← Ch 2  ·  Contents  ·  Ch 4 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

3. ಪದವಗ್ರಗಳು

Eke →

3.1 ಮುನ್ನೋಟ

ಭಾಷೆಯೊಂದರಲ್ಲಿ ಬರುವ ಪದಗಳನ್ನು ಅವುಗಳ ಅರ್ಥ ಮತ್ತು ವಾಕ್ಯಗಳಲ್ಲಿ ಅವು ನಡೆಸಬೇಕಾಗಿರುವ ಕೆಲಸ - ಈ ಎರಡು ವಿಷಯಗಳ ಆಧಾರದ ಮೇಲೆ ಕೆಲವು ಮುಖ್ಯ ಗುಂಪುಗಳಲ್ಲಿ ವಿಂಗಡಿಸಬಹುದು.
ಉದಾಹರಣೆಗಾಗಿ, ಕನ್ನಡ ವಾಕ್ಯಗಳಲ್ಲಿ ಬಳಕೆಯಾಗುವ ಪದಗಳನ್ನು ಅವುಗಳ ಅರ್ಥದ ಆಧಾರದ ಮೇಲೆ ಕೆಳಗೆ ಸೂಚಿಸಿದ ಹಾಗೆ ಮುಖ್ಯವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

ನಾಮಪದಗಳು:  ರಾಜು,  ಹುಡುಗಿ,  ಮನೆ,  ಆನೆ  ಮೊದಲಾದ  ವ್ಯಕ್ತಿ,  ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ಪದಗಳು. 
ಕ್ರಿಯಾಪದಗಳು:  ಹೇಳು,  ತಿನ್ನು,  ಓಡು,  ಬೀಳು,  ಕೊಡು,  ಮಾಡು 

ಮೊದಲಾದ ಘಟನೆಗಳನ್ನು ನಿರ್ದೇಶಿಸುವ ಪದಗಳು.

ಗುಣಪದಗಳು: ದೊಡ್ಡ, ಚಿಕ್ಕ, ಬಿಳಿ, ಕಪ್ಪು, ಒಳ್ಳೆ, ಬಹಳ ಮೊದಲಾದ 

ಗುಣಧರ್ಮಗಳನ್ನು ಸೂಚಿಸುವ ಪದಗಳು.

ಪದಗಳನ್ನು  ವಿಂಗಡಿಸಲು  ಈ  ರೀತಿ  ಅವುಗಳ  ಅರ್ಥವನ್ನು  ಮಾತ್ರವಲ್ಲದೆ  ವಾಕ್ಯಗಳಲ್ಲಿ  ಅವು  ಎಂತಹ  ಕೆಲಸಗಳನ್ನು  ನಡೆಸುತ್ತವೆ  ಎಂಬುದನ್ನೂ  ತಿಳಿದು  ಕೊಳ್ಳುವ  ಅವಶ್ಯಕತೆಯಿದೆ.  ಕನ್ನಡದಲ್ಲಿ  ಮೇಲೆ  ಕೊಟ್ಟಿರುವ  ಮೂರು  ರೀತಿಯ  ಪದಗಳು ಮೂರು ರೀತಿಯ ಕೆಲಸಗಳನ್ನು ನಡೆಸುತ್ತವೆ ಎಂಬುದನ್ನು ಈ ಕೆಳಗಿನ  ವಾಕ್ಯಗಳಿಂದ ತಿಳಿಯಬಹುದು. 

ರಾಜು ಚಿಕ್ಕ ಹುಡುಗನಿಗೆ ಹಣ್ಣು ಕೊಟ್ಟ (1ಖ) ಗಿರಿ ಕಪ್ಪು ಕಾಗದದಲ್ಲಿ ಚಿತ್ರ ಬಿಡಿಸಿದ

(1ಕ-ಖ)  ವಾಕ್ಯಗಳಲ್ಲಿ  ರಾಜು,  ಹುಡುಗ,  ಹಣ್ಣು,  ಗಿರಿ,  ಕಾಗದ  ಮತ್ತು  ಚಿತ್ರ ಎಂಬ ಆರು ಪದಗಳನ್ನು ಆರು ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುವು  ದಕ್ಕಾಗಿ  ಬಳಸಲಾಗಿದೆ.  ಇವು  ಕೊಡು  ಮತ್ತು  ಬಿಡಿಸು  ಎಂಬ  ಕ್ರಿಯಾಪದಗಳು  ನಿರ್ದೇಶಿಸುವ ಎರಡು ಘಟನೆಗಳಲ್ಲಿ ತೊಡಗಿರುವ ವ್ಯಕ್ತಿ ಮತ್ತು ವಸ್ತುಗಳಾಗಿವೆ.  
ಇದಲ್ಲದೆ  ಮೇಲಿನ  ವಾಕ್ಯಗಳಲ್ಲಿ  ಚಿಕ್ಕ  ಹಾಗೂ  ಕಪ್ಪು  ಎಂಬ  ಬೇರೆಯೂ  ಎರಡು  ಪದಗಳ  ಬಳಕೆಯಾಗಿದ್ದು,  ಅವುಗಳನ್ನು  ಅವುಗಳ  ಮುಂದಿರುವ  ನಾಮಪದಗಳು  (ಅನುಕ್ರಮವಾಗಿ  ಹುಡುಗ  ಮತ್ತು  ಕಾಗದ  ಎಂಬವುಗಳು)  ಗುರುತಿಸುವ  ವ್ಯಕ್ತಿ  ಇಲ್ಲವೇ  ವಸ್ತುಗಳ  ಗುಣಧರ್ಮಗಳನ್ನು  ಸೂಚಿಸುವುದಕ್ಕಾಗಿ  ಬಳಸಲಾಗಿದೆ.  
ಕನ್ನಡದಲ್ಲಿ  ಈ  ರೀತಿ  ವ್ಯಕ್ತಿ,  ವಸ್ತು,  ವಿಷಯ,  ಮೊದಲಾದವುಗಳನ್ನು  ಗುರುತಿಸುವುದು,  ಘಟನೆಗಳನ್ನು  ನಿರ್ದೇಶಿಸುವುದು  ಮತ್ತು  ಗುಣಧರ್ಮಗಳನ್ನು  ಸೂಚಿಸುವುದು  ಎಂಬುದಾಗಿ  ಮೂರು  ಮುಖ್ಯ  ಕೆಲಸಗಳನ್ನು  ನಡೆಸುವುದಕ್ಕಾಗಿ  ಮೇಲಿನ  ಮೂರು  ರೀತಿಯ  ಪದಗಳನ್ನು  ಬಳಸುತ್ತೇವೆ.  ಇದು  ಅವನ್ನು  ಅನು  ಕ್ರಮವಾಗಿ  ನಾಮಪದ,  ಕ್ರಿಯಾಪದ  ಮತ್ತು  ಗುಣಪದಗಳೆಂಬ  ಮೂರು  ಪದ  ವಗ್ರಗಳಲ್ಲಿ ವಿಂಗಡಿಸಲು ಇನ್ನೊಂದು ಆಧಾರ. 

Eke →

3.2 ನಾಮಪದಗಳು ಮತ್ತು ಗುಣಪದಗಳು

ಪದಗಳನ್ನು ಪದವಗ್ರಗಳಾಗಿ ವಿಂಗಡಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆ ಗಳ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಮುಖ್ಯವಾದುದೆಂದರೆ, ಮೇಲೆ ಸೂಚಿಸಿದ ಹಾಗೆ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಗಳೆಂಬುದಾಗಿ ಮೂರು ಪದವಗ್ರಗಳಿವೆ; ಆದರೆ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಪದವಗ್ರಗಳು ಮಾತ್ರ ಇವೆ. ಗುಣಪದಗಳು ನಾಮಪದಗಳಿಂದ ಭಿನ್ನವಾದ ಮೂರನೆಯ ಪದವಗ್ರದಲ್ಲಿ ಬಾರದೆ ನಾಮಪದ ವಗ್ರದಲ್ಲೇನೇ ಬರುತ್ತವೆ. ಸಂಸ್ಕೃತದ ಪದಗಳನ್ನು ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬು ದಾಗಿ ಮೂರು ಗುಂಪುಗಳಲ್ಲಿ ವಿಂಗಡಿಸುವುದು ಅವಶ್ಯ ಎಂಬುದಾಗಿ ಅದರ ಕೆಲವು ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ; ಆದರೆ ಬೇರೆ ಕೆಲವರು ವೈಯಾಕರಣಿಗಳು ಇವುಗಳಲ್ಲಿ ಮೂರನೆಯದಾದ ಅವ್ಯಯ ಎಂಬುದನ್ನು ನಾಮ ಪದಗಳೊಂದಿಗೆ ಸೇರಿಸುವುದರ ಮೂಲಕ, ಸಂಸ್ಕೃತದ ಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡೇ ಎರಡು ಪದವಗ್ರಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದಾಗಿ ವಾದಿಸಿದ್ದಾರೆ.
ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ಸಂಸ್ಕೃತ ಪದಗಳ ಈ ಎರಡು ರೀತಿಯ ವಿಭಜನೆಗಳನ್ನು ಹಾಗೆಯೇ ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸ

ಲಾಗಿದೆ. ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬುದಾಗಿ ಮೂರು ರೀತಿಯ ಪದಗಳು ಕನ್ನಡದಲ್ಲಿವೆಯುಂಬುದಾಗಿ ಕೆಲವು ವ್ಯಾಕರಣಗಳು ತಿಳಿಸು ತ್ತವೆ ಮತ್ತು ಬೇರೆ ಕೆಲವು ವ್ಯಾಕರಣಗಳು ಕನ್ನಡದಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ರೀತಿಯ ಪದಗಳು ಮಾತ್ರ ಇವೆಯೆಂದು ತಿಳಿಸುತ್ತವೆ. ಸಂಸ್ಕೃತ ವ್ಯಾಕರಣದಲ್ಲಿ ಗುಣಪದ (ಗುಣವಾಚಕ ಪದ) ಮತ್ತು ನಾಮ ಪದಗಳನ್ನು ಒಂದೇ ಪದವಗ್ರದಲ್ಲಿ ಇರಿಸಲು ಕಾರಣವೇನೆಂದರೆ, ಅರ್ಥದ ಮಟ್ಟಿಗೆ ಈ ಎರಡು ರೀತಿಯ ಪದಗಳು ಭಿನ್ನವಾಗಿ ತೋರುವುವಾದರೂ ವಾಕ್ಯ ಗಳಲ್ಲಿ ಅವಕ್ಕೆ ಒಂದೇ ರೀತಿಯ ಬಳಕೆಯಿದೆ. ಆದರೆ, ಕನ್ನಡದಲ್ಲಿ ಗುಣಪದ ಗಳು ಮೇಲೆ ವಿವರಿಸಿದ ಹಾಗೆ ಅರ್ಥ ಮತ್ತು ಬಳಕೆಗಳೆರಡರಲ್ಲೂ ನಾಮಪದ ಗಳಿಗಿಂತ ತೀರಾ ಭಿನ್ನವಾಗಿವೆ.
ಹಾಗಾಗಿ, ಕನ್ನಡದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಾದ ಪದವಗ್ರದಲ್ಲಿ ಬರುತ್ತವೆಯುಂದು ವಾದಿಸಲು ಹಲವು ಆಧಾರಗಳನ್ನು ಕೊಡ ಬಹುದು. ನಾಮಪದಗಳ ಹಾಗೆ ಅವು ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವುದಿಲ್ಲ ವೆಂಬುದು ಇವುಗಳಲ್ಲಿ ಮುಖ್ಯವಾದುದು. ಈ ವಿಷಯವನ್ನಾಧರಿಸಿ ಅವನ್ನು ಅವ್ಯಯಗಳೆಂದು ಹೆಸರಿಸಲು ಸಾಧ್ಯವಿದೆಯೇನೋ ನಿಜ. ಆದರೆ, ಇದರಿಂದ ಬೇರೆ ಕೆಲವು ಸಮಸ್ಯೆಗಳೇಳಲು ಸಾಧ್ಯವಿದೆ.
ಗುಣಪದಗಳಿಗಿಂತ ಭಿನ್ನವಾಗಿರುವ ಕೆಲವು ಕ್ರಿಯಾವಿಶೇಷಣಗಳನ್ನು ಮತ್ತು ನಿಪಾತಗಳನ್ನು ಮಾತ್ರ ಸಂಸ್ಕೃತದಲ್ಲಿ ಅವ್ಯಯಗಳೆಂದು ಕರೆಯುವುದು ರೂಢಿ. ಇಂತಹವು (ಅಯ್ಯೋ, ಓಹೋ, ಚೀ, ಥೂ, ಎಲವೋ ಮೊದಲಾದವುಗಳು) ಕನ್ನಡದಲ್ಲೂ ಇವೆಯಾದ ಕಾರಣ, ಅವಕ್ಕಿಂತ ಭಿನ್ನವಾಗಿರುವ ಕನ್ನಡದ ಗುಣ ಪದಗಳನ್ನು ಅವ್ಯಯಗಳೆಂದು ಕರೆದಲ್ಲಿ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗ ಬಲ್ಲುದು. ಹಾಗಾಗಿ, ಕನ್ನಡದಲ್ಲಿ ಅವನ್ನು ಬೇರೆಯೇ ಒಂದು ಪದವಗ್ರದಲ್ಲಿ ಇರಿಸುವುದು ಒಳ್ಳೆಯದು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯತ್ಯಾಸ ಒಂದು ಅತ್ಯಂತ ಮುಖ್ಯವಾದ ವ್ಯತ್ಯಾಸ. ವ್ಯಾಕರಣದ ಹಲವಾರು ಭಾಗಗಳಲ್ಲಿ ಈ ವ್ಯತ್ಯಾಸದಿಂದಾಗಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಒಂದಕ್ಕಿಂತ ಒಂದು ತೀರ ಭಿನ್ನವಾಗಿ ಕಾಣಿಸುವುವೆಂಬುದನ್ನು ಮುಂದೆ ನೋಡಲಿರುವೆವು. ಈ ವಿಷಯದಲ್ಲಿ ಕನ್ನಡ ಯಾಕೆ ಸಂಸ್ಕೃತದ ಹಾಗೆ ಅಲ್ಲ, ಕನ್ನಡದಲ್ಲಿ ಗುಣಪದಗಳನ್ನು ಬೇರೆಯೇ ಒಂದು ಪದವಗ್ರದಲ್ಲಿ ಯಾಕೆ ಪ್ರತ್ಯೇಕವಾಗಿ ಇರಿಸಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ಕೆಲವು ವಿಷಯಗಳನ್ನು ಪರಿಶೀಲಿಸಬಹುದು. ನಾಮಪದದ ವಿಶೇಷಣವನ್ನಾಗಿ

Eke →

3.2.1 ವಿಶೇಷಣಗಳಾಗಿ ಗುಣಪದಗಳ ಬಳಕೆ

ಗುಣಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡುವ ವಿಧಾನ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಬೇರೆ ಬೇರಾಗಿದೆ. ಸಂಸ್ಕೃತದಲ್ಲಿ ಒಂದು ಗುಣಪದವನ್ನು ಮಾಡಬೇಕಿದ್ದಲ್ಲಿ, ಆ ನಾಮಪದದೊಂದಿಗೆ ಯಾವ ವಿಭಕ್ತಿ ಪ್ರತ್ಯಯ ಬರುತ್ತಿದೆಯೋ ಅದನ್ನು ಗುಣಪದದೊಂದಿಗೂ ಬಳಸುವ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಗುಣಪದ ಗಳೂ ನಾಮಪದಗಳೇ ಎನ್ನುವುದು ಇದೇ ಕಾರಣಕ್ಕಾಗಿ.
ಆದರೆ ಕನ್ನಡದಲ್ಲಿ ಆ ರೀತಿ ಗುಣಪದದೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಒಂದು ಗುಣಪದವನ್ನು ನಾಮಪದದ ವಿಶೇಷಣವಾಗಿ ಬಳಸಬೇಕಿದ್ದಲ್ಲಿ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ನೇರವಾಗಿ ಆ ನಾಮಪದದೊಂದಿಗೆ ಇರಿಸಬೇಕಾಗುತ್ತದೆ.
ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳನ್ನು ಮತ್ತು ಅವುಗಳ ಕನ್ನಡ ಅನುವಾದಗಳನ್ನು ಗಮನಿಸಬಹುದು.

ತತ್ರ ಏಕಃ ಕೃಷ್ಣಃ ಸಪ್ರಃ ಅಸ್ತಿ ‘ಅಲ್ಲಿ ಒಂದು ಕಪ್ಪು ಹಾವು ಇದೆ’ (2ಖ) ಹರಿಃ ಏಕಂ ಕೃಷ್ಣಂ ಸಪ್ರಂ ಅಪಶ್ಯತ್ ‘ಹರಿ ಒಂದು ಕಪ್ಪು ಹಾವನ್ನು ನೋಡಿದ’ (2ಗ) ಹರಿಃ ಏಕೇನ ಕೃಷ್ಣೇನ ಸಪ್ರೇನ ದಷ್ಟಃ ‘ಹರಿಯನ್ನು ಒಂದು ಕಪ್ಪು ಹಾವು ಕಚ್ಚಿತು’

(2ಕ)  ವಾಕ್ಯದಲ್ಲಿ  ಏಕಃ  ಕೃಷ್ಣಃ  ಸಪ್ರಃ  ‘ಒಂದು  ಕಪ್ಪು  ಹಾವು’  ಎಂಬ  ನಾಮಪದಕಂತೆ  ಬಂದಿದ್ದು  ಅದರಲ್ಲಿರುವ  ಸಪ್ರ  ನಾಮಪದ  ಮಾತ್ರವಲ್ಲದೆ,  ಅದರ  ವಿಶೇಷಣಗಳಾದ  ಏಕ  ಮತ್ತು  ಕೃಷ್ಣ  ಪದಗಳೂ  ವಿಭಕ್ತಿ  ಪ್ರತ್ಯಯ  ದೊಂದಿಗೆ (ಪುಲ್ಲಿಂಗ-ಏಕವಚನ-ಪ್ರಥಮಾ ವಿಭಕ್ತಿಯಲ್ಲಿ) ಬಂದಿವೆ.  
ಇದೇ ನಾಮಪದಕಂತೆ (2ಖ) ಮತ್ತು (2ಗ) ವಾಕ್ಯಗಳಲ್ಲೂ ಬಂದಿದ್ದು, ಆ  ಪದಕಂತೆಯಲ್ಲಿರುವ  ಸಪ್ರ  ನಾಮಪದದ  ವಿಭಕ್ತಿ  ಪ್ರತ್ಯಯ  ಮಾತ್ರವಲ್ಲದೆ  ಇತರ  ಎರಡು  ವಿಶೇಷಣ  ಪದಗಳ  (ಏಕ,  ಕೃಷ್ಣ  ಎಂಬವುಗಳ)  ವಿಭಕ್ತಿ  ಪ್ರತ್ಯಯವೂ ಬದಲಾಗಿರುವುದನ್ನು ಕಾಣಬಹುದು.  
ಇವು  ಮೂರೂ  (2ಖ)  ವಾಕ್ಯದಲ್ಲಿ  ಪುಲ್ಲಿಂಗ-ಏಕವಚನ-ದ್ವಿತೀಯಾ  ವಿಭಕ್ತಿಯಲ್ಲಿ  (ಏಕಂ  ಕೃಷ್ಣಂ  ಸಪ್ರಂ  ಎಂಬುದಾಗಿ)  ಬಂದಿವೆ  ಮತ್ತು  (2ಗ) 

ವಾಕ್ಯದಲ್ಲಿ ಪುಲ್ಲಿಂಗ-ಏಕವಚನ-ತೃತೀಯಾ ವಿಭಕ್ತಿಯಲ್ಲಿ (ಏಕೇನ ಕೃಷ್ಣೇನ ಸಪ್ರೇನ ಎಂಬುದಾಗಿ) ಬಂದಿವೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶವೇನೆಂದರೆ, ಸಪ್ರ ‘ಹಾವು’ ನಾಮಪದ ಮಾತ್ರವಲ್ಲದೆ ಅದರ ವಿಶೇಷಣವಾಗಿ ಬಂದಿರುವ ಕೃಷ್ಣ ‘ಕಪ್ಪು’ ಗುಣಪದ (ಮತ್ತು ಏಕ ‘ಒಂದು’ ಎಣಿಕೆಯ ಪದ) - ಇವೆಲ್ಲವೂ ಸಂಸ್ಕೃತದಲ್ಲಿ ಲಿಂಗ-ವಚನ-ವಿಭಕ್ತಿ ಪ್ರತ್ಯಯದೊಂದಿಗೆ ಬರಬೇಕಾಗುತ್ತದೆ ಮತ್ತು ಒಂದೇ ಪದಕಂತೆಯ ಅಂಗಗಳಾಗಿರುವಾಗ ಇವೆಲ್ಲವೂ ಒಂದೇ ಲಿಂಗ- ವಚನ-ವಿಭಕ್ತಿಯಲ್ಲಿ ಬರಬೇಕಾಗುತ್ತದೆ. ಈ ಮೂರು ವಾಕ್ಯಗಳ ಕೆಳಗೇನೇ ಕೊಟ್ಟಿರುವ ಕನ್ನಡ ವಾಕ್ಯಗಳನ್ನು ಗಮನಿಸಿದಲ್ಲಿ, ಅದರ ಗುಣಪದಗಳು (ಮತ್ತು ಎಣಿಕೆಯ ಪದಗಳು) ಸಂಸ್ಕೃತದ ಗುಣಪದಗಳಿಗಿಂತ ಯಾಕೆ ಭಿನ್ನವಾದವುಗಳು ಎಂಬ ವಿಷಯ ಸ್ಪಷ್ಟವಾದೀತು.
ಆ ವಾಕ್ಯಗಳಲ್ಲಿ ಬರುವ ಕಪ್ಪು ಗುಣಪದ ಮೂರು ವಾಕ್ಯಗಳಲ್ಲೂ ಒಂದೇ ರೂಪದಲ್ಲಿದೆ. ಅದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಕಪ್ಪನ್ನು ಹಾವನ್ನು ಇಲ್ಲವೇ *ಕಪ್ಪಿನಿಂದ ಹಾವಿನಿಂದ ಎಂದು ಹೇಳಿದೆವಾದರೆ ಅದು ಕನ್ನಡ ವಾಗಲಾರದು.
ಇದೇ ರೀತಿಯಲ್ಲಿ ಒಂದು ಎಂಬ ಎಣಿಕೆಯ ಪದವೂ ಕನ್ನಡದ ಈ ಮೂರು (2ಕ-ಗ) ವಾಕ್ಯಗಳಲ್ಲಿ ಒಂದೇ ರೂಪದಲ್ಲಿದೆ. ನಾಮಪದದೊಂದಿಗೆ ಬಳಸುವಾಗ ಅದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿ *ಒಂದನ್ನು ಹಾವನ್ನು ಇಲ್ಲವೇ *ಒಂದಕ್ಕೆ ಹಾವಿಗೆ ಎಂಬುದಾಗಿ ಹೇಳಲು ಕನ್ನಡದಲ್ಲಿ ಸಾಧ್ಯವಾಗದು. (ಭಾಷಾವಿಜ್ಞಾನಿಗಳು ಪದಕಂತೆ ಇಲ್ಲವೇ ವಾಕ್ಯದ ಮುಂದೆ ‘
’ ಸಂಜ್ಞೆ ಯನ್ನು ಬಳಸುವುದರ ಮೂಲಕ ಅದು ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುತ್ತಾರೆ. ಇದೇ ಕ್ರಮವನ್ನು ಮೇಲೆ ಕೊಟ್ಟಿರುವ *ಕಪ್ಪನ್ನು ಹಾವನ್ನು, *ಕಪ್ಪಿನಿಂದ ಹಾವಿನಿಂದ *ಒಂದನ್ನು ಹಾವನ್ನು ಮೊದಲಾದ ಪದಕಂತೆಗಳು ಕನ್ನಡದಲ್ಲಿ ವ್ಯಾಕರಣಬದ್ಧವಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ಬಳಸ

Eke →

3.2.2 ವಿಶೇಷಣಗಳಾಗಿ ನಾಮಪದಗಳ ಬಳಕೆ

ಸಂಸ್ಕೃತದಲ್ಲಿ ಗುಣಪದಗಳ ಹಾಗೆ ನಾಮಪದಗಳನ್ನೂ ಬೇರೆ ನಾಮಪದಗಳ ವಿಶೇಷಣಗಳನ್ನಾಗಿ ಮಾಡಿ ಬಳಸಲು ಸಾಧ್ಯವಿದೆ. ಈ ರೀತಿ ಬಳಸಬೇಕಿದ್ದಲ್ಲಿ, ಗುಣಪದಗಳ ಹಾಗೆ ಆ ನಾಮಪದಗಳಿಗೂ ಅವುಗಳ ವಿಶೇಷ್ಯವಾಗಿರುವ ನಾಮ ಪದದ ಲಿಂಗ-ವಚನ-ವಿಭಕ್ತಿ ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ.

ಆದರೆ  ಕನ್ನಡದಲ್ಲಿ  ಒಂದು  ನಾಮಪದವನ್ನು  ಇನ್ನೊಂದು  ನಾಮಪದದ  ಸಂಬಂಧವಿದೆ  ವಿಶೇಷಣವನ್ನಾಗಿ  ಮಾಡಬೇಕಿದ್ದಲ್ಲಿ  ಅವೆರಡರ  ಎಂಬುದನ್ನು  ಸೂಚಿಸುವ  ಅ  (‘ಷಷ್ಠೀ  ವಿಭಕ್ತಿ’)  ಪ್ರತ್ಯಯವನ್ನು  ಸೇರಿಸಬೇಕು  (ಎಂದರೆ, ಅದನ್ನೊಂದು ‘ಗುಣಪದ’ವಾಗಿ ಬದಲಾಯಿಸಬೇಕು).  

ನಡುವೆ

(3ಕ) ಅಹಂ ಮೃತ್ತಿಕಂ ಘಟಂ ದೃಷ್ಟವಾನ್ ‘ನಾನು ಮಣ್ಣಿನ ಕೊಡವನ್ನು ನೋಡಿದೆ’

(3ಖ) ಅಹಂ ಮೃತ್ತಿಕೇನ ಘಟೇನ ಜಲಂ ಪಿಬಂ

‘ನಾನು ಮಣ್ಣಿನ ಕೊಡದಿಂದ (ಕೊಡದಲ್ಲಿ) ನೀರು ಕುಡಿದೆ’

(3ಕ)  ಮತ್ತು  (3ಖ)  ವಾಕ್ಯಗಳಲ್ಲಿ  ಸಂಸ್ಕೃತದ  ಮೃತ್ತಿಕ  ‘ಮಣ್ಣು’  ನಾಮಪದ  ಎರಡು  ಬೇರೆ  ಬೇರೆ  ವಿಭಕ್ತಿ  ಪ್ರತ್ಯಯಗಳೊಂದಿಗೆ  (ದ್ವಿತೀಯಾ  ಮತ್ತು ತೃತೀಯಾ ವಿಭಕ್ತಿ ಪ್ರತ್ಯಯಗಳೊಂದಿಗೆ) ಬಳಕೆಯಾಗಿದೆ.  
ಆದರೆ  ಈ  ವಾಕ್ಯಗಳ  ಕೆಳಗೆ  ಕೊಟ್ಟಿರುವ  ಕನ್ನಡ  ವಾಕ್ಯಗಳೆರಡರಲ್ಲೂ  ಮಣ್ಣು  ನಾಮಪದ  ಷಷ್ಠೀ  ವಿಭಕ್ತಿ  ಪ್ರತ್ಯಯದೊಂದಿಗೆ  ಬಳಕೆಯಾಗಿದೆ.  ಆ  ನಾಮಪದದ  ವಿಭಕ್ತಿ  ನಾಮಪದವನ್ನು  ಅದರ  ವಿಶೇಷ್ಯವಾದ  ಪ್ರತ್ಯಯದೊಂದಿಗೆ  (ಎಂದರೆ  ಅನ್ನು  ಇಲ್ಲವೇ  ಇಂದ  ಪ್ರತ್ಯಯಗಳೊಂದಿಗೆ)  ಬಳಸಲು ಕನ್ನಡದಲ್ಲಿ ಸಾಧ್ಯವಾಗದು.  
ಸಂಸ್ಕೃತದ  ವಿಶೇಷಣ  ನಾಮಪದಗಳೊಂದಿಗೆ  ಈ  ರೀತಿ  ಬಳಳಕೆಯಾಗುವ  ವಿಭಕ್ತಿ ಪ್ರತ್ಯಯಗಳು ಅವುಗಳ ವಿಶೇಷ್ಯದೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳೇ  ಆಗಿರಬೇಕೆಂಬ  ನಿಯಮವಿದೆ.  (3ಕ)  ವಾಕ್ಯದಲ್ಲಿ  ಇವೆರಡೂ  ದ್ವಿತೀಯೆಯಲ್ಲಿವೆ  ಮತ್ತು (3ಖ) ವಾಕ್ಯದಲ್ಲಿ ಇವೆರಡೂ ತೃತೀಯೆಯಲ್ಲಿವೆ ಎಂಬುದನ್ನು ಗಮನಿಸ  ಬಹುದು.  
ಈ  ವಿಷಯದಲ್ಲಿ  ಸಂಸ್ಕೃತದ  ಈ  ನಾಮಪದಗಳು  (2ಕ-ಗ)  ವಾಕ್ಯಗಳಲ್ಲಿ  ಕಾಣಿಸುವ  ಸಂಸ್ಕೃತದ  ಗುಣಪದಗಳಿಗಿಂತ  ಭಿನ್ನವಾಗಿಲ್ಲ.  ಆ  ಗುಣಪದಗಳೂ  ಅವುಗಳ  ವಿಶೇಷ್ಯಗಳಾಗಿ  ಬಂದಿರುವ  ನಾಮಪದಗಳ  ವಿಭಕ್ತಿಯಲ್ಲಿಯೇ  ಬಳಕೆ  ಯಾಗಿವೆ.    
ಆದರೆ (3ಕ-ಗ) ಕನ್ನಡ ವಾಕ್ಯಗಳಲ್ಲಿರುವ ನಾಮಪದಗಳು (2ಕ-ಗ) ವಾಕ್ಯ  ಗಳಲ್ಲಿ ಕಾಣಿಸುವ ಗುಣಪದಗಳಿಗಿಂತ ಭಿನ್ನವಾಗಿವೆ. (2ಕ-ಗ) ವಾಕ್ಯಗಳಲ್ಲಿರುವ  ಗುಣಪದಗಳಿಗೆ  ಯಾವ  ಪ್ರತ್ಯಯವೂ  ಸೇರಿಲ್ಲ.  ಆದರೆ  (3ಕ-ಗ)  ವಾಕ್ಯ  ಗಳಲ್ಲಿರುವ ನಾಮಪದಗಳಿಗೆ ಷಷ್ಠೀ ವಿಭಕ್ತಿ ಪ್ರತ್ಯಯ ಸೇರಿದೆ. ಈ ರೀತಿ ಷಷ್ಠೀ  ವಿಭಕ್ತಿ  ಪ್ರತ್ಯಯ  ಸೇರದೆ  ಕನ್ನಡದ  ನಾಮಪದಗಳು  ಬೇರೊಂದು  ನಾಮಪದದ  ವಿಶೇಷಣಗಳಾಗಿ ಬರಲಾರವು.  

Eke →

3.2.3 ವಿಶೇಷಣ ಮತ್ತು ವಿಶೇಷ್ಯಗಳ ಜಾಗ

ಗುಣಪದಗಳ ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷ್ಯಗಳೊಂದಿಗೇನೇ ಬಳಸಬೇಕೆಂಬ ನಿಯಮವಿಲ್ಲ. ಅವೆರಡು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದಿರಲೂ ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿ ರುವ (4)ನೇ ವಾಕ್ಯವನ್ನು ಗಮನಿಸಬಹುದು.

ಕಟಂ ಕರೋತಿ ದಶ್ರನೀಯಂ (4) *‘ಚಾಪೆಯನ್ನು ತಯಾರಿಸುತ್ತಿದ್ದಾನೆ ಸುಂದರವಾದ’ (4ಖ) ‘ಸುಂದರವಾದ ಚಾಪೆಯನ್ನು ತಯಾರಿಸುತ್ತಿದ್ದಾನೆ’

(4)ನೇ ಸಂಸ್ಕೃತ ವಾಕ್ಯದಲ್ಲಿ ದಶ್ರನೀಯಂ ‘ಸುಂದರ’ ಗುಣಪದ ಅದರ  ವಿಶೇಷ್ಯವಾಗಿರುವ  ಕಟಂ  ‘ಚಾಪೆ’  ಎಂಬುದರೊಂದಿಗೆ  ಬರುವ  ಬದಲು  ಆ  ವಾಕ್ಯದ  ಕ್ರಿಯಾಪದವಾಗಿರುವ  ಕರೋತಿ  ‘ಮಾಡುತ್ತಾನೆ’  ಎಂಬುದರ  ಅನಂತರ  ಬಂದಿರುವುದನ್ನು ಗಮನಿಸಬಹುದು.  
ಆದರೆ ಕನ್ನಡದಲ್ಲಿ ವಿಶೇಷಣವನ್ನು ಈ ರೀತಿ ವಿಶೇಷ್ಯದಿಂದ ದೂರ ಇರಿಸಿ  ಹೇಳಲು  ಸಾಧ್ಯವಿಲ್ಲ.  ಉದಾಹರಣೆಗಾಗಿ,  (4)ನೇ  ಸಂಸ್ಕೃತ  ವಾಕ್ಯದ  ಕೆಳಗೆ  ಕೊಟ್ಟಿರುವ  ಮೊದಲನೆಯ  (4ಕ)  ಕನ್ನಡ  ವಾಕ್ಯದಲ್ಲಿ  ಸುಂದರವಾದ  ಎಂಬು  ದನ್ನು  ಕ್ರಿಯಾಪದದ  ಅನಂತರ  ಇರಿಸಿದ  ಕಾರಣ,  ಆ  ವಾಕ್ಯ  ಸರಿಯಾಗಿಲ್ಲ.  ಕನ್ನಡದಲ್ಲಿ ವಿಶೇಷಣಗಳು ವಿಶೇಷ್ಯದೊಂದಿಗೇನೇ ಇರುವುದು ಅವಶ್ಯ. 
ಸಂಸ್ಕೃತದಲ್ಲಿ  ವಿಶೇಷ್ಯ  ಮತ್ತು  ವಿಶೇಷಣಗಳು  ಒಂದೇ  ವಿಭಕ್ತಿ,  ವಚನ  ಮತ್ತು  ಲಿಂಗಗಳಲ್ಲಿ  ಬರುತ್ತವೆಯಾದ  ಕಾರಣ,  ಅವನ್ನು  ಯಾವಾಗಲೂ  ಒಟ್ಟಿಗೆ  ಇರಿಸಬೇಕೆಂಬ ನಿಯಮವಿಲ್ಲ. ಅವು ವಾಕ್ಯದ ಬೇರೆ ಬೇರೆ ಕಡೆಗಳಲ್ಲಿ ಬಂದಿವೆ  ಯಾದರೂ  ವಾಕ್ಯವನ್ನು  ಅರ್ಥ  ಮಾಡಿಕೊಳ್ಳುವ  ಸಮಯದಲ್ಲಿ  ಲಿಂಗ-ವಿಭಕ್ತಿ- ವಚನಗಳ  ಆಧಾರದ  ಮೇಲೆ  ಅವನ್ನು  ಸುಲಭವಾಗಿ  ಒಟ್ಟಿಗೆ  ಸೇರಿಸಿ  ಅರ್ಥ  ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  
ಆದರೆ ಕನ್ನಡದಲ್ಲಿ ವಿಶೇಷಣಗಳು ಲಿಂಗ, ವಚನ ಮತ್ತು ವಿಭಕ್ತಿ ಪ್ರತ್ಯಯ  ಗಳೊಂದಿಗೆ  ಬರುವುದಿಲ್ಲ.  ಹಾಗಾಗಿ  ಅವನ್ನು  ಯಾವಾಗಲೂ  ಅವುಗಳ  ವಿಶೇಷ್ಯ  ವಾಗಿರುವ  ನಾಮಪದದ  ಹತ್ತಿರವೇ  ಇರಿಸಬೇಕಾಗುತ್ತದೆ;  ವಾಕ್ಯದ  ಬೇರೆ  ಕಡೆ  ಗಳಿಗೆ ವಗ್ರಾಯಿಸಲು ಸಾಧ್ಯವಾಗುವುದಿಲ್ಲ. 
ನಿಜಕ್ಕೂ  ಸಂಸ್ಕೃತದಲ್ಲಿ  ವಿಶೇಷಣ  ಮತ್ತು  ವಿಶೇಷ್ಯಗಳ  ನಡುವೆ  ಯಾವ  ವ್ಯತ್ಯಾಸವೂ  ಇಲ್ಲ.  ಯಾಕೆಂದರೆ  ಅದರ  ಪದಕಂತೆಗಳಲ್ಲಿ  ಬರುವ  ಎರಡು 

(ಅಥವಾ ಜಾಸ್ತಿ) ಪದಗಳಲ್ಲಿ ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದಾಗಿ ಅವುಗಳ ನಡುವೆ ವ್ಯತ್ಯಾಸವನ್ನು ಸಾಧಿಸಲು ಯಾವ ಆಧಾರವೂ ಸಿಗುವುದಿಲ್ಲ.
ಆದರೆ ಕನ್ನಡದಲ್ಲಿ ವಿಶೇಷಣಗಳು ವಿಶೇಷ್ಯಗಳಿಂದ ತೀರ ಭಿನ್ನವಾಗಿರುತ್ತವೆ. ಯಾಕೆಂದರೆ, ಕನ್ನಡದ ಪದಕಂತೆಗಳಲ್ಲಿ ವಿಶೇಷ್ಯಗಳು ಮಾತ್ರ ವಿಭಕ್ತಿ ಪ್ರತ್ಯಯ ದೊಂದಿಗೆ ಬರಬಲ್ಲುವು. ವಿಶೇಷಣಗಳು ಗುಣಪದಗಳಾಗಿದ್ದಲ್ಲಿ ಹಾಗೆಯೇ ಬರುತ್ತವೆ ಮತ್ತು ನಾಮಪದಗಳಾಗಿದ್ದಲ್ಲಿ ಷಷ್ಠೀ ಪ್ರತ್ಯಯದೊಂದಿಗೆ ಬರುತ್ತವೆ. ಈ ಷಷ್ಠೀ ಪ್ರತ್ಯಯ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯವಲ್ಲ (8.5.5 ನೋಡಿ).

Eke →

3.2.4 ಪದಕಂತೆ ಮತ್ತು ಜೋಡುಪದಗಳಲ್ಲಿ ಗುಣಪದಗಳು

ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಬಳಸುವ ಬದಲು, ಒಂದು ಜೋಡುಪದದ (ಸಮಸ್ತಪದದ) ಅಂಗಗಳನ್ನಾಗಿ ಬಳಸಲೂ ಸಾಧ್ಯವಿದೆ. ಹೀಗೆ ಬಳಸುವಾಗ ಸಾಮಾನ್ಯವಾಗಿ ಅವುಗಳಲ್ಲಿ ಮೊದಲಿನದರ ವಿಭಕ್ತಿ ಪ್ರತ್ಯಯವನ್ನು ತೆಗೆದುಹಾಕಲಾಗುತ್ತದೆ. ಉದಾಹರಣೆ ಗಾಗಿ, ಕೃಷ್ಣಂ ಸಪ್ರಂ ಪದಕಂತೆಯನ್ನು ಈ ರೀತಿ ಕೃಷ್ಣಸಪ್ರಂ ಜೋಡುಪದ ವಾಗಿ ಬದಲಾಯಿಸಲು ಸಾಧ್ಯವಿದೆ.
ಇಂತಹ ಸಂಸ್ಕೃತದ ಜೋಡುಪದಗಳು ಮೇಲೆ ಕೊಟ್ಟಿರುವ ಕನ್ನಡದ ಪದ ಕಂತೆಗಳ ಹಾಗೆ (ಎಂದರೆ ಕಪ್ಪುಹಾವನ್ನು ಎಂಬುದರ ಹಾಗೆ) ಕಾಣಿಸುವುವಾದ ಕಾರಣ, ಕನ್ನಡದ ವೈಯಾಕರಣಿಗಳು ಕನ್ನಡದ ಕೆಲವು ಪದಕಂತೆಗಳನ್ನು ಜೋಡುಪದ(ಸಮಸ್ತಪದ)ಗಳೆಂದು ತಪ್ಪಾಗಿ ವರ್ಣಿಸಿದ್ದಾರೆ. ಉದಾಹರಣೆಗಾಗಿ ಕೆಳಗಿನ ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡಬಹುದು.

(5ಕ) ಹರಿಃ ಏಕಂ ಕೃಷ್ಣಸಪ್ರಂ ಅಪಶ್ಯತ್ ‘ಹರಿ ಒಂದು ಕಪ್ಪುಹಾವನ್ನು ನೋಡಿದ’ (5ಖ) ಹರಿಃ ಏಕೇನ ಕೃಷ್ಣಸಪ್ರೇಣ ದಷ್ಟಃ

‘ಹರಿಯನ್ನು ಒಂದು ಕಪ್ಪುಹಾವು ಕಚ್ಚಿತು’

(5ಕ-ಖ)  ಸಂಸ್ಕೃತ  ವಾಕ್ಯಗಳಲ್ಲಿ  ಕೃಷ್ಣಸಪ್ರಂ  ಮತ್ತು  ಕೃಷ್ಣಸಪ್ರೇಣ  ಎಂಬುದಾಗಿ  ಜೋಡುಪದವೊಂದು  ಎರಡು  ವಿಭಕ್ತಿ  ರೂಪಗಳಲ್ಲಿ  ಬಳಕೆ  ಯಾಗಿದ್ದು, ಅದರ ಮೊದಲನೆಯ ಅಂಗವಾಗಿರುವ ಪದ (ಕೃಷ್ಣ ಎಂಬುದು) ಈ  ಎರಡು ಬಳಕೆಗಳಲ್ಲೂ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿರುವುದನ್ನು ಕಾಣಬಹುದು.  

ಇದೇ  ರೀತಿಯಲ್ಲಿ  ಇವುಗಳ  ಕೆಳಗೆ  ಕೊಟ್ಟಿರುವ  ಕನ್ನಡ  ವಾಕ್ಯಗಳಲ್ಲೂ  ಕಪ್ಪುಹಾವನ್ನು  ಮತ್ತು  ಕಪ್ಪುಹಾವು  ಎಂಬ  ಎರಡು  ಬಳಕೆಗಳಲ್ಲಿ  ಕಪ್ಪು  ಎಂಬುದು ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿದೆ.  
ಆದರೆ,  ಇಲ್ಲಿ  ಸಂಸ್ಕೃತದ  ಬಳಕೆಗಳಿಗೂ  ಕನ್ನಡದ  ಬಳಕೆಗಳಿಗೂ  ನಡುವೆ  ಒಂದು  ಮುಖ್ಯವಾದ  ವ್ಯತ್ಯಾಸವಿದೆಯೆಂಬುದನ್ನು  ಗಮನಿಸುವುದು  ಅವಶ್ಯ.  ಸಂಸ್ಕೃತದ  ಜೋಡುಪದಗಳಲ್ಲಿ  ಮೊದಲಿದ್ದ  ವಿಭಕ್ತಿ  ಪ್ರತ್ಯಯವೊಂದು  ಬಿದ್ದು  ಹೋಗಿದೆ, ಆದರೆ ಕನ್ನಡದಲ್ಲಿ ಆ ರೀತಿ ವಿಭಕ್ತಿ ಪ್ರತ್ಯಯ ಬಿದ್ದುಹೋಗಿಲ್ಲ.  
ಯಾಕೆಂದರೆ,  ಮೊದಲಿಗೇನೇ  ಕಪ್ಪು  ಹಾವು  ಎಂಬುದರಲ್ಲಿ  ಕಪ್ಪು  ಎಂಬುದರ  ಮುಂದೆ  ವಿಭಕ್ತಿ  ಪ್ರತ್ಯಯ  ಬಂದಿರಲಿಲ್ಲ,  ಮತ್ತು  ಕನ್ನಡದಲ್ಲಿ  ಹಾಗೆ  ಬರಲು  ಸಾಧ್ಯವೂ  ಇಲ್ಲ.  ಈ  ವಿಷಯ  3.2.1ನೇ  ವಿಭಾಗದಲ್ಲಿ  (2ಕ-ಗ)  ವಾಕ್ಯಗಳನ್ನು ಪರಿಶೀಲಿಸುವಾಗ ಸ್ಪಷ್ಟವಾಗಿದೆ.  
ಈ ಕಾರಣಕ್ಕಾಗಿ, ಸಂಸ್ಕೃತದ ಕೃಷ್ಣಸಪ್ರ ಎಂಬುದನ್ನು, ಅದರಲ್ಲಿ ವಿಭಕ್ತಿ  ಪ್ರತ್ಯಯವೊಂದು  ಬಿದ್ದು  ಹೋಗಿರುವುದನ್ನು  ಆಧಾರವಾಗಿ  ಇರಿಸಿ,  ಜೋಡು  ಪದವೆಂದು ಪರಿಗಣಿಸಿದ ಹಾಗೆ ಕನ್ನಡದ ಕಪ್ಪು ಹಾವು ಎಂಬುದನ್ನು ಜೋಡು  ಪದವೆಂದು  ಪರಿಗಣಿಸಲು  ಸಾಧ್ಯವಿಲ್ಲ.  ಕಪ್ಪು  ಹಾವು  ಎಂಬುದರಲ್ಲಿ  ವಿಭಕ್ತಿ  ಪ್ರತ್ಯಯ ಬಿದ್ದು ಹೋಗಿಲ್ಲ; ಯಕೆಂದರೆ, ಅದನ್ನಲ್ಲಿ ಬಳಸಲೇ ಇಲ್ಲ.  
ನಿಜಕ್ಕೂ  ಸಂಸ್ಕೃತದಲ್ಲಿ  ಜೋಡುಪದಗಳಿಗೂ  ಅವಕ್ಕೆ  ಸಮನಾಗಿರುವ  ಪದ  ಕಂತೆಗಳಿಗೂ ನಡುವೆ ಅರ್ಥದ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ; ವಿಭಕ್ತಿ  ಪ್ರತ್ಯಯದ ಲೋಪವೊಂದೇ ಅವುಗಳ ನಡುವೆ ಕಾಣಿಸುವ ವ್ಯತ್ಯಾಸ.  
ಆದರೆ  ಕನ್ನಡದಲ್ಲಿ  ಜೋಡುಪದ  ಮತ್ತು  ಪದಕಂತೆಗಳ  ನಡುವೆ  ಅರ್ಥದ  ಮಟ್ಟಿಗೂ  ಮುಖ್ಯವಾದ  ವ್ಯತ್ಯಾಸಗಳಿದ್ದು,  ಅವನ್ನು  ಬರಿಯ  ವಿಭಕ್ತಿ  ಪ್ರತ್ಯಯದ  ಇರುವಿಕೆ  ಇಲ್ಲವೇ  ಇಲ್ಲದಿರುವಿಕೆಯ  ಆಧಾರದ  ಮೇಲೆ  ಒಂದರಿಂದೊಂದನ್ನು  ಪ್ರತ್ಯೇಕಿಸಲು ಸಾಧ್ಯವಾಗದೆಂಬುದನ್ನು ಮುಂದೆ ನಾಲ್ಕನೇ ಅಧ್ಯಾಯದಲ್ಲಿ ನೋಡ  ಲಿರುವೆವು. 

Eke →

3.2.5 ನಾಮಪದಗಳಾಗಿ ಗುಣಪದಗಳ ಬಳಕೆ

ಸಂಸ್ಕೃತದಲ್ಲಿ ಗುಣಪದಗಳನ್ನು (ಎಂದರೆ ಗುಣಪದದ ಅರ್ಥವಿರುವ ನಾಮಪದ ಗಳನ್ನು) ಬೇರೆ ನಾಮಪದಗಳ ವಿಶೇಷಣಗಳಾಗಿ ಮಾತ್ರವಲ್ಲದೆ ಸ್ವತಂತ್ರವಾದ ನಾಮಪದಗಳಾಗಿಯೂ ಬಳಸಲು ಸಾಧ್ಯವಿದೆ ಮತ್ತು ಹಾಗೆ ಬಳಸಿದಾಗ ಅವು ಎಲ್ಲಾ ರೀತಿಯ ವಿಭಕ್ತಿ ಪ್ರತ್ಯಯಗಳೊಂದಿಗೂ ಬರಬಲ್ಲುವು.
ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಹಾಗೆಯೇ ನಾಮಪದಗಳಾಗಿ ಬಳಸಲು ಸಾಮಾನ್ಯವಾಗಿ ಸಾಧ್ಯವಾಗದು. ಉದಾಹರಣೆಗಾಗಿ ಕನ್ನಡದ ದೊಡ್ಡ,

ಚಿಕ್ಕ, ಹೊಸ, ಹಳೆ ಮೊದಲಾದ ಗುಣಪದಗಳನ್ನು ನಾಮಪದಗಳ ಜಾಗದಲ್ಲಿ ಬಳಸಲು (ಎಂದರೆ ನೇರವಾಗಿ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಹೇಳಲು) ಸಾಧ್ಯವಾಗದು.
ಈ ನಿಯಮಕ್ಕೆ ಕನ್ನಡದಲ್ಲಿ ಕೆಲವು ಅಪವಾದಗಳಿರುವುದು ನಿಜ. ಉದಾ ಹರಣೆಗಾಗಿ, ಮೇಲೆ ಕೊಟ್ಟಿರುವ ಕಪ್ಪು ಗುಣಪದ ನಾಮಪದವಾಗಿಯೂ ಬಳಕೆ ಯಾಗಬಲ್ಲುದು (ಅದಕ್ಕೆ ಕಪ್ಪು ಹಾಕಿದ್ದು ಜಾಸ್ತಿಯಾಗಿದೆ) ಮತ್ತು ಗುಣಪದ ವಾಗಿಯೂ ಬಳಕೆಯಾಗಬಲ್ಲುದು (ಅದು ಕಪ್ಪು ಹಕ್ಕಿ). ಹೀಗಿದ್ದರೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬರಲಾರದ ಗುಣಪದಗಳು ಹಲವು ಕನ್ನಡದಲ್ಲಿವೆಯಾದ ಕಾರಣ ಅವುಗಳಿಗಾಗಿ ಬೇರೊಂದು ಪದವಗ್ರ ವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಕನ್ನಡದಲ್ಲಿದೆ. ಆದರೆ ಇಂತಹ ಅವಶ್ಯಕತೆ ಸಂಸ್ಕೃತದಲ್ಲಿಲ್ಲ. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.

(6ಕ) ಅಹಂ ಫಲಂ ಖಾದಾಮಿ

‘ನಾನು ಹಣ್ಣನ್ನು ತಿನ್ನುತ್ತೇನೆ’ (6ಖ) ಅಹಂ ಶುಕ್ಲಂ ಖಾದಾಮಿ

‘ನಾನು ಬಿಳಿಯದನ್ನು ತಿನ್ನುತ್ತೇನೆ’ (6ಗ) ಅಹಂ ಶುಕ್ಲಾಯ ಫಲಂ ದಾಸ್ಯಾಮಿ

‘ನಾನು ಬಿಳಿಯವನಿಗೆ ಹಣ್ಣು ಕೊಡುತ್ತೇನೆ’

(6ಖ-ಗ)  ವಾಕ್ಯಗಳಲ್ಲಿ  ಸಂಸ್ಕೃತದ  ಶುಕ್ಲ  ‘ಬಿಳಿ’  ಗುಣಪದವನ್ನು  (6ಕ)  ವಾಕ್ಯದಲ್ಲಿ  ಬಂದಿರುವ  ಫಲ  ‘ಹಣ್ಣು’  ನಾಮಪದದ  ಹಾಗೆಯೇ  ಬಳಸಲಾಗಿದೆ.  ಅದು (6ಖ) ವಾಕ್ಯದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ಮತ್ತು (6ಗ)  ವಾಕ್ಯದಲ್ಲಿ ಚತುರ್ಥೀ ವಿಭಕ್ತಿ ಪ್ರತ್ಯಯದೊಂದಿಗೆ ಸ್ವತಂತ್ರವಾಗಿ, ಎಂದರೆ ಫಲ  ಎಂಬುದರ ಆಧಾರವಿಲ್ಲದೆ, ಬಳಕೆಯಾಗಿದೆ.  
ಆದರೆ  ಈ  (6ಖ-ಗ)  ವಾಕ್ಯಗಳ  ಕೆಳಗೆ  ಕೊಟ್ಟಿರುವ  ಕನ್ನಡ  ವಾಕ್ಯಗಳಲ್ಲಿ  ಬಿಳಿ  ಗುಣಪದಕ್ಕೆ  ಆ  ರೀತಿ  ವಿಭಕ್ತಿ  ಪ್ರತ್ಯಯಗಳನ್ನು  ನೇರವಾಗಿ  ಸೇರಿಸಲು  ಸಾಧ್ಯವಾಗಿಲ್ಲ.  ಮೊದಲಿಗೆ  ಅವಕ್ಕೆ  ಸವ್ರನಾಮ  ಪ್ರತ್ಯಯಗಳನ್ನು  ಇಲ್ಲವೇ  ಸವ್ರನಾಮಗಳನ್ನು  (ದು  ಇಲ್ಲವೇ  ಅವನು  ಎಂಬುದನ್ನು)  ಸೇರಿಸಿ  ಅನಂತರ  ವಿಭಕ್ತಿ  ಪ್ರತ್ಯಯಗಳನ್ನು  ಸೇರಿಸಬೇಕಾಗಿದೆ.  ಕನ್ನಡದ  ಗುಣಪದಗಳು  ನಾಮಪದ  ಗಳಿಗಿಂತ ಭಿನ್ನವಾದವುಗಳು ಎಂಬ ವಿಷಯ ಇದರಿಂದಲೂ ಸ್ಪಷ್ಟವಾಗುತ್ತದೆ. 

ಕನ್ನಡದ  ಗುಣಪದಗಳಲ್ಲಿ  ಕೆಲವನ್ನು  ಉದ್ದ-ಗಿಡ್ಡ,  ಅಗಲ-ಸಪುರ,  ಎತ್ತರ-ತಗ್ಗು,  ದಪ್ಪ-ತೆಳು,  ದೊಡ್ಡ-ಚಿಕ್ಕ,  ಬಿಸಿ-ತಂಪು,  ಭಾರ-ಹಗುರ,  ಎಂಬಂತಹ  ಜೋಡಿಗಳಾಗಿ  ಸೇರಿಸಿ  ಹೇಳಲು  ಸಾಧ್ಯವಿದೆ.  ಈ  ಜೋಡಿಗಳಲ್ಲಿ  ಮೊದಲನೆಯದನ್ನು  ಮಾತ್ರ  ನಾಮಪದವಾಗಿ  ಬಳಸಲು  ಸಾಧ್ಯವಿದ್ದು,  ಅದು  ಆ  ಜೋಡಿಯ ಒಟ್ಟು ಅರ್ಥವನ್ನು ಸೂಚಿಸಬಲ್ಲುದು.  

(7ಕ) ಈ ಗೋಡೆಯ ಎತ್ತರ ಆರು ಅಡಿ (7ಖ) *ಈ ಗೋಡೆಯ ತಗ್ಗು ಎರಡು ಅಡಿ (8ಕ) ಮೇಲೆ ಇರುವ ಹಗ್ಗದ ಉದ್ದ ಆರು ಅಡಿ (8ಖ) *ಮೇಲೆ ಇರುವ ಹಗ್ಗದ ಗಿಡ್ಡ ಎರಡು ಅಡಿ

(7ಕ)  ವಾಕ್ಯದಲ್ಲಿ  ಎತ್ತರ  ಗುಣಪದ  ನಾಮಪದವಾಗಿ  ಬಳಕೆಯಾಗಿದೆ.  ಗೋಡೆ ತಗ್ಗಾಗಿದ್ದರೂ ಎತ್ತರವಾಗಿದ್ದರೂ ಅದರ ಅಳತೆಯನ್ನು ತಿಳಿಸಲು ಎತ್ತರ  ಪದವಿರುವ (7ಕ) ವಾಕ್ಯವನ್ನೇ ಬಳಸಲು ಸಾಧ್ಯ ಎಂಬುದನ್ನು ಗಮನಿಸಬಹುದು.  
ಇದಕ್ಕೆ  ಬದಲು  ಗಿಡ್ಡ  ಪದವನ್ನು  ಬಳಸಿರುವ  (7ಖ)  ವಾಕ್ಯ  ಸರಿಯಲ್ಲ  ಎಂಬುದನ್ನೂ ಗಮನಿಸಬಹುದು. (8ಕ-ಖ) ವಾಕ್ಯಗಳಲ್ಲೂ ಹೀಗೆಯೇ. 
ಇದಲ್ಲದೆ  ಕನ್ನಡದಲ್ಲಿ  ನಾಮಪದಗಳೊದಿಗೆ  ‘ಮೊದಲಾದ’  ಎಂಬ  ಅರ್ಥ  ವನ್ನು ಕೊಡುವುದಕ್ಕಾಗಿ ಅವುಗಳ ಪ್ರತಿಧ್ವನಿಯ ಹಾಗೆ ಕಾಣಿಸುವ ಪದವೊಂದನ್ನು  ಸೇರಿಸಿ  ಹೇಳಲು  ಸಾಧ್ಯವಿದೆ.  ಆದರೆ,  ಗುಣಪದಗಳೊಂದಿಗೆ  ಅಂತಹ  ಪದವನ್ನು  ಸೇರಿಸಿ  ಹೇಳಲು  ಸಾಧ್ಯವಾಗದು.  ಸಾಮಾನ್ಯವಾಗಿ  ಈ  ಪ್ರತಿಧ್ವನಿಸುವ  ಪದ  ಕನ್ನಡದಲ್ಲಿ ಗಕಾರದಿಂದ ತೊಡಗುತ್ತದೆ. 

(9ಕ) ನಿಮ್ಮ ದೊಡ್ಡಮ್ಮ ಗಿಡ್ಡಮ್ಮ ಎಲ್ಲ ಬಂದಿದ್ದಾರೆ (9ಖ) ಅವರು ಮನೆ ಗಿನೆ ಎಲ್ಲ ಕಳೆದುಕೊಂಡಿದ್ದಾರೆ (9ಗ) *ಅವನು ತನ್ನ ಚಿಕ್ಕ ಗಿಕ್ಕ ಮನೆಯನ್ನು ಮಾರಿದ್ದಾನೆ

(9ಕ)  ವಾಕ್ಯದಲ್ಲಿ  ದೊಡ್ಡಮ್ಮ  ನಾಮಪದದೊಂದಿಗೆ  ಅದರ  ಪ್ರತಿಧ್ವನಿಯ  ಹಾಗೆ ಕಾಣಿಸುವ ಗಿಡ್ಡಮ್ಮ ಎಂಬುದನ್ನು ಸೇರಿಸಿ ಹೇಳಲು ಸಾಧ್ಯವಾಗಿದೆ. ಇದೇ  ರೀತಿಯಲ್ಲಿ  (9ಖ)  ವಾಕ್ಯದಲ್ಲಿ  ಮನೆ  ನಾಮಪದದೊಂದಿಗೆ  ಗಿನೆ  ಎಂಬುದನ್ನು  ಸೇರಿಸಿ ಹೇಳಲು ಸಾಧ್ಯವಾಗಿದೆ.  
ಆದರೆ  (9ಗ)ದಲ್ಲಿ  ಚಿಕ್ಕ  ಗುಣಪದದೊಂದಿಗೆ  ಅದರ  ಪ್ರತಿಧ್ವನಿಯ  ಹಾಗೆ  ಕಾಣಿಸುವ  ಗಿಕ್ಕ  ಎಂಬುದನ್ನು  ಸೇರಿಸಿ  ಹೇಳಲು  ಪ್ರಯತ್ನಿಸಿದುದರಿಂದಾಗಿ  ಆ  ವಾಕ್ಯ ಸರಿಯಿಲ್ಲವೆಂದು ಅನಿಸುತ್ತದೆ. 

ನಾಮಪದವೊಂದರ  ಅರ್ಥಕ್ಕೆ  ಒಂದು  ನಿಶ್ಚಿತವಾದ  ಗುಣಧರ್ಮವನ್ನು  ಸೇರಿಸುವುದರ  ಮೂಲಕ  ಅದರ  ವ್ಯಾಪ್ತಿಯನ್ನು  ಕಡಿಮೆ  ಮಾಡುವುದೇ  ಗುಣ  ಪದಗಳ  ಮುಖ್ಯ  ಕೆಲಸ.  ‘ಮೊದಲಾದ’  ಎಂಬ  ಅರ್ಥವನ್ನು  ಕೊಡುವ  ಪ್ರತಿ  ಧ್ವನಿಸುವ  ಪದಗಳನ್ನು  ಅವುಗಳೊಂದಿಗೆ  ಸೇರಿಸಿ  ಹೇಳಿದಲ್ಲಿ  ಅವು  ಸೂಚಿಸುವ  ಅರ್ಥ ಅನಿಶ್ಚಿತವಾಗಿಬಿಡುತ್ತದೆ ಮತ್ತು ಇದರಿಂದಾಗಿ ಅವುಗಳ  ಮುಖ್ಯ ಕೆಲಸಕ್ಕೆ  ಅಡ್ಡಿಯಾಗುತ್ತದೆ.  
ಕನ್ನಡದಲ್ಲಿ  ಪ್ರತಿಧ್ವನಿಸುವ  ಪದಗಳನ್ನು  ಗುಣಪದಗಳೊಂದಿಗೆ  ಬಳಸಲು  ಸಾಧ್ಯವಾಗದಿರುವುದಕ್ಕೆ ಅವು ಸೂಚಿಸುವ ಈ ಅನಿಶ್ಚಿತತೆಯೇ ಮುಖ್ಯ ಕಾರಣ.  
ನಾಮಪದಗಳು  ಮತ್ತು  ಗುಣಪದಗಳು  ಕನ್ನಡದಲ್ಲಿ  ಬೇರೆ  ಬೇರೆ  ವಗ್ರ  ಗಳಿಗೆ  ಸೇರುತ್ತವೆಯುಂಬುದಕ್ಕೆ  ಮೇಲಿನ  ಎರಡು  ವ್ಯತ್ಯಾಸಗಳೂ  ಆಧಾರವಾಗ  ಬಲ್ಲುವು.  

Eke →

3.2.6 ಗುಣಪದಗಳ ಜಾಗ

ಸಂಸ್ಕೃತದಲ್ಲಿ ಗುಣಪದಗಳನ್ನು ಅವುಗಳ ವಿಶೇಷ್ಯದ ಮೊದಲೂ ಹೇಳಬಹುದು, ಅನಂತರವೂ ಹೇಳಬಹುದು. ಆದರೆ ಕನ್ನಡದಲ್ಲಿ ಅವನ್ನು ವಿಶೇಷ್ಯದ ಮೊದಲೇ ಹೇಳಬೇಕೆಂಬ ನಿಯಮವಿದೆ. ಅವನ್ನು ವಿಶೇಷ್ಯದ ಅನಂತರ ಹೇಳಿದಲ್ಲಿ ಆ ರಚನೆ ಒಂದು ನಾಮಪದಕಂತೆಯಾಗಿ ಉಳಿಯುವ ಬದಲು ವಾಕ್ಯವಾದೀತು.
ಉದಾಹರಣೆಗಾಗಿ ಸಂಸ್ಕೃತದಲ್ಲಿ ಕೃಷ್ಣಃ ಸಪ್ರಃ ಎಂದರೂ ಸಪ್ರಃ ಕೃಷ್ಣಃ ಎಂದರೂ ಅರ್ಥ ಒಂದೇ. ಅವೆರಡೂ ಪದಕಂತೆಗಳಾಗಿಯೇ ಉಳಿಯುತ್ತವೆ. ಆದರೆ ಕನ್ನಡದಲ್ಲಿ ಕಪ್ಪು ಹಾವು ಎಂಬುದೊಂದು ಪದಕಂತೆ, ಮತ್ತು ಹಾವು ಕಪ್ಪು ಎಂಬುದೊಂದು ವಾಕ್ಯ. ಅವುಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿದೆ. ಮೇಲೆ (3.2.3)ರಲ್ಲಿ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ನಿಜಕ್ಕೂ ವಿಶೇಷಣ ಮತ್ತು ವಿಶೇಷ್ಯಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂಬುದು ಈ ಉದಾಹರಣೆಯಿಂದಲೂ ಸ್ಪಷ್ಟವಾಗುತ್ತದೆ. ಕೃಷ್ಣಃ ಸಪ್ರಃ ಎಂಬ ಪದಕಂತೆಯಲ್ಲಿ ಬರುವ ಎರಡು ಪದಗಳಲ್ಲಿ ಯಾವುದನ್ನು ಬೇಕಿದ್ದರೂ ಸಂಸ್ಕೃತದಲ್ಲಿ ವಿಶೇಷಣವೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಹಾಗಿಲ್ಲ. ಕಪ್ಪುಹಾವು ಎಂಬ ಪದಕಂತೆಯಲ್ಲಿ ಕಪ್ಪು ಎಂಬುದು ಮಾತ್ರವೇ ವಿಶೇಷಣವಾಗಬಲ್ಲುದಲ್ಲದೆ ಹಾವು ಎಂಬುದು ವಿಶೇಷಣವಾಗಲಾರದು. ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಬಳಸಿ ಒಂದು ವಾಕ್ಯವನ್ನು ರಚಿಸಲು ಸಾಧ್ಯವಿದೆ. ಕನ್ನಡದಲ್ಲೂ ಇದು ಸಾಧ್ಯ. ಇಂತಹ ವಾಕ್ಯಗಳ ಮೂಲಕ ಆ ನಾಮಪದಗಳು ಸೂಚಿಸುವ ವ್ಯಕ್ತಿ ಇಲ್ಲವೇ ವಸ್ತುಗಳೆರಡೂ ಒಂದೇ ಎಂಬ ಅರ್ಥವನ್ನು ಈ ಎರಡು ಭಾಷೆಗಳಲ್ಲೂ ಸೂಚಿಸಬಹುದು.

ಆದರೆ,  ಸಂಸ್ಕೃತದಲ್ಲಿ  ಇಂತಹ  ವಾಕ್ಯಗಳನ್ನು  ನಾಮಪದಗಳ  ಬದಲು  ಗುಣಪದವನ್ನು  ಬಳಸಿಯೂ  ರಚಿಸಲು  ಸಾಧ್ಯವಿದೆ,  ಮತ್ತು  ಹೀಗೆ  ರಚಿಸಿದ  ವಾಕ್ಯಗಳು  ರಚಿಸಿದ  ವಾಕ್ಯಗಳಿಗಿಂತ  ಯಾವ  ರೀತಿಯಲ್ಲಿಯೂ ಭಿನ್ನವಾಗಿರುವುದಿಲ್ಲ. 

ನಾಮಪದಗಳನ್ನು ಬಳಸಿ

(10ಕ) ರಾಮಃ ಅಧ್ಯಾಪಕಃ

‘ರಾಮ ಅಧ್ಯಾಪಕ’

(10ಖ) ರಾಮಃ ಕೃಷ್ಣಃ ‘ಅವನು ಕಪ್ಪು’

ರಾಮ  ನಾಮಪದದೊಂದಿಗೆ  (10ಕ)ದಲ್ಲಿ  ಅಧ್ಯಾಪಕ  ಎಂಬ  ಇನ್ನೊಂದು  ನಾಮಪದದ  ಬಳಕೆಯಾಗಿದೆ  ಆದರೆ  (10ಖ)ದಲ್ಲಿ  ಅದರೊಂದಿಗೆ  ಕೃಷ್ಣ  ಗುಣಪದದ  (ಗುಣಪದದ  ಅರ್ಥವಿರುವ  ನಾಮಪದದ)  ಬಳಕೆಯಾಗಿದೆ.  ಸಂಸ್ಕ್ರುತದಲ್ಲಿ  ಈ  ಎರಡು  ರೀತಿಯ  ವಾಕ್ಯಗಳ  ನಡುವೆ  ಯಾವ  ವ್ಯತ್ಯಾಸವೂ 
ಆದರೆ ಕನ್ನಡದಲ್ಲಿ ಈ ರೀತಿ ಗುಣಪದಗಳನ್ನು ಬಳಸಿ ರಚಿಸಿದ ವಾಕ್ಯಗಳು  ನಾಮಪದಗಳನ್ನು  ಬಳಸಿ  ರಚಿಸಿದ  ವಾಕ್ಯಗಳಿಗಿಂತ  ಭಿನ್ನವಾಗಿರುತ್ತವೆ.  ಉದಾ  ಹರಣೆಗಾಗಿ  ಕೆಳಗೆ  ಕೊಟ್ಟಿರುವ  ಮೂರು  ವಾಕ್ಯಗಳನ್ನು  ಹೋಲಿಸಿ  ನೋಡ  ಬಹುದು. 

(11ಕ) ಅಲ್ಲಿರುವ ಹೂ ಗುಲಾಬಿ (11ಖ) ಅಲ್ಲಿರುವ ಹೂ ಬಿಳಿದು (11ಗ) ಅಲ್ಲಿರುವ ಹೂ ಬಿಳಿ

(11ಕ) ವಾಕ್ಯದಲ್ಲಿ ಅಲ್ಲಿರುವ ಹೂ ನಾಮಪದಕಂತೆಯೊಂದಿಗೆ ಗುಲಾಬಿ  ನಾಮಪದ  ಬಂದಿದೆ  ಮತ್ತು  (11ಖ)ದಲ್ಲಿ  ಅದೇ  ನಾಮಪದಕಂತೆಯೊಂದಿಗೆ  ಬಿಳಿ ಗುಣಪದದ ಬಿಳಿದು ನಾಮರೂಪ ಬಂದಿದೆ.  
ಆದರೆ  (11ಗ)  ವಾಕ್ಯದಲ್ಲಿ  ಅದೇ  ನಾಮಪದಕಂತೆಯೊಂದಿಗೆ  ಬಿಳಿ  ಗುಣ  ಪದ ಯಾವ ಪ್ರತ್ಯಯವೂ ಸೇರದೆ ನೇರವಾಗಿ ಗುಣಪದ ರೂಪದಲ್ಲೇ ಬಂದಿದೆ. 
ಈ ರೀತಿ ನಾಮಪದಕಂತೆಯೊಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ  ಗುಣಪದದ  ನಾಮರೂಪವನ್ನು  ಬಳಸುವುದಕ್ಕೂ  ಗುಣಪದವನ್ನೇ  ನೇರವಾಗಿ  ಬಳಸುವುದಕ್ಕೂ ನಡುವೆ ಕನ್ನಡದಲ್ಲಿ ವ್ಯತ್ಯಾಸವಿದೆ. ಈ ಎರಡು ರೀತಿಯ ವಾಕ್ಯ 

ಗಳನ್ನು ಅಲ್ಲಗಳೆಯಬೇಕಿದ್ದಲ್ಲಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸ ಬೇಕಾಗುತ್ತದೆ ಎಂಬುದರಿಂದ ಈ ವಿಷಯ ಸ್ಪಷ್ಟವಾಗುತ್ತದೆ.
ನಾಮಪದಕಂತೆಯೊಂದಿಗೆ ಇನ್ನೊಂದು ನಾಮಪದವನ್ನು ಇಲ್ಲವೇ ಗುಣ ಪದದ ನಾಮರೂಪವನ್ನು ಬಳಸಿ ರಚಿಸಿದ (11ಕ) ಮತ್ತು (11ಖ) ವಾಕ್ಯ ಗಳನ್ನು ಅಲ್ಲಗಳೆಯಬೇಕಿದ್ದಲ್ಲಿ ಅಲ್ಲ ಪದವನ್ನು ಬಳಸಬೇಕಾಗುತ್ತದೆ, ಮತ್ತು ನಾಮಪದಕಂತೆಯೊಂದಿಗೆ ನೇರವಾಗಿ ಒಂದು ಗುಣಪದವನ್ನು ಬಳಸಿ ರಚಿಸಿದ (11ಗ) ವಾಕ್ಯವನ್ನು ಅಲ್ಲಗಳೆಯಬೇಕಿದ್ದಲ್ಲಿ ಇಲ್ಲ ಪದವನ್ನು ಬಳಸಬೇಕಾಗು

(12ಕ) ಅಲ್ಲಿರುವ ಹೂ ಗುಲಾಬಿ ಅಲ್ಲ (12ಖ) ಅಲ್ಲಿರುವ ಹೂ ಬಿಳಿದು ಅಲ್ಲ (12ಗ) ಅಲ್ಲಿರುವ ಹೂ ಬಿಳಿ ಇಲ್ಲ

ಈ ವಿಷಯದಲ್ಲಿ ಗುಣಪದವನ್ನು ಬಳಸಿರುವ ಮೂರನೆಯ (11ಗ) ವಾಕ್ಯ  ಕ್ರಿಯಾಪದಗಳನ್ನು  ಬಳಸಿರುವ  ವಾಕ್ಯಗಳ  ಹಾಗೆಯೇ  ಇದೆ;  ಯಾಕೆಂದರೆ,  ನಾಮಪದ(ಕಂತೆ)ಯೊಂದಿಗೆ  ಒಂದು  ಕ್ರಿಯಾಪದವನ್ನು  ಬಳಸಿರುವ  ವಾಕ್ಯವನ್ನು  ಅಲ್ಲಗಳೆಯಬೇಕಿದ್ದರೂ ಕನ್ನಡದಲ್ಲಿ ಇಲ್ಲ ಪದವನ್ನೇ ಬಳಸಬೇಕಾಗುತ್ತದೆ.  

(13ಕ) ಅವನು ಮನೆಗೆ ಹೋದ (13ಖ) ಅವನು ಮನೆಗೆ ಹೋಗಲಿಲ್ಲ

ಮೇಲಿನ ವಿಷಯ ನಾಮಪದಗಳಿಗೂ ಗುಣಪದಗಳಿಗೂ ನಡುವೆ ಕನ್ನಡದಲ್ಲಿ  ಇರುವ,  ಮತ್ತು  ಸಂಸ್ಕೃತದಲ್ಲಿ  ಇಲ್ಲದಿರುವ  ಇನ್ನೊಂದು  ವ್ಯತ್ಯಾಸವನ್ನೂ  ತೋರಿಸಿಕೊಡುತ್ತದೆ. 
ಅದೇನೆಂದರೆ, ಸಂಸ್ಕೃತದಲ್ಲಿ ಎಲ್ಲಾ ರೀತಿಯ ವಾಕ್ಯಗಳನ್ನೂ ನ ಪದವನ್ನು  ಬಳಸುವುದರ ಮೂಲಕ ಅಲ್ಲಗಳೆಯಲು ಸಾಧ್ಯವಿದೆ. ಕನ್ನಡದ ಹಾಗೆ ನಾಮಪದ,  ಕ್ರಿಯಾಪದ ಮತ್ತು ಗುಣಪದಗಳ ನಡುವೆ ಈ ವಿಷಯದಲ್ಲಿ ವ್ಯತ್ಯಾಸ ಇಲ್ಲ. 

(14ಕ) ಮಾಂ ನ ಕಶ್ಚಿದ್ ಅಪಶ್ಯತ್ ‘ನನ್ನನ್ನು ಯಾರೂ ನೋಡಲಿಲ್ಲ’

(14ಖ) ಸಃ ನ ಅಧ್ಯಾಪಕಃ

‘ಅವನು ಅಧ್ಯಾಪಕನಲ್ಲ’

(14ಗ) ಸಃ ನ ಕೃಷ್ಣಃ

‘ಅವನು ಕಪ್ಪಲ್ಲ/ ಅವನು ಕಪ್ಪಿಲ್ಲ’

ಮೇಲಿನ ಮೂರು ವಾಕ್ಯಗಳಲ್ಲೂ ನಿಷೇಧಾರ್ಥವನ್ನು ಸೂಚಿಸಲು ಸಂಸ್ಕೃತ  ದಲ್ಲಿ  ನ  ಎಂಬ  ಒಂದೇ  ಒಂದು  ಪದದ  ಬಳಕೆಯಾಗಿದೆ.  ಆದರೆ  ಕನ್ನಡದ  ಮೊದಲನೆಯ  (14ಕ)  ವಾಕ್ಯದಲ್ಲಿ  ಇಲ್ಲ  ಪದ  ಬಳಕೆಯಾಗಿದೆ  ಮತ್ತು  ಎರಡನೆಯ (14ಖ) ವಾಕ್ಯದಲ್ಲಿ ಅಲ್ಲ ಪದ ಬಳಕೆಯಾಗಿದೆ.  
ಮೂರನೆಯ  (14ಗ)  ವಾಕ್ಯದಲ್ಲಿ  ಇಲ್ಲ  ಮತ್ತು  ಅಲ್ಲ  ಎಂಬವುಗಳಲ್ಲಿ  ಯಾವುದನ್ನು  ಬೇಕಿದ್ದರೂ  ಬಳಸಲು  ಸಾಧ್ಯವಿದ್ದು  ಅವು  ಬೇರೆ  ಬೇರೆ  ಅರ್ಥಗಳನ್ನು ಕೊಡುತ್ತವೆ.  
ಸಂಸ್ಕೃತದಲ್ಲಿ ನಾಮಪದ-ಗುಣಪದ ವ್ಯತ್ಯಾಸವಿಲ್ಲವಾದ ಕಾರಣ, ಇಂತಹ  ಸಾಧ್ಯತೆಗಳಿಲ್ಲ. 

Eke →

3.2.7 ತಾರತಮ್ಯ ಸೂಚನೆ

ತಾರತಮ್ಯವನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ತರ ಮತ್ತು ತಮ ಪ್ರತ್ಯಯ ಗಳನ್ನಾಗಲೀ ಇಲ್ಲವೇ ಈಯ ಮತ್ತು ಇಷ್ಠ ಪ್ರತ್ಯಯಗಳನ್ನಾಗಲೀ ಬಳಸುವ ಕ್ರಮವಿದೆ. ಇವನ್ನು ಗುಣಪದಗಳೊಂದಿಗೂ (ಗುಣಧರ್ಮವನ್ನು ಸೂಚಿಸುವ ಪದಗಳೊಂದಿಗೂ) ಬಳಸಬಹುದು ನಾಮಪದಗಳೊಂದಿಗೂ ಬಳಸಬಹುದು.

(15ಕ) ಪ್ರಿಯಃ
(15ಖ) ಸ್ರಕ್

ಪ್ರೇಯಃ
ಸ್ರಜೀಯಃ

ಪ್ರೇಷ್ಠಃ ಸ್ರಜಿಷ್ಠಃ

ಈಯ ಮತ್ತು ಇಷ್ಠ ಪ್ರತ್ಯಯಗಳನ್ನು (15ಕ)ದಲ್ಲಿ ಪ್ರಿಯ ಗುಣಪದ ದೊಂದಿಗೆ ಬಳಸಲಾಗಿದೆ ಮತ್ತು (15ಖ)ದಲ್ಲಿ ಸ್ರಕ್ ‘ಮಾಲೆ’ ನಾಮಪದ ದೊಂದಿಗೆ ಬಳಸಲಾಗಿದೆ. ಸ್ರಜೀಯ ಎಂದರೆ ಜಾಸ್ತಿ ಮಾಲೆಗಳನ್ನು ಹಾಕಿರುವವ ನೆಂದು ಮತ್ತು ಸ್ರಜಿಷ್ಠ ಎಂದರೆ ಎಲ್ಲರಿಗಿಂತಲೂ ಜಾಸ್ತಿ ಮಾಲೆಗಳನ್ನು ಹಾಕಿರು ವವನೆಂದು ಅರ್ಥ ಬರುತ್ತದೆ. ಇಂತಹದೇ ಬಳಕೆಯನ್ನು ಕೆಳಗಿನ ವಾಕ್ಯ ಗಳಲ್ಲಿಯೂ ಕಾಣಬಹುದು.

(16ಕ) ಗೋವಿಂದಾದ್ ರಾಮೋ ವಿದ್ವತ್ತರಃ

‘ಗೋವಿಂದನಿಗಿಂತ ರಾಮ ಜಾಸ್ತಿ ವಿದ್ವಾಂಸ’ (16ಖ) ತಂ ಅಶ್ವತಮಂ ವಿಜ್ಞಾಯ ಅಧಿರೂಢಃ

‘ಅದು ಕುದುರೆಗಳಲ್ಲೆಲ್ಲ ಅತ್ಯಂತ ಶ್ರೇಷ್ಠ ಎಂದು ತಿಳಿದು ಹತ್ತಿದ’

ತಮ  ಪ್ರತ್ಯಯ  (16ಕ)  ವಾಕ್ಯದಲ್ಲಿ  ವಿದ್ವತ್  ಗುಣಪದದೊಂದಿಗೂ  (16ಖ)  ವಾಕ್ಯದಲ್ಲಿ  ಅಶ್ವ  ‘ಕುದುರೆ’  ನಾಮಪದದೊಂದಿಗೂ  ಬಂದಿರುವುದನ್ನು  ಗಮನಿಸಬಹುದು. 
ಕನ್ನಡದಲ್ಲಿ  ಈ  ರೀತಿ  ತರ-ತಮಾರ್ಥಗಳನ್ನು  ಕೊಡುವ  ಪ್ರತ್ಯಯಗಳಿಲ್ಲ  ವಾದರೂ,  ಬಹಳ,  ಬಾರೀ,  ಒಳ್ಳೆ,  ಮೊದಲಾದ  ಕೆಲವು  ವಿಶೇಷಣಗಳನ್ನು  ಅಂತಹದೇ ಅರ್ಥ ಬರುವ ಹಾಗೆ ಬಳಸಲು ಸಾಧ್ಯವಿದೆ. ಆದರೆ ಈ ಪದಗಳನ್ನು  ಗುಣಪದಗಳೊಂದಿಗೆ  ಮಾತ್ರ  ಬಳಸಲು  ನಾಮಪದ  ಗಳೊಂದಿಗೆ ಬಳಸಲು ಸಾಧ್ಯವಾಗದು.  
ಕನ್ನಡದ  ಕೆಲವು  ಪ್ರಭೇದಗಳಲ್ಲಿ  ಆ  ರೀತಿ  ಬಳಸಲು  ಸಾಧ್ಯವಿದ್ದರೂ,  ಅಂತಹ ನಾಮಪದಗಳ ಮೂಲಕ ಗುಣಪದವೊಂದರ ಅರ್ಥ ಧ್ವನಿತವಾಗುತ್ತದೆ.  ತುಲನಾತ್ಮಕ ವಾಕ್ಯಗಳಲ್ಲೂ ಹೀಗೆಯೇ. 

ಸಾಧ್ಯವಿದೆಯಲ್ಲದೆ

(17ಕ) ಅವನು ನನಗಿಂತ ದೊಡ್ಡ (17ಖ) ಅವನು ನನಗಿಂತ ತಮ್ಮ

ಕರಾವಳಿಯ  ಕನ್ನಡದಲ್ಲಿ  ಬಳಕೆಯಾಗುವ  (17ಖ)  ವಾಕ್ಯದಲ್ಲಿ  ತಮ್ಮ  ನಾಮಪದವನ್ನು  ಹೋಲಿಕೆಯ  ಅರ್ಥದಲ್ಲಿ  ಬಳಸಲಾಗಿದೆಯಾದರೂ  ಆ  ವಾಕ್ಯ  ದಲ್ಲಿ ಅದಕ್ಕೆ ‘ಚಿಕ್ಕವನು’ ಎಂಬುದಾಗಿ ಒಂದು ಗುಣಪದದ ಅರ್ಥವಿದೆ.  
ಕನ್ನಡದಲ್ಲಿ  ಗುಣಪದಗಳು  ಯಾವುದಾದರೂ  ಒಂದು  ಗುಣಧರ್ಮವನ್ನು  ಮಾತ್ರ ಸೂಚಿಸುತ್ತವೆ. ಆದರೆ ನಾಮಪದಗಳು ಇದಕ್ಕೆ ವಿರುದ್ಧವಾಗಿ ಹಲವಾರು  ಗುಣಧರ್ಮಗಳನ್ನು  ಸೂಚಿಸುತ್ತವೆ.  ಬಹಳ,  ಒಳ್ಳೆ  ಮೊದಲಾದ  ತರ-ತಮಾ  ರ್ಥಗಳನ್ನು ಕೊಡುವ ವಿಶೇಷಣಗಳನ್ನು ಬಳಸಬೇಕಿದ್ದಲ್ಲಿ ಅವುಗಳ ವಿಶೇಷ್ಯವಾಗಿ  ಬರುವ  ಪದ  ಒಂದಕ್ಕಿಂತ  ಜಾಸ್ತಿ  ಗುಣಧರ್ಮಗಳನ್ನು  ಸೂಚಿಸುತ್ತಿರಬಾರದೆಂಬ  ನಿಯಮ  ಕನ್ನಡದಲ್ಲಿದೆ.  ಹಾಗಾಗಿ,  ಕನ್ನಡದಲ್ಲಿ  ಅವನ್ನು  ಗುಣಪದಗಳೊಂದಿಗೆ  ಮಾತ್ರ ಬಳಸಲು ಸಾಧ್ಯವಾಗುತ್ತದೆ. 
ಸಂಸ್ಕೃತದಲ್ಲಿ  ನಾಮಪದ  ಮತ್ತು  ಗುಣಪದಗಳೆರಡೂ  ಒಂದೇ  ಪದವಗ್ರ  ದಲ್ಲಿ  ಬರುವುವಾದ  ಕಾರಣ,  ತರ-ತಮ  ಪ್ರತ್ಯಯಗಳನ್ನು  ಬಳಸುವ  ವಿಷಯ  ದಲ್ಲಿ ಕನ್ನಡದಲ್ಲಿರುವಂತಹ ನಿಬ್ರಂಧ ಆ ಭಾಷೆಯಲ್ಲಿಲ್ಲ. 

Eke →

3.2.8 ಕೃದಂತಗಳ ಬಳಕೆ

ಕನ್ನಡದಲ್ಲಿ ತಯಾರಿಸಬಹುದಾದ ಕ್ರಿಯಾಪದಗಳ ಕೃದಂತ ರೂಪಗಳೆಲ್ಲ ನಾಮ ಪದಗಳ ವಿಶೇಷಣಗಳಾಗಿ ಮಾತ್ರವೇ ಬರಬಲ್ಲುವು. ಉದಾಹರಣೆಗಾಗಿ, ಮಾಡು ಕ್ರಿಯಾಪದದ ಮಾಡಿದ, ಮಾಡುವ, ಮತ್ತು ಮಾಡದ ಎಂಬ ರೂಪಗಳು

ಮಾಡಿದ ಕೆಲಸ, ಮಾಡುವ ಕೆಲಸ, ಮಾಡದ ಕೆಲಸ ಎಂಬಂತಹ ಪದಕಂತೆ ಗಳಲ್ಲಿ ಮಾತ್ರ ಬರಬಲ್ಲುವು.
ಆದರೆ ಸಂಸ್ಕೃತದಲ್ಲಿ ತಯಾರಿಸಬಹುದಾದ ಕೃದಂತ ರೂಪಗಳೆಲ್ಲ ನಾಮ ಪದಗಳಾಗಿದ್ದು ಅವು ಸ್ವತಂತ್ರವಾಗಿಯೂ ಬರಬಲ್ಲುವು ಮತ್ತು ಬೇರೆ ನಾಮಪದ ಗಳ ವಿಶೇಷಣಗಳಾಗಿಯೂ ಬರಬಲ್ಲುವು (18ಕ-ಖ ಮತ್ತು 19ಕ-ಖ ನೋಡಿ).
ಇದಲ್ಲದೆ ಕೃದಂತಗಳು ಈ ರೀತಿ ನಾಮಪದಗಳ ವಿಶೇಷಣಗಳಾಗಿ ಬರುವಾಗ ಅವುಗಳೊಂದಿಗೆ ಆ ನಾಮಪದಗಳ ವಿಭಕ್ತಿ ಪ್ರತ್ಯಯಗಳೂ ಬರ ಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ವಿಭಕ್ತಿ ಪ್ರತ್ಯಯ ಬಾರದಿದ್ದಲ್ಲಿ ಅವು ಆ ನಾಮಪದದೊಂದಿಗೆ ಸೇರಿ ಜೋಡುಪದ(ಸಮಸ್ತಪದ)ಗಳಾಗುತ್ತವೆ.
ಆದರೆ ಕನ್ನಡದಲ್ಲಿ ಕೃದಂತಗಳು ನಾಮಪದಗಳ ವಿಶೇಷಣಗಳಾಗಿ ಬಂದಾಗ ಅವುಗಳೊಂದಿಗೆ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯ ವಾಗದು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (18ಕ-ಖ) ಸಂಸ್ಕೃತ ವಾಕ್ಯಗಳನ್ನು ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳೊಂದಿಗೆ ಹೋಲಿಸಿ ನೋಡ ಬಹುದು.

(18ಕ) ಅಹಂ ಏಕಂ ಭಗ್ನಂ ಘಟಂ ದೃಷ್ಟವಾನ್

‘ನಾನು ಒಂದು ಒಡೆದ ಕೊಡವನ್ನು ನೋಡಿದೆ’

(18ಖ) ಅಹಂ ಏಕಂ ಭಗ್ನಘಟಂ ದೃಷ್ಟವಾನ್

‘ನಾನು ಒಂದು ಒಡೆದ ಕೊಡವನ್ನು ನೋಡಿದೆ’

(18ಕ)  ಸಂಸ್ಕೃತ  ವಾಕ್ಯದಲ್ಲಿ  ಭಗ್ನ  ‘ಒಡೆದ’  ಕೃದಂತ  ಅದರ  ವಿಶೇಷ್ಯ  ವಾಗಿರುವ  ಘಟ  ‘ಕೊಡ’  ಎಂಬುದರ  ಹಾಗೆ  ದ್ವಿತೀಯಾ  ವಿಭಕ್ತಿ  ಪ್ರತ್ಯಯ  ದೊಂದಿಗೆ  ಬಂದಿದೆ.  (18ಖ)  ವಾಕ್ಯದಲ್ಲಿ  ಈ  ವಿಭಕ್ತಿ  ಪ್ರತ್ಯಯ  ಲೋಪ  ಗೊಂಡಿದ್ದು,  ಭಗ್ನ  ಕೃದಂತವು  ಮುಂದಿರುವ  ನಾಮಪದದೊಂದಿಗೆ  ಸೇರಿ  ಭಗ್ನಘಟ ‘ಒಡೆದ ಕೊಡ’ ಎಂಬ ಜೋಡುಪದವಾಗಿ ಬಂದಿದೆ.  
ಆದರೆ  ಈ  ಎರಡೂ  ವಾಕ್ಯಗಳ  ಕನ್ನಡ  ಅನುವಾದಗಳಲ್ಲಿ  ಕೃದಂತ  ಪದ  (ಒಡೆದ  ಎಂಬುದು)  ಒಂದೇ  ರೂಪದಲ್ಲಿ  ವಿಭಕ್ತಿ  ಪ್ರತ್ಯಯವಿಲ್ಲದೆ  ಬಂದಿದೆ.  ನಿಜಕ್ಕೂ  ಕನ್ನಡದಲ್ಲಿ  ಕೃದಂತಗಳಿಗೆ  ನೇರವಾಗಿ  ವಿಭಕ್ತಿ  ಪ್ರತ್ಯಯಗಳನ್ನು  ಸೇರಿಸಿ  ಹೇಳಲು ಸಾಧ್ಯವಾಗದು.  

ಸಂಸ್ಕೃತದ ಕೃದಂತಗಳು ನಾಮಪದಗಳಾಗಿರುವ ಕಾರಣ ಅವನ್ನು ಸ್ವತಂತ್ರ  ವಾಗಿ,  ಎಂದರೆ  ಬೇರೆ  ನಾಮಪದಗಳ  ಆಧಾರವಿಲ್ಲದೆ,  ವಾಕ್ಯಗಳಲ್ಲಿ  ಬಳಸಲು  ಸಾಧ್ಯವಿದೆ. ಆದರೆ ಕನ್ನಡದ ಕೃದಂತಗಳನ್ನು ವಿಶೇಷಣಗಳಾಗಿ ಮಾತ್ರ ಬಳಸಲು  ಸಾಧ್ಯ.  
ಅವನ್ನು  ಸ್ವತಂತ್ರವಾಗಿ  ಬಳಸಬೇಕಿದ್ದಲ್ಲಿ  ಅವಕ್ಕೆ  ಉದು  ಪ್ರತ್ಯಯವನ್ನಾಗಲಿ  ಇಲ್ಲವೇ  ಅವನು,  ಅವಳು  ಮೊದಲಾದ  ಸವ್ರನಾಮ(ಸವ್ರಪದ)ಗಳನ್ನಾಗಲಿ  ಸೇರಿಸಿ  ಹೇಳುವ  ಅವಶ್ಯಕತೆಯಿದೆ.  ನೇರವಾಗಿ  ಅವಕ್ಕೆ  ವಿಭಕ್ತಿ  ಪ್ರತ್ಯಯಗಳನ್ನು  ಸೇರಿಸಲು ಸಾಧ್ಯವಾಗದು. 

(19ಕ) ಅಹಂ ಭಗ್ನಂ ಅಪಶ್ಯಂ

‘ನಾನು ಒಡೆದುದನ್ನು ನೋಡಿದೆ’

(19ಖ) ಅಹಂ ಘಟಂ ಕುವ್ರಾಣಂ ಅಪಶ್ಯಂ

‘ನಾನು ಕೊಡ ಮಾಡುವವನನ್ನು ನೋಡಿದೆ’

(19ಕ-ಖ)  ಸಂಸ್ಕೃತ  ವಾಕ್ಯಗಳಲ್ಲಿ  ಭಗ್ನ  ‘ಒಡೆದ’  ಮತ್ತು  ಕುವ್ರನ್  ‘ಮಾಡುವ’  ಕೃದಂತಗಳು  ನೇರವಾಗಿ  ದ್ವಿತೀಯಾ  ವಿಭಕ್ತಿಯೊಂದಿಗೆ  (ಎಂದರೆ  ಸ್ವತಂತ್ರವಾದ ನಾಮಪದಗಳಾಗಿ) ಬಂದಿವೆ.  
ಆದರೆ  ಅವುಗಳ  ಕೆಳಗೆ  ಕೊಟ್ಟಿರುವ  ಕನ್ನಡ  ವಾಕ್ಯಗಳಲ್ಲಿ  ಭಗ್ನ  ಮತ್ತು  ಕುವ್ರನ್ಗಳಿಗೆ ಸಮಾನವಾಗಿರುವ ಒಡೆದ ಮತ್ತು ಮಾಡುವ ಕೃದಂತಗಳು ಆ  ರೀತಿ ನೇರವಾಗಿ ದ್ವಿತೀಯಾ ವಿಭಕ್ತಿಯೊಂದಿಗೆ ಬಂದಿಲ್ಲ; ಇದಕ್ಕೆ ಬದಲು ಅವು  ಅನುಕ್ರಮವಾಗಿ  ಉದು  ಪ್ರತ್ಯಯದೊಂದಿಗೆ  ಮತ್ತು  ಅವನು  ಸವ್ರನಾಮ  (ಸವ್ರಪದ)ದೊಂದಿಗೆ  ಸೇರಿ,  ಅನಂತರ  ದ್ವಿತೀಯಾ  ವಿಭಕ್ತಿ  ಪ್ರತ್ಯಯವನ್ನು  ಪಡೆದಿವೆ. 

Eke →

3.3 ಜೋಡುಪದಗಳ ರಚನೆ

ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಈ ರೀತಿ ಗುಣಪದಗಳ ವಿಭಜನೆ ಯಲ್ಲಿ ಕಾಣಿಸುವ ವ್ಯತ್ಯಾಸದಿಂದಾಗಿ ಆ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ (ಸಮಸ್ತಪದಗಳ) ರಚನೆಯಲ್ಲೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ.
ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದ ಸಮಾಸಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿರುವರಾದ ಕಾರಣ, ಅವರು ಈ ವ್ಯತ್ಯಾಸಗಳನ್ನು ಗಮನಿಸಲು ಶಕ್ತರಾಗಲಿಲ್ಲ. ಇದನ್ನು ಮುಂದೆ ಐದನೇ ಅಧ್ಯಾಯ

ದಲ್ಲಿ ವಿವರವಾಗಿ ಪರಿಶೀಲಿಸಲಿರುವೆವಾದ ಕಾರಣ, ಇಲ್ಲಿ ಪದವಗ್ರಗಳಿಗೆ ಸಂಬಂಧಿಸಿರುವಂತಹ ಒಂದು ವ್ಯತ್ಯಾಸವನ್ನು ಮಾತ್ರವೇ ಸೂಚಿಸಲಾಗಿದೆ. ಸಂಸ್ಕೃತದ ಸಮಾಸಗಳ ಒಳರಚನೆಯಲ್ಲಿ ನಾಮಪದ ಮತ್ತು ಗುಣಪದಗಳ ಬಳಕೆಯಲ್ಲಿ ವ್ಯತ್ಯಾಸ ಕಾಣಿಸುವುದಿಲ್ಲ. ಅದರಲ್ಲಿ ಬರುವ ಕರ್ಮಧಾರಯ ಮತ್ತು ತತ್ಪುರುಷ ಸಮಾಸಗಳಲ್ಲಿ ಮೊದಲನೆಯದು ಎರಡು ಪದಗಳ ನಡುವೆ ವಿಶೇಷಣ-ವಿಶೇಷ್ಯ ಸಂಬಂಧವನ್ನು ಮತ್ತುಎರಡನೆಯದು ಬೇರೆ ಬೇರೆ ರೀತಿಯ ಇತರ ಸಂಬಂಧಗಳನ್ನು ಸೂಚಿಸುವುವೆಂದು ಕೆಲವರು ವರ್ಣಿಸಿರುವ ರೇನೋ ನಿಜ.
ಆದರೆ, ಕರ್ಮಧಾರಯದಲ್ಲಿ ಮೊದಲನೆಯ ಪದ ಗುಣಪದವೇ ಆಗ ಬೇಕೆಂಬ ನಿಯಮವೇನೂ ಸಂಸ್ಕೃತದಲ್ಲಿಲ್ಲ. ಎರಡು ನಾಮಪದಗಳ ಸೇರುವಿಕೆ ಯಿಂದಲೂ ಕರ್ಮಧಾರಯ ಸಿದ್ಧವಾಗಲು ಸಾಧ್ಯವಿದೆ.
ಉದಾಹರಣೆಗಾಗಿ ಚಂದ್ರಮುಖಂ ಜೋಡುಪದದಲ್ಲಿ ಎರಡು ನಾಮಪದ ಗಳು ಬಳಕೆಯಾಗಿವೆಯಾದರೂ ಅದು ಕರ್ಮಧಾರಯ ಸಮಾಸಕ್ಕೆ ಉದಾಹರಣೆ ಯಾಗಬಲ್ಲುದು. ಈ ಕಾರಣಕ್ಕಾಗಿ ಮೇಲಿನ ಸಂಸ್ಕೃತ ಸಮಾಸಗಳನ್ನು ವರ್ಣಿಸು ವಾಗ, ಎರಡು ಪದಗಳೂ ಒಂದೇ ವಿಭಕ್ತಿಯಲ್ಲಿದ್ದರೆ ಕರ್ಮಧಾರಯ ಮತ್ತು ಬೇರೆ ಬೇರೆ ವಿಭಕ್ತಿಗಳಲ್ಲಿದ್ದರೆ ತತ್ಪುರುಷ ಎಂಬುದಾಗಿ ಹೇಳಬೇಕಾಗುತ್ತದೆ. ಕನ್ನಡದಲ್ಲಿ ನಾಮಪದ ಮತ್ತು ಗುಣಪದಗಳು ಒಂದಕ್ಕಿಂತ ಒಂದು ತೀರ ಭಿನ್ನವಾದವುಗಳೆಂಬ ವಿಷಯ ಕನ್ನಡದ ಸಮಾಸಗಳ ರಚನೆಯಲ್ಲೂ ವ್ಯಕ್ತವಾಗು ತ್ತದೆ. ಸಾಮಾನ್ಯವಾಗಿ ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಪದ ನಾಮಪದವಾಗಿರುತ್ತದೆ. ಮೊದಲನೆಯದು ನಾಮಪದವಿರ ಬಹುದು, ಗುಣಪದವಿರಬಹುದು, ಇಲ್ಲವೇ ಕ್ರಿಯಾಪದವಿರಬಹುದು. ಅದು ಗುಣಪದವಾಗಿದೆಯಾದರೆ ಕನ್ನಡದಲ್ಲಿ ಎರಡು ರೀತಿಯ ಸಮಾಸಗಳನ್ನು ಸಾಧಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಚಿಕ್ಕಾಸು ಮತ್ತು ನಡುಹಗಲು ಎಂಬ ಎರಡು ಜೋಡುಪದಗಳನ್ನು ಹೋಲಿಸಿ ನೋಡಬಹುದು. ಇವುಗಳಲ್ಲಿ ಮೊದಲನೆಯ ದನ್ನು ತಯಾರಿಸುವುದಕ್ಕಾಗಿ ಚಿಕ್ಕ ಗುಣಪದವನ್ನು ಕಾಸು ನಾಮಪದಕ್ಕೆ ವಿಶೇಷಣವಾಗಿ ಬಳಸಲಾಗಿದೆ. ಆದರೆ ಎರಡನೆಯದರಲ್ಲಿ ನಡು ಗುಣಪದವನ್ನು ಹಗಲು ನಾಮಪದಕ್ಕೆ ಆ ರೀತಿ ವಿಶೇಷಣವಾಗಿ ಮಾಡಿಲ್ಲ. ಇದಕ್ಕೆ ಬದಲು, ಆ ಜೋಡುಪದದಲ್ಲಿಲ್ಲದಿರುವ ಭಾಗ ಎಂಬ ಪದಕ್ಕೆ ಅದನ್ನು ವಿಶೇಷಣವಾಗಿ ಮಾಡಲಾಗಿದೆ.
ನಡುಹಗಲು ಎಂಬುದಕ್ಕೆ ‘ಹಗಲಿನ ನಡುಭಾಗ’ ಎಂಬ ಅರ್ಥವಿದೆಯಲ್ಲದೆ ‘ಹಗಲಿನ ನಡುವೆ’ ಎಂಬ ಅರ್ಥವಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದು. ಇದೇ ರೀತಿಯಲ್ಲಿ ಮುಂಬಾಗಿಲು ಎಂಬುದಕ್ಕೆ ‘(ಮನೆಯ) ಮುಂದಿನ ಬಾಗಿಲು’

ಎಂಬ ಅರ್ಥವಿದೆಯಾದರೂ ಮುಂಗೈ ಎಂಬುದಕ್ಕೆ ‘ಮುಂದಿನ ಕೈ’ ಎಂಬ ಅರ್ಥವಿಲ್ಲ, ‘ಕೈಯ ಮುಂದಿನ ಭಾಗ’ ಎಂಬ ಅರ್ಥವಿದೆ.
ಈ ರೀತಿ ಕನ್ನಡದಲ್ಲಿ ನಾಮಪದದೊಂದಿಗೆ ಗುಣಪದವೊಂದನ್ನು ಸೇರಿಸಿ ರಚಿಸಿದ ಜೋಡುಪದಕ್ಕೂ ಇನ್ನೊಂದು ನಾಮಪದವನ್ನು ಸೇರಿಸಿ ರಚಿಸಿದ ಜೋಡುಪದಕ್ಕೂ ನಡುವೆ ಮುಖ್ಯವಾದ ವ್ಯತ್ಯಾಸವಿದೆ. ಆದರೆ ಸಂಸ್ಕೃತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಈ ಕಾರಣಕ್ಕಾಗಿ ಸಂಸ್ಕೃತದಲ್ಲಿ ಕರ್ಮಧಾರಯವನ್ನು ತತ್ಪುರುಷದ ಒಂದು ಉಪಭೇದವೆಂದು ಪರಿಗಣಿಸಲು ಸಾಧ್ಯವಿದೆ, ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ.

Eke →

3.4 ಪದಕಂತೆಗಳನ್ನು ತಯಾರಿಸಲು ಎರಡು ವಿಧಾನಗಳು

ಮೇಲೆಯೇ ತಿಳಿಸಿರುವ ಹಾಗೆ, ಭಾಷೆಯೊಂದರಲ್ಲಿ ಯಾವ ಯಾವ ರೀತಿಯ ಪದವಗ್ರಗಳೆಲ್ಲ ಇವೆ ಎಂಬುದು ಪದಗಳು ಆ ಭಾಷೆಯ ವಾಕ್ಯಗಳಲ್ಲಿ ಯಾವ ಯಾವ ರೀತಿಯ ಕೆಲಸಗಳನ್ನೆಲ್ಲ ನಡೆಸಬೇಕಾಗುತ್ತದೆ ಎಂಬುದರ ಮೇಲೆ ಅವಲಂಬಿಸಿದೆ.
ಕನ್ನಡದಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದು, ಘಟನೆ ಗಳನ್ನು ನಿರ್ದೇಶಿಸುವುದು ಮತ್ತು ವ್ಯಕ್ತಿಗಳ ಗುಣಧರ್ಮಗಳನ್ನು ಸೂಚಿಸುವುದು ಎಂಬುದಾಗಿ ಮೂರು ಮುಖ್ಯ ಕೆಲಸಗಳನ್ನು ಅದರ ಪದಗಳು ನಡೆಸ ಬೇಕಾಗುತ್ತದೆ. ಹಾಗಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದ ಎಂಬುದಾಗಿ ಮೂರು ಮುಖ್ಯ ಪಂಗಡಗಳಲ್ಲಿ ವಿಂಗಡಿಸಬಲ್ಲ ಪದಗಳ ಅವಶ್ಯಕತೆ ಅದಕ್ಕಿದೆ.
ಆದರೆ ಸಂಸ್ಕೃತಕ್ಕೆ ಮುಖ್ಯವಾಗಿ ನಾಮಪದ ಮತ್ತುಕ್ರಿಯಾಪದ ಎಂಬು ದಾಗಿ ಎರಡು ಪದವಗ್ರಗಳಲ್ಲಿ ವಿಂಗಡಿಸಬಲ್ಲ ಪದಗಳಿದ್ದರೆ ಸಾಕು. ಗುಣಪದ ಎಂಬ ಮೂರನೆಯ ಪದವಗ್ರದ ಅವಶ್ಯಕತೆ ಅದಕ್ಕಿಲ್ಲ. ಈ ವಿಷಯದಲ್ಲಿ ಸಂಸ್ಕೃತ ಕನ್ನಡಕ್ಕಿಂತ ಭಿನ್ನವಾಗಿರಲು ಕಾರಣವೇನೆಂದರೆ, ಅದರ ಪದಗಳು ಮೇಲೆ ಹೇಳಿದ ಕೆಲಸಗಳಲ್ಲಿ ವ್ಯಕ್ತಿ ಇಲ್ಲವೇ ವಸ್ತುಗಳ ಗುಣಧರ್ಮಗಳನ್ನು ತಿಳಿಸುವುದು ಎಂಬ ಮೂರನೆಯ ಕೆಲಸವನ್ನು ನಡೆಸಬೇಕಾಗಿಲ್ಲ. ಉದಾಹರಣೆಗಾಗಿ ಕನ್ನಡದ ಕಪ್ಪು ಹಾವು ಪದಕಂತೆಯನ್ನು ಸಂಸ್ಕೃತದ ಕೃಷ್ಣಃ ಸಪ್ರಃ ಪದಕಂತೆಯೊಂದಿಗೆ ಹೋಲಿಸಿ ನೋಡಬಹುದು. ಇವೆರಡೂ ಒಂದೇ ಅರ್ಥವನ್ನು ಕೊಡುವುವಾದರೂ ಆ ಅರ್ಥವನ್ನು ಅವು ಕೊಡುವ ಕ್ರಮ ಮಾತ್ರ ಬೇರೆ ಬೇರೆ.
ಕನ್ನಡದ ಕಪ್ಪು ಹಾವು ಎಂಬುದರಲ್ಲಿ ಬರುವ ಹಾವು ನಾಮಪದ ಒಂದು ಪ್ರಾಣಿಯನ್ನು ಗುರುತಿಸುತ್ತದೆ ಮತ್ತು ಕಪ್ಪು ಗುಣಪದ ಒಂದು ಗುಣಧರ್ಮ ವನ್ನು (ಎಂದರೆ ಒಂದು ವಿಶಿಷ್ಟವಾದ ಬಣ್ಣವನ್ನು) ಸೂಚಿಸುತ್ತದೆ. ಇವೆರಡನ್ನು ಒಟ್ಟು ಸೇರಿಸಿ ಒಂದೇ ಪದಕಂತೆಯಲ್ಲಿ ಕಪ್ಪು ಹಾವು ಎಂಬುದಾಗಿ

ಬಳಸುವುದರ ಮೂಲಕ ಒಂದು ವಿಶಿಷ್ಟವಾದ ಹಾವನ್ನು (ಕಪ್ಪುಬಣ್ಣದ ಹಾವನ್ನು) ಗುರುತಿಸಲಾಗುತ್ತದೆ. ಇದು ಕನ್ನಡದ ಪದಕಂತೆಗಳು ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದುವನ್ನು ಗುರುತಿಸುವ ವಿಧಾನ. ಸಂಸ್ಕೃತದ ವಿಧಾನ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತದಲ್ಲಿ ಬರುವ ಕೃಷ್ಣಃ ಸಪ್ರಃ ಪದಕಂತೆಯಲ್ಲಿ ಕೃಷ್ಣಃ ಮತ್ತು ಸಪ್ರಃ ಎಂಬ ಎರಡು ನಾಮಪದಗಳು ಬಳಕೆಯಾಗಿವೆ. ಅವುಗಳಲ್ಲಿ ಕೃಷ್ಣಃ ಎಂಬುದು ಕಪ್ಪಾಗಿರುವ ಒಂದು ಪ್ರಾಣಿ ಇಲ್ಲವೇ ವಸ್ತುವನ್ನೂ ಸಪ್ರಃ ಎಂಬುದು ‘ಹಾವಾ’ಗಿರುವ ಒಂದು ಪ್ರಾಣಿಯನ್ನೂ ಗುರುತಿಸುತ್ತವೆ.
ಈ ಎರಡು ಪದಗಳನ್ನೂ ಒಟ್ಟಿಗೆ ಒಂದೇ ಪದಕಂತೆಯ ಅಂಗಗಳನ್ನಾಗಿ (ಎಂದರೆ ಒಂದೇ ಲಿಂಗ-ವಚನ-ವಿಭಕ್ತಿಗಳಲ್ಲಿ) ಬಳಸಿರುವ ಕಾರಣ, ವಾಕ್ಯ ವೊಂದರಲ್ಲಿ ಅವು ಗುರುತಿಸುವ ಪ್ರಾಣಿಗಳೆರಡೂ ಒಂದೇ ಎಂಬ ಅರ್ಥ ವ್ಯಕ್ತವಾಗುತ್ತದೆ ಮತ್ತು ಇದರಿಂದಾಗಿ ಈ ಪದಕಂತೆ ವಿಶಿಷ್ಟವಾದೊಂದು ಪ್ರಾಣಿಯನ್ನು (ಕಪ್ಪು ಬಣ್ಣದ ಹಾವನ್ನು) ಗುರುತಿಸುವಂತಾಗುತ್ತದೆ. ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಮತ್ತು ಅದಕ್ಕಾಗಿ ಬಳಕೆಯಾಗುವ ಪದಕಂತೆಗಳನ್ನು ರಚಿಸುವುದಕ್ಕಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಬಳಸುತ್ತಿವೆಯೆಂಬುದನ್ನು ಗಮನಿಸಬೇಕು.
ಕನ್ನಡದಲ್ಲಿ ಬರುವ ಹಾವು ನಾಮಪದ ಹಲವಾರು ರೀತಿಯ ಹಾವುಗಳನ್ನು ಗುರುತಿಸಬಲ್ಲುದು. ಅವುಗಳಲ್ಲಿ ಕೆಲವನ್ನು ಕಪ್ಪು ಹಾವು ಎಂಬ ಪದಕಂತೆ ಯಿಂದಲೂ, ಇನ್ನು ಕೆಲವನ್ನು ಹಸುರು ಹಾವು ಎಂಬ ಪದಕಂತೆಯಿಂದಲೂ, ಬೇರೆ ಕೆಲವನ್ನು ಉದ್ದ ಹಾವು ಎಂಬ ಪದಕಂತೆಯಿಂದಲೂ ಪ್ರತ್ಯೇಕಿಸಿ ಹೇಳಲು ಕನ್ನಡದಲ್ಲಿ ಸಾಧ್ಯ.
ಇಲ್ಲಿ ಕಪ್ಪು, ಹಸುರು, ಉದ್ದ ಮೊದಲಾದ ಗುಣಪದಗಳು ಬೇರೆ ಬೇರೆ ಗುಣಧರ್ಮಗಳನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಒಂದನ್ನು ಹಾವು ನಾಮಪದ ದೊಂದಿಗೆ ಬಳಸಿದಾಗ ಆ ಗುಣಪದ ಸೂಚಿಸುವ ಗುಣಧರ್ಮವನ್ನು ತೋರಿಸುವ ಹಾವನ್ನು ಮಾತ್ರವೇ ಆ ಪದಕಂತೆ ಗುರುತಿಸುವಂತಾಗುತ್ತದೆ. ಸಂಸ್ಕೃತ ಬಳಸುವ ವಿಧಾನ ಇದಕ್ಕಿಂತ ತೀರ ಭಿನ್ನವಾದುದು. ಸಂಸ್ಕೃತ ದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಲ್ಲ ಎಂಬುದನ್ನು ನಾವು ಮೇಲೆಯೇ ನೋಡಿರುವೆವು. ಕೃಷ್ಣಃ ಎಂಬುದೂ ಒಂದು ನಾಮಪದ, ಸಪ್ರಃ ಎಂಬುದೂ ಒಂದು ನಾಮಪದ. ಮೊದಲನೆಯದು ಕಪ್ಪುಬಣ್ಣವಿರುವ ಬೇರೆ ಬೇರೆ ರೀತಿಯ ವ್ಯಕ್ತಿ, ವಸ್ತು, ಪ್ರಾಣಿ ಮೊದಲಾದುವನ್ನು (ಇದರಲ್ಲಿ ಹಾವುಗಳೂ ಸೇರುತ್ತವೆ) ಗುರುತಿಸುತ್ತದೆಯಾದರೆ, ಎರಡನೆಯದು ಬೇರೆ ಬೇರೆ ಬಣ್ಣದ

ಮತ್ತು ಆಕಾರದ ಹಾವುಗಳನ್ನು ಗುರುತಿಸುತ್ತದೆ (ಇದರಲ್ಲಿ ಕಪ್ಪು ಬಣ್ಣದ ಹಾವುಗಳೂ ಸೇರುತ್ತವೆ).
ಈ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಒಂದು ಪದಕಂತೆಯನ್ನಾಗಿ ಮಾಡಿ ಬಳಸಿದಾಗ, ಅದಕ್ಕೆ ಆ ಎರಡು ಪದಗಳು ಗುರುತಿಸುವವುಗಳಲ್ಲಿ ಸಮಾನವಾಗಿರುವಂತಹದನ್ನು (ಎಂದರೆ ಕಪ್ಪು ಬಣ್ಣದ ಹಾವನ್ನು) ಗುರುತಿಸಲು ಸಾಧ್ಯವಾಗುತ್ತದೆ. ಸಂಸ್ಕೃತದಲ್ಲಿ ಈ ರೀತಿ ಗುಣಧರ್ಮಗಳ ಅರ್ಥವನ್ನು ಕೊಡುವ ನಾಮ ಪದಗಳನ್ನು ಮಾತ್ರವಲ್ಲದೆ ಬೇರೆ ನಾಮಪದಗಳನ್ನೂ ಒಂದರೊಡನೊಂದನ್ನು ಸೇರಿಸಿ ಪದಕಂತೆಯನ್ನಾಗಿ ಮಾಡಿ ಬಳಸಲು ಸಾಧ್ಯವಿದೆ.
ಉದಾಹರಣೆಗಾಗಿ ಮೃತ್ತಿಕಂ ಘಟಂ ಪದಕಂತೆಯಲ್ಲಿ ಮೃತ್ತಿಕ ‘ಮಣ್ಣು’ ಮತ್ತು ಘಟ ‘ಕೊಡ’ ಎಂಬ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ಬಳಸಲಾಗಿದೆ. ಇವುಗಳಲ್ಲಿ ಮೊದಲನೆಯದು ಮಣ್ಣಾಗಿರುವ ಒಂದು ವಸ್ತು ವನ್ನೂ ಎರಡನೆಯದು ಕೊಡವಾಗಿರುವ ಒಂದು ವಸ್ತುವನ್ನೂ ಗುರುತಿಸುತ್ತಿದ್ದು, ಅವೆರಡೂ ಒಂದೇ ಪದಕಂತೆಯ ಅಂಗಗಳಾಗಿ ಬಂದಿರುವ ಕಾರಣ ಅದಕ್ಕೆ ಮಣ್ಣಿನ ಕೊಡವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಕನ್ನಡದಲ್ಲಿ ಈ ರೀತಿ ಎರಡು ನಾಮಪದಗಳನ್ನು ಒಂದೇ ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಲು ಸಾಧ್ಯವಿಲ್ಲ. ಮೇಲಿನ ಅರ್ಥವನ್ನು ಕೊಡಲು ಕನ್ನಡದಲ್ಲಿ ಮಣ್ಣಿನ ಕೊಡ ಎಂಬುದಾಗಿ ಹೇಳಬೇಕು; ಎಂದರೆ, ಮಣ್ಣಿಗೂ ಕೊಡಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವುದರ ಮೂಲಕ ಆ ವಿಶಿಷ್ಟವಾದ ವಸ್ತುವನ್ನು ಗುರುತಿಸಬೇಕು.

Eke →

3.5 ಭಾಷೆಗಳ ನಡುವಿನ ವೈವಿಧ್ಯ

ಈ ರೀತಿ ಗುಣಪದಗಳನ್ನು ಕನ್ನಡದಲ್ಲಿರುವ ಹಾಗೆ ಪ್ರತ್ಯೇಕವಾದೊಂದು ಪದವಗ್ರದಲ್ಲಿರಿಸುವ ಬದಲು ಇಲ್ಲವೇ ಸಂಸ್ಕೃತದಲ್ಲಿರುವ ಹಾಗೆ ನಾಮ ಪದಗಳ ವಗ್ರದಲ್ಲಿ ಸೇರಿಸುವ ಬದಲು ಕ್ರಿಯಾಪದಗಳ ವಗ್ರದಲ್ಲಿ ಸೇರಿಸಲೂ ಸಾಧ್ಯವಿದೆ. ಭಾರತದ ವಾಯವ್ಯ ಗಡಿಪ್ರದೇಶದಲ್ಲಿ ಬಳಕೆಯಲ್ಲಿರುವ ಕೆಲವು ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಈ ಮೂರನೆಯ ವಿಧಾನ ಬಳಕೆಯಲ್ಲಿದೆ.
ಉದಾಹರಣೆಗಾಗಿ, ಈ ಭಾಷಾಕುಟುಂಬಕ್ಕೆ ಸೇರಿರುವ ಮಣಿಪುರಿ ಭಾಷೆ ಯನ್ನು ಪರಿಶೀಲಿಸಬಹುದು. ಗುಣಪದ ಮತ್ತು ಕ್ರಿಯಾಪದಗಳ ನಡುವೆ ಈ ಭಾಷೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಓಡು, ಬೀಳು, ಒಡೆ, ಕೊಳೆ ಮೊದಲಾದ ಕ್ರಿಯಾಪದಗಳ ಹಾಗೆಯೇ ಬಿಳಿ, ಕಪ್ಪು, ದೊಡ್ಡ, ಚಿಕ್ಕ ಮೊದಲಾದ ಗುಣಪದಗಳನ್ನೂ ಈ ಭಾಷೆಯಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬಳಸಲು ಸಾಧ್ಯವಿದೆ.

ಈ  ಗುಣಪದಗಳನ್ನು  ನಾಮಪದಗಳ  ವಿಶೇಷಣಗಳಾಗಿ  ಬಳಸಬೇಕಿದ್ದರೂ  ಕ್ರಿಯಾಪದಗಳ ಹಾಗೆ ಅವುಗಳ ಕೃದಂತ ರೂಪಕ್ಕೆ ಬದಲಾಯಿಸಬೇಕಾಗುತ್ತದೆ.  
ಮಣಿಪುರಿ  ಭಾಷೆಯಲ್ಲಿ  ಚಾ  ‘ತಿನ್ನು’,  ಚತ್  ‘ಹೋಗು’,  ಮೊದಲಾದ  ಕ್ರಿಯಾಪದಗಳ ಹಾಗೆಯೇ ಸಾಙ್ ‘ಉದ್ದ’, ಮೂ ‘ಕಪ್ಪು’ ಮೊದಲಾದ ಗುಣ  ಪದಗಳನ್ನೂ  ಸಮಯವನ್ನು  ಸೂಚಿಸುವ  (ಕಾಲವಾಚಕ)  ಪ್ರತ್ಯಯಗಳೊಂದಿಗೆ  ಬಳಸಲು ಸಾಧ್ಯ ಎಂಬುದನ್ನು ಈ ಕೆಳಗಿನ ಪದರೂಪಗಳಿಂದ ತಿಳಿಯಬಹುದು. 

ಚಾಗನಿ ‘ತಿಂದಾನು’ ಚತ್ಕನಿ ‘ಹೋದಾನು’

‘ಹೋಯಿತು’

ಸಾಙ್ಗನಿ ಮೂಗನಿ
ಸಾಙಙ್
ಮೂರಿ

‘ಉದ್ದವಿದ್ದಾನು’ ‘ಕಪ್ಪಿದ್ದಾನು’ ‘ಉದ್ದವಾಯಿತು’ ‘ಕಪ್ಪಾಯಿತು’

ಮೇಲೆ ಕೊಟ್ಟಿರುವ ಪದರೂಪಗಳಲ್ಲಿ ಮುಂದಿನ ಸಮಯವನ್ನು ಸೂಚಿಸುವ  ಗನಿ ಇಲ್ಲವೇ ಕನಿ ಪ್ರತ್ಯಯ ಮತ್ತು ಹಿಂದಿನ ಸಮಯವನ್ನು ಸೂಚಿಸುವ ಇ (ರಿ)  ಪ್ರತ್ಯಯ  -  ಇವೆರಡೂ  ಘಟನೆಯನ್ನು  ನಿರ್ದೇಶಿಸುವ  ಚಾ  ಮತ್ತು  ಚತ್  ಪದಗಳೊಂದಿಗೆ  ಮಾತ್ರವಲ್ಲದೆ  ಗುಣಧರ್ಮವನ್ನು  ಸೂಚಿಸುವ  ಸಾಙ್  ಮತ್ತು  ಮೂ ಪದಗಳೊಂದಿಗೂ ಬಂದಿವೆಯೆಂಬುದನ್ನು ಗಮನಿಸಬಹುದು.   
ಆದರೆ  ಕನ್ನಡದಲ್ಲಿ  ಸಮಯವನ್ನು  ಸೂಚಿಸುವ  ಪ್ರತ್ಯಯಗಳನ್ನು  ಆ  ರೀತಿ  ನೇರವಾಗಿ  ಗುಣಪದಗಳಿಗೆ  ಸೇರಿಸಲು  ಸಾಧ್ಯವಾಗದು.  ಗುಣಪದಗಳ  ಅನಂತರ  ಇರು  ಇಲ್ಲವೇ  ಆಗು  ಕ್ರಿಯಾಪದಗಳನ್ನು  ಬಳಸಿ  ಅವಕ್ಕೆ  ಈ  ಪ್ರತ್ಯಯಗಳನ್ನು  ಸೇರಿಸಬೇಕಾಗುತ್ತದೆ (ಉದ್ದವಿದ್ದಾನು, ಉದ್ದವಾಯಿತು). 
ಇದೇ  ರೀತಿಯಲ್ಲಿ  ಈ  ಎರಡು  ರೀತಿಯ  ಪದಗಳನ್ನು  ಮಣಿಪುರಿ  ಭಾಷೆ  ಯಲ್ಲಿ  ನಾಮಪದದ  ವಿಶೇಷಣವಾಗಿ  ಬಳಸಬೇಕಿದ್ದಲ್ಲಿ  ಅವಕ್ಕೆ  ಅ  ಪೂವ್ರ  ಪ್ರತ್ಯಯ  ಮತ್ತು  ಪ  ಇಲ್ಲವೇ  ಬ  ಪರಪ್ರತ್ಯಯ  -  ಇವೆರಡನ್ನೂ  ಸೇರಿಸುವ  ಮೂಲಕ ಕೃದಂತ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ. 

‘ತಿನ್ನುವ ಮನುಷ್ಯ’

ಅಚಾಬ ಮೀ ಅಚತ್ಪ ಮೀ ‘ಹೋಗುವ ಮನುಷ್ಯ’ ಅಸಾಙ್ಬ ಮೀ ‘ಉದ್ದ ಮನುಷ್ಯ’ ಅಮೂಬ ಮೀ ‘ಕಪ್ಪು ಮನುಷ್ಯ’

ಆದರೆ  ಕನ್ನಡದಲ್ಲಿ  ಕ್ರಿಯಾಪದಗಳನ್ನು  ಮಾತ್ರ  ಆ  ರೀತಿ  ಕೃದಂತ  ರೂಪಕ್ಕೆ  ಬದಲಾಯಿಸಬಹುದಲ್ಲದೆ  ಗುಣಪದಗಳನ್ನು  ಕೃದಂತ  ರೂಪಕ್ಕೆ  ಬದಲಾಯಿಸಲು  ಸಾಧ್ಯವಾಗದು. 
ಇದಲ್ಲದೆ ಇನ್ನೂ ಹಲವಾರು ರೀತಿಯ ಸಂದಭ್ರಗಳಲ್ಲಿ ಕ್ರಿಯಾಪದ ಮತ್ತು  ಗುಣಪದಗಳು  ಮಣಿಪುರಿ  ಭಾಷೆಯಲ್ಲಿ  ಒಂದೇ  ವಿಧವಾಗಿ  ಬಳಕೆಯಾಗುತ್ತಿದ್ದು  ಅವನ್ನು ಒಂದೇ ಪದವಗ್ರದಲ್ಲಿ ಸೇರಿಸಿ ಹೇಳುವ ಅವಶ್ಯಕತೆಯಿದೆ. ನಾಮಪದ  ಗಳು ಮಾತ್ರ ಇವಕ್ಕಿಂತ ತೀರ ಭಿನ್ನವಾದವುಗಳು.  
ಉದಾಹರಣೆಗಾಗಿ  ಮಣಿಪುರಿ  ಭಾಷೆಯಲ್ಲಿ  ನಾಮಪದಗಳಿಗೆ  ನೇರವಾಗಿ  ಸಮಯವನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು. ಇದಲ್ಲದೆ  ಒಂದು  ನಾಮಪದವನ್ನು  ಇನ್ನೊಂದು  ನಾಮಪದಕ್ಕೆ  ವಿಶೇಷಣವಾಗಿ  ಮಾಡ  ಬೇಕಿದ್ದಲ್ಲಿ  ಅದಕ್ಕೆ  ಕನ್ನಡದಲ್ಲಿರುವ  ಹಾಗೆ  ಗಿ/ಕಿ  ಷಷ್ಠೀ  ವಿಭಕ್ತಿಯನ್ನು  ಸೇರಿಸ  ಬೇಕಲ್ಲದೆ  ಮೇಲೆ  ಕೊಟ್ಟಿರುವ  ಕೃದಂತ  ಪ್ರತ್ಯಯಗಳನ್ನು  ಸೇರಿಸಲು  ಸಾಧ್ಯ  ವಾಗದು (ಹೆಚ್ಚಿನ ವಿವರಗಳಿಗೆ ಭಟ್ ಮತ್ತು ನಿಂಗೊಂಬ 1997 ನೋಡಿ). 

‘ಬಿದಿರು’
ಲರ್ಯಿಕ್ ‘ಪುಸ್ತಕ’
ಅಯ್ ‘ನಾನು’

ವಾಗಿ ಸಂಬಲ್ ‘ಬಿದಿರಿನ ಬೇಲಿ’ ಲರ್ಯಿಕ್ಕಿ ಮಮನ್ ‘ಪುಸ್ತಕದ ಬೆಲೆ’

‘ನನ್ನ ಪತ್ರ’

ಈ  ಮೂರು  ರೀತಿಯ  ಭಾಷೆಗಳು  ಮಾತ್ರವಲ್ಲದೆ  ಗುಣಪದಗಳ  ಮಟ್ಟಿಗೆ  ನಾಲ್ಕನೇ  ರೀತಿಯ  ಭಾಷೆಗಳೂ  ಕೆಲವಿವೆ.  ಇವುಗಳಲ್ಲಿ  ನಾಮಪದ,  ಕ್ರಿಯಾಪದ  ಮತ್ತು ಗುಣಪದಗಳೆಂಬ ಮೂರು ರೀತಿಯ ಅರ್ಥ ಕೊಡುವ ಪದಗಳೂ ಒಂದೇ  ಪದವಗ್ರಕ್ಕೆ  ಸೇರುತ್ತವೆ.  ಎಂದರೆ,  ಅವುಗಳಲ್ಲಿ  ಯಾವುದನ್ನು  ಬೇಕಿದ್ದರೂ  ನೇರವಾಗಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದವಾಗಿ,  ಕ್ರಿಯಾಪದ  ವಾಗಿ ಇಲ್ಲವೇ ಗುಣಪದವಾಗಿ ಬಳಸಲು ಸಾಧ್ಯವಿದೆ.  
ಭಾರತದಲ್ಲಿ  ಬಳಕೆಯಲ್ಲಿರುವ  ಮುಂಡಾರಿ  ಎಂಬ  ಆಸ್ಟ್ರೋ-ಏಶಿಯಾಟಿಕ್  ಭಾಷಾಕುಟುಂಬಕ್ಕೆ  ಸೇರುವ  ಭಾಷೆ  ಇಂತಹದು  (ಜಾಸ್ತಿ  ವಿವರಗಳಿಗೆ  ಭಟ್  1994 ನೋಡಿ). 

Eke →

3.6 ಬೇರೆ ಪದವಗ್ರಗಳು

ನಾಮಪದ, ಕ್ರಿಯಾಪದ ಮತ್ತು ಗುಣಪದಗಳು ಕನ್ನಡದಲ್ಲಿ ಬಳಕೆಯಲ್ಲಿರುವ ಮುಖ್ಯವಾದ ಪದವಗ್ರಗಳು. ಕನ್ನಡ ಪದಕೋಶದಲ್ಲಿ ಕಾಣಸಿಗುವ ಪದಗಳಲ್ಲಿ ಹೆಚ್ಚಿನವನ್ನೂ ಈ ಮೂರು ಪದವಗ್ರಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ.
ಕನ್ನಡ ವಾಕ್ಯರಚನೆಯನ್ನು ವಿವರಿಸಲು ಈ ಮೂರು ಮುಖ್ಯವಾದ ಪದ ವಗ್ರಗಳು ಮಾತ್ರವಲ್ಲದೆ ಬೇರೆಯೂ ಕೆಲವು ಪದವಗ್ರಗಳ ಅವಶ್ಯಕತೆಯಿದೆ.

ಇಂತಹ ಅಮುಖ್ಯವಾದ ಪದವಗ್ರಗಳ ವಿಷಯದಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಸವ್ರನಾಮಗಳನ್ನು ಮತ್ತು ಎಣಿಕೆಯ (ಸಂಖ್ಯಾವಾಚಕ) ಪದಗಳನ್ನು ನಾಮಪದವಗ್ರದಲ್ಲೇ ಸೇರಿಸಿ ಹೇಳಲಾಗಿದೆ. ಆದರೆ ಕನ್ನಡದಲ್ಲಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇವುಗಳ ಸ್ವರೂಪ ವೇನೆಂಬುದನ್ನು ಮತ್ತು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಇವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಮುಂದೆ ಹತ್ತನೇ ಅಧ್ಯಾಯದಲ್ಲಿ ವಿವರಿಸಲಾಗುವುದು. ಇದಲ್ಲದೆ ಕನ್ನಡದ ಗುಣಪದಗಳಲ್ಲೂ ನಾಮಪದಕ್ಕೆ ವಿಶೇಷಣವಾಗಿ ಬರುವವುಗಳು ಮತ್ತು ಕ್ರಿಯಾಪದಕ್ಕೆ ವಿಶೇಷಣವಾಗಿ ಬರುವವು ಎಂಬುದಾಗಿ ಎರಡು ವಿಧದವುಗಳಿವೆ. ಇವುಗಳಲ್ಲಿ ಎರಡನೆಯ ಉಪವಗ್ರಕ್ಕೆ ಸೇರುವ ಪದಗಳನ್ನು ಸಂಸ್ಕೃತದಲ್ಲಿ (ನಾಮಪದ ವಗ್ರದಲ್ಲೇ ಬರುವ) ಅವ್ಯಯಗಳೆಂದು ಕರೆಯಲಾಗುತ್ತದೆ.

Eke →

3.7 ತತ್ಸಮ ಮತ್ತು ತದ್ಭವ ಪದಗಳು

ಕನ್ನಡದಲ್ಲಿ ಬಳಕೆಯಾಗುವ ಪದಗಳನ್ನು ಮೇಲೆ ವಿವರಿಸಿದ ಹಾಗೆ ಅವುಗಳ ಅರ್ಥವೇನು ಮತ್ತು ವಾಕ್ಯಗಳಲ್ಲಿ ಅವುಗಳ ಕೆಲಸವೆಂತಹದು ಎಂಬ ವಿಷಯದ ಮೇಲೆ ಮಾತ್ರವಲ್ಲದೆ, ಅವುಗಳ ಮೂಲ ಯಾವುದು (ದೇಶ್ಯ ಪದಗಳೇ ಅಥವಾ ಎರವಲು ಪದಗಳೇ) ಮತ್ತು ಅವುಗಳ ಸ್ವರೂಪವೆಂತಹದು (ಎರವಲಾಗಿ ಬಂದ ಮೇಲೆ ಈ ಪದಗಳು ಬದಲಾಗಿವೆಯೇ ಅಥವಾ ಹಾಗೆಯೇ ಉಳಿದಿವೆಯೇ) ಎಂಬ ವಿಷಯದ ಮೇಲೆಯೂ ವಿಂಗಡಿಸಲು ಸಾಧ್ಯವಿದೆ. ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ದೇಶ್ಯ, ತತ್ಸಮ ಮತ್ತು ತದ್ಭವ ಎಂಬ ಪದಗಳ ವಿಂಗಡಣೆ ಇಂತಹದೆಂದು ಹೇಳಲು ಸಾಧ್ಯವಿದೆ. ಆದರೆ ಕನ್ನಡ ವೈಯಾಕರಣಿಗಳು ಈ ವಿಭಜನೆಯನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಮಾತ್ರವೇ ಅನ್ವಯಿಸುತ್ತಾರೆ. ಇಂಗ್ಲಿಷ್, ಹಿಂದಿ ಮೊದಲಾದ ಇತರ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳನ್ನು ತತ್ಸಮ ಮತ್ತು ತದ್ಭವ ಪದ ಗಳೆಂಬುದಾಗಿ ವಿಂಗಡಿಸುವುದಿಲ್ಲ. ನಿಜಕ್ಕೂ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಈ ತತ್ಸಮ-ತದ್ಭವ ವಿಂಗಡಣೆ ಪಾಲಿ, ಪ್ರಾಕೃತ ಮೊದಲಾದ ಸಂಸ್ಕೃತಜನ್ಯ ಭಾಷೆಗಳ ವ್ಯಾಕರಣ ಗಳಲ್ಲಿ ಬಳಕೆಯಲ್ಲಿದ್ದ ವಿಭಜನೆಯನ್ನು ಕನ್ನಡ ವ್ಯಾಕರಣಕ್ಕೆ ಅಳವಡಿಸಲು ನಡೆಸಿದ ಪ್ರಯತ್ನವಲ್ಲದೆ ಬೇರೇನಲ್ಲ. ಕನ್ನಡ ಭಾಷೆ ಸಂಸ್ಕೃತಜನ್ಯ ಭಾಷೆ ಯಲ್ಲವಾದ ಕಾರಣ, ಪಾಲಿ-ಪ್ರಾಕೃತ ಭಾಷೆಗಳ ಈ ವಿಭಜನೆ ಕನ್ನಡ ವ್ಯಾಕರಣಕ್ಕೆ ಅನುಕೂಲವಾಗಿಲ್ಲ.

ಪಾಲಿ,  ಪ್ರಾಕೃತ  ಮೊದಲಾದ  ಭಾಷೆಗಳಲ್ಲಿ  ಮುಖ್ಯವಾಗಿ  ಎರಡು  ರೀತಿಯ  ಪದಗಳನ್ನು  ಕಾಣಬಹುದು.  ವೇದಕಾಲದಿಂದ  ಬುದ್ಧ  ಮತ್ತು  ಮಹಾವೀರರ  ಕಾಲದ  ವರೆಗೆ  ಜನಸಾಮಾನ್ಯರ  ಮಾತಿನಲ್ಲಿ  ಬಳಕೆಯಲ್ಲಿದ್ದ  ಭಾಷೆಯಲ್ಲಿ  ಹಲವಾರು  ಬದಲಾವಣೆಗಳು  ನಡೆದಿದ್ದುವು.  ಇವುಗಳ  ಪರಿಣಾಮವನ್ನು  ಈ  ಭಾಷೆಗಳವೇ ಆದ ಪದಗಳಲ್ಲಿ ಕಾಣಬಹುದು. ಇಂತಹ ಬದಲಾವಣೆಗಳಾವುವೂ  ಸಂಸ್ಕೃತದಲ್ಲಿ  ನಡೆದಿರಲಿಲ್ಲವಾದ  ಕಾರಣ  ಅದರ  ಪದಗಳು  ಈ  ಪದಗಳಿಗಿಂತ  ತೀರ ಭಿನ್ನವಾಗಿ ಉಳಿದಿವೆ. 
ಇಂತಹ  ಬದಲಾವಣೆಗಳ  ಪರಿಣಾಮವನ್ನು  ತೋರಿಸುವ  ಪಾಲಿ  ಮತ್ತು  ಪ್ರಾಕೃತ  ಪದಗಳನ್ನು  ಅವುಗಳ  ವ್ಯಾಕರಣಗಳಲ್ಲಿ  ‘ತದ್ಭವ’  ಪದಗಳೆಂದು  ಕರೆಯಲಾಗುತ್ತದೆ.  ಅನಂತರದ  ಕಾಲದಲ್ಲಿ,  ಇವೇ  ಭಾಷೆಗಳಲ್ಲಿ  ಗ್ರಂಥಗಳನ್ನು  ರಚಿಸಿದ  ಬೌದ್ಧ  ಮತ್ತು  ಜೈನ  ಪಂಡಿತರು  ಹಲವಾರು  ಪದಗಳನ್ನು  ನೇರವಾಗಿ  ಸಂಸ್ಕೃತದಿಂದ  ಎರವಲಾಗಿ  ಪಡೆದಿದ್ದು,  ಅವನ್ನು  ‘ತತ್ಸಮ’  ಪದಗಳೆಂದು  ಕರೆಯಲಾಗುತ್ತದೆ. 
ಪಾಲಿ  ಮತ್ತು  ಪ್ರಾಕೃತ  ಭಾಷೆಗಳಲ್ಲೇನೇ  ಬಳಕೆಯಲ್ಲಿರುವ  ಬೇರೆ  ಕೆಲವು  ಪದಗಳಿಗೆ  ಸಂಸ್ಕೃತ  ಪದಗಳೊಂದಿಗೆ  ನೇರವಾಗಿ  ಸಂಬಂಧವನ್ನು  ಕಲ್ಪಿಸಲು  ಸಾಧ್ಯವಾಗುವುದಿಲ್ಲ.  ಇಂತಹ  ಪದಗಳು  ಇಂಡೋ-ಆರ್ಯನ್  ಮೂಲದಿಂದ  ಲೇನೇ  ಬಂದಿರಲು  ಸಾಧ್ಯವಿದೆ,  ಇಲ್ಲವೇ  ಬೇರೆ  ಮೂಲಗಳಿಂದ  ಎರವಲಾಗಿ  ಬಂದಿರಲು  ಸಾಧ್ಯವಿದೆ.  ಇವನ್ನು  ಈ  ಭಾಷೆಯ  ವ್ಯಾಕರಣಗಳಲ್ಲಿ  ‘ದೇಶಿ’  ಇಲ್ಲವೇ ‘ದೇಶಜ’ ಪದಗಳೆಂದು ಕರೆಯಲಾಗುತ್ತದೆ. 
ಇಂತಹದೇ  ಒಂದು  ವಿಭಜನೆಯನ್ನು  ಕನ್ನಡಕ್ಕೆ  ಅಳವಡಿಸುವುದಿದ್ದಲ್ಲಿ,  ಹಳೆಗನ್ನಡದಿಂದ ಹೊಸಗನ್ನಡದ ವರೆಗಿನ ಸಮಯದಲ್ಲಿ ನಡೆದ ಬದಲಾವಣೆಗಳ  ಪರಿಣಾಮವನ್ನು  ತೋರಿಸುವ  ಹಾಲು  (<ಪಾಲ್),  ಹಣ್ಣು  (<ಪಣ್),  ನೂಕು  (<ನೂಂಕು),  ಹಬ್ಬು  ತದ್ಭವಗಳೆಂದು  ಕರೆಯಬೇಕು  ಮತ್ತು  ಅನಂತರದ  ಕಾಲದಲ್ಲಿ  ಹಳೆಗನ್ನಡದಿಂದ  ಎರವಲಾಗಿ  ಪಡೆದ  ಪಾಡು,  ಪಡೆ,  ಪಾಲು,  ಪೆಟ್ಟು  ಮೊದಲಾದುವನ್ನು  ತತ್ಸಮಗಳೆಂದು  ಕರೆಯಬೇಕು. 
ಇವತ್ತಿನ  ಕನ್ನಡ  ವ್ಯಾಕರಣಗಳಲ್ಲಿ  ಕಾಣಿಸುವ  ತತ್ಸಮ-ತದ್ಭವ  ವಿಭಜನೆ  ಇದಕ್ಕಿಂತ ತೀರ ಭಿನ್ನವಾಗಿದ್ದು, ಪ್ರಾಕೃತ ಭಾಷೆಯ ವೈಯಾಕರಣಿಗಳು ನಡೆಸಿದ  ವಿಭಜನೆಯ  ನಕಲು  ಮಾತ್ರ.  ಅದರಿಂದ  ಕನ್ನಡ  ವ್ಯಾಕರಣ  ನಿಯಮಗಳನ್ನು  ರಚಿಸುವಲ್ಲಿ  ಯಾವ  ಪ್ರಯೋಜನವೂ  ಸಿಗಲಾರದು  (ಜಾಸ್ತಿ  ವಿವರಗಳಿಗೆ  ಭಟ್  2005:88 ನೋಡಿ). (<ಪಬ್ರು)  ಮೊದಲಾದುವನ್ನು

Eke →

3.8 ತಿರುಳು

ಮೇಲಿನ ಪರಿಶೀಲನೆಯಿಂದ ತಿಳಿಯುವುದೇನೆಂದರೆ, ಭಾಷೆಗಳು ಅವುಗಳಲ್ಲಿ ಕಾಣಿಸುವ ಪದವಗ್ರಗಳ ಮಟ್ಟಿಗೆ ಒಂದಕ್ಕಿಂತ ಒಂದು ತೀರ ಭಿನ್ನವಾಗಿರಲು ಸಾಧ್ಯವಿದೆ. ಹೀಗೆ ಭಿನ್ನವಾಗಿರಲು ಅವು ವಾಕ್ಯರಚನೆಗಾಗಿ ಬಳಸುವ ವಿಧಾನಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದೇ ಮುಖ್ಯ ಕಾರಣ.
ಈ ವಿಷಯದಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಸಂಸ್ಕೃತ ದಲ್ಲಿರುವ ಪದವಗ್ರಗಳೇ ಕನ್ನಡದಲ್ಲೂ ಇವೆಯೆಂದು ಹೇಳುವುದು ಸರಿಯಲ್ಲ. ಸಂಸ್ಕೃತಕ್ಕೆ ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ಮುಖ್ಯ ಪದವಗ್ರಗಳನ್ನು ಕಲ್ಪಿಸಿಕೊಂಡರೆ ಸಾಕು. ಆದರೆ ಕನ್ನಡಕ್ಕೆ ಈ ಎರಡು ಪದ ವಗ್ರಗಳು ಮಾತ್ರವಲ್ಲದೆ ಗುಣಪದಗಳೆಂಬ ಮೂರನೆಯದೊಂದು ಮುಖ್ಯ ಪದ ವಗ್ರವನ್ನೂ ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ.
ಯಾಕೆಂದರೆ, ಗುಣಧರ್ಮವನ್ನು ಸೂಚಿಸುವ ಪದಗಳು ಸಂಸ್ಕೃತದಲ್ಲಿ ನಾಮಪದಗಳ ಹಾಗೆಯೇ ಬಳಕೆಯಾಗುತ್ತವೆ, ಆದರೆ ಕನ್ನಡದಲ್ಲಿ ಅವು ನಾಮ ಪದ ಗಳಿಗಿಂತ ತೀರ ಭಿನ್ನವಾಗಿರುವ ರೀತಿಯಲ್ಲಿ ಬಳಕೆಯಾಗುತ್ತವೆ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸದ ಪರಿಣಾಮವಾಗಿ ಈ ಎರಡು ಭಾಷೆಗಳ ನಡುವೆ ವ್ಯಾಕರಣದ ಮಟ್ಟಿಗೆ ಇನ್ನೂ ಹಲವಾರು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತಿವೆ ಎಂಬುದನ್ನು ನಾವು ಈ ಅಧ್ಯಾಯದಲ್ಲಿ ನೋಡಿರುವೆವು.