Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
11. ಕ್ರಿಯಾರೂಪಗಳು
11.1 ಮುನ್ನೋಟ
ಕನ್ನಡದ ಕ್ರಿಯಾರೂಪಗಳು ಸಂಸ್ಕೃತದ ಕ್ರಿಯಾರೂಪಗಳಿಗಿಂತ ಹಲವು ವಿಷಯ ಗಳಲ್ಲಿ ಭಿನ್ನವಾಗಿವೆಯಾದ ಕಾರಣ, ಅವನ್ನು ವಿವರಿಸುವಲ್ಲಿ ಕನ್ನಡದ ವೈಯಾ ಕರಣಿಗಳಿಗೆ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಜಾಸ್ತಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಿದ್ದರೂ ಸಂಸ್ಕೃತ ವ್ಯಾಕರಣದ ನೆರಳನ್ನು ಇಲ್ಲೂ ಹಲವು ಕಡೆಗಳಲ್ಲಿ ಕಾಣಬಹುದು.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ಬರುವ ತಿಙ್ ಎಂಬ ಹೆಸರಿನ ಆಖ್ಯಾತ ಪ್ರತ್ಯಯಗಳು ಪುರುಷ ಮತ್ತು ವಚನಭೇದಗಳನ್ನು ಮಾತ್ರ ಸೂಚಿಸುತ್ತವಲ್ಲದೆ ಲಿಂಗ ಭೇದವನ್ನು ಸೂಚಿಸುವುದಿಲ್ಲ. ಆದರೆ ಕನ್ನಡದ ಆಖ್ಯಾತ ಪ್ರತ್ಯಯಗಳು ಪುರುಷ-ವಚನ ಭೇದಗಳನ್ನು ಮಾತ್ರವಲ್ಲದೆ ಪ್ರಥಮ ಪುರುಷದಲ್ಲಿ ಲಿಂಗ ಭೇದವನ್ನೂ ಸೂಚಿಸುತ್ತವೆ.
ಪುರುಷ ಏಕವಚನದ ರೂಪಗಳು ಹೋಗುತ್ತಾನೆ ಪ್ರಥಮ ಹೋಗುತ್ತಾಳೆ ಹೋಗುತ್ತದೆ
ಬಹುವಚನದ ರೂಪಗಳು ಲಿಂಗ ಗಚ್ಛಂತಿ ಹೋಗುತ್ತಾರೆ (ಪುಲ್ಲಿಂಗ) ,, (ಸ್ತ್ರೀಲಿಂಗ) ಹೋಗುತ್ತವೆ (ನಪುಂಸಕಲಿಂಗ)
ಮಧ್ಯಮ ಗಚ್ಛಸಿ ಉತ್ತಮ ಗಚ್ಛಾಮಿ ಹೋಗುತ್ತೇನೆ
ಹೋಗುತ್ತೀ
ಗಚ್ಛಥ ಹೋಗುತ್ತೀರಿ ಗಚ್ಛಾಮಃ ಹೋಗುತ್ತೇವೆ
ಕನ್ನಡದ ವೈಯಾಕರಣಿಗಳು ಕನ್ನಡದ ಆಖ್ಯಾತ ಪ್ರತ್ಯಯಗಳನ್ನು ವರ್ಣಿಸು ವಾಗ, ಮೊದಲಿಗೆ ಅವು ಸಂಸ್ಕೃತದ ಹಾಗೆ ಪುರುಷ ಮತ್ತು ವಚನ ಭೇದ ಗಳನ್ನು ಮಾತ್ರ ಸೂಚಿಸುತ್ತವೆಯುಂದು ಹೇಳಿ ಅನಂತರ ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳು ಆಖ್ಯಾತ ಪ್ರತ್ಯಯಗಳಿಗೆ ಆದೇಶಗಳಾಗಿ ಬರುತ್ತವೆ ಎಂಬುದಾಗಿ ವರ್ಣಿಸುತ್ತಾರೆ. ಇದರಿಂದಾಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗಿದೆ.
ಸಂಸ್ಕೃತದಲ್ಲಿ ಕ್ರಿಯಾಪದಗಳೊಂದಿಗೆ ತಿಙ್ ಪ್ರತ್ಯಯವನ್ನು ಮಾತ್ರ ಬಳಸ ಬೇಕಾಗುತ್ತದೆ. ಈ ಪ್ರತ್ಯಯ ಪುರುಷ-ವಚನಭೇದವನ್ನು ಮಾತ್ರವಲ್ಲದೆ ಕಾಲ ಭೇದವನ್ನೂ ಸೂಚಿಸುತ್ತದೆ. ಉದಾಹರಣೆಗಾಗಿ, ಯಾತಿ ‘ಹೋಗುತ್ತಾನೆ’ ಎಂಬ
ಭೇದವನ್ನು
ಕ್ರಿಯಾರೂಪದಲ್ಲಿ ಯಾ ‘ಹೋಗು’ ಕ್ರಿಯಾಪದದೊಂದಿಗೆ ತಿ ಪ್ರತ್ಯಯ (ತಿಙ್ ಪ್ರತ್ಯಯ) ಮಾತ್ರ ಬಂದಿದೆ.
ಆದರೆ ಕನ್ನಡದ ಕ್ರಿಯಾಪದಗಳೊಂದಿಗೆ ಎರಡು ಪ್ರತ್ಯಯಗಳು ಬರುತ್ತಿದ್ದು ಕಾಲಭೇದವನ್ನು ಮತ್ತು ಎರಡನೆಯದು ಅವುಗಳಲ್ಲಿ ಮೊದಲನೆಯದು ಪುರುಷ-ಲಿಂಗ-ವಚನ ಸೂಚಿಸುತ್ತವೆ. ಉದಾಹರಣೆಗಾಗಿ, ಹೋಗುತ್ತಾನೆ ಕ್ರಿಯಾರೂಪದಲ್ಲಿ ಹೋಗು ಕ್ರಿಯಾಪದದೊಂದಿಗೆ ಕಾಲವನ್ನು ಸೂಚಿಸುವ ಉತ್್ತ ಪ್ರತ್ಯಯ ಮತ್ತು ಪುರುಷ-ವಚನ-ಲಿಂಗಗಳನ್ನು ಸೂಚಿಸುವ ಆನೆ ಪ್ರತ್ಯಯ ಇವೆರಡೂ ಬಂದಿವೆ.
ಕನ್ನಡದ ವೈಯಾಕರಣಿಗಳು ಈ ಎರಡು ಪ್ರತ್ಯಯಗಳಲ್ಲಿ ಎರಡನೆಯದನ್ನು ಮಾತ್ರ ‘ಪ್ರತ್ಯಯ’ವೆಂದು ಕರೆದು, ಮೊದಲನೆಯದನ್ನು ಆಗಮವೆಂದು ವರ್ಣಿಸಿ ದ್ದಾರೆ. ಉದಾಹರಣೆಗಾಗಿ, ಬರುತ್ತಾನೆ ಕ್ರಿಯಾರೂಪದಲ್ಲಿ ಬರು ಎಂಬುದನ್ನು ಕ್ರಿಯಾಧಾತುವೆಂದೂ ಆನೆ ಎಂಬುದನ್ನು ಪ್ರತ್ಯಯವೆಂದೂ ಮತ್ತು ಉತ್ತ ಎಂಬುದನ್ನು ಆ ಪ್ರತ್ಯಯದೊಂದಿಗೆ ಬರುವ ಆಗಮವೆಂದೂ ಕನ್ನಡದ ವೈಯಾಕರಣಿಗಳು ವರ್ಣಿಸುತ್ತಾರೆ.
ಇಲ್ಲೂ ಅವರು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಹೊರಿಸ ಹೋಗಿ ಕನ್ನಡದ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗುವ ಹಾಗೆ ಮಾಡಿದ್ದಾರೆ.
11.2 ಕಾಲಸಂಬಂಧ ಮತ್ತು ಕಾಲವ್ಯವಸ್ಥೆ
ಕ್ರಿಯಾರೂಪಗಳ ಮೂಲಕ ಕಾಲಭೇದವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಕನ್ನಡದ ಕ್ರಿಯಾರೂಪಗಳಲ್ಲಿ ಹಿಂದಿನ ಕಾಲ (ಭೂತ ಕಾಲ) ಮತ್ತು ಮುಂದಿನ ಇಲ್ಲವೇ ಈಗಿನ ಕಾಲ (ಭವಿಷ್ಯತ್ ಇಲ್ಲವೇ ವರ್ತಮಾನ ಕಾಲ) ಎಂಬಂತಹ ‘ಕಾಲ ಸಂಬಂಧದ’ ಭೇದ ಕಾಣಿಸುತ್ತದೆ; ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಮುಗಿದ (ಪೂರ್ಣ) ಮತ್ತು ಮುಗಿಯದ (ಅಪೂರ್ಣ) ಘಟನೆ ಎಂಬಂತಹ ‘ಕಾಲ ವ್ಯವಸ್ಥೆಯ’ ಭೇದ ಕಾಣಿಸುತ್ತದೆ.
ಈ ವಿಷಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯ ಹಾಗಿದೆಯಾದರೆ ಸಂಸ್ಕೃತ ಅದಕ್ಕಿಂತ ತೀರಾ ಭಿನ್ನವಾಗಿದೆ.
11.2.1 ಕನ್ನಡದ ಕಾಲಸಂಬಂಧ
ಕನ್ನಡದ ಕಾಲ ಪ್ರತ್ಯಯಗಳು ಒಂದು ವಾಕ್ಯವು ತಿಳಿಸುವ ಘಟನೆಗೂ ಆ ವಾಕ್ಯವನ್ನು ಬಳಸುವ ಸಮಯಕ್ಕೂ ನಡುವಿರುವ ಸಂಬಂಧವನ್ನು ತಿಳಿಸುತ್ತದೆ. ಉದಾಹರಣೆಗಾಗಿ, ರಾಜು ಮನೆಗೆ ಹೋದ ಎಂಬ ವಾಕ್ಯ ಹಿಂದಿನ ಕಾಲ ದಲ್ಲಿದೆ, ಎಂದರೆ ಆ ವಾಕ್ಯ ತಿಳಿಸುವ (ರಾಜು ಮನೆಗೆ ಹೋಗಿದ್ದಾನೆಂಬ) ಘಟನೆ ಅದನ್ನಾಡುವ ಸಮಯಕ್ಕಿಂತ ಮೊದಲೇ ನಡೆದಿದೆ.
ರಾಜು ಮನೆಗೆ ಹೋಗುತ್ತಾನೆ ವಾಕ್ಯ ಮುಂದಿನ (ಇಲ್ಲವೇ ಈಗಿನ) ಕಾಲದಲ್ಲಿದೆ, ಎಂದರೆ ಅದು ತಿಳಿಸುವ ಘಟನೆ ಆ ವಾಕ್ಯವನ್ನಾಡುವ ಸಮಯದ ಅನಂತರ ನಡೆಯುವಂತಹದು (ಅಥವಾ ಈಗಿನ ಕಾಲದಲ್ಲಿ (ರೂಢಿಯಲ್ಲಿ) ಜರಗುವಂತಹದು).
ಕನ್ನಡದ ಕ್ರಿಯಾರೂಪಗಳಲ್ಲಿ ಈ ರೀತಿ ಹಿಂದಿನ ಕಾಲ ಮತ್ತು ಮುಂದಿನ ಕಾಲ ಎಂಬುದಾಗಿ ಎರಡು ರೀತಿಯ ಕಾಲಗಳನ್ನು ಸೂಚಿಸುವ ದ ಮತ್ತು ಉತ್ತ ಪ್ರತ್ಯಯಗಳು ಬಳಕೆಯಾಗುತ್ತವೆ. ಬಂದ-ಬರುತ್ತಾನೆ, ತಿಂದ-ತಿನ್ನುತ್ತಾನೆ, ಹಾಡಿದ-ಹಾಡುತ್ತಾನೆ ಮೊದಲಾದ ಕ್ರಿಯಾರೂಪಗಳಲ್ಲಿ ಈ ಎರಡು ಪ್ರತ್ಯಯಗಳ ಬಳಕೆಯನ್ನು ಕಾಣಬಹುದು.
ಕನ್ನಡದ ವೈಯಾಕರಣಿಗಳು ಕನ್ನಡದಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ಕಾಲಸೂಚಕ ಪ್ರತ್ಯಯಗಳಿವೆಯೆಂದು ಹೇಳು ತ್ತಾರೆ. ಹಳೆಗನ್ನಡದಲ್ಲಿ ಇವು ದ, ದಪ ಮತ್ತು ವ ಎಂಬವುಗಳು ಮತ್ತು ಹೊಸಗನ್ನಡದಲ್ಲಿ ದ, ಉತ್ತ ಮತ್ತು ವ ಎಂಬವುಗಳು ಎಂಬುದು ಇವರ ಅಭಿಪ್ರಾಯ.
ಆದರೆ ನಿಜಕ್ಕೂ ಹೊಸಗನ್ನಡದಲ್ಲಿ ಉತ್ತ ಪ್ರತ್ಯಯಯವೇ ವರ್ತಮಾನ ಮತ್ತು ಭವಿಷ್ಯದರ್ಥಗಳೆರಡರಲ್ಲೂ ಬಳಕೆಯಾಗುತ್ತಿದ್ದು, ವ ಪ್ರತ್ಯಯದ ಬಳಕೆ ಬಹಳ ಅಪರೂಪವೆಂದೇ ಹೇಳಬಹುದು.
ಇದಲ್ಲದೆ, ಹಳೆಗನ್ನಡದಲ್ಲಿ ದಪ ಎಂಬುದು ನಿಜಕ್ಕೂ ಒಂದು ಪ್ರತ್ಯಯ ವಲ್ಲ. ಅದರಲ್ಲಿ ಕಾಣಿಸುವ ದ ಎಂಬುದು ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯವಾಗಿದ್ದು ಪ ಎಂಬುದು ಅದಕ್ಕಿಂತ ಭಿನ್ನವಾಗಿರುವ ಮುಂದಿನ ಸಮಯ ವನ್ನು ಸೂಚಿಸುವ ಪ್ರತ್ಯಯವಾಗಿದೆ.
ಉದಾಹರಣೆಗಾಗಿ, ಬಂದಪಂ ಕ್ರಿಯಾರೂಪವನ್ನು ಬರು ಕ್ರಿಯಾಪದದ ಬಂದ ರೂಪಕ್ಕೆ ಆಗು ಕ್ರಿಯಾಪದದ ಅಪ್ಪಂ ರೂಪವನ್ನು ಸೇರಿಸಿ ರಚಿಸಲಾಗಿದೆ. ಸಂಧಿಯಲ್ಲಿ ಈ ಎರಡನೆಯ ರೂಪ ಅಪಂ ಎಂದಾಗಿದೆ ಮತ್ತು ಅನಂತರ ಅದರ ಅಕಾರ ಲೋಪಗೊಂಡು ಪಂ ಎಂದಿಷ್ಟೇ ಉಳಿದಿದೆ (ಬಂದವನ್ ಅಪ್ಪನ್ - ಬಂದಪಂ).
ಹಳೆಗನ್ನಡದಲ್ಲಿ ದಪ ಮತ್ತು ವ ‘ಪ್ರತ್ಯಯ’ಗಳ ಬಳಕೆಯುಂತಹದು ಎಂಬುದನ್ನು ಪರಿಶೀಲಿಸಿದಾಗಲೂ ಮೇಲೆ ಕೊಟ್ಟಿರುವ ಕನ್ನಡ ವೈಯಾಕರಣಿಗಳ ಅಭಿಪ್ರಾಯ ತಪ್ಪೆಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗಾಗಿ, ಪಂಪಭಾರತ ಮಾತ್ರವಲ್ಲದೆ ಭವಿಷ್ಯದರ್ಥದಲ್ಲೂ ಬಳಕೆಯಾಗುತ್ತದೆ.
ಇದಲ್ಲದೆ, ವ ಪ್ರತ್ಯಯವೂ ಪಂಪಭಾರತದಲ್ಲಿ ಭವಿಷ್ಯದರ್ಥದಲ್ಲಿ ಮಾತ್ರ ವಲ್ಲದೆ ವರ್ತಮಾನಾರ್ಥದಲ್ಲೂ ಬಳಕೆಯಾಗುತ್ತದೆ. ಹಾಗಾಗಿ, ದಪ ಮತ್ತು ವ ಪ್ರತ್ಯಯಗಳ ನಡುವಿನ ವ್ಯತ್ಯಾಸಕ್ಕೆ ಕಾಲಭೇದವನ್ನು ಸೂಚಿಸುವ ಬದಲು
ವರ್ತಮಾನಾರ್ಥದಲ್ಲಿ
ಪ್ರತ್ಯಯ
ಬೇರೆಯೇ ಕೆಲಸವಿದೆಯುಂದು ಹೇಳಬೇಕಾಗುತ್ತದೆ (ಜಾಸ್ತಿ ವಿವರಗಳಿಗೆ ಭಟ್ 2005:200 ನೋಡಿ).
ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯವಾದ ವಿಷಯವೇನೆಂದರೆ ಸಾಮಾನ್ಯವಾಗಿ ಘಟನೆಗಳ ಕಾಲವನ್ನು ತಿಳಿಸುವಾಗ ಅವು ಮಾತನಾಡುವ ಸಮಯಕ್ಕಿಂತ ಮೊದಲೇ ನಡೆದವುಗಳು (ಎಂದರೆ ಹಿಂದಿನ ಕಾಲದವು) ಮತ್ತು ಮಾತನಾಡುವ ಸಮಯದ ಅನಂತರ ನಡೆಯುವವುಗಳು (ಎಂದರೆ ಮುಂದಿನ ಕಾಲದವು) ಎಂಬುದಾಗಿ ಎರಡು ವಿಧದವುಗಳೆಂದು ವಿಭಜಿಸುವುದೇ ಸುಲಭ.
ಯಾಕೆಂದರೆ, ಅವು ಮಾತನಾಡುವ ಕಾಲದಲ್ಲಿ ನಡೆಯುತ್ತಿವೆಯೆಂಬುದಾಗಿ (ಎಂದರೆ ಈಗಿನ (ವರ್ತಮಾನ) ಕಾಲದವು ಎಂಬುದಾಗಿ) ಹೇಳಬೇಕಿದ್ದಲ್ಲಿ ನಿರಂತರವಾಗಿ ನಡೆಯುವ ಇಲ್ಲವೇ ರೂಢಿಯಲ್ಲಿ ನಡೆಯುವ ಘಟನೆಗಳಾಗಿರ ಬೇಕಾಗುತ್ತದೆ.
ಕನ್ನಡದಲ್ಲಿ ರೂಢಿಯಲ್ಲಿ ಜರಗುವ ಘಟನೆಗಳನ್ನು ಮೇಲೆ ಸೂಚಿಸಿದ ಹಾಗೆ ಉತ್ತ ಪ್ರತ್ಯಯದ ಮೂಲಕವೇ ಸೂಚಿಸಲಾಗುತ್ತದೆ. ಆದರೆ ನಿರಂತರವಾಗಿ ನಡೆಯುವ ಘಟನೆಗಳನ್ನು ಸೂಚಿಸಬೇಕಾದಲ್ಲಿ ಅದಕ್ಕಾಗಿ ಮಾಡುತ್ತಾ ಇದ್ದಾನೆ ಎಂಬಂತಹ ನಿರಂತರಾರ್ಥದ ಕ್ರಿಯಾರೂಪವನ್ನು ಬಳಸಲಾಗುತ್ತದೆ. ಈ ಕ್ರಿಯಾ ರೂಪದ ಮೂಲಕ ಘಟನೆಯ ಕಾಲವನ್ನು ಮಾತ್ರವಲ್ಲದೆ ಕಾಲ ವ್ಯವಸ್ಥೆಯನ್ನೂ (ಅದು ನಿರಂತರವಾದುದು ಎಂಬುದಾಗಿ) ಸೂಚಿಸಲಾಗುತ್ತದೆ (ಜಾಸ್ತಿ ವಿವರ ಗಳಿಗೆ ಭಟ್ 2004 ನೋಡಿ).
11.2.2 ಸಂಸ್ಕೃತದ ಕಾಲವ್ಯವಸ್ಥೆ
ಸಂಸ್ಕೃತದ ಕ್ರಿಯಾರೂಪಗಳನ್ನು ನಾಲ್ಕು ಮುಖ್ಯ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಆ ಭಾಷೆಯ ವ್ಯಾಕರಣಗಳಲ್ಲಿ ಇವನ್ನು ಲಟ್, ಲಿಟ್, ಲುಙ್ ಮತ್ತು ಲೃಟ್ ಎಂಬ ನಾಲ್ಕು ಲಕಾರಗಳೆಂದು ಹೆಸರಿಸುವುದು ರೂಢಿ. ಸಂಸ್ಕೃತದ ವೈಯಾಕರಣಿಗಳು ಇವು ಬೇರೆ ಬೇರೆ ‘ಕಾಲ’ಗಳನ್ನು ಸೂಚಿಸು ತ್ತವೆಯುಂದು ಹೇಳುತ್ತಾರಾದರೂ ನಿಜಕ್ಕೂ ಅವು ಕಾಲವ್ಯವಸ್ಥೆಯ ಭೇದವನ್ನು ಸೂಚಿಸುತ್ತವೆ (ಬರೋ 1955 ನೋಡಿ).
ಲುಙ್ ಅಕರತ್ ಕರಿಷ್ಯತಿ
ಕರೋತಿ ‘ಮಾಡುತ್ತಾನೆ’ ಚಕಾರ ‘ಮಾಡಿದ’
‘ಮಾಡಿದ’
‘ಮಾಡುತ್ತಾನೆ’
ಭವತಿ ‘ಆಗುತ್ತದೆ’ ಬಭೂವ ‘ಆಯಿತು’ ಅಭೂತ್ ‘ಆಯಿತು’ ಭವಿಷ್ಯತಿ ‘ಆಗುತ್ತದೆ’
ಈ ಕ್ರಿಯಾರೂಪಗಳ ಭಾಷಾಂತರಗಳನ್ನು ಗಮನಿಸಿದಾಗ, ಲಟ್ ಹಾಗೂ ಲೃಟ್ ರೂಪಗಳು ಮುಂದಿನ ಕಾಲವನ್ನು ಮತ್ತು ಲಿಟ್ ಹಾಗೂ ಲುಙ್ ರೂಪಗಳು ಹಿಂದಿನ ಕಾಲವನ್ನು ಸೂಚಿಸುವ ಹಾಗೆ ಕಾಣಿಸುತ್ತದೆ. ಆದರೆ
ಪೂರ್ಣ
ನಿಜಕ್ಕೂ ಇವುಗಳಲ್ಲಿ ಲಿಟ್ ಎಂಬುದು ಘಟನೆ ಮುಗಿದಿರುವುದನ್ನು ಸೂಚಿಸುತ್ತದೆ ಮತ್ತು ಉಳಿದ ರೂಪಗಳು (ಲಟ್, ಲುಙ್ ಮತ್ತು ಲೃಟ್ಗಳು) ಅದು ಮುಗಿಯದಿರುವುದನ್ನು ಸೂಚಿಸುತ್ತವೆ.
ಹಾಗಾಗಿ, ಇವುಗಳ ನಡುವಿನ ವ್ಯತ್ಯಾಸವನ್ನು ಕನ್ನಡದ ಹಾಗೆ ಹಿಂದಿನ ಮತ್ತು ಮುಂದಿನ ಕಾಲದ ಘಟನೆಗಳ ನಡುವಿನ ಕಾಲಸಂಬಂಧದ ವ್ಯತ್ಯಾಸ ವೆಂದು ವಿವರಿಸುವ ಬದಲು, ಮತ್ತು ಅಪೂರ್ಣಗಳೆಂಬ ಕಾಲವ್ಯವಸ್ಥೆಯ ವ್ಯತ್ಯಾಸವೆಂದು ಹೇಳುವ ಅವಶ್ಯಕತೆಯಿದೆ.
ಕಾಲಸಂಬಂಧಕ್ಕೂ ಕಾಲವ್ಯವಸ್ಥೆಗೂ ನಡುವೆ ಬಹಳ ಮುಖ್ಯವಾದ ವ್ಯತ್ಯಾಸ ವಿದೆ. ಉದಾಹರಣೆಗಾಗಿ, ಕ್ರಿಯಾಪದದ ಪೂರ್ಣರೂಪ ಅದು ತಿಳಿಸುವ ಘಟನೆ ಯನ್ನು ಆ ಘಟನೆಯ ಪೂರ್ಣಗೊಂಡ ಅವಸ್ಥೆಯಲ್ಲಿ ಸೂಚಿಸುತ್ತದೆ ಮತ್ತು ಅಪೂರ್ಣರೂಪ ಆ ಘಟನೆಯ ಒಳವ್ಯವಸ್ಥೆಯನ್ನು (ಅದರ ಆದಿ, ಅಂತ್ಯ, ಸೂಚಿಸುತ್ತದೆ. ನಿರಂತರತೆ, ಇವೆರಡೂ ಮುಂದಿನ ಕಾಲದಲ್ಲಿರಬಹುದು. ಸಂಸ್ಕೃತದಲ್ಲಿ ಕಾಲಸಂಬಂಧವನ್ನು ಸೂಚಿಸುವುದಕ್ಕಾಗಿ ಕ್ರಿಯಾರೂಪದ ಮುಂದೆ ಅ ಪ್ರತ್ಯಯವನ್ನು ಸೇರಿಸುವ ಕ್ರಮವಿದೆ. ಮೇಲೆ ಸೂಚಿಸಿದ ನಾಲ್ಕು ರೀತಿಯ ಕ್ರಿಯಾರೂಪಗಳಿಗೂ ಇಂತಹ ಅ ಪ್ರತ್ಯಯವನ್ನು ಸೇರಿಸಿ ಅವಕ್ಕೆ ಹಿಂದಿನ ಕಾಲದ ಅರ್ಥ ಬರುವ ಹಾಗೆ ಮಾಡಬಹುದು.
ಉದಾಹರಣೆಗಾಗಿ, ಇಂತಹ ಅ ಪ್ರತ್ಯಯವನ್ನು ಕ್ರಿಯಾಪದದ ಲಟ್ ರೂಪಕ್ಕೆ ಸೇರಿಸಿ ಲಙ್ ರೂಪವನ್ನು ಪಡೆಯಲು ಸಾಧ್ಯವಿದೆ ಮತ್ತು ಲೃಟ್ ರೂಪಕ್ಕೆ ಸೇರಿಸಿ ಲೃಙ್ ರೂಪವನ್ನು ಪಡೆಯಲು ಸಾಧ್ಯವಿದೆ.
ಮೊದಲಾದವುಗಳಲ್ಲೊಂದನ್ನು) ಕಾಲದಲ್ಲಿರಬಹುದು
ಕ್ಷಣಿಕತೆ ಹಿಂದಿನ
ಇಲ್ಲವೇ
ಲಟ್ ಕರೋತಿ ‘ಮಾಡುತ್ತಾನೆ’ ಲಙ್ ಅಕರೋತ್ ‘ಮಾಡಿದ’ ಲೃಟ್ ಕರಿಷ್ಯತಿ ‘ಮಾಡುತ್ತಾನೆ’ ಲೃಙ್ ಅಕರಿಷ್ಯತ್ ‘ಮಾಡಿದ, ಮಾಡುತ್ತಿದ್ದ’
ಮೇಲೆ ಕೊಟ್ಟಿರುವ ಉಳಿದ ಎರಡು ಕ್ರಿಯಾರೂಪಗಳಲ್ಲಿ ಲಿಟ್ ರೂಪಕ್ಕೆ ಅ ಪ್ರತ್ಯಯವನ್ನು ಸೇರಿಸಿ ರಚಿಸಿದ ರೂಪಗಳನ್ನು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ ಕಾಣಬಹುದು. ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಂತಹ ರೂಪಗಳು ಉಳಿದಿಲ್ಲ.
ಇದಕ್ಕೆ ಬದಲು ಲುಙ್ ರೂಪ ಕಾವ್ಯಗಳ ಕಾಲದಲ್ಲಿ ಅ ಪ್ರತ್ಯಯದೊಂದಿಗೆ ಮಾತ್ರವೇ ಬಳಕೆಯಾಗುತ್ತದೆ. ಆದರೆ ವೇದ ಕಾಲದ ಸಂಸ್ಕೃತದಲ್ಲಿ ಅ ಪ್ರತ್ಯಯ ಸೇರಿದ ಮತ್ತು ಸೇರದಿರುವ ಎರಡು ರೀತಿಯ ರೂಪಗಳೂ ಬಳಕೆ ಯಲ್ಲಿದ್ದುವು. ಕಾವ್ಯಗಳ ಕಾಲದ ಸಂಸ್ಕೃತದಲ್ಲೂ ಮಾ ಭೂತ್ ಎಂಬಂತಹ ಅಲ್ಲಗಳೆಯುವ ಪದರೂಪಗಳಲ್ಲಿ ಇಂತಹ ಅ ಪ್ರತ್ಯಯ ಸೇರಿರದ ಲುಙ್ ರೂಪಗಳನ್ನು ಕಾಣಬಹುದು.
ಸಂಸ್ಕತದಲ್ಲಿ ಹಿಂದಿನ ಕಾಲವನ್ನು ಸೂಚಿಸುವ ಅ ಪ್ರತ್ಯಯವನ್ನು ಸೇರಿಸದೆಯೂ ಮೇಲಿನ ಕ್ರಿಯಾರೂಪಗಳನ್ನು ಹಿಂದಿನ ಸಮಯದ ಘಟನೆ ಯೊಂದನ್ನು ಸೂಚಿಸುವುದಕ್ಕಾಗಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.
(1)
ಕಸ್ಮಿಂಶ್ಚಿತ್ ವೃಕ್ಷೇ ಪುರಾ ಅಹಂ ವಸಾಮಿ ‘ನಾನು ಹಿಂದೆ ಯಾವುದೋ ಒಂದು ಮರದಲ್ಲಿ ವಾಸಿಸುತ್ತಿದ್ದೆ’
(1)ನೇ ವಾಕ್ಯದಲ್ಲಿ ಹಿಂದಿನ ಸಮಯವನ್ನು ಸೂಚಿಸುವ ಕ್ರಿಯಾವಿಶೇಷಣ ವೊಂದು (ಪುರಾ ‘ಹಿಂದೆ’ ಎಂಬುದಾಗಿ) ಬಂದಿರುವ ಕಾರಣ, ಅದರಲ್ಲಿರುವ ಲಟ್ ರೂಪಕ್ಕೆ (ವಸಾಮಿ ಎಂಬುದಕ್ಕೆ) ಅ ಪ್ರತ್ಯಯವನ್ನು ಸೇರಿಸಿಲ್ಲವಾದರೂ ‘ವಾಸಿಸುತ್ತಿದ್ದೆ’ ಎಂಬ ಹಿಂದಿನ ಸಮಯದ ಅರ್ಥ ದೊರೆತಿದೆ. ಸಂಸ್ಕೃತದಲ್ಲಿ ಕಾಲಸಂಬಂಧದ ಭೇದಕ್ಕಿಂತಲೂ ಕಾಲವ್ಯವಸ್ಥೆಯ ಭೇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆಯೆಂಬುದು ಈ ವಿಷಯದಿಂದಲೂ ಸ್ಪಷ್ಟವಾಗುತ್ತದೆ.
ಆದರೆ ಹಿಂದೆ ವೇದಗಳ ಕಾಲದ ಸಂಸ್ಕೃತದಲ್ಲಿ ಬಳಕೆಯಲ್ಲಿದ್ದ ಕ್ರಿಯಾ ರೂಪಗಳ ಈ ಕಾಲವ್ಯವಸ್ಥೆ ಕಾವ್ಯಗಳ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಬಹಳ ಮಟ್ಟಿಗೆ ನಷ್ಟವಾಗಿದೆ. ಮೇಲೆ ಸೂಚಿಸಿದ ಹಾಗೆ, ವೇದ ಕಾಲದಲ್ಲಿದ್ದ ಹಲವು ಕ್ರಿಯಾರೂಪಗಳು ಅನಂತರದ ಕಾಲದಲ್ಲಿ ಬಳಕೆಯಲ್ಲಿ ಉಳಿದಿಲ್ಲ ಮಾತ್ರವಲ್ಲ, ಉಳಿದಿರುವ ಕ್ರಿಯಾರೂಪಗಳೂ ಹಲಕೆಲವು ಬದಲಾವಣೆಗಳಿಗೊಳ
ಇದಲ್ಲದೆ, ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಕರ್ತರಿ ಪ್ರಯೋಗಕ್ಕಿಂತಲೂ ಕರ್ಮಣಿ ಪ್ರಯೋಗವೇ ಜಾಸ್ತಿಯಾಗಿದೆ ಮತ್ತು ವಾಕ್ಯಗಳಲ್ಲಿ ಕ್ರಿಯಾರೂಪಗಳ ಬದಲು ಕೃದಂತ ರೂಪಗಳನ್ನು ಬಳಸುವುದೂ ಜಾಸ್ತಿಯಾಗಿದೆ. ಇಂತಹ ಹಲವು ಕಾರಣಗಳಿಂದಾಗಿ ಮೇಲೆ ಸೂಚಿಸಿದ ಕ್ರಿಯಾಪದಗಳ ಕಾಲವ್ಯವಸ್ಥೆ ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಅಷ್ಟೊಂದು ಸ್ಪಷ್ಟವಾಗಿ ಗೋಚರಿಸುವುದಿಲ್ಲ (ಭಟ್ 2000:100 ನೋಡಿ).
11.2.3 ಕಾಲರೂಪಗಳಲ್ಲಿ ವ್ಯತ್ಯಾಸ
ಕ್ರಿಯಾಪದಗಳಿಗಿರುವ ಕಾಲರೂಪಗಳ ಒಳರಚನೆಯಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಮೇಲೆ ಸೂಚಿಸಿದ ಹಾಗೆ ಸಂಸ್ಕೃತದಲ್ಲಿ ಕ್ರಿಯಾಪದಗಳಿಗೆ ಆಖ್ಯಾತ (ತಿಙ್) ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಕಾಲರೂಪಗಳನ್ನು ಪಡೆಯಬಹುದು.
ಆದರೆ ಕನ್ನಡದಲ್ಲಿ ಇದಕ್ಕಾಗಿ ಕ್ರಿಯಾಪದಗಳಿಗೆ ಆಖ್ಯಾತ ಪ್ರತ್ಯಯಗಳನ್ನು ಮಾತ್ರವಲ್ಲದೆ ಕಾಲ ಪ್ರತ್ಯಯಗಳನ್ನೂ ಸೇರಿಸಬೇಕಾಗುತ್ತದೆ.
ಸಂಸ್ಕೃತದ ಕ್ರಿಯಾಧಾತುಗಳಿಗಿರುವ ಪೂರ್ಣ ರೂಪಗಳನ್ನು (ಎಂದರೆ ಲಿಟ್ ಲಕಾರದಲ್ಲಿರುವ ರೂಪಗಳನ್ನು) ತಯಾರಿಸುವುದು ಬಹಳ ಸುಲಭ. ಇದಕ್ಕಾಗಿ ಧಾತುವಿನ ದ್ವಿತ್ವ ರೂಪವನ್ನು ಬಳಸಬೇಕು ಮತ್ತು ಅದರ ಸ್ವರ ಮತ್ತು ವ್ಯಂಜನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಅಷ್ಟೆ.
ಧಾತುಗಳು
‘ಮಾಡು’
‘ಹೊರು’
‘ಅಡುಗೆ ಮಾಡು’
ಲಿಟ್ ರೂಪಗಳು ಚಕಾರ ‘ಮಾಡಿದ’ ಬಭೂವ ‘ಆಯಿತು’ ಬಭಾರ ‘ಹೊತ್ತ’ ರುರೋಧ ‘ತಡೆದ’ ಪಪಾಚ ‘ಅಡುಗೆ ಮಾಡಿದ’
ಸಂಸ್ಕೃತದ ಕ್ರಿಯಾಧಾತುಗಳಿಗಿರುವ ಅಪೂರ್ಣರೂಪಗಳನ್ನು ತಯಾರಿಸಬೇಕಿದ್ದಲ್ಲಿ ಆ ಧಾತುಗಳಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳು ಬಹಳ ಕ್ಲಿಷ್ಟವಾದುವಾದ ಕಾರಣ ಅವನ್ನು ವರ್ಣಿಸುವುದಕ್ಕಾಗಿ ಸಂಸ್ಕೃತದ ವೈಯಾಕರಣಿಗಳು ಸಂಸ್ಕೃತದ ಕ್ರಿಯಾಧಾತುಗಳನ್ನು ಹತ್ತು ವಗ್ರ(ಗಣ)ಗಳಲ್ಲಿ ವಿಂಗಡಿಸಬೇಕಾಗಿದೆ.
ಇವುಗಳಲ್ಲಿ ಕೆಲವು ಧಾತುಗಳು ದ್ವಿತ್ವ ರೂಪದಲ್ಲಿ ಬರುತ್ತವೆ, ಕೆಲವು ಸ್ವರದಲ್ಲಿ ಬದಲಾವಣೆಗಳನ್ನು ತೋರಿಸುತ್ತವೆ, ಕೆಲವಕ್ಕೆ ಸ್ವರಾಗಮದ ಅವಶ್ಯಕತೆ ಯಿದೆ, ಕೆಲವಕ್ಕೆ ಯ ಪ್ರತ್ಯಯದ ಅವಶ್ಯಕತೆಯಿದೆ, ಕೆಲವಕ್ಕೆ ಧಾತುವಿನೊಳಗೆ ನಕಾರವೊಂದನ್ನು ಇರಿಸಬೇಕಾಗುತ್ತದೆ, ಇತ್ಯಾದಿ.
ಧಾತುಗಳು
ಕುಪ್ ಮುಚ್
‘ಹೊರು’
‘ಮಾಡು’
‘ಕೋಪಿಸು’
ಲಟ್ ರೂಪಗಳು ಬಿಭತ್ರಿ ‘ಹೊರುತ್ತಾನೆ’ ಕರೋತಿ ‘ಮಾಡುತ್ತಾನೆ’ ಭವತಿ ಕುಪ್ಯತಿ ‘ಕೋಪಿಸುತ್ತಾನೆ’ ಮುಂಚತಿ ‘ಬಿಡುತ್ತಾನೆ’
‘ಆಗುತ್ತದೆ’
ಇದಕ್ಕೆ ಬದಲು, ಕನ್ನಡದಲ್ಲಿ ಬಳಕೆಯಾಗುವ ಕ್ರಿಯಾಪದಗಳ ಮುಂದಿನ ಕಾಲದ ರೂಪವನ್ನು ವರ್ಣಿಸುವುದು ಬಹಳ ಸುಲಭ. ಕ್ರಿಯಾಪ್ರಕೃತಿಗೆ ಈ ಕಾಲ ವನ್ನು ಸೂಚಿಸುವ ಉತ್ತ ಪ್ರತ್ಯಯವನ್ನು ಸೇರಿಸಿ, ಅನಂತರ ಅದಕ್ಕೆ ಪುರುಷ- ಲಿಂಗ-ವಚನಗಳನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಸೇರಿಸಿದಾಗ ಈ ರೂಪ ಸಿದ್ಧಿಸುತ್ತದೆ. (ಮಾಡು-ಮಾಡುತ್ತಾನೆ, ಕೊಡು-ಕೊಡುತ್ತಾನೆ, ತಿನ್ನು-ತಿನ್ನುತ್ತಾನೆ, ಕುಡಿ-ಕುಡಿಯುತ್ತಾನೆ, ಬರೆ-ಬರೆಯುತ್ತಾನೆ).
ಹಿಂದಿನ ಕಾಲವನ್ನು ಸೂಚಿಸುವ ಕ್ರಿಯಾರೂಪಗಳನ್ನು ವರ್ಣಿಸುವುದು ಇದಕ್ಕಿಂತ ಸ್ವಲ್ಪ ಕಷ್ಟ. ಇಲ್ಲೂ ಕ್ರಿಯಾಪ್ರಕೃತಿಗೆ ಕಾಲವನ್ನು ಸೂಚಿಸುವ ದ
ಪ್ರತ್ಯಯವನ್ನು ಸೇರಿಸಿ, ಅನಂತರ ಅದಕ್ಕೆ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಸೇರಿಸಬೇಕು (ಕುಡಿ-ಕುಡಿದ, ಬರೆ-ಬರೆದ, ಮಾಡು-ಮಾಡಿದ, ಹೇಳು- ಹೇಳಿದ).
ಆದರೆ ಈ ಹಿಂದಿನ ಕಾಲದ ರೂಪಗಳಲ್ಲಿ ಬರುವ ಕ್ರಿಯಾಪ್ರಕೃತಿಗಳಲ್ಲಿ ಮತ್ತು ಹಲಕೆಲವು ಬದಲಾವಣೆಗಳಾಗುವು ವಾದ ಕಾರಣ (ಬರು-ಬಂದ, ಕಾಣು-ಕಂಡ, ಕೊಲ್ಲು- ಕೊಂದ, ಸಾಯು-ಸತ್ತ, ಹೊಗು-ಹೊಕ್ಕ, ಇತ್ಯಾದಿ) ಮುಂದಿನ ಕಾಲದ ಕ್ರಿಯಾರೂಪಗಳ ವರ್ಣನೆ ಗಿಂತ ಹಿಂದಿನ ಕಾಲದ ಕ್ರಿಯಾರೂಪಗಳ ವರ್ಣನೆ ಕನ್ನಡದಲ್ಲಿ ಸ್ವಲ್ಪ ಕ್ಲಿಷ್ಟ ವಾದುದು. ಆದರೂ ಸಂಸ್ಕೃತದ ಕ್ರಿಯಾರೂಪಗಳಿಗೆ ಹೋಲಿಸಿದೆವಾದರೆ ಈ ಕ್ಲಿಷ್ಟತೆ ಅತ್ಯಲ್ಪವೆಂದೇ ಹೇಳಬಹುದು. ಪ್ರತ್ಯಯದಲ್ಲಿ ಸೂಚಿಸುವ ಕಾಲವನ್ನು
11.2.4 ಘಟನೆಗಳ ನಡುವಿನ ಕಾಲಭೇದ
ಒಂದೇ ವಾಕ್ಯದಲ್ಲಿ ಎರಡು ಘಟನೆಗಳನ್ನು ಸೂಚಿಸಬೇಕಾದಾಗ, ಅವುಗಳಲ್ಲಿ ಒಂದನ್ನು ಸೂಚಿಸುವುದಕ್ಕಾಗಿ ಜೋಡಿಸುವ ಕ್ರಿಯಾರೂಪವನ್ನು ಬಳಸಲು ಸಾಧ್ಯ ವಿದೆ. ಕನ್ನಡದಲ್ಲಿ ಇದಕ್ಕಾಗಿ ನಾಲ್ಕು ರೀತಿಯ ಜೋಡಿಸುವ ಕ್ರಿಯಾರೂಪಗಳು (ಮಾಡುತ್ತಾ, ಮಾಡಿ, ಮಾಡಲು, ಮಾಡದೆ) ಬಳಕೆಯಲ್ಲಿವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು.
(2ಕ) ಅವನು ಊಟ ಮಾಡುತ್ತಾ ನಮ್ಮೊಂದಿಗೆ ಮಾತನಾಡಿದ (2ಖ) ಅವನು ಊಟ ಮಾಡಿ ನಮ್ಮೊಂದಿಗೆ ಮಾತನಾಡಿದ (2ಗ) ಅವನು ಊಟ ಮಾಡಲು ನಮ್ಮಲ್ಲಿಗೆ ಬಂದ (2ಘ) ಅವನು ಊಟ ಮಾಡದೆ ನಮ್ಮಲ್ಲಿಗೆ ಬಂದ
(2ಕ) ವಾಕ್ಯದಲ್ಲಿ ಎರಡು ಘಟನೆಗಳು ಒಂದೇ ಸಮಯದಲ್ಲಿ ನಡೆದುವು ಎಂಬುದನ್ನು ಸೂಚಿಸುವುದಕ್ಕಾಗಿ ಮಾಡುತ್ತಾ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ; ಇದಕ್ಕೆ ಬದಲು (2ಖ)ದಲ್ಲಿ ಮೊದಲು ತಿಳಿಸಿರುವ ಘಟನೆ ಎರಡನೆಯದಕ್ಕಿಂತ ಮೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಗಿ ಮಾಡಿ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ.
(2ಗ)ದಲ್ಲಿ ಮೊದಲನೆಯ ಘಟನೆ ಎರಡನೆಯದರ ಅನಂತರ ನಡೆದಿದೆ ಎಂಬುದನ್ನು ಸೂಚಿಸಬೇಕಾಗಿದೆ, ಮತ್ತು ಇದಕ್ಕಾಗಿ ಮಾಡಲು ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ. ಇದಕ್ಕೆ ಬದಲು (2ಘ)ದಲ್ಲಿ ಎರಡನೆಯ ಘಟನೆ ನಡೆಯುವ ಸಮಯದಲ್ಲಿ ಮೊದಲಿನದು ನಡೆದಿರಲಿಲ್ಲ ಎಂಬುದನ್ನು ಸೂಚಿಸಬೇಕಾಗಿದೆ ಮತ್ತು ಇದಕ್ಕಾಗಿ ಮಾಡದೆ ಜೋಡಿಸುವ ಕ್ರಿಯಾರೂಪವನ್ನು ಬಳಸಲಾಗಿದೆ.
ವಾಕ್ಯದ
(11.2.1)ರಲ್ಲಿ ವಿವರಿಸಿದ
ಕನ್ನಡದಲ್ಲಿ ಈ ರೀತಿ ನಾಲ್ಕು ಜೋಡಿಸುವ ಕ್ರಿಯಾರೂಪಗಳಿದ್ದು, ಅವು ಗಳಲ್ಲಿ ಕಾಣಿಸುವ ಕಾಲಭೇದ ವಾಕ್ಯದ ಕೊನೆಯ ಕ್ರಿಯಾರೂಪಗಳಲ್ಲಿ ಕಾಣಿಸುವ ಕಾಲಭೇದಕ್ಕಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬಹುದು. ಮೇಲೆ ಕೊನೆಯ ಕ್ರಿಯಾರೂಪಗಳಲ್ಲಿ ‘ಹಿಂದಿನ ಕಾಲ’ ಮತ್ತು ‘ಮುಂದಿನ ಕಾಲ’ ಎಂಬುದಾಗಿ ಎರಡು ಕಾಲಪ್ರತ್ಯಯ ಗಳು ಮಾತ್ರ ಬಳಕೆಯಾಗುತ್ತವೆ. ಇವು ವಾಕ್ಯದ ಆಡುಗನ ಸಮಯ ಮತ್ತು ವಾಕ್ಯ ತಿಳಿಸುವ ಘಟನೆಯ ಸಮಯಗಳ ನಡುವಿರುವ ಕಾಲಸಂಬಂಧವನ್ನು ಸೂಚಿಸುತ್ತವೆ.
ಆದರೆ, ಜೋಡಿಸುವ ಕ್ರಿಯಾರೂಪಗಳಲ್ಲಿ ಮೊದಲಿನ ಘಟನೆ, ಅನಂತರದ ಘಟನೆ ಮತ್ತು ಒಂದೇ ಸಮಯದ ಘಟನೆ ಎಂಬುದಾಗಿ ಮೂರು ರೀತಿಯ ಕಾಲಭೇದಗಳನ್ನು ಸೂಚಿಸಬೇಕಾಗಿದ್ದು, ಅದಕ್ಕಾಗಿ ಮೂರು ಕಾಲಪ್ರತ್ಯಯಗಳನ್ನು ಬಳಸಬೇಕಾಗಿದೆ (ಇದಲ್ಲದೆ ನಾಲ್ಕನೆಯ ಅಲ್ಲಗಳೆಯುವ ಪ್ರತ್ಯಯವೂ ಈ ಜೋಡಿಸುವ ಕ್ರಿಯಾರೂಪಗಳಲ್ಲಿ ಬಳಕೆಯಾಗುತ್ತದೆ).
ಸಂಸ್ಕೃತದಲ್ಲಿ ಕನ್ನಡದ ಹಾಗೆ ವಿಶಿಷ್ಟವಾದ ಜೋಡಿಸುವ ಕ್ರಿಯಾರೂಪಗಳ ಬಳಕೆಯಾಗುವುದಿಲ್ಲ. ಹೆಚ್ಚಿನೆಡೆಗಳಲ್ಲೂ ಈ ರೀತಿ ವಾಕ್ಯಗಳನ್ನು ಜೋಡಿಸ ಬೇಕಾದಲ್ಲಿ ಕ್ರಿಯಾಪದಗಳ ನಾಮರೂಪ(ಕೃದಂತ)ಗಳನ್ನಾಗಲಿ ಇಲ್ಲವೇ ‘ಸತಿ ಸಪ್ತಮಿ’ ಎಂಬ ರಚನೆಯನ್ನಾಗಲಿ ಬಳಸಬೇಕಾಗುತ್ತದೆ.
(3) ಅಹಂ ದಕ್ಷಿಣಾರಣ್ಯೇ ಚರನ್ ಮೃಗಮೇಕಂ ಅಪಶ್ಯಂ
(4)
‘ನಾನು ದಕ್ಷಿಣಾರಣ್ಯದಲ್ಲಿ ನಡೆಯುತ್ತಾ ಮೃಗವೊಂದನ್ನು ನೋಡಿದೆ’ ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್ ‘ಅವನು ರಾಜನಾಗಿರುವಾಗ ಭೂಮಂಡಲವನ್ನು ಯಾರು ಗೆದ್ದಾರು?’
(3)ನೇ ವಾಕ್ಯದಲ್ಲಿ ಚರನ್ ನಾಮಪದವನ್ನು ಜೋಡಿಸುವ ಕ್ರಿಯಾರೂಪ ವನ್ನಾಗಿ ಬಳಸಲಾಗಿದೆ ಮತ್ತು (4)ನೇ ವಾಕ್ಯದಲ್ಲಿ ತಸ್ಮಿ ರಾಜ್ಞಿ ಸತಿ ಎಂಬು ದಾಗಿ ಸತಿಸಪ್ತಮಿ ರಚನೆಯನ್ನು ಬಳಸಲಾಗಿದೆ.
ಇದಕ್ಕೆ ಅಪವಾದವಾಗಿ, ತ್ವಾ ಇಲ್ಲವೇ ಯ ಪ್ರತ್ಯಯವನ್ನು ಬಳಸಿ ರಚಿಸಿದ ಜೋಡಿಸುವ ಕ್ರಿಯಾರೂಪವೊಂದು ಸಂಸ್ಕೃತದಲ್ಲಿ ಬಳಕೆಯಲ್ಲಿದೆ. ಇದು ಮೊದಲನೆಯ ಘಟನೆ ಎರಡನೆಯದಕ್ಕಿಂತ ಮೊದಲು ನಡೆದಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಕ್ರಿಯಾರೂಪ. ಸಂಸ್ಕೃತದ ಈ ಕ್ರಿಯಾರೂಪ ದ್ರಾವಿಡ ಭಾಷೆಗಳ ಸಂಪಕ್ರದಿಂದಾಗಿ ಬೆಳೆದು ಬಂದಿದೆಯುಂದು ವಿದ್ವಾಂಸರ
(4ಕ) ಛಾಗಂ ತ್ಯಕ್ತ್ವಾ ಸ್ವಗೃಹಂ ಯಯೌ
‘ಆಡನ್ನು ತ್ಯಜಿಸಿ (ಅವನು) ತನ್ನ ಮನೆಗೆ ಹೋದ’
(4ಖ) ನರಾಃ ಶಾಸ್ತ್ರಂ ಅಧೀತ್ಯ ಪಂಡಿತಾಃ ಭವಂತಿ
‘ಮಾನವರು ಶಾಸ್ತ್ರಗಳನ್ನು ಓದಿ ಪಂಡಿತರಾಗುತ್ತಾರೆ’
ವಾಕ್ಯಗಳನ್ನು
ಸಂಸ್ಕೃತದಲ್ಲಿ ಈ ಜೋಡಿಸುವುದಕ್ಕಾಗಿ ಬಳಕೆಯಾಗುವ ಕ್ರಿಯಾರೂಪಗಳಲ್ಲಿ ಒಂದು ನಿಶ್ಚಿತವಾದ ವ್ಯವಸ್ಥೆಯಿಲ್ಲ. ಹಾಗಾಗಿ, ಅದರ ವ್ಯಾಕರಣಗಳಲ್ಲಿ ಇವುಗಳ ಬಳಕೆಯನ್ನು ವ್ಯವಸ್ಥಿತವಾಗಿ ವಿವರಿಸುವ ಅವಶ್ಯಕತೆ ಕಂಡುಬಂದಿಲ್ಲ.
ಆದರೆ ಕನ್ನಡದಲ್ಲಿ ಜೋಡಿಸುವ ಕ್ರಿಯಾರೂಪಗಳ ಬಳಕೆಯಲ್ಲಿ ಒಂದು ಅಚ್ಚುಕಟ್ಟು ಕಾಣಿಸುತ್ತದೆ. ಸಂಸ್ಕೃತ ವ್ಯಾಕರಣದ ಅಂಧಾನುಕರಣ ಮಾಡಿರುವ ಕನ್ನಡ ವೈಯಾಕರಣಿಗಳಿಗೆ ಈ ಅಚ್ಚುಕಟ್ಟನ್ನು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯವಾಗಲಿಲ್ಲ (ಜಾಸ್ತಿ ವಿವರಗಳಿಗೆ ಭಟ್ 2005 ನೋಡಿ).
11.3 ಆಖ್ಯಾತ ಪ್ರತ್ಯಯಗಳು
ಸಂಸ್ಕೃತ ಕ್ರಿಯಾಪದದ ಪೂರ್ಣ ರೂಪಗಳಲ್ಲಿ ಬಳಕೆಯಾಗುವ ಆಖ್ಯಾತ ಪ್ರತ್ಯಯಗಳು ಅಪೂರ್ಣ ರೂಪಗಳಲ್ಲಿ ಬಳಕೆಯಾಗುವ ಆಖ್ಯಾತ ಪ್ರತ್ಯಯಗಳಿ ಗಿಂತ ಭಿನ್ನವಾಗಿರಬೇಕಾಗುತ್ತದೆ.
ಯಾಕೆಂದರೆ, ಕಾಲವ್ಯವಸ್ಥೆಯನ್ನು ಸೂಚಿಸುವುದಕ್ಕಾಗಿ ಈ ಕ್ರಿಯಾರೂಪ ಗಳಲ್ಲಿ ಆಖ್ಯಾತ ಪ್ರತ್ಯಯಗಳೊಂದಿಗೆ ಬೇರೆ ಪ್ರತ್ಯಯಗಳು ಬರುವುದಿಲ್ಲ. ಹಾಗಾಗಿ, ಅವುಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳ ನಡುವಿರುವ ವ್ಯತ್ಯಾಸ (ಮತ್ತು ಕ್ರಿಯಾಧಾತುಗಳಲ್ಲಿ ಕಾಣಿಸುವ ವ್ಯತ್ಯಾಸ) ಇವುಗಳೇ ಪೂರ್ಣ ಮತ್ತು ಅಪೂರ್ಣ ಎಂಬ ಎರಡು ಕಾಲವ್ಯವಸ್ಥೆಗಳ ನಡುವಿರುವ ವ್ಯತ್ಯಾಸವನ್ನೂ ಸೂಚಿಸಬೇಕಾಗಿದೆ.
ಲಟ್ರೂಪದ ಪ್ರತ್ಯಯಗಳು
ಪುರುಷ ಏಕವಚನ ದ್ವಿವಚನ ಬಹುವಚನ ಕರೋತಿ ಕುರುತಃ ಕುವ್ರಂತಿ
ಪ್ರಥಮ ಮಧ್ಯಮ ಕರೋಷಿ ಕುರುಥಃ ಕುರುಥ ಉತ್ತಮ ಕರೋಮಿ ಕುವ್ರಃ
ಕುರ್ಮಃ
ಲಿಟ್ರೂಪದ ಪ್ರತ್ಯಯಗಳು ಏಕವಚನ ದ್ವಿವಚನ ಬಹುವಚನ ಚಕಾರ ಚಕ್ರತುಃ ಚಕ್ರುಃ ಚಕರ್ಥ ಚಕ್ರಥುಃ ಚಕ್ರ ಚಕಾರ ಚಕ್ರವ ಚಕ್ರಮ
ಮೇಲೆ ಪ್ರಥಮಪುರುಷ ಏಕವಚನದ ಲಟ್ರೂಪದಲ್ಲಿ (ಎಂದರೆ ಅಪೂರ್ಣ ರೂಪದಲ್ಲಿ) ತಿ ಆಖ್ಯಾತ ಪ್ರತ್ಯಯ ಬಂದಿದೆ; ಆದರೆ, ಲಿಟ್ (ಪೂರ್ಣ) ರೂಪ ದಲ್ಲಿ ಅ ಪ್ರತ್ಯಯ ಬಂದಿದೆ. ಮಧ್ಯಮ ಪುರುಷ ಏಕವಚನದ ಲಟ್ ರೂಪದಲ್ಲಿ ಸಿ(ಷಿ) ಅಖ್ಯಾತ ಪ್ರತ್ಯಯ ಬಂದಿದೆ; ಆದರೆ ಲಿಟ್ ರೂಪದಲ್ಲಿ ಥ ಪ್ರತ್ಯಯ ಬಂದಿದೆ. ಇತರ ರೂಪಗಳಲ್ಲೂ ಇಂತಹವೇ ವ್ಯತ್ಯಾಸಗಳನ್ನು ಕಾಣಬಹುದು.
ಕನ್ನಡದಲ್ಲೂ ಮುಂದಿನ ಮತ್ತು ಹಿಂದಿನ ಕಾಲಗಳನ್ನು ಸೂಚಿಸುವ ಕ್ರಿಯಾ ರೂಪಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳ ನಡುವೆ ಕೆಲವು ವ್ಯತ್ಯಾಸಗಳಿವೆ ಯೆಂಬುದನ್ನು ಈ ಕೆಳಗಿನ ರೂಪಾವಳಿಗಳಲ್ಲಿ ಕಾಣಬಹುದು:
ಮುಂದಿನ ಕಾಲದ ಕ್ರಿಯಾರೂಪಗಳು
ಮಾಡುತ್ತಾರೆ ,, ಮಾಡುತ್ತವೆ
ಹಿಂದಿನ ಕಾಲದ ಕ್ರಿಯಾರೂಪಗಳು ಮಾಡಿದರು ಮಾಡಿದ
,, ಮಾಡಿದಳು ಮಾಡಿತು
ಮಾಡುತ್ತೀರಿ ಮಾಡುತ್ತೇವೆ
ಮಾಡಿದೆ
ಮಾಡಿದೆ
ಮಾಡಿದಿರಿ ಮಾಡಿದೆವು
ಪ್ರಥಮ ಮಾಡುತ್ತಾನೆ ಮಾಡುತ್ತಾಳೆ ಮಾಡುತ್ತದೆ ಮಾಡಿದುವು ಮಧ್ಯಮ ಮಾಡುತ್ತೀ ಉತ್ತಮ ಮಾಡುತ್ತೇನೆ
ಮುಂದಿನ ಕಾಲವನ್ನು ಸೂಚಿಸುವ ಉತ್ತಮಪುರುಷ ಮತ್ತು ಏಕವಚನದ ಕ್ರಿಯಾರೂಪದಲ್ಲಿ ಏನೆ ಆಖ್ಯಾತ ಪ್ರತ್ಯಯವಿದೆ; ಆದರೆ ಅದಕ್ಕೆ ಸಮನಾಗಿರುವ ಹಿಂದಿನ ಕಾಲದ ಕ್ರಿಯಾರೂಪದಲ್ಲಿ ಎ ಆಖ್ಯಾತ ಪ್ರತ್ಯಯವಿದೆ. ಇತರ ರೂಪ ಗಳಲ್ಲೂ ಇಂತಹವೇ ವ್ಯತ್ಯಾಸಗಳಿರುವುದನ್ನು ಕಾಣಬಹುದು.
ಆದರೆ ಕನ್ನಡದ ಈ ಕ್ರಿಯಾರೂಪಗಳಲ್ಲಿ ಆಖ್ಯಾತ ಪ್ರತ್ಯಯಗಳು ಮಾತ್ರ ವಲ್ಲದೆ ಉತ್ತ ಇಲ್ಲವೇ ದ ಕಾಲಪ್ರತ್ಯಯಗಳೂ ಬರುವುವಾದ ಕಾರಣ, ಕಾಲ ಭೇದವನ್ನು ಸೂಚಿಸುವ ಕೆಲಸವನ್ನು ಆಖ್ಯಾತ ಪ್ರತ್ಯಯಗಳ ನಡುವಿನ ವ್ಯತ್ಯಾಸದ ಮೇಲೆ ಹೊರಿಸುವ ಅವಶ್ಯಕತೆಯಿಲ್ಲ. ಅವನ್ನು ನೇರವಾಗಿ ಕಾಲಪ್ರತ್ಯಯಗಳಾದ ಉತ್ತ ಮತ್ತು ದ ಪ್ರತ್ಯಯಗಳ ಮೇಲೆಯೇ ಹೊರಿಸಬಹುದು.
11.4 ಪರಸ್ಮೈಪದ ಮತ್ತು ಆತ್ಮನೇಪದ
ಸಂಸ್ಕೃತದ ಕ್ರಿಯಾರೂಪಗಳಲ್ಲಿ ಪರಸ್ಮೈಪದ ಮತ್ತು ಆತ್ಮನೇಪದ ಎಂಬುದಾಗಿ ಇನ್ನೊಂದು ಮುಖ್ಯವಾದ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಆ ಭಾಷೆಯ ಕ್ರಿಯಾರೂಪಗಳಲ್ಲಿ ಎರಡು ರೀತಿಯ ಆಖ್ಯಾತ ಪ್ರತ್ಯಯಗಳನ್ನು ಬಳಸಲಾಗುತ್ತದೆ.
ಕ್ರಿಯಾಪದವು ತಿಳಿಸುವ ಘಟನೆಯನ್ನು ಒಬ್ಬ ವ್ಯಕ್ತಿ ತನ್ನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಆತ್ಮನೇಪದದ ರೂಪಗಳನ್ನು ಬಳಸಬೇಕು ಮತ್ತು ಬೇರೊಬ್ಬನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಪರಸ್ಮೈಪದದ ರೂಪಗಳನ್ನು ಬಳಸಬೇಕು ಎಂಬುದು ಈ ವ್ಯತ್ಯಾಸದ ಮೂಲ ಉದ್ದೇಶವಾಗಿತ್ತು.
ಆದರೆ ಸಂಸ್ಕೃತದಲ್ಲಿ ಈ ಮೂಲ ಉದ್ದೇಶ ಬಹಳ ಮಟ್ಟಿಗೆ ನಷ್ಟವಾಗಿದೆ. ಇದಕ್ಕೆ ಕಾರಣವೇನೆಂದರೆ, ಆ ಭಾಷೆಯ ಕೆಲವು ಕ್ರಿಯಾಪದಗಳು ಯಾವಾಗಲೂ ಆತ್ಮನೇಪದದ ಆಖ್ಯಾತ ಪ್ರತ್ಯಯಗಳೊಂದಿಗೇನೇ ಬರುತ್ತವೆ ಮತ್ತು ಇನ್ನು ಕೆಲವು ಕ್ರಿಯಾಪದಗಳು ಯಾವಾಗಲೂ ಪರಸ್ಮೈಪದದ ಆಖ್ಯಾತ ಪ್ರತ್ಯಯಗ
ಳೊಂದಿಗೇನೇ ಬರುತ್ತವೆ. ಹಾಗಾಗಿ ಅವುಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸ ಅರ್ಥಭೇದವನ್ನು ಸೂಚಿಸಲಾರದು.
ಆದರೆ ಬೇರೆ ಕೆಲವು ಕ್ರಿಯಾಪದಗಳು ಈ ಎರಡು ರೀತಿಯ ಆಖ್ಯಾತ ಪ್ರತ್ಯಯಗಳೊಂದಿಗೂ ಬರಲು ಸಾಧ್ಯವಿದ್ದು, ಅಂತಹ ಕ್ರಿಯಾಪದಗಳಲ್ಲಿ ಕೆಲವು ಮಾತ್ರ ಮೇಲಿನ ಅರ್ಥ ವ್ಯತ್ಯಾಸವನ್ನು ತೋರಿಸುತ್ತವೆ.
(5ಕ) ದೇವದತ್ತಃ ಪಚತಿ
‘ದೇವದತ್ತ ಅಡಿಗೆ ಮಾಡುತ್ತಾನೆ’
(5ಖ) ದೇವದತ್ತಃ ಪಚತೇ
‘ದೇವದತ್ತ ಅಡಿಗೆ ಮಾಡಿಕೊಳ್ಳುತ್ತಾನೆ’
ಪಚ್ ‘ಅಡಿಗೆ ಮಾಡು’ ಕ್ರಿಯಾಪದ (5ಕ) ವಾಕ್ಯದಲ್ಲಿ ಪಚತಿ ಎಂಬುದಾಗಿ ಪರಸ್ಮೈಪದದಲ್ಲಿ ಬಳಕೆಯಾಗಿದೆ ಮತ್ತು (5ಖ) ವಾಕ್ಯದಲ್ಲಿ ಪಚತೇ ಎಂಬು ದಾಗಿ ಆತ್ಮನೇಪದದಲ್ಲಿ ಬಳಕೆಯಾಗಿದೆ. ಅಡಿಗೆ ಮಾಡುತ್ತಿರುವುದು ತನಗಾಗಿ ಎಂಬ ಅರ್ಥ ಈ (5ಖ) ವಾಕ್ಯಕ್ಕಿದೆ; ಆದರೆ (5ಕ) ವಾಕ್ಯಕ್ಕೆ ಅಂತಹ ಅರ್ಥ
ಕನ್ನಡದಲ್ಲಿ ಈ ಅರ್ಥವನ್ನು ಆಖ್ಯಾತ ಪ್ರತ್ಯಯದ ಮೂಲಕ ಸೂಚಿಸುವ ಬದಲು ಕ್ರಿಯಾಪದದೊಂದಿಗೆ ಕೊಳ್ಳು ಎಂಬುದನ್ನು ಬಳಸುವುದರ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ಮೇಲೆ (5ಖ) ವಾಕ್ಯದ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯದಲ್ಲಿ ಕಾಣಬಹುದು.
11.5 ಕರ್ಮಣಿ ಪ್ರಯೋಗ
ಸಂಸ್ಕೃತದಲ್ಲಿ ಕರ್ತರಿ, ಕರ್ಮಣಿ ಮತ್ತು ಭಾವೇ ಎಂಬುದಾಗಿ ಮೂರು ರೀತಿಯ ವಾಕ್ಯಗಳಿವೆ. ವೈಯಾಕರಣಿಗಳು ಇವನ್ನು ಮೂರು ‘ಪ್ರಯೋಗ’ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕರ್ಮಣಿ ಪ್ರಯೋಗದ ಮೂಲ ಉದ್ದೇಶ ಭಾಷಾ ವ್ಯವಹಾರಕ್ಕೆ ಸಂಬಂಧಿಸಿದುದಾಗಿತ್ತು.
ವಾಕ್ಯವು ಸೂಚಿಸುವ ಘಟನೆಯ ಸ್ವರೂಪ ಮತ್ತು ಅದಕ್ಕೂ ಅದರಲ್ಲಿ ಭಾಗ ವಹಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ಸಂಬಂಧ -
ಇವೆರಡೂ ಕರ್ಮಣಿ ಪ್ರಯೋಗದಲ್ಲಿ ಬದಲಾಗದೆ ಹಾಗೆಯೇ ಉಳಿಯುತ್ತವೆ. ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಯಾವುದನ್ನು ಮುಖ್ಯ ವಿಷಯವಾಗಿ ಆರಿಸಲಾಗಿದೆ ಎಂಬ ಭಾಷಾವ್ಯವಹಾರಕ್ಕೆ ಸಂಬಂಧಿಸಿದ ಅಂಶ ಮಾತ್ರ ಬದಲಾಗುತ್ತದೆ.
ಕರ್ತರಿ-ಕರ್ಮಣಿ ಪ್ರಯೋಗಗಳ ನಡುವಿದ್ದ ಈ ಮೂಲ ಉದ್ದೇಶ ಸಂಸ್ಕೃತದಲ್ಲಿ ಉಳಿದಿಲ್ಲ. ಆದರೆ ಇಂತಹದೇ ಪ್ರಯೋಗ ವ್ಯತ್ಯಾಸವನ್ನು
ಹೊಂದಿರುವ ಇಂಗ್ಲಿಷ್ ಭಾಷೆಯಲ್ಲಿ ಈ ಅರ್ಥ ವ್ಯತ್ಯಾಸ ಉಳಿದುಕೊಂಡಿದೆ. ಇದನ್ನು ಕೆಳಗೆ ಕೊಟ್ಟಿರುವ (6ಕ-ಖ) ವಾಕ್ಯಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
‘ಅವಳು ಅವನನ್ನು ಹೊಗಳಿದಳು’
(6R) He was praised by her
‘ಅವನನ್ನು ಅವಳು ಹೊಗಳಿದಳು’
(6ಕ) ವಾಕ್ಯದಲ್ಲಿ she ‘ಅವಳು’ ಎಂಬುದು ಮುಖ್ಯ ವಿಷಯವಾಗಿದೆ; ಆದರೆ, (6ಖ)ದಲ್ಲಿ ಅದರ ಬದಲು he ‘ಅವನು’ ಎಂಬುದು ಮುಖ್ಯ ವಿಷಯ ವಾಗಿ ಬಂದಿದೆ. ಕನ್ನಡದಲ್ಲಿ ಈ ರೀತಿ ವಾಕ್ಯದ ಮುಖ್ಯ ವಿಷಯವನ್ನು ಬದಲಿಸಬೇಕಾದಲ್ಲಿ ಅದರಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಿಸಿದರೆ ಸಾಕು; ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆ ಯಿಲ್ಲ; ಇದನ್ನು ಈ ವಾಕ್ಯಗಳ ಕೆಳಗೆ ಕೊಟ್ಟಿರುವ ಕನ್ನಡ ಅನುವಾದ ವಾಕ್ಯಗಳಲ್ಲಿ ಕಾಣಬಹುದು.
ಇಂಗ್ಲಿಷ್ನಲ್ಲಿ ಮೇಲಿನ ಅರ್ಥವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಪದಗಳ ಜಾಗವನ್ನು ಬದಲಾಯಿಸುವುದರೊಂದಿಗೆ ಬೇರೆ ಬದಲಾವಣೆಗಳನ್ನೂ ಮಾಡ ಬೇಕಾಗಿದೆ; ಇದಕ್ಕಾಗಿ ವಾಕ್ಯದ ಕ್ರಿಯಾಪದವನ್ನು ‘ಕರ್ಮಣಿ’ ರೂಪಕ್ಕೆ ಬದಲಿಸ ಬೇಕಾಗುತ್ತದೆ (ಠಿಡಿಚಿiseಜ ಎಂಬುದನ್ನು ತಿಚಿs ಠಿಡಿಚಿiseಜ ಎಂಬುದಾಗಿ ಬದಲಿಸಿ ಕೊಳ್ಳಬೇಕಾಗುತ್ತದೆ) ಮತ್ತು ಸವ್ರನಾಮಗಳ ಜಾಗವನ್ನು ಬದಲಾಯಿಸುವು ದಿದ್ದಲ್ಲಿ ಅವುಗಳ ವಿಭಕ್ತಿರೂಪವನ್ನೂ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಆದರೆ, ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಕರ್ತರಿ ಮತ್ತು ಕರ್ಮಣಿ ವಾಕ್ಯಗಳ ನಡುವೆ ‘ಅರ್ಥ’ದಲ್ಲಿ ಈ ವ್ಯತ್ಯಾಸ ಉಳಿದಿಲ್ಲವಾದ ಕಾರಣ, ಅದರಲ್ಲಿ ಕಾಣಿಸುವ ವಿಭಕ್ತಿಪಲ್ಲಟಕ್ಕೆ ಇಂಗ್ಲಿಷ್ನಲ್ಲಿರುವ ಹಾಗೆ ಆರ್ಥ ವ್ಯತ್ಯಾಸವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದು.
ಸಂಸ್ಕೃತ ವಾಕ್ಯಗಳಲ್ಲಿ ಬರುವ ನಾಮಪದಗಳ ಜಾಗವನ್ನು ಬದಲಾಯಿಸಲು ವಾಕ್ಯದ ಕ್ರಿಯಾರೂಪದಲ್ಲಿ ಇಲ್ಲವೇ ನಾಮಪದಗಳ ವಿಭಕ್ತಿಯಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ. ಹಾಗಾಗಿ, ಮೇಲಿನ ಉದ್ದೇಶ ಕ್ಕಾಗಿ ಕರ್ಮಣಿ ಪ್ರಯೋಗವನ್ನು ಬಳಸುವ ಅವಶ್ಯಕತೆ ಸಂಸ್ಕೃತದಲ್ಲಿಲ್ಲ ಎಂಬುದು ಸ್ಪಷ್ಟ. ಸಂಸ್ಕೃತದಿಂದ ಬೆಳೆದು ಬಂದ ಹಿಂದಿ, ಮರಾಠಿ ಮೊದಲಾದ ಆಧುನಿಕ ಭಾಷೆಗಳಲ್ಲೂ ಕರ್ಮಣಿ ಪ್ರಯೋಗವಿದ್ದು ಅದಕ್ಕೆ ಬೇರೆಯೇ ಒಂದು ಉದ್ದೇಶವಿದೆ.
ಹಿಂದಿಯಲ್ಲಿ ಕ್ರಿಯಾಪದದ ಭೂತಕೃದಂತ ರೂಪದೊಂದಿಗೆ ಜಾ ‘ಹೋಗು’ ಕ್ರಿಯಾಪದದ ರೂಪವೊಂದನ್ನು ಬಳಸಿದಾಗ ಕರ್ಮಣಿ ಪ್ರಯೋಗ ಸಿದ್ಧಿಸುತ್ತದೆ.
ಇಂತಹ ಕರ್ಮಣಿ ವಾಕ್ಯದಲ್ಲಿ ಕರ್ತೃಪದವನ್ನು ಕರಣಾರ್ಥದ ಸೇ ಎಂಬುದ ರೊಂದಿಗೆ ಬಳಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕರ್ಮಣಿ ವಾಕ್ಯವನ್ನು ಹಿಂದಿಯಲ್ಲಿ ಕರ್ತೃವಿಗೆ ಘಟನೆಯನ್ನು ನಡೆಸಲು ಸಾಧ್ಯವಾಗಲಿಲ್ಲ ಎಂಬ ಅರ್ಥದಲ್ಲಿ ನಿಷೇಧಾರ್ಥಕ ವಾಕ್ಯವಾಗಿ ಬಳಸುವುದೇ ಜಾಸ್ತಿ.
ರಾಮ್ ರೋಟೀ ನಹೀಂ ಖಾಯಾ ‘ರಾಮ ರೊಟ್ಟಿ ತಿನ್ನಲಿಲ್ಲ’
(7ಖ) ರಾಮ್ ಸೇ ರೋಟೀ ನಹೀಂ ಖಾಯೀ ಗಯೀ
‘ರಾಮನಿಗೆ ರೊಟ್ಟಿ ತಿನ್ನಲು ಸಾಧ್ಯವಾಗಲಿಲ್ಲ’
ಆದರೆ ಕರ್ತೃಪದವನ್ನು ವಾಕ್ಯದಲ್ಲಿ ಬಳಸದಿದ್ದಲ್ಲಿ ಇಂತಹ ‘ಸಾಧ್ಯವಾಗ ಲಿಲ್ಲ’ ಎಂಬ ಅರ್ಥವಿಲ್ಲದೆಯೂ ಹಿಂದಿಯಲ್ಲಿ ಕರ್ಮಣಿ ವಾಕ್ಯವನ್ನು ಬಳಸಲು ಸಾಧ್ಯವಿದೆ.
(8)
ಚೋರ್ ಪಕಡ್ ಲಿಯೇ ಗಯೇ ‘ಕಳ್ಳರನ್ನು ಹಿಡಿಯಲಾಯಿತು’
11.6 ಅಲ್ಲಗಳೆಯುವ ವಾಕ್ಯಗಳು
ವಾಕ್ಯಗಳನ್ನು ಅಲ್ಲಗಳೆಯುವ ರೂಪಕ್ಕೆ (ಎಂದರೆ ನಿಷೇಧರೂಪಕ್ಕೆ) ಬದಲಾ ಯಿಸುವಲ್ಲಿ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ. ಸಂಸ್ಕೃತದಲ್ಲಿ ಘಟನೆಯನ್ನು ವರದಿ ಮಾಡುವ ಯಾವುದೇ ಒಂದು ವಾಕ್ಯವನ್ನೂ ಅಲ್ಲಗಳೆಯುವ ನ ಪದ ವನ್ನು ಸೇರಿಸುವುದರ ಮೂಲಕ ಅಲ್ಲಗಳೆಯುವ ವಾಕ್ಯವನ್ನಾಗಿ ಬದಲಾಯಿಸಲು ಸಾಧ್ಯವಿದೆ.
ಆದರೆ ಕನ್ನಡದಲ್ಲಿ ಇಲ್ಲ ಮತ್ತು ಅಲ್ಲ ಎಂಬ ಎರಡು ಅಲ್ಲಗಳೆಯುವ ಪದಗಳಿದ್ದು ಇವುಗಳಲ್ಲಿ ಮೊದಲನೆಯದನ್ನು ಕ್ರಿಯಾಪದವಿರುವ ವಾಕ್ಯಗಳನ್ನು ಅಲ್ಲಗಳೆಯುವುದಕ್ಕಾಗಿ ಮತ್ತು ಎರಡನೆಯದನ್ನು ಎರಡು ನಾಮಪದ (ಇಲ್ಲವೇ ನಾಮಪದಕಂತೆ)ಗಳಿಂದ ಸಿದ್ಧವಾದ (ಕ್ರಿಯಾಪದವಿಲ್ಲದ) ವಾಕ್ಯಗಳನ್ನು ಅಲ್ಲಗಳೆ ಯುವುದಕ್ಕಾಗಿ ಬಳಸುವ ಅವಶ್ಯಕತೆಯಿದೆ. ಇದಲ್ಲದೆ, ಕನ್ನಡದಲ್ಲಿ ಕ್ರಿಯಾಪದವಿರುವ ವಾಕ್ಯಗಳಿಗೆ ಇಲ್ಲ ಪದವನ್ನು ಸೇರಿಸುವ ಮೊದಲು ಅವುಗಳ ಕ್ರಿಯಾಪದವನ್ನು ಸಂಬಂಧಿಸುವ ರೂಪಕ್ಕೆ ಇಲ್ಲವೇ ನಾಮರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ. ಹಿಂದಿನ ಸಮಯದ ಅರ್ಥವನ್ನು ಕೊಡಲು ಕ್ರಿಯಾಪದದ ಸಂಬಂಧಿಸುವ ರೂಪವನ್ನು ಮತ್ತು ಮುಂದಿನ ಸಮಯದ ಅರ್ಥವನ್ನು ಕೊಡಲು ನಾಮರೂಪವನ್ನು ಬಳಸು ವುದು ಕನ್ನಡದಲ್ಲಿ ರೂಢಿ.
ಆದರೆ ಸಂಸ್ಕೃತದಲ್ಲಿ ಅಲ್ಲಗಳೆಯುವ ನ ಪದವನ್ನು ಬಳಸಲು ವಾಕ್ಯದಲ್ಲಿ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ.
(9)
ತೇ ಪುಸ್ತಕಾನಿ ನ ಪಠಂತಿ ‘ಅವರು ಪುಸ್ತಕಗಳನ್ನು ಓದುವುದಿಲ್ಲ’ (10) ವಿಶ್ವಾಮಿತ್ರಃ ಅಯೋಧ್ಯಾಂ ನ ಅಗಚ್ಛತ್
‘ವಿಶ್ವಾಮಿತ್ರ ಅಯೋಧ್ಯೆಗೆ ಹೋಗಲಿಲ್ಲ’
ಕ್ರಿಯಾಪದಗಳ ಕೃದಂತ (ಗುಣ)ರೂಪವನ್ನು ಅಲ್ಲಗಳೆಯುವುದಕ್ಕಾಗಿ ಕನ್ನಡ ದಲ್ಲಿ ಅದ ಎಂಬ ಬೇರೆಯೇ ಒಂದು ಅಲ್ಲಗಳೆಯುವ ಪ್ರತ್ಯಯದ ಬಳಕೆಯಿದೆ. ಆದರೆ ಸಂಸ್ಕೃತದಲ್ಲಿ ಇಂತಹ ಸಂದಭ್ರಗಳಲ್ಲೂ ನ ಪದದ ಬಳಕೆಯೇ ಕಾಣಿಸುತ್ತದೆ.
ಕನ್ನಡದಲ್ಲಿ ಈ ರೀತಿ ಅದ ಪ್ರತ್ಯಯವನ್ನು ಬಳಸಿ ರಚಿಸಿದ ಕ್ರಿಯಾರೂಪ ಗಳು ಕಾಲವ್ಯತ್ಯಾಸವನ್ನು ಸೂಚಿಸಲಾರವು. ಆದರೆ ಸಂಸ್ಕೃತದಲ್ಲಿ ಕನ್ನಡದ ಹಾಗೆ ಪ್ರತ್ಯಯವನ್ನು ಬಳಸದೆ ನ ಪದವನ್ನೇ ಬಳಸುವ ಕಾರಣ, ಅದರ ಕೃದಂತ ರೂಪಗಳು ಕಾಲವ್ಯತ್ಯಾಸವನ್ನೂ ಸೂಚಿಸಬಲ್ಲುವು.
(11ಕ) ಭೋಜನಂ ನ ಕರಿಷ್ಯಮಾಣಃ ನರಃ ‘ಊಟಮಾಡದ ಮನುಷ್ಯ’
(11ಖ) ಭೋಜನಂ ನ ಚಕ್ರಾಣಃ ನರಃ
‘ಊಟಮಾಡದ ಮನುಷ್ಯ’
(11ಕ)ದಲ್ಲಿ ಯಾರು ಊಟ ಮಾಡುವುದಿಲ್ಲವೋ ಆತನನ್ನು ಸೂಚಿಸ ಲಾಗಿದೆ ಮತ್ತು (11ಖ)ದಲ್ಲಿ ಯಾರು ಊಟ ಮಾಡಲಿಲ್ಲವೋ ಆತನನ್ನು ಸೂಚಿಸಲಾಗಿದೆ. ಈ ಎರಡು ಸಂದಭ್ರಗಳಲ್ಲೂ ಕನ್ನಡದಲ್ಲಿ ಮಾಡದ ಎಂಬ ಒಂದೇ ಕ್ರಿಯಾರೂಪ ಬಳಕೆಯಾಗುತ್ತದೆ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ವ್ಯತ್ಯಾಸ ವೇನೆಂದರೆ, ಸಂಸ್ಕೃತದಲ್ಲಿ ವಾಕ್ಯಗಳನ್ನು ಮಾತ್ರವಲ್ಲದೆ ಪದಗಳನ್ನೂ ಅ ಇಲ್ಲವೇ ಅನ್ ಉಪಸಗ್ರದ ಮೂಲಕ ಅಲ್ಲಗಳೆಯಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಈ ರೀತಿ ಪದಗಳನ್ನು ಅಲ್ಲಗಳೆಯುವ ವಿಧಾನವಿಲ್ಲ. ಸಂಸ್ಕೃತದಿಂದ ಎರವಲಾಗಿ ಬಂದ ಇಂತಹ ಅಲ್ಲಗಳೆಯುವ ಉಪಸಗ್ರಗಳಿರುವ ಪದಗಳು ಕೆಲವು ಕನ್ನಡದಲ್ಲಿರುವುದು ನಿಜವಾದರೂ ಕನ್ನಡದವೇ ಆದ ಪದಗಳಿಗೆ ಅಂತಹ ಅಲ್ಲಗಳೆಯುವ ರೂಪಗಳಿಲ್ಲ.
ಸತ್ಯ ಜ್ಞಾನ
ನ್ಯಾಯ
ಅಸತ್ಯ ಅನಾಚಾರ ಅನೇಕ ಅಜ್ಞಾನ ಅನರ್ಥ ಅನ್ಯಾಯ
ಆದರೆ, ವಾಕ್ಯವೊಂದನ್ನು ಪೂರ್ತಿಯಾಗಿ ಅಲ್ಲಗಳೆಯುವ ಬದಲು ಅದರ ಒಂದು ಅಂಗವನ್ನು ಮಾತ್ರ ಅಲ್ಲಗಳೆಯಲು ಕನ್ನಡದಲ್ಲಿ ಬೇರೆಯೇ ಒಂದು ವ್ಯಾಕರಣ ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ಅಲ್ಲ ಪದವನ್ನು ಅಲ್ಲಗಳೆಯ ಬೇಕಾಗಿರುವ ವಾಕ್ಯಾಂಗದೊಂದಿಗೆ ಸೇರಿಸಿ ಹೇಳಬೇಕು ಮತ್ತು ವಾಕ್ಯದಲ್ಲಿ ಬರುವ ಕ್ರಿಯಾಪದವನ್ನು ನಾಮಪದವಾಗಿ ಬದಲಾಯಿಸಿಕೊಳ್ಳಬೇಕು.
(12ಕ) ಹರಿ ರಾಮುವಿಗೆ ಒಂದು ಪುಸ್ತಕ ಕೊಟ್ಟ (12ಖ) ಹರಿ ರಾಮುವಿಗೆ ಒಂದು ಪುಸ್ತಕ ಕೊಡಲಿಲ್ಲ (12ಗ) ಹರಿಯಲ್ಲ ರಾಮುವಿಗೆ ಒಂದು ಪುಸ್ತಕ ಕೊಟ್ಟದ್ದು (12ಘ) ಹರಿ ರಾಮುವಿಗಲ್ಲ ಒಂದು ಪುಸ್ತಕ ಕೊಟ್ಟದ್ದು (12ಙ) ಹರಿ ರಾಮುವಿಗೆ ಒಂದು ಪುಸ್ತಕವನ್ನಲ್ಲ ಕೊಟ್ಟದ್ದು (12ಚ) ಹರಿ ರಾಮುವಿಗೆ ಒಂದು ಪುಸ್ತಕ ಕೊಟ್ಟದ್ದಲ್ಲ (ಮಾರಿದ್ದು)
(12ಖ) ವಾಕ್ಯದಲ್ಲಿ (12ಕ) ವಾಕ್ಯವನ್ನು ಪೂರ್ತಿಯಾಗಿ ಅಲ್ಲಗಳೆಯ ಲಾಗಿದೆ. ಆದರೆ, (12ಗ)ದಲ್ಲಿ ಅದರ ಒಂದು ಭಾಗವನ್ನು ಮಾತ್ರ, ಎಂದರೆ ರಾಮುವಿಗೆ ಪುಸ್ತಕವನ್ನು ಕೊಟ್ಟವನು ಹರಿ ಎಂಬುದನ್ನು ಮಾತ್ರ ಅಲ್ಲಗಳೆಯ ಲಾಗಿದೆ. ವಾಕ್ಯದ ಇತರ ಭಾಗವನ್ನು, ಎಂದರೆ ಯಾರೋ ರಾಮುವಿಗೆ ಒಂದು ಪುಸ್ತಕ ಕೊಟ್ಟಿದ್ದಾರೆ ಎಂಬುದನ್ನು ಈ ವಾಕ್ಯದಲ್ಲಿ ಅಲ್ಲಗಳೆಯಲಾಗಿಲ್ಲ ಎಂಬುದನ್ನು ಗಮನಿಸಬಹುದು. ಇತರ (12ಘ-ಚ) ವಾಕ್ಯಗಳಲ್ಲೂ ಹೀಗೆಯೇ ಘಟಕಗಳನ್ನು ಅಲ್ಲಗಳೆಯಲಾಗಿದೆ.
ಆಜ್ಞೆ ಮಾಡುವ ವಾಕ್ಯಗಳನ್ನು ಅಲ್ಲಗಳೆಯಲು ಸಂಸ್ಕೃತದಲ್ಲಿ ನ ಎಂಬುದರ ಬದಲು ಮಾ ಎಂಬುದನ್ನು ಬಳಸುವ ಕ್ರಮವಿದೆ. ಕನ್ನಡದಲ್ಲಿ ಇದಕ್ಕಾಗಿ ಇಲ್ಲ ಎಂಬುದರ ಬದಲು ಬೇಡ ಎಂಬ ಪದವನ್ನು ಬಳಸುವ ಕ್ರಮವಿದೆ.
ವಾಕ್ಯದ
ಬೇರೆ
ಬೇರೆ
(13) ಭೋಜನಸಮಯೇ ಜಲಂ ಮಾ ಪಿಬ
‘ಊಟದ ಸಮಯದಲ್ಲಿ ನೀರು ಕುಡಿಯಬೇಡ’
ಇಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅಲ್ಲಗಳೆಯುವ ಅರ್ಥವನ್ನು ಸೂಚಿಸುವಲ್ಲಿ ಕಾಣಿಸುವ ವ್ಯತ್ಯಾಸವೇನೆಂದರೆ ಕನ್ನಡದಲ್ಲಿ ಈ ಅರ್ಥವನ್ನು ಒಂದು ಕ್ರಿಯಾರೂಪ ಸೂಚಿಸುತ್ತದೆ; ಆದರೆ, ಸಂಸ್ಕೃತದಲ್ಲಿ ಅದನ್ನು ಒಂದು ಉಪಸಗ್ರ ಇಲ್ಲವೇ ಅವ್ಯಯ ಸೂಚಿಸುತ್ತದೆ.
11.7 ಕೇಳುವ ವಾಕ್ಯಗಳು
ಕೇಳುವ (ಪ್ರಶ್ನಾರ್ಥಕ) ವಾಕ್ಯಗಳ ರಚನೆಯಲ್ಲೂ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಇಂತಹದೇ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ವಾಕ್ಯವೊಂದನ್ನು ಕೇಳ್ವಿ (ಪ್ರಶ್ನೆ)ಯನ್ನಾಗಿ ಬದಲಾಯಿಸಬೇಕಿದ್ದಲ್ಲಿ ಕಿಂ ಪದವನ್ನು ಅದರಲ್ಲಿ ಸೇರಿಸಿದರೆ ಸಾಕು. ವಾಕ್ಯದಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡುವ ಅವಶ್ಯಕತೆಯಿಲ್ಲ.
ಆದರೆ ಕನ್ನಡದಲ್ಲಿ ಇದಕ್ಕಾಗಿ ಓ ಪ್ರತ್ಯಯದ ಬಳಕೆಯಿದ್ದು ಇದನ್ನು ಕ್ರಿಯಾಪದದ ಕೊನೆಯಲ್ಲಿ ಬಳಸುವುದಾದರೆ ಮಾತ್ರ ವಾಕ್ಯದಲ್ಲಿ ಬೇರೆ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿಲ್ಲ. ವಾಕ್ಯದಲ್ಲಿ ಬರುವ ಬೇರೆ ಪದಗಳೊಂದಿಗೆ ಅದನ್ನು ಬಳಸಬೇಕಿದ್ದಲ್ಲಿ ಕ್ರಿಯಾಪದವನ್ನು ಅದರ ನಾಮ ರೂಪಕ್ಕೆ ಬದಲಾಯಿಸುವ ಅವಶ್ಯಕತೆಯಿದೆ.
(14ಕ) ವ್ಯಾಧಾಃ ವನೇಸ್ಮಿನ್ ಸಂಚರಂತಿ
‘ಈ ಕಾಡಿನಲ್ಲಿ ಬೇಟೆಗಾರರು ಸಂಚರಿಸುತ್ತಾರೆ’
(14ಖ) ಕಿಂ ವ್ಯಾಧಾಃ ವನೇಸ್ಮಿನ್ ಸಂಚರಂತಿ?
‘ಈ ಕಾಡಿನಲ್ಲಿ ಬೇಟೆಗಾರರು ಸಂಚರಿಸುತ್ತಾರೋ?’ (14ಗ) ಬೇಟೆಗಾರರು ಈ ಕಾಡಿನಲ್ಲೋ ಸಂಚರಿಸುವುದು? (14ಘ) ಬೇಟೆಗಾರರೋ ಈ ಕಾಡಿನಲ್ಲಿ ಸಂಚರಿಸುವುದು?
ಕನ್ನಡದಲ್ಲಿಕೇಳ್ವಿಯ ಅರ್ಥವನ್ನು ಕೊಡುವ ಓ ಪ್ರತ್ಯಯವನ್ನು ವಾಕ್ಯ ದಲ್ಲಿರುವ ನಾಮಪದಗಳಲ್ಲಿ ಒಂದರೊಡನೆ ಬಳಸಿದಾಗ ಅದು ಸೂಚಿಸುವ ಕೇಳ್ವಿ ಆ ಪದವನ್ನು ಮಾತ್ರ ಬಾಧಿಸುತ್ತದೆ ಎಂಬುದನ್ನು ಗಮನಿಸಬಹುದು. ಮೇಲೆ (14ಗ) ವಾಕ್ಯ ಕಾಡಿನಲ್ಲಿ ಯಾರಾದರೂ ಸಂಚರಿಸುತ್ತಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಪ್ರಯತ್ನಿಸುವ ಬದಲು ಸಂಚರಿಸುವುದು ಈ ಕಾಡಿನಲ್ಲೋ ಎಂದು ಕೇಳುತ್ತದೆ ಮತ್ತು (14ಘ) ವಾಕ್ಯ ಸಂಚರಿಸುವವರು ಯಾರು (ಬೇಟೆಗಾರರೋ) ಎಂದು ಕೇಳುತ್ತದೆ.
ಕನ್ನಡ ಮತ್ತು ಸಂಸ್ಕೃತಗಳೆರಡರಲ್ಲೂ ಈ ರೀತಿ ವಾಕ್ಯದಲ್ಲಿ ಬರುವ ನಾಮಪದಗಳಲ್ಲಿ ಒಂದರ ಕುರಿತಾಗಿ ಮಾತ್ರ ವಿಷಯವನ್ನು ತಿಳಿಯುವುದಕ್ಕಾಗಿ ಸವ್ರನಾಮವನ್ನು ಬಳಸಲು ಸಾಧ್ಯವಿದೆ.
(14ಙ) ಕೇ ವನೇಸ್ಮಿನ್ ಸಂಚರಂತಿ?
‘ಈ ಕಾಡಿನಲ್ಲಿ ಯಾರು ಸಂಚರಿಸುತ್ತಾರೆ?’
(15) ಕ್ವ ಭವತಾಂ ನಿವಾಸಃ?
‘ನಿಮ್ಮ ಮನೆ ಎಲ್ಲಿ?’
ಕನ್ನಡದ ‘ಕೇಳ್ವಿ’ ಪದಗಳಿಗೆ ಓ, ಊ ಮತ್ತು ಏ ಎಂಬ ಮೂರು ಪ್ರತ್ಯಯಗಳಲ್ಲಿ ಯಾವುದಾದರೂ ಒಂದನ್ನು ಸೇರಿಸುವುದರ ಮೂಲಕ ಅವನ್ನು ಅನಿಶ್ಚಿತವಾದ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಸೂಚಿಸುವ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.
ಸಂಸ್ಕೃತದಲ್ಲಿಯೂ ಇದೇ ರೀತಿಯಲ್ಲಿ ಅಪಿ, ಚ, ಚನ, ಚಿದ್, ವಾ ಮೊದಲಾದವುಗಳಲ್ಲಿ ಒಂದನ್ನು ಬಳಸಿ ಕೇಳ್ವಿ ಪದಗಳನ್ನು ಅನಿಶ್ಚಯಾರ್ಥದ ಪದಗಳನ್ನಾಗಿ ಬದಲಾಯಿಸಲು ಸಾಧ್ಯವಿದೆ.
(16) ನ ಮಾಂ ಕಶ್ಚಿತ್ ಅಪಶ್ಯತ್ ‘ನನ್ನನ್ನು ಯಾರೂ ನೋಡಲಿಲ್ಲ’
(17) ನ ಕಿಂಚಿತ್ ಉಕ್ತವಾನ್
‘ಅವನು ಏನೂ ಹೇಳಲಿಲ್ಲ’
ಆದರೆ ಕನ್ನಡದಲ್ಲಿ ಮೇಲೆ ಕೊಟ್ಟಿರುವ ಮೂರು ಪ್ರತ್ಯಯಗಳಿಂದ ಸಿದ್ಧ ವಾದ ಅನಿಶ್ಚಯಾರ್ಥದ ಪದಗಳಿಗೆ ಮೂರು ಭಿನ್ನವಾದ ಅರ್ಥಗಳಿವೆ. ಓ ಪ್ರತ್ಯಯಕ್ಕೆ ಬೇರೆ ಬಳಕೆಗಳಲ್ಲಿ ವಿಕಲ್ಪಾರ್ಥವಿದೆಯಾದ ಕಾರಣ, ಅದರಿಂದ ಸಿದ್ಧವಾದ ಅನಿಶ್ಚಯಾರ್ಥದ ಪದಕ್ಕೆ ಏಕದೇಶಾರ್ಥ ಮತ್ತು ಅಸ್ತಿತ್ವಾರ್ಥಗಳಿವೆ.
ಇದಕ್ಕೆ ವಿರುದ್ಧವಾಗಿ ಊ ಪ್ರತ್ಯಯಕ್ಕೆ ಸಮುಚ್ಚಯಾರ್ಥವಿದೆಯಾದ ಕಾರಣ, ಅದರಿಂದ ಸಿದ್ಧವಾದ ಪದಕ್ಕೆ ಸಾವ್ರತ್ರಿಕಾರ್ಥವಿದೆಯಲ್ಲದೆ ಅಸ್ತಿತ್ವಾರ್ಥವಿಲ್ಲ. ಈ ವ್ಯತ್ಯಾಸವನ್ನು ಈ ಅನಿಶ್ಚಯಾರ್ಥದ ಪದಗಳ ಬಳಕೆಯಲ್ಲಿ ಕಾಣಬಹುದು.
ಉದಾಹರಣೆಗಾಗಿ, ಈ ಎರಡು ರೀತಿಯ ಪದಗಳನ್ನೂ ಒಂದು ಘಟನೆ ನಡೆದಿಲ್ಲವೆಂದು ತಿಳಿಸುವ ಅಲ್ಲಗಳೆಯುವ ವಾಕ್ಯಗಳಲ್ಲಿ ಬಳಸಲು ಸಾಧ್ಯವಿದೆ, ಆದರೆ ಒಂದು ಘಟನೆ ನಡೆದಿದೆಯೆಂದು ತಿಳಿಸುವ ವಾಕ್ಯಗಳಲ್ಲಿ ಓ ಪ್ರತ್ಯಯದ ಮೂಲಕ ಸಾಧಿತವಾಗಿರುವ ಪದಗಳನ್ನು ಮಾತ್ರ ಬಳಸಲು ಸಾಧ್ಯ.
(17ಕ) ನಿನ್ನೆ ಆತ ಯಾರನ್ನೋ ಕಂಡಿರಲಿಲ್ಲ (17ಖ) ನಿನ್ನೆ ಆತ ಯಾರನ್ನೂ ಕಂಡಿರಲಿಲ್ಲ (18) ನಿನ್ನೆ ಆತ ಯಾರನ್ನೋ ಕಂಡಿದ್ದ
ಇದಕ್ಕೆ ಬದಲು ವಿಧ್ಯರ್ಥಕ ವಾಕ್ಯಗಳಲ್ಲಿ ಊ ಪ್ರತ್ಯಯದಿಂದ ಸಾಧಿತ ವಾಗಿರುವ ಪದಗಳನ್ನು ಬಳಸಲು ಸಾಧ್ಯವಿದೆ, ಆದರೆ ಓ ಪ್ರತ್ಯಯದಿಂದ ಸಾಧಿತವಾಗಿರುವ ಪದಗಳನ್ನು ಬಳಸಲು ಸಾಧ್ಯವಿಲ್ಲ (ಜಾಸ್ತಿ ವಿವರಗಳಿಗೆ ಭಟ್ 1978, 2003 ನೋಡಿ).
(19) ಎಲ್ಲಿಗೂ ಹೋಗು (20) ಯಾರನ್ನು ಬೇಕಿದ್ದರೂ ಕೇಳು
ಸಂಸ್ಕೃತದ ಕೇಳ್ವಿ ಪದಗಳೊಂದಿಗೆ ಬರಬಲ್ಲ ಚ, ಅಪಿ, ವಾ ಮೊದಲಾ ದವುಗಳ ಬಳಕೆಯಲ್ಲಿ ಇಂತಹ ಅರ್ಥ ವ್ಯತ್ಯಾಸವಿರುವ ಹಾಗೆ ಕಾಣಿಸುವುದಿಲ್ಲ. ಬಹುಶಃ ಮೊದಲಿಗೆ ಅಂತಹ ವ್ಯತ್ಯಾಸವಿದ್ದು ಅನಂತರ ಆ ಭಾಷೆಯಲ್ಲಿ ಅದು ನಷ್ಟವಾಗಿರಲು ಸಾಧ್ಯವಿದೆ.
11.8 ತಿರುಳು
ಕ್ರಿಯಾರೂಪಗಳ ಒಳರಚನೆಯಲ್ಲಿ ಮತ್ತು ಬಳಕೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಕನ್ನಡದಲ್ಲಿ ಮುಖ್ಯವಾಗಿ ಹಿಂದಿನ ಮತ್ತು ಮುಂದಿನ ಕಾಲದವುಗಳೆಂಬುದಾಗಿ ‘ಕಾಲಸಂಬಂಧ’ದ ಭೇದ ಕಾಣಿಸು ತ್ತದೆ; ಆದರೆ, ಸಂಸ್ಕೃತದಲ್ಲಿ ಮುಗಿದ (ಪೂರ್ಣ) ಮತ್ತು ಮುಗಿಯದ (ಅಪೂರ್ಣ) ಎಂಬುದಾಗಿ ‘ಕಾಲವ್ಯವಸ್ಥೆ’ಯ ಭೇದ ಕಾಣಿಸುತ್ತದೆ.
ಕನ್ನಡದಲ್ಲಿರುವಂತಹ ಕಾಲಸಂಬಂಧದ ಭೇದಕ್ಕೆ ಸಂಸ್ಕೃತದಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿಲ್ಲ. ಅದನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಕ್ರಿಯಾಪದದ ಮೊದಲಿಗೆ ಅ ಉಪಸಗ್ರವನ್ನು ಸೇರಿಸಲಾಗುತ್ತದೆ. ಆದರೆ ಇದನ್ನು ಬಳಸಲೇ ಬೇಕೆಂಬ ನಿಯಮವಿಲ್ಲ, ಅವಶ್ಯವಿದ್ದಲ್ಲಿ ಮಾತ್ರ ಬಳಸಿದರೆ ಸಾಕು.
ಕನ್ನಡದಲ್ಲಿ ಕಾಲಸಂಬಂಧವನ್ನು ಸೂಚಿಸುವ ಪ್ರತ್ಯಯಗಳು ಪುರುಷ- ವಚನ-ಲಿಂಗಗಳನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳಿಂದ ಭಿನ್ನವಾದವುಗಳು, ಆದರೆ ಸಂಸ್ಕೃತದಲ್ಲಿ ಕಾಲವ್ಯವಸ್ಥೆಯನ್ನು ಮತ್ತು ಪುರುಷ-ವಚನಗಳನ್ನು ಒಟ್ಟಾಗಿ ಆಖ್ಯಾತ ಪ್ರತ್ಯಯಗಳೇ ಸೂಚಿಸುತ್ತವೆ.
ಕನ್ನಡದ ಕ್ರಿಯಾರೂಪಗಳಲ್ಲಿ ಲಿಂಗಭೇದವನ್ನು ಸೂಚಿಸಲಾಗುತ್ತದೆ, ಆದರೆ ಸಂಸ್ಕೃತದ ಕ್ರಿಯಾರೂಪಗಳಲ್ಲಿ ಲಿಂಗಭೇದದ ಸೂಚನೆಯಿಲ್ಲ. ಕನ್ನಡದಲ್ಲಿ ಆತ್ಮಾರ್ಥವನ್ನು ಸೂಚಿಸುವುದಕ್ಕಾಗಿ ಕೊಳ್ಳು ಎಂಬುದರ ಬಳಕೆ ಯಾಗುತ್ತದೆ. ಸಂಸ್ಕೃತದಲ್ಲಿ ಮೊದಲಿಗೆ ಇದನ್ನು ಆಖ್ಯಾತ ಪ್ರತ್ಯಯಗಳಲ್ಲೇನೇ ಕಾಣಿಸುವ ಪರಸ್ಮೈಪದ-ಆತ್ಮನೇಪದ ವ್ಯತ್ಯಾಸದ ಮೂಲಕ ಸೂಚಿಸಲಾಗು ತ್ತಿತ್ತು; ಆದರೆ ಕಾವ್ಯಗಳ ಕಾಲದಲ್ಲಿ ಈ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಅರ್ಥಹೀನ
ಸಮನಾದ
ಇದೇ ರೀತಿಯಲ್ಲಿ, ಸಂಸ್ಕೃತದಲ್ಲಿ ಮೊದಲಿಗೆ ಬಳಕೆಯಲ್ಲಿದ್ದ ಕರ್ತರಿ- ಕರ್ಮಣಿ ಪ್ರಯೋಗಭೇದವೂ ಕಾವ್ಯಗಳ ಕಾಲದಲ್ಲಿ ತನ್ನ ಮೂಲ ಉದ್ದೇಶವನ್ನು ಪ್ರಯೋಗಭೇದ ಪ್ರಯೋಗಭೇದಕ್ಕೆ ಕಳೆದುಕೊಂಡಿದೆ. ಈ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಬರವಣಿಗೆಗಳಲ್ಲಿ ಮಾತ್ರ ಕಾಣಿಸುತ್ತದೆ.
ಅಲ್ಲಗಳೆಯುವ ಮತ್ತು ಕೇಳುವ (ಪ್ರಶ್ನಿಸುವ) ವಾಕ್ಯಗಳ ರಚನೆಯಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಕ್ರಿಯಾರೂಪಗಳ ಒಳರಚನೆಯಲ್ಲಿ ಈ ರೀತಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿದ್ದು, ಸಂಸ್ಕೃತದ ವ್ಯಾಕರಣ ನಿಯಮ ಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತಕ್ಕಿಂತ ತೀರ ಭಿನ್ನವಾಗಿರುವ ಕನ್ನಡದ್ದೇ ಆದ ನಿಯಮಗಳನ್ನು ತಯಾರಿಸಿಕೊಂಡಲ್ಲಿ ಮಾತ್ರ ಕನ್ನಡದ ಈ ಕ್ರಿಯಾರೂಪಗಳನ್ನು ವಿವರಿಸಲು ಸಾಧ್ಯ.