← Ch 4  ·  Contents  ·  Ch 6 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

5. ಸಮಾಸಗಳು

Eke →

5.1 ಮುನ್ನೋಟ

ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಕನ್ನಡ ಸಮಾಸಗಳನ್ನು ವರ್ಣಿಸುವ ಸಂದಭ್ರದಲ್ಲಿ ಮೊದಲಿಗೆ ಸಂಸ್ಕೃತ ಸಮಾಸಗಳು ಯಾವುವು ಎಂಬುದನ್ನು ವರ್ಣಿಸುತ್ತಾರೆ. ಅನಂತರ ಅವಕ್ಕಿಂತ ಭಿನ್ನವಾಗಿರುವಂತಹ ಯಾವ ಸಮಾಸಗಳು ಕನ್ನಡದಲ್ಲಿವೆ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಾರೆ. ಸಂಸ್ಕೃತದ ಸಮಾಸಗ ಳೆಲ್ಲವೂ ಕನ್ನಡದಲ್ಲಿ ಹೇಗಿದ್ದರೂ ಇದ್ದೇ ಇರುತ್ತವೆ ಅಥವಾ ಇದ್ದೇ ಇರಬೇಕು ಎಂಬ ಭಾವನೆ ಅವರಲ್ಲಿರುವ ಹಾಗೆ ತೋರುತ್ತದೆ.
ಆದರೆ ಈ ಅಭಿಪ್ರಾಯಕ್ಕೆ ಯಾವ ಆಧಾರವೂ ಇಲ್ಲ. ಕನ್ನಡ ಭಾಷೆ ಸಂಸ್ಕೃತಕ್ಕಿಂತ ತೀರ ಭಿನ್ನವಾಗಿದ್ದು, ಅದರಲ್ಲಿ ಬಳಕೆಯಾಗುವ ಸಮಾಸಗಳ ರಚನೆ ಸಂಸ್ಕೃತ ಸಮಾಸಗಳ ರಚನೆಗಿಂತ ಬಹಳ ಭಿನ್ನವಾದುದು. ಕನ್ನಡದವೇ ಆದ ಪದಗಳಿಗೆ ಮಾತ್ರವಲ್ಲ, ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೂ ಕನ್ನಡದಲ್ಲಿ ಕನ್ನಡದ್ದೇ ಆದ ಒಳರಚನೆಯಿರುತ್ತದೆ. ಹಾಗಾಗಿ, ಅಂತಹ ಪದ ಗಳಿಗೂ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳರಚನೆಯನ್ನು ಕನ್ನಡದಲ್ಲಿ ಕೊಡಲು ಸಾಧ್ಯವಾಗದು. ಸಂಸ್ಕೃತ ಸಮಾಸಗಳನ್ನು ಹಾಗೆಯೇ ಕನ್ನಡ ವ್ಯಾಕರಣದೊಳಕ್ಕೆ ತಂದು ತುರುಕಿಸಿರುವುದು ಕನ್ನಡ ವೈಯಾಕರಣಿಗಳು ಮಾಡಿರುವ ಒಂದು ತಪ್ಪಾದರೆ, ಕನ್ನಡದಲ್ಲಿ ಸಮಾಸ ಮತ್ತು ಪದಕಂತೆಗಳ ನಡುವೆ ವ್ಯತ್ಯಾಸವಿದೆಯುಂಬುದನ್ನು ಗಮನಿಸದಿರುವುದು ಇನ್ನೊಂದು ತಪ್ಪು. ಇದಕ್ಕೂ ಈ ವೈಯಾಕರಣಿಗಳು ಬಹಳ ಮಟ್ಟಿಗೆ ಸಂಸ್ಕೃತ ವ್ಯಾಕರಣಗಳನ್ನು ಅವಲಂಬಿಸಿರುವುದೇ ಮುಖ್ಯ ಕಾರಣ.
ಸಮಾಸ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಕನ್ನಡದಲ್ಲಿರುವ ಹಾಗೆ ಸಂಸ್ಕೃತದಲ್ಲಿಲ್ಲ. ಈ ವಿಷಯವನ್ನು ಗಮನಿಸದೆ, ಸಂಸ್ಕೃತದ ಪದ ರಚನೆಯ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವುದರ ಮೂಲಕ ಈ ವೈಯಾಕರಣಿಗಳು ಆ ಹುಡುಗ, ಸತ್ತ ಹಾವು, ಕನಸು ಕಾಣು ಮೊದಲಾದ ಪದಕಂತೆಗಳನ್ನು ಸಮಾಸಗಳೆಂದು ಭ್ರಮಿಸಿ ವರ್ಣಿಸುತ್ತಾರೆ ಮತ್ತು ಕನ್ನಡದಲ್ಲಿ ಇಲ್ಲದ ಗಮಕಸಮಾಸ, ಕ್ರಿಯಾಸಮಾಸ ಮೊದಲಾದವುಗಳನ್ನು ಈ ಉದಾಹರಣೆ ಗಳಲ್ಲಿ ಕಾಣುತ್ತಾರೆ.

ಸಮಾಸಗಳ  ಮಟ್ಟಿಗೆ  ಕನ್ನಡ  ಸಂಸ್ಕೃತಕ್ಕಿಂತ  ಹೇಗೆ  ಭಿನ್ನವಾಗಿದೆ,  ಮತ್ತು  ಹಾಗೆ ಅದು ಭಿನ್ನವಾಗಿರಲು ಕಾರಣವೇನು ಎಂಬುದನ್ನು ಕೆಳಗಿನ  ವಿಭಾಗಗಳಲ್ಲಿ  ಸ್ವಲ್ಪ  ವಿವರವಾಗಿ  ಪರಿಶೀಲಿಸಲಾಗುವುದು.  ಆದರೆ  ಅದಕ್ಕೆ  ಮೊದಲು  ಸಮಾಸ  ವೆಂದರೇನು, ಅದಕ್ಕೂ ಪದಕಂತೆಗೂ ನಡುವಿರುವ ವ್ಯತ್ಯಾಸಗಳೆಂತಹವು ಎಂಬು  ದನ್ನು ತಿಳಿದುಕೊಳ್ಳುವುದು ಅವಶ್ಯ. 

Eke →

5.2 ಜೋಡುಪದಗಳು ಮತ್ತು ಪದಕಂತೆಗಳು

‘ಸಮಾಸ’ ಎಂಬ ಪದವನ್ನು ಎರಡು ಅರ್ಥಗಳಲ್ಲಿ ಬಳಸುವ ಕ್ರಮ ವ್ಯಾಕರಣ ಗಳಲ್ಲಿದೆ. ವೂದಲನೆಯದಾಗಿ, ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಲು ಬಳಸುವ ವ್ಯಾಕರಣ ವಿಧಾನವನ್ನು (ಇಲ್ಲವೇ ವ್ಯಾಕರಣ ಕ್ರಿಯೆಯನ್ನು) ಸಮಾಸವೆಂದು ಕರೆಯಲಾಗುತ್ತದೆ.
ತತ್ಪುರುಷ, ಕರ್ಮಧಾರಯ, ಬಹುವ್ರೀಹಿ ಮೊದಲಾದವುಗಳು ಇಂತಹ ವ್ಯಾಕರಣಕ್ರಿಯೆಗಳನ್ನು ಸೂಚಿಸುವುವಾದ ಕಾರಣ, ಅವು ಸಮಾಸಗಳು. ಸಂಸ್ಕೃತ ದಲ್ಲಿ ನಾಲ್ಕು ಇಲ್ಲವೇ ಆರು ಸಮಾಸಗಳಿವೆ ಎಂಬ ಮಾತಿನಲ್ಲಿ ಸಮಾಸ ಪದ ಈ ಅರ್ಥದಲ್ಲಿ ಬಳಕೆಯಾಗಿದೆ.
ಎರಡನೆಯದಾಗಿ, ಇಂತಹ ವ್ಯಾಕರಣ ಕ್ರಿಯೆಯ ಮೂಲಕ ತಯಾರಾಗಿರುವ ಪದಗಳನ್ನೂ ಸಮಾಸವೆಂಬ ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗಾಗಿ, ಸಂಸ್ಕೃತದ ಕೃಷ್ಣಸಪ್ರಃ ಪದವನ್ನು ಕರ್ಮಧಾರಯವೆಂಬ ಒಂದು ಸಮಾಸ ಕ್ರಿಯೆಯ ಮೂಲಕ ತಯಾರಿಸಲಾಗಿದೆಯಾದ ಕಾರಣ, ಅದನ್ನೂ ಸಮಾಸವೆಂದು ಕರೆಯುವ ಪದ್ಧತಿಯಿದೆ.
ಆದರೆ ಈ ರೀತಿ ಒಂದೇ ಪಾರಿಭಾಷಿಕ ಪದವನ್ನು ಎರಡು ಅರ್ಥಗಳಲ್ಲಿ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಗೊಂದಲವುಂಟಾಗಲು ಸಾಧ್ಯವಿದೆ. ಹಾಗಾಗಿ, ಈ ಪುಸ್ತಕದಲ್ಲಿ ‘ಸಮಾಸ’ ಎಂಬ ಪದವನ್ನು ಮೇಲೆ ವಿವರಿಸಿರುವ ವ್ಯಾಕರಣ ಕ್ರಿಯೆಯನ್ನು ಹೆಸರಿಸಲು ಮಾತ್ರವೇ ಬಳಸಲಾಗಿದೆ.
ಅಂತಹ ಕ್ರಿಯೆಯಿಂದ ತಯಾರಾಗಿರುವ ಪದಗಳನ್ನು ಹೆಸರಿಸಲು ‘ಜೋಡು ಪದ’ ಎಂಬ ಬೇರೆಯೇ ಒಂದು ಪದವನ್ನು ಬಳಸಲಾಗಿದೆ. ಸಂಸ್ಕೃತದಲ್ಲಿ ಇದಕ್ಕೆ ‘ಸಮಸ್ತಪದ’ ಎಂಬ ಹೆಸರೂ ಇದೆ. ಎರಡು ಪದಗಳನ್ನು ಒಟ್ಟು ಸೇರಿಸಿ ಒಂದೇ ಪದವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಜೋಡುಪದವೆಂದೂ, ಎರಡು ಪದಗಳನ್ನು ಬೇರೆ ಬೇರಾಗಿ, ಆದರೂ ಒಂದು ಘಟಕವನ್ನಾಗಿ ಮಾಡಿ ಬಳಸಿದರೆ ಅದನ್ನು ಒಂದು ಪದಕಂತೆಯೆಂದೂ ಹೇಳಬಹುದು.

ಉದಾಹರಣೆಗಾಗಿ,  ಕಗ್ಗಲ್ಲು  ಎಂಬುದು  ಒಂದು  ಜೋಡುಪದ,  ಆದರೆ  ಕಪ್ಪುಕಲ್ಲು  ಎಂಬುದು  ಒಂದು  ಪದಕಂತೆ.  ಮೊದಲನೆಯದರಲ್ಲಿ  ಕಪ್ಪು  ಪದವನ್ನು (ಅದರ ಕಗ್ ರೂಪವನ್ನು) ಕಲ್ಲು ಎಂಬ ಇನ್ನೊಂದು ಪದದೊಂದಿಗೆ  ಸೇರಿಸಿ  ಒಂದೇ  ಪದವನ್ನಾಗಿ  ಮಾಡಲಾಗಿದೆ.  ಆದರೆ  ಎರಡನೆಯದರಲ್ಲಿ  (ಕಪ್ಪುಕಲ್ಲು  ಎಂಬುದರಲ್ಲಿ)  ಅವನ್ನು  ಆ  ರೀತಿ  ಒಟ್ಟು  ಸೇರಿಸದೆ  ಬೇರೆ  ಬೇರೆ  ಪದಗಳಾಗಿಯೇ ಉಳಿಸಲಾಗಿದೆ.  
ಕಪ್ಪುಕಲ್ಲು  ಎಂಬುದರಲ್ಲಿ  ಈ  ರೀತಿ  ಕಪ್ಪು  ಮತ್ತು  ಕಲ್ಲು  ಪದಗಳು  ಎರಡು  ಬೇರೆ  ಬೇರೆ  ಪದಗಳಾಗಿ  ಉಳಿದಿವೆಯಾದರೂ  ಅವು  ಒಟ್ಟಿಗೆ  ವಾಕ್ಯದ  ಒಂದು  ‘ಘಟಕ’ವಾಗಿ  ಬಳಕೆಯಾಗಿರುತ್ತವೆ.  ಈ  ಕಾರಣಕ್ಕಾಗಿ  ಕಪ್ಪುಕಲ್ಲು  ಎಂಬುದನ್ನು ಒಂದು ಪದಕಂತೆಯುಂದು ಕರೆಯಲಾಗುತ್ತದೆ.  
ಕಗ್ಗಲ್ಲು  ಎಂಬುದರಲ್ಲಿ  ಕಪ್ಪು  ಪದ  ಕಗ್  ಎಂಬ  ರೂಪಕ್ಕೆ  ಬದಲಾಗಿದೆ.  ಆದರೆ  ಈ  ರೀತಿ  ಬದಲಾಗುವುದು  ಜೋಡುಪದದ  ರಚನೆಗೆ  ಅವಶ್ಯವೇನೂ  ಅಲ್ಲ. ಉದಾಹರಣೆಗಾಗಿ, ಅಡ್ಡದಾರಿ ಪದದಲ್ಲಿ ಅಂಗವಾಗಿ ಬಂದಿರುವ ಎರಡು  ಪದಗಳೂ  ಬದಲಾಗದೆ  ಹಾಗೆಯೇ  ಉಳಿದಿವೆ.  ಹೀಗಿದ್ದರೂ  ಕನ್ನಡದಲ್ಲಿ  ಅದು  ಒಂದು ಜೋಡುಪದವಲ್ಲದೆ ಪದಕಂತೆಯಲ್ಲ. 
ಒಂದು ಪದಕಂತೆಯ ಅರ್ಥವನ್ನು ಅದರ ಅಂಗಗಳಾಗಿ ಬಂದಿರುವ ಪದಗಳ  ಅರ್ಥದ  ಸಹಾಯದಿಂದ  ಸಂಪೂರ್ಣವಾಗಿ  ನಿರ್ಧರಿಸಲು  ಸಾಧ್ಯವಿದೆ.  ಆದರೆ  ಒಂದು  ಜೋಡುಪದದ  ಅರ್ಥವನ್ನು  ಆ  ರೀತಿ  ಅದರ  ಅಂಗಗಳಾಗಿ  ಬಂದಿರುವ  ಪದಗಳ ಅರ್ಥದ ಸಹಾಯದಿಂದ ಸಂಪೂರ್ಣವಾಗಿ ನಿರ್ಧರಿಸಲು ಸಾಧ್ಯವಾಗದು.  ಇದು ಈ ಎರಡು ರೀತಿಯ ಘಟಕಗಳ ನಡುವಿರುವ ಎರಡನೆಯ ವ್ಯತ್ಯಾಸ.  
ಉದಾಹರಣೆಗಾಗಿ, ಕಗ್ಗಲ್ಲು ಎಂಬುದು ಕಪ್ಪು(ಕಗ್) ಮತ್ತು ಕಲ್ಲು ಎಂಬ  ಎರಡು ಪದಗಳ ಜೋಡಣೆಯಿಂದ ಸಿದ್ಧವಾಗಿದೆ. ಆದರೆ ಅದು ಎಲ್ಲಾ ರೀತಿಯ  ಕಪ್ಪು  ಬಣ್ಣದ  ಕಲ್ಲುಗಳನ್ನೂ  ಗುರುತಿಸುವುದಿಲ್ಲ,  ಒಂದು  ವಿಶಿಷ್ಟವಾದ  ಜಾತಿಗೆ  ಸೇರಿದ  ಕಲ್ಲುಗಳನ್ನು  ಮಾತ್ರ  ಗುರುತಿಸುತ್ತದೆ.  ಇದಕ್ಕೆ  ಬದಲು,  ಕಪ್ಪುಕಲ್ಲು  ಪದಕಂತೆ ಎಲ್ಲಾ ರೀತಿಯ ಕಪ್ಪುಬಣ್ಣದ ಕಲ್ಲುಗಳನ್ನೂ ಗುರುತಿಸಬಲ್ಲುದು. 
ಜೋಡುಪದದ  ಅರ್ಥವನ್ನು  ತಿಳಿಯಲು  ರೂಢಿಯಲ್ಲಿ  ಅದು  ಯಾವ  ಅರ್ಥದಲ್ಲಿ  ಬಳಕೆಯಾಗುತ್ತದೆ  ಇಲ್ಲವೇ  ರೂಢಿಯಲ್ಲಿ  ಎಂತಹ  ವ್ಯಕ್ತಿ  ಅಥವಾ  ವಸ್ತುವನ್ನು  ಅದು  ಗುರುತಿಸುತ್ತದೆ  ಎಂಬುದನ್ನು  ತಿಳಿದುಕೊಳ್ಳಬೇಕಾಗುತ್ತದೆ.  ಉದಾಹರಣೆಗಾಗಿ ಕಗ್ಗಲ್ಲು ಪದ ಯಾವ ರೀತಿಯ ಕಲ್ಲುಗಳನ್ನು ಗುರುತಿಸುತ್ತದೆ  ಎಂಬುದನ್ನು ರೂಢಿಯ ಬಳಕೆಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯ.  
ಜೋಡುಪದ  ಮತ್ತು  ಪದಕಂತೆಗಳ  ನಡುವಿರುವ  ಈ  ಎರಡು  ವ್ಯತ್ಯಾಸ  ಗಳನ್ನು ಎಲ್ಲಾ ರೀತಿಯ ಜೋಡುಪದ ಮತ್ತು ಪದಕಂತೆಗಳ ನಡುವೆಯೂ ಸ್ಪಷ್ಟ 

ವಾಗಿ ಕಾಣಲು ಸಾಧ್ಯವಾಗದಿರಬಹುದು. ಆದರೆ ಹೆಚ್ಚಿನೆಡೆಗಳಲ್ಲೂ ಅವೆರಡನ್ನು ಈ ವ್ಯತ್ಯಾಸಗಳ ಸಹಾಯದಿಂದ ಪ್ರತ್ಯೇಕಿಸಲು ಸಾಧ್ಯವಿದೆ.
ಇದಲ್ಲದೆ, ಜೋಡುಪದ ಮತ್ತು ಪದಕಂತೆಗಳ ನಡುವೆ ವಾಕ್ಯದಲ್ಲಿ ಅವು ಯಾವ ರೀತಿಯಲ್ಲಿ ಬಳಕೆಯಾಗುತ್ತವೆ ಎಂಬ ವಿಷಯದಲ್ಲಿಯೂ ವ್ಯತ್ಯಾಸವಿದೆ. ಹಿಂದಿನ ಅಧ್ಯಾಯದಲ್ಲಿ ವಿವರಿಸಿದ ಹಾಗೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಕೆಲಸವನ್ನು ಈ ಎರಡು ರೀತಿಯ ಘಟಕಗಳೂ ನಡೆಸಬಲ್ಲು ವಾದರೂ, ಇದಕ್ಕಾಗಿ ಜೋಡುಪದಗಳು ‘ಹೆಸರಿಸುವ’ ವಿಧಾನವನ್ನು ಬಳಸುತ್ತವೆ ಮತ್ತು ಪದಕಂತೆಗಳು ‘ವರ್ಣಿಸುವ’ ವಿಧಾನವನ್ನು ಬಳಸುತ್ತವೆ.
ಈ ವ್ಯತ್ಯಾಸಕ್ಕೆ ಜೋಡುಪದ ಮತ್ತು ಪದಕಂತೆಗಳ ನಡುವಿರುವ ಎರಡನೆಯ (ಅರ್ಥಕ್ಕೆ ಸಂಬಂಧಿಸಿದ) ವ್ಯತ್ಯಾಸವೇ ಮುಖ್ಯ ಕಾರಣ. ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಿದ್ದಲ್ಲಿ ವರ್ಣಿಸಲು ಬಳಸುವ ಘಟಕದ ಅರ್ಥವನ್ನು ಸಂಪೂರ್ಣವಾಗಿ ಅದರ ಒಳ ರಚನೆಯ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಿರಬೇಕು. ಜೋಡುಪದಗಳ ಅರ್ಥವನ್ನು ಈ ರೀತಿ ಪಡೆಯಲು ಸಾಧ್ಯವಿಲ್ಲವಾದ ಕಾರಣ ಅವು ವರ್ಣಿಸುವ ವಿಧಾನದಲ್ಲಿ ಬಳಕೆಯಾಗಲಾರವು.
ಜೋಡುಪದವನ್ನು ಒಂದು ಚಾರಿತ್ರಿಕ ಸೃಷ್ಟಿ ಎಂದು ಕರೆಯಬಹುದು. ಯಾವುದಾದರೂ ಒಂದು ವಸ್ತುವನ್ನು ಗುರುತಿಸಲು (ಹೆಸರಿಸಲು) ಭಾಷೆಯಲ್ಲಿ ಪದವಿಲ್ಲದಿರುವಾಗ, ಇಲ್ಲವೇ ಇರುವ ಪದ ನೆನಪಿಗೆ ಬಾರದಿರುವಾಗ, ಹೊಸ ಪದವೊಂದನ್ನು ತಯಾರಿಸಲು ಜನರು ಸಮಾಸವೆಂಬ ಈ ವ್ಯಾಕರಣ ಕ್ರಿಯೆಯನ್ನು ಬಳಸುತ್ತಾರೆ. ಈ ಕ್ರಿಯೆಯ ಮೂಲಕ ತಯಾರಾಗಿರುವ ಪದ ಅನಂತರ ಇತರರ ಮಾತಿನಲ್ಲೂ ಸೇರಿಕೊಂಡು ರೂಢಿಗೆ ಬಂದಾಗ ಮಾತ್ರ ಅದು ಭಾಷೆಯ ಪದ ವೆನಿಸಬಲ್ಲುದು.
ಆದರೆ ಪದಕಂತೆಗಳು ಆ ರೀತಿಯವಲ್ಲ. ಭಾಷೆಯನ್ನು ಬಳಸುವಾಗ ಅವನ್ನು ಬೇಕಾದ ಹಾಗೆ ಹೊಸದಾಗಿ ತಯಾರಿಸಿಕೊಂಡು ಬಳಸಲಾಗುತ್ತದೆ.
ಈ ಕಾರಣಕ್ಕಾಗಿ, ಒಂದು ಭಾಷೆಯ ಅರ್ಥಕೋಶವನ್ನು ತಯಾರಿಸುವಾಗ ಅದರಲ್ಲಿ ಆ ಭಾಷೆಯ ಎಲ್ಲಾ ಜೋಡುಪದಗಳನ್ನೂ ಕೊಡುವ ಅವಶ್ಯಕತೆಯಿದೆ; ಆದರೆ ಎಲ್ಲಾ ಪದಕಂತೆಗಳನ್ನೂ ಕೊಡುವ ಅವಶ್ಯಕತೆಯಿಲ್ಲ; ಹಾಗೆ ಕೊಡಲು ಸಾಧ್ಯವೂ ಆಗದು. ಯಾಕೆಂದರೆ, ಒಂದು ಭಾಷೆಯಲ್ಲಿರುವ ಜೋಡುಪದಗಳ ಸಂಖ್ಯೆ ಚಿಕ್ಕದು. ಆದರೆ ಪದಕಂತೆಗಳ ಸಂಖ್ಯೆ ಬಹಳ ದೊಡ್ಡದು. ಅದು ಅನಂತ ಎಂದೇ ಹೇಳಲೂ ಸಾಧ್ಯವಿದೆ.

Eke →

5.3 ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿನ ವ್ಯತ್ಯಾಸ

ಜೋಡುಪದಗಳ ವಿಷಯದಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವೆ ಹಲವು ವ್ಯತ್ಯಾಸಗಳಿವೆ. ಇವನ್ನು ಸರಿಯಾಗಿ ತಿಳಿದುಕೊಳ್ಳದೆ ಸಂಸ್ಕೃತದ ಎಲ್ಲಾ ಸಮಾಸಗಳನ್ನೂ ಕನ್ನಡದಲ್ಲಿ ಕಾಣಲು ನಡೆಸಿದ ಕನ್ನಡ ವೈಯಾಕರಣಿಗಳ ಪ್ರಯತ್ನ ಹಲವು ರೀತಿಯ ಗೊಂದಲಗಳಿಗೆ ಎಡೆಮಾಡಿದೆ.
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ವ್ಯತ್ಯಾಸಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ.

Eke →

5.3.1 ಸಂಸ್ಕೃತದ ಜೋಡುಪದಗಳು

ಸಂಸ್ಕೃತದಲ್ಲಿ ಮೇಲೆ (5.2)ರಲ್ಲಿ ತಿಳಿಸಿರುವಂತಹ ಜೋಡುಪದ ಮತ್ತು ಪದಕಂತೆಗಳ ನಡುವೆ ಕಾಣಿಸಬೇಕಾದ ವ್ಯತ್ಯಾಸಗಳು ಬಹಳ ಮಟ್ಟಿಗೆ ಅಳಿದು ಹೋಗಿವೆ. ಆ ಭಾಷೆ ದಿನನಿತ್ಯದ ವ್ಯಾವಹಾರಿಕ ಭಾಷೆಯಾಗಿ ಉಳಿಯದೆ ಸುಮಾರು ಎರಡು ಸಾವಿರ ವಷ್ರಗಳಿಂದಲೂ ಬರಿಯ ಕಾವ್ಯಗಳ ಮತ್ತು ಶಾಸ್ತ್ರಗಳ ಭಾಷೆಯಾಗಿ ಮಾತ್ರವೇ ಉಳಿದುಕೊಂಡಿರುವುದೇ ಇದಕ್ಕೆ ಕಾರಣವಿರ ಬೇಕು.
ಎರಡು ಪದಗಳನ್ನು ಒಟ್ಟು ಸೇರಿಸಿದೊಡನೆ ಸಂಸ್ಕೃತದಲ್ಲಿ ಒಂದು ಜೋಡುಪದ (ಸಮಸ್ತಪದ) ಸಿದ್ಧವಾಗಿಬಿಡುತ್ತದೆ. ಅನಂತರ ಅವೆರಡು ಒಂದೇ ಪದವಾಗಿ ಆ ಭಾಷೆಯಲ್ಲಿ ರೂಢಿಗೆ ಬರಬೇಕಾದ ಅವಶ್ಯಕತೆಯೇ ಇಲ್ಲ.
ಹಾಗಾಗಿ, ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಸಂಸ್ಕೃತ ದಲ್ಲಿ ಮುಖ್ಯವಾಗಿ ವಿಭಕ್ತಿ ಪ್ರತ್ಯಯಗಳು ಯಾವ ಜಾಗಗಳಲ್ಲೆಲ್ಲ ಬರಬಲ್ಲುವು ಎಂಬುದರ ಮೇಲೆ ಅವಲಂಬಿಸಿದೆ. ಒಂದು ಘಟಕದ ಅಂಗಗಳಾಗಿ ಬರುವ ಪದಗಳೆಲ್ಲವೂ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತವೆಯಾದರೆ ಅದೊಂದು ಪದಕಂತೆ ಮತ್ತು ಕೊನೆಯ ಅಂಗ ಮಾತ್ರ ವಿಭಕ್ತಿಪ್ರತ್ಯಯದೊಂದಿಗೆ ಬರುತ್ತದೆ ಯಾದರೆ ಅದೊಂದು ಜೋಡುಪದ ಎಂಬುದಾಗಿ ಸಂಸ್ಕೃತದಲ್ಲಿ ಒಂದು ನಿಯಮವನ್ನು ಮಾಡಲು ಸಾಧ್ಯವಿದೆ.
ಈ ನಿಯಮಕ್ಕೆ ಕೆಲವು ಅಪವಾದಗಳಿವೆಯಾದರೂ ಸಾಧಾರಣವಾಗಿ ಸಂಸ್ಕೃತದಲ್ಲಿ ವಿಭಕ್ತಿಪ್ರತ್ಯಯ ಲೋಪವಾದಾಗಲೆಲ್ಲ ಜೋಡುಪದ ಸಿದ್ಧಿಸುತ್ತದೆ ಯುಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತದ ಪದಕಂತೆಗಳನ್ನು ಮತ್ತು ಜೋಡುಪದಗಳನ್ನು ಹೋಲಿಸಿ ನೋಡ ಬಹುದು.

ಪದಕಂತೆ
ಮಾತ್ರಾ ಸದೃಶಃ ಸ್ವಗ್ರಾತ್ ಪತಿತಃ ಸ್ವಗ್ರಪತಿತಃ ಕರ್ಮಕುಶಲಃ ಕರ್ಮಣಿ ಕುಶಲಃ

ಜೋಡುಪದ ಮಾತೃಸದೃಶಃ

‘ತಾಯಿಯ ಹಾಗಿರುವವನು’ ‘ಸ್ವಗ್ರದಿಂದ ಬಿದ್ದವನು’ ‘ಕೆಲಸದಲ್ಲಿ ಕುಶಲನಾದವನು’

ಗ್ರಾಮಂ ಗತಃ ರಾಜ್ಞಃ ಪುರುಷಃ

ಗ್ರಾಮಗತಃ ರಾಜಪುರುಷಃ

‘ಹಳ್ಳಿಗೆ ಹೋದವನು’ ‘ರಾಜನ ಜನ’

ಮೊದಲನೇ  ಕಾಲಂನಲ್ಲಿ  ಕೊಟ್ಟಿರುವ  ಪದಕಂತೆಗಳಲ್ಲಿ  ಎರಡು  ಪದಗಳೂ  ವಿಭಕ್ತಿ  ಪ್ರತ್ಯಯದೊಂದಿಗೆ  ಬಂದಿವೆ,  ಆದರೆ  ಅವುಗಳ  ಎದುರು  ಎರಡನೇ  ಕಾಲಂನಲ್ಲಿ  ಕೊಟ್ಟಿರುವ  ಜೋಡುಪದಗಳಲ್ಲಿ  ಎರಡನೆಯ  ಪದ  ಮಾತ್ರ  ವಿಭಕ್ತಿ  ಪ್ರತ್ಯಯದೊಂದಿಗೆ  ಬಂದಿದೆ,  ಮೊದಲನೆಯ  ಪದ  ವಿಭಕ್ತಿ  ಪ್ರತ್ಯಯವಿಲ್ಲದೆ 
ಮೆಲೆ  ಸೂಚಿಸಿದ  ಹಾಗೆ,  ಪದಕಂತೆ  ಮತ್ತು  ಜೋಡುಪದಗಳ  ನಡುವೆ  ಸಂಸ್ಕೃತದಲ್ಲಿ  ಕಾಣಿಸುವ  ಈ  ವ್ಯತ್ಯಾಸವೇ  ಕನ್ನಡದಲ್ಲೂ  ಇರಬಹುದೆಂದು  ಭಾವಿಸಿ,  ಸಂಸ್ಕೃತದ  ಈ  ಪದರಚನೆಯ  ನಿಯಮವನ್ನು  ಹಾಗೆಯೇ  ಕನ್ನಡಕ್ಕೆ  ಅಳವಡಿಸಲು ಕನ್ನಡದ ವೈಯಾಕರಣಿಗಳು ಪ್ರಯತ್ನಿಸಿದ್ದಾರೆ.  
ಪದಕಂತೆಯೊಂದರಲ್ಲಿ  ಎರಡು  ಅಥವಾ  ಜಾಸ್ತಿ  ಪದಗಳು  ಬಳಕೆಯಾಗಿವೆ  ಯಾದರೆ,  ಅವುಗಳಲ್ಲಿ  ಪ್ರತಿಯೊಂದನ್ನೂ  ವಿಭಕ್ತಿ  ಪ್ರತ್ಯಯದೊಂದಿಗೆ  ಬಳಸ  ಬೇಕೆಂಬ ನಿಯಮ ಸಂಸ್ಕೃತದಲ್ಲಿದೆ. ಹಾಗಾಗಿ, ಆ ಪದಗಳಲ್ಲಿ ಯಾವುದಾದರೂ  ಒಂದು ಪದದೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲವಾದರೆ, ಅದು ತನ್ನ ಅನಂತರ  ಬಂದಿರುವ ಪದದೊಂದಿಗೆ ಸೇರಿ ಸಮಸ್ತಪದವಾಗಿದೆಯುಂದೇ ಅರ್ಥ. 
ಆದರೆ  ಕನ್ನಡದಲ್ಲಿ  ಇಂತಹ  ನಿಯಮವಿಲ್ಲ.  ಕನ್ನಡದ  ಪದಕಂತೆಗಳಲ್ಲಿ  ಬರುವ  ಪದಗಳಲ್ಲಿ  ಕೊನೆಯದಕ್ಕೆ  ಮಾತ್ರ  ವಿಭಕ್ತಿ  ಪ್ರತ್ಯಯವನ್ನು  ಸೇರಿಸಲು  ಸಾಧ್ಯ.  ಉಳಿದ  ಪದಗಳು  ನಾಮಪದಗಳಾಗಿವೆಯಾದರೆ  ಷಷ್ಠಿಯಲ್ಲಿ  ಬರುತ್ತವೆ,  ಮತ್ತು ಗುಣಪದ, ಎಣಿಕೆಯ ಪದ ಇಲ್ಲವೇ ಕೃದಂತಗಳಾಗಿವೆಯಾದರೆ ಯಾವ  ಪ್ರತ್ಯಯವೂ ಸೇರದೆ ಹಾಗೆಯೇ ಬರುತ್ತವೆ.   
ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಈ ಮುಖ್ಯವಾದ ವ್ಯತ್ಯಾಸ  ವನ್ನು ಕೆಳಗೆ (5.2.2-5)ನೇ ವಿಭಾಗಗಳಲ್ಲಿ ವಿವರಿಸಲಾಗಿದೆ. 

Eke →

5.3.2 ಪದಕಂತೆಗಳಲ್ಲಿ ಗುಣಪದಗಳ ಬಳಕೆ

ಸಂಸ್ಕೃತದ ಪದಕಂತೆಗಳಲ್ಲಿ ಒಂದು ಗುಣಪದವನ್ನು ಬಳಸಬೇಕಿದ್ದಲ್ಲಿ ಅದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ ಮತ್ತು ಈ ವಿಭಕ್ತಿ ಪ್ರತ್ಯಯ ಅದರ ಅನಂತರ ಬರುವ ನಾಮಪದದ (ವಿಶೇಷ್ಯದ) ವಿಭಕ್ತಿ ಪ್ರತ್ಯಯವೇ ಆಗಿರ ಬೇಕಾಗುತ್ತದೆ (3.2.2 ನೋಡಿ). ಆದರೆ, ಕನ್ನಡದಲ್ಲಿ ಈ ರೀತಿ ಗುಣಪದಗಳಿಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿ ಹೇಳುವ ವಿಧಾನ ಬಳಕೆಯಲ್ಲಿಲ್ಲ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ

ಸಂಸ್ಕೃತ ಪದಕಂತೆಗಳನ್ನು ಅವುಗಳ ಕನ್ನಡ ರೂಪದೊಂದಿಗೆ ಹೋಲಿಸಿ ನೋಡ ಬಹುದು.

(1ಕ) ಏಕಂ ಕೃಷ್ಣಂ ಸಪ್ರಂ

‘ಒಂದು ಕಪ್ಪು ಹಾವನ್ನು’

(1ಖ) ಏಕೇನ ಕೃಷ್ಣೇನ ಸಪ್ರೇಣ

‘ಒಂದು ಕಪ್ಪು ಹಾವಿನಿಂದ’ (1ಗ) ಏಕಾಯ ಕೃಷ್ಣಾಯ ಸಪ್ರಾಯ ‘ಒಂದು ಕಪ್ಪು ಹಾವಿಗೆ’

(1ಕ-ಗ)  ಸಂಸ್ಕೃತ  ಪದಕಂತೆಗಳಲ್ಲಿ  ದ್ವಿತೀಯಾ,  ತೃತೀಯಾ  ಮತ್ತು  ಚತುರ್ಥೀ  ವಿಭಕ್ತಿ  ಪ್ರತ್ಯಯಗಳು  ಪದಕಂತೆಯ  ಮೂರು  ಪದಗಳೊಂದಿಗೂ  ಬಂದಿವೆ.  ಆದರೆ  ಅವುಗಳ  ಕನ್ನಡ  ರೂಪಗಳಲ್ಲಿ  ಪದಕಂತೆಯ  ಕೊನೆಯ  ಪದವಾಗಿರುವ  ಹಾವು  ಎಂಬುದರೊಂದಿಗೆ  ಮಾತ್ರ  ವಿಭಕ್ತಿ  ಪ್ರತ್ಯಯಗಳು  ಬಂದಿವೆ.  
ಇವುಗಳಲ್ಲಿ  ಕೃಷ್ಣ  ‘ಕಪ್ಪು’  ಪದವನ್ನು  ಸಂಸ್ಕೃತದಲ್ಲಿ  ವಿಭಕ್ತಿ  ಪ್ರತ್ಯಯ  ವಿಲ್ಲದೆಯೂ ಬಳಸಲು ಸಾಧ್ಯವಿದೆ. ಹಾಗೆ ಮಾಡಿದಲ್ಲಿ ಅದು ಅದರ ಅನಂತರ  ಬರುವ ಸಪ್ರ ‘ಹಾವು’ ಪದದೊಂದಿಗೆ ಸೇರಿ ಕೃಷ್ಣಸಪ್ರ ಎಂಬ ಜೋಡುಪದ  ವಾಗುತ್ತದೆ.  ಆದರೆ  ಕನ್ನಡದಲ್ಲಿ  ಕಪ್ಪು  ಪದ  ಹೇಗಿದ್ದರೂ  ವಿಭಕ್ತಿ  ಪ್ರತ್ಯಯ  ವಿಲ್ಲದೆಯೇ ಕಪ್ಪು ಹಾವು ಪದಕಂತೆಯಲ್ಲಿ ಬಂದಿರುವುದಾದ ಕಾರಣ ಅದನ್ನು  ಆ ರೀತಿ ಜೋಡುಪದವಾಗಿ ಬದಲಾಯಿಸಲು ಸಾಧ್ಯವಾಗದು. 

(2ಕ) ಏಕಂ ಕೃಷ್ಣಸಪ್ರಂ

‘ಒಂದು ಕಪ್ಪು ಹಾವನ್ನು’ (2ಖ) ಏಕೇನ ಕೃಷ್ಣಸಪ್ರೇಣ

‘ಒಂದು ಕಪ್ಪು ಹಾವಿನಿಂದ’ (2ಗ) ಏಕಾಯ ಕೃಷ್ಣಸಪ್ರಾಯ

‘ಒಂದು ಕಪ್ಪು ಹಾವಿಗೆ’

ಮೇಲೆ ಕೊಟ್ಟಿರುವ (2ಕ-ಗ) ಪದಕಂತೆಗಳನ್ನು ಅದಕ್ಕೆ ಹಿಂದೆ ಕೊಟ್ಟಿರುವ  (1ಕ-ಗ) ಪದಕಂತೆಗಳೊಂದಿಗೆ ಹೋಲಿಸಿ ನೋಡಿದಲ್ಲಿ ಸಂಸ್ಕೃತ ಮತ್ತು ಕನ್ನಡ  ಭಾಷೆಗಳ ನಡುವಿರುವ ವ್ಯತ್ಯಾಸ ಸ್ಪಷ್ಟವಾದೀತು.  

ಸಂಸ್ಕೃತದ  (1ಕ-ಗ)  ಪದಕಂತೆಗಳಲ್ಲಿ  ಕೃಷ್ಣ  ಪದದೊಂದಿಗೆ  ಬಂದಿದ್ದ  ವಿಭಕ್ತಿ  ಪ್ರತ್ಯಯಗಳು  (2ಕ-ಗ)  ಪದಕಂತೆಗಳಲ್ಲಿ  ಲೋಪಗೊಂಡಿವೆ;  ಆದರೆ  ಅವಕ್ಕೆ  ಸಮಾನವಾಗಿರುವ  ಕನ್ನಡದ  ಪದಕಂತೆಗಳಲ್ಲಿ  ಯಾವ  ರೀತಿಯ  ವ್ಯತ್ಯಾಸವೂ ಆಗಿಲ್ಲ. 
ಇಂತಹ  ಸಂದಭ್ರಗಳಲ್ಲಿ  ಎರಡು  ಪದಗಳು  ಒಟ್ಟು  ಸೇರಿ  ಒಂದು  ಜೋಡುಪದವಾಗಿದೆಯೆಂದು  ಹೇಳಬೇಕಿದ್ದಲ್ಲಿ  ಕನ್ನಡದಲ್ಲಿ  ಅದಕ್ಕೆ  ಒಂದು  ವಿಶಿಷ್ಟವಾದ ಅರ್ಥವೂ ಬಂದಿರುವುದು ಅವಶ್ಯ. ಈ ಅರ್ಥ ಅದರ ಅಂಗಗಳಾಗಿ  ಬಂದಿರುವ ಪದಗಳು ಕೊಡುವ ಅರ್ಥಕ್ಕಿಂತ ಭಿನ್ನವಾಗಿರಬೇಕು. 
ಉದಾಹರಣೆಗಾಗಿ,  ಚಿಕ್ಕಮ್ಮ  ಎಂಬುದು  ಒಂದು  ಜೋಡುಪದ;  ಆದರೆ,  ಚಿಕ್ಕಡಿಕೆ ಎಂಬುದು ಒಂದು ಪದಕಂತೆ. ಚಿಕ್ಕಮ್ಮ ಎಂಬುದು ಚಿಕ್ಕ ಅಮ್ಮನನ್ನು  ಸೂಚಿಸುವುದಿಲ್ಲ;  ಅಮ್ಮನ  ತಂಗಿಯನ್ನು  ಸೂಚಿಸುತ್ತದೆ;  ಆದರೆ,  ಚಿಕ್ಕಡಿಕೆ  ಎಂಬುದು  ಚಿಕ್ಕ  ಅಡಿಕೆಯನ್ನೇ  ಸೂಚಿಸುತ್ತದೆ.  ಚಿಕ್ಕಮ್ಮ  ಎಂಬುದರ  ಬಳಕೆ  ಯಲ್ಲಿ  ಅರ್ಥದ  ಬದಲಾವಣೆಯೂ  ಸೇರಿಕೊಂಡಿದೆ;  ಆದರೆ,  ಚಿಕ್ಕಡಿಕೆ  ಎಂಬು  ದರಲ್ಲಿ ಅಂತಹ ಬದಲಾವಣೆ ಸೇರಿಕೊಂಡಿಲ್ಲ.   
ಗುಣಪದವನ್ನು ನಾಮಪದದೊಂದಿಗೆ ಬಳಸಿರುವ ಸಂದಭ್ರದಲ್ಲಿ ಈ ರೀತಿ  ಅರ್ಥದ ಬದಲಾವಣೆ ನಡೆದಿಲ್ಲವಾದರೆ ಅದನ್ನು ಕನ್ನಡದಲ್ಲಿ ಪದಕಂತೆಯೆಂದೇ  ಪರಿಗಣಿಸಬೇಕಲ್ಲದೆ  ಜೋಡುಪದವೆಂದು  ಪರಿಗಣಿಸಲು  ಯಾವ  ಆಧಾರವೂ  ಇರುವುದಿಲ್ಲ.  

Eke →

5.3.3 ಕೃದಂತಗಳ ಬಳಕೆ

ಕೃದಂತಗಳನ್ನು ನಾಮಪದಕಂತೆಗಳಲ್ಲಿ ಬಳಸಬೇಕಿದ್ದರೂ ಸಂಸ್ಕೃತದಲ್ಲಿ ಅವಕ್ಕೆ ನಾಮಪದದ ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ವಿಭಕ್ತಿ ಪ್ರತ್ಯಯ ವೊಂದನ್ನು ಸೇರಿಸುವ ಅವಶ್ಯಕತೆಯಿದೆ. ಆದರೆ ಕನ್ನಡದಲ್ಲಿ ಆ ರೀತಿ ಕೃದಂತ ಗಳಿಗೆ ವಿಭಕ್ತಿ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು. ಇದಕ್ಕೆ ಕಾರಣ ವೇನೆಂದರೆ, ಮೇಲೆ (5.3.2)ರಲ್ಲಿ ಸೂಚಿಸಿದ ಹಾಗೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ನಾಮಪದಕಂತೆಗಳ ಕೊನೆಯ ಪದದೊಂದಿಗೆ ಮಾತ್ರ ಬರುತ್ತವೆ.

(3ಕ) ಏಕಂ ಮೃತಂ ಸಪ್ರಂ ‘ಒಂದು ಸತ್ತ ಹಾವನ್ನು’ (3ಖ) ಏಕೇನ ಮೃತೇನ ಸಪ್ರೇಣ

‘ಒಂದು ಸತ್ತ ಹಾವಿನಿಂದ’ (3ಗ) ಏಕಾಯ ಮೃತಾಯ ಸಪ್ರಾಯ ‘ಒಂದು ಸತ್ತ ಹಾವಿಗೆ’

ಸಂಸ್ಕೃತದಲ್ಲಿ ಇಂತಹ ಕೃದಂತಗಳನ್ನೂ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆ  ಬಳಸಲು  ಸಾಧ್ಯವಿದೆ.  ಹಾಗೆ  ಮಾಡಿದಾಗ  ಅವು  ಅವುಗಳ  ಮುಂದಿರುವ  ನಾಮ  ಪದದೊಂದಿಗೆ  ಸೇರಿ  ಜೋಡುಪದಗಳಾಗುತ್ತವೆ.  ಆದರೆ  ಕನ್ನಡದ  ಕೃದಂತಗಳು  ಪದಕಂತೆಗಳಲ್ಲೇನೇ  ವಿಭಕ್ತಿ  ಪ್ರತ್ಯಯವಿಲ್ಲದೆ  ಬರುತ್ತವೆ.  ಹಾಗಾಗಿ,  ಅವುಗ  ಳೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲ ಎಂಬ ವಿಷಯದ ಆಧಾರದ ಮೇಲೆ ಅವು  ಅನಂತರ  ಬರುವ  ನಾಮಪದಗಳೊಂದಿಗೆ  ಸೇರಿ  ಜೋಡುಪದಗಳಾಗಿವೆಯೆಂದು  ಹೇಳಲು ಸಾಧ್ಯವಿಲ್ಲ. 

(4ಕ) ಏಕಂ ಮೃತಸಪ್ರಂ

ಒಂದು ಸತ್ತ ಹಾವನ್ನು’

(4ಖ) ಏಕೇನ ಮೃತಸಪ್ರೇಣ ‘ಒಂದು ಸತ್ತ ಹಾವಿನಿಂದ’

(4ಗ) ಏಕಾಯ ಮೃತಸಪ್ರಾಯ

‘ಒಂದು ಸತ್ತ ಹಾವಿಗೆ’

ಇಲ್ಲೂ  (3ಕ-ಗ)  ಮತ್ತು  (4ಕ-ಗ)  ಪದಕಂತೆಗಳ  ನಡುವೆ  ಸಂಸ್ಕೃತದಲ್ಲಿ  ವಿಭಕ್ತಿಗಳ  ಮಟ್ಟಿಗೆ  ವ್ಯತ್ಯಾಸವಿದೆ,  ಆದರೆ  ಕನ್ನಡದಲ್ಲಿ  ಯಾವ  ವ್ಯತ್ಯಾಸವೂ  ಇಲ್ಲ.  (4ಕ-ಗ)ಗಳಲ್ಲಿ  ಬರುವ  ಮೃತಸಪ್ರ  ಎಂಬುದನ್ನು  ಸಂಸ್ಕೃತದಲ್ಲಿ  ಜೋಡುಪದ  ಎಂಬುದಾಗಿ  ಪರಿಗಣಿಸಲು  (3ಕ-ಗ)ಗಳಲ್ಲಿ  ಮೃತ  ಪದದ  ಅನಂತರ  ಕಾಣಿಸುತ್ತಿದ್ದ  ವಿಭಕ್ತಿ  ಪ್ರತ್ಯಯ  ಇಲ್ಲವಾಗಿರುವುದನ್ನು  ಆಧಾರವಾಗಿ  ಕೊಡಲು ಸಾಧ್ಯವಿದೆ. 
ಆದರೆ  ಕನ್ನಡದ  ಸತ್ತ  ಪದ  (4ಕ-ಗ)ಗಳಲ್ಲಿ  ಮಾತ್ರವಲ್ಲದೆ  (3ಕ- ಗ)ಗಳಲ್ಲೂ ವಿಭಕ್ತಿ ಪ್ರತ್ಯಯವಿಲ್ಲದೆಯೇ ಬಂದಿರುವ ಕಾರಣ, ಕನ್ನಡದಲ್ಲಿ ಸತ್ತ  ಹಾವು  ಎಂಬುದನ್ನು  ಜೋಡುಪದ  ಎಂಬುದಾಗಿ  ಪರಿಗಣಿಸಲು  ಯಾವ  ಆಧಾರವೂ ಸಿಗುವುದಿಲ್ಲ. 

Eke →

5.3.4 ನಿರ್ದೇಶಕ ಪದಗಳ ಬಳಕೆ

ಸಂಸ್ಕೃತದ ಪದಕಂತೆಗಳಲ್ಲಿ ಅಯಂ ‘ಇವನು’, ಸಃ ‘ಅವನು’ ಮೊದಲಾದ ಮಾತನಾಡುವವನಿಗೂ ಮಾತಿನಲ್ಲಿ ಬರುವ ವ್ಯಕ್ತಿ, ವಸ್ತು ಮೊದಲಾದವುಗಳಿಗೂ ನಡುವಿರುವ ‘ಸ್ಥಾನೀಯ’ ಸಂಬಂಧವನ್ನು ಸೂಚಿಸುವ ನಿರ್ದೇಶಕ ಪದಗಳನ್ನು ಬಳಸಬೇಕಿದ್ದಲ್ಲಿ ಅವುಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆ ಯಿದೆ. ಹಾಗಾಗಿ ಅವು ಇಂತಹ ವಿಭಕ್ತಿ ಪ್ರತ್ಯಯಗಳಿಲ್ಲದೆ ಬಂದಾಗ ಅವುಗಳ

ಅನಂತರ ಬರುವ ನಾಮಪದಗಳೊಂದಿಗೆ ಸೇರಿ ಜೋಡುಪದಗಳಾಗಿವೆಯೆಂದು ಹೇಳಲು ಬರುತ್ತದೆ.
ಆದರೆ ಕನ್ನಡದಲ್ಲಿ ಇಂತಹ ಪದಗಳನ್ನು ಪದಕಂತೆಗಳಲ್ಲಿ ಬಳಸುವಾಗಲೆಲ್ಲ ಈ ಮತ್ತು ಆ ಎಂಬ ಸಂಕ್ಷಿಪ್ತ ರೂಪಗಳನ್ನು ಬಳಸುವ ಅವಶ್ಯಕತೆಯಿದೆ. ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಕ್ರಮ ಕನ್ನಡದಲ್ಲಿಲ್ಲ.

(5ಕ) ಇಮಂ ಘಟಂ

‘ಈ ಕೊಡವನ್ನು’

(5ಖ) ಅಸ್ಮಾತ್ ಘಟಾತ್

‘ಈ ಕೊಡದಿಂದ’

(5ಗ) ತಸ್ಮಾತ್ ಘಟಾತ್

‘ಆ ಕೊಡದಿಂದ’ (5ಘ) ತಸ್ಮಿನ್ ಘಟೇ ‘ಆ ಕೊಡದಲ್ಲಿ’

ಸಂಸ್ಕೃತದ  ಇದಂ  ‘ಈ’  ಎಂಬುದು  (5ಕ)ದಲ್ಲಿ  ಇಮಂ  ಎಂಬುದಾಗಿ  ದ್ವಿತೀಯಾ ವಿಭಕ್ತಿಯಲ್ಲಿ ಬಂದಿದೆ ಮತ್ತು (5ಖ)ದಲ್ಲಿ ಅಸ್ಮಾತ್ ಎಂಬುದಾಗಿ  ತೃತೀಯಾ ವಿಭಕ್ತಿಯಲ್ಲಿ ಬಂದಿದೆ; ತತ್ ‘ಆ’ ಎಂಬುದು (5ಗ)ದಲ್ಲಿ ತಸ್ಮಾತ್  ಎಂಬುದಾಗಿ  ತೃತೀಯಾ  ವಿಭಕ್ತಿಯಲ್ಲಿ  ಬಂದಿದೆ  ಮತ್ತು  (5ಘ)ದಲ್ಲಿ  ತಸ್ಮಿನ್  ಎಂಬುದಾಗಿ ಸಪ್ತಮೀ ವಿಭಕ್ತಿಯಲ್ಲಿ ಬಂದಿದೆ. ಈ ಎಲ್ಲಾ ಬಳಕೆಗಳಲ್ಲೂ ಅವು  ಅವುಗಳ  ಅನಂತರ  ಬರುವ  ನಾಮಪದದ  (ಘಟ  ಎಂಬುದರ)  ವಿಭಕ್ತಿಯಲ್ಲೇ  ಬಂದಿರುವುದನ್ನು ಗಮನಿಸಬಹುದು.  
ಆದರೆ  ಕನ್ನಡದ  ಈ  ಮತ್ತು  ಆ  ಎಂಬವುಗಳು  ಆ  ರೀತಿ  ವಿಭಕ್ತಿ  ಪ್ರತ್ಯಯ  ದೊಂದಿಗೆ  ಬರುವುದಿಲ್ಲ.  ಅವುಗಳ  ಅನಂತರ  ಬರುವ  ನಾಮಪದ  ಯಾವ  ವಿಭಕ್ತಿಯಲ್ಲೇ  ಇರಲಿ  ಅವಕ್ಕೆ  ಕನ್ನಡದಲ್ಲಿ  ಒಂದೇ  ರೂಪವಿರುತ್ತದೆ.  ಇದು  ಕನ್ನಡದಲ್ಲಿ ಪದಕಂತೆಗಳನ್ನು ರಚಿಸುವ ವಿಧಾನ.  
ಸಂಸ್ಕೃತದಲ್ಲಿ  ಮೇಲೆ  ಕೊಟ್ಟಿರುವ  ನಿರ್ದೇಶಕ  ಪದಗಳನ್ನು  ವಿಭಕ್ತಿ  ಪ್ರತ್ಯಯವಿಲ್ಲದೆಯೂ  (ತದ್ಘಟಾತ್  ‘ಆ  ಕೊಡದಿಂದ’,    ತದ್ಘಟೇ  ‘ಆ  ಕೊಡ  ದಲ್ಲಿ’  ಮೊದಲಾದವುಗಳ  ಹಾಗೆ)  ಬಳಸಲು  ಸಾಧ್ಯವಿದೆ  ಮತ್ತು  ಹಾಗೆ  ಬಳಸಿ  ದಾಗ ಸಂಸ್ಕೃತದಲ್ಲಿ ಜೋಡುಪದ ಸಿಗುತ್ತದೆಯುಂದು ಹೇಳಲು ಸಾಧ್ಯವಿದೆ.  

ಆದರೆ ಕನ್ನಡದಲ್ಲಿ ಈ ರೀತಿ ಜೋಡುಪದವನ್ನು ರಚಿಸಲು ಸಾಧ್ಯವಾಗದು.  ಯಾಕೆಂದರೆ  ಇಂತಹ  ಪದಕಂತೆಗಳಲ್ಲಿ  ಕನ್ನಡದ  ನಿರ್ದೇಶಕ  ಪದಗಳು  ಆ  ಕೊಡದಿಂದ,  ಆ  ಕೊಡದಲ್ಲಿ  ಎಂಬವುಗಳಲ್ಲಿ  ಕಾಣಿಸುವ  ಹಾಗೆ  ವಿಭಕ್ತಿ  ಪ್ರತ್ಯಯವಿಲ್ಲದ ರೂಪದಲ್ಲಿ ಮಾತ್ರ ಬರಬಲ್ಲುವು.   
ಕನ್ನಡದ  ಕೆಲವು  ವ್ಯಾಕರಣ  ಪಠ್ಯಗಳಲ್ಲಿ  ಆ  ಹುಡುಗ  ಎಂಬಂತಹ  ಪದ  ಕಂತೆಗಳನ್ನು ಜೋಡುಪದ (ಸಮಾಸ)ಗಳೆಂದು ತೋರಿಸಿಕೊಡುವುದಕ್ಕಾಗಿ ಅವಕ್ಕೆ  ಅವನು ಹುಡುಗ ಎಂಬಂತಹ ಒಳನುಡಿ (ವಿಗ್ರಹವಾಕ್ಯ)ಗಳನ್ನು ಕೊಡಲಾಗಿದೆ.  
ಆದರೆ  ಇಲ್ಲೂ  ಮೊದಲನೆಯ  ಪದದಲ್ಲಿ  ವಿಭಕ್ತಿ  ಪ್ರತ್ಯಯವಿದೆಯೆಂದು  ಹೇಳಲು ಸಾಧ್ಯವಾಗದು. ಯಾಕೆಂದರೆ ಕನ್ನಡದಲ್ಲಿ *ಅವನನ್ನು ಹುಡುಗನನ್ನು  ಇಲ್ಲವೇ *ಅವನಿಂದ ಹುಡುಗನಿಂದ ಎಂಬುದಾಗಿ ಸಂಸ್ಕೃತದ ಇಮಂ ಘಟಂ,  ಅಸ್ಮಾತ್  ಘಟಾತ್  ಎಂಬವುಗಳ  ಹಾಗೆ  ಪದಕಂತೆಯ  ಮೊದಲನೆಯ  ಪದಕ್ಕೆ  ವಿಭಕ್ತಿ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು.  
ಇನ್ನೊಂದು ವಿಷಯವೇನೆಂದರೆ, ಕನ್ನಡದಲ್ಲಿ ಅವನು ಹುಡುಗ ಎಂಬುದು  ಒಂದು  ವಾಕ್ಯವಾಗುತ್ತದಲ್ಲದೆ  ಪದಕಂತೆಯಾಗುವುದಿಲ್ಲ.  ಹಾಗಾಗಿ  ಆ  ಹುಡುಗ  ಎಂಬುದನ್ನು ಅವನು ಹುಡುಗ ಎಂಬುದರಿಂದ ಸಾಧಿಸುವುದೂ ಸರಿಯಲ್ಲ. 

Eke →

5.3.5 ದ್ವಿತೀಯಾ ವಿಭಕ್ತಿಯ ಬಳಕೆ

ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅಪ್ರಾಣಿ ವಾಚಕ ಪದಗಳು ಕ್ರಿಯಾಪದದ ಪಕ್ಕದಲ್ಲೇ ಇವೆಯಾದರೆ ಅವುಗಳೊಂದಿಗಿರುವ ದ್ವಿತೀಯಾ ವಿಭಕ್ತಿ ಪ್ರತ್ಯಯವನ್ನು ತೆಗೆದು ಹಾಕಲು ಸಾಧ್ಯವಿದೆ. ಆದರೆ ಆ ಪದವನ್ನು ವಾಕ್ಯದಲ್ಲಿ ಬೇರೆಡೆಗೆ ಸಾಗಿಸಿದಾಗ ಇಲ್ಲವೇ ಒತ್ತಿ ಹೇಳುವ ಊ ಪ್ರತ್ಯಯವನ್ನು ಅದಕ್ಕೆ ಸೇರಿಸಿದಾಗ ಆ ರೀತಿ ತೆಗೆದು ಹಾಕಿದ ದ್ವಿತೀಯಾ ವಿಭಕ್ತಿ ಪ್ರತ್ಯಯ ತಿರುಗಿ ಕಾಣಿಸಿಕೊಳ್ಳುತ್ತದೆ.

ರಾಜು ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಿಸಿದ್ದಾನೆ (6ಖ) ರಾಜು ಬೆಂಗಳೂರಿನಲ್ಲಿ ಒಂದು ಮನೆಯನ್ನೂ ಕಟ್ಟಿಸಿದ್ದಾನೆ ರಾಜು ಒಂದು ಮನೆಯನ್ನು ಬೆಂಗಳೂರಿನಲ್ಲೂ ಕಟ್ಟಿಸಿದ್ದಾನೆ

ಮನೆ  ಪದದೊಂದಿಗಿದ್ದ  ದ್ವಿತೀಯ  ವಿಭಕ್ತಿ  ಪ್ರತ್ಯಯ  (6ಕ)  ವಾಕ್ಯದಲ್ಲಿ  ಬಿದ್ದುಹೋಗಿದೆ, ಆದರೆ (6ಖ-ಗ) ವಾಕ್ಯಗಳಲ್ಲಿ ಅದು ಉಳಿದುಕೊಂಡಿದೆ.  
ಈ ರೀತಿ ಕ್ರಿಯಾಪದದ ಪಕ್ಕದಲ್ಲಿ ಅಪ್ರಾಣಿವಾಚಕ ನಾಮಪದಗಳು ವಿಭಕ್ತಿ  ಪ್ರತ್ಯಯವಿಲ್ಲದೆ ಬಂದಿರುವುದನ್ನು ನೋಡಿ, ಕನ್ನಡದ ವೈಯಾಕರಣಿಗಳು ಅಂತಹ  ರಚನೆಗಳು  (ಮನೆಕಟ್ಟು  ಎಂಬಂತಹವುಗಳು)  ‘ಕ್ರಿಯಾಸಮಾಸ’ವೆಂಬ  ಕನ್ನಡಕ್ಕೆ 

ವಿಶಿಷ್ಟವಾಗಿರುವ ಸಮಾಸವೊಂದಕ್ಕೆ ಉದಾಹರಣೆಗಳಾಗುತ್ತವೆಯೆಂದು ವಾದಿಸಿ ಆದರೆ ನಿಜಕ್ಕೂ ಇದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯ ರಚನೆಯಲ್ಲಿ (ಎಂದರೆ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ) ಕಾಣಿಸುವ ಒಂದು ವ್ಯತ್ಯಾಸ ಮಾತ್ರ (8.4 ನೋಡಿ). ಇಲ್ಲಿ ಹೊಸ ಪದದ ರಚನೆಯಾಗಿಲ್ಲ.

Eke →

5.3.6 ನಾಮಪದಗಳ ಬಳಕೆ

ಕನ್ನಡದಲ್ಲಿ ಎರಡು ನಾಮಪದಗಳನ್ನು ಒಂದು ಪದಕಂತೆಯ ಅಂಗಗಳನ್ನಾಗಿ ಮಾಡಿ ಬಳಸಬೇಕಾಗಿದೆಯಾದರೆ ಅವೆರಡನ್ನು ಸಂಬಂಧಿಸಲು ಮೊದಲನೆಯದ ರೊಂದಿಗೆ ಷಷ್ಠೀ ‘ವಿಭಕ್ತಿ’ ಪ್ರತ್ಯಯವನ್ನು ಬಳಸುವ ಅವಶ್ಯಕತೆಯಿದೆ.
ಆದರೆ ಸಂಸ್ಕೃತದಲ್ಲಿ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ ಬಳಸ ಲಾಗುತ್ತದೆ. ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳ ನಡುವೆ ವ್ಯತ್ಯಾಸವಿಲ್ಲದಿರುವುದೇ ಇದಕ್ಕೆ ಕಾರಣ.

(7ಕ) ಏಕಂ ಮೃತ್ತಿಕಂ ಘಟಂ

‘ಒಂದು ಮಣ್ಣಿನ ಕೊಡವನ್ನು’ (7ಖ) ಏಕೇನ ಮೃತ್ತಿಕೇನ ಘಟೇನ ‘ಒಂದು ಮಣ್ಣಿನ ಕೊಡದಿಂದ’

(7ಗ) ಏಕಾಯ ಮೃತ್ತಿಕಾಯ ಘಟಾಯ ‘ಒಂದು ಮಣ್ಣಿನ ಕೊಡಕ್ಕೆ’

ಮಣ್ಣಿನ

ಸೂಚಿಸುವ ಏಕ ಪದ (7ಕ-ಗ) ಪದಕಂತೆಗಳಲ್ಲಿ ಎಣಿಕೆಯನ್ನು ಮಾತ್ರವಲ್ಲದೆ ಮೃತ್ತಿಕ ನಾಮಪದವೂ ವಿಶೇಷ್ಯ ನಾಮಪದದ (ಘಟ ಎಂಬುದರ) ವಿಭಕ್ತಿಗಳಲ್ಲಿ ಬಂದಿದೆ. ಇಲ್ಲೂ ಈ ವಿಭಕ್ತಿ ಪ್ರತ್ಯಯಗಳನ್ನು ಲೋಪಮಾಡುವುದರ ಮೂಲಕ ಜೋಡುಪದಗಳನ್ನು ಸಾಧಿಸಲು ಸಾಧ್ಯವಿದೆ. (ಮೃತ್ತಿಕಘಟಂ ‘ಮಣ್ಣಿನ ಕೊಡವನ್ನು’, ಕೊಡದಿಂದ’).
ಆದರೆ (7ಕ-ಗ) ಕನ್ನಡ ಪದಕಂತೆಗಳಲ್ಲಿ ಮಣ್ಣು ನಾಮಪದ ಆ ರೀತಿ ವಿಶೇಷ್ಯದ ವಿಭಕ್ತಿಗಳಲ್ಲಿ ಬರುವ ಬದಲು ಎಲ್ಲೆಡೆಯಲ್ಲೂ ಅದನ್ನು ವಿಶೇಷ್ಯ ದೊಂದಿಗೆ ಸಂಬಂಧಿಸಬಲ್ಲ ಅ ಪ್ರತ್ಯಯದೊಂದಿಗೆ (ಷಷ್ಠೀ ವಿಭಕ್ತಿಯಲ್ಲಿ) ಇಂತಹ ಸಂದಭ್ರಗಳಲ್ಲಿ ಮಾತ್ರ ಕನ್ನಡದಲ್ಲೂ ಸಂಸ್ಕೃತದ ಹಾಗೆ ‘ವಿಭಕ್ತಿ ಪ್ರತ್ಯಯ’ ಲೋಪವಾಗುವುದರ ಮೂಲಕ ಜೋಡುಪದ ಸಿದ್ಧಿಸುತ್ತದೆಯುಂದು

ಮೃತ್ತಿಕಘಟೇನ

ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಅರಮನೆ ‘ಅರಸನ ಮನೆ’, ಮೂಗುದಾರ ‘ಮೂಗಿನ ದಾರ’, ಕಣ್ಣೀರು ‘ಕಣ್ಣಿನ ನೀರು’ ಮೊದಲಾದವು ಗಳಲ್ಲಿ ಈ ರೀತಿ ಷಷ್ಠೀ ವಿಭಕ್ತಿಯ ಲೋಪವನ್ನು ಕಾಣಬಹುದು. ವಿಭಕ್ತಿಲೋಪದ ಮಟ್ಟಿಗೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಸ್ವಲ್ಪವಾದರೂ ಸಮಾನತೆಯಿದೆಯಾದರೆ ಅದು ಇಲ್ಲಿ ಮಾತ್ರ. ಆದರೆ ನಿಜಕ್ಕೂ ಕನ್ನಡದಲ್ಲಿ ಷಷ್ಠೀ ವಿಭಕ್ತಿಯುಂಬುದು ಒಂದು ವಿಭಕ್ತಿ ಪ್ರತ್ಯಯವಲ್ಲ ಎಂಬುದನ್ನು ಮುಂದೆ (8.5.5)ರಲ್ಲಿ ನೋಡಲಿರುವೆವು.

Eke →

5.3.7 ಪದಗಳ ಸಂಖ್ಯೆ

ಸಂಸ್ಕೃತದಲ್ಲಿ ಎಷ್ಟು ಪದಗಳನ್ನು ಬೇಕಿದ್ದರೂ ಒಟ್ಟಿಗೆ ಸೇರಿಸಿ ಜೋಡುಪದ ಗಳನ್ನು ತಯಾರಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಬಾಣಭಟ್ಟನ ಕಾದಂಬರಿ ಯಲ್ಲಿ ಬರುವ ಕೆಲವು ಜೋಡುಪದಗಳು ಒಂದು ಇಡೀ ಪುಟವನ್ನೇ ತುಂಬು ವಷ್ಟು ಉದ್ದವಾಗಿವೆ.
ವೇದ ಕಾಲದ ಸಂಸ್ಕೃತದಲ್ಲಿ ಈ ರೀತಿಯಿರಲಿಲ್ಲ. ಅದರಲ್ಲಿ ಬಳಕೆ ಯಾಗುವ ಜೋಡುಪದಗಳ ಸಂಖ್ಯೆಯೂ ಕಡಿಮೆಯಿತ್ತು ಮತ್ತು ಅವು ಜಾಸ್ತಿ ಉದ್ದವಾಗಿಯೂ ಇರಲಿಲ್ಲ. ಹೆಚ್ಚಿನ ಜೋಡುಪದಗಳಲ್ಲೂ ಎರಡಕ್ಕಿಂತ ಜಾಸ್ತಿ ಪದಗಳು ಅಂಗಗಳಾಗಿರಲಿಲ್ಲ. ಬಹುಶಃ ವೇದಕಾಲದಲ್ಲಿ ಸಂಸ್ಕೃತ ವ್ಯವಹಾರದ ಭಾಷೆಯಾಗಿದ್ದುದೇ ಇದಕ್ಕೆ ಕಾರಣವಿರಬೇಕು. ಇದೇ ರೀತಿಯಲ್ಲಿ ಕನ್ನಡದಲ್ಲಿ ಬಳಕೆಯಾಗುವ ಜೋಡುಪದಗಳಲ್ಲಿ ಎರಡ ಕ್ಕಿಂತ ಜಾಸ್ತಿ ಅಂಗಗಳಿರುವ ಪದಗಳು ಬಹಳ ಕಡಿಮೆ. ಹೆಚ್ಚಿನವುಗಳಲ್ಲೂ ಎರಡು ಪದಗಳು ಮಾತ್ರ ಒಟ್ಟು ಸೇರಿರುತ್ತವೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ‘ಸಮಸ್ತಪದ’ಗಳನ್ನು ‘ಜೋಡುಪದ’ ಎಂಬ ಹೆಸರಿನಿಂದ ಕರೆಯುವುದು ಸರಿ

Eke →

5.3.8 ಜೋಡುಪದಗಳ ಅರ್ಥ

ಅರ್ಥದ ಮಟ್ಟಿಗೆ ಸಂಸ್ಕೃತದಲ್ಲಿ ಪದಕಂತೆ ಮತ್ತು ಜೋಡುಪದಗಳ ನಡುವೆ ವ್ಯತ್ಯಾಸವಿದೆಯುಂದು ವೈಯಾಕರಣಿಗಳು ಹೇಳುವರಾದರೂ ಈ ವ್ಯತ್ಯಾಸ ಸ್ಪಷ್ಟ ವಾಗಿ ಕಾಣಿಸುವುದು ವೇದ ಕಾಲದ ಸಂಸ್ಕೃತದಲ್ಲಿ ಮಾತ್ರ. ಅನಂತರದ ಕಾವ್ಯ ಮತ್ತು ಶಾಸ್ತ್ರಗಳ ಸಂಸ್ಕೃತದಲ್ಲಿ ಇದು ಬಹಳ ಮಟ್ಟಿಗೆ ಅಳಿದು ಹೋಗಿದೆ.
ಕಾವ್ಯಗಳಲ್ಲಿ ಬಳಕೆಯಲ್ಲಿರುವ ಕೆಲವು ಜೋಡುಪದಗಳಲ್ಲಿ ಮಾತ್ರ ಇಂತಹ ಅರ್ಥವೈಶಿಷ್ಟ್ಯವನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ನೀಲೋತ್ಪಲ ಜೋಡುಪದಕ್ಕೆ ‘ನೀಲಿಬಣ್ಣದ ಕಮಲ’ ಎಂಬ ಅರ್ಥವನ್ನು ಕೊಟ್ಟರೆ ಅದು

ಸಾಧುವೆನಿಸದು. ಆ ಪದ ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಕಮಲವನ್ನು ಮಾತ್ರ ಸೂಚಿಸುತ್ತದೆ.
ಆದರೆ ಸಂಸ್ಕೃತದ ಹೆಚ್ಚಿನ ಜೋಡುಪದಗಳಲ್ಲೂ ಇಂತಹ ಅರ್ಥವೈಶಿಷ್ಟ್ಯ ಕಾಣಿಸುವುದಿಲ್ಲ. ಉದಾಹರಣೆಗಾಗಿ, ಕೃಷ್ಣಃ ಸಪ್ರಃ ಪದಕಂತೆಗೂ ಕೃಷ್ಣಸಪ್ರಃ ಜೋಡುಪದಕ್ಕೂ ನಡುವೆ ಸಂಸ್ಕೃತದಲ್ಲಿ ಅರ್ಥದ ಮಟ್ಟಿಗೆ ಯಾವ ವ್ಯತ್ಯಾಸವೂ ಕನ್ನಡದಲ್ಲಿ ಮೇಲೆ (5.3.1)ರಲ್ಲಿ ಸೂಚಿಸಿದ ಹಾಗೆ ಹೆಚ್ಚಿನೆಡೆಗಳಲ್ಲೂ ಅರ್ಥವ್ಯತ್ಯಾಸ ಮೂಡಿಬಂದಿಲ್ಲವಾದರೆ ಎರಡು ಪದಗಳು ಒಟ್ಟಿಗೆ ಸೇರಿರುವ ಸಂದಭ್ರಗಳಲ್ಲಿ ಸಮಾಸ ನಡೆದಿದೆಯುಂದು ಹೇಳಲು ಸಾಧ್ಯವಾಗದು.

Eke →

5.4 ಸಂಸ್ಕೃತ ಸಮಾಸಗಳ ವಿಭಜನೆ

ಸಂಸ್ಕೃತದಲ್ಲಿ ಮುಖ್ಯವಾಗಿ ತತ್ಪುರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವ್ರೀಹಿ ಎಂಬುದಾಗಿ ನಾಲ್ಕು ರೀತಿಯ ಸಮಾಸಗಳಿವೆಯೆಂದು ಅದರ ವೈಯಾಕರಣಿಗಳು ಹೇಳುತ್ತಾರೆ. ಇವನ್ನು ಬಳಸಿ ತಯಾರಿಸಿದ ಜೋಡುಪದ ಗಳಲ್ಲಿ ‘ಪ್ರಧಾನ ಪದ’ ಯಾವುದು ಎಂಬುದರ ಮೇಲೆ ಈ ವಿಭಜನೆ ಅವಲಂಬಿಸಿದೆ.
ಜೋಡುಪದದ ಅಂಗಗಳಾಗಿ ಬರುವ ಎರಡು ಪದಗಳಲ್ಲಿ ಎರಡನೆಯದು ಆ ಪದಕ್ಕೆ ಪ್ರಧಾನ ಪದವಾಗಿದೆಯಾದರೆ ತತ್ಪುರುಷ, ಮೊದಲನೆಯದು ಪ್ರಧಾನ ಪದವಾಗಿದೆಯಾದರೆ ಅವ್ಯಯೀಭಾವ, ಎರಡೂ ಪ್ರಧಾನ ಪದಗಳಾಗಿವೆಯಾದರೆ ದ್ವಂದ್ವ, ಮತ್ತು ಎರಡೂ ಪ್ರಧಾನ ಪದವಲ್ಲವಾದರೆ ಬಹುವ್ರೀಹಿ. ಉದಾಹರಣೆಗಾಗಿ, ರಾಜಷ್ರಿ ಜೋಡುಪದದಲ್ಲಿ ರಾಜ ಮತ್ತು ಋಷಿ ಎಂಬ ಎರಡು ಅಂಗಗಳಿವೆ. ಆ ಪದ ಒಬ್ಬ ಋಷಿಯನ್ನು ಸೂಚಿಸುವ ಕಾರಣ, ಅದರ ಪ್ರಧಾನ ಪದ ಋಷಿ ಎಂದು ಹೇಳಬೇಕಾಗುತ್ತದೆ. ಹೀಗೆ ಈ ಪದದಲ್ಲಿ ಎರಡನೆಯ ಅಂಗ ಪ್ರಧಾನವಾಗಿರುವ ಕಾರಣ, ಅದು ತತ್ಪುರುಷ ಸಮಾಸಕ್ಕೆ ಉದಾಹರಣೆ.
ಸಂಸ್ಕೃತದಲ್ಲಿ ‘ಅರಸನ ಹತ್ತಿರ’ ಜೋಡುಪದವನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಯಾಗಿ ಕೊಡಲಾಗುತ್ತದೆ. ಇದು ಯಾರ ಹತ್ತಿರ ಎಂಬುದನ್ನು ತಿಳಿಸುವ ಒಂದು ಕ್ರಿಯಾವಿಶೇಷಣ(ಅವ್ಯಯ)ವಾಗಿದ್ದು, ಅದರ ಅಂಗಗಳಾಗಿರುವ ಉಪ ‘ಹತ್ತಿರ’ ಮತ್ತುರಾಜ ‘ಅರಸು’ ಎಂಬ ಎರಡು ಪದಗಳಲ್ಲಿ ಉಪ ಎಂಬ ಮೊದಲನೆಯ ಪದ ಪ್ರಧಾನವಾದುದು. ರಾಮಲಕ್ಷ್ಮಣೌ ‘ರಾಮಲಕ್ಷ್ಮಣರು’ ಜೋಡುಪದ ದ್ವಂದ್ವ ಸಮಾಸಕ್ಕೆ ಉದಾಹರಣೆ. ಇದರಲ್ಲಿ ರಾಮ ಮತ್ತು ಲಕ್ಷ್ಮಣ ಎಂಬ ಎರಡು ಪದಗಳು

ಅಂಗಗಳಾಗಿ ಸೇರಿಕೊಂಡಿವೆ. ಇವುಗಳಲ್ಲಿ ಯಾವುದನ್ನೂ ಪ್ರಧಾನಪದವಲ್ಲ ಎಂದು ಹೇಳಲು ಸಾಧ್ಯವಿಲ್ಲವಾದ ಕಾರಣ, ಅದರ ಎರಡು ಅಂಗಗಳೂ ಪ್ರಧಾನ ಪದಗಳೇ ಎಂದು ಹೇಳಬೇಕಾಗುತ್ತದೆ. ಪೀತಾಂಬರಃ ‘ಹಳದಿಬಟ್ಟೆಯ ವ್ಯಕ್ತಿ’ ಎಂಬುದು ಬಹುವ್ರೀಹಿ ಸಮಾಸಕ್ಕೆ ಉದಾಹರಣೆ. ಇದರಲ್ಲಿ ಪೀತ ‘ಹಳದಿ’ ಮತ್ತು ಅಂಬರ ‘ಬಟ್ಟೆ’ ಎಂಬ ಎರಡು ಪದಗಳು ಅಂಗಗಳಾಗಿ ಬಂದಿದ್ದು, ಅವುಗಳಲ್ಲಿ ಯಾವುದನ್ನೂ ಅದರ ಪ್ರಧಾನ ಪದವೆಂಬುದಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಆ ಜೋಡುಪದದ ಹೊರಗಿರುವ, ಎಂದರೆ ಅದರ ಅಂಗವಾಗಿ ಬಾರದಿರುವ ವ್ಯಕ್ತಿ ಎಂಬಂತಹ ಪದವೊಂದು ಅದರ ಪ್ರಧಾನ ಪದವೆಂದು ಹೇಳಬೇಕಾಗು ತ್ತದೆ. ಯಾಕೆಂದರೆ ಈ ಜೋಡುಪದ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದಲ್ಲದೆ ಒಂದು ಬಣ್ಣ(ಪೀತ)ವನ್ನಾಗಲೀ ಇಲ್ಲವೇ ಒಂದು ಬಟ್ಟೆ(ಅಂಬರ)ವನ್ನಾಗಲೀ ಗುರುತಿಸುವುದಿಲ್ಲ. ತತ್ಪುರುಷ ಸಮಾಸದ ಉಪಭೇದಗಳಾಗಿ ಕರ್ಮಧಾರಯ ಮತ್ತುದ್ವಿಗು ಎಂಬ ಇನ್ನೂ ಎರಡು ರೀತಿಯ ಸಮಾಸಗಳನ್ನು ಸಂಸ್ಕೃತದಲ್ಲಿ ಗುರುತಿಸುವ ಕ್ರಮ ರೂಢಿಯಲ್ಲಿದೆ.
(1) ತತ್ಪುರುಷ ಜೋಡುಪದದ ಅಂಗಗಳಾಗಿ ಬರುವ ಪದಗಳನ್ನು ಒಳ ನುಡಿಯ (ವಿಗ್ರಹವಾಕ್ಯದ) ಮೂಲಕ ಸಂಬಂಧಿಸುವಾಗ ಅವೆರಡನ್ನೂ ಒಂದೇ ವಿಭಕ್ತಿಯಲ್ಲಿರಿಸಿ (ಎಂದರೆ ಪ್ರಥಮಾ ವಿಭಕ್ತಿಯಲ್ಲಿರಿಸಿ) ಸಂಬಂಧಿಸಲು ಸಾಧ್ಯ ವಿದೆಯಾದರೆ ಅದನ್ನು ಕರ್ಮಧಾರಯವೆಂಬ ಉಪವಿಭಾಗದಲ್ಲಿ ಸೇರಿಸುವುದು ಉದಾಹರಣೆಗಾಗಿ ಕೃಷ್ಣಸಪ್ರಃ ‘ಕಪ್ಪುಹಾವು’ ಎಂಬುದರ ಅಂಗವಾಗಿರುವ ಪದಗಳನ್ನು ಕೃಷ್ಣಃ ಸಪ್ರಃ ಎಂಬುದಾಗಿ ಒಂದೇ ವಿಭಕ್ತಿಯಲ್ಲಿ (ಪ್ರಥಮಾ ವಿಭಕ್ತಿಯಲ್ಲಿ) ಇರಿಸಿ ಸಂಬಂಧಿಸಬಹುದು. ಹಾಗಾಗಿ ಅದು ಕರ್ಮಧಾರಯ ವಾಗುತ್ತದೆ.
ಆದರೆ, ವೃಕಭಯ ‘ತೋಳನ ಹೆದರಿಕೆ’ ಎಂಬ ಇನ್ನೊಂದು ಜೋಡುಪದ ತತ್ಪುರುಷಕ್ಕೆ ಉದಾಹರಣೆಯಾಗಬಲ್ಲುದಾದರೂ ಕರ್ಮಧಾರಯಕ್ಕೆ ಉದಾಹರಣೆ ಯಾಗಲಾರದು. ಯಾಕೆಂದರೆ, ಈ ಜೋಡುಪದದ ಅಂಗಗಳಾಗಿ ಬರುವ ವೃಕ ‘ತೋಳ’ ಮತ್ತು ಭಯ ‘ಹೆದರಿಕೆ’ ಪದಗಳನ್ನು ಒಂದೇ ವಿಭಕ್ತಿಯಲ್ಲಿರಿಸಿ ಸಂಬಂಧಿಸಲು ಸಾಧ್ಯವಾಗದು. ವೃಕಾತ್ ಭಯಂ ಎಂಬುದಾಗಿ ಅವುಗಳಲ್ಲಿ ಮೊದಲನೆಯ ಪದವನ್ನು ಪಂಚಮೀ ವಿಭಕ್ತಿಯಲ್ಲಿ ಇರಿಸುವ ಅವಶ್ಯಕತೆ ಸಂಸ್ಕೃತದಲ್ಲಿದೆ.

(2)  ತತ್ಪುರುಷ  ಜೋಡುಪದದ  ಅಂಗಗಳಾಗಿ  ಬರುವ  ಪದಗಳಲ್ಲಿ  ಮೊದಲನೆಯದು  ಎಣಿಕೆಯನ್ನು  ಸೂಚಿಸುವ  ಪದವಾಗಿದೆಯಾದರೆ  ಅದನ್ನು  ‘ದ್ವಿಗು’ ಎಂಬ ಉಪವಿಭಾಗದಲ್ಲಿ ಸೇರಿಸುವ ಕ್ರಮವಿದೆ.  
ಉದಾಹರಣೆಗಾಗಿ  ತ್ರಿಲೋಕಂ  ‘ಮೂರು  ಲೋಕಗಳು’  ಜೋಡುಪದದಲ್ಲಿ  ಮೊದಲನೆಯ ಅಂಗವಾಗಿರುವ ತ್ರಿ ‘ಮೂರು’ ಎಂಬುದು ಎಣಿಕೆಯ ಪದವಾಗಿದೆ.  ಹಾಗಾಗಿ,  ಅದನ್ನು  ತಯಾರಿಸುವಲ್ಲಿ  ದ್ವಿಗು  ಸಮಾಸದ  ಬಳಕೆಯಾಗಿದೆಯೆಂದು  ಹೇಳಬಹುದು. 

Eke →

5.5 ಕನ್ನಡ ಜೋಡುಪದಗಳ ಒಳರಚನೆ

ಮೇಲೆ (5.1ರಲ್ಲಿ) ಸೂಚಿಸಿದ ಹಾಗೆ, ಸಂಸ್ಕೃತದ ಆರು ಸಮಾಸಗಳೂ ಕನ್ನಡದಲ್ಲಿವೆಯೆಂಬುದಾಗಿ ಕನ್ನಡದ ವೈಯಾಕರಣಿಗಳು ಹೇಳುತ್ತಾರೆ. ಇದಲ್ಲದೆ, ಗಮಕ ಮತ್ತು ಕ್ರಿಯಾಸಮಾಸಗಳೆಂಬ ಬೇರೆ ಎರಡು ರೀತಿಯ ಕನ್ನಡದವೇ ಆದ ಸಮಾಸಗಳೂ ಕನ್ನಡದಲ್ಲಿವೆಯೆಂದು ಇವರು ಹೇಳುತ್ತಾರೆ.
ಆದರೆ ಇದು ಕನ್ನಡದ ಜೋಡುಪದಗಳನ್ನು ಸಂಸ್ಕೃತ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದುದರಿಂದಾಗಿ ಹುಟ್ಟಿಬಂದ ತಪ್ಪು ಕಲ್ಪನೆ. ಕನ್ನಡದ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ಮತ್ತು ಪದರಚನೆಯ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಸಂಸ್ಕೃತದ ವಿಭಜನೆಗಿಂತ ತೀರ ಭಿನ್ನವಾಗಿರುವ ಬೇರೊಂದು ರೀತಿಯ ಕನ್ನಡದ್ದೇ ಆದ ವಿಭಜನೆ ನಮಗೆ ದೊರಕುತ್ತದೆ. ಹೊಸಗನ್ನಡದ ಜೋಡುಪದಗಳಲ್ಲಿ ಸಾಮಾನ್ಯವಾಗಿ ಎರಡನೆಯ ಅಂಗ ವಾಗಿ ಬರುವ ಪದ ನಾಮಪದವಾಗಿರುತ್ತದೆ. ಮೊದಲನೆಯದು ನಾಮಪದವಿರ ಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು.
ಈ ವಿಷಯದ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಕೆಳಗೆ ಸೂಚಿಸಿದ ಹಾಗೆ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದೆ (ಹೆಚ್ಚಿನ ವಿವರಗಳಿಗೆ ಕನ್ನಡ ಪದಗಳ ಒಳರಚನೆ (ಭಟ್ 2002) ನೋಡಿ).

(1) ನಾಮಪದವಿರುವವು:  ಬಯಲಾಟ, ನೆಲಗಡಲೆ, ಕೈಮಗ್ಗ  
(2) ಕ್ರಿಯಾಪದವಿರುವು: ಕಡೆಗೋಲು, ಸಿಡಿಮದ್ದು, ತೂಗುದೀಪ  
(3) ಗುಣಪದವಿರುವವು: ದೊಡ್ಡಮ್ಮ, ಕಿರುಬೆರಳು, ಕಗ್ಗಲ್ಲು 

Eke →

5.5.1 ನಾಮಪದವಿರುವ ಜೋಡುಪದಗಳು

‘ನಾಮಪದವಿರುವ’ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಒಳನುಡಿಯನ್ನು (ವಿಗ್ರಹ ವಾಕ್ಯವನ್ನು) ಹೇಳುವಾಗ ಮೊದಲನೆಯ ಅಂಗವನ್ನು ಷಷ್ಠೀ ವಿಭಕ್ತಿಯಲ್ಲಿರಿಸುವ ಮೂಲಕ ಎರಡನೆಯ ಅಂಗದೊಂದಿಗೆ ಸಂಬಂಧಿಸಲು ಸಾಧ್ಯವಿದೆ.

ಒಳನುಡಿ
ಬೆಂಕಿಯ ಪೆಟ್ಟಿಗೆ
ನೆಲದ ಕಡಲೆ ಬಯಲಿನ ಆಟ
ಕಾಲಿನ ಮಣೆ ಕೈಯ ಮಗ್ಗ

ಜೋಡುಪದ ಬೆಂಕಿಪೆಟ್ಟಿಗೆ ನೆಲಕಡಲೆ ಬಯಲಾಟ ಕಾಲ್ಮಣೆ ಕೈಮಗ್ಗ

ಈ  ನಿಯಮಕ್ಕೆ  ಆನೆಕಾಲು,  ಕೈಗಂಬ,  ಇಲಿಕಿವಿ,  ನೆಲದಾವರೆ  ಮೊದಲಾದ  ಕೆಲವು  ಅಪವಾದಗಳಿವೆ.  ಯಾಕೆಂದರೆ,  ಮೇಲೆ  ಕೊಟ್ಟಿರುವ  ಜೋಡುಪದಗಳ  ಹಾಗೆ  ಇವುಗಳ  ಎರಡು  ಅಂಗಗಳನ್ನು  ಷಷ್ಠೀ  ವಿಭಕ್ತಿಯ  ಮೂಲಕ ಸಂಬಂಧಿಸಲು ಸಾಧ್ಯವಾಗದು.  
ಉದಾಹರಣೆಗಾಗಿ  ಆನೆಕಾಲು  ಪದ  ‘ಆನೆಯ  ಕಾಲ’ನ್ನು  ಸೂಚಿಸುವ  ಬದಲು  ‘ಆನೆಯ  ಕಾಲಿನ  ಹಾಗೆ  ಕಾಲು  ಬಾತುಕೊಳ್ಳುವ  ಒಂದು  ರೋಗ’ವನ್ನು  ಸೂಚಿಸುತ್ತದೆ. ಇಂತಹ ಜೋಡುಪದಗಳಲ್ಲಿ ಮೊದಲನೆಯ ಅಂಗ, ಎರಡನೆಯ  ಅಂಗ, ಇಲ್ಲವೇ ಎರಡೂ ಅಂಗಗಳು ಉಪಮಾನಗಳಾಗಿರಲು ಸಾಧ್ಯವಿದೆ. 

ಜೋಡುಪದ ಕಲ್ಲೆದೆ
ನೆಲದಾವರೆ

ಒಳನುಡಿ ಕಲ್ಲಿನ ಹಾಗೆ ಕಠಿಣವಾಗಿರುವ ಎದೆ ನೆಲದಲ್ಲಿ ಬೆಳೆಯುವ ತಾವರೆಯಂತಹ ಹೂ ಇಲಿಯ ಕಿವಿಯ ಹಾಗಿರುವ ಎಲೆಯಿರುವ ಗಿಡ

ಇದಲ್ಲದೆ, ಬೇರೆ ಕೆಲವು ಜೋಡುಪದಗಳ ಅಂಗಗಳನ್ನು ಷಷ್ಠೀ ವಿಭಕ್ತಿಯ  ಮೂಲಕ ಸಂಬಂಧಿಸಲು ಸಾಧ್ಯವಿದೆಯಾದರೂ ಅವುಗಳ ಅರ್ಥವನ್ನು ಸರಿಯಾಗಿ  ಸೂಚಿಸುವ ಹಾಗೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ, ಮತ್ತು  ಈ  ಆಧಾರದ  ಮೇಲೆ  ಅವನ್ನು  ಹಲವು  ಉಪವಿಭಾಗಗಳಲ್ಲಿ  ವಿಂಗಡಿಸಲು  ಸಾಧ್ಯವಿದೆ.  
ಸಾಮಾನ್ಯವಾಗಿ  ಇಂತಹ  ಒಳನುಡಿಗಳಲ್ಲಿ  ಜೋಡುಪದದ  ಅಂಗಗಳಾಗಿ  ಬಂದಿರುವ  ನಾಮಪದಗಳಲ್ಲಿ  ಒಂದರೊಡನೊಂದನ್ನು  ಸಂಬಂಧಿಸುವುದಕ್ಕಾಗಿ  ಯಾವುದಾದರೊಂದು  ಕ್ರಿಯಾಪದವನ್ನು  ಬಳಸುವ  ಅವಶ್ಯಕತೆಯಿರುತ್ತದೆ.  ಈ 

ಕ್ರಿಯಾಪದದ ಆಧಾರದ ಮೇಲೆಯೂ ಇಂತಹ ಜೋಡುಪದಗಳನ್ನು ವಿಂಗಡಿಸ ಬಹುದು.

ಜೋಡುಪದ ಕಾಲ್ಮಣೆ
ಅರಮನೆ ಜೇನುಹುಳ ಬೆಂಕಿಪೆಟ್ಟಿಗೆ ಕೈಕೊಡಲಿ ಕಣ್ಣುಸನ್ನೆ ತಪ್ಪುಕಾಣಿಕೆ ಮೂಗುದಾರ ಕಣ್ಣೀರು
ತಲೆಗೂದಲು

ಒಳನುಡಿ ಕಾಲು ಇರುವ ಮಣೆ

ಅರಸನು ವಾಸಿಸುವ ಮನೆ

ಜೇನನ್ನು ಸಂಗ್ರಹಿಸುವ ಹುಳ ಬೆಂಕಿಯನ್ನು ಹೊತ್ತಿಸಲು ಬಳಸುವ ಪೆಟ್ಟಿಗೆ ಕೈಯಿಂದ ಕಡಿಯಲು ಬಳಸುವ ಕೊಡಲಿ ಕಣ್ಣಿನಿಂದ ಮಾಡುವ ಸನ್ನೆ ತಪ್ಪಿಗೆ ಕೊಡುವ ಕಾಣಿಕೆ ಮೂಗಿಗೆ ಕಟ್ಟುವ ದಾರ ಕಣ್ಣಿನಲ್ಲಿ ಬರುವ ನೀರು ತಲೆಯಲ್ಲಿ ಬೆಳೆದ ಕೂದಲು

ಮೇಲೆ  ಕೊಟ್ಟಿರುವ  ಜೋಡುಪದಗಳೆಲ್ಲವನ್ನೂ  ಅವುಗಳ  ಮೊದಲನೆಯ  ಅಂಗವಾಗಿ  ಬಂದಿರುವ  ಪದವನ್ನು  ಷಷ್ಠೀ  ವಿಭಕ್ತಿಯಲ್ಲಿರಿಸುವುದರ  ಮೂಲಕ  ಸಾಧಿಸಲು  ಸಾಧ್ಯವಿದೆಯೆಂಬುದನ್ನು  ಗಮನಿಸಬಹುದು  (ಕಾಲಿನ  ಮಣೆ,  ಜೇನಿನ ಹುಳ, ಕೈಯ ಕೊಡಲಿ, ತಪ್ಪಿನ ಕಾಣಿಕೆ, ಕಣ್ಣಿನ ನೀರು). 

Eke →

5.5.2 ಕ್ರಿಯಾಪದವಿರುವ ಜೋಡುಪದಗಳು

ಕ್ರಿಯಾಪದವಿರುವ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುತ್ತದೆ. ಈ ಕ್ರಿಯಾಪದಕ್ಕೂ ಎರಡನೆಯ ಅಂಗವಾಗಿ ಬಂದಿರುವ ನಾಮಪದಕ್ಕೂ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳಿರಲು ಸಾಧ್ಯವಿದೆ.
(1) ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ನಾಮಪದವು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತು ತೊಡಗಿಕೊಂಡಿರಬಹುದು. ಉದಾಹರಣೆಗಾಗಿ, ಸುಳಿಗಾಳಿ ಜೋಡುಪದದ ಎರಡನೆಯ ಅಂಗವಾಗಿ ಗಾಳಿ ನಾಮಪದ ಬಂದಿದ್ದು, ಇದು ಸುಳಿ ಘಟನೆಯಲ್ಲಿ ತೊಡಗಿದೆ; ಸಿಡಿಮದ್ದು ಎಂಬುದರಲ್ಲೂ ಹೀಗೆಯೇ.
(2) ಬೇರೆ ಯಾರಾದರೂ ಅದನ್ನು ಆ ಘಟನೆಯಲ್ಲಿ ತೊಡಗಿಸಿರಬಹುದು ಉದಾಹರಣೆಗಾಗಿ, ತೂಗುದೀಪ ಜೋಡುಪದದಲ್ಲಿ ಎರಡನೆಯ ಅಂಗ

ವಾಗಿರುವ ದೀಪವನ್ನು ಯರೋ ತೂಗಲು ಬಳಸಿದ್ದಾರೆ; ಚುಚ್ಚುಮದ್ದು ಜೋಡುಪದವೂ ಇಂತಹದೇ.
(3) ಅದು ಆ ಘಟನೆಯ ಕರಣವಾಗಿರಬಹುದು. ಉದಾಹರಣೆಗಾಗಿ, ಬೀಸುಗಲ್ಲು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಲ್ಲು ಬೀಸುವ
ಘಟನೆಯ ಕರಣವಾಗಿದೆ; ಕಡೆಗೋಲು ಜೋಡುಪದದಲ್ಲೂ ಹೀಗೆಯೇ.
(4) ಅದು ಆ ಘಟನೆಯ ಆಕರವಾಗಿರಬಹುದು. ಉದಾಹರಣೆಗಾಗಿ, ಸುಡುಗಾಡು ಜೋಡುಪದದಲ್ಲಿ ಎರಡನೆಯ ಅಂಗವಾಗಿರುವ ಕಾಡು ನಾಮ ಪದವು ಸುಡು ಘಟನೆಯ ಆಕರವಾಗಿದೆ (ಸುಡುವುದೆಲ್ಲಿ ಎಂಬುದನ್ನು ಅದು ಸೂಚಿಸುತ್ತದೆ); ಜಾರುಬಂಡಿ ಜೋಡುಪದವೂ ಇಂತಹದೇ.
ಇದಲ್ಲದೆ, ಇಂತಹ ಜೋಡುಪದಗಳಲ್ಲಿ ಬರುವ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ಸೂಚಿಸಲು ಸಾಧ್ಯವಿದ್ದು, ಅವನ್ನವಲಂಬಿಸಿಯೂ ಇಂತಹ ಜೋಡುಪದಗಳನ್ನು ವಿಭಜಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಈ ಕ್ರಿಯಾಪದಗಳು ಸೂಚಿಸುವ ಘಟನೆ ಹಲವು ಬಾರಿ ನಡೆಯುವಂತಹದಿರಬಹುದು (ಸುರಿಮಳೆ, ಬೀಸುಗಲ್ಲು) ಇಲ್ಲವೇ ಒಮ್ಮೆ ಮಾತ್ರ ನಡೆಯುವಂತಹದಿರ ಬಹುದು (ಬಿಚ್ಚುಗತ್ತಿ, ಹುರಿಗಡಲೆ).

Eke →

5.5.3 ಗುಣಪದವಿರುವ ಜೋಡುಪದಗಳು

ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಗುಣಪದ ಬಂದಿದೆಯಾದಲ್ಲಿ ಅವಕ್ಕೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯವಿದೆ. ಅವುಗಳಲ್ಲಿ ಕೆಲವಕ್ಕೆ ಎರಡನೆಯ ಅಂಗವಾಗಿ ಬಂದಿರುವ ನಾಮಪದ ಪ್ರಧಾನ ಪದವಾಗಿರಬಲ್ಲುದು ಮತ್ತು ಬೇರೆ ಕೆಲವಕ್ಕೆ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವುದೂ ಪ್ರಧಾನ ಪದವಾಗಿರದೆ, ಜೋಡುಪದದಿಂದ ಹೊರಗಿರುವ ಪದವೊಂದು ಪ್ರಧಾನ ಪದವಾಗಿರಬಲ್ಲುದು.
ಕೆಳಗೆ ಕೊಟ್ಟಿರುವ (ಕ-ಖ) ಜೋಡುಪದಗಳ ನಡುವೆ ಈ ವ್ಯತ್ಯಾಸವನ್ನು ಕಾಣಬಹುದು.

ಜೋಡುಪದ ಕಡೆಹಲ್ಲು (8ಖ) ಕಡೆಗಣ್ಣು (9ಕ) ಮುಂಬಾಗಿಲು (9ಖ) ಮುಂಗೈ
(10ಕ) ನಡುಬೆರಳು (10ಖ) ನಡುಹಗಲು

ಒಳನುಡಿ (ಬಾಯಿಯ) ಕಡೆಯಲ್ಲಿರುವ ಹಲ್ಲು

ಕಣ್ಣಿನ ಕಡೆಯಲ್ಲಿರುವ ಭಾಗ

(ಮನೆಯ) ಮುಂದುಗಡೆಯಿರುವ ಬಾಗಿಲು ಕೈಯ ಮುಂದಿರುವ ಭಾಗ (ಕೈಯಲ್ಲಿ) ನಡುವೆ ಇರುವ ಬೆರಳು ಹಗಲಿನ ನಡುವೆ ಇರುವ ಭಾಗ

(11ಕ) ಚಿಕ್ಕಾಸು
(11ಖ) ಚಿಕ್ಕಮ್ಮ
ಚಿಕ್ಕದಾಗಿರುವ ಕಾಸು ಅಮ್ಮನಿಗಿಂತ ಚಿಕ್ಕವಳಾಗಿರುವ ಹೆಂಗಸು

(8-11) ಜೋಡುಪದಗಳಲ್ಲಿ (ಕ) ಮತ್ತು (ಖ)ಜೋಡುಪದಗಳ ನಡುವೆ  ಪ್ರಧಾನ  ಪದದ  ಮಟ್ಟಿಗೆ  ವ್ಯತಾಸವಿದೆಯೆಂಬುದನ್ನು  ಗಮನಿಸಬಹುದು.  ಇಲ್ಲಿ  ಪ್ರತಿಯೊಂದರಲ್ಲೂ  (ಕ)ಜೋಡುಪದಕ್ಕೆ  ಎರಡನೆಯ  ಅಂಗವಾಗಿ  ಬಂದ  ಪದ  ಪ್ರಧಾನ ಪದವಾಗಿದೆಯಾದರೆ, (ಖ)ಜೋಡುಪದಕ್ಕೆ ಅದರ ಎರಡು ಅಂಗಗಳಲ್ಲಿ  ಒಂದೂ  ಪ್ರಧಾನ  ಪದವಾಗಿರದೆ,  ಜೋಡುಪದದ  ಹೊರಗಿರುವ  ಪದವೊಂದು  ಪ್ರಧಾನ ಪದವಾಗಿದೆ.  
ಉದಾಹರಣೆಗಾಗಿ,  (8ಕ)ದಲ್ಲಿ  ಬಂದಿರುವ  ಕಡೆಹಲ್ಲು  ಜೋಡುಪದಕ್ಕೆ  ಅದರ ಎರಡನೆಯ ಅಂಗವಾಗಿರುವ ಹಲ್ಲು ಪದ ಪ್ರಧಾನ ಪದವಾಗಿದೆ. ಆದರೆ,  (8ಖ)ದಲ್ಲಿ ಬಂದಿರುವ ಕಡೆಗಣ್ಣು ಜೋಡುಪದಕ್ಕೆ ಆ ಪದದ ಅಂಗವಾಗಿಲ್ಲದ  (ಎಂದರೆ ಅದರ ಹೊರಗಿರುವ) ಭಾಗ ಪದ ಪ್ರಧಾನ ಪದವಾಗಿದೆ.  
ಉಳಿದ  (9-11)  ಪದಯುಗ್ಮಗಳಲ್ಲೂ  ಇಂತಹದೇ  ವ್ಯತ್ಯಾಸವಿದೆಯೆಂಬುದನ್ನು ಅವುಗಳ ಮುಂದೆ ಕೊಟ್ಟಿರುವ ಒಳನುಡಿಗಳಿಂದ ತಿಳಿಯಬಹುದು. 
ಗುಣಪದವಿರುವ ಜೋಡುಪದಗಳ ನಡುವೆ ಇನ್ನೂ ಕೆಲವು ವ್ಯತ್ಯಾಸಗಳನ್ನು  ಕಾಣಲು  ಸಾಧ್ಯವಿದ್ದು,  ಅವು  ಬೇರೆ  ಕೆಲವು  ರೀತಿಯ  ವಿಭಜನೆಗಳಿಗೆ  ಆಧಾರ  ವಾಗಬಲ್ಲುವು.  ಉದಾಹರಣೆಗಾಗಿ,  ಈ  ಜೋಡುಪದಗಳ  ಮೊದಲನೆಯ  ಅಂಗ  ವಾಗಿ  ಬಂದಿರುವ  ಗುಣಪದವು  ನಾಮವಿಶೇಷಣವಾಗಿರಲೂ  ಸಾಧ್ಯವಿದೆ,  ಕ್ರಿಯಾ  ವಿಶೇಷಣವಾಗಿರಲೂ ಸಾಧ್ಯವಿದೆ. 

(12ಕ) ಗುಣಪದ ನಾಮವಿಶೇಷಣವಾಗಿರುವ ಜೋಡುಪದಗಳು:

ಚಿಕ್ಕಾಸು
ಕರಿತುಳಸಿ

ಚಿಕ್ಕ ಕಾಸು ಕೆಂಪು ತಾಳಿ (ತೆಂಗು) ಕರಿ (ಕಪ್ಪು) ತುಳಸಿ

(12ಖ) ಗುಣಪದ ಕ್ರಿಯಾವಿಶೇಷಣವಾಗಿರುವ ಜೋಡುಪದಗಳು: (ಕೆಲಸಕ್ಕೆ) ಮುಂದಾಗಿ ಕೊಡುವ ಕಡ ಅಡ್ಡಕ್ಕೆ ಹೋಗುವ ದಾರಿ (ಮನೆಯ) ಹೊರಗಿರುವ ಬಾಗಿಲು

ಮುಂಗಡ ಹೊರಬಾಗಿಲು

ಇನ್ನೊಂದು ರೀತಿಯ ವ್ಯತ್ಯಾಸವೇನೆಂದರೆ, ಕೆಲವು ಗುಣಪದಗಳು ನೇರವಾಗಿ  ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧರ್ಮವನ್ನು ಸೂಚಿಸುವುವಾದರೆ, 

ಇನ್ನು ಕೆಲವು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿಗೂ ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವೆ ಅಂತಹ ಗುಣಧರ್ಮದ ಮಟ್ಟಿಗೆ ವ್ಯತ್ಯಾಸವೇನಿದೆ ಯೆಂಬುದನ್ನು ತಿಳಿಸುತ್ತವೆ.
ಉದಾಹರಣೆಗಾಗಿ, ಕರಿತುಳಸಿ ಎಂಬುದು ತುಳಸಿಯ ಒಂದು ಗುಣಧರ್ಮ ವನ್ನು ಸೂಚಿಸುವ ಮೂಲಕ ಬೇರೆ ರೀತಿಯ ತುಳಸಿಗಳಿಂದ ಅದನ್ನು ಬೇಪ್ರಡಿಸು ತ್ತದೆ. ಆದರೆ, ನಡುಬೆರಳು ಎಂಬುದು ಕೈಯಲ್ಲಿರುವ ಬೆರಳುಗಳ ನಡುವಿರುವ ಸಂಬಂಧವನ್ನು ಸೂಚಿಸುವುದರ ಮೂಲಕ ಅವುಗಳಲ್ಲಿ ಒಂದು ಬೆರಳನ್ನು ಗುರುತಿಸುತ್ತದೆ.

Eke →

5.5.4 ಕೆಲವು ಅಪವಾದಗಳು

ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಎರಡನೆಯ ಅಂಗವಾಗಿ ಒಂದು ನಾಮಪದ ಬಂದಿರುತ್ತದೆಯುಂಬುದಾಗಿ ಮೇಲೆ ಸೂಚಿಸಲಾಗಿತ್ತು. ಇದಕ್ಕೆ ಅಪವಾದವಾಗಿ ಕೆಲವು ಜೋಡುಪದಗಳ ಒಳನುಡಿಯಲ್ಲಿ ಗುಣಪದ ಎರಡನೆಯ ಅಂಗವಾಗಿ ಬಂದಿರುವುದನ್ನು ಕಾಣಬಹುದು; ಆದರೆ, ಇಂತಹ ಸಂದಭ್ರಗಳಲ್ಲೂ ಜೋಡುಪದದಲ್ಲಿ ಅದು ಮೊದಲನೆಯ ಅಂಗವಾಗಿ ಬದಲಾಗಿರುತ್ತದೆ. ಎರಡನೆಯ ಅಂಗ ನಾಮಪದವೇ ಆಗಿರಬೇಕೆಂಬ ಕನ್ನಡ ಜೋಡುಪದಗಳ ಸಾಮಾನ್ಯ ಸ್ವರೂಪವನ್ನು ಇದು ಒತ್ತಿ ಹೇಳುತ್ತದೆ.
ಉದಾಹರಣೆಗಾಗಿ, ‘ಕೈಯ ಮುಂದಿರುವ ಭಾಗ’ ಎಂಬ ಒಳನುಡಿಯಲ್ಲಿ ಮುಂದೆ ಪದ ಎರಡನೆಯ ಅಂಗವಾಗಿದೆಯಾದರೂ ಅದರಿಂದ ತಯಾರಾದ ಮುಂಗೈ ಜೋಡುಪದದಲ್ಲಿ ಆ ಗುಣಪದ ಅದರ ಮೊದಲನೆಯ ಅಂಗವಾಗಿ ಬದಲಾಗಿರುವುದನ್ನು ಕಾಣಬಹುದು.
ಈ ನಿಯಮಕ್ಕೆ ಅಪವಾದಗಳಾಗಿ ಕಾಣಿಸುವ ಬೇರೆ ಕೆಲವು ಜೋಡು ಪದಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಕೈಪಿಡಿ, ಬಾನುಲಿ, ಇಳಿಜಾರು, ಒಡಹುಟ್ಟು ಮೊದಲಾದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುವ ಹಾಗೆ ಕಾಣಿಸುತ್ತದೆ. ಆದರೆ ಇಲ್ಲಿ ಎರಡನೆಯ ಅಂಗಗಳಾಗಿ ಬಂದಿರುವ ಪಿಡಿ, ಉಲಿ, ಜಾರು, ಹುಟ್ಟು ಮೊದಲಾದವುಗಳು ಹಿಡಿ, ಕಟ್ಟು, ನಗು, ಓದು, ತಪ್ಪು, ಬದುಕು ಮೊದಲಾದವುಗಳ ಹಾಗೆ ‘ಸೊನ್ನೆ’ ಪ್ರತ್ಯಯದ ಮೂಲಕ ತಯಾರಾಗಿರುವ ನಾಮಪದಗಳೆಂದು ಹೇಳಲು ಸಾಧ್ಯವಿದೆ.
ಕನ್ನಡದ ಜೋಡುಪದಗಳ ಈ ವಿಭಜನೆಯಲ್ಲಿ ಒಂದು ಮುಖ್ಯವಾದ ವಿಷಯವನ್ನು ಮನಸ್ಸಿನಲ್ಲಿರಿಸಿಕೊಳ್ಳುವುದು ಅವಶ್ಯ. ಪ್ರತ್ಯಯಗಳನ್ನು ಬಳಸಿ ತಯಾರಿಸಿರುವ ನಾಮಪದಗಳ ಹಾಗೆ ಸಮಾಸವೆಂಬ ವಿಧಾನವನ್ನು ಬಳಸಿ ತಯಾರಿಸಿರುವ ಈ ಜೋಡುಪದಗಳೂ ಹಲವಾರು ವಿಷಯಗಳಲ್ಲಿ ಅನಿಯಮಿತ

ವಾಗಿರುತ್ತವೆ. ಹಾಗಾಗಿ, ಮೇಲೆ ವಿವರಿಸಿರುವ ವಿಭಜನೆಗಳಿಗೆ ಅಪವಾದಗಳನ್ನು ಕಂಡುಹಿಡಿಯುವುದೇನೂ ಕಷ್ಟವಲ್ಲ. ಎಂದರೆ, ಈ ವಿಭಜನೆಗಳು ಭಾಷೆಯ ಒಂದು ‘ಒಲವ’ನ್ನು ಸೂಚಿಸುತ್ತಿವೆಯಲ್ಲದೆ ತಕ್ರಬದ್ಧವಾದ ನಿಯಮವನ್ನಲ್ಲ.

Eke →

5.6 ಸಂಸ್ಕೃತದ ಸಮಾಸಗಳು ಕನ್ನಡದಲ್ಲಿವೆಯೇ?

ಹೊಸಗನ್ನಡದಲ್ಲಿ ಬರುವ ಜೋಡುಪದಗಳನ್ನು ಕನ್ನಡದ್ದೇ ಆದ ವ್ಯಾಕರಣದ ದೃಷ್ಟಿಯಿಂದ ಪರಿಶೀಲಿಸಿದೆವಾದರೆ, ಮೇಲೆ ವಿವರಿಸಿದಂತಹ ಒಳರಚನೆ ಅವುಗಳಲ್ಲಿದೆಯೆಂಬ ವಿಷಯ ಸ್ಪಷ್ಟವಾಗುತ್ತದೆ. ಇದಲ್ಲದೆ ಆ ಒಳರಚನೆಯ ಆಧಾರದ ಮೇಲೆ ಅವನ್ನು ಮುಖ್ಯವಾಗಿ ನಾಮಪದವಿರುವವು, ಕ್ರಿಯಾಪದ ವಿರುವವು ಮತ್ತು ಗುಣಪದವಿರುವವು ಎಂಬ ಮೂರು ರೀತಿಯ ಸಮಾಸಗಳಲ್ಲಿ ವಿಭಜಿಸಲು ಸಾಧ್ಯ ಎಂಬ ವಿಷಯವೂ ಸ್ಪಷ್ಟವಾಗುತ್ತದೆ.
ಈ ವಿಭಜನೆ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಜೋಡುಪದಗಳ ವಿಭಜನೆ ಗಿಂತ ತೀರ ಭಿನ್ನವಾದುದು. ಜೋಡುಪದಗಳ ಅಂಗಗಳಾಗಿ ಬರುವ ಪದಗಳಲ್ಲಿ ಪ್ರಧಾನವಾಗಿರುವ ಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಸಂಸ್ಕೃತದ ವೈಯಾಕರಣಿಗಳು ಅದರ ಜೋಡುಪದಗಳನ್ನು ಮುಖ್ಯವಾಗಿ ತತ್ಪುರುಷ, ದ್ವಂದ್ವ, ಅವ್ಯಯೀಭಾವ ಮತ್ತು ಬಹುವ್ರೀಹಿ ಎಂಬುದಾಗಿ ವಿಂಗಡಿಸಿದ್ದಾರೆ. ಸಂಸ್ಕೃತದ ಈ ವಿಭಜನೆಯನ್ನು ಕನ್ನಡಕ್ಕೂ ಅಳವಡಿಸಲು ಸಾಧ್ಯ ಎಂಬುದು ಕನ್ನಡ ವೈಯಾಕರಣಿಗಳ ಅಭಿಪ್ರಾಯ. ಎಂದರೆ, ಮೇಲಿನ ನಾಲ್ಕು ಸಮಾಸ ಗಳಲ್ಲದೆ ತತ್ಪುರುಷದ ಉಪಭೇದಗಳಾಗಿರುವ ಕರ್ಮಧಾರಯ ಮತ್ತು ದ್ವಿಗು ಎಂಬ ಬೇರೆ ಎರಡು ಸಮಾಸಗಳನ್ನು ಮತ್ತು ಕನ್ನಡದವೇ ಆದ ಕ್ರಿಯಾಸಮಾಸ ಮತ್ತು ಗಮಕಸಮಾಸ ಎಂಬ ಇನ್ನೂ ಎರಡು ಸಮಾಸಗಳನ್ನು ಬಳಸುವುದರ ಮೂಲಕ ಕನ್ನಡ ಸಮಾಸಗಳನ್ನು ವರ್ಣಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯ. ಈ ಅಭಿಪ್ರಾಯ ಸರಿಯೇ ಎಂಬುದನ್ನು ಇಲ್ಲಿ ಪರಿಶೀಲಿಸುವುದು ಅವಶ್ಯ.

Eke →

5.6.1 ವಿಭಜನೆಯ ಆಧಾರ

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಜೋಡುಪದಗಳನ್ನು ಮುಖ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಪದವಾಗಿ ನಿಲ್ಲುತ್ತದೆ ಎಂಬ ವಿಷಯದ ಆಧಾರದ ಮೇಲೆ ತತ್ಪುರುಷ, ಅವ್ಯಯೀಭಾವ, ದ್ವಂದ್ವ ಮತ್ತು ಬಹುವ್ರೀಹಿ ಎಂಬ ನಾಲ್ಕು ಸಮಾಸಗಳಾಗಿ ವಿಂಗಡಿಸಲಾಗಿದೆ.
ಎರಡನೆಯ ಪದ ಪ್ರಧಾನವಾಗಿದೆಯಾದರೆ ತತ್ಪುರುಷ, ಮೊದಲನೆಯ ಪದ ಪ್ರಧಾನವಾಗಿದೆಯಾದರೆ ಅವ್ಯಯೀಭಾವ, ಎರಡು ಪದಗಳೂ ಪ್ರಧಾನವಾಗಿವೆ

ಯಾದರೆ ದ್ವಂದ್ವ ಮತ್ತು ಒಂದೂ ಪ್ರಧಾನವಾಗಿಲ್ಲವಾದರೆ ಬಹುವ್ರೀಹಿ ಎಂದು ಹೇಳುವುದು ಈ ವಿಭಜನೆಯ ಸಾರ.
ಈ ನಾಲ್ಕು ಸಮಾಸಗಳೊಳಗೆ ಬಹುವ್ರೀಹಿ ಸಮಾಸದಲ್ಲಿ ಮಾತ್ರ ಜೋಡು ಪದದ ಅಂಗವಾಗಿ ಬಂದಿರುವ ಪದಗಳಲ್ಲಿ ಯಾವುದೂ ಪ್ರಧಾನಪದವಾಗಿರದೆ ಜೋಡುಪದದ ಹೊರಗಿರುವ ಪದವೊಂದು ಪ್ರಧಾನಪದವಾಗಿರುತ್ತದೆ.
ಆದರೆ ಹೊಸಗನ್ನಡದ ಜೋಡುಪದಗಳನ್ನು ವಿಂಗಡಿಸುವಲ್ಲಿ ಈ ರೀತಿ ಪ್ರಧಾನಪದ ಯಾವುದು ಎಂಬ ವಿಷಯ ಅಷ್ಟೊಂದು ಮುಖ್ಯವಾದ ಪಾತ್ರವನ್ನು ವಹಿಸುವುದಿಲ್ಲ. ಯಾಕೆಂದರೆ, ಕನ್ನಡದ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಪ್ರಧಾನಪದ ಎರಡನೆಯ ಅಂಗವಾಗಿರುತ್ತದೆ.
ಹಾಗಾಗಿ, ಮೇಲಿನ ವಿಷಯದ ಬದಲು ಜೋಡುಪದದ ಮೊದಲನೆಯ ಅಂಗವಾಗಿ ಬರುವ ಪದ ಯಾವ ಪದವಗ್ರಕ್ಕೆ ಸೇರುತ್ತದೆ - ಅದು ನಾಮಪದವೇ, ಕ್ರಿಯಾಪದವೇ, ಅಥವಾ ಗುಣಪದವೇ ಎಂಬ ವಿಷಯ ಕನ್ನಡದ ಜೋಡುಪದಗಳ ವಿಭಜನೆಯಲ್ಲಿ ಹೆಚ್ಚು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಕಾರಣಕ್ಕಾಗಿ, ಕನ್ನಡದ ಜೋಡುಪದಗಳನ್ನು ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಆರು (ಇಲ್ಲವೇ ನಾಲ್ಕು) ಸಮಾಸಗಳಾಗಿ ವಿಂಗಡಿಸಲು ಪ್ರಯತ್ನಿಸಿದಲ್ಲಿ ಗೊಂದಲವಲ್ಲದೆ ಬೇರೇನೂ ಸಿಗಲಾರದು. ಕನ್ನಡದ ಜೋಡುಪದಗಳಲ್ಲಿ ಗುಣಪದವುಳ್ಳವುಗಳನ್ನು ಮಾತ್ರ ಅವುಗಳ ಪ್ರಧಾನಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಎರಡು ಉಪ ವಿಭಾಗಗಳಾಗಿ ವಿಂಗಡಿಸಲು ಸಾಧ್ಯ. ಮೇಲೆ (5.6.3ರಲ್ಲಿ) ಸೂಚಿಸಿರುವ ಹಾಗೆ ಮುಂಬಾಗಿಲು ಮತ್ತು ಮುಂಗೈ ಎಂಬಂತಹ ಜೋಡುಪದಗಳ ನಡುವೆ ಇಂತಹ ವ್ಯತ್ಯಾಸವಿದೆ.
ಹಾಗಾಗಿ ಇವುಗಳಲ್ಲಿ ಮೊದಲನೆಯದನ್ನು (ಮುಂಬಾಗಿಲು ಎಂಬುದನ್ನು) ತತ್ಪುರುಷದ ಹಾಗೆ ಎರಡನೆಯ ಅಂಗ ಪ್ರಧಾನವಾಗಿರುವ ಸಮಾಸವೆಂದೂ ಎರಡನೆಯದನ್ನು (ಮುಂಗೈ ಎಂಬುದನ್ನು) ಬಹುವ್ರೀಹಿಯ ಹಾಗೆ ಯಾವ ಅಂಗವೂ ಪ್ರಧಾನವಾಗಿಲ್ಲದ ಸಮಾಸವೆಂದೂ ಪರಿಗಣಿಸಲು ಸಾಧ್ಯವಿದೆ.
ಆದರೆ ಕನ್ನಡ ವೈಯಾಕರಣಿಗಳು ಇವೆರಡನ್ನೂ ಅವ್ಯಯೀಭಾವದಲ್ಲಿ (ಅವು ಕನ್ನಡದಲ್ಲಿ ಅವ್ಯಯವಲ್ಲವಾದ ಕಾರಣ ಅವಕ್ಕೆ ‘ಅಂಶೀ’ ಎಂಬ ಬೇರೆಯೇ ಒಂದು ಹೆಸರನ್ನು ಕೊಟ್ಟು) ಸೇರಿಸಿದ್ದಾರೆ, ಮತ್ತು ಬಹುವ್ರೀಹಿಗೆ ಬೇರೆ ರೀತಿಯ ಜೋಡುಪದಗಳನ್ನು ಉದಾಹರಣೆಗಳನ್ನಾಗಿ ಕೊಟ್ಟು ಗೊಂದಲ ಇನ್ನೂ ಹೆಚ್ಚುವ ಹಾಗೆ ಮಾಡಿದ್ದಾರೆ. ಕರ್ಮಧಾರಯವನ್ನು ತತ್ಪುರುಷದ ಒಂದು ಉಪಭೇದವೆಂಬುದಾಗಿ ಪರಿಗಣಿ ಸಿರುವುದು ಸಂಸ್ಕೃತದಲ್ಲಿ ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬ ವಿಷಯದ ಆಧಾರದ ಮೇಲೆ ಎಂಬು

ದನ್ನು ಮೇಲೆ (5.5ರಲ್ಲಿ) ನೋಡಿರುವೆವು. ಜೋಡುಪದಗಳ ಅಂಗಗಳನ್ನು ಪ್ರಥಮಾ ವಿಭಕ್ತಿಯ ಮೂಲಕ ಸಂಬಂಧಿಸಲಾಗಿದೆಯಾದರೆ ಅವು ಕರ್ಮ ಧಾರಯಕ್ಕೆ ಉದಾಹರಣೆಗಳಾಗುತ್ತವೆ ಮತ್ತು ಬೇರೆ ವಿಭಕ್ತಿಗಳ ಮೂಲಕ ಸಂಬಂಧಿಸಲಾಗಿದೆಯಾದರೆ ಅವು (ಕರ್ಮಧಾರಯವಲ್ಲದ) ತತ್ಪುರುಷಕ್ಕೆ ಉದಾ ಹರಣೆಗಳಾಗುತ್ತವೆ.
ಆದರೆ ಕನ್ನಡದಲ್ಲಿ ಇಂತಹದೇ ವಿಭಜನೆಯನ್ನು ಬಳಸುವುದು ಕಷ್ಟಸಾಧ್ಯ. ಯಾಕೆಂದರೆ ಮೊದಲನೆಯದಾಗಿ, ಸಂಸ್ಕೃತದಲ್ಲಿ ಕರ್ಮಧಾರಯ ಸಮಾಸದ ಮೂಲಕ ತಯಾರಾಗುವ ಜೋಡುಪದಗಳಲ್ಲಿ ಹೆಚ್ಚಿನವಕ್ಕೂ ಪ್ರತಿಯಾಗಿ ಕನ್ನಡದಲ್ಲಿ ಗುಣಪದವನ್ನೊಳಗೊಂಡಿರುವಂತಹ ಜೋಡುಪದಗಳು ಬರುತ್ತವೆ. ಇದಲ್ಲದೆ, ಇವುಗಳಲ್ಲಿ ಬರುವ ಮೊದಲನೆಯ ಅಂಗ ಅವುಗಳ ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಯಾವ ವಿಭಕ್ತಿ ಪ್ರತ್ಯಯದೊಂದಿಗೂ ಸೇರದೆ ಬರುತ್ತವೆ (5.4 ನೋಡಿ).
ಹಾಗಾಗಿ, ಅವುಗಳನ್ನು ತತ್ಪುರುಷದ ಉಪಭೇದವೆಂದು ಪರಿಗಣಿಸುವ ಬದಲು ಗುಣಪದವಿರುವವುಗಳೆಂಬ ಬೇರೆಯೇ ಒಂದು ವಿಭಾಗದಲ್ಲಿ ಇರಿಸುವ ಅವಶ್ಯಕತೆಯಿದೆ. ಇಂತಹ ಗುಣಪದವಿರುವ ಜೋಡುಪದಗಳು ಕರ್ಮಧಾರಯವೆಂದೆನಿಸಲು (ಇಲ್ಲವೇ ತತ್ಪುರುಷದ ಒಂದು ಉಪವಿಭಾಗವೆಂದೆನಿಸಲು) ಅವುಗಳ ಎರಡು ಅಂಗಗಳೂ ಒಂದೇ ವಿಭಕ್ತಿಯಲ್ಲಿ ಬರುವುದು ಅವಶ್ಯ. ಈ ಅವಶ್ಯಕತೆಯನ್ನು ಪೂರೈಸುವುದಕ್ಕಾಗಿ ಕನ್ನಡದ ವೈಯಾಕರಣಿಗಳು ಇಂತಹ ಜೋಡುಪದಳಿಗೆ ಒಳನುಡಿಯನ್ನು ಹೇಳುವಾಗ ಗುಣಪದಗಳನ್ನು ಹಾಗೆಯೇ ಬಳಸದೆ, ಅವುಗಳ ನಾಮರೂಪದಲ್ಲಿ ಬಳಸುತ್ತಾರೆ (ಹೊಸದು ಕನ್ನಡ > ಹೊಸಗನ್ನಡ, ಕರಿದು ಮುಗಿಲು > ಕರ್ಮುಗಿಲು) ಎಂಬುದನ್ನು ಮೇಲೆ ನೋಡಿದ್ದೇವೆ. ಆದರೆ ಇಂತಹ ಒಳನುಡಿಗಳು ಕನ್ನಡದಲ್ಲಿ ‘ವಾಕ್ಯ’ (ಇಲ್ಲವೇ ವಾಕ್ಯಾಂಶ) ಗಳಾಗಲಾರವು. ಉದಾಹರಣೆಗಾಗಿ ಹೊಸದು ಎಂಬುದು ಕನ್ನಡದಲ್ಲಿ ಹೊಸ ಗುಣಪದವನ್ನು ಕ್ರಿಯಾಪದದ ಜಾಗದಲ್ಲಿ ಎಂದರೆ ವಾಕ್ಯದ ಕೊನೆಯಲ್ಲಿ ಇರಿಸ ಬೇಕಾದಾಗ ಬಳಸುವ ರೂಪ (ಈ ಪುಸ್ತಕ ಹೊಸದು ಎಂಬುದಾಗಿ). ಅದನ್ನು ಹೊಸದಕ್ಕೆ, ಹೊಸದರ ಎಂಬಂತಹ ವಿಭಕ್ತಿ ರೂಪದಲ್ಲೂ ಬಳಸಲು ಸಾಧ್ಯವಿದೆ.
ಆದರೆ, ನಾಮಪದದ ಮುಂದೆ ಇರಿಸಿ ಹೊಸದು ಪುಸ್ತಕ ಎಂಬುದಾಗಿ ಹೇಳಿದರೆ ಅದಕ್ಕೆ ಹೊಸ ಪುಸ್ತಕ ಎಂಬುದಕ್ಕಿಂತ ತೀರ ಭಿನ್ನವಾದ ಅರ್ಥ ಬರುತ್ತದೆ. ಇದಲ್ಲದೆ, *ಹೊಸದರ ಪುಸ್ತಕ ಎಂಬಂತಹ ಬಳಕೆಯೂ ಕನ್ನಡದಲ್ಲಿ ಇಲ್ಲವಾದುದರಿಂದ, ಈ ಗುಣಪದವುಳ್ಳ ಜೋಡುಪದಗಳನ್ನು

ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳನ್ನು ಜೋಡಿಸುವುದರ ಮೂಲಕ ಪಡೆಯುವುದು ಕಷ್ಟ. ಅಂಗಗಳೆರಡು ವಿಶೇಷಣ-ವಿಶೇಷ್ಯ ಸಂಬಂಧದಿಂದ ಸೇರಿಕೊಂಡಿವೆಯಾದರೆ ಅಂತಹ ಜೋಡುಪದವನ್ನು ಕರ್ಮಧಾರಯವೆಂದು ಕರೆಯಬಹುದೆಂಬುದಾಗಿ ಬೇರೆಯೇ ಒಂದು ವಿಷಯವನ್ನು ಕೆಲವರು ವೈಯಾಕರಣಿಗಳು ತತ್ಪುರುಷದ ವಿಭಜನೆಗೆ ಆಧಾರವಾಗಿ ಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಅಂತಹ ವಿಭಜನೆಯ ವ್ಯಾಪ್ತಿಯಲ್ಲಿ ಕನ್ನಡದ ಗುಣಪದವಿರುವ ಜೋಡುಪದಗಳಲ್ಲಿ ಕೆಲವು ಮಾತ್ರ ಬರಬಲ್ಲುವಲ್ಲದೆ ಎಲ್ಲವೂ ಬರಲಾರವು.
ಉದಾಹರಣೆಗಾಗಿ, ಕನ್ನಡದ ನಡುಹಗಲು, ಚಿಕ್ಕಮ್ಮ ಮೊದಲಾದವುಗಳು ಗುಣಪದವಿರುವ ಜೋಡುಪದಗಳಾಗಿವೆ. ಆದರೆ ಅವುಗಳ ಅಂಗಗಳಾಗಿ ಬಂದಿರುವ ನಾಮಪದಗಳು (ಹಗಲು, ಅಮ್ಮ ಮೊದಲಾದವು) ಅವುಗಳಲ್ಲಿ ಬಂದಿರುವ ಗುಣಪದಗಳ (ನಡು, ಚಿಕ್ಕ ಮೊದಲಾದವುಗಳ) ವಿಶೇಷ್ಯಗಳಲ್ಲ. ಈ ಜೋಡುಪದಗಳ ಅಂಗಗಳಾಗಿಲ್ಲದಂತಹ ಭಾಗ, ಹೆಂಗಸು ಮೊದಲಾದ ಪದಗಳು ಅವುಗಳ ವಿಶೇಷ್ಯಗಳು (ಹಗಲಿನ ನಡುಭಾಗ > ನಡುಹಗಲು). ಹಾಗಾಗಿ ಅಂತಹ ಜೋಡುಪದಗಳಿಗೆ ವಿಶೇಷಣ-ವಿಶೇಷ್ಯ ಸಂಬಂಧ ಆಧಾರ ವಾಗಲಾರದು.
ಇನ್ನೊಂದು ವಿಷಯವೇನೆಂದರೆ, ಸಂಸ್ಕೃತದಲ್ಲಿ ಎರಡು ನಾಮಪದಗಳು ಅಂಗಗಳಾಗಿ ಬಂದಿರುವ ಚಂದ್ರಮುಖಂ, ಗೋಗಭ್ರಿಣೀ ಮೊದಲಾದ ಜೋಡುಪದಗಳಲ್ಲೂ ಕರ್ಮಧಾರಯ ಸಮಾಸವಿದೆಯೆಂದು ಹೇಳಬೇಕಾಗುತ್ತದೆ. ಈ ಪದಗಳಲ್ಲೂ ಪ್ರಥಮಾ ವಿಭಕ್ತಿಯ ಮೂಲಕ ಎರಡು ಅಂಗಗಳನ್ನು ಸಂಬಂಧಿಸಲಾಗಿದೆಯೆಂಬುದೇ ಇದಕ್ಕೆ ಕಾರಣ.
ಆದರೆ ಕನ್ನಡದಲ್ಲಿ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ರಚಿಸಿದ ಜೋಡುಪದಗಳು ಗುಣಪದವೊಂದನ್ನು ನಾಮಪದದೊಂದಿಗೆ ಸೇರಿಸಿ ರಚಿಸಿದ ಜೋಡುಪದಗಳಿಗಿಂತ ತೀರಾ ಭಿನ್ನವಾಗಿರುತ್ತವೆ (3.2-4 ನೋಡಿ). ಹಾಗಾಗಿ,
ಅಂತಹ ವಿಭಜನೆ ಕನ್ನಡದ ಮಟ್ಟಿಗೆ ಸಮಪ್ರಕವಾಗಲಾರದು. ತತ್ಪುರುಷ ಸಮಾಸದಲ್ಲಿ ಮೊದಲನೆಯ ಅಂಗವಾಗಿ ಬರುವ ಪದ ಎಣಿಕೆಯನ್ನು ಸೂಚಿಸುವ ಪದವಾಗಿದೆಯಾದರೆ ಅದನ್ನು ದ್ವಿಗು ಎಂಬ ಬೇರೊಂದು ಉಪವಿಭಾಗದಲ್ಲಿ ಇರಿಸುವ ಕ್ರಮ ಸಂಸ್ಕೃತದಲ್ಲಿ ರೂಢಿಯಲ್ಲಿದೆ. ಕನ್ನಡದಲ್ಲಿ ಇಂತಹ ಜೋಡುಪದಗಳು ತತ್ಪುರುಷದ ಅಂಗವಾಗಿ ಬರುವ ಬದಲು ಕರ್ಮಧಾರಯದ (ಎಂದರೆ ಗುಣಪದವಿರುವ ಸಮಾಸದ) ಅಂಗವಾಗಿ ಬರುತ್ತವೆ. ಯಾಕೆಂದರೆ, ಕನ್ನಡದಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ನಾಮಪದಗಳೊಂದಿಗೆ ಬರುವಾಗ ವಿಭಕ್ತಿ ಪ್ರತ್ಯಯವಿಲ್ಲದೆ ಬರುತ್ತವೆ.

ಉದಾಹರಣೆಗಾಗಿ, ಕನ್ನಡದಲ್ಲಿ ಮೂರು ಪುಸ್ತಕಗಳಿಂದ ಎನ್ನುತ್ತೇವಲ್ಲದೆ  *ಮೂರರಿಂದ  ಪುಸ್ತಕಗಳಿಂದ  ಎಂದು  ಹೇಳುವುದಿಲ್ಲ;  ಆದರೆ  ಸಂಸ್ಕೃತದಲ್ಲಿ  ತ್ರಿಭ್ಯಃ  ಪುಸ್ತಕೇಭ್ಯಃ  ‘ಮೂರು  ಪುಸ್ತಕಗಳಿಂದ’  ಎಂಬುದಾಗಿ  ಭ್ಯಃ  ವಿಭಕ್ತಿ  ಪ್ರತ್ಯಯವನ್ನು  ಪುಸ್ತಕ  ನಾಮಪದಕ್ಕೆ  ಮಾತ್ರವಲ್ಲದೆ,  ತ್ರಿ  ಎಣಿಕೆಯ  ಪದಕ್ಕೂ  ಸೇರಿಸಿ ಹೇಳಲಾಗುತ್ತದೆ (10.3 ನೋಡಿ).     
ಈ  ರೀತಿ  ಜೋಡುಪದಗಳ  ವಿಭಜನೆಗೆ  ಕನ್ನಡದಲ್ಲಿ  ಆಧಾರವಾಗಬಲ್ಲ  ವಿಷಯಗಳು  ಸಂಸ್ಕೃತದಲ್ಲಿ  ಆಧಾರವಾಗಬಲ್ಲ  ವಿಷಯಗಳಿಗಿಂತ  ತೀರಾ  ಭಿನ್ನ  ವಾಗಿರುವುವಾದ  ಕಾರಣ,  ಜೋಡುಪದಗಳ  (ಸಮಾಸಗಳ)  ವಿಭಜನೆಯನ್ನು  ಸಂಸ್ಕೃತದಿಂದ ಕನ್ನಡಕ್ಕೆ ಹಾಗೆಯೇ ತಂದು ಅಳವಡಿಸಲು ಸಾಧ್ಯವಾಗದು. 

Eke →

5.6.2 ಒಳನುಡಿಗಳ ಬಳಕೆ

ಜೋಡುಪದಗಳ ಒಳರಚನೆ ಎಂತಹದು ಎಂಬುದನ್ನು ಮತ್ತು ಅವುಗಳ ಅಂಗಗಳಾಗಿ ಬಂದಿರುವ ಪದಗಳ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಅವುಗಳಿಗೆ ಎಂತಹ ಒಳನುಡಿ (ವಿಗ್ರಹವಾಕ್ಯ)ಗಳನ್ನು ಕೊಡಬೇಕಾಗುತ್ತದೆ ಅಥವಾ ಕೊಡಲು ಸಾಧ್ಯ ಎಂಬ ವಿಷಯದ ಆಧಾರದ ಮೇಲೆ ನಿರ್ಧರಿಸ ಬೇಕಾಗುತ್ತದೆ.
ಉದಾಹರಣೆಗಾಗಿ, ಮಿಂಚುಹುಳ ಜೋಡುಪದಕ್ಕೆ ಮಿಂಚುವ ಹುಳ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು ಅದನ್ನು ಈ ಹುಳ ಮಿಂಚುತ್ತದೆ ಎಂಬ ವಾಕ್ಯದಿಂದ ಪಡೆಯಲು ಸಾಧ್ಯವಿದೆ. ಈ ವಾಕ್ಯದಲ್ಲಿ ಜೋಡುಪದದ ಅಂಗಗಳಾಗಿ ಬಂದಿರುವ ಮಿಂಚು ಮತ್ತು ಹುಳ ಎಂಬ ಪದಗಳು ಅನುಕ್ರಮವಾಗಿ ಒಂದು ಘಟನೆಯನ್ನು ಸೂಚಿಸುವ ಕ್ರಿಯಾಪದ ಮತ್ತು ಆ ಘಟನೆಯನ್ನು ನಡೆಸುವ ಜಂತುಗಳಾಗಿವೆ.
ಇದೇ ರೀತಿಯಲ್ಲಿ ಕಣ್ಣುಸನ್ನೆ ಜೋಡುಪದಕ್ಕೆ ಕಣ್ಣಿನಿಂದ ಮಾಡಿದ ಸನ್ನೆ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರ ಅಂಗಗಳಾಗಿ ಬಂದಿರುವ ಕಣ್ಣು ಮತ್ತು ಸನ್ನೆ ಎಂಬ ಎರಡು ನಾಮಪದಗಳ ನಡುವೆ ತೃತೀಯಾ ವಿಭಕ್ತಿಯ ಮೂಲಕ ಸೂಚಿತವಾಗುವ ಕರಣ-ಕಾರ್ಯ ಸಂಬಂಧವಿದೆಯೆಂದು ಹೇಳಬಹುದು. ಸಾಮಾನ್ಯವಾಗಿ ಜೋಡುಪದಗಳ ಒಳನುಡಿಯನ್ನು ಅವುಗಳ ಅರ್ಥಕ್ಕನು ಸಾರವಾಗಿ ಕೊಡುವುದು ರೂಢಿ. ಆದರೆ ಕೆಲವೊಮ್ಮೆ ಅವುಗಳ ಅರ್ಥಕ್ಕೂ ಅವುಗಳ ಅಂಗಗಳಾಗಿ ಬಂದಿರುವ ಪದಗಳಿಗೂ ಹೊಂದಿಕೆಯಾಗದಿರಲು ಸಾಧ್ಯವಿದೆ. ಅಂತಹ ಸಂದಭ್ರಗಳಲ್ಲಿ ಒಂದು ಜೋಡುಪದದ ಒಳನುಡಿ ಅದರ ಅರ್ಥವನ್ನು ಸೂಚಿಸದಿರಲು ಸಾಧ್ಯವಿದೆ.

ಉದಾಹರಣೆಗಾಗಿ,  ಹೊಸಮನೆ  ಜೋಡುಪದ  ಬಹಳ  ಹಳೆಯದಾಗಿರುವ  ಒಂದು  ಮನೆಯನ್ನು  ಗುರುತಿಸಲು  ಸಾಧ್ಯವಿದೆಯಾದರೂ  ಆ  ಪದಕ್ಕೆ  ಒಳನುಡಿ  ಯನ್ನು  ಕೊಡುವಾಗ  ಹೊಸ  ಎಂಬುದರ  ಬದಲು  ಹಳೆ  ಎಂಬ  ಗುಣಪದವನ್ನು  ಬಳಸುವುದು ಸರಿಯಾಗದು.  
ನಿಜಕ್ಕೂ  ಜೋಡುಪದವೊಂದಕ್ಕೆ  ಎರಡು  ರೀತಿಯ  ಒಳನುಡಿಗಳನ್ನು  ಕೊಡಲು ಸಾಧ್ಯವಿದೆ. ಆ ಪದವನ್ನು ಮೊದಲ ಬಾರಿಗೆ ಭಾಷೆಯಲ್ಲಿ ಬಳಸಿದಾಗ  ಅದಕ್ಕೆ  ಯಾವ  ಅರ್ಥ  ಇದ್ದಿರಬಹುದು  ಎಂಬುದನ್ನು  ಸೂಚಿಸುವ  ಒಳನುಡಿ  ಯೊಂದು,  ಮತ್ತು  ರೂಢಿಗೆ  ಬಂದ  ಮೇಲೆ  ಅದು  ಗುರುತಿಸುವ  ವ್ಯಕ್ತಿ  ಇಲ್ಲವೇ  ವಸ್ತುವಿನಲ್ಲಿ ಬದಲಾವಣೆಗಳಾದುದರಿಂದಾಗಿ ಅದರ ಅರ್ಥದಲ್ಲೂ ಮಾಪ್ರಾಟು  ಗಳಾಗಿವೆಯಾದಲ್ಲಿ, ಅದರ ಈಗಿನ ಅರ್ಥವೇನೆಂಬುದನ್ನು ಸೂಚಿಸುವ ಒಳನುಡಿ  ಯಿನ್ನೊಂದು.  
ಸಾಮಾನ್ಯವಾಗಿ  ಜೋಡುಪದದ  ಅಂಗಗಳನ್ನು  ಅದರ  ಈಗಿನ  ಅರ್ಥಕ್ಕೆ  ಹೊಂದಿಕೆಯಾಗುವ  ಹಾಗೆ  ಅವುಗಳಲ್ಲಿ  ಒಂದನ್ನು  ಇನ್ನೊಂದರೊಂದಿಗೆ  ಸಂಬಂಧಿಸುವಂತಹ  ಒಳನುಡಿ  ವೈಯಾಕರಣಿಗಳಿಗೆ  ಒಪ್ಪಿಗೆಯಾಗುತ್ತದೆ.  ಇದು  ಈ ಎರಡು ರೀತಿಯ ಒಳನುಡಿಗಳ ಸಮ್ಮಿಳನವಾಗಿರಲೂ ಸಾಧ್ಯವಿದೆ. 
ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಕಾಣಿಸುವ ಕೆಲವು ಜೋಡುಪದಗಳು  ಮೇಲ್ನೋಟಕ್ಕೆ  ಒಂದೇ  ರೀತಿಯವಾಗಿ  ಕಂಡುಬಂದರೂ  ಅವುಗಳ  ಒಳನುಡಿ  ಗಳನ್ನು  ಪರಿಶೀಲಿಸಿದಾಗ  ಅವು  ಒಂದಕ್ಕಿಂತ  ಒಂದು  ತೀರಾ  ಭಿನ್ನವಾಗಿರುವುದು  ಕಂಡುಬರುತ್ತದೆ.  ಜೋಡುಪದಗಳ  ವಿಭಜನೆಗೆ  ಅವುಗಳ  ಒಳನುಡಿ  ಒಂದು  ಕಡೆಗಣಿಸಲು  ಮುಖ್ಯವಾದ  ಆಧಾರವಾಗುವುದರಿಂದ  ಈ  ವ್ಯತ್ಯಾಸವನ್ನು  ಸಾಧ್ಯವಿಲ್ಲ.  
ಸಂಸ್ಕೃತದಿಂದ  ಕನ್ನಡಕ್ಕೆ  ಎರವಲಾಗಿ  ಬಂದ  ಜೋಡುಪದಗಳಿಗೂ  ಕನ್ನಡದಲ್ಲಿ ಕೊಡಬೇಕಾಗುವ ಒಳನುಡಿ ಸಂಸ್ಕೃತದಲ್ಲಿ ಕೊಡುವ ಒಳನುಡಿಗಿಂತ  ಭಿನ್ನವಾಗಿರಲು ಸಾಧ್ಯ ಎಂಬುದನ್ನು ಮುಂದೆ (5.9ರಲ್ಲಿ) ನೋಡಲಿರುವೆವು. 

Eke →

5.7 ಕನ್ನಡ ವೈಯಾಕರಣಿಗಳು ಹೇಳುವ ಸಮಾಸಗಳು

ಸಂಸ್ಕೃತ ಜೋಡುಪದಗಳ ವಿಭಜನೆಯನ್ನು ಕನ್ನಡಕ್ಕೆ ಹಾಗೆಯೇ ಅಳವಡಿಸಲು ಕನ್ನಡ ವೈಯಾಕರಣಿಗಳು ಪ್ರಯತ್ನಿಸಿದ್ದಾರೆಂದು ಮೇಲೆ ಹೇಳಿದ್ದೆ. ಈ ಪ್ರಯತ್ನ ಕನ್ನಡದ ಅತೀ ಪ್ರಾಚೀನ ವ್ಯಾಕರಣ ಗ್ರಂಥಗಳ ಕಾಲದಿಂದಲೂ ನಡೆದು ಬಂದಿದೆ. ಪ್ರಾಕೃತ, ಅಪಭ್ರಂಶ, ಪಾಲಿ ಮೊದಲಾದವುಗಳ ಹಾಗೆ ಕನ್ನಡವೂ ಸಂಸ್ಕೃತದ ಒಂದು (ವಿಕೃತ) ರೂಪವೆಂಬ ತಪ್ಪು ಕಲ್ಪನೆ ಇದಕ್ಕೆ ಆಧಾರ ವಾಗಿದ್ದಿರಬೇಕು.

ಈ  ಎರಡು  ಭಾಷೆಗಳಲ್ಲಿ  ಬಳಕೆಯಾಗುವ  ಜೋಡುಪದಗಳ  ಒಳರಚನೆ  ಮೇಲೆ  ವಿವರಿಸಿದ  ಹಾಗೆ  ಒಂದಕ್ಕಿಂತ  ಒಂದು  ತೀರಾ  ಭಿನ್ನವಾಗಿದೆಯಾದ  ಕಾರಣ,  ಈ  ಪ್ರಯತ್ನ  ಸಫಲವಾಗುವುದು  ಅಸಂಭವವೇ.  ಹಾಗಿದ್ದರೂ  ನಮ್ಮ  ವೈಯಾಕರಣಿಗಳು ಅದನ್ನು ಇವತ್ತಿಗೂ, ಎಂದರೆ ಈ ಎರಡು ಭಾಷೆಗಳು ಬೇರೆ  ಬೇರೆ  ಭಾಷಾಕುಟುಂಬಗಳಿಗೆ  ಸೇರಿದವುಗಳೆಂಬ  ವಿಷಯ  ತಿಳಿದಮೇಲೂ,  ಹಾಗೆಯೇ  ಉಳಿಸಿಕೊಂಡು  ಬಂದಿರುವುದು  ನಿಜಕ್ಕೂ  ಆಶ್ಚರ್ಯವನ್ನು  ತರುವ 
ಸಂಸ್ಕೃತದ  ಆರು  ಸಮಾಸಗಳನ್ನು  (ತತ್ಪುರುಷ,  ಅವ್ಯಯೀಭಾವ,  ದ್ವಂದ್ವ  ಮತ್ತು ಬಹುವ್ರೀಹಿ ಎಂಬ ನಾಲ್ಕು ಮುಖ್ಯ ಸಮಾಸಗಳನ್ನು ಮತ್ತು ಅವುಗಳಲ್ಲಿ  ಒಂದಾದ  ತತ್ಪುರುಷದ  ಎರಡು  ಉಪಭೇದಗಳಾಗಿರುವ  ಕರ್ಮಧಾರಯ  ಮತ್ತು  ದ್ವಿಗು ಎಂಬವುಗಳನ್ನು) ಕನ್ನಡಕ್ಕೆ ಅಳವಡಿಸುವುದರಲ್ಲಿ ಎಂತಹ ತೊಂದರೆಗಳೆಲ್ಲ  ಇವೆ ಎಂಬುದನ್ನು, ಮತ್ತು ಅವುಗಳಿಗಿಂತ ಭಿನ್ನವಾದ ಹಾಗೂ ಕನ್ನಡದವೇ ಆದ  ಕನ್ನಡದಲ್ಲಿವೆಯುಂದು  ಕ್ರಿಯಾಸಮಾಸ  ಸಾಧಿಸುವುದು ಹೇಗೆ ಅಸಾಧ್ಯ ಎಂಬುದನ್ನು ಕೆಳಗೆ ವಿವರಿಸಲಾಗಿದೆ. ಗಮಕಸಮಾಸಗಳೆಂಬವು ಮತ್ತು

Eke →

5.7.1 ತತ್ಪುರುಷ

ಸಂಸ್ಕೃತದಲ್ಲಿ ರಾಜೇಂದ್ರ, ಇಂದ್ರಧನು ಮೊದಲಾದ ಜೋಡುಪದಗಳನ್ನು ‘ತತ್ಪುರುಷ’ವೆಂಬ ಹೆಸರಿನಿಂದ ಕರೆಯಲಾಗುತ್ತದೆ. (5.5)ರಲ್ಲಿ ವಿವರಿಸಿದ ಹಾಗೆ, ಈ ಜೋಡುಪದಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವಾಗಿದೆ ಎಂಬ ವಿಷಯ ಇದಕ್ಕೆ ಆಧಾರವಾಗಿದೆ. ಆದರೆ ಕನ್ನಡದ ಜೋಡುಪದಗಳನ್ನು ಈ ವಿಷಯದ ಆಧಾರದ ಮೇಲೆ ಹೆಸರಿಸುವುದರಿಂದ ಯಾವ ಪ್ರಯೋಜನವೂ ದೊರಕಲಾರದು.
ಯಾಕೆಂದರೆ, ಕನ್ನಡದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜೋಡುಪದಗಳಲ್ಲೂ ಎರಡನೆಯ ಅಂಗ ಪ್ರಧಾನ ಪದವಾಗಿರುತ್ತದೆ (5.6 ನೋಡಿ). ಹಾಗಾಗಿ, ಮೇಲಿನ ವಿಷಯವನ್ನು ಬಳಸಿದಲ್ಲಿ ಕನ್ನಡದ ಎಲ್ಲಾ ಜೋಡುಪದಗಳೂ ತತ್ಪುರುಷವೆಂಬ ಒಂದೇ ಸಮಾಸಕ್ಕೆ ಉದಾಹರಣೆಗಳಾಗಬಲ್ಲುವು. ಎಂದರೆ, ಮೇಲಿನ ವಿಷಯವನ್ನು ಬಳಸಿದಲ್ಲಿ ನಮಗೆ ಕನ್ನಡದಲ್ಲಿ ಜೋಡುಪದಗಳ ವಿಭಜನೆಯೇ ಸಿಗುವುದಿಲ್ಲ.
ಉದಾಹರಣೆಗಾಗಿ, ಸಂಸ್ಕೃತದ ಅವ್ಯಯೀಭಾವಕ್ಕೆ ಸಮನಾಗಿರುವ (‘ಅಂಶಿ’ ಎಂಬ ಹೆಸರಿನ) ಸಮಾಸಕ್ಕೆ ಕನ್ನಡ ವ್ಯಾಕರಣಗಳಲ್ಲಿ ಉದಾಹರಣೆಗಳನ್ನಾಗಿ ಕೊಡುವ ಕೆಳದುಟಿ (ಕೆಳಗಿನ ತುಟಿ) ಹೊರಬಾಗಿಲು (ಹೊರಗಿನ ಬಾಗಿಲು) ಮೊದಲಾದವುಗಳಲ್ಲಿ ಎರಡನೆಯ ಅಂಗ ಪ್ರಧಾನ ಪದವೆನ್ನಲು ಯಾವ ತೊಂದರೆಯೂ ಇಲ್ಲ.

ಇದೇ  ರೀತಿಯಲ್ಲಿ,  ಕನ್ನಡದ  ವೈಯಾಕರಣಿಗಳು  ಬಹುವ್ರೀಹಿ  ಸಮಾಸಕ್ಕೆ  ಉದಾಹರಣೆಗಳನ್ನಾಗಿ ಕೊಡುವ ಹಣೆಗಣ್ಣ, ಚಲವಾದಿ ಮೊದಲಾದವುಗಳಲ್ಲೂ  ಕೆಳಗೆ (5.8.6)ರಲ್ಲಿ ವಿವರಿಸಿರುವ ಹಾಗೆ ಎರಡನೆಯ ಅಂಗವಾಗಿ ಬರುವ ಪದ  ಪ್ರಧಾನವೆಂದು ವಾದಿಸಲು ಸಾಧ್ಯವಿದೆ. 
ಇದಲ್ಲದೆ, ಕನ್ನಡ ವೈಯಾಕರಣಿಗಳು ಗಮಕ, ಕ್ರಿಯಾಸಮಾಸ ಮೊದಲಾದ  ಇತರ  ಹೆಸರುಗಳಿಂದ  ಕರೆಯುವ  ಜೋಡುಪದ  ಇಲ್ಲವೆ  ಪದಕಂತೆಗಳಲ್ಲೂ  ಎರಡನೆಯ ಪದವೇ ಪ್ರಧಾನ ಪದವಾಗಿರುತ್ತದೆ. 
ಹಾಗಾಗಿ,  ಕನ್ನಡದ  ಮಟ್ಟಿಗೆ  ತತ್ಪುರುಷ  ಸಮಾಸ  ಎಂಬುದು  ಒಂದು  ಅನವಶ್ಯಕವಾದ ಕಲ್ಪನೆ.  

Eke →

5.7.2 ಕರ್ಮಧಾರಯ

ಕನ್ನಡ ವ್ಯಾಕರಣಗಳಲ್ಲಿ ಕರ್ಮಧಾರಯ ಸಮಾಸಕ್ಕೆ ಕೊಡುವ ಉದಾಹರಣೆ ಗಳಲ್ಲಿ ಹೆಚ್ಚಿನವೂ ಜೋಡುಪದಗಳೇ ಅಲ್ಲ. ಗುಣಪದಗಳನ್ನು ಕನ್ನಡದಲ್ಲಿ ಹಾಗೆಯೇ ಅವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆ ನಾಮಪದಗಳೊಂದಿಗೆ ಬಳಸುವ ಕ್ರಮವಿದೆಯಾದ ಕಾರಣ, ಸಂಸ್ಕೃತದ ಜೋಡುಪದಗಳೊಂದಿಗೆ ಹೋಲಿಸಿದಾಗ ಅವು ಜೋಡುಪದಗಳ ಹಾಗೆ ಕಾಣಿಸುತ್ತವೆ. ಆದರೆ ನಿಜಕ್ಕೂ ಕನ್ನಡದಲ್ಲಿ ಅವು ಪದಕಂತೆಗಳಲ್ಲದೆ ಜೋಡುಪದಗಳಲ್ಲವೆಂಬುದನ್ನು ಮೇಲೆ (5.3)ರಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ. ಕರ್ಮಧಾರಯಕ್ಕೆ ಕೊಟ್ಟಿರುವ ಬೇರೆ ಕೆಲವು ಜೋಡುಪದಗಳು (ಕಿರುಗೆಜ್ಜೆ, ಎಳನೀರು, ಹಳಗನ್ನಡ, ಬೆಳ್ಗಲ್ಲು ಮೊದಲಾದವುಗಳು) ಕನ್ನಡದಲ್ಲಿ ಜೋಡು ಪದಗಳಾಗಿವೆಯಾದರೂ ಅವನ್ನು ತತ್ಪುರುಷದ ಉಪವಿಭಾಗವೆಂದು ಹೇಳಲು ಸಾಧ್ಯವಾಗದು. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಈ ಜೋಡುಪದಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವಲ್ಲ. ಅದು ಗುಣಪದ ವೆಂಬ ಬೇರೆಯೇ ಒಂದು ಪದವಗ್ರಕ್ಕೆ ಸೇರುವ ಪದ.
ಹಾಗಾಗಿ, ಈ ಜೋಡುಪದಗಳು ಕರ್ಮಧಾರ ಸಮಾಸಕ್ಕೆ ಉದಾಹರಣೆ ಗಳೆಂದು ಹೇಳುವುದಿದ್ದಲ್ಲಿ, ಅದು ಸಂಸ್ಕೃತದ ಹಾಗೆ ತತ್ಪುರುಷದ ಅಂಗ ವಾಗಿರದೆ, ಬೇರೆಯೇ ಒಂದು ಸಮಾಸವಾಗಿದೆಯುಂದು ವಾದಿಸಬೇಕಾಗುತ್ತದೆ. ಮೇಲೆ ಕೊಟ್ಟಿರುವ ಗುಣಪದವಿರುವ ಜೋಡುಪದಗಳನ್ನು ಅವುಗಳ ಅಂಗ ಗಳೆರಡು ಒಂದೇ ವಿಭಕ್ತಿಯಲ್ಲಿಲ್ಲದಿದ್ದರೂ ಕರ್ಮಧಾರಯವೆಂದು ಕರೆದಲ್ಲಿ ಬೇರೊಂದು ತೊಂದರೆ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ, ಅಂಗಗಳಾಗಿ ಬಂದಿರುವ ಪದಗಳಲ್ಲಿ ಎರಡೂ ಒಂದೇ ವಿಭಕ್ತಿಯಲ್ಲಿರುವಂತಹ ಎರಡು ನಾಮಪದಗಳನ್ನು ಸೇರಿಸಿ ರಚಿಸಿದ ಜೋಡುಪದಗಳೂ ಕನ್ನಡದಲ್ಲಿ ಕೆಲವಿವೆ.

ಉದಾಹರಣೆಗಾಗಿ ಅರಮನೆ (ಅರಸನು ಇರುವ ಮನೆ), ಕಾಲ್ಮಣೆ (ಕಾಲು  ಇರಿಸುವ  ಮಣೆ)  ಮೊದಲಾದ  ಜೋಡುಪದಗಳಲ್ಲಿ  ಒಂದೇ  ವಿಭಕ್ತಿಯಲ್ಲಿರುವ  ಎರಡು ನಾಮಪದಗಳು ಒಟ್ಟಿಗೆ ಸೇರಿವೆ. ಆದರೆ ಇವುಗಳ ಮೊದಲನೆಯ ಪದ  ಗುಣಪದವಲ್ಲವಾದ  ಕಾರಣ,  ಮೇಲೆ  ಸೂಚಿಸಿದ  ಅಭಿಪ್ರಾಯದ  ಮೇರೆಗೆ  ಅವು  ಕರ್ಮಧಾರಯವಾಗಲಾರವು.  ಅಂತೂ  ಕರ್ಮಧಾರಯವನ್ನು  ಸಂಸ್ಕೃತದ  ಹಾಗೆಯೇ ಕನ್ನಡಕ್ಕೆ ಅಳವಡಿಸುವುದು ಅಸಾಧ್ಯ.       
ಮೇಲೆ  (5.5.2)ನೇ  ವಿಭಾಗದಲ್ಲಿ  ಕ್ರಿಯಾಪದವಿರುವ  ಜೋಡುಪದ  ಗಳೆಂದು  ಕರೆದಿರುವ  ಹುರಿಗಡಲೆ,  ಸಿಡಿಮದ್ದು,  ಕಡೆಗೋಲು  ಎಂಬಂತಹ  ಕರ್ಮಧಾರಯವೆಂದು  ಕೆಲವರು  ವೈಯಾಕರಣಿಗಳು  ಜೋಡುಪದಗಳನ್ನು  ಪರಿಗಣಿಸಿದ್ದಾರೆ  (ಶ್ರೀಕಂಠಯ್ಯ  1952  ನೋಡಿ).  ಇಂತಹ  ಜೋಡುಪದಗಳಿಗೆ  ಹುರಿದ  ಕಡಲೆ,  ಸಿಡಿಯುವ  ಮದ್ದು,  ಕಡೆಯುವ  ಕೋಲು  ಎಂಬುದಾಗಿ  ಕ್ರಿಯಾ  ಪದದ  ಕೃದಂತರೂಪವೊಂದನ್ನು  ಬಳಸಿರುವ  ಒಳನುಡಿ(ವಿಗ್ರಹವಾಕ್ಯ)ವನ್ನು  ಕೊಡುವುದರ ಮೂಲಕ ಇದನ್ನು ಸಮರ್ಥಿಸಲಾಗಿದೆ.  
ಆದರೆ  ಇಲ್ಲೂ  ಜೋಡುಪದದ  ಅಂಗಗಳಾಗಿ  ಬಂದಿರುವ  ಪದಗಳಲ್ಲಿ  ಮೊದಲನೆಯದು  ನಾಮಪದವಲ್ಲ  (ಒಳನುಡಿಯಲ್ಲೂ  ಮೊದಲನೆಯದು)  ಎಂಬುದನ್ನು  ಗಮನಿಸಬೇಕು.  ಸಂಸ್ಕೃತದಲ್ಲಿ  ಕೃದಂತಗಳು  ನಾಮಪದಗಳಾಗಿ  ಬಳಕೆಯಾಗುತ್ತವೆ.  ಯಾಕೆಂದರೆ,  ಅವಕ್ಕೆ  ವಿಭಕ್ತಿ  ಪ್ರತ್ಯಯಗಳನ್ನು  ಸೇರಿಸಲು  ಸಾಧ್ಯವಿದೆ.  ಆದರೆ  ಕನ್ನಡದಲ್ಲಿ  ಕೃದಂತಗಳು  ನಾಮಪದಗಳಲ್ಲ;  ಅವು  ಗುಣಪದಗಳ  ಜಾಗದಲ್ಲಿ  (ಎಂದರೆ  ನಾಮಪದಗಳ  ವಿಶೇಷಣಗಳಾಗಿ)  ಬಳಕೆ  ಯಾಗಬಲ್ಲ ಕ್ರಿಯಾರೂಪಗಳು ಮಾತ್ರ. 

Eke →

5.7.3 ದ್ವಿಗು

ತತ್ಪುರುಷ ಸಮಾಸಕ್ಕೆ ಸೇರಿದ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಒಂದು ಎಣಿಕೆಯ ಪದ ಬಂದಿದೆಯಾದರೆ, ಅವನ್ನು ಸಂಸ್ಕೃತದ ವೈಯಾ ಕರಣಿಗಳು ದ್ವಿಗು ಎಂಬ ಒಂದು ಉಪವಿಭಾಗದಲ್ಲಿ ವಗ್ರೀಕರಿಸುತ್ತಾರೆ. ಸಂಸ್ಕೃತದಲ್ಲಿ ಎಣಿಕೆಯ ಪದಗಳು ಇತರ ನಾಮಪದಗಳ ಹಾಗೆಯೇ ಬಳಕೆಯಾಗುವುವಾದ ಕಾರಣ ಈ ಸಮಾಸವನ್ನು ಸಂಸ್ಕೃತದಲ್ಲಿ ತತ್ಪುರುಷದ ಒಂದು ಉಪವಿಭಾಗವೆಂದು ಪರಿಗಣಿಸುವುದರಲ್ಲಿ ತಪ್ಪಿಲ್ಲ.
ಆದರೆ ಕನ್ನಡದಲ್ಲಿ ಎಣಿಕೆಯ ಪದಗಳು ಕೆಲವು ವಿಷಯಗಳಲ್ಲಿ ನಾಮ ಪದಗಳ ಹಾಗೆ ಬಳಕೆಯಾಗುತ್ತವೆ ಮತ್ತು ಬೇರೆ ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗೆ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಬೇರೆ ನಾಮಪದ ಗಳೊಂದಿಗೆ ಬಳಸಿದಾಗ ಅವು ಕನ್ನಡದಲ್ಲಿ ನಾಮಪದಗಳ ಹಾಗೆ ಷಷ್ಠೀ ವಿಭಕ್ತಿ ಯಲ್ಲಿ ಬರುವುದಿಲ್ಲ. ಇದಕ್ಕೆ ಬದಲು ಗುಣಪದಗಳ ಹಾಗೆ ಯಾವ ಪ್ರತ್ಯಯ

ದೊಂದಿಗೂ ಸೇರದೆ ಹಾಗೆಯೇ ಬರುತ್ತವೆ (ಮೂರು ಪುಸ್ತಕಗಳನ್ನು, ಮೂರು ಪುಸ್ತಕಗಳಿಗೆ).
ನಾಮಪದಗಳ ಜಾಗದಲ್ಲಿ ಬರುವಾಗ ಮಾತ್ರ ಅವು ಇತರ ನಾಮಪದಗಳ ಹಾಗೆ ವಿಭಕ್ತಿ ಪ್ರತ್ಯಯಗಳೊಂದಿಗೆ ಬರುತ್ತವೆ (ಮೂರನ್ನು ಇಲ್ಲಿ ಕೊಡು).
ಇಬ್ಭಾಗ, ಇಮ್ಮಡಿ, ಮುನ್ನೂರು, ನಲುವತ್ತು ಮೊದಲಾದ ಜೋಡು ಪದಗಳ ಒಳರಚನೆಯಲ್ಲಿ ಎಣಿಕೆಯ ಪದಗಳು ಗುಣಪದಗಳ ಹಾಗೆ ವಿಭಕ್ತಿ ಪ್ರತ್ಯಯವಿಲ್ಲದೆ ಬಳಕೆಯಾಗಿವೆಯಾದ ಕಾರಣ ಅಂತಹ ಜೋಡುಪದಗಳನ್ನು ಗುಣಪದವಿರುವ ಜೋಡುಪದಗಳ ವಿಭಾಗದಲ್ಲಿ ಸೇರಿಸುವುದೇ ಒಳ್ಳೆಯದು.
ಈ ಜೋಡುಪದಗಳ ಅಂಗಗಳಾಗಿ ಬರುವ ಪದಗಳು ಸಮಾನ (ಇಲ್ಲವೇ ಅಸಮಾನ) ವಿಭಕ್ತಿಯಲ್ಲಿರುವವುಗಳೆಂದು ಹೇಳಲು ಸಾಧ್ಯವಿಲ್ಲವಾದ ಕಾರಣ (ಅವು ಯಾವ ವಿಭಕ್ತಿಯಲ್ಲೂ ಇಲ್ಲವಾದ ಕಾರಣ) ಅವನ್ನು ತತ್ಪುರುಷದಲ್ಲಿ ಸೇರಿಸುವುದು ಕನ್ನಡದ ಮಟ್ಟಿಗಂತೂ ಕಷ್ಟಸಾಧ್ಯ.

Eke →

5.7.4 ಅವ್ಯಯೀಭಾವ

ಸಂಸ್ಕೃತದಲ್ಲಿ ಯಥಾಶಕ್ತಿ, ಉಪಕೃಷ್ಣಂ, ಪ್ರತಿದಿನಂ, ಪರೋಕ್ಷಂ ಮೊದಲಾದ ಜೋಡುಪದಗಳನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆ ಗಳನ್ನಾಗಿ ಕೊಡುವುದು ಕ್ರಮ. ಇವುಗಳಲ್ಲಿ ಅವ್ಯಯದೊಂದಿಗೆ ನಾಮಪದವನ್ನು ಸೇರಿಸಲಾಗಿದೆ, ಮತ್ತು ಈ ಜೋಡುಪದಗಳನ್ನು ವಾಕ್ಯಗಳಲ್ಲಿ ಅವ್ಯಯಗಳಾಗಿ ಬಳಸಲಾಗುತ್ತದೆ. ಆದರೆ ಕನ್ನಡದಲ್ಲಿ ಈ ರೀತಿ ಅವ್ಯಯಕ್ಕೆ ನಾಮಪದಗಳನ್ನು ಸೇರಿಸಿ ರಚಿಸಿದ ಮತ್ತು ವಾಕ್ಯಗಳಲ್ಲಿ ಅವ್ಯಯಗಳಾಗಿ ಬಳಕೆಯಾಗುವ ಜೋಡುಪದಗಳು ಕಾಣಿಸುವುದಿಲ್ಲವಾದ ಕಾರಣ, ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದ ಗಳಲ್ಲಿ ಕಾಣಿಸುವ ಇನ್ನೊಂದು ಅಂಶವನ್ನು ಆಧಾರವಾಗಿರಿಸುವ ಮೂಲಕ, ಕನ್ನಡದಲ್ಲಿ ಅವ್ಯಯೀಭಾವಕ್ಕೆ ಉದಾಹರಣೆಗಳನ್ನು ಹುಡುಕಿ ಹಿಡಿಯಲಾಗಿದೆ.
ಮೇಲೆ ಕೊಟ್ಟಿರುವ ಸಂಸ್ಕೃತದ ಜೋಡುಪದಗಳಲ್ಲಿ ಮೊದಲನೆಯ ಅಂಗ ವಾಗಿ ಬಂದಿರುವ ಪದ ಪ್ರಧಾನವಾಗಿದ್ದು, ಈ ವಿಷಯದಲ್ಲಿ ಅದು ಇತರ ಜೋಡುಪದಗಳಿಗಿಂತ ಭಿನ್ನವಾಗಿದೆ. ಉದಾಹರಣೆಗಾಗಿ, ಯಥಾಶಕ್ತಿ ಜೋಡು ಪದದಲ್ಲಿ ಶಕ್ತಿ ಎಂಬುದು ಪ್ರಧಾನ ಪದವಲ್ಲ, ಯಥಾ ಎಂಬುದೇ ಪ್ರಧಾನ ಪದ. ‘ಎಷ್ಟು ಶಕ್ತಿಯಿದೆಯೋ ಅಷ್ಟು’ ಎಂಬುದಾಗಿ ಇದು ಶಕ್ತಿಯ ಪ್ರಮಾಣ ವನ್ನು ಸೂಚಿಸುವ ಜೋಡುಪದ.
ಇದೇ ರೀತಿಯಲ್ಲಿ, ಕನ್ನಡದಲ್ಲಿ ಬರುವ ತುದಿನಾಲಿಗೆ, ಅಂಗೈ, ಹೊರ ಮೈ, ಹಿಂಗಾಲು ಮೊದಲಾದವುಗಳ ಮೊದಲನೆಯ ಅಂಗ ಪ್ರಧಾನ

ಭಾವಿಸಿ, ಅವನ್ನು ಈ

ಯುಂಬುದಾಗಿ

ಪದವಾಗಿದೆ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕನ್ನಡ ವ್ಯಾಕರಣಗಳಲ್ಲಿ ಕೊಡಲಾಗಿದೆ (ಇದು ಯಾಕೆ ತಪ್ಪು ಎಂಬುದನ್ನು ಕೆಳಗೆ ವಿವರಿಸಲಾಗಿದೆ).
ಇದಲ್ಲದೆ, ಈ ಜೋಡುಪದಗಳು ಕನ್ನಡದಲ್ಲಿ ಅವ್ಯಯಗಳಾಗಿ ಬಳಕೆ ಯಾಗುವುದಿಲ್ಲವಾದ ಕಾರಣ ಕೆಲವರು ವೈಯಾಕರಣಿಗಳು ಅವನ್ನು ಅವ್ಯಯೀ ಭಾವವೆಂದು ಕರೆಯದೆ ‘ಅಂಶಿ’ ಎಂದು ಕರೆಯುತ್ತಾರೆ. ಇವುಗಳಲ್ಲಿ ಅಂಶವನ್ನು ಅಂಶಿಯೊಂದಿಗೆ ಸಂಬಂಧಿಸಲಾಗುತ್ತದೆಯೆಂಬುದೇ ಇದಕ್ಕೆ ಆಧಾರ.
ಉದಾಹರಣೆಗಾಗಿ, ತುದಿನಾಲಿಗೆ ಜೋಡುಪದದಲ್ಲಿ ತುದಿ ಎಂಬುದು ನಾಲಿಗೆಯ ಒಂದು ಅಂಶವನ್ನು ಸೂಚಿಸುತ್ತದೆ; ಈ ಅಂಶವನ್ನು ಪಡೆದಿರುವ ನಾಲಿಗೆ ಪದದೊಂದಿಗೆ (ಎಂದರೆ ಅಂಶಿಯೊಂದಿಗೆ) ತುದಿ ಎಂಬ ಅದರ ಅಂಶವನ್ನು ಸೂಚಿಸುವ ಪದವನ್ನು ಸೇರಿಸಿ ತುದಿನಾಲಿಗೆ ಪದವನ್ನು ತಯಾರಿಸ ಆದರೆ ಮೆಲೆ ಸೂಚಿಸಿದ ಹಾಗೆ, ಇಂತಹ ಜೋಡುಪದಗಳಲ್ಲಿ ಎಲ್ಲವಕ್ಕೂ ಮೊದಲನೆಯ ಅಂಗ ಪ್ರಧಾನ ಪದವಾಗಿರುತ್ತದೆ ಎಂದು ಹೇಳುವುದು ಕಷ್ಟ. ಉದಾಹರಣೆಗಾಗಿ ಹೊರಬಾಗಿಲು ಎಂಬುದಕ್ಕೆ ‘ಬಾಗಿಲಿನ ಹೊರಗು’ (ಅಥವಾ ‘ಬಾಗಿಲಿನ ಹೊರಗೆ’) ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅರ್ಥವನ್ನು ಸರಿಯಾಗಿ ಸೂಚಿಸಲಾರದು. ಹೊರಬಾಗಿಲು ಎಂಬುದು ಹೊರಗಿನ ಬಾಗಿಲನ್ನು ಸೂಚಿಸುವುದಾದ ಕಾರಣ, ಅದರಲ್ಲಿ ಎರಡನೆಯ ಪದ ಪ್ರಧಾನ ವಾಗಿದೆಯಲ್ಲದೆ ಮೊದಲನೆಯದಲ್ಲ.
ಇದೇ ರೀತಿಯಲ್ಲಿ ಕೆಳದುಟಿ ಜೋಡುಪದಕ್ಕೆ ‘ತುಟಿಯ ಕೆಳಗು’ ಎಂಬ ಒಳನುಡಿಯನ್ನು ಕೊಟ್ಟರೆ ಅದು ಆ ಪದದ ಅರ್ಥವನ್ನು ಸರಿಯಾಗಿ ಸೂಚಿಸಲಾರದು. ನಿಜಕ್ಕೂ ಈ ಜೋಡುಪದ ‘ಕೆಳಗಿನ ತುಟಿ’ಯನ್ನು ಸೂಚಿಸುವ ಕಾರಣ, ಕರ್ಮಧಾರಯಕ್ಕೆ ಮಾತ್ರವೇ ಉದಾಹರಣೆಯಾಗಬಲ್ಲುದು. ಇದಲ್ಲದೆ, ಇದೇ ಅಂಶಿ ಸಮಾಸಕ್ಕೆ ಕನ್ನಡದ ವೈಯಾಕರಣಿಗಳು ಉದಾ ಹರಣೆಗಳನ್ನಾಗಿ ಕೊಡುವ ಹಿಂಗಾಲು, ಹೊರಮೈ, ನಡುಹಗಲು ಮೊದಲಾದ ಬೇರೆ ಕೆಲವು ಜೋಡುಪದಗಳಲ್ಲಿ ಕಾಣಿಸುವ ಅಂಗಗಳಲ್ಲಿ ಯಾವುದೂ ಪ್ರಧಾನ ಪದವಾಗಿ ಇಲ್ಲದಿರುವುದನ್ನು ಗಮನಿಸಬಹುದು.
ಉದಾಹರಣೆಗಾಗಿ, ನಡುಹಗಲು ಎಂಬುದು ‘ಹಗಲಿನ ನಡು ಭಾಗ’ವನ್ನು ಸೂಚಿಸುವುದಾದ ಕಾರಣ ಅದರ ಅಂಗಗಳಾಗಿ ಬಂದಿರುವ ನಡು ಮತ್ತು ಹಗಲು ಎಂಬ ಎರಡು ಪದಗಳಲ್ಲಿ ಯಾವುದೂ ಅದರ ಪ್ರಧಾನ ಪದವಾಗಿರದೆ, ಆ ಜೋಡುಪದದ ಹೊರಗಿರುವ ಭಾಗ ಎಂಬ ಪದ ಅದರ ಪ್ರಧಾನ ಪದವೆಂದು ಹೇಳಬೇಕಾಗುತ್ತದೆ.

ಹಾಗಾಗಿ ಈ ಪದಗಳನ್ನು ಅಂಶಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವ  ಬದಲು  ಬಹುವ್ರೀಹಿ  ಸಮಾಸಕ್ಕೆ  ಉದಾಹರಣೆಗಳನ್ನಾಗಿ  ಕೊಡುವುದೇ  ಯೋಗ್ಯ  ವೆಂದು ತೋರುತ್ತದೆ. 
‘ಅಂಶಿ’  ಪಾರಿಭಾಷಿಕ  ಪದವೂ  ಕನ್ನಡದ  ಈ  ಜೋಡುಪದಗಳನ್ನು  ವರ್ಣಿಸಲು  ಸಮಪ್ರಕವಾದುದಲ್ಲ.  ಯಾಕೆಂದರೆ,  ಅಂಶ  ಮತ್ತು  ಅಂಶಿಗಳ  ನಡುವಿರುವ  ಸಂಬಂಧವನ್ನು  ಸೂಚಿಸದಿರುವಂತಹ  ಚಿಕ್ಕಮ್ಮ,  ದೊಡ್ಡಪ್ಪ  ಮೊದಲಾದ  ಜೋಡುಪದಗಳಲ್ಲೂ  ಇಂತಹದೇ  ರಚನೆ  ಕಾಣಿಸುತ್ತದೆ  (5.5.3  ನೋಡಿ). 

Eke →

5.7.5 ದ್ವಂದ್ವ

ದ್ವಂದ್ವ ಸಮಾಸಕ್ಕೆ ಕನ್ನಡದಲ್ಲಿ ಕೊಟ್ಟಿರುವ ಉದಾಹರಣೆಗಳೆಲ್ಲ ಪದಕಂತೆ ಗಳಲ್ಲದೆ ಜೋಡುಪದಗಳಲ್ಲ. ಸಂಸ್ಕೃತದಲ್ಲಿ ರಾಮಲಕ್ಷ್ಮಣೌ, ಮಾತಾ ಪಿತರೌ ಮೊದಲಾದವುಗಳನ್ನು ಜೋಡುಪದಗಳೆಂದು ಕರೆಯಲು ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಕೊನೆಯದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬಂದಿವೆಯುಂಬುದೇ ಮುಖ್ಯ ಕಾರಣ. ಇಂತಹ ಜೋಡುಪದಗಳಲ್ಲಿ ಎರಡೇ ಅಂಗಗಳಿರಬೇಕೆಂದೇನಿಲ್ಲ. ಉದಾ ಹರಣೆಗಾಗಿ, ರೋಗಶೋಕಪರಿತಾಪಬಂಧನವ್ಯಸನಾನಿ ಎಂಬ ಜೋಡುಪದ ದಲ್ಲಿ ಒಟ್ಟು ಐದು ಅಂಗಗಳಿವೆ.
ಆದರೆ ಕನ್ನಡದಲ್ಲಿ ಜೋಡುಪದಗಳನ್ನು ವಿಭಕ್ತಿ ಪ್ರತ್ಯಯದ ಬಳಕೆ ಯಾಗಿದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ವರ್ಣಿಸಲು ಇಲ್ಲವೇ ವಿಭಜಿಸಲು ಸಾಧ್ಯವಿಲ್ಲವೆಂಬುದನ್ನು ನಾವು ಮೇಲೆ (5.3)ರಲ್ಲಿ ನೋಡಿರುವೆವು. ಹಾಗಾಗಿ, ದ್ವಂದ್ವವೆಂಬ ಸಮಾಸ ಕನ್ನಡದಲ್ಲಿ ಇಲ್ಲವೆಂದು ಹೇಳುವುದೇ ಒಳ್ಳೆಯದು.

Eke →

5.7.6 ಬಹುವ್ರೀಹಿ

ಸಂಸ್ಕೃತದಲ್ಲಿ ಚಕ್ರಪಾಣಿ ‘ಕೈಯಲ್ಲಿ ಚಕ್ರವನ್ನು ಹಿಡಿದವನು’, ಪೀತಾಂಬರ ‘ಹಳದಿ ಬಟ್ಟೆಯನ್ನುಟ್ಟವನು’, ದತ್ತಧನ ‘ಹಣವನ್ನು ಕೊಟ್ಟವನು’ ಮೊದಲಾದ ಜೋಡುಪದಗಳನ್ನು ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವ ಪದವೂ ಅದರ ಪ್ರಧಾನ ಪದವಾಗಿಲ್ಲದಿರುವುದೇ ಅವನ್ನು ಬಹುವ್ರೀಹಿಯೆಂದು ಕರೆಯಲು ಕಾರಣ.
ಉದಾಹರಣೆಗಾಗಿ, ಚಕ್ರಪಾಣಿ ಜೋಡುಪದದಲ್ಲಿ ಚಕ್ರ ಮತ್ತು ಪಾಣಿ ‘ಕೈ’ ಎಂಬ ಎರಡು ಪದಗಳು ಒಟ್ಟು ಸೇರಿದ್ದು, ಆ ಪದಗಳಿಗಿಂತ ಭಿನ್ನವಾದ ಸ:

‘ಅವನು’ ಇಲ್ಲವೇ ವ್ಯಕ್ತಿ ಎಂಬ ಪದ ಅದರ ಪ್ರಧಾನ ಪದವಾಗಿದೆ. ಎಂದರೆ, ಚಕ್ರಪಾಣಿ ಎಂಬುದು ಚಕ್ರವನ್ನಾಗಲಿ, ಕೈಯನ್ನಾಗಲಿ ಹೆಸರಿಸದೆ, ಕೈಯಲ್ಲಿ ಚಕ್ರವನ್ನು ಹಿಡಿದಿರುವ ಒಬ್ಬ ವ್ಯಕ್ತಿಯನ್ನು (ಕೃಷ್ಣನನ್ನು) ಹೆಸರಿಸುತ್ತದೆ.
ಕನ್ನಡ ವ್ಯಾಕರಣಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆಗಳಾಗಿ ಕೊಡುವ ಹಣೆಗಣ್ಣ, ಚಲವಾದಿ, ಗೆಡ್ಡೆಮೂಗ, ಹಣಾಹಣಿ ಮೊದಲಾದ ಜೋಡುಪದಗಳಲ್ಲಿ ಈ ರೀತಿ ಅವುಗಳ ಅಂಗಗಳಾಗಿರುವ ಪದಗಳಲ್ಲಿ ಯಾವುದೂ ಪ್ರಧಾನ ಪದವಲ್ಲ ಎಂದು ವಾದಿಸುವುದು ಕಷ್ಟಸಾಧ್ಯ.
ಉದಾಹರಣೆಗಾಗಿ, ಚಲವಾದಿ ಎಂಬುದರಲ್ಲಿ ಎರಡನೆಯ ಅಂಗವಾಗಿ ಬಂದಿರುವ ವಾದಿ ಪದವನ್ನು ಪ್ರಧಾನ ಪದವೆಂದು ಪರಿಗಣಿಸಲು ಸಾಧ್ಯವಿದೆ. ಕನ್ನಡದ ವೈಯಾಕರಣಿಗಳು ಬಹುವ್ರೀಹಿಗೆ ಉದಾಹರಣೆಯಾಗಿ ಕೊಡುವ ಇತರ ಹಲವಾರು ಜೋಡುಪದಗಳೂ ಸಂಸ್ಕೃತದ ಬಹುವ್ರೀಹಿ ಪದಗಳಿಗಿಂತ ಒಂದು ಮುಖ್ಯವಾದ ವಿಷಯದಲ್ಲಿ ಭಿನ್ನವಾಗಿವೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳು ನಾಮಪದಗಳ ಲಿಂಗ, ವಚನ, ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುತ್ತವೆ ಎಂಬುದನ್ನು ನಾವು ಮುಂದೆ ಏಳನೇ ಅಧ್ಯಾಯದಲ್ಲಿ ನೋಡಲಿರುವೆವು. ಆದರೆ ಕನ್ನಡದಲ್ಲಿ ಬಳಕೆಯಾಗುವ ವಿಭಕ್ತಿ ಪ್ರತ್ಯಯಗಳು ವಿಭಕ್ತಿಯನ್ನು ಮಾತ್ರ ಸೂಚಿಸುತ್ತವೆ. ಲಿಂಗ ಮತ್ತು ವಚನಗಳನ್ನು ಸೂಚಿಸಲು ಕನ್ನಡದಲ್ಲಿ ಬೇರೆಯೇ ಪ್ರತ್ಯಯಗಳಿವೆ.
ಉದಾಹರಣೆಗಾಗಿ, ಸಂಸ್ಕೃತದ ಗುರುಭ್ಯಃ ಎಂಬುದರಲ್ಲಿ ಬಂದಿರುವ ಭ್ಯಃ ವಿಭಕ್ತಿಪ್ರತ್ಯಯ ಪುಲ್ಲಿಂಗ, ಬಹುವಚನ ಮತ್ತು ಚತುರ್ಥೀ ವಿಭಕ್ತಿ - ಈ ಮೂರನ್ನೂ ಒಟ್ಟಾಗಿ ಸೂಚಿಸುತ್ತದೆ. ಆದರೆ ಇದಕ್ಕೆ ಸಮನಾಗಿ ಕನ್ನಡದಲ್ಲಿ ಬರುವ ಗುರುಗಳಿಗೆ ನಾಮಪದರೂಪದಲ್ಲಿ ಗಳು ಪ್ರತ್ಯಯ ಬಹುವಚನವನ್ನು ಮಾತ್ರ ಸೂಚಿಸುತ್ತದೆ; ಚತುರ್ಥೀ ವಿಭಕ್ತಿಯನ್ನು ಸೂಚಿಸುವುದಕ್ಕಾಗಿ ಈ ಪದರೂಪದಲ್ಲಿ ಬಹುವಚನ ಪ್ರತ್ಯಯಕ್ಕಿಂತ ಭಿನ್ನವಾಗಿರುವ ಇಗೆ ಪ್ರತ್ಯಯ ಸಂಸ್ಕೃತದ ಪೀತಾಂಬರ ಜೋಡುಪದವನ್ನು (ಅಥವಾ ಬೇರೆ ಯಾವುದೇ ನಾಮಪದವನ್ನು) ಸಂಸ್ಕೃತ ವಾಕ್ಯದಲ್ಲಿ ಪ್ರಯೋಗಿಸಬೇಕಾದಾಗ ಅದಕ್ಕೆ ಲಿಂಗ, ವಚನ ಮತ್ತು ವಿಭಕ್ತಿ ಈ ಮೂರನ್ನೂ ಸೂಚಿಸುವಂತಹ ವಿಭಕ್ತಿ ಪ್ರತ್ಯಯ ವೊಂದನ್ನು ಸೇರಿಸಲೇಬೇಕೆಂಬ ನಿಯಮವಿದೆ. ಆದರೆ ಕನ್ನಡದಲ್ಲಿ ಚಲವಾದಿ ಜೋಡುಪದವನ್ನು (ಇಲ್ಲವೇ ಇತರ ಯಾವುದೇ ನಾಮಪದವನ್ನು) ವಾಕ್ಯದಲ್ಲಿ ಹಾಗೆಯೇ ಅದಕ್ಕೆ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸಲು ಸಾಧ್ಯ. ಇದು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸ.

(14ಕ) ಪೀತಾಂಬರಃ ಕುತ್ರ ಗತಃ

‘ಹಳದಿ ಬಟ್ಟೆಯುಟ್ಟವನು ಎಲ್ಲಿಗೆ ಹೋದ? ’

(14ಖ) ಚಲವಾದಿ ಎಲ್ಲಿಗೆ ಹೋದ?

ಮೇಲೆ ಕೊಟ್ಟಿರುವ (14ಕ) ಸಂಸ್ಕೃತ ವಾಕ್ಯದಲ್ಲಿ ಪೀತಾಂಬರ ಪದವನ್ನು  ಅದಕ್ಕೆ  ಪುಲ್ಲಿಂಗ-ಏಕವಚನ-ಪ್ರಥಮಾ  ವಿಭಕ್ತಿ  ಪ್ರತ್ಯಯವಾದ  ಅಸ್  ಎಂಬು  ದನ್ನು  (ವಿಸಗ್ರರೂಪದಲ್ಲಿ)  ಸೇರಿಸಿ  ಬಳಸಲಾಗಿದೆ.  ಆದರೆ  (14ಖ)  ಕನ್ನಡ  ವಾಕ್ಯದಲ್ಲಿ  ಚಲವಾದಿ  ಪದವನ್ನು  ಅದಕ್ಕೆ  ಯಾವ  ಪ್ರತ್ಯಯವನ್ನೂ  ಸೇರಿಸದೆ  ಹಾಗೆಯೇ ಬಳಸಲಾಗಿದೆ.  
ಸಂಸ್ಕೃತದ ಪೀತಾಂಬರ ಜೋಡುಪದದಲ್ಲಿ ಪೀತ ಮತ್ತು ಅಂಬರ ಎಂಬ  ಎರಡು  ಪದಗಳು ಮಾತ್ರ ಆ ಜೋಡುಪದದ ಅಂಗಗಳಾಗಿ ಬಂದಿವೆ. ಅವುಗಳ  ಅನಂತರ  ಬರುವ  ಅಸ್  ಎಂಬುದು  ಲಿಂಗ,  ವಚನ  ಮತ್ತು  ವಿಭಕ್ತಿಗಳನ್ನು  ಸೂಚಿಸುವ  ಪ್ರತ್ಯಯ  (ಇದು  ಇಲ್ಲಿ  ವಿಸಗ್ರರೂಪದಲ್ಲಿದೆ).  ಈ  ಪ್ರತ್ಯಯ  ಪೀತಾಂಬರ  ಪದದ  ಅಂಗವಲ್ಲ;  ಆ  ಪದವನ್ನು  ವಾಕ್ಯದಲ್ಲಿ  ಪ್ರಯೋಗಿಸುವಾಗ  ಅದರೊಂದಿಗೆ ಬಳಸಬೇಕಾಗಿರುವ ಪ್ರತ್ಯಯ ಮಾತ್ರ.  
ಆದರೆ  ಕನ್ನಡದ  ಚಲವಾದಿ  ಪದದಲ್ಲಿ  ಚಲ  ಮತ್ತು  ವಾದ  ಎಂಬೆರಡು  ಪದಗಳು    ಮಾತ್ರವಲ್ಲದೆ  ಇ  ಪ್ರತ್ಯಯವೂ  ಆ  ಪದದ  ಅಂಗವಾಗಿ  ಬಂದಿದೆ.  ಪೀತಾಂಬರಃ  ಎಂಬುದರಲ್ಲಿ  ಬರುವ  ಅಸ್  ಪ್ರತ್ಯಯದ  ಹಾಗೆ  ಚಲವಾದಿ  ಎಂಬುದರಲ್ಲಿ  ಬರುವ  ಇ  ಪ್ರತ್ಯಯವನ್ನು  ಕನ್ನಡದಲ್ಲಿ  ಒಂದು  ಪದರೂಪ  ಪ್ರತ್ಯಯವೆಂದು ಪರಿಗಣಿಸಲು ಯಾವ ಆಧಾರವೂ ಇಲ್ಲ.  
ಇಲ್ಲಿ  ಮುಖ್ಯವಾಗಿ  ಗಮನಿಸಬೇಕಾಗಿರುವ  ವಿಷಯವೇನೆಂದರೆ,  ವಾದ  ಪದದ ಅನಂತರ ಬರುವ ಇ ಪ್ರತ್ಯಯ ಕನ್ನಡದಲ್ಲಿ ಪದರಚನೆಗೆ ಸಂಬಂಧಿಸಿದು  ದಲ್ಲದೆ  ಪದರೂಪದ  ರಚನೆಗೆ  (ಇಲ್ಲವೇ  ವಾಕ್ಯರಚನೆಗೆ)  ಸಂಬಂಧಿಸಿದುದಲ್ಲ.  ಹಾಗಾಗಿ, ಈ ಜೋಡುಪದವನ್ನು ಎರಡು ರೀತಿಯಲ್ಲಿ ವರ್ಣಿಸಲು ಸಾಧ್ಯವಿದೆ.  
(1) ಚಲ ಮತ್ತು ವಾದಿ ಎಂಬ ಎರಡು ಪದಗಳು ಅದರ ಅಂಗಗಳೆಂದು  ಹೇಳಬಹುದು; ಇಲ್ಲವೇ 
(2)  ಚಲ  ಮತ್ತು  ವಾದ  ಎಂಬ  ಎರಡು  ಪದಗಳು  ಮತ್ತು  ಇ  ಎಂಬ  ಪ್ರತ್ಯಯ - ಈ ಮೂರು ಅದರ ಅಂಗಗಳೆಂದು ಹೇಳಬಹುದು.  
ಮೊದಲನೆಯ  ವರ್ಣನೆಯ  ಪ್ರಕಾರ,  ವಾದಿ  ಎಂಬುದು  ಚಲವಾದಿ  ಜೋಡುಪದದ  ಪ್ರಧಾನ  ಪದವೆನಿಸುತ್ತದೆ  ಮತ್ತು  ಈ  ಕಾರಣಕ್ಕಾಗಿ  ಅದು  ಬಹುವ್ರೀಹಿಗೆ ಉದಾಹರಣೆಯಾಗಲಾರದು.  

ಎರಡನೆಯ  ವಿಧಾನದ  ಪ್ರಕಾರ,  ಪದ  ಮತ್ತು  ಪ್ರತ್ಯಯಗಳೆರಡೂ  ಈ  ಜೋಡುಪದದ  ಒಳರಚನೆಯಲ್ಲಿ  ಬಳಕೆಯಾಗಿವೆಯಾದ  ಕಾರಣ,  ಅದನ್ನು  ಜೋಡುಪದಗಳಿಗಿಂತ ಭಿನ್ನವಾಗಿರುವ ಬೇರೆಯೇ ಒಂದು ವಗ್ರದಲ್ಲಿ ಸೇರಿಸುವ  ಅವಶ್ಯಕತೆಯಿದೆ. 
ಎಂದರೆ,  ಕರ್ಮಧಾರಯ  ಸಮಾಸದಿಂದ  ಸಿದ್ಧವಾದ  ಚಲವಾದ  ಜೋಡು  ಪದಕ್ಕೆ  ಇ  ಪ್ರತ್ಯಯವನ್ನು  ಸೇರಿಸುವುದರ  ಮೂಲಕ  ಚಲವಾದಿ  ಪದವನ್ನು  ತಯಾರಿಸಲಾಗಿದೆಯುಂದು ಹೇಳಬೇಕಾಗುತ್ತದೆ. 

Eke →

5.7.7 ಕ್ರಿಯಾಸಮಾಸ

ಕನ್ನಡದಲ್ಲಿ ಸಂಸ್ಕೃತದಲ್ಲಿಲ್ಲದ ಕ್ರಿಯಾಸಮಾಸವೆಂಬ ಹೊಸದೊಂದು ರೀತಿಯ ಸಮಾಸವಿದೆಯೆಂದು ಕನ್ನಡ ವೈಯಾಕರಣಿಗಳು ಹೇಳಿರುವುದು ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಿಭಕ್ತಿಗಳ ಬಳಕೆಯಲ್ಲಿರುವ ವ್ಯತ್ಯಾಸವನ್ನು ಸರಿ ಯಾಗಿ ತಿಳಿದುಕೊಳ್ಳದುದರಿಂದಾಗಿ ಎಂಬುದನ್ನು ನಾವು ಮೇಲೆ (5.3.5ರಲ್ಲಿ) ನೋಡಿರುವೆವು.
ಮರವೇರು, ಕೈಮುಗಿ, ಮರೆಹೊಗು, ಬಿಲ್ಲೆತ್ತು, ನಿದ್ದೆಮಾಡು ಮೊದಲಾ ದವುಗಳನ್ನು ಇವರು ಕ್ರಿಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಟ್ಟಿದ್ದಾರೆ. ಇಂತಹ ಬಳಕೆಗಳಲ್ಲಿ ನಾಮಪದದ ವಿಭಕ್ತಿ ಪ್ರತ್ಯಯ (ದ್ವಿತೀಯಾ ವಿಭಕ್ತಿ ಪ್ರತ್ಯಯ) ಲೋಪಗೊಂಡಿರುವುದು ನಿಜವಾದರೂ ಅದು ಕನ್ನಡದ ಒಂದು ವಾಕ್ಯರಚನೆಯ ನಿಯಮದ ಮೂಲಕ ಲೋಪಗೊಂಡಿದೆಯಲ್ಲದೆ ಪದರಚನೆಯ ನಿಯಮದ ಮೂಲಕವಲ್ಲ. ಇದಕ್ಕೆ ಬದಲು ಮೊದಲನೆಯ ಅಂಗವಾಗಿ ಒಂದು ಕ್ರಿಯಾಪದ ಬಂದಿರುವ ಚುಚ್ಚುಮದ್ದು, ಸುಳಿಗಾಳಿ, ಬೀಸುಗಲ್ಲು ಮೊದಲಾದ ಕನ್ನಡಕ್ಕೆ ವಿಶಿಷ್ಟ ಜೋಡುಪದಗಳನ್ನೇ ಕ್ರಿಯಾಸಮಾಸಕ್ಕೆ ಉದಾಹರಣೆಗಳನ್ನಾಗಿ ವಾಗಿರುವ ಕೊಡುವುದು ಒಳ್ಳೆಯದು (5.5.2 ನೋಡಿ).

Eke →

5.7.8 ಗಮಕ ಸಮಾಸ

ಕನ್ನಡದ ಇನ್ನೊಂದು ವಿಶಿಷ್ಟ ಸಮಾಸವೆಂದು ಪರಿಗಣಿಸಲ್ಪಟ್ಟಿರುವ ಗಮಕ ಸಮಾಸವೂ ಇದೇ ರೀತಿಯದು. ಕನ್ನಡ ವ್ಯಾಕರಣಗಳಲ್ಲಿ ಇದಕ್ಕೆ ಉದಾಹರಣೆ ಗಳನ್ನಾಗಿ (1) ಮೊದಲನೆಯ ಅಂಗದಲ್ಲಿ ಷಷ್ಠೀ ವಿಭಕ್ತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಬಿಸಿಯ ಹಾಲು, ಕಿರಿಯ ಮಗ ಮೊದಲಾದವುಗಳನ್ನು, (2) ಕೃತ್ ಪ್ರತ್ಯಯವನ್ನು ಹಾಗೆಯೇ ಉಳಿಸಿಕೊಂಡಿರುವ ತೂಗುವ ತೊಟ್ಟಿಲು, ಕಂಡ ವಿಚಾರ ಮೊದಲಾದವುಗಳನ್ನು ಮತ್ತು (3) ಮೊದಲನೆಯ ಅಂಗದಲ್ಲಿ

ವಿಭಕ್ತಿ ಪ್ರತ್ಯಯವಿಲ್ಲದೆ ಬರುವ ಆ ಮರ, ಈ ಹುಡುಗ ಮೊದಲಾದವುಗಳನ್ನು ಕೊಡುವುದು ರೂಢಿ.
ಆದರೆ ನಿಜಕ್ಕೂ ಇವು ಕನ್ನಡದಲ್ಲಿ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಮೇಲೆ (5.3.3-4)ರಲ್ಲಿ ವಿವರಿಸಿರುವ ಹಾಗೆ, ಕೃದಂತಗಳು ಮತ್ತು ಆ, ಈ ಮೊದಲಾದ ಜಾಗವನ್ನು ಸೂಚಿಸುವ ಪದಗಳು ಪದಕಂತೆಗಳಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬರುತ್ತವೆಯುಂಬುದು ಕನ್ನಡ ಭಾಷೆಯ ವಾಕ್ಯರಚನೆಯ ನಿಯಮವಲ್ಲದೆ ಪದರಚನೆಯ ನಿಯಮವಲ್ಲ. ಹಾಗಾಗಿ ಇಂತಹ ರಚನೆಗಳನ್ನು ಪದಕಂತೆಗಳೆಂದು ಹೇಳಬೇಕಲ್ಲದೆ ಜೋಡುಪದಗಳೆಂದು ಹೆಸರಿಸುವುದಕ್ಕೆ ಕನ್ನಡದಲ್ಲಿ ಯಾವ ಆಧಾರವೂ ಇಲ್ಲ (ಸೇಡಿಯಾಪು ಕೃಷ್ಣಭಟ್ಟ 1992:269 ನೋಡಿ).

Eke →

5.8 ಸಂಸ್ಕೃತದಿಂದ ಎರವಲಾಗಿ ಬಂದ ಜೋಡುಪದಗಳು

ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಪದಗಳು ಎರವಲಾಗಿ ಬಂದಿದ್ದು ಇವುಗಳಲ್ಲಿ ಜೋಡುಪದಗಳೂ ಹಲವಿವೆ. ಈ ಜೋಡುಪದಗಳು ಎಂತಹವು, ಅವನ್ನು ವರ್ಣಿಸುವುದಕ್ಕಾಗಿ ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಧಾನವನ್ನೇ ಕನ್ನಡ ವ್ಯಾಕರಣದಲ್ಲೂ ಬಳಸಲು ಸಾಧ್ಯವೇ? ಎಂದರೆ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಜೋಡುಪದಗಳಲ್ಲಿ ಸಂಸ್ಕೃತದ ನಾಲ್ಕು (ಇಲ್ಲವೇ ಆರು) ಸಮಾಸಗಳನ್ನು ಕಾಣಲು ಸಾಧ್ಯವೇ ಎಂಬುದನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆಯಿದೆ.

Eke →

5.8.1 ಜೋಡುಪದಗಳ ಒಳನುಡಿಗಳು

ಈ ಪದಗಳು ಸಂಸ್ಕೃತದಿಂದ ಎರವಲಾಗಿ ಬಂದಿವೆಯಾದರೂ ಕನ್ನಡದಲ್ಲಿ ಅವಕ್ಕೆ ಕನ್ನಡದ್ದೇ ಆದ, ಎಂದರೆ ಕನ್ನಡದ ವ್ಯಾಕರಣ ನಿಯಮಗಳಿಗೆ ಹೊಂದಿಕೊಳ್ಳುವಂತಹ ಬಳಕೆಗಳಿವೆ. ಹಾಗಾಗಿ, ಅವುಗಳ ಒಳರಚನೆಯನ್ನು ಕನ್ನಡದವೇ ಆದ ನಿಯಮಗಳ ಮೂಲಕ ವರ್ಣಿಸುವ ಅವಶ್ಯಕತೆಯಿದೆ.
ಉದಾಹರಣೆಗಾಗಿ, ಈ ಜೋಡುಪದಗಳಿಗೆ ಒಳನುಡಿ(ವಿಗ್ರಹವಾಕ್ಯ)ವನ್ನು ಹೇಳುವಾಗ ಅದನ್ನು ಕನ್ನಡದಲ್ಲಿ ಹೇಳಬೇಕಲ್ಲದೆ ಸಂಸ್ಕೃತದಲ್ಲಿ ಹೇಳಿದರೆ ಅದು ಕನ್ನಡದಲ್ಲಿ ಆ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿಸ ಲಾರದು. ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೆ ಸಂಸ್ಕೃತ ವೈಯಾಕರಣಿಗಳು ಕೊಡುವ ಒಳ ನುಡಿಗಳನ್ನು ಹಾಗೆಯೇ ಕನ್ನಡದಲ್ಲೂ ಕೊಟ್ಟಿದ್ದಾರೆ. ಇದು ಸರಿಯಲ್ಲ. ಸಂಸ್ಕೃತದಿಂದ ಎರವಲಾಗಿ ಬಂದಿರುವ ಎಲ್ಲಾ ಜೋಡುಪದಗಳಿಗೂ ಕನ್ನಡದಲ್ಲಿ ಒಳರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೆಂಬುದನ್ನು ಇಲ್ಲಿ

ಗಮನಿಸುವುದು ಅವಶ್ಯ. ಆದರೆ ಇದು ಕನ್ನಡದವೇ ಆದ ಪದಗಳಿಗೂ ಅನ್ವಯಿಸುವಂತಹ ಸಂಗತಿ.
ಉದಾಹರಣೆಗಾಗಿ, ಕನ್ನಡದ ಎಣ್ಣೆ ಪದ ಎಳ್ಳು ಮತ್ತು ನೆಯ್ ಎಂಬ ಎರಡು ಪದಗಳು ಒಟ್ಟಿಗೆ ಸೇರಿದುದರಿಂದಾಗಿ ಸಿದ್ಧವಾದ ಜೋಡುಪದವೆಂದು ಹೇಳುವುದಕ್ಕೆ ಚಾರಿತ್ರಿಕ ಆಧಾರವಿದೆ. ಆದರೆ ಹೊಸಗನ್ನಡದಲ್ಲಿ ಈ ಪದವನ್ನು ಈ ರೀತಿ ಒಳರಚನೆಯಿರುವ ಪದವೆಂದು ಪರಿಗಣಿಸಲು ಅಷ್ಟೊಂದು ಸಮಪ್ರಕ ವಾದ ಆಧಾರವಿಲ್ಲ. ಹಾಗಾಗಿ, ಹೊಸಗನ್ನಡದ ಮಟ್ಟಿಗೆ ಎಣ್ಣೆ ಎಂಬ ಪದವನ್ನು ಒಳರಚನೆಯಿಲ್ಲದ ಪದವೆಂದು ಪರಿಗಣಿಸುವುದೇ ಮೇಲು.
ಇದೇ ರೀತಿಯಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಕೆಲವನ್ನು ಜೋಡುಪದಗಳೆಂದು ಪರಿಗಣಿಸುವ ಬದಲು ಕನ್ನಡದ ಮಟ್ಟಿಗೆ ಒಳರಚನೆ ಯಿಲ್ಲದ ಪದಗಳೆಂದು ಪರಿಗಣಿಸುವ ಅವಶ್ಯಕತೆ ಕಂಡುಬಂದೀತು. ಇದಕ್ಕೆ ಕಾರಣವೇನೆಂದರೆ, ಸಾಧಿಸಲು ಆಧಾರವಿದ್ದರೂ ಆ ಪದದೊಂದಿಗೆ ಅಂತಹ ಆಧಾರ ಕನ್ನಡಕ್ಕೆ ಎರವಲಾಗಿ ಬಾರದಿರಲು ಸಾಧ್ಯವಿದೆ. ಇದು ನಾವು ವರ್ಣಿಸುತ್ತಿರುವ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿರಲೂ ಸಾಧ್ಯವಿದೆ. ಸಂಸ್ಕೃತದಲ್ಲಿ ಅವಕ್ಕೆ ಒಳರಚನೆಯನ್ನು

Eke →

5.8.2 ವಿಭಜನೆ

ಸಂಸ್ಕೃತದಿಂದ ಎರವಲಾಗಿ ಬಂದು ಹೊಸಗನ್ನಡದಲ್ಲಿ ಬಳಕೆಗೆ ಬಂದಿರುವ ಜೋಡುಪದಗಳಿಗೆ ಕನ್ನಡದವೇ ಆದ ಒಳನುಡಿಗಳನ್ನು ಕೊಟ್ಟು ಪರಿಶೀಲಿಸಿದಲ್ಲಿ, ಅವನ್ನು ಎರಡು ಮುಖ್ಯ ವಗ್ರಗಳಲ್ಲಿ ವಿಂಗಡಿಸಲು ಸಾಧ್ಯ ಎಂಬ ವಿಷಯ ಸ್ಪಷ್ಟವಾಗುತ್ತದೆ. ಮೊದಲನೆಯ ಅಂಗವಾಗಿ (1) ನಾಮಪದವಿರುವವು ಮತ್ತು (2) ಗುಣಪದವಿರುವವುಗಳು ಎಂಬವುಗಳೇ ಈ ಎರಡು ವಗ್ರಗಳು.
ಇವು ಮೇಲೆ ಕನ್ನಡದವೇ ಆದ ಜೋಡುಪದಗಳನ್ನು ವಿಭಜಿಸುವಲ್ಲಿ ಬಳಸಿದ ವಗ್ರಗಳೇ ಎಂಬುದನ್ನು ಗಮನಿಸಬಹುದು. ಮೊದಲನೆಯ ಅಂಗವಾಗಿ ಕ್ರಿಯಾಪದವಿರುವವು ಎಂಬ ಮೂರನೇ ವಗ್ರ ಮಾತ್ರ ಈ ಎರವಲಾಗಿ ಬಂದಿರುವ ಜೋಡುಪದಗಳಲ್ಲಿ ಕಾಣಿಸುವುದಿಲ್ಲ. ನಾಮಪದವಿರುವ ಜೋಡುಪದಗಳ ಎರಡು ಅಂಗಗಳನ್ನು ಕನ್ನಡದವೇ ಆದ ಜೋಡುಪದಗಳ ಹಾಗೆ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.

ಒಳನುಡಿ
ಮಾನದ ಹಾನಿ
ಯುಗದ ಆದಿ

ಜೋಡುಪದ ಮಾನಹಾನಿ ಯುಗಾದಿ

ಲಗ್ನದ ಪತ್ರಿಕೆ ಜಗತ್ತಿನ ಗುರು
ಭೂಮಿಯ ಕಂಪ

ಲಗ್ನಪತ್ರಿಕೆ ಜಗದ್ಗುರು ಭೂಕಂಪ

ಸಂಸ್ಕೃತದಿಂದ  ಎರವಲಾಗಿ  ಬಂದ  ಜೋಡುಪದಗಳಲ್ಲಿ  ಎಲ್ಲವನ್ನೂ  ಈ  ರೀತಿ  ಷಷ್ಠೀ ವಿಭಕ್ತಿಯ  ಮೂಲಕ  ಸಾಧಿಸಲು  ಸಾಧ್ಯವಾಗದು.  ಕೆಲವು  ಜೋಡು  ಪದಗಳ  ಅಂಗಗಳಾಗಿ  ಬಂದಿರುವ  ಪದಗಳಲ್ಲಿ  ಮೊದಲನೆಯದು  ಕನ್ನಡದಲ್ಲಿ  ನಾಮಪದವಾಗಿ ಬಳಕೆಯಲ್ಲಿಲ್ಲದಿರುವುದೇ ಇದಕ್ಕೆ ಕಾರಣ.  
ಉದಾಹರಣೆಗಾಗಿ,  ಕೃಷ್ಣಸಪ್ರ,  ಗಾಢನಿದ್ರೆ,  ಮೂಲನಿವಾಸಿ,  ಶುಭ  ಕಾರ್ಯ, ಮಹಾನಗರ, ದೃಢಮನಸ್ಸು, ಪೂರ್ಣವಿರಾಮ, ದೀರ್ಘಾಯುಷ್ಯ  ಮೊದಲಾದವುಗಳ  ಅಂಗಗಳನ್ನು  ಮೇಲೆ  ಕೊಟ್ಟಿರುವ  ಜೋಡುಪದಗಳಲ್ಲಿ  ಕಾಣಿಸುವ ಹಾಗೆ ಷಷ್ಠೀ ವಿಭಕ್ತಿಯ ಮೂಲಕ ಸಂಬಂಧಿಸಲು ಸಾಧ್ಯವಾಗದು. 
ಇಂತಹ  ಜೋಡುಪದಗಳಲ್ಲಿ  ಕೆಲವಕ್ಕೆ  ಒಳನುಡಿಯನ್ನು  ಕೊಡುವಾಗ  ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದವನ್ನು ಆಗು ಕ್ರಿಯಾಪದದ  ವಿಶೇಷಣವನ್ನಾಗಿ ಮಾಡಿ ಹೇಳಲು ಸಾಧ್ಯವಿದೆ. 

ಜೋಡುಪದ

ಒಳನುಡಿ
ಗಾಢವಾದ ನಿದ್ರೆ
ದೃಢವಾದ ಮನಸ್ಸು
ದೃಢಮನಸ್ಸು
ದೀರ್ಘವಾದ ಆಯುಷ್ಯ ದೀರ್ಘಾಯುಷ್ಯ

ಗಾಢನಿದ್ರೆ

ಆದರೆ  ಬೇರೆ  ಕೆಲವಕ್ಕೆ  (ಕೃಷ್ಣಸಪ್ರ,  ಪರಲೋಕ,  ಮೂಲನಿವಾಸಿ  ಮೊದಲಾದವುಗಳಿಗೆ) ಈ ರೀತಿ ಆಗು ಕ್ರಿಯಾಪದವನ್ನು ಬಳಸಿ ಒಳನುಡಿಯನ್ನು  ಹೇಳಲು  ಸಾಧ್ಯವಾಗದು.  ಇದಕ್ಕೆ  ಕಾರಣವೇನೆಂದರೆ,  ಈ  ಗುಣಪದವಿರುವ  ಜೋಡುಪದಗಳಿಗೆ  ಕ್ರಿಯಾವಿಶೇಷಣ  ಮತ್ತು  ನಾಮವಿಶೇಷಣ  ಎಂಬುದಾಗಿ  ಎರಡು ಮೂಲಗಳಿವೆ.  
ಕ್ರಿಯಾವಿಶೇಷಣ  ಮೂಲವಾಗಿರುವ  ಜೋಡುಪದಗಳಿಗೆ  ಒಳನುಡಿಯನ್ನು  ಹೇಳಬೇಕಿದ್ದಲ್ಲಿ  ಅವುಗಳ  ಮೊದಲನೆಯ  ಅಂಗವನ್ನು  ಆಗು  ಕ್ರಿಯಾಪದದ  ವಿಶೇಷಣವನ್ನಾಗಿ  ಮಾಡಿ  ಹೇಳಲು  ಸಾಧ್ಯವಾಗುತ್ತದೆ,  ಆದರೆ  ನಾಮವಿಶೇಷಣ  ಮೂಲವಾಗಿರುವ  ಜೋಡುಪದಗಳಿಗೆ  ಅಂತಹ  ಒಳನುಡಿಯನ್ನು  ಹೇಳಲು  ಸಾಧ್ಯವಾಗುವುದಿಲ್ಲ.  

Eke →

5.9 ತಿರುಳು

ಕನ್ನಡದ ಜೋಡುಪದಗಳಿಗೆ ಕನ್ನಡದವೇ ಆದ ಒಳರಚನೆಗಳಿವೆಯಾದ ಕಾರಣ, ಸಂಸ್ಕೃತದ ಸಮಾಸ ವಿಧಾನಗಳನ್ನು ಕನ್ನಡ ವ್ಯಾಕರಣದಲ್ಲಿ ಹಾಗೆಯೇ ಅಳವಡಿಸಿಕೊಳ್ಳಲು ಸಾಧ್ಯವಾಗದು. ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೂ ಕನ್ನಡದಲ್ಲಿ ಇಂತಹ ಕನ್ನಡದವೇ ಆದ ಒಳರಚನೆಗಳು ಇವೆಯಲ್ಲದೆ ಸಂಸ್ಕೃತದಲ್ಲಿರುವಂತಹ ಒಳರಚನೆಗಳಿಲ್ಲ.
ಸಂಸ್ಕೃತ ವ್ಯಾಕರಣದಲ್ಲಿ ಜೋಡುಪದಗಳನ್ನು ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು ಪ್ರಧಾನ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದು ಕ್ರಮ. ಎರಡನೆಯ ಅಂಗ ಪ್ರಧಾನವಾದರೆ ತತ್ಪುರುಷ, ಮೊದಲನೆಯದು ಪ್ರಧಾನವಾದರೆ ಅವ್ಯಯೀಭಾವ, ಎರಡೂ ಪ್ರಧಾನವಾದರೆ ದ್ವಂದ್ವ, ಮತ್ತು ಒಂದೂ ಪ್ರಧಾನವಲ್ಲವಾದರೆ (ಎಂದರೆ ಹೊರಗಿನ ಪದವೊಂದು ಪ್ರಧಾನವಾಗಿದೆಯಾದರೆ) ಬಹುವ್ರೀಹಿ ಎಂಬುದಾಗಿ ಅದರ ಜೋಡುಪದಗಳನ್ನು ವಿಭಜಿಸಲಾಗುತ್ತದೆ. ಆದರೆ ಕನ್ನಡದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವುಗಳಲ್ಲೂ ಎರಡನೆಯ ಪದ ಪ್ರಧಾನವಾಗಿರುತ್ತದೆ. ಹಾಗಾಗಿ ಅವುಗಳ ವಿಭಜನೆಯನ್ನು ಸಂಸ್ಕೃತದ ಹಾಗೆ ಅಂಗವಾಗಿ ಬಂದಿರುವ ಪದಗಳ ಪ್ರಾಧಾನ್ಯತೆಯ ಆಧಾರದ ಮೇಲೆ ಸಾಧಿಸುವುದರಿಂದ ತೃಪ್ತಿಕರವಾದ ವಿಭಜನೆ ಸಿಗಲಾರದು.
ಈ ಜೋಡುಪದಗಳಲ್ಲಿ ಎರಡನೆಯ ಅಂಗ ಹೆಚ್ಚಿನವುಗಳಲ್ಲೂ ನಾಮಪದ ವಾಗಿದ್ದು, ಮೊದನೆಯದು ನಾಮಪದ, ಗುಣಪದ ಇಲ್ಲವೇ ಕ್ರಿಯಾಪದವಾಗಿರಲು ಸಾಧ್ಯವಿದೆ. ಹಾಗಾಗಿ ಕನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಅಂಗದ ಪದವಗ್ರವನ್ನಾಧರಿಸಿ ಮೂರು ಮುಖ್ಯ ವಿಭಾಗಗಳಲ್ಲಿ (ನಾಮಪದ ವಿರುವವು, ಗುಣಪದವಿರುವವು ಮತ್ತು ಕ್ರಿಯಾಪದವಿರುವವು ಎಂಬುದಾಗಿ) ವಿಂಗಡಿಸುವುದು ಕನ್ನಡ ವ್ಯಾಕರಣದ ಮಟ್ಟಿಗೆ ಅತ್ಯಂತ ಸಮಪ್ರಕವಾದ ವಿಧಾನ ವೆಂದು ಹೇಳಬಹುದು. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದ ಜೋಡು ಪದಗಳಿಗೂ ಈ ವಿಭಜನೆ ಅನ್ವಯಿಸುತ್ತದೆ.