Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
8. ವಿಭಕ್ತಿಗಳು
8.1 ಮುನ್ನೋಟ
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಬಳಕೆಯಲ್ಲಿ ಕಾಣಿಸುವ ಒಂದು ಮುಖ್ಯವಾದ ವ್ಯತ್ಯಾಸವನ್ನು ಹಿಂದಿನ ಅಧ್ಯಾಯದಲ್ಲಿ ಪರಿಶೀಲಿಸ ಲಾಗಿತ್ತು. ಅದೇನೆಂದರೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೂ ಅವುಗಳ ಅರ್ಥಕ್ಕೂ ನಡುವೆ ನೇರವಾದ ಹೊಂದಾಣಿಕೆಯಿದೆ, ಆದರೆ ಸಂಸ್ಕೃತದಲ್ಲಿ ಆ ರೀತಿ ನೇರವಾದ ಹೊಂದಾಣಿಕೆಯಿಲ್ಲ.
ಈ ವ್ಯತ್ಯಾಸದ ಆಧಾರದ ಮೇಲೆ, ಸಂಸ್ಕೃತ ವ್ಯಾಕರಣಗಳಲ್ಲಿ ವಿಭಕ್ತಿ ಪ್ರತ್ಯಯಗಳ ಬಳಕೆಯನ್ನು ವಿವರಿಸುವುದಕ್ಕಾಗಿ ‘ಕಾರಕ’ವೆಂಬ ವ್ಯಾಕರಣ ತತ್ವ ವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಯಾಕೆ ಇದೆ, ಮತ್ತು ಕನ್ನಡದಲ್ಲಿ ಅಂತಹ ಅವಶ್ಯಕತೆ ಯಾಕೆ ಇಲ್ಲ ಎಂಬುದನ್ನು ಅಲ್ಲಿ ವಿವರಿಸಲಾಗಿತ್ತು. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಸಂಖ್ಯೆಯಲ್ಲಿ ಮತ್ತು ಅವುಗಳ ಬಳಕೆಯಲ್ಲಿ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಶೀಲಿಸಲಾಗಿದೆ ಮತ್ತು ‘ವಿಭಕ್ತಿ ಪಲ್ಲಟ’ ವೆಂಬ ವ್ಯಾಕರಣ ಪರಿಕಲ್ಪನೆಯನ್ನು ಈ ಎರಡು ಭಾಷೆಗಳ ವ್ಯಾಕರಣಗಳಲ್ಲಿ ಹೇಗೆ ಬಳಸಿಕೊಳ್ಳಲು ಸಾಧ್ಯ ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಎಲ್ಲಾ ವ್ಯತ್ಯಾಸಗಳನ್ನೂ ಪರಿಶೀಲಿಸಿದಾಗ ಒಂದು ವಿಷಯವಂತೂ ಸ್ಪಷ್ಟ ವಾಗುತ್ತದೆ. ಸಂಸ್ಕೃತ ವ್ಯಾಕರಣಗಳಲ್ಲಿ ಕಾಣಿಸುವ ವಿಭಕ್ತಿ ಪ್ರತ್ಯಯಗಳ ವ್ಯವಸ್ಥೆ ಯನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲಿ ತಂದಿರಿಸುವ ಕನ್ನಡ ವೈಯಾಕರಣಿಗಳ ಪ್ರಯತ್ನ ಸಫಲವಾಗಲು ಸಾಧ್ಯವೇ ಇಲ್ಲ.
8.2 ವಿಭಕ್ತಿಗಳ ಹೆಸರು
ಸಂಸ್ಕೃತದ ವಿಭಕ್ತಿಗಳನ್ನು ಒಂದು ಕ್ರಮದಲ್ಲಿ ಪಟ್ಟಿಮಾಡಿ ಅವಕ್ಕೆ ಪ್ರಥಮಾ, ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ ಮತ್ತು ಸಪ್ತಮೀ (ಎಂದರೆ ಅನುಕ್ರಮವಾಗಿ ಒಂದನೇ, ಎರಡನೇ, ಮೂರನೇ, ನಾಲ್ಕನೇ, ಐದನೇ, ಆರನೇ ಮತ್ತು ಏಳನೇ) ವಿಭಕ್ತಿಗಳೆಂದು ಹೆಸರು ಕೊಡಲಾಗಿದೆ. ಈ ಹೆಸರುಗಳನ್ನು ಕನ್ನಡ ವೈಯಾಕರಣಿಗಳು ಸಂಸ್ಕೃತದಿಂದ ಹಾಗೆಯೇ ಕನ್ನಡಕ್ಕೆ ವಗ್ರಾಯಿಸಿಕೊಂಡಿದ್ದಾರೆ.
ಸಂಸ್ಕೃತದಲ್ಲಿ ವಿಭಕ್ತಿಗಳನ್ನು ಈ ರೀತಿ ಪ್ರಥಮಾ, ದ್ವಿತೀಯಾ, ತೃತೀಯಾ ಮೊದಲಾಗಿ ಪಟ್ಟಿಮಾಡಿ ಹೆಸರಿಸಲು ಒಂದು ಉತ್ತಮವಾದ ಕಾರಣವಿದೆ. ಅದರಲ್ಲಿ ಬರುವ ವಿಭಕ್ತಿಗಳಲ್ಲಿ ಯಾವುವಕ್ಕೆಲ್ಲ ಒಂದೇ ರೂಪದಲ್ಲಿರುವ ಪ್ರತ್ಯಯಗಳಿವೆ ಎಂಬುದನ್ನು ಸುಲಭವಾಗಿ ವಿವರಿಸಿ ಹೇಳಲು ಮೇಲಿನ ಕ್ರಮ ಅತ್ಯಂತ ಯೋಗ್ಯವಾದುದು. ಬೇರೆ ಯಾವ ರೀತಿಯಲ್ಲಿ ಈ ವಿಭಕ್ತಿಗಳನ್ನು ಪಟ್ಟಿಮಾಡಿ ಹೇಳಿದರೂ ಆ ರೀತಿ ಒಂದೇ ರೂಪದಲ್ಲಿ ಬರುವ ಪ್ರತ್ಯಯಗಳನ್ನು ಅಷ್ಟೊಂದು ಸುಲಭವಾಗಿ (ಎಂದರೆ ಒಟ್ಟೊಟ್ಟಾಗಿ) ಸೂಚಿಸಲು ಸಾಧ್ಯವಾಗದು.
ಉದಾಹರಣೆಗಾಗಿ, ದೇವಃ ನಾಮಪದಕ್ಕೆ ದ್ವಿವಚನದ ಪ್ರಥಮಾ ಮತ್ತು ದ್ವಿತೀಯಾ ವಿಭಕ್ತಿಗಳೆರಡರಲ್ಲಿ ದೇವೌ ಎಂಬ ಒಂದೇ ರೂಪವಿದೆ, ತೃತೀಯಾ, ಚತುರ್ಥೀ ಮತ್ತು ಪಂಚಮಿಗಳೆಂಬ ಮೂರು ವಿಭಕ್ತಿಗಳಲ್ಲಿ ದೇವಾಭ್ಯಂ ಎಂಬ ಒಂದೇ ರೂಪವಿದೆ, ಮತ್ತು ಷಷ್ಠೀ ಹಾಗೂ ಸಪ್ತಮೀ ವಿಭಕ್ತಿಗಳೆರಡರಲ್ಲಿ ದೇವಯೋಃ ಎಂಬ ಒಂದೇ ರೂಪವಿದೆ.
ದ್ವಿವಚನ
ಪ್ರಥಮಾ-ದ್ವಿತೀಯಾ ತೃತೀಯಾ-ಚತುರ್ಥೀ-ಪಂಚಮೀ ದೇವಾಭ್ಯಾಂ ದೇವಯೋಃ ಷಷ್ಠೀ-ಸಪ್ತಮೀ
ದೇವೌ
ಬಹುವಚನ
ಚತುರ್ಥೀ-ಪಂಚಮೀ
ದೇವೇಭ್ಯಃ
ಇದೇ ರೀತಿಯಲ್ಲಿ ಅಗ್ನಿ ನಾಮಪದಕ್ಕೆ (1) ಏಕವಚನದ ಪಂಚಮಿ- ಷಷ್ಠಿಗಳಲ್ಲಿ, (2) ದ್ವಿವಚನದ ಪ್ರಥಮಾ-ದ್ವಿತೀಯೆಗಳಲ್ಲಿ, ತೃತೀಯಾ- ಚತುರ್ಥೀ-ಪಂಚಮಿಗಳಲ್ಲಿ ಮತ್ತು ಷಷ್ಠೀ-ಸಪ್ತಮಿಗಳಲ್ಲಿ, ಹಾಗೂ (3) ಬಹುವಚನದ ಚತುರ್ಥೀ-ಪಂಚಮಿಗಳಲ್ಲಿ ಸಮಾನವಾದ ರೂಪಗಳಿವೆ.
ಏಕವಚನ
ಪಂಚಮೀ-ಷಷ್ಠೀ
ದ್ವಿವಚನ
ಪ್ರಥಮಾ-ದ್ವಿತೀಯಾ ತೃತೀಯಾ-ಚತುರ್ಥೀ-ಪಂಚಮೀ ಅಗ್ನಿಭ್ಯಾಂ ಅಗ್ನಯೋಃ ಷಷ್ಠೀ-ಸಪ್ತಮೀ
ಬಹುವಚನ
ಚತುರ್ಥೀ-ಪಂಚಮೀ
ಅಗ್ನಿಭ್ಯಃ
ಸಂಸ್ಕೃತದ ವಿಭಕ್ತಿಗಳನ್ನು ಮೇಲೆ ಸೂಚಿಸಿದ ಹಾಗೆ ಪಟ್ಟಿ ಮಾಡಿದಲ್ಲಿ ಒಂದೇ ರೂಪವಿರುವ ವಿಭಕ್ತಿಗಳೆಲ್ಲ ಒಟ್ಟೊಟ್ಟಿಗೆ ಬರುತ್ತವೆ; ಬೇರೆ ಯಾವ ಕ್ರಮದಲ್ಲಿ ಅವನ್ನು ಪಟ್ಟಿ ಮಾಡಿದರೂ ಅವು ಆ ರೀತಿ ಒಟ್ಟೊಟ್ಟಿಗೆ ಬರಲಾರವು ಮತ್ತು ಈ ಕಾರಣಕ್ಕಾಗಿ ಅವುಗಳ ನಡುವಿರುವ ರೂಪಸಾದೃಶ್ಯವನ್ನು ಅಷ್ಟೊಂದು ಸುಲಭವಾಗಿ ವಿವರಿಸಿ ಹೇಳಲು ಸಾಧ್ಯವಾಗದು.
ಎಂದರೆ, ರೂಪಸಾದೃಶ್ಯವನ್ನು ತೋರಿಸುವ ಸಂಸ್ಕೃತದ ವಿಭಕ್ತಿ ರೂಪಗಳು ಈ ರೀತಿ ಒಟ್ಟೊಟ್ಟಾಗಿ ನಾಮಪದಗಳ ರೂಪಾವಳಿಗಳಲ್ಲಿ ಕಾಣಿಸಿಕೊಳ್ಳ ಬೇಕಿದ್ದಲ್ಲಿ ಅವನ್ನು ಸಂಸ್ಕೃತ ವ್ಯಾಕರಣದಲ್ಲಿ ಮೇಲೆ ಕಾಣಿಸಿದ ಹಾಗೆ ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ವಿಂಗಡಿಸುವುದು ಅವಶ್ಯ.
ಕನ್ನಡದ ವಿಭಕ್ತಿಗಳನ್ನು ಮೇಲಿನ ಸಂಸ್ಕೃತ ವಿಭಕ್ತಿಗಳ ಕ್ರಮವನ್ನನುಸರಿಸಿ ಪ್ರಥಮಾ, ದ್ವಿತೀಯಾ, ತೃತೀಯಾ ಮೊದಲಾಗಿ ಹೆಸರಿಸುವುದರಿಂದ ಇಂತಹ ಪ್ರಯೋಜನವೇನೂ ಸಿಗಲಾರದು. ಯಾಕೆಂದರೆ, ಕನ್ನಡದಲ್ಲಿ ಸಂಸ್ಕೃತದ ಹಾಗೆ ಒಂದೇ ರೂಪವಿರುವ ವಿಭಕ್ತಿಗಳೇ ಇಲ್ಲ.
ಸಂಸ್ಕೃತದ ಏಳು ವಿಭಕ್ತಿಗಳನ್ನು ಕನ್ನಡದಲ್ಲೂ ಕಾಣಲು ಪ್ರಯತ್ನಿಸಿದಲ್ಲಿ ಮಾತ್ರ ಅದರಲ್ಲಿ ಕೆಲವು ಒಂದೇ ರೂಪವಿರುವ ವಿಭಕ್ತಿಗಳಿವೆಯೆಂದು ಹೇಳಲು ಸಾಧ್ಯ. ಆದರೆ ಅಂತಹ ಪ್ರಯತ್ನದಲ್ಲಿ ತೃತೀಯಾ-ಪಂಚಮಿಗಳು (ನಡುವಿರುವ ಚತುರ್ಥಿಯನ್ನು ಬಿಟ್ಟು) ಇಂದ ಎಂಬ ಒಂದೇ ರೂಪದವಾಗಿ ಕಾಣಿಸುತ್ತವೆ. ಹಾಗಾಗಿ, ಪ್ರತ್ಯಯಗಳನ್ನು ಹೆಸರಿಸುವ ಈ ಮೇಲಿನ ಸಂಸ್ಕೃತದ ಕ್ರಮ ಕನ್ನಡಕ್ಕೆ ಅನುಕೂಲವಾಗುವ ಬದಲು ಪ್ರತಿಕೂಲವಾಗುತ್ತದೆ.
ನಿಜಕ್ಕೂ ಕನ್ನಡದ ವಿಭಕ್ತಿಗಳನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಮೊದ ಲಾಗಿ ಕರೆಯುವ ಬದಲು, ವಾಕ್ಯಗಳಲ್ಲಿ ಬಳಸಿದಾಗ ಅವಕ್ಕೆ ಎಂತಹ ಅರ್ಥ ಬರುತ್ತದೆ ಎಂಬುದನ್ನು ಸೂಚಿಸುವಂತಹ ಹೆಸರುಗಳನ್ನು ಕೊಡುವುದೇ ಉತ್ತಮ. ಇದರಿಂದ ಅವನ್ನು ಕಲಿಯಬೇಕೆಂದಿರುವ ವಿದ್ಯಾರ್ಥಿಗಳಿಗೂ ಅವನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿರುವ ಇತರರಿಗೂ ಪ್ರಯೋಜನವಾದೀತು.
ಉದಾಹರಣೆಗಾಗಿ, ಇಂದ ಪ್ರತ್ಯಯ ಕನ್ನಡದಲ್ಲಿ ಮುಖ್ಯವಾಗಿ ಒಂದು ಚಲನೆಯ ಮೂಲ(ಸುರು)ವನ್ನು ಸೂಚಿಸುತ್ತದೆ ಮತ್ತು ಗೆ ಪ್ರತ್ಯಯ ಚಲನೆಯ ಕೊನೆ ಇಲ್ಲವೇ ಗುರಿಯನ್ನು ಸೂಚಿಸುತ್ತದೆ. ಈ ವಿಭಕ್ತಿಗಳನ್ನು ‘ತೃತೀಯಾ’ (ಇಲ್ಲವೇ ‘ಪಂಚಮೀ’) ಮತ್ತು ‘ಚತುರ್ಥೀ’ ಎಂಬುದಾಗಿ ಹೆಸರಿಸುವ ಬದಲು ಅವುಗಳ ಈ ಪ್ರಧಾನವಾದ ಅರ್ಥವನ್ನು ಸೂಚಿಸುವ ಹಾಗೆ ‘ಸುರು’ ವಿಭಕ್ತಿ ಮತ್ತು ‘ಕೊನೆ’ ವಿಭಕ್ತಿ ಎಂಬುದಾಗಿ ಹೆಸರಿಸಿದಲ್ಲಿ ವಾಕ್ಯದಲ್ಲಿ ಅವುಗಳ ಬಳಕೆ ಯೆಂತಹದು ಎಂಬುದನ್ನು ವಿವರಿಸುವ ಕೆಲಸ ಸುಲಭವಾದೀತು.
ಇದೇ ರೀತಿಯಲ್ಲಿ, ಕನ್ನಡದ ಅನ್ನು ಪ್ರತ್ಯಯ ಮುಖ್ಯವಾಗಿ ಒಂದು ಘಟನೆ ಯಿಂದ ಬಾಧಿತವಾಗಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ ಮತ್ತು ಅಲ್ಲಿ ಪ್ರತ್ಯಯ ಒಂದು ಘಟನೆ ನಡೆದಿರುವ ಜಾಗವನ್ನು ಸೂಚಿಸುತ್ತದೆ. ಹಾಗಾಗಿ ಇವೆರಡನ್ನು ಯಾವ ವಿಶಿಷ್ಟವಾದ ಅರ್ಥವನ್ನೂ ಕೊಡದ ‘ದ್ವಿತೀಯಾ’ ಮತ್ತು ‘ಸಪ್ತಮೀ’ ವಿಭಕ್ತಿಗಳೆಂಬ ಹೆಸರುಗಳಿಂದ ಕರೆಯುವ ಬದಲು, ಅವುಗಳ ಮುಖ್ಯ ಅರ್ಥವನ್ನು ಸ್ಪಷ್ಟವಾಗಿ ಸೂಚಿಸುವ ‘ಬಾಧಿತ’ ಇಲ್ಲವೇ ‘ಆಗುಗ’ ವಿಭಕ್ತಿ ಮತ್ತು ‘ಜಾಗ’ ವಿಭಕ್ತಿ ಎಂಬುದಾಗಿ ಹೆಸರಿಸುವುದೇ ಕನ್ನಡದ ಮಟ್ಟಿಗೆ ಉತ್ತಮವಾದ ಕ್ರಮ.
ಆದರೆ ಇಷ್ಟರವರೆಗೆ ಸಂಸ್ಕೃತದ ಹೆಸರುಗಳನ್ನೇ ಬಳಸಿ ಅಭ್ಯಾಸವಾಗಿರುವ ವ್ಯಾಕರಣ ಪಂಡಿತರಿಗೆ ಮಾತ್ರ ಇದು ಸ್ವಲ್ಪ ತೊಂದರೆ ಕೊಡಬಹುದು.
ಕನ್ನಡದ ವೈಯಾಕರಣಿಗಳು ಸಂಸ್ಕೃತದಲ್ಲಿ ಕಾಣಿಸುವ ಇತರ (ಪ್ರಥಮಾ, ಪಂಚಮೀ ಮೊದಲಾದ) ವಿಭಕ್ತಿಗಳಿಗೆ ಸಮನಾದ ವಿಭಕ್ತಿಗಳೂ ಕನ್ನಡದಲ್ಲಿವೆ ಯೆಂದು ಹೇಳುತ್ತಾರಾದರೂ ನಿಜಕ್ಕೂ ಕನ್ನಡದಲ್ಲಿ ಅದಕ್ಕೆ ಆಧಾರವಿಲ್ಲವೆಂಬು ದನ್ನು ಮುಂದೆ ನೋಡಲಿರುವೆವು.
8.3 ವಿಭಕ್ತಿ, ಲಿಂಗ ಮತ್ತು ವಚನ
ಹಿಂದೆ ಆರನೆಯ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ಕನ್ನಡದಲ್ಲಿ ಬರುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅರ್ಥವನ್ನು (ಎಂದರೆ ನಾಮಪದಕ್ಕೂ ಕ್ರಿಯಾಪದಕ್ಕೂ ನಡುವಿರುವ ಸಂಬಂಧವನ್ನು) ಮಾತ್ರ ಸೂಚಿಸುತ್ತವೆ; ಲಿಂಗ ಮತ್ತು ವಚನ ಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಇವಕ್ಕಿಂತ ತೀರ ಭಿನ್ನವಾದ ಪ್ರತ್ಯಯ ಗಳು ಬಳಕೆಯಾಗುತ್ತವೆ.
ಆದರೆ, ಸಂಸ್ಕೃತದಲ್ಲಿ ಬರುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅರ್ಥ ವನ್ನು ಮಾತ್ರವಲ್ಲದೆ ಲಿಂಗ-ವಚನಗಳನ್ನೂ ಸೂಚಿಸುತ್ತವೆ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಒಂದು ಮುಖ್ಯವಾದ ವ್ಯತ್ಯಾಸ.
ಉದಾಹರಣೆಗಾಗಿ, ಸಂಸ್ಕೃತದಲ್ಲಿ ಪುಲ್ಲಿಂಗದ ದೇವ, ಸ್ತ್ರೀಲಿಂಗದ ದೇವಿ ಮತ್ತು ನಪುಂಸಕಲಿಂಗದ ಜಗತ್ ಪದಗಳಿಗೆ ದ್ವಿತೀಯಾ ವಿಭಕ್ತಿಯ ಏಕವಚನ, ದ್ವಿವಚನ ಮತ್ತು ಬಹುವಚನಗಳಲ್ಲಿ ಬರುವ ವಿಭಕ್ತಿರೂಪಗಳನ್ನು ಗಮನಿಸ ಬಹುದು.
ನಾಮಪದ
ಏಕವಚನ
ದೇವ (ಪುಲ್ಲಿಂಗ) ದೇವಂ
ದೇವಿ (ಸ್ತ್ರೀಲಿಂಗ) ದೇವೀಂ
ದ್ವಿತೀಯಾ ವಿಭಕ್ತಿಯ ರೂಪಗಳು ದ್ವಿವಚನ
ದೇವೌ
ದೇವೌ್ಯ
ಬಹುವಚನ ದೇವಾನ್ ದೇವೀ
ಜಗತ್ (ನಪುಂಸಕ ಜಗತ್
ಮೇಲೆ ದೇವಂ ಪದದಲ್ಲಿ ಅಂ ಪ್ರತ್ಯಯ ಬಂದಿದೆ. ಇದು ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಪುಲ್ಲಿಂಗ ಮತ್ತು ಏಕವಚನಗಳನ್ನೂ ಸೂಚಿಸುತ್ತದೆ ಯುಂದು ಹೇಳಬೇಕಾಗುತ್ತದೆ. ಯಾಕೆಂದರೆ, ದೇವೀಂ ಪದದಲ್ಲಿ ದ್ವಿತೀಯಾ ವಿಭಕ್ತಿಯನ್ನು ಸೂಚಿಸಲು ಅದಕ್ಕಿಂತ ತೀರ ಭಿನ್ನವಾದ ಇಂ ಪ್ರತ್ಯಯ ಬಂದಿದೆ. ಈ ಪ್ರತ್ಯಯಕ್ಕೂ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ಸ್ತ್ರೀಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಅರ್ಥವಿದೆಯುಂದು ಹೇಳಬೇಕಾಗುತ್ತದೆ. ಜಗತ್ ಪದದಲ್ಲಿ ‘ಶೂನ್ಯ’ ಪ್ರತ್ಯಯ ಬಂದಿದ್ದು, ಅದರ ಮೇಲೆ ದ್ವಿತೀಯಾ ವಿಭಕ್ತಿಯನ್ನು ಮಾತ್ರವಲ್ಲದೆ ನಪುಂಸಕಲಿಂಗ ಮತ್ತು ಏಕವಚನಗಳನ್ನು ಸೂಚಿಸುವ ಕೆಲಸನ್ನೂ ಹೊರಿಸಬೇಕಾಗಿದೆ.
ಇದೇ ರೀತಿಯಲ್ಲಿ ಪುಲ್ಲಿಂಗ ದ್ವಿವಚನವನ್ನು ಸೂಚಿಸಲು ಔ ಪ್ರತ್ಯಯ, ಪುಲ್ಲಿಂಗ ಬಹುವಚನವನ್ನು ಸೂಚಿಸಲು ಅನ್ ಪ್ರತ್ಯಯ, ಸ್ತ್ರೀಲಿಂಗ ಬಹುವಚನ ವನ್ನು ಸೂಚಿಸಲು ಇ ಪ್ರತ್ಯಯ, ನಪುಂಸಕ ದ್ವಿವಚನವನ್ನು ಸೂಚಿಸಲು ಈ ಪ್ರತ್ಯಯ ಮೊದಲಾದವು ಬಂದಿರುವುದನ್ನು ಇದೇ ದ್ವಿತೀಯಾ ವಿಭಕ್ತಿಯಲ್ಲಿ ಕಾಣಬಹುದು. ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಲಿಂಗ ಪ್ರತ್ಯಯಗಳಿಂದ ಇಲ್ಲವೇ ವಚನ ಪ್ರತ್ಯಯಗಳಿಂದ ಬೇಪ್ರಡಿಸಲು ಸಾಧ್ಯ ವಾಗುವುದಿಲ್ಲ.
ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯ ಅರ್ಥವನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನ ಭೇದಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯಯಗಳು ಬರುತ್ತವೆ. ಇವುಗಳಲ್ಲಿ ಲಿಂಗ ಪ್ರತ್ಯಯಗಳು ಹುಡುಗ-ಹುಡುಗಿ, ಅಜ್ಜ-ಅಜ್ಜಿ ಮೊದಲಾದ ಕೆಲವೇ ಕೆಲವು ನಾಮಪದ ಗಳೊಂದಿಗೆ ಮಾತ್ರ ಬರುತ್ತವೆ; ಉಳಿದೆಡೆಗಳಲ್ಲೆಲ್ಲ ನಾಮಪದಗಳ ಲಿಂಗವನ್ನು ಅವುಗಳ ಅರ್ಥದಿಂದಲೇನೇ ತಿಳಿದುಕೊಳ್ಳಬೇಕಾಗುತ್ತದೆ (6.3.2 ನೋಡಿ). ಅದಕ್ಕಾಗಿ ಪ್ರತ್ಯಯಗಳ ಬಳಕೆಯಿಲ್ಲ.
ಕನ್ನಡದ ವಚನ ಪ್ರತ್ಯಯಗಳು ಕೆಲವು ಸಂದಭ್ರಗಳಲ್ಲಿ ಲಿಂಗಭೇದವನ್ನೂ ಸೂಚಿಸಬಲ್ಲುವು. ಉದಾಹರಣೆಗಾಗಿ, ಬಹುವಚನದ ರು ಪ್ರತ್ಯಯ ಮನುಷ್ಯ (ಪುಂ-ಸ್ತ್ರೀ) ಲಿಂಗವನ್ನೂ ಸೂಚಿಸಬಲ್ಲುದು ಮತ್ತು ವು ಪ್ರತ್ಯಯ ಮನುಷ್ಯೇತರ (ನಪುಂಸಕ) ಲಿಂಗವನ್ನೂ ಸೂಚಿಸಬಲ್ಲುದು. ಆದರೆ ಎಲ್ಲಾ ಸಂದಭ್ರಗಳಲ್ಲೂ ಈ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಿಗಿಂತ ಭಿನ್ನವಾಗಿರುತ್ತವೆ.
ಕನ್ನಡದಲ್ಲಿ ಲಿಂಗ ಮತ್ತು ವಚನ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಿಗಿಂತ ಬೇರೆಯಾಗಿರುವುದನ್ನು ಕೆಳಗಿನ ಪದರೂಪಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
ನಾಮಪದ
ಏಕವಚನ
ಹುಡುಗ (ಪುಲ್ಲಿಂಗ) ಹುಡುಗನನ್ನು ಹುಡುಗಿ (ಸ್ತ್ರೀಲಿಂಗ) ಹುಡುಗಿಯನ್ನು ಕಲ್ಲು (ನಪುಂಸಕ
ಕಲ್ಲನ್ನು
ದ್ವಿತೀಯಾ ವಿಭಕ್ತಿಯ ರೂಪಗಳು ಬಹುವಚನ ಹುಡುಗರನ್ನು ಹುಡುಗಿಯರನ್ನು ಕಲ್ಲುಗಳನ್ನು
ಮೇಲೆ ಕೊಟ್ಟಿರುವ ಎಲ್ಲಾ ಪದರೂಪಗಳಲ್ಲೂ ಅನ್ನು ಪ್ರತ್ಯಯ ಬಂದಿದ್ದು ಅದು ದ್ವಿತೀಯಾ ವಿಭಕ್ತಿಯನ್ನು ಮಾತ್ರವೇ ಸೂಚಿಸುತ್ತದೆ. ಲಿಂಗ ಮತ್ತು ವಚನ ಗಳನ್ನು ಸೂಚಿಸುವುದಕ್ಕಾಗಿ ಈ ಪದರೂಪಗಳಲ್ಲಿ ಅ (ಅನ್), ಇ, ರು ಮತ್ತು ಗಳು ಪ್ರತ್ಯಯಗಳು ಬಂದಿದ್ದು, ಅವನ್ನು ವಿಭಕ್ತಿ ಪ್ರತ್ಯಯದಿಂದ ಬೇಪ್ರಡಿಸಲು ಯಾವ ತೊಂದರೆಯೂ ಇಲ್ಲ.
ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ಮೇಲೆ ಸೂಚಿಸಿದ ಹಾಗೆ ನಾಮಪದದ ವಿಭಕ್ತಿ, ಲಿಂಗ ಮತ್ತು ವಚನಗಳನ್ನನುಸರಿಸಿ ಮಾತ್ರವಲ್ಲದೆ ಅವುಗಳ ಕೊನೆಯ ಅಕ್ಷರವನ್ನನುಸರಿಸಿಯೂ ಭಿನ್ನವಾಗಿರುತ್ತವೆ.
ಉದಾಹರಣೆಗಾಗಿ, ಪುಲ್ಲಿಂಗದಲ್ಲಿರುವ ಅಗ್ನಿ ಮತ್ತು ಗುರು ಎಂಬ ಎರಡು ನಾಮಪದಗಳಿಗೆ ತೃತೀಯಾ ವಿಭಕ್ತಿ ಏಕವಚನದಲ್ಲಿ ಅಗ್ನಿನಾ ಮತ್ತು ಗುರುಣಾ ಎಂಬ ರೂಪಗಳಿವೆ. ಗುರು ಪದದ ಕೊನೆಯ ಅಕ್ಷರದಲ್ಲಿರುವ ರಕಾರದಿಂದಾಗಿ ತೃತೀಯಾ ಏಕವಚನದ ನಾ ಎಂಬುದು ಣಾ ಎಂದಾಗಿದೆ. ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಸಂಸ್ಕೃತದ ವಿಭಕ್ತಿ ಪ್ರತ್ಯಯಗಳಲ್ಲಿ ಕಾಣಿಸುತ್ತಿವೆಯಾದ ಕಾರಣ, ಅದರ ನಾಮಪದಗಳಿಗಿರುವ ವಿಭಕ್ತಿ ರೂಪಗಳನ್ನು ಕಲಿಯುವುದು ಒಂದು ಬಹಳ ಕಷ್ಟವಾದ ಕೆಲಸವಾಗಿದೆ.
ಕನ್ನಡದಲ್ಲಿಯೂ ನಾಮಪದಗಳ ಸ್ವರೂಪವನ್ನವಲಂಬಿಸಿ ವಿಭಕ್ತಿ ಪ್ರತ್ಯಯ ದಲ್ಲಿ ಕೆಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ಚತುರ್ಥೀ ಪ್ರತ್ಯಯಕ್ಕಿರುವ ಇಗೆ, ಗೆ ಮತ್ತು ಕ್ಕೆ ರೂಪಗಳು ಮುಖ್ಯವಾಗಿ ನಾಮಪದದ ಸ್ವರೂಪವನ್ನವಲಂಬಿಸಿವೆ. ಆದರೆ, ಸಂಸ್ಕೃತಕ್ಕೆ ಹೋಲಿಸಿದೆವಾದರೆ ಕನ್ನಡದಲ್ಲಿ ಕಾಣಿಸುವ ಈ ವ್ಯತ್ಯಾಸಗಳು ಅತ್ಯಲ್ಪವೆಂದೇ ಹೇಳಬಹುದು.
8.4 ಪ್ರತ್ಯಯಗಳ ಅವಶ್ಯಕತೆ
ಮೇಲೆ ವಿವರಿಸಿದ ಹಾಗೆ, ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರವಲ್ಲದೆ ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸಬೇಕಾ ಗಿದೆಯಾದ ಕಾರಣ, ನಾಮಪದವೊಂದನ್ನು ವಾಕ್ಯದಲ್ಲಿ ಬಳಸುವಾಗಲೆಲ್ಲ ಅದಕ್ಕೆ
ಯಾವುದಾದರೊಂದು ವಿಭಕ್ತಿ ಪ್ರತ್ಯಯವನ್ನು ಸೇರಿಸಿಯೇ ಬಳಸಬೇಕೆಂಬುದಾಗಿ ಸಂಸ್ಕೃತ ವ್ಯಾಕರಣದಲ್ಲಿ ನಿಯಮವೊಂದನ್ನು ಮಾಡಲು ಸಾಧ್ಯವಾಗಿದೆ.
ಆದರೆ ಕನ್ನಡದಲ್ಲಿ ಇಂತಹ ನಿಯಮವನ್ನು ಮಾಡಲು ಸಾಧ್ಯವಾಗದು. ಯಾಕೆಂದರೆ, ಕನ್ನಡದ ನಾಮಪದಗಳು ಅವಶ್ಯವಿದ್ದಲ್ಲಿ ಮಾತ್ರ ವಿಭಕ್ತಿ ಪ್ರತ್ಯಯ ದೊಂದಿಗೆ ಬರುತ್ತವೆ. ಇಲ್ಲವಾದಲ್ಲಿ ಅವು ಯಾವ ವಿಭಕ್ತಿ ಪ್ರತ್ಯಯದೊಂದಿಗೂ ಸೇರಿಕೊಳ್ಳದೆ ಪ್ರಕೃತಿರೂಪದಲ್ಲೇನೇ ಬಳಕೆಯಾಗುತ್ತವೆ.
ಯಾವ ಸಂದಭ್ರದಲ್ಲಿ ಈ ರೀತಿ ಕನ್ನಡ ನಾಮಪದಗಳೊಂದಿಗೆ ವಿಭಕ್ತಿ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ ಮತ್ತು ಯಾವ ಸಂದಭ್ರದಲ್ಲಿ ಅದರ ಅವಶ್ಯಕತೆಯಿಲ್ಲ ಎಂಬುದು ಆ ನಾಮಪದಗಳನ್ನು ಬಳಸಬೇಕಾಗಿರುವ ವಾಕ್ಯದ ಸ್ವರೂಪವನ್ನವಲಂಬಿಸಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವಾಕ್ಯ ಗಳಲ್ಲಿ ಸಾಮಾನ್ಯವಾಗಿ ಒಂದು ಕ್ರಿಯಾಪದ ಮತ್ತು ಒಂದು ಅಥವಾ ಜಾಸ್ತಿ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಬರುತ್ತವೆ. ಇವುಗಳಲ್ಲಿ ಕ್ರಿಯಾಪದವು ಒಂದು ಘಟನೆಯನ್ನು ಸೂಚಿಸುತ್ತದೆ ಮತ್ತು ಅದರೊಂದಿಗೆ ಬರುವ ನಾಮಪದಗಳು (ಇಲ್ಲವೇ ನಾಮಪದಕಂತೆಗಳು) ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುತ್ತವೆ.
ಈ ವ್ಯಕ್ತಿ, ವಸ್ತು ಮೊದಲಾದವುಗಳು ಯಾವ ಕೆಲಸದಲ್ಲಿ ತೊಡಗಿಕೊಂಡಿವೆ ಎಂಬುದನ್ನು - ಎಂದರೆ ಅವನ್ನು ಗುರುತಿಸುವ ನಾಮಪದಗಳಿಗೂ ಕ್ರಿಯಾ ಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು - ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ತಿಳಿಸುತ್ತವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ವಾಕ್ಯವನ್ನು ಪರಿಶೀಲಿಸಬಹುದು.
(1)
ರಾಜು ತನ್ನ ಕಾರನ್ನು ಹರಿಗೆ ಮಾರಿದ
(1)ನೇ ವಾಕ್ಯದಲ್ಲಿ ರಾಜು, ಹರಿ ಮತ್ತು ಕಾರು ಎಂಬ ಮೂರು ನಾಮಪದಗಳು ಬಂದಿದ್ದು, ಅವು ಮಾರು ಕ್ರಿಯಾಪದವು ಸೂಚಿಸುವ (ಎಂದರೆ ಮಾರುವ) ಘಟನೆಯಲ್ಲಿ ತೊಡಗಿಕೊಂಡಿರುವ ಎರಡು ವ್ಯಕ್ತಿಗಳನ್ನು ಮತ್ತು ಒಂದು ವಸ್ತುವನ್ನು ಗುರುತಿಸುತ್ತವೆ.
ಇವುಗಳಲ್ಲಿ ಹರಿ ನಾಮಪದದೊಂದಿಗೆ ಚತುರ್ಥೀ ವಿಭಕ್ತಿ ಪ್ರತ್ಯಯ ಗೆ ಬಂದಿದ್ದು, ಅದು ‘ಮಾರಿದ್ದು ಯಾವ ವ್ಯಕ್ತಿಗೆ’ ಎಂಬುದನ್ನು (ಹರಿಗೆ ಎಂಬು ದಾಗಿ) ತಿಳಿಸುತ್ತದೆ ಮತ್ತು ಕಾರು ನಾಮಪದದೊಂದಿಗೆ ದ್ವಿತೀಯಾ ವಿಭಕ್ತಿ ಪ್ರತ್ಯಯ ಅನ್ನು ಬಂದಿದ್ದು, ಅದು ‘ಮಾರಿದ್ದು ಯಾವುದನ್ನು’ ಎಂಬುದನ್ನು (ಕಾರನ್ನು ಎಂಬುದಾಗಿ) ತಿಳಿಸುತ್ತದೆ.
ಮಾರಿದ್ದು ಯಾರು ಎಂಬುದನ್ನು ಸೂಚಿಸಲು ಕನ್ನಡದಲ್ಲಿ ಇವೆರಡಕ್ಕಿಂತ ಭಿನ್ನವಾದ ಪ್ರತ್ಯಯದ ಅವಶ್ಯಕತೆಯಿಲ್ಲ. ಯಾಕೆಂದರೆ, ಮೇಲಿನ ಎರಡು ವಿಭಕ್ತಿ ಪ್ರತ್ಯಯಗಳೂ ಇಲ್ಲದಿರುವ ಮೂರನೆಯ ನಾಮಪದವೇ ಆ ವ್ಯಕ್ತಿಯನ್ನು ಸೂಚಿಸುವುದೆಂಬುದಾಗಿ ತಿಳಿದುಕೊಳ್ಳಲು ಸಾಧ್ಯವಿದೆ.
ಬೇರೆ ಬೇರೆ ರೀತಿಯ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ಸೂಚಿಸಬಲ್ಲುವಾದ ಕಾರಣ, ಅವುಗಳಲ್ಲಿ ತೊಡಗಿಕೊಂಡಿರಬೇಕಾದ ವ್ಯಕ್ತಿ, ವಸ್ತು ಮೊದಲಾದವುಗಳೂ ಬೇರೆ ಬೇರೆ ರೀತಿಯವಾಗಿರುತ್ತವೆ. ಉದಾಹರಣೆ ಗಾಗಿ, ಅಳು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಭಾಗವಹಿಸಬಲ್ಲ; ಆದರೆ, ಬೀಳು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ತೊಡಗಿಕೊಂಡಿರಲು ಸಾಧ್ಯವಿದೆ.
ರಾಜು ಅತ್ತ
(2ಖ) *ಪುಸ್ತಕ ಅತ್ತಿತು
ರಾಜು ಬಿದ್ದ
(3ಖ) ಪುಸ್ತಕ ಬಿತ್ತು
ಬಯ್ಯು, ದೂಡು, ಹೊಗಳು, ಕೊಲ್ಲು ಮೊದಲಾದ ಕ್ರಿಯಾಪದಗಳು ಸೂಚಿಸುವ ಘಟನೆಗಳಲ್ಲಿ ಅವನ್ನು ನಡೆಸುವ ವ್ಯಕ್ತಿ ಮತ್ತು ಅವುಗಳಿಂದ ಬಾಧಿತವಾಗುವ ವ್ಯಕ್ತಿ ಎಂಬುದಾಗಿ ಇಬ್ಬರು ವ್ಯಕ್ತಿಗಳು ಭಾಗವಹಿಸಬಲ್ಲರು.
ಹಾಗಾಗಿ, ಇಂತಹ ಕ್ರಿಯಾಪದಗಳಿರುವ ವಾಕ್ಯಗಳಲ್ಲಿ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯಿಂದ ಬೇಪ್ರಡಿಸುವುದಕ್ಕಾಗಿ ವಿಭಕ್ತಿ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ. ಕನ್ನಡದಲ್ಲಿ ಇದಕ್ಕಾಗಿ ಘಟನೆಗಳಿಂದ ಬಾಧಿತನಾಗುವ ವ್ಯಕ್ತಿ ಯನ್ನು ಅನ್ನು ಪ್ರತ್ಯಯದ ಮೂಲಕ ಸೂಚಿಸಲಾಗುತ್ತದೆ.
(4ಕ) ಹರಿ ರಾಜುವನ್ನು ದೂಡಿದ (4ಖ) ಹರಿಯನ್ನು ರಾಜು ದೂಡಿದ
(4ಕ-ಖ) ವಾಕ್ಯಗಳಲ್ಲಿ ‘ದೂಡಿದ್ದು ಯಾರನ್ನು’ ಎಂಬುದನ್ನು ಸೂಚಿಸುವು ದಕ್ಕಾಗಿ ಅನ್ನು ವಿಭಕ್ತಿ ಪ್ರತ್ಯಯವಿರುವ ಪದವನ್ನು ಬಳಸಲಾಗಿದೆ. ಆದರೆ ‘ದೂಡಿದ್ದುಯಾರು’ ಎಂಬುದನ್ನು ಸೂಚಿಸುವುದಕ್ಕಾಗಿ ರಾಜು ಪದವನ್ನು ಅದಕ್ಕೆ ಯಾವ ವಿಭಕ್ತಿ ಪ್ರತ್ಯಯವನ್ನೂ ಸೇರಿಸದೆ ಬಳಸಲಾಗಿದೆ.
ಕನ್ನಡ ವಾಕ್ಯಗಳಲ್ಲಿ ಈ ರೀತಿ ಘಟನೆಗಳನ್ನು ನಡೆಸುವ ವ್ಯಕ್ತಿಯನ್ನು ಸೂಚಿಸುವುದಕ್ಕಾಗಿ ಯಾವ ವಿಭಕ್ತಿ ಪ್ರತ್ಯಯವನ್ನೂ ಬಳಸುವುದಿಲ್ಲ. ನಿಜಕ್ಕೂ ಅಂತಹ ಪ್ರತ್ಯಯದ ಅವಶ್ಯಕತೆಯೇ ಇಲ್ಲ; ಯಾಕೆಂದರೆ ಅನ್ನು ವಿಭಕ್ತಿ ಪ್ರತ್ಯಯದ ಮೂಲಕ ಸೂಚಿಸದಿರುವ ವ್ಯಕ್ತಿಯೇ ಘಟನೆಗಳನ್ನು ನಡೆಸುವವನು ಎಂಬುದಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಇಂತಹ ವಾಕ್ಯಗಳು ತಿಳಿಸುವ ಘಟನೆಯಲ್ಲಿ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತು ಭಾಗವಹಿಸುತ್ತಿವೆಯಾದರೆ ಅವುಗಳಲ್ಲಿ ಎರಡಕ್ಕೂ ವಿಭಕ್ತಿ ಪ್ರತ್ಯಯವನ್ನು ಸೇರಿಸದಿರಲು ಸಾಧ್ಯವಿದೆ. ಯಾಕೆಂದರೆ, ಅವುಗಳಲ್ಲಿ ಯಾವುದಕ್ಕೆ ಯಾವ ಕೆಲಸ ಎಂಬುದನ್ನು ಸಾಮಾನ್ಯವಾಗಿ ಸಂದಭ್ರದಿಂದಲೇ ಊಹಿಸಿಕೊಳ್ಳಲು ಸಾಧ್ಯವಾಗು
ಉದಾಹರಣೆಗಾಗಿ, ಕಟ್ಟಿಸುವ ಕೆಲಸವನ್ನಾಗಲಿ ಇಲ್ಲವೇ ಎತ್ತುವ ಕೆಲಸ ವನ್ನಾಗಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮಾಡಬಲ್ಲನಲ್ಲದೆ ಒಂದು ವಸ್ತುವಲ್ಲ. ಹಾಗಾಗಿ, ಅಂತಹ ಕ್ರಿಯಾಪದವಿರುವ ವಾಕ್ಯಗಳಲ್ಲಿ ಎರಡು ನಾಮಪದಗಳನ್ನೂ ವಿಭಕ್ತಿ ಪ್ರತ್ಯಯವನ್ನು ಸೇರಿಸದೆ ಬಳಸಲು ಸಾಧ್ಯವಿದೆ.
(5) (6)
ರಾಜು ಒಂದು ಮನೆ ಕಟ್ಟಿಸಿದ ಹರಿ ಕೈ ಎತ್ತಿದ
(5) ನೇ ವಾಕ್ಯದಲ್ಲಿ ಕಟ್ಟಿಸು ಕ್ರಿಯಾಪದದೊಂದಿಗೆ ರಾಜು ಮತ್ತು ಮನೆ ಎಂಬ ಎರಡು ನಾಮಪದಗಳು ಬಂದಿದ್ದು ಅವೆರಡೂ ವಿಭಕ್ತಿ ಪ್ರತ್ಯಯವಿಲ್ಲದೆ ಬಳಕೆಯಾಗಿವೆ. ಈ ನಾಮಪದಗಳು ಗುರುತಿಸುವ ವ್ಯಕ್ತಿ ಮತ್ತು ವಸ್ತುಗಳ ಕೆಲಸವೇನು ಎಂಬುದನ್ನು ತಿಳಿಯಲು ವಿಭಕ್ತಿ ಪ್ರತ್ಯಯದ ಅವಶ್ಯಕತೆಯಿಲ್ಲ ದಿರುವುದೇ ಇದಕ್ಕೆ ಕಾರಣ.
(5)ನೇ ವಾಕ್ಯಕ್ಕೆ ‘ಕಟ್ಟಿಸಿದ್ದು ಮನೆಯನ್ನು’ ಎಂಬ ಅರ್ಥ ಬರಬಲ್ಲುದಲ್ಲದೆ ‘ಕಟ್ಟಿಸಿದ್ದು ರಾಜುವನ್ನು’ ಎಂಬ ಅರ್ಥ ಬರುವುದು ಕಷ್ಟಸಾಧ್ಯ. (6)ನೇ ವಾಕ್ಯ ದಲ್ಲೂ ಹೀಗೆಯೇ.
ವಾಕ್ಯದಲ್ಲಿ ಬರುವ ನಾಮಪದಗಳೆರಡೂ ವಸ್ತುಗಳನ್ನು ಸೂಚಿಸುತ್ತಿದ್ದಲ್ಲಿ ಅಥವಾ ನಾಮಪದಗಳಿಗೆ ಕ್ರಿಯಾಪದದೊಂದಿಗಿರುವ ಸಂಬಂಧವನ್ನು ಜಾಸ್ತಿ ಸ್ಪಷ್ಟವಾಗಿ ತಿಳಿಸಬೇಕಿದ್ದಲ್ಲಿ ವಿಭಕ್ತಿ ಪ್ರತ್ಯಯದ ಅವಶ್ಯಕತೆ ಕಂಡುಬಂದೀತು. ಅಂತಹ ಸಂದಭ್ರಗಳಲ್ಲಿ ಅನ್ನು ಪ್ರತ್ಯಯ ಕಾಣಿಸಿಕೊಳ್ಳುತ್ತದೆ.
(7) ಬಿರುಗಾಳಿ ಮರವನ್ನು ಉರುಳಿಸಿತು (8)
ನನ್ನ ಕೈ ಹರಿಯನ್ನು ಎತ್ತಿ ಹಿಡಿದಿದೆ
(7)ನೇ ವಾಕ್ಯದಲ್ಲಿ ಎರಡು ನಾಮಪದಗಳೂ ವಸ್ತುಗಳನ್ನು ಸೂಚಿಸುತ್ತಿವೆ. ಹಾಗಾಗಿ, ಅವುಗಳಲ್ಲಿ ಬಾಧಿತವಾಗಿರುವ ನಾಮಪದದೊಂದಿಗೆ ಅನ್ನು ಪ್ರತ್ಯಯ ವನ್ನು ಬಳಸಬೇಕಾಗಿದೆ. ಇದಕ್ಕೆ ಬದಲು (8)ನೇ ವಾಕ್ಯದಲ್ಲಿ ಒಂದು ನಾಮಪದ (ಕಂತೆ) ವ್ಯಕ್ತಿಯನ್ನು ಸೂಚಿಸುತ್ತಿದ್ದು ಇನ್ನೊಂದು ವಸ್ತುವನ್ನು ಸೂಚಿಸುತ್ತಿದೆ ಯಾದರೂ, ಅವೆರಡರ ನಡುವೆ ಬಾಧಿತವಾಗಿರುವುದು ವ್ಯಕ್ತಿಯಾದ ಕಾರಣ, ಅದರೊಂದಿಗೆ ಅನ್ನು ಪ್ರತ್ಯಯವನ್ನು ಬಳಸಬೇಕಾಗಿದೆ.
ಕನ್ನಡದಲ್ಲಿ ಈ ರೀತಿ ಅವಶ್ಯವಿರುವಲ್ಲಿ ಮಾತ್ರ ವಿಭಕ್ತಿ ಪ್ರತ್ಯಯವನ್ನು ಬಳಸಿ ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ. ಆದರೆ ಸಂಸ್ಕೃತ ದಲ್ಲಿ ಅವಶ್ಯವಿರಲಿ ಅಥವಾ ಇಲ್ಲದಿರಲಿ, ವಾಕ್ಯದಲ್ಲಿ ನಾಮಪದವನ್ನು ಬಳಸು ವಲ್ಲೆಲ್ಲ ಅದರೊಂದಿಗೆ ಖಡ್ಡಾಯವಾಗಿಯೂ ವಿಭಕ್ತಿ ಪ್ರತ್ಯಯವನ್ನು ಬಳಸಲೇ ಬೇಕೆಂಬ ನಿಯಮವಿದೆ.
ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ವಚನ ಮತ್ತು ವಿಭಕ್ತಿಗಳನ್ನು ಸೂಚಿಸಲು ಕನ್ನಡದ ಹಾಗೆ ಬೇರೆ ಬೇರೆ ಪ್ರತ್ಯಯಗಳಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ವಿಭಕ್ತಿಯನ್ನು ಸೂಚಿಸಬೇಕಾಗಿಲ್ಲದಲ್ಲೂ ವಚನವನ್ನು ಸೂಚಿಸ ಬೇಕಾಗುತ್ತದೆಯಾದ ಕಾರಣ, ವಿಭಕ್ತಿ ಪ್ರತ್ಯಯವನ್ನು ಅವಶ್ಯವಿಲ್ಲದಲ್ಲೂ ಬಳಸ ಬೇಕಾಗುತ್ತದೆ.
8.5 ಪ್ರತ್ಯಯಗಳ ಸಂಖ್ಯೆ
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯಯಗಳ ಸಂಖ್ಯೆಯಲ್ಲೂ ಬಹಳ ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ಎಷ್ಟು ವಿಭಕ್ತಿಗಳಿವೆಯೋ ಅಷ್ಟೇ ಕನ್ನಡದಲ್ಲೂ ಇರಬೇಕೆಂದು ಕನ್ನಡದ ವೈಯಾಕರಣಿಗಳು ಭಾವಿಸಿರುವಂತಿದೆ. ಇದಕ್ಕಾಗಿ ರಾಮನ ದೆಸೆಯಿಂದ ಎಂಬಂತಹ ಕನ್ನಡದ ಪದಕಂತೆಯನ್ನೂ ಅವರು ವಿಭಕ್ತಿರೂಪವೆಂದು ಪರಿಗಣಿಸಿದ್ದಾರೆ.
ಆದರೆ ನಿಜಕ್ಕೂ ವಿಭಕ್ತಿಗಳ ಸಂಖ್ಯೆ ಭಾಷೆಯಿಂದ ಭಾಷೆಗೆ ಭಿನ್ನವಾಗಿರಲು ಸಾಧ್ಯ. ಒಂದೇ ಒಂದು ವಿಭಕ್ತಿ ಪ್ರತ್ಯಯವನ್ನೂ ಬಳಸದ ಭಾಷೆಗಳೂ ಹಲವಿವೆ. ಸಂಸ್ಕೃತಕ್ಕಿಂತ ಎಷ್ಟೋ ಜಾಸ್ತಿ, ಎಂದರೆ ಹತ್ತಿಪ್ಪತ್ತು ವಿಭಕ್ತಿ ಪ್ರತ್ಯಯಗಳಿರುವ ಭಾಷೆಗಳೂ ಕೆಲವಿವೆ. ಉದಾಹರಣೆಗಾಗಿ, ಉರಾಲಿಕ್ ಭಾಷಾಕುಟುಂಬಕ್ಕೆ ಸೇರಿದ ಪೆರ್ಮ್ಯಾಕ್ ಭಾಷೆಯಲ್ಲಿ ಒಟ್ಟು 28 ವಿಭಕ್ತಿ ಪ್ರತ್ಯಯಗಳಿವೆ! ವಾಕ್ಯದಲ್ಲಿ ಬರುವ ನಾಮಪದಗಳನ್ನು (ಇಲ್ಲವೇ ನಾಮಪದಕಂತೆಗಳನ್ನು) ಕ್ರಿಯಾಪದದೊಂದಿಗೆ ಸಂಬಂಧಿಸುವುದೇ ವಿಭಕ್ತಿ ಪ್ರತ್ಯಯಗಳ ಮುಖ್ಯ ಕೆಲಸ ವೆಂಬುದನ್ನು ನಾವು ಮೇಲೆ ನೋಡಿರುವೆವು. ಆದರೆ ಈ ಕೆಲಸವನ್ನು ವಿಭಕ್ತಿ ಪ್ರತ್ಯಯಗಳ ಮೂಲಕವೇ ಮಾಡಬೇಕೆಂದೇನೂ ನಿಯಮವಿಲ್ಲ. ಬೇರೆ ಸಾಧನ
ಗಳನ್ನು ಬಳಸಿಯೂ ನಾಮಪದಗಳಿಗೆ ಕ್ರಿಯಾಪದದೊಂದಿಗೆ ಎಂತಹ ಸಂಬಂಧ ವಿದೆಯೆಂಬುದನ್ನು ಸೂಚಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯಲ್ಲಿ ಈ ಕೆಲಸವನ್ನು ಒಂದು ನಾಮಪದ ವಾಕ್ಯದಲ್ಲಿ ಕ್ರಿಯಾಪದದ ಮೊದಲು ಬಂದಿದೆಯೇ ಅಥವಾ ಅನಂತರ ಬಂದಿದೆಯೇ ಎಂಬ ವಿಷಯವೂ ನಡೆಸಬಲ್ಲುದು.
‘ರಾಜು ಹರಿಯನ್ನು ದೂಡಿದ’
(9R) Hari pushed Raju
‘ರಾಜುವನ್ನು ಹರಿ ದೂಡಿದ’
(9ಕ-ಖ) ಇಂಗ್ಲಿಷ್ ವಾಕ್ಯಗಳಲ್ಲಿ ‘ಯಾರು ದೂಡಿದ್ದು’ ಎಂಬುದನ್ನು ಠಿush ‘ದೂಡು’ ಕ್ರಿಯಾಪದದ ಮೊದಲು ಬಂದಿರುವ ನಾಮಪದ ಗುರುತಿಸುತ್ತದೆ ಮತ್ತು ‘ಯಾರನ್ನು ದೂಡಿದ್ದು’ ಎಂಬುದನ್ನು ಅದರ ಅನಂತರ ಬಂದಿರುವ ನಾಮಪದ ಗುರುತಿಸುತ್ತದೆ. (9ಕ) ವಾಕ್ಯದಲ್ಲಿ ಖಚಿರಿu ನಾಮಪದ ಕ್ರಿಯಾಪದದ ಮೊದಲು ಬಂದಿದೆಯಾದ ಕಾರಣ, ದೂಡಿದವನು ರಾಜು; ಇದಕ್ಕೆ ಬದಲು, (9ಖ) ವಾಕ್ಯದಲ್ಲಿ ಊಚಿಡಿi ನಾಮಪದ ಮೊದಲು ಬಂದಿದೆಯಾದ ಕಾರಣ, ದೂಡಿದವನು ಹರಿ.
ಆದರೆ ಈ ಇಂಗ್ಲಿಷ್ ವಾಕ್ಯಗಳ ಕೆಳಗೆ ಕೊಟ್ಟಿರುವ ಎರಡು ಕನ್ನಡ ವಾಕ್ಯಗಳಲ್ಲೂ ‘ಯಾರು ದೂಡಿದ್ದು’ ಎಂಬುದನ್ನು ವಿಭಕ್ತಿ ಪ್ರತ್ಯಯವಿಲ್ಲದ ನಾಮಪದ ಸೂಚಿಸುತ್ತದೆ ಮತ್ತು ‘ಯಾರನ್ನು ದೂಡಿದ್ದು’ ಎಂಬುದನ್ನು ದ್ವಿತೀಯಾ ವಿಭಕ್ತಿಯಲ್ಲಿರುವ ನಾಮಪದ ಸೂಚಿಸುತ್ತದೆ. ಇಂಗ್ಲಿಷ್ನ ಹಾಗೆ ಅವು ಯಾವ ಜಾಗದಲ್ಲಿ ಬಂದಿವೆ ಎಂಬುದಕ್ಕೆ ಈ ಅರ್ಥವನ್ನು ಕೊಡುವ ಶಕ್ತಿ ಕನ್ನಡದಲ್ಲಿಲ್ಲ.
ಇದೇ ಕೆಲಸವನ್ನು ನಡೆಸಲು ಮುಂಡಾರಿ ಭಾಷೆಯಲ್ಲಿ ಬೇರೊಂದು ವ್ಯವಸ್ಥೆ ಬಳಕೆಯಲ್ಲಿದೆ. ಈ ಭಾಷೆಯ ಕ್ರಿಯಾಪದಗಳಲ್ಲೇನೇ ಅವು ಸೂಚಿಸುವ ಘಟನೆ ಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಲು ಕೆಲವು ಆಖ್ಯಾತ ಪ್ರತ್ಯಯ ಗಳು ಬಳಕೆಯಾಗುತ್ತವೆ. ಈ ಪ್ರತ್ಯಯಗಳ ಜಾಗವೇ ಅವಕ್ಕೂ ಕ್ರಿಯಾಪದಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸುತ್ತದೆ.
(10) ದಲ್-ಕೆದ್-ಕೊ-ಅ-ಎ
ಹೊಡೆ-ಭೂತಕಾಲ-ಅವರು-ಕ್ರಿಯಾಪದ-ಅವನು ‘ಅವನು ಅವರಿಗೆ ಹೊಡೆದ’
(10)ನೇ ವಾಕ್ಯದಲ್ಲಿ ಒಂದು ಕ್ರಿಯಾಪದ ಮಾತ್ರ ಬಂದಿದೆಯಾದರೂ ಅದಕ್ಕೆ ಒಂದು ಇಡೀ ವಾಕ್ಯದ ಅರ್ಥವಿದೆ. ಅದರಲ್ಲಿ ಬಂದಿರುವ ದಲ್ ‘ಹೊಡೆ’ ಎಂಬುದು ಘಟನೆಯನ್ನು ಸೂಚಿಸುವುದಾದರೆ, ಅದರ ಅನಂತರ ಬಂದಿರುವ ಕೆದ್ ಪ್ರತ್ಯಯ ಭೂತಕಾಲವನ್ನೂ, ಕೊ ‘ಅವರು’ ಪ್ರತ್ಯಯ ಹೊಡೆದುದು ಯಾರಿಗೆ ಎಂಬುದನ್ನೂ, ಎ ‘ಅವನು’ ಪ್ರತ್ಯಯ ಹೊಡೆದುದು ಯಾರು ಎಂಬು ದನ್ನೂ ತಿಳಿಸುತ್ತವೆ.
ಕೊ ಮತ್ತು ಎ ಎಂಬ ಈ ಎರಡು ಪ್ರತ್ಯಯಗಳ ಜಾಗವೇ ಅವುಗಳಲ್ಲಿ ಹೊಡೆಯುವ ವ್ಯಕ್ತಿಯನ್ನು ಸೂಚಿಸುವ ಪ್ರತ್ಯಯ ಯಾವುದು ಮತ್ತು ಹೊಡೆತ ತಿಂದ ವ್ಯಕ್ತಿಯನ್ನು ಸೂಚಿಸುವ ಪ್ರತ್ಯಯ ಯಾವುದು ಎಂಬ ವಿಷಯವನ್ನು ಸ್ಪಷ್ಟಪಡಿಸುತ್ತದೆ.
ಕನ್ನಡದಲ್ಲಿ ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ನಾಲ್ಕು ವಿಭಕ್ತಿ ಪ್ರತ್ಯಯಗಳು ಮಾತ್ರ ಬಳಕೆಯಲ್ಲಿವೆ. ಇವುಗಳನ್ನು ದ್ವಿತೀಯಾ, ತೃತೀಯಾ, ಚತುರ್ಥೀ ಮತ್ತು ಸಪ್ತಮಿಗಳೆಂದು ಕರೆಯುವುದು ರೂಢಿ.
ಸಂಸ್ಕೃತದ ಈ ಹೆಸರುಗಳು ಕನ್ನಡದ ಮಟ್ಟಿಗೆ ಅಷ್ಟೊಂದು ತೃಪ್ತಿಕರ ವಾಗಿಲ್ಲವೆಂಬುದನ್ನು ಮೇಲೆ (8.2)ರಲ್ಲಿ ನೋಡಿರುವೆವು. ಅರ್ಥ ಮತ್ತು ಬಳಕೆ ಗಳ ಮಟ್ಟಿಗೂ ಸಂಸ್ಕೃತದಲ್ಲಿ ಈ ಹೆಸರಿನಿಂದ ಗುರುತಿಸಲಾಗುವ ವಿಭಕ್ತಿಗಳಿಗೂ ಕನ್ನಡದ ವಿಭಕ್ತಿಗಳಿಗೂ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ.
ಆದರೆ, ಈ ಪುಸ್ತಕದ ಓದುಗರಿಗೆ ಸಂಸ್ಕೃತ ಹೆಸರುಗಳೇ ರೂಢಿಯಾಗಿವೆ ಯಾದ ಕಾರಣ, ಅನವಶ್ಯಕವಾಗಿ ಅವರಲ್ಲಿ ಗೊಂದಲವುಂಟಾಗದ ಹಾಗೆ ಆ ಹೆಸರುಗಳನ್ನೇ ಇಲ್ಲೂ ಬಳಸಲಾಗಿದೆ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ವಿಭಕ್ತಿಗಳ ಅರ್ಥದಲ್ಲಿ ಮತ್ತು ಬಳಕೆಗಳಲ್ಲಿ ಕಾಣಿಸುವ ವ್ಯತ್ಯಾಸಗಳನ್ನು ಪರಿಶೀಲಿಸುವುದರ ಮೂಲಕ ಅವುಗಳ ಸಂಖ್ಯೆಯಲ್ಲೂ ವ್ಯತ್ಯಾಸ ಹೇಗೆ ಕಾಣಿಸಿ ಕೊಳ್ಳುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
8.5.1 ಪ್ರಥಮಾ ವಿಭಕ್ತಿ
ಸಂಸ್ಕೃತದಲ್ಲಿರುವ ಹಾಗೆ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯೆಂಬುದಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ವಿಷಯಗಳನ್ನು ಕಾರಣಗಳೆಂದು ಪರಿಗಣಿಸಬಹುದು.
(1) ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವಶ್ಯವಿದ್ದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ಅವನ್ನು ಬಳಸದಿರಲು ಸಾಧ್ಯವಿದೆ, ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ.
(2) ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರವಲ್ಲದೆ, ನಾಮಪದದ ಲಿಂಗ ಮತ್ತು ವಚನಗಳನ್ನೂ ಸೂಚಿಸುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರ, ಎಂದರೆ ನಾಮಪದಕ್ಕೂ ಕ್ರಿಯಾ ಪದಕ್ಕೂ ನಡುವಿರುವ ಸಂಬಂಧವನ್ನು ಮಾತ್ರ ಸೂಚಿಸುತ್ತವೆ.
ಈ ಎರಡು ಕಾರಣಗಳಿಗಾಗಿ ಸಂಸ್ಕೃತಕ್ಕೆ ಪ್ರಥಮಾ ಎಂಬ ವಿಭಕ್ತಿ ಪ್ರತ್ಯಯ ಬೇಕಾಗುತ್ತದೆ, ಆದರೆ ಕನ್ನಡಕ್ಕೆ ಬೇಕಾಗುವುದಿಲ್ಲ. ಪ್ರಥಮಾ ವಿಭಕ್ತಿಯನ್ನು ಬಳಸಬೇಕಾಗಿರುವ ಸಂದಭ್ರಗಳಲ್ಲಿ ಕನ್ನಡದ ನಾಮಪದಗಳು ಯಾವ ಪ್ರತ್ಯಯ ವನ್ನೂ ಪಡೆಯದೆ ಹಾಗೆಯೇ ಬಳಕೆಯಾಗುತ್ತವೆ.
ಕನ್ನಡದ ವೈಯಾಕರಣಿಗಳು ಸಂಸ್ಕೃತದ ಹಾಗೆ ಕನ್ನಡದಲ್ಲೂ ಪ್ರಥಮಾ ವಿಭಕ್ತಿಯೆಂಬುದಿರಬೇಕು ಎಂಬುದಾಗಿ ಭಾವಿಸಿರುವ ಕಾರಣ ಅದಕ್ಕೆ ಅನುರೂಪ ವಾದ ಒಂದು ಪ್ರತ್ಯಯವನ್ನು ಹುಡುಕಬೇಕಾಗಿದೆ. ಹಳೆಗನ್ನಡದಲ್ಲಿ ಂ (ಸೊನ್ನೆ ಇಲ್ಲವೇ ಅನುಸ್ವಾರ)ವನ್ನು ಮತ್ತು ಹೊಸಗನ್ನಡದಲ್ಲಿ ಉ ಎಂಬುದನ್ನು ಇದಕ್ಕಾಗಿ ಆರಿಸಿಕೊಳ್ಳಲಾಗಿದೆ.
ಆದರೆ ಇವು ಅಕಾರಾಂತ ಪದಗಳೊಂದಿಗೆ ಮಾತ್ರ ಬರುವುವಾದ ಕಾರಣ, ಉಳಿದ ಕಡೆಗಳಲ್ಲಿ ಪ್ರಥಮಾ ವಿಭಕ್ತಿ ಪ್ರತ್ಯಯ ಲೋಪ ಹೊಂದುತ್ತದೆಯೆಂದು ಅವರು ಹೇಳಬೇಕಾಗಿದೆ. ಇದಲ್ಲದೆ, ಹೊಸಗನ್ನಡದಲ್ಲಿ ಅಕಾರಾಂತ ಪದಗಳೂ ಇಂತಹ ಉಕಾರವನ್ನು ಪಡೆಯದೆ ಬರಬಲ್ಲುವಾದ ಕಾರಣ, ಅಲ್ಲೂ ಪ್ರತ್ಯಯ ಲೋಪವನ್ನು ಕಾಣಬೇಕಾಗಿದೆ.
(11ಕ) ಹುಡುಗನು ಮನೆಗೆ ಹೋಗಿದ್ದಾನೆ (11ಖ) ಹುಡುಗ ಮನೆಗೆ ಹೋಗಿದ್ದಾನೆ (12ಕ) ?ತಾಯಿಯು ಅಡುಗೆ ಮಾಡುತ್ತಿದ್ದಾಳೆ (12ಖ) ತಾಯಿ ಅಡುಗೆ ಮಾಡುತ್ತಿದ್ದಾಳೆ
ಕನ್ನಡದಲ್ಲಿ ಸಾಮಾನ್ಯವಾಗಿ ಮೇಲೆ (ಖ) ವಾಕ್ಯಗಳಲ್ಲಿ ಕೊಟ್ಟಿರುವಂತಹ ಪ್ರಯೋಗಗಳೇ ಜಾಸ್ತಿ ಎಂಬುದನ್ನು ಇಲ್ಲಿ ಗಮನಿಸಬಹುದು.
ಶಾಸ್ತ್ರೀಯ ಗ್ರಂಥಗಳಲ್ಲಿ ಬಳಕೆಯಾಗುವ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯ ವಿಲ್ಲದೆ ಬರುವ ನಾಮಪದಗಳ ಮುಂದೆ (ಅವು ಅಕಾರದಲ್ಲಿ ಮಾತ್ರವಲ್ಲದೆ ಇತರ ಸ್ವರಗಳಲ್ಲಿ ಕೊನೆಗೊಂಡಿವೆಯಾದರೂ) ವ್ಯಾಕರಣವು, ಪ್ರತ್ಯಯವು, ಹರಿಯು ಎಂಬುದಾಗಿ ಉಕಾರವನ್ನು ಸೇರಿಸಿ ಹೇಳುವುದು ಸ್ವಲ್ಪ ಜಾಸ್ತಿ.
ಇದಕ್ಕೆ ಕಾರಣವೇನೆಂದರೆ, ಇಂತಹ ಬರವಣಿಗೆಗಳಲ್ಲಿ ಕ್ಲಿಷ್ಟವಾಗಿರುವ ವಾಕ್ಯಗಳನ್ನು ಬಳಸುವುದು ಸ್ವಲ್ಪ ಜಾಸ್ತಿ. ಅಂತಹ ವಾಕ್ಯಗಳಲ್ಲಿ ವಿಭಕ್ತಿ ಪ್ರತ್ಯಯ ವಿಲ್ಲದೆ ಬಂದಿರುವ ನಾಮಪದಗಳನ್ನು ಇತರ ಪದಗಳಿಂದ (ಉದಾಹರಣೆಗಾಗಿ,
ಇನ್ನೊಂದು ನಾಮಪದಕಂತೆಯ ಅಂಗವಾಗಿ ಬಂದಿರುವ ಪದಗಳಿಂದ) ಬೇರೆ ಮಾಡಲು ಈ ಉಕಾರ ಪ್ರಯೋಜನಕ್ಕೆ ಬರುತ್ತದೆ.
8.5.2 ದ್ವಿತೀಯಾ ವಿಭಕ್ತಿ
ಕನ್ನಡದಲ್ಲಿ ದ್ವಿತೀಯಾ ವಿಭಕ್ತಿ ಪ್ರತ್ಯಯವಾದ ಅನ್ನು ಎಂಬುದನ್ನು ಅವಶ್ಯ ವಿದ್ದಲ್ಲಿ ಮಾತ್ರ ಬಳಸಿ, ಅವಶ್ಯವಿಲ್ಲದಲ್ಲಿ ನಾಮಪದವನ್ನು ಪ್ರಕೃತಿರೂಪ ದಲ್ಲೇನೇ ಬಳಸಲು ಸಾದ್ಯವಿದೆ. ಆದರೆ ಸಂಸ್ಕೃತದಲ್ಲಿ ಇದು ಸಾಧ್ಯವಿಲ್ಲ. ದ್ವಿತೀಯಾ ವಿಭಕ್ತಿ ಬರಬೇಕಾದ ಸಂದಭ್ರಗಳಲ್ಲೆಲ್ಲ ಕಡ್ಡಾಯವಾಗಿಯೂ ಆ ಪ್ರತ್ಯಯವನ್ನು ಬಳಸಲೇಬೇಕು ಎಂಬ ನಿಯಮ ಸಂಸ್ಕೃತದಲ್ಲಿದೆ (8.4 ನೋಡಿ).
ಇದಲ್ಲದೆ, ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ದ್ವಿತೀಯಾ ವಿಭಕ್ತಿಯ ಬಳಕೆಯಲ್ಲಿ ಬೇರೆಯೂ ಕೆಲವು ವ್ಯತ್ಯಾಸಗಳಿವೆ. (1) ಒಂದು ಚಲನೆಯ ಗುರಿ ಯಾವುದು ಎಂಬುದನ್ನು ಸೂಚಿಸಲು ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯವಿದೆ. ಆದರೆ, ಕನ್ನಡದಲ್ಲಿ ಇದು ಸಾಧ್ಯವಿಲ್ಲ. ಇಂತಹ ಸಂದಭ್ರಗಳಲ್ಲೆಲ್ಲ ಕನ್ನಡದಲ್ಲಿ ಚತುರ್ಥೀ ವಿಭಕ್ತಿಯನ್ನೇ ಬಳಸಬೇಕಾಗುತ್ತದೆ.
(13) ಸಃ ಗ್ರಾಮಂ ಗಚ್ಛತಿ (13ಕ) ‘ಅವನು ಹಳ್ಳಿಗೆ ಹೋಗುತ್ತಾನೆ’ (13ಖ) *ಅವನು ಹಳ್ಳಿಯನ್ನು ಹೋಗುತ್ತಾನೆ
(13)ನೇ ಸಂಸ್ಕೃತ ವಾಕ್ಯದಲ್ಲಿ ಹೋಗುವುದು ಎಲ್ಲಿಗೆ (ಹಳ್ಳಿಗೆ) ಗ್ರಾಮಂ ಸೂಚಿಸಬೇಕಾದಲ್ಲಿ ದ್ವಿತೀಯಾ ವಿಭಕ್ತಿಯನ್ನು ಎಂಬುದನ್ನು ‘ಹಳ್ಳಿಯನ್ನು’ ಎಂಬಲ್ಲಿ ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಇದು ಅಸಾಧ್ಯ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (13ಖ) ವಾಕ್ಯ ಸ್ಪಷ್ಟಪಡಿಸುತ್ತದೆ.
(2) ಯಾರೊಡನೆ ಮಾತನಾಡುತ್ತಿದ್ದಾನೆ ಎಂಬುದನ್ನು ತಿಳಿಸುವುದಕ್ಕಾಗಿ ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯ, ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುರ್ಥೀ ವಿಭಕ್ತಿಯನ್ನು ಇಲ್ಲವೇ ಒಡನೆ ಪದವನ್ನು ಬಳಸ ಬೇಕಾಗುತ್ತದಲ್ಲದೆ ದ್ವಿತೀಯಾ ವಿಭಕ್ತಿಯನ್ನು ಬಳಸಲು ಸಾಧ್ಯವಿಲ್ಲ.
(14) ಸಃ ಪಿತರಂ ಉವಾಚ (14ಕ) ‘ಅವನು ತಂದೆಯೊಡನೆ ಮಾತನಾಡಿದ’
(14ಖ) ‘ಅವನು ತಂದೆಗೆ ಹೇಳಿದ’ (14ಗ) *ಅವನು ತಂದೆಯನ್ನು ಹೇಳಿದ
(14)ನೇ ಸಂಸ್ಕೃತ ವಾಕ್ಯದಲ್ಲಿ ಯಾರೊಡನೆ ಮಾತನಾಡಿದ್ದು ಎಂಬುದನ್ನು ಸೂಚಿಸಲು ಪಿತರಂ ‘ತಂದೆಯನ್ನು’ ಎಂಬುದಾಗಿ ದ್ವಿತೀಯಾ ವಿಭಕ್ತಿಯನ್ನು ಬಳಸಲಾಗಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (14ಗ) ವಾಕ್ಯ ಸ್ಪಷ್ಟಪಡಿಸುತ್ತದೆ.
(3) ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಯನ್ನು ವಾಕ್ಯದಲ್ಲಿ ಬಂದಿರುವ ಎರಡು ನಾಮಪದಗಳೊಂದಿಗೆ, ಅವು ಬೇರೆ ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತಿದ್ದರೂ, ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇದು ಸಾಧ್ಯ
(15) ಸೂದಃ ತಂಡುಲಾನ್ ಓದನಂ ಪಚತಿ (15ಕ) ‘ಅಡುಗೆಯವನು ಅಕ್ಕಿಯನ್ನು ಬೇಯಿಸುತ್ತಾನೆ’ (15ಖ) ‘ಅಡುಗೆಯವನು ಅನ್ನವನ್ನು ಬೇಯಿಸುತ್ತಾನೆ’ (15ಗ) *ಅಡುಗೆಯವನು ಅಕ್ಕಿಯನ್ನು ಅನ್ನವನ್ನು ಬೇಯಿಸುತ್ತಾನೆ (16) ಬಾಲಾ ಅಂಧಂ ಗೃಹಂ ನಯತಿ (16ಕ) ‘ಹುಡುಗಿ ಕುರುಡನನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ’ (16ಖ) *ಹುಡುಗಿ ಕುರುಡನನ್ನು ಮನೆಯನ್ನು ಕರೆದುಕೊಂಡು ಹೋಗುತ್ತಾಳೆ (17) ಇಂದ್ರಃ ಕರ್ಣಂ ಕವಚಂ ಯಾಚತೇ (17ಕ) ‘ಇಂದ್ರನು ಕರ್ಣನ ಹತ್ತಿರ ಕವಚವನ್ನು ಯಾಚಿಸುತ್ತಾನೆ’ (17ಖ) *ಇಂದ್ರನು ಕರ್ಣನನ್ನು ಕವಚವನ್ನು ಯಾಚಿಸುತ್ತಾನೆ
(15-17) ಸಂಸ್ಕೃತ ವಾಕ್ಯಗಳಲ್ಲಿ ಎರಡು ಬೇರೆ ಬೇರೆ ನಾಮಪದಗಳು ದ್ವಿತೀಯಾ ವಿಭಕ್ತಿಯಲ್ಲಿ ಬಂದಿರುವುದನ್ನು ಕಾಣಬಹುದು. ಆದರೆ ಇವುಗಳ ಕನ್ನಡ ರೂಪದಲ್ಲಿ ದ್ವಿತೀಯಾ ವಿಭಕ್ತಿಯನ್ನು ಅವುಗಳಲ್ಲಿ ಒಂದರೊಡನೆ ಮಾತ್ರ ಬಳಸಲು ಸಾಧ್ಯವಾಗಿದೆಯಲ್ಲದೆ ಎರಡರೊಡನೆಯೂ ಬಳಸಲು ಸಾಧ್ಯವಾಗಿಲ್ಲ ಎಂಬುದನ್ನು ವ್ಯಾಕರಣದ ಮಟ್ಟಿಗೆ ಸರಿಯಲ್ಲದ (15ಗ), 16ಖ) ಮತ್ತು (17ಖ) ವಾಕ್ಯಗಳು ಸ್ಪಷ್ಟಪಡಿಸುತ್ತವೆ.
(4) ಸಂಸ್ಕೃತದಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಿತವಾದ ಅರ್ಥವನ್ನು ಕೊಡಲು ಅದರ ವೈಯಾಕರಣಿಗಳಿಗೆ ಸಾಧ್ಯವಾಗಿಲ್ಲ. ಇತರ ವಿಭಕ್ತಿ ಪ್ರತ್ಯಯ ಗಳು ಸೂಚಿಸದಿರುವಂತಹ ಅರ್ಥ ದ್ವಿತೀಯೆಯದು ಎಂಬುದಾಗಿ ಅದಕ್ಕೊಂದು ನಿಷೇಧ ರೂಪದ ಅರ್ಥವನ್ನಷ್ಟೇ ಕೊಡಲು ಸಾಧ್ಯವಾಗಿದೆ (ತಾರಾಪೋರ್ವಾಲಾ
1967 ನೋಡಿ). ಮೇಲೆ ಸೂಚಿಸಿದ ಹಾಗೆ ಒಂದೇ ವಾಕ್ಯದಲ್ಲಿ ಎರಡು ಕ್ರಿಯಾ ಸಂಬಂಧಗಳನ್ನು ಅದು ಸೂಚಿಸಬಲ್ಲುದೆಂಬುದೂ ಈ ಸಮಸ್ಯೆಗೆ ಒಂದು ಕಾರಣ ವಿರಬಹುದು.
ಆದರೆ ಕನ್ನಡದಲ್ಲಿ ಈ ಸಮಸ್ಯೆಯಿಲ್ಲ. ಅದರಲ್ಲಿ ದ್ವಿತೀಯಾ ವಿಭಕ್ತಿಗೆ ಒಂದು ನಿಶ್ಚಿತವಾದ ಅರ್ಥವಿದ್ದು, ಅದು ಘಟನೆಯೊಂದರಲ್ಲಿ ಸ್ವೇಚ್ಛೆಯಿಂದ ತೊಡಗದಿರುವ ಮತ್ತು ಇನ್ನೊಬ್ಬ ವ್ಯಕ್ತಿಯ ಕಾರ್ಯದಿಂದಾಗಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಸೂಚಿಸುತ್ತದೆ. ಇದೇ ಅರ್ಥದಲ್ಲಿ ಅದನ್ನು ಮೇಲೆ (8.2)ರಲ್ಲಿ ‘ಆಗುಗ’ ಇಲ್ಲವೇ ‘ಬಾಧಿತ’ ಎಂಬುದಾಗಿ ಹೆಸರಿಸಲಾಗಿದೆ.
8.5.3 ತೃತೀಯಾ ಮತ್ತು ಪಂಚಮೀ ವಿಭಕ್ತಿಗಳು
ಸಂಸ್ಕೃತದಲ್ಲಿ ತೃತೀಯಾ ಮತ್ತು ಪಂಚಮೀ ಎಂಬ ಎರಡು ವಿಭಕ್ತಿ ಪ್ರತ್ಯಯ ಗಳಿದ್ದು, ಕನ್ನಡದಲ್ಲಿ ಇವಕ್ಕನುಗುಣವಾಗಿ ಇಂದ ಎಂಬ ಒಂದೇ ವಿಭಕ್ತಿ ಪ್ರತ್ಯಯ ಬಳಕೆಯಲ್ಲಿದೆ. ಕನ್ನಡದ ಕೆಲವು ವೈಯಾಕರಣಿಗಳು ದೆಸೆಯಿಂದ ಎಂಬುದನ್ನು ಪಂಚಮೀ ವಿಭಕ್ತಿ ಪ್ರತ್ಯಯವೆಂದು ಕರೆದಿದ್ದಾರೇನೋ ನಿಜ. ಆದರೆ ಇದು ಒಂದು ನಾಮಪದವಲ್ಲದೆ ಪ್ರತ್ಯಯವಲ್ಲ.
ಸೇಡಿಯಾಪು ದೆಸೆಯಿಂದ ಎಂಬುದು ಇಂದ ಪ್ರತ್ಯಯವನ್ನು ಅಂಟಿಸಿಕೊಂಡಿರುವ ದಿಶಾ ಎಂಬ ಸಂಸ್ಕೃತ ಪದದ ತದ್ಭವ ರೂಪ ಮಾತ್ರ. ರಾಮನ ದೆಸೆಯಿಂದ ಎಂಬಂತಹ ಬಳಕೆಯಲ್ಲಿ ಒಂದು ಪದಕಂತೆ ಬಂದಿದೆಯಲ್ಲದೆ ರಾಮ ನಾಮಪದದ ವಿಭಕ್ತಿರೂಪ ಬಂದಿಲ್ಲ. ಕನ್ನಡದಲ್ಲಿ ಇಂದ ಪ್ರತ್ಯಯಕ್ಕಿರುವ ಅತಿ ಮುಖ್ಯವಾದ ಬಳಕೆಯುಂದರೆ, ಚಲನೆ ಯಾವ ದಿಕ್ಕಿನಿಂದ ನಡೆಯಿತು ಎಂಬುದಾಗಿ ಚಲನೆಯ ಮೂಲವನ್ನು ಸೂಚಿಸುವುದು.
(1992:164)
ಕೃಷ್ಣಭಟ್ಟರು
ಹೇಳುವ
(18ಕ) ರಾಜು ಮನೆಯಿಂದ ಬಂದ (18ಖ) ಸೀತೆ ಬಾವಿಯಿಂದ ನೀರೆತ್ತಿದಳು (19) ರಾಮು ಹರಿಯಿಂದ ಪುಸ್ತಕವನ್ನು ಕಸಿದುಕೊಂಡ
(18-19)ನೇ ವಾಕ್ಯಗಳಲ್ಲಿ ಕಾಣಿಸುವ ಹಾಗೆ, ಇಂದ ಪ್ರತ್ಯಯಕ್ಕೆ ಕನ್ನಡ ದಲ್ಲಿ ಮುಖ್ಯವಾಗಿ ಅಪಾದಾನಾರ್ಥ (ಇಲ್ಲವೇ ಅಪಕಷ್ರಾರ್ಥ)ವಿದ್ದು, ಇದಕ್ಕೆ ವಿರುದ್ಧವಾದ ಸಂಪ್ರದಾನಾರ್ಥ (ಇಲ್ಲವೇ ಸಹಯೋಗಾರ್ಥ)ವನ್ನು ಕೊಡುವ ಶಕ್ತಿ ಇಗೆ (ಚತುರ್ಥೀ) ಪ್ರತ್ಯಯಕ್ಕಿದೆ.
ಯಾವ ದಿಕ್ಕಿನಿಂದ ಇಲ್ಲವೇ ಯಾವ ಜಾಗದಿಂದ ಚಲನೆ ನಡೆಯುತ್ತದೆ ಎಂಬುದನ್ನು ಇಂದ ಪ್ರತ್ಯಯ ಸೂಚಿಸುತ್ತದೆ ಮತ್ತು ಯಾವ ದಿಕ್ಕಿಗೆ ಇಲ್ಲವೇ ಜಾಗಕ್ಕೆ ಚಲನೆ ನಡೆಯುತ್ತದೆ ಎಂಬುದನ್ನು ಇಗೆ ಪ್ರತ್ಯಯ ಸೂಚಿಸುತ್ತದೆ.
ರಾಜು ಮನೆಗೆ ಹೋದ
(20) (21) ಸೀತೆ ಕಟ್ಟೆಗೆ ನೀರು ಸುರಿಯುತ್ತಿದ್ದಾಳೆ (22) ಹುಡುಗರು ಶಾಲೆಯಿಂದ ಮನೆಗೆ ಓಡಿದರು
ಸಹಯೋಗಾರ್ಥವನ್ನು ಸೂಚಿಸುವಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ (23)ನೇ ವಾಕ್ಯವೂ ಸ್ಪಷ್ಟ ಪಡಿಸುತ್ತದೆ.
(23) ದೇವೋ ದೇವೇಭಿರ್ ಆಗಮತ್ ‘ದೇವನು ದೇವತೆಗಳೊಂದಿಗೆ ಬಂದ’
ಇದೇ ರೀತಿಯಲ್ಲಿ ಸಮಾನ ಇಲ್ಲವೇ ಸದೃಶ ಎಂಬ ಅರ್ಥದಲ್ಲೂ ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗವಿದೆ. ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುರ್ಥೀ ವಿಭಕ್ತಿಯ ಪ್ರಯೋಗವಿದೆ.
(24) ಅನೇನ ಸದೃಶೋ ಲೋಕೇ ನ ಭೂತೋ ನ ಭವಿಷ್ಯತಿ
‘ಇವನಿಗೆ ಸದೃಶನಾದವನು ಜಗತ್ತಿನಲ್ಲಿ ಹುಟ್ಟಿಯೂ ಇಲ್ಲ, ಹುಟ್ಟು ವುದೂ ಇಲ್ಲ’
(24)ನೇ ಸಂಸ್ಕೃತ ವಾಕ್ಯದಲ್ಲಿ ಅನೇನ ಎಂಬುದು ತೃತೀಯುಯಲ್ಲಿ ಬಂದಿದೆ, ಆದರೆ ಕನ್ನಡದಲ್ಲಿ ಅವನಿಗೆ ಎಂಬುದಾಗಿ ಚತುರ್ಥೀ ಪದರೂಪದ ಬಳಕೆಯಾಗಿದೆ. ಅವನಿಂದ ಎಂಬುದನ್ನು ಇಲ್ಲಿ ಬಳಸಲು ಸಾಧ್ಯವಾಗದು.
ಸಂಸ್ಕೃತದಲ್ಲಿ ಸಹಯೋಗವನ್ನು ತೃತೀಯಾ ವಿಭಕ್ತಿ ಸೂಚಿಸುತ್ತದೆ ಮತ್ತು ವಿಯೋಗವನ್ನು ಪಂಚಮೀ ವಿಭಕ್ತಿ ಸೂಚಿಸುತ್ತದೆ. ಆದರೆ ಕನ್ನಡದಲ್ಲಿ ಇದಕ್ಕೆ ವಿರುದ್ಧವಾದ ಪ್ರಯೋಗವಿದ್ದು, ತೃತೀಯಾ ವಿಭಕ್ತಿ ವಿಯೋಗವನ್ನು ಸೂಚಿಸು
(25) ವೃಕ್ಷಾತ್ ಫಲಂ ಪತತಿ
‘ಮರದಿಂದ ಹಣ್ಣು ಬೀಳುತ್ತದೆ’
(26) ಅಹಂ ಅಸ್ಮಾತ್ ವನಾತ್ ಗಂತುಮಿಚ್ಛಾಮಿ
‘ನನಗೆ ಈ ಕಾಡಿನಿಂದ (ಹೊರಗೆ) ಹೋಗಬೇಕು’
(25)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ವೃಕ್ಷಾತ್ ಪದರೂಪ ಬಂದಿದೆ; ಆದರೆ ಕನ್ನಡದಲ್ಲಿ ತೃತೀಯುಯ ಮರದಿಂದ ಎಂಬುದು ಬಂದಿದೆ. ಇದೇ ರೀತಿಯಲ್ಲಿ (26)ನೇ ಸಂಸ್ಕೃತ ವಾಕ್ಯದಲ್ಲಿ ಪಂಚಮಿಯ ಅಸ್ಮಾತ್ ವನಾತ್ ಪದಕಂತೆ ಬಂದಿದೆ; ಆದರೆ ಕನ್ನಡದಲ್ಲಿ ತೃತೀಯುಯ ಈ ಕಾಡಿನಿಂದ ಪದಕಂತೆ ಬಂದಿದೆ.
ಕನ್ನಡದಲ್ಲಿ ಈ ರೀತಿ ಇಂದ ಪ್ರತ್ಯಯಕ್ಕೆ ವಿಯೋಗವೇ ಮುಖ್ಯವಾದ ಆರ್ಥವಾದ ಕಾರಣ, ಅದನ್ನು ತೃತೀಯಾ ಎಂದು ಕರೆಯುವ ಬದಲು ಪಂಚಮೀ ಎಂದು ಕರೆಯುವುದೇ ಯೋಗ್ಯ ಎಂಬುದಾಗಿ ಸೇಡಿಯಾಪು ಕೃಷ್ಣಭಟ್ಟರು (1992:178) ವಾದಿಸಿದ್ದಾರೆ.
ಸಂಸ್ಕೃತದಲ್ಲಿ ತೃತೀಯಾ ವಿಭಕ್ತಿಯನ್ನು ಕರಣಾರ್ಥದಲ್ಲೂ ಬಳಸುವ ಕ್ರಮವಿದೆ. ಕನ್ನಡದಲ್ಲೂ ಕರಣವನ್ನು ಸೂಚಿಸುವುದಕ್ಕಾಗಿ ಇಂದ ವಿಭಕ್ತಿಯ ಬಳಕೆಯೇ ಬರುತ್ತದೆಯುಂದು ಭಾವಿಸಿ ಕನ್ನಡದ ವೈಯಾಕರಣಿಗಳು ಅದನ್ನು ತೃತೀಯಾ ವಿಭಕ್ತಿಯೆಂದು ಕರೆದಿದ್ದಾರೆ.
ಆದರೆ ನಿಜಕ್ಕೂ ಇದು ಸರಿಯಲ್ಲ. ಕೃಷ್ಣಭಟ್ಟರು (1992) ತೋರಿಸಿ ಕೊಟ್ಟಿರುವ ಹಾಗೆ, ಕನ್ನಡದಲ್ಲಿ ಕರಣಾರ್ಥಕ್ಕೆ ಸಪ್ತಮಿಯನ್ನು ಬಳಸುವುದೇ ಜಾಸ್ತಿ (8.5.6 ನೋಡಿ).
8.5.4 ಚತುರ್ಥೀ ವಿಭಕ್ತಿ
ಸಂಸ್ಕೃತದಲ್ಲಿ ಚಲನೆಯ ಗುರಿ ಇಲ್ಲವೇ ಉದ್ದೇಶಕ್ಕೆ ಸಂಬಂಧಿಸಿದ ಹಾಗೆ ದ್ವಿತೀಯಾ (8.5.2 ನೋಡಿ), ಚತುರ್ಥೀ ಮತ್ತು ಸಪ್ತಮೀ ಎಂಬ ಈ ಮೂರು ವಿಭಕ್ತಿಗಳನ್ನೂ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಇಂತಹ ಸಂದಭ್ರ ಗಳಲ್ಲಿ ಚತುರ್ಥಿಯನ್ನು ಮಾತ್ರ ಬಳಸಲು ಸಾಧ್ಯ.
(27ಕ) ರಾಮಃ ಗ್ರಾಮಂ ಗಚ್ಛತಿ
‘ರಾಮ ಊರಿಗೆ ಹೋಗುತ್ತಾನೆ’
(27ಖ) ರಾಮಃ ಗ್ರಾಮಾಯ ಗಚ್ಛತಿ
‘ರಾಮ ಊರಿಗೆ (ಊರಿನ ಕಡೆಗಾಗಿ) ಹೋಗುತ್ತಾನೆ’
(27ಗ) ರಾಮಃ ಗ್ರಾಮೇ ಗಚ್ಛತಿ
‘ರಾಮ ಊರಿಗೆ ಹೋಗುತ್ತಾನೆ (ಹೋಗಿ ಊರನ್ನು ಸೇರುತ್ತಾನೆ)’
ಸಂಸ್ಕೃತದ ಗ್ರಾಮ ಪದ (27ಕ) ವಾಕ್ಯದಲ್ಲಿ ದ್ವಿತೀಯೆಯಲ್ಲಿ, (27ಖ) ವಾಕ್ಯದಲ್ಲಿ ಚತುರ್ಥಿಯಲ್ಲಿ ಮತ್ತು (27ಗ) ವಾಕ್ಯದಲ್ಲಿ ಸಪ್ತಮಿಯಲ್ಲಿ ಬಂದಿದೆ. ಆದರೆ ಕನ್ನಡದ ಊರು ಪದ ಮೇಲಿನ ಮೂರು ವಾಕ್ಯಗಳಲ್ಲೂ ಚತುರ್ಥೀ ವಿಭಕ್ತಿಯಲ್ಲೇ ಬಂದಿದೆ.
ಸಂಸ್ಕೃತದಲ್ಲಿ ಸಂಪ್ರದಾನ ‘ಕೊಡುವುದು’ ಎಂಬುದೇ ಚತುರ್ಥೀ ವಿಭಕ್ತಿಯ ಮುಖ್ಯವಾದ ಅರ್ಥ ಎಂಬುದಾಗಿ ವಿದ್ವಾಂಸರು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಈ ವಿಭಕ್ತಿಗೆ ಚಲನೆಯ ಗುರಿ (ಇಲ್ಲವೇ ಕೊನೆ)ಯನ್ನು ಸೂಚಿಸುವುದೇ ಮುಖ್ಯ ವಾದ ಅರ್ಥ. ಅದು ತೃತೀಯಾ ವಿಭಕ್ತಿಯ ವಿರುದ್ಧ ನಿಲ್ಲುತ್ತದೆ ಮಾತ್ರವಲ್ಲ, ತೃತೀಯಾ ವಿಭಕ್ತಿಯೊಂದಿಗೆ ಸೇರಿ ಸಪ್ತಮೀ ವಿಭಕ್ತಿಯ ವಿರುದ್ಧವೂ ನಿಲ್ಲುತ್ತದೆ.
ಕನ್ನಡದಲ್ಲಿ ತೃತೀಯಾ ಮತ್ತು ಚತುರ್ಥೀ ವಿಭಕ್ತಿಗಳ ಬಳಕೆಯಲ್ಲಿ ಚಲನೆಯ ಅರ್ಥ ಬರುತ್ತದೆ, ಸಪ್ತಮಿಯ ಬಳಕೆಯಲ್ಲಿ ಬರುವುದಿಲ್ಲ. ಆದರೆ, ಸಂಸ್ಕೃತದಲ್ಲಿ ಚಲನೆಯ ಅರ್ಥ ಚತುರ್ಥೀ ವಿಭಕ್ತಿಯಲ್ಲಿ ಮಾತ್ರವಲ್ಲದೆ ಸಪ್ತಮೀ ವಿಭಕ್ತಿಯಲ್ಲೂ ಬರಬಲ್ಲುದು (27ಗ ನೋಡಿ).
8.5.5 ಷಷ್ಠೀ ವಿಭಕ್ತಿ
ಕನ್ನಡದ ಅ ಪ್ರತ್ಯಯವನ್ನು ಷಷ್ಠೀ ವಿಭಕ್ತಿಯೆಂದು ಕರೆಯುವ ರೂಢಿಯಿದೆ. ಆದರೆ ನಿಜಕ್ಕೂ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯಯವಾಗಿ ಬಳಕೆಯಲ್ಲಿಲ್ಲ. ಈ ವಿಷಯದಲ್ಲೂ ಕನ್ನಡ ಸಂಸ್ಕೃತಕ್ಕಿಂತ ಭಿನ್ನವಾಗಿದೆ.
ಅ ಪ್ರತ್ಯಯದ ಮೂಲಕ ಕನ್ನಡದಲ್ಲಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆಯಲ್ಲದೆ ಕ್ರಿಯಾಪದದೊಂದಿಗೆ ಸಂಬಂಧಿಸಲು ಸಾಧ್ಯವಾಗದು. ಹಾಗಾಗಿ ಅದು ಕನ್ನಡದಲ್ಲಿ ವಿಭಕ್ತಿ ಪ್ರತ್ಯಯ ವಲ್ಲ.
ಆದರೆ ಸಂಸ್ಕೃತದಲ್ಲಿ ಷಷ್ಠೀ ಪ್ರತ್ಯಯ ಒಂದು ವಿಭಕ್ತಿಯೇ. ಯಾಕೆಂದರೆ, ಆ ಪ್ರತ್ಯಯದ ಮೂಲಕ ನಾಮಪದಗಳನ್ನು ಕ್ರಿಯಾಪದದೊಂದಿಗೂ ನೇರವಾಗಿ ಸಂಬಂಧಿಸಲು ಸಂಸ್ಕೃತದಲ್ಲಿ ಸಾಧ್ಯವಿದೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (28-30) ಸಂಸ್ಕೃತ ವಾಕ್ಯಗಳನ್ನು ಪರಿಶೀಲಿಸಬಹುದು.
(28) ನೇಯಂ ಮಮ ಮಹೀ ದುಲ್ರಭಃ
‘ನನಗೆ ಈ ಭೂಮಿಯನ್ನು ಗೆಲ್ಲುವುದು ಕಷ್ಟವಲ್ಲ’
(29) ಭೀಮಸ್ಯ ಅನುಕರಿಷ್ಯಾಮಿ (29ಕ) ‘(ನಾನು) ಭೀಮನನ್ನು ಅನುಕರಿಸುತ್ತೇನೆ’ (29ಖ) *ನಾನು ಭೀಮನ ಅನುಕರಿಸುತ್ತೇನೆ’ (30) ಮಮ ಪ್ರೀತಿಃ ಸಂಜಾತಃ
(30ಕ) ‘ನನಗೆ ಪ್ರೀತಿಯುಂಟಾಯಿತು’ (30ಖ) *ನನ್ನ ಪ್ರೀತಿಯುಂಟಾಯಿತು’
(28-30) ಸಂಸ್ಕೃತ ವಾಕ್ಯಗಳಲ್ಲಿ ನಾಮಪದಗಳ ಷಷ್ಠೀ ರೂಪಗಳನ್ನು (ಮಮ ಮತ್ತು ಭೀಮಸ್ಯ ಎಂಬವುಗಳನ್ನು) ನೇರವಾಗಿ ಕ್ರಿಯಾಪದಗಳೊಂದಿಗೆ ಸಂಬಂಧಿಸಲು ಬಳಸಲಾಗಿದೆ. ಆದರೆ ಅವುಗಳ ಕೆಳಗೆ ಕೊಟ್ಟಿರುವ ಕನ್ನಡ ವಾಕ್ಯಗಳಲ್ಲಿ ಈ ರೀತಿ ಷಷ್ಠೀ ರೂಪಗಳನ್ನು ಬಳಸಲು ಸಾಧ್ಯವಾಗಿಲ್ಲ.
(28) ಮತ್ತು (30)ನೇ ವಾಕ್ಯಗಳಲ್ಲಿ ಷಷ್ಠೀ ವಿಭಕ್ತಿಯಲ್ಲಿರುವ ಸಂಸ್ಕೃತದ ಮಮ ‘ನನ್ನ’ ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ಚತುರ್ಥೀ ವಿಭಕ್ತಿಯಲ್ಲಿರುವ ನನಗೆ ರೂಪವೂ (29)ನೇ ವಾಕ್ಯದಲ್ಲಿ ಷಷ್ಠೀ ವಿಭಕ್ತಿಯಲ್ಲಿರುವ ಸಂಸ್ಕೃತದ ಭೀಮಸ್ಯ ‘ಭೀಮನ’ ಪದರೂಪಕ್ಕೆ ಬದಲಾಗಿ ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯಲ್ಲಿರುವ ಭೀಮನನ್ನು ರೂಪವೂ ಬಂದಿರುವುದನ್ನು ಗಮನಿಸಬಹುದು.
ಈ ಮೂರು ಬಳಕೆಗಳಲ್ಲೂ ಸಂಸ್ಕೃತದಲ್ಲಿ ನಾಮಪದವನ್ನು ಕ್ರಿಯಾಪದ ದೊಂದಿಗೆ ಸಂಬಂಧಿಸುವುದಕ್ಕಾಗಿ ಅದರ ಷಷ್ಠೀ ರೂಪವನ್ನು ಬಳಸಲು ಸಾಧ್ಯವಾಗಿದೆ. ಆದರೆ ಕನ್ನಡದಲ್ಲಿ ಹೀಗೆ ಸಂಬಂಧಿಸಲು ಷಷ್ಠೀರೂಪವನ್ನು (ನನ್ನ ಇಲ್ಲವೇ ಭೀಮನ ಎಂಬವುಗಳನ್ನು) ಬಳಸುವ ಬದಲು ಚತುರ್ಥಿ ಇಲ್ಲವೇ ದ್ವಿತೀಯಾ ರೂಪವನ್ನು ಬಳಸಬೇಕಾಗಿದೆ. ಕನ್ನಡದಲ್ಲಿ ಈ ಕೆಲಸಕ್ಕಾಗಿ ಷಷ್ಠೀ ರೂಪವನ್ನು ಬಳಸಲು ಸಾಧ್ಯವಾಗದು.
ಹಾಗಾಗಿ, ಕನ್ನಡದಲ್ಲಿ ಅ ಪ್ರತ್ಯಯವನ್ನು ಬಳಸಿ ತಯಾರಿಸಿದ ಷಷ್ಠೀ ರೂಪವನ್ನು ಒಂದು ‘ವಿಭಕ್ತಿ’ ರೂಪವೆಂದು ಪರಿಗಣಿಸುವುದು ಸರಿಯಲ್ಲ. ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸುವುದಕ್ಕಾಗಿ ಆ ನಾಮಪದವನ್ನು ಅದರ ‘ವಿಶೇಷಣ’ ರೂಪಕ್ಕೆ ಬದಲಾಯಿಸುವುದೇ ಕನ್ನಡದಲ್ಲಿ ಈ ಷಷ್ಠೀ ಪ್ರತ್ಯಯಕ್ಕಿರುವ ಕೆಲಸ.
ಸಂಸ್ಕೃತದಲ್ಲಿ ವಿಶೇಷಣವೆಂಬುದಿಲ್ಲವಾದ ಕಾರಣ ಅದಕ್ಕೆ ನಾಮಪದವನ್ನು ವಿಶೇಷಣರೂಪಕ್ಕೆ ಪರಿವರ್ತಿಸುವ ಪ್ರತ್ಯಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಒಂದು ನಾಮಪದವನ್ನು ಇನ್ನೊಂದು ನಾಮಪದದೊಂದಿಗೆ ಸಂಬಂಧಿಸಲು ಸಂಸ್ಕೃತದಲ್ಲಿ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿ ಬಳಸುವುದು ಕ್ರಮ (3.2.2 ನೋಡಿ).
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ವ್ಯತ್ಯಾಸವನ್ನು ಕೆಳಗಿನ (31)ನೇ ವಾಕ್ಯದಲ್ಲಿ ಕಾಣಬಹುದು.
(31) ಮೃತ್ತಿಕಂ ಘಟಂ ಆನಯ ‘ಮಣ್ಣಿನ ಕೊಡವನ್ನು ತಾ’
(31)ನೇ ಸಂಸ್ಕೃತ ವಾಕ್ಯದಲ್ಲಿ ಮೃತ್ತಿಕ ಮತ್ತು ಘಟ ಎಂಬ ಎರಡು ನಾಮಪದಗಳು ಒಂದೇ ವಿಭಕ್ತಿಯಲ್ಲಿ (ದ್ವಿತೀಯೆಯಲ್ಲಿ) ಬಂದಿದ್ದು ಅವು ಒಂದರೊಡನೊಂದು ಸಂಬಂಧಿಸಿವೆ. ಆದರೆ ಕನ್ನಡದಲ್ಲಿ ಮೊದಲನೆಯದು ಷಷ್ಠಿಯಲ್ಲಿ ಬಂದಿದ್ದು, ಆ ಪ್ರತ್ಯಯದ ಮೂಲಕ ಅದು ಎರಡನೆಯದರೊಂದಿಗೆ ಸಂಬಂಧಿಸಿದೆ.
ನಾಮಪದಗಳೆರಡನ್ನು ಸಂಸ್ಕೃತ ಭಾಷೆಯಲ್ಲೂ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಿದೆ. ಆದರೆ, ಅವಯವಗಳು, ಸ್ವಾಮ್ಯ, ನಂಟು, ಮೊದಲಾದ ಕೆಲವು ವಿಶಿಷ್ಟವಾದ ಸಂಬಂಧಗಳನ್ನು ಮಾತ್ರ ಈ ರೀತಿ ಷಷ್ಠಿಯ ಮೂಲಕ ಸಂಬಂಧಿಸಲು ಸಾಧ್ಯ.
(32) ಮಮ ಪುಸ್ತಕಂ ಇಹ ಅಸ್ತಿ
‘ನನ್ನ ಪುಸ್ತಕ ಇಲ್ಲಿ ಇದೆ’
(33) ಪಶೂನಾಂ ರಾಜಾ ಸಿಂಹಃ ‘ಪಶುಗಳ ರಾಜ ಸಿಂಹ’
(34) ಸಃ ಮಮ ಪಿತೃಃ ಭ್ರಾತಾ
‘ಅವನು ನನ್ನ ತಂದೆಯ ಅಣ್ಣ’
ಇದಕ್ಕೆ ಬದಲು, ಎರಡು ನಾಮಪದಗಳ ನಡುವೆ ಎಂತಹ ಸಂಬಂಧ ಗಳನ್ನೆಲ್ಲ ಕಲ್ಪಿಸಲು ಸಾಧ್ಯವೋ ಅವೆಲ್ಲವನ್ನೂ ಕನ್ನಡದಲ್ಲಿ ಅ ಪ್ರತ್ಯಯದ ಮೂಲಕ ಸಂಬಂಧಿಸಬಹುದು. ಇದಲ್ಲದೆ ಕೆಲವು ಗುಣಪದಗಳನ್ನೂ ಕನ್ನಡದಲ್ಲಿ ಈ ಪ್ರತ್ಯಯದ ಮೂಲಕ ನಾಮಪದದೊಂದಿಗೆ ಸಂಬಂಧಿಸಲು ಸಾಧ್ಯವಿದೆ (ದಪ್ಪದ ಹಲಿಗೆ, ಎತ್ತರದ ಗೋಡೆ, ಕೋಪದ ಹುಡುಗಿ, ಎಳೆಯ ಮಿಡಿ).
ಕನ್ನಡದ ಅ ಪ್ರತ್ಯಯಕ್ಕೂ ಕನ್ನಡದ್ದೇ ಆದ ಅನ್ನು, ಇಂದ, ಗೆ ಮತ್ತು ಅಲ್ಲಿ ‘ವಿಭಕ್ತಿ’ ಪ್ರತ್ಯಯಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವನ್ನೆಲ್ಲ ಪರಿಶೀಲಿಸಿದಾಗ ನಿಜಕ್ಕೂ ಕನ್ನಡದಲ್ಲಿ ಅ ಪ್ರತ್ಯಯ ಯಾಕೆ ಒಂದು ವಿಭಕ್ತಿ ಪ್ರತ್ಯಯವಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ. (1) ಕನ್ನಡದ ಅ ಪ್ರತ್ಯಯ ಗುಣಪದಗಳನ್ನು ಮತ್ತು ಕ್ರಿಯಾಪದಗಳ ಕೃದಂತ ರೂಪಗಳನ್ನು ಹೋಲುತ್ತದೆ. ಈ ಮೂರೂ ಕನ್ನಡದಲ್ಲಿ ನಾಮಪದಗಳ ವಿಶೇಷಣಗಳಾಗಿ ಬರಬಲ್ಲ ಪದ(ರೂಪ)ಗಳೆಂಬುದನ್ನು ಇಲ್ಲಿ ಗಮನಿಸಬಹುದು.
ಗುಣಪದ
ದೊಡ್ಡ ಮನೆ
ಕೃದಂತರೂಪ ಅ ಪ್ರತ್ಯಯ ಮುರಿದ ಮನೆ ಅರಸನ ಮನೆ
ಕಪ್ಪು ಕಲ್ಲು ಉದ್ದ ಹಗ್ಗ ಹುಚ್ಚು ನಾಯಿ ಹಸಿದ ನಾಯಿ
ಬಿದ್ದ ಕಲ್ಲು ಕಟ್ಟಿದ ಹಗ್ಗ
ಗುಡ್ಡದ ಕಲ್ಲು ಹುಲ್ಲಿನ ಹಗ್ಗ ನಮ್ಮ ನಾಯಿ
(2) ‘ಮತ್ತು’ ಎಂಬ ಅರ್ಥವನ್ನು ಕೊಡುವ ಊ ಪ್ರತ್ಯಯವನ್ನು ಕನ್ನಡದಲ್ಲಿ ಎಲ್ಲಾ ವಿಭಕ್ತಿರೂಪಗಳೊಂದಿಗೂ ಬಳಸಲು ಸಾಧ್ಯವಿದೆ (ಮನೆಯನ್ನೂ, ಮನೆ ಯಿಂದಲೂ, ಮನೆಗೂ, ಮನೆಯಲ್ಲೂ); ಆದರೆ ಅ ಪ್ರತ್ಯಯವಿರುವ ನಾಮ ಪದಗಳೊಂದಿಗೆ ಅದನ್ನು ಬಳಸಲು ಸಾಧ್ಯವಾಗದು.
ಇದೇ ರೀತಿಯಲ್ಲಿ ಗುಣಪದಗಳೊಂದಿಗಾಗಲಿ ಇಲ್ಲವೇ ಕ್ರಿಯಾಪದಗಳ ಕೃದಂತ ರೂಪದೊಂದಿಗಾಗಲಿ ಈ ಪ್ರತ್ಯಯವನ್ನು ಬಳಸಲು ಸಾಧ್ಯವಾಗದು. ಈ ವಿಷಯದಲ್ಲೂ ಅ ಪ್ರತ್ಯಯವಿರುವ ನಾಮಪದಗಳ ಬಳಕೆ ಗುಣಪದ ಮತ್ತು ಕೃದಂತಗಳ ಹಾಗಿದೆಯಲ್ಲದೆ, ವಿಭಕ್ತಿರೂಪಗಳ ಬಳಕೆಯ ಹಾಗಿಲ್ಲ.
(3) ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಗುಣಪದಗಳು, ಕ್ರಿಯಾಪದಗಳ ಕೃದಂತ ರೂಪಗಳು ಮತ್ತು ನಾಮಪದಗಳ ಷಷ್ಠೀ ರೂಪ ಇವು ಮೂರೂ ಕನ್ನಡದಲ್ಲಿ ಪದಕಂತೆಗಳನ್ನು ತಯಾರಿಸು ವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತವೆ. ಅವು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆಯಾಗುವುದಿಲ್ಲ. ಇದಕ್ಕೆ ಬದಲು, ಅನ್ನು, ಇಂದ, ಗೆ ಮತ್ತು ಅಲ್ಲಿ ಪ್ರತ್ಯಯಗಳು ನೇರವಾಗಿ ವಾಕ್ಯಗಳನ್ನು ತಯಾರಿಸುವಲ್ಲಿ ಬಳಕೆ ಯಾಗುತ್ತವೆ.
ಪದಕಂತೆಗಳ ತಯಾರಿಕೆಯುಂಬುದು ವಾಕ್ಯಗಳ ತಯಾರಿಕೆಗಿಂತ ಕೆಳಗಿನ ಸ್ತರ ದಲ್ಲಿ ಬರುವ ವ್ಯಾಕರಣ ಕಾರ್ಯ. ಕನ್ನಡದ ಷಷ್ಠೀ ಪ್ರತ್ಯಯ ಈ ಕೆಳಗಿನ ಸ್ತರದಲ್ಲಿ ಮಾತ್ರವೇ ಬರಬಲ್ಲುದು.
ಇದಕ್ಕೆ ಬದಲು, ಅನ್ನು, ಇಂದ ಮೊದಲಾದ ವಿಭಕ್ತಿ ಪ್ರತ್ಯಯಗಳು ಅದಕ್ಕಿಂತ ಮೇಲಿರುವ ವಾಕ್ಯರಚನೆಯ ಸ್ತರದಲ್ಲಿ ಬಳಕೆಯಾಗುತ್ತವೆ. ಹಾಗಾಗಿ, ಕನ್ನಡದ ಷಷ್ಠೀ ಪ್ರತ್ಯಯವನ್ನು ಇತರ ‘ವಿಭಕ್ತಿ’ ಪ್ರತ್ಯಯಗಳೊಂದಿಗೆ ಒಂದೇ ಗುಂಪಿನಲ್ಲಿ ಇರಿಸಿ ಹೇಳುವುದು ಸರಿಯಲ್ಲ.
8.5.6 ಸಪ್ತಮೀ ವಿಭಕ್ತಿ
ಸಪ್ತಮೀ ವಿಭಕ್ತಿ ಪ್ರತ್ಯಯ ಸಂಸ್ಕೃತ ಮತ್ತು ಕನ್ನಡಗಳೆರಡರಲ್ಲೂ ಬಳಕೆ ಯಾಗುತ್ತದೆ. ಆದರೆ ಅದರ ಬಳಕೆಯಲ್ಲಿ ಈ ಎರಡು ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ.
(1) ಮೇಲೆ (8.5.4ರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದಲ್ಲಿ ಸಪ್ತಮಿಯ ಮೂಲಕ ಒಂದು ಚಲನೆಯ ಕೊನೆ ಯಾವುದು (ಯಾವ ಜಾಗದಲ್ಲಿ ಚಲನೆ
ಮುಕ್ತಾಯವಾಯಿತು) ಎಂಬುದನ್ನು ಸೂಚಿಸಲು ಸಾಧ್ಯ; ಆದರೆ ಕನ್ನಡದಲ್ಲಿ ಇದಕ್ಕಾಗಿ ಚತುರ್ಥಿಯನ್ನು ಬಳಸಬೇಕಾಗುತ್ತದೆ.
(35) ಪುರೇಷು ಪ್ರೇಷಯಾಮಾಸ ದೂತಾನ್ ‘ದೂತರನ್ನು ನಗರಗಳಿಗೆ ಕಳುಹಿಸಿದ’
(35)ನೇ ಸಂಸ್ಕೃತ ವಾಕ್ಯದಲ್ಲಿ ಸಪ್ತಮಿಯ ಪುರೇಷು ‘ನಗರಗಳಲ್ಲಿ’ ಬಂದಿದೆ; ಆದರೆ ಕನ್ನಡದಲ್ಲಿ ಚತುರ್ಥಿಯ ನಗರಗಳಿಗೆ ಬಂದಿದೆ.
(2) ಕನ್ನಡದಲ್ಲಿ ಸಪ್ತಮಿಯನ್ನು ಬಳಸಬೇಕಿದ್ದಲ್ಲಿ ಅದು ಚಲನೆಯ ಜಾಗ ವಾಗಿರಬೇಕಲ್ಲದೆ ಕೊನೆಯಾಗಿರಬಾರದು. ಸಪ್ತಮಿಗೂ ಚತುರ್ಥಿಗೂ ನಡುವೆ ಕನ್ನಡದಲ್ಲಿರುವ ಈ ವ್ಯತ್ಯಾಸವನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
(36ಕ) ರಾಜು ಕಾಡಿಗೆ ಓಡಿದ (36ಖ) ರಾಜು ಕಾಡಿನಲ್ಲಿ ಓಡಿದ
ಓಡುವ ಚಲನೆ ಕಾಡಿನ ದಿಕ್ಕಿಗಾಗಿ ಎಂದರೆ ಕಾಡಿನಲ್ಲಿ ಕೊನೆಗೊಳ್ಳುವಂತೆ ನಡೆದಿದೆಯಾದರೆ, (36ಕ)ದಲ್ಲಿ ಕಾಣಿಸಿದಂತೆ ಕನ್ನಡದಲ್ಲಿ ಚತುರ್ಥಿಯನ್ನು ಬಳಸಬೇಕಾಗುತ್ತದೆ; ಅದು ಕಾಡಿನೊಳಗೇನೇ (ಎಂದರೆ ಕಾಡು ಆ ಚಲನೆಯ ಜಾಗವಾಗಿರುವಂತೆ) ನಡೆದಿದೆಯಾದರೆ (36ಖ)ದಲ್ಲಿ ಕಾಣಿಸಿದಂತೆ ಸಪ್ತಮಿ ಯನ್ನು ಬಳಸಬೇಕಾಗುತ್ತದೆ.
(3) ಕನ್ನಡದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಘಟನೆಯಲ್ಲಿ ಬಳಕೆ ಯಾಗುವ ಕರಣ, ದ್ರವ್ಯ, ಕಾಲ ಮೊದಲಾದ ಬೇರೆ ಕೆಲವು ಸಂಬಂಧಗಳನ್ನು ಸೂಚಿಸುವುದಕ್ಕಾಗಿಯೂ ಅದರಲ್ಲಿ ಸಪ್ತಮಿಯನ್ನು ಬಳಸಲು ಸಾಧ್ಯವಿದೆ.
(37) ರಾಜು ಚಮಚದಲ್ಲಿ ಊಟ ಮಾಡಿದ (38) ಜಾನಕಿ ಒಂದು ಮೂತ್ರಿಯನ್ನು ಮಣ್ಣಿನಲ್ಲಿ ಮಾಡಿದಳು (38) ಆಕೆ ಐದೇ ಮಿನಿಟಿನಲ್ಲಿ ಊಟ ಮುಗಿಸಿದಳು
(4) ಸಂಸ್ಕೃತದಲ್ಲಿ ಸಪ್ತಮೀ ವಿಭಕ್ತಿಯನ್ನು ಎಲ್ಲಾ ರೀತಿಯ ನಾಮಪದ ಗಳೊಂದಿಗೂ ‘ಜಾಗ’ ಎಂಬ ಅರ್ಥದಲ್ಲಿ ಬಳಸಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಅದನ್ನು ಈ ಅರ್ಥದಲ್ಲಿ ಬಳಸಲು ಸಾಧ್ಯವಿಲ್ಲ.
(39) ಪೌರೇಷು ಪ್ರೇಷಯಾಮಾಸ ದೂತಾನ್
‘ಪೌರರಲ್ಲಿಗೆ ದೂತರನ್ನು ಕಳುಹಿಸಿದ’ ತಸ್ಮಿನ್ ಖಡ್ಗೇನ ಪ್ರಹರನ್ ಮುನೌ ‘ಅವನು ಮುನಿಗೆ ಖಡ್ಗದಲ್ಲಿ ಹೊಡೆದ’
(40)
ಸಂಸ್ಕೃತದ (39)ನೇ ವಾಕ್ಯದಲ್ಲಿ ಪೌರೇಷು ‘ಪೌರರಲ್ಲಿ’ ಎಂಬುದಾಗಿ ಮನುಷ್ಯರನ್ನು ಸೂಚಿಸುವ ಪದವೊಂದು ನೇರವಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಆದರೆ, ಕನ್ನಡದಲ್ಲಿ ಈ ರೀತಿ ಸಪ್ತಮೀ ರೂಪವನ್ನು ಮಾತ್ರವೇ ಬಳಸಲು ಸಾಧ್ಯವಾಗದು.
(39)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಪೌರರಲ್ಲಿಗೆ ಎಂಬುದು ಬಂದಿದೆ. ಇದರಲ್ಲಿ ಜಾಗವನ್ನು ಸೂಚಿಸುವುದಕ್ಕಾಗಿ ಅಲ್ಲಿಗೆ ಪದವನ್ನು ಬಳಸ ಲಾಗಿದ್ದು, ಅದರೊಂದಿಗೆ ಪೌರರು ಪದವನ್ನು ಸಂಬಂಧಿಸುವುದಕ್ಕಾಗಿ ಅದರ ವಿಶೇಷಣ ರೂಪವನ್ನು (ಪೌರರ ಎಂಬ ಅ ಪ್ರತ್ಯಯವನ್ನು ಸೇರಿಸಿರುವ ರೂಪ ವನ್ನು) ಬಳಸಲಾಗಿದೆ.
ಇದಕ್ಕೆ ಬದಲು, (40)ನೇ ವಾಕ್ಯದ ಕನ್ನಡ ಅನುವಾದದಲ್ಲಿ ಸಪ್ತಮಿಯ ಬದಲು ಚತುರ್ಥಿಯನ್ನು (ಮುನಿಗೆ ಎಂಬುದನ್ನು) ಬಳಸಲಾಗಿದೆ.
ಕನ್ನಡದಲ್ಲಿ ಮನುಷ್ಯರನ್ನು ಸೂಚಿಸುವ ಪದಗಳೊಂದಿಗೆ ಬರುವ ಸಪ್ತಮೀ ವಿಭಕ್ತಿಗೆ ನೇರವಾಗಿ ಜಾಗದ ಅರ್ಥವಿಲ್ಲ. ರಾಮನಲ್ಲಿ ಎಂದರೆ ರಾಮನ ಬಳಿಯಲ್ಲಿ ಎಂಬ ಅರ್ಥ ಮಾತ್ರ ಬರುತ್ತದೆ.
ಕನ್ನಡದಲ್ಲಿ ಬಳಕೆಯಾಗುವ ನಾಲ್ಕು ವಿಭಕ್ತಿ ಪ್ರತ್ಯಯಗಳಿಗೆ ಎಂತಹ ಬಳಕೆಗಳೆಲ್ಲ ಇವೆ ಎಂಬುದನ್ನು ಕೂಲಂಕಶವಾಗಿ ಪರಿಶೀಲಿಸುವ ಕೆಲಸ ಇನ್ನೂ ನಡೆದಿಲ್ಲ. ಸಂಸ್ಕೃತದ ವಿಭಕ್ತಿಗಳನ್ನು ಮತ್ತು ಅವುಗಳ ಬಳಕೆಗಳನ್ನು ಕನ್ನಡ ದಲ್ಲೂ ಕಾಣುವ ಪ್ರಯತ್ನವಷ್ಟೇ ನಡೆದಿದೆ.
ಸಂಸ್ಕೃತಕ್ಕಿಂತ ಕನ್ನಡ ಈ ವಿಷಯದಲ್ಲಿ ತೀರ ಭಿನ್ನವಾಗಿರಲು ಸಾಧ್ಯ ಎಂಬುದನ್ನು ಗಮನದಲ್ಲಿರಿಸಿಕೊಂಡು ಕನ್ನಡದ ವಿಭಕ್ತಿಗಳನ್ನು ನೇರವಾಗಿ ಪರಿಶೀಲಿಸಿದಲ್ಲಿ ಮಾತ್ರ ಕನ್ನಡ ವಿಭಕ್ತಿಗಳ ನಿಜವಾದ ಸ್ವರೂಪ ಎಂತಹದು ಎಂಬ ವಿಷಯ ಸ್ಪಷ್ಟವಾದೀತು.
8.6 ತಿರುಳು
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿ ಪ್ರತ್ಯಯಗಳ ಸಂಖ್ಯೆ, ಅವುಗಳ ಅರ್ಥ ಮತ್ತು ಅವುಗಳ ಬಳಕೆ - ಇವೆಲ್ಲದರಲ್ಲೂ ಹಲವಾರು ರೀತಿಯ ವ್ಯತ್ಯಾಸಗಳಿವೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುವ ಮೂಲಕ ಕನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹದು ಎಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗದು.
ಇದಲ್ಲದೆ, ಕನ್ನಡದ ವಿಭಕ್ತಿಗಳಿಗೆ ದ್ವಿತೀಯಾ, ತೃತೀಯಾ, ಚತುರ್ಥೀ ಮತ್ತು ಸಪ್ತಮೀ ಎಂಬ ಕನ್ನಡದ ಮಟ್ಟಿಗೆ ಅರ್ಥಹೀನವಾಗಿರುವ ಹೆಸರುಗಳನ್ನು ಕೊಡುವ ಬದಲು, ಕನ್ನಡದಲ್ಲಿ ಅವುಗಳಿಗಿರುವ ಮುಖ್ಯವಾದ ಬಳಕೆಯೆಂತಹದು ಎಂಬುದನ್ನು ಸೂಚಿಸುವ ಆಗುಗ, ಸುರು, ಕೊನೆ ಮತ್ತು ಜಾಗ ಎಂಬ (ಇಲ್ಲವೇ ಅಂತಹವೇ ಬೇರೆ) ಹೆಸರುಗಳನ್ನು ಕೊಟ್ಟಲ್ಲಿ ಆ ಹೆಸರುಗಳನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಲಭವಾಗಬಲ್ಲುದು.
ಕನ್ನಡದಲ್ಲಿ ಪ್ರಥಮಾ ವಿಭಕ್ತಿಯೆಂಬುದಿಲ್ಲ. ದ್ವಿತೀಯೆಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವ ಅನುಕೂಲತೆ ಕನ್ನಡದಲ್ಲಿದೆ. ತೃತೀಯಾ, ಚತುರ್ಥೀ ಮತ್ತು ಸಪ್ತಮಿಗಳು ಕನ್ನಡದಲ್ಲಿ ಮುಖ್ಯವಾಗಿ ಜಾಗವನ್ನು ಸೂಚಿಸುತ್ತಿದ್ದು, ಅವುಗಳಲ್ಲಿ ಮೊದಲನೆಯ ಎರಡು ವಿಭಕ್ತಿಗಳು ಚಲನೆಗೆ ಸಂಬಂಧಿಸಿದ ಜಾಗವನ್ನು ಸೂಚಿಸು ತ್ತವೆ ಮತ್ತು ಮೂರನೆಯದು ಬರಿಯ ಜಾಗವನ್ನು ಸೂಚಿಸುತ್ತದೆ.
ತೃತೀಯೆಗಿಂತ ಭಿನ್ನವಾದ ಪಂಚಮಿಯೆಂಬ ವಿಭಕ್ತಿ ಕನ್ನಡದಲ್ಲಿಲ್ಲ. ಸಂಸ್ಕೃತ ವಿಭಕ್ತಿಗಳ ಅರ್ಥಕ್ಕೆ ಹೋಲಿಸಿದೆವಾದರೆ ಕನ್ನಡದ ತೃತೀಯೆಯನ್ನು ಪಂಚಮಿಯೆಂದು ಕರೆಯುವುದೇ ಒಳ್ಳೆಯದು.
ಕನ್ನಡದಲ್ಲಿ ಬಳಕೆಯಾಗುವ ಷಷ್ಠೀ ಪ್ರತ್ಯಯಕ್ಕೆ ವಿಭಕ್ತಿಯಾಗಿ ಬಳಕೆಯಿಲ್ಲ. ಯಾಕೆಂದರೆ, ಅದು ಎರಡು ನಾಮಪದಗಳ ನಡುವಿನ ಸಂಬಂಧವನ್ನು ಸೂಚಿಸು ತ್ತದೆಯಲ್ಲದೆ ನಾಮಪದ ಮತ್ತು ಕ್ರಿಯಾಪದ ನಡುವಿರುವ ಸಂಬಂಧವನ್ನು ಸೂಚಿಸುವುದಿಲ್ಲ.