Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಎರಡನೇ ಪಸುಗೆ — ಓದು-ಬರಹದ ಕಲಿಕೆ
2.1 ಶಾಲೆಯಲ್ಲಿ ಕನ್ನಡದ ಕಲಿಕೆ
ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ತಮ್ಮ ಆಡುನುಡಿಯಲ್ಲಿ (ಕನ್ನಡದಲ್ಲಿ) ಮಾತನಾಡಲು ತುಂಬಾ ಚನ್ನಾಗಿ ತಿಳಿದಿರುತ್ತದೆ. ಶಾಲೆಯಲ್ಲಿ ಅವರು ಮೊದಲಿಗೆ ಮಾಡಬೇಕಾಗಿರುವ ಕೆಲಸವೇನೆಂದರೆ, ತಮ್ಮ ಆಡುನುಡಿಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ (ಎಂದರೆ ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಹೆಚ್ಚು ಕಡಿಮೆ ಒಂದೇ ರೂಪದಲ್ಲಿರುವ ಕನ್ನಡದಲ್ಲಿ) ಮಾತನಾಡಲು ಕಲಿಯುವುದು ಮತ್ತು ಅದರಲ್ಲೇನೇ ಓದಲು ಮತ್ತು ಬರೆಯಲು ಕಲಿಯುವುದು.
ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ಬೇರೆಯೂ ಹಲವು ವಿಶಯಗಳನ್ನು ಅವರು ಶಾಲೆಯಲ್ಲಿ ಕಲಿಯಬೇಕಾಗುತ್ತದೆ. ಆದರೆ, ಈ ಎಲ್ಲಾ ಕಲಿಕೆಗಳನ್ನೂ ಅವರು ಎಲ್ಲರ ಕನ್ನಡದ ಮೂಲಕವೇನೇ ನಡೆಸಬೇಕಾಗುತ್ತದೆ. ಅದು ಅವರ ಬೇರೆಲ್ಲಾ ಕಲಿಕೆಗಳಿಗೂ ಒಂದು ಅಡಿಗಟ್ಟನ್ನು ಒದಗಿಸುತ್ತದೆ. ಹಾಗಾಗಿ, ಬೇರೆಲ್ಲಾ ಕಲಿಕೆಗಳಿಗಿಂತಲೂ ಎಲ್ಲರ ಕನ್ನಡದ ಕಲಿಕೆಗೆ ನಾವು ಹೆಚ್ಚಿನ ಗಮನ ಕೊಡಬೇಕಾಗಿದೆ.
ಇಲ್ಲಿ ಎರಡು ಮುಕ್ಯ ಕೆಲಸಗಳು ಕಲಿಸುಗರ ಮುಂದಿವೆ: ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಸುವುದು ಮತ್ತು ಅದರಲ್ಲೇನೇ ಓದಲು ಮತ್ತು ಬರೆಯಲು ಕಲಿಸುವುದು. ಮಾತನಾಡುವುದು ಹೇಗೆ ಎಂಬುದು ಮಕ್ಕಳಿಗೆ ಗೊತ್ತಿದೆ. ಹಾಗಾಗಿ, ಎಲ್ಲರ ಕನ್ನಡದಲ್ಲಿ ಮಾತನಾಡುವುದೆಂದರೆ, ಕನ್ನಡದ ಒಂದು ರೂಪದ ಬದಲು ಇನ್ನೊಂದು ರೂಪವನ್ನು ಮಾತಿನಲ್ಲಿ ಬಳಸಲು ಕಲಿಯುವುದು. ಇದನ್ನು ಅವರು ಹೆಚ್ಚು ತೊಂದರೆಯಿಲ್ಲದೆ ನಡೆಸಬಲ್ಲರು.
ಆದರೆ, ಓದಲು ಮತ್ತು ಬರೆಯಲು ಕಲಿಯುವುದು ಶಾಲೆಮಕ್ಕಳ ಮಟ್ಟಿಗೆ ಒಂದು ತೀರ ಹೊಸ ಬಗೆಯ ಕೆಲಸವಾಗಿದೆ. ಯಾಕೆಂದರೆ, ಅದು ಅವರು
ಹುಟ್ಟಿನಿಂದಲೇ ಪಡೆಯಬಲ್ಲ ಕೆಲಸಗಳಲ್ಲಿ ಸೇರಿಲ್ಲ. ಅವರಶ್ಟಕ್ಕೇ ಬಿಟ್ಟರೆ ಮಕ್ಕಳು ಮಾತನಾಡಲು ಕಲಿಯುತ್ತಾರೆ, ಆದರೆ ಓದಲು ಬರೆಯಲು ಕಲಿಯುವುದಿಲ್ಲ.
ಇದಲ್ಲದೆ, ಮೇಲೆ (1.2.1)ರಲ್ಲಿ ತಿಳಿಸಿದ ಹಾಗೆ, ಮಾತು ಮತ್ತು ಬರಹ ಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ. ಮಾತಿನಲ್ಲಿ ಬಳಸುವ ಎಲ್ಲರ ಕನ್ನಡ ಮತ್ತು ಬರಹಗಳಲ್ಲಿ ಬಳಸುವ ಎಲ್ಲರ ಕನ್ನಡಗಳ ನಡುವೆಯೂ ಇವೇ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಶಾಲೆಯಲ್ಲಿ ಮಕ್ಕಳು ಎಲ್ಲರ ಕನ್ನಡ ದಲ್ಲಿ ಮಾತನಾಡುವುದರೊಂದಿಗೆ ಓದಲು ಮತ್ತು ಬರೆಯಲು ಕಲಿಯ ಬೇಕಿದ್ದಲ್ಲಿ, ಅವರು ಈ ಹೊಸ ಬಗೆಯ ಬರಹದ ಕನ್ನಡವನ್ನೂ ಕಲಿಯ ಬೇಕಾಗುತ್ತದೆ.
ಈ ಕೆಲಸವನ್ನು ನಡೆಸುವಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಸಾಕಶ್ಟು ನೆರವು ನೀಡಬಲ್ಲುದು. ಇದು ಹೇಗೆ ಎಂಬುದನ್ನು, ಮತ್ತು ಯಾವ ರೀತಿಯಲ್ಲಿ ಅದನ್ನು ಮಕ್ಕಳ ಕಲಿಕೆಯಲ್ಲಿ ಬಳಸಬಲ್ಲೆವು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
2.2 ಓದು-ಬರಹದ ಕಲಿಕೆಗೆ ಸೊಲ್ಲರಿಮೆಯ ನೆರವು
ಮಕ್ಕಳಿಗೆ ಅವರ ತಾಯ್ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸುವ ಸಮಯದಲ್ಲಿ ಆ ನುಡಿಯ ಸೊಲ್ಲರಿಮೆಯನ್ನೂ ಕಲಿಸಬೇಕೇ, ಹಾಗೆ ಕಲಿಸುವುದರಿಂದ ಅವರಿಗೆ ಓದು-ಬರಹಗಳನ್ನು ಕಲಿಯುವುದರಲ್ಲಿ ನೆರವೇನಾದರೂ ದೊರಕಬಲ್ಲುದೇ ಮತ್ತು ಕಲಿಸುವುದಿದ್ದಲ್ಲಿ ಅದನ್ನು ಯಾವ ರೀತಿಯಲ್ಲಿ ಕಲಿಸಬೇಕು ಎಂಬ ವಿಶಯದಲ್ಲಿ ತುಂಬಾ ಚರ್ಚೆಗಳು ನಡೆದಿವೆ, ಮತ್ತು ಈಗಲೂ ನಡೆಯುತ್ತಿವೆ.
ಮಕ್ಕಳಿಗೆ ನುಡಿಯ ಸೊಲ್ಲರಿಮೆಯನ್ನು ಕಲಿಸುವುದು ನಿಜಕ್ಕೂ ತುಂಬಾ ತೊಡಕಿನ ಕೆಲಸ. ಇದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ, ಸೊಲ್ಲರಿಮೆಯಲ್ಲಿ ಬರುವ ಕಟ್ಟಲೆಗಳೆಲ್ಲ ತುಂಬಾ ತೊಡಕು ತೊಡಕಾದವುಗಳು. ಅವುಗಳಲ್ಲಿ ಯಾವ ಕಟ್ಟಲೆಯೂ ಬೇರಾಗಿ ನಿಲ್ಲುವುದಿಲ್ಲ; ಎಲ್ಲವೂ ಉಳಿದ ಹಲವಾರು ಕಟ್ಟಲೆಗಳೊಂದಿಗೆ ಹೆಣೆದಿರುತ್ತವೆ. ಹಾಗಾಗಿ, ಯಾವ ಸೊಲ್ಲರಿಮೆಯ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆ ಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.
ಓದು-ಬರಹದ ಕಲಿಕೆ
ಎರಡನೆಯದಾಗಿ, ಸೊಲ್ಲರಿಮೆಯ ಕಟ್ಟಲೆಗಳು ತಮ್ಮ ಓದಿಗೆ ಇಲ್ಲವೇ ಬರವಣಿಗೆಗೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅದನ್ನು ಕಲಿಯುವವರಿಗೆ ಸುಳುವಾಗಿ ಗೊತ್ತಾಗುವುದಿಲ್ಲ. ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವುದರಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರೇ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ. ಈ ಎರಡನೇ ಸಮಸ್ಯೆಯನ್ನು ಹೋಗಲಾಡಿಸುವುದಕ್ಕಾಗಿ, ಸೊಲ್ಲರಿಮೆಯ ಕಟ್ಟಲೆಗಳನ್ನು ಕಲಿಸುವವರು ಅವನ್ನೊಂದು ವಿಶಯವಾಗಿ ಕಲಿಸಲು ಹೋಗ ಬಾರದು. ನೇರವಾಗಿ ಓದು ಮತ್ತು ಬರವಣಿಗೆಗಳಲ್ಲಿ ಅವು ಹೇಗೆ ನೆರವಿಗೆ ಬರುತ್ತವೆ ಎಂಬುದನ್ನು ತಿಳಿಸಿಕೊಡುವ ಮೂಲಕ ಅವನ್ನು ಕಲಿಸಬೇಕು. ಹೀಗೆ ಮಾಡಿದಲ್ಲಿ, ಮಕ್ಕಳಿಗೆ ಅವನ್ನು ತಿಳಿದುಕೊಳ್ಳಬೇಕೆಂಬ ಹುರುಪು ಹುಟ್ಟುತ್ತದೆ, ಮತ್ತು ಅವನ್ನು ಕಲಿಸುವ ಕೆಲಸ ಹೆಚ್ಚು ಸುಳುವಾಗುತ್ತದೆ.
ಹಿಂದಿನ ಕಾಲದ ಶಾಲೆಗಳಲ್ಲಿ ಸೊಲ್ಲರಿಮೆಯನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು. ಇದರಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಕಲಿಸುವವರಿಗೂ ಅನಿಸುತ್ತಿತ್ತು. ಇದನ್ನು ಗಮನಿಸಿದ ಕೆಲವರು ತಿಳಿವಿಗರು ನುಡಿಯ ಕಲಿಕೆಗೆ ಸೊಲ್ಲರಿಮೆಯ ತಿಳುವಳಿಕೆ ಬೇಕಾಗಿಲ್ಲ; ಅದರಿಂದ ಕಲಿಕೆಗೆ ಯಾವ ನೆರವೂ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು.
ಆದರೆ, ನಿಜಕ್ಕೂ ಇದೊಂದು ಗಡಿಬಿಡಿಯ ತೀರ್ಮಾನವಾಗಿತ್ತು. ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬರದೆ ಇರಲಾರದು. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಕಾರಿನ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು ಇಲ್ಲವೇ ದಾರಿಯ ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.
ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಈ ಎರಡು ಕೆಲಸಗಳಲ್ಲೂ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಬೇಕಾಗುವುದಾದ ಕಾರಣ, ಅವುಗಳ ತಿಳಿವೂ ಅವರಿಗೆ ಬೇಕಾಗುತ್ತದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಈ ಕಟ್ಟಲೆಗಳನ್ನು ಮಕ್ಕಳಿಗೆ ಅವರ ಓದುವ ಇಲ್ಲವೇ ಬರೆಯುವ ಕೆಲಸದಲ್ಲಿ ನೇರವಾಗಿ ಬಳಸಿಕೊಳ್ಳಲು ಬರುವ ಹಾಗೆ ಕಲಿಸಬೇಕಲ್ಲದೆ, ಬೇರೆಯೇ ಒಂದು ವಿಶಯವಾಗಿ ಕಲಿಸಿದರೆ ಅದರಿಂದ ಅವರಿಗೆ ಯಾವ ನೆರವೂ ಸಿಗುವುದಿಲ್ಲ.
ಎತ್ತುಗೆಗಾಗಿ, ಕೆಲವು ಸೊಲ್ಲುಗಳ ಹುರುಳೇನೆಂಬುದನ್ನು ತಿಳಿದುಕೊಳ್ಳಲು ಮಕ್ಕಳಿಗೆ ತೊಂದರೆಯಾಗುತ್ತಿರಬಹುದು. ಆದರೆ, ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳಿಂದ ಮುಕ್ಯವಲ್ಲದ ಅಂಶಗಳನ್ನು ಬೇರ್ಪಡಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಲ್ಲಿ, ಅವರು ಅದರ ಹುರುಳನ್ನು ಸುಳುವಾಗಿ ತಿಳಿದುಕೊಳ್ಳಬಲ್ಲರು. ತುಂಬಾ ತೊಡಕು ತೊಡಕಾಗಿರುವ ಸೊಲ್ಲಿನಲ್ಲೂ ಮುಕ್ಯ ಅಂಶಗಳನ್ನು ಉಳಿದ ಅಂಶಗಳಿಂದ ಬೇರ್ಪಡಿಸಿದಾಗ, ಅದು ಏನು ಹೇಳುತ್ತದೆ ಎಂಬುದು ಕೂಡಲೇ ಗೊತ್ತಾಗುತ್ತದೆ. ಆದರೆ, ಒಂದು ಸೊಲ್ಲಿನಲ್ಲಿ ಮುಕ್ಯ ಅಂಶ ಯಾವುದು ಎಂಬುದನ್ನು ಕಂಡುಹಿಡಿಯಬೇಕಿದ್ದಲ್ಲಿ, ಅದನ್ನು ಹೇಗೆ ಕಟ್ಟಲಾಗಿದೆ, ಅದರ ಇಟ್ಟಳ (ಒಳರಚನೆ) ಎಂತಹದು ಎಂಬಂತಹ ಸೊಲ್ಲರಿಮೆಯ ವಿಶಯಗಳನ್ನೂ ಮಕ್ಕಳು ತಿಳಿದುಕೊಳ್ಳಬೇಕಾಗುತ್ತದೆ. ಇದನ್ನವರಿಗೆ ಕುತೂಹಲ ಮೂಡುವ ಹಾಗೆ ಕಲಿಸಬಹುದು (2.3.8 ನೋಡಿ). ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ಸೊಲ್ಲರಿಮೆಯ ಕೊಡುಗೆ ನಿಜಕ್ಕೂ ತುಂಬಾ ದೊಡ್ಡದು ಎಂಬುದನ್ನು ಕಂಡು ಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಇಟ್ಟಳವೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಳುವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.
ಸೊಲ್ಲರಿಮೆಯ ಕಟ್ಟಲೆಗಳ ಈ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಬರಹದಲ್ಲಿ ಬಳಸುವ ಸೊಲ್ಲುಗಳೆಲ್ಲ ಇಡಿಯಾಗಿರಬೇಕು, ತುಂಡು ಸೊಲ್ಲುಗಳನ್ನು ಅವುಗಳ ಅಂಗಗಳಾಗಿ ಮಾತ್ರ ಬಳಸಬೇಕು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡ ಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ; ಆದರೆ, ತರಗತಿಯಲ್ಲಿ ಹಿಂದೆ ಇರುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗದು ಗೊತ್ತಾಗುವ ಹಾಗೆ ಮಾಡಲು, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸವೇನೆಂಬುದನ್ನು ತೋರಿಸಿಕೊಡಬೇಕಾಗುತ್ತದೆ ಮತ್ತು ತುಂಡು
ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ಎತ್ತುಗೆಗಳನ್ನು ಕೊಟ್ಟು ವಿವರಿಸಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಇಟ್ಟಳದ ಮತ್ತು ಬಳಕೆಯ ಹಿಂದಿರುವ ಸೊಲ್ಲರಿಮೆಯ ಕಟ್ಟಲೆಗಳನ್ನು ಅವರಿಗೆ ತಿಳಿಸಿಹೇಳಬೇಕಾಗುತ್ತದೆ.
2.2.1 ಎಲ್ಲರ ಕನ್ನಡ ಮತ್ತು ಆಡುಗನ್ನಡ
ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಶಾಲೆಗೆ ಸೇರುವ ಮಕ್ಕಳು ತಾವು ಮನೆಯಲ್ಲಿ ಬಳಸುತ್ತಿರುವ ಆಡುನುಡಿಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿಯ ಬೇಕಾಗುತ್ತದೆ. ಅದು ಅವರು ಈಗಾಗಲೇ ಕಲಿತಿರುವ ಕನ್ನಡದಿಂದ (ಅವರ ಆಡುನುಡಿಯಿಂದ) ಹಲವು ವಿಶಯಗಳಲ್ಲಿ ಬೇರಾಗಿದೆ ಎಂಬುದನ್ನು ಕಲಿಸು ವವರು ಮನಸ್ಸಿನಲ್ಲಿರಿಸಿಕೊಳ್ಳುವುದು ಅವಶ್ಯ.
ಮಕ್ಕಳು ಮನೆಯಲ್ಲಿ ಬಳಸುವ ಆಡುನುಡಿ ತಪ್ಪು ತಪ್ಪಾದ ಕನ್ನಡ, ಮತ್ತು ಪುಸ್ತಕದಲ್ಲಿ ಬಳಸಿರುವ ಕನ್ನಡವೇ ಸರಿಯಾದ ಕನ್ನಡ ಎಂಬುದಾಗಿ ಮಕ್ಕಳಿಗೆ ಹೇಳಿಕೊಡುವುದು ಸರಿಯಲ್ಲ. ಯಾಕೆಂದರೆ, ನಿಜಕ್ಕೂ ಅವು ಎರಡು ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾಗಿರುವ ಕನ್ನಡದ ರೂಪಗಳಾಗಿದ್ದು, ಅವುಗಳಲ್ಲಿ ಒಂದು ಸರಿ ಮತ್ತು ಇನ್ನೊಂದು ತಪ್ಪು ಎಂದು ಹೇಳುವುದಕ್ಕೆ ಯಾವ ಆದಾರವೂ ಇಲ್ಲ. ಆಡುನುಡಿಯನ್ನು ಶಾಲೆಯಲ್ಲಿ ಬಳಸುವುದು ಹೇಗೆ ಸರಿಯೆಂದು ತೋರುವುದಿಲ್ಲವೋ ಹಾಗೆಯೇ ಶಾಲೆಯಲ್ಲಿ ಬಳಸುವ ಎಲ್ಲರ ಕನ್ನಡವನ್ನು ಮನೆಯಲ್ಲಿ ಬಳಸುವುದೂ ಸರಿಯೆಂದು ತೋರುವುದಿಲ್ಲ.
ಮಕ್ಕಳಿಗೆ ಎಲ್ಲರ ಕನ್ನಡವನ್ನು ಕಲಿಸುವವರು ಮನೆಯಲ್ಲಿ ಬಳಸುವ ಆಡು ಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅವರ ಗಮನಕ್ಕೆ ತರಬೇಕು. ಕನ್ನಡಕ್ಕೆ ಬೇರೆ ಬೇರೆ ರೂಪಗಳಿವೆ ಮತ್ತು ಈ ರೂಪಗಳನ್ನು ಅವರು ಬೇರೆ ಬೇರೆ ಸಂದರ್ಬಗಳಲ್ಲಿ ಬಳಸಬೇಕಾಗು ತ್ತದೆ ಎಂಬ ವಿಶಯವನ್ನು ಅವರು ಗಮನಿಸುವ ಹಾಗೆ ಮಾಡಬೇಕು.
ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ, ಅದರಲ್ಲೂ ಕೆಳವರ್ಗದ ಮಕ್ಕಳಲ್ಲಿ, ತಾವು ಮನೆಯಲ್ಲಿ ಬಳಸುವ ಆಡುನುಡಿ ತಪ್ಪು ತಪ್ಪಾದುದು, ಕೀಳು ದರ್ಜೆಯದು, ಹೇಸುವಂತಹದು ಎಂಬ ಅನಿಸಿಕೆಯಿರುತ್ತದೆ. ಅವರಲ್ಲಿ ಇಂತಹ ಅನಿಸಿಕೆ ಉಂಟಾಗುವಂತೆ ಮೇಲ್ವರ್ಗದವರು ಮಾಡಿರುತ್ತಾರೆ. ಆದರೆ, ಇದು ಸರಿಯಾದ ಅನಿಸಿಕೆಯಲ್ಲ; ಆಡುನುಡಿಗಳು ಎಲ್ಲರ ಕನ್ನಡಕ್ಕಿಂತ ಬೇರಾಗಿ ಮಾತ್ರ ಇವೆ
ಯಲ್ಲದೆ ಅವುಗಳಲ್ಲಿ ಹೇಸುವಂತಹದು ಏನೂ ಇಲ್ಲ ಎಂಬುದನ್ನು ಶಾಲೆಯಲ್ಲಿ ಅವರಿಗೆ ತಿಳಿಸಿಕೊಡಬೇಕು.
ಜಾತಿಗಳ ನಡುವಿರುವ ವ್ಯತ್ಯಾಸವನ್ನು ಕೀಳು-ಮೇಲೆಂದು ಬಗೆಯುವುದು ಹೇಗೆ ತಪ್ಪೀ ಅದೇ ರೀತಿಯಲ್ಲಿ ಜಾತಿಗಳು ಬಳಸುವ ಆಡುನುಡಿಗಳ ನಡುವಿರುವ ವ್ಯತ್ಯಾಸವನ್ನು ಕೀಳು-ಮೇಲೆಂದು ಬಗೆಯುವುದೂ ತಪ್ಪೇ. ಪ್ರತಿಯೊಬ್ಬನಿಗೂ ತನ್ನ ಆಡುನುಡಿಯನ್ನು ಬಳಸುವ ಮತ್ತು ಉಳಿಸಿಕೊಳ್ಳುವ ಹಕ್ಕಿದೆ. ಅದು ಆತನ ಸಂಸ್ಕ್ರುತಿಯ ಅಂಗವಾಗಿದೆ. ಅದನ್ನು ಬಳಸುವುದು ಆತನಿಗೆ ಹೆಮ್ಮೆಯ ವಿಶಯವಾಗಿರಬೇಕು.
ಎಲ್ಲರ ಕನ್ನಡವನ್ನು ಕಲಿಸುವವರು ಅದಕ್ಕೂ ಮನೆಯಲ್ಲಿ ಬಳಸುವ ಆಡುನುಡಿಗೂ ನಡುವಿರುವ ವ್ಯತ್ಯಾಸಗಳನ್ನು ಮಕ್ಕಳು ಕುತೂಹಲದಿಂದ ಕಾಣುವ ಹಾಗೆ ಮಾಡಬೇಕು. ಎಲ್ಲರ ಕನ್ನಡದ ಹಾಗೆ ಆಡುಗನ್ನಡದಲ್ಲೂ ತೊಡಕು ತೊಡಕಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ. ಮೇಲ್ವರ್ಗದವರ ಆಡುನುಡಿಗಳಲ್ಲಿ ಮಾತ್ರವಲ್ಲ, ಕೆಳವರ್ಗದವರ ಆಡುನುಡಿ ಗಳಲ್ಲೂ ಇಂತಹ ನೂರಾರು ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ. ಇವುಗಳಲ್ಲಿ ಒಂದು ಆಡುನುಡಿ ಇನ್ನೊಂದು ಆಡುನುಡಿಯಿಂದ ಬೇರಾಗಿರು ತ್ತದಶ್ಟೇ ಅಲ್ಲದೆ, ಯಾವುದರಲ್ಲೂ ತಪ್ಪಾಗಿರುವ ಕಟ್ಟಲೆಗಳು ಬಳಕೆ ಯಾಗುವುದಿಲ್ಲ. ಇದಲ್ಲದೆ, ಒಂದರಲ್ಲಿ ಕಟ್ಟಲೆಗಳು ಬಳಕೆಯಾಗುತ್ತವೆ ಮತ್ತು ಇನ್ನೊಂದರಲ್ಲಿ ಕಟ್ಟಲೆಗಳೇ ಇಲ್ಲ ಎಂದು ಹೇಳುವುದಕ್ಕೂ ಯಾವ ಆದಾರವೂ ಈ ವಿಶಯವನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಮಕ್ಕಳ ಗಮನಕ್ಕೆ ತಂದಲ್ಲಿ, ಅವರಿಗೆ ತಮ್ಮ ಆಡುನುಡಿಯ ವಿಶಯದಲ್ಲಿದ್ದ ಕೀಳರಿಮೆ ಇಲ್ಲವಾಗು
2.2.2 ಆಡುಗನ್ನಡದ ನೆರವು
ಮೇಲೆ ಸೂಚಿಸಿದ ಹಾಗೆ, ಶಾಲೆಗೆ ಸೇರಿರುವ ಮಕ್ಕಳಿಗೆ ತಮ್ಮ ಆಡುಗನ್ನಡದಲ್ಲಿ ಸಲೀಸಾಗಿ ಮಾತನಾಡಲು ಗೊತ್ತಿರುತ್ತದೆ. ಎಲ್ಲರ ಕನ್ನಡದಲ್ಲಿ ಮಾತನಾಡು ವುದನ್ನು ಅವರು ತಮ್ಮಲ್ಲಿರುವ ಈ ತಿಳುವಳಿಕೆಯ ನೆಲೆಯ ಮೇಲೆ ನಡೆಸ ಬೇಕಾಗುತ್ತದೆ. ಹಾಗಾಗಿ, ಮನೆಯಲ್ಲಿ ಬಳಸುವ ಆಡುಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅವರು
ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಹೆಚ್ಚು ಚನ್ನಾಗಿ ಮುಂದು ವರಿಯಬಲ್ಲುದು.
ಆದರೆ ಇದನ್ನು ನಡೆಸಿಕೊಡಬೇಕಿದ್ದಲ್ಲಿ, ಕಲಿಸುಗರಿಗೆ ಈ ಎರಡು ಒಳನುಡಿಗಳ ಸೊಲ್ಲರಿಮೆ ಎಂತಹದು, ಯಾವ ರೀತಿಯಲ್ಲೆಲ್ಲ ಅವು ಒಂದರಿಂದೊಂದು ಬೇರಾಗಿವೆ ಎಂಬುದರ ತಿಳಿವು ಬೇಕಾಗುತ್ತದೆ. ಎತ್ತುಗೆಗಾಗಿ, ಎಲ್ಲರ ಕನ್ನಡದಲ್ಲಿ ಬರುವ ಉಲಿಗಳಲ್ಲಿ ಯಾವುವು ಮಕ್ಕಳ ಆಡುಗನ್ನಡದಲ್ಲಿ ಬರುವುದಿಲ್ಲ ಎಂಬುದನ್ನು, ಮತ್ತು ಅಂತಹ ಉಲಿಗಳನ್ನು ಹೊರಡಿಸುವ ಬಗೆ ಹೇಗೆ ಎಂಬುದನ್ನು ಕಲಿಸುಗರು ತಿಳಿದುಕೊಂಡಿದ್ದಲ್ಲಿ, ಅವನ್ನು ಮಕ್ಕಳಿಗೆ ಕಲಿಸುವ ಕೆಲಸ ಸುಳುವಾಗುತ್ತದೆ.
ಇದೇ ರೀತಿಯಲ್ಲಿ, ಮಕ್ಕಳ ಆಡುಗನ್ನಡಕ್ಕೂ ಎಲ್ಲರ ಕನ್ನಡಕ್ಕೂ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಅವರು ತಿಳಿದುಕೊಂಡಿದ್ದಲ್ಲಿ, ಎಲ್ಲರ ಕನ್ನಡವನ್ನು ಮಕ್ಕಳಿಗೆ ಹೆಚ್ಚು ಚನ್ನಾಗಿ ಕಲಿಸಬಲ್ಲರು. ಯಾಕೆಂದರೆ, ಹಾಗೆ ಮಾಡಿದಲ್ಲಿ ಮಕ್ಕಳು ತಮ್ಮಲ್ಲಿರುವ ಆಡುಗನ್ನಡದ ತಿಳಿವನ್ನು ಎಲ್ಲರ ಕನ್ನಡದ ಕಲಿಕೆಗೆ ಒಂದು ಮೆಟ್ಟಲಾಗಿ ಬಳಸ ಬಲ್ಲರು. ನೇರವಾಗಿ ಎಲ್ಲರ ಕನ್ನಡವನ್ನು ಕಲಿಯುವುದಕ್ಕಿಂತ ಅವರಿಗೆ ಇದು ಹೆಚ್ಚು ಸುಳುವಾಗಬಲ್ಲುದು.
ಮಕ್ಕಳ ಆಡುಗನ್ನಡವನ್ನು ಎಲ್ಲರ ಕನ್ನಡದ ಕಲಿಕೆಯಲ್ಲಿ ಒಂದು ಮೆಟ್ಟಲಾಗಿ ಬಳಸುವುದರಿಂದ ಇನ್ನೊಂದು ನೆರವೂ ಸಿಗುತ್ತದೆ: ಹಾಗೆ ಮಾಡುವುದರಿಂದ ಮಕ್ಕಳಿಗೆ ತಮ್ಮ ಆಡುಗನ್ನಡದ ಮೇಲಿರುವ ಕೀಳರಿಮೆ ಹೋಗುತ್ತದೆ, ಮತ್ತು ಕನ್ನಡಕ್ಕೆ ಹಲವು ರೂಪಗಳಿದ್ದು, ಸಂದರ್ಬಕ್ಕೆ ತಕ್ಕ ಹಾಗೆ ಅವುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗೆ ಚಿಕ್ಕಂದಿನಲ್ಲೇನೇ ಬರುತ್ತದೆ. ಕನ್ನಡದ ಈ ಹಲವು ರೂಪಗಳನ್ನು ಕಲಿತುಕೊಂಡು, ಸಂದರ್ಬಕ್ಕೆ ತಕ್ಕ ಹಾಗೆ ಅವನ್ನು ಜಾಣ್ಮೆಯಿಂದ ಬಳಸುವುದು ಹೇಗೆ ಎಂಬುದೂ ಅವರಿಗೆ ಗೊತ್ತಾಗುತ್ತದೆ.
ಆದರೆ, ಇಂತಹ ಕೆಲಸಗಳನ್ನು ನಡೆಸಬೇಕಿದ್ದಲ್ಲಿ, ಅದಕ್ಕಾಗಿ ಶಾಲೆಗೆ ಸೇರುವ ಮಕ್ಕಳ ಆಡುನುಡಿಗಳಿಗೂ ಎಲ್ಲರ ಕನ್ನಡಕ್ಕೂ ನಡುವೆ ಉಲಿಯರಿಮೆ ಮತ್ತು ಸೊಲ್ಲರಿಮೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಅವರಿಗೆ ತಿಳಿಸಿಕೊಡುವಂತಹ ಅರಕೆಗಳು ನಡೆದಿರಬೇಕಾಗುತ್ತದೆ. ಇದು ಇವತ್ತು ನುಡಿಯರಿಗರು ನಡೆಸಬೇಕಾಗಿರುವ ಕೆಲಸವಾಗಿದೆ.
2.2.3 ಹೆಚ್ಚಿನ ಉಲಿಗಳ ಕಲಿಕೆ
ಮೇಲೆ ಸೂಚಿಸಿದ ಹಾಗೆ, ಮಕ್ಕಳು ಮನೆಯಲ್ಲಿ ಬಳಸುವ ಆಡುಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವೆ ಅವುಗಳಲ್ಲಿ ಬರುವ ಉಲಿಗಳಲ್ಲಿ ವ್ಯತ್ಯಾಸವಿರಬಹುದು. ಎತ್ತುಗೆಗಾಗಿ, ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಸಕಾರ ಮತ್ತು ಶಕಾರಗಳ ನಡುವಿನ ವ್ಯತ್ಯಾಸ ಕೆಲವು ಮಕ್ಕಳ ಆಡುಗನ್ನಡದಲ್ಲಿ ಇಲ್ಲದಿರಬಹುದು. ಹೀಗಿದ್ದಲ್ಲಿ, ಆ ಮಕ್ಕಳಿಗೆ ಎಲ್ಲರ ಕನ್ನಡ ದಲ್ಲಿ ಮಾತನಾಡಬೇಕಾದಾಗ ಇಲ್ಲವೇ ಓದಬೇಕಾದಾಗ, ಸಕಾರಕ್ಕಿಂತ ಬೇರಾ ಗಿರುವಂತೆ ಶಕಾರವನ್ನು ಸರಿಯಾಗಿ ಹೊರಡಿಸಲು ಬರುವುದಿಲ್ಲ.
ಸಾಮಾನ್ಯವಾಗಿ ಶಾಲೆಗಳಲ್ಲಿ (ಮತ್ತು ಸಮಾಜದಲ್ಲಿ) ಇಂತಹ ಮಕ್ಕಳನ್ನು ಹೀನಾಯವಾಗಿ ಕಾಣಲಾಗುತ್ತದೆ. ಶಕಾರವನ್ನು ಸರಿಯಾಗಿ ಆಡಲು ಬರದಿರುವು ದಕ್ಕೆ ಅವರ ಹುಟ್ಟು ಕಾರಣ, ಇಲ್ಲವೇ ಅವರ ನಾಲಿಗೆ ಸರಿಯಾಗಿ ಮಗುಚ ದಿರುವುದು ಇಲ್ಲವೇ ನಾಲಿಗೆ ದಪ್ಪವಾಗಿರುವುದು ಕಾರಣ ಎಂದೆಲ್ಲ ಹೇಳ ಲಾಗುತ್ತಿದೆ. ಆದರೆ, ನಿಜಕ್ಕೂ ಇದಕ್ಕೆ ಮಕ್ಕಳಲ್ಲಿರುವ ಯಾವ ಕೊರತೆಯೂ ಕಾರಣವಲ್ಲ. ತಾಯ್ನುಡಿಯಾಗಿ ಕಲಿತ ತಮ್ಮ ಆಡುನುಡಿಯಲ್ಲಿ ಇಲ್ಲದೇ ಇರುವಂತಹ ಉಲಿಗಳನ್ನು ಆಡಲು ಎಲ್ಲಾ ಮಕ್ಕಳಿಗೂ ಮೊದಲಿಗೆ ತೊಂದರೆ ಯೆನಿಸುತ್ತದೆ.
ಈ ವಿಶಯವನ್ನು ಕಲಿಸುವವರು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಮತ್ತು ಮಕ್ಕಳಲ್ಲಿ ಕೀಳರಿಮೆಯುಂಟಾಗದ ಹಾಗೆ, ಅವರಿಗೆ ಈ ಹೆಚ್ಚಿನ ಉಲಿಗಳನ್ನು ಆಡಲು ಹೇಳಿಕೊಡಬೇಕು. ಸಕಾರವನ್ನು ಆಡುವಾಗ ನಾಲಿಗೆಯ ತುದಿ ಹಲ್ಲಿನ ಹಿಂದುಗಡೆ ನಿಲ್ಲುತ್ತದೆ, ಮತ್ತು ಶಕಾರವನ್ನು ಆಡುವಾಗ ನಾಲಿಗೆಯ ಅಲಗು (ತುದಿಯಿಂದ ತುಸು ಹಿಂದಿರುವ ಬಾಗ) ಇನ್ನೂ ತುಸು ಹಿಂದೆ, ಎಂದರೆ ಅಂಗುಳಿನ ಹತ್ತಿರ ನಿಲ್ಲುತ್ತದೆ. ಇವನ್ನು ಜೋರಾಗಿ ಉಜ್ಜಿಕೊಂಡು ಉಸಿರು ಹೊರಹೋಗುವ ಹಾಗೆ ಮಾಡಿದಲ್ಲಿ, ಸ್ ಮತ್ತು ಶ್ ಎಂಬ ಉಜ್ಜುಲಿಗಳು ಕೇಳಿಸುತ್ತವೆ.
ಮಕ್ಕಳಿಗೆ ಇದನ್ನು ಹೇಳಿಕೊಟ್ಟು, ಸಾಲು-ಶಾಲು, ಸಾಯಿ-ಶಾಯಿ, ಸಾಕು-ಶಾಲೆ ಮೊದಲಾದ ಎಲ್ಲರ ಕನ್ನಡದ ಪದಗಳಲ್ಲಿ ಈ ಎರಡು ಉಲಿಗಳು ಹೇಗೆ ಬೇರೆ ಬೇರಾಗಿ ಕೇಳಿಸುತ್ತವೆ ಎಂಬುದನ್ನು ತೋರಿಸಿಕೊಡ ಬೇಕು, ಮತ್ತು ಅವನ್ನು ಸರಿಯಾಗಿ ಆಡಲು ಕಲಿಸಬೇಕು. ಹೀಗೆ ಮಾಡಿದಲ್ಲಿ, ತರಗತಿಯಲ್ಲಿರುವ ಎಲ್ಲಾ ಮಕ್ಕಳೂ ಸಕಾರ ಮತ್ತು ಶಕಾರಗಳನ್ನು ಸರಿಯಾಗಿ ಆಡುವ ಹಾಗಾಗಬಲ್ಲರು.
ಮಯ್ಸೂರಿನ ಹಲವು ಮಕ್ಕಳಿಗೆ ಹಕಾರವನ್ನು ಹೊರಡಿಸಲು ಗೊತ್ತಿದೆ ಯಾದರೂ ಅದನ್ನು ಹಾಲು, ಹಲ್ಲಿ, ಹಕ್ಕಿ, ಹುಳಿ ಮೊದಲಾದ ಯಾವ ಪದಗಳಲ್ಲಿ ಬಳಸಬೇಕು, ಮತ್ತು ಆಳು, ಅಲ್ಲಿ, ಅಕ್ಕಿ, ಉಳಿ ಮೊದಲಾದ ಯಾವ ಪದಗಳಲ್ಲಿ ಬಳಸದಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಅವನ್ನು ಸರಿಯಾಗಿ ಬಳಸುವಲ್ಲಿ ತೊಂದರೆ ಕಾಣಿಸುತ್ತದೆ. ಇಲ್ಲೂ ಕೂಡ, ಮಕ್ಕಳಲ್ಲಿ ಕೀಳರಿಮೆಯುಂಟಾಗದ ಹಾಗೆ ಪದಗಳ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಬೇಕು, ಮತ್ತು ಅವನ್ನು ಸರಿಯಾಗಿ ಆಡಲು ಕಲಿಸಬೇಕು. ಹೀಗೆ ಮಾಡಿದಲ್ಲಿ, ಯಾವ ಮಗುವಿಗೂ ಹಕಾರವಿರುವ ಮತ್ತು ಹಕಾರವಿಲ್ಲದ ಪದಗಳನ್ನು ಸರಿಯಾಗಿ ಆಡಲು ತೊಂದರೆಯುಂಟಾಗಲಾರದು.
ಈ ಮಕ್ಕಳು ಎಲ್ಲರ ಕನ್ನಡದಲ್ಲಿ ಕಾಣಿಸುವ ಹಕಾರವನ್ನು ಸರಿಯಾಗಿ ಹೊರಡಿಸದಿರುವುದಕ್ಕೆ ಅವರ ಆಡುಗನ್ನಡದಲ್ಲಿ ಆ ಉಲಿ ಬಳಕೆಯಾಗ ದಿರುವುದು ಕಾರಣವಲ್ಲದೆ, ಅವರಲ್ಲಿರುವ ಯಾವ ಕೊರತೆಯೂ ಕಾರಣವಲ್ಲ. ಸರಿಯಾಗಿ ಕಲಿಸಿದಲ್ಲಿ, ಅವರದನ್ನು ಯಾವ ತೊಂದರೆಯೂ ಇಲ್ಲದೆ ಕಲಿಯ ಬಲ್ಲರು. ಮೊದಲಿನಿಂದಲೂ ಅದು ಅವರಲ್ಲಿ ಹುಟ್ಟಿನಿಂದಲೇ ಬಂದಿರುವ ಕೊರತೆ ಎಂಬುದಾಗಿ ಕೀಳರಿಮೆಯನ್ನು ಹುಟ್ಟಿಸಿದಲ್ಲಿ, ಆಮೇಲೆ ಅವರಿಗೆ ಅದನ್ನು ಕಲಿಯಲು ಆಗುವುದೇ ಇಲ್ಲ.
ಮಕ್ಕಳ ಆಡುಗನ್ನಡದಲ್ಲಿಲ್ಲದ ಉಲಿಗಳು ಎಲ್ಲರ ಕನ್ನಡದಲ್ಲಿ ಬರುತ್ತಿವೆ ಯಾದರೆ, ಅವನ್ನು ಕಲಿಸುವುದಕ್ಕಾಗಿ ಕಲಿಸುಗರು ಹೆಚ್ಚಿನ ತೊಂದರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಉಲಿಗಳನ್ನು ಹೊರಡಿಸುವುದು ಹೇಗೆ ಎಂಬುದನ್ನು ಅವರು ತಾವೇ ಮೊದಲು ತಿಳಿದುಕೊಳ್ಳಬೇಕು, ಮತ್ತು ಅವನ್ನು ಕಲಿಸುವಾಗ ಮಕ್ಕಳಿಗೂ ಇದನ್ನು ತಿಳಿಸಿ, ಬಾಯಿಯೊಳಗೆ ನಾಲಿಗೆ ಹೇಗೆ ಚಲಿಸುತ್ತದೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡಬೇಕು.
ಕೆಲವು ಮಕ್ಕಳಿಗೆ ನ-ಣಗಳ ನಡುವಿನ ವ್ಯತ್ಯಾಸವನ್ನು ಮಾತಿನಲ್ಲಿ ಕಾಣಿಸಲು ಬರುವುದಿಲ್ಲ. ಅವರ ಆಡುಗನ್ನಡದಲ್ಲಿ ಈ ವ್ಯತ್ಯಾಸ ಇಲ್ಲದಿರುವುದೇ ಇದಕ್ಕೆ ಕಾರಣ. ಣಕಾರವನ್ನು ಹೊರಡಿಸಬೇಕಿದ್ದಲ್ಲಿ, ನಾಲಿಗೆಯ ತುದಿ ಒಳಕ್ಕೆ ಮಡಚಿಕೊಳ್ಳಬೇಕು. ನಕಾರಕ್ಕೂ ಣಕಾರಕ್ಕೂ ನಡುವಿರುವ ಈ ವ್ಯತ್ಯಾಸ, ದಕಾರಕ್ಕೂ ಡಕಾರಕ್ಕೂ ನಡುವಿರುವ ವ್ಯತ್ಯಾಸದ ಹಾಗೆಯೇ ಇದೆ. ಇದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಸುಳುವಾಗಿ ಣಕಾರವನ್ನು ಹೊರಡಿಸಲು ಕಲಿತುಬಿಡುತ್ತಾರೆ.
ಇಲ್ಲಿ ಎರಡು ಮುಕ್ಯ ವಿಶಯಗಳನ್ನು ನಾವು ಗಮನಿಸಬೇಕು: ಮೊದಲನೆಯದಾಗಿ, ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಉಲಿಗಳನ್ನು ಹೊರಡಿಸುವ ಬಗೆ ಹೇಗೆ ಎಂಬುದನ್ನು ಕಲಿಸುಗರು ತಿಳಿದಿರಬೇಕು, ಮತ್ತು ಬೇಕಿದ್ದಲ್ಲಿ ಅದನ್ನು ಮಕ್ಕಳಿಗೆ ತಿಳಿಸಿಹೇಳಲು ಅವರಿಗೆ ಗೊತ್ತಿರಬೇಕು. ಎರಡನೆಯದಾಗಿ, ಮಕ್ಕಳಿಗೆ ಎಲ್ಲರ ಕನ್ನಡದಲ್ಲಿ ಬರುವ ಉಲಿಗಳಲ್ಲಿ ಕೆಲವನ್ನು ಹೊರಡಿಸಲು ಬಾರದಿರುವುದಕ್ಕೆ ಅವು ಅವರ ಆಡುನುಡಿಯಲ್ಲಿ ಇಲ್ಲದಿರುವುದು ಕಾರಣವಲ್ಲದೆ, ಅವರ ಇಲ್ಲವೇ ಅವರ ನಾಲಿಗೆಯ ಕೊರತೆಯಲ್ಲ ಎಂಬುದನ್ನು ಕಲಿಸುಗರು ತಿಳಿದಿರಬೇಕು. ಯಾವುದಾದರೂ ಒಂದು ತರಗತಿಯಲ್ಲಿ ಕಲಿತಿರುವ ಮಕ್ಕಳಿಗೆ ಅಂತಹ ಉಲಿಗಳನ್ನು ಆಡಲು ತಿಳಿದಿಲ್ಲವಾದರೆ, ಅದಕ್ಕೆ ಆ ತರಗತಿಯ ಕಲಿಸುಗರ ಕೊರತೆಯೇ ಕಾರಣವಲ್ಲದೆ ಮಕ್ಕಳ ಕೊರತೆಯಲ್ಲ.
2.3 ಓದಲು ಕಲಿಯುವುದು
ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಯುವುದಕ್ಕಿಂತಲೂ, ಅದರಲ್ಲಿ ಓದಲು ಕಲಿಯುವುದು ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಓದುವ ಕೆಲಸದಲ್ಲಿ ಮಕ್ಕಳು ಹಲವು ಬಗೆಯ ಚಳಕ(ಕವ್ಶಲ್ಯ)ಗಳನ್ನು ಬಳಸಬೇಕಾಗು ತ್ತದೆ: ಮಾತಿನಲ್ಲಿ ಬರುವ ಪದಗಳೆಲ್ಲ ಉಲಿಗಳ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಅವರು ತಿಳಿದುಕೊಳ್ಳ ಬೇಕಾಗುತ್ತದೆ, ಮತ್ತು ಕಾಗದದಲ್ಲಿ ಕಾಣಿಸುವ ಗುರುತು ಇಲ್ಲವೇ ಬರಿಗೆ (ಅಕ್ಶರ)ಗಳ ನಡುವಿರುವ ವ್ಯತ್ಯಾಸಗಳನ್ನು ಗಮನಿಸಿ, ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸಲು, ಮತ್ತು ಉಲಿ ಇಲ್ಲವೇ ಉಲಿಕಂತೆಗಳಿಗೂ ಅವಕ್ಕೂ ನಡುವಿರುವ ಪತ್ತುಗೆಯನ್ನು ತಿಳಿದುಕೊಳ್ಳಲು ಕಲಿಯಬೇಕಾಗುತ್ತದೆ. ಇದಲ್ಲದೆ, ಈ ಬರಿಗೆಗಳ ಜೋಡಣೆಗಳಲ್ಲಿ ಪದಗಳನ್ನು ಮಾತ್ರವಲ್ಲದೆ ಪದ ಕಂತೆಗಳನ್ನು ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹದ ಹುರುಳನ್ನು ಪಡೆಯಲು ಅವರು ಕಲಿಯಬೇಕಾಗುತ್ತದೆ.
ಈ ಕೆಲಸವನ್ನು ಮಕ್ಕಳು ತಾವಾಗಿಯೇ ನಡೆಸಲಾರರು. ಅದನ್ನವರಿಗೆ ಶಾಲೆಯಲ್ಲಿ ಹೇಳಿಕೊಡಬೇಕಾಗುತ್ತದೆ. ಹಾಗೆ ಹೇಳಿಕೊಡುವವರಿಗೆ ಓದು ಕಲಿಯುವುದಕ್ಕಾಗಿ ಮಕ್ಕಳು ಎಂತಹ ಚಳಕಗಳನ್ನೆಲ್ಲ ಗಳಿಸಬೇಕಾಗುತ್ತದೆ ಎಂಬುದು ತಿಳಿದಿದೆಯಾದಲ್ಲಿ, ಅವನ್ನು ಮಕ್ಕಳು ಒಂದೊಂದಾಗಿ ಪಡೆಯುವ ಹಾಗೆ ಅವರು ಮಾಡಬಲ್ಲರು ಮತ್ತು ಆ ಮೂಲಕ ಮಕ್ಕಳು ಒಳ್ಳೇ ಓದುಗ ರಾಗುವ ಹಾಗೆ ಮಾಡಬಲ್ಲರು.
ಓದು ಕಲಿಯುವ ಮಕ್ಕಳು ಗಳಿಸಬೇಕಾಗಿರುವ ಈ ಚಳಕಗಳಲ್ಲಿ ಮುಕ್ಯ ವಾದವುಗಳನ್ನು ಕೆಳಗೆ ವಿವರಿಸಲಾಗಿದೆ. ಇವುಗಳಲ್ಲಿ ಮೊದಲ ಎರಡು ಚಳಕ ಗಳನ್ನು ಗಳಿಸುವಲ್ಲಿ ಉಲಿಯರಿಮೆಯ ತಿಳಿವು ನೆರವಿಗೆ ಬರುತ್ತದೆ, ಮತ್ತು ಉಳಿದ ಮೂರು ಚಳಕಗಳನ್ನು ಗಳಿಸುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ ಎಂಬುದನ್ನು ಗಮನಿಸಬಹುದು. ಈ ಚಳಕಗಳನ್ನು ಕಲಿಯುವವರಿ ಗಿಂತಲೂ, ಅವನ್ನು ಶಾಲೆಯಲ್ಲಿ ಕಲಿಸುವವರಿಗೆ ಹೆಚ್ಚು ಆಳವಾದ ಉಲಿಯರಿಮೆ ಮತ್ತು ಸೊಲ್ಲರಿಮೆಗಳ ತಿಳಿವು ಬೇಕಾಗುತ್ತದೆ.
2.3.1 ಉಲಿಗಳಿಂದ ಪದಗಳು
ಮಾತಿನಲ್ಲಿ ಬಳಕೆಯಾಗುವ ಪದಗಳು ಉಲಿಗಳ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು. ಇದರಿಂದ ಅವರಿಗೆ ಬರಹಗಳನ್ನು ಓದಲು ಹೆಚ್ಚು ಸುಳುವಾಗುತ್ತದೆ. ಮಕ್ಕಳಲ್ಲಿ ಈ ತಿಳುವಳಿಕೆಯನ್ನು ಉಂಟುಮಾಡುವುದಕ್ಕಾಗಿ, ಆ ತಿಳುವಳಿಕೆಯನ್ನು ಕೊಡಬಲ್ಲ ಕೆಲವು ಕೆಲಸಗಳನ್ನು ಅವರಿಂದ ಮಾಡಿಸಬಹುದು.
ಎತ್ತುಗೆಗಾಗಿ, ಕೆಲವು ಪದಗಳನ್ನು ಆಡಿ ತೋರಿಸಿ, ಅವುಗಳಲ್ಲಿ ಮೊದಲಿಗೆ ಯಾವ ಉಲಿ ಬರುತ್ತದೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡ ಬಹುದು (ಎತ್ತುಗೆಗಾಗಿ, ಮನೆ, ಮಾತು, ಮುಗಿಲು, ಮೇಲೆ ಮೊದಲಾದ ಪದಗಳಲ್ಲಿ ಮಕಾರ ಮೊದಲಿಗೆ ಬರುತ್ತದೆ);
ಒಂದು ಪದದ ಮೊದಲ ಉಲಿಯನ್ನು ತೆಗೆದು ಹಾಕಿದರೆ, ಬೇರೊಂದು ಪದ ಸಿಗುತ್ತದೆ (ಮಾಡು ಪದದ ಮೊದಲ ಉಲಿಯಾದ ಮಕಾರವನ್ನು ತೆಗೆದು ಹಾಕಿದರೆ ಆಡು ಪದ ಸಿಗುತ್ತದೆ), ಮತ್ತು ಅದರ ಬದಲು ಬೇರೊಂದು ಉಲಿಯನ್ನು ಬಳಸಿದರೆ ಇನ್ನೊಂದು ಪದ ಸಿಗುತ್ತದೆ (ಮಾಡು ಪದದ ಮೊದಲ ಉಲಿಯಾದ ಮಕಾರದ ಬದಲು ಕಕಾರವನ್ನು ಬಳಸಿದಲ್ಲಿ ಕಾಡು ಪದ ಸಿಗುತ್ತದೆ) ಎಂಬಂತಹ ವಿಶಯಗಳನ್ನು ಅವರು ಗಮನಿಸುವಂತೆ ಮಾಡ ಬಹುದು; ಮತ್ತು
ಒಂದು ಪದದಲ್ಲಿ ಎಶ್ಟು ಉಲಿಕಂತೆಗಳು ಇಲ್ಲವೇ ಉಲಿಗಳು ಸೇರಿ ಕೊಂಡಿವೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡಬಹುದು (ಮನೆ ಪದದಲ್ಲಿ ಮ ಮತ್ತು ನೆ ಎಂಬ ಎರಡು ಉಲಿಕಂತೆಗಳು ಸೇರಿವೆ ಮತ್ತು ಮ್, ಅ, ನ್, ಎ ಎಂಬ ನಾಲ್ಕು ಉಲಿಗಳು ಸೇರಿವೆ).
ಇದಲ್ಲದೆ, ಪದಗಳಿಗೆ ಅವುಗಳದೇ ಆದ ಹುರುಳುಗಳಿವೆಯಾದರೂ ಅವುಗಳಲ್ಲಿ ಬರುವ ಉಲಿಗಳಿಗೆ ಇಲ್ಲವೇ ಉಲಿಕಂತೆಗಳಿಗೆ ಅವುಗಳದೇ ಆದ ಹುರುಳಿಲ್ಲ ಎಂಬುದನ್ನೂ ಮಕ್ಕಳು ಗಮನಿಸುವ ಹಾಗೆ ಮಾಡಬಹುದು. ಎತ್ತುಗೆಗಾಗಿ, ಮನೆ ಪದಕ್ಕೆ ಅದರದೇ ಆದ ಒಂದು ಹುರುಳಿದೆ; ಆದರೆ, ಅದರಲ್ಲಿ ಬರುವ ಮಕಾರಕ್ಕಾಗಲಿ, ನಕಾರಕ್ಕಾಗಲಿ ಇಲ್ಲವೇ ಅಕಾರ-ಎಕಾರ ಗಳಿಗಾಗಲಿ ಅವುಗಳದೇ ಆದ ಹುರುಳಿಲ್ಲ. ಮನೆ, ಮಗು, ಮಗುಚು, ಮಗ್ಗುಲು, ಮಂಕುತನ, ಮಚ್ಚೆ, ಮಜ್ಜಿಗೆ, ಮಂಜು, ಮಟ್ಟ, ಮಣ್ಣು, ಮತ್ತು, ಮರ, ಮರುಳು, ಮಳೆ ಮೊದಲಾದ ಹಲವಾರು ಪದಗಳಲ್ಲಿ ಮಕಾರ ಮೊದಲಿಗೆ ಬರುತ್ತದೆ. ಆದರೆ, ಈ ಎಲ್ಲಾ ಪದಗಳಿಗೂ ಸಮಾನ ವಾಗಿರುವಂತಹ ಹುರುಳು ಯಾವುದೂ ಇಲ್ಲ.
ಇಂತಹ ಬೇರೆ ಬೇರೆ ಹಲವು ಬಗೆಯ ಕೆಲಸಗಳ ಮೂಲಕ, ಉಲಿಗಳಿಗೂ ಪದಗಳಿಗೂ ನಡುವಿರುವ ನಂಟನ್ನು ಅವರು ತಿಳಿದುಕೊಳ್ಳುವ ಹಾಗೆ ಮಾಡ ಬಹುದು.
2.3.2 ಉಲಿ ಮತ್ತು ಬರಿಗೆಗಳ ನಡುವಿನ ಪತ್ತುಗೆ
ಕನ್ನಡದ ಬರಹದಲ್ಲಿ ಬರುವ ಬರಿಗೆ(ಅಕ್ಶರ)ಗಳಿಗೂ ಮಾತಿನಲ್ಲಿ ಬರುವ ಉಲಿಗಳಿಗೂ ನಡುವೆ ನೇರವಾದ ಪತ್ತುಗೆ (ಸಂಬಂದ) ಇದೆ. ಈ ಪತ್ತುಗೆಯನ್ನು ಮಕ್ಕಳು ಗಮನಿಸುವ ಹಾಗೆ ಮಾಡಬೇಕು. ಇದನ್ನು ಗಮನಿಸಿರುವ ಮಕ್ಕಳಿಗೆ ಆಮೇಲೆ ಓದನ್ನು ಕಲಿಯಲು ಹೆಚ್ಚು ಸುಳುವಾಗುತ್ತದೆ. ಕೆಲವು ಮಕ್ಕಳು ಇದನ್ನು ಅವರಾಗಿಯೇ ಕಂಡುಕೊಳ್ಳಬಲ್ಲರು. ಆದರೆ, ಎಲ್ಲಾ ಮಕ್ಕಳಿಗೂ ಇದು ತಿಳಿಯುವುದಿಲ್ಲ. ಅಂತಹವರಿಗೆ ಇದನ್ನು ಕಲಿಸಿಕೊಡಬೇಕಾಗುತ್ತದೆ. ಬರಹಗಳಲ್ಲಿ ಬರುವ ಬರಿಗೆಗಳು, ಇಂಗ್ಲಿಶ್ ಬಳಸುವ ರೋಮನ್ ಲಿಪಿಯಲ್ಲಿ ಕಾಣಿಸುವ ಹಾಗೆ, ಉಲಿಗಳನ್ನು ಬೇರೆ ಬೇರಾಗಿ ಸೂಚಿಸುತ್ತಿರ ಬಹುದು, ಇಲ್ಲವೇ ಜಪಾನೀಸ್ ಬಳಸುವ ಕತಕನ ಲಿಪಿಯಲ್ಲಿ ಕಾಣಿಸುವ ಹಾಗೆ, ಅವನ್ನು ಒಟ್ಟೊಟ್ಟಾಗಿ, ಎಂದರೆ ಉಲಿಕಂತೆಗಳಾಗಿ ಸೂಚಿಸುತ್ತಿರ ಬಹುದು. ಜಪಾನೀಸ್ನ ಕತಕನ ಲಿಪಿಯಲ್ಲಿ ಕ, ಕಿ, ಕು, ಕೆ, ಕೊ, ಸ, ಸು ಮೊದಲಾದ ಉಲಿಕಂತೆಗಳನ್ನು ಸೂಚಿಸಲು ಬೇರೆ ಬೇರೆ ಬರಿಗೆಗಳಿವೆ.
ಕನ್ನಡದಲ್ಲಿ ಬಳಕೆಯಾಗುವ ಲಿಪಿಯಲ್ಲೂ ಇಂತಹ ಉಲಿಕಂತೆಗಳನ್ನು ಸೂಚಿಸುವ ಗುರುತುಗಳಿವೆ; ಆದರೆ, ಈ ಗುರುತುಗಳಲ್ಲಿ ಕಕಾರ, ಸಕಾರ ಮೊದಲಾದುವನ್ನು ಗುರುತಿಸುವ ಅಂಶದಿಂದ ಅಕಾರ, ಇಕಾರ, ಉಕಾರ
ಮೊದಲಾದುವನ್ನು ಗುರುತಿಸುವ ಅಂಶವನ್ನು ಬೇರ್ಪಡಿಸಲು ಬರುತ್ತದೆ. ಜಪಾನೀಸ್ ಲಿಪಿಯಲ್ಲಿ ಆ ರೀತಿ ಬೇರ್ಪಡಿಸಲು ಬರುವುದಿಲ್ಲ. ಈ ಕಾರಣಕ್ಕಾಗಿ, ಇಂಗ್ಲಿಶ್ ಬಳಸುವ ರೋಮನ್ ಲಿಪಿಯ ಹಾಗೆ, ಕನ್ನಡದ ಲಿಪಿಯನ್ನೂ ಉಲಿಲಿಪಿಯೆಂದು ಕರೆಯಲಾಗುತ್ತದೆ, ಮತ್ತು ಜಪಾನೀಸ್ ಲಿಪಿಯನ್ನು ಉಲಿಕಂತೆಯ ಲಿಪಿಯೆಂದು ಕರೆಯಲಾಗುತ್ತದೆ.
ಮಕ್ಕಳು ಉಲಿಲಿಪಿಯಲ್ಲಿರುವ ಬರಹಗಳಿಗಿಂತಲೂ ಉಲಿಕಂತೆಯ ಲಿಪಿಯಲ್ಲಿರುವ ಬರಹಗಳನ್ನು ಹೆಚ್ಚು ಸುಳುವಾಗಿ ಓದಲು ಕಲಿಯಬಲ್ಲರು. ಇದಕ್ಕೆ ಕಾರಣವೇನೆಂದರೆ, ಬರಹದ ಗುರುತುಗಳನ್ನು ಉಲಿಗಳೊಂದಿಗೆ ಹೊಂದಿಸುವುದಕ್ಕಿಂತಲೂ ಉಲಿಕಂತೆಗಳೊಂದಿಗೆ ಹೊಂದಿಸುವುದು ಹೆಚ್ಚು ಸುಳುವಾದ ಕೆಲಸ. ಎತ್ತುಗೆಗಾಗಿ, ಮನೆ ಪದದಲ್ಲಿ ಮ್, ಅ, ನ್, ಎ ಎಂಬ ನಾಲ್ಕು ಉಲಿಗಳಿವೆ ಎಂಬುದನ್ನು ಮಕ್ಕಳಿಗೆ ತಿಳಿಸಿಹೇಳುವುದಕ್ಕಿಂತಲೂ ಮ ಮತ್ತು ನೆ ಎಂಬ ಎರಡು ಉಲಿಕಂತೆಗಳಿವೆ ಎಂಬುದನ್ನು ತಿಳಿಸಿ ಹೇಳುವುದು ಹೆಚ್ಚು ಸುಳುವಾದ ಕೆಲಸ.
ಆದರೆ, ಉಲಿಲಿಪಿಯಲ್ಲಿ ಬರೆಯುವುದಕ್ಕಿಂತ ಉಲಿಕಂತೆಯ ಲಿಪಿಯಲ್ಲಿ ಬರೆಯಲು ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಹಾಗಾಗಿ, ಉಲಿಲಿಪಿಯನ್ನು ಕಲಿಯುವ ಮಕ್ಕಳಿಗಿಂತ ಉಲಿಕಂತೆಯ ಲಿಪಿಯನ್ನು ಕಲಿಯುವ ಮಕ್ಕಳು ಹೆಚ್ಚು ಬರಿಗೆಗಳನ್ನು ಕಲಿಯಬೇಕಾಗುತ್ತದೆ.
ಕನ್ನಡದ ಲಿಪಿ ಈ ಎರಡು ಲಿಪಿಗಳ ಅಂಶಗಳನ್ನೂ ಪಡೆದಿದ್ದು, ಕಲಿಯಲು ಅವೆರಡಕ್ಕಿಂತ ಹೆಚ್ಚು ಸುಳುವಾದುದೆಂದು ಹೇಳಬಹುದು: ಅದರ ಉಲಿಗಳು ಸಾಮಾನ್ಯವಾಗಿ ಉಲಿಕಂತೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಮುಚ್ಚುಲಿಯ (ವ್ಯಂಜನದ) ಅನಂತರ ಬರುವ ತೆರೆಯುಲಿ (ಸ್ವರ) ಮುಚ್ಚುಲಿಯೊಂದಿಗೆ ಸೇರಿಕೊಂಡಿರುವುದು (ಮ್+ಅ=ಮ, ನ್+ಎ=ನೆ) ಇದಕ್ಕೆ ಕಾರಣ. ಹಾಗಾಗಿ, ಮಕ್ಕಳಿಗೆ ಓದಲು ಕಲಿಸುವಾಗ, ಮೊದಲಿಗೆ ಮುಚ್ಚುಲಿ ಮತ್ತು ತೆರೆಯುಲಿಗಳನ್ನು ಒಟ್ಟಾಗಿ ಓದಲು ಕಲಿಸಬಹುದು, ಮತ್ತು ಈ ಓದಿನಲ್ಲಿ ಅವರು ಪಳಗುತ್ತಿರುವ ಹಾಗೆ, ತೆರೆಯುಲಿಗಳನ್ನು ಮುಚ್ಚುಲಿಗಳಿಂದ ಬೇರ್ಪಡಿಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತಿಳಿಸಬಹುದು.
ಬರಹದಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ನಂಟನ್ನು ತಿಳಿಯುವುದು ಓದಲು ಕಲಿಯುವುದರಲ್ಲಿ ತುಂಬಾ ಮುಕ್ಯವಾದ ಕೆಲಸ. ಯಾಕೆಂದರೆ, ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ.
ಯಾವ ಹುರುಳೂ ಇಲ್ಲದ ಪದಗಳನ್ನು ಬರಹದಲ್ಲಿ ಬಳಸಿದರೂ, ಅವನ್ನು ಅವರು ಓದಬಲ್ಲರು. ಓದಿನಲ್ಲಿ ಹಿಂದೆ ಬೀಳುವ ಮಕ್ಕಳಲ್ಲಿ ಹೆಚ್ಚಿನವರಿಗೂ ಈ ವಿಶಯ ತಿಳಿದಿರುವುದಿಲ್ಲ.
2.3.3 ಬರಿಗೆಗಳ ಕಲಿಕೆ
ಮಕ್ಕಳಿಗೆ ಬರಹವನ್ನು ಓದಲು ಕಲಿಸುವುದರೊಂದಿಗೇನೇ ಅದರಲ್ಲಿ ಬಳಕೆ ಯಾಗುವ ಬರಿಗೆ(ಅಕ್ಶರ)ಗಳನ್ನು ಬರೆಯುವುದು ಹೇಗೆ ಎಂಬುದನ್ನೂ ಕಲಿಸಬಹುದು. ಯಾಕೆಂದರೆ, ಈ ಕಲಿಕೆಯೂ ಅವರ ಓದಿನಲ್ಲಿ ನೆರವಾಗುತ್ತದೆ. ಬರೆಯಲು ಕಲಿಯುವುದರಿಂದ ಬರಿಗೆಗಳ ರೂಪವನ್ನು ನೆನಪಿನಲ್ಲಿರಿಸಿಕೊಳ್ಳುವ ಕೆಲಸ ಸುಳುವಾಗುತ್ತದೆ.
ಕೆಲವು ಮಕ್ಕಳು ಎರಡು-ಮೂರು ವರ್ಶಗಳಾಗುವಾಗಲೇ ಮನೆಯಲ್ಲಿ ದೊಡ್ಡವರು ಬರೆಯುವುದನ್ನು ನೋಡಿ ತಾವೂ ಬರೆಯಲು ತೊಡಗುತ್ತಾರೆ. ಅಂತಹ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಓದಲು ಮತ್ತು ಬರೆಯಲು ಕಲಿಸಬಹುದು. ಆದರೆ, ಇನ್ನು ಕೆಲವು ಮಕ್ಕಳಿಗೆ ನಾಲ್ಕಯ್ದು ವರ್ಶಗಳಾದಾಗಲೂ ಬರೆಯ ಬೇಕೆಂದು ಅನಿಸುವುದಿಲ್ಲ. ಇಂತಹ ಮಕ್ಕಳನ್ನು ಒತ್ತಾಯದಿಂದ ಬರೆಯಲು ತೊಡಗಿಸಬಾರದು. ಯಾಕೆಂದರೆ, ತಡವಾಗಿ ಬರೆಯತೊಡಗಿದ ಮಕ್ಕಳೂ ಮುಂದೆ ತಮ್ಮ ಓದು-ಬರಹದಲ್ಲಿ ಹಿಂದೆ ಬೀಳುವುದಿಲ್ಲ.
ಓದಲು ಮತ್ತು ಬರೆಯಲು ಕಲಿಸುವ ಮೊದಲು, ಮಕ್ಕಳಿಗೆ ಬರಹದಲ್ಲಿ ಆಸಕ್ತಿ ಹುಟ್ಟುವ ಹಾಗೆ, ಮನೆಯಲ್ಲಿ ಕತೆ ಪುಸ್ತಕಗಳನ್ನು ಓದಿಹೇಳಬೇಕು. ಓದುತ್ತಿರುವಾಗ ಅವರು ಬರೆದುದನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅದರಲ್ಲಿ ಬರುವ ಗುರುತುಗಳು ಉಲಿಗಳನ್ನು ಮತ್ತು ಪದಗಳನ್ನು ಸೂಚಿಸುತ್ತವೆ ಎಂಬ ವಿಶಯ ಅವರ ಗಮನಕ್ಕೆ ಬರುತ್ತದೆ. ದಿನಾಲೂ ಓದುವ ಮತ್ತು ಬರೆಯುವ ಕೆಲಸವನ್ನು ನಡೆಸುವ ದೊಡ್ಡವರು ಮನೆಯಲ್ಲಿದ್ದರೆ, ಮಕ್ಕಳಿಗೆ ಓದಿನಲ್ಲಿ ಬೇಗನೆ ಆಸಕ್ತಿ ಹುಟ್ಟುತ್ತದೆ.
ಕನ್ನಡದ ಬರಿಗೆಪಟ್ಟಿ(ವರ್ಣಮಾಲೆ)ಯನ್ನು ಮಕ್ಕಳಿಗೆ ಹಾಗೆಯೇ ಅ, ಆ, ಇ, ಈ, ಉ, ಊ ಎಂಬಂತಹ ಓರಣದಲ್ಲಿ ಕಲಿಸುವುದು ಸರಿಯಾದ ದಾರಿಯಲ್ಲ. ಮೊದಲಿಗೆ ಬರೆಯಲು ಸುಳುವಾಗಿರುವ ದ, ರ, ವ, ಲ, ಗ ಮೊದಲಾದವುಗಳನ್ನು ಕಲಿಸಬೇಕು. ಈ ಬರಿಗೆಗಳೊಂದಿಗೆ ಅವನ್ನು ಬಳಸಿ ಉಂಟುಮಾಡಿದ ಪದಗಳನ್ನೂ ಬರೆಯಲು ಕಲಿಸಿದಲ್ಲಿ, ಅವರಿಗೆ ಬರೆಯುವ ಕೆಲಸದಲ್ಲಿ ಆಸಕ್ತಿ ಹುಟ್ಟುತ್ತದೆ. ಮೊದಲಿಗೆ ಅಕಾರದೊದಿಗೆ ಬರುವ ಇಂತಹ
ಮುಚ್ಚುಲಿ(ವ್ಯಂಜನ)ಗಳನ್ನು ಕಲಿಸಿ, ಆಮೇಲೆ ಬೇರೆ ತೆರೆಯುಲಿ (ಸ್ವರ)ಗಳೊಂದಿಗೆ ಬರುವ ಮುಚ್ಚುಲಿಗಳನ್ನು ಕಲಿಸಬಹುದು. ಅ, ಆ, ಇ, ಈ ಮೊದಲಾದ ತೆರೆಯುಲಿ ಬರಿಗೆಗಳು ಪದಗಳ ಮೊದಲಿಗೆ ಮಾತ್ರ ಬರುವ ಕಾರಣ, ಅವನ್ನು ಆಮೇಲೆ ಕಲಿಸಬಹುದು.
ಕನ್ನಡದ ಕೆಲವು ಬರಿಗೆಗಳ ನಡುವೆ ವ್ಯತ್ಯಾಸ ತುಂಬಾ ಕಡಿಮೆ ಇರುತ್ತದೆ. ಅಂತಹ ಬರಿಗೆಗಳನ್ನು ಕಲಿಯಲು ಮಕ್ಕಳಿಗೆ ತೊಡಕಾಗಬಹುದು. ಈ ಬರಿಗೆಗಳನ್ನು ಒಂದೇ ಸಮಯದಲ್ಲಿ ಕಲಿಸಲು ಹೋಗಬಾರದು. ಅವುಗಳಲ್ಲಿ ಒಂದನ್ನು ಸರಿಯಾಗಿ ಕಲಿತ ಮೇಲೆ ಇನ್ನೊಂದನ್ನು ಕಲಿಸಲು ತೊಡಗಬೇಕು.
2.3.4 ಮಿದುಳಿನಲ್ಲಿ ಓದುವ ಕೆಲಸ
ಮಕ್ಕಳು ಓದುವುದಕ್ಕಾಗಿ ಮಿದುಳಿನ ಯಾವ ಜಾಗಗಳನ್ನು ಬಳಸುತ್ತಾರೆ? ಇತ್ತೀಚೆಗೆ, ಎಂದರೆ ಕಳೆದ ಇಪ್ಪತ್ತು ವರ್ಶಗಳಲ್ಲಿ ನಡೆಸಿರುವಂತಹ ಮಿದುಳಿಗೆ ಸಂಬಂದಿಸಿದ ಸಂಶೋದನೆಗಳಿಂದ ಈ ವಿಶಯದ ಕುರಿತು ನಮಗೆ ಹೆಚ್ಚಿನ ತಿಳಿವು ದೊರೆತಿದೆ. ಓದುವ ಕೆಲಸವನ್ನು ನಡೆಸುತ್ತಿರುವಾಗ ಮಕ್ಕಳ ಮಿದುಳಿನಲ್ಲಿ ಯಾವ ಜಾಗಗಳು ಮಿಂಚುತ್ತಿರುತ್ತವೆ ಎಂಬುದನ್ನು ಇವತ್ತು ನೇರವಾಗಿ ಗಮನಿಸಲು ಬರುತ್ತದೆಯೆಂಬುದೇ ಇದಕ್ಕೆ ಕಾರಣ.
ಮಕ್ಕಳು ಮಾತನ್ನು ಕೇಳುತ್ತಿರುವಾಗ ಅವರ ಮಿದುಳಿನಲ್ಲಿ ಎರಡು ಜಾಗಗಳು ಮಿಂಚುತ್ತಿರುತ್ತವೆ: ಅವುಗಳಲ್ಲಿ ಬರುವ ಉಲಿಗಳನ್ನು ಗುರುತಿಸುವುದಕ್ಕಾಗಿ ಕಿವಿಯ ಹತ್ತಿರ ಇರುವ ಮಿದುಳಿನ ಜಾಗ ಮಿಂಚುತ್ತಿರುತ್ತದೆ ಮತ್ತು ಮಾತಿನ ಹುರುಳನ್ನು ತಿಳಿದುಕೊಳ್ಳುವುದಕ್ಕಾಗಿ ಮಿದುಳಿನ ಹಿಂಬಾಗ ಮಿಂಚುತ್ತಿರುತ್ತದೆ. ಹೆಚ್ಚಿನ ಮಕ್ಕಳಲ್ಲೂ ಈ ಕೆಲಸ ಮಿದುಳಿನ ಎಡಬಾಗದಲ್ಲಿ (ಎಡಮಿದುಳಿನಲ್ಲಿ) ನಡೆಯುತ್ತದೆ.
ಓದುವ ಮಕ್ಕಳಲ್ಲಿ ಈ ಎರಡು ಜಾಗಗಳು ಮಾತ್ರವಲ್ಲದೆ, ಮಿದುಳಿನ ಮೇಲ್ಬಾಗದಲ್ಲಿರುವ ಮೂರನೆಯದೊಂದು ಜಾಗವೂ ಮಿಂಚುತ್ತಿರುತ್ತದೆ. ಈ ಜಾಗದಲ್ಲಿ ಓದಿದ ಬರಿಗೆಗಳನ್ನು ಗುರುತಿಸುವ ಕೆಲಸ ನಡೆಯುತ್ತದೆ. ಉಲಿಗಳನ್ನು ಹೊರಡಿಸದೆ ಮಿಣ್ಣಗೆ ಓದುವಾಗಲೂ ಮಕ್ಕಳ ಮಿದುಳಿನಲ್ಲಿರುವ ಈ ಮೂರು ಜಾಗಗಳು ಮಿಂಚುತ್ತಿರುತ್ತವೆ; ಎಂದರೆ, ಮಿಣ್ಣಗಿನ ಓದಿನಲ್ಲೂ ಮಕ್ಕಳು ಬರಹದಲ್ಲಿ ಬರುವ ಬರಿಗೆಗಳನ್ನು ಉಲಿಗಳಾಗಿ ಮಾರ್ಪಡಿಸಿಕೊಳ್ಳುವ ಮೂಲಕವೇನೇ ಅದರ ಹುರುಳನ್ನು ತಿಳಿದುಕೊಳ್ಳುತ್ತಾರೆ.
ಕೆಲವು ಮಕ್ಕಳಿಗೆ ಓದಿನಲ್ಲಿ ತುಸುವೂ ಆಸಕ್ತಿ ಹುಟ್ಟುವುದಿಲ್ಲ. ಇದಕ್ಕೆ ಅವರು ಸರಿಯಾದ ಕ್ರಮದಲ್ಲಿ ಓದಲು ಕಲಿಯದಿರುವುದೇ ಕಾರಣ ಎಂಬುದನ್ನು ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಅಂತಹ ಮಕ್ಕಳು ಓದುವಾಗ, ಅವರ ಬಲಮಿದುಳು ಮಾತ್ರವೇ ಮಿಂಚುತ್ತಿರುತ್ತದೆ. ಎಂದರೆ, ಅವರು ಬರಹದಲ್ಲಿ ಬರುವ ಪದಗಳನ್ನು ಬರಿಗೆ(ಅಕ್ಶರ)ಗಳಾಗಿ ಒಡೆದು ಅವನ್ನು ಉಲಿಗಳಾಗಿ ಮಾರ್ಪಡಿಸಿಕೊಳ್ಳುವ ಬದಲು, ನೇರವಾಗಿ ಅವುಗಳಿಂದ ಹುರುಳನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಇದಲ್ಲದೆ, ಈ ಕೆಲಸವನ್ನು ಅವರು ಮಾತನ್ನು ಹಿಡಿತದಲ್ಲಿರಿಸಿಕೊಂಡಿರುವ ಎಡಮಿದುಳಿನಲ್ಲಿ ನಡೆಸುವ ಬದಲು, ಮಾತಿಲ್ಲದ ಬಲಮಿದುಳಿನಲ್ಲಿ ನಡೆಸುತ್ತಾರೆ; ಎಂದರೆ, ಚಿತ್ರಗಳನ್ನು ನೋಡಿ ಗುರುತಿಸುವ ಹಾಗೆ, ಬರಹವನ್ನೂ ಓದಿ ತಿಳಿಯಲು ಅವರು ಪ್ರಯತ್ನಿಸುತ್ತಾರೆ.
ಈ ಕಾರಣಕ್ಕಾಗಿ, ಅವರಿಗೆ ಓದು ತುಂಬಾ ತೊಂದರೆಯ ಕೆಲಸವೆಂದೆನಿಸು ತ್ತದೆ, ಮತ್ತು ಆದಶ್ಟು ಮಟ್ಟಿಗೆ ಅವರು ಅದರಿಂದ ದೂರ ಉಳಿಯ ತೊಡಗುತ್ತಾರೆ. ಇದಲ್ಲದೆ, ಅಶ್ಟೊಂದು ತೊಂದರೆಯಿಂದ ನಡೆಸುವ ಓದಿನಿಂದ ಅವರಿಗೆ ಆನಂದವನ್ನು ಪಡೆಯಲು ಬರುವುದೇ ಇಲ್ಲ.
ಇಂತಹ ಮಕ್ಕಳಿಗೆ, ಮೇಲೆ ಸೂಚಿಸಿದ ಹಾಗೆ, ಪದಗಳನ್ನು ಉಲಿಗಳಾಗಿ ಬೇರ್ಪಡಿಸುವ ಬಗೆ ಹೇಗೆ ಮತ್ತು ಬರಹದಲ್ಲಿ ಬರುವ ಬರಿಗೆಗಳನ್ನು ಗುರುತಿಸಿ, ಉಲಿಗಳಾಗಿ ಮಾರ್ಪಡಿಸಿ, ಓದುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಟ್ಟಲ್ಲಿ, ಅವರಿಗೆ ಓದಿನಲ್ಲಿ ಆಸಕ್ತಿ ಮೂಡುತ್ತದೆ, ಮತ್ತು ಅವರು ಓದುತ್ತಿರುವಾಗ ಮಿದುಳನ್ನು ಬಳಸುವ ಬಗೆಯೂ ಬದಲಾಗುತ್ತದೆ (ಬಲಮಿದುಳಿನೊಂದಿಗೆ ಎಡಮಿದುಳಿನ ಎರಡು ಜಾಗಗಳನ್ನೂ ಬಳಸಲು ಅವರಿಗೆ ಗೊತ್ತಾಗುತ್ತದೆ) ಎಂಬುದನ್ನು ಕಂಡುಕೊಳ್ಳಲಾಗಿದೆ.
ಇಲ್ಲಿ ನಾವು ಗಮನಿಸಬೇಕಾಗಿರುವ ಇನ್ನೊಂದು ವಿಶಯವೇನೆಂದರೆ, ಮಕ್ಕಳನ್ನು ಎಶ್ಟು ಬೇಗನೆ ಓದಿನಲ್ಲಿ ತೊಡಗಿಸಬಹುದು ಎಂಬುದು; ಈ ವಿಶಯದಲ್ಲಿ ಮಿದುಳರಿಗರು ಒಂದು ಎಚ್ಚರಿಕೆಯ ಮಾತನ್ನು ಹೇಳುತ್ತಾರೆ: ಓದಲು ಮತ್ತು ಬರೆಯಲು ಅಣಿಯಾಗುವ ಮೊದಲೇ ಅದನ್ನು ಅವರ ಮೇಲೆ ಒತ್ತಾಯದಿಂದ ಹೇರಿದೆವಾದರೆ, ಅದನ್ನು ನಡೆಸಲು ಅವರು ಸರಿಯಾಗಿ ಕಲಿಯದೆ, ಆಮೇಲೆ ಜೀವನವಿಡೀ ತೊಂದರೆಗೊಳಗಾಗಬಲ್ಲರು.
ಮಕ್ಕಳಲ್ಲಿ ಎಡಮಿದುಳಿಗಿಂತ ಬಲಮಿದುಳು ಮೊದಲು ಬೆಳೆದಿರುತ್ತದೆ. ಹಾಗಾಗಿ, ಕೆ.ಜಿ. ಕ್ಲಾಸಿನಲ್ಲಿರುವ ನಾಲ್ಕಯ್ದು ವರ್ಶದ ಮಕ್ಕಳನ್ನು ಓದಲು ಮತ್ತು ಬರೆಯಲು ಒತ್ತಾಯಿಸಿದಲ್ಲಿ, ಅವರು ಇದನ್ನು ತಮ್ಮ ಬಲಮಿದುಳಿನ
ಮೂಲಕವೇನೇ ನಡೆಸಬೇಕಾಗುತ್ತದೆ. ಈ ಮಿದುಳು ಅವರಿಗೆ ಪದಗಳ ಒಟ್ಟಾರೆ ಆಕಾರವೆಂತಹದು ಎಂಬುದನ್ನು ಮಾತ್ರ ತಿಳಿಸಬಲ್ಲುದು. ಈ ಆಕಾರವನ್ನು ಗಮನಿಸಿ, ಅವರು ಪದಗಳ ಓದನ್ನು ಊಹಿಸಿಕೊಳ್ಳಬೇಕಾಗುತ್ತದೆ.
ಎಡಮಿದುಳಿನಲ್ಲಿರುವ ಓದಿನ ಬಾಗಗಳು ಆರೇಳು ವರ್ಶದ ಮಕ್ಕಳಲ್ಲಿ ಮಾತ್ರ ಬಳಕೆಗೆ ಬರುವಶ್ಟು ಬೆಳೆದಿರುತ್ತವೆ. ಇವು ಹುಡುಗರಿಗಿಂತ ಹುಡುಗಿಯರಲ್ಲಿ ತುಸು ಬೇಗನೆ ಬೆಳೆದಿರುತ್ತವೆ. ಕೆಲವರು ಹುಡುಗರಲ್ಲಿ ಇವು ಎಂಟೊಂಬತ್ತು ವರ್ಶಗಳ ವರೆಗೂ ಬೆಳೆದಿರುವುದಿಲ್ಲ. ಬಲಮಿದುಳನ್ನು ಎಡಮಿದುಳಿನೊಂದಿಗೆ ಜೋಡಿಸುವ ನರಗಳ ಪಟ್ಟಿಯೂ ಕೆ.ಜಿ. ಕ್ಲಾಸಿನ ಮಕ್ಕಳಲ್ಲಿ ಸರಿಯಾಗಿ ಬೆಳೆದಿರುವುದಿಲ್ಲ.
ಹಾಗಾಗಿ, ಎಡಮಿದುಳು ಸರಿಯಾಗಿ ಬೆಳೆಯುವ ಮೊದಲೇ ಮಕ್ಕಳನ್ನು ಒತ್ತಾಯದಿಂದ ಓದಿನಲ್ಲಿ ತೊಡಗಿಸಿದೆವಾದರೆ, ಅವರಲ್ಲಿ ಕೆಲವರಿಗೆ ಆಮೇಲೆ ಸರಿಯಾಗಿ ಓದುವ ಬಗೆಯೇ ತಿಳಿಯದ ಹಾಗೆ ಆಗಬಲ್ಲುದು. ಯಾಕೆಂದರೆ, ಬಲಮಿದುಳನ್ನು ಮಾತ್ರವೇ ಬಳಸಿ ನಡೆಸುವ ಓದು ಅವರಿಗೊಮ್ಮೆ ಬಳಕೆಯಾಗಿ ಬಿಟ್ಟಿತೆಂದರೆ, ಆಮೇಲೆ ತಾವಾಗಿಯೇ ಅದನ್ನು ಬದಲಾಯಿಸಿ, ಎಡಮಿದುಳನ್ನೂ ಬಳಸಿ ಓದಲು ಆ ಮಕ್ಕಳು ಕಲಿಯದಿರಬಹುದು ಎಂಬುದಾಗಿ ಈ ತಿಳಿವಿಗರು ಹೇಳುತ್ತಾರೆ.
2.3.5 ಕನ್ನಡ ಬರಹದ ಬರಿಗೆಗಳ ಸಮಸ್ಯೆ
ಮಕ್ಕಳಿಗೆ ಈ ರೀತಿ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವಲ್ಲಿ ಇವತ್ತಿನ ಕನ್ನಡದ ಬರಹ ಒಂದು ಸಮಸ್ಯೆಯನ್ನು ತಂದೊಡ್ಡುತ್ತದೆ. ಕನ್ನಡಕ್ಕೊಂದು ಲಿಪಿಯನ್ನು ಅಳವಡಿಸುವ ಸಮಯದಲ್ಲಿ, ಎಂದರೆ ಸುಮಾರು ಎರಡು ಸಾವಿರ ವರ್ಶಗಳಶ್ಟು ಹಿಂದೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೆಲ್ಲ ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾದ ಕಟ್ಟಲೆಯೊಂದನ್ನು ನಮ್ಮ ಹಿರಿಯರು ಮಾಡಿದ್ದುದೇ ಈ ಸಮಸ್ಯೆಗೆ ಕಾರಣ.
ಈ ಕಟ್ಟಲೆಯಿಂದಾಗಿ, ಇವತ್ತು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ನಾವು ಹೇಗೆ ಓದುತ್ತೇವೆಯೋ ಹಾಗೆ ಬರೆಯುವುದಿಲ್ಲ. ಅವು ಸಂಸ್ಕ್ರುತದಲ್ಲಿ ಹೇಗಿವೆಯೋ ಹಾಗೆ ಬರೆಯುತ್ತೇವೆ. ವಿಶೇಷ ಎಂಬುದಾಗಿ ಬರೆಯುತ್ತೇವೆ; ಆದರೆ ವಿಶೇಶ ಎಂಬುದಾಗಿ ಓದುತ್ತೇವೆ; ಕೃತಿ ಎಂಬುದಾಗಿ ಬರೆಯುತ್ತೇವೆ, ಕ್ರುತಿ ಎಂಬುದಾಗಿ ಓದುತ್ತೇವೆ; ಅಧಿಕಾರ ಎಂಬುದಾಗಿ
ಬರೆಯುತ್ತೇವೆ, ಅದಿಕಾರ ಎಂಬುದಾಗಿ ಓದುತ್ತೇವೆ; ದುಃಖ ಎಂಬುದಾಗಿ ಬರೆಯುತ್ತೇವೆ, ದುಕ್ಕ ಎಂಬುದಾಗಿ ಓದುತ್ತೇವೆ.
ಶಾಲೆಯಲ್ಲಿ ಮಕ್ಕಳು ಇಂತಹ ಪದಗಳನ್ನು ಓದಲು ಕಲಿಯುವಾಗ ಷ, ಋ, ಧ, ಖ, ವಿಸರ್ಗ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನು ಅನವಶ್ಯಕವಾಗಿ ಕಲಿಯಬೇಕಾಗುತ್ತದೆ ಎಂಬುದು ಇಲ್ಲಿ ಒಂದು ಸಮಸ್ಯೆ; ಅವನ್ನು ಕಲಿಸುವ ಕ್ರಮವೂ ಸರಿಯಾಗಿಲ್ಲ ಎಂಬುದು ಇನ್ನೊಂದು ಸಮಸ್ಯೆ. ಅವುಗಳಲ್ಲಿ ಷ, ಋ, ವಿಸರ್ಗ ಮೊದಲಾದ ಕೆಲವನ್ನು ಓದಿ ತೋರಿಸುವುದು ಹೇಗೆ ಎಂಬುದೇ ಹೆಚ್ಚಿನ ಕಲಿಸುಗರಿಗೂ ತಿಳಿದಿರುವುದಿಲ್ಲ. ಆದರೆ, ಅವರ ಈ ಅರಿಯಮೆಯನ್ನು (ಅಜ್ನಾನವನ್ನು) ಮಕ್ಕಳಿಂದ ಅಡಗಿಸಿಡಲಾಗುತ್ತದೆ.
ದ-ಧ, ಪ-ಫ, ಕ-ಖ ಮೊದಲಾದ ಬೇರೆ ಕೆಲವು ಬರಿಗೆಗಳ ನಡುವಿರುವ ವ್ಯತ್ಯಾಸವನ್ನು ಹೆಚ್ಚಿನ ಕಲಿಸುಗರೂ ಓದಿ ತೋರಿಸಬಲ್ಲರು; ಆದರೆ, ಕಲಿಸುವ ಸಮಯದಲ್ಲಿ ಮಾತ್ರ ಅವರು ಆ ರೀತಿ ಅವನ್ನು ಸರಿಯಾಗಿ ಓದಿ ತೋರಿಸುತ್ತಾರೆ. ಉಳಿದ ಸಮಯಗಳಲ್ಲೆಲ್ಲ ಅವು ಕಲಿಸುಗರ ಓದಿನಲ್ಲೂ ಒಂದಕ್ಕಿಂತ ಒಂದು ಬೇರಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಎತ್ತುಗೆಗಾಗಿ, ಭಾರತ ಪದಕ್ಕೂ ಬಾಗಿಲು ಪದಕ್ಕೂ ನಡುವೆ ಮೊದಲನೇ ಬರಿಗೆಯಲ್ಲಿರುವ ವ್ಯತ್ಯಾಸ ಆ ಪದಗಳನ್ನು ಅವರು ಕಲಿಸುವಾಗ ಮಕ್ಕಳ ಕಿವಿಗೆ ಕೇಳಿಸುತ್ತಿರ ಬಹುದು; ಆದರೆ ಆಮೇಲೆ ಓದುತ್ತಿರುವಾಗ ಇಲ್ಲವೇ ಬೇರೆ ವಿಶಯಗಳನ್ನು ತಿಳಿಸುತ್ತಿರುವಾಗ, ಈ ವ್ಯತ್ಯಾಸ ಇಲ್ಲವಾಗುತ್ತದೆ. ಇದು ಮಕ್ಕಳಲ್ಲಿ ಗೊಂದಲ ವನ್ನುಂಟುಮಾಡಬಲ್ಲುದು.
ಈ ಹೆಚ್ಚಿನ ಬರಿಗೆಗಳಿಗೆ ಸಮನಾಗಿರುವ ಉಲಿಗಳು ಎಲ್ಲರ ಕನ್ನಡದ ಓದಿನಲ್ಲಿ ಕಾಣಿಸಿಕೊಳ್ಳದಿರುವುದೇ ಇದಕ್ಕೆ ಕಾರಣ. ಈ ವಿಶಯವನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ, ಎಂದರೆ ಈ ಹೆಚ್ಚಿನ ಬರಿಗೆಗಳು ಬರಹದಲ್ಲಿ ಮಾತ್ರ ಬರುತ್ತವೆ, ಓದಿನಲ್ಲಿ ಬರುವುದಿಲ್ಲ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡುವ ಮೂಲಕ, ಅವರಲ್ಲಿ ಗೊಂದಲವುಂಟಾಗದ ಹಾಗೆ ಮಾಡ ಬಹುದು.
ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ನಂಟನ್ನು ತಿಳಿದುಕೊಳ್ಳಬೇಕಾ ಗಿರುವ ಸಮಯದಲ್ಲಿ ಗೊಂದಲಕ್ಕೊಳಗಾದಾಗ, ಹೆಚ್ಚಿನ ಮಕ್ಕಳೂ ಪದಗಳನ್ನು ಉಲಿಗಳೊಂದಿಗೆ ಜೋಡಿಸಲು ಹೋಗದೆ, ನೇರವಾಗಿ ಓದಲು ತೊಡಗುತ್ತಾರೆ. ಮೊದಲಿಗೆ ಆ ರೀತಿ ಓದುವ ಕೆಲಸ ಅವರಿಗೆ ಹೆಚ್ಚು ತೊಡಕಿನದಾಗಿ ಕಾಣಿಸುವು ದಿಲ್ಲ. ಆದರೆ, ಅವರ ಓದು ಮುಂದುವರಿದ ಹಾಗೆಲ್ಲ, ಹೆಚ್ಚು ಹೆಚ್ಚು
ಪದಗಳನ್ನು ಅವರು ಉಲಿಗಳಾಗಿ ಒಡೆಯದೆ ಆ ರೀತಿ ಇಡಿ ಇಡಿಯಾಗಿ ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ, ಮತ್ತು ಇದನ್ನು ನಡೆಸಲು ಬಾರದೆ, ಅಂತಹ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ.
ಪದಗಳನ್ನು ಉಲಿಗಳಾಗಿ ಒಡೆದು ಓದುವುದೇ ಕನ್ನಡದಂತಹ ಉಲಿಲಿಪಿಗಳ ಮಟ್ಟಿಗೆ ಸರಿಯಾದ ದಾರಿ. ಈ ಓದಿನಲ್ಲಿ ಬಲಮಿದುಳಿನೊಂದಿಗೆ ಎಡ ಮಿದುಳೂ ಕೆಲಸಮಾಡುತ್ತಿರಬೇಕು. ಇದಕ್ಕೆ ಬದಲು, ಪದಗಳನ್ನು ಇಡಿ ಇಡಿಯಾಗಿ ಓದುವವರಲ್ಲಿ ಬಲಮಿದುಳು ಮಾತ್ರ ಕೆಲಸಮಾಡುತ್ತಿರುತ್ತದೆ. ಇದು ತುಂಬಾ ತೊಡಕು ತೊಡಕಾದ ಓದು. ಪದಗಳನ್ನು ಉಲಿಗಳಾಗಿ ಒಡೆದು ಓದುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ಸರಿಯಾಗಿ ಕಲಿಸದಿದ್ದಲ್ಲಿ, ಮುಂದೆ ಅವರಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲವಾಗುತ್ತದೆ.
ಮಕ್ಕಳಲ್ಲಿ ಗೊಂದಲವನ್ನುಂಟುಮಾಡಿ, ಅವರು ಓದಿನಲ್ಲಿ ದಾರಿತಪ್ಪುವಂತೆ ಮಾಡಬಲ್ಲ ಋ, ಷ, ಮಹಾಪ್ರಾಣ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನು ಅವರಿಗೆ ಮೊದಲನೇ ತರಗತಿಯಲ್ಲಿ ಕಲಿಸಹೋಗದೆ, ಆಮೇಲೆ ಕಲಿಸುವುದೇ ಒಳ್ಳೆಯದು. ಕನ್ನಡದವೇ ಆದ ಪದಗಳಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಹೀಗೆ ಮಾಡುವುದು ತೊಡಕಿನ ಕೆಲಸವೇನಲ್ಲ. ಆದರೆ, ಅದಕ್ಕಾಗಿ ಈ ಹೆಚ್ಚಿನ ಬರಿಗೆಗಳು ಬರುವ ಸಂಸ್ಕ್ರುತ ಪದಗಳನ್ನು ಬಳಸದಿರುವಂತಹ ಬರಹಗಳನ್ನು ಮಾತ್ರ ಮೊದಲನೇ ತರಗತಿಯ ಮಕ್ಕಳು ಓದುವ ಹಾಗೆ ಮಾಡಬೇಕಾಗುತ್ತದೆ.
ಇವೆರಡಕ್ಕಿಂತಲೂ ಒಳ್ಳೆಯ ಉಪಾಯವೆಂದರೆ, ನನ್ನ ಈ ಬರಹದಲ್ಲಿ ಮಾಡಿರುವ ಹಾಗೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾಗಿರುವ ಕಟ್ಟಲೆಯನ್ನು ತೆಗೆದು ಹಾಕಬೇಕು. ಹೀಗೆ ಮಾಡಿರುವ ಬರಹವನ್ನು ನಾನು ಹೊಸ ಬರಹ ಎಂದು ಕರೆದಿದ್ದೇನೆ. ಇದರಲ್ಲಿ ಸಂಸ್ಕ್ರುತ ದಿಂದ ಎರವಲಾಗಿ ಪಡೆದ ಪದಗಳನ್ನೆಲ್ಲ ನಾವು ಎಲ್ಲರ ಕನ್ನಡದಲ್ಲಿ ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇವೆ (ಈ ಹೊಸ ಬರಹದ ಕುರಿತು ಹೆಚ್ಚಿನ ವಿವರಗಳನ್ನು ನನ್ನ ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ ನೋಡಬಹುದು).
ಚಿಕ್ಕ ಮಕ್ಕಳಿಗೆ ಓದನ್ನು ಮೊದಲಿಗೆ ಹೊಸಬರಹದಲ್ಲಿ ಕಲಿಸಿ, ಮುಂದೆ ಅವರಿಗೆ ಸರಿಯಾಗಿ ಓದಲು ಬಂದಮೇಲೆ ಬೇಕಿದ್ದರೆ ಹಳೆಬರಹದಲ್ಲೂ ಕಲಿಸುವುದು ಇನ್ನೊಂದು ದಾರಿ. ಹೀಗೆ ಮಾಡುವುದರಿಂದ ಅವರಿಗೆ ಓದು
ಕಲಿಯುವಲ್ಲಿ ಗೊಂದಲವುಂಟಾಗದ ಹಾಗೆ, ಮತ್ತು ಸರಿಯಾಗಿ ಓದುವ ಬಗೆ ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳುವ ಹಾಗೆ ಮಾಡಲು ಸುಳುವಾಗುತ್ತದೆ.
2.3.6 ಸಲೀಸಾದ ಓದು
ಬರಹಗಳನ್ನು ಸಲೀಸಾಗಿ (ಸರಾಗವಾಗಿ) ಓದಲು ಬರಬೇಕಿದ್ದಲ್ಲಿ, ಅವುಗಳಲ್ಲಿ ಬರುವ ಪದಗಳಲ್ಲಿ ಹೆಚ್ಚಿನವನ್ನೂ ಇಡಿಯಿಡಿಯಾಗಿ, ತಟ್ಟನೆ, ಮತ್ತು ತಪ್ಪಿಲ್ಲದೆ ಗುರುತಿಸಲು ಕಲಿತಿರಬೇಕು. ಇದಲ್ಲದೆ, ಓದುತ್ತಾ ಹೋಗುತ್ತಿರುವಂತೆ, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿಕೊಳ್ಳಲು, ಮತ್ತು ಅವುಗಳಿಂದ ಹುರುಳನ್ನು ಪಡೆಯಲು ತಿಳಿದಿರಬೇಕು. ಈ ಎಲ್ಲಾ ಕೆಲಸಗಳನ್ನೂ ಅವರು ಒಟ್ಟೊಟ್ಟಿಗೆ ನಡೆಸಲು ಕಲಿತಿರಬೇಕು.
ಓದಲು ಕಲಿಯುವುದು ಶಾಲೆಯಲ್ಲಿ ನಡೆಸುವ ಬೇರೆಲ್ಲಾ ಕಲಿಕೆಗಳಿಗೂ ಅಡಿಗಟ್ಟನ್ನು ಒದಗಿಸುತ್ತದೆ. ಅದಿಲ್ಲದೆ ವಿಜ್ನಾನ, ಚರಿತ್ರೆ, ಸಾಹಿತ್ಯ ಮೊದಲಾದ ಬೇರೆ ಯಾವ ಕಲಿಕೆಯೂ ಮುಂದೆ ಹೋಗಲಾರದು. ಈ ಕಾರಣಕ್ಕಾಗಿ, ಸಲೀಸಾಗಿ ಓದಲು ಬಾರದ ಮಕ್ಕಳು ತಮ್ಮ ಓದಿನಲ್ಲಿ ಮಾತ್ರವಲ್ಲ, ಬೇರೆಲ್ಲಾ ಕಲಿಕೆಗಳಲ್ಲೂ ಹಿಂದೆ ಬೀಳುತ್ತಾರೆ. ಯಾಕೆಂದರೆ, ಸಲೀಸಾಗಿ ಓದಲು ಬಾರದ ಮಕ್ಕಳಿಗೆ ತಾವು ಓದುವ ಬರಹ ಏನು ತಿಳಿಸುತ್ತದೆ ಎಂಬುದು ಸರಿಯಾಗಿ ಗೊತ್ತಾಗುವುದೇ ಇಲ್ಲ.
ಕತೆಗಳನ್ನು ಓದಿ ಆನಂದಿಸಬೇಕಿದ್ದಲ್ಲಿ, ನಗೆಹನಿಗಳನ್ನು ಓದಿ ನಗಬೇಕಿದ್ದಲ್ಲಿ, ಇಲ್ಲವೇ ಸುದ್ದಿಹಾಳೆ(ದಿನಪತ್ರಿಕೆ)ಗಳನ್ನು ಓದಿ ವಿಶಯಗಳನ್ನು ತಿಳಿದುಕೊಳ್ಳ ಬೇಕಿದ್ದಲ್ಲಿ ಸಲೀಸಾದ ಓದು ಅತ್ಯವಶ್ಯ. ಈ ರೀತಿ ಓದಲು ಬಾರದ ಮಕ್ಕಳು ಮೇಲಿನ ಕೆಲಸಗಳಲ್ಲಿ ಯಾವುದನ್ನೂ ಮಾಡಲು ಹೋಗುವುದಿಲ್ಲ. ಒತ್ತಾಯ ಕ್ಕಾಗಿ ನಡೆಸಬೇಕಾಗಿರುವ ತರಗತಿಯ ಓದನ್ನು ಬಿಟ್ಟು ಬೇರೆಲ್ಲಾ ಓದು ಗಳಿಂದಲೂ ಅವರು ದೂರವೇ ಉಳಿಯುತ್ತಾರೆ.
ಚುರುಕಾಗಿರುವ ಮತ್ತು ಬುದ್ದಿವಂತರಾಗಿರುವ ಮಕ್ಕಳೂ ತಮ್ಮ ಓದಿನಲ್ಲಿ ಹಿಂದೆ ಬೀಳಬಲ್ಲರು. ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದನ್ನು ಯಾರೂ ಕಲಿಸದಿರುವುದು, ಮತ್ತು ತಾವಾಗಿ ಅದನ್ನು ಕಲಿತುಕೊಳ್ಳಲು ಬಾರದಿರುವುದು ಇದಕ್ಕೆ ಕಾರಣ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಸಲೀಸಾಗಿ ಓದುವುದೂ ಒಂದು ಚಳಕವಾಗಿದ್ದು, ಹೆಚ್ಚಿನ ಮಕ್ಕಳೂ ಅದನ್ನು ಹೇಳಿಕೊಟ್ಟಲ್ಲಿ ಮಾತ್ರ ಕಲಿತುಕೊಳ್ಳಬಲ್ಲರು.
ಮಕ್ಕಳಿಗೆ ಸಲೀಸಾಗಿ ಓದಲು ಬರುತ್ತದೆಯೇ ಇಲ್ಲವೇ ಎಂಬುದನ್ನು ಅವರು ಓದುವ ಕ್ರಮದಿಂದಲೇನೇ ಕಂಡುಹಿಡಿಯಬಹುದು. ಪದಗಳನ್ನು ಬಿಡಿಸಿ ಬಿಡಿಸಿ ಓದುತ್ತಿರುವರಾದರೆ, ಅವನ್ನು ಪದಕಂತೆಗಳಾಗಿ ಜೋಡಿಸಿ ಓದಲು ಅವರಿಗೆ ಬರುವುದಿಲ್ಲವಾರೆ, ಮತ್ತು ಓದುವಾಗ ಅನಿಸಿಕೆಗಳು ಅವರ ಮೋರೆಯಲ್ಲಿ ಮೂಡುವುದಿಲ್ಲವಾದರೆ, ಅವರಿಗೆ ಸಲೀಸಾಗಿ ಓದಲು ಬರುವುದಿಲ್ಲವೆಂದೇ ಹೇಳಬಹುದು. ಒಳ್ಳೇ ಓದುಗರ ಓದು ಮಾತನಾಡುವ ಹಾಗೆಯೇ ಸಲೀಸಾಗಿ ಸಾಗುತ್ತದೆ. ಅವರು ತಮ್ಮ ಓದಿನಿಂದ ಕೇಳುಗರನ್ನು ಸೆರೆಹಿಡಿಯಬಲ್ಲರು. ಸಲೀಸಾಗಿ ಓದಲು ಬಾರದ ಮಕ್ಕಳಿಗೆ ಅದನ್ನು ಕಲಿಸುವುದಕ್ಕಾಗಿ ಕಲಿಸುಗರು ಕೆಲವು ಕೆಲಸಗಳನ್ನು ನಡೆಸಬೇಕಾಗುತ್ತದೆ. ಮೊದಲನೆಯದಾಗಿ, ಓದನ್ನು ಸಲೀಸಾಗಿ ನಡೆಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತೋರಿಸಿಕೊಡಬೇಕು. ಇದಕ್ಕಾಗಿ ಮಕ್ಕಳ ಮನಸ್ಸನ್ನು ಸೆಳೆಯಬಲ್ಲ ಬರಹಗಳನ್ನು ಆರಿಸಿಕೊಂಡು, ಅವನ್ನು ಗಟ್ಟಿಯಾಗಿ ಓದಿ ತೋರಿಸಬೇಕು, ಮತ್ತು ಪದಗಳನ್ನು ಪದಕಂತೆಗಳಾಗಿ ಜೋಡಿಸಿ ಓದುವ ಬಗೆ ಹೇಗೆ, ಬರಹದ ಹುರುಳು ಗೊತ್ತಾಗುವ ಹಾಗೆ ಅಲ್ಲಲ್ಲಿ ನಿಲ್ಲಿಸಿ ಓದುವ ಬಗೆ ಹೇಗೆ, ಮತ್ತು ಓದುಗರನ್ನು ಸೆಳೆಯುವ ಹಾಗೆ ಉಲಿಯ ಏರಿಳಿತಗಳನ್ನು ಓದಿನಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತಮ್ಮ ಓದಿನ ಮೂಲಕ ತೋರಿಸಿಕೊಡಬೇಕು.
ಎರಡನೆಯದಾಗಿ, ಕೆಲವು ಬರಹಗಳನ್ನು ಮಕ್ಕಳೇ ಹಲವು ಬಾರಿ ಗಟ್ಟಿಯಾಗಿ ಓದುವಂತೆ ಮಾಡಬೇಕು. ಆ ರೀತಿ ಒಂದೇ ಬರಹವನ್ನು ಹಲವು ಬಾರಿ ಓದುವುದರಿಂದ ಮಕ್ಕಳಿಗೆ ತಮ್ಮ ಓದಿನ ಮೇಲೆ ಹೆಚ್ಚಿನ ಹಿಡಿತವನ್ನು ಪಡೆಯಲು ಬರುತ್ತದೆ. ಕತೆ, ಕವಿತೆ ಮೊದಲಾದುವನ್ನು ಹಲವು ಬಾರಿ ಓದಿದಾಗ, ಅಂತಹ ಬರಹಗಳಲ್ಲಿ ಆಗಾಗ ಬರುವ ಪದಗಳನ್ನು ಗುರುತಿಸುವ ಕೆಲಸ ಅವರಿಗೆ ಸುಳುವಾಗುತ್ತಾ ಹೋಗುತ್ತದೆ. ಇದರಿಂದಾಗಿ, ಅವರಿಗೆ ತಾವು ಓದುತ್ತಿರುವುದೇನೆಂಬುದನ್ನು (ಎಂದರೆ ಓದಿನ ಹುರುಳನ್ನು) ತಿಳಿದುಕೊಳ್ಳುವು ದಕ್ಕೆ ಸಾಕಶ್ಟು ಸಮಯ ದೊರೆಯುತ್ತದೆ.
2.3.7 ಪದಗಳ ಕಲಿಕೆ
ಮಕ್ಕಳಿಗೆ ತಾವು ಓದುತ್ತಿರುವುದೇನೆಂಬುದು ಗೊತ್ತಾಗಬೇಕಿದ್ದಲ್ಲಿ, ಅವರ ಓದಿನಲ್ಲಿ ಬರುವ ಪದಗಳಲ್ಲಿ ಹೆಚ್ಚಿನವನ್ನೂ ಅವರು ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ಮಾತಿನಲ್ಲಿ ಬಳಕೆಯಾಗುವ ಪದಗಳೇ ಓದಿನಲ್ಲೂ ಬರುವ ಕಾರಣ, ತಮ್ಮ ನೆನಪಿನಲ್ಲಿರುವ ಮಾತಿನ ಪದನೆರಕೆ(ಪದಕೋಶ)ಯನ್ನೇ
ಅವರು ತಮ್ಮ ಓದಿನಲ್ಲೂ ಬಳಸಿಕೊಳ್ಳಬಲ್ಲರು. ಮಾತಿನಲ್ಲಿ ಬಾರದಿರುವ ಪದಗಳು ಓದಿನಲ್ಲಿ ಬಂದಾಗ ಮಾತ್ರ ಅವರು ತೊಂದರೆಗೀಡಾಗುತ್ತಾರೆ.
ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳು ತ್ತವೆ. ಇದಲ್ಲದೆ, ಈ ಎರಡು ಬಗೆಯ ಪದನೆರಕೆಗಳಲ್ಲೂ ಮಾತನ್ನು ಕೇಳಿ ತಿಳಿಯುವುದರಲ್ಲಿ, ಇಲ್ಲವೇ ಬರಹವನ್ನು ಓದಿ ತಿಳಿಯುವುದರಲ್ಲಿ ಬಳಕೆ ಯಾಗುವ ಪದನೆರಕೆಗಳಿಗಿಂತ ಮಾತನಾಡುವುದರಲ್ಲಿ, ಇಲ್ಲವೇ ಬರೆಯು ವುದರಲ್ಲಿ ಬಳಕೆಯಾಗುವ ಪದನೆರಕೆಗಳು ಬೇರಾಗಿರುತ್ತವೆ. ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು.
ಬಗೆ ಬಗೆಯ ಬರಹಗಳನ್ನು ಓದುತ್ತಾ ಹೋದಂತೆ, ಮಕ್ಕಳಲ್ಲಿರುವ ಓದಿನ ಪದನೆರಕೆ ಹಿಗ್ಗುತ್ತಾ ಹೋಗುತ್ತದೆ. ತಾವು ಕಲಿಯುವ ಹೆಚ್ಚಿನ ಪದಗಳನ್ನೂ ಅವರು ಈ ರೀತಿ ಬರಹಗಳಲ್ಲಿ ಅವುಗಳ ಬಳಕೆಯನ್ನು ಗಮನಿಸುವುದರ ಮೂಲಕ ಪಡೆಯುತ್ತಾರೆ. ಹಾಗಾಗಿ, ಮಕ್ಕಳಲ್ಲಿರುವ ಓದಿನ ಪದನೆರಕೆಯನ್ನು ಹಿಗ್ಗಿಸಬೇಕಿದ್ದಲ್ಲಿ, ಅವರು ಹೆಚ್ಚು ಹೆಚ್ಚು ಬರಹಗಳನ್ನು, ಮತ್ತು ಬಗೆ ಬಗೆಯ ಬರಹಗಳನ್ನು ಓದುವ ಹಾಗೆ ಮಾಡಬೇಕು.
ಹಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ. ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಹೇಳು ತ್ತಿರುತ್ತಾರೆ. ಆದರೆ ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಪುಸ್ತಕಗಳನ್ನೂ ಓದುತ್ತಿರಬೇಕು.
ಪದಗಳನ್ನು ನೇರವಾಗಿ ಕಲಿಯುವ ಮೂಲಕವೂ ಮಕ್ಕಳು ತಮ್ಮ ಪದನೆರಕೆ ಯನ್ನು ಸ್ವಲ್ಪ ಮಟ್ಟಿಗೆ ಹಿಗ್ಗಿಸಿಕೊಳ್ಳಬಲ್ಲರು. ಎತ್ತುಗೆಗಾಗಿ, ತಾವು ಓದುವ ಬರಹದಲ್ಲಿ ಕಂಡುಬರುವ ಹೊಸ ಪದವೊಂದರ ಹುರುಳೇನು ಎಂಬುದನ್ನು ಕಂಡುಹಿಡಿಯಲು ಅವರು ಪದನೆರಕೆ(ಪದಕೋಶ)ಗಳ ನೆರವನ್ನು ಪಡೆಯ ಬಹುದು. ಕನ್ನಡದ ಪದನೆರಕೆಗಳಲ್ಲಿ ಸಾವಿರಾರು ಕನ್ನಡ ಪದಗಳ ಹುರುಳು ಗಳನ್ನು ಕೊಡಲಾಗಿದೆ. ಇದಲ್ಲದೆ, ಈ ಪದಗಳನ್ನು ಪದಕಂತೆಗಳಲ್ಲಿ ಮತ್ತು ಸೊಲ್ಲುಗಳಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನೂ ಅವುಗಳಲ್ಲಿ ತೋರಿಸಿ ಕೊಡಲಾಗಿದೆ.
ಆದರೆ, ಇಂತಹ ಪದನೆರಕೆಗಳನ್ನು ಬಳಸುವ ಬಗೆ ಹೇಗೆ ಎಂಬುದು ಮಕ್ಕಳಿಗೆ ಗೊತ್ತಿರುವುದಿಲ್ಲ; ಹಾಗಾಗಿ, ಅದನ್ನು ಅವರಿಗೆ ತಿಳಿಸಿಕೊಡ ಬೇಕಾಗುತ್ತದೆ. ಅವುಗಳಲ್ಲಿ ಬರುವ ಹೆಚ್ಚಿನ ಕನ್ನಡ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳನ್ನು ಕೊಟ್ಟಿರುತ್ತದೆ; ಅಂತಹ ಹುರುಳುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹ ಹುರುಳನ್ನು ಆರಿಸುವುದು ಹೇಗೆ ಎಂಬುದನ್ನು ಮಕ್ಕಳು ತಿಳಿದಿರಬೇಕು. ಹೀಗೆ ಹುರುಳನ್ನು ಆರಿಸಬೇಕಿದ್ದಲ್ಲಿ, ತಾವು ಓದುವ ಬರಹದಲ್ಲಿ ಬಂದ ಪದ ಹೆಸರು(ನಾಮ)ಪದವೇ, ಎಸಕ(ಕ್ರಿಯಾ)ಪದವೇ ಇಲ್ಲವೇ ಪರಿಚೆ(ಗುಣ)ಪದವೇ ಎಂಬುದನ್ನೂ ಮಕ್ಕಳು ತಿಳಿದುಕೊಂಡಿರ ಬೇಕಾಗುತ್ತದೆ. ಪದನೆರಕೆಗಳನ್ನು ಬಳಸಲು ಕಲಿತಿರುವ ಮಕ್ಕಳಿಗೆ ಇಂತಹ ಸೊಲ್ಲರಿಮೆಗೆ ಸಂಬಂದಿಸಿದ ವಿಶಯಗಳೂ ಗೊತ್ತಿರುತ್ತವೆ.
ಪದಗಳಲ್ಲಿ ಬರುವ ಒಟ್ಟು(ಪ್ರತ್ಯಯ)ಗಳನ್ನು ಮತ್ತು ತುಂಡುಪದಗಳನ್ನು ಗಮನಿಸುವ ಮೂಲಕವೂ ಮಕ್ಕಳು ಹೊಸ ಪದಗಳನ್ನು ಕಲಿತುಕೊಳ್ಳಬಲ್ಲರು. ಎತ್ತುಗೆಗಾಗಿ, ಕನ್ನಡದಲ್ಲಿ ಸಾಮಾನ್ಯವಾಗಿ ಇಗ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳು ಒಬ್ಬ ಮನುಶ್ಯನನ್ನು ಸೂಚಿಸುತ್ತವೆ (ಕೇಳುಗ, ನುಡಿಗ, ಗಾಣಿಗ, ಸಾಲಿಗ, ನಾಡಿಗ, ಒಕ್ಕಲಿಗ); ಗಾರ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳೂ ಇದೇ ಹುರುಳನ್ನು ಕೊಡುತ್ತವೆ (ಬರಹಗಾರ, ಹೊಣೆಗಾರ, ಓಟಗಾರ, ಕಾವಲುಗಾರ).
ಇದಕ್ಕೆ ಬದಲು, ಇಗೆ ಇಲ್ಲವೇ ಗೆ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳು ಸಾಮಾನ್ಯವಾಗಿ ಒಂದು ವಸ್ತುವನ್ನು ಸೂಚಿಸುತ್ತವೆ (ಹಾಸಿಗೆ, ಆಟಿಗೆ, ಬಡಿಗೆ, ಉಡುಗೆ, ಕೊಡುಗೆ). ಕನ್ನಡ ಪದಗಳಲ್ಲಿ ಬರುವ ಒಟ್ಟುಗಳ ಕುರಿತಾಗಿ ಇಂತಹ ವಿಶಯಗಳನ್ನು ಎತ್ತುಗೆಗಳ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ, ಅವರು ಓದುವ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವುಗಳ ಲ್ಲಿರುವ ಒಟ್ಟುಗಳನ್ನು ಗಮನಿಸಿ ಹುರುಳನ್ನು ಊಹಿಸಿಕೊಳ್ಳಲು ಅವರಿಗೆ ಗೊತ್ತಾಗುತ್ತದೆ.
ಕನ್ನಡ ಪದಗಳಲ್ಲಿ ಹಲವು ಬಗೆಯ ತುಂಡುಪದಗಳು ಬಳಕೆಯಾಗುತ್ತವೆ; ಇವಕ್ಕೂ ಅವುಗಳದೇ ಆದ ಹುರುಳುಗಳು ಹೆಚ್ಚಿನ ಬಳಕೆಗಳಲ್ಲೂ ಇರುತ್ತವೆ. ಎತ್ತುಗೆಗಾಗಿ, ಕಿರು-ಕಿತ್ ಎಂಬ ತುಂಡುಪದಕ್ಕೆ ಚಿಕ್ಕ ಎಂಬ ಹುರುಳಿದೆ. ಈ ತುಂಡುಪದದ ಅನಂತರ ಒಂದು ಮುಚ್ಚುಲಿ (ವ್ಯಂಜನ) ಬಂದಿದೆಯಾದರೆ ಅದಕ್ಕೆ ಕಿರು ಎಂಬ ರೂಪ ಇರುತ್ತದೆ (ಕಿರುನಾಲಿಗೆ, ಕಿರುಗತ್ತಿ, ಕಿರುನಾಯಿ, ಕಿರುಗುಡ್ಡ), ಮತ್ತು ಒಂದು ತೆರೆಯುಲಿ (ಸ್ವರ) ಬಂದಿದೆಯಾದರೆ ಅದಕ್ಕೆ
ಕಿತ್ ಎಂಬ ರೂಪ ಇರುತ್ತದೆ (ಕಿತ್ತುಸಿರು, ಕಿತ್ತೆಸಳು, ಕಿತ್ತೋಟ, ಕಿತ್ತುಲಿ, ಕಿತ್ತೋಲೆ).
ಕನ್ನಡದ ಪದಗಳಲ್ಲಿ ಇಂತಹ ತುಂಡುಪದಗಳು ಹೇಗೆ ಬಳಕೆಯಾಗುತ್ತವೆ ಮತ್ತು ಅವುಗಳ ನೆರವಿನಿಂದ ಹೊಸ ಪದಗಳ ಹುರುಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಮಕ್ಕಳಿಗೆ ಎತ್ತುಗೆಗಳ ಮೂಲಕ ತಿಳಿಸಿಕೊಡಬೇಕು. ತಮ್ಮ ಪದನೆರಕೆಯನ್ನು ಹಿಗ್ಗಿಸಿಕೊಳ್ಳಲು ಅವರಿಗೆ ಇದರಿಂದಲೂ ನೆರವಾಗುತ್ತದೆ. ಹೊಸ ಪದಗಳ ಹುರುಳನ್ನು ಅವು ಬಳಕೆಯಾಗಿರುವ ಕುಳ್ಳಿಹ(ಸಂದರ್ಬ) ದಿಂದಲೂ ಊಹಿಸಿಕೊಳ್ಳಲು ಬರುತ್ತದೆ. ಹಾಗಾಗಿ, ಈ ಕೆಲಸದಲ್ಲಿ ಕುಳ್ಳಿಹದ ನೆರವನ್ನು ಪಡೆಯುವುದು ಹೇಗೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಎತ್ತುಗೆಗಾಗಿ, ಹಾಲು ಚಿಮ್ಮಿ ಆತನ ಕಣ್ಣು ಕುರುಡಾಯಿತು ಎಂಬ ಸೊಲ್ಲಿನಲ್ಲಿ ಬಂದಿರುವ ಹಾಲು ಪದಕ್ಕೆ ದನದ ಹಾಲು ಎಂಬ ಹುರುಳಿಗಿಂತಲೂ ಒಂದು ಗಿಡದ ಸೊನೆ ಎಂಬ ಹುರುಳೇ ಸರಿಯಾದುದು ಎಂಬುದು ಅದರ ಕುಳ್ಳಿಹದಿಂದ ಗೊತ್ತಾಗುತ್ತದೆ. ದನದ ಹಾಲು ಚಿಮ್ಮಿದರೆ ಕಣ್ಣು ಕುರುಡಾಗಲಾರದಲ್ಲವೇ?
ಸಾಮಾನ್ಯವಾಗಿ, ಕತೆ ಕಾದಂಬರಿಗಳಂತಹ ಬರಹಗಳನ್ನು ಓದುವವರು ಅವುಗಳಲ್ಲಿ ಬರುವ ಹೊಸ ಪದಗಳಿಗೆ ಸರಿಯಾದ ಹುರುಳು ಏನೆಂಬುದನ್ನು ಪದನೆರಕೆಗಳಲ್ಲಿ ಹುಡುಕಲು ಹೋಗುವ ಬದಲು, ಪದಗಳ ಕುಳ್ಳಿಹದ ನೆರವಿ ನಿಂದ ಊಹಿಸಿಕೊಂಡು ಮುಂದೆ ಹೋಗುವುದೇ ಒಳ್ಳೆಯದು. ಯಾಕೆಂದರೆ, ಅಂತಹ ಬರಹಗಳನ್ನು ಓದಿ ಆನಂದಿಸಲು ಅವುಗಳಲ್ಲಿ ಬರುವ ಎಲ್ಲಾ ಪದ ಗಳ ಹುರುಳನ್ನೂ ತಿಳಿಯಲೇಬೇಕೆಂದೇನಿಲ್ಲ. ಕುಳ್ಳಿಹದ ಮೂಲಕ ಹೊಸ ಪದಗಳ ಹುರುಳನ್ನು ಊಹಿಸಿಕೊಳ್ಳಲು ಕಲಿತ ಮಕ್ಕಳಿಗೆ ಕತೆ, ಕಾದಂಬರಿ ಮೊದಲಾದುವನ್ನು ಓದಿ ಆನಂದಿಸುವ ಕೆಲಸ ಹೆಚ್ಚು ಸುಳುವಿನದಾಗುತ್ತದೆ. ಅರಿಮೆಯ (ವಿಜ್ನಾನದ) ಬರಹಗಳಲ್ಲಿ ತುಂಬಾ ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳು (ರೂಪಕ ಇಲ್ಲವೇ ಮೆಟಾಫರ್ಗಳು) ಬಳಕೆಯಾಗುತ್ತವೆ (4.4 ನೋಡಿ). ಇವುಗಳಲ್ಲಿ ಸೊಲ್ಲುಗಳನ್ನು ಹೆಸರುಪದಗಳಾಗಿ ಇಲ್ಲವೇ ಹೆಸರುಪದಕಂತೆಗಳಾಗಿ ಮಾರ್ಪಡಿಸಿ ಬಳಸಲಾಗುತ್ತದೆ (ನೀರು ಇಂಗಿತು ಎಂಬುದನ್ನು ನೀರಿನ ಇಂಗುವಿಕೆ ಎಂಬುದಾಗಿ ಮಾರ್ಪಡಿಸಲಾಗುತ್ತದೆ) ಮತ್ತು ಅವನ್ನು ಇನ್ನಶ್ಟು ಅಡಕವಾಗಿರುವ ಅರಿಮೆಯ (ಪಾರಿಬಾಶಿಕ) ಪದಗಳನ್ನಾಗಿ ಮಾಡಿಯೂ ಬಳಸಲಾಗುತ್ತದೆ. ಇವು ಓದುಗರಿಗೆ ತುಂಬಾ ತೊಡಕನ್ನುಂಟು ಮಾಡುತ್ತವೆ. ಸೊಲ್ಲರಿಮೆಯ ಮಾರ್ಪುರುಳುಗಳನ್ನು ಅವುಗಳ ಹಿಂದಿರುವ
ಸೊಲ್ಲುಗಳಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ ಮತ್ತು ಹಾಗೆ ಮಾಡುವ ಮೂಲಕ ಅವುಗಳ ಹುರುಳುಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಮಕ್ಕಳಿಗೆ ಬೇರೆಯಾಗಿ ಕಲಿಸಿಕೊಡಬೇಕಾಗುತ್ತದೆ.
2.3.8 ಓದಿನಿಂದ ತಿಳುವಳಿಕೆಯನ್ನು ಪಡೆಯುವುದು
ತಾವು ಓದುವ ಬರಹದಿಂದ ತಿಳುವಳಿಕೆಯನ್ನು ಪಡೆಯುವುದು ಹೇಗೆ ಎಂಬು ದನ್ನೂ ಮಕ್ಕಳಿಗೆ ತಿಳಿಸಿಕೊಡಬೇಕಾಗುತ್ತದೆ. ಎಲ್ಲಾ ಬರಹಗಳನ್ನೂ ಒಂದೇ ರೀತಿಯಲ್ಲಿ ಓದುವ ಮಕ್ಕಳಿಗೆ ಅವುಗಳಲ್ಲಿ ಹೆಚ್ಚಿನವುಗಳಿಂದಲೂ ತಮಗೆ ಬೇಕಾಗಿರುವ ತಿಳುವಳಿಕೆಯನ್ನು ಪಡೆಯಲು ಬರುವುದಿಲ್ಲ. ಓದುತ್ತಿರುವ ಬರಹವನ್ನವಲಂಬಿಸಿ, ತಮ್ಮ ಓದಿನ ವೇಗವನ್ನು ಹೆಚ್ಚುಕಡಿಮೆ ಮಾಡಲು ಮತ್ತು ಓದಿನ ಮೇಲೆ ಹತೋಟಿಯನ್ನಿಟ್ಟುಕೊಳ್ಳಲು ಅವರು ಕಲಿಯ ಬೇಕಾಗು
ಯಾವುದೇ ಬರಹವನ್ನಾಗಲಿ, ಓದುವುದಕ್ಕೆ ಒಂದು ಗುರಿಯಿರುತ್ತದೆ. ಇದು ಬೇರೆ ಬೇರೆ ಬಗೆಯ ಬರಹಗಳಿಗೆ ಬೇರೆ ಬೇರಾಗಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿಗಳನ್ನು ಓದುವವರಿಗೆ ಸಾಮಾನ್ಯವಾಗಿ ತಮ್ಮ ಓದಿನಿಂದ ಸಂತೋಶಪಡಬೇಕೆಂದಿರುತ್ತದೆ; ಅರಿಮೆಯ (ವಿಜ್ನಾನದ) ಬರಹಗಳನ್ನು ಓದುವವರಿಗೆ ಅವುಗಳ ನೆರವಿನಿಂದ ಯಾವುದಾದರೊಂದು ವಿಶಯವನ್ನು ತಿಳಿದುಕೊಳ್ಳಬೇಕೆಂದಿರುತ್ತದೆ; ಪದನೆರಕೆಯನ್ನು ಓದುವವರಿಗೆ ತಮಗೆ ಗೊತ್ತಾಗದ ಯಾವುದಾದರೊಂದು ಪದದ ಹುರುಳೇನೆಂಬುದನ್ನು ತಿಳಿಯ ಬೇಕೆಂದಿರುತ್ತದೆ. ಈ ರೀತಿ, ಬೇರೆ ಬೇರೆ ಓದುಗಳಿಗೆ ಬೇರೆ ಬೇರೆ ಗುರಿಗಳಿದ್ದು, ತಾನು ಒಂದು ಬರಹವನ್ನು ಯಾಕೆ ಓದುತ್ತಿದ್ದೇನೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು, ಅದಕ್ಕನುಸಾರವಾಗಿ ತನ್ನ ಓದನ್ನು ಹೊಂದಿಸಿಕೊಳ್ಳಲು ಒಳ್ಳೇ ಓದುಗರಿಗೆ ತಿಳಿದಿರುತ್ತದೆ. ಮಕ್ಕಳಿಗೆ ಇದನ್ನು ಕಲಿಸಿಕೊಟ್ಟು, ಅವರು ಒಳ್ಳೇ ಓದುಗರಾಗುವ ಹಾಗೆ ಮಾಡಬೇಕು.
ಬರಹಗಳನ್ನು ಓದುತ್ತಿರುವಾಗ, ಮೂರು ಬಗೆಯ ಚಟುವಟಿಕೆಗಳನ್ನು ನಡೆಸುವ ಮೂಲಕ ಓದುಗನು ತನ್ನ ಓದಿನ ಮಟ್ಟವನ್ನು ಮೇಲಕ್ಕೇರಿಸಬಹುದು: ಅದನ್ನು ಬರೆದವನು ಅದರ ಮೂಲಕ ಏನನ್ನು ತಿಳಿಸುತ್ತಿದ್ದಾನೆ, ಆತನ ಗುರಿಯೇನು ಎಂಬುದನ್ನು ತಿಳಿದುಕೊಳ್ಳುವುದು ಇದರಲ್ಲಿ ಮೊದಲನೆಯದು; ಅದರಿಂದ ದೊರೆತ ತಿಳುವಳಿಕೆಯನ್ನು ತನ್ನಲ್ಲಿರುವ ತಿಳುವಳಿಕೆಯೊಂದಿಗೆ ಸೇರಿಸಿಕೊಂಡು, ಆ ವಿಶಯದ ಕುರಿತು ಹೆಚ್ಚಿನ ಅರಿವನ್ನು ಪಡೆಯುವುದು
ಎರಡನೆಯದು; ಮತ್ತು ಆ ರೀತಿ ಓದನ್ನು ನಡೆಸುತ್ತಿರುವಾಗ, ನಿಜಕ್ಕೂ ತಾನು ಯಾವ ರೀತಿಯಲ್ಲಿ ತಿಳುವಳಿಕೆಯನ್ನು ಪಡೆಯುತ್ತಿದ್ದೇನೆ ಎಂಬುದನ್ನು ಗಮನಿಸಿ, ತನ್ನ ಓದನ್ನು ಹಿಡಿತದಲ್ಲಿರಿಸಿಕೊಳ್ಳುವುದು ಮೂರನೆಯದು.
ಇವುಗಳಲ್ಲಿ ಮೊದಲನೆಯ ಕೆಲಸವನ್ನು ನಡೆಸಬೇಕಿದ್ದಲ್ಲಿ, ಓದುಗನಿಗೆ ಬರಹದ ಹಿಂದಿರುವ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಓದುತ್ತಿರುವ ಬರಹದಲ್ಲಿ ಯಾವ ಅಂಶ ತನಗೆ ಗೊತ್ತಾಗುತ್ತದೆ ಮತ್ತು ಯಾವುದು ಗೊತ್ತಾಗುವುದಿಲ್ಲ ಎಂಬುದನ್ನು ಆತ ತಿಳಿದುಕೊಳ್ಳಬಲ್ಲನಾದರೆ, ಗೊತ್ತಾಗ ದಿರುವ ಅಂಶವನ್ನು ಸೊಲ್ಲರಿಮೆಯ ತಿಳಿವಿನ ಮೂಲಕ ಗೊತ್ತಾಗುವ ಹಾಗೆ ಮಾಡಲು ಪ್ರಯತ್ನಿಸಬಹುದು.
ಎತ್ತುಗೆಗಾಗಿ, ಒಂದು ತುಂಬಾ ತೊಡಕು ತೊಡಕಾಗಿರುವ ಸೊಲ್ಲು ನಿಜಕ್ಕೂ ಏನು ಹೇಳುತ್ತಿದೆ ಎಂಬುದನ್ನು ತಿಳಿಯಲು ಅದರಲ್ಲಿ ಬಂದಿರುವ ಎಸಕ(ಕ್ರಿಯಾ) ಪದಗಳಲ್ಲಿ ಮುಕ್ಯವಾದುದು ಯಾವುದು ಎಂಬುದನ್ನು, ಮತ್ತು ಅದು ತಿಳಿಸುವ ಎಸಕದಲ್ಲಿ ಯಾವ ವ್ಯಕ್ತಿ, ವಸ್ತು ಮತ್ತು ವಿಶಯಗಳು ತೊಡಗಿಕೊಂಡಿವೆ ಎಂಬುದನ್ನು ಕಂಡುಹಿಡಿಯಲು ಗೊತ್ತಿರಬೇಕು. ಹಾಗೆ ಮಾಡಬೇಕಿದ್ದಲ್ಲಿ, ಅವುಗಳೊಂದಿಗೆ ಬಂದಿರುವ ತುಂಡು ಸೊಲ್ಲುಗಳನ್ನು ಮತ್ತು ಪರಿಚೆ(ಗುಣ) ಪದಗಳನ್ನು ಮುಕ್ಯ ಪದಗಳಿಂದ ಬೇರ್ಪಡಿಸಲು ಗೊತ್ತಿರಬೇಕು. ಈ ಕೆಲಸವನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸಿಕೊಡ ಬೇಕಾಗುತ್ತದೆ.
2.4 ಬರೆಯಲು ಕಲಿಯುವುದು
ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ. ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ
ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.
2.4.1 ಬರವಣಿಗೆಯ ಚಳಕಗಳು
ಮೇಲೆ ಸೂಚಿಸಿದ ಹಾಗೆ, ಬರವಣಿಗೆಯನ್ನು ನಡೆಸಲು ಹಲವು ಚಳಕಗಳನ್ನು ಕಲಿತಿರಬೇಕಾಗುತ್ತದೆ, ಮತ್ತು ಅವನ್ನೆಲ್ಲ ತಮ್ಮ ಹತೋಟಿಯಲ್ಲಿರಿಸಿಕೊಂಡು ಒಟ್ಟಿಗೆ ನಡೆಸುತ್ತಿರಬೇಕಾಗುತ್ತದೆ. ಇದಲ್ಲದೆ, ಬೆರಳಚ್ಚು ಮಾಡುವುದು, ಕಾರು ಬಿಡುವುದು, ಹೆಣಿಗೆ ಕೆಲಸ ಮಾಡುವುದು ಮೊದಲಾದ ಬೇರೆ ತೊಡಕಿನ ಕೆಲಸಗಳ ಹಾಗೆ, ಬರೆಯುವ ಕೆಲಸವನ್ನು ನಡೆಸುವಾಗ ಕಯ್ಕೆಲಸದೊಂದಿಗೆ ಮನಸ್ಸಿನ ಕೆಲಸವನ್ನೂ ಸೇರಿಸಿಕೊಳ್ಳಬೇಕಾಗುತ್ತದೆ.
ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕ ಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯ ದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.
ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾ ಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.
ಕೆಲವು ಮಕ್ಕಳು ಬರವಣಿಗೆಗೆ ಬಲಗಯ್ಯನ್ನು ಬಳಸುವ ಬದಲು ಎಡ ಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯು ವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುವ ಕಾರಣ, ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ, ಮತ್ತು ಅದು ಕಾಣಿಸುವಂತೆ ಮಾಡಲು,
ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರಿಗೆ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ. ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.
ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗ ಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನೊಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬು ದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ
ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.
2.4.2 ಗಟ್ಟಿಯಾಗಿ ಬರೆಯುವುದು
ಬರೆಯುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸುವುದಕ್ಕಾಗಿ ಕಲಿಸುವವರು ಬಳಸಬಲ್ಲ ಹೊಲಬುಗಳಲ್ಲಿ ಒಂದನ್ನು ಗಟ್ಟಿಯಾಗಿ ಬರೆಯುವುದು ಎಂಬುದಾಗಿ ಹೆಸರಿಸಲಾಗಿದೆ. ಬರೆಯುತ್ತಿರುವಾಗ ತಮ್ಮ ಮನಸ್ಸಿನಲ್ಲಿ ಎಂತಹ ಆಲೋಚನೆಗಳೆಲ್ಲ ಮೂಡುತ್ತವೆಯೋ ಅವನ್ನು ಗಟ್ಟಿಯಾಗಿ ಹೇಳುತ್ತಾ ಹೋಗುವುದೇ ಈ ಹೊಲಬಾಗಿದೆ. ಕಲಿಸುವವರು ಮಕ್ಕಳ ಎದುರಿಗೆ ಒಂದು ಕತೆಯನ್ನು ಇಲ್ಲವೇ ಒಂದು ವಿಶಯದ ವಿವರಣೆಯನ್ನು ಬರೆದು ತೋರಿಸಬೇಕು, ಮತ್ತು ಹಾಗೆ ಬರೆಯುತ್ತಿರುವಾಗ ತಮ್ಮ ಮನಸ್ಸಿನಲ್ಲಿ ಎಂತಹ ಆಲೋಚನೆ ಗಳೆಲ್ಲ ಮೂಡುತ್ತವೆ ಎಂಬುದನ್ನು ಅವರು ಗಟ್ಟಿಯಾಗಿ ಮಕ್ಕಳಿಗೆ ಗೊತ್ತಾಗುವ ಹಾಗೆ ಹೇಳುತ್ತಾ ಹೋಗಬೇಕು. ಇದರಿಂದ ಬರೆಯುವ ಬಗೆ ಹೇಗೆ ಎಂಬುದು ಮಕ್ಕಳಿಗೆ ಗೊತ್ತಾಗುತ್ತದೆ.
ಕತೆ ಬರೆಯುವುದಿದ್ದಲ್ಲಿ ಅದಕ್ಕೊಂದು ಹಮ್ಮುಗೆಯನ್ನು ತಾವು ಹೇಗೆ ಹಮ್ಮಿಕೊಳ್ಳುತ್ತೇವೆ ಎಂಬುದನ್ನು, ಮತ್ತು ವಿಶಯವೊಂದರ ವಿವರಣೆಯನ್ನು ಬರೆಯುವುದಿದ್ದಲ್ಲಿ ಮೊದಲಿಗೆ ಅದಕ್ಕೆ ಸಂಬಂದಿಸಿದ ಹಲವಾರು ಸಂಗತಿಗಳನ್ನು ತಾವು ಹೇಗೆ ಕಲೆಹಾಕುತ್ತೇವೆ ಎಂಬುದನ್ನು ಆ ಕೆಲಸವನ್ನು ಮಾಡುತ್ತಿರುವಂತೆ ಮಕ್ಕಳಿಗೆ ಗಟ್ಟಿಯಾಗಿ ವಿವರಿಸುತ್ತಾ ಹೋಗಬೇಕು. ಇವನ್ನು ಬಳಸಿ ಬರಹವನ್ನು ಮುಂದುವರಿಸುವಾಗ, ಪದಗಳನ್ನು ಆರಿಸುವಲ್ಲಿ, ಸೊಲ್ಲುಗಳನ್ನು ಮತ್ತು ಕುರಳುಗಳನ್ನು ಕಟ್ಟುವಲ್ಲಿ ತಮಗೆ ಎದುರಾಗುವ ತೊಡಕುಗಳು ಎಂತಹವು, ಅವನ್ನು ತಾವು ಹೇಗೆ ಬಗೆಹರಿಸುತ್ತೇವೆ, ಇದಕ್ಕಾಗಿ ಸೊಲ್ಲುಗಳ ಇಟ್ಟಳಗಳನ್ನು ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನೆಲ್ಲ ಗಟ್ಟಿಯಾಗಿ ವಿವರಿಸುತ್ತಾ ಈ ಕೆಲಸಗಳನ್ನು ನಡೆಸಬೇಕು.
ಬರೆಯುವ ಕೆಲಸವನ್ನು ಕಲಿಸುವವರು ಈ ರೀತಿ ಅದನ್ನು ತಾವೇ ಮಾಡಿ ತೋರಿಸಿದಲ್ಲಿ, ಅದನ್ನು ಹೇಗೆ ನಡೆಸಬೇಕಾಗುತ್ತದೆ ಎಂಬುದು ಮಕ್ಕಳಿಗೆ ಹೆಚ್ಚು ಸುಳುವಾಗಿ ಗೊತ್ತಾಗುತ್ತದೆ, ಮತ್ತು ತಾವು ಬರೆಯುತ್ತಿರುವಾಗ ಎದುರಾಗುವ ತೊಡರುಗಳನ್ನು ಹೇಗೆ ಬಗೆಹರಿಸಬೇಕು ಎಂಬುದು ಅವರಿಗೆ ಗೊತ್ತಾಗುತ್ತದೆ.
2.4.3 ಬರೆಯುವುದು ಮತ್ತು ಸರಿಪಡಿಸುವುದು
ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.
ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡು ಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.
2.4.4 ಬರಹದಲ್ಲಿ ಆಸಕ್ತಿ
ಮಕ್ಕಳಿಗೆ ಬರೆಯುವಿಕೆಯಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.
ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಎತ್ತುಗೆಗಾಗಿ, ಶಾಲೆಯಿಂದ ಮನೆಗೆ ಬಂದೊಡನೆ ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.
ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆ
ಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡ ಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.
ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.
ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತು ಕೊಳ್ಳುವಂತೆ ಮಾಡಬೇಕು.
2.5 ದೊಡ್ಡವರಿಗೆ ಓದಲು-ಬರೆಯಲು ಕಲಿಸುವುದು
ಚಿಕ್ಕವರಿಗೆ ಓದಲು-ಬರೆಯಲು ಕಲಿಸುವುದಕ್ಕಿಂತಲೂ ದೊಡ್ಡವರಿಗೆ ಕಲಿಸುವ ಸಮಯದಲ್ಲಿ ಸೊಲ್ಲರಿಮೆಯ ತಿಳಿವನ್ನು ಹೆಚ್ಚು ನೇರವಾಗಿ ಮತ್ತು ಹೆಚ್ಚು ವಿವರವಾಗಿ ಕೊಡಿಸಲು ಬರುತ್ತದೆ. ಯಾಕೆಂದರೆ, ದೊಡ್ಡವರಿಗೆ ಅದನ್ನು ನೇರವಾಗಿ ತಮ್ಮ ಓದು ಮತ್ತು ಬರವಣಿಗೆಗಳಲ್ಲಿ ಬಳಸಲು ಬರುತ್ತದೆ.
ನಮ್ಮಲ್ಲಿ ಬಹಳ ಮಂದಿ ಜನರು ಚಿಕ್ಕಂದಿನಲ್ಲಿ ಓದಲು-ಬರೆಯಲು ಕಲಿತಿರುವುದಿಲ್ಲ, ಇಲ್ಲವೇ ಒಂದೆರಡು ಬರಿಗೆ(ಅಕ್ಶರ)ಗಳನ್ನಶ್ಟೇ ಕಲಿತು ಅಲ್ಲಿಗೆ ತಮ್ಮ ಕಲಿಕೆಯನ್ನು ಮುಗಿಸಿರುತ್ತಾರೆ. ಅವರಿಗೆಲ್ಲ ಓದಲು-ಬರೆಯಲು ಕಲಿಸುವ ಕೆಲಸ ಇವತ್ತು ನಮ್ಮ ಮುಂದಿದೆ. ಇದನ್ನು ನಾವು ಇವತ್ತು ನಡೆಸಲೇಬೇಕಾಗಿದೆ. ಯಾಕೆಂದರೆ, ಓದು-ಬರಹ ತಿಳಿದಿರುವುದರಿಂದ ಸಿಗುವ ಪ್ರಯೋಜನಗಳು ಮತ್ತು ಓದು-ಬರಹ ಬಾರದಿರುವುದರಿಂದ ಉಂಟಾಗುವ ತೊಂದರೆಗಳು ಹಿಂದಿಗಿಂತ ಇವತ್ತು ತುಂಬಾ ಹೆಚ್ಚಾಗಿವೆ.
ಹಿಂದೆ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಓದಲು-ಬರೆಯಲು ತಿಳಿದಿದ್ದರೆ ಸಾಕಾಗುತ್ತಿತ್ತು. ಜನರ ಜೀವನದಲ್ಲಿ ಬರಹವನ್ನು ತುಂಬಾ ಕಡಿಮೆ ಬಳಸುತ್ತಿದ್ದುದೇ ಇದಕ್ಕೆ ಕಾರಣ. ಆದರೆ ಈವತ್ತು ಜೀವನದ ಎಲ್ಲಾ ಸನ್ನಿವೇಶ ಗಳನ್ನೂ ಬರಹ ಆಕ್ರಮಿಸಿದೆ, ಮತ್ತು ಇದರಿಂದಾಗಿ ಓದಲು-ಬರೆಯಲು ತಿಳಿಯದವರು ಜೀವನದಲ್ಲಿ ಮುಂದೆ ಬರಲು ಸಾದ್ಯವೇ ಇಲ್ಲ ಎಂಬ ನೆಲೆಗೆ ಇವತ್ತು ನಾವು ಬಂದು ಮುಟ್ಟಿದ್ದೇವೆ. ಹಾಗಾಗಿ, ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ಮಂದಿಯೂ ಓದು-ಬರಹವನ್ನು ತಿಳಿದಿರಲೇಬೇಕಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೆ ಬರವಣಿಗೆಯನ್ನು ಮುಕ್ಯವಾಗಿ ನಲ್ಬರಹ (ಸಾಹಿತ್ಯ)ಗಳನ್ನು ಉಂಟುಮಾಡುವುದಕ್ಕಾಗಿ, ಮತ್ತು ಅವನ್ನು ಓದಿ ಆನಂದಿಸು ವುದಕ್ಕಾಗಿ ಬಳಸಲಾಗುತ್ತಿತ್ತು. ಬರವಣಿಗೆ ಸಮಾಜದ ಕೆಲವೇ ಕೆಲವು ಮಂದಿ ಯಲ್ಲಿ ಮಾತ್ರ ಉಳಿದುಕೊಂಡಿದ್ದುದಕ್ಕೆ ಇದೂ ಒಂದು ಕಾರಣ. ಆದರೆ ಇವತ್ತು ಇಂತಹ ನಲ್ಬರಹ(ಸಾಹಿತ್ಯ)ಕ್ಕೆ ಸಂಬಂದಿಸಿದಂತಹ ಕೆಲಸಗಳಿಗಿಂತಲೂ ನೇರವಾಗಿ ಜನರಿಗೆ ತಿಳುವಳಿಕೆಯನ್ನು ಕೊಡುವಂತಹ ಬೇರೆ ಬಗೆಯ ಕೆಲಸ ಗಳಿಗೇನೇ ಬರಹ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ.
ನಮ್ಮ ದೇಶದ ಆಡಳಿತಕ್ಕಾಗಿ ಮಂದಿಯಾಳ್ವಿಕೆಯನ್ನು (ಪ್ರಜಾಪ್ರಬುತ್ವವನ್ನು) ಆರಿಸಿಕೊಂಡಿದ್ದೇವಾದ ಕಾರಣ, ಇವತ್ತು ಆಡಳಿತಕ್ಕೆ ಸಂಬಂದಿಸಿದ ಹಲವಾರು ವಿಶಯಗಳನ್ನು ಎಲ್ಲರೂ ತಿಳಿದುಕೊಂಡಿರಲೇಬೇಕಾಗಿದೆ. ಇವನ್ನೆಲ್ಲ ಸುದ್ದಿಹಾಳೆಗಳು ಕೊಡುತ್ತಿವೆ; ಆಡಳಿತದ ಹೊರಪಡಿಕೆಗಳೂ ಇವನ್ನು ಜನರಿಗೆ ತಿಳಿಸುತ್ತವೆ. ರೇಡಿಯೋ, ಟಿವಿ ಮೊದಲಾದ ಹಲವು ಬಗೆಯ ಉಪಕರಣಗಳನ್ನು ಇವತ್ತು ಹೆಚ್ಚಿನ ಜನರೂ ಬಳಸುತ್ತಿದ್ದಾರೆ; ಇವಕ್ಕೆ ಬೇಕಾಗುವ ಹಲವು ಬಗೆಯ ತಿಳುವಳಿಕೆಗಳನ್ನು ಅವರು ಬರಹಗಳ ಮೂಲಕವೇನೇ ಪಡೆಯ ಬೇಕಾಗಿದೆ. ಇದಲ್ಲದೆ, ಅಡಿಗೆ, ಮಯ್ಯೊಳಿತು (ಆರೋಗ್ಯ), ಮಕ್ಕಳ ಸಾಕುವಿಕೆ, ಕಟ್ಟಲೆ-ಕಾನೂನುಗಳು, ಮೊದಲಾದ ಇನ್ನೂ ಹಲವಾರು ಬಗೆಯ ವಿಶಯಗಳ ಕುರಿತು ತಿಳುವಳಿಕೆಯನ್ನು ಇವತ್ತು ಬರಹಗಳ ಮೂಲಕ ಪಡೆಯಬಹುದಾಗಿದೆ. ಈ ಕಾರಣಕ್ಕಾಗಿಯೂ ಇವತ್ತು ಬರಹದ ಕಲಿಕೆ ಎಲ್ಲರಿಗೂ ಬೇಕಾಗಿದೆ.
ಓದಲು-ಬರೆಯಲು ತಿಳಿಯದಿರುವವರಿಗೆ ಸಾಮಾನ್ಯವಾಗಿ ಅದರ ಮಹತ್ವ ಗೊತ್ತಿರುವುದಿಲ್ಲ. ಹಾಗಾಗಿ, ಅಂತಹವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರಲ್ಲಿಯೂ ಹಿಂದೆ ಬೀಳುತ್ತಾರೆ. ಇದಲ್ಲದೆ, ಓದು-ಬರಹಗಳನ್ನು ಬಳಸುವವರಿಲ್ಲದ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಅವುಗಳಲ್ಲಿ ಆಸಕ್ತಿ
ಹುಟ್ಟುವುದಿಲ್ಲ. ಈ ಎಲ್ಲಾ ಕಾರಣಗಳಿಗಾಗಿ, ಇವತ್ತು ಓದು-ಬರಹ ಬಾರದ ಚಿಕ್ಕವರಿಗೆ ಮಾತ್ರವಲ್ಲದೆ ದೊಡ್ಡವರಿಗೂ ಅದನ್ನು ಕಲಿಸಬೇಕಾಗಿದೆ.
ಓದಲು ಕಲಿಯುವಲ್ಲಿ ಮಕ್ಕಳು ಪಡೆಯಬೇಕಾಗಿರುವಂತಹ ಚಳಕಗಳನ್ನೇ ದೊಡ್ಡವರೂ ಪಡೆಯಬೇಕಾಗುತ್ತದೆ. ಆದರೆ, ಈ ಚಳಕಗಳು ಎಂತಹವು, ಅವನ್ನು ಪಡೆಯುವ ಬಗೆ ಹೇಗೆ, ಮತ್ತು ಅವನ್ನು ಯಾಕೆ ಪಡೆಯಬೇಕು ಎಂಬುದನ್ನು ದೊಡ್ಡವರಿಗೆ ನೇರವಾಗಿಯೇ ತಿಳಿಸಲು ಬರುತ್ತದೆ ಎಂಬುದು ಮಕ್ಕಳ ಕಲಿಕೆಗೂ ದೊಡ್ಡವರ ಕಲಿಕೆಗೂ ನಡುವಿರುವ ವ್ಯತ್ಯಾಸ.
ಚಿಕ್ಕವರ ಹಾಗೆ, ಓದಲು ಕಲಿಯದಿರುವ ದೊಡ್ಡವರಿಗೂ ಉಲಿ, ಪದ ಮತ್ತು ಬರಿಗೆಗಳ ನಡುವಿನ ಪತ್ತುಗೆಯೆಂತಹದು ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ, ಮಾತಿನಲ್ಲಿ ಬರುವ ಪದಗಳನ್ನು ಉಲಿ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು, ಮತ್ತು ಈ ಉಲಿಗಳಿಗೆ ತಮ್ಮವೇ ಆದ ಹುರುಳಿಲ್ಲದಿದ್ದರೂ, ಅವುಗಳ ಸೇರಿಕೆಯಿಂದ ಉಂಟಾಗಿರುವ ಪದಗಳಿಗೆ ಹುರುಳಿದೆ ಎಂಬುದನ್ನು ಓದಲು ಕಲಿಸುವ ಸಮಯದಲ್ಲಿ ಅವರು ಗಮನಿಸುವ ಹಾಗೆ ಮಾಡಬೇಕಾಗುತ್ತದೆ.
ಈ ವಿಶಯವನ್ನು ಅವರ ಗಮನಕ್ಕೆ ತಂದಲ್ಲಿ, ಬರಹದಲ್ಲಿ ಬಳಕೆಯಾಗಿರುವ ಬರಿಗೆಗಳನ್ನು ಉಲಿ ಇಲ್ಲವೇ ಉಲಿಕಂತೆಗಳೊಂದಿಗೆ ಸಂಬಂದಿಸಬೇಕಾಗುತ್ತದೆ, ಮತ್ತು ಆ ರೀತಿ ಸಂಬಂದಿಸುವ ಮೂಲಕ ಬರಹದಲ್ಲಿ ಬರುವ ಪದಗಳನ್ನು ಗುರುತಿಸಬೇಕಾಗುತ್ತದೆ ಎಂಬುದನ್ನು ಅವರಿಗೆ ಕಲಿಸಲು ಸುಳುವಾಗುತ್ತದೆ. ಬರೆಯಲು ಕಲಿಸುವಲ್ಲೂ ಇದೇ ರೀತಿಯಲ್ಲಿ ದೊಡ್ದವರಿಗೆ ನೇರವಾಗಿ ಕಲಿಕೆಯ ಗುಟ್ಟನ್ನು ತಿಳಿಸಿಹೇಳಬಹುದು. ಅದನ್ನವರು ತಮ್ಮ ಕಲಿಕೆಯಲ್ಲಿ ಬಳಸಿ ಹೆಚ್ಚು ಬೇಗನೆ ಮುಂದೆ ಹೋಗಬಲ್ಲರು.
2.6 ತಿರುಳು
ಶಾಲೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬಳಸುವ ಆಡುಗನ್ನಡಕ್ಕಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಯ ಬೇಕಾಗುತ್ತದೆ, ಮತ್ತು ಅದಕ್ಕಿಂತ ಇನ್ನೂ ಸ್ವಲ್ಪ ಬೇರಾಗಿರುವ ಬರಹದ ರೂಪದಲ್ಲಿರುವ ಎಲ್ಲರ ಕನ್ನಡದಲ್ಲಿ ಓದಲು ಮತ್ತು ಬರೆಯಲು ಕಲಿಯ ಬೇಕಾಗುತ್ತದೆ. ಈ ಮೂರು ಬಗೆಯ ಕನ್ನಡಗಳ ನಡುವೆ ಸೊಲ್ಲರಿಮೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಕಲಿಸುವವರು ತಿಳಿದುಕೊಂಡಿದ್ದಲ್ಲಿ,
ಅವನ್ನು ಅವರು ತಮ್ಮ ಕಲಿಸುವಿಕೆಯಲ್ಲಿ ಬಳಸಿಕೊಳ್ಳಬಲ್ಲರು. ಈ ವ್ಯತ್ಯಾಸದ ತಿಳಿವು ಮಕ್ಕಳಿಗೂ ಅವರ ಕಲಿಕೆಯಲ್ಲಿ ನೆರವಾಗಬಲ್ಲುದು.
ಓದಲು ಕಲಿಯುವ ಮಕ್ಕಳಿಗೆ ಕನ್ನಡದಲ್ಲಿ ಉಲಿಗಳ ಸೇರಿಕೆಯಿಂದ ಪದಗಳನ್ನು ಉಂಟುಮಾಡಲಾಗುತ್ತದೆ, ಮತ್ತು ಕನ್ನಡ ಬರಹದಲ್ಲಿ ಈ ಉಲಿಗಳನ್ನು ಮತ್ತು ಉಲಿಕಂತೆಗಳನ್ನು ಬರಿಗೆಗಳ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟಲ್ಲಿ, ಅವರಿಗೆ ಬರಹವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಬೇಗನೆ ಓದಲು ಬರುತ್ತದೆ.
ಬರಹದ ಓದಿನಿಂದ ತಿಳುವಳಿಕೆಯನ್ನು ಪಡೆಯಬೇಕಿದ್ದಲ್ಲಿ, ಅದರಲ್ಲಿ ಬರುವ ಬರಿಗೆಗಳನ್ನು ಪದಗಳಾಗಿ, ಪದಕಂತೆಗಳಾಗಿ, ತುಂಡುಸೊಲ್ಲುಗಳಾಗಿ, ಮತ್ತು ಸೊಲ್ಲುಗಳಾಗಿ ಜೋಡಿಸಿ ಓದಲು ತಿಳಿದಿರಬೇಕು. ಈ ಕೆಲಸವನ್ನು ನಡೆಸುವಲ್ಲಿಯೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಬರೆಯಲು ಕಲಿಯುವಲ್ಲಿ ಮತ್ತು ಬರೆದುದನ್ನು ಸರಿಪಡಿಸುವಲ್ಲಿಯೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ. ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬರೆಯಬಲ್ಲವರು ಅವನ್ನು ಸೇರಿಸಿ ಉದ್ದ ಸೊಲ್ಲುಗಳನ್ನು ಮಾಡಬೇಕಿದ್ದಲ್ಲಿ, ಮತ್ತು ಸೊಲ್ಲುಗಳೊಳಗೆ ಬೇರೆ ಸೊಲ್ಲುಗಳನ್ನು ಸೇರಿಸಿ ಬರಹ ಹೆಚ್ಚು ಚನ್ನಾಗಿ ಕಾಣಿಸುವಂತೆ ಮಾಡಬೇಕಿದ್ದಲ್ಲಿ, ಸೊಲ್ಲುಗಳ ಇಟ್ಟಳಗಳನ್ನು ಅವರು ತಿಳಿದಿರಬೇಕಾಗುತ್ತದೆ.
ದೊಡ್ಡವರಿಗೆ ಓದಲು-ಬರೆಯಲು ಕಲಿಸುವವರು ಮೇಲಿನ ಚಳಕಗಳನ್ನೇ ಅವರಿಗೂ ಕಲಿಸಿಕೊಡಬೇಕಾಗುತ್ತದೆ. ಆದರೆ, ದೊಡ್ಡವರಿಗೆ ಇವನ್ನು ನೇರವಾಗಿ ತಿಳಿಸಿಹೇಳಬಹುದೆಂಬುದೇ ಅವರ ಕಲಿಕೆಗೂ ಚಿಕ್ಕವರ ಕಲಿಕೆಗೂ ನಡುವಿರುವ ಮುಕ್ಯ ವ್ಯತ್ಯಾಸ.