Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
9. ವಿಭಕ್ತಿಪಲ್ಲಟ
9.1 ಮುನ್ನೋಟ
ಕನ್ನಡ ವ್ಯಾಕರಣಗಳಲ್ಲಿ ‘ವಿಭಕ್ತಿಪಲ್ಲಟ’ ಎಂಬ ವಿಭಾಗವೊಂದಿರುತ್ತದೆ. ಒಂದೇ ಅರ್ಥದಲ್ಲಿ ಎರಡು ಅಥವಾ ಜಾಸ್ತಿ ವಿಭಕ್ತಿಗಳು ಬಳಕೆಯಾಗುವ ಕೆಲವು ಸಂದಭ್ರಗಳನ್ನು ಸಾಮಾನ್ಯವಾಗಿ ಈ ವಿಭಾಗದಲ್ಲಿ ವಿವರಿಸಲಾಗುತ್ತದೆ.
ಆದರೆ ಸ್ವಲ್ಪ ಸೂಕ್ಷ್ಮವಾಗಿ ಈ ಸಂದಭ್ರಗಳನ್ನು ಪರಿಶೀಲಿಸಿದಾಗ, ಅವು ಗಳಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳಿಗೆ ಕನ್ನಡದಲ್ಲಿ ಒಂದೇ ಅರ್ಥವಲ್ಲ, ಬೇರೆ ಬೇರೆ ಅರ್ಥಗಳಿವೆಯೆಂಬ ವಿಷಯ ಸ್ಪಷ್ಟವಾಗುತ್ತದೆ. ಎಂದರೆ, ವೈಯಾ ಕರಣಿಗಳು ತಿಳಿಸುವ ಹಾಗೆ ಅವು ಒಂದೇ ಅರ್ಥದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳಲ್ಲ.
ಸಂಸ್ಕೃತ ವ್ಯಾಕರಣಗಳಲ್ಲಿಯೂ ‘ವಿಭಕ್ತಿಪಲ್ಲಟ’ಗಳನ್ನು ವರ್ಣಿಸುವ ಕ್ರಮ ವಿದೆ. ಆದರೆ, ಅವುಗಳಲ್ಲಿ ಕೆಲವೇ ಕೆಲವಕ್ಕೆ ಮಾತ್ರ ಕನ್ನಡದ ಹಾಗೆ ಅರ್ಥಭೇದ ವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಹೆಚ್ಚಿನೆಡೆಗಳಲ್ಲೂ ಅವನ್ನು ಒಂದು ವಿಭಕ್ತಿಯ ಅರ್ಥದಲ್ಲಿ ಇನ್ನೊಂದು ವಿಭಕ್ತಿಯ ಬಳಕೆಯುಂಬು ದಾಗಿ ವರ್ಣಿಸಲು ಸಾಧ್ಯವಿದೆ.
ಕನ್ನಡದಲ್ಲಿ ಎಲ್ಲಾ ವಿಭಕ್ತಿ ಪ್ರತ್ಯಯಗಳಿಗೂ ಅರ್ಥದೊಂದಿಗೆ ನೇರವಾದ ಸಂಬಂಧವಿದೆ ಮತ್ತು ಸಂಸ್ಕೃತದಲ್ಲಿ ಇಲ್ಲ ಎಂಬುದೇ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅವುಗಳ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸಕ್ಕೆ ಮೂಲ ಕಾರಣ. ಕನ್ನಡದಲ್ಲಿ ಮುಖ್ಯವಾಗಿ ಇಂತಹ ಎರಡು ರೀತಿಯ ‘ವಿಭಕ್ತಿಪಲ್ಲಟ’ಗಳನ್ನು ಕಾಣಬಹುದು.
(1) ಕ್ರಿಯಾಪದವನ್ನು ಹಾಗೆಯೇ ಉಳಿಸಿ, ಅದರೊಂದಿಗೆ ಬರುವ ನಾಮಪದಗಳನ್ನು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯ ಎಂಬುದು ಒಂದು ರೀತಿಯ ವಿಭಕ್ತಿಪಲ್ಲಟ.
(2) ಕ್ರಿಯಾಪದದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದಾಗ ಅದರೊಂದಿಗೆ ಬರುವ ನಾಮಪದಗಳ ವಿಭಕ್ತಿಗಳಲ್ಲೂ ಕೆಲವು
ಬದಲಾವಣೆಗಳನ್ನು ಮಾಡಬೇಕಾಗುವುದೆಂಬುದು ಇನ್ನೊಂದು ರೀತಿಯ ವಿಭಕ್ತಿಪಲ್ಲಟ.
ಈ ಎರಡು ರೀತಿಯ ವಿಭಕ್ತಿಪಲ್ಲಟಗಳಲ್ಲೂ ಕನ್ನಡ ವಾಕ್ಯಗಳಲ್ಲಿ ಅರ್ಥ ಬದಲಾಗದೆ ಉಳಿಯುವುದಿಲ್ಲ. ಸಂಸ್ಕೃತದಲ್ಲೂ ಈ ಎರಡು ರೀತಿಯ ವಿಭಕ್ತಿ ಪಲ್ಲಟಗಳನ್ನು ಕಾಣಬಹುದು. ಆದರೆ ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಈ ವಿಭಕ್ತಿಪಲ್ಲಟವನ್ನು ಕನ್ನಡದ ಹಾಗೆ ಅರ್ಥವ್ಯತ್ಯಾಸದೊಂದಿಗೆ ಹೆಚ್ಚಿನೆಡೆಗಳಲ್ಲೂ ಹೊಂದಿಸಿಕೊಳ್ಳಲು ಸಾಧ್ಯವಾಗದು.
9.2 ಕ್ರಿಯಾಪದದಲ್ಲಿ ಬದಲಾವಣೆಯಾಗದೆ ವಿಭಕ್ತಿಪಲ್ಲಟ
ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಿಭಕ್ತಿ ಪ್ರತ್ಯಯಗಳು ನಾಮಪದ ಮತ್ತು ಕ್ರಿಯಾಪದಗಳ ನಡುವಿರುವ ಸಂಬಂಧ ಎಂತಹದು ಎಂಬುದನ್ನು ತಿಳಿಸುತ್ತವೆ; ಎಂದರೆ, ನಾಮಪದಗಳು ಗುರುತಿಸುವಂತಹ ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳು ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ಎಂತಹ ಕೆಲಸವನ್ನು ನಡೆಸುತ್ತವೆ ಎಂಬುದನ್ನು ಅವು ಸೂಚಿಸುತ್ತವೆ.
ಈ ವಿಷಯದಲ್ಲಿ ಕನ್ನಡದ ಕ್ರಿಯಾಪದಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. (1) ಕೆಲವು ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಒಂದು ವಿಶಿಷ್ಟವಾದ ರೀತಿಯಲ್ಲಿ ಮಾತ್ರ ಸಂಬಂಧಿಸಲು ಸಾಧ್ಯವಿದೆ. ಆದರೆ (2) ಬೇರೆ ಕೆಲವು ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಸಂಬಂಧಿಸಲು ಸಾಧ್ಯವಿದೆ.
ಎರಡನೆಯ ಗುಂಪಿಗೆ ಸೇರಿರುವ ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಅವು ಸೂಚಿಸಬಲ್ಲ ಸಂಬಂಧಗಳನ್ನನುಸರಿಸಿ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಜೋಡಿಗಳನ್ನು ಪರಿಶೀಲಿಸಬಹುದು.
ರಾಜು ಪುಸ್ತಕಗಳನ್ನು ಕಪಾಟಿನಲ್ಲಿ ತುಂಬಿಸಿದ (1ಖ) ರಾಜು ಕಪಾಟನ್ನು ಪುಸ್ತಕಗಳಿಂದ ತುಂಬಿಸಿದ (2ಕ) ಹರಿ ಪಾಠವನ್ನು ಮರೆತಿದ್ದಾನೆ (2ಖ) ಹರಿಗೆ ಪಾಠ ಮರೆತಿದೆ (3ಕ) ಜಾನಕಿ ಏಣಿಯಿಂದ ಮರವನ್ನು ಹತ್ತಿದಳು (3ಖ) ಜಾನಕಿ ಏಣಿಯಿಂದ ಮರಕ್ಕೆ ಹತ್ತಿದಳು
(1-3) ವಾಕ್ಯಜೋಡಿಗಳಲ್ಲಿ ಬಂದಿರುವ (ಕ-ಖ) ವಾಕ್ಯಗಳಲ್ಲಿ ಕ್ರಿಯಾ ರೂಪಗಳು ಬದಲಾಗದೆ ಉಳಿದಿವೆಯಾದರೂ ಅವುಗಳೊಂದಿಗೆ ಬಂದಿರುವ
ನಾಮಪದಗಳ ವಿಭಕ್ತಿಗಳು ಬದಲಾಗಿವೆ. ಉದಾಹರಣೆಗಾಗಿ, ಪುಸ್ತಕ ನಾಮ ಪದ (1ಕ)ದಲ್ಲಿ ದ್ವಿತೀಯೆಯಲ್ಲಿ ಬಂದಿದೆ, ಆದರೆ (1ಖ)ದಲ್ಲಿ ತೃತೀಯೆಯಲ್ಲಿ ಬಂದಿದೆ. ಇದಲ್ಲದೆ, (1ಕ)ದಲ್ಲಿ ಸಪ್ತಮಿಯಲ್ಲಿದ್ದ ಕಪಾಟು ನಾಮಪದ (1ಖ) ದಲ್ಲಿ ದ್ವಿತೀಯುಯಲ್ಲಿ ಬಂದಿದೆ.
ಉಳಿದ (ಕ-ಖ) ವಾಕ್ಯಗಳಲ್ಲೂ ಕ್ರಿಯಾಪದ ಬದಲಾಗದೆ ಉಳಿದಿದೆ; ಆದರೆ ಅದರೊಂದಿಗೆ ಬಂದಿರುವ ಒಂದು ಅಥವಾ ಜಾಸ್ತಿ ನಾಮಪದಗಳು ಅವುಗಳ ವಿಭಕ್ತಿ ಪ್ರತ್ಯಯದಲ್ಲಿ ಬದಲಾಗಿವೆ.
ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಕನ್ನಡದಲ್ಲಿ ಇಂತಹ ‘ವಿಭಕ್ತಿಪಲ್ಲಟಗಳು’ ಅರ್ಥವಿಲ್ಲದ ಬದಲಾವಣೆಗಳಲ್ಲ. ಅವುಗಳಲ್ಲಿ ಮುಖ್ಯವಾಗಿ ‘ಸಮಗ್ರತೆ’, ‘ಸ್ವೇಚ್ಛೆ’ ಮತ್ತು ‘ಸಾನ್ನಿಧ್ಯ’ ಎಂಬುದಾಗಿ ಮೂರು ರೀತಿಯ ಅರ್ಥವ್ಯತ್ಯಾಸಗಳನ್ನು ಕಾಣಲು ಸಾಧ್ಯ (ಜಾಸ್ತಿ ವಿವರಗಳಿಗೆ ಭಟ್ 1978, 2004 ನೋಡಿ).
9.2.1 ಸಮಗ್ರತೆ
ಕನ್ನಡದ ಕ್ರಿಯಾಪದಗಳನ್ನು ಅವು ಸೂಚಿಸುವ ಘಟನೆ ಒಂದು ವಸ್ತುವನ್ನು ಸಮಗ್ರವಾಗಿ ಬಾಧಿಸುವುದೇ ಅಥವಾ ಅಸಮಗ್ರವಾಗಿ ಬಾಧಿಸುವುದೇ ಎಂಬ ವಿಷಯದ ಮೇಲೆ ಎರಡು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.
ಈಜು, ದಾಟು, ತುಂಬು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆ ಒಂದು ವಸ್ತುವನ್ನು ಸಮಗ್ರವಾಗಿ ಬಾಧಿಸುತ್ತದೆ; ಆದರೆ ಮುಟ್ಟು, ಕತ್ತರಿಸು, ಹರಿ, ನೋಡು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆ ಒಂದು ವಸ್ತುವನ್ನು ಅಸಮಗ್ರವಾಗಿ ಬಾಧಿಸುತ್ತದೆ.
(4) (5)
ಹರಿ ಮೇಜನ್ನು ಮುಟ್ಟಿದ ಹರಿ ನದಿಯನ್ನು ಈಜಿದ
ಹರಿ ಮೇಜಿನ ತುದಿಯನ್ನು ಮಾತ್ರವೇ ಮುಟ್ಟಿರುವನಾದರೂ (4)ನೇ ವಾಕ್ಯವನ್ನು ಬಳಸಲು ಸಾಧ್ಯವಿದೆ; ಆದರೆ (5)ನೇ ವಾಕ್ಯವನ್ನು ಬಳಸಬೇಕಿದ್ದಲ್ಲಿ ಅವನು ನದಿಯನ್ನು ಸಮಗ್ರವಾಗಿ, ಎಂದರೆ ಒಂದು ದಡದಿಂದ ಇನ್ನೊಂದು ದಡದವರೆಗೆ ಈಜಿ ದಾಟಿರಬೇಕಾಗುತ್ತದೆ.
ಸಮಗ್ರವಾಗಿ ಬಾಧಿಸುವ ಕ್ರಿಯಾಪದಗಳಲ್ಲಿ ಕೆಲವಕ್ಕೆ ಸಮಗ್ರ ಮತ್ತು ಅಸಮಗ್ರ ಎಂಬ ಈ ಎರಡು ರೀತಿಯ ಅರ್ಥಗಳೂ ಬರಲು ಸಾಧ್ಯವಿದ್ದು, ಇದು ಅವುಗಳೊಂದಿಗೆ ಬರುವ ನಾಮಪದದ ವಿಭಕ್ತಿಯನ್ನವಲಂಬಿಸಿದೆ.
ಉದಾಹರಣೆಗಾಗಿ, ಇಂತಹ ಕೆಲವು ಕ್ರಿಯಾಪದಗಳು ದ್ವಿತೀಯಾ ವಿಭಕ್ತಿ ಯಲ್ಲಿರುವ ನಾಮಪದದೊಂದಿಗೆ ಬಂದಾಗ ಸಮಗ್ರಾರ್ಥವನ್ನು ಕೊಡುತ್ತವೆ ಮತ್ತು ನಾಮಪದದೊಂದಿಗೆ ಬಂದಾಗ ಚತುರ್ಥೀ ವಿಭಕ್ತಿಯಲ್ಲಿರುವ ಅಸಮಗ್ರಾರ್ಥವನ್ನು ಕೊಡುತ್ತವೆ (6ಕ-ಖ ನೋಡಿ).
ಹಾಗಾಗಿ, ಅಂತಹ ಎರಡು ಬಳಕೆಗಳನ್ನು ದ್ವಿತೀಯಾ-ಚತುರ್ಥೀ ವಿಭಕ್ತಿ ಪಲ್ಲಟಕ್ಕೆ ಉದಾಹರಣೆಯಾಗಿ ಕೊಡಲು ಸಾಧ್ಯವಿದೆಯಾದರೂ ಅಲ್ಲಿ ದ್ವಿತೀಯಾ ಮತ್ತು ಚತುರ್ಥೀ ವಿಭಕ್ತಿಗಳು ಒಂದೇ ಅರ್ಥದಲ್ಲಿ ಬಂದಿವೆ ಎಂದು ಹೇಳುವುದು ಸರಿಯಲ್ಲ. ಯಾಕೆಂದರೆ ಆ ಎರಡು ವಿಭಕ್ತಿಗಳು ಬೇರೆ ಬೇರೆ ಅರ್ಥಗಳನ್ನು ಕೊಡುವುದಕ್ಕಾಗಿ ಬಳಕೆಯಾಗುತ್ತವೆ.
(6ಕ) ಬೆಕ್ಕು ಮರವನ್ನು ಹತ್ತಿತು (6ಖ) ಬೆಕ್ಕು ಮರಕ್ಕೆ ಹತ್ತಿತು
ಬೆಕ್ಕು ಮರಕ್ಕೆ ಬುಡದಿಂದಲೇನೇ ಹತ್ತಿದೆಯಾದರೆ (6ಕ)ವನ್ನು ಮತ್ತು ಮಾಡಿನಿಂದ ಮರಕ್ಕೆ ಹತ್ತಿದೆಯಾದರೆ (6ಖ)ವನ್ನೂ ಬಳಸಲು ಸಾಧ್ಯವಿದೆ. ಮರದ ಮಟ್ಟಿಗೆ ಮೊದಲನೆಯದು ಸಮಗ್ರಾರ್ಥವನ್ನು ಕೊಡುವುದಾದರೆ ಎರಡನೆಯದು ಅಸಮಗ್ರಾರ್ಥವನ್ನು ಕೊಡುತ್ತದೆ. ಈ ಅರ್ಥ ವ್ಯತ್ಯಾಸವನ್ನು (7ಕ-ಗ) ವಾಕ್ಯಗಳಲ್ಲೂ ಕಾಣಬಹುದು.
(7ಕ) ಜಾನಕಿ ಏಣಿಯಿಂದ ಮರವನ್ನು ಹತ್ತಿದಳು (7ಖ) ಜಾನಕಿ ಏಣಿಯಿಂದ ಮರಕ್ಕೆ ಹತ್ತಿದಳು (7ಗ) ಜಾನಕಿ ಮಾಡಿನಿಂದ ಮರಕ್ಕೆ ಹತ್ತಿದಳು
(7ಕ)ದಿಂದ ಜಾನಕಿ ಏಣಿಯನ್ನು ಬಳಸಿ (ನೆಲದಿಂದ) ಮರವನ್ನೇರಿದಳೆಂಬ ಅರ್ಥ ಸಿಗುವುದಾದರೆ, (7ಖ)ದಿಂದ ಆಕೆ, ಏಣಿಯ ಮೇಲೆ ನಿಂತಿದ್ದವಳು, ಅಲ್ಲಿಂದ ಮರಕ್ಕೆ ಹತ್ತಿದಳೆಂಬ ಅರ್ಥ ಸಿಗುತ್ತದೆ. ಮರದ ಬುಡದಿಂದಲೇ ಹತ್ತಿದಳೆಂಬ ಅರ್ಥ (7ಖ) ವಾಕ್ಯಕ್ಕೆ ಬರಲಾರದು. ಅಂತಹ ಅರ್ಥ (7ಗ) ವಾಕ್ಯಕ್ಕೂ, ಅದರಲ್ಲಿ ಮರ ನಾಮಪದ ಚತುರ್ಥಿಯಲ್ಲಿ ಬಂದಿರುವ ಕಾರಣ, ಬರಲಾರದು.
ಕನ್ನಡದಲ್ಲಿ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟವೂ ಇದೇ ರೀತಿಯಲ್ಲಿ ಸಮಗ್ರ ಮತ್ತು ಅಸಮಗ್ರಾರ್ಥಗಳನ್ನು ಕೊಡಬಲ್ಲುದು.
(8ಕ) ಆತ ಕಾವೇರಿ ನದಿಯನ್ನು ಈಜಿದ (8ಖ) ಆತ ಕಾವೇರಿ ನದಿಯಲ್ಲಿ ಈಜಿದ
(9ಕ) ಅವನು ಒಂದು ಪುಸ್ತಕ(ವನ್ನು) ಬರೆದಿದ್ದಾನೆ (9ಖ) ಅವನು ಒಂದು ಪುಸ್ತಕದಲ್ಲಿ (ಒಂದು ಕತೆ) ಬರೆದಿದ್ದಾನೆ
ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿದನೆಂಬ ಅರ್ಥ ನದಿ ಪದ ದ್ವಿತೀಯೆಯಲ್ಲಿರುವ (8ಕ) ವಾಕ್ಯಕ್ಕಿದೆ ಮತ್ತು ನದಿಯಲ್ಲೇ ಎಲ್ಲೋ ಒಂದು ಕಡೆ ಈಜಿದನೆಂಬ ಅರ್ಥ ನದಿ ಪದ ಸಪ್ತಮಿಯಲ್ಲಿರುವ (8ಖ) ವಾಕ್ಯಕ್ಕಿದೆ ಎಂಬುದನ್ನು ಗಮನಿಸಬಹುದು.
ಇದೇ ರೀತಿಯಲ್ಲಿ (9ಕ) ವಾಕ್ಯಕ್ಕೆ ಅವನೊಂದು ಇಡೀ ಪುಸ್ತಕವನ್ನು ಬರೆದಿದ್ದಾನೆಂಬ ಸಮಗ್ರಾರ್ಥ ಬರುತ್ತದೆ. ಅದರಲ್ಲಿ ಪುಸ್ತಕ ಪದ ದ್ವಿತೀಯು ಯಲ್ಲಿರುವುದೇ ಇದಕ್ಕೆ ಕಾರಣ. ಇದಕ್ಕೆ ಬದಲು, (9ಖ) ವಾಕ್ಯಕ್ಕೆ ಅವನು ಪುಸ್ತಕದ ಒಂದು ಭಾಗದಲ್ಲಿ ಬರೆದಿದ್ದಾನೆಂಬ ಅಸಮಗ್ರಾರ್ಥ ಬರುತ್ತದೆ. ಅದರಲ್ಲಿ ಪುಸ್ತಕ ಪದ ಸಪ್ತಮಿಯಲ್ಲಿರುವುದೇ ಇದಕ್ಕೆ ಕಾರಣ. ಈ ಅರ್ಥ ವ್ಯತ್ಯಾಸವನ್ನು (9ಖ)ದಲ್ಲಿ ಕಂಸದೊಳಗೆ ಕೊಟ್ಟಿರುವ ಪದ ಸ್ಪಷ್ಟಪಡಿಸುತ್ತದೆ.
ಮೇಲೆ 9.2ರಲ್ಲಿ (1ಕ-ಖ) ವಾಕ್ಯಗಳಲ್ಲಿ ಇಂತಹ ದ್ವಿತೀಯಾ-ಸಪ್ತಮೀ ವಿಭಕ್ತಿಪಲ್ಲಟ ಮಾತ್ರವಲ್ಲದೆ, ದ್ವಿತೀಯಾ-ತೃತೀಯಾ ವಿಭಕ್ತಿ ಪಲ್ಲಟವೂ ಇದೆ. ಈ ವಾಕ್ಯಗಳನ್ನು ಕೆಳಗೆ ಪುನಃ ಕೊಡಲಾಗಿದೆ.
ಕೊಟ್ಟಿರುವ
ರಾಜು ಪುಸ್ತಕಗಳನ್ನು ಕಪಾಟಿನಲ್ಲಿ ತುಂಬಿಸಿದ (1ಖ) ರಾಜು ಕಪಾಟನ್ನು ಪುಸ್ತಕಗಳಿಂದ ತುಂಬಿಸಿದ
(1ಕ) ವಾಕ್ಯದ ಪ್ರಕಾರ ತನ್ನಲ್ಲಿರುವ ಪುಸ್ತಕಗಳೆಲ್ಲವನ್ನೂ ರಾಜು ಕಪಾಟಿ ನಲ್ಲಿ ತುಂಬಿಸಿದನೆಂಬ ಅರ್ಥ ಬರುತ್ತದೆ, ಆದರೆ ಕಪಾಟು ತುಂಬಿತೆಂಬ ಅರ್ಥ ಬರುವುದಿಲ್ಲ. (1ಕ) ವಾಕ್ಯದ ಪ್ರಕಾರ ಕಪಾಟಿನಲ್ಲಿ ಇನ್ನೂ ಸ್ವಲ್ಪ ಜಾಗ ಉಳಿದಿರಲು ಸಾಧ್ಯವಿದೆ.
(1ಖ) ವಾಕ್ಯ ಇದಕ್ಕಿಂತ ಭಿನ್ನವಾಗಿದೆ. ಆ ವಾಕ್ಯದ ಪ್ರಕಾರ, ಕಪಾಟು ಪುಸ್ತಕದಿಂದ ತುಂಬಿತೆಂಬ ಅರ್ಥ ಬರುತ್ತದೆ, ಆದರೆ ರಾಜುವಿಗೆ ತನ್ನಲ್ಲಿರುವ ಪುಸ್ತಕಗಳೆಲ್ಲವನ್ನೂ ಆ ಕಪಾಟಿನಲ್ಲಿ ತುಂಬಿಸಲು ಸಾಧ್ಯವಾಯಿತೆಂಬ ಅರ್ಥ ಬರುವುದಿಲ್ಲ. ಈ ವಾಕ್ಯದ ಪ್ರಕಾರ, ಕಪಾಟು ತುಂಬಿದ ಮೇಲೂ ಸ್ವಲ್ಪ ಪುಸ್ತಕ ರಾಜುವಿನ ಹತ್ತಿರ ಉಳಿದಿರಲು ಸಾಧ್ಯವಿದೆ.
(1ಕ-ಖ) ವಾಕ್ಯಗಳಲ್ಲಿ ಕಾಣಿಸಿದ ಹಾಗೆ, ಮತ್ತು ಇದರಂತೆಯೇ (9ಕ-ಖ) ವಾಕ್ಯಗಳಲ್ಲೂ ಕಾಣಿಸಿದ ಹಾಗೆ, ಸಮಗ್ರಾರ್ಥವನ್ನು ಕೊಡುವ ಕ್ರಿಯಾಪದ ಗಳೊಂದಿಗೆ ದ್ವಿತೀಯುಯಲ್ಲಿ ಬರುವ ನಾಮಪದವನ್ನು ಬಳಸಿದಾಗ ಆ ಕ್ರಿಯಾ ಪದಗಳು ಸೂಚಿಸುವ ಘಟನೆಯು ನಾಮಪದವು ಸೂಚಿಸುವ ವಸ್ತುವನ್ನು ಸಮಗ್ರ
ವಾಗಿ ಬಾಧಿಸುತ್ತದೆಯುಂಬುದು ಕನ್ನಡ ವಾಕ್ಯರಚನೆಯ ಒಂದು ಸಾಮಾನ್ಯ ನಿಯಮ.
9.2.2 ಸ್ವೇಚ್ಛಾಪ್ರವೃತ್ತಿ
ನಾಮಪದವೊಂದನ್ನು ಪ್ರಕೃತಿ (ಪ್ರಥಮಾ) ರೂಪದಲ್ಲಿ ಬಳಸುವ ಬದಲು ಚತುರ್ಥಿಯಲ್ಲಿ ಬಳಸಿದಾಗ, ಆ ನಾಮಪದವು ಗುರುತಿಸುವ ವ್ಯಕ್ತಿ ಘಟನೆಯಲ್ಲಿ ಸ್ವೇಚ್ಛೆಯಿಂದ ಪ್ರವೃತ್ತವಾಗಿಲ್ಲ ಎಂಬ ಅರ್ಥ ಸಿಗುತ್ತದೆ. ಇಲ್ಲೂ ವಿಭಕ್ತಿಪಲ್ಲಟ ಕಾಣಿಸುವುದು ನಿಜವಾದರೂ ‘ಪ್ರಥಮಾ’ ಮತ್ತು ಚತುರ್ಥೀ ವಿಭಕ್ತಿಗಳು ಒಂದೇ ಅರ್ಥದಲ್ಲಿ ಬಂದಿವೆಯೆಂದು ಹೇಳುವುದು ಸರಿಯಲ್ಲ.
(10ಕ) ಸನ್ಯಾಸಿ ತಲೆ ತುರಿಸಿದ (10ಖ) ಸನ್ಯಾಸಿಗೆ ತಲೆ ತುರಿಸಿತು (11ಕ) ಹುಲಿಯನ್ನು ಕಂಡು ಹರಿ ಹೆದರಿದ (11ಖ) ಹುಲಿಯನ್ನು ಕಂಡು ಹರಿಗೆ ಹೆದರಿತು (12ಕ) ಪುಸ್ತಕವನ್ನು ತರಲು ಅವನು ಮರೆತಿದ್ದಾನೆ (12ಖ) ಪುಸ್ತಕವನ್ನು ತರಲು ಅವನಿಗೆ ಮರೆತಿದೆ
ಗುರುತಿಸುವ
ನಾಮಪದವು
(10-12) ವಾಕ್ಯಗಳಲ್ಲಿ ನಾಮಪದವನ್ನು ಚತುರ್ಥಿಯಲ್ಲಿ ಬಳಸಿದಾಗ ಕ್ರಿಯಾಪದವು ತಿಳಿಸುವ ಘಟನೆಗೆ ವ್ಯಕ್ತಿ ಜವಾಬ್ದಾರನಲ್ಲ (ಎಂದರೆ ಆ ಘಟನೆ ಆತನ ಹತೋಟಿಯಲ್ಲಿರಲಿಲ್ಲ) ಎಂಬ ಅರ್ಥ ಸಿಗುತ್ತದೆ. ಆದರೆ ಅದೇ ನಾಮಪದವನ್ನು ಯಾವ ವಿಭಕ್ತಿ ಪ್ರತ್ಯಯವನ್ನೂ ಸೇರಿಸದೆ (‘ಪ್ರಥಮೆ’ಯಲ್ಲಿ) ಬಳಸಿದಾಗ ಅದು ಗುರುತಿಸುವ ವ್ಯಕ್ತಿ ಘಟನೆಗೆ ಜವಾಬ್ದಾರನೆಂಬ ಅರ್ಥ ಸಿಗುತ್ತದೆ.
ಪ್ರೇರಣಾರ್ಥವನ್ನು ಕೊಡುವ ವಾಕ್ಯಗಳಲ್ಲಿ ಪ್ರೇರಿತನಾಗಿರುವ ವ್ಯಕ್ತಿಯನ್ನು ದ್ವಿತೀಯೆಯಿಂದಲೂ ಸೂಚಿಸಬಹುದು ಮತ್ತು ಕೈಯಲ್ಲಿ ಎಂಬ ಪದದೊಡನೆ ಬಂದಿರುವ ಷಷ್ಠಿಯಿಂದಲೂ ಸೂಚಿಸಬಹುದು. ಇಲ್ಲೂ ಪ್ರೇರಿತನಾಗಿರುವ ವ್ಯಕ್ತಿ ಸ್ವೇಚ್ಛೆಯಿಂದ ಮತ್ತು ಸ್ವಶಕ್ತಿಯಿಂದ ಕಾರ್ಯದಲ್ಲಿ ತೊಡಗಿರುವನೋ ಇಲ್ಲವೋ ಎಂಬ ವಿಷಯ ಆತನನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯಯವನ್ನು ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.
(13ಕ) ನಳಿನಿಯು ಹುಡುಗನನ್ನು ಮರಕ್ಕೆ ಹತ್ತಿಸಿದಳು (13ಖ) ನಳಿನಿಯು ಹುಡುಗನ ಕೈಯಲ್ಲಿ ಮರಕ್ಕೆ ಹತ್ತಿಸಿದಳು
(13ಕ) ವಾಕ್ಯದಿಂದ ನಳಿನಿ ಹುಡುಗನನ್ನು ಕೈಯಿಂದ ಎತ್ತಿ ಮರಕ್ಕೆ ಹತ್ತಿಸಿದಳೆಂಬ ಅರ್ಥವೂ (13ಖ) ವಾಕ್ಯದಿಂದ ನಳಿನಿ ಆತನನ್ನು ಮರಕ್ಕೆ ಹತ್ತುವಂತೆ ಪ್ರೇರೇಪಿಸಿದಳೆಂಬ ಅರ್ಥವೂ ಸಿಗುತ್ತದೆ. ಹುಡುಗನು ಸ್ವೇಚ್ಛೆಯಿಂದ ಮರಕ್ಕೆ ಹತ್ತಿದನೆಂಬ ಅರ್ಥ ಎರಡನೆಯ ವಾಕ್ಯದಲ್ಲಿ ಮಾತ್ರ ಸಿಗುತ್ತದೆ.
9.2.3 ಸಾನ್ನಿಧ್ಯ
ಬಯ್ಯು ಕ್ರಿಯಾಪದದೊಂದಿಗೆ ಬೈಗಳನ್ನು ತಿನ್ನುವ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯೆಯಲ್ಲೂ ಬರಬಲ್ಲುದು ಚತುರ್ಥಿಯಲ್ಲೂ ಬರಬಲ್ಲುದು. ಇಲ್ಲೂ ದ್ವಿತೀಯಾ-ಚತುರ್ಥೀ ವಿಭಕ್ತಿಪಲ್ಲಟಕ್ಕೆ ಕನ್ನಡದಲ್ಲಿ ಅರ್ಥ ವ್ಯತ್ಯಾಸ ವನ್ನು ಸೂಚಿಸುವ ಶಕ್ತಿಯಿದೆ.
(14ಕ) ಮಾಲಿನಿ ರವಿಯನ್ನು ಚನ್ನಾಗಿ ಬೈದಳು (14ಖ) ಮಾಲಿನಿ ರವಿಗೆ ಚನ್ನಾಗಿ ಬೈದಳು
(14ಕ) ವಾಕ್ಯದಲ್ಲಿ ರವಿ ಪದ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಹಿಂದಿನಿಂದ ಎಂದರೆ ಅವನಿಲ್ಲದಾಗ ಅವನ ತಾಯಿಯ ಹತ್ತಿರ ಅಥವಾ ಬೇರೆ ಯಾರಾದರೂ ಒಬ್ಬನ ಹತ್ತಿರ ಬೈದಿದ್ದಾಳೆ ಎಂಬ ಅರ್ಥ ಬರುತ್ತದೆ.
(14ಖ)ದಲ್ಲಿ ಅದೇ ಪದ ಚತುರ್ಥಿಯಲ್ಲಿ ಬಂದಿದ್ದು, ಇದಕ್ಕೆ ಮಾಲಿನಿ ರವಿಯನ್ನು ಆತನ ಎದುರಿಗೇನೇ ಬೈದಿದ್ದಾಳೆ ಎಂಬ ಅರ್ಥ ಬರುತ್ತದೆ.
ಕನ್ನಡದಲ್ಲಿ ದೂರು ಕ್ರಿಯಾಪದವು ಸೂಚಿಸುವ ಘಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೇನೇ ಮಾಡುವುದಿಲ್ಲವಾದ ಕಾರಣ ಆ ವ್ಯಕ್ತಿ ಯನ್ನು ಗುರುತಿಸುವ ನಾಮಪದ ಚತುರ್ಥಿಯಲ್ಲಿ ಬರುವುದಿಲ್ಲ.
ಇದಕ್ಕೆ ಬದಲು, ಹೇಳು ಕ್ರಿಯಾಪದವು ತಿಳಿಸುವ ಘಟನೆಯನ್ನು ಸಾಮಾನ್ಯ ವಾಗಿ ಒಬ್ಬ ವ್ಯಕ್ತಿಯ ಎದುರಿಗೆ ಮಾತ್ರವೇ ನಡೆಸುವ ಕಾರಣ, ಆ ವ್ಯಕ್ತಿಯನ್ನು ಗುರುತಿಸುವ ನಾಮಪದ ದ್ವಿತೀಯೆಯಲ್ಲಿ ಬರುವುದಿಲ್ಲ.
(15) ಮಾಲಿನಿ ರವಿಯನ್ನು ದೂರಿದಳು (16) ಮಾಲಿನಿ ರವಿಗೆ ಹೇಳಿದಳು
ಕನ್ನಡದಲ್ಲಿ ಚತುರ್ಥೀ ವಿಭಕ್ತಿಗೆ ಈ ರೀತಿ ‘ಸಮ್ಮುಖದಲ್ಲಿ’ ಎಂಬ ಅರ್ಥ ಬರಲು ಆ ವಿಭಕ್ತಿಗೆ ಒಂದು ಅನುಭವವನ್ನು ಪಡೆಯುವ ವ್ಯಕ್ತಿಯನ್ನು
ಸೂಚಿಸುವ ಅರ್ಥವಿರುವುದೇ ಮುಖ್ಯ ಕಾರಣ. ಒಬ್ಬನ ಸಮ್ಮುಖದಲ್ಲಿ ಬೈದರೆ ಮಾತ್ರವೇ ಆತನಿಗೆ ಆ ಬೈಗಳಿನ ಅನುಭವವಾಗಬಲ್ಲುದು ತಾನೇ!
9.2.4 ಬೇರೆ ಅರ್ಥಗಳು
ಮೇಲೆ ಸೂಚಿಸಿದ ಆರ್ಥಭೇದಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಅರ್ಥ ಭೇದಗಳನ್ನು ಕನ್ನಡದಲ್ಲಿ ಈ ರೀತಿ ‘ವಿಭಕ್ತಿಪಲ್ಲಟ’ದ ಮೂಲಕ ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ ಬೀಳು ಕ್ರಿಯಾಪದದೊಂದಿಗೆ ಬಿದ್ದಿರುವ ಜಾಗವನ್ನು ಸೂಚಿಸುವ ಪದವನ್ನು ಚತುರ್ಥಿಯಲ್ಲಿಯೂ ಬಳಸಲು ಸಾಧ್ಯವಿದೆ, ಸಪ್ತಮಿ ಯಲ್ಲಿಯೂ ಬಳಸಲು ಸಾಧ್ಯವಿದೆ.
(17ಕ) ಸುರೇಶನ ಚೆಂಡು ನೀರಿಗೆ ಬಿದ್ದಿದೆ (17ಖ) ಸುರೇಶನ ಚೆಂಡು ನೀರಿನಲ್ಲಿ ಬಿದ್ದಿದೆ
ಆದರೆ ಈ ಎರಡು ವಾಕ್ಯಗಳಲ್ಲಿ ಚತುರ್ಥೀ ಮತ್ತು ಸಪ್ತಮೀ ವಿಭಕ್ತಿಗಳು ಒಂದೇ ಅರ್ಥದಲ್ಲಿ ಬಂದಿಲ್ಲ ಎಂಬುದನ್ನು ಗಮನಿಸಬಹುದು. ಕನ್ನಡದಲ್ಲಿ ಚತುರ್ಥೀ ವಿಭಕ್ತಿಯ ಬಳಕೆಯಾದಾಗಲೆಲ್ಲ ಚಲನೆಯ ಅರ್ಥ ಬರುತ್ತದೆ, ಆದರೆ ಸಪ್ತಮೀ ವಿಭಕ್ತಿಯ ಬಳಕೆಯಾದಾಗ ಅಂತಹ ಚಲನೆಯ ಅರ್ಥ ಬರಬೇಕಾಗಿಲ್ಲ.
ಮೇಲೆ (17ಕ) ವಾಕ್ಯವು ಚೆಂಡು ನೀರಿಗೆ ಹೋಗಿ ಬಿದ್ದಿದೆಯೆಂಬುದನ್ನೂ ಮತ್ತು (17ಖ) ವಾಕ್ಯವು ಅದು ನೀರಿನಲ್ಲಿ ಬಿದ್ದುಕೊಂಡಿದೆಯೆಂಬುದನ್ನೂ ತಿಳಿಸುತ್ತಿದ್ದು ಮೊದಲನೆಯದರಲ್ಲಿ ಮಾತ್ರ ಚಲನೆಯ ಅರ್ಥ ಕಾಣಿಸುತ್ತದೆ.
9.3 ಸಂಸ್ಕೃತದಲ್ಲಿ ವಿಭಕ್ತಿಪಲ್ಲಟ
ಕನ್ನಡದಲ್ಲಿ ಸಾಮಾನ್ಯವಾಗಿ ವಿಭಕ್ತಿ ವ್ಯತ್ಯಾಸವಿರುವಲ್ಲೆಲ್ಲ ಅರ್ಥವ್ಯತ್ಯಾಸವನ್ನೂ ಕಾಣಲು ಸಾಧ್ಯ ಎಂಬುದಾಗಿ ಒಂದು ನಿಯಮವನ್ನು ಮಾಡಬಹುದು. ಇದಲ್ಲದೆ ಈ ಅರ್ಥ ವ್ಯತ್ಯಾಸ ವಿಭಕ್ತಿಯ ಮುಖ್ಯ ಅರ್ಥದಿಂದಲೇನೇ ಸಾಧಿಸಲು ಸಾಧ್ಯ ವಾಗುವಂತಹ ವ್ಯತ್ಯಾಸವೂ ಆಗಿರುತ್ತದೆ ಎಂಬುದು ಕನ್ನಡದ ವೈಶಿಷ್ಟ್ಯ.
ಸಂಸ್ಕೃತದಲ್ಲೂ ಕೆಲವು ಸಂದಭ್ರಗಳಲ್ಲಿ ವಿಭಕ್ತಿಪಲ್ಲಟಗಳಿಗೆ ಈ ರೀತಿ ಅರ್ಥವನ್ನು ಹೊಂದಿಸಿ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದಗಳೂ ಹಲವಿವೆ.
(18ಕ) ರಾಮಃ ಗ್ರಾಮಂ ಗಚ್ಛತಿ
‘ರಾಮ ಹಳ್ಳಿಗೆ ಹೋಗುತ್ತಾನೆ’
(18ಖ) ರಾಮಃ ಗ್ರಾಮಾಯ ಗಚ್ಛತಿ
‘ರಾಮ ಹಳ್ಳಿಗೆ (ಹಳ್ಳಿಯ ಕಡೆಗಾಗಿ) ಹೋಗುತ್ತಾನೆ’
(18ಗ) ರಾಮಃ ಗ್ರಾಮೇ ಗಚ್ಛತಿ
‘ರಾಮ ಹಳ್ಳಿಗೆ ಹೋಗುತ್ತಾನೆ (ಹೋಗಿ ಹಳ್ಳಿಯನ್ನು ಸೇರುತ್ತಾನೆ)’
(18ಕ-ಗ) ವಾಕ್ಯಗಳಲ್ಲಿ ಗಚ್ಛತಿ ಕ್ರಿಯಾರೂಪದೊಂದಿಗೆ ಗ್ರಾಮ ನಾಮ ಪದ ಮೂರು ಬೇರೆ ಬೇರೆ ವಿಭಕ್ತಿಗಳಲ್ಲಿ ಬಳಕೆಯಾಗಿರುವುದನ್ನು ಕಾಣಬಹುದು. ಈ ಮೂರು ಬಳಕೆಗಳಿಗೆ ಹೆಚ್ಚು ಕಡಿಮೆ ಒಂದೇ ಅರ್ಥವಿದೆಯೆಂದು ಹೇಳಲು ಸಾಧ್ಯವಿದೆಯಾದರೂ ಅವುಗಳ ನಡುವೆ ಅರ್ಥದಲ್ಲಿ ಸೂಕ್ಷ್ಮವಾದ ವ್ಯತ್ಯಾಸ ಗಳೂ ಇವೆ. ಇವನ್ನು ಮೇಲೆ ಅವುಗಳ ಕನ್ನಡ ಅನುವಾದದಲ್ಲಿ ಕಂಸಗಳೊಳಗೆ ಕೊಟ್ಟಿರುವ ಪದಗಳು ಸೂಚಿಸುತ್ತಿವೆ.
ದ್ವಿತೀಯೆಯು ಒಂದು ದಿಕ್ಕಿನಲ್ಲಿ ಚಲನೆ ನಡೆಯುತ್ತಿದೆಯೆಂದಿಷ್ಟೇ ಸೂಚಿಸು ವುದಾದರೆ, ಆ ದಿಕ್ಕು ಯಾವುದು ಎಂಬುದನ್ನು ಚತುರ್ಥಿ ತಿಳಿಸುತ್ತದೆ ಮತ್ತು ಚಲನೆಯ ಮೂಲಕ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಯಾವ ಸ್ಥಾನದಲ್ಲಿ ಬಂದು ನಿಲ್ಲುತ್ತದೆ ಎಂಬುದನ್ನು ಸಪ್ತಮಿ ತಿಳಿಸುತ್ತದೆ (ತಾರಾಪೋರ್ವಾಲಾ 1967).
ಆದರೆ ಸಂಸ್ಕೃತದಲ್ಲಿ ಕಾಣಿಸುವ ಬೇರೆ ಹಲವು ವಿಭಕ್ತಿಪಲ್ಲಟಗಳಿಗೆ ಈ ರೀತಿ ಅರ್ಥವ್ಯತ್ಯಾಸವನ್ನು ಹೊಂದಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಪ್ರೇರಣಾರ್ಥಕ ಕ್ರಿಯಾಪದಗಳೊಂದಿಗೆ ಪ್ರೇರಿತನಾಗುವಂತಹ ವ್ಯಕ್ತಿಯನ್ನು ಗುರುತಿಸುವ ನಾಮಪದವೊಂದು ಬರುತ್ತಿದ್ದು, ಅದನ್ನು ಸಂಸ್ಕೃತದಲ್ಲಿ ದ್ವಿತೀಯೆ ಯಲ್ಲೂ ಬಳಸಬಹುದು, ತೃತೀಯೆಯಲ್ಲೂ ಬಳಸಬಹುದು. ಈ ವಿಭಕ್ತಿ ಪಲ್ಲಟಕ್ಕೆ ಹೊಂದಿಕೆಯಾಗುವಂತಹ ಅರ್ಥವ್ಯತ್ಯಾಸವಾವುದೂ ಸಂಸ್ಕೃತದಲ್ಲಿ ಇರುವ ಹಾಗೆ ಕಾಣಿಸುವುದಿಲ್ಲ.
(19ಕ) ದೇವದತ್ತೇನ ಘಟಂ ಕಾರಯತಿ
‘ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’
(19ಖ) ದೇವದತ್ತಂ ಘಟಂ ಕಾರಯತಿ
‘ದೇವದತ್ತನ ಮೂಲಕ ಕೊಡವನ್ನು ಮಾಡಿಸುತ್ತಾನೆ’
(19)ನೇ ಸಂಸ್ಕೃತ ವಾಕ್ಯದಲ್ಲಿ ಕಾರಯತಿ ‘ಮಾಡಿಸುತ್ತಾನೆ’ ಕ್ರಿಯಾಪದವು ಸೂಚಿಸುವ ಘಟನೆಯಿಂದ ಪ್ರೇರಿತನಾಗುವ ವ್ಯಕ್ತಿ ದೇವದತ್ತ. ಆತನನ್ನು ಗುರುತಿಸುವ ನಾಮಪದ (19ಕ)ದಲ್ಲಿ ತೃತೀಯುಯಲ್ಲಿ ಬಂದಿದೆ ಮತ್ತು
(19ಖ)ದಲ್ಲಿ ದ್ವಿತೀಯುಯಲ್ಲಿ ಬಂದಿದೆ. ಆದರೆ ಈ ವಿಭಕ್ತಿ ವ್ಯತ್ಯಾಸಕ್ಕೆ ಹೊಂದಿಕೆಯಾಗುವಂತಹ ಅರ್ಥವ್ಯತ್ಯಾಸ ಈ ವಾಕ್ಯಗಳಲ್ಲಿಲ್ಲ.
ಇದೇ ರೀತಿಯಲ್ಲಿ, ಕಾರಣವನ್ನು ಸೂಚಿಸುವ ಪದ ಸಂಸ್ಕೃತದಲ್ಲಿ ಕಾರಣೇನ ಎಂಬುದಾಗಿ ತೃತೀಯುಯಲ್ಲೂ ಬರಬಲ್ಲುದು, ಕಾರಣಾತ್ ಎಂಬು ದಾಗಿ ಪಂಚಮಿಯಲ್ಲೂ ಬರಬಲ್ಲುದು;
ಯಾರೊಂದಿಗೆ ಮಾತನಾಡಿದುದು ಎಂಬುದನ್ನು ಸೂಚಿಸುವ ಪದ ಚತುರ್ಥಿ ಯಲ್ಲೂ ಬರಬಲ್ಲುದು, ದ್ವಿತೀಯುಯಲ್ಲೂ ಬರಬಲ್ಲುದು;
ಯಾರಿಗೆ ಕೊಟ್ಟದ್ದು ಎಂಬುದನ್ನು ಸೂಚಿಸುವ ಪದ ಚತುರ್ಥಿಯಲ್ಲೂ ಬರಬಲ್ಲುದು, ಷಷ್ಠಿ ಇಲ್ಲವೇ ಸಪ್ತಮಿಯಲ್ಲೂ ಬರಬಲ್ಲುದು (ಸ್ಪೀಜರ್ 1886 ನೋಡಿ). ಇವನ್ನೆಲ್ಲ ವಿಭಕ್ತಿಪಲ್ಲಟವೆಂದು ಕರೆಯುವುದಕ್ಕೂ ಮೇಲೆ ವಿವರಿಸಿದಂತಹ ಕನ್ನಡದ ಬಳಕೆಗಳನ್ನು ವಿಭಕ್ತಿಪಲ್ಲಟವೆಂದು ಕರೆಯುವುದಕ್ಕೂ ನಡುವೆ ವ್ಯತ್ಯಾಸ ವಿದೆಯುಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.
9.4 ಕ್ರಿಯಾಪದದಲ್ಲಿ ಬದಲಾವಣೆ
ಕ್ರಿಯಾಪದದಲ್ಲಿ ಬದಲಾವಣೆಗಳನ್ನು ಮಾಡುವುದರ ಮೂಲಕ ಅದು ಸೂಚಿಸುವ ಘಟನೆಯಲ್ಲಿ ಬಳಕೆಯಾಗುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಜಾಸ್ತಿಯೂ ಮಾಡಬಹುದು ಇಲ್ಲವೇ ಕಡಿಮೆಯೂ ಮಾಡಬಹುದು.
ಉದಾಹರಣೆಗಾಗಿ, ಒಂದು ಕ್ರಿಯಾಪದಕ್ಕೆ ಪ್ರೇರೇಪಿಸು ಎಂಬ ಅರ್ಥವನ್ನು ಕೊಡುವ ಇಸು ಪ್ರತ್ಯಯವನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಯಲ್ಲಿ ಪ್ರೇರೇಪಿಸುವ ವ್ಯಕ್ತಿಯೂ ಸೇರುವನಾದ ಕಾರಣ ಅದರೊಂದಿಗೆ ಬರಬಲ್ಲ ವ್ಯಕ್ತಿ ಗಳ ಸಂಖ್ಯೆ ಜಾಸ್ತಿಯಾಗುತ್ತದೆ.
ಇದಕ್ಕೆ ಬದಲು, ಆತ್ಮಾರ್ಥಕವಾದ ಕೊಳ್ಳು ಎಂಬುದನ್ನು ಸೇರಿಸಿದಾಗ ಅದು ಸೂಚಿಸುವ ಘಟನೆಗೆ ಸಂಬಂಧಿಸಿದಂತಹ ಎರಡು ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ವಹಿಸುವಂತಾಗುವ ಕಾರಣ, ಅದರೊಂದಿಗೆ ಬರಬಲ್ಲ ವ್ಯಕ್ತಿಗಳ ಸಂಖ್ಯೆ ಕಡಿಮೆ ಯಾಗುತ್ತದೆ.
(20ಕ) ರಾಜು ಓಡಿದ (20ಖ) ಹರಿ ರಾಜುವನ್ನು ಓಡಿಸಿದ (21ಕ) ನಾನು ರಾಜುವಿಗೆ ಹರಿಯ ಕೈಯಲ್ಲಿ ಪಾಠ ಹೇಳಿಸಿದೆ (21ಖ) ನಾನು ಹರಿಯ ಕೈಯಲ್ಲಿ ಪಾಠ ಹೇಳಿಸಿಕೊಂಡೆ
(20ಕ) ವಾಕ್ಯದಲ್ಲಿ ಬಂದಿರುವ ಓಡು ಕ್ರಿಯಾಪದಕ್ಕೆ (20ಖ) ವಾಕ್ಯದಲ್ಲಿ ಪ್ರೇರಣಾರ್ಥಕವಾದ ಇಸು ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದು ಸೂಚಿಸುವ ಘಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಂಖ್ಯೆ ಜಾಸ್ತಿಯಾಗಿದೆ (ರಾಜು ಮತ್ತು ಹರಿ).
ಆದರೆ, (21ಕ) ವಾಕ್ಯದಲ್ಲಿ ಬಂದಿರುವ ಹೇಳಿಸು ಕ್ರಿಯಾಪದದೊಂದಿಗೆ (21ಖ) ವಾಕ್ಯದಲ್ಲಿ ಆತ್ಮಾರ್ಥಕವಾದ ಕೊಳ್ಳು ಎಂಬುದನ್ನು ಸೇರಿಸಲಾಗಿದೆ ಮತ್ತು ಇದರಿಂದಾಗಿ ಅದರಲ್ಲಿ ಬರುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ; (21ಕ)ದಲ್ಲಿದ್ದ ರಾಜು (21ಖ)ದಲ್ಲಿ ಬಂದಿಲ್ಲ. (20ಕ) ವಾಕ್ಯದಲ್ಲಿ ಇಬ್ಬರು ಮಾಡುವ ಕೆಲಸವನ್ನು (20ಖ)ದಲ್ಲಿ ಒಬ್ಬನೇ ನಡೆಸುತ್ತಿದ್ದಾನೆ ಎಂಬುದನ್ನು ಗಮನಿಸಬಹುದು.
ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳ ಸಂಖ್ಯೆ ಹೆಚ್ಚುಕಡಿಮೆ ಯಾದಾಗ, ಕೆಲವೊಮ್ಮೆ ಅವುಗಳಲ್ಲಿ ಮೊದಲಿಗೆ ಬಳಕೆಯಾಗಿದ್ದ ನಾಮಪದಗಳ ವಿಭಕ್ತಿಯಲ್ಲಿ ಬದಲಾವಣೆಯಾಗಲು ಸಾಧ್ಯವಿದೆ.
ಉದಾಹರಣೆಗಾಗಿ, (20ಕ)ದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿದ್ದ ರಾಜು ನಾಮಪದ (20ಖ)ದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿದೆ. ಹೊಸತಾಗಿ ಸೇರಿದ ಹರಿ ಪದವನ್ನು ಆ ವಾಕ್ಯದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬಳಸಬೇಕಾಗಿದೆಯೆಂಬುದೇ ಇದಕ್ಕೆ ಕಾರಣ.
(20ಕ)ದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ (‘ಪ್ರಥಮೆ’ಯಲ್ಲಿ) ಬಂದಿದ್ದ ರಾಜು ಪದ (20ಖ)ದಲ್ಲಿ ದ್ವಿತೀಯಾ ವಿಭಕ್ತಿಗೆ ಬದಲಾದುದನ್ನು ವಿಭಕ್ತಿಪಲ್ಲಟವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ವಿಭಕ್ತಿಗಳ ಬದಲಾವಣೆಗಳೂ ಅರ್ಥ ವ್ಯತ್ಯಾಸವನ್ನು ಸೂಚಿಸುತ್ತವೆ. (20ಖ) ಸೂಚಿಸುವ ಘಟನೆಯನ್ನು ರಾಜು ಸ್ವೇಚ್ಛೆಯಿಂದ ನಡೆಸುವುದಿಲ್ಲ.
ಇದಕ್ಕೆ ಬದಲು, ಸಂಸ್ಕೃತದಲ್ಲಿ ಕಾಣಿಸುವ ಇಂತಹ ಹಲವು ವಿಭಕ್ತಿಗಳ ಬದಲಾವಣೆಗಳಿಗೆ ಅರ್ಥವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ.
ಉದಾಹರಣೆಗಾಗಿ, ಕನ್ನಡದ ಪ್ರೇರಣಾರ್ಥಕ ವಾಕ್ಯಗಳಲ್ಲಿ ಪ್ರೇರಿತನಾಗುವ ವ್ಯಕ್ತಿಯನ್ನು ಗುರುತಿಸುವ ನಾಮಪದವನ್ನು ದ್ವಿತೀಯೆಯಲ್ಲೂ ಬಳಸಬಹುದು ಇಲ್ಲವೇ ಕೈಯಲ್ಲಿ ಪದದೊಂದಿಗೆ ಷಷ್ಠಿಯಲ್ಲೂ ಬಳಸಬಹುದು. ದ್ವಿತೀಯೆ ಯಲ್ಲಿ ಬಳಸಿದಾಗ ಪ್ರೇರಿತನಾದ ವ್ಯಕ್ತಿ ಸ್ವೇಚ್ಛೆಯಿಂದ ಕೆಲಸವನ್ನು ನಡೆಸಿಲ್ಲ ಎಂಬ ಅರ್ಥ ಬರುತ್ತದೆ ಆದರೆ ಕೈಯಲ್ಲಿ ಎಂಬುದರೊಂದಿಗೆ ಷಷ್ಠಿಯಲ್ಲಿ ಬಳಸಿದಾಗ ಆ ಅರ್ಥ ಬರುವುದಿಲ್ಲ.
(22ಕ) ನಾನು ರಾಜುವನ್ನು ಮೂರು ಮೈಲು ಓಡಿಸಿದೆ (22ಖ) ನಾನು ರಾಜುವಿನ ಕೈಯಲ್ಲಿ ಮೂರು ಮೈಲು ಓಡಿಸಿದೆ
(22ಕ) ವಾಕ್ಯಕ್ಕೆ ನಾನೂ ರಾಜುವಿನ ಹಿಂದೆಯೇ ಓಡಿ ಅವನು ಮೂರು ಮೈಲು ಓಡುವ ಹಾಗೆ ಮಾಡಿದೆ ಎಂಬ ಅರ್ಥ ಬರಲು ಸಾಧ್ಯವಿದೆ. ಆದರೆ, (22ಖ) ವಾಕ್ಯಕ್ಕೆ ಆ ಅರ್ಥವಿಲ್ಲ. ಹಾಗಾಗಿ, (22ಕ) ವಾಕ್ಯಕ್ಕಿಂತ (22ಖ) ವಾಕ್ಯದಲ್ಲಿ ರಾಜುವಿಗೆ ಹೆಚ್ಚಿನ ಸ್ವೇಚ್ಛಾಪ್ರವೃತ್ತಿಯಿದೆ ಎಂದು ಹೇಳಲು ಸಾಧ್ಯ
ಸಂಸ್ಕೃತದಲ್ಲಿ ಕರ್ತರಿ ಮತ್ತು ಕರ್ಮಣಿ ಎಂಬ ಎರಡು ಪ್ರಯೋಗಗಳಿದ್ದು ಇವುಗಳಲ್ಲಿ ನಾಮಪದಗಳ ವಿಭಕ್ತಿಪಲ್ಲಟವನ್ನು ಕಾಣಬಹುದು. ಆದರೆ ಈ ವಿಭಕ್ತಿ ಪಲ್ಲಟಕ್ಕೆ ಅರ್ಥವ್ಯತ್ಯಾಸವನ್ನು ಹೊಂದಿಸಿ ಹೇಳುವುದು ಕಷ್ಟಸಾಧ್ಯ.
(23ಕ) ಶಿಶುಪಾಲಃ ಕೃಷ್ಣಂ ನಿಂದತಿ
‘ಶಿಶುಪಾಲ ಕೃಷ್ಣನನ್ನು ನಿಂದಿಸುತ್ತಾನೆ’
(23ಖ) ಕೃಷ್ಣಃ ಶಿಶುಪಾಲೇನ ನಿಂದ್ಯತೇ
‘ಶಿಶುಪಾಲ ಕೃಷ್ಣನನ್ನು ನಿಂದಿಸುತ್ತಾನೆ’
ಮೇಲೆ ಕೊಟ್ಟಿರುವ (23ಕ) ಮತ್ತು (23ಖ) ವಾಕ್ಯಗಳ ನಡುವೆ ಅರ್ಥ ದಲ್ಲಿ ವ್ಯತ್ಯಾಸವಿಲ್ಲ ಎಂಬುದನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದ ಗಳು ಸ್ಪಷ್ಟಪಡಿಸುತ್ತವೆ. (23ಖ) ವಾಕ್ಯವನ್ನು ಕೆಲವರು ‘ಕೃಷ್ಣನು ಶಿಶು ಪಾಲನಿಂದ ನಿಂದಿಸಲ್ಪಡುತ್ತಾನೆ’ ಎಂಬುದಾಗಿ ಅನುವಾದಿಸುತ್ತಾರೇನೋ ನಿಜ. ಆದರೆ ಇಲ್ಲಿ ಅರ್ಥ ವ್ಯತ್ಯಾಸವಿಲ್ಲ.
ಸಂಸ್ಕೃತದ ಕೆಲವು ಕ್ರಿಯಾಪದಗಳಿಗೆ ಉಪಸಗ್ರಗಳನ್ನು ಸೇರಿಸಿದಾಗಲೂ ಅವುಗಳೊಂದಿಗೆ ಬರುವ ನಾಮಪದದ ವಿಭಕ್ತಿಯನ್ನು ಕೆಲವೊಮ್ಮೆ ಬದಲಿಸ ಬೇಕಾಗುತ್ತದೆ. ಇಂತಹ ವಿಭಕ್ತಿಪಲ್ಲಟಕ್ಕೂ ಸಂಸ್ಕೃತದಲ್ಲಿ ಎಲ್ಲೆಡೆಗಳಲ್ಲೂ ಅರ್ಥಭೇದವನ್ನು ಹೊಂದಿಸಲು ಸಾಧ್ಯವಾಗದು.
(24ಕ) ಹರಿಃ ಶಿಲಾಪಟ್ಟೇ ತಿಷ್ಠತಿ
‘ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’
(24ಖ) ಹರಿಃ ಶಿಲಾಪಟ್ಟಂ ಅಧಿತಿಷ್ಠತಿ
‘ಹರಿ ಪಾದೆಕಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ’
(24ಕ) ವಾಕ್ಯದಲ್ಲಿ ತಿಷ್ಠತಿ ‘ಕುಳಿತುಕೊಳ್ಳುತ್ತಾನೆ’ ಕ್ರಿಯಾರೂಪದೊಂದಿಗೆ ಕುಳಿತುಕೊಂಡ ಜಾಗವನ್ನು ಗುರುತಿಸುವ ನಾಮಪದ ಸಪ್ತಮಿಯಲ್ಲಿ ಬಂದಿದೆ. ಆದರೆ (24ಖ)ದಲ್ಲಿ ಅದೇ ಕ್ರಿಯಾಪದವನ್ನು ಅಧಿ ಉಪಸಗ್ರದೊಂದಿಗೆ
ಬಳಸಿರುವ ಕಾರಣ, ಕುಳಿತಿರುವ ಜಾಗವನ್ನು ಸೂಚಿಸುವ ಪದವನ್ನು ದ್ವಿತೀಯೆ ಯಲ್ಲಿ ಬಳಸಬೇಕಾಗಿದೆ. ಇಲ್ಲಿ ಕಾಣಿಸುವ ವಿಭಕ್ತಿಪಲ್ಲಟ ಅರ್ಥ ವ್ಯತ್ಯಾಸವನ್ನು ಸೂಚಿಸುವುದಿಲ್ಲ.
ಕ್ರಿಯಾಪದದೊಂದಿಗೆ ಉಪಸಗ್ರಗಳನ್ನು ಬಳಸಿದಾಗ ಸಂಸ್ಕೃತದಲ್ಲಿ ಇಂತಹ ಹಲವು ರೀತಿಯ ವಿಭಕ್ತಿಪಲ್ಲಟಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವನ್ನು ಉಪಸಗ್ರದ ಅರ್ಥದೊಂದಿಗೆ ಸಂಬಂಧಿಸಲು ಸಾಧ್ಯವಿದೆಯೇನೋ ನಿಜ; ಆದರೆ ಹೆಚ್ಚಿನೆಡೆಗಳಲ್ಲೂ ಇದು ಕಷ್ಟಸಾಧ್ಯ.
9.5 ತಿರುಳು
ಸಂಸ್ಕೃತದ ಹಾಗೆ ಕನ್ನಡದಲ್ಲೂ ವಾಕ್ಯದಲ್ಲಿ ಬರುವ ನಾಮಪದಗಳೊಂದಿಗೆ ಒಂದು ವಿಭಕ್ತಿಯ ಬದಲು ಇನ್ನೊಂದು ವಿಭಕ್ತಿಯನ್ನು ಬಳಸುವ ಸಾಧ್ಯತೆಯಿದೆ. ವೈಯಾಕರಣಿಗಳು ಇದನ್ನು ‘ವಿಭಕ್ತಿಪಲ್ಲಟ’ವೆಂದು ಕರೆಯುತ್ತಾರೆ.
ನಾಮಪದದ ವಿಭಕ್ತಿಯಲ್ಲಿ ಕಾಣಿಸುವ ಈ ಬದಲಾವಣೆ ಕ್ರಿಯಾಪದದಲ್ಲಿ ಯಾವುದಾದರೂ ಒಂದು ಬದಲಾವಣೆಯನ್ನು ಮಾಡಿದುದರಿಂದಾಗಿ ನಡೆದಿರ ಬಹುದು, ಇಲ್ಲವೇ ಕ್ರಿಯಾಪದದಲ್ಲಿ ಯಾವ ರೀತಿಯ ಬದಲಾವಣೆಯನ್ನು ಮಾಡಿರದಿದ್ದರೂ ಅದು ನಡೆದಿರಬಹುದು. ಈ ಎರಡು ರೀತಿಯ ವಿಭಕ್ತಿ ಪಲ್ಲಟಗಳೂ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ, ಈ ಎರಡು ಭಾಷೆಗಳ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಕಾಣಿಸುವ ವಿಭಕ್ತಿಪಲ್ಲಟಗಳಲ್ಲಿ ಹೆಚ್ಚಿನವಕ್ಕೂ ಅನುರೂಪವಾದ ಅರ್ಥವ್ಯತ್ಯಾಸವನ್ನು ಹೊಂದಿಸಿಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವನ್ನು ಒಂದು ವಿಭಕ್ತಿಯ ಅರ್ಥದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ ಎಂಬುದಾಗಿ ವರ್ಣಿಸುವುದು ಸರಿ.
ಆದರೆ, ಕನ್ನಡದಲ್ಲಿ ವಿಭಕ್ತಿಪಲ್ಲಟ ಕಾಣಿಸುವಲ್ಲೆಲ್ಲ ಅದಕ್ಕೆ ಅನುರೂಪ ವಾದ ಅರ್ಥವ್ಯತ್ಯಾಸವೂ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಕನ್ನಡದ ವಿಭಕ್ತಿಪಲ್ಲಟ ವನ್ನು ಒಂದು ವಿಭಕ್ತಿಯ ಅರ್ಥದಲ್ಲಿ ಇನ್ನೊಂದು ವಿಭಕ್ತಿಯ ಬಳಕೆ ಎಂಬುದಾಗಿ ವಿವರಿಸುವುದು ಸರಿಯಲ್ಲ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸವನ್ನು ಕನ್ನಡದ ವೈಯಾಕರಣಿಗಳು ಗಮನಿಸಿದಂತಿಲ್ಲ.