Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
6. ಲಿಂಗ ಮತ್ತು ವಚನಗಳು
6.1 ಮುನ್ನೋಟ
ಕನ್ನಡ ವಾಕ್ಯಗಳ ಒಳರಚನೆಯಲ್ಲಿ ಲಿಂಗ ಮತ್ತು ವಚನ ಎಂಬ ಈ ಎರಡು ವ್ಯಾಕರಣತತ್ವಗಳಿಗೆ ಮುಖ್ಯವಾದ ಸ್ಥಾನವಿದೆ. ವಾಕ್ಯದಲ್ಲಿ ಬಳಕೆಯಾಗುವ ನಾಮ ಪದಗಳನ್ನು ಮೂರು ಉಪವಗ್ರಗಳಲ್ಲಿ ವಿಂಗಡಿಸುವ ಕೆಲಸವನ್ನು ಅವುಗಳ ‘ಲಿಂಗ’ ನಡೆಸುತ್ತದೆ ಮತ್ತು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಎಣಿಕೆಯುಂತಹದು ಎಂಬುದನ್ನು ಅವುಗಳ ‘ವಚನ’ ತಿಳಿಸುತ್ತದೆ.
ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಮೂರು ಲಿಂಗಗಳಿವೆ. ಇವು ಗಂಡು, ಹೆಣ್ಣು ಮತ್ತು ಇತರ ಎಂಬುದಾಗಿ ನಾಮ ಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವರೂಪವನ್ನನುಸರಿಸಿ ನಾಮಪದಗಳನ್ನು ವಿಂಗಡಿಸುತ್ತವೆ.
ಇದಲ್ಲದೆ, ಏಕವಚನ ಮತ್ತು ಬಹುವಚನ ಎಂಬುದಾಗಿ ಕನ್ನಡದಲ್ಲಿ ಎರಡು ವಚನಗಳಿವೆ. ಇವು ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವು ಗಳು ಒಂದೇ ಅಥವಾ ಒಂದಕ್ಕಿಂತ ಜಾಸ್ತಿಯೇ ಎಂಬುದಾಗಿ ಅವುಗಳ ಎಣಿಕೆ ಯನ್ನು ಸೂಚಿಸುತ್ತವೆ. ನಾಮಪದವನ್ನು ಅದರ ಪ್ರಕೃತಿ ರೂಪದಲ್ಲಿ, ಎಂದರೆ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸಿದರೆ ಏಕವಚನ ಮತ್ತು ರು ಇಲ್ಲವೇ ಗಳು ಪ್ರತ್ಯಯದೊಂದಿಗೆ ಬಳಸಿದರೆ ಬಹುವಚನ.
ಲಿಂಗ ಮತ್ತು ವಚನಗಳೆಂಬ ಈ ಎರಡು ವ್ಯಾಕರಣತತ್ವಗಳೂ ನಾಮಪದ ಗಳ ಬಳಕೆಗೆ ಸಂಬಂಧಿಸಿದವುಗಳು ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ. ಕ್ರಿಯಾಪದಗಳ ಬಳಕೆಯಲ್ಲೂ ಇವನ್ನು ಕಾಣಲು ಸಾಧ್ಯವಿದೆಯಾದರೂ ಅಲ್ಲಿ ಅವುಗಳ ಸ್ವರೂಪ ಕ್ರಿಯಾಪದಗಳೊಂದಿಗೆ ಬರುವ ನಾಮಪದಗಳ ಸ್ವರೂಪ ವನ್ನವಲಂಬಿಸಿದೆಯಲ್ಲದೆ ಕ್ರಿಯಾಪದಗಳ ಸ್ವರೂಪವನ್ನವಲಂಬಿಸಿಲ್ಲ.
ಉದಾಹರಣೆಗಾಗಿ, ಬರುತ್ತಾರೆ ಎಂದಾಗ ‘ಹಲವು ಮಂದಿ ವ್ಯಕ್ತಿಗಳು ಬರುತ್ತಾರೆ’ ಎಂಬ ಅರ್ಥ ಬರುವುದಲ್ಲದೆ ‘ಬರುವ ಕ್ರಿಯೆಯನ್ನು ಒಬ್ಬ ವ್ಯಕ್ತಿ ಹಲವು ಬಾರಿ ಮಾಡುತ್ತಾನೆ (ಎಂದರೆ ಹಲವು ಬಾರಿ ಬಂದು ಹೋಗಿ ಮಾಡು ತ್ತಾನೆ)’ ಎಂಬ ಅರ್ಥ ಬರಲಾರದು. ಹಾಗಾಗಿ, ಬರುತ್ತಾರೆ ಕ್ರಿಯಾಪದದಲ್ಲಿ ಬಂದಿರುವ ಬಹುವಚನ ಆ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.
ಕ್ರಿಯಾಪದಗಳಲ್ಲಿ ಕಾಣಿಸುವ ಲಿಂಗ ವ್ಯತ್ಯಾಸವೂ ಇದೇ ರೀತಿಯಲ್ಲಿ ನಾಮ ಪದಕ್ಕೆ ಸಂಬಂಧಿಸಿದುದಲ್ಲದೆ ನೇರವಾಗಿ ಕ್ರಿಯಾಪದಕ್ಕೆ ಸಂಬಂಧಿಸಿದುದಲ್ಲ.
(1) (2) (3)
ನಿನ್ನೆ ಜಾನಕಿ ಪುತ್ತೂರಿಗೆ ಹೋಗಿದ್ದಳು ರಾಜು ಸಂತೆಯಲ್ಲಿ ಯಾರನ್ನು ಕಂಡಿದ್ದ? ನಾಯಿ ಏನು ಮಾಡುತ್ತದೆ?
(1-3)ನೇ ವಾಕ್ಯಗಳಲ್ಲಿ ಕ್ರಿಯಾಪದಗಳು ಮೂರು ಬೇರೆ ಬೇರೆ ಲಿಂಗ ಗಳಲ್ಲಿ ಬಂದಿವೆಯೆಂಬುದನ್ನು ಗಮನಿಸಬಹುದು. (1)ನೇ ವಾಕ್ಯದ ಹೋಗಿ ದ್ದಳು ಕ್ರಿಯಾಪದ ಸ್ತ್ರೀಲಿಂಗದಲ್ಲಿದೆ, (2)ನೇ ವಾಕ್ಯದ ಕಂಡಿದ್ದ ಕ್ರಿಯಾಪದ ಪುಲ್ಲಿಂಗದಲ್ಲಿದೆ ಮತ್ತು (3)ನೇ ವಾಕ್ಯದ ಮಾಡುತ್ತದೆ ಕ್ರಿಯಾಪದ ನಪುಂಸಕ ಲಿಂಗದಲ್ಲಿದೆ.
ಆದರೆ ಕ್ರಿಯಾಪದಗಳಲ್ಲಿ ಕಾಣಿಸುವ ಈ ಲಿಂಗಭೇದ ಅವುಗಳೊಂದಿಗೆ ಆ ವಾಕ್ಯಗಳಲ್ಲಿ ಬಂದಿರುವ ಜಾನಕಿ, ರಾಜು ಮತ್ತು ನಾಯಿ ಎಂಬವುಗಳಲ್ಲಿ ಕಾಣಿಸುವ ಲಿಂಗ ವ್ಯತ್ಯಾಸವನ್ನವಲಂಬಿಸಿದೆಯಲ್ಲದೆ ಕ್ರಿಯಾಪದವು ಸೂಚಿಸುವ ಘಟನೆಯ ಸ್ವರೂಪವನ್ನವಲಂಬಿಸಿಲ್ಲ.
ನಾಮಪದಗಳಿಗೆ ಸಂಬಂಧಿಸಿದ ಹಾಗೆ ಸಾಮಾನ್ಯವಾಗಿ ‘ಪುರುಷ’ ಎಂಬ ಇನ್ನೊಂದು ವ್ಯಾಕರಣ ತತ್ವವನ್ನೂ ಹೆಸರಿಸುವ ಕ್ರಮ ರೂಢಿಯಲ್ಲಿದೆ. ಆದರೆ, ನಿಜಕ್ಕೂ ಈ ವ್ಯಾಕರಣತತ್ವ ನಾಮಪದಗಳಿಗೆ ಸಂಬಂಧಿಸಿದುದಲ್ಲ. ವಾಕ್ಯದ ಆಡುಗ ಮತ್ತು ಕೇಳುಗರನ್ನು ಸೂಚಿಸುವ ‘ಪುರುಷಪದ’ ಎಂಬ ಬೇರೆಯೇ ಒಂದು ಪದವಗ್ರಕ್ಕೆ ಸೇರುವ ಪದಗಳಿಗೆ ಸಂಬಂಧಿಸಿದ ಹಾಗೆ ಈ ತತ್ವ ಬಳಕೆ ಯಲ್ಲಿದೆ (10.2.1 ನೋಡಿ).
6.2 ಲಿಂಗಭೇದಗಳು
6.2.1 ‘ಲಿಂಗ’ ಪದದ ಬಳಕೆ
ಕನ್ನಡ ವ್ಯಾಕರಣಗಳಲ್ಲಿ ‘ಲಿಂಗ’ ಪದವನ್ನು ಎರಡು ಅರ್ಥಗಳಲ್ಲಿ ಬಳಸಲಾಗಿದೆ. ‘ವಿಭಕ್ತಿಗಳನ್ನು ಪಡೆಯಬಲ್ಲ ನಾಮಪ್ರಕೃತಿಗಳು’ ಎಂಬುದು ಅದರ ಒಂದು ಅರ್ಥ; ‘ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳೆಂಬ ನಾಮಪ್ರಕೃತಿಗಳ ವಗ್ರಗಳು (ಇಲ್ಲವೇ ಪ್ರಭೇದಗಳು)’ ಎಂಬುದು ಅದರ ಇನ್ನೊಂದು ಅರ್ಥ.
ಹೀಗೆ ಒಂದೇ ಪಾರಿಭಾಷಿಕ ಪದವನ್ನು ಎರಡು ಭಿನ್ನವಾದ ಅರ್ಥಗಳಲ್ಲಿ ಬಳಸುವುದರಿಂದ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗಲು ಸಾಧ್ಯವಿದೆ. ಹಾಗಾಗಿ, ಮೊದಲನೆಯ ಅರ್ಥದಲ್ಲಿ ‘ನಾಮಪ್ರಕೃತಿ’ (ಇಲ್ಲವೇ ನಾಮಪದ) ಪದವನ್ನೇ
ಉಪಯೋಗಿಸಿ, ‘ಲಿಂಗ’ ಪದವನ್ನು ಎರಡನೆಯ ಅರ್ಥದಲ್ಲಿ ಮಾತ್ರ ಉಳಿಸಿ ಕೊಳ್ಳುವುದು ಒಳ್ಳೆಯದು. ಇದಲ್ಲದೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ನಾಮಪ್ರಕೃತಿಗಳನ್ನು ವಾಕ್ಯದಲ್ಲಿ ಬಳಸುವಾಗಲೆಲ್ಲ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿಯೇ ಬಳಸಬೇಕೆಂಬ ನಿಯಮ ವಿಲ್ಲ (8.4 ನೋಡಿ). ಅವಶ್ಯವಿಲ್ಲದಲ್ಲಿ ಅವಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸದೆ ಹಾಗೆಯೇ ಪ್ರಕೃತಿರೂಪದಲ್ಲೂ ಬಳಸಲು ಸಾಧ್ಯವಿದೆ.
ಹಾಗಾಗಿ, ಸಂಸ್ಕೃತದ ಹಾಗೆ ಕನ್ನಡದಲ್ಲಿ ‘ನಾಮಪದ’ ಮತ್ತು ‘ನಾಮ ಪ್ರಕೃತಿ’ (ಇಲ್ಲವೇ ‘ಪ್ರಾತಿಪದಿಕ’) ಎಂಬುದಾಗಿ ಎರಡು ಪಾರಿಭಾಷಿಕ ಪದಗಳನ್ನು ಬಳಸುವ ಅವಶ್ಯಕತೆಯೂ ಇಲ್ಲ, ಮತ್ತು ಈ ಕಾರಣಕ್ಕಾಗಿ ಮೇಲೆ ಕೊಟ್ಟಿರುವ ಮೊದಲನೆಯ ಅರ್ಥದಲ್ಲಿ ‘ಲಿಂಗ’ ಪದವನ್ನು ಬಳಸುವ ಅವಶ್ಯಕತೆಯೂ ಇಲ್ಲ.
6.2.2 ಕನ್ನಡದಲ್ಲಿ ಲಿಂಗವಿಭಜನೆ
‘ಲಿಂಗ’ ಎಂಬುದು (ಮೇಲೆ ಕೊಟ್ಟಿರುವ ಎರಡನೆಯ ಅರ್ಥದಲ್ಲಿ) ನಾಮಪದ ಗಳನ್ನು ವಿಭಜಿಸುವಲ್ಲಿ ಬಳಕೆಯಾಗುವ ಒಂದು ವ್ಯಾಕರಣತತ್ವ ಎಂದು ಹೇಳ ಬಹುದು. ಹೆಚ್ಚಿನ ಭಾಷೆಗಳಲ್ಲೂ ನಾಮಪದಗಳನ್ನು ಗಂಡು, ಹೆಣ್ಣು ಮತ್ತು ಇತರ ಎಂಬ ವ್ಯತ್ಯಾಸದ ಆಧಾರದ ಮೇಲೇನೇ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ವಿಭಜಿಸುವುದು ರೂಢಿ. ಕನ್ನಡದಲ್ಲೂ ಹೀಗೆಯೇ. ನಾಮಪದಗಳ ಲಿಂಗವನ್ನು ಕನ್ನಡದಲ್ಲಿ ಮುಖ್ಯವಾಗಿ ಅವುಗಳ ಅರ್ಥ ದಿಂದಲೇನೇ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಕೆಲವು ನಾಮಪದಗಳಲ್ಲಿ ಈ ವ್ಯತ್ಯಾಸವನ್ನು ಸೂಚಿಸುವ ಪ್ರತ್ಯಯಗಳು ಕಾಣಿಸಿಕೊಳ್ಳುವುವಾದರೂ ಹೆಚ್ಚಿನೆಡೆ ಗಳಲ್ಲೂ ನಾಮಪದಗಳ ಅರ್ಥವೇ ಈ ವಿಭಜನೆಯ ಆಧಾರವಾಗಿರುತ್ತದೆ.
ಉದಾಹರಣೆಗಾಗಿ, ಹುಡುಗ-ಹುಡುಗಿ, ಅಜ್ಜ-ಅಜ್ಜಿ, ಗೆಳೆಯ-ಗೆಳತಿ ಮೊದಲಾದ ಕೆಲವು ನಾಮಪದಗಳಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯಯಗಳು ಬಂದಿವೆ. ಆದರೆ ಅಣ್ಣ, ಅಕ್ಕ, ಮರ, ಹೆಂಗಸು, ಗಂಡಸು ಮೊದಲಾದ ಪದಗಳಲ್ಲಿ ಅಂತಹ ಪ್ರತ್ಯಯಗಳಿಲ್ಲ. ಅವುಗಳ ಲಿಂಗವನ್ನು ಅರ್ಥದಿಂದಲೇನೇ ತಿಳಿಯಬೇಕಾಗುತ್ತದೆ.
ಇದಲ್ಲದೆ, ಕನ್ನಡದಲ್ಲಿ ಗಂಡು ಮತ್ತು ಹೆಣ್ಣು ಎಂಬ ಲಿಂಗಭೇದ ಮನುಷ್ಯರನ್ನು ಗುರುತಿಸುವ ನಾಮಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿ ಕೊಳ್ಳುತ್ತದೆ. ಇತರ ಪ್ರಾಣಿಗಳಲ್ಲೂ ಗಂಡು-ಹೆಣ್ಣು ಎಂಬ ಭೇದವನ್ನು ಕಾಣಲು ಸಾಧ್ಯವಿದೆಯಾದರೂ ಅವನ್ನು ಗುರುತಿಸುವ ನಾಮಪದಗಳನ್ನೆಲ್ಲ ಕನ್ನಡದಲ್ಲಿ ಮನುಷ್ಯೇತರರನ್ನು ಸೂಚಿಸುವ ನಪುಂಸಕಲಿಂಗದಲ್ಲಿ ಸೇರಿಸುವುದೇ ರೂಢಿ.
(4)
ಮನುಷ್ಯ
ಮನುಷ್ಯೇತರ
ಹುಡುಗ ಬಂದ
ಹುಡುಗಿ ಬಂದಳು
ದನ ಬಂತು ಎತ್ತು ಬಂತು
ಕನ್ನಡದಲ್ಲಿ ಕಾಣಿಸುವ ಲಿಂಗಭೇದದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಪುಂ-ಸ್ತ್ರೀ ಲಿಂಗಭೇದ ಏಕವಚನದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ; ಈ ಕಾರಣಕ್ಕಾಗಿ, ಬಹುವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬ ಲಿಂಗಭೇದದ ಬದಲು ಮನುಷ್ಯ-ಮನುಷ್ಯೇತರ ಎಂಬ ಲಿಂಗಭೇದ ಕನ್ನಡದಲ್ಲಿದೆ.
(5ಕ) ಏಕವಚನ ಪುಲ್ಲಿಂಗ
ಸ್ತ್ರೀಲಿಂಗ
ನಪುಂಸಕಲಿಂಗ ಎತ್ತು ಬಂತು
ಹುಡುಗ ಬಂದ
ಹುಡುಗಿ ಬಂದಳು
(5ಖ) ಬಹುವಚನ
ಮನುಷ್ಯ
ಮನುಷ್ಯೇತರ
ಹುಡುಗರು ಬಂದರು ಹುಡುಗಿಯರು ಬಂದರು ಎತ್ತುಗಳು ಬಂದುವು
6.2.3 ಸಂಸ್ಕೃತದ ಲಿಂಗ ವಿಭಜನೆ
ಸಂಸ್ಕೃತದಲ್ಲಿ ಬಳಕೆಯಲ್ಲಿರುವ ನಾಮಪದಗಳ ಲಿಂಗ ವಿಭಜನೆ ಕನ್ನಡದ ಲಿಂಗ ವಿಭಜನೆಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ.
(1) ಸಂಸ್ಕೃತದಲ್ಲಿ ಈ ವಿಭಜನೆಗೆ ಅರ್ಥದ ಆಧಾರ ಬಹಳ ಕಡಿಮೆ. ಪದಗಳ ಕೊನೆಯ ವರ್ಣವನ್ನಾಧರಿಸಿ ಅವುಗಳ ಲಿಂಗ ಯಾವುದು ಎಂಬುದನ್ನು ನಿರ್ಧರಿಸಲು ಸ್ವಲ್ಪ ಮಟ್ಟಿಗೆ ಸಾಧ್ಯವಾಗುವುದಾದರೂ ಹೆಚ್ಚಿನೆಡೆಗಳಲ್ಲೂ ನಾಮ ಪದಗಳ ಲಿಂಗವನ್ನು ಅವುಗಳ ಬಳಕೆಯ ಆಧಾರದ ಮೇಲೇನೇ ತಿಳಿದುಕೊಳ್ಳುವ ಅವಶ್ಯಕತೆ ಸಂಸ್ಕೃತದಲ್ಲಿದೆ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ನಾಮಪದಗಳೂ ಪುಲ್ಲಿಂಗ, ಸ್ತ್ರೀಲಿಂಗ ಇಲ್ಲವೇ ನಪುಂಸಕಲಿಂಗದಲ್ಲಿ ಬರಬಲ್ಲುವು: ವರ್ಣಃ ‘ಬಣ್ಣ’ ಎಂಬುದು ಪುಲ್ಲಿಂಗ, ಮತಿ ‘ಬುದ್ಧಿ’ ಎಂಬುದು ಸ್ತ್ರೀಲಿಂಗ ಮತ್ತು ಮಧು ‘ಜೇನು’ ಎಂಬುದು ನಪುಂಸಕ ಲಿಂಗ; ‘ಹೆಂಡತಿ’ ಎಂಬ ಅರ್ಥವಿರುವ ದಾರಾ ಪದ ಪುಲ್ಲಿಂಗ, ಪತ್ನೀ ಪದ ಸ್ತ್ರೀಲಿಂಗ ಮತ್ತು ಕಲತ್ರಂ ಪದ ನಪುಂಸಕಲಿಂಗ.
ಹೆಚ್ಚಿನ ನಾಮಪದಗಳಿಗೂ ಸಂಸ್ಕೃತದಲ್ಲಿ ಒಂದು ನಿಶ್ಚಿತವಾದ ಲಿಂಗ ವಿರುತ್ತದೆ. ಆದರೆ ಕೆಲವನ್ನು ಸಂದಭ್ರಕ್ಕನುಸಾರವಾಗಿ ಎರಡು ಇಲ್ಲವೇ ಮೂರು ಲಿಂಗಗಳಲ್ಲೂ ಬಳಸಲು ಸಾಧ್ಯವಿದೆ.
ಹಾಗಾಗಿ, ಸಂಸ್ಕೃತದ ಅರ್ಥಕೋಶಗಳಲ್ಲಿ ನಾಮಪದಗಳ ಅರ್ಥವನ್ನು (ಮತ್ತು ಪದವಗ್ರವನ್ನು) ಕೊಡಬೇಕಾಗುತ್ತದೆ ಮಾತ್ರವಲ್ಲ, ಪ್ರತಿಯೊಂದು ನಾಮಪದದ ಎದುರಿಗೂ ಅದು ಒಂದೇ ಲಿಂಗದಲ್ಲಿ ಬರುವಂತಹದೋ ಇಲ್ಲವೇ ಎರಡು ಅಥವಾ ಮೂರು ಲಿಂಗಗಳಲ್ಲಿ ಬರುವಂತಹದೋ ಎಂಬುದನ್ನು ಮತ್ತು ಯಾವ ಲಿಂಗದಲ್ಲಿ (ಅಥವಾ ಲಿಂಗಗಳಲ್ಲಿ) ಬರುವಂತಹದು ಎಂಬುದನ್ನು ಸ್ಪಷ್ಟ ವಾಗಿ ಸೂಚಿಸಬೇಕಾಗುತ್ತದೆ.
(6ಕ) ಯಾವಾಗಲೂ ಒಂದೇ ಲಿಂಗದಲ್ಲಿ ಬರುವ ಪದಗಳು
ಪುಲ್ಲಿಂಗ: ಪಿತೃ, ತಿಲಕ, ಧೀ, ತಡಿ ‘ಏಟು’, ಚೋಲ ‘ರವಿಕೆ’, ತಕ್ರ, ತಿಮಿಂಗಿಲ, ತಿರಸ್ಕಾರ, ಆತ್ಮನ್, ನಿಧಿ, ಇತ್ಯಾದಿ. ಸ್ತ್ರೀಲಿಂಗ: ಮಾತೃ, ನದೀ, ನೌ, ಶ್ರೀ, ಲಿಪಿ, ನಿದ್ರಾ, ಮಹಾನವಮೀ, ಚಚ್ರಾ, ಕಾದಂಬರೀ, ಇತ್ಯಾದಿ. ನಪುಂಸಕಲಿಂಗ: ಹೃದಯ, ಚಿತ್ರ, ತಾಂಬೂಲ, ಮಧು, ಅಸ್ಥಿ, ಯಕೃತ್, ಬ್ರಹ್ಮನ್, ಇತ್ಯಾದಿ.
(6ಖ) ಎರಡು ಅಥವಾ ಮೂರು ಲಿಂಗಗಳಲ್ಲಿ ಬರಬಲ್ಲ ಪದಗಳು
ಪುಂ-ಸ್ತ್ರೀಲಿಂಗ: ತಿಥಿ, ವಜ್ರ, ಕೀಲ ‘ಕೀಲು’, ಕುಟ ‘ಮನೆ’, ಪುಂ-ನಪುಂಸಕಲಿಂಗ: ಕರ್ತೃ, ತಂಡುಲ, ಮೋದಕ, ಮೂಲ, ಕಷಾಯ, ಕಿರೀಟ, ಕುಟುಂಬ, ಅಭ್ರಕ, ಇತ್ಯಾದಿ. ಸ್ತ್ರೀ-ನಪುಂಸಕಲಿಂಗ: ಔಚಿತ್ಯ(ತೀ), ಶಾಲ(ಲಾ), ನೃಸೇನ(ನಾ), ಪುಂ-ಸ್ತ್ರೀ-ನಪುಂಸಕಲಿಂಗ: ಶುಚಿ, ಗುರು, ನಿತ್ಯ, ನಿದ್ರಿತ, ಪ್ರಕಾ ಶಕ, ಪರಕೀಯ, ಇತ್ಯಾದಿ.
ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಎಲ್ಲಾ ನಾಮಪದಗಳ ಲಿಂಗವನ್ನೂ ಅವುಗಳ ಅರ್ಥದ ಆಧಾರದ ಮೇಲೇನೇ ಊಹಿಸಿಕೊಳ್ಳಲು ಸಾಧ್ಯವಿದೆಯಾದ ಕಾರಣ, ಅವುಗಳ ಲಿಂಗವನ್ನು ಕನ್ನಡದ ಅರ್ಥಕೋಶದಲ್ಲಿ ಸೂಚಿಸುವ ಅವಶ್ಯಕತೆಯಿಲ್ಲ.
ಸಂಸ್ಕೃತದಲ್ಲಿ ನಾಮಪದಗಳ ಲಿಂಗವನ್ನು ತಿಳಿದುಕೊಳ್ಳುವುದು ಬಹಳ ಕಷ್ಟದ ಕೆಲಸವಾದ ಕಾರಣ ಅದರ ವೈಯಾಕರಣಿಗಳು ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗ ಎಂಬುದಾಗಿ ಮೂರು ಲಿಂಗಗಳಲ್ಲಿ ಮಾತ್ರವಲ್ಲದೆ ಪುಂಸ್ತ್ರೀ ಲಿಂಗ, ಪುನ್ನಪುಂಸಕಲಿಂಗ, ಸ್ತ್ರೀನಪುಂಸಕಲಿಂಗ ಇತ್ಯಾದಿ ಯಾಗಿ ಬೇರೆ ಕೆಲವು ವಗ್ರಗಳಲ್ಲೂ ವಿಂಗಡಿಸಲು ಪ್ರಯತ್ನಿಸಿದ್ದಾರೆ.
ಕನ್ನಡದ ವೈಯಾಕರಣಿಗಳು ಸಂಸ್ಕೃತದ ಈ ಕ್ಲಿಷ್ಟವಾದ ಲಿಂಗವಿಭಜನೆ ಯನ್ನು ಕನ್ನಡಕ್ಕೂ ಅಳವಡಿಸಹೋಗಿ ಅನವಶ್ಯಕವಾಗಿ ಅದು ಇರುವುದಕ್ಕಿಂತ ಹೆಚ್ಚು ಕ್ಲಿಷ್ಟವಾಗಿ ಕಾಣುವ ಹಾಗೆ ಮಾಡಿದ್ದಾರೆ ಮತ್ತು ಗೊಂದಲವನ್ನೂ ತಂದು ಹಾಕಿದ್ದಾರೆ.
(2) ಸಂಸ್ಕೃತದಲ್ಲಿ ಪುಂ-ಸ್ತ್ರೀ ಲಿಂಗಭೇದ ಕನ್ನಡದ ಹಾಗೆ ಏಕವಚನದಲ್ಲಿ ಮಾತ್ರವಲ್ಲದೆ (6.3.2 ನೋಡಿ), ದ್ವಿವಚನ ಮತ್ತು ಬಹುವಚನಗಳಲ್ಲೂ ಕಾಣಿಸಿಕೊಳ್ಳುತ್ತದೆ.
(7) ‘ಅವನು’
‘ಅವಳು’
ಏಕವಚನ
ದ್ವಿವಚನ
ಬಹುವಚನ
(3) ಕನ್ನಡದಲ್ಲಿ ನಾಮಪದಗಳ ಲಿಂಗಭೇದವನ್ನು ಕ್ರಿಯಾರೂಪಗಳಲ್ಲೂ ಸೂಚಿಸುವ ಕ್ರಮವಿದೆ; ಆದರೆ ಸಂಸ್ಕೃತದ ಕ್ರಿಯಾರೂಪಗಳು ಪುರುಷ ಮತ್ತು ವಚನ ಭೇದಗಳನ್ನು ಮಾತ್ರ ಸೂಚಿಸುತ್ತವೆಯಲ್ಲದೆ ಲಿಂಗಭೇದವನ್ನು ಸೂಚಿಸು ವುದಿಲ್ಲ. ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸ.
(8)
ಸಂಸ್ಕೃತದ ಕ್ರಿಯಾರೂಪಗಳು
ತತ್ರ ರಾಮಃ ಅಸ್ತಿ
ತತ್ರ ಸೀತಾ ಅಸ್ತಿ
ತತ್ರ ಗೃಹಂ ಅಸ್ತಿ
ಕನ್ನಡದ ಕ್ರಿಯಾರೂಪಗಳು ಅಲ್ಲಿ ರಾಮ ಇದ್ದಾನೆ ಅಲ್ಲಿ ಸೀತೆ ಇದ್ದಾಳೆ ಅಲ್ಲಿ ಮನೆ ಇದೆ
(8)ರಲ್ಲಿ ಕನ್ನಡದ ಇರು ಕ್ರಿಯಾಪದಕ್ಕೆ ಅದರೊಂದಿಗೆ ಬರುವ ನಾಮ ಪದದ ಲಿಂಗವನ್ನನುಸರಿಸಿ ಇದ್ದಾನೆ, ಇದ್ದಾಳೆ ಮತ್ತು ಇದೆ ಎಂಬ ಮೂರು
ರೂಪಗಳಿವೆ; ಆದರೆ ಸಂಸ್ಕೃತದ ಅಸ್ ಕ್ರಿಯಾಪದಕ್ಕೆ ಎಲ್ಲಾ ಸಂದಭ್ರಗಳಲ್ಲೂ ಅಸ್ತಿ ಎಂಬ ಒಂದೇ ರೂಪವಿದೆ. ಕನ್ನಡದ ಕ್ರಿಯಾರೂಪಗಳಲ್ಲಿ ಈ ಲಿಂಗಭೇದ ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರ ವ್ಯಕ್ತಿಗಳನ್ನು (ಇಲ್ಲವೇ ವಸ್ತುಗಳನ್ನು) ಸೂಚಿಸುವಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆಡುಗ ಮತ್ತು ಕೇಳುಗರನ್ನು ಸೂಚಿಸುವ ಸಂದಭ್ರಗಳಲ್ಲಿ ಅದು ಸಂಸ್ಕೃತದ ಹಾಗೆ ವಚನ ಭೇದವನ್ನು ಮಾತ್ರ ಸೂಚಿಸುತ್ತದೆ.
(9ಕ) ಅಹಂ ಗಚ್ಛಾಮಿ
‘ನಾನು ಹೋಗುತ್ತೇನೆ’
(9ಖ) ತ್ವಂ ಗಚ್ಛಸಿ
‘ನೀನು ಹೋಗುತ್ತೀ’
(9ಕ) ವಾಕ್ಯವನ್ನಾಡಿದ ವ್ಯಕ್ತಿ ಗಂಡಸಾಗಿರಬಹುದು ಇಲ್ಲವೇ ಹೆಂಗಸಾಗಿರ ಬಹುದು. ಈ ವ್ಯತ್ಯಾಸವನ್ನು ಸಂಸ್ಕೃತದ ಗಚ್ಛಾಮಿ ಕ್ರಿಯಾರೂಪ ಇಲ್ಲವೇ ಕನ್ನಡದ ಹೋಗುತ್ತೇನೆ ಕ್ರಿಯಾರೂಪ ಸೂಚಿಸಲಾರದು. (9ಖ) ವಾಕ್ಯದಲ್ಲೂ ಹೀಗೆಯೇ.
6.2.4 ಭಾಷೆಗಳ ನಡುವಿನ ವ್ಯತ್ಯಾಸಗಳು
ಮೇಲೆ ಸೂಚಿಸಿದ ಹಾಗೆ, ಹೆಚ್ಚಿನ ಭಾಷೆಗಳಲ್ಲೂ ನಾಮಪದಗಳ ವಿಭಜನೆ ನಿಜ ಜೀವನದ ಲಿಂಗಭೇದವನ್ನು ಅವಲಂಬಿಸಿರುತ್ತದೆಯಾದ ಕಾರಣ, ಅದನ್ನು ‘ಲಿಂಗ ವಿಭಜನೆ’ಯುಂಬುದಾಗಿ ಕರೆಯುವುದರಲ್ಲಿ ತಪ್ಪಿಲ್ಲ. ಆದರೆ, ನಿಜಕ್ಕೂ ಇದು ಮುಖ್ಯವಾಗಿ ನಾಮಪದಗಳನ್ನು ವಿಭಜಿಸುವುದಕ್ಕಾಗಿ ಬಳಕೆಯಾಗುವ ಒಂದು ವ್ಯಾಕರಣ ವಿಧಾನ ಮಾತ್ರ ಎಂಬುದನ್ನು ಮರೆಯಬಾರದು. ಯಾಕೆಂದರೆ, ಕೆಲವು ಭಾಷೆಗಳಲ್ಲಿ ಈ ವಿಭಜನೆ ನಿಜ ಜೀವನದ ಲಿಂಗಭೇದಕ್ಕಿಂತ ತೀರ ಭಿನ್ನವಾ ಗಿರಲೂ ಸಾಧ್ಯವಿದೆ.
ಉದಾಹರಣೆಗಾಗಿ, ಹಿಂದಿ ಭಾಷೆಯಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿಂಗ ಎಂಬ ಎರಡು ವಗ್ರಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅದರಲ್ಲಿ ನಿಜ್ರೀವ ವಸ್ತುಗಳನ್ನು ಸೂಚಿಸುವ ಪದಗಳನ್ನೂ ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳಾಗಿ ವಿಂಗಡಿಸಲಾಗಿದ್ದು ಅದಕ್ಕೆ ಅರ್ಥದ ಆಧಾರ ಬಹಳ ಕಡಿಮೆ. ಈ ರೀತಿ ಎರಡು ಲಿಂಗಗಳನ್ನು ಮಾತ್ರ ಬಳಸುವ ಬೇರೆಯೂ ಕೆಲವು ಭಾಷೆಗಳು ಭಾರತದಲ್ಲಿವೆ.
ಬೇರೆ ಕೆಲವು ಭಾಷೆಗಳು (ಉದಾಹರಣೆಗಾಗಿ, ಪಾಜ್ರಿ ಎಂಬ ದ್ರಾವಿಡ ಭಾಷೆ) ಗಂಡು ಮತ್ತು ಇತರ ಎಂಬ ಲಿಂಗವಿಭಜನೆಯನ್ನು ಬಳಸುತ್ತದೆ ಮತ್ತು
ಆಸ್ಟ್ರೇಲಿಯಾದ ದಿಯಾರಿ ಭಾಷೆ ಹೆಣ್ಣು ಮತ್ತು ಇತರ ಎಂಬ ಲಿಂಗ ವಿಭಜನೆ ಯನ್ನು ಬಳಸುತ್ತದೆ. ಗಂಡು, ಹೆಣ್ಣು ಮತ್ತು ಇತರ ಎಂಬ ಈ ವ್ಯತ್ಯಾಸದ ಬದಲು ಬೇರೆ ವ್ಯತ್ಯಾಸಗಳನ್ನು ನಾಮಪದಗಳ ವಿಭಜನೆಗೆ ಆಧಾರವಾಗಿ ಬಳಸುವ ಭಾಷೆಗಳೂ ಹಲವಿವೆ. ಉದಾಹರಣೆಗಾಗಿ, ಆಸ್ಟ್ರೇಲಿಯಾದ ದ್ಯಿಬ್ರಾಲ್ ಭಾಷೆಯಲ್ಲಿ (1) ಹೆಂಗಸರು, (2) ಗಂಡಸರು ಮತ್ತು ಇತರ ಪ್ರಾಣಿಗಳು, (3) ಮಾಂಸವಜ್ರಿತ ಆಹಾರ ಮತ್ತು (4) ಇತರ ಎಂಬುದಾಗಿ ನಾಲ್ಕು ವಿಧದ ಲಿಂಗಗಳಿವೆ.
ಬೇರೆ ಕೆಲವು ಭಾಷೆಗಳಲ್ಲಿ ಚಿಕ್ಕ ವಸ್ತು, ಪ್ರಾಣಿ ಮೊದಲಾದವುಗಳಿಗಾಗಿ ಬೇರೆಯೇ ಒಂದು ಲಿಂಗವಿರುತ್ತದೆ. ಆಫ್ರಿಕಾದ ಕೆಲವು ಭಾಷೆಗಳಲ್ಲಿ ನಾಮಪದ ಗಳನ್ನು ಮನುಷ್ಯರು, ಚಿಕ್ಕವು, ದೊಡ್ಡವು, ಉದ್ದದವು, ಕ್ರಿಯೆ, ಭಾವನೆ ಮೊದ ಲಾದ 20-25 ಲಿಂಗಗಳಲ್ಲಿ ವಿಭಜಿಸುವ ಕ್ರಮವಿದೆ. ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ನಾಮಪದಗಳನ್ನು ವಿಭಜಿಸುವ ಕ್ರಮ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಕನ್ನಡದ ಲಿಂಗವಿಭಜನೆಯನ್ನು ಕನ್ನಡದ್ದೇ ಆದ ದೃಷ್ಟಿಕೋನದ ಮೂಲಕ ಪರಿಶೀಲಿಸಿದಲ್ಲಿ ಮಾತ್ರ ಅದರ ನಿಜವಾದ ಸ್ವರೂಪ ನಮಗೆ ಗೊತ್ತಾಗುತ್ತದೆ.
6.2.5 ಎಣಿಕೆಯ ಪದಗಳಲ್ಲಿ ಲಿಂಗಭೇದ
ಕನ್ನಡದ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬಳಕೆಯಾಗುತ್ತವೆ ಯುಂಬುದನ್ನು ನಾವು ಮುಂದೆ (10.3)ರಲ್ಲಿ ನೋಡಲಿರುವೆವು.
ನಾಮಪದಗಳ ಜಾಗದಲ್ಲಿ ಬಳಕೆಯಾಗುವ ಸಂದಭ್ರದಲ್ಲಿ ಅವು ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಬಲ್ಲುವು. ಈ ವಿಷಯದಲ್ಲೂ ಅವು ನಾಮಪದಗಳನ್ನು ಹೋಲುತ್ತವೆ. ಒಬ್ಬನು, ಒಬ್ಬಳು ಮತ್ತು ಒಂದು ಎಂಬ ಪದಗಳು ಏಕವಚನದ ಮೂರು ರೂಪಗಳಾಗಿವೆ. ಕನ್ನಡದಲ್ಲಿ ಒಬ್ಬರು ಎಂಬ ಬಹುವಚನ ರೂಪವಿದೆಯಾದರೂ ಅದಕ್ಕೆ ಸಾಮಾನ್ಯವಾಗಿ ಗೌರವಾರ್ಥದಲ್ಲಿ ಏಕವಚನದ ಅರ್ಥವೇ ಇದೆ. ಎರಡರಿಂದ ಐದರ ವರೆಗಿನ ಪದಗಳಿಗೆ ಬಹುವಚನದ ಎರಡೆರಡು (ಮನುಷ್ಯ-ಮನುಷ್ಯೇತರ) ಲಿಂಗರೂಪಗಳಿವೆ (ಇಬ್ಬರು-ಎರಡು, ಮೂವರು- ಮೂರು, ನಾಲ್ವರು-ನಾಲ್ಕು, ಐವರು-ಐದು). ಉಳಿದ ಪದಗಳಿಗೂ ಹಳೆಗನ್ನಡ ದಲ್ಲಿ ಲಿಂಗರೂಪಗಳಿದ್ದುವು. ಆದರೆ ಹೊಸಗನ್ನಡದಲ್ಲಿ ಅವುಗಳ ಬಳಕೆಯಿಲ್ಲ.
6.3 ವಚನಭೇದಗಳು
ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸುವುದಕ್ಕಾಗಿ ವಚನ ಎಂಬ ವ್ಯಾಕರಣ ತತ್ವ ಬಳಕೆಯಲ್ಲಿದೆ. ಕನ್ನಡದಲ್ಲಿ ನಾಮಪದಗಳನ್ನು ಅವಕ್ಕೆ ವಚನ ಪ್ರತ್ಯಯವನ್ನು ಸೇರಿಸದೆ ಹಾಗೆಯೇ ಬಳಸಿದಲ್ಲಿ ಅವು ಗುರುತಿಸುವ ಸಂಖ್ಯೆ ಒಂದು (ಇಲ್ಲವೇ ಅನಿರ್ದಿಷ್ಟ) ಎಂಬ ಅರ್ಥ ಬರು ತ್ತದೆ. ಅವುಗಳೊಂದಿಗೆ ಬಹುವಚನ ಪ್ರತ್ಯಯವನ್ನು ಬಳಸಿದಲ್ಲಿ ಅವುಗಳ ಸಂಖ್ಯೆ ಒಂದಕ್ಕಿಂತ ಜಾಸ್ತಿ ಎಂಬ ಅರ್ಥ ಬರುತ್ತದೆ.
ವಚನಗಳ ಮಟ್ಟಿಗೆ ಸಂಸ್ಕೃತ ಕನ್ನಡಕ್ಕಿಂತ ಕೆಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ವ್ಯತ್ಯಾಸಗಳನ್ನು ಸರಿಯಾಗಿ ತಿಳಿದುಕೊಳ್ಳದೆ ಕನ್ನಡದ ವೈಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಹೋಗಿ ಗೊಂದಲಕ್ಕೆಡೆಮಾಡಿದ್ದಾರೆ.
6.3.1 ವಚನಗಳ ಸಂಖ್ಯೆ
ಸಂಸ್ಕೃತದಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನ ಎಂಬುದಾಗಿ ಮೂರು ವಚನಗಳಿವೆ. ಆದರೆ ಕನ್ನಡದಲ್ಲಿ ಏಕವಚನ ಮತ್ತು ಬಹುವಚನಗಳೆಂಬ ಎರಡು ವಚನಗಳು ಮಾತ್ರ ಇವೆ. ಸಂಸ್ಕೃತದ ವಚನರೂಪಗಳನ್ನು ಕನ್ನಡದ ವಚನ ರೂಪಗಳೊಂದಿಗೆ ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟವಾಗುತ್ತದೆ.
(10) ಏಕಃ ಪುಸ್ತಕಃ ದೌ್ವ ಪುಸ್ತಕೌ ತ್ರಯಃ ಪುಸ್ತಕಾಃ
ಒಂದು ಪುಸ್ತಕ ಎರಡು ಪುಸ್ತಕಗಳು ಮೂರು ಪುಸ್ತಕಗಳು
ಪುಸ್ತಕ ಪದಕ್ಕೆ ಸಂಸ್ಕೃತದಲ್ಲಿ ಮೂರು ವಚನ ರೂಪಗಳಿವೆ; ಆದರೆ ಕನ್ನಡದಲ್ಲಿ ಈ ಪದಕ್ಕೆ ಎರಡು ವಚನ ರೂಪಗಳು ಮಾತ್ರ ಇವೆ ಎಂಬುದನ್ನು ಮೇಲಿನ ಉದಾಹರಣೆಯಿಂದ ತಿಳಿಯಬಹುದು. ಪುಸ್ತಕಗಳ ಸಂಖ್ಯೆ ಎರಡಾಗಿರಲಿ ಇಲ್ಲವೇ ಅದಕ್ಕಿಂತ ಜಾಸ್ತಿ ಇರಲಿ, ಕನ್ನಡದಲ್ಲಿ ಬಹುವಚನವನ್ನು ಸೂಚಿಸುವ ಗಳು ಪ್ರತ್ಯಯವೇ ಬಳಕೆಯಾಗುತ್ತದೆ.
ಕನ್ನಡದ ವೈಯಾಕರಣಿಗಳಲ್ಲಿ ಕೆಲವರು ಸಂಸ್ಕೃತದ ವ್ಯಾಕರಣವನ್ನು ಕನ್ನಡಕ್ಕೆ ಅಳವಡಿಸುವ ಭರದಲ್ಲಿ, ಕನ್ನಡದಲ್ಲೂ ಕಾಲ್ಗಳ್, ಕೈಗಳ್ ಮೊದಲಾದ ಪದಗಳಲ್ಲಿ ದ್ವಿವಚನವನ್ನು ಕಂಡುಕೊಂಡಿದ್ದಾರೆ. ಈ ಪದಗಳು ಎರಡು ವಸ್ತುಗಳನ್ನು ಸೂಚಿಸುವುದು ನಿಜವಾದರೂ ಇವುಗಳೊಂದಿಗೆ ಬಹುವಚನದ ಗಳು ಪ್ರತ್ಯಯವೇ ಬಂದಿರುವ ಕಾರಣ ಅವುಗಳಲ್ಲಿ ದ್ವಿವಚನವಿದೆಯುನ್ನುವುದಕ್ಕೆ ಕನ್ನಡದಲ್ಲಿ ಯಾವ ಆಧಾರವೂ ಇಲ್ಲ.
ಇದಲ್ಲದೆ, ಕನ್ನಡದಲ್ಲಿ ಎರಡೇ ವಚನಗಳಿವೆಯುಂಬುದು ಒಂದು ಕೊರತೆ ಯಲ್ಲ ಮತ್ತು ಸಂಸ್ಕೃತದಲ್ಲಿ ಮೂರು ವಚನಗಳಿವೆಯುಂಬುದು ಒಂದು ಹೆಗ್ಗಳಿಕೆಯೂ ಅಲ್ಲ. ವ್ಯಕ್ತಿ, ವಸ್ತು ಮೊದಲಾದವುಗಳ ಸಂಖ್ಯೆಯನ್ನು ಸೂಚಿಸು ವಲ್ಲಿ ಭಾಷೆಗಳು ಒಂದಕ್ಕಿಂತ ಒಂದು ಭಿನ್ನವಾಗಿರಲು ಸಾಧ್ಯ ಎಂಬುದನ್ನಷ್ಟೇ ಇದು ಸೂಚಿಸುತ್ತದೆ.
ಯಾಕೆಂದರೆ, ಮೂರಕ್ಕಿಂತ ಜಾಸ್ತಿ ವಚನಭೇದವನ್ನು ತೋರಿಸುವ ಭಾಷೆ ಗಳೂ ಕೆಲವಿವೆ. ಉದಾಹರಣೆಗಾಗಿ ಫಿಜಿ ಭಾಷೆಯಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನಗಳು ಮಾತ್ರವಲ್ಲದೆ ತ್ರಿವಚನ ಎಂಬುದೂ ಇದೆ. ಇದಲ್ಲದೆ, ಕೆಲವು ಎಂಬುದನ್ನು ಸೂಚಿಸುವ ಐದನೆಯದೊಂದು ವಚನವೂ ಈ ಭಾಷೆ ಯಲ್ಲಿದೆ. ಸುರ್ಸುರುಂಗ ಎಂಬ ಇನ್ನೊಂದು ಭಾಷೆಯಲ್ಲಿ ತ್ರಿವಚನ ಮಾತ್ರವಲ್ಲದೆ ಚತುವ್ರಚನವೂ ಇದೆ. ನಾಮಪದಗಳಲ್ಲಿ ಯಾವ ವಚನಭೇದವನ್ನೂ ತೋರಿಸ ದಿರುವ ಖ್ಮೇರ್ ನಂತಹ ಭಾಷೆಗಳೂ ಕೆಲವಿವೆ.
6.3.2 ವಚನ ಮತ್ತು ವಿಭಕ್ತಿ
ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿ ಇವೆರಡನ್ನೂ ಒಂದೇ ಪ್ರತ್ಯಯ ಸೂಚಿಸು ತ್ತದೆ. ಆದರೆ ಕನ್ನಡದಲ್ಲಿ ಇವೆರಡನ್ನು ಸೂಚಿಸಲು ಬೇರೆ ಬೇರೆ ಪ್ರತ್ಯಯಗಳಿವೆ. ಉದಾಹರಣೆಗಾಗಿ, ಸಂಸ್ಕೃತದ ನದೀಭಿಃ ‘ನದಿಗಳಿಂದ’ ಎಂಬ ಪದರೂಪ ದಲ್ಲಿ ಬಂದಿರುವ ಭಿಃ ಪ್ರತ್ಯಯ ಬಹುವಚನ ಮತ್ತು ತೃತೀಯಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ. ಇದೇ ರೀತಿಯಲ್ಲಿ, ನದೀಷು ‘ನದಿಗಳಲ್ಲಿ’ ಎಂಬ ಪದರೂಪದಲ್ಲಿ ಬಂದಿರುವ ಷು ಪ್ರತ್ಯಯ ಬಹುವಚನ ಮತ್ತು ಸಪ್ತಮೀ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸುತ್ತದೆ. ಆದರೆ ಮೇಲೆ ಈ ಪದಗಳ ಎದುರು ಕೊಟ್ಟಿರುವ ಕನ್ನಡದ ನದಿಗಳಿಂದ ಮತ್ತು ನದಿಗಳಲ್ಲಿ ಎಂಬ ಪದರೂಪಗಳಲ್ಲಿ ಬಹುವಚನವನ್ನು ಸೂಚಿಸಲು ಗಳ್ ಪ್ರತ್ಯಯ ಬಂದಿದೆ ಮತ್ತು ವಿಭಕ್ತಿಗಳನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂದ (ತೃತೀಯಾ) ಮತ್ತು ಅಲ್ಲಿ (ಸಪ್ತಮೀ) ಪ್ರತ್ಯಯಗಳು ಬಂದಿವೆ. ಸಂಸ್ಕೃತದಲ್ಲಿ ಈ ರೀತಿ ವಿಭಕ್ತಿ ಮತ್ತು ವಚನಗಳನ್ನು ಒಂದೇ ಪ್ರತ್ಯಯ ಸೂಚಿಸುವ ಕಾರಣ, ಅದರಲ್ಲಿ ವಿಭಕ್ತಿಯನ್ನು ಸೂಚಿಸುವ ಅವಶ್ಯಕತೆಯಿಲ್ಲ ದಿರುವಲ್ಲೂ ವಚನವನ್ನು ಸೂಚಿಸುವುದಕ್ಕಾಗಿ ‘ವಿಭಕ್ತಿ’ ಪ್ರತ್ಯಯಗಳನ್ನು ಬಳಸ ಬೇಕಾಗುತ್ತದೆ; ಕನ್ನಡದಲ್ಲಿ ಈ ಅವಶ್ಯಕತೆಯಿಲ್ಲ.
ಈ ಕಾರಣಕ್ಕಾಗಿ, ಸಂಸ್ಕೃತಕ್ಕೆ ‘ಪ್ರಥಮಾ ವಿಭಕ್ತಿ’ ಎಂಬುದು ಬೇಕಾಗುತ್ತದೆ; ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ ಎಂಬುದನ್ನು ಮುಂದೆ (8.5.1)ರಲ್ಲಿ ನೋಡ ಲಿರುವೆವು.
6.3.3 ಏಕವಚನದ ಸೂಚನೆ
ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಒಂದೇ ಪ್ರತ್ಯಯ ಸೂಚಿಸುವ ಕಾರಣ, ಅದರಲ್ಲಿ ದ್ವಿವಚನ ಮತ್ತು ಬಹುವಚನಗಳನ್ನು ಮಾತ್ರವಲ್ಲದೆ ಏಕ ವಚನವನ್ನು ಸೂಚಿಸುವುದಕ್ಕಾಗಿಯೂ ಪ್ರತ್ಯಯಗಳಿವೆಯುಂದು ಹೇಳಲು ಸಾಧ್ಯ ವಾಗುತ್ತದೆ. ಉದಾಹರಣೆಗಾಗಿ, ಪುಸ್ತಕಃ ಪದರೂಪದಲ್ಲಿ ಬರುವ ಅಸ್ (ಅಃ) ಪ್ರತ್ಯಯ ಏಕವಚನ ಮತ್ತು ಪ್ರಥಮಾ ವಿಭಕ್ತಿ ಇವೆರಡನ್ನೂ ಒಟ್ಟಾಗಿ ಸೂಚಿಸು ತ್ತದೆಯುಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಬೇರೆ ಬೇರೆ ಪ್ರತ್ಯಯಗಳು ಸೂಚಿಸುವ ಕಾರಣ, ಏಕವಚನವನ್ನು ಸೂಚಿಸುವುದಕ್ಕಾಗಿ ಪ್ರತ್ಯಯವೊಂದನ್ನು ಬಳಸುವ ಅವಶ್ಯಕತೆಯಿಲ್ಲ. ಬಹುವಚನವನ್ನು ಸೂಚಿಸಬೇಕಾದಾಗ ಮಾತ್ರ ವಚನ ಪ್ರತ್ಯಯವನ್ನು ಬಳಸಿದರೆ ಸಾಕು. ಕನ್ನಡದಲ್ಲಿ ಲಿಂಗವನ್ನು ಸೂಚಿಸುವ ಪ್ರತ್ಯಯ ಕೆಲವು ಸಂದಭ್ರಗಳಲ್ಲಿ ವಚನವನ್ನೂ ಸೂಚಿಸಬಲ್ಲುದು. ಉದಾಹರಣೆಗಾಗಿ, ಅವನು ಸವ್ರನಾಮದಲ್ಲಿ ನು ಎಂಬುದು ಪುಲ್ಲಿಂಗವನ್ನು ಮಾತ್ರವಲ್ಲದೆ ಏಕವಚನವನ್ನೂ ಸೂಚಿಸುತ್ತಿದೆ; ಇದಕ್ಕೆ ಬದಲು, ಅವರು ಸವ್ರನಾಮದಲ್ಲಿ ರು ಎಂಬುದು ಪುಂ-ಸ್ತ್ರೀ (ಮನುಷ್ಯ) ಲಿಂಗದೊಂದಿಗೆ ಬಹುವಚನವನ್ನೂ ಸೂಚಿಸುತ್ತಿದೆ.
ಇಂತಹ ಸಂದಭ್ರಗಳಲ್ಲಿ ಮಾತ್ರ ಕನ್ನಡದಲ್ಲಿ ಏಕವಚನವನ್ನು ಸೂಚಿಸುವ ಪ್ರತ್ಯಯವಿದೆಯುಂದು ಹೇಳಲು ಸಾಧ್ಯವಿದೆ.
6.3.4 ವಚನವನ್ನು ಸೂಚಿಸದಿರುವುದು
ವಸ್ತುಗಳನ್ನು ಸೂಚಿಸುವ ಪದಗಳನ್ನು ಅವು ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಗುರುತಿಸುತ್ತಿದ್ದರೂ ಬಹುವಚನ ಪ್ರತ್ಯಯವಿಲ್ಲದೇನೇ ಬಳಸುವ ಕ್ರಮ ಕನ್ನಡ ದಲ್ಲಿ ರೂಢಿಯಲ್ಲಿದೆ. ಅವುಗಳ ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಸಬೇಕಾದಲ್ಲಿ ಮಾತ್ರ ಬಹುವಚನ ಪ್ರತ್ಯಯವನ್ನು ಬಳಸಿದರೆ ಸಾಕು.
(11) ಎಲ್ಲಾ ಪುಸ್ತಕಗಳನ್ನೂ ಮೇಜಿನ ಮೇಲಿರಿಸಿದ್ದೇನೆ (12) ನಾಲ್ಕು ಪುಸ್ತಕ ಸಿಕ್ಕಿತು
ಪುಸ್ತಕ ಪದ (11)ನೇ ವಾಕ್ಯದಲ್ಲಿ ಗಳು ಬಹುವಚನ ಪ್ರತ್ಯಯದೊಂದಿಗೆ ಬಂದಿದೆ; ಆದರೆ (12)ನೇ ವಾಕ್ಯದಲ್ಲಿ ಅದು ಆ ಪ್ರತ್ಯಯವಿಲ್ಲದೆ ಬಂದಿದೆ. ಹೀಗಿದ್ದರೂ ಅದು ಈ ಎರಡು ವಾಕ್ಯಗಳಲ್ಲೂ ಒಂದಕ್ಕಿಂತ ಜಾಸ್ತಿ ವಸ್ತುಗಳನ್ನು ಸೂಚಿಸುತ್ತದೆ.
ಸಂಸ್ಕೃತದಲ್ಲಿ ಈ ರೀತಿ ವಚನ ಪ್ರತ್ಯಯವನ್ನು ಬಳಸದೆ ಇರಲು ಸಾಧ್ಯ ವಾಗದು. ಎಣಿಕೆಯ ಪದ ಬಂದಿರುವ ಕಡೆಗಳಲ್ಲೂ ಅದರಲ್ಲಿ ವಚನವನ್ನು ಸೂಚಿಸಬೇಕಾಗುತ್ತದೆ.
(13ಕ) ಏಕಃ ವೃಕ್ಷಃ ಅಪತತ್ ‘ಒಂದು ಮರ ಬಿತ್ತು’
(13ಖ) ದೌ್ವ ವೃಕೌ್ಷ ಅಪತತಾಂ
‘ಎರಡು ಮರಗಳು ಬಿದ್ದುವು/ಎರಡು ಮರ ಬಿತ್ತು’
(13ಗ) ತ್ರೀಣಿ ವೃಕ್ಷಾನಿ ಅಪತನ್
‘ಮೂರು ಮರಗಳು ಬಿದ್ದುವು/ಮೂರು ಮರ ಬಿತ್ತು’
(13ಕ-ಗ) ವಾಕ್ಯಗಳಲ್ಲಿ ವೃಕ್ಷ ‘ಮರ’ ಪದ ಮಾತ್ರವಲ್ಲದೆ ಅದರೊಂದಿಗೆ ಬಂದಿರುವ ಎಣಿಕೆಯ ಪದಗಳೂ ಆ ಪದದ ವಚನವನ್ನು ಸೂಚಿಸುತ್ತಿವೆ.
ಸಂಸ್ಕೃತದಲ್ಲಿ ಈ ರೀತಿ ಕನ್ನಡದ ಹಾಗೆ ಅವಶ್ಯಕತೆಯಿಲ್ಲದಲ್ಲಿ ವಚನ ಪ್ರತ್ಯಯವನ್ನು ತೆಗೆದುಹಾಕಲು ಸಾಧ್ಯವಾಗದಿರುವುದಕ್ಕೆ ಅದರಲ್ಲಿ ವಚನ ಮತ್ತು ವಿಭಕ್ತಿಗಳೆರಡನ್ನೂ ಒಂದೇ ಪ್ರತ್ಯಯ ಸೂಚಿಸುತ್ತಿರುವುದೇ ಮುಖ್ಯ ಕಾರಣ. ವಚನವನ್ನು ಸೂಚಿಸುವ ಅವಶ್ಯಕತೆಯಿಲ್ಲದಲ್ಲೂ ವಿಭಕ್ತಿಯನ್ನು ಸೂಚಿಸಬೇಕಾಗು ತ್ತದೆ ತಾನೆ!
6.4 ತಿರುಳು
ಲಿಂಗ ಮತ್ತು ವಚನಗಳೆಂಬ ಈ ಎರಡು ವ್ಯಾಕರಣತತ್ವಗಳ ಬಳಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ತೆರನಾಗಿರುತ್ತದೆ. ಕೆಲವು ಭಾಷೆಗಳಲ್ಲಿ ಲಿಂಗ ಮತ್ತು ವಚನಗಳ ಬಳಕೆಯಾಗದೇ ಇರಲೂ ಸಾಧ್ಯವಿದೆ.
ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಹಲವು ರೀತಿಯಲ್ಲಿ ಭಿನ್ನವಾಗಿದೆ ಯಾದ ಕಾರಣ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲಿ ಅಳವಡಿಸಿಕೊಳ್ಳಲು ಇಲ್ಲವೇ ಅವುಗಳಲ್ಲಿ ಅಲ್ಪ ಸ್ವಲ್ಪ ಬದಲಾ ವಣೆಗಳನ್ನು ಮಾಡಿ ಉಪಯೋಗಿಸಿಕೊಳ್ಳಲು ಸಾಧ್ಯವಾಗದು.
ಹಾಗಾಗಿ, ಈ ಎರಡು ವ್ಯಾಕರಣ ತತ್ವಗಳು ಕನ್ನಡದಲ್ಲಿ ಯಾವ ರೀತಿ ಯಲ್ಲೆಲ್ಲ ಬಳಕೆಯಾಗುತ್ತವೆ ಎಂಬುದನ್ನು ಪೂರ್ತಿಯಾಗಿ ಅಭ್ಯಾಸ ಮಾಡಿ ಅದರ ಆಧಾರದ ಮೇಲೆ ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯವಶ್ಯ.
ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳು ಎಂತಹವು ಎಂಬುದನ್ನು ಈ ಎರಡು ವ್ಯಾಕರಣ ತತ್ವಗಳು ಸೂಕ್ಷ್ಮವಾಗಿ ಸೂಚಿಸುತ್ತವೆ. ಈ ವಿಷಯವನ್ನು ನಾಮಪದಗಳಲ್ಲಿ ಮಾತ್ರವಲ್ಲದೆ, ಕ್ರಿಯಾಪದಗಳಲ್ಲಿ, ನಾಮ ಪದಗಳ ವಿಶೇಷಣಗಳಲ್ಲಿ ಮತ್ತು ಸವ್ರನಾಮ(ಪದ)ಗಳಲ್ಲೂ ಸೂಚಿಸುವ ಕ್ರಮವಿದೆ.
ಈ ವಿಷಯದಲ್ಲೂ ಬೇರೆ ಬೇರೆ ಭಾಷೆಗಳು ಬೇರೆ ಬೇರೆ ತೆರನಾಗಿರ ಬಲ್ಲುವಾದ ಕಾರಣ, ಪ್ರತಿಯೊಂದು ಭಾಷೆಯ ವ್ಯಾಕರಣದಲ್ಲೂ ಆ ಭಾಷೆಯಲ್ಲಿ ಕಾಣಿಸುವ ಬಳಕೆ ಎಂತಹದು ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿವರಿಸು ವುದು ಅವಶ್ಯ.