Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಏಳನೇ ಪಸುಗೆ — ಎರಡನೇ ನುಡಿಯ ಕಲಿಕೆ
7.1 ಮುನ್ನೋಟ
ತಮ್ಮ ತಾಯ್ನುಡಿಯಿಂದ ಬೇರಾಗಿರುವ ಎರಡನೇ ನುಡಿಯನ್ನು ಕಲಿಯ ಬೇಕೆಂದಿರುವವರಿಗೆ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಒರೆದು ನೋಡಲಾಗಿದೆ. ಇಲ್ಲಿ ಮುಕ್ಯವಾಗಿ ಎರಡು ಕೇಳ್ವಿಗಳು ನಮ್ಮ ಮುಂದಿವೆ:
(1) ಕನ್ನಡವನ್ನು ತಾಯ್ನುಡಿಯಾಗಿ ಪಡೆದವರಿಗೆ ಬೇರೊಂದು ನುಡಿಯನ್ನು ಎರಡನೆಯ ನುಡಿಯಾಗಿ ಕಲಿಸಬೇಕಿದ್ದಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು?
(2) ಕನ್ನಡಕ್ಕಿಂತ ಬೇರಾಗಿರುವ ನುಡಿಯೊಂದನ್ನು ತಾಯ್ನುಡಿಯಾಗಿ ಪಡೆದವರಿಗೆ ಕನ್ನಡ ನುಡಿಯನ್ನು ಎರಡನೆಯ ನುಡಿಯಾಗಿ ಕಲಿಸಬೇಕಿದ್ದಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು?
ಇವುಗಳಲ್ಲಿ ಮೊದಲನೇ ಕೇಳ್ವಿಯನ್ನು ಈ ಪಸುಗೆಯ (7.2.1-6)ರಲ್ಲಿ ವಿವರವಾಗಿ ಪರಿಶೀಲಿಸಲಾಗಿದೆ. ಎರಡನೆಯದರ ಕುರಿತು ಹೆಚ್ಚು ಬರೆದಿಲ್ಲ; ಯಾಕೆಂದರೆ, ಮೇಲೆ ಎರಡು ಮತ್ತು ಮೂರನೇ ಪಸುಗೆಗಳಲ್ಲಿ ಒಂದು ನುಡಿಯ ಮತ್ತು ಅದರ ಓದು-ಬರಹಗಳ ಕಲಿಕೆಗೆ ಅದರ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗುತ್ತದೆ ಎಂಬುದನ್ನು ಹೆಚ್ಚು ವಿವರವಾಗಿ ಈಗಾಗಲೇ ವಿವರಿಸಲಾಗಿದೆ. ಅದನ್ನೇ ಇಲ್ಲಿಗೂ ಅಳವಡಿಸಿಕೊಳ್ಳಬಹುದು.
ಇದಕ್ಕೂ ಮೊದಲು, ಎರಡನೇ ನುಡಿಯನ್ನು ಕಲಿಯುವುದರ ಹೆಚ್ಚುಗಾರಿಕೆ ಮತ್ತು ಹೊಲಬುಗಳ ಕುರಿತು ಕೆಲವು ಮುಕ್ಯ ವಿಶಯಗಳನ್ನು ಕೆಳಗೆ ವಿವರಿಸಲಾಗಿದೆ.
7.1.1 ಎರಡನೇ ನುಡಿಯನ್ನು ಕಲಿಯುವುದರ ಹೆಚ್ಚುಗಾರಿಕೆ
ಒಂದಕ್ಕಿಂತ ಹೆಚ್ಚು ನುಡಿಗಳು ತಿಳಿದಿರುವ ಮಕ್ಕಳು (ಇರ್ನುಡಿಗರು ಇಲ್ಲವೇ ಹಲನುಡಿಗರು) ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹಲವು ವಿಶಯ ಗಳಲ್ಲಿ ಮುಂದಿರುತ್ತಾರೆ. ಒಂದು ನುಡಿಯನ್ನು ಕಲಿಯುವುದೇ ತುಂಬಾ ತೊಡಕಿನ ಕೆಲಸ. ಹಾಗಿರುವಾಗ, ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ನುಡಿಗಳನ್ನು ಈ ಮಕ್ಕಳು ಕಲಿತಿದ್ದಾರೆಂದರೆ, ಮತ್ತು ಅವನ್ನು ಒಂದರೊಡನೊಂದು ಬೆರಸದೆ ಬಳಸಲು ಕಲಿತಿದ್ದಾರೆಂದರೆ, ನಿಜಕ್ಕೂ ಅವರು ಒಂದು ತುಂಬಾ ತೊಡಕಿನ ಕೆಲಸವನ್ನೇ ನಡೆಸಲು ತಿಳಿದಿದ್ದಾರೆಂದು ಹೇಳಿದ ಹಾಗಾಯಿತು. ಈ ತಿಳಿವು ಅವರಿಗೆ ಬೇರೆ ಕೆಲಸಗಳನ್ನು ನಡೆಸುವಲ್ಲೂ ನೆರವಿಗೆ ಬರುತ್ತದೆ:
(1) ಇರ್ನುಡಿಗರು ಒಂದು ನುಡಿಯನ್ನು ಬಳಸುವಾಗ ಆ ನುಡಿಯ ಪದ ಮತ್ತು ಕಟ್ಟಲೆಗಳನ್ನು ಮಾತ್ರವೇ ಬಳಸುತ್ತಿರಬೇಕು. ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳು ತಮ್ಮ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಸ್ವಲ್ಪವೂ ತಲೆಹಾಕದಂತೆ ನೋಡಿಕೊಳ್ಳಬೇಕು. ಹಾಗಾಗಿ, ತಮಗೆ ತಿಳಿದಿರುವ ಯಾವುದೇ ಒಂದು ನುಡಿಯನ್ನು ಬಳಸುತ್ತಿರುವಾಗಲೂ, ಅವರು ತಮ್ಮ ಮಿದುಳಿನಲ್ಲಿ ನೆಲೆನಿಂತಿರುವ ಆ ನುಡಿಯ ಪದಗಳು, ಸೊಲ್ಲರಿಮೆಯ ಕಟ್ಟಲೆಗಳು ಮೊದಲಾದುವನ್ನು ಮಾತ್ರವಲ್ಲದೆ, ಇನ್ನೊಂದು ನುಡಿಯ ಪದಗಳು, ಸೊಲ್ಲರಿಮೆಯ ಕಟ್ಟಲೆಗಳು ಮೊದಲಾದುವನ್ನೂ ಗಮನಿಸುತ್ತಿರಬೇಕಾಗುತ್ತದೆ. ಎರಡು ಇಲ್ಲವೇ ಹೆಚ್ಚು ನುಡಿಗಳನ್ನು ಬಳಸುವುದಕ್ಕಾಗಿ ತಾವು ಪಡೆದು ಕೊಂಡಿರುವ ಈ ಅಳವನ್ನು ಅವರು ತಾವು ಮಾಡಬೇಕಾಗಿರುವ ಬೇರೆ ಕೆಲಸ ಗಳಲ್ಲೂ ಬಳಸಿಕೊಳ್ಳಬಲ್ಲರು. ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಅದಕ್ಕೆ ಸಂಬಂದಿಸದಿರುವ ವಿಶಯಗಳನ್ನು ಬದಿಗಿರಿಸಿ, ಸಂಬಂದಿಸಿದವುಗಳನ್ನು ಮಾತ್ರವೇ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಈ ಕೆಲಸವನ್ನು ಅವರು ಒಂದೇ ನುಡಿಯನ್ನು ಕಲಿತಿರುವ ಒರ್ನುಡಿಗರಿಗಿಂತ ಹೆಚ್ಚು ಸುಳುವಾಗಿ ನಡೆಸಬಲ್ಲರೆಂಬುದು ಅರಕೆ(ಸಂಶೋದನೆ)ಗಳಿಂದ ತಿಳಿದು
(2) ಇರ್ನುಡಿಗರು ಇನ್ನೊಂದು ಕೆಲಸದಲ್ಲೂ ಒರ್ನುಡಿಗರಿಗಿಂತ ಮುಂದಿರು ತ್ತಾರೆ. ಮಾತನಾಡುವಾಗ ಅವರು ಆಗಾಗ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬೇಕಾಗುತ್ತದೆ. ಹಲವು ಕಡೆಗಳಲ್ಲಿ ಅವರು ಒಂದು ಸೊಲ್ಲನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಸೊಲ್ಲನ್ನು ತಮಗೆ ಗೊತ್ತಿರುವ ಇನ್ನೊಂದು ನುಡಿಯಲ್ಲಿ ಹೇಳಬೇಕಾಗುತ್ತದೆ.
ಎರಡನೇ ನುಡಿಯ ಕಲಿಕೆ
ಹೀಗೆ ಮಾಡುವುದು ಸುಲಬದ ಕೆಲಸವೇನಲ್ಲ. ಇದಕ್ಕಾಗಿ ಅವರು ಬಹಳ ಬೇಗನೆ ಒಂದು ನುಡಿಯ ಪದ ಮತ್ತು ಕಟ್ಟಲೆಗಳ ಬದಲು ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬೇಕಾಗುತ್ತದೆ. ಈ ರೀತಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯಲು ಕಲಿತುದರಿಂದಾಗಿ, ಅವರಿಗೆ ಬೇರೆ ಬಗೆಯ ಕೆಲಸಗಳನ್ನು ನಡೆಸುವಲ್ಲೂ ಒಂದು ಬಗೆಯ ಕೆಲಸದಿಂದ ಇನ್ನೊಂದು ಬಗೆಯ ಕೆಲಸಕ್ಕೆ ನೆಗೆಯಲು ಸುಳುವಾಗುತ್ತದೆ.
ಹಾಗಾಗಿ, ತೊಡಕುಗಳನ್ನು ಬಗೆಹರಿಸುವುದರಲ್ಲಿ, ಮತ್ತು ತಿಳಿದಿರುವ ಸಂಗತಿಗಳನ್ನು ಸರಿಯಾಗಿ ಜೋಡಿಸಿಕೊಂಡು ಅವುಗಳಿಂದ ಯಾವುದಾದ ರೊಂದು ತೀರ್ಮಾನಕ್ಕೆ ಬರುವುದರಲ್ಲಿ ಇರ್ನುಡಿ ಮಕ್ಕಳು ಒರ್ನುಡಿ ಮಕ್ಕಳಿಗಿಂತ ಮುಂದಿರುತ್ತಾರೆ.
(3) ತಮ್ಮ ಅನಿಸಿಕೆಗಳನ್ನು ಮತ್ತು ತಿಳಿವನ್ನು ಇನ್ನೊಬ್ಬರಿಗೆ ತಿಳಿಸುವಲ್ಲಿ ನುಡಿಗಳು ಹೇಗೆ ನೆರವಾಗುತ್ತವೆ ಎಂಬುದು ಒರ್ನುಡಿಗರಿಗಿಂತ ಇರ್ನುಡಿಗರಿಗೆ ಹೆಚ್ಚು ಚನ್ನಾಗಿ ತಿಳಿದಿರುತ್ತದೆ. ಉಲಿಗಳ ಜೋಡಣೆಯಿಂದ ಪದಗಳನ್ನು ಉಂಟುಮಾಡಲಾಗುತ್ತದೆ, ಮತ್ತು ಹೀಗೆ ಜೋಡಿಸಿರುವ ಪದಗಳಿಗೆ ಹುರುಳಿದೆಯಲ್ಲದೆ ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲ ಎಂಬ ವಿಶಯ, ಮತ್ತು ಪದಗಳಿಗಿರುವ ಹುರುಳುಗಳು ರೂಡಿಯಿಂದ ಬಂದುವಲ್ಲದೆ ಸಹಜವಾದುವಲ್ಲ (ಒಂದೇ ಹುರುಳಿಗೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ಬಗೆಯ ಪದಗಳಿವೆ) ಎಂಬ ವಿಶಯ ಅವರ ಮನಸ್ಸಿನಲ್ಲಿ ಹೆಚ್ಚು ಚನ್ನಾಗಿ ಮೂಡಿರುತ್ತದೆ.
ಈ ತಿಳಿವು ಬರಹಗಳನ್ನು ಓದಲು ಕಲಿಯುವಲ್ಲಿ ನೆರವಿಗೆ ಬರುತ್ತದೆ, ಮತ್ತು ಇದರಿಂದಾಗಿ ಓದಿನ ಕಲಿಕೆಯಲ್ಲಿ ಅವರು ಒರ್ನುಡಿಗರಿಂದ ಮುಂದಿರು ತ್ತಾರೆ. ಇದಲ್ಲದೆ, ಸೊಲ್ಲುಗಳಲ್ಲಿ ಬಳಕೆಯಾಗಿರುವ ಪದಗಳನ್ನು ಬೇರ್ಪಡಿಸು ವಲ್ಲಿ, ಮತ್ತು ಅವುಗಳ ಇಟ್ಟಳಗಳನ್ನು ತಿಳಿದುಕೊಳ್ಳುವಲ್ಲಿ ಅವರು ಒರ್ನುಡಿಗ ರಿಂದ ಮುಂದಿರುತ್ತಾರೆ. ಹಾಗಾಗಿ, ಬರಹಗಳಲ್ಲಿರುವ ತಪ್ಪುಗಳನ್ನು ಕಂಡುಹಿಡಿ ಯುವುದರಲ್ಲಿ, ಮತ್ತು ಅವನ್ನು ತಿದ್ದುವುದರಲ್ಲಿಯೂ ಅವರು ಒರ್ನುಡಿಗರಿಂದ ಮುಂದಿರುತ್ತಾರೆ.
(4) ಇನ್ನೊಂದು ಹೆಚ್ಚಿನ ನುಡಿಯನ್ನು ಕಲಿಯುವುದರಲ್ಲಿಯೂ ಇರ್ನುಡಿಗರು ಒರ್ನುಡಿಗರಿಗಿಂತ ಮುಂದಿರುತ್ತಾರೆ. ನುಡಿಗಳ ಒಳಗುಟ್ಟನ್ನು ಅವರು ಹೆಚ್ಚು ಚನ್ನಾಗಿ ತಿಳಿದುಕೊಂಡಿರುವುದೇ ಇದಕ್ಕೆ ಕಾರಣ. ಎರಡು ನುಡಿಗಳ ನಡುವೆ ಅವು ಬಳಸುವ ಉಲಿಗಳಲ್ಲಿ, ಪದಗಳಲ್ಲಿ, ಮತ್ತು ಸೊಲ್ಲರಿಮೆಯ ಕಟ್ಟಲೆಗಳಲ್ಲಿ
ಯಾವ ರೀತಿ ವ್ಯತ್ಯಾಸಗಳೆಲ್ಲ ಇರಬಲ್ಲುವು ಎಂಬುದು ಒರ್ನುಡಿಗರಿಂದ ಇರ್ನುಡಿಗರು ಹೆಚ್ಚು ಚನ್ನಾಗಿ ತಿಳಿದುಕೊಳ್ಳಬಲ್ಲರು.
ದಕ್ಶಿಣ ಕನ್ನಡ ಜಿಲ್ಲೆಯ ಮಕ್ಕಳು ಸಾಮಾನ್ಯವಾಗಿ ಕರ್ನಾಟಕದ ಬೇರೆ ಜಿಲ್ಲೆಯ ಮಕ್ಕಳಿಗಿಂತ ಕಲಿಕೆಯಲ್ಲಿ ಮುಂದಿರುತ್ತಾರೆಂದು ಹೇಳಲಾಗುತ್ತದೆ. ಇದಕ್ಕೆ ಅಲ್ಲಿನ ಮಕ್ಕಳಲ್ಲಿ ಹೆಚ್ಚಿನವರೂ ಇರ್ನುಡಿಗರಾಗಿರುವುದು ಇಲ್ಲವೇ ಹಲನುಡಿಗರಾಗಿರುವುದು ಕಾರಣವಿರಬಹುದು.
ಹಾಗಾಗಿ, ಒಂದೋ ಎರಡೋ ಹೆಚ್ಚಿನ ನುಡಿಗಳನ್ನು ಕಲಿಯುವ ತೆರಹು ಮಕ್ಕಳಿಗಿದೆಯಾದರೆ, ಅದನ್ನು ಬಳಸಿಕೊಳ್ಳುವಂತೆ ಅವರನ್ನು ಹುರಿದುಂಬಿಸು ವುದು ಒಳ್ಳೆಯದು. ಯಾಕೆಂದರೆ, ಆ ರೀತಿ ಹೆಚ್ಚಿನ ನುಡಿಗಳನ್ನು ಕಲಿಯುವ ಮೂಲಕ ಅವರು ತಮ್ಮ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬಲ್ಲರು, ಮತ್ತು ಗಣಿತ, ವಿಜ್ನಾನ ಮೊದಲಾದ ಬೇರೆ ವಿಶಯಗಳ ಕಲಿಕೆಯಲ್ಲೂ ಉಳಿದವರಿಗಿಂತ ಮುಂದೆ ಹೋಗಬಲ್ಲರು.
ಇಂಗ್ಲಿಶ್ ಕಲಿಕೆನುಡಿಯ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿರುವ ಕೆಲವರು ತಾಯ್ತಂದೆಯರು ಆ ಮಕ್ಕಳು ತಮ್ಮ ತಾಯ್ನುಡಿಯನ್ನು ಪೂರ್ತಿ ಮರೆಯುವ ಹಾಗೆ ಅವರನ್ನು ಬೆಳೆಸುತ್ತಾರೆ. ಶಾಲೆಗಳಲ್ಲಂತೂ ಅವರು ತಮ್ಮ ತಾಯ್ನುಡಿಯನ್ನು ಬಳಸಲೇ ಬಾರದೆಂಬ ಕಟ್ಟಲೆಯಿರುತ್ತದೆ; ಮನೆಯಲ್ಲೂ ಇಂಗ್ಲಿಶ್ ನುಡಿಯನ್ನೇ ಬಳಸುತ್ತಿರುವ ಹಾಗೆ ಅವರನ್ನು ಹುರಿದುಂಬಿಸಿದಲ್ಲಿ, ಅವರು ತಮ್ಮ ತಾಯ್ನುಡಿಯನ್ನು ಪೂರ್ತಿ ಮರೆತುಬಿಡುತ್ತಾರೆ. ಆದರೆ, ಆ ರೀತಿ ತಮ್ಮಲ್ಲಿರುವ ಒಂದು ಹೆಚ್ಚಿನ ನುಡಿಯನ್ನು ಕಳೆದುಕೊಳ್ಳುವ ಮಕ್ಕಳು ಸ್ವಲ್ಪ ಮಟ್ಟಿಗೆ ತಮ್ಮ ಜಾಣ್ಮೆಯನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಈ ತಾಯಿತಂದೆಯರು ಗಮನಿಸಿದ ಹಾಗೆ ಕಾಣುವುದಿಲ್ಲ.
8.1.2 ಮೊದಲನೇ ಮತ್ತು ಎರಡನೇ ನುಡಿಗಳ ಕಲಿಕೆ
ಮಕ್ಕಳು ತಮ್ಮ ಮೊದಲನೇ ನುಡಿಯನ್ನು ಕಲಿಯುವುದಕ್ಕೂ, ಆಮೇಲೆ ಎರಡನೇ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಇದಲ್ಲದೆ, ಎರಡನೇ ನುಡಿಯನ್ನು ಚಿಕ್ಕಂದಿನಲ್ಲೇನೇ ಕಲಿಯುವುದಕ್ಕೂ, ಆಮೇಲೆ ದೊಡ್ಡವ ರಾದ ಮೇಲೆ ಕಲಿಯುವುದಕ್ಕೂ ನಡುವೆಯೂ ಹಲವು ವ್ಯತ್ಯಾಸಗಳಿವೆ. ಎರಡನೇ ನುಡಿಯ ಕಲಿಕೆಯಲ್ಲಿ ಸೊಲ್ಲರಿಮೆಯ ಕಲಿಕೆ ಯಾಕೆ ಮತ್ತು ಹೇಗೆ ಬೇಕಾಗುತ್ತದೆ ಎಂಬುದನ್ನು ಒರೆದು ನೋಡುವವರು ಈ ವ್ಯತ್ಯಾಸಗಳನ್ನು ಗಮನಕ್ಕೆ ತೆಗೆದು ಕೊಳ್ಳಬೇಕಾಗುತ್ತದೆ.
ಮೊದಲನೇ ನುಡಿಯ (ತಾಯ್ನುಡಿಯ) ಕಲಿಕೆ ಮಕ್ಕಳ ಬೆಳವಣಿಗೆಯ ಒಂದು ಹಂತವಾಗಿ ನಡೆಯುತ್ತದೆ. ಆರೋಗ್ಯದಲ್ಲಿರುವ ಯಾವ ಮಗುವೂ ತನ್ನ ಮೊದಲನೇ ನುಡಿಯನ್ನು ಕಲಿಯದಿರುವುದಿಲ್ಲ. ಮಲಗಿದಲ್ಲಿಂದ ಕವುಚಿ ಕೊಳ್ಳುವುದು, ಆಮೇಲೆ ಕುಳಿತುಕೊಳ್ಳುವುದು, ಅಂಬೆಗಾಲಿಡುವುದು, ಎದ್ದು ನಿಲ್ಲುವುದು, ನಡೆಯುವುದು ಮೊದಲಾದುವನ್ನು ಕಲಿತುಕೊಳ್ಳುವ ಹಾಗೆಯೇ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಮಾತನಾಡುವುದನ್ನೂ ಹಂತ ಹಂತವಾಗಿ ತಾವಾಗಿಯೇ ಕಲಿತುಕೊಳ್ಳುತ್ತಾರೆ.
ಮನೆಯಲ್ಲಿ ಮಗುವನ್ನು ನಲ್ಮೆಯಿಂದ ನೋಡಿಕೊಳ್ಳುವ ಮತ್ತು ಅದರೊಂದಿಗೆ ಯಾವಾಗಲೂ ಮಾತನಾಡಿಕೊಂಡಿರುವ ತಾಯಿತಂದೆಯರು, ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರಿರಬಹುದು; ಇಲ್ಲವೇ ತುಸುವೂ ನಲ್ಮೆಯನ್ನು ತೋರಿಸದ ಮಲತಾಯಿ ಮಾತ್ರವೇ ಮಗುವಿನೊಡನೆ ಮನೆಯಲ್ಲಿರ ಬಹುದು. ಈ ವ್ಯತ್ಯಾಸ ಮಕ್ಕಳು ತಮ್ಮ ತಾಯ್ನುಡಿಯನ್ನು ಕಲಿಯುವುದರ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ.
ಇದಲ್ಲದೆ, ಅವರ ಬುದ್ದಿಶಕ್ತಿ, ಚುರುಕುತನ, ಜಾಣ್ಮೆ ಮೊದಲಾದವುಗಳು ಯಾವುವೂ ಈ ಕಲಿಕೆಯ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯನ್ನು ಯಾರ ನೆರವೂ ಇಲ್ಲದೆ ತಾವಾಗಿಯೇ ಕಲಿತುಕೊಳ್ಳಬಲ್ಲರು. ದೊಡ್ಡವರ ಮಾತನ್ನು ಅವರು ಕೇಳುತ್ತಾ ಇದ್ದರೆ ಸಾಕು, ಅವರಿಗೆ ಮಾತನಾಡಲು ಬಂದುಬಿಡುತ್ತದೆ. ಈ ಕಾರಣಕ್ಕಾಗಿ, ಮಕ್ಕಳು ತಮ್ಮ ಮೊದಲನೇ ನುಡಿಯನ್ನು ಕಲಿಯುತ್ತಾರೆ ಎಂದು ಹೇಳುವುದಕ್ಕಿಂತಲೂ ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ ಎಂದು ಹೇಳು ವುದೇ ಸರಿ ಎಂಬ ಅನಿಸಿಕೆ ಹಲವು ತಿಳಿವಿಗರಲ್ಲಿದೆ.
ಇದಕ್ಕೆ ಬದಲು, ಎರಡನೇ ನುಡಿಯ ಕಲಿಕೆ ಎರಡು ಬಗೆಯ ತೆರಹುಗಳಲ್ಲಿ ನಡೆಯಬಲ್ಲುದು. ಮೊದಲನೆಯದಾಗಿ, ಮಕ್ಕಳು ಎರಡು ಇಲ್ಲವೇ ಹೆಚ್ಚು ನುಡಿಗಳು ಬಳಕೆಯಲ್ಲಿರುವಲ್ಲಿ ಬೆಳೆಯುತ್ತಿರುವರಾದರೆ, ಅವರು ತಮ್ಮ ತಾಯ್ನುಡಿಯೊಂದಿಗೆ ಆ ಹೆಚ್ಚಿನ ನುಡಿಗಳನ್ನೂ ಕಲಿತುಕೊಳ್ಳುತ್ತಾರೆ. ಆದರೆ ಇಂತಹ ಕಡೆಗಳಲ್ಲೆಲ್ಲ, ತಾಯ್ನುಡಿಯೇ ಅವರ ಮುಕ್ಯ ನುಡಿಯಾಗಿರುತ್ತದೆ, ಮತ್ತು ಅದರ ತಳಹದಿಯ ಮೇಲೆ ಬೇರೆ ನುಡಿಗಳ ಕಲಿಕೆ ನಡೆಯುತ್ತದೆ. ಬೇರೊಂದು ನುಡಿ ಬಳಕೆಯಲ್ಲಿರುವ ಊರಲ್ಲಿ ನೆಲೆಸಲು ಬಂದ ದೊಡ್ಡವ ರಲ್ಲೂ ಕೆಲವರು ತಾವಾಗಿಯೇ ಆ ಊರಿನ ನುಡಿಯನ್ನು ತಮ್ಮ ಎರಡನೆಯ ನುಡಿಯಾಗಿ ಕಲಿತುಕೊಳ್ಳಬಹುದು. ಅವರ ಈ ಕಲಿಕೆ ಸ್ವಲ್ಪ ಮಟ್ಟಿಗೆ ಚಿಕ್ಕ
ಮಕ್ಕಳ ಕಲಿಕೆಯನ್ನು ಹೋಲುತ್ತದೆ. ಆದರೆ, ಎಲ್ಲಾ ದೊಡ್ಡವರಿಗೂ ಆ ರೀತಿ ಎರಡನೇ ನುಡಿಯನ್ನು ತಾವಾಗಿಯೇ ಕಲಿಯಲು ಬರುವುದಿಲ್ಲ. ಕೆಲವರಿಗೆ ಅದಕ್ಕಾಗಿ ಯಾರಾದರೂ ಕಲಿಸುಗರ ನೆರವನ್ನು ಪಡೆಯಬೇಕಾಗುತ್ತದೆ.
ಕಲಿಸುಗರ ಇಲ್ಲವೇ ಪುಸ್ತಕಗಳ ನೆರವಿನಿಂದ ನಡೆಸುವ ಈ ಎರಡನೇ ನುಡಿಯ ಕಲಿಕೆ ಎರಡನೇ ಬಗೆಯದು. ಇದು ಹಲವು ವಿಶಯಗಳಲ್ಲಿ ಮೊದಲನೇ ನುಡಿಯ ಕಲಿಕೆಗಿಂತ ಬೇರಾಗಿದೆ.
ಶಾಲೆಯಲ್ಲಿ ಮಕ್ಕಳು ತಮ್ಮ ಎರಡನೇ ನುಡಿಯನ್ನು ಈ ಎರಡನೇ ಬಗೆಯಲ್ಲಿ ಕಲಿಯುತ್ತಾರೆ. ಅವರಿಗೆ ಈ ನುಡಿಯನ್ನು ಯಾರಾದರೂ ದೊಡ್ಡವರು ಕಲಿಸ ಬೇಕಾಗುತ್ತದೆ. ಚುರುಕಾಗಿರುವ ಕೆಲವು ಮಕ್ಕಳು ಅದನ್ನು ಬೇಗನೆ ಮತ್ತು ತುಂಬಾ ಚೆನ್ನಾಗಿ ಕಲಿಯಬಲ್ಲರು; ಆದರೆ, ಅಶ್ಟೊಂದು ಚುರುಕಿಲ್ಲದ ಬೇರೆ ಕೆಲವು ಮಕ್ಕಳು ಎಶ್ಟು ಹೇಳಿಕೊಟ್ಟರೂ ತಮ್ಮ ಎರಡನೇ ನುಡಿಯನ್ನು ಸರಿಯಾಗಿ ಕಲಿಯುವುದೇ ಇಲ್ಲ.
ಇದಲ್ಲದೆ, ಎರಡನೇ ನುಡಿಯನ್ನು ಕಲಿಸುವವರು ಎಂತಹವರು, ಕಲಿಸುವು ದಕ್ಕಾಗಿ ಅವರು ಎಂತಹ ಪುಸ್ತಕಗಳನ್ನು ಮತ್ತು ಉಪಕರಣಗಳನ್ನು ಬಳಸುತ್ತಾರೆ, ಕಲಿಯುವವರಿಗೆ ತಮ್ಮ ಕಲಿಕೆಯಲ್ಲಿ ಎಶ್ಟು ಆಸಕ್ತಿಯಿದೆ ಎಂಬಂತಹ ಬೇರೆ ಹಲವು ವಿಶಯಗಳೂ ಈ ಎರಡನೇ ಬಗೆಯ ಕಲಿಕೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಸರಿಯಾಗಿ ಕಲಿಸುವವರ ನೆರವಿಲ್ಲದಿದ್ದಲ್ಲಿ, ಹೆಚ್ಚಿನ ಮಕ್ಕಳೂ ತಮ್ಮ ಎರಡನೇ ನುಡಿಯನ್ನು ಚನ್ನಾಗಿ ಕಲಿತುಕೊಳ್ಳುವುದಿಲ್ಲ.
ಮೊದಲನೇ ನುಡಿಯನ್ನು ಮಕ್ಕಳು ಹಲವು ಹಂತಗಳ ಮೂಲಕ ಕಲಿಯಬೇಕಾಗುತ್ತದೆ. ಈ ಎಲ್ಲಾ ಹಂತಗಳನ್ನೂ ಅವರು ತಾವಾಗಿಯೇ ದಾಟುತ್ತಾ ಮುಂದುವರಿಯುತ್ತಾರೆ. ಯಾವ ಮಗುವೂ ಈ ಹಂತಗಳನ್ನು ದಾಟದಿರುವುದಿಲ್ಲ.
ಇದೇ ರೀತಿಯಲ್ಲಿ, ಎರಡನೇ ನುಡಿಯ ಕಲಿಕೆಯಲ್ಲೂ ಹಲವು ಹಂತ ಗಳಿರುತ್ತವೆ, ಮತ್ತು ಕೆಲವು ಮಕ್ಕಳು, ಕಲಿಸುವಿಕೆ ಅಶ್ಟು ಚನ್ನಾಗಿಲ್ಲದಿದ್ದರೂ, ಅವೆಲ್ಲವನ್ನೂ ದಾಟಿ ಮುಂದೆ ಹೋಗುತ್ತಾರೆ. ಆದರೆ, ಬೇರೆ ಕೆಲವು ಮಕ್ಕಳು ಯಾವುದಾದರೂ ಒಂದು ಹಂತದಲ್ಲಿ ಸಿಲುಕಿಕೊಂಡಿರುತ್ತಾರೆ, ಮತ್ತು ಅಲ್ಲಿಂದ ಮುಂದೆ ಹೋಗುವುದು ಹೇಗೆಂದು ತಿಳಿಯದೆ, ಅಲ್ಲೇ ಉಳಿಯುತ್ತಾರೆ. ಇದು ಮೊದಲನೇ ನುಡಿಯ ಕಲಿಕೆಗೂ ಎರಡನೇ ನುಡಿಯ ಕಲಿಕೆಗೂ ನಡುವಿರುವ ಇನ್ನೊಂದು ವ್ಯತ್ಯಾಸ.
7.1.3 ಮಕ್ಕಳ ಕಲಿಕೆ ಮತ್ತು ದೊಡ್ಡವರ ಕಲಿಕೆ
ಎರಡನೇ ನುಡಿಯನ್ನು ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕೂ, ಬಳಿಕ ದೊಡ್ಡವರಾದ ಮೇಲೆ ಕಾಲೇಜಿನಲ್ಲಿ, ಇಲ್ಲವೇ ಅದಕ್ಕೂ ಮುಂದೆ ಒಂದು ಕೆಲಸದಲ್ಲಿರುವಾಗ ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ:
ಮಕ್ಕಳಿಗಿಂತ ದೊಡ್ಡವರಿಗೆ ಹೆಚ್ಚು ತಿಳುವಳಿಕೆಯಿರುತ್ತದೆ. ತಮ್ಮ ಮುಂದಿರುವ ಸಂಗತಿಗಳನ್ನು ಬಿಡಿಸಿನೋಡಿ, ಅವುಗಳ ಒಳಗುಟ್ಟನ್ನು ತಿಳಿದು ಕೊಳ್ಳಬಲ್ಲಂತಹ ಅಳವು ಅವರಲ್ಲಿ ಚಿಕ್ಕವರಿಗಿಂತ ಹೆಚ್ಚಿರುತ್ತದೆ. ಈ ಅಳವನ್ನು ಅವರು ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.
ತಾವು ಈಗಾಗಲೇ ಕಲಿತಿರುವ ಮೊದಲನೇ ನುಡಿಗೂ ಈಗ ಕಲಿಯುತ್ತಿರುವ ಎರಡನೇ ನುಡಿಗೂ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದರ ತಿಳಿವನ್ನು ಚಿಕ್ಕವರಿಗಿಂತ ದೊಡ್ಡವರು ಹೆಚ್ಚು ಚನ್ನಾಗಿ ತಮ್ಮ ಕಲಿಕೆಯಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಎರಡನೇ ನುಡಿಯನ್ನು ಕಲಿಸುವವರು ಚಿಕ್ಕವರಿಗಿಂತಲೂ ದೊಡ್ಡವರಿಗೆ ಸೊಲ್ಲರಿಮೆಯ ಕಟ್ಟಲೆಗಳನ್ನು ನೇರವಾಗಿ ತಿಳಿಸಬಹುದು.
ಇದಲ್ಲದೆ, ನುಡಿಯ ಕಲಿಕೆಯಲ್ಲಿ ಎರಡು ಮುಕ್ಯ ಹಂತಗಳಿರುತ್ತವೆ: ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ಹಂತ, ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಮತ್ತು ಹಾಗೆ ತಿಳಿದುಕೊಂಡುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು
ಈ ಎರಡು ಹಂತಗಳ ನಡುವಿನ ಮುಕ್ಯ ವ್ಯತ್ಯಾಸವೇನೆಂದರೆ, ಮೊದಲನೇ ಹಂತದಲ್ಲಿ ನುಡಿಯ ಬಳಕೆಗೆ ಕಯ್ಸನ್ನೆ, ಕಣ್ಣುಸನ್ನೆ, ಮಾತಿನ ಏರಿಳಿತ ಮೊದಲಾ ದವುಗಳ ನೆರವು ಸಿಗುತ್ತದೆ. ಆದರೆ, ಎರಡನೇ ಹಂತದ ಕಲಿಕೆಯಲ್ಲಿ ನಾವು ಪಡೆಯಬೇಕಾಗಿರುವ ಹುರುಳುಗಳನ್ನೆಲ್ಲ ಪದ ಮತ್ತು ಸೊಲ್ಲುಗಳನ್ನು ಮಾತ್ರವೇ ಗಮನಿಸಿ ಪಡೆಯಬೇಕಾಗುತ್ತದೆ.
ಎರಡನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳಿಗೆ ಅದರಲ್ಲಿ ಮೊದಲನೇ ಹಂತವನ್ನು ತಲಪಲು ಎರಡು ವರ್ಶಗಳು ಸಾಕಾಗಬಹುದು; ಆದರೆ, ಎರಡನೇ ಹಂತವನ್ನು ತಲಪಬೇಕಿದ್ದಲ್ಲಿ ಅವರಿಗೆ ಆರೇಳು ವರ್ಶಗಳೇ ಬೇಕಾಗಬಹುದು. ಮಕ್ಕಳ ಮನಸ್ಸು ಸಾಕಶ್ಟು ಬೆಳವಣಿಗೆಯನ್ನು ಪಡೆಯುವಲ್ಲಿವರೆಗೆ ಅವರಿಗೆ ಈ ಎರಡನೇ ಹಂತವನ್ನು ತಲಪಲು ಬರುವುದಿಲ್ಲ. ಹಾಗಾಗಿ, ಈ ಎರಡನೇ
ಹಂತದ ಕಲಿಕೆಯನ್ನು ಚಿಕ್ಕವರಿಗಿಂತಲೂ ದೊಡ್ಡವರು ಹೆಚ್ಚು ಚನ್ನಾಗಿ ಮತ್ತು ಹೆಚ್ಚು ಬೇಗನೆ ನಡೆಸಬಲ್ಲರು.
ಆದರೆ, ಬೇರೆ ಹಲವು ವಿಶಯಗಳಲ್ಲಿ ದೊಡ್ಡವರು ತಮ್ಮ ಎರಡನೇ ನುಡಿಯ ಕಲಿಕೆಯಲ್ಲಿ ಚಿಕ್ಕವರಿಗಿಂತ ತುಂಬಾ ಹಿಂದೆ ಬೀಳುತ್ತಾರೆ. ಎತ್ತುಗೆಗಾಗಿ, ತಮ್ಮ ಮೊದಲನೇ ನುಡಿಯಲ್ಲಿ ಬಳಕೆಯಾಗಿಲ್ಲದಂತಹ ಹೊಸ ಉಲಿಗಳು ಎರಡನೇ ನುಡಿಯಲ್ಲಿ ಬಳಕೆಯಾಗುತ್ತಿವೆಯಾದರೆ, ಅಂತಹ ಉಲಿಗಳ ಉಲಿಪನ್ನು (ಉಚ್ಚಾರಣೆಯನ್ನು) ಚಿಕ್ಕವರಶ್ಟು ಸುಲಬವಾಗಿ ಮತ್ತು ಚೆನ್ನಾಗಿ ದೊಡ್ಡವರು ಕಲಿತುಕೊಳ್ಳಲಾರರು.
ಯಾಕೆಂದರೆ, ಉಲಿಗಳ ನಡುವಿನ ವ್ಯತ್ಯಾಸವನ್ನು ಮಾತಿನಲ್ಲಿ ಬಳಸಿಕೊಳ್ಳುವ ಕಸುವು ಮಕ್ಕಳಲ್ಲಿರುವ ಹಾಗೆ ದೊಡ್ಡವರಲ್ಲಿರುವುದಿಲ್ಲ. ಹೊಸ ಉಲಿಗಳನ್ನು ಹೊರಡಿಸುವ ಕಸುವೂ ಅವರ ನಾಲಿಗೆಯಲ್ಲಿ ಉಳಿದಿರುವುದಿಲ್ಲ. ತಾವು ಕಲಿಯುತ್ತಿರುವ ಎರಡನೇ ನುಡಿಯನ್ನು ತಾಯ್ನುಡಿಯಾಗಿ ಆಡುವವರ ಹಾಗೆ ಆಡಲು ದೊಡ್ಡವರಿಗಿಂತಲೂ ಚಿಕ್ಕ ಮಕ್ಕಳು ಹೆಚ್ಚು ಸುಳುವಾಗಿ ಕಲಿತುಕೊಳ್ಳ ಬಲ್ಲರು.
ಇದಲ್ಲದೆ, ಬೇರೆಯೂ ಹಲವು ವಿಶಯಗಳಲ್ಲಿ ದೊಡ್ಡವರ ನಿಲುವು ಗಟ್ಟಿ ಗೊಂಡಿದ್ದು, ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವರಿಗೆ ಕಶ್ಟವಾಗುತ್ತದೆ. ಎರಡನೇ ನುಡಿಯನ್ನು ಕಲಿತುಕೊಳ್ಳುವವರು ತಮ್ಮ ನಿಲುವಿನಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದರಿಂದ, ಈ ಕೆಲಸವನ್ನು ದೊಡ್ಡವರಿಗಿಂತ ಚಿಕ್ಕವರು ಹೆಚ್ಚು ಸುಳುವಾಗಿ ಮಾಡಬಲ್ಲರು.
ಚಿಕ್ಕ ಮಕ್ಕಳು ಎರಡನೇ ನುಡಿಯನ್ನು ಕಲಿಯುತ್ತಿರುವಾಗ ತಪ್ಪು ಮಾಡಲು ಹೆದರುವುದಿಲ್ಲ. ಹಾಗಾಗಿ, ಅವರಿಗೆ ಕಲಿಕೆಯಲ್ಲಿ ಬೇಗನೆ ಮುಂದೆ ಹೋಗಲು ಬರುತ್ತದೆ. ಆದರೆ, ದೊಡ್ಡವರು ತಪ್ಪು ಮಾಡಿದರೆ ಯಾರಾದರೂ ನಗಬಹುದು ಎಂಬುದಾಗಿ ಹೆದರುತ್ತಿರುತ್ತಾರೆ. ಅವರಿಗೆ ಕಲಿಸುವವರು ಅವರಿಗಿಂತ ಚಿಕ್ಕವರಾಗಿದ್ದರೆ, ಅವರು ತಪ್ಪು ಮಾಡಲು ಇನ್ನಶ್ಟು ಹೆದರುತ್ತಾರೆ. ಈ ಹೆದರಿಕೆಯೇ ಅವರನ್ನು ಕಲಿಕೆಯಲ್ಲಿ ಹಿಂದೆ ಬೀಳುವ ಹಾಗೆ ಮಾಡುತ್ತದೆ.
7.2 ಎರಡನೇ ನುಡಿಯಾಗಿ ಇಂಗ್ಲಿಶ್ನ ಕಲಿಕೆ
ಇಂಗ್ಲಿಶ್ ನುಡಿಯನ್ನು (ಇಲ್ಲವೇ ಹಿಂದಿ, ಫ್ರೆಂಚ್, ಜರ್ಮನ್ನಂತಹ ಬೇರೊಂದು ನುಡಿಯನ್ನು) ಕಲಿಯುತ್ತಿರುವ ಕನ್ನಡದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಕನ್ನಡದ
ಸೊಲ್ಲರಿಮೆಯಿಂದ ನೆರವೇನಾದರೂ ದೊರಕಬಲ್ಲುದೇ ಎಂಬುದನ್ನು ಕೆಳಗೆ (7.2-5)ರಲ್ಲಿ ಒರೆದು ನೋಡಲಾಗಿದೆ.
7.2.1 ತಾಯ್ನುಡಿಯನ್ನು ಕಲಿಕೆಯಿಂದ ಹೊರಗಿಡುವುದು
ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಎರಡನೇ ನುಡಿಯಾಗಿ ಕಲಿಸುತ್ತಿರುವಾಗ ಮಕ್ಕಳ ತಾಯ್ನುಡಿಯನ್ನು ಬಳಸಬಹುದೇ ಇಲ್ಲವೇ ಬಳಸಬೇಕೇ ಎಂಬ ವಿಶಯ ದಲ್ಲಿ ಇತ್ತೀಚೆಗೆ ತುಂಬಾ ಚರ್ಚೆಗಳು ನಡೆಯುತ್ತಿವೆ; ಆದರೆ, ಇವತ್ತು ಹೆಚ್ಚಿನ ಅರಿವಿಗರೂ ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬಳಕೆ ಹಲವು ಬಗೆಯಲ್ಲಿ ನೆರವಾಗಬಲ್ಲುದು ಎಂಬುದನ್ನು ಒಪ್ಪುವ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಮೊದಲು, ಇಂಗ್ಲಿಶ್ ತರಗತಿಗಳಲ್ಲಿ ತಾಯ್ನುಡಿಯನ್ನು ಬಳಸಲೇ ಕೂಡದು ಎಂಬ ಕಟ್ಟಲೆಯೊಂದು ಕಳೆದ ಶತಮಾನದಲ್ಲಿ ಬೆಳೆದುಬಂದಿತ್ತು. ತಾಯ್ನುಡಿಯನ್ನು ಬಳಸಿದಲ್ಲಿ ಅದು ಇಂಗ್ಲಿಶ್ ಕಲಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆಯೆಂಬ ತಪ್ಪು ತಿಳಿವಳಿಕೆ ಇದಕ್ಕೆ ಮುಕ್ಯವಾದ ಕಾರಣವಾಗಿತ್ತು. ಇದಲ್ಲದೆ, ಮಕ್ಕಳು ಯಾವಾಗಲೂ ಇಂಗ್ಲಿಶ್ ನುಡಿಯನ್ನೇ ಕೇಳುತ್ತಿದ್ದಲ್ಲಿ, ಮತ್ತು ಬೇರೆ ಯಾವ ನುಡಿಯನ್ನೂ ಕೇಳದಿದ್ದಲ್ಲಿ, ಅವರಿಗೆ ಇಂಗ್ಲಿಶ್ನಲ್ಲಿ ತುಂಬಾ ಚನ್ನಾಗಿ ಮತ್ತು ಬಹಳ ಬೇಗನೆ ಮಾತನಾಡಲು ಬಂದೀತೆಂಬ ಅನಿಸಿಕೆಯೂ ಇದಕ್ಕೆ ಕಾರಣವಾಗಿತ್ತು.
ಇಂಗ್ಲಿಶ್ ನುಡಿಯನ್ನು ಕಲಿಕೆಯ ನುಡಿಯಾಗಿ ಬಳಸುವ ಕೆಲವು ಶಾಲೆಗಳ ಲ್ಲಂತೂ ಮಕ್ಕಳು ಶಾಲೆಯೊಳಗೆ ತಮ್ಮ ತಾಯ್ನುಡಿಯನ್ನು ಬಳಸುವುದೇ ಅಪರಾದವೆಂಬುದಾಗಿ ಇವತ್ತಿಗೂ ಪರಿಗಣಿಸಲಾಗುತ್ತಿದೆ.
ನಿಜಕ್ಕೂ ಇದು ಮಕ್ಕಳ ಇಲ್ಲವೇ ದೊಡ್ಡವರ ಕಲಿಕೆ ಹೇಗೆ ಸಾಗುತ್ತದೆ ಎಂಬುದನ್ನು ಅರಿಯದೆ ಮಾಡಿರುವಂತಹ ಕಟ್ಟಲೆ. ಯಾರೇ ಆಗಲಿ, ತಮ್ಮಲ್ಲಿರುವ ತಿಳುವಳಿಕೆಯ ತಳಹದಿಯ ಮೇಲೆ ಹೊಸ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ. ಶಾಲೆಗೆ ಬರುವ ಮೊದಲೇ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಚನ್ನಾಗಿ ಮಾತನಾಡಲು ಕಲಿತಿರುತ್ತಾರೆ. ತಮ್ಮ ಅನಿಸಿಕೆಗಳನ್ನು ಆ ನುಡಿಯಲ್ಲಿ ತಿಳಿಸುವುದು ಹೇಗೆ, ಮತ್ತು ಅದರಲ್ಲಿ ಬೇರೆಯವರು ಹೇಳಿದುದನ್ನು ಕೇಳಿ ತಿಳಿಯುವುದು ಹೇಗೆ ಎಂಬುದನ್ನು ಅವರು ಚನ್ನಾಗಿ ತಿಳಿದಿರುತ್ತಾರೆ. ಅವರ ಆಲೋಚನೆಗಳೆಲ್ಲವೂ ಆ ನುಡಿಯಲ್ಲಿಯೇ ನಡೆಯುತ್ತಿರುತ್ತವೆ.
ಹಾಗಿರುವಾಗ, ಮಕ್ಕಳು ಶಾಲೆಯಲ್ಲಿ ಹೊಸ ನುಡಿಯೊಂದನ್ನು ಕಲಿಯ ಬೇಕಿದ್ದಲ್ಲಿ, ಅದನ್ನು ಅವರು ಅದಕ್ಕೆ ಮೊದಲೇ ಕಲಿತುಕೊಂಡಿದ್ದ ತಾಯ್ನುಡಿಯ ಮೂಲಕವೇನೇ ಕಲಿಯಬೇಕು. ಇದಲ್ಲದೆ, ನುಡಿಯ ಸ್ವರೂಪವೆಂತಹದು ಎಂಬುದನ್ನು ಶಾಲೆಗೆ ಸೇರುವ ಮೊದಲೇನೇ ಅವರಿಗೆ ತಾಯ್ನುಡಿಯ ಕಲಿಕೆ ತಿಳಿಸಿಕೊಟ್ಟಿದೆ. ಉಲಿಗಳನ್ನು ಬಳಸಿ ಪದಗಳನ್ನು ಉಂಟುಮಾಡುವುದು ಹೇಗೆ, ಅವನ್ನು ಬಳಸಿ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಅವು ಹುರುಳುಗಳನ್ನು ಹೇಗೆ ಸೂಚಿಸಬಲ್ಲುವು ಎಂಬುದನ್ನೆಲ್ಲ ಅವರು ಅದಕ್ಕೆ ಮೊದಲೇ ತಮ್ಮ ತಾಯ್ನುಡಿಯ ಕಲಿಕೆಯ ಮೂಲಕ ತಿಳಿದಿರುತ್ತಾರೆ. ಅವರು ಕಲಿಯಬೇಕಾಗಿರುವ ಹೊಸ ನುಡಿಯಲ್ಲಿ (ಇಂಗ್ಲಿಶ್ನಲ್ಲಿ) ಇದನ್ನೇ ಬೇರೊಂದು ಬಗೆಯಲ್ಲಿ ನಡೆಸಲಾಗುತ್ತದೆ. ಈ ಬಗೆ ಎಂತಹದು ಎಂಬುದನ್ನು ಅವರು ಗಮನಿಸುವ ಹಾಗೆ ಮಾಡುವ ಮೂಲಕ, ಅದನ್ನು ಕಲಿಯಲು ತೊಡಗಿಸು ವುದೇ ಸರಿಯಾದ ಮತ್ತು ಸುಳುವಾದ ದಾರಿ. ಈ ರೀತಿ ತಾಯ್ನುಡಿಯ ಮೂಲಕ ಹೊಸ ನುಡಿಯನ್ನು ಕಲಿಸಹೊರಟಲ್ಲಿ, ಮಕ್ಕಳಿಗೆ ನೆಮ್ಮದಿಯ ಕಲಿಕೆ ದೊರಕುತ್ತದೆ, ಮತ್ತು ಹೊಸ ನುಡಿಯಲ್ಲಿ ಅಂಜದೆ ಮಾತು ಕಲಿಯಲು ಬರುತ್ತದೆ.
ಇದಕ್ಕೆ ಬದಲು, ತಾಯ್ನುಡಿಯನ್ನು ಶಾಲೆಯಲ್ಲಿ ಬಳಸಲೇ ಕೂಡದೆಂಬ ಕಟ್ಟಲೆಯನ್ನು ಮಾಡಿದಲ್ಲಿ, ಕಲಿಕೆಯಲ್ಲಿ ಅವರು ಬಳಸಬಲ್ಲ ಒಂದು ಅಮೂಲ್ಯ ವಾದ ಸಾದನವನ್ನು ಅವರಿಂದ ಕಿತ್ತುಕೊಂಡಹಾಗಾಗುತ್ತದೆ, ಮತ್ತು ತಾಯ್ನುಡಿಯ ಕುರಿತಾಗಿ ಅವರಲ್ಲಿ ಕೀಳರಿಮೆಯನ್ನು ಉಂಟುಮಾಡಿದ ಹಾಗಾಗುತ್ತದೆ. ಇದರಿಂದಾಗಿ, ಹಲವು ಮಕ್ಕಳಿಗೆ ತಮ್ಮ ತನ್ನತನವನ್ನೇ ಕಳೆದುಕೊಂಡ ಹಾಗೆಯೂ ಆಗುತ್ತದೆ.
ನಿಜಕ್ಕೂ ಮಕ್ಕಳು ತಮ್ಮ ಎರಡನೇ ನುಡಿಯನ್ನು ಮೊದಲನೇ ನುಡಿಯ ತಳಹದಿಯ ಮೇಲೇನೇ ಕಲಿಯುತ್ತಾರೆ. ತರಗತಿಯಲ್ಲಿ ತಾಯ್ನುಡಿಯನ್ನು ಬಳಸಬಾರದೆಂಬ ಕಟ್ಟಲೆಯನ್ನು ಮಾಡಿದರೂ ಅವರು ಕಲಿಯುತ್ತಿರುವಾಗ ಮನಸ್ಸಿನಲ್ಲಿ ಇಲ್ಲವೇ ಮಿದುಳಿನಲ್ಲಿ ತಾಯ್ನುಡಿಯನ್ನು ಬಳಸದಿರುವುದಿಲ್ಲ. ಯಾಕೆಂದರೆ, ಹಾಗೆ ಬಳಸದಿರಲು ಅವರಿಗೆ ಸಾದ್ಯವೇ ಇಲ್ಲ! ಹಾಗಾಗಿ, ಅವರ ತಾಯ್ನುಡಿಯನ್ನು ಮನಸ್ಸಿನಲ್ಲಿ ಮಾತ್ರವೇ ಬಳಸಲಾಗುತ್ತಿದೆಯೋ ಇಲ್ಲವೇ ಹೊರಗೂ ಬಳಸಲಾಗುತ್ತಿದೆಯೋ ಎಂಬುದೇ ಇಲ್ಲಿರುವ ವ್ಯತ್ಯಾಸ. ಪದ ಮತ್ತು ಸೊಲ್ಲುಗಳಿಗೂ ಅವುಗಳ ಹುರುಳಿಗೂ ನಡುವಿರುವ ಪತ್ತುಗೆ(ಸಂಬಂದ)ಯನ್ನು ತಿಳಿದುಕೊಂಡು, ಅದನ್ನು ನೆನಪಿನಲ್ಲಿ
ಉಳಿಸಿಕೊಳ್ಳುವ ಕೆಲಸ ಮಕ್ಕಳ ಮಿದುಳಿನ ಒಂದು ಕಡೆಯಲ್ಲಿ ಮಾತ್ರ ನಡೆಯುತ್ತದೆ. ಹೊಸದೊಂದು ನುಡಿಯನ್ನು ಕಲಿಯುವ ಮಕ್ಕಳಲ್ಲೂ ಈ ಕೆಲಸ ಅದೇ ಜಾಗದಲ್ಲಿ, ಎಂದರೆ ಅವರು ತಮ್ಮ ತಾಯ್ನುಡಿಯನ್ನು ಕಲಿಯು ತ್ತಿರುವಾಗ ಬಳಸಿದ ಜಾಗದಲ್ಲೇ ನಡೆಯುತ್ತದೆ. ಎರಡನೇ ನುಡಿಯನ್ನು ಎಂಟು-ಹತ್ತು ವರ್ಶ ದಾಟಿದ ಮಕ್ಕಳು ಕಲಿಯುತ್ತಿರುವಾಗಲೂ ಅವರ ಮಿದುಳಿನಲ್ಲಿ ಈ ಕೆಲಸವನ್ನು ನಡೆಸಲು ಬೇರೆ ಹೊಸ ಜಾಗ ಬಳಕೆಗೆ ಬರುವುದಿಲ್ಲ. ಎಂದರೆ, ತಾಯ್ನುಡಿಯ ತಿಳಿವಿಗೆ ಸಂಬಂದಿಸಿದ ಹಾಗೇನೇ ಅವರ ಎರಡನೇ ನುಡಿಯ ತಿಳಿವು ಮಿದುಳಿನಲ್ಲಿ ನೆಲೆಗೊಳ್ಳುತ್ತದೆ.
7.2.2 ಕಟ್ಟಳೆಯ ಮೂಲ
ಸುಮಾರು ಎರಡು ಸಾವಿರ ವರ್ಶಗಳಿಂದಲೂ ಮಕ್ಕಳಿಗೆ (ಇಲ್ಲವೆ ದೊಡ್ದವರಿಗೆ) ಎರಡನೇ ನುಡಿಯನ್ನು ತಾಯ್ನುಡಿಯ ತಳಹದಿಯ ಮೇಲೇನೇ ಕಲಿಸಲಾಗು ತ್ತಿತ್ತು. ಎತ್ತುಗೆಗಾಗಿ, ಲ್ಯಾಟಿನ್, ಗ್ರೀಕ್ ಮೊದಲಾದ ನುಡಿಗಳನ್ನು ಕಲಿಸುವವರು ಅವುಗಳ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳನ್ನು ಮತ್ತು ಅವುಗಳ ಪದ, ಪದಕಂತೆ, ಸೊಲ್ಲು ಮೊದಲಾದವುಗಳ ಹುರುಳುಗಳನ್ನು ತಾಯ್ನುಡಿ ಯಲ್ಲೇನೇ ಕಲಿಸುತ್ತಿದ್ದರು. ನಮ್ಮ ದೇಶದಲ್ಲಿ ಸಂಸ್ಕ್ರುತದ ಕಲಿಕೆಯೂ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ನಡೆಯುತ್ತಿತ್ತು.
ಈ ಹೊಲಬನ್ನು (ಪದ್ದತಿಯನ್ನು) ಬಿಟ್ಟುಕೊಟ್ಟು, ಹಲವು ಬಗೆಯ ಹೊಸ ಹೊಲಬುಗಳನ್ನು ಮುಕ್ಯವಾಗಿ ಇಪ್ಪತ್ತನೇ ಶತಮಾನದಲ್ಲಿ ಬಳಕೆಗೆ ತರಲಾಯಿತು. ಇವುಗಳಲ್ಲಿ ಹೆಚ್ಚಿನವನ್ನೂ ಇಂಗ್ಲಿಶ್, ಜರ್ಮನ್, ಫ್ರಂಚ್ ಮೊದಲಾದ ನುಡಿಗಳನ್ನು ಯುರೋಪಿನಲ್ಲಿ ಬೇರೆ ನುಡಿಗಳನ್ನಾಡುವವರಿಗೆ ಅವರ ಎರಡನೇ ನುಡಿಯಾಗಿ ಕಲಿಸುವಲ್ಲಿ ಬಳಕೆಗೆ ತರಲಾಯಿತು. ಈ ಎರಡನೇ ನುಡಿಯ ತರಗತಿಗಳಲ್ಲಿ ಹಲವು ನುಡಿಗಳನ್ನು ತಾಯ್ನುಡಿಯಾಗಿ ಬಳಸುವ ಕಲಿಗರಿದ್ದರಾದ ಕಾರಣ, ಮತ್ತು ಅವರಿಗೆ ಎರಡನೇ ನುಡಿಯನ್ನು ಕಲಿಸುವವರು ಅವುಗಳಲ್ಲಿ ಹೆಚ್ಚೆಂದರೆ ಒಂದೆರಡನ್ನು ಮಾತ್ರವೇ ತಿಳಿದಿದ್ದರಾದ ಕಾರಣ, ಕಲಿಕೆಯಿಂದ ತಾಯ್ನುಡಿಯನ್ನು ಹೊರಗಿರಿಸುವುದೇ ಅವರಿಗೆ (ಕಲಿಸುವವರಿಗೆ, ಕಲಿಯುವವರಿಗಲ್ಲ!) ಅನುಕೂಲವಾದ ಹೊಲಬಾಗಿತ್ತು. ಹಾಗಾಗಿ, ಇಪ್ಪತ್ತನೇ ಶತಮಾನದಲ್ಲಿ ಬಳಕೆಗೆ ಬಂದಿದ್ದ ಹೆಚ್ಚಿನ ಹೊಲಬು ಗಳಲ್ಲೂ ತಾಯ್ನುಡಿಯ ಬಳಕೆಯನ್ನು ಎರಡನೇ ನುಡಿಯ ಕಲಿಕೆಯಿಂದ ದೂರ ಇರಿಸಲಾಯಿತು. ಆದರೆ, ತರಗತಿಯ ಮಕ್ಕಳೆಲ್ಲರೂ ಒಂದೇ ತಾಯ್ನುಡಿಯನ್ನು
ಪಡೆದಿರುವ ಇಲ್ಲವೇ ಒಂದೇ ನುಡಿಯನ್ನು ತಿಳಿದಿರುವ ನಮ್ಮಲ್ಲಿನ ಇಂಗ್ಲಿಶ್ ತರಗತಿಗಳಲ್ಲೂ ಇದೇ ಹೊಲಬನ್ನು ಅನುಸರಿಸುತ್ತಿರುವುದು ಮಾತ್ರ ತೀರ ವಿಚಿತ್ರವಾಗಿದೆ. ಅದು ಮೇಲಿನ ಹೊಲಬುಗಳ ಕುರುಡು ಅನುಕರಣೆಯಾಗಿದೆ. ಮೊದಲನೇ ನುಡಿಯನ್ನು ಬಳಸದೆ ಎರಡನೇ ನುಡಿಯನ್ನು ನೇರವಾಗಿ ಕಲಿಸತೊಡಗಿದಾಗ, ಕೆಲವು ಮಕ್ಕಳಿಗೆ ಹೆಚ್ಚು ತೊಂದರೆಯಾಗುವುದಿಲ್ಲ. ಅವರು ಸುಳುವಾಗಿ ಕಲಿಕೆಯಲ್ಲಿ ಮುಂದೆ ಹೋಗುತ್ತಾರೆ. ಆದರೆ ಬೇರೆ ಕೆಲವು ಮಕ್ಕಳಿಗೆ ಇದು ತುಂಬಾ ತೊಡಕಿನ ಕೆಲಸವೆಂದೆನಿಸುತ್ತದೆ. ಹಾಗಾಗಿ, ಅವರು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ.
ಅಂತಹ ಮಕ್ಕಳಿಗೆ ಕಲಿಕೆಯ ಮೊದಲ ಹಂತಗಳಲ್ಲಿ ತಾಯ್ನುಡಿಯ ನೆರವನ್ನು ಕೊಟ್ಟಲ್ಲಿ, ಅವರು ಬೇಗನೆ ಕಲಿಕೆಯಲ್ಲಿ ಮುಂದೆ ಹೋಗಬಲ್ಲರು. ಆಮೇಲೆ, ಹಾಗೆ ಮುಂದೆ ಹೋಗುತ್ತಿದ್ದಂತೆ, ತಾಯ್ನುಡಿಯ ನೆರವನ್ನು ಕಡಿಮೆ ಮಾಡುತ್ತಾ ಹೋಗಬಹುದು.
ಇಂಗ್ಲಿಶ್ ಪದಗಳ ಹುರುಳನ್ನು ತಿಳಿಸುವಲ್ಲಿ, ಅದರ ಸೊಲ್ಲರಿಮೆಯ ಕಟ್ಟಲೆಗಳನ್ನು ವಿವರಿಸಿ ಹೇಳುವಲ್ಲಿ, ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ತೊಡಕು ಗಳೇನಾದರೂ ಇದ್ದಲ್ಲಿ ಅವು ಎಂತಹವು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವರ ತಾಯ್ನುಡಿ ನೆರವಿಗೆ ಬರಬಲ್ಲುದು. ನಿಜಕ್ಕೂ ಇಂತಹ ಕಡೆಗಳಲ್ಲಿ ಹಲವು ಮಂದಿ ಕಲಿಸುಗರು ಇವತ್ತೂ ತರಗತಿಗಳಲ್ಲಿ ಮಕ್ಕಳ ತಾಯ್ನುಡಿಯನ್ನು ಬಳಸುತ್ತಿರುತ್ತಾರೆ; ಆದರೆ, ಹಾಗೆ ಬಳಸುತ್ತಿರುವಾಗ ತಾವೇನೋ ಒಂದು ದೊಡ್ಡ ತಪ್ಪನ್ನು ಮಾಡುತ್ತಿದ್ದೇವೆ ಎಂಬ ಅನಿಸಿಕೆ ಅವರಲ್ಲಿರುತ್ತದೆ.
ಇಂಗ್ಲಿಶ್ ತರಗತಿಗಳಲ್ಲಿ ತಾಯ್ನುಡಿಯನ್ನು ಬಳಸಲೇಬಾರದೆಂಬ ಕಟ್ಟಲೆ ಯನ್ನು ತೆಗೆದು ಹಾಕಿದಲ್ಲಿ, ಇಂತಹ ತಪ್ಪನಿಸಿಕೆ ಕಲಿಸುವವರಲ್ಲಿ ಇಲ್ಲವಾಗು ತ್ತದೆ, ಮತ್ತು ಕಲಿಯುವ ಮಕ್ಕಳಿಗೂ ತಮ್ಮ ಮನಸ್ಸಿನೊಳಗೇನೇ ನಡೆಸುತ್ತಿದ್ದ ಕೆಲಸವನ್ನು ಹೊರಗೆ ತರಗತಿಯಲ್ಲೂ ಹೆದರಿಕೆಯಿಲ್ಲದೆ ನಡೆಸಲು ಬರುತ್ತದೆ. ಇದರಿಂದಾಗಿ ಅವರಿಗೆ ತಮ್ಮ ತಾಯ್ನುಡಿಯ ಮೇಲೆ ಕೀಳರಿಮೆಯೂ ಬೆಳೆಯುವುದಿಲ್ಲ.
7.2.3 ತಾಯ್ನುಡಿಯ ಸೊಲ್ಲರಿಮೆಯ ಬಳಕೆ
ಎರಡನೇ ಮಹಾಯುದ್ದದ ಸಮಯದಲ್ಲಿ ಅಮೆರಿಕಾದ ಪಡೆಯಾಳುಗಳಿಗೆ ರಶ್ಯನ್, ಜಪಾನೀಸ್, ಜರ್ಮನ್ ಮೊದಲಾದ ಹೊರನಾಡಿನ ನುಡಿಗಳನ್ನು
ಬಹಳ ಬೇಗನೆ, ಎಂದರೆ ಕೆಲವೇ ಕೆಲವು ವಾರಗಳಲ್ಲಿ ಕಲಿಸುವುದಕ್ಕಾಗಿ ನುಡಿಯರಿಗರ (ಬಾಶಾವಿಜ್ನಾನಿಗಳ) ಮೊರೆಹೊಗಲಾಯಿತು. ಈ ಕೆಲಸವನ್ನು ನಡೆಸುವುದಕ್ಕಾಗಿ ಅವರು ಆ ನುಡಿಗಳಲ್ಲಿ ಬಳಕೆಯಾಗುವ ಹಲವಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಕಂಡುಹಿಡಿದರು, ಮತ್ತು ಅವನ್ನು ನುಡಿಗಳ ಕಲಿಸುವಿಕೆಯಲ್ಲಿ ತುಂಬಾ ಚೆನ್ನಾಗಿ ಬಳಸಲು ಕಲಿತರು.
ಇಂತಹ ಕಲಿಸುವಿಕೆಯಲ್ಲಿ ಇಂಗ್ಲಿಶ್ ನುಡಿಯ (ತಾಯ್ನುಡಿಯ) ಸೊಲ್ಲರಿಮೆಗೂ ಕಲಿಸಬೇಕಾಗಿರುವ ಎರಡನೇ ನುಡಿಯ ಸೊಲ್ಲರಿಮೆಗೂ ನಡುವಿರುವ ವ್ಯತ್ಯಾಸಗಳನ್ನು ಬಳಸಿಕೊಂಡಲ್ಲಿ ಕಲಿಕೆ ಇನ್ನಶ್ಟು ವೇಗವಾಗಿ ಸಾಗುತ್ತದೆ ಎಂಬುದನ್ನು ಅವರು ಕಂಡುಕೊಂಡರು, ಮತ್ತು ಅದಕ್ಕಾಗಿ ಎರಡೆರಡು ನುಡಿಗಳ ಸೊಲ್ಲರಿಮೆಗಳನ್ನು ಹೋಲಿಸಿ ತೋರಿಸುವಂತಹ ಹೋಲಿಕೆಯ ಸೊಲ್ಲರಿಮೆಗಳನ್ನು ತಯಾರಿಸತೊಡಗಿದರು. ಆಮೇಲೆ, ಇಂತಹ ಸೊಲ್ಲರಿಮೆಗಳನ್ನು ಹಲವಾರು ನುಡಿಜೋಡಿಗಳಿಗಾಗಿ ತಯಾರಿಸ ಲಾಯಿತು, ಮತ್ತು ಅವುಗಳ ಮೇಲೆ ಹಲವು ಪುಸ್ತಕಗಳನ್ನೂ ಹೊರತರ ಲಾಯಿತು.
ಆದರೆ ಆಮೇಲೆ, ನುಡಿಗಳ ಸೊಲ್ಲರಿಮೆಯ ಕುರಿತಾಗಿ ಚೊಮ್ಸ್ಕೀ ಅವರ ಸಿದ್ದಾಂತಗಳು ಮಂದಿಮೆಚ್ಚುಗೆ ಪಡೆದಾಗ, ಅದಕ್ಕೆ ಹಿಂದೆ ನಡೆದಿದ್ದ ಹಲವಾರು ಅರಕೆಗಳು ಮೂಲೆಗುಂಪಾದುವು. ಇದಕ್ಕೆ ಕಾರಣವೇನೆಂದರೆ, ಆ ಅರಕೆಗಳೆಲ್ಲ ಮುಕ್ಯವಾಗಿ ಮನುಶ್ಯನ ನಡವಳಿಕೆಯ ಮೇಲೆ (ಅವನು ಎಂತಹ ಸೊಲ್ಲುಗಳನ್ನು ನುಡಿಯುತ್ತಾನೆ ಎಂಬುದರ ಮೇಲೆ) ಅವಲಂಬಿಸಿದ್ದುವು. ನುಡಿಯ ಮೇಲಿನ ಅರಕೆಗೆ ಮನುಶ್ಯನ ನಡವಳಿಕೆಗಿಂತಲೂ ಆತನ ಒಳಗಿನ (ಮನಸ್ಸಿನ) ಅರಿಮೆಯೇ ಆದಾರವಾಗಿರಬೇಕೆಂಬುದಾಗಿ ಚೊಮ್ಸ್ಕೀ ತೋರಿಸಿಕೊಟ್ಟಿದ್ದರು. ಇದರಿಂದಾಗಿ, ಮನುಶ್ಯರ ನಡವಳಿಕೆಯ ಮೇಲೆ ಅವಲಂಬಿಸಿದ್ದ ನುಡಿ ಯರಿಮೆಯ (ಮತ್ತು ಸೊಲ್ಲರಿಮೆಯ) ಸಿದ್ದಾಂತಗಳೆಲ್ಲವೂ ಮಂದಿಮೆಚ್ಚುಗೆ ಯನ್ನು ಕಳೆದುಕೊಂಡುವು.
ಈ ರೀತಿ ಮೂಲೆಗುಂಪಾದವುಗಳಲ್ಲಿ ಎರಡನೇ ನುಡಿಯ ಕಲಿಸುವಿಕೆಯಲ್ಲಿ ಸಾಕಶ್ಟು ಪರಿಣಾಮಕಾರಿಯಾಗಿದ್ದ ಮೇಲೆ ವಿವರಿಸಿದಂತಹ ಹೋಲಿಕೆಯ ಸೊಲ್ಲರಿಮೆಗಳೂ ಸೇರಿದ್ದುವು.
ಇದೇ ಸಮಯದಲ್ಲಿ, ಮಕ್ಕಳು ಮೊದಲನೇ ನುಡಿಯನ್ನು (ತಾಯ್ನುಡಿಯನ್ನು) ಕಲಿಯುವ ಹಾಗೆಯೇ ಎರಡನೇ ನುಡಿಯನ್ನೂ ತಾವಾಗಿಯೇ ಕಲಿಯಬಲ್ಲರು; ಹಾಗಾಗಿ, ಮೊದಲನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳ ಹಾಗೆ ಎರಡನೇ
ನುಡಿಯನ್ನು ಕಲಿಯುವವರೂ ಆ ಒಂದು ನುಡಿಯನ್ನು ಮಾತ್ರವೇ ಯಾವಾಗಲೂ ಕೇಳುತ್ತಿರುವ ಹಾಗೆ ಮತ್ತು ಓದುತ್ತಿರುವ ಹಾಗೆ ಮಾಡಿದಲ್ಲಿ, ಮೊದಲನೇ ನುಡಿಯನ್ನು ಕಲಿತಶ್ಟೇ ವೇಗದಲ್ಲಿ ಅವರು ಎರಡನೆಯದನ್ನೂ ತಾವಾಗಿಯೇ ಕಲಿತಾರು; ಅವರಿಗೆ ಸೊಲ್ಲರಿಮೆಯನ್ನು ಕಲಿಸಬೇಕಾಗಿಯೇ ಇಲ್ಲ ಎಂಬುದಾಗಿ ವಾದಿಸಲಾಯಿತು.
ಆದರೆ ಮೇಲೆ ಸೂಚಿಸಿದ ಹಾಗೆ, ಇತ್ತೀಚೆಗೆ ನಡೆಸಿದ ಅರಕೆಗಳು ಈ ವಾದ ತಪ್ಪಾದುದು ಎಂಬುದನ್ನು ತೋರಿಸಿಕೊಟ್ಟಿವೆ. ನಿಜಕ್ಕೂ ಎರಡನೇ ನುಡಿಯ ಕಲಿಕೆ ಮೊದಲನೇ ನುಡಿಯ ಕಲಿಕೆಯ ಹಾಗೆ ನಡೆಯಲು ಸಾದ್ಯವೇ ಇಲ್ಲ. ಯಾಕೆಂದರೆ, ಮೊದಲನೇ ನುಡಿಯನ್ನು ಕಲಿಯುವ ಸಮಯದಲ್ಲಿ ಮಕ್ಕಳ ಮಿದುಳು ನುಡಿಯ ಮಟ್ಟಿಗೆ ಬರಿದಾಗಿರುತ್ತದೆ. ಅಂತಹ ಬರಿದಾಗಿರುವ ಮಿದುಳಿನಲ್ಲಿ ಅವರು ಒಂದು ನುಡಿಯನ್ನು ಹೊಸದಾಗಿ ಮೂಡಿಸಿಕೊಳ್ಳ ಬೇಕಾಗಿದೆ.
ಇದಕ್ಕೆ ಬದಲು, ಎರಡನೇ ನುಡಿಯನ್ನು ಕಲಿಯುವ ಸಮಯದಲ್ಲಿ ಅವರ ಮಿದುಳು ಆ ರೀತಿ ಬರಿದಾಗಿರುವುದಿಲ್ಲ. ಅದರಲ್ಲಿ ಮೊದಲನೇ ನುಡಿ ನೆಲೆನಿಂತಿರುತ್ತದೆ. ಹಾಗಾಗಿ, ಎರಡನೇ ನುಡಿಯನ್ನು ಕಲಿಯಹೊರಡುವ ಮಕ್ಕಳಲ್ಲಿರುವ ಈ ಅಮೂಲ್ಯವಾದ ಸಾದನವನ್ನು ಬಳಸದೆ ಎರಡನೆಯ ನುಡಿಯನ್ನು ಕಲಿಯುವ ಹಾಗೆ ಅವರನ್ನು ಒತ್ತಾಯಿಸುವುದು ನಿಜಕ್ಕೂ ಪೆದ್ದುತನವಲ್ಲದೆ ಬೇರೇನಲ್ಲ.
ಇದಲ್ಲದೆ, ಮಕ್ಕಳ ತಾಯ್ನುಡಿಯ ಸೊಲ್ಲರಿಮೆಗೂ ಅವರು ಕಲಿಯುತ್ತಿರುವ ಎರಡನೇ ನುಡಿಯ ಸೊಲ್ಲರಿಮೆಗೂ ನಡುವೆ ಇರುವ ಮುಕ್ಯ ವ್ಯತ್ಯಾಸಗಳನ್ನು ಅವರ ಗಮನಕ್ಕೆ ತಂದಲ್ಲಿ, ಅವರ ಕಲಿಕೆ ಬೇಗನೆ ಮುಂದೆ ಸಾಗುತ್ತದೆ ಎಂಬುದನ್ನು ಇತ್ತೀಚೆಗಿನ ಕೆಲವು ಅರಕೆಗಳು ತೋರಿಸಿಕೊಟ್ಟಿವೆ. ಕೆಲವು ಮಕ್ಕಳು ಇಂತಹ ಸೊಲ್ಲರಿಮೆಯ ತಿಳುವಳಿಕೆಯನ್ನು ಕೊಡಿಸದಿದ್ದರೂ ಕಲಿಕೆಯಲ್ಲಿ ಮುಂದೆ ಹೋಗಬಲ್ಲರು. ಆದರೆ, ಕಲಿಕೆಯಲ್ಲಿ ಹಿಂದೆ ಬೀಳುವ ಬೇರೆ ಕೆಲವು ಮಕ್ಕಳಿಗೆ ಸೊಲ್ಲರಿಮೆಯ ತಿಳಿವನ್ನು ಕೊಡಿಸಿದಲ್ಲಿ ಅವರೂ ಮುಂದೆ ಹೋಗಬಲ್ಲರು.
7.2.4 ಕಲಿಕೆಯ ತಪ್ಪುಗಳು
ಎರಡನೇ ನುಡಿಯ ಕಲಿಕೆಯಿಂದ ಮೊದಲನೇ ನುಡಿಯನ್ನು ದೂರ ಇರಿಸಬೇಕೆಂದು ಹೇಳುವುದಕ್ಕೆ ಇನ್ನೊಂದು ಕಾರಣವನ್ನೂ ಕೊಡಲಾಗುತ್ತದೆ.
ಅದೇನೆಂದರೆ, ಎರಡನೇ ನುಡಿಯ ಕಲಿಕೆಯಲ್ಲಿ ಮಕ್ಕಳ ಮೊದಲನೇ ನುಡಿ ತಲೆಹಾಕುತ್ತದೆ; ಎರಡನೇ ನುಡಿಯಲ್ಲಿ ಸೊಲ್ಲುಗಳನ್ನು ಕಟ್ಟುವಾಗ, ಅದರ ಕಟ್ಟಲೆಗಳನ್ನು ಬಳಸುವ ಬದಲು, ಮಕ್ಕಳು ತಮ್ಮ ಮೊದಲನೇ ನುಡಿಯ ಕಟ್ಟಲೆಗಳನ್ನು ಬಳಸಹೋಗುತ್ತಾರೆ. ಇದರಿಂದಾಗಿ ಅವರ ಕಲಿಕೆಯಲ್ಲಿ ತಪ್ಪುಗಳು ತಲೆಹಾಕುತ್ತವೆ. ಇಂತಹ ತಪ್ಪುಗಳು ಬಾರದ ಹಾಗೆ ನೋಡಿ ಕೊಳ್ಳಲು, ಎರಡನೇ ನುಡಿಯನ್ನು ಕಲಿಯುವ ಸಮಯದಲ್ಲಿ ಮಕ್ಕಳ ತಾಯ್ನುಡಿಯನ್ನು ಕಲಿಕೆಯಿಂದ ದೂರ ಇರಿಸುವುದೇ ಸರಿಯಾದ ದಾರಿ ಎಂಬುದಾಗಿ ಅವರು ವಾದಿಸುತ್ತಾರೆ.
ಆದರೆ, ಎರಡನೇ ನುಡಿಯನ್ನು ಕಲಿಯುತ್ತಿರುವಾಗ ಮಕ್ಕಳು ಮಾಡುವ ತಪ್ಪುಗಳಲ್ಲಿ ಹೆಚ್ಚಿನವೂ ತಪ್ಪುಗಳೇ ಅಲ್ಲ ಎಂಬುದಾಗಿ ಇತ್ತೀಚೆಗಿನ ಅರಕೆಗಳು ತೋರಿಸಿಕೊಟ್ಟಿವೆ. ಮಕ್ಕಳು ತಮ್ಮ ಎರಡನೇ ನುಡಿಯ ಕಲಿಕೆಯನ್ನು ಹಲವು ಹಂತಗಳಲ್ಲಿ ನಡೆಸುತ್ತಾರೆ, ಮತ್ತು ಒಂದೊಂದು ಹಂತದಲ್ಲೂ ಅವರು ಅದರದೇ ಆದ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸುತ್ತಿರುತ್ತಾರೆ.
ಎರಡನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳ ಮಾತಿನಲ್ಲಿ ಕಾಣಿಸುವ ತಪ್ಪುಗಳಲ್ಲಿ ಹೆಚ್ಚಿನವೂ ಈ ರೀತಿ ಕಲಿಯಬೇಕಾಗಿರುವ ನುಡಿಗೂ ಅವರಿರುವ ಕಲಿಕೆಯ ಹಂತದ ನುಡಿಗೂ ನಡುವಿರುವ ವ್ಯತ್ಯಾಸಗಳನ್ನು ಸೂಚಿಸುತ್ತವಲ್ಲದೆ ನಿಜಕ್ಕೂ ಅವು ತಪ್ಪುಗಳಲ್ಲ. ಮಕ್ಕಳು ಕಲಿಕೆಯ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುತ್ತಿರುವಂತೆ ಈ ವ್ಯತ್ಯಾಸಗಳು ತಾವಾಗಿಯೇ ಇಲ್ಲವಾಗುತ್ತವೆ. ಇದಲ್ಲದೆ, ಅವರು ಈ ಹಂತಗಳನ್ನು ದಾಟುವ ಮೊದಲೇ ಅವಕ್ಕೆ ಸಂಬಂದಿಸಿದ ತಪ್ಪು(ವ್ಯತ್ಯಾಸ)ಗಳನ್ನು ಇಲ್ಲವಾಗಿಸಲೂ ಬರುವುದಿಲ್ಲ.
ತಾಯ್ನುಡಿಯ ಕಯ್ವಾಡದಿಂದಾಗಿಯೂ ಎರಡನೇ ನುಡಿಯ ಕಲಿಕೆಯಲ್ಲಿ ಕೆಲವು ತಪ್ಪುಗಳು ಕಾಣಿಸಿಕೊಳ್ಳಬಲ್ಲುವೇನೋ ನಿಜ. ಆದರೆ, ಇವನ್ನು ಹೋಗಲಾಡಿಸುವುದಕ್ಕಾಗಿ ತಾಯ್ನುಡಿಯನ್ನು ಕಲಿಕೆಯಿಂದ ದೂರ ಇರಿಸುವುದು ಸರಿಯಾದ ದಾರಿಯಲ್ಲ. ಸಾಮಾನ್ಯವಾಗಿ ಎರಡನೇ ನುಡಿಯನ್ನು ಕಲಿಯುವವರು ಮೊದಲಿಗೆ ತಮ್ಮ ಮೊದಲನೇ ನುಡಿಯ ಕಟ್ಟಲೆಗಳನ್ನೇ ಅದರಲ್ಲೂ ಬಳಸಲು ಹೋಗುತ್ತಾರೆ. ಆದರೆ ಆಮೇಲೆ, ಎರಡನೇ ನುಡಿಯಲ್ಲಿ ಸರಿಯಾದ ಸೊಲ್ಲುಗಳನ್ನು ಉಂಟುಮಾಡುವಲ್ಲಿ ಆ ಕಟ್ಟಲೆಗಳು ಸೋತುಹೋಗುವುದನ್ನು ಕಂಡುಕೊಂಡು, ಅದರವೇ ಆದ ಕಟ್ಟಲೆಗಳನ್ನು ಬಳಸಲು ಕಲಿಯುತ್ತಾರೆ. ಈ ಎಲ್ಲಾ ಕೆಲಸಗಳೂ ಅವರ ಮಿದುಳಿನಲ್ಲಿ ತಿಳಿವಿಗೆ ಎಟಕದ ರೂಪದಲ್ಲಿ ನಡೆಯುತ್ತಿರುತ್ತವೆ.
ಕೆಲವರಿಗೆ ಈ ಕೆಲಸವನ್ನು ತಾವಾಗಿಯೇ ಸುಳುವಾಗಿ ನಡೆಸಲು ಬರುತ್ತದೆ, ಆದರೆ ಬೇರೆ ಕೆಲವರಿಗೆ ಇದನ್ನು ತಾವಾಗಿಯೇ ನಡೆಸಲು ಬರುವುದಿಲ್ಲ. ಅಂತಹ ಮಕ್ಕಳಿಗೆ ಮೊದಲನೇ ನುಡಿಯ ಕಟ್ಟಲೆಗಳು ಎಂತಹವು, ಮತ್ತು ಎರಡನೇ ನುಡಿಯ ಕಟ್ಟಲೆಗಳು ಅವುಗಳಿಂದ ಯಾವ ರೀತಿಯಲ್ಲಿ ಬೇರಾಗಿವೆ ಎಂಬುದನ್ನು ತೋರಿಸಿಕೊಟ್ಟಲ್ಲಿ, ಈ ಕೆಲಸವನ್ನು ನಡೆಸಲು ಅವರಿಗೆ ಹೆಚ್ಚು ಸುಳುವಾಗುತ್ತದೆ ಎಂಬುದನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ.
ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯಿಂದ ತೊಂದರೆ ಮಾತ್ರವಲ್ಲದೆ ನೆರವೂ ದೊರಕುತ್ತದೆ ಎಂಬುದನ್ನೂ ಇಲ್ಲಿ ಗಮನಿಸುವುದು ಅವಶ್ಯ. ತಾಯ್ನುಡಿಯನ್ನು ಎರಡನೇ ನುಡಿಯ ಕಲಿಕೆಯಿಂದ ದೂರ ಇರಿಸಬೇಕೆಂದು ಹೇಳುವವರು ಅದರಿಂದ ಉಂಟಾಗುವ ತೊಂದರೆಯ ಕಡೆಗೆ ಮಾತ್ರವೇ ಗಮನ ಹರಿಸಿದ್ದಾರಲ್ಲದೆ, ಅದರಿಂದ ಸಿಗಬಲ್ಲ ನೆರವಿನ ಕಡೆಗೆ ಗಮನ ಹರಿಸಿಲ್ಲ. ನಿಜಕ್ಕೂ ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯನ್ನು ಬಳಸುವುದರಿಂದಾಗುವ ತೊಂದರೆಗಿಂತಲೂ ಅದನ್ನು ಕಡೆಗಣಿಸು ವುದರಿಂದಾಗುವ ತೊಂದರೆಯೇ ಹೆಚ್ಚು ಕೆಡುಕನ್ನುಂಟುಮಾಡಬಲ್ಲುದು.
7.2.5 ಓದಲು-ಬರೆಯಲು ಕಲಿಯುವುದು
ಮಕ್ಕಳಿಗೆ ಎರಡನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಹೇಗೆ ಕಲಿಸಬೇಕು ಎಂಬುದರ ಕುರಿತು ಇತ್ತೀಚೆಗೆ ಹಲವು ಅರಕೆಗಳನ್ನು ನಡೆಸಲಾಗಿದೆ. ಓದಲು ಮತ್ತು ಬರೆಯಲು ಮೊದಲಿಗೆ ಅವರ ತಾಯ್ನುಡಿಯಲ್ಲಿ ಕಲಿಸಿ, ಆಮೇಲೆ ಎರಡನೇ ನುಡಿಯಲ್ಲಿ ಕಲಿಸುವುದು ಒಳ್ಳೆಯದೇ, ಇಲ್ಲವೇ ಮೊದಲಿಗೇನೇ ನೇರವಾಗಿ ಎರಡನೆಯ ನುಡಿಯಲ್ಲಿ ಕಲಿಸುವುದು ಒಳ್ಳೆಯದೇ ಎಂಬುದು ಇಂತಹ ಅರಕೆಗಳ ಮುಂದಿದ್ದ ಒಂದು ಕೇಳ್ವಿ.
ಮಕ್ಕಳು ಎರಡನೇ ನುಡಿಗಿಂತ ತಮ್ಮ ತಾಯ್ನುಡಿಯಲ್ಲಿ ಹೆಚ್ಚು ಸುಳುವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು, ಮತ್ತು ಹಾಗೆ ಕಲಿತ ಮೇಲೆ ಆ ಕೆಲಸಗಳನ್ನು ನಡೆಸುವುದಕ್ಕಾಗಿ ತಮ್ಮ ತಾಯ್ನುಡಿಯಲ್ಲಿ ಕಲಿತಿರುವ ಚಳಕಗಳಲ್ಲಿ ಹೆಚ್ಚಿನವನ್ನೂ ಅವರು ಎರಡನೇ ನುಡಿಗೂ ಸುಳುವಾಗಿ ಮಾರೆಡೆಗೊಳಿಸಬಲ್ಲರು ಎಂಬುದನ್ನು ಈ ಅರಕೆಗಳು ಕಂಡುಕೊಂಡಿವೆ. ಹಾಗಾಗಿ, ಮಕ್ಕಳಿಗೆ ಓದು- ಬರಹವನ್ನು ಮೊದಲಿಗೆ ಅವರ ತಾಯ್ನುಡಿಯಲ್ಲೇನೇ ಕಲಿಸಿ, ಆಮೇಲೆ ಅವರ ಎರಡನೇ ನುಡಿಯಲ್ಲಿ ಓದು-ಬರಹವನ್ನು ಕಲಿಸುವುದು ಒಳ್ಳೆಯದೆಂಬ ತೀರ್ಮಾನಕ್ಕೆ ಬರಲಾಗಿದೆ.
ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಮಕ್ಕಳು ಓದಲು ಕಲಿಯುವ ಕೆಲಸ ವನ್ನು ಎರಡನೇ ನುಡಿಯಾದ ಇಂಗ್ಲಿಶ್ನಲ್ಲಿ ನಡೆಸುವುದಕ್ಕಿಂತ ಮೊದಲು ಕನ್ನಡದಲ್ಲಿ ನಡೆಸುವುದು ಒಳ್ಳೆಯದು ಎಂಬುದಕ್ಕೆ ಬೇರೊಂದು ಮುಕ್ಯವಾದ ಕಾರಣವಿದೆ. ಕನ್ನಡದಲ್ಲಿ ಬರಿಗೆ(ಅಕ್ಶರ)ಗಳಿಗೂ ಉಲಿಕಂತೆಗಳಿಗೂ (ಮತ್ತು ಉಲಿಗಳಿಗೂ) ನಡುವೆ ನೇರವಾದ ಹೊಂದಾಣಿಕೆಯಿದೆ. (ಇದಕ್ಕೆ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳು ಮಾತ್ರ - ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಅನವಶ್ಯಕವಾದ ಕಟ್ಟಳೆಯಿರುವ ಕಾರಣ - ಹೊರಪಡಿಕೆ (ಅಪವಾದ)ಗಳಾಗಿವೆ.) ಹಾಗಾಗಿ, ಕನ್ನಡ ಪದಗಳನ್ನು ಮಾತ್ರವೇ ಬಳಸಿರುವ ಬರಹಗಳ ಮೂಲಕ (ಇಲ್ಲವೇ ಹೊಸ ಬರಹವನ್ನು ಬಳಸಿರುವ ಬರಹಗಳ ಮೂಲಕ) ಮಕ್ಕಳಿಗೆ ಕನ್ನಡದಲ್ಲಿ ತುಂಬಾ ಸುಳುವಾಗಿ ಓದಲು ಕಲಿಸಬಹುದು. ಇಂಗ್ಲಿಶ್ನಲ್ಲಿ ತುಂಬಾ ತೊಡಕು ತೊಡಕಾದ ಸ್ಪೆಲ್ಲಿಂಗ್ ಸಮಸ್ಯೆಯಿದೆ. ಹಾಗಾಗಿ, ಅದರ ಬರಹಗಳಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ಹೊಂದಾಣಿಕೆ ಇದೆ ಎಂಬುದನ್ನು ಮಕ್ಕಳು ಗಮನಿಸುವ ಹಾಗೆ ಮಾಡುವುದು ತುಂಬಾ ತೊಡಕಿನ ಕೆಲಸ. ಹಲವು ಮಂದಿ ಮಕ್ಕಳ ಗಮನಕ್ಕೆ ಇದು ಬರುವುದೇ ಇಲ್ಲ. ಹಾಗಾಗಿ, ಅಂತಹ ಮಕ್ಕಳು ಪದಗಳನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಹೊಂದಿಸಲು ಹೋಗದೆ ನೇರವಾಗಿ ಓದಲು ತೊಡಗುತ್ತಾರೆ. ಈ ರೀತಿ ಓದಲು ಮೊದಲಿಗೆ ಅಶ್ಟೊಂದು ತೊಂದರೆಯಾಗುವುದಿಲ್ಲವಾದರೂ, ಓದಿನಲ್ಲಿ ಮುಂದೆ ಹೋದಂತೆ ಹೆಚ್ಚು ಹೆಚ್ಚು ಬರಹಗಳನ್ನು ಓದಬೇಕಾಗುವು ದಾದ ಕಾರಣ, ಅವರು ಓದಿನಲ್ಲಿ ಹಿಂದೆ ಬೀಳತೊಡಗುತ್ತಾರೆ (2.3 ನೋಡಿ). ಹಾಗಾಗಿ, ಮೊದಲಿಗೆ ಕನ್ನಡದಲ್ಲಿ ಓದಲು ಕಲಿಯುವ ಮೂಲಕ ಸರಿಯಾಗಿ ಓದುವ ಬಗೆ ಹೇಗೆ ಎಂಬುದನ್ನು ತಿಳಿದುಕೊಂಡಿರುವ ಮಕ್ಕಳು ಇಂಗ್ಲಿಶ್ನಲ್ಲೂ ಸರಿಯಾಗಿ ಓದಲು ಸುಳುವಾಗಿ ಕಲಿತುಕೊಳ್ಳಬಲ್ಲರು. ಯಾಕೆಂದರೆ, ಓದುವ ಕೆಲಸಕ್ಕಾಗಿ ಕನ್ನಡದಲ್ಲಿ ಪಡೆದಿರುವ ಚಳಕವನ್ನು ಅವರು ಸುಳುವಾಗಿ ತಮ್ಮ ಇಂಗ್ಲಿಶ್ ಓದಿಗೂ ಮಾರೆಡೆಗೊಳಿಸಬಲ್ಲರು.
ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಹೆಚ್ಚು ತೊಡಕಿನ ಕೆಲಸ. ಇದನ್ನು ಎರಡನೇ ನುಡಿಯಲ್ಲಿ ನಡೆಸಲು ಕಲಿಯುವುದು ಮತ್ತಶ್ಟು ತೊಡಕಿನ ಕೆಲಸ. ಈ ಎರಡನೇ ಕೆಲಸವನ್ನು ತಮ್ಮ ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ಹೆಚ್ಚು ಸುಳುವಾಗಿ ನಡೆಸಬಲ್ಲರು. ಯಾಕೆಂದರೆ, ಅವರು ಇದಕ್ಕಾಗಿ ತಮ್ಮ ತಾಯ್ನುಡಿಯಲ್ಲಿ ಕಲಿತುಕೊಂಡಿದ್ದ ಚಳಕಗಳಲ್ಲಿ ಹೆಚ್ಚಿನವನ್ನೂ ಎರಡನೇ ನುಡಿಯ ಬರವಣಿಗೆಗೂ ಮಾರೆಡೆಗೊಳಿಸಬಲ್ಲರು.
ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಆಲೋಚಿಸಲು ಏನೂ ತೊಂದರೆ ಯಾಗುವುದಿಲ್ಲ. ಆದರೆ, ಎರಡನೇ ನುಡಿಯಲ್ಲಿ ಸಾಕಶ್ಟು ಪಳಗುವಲ್ಲಿವರೆಗೆ ಅವರಿಗೆ ಅದರಲ್ಲಿ ಆಲೋಚಿಸಲು ಬರುವುದಿಲ್ಲ. ಹಾಗಾಗಿ, ಬರೆಯಬೇಕಾ ಗಿರುವ ವಿಶಯಗಳನ್ನು ಮೊದಲಿಗೆ ತಾಯ್ನುಡಿಯಲ್ಲಿ ಆಲೋಚಿಸಿ, ಮತ್ತು ಅವನ್ನು ಬೇಕಾದ ಕ್ರಮದಲ್ಲಿ ಸಾವಗಿಸಿ(ಜೋಡಿಸಿ)ಕೊಂಡು, ಆಮೇಲೆ ಎರಡನೇ ನುಡಿಯಲ್ಲಿ ಬರೆಯುವುದು ಅವರಿಗೆ ಹೆಚ್ಚು ಸುಳುವಾದ ಕೆಲಸವಾಗಬಲ್ಲುದು. ಇದಲ್ಲದೆ, ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ತಾವು ಒಟ್ಟು ಗೂಡಿಸಿರುವ ವಿಶಯಗಳನ್ನು ಮೊದಲಿಗೆ ತಮ್ಮ ತಾಯ್ನುಡಿಯಲ್ಲಿ ಬರೆದು, ಆಮೇಲೆ ಅದನ್ನು ಎರಡನೇ ನುಡಿಗೆ ನುಡಿಮಾರ(ಬಾಶಾಂತರಿಸ)ಬಹುದು. ಎರಡನೇ ನುಡಿಯನ್ನು ಕಲಿಯುವ ಮೊದಲ ಹಂತಗಳಲ್ಲಿ ಇಂತಹ ನುಡಿ ಮಾರಿಕೆಯ ಬಳಕೆಯೂ ನೆರವಿಗೆ ಬರುತ್ತದೆಯೆಂದು ಇತ್ತೀಚೆಗಿನ ಕೆಲವು ಅರಕೆಗಳು ತೋರಿಸಿಕೊಟ್ಟಿವೆ.
ಎರಡನೇ ನುಡಿಯನ್ನು ಕಲಿಯುತ್ತಿರುವಾಗ ಒಟ್ಟೊಟ್ಟಿಗೆ ತಮ್ಮ ತಾಯ್ನುಡಿ ಯಲ್ಲೂ ಓದು-ಬರಹದ ತಿಳಿವನ್ನು ಹೆಚ್ಚಿಸಿಕೊಳ್ಳುವ ಮಕ್ಕಳು ಎರಡನೇ ನುಡಿಯ ಕಲಿಕೆಯಲ್ಲಿ ಬೇರೆ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ. ತಾಯ್ನುಡಿ ಯನ್ನು ಪೂರ್ತಿ ಕಡೆಗಣಿಸಿರುವ ಮಕ್ಕಳು ಮೊದಮೊದಲಿಗೆ ತುಂಬಾ ವೇಗವಾಗಿ ಮುಂದೆ ಹೋಗುತ್ತಿರುವಂತೆ ಕಾಣಿಸುತ್ತಾರೆ; ಆದರೆ, ಆಮೇಲೆ ಹಲವು ಮಕ್ಕಳು ತಮ್ಮ ಎರಡನೇ ನುಡಿಯ ಕಲಿಕೆಯಲ್ಲಿ ಹಿಂದೆ ಬೀಳತೊಡಗುತ್ತಾರೆ. ಇದರಿಂದ ಗೊತ್ತಾಗುವುದೇನೆಂದರೆ, ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬೆಂಬಲ ಹೆಚ್ಚಿನ ಮಕ್ಕಳಿಗೂ ಬೇಕಾಗುತ್ತದೆ.
ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ. ಮೇಲೆ ಸೂಚಿಸಿದ ಹಾಗೆ, ನುಡಿಯ ಕಲಿಕೆಯಲ್ಲಿ ಎರಡು ಹಂತಗಳಿರುತ್ತವೆ. ಅದರಲ್ಲಿ ಸಲೀಸಾಗಿ ಮಾತನಾಡಲು ಕಲಿಯುವುದು ಒಂದು ಹಂತ ಮತ್ತು ಗಣಿತ, ವಿಜ್ನಾನ ಮೊದ ಲಾದ ವಿಶಯಗಳನ್ನು ತಿಳಿಯಲು ಮತ್ತು ಇನ್ನೊಬ್ಬರಿಗೆ ತಿಳಿಸಲು ಕಲಿಯುವುದು ಇನ್ನೊಂದು ಹಂತ.
ಶಾಲೆಯಲ್ಲಿ ಮೊದಲಿನಿಂದಲೂ ಇಂಗ್ಲಿಶ್ ನುಡಿಯನ್ನೇ ಕಲಿಕೆನುಡಿಯಾಗಿ ಬಳಸಿರುವ ಮಕ್ಕಳು ಆ ನುಡಿಯಲ್ಲಿ ಸಲೀಸಾಗಿ ಮಾತನಾಡುವುದನ್ನು ಗಮನಿ ಸಿರುವ ಹಲವರಿಗೆ, ಅವರು ಅದನ್ನು ಬಹಳ ಚನ್ನಾಗಿ ಕಲಿತುಕೊಂಡಿದ್ದಾರೆಂದು ಅನಿಸುತ್ತದೆ. ಹಾಗಾಗಿ, ತಮ್ಮ ಮಕ್ಕಳೂ ಇಂಗ್ಲಿಶ್ ನುಡಿಯನ್ನೇ ಕಲಿಕೆನುಡಿ ಯಾಗಿ ಬಳಸಿ, ಆದಶ್ಟು ಬೇಗನೆ ಆ ನುಡಿಯಲ್ಲಿ ಪರಿಣತರಾಗಬೇಕೆಂದು
ಅವರು ಬಯಸುತ್ತಾರೆ. ಆದರೆ, ನಿಜಕ್ಕೂ ಅಂತಹ ಮಕ್ಕಳು ತಮ್ಮ ಇಂಗ್ಲಿಶ್ ಕಲಿಕೆಯಲ್ಲಿ ಮೊದಲನೆಯ ಹಂತವನ್ನಶ್ಟೇ ತಲಪಿರುತ್ತಾರೆ.
ಮುಂದೆ ಎರಡನೇ ಹಂತವನ್ನು ತಲಪುವ ಕೆಲಸದಲ್ಲಿ ಅವರು ಹಿಂದೆ ಬೀಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಈ ಕೆಲಸವನ್ನು ಹೆಚ್ಚು ಸುಳುವಾಗಿ ನಡೆಸಬಲ್ಲರು, ಮತ್ತು ಆಮೇಲೆ ಅದನ್ನು ತಮ್ಮ ಎರಡನೆಯ ನುಡಿಗೂ ಸುಳುವಾಗಿ ಮಾರೆಡೆಗೊಳಿಸ(ವರ್ಗಾಯಿಸ)ಬಲ್ಲರು. ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುತ್ತಿರುವ ಮಕ್ಕಳಿಗೆ ಇಂತಹ ತಾಯ್ನುಡಿಯ ನೆರವು ದೊರಕುವುದಿಲ್ಲವಾದ ಕಾರಣ, ಅವರಿಗೆ ತಮ್ಮ ಕಲಿಕೆಯ ಎರಡನೇ ಹಂತವನ್ನು ತಲಪುವಲ್ಲಿ ತೊಂದರೆಯಾಗುತ್ತದೆ.
ಹಾಗಾಗಿ, ಮೊದಲಿಗೆ ಕನ್ನಡವನ್ನೇ ಕಲಿಕೆನುಡಿಯಾಗಿ ಬಳಸಿ, ಆಮೇಲೆ ಹಯ್ಸ್ಕೂಲ್ನಲ್ಲಿ, ಇಲ್ಲವೇ ಮುಂದೆ ಕಾಲೇಜಿನಲ್ಲಿ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳು ಆ ನುಡಿಯಲ್ಲಿ ಎರಡನೇ ಹಂತವನ್ನು ತಲಪುವಲ್ಲಿ ಸುರುವಿನಿಂದಲೂ ಅದಕ್ಕಾಗಿ ಇಂಗ್ಲಿಶ್ ನುಡಿಯನ್ನೇ ಬಳಸುವ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ.
7.2.6 ದೊಡ್ಡವರ ಕಲಿಕೆ
ಎರಡನೇ ನುಡಿಯೊಂದನ್ನು ಮಕ್ಕಳು ಶಾಲೆಗಳಲ್ಲಿ ಕಲಿಯುವುದಕ್ಕೂ ದೊಡ್ಡವ ರಾದ ಮೇಲೆ ಕಾಲೇಜಿನಲ್ಲಿ, ಇಲ್ಲವೇ ಮುಂದೆ ಕೆಲಸದಲ್ಲಿರುವಾಗ ಕಲಿಯುವು ದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವು ಮೇಲೆ (7.1.3)ರಲ್ಲಿ ನೋಡಿರುವೆವು. ದೊಡ್ಡವರ ಕಲಿಕೆಗೆ ಒಂದು ಗುರಿಯಿರುತ್ತದೆ. ಹೊಸ ಊರಲ್ಲಿ ನೆಲೆಸುವುದಕ್ಕಾಗಿ, ಹೊಸ ಕೆಲಸಕ್ಕೆ ಸೇರುವುದಕ್ಕಾಗಿ, ಇಲ್ಲವೇ ಈಗಿನ ಕೆಲಸದಲ್ಲೇನೇ ಮುಂದೆ ಹೋಗುವುದಕ್ಕಾಗಿ ದೊಡ್ಡವರು ಹೊಸ ದೊಂದು ನುಡಿಯನ್ನು ಕಲಿಯತೊಡಗುತ್ತಾರೆ. ಆದರೆ ಚಿಕ್ಕವರೆದುರು ಅಂತಹ ಗುರಿಯಿರುವುದಿಲ್ಲ.
ಹಾಗಾಗಿ, ಗುರಿಗೆ ತಕ್ಕುದಾದ ಕಲಿಕೆಯನ್ನು ದೊಡ್ಡವರಿಗೆ ಒದಗಿಸಿಕೊಟ್ಟಲ್ಲಿ, ಅವರು ಅದರಲ್ಲಿ ಬೇಗನೆ ಮುಂದೆ ಹೋಗಬಲ್ಲರು. ಎತ್ತುಗೆಗಾಗಿ, ಅವರ ಗುರಿಗೆ ಓದುವುದು ಮತ್ತು ಬರೆಯುವುದು ಮಾತ್ರವೇ ಮುಕ್ಯವಾಗಿರ ಬಹುದು; ಹಾಗಿದ್ದಲ್ಲಿ, ಮಾತನಾಡುವುದಕ್ಕಿಂತಲೂ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಅವರ ಕಲಿಕೆಯಲ್ಲಿ ಹೆಚ್ಚಿನ ಒತ್ತು ಕೊಡಬೇಕು.
ದೊಡ್ಡವರಿಗೆ ಯಾವುದೇ ಒಂದು ವಿಶಯವನ್ನು ತಿಳಿಸಬೇಕಿದ್ದರೂ, ಅದರ ಹಿಂದಿರುವ ಕಟ್ಟಲೆಗಳನ್ನು ತಿಳಿಸುವುದೊಳ್ಳೆಯದು. ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಜಿಚಿಣheಡಿ’s booಞ ಎನ್ನುತ್ತೇವೆ ಆದರೆ bಡಿಚಿಟಿಛಿh oಜಿ ಣhe ಣಡಿee ಎನ್ನುತ್ತೇವೆ. ಒಂದು ಕಡೆಯಲ್ಲಿ s ಎಂಬ ಒಟ್ಟನ್ನು ಬಳಸಲಾಗುತ್ತದೆ ಮತ್ತು ಇನ್ನೊಂದು ಕಡೆಯಲ್ಲಿ oಜಿ ಎಂಬ ತುಂಡುಪದವನ್ನು ಬಳಸಲಾಗುತ್ತದೆ. ಆದರೆ, ಕನ್ನಡದಲ್ಲಿ ಇಂತಹ ವ್ಯತ್ಯಾಸವಿಲ್ಲ; ಎರಡು ಕಡೆಗಳಲ್ಲೂ ಅದರಲ್ಲಿ ಅ ಎಂಬ ಒಂದೇ ಒಟ್ಟನ್ನು ಬಳಸಲಾಗುತ್ತದೆ (ತಂದೆಯ ಪುಸ್ತಕ, ಮರದ ಗೆಲ್ಲು).
ಇಂಗ್ಲಿಶ್ಗೂ ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸವನ್ನು ವಿವರಿಸುವವರು ಅದರ ಹಿಂದಿರುವ ಕಟ್ಟಲೆಯನ್ನೂ ತಿಳಿಸಬಹುದು: ಇಂಗ್ಲಿಶ್ನಲ್ಲಿ ಎರಡು ಹೆಸರು(ನಾಮ)ಪದಗಳ ನಡುವಿನ ಪತ್ತುಗೆ(ಸಂಬಂದ)ಯನ್ನು ಸೂಚಿಸ ಬೇಕಾದಾಗ, ಅವು ಉಸಿರುಗರ (ಜೀವಿಗಳ) ಪತ್ತುಗೆಯನ್ನು ತಿಳಿಸುವುದಾದರೆ ಸಾಮಾನ್ಯವಾಗಿ s ಒಟ್ಟನ್ನು ಬಳಸಲಾಗುತ್ತದೆ, ಮತ್ತು ಬೇರೆ ಬಗೆಯ ಪತ್ತುಗೆ ಯನ್ನು ತಿಳಿಸುವುದಾದರೆ oಜಿ ತುಂಡುಪದವನ್ನು ಬಳಸಲಾಗುತ್ತದೆ. ಈ ವ್ಯತ್ಯಾಸದ ತಿಳಿವು ಇಂಗ್ಲಿಶ್ ಕಲಿಯುವ ದೊಡ್ಡವರಿಗೆ ನೆರವಾಗಬಲ್ಲುದು. ಕನ್ನಡದಲ್ಲಿ ಎಸಕ(ಕ್ರಿಯಾ)ಪದಗಳು ಸೊಲ್ಲಿನಲ್ಲಿ ಕೊನೆಗೆ ಬರುತ್ತವೆ; ಆದರೆ, ಇಂಗ್ಲಿಶ್ನಲ್ಲಿ ಅವು ನಡುವೆ ಬರುತ್ತವೆ. ಎತ್ತುಗೆಗಾಗಿ, ಕೆಳಗಿನ ಎರಡು ಸೊಲ್ಲುಗಳನ್ನು ಹೋಲಿಸಿ ನೋಡಬಹುದು:
ರಾಜು ಮನೆಗೆ ಹೋದ.
ಮೇಲೆ ಕೊಟ್ಟಿರುವ ಕನ್ನಡದ (1ಕ) ಸೊಲ್ಲಿನಲ್ಲಿ ಹೋದ ಎಂಬ ಎಸಕ ಪದ ಸೊಲ್ಲಿನ ಕೊನೆಗೆ ಬಂದಿದೆ; ಆದರೆ ಇಂಗ್ಲಿಶ್ನ (1ಚ) ಸೊಲ್ಲಿನಲ್ಲಿ ತಿeಟಿಣ ಎಂಬ ಎಸಕ ಪದ ನಡುವೆ ಬಂದಿದೆ.
ಕನ್ನಡದಲ್ಲಿ ಒಂದು ಹೇಳಿಕೆಯನ್ನು ಕೇಳ್ವಿಯಾಗಿ ಮಾರ್ಪಡಿಸಬೇಕಿದ್ದಲ್ಲಿ, ಅದರ ಕೊನೆಯಲ್ಲಿ ಬರುವ ಪದಕ್ಕೆ ಓ ಎಂಬ ಒಟ್ಟನ್ನು ಸೇರಿಸಿದರೆ ಸಾಕಾಗು ತ್ತದೆ; ಆದರೆ, ಇಂಗ್ಲಿಶ್ನಲ್ಲಿ ಇದಕ್ಕಾಗಿ ಎಸಕ ಪದಕ್ಕೆ ಒಂದು ಒತ್ತಾಸೆಯ ಪದವನ್ನು ಸೇರಿಸಿ, ಅದನ್ನು ಸೊಲ್ಲಿನ ಮೊದಲ ಪದವಾಗಿ ಬಳಸಬೇಕಾಗುತ್ತದೆ, ಮತ್ತು ಆ ಸೊಲ್ಲಿನಲ್ಲಿ ಬೇರೆಯೂ ಕೆಲವು ಮಾರ್ಪಾಡುಗಳನ್ನು ಮಾಡ ಬೇಕಾಗುತ್ತದೆ.
ನಾಯಿ ಬೊಗಳಿತು. ನಾಯಿ ಬೊಗಳಿತೋ?
ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ ಇಂತಹ ಹಲವಾರು ಸೊಲ್ಲರಿಮೆಯ ವ್ಯತ್ಯಾಸಗಳಿವೆ. ಇಂಗ್ಲಿಶ್ ಸೊಲ್ಲುಗಳನ್ನು ಕಲಿಯುತ್ತಿರುವ ದೊಡ್ಡವರಿಗೆ ಇವನ್ನು ಎತ್ತುಗೆಗಳ ಮೂಲಕ ಅವರ ಕಲಿಕೆಯ ಅಂಗವಾಗಿ ತೋರಿಸಿಕೊಡುತ್ತಾ ಹೋದಲ್ಲಿ, ಅವರಿಗೆ ಇಂಗ್ಲಿಶ್ ಸೊಲ್ಲುಗಳನ್ನು ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಹೆಚ್ಚು ಸುಳುವಾಗುತ್ತದೆ. ಯಾಕೆಂದರೆ, ಅವರಿಗೆ ಇಂತಹ ತಿಳಿವನ್ನು ತಮ್ಮ ಕಲಿಕೆಯಲ್ಲಿ ಬಳಸಿಕೊಳ್ಳು ವಂತಹ ಕಸುವಿದೆ.
7.3 ಎರಡನೇ ನುಡಿಯಾಗಿ ಕನ್ನಡದ ಕಲಿಕೆ
ಎರಡನೇ ನುಡಿಯಾಗಿ ಕನ್ನಡವನ್ನು ಕಲಿಯಬೇಕೆಂದಿರುವವರಿಗೆ, ಅದರಲ್ಲೂ ಮುಕ್ಯವಾಗಿ ಕನ್ನಡದಲ್ಲಿ ಓದಲು ಮತ್ತು ಬರೆಯಲು ತಿಳಿಯಬೇಕೆಂದಿರುವವರಿಗೆ ಕನ್ನಡದ ಸೊಲ್ಲರಿಮೆಯ ತಿಳಿವು ನೆರವಿಗೆ ಬರಬಲ್ಲುದು. ಪದಗಳು ನೂಲಿನ ಹಾಗೆ, ಮತ್ತು ಸೊಲ್ಲರಿಮೆಯ ಕಟ್ಟಲೆಗಳು ಬಟ್ಟೆಯಲ್ಲಿ ಕಾಣಿಸುವ ನೆಯ್ಗೆಯ ಹಾಗೆ. ನೂಲನ್ನು ತರತರದ ಬಟ್ಟೆಗಳನ್ನಾಗಿ ಮಾರ್ಪಡಿಸಬೇಕಿದ್ದರೆ, ಮತ್ತು ಅದರಲ್ಲಿ ಹೊಸ ಹೊಸ ಚಿತ್ತಾರಗಳನ್ನು ಮೂಡಿಸಬೇಕಿದ್ದರೆ ಹೇಗೆ ತರತರದ ನೇಯ್ಗೆಗಳ ಪರಿಚಯ ಬೇಕಾಗುತ್ತದೆಯೋ ಹಾಗೆಯೇ ಪದಗಳನ್ನು ತರತರದ ಸೊಲ್ಲುಗಳಾಗಿ ಜೋಡಿಸಿಕೊಳ್ಳಬೇಕಿದ್ದರೂ ಸೊಲ್ಲರಿಮೆಯ ಕಟ್ಟಲೆಗಳ ತಿಳಿವು ಬೇಕಾಗುತ್ತದೆ.
ಸೊಲ್ಲುಗಳ ಇಟ್ಟಳ ಎಂತಹದು ಎಂಬುದನ್ನು ತಿಳಿಯದವರಿಗೆ ಅವು ಹೇಗೆ ಒಂದರೊಡನೊಂದು ಸಂಬಂದಿಸಿವೆ ಎಂಬುದನ್ನು ಕಂಡುಕೊಳ್ಳಲು ಬರುವುದಿಲ್ಲ. ಹೆಚ್ಚಿನ ಸೊಲ್ಲುಗಳಲ್ಲೂ ಎಸಕ(ಕ್ರಿಯಾ)ಪದವೊಂದಿರುತ್ತದೆ, ಮತ್ತು ಅದು ತಿಳಿಸುವ ಎಸಕದಲ್ಲಿ ಪಾಲ್ಗೊಳ್ಳುವ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ತಿಳಿಸುವ ಹೆಸರು(ನಾಮ)ಪದ ಇಲ್ಲವೇ ಪದಕಂತೆ ಗಳಿರುತ್ತವೆ. ಇವನ್ನು ಗುರುತಿಸಬಲ್ಲವರು, ಮತ್ತು ಸೊಲ್ಲಿನಲ್ಲಿ ಬರುವ ಬೇರೆ
ಪದಗಳಿಂದ ಇವನ್ನು ಬೇರ್ಪಡಿಸಬಲ್ಲವರು ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ಯಾವಾಗಲೂ ಮುಂದಿರುತ್ತಾರೆ.
ಸೊಲ್ಲುಗಳನ್ನು ಜೋಡಿಸುವುದು ಹೇಗೆ, ಒಂದು ಸೊಲ್ಲಿನೊಳಗೆ ಇನ್ನೊಂದು ಸೊಲ್ಲನ್ನು ಇರಿಸಿ ಹೇಳುವುದು ಹೇಗೆ, ತುಂಡುಸೊಲ್ಲುಗಳನ್ನು ಪದಕಂತೆಯೊಳಗೆ ಇರಿಸುವುದು ಹೇಗೆ ಎಂಬಂತಹ ವಿಶಯಗಳನ್ನು ತಿಳಿದುಕೊಂಡವರಿಗೆ ತಮ್ಮ ಬರಹವನ್ನು ತಿದ್ದಿ ಸರಿಪಡಿಸಲು ಹೆಚ್ಚು ತೊಂದರೆಯಾಗುವುದಿಲ್ಲ.
ಕನ್ನಡವನ್ನು ಕಲಿಯುವವರು ಅವರ ತಾಯ್ನುಡಿಯ ಸೊಲ್ಲರಿಮೆಗೂ ಕನ್ನಡದ ಸೊಲ್ಲರಿಮೆಗೂ ನಡುವಿರುವ ಮುಕ್ಯವಾದ ವ್ಯತ್ಯಾಸಗಳನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಇನ್ನಶ್ಟು ಬೇಗನೆ ಮುಂದುವರಿಯಬಲ್ಲುದು. ಆದರೆ, ಇದಕ್ಕಾಗಿ ಕನ್ನಡದ್ದೇ ಆದ ಸೊಲ್ಲರಿಮೆ ಎಂತಹದು ಎಂಬುದನ್ನು ಕಲಿಸುವವರು ತಿಳಿದುಕೊಂಡಿರಬೇಕಾಗುತ್ತದೆ.
ಕನ್ನಡದಲ್ಲಿ ಇವತ್ತು ಬಳಕೆಯಲ್ಲಿರುವ ಸೊಲ್ಲರಿಮೆಯ (ವ್ಯಾಕರಣದ) ಪುಸ್ತಕಗಳು ನಿಜಕ್ಕೂ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ಹಾಗಾಗಿ, ಅವುಗಳಿಂದ ಕನ್ನಡವನ್ನು ಎರಡನೆಯ ನುಡಿಯಾಗಿ ಕಲಿಯಬೇಕೆಂದಿರುವವರಿಗೆ ಹೆಚ್ಚಿನ ನೆರವು ಸಿಗಲಾರದು. ತಮಿಳು, ತೆಲುಗು, ಹಿಂದಿ, ಮರಾಟಿ ಮೊದಲಾದ ಬೇರೆ ನುಡಿಗಳನ್ನಾಡುವವರಿಗೆ ಕನ್ನಡವನ್ನು ಕಲಿಸುವವರು ಅವರ ತಾಯ್ನುಡಿಯ ಸೊಲ್ಲುಗಳಿಗೂ ಕನ್ನಡದ ಸೊಲ್ಲುಗಳಿಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಗಮನಿಸಬೇಕು, ಮತ್ತು ಅವನ್ನು ಬೇಕಾದಾಗಲೆಲ್ಲ ಕಲಿಯುವವರ ಗಮನಕ್ಕೆ ತರುತ್ತಿರಬೇಕು.
ಈ ವಿಶಯದಲ್ಲಿ ಅವರಿಗೆ ನೆರವಾಗುವಂತಹ ಹೊತ್ತಗೆಗಳನ್ನು ಸೊಲ್ಲರಿಗರು ಹೊರತಂದಲ್ಲಿ ಇನ್ನೂ ಒಳ್ಳೆಯದು. ನಿಜಕ್ಕೂ ತಮಿಳು, ತೆಲುಗು, ಮಲಯಾಳ ಮೊದಲಾದ ಕನ್ನಡಕ್ಕೆ ತೀರ ಹತ್ತಿರವಿರುವ (ಎಂದರೆ, ಒಂದೇ ನುಡಿಕುಟುಂಬಕ್ಕೆ ಸೇರಿರುವ) ನುಡಿಗಳನ್ನಾಡುವವರಿಗೆ ಕನ್ನಡವನ್ನು ಕಲಿಸುವಲ್ಲಿ ಇಂತಹ ಹೋಲಿಕೆಯ ಸೊಲ್ಲರಿಮೆಗಳು ಬೇರೆ ಬಗೆಯಲ್ಲೂ ನೆರವು ನೀಡಬಲ್ಲುವು. ಎತ್ತುಗೆಗಾಗಿ, ತಮಿಳು ಕನ್ನಡಕ್ಕೆ ತೀರ ಹತ್ತಿರದ ನುಡಿ. ಅವೆರಡರ ನಡುವೆ ಹೆಚ್ಚು ಕಡಿಮೆ ಒಂದೇ ಬಗೆಯವಾಗಿರುವಂತಹ ಹಲವಾರು ಪದಗಳು, ಪದಕಂತೆಗಳು ಮತ್ತು ಸೊಲ್ಲುಗಳಿವೆ. ತಮಿಳರಿಗೆ ಕನ್ನಡವನ್ನು ಕಲಿಸ ಬೇಕೆಂದಿರುವವರು ಇಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಬಳಸಿ ಬರಹಗಳನ್ನು ಬರೆದಲ್ಲಿ, ಅವನ್ನು ಕಲಿಯುವವರು ತುಂಬಾ ಬೇಗನೆ ಓದಲು- ಬರೆಯಲು ಕಲಿತುಕೊಳ್ಳಬಲ್ಲರು. ಇದು ಅವರಿಗೆ ತಮ್ಮ ಕಲಿಕೆಯ ಅಳವಿನ
ಮೇಲೆ ನಂಬಿಕೆ ಹುಟ್ಟುವಂತೆ ಮಾಡಬಲ್ಲುದು, ಮತ್ತು ಇದರಿಂದಾಗಿ ಅವರ ಕಲಿಕೆಯೂ ಬೇಗನೆ ಮುಂದೆ ಹೋಗಬಲ್ಲುದು.
7.4 ತಿರುಳು
ಎರಡನೇ ನುಡಿಯ ಕಲಿಕೆಯಲ್ಲಿ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ. ಈ ಕಲಿಕೆಯನ್ನು ಮೊದಲನೇ ನುಡಿಯ (ತಾಯ್ನುಡಿಯ) ತಳಹದಿಯ ಮೇಲೆ ನಡೆಸಬೇಕಾಗುವುದಾದ ಕಾರಣ, ಮೊದಲನೇ ಮತ್ತು ಎರಡನೇ ನುಡಿಗಳ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬು ದನ್ನು ತಿಳಿದುಕೊಂಡಲ್ಲಿ, ಅದು ಅವರಿಗೆ ಇನ್ನಶ್ಟು ಹೆಚ್ಚಿನ ನೆರವನ್ನು ನೀಡಬಲ್ಲುದು.
ಎರಡನೇ ನುಡಿಯನ್ನು ಕಲಿಸುವ ಸಮಯದಲ್ಲಿ ತಾಯ್ನುಡಿಯನ್ನು ಪೂರ್ತಿ ಹೊರಗಿಡಬೇಕೆಂಬ ಹೇಳಿಕೆಗೆ ಯಾವ ಆದಾರವೂ ಇಲ್ಲ. ನಿಜಕ್ಕೂ ಇಂಗ್ಲಿಶ್ ತರಗತಿಗಳಲ್ಲಿ ಮಕ್ಕಳ ತಾಯ್ನುಡಿಯನ್ನು ಬಳಸದಿರುವವರು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಯಾಕೆಂದರೆ, ಆ ರೀತಿ ತರಗತಿಯಲ್ಲಿ ತಾಯ್ನುಡಿಯನ್ನು ಹೊರಗಿಟ್ಟರೂ ಮಕ್ಕಳ ಮಿದುಳಿನಲ್ಲಿ ಎರಡನೇ ನುಡಿಯ ಕಲಿಕೆ ಆ ನುಡಿಯ ತಳಹದಿಯ ಮೇಲೇನೇ ನಡೆಯುತ್ತದೆ. ಹಾಗಾಗಿ, ತರಗತಿಯಲ್ಲೂ ತಾಯ್ನುಡಿಯ ತಳಹದಿಯ ಮೇಲೇನೇ ಎರಡನೇ ನುಡಿಯನ್ನು ಕಲಿಸುವುದು ಸರಿಯಾದ ದಾರಿ.
ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬಳಕೆಯಿಂದ ತಪ್ಪುಗಳು ಕಾಣಿಸುತ್ತವೆ ಎಂಬ ವಾದವೂ ಸರಿಯಲ್ಲ. ಯಾಕೆಂದರೆ, ಅವು ನಿಜಕ್ಕೂ ಕಲಿಕೆಯ ಹಂತಗಳಲ್ಲದೆ ತಪ್ಪುಗಳಲ್ಲ. ಕಲಿಕೆ ಮುಂದುವರಿದಂತೆ ಅವು ತಾವಾಗಿಯೇ ಇಲ್ಲವಾಗುತ್ತವೆ.
ಎರಡನೇ ನುಡಿಯನ್ನು ದೊಡ್ಡವರಿಗೆ ಕಲಿಸುವವರು ಅವರ ತಾಯ್ನುಡಿಗೂ ಎರಡನೇ ನುಡಿಗೂ ನಡುವೆ ಸೊಲ್ಲರಿಮೆಯಲ್ಲಿ ಎಂತಹ ಹೋಲಿಕೆ ಮತ್ತು ವ್ಯತ್ಯಾಸಗಳಿವೆ ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಹೆಚ್ಚು ಬೇಗನೆ ಮುಂದುವರಿಯಬಲ್ಲುದು.