Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೯ — ಕ್ರಿಯಾರೂಪಗಳು
ಕ್ರಿ ಯಾರೂಪಗಳು
೯.೧ ಕ್ರಿಯಾರೂಪಗಳ ಒಳರಚನೆ
ವಾಕ್ಯದ ಪ್ರಧಾನ ಅಂಗವಾಗಿ ಬರುವ ಕ್ರಿಯಾರೂಪಗಳ ಒಳರಚನೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಈ ಎರಡು ಭಾಷೆಗಳು ಬಳಸುವ ವ್ಯಾಕರಣದ ಮೂಲತತ್ವಗಳು ಬೇರೆ ಬೇರೆಯಾಗಿರುವುದೇ ಈ ವ್ಯತ್ಯಾಸಗಳಿಗೂ ಮೂಲ ಕಾರಣ ಎಂಬುದನ್ನು ಈ ಅಧ್ಯಾಯದಲ್ಲಿ ನೋಡಲಿರುವೆವು.
(೧) ಸಂಸ್ಕೃತದಲ್ಲಿ ಕ್ರಿಯಾರೂಪಗಳನ್ನು ರಚಿಸುವುದಕ್ಕಾಗಿ ಕ್ರಿಯಾಧಾತುವಿಗೆ ಘಟಕವನ್ನು ಸೂಚಿಸುವ “ತಿಜ್‌್’ ಪ್ರತ್ಯಯಗಳಲ್ಲೊಂದನ್ನು ಮಾತ್ರ ಸೇರಿಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಸಂಸ್ಕೃತದ ಯಾತಿ “ಹೋಗುತ್ತಾ ನೆ ಕ್ರಿಯಾರೂಪದಲ್ಲಿ ಯಾ “ಹೋಗು’ ಧಾತುವಿನ ಅನಂತರ ಅದರ ಘಟಕವೊಂದನ್ನು ಸೂಚಿಸುವ ತಿ ಪ್ರತ್ಯಯ ಮಾತ್ರ ಬಂದಿದೆ. ಸಮಯವನ್ನು ಸೂಚಿಸುವುದಕ್ಕಾಗಿ ಅದಕ್ಕಿಂತ ಭಿನ್ನವಾದ ಬೇರೆ ಪ್ರತ್ಯಯ ಬಳಕೆಯಾಗಿಲ್ಲ.
ಆದರೆ, ಹಳೆಗನ್ನಡದಲ್ಲಿ ಕ್ರಿಯಾಪದದೊಂದಿಗೆ ಘಟಕವನ್ನು ಸೂಚಿಸುವ ಆಖ್ಯಾತ ಪ್ರತ್ಯಯವನ್ನು ಮಾತ್ರವಲ್ಲದೆ, ಸಮಯವನ್ನು ಸೂಚಿಸುವ ಪ್ರತ್ಯಯವನ್ನೂ ಸೇರಿಸಬೇಕಾಗುತ್ತದೆ. ಉದಾಹರಣೆಗಾಗಿ, ಹಳೆಗನ್ನಡದ ಪೋಪನ್ ಕ್ರಿಯಾರೂಪದಲ್ಲಿ ಪೋ ಧಾತುವಿನ ಅನಂತರ ಮುಂದಿನ ಸಮಯವನ್ನು ಸೂಚಿಸುವ ಪ ಪ್ರತ್ಯಯ ಮತ್ತು ಘಟಕವನ್ನು ಸೂಚಿಸುವ ಅನ್ ಪ್ರತ್ಯಯ - ಹೀಗೆ ಎರಡು ಪ್ರತ್ಯಯಗಳು ಬಂದಿವೆ.
(೨) ಹಳೆಗನ್ನಡದಲ್ಲಿ ಸಮಯವನ್ನು ಸೂಚಿಸುವ ಪ್ರತ್ಯಯಗಳು ಆಡುಗನ ಸಮಯಕ್ಕೂ ಘಟನೆಯ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಪೋದನ್ ಕ್ರಿಯಾರೂಪದಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ದ್ ಪ್ರತ್ಯಯ ಬಂದಿದೆ, ಮತ್ತು ಪೋಪನ್ ಕ್ರಿಯಾರೂಪದಲ್ಲಿ ಪ್ ಪ್ರತ್ಯಯ ಬಂದಿದೆ. ಆ ಕ್ರಿಯಾರೂಪವನ್ನು ವಾಕ್ಯವೊಂದರಲ್ಲಿ ಬಳಸಿರುವ ಸಮಯಕ್ಕಿಂತ ಮೊದಲೇ ಹೋಗುವ ಘಟನೆ ನಡೆದಿದೆಯೆಂಬುದನ್ನು ದ್ ಪ್ರತ್ಯಯವೂ, ಅನಂತರ ನಡೆಯಲಿದೆಯೆಂಬುದನ್ನು ಪ್ ಪ್ರತ್ಯಯವೂ ಸೂಚಿಸುತ್ತವೆ.
ಆದರೆ, ಸಂಸ್ಕೃತದ ಕ್ರಿಯಾರೂಪಗಳಲ್ಲಿ ಈ ರೀತಿ ಆಡುಗನ ಸಮಯಕ್ಕೂ ಘಟನೆಯ ಸಮಯಕ್ಕೂ ನಡುವಿರುವ ಸಂಬಂಧವನ್ನು ಸೂಚಿಸುವುದಕ್ಕಿಂತಲೂ ಘಟನೆಯ ಆಂತರಿಕ ಸಮಯ ವ್ಯವಸ್ಥೆಯನ್ನು ಸೂಚಿಸುವುದಕ್ಕೇನೇ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಲಾಗಿದೆ, ಮತ್ತು ಇದಕ್ಕಾಗಿ, ಮೇಲೆ ಸೂಚಿಸಿದ ಹಾಗೆ, ಪ್ರತ್ಯೇಕವಾದ ಪ್ರತ್ಯಯವನ್ನು ಬಳಸುವ ಬದಲು, ಕ್ರಿಯಾಧಾತುವಿನಲ್ಲಿ ಮತ್ತು ಅದರ ಅನಂತರ ಘಟಕವನ್ನು ಸೂಚಿಸುವುದಕ್ಕಾಗಿ ಬರುವ ಪ್ರತ್ಯಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ.
ಉದಾಹರಣೆಗಾಗಿ, ತುದ್ “ಹೊಡೆ’ ಧಾತುವಿಗೆ ಮುಖ್ಯವಾಗಿ ತುದ್ ಮತ್ತು ತುತೋದ್ ಎಂಬ ಎರಡು ರೂಪಗಳಿದ್ದು, ಇವು ಅಪೂರ್ಣ ಮತ್ತು ಪೂರ್ಣ ಎಂಬ ಎರಡು ಸಮಯ ವ್ಯವಸ್ಥೆ ಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತ ವೆ. ಅವುಗಳಲ್ಲಿ ಮೊದಲನೆಯದನ್ನು ತುದತಿ “ಹೊಡೆಯುತ್ತಾನೆ” ಕ್ರಿಯಾರೂಪದಲ್ಲೂ, ಎರಡನೆಯದನ್ನು ತುತೋದ “ಹೊಡೆದ’ ಕ್ರಿಯಾರೂಪದಲ್ಲೂ ಕಾಣಬಹುದು.
ಘಟಕವನ್ನು ಸೂಚಿಸುವ ಪ್ರತ್ಯಯಕ್ಕೆ ಮೊದಲನೆಯದರಲ್ಲಿ ತಿ ಎಂಬ ರೂಪವಿದೆಯಾದರೆ ಎರಡನೆಯದರಲ್ಲಿ ಅ ಎಂಬ ರೂಪವಿದೆ.
(೩) ಘಟಕಗಳನ್ನು ಸೂಚಿಸುವ ಪ್ರತ್ಯಯಗಳಲ್ಲೂ ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವೆ ಹಲವು ವ್ಯತ್ಯಾಸಗಳಿವೆ:
(ಕ) ಹಳೆಗನ್ನಡದಲ್ಲಿ ಈ ಪ್ರತ್ಯಯಗಳು ಪುರುಷ-ವಚನ ಭೇದಗಳನ್ನು ಮಾತ್ರವಲ್ಲದೆ ಪ್ರಥಮ ಪುರುಷದಲ್ಲಿ ಲಿಂಗಭೇದವನ್ನೂ ಸೂಚಿಸುತ್ತವೆ (ಬಂದನ್, ಬಂದಳ್, ಬಂದುದು). ಆದರೆ, ಸಂಸ್ಕೃತದಲ್ಲಿ ಈ ಪ್ರತ್ಯಯಗಳು ಪುರುಷ ಮತ್ತು ವಚನ ಭೇದವನ್ನು ಮಾತ್ರ ಸೂಚಿಸುತ್ತವಲ್ಲದೆ, ಲಿಂಗಭೇದವನ್ನು ಸೂಚಿಸುವುದಿಲ್ಲ. ಉದಾಹರಣೆಗಾಗಿ, ಸಂಸ್ಕೃತದ ತುದತಿ ಕ್ರಿಯಾರೂಪವನ್ನು “ಹೊಡೆಯುತ್ತಾನೆ’, “ಹೊಡೆಯುತ್ತಾಳೆ’, ಮತ್ತು “ಹೊಡೆಯುತ್ತದೆ’ ಎಂಬುದಾಗಿ ಮೂರು ಅರ್ಥಗಳಲ್ಲೂ ಬಳಸಲು ಸಾಧ್ಯವಿದೆ.
(ಖ) ಹಳೆಗನ್ನಡದಲ್ಲಿ ಏಕವಚನ-ಬಹುವಚನ ಭೇದ ಮಾತ್ರ ಇದೆ; ಆದರೆ, ಸಂಸ್ಕೃತದಲ್ಲಿ ಏಕವಚನ-ದ್ವಿವಚನ-ಬಹುವಚನ ಭೇದವಿದೆ. ಹಳೆಗನ್ನಡದ ಮಾಲ್ಬರ್ “ಮಾಡುತ್ತಾರೆ’ ಕ್ರಿಯಾರೂಪಕ್ಕೆ ಬದಲಾಗಿ ಸಂಸ್ಕೃತದಲ್ಲಿ ಕುರುತಃ “(ಇಬ್ಬರು) ಮಾಡುತ್ತಾರೆ’ ಮತ್ತು ಕುರ್ವಂತಿ “(ಇಬ್ಬರಿಗಿಂತ ಜಾಸ್ತಿ ಮಂದಿ) ಮಾಡುತ್ತಾರೆ” ಎಂಬುದಾಗಿ ಎರಡು ಕ್ರಿಯಾರೂಪಗಳಿವೆ.
(ಗ) ಹಳೆಗನ್ನಡದಲ್ಲಿ ಘಟಕವನ್ನು ಸೂಚಿಸುವ ಪ್ರತ್ಯಯಗಳು ಎಲ್ಲಾ ರೂಪಗಳಲ್ಲೂ ಬದಲಾಗದೆ ಒಂದೇ ರೂಪದಲ್ಲಿರುತ್ತವೆ. ಉದಾಹರಣೆಗಾಗಿ, ಪೋಪನ್, ಪೋದನ್ ಮತ್ತು ಪೋಗನ್ ಎಂಬ ಈ ಮೂರು ರೂಪಗಳಲ್ಲೂ ಘಟಕವನ್ನು ಸೂಚಿಸುವ ಪ್ರ ತ್ಯಯ ಅನ್ ಎಂಬ ಒಂದೇ ರೂಪದಲ್ಲಿದೆ. (ನಪುಂಸಕ ಏಕವಚನದ ಉದು ಪ್ರತ್ಯಯಕ್ಕೆ ಭೂತಕಾಲದಲ್ಲಿ ವಿಕಲ್ಪವಾಗಿ ತು ಇಲ್ಲವೇ ತ್ತು ರೂಪಗಳಿವೆಯೆಂಬುದು ಮಾತ್ರ (ಮಾಡಿದುದು, ಮಾಡಿತು, ಒಡೆದತ್ತು) ಇದಕ್ಕೆ ಅಪವಾದವಾಗಿದೆ).
ಆದರೆ, ಸಂಸ್ಕೃತದಲ್ಲಿ ಈ ಪ್ರತ್ಯಯಗಳು ಹಲವು ರೀತಿಯ ರೂಪಭೇದಗಳನ್ನು ತೋರಿಸುತ್ತವೆ. ಉದಾಹರಣೆಗಾಗಿ, ಪ್ರಥಮಪುರುಷ ಏಕವಚನ ಪ್ರತ್ಯಯಕ್ಕೆ ಅಪೂರ್ಣ ಕಾಲದಲ್ಲಿ ತಿ ರೂಪವಿದೆಯಾದರೆ (ಕರೋತಿ “ಮಾಡುತ್ತಾನೆ’), ಭೂತ ಪ್ರತ್ಯಯ ಸೇರಿರುವಲ್ಲಿ ತ್ ರೂಪವಿದೆ (ಅಕರೋತ್ “ಮಾಡಿದ’). ಆತ್ಮನೇಪದದಲ್ಲಿ ಇವೆರಡಕ್ಕಿಂತ ಭಿನ್ನವಾದ ತೇ ಮತ್ತು ತ ರೂಪಗಳಿವೆ (ಕುರುತೇ ಮತ್ತು ಅಕುರುತ). ಇದೇ ರೀತಿಯಲ್ಲಿ, ಈ ಪ್ರತ್ಯಯಕ್ಕೆ ಪೂರ್ಣಕಾಲದಲ್ಲೂ ಬೇರೆ ಬೇರೆ ರೂಪಗಳಿವೆ (ಚಕಾರ, ಅಕಾರ್ಷಿತ್ ಮತ್ತು ಚಕ್ರೇ, ಅಕೃತ).
(೪) ಸಂಸ್ಕೃತದ ಕ್ರಿಯಾಪದಗಳಿಗೆ ಪರಸ್ಮೈಪದ ಮತ್ತು ಆತ್ಮನೇಪದ ಎಂಬುದಾಗಿ ಎರಡೆರಡು ರೂಪಗಳಿವೆ. ಕ್ರಿಯಾಪದವು ತಿಳಿಸುವ ಘಟನೆಯನ್ನು ಒಬ್ಬ ವ್ಯಕ್ತಿ ಬೇರೊಬ್ಬನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಪರಸ್ಮೈಪದ ರೂಪ ವನ್ನೂ, ತನ್ನ ಲಾಭಕ್ಕಾಗಿ ನಡೆಸುತ್ತಿರುವನಾದರೆ ಆತ್ಮನೇಪದ ರೂಪವನ್ನೂ ಬಳಸಬೇಕೆಂಬುದು ಈ ವ್ಯತ್ಯಾಸದ ಮೂಲ
ಉದೇಶವಾಗಿತು. ಎ pf)
ಕ್ರಿಯಾರೂಪಗಳು ಕ್
ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಸಂಸ್ಕೃತದ ಕ್ರಿಯಾಪದಗಳೊಂದಿಗೆ ಎರಡು ರೀತಿಯ ಆಖ್ಯಾತ ಪ್ರತ್ಯಯಗಳು ಬಳಕೆಯಾಗುತ್ತವೆ. ಉದಾಹರಣೆಗಾಗಿ, ಯಜ್ “ಯಾಗ ಮಾಡು’ ಧಾತುವಿನೊಂದಿಗೆ ಅಪೂರ್ಣ ಕಾಲದ ಪ್ರಥಮ ಪುರುಷ-ಏಕವಚನವನ್ನು ಸೂಚಿಸಲು ಪರಸ್ಮೈಪದದಲ್ಲಿ ತಿ ಪ್ರತ್ಯಯ ಬರುವುದಾದರೆ, ಆತ್ಮನೇಪದದಲ್ಲಿ ತೇ ಪ್ರತ್ಯಯ ಬರುತ್ತದೆ (ಯಜತಿ, ಯಜತೇ).
ಆದರೆ, ಈ ಮೂಲ ಉದ್ದೇಶ ಸಂಸ್ಕೃತದ ಕೆಲವು ಕ್ರಿಯಾಪದಗಳ ಬಳಕೆಯಲ್ಲಿ ಮಾತ್ರ ಕಾಣಿಸುತ್ತದೆ. ಬೇರೆ ಕೆಲವು ಕ್ರಿಯಾಪದಗಳು ಯಾವಾಗಲೂ ಆತ್ಮನೇಪದದಲ್ಲಿ ಅಥವಾ ಪರಸ್ಮೈಪದದಲ್ಲಿ ಬರುತ್ತಿದ್ದು, ಅವುಗಳ ಬಳಕೆಯಲ್ಲಿ ಈ ಅರ್ಥವ್ಯತ್ಯಾಸ ಉಳಿದಿಲ್ಲ. ಇನ್ನು ಕೆಲವು ಕ್ರಿಯಾಪದಗಳು ಕೆಲವು ಸಮಯ ರೂಪಗಳಲ್ಲಿ ಮಾತ್ರ ಈ ವ್ಯತ್ಯಾಸವನ್ನು ಉಳಿಸಿಕೊಂಡಿವೆ.
ಹೊಸಗನ್ನಡದಲ್ಲಿ ಈ ಅರ್ಥವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಕ್ರಿಯಾಪದದ ಮೊದಲಿನ ಸಮಯದ ರೂಪಕ್ಕೆ ಕೊಳ್ಳು ಎಂಬುದನ್ನು ಸೇರಿಸಿ ಬಳಸಲಾಗುತ್ತದೆ (ಮಾಡು-ಮಾಡಿಕೊಳ್ಳು, ಕೊಡಿಸು-ಕೊಡಿಸಿಕೊಳ್ಳು). ಹಳೆಗನ್ನಡದಲ್ಲೂ ಕೊಳ್ ಕ್ರಿಯಾಪದಕ್ಕೆ ಇಂತಹದೇ ಬಳಕೆಯಿತ್ತಾದರೂ (ತಿಳಿ-ತಿಳಿದುಕೊಳ್), ಅದು ಹೊಸಗನ್ನಡದಲ್ಲಿ ಕಾಣಿಸುವಷ್ಟು ನಿಯಮಿತವಾಗಿ ಆ ಅರ್ಥವನ್ನು ಸೂಚಿಸುವ ಹಾಗೆ ಕಾಣಿಸುವುದಿಲ್ಲ.
(೫) ಕರ್ತರಿ-ಕರ್ಮಣಿ ಭೇದ: ಸಂಸ್ಕ ತದಲ್ಲಿ ಒಂದು ಘಟನೆಯನ್ನು ವರದಿ ಮಾಡುವಾಗ ಅದರ ಕರ್ತೃವಿನ ಬದಲು ಕರ್ಮಕ್ಕೆ ಪ್ರಾಧಾನ್ಯತೆಯನ್ನು ಕೊಡಬೇಕಿದ್ದ ಲ್ಲಿ ಬೇರೆಯೇ ಒಂದು ಕ್ರಿಯಾರೂಪವನ್ನು ಬಳಸಬೇಕಾಗುತ್ತದೆ. ಕರ್ತವಿಗೆ ಪ್ರಾಧಾನ್ಯತೆಯನ್ನು ಕೊಡುವ ಮೇಲೆ ವಿವರಿಸಿದ ಕ್ರಿಯಾರೂಪಗಳನ್ನು “ಕರ್ತರಿ’ ರೂಪಗಳೆಂದು ಕರೆಯಲಾಗುತ್ತದೆ, ಮತ್ತು ಕರ್ಮಕ್ಕೆ ಪ್ರಾಧಾನ್ಯತೆಯನ್ನು ಕೊಡುವ ಇವಕ್ಕಿಂತ ಭಿನ್ನವಾದ ಕ್ರಿಯಾರೂಪಗಳನ್ನು “ಕರ್ಮಣಿ’ ರೂಪಗಳೆಂದು ಕರೆಯಲಾಗುತ್ತದೆ.
ಕರ್ಮಣಿ ರೂಪಗಳನ್ನು ರಚಿಸಲು ಕ್ರಿಯಾಪದಕ್ಕೆ ಯ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ, ಮತ್ತು ಅದರೊಂದಿಗೆ ಆಖ್ಯಾತ ಪ್ರತ್ಯಯದ ಆತ್ಮನೇಪದ ರೂಪವನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಕ್ರಿಯಾಪದದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಕೃ “ಮಾಡು’ ಧಾತುವಿಗೆ ಕರ್ತರಿಯಲ್ಲಿ ಕರೋತಿ “ಮಾಡುತ್ತಾನೆ” ರೂಪವಿದೆಯಾದರೆ, ಕರ್ಮಣಿಯಲ್ಲಿ ಕ್ರಿಯತೇ ರೂಪವಿದೆ.
ಹಳೆಗನ್ನಡದ ಕ್ರಿಯಾಪದಗಳಿಗೆ ಇಂತಹ ವಿಶಿಷ್ಟವಾದ ಕರ್ಮಣಿ ರೂಪಗಳಿಲ್ಲ. ಅವು ಕೊಡುವ ಅರ್ಥವನ್ನು ಸೂಚಿಸಬೇಕಿದ್ದಲ್ಲಿ, ಕ್ರಿಯಾಪದಗಳ ಸಂಯುಕ್ತರೂಪಗಳನ್ನು ಬಳಸಬೇಕಾಗುತ್ತದೆ (ಅವನಿಂ ಮಾಡೆ ಪಟ್ಟುದು, ಪದಕಂ ಅಕ್ಕಸಾಲೆಯಿಂ ಮಾಡಲ್ ಪಟ್ಟುದು, ತಾನ್ ಇರಲ್ ಪಟ್ಟಂ, ಇತ್ಯಾದಿ). (ಜಾಸ್ತಿ ವಿವರಗಳಿಗೆ ಕಿಟ್ಟೆಲ್ ೧೯೦೩:೩೨೩-೩೦ ನೋಡಿ).
೯.೧.೧ ಹಳೆಗನ್ನಡ ವೈಯಾಕರಣಿಗಳ ಸಮಸ್ಯೆಗಳು
ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಆ ಭಾಷೆಯ ಕ್ರಿಯಾರೂಪಗಳನ್ನು ಮೊದಲಿಗೆ ಸಂಸ್ಕೃತದಲ್ಲಿ ಬಳಕೆಯಾಗುವ ವಿಧಾನಗಳ ಮೂಲಕವೇ ವರ್ಣಿಸಿ, ಅನಂತರ ಅವುಗಳ ಹಿಂದಿರುವ ನಿಯಮಗಳಿಗೆ ಒಳಗಾಗದ ರೂಪಗಳನ್ನು ಬೇರೆ ನಿಯಮಗಳ ಮೂಲಕ ವರ್ಣಿಸಲು ಪ್ರಯತ್ನಿಸಿದ್ದಾರೆ. ಇಂತಹ ತೇಪೆಕೆಲಸದಿಂದಾಗಿ ಇವರು ರಚಿಸಿದ ವ್ಯಾಕರಣ ನಿಯಮಗಳೆಲ್ಲ ಅನವಶ್ಯಕವಾಗಿ
ಕೇಶಿರಾಜನು (ಸೂ. ೨೩೨) ಹಳೆಗನ್ನಡ ಕ್ರಿಯಾರೂಪಗಳಲ್ಲಿ ಘಟಕವನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳನ್ನು ಮಾತ್ರ ಪ್ರ ತ್ಯಯ’ಗಳೆಂದು (ಆಖ್ಯಾತ (ವಿಭಕ್ತಿ) ಪ್ರತ್ಯಯಗಳೆಂದು) ಕರೆದಿದ್ದಾನೆ. ಸಮಯವನ್ನು ಸೂಚಿಸುವ ಪ್ರತ್ಯಯಗಳನ್ನು ಪ್ರತ್ಯಯಗಳೆಂದು ಕರೆಯದೆ, ಆಖ್ಯಾತ ಪ್ರತ್ಯಯಗಳ ಮೊದಲು ಬರುವವುಗಳೆಂದಿಷ್ಟೇ ಹೇಳಿದ್ದಾನೆ. ಇದು ಮೇಲೆ ಸೂಚಿಸಿದಂತಹ ತೇಪೆಕೆಲಸಕ್ಕೆ ಒಂದು ಉದಾಹರಣೆ.
ಸಮಯವನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಆಖ್ಯಾತ ಪ್ರತ್ಯಯ, ಸಂಸ್ಕೃತದಲ್ಲಿರುವ ಹಾಗೆ, ನೇರವಾಗಿ ಕ್ರಿಯಾಪದದ ಅನಂತರ ಬರುವುದಿಲ್ಲವಾದ ಕಾರಣ, ನಾಗವರ್ಮನು ಆಖ್ಯಾತ ಪ್ರತ್ಯಯಗಳ ಬಳಕೆಗೆ ಉದಾಹರಣೆಗಳನ್ನು ಕೊಡುವಾಗ ಸಮಯವನ್ನು ಸೂಚಿಸುವ ಕ್ರಿಯಾರೂಪಗಳ ಬದಲು ಅಲ್ಲಗಳೆಯುವ ಕ್ರಿಯಾರೂಪಗಳನ್ನು ಕೊಟ್ಟಿದ್ದಾನೆ (ದೊಡ್ಡಸ್ವಾಮಿ ೧೯೮೦:೩೯೬ ನೋಡಿ).
ಸಂಸ್ಕೃತದಲ್ಲಿ ಘಟಕವನ್ನು ಸೂಚಿಸುವ ತಿಜ್‌್ ಪ್ರತ್ಯಯಗಳು ಘಟಕಗಳ ಪುರುಷ ಮತ್ತು ವಚನಭೇದಗಳನ್ನು ಮಾತ್ರ ಸೂಚಿಸುತ್ತವೆ; ಆದರೆ, ಹಳೆಗನ್ನಡದ ಘಟಕ ಪ್ರತ್ಯಯಗಳು ಪುರುಷ ಮತ್ತು ವಚನಗಳನ್ನು ಮಾತ್ರವಲ್ಲದೆ ಪ್ರಥಮ ಪುರುಷದಲ್ಲಿ ಲಿಂಗಭೇದವನ್ನೂ ಸೂಚಿಸುತ್ತವೆ (೯.೩ ನೋಡಿ).
ಕೇಶಿರಾಜನೇ ಮೊದಲಾದವರು ಹಳೆಗನ್ನಡದ ಕ್ರಿಯಾರೂಪಗಳಲ್ಲಿ ಪುರುಷ ಮತ್ತು ವಚನಗಳನ್ನು ಸೂಚಿಸುವುದಕ್ಕಾಗಿ ಬರುವ ಅಮ್, ಅರ್, ಅಯ್, ಇರ್, ಎನ್, ಎವು ಪ್ರತ್ಯಯಗಳನ್ನು ಮಾತ್ರವೇ ಅಖ್ಯಾತ ಪ್ರತ್ಯಯಗಳೆಂದು ಕರೆದಿದ್ದಾರೆ. ಸಂಸ್ಕೃತದ ಕ್ರಿಯಾರೂಪಗಳಲ್ಲಿ ಇಂತಹ ಆಖ್ಯಾತ ಪ್ರತ್ಯಯಗಳ ಮೂಲಕ ಪುರುಷ ಮತ್ತು ವಚನಗಳನ್ನು ಮಾತ್ರವೇ ಸೂಚಿಸಲಾಗುತ್ತದೆಯೆಂಬುದೇ ಇದಕ್ಕೆ ಕಾರಣ.
ಹಳೆಗನ್ನಡದ ಕ್ರಿಯಾರೂಪಗಳಲ್ಲಿ ಲಿಂಗಭೇದವನ್ನು ಸೂಚಿಸುವುದಕ್ಕಾಗಿ ಪ್ರಥಮಪುರುಷದಲ್ಲಿ ಬರುವ ಸ್ತ್ರ €ಲಿಂಗ-ಏಕವಚನದ ಅಳ್, ನಪುಂಸಕಲಿಂಗ ಏಕವಚನದ ಉದು ಮತ್ತು ನಪುಂಸಕಲಿಂಗ- ಬಹುವಚನದ ಉವು ಇವನ್ನೆಲ್ಲ ಆಖ್ಯಾತ ಪ್ರತ್ಯಯಗಳೆಂದು ಕರೆಯದೆ ಪ್ರಥಮಪುರುಷ (ಪುಲ್ಲಿಂಗ) ಏಕವಚನ ಮತ್ತು ಬಹುವಚನ ಪ್ರತ್ಯಯಗಳ ಮೇಲೆ ಬಂದಿರುವ “ಆದೇಶ’ಗಳೆಂದು ಕರೆಯಲಾಗಿದೆ (ಕೇಶಿರಾಜ, ಸೂ. ೨೩೬-೭ ನೋಡಿ). ಇದು ಮೇಲೆ ಸೂಚಿಸಿದಂತಹ ತೇಪೆಕೆಲಸಕ್ಕೆ ಇನ್ನೊಂದು ಉದಾಹರಣೆ.
೯.೨ ಸಮಯವನ್ನು ಸೂಚಿಸುವ ವಿಧಾನಗಳು
ಒಂದು ಘಟನೆ ಇಲ್ಲವೇ ಸಂಗತಿಯ ಸಮಯವನ್ನು ಸೂಚಿಸುವುದಕ್ಕಾಗಿ ಭಾಷೆಗಳಲ್ಲಿ ಮುಖ್ಯವಾಗಿ ಮೂರು ರೀತಿಯ ವಿಧಾನಗಳು ಬಳಕೆಯಲ್ಲಿವೆ: (ಕ) ಘಟನೆ ಇಲ್ಲವೇ ಸಂಗತಿಯ ಸಮಯವನ್ನು ಆ ಘಟನೆಯನ್ನು ವರದಿಮಾಡುವ ಸಮಯಕ್ಕೆ ಸಂಬಂಧಿಸಿದಂತೆ ಸೂಚಿಸುವುದು ಇವುಗಳಲ್ಲಿ ಒಂದು ವಿಧಾನ; (ಖ) ಘಟನೆ ಮುಗಿದುದೇ ಅಥವಾ ಮುಗಿಯದುದೇ, ಕ್ಷಣಿಕವೇ ಅಥವಾ ಜಾಸ್ತಿ ಹೊತ್ತು ನಡೆಯುವಂತಹದೇ, ಒಮ್ಮೆ ನಡೆದುದೇ ಅಥವಾ ಹಲವು ಬಾರಿ ನಡೆದುದೇ ಮೊದಲಾದಂತಹ ಘಟನೆಯ ಆಂತರಿಕ ಸಮಯ ವ್ಯವಸ್ಥೆಯನ್ನು ಸೂಚಿಸುವುದು ಎರಡನೆಯ ವಿಧಾನ; ಮತ್ತು (ಗ) ಘಟನೆ ನಿಜವಾದುದೇ ಅಥವಾ ನಿಜವಲ್ಲದುದೇ, ಅದು ನಡೆದಿರುವ ಇಲ್ಲವೇ
ಕ್ರಿಯಾರೂಪಗಳು ಇಷು
ನಡೆಯಲಿರುವ ವಿಷಯದಲ್ಲಿ ಆಡುಗನ ತಿಳುವಳಿಕೆಯೆಂತಹದು (ಆತ ಸ್ವತ: ನೋಡಿರುವುದೇ, ಅಥವಾ ಇನ್ನೊಬ್ಬರಿಂದ ಕೇಳಿ ತಿಳಿದಿರುವಂತಹದೇ) ಮೊದಲಾದಂತಹ ಘಟನೆಯ ವಿಷಯದಲ್ಲಿ ಆಡುಗನ ಮನೋಭಾವವೆಂತಹದು ಎಂಬುದನ್ನು ಸೂಚಿಸುವುದು ಮೂರನೆಯ ವಿಧಾನ. ಘಟನೆಯ ಸಮಯ ಸಂಬಂಧವನ್ನು ಸೂಚಿಸುವುದು, ಸಮಯದ ವ್ಯವಸ್ಥೆಯನ್ನು ಸೂಚಿಸುವುದು, ಮತ್ತು ಘಟನೆಯ ಸಮಯದ ಕುರಿತು ಆಡುಗನ ಮನೋಭಾವವನ್ನು ಸೂಚಿಸುವುದು ಎಂಬುದಾಗಿ ಈ ಮೂರು ವಿಧಾನಗಳನ್ನು ಸಂಕ್ಷಿಪ್ತವಾಗಿ ವರ್ಣಿಸಲು ಸಾಧ್ಯವಿದ್ದು, ಇವನ್ನು “ಸಮಯ ಸಂಬಂಧ’, “ಸಮಯ ವ್ಯವಸ್ಥೆ ‘ ಮತ್ತು “ಮನೋಭಾವ’ ಎಂಬುದಾಗಿ ಹೆಸರಿಸಬಹುದು. ಭಾಷೆಗಳ ನಡುವೆ ಸಮಯ ಸೂಚನೆಯಲ್ಲಿ ಕಾಣಿಸುವ ಒಂದು ಮುಖ್ಯ ವ್ಯತ್ಯಾಸವೇನೆಂದರೆ, ಅವು ಈ ಮೂರು ವಿಧಾನಗಳಲ್ಲಿ ಒಂದಕ್ಕೆ ಹೆಚ್ಚಿ ನ ಮಹತ್ವವನ್ನು ಕೊಡುತ್ತವೆ. ಉದಾಹರಣೆಗಾಗಿ, ಕನ್ನಡದಲ್ಲಿ (ಮತ್ತು ಇತರ ದ್ರಾವಿಡ ಭಾಷೆಗಳಲ್ಲಿ) ಘಟನೆಯ ಸಮಯ ಮತ್ತು ಮಾತಿನ ಸಮಯಗಳ ನಡುವಿರುವ ಸಂಬಂಧಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದ್ದು, ಮೊದಲನೆಯ ವಿಧಾನ ಪ್ರಧಾನವಾದುದು. ಆದರೆ, ಸಂಸ್ಕೃತದಲ್ಲಿ ಈ ಎರಡು ಸಮಯಗಳ ನಡುವಿರುವ ಸಂಬಂಧಕ್ಕಿಂತಲೂ ಘಟನೆಯ ಆಂತರಿಕ ಸಮಯ ವ್ಯವಸ್ಥೆ ಗೆ (ಇದರಲ್ಲೂ ಮುಖ್ಯವಾಗಿ ಪೂರ್ಣ ಮತ್ತು ಅಪೂರ್ಣ ಎಂಬ ವಿಭಜನೆಗೆ) ಹೆಚ್ಚಿನ ಮಹತ್ವವನ್ನು ಕೊಡಲಾಗಿದ್ದು, ಎರಡನೆಯ ವಿಧಾನ ಪ್ರಧಾನವಾದುದು. ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಬರ್ಮಿೀಸ್ ಭಾಷೆಯಲ್ಲಿ ಆಡುಗನ ಮನೋಭಾವಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದ್ದು, ಸಮಯ ಸೂಚನೆಯಲ್ಲಿ ಮೊದಲಿನ ಎರಡು ವಿಧಾನಗಳಿಗಿಂತಲೂ ಮೂರನೆಯ ವಿಧಾನ ಪ್ರಧಾನವಾದುದು (ಜಾಸ್ತಿ ವಿವರಗಳಿಗೆ ಭಟ್ ೧೯೯೯ ನೋಡಿ). ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಘಟನೆಗಳ’ ಸಮಯ ಸೂಚನೆಯಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಅವುಗಳಲ್ಲಿ ಬಳಕೆಯಾಗುವ ಕ್ರಿಯಾರೂಪಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಹಳೆಗನ್ನಡದ ಕ್ರಿಯಾಪದಗಳಿಗೆಲ್ಲ ಮುಖ್ಯವಾಗಿ ಎರಡೆರಡು ಸಮಯರೂಪಗಳಿವೆ. ಇವುಗಳಲ್ಲಿ ಒಂದು ಮಾತಿನ ಸಮಯದ ಅನಂತರ ನಡೆಯುವ ಘಟನೆಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತದೆ, ಮತ್ತು ಇನ್ನೊಂದು ಅದಕ್ಕಿಂತ ಮೊದಲು ನಡೆದ ಘಟನೆಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತದೆ. ಈ ಎರಡು ರೂಪಗಳನ್ನು “ಮುಂದಿನ’ ಸಮಯದ (ಭವಿಷ್ಯತ್ ಕಾಲದ) ಕ್ರಿಯಾರೂಪಗಳು ಮತ್ತು “ಹಿಂದಿನ’ ಸಮಯದ (ಭೂತಕಾಲದ) ಕ್ರಿಯಾರೂಪಗಳು ಎಂಬುದಾಗಿ ಹೆಸರಿಸಬಹುದು. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹಳೆಗನ್ನಡದ ಕ್ರಿಯಾರೂಪಗಳನ್ನು ಗಮನಿಸಬಹುದು:
ಮುಂದಿನ ಸಮಯ ಹಿಂದಿನ ಸಮಯ ನಗುವನ್ ನಕ್ಕನ್ ಬರ್ಪನ್ ಬಂದನ್ ವಾತಿ ಗು ಅಜುವೆನ್ ಅಣುದೆನ್
ಅಪ್ಪುದು ಆಯ್ತು ಈವೆನ್ ಇತ್ತೆನ್ ಎಂಬರ್ ಎಂದರ್
ಹಳೆಗನ್ನಡದಲ್ಲಿ ಬರುವ ಈ ಎರಡು ರೀತಿಯ ಕ್ರಿಯಾರೂಪಗಳಲ್ಲಿ ಹಿಂದಿನ ಸಮಯದ ಕ್ರಿಯಾರೂಪಗಳನ್ನು ಸಾಧಿಸುವುದು ಸ್ವಲ್ಪ ಕಷ್ಟ. ಯಾಕೆಂದರೆ, ಈ ಕ್ರಿಯಾರೂಪಗಳಲ್ಲಿ ಬರುವ ಕ್ರಿಯಾಪದದಲ್ಲಿ, ಸಲ್>ಸನ್, ನಿಲ್>ನಿನ್, ತರ್>ತನ್ ಇಡುಇಟ್, ನಗು>ನಕ್, ಕುಡು>ಕೊಟ್, ಕಿಡು*ಕೆಟ್, ಮೊದಲಾದವುಗಳಲ್ಲಿ ಕಾಣಿಸುವ ಹಾಗೆ, ಹಲವಾರು ಬದಲಾವಣೆಗಳು ನಡೆಯುತ್ತವೆ, ಮತ್ತು ಅದರೊಂದಿಗೆ ಬರುವ ಸಮಯ ಪ್ರತ್ಯಯದಲ್ಲೂ ದ್‌ಾಟ್‌ಾಕ್‌ಾತ್‌ಾಡ್‌ಾಯ್ ಮೊದಲಾದ ಹಲಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತ ವೆ. ಇವನ್ನೆಲ್ಲ ಸರಿಯಾಗಿ ವರ್ಣಿಸಬೇಕಿದ್ದಲ್ಲಿ ಕ್ರಿಯಾಪದಗಳನ್ನು ಕಡಿಮೆಯೆಂದರೆ ಎಂಟು ಗುಂಪುಗಳಲ್ಲಾದರೂ ವಿಂಗಡಿಸುವ ಅವಶ್ಯಕತೆಯಿದೆ (ರಾಮಚಂದ್ರ ರಾವ್ ೧೯೭೨:೧೧೨-೧೮ ನೋಡಿ).
ಸಂಸ್ಕೃತದ ಕ್ರಿಯಾಪದಗಳಿಗೆ ಮುಖ್ಯವಾಗಿ ಅಪೂರ್ಣ ಮತ್ತು ಪೂರ್ಣಗಳೆಂಬ ಎರಡು ರೀತಿಯ ಸಮಯ ವ್ಯವಸ್ಥೆಗಳನ್ನು ಸೂಚಿಸುವ ಕ್ರಿಯಾರೂಪಗಳಿವೆ. ಇವನ್ನು ಸಂಸ್ಕೃತ ವ್ಯಾಕರಣಗಳಲ್ಲಿ ಲಟ್ ಮತ್ತು ಲಿಟ್ ರೂಪಗಳೆಂದು ಕರೆಯಲಾಗಿದೆ. ಈ ರೂಪಗಳ ನಡುವಿರುವ ವ್ಯತ್ಯಾಸವನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು:
ಲಟ್ ರೂಪ ಲಿಟ್ ರೂಪ
ಕರೋತಿ “ಮಾಡುತ್ತಾನೆ’ ಚಕಾರ “ಮಾಡಿದ’ ಭವತಿ ““ಆಗುತ್ತದೆ’ ಬಭೂವ “ಆಯಿತು’ ಬಿಭರ್ತಿ “ಹೊರುತ್ತಾನೆ’ ಬಭಾರ “ಹೊತ್ತ’ ರುಣದ್ದಿ “ತಡೆಯುತ್ತಾನೆ” ರುರೋಧ “ತಡೆದ’ ಚರತಿ “ಚಲಿಸುತ್ತದೆ’ ಚಚಾರ “ಚಲಿಸಿತು’
ಕುಪ್ಯತಿ “ಕೋಪಿಸುತಾನೆ ಚುಕೋಪ “ಕೋಪಿಸಿದ’
ಈ ಎರಡು ರೀತಿಯ ಕ್ರಿಯಾರೂಪಗಳಲ್ಲಿ ಲಿಟ್ ರೂಪಗಳನ್ನು ಸಾಧಿಸುವುದು ಸುಲಭ. ಇದಕ್ಕಾಗಿ ಕ್ರಿಯಾಧಾತುವಿನ ದ್ವಿತ್ವ ರೂಪವನ್ನು ಬಳಸಬೇಕು, ಮತ್ತು ಅದರ ಸ್ವರ ಮತ್ತು ವ್ಯಂಜನಗಳಲ್ಲಿ ಕೆಲವು ಜಾಸ್ತಿ ಕ್ಲಿಷ್ಟವಲ್ಲದ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕು. ಉದಾಹರಣೆಗಾಗಿ, ಭೂ “ಆಗು’ ಧಾತುವಿನಿಂದ ಅದರ ಲಿಟ್ ರೂಪವಾದ ಬಭೂವ ಎಂಬುದನ್ನು ಸಾಧಿಸುವಲ್ಲಿ ಆ ಧಾತುವನ್ನು ಎರಡು ಬಾರಿ ಬಳಸಲಾಗಿದ್ದು, ಮೊದಲನೆಯ ಬಳಕೆಯಲ್ಲಿ ಭೂ ಎಂಬುದನ್ನು ಬ ಎಂಬುದಾಗಿ ಬದಲಿಸಲಾಗಿದೆ.
ಆದರೆ, ಕ್ರಿಯಾಪದಗಳ ಲಟ್ ರೂಪವನ್ನು ಸಾಧಿಸಬೇಕಿದ್ದಲ್ಲಿ, ಅವುಗಳಲ್ಲಿ ಹಲವಾರು ಬಹಳ ಕ್ಲಿಷ್ಟವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಬದಲಾವಣೆಗಳನ್ನೆಲ್ಲ ಸರಿಯಾಗಿ ವರ್ಣಿಸಲು ಸಂಸ್ಕೃತದ ವೈಯಾಕರಣಿಗಳು ಧಾತುಗಳನ್ನು ಒಟ್ಟು ಹತ್ತು ಗುಂಪು(ಗಣ)ಗಳಲ್ಲಿ ವಿಂಗಡಿಸಬೇಕಾಗಿದೆ. ಇವುಗಳಲ್ಲಿ ಕೆಲವು ಧಾತುಗಳು ದ್ವಿತ್ವ ರೂಪದಲ್ಲಿ ಬರುತ್ತವೆ (ಭೃ “ಹೊರು’ ಬಿಭರ್ತಿ “ಹೊರುತ್ತಾನೆ’), ಕೆಲವು ಸ್ವರದಲ್ಲಿ ಬದಲಾವಣೆಯನ್ನು
ತೋರಿಸುತ್ತವೆ (ಕೃ “ಮಾಡು’ ಕರೋತಿ “ಮಾಡುತ್ತಾನೆ’), ಕೆಲವಕ್ಕೆ ಯಕಾರವನ್ನು ಸೇರಿಸಬೇಕಾಗುತ್ತದೆ (ಕುಪ್ “ಕೋಪಿಸು’ ಕುಪ್ಯತಿ “ಕೋಪಿಸುತ್ತಾನೆ’), ಕೆಲವಕ್ಕೆ ಧಾತುವಿನೊಳಗೆ ಅನುನಾಸಿಕವೊಂದನ್ನು ತುರುಕಿಸಬೇಕಾಗುತ್ತದೆ (ಮುಚ್ “ಬಿಡು’ ಮುಂಚತಿ “ಬಿಡುತ್ತಾನೆ’), ಇತ್ಯಾದಿ.
ಸಾಮಾನ್ಯವಾಗಿ ಸಂಸ್ಕೃತದ ಈ ಕ್ರಿಯಾರೂಪಗಳನ್ನು ಕನ್ನಡಕ್ಕೆ ಅನುವಾದಿಸುವಾಗ (ಮೇಲೆ ಕೊಟ್ಟಿರುವ ಹಾಗೆ) ಲಟ್ ರೂಪಗಳನ್ನು ಮುಂದಿನ ಅಥವಾ ಈಗಿನ ಸಮಯದ (ಭವಿಷ್ಯತ್ ಅಥವಾ ವರ್ತಮಾನ) ಘಟನೆಯನ್ನು ಸೂಚಿಸುವಂತೆಯೂ ಲಿಟ್ ರೂಪಗಳನ್ನು ಹಿಂದಿನ ಸಮಯದ (ಭೂತ) ಘಟನೆಯನ್ನು ಸೂಚಿಸುವಂತೆಯೂ ತೋರಿಸುವುದು ರೂಢಿ. ಆದರೆ, ನಿಜಕ್ಕೂ ಇವೆರಡು ರೂಪಗಳ ನಡುವಿರುವ ವ್ಯತ್ಯಾಸ ಘಟನೆಯ “ಸಮಯ ಸಂಬಂಧ’ವನ್ನು ಸೂಚಿಸುವಂತಹದಾಗಿರದೆ ಅದರ ಆಂತರಿಕ “ಸಮಯ ವ್ಯವಸ್ಥೆ ‘ಯನ್ನು ಸೂಚಿಸುವಂತಹದಾಗಿದೆ. ಲಿಟ್ ರೂಪ ಪೂರ್ಣ ಘಟನೆಯನ್ನೂ, ಲಟ್ ರೂಪ ಅಪೂರ್ಣ ಘಟನೆಯನ್ನೂ ಸೂಚಿಸುತ್ತವೆ.
ಸಂಸ್ಕೃತದಲ್ಲಿ ಸಮಯ ಸಂಬಂಧವನ್ನು ಸೂಚಿಸಲು ಕ್ರಿಯಾರೂಪಗಳಿಗೆ ಅ ಎಂಬ ಪೂರ್ವಪ್ರತ್ಯಯವನ್ನು ಸೇರಿಸಲಾಗುತ್ತದೆ. ಇದನ್ನು ಮೇಲೆ ವಿವರಿಸಿದ ಎರಡು ರೀತಿಯ (ಅಪೂರ್ಣ ಮತ್ತು ಪೂರ್ಣ) ರೂಪಗಳಿಗೂ ಸೇರಿಸಲು ಸಾಧ್ಯವಿದೆ.
ಉದಾಹರಣೆಗಾಗಿ, ಕರೋತಿ “ಮಾಡುತ್ತಾನೆ’ ಎಂಬ ಲಟ್ ರೂಪದ ಕ್ರಿಯಾಪದಕ್ಕೆ ಈ ಪ್ರತ್ಯಯವನ್ನು ಸೇರಿಸಿ ಅಕರೋತ್ “ಮಾಡಿದ’ ಎಂಬ ಲಜ್ ರೂಪವನ್ನು ಸಾಧಿಸಬಹುದು. ಇದೇ ರೀತಿಯಲ್ಲಿ ಲಿಟ್ ರೂಪಕ್ಕೆ ಅ ಪ್ರತ್ಯಯವನ್ನು ಸೇರಿಸಿ ರಚಿಸಿದ ಅಚಚಕ್ಬ್ಟಂ ಎಂಬಂತಹ ಕ್ರಿಯಾರೂಪಗಳು ವೇದಕಾಲದ ಸಂಸ್ಕೃತದಲ್ಲಿ ಬಳಕೆಯಲ್ಲಿದ್ದುವು; ಆದರೆ, ಅನಂತರದ ಸಂಸ್ಕೃತದಲ್ಲಿ ಅವು ಬಳಕೆಯಿಂದ ಬಿದ್ದು ಹೋಗಿವೆ.
ಸಮಯಭೇದವನ್ನು ಸೂಚಿಸುವುದಕ್ಕಾಗಿ ಸಂಸ್ಕೃತದಲ್ಲಿ ಇನ್ನೂ ಹಲವು ಕ್ರಿಯಾರೂಪಗಳು ಬಳಕೆಯಲ್ಲಿದ್ದು, ಇವುಗಳಲ್ಲೆಲ್ಲ ಮೇಲೆ ಸೂಚಿಸಿದ ಅಪೂರ್ಣ ಮತ್ತು ಪೂರ್ಣವೆಂಬ ಸಮಯ ವ್ಯವಸ್ಥೆಯ ವ್ಯತ್ಯಾಸವೇ ಪ್ರಧಾನ ವ್ಯತ್ಯಾಸವಾಗಿ ಕಾಣಿಸಿಕೊಳ್ಳುತ್ತದೆ (ಬರೋ ೧೯೫೫:೨೯೪ ನೋಡಿ). ವೇದ ಕಾಲದ ಸಂಸ್ಕೃತದಲ್ಲಿ ಇದು ಸ್ಪಷ್ಟವಾಗಿತ್ತು; ಆದರೆ, ಅನಂತರದ ಸಂಸ್ಕೃತದಲ್ಲಿ ಅಸ್ಪಷ್ಟವಾಗಿದೆ.
ವೇದಕಾಲದ ಅನಂತರ ಕ್ರಮೇಣ ಸಂಸ್ಕೃತ ಭಾಷೆಗೆ ಮಾತಿನ ಬಳಕೆ ತಪ್ಪಿಹೋಗಿ, ಅದು ಬರಿಯ ಗ್ರಾಂಥಿಕ ಭಾಷೆಯಾಗಿ ಉಳಿದುಕೊಂಡಿರುವುದೇ ಈ ರೀತಿ ಹಲವು ವ್ಯಾಕರಣದ ಸೂಕ್ಸ್ಮ ವ್ಯತ್ಯಾಸಗಳು ಅದರ ಬಳಕೆಯಿಂದ ಬಿದ್ದು ಹೋಗಲು ಕಾರಣವಿರಬೇಕು.
ಮಾತಿನ ಬಳಕೆಯಲ್ಲೇ ಉಳಿದುಕೊಂಡಿರುವ ಹಿಂದಿ, ಮರಾಠಿ ಮೊದಲಾದ ಆಧುನಿಕ ಇಂಡೋ-ಆರ್ಯನ್ ಭಾಷೆಗಳಲ್ಲಿ ಇವತ್ತಿಗೂ ಸಮಯ ಸಂಬಂಧಕ್ಕಿಂತ ಸಮಯ ವ್ಯವಸ್ಥೆಗೆ ಹೆಚ್ಚಿ ನ ಮಹತ್ವವಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಉದಾಹರಣೆಗಾಗಿ, ಹಿಂದಿ ಭಾಷೆಯಲ್ಲಿ ಆ “ಬರು’ ಕ್ರಿಯಾಪದಕ್ಕೆ ಆತಾ ಮತ್ತು ಆಯಾ ಎಂಬ ಎರಡು ರೂಪಗಳಿದ್ದು ಇವು ಅಪೂರ್ಣ ಮತ್ತು ಪೂರ್ಣ ಘಟನೆಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ.
ಸಮಯ ಸಂಬಂಧವನ್ನು ಸೂಚಿಸುವುದಕ್ಕಾಗಿ ಹಿಂದಿ ಭಾಷೆಯಲ್ಲಿ ಈ ಎರಡು ಕ್ರಿಯಾರೂಪಗಳೊಂದಿಗೆ ಹೈ “ಈಗಿನ ಅಥವಾ ಮುಂದಿನ ಸಮಯ’ ಮತ್ತು ಥಾ “ಹಿಂದಿನ ಸಮಯ’ ಎಂಬುದಾಗಿ ಎರಡು ಉಪಕ್ರಿಯಾಪದಗಳನ್ನು ಬಳಸಲು ಸಾಧ್ಯವಿದೆಯಾದರೂ, ಮೇಲಿನ ಪೂರ್ಣ-ಅಪೂರ್ಣ ರೂಪಗಳನ್ನು ಅಂತಹ ಉಪಕ್ರಿಯಾಪದಗಳ ಸಹಾಯವಿಲ್ಲದೆಯೂ ಬಳಸಲು ಸಾಧ್ಯವಿದೆ (೧ಗ-೨ಗ ನೋಡಿ).
(೧ಕ) ಮೈ ಆತಾ ಹೂಂ (ಈಗಿನ ಅಥವಾ ಮುಂದಿನ ಕಾಲದ ಅಪೂರ್ಣ ಘಟನೆ) (೧ಖ) ಮೈ ಆತಾ ಥಾ (ಹಿಂದಿನ ಕಾಲದ ಅಪೂರ್ಣ ಘಟನೆ) (೧ಗ) ಮೈ ಆತಾ (ಅಪೂರ್ಣ ಘಟನೆ)
(೨5) ಮೈ ಆಯಾ ಹೂಂ (ಈಗಿನ ಅಥವಾ ಮುಂದಿನ ಕಾಲದ ಪೂರ್ಣ ಘಟನೆ) (೨ಖ) ಮೈ ಆಯಾ ಥಾ (ಹಿಂದಿನ ಕಾಲದ ಪೂರ್ಣ ಘಟನೆ) (೨ಗ) ಮೈ ಆಯಾ (ಪೂರ್ಣ ಘಟನೆ)
ಸಮಯ ವ್ಯವಸ್ಥೆ ಯನ್ನು ಸೂಚಿಸುವುದಕ್ಕಾಗಿ ಹಳೆಗನ್ನಡದಲ್ಲಿ ಕೆಲವು ವಿಶಿಷ್ಟವಾದ ಕ್ರಿಯಾಪದಗಳ ಬಳಕೆಯಾಗುತ್ತದಲ್ಲದೆ, ಸಂಸ್ಕೃತದ ಹಾಗೆ ಪ್ರತ್ಯಯಗಳ ಬಳಕೆಯಿಲ್ಲ. ಉದಾಹರಣೆಗಾಗಿ, ಅಟಃದತ್ತು, ಉರಿದತ್ತು ಎಂಬಂತಹ ಪ್ರಯೋಗಗಳಲ್ಲಿ ಅಟಃ ಮತ್ತು ಉರಿ ಕ್ರಿಯಾಪದಗಳೊಂದಿಗೆ ಅವು ಸೂಚಿಸುವ ಘಟನೆ ಪೂರ್ಣಗೊಂಡಿದೆಯೆಂಬ ಅರ್ಥವನ್ನು ಕೊಡುವುದಕ್ಕಾಗಿ ಆಗು ಕ್ರಿಯಾಪದದ “ಹಿಂದಿನ’ ಸಮಯದ ರೂಪ ಬಳಕೆಯಾಗಿದೆ (ರಾಮಚಂದ್ರ ರಾವ್ ೧೯೭೨:೧೨೬ ನೋಡಿ).
ಆಗು ಕ್ರಿಯಾಪದದ ಮುಂದಿನ ಸಮಯದ ರೂಪವನ್ನು ಇವೇ ಕ್ರಿಯಾಪದಗಳೊಂದಿಗೆ ಬಳಸಿ ಅವು ಸೂಚಿಸುವ ಘಟನೆ ಪೂರ್ಣಗೊಂಡಿಲ್ಲವೆಂಬ ಅರ್ಥವನ್ನು ಸೂಚಿಸಲು ಸಾಧ್ಯವಿದೆ (ಅಲುದಪುದು, ಉರಿದಪುದು). ಇಂತಹ ಕ್ರಿಯಾರೂಪಗಳಲ್ಲಿ ದಪ ಎಂಬ “ವರ್ತಮಾನ ಪ್ರತ್ಯಯ’ ಬಂದಿದೆಯೆಂದು ಕನ್ನಡದ ವೈಯಾಕರಣಿಗಳು ಹೇಳಿರುವುದು ನಿಜಕ್ಕೂ ಸರಿಯಲ್ಲ ಎಂಬುದನ್ನು ಕೆಳಗೆ (೯.೨.೧)ರಲ್ಲಿ ತೋರಿಸಿಕೊಡಲಾಗಿದೆ.
೯.೨.೧ ದಪ ಮತ್ತು ವ ಪ್ರತ್ಯಯಗಳು
ಹಳೆಗನ್ನಡದಲ್ಲಿ ದ, ದಪ ಮತ್ತು ವ ಎಂಬುದಾಗಿ ಮೂರು ಕಾಲವಾಚಕ ಪ್ರತ್ಯಯಗಳಿವೆ, ಮತ್ತು ಇವು ಅನುಕ್ರಮವಾಗಿ ಭೂತ, ವರ್ತಮಾನ, ಮತ್ತು ಭವಿಷ್ಯತ್ ಕಾಲಗಳನ್ನು ಸೂಚಿಸುತ್ತವೆ ಎಂಬುದಾಗಿ ಕೇಶಿರಾಜನೇ ಮೊದಲಾದ ಹಳೆಗನ್ನಡದ ವೈಯಾಕರಣಿಗಳೆಲ್ಲರೂ ಹೇಳಿದ್ದಾ ರೆ. ಆದರೆ, ನಿಜಕ್ಕೂ ಹಳೆಗನ್ನಡದ ಗ್ರಂಥಗಳಲ್ಲಿ ಈ ಪ್ರತ್ಯಯಗಳ ಬಳಕೆ ಹೇಗಿದೆಯೆಂಬುದನ್ನು ಪರಿಶೀಲಿಸಿದೆವಾದರೆ, ದಪ ಮತ್ತು ವ ಪ್ರತ್ಯಯಗಳ ವಿಷಯದಲ್ಲಿ ಈ ಹೇಳಿಕೆ ಸರಿಯಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಪಂಪಭಾರತದಲ್ಲಿ ದಪ ಪ್ರತ್ಯಯ ಭವಿಷ್ಯದರ್ಥದಲ್ಲಿ ಮಾತ್ರವಲ್ಲ ದೆ ವರ್ತಮಾನಾರ್ಥದಲ್ಲೂ ಬಳಕೆಯಾಗುತ್ತದೆ ಎಂಬುದನ್ನು ಕೆಳಗಿನ ಪ್ರಯೋಗಗಳಲ್ಲಿ ಕಾಣಬಹುದು.
(ಕ) ಭವಿಷ್ಯದರ್ಥದಲ್ಲಿ ದಪ ಪ್ರತ್ಯಯದ ಬಳಕೆ
(೩ಕ) ಕಡಲಂ ಪೊಕ್ಕೊಡೆ ಪೀರ್ದಪೆಂ ಕಡಲನಾ ಪಾತಾಳಮಂ ಪೊಕ್ಕನಪ್ಪೊಡೆ ಶೇಷಾಹಿಯ ಪಲ್ಲಳಂ ಮುಜಾದಪೆಂ (೧೩.೭೬) ‘(ದರ್ಯೋಧನನು) ಕಡಲನ್ನು ಹೊಕ್ಕರೆ ಕಡಲನ್ನು ಹೀರುತ್ತೇನೆ, ಪಾತಾಳವನ್ನು ಹೊಕ್ಕನಾದರೆ ಆದಿಶೇಷನ ಹಲ್ಲುಗಳನ್ನು ಮುರಿಯುತ್ತೇನೆ’
(೩ಖ) ಸೆರಗಂ ಬಗೆದೊಡೆ ಸಾವಾದಪುದು (೧೧.೨೧) “ಸಹಾಯವನ್ನು ಅಪೇಕ್ಷಿಸಿದರೆ ಸಾವಾಗುತ್ತದೆ’
(೩ಗ) ಮೊನೆಯಂಬುಗಳೊಳೆ ಪೂಣ್ಣಪನ್ ಅನಿಬರುಮಂ ಕಿಜುದು ಬೇಗದಿಂ ಹರಿಗನ್ ಅದರ್ಕೆ ಎನಗೆ ಎಡೆಮೇಟ್ಕುಮೆ ಎಂಬವೊಲ್ ಅನಿಬರುಮಂ ಪೂಣ್ಣನ್ ಅತನು ನನೆಯಂಬುಗಳಿಂ (೩.೫೨)
“ಹರಿಗನು ಸ್ವಲ್ಪ ಹೊತ್ತಿನಲ್ಲಿ ಅಷ್ಟು ಜನರನ್ನೂ ಮೊನಚಾದ ಬಾಣಗಳಿಂದ ಹೂಳಿಬಿಡುತ್ತಾನೆ, ಅನಂತರ ನಾನು ಬಾಣಬಿಡುವುದಕ್ಕೆ ಸ್ಥಳ ಬೇಕಲ್ಲವೇ? ಎನ್ನುವ ಹಾಗೆ ಮನ್ಮಥನು ಅಷ್ಟು ಜನರನ್ನೂ ಪುಷ್ಪಬಾಣಗಳಿಂದ ಹೂತನು’
(ಖ) ವರ್ತಮಾನಾರ್ಥದಲ್ಲಿ ದಪ ಪ್ರತ್ಯಯದ ಬಳಕೆ
(೪ಕ) ಎ ಗೆಯ್ಯಲ್ ಬಗೆದಪೆ (೧೩.೬೪ವ) “ಏನು ಮಾಡಬೇಕೆಂದು ಆಲೋಚಿಸುತ್ತಿ ದ್ದೀ?’
(೪ಖ) ಬಿರಯಿಯ ಮಿಟ್ತುವೆಂ ಮಿದಿದೊಡಲ್ಲದಣಂ ಮುಳಿಸಾಜದೆಂದು ಪಲ್ಮೊರೆದಪನ್ ಇಲ್ಲಿ ಮನ್ಮಥನ್ (೩.೧೩) “ನಾನು ವಿರಹಿಗಳ ಶತ್ರುವಾಗಿದ್ದೇನೆ; ಅವರನ್ನು ತುಳಿದರಲ್ಲದೆ ನನ್ನ ಕೋಪವು ಸ್ವಲ್ಪವೂ ಆರುವುದಿಲ್ಲ ಎಂದು ಇಲ್ಲಿ ಮನ್ಮಥನು ಹಲ್ಲು ಮಸೆಯುತ್ತಿದ್ದಾನೆ’
(೪ಗ) ಎನ್ನ ಕಣ್ಣಿ ೦ ಕಿಡಿಯುಂ ಕೆಂಡಂಗಳುಂ ಸೂಸಿದಪುವು ಅಹಿತರಂ ನೋಡಿ (೭.೧೩) “ಶತ್ರುಗಳನ್ನು ನೋಡಿ ನನ್ನ ಕಣ್ಣಿನಿಂದ ಕಿಡಿಯೂ ಕೆಂಡಗಳೂ ಚೆಲ್ಲುತ್ತಿವೆ’
ಮೇಲೆ (೩ಕ)ದಲ್ಲಿ ಪೀರ್ದಪೆಂ ಮತ್ತು ಮುಜುದಪೆಂ ಎಂಬ ಎರಡು ಕ್ರಿಯಾರೂಪಗಳೂ ಷರತ್ತನ್ನು ಸೂಚಿಸುವ ಪೊಕ್ಕೊಡೆ ಮತ್ತು ಪೊಕ್ಕನಪ್ಪೊಡೆ ಎಂಬ ಕ್ರಿಯಾರೂಪಗಳ ಅನಂತರ ಬಂದಿರುವ ಕಾರಣ, ಅವು ಮುಂದೆ ನಡೆಯಬಹುದಾದ (ಎಂದರೆ ಭವಿಷ್ಯತ್ತಿನ) ಘಟನೆಗಳನ್ನು ಸೂಚಿಸುತ್ತವೆಯಲ್ಲದೆ ಮಾತನಾಡುವ ಸಮಯದಲ್ಲಿ ನಡೆಯುತ್ತಿರುವ (ವರ್ತಮಾನ) ಘಟನೆಗಳನ್ನು ಸೂಚಿಸುವುದಿಲ್ಲ. ಇದೇ ರೀತಿಯಲ್ಲಿ, (೩ಖ)ದಲ್ಲೂ ಆದಪುದು ಎಂಬ ಕ್ರಿಯಾರೂಪ ಬಗೆದೊಡೆ ಎಂಬ ಷರತ್ತನ್ನು ಸೂಚಿಸುವ ಕ್ರಿಯಾರೂಪದ ಅನಂತರ ಬಂದಿದೆಯಾದ ಕಾರಣ, ಅದಕ್ಕೂ ವರ್ತಮಾನಾರ್ಥವಿದೆಯೆಂದು ಹೇಳಲು ಸಾಧ್ಯವಿಲ್ಲ.
(೩ಗ)ದಲ್ಲಿ ಪೂಣ್ಣಪಂ ಎಂಬ ಕ್ರಿಯಾರೂಪ ಸ್ವಲ್ಪ ಹೊತ್ತಿನಲ್ಲಿ (ಎಂದರೆ ಭವಿಷ್ಯತ್ತಿನಲ್ಲಿ) ಏನಾಗಬಹುದು ಎಂಬುದನ್ನು ಸೂಚಿಸುತ್ತದೆಯಲ್ಲದೆ, ಈಗಿನ ಸ್ಥಿತಿ ಏನು ಅಥವಾ ಏನು ನಡೆಯುತ್ತಾ ಇದೆ ಎಂಬುದನ್ನು ಸೂಚಿಸುವುದಿಲ್ಲ. ಈ ಎಲ್ಲಾ ಪ್ರಯೋಗಗಳಲ್ಲೂ ದಪ ಪ್ರತ್ಯಯ ಭವಿಷ್ಯದರ್ಥದಲ್ಲಿ ಬಳಕೆಯಾಗಿದೆ.
ಇದಕ್ಕೆ ಬದಲು, (೪ಕ-ಗ) ವಾಕ್ಯಗಳಲ್ಲಿ ಇದೇ ಪ್ರತ್ಯಯ ವರ್ತಮಾನಾರ್ಥದಲ್ಲಿ ಬಳಕೆಯಾಗಿದೆಯೆಂದು ಹೇಳಬೇಕಾಗುತ್ತದೆ. ಉದಾಹರಣೆಗಾಗಿ, (೪ಕ)ದಲ್ಲಿ ಬಗೆದಪೆ ಕ್ರಿಯಾರೂಪ ಮಾತನಾಡುತ್ತಿರುವ ಸಮಯದಲ್ಲಿ ಆತನಲ್ಲಿ ಎಂತಹ ಆಲೋಚನೆಯಿದೆ ಎಂಬುದನ್ನು ಪ್ರಶ್ನಿಸುತ್ತದೆ; (೪ಖ)ದಲ್ಲಿ ಬಂದಿರುವ ಪಲ್ಮೊರೆದಪನ್ ಎಂಬುದು ಮನ್ಮಥನು ಏನು ಮಾಡುತ್ತಿ ದ್ಬಾ ನೆ ಎಂಬುದನ್ನು ಸೂಚಿಸುತ್ತದೆ, ಮತ್ತು (೪ಗ)ದಲ್ಲಿ ಸೂಸಿದಪುವು ಎಂಬುದು ಆ ಸಮಯದಲ್ಲಿ ಆತನ ಕಣ್ಣುಗಳು ಹೇಗಿವೆ ಎಂಬುದನ್ನು ವರ್ಣಿಸುತ್ತದೆ.
ದಪ ಪ್ರತ್ಯಯದ ಹಾಗೆಯೇ ವ (ಪ) ಪ್ರತ್ಯಯವೂ ಪಂಪಭಾರತದಲ್ಲಿ ಭವಿಷ್ಯತ್ ಮತ್ತು ವರ್ತಮಾನಾರ್ಥಗಳೆರಡರಲ್ಲೂ ಬಳಕೆಯಾಗುತ್ತದೆ ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು:
(ಕ) ಭವಿಷ್ಯದರ್ಥದಲ್ಲಿ ವ ಪ್ರತ್ಯಯದ ಬಳಕೆ
(೫ಕ) ಕರ್ಣನನ್ ಈಗಳೆ ಕುಲಜನಂ ಮಾಡಿ ತೋರ್ಪೆನ್ (೨.೮೩ವ) “ಕರ್ಣನನ್ನು ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ’
(೫ಖ) ಆತಂಗೆ ಕಟ್ಟಿದಿರ್ ನಿಲ್ವೊಡೆ ನೀನೆ ನಿಲ್ವೆ (೧೩.೩೧) “ಆತನಿಗೆ ಸರಿಸಮನಾಗಿ ನಿಲ್ಲುವುದಿದ್ದರೆ ನೀನೇ ನಿಲ್ಲುತ್ತೀ (ನೀನೊಬ್ಬನೇ ನಿಲ್ಲಬಲ್ಲೆ)’
(೫ಗ) ಎಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೊಡೆಯನಪ್ಪೊಡೆ ಕುಡುವೆಂ “ನಮ್ಮ ಮಗಳಿಗೆ ಹುಟ್ಟಿದವನು ರಾಜ್ಯಕ್ಕೊಡೆಯನಾಗುವುದಾದರೆ (ಮಗಳನ್ನು) ಕೊಡುತ್ತೇವೆ’
(ಖ) ವರ್ತಮಾನಾರ್ಥದಲ್ಲಿ ವ ಪ್ರತ್ಯಯದ ಬಳಕೆ (೬ಕ) ಸಿರಿಯುಂ ಆಕೆಯ ಕೆಲದೊಳ್ ನಸು ಮಸುಳ್ಳು ತೋರ್ಪಳ್ (೧.೪೦) “ಲಕ್ಷ್ಮೀ ದೇವಿಯೂ ಆಕೆಯ ಪಕ್ಕದಲ್ಲಿ ಸ್ವಲ್ಪ ಕಾಂತಿಹೀನಳಾಗಿ ತೋರುತ್ತಾಳೆ” (೬ಖ) ಉದ್ದತ ಸಿದ್ದ ಖೇಚರರೆ ಕಾವರ್ (೫.೮೧) “(ಈ ಖಾಂಡವ ವನವನ್ನು) ಗರ್ವಿಷ್ಠರಾದ ಸಿದ್ಧ ಖೇಚರರೇ ಕಾಯುತ್ತಿದ್ದಾರೆ”
(೫ಕ)ದಲ್ಲಿ ತೋರ್ಪೆನ್ ಕ್ರಿಯಾರೂಪ ದುರ್ಯೋಧನನು ಮುಂದೆ ನಡೆಸಲಿರುವ ಘಟನೆಯೊಂದನ್ನು ಸೂಚಿಸುತ್ತಿದೆಯಾದ ಕಾರಣ, ಅದರಲ್ಲಿ ಬಂದಿರುವ ವ (ಪ) ಪ್ರತ್ಯಯಕ್ಕೆ ಭವಿಷ್ಯದರ್ಥವಿದೆ. ಇದೇ ರೀತಿಯಲ್ಲಿ, (೫ಖ) ಮತ್ತು (೫ಗ) ವಾಕ್ಯಗಳಲ್ಲಿ ನಿಲ್ವೆ ಮತ್ತು ಕುಡುವೆಂ ಕ್ರಿಯಾರೂಪಗಳು ಷರತ್ತನ್ನು ಸೂಚಿಸುವ ನಿಲ್ವೊಡೆ ಮತ್ತು ಅಪ್ಪೊಡೆ ಕ್ರಿಯಾರೂಪಗಳ ಅನಂತರ ಬಂದಿರುವ ಕಾರಣ, ಅವು ಆ ಷರತ್ತನ್ನು ಪೂರ್ಣಗೊಳಿಸಿದ ಮೇಲೆ, ಎಂದರೆ ಭವಿಷ್ಯತ್ಕಾಲದಲ್ಲಿ ನಡೆಯಬಹುದಾದ ಘಟನೆಗಳನ್ನು ಮಾತ್ರವೇ ಸೂಚಿಸಬಲ್ಲುವು.
ಇದಕ್ಕೆ ಬದಲು, (೬5) ವಾಕ್ಕ ಮಾತನಾಡುವ ಸಮಯದಲ್ಲಿ ಲಕ್ಷ್ಮೀ ದೇವಿ ಹೇಗೆ ಕಾಣಿಸುತ್ತಿದ್ದಾಳೆ ಎಂಬುದನ್ನು ವರ್ಣಿಸುತ್ತಿದೆಯಾದ ಕಾರಣ, ಅದರಲ್ಲಿ ಬಂದಿರುವ ತೋರ್ಪಳ್ ಕ್ರಿಯಾರೂಪದಲ್ಲಿ ವ (ಪ) ಪ್ರತ್ಯಯ ವರ್ತಮಾನಾರ್ಥದಲ್ಲಿ ಬಂದಿದೆಯೆಂದು ಹೇಳಬೇಕಾಗುತ್ತದೆ. (೬ಖ)ದಲ್ಲಿ ಬಂದಿರುವ ಕಾವರ್ ಕ್ರಿಯಾರೂಪವೂ ಇದೇ ರೀತಿಯಲ್ಲಿ ವರ್ತಮಾನಾರ್ಥದಲ್ಲಿ ಬಂದಿದೆ.
ಮೇಲಿನ ಉದಾಹರಣೆಗಳಿಂದ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ: ದಪ ಮತ್ತು ವ ಪ್ರತ್ಯಯಗಳ ನಡುವೆ “ಸಮಯ ಸಂಬಂಧ’ದ ಮಟ್ಟಿಗೆ ಯಾವ ವ್ಯತ್ಯಾಸವೂ ಇಲ್ಲ. ಎರಡನ್ನೂ ವರ್ತಮಾನಾರ್ಥದಲ್ಲೂ ಬಳಸಬಹುದು, ಭವಿಷ್ಯದರ್ಥದಲ್ಲೂ ಬಳಸಬಹುದು. ಹಾಗಾದರೆ ಅವುಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವೇನಾದರೂ ಇದೆಯೇ? ಮತ್ತು ಇದೆಯಾದರೆ ಅದು
ಎಂತಹದು? ಇದನ್ನು ತಿಳಿಯಲು ಈ “ಪ್ರತ್ಯಯ’ಗಳ ಚರಿತ್ರೆಯೆಂತಹದು ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ.
ನಿಜಕ್ಕೂ ಪೀರ್ದಪೆಂ, ಮುಖುದಪೆಂ, ಬಗೆದಪೆ, ಸೂಸಿದಪುವು ಮೊದಲಾದ ಕ್ರಿಯಾರೂಪಗಳಲ್ಲಿ ಕಾಣಿಸುವ ಈ ದಪ ಎಂಬುದು ದ ಮತ್ತು ವ (ಪ) ಪ್ರತ್ಯಯಗಳಿಂದ ಭಿನ್ನವಾಗಿರುವ ಮೂರನೆಯದೊಂದು ಪ್ರತ್ಯಯವೇ ಅಲ್ಲ; ಅದು ದ ಮತ್ತು ವ (ಪ) ಪ್ರತ್ಯಯಗಳ ಸೇರಿಕೆ ಮಾತ್ರ. ಹಿಂದಿನ ಸಮಯ ಮತ್ತು ಮುಂದಿನ ಸಮಯಗಳನ್ನು ಸೂಚಿಸುವ ದ ಮತ್ತು ವ (ಪ) ಪ್ರತ್ಯಯಗಳು ಈರೀತಿ ಒಟ್ಟಿಗೆ ಬರಲು ಈ ಕ್ರಿಯಾರೂಪಗಳಲ್ಲಿ ನಡೆದ ಕೆಲವು ಬದಲಾವಣೆಗಳೇ ಕಾರಣವಿರಬೇಕು.
ಹಳೆಗನ್ನಡದಲ್ಲಿ ದಪ ಪ್ರತ್ಯಯ ಕೆಲವು ಸಂದರ್ಭಗಳಲ್ಲಿ ದಪ್ಪ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಯನ್ನು ಗಮನಿಸಬಹುದು:
(೭) ಇವರ್ ಗಜೆಗೊಂಡೆನಪ್ಪೊಡೆ ಈಗಡೆ ಪರೆದಪ್ಪರ್ (೧೧.೧೪೨) “ಗದೆಯನ್ನು ತೆಗೆದುಕೊಂಡರೆ ಇವರು ಈಗಲೇ ಚದರಿಹೋಗುತ್ತಾರೆ’
(೭)ನೇ ವಾಕ್ಯದ ಪರೆದಪ್ಪರ್ ಕ್ರಿಯಾರೂಪದಲ್ಲಿ ದಪ ಎಂಬುದು ದಪ್ಪ ರೂಪದಲ್ಲಿದೆ. ಈ ಕ್ರಿಯಾರೂಪವನ್ನು ಪರಿಶೀಲಿಸಿದಾಗ, ಅದರಲ್ಲಿ ಪರೆ ಕ್ರಿಯಾಪದದ ಸಾಮಾನ್ಯ ರೂಪವೊಂದು ಬಂದಿರುವ ಬದಲು ಅದರೊಂದಿಗೆ ಬೇರೊಂದು ಕ್ರಿಯಾಪದದ ಕ್ರಿಯಾರೂಪ ಸೇರಿರುವ ಹಾಗೆ ಕಾಣಿಸುತ್ತದೆ. ಪರೆ ಕ್ರಿಯಾಪದದ ಸಂಬಂಧಿಸುವ ರೂಪವಾದ ಪರೆದ ಎಂಬುದರೊಂದಿಗೆ ಆಗು ಕ್ರಿಯಾಪದದ ಮುಂದಿನ ಸಮಯದ ರೂಪವಾದ ಅಪ್ಪರ್ ಎಂಬುದನ್ನು ಸೇರಿಸಿ ಮೇಲಿನ ಪರೆದಪ್ಪರ್ ರೂಪವನ್ನು ತಯಾರಿಸಿರಬಹುದೇ?
ಕಿಟ್ಟೆಲ್ (೧೯೦೩:೧೨೫) ಅವರು ಇಂತಹ ಅಭಿಪ್ರಾಯವನ್ನು ನಮ್ಮ ಮುಂದಿರಿಸಿದ್ದಾ Be ಕ್ರಿಯಾಪದಗಳ ಸಂಬಂಧಿಸುವ ರೂಪ(ಭೂತವಿಭಕ್ತಿಕೃತ್)ದೊಂದಿಗೆ ಆಗು ಕ್ರಿಯಾಪದದ ಭವಿಷ್ಯದ್ರೂಪಗಳನ್ನು ಸೇರಿಸಿ ಈ ಕ್ರಿಯಾರೂಪಗಳನ್ನು ತಯಾರಿಸಲಾಗಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾ ರೆ.
ಆದರೆ, ಹೀಗೆ ಹೇಳುವುದರಲ್ಲಿ ಒಂದು ಮುಖ್ಯವಾದ ಸಮಸ್ಯೆಯಿದೆ. ಹಳೆಗನ್ನಡದಲ್ಲಿ ಕೃದಂತರೂಪ(ಕ್ರಿಯಾಪದದ ಸಂಬಂಧಿಸುವ ರೂಪ)ವನ್ನು ನೇರವಾಗಿ ಬೇರೊಂದು ಕ್ರಿಯಾಪದದೊಂದಿಗೆ ಬಳಸಲು ಸಾಧ್ಯವಾಗದು. ಅದನ್ನು ನಾಮಪದದೊಂದಿಗೆ ಮಾತ್ರವೇ ಬಳಸಲು ಸಾಧ್ಯ. ಕ್ರಿ ಯಾಪದದೊಂದಿಗೆ ಬಳಸಬೇಕಿದ್ದ ಲ್ಲಿ, ಅದಕ್ಕೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ನಾಮರೂಪಕ್ಕೆ ಬದಲಾಯಿಸಿಕೊಳ್ಳುವ ಅವಶ್ಯಕತೆಯಿದೆ (೬.೧.೩ ನೋಡಿ).
ಹಾಗಾಗಿ, ಮೊದಲಿಗೆ ಈ ಕ್ರಿಯಾರೂಪಗಳು ನಾಮರೂಪದಲ್ಲಿದ್ದು, ಅನಂತರ ಈಗಿನ ರೂಪಕ್ಕೆ ಬದಲಾಯಿಸಿವೆ ಎಂದು ಹೇಳಬೇಕಾಗುತ್ತದೆ. ಉದಾಹರಣೆಗಾಗಿ, ಪರೆದಪ್ಪರ್ ಎಂಬುದು ಮೊದಲಿಗೆ ಪರೆದರಪ್ಪರ್ (ಪರೆದರ್ ಅಪ್ಪರ್) ಎಂದಿದ್ದು, ಅನಂತರ ಅದರಲ್ಲಿದ್ದ ಮೊದಲನೆಯ ಅರ್ ಪ್ರತ್ಯಯ ಬಿದ್ದು ಹೋಗಿ, ಪರೆದಪ್ಪರ್ ಎಂಬುದಾಗಿ ಬದಲಾಯಿತೆಂದು ಹೇಳುವುದೇ ಸರಿಯೆಂದು ತೋರುತ್ತದೆ. ಲಿಂಗ-ವಚನಗಳನ್ನು ಸೂಚಿಸುವ (ಅರ್ ಎಂಬಂತಹ) ಪ್ರತ್ಯಯ ಎರಡು ಬಾರಿ ಬರುವ ಅವಶ್ಯಕತೆಯಿಲ್ಲವಾದ ಕಾರಣ, ಮೊದಲನೇ ಕ್ರಿಯಾರೂಪದಿಂದ ಅದು
ಬಿದ್ದುಹೋಗಿರಬೇಕು.
ಈ ರೀತಿ ಕ್ರಿಯಾಪದದ ನಾಮರೂಪದೊಂದಿಗೆ ಆಗು ಕ್ರಿಯಾಪದದ ಮುಂದಿನ ಸಮಯದ ರೂಪಗಳನ್ನು (ಮತ್ತು ಬೇರೆ ಕೆಲವು ಕ್ರಿಯಾರೂಪಗಳನ್ನು) ಬಳಸಿ ತಯಾರಿಸಿದ ರಚನೆಗಳು ಹೊಸಗನ್ನಡದಲ್ಲಿ ಇವತ್ತಿಗೂ ಬಳಕೆಯಲ್ಲಿವೆ. ಉದಾಹರಣೆಗಾಗಿ ಬರುವವನಾಗುತ್ತೇನೆ, ಬರುವವನಾಗು ಎಂಬಂತಹ ಬಳಕೆಗಳನ್ನು ಗಮನಿಸಬಹುದು. ಆದರೆ ಈ ಬಳಕೆಗಳಲ್ಲಿ ಮೊದಲನೆಯ ಕ್ರಿಯಾ ಪದದೊಂದಿಗೆ ಲಿಂಗ-ವಚನಗಳನ್ನು ಸೂಚಿಸುವ ಸರ್ವನಾಮದ (ಸರ್ವಪದದ) ರೂಪಗಳು ಹಾಗೆಯೇ ಉಳಿದುಕೊಂಡಿವೆ.
ಹಾಗಾಗಿ, ಮೇಲ್ನೋಟಕ್ಕೆ ಅರಿದಪ್ಪಂ ಎಂಬಂತಹ ಕ್ರಿಯಾರೂಪಗಳಲ್ಲಿ ಕೃದಂತದೊಂದಿಗೆ ಕ್ರಿಯಾರೂಪ ಬಂದಿದೆಯೆಂದು ಕಾಣಿಸುವುದಾದರೂ, ಅದಕ್ಕೆ ಮೂಲದಲ್ಲಿ ಕ್ರಿಯಾಪದಗಳ ನಾಮರೂಪ(ಕೃಲ್ಲಿಂಗ)ವಿತ್ತೆಂದು ಹೇಳುವುದೇ ಸರಿ ಎಂದು ತೋರುತ್ತದೆ.
ಹಳೆಗನ್ನಡದ ದಪ ಮತ್ತು ವ “ಪ್ರತ್ಯಯ’ಗಳ ನಡುವೆ ಅರ್ಥದಲ್ಲಿ ಎಂತಹ ವ್ಯತ್ಯಾಸವಿತ್ತು ಎಂಬ ಪ್ರಶ್ನೆಗೆ ಉತ್ತರವನ್ನೂ ಮೇಲಿನ ಚಾರಿತ್ರಿಕ ಕಲ್ಪನೆಯೇ ಕೊಡಬಲ್ಲುದೆಂದು ನನಗೆ ತೋರುತ್ತದೆ. ಹೊಸಗನ್ನಡದಲ್ಲಿ ಬರುತ್ತೇನೆ ಮತ್ತು ಬರುವವನಾಗುತ್ತೇನೆ ಎಂಬವುಗಳ ನಡುವೆ ಎಂತಹ ಅರ್ಥವ್ಯತ್ಯಾಸವಿದೆಯೋ ಅಂತಹದೇ ವ್ಯತ್ಯಾಸ ಹಳೆಗನ್ನಡದ ಬರ್ಪೆನ್ ಮತ್ತು ಬಂದಪೆನ್ ಎಂಬವುಗಳ ನಡುವೆಯೂ ಇದ್ದಿರಬೇಕು. ಇದು ಸಮಯ ಸಂಬಂಧಕ್ಕಿಂತಲೂ ಸಮಯ ವ್ಯವಸ್ಥೆ ಗೆ ಸಂಬಂಧಿಸಿದ ವ್ಯತ್ಯಾಸವೆಂದು ತೋರುತ್ತದೆ (೯.೨ ನೋಡಿ).
ಹಳೆಗನ್ನಡದಲ್ಲಿ ಈ ಎರಡು ರೀತಿಯ ಕ್ರಿಯಾರೂಪಗಳ ಬಳಕೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ಪರಿಶೀಲಿಸಿದಲ್ಲಿ ಅವುಗಳ ನಡುವೆ ನಿಜಕ್ಕೂ ಎಂತಹ ಅರ್ಥವ್ಯತ್ಯಾಸವಿದೆ ಎಂಬುದು ಹೆಚ್ಚು ಸ್ಪಷ್ಟವಾಗಬಲ್ಲುದು.
೯.೨.೨ ಅತ್ತು ಪ್ರತ್ಯಯದ ಬಳಕೆ
ಹಳೆಗನ್ನಡದಲ್ಲಿ ಬಳಕೆಯಾಗುವ ಅಟುದತ್ತು, ಉರಿದತ್ತು, ಬಿಟ್ಟಿತ್ತು, ಮಸುಳ್ಳತ್ತು ಮೊದಲಾದ ರೂಪಗಳೂ, ಮೇಲಿನ ಕ್ರಿಯಾರೂಪಗಳ ಹಾಗೆ, ಎರಡು ಕ್ರಿಯಾರೂಪಗಳ ಸೇರಿಕೆಯಿಂದ ವಾದ ರೂಪಗಳಿರಬೇಕೆಂದು ರಾಮಚಂದ್ರ ರಾವ್ (೧೯೭೨:೧೨೬) ವಾದಿಸಿದ್ದಾ ರೆ. ಇವುಗಳಲ್ಲಿ ಯಾಪದದ ಹಿಂದಿನ ಸಮಯದ ಸಂಬಂಧಿಸುವ ರೂಪದೊಂದಿಗೆ ಆಗು ಕ್ರಿಯಾಪದದ ಹಿಂದಿನ ಮಯದ ಪೂರ್ಣರೂಪಗಳು ಬಂದಿವೆಯೆಂಬುದು ಅವರ ಅಭಿಪ್ರಾಯ. (ಇಂತಹ ಸೇರಿಕೆಯ ರೂಪಗಳು ನಪುಂಸಕ ಏಕವಚನದಲ್ಲಿ ಮಾತ್ರ ಕಾಣಿಸುತ್ತವೆ).
ಆದರೆ, ಹಳೆಗನ್ನಡದಲ್ಲಿ ಕ್ರಿಯಾಪದದ ಸಂಬಂಧಿಸುವ ರೂಪಗಳು ನೇರವಾಗಿ ಇನ್ನೊಂದು ಕ್ರಿಯಾಪದದೊಂದಿಗೆ ಬರಲಾರವಾದ ಕಾರಣ, ಇಲ್ಲಿಯೂ ಮೇಲೆ ವಿವರಿಸಿದಂತಹ ಸಂಬಂಧಿಸುವ ಪದದ ನಾಮರೂಪವೊಂದನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ. ಕಾಲಕ್ರಮೇಣ, ಇದರ ಲಿಂಗ- ವಚನ ಪ್ರತ್ಯಯಗಳು ಬಿದ್ದುಹೋಗಿರಬಹುದು.
ಇನ್ನೊಂದು ಸಮಸ್ಯೆಯೇನೆಂದರೆ, ಆಗು ಕ್ರಿಯಾಪದದ ಹಿಂದಿನ ಸಮಯದ ರೂಪ ನಪುಂಸಕ ಏಕವಚನದಲ್ಲಿ ಆಯ್ತು ಎಂದಿದೆ. ಇದು ಅತ್ತು ಎಂಬುದಾಗಿ ಬದಲಾದುದು ಹೇಗೆ ಎಂಬುದನ್ನೂ ವಿವರಿಸುವ ಅವಶ್ಯಕತೆಯಿದೆ.
ಕೇಶಿರಾಜನ ಶಬ್ದಮಣಿದರ್ಪಣದ ಪ್ರಕಾರ (ಸೂತ್ರ ೨೩೭ ನೋಡಿ), ಈ ಕ್ರಿಯಾರೂಪಗಳಲ್ಲಿ ನಪುಂಸಕ ಏಕವಚನದ ಪ್ರತ್ಯಯ ಉದು ರೂಪಕ್ಕೆ ಬದಲಾಗಿ ಅತ್ತು ರೂಪದಲ್ಲಿ ಬಂದಿದೆ. ಆದರೆ,
ನು
2 (de 2 (ಓಲಾ ೨೮.
ಹೀಗೆ ಹೇಳುವುದರಿಂದ, ಈ ಕ್ರಿಯಾರೂಪಗಳಿಗೂ ಅಟಾದುದು, ಉರಿದುದು, ಬಿಟ್ಟು ದು, ಮಸುಳ್ಳು ದು ಮೊದಲಾದುವಕ್ಕೂ ನಡುವೆ ಅರ್ಥದಲ್ಲಿ ಏನೂ ವ್ಯತ್ಯಾಸವಿಲ್ಲ ಎಂದು ಹೇಳಿದ ಹಾಗಾಗುತ್ತದೆ. ಇದು ನಿಜವೇ ಎಂಬುದನ್ನು ಹಳೆಗನ್ನಡದ ಗ್ರಂಥಗಳಲ್ಲಿ ಈ ಎರಡು ರೂಪಗಳ ಬಳಕೆಯೆಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ನಿರ್ಧರಿಸಬಹುದು.
ಪಂಪಭಾರತದಲ್ಲಿ ಈ ಎರಡು ಕ್ರಿಯಾರೂಪಗಳ ನಡುವೆ ಅರ್ಥದಲ್ಲಿ ವ್ಯತ್ಯಾಸವಿರುವ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ ಅತ್ತು ಕ್ರಿಯಾರೂಪ ಬಂದಿರುವ ಹಲವು ಸಂದರ್ಭಗಳಲ್ಲಿ, ಕೆಳಗೆ ಕಾಣಿಸಿದ ಹಾಗೆ, ಅಂತೆ “ಹಾಗೆ’ ಪದದ (ಉಪಮೆಯ) ಪ್ರಯೋಗವಿದೆ.
(೮ಕ) ವೃಷಾಂಕನಂಬು ತನುವಂ ಪಚ್ಚಂತೆ ಕೊಂಡತ್ತು (೮.೧೬) “ಶಿವನ ಬಾಣ ಶರೀರವನ್ನು ಭಾಗ ಮಾಡಿದ ಹಾಗೆ ಒಳನುಗ್ಗಿ ತು’
(೮ಖ) ಉರಿಮುಟ್ಟಿದರಳೆಯಂತೆ ಅಂಬರಂ ಉರಿದತ್ತು (೧೦.೩೬) “ಬೆಂಕಿ ತಗಲಿದ ಹತ್ತಿಯ ಹಾಗೆ ಆಕಾಶ ಉರಿಯಿತು’
(ಆಗು ದೇವದುಂದುಭಿ ಜಯಪ್ರಾರಂಭಮಂ ಸಾಜುವಂತೆ ಎಸೆದತ್ತು (೯.೯೬) “ದೇವದುಂದುಭಿರವವು ಜಯೋದ್ಯೋಗವನ್ನು ಸಾರುವ ಹಾಗೆ ಎಸೆದುದು’
ಆದರೆ, ಬೇರೆ ಕೆಲವು ಬಳಕೆಗಳಲ್ಲಿ ಅತ್ತು ಮತ್ತು ತು ಪ್ರತ್ಯಯಗಳ ನಡುವೆ ಅರ್ಥದ ಮಟ್ಟಿಗೆ ಯಾವ ವ್ಯತ್ಯಾಸವೂ ಇಲ್ಲದ ಹಾಗೆಯೂ ಅನಿಸುತ್ತದೆ. ಉದಾಹರಣೆಗಾಗಿ, ಕೆಳಗಿನ ಎರಡು ಬಳಕೆಗಳನ್ನು ಹೋಲಿಸಿ ನೋಡಬಹುದು.
(೯ಕ) ನೀಳ ನೀರರುಹಮಂ ಪೋಲ್ಡತ್ತು ಕಟ್ಟುಂದುವಾ (೪.೫೧) “ಆ ಚಂದ್ರನ ಕಲೆ ಕನ್ನೈದಿಲೆಯ ಹೂವನ್ನು ಹೋಲುತ್ತಿತ್ತು’
(೯ಖ) ಮೂಜು ಲೋಕಮನೆ ಪೋಲ್ತುದು ಸ್ವಯಂವರಂ (೩.೫೩) “ಸ್ವಯಂವರವು ಮೂರು ಲೋಕವನ್ನೂ ಹೋಲುತ್ತಿತ್ತು 4
ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಅವಶ್ಯಕತೆಯಿದೆ.
೯.೨.೩ ಘಟನೆಗಳ ನಡುವಿನ ಸಮಯ ಸಂಬಂಧ
ಹಳೆಗನ್ನಡದಲ್ಲಿ ಘಟನೆಯ ಸಮಯವನ್ನು ಮಾತಿನ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಬಲ್ಲ ಕ್ರಿಯಾರೂಪಗಳು ಮಾತ್ರವಲ್ಲ ದೆ, ಬೇರೊಂದು ಘಟನೆಯ ಸಮಯಕ್ಕೆ ಸಂಬಂಧಿಸಿದ ಹಾಗೆ ಸೂಚಿಸಬಲ್ಲ ಕ್ರಿಯಾರೂಪಗಳೂ ಬಳಕೆಯಲ್ಲಿವೆ. ಈ ಕ್ರಿಯಾರೂಪಗಳು ಮಾತಿನ ಸಮಯಕ್ಕೆ ಸಂಬಂಧಿಸಿದ ಹಾಗೆ ಘಟನೆಯ ಸಮಯವನ್ನು ಸೂಚಿಸುವ ಕ್ರಿಯಾರೂಪಗಳಿಗಿಂತ ಸ್ವಲ್ಪ ಮಟ್ಟಿಗೆ ಭಿನ್ನವಾಗಿಯೂ ಇವೆ.
ಎರಡು ಘಟನೆಗಳ ನಡುವೆ ಸಮಯದ ಮಟ್ಟಿಗೆ ಮೂರು ರೀತಿಯ ಸಂಬಂಧಗಳಿರಲು ಸಾಧ್ಯವಿದೆ: (ಕ) ಅವುಗಳಲ್ಲಿ ಒಂದು ಘಟನೆ ಇನ್ನೊಂದು ಘಟನೆಗಿಂತ ಮೊದಲು ನಡೆದುದಿರಬಹುದು, (ಖ) ಅನಂತರ ನಡೆಯುವುದಿರಬಹುದು, ಇಲ್ಲವೇ (ಗ) ಅವೆರಡೂ ಒಂದೇ ಸಮಯದಲ್ಲಿ
ನಡೆಯುವಂತಹವಿರಬಹುದು. ಎರಡು ಘಟನೆಗಳ ನಡುವೆ ಕಾಣಿಸಬಲ್ಲ ಈ ಮೂರು ಸಮಯ ಸಂಬಂಧಗಳನ್ನು “ಮೊದಲಿನ ಸಮಯ’, “ಅನಂತರದ ಸಮಯ’ ಮತ್ತು “ಒಂದೇ ಸಮಯ’ ಎಂಬುದಾಗಿ ಹೆಸರಿಸಬಹುದು.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ಬಳಕೆಗಳನ್ನು ಗಮನಿಸಬಹುದು:
(೧೦ಕ) ಈ ಪುಯ್ಯಲನ್ ಆರಯ್ದು ಬರ್ಪೆನ್ (೩.೨೪ವ) “ಈ ಪ್ರಲಾಪವನ್ನು ವಿಚಾರಿಸಿ ಬರುತ್ತೇನೆ’
(೧೦ಖ) ಸುಖದಿಂ ರಾಜ್ಯಂ ಗೆಯ್ಯುತ್ತ ಇರಿಂ (೪.೮ವ) “ಸುಖದಿಂದ ರಾಜ್ಯವಾಳುತ್ತ ಇರಿ’
(೧೦ಕ)ದಲ್ಲಿ ವಿಚಾರಿಸುವ ಘಟನೆ ಬರುವ ಘಟನೆಗಿಂತ ಮೊದಲು ನಡೆಯುವಂತಹದೆಂದು ಸೂಚಿಸಲಾಗಿದೆ; ಆದರೆ, (೧೦ಖ)ದಲ್ಲಿ ರಾಜ್ಯವಾಳುವ ಘಟನೆ ಮತ್ತು ಇರುವ ಘಟನೆ ಇವೆರಡೂ ಒಂದೇ ಸಮಯದಲ್ಲಿ ನಡೆಯುವಂತಹವೆಂದು ಸೂಚಿಸಲಾಗಿದೆ.
ಹಳೆಗನ್ನಡದಲ್ಲಿ ಈ ಕ್ರಿಯಾರೂಪಗಳು, ಕ್ರಿಯಾಪದಗಳ ವಿಶೇಷಣಗಳ ಹಾಗೆ, ಗುಣಪದಗಳ ಜಾಗದಲ್ಲಿ ಬಳಕೆಯಾಗುತ್ತವೆ. ಆದರೆ, ಇವು ನಾಮಪದಗಳ ವಿಶೇಷಣಗಳಾಗಿ ಬರುವ ಗುಣರೂಪಗಳಿಂದ ಭಿನ್ನವಾಗಿವೆ ಎಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ, ಮಾಡು ಕ್ರಿಯಾಪದಕ್ಕೆ ನಾಮಪದಗಳ ವಿಶೇಷಣಗಳಾಗಿ ಬಳಸಲು ಮಾಡಿದ, ಮಾಲ್ಬ (ಮಾಡುವ), ಮತ್ತು ಮಾಡದ ಎಂಬ ಗುಣರೂಪ(ಕೃದಂತರೂಪ)ಗಳಿವೆಯಾದರೆ, ಕ್ರಿಯಾಪದಗಳ ವಿಶೇಷಣಗಳಾಗಿ ಬಳಸಲು ಮಾಡಿ, ಮಾಡಲ್, ಮಾಡುತ್ತೆ, ಮತ್ತು ಮಾಡದೆ ಎಂಬ ಗುಣರೂಪಗಳಿವೆ. ಈ ಎರಡನೇ ರೀತಿಯ ಗುಣರೂಪಗಳನ್ನು ಇಲ್ಲಿ ಕ್ರಿಯಾಪದಗಳ ಜೋಡಿಸುವ ರೂಪಗಳೆಂದು ಕರೆಯಲಾಗಿದೆ.
ಸಂಸ್ಕೃತದಲ್ಲಿ ಮೇಲಿನ ಎರಡು ಸಂದರ್ಭಗಳಲ್ಲೂ ಕ್ರಿಯಾಪದಗಳ ನಾಮರೂಪ(ಕೃದಂತ)ಗಳನ್ನೇ ಬಳಸಲಾಗುತ್ತದೆ. ಗತ್ವಾ, ಕೃತ್ವಾ ಎಂಬಂತಹ ರೂಪಗಳು ಮಾತ್ರ ಇದಕ್ಕೆ ಅಪವಾದಗಳಾಗಿವೆ (ಜಾಸ್ತಿ ವಿವರಗಳಿಗೆ (೧೦.೨-೩) ನೋಡಿ).
೯.೩ ಘಟಕವನ್ನು ಸೂಚಿಸುವುದು
ಘಟನೆಯನ್ನು ಸೂಚಿಸುವ ವಾಕ್ಯಗಳಲ್ಲಿ ಕ್ರಿಯಾಪದಗಳು ಘಟನೆಯನ್ನೂ ನಾಮಪದಗಳು (ಇಲ್ಲವೇ ನಾಮಪದ ಕಂತೆಗಳು) ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದ “ಘಟಕ’ಗಳನ್ನೂ ಸೂಚಿಸುತ್ತವೆ. ಉದಾಹರಣೆಗಾಗಿ, ಕೆಳಗಿನ ಹಳೆಗನ್ನಡ ವಾಕ್ಯವನ್ನು ಗಮನಿಸಬಹುದು:
(೧೧) ಅರಸನ್ ಲಲನೆಗೆ ಪೂಮಾಲೆಯನ್ ಇತ್ತನ್ “ಅರಸನು ಲಲನೆಗೆ ಹೂಮಾಲೆಯನ್ನು ಕೊಟ್ಟನು’
ಮೇಲಿನ ವಾಕ್ಯದಲ್ಲಿ ಈ “ಕೊಡು’ ಕ್ರಿಯಾಪದದ ಇತ್ತನ್ ರೂಪ ಆ ವಾಕ್ಕ ತಿಳಿಸಬೇಕಾಗಿರುವ ಘಟನೆ ಯಾವುದು ಎಂಬುದನ್ನು ಸೂಚಿಸುತ್ತದೆ, ಮತ್ತು ಅದರೊಂದಿಗೆ ಬಂದಿರುವ ಅರಸನ್,
ಲಲನೆ ಮತ್ತು ಪೂಮಾಲೆ ಎಂಬ ನಾಮಪದಗಳು ಆ ಘಟನೆಯಲ್ಲಿ ತೊಡಗಿಕೊಂಡಿರುವ ಘಟಕಗಳು ಯಾವುವು ಎಂಬುದನ್ನು ಸೂಚಿಸುತ್ತವೆ.
ವಾಕ್ಯದಲ್ಲಿ ಬರುವ ನಾಮಪದಗಳು ಮಾತ್ರವಲ್ಲದೆ, ಕ್ರಿಯಾರೂಪದ ಕೊನೆಯಲ್ಲಿ ಬರುವ “ಆಖ್ಯಾತ’ ಪ್ರತ್ಯಯವೂ ಘಟನೆಯಲ್ಲಿ ತೊಡಗಿಕೊಂಡಿರುವ ಘಟಕವೊಂದನ್ನು ಸೂಚಿಸಬಲ್ಲುದು ಎಂಬುದನ್ನು ಮೇಲೆ ಕೊಟ್ಟಿರುವ (೧೧)ನೇ ವಾಕ್ಯದಲ್ಲಿ ಕಾಣಬಹುದು. ಇತ್ತನ್ ಕ್ರಿಯಾರೂಪದ ಕೊನೆಯಲ್ಲಿ ಬಂದಿರುವ ಅನ್ ಪ್ರತ್ಯಯ ಈ ಘಟನೆಯನ್ನು ನಡೆಸಿದವನು ಅರಸ ಎಂಬುದನ್ನು ಬಹಳ ಸೂಕ್ಷ್ಮವಾಗಿ (ಎಂದರೆ ಹಾಗೆ ನಡೆಸಿದವನು ಒಬ್ಬ ಮನುಷ್ಯ ಮತ್ತು ಗಂಡಸು ಎಂಬುದಾಗಿ) ಸೂಚಿಸುತ್ತದೆ.
ಈ ರೀತಿ ಕ್ರಿಯಾರೂಪದಲ್ಲಿ ಬರುವ ಆಖ್ಯಾತ ಪ್ರತ್ಯಯದ ಮೂಲಕ ಘಟಕವೊಂದನ್ನು ಹಳೆಗನ್ನಡದ ಹಾಗೆ ಸಂಸ್ಕೃತವೂ ಸೂಚಿಸಬಲ್ಲುದಾದರೂ, ಈ ಎರಡು ಭಾಷೆಗಳ ನಡುವೆ ಈ ವಿಷಯದಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ. ಹಳೆಗನ್ನಡದಲ್ಲಿ ಈ ಪ್ರತ್ಯಯದ ಮೂಲಕ ಘಟಕದ ಪುರುಷ, ವಚನ, ಮತ್ತು ಲಿಂಗಗಳನ್ನು ಸೂಚಿಸಲು ಸಾಧ್ಯವಿದೆಯಾದರೆ, ಸಂಸ್ಕೃತದಲ್ಲಿ ಪುರುಷ ಮತ್ತು ವಚನಗಳನ್ನು ಮಾತ್ರ ಸೂಚಿಸಲು ಸಾಧ್ಯವಿದೆ. ಸಂಸ್ಕೃತದಲ್ಲಿ ಈ ಪ್ರತ್ಯಯ ಲಿಂಗ ಭೇದವನ್ನು ಸೂಚಿಸಲಾರದು.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಹಳೆಗನ್ನಡ ಮತ್ತು ಸಂಸ್ಕೃತ ವಾಕ್ಯಗಳನ್ನು ಗಮನಿಸಬಹುದು.
(೧೨5) ದೇವದತ್ತಃ ಕಟಂ ಕರೋತಿ “ದೇವದತ್ತ ಚಾಪೆಯನ್ನು ಮಾಡುತ್ತಾ ನೆ’
(೧೨ಖ) ದೇವದತ್ತಸ್ಯ ಭಾರ್ಯಾ ಕಟಂ ಕರೋತಿ “ದೇವದತ್ತನ ಹೆಂಡತಿ ಚಾಪೆಯನ್ನು ಮಾಡುತ್ತಾಳೆ’
(೧೩ಕ) ಕೀಚಕಂ ತಮ್ಮಕ್ಕನಂ ಕಾಣಲ್ ಪೋದನ್ “ಕೀಚಕನು ತನ್ನ ಅಕ್ಕನನ್ನು ಕಾಣಲು ಹೋದನು’ (೧೩ಖ) ದ್ರೌಪದಿ ತಕ್ಕುದನೆ ನುಡಿದಳ್ “ದ್ರೌಪದಿ ಯೋಗ್ಯವಾದುದನ್ನೇ ಹೇಳಿದಳು’
ಚಾಪೆಯನ್ನು ಮಾಡುವ ವ್ಯಕ್ತಿ (೧೨ಕ)ದಲ್ಲಿ ಒಬ್ಬ ಗಂಡಸು ಮತ್ತು (೧೨ಖ)ದಲ್ಲಿ ಒಬ್ಬ ಹೆಂಗಸು; ಆದರೆ, ಈ ಎರಡು ವಾಕ್ಯಗಳಲ್ಲೂ ಸಂಸ್ಕೃತದಲ್ಲಿ ಕರೋತಿ ಎಂಬ ಒಂದೇ ಕ್ರಿಯಾರೂಪ ಬಳಕೆಯಾಗಿದೆ.
(೧೩ಕ-ಖ) ವಾಕ್ಯಗಳಲ್ಲೂ ಇದೇ ರೀತಿಯಲ್ಲಿ ಒಬ್ಬ ಗಂಡಸು ಮತ್ತು ಒಬ್ಬ ಹೆಂಗಸು ನಡೆಸಿರುವ ಕೆಲಸಗಳನ್ನು ಸೂಚಿಸಲಾಗಿದೆ; ಆದರೆ, ಹಳೆಗನ್ನಡದ ಈ ವಾಕ್ಯಗಳಲ್ಲಿ ಒಬ್ಬ ಗಂಡಸು ನಡೆಸಿದ ಹೋಗುವ ಘಟನೆಯನ್ನು (೧೩ಕ)ದಲ್ಲ ಅನ್ ಪ್ರತ್ಯಯವಿರುವ ಪೋದನ್ ಕ್ರಿಯಾರೂಪವೂ, ಒಬ್ಬ ಹೆಂಗಸು ನಡೆಸಿದ ಹೇಳುವ ಘಟನೆಯನ್ನು (೧೩ಖ)ದಲ್ಲಿ ಅದಕ್ಕಿಂತ ಭಿನ್ನವಾದ ಅಳ್ ಪ್ರತ್ಯಯವಿರುವ ನುಡಿದಳ್ ಕ್ರಿಯಾರೂಪವೂ ಸೂಚಿಸುತ್ತವೆ.
ಹಳೆಗನ್ನಡದಲ್ಲೂ ಇಂತಹ ಪ್ರತ್ಯಯಗಳು ಆಡುಗನನ್ನು ಇಲ್ಲವೇ ಕೇಳುಗನನ್ನು ಸೂಚಿಸುತ್ತಿವೆಯಾದರೆ ಅವುಗಳ ಮೂಲಕ ಲಿಂಗಭೇದ ಸೂಚಿತವಾಗುವುದಿಲ್ಲ. ಉದಾಹರಣೆಗಾಗಿ ಪಂಪಭಾರತದ ಕೆಳಗಿನ ವಾಕ್ಯಗಳನ್ನು ಗಮನಿಸಬಹುದು.
(೧೪ಕ) ಆನುಂ ತಪೋನಿಯೋಗದೊಳಿರ್ಪೆಂ (೧೨.೧೩೦) “ನಾನೂ ತಪಸ್ಸಿನ ನಿಯಮದಲ್ಲಿ ಇರುತ್ತೇನೆ’ (೧೪ಖ) ನಿನ್ನ ಬಿಸುಟೆಂತಿರ್ಪೆಂ (೨.೨೫) “ನಿನ್ನ ಬಿಟ್ಟು (ನಾನು) ಹೇಗಿರಬಲ್ಲೆ?’
(೧೪ಕ) ವಾಕ್ಯವನ್ನು ಧರ್ಮರಾಯ ಹೇಳಿದ್ದು , ಆ ಘಟಕವನ್ನು (ಆಡುಗ ಮತ್ತು ಗಂಡಸು) ಸೂಚಿಸಲು ಇರು ಕ್ರಿಯಾಪದದೊಂದಿಗೆ ಎಂ ಆಖ್ಯಾತ ಪ್ರತ್ಯಯ ಬಂದಿದೆ; (೧೪ಖ) ವಾಕ್ಯವನ್ನು ಕುಂತಿ ಹೇಳಿದ್ದು, ಆ ಘಟಕವನ್ನು (ಆಡುಗ ಮತ್ತು ಹೆಂಗಸು) ಸೂಚಿಸುವುದಕ್ಕಾಗಿಯೂ ಎಂ ಆಖ್ಯಾತ ಪ್ರತ್ಯಯವೇ ಬಂದಿದೆ.
ಇದಲ್ಲದೆ, ಆಡುಗ ಮತ್ತು ಕೇಳುಗರನ್ನು ಬಿಟ್ಟು ಇತರರನ್ನು ಸೂಚಿಸುವಲ್ಲಿಯೂ ಬಹುವಚನದಲ್ಲಿ ಮನುಷ್ಯ-ಮನುಷ್ಯೇತರ ಲಿಂಗಭೇದವಿದೆಯಲ್ಲದೆ ಪುಂ-ಸ್ತ್ರಿ ಲಿಂಗಭೇದವಿಲ್ಲ.
(೧೫ಕ) ಆ ತಪೋವೃದ್ಧ ರ್ ಕಾಂತೆಯನ್ ಸಂತೈಸಿದರ್ (೨.೨೬ವ) “ಆ ತಪೋವನದಲ್ಲಿದ್ದ ವೃದ್ಧ ತಾಪಸರು ಕಾಂತೆ(ಕುಂತಿ)ಯನ್ನು ಸಂತೈಸಿದರು’
(೧೫ಖ) ಅಂತು ದಿವ್ಯ ಸಂಯೋಗದೊಳಿರ್ವರುಂ ಗರ್ಭಮಂ ತಾಳ್ಜರ್ (೧.೮೫ವ) “ಹಾಗೆ ದಿವ್ಯವಾದ ಯಷಿಶ್ರೇಷ್ಠನ ಸಂಯೋಗದಿಂದ ಇಬ್ಬರೂ ಗರ್ಭವನ್ನು ಧರಿಸಿದರು’
(೧೫ಗ) ಬೀಸುವ ಚಾಮರಾಳಿ ಸುಂದರಿಯರ ಕೈಗಳಿಂ ಬರ್ದುಕಿ ಬಿಟ್ಲುವು “ಬೀಸುತ್ತಿದ್ದ ಚಾಮರ ಸಮೂಹಗಳು ಸುಂದರಿಯರ ಕೈಗಳಿಂದ ಜಾರಿ ಬಿದ್ದುವು’
(೧೫ಕ)ದಲ್ಲಿ ಘಟನೆಯನ್ನು ನಡೆಸಿದವರು ತಾಪಸ(ಗಂಡಸ)ರಾಗಿದ್ದು, ಆ ಘಟಕವನ್ನು ಸೂಚಿಸುವುದಕ್ಕಾಗಿ ಅರ್ ಆಖ್ಯಾತ ಪ್ರತ್ಯಯ ಬಂದಿದೆ (ಸಂತೈಸಿದರ್); (೧೫ಖ)ದಲ್ಲಿ ಘಟನೆಯನ್ನು ನಡೆಸಿದವರು ಇಬ್ಬರು ಹೆಂಗಸರು (ಅಂಬಿಕೆ ಮತ್ತು ಅಂಬಾಲಿಕೆ); ಹೀಗಿದ್ದರೂ, ಆ ಘಟಕವನ್ನು ಸೂಚಿಸುವುದಕ್ಕಾಗಿ ಅರ್ ಪ್ರತ್ಯಯವೇ ಬಂದಿದೆ (ತಾಳ್ಜರ್). (೧೫ಗ)ದಲ್ಲಿ ಮಾತ್ರ ಘಟನೆ ನಡೆದುದು ಚಾಮರ ಸಮೂಹಗಳಿಂದ; ಇವು ಮನುಷ್ಯೇತರಗಳಾದ ಕಾರಣ, ಆ ಘಟಕವನ್ನು ಸೂಚಿಸುವುದಕ್ಕಾಗಿ ಅರ್ ಪ್ರತ್ಯಯಕ್ಕಿಂತ ಭಿನ್ನವಾದ ಉವು ಪ್ರತ್ಯಯ ಬಂದಿದೆ (ಬಿಟ್ಟುವು).
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಘಟಕಗಳನ್ನು ಸೂಚಿಸುವ ಪ್ರತ್ಯಯಗಳ ಮಟ್ಟಿಗೆ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ಈ ಪ್ರತ್ಯಯಗಳು ಬೇರೆಯೂ ಕೆಲವು ಅರ್ಥಭೇದಗಳನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತದ ಅಪೂರ್ಣ ಮತ್ತು ಪೂರ್ಣ ಕ್ರಿಯಾರೂಪಗಳನ್ನು ಅವಕ್ಕೆ ಸಮನಾಗಿರುವ ಹಳೆಗನ್ನಡದ ಅಭೂತ ಮತ್ತು ಭೂತ ಕ್ರಿಯಾರೂಪಗಳೊಂದಿಗೆ ಹೋಲಿಸಿ ನೋಡಬಹುದು:
ಸಂಸ್ಕೃತ ಹಳೆಗನ್ನಡ ಅಪೂರ್ಣ-ಪೂರ್ಣ ಅಭೂತ-ಭೂತ ಕರೋಮಿ-ಚಕಾರ ಮಾಡುವೆನ್-ಮಾಡಿದೆನ್ ಕುರ್ಮಃ-ಚಕೃಮ ಮಾಡುವೆಮ್-ಮಾಡಿದೆಮ್ ಕರೋಷಿ-ಚಕರ್ಥ ಮಾಡುವಯ್-ಮಾಡಿದಯ್ ಕುರುಥ-ಚಕ್ರ ಮಾಡುವಿರ್-ಮಾಡಿದಿರ್ ಕರೋತಿ-ಚಕಾರ ಮಾಡುವನ್-ಮಾಡಿದನ್ ಕುರ್ವಂತಿ-ಚಕ್ರುಃ ಮಾಡುವರ್-ಮಾಡಿದರ್
ಮೇಲೆ ಸಂಸ್ಕೃತದ ಅಪೂರ್ಣರೂಪಗಳ ಕೊನೆಯಲ್ಲಿ ಕಾಣಿಸುವ ಆಖ್ಯಾತ ಪ್ರತ್ಯಯಗಳು (ಮಿ, ಮಃ, ಷಿ, ಥ, ತಿ ಮತ್ತು ಅಂತಿ ಎಂಬವುಗಳು) ಪೂರ್ಣ ರೂಪಗಳ ಕೊನೆಯಲ್ಲಿ ಕಾಣಿಸುವ ಆಖ್ಯಾತ ಪ್ರತ್ಯಯಗಳಿಗಿಂತ (ಅ, ಮ, ಥ, ಅ, ಅ ಮತ್ತು ಉಃ ಎಂಬವುಗಳಿಂದ) ತೀರ ಭಿನ್ನವಾಗಿವೆ. ಆದರೆ, ಹಳೆಗನ್ನಡದಲ್ಲಿ ಅಭೂತ ಮತ್ತು ಭೂತ ರೂಪಗಳೆರಡರಲ್ಲೂ ಒಂದೇ ರೀತಿಯ ಆಖ್ಯಾತ ಪ್ರತ್ಯಯಗಳು (ಎನ್, ಎಮ್, ಅಯ್, ಇರ್, ಅನ್ ಮತ್ತು ಅರ್ ಎಂಬವು)
ಬಳಕೆಯಾಗಿವೆ.
೯.೪ ಗುಂ (ಕುಂ) ಪ್ರತ್ಯಯದ ಬಳಕೆ
ಹಳೆಗನ್ನಡದಲ್ಲಿ ಗುಂ (ಕುಂ) ಪ್ರತ್ಯಯ ನಿಜಕ್ಕೂ ಯಾವ ಅರ್ಥದಲ್ಲಿ ಬಳಕೆಯಾಗುತ್ತಿತ್ತು ಎಂಬ ವಿಷಯದಲ್ಲೂ ಹೆಚ್ಚಿನ ಸಂಶೋಧನೆ ನಡೆಸುವ ಅವಶ್ಯಕತೆಯಿದೆಯೆಂದು ನನಗೆ ತೋರುತ್ತದೆ. ನಾಗಮರ್ಮನ ಭಾಷಾಭೂಷಣದಲ್ಲಿ ಈ ಪ್ರತ್ಯಯ ಭವಿಷ್ಯತ್ಕಾಲದಲ್ಲಿ ಬಳಕೆಯಾಗುವುದೆಂದು ಹೇಳಲಾಗಿದೆ (ಸೂ. ೨೦೯), ಮತ್ತು ಕಾವ್ಯಾವಲೋಕನದಲ್ಲಿ (ಸೂ. ೯೦) ಇದು ಭವಿಷ್ಯತ್ಕಾಲದಲ್ಲಿ ಮಾತ್ರವಲ್ಲದೆ ವರ್ತಮಾನ ಕಾಲದಲ್ಲೂ ಬಳಕೆಯಾಗುವುದೆಂದು ಹೇಳಲಾಗಿದೆ.
ಆದರೆ, ಕೇಶಿರಾಜನ ಶಬ್ದಮಣಿದರ್ಪಣದಲ್ಲಿ (ಸೂ. ೨೩೮), ಮತ್ತು ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ (ಸೂ. ೪೬೩) ಈ ಪ್ರತ್ಯಯ ಭೂತಾರ್ಥದಲ್ಲೂ ಬಳಕೆಯಾಗುತ್ತದೆಯೆಂದು ಹೇಳಲಾಗಿದೆ. ಅನಂತರದ ವಿದಾ ಿಂಸರು ಈ ಮೂರನೆಯ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದಾ ರೆ (ಕಿಟ್ಟೆಲ್ ೧೯೦೩:೧೪೬, ಕನ್ನಡ ಕೈಪಿಡಿ ೧೯೩೬:೪೫).
ಭಟ್ಟಾಕಳಂಕನು ಕೊಟ್ಟಿರುವ ಪ್ರಯೋಗಗಳಿಂದ ಇವಕ್ಕೂ ಸಾಮಾನ್ಯ ಕ್ರಿಯಾರೂಪಗಳಿಗೂ ಅರ್ಥದಲ್ಲಿ ವ್ಯತ್ಯಾಸವಿಲ್ಲವೆಂಬ ಅಭಿಪ್ರಾಯ ಆತನಿಗಿದ್ದ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ, ಪುಟ್ಟುಗುಂ ಎಂಬುದಕ್ಕೆ ಪುಟ್ಟಿದಂ, ಪುಟ್ಟುವಂ ಮತ್ತು ಪುಟ್ಟಿದಪಂ ಎಂಬವುಗಳ ಅರ್ಥವೇ ಇದೆಯೆಂದು ಆತನ ಪ್ರಯೋಗಗಳು ಸೂಚಿಸುತ್ತವೆ. ಅನಂತರದ ವಿದ್ವಾಂಸರೂ ಇವಕ್ಕೂ ಮತ್ತು ಸಾಮಾನ್ಯ ಕ್ರಿಯಾರೂಪಗಳಿಗೂ ನಡುವೆ ಅರ್ಥದ ಮಟ್ಟಿಗೆ ವ್ಯತ್ಯಾಸವೇನಾದರೂ ಇದೆಯೇ ಎಂಬ ವಿಷಯದಲ್ಲಿ ಏನೂ ಹೇಳಿರುವ ಹಾಗೆ ಕಾಣಿಸುವುದಿಲ್ಲ.
ಪಂಪಭಾರತದಲ್ಲಿ ಈ ಗುಂ (ಕುಂ) ಪ್ರತ್ಯಯದ ಮೂಲಕ ಸಾಧಿತವಾಗಿರುವ ಕ್ರಿಯಾರೂಪಗಳು ಹೆಚ್ಚಿನೆಡೆಗಳಲ್ಲೂ ಭವಿಷ್ಯದರ್ಥದಲ್ಲೇ ಬಳಕೆಯಾಗಿವೆ. ಇದಲ್ಲದೆ, ಈ ಪ್ರಯೋಗಗಳಲ್ಲಿ ಗುಂ (ಕುಂ) ಪ್ರತ್ಯಯಕ್ಕೆ ಭವಿಷ್ಯದರ್ಥ ಮಾತ್ರವಲ್ಲದೆ ಸಂಭಾವ್ಯತೆಯ ಅರ್ಥವೂ ಇರುವ ಹಾಗೆ
ಕಾಣಿಸುತ್ತದೆ. ಅಪರೂಪಕ್ಕೆ ಇವನ್ನು ಭೂತಾರ್ಥದಲ್ಲೂ ಬಳಸಲಾಗಿದೆಯಾದರೂ, ಅಂತಹ ಸಂದರ್ಭಗಳಲ್ಲಿ ಅವು ರೂಢಿಯಲ್ಲಿರುವ ಘಟನೆಗಳನ್ನು ಸೂಚಿಸುತ್ತಿರುವ ಹಾಗೆ ಕಾಣಿಸುತ್ತದೆ.
ಈ ಕಾರಣಕ್ಕಾಗಿ, ಹಳೆಗನ್ನಡದಲ್ಲಿ ಈ ಕುಂ (ಗುಂ) ಪ್ರತ್ಯಯದ ಮೂಲಕ ಸಾಧಿತವಾಗುವ ಕ್ರಿಯಾರೂಪಗಳು ದ ಮತ್ತು ವ (ಪ) ಪ್ರತ್ಯಯಗಳಿರುವ ಕ್ರಿಯಾರೂಪಗಳಿಗಿಂತ ಅರ್ಥದಲ್ಲಿ ಭಿನ್ನವಾದುವೆಂದು ಹೇಳಲು ಸಾಧ್ಯವಿರುವ ಹಾಗೆ ಕಾಣಿಸುತ್ತದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಗಳನ್ನು ಗಮನಿಸಬಹುದು:
(೧೬ಕ) ಬೇಡಿದೊಡೆ ಬಲದ ಬರಿಯುಮನ್ ಈಡಾಡುಗುಂ (೧.೧೦೦ “ಯಾಚಿಸಿದರೆ (ಕರ್ಣನು) ಬಲಪಾರ್ಶ್ವದ ಪಕ್ಕೆಯನ್ನು ಕತ್ತರಿಸಿ ಎಸೆದಾನು’ (೧೬ಖ)ಎನ್ನುಮನಿಂತು ತುತ್ತುಗುಂ (೩.೨೯ ವ) “ನನ್ನನ್ನೂ ಈ ರೀತಿ ನುಂಗಿಬಿಡಬಹುದು’ (೧೬ಗ) ಬಗೆವಾಗಳ್ ಈ ಕಲಹದೊಳ್ ನಿಮ್ಮ ಕುಲವಾಕುಲವಂ ನಿಮಗುಂಟುಮಾಡುಗುಂ
(೧೦.೨೧) “ವಿಚಾರ ಮಾಡುವುದಾದರೆ, ಈ ಯುದ್ಧದಲ್ಲಿ ನಿಮ್ಮ ಕುಲವು ನಿಮಗೆ ವ್ಯಥೆಯನ್ನುಂಟುಮಾಡೀತು’
ಮೇಲಿನ ವಾಕ್ಯಗಳಲ್ಲೆಲ್ಲ ಈ ಕ್ರಿಯಾರೂಪಗಳು ಮುಂದಿನ ಸಮಯದಲ್ಲಿ ನಡೆಯಬಹುದಾದ (ಎಂದರೆ ಸಂಭಾವ್ಯ) ಘಟನೆಯೊಂದನ್ನು ಸೂಚಿಸುತ್ತಿವೆ.
ಭೂತಕಾಲದ ಬಳಕೆಗಳಲ್ಲೂ ಇದೇ ರೀತಿಯಲ್ಲಿ ಭೂತಕಾಲದ ಸಾಮಾನ್ಯ ಕ್ರಿಯಾರೂಪಗಳಿಗಿಂತ ಭಿನ್ನವಾಗಿರುವ “ರೂಢಿ’ಯಲ್ಲಿ ಜರಗುವ ಘಟನೆಯೊಂದನ್ನು ಸೂಚಿಸುವಂತಹ ಅರ್ಥವನ್ನು ಈ ಕ್ರಿಯಾರೂಪಗಳು ಕೊಡುತ್ತವೆಯೆಂದು ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಕಂದಪದ್ಯವನ್ನು ಗಮನಿಸಬಹುದು:
(೧೭) ನುಡಿಯಿಸಿ ಕೇಳ್ಗುಂ ಹರಿಗನ ಪಡೆಮಾತನೆ ಮಾತು ತಪ್ಪೊಡಂ ಮತ್ತಮದಂ ನುಡಿಯಿಸುಗುಂ ಮೊದಲಿಂದಾ ನುಡಿ ಪಣಪಡೆ ಮುಳಿದು ನೋಡುಗುಂ ಕೆಳದಿಯರಂ (೪.೫೬)
ಇಲ್ಲಿ ಸುಭದ್ರೆ ವಿರಹತಾಪದಿಂದ ಏನು ಮಾಡುತ್ತಿ ದ್ದಳು ಎಂಬುದನ್ನು ವಿವರಿಸಲಾಗಿದೆ. ಈ ಸಂದರ್ಭದಲ್ಲಿ ಭೂತಕಾಲದ ಸಾಮಾನ್ಯ ಕ್ರಿಯಾ ರೂಪಗಳನ್ನು (ಕೇಳ್ಲಳ್, ನುಡಿಯಿಸಿದಳ್, ನೋಡಿದಳ್ ಎಂಬ ರೂಪಗಳನ್ನು) ಬಳಸಿದಲ್ಲಿ ತಿಳಿಸಬೇಕಾಗಿರುವ ಏನು ಮಾಡುತ್ತಾ ಇದ್ದಳು ಎಂಬ “ರೂಢಿಯ’ ಅರ್ಥ ಸ್ಪಷ್ಟವಾಗಿ ಮೂಡಲಾರದು.
ಈ ಕಂದಪದ್ಯದ ಅನುವಾದದಲ್ಲಿ ಅನಂತರಂಗಾಚಾರ್ ಅವರು ಕೇಳುತ್ತಾಳೆ, ನುಡಿಯಿಸುತ್ತಾಳೆ ಮತ್ತು ನೋಡುತ್ತಾಳೆ ಎಂಬುದಾಗಿ ವರ್ತಮಾನಾರ್ಥದ ಕ್ರಿಯಾರೂಪಗಳನ್ನು ಬಳಸಿದ್ದಾರೆ; ಆದರೆ, ಇದಕ್ಕಿಂತಲೂ ಕೇಳುತ್ತಿದ್ದಳು, ನುಡಿಯಿಸುತ್ತಿದ್ದಳು, ಮತ್ತು ನೋಡುತ್ತಿದ್ದಳು ಎಂಬಂತಹ ರೂಪಗಳೇ ಹೆಚ್ಚು ಸ್ಪಷ್ಟವಾಗಿ ಇಲ್ಲಿ ತಿಳಿಸಬೇಕಾಗಿರುವ ರೂಢಿಯ ಅರ್ಥವನ್ನು ತಿಳಿಸಬಲ್ಲವು ಎಂದು ತೋರುತ್ತದೆ.
ಹೊಸಗನ್ನಡದಲ್ಲಿ ಕಾಣಿಸದಿರುವ ಹಲವು ಹಳೆಗನ್ನಡದ ಪದರೂಪಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಗುಂ (ಕುಂ) ಪ್ರತ್ಯಯವೂ ಗು (ಕು) ಎಂಬ ರೂಪದಲ್ಲಿ ಉಳಿದುಕೊಂಡಿದ್ದು, ಅವುಗಳಲ್ಲಿ ಅದಕ್ಕೆ ಮುಂದಿನ ಸಮಯದಲ್ಲಿ ಮೇಲೆ ಸೂಚಿಸಿದಂತಹ ಸಂಭಾವ್ಯತೆಯ ಅರ್ಥವೂ, ಹಿಂದಿನ ಸಮಯದಲ್ಲಿ ರೂಢಿಯ ಅರ್ಥವೂ ಇವೆ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ ಹವ್ಯಕ ಕನ್ನಡ ವಾಕ್ಯಗಳನ್ನು ಗಮನಿಸಬಹುದು:
(೧೮ಕ) ಅವು ನಾಳಂಗೆ ರಜಾ ಬೇಗ ಬಕ್ಕು “ಅವರು ನಾಳೆ ಸ್ವಲ್ಪ ಬೇಗ ಬಂದಾರು’ (೧೮ಖ) ಹೆಚ್ಚು ಎಳದರೆ ಅದು ಮುರಿಗು “ಜಾಸ್ತಿ ಎಳೆದರೆ ಅದು ಮುರಿದೀತು’ (೧೮ಗ) ನಾವು ಪೂನಲ್ಲಿಪ್ಪಗ ದಿನಾಗಳುದೆ ಕಾಪಿಗೆ ಹೋಟೆಲಿಂಗೆ ಹೋಕು “ನಾವು ಪುಣೆಯಲ್ಲಿದ್ದಾಗ ದಿನಾಲೂ ಕಾಫಿಗೆ ಹೋಟೆಲಿಗೆ ಹೋಗುತ್ತಿದ್ದೆವು’
(೧೮ಕ-ಖ) ವಾಕ್ಯಗಳಲ್ಲಿ ಕು (ಗು) ಪ್ರತ್ಯಯ ಮುಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಂದಿದ್ದು, ಅದಕ್ಕೆ ಸಂಭಾವ್ಯತೆಯ ಅರ್ಥವೂ ಇದೆ, ಮತ್ತು (೧೮ಗ) ವಾಕ್ಯದಲ್ಲಿ ಅದು ಹಿಂದಿನ ಸಮಯವನ್ನು ಸೂಚಿಸುವುದಕ್ಕಾಗಿ ಬಂದಿದ್ದು, ಅದಕ್ಕೆ ರೂಢಿಯಲ್ಲಿ ಜರಗುತ್ತಿದ್ದ ಘಟನೆಯೊಂದನ್ನು ಸೂಚಿಸುವ ಅರ್ಥವಿದೆ.
೯.೫ ಅಲ್ಲಗಳೆಯುವ ವಿಧಾನಗಳು
ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಅಲ್ಲಗಳೆಯುವುದಕ್ಕಾಗಿ ಬಳಕೆಯಾಗುವ ವಿಧಾನಗಳ ನಡುವೆ ಹಲವು ಮೂಲಭೂತವಾದ ವ್ಯತ್ಯಾಸಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(೧) ಸಂಸ್ಕೃತದಲ್ಲಿ ವಾಕ್ಯಗಳನ್ನು ಮಾತ್ರವಲ್ಲದೆ ಪದಗಳನ್ನೂ ಅಲ್ಲ ಗಳೆಯಲು ಸಾಧ್ಯವಿದೆ; ಇದಕ್ಕಾಗಿ, ಪದಗಳಿಗೆ ಅ (ಸ್ವರ ಪರವಾಗಿದ್ದರೆ ಅನ್) ಉಪಸರ್ಗವನ್ನು ಸೇರಿಸಲಾಗುತ್ತದೆ.
ಈ ರೀತಿ ಅಲ್ಲಗಳೆದಿರುವ ಹಲವು ಪದಗಳು ಸಂಸ್ಕೃತದಿಂದ ಹಳೆಗನ್ನಡಕ್ಕೂ ಎರವಲಾಗಿ ಬಂದಿರುವ ಕಾರಣ, ಅವುಗಳ ಬಳಕೆಯನ್ನು ಹಳೆಗನ್ನಡದಲ್ಲೂ ಕಾಣಬಹುದು. ಆದರೆ ಕನ್ನಡದವೇ ಆದ ಪದಗಳಿಗೆ ಈ ರೀತಿ ಪ್ರತ್ಯಯಗಳನ್ನು ಸೇರಿಸಿ ಅವನ್ನು ಅಲ್ಲ ಗಳೆಯಲು ಸಾಧ್ಯವಾಗದು.
ಶ್ರ $ ಜಾನ ಅಜಾನ ಹಿ ಇ ನ್ಯಾಯ ಅನ್ಯಾಯ ಆಚಾರ ಅನಾಚಾರ ಏಕ ಅನೇಕ
ಸಂಸ್ಕೃತದ ಪದಗಳಲ್ಲಿ ಈ ಅ ಪ್ರತ್ಯಯ (ಉಪಸರ್ಗ) ಮಾತ್ರವಲ್ಲದೆ, ನಿ (ಸ್ವರ ಪರವಾಗಿದ್ದರೆ ನಿರ್) ಎಂಬ ಇನ್ನೊಂದು ಪ್ರತ್ಯಯವೂ ಅಲ್ಲ ಗಳೆಯುವ ಅರ್ಥದಲ್ಲಿ ಬಳಕೆಯಾಗುತ್ತದೆ. ದಯೆ-ನಿರ್ದಯೆ, ಭಯ-ನಿರ್ಭಯ, ಆಶ್ರಿತ-ನಿರಾಶ್ರಿತ, ಅಪರಾಧಿ-ನಿರಪರಾಧಿ ಮೊದಲಾದ ಪದಗಳಲ್ಲಿ ಈ ಪ್ರತ್ಯಯದ ಬಳಕೆಯನ್ನು ಕಾಣಬಹುದು.
ಹಳೆಗನ್ನಡದ ನಿರ್ನೆರಂ, ನಿಬ್ಬೆರಗು, ನಿಪ್ಪೊಸತು ಮೊದಲಾದ ಕೆಲವು ಪದಗಳಲ್ಲಿ ಅಪರೂಪವಾಗಿ ಕನ್ನಡ ಪದಗಳಿಗೂ ಈ ಪ್ರತ್ಯಯ ಸೇರಿರುವ ಹಾಗೆ ಕಾಣಿಸುತ್ತದೆ (ಡಿ. ಎಲ್. ನರಸಿಂಹಾಚಾರ್ (೧೯೭೧:೭೭೯-೮೦ ನೋಡಿ).
(೨) ಸಂಸ್ಕೃತದಲ್ಲಿ ವಾಕ್ಯವೊಂದನ್ನು ಅಲ್ಲಗಳೆಯಬೇಕಿದ್ದಲ್ಲಿ, ಅದಕ್ಕೆ ನ ಎಂಬ ಅಲ್ಲಗಳೆಯುವ ಪದವನ್ನು ಸೇರಿಸಿದರೆ ಸಾಕು. ಆ ವಾಕ್ಯದಲ್ಲಿ ಬೇರಾವ ಬದಲಾವಣೆಯನ್ನೂ ಮಾಡಬೇಕಾಗಿಲ್ಲ.
(೧೯ಕ) ತೇ ಪುಸ್ತಕಾನಿ ಪಠಂತಿ
“ಅವರು ಪುಸ್ತಕಗಳನ್ನು ಓದುತ್ತಾರೆ’ (೧೯ಖ) ತೇ ಪುಸ್ತಕಾನಿ ನ ಪಠಂತಿ
“ಅವರು ಪುಸ್ತಕಗಳನ್ನು ಓದುವುದಿಲ್ಲ’
(೧೯ಕ) ತಿಳಿಸುವ ಘಟನೆಯನ್ನು ಅಲ್ಲಗಳೆಯುವುದಕ್ಕಾಗಿ (೧೯ಖ)ದಲ್ಲಿ ಆ ವಾಕ್ಯಕ್ಕೆ ನ ಎಂಬುದನ್ನಷ್ಟೇ ಸೇರಿಸಲಾಗಿದೆ, ಆ ವಾಕ್ಯದಲ್ಲಿ ಬೇರಾವ ಬದಲಾವಣೆಯೂ ನಡೆದಿಲ್ಲ ಎಂಬುದನ್ನು ಗಮನಿಸಬಹುದು.
ಹಳೆಗನ್ನಡದಲ್ಲಿ ಹಿಂದಿನ ಸಮಯದ ಘಟನೆಯನ್ನು ಅಲ್ಲಗಳೆಯುವಲ್ಲಿ ಮಾತ್ರ ಇಂತಹ ವಿಧಾನ ಬಳಕೆಯಲ್ಲಿದೆ. ಇದಕ್ಕಾಗಿ ವಾಕ್ಯದ ಕೊನೆಯಲ್ಲಿ ಇಲ್ಲ ಪದವನ್ನು ಬಳಸಲಾಗುತ್ತ ದೆ. ವಾಕ್ಯದಲ್ಲಿ ಬೇರಾವ ಬದಲಾವಣೆಯನ್ನೂ ಮಾಡಬೇಕಾಗುವುದಿಲ್ಲ:
(೨೦ಕ) ಈ ಕನ್ನೆಯನ್ ಪದ್ಮಜನ್ ಪಡೆದನ್ “ಈ ಕನ್ಯೆಯನ್ನು ಬ್ರಹ್ಮನು ಸೃಷ್ಟಿಸಿದನು” (೨೦೫) ಈ ಕನ್ನೆಯನ್ ಪದ್ಮಜನ್ ಪಡೆದನ್ ಇಲ್ಲ “ಈ ಕನ್ಯೆಯನ್ನು ಬ್ರಹ್ಮನು ಸೃಷ್ಟಿಸಲಿಲ್ಲ’
ಆದರೆ, ಮುಂದಿನ ಸಮಯದ ವಾಕ್ಯವೊಂದನ್ನು ಅಲ್ಲಗಳೆಯಬೇಕಿದ್ದಲ್ಲಿ, ಅಂತಹ ವಾಕ್ಯದಲ್ಲಿ ಬರುವ ಕ್ರಿಯಾಪದವನ್ನು ಅಲ್ಲಗಳೆಯುವ ರೂಪಕ್ಕೆ ಬದಲಾಯಿಸಬೇಕಾಗುತ್ತದೆ. ಕ್ರಿಯಾರೂಪಗಳಲ್ಲಿ ಸಮಯವನ್ನು ಸೂಚಿಸುವುದಕ್ಕಾಗಿ ಬರುವ ಪ್ರತ್ಯಯದ ಜಾಗದಲ್ಲಿ ಅ ಪ್ರತ್ಯಯವನ್ನು ಬಳಸುವುದರ ಮೂಲಕ, ಇಂತಹ ಅಲ್ಲಗಳೆಯುವ ಕ್ರಿಯಾರೂಪಗಳನ್ನು ಸಾಧಿಸಬಹುದು:
(೨೧ಕ) ಅವನ್ ಸಂಗರದೊಳ್ ಚಾಪಮಂ ಪಿಡಿವಂ “ಅವನು ಯುದ್ಧದಲ್ಲಿ ಬಿಲ್ಲನ್ನು ಹಿಡಿಯುತ್ತಾನೆ’
(೨೧ಖ) ಅವನ್ ಸಂಗರದೊಳ್ ಚಾಪಮಂ ಪಿಡಿಯಂ “ಅವನು ಯುದ್ಧದಲ್ಲಿ ಬಿಲ್ಲನ್ನು ಹಿಡಿಯುವುದಿಲ್ಲ’
(೨೧5) ವಾಕ್ಯ ತಿಳಿಸುವ ಘಟನೆಯನ್ನು ಅಲ್ಲಗಳೆಯುವುದಕ್ಕಾಗಿ (೨೧ಖ) ವಾಕ್ಯದಲ್ಲಿ ಅದರ ಪಿಡಿವಂ ಕ್ರಿಯಾರೂಪವನ್ನು ಪಿಡಿಯಂ ಎಂಬುದಾಗಿ ಬದಲಾಯಿಸಲಾಗಿದೆ ಎಂಬುದನ್ನು ಗಮನಿಸಬಹುದು. ಇಲ್ಲಿ ಪಿಡಿ ಕ್ರಿಯಾಪದದ ಅನಂತರ ಬಂದಿರುವ ವ್ ಎಂಬ ಮುಂದಿನ ಸಮಯವನ್ನು ಸೂಚಿಸುವ ಪ್ರತ್ಯಯದ ಬದಲು ಅ ಎಂಬ ಅಲ್ಲಗಳೆಯುವ ಪ್ರತ್ಯಯವನ್ನು ಬಳಸಲಾಗಿದೆ. ಪಿಡಿ ಕ್ರಿಯಾಪದ ಇಕಾರದಲ್ಲಿ ಕೊನೆಗೊಳ್ಳುವ ಕಾರಣ, ಅದರ ಅನಂತರ ಅ ಪ್ರತ್ಯಯ ಬಂದಾಗ ಯಕಾರವೊಂದು ಸೇರಿಕೊಳ್ಳುತ್ತ ದೆ.
ಹಳೆಗನ್ನಡ ವ್ಯಾಕರಣಗಳಲ್ಲಿ ಈ ಕ್ರಿಯಾರೂಪಕ್ಕೆ ಮೂರು ಕಾಲಗಳನ್ನೂ ಸೂಚಿಸುವ ಅರ್ಥವಿದೆಯೆಂದು ಹೇಳಲಾಗಿದೆ (ಕೇಶಿರಾಜ ಸೂ. ೨೩೩). ಅನಂತರದ ವಿದ್ವಾಂಸರೂ ಇದು ಸರಿಯೆಂದು ಒಪ್ಪಿಕೊಂಡಿರುವ ಹಾಗೆ ಕಾಣಿಸುತ್ತದೆ (ಕಿಟ್ಟೆಲ್ ೧೯೦೩:೧೫೭).
ಆದರೆ, ಈ ಕ್ರಿಯಾರೂಪಗಳ ಹೆಚ್ಚಿನ ಬಳಕೆಗಳಲ್ಲೂ ಅದು ಹೊಸಗನ್ನಡದ ನೋಡುವುದಿಲ್ಲ, ಮಾಡುವುದಿಲ್ಲ ಎಂಬಂತಹ ರೂಪಗಳ, ಇಲ್ಲವೇ ನೋಡಲಿಕ್ಕಿಲ್ಲ, ಮಾಡಲಿಕ್ಕಿಲ್ಲ ಎಂಬಂತಹ ರೂಪಗಳ ಅರ್ಥದಲ್ಲೇ (ಎಂದರೆ ವರ್ತಮಾನ ಇಲ್ಲವೇ ಭವಿಷ್ಯದರ್ಥದಲ್ಲೇ) ಕಾಣಿಸಿಕೊಳ್ಳುತ್ತ ದೆ.
ನೋಡಲಿಲ್ಲ, ಮಾಡಲಿಲ್ಲ ಎಂಬಂತಹ ಕ್ರಿಯಾರೂಪಗಳ ಅರ್ಥದಲ್ಲಿ (ಭೂತಾರ್ಥದಲ್ಲಿ), ಮೇಲೆ (೨೦ಕ-ಖ)ಗಳಲ್ಲಿ ಉದಾಹರಿಸಿದ ಹಾಗೆ, ಕ್ರಿಯಾಪದದ ಪೂರ್ಣರೂಪದೊಂದಿಗೆ ಇಲ್ಲ ಪದವನ್ನು ಸೇರಿಸಿರುವ ರಚನೆಯನ್ನೇ ಬಳಸಲಾಗುತ್ತದೆ.
ಹಳೆಗನ್ನಡದ ಹಲವು ರಚನೆಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಅಲ್ಲಗಳೆಯುವ ಕ್ರಿಯಾರೂಪವೂ ಕಾಣಿಸುತ್ತಿದ್ದು ಅದಕ್ಕೆ ಮಾಡಲಿಕ್ಕಿಲ್ಲ, ಹೋಗಲಿಕ್ಕಿಲ್ಲ ಎಂಬಂತಹ ಕ್ರಿಯಾರೂಪಗಳಿಗಿರುವ ಅರ್ಥವಿದೆ.
ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಆನು ಹೋಗೆ “ನಾನು ಹೋಗಲಿಕ್ಕಿಲ್ಲ ’ ಆನು ಹೋವುತ್ತಿಲ್ಲೆ “ನಾನು ಹೋಗುವುದಿಲ್ಲ’ ಮತ್ತು ಆನು ಹೋಯಿದಿಲ್ಲೆ “ನಾನು ಹೋಗಲಿಲ್ಲ ಎಂಬುದಾಗಿ ಮೂರು ಅಲ್ಲಗಳೆಯುವ ಕ್ರಿಯಾರೂಪಗಳಿದ್ದು, ಇವುಗಳಲ್ಲಿ ಮೊದಲನೆಯದು ಹಳೆಗನ್ನಡದ ಪೋಗೆಂ ಎಂಬುದರ ಆಧುನಿಕ ರೂಪವಾಗಿದೆ.
ಉಳಿದೆರಡು ಅಲ್ಲಗಳೆಯುವ ಕ್ರಿಯಾರೂಪಗಳನ್ನು ಹೋಗು ಕ್ರಿಯಾಪದದ ಹೋವುತ್ತೆ “ಹೋಗುತ್ತೇನೆ’ ಮತ್ತು ಹೋಯಿದೆ “ಹೋಗಿದ್ದೇನೆ’ ಎಂಬ ಪೂರ್ಣ ರೂಪಗಳಿಗೆ ಇಲ್ಲೆ “ಇಲ್ಲ’ ಎಂಬುದನ್ನು ಸೇರಿಸಿ ರಚಿಸಲಾಗಿದೆ.
(೩) ಹಳೆಗನ್ನಡದಲ್ಲಿ ಒಂದು ಘಟನೆ ಇಲ್ಲವೇ ಸಂಗತಿಗೂ, ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುವುದಿದ್ದಲ್ಲಿ ಇಲ್ಲ ಪದದ ಬದಲು ಅಲ್ಲ ಎಂಬ ಬೇರೆಯೇ ಒಂದು ಪದವನ್ನು ಬಳಸಬೇಕಾಗುತ್ತದೆ. ಆದರೆ, ಸಂಸ್ಕೃತದಲ್ಲಿ ಇದಕ್ಕೂ ನ ಉಪಸರ್ಗವನ್ನೇ ಬಳಸಲಾಗುತ್ತದೆ.
ಹಳೆಗನ್ನಡದಲ್ಲಿ ಸಂಬಂಧವನ್ನು ಅಲ್ಲಗಳೆಯುವ ಈ ಅಲ್ಲ ಪದದೊಂದಿಗೆ ಘಟಕವನ್ನು ಸೂಚಿಸುವ ಪ್ರತ್ಯಯಗಳೂ ಬರಬಲ್ಲುವು.
(೨೨ಕ) ಎನ್ನೆಂದುದಂ ಮೀಜುವರ್ ಅಲ್ಲರ್ “ನಾನು ಹೇಳಿದುದನ್ನು ಮೀರುವವರು ಅಲ್ಲ ಕ (೨೨ಖ) ನೀ ಅಉುಯದೆಯುಂ ವಿಚಾರಿಸದೆಯುಂ ನೆಗಳ್ತನ್ನೆಯಲ್ಲೆ “ನೀನು ತಿಳಿಯದೆಯೂ ವಿಚಾರಿಸದೆಯೂ ಕಾರ್ಯಮಾಡುವಂಥವನಲ್ಲ’
(೪) ಕೇಳುಗನು ಒಂದು ಕೆಲಸವನ್ನು ಮಾಡದ ಹಾಗೆ ತಡೆಯುವುದಕ್ಕಾಗಿ ಹಳೆಗನ್ನಡದಲ್ಲಿ ಕ್ರಿಯಾಪದದೊಂದಿಗೆ ಅಲ್ ಪ್ರತ್ಯಯದ ಬಳಕೆಯಾಗುತ್ತದೆ.
(೨೩ಕ) ಪೋ ಪೋಗಲ್ ಎಂದೊದಜುತ್ತುಂ ಪರಿತಂದು ತಾಗಿ ತಡರ್ದಂ ಗಂಗಾಸುತಂ ಭೀಮನಂ “ಹೋಗಬೇಡ, ಹೋಗಬೇಡ ಎಂಬುದಾಗಿ ಕೂಗಿಕೊಳ್ಳುತ್ತಾ ಓಡಿ ಬಂದು ಭೀಷ್ಮನು ಭೀಮನನ್ನು ತಡೆಗಟ್ಟಿದನು’
(೨೩ಖ) ಕಾಗೆವೊಲ್ ಇಂತು ಬಿಲ್ಲೆ ಕರಂ ಅಂಜುವಿರ್ ಅಂಜಲಿಂ “ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ’
ಈ ಪ್ರತ್ಯಯವೂ ಅನಂತರದ ಘಟನೆಯನ್ನು ಸೂಚಿಸುವುದಕ್ಕಾಗಿ ಬಳಸುವ ಅಲ್ ಪ್ರತ್ಯಯವೂ ಒಂದೇ ಎಂಬ ಅರ್ಥ ಬರುವ ಹಾಗೆ ಶಬ್ದಮಣಿದರ್ಪಣದಲ್ಲಿ (ಸೂ. ೨೪೫) ಇವನ್ನು ಪರಿಚಯಿಸಲಾಗಿದೆ. ಆದರೆ, ನಿಜಕ್ಕೂ ಹಳೆಗನ್ನಡದಲ್ಲಿ ಮೂರು ಬೇರೆ ಬೇರೆ ಅಲ್ ಎಂಬ ಒಂದೇ ರೂಪದ ಪ್ರತ್ಯಯಗಳಿವೆ ಎಂದು ಹೇಳುವ ಅವಶ್ಯಕತೆಯಿದೆ. ಮೇಲೆ ವಿವರಿಸಿದ ಪ್ರತಿಷೇಧಾರ್ಥದ ಅಲ್ ಪ್ರತ್ಯಯ ಇವುಗಳಲ್ಲೊಂದು.
ಇದಲ್ಲದೆ, ಅನಂತರದ ಘಟನೆಯನ್ನು ಸೂಚಿಸುವ ಅಲ್ ಮತ್ತು ಮೊದಲಿನ ಘಟನೆಯನ್ನು ಸೂಚಿಸುವ ಅಲ್ ಎಂಬುದಾಗಿ ಬೇರೆ ಎರಡು ಪ್ರತ್ಯಯಗಳಿದ್ದು, ಇವೆರಡೂ ಬಳಕೆಯಲ್ಲಿ ಒಂದಕ್ಕಿಂತ ಒಂದು ತೀರ ಭಿನ್ನವಾಗಿವೆ (೧೦.೨.೨ ನೋಡಿ).
ಕೆಲಸ ಮಾಡುವುದನ್ನು ತಡೆಯುವ ಪ್ರತಿಷೇಧಾರ್ಥದಲ್ಲಿ ಬರುವ ಅಲ್ ಪ್ರತ್ಯಯ ಅಲ್ಲ ಎಂಬುದರ (ಕ್ರಿಯೆಯ ಅರ್ಥವಿರುವ ಅವ್ಯಯದ) ಮೂಲ ರೂಪವೆಂದು ವೆಂಕಟಾಚಲ ಶಾಸ್ತ್ರಿ] ಗಳು (೧೯೯೪:೧೧೮) ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅರ್ಥದಲ್ಲಿ ಇವೆರಡರ ನಡುವೆ ಬಹಳ ವ್ಯತ್ಯಾಸವಿದೆ. ಅಲ್ಲ ಎಂಬುದು ಒಂದು ಘಟನೆ ಇಲ್ಲವೇ ಸಂಗತಿಗೂ, ಅದರ ಒಂದು ಘಟಕಕ್ಕೂ ನಡುವಿರುವ ಸಂಬಂಧವನ್ನು ಅಲ್ಲಗಳೆಯುತ್ತದೆ, ಆದರೆ, ಅಲ್ ಪ್ರತ್ಯಯ ಕೇಳುಗನು ಒಂದು ಕೆಲಸವನ್ನು ಮಾಡದಂತೆ ತಡೆಯುತ್ತದೆ. ಅಲ್ ಪ್ರತ್ಯಯಕ್ಕೆ “ಅಲ್ಲ’ ಪದದ ಅರ್ಥಕ್ಕಿಂತಲೂ “”ಬೇಡ’ ಪದದ ಅರ್ಥವೇ ಹೆಚ್ಚು ಸರಿಯಾದುದು.
೯.೬ ಘಟನೆ ಮತ್ತು ಸಂಗತಿ
ಕ್ರಿಯಾಪದಗಳ ರಚನೆಯಲ್ಲಿ ಸಮಯದ “ಸಂಬಂಧ’ಕ್ಕೆ ಮಹತ್ವವನ್ನು ಕೊಡುವ ಭಾಷೆಗಳಿಗೂ ಸಮಯದ “ಆಂತರಿಕ ವ್ಯವಸ್ಥೆ’ಗೆ ಮಹತ್ವವನ್ನು ಕೊಡುವ ಭಾಷೆಗಳಿಗೂ ನಡುವೆ ಒಂದು ಕುತೂಹಲಕಾರಿಯಾದ ವ್ಯತ್ಯಾಸವಿದೆ:
ಕ್ರಿಯಾರೂಪಗಳು ಸಿ
ಸಮಯ ಸಂಬಂಧಕ್ಕೆ ಮಹತ್ವ ವನ್ನು ಕೊಡುವ ಭಾಷೆಗಳಲ್ಲಿ ಕ್ರಿಯಾಪದಗಳು ಸಾಮಾನ್ಯವಾಗಿ ಘಟನೆಗಳನ್ನು ಸೂಚಿಸುವುದಕ್ಕಾಗಿ ಮಾತ್ರವೇ ಬಳಕೆಯಾಗುತ್ತವೆ. ಸಂಗತಿಯನ್ನು ಸೂಚಿಸುವುದಕ್ಕಾಗಿ ಕ್ರಿಯಾಪದಗಳಿಲ್ಲದಿರುವ ವಾಕ್ಯಗಳನ್ನಾಗಲಿ, ಇಲ್ಲವೇ ಸಂಗತಿಯ ಇರುವಿಕೆಯನ್ನು ಸೂಚಿಸು ಒಂದೋ ಎರಡೋ ಕ್ರಿಯಾಪದಗಳನ್ನಾಗಲೀ ಬಳಸುವ ಕ್ರಮ ಈ ಭಾಷೆಗಳಲ್ಲಿರುತ್ತದೆ.
ಇದಕ್ಕೆ ಬದಲು, ಸಮಯದ ಆಂತರಿಕ ವ್ಯವಸ್ಥೆಗೆ ಮಹತ್ವವನ್ನು ಕೊಡುವ ಭಾಷೆಗಳಲ್ಲಿ ಹಲವು ಕ್ರಿಯಾಪದಗಳು ಘಟನೆಗಳನ್ನು ಸೂಚಿಸಲು ಬಳಕೆಯಾಗುತ್ತವೆ ಮತ್ತು ಬೇರೆ ಹಲವು ಕ್ರಿಯಾಪದಗಳು ಸಂಗತಿಗಳನ್ನು ಸೂಚಿಸಲು ಬಳಕೆಯಾಗುತ್ತವೆ. ಇಂತಹ ಭಾಷೆಗಳಲ್ಲಿ ಕ್ರಿಯಾಪದಗಳನ್ನು (೧) ಘಟನೆಯನ್ನು ಸೂಚಿಸುವವು, ಮತ್ತು (೨) ಸಂಗತಿಯನ್ನು ಸೂಚಿಸುವವು ಎಂಬುದಾಗಿ ಎರಡು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲು lng ವಿದೆ (ಜಾಸ್ತಿ ವಿಷಕಗಳಿಗೆ ಭಟ್ ೧೯೯೯:೧೫೨ ನೋಡಿ).
ಕ್ರಿಯಾಪದಗಳಲ್ಲಿ ಸಮಯ ಸಂಬಂಧಕ್ಕೆ ಮಹತ್ವವನ್ನು ಕೊಡುವ ಹಳೆಗನ್ನಡ ಭಾಷೆಗೂ, ಸಮಯದ ಆಂತರಿಕ ವ್ಯವಸ್ಥೆ ಗೆ ಮಹತ್ವವನ್ನು ಕೊಡುವ ಸಂಸ್ಕೃತ ಭಾಷೆಗೂ ನಡುವೆ ಇಂತಹದೇ ವ್ಯತ್ಯಾಸವಿರುವ ಹಾಗೆ ಕಾಣಿಸುತ್ತದೆ. ಹಳೆಗನ್ನಡದ ಕ್ರಿಯಾಪದಗಳೆಲ್ಲವೂ ಘಟನೆಗಳನ್ನು ಸೂಚಿಸುವುದಕ್ಕಾಗಿಯೇ ಬಳಕೆಯಾಗುತ್ತವೆ.
ಇದಕ್ಕೆ ಅಪವಾದಗಳಾಗಿ ಒಳ್ (ಉಳ್), ಬಲ್, ಅಲ್ ಎಂಬಂತಹ ಕೆಲವೇ ಕೆಲವು ಕ್ರಿಯಾಪದಗಳು ಮಾತ್ರ ಘಟನೆಯ ಬದಲು ಸಂಗತಿಯನ್ನು (ಇಲ್ಲವೇ ಸಂಗತಿಯ ಇರುವಿಕೆಯನ್ನು) ಸೂಚಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಕ್ರಿಯಾಪದಗಳು ಹಲವು ವಿಷಯಗಳಲ್ಲಿ ಘಟನೆಯನ್ನು ಸೂಚಿಸುವ ಕ್ರಿಯಾಪದಗಳಿಗಿಂತ ಭಿನ್ನವಾಗಿವೆ.
ಉದಾಹರಣೆಗಾಗಿ, ಇವು ನೇರವಾಗಿ ಘಟಕವನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳೊಂದಿಗೆ ಬರುತ್ತವಲ್ಲದೆ, ಸಮಯವನ್ನು ಸೂಚಿಸುವ ಪ್ರತ್ಯಯಗಳೊಂದಿಗೆ ಬರುವುದಿಲ್ಲ:
(೨೪ಕ) ಮಕ್ಕಳೊಳರ್ ಎನಗಯ್ವರ್ “ನನಗೆ ಐವರು ಮಕ್ಕಳಿದ್ದಾ ರೆ” (೨೪ಖ) ಎಂತಪ್ಪ ದುಷ್ಟಾಶ್ವಂಗಳುಮನ್ ಏಜಅಲುಂ ತಿರ್ದಲುಂ ಬಲ್ಲೆನ್ “ಎಂತಹ ಕೆಟ್ಟಕುದುರೆಗಳನ್ನಾದರೂ ಹತ್ತಲು ಮತ್ತು ತಿದ್ದಲು ಬಲ್ಲೆ’ (೨೪ಗ) ನಿನ್ನ ಮಾತಿಂಗೆ ಮೆಳ್ಳಡುವಂತಪ್ಪಾ ಕೆಯಲ್ಲೆಂ “(ನಾನು) ನಿನ್ನ ಮಾತಿಗೆ ಮೋಸಹೋಗುವಂತಹವಳಲ್ಲ 1
(೨೪ಕ)ದಲ್ಲಿ ಬಂದಿರುವ ಒಳರ್ ಕ್ರಿಯಾರೂಪದಲ್ಲಾಗಲಿ, (೨೪ಖ)ದಲ್ಲಿ ಬಂದಿರುವ ಬಲ್ಲೆನ್ ಕ್ರಿಯಾರೂಪದಲ್ಲಾಗಲಿ ಸಮಯವನ್ನು ಸೂಚಿಸುವ ಪ್ರತ್ಯಯಗಳ ಬಳಕೆಯಾಗಿಲ್ಲ ಎಂಬುದನ್ನು ಗಮನಿಸಬಹುದು. ಸಂಗತಿಯನ್ನು ಅಲ್ಲಗಳೆಯುವ ಅಲ್ ಕ್ರಿಯಾಪದದ ಬಳಕೆಯೂ (೨೪ಗ) ಹೀಗೆಯೆ
ಕೇಶಿರಾಜನು ಉಳ್ ಧಾತುವಿಗೆ “ದತ್ವನಿ ಷೇಧ’ವನ್ನು ಹೇಳಿದ್ದಾನೆ (ಸೂ. ೨೫೬); ಆದರೆ, ನಿಜಕ್ಕೂ ಇಲ್ಲಿ ಸಮಯವನ್ನು ಸೂಚಿಸುವ ದ ಪ್ರತ ತ್ಯಯವೊಂದೇ ಅಲ್ಲ, ಇತರ ಸಮಯಸೂಚಕ
ಪ್ರತ್ಯಯಗಳೂ (ದಪ, ವಗಳೂ) ಬಳಕೆಯಾಗುವುದಿಲ್ಲ.
[ee]
ಸಂಸ್ಕೃತದಲ್ಲಿ ಸಂಗತಿಗಳನ್ನು ಸೂಚಿಸಬಲ್ಲ ಕ್ರಿಯಾಪದಗಳೂ ಹಲವಿದ್ದು, ಅವಕ್ಕೂ ಇತರ ಘಟನೆಗಳನ್ನು ಸೂಚಿಸಬಲ್ಲ ಕ್ರಿಯಾಪದಗಳ ಹಾಗೆಯೇ ಬೇರೆ ಬೇರೆ ಸಮಯ ವ್ಯವಸ್ಥೆಯ ಭೇದಗಳನ್ನು (ಮತ್ತು ಸಮಯ ಸಂಬಂಧದ ಭೇದಗಳನ್ನು) ಸೂಚಿಸಬಲ್ಲ ಕ್ರಿಯಾರೂಪಗಳಿವೆ.
ಉದಾಹರಣೆಗಾಗಿ, ಶಕ್ ಕ್ರಿಯಾಪದಕ್ಕೆ ಎಲ್ಲಾ ರೀತಿಯ ಸಮಯ ಭೇದಗಳನ್ನು ಸೂಚಿಸಬಲ್ಲ ಕ್ರಿಯಾರೂಪಗಳೂ ಇವೆ.
(೨೫ಕ) ಮಯಾ ಕಟಃ ಕರ್ತುಂ ಶಕ್ಯತೇ “ನನಗೆ ಚಾಪೆಯನ್ನು ಮಾಡಲು ಬರುತ್ತದೆ’
(೨೫ಖ) ಸಾ ಚೇಯಂ ಕಥಾ ಕ್ಚತ್ರಿಯಸ್ಕ್ಯಾಕರ್ಷಣಾಯ ಅಶಕತ್ “ಆ ಕಥೆ ಕ್ಚತ್ರಿಯನನ್ನು ಆಕರ್ಷಿಸಲು ಶಕ್ತವಾಯಿತು’
೯.೭ ಸಾರಾಂಶ
ಕ್ರಿಯಾರೂಪಗಳ ರಚನೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವ್ಯಾಕರಣದ ಮೂಲ ತತ್ವಗಳಲ್ಲೆ €ನೇ ಹಲವಾರು ವ್ಯತ್ಯಾಸಗಳಿವೆ.
(೧) ಹಳೆಗನ್ನಡದ ಕ್ರಿಯಾರೂಪಗಳಲ್ಲಿ ಸಮಯ ಸಂಬಂಧಕ್ಕೆ ಮಹತ್ವವಿದೆ; ಆದರೆ, ಸಂಸ್ಕೃತ ಕ್ರಿಯಾರೂಪಗಳಲ್ಲಿ ಸಮಯದ ಆಂತರಿಕ ವ್ಯವಸ್ಥೆಗೆ ಮಹತ್ವವಿದೆ.
(೨) ಹಳೆಗನ್ನಡದಲ್ಲಿ ಸಮಯವನ್ನು ಸೂಚಿಸಲು ವಿಶಿಷ್ಟವಾದ ಪ್ರತ್ಯಯಗಳಿವೆ; ಆದರೆ, ಸಂಸ್ಕೃತದಲ್ಲಿ ಇದನ್ನು ಧಾತುವಿನಲ್ಲಿ ನಡೆಸಿರುವ ಬದಲಾವಣೆಗಳ ಮೂಲಕ ಮಾತ್ರವೇ ಸೂಚಿಸಲಾಗುತ್ತದೆ.
(೩) ಹಳೆಗನ್ನಡದಲ್ಲಿ ಆಖ್ಯಾತ ಪ್ರತ್ಯಯಗಳು ಪ್ರಥಮಪುರುಷದಲ್ಲಿ ಲಿಂಗ ಭೇದವನ್ನೂ ಸೂಚಿಸುತ್ತವೆ; ಆದರೆ, ಸಂಸ್ಕೃತದ ಆಖ್ಯಾತ ಪ್ರತ್ಯಯಗಳಲ್ಲಿ ಲಿಂಗಭೇದ ಸೂಚಿತವಾಗುವುದಿಲ್ಲ.
ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಈ ಎರಡು ಭಾಷೆಗಳ ನಡುವೆ ಇವೆಯೆಂಬುದನ್ನು ಗಮನಿಸದೆ, ಸಂಸ್ಕೃತದ ರೂಪರಚನಾನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದುದರಿಂದಾಗಿ, ಅದರ ವೈಯಾಕರಣಿಗಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂಬುದನ್ನು ಈ ಅಧ್ಯಾಯದಲ್ಲಿ ತೋರಿಸಿಕೊಡಲಾಗಿದೆ.