← Ch 4  ·  Contents  ·  Ch 6 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೫ — ಪದಗಳ ಒಳರಚನೆ

↑ ಒಳಪಿಡಿಗೆ ಹಿಂತಿರುಗಿ


ಪದಗಳ ಒಳರಚನೆ

Eke →

೫.೧ ಪೀಠಿಕೆ

ಹಳೆಗನ್ನಡದಲ್ಲಿ ಬಳಕೆಯಾಗುವ ಪದಗಳ ಒಳರಚನೆಯೆಂತಹದು ಎಂಬುದನ್ನು ತಿಳಿಯಲು ಪ್ರಯತ್ನಿಸುವ ಮೊದಲು, ಪದ ಮತ್ತು ಪದರೂಪಗಳ ನಡುವಿರುವ ವ್ಯತ್ಯಾಸವೆಂತಹದು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಪದಗಳ ಒಳರಚನೆಯಲ್ಲಿ ಬರುವ ಪ್ರತ್ಯಯಗಳೆಲ್ಲ ಅವುಗಳ ತಯಾರಿಕೆಗೆ ಸಂಬಂಧಿಸಿದವುಗಳು ಮತ್ತು ಪದರೂಪಗಳಲ್ಲಿ ಬರುವ ಪ್ರತ್ಯಯಗಳೆಲ್ಲ ಅವುಗಳ ಬಳಕೆಗೆ ಸಂಬಂಧಿಸಿದವುಗಳು.

ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಕೆಯ್‌ ಎಂಬ ಪದಕ್ಕೆ ಕೆಯ್ಗಳ್‌, ಕೆಯ್ಯನ್‌, ಕೆಯ್ಯಿನ್‌, ಕೆಯ್ಯೆ, ಕೆಯ್ಯೊಳ್‌ ಮೊದಲಾದ ಪದರೂಪಗಳಿವೆ. ಇವೆಲ್ಲ ಕೆಯ್‌ ಎಂಬ ಒಂದೇ ಪದದ ಪದರೂಪಗಳು. ಇವುಗಳಲ್ಲಿ ಬರುವ ಗಳ್‌, ಅನ್‌, ಇನ್‌, ಗೆ, ಒಳ್‌ ಮೊದಲಾದ ಪ್ರತ್ಯಯಗಳು ಆ ಪದವನ್ನು ವಾಕ್ಯದ ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾದಾಗ, ಅದಕ್ಕೆ ಬೇರೆ ಬೇರೆ ರೂಪಗಳನ್ನು ಕೊಡಬೇಕಾಗಿದೆಯಾದ ಕಾರಣ ಬಳಕೆಯಾಗುತ್ತವೆ.

ಕೆಯ್ತ “ಕೆಲಸ’, ಕೆಯ್ದು “ಆಯುಧ’, ಕೆಯ್ಕೆ “ಮೋಸ’, ಮೊದಲಾದ ಬೇರೆ ಕೆಲವು ಪದಗಳಲ್ಲೂ ಕೆಯ್‌ ಎಂಬುದು ಕಾಣಿಸುತ್ತದೆ; ಆದರೆ, ಇವು ಕೆಯ್‌ ಪದದ ಪದರೂಪಗಳಲ್ಲ; ಆ ಪದಕ್ಕೆ ತ, ದು, ಕೆ ಮೊದಲಾದ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿರುವ, ಅದಕ್ಕಿಂತ ಭಿನ್ನವಾದ, ಪದಗಳು. ಹಾಗಾಗಿ, ಈ ಪದಗಳಲ್ಲಿ ಕಾಣಿಸುವ ಪ್ರತ್ಯಯಗಳನ್ನು ಅವುಗಳ ಒಳರಚನೆಗೆ ಸಂಬಂಧಿಸಿದ ಪ್ರತ್ಯಯಗಳೆಂದು ಪರಿಗಣಿಸಬೇಕಾಗುತ್ತದೆ.

ಇದೇ ರೀತಿಯಲ್ಲಿ, ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸವನ್ನೂ ಇಲ್ಲಿ ಗಮನಿಸುವುದು ಅವಶ್ಯ. ಪದಗಳ ಒಳರಚನೆಯಲ್ಲಿ ಒಂದಕ್ಕಿಂತ ಹೆಚ್ಚು ಪದಗಳು ಸೇರಿಕೊಂಡಿರಲು ಸಾಧ್ಯವಿದೆ, ಮತ್ತು ಪದಕಂತೆಗಳ ರಚನೆಯಲ್ಲೂ ಒಂದಕ್ಕಿಂತ ಹೆಚ್ಚು ಪದಗಳ ಬಳಕೆಯಾಗಿರುತ್ತದೆ; ಆದರೆ, ಒಂದು ಪದದ ಒಳರಚನೆಯಲ್ಲಿ ಕಾಣಿಸುವ ಪದಗಳು ಆ ಪದದ ತಯಾರಿಕೆಗೆ ಸಂಬಂಧಿಸಿದವು, ಮತ್ತು ಒಂದು ಪದಕಂತೆಯಲ್ಲಿ ಕಾಣಿಸುವ ಪದಗಳು ಆ ಪದಗಳ ಬಳಕೆಗೆ ಸಂಬಂಧಿಸಿದವು.

ಉದಾಹರಣೆಗಾಗಿ, ಎಳನೀರ್‌ “ಸೀಯಾಳ’ ಪದದಲ್ಲಿ ಎಳ ಮತ್ತು ನೀರ್‌ ಎಂಬ ಎರಡು ಪದಗಳು ಸೇರಿವೆ. ಅದರೆ ಎಳನೀರ್‌ ಎಂಬುದು ಎಳ ಮತ್ತು ನೀರ್‌ ಎಂಬ ಎರಡು ಪದಗಳಿಂದ ತೀರ ಭಿನ್ನವಾಗಿರುವ ಬೇರೊಂದು ಪದ. ಹಾಗಾಗಿ, ಇಲ್ಲಿ ಕಾಣಿಸುವ ಪದಗಳ ಸೇರಿಕೆ ಎಳನೀರ್‌ ಪದದ ಒಳರಚನೆಗೆ ಸಂಬಂಧಿಸಿದುದು. ಇದೇ ರೀತಿಯಲ್ಲಿ ಬೆಳ್ಚಿಂಗಳ್‌, ಕರ್ಬೊನ್‌, ಆಲಿಕಲ್‌ ಮೊದಲಾದವುಗಳಲ್ಲೂ ಎರಡೆರಡು ಪದಗಳು ಸೇರಿದ್ದು, ಈ ಸೇರುವಿಕೆಯ ಮೂಲಕ ಅವೆರಡಕ್ಕಿಂತಲೂ ಭಿನ್ನವಾದ ಬೇರೆಯೇ ಪದಗಳ ಸೃಷ್ಟಿಯಾಗಿದೆ.

ಆದರೆ, ಎಳವಾಳೆ “ಎಳೇ ಬಾಳೆಗಿಡ’ ಎಂಬುದರಲ್ಲಿ ಎಳ ಮತ್ತು ಬಾಳೆ(ಟ್‌) ಎಂಬ ಎರಡು ಪದಗಳ ಸೇರಿಕೆಯಿಂದ ಒಂದು ಪದಕಂತೆ ರಚಿತ ವಾಗಿದೆಯಲ್ಲದೆ, ಹೊಸದೊಂದು ಪದ ರಚಿತವಾಗಿಲ್ಲ. ಪೊಸವೂ “ಹೊಸ ಹೂವು’, ಪೇರಾನೆ “ದೊಡ್ಡ ಆನೆ’, ಪೆರ್ವೇಂಟೆ “ದೊಡ್ಡ ಬೇಟೆ’ ಮೊದಲಾದವುಗಳಲ್ಲೂ, ಇದೇ ರೀತಿಯಲ್ಲಿ, ಎರಡೆರಡು ಪದಗಳ ಸೇರಿಕೆಯಿಂದ ಪದಕಂತೆಗಳನ್ನು ರಚಿಸಲಾಗಿದೆಯಲ್ಲದೆ, ಹೊಸ ಪದಗಳ ಸೃಷ್ಟಿಯಾಗಿಲ್ಲ. ಇಲ್ಲಿ ಕಾಣಿಸುವ ಪದಗಳ ಸೇರಿಕೆ ಪದಗಳ ಬಳಕೆಗೆ ಸಂಬಂಧಿಸಿದುದಲ್ಲದೆ ಹೊಸ ಪದಗಳ ತಯಾರಿಕೆಗೆ ಇಲ್ಲವೇ ಸೃಷ್ಟಿಗೆ ಸಂಬಂಧಿಸಿದುದಲ್ಲ (ಹೆಚ್ಚಿ. ನ ವಿವರಗಳಿಗೆ ಭಟ್‌ ೨೦೦೨ ನೋಡಿ).

ಪದ ಮತ್ತು ಪದರೂಪಗಳ ನಡುವಿರುವ ವ್ಯತ್ಯಾಸ, ಹಾಗೂ ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ - ಇವೆರಡೂ ಮಾತಿನ ಬಳಕೆಯಲ್ಲಿ ಉಳಿದಿರುವಂತಹ ಭಾಷಾಪ್ರಭೇದಗಳಲ್ಲಿ ಮಾತ್ರ ಬಹಳ ಸ್ಪಷ್ಟವಾಗಿ ಕಾಣಿಸುತ್ತವೆ. ಮಾತಿನ ಬಳಕೆ ತಪ್ಪಿಹೋಗಿ ಬರಿಯ ಗ್ರಾಂಥಿಕ ಬಳಕೆಯಲ್ಲಿ ಮಾತ್ರವೇ ಉಳಿದಿರುವಂತಹ ಭಾಷಾಪ್ರಭೇದಗಳಲ್ಲಿ ಈ ಎರಡು ರೀತಿಯ ವ್ಯತ್ಯಾಸಗಳನ್ನು ಕಾಣುವುದು ಸ್ವಲ್ಪ ಕಷ್ಟ.

ಇದಕ್ಕೆ ಕಾರಣವೇನೆಂದರೆ, ಮಾತಿನ ಬಳಕೆಯಲ್ಲಿ ಉಳಿದಿರುವ ಭಾಷೆಯ ವ್ಯಾಕರಣ ಜನರ ಮಾತಿನ ಮೇಲೆ ಅವಲಂಬಿಸಿರುತ್ತದೆ. ದೊಡ್ಡವರು ಬಳಸುವ ಮಾತನ್ನು ಕೇಳುತ್ತಾ ಕೇಳುತ್ತಾ ಚಿಕ್ಕವರು ಮಾತು ಕಲಿಯುತ್ತಾರೆ. ಹೀಗೆ ಕಲಿಯುವಾಗ, ಆ ಭಾಷೆಯ ವ್ಯಾಕರಣ ಅವರ ಅರಿವಿಲ್ಲದಂತೆಯೇ ಅವರ ಮಿದುಳಿನಲ್ಲಿ ನೆಲೆಗೊಳ್ಳುತ್ತದೆ. ಭಾಷೆಯ ಅತಿ ಸೂಕ್ಷ್ಮವಾದ ವ್ಯಾಕರಣ ನಿಯಮಗಳೂ ಈ ರೀತಿ ಅರಿವಿಗೆ ಬಾರದ ರೂಪದಲ್ಲಿ ಅವರ ಸ್ವಾಧೀನವಾಗುತ್ತವೆ.

ಮಾತಿನ ಬಳಕೆ ತಪ್ಪಿಹೋಗಿ, ಬರೇ ಗ್ರಾಂಥಿಕವಾಗಿರುವ ಭಾಷೆಯನ್ನು ಸಾಮಾನ್ಯವಾಗಿ ಜನರು ತಮ್ಮ “ಎರಡನೆಯ’ ಭಾಷೆಯಾಗಿ ವಿದ್ಯಾಭ್ಯಾಸದ ಸಮಯದಲ್ಲಿ ಕಲಿಯುತ್ತಾರೆ, ಮತ್ತು ಇಂತಹ ಕಲಿಯುವಿಕೆಯಲ್ಲಿ ಆ ಭಾಷೆಯ ಮೇಲೆ ವಿದ್ವಾಂಸರು ರಚಿಸಿರುವ ವ್ಯಾಕರಣದ ಪುಸ್ತಕಗಳು ಮಹತ್ವದ ಪಾತ್ರವನ್ನು ವಹಿಸಬೇಕಾಗುತ್ತದೆ. ವ್ಯಾಕರಣ ಪುಸ್ತಕಗಳಲ್ಲಿರುವ ನಿಯಮಗಳನ್ನು ಅವರು ಮೊದಲಿಗೆ ಅರಿವಿಗೆ ಎಟಕುವ ರೂಪದಲ್ಲಿ ಕಲಿತು, ಅನಂತರ ಅವನ್ನು ಅರಿವಿಗೆ ಎಟಕದ ರೂಪಕ್ಕೆ ಪರಿವರ್ತಿಸಿಕೊಳ್ಳಬೇಕಾಗುತ್ತದೆ.

ಇಂತಹ ಅರಿವಿಗೆ ಎಟಕುವ ವ್ಯಾಕರಣಗಳಲ್ಲಿ (ವ್ಯಾಕರಣ ಪುಸ್ತಕಗಳಲ್ಲಿ) ಮೇಲೆ ವಿವರಿಸಿದಂತಹ ಭಾಷೆಯ ಸೂಕ್ಷ್ಮವಾದ ವ್ಯತ್ಯಾಸಗಳನ್ನು ನಿಯಮಗಳ ಮೂಲಕ ವರ್ಣಿಸಲು ಸಾಧ್ಯವಾಗಿರುವುದಿಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ಅವನ್ನು ಕಲಿಯಲೂ ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಮಾತಿನ ಬಳಕೆ ತಪ್ಪಿಹೋಗಿರುವ ಭಾಷೆಗಳಲ್ಲಿ ಇಂತಹ ಸೂಕ್ಷ್ಮವಾದ ವ್ಯತ್ಯಾಸಗಳು ಕ್ರಮೇಣ ಇಲ್ಲವಾಗುತ್ತವೆ.

ಪಾಣಿನಿಯ ಕಾಲದ ಅನಂತರ ಸಂಸ್ಕೃತ ಭಾಷೆ ವಿದ್ದಾ _೦ಸರ ಬಳಕೆಯಲ್ಲಿ ಮಾತ್ರ ಉಳಿದು, ಸಾಮಾನ್ಯ ಜನರ ಮಾತಿನ ಬಳಕೆಯಿಂದ ದೂರವಾಗಿರುವ ಹಾಗೆ ಕಾಣಿಸುತ್ತದೆ. ಅಶೋಕನೇ ಮೊದಲಾದವರು ಸಾಮಾನ್ಯ ಜನರಿಗಾಗಿ ರಚಿಸಿದ ತಮ್ಮ ಶಾಸನಗಳಲ್ಲಿ ಸಂಸ್ಕೃತದ ಬದಲು ಪಾಲಿ, ಪ್ರಾಕೃತ ಮೊದಲಾದುವನ್ನು ಬಳಸಲು ಇದೇ ಕಾರಣವಿರಬೇಕು.

ಈ ರೀತಿ ಮಾತಿನ ಬಳಕೆ ತಪ್ಪಿರುವ ಕಾರಣ, ಸಂಸ್ಕೃತ ಪದಗಳ ಒಳರಚನೆಯಲ್ಲಿ ಪದ ಮತ್ತು ಪದರೂಪಗಳ ನಡುವಿರುವ ವ್ಯತ್ಯಾಸ, ಹಾಗೂ ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಇವೆರಡೂ ಕ್ರಮೇಣ ಮಾಯವಾಗುತ್ತಾ ಬಂದಿವೆ. ಪಾಣಿನಿಗಿಂತ ಹಿಂದಿನ ವೇದಕಾಲದ ಸಂಸ್ಕೃತದಲ್ಲಿ ಈ ವ್ಯತ್ಯಾಸಗಳೆರಡೂ ಸ್ಪಷ್ಟವಾಗಿ ಕಾಣಿಸುತ್ತವೆ.

ಹಳೆಗನ್ನಡದಲ್ಲೂ ಪಂಪನೇ ಮೊದಲಾದ ಪ್ರಾಚೀನ ಕವಿಗಳ ಕಾಲದಲ್ಲಿ ಮಾತಿನ ಬಳಕೆ ತಪ್ಪಿಹೋಗಿರಲಿಲ್ಲ. ಆದರೆ, ಹನ್ನೆರಡು-ಹದಿಮೂರನೇ ಶತಮಾನಗಳ ಅನಂತರದ ಕಾಲದಲ್ಲಿ ಹಳೆಗನ್ನಡ ನಡುಗನ್ನಡವಾಗಿ ಬದಲಾಗಿತ್ತು. ಹಾಗಾಗಿ, ಇದಕ್ಕೆ ಮುಂದೆ ಹಳೆಗನ್ನಡವನ್ನು ಬಳಸಿದವರೆಲ್ಲ ಅದನ್ನು ಬರಿಯ ಗ್ರಾಂಥಿಕ ಭಾಷೆಯಾಗಿಯೇ ಕಲಿತು ಬಳಸುತ್ತಿದ್ದಿರಬೇಕು.

ಹಾಗಾಗಿ, ಹಳೆಗನ್ನಡದಲ್ಲೂ ಪಂಪನ ಕಾಲದಲ್ಲಿ ರಚಿತವಾದ ಗ್ರಂಥಗಳಲ್ಲಿ ಮೇಲಿನ ವ್ಯತ್ಯಾಸಗಳು ಸ್ಪಷ್ಟವಾಗಿ ಕಾಣಿಸುತ್ತವೆ, ಆದರೆ ಅವನ ಅನಂತರ ರಚಿತವಾದ ಗ್ರಂಥಗಳಲ್ಲಿ ಇವು ಅಸ್ಪಷ್ಟವಾಗುತ್ತಾ ಹೋಗುತ್ತವೆ.

ಪದಗಳ ಒಳರಚನೆಯನ್ನು ಪರಿಶೀಲಿಸುವ ಈ ಅಧ್ಯಾಯದಲ್ಲಿ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಹೊಸ ಪದಗಳನ್ನು ತಯಾರಿಸುವುದಕ್ಕಾಗಿ ಭಾಷೆಯೊಂದರಲ್ಲಿ ಎಂತಹ ವಿಧಾನಗಳೆಲ್ಲ ಬಳಕೆಯಲ್ಲಿವೆ (ಇಲ್ಲವೇ ಬಳಕೆಯಲ್ಲಿ ದ್ದುವು) ಎಂಬುದನ್ನು ಪರಿಶೀಲಿಸಬೇಕಾಗಿದೆ, ಮತ್ತು ಇದಕ್ಕಾಗಿ, ಮೇಲೆ ಸೂಚಿಸಿದ ಹಾಗೆ, ಪದಗಳ ಒಳರಚನೆಯನ್ನು ಪದರೂಪಗಳ ರಚನೆಯಿಂದ, ಮತ್ತು ಪದಕಂತೆಗಳ ರಚನೆಯಿಂದ ಪ್ರತ್ಯೇಕಿಸಿಕೊಳ್ಳುವುದು ಅತ್ಯವಶ್ಯ.

ಈ ಎರಡು ವಿಷಯಗಳಲ್ಲೂ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ಮೂಲಭೂತವಾದ ವ್ಯತ್ಯಾಸಗಳಿವೆ. ಹಳೆಗನ್ನಡದ ವೈಯ್ಯಾಕರಣಿಗಳು ಸಂಸ್ಕೃತ ವ್ಯಾಕರಣವನ್ನೇ ಮಾದರಿಯಾಗಿ ಇರಿಸಿಕೊಂಡುದರಿಂದಾಗಿ, ಈ ವ್ಯತ್ಯಾಸಗಳನ್ನು ಗಮನಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ, ಅವರ ವ್ಯಾಕರಣಗಳಲ್ಲಿ ಹಲವು ರೀತಿಯ ಗೊಂದಲಗಳು ಕಾಣಿಸಿಕೊಂಡಿವೆ ಎಂಬುದನ್ನು ಕೆಳಗಿನ ಪರಿಶೀಲನೆ ಸ್ಪಷ್ಟಪಡಿಸುತ್ತದೆ.

Eke →

೫.೨ ಪ್ರತ್ಯಯಗಳ ಬಳಕೆ

ಹೊಸ ಪದಗಳನ್ನು ತಯಾರಿಸುವುದಕ್ಕಾಗಿ ಈ ಎರಡು ಭಾಷೆಗಳಲ್ಲೂ ಮುಖ್ಯವಾಗಿ (೧) ಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದು, ಮತ್ತು (೨) ಎರಡು (ಅಥವಾ ಹೆಚ್ಚು) ಪದಗಳನ್ನು ಒಟ್ಟು ಸೇರಿಸುವುದು ಎಂಬ ಎರಡು ವಿಧಾನಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಮೊದಲನೆಯ ವಿಧಾನವನ್ನು ಈ (೫.೨)ನೇ ವಿಭಾಗದಲ್ಲಿ, ಮತ್ತು ಎರಡನೆಯ ವಿಧಾನವನ್ನು ಮುಂದಿನ (೫.೩)ನೇ ವಿಭಾಗದಲ್ಲಿ ಪರಿಶೀಲಿಸಲಾಗುತ್ತದೆ.

ಪ್ರತ್ಯಯಗಳನ್ನು ಬಳಸುವುದರ ಮೂಲಕ ಹೊಸ ಪದಗಳನ್ನು ತಯಾರಿಸುವಲ್ಲಿ ಹಳೆಗನ್ನಡ ಮತ್ತು ಸಂಸ್ಕೃತಗಳ ನಡುವೆ ಹಲವು ವ್ಯತ್ಯಾಸಗಳಿವೆ.

(೧) ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ಸಂಸ್ಕೃತ ಪದಗಳಲ್ಲಿ ಹೆಚ್ಚಿನವಕ್ಕೂ ಮೂಲದಲ್ಲಿ ಕ್ರಿಯಾಧಾತುಗಳಿವೆ. ಕೆಲವು ವೈಯಾಕರಣಿಗಳ ಅಭಿಪ್ರಾಯದಂತೆ, ಸಂಸ್ಕೃತದ ಎಲ್ಲಾ ಪದಗಳಲ್ಲೂ ಈ ರೀತಿ ಮೂಲದಲ್ಲಿ ಕ್ರಿಯಾಧಾತುಗಳಿವೆಯೆಂದು ಸಾಧಿಸಿ ತೋರಿಸಲು ಸಾಧ್ಯವಿದೆ. ಈ ಕಾರಣಕ್ಕಾಗಿ, ಸಂಸ್ಕೃತ ವ್ಯಾಕರಣದಲ್ಲಿ ಧಾತು ಪದವನ್ನು “ಕ್ರಿಯಾಧಾತು’ ಎಂಬ ಅರ್ಥದಲ್ಲಿ ಬಳಸಲು ಸಾಧ್ಯವಾಗಿದೆ.

ಹಳೆಗನ್ನಡದಲ್ಲೂ ಹಲವು ನಾಮಪದ ಮತ್ತು ಗುಣಪದಗಳನ್ನು ಕ್ರಿಯಾಪದಗಳಿಂದ ಸಾಧಿಸಲಾಗಿದೆಯೇನೋ ನಿಜ. ಆದರೆ, ಆ ರೀತಿ ಸಾಧಿಸಿರದಂತಹ ಸಾಕಷ್ಟು ನಾಮಪದ ಮತ್ತು

ಗುಣಪದಗಳು ಹಳೆಗನ್ನಡದಲ್ಲಿವೆ. ಹಾಗಾಗಿ, ಹಳೆಗನ್ನಡ ವ್ಯಾಕರಣದಲ್ಲಿ ಧಾತು ಪದವನ್ನು

ನಾಮಧಾತು, ಕ್ರಿಯಾಧಾತು, ಮತ್ತು ಗುಣಧಾತು ಎಂಬುದಾಗಿ ಮೂರು ಸಂದರ್ಭಗಳಲ್ಲಿ ಬಳಸುವ

ಅವಶ್ಯಕತೆಯಿದೆ. ಸಂಸ್ಕೃತದ ಹಾಗೆ, ಕ್ರಿಯಾಧಾತು ಎಂಬ ಒಂದೇ ಅರ್ಥದಲ್ಲಿ ಆ ಪದವನ್ನು ಬಳಸಲು ಸಾಧ್ಯವಿಲ್ಲ 2

ಉದಾಹರಣೆಗಾಗಿ, ಹಳೆಗನ್ನಡದ ಪೊನ್‌, ಕೂಸು, ಉಪ್ಪು, ತಲೆ, ಪಲ್‌, ಪುಲ್‌, ಪಾಲ್‌, ಮೊದಲಾದ ಹಲವಾರು ನಾಮಪದಗಳ ಮೂಲದಲ್ಲಿ ““ನಾಮಧಾತು’ಗಳಿವೆಯೆಂದು ಹೇಳಬೇಕಾಗುತ್ತದೆ, ಮತ್ತು ಪೊಸ, ಪಟ, ಕೆಮ್‌, ಮೆಲ್‌, ಎಳ ಮೊದಲಾದ ಹಲವಾರು ಗುಣಪದಗಳ ಮೂಲದಲ್ಲಿ ಗುಣಧಾತುಗಳಿವೆಯೆಂದು ಹೇಳಬೇಕಾಗುತ್ತದೆ. ಈ ಎರಡು ರೀತಿಯ ಪದಗಳನ್ನೂ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಾಗದು.

(೨) ಸಂಸ್ಕೃತದಲ್ಲಿ ಎಲ್ಲಾ ನಾಮಪದಗಳನ್ನೂ ಕ್ರಿಯಾಧಾತುಗಳಿಂದ ರಚಿಸಲಾಗಿದೆಯಾದ ಕಾರಣ, ಅದರಲ್ಲಿ ಪ್ರತ್ಯಯಗಳ ಬಳಕೆಯಿಂದ ತಯಾರಾಗಿರುವ ನಾಮಪದಗಳನ್ನು ಕ್ರಿಯಾಪದಗಳಿಗೆ ಒಂದು ಪ್ರತ್ಯಯವನ್ನು ಸೇರಿಸಿ ತಯಾರಿಸಿದ “ಕೃದಂತ’ಗಳೆಂದು, ಮತ್ತು ಅಂತಹ ಕೃದಂತಗಳಿಗೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ “ತದ್ದಿತಾಂತ’ಗಳೆಂದು ವಿಂಗಡಿಸಿ ಹೇಳಲು ಸಾಧ್ಯವಾಗಿದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕ್ರಿಯಾಪದಗಳ ಕೃದಂತ ಮತ್ತು ತದ್ದಿತಾಂತ ರೂಪಗಳನ್ನು ಗಮನಿಸಬಹುದು.

ಧಾತು ಕೃದಂತ ತದ್ಧಿ ತಾಂತ ಕೃ ಕರ್ತ ಕತಣೃತ್ವ ಮನ್‌ ಮತಿ ಮತಿಮತ್‌ ಜಿ ಜಯ ಜಯ್ಯ ಶುಚ್‌ ಶುಚಿ ಶೌಚ ಪೃಥ್‌ ಪೃಥು ಪಾರ್ಥಿವ ದಿವ್‌ ದೇವ ದೈವ ಬುಧ್‌ ಬುದ್ಧಿ ಬುದ್ಧಿ ಮತ್‌ ಜ್ಞಾ ಜ್ಞಾನ ಜ್ಞಾನಿನ್‌ ವಚ್‌ ವಾಚ್‌ ವಾಗ್ಮಿನ್‌

ಆದರೆ, ಹಳೆಗನ್ನಡದಲ್ಲಿ ನಾಮಪದಗಳನ್ನು ಕ್ರಿಯಾಧಾತುಗಳಿಂದ (ಮಾಡು-ಮಾಲ್ಮಕ್ಕೆ, ಒಲ್‌-ಒಲವು, ಆಡು-ಆಟ) ಮಾತ್ರವಲ್ಲದೆ, ನಾಮಧಾತುಗಳಿಂದ (ಮಾತು-ಮಾತಾಳಿ, ಪಡೆ- ಪಡೆವಳ, ಕೂಸು-ಕೂಸುತನ), ಮತ್ತು ಗುಣಧಾತುಗಳಿಂದಲೂ (ನಲ್‌-ನಲ್ಮೆ, ಬಿಳಿ-ಬಿಳಿಕ, ತಣ್‌-ತಣ್ಣು) ತಯಾರಿಸಿರಲು ಸಾಧ್ಯವಿದೆ.

ಇದಲ್ಲದೆ, ಆಂತರಿಕ ರಚನೆಯಿರುವ ಹಳೆಗನ್ನಡದ ಪದಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳು ಬಂದಿರುವುದು ಬಹಳ ಅಪರೂಪ. ಹಾಗಾಗಿ, ಹಳೆಗನ್ನಡದ ಪದರಚನೆಯನ್ನು ವರ್ಣಿಸುವಲ್ಲಿ ಸಂಸ್ಕೃತದ ಕೃದಂತ-ತದ್ದಿತಾಂತ ವಿಭಜನೆ ಅನುಕೂಲವಲ್ಲ (೬.೧.೨ ನೋಡಿ).

(೩) ಸಂಸ್ಕೃತದಲ್ಲಿ ಪದಗಳನ್ನು ರಚಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯಗಳನ್ನು ಪದಗಳ ಮೊದಲೂ ಸೇರಿಸಬಹುದು (ಅ-ನ್ಯಾಯ, ನಿರ್‌-ದಯೆ, ವಿ-ಜ್ಞಾನ), ಅನಂತರವೂ

ಸೇರಿಸಬಹುದು (ಕಾವ್‌-ಯ, ಚೋರ್‌-ಅ, ಬಾಲ-ಕಿ); ಆದರೆ, ಹಳೆಗನ್ನಡದಲ್ಲಿ ಇಂತಹ ಪ್ರತ್ಯಯಗಳನ್ನು ಪದಗಳ ಅನಂತರ ಮಾತ್ರ ಸೇರಿಸಲು ಸಾಧ್ಯ.

೫.೨.೧ ಪದಗಳು ಮತ್ತು ಪದರೂಪಗಳು

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತ ವ್ಯಾಕರಣಗಳಲ್ಲಿ ಪ್ರತ್ಯಯಗಳ ಮೂಲಕ ರಚಿತವಾಗಿರುವ ನಾಮಪದಗಳನ್ನು ಕೃದಂತ ಮತ್ತು ತದ್ದಿ ತಾಂತಗಳೆಂಬ ಎರಡು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಕ್ರಿಯಾಧಾತುಗಳಿಗೆ ಒಂದು ಪ್ರತ್ಯಯವನ್ನು ಸೇರಿಸಿ ರಚಿಸಿದ ಪದಗಳು ಕೃದಂತಗಳು, ಮತ್ತು ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ರಚಿಸಿದ ಪದಗಳು ತದ್ಧಿತಾಂತಗಳು ಎಂಬುದೇ ಈ ವಿಭಜನೆಯ ಹಿಂದೆ ಅಡಗಿರುವಮೂಲ ತತ್ವ. (ಪೂರ್ವಪ್ರತ್ಯಯಗಳ ಬಳಕೆಯನ್ನು ಈ ವಿಭಜನೆಯಲ್ಲಿ ಕಡೆಗಣಿಸಲಾಗಿದೆ).

ಹಳೆಗನ್ನಡದ ಪ್ರಾಚೀನ ವೈಯಾಕರಣಿಗಳು ಸಂಸ್ಕೃತದ ಈ ವಿಭಜನೆಯನ್ನು ಹಳೆಗನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿದ್ದಾರೆ; ಆದರೆ, ಹಳೆಗನ್ನಡದ ನಾಮಪದಗಳಲ್ಲಿ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳಿರುವುದು ಅಪರೂಪವಾದ ಕಾರಣ, ಈ ವಿಭಜನೆಯನ್ನು ಹಾಗೆಯೇ ಬಳಸುವುದು ಅಸಾಧ್ಯ.

ಕೇಶಿರಾಜನ ಶಬ್ದ ಮಣಿದರ್ಪಣದಲ್ಲಿ ಕ್ರಿಯಾಪದಗಳಿಗೆ ದ ಮತ್ತು ಪ (ವ) ಪ್ರತ್ಯಯಗಳನ್ನು ಸೇರಿಸಿ ರಚಿಸಿದ ನಲಿದ, ಕೊಟ್ಟ, ಬೇಡುವ, ಮಾಲ್ಬ ಮೊದಲಾದ ಪದಗಳನ್ನು ಕೃತ್‌(ಲಿಂಗ)ಗಳೆಂದು (ಸೂ. ೮೩), ಮತ್ತು ಗೆ, ಕೆ, ಮೆ, ಪಿ ಮೊದಲಾದುವನ್ನು ಸೇರಿಸಿ ರಚಿಸಿದ ಉಡುಗೆ, ತೆರಳ್ಕೆ, ಒಲ್ಮೆ, ನೋಂಪಿ, ಉನ್ನತಿಕೆ ಮೊದಲಾದ ಪದಗಳನ್ನು ತದ್ಧಿ ತ(ಲಿಂಗ)ಗಳೆಂದು (ಸೂ. ೨೨೨) ವರ್ಣಿಸಲಾಗಿದೆ.

ಇದಲ್ಲದೆ, ಇಕ, ಇಚ, ಕ, ಗ, ಇತಿ ಮೊದಲಾದ ಬೇರೆ ಹಲವು ಪ್ರತ್ಯಯಗಳನ್ನು ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದಗಳಿಗೆ ಸೇರಿಸಿ ರಚಿಸಿದ ತೋಂಟಿಗ, ಅಲರಿಚ, ಒಣಕ, ಕನ್ನಡಿಗಿತಿ, ಮಅವೆ, ಪೊಗಟಕ್ಕೆ ಮೊದಲಾದ ಪದಗಳನ್ನೂ ತದ್ಧಿ ತ(ಲಿಂಗ)ಗಳೆಂಬ ಈ ಎರಡನೆಯ ವರ್ಗದಲ್ಲಿ (ಸೂ. ೨೦೮-೨೬) ಸೇರಿಸಿ ಹೇಳಲಾಗಿದೆ.

ಇಲ್ಲಿ ಒಂದು ವಿಷಯವನ್ನು ಗಮನಿಸುವುದು ಅವಶ್ಯ. ಹಳೆಗನ್ನಡದ ಎಲ್ಲಾ ಕ್ರಿಯಾಪದಗಳಿಂದಲೂ ಮಾಡಿದ, ಮಾಡುವ (ಮಾಬಲ್ಪ) ಮತ್ತು ಮಾಡದ ಎಂಬಂತಹ ರೂಪಗಳನ್ನು ಸಾಧಿಸಲು ಸಾಧ್ಯವಿದೆ, ಮತ್ತು ಈ ರೀತಿ ಸಾಧಿಸಿದ ಕ್ರಿಯಾರೂಪಗಳ ಅರ್ಥವನ್ನೂ ನೇರವಾಗಿ ಆ ಕ್ರಿಯಾಪದಗಳ ಅರ್ಥದಿಂದಲೇನೇ ಪಡೆಯಲು ಸಾಧ್ಯವಿದೆ. ಹಾಗಾಗಿ, ಇವು ಕ್ರಿಯಾಪದಗಳ “ಪದರೂಪ’ಗಳಲ್ಲದೆ ಅವಕ್ಕಿಂತ ಭಿನ್ನವಾದ “ಪದ’ಗಳಲ್ಲ.

ಕೆ, ಪಿ, ಮೆ ಮೊದಲಾದ ತದ್ಧಿತ ಪ್ರತ್ಯಯಗಳನ್ನು ಕ್ರಿಯಾಪದಗಳಿಗೆ ಸೇರಿಸಿ ತೆರಳ್ಳೆ, ನೋಂಪಿ ಮೊದಲಾದವುಗಳ ಹಾಗಿರುವ ಕೆಲವೇ ಕೆಲವು ನಾಮಪದಗಳನ್ನು ಮಾತ್ರ ಸಾಧಿಸಲು ಸಾಧ್ಯವಿದೆ. ಇವು ಭಾಷೆಯಲ್ಲಿ ರೂಢಿಗೆ ಬಂದಿರುವ ಪದಗಳು. ಬೇರೆ ಕ್ರಿಯಾಪದಗಳಿಗೆ ಈ ಪ್ರ ತ್ಯಯಗಳನ್ನು ಸೇರಿಸಿ ಹೊಸ ಪದಗಳನ್ನು ತಯಾರಿಸಲು ಸಾಧ್ಯವಿದೆಯಾದರೂ, ಅವು ಭಾಷೆಯಲ್ಲಿ ರೂಢಿಗೆ ಬಂದ ಮೇಲೇನೇ ಆ ಭಾಷೆಯ ಪದಗಳಾಗಬಲ್ಲುವು. ಮಾಡಿದ, ಮಾಡುವ, ಕೊಟ್ಟ ಮೊದಲಾದವುಗಳ ಹಾಗಿರುವ ಪದರೂಪಗಳನ್ನು ಸಾಧಿಸುವಲ್ಲಿ ಕಾಣಿಸುವ ಸ್ವಾತ್ರಂತ್ರ್ಯ ತೆರಳ್ಳೆ, ನೋಂಪಿ ಮೊದಲಾದವುಗಳ ಹಾಗಿರುವ ಪದಗಳನ್ನು ಸಾಧಿಸುವಲ್ಲಿ ಕಾಣಿಸುವುದಿಲ್ಲ.

ಇದಲ್ಲದೆ, ಕೆ, ಪಿ, ಮೆ ಮೊದಲಾದ ತದ್ದಿತ ಪ್ರತ್ಯಯಗಳಿಂದ ಸಿದ್ದವಾದ ಪದಗಳ

ಅರ್ಥದಲ್ಲೂ ಸಾಕಷ್ಟು ವೈವಿಧ್ಯವಿದ್ದು, ಅದನ್ನು ನೇರವಾಗಿ ಮೂಲ ಪದದ ಅರ್ಥದಿಂದ ಪಡೆಯಲು ಸಾಧ್ಯವಾಗದು. ಉದಾಹರಣೆಗಾಗಿ, ಅಣು, ಇರ್‌, ಕಾಣ್‌, ಪೂಣ್‌, ಬೇಯ್‌ ಮೊದಲಾದ ಕ್ರಿಯಾಪದಗಳಿಗೆ ಕೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಅಜುಕೆ “ಪ್ರಸಿದ್ದಿ’, ಇರ್ಕೆ “ಮನೆ’, ಕಾಣ್ಕೆ “ಉಡುಗರೆ’, ಪೂಣ್ಯೆ “ವಾಗ್ದಾನ’ ಬೆಂಕೆ “ಬೆಂಕಿ’ ಮೊದಲಾದ ಪದಗಳಲ್ಲಿ ಆ ಕ್ರಿಯಾಪದಗಳಿಗಿಂತ ಬೇರೆ ಬೇರೆ ರೀತಿಯಲ್ಲಿ ಭಿನ್ನವಾಗಿರುವ ಅರ್ಥಗಳು ವ್ಯಕ್ತ ವಾಗಿರುವುದನ್ನು ಕಾಣಬಹುದು.

ಈ ಕಾರಣಕ್ಕಾಗಿ, ಇಂತಹ ಪದಗಳನ್ನು ಮತ್ತು ಅವುಗಳ ಅರ್ಥವನ್ನು ಅರ್ಥಕೋಶಗಳಲ್ಲಿ ಸೂಚಿಸುವ ಅವಶ್ಯಕತೆಯಿದೆ; ಆದರೆ, ಮಾಡಿದ, ಮಾಡುವ ಮೊದಲಾದ ಪದರೂಪಗಳನ್ನಾಗಲಿ, ಇಲ್ಲವೇ ಅವುಗಳ ಅರ್ಥವನ್ನಾಗಲಿ ಅರ್ಥಕೋಶಗಳಲ್ಲಿ ಸೂಚಿಸುವ ಅವಶ್ಯಕತೆಯಿಲ್ಲ ತ

ಮೇಲೆ ಸೂಚಿಸಿದ ಹಾಗೆ, ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಪದ ಮತ್ತು ಪದರೂಪಗಳ ನಡುವಿನ ಈ ವ್ಯತ್ಯಾಸ ಬಹಳ ಮಟ್ಟಿಗೆ ಇಲ್ಲವಾಗಿದೆ. ಹಾಗಾಗಿ, ಸಂಸ್ಕೃತದಲ್ಲಿ ಕೃತ, ಸ್ತುತ, ಯಾತ, ತುದಮಾನ ಮೊದಲಾದವುಗಳಿಗೂ ಕೃತ್ಯ, ಕರಣ, ಕೃತಿ, ಕರ್ಮನ್‌, ಕಾರಕ ಮೊದಲಾದ ಬೇರೆ ಹಲವಾರು ರೀತಿಯ ಪದಗಳಿಗೂ ನಡುವೆ ಹಳೆಗನ್ನಡದಲ್ಲಿ ಕಾಣಿಸುವಂತಹ ವ್ಯತ್ಯಾಸವಿಲ್ಲ. ಈ ಎರಡು ರೀತಿಯವನ್ನೂ ಎಲ್ಲಾ ರೀತಿಯ ಕ್ರಿಯಾಪದಗಳಿಂದಲೂ ರಚಿಸಲು ಸಾಧ್ಯವಿದೆ.

ಕೇಶಿರಾಜನು ಮಾಡಿರುವ ಕೃಲ್ಲಿ ೦ಗ-ತದ್ದಿ ತಲಿಂಗ ವಿಭಜನೆಗೆ ಹಳೆಗನ್ನಡದಲ್ಲಿದ್ದ ಪದರೂಪ ಮತ್ತು ಪದಗಳ ನಡುವಿನ ವ್ಯತ್ಯಾಸ ಮೂಲವಾಗಿರಲು ಸಾಧ್ಯವಿದೆ. ತೆರಳ್ಕೆ, ನೋಪಿ ಮೊದಲಾದ ಭಾವನಾಮಗಳನ್ನು ಆತನು ತದ್ದಿ ತ ಪ್ರಕರಣದಲ್ಲಿ ಸೇರಿಸಿ ಹೇಳಲು ಅವು ಪದರೂಪಗಳಲ್ಲದಿರುವುದೇ ಕಾರಣವಿರಬಹುದು. ಅವನ ಕಾಲದಲ್ಲಿ ಹಳೆಗನ್ನಡ ಇಲ್ಲವೇ ಅದನ್ನೇ ಬಹಳ ಮಟ್ಟಿಗೆ ಹೋಲುವ ಕನ್ನಡದ ಪ್ರಭೇದವೊಂದು ಮಾತಿನ ಬಳಕೆಯಲ್ಲಿದ್ದಿರಬಹುದಾಗಿದ್ದು, ಅದರಲ್ಲಿ ಪದ ಮತ್ತು ಪದರೂಪಗಳ ನಡುವಿನ ಈ ವ್ಯತ್ಯಾಸ ಸ್ಪಷ್ಟವಾಗಿಯೇ ಉಳಿದಿದ್ದು, ಅದು ಆತನನ್ನು ಈ ರೀತಿ ವಿಭಜಿಸಲು ಪ್ರೇರೇಪಿಸಿರಬಹುದು.

ಆದರೆ, ಅನಂತರದ ವೈಯಾಕರಣಿಗಳು ಇದನ್ನು ಗಮನಿಸಿದ ಹಾಗಿಲ್ಲ. ಉದಾಹರಣೆಗಾಗಿ, ಕನ್ನಡ ಕೈಪಿಡಿಯಲ್ಲಿ (೧೯೭೧:೧೬-೧೯) ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ರಚಿಸಿದ ಒಲವು, ಕಾಣ್ಕೆ, ಉಡುಗೆ, ನೆಗಳ್ಲೆ ಮೊದಲಾದುವನ್ನು (ಮತ್ತು ನುಡಿದ, ನುಡಿವ ಮೊದಲಾದವುಗಳನ್ನು) ಕೃದಂತಗಳೆಂದು, ಮತ್ತು ನಾಮಪದಗಳಿಗೆ (ಮತ್ತು ಗುಣಪದಗಳಿಗೆ) ಪ್ರತ್ಯಯಗಳನ್ನು ಸೇರಿಸಿ ರಚಿಸಿದ ಪೂವಡಿಗ, ಬಿಳಿಕ, ಮಾತುಗ, ಪಡೆವಳ, ಮಡಿವಳ ಮೊದಲಾದವುಗಳನ್ನು ತದ್ದಿ ತಾಂತಗಳೆಂದು ಪರಿಗಣಿಸಲಾಗಿದೆ.

ಕೇಶಿರಾಜನು ಉಡುಕಂ, ಮಡಿಕೆ, ಆಟಂ, ಒಲ್ಮೆ ಮೊದಲಾದ ಭಾವನಾಮಗಳನ್ನು ತದ್ದಿ ತ ಪ್ರಕರಣದಲ್ಲಿ ಪ್ರಸ್ತಾಪಿಸುವ ಬದಲು ಆಖ್ಯಾತ ಪ್ರಕರಣದಲ್ಲಿ ಪ್ರಸ್ತಾಪಿಸಿದ್ದರೆ ಹೆಚ್ಚು ತೃಪ್ತಿಕರವೆನಿಸುತ್ತಿ ದ್ದಿತು ಎಂಬುದಾಗಿ ವೆಂಕಟಾಚಲ ಶಾಸ್ತ್ರಿ ಗಳು ಹೇಳಿರುವುದು (೧೯೯೪:೧೦೩) ಬಹುಶಃ ಕೃದಂತ ಪದಕ್ಕೆ ಕೊಟ್ಟಿದ್ದ ಈ ಎರಡನೆಯ ಅರ್ಥದ ಪ್ರಭಾವದಿಂದಿರಬಹುದು.

ಸಂಸ್ಕೃತದಲ್ಲಿ ಹೆಚ್ಚು ಕಡಿಮೆ ಎಲ್ಲಾ ನಾಮಪದಗಳಿಗೂ ಮೂಲದಲ್ಲಿ ಕ್ರಿಯಾಪದವೊಂದಿದೆಯಾದ ಕಾರಣ, ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ತದ್ದಿ ತ ಪದಗಳನ್ನೆಲ್ಲ ನಾಮಪದಕ್ಕೆ ಪ್ರತ್ಯಯ ಸೇರಿಸಿ ತಯಾರಿಸಿದವುಗಳೆಂದು ಹೇಳಲು ಸಾಧ್ಯವಿದೆ. ಹಾಗಾಗಿ, ಮೇಲೆ ವಿವರಿಸಿದ ಕನ್ನಡ ಕೈಪಿಡಿಯ ವಿಭಜನೆ ಸಂಸ್ಕೃತ ವ್ಯಾಕರಣವನ್ನು ಸರಿಯಾಗಿ ಅನುಸರಿಸಿದೆಯೆಂದು ಹೇಳಬಹುದು.

ಆದರೆ, ಹಳೆಗನ್ನಡಕ್ಕೆ ಅವಶ್ಯವಾಗಿರುವ ಪದ ಮತ್ತು ಪದರೂಪಗಳ ನಡುವಿನ ವ್ಯತ್ಯಾಸವನ್ನು ಈ ವಿಭಜನೆ ಕಡೆಗಣಿಸುತ್ತದೆ. ಹಾಗಾಗಿ, ಹಳೆಗನ್ನಡದ ಮಟ್ಟಿಗೆ ಇದು ತೃಪ್ತಿಕರವಾದ ವಿಭಜನೆಯಲ್ಲ.

೫.೨.೨ ಪದವರ್ಗಗಳಲ್ಲಿ ವೈವಿಧ್ಯ

ಪ್ರತ್ಯಯಗಳನ್ನು ಬಳಸಿ ರಚಿಸಿದ ಸಂಸ್ಕೃತದ ನಾಮಪದಗಳಲ್ಲಿ ಹೆಚ್ಚು ಕಡಿಮೆ ಎಲ್ಲವನ್ನೂ ಕ್ರಿಯಾಧಾತುಗಳಿಂದಲೇನೇ ಸಾಧಿಸಲು ಸಾಧ್ಯವಿದೆ. ಹಾಗಾಗಿ, ಮೇಲೆ ಸೂಚಿಸಿದಂತಹ ಕೃದಂತ- ತದ್ದಿ ತಾಂತ ವಿಭಜನೆ ಸಂಸ್ಕೃತ ಭಾಷೆಗೆ ಉಚಿತವಾಗಿದೆ. ಕ್ರಿಯಾಧಾತುವಿಗೆ ಒಂದು ಪ್ರತ್ಯಯವನ್ನು ಸೇರಿಸಿ ರಚಿಸಿದ ಪದಗಳೆಲ್ಲವೂ ನಾಮಪದಗಳು (ಕೃದಂತಗಳು), ಮತ್ತು ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ರಚಿಸಿದ ಪದಗಳೆಲ್ಲವೂ ಅಂತಹ ನಾಮಪದಗಳಿಂದ ರಚಿತವಾದವುಗಳು (ತದ್ದಿ ತಾಂತಗಳು) ಎಂಬುದಾಗಿ ಅದರ ಪದಗಳನ್ನು ವಿಭಜಿಸಲು ಸಾಧ್ಯವಿದೆ.

ಆದರೆ, ಹಳೆಗನ್ನಡದ ನಾಮಪದಗಳನ್ನು ಈ ರೀತಿ ಕ್ರಿಯಾಧಾತುಗಳಿಂದ ಮಾತ್ರವಲ್ಲದೆ, ನಾಮಧಾತು ಮತ್ತು ಗುಣಧಾತುಗಳಿಂದಲೂ ಸಾಧಿಸಲು ಸಾಧ್ಯವಿದೆ. ಹಾಗಾಗಿ, ಅವುಗಳ ಒಳರಚನೆಯನ್ನು ವರ್ಣಿಸುವಲ್ಲಿ ಮೇಲಿನ ಕೃದಂತ-ತದ್ದಿ ತಾಂತ ವಿಭಜನೆ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕಿಂತಲೂ ಈ ಪದಗಳಲ್ಲಿ ಬಳಕೆಯಾಗಿರುವ ಧಾತುಗಳ (ಇಲ್ಲವೇ ಪದಗಳ) ವರ್ಗವನ್ನು ಆಧಾರವಾಗಿರಿಸಿಕೊಂಡಲ್ಲಿ ಹಳೆಗನ್ನಡಕ್ಕೊಂದು ಉತ್ತಮವಾದ ಪದಗಳ ವಿಭಜನೆ ಸಿದ್ದವಾಗುತ್ತದೆ.

(೧) ಕ್ರಿಯಾಪದಗಳಿಂದ ತಯಾರಾದ ನಾಮಪದಗಳು: ಹಳೆಗನ್ನಡದ ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಹಲವು ರೀತಿಯ ನಾಮಪದಗಳನ್ನು ಸಿದ್ದ ಪಡಿಸಲಾಗಿದೆ. ಉದಾಹರಣೆಗಾಗಿ, ಅಟಕ್ಕೆ, ಉಣೆ, ಪೊಗಟಕ್ಕೆ ಪೋಲ್ಕೆ ಮೊದಲಾದ ನಾಮಪದಗಳನ್ನು ಅಟ್‌ “ಅಳು’, ಉಣ್‌, ಪೊಗಳ್‌, ಪೋಲ್‌ ಮೊದಲಾದ ಕ್ರಿಯಾಪದಗಳಿಗೆ ಕೆ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ, ಮತ್ತು ಕೂರ್ಪು, ಕಾಪು, ಮೇಪು, ಪಡೆಪು ಮೊದಲಾದ ನಾಮಪದಗಳನ್ನು ಕೂರ್‌, ಕಾ (ಕಾಯ್‌), ಮೇ (ಮೇಯ್‌), ಪಡೆ ಮೊದಲಾದ ಕ್ರಿಯಾಪದಗಳಿಗೆ ಪು ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ.

ಇದಲ್ಲದೆ, ಓದು, ತಡೆ, ಸೊರ್ಕು ಮೊದಲಾದ ಬೇರೆ ಕೆಲವು ಕ್ರಿಯಾಪದಗಳು ಯಾವ ಪ್ರತ್ಯಯವನ್ನೂ ಸೇರಿಸದೆ ಹಾಗೆಯೇ ಹಳೆಗನ್ನಡದಲ್ಲಿ ನಾಮಪದಗಳಾಗಿ ಬಳಕೆಯಾಗಬಲ್ಲುವು.

(೨) ನಾಮಪದಗಳಿಂದ ತಯಾರಾದ ನಾಮಪದಗಳು: ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕವೂ ಅವಕ್ಕಿಂತ ಭಿನ್ನವಾದ ಹಲವು ರೀತಿಯ ನಾಮಪದಗಳನ್ನು ಸಿದ್ಧ ಪಡಿಸಲಾಗಿದೆ. ಉದಾಹರಣೆಗಾಗಿ, ತೋಂಟಿಗ, ಒಕ್ಕಲಿಗ, ಚಿಪ್ಪಿಗ, ಗಾಣಿಗ ಮೊದಲಾದ ನಾಮಪದಗಳನ್ನು ತೋಂಟ, ಒಕ್ಕಲ್‌, ಚಿಪ್ಪಿ, ಗಾಣ ಮೊದಲಾದ ನಾಮಪದಗಳಿಗೆ ಇಗ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ, ಮತ್ತು ಇಂತಹ ಸಾಧಿತ ನಾಮಪದಗಳಿಗೇನೇ ಇತಿ ಪ್ರತ್ಯಯವನ್ನು ಸೇರಿಸಿ ತೋಂಟಿಗಿತಿ, ಒಕ್ಕಲಿಗಿತಿ, ಚಿಪ್ಪಿಗಿತಿ, ಗಾಣಿಗಿತಿ ಮೊದಲಾದ ನಾಮಪದಗಳನ್ನು ತಯಾರಿಸಲಾಗಿದೆ.

(೩) ಗುಣಪದಗಳಿಂದ ತಯಾರಾದ ನಾಮಪದಗಳು: ಗುಣಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕವೂ ಹಳೆಗನ್ನಡದಲ್ಲಿ ಹಲವು ರೀತಿಯ ನಾಮಪದಗಳನ್ನು ಸಿದ್ದ ಪಡಿಸಲಾಗಿದೆ. ಉದಾಹರಣೆಗಾಗಿ, ಇಂಪು, ಕರ್ಪು, ಕೆಂಪು, ತೆಳ್ಬು ಮೊದಲಾದ ನಾಮಪದಗಳನ್ನು ಇನ್‌, ಕರ್‌,

ಕೆಂ, ತೆಳ್‌ ಗುಣಪದಗಳಿಗೆ ಪು ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ, ಮತ್ತು ನಲ್ಮೆ, ಪೊಲ್ಲ ಮೆ ಬಲ್ಮೆ ಮೊದಲಾದ ನಾಮಪದಗಳನ್ನು ನಲ್‌, ಪೊಲ್ಲ , ಬಲ್‌ ಗುಣಪದಗಳಿಗೆ ಮೆ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ.

೫.೨.೩ ನಾಮಪದಗಳು ಮತ್ತು ನಾಮರೂಪಗಳು

ಈ ರೀತಿ ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ಅವಕ್ಕಿಂತ ತೀರ ಭಿನ್ನವಾದ (ನಾಮ)ಪದಗಳನ್ನು ತಯಾರಿಸುವುದಕ್ಕೂ, ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದಗಳನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸುವುದಕ್ಕಾಗಿ ಪ್ರತ್ಯಯಗಳನ್ನು ಸೇರಿಸಿ ಪದರೂಪಗಳನ್ನು ತಯಾರಿಸುವುದಕ್ಕೂ ನಡುವೆ ವ್ಯತ್ಯಾಸವಿದೆ.

ಉದಾಹರಣೆಗಾಗಿ, ನಲ್‌, ಅಸಿ, ಇನಿ, ಪಿರಿ ಮೊದಲಾದ ಗುಣಪದಗಳಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ ಪದರೂಪಗಳನ್ನು ತಯಾರಿಸಲು ಸಾಧ್ಯವಿದೆ ಮತ್ತು ಇವನ್ನು ನಾಮಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ.

ಪಿರಿಯನ್‌ ಪಿರಿಯರ್‌ ಪಿರಿಯಳ್‌ ಪಿರಿದು ಪಿರಿಯವು

ಇದೇ ರೀತಿಯಲ್ಲಿ, ಕ್ರಿಯಾಪದಗಳ ಸಂಬಂಧಿಸುವ ರೂಪಗಳಿಗೂ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ, ಅವನ್ನು ನಾಮಪದಗಳ ಜಾಗದಲ್ಲಿ ಬಳಸಲು ಸಾಧ್ಯವಿದೆ.

ಕಂಡನ್‌ ಕಂಡರ್‌ ಕಂಡಳ್‌ ಕಂಡುದು ಕಂಡುವು

ಇವೂ ಕೂಡ ಕ್ರಿಯಾಪದಗಳ ಪದರೂಪಗಳಲ್ಲದೆ, ಅವುಗಳಿಂದ ತಯಾರಾಗಿರುವ ನಾಮಪದಗಳಲ್ಲ. ಯಾಕೆಂದರೆ, ಎಲ್ಲಾ ರೀತಿಯ ಸಂಬಂಧಿಸುವ ರೂಪಗಳಿಗೂ ಈ ರೀತಿ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ ಬಳಸಲು ಸಾಧ್ಯವಿದೆ, ಮತ್ತು ಅವುಗಳ ಅರ್ಥವನ್ನು ನೇರವಾಗಿ ಈ ರಚನೆಯ ಅಧಾರದ ಮೇಲೆ ಸಾಧಿಸಲು ಸಾಧ್ಯವಿದೆ.

ನಾಮಪದಗಳ ಸಂಬಂಧಿಸುವ ರೂಪಗಳಿಗೂ ಇದೇ ರೀತಿಯಲ್ಲಿ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ, ಅವನ್ನು ನಾಮಪದಗಳ ಜಾಗದಲ್ಲಿ (ಎಂದರೆ ವಿಭಕ್ತಿಪ್ರತ್ಯಯಗಳೊಂದಿಗೆ) ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಗಳನ್ನು ಗಮನಿಸಬಹುದು.

(೧ಕ) ಈತಂ ಬಿರ್ದಿನನ್‌ (೪.೪೪) “ಇವನು ಅತಿಥಿ (ಆತಿಥ್ಯದವನು)’

(೧ಖ) ಮಿಜುಗುವ ಚೆಂಬೊನ್ನ ರಥದನ್‌ ಅಶ್ವತ್ಥಾಮಂ (೧೦.೫೭) “ಹೊಳೆಯುವ ಚಿನ್ನದ ರಥದವನು ಅಶ್ವತ್ಥಾ ಮ’

ಪದಗಳ ಒಳರಚನೆ ಗೆ

(೧ಕ)ದಲ್ಲಿ ಬಿರ್ದು “ಅತಿಥಿ’ ನಾಮಪದದ ಬಿರ್ದಿನ ಎಂಬ ಸಂಬಂಧಿಸುವ ರೂಪಕ್ಕೆ ಅನ್‌ ಪ್ರತ್ಯಯವನ್ನು ಸೇರಿಸಿ ಬಿರ್ದಿನನ್‌ ನಾಮರೂಪವನ್ನು ತಯಾರಿಸಲಾಗಿದೆ, ಮತ್ತು (೧ಖ)ದಲ್ಲಿ ರಥದ ಎಂಬ ಇನ್ನೊಂದು ನಾಮಪದದ ಸಂಬಂಧಿಸುವ ರೂಪಕ್ಕೆ ಅನ್‌ ಪ್ರತ್ಯಯವನ್ನು ಸೇರಿಸಿ ರಥದನ್‌ ನಾಮರೂಪವನ್ನು ತಯಾರಿಸಲಾಗಿದೆ.

ಹಳೆಗನ್ನಡದ ವೈಯಾಕರಣಿಗಳು ಇಂತಹ ಪದರೂಪಗಳನ್ನು ಮೂಲ ಪದಗಳೊಂದಿಗೆ ಸಂಬಂಧಿಸುವಲ್ಲಿ ಭಾಷೆಯ ವೈಶಿಷ್ಟ್ಯವನ್ನು ಗಮನಿಸಲು ಶಕ್ತರಾಗಿಲ್ಲ. ಉದಾಹರಣೆಗಾಗಿ, ಕೇಶಿರಾಜನು ಕರಿದು, ಬಿಳಿದು, ಪಟದು, ಬಿಸಿದು ಮೊದಲಾದವುಗಳನ್ನು ಗುಣವಚನಗಳೆಂದು ಕರೆದಿದ್ದಾನೆ (ಸೂ. ೮೭), ಮತ್ತು ಇವುಗಳ ಕೊನೆಯ ದುವಿಗೆ ಪುಲ್ಲಿಂಗದಲ್ಲಿ ಅಕಾರವೂ (ಸೂ. ೧೬೩), ಸ್ತ್ರ “ಲಿಂಗದಲ್ಲಿ ಅಳ್‌ ಎಂಬುದೂ (ಸೂ. ೧೬೪) ಆದೇಶವಾಗಿ ಬರುವುದೆಂದು ಹೇಳಿದ್ದಾ ನೆ.

ಆದರೆ ನಿಜಕ್ಕೂ ಇಲ್ಲಿ ಕರಿ, ಬಿಳಿ, ಪಟ, ಬಿಸಿ ಮೊದಲಾದವು ಗುಣವಚನಗಳು (ಗುಣಪದಗಳು), ಮತ್ತು ಕರಿದು, ಕರಿಯನ್‌, ಕರಿಯಳ್‌ ಮೊದಲಾದವು ಕರಿ ಪದಕ್ಕೆ ಲಿಂಗ- ವಚನ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ನಾಮರೂಪಗಳು. ಇವು ಕರಿ ಪದದ ಪದರೂಪಗಳಲ್ಲದೆ ಅದಕ್ಕಿಂತ ಭಿನ್ನವಾದ ಬೇರೆ ಪದಗಳಲ್ಲ.

ಅವರು ಈ ರೀತಿ ಕರಿದು, ಬಿಳಿದು ಮೊದಲಾದುವನ್ನು ಗುಣವಚನಗಳೆಂದು ಪರಿಗಣಿಸಲು ಸಂಸ್ಕೃತ ವ್ಯಾಕರಣದಲ್ಲಿ ಹಾಗೆ ಮಾಡಿರುವುದೇ ಕಾರಣ. ಆದರೆ, ಸಂಸ್ಕೃತದಲ್ಲಿ ಗುಣಪದಗಳು (ಗುಣವಚನಗಳು) ಹಳೆಗನ್ನಡದ ಹಾಗೆ ನಾಮಪದಗಳಿಗಿಂತ ಭಿನ್ನವಾಗಿಲ್ಲ (೪.೨ ನೋಡಿ). ಹೆಚ್ಚಿ. ನ ಗುಣಪದಗಳೂ ಮೂರು ಲಿಂಗಗಳಲ್ಲಿ ಬರಬಲ್ಲುವು ಎಂಬುದೊಂದೇ ಇವುಗಳ ಬಳಕೆಯಲ್ಲಿ ಕಾಣಿಸುವ ವೈಶಿಷ್ಟ್ಯ. ಆದರೆ, ಗುಣವಚನಗಳಲ್ಲದ ಹಲವು ನಾಮಪದಗಳೂ ಈ ರೀತಿ ಮೂರು ಲಿಂಗಗಳಲ್ಲಿ ಬರಬಲ್ಲುವಾದ ಕಾರಣ, ಈ ವಿಷಯವನ್ನಾಧರಿಸಿ ಸಂಸ್ಕೃತದ ಗುಣವಚನಗಳನ್ನು ಬೇರೆಯೇ ಒಂದು ಪದವರ್ಗದಲ್ಲಿ ಇರಿಸಲು ಸಾಧ್ಯವಾಗುವುದಿಲ್ಲ (೭.೨.೩ ನೋಡಿ).

Eke →

೫.೩ ಸಮಾಸಗಳು

ಎರಡು (ಅಥವಾ ಹೆಚ್ಚು) ಪದಗಳನ್ನು ಒಟ್ಟು ಸೇರಿಸಿ ಹೊಸ ಪದವೊಂದನ್ನು ತಯಾರಿಸುವುದಕ್ಕಾಗಿ ಬಳಕೆಯಾಗುವ ವಿಧಾನಗಳನ್ನು ಸಮಾಸಗಳೆಂದು ಕರೆಯಲಾಗುತ್ತದೆ. ಇದಲ್ಲದೆ, ಇಂತಹ ವಿಧಾನಗಳನ್ನು ಬಳಸಿ ತಯಾರಿಸಿದ ಪದಗಳನ್ನೂ ಸಮಾಸಗಳೆಂದೇ ಕರೆಯಲಾಗುತ್ತದೆ.

ಈ ರೀತಿ ಸಮಾಸ ಎಂಬುದನ್ನು ಎರಡು ಅರ್ಥಗಳಲ್ಲಿ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಗೊಂದಲವುಂಟಾಗಲು ಸಾಧ್ಯವಿದೆ. ಅದನ್ನು ನಿವಾರಿಸುವುದಕ್ಕಾಗಿ, ಇಲ್ಲಿ ಬಳಕೆಯಾಗುವ ವಿಧಾನಗಳನ್ನು ಮಾತ್ರ “ಸಮಾಸ’ವೆಂಬ ಹೆಸರಿನಿಂದ ಕರೆದು, ಅವುಗಳ ಮೂಲಕ ಸಾಧಿತವಾಗುವ ಪದಗಳನ್ನು “ಸಮಸ್ತಪದ’ ಇಲ್ಲವೇ “ಜೋಡುಪದ’ ಎಂಬ ಬೇರೆಯೇ ಹೆಸರಿನಿಂದ ಕರೆಯುವುದು ಒಳ್ಳೆಯದು.

ಸಮಸ್ತಪದಗಳನ್ನು ತಯಾರಿಸುವುದಕ್ಕಾಗಿ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ವಿಧಾನಗಳು ಸಂಸ್ಕೃತದಲ್ಲಿ ಬಳಕೆಯಲ್ಲಿರುವ ವಿಧಾನಗಳಿಗಿಂತ ತೀರ ಭಿನ್ನವಾಗಿವೆ. ಹಾಗಾಗಿ, ಸಂಸ್ಕೃತದ ಸಮಸ್ತಪದಗಳನ್ನು ವಿಭಜಿಸುವುದಕ್ಕಾಗಿ ಅದರ ವೈಯಾಕರಣಿಗಳು ಬಳಸಿರುವಂತಹ ಮೂಲತತ್ವವನ್ನು ಹಾಗೆಯೇ ಹಳೆಗನ್ನಡದ ಸಮಸ್ತಪದಗಳನ್ನು ವಿಭಜಿಸುವುದಕ್ಕಾಗಿ ಬಳಸಲು ಸಾಧ್ಯವಾಗದು.

೫.೩.೧ ಸಂಸ್ಕೃತದ ಸಮಾಸಗಳು

ಸಂಸ್ಕೃತದ ಸಮಸ್ತಪದಗಳನ್ನು ಅವುಗಳ ಅಂಗಗಳಾಗಿ ಬರುವ ಪದಗಳಲ್ಲಿ ಯಾವುದು “ಪ್ರಧಾನವಾದುದು ಎಂಬ ವಿಷಯದ ಆಧಾರದ ಮೇಲೆ ವಿಭಜಿಸಲಾಗುತ್ತದೆ. ಎರಡು ಅಂಗಗಳಿರುವ ಸಮಸ್ತಪದಗಳಲ್ಲಿ (೧) ಎರಡನೆಯದು ಪ್ರಧಾನವಾದರೆ ತತ್ಪುರುಷ, (೨) ಮೊದಲನೆಯದು ಪ್ರಧಾನವಾದರೆ ಅವ್ಯಯೀಭಾವ, (೩) ಎರಡೂ ಪ್ರಧಾನವಾದರೆ ದ್ವಂದ್ವ ಮತ್ತು (೪) ಎರಡೂ ಪ್ರಧಾನವಾಗಿಲ್ಲದೆ, ಹೊರಗಿನ ಪದವೊಂದು ಪ್ರಧಾನವಾದರೆ ಬಹುವ್ರೀಹಿ ಎಂಬುದಾಗಿ ಸಂಸ್ಕೃತದ ವೈಯಾಕರಣಿಗಳು ಈ ಸಮಸ್ತಪದಗಳನ್ನು ನಾಲ್ಕು ಮುಖ್ಯ ಗುಂಪುಗಳಲ್ಲಿ ವಿಂಗಡಿಸಿದ್ದಾ ರೆ.

(೧) ತತ್ಪುರುಷ: ರಾಜಪುರುಷ ಎಂಬ ಪದದಲ್ಲಿ ರಾಜ ಮತ್ತು ಪುರುಷ ಎಂಬ ಎರಡು ನಾಮಪದಗಳು ಒಟ್ಟು ಸೇರಿವೆ. ಇವುಗಳಲ್ಲಿ ಪುರುಷ ಎಂಬುದೇ ಪ್ರಧಾನವಾದುದು. ಯಾಕೆಂದರೆ, ಈ ಪದ ಒಂದು ರೀತಿಯ ಪುರುಷನನ್ನು (ರಾಜನಿಗೆ ಸಂಬಂಧಿಸಿದವನನ್ನು) ಸೂಚಿಸುತ್ತದೆ. ಹಾಗಾಗಿ, ರಾಜಪುರುಷ ಎಂಬುದು ತತ್ಪುರುಷ ಸಮಾಸಕ್ಕೆ ಉದಾಹರಣೆಯಾಗುತ್ತದೆ.

ತತ್ಪುರುಷ ಸಮಾಸದಲ್ಲಿ ಬಳಕೆಯಾಗುವ ಪದಗಳು ಒಂದೇ ವಿಭಕ್ತಿ ಪ್ರತ್ಕಯದ ಮೂಲಕ ಸಂಬಂಧಿಸಿಕೊಂಡಿವೆಯಾದರೆ, ಅದನ್ನು “ಕರ್ಮಧಾರಯ’ವೆಂಬ ಬೇರೆ ಒಂದು ಹೆಸರಿನಿಂದ ಕರೆಯಲಾಗುತ್ತದೆ. ಉದಾಹರಣೆಗಾಗಿ, ನೀಲೋತ್ಸಲ ಎಂಬುದರಲ್ಲಿ ನೀಲ ಮತ್ತು ಉತ್ಪಲ “ಕಮಲ’ ಎಂಬ ಎರಡು ಪದಗಳೂ ಪ್ರಥಮಾ ವಿಭಕ್ತಿಯ ಮೂಲಕ ಸಂಬಂಧಿತವಾಗಿವೆಯಾದ ಕಾರಣ, ಅದು ಕರ್ಮಧಾರಯಕ್ಕೆ ಉದಾಹರಣೆ. (ರಾಜಪುರುಷ ಎಂಬುದರಲ್ಲಿ ರಾಜ ಪದ ಷಷ್ಠೀ ವಿಭಕ್ತಿಯ ಮೂಲಕ ಪುರುಷ ಪದದೊಂದಿಗೆ ಸಂಬಂಧಿತವಾಗಿದೆ.)

ಇದಲ್ಲದೆ, ತತ್ಪುರುಷದ ಅಂಗಗಳಲ್ಲಿ ಮೊದಲನೆಯದು ಎಣಿಕೆಯ ಪದವಾದರೆ ಅದಕ್ಕೆ “ದ್ವಿಗು’ ಎಂಬ ಹೆಸರಿದೆ. ತ್ರಿಭುವನ ಎಂಬುದು ಇದಕ್ಕೆ ಉದಾಹರಣೆ. ಇದರಲ್ಲಿ ತ್ರಿ “ಮೂರು’ ಎಂಬುದು ಎಣಿಕೆಯ ಪದ.

(೨) ಅವ್ಯಯೀಭಾವ: ಯಥಾಶಕ್ತಿ ಎಂಬುದರಲ್ಲಿ ಯಥಾ ಮತ್ತು ಶಕ್ತಿ ಎಂಬ ಎರಡು ಪದಗಳು ಒಟ್ಟು ಸೇರಿವೆ. ಇದಕ್ಕೆ ಶಕ್ತಿಂ ಅನತಿಕ್ರಮ್ಯ “ಶಕ್ತಿಯನ್ನು ಅತಿಕ್ರಮಿಸದೆ’ ಎಂಬ ವಿಗ್ರಹವಾಕ್ಯವನ್ನು ಕೊಡಲಾಗುತ್ತದೆ. ಈ ಸಮಸ್ತ ಪದದಲ್ಲಿ ಪ್ರಧಾನ ಪದವಾದ ಯಥಾ ಎಂಬುದು ಮೊದಲು ಬಂದಿದೆ. ಇದಲ್ಲದೆ, ಈ ಸಮಾಸದಿಂದ ಸಿದ್ಧ ವಾಗುವ ಪದ ಒಂದು ಅವ್ಯಯವಾಗಿದೆ. ಈ ಕಾರಣಗಳಿಗಾಗಿ ಇಲ್ಲಿ ಬಳಕೆಯಾಗಿರುವ ಸಮಾಸವನ್ನು ಅವ್ಯಯೀಭಾವ ಎಂದು ಕರೆಯಲಾಗುತ್ತದೆ.

(೩) ದ್ವಂದ್ವ: ಸುಖದುಃಖ ಎಂಬುದರಲ್ಲಿ ಸುಖ ಮತ್ತು ದುಃಖ ಎಂಬ ಎರಡು ನಾಮಪದಗಳು ಒಟ್ಟು ಸೇರಿವೆ. ಇವುಗಳಲ್ಲಿ ಎರಡೂ ಪ್ರಧಾನವೇ ಆಗಿರುವ ಕಾರಣ, ಇಲ್ಲಿ ಬಳಕೆಯಾಗಿರುವ ಸಮಾಸವನ್ನು ದ್ವಂದ್ವ ಎಂದು ಕರೆಯಲಾಗುತ್ತದೆ.

(೪) ಬಹುವ್ರೀಹಿ: ಪೀತಾಂಬರ ಎಂಬುದರಲ್ಲಿ ಪೀತ “ಹಳದಿ’ ಮತ್ತು ಅಂಬರ “ಬಟ್ಟೆ’ ಎಂಬ ಎರಡು ಪದಗಳು ಒಟ್ಟು ಸೇರಿವೆ. ಆದರೆ, ಈ ಪದ ಒಂದು ರೀತಿಯ (ಹಳದಿ) ಬಣ್ಣವನ್ನಾಗಲಿ ಇಲ್ಲವೇ ಒಂದು ರೀತಿಯ ಬಟ್ಟೆಯನ್ನಾಗಲಿ ಸೂಚಿಸುವ ಬದಲು, ಅಂತಹ ಬಟ್ಟೆಯನ್ನುಟ್ಟಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತ ದೆ; ಎಂದರೆ, ಇದರಲ್ಲಿ ಬಂದಿರುವ ಪದಗಳಲ್ಲಿ ಎರಡೂ ಪ್ರಧಾನವಲ್ಲ; ಅವಕ್ಕಿಂತ ಭಿನ್ನವಾಗಿರುವ (ಎಂದರೆ ಆ ಸಮಸ್ತಪದದ ಹೊರಗಿರುವ)

“ವ್ಯಕ್ತಿ’ ಎಂಬ ಅರ್ಥವನ್ನು ಸೂಚಿಸುವ ಪದ ಪ್ರಧಾನವಾದುದು. ಹಾಗಾಗಿ, ಇಲ್ಲಿ ಬಳಕೆಯಾಗಿರುವ ಸಮಾಸವನ್ನು ಬಹುವ್ರೀಹಿ ಎಂಬುದಾಗಿ ಕರೆಯಲಾಗುತ್ತದೆ.

೫.೩.೨ ಹಳೆಗನ್ನಡದ ಸಮಾಸಗಳು

ಹಳೆಗನ್ನಡದ ಸಮಸ್ತಪದಗಳನ್ನು ವಿಭಜಿಸಲು ಸಂಸ್ಕೃತದಲ್ಲಿ ಬಳಸಿದುದಕ್ಕಿಂತ ತೀರ ಭಿನ್ನವಾದ ಮೂಲತತ್ವವನ್ನು ಅನುಸರಿಸಬೇಕಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಹಳೆಗನ್ನಡದಲ್ಲಿ ಸಂಸ್ಕೃತದ ಹಾಗೆ ಒಂದೇ ಒಂದು ಪದವರ್ಗಕ್ಕೆ ಸೇರಿದ ಪದಗಳನ್ನು ಮಾತ್ರ (ಎಂದರೆ ನಾಮಪದಗಳನ್ನು ಮಾತ್ರ) ಇಂತಹ ಸಮಸ್ತಪದಗಳ ರಚನೆಯಲ್ಲಿ ಬಳಸುವ ಬದಲು, ಮೂರು ಪದವರ್ಗಗಳಿಗೆ ಸೇರಿದ ಪದಗಳನ್ನು ಬಳಸಲಾಗುತ್ತದೆ.

ಈ ಸಮಸ್ತಪದಗಳ ಮೊದಲನೆಯ ಅಂಗವಾಗಿ ಒಂದು ನಾಮಪದ ಬರಬಹುದು, ಗುಣಪದ ಬರಬಹುದು ಇಲ್ಲವೇ ಕ್ರಿಯಾಪದ ಬರಬಹುದು; ಆದರೆ, ಎರಡನೆಯ ಅಂಗವಾಗಿ ಒಂದು ನಾಮಪದ ಮಾತ್ರ ಬರಬಲ್ಲುದು. ಈ ವಿಷಯದ ಆಧಾರದ ಮೇಲೆ ಹಳೆಗನ್ನಡದ ಸಮಸ್ತಪದಗಳನ್ನು “ನಾಮಸಮಾಸ’, “ಗುಣಸಮಾಸ’ ಮತ್ತು “ಕ್ರಿಯಾಸಮಾಸ’ ಎಂಬುದಾಗಿ ಮೂರು ಮುಖ್ಯ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಕಣ್ಣೀರ್‌ ಎಂಬುದರಲ್ಲಿ ಕಣ್‌ ಮತ್ತು ನೀರ್‌ ಎಂಬ ಎರಡು ನಾಮಪದಗಳು ಒಟ್ಟು ಸೇರಿವೆ. ಈ ಪದ ಕಣ್ಣಿನಿಂದ ಹೊರ ಸೂಸುವ ಒಂದು ವಿಶಿಷ್ಟವಾದ ದ್ರವವನ್ನು ಸೂಚಿಸುತ್ತಿದೆಯಾದ ಕಾರಣ, ಅದು ಹೆಸರಲ್ಲದೆ ವರ್ಣನೆಯಲ್ಲ. ಹಾಗಾಗಿ, ಇದನ್ನು ಸಮಸ್ತಪದವೆಂದು ಪರಿಗಣಿಸಬಹುದು. ಇದೇ ರೀತಿಯಲ್ಲಿ ಕೆಯ್ದಿಡಿ “ಕನ್ನಡಿ’, ಕಾಟ್ಕರ್ಚು, ನಾಣ್ಣುಡಿ, ಬಿಸಿಲ್ಲುದುರೆ ಮೊದಲಾದ ಸಮಸ್ತಪದಗಳನ್ನೂ ಎರಡು ನಾಮಪದಗಳನ್ನು ಒಟ್ಟು ಸೇರಿಸಿ ತಯಾರಿಸಲಾಗಿದೆ.

ಬೆಳ್ಳುಳ್ಳಿ ಎಂಬುದರಲ್ಲಿ ಬೆಳ್‌ ಗುಣಪದದೊಂದಿಗೆ ಉಳ್ಳಿ ನಾಮಪದ ಸೇರಿ ಒಂದು ವಿಶಿಷ್ಟವಾದ ಗಡ್ಡೆಯನ್ನು ಸೂಚಿಸುವ ಸಮಸ್ತಪದ ಸಿದ್ಧ ವಾಗಿದೆ. ಇದೇ ರೀತಿಯಲ್ಲಿ, ಕರ್ಬೊನ್‌ “ಕಬ್ಬಿಣ’, ಎಳನೀರ್‌, ಕಿರುಕುಣಿಕೆ “ಕಿರುಬೆರಳು’ ಮೊದಲಾದ ಸಮಸ್ತಪದಗಳೂ ಗುಣಪದಕ್ಕೆ ನಾಮಪದವನ್ನು ಸೇರಿಸುವುದರ ಮೂಲಕ ತಯಾರಾಗಿವೆ.

ಸುಡುಗಾಡು ಎಂಬುದರಲ್ಲಿ ಸುಡು ಕ್ರಿಯಾಪದದೊಂದಿಗೆ ಕಾಡು ನಾಮಪದ ಸೇರಿ ಹೆಣಗಳನ್ನು ಸುಡುವ ಒಂದು ವಿಶಿಷ್ಟವಾದ ಜಾಗವನ್ನು ಹೆಸರಿಸುವ ನಾಮಪದ ಸಿದ್ಧ ವಾಗಿದೆ. ಇದೇ ರೀತಿಯಲ್ಲಿ, ಬಿಡುವೆಣ್‌, ಅಡುಗಬ್ಬು “ಕಟ್ಟಿಗೆ’, ಇಡುವಲೆ ಮೊದಲಾದ ಸಮಸ್ತಪದಗಳೂ ಕ್ರಿಯಾಪದಗಳಿಗೆ ನಾಮಪದಗಳನ್ನು ಸೇರಿಸುವುದರ ಮೂಲಕ ತಯಾರಾಗಿವೆ.

೫.೩.೩ ಸಮಸ್ತಪದಗಳು ಮತ್ತು ಪದಕಂತೆಗಳು

ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಸಮಾಸಗಳು ಸಂಸ್ಕೃತದ ಸಮಾಸಗಳಿಂದ ಬೇರೆಯೂ ಕೆಲವು ವಿಷಯಗಳಲ್ಲಿ ಭಿನ್ನವಾಗಿವೆ. ಸಂಸ್ಕೃತದ ಒಂದು ವೈಶಿಷ್ಟ $ವೇನೆಂದರೆ, ಅದರಲ್ಲಿ ಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಬಹಳ ಮಟ್ಟಿಗೆ ನಷ್ಟವಾಗಿದ್ದು, ಸಮಾಸ ಎಂಬುದಕ್ಕೆ ಎರಡು (ಅಥವಾ ಹೆಚ್ಚು) ಪದಗಳು ಅಡಕವಾಗಿ ಸೇರಿಕೊಂಡಿರುವುದು ಎಂದಿಷ್ಟೇ ಅರ್ಥವಿರುವ

ಹಾಗೆ ಕಾಣಿಸುತ್ತದೆ. ಎರಡು ಪದಗಳು ಸೇರಿ ಹೊಸದೊಂದು ಪದವಾಗಿರುವುದು ಎಂಬ ಅರ್ಥದಲ್ಲಿ ಅದರ ಬಳಕೆಯಿರುವ ಹಾಗೆ ಕಾಣಿಸುವುದಿಲ್ಲ.

ಹೀಗಾಗಿರುವುದಕ್ಕೆ ಸಂಸ್ಕೃತ ಭಾಷೆಗೆ ಮಾತಿನ ಬಳಕೆ ತಪ್ಪಿ ಹೋಗಿರುವುದೇ ಕಾರಣವೆಂದು ಹೇಳಬಹುದು. ಸಾಮಾನ್ಯವಾಗಿ ಮಾತಿನ ಬಳಕೆಯಲ್ಲಿರುವ ಭಾಷೆಯಲ್ಲಿ ಎರಡು ಪದಗಳನ್ನು ಸೇರಿಸಿ ಹೊಸ ಪದವೊಂದನ್ನು ರಚಿಸಿದೊಡನೆಯೇ ಅದು ಆ ಭಾಷೆಯ ಪದವೆನಿಸುವುದಿಲ್ಲ. ಒಂದು ವಿಶಿಷ್ಟವಾದ ಅರ್ಥದಲ್ಲಿ ರೂಢಿಗೆ ಬಂದ ನಂತರವಷ್ಟೇ ಅದು ಆ ಭಾಷೆಯ ಪದವೆನಿಸಬಲ್ಲುದು.

ಆದರೆ, ಸಂಸ್ಕೃತದಲ್ಲಿ ಪರಸ್ಪರ ಹೊಂದಿಕೊಳ್ಳುವ ಅರ್ಥವಿರುವ ಯಾವ ಎರಡು ಪದಗಳನ್ನು ಬೇಕಿದ್ದರೂ ಸಮಾಸವೆಂಬ ವಿಧಾನದ ಮೂಲಕ ಸೇರಿಸಿ ಹೇಳಲು ಸಾಧ್ಯವಿದೆ. ಸಂಸ್ಕೃತದ ಕವಿಗಳು ಮತ್ತು ವಿದ್ವಾಂಸರು ಈ ಸ್ವಾತಂತ್ರ್ಯವನ್ನು ಎಲ್ಲೆಡೆಗಳಲ್ಲಿಯೂ ಬಳಸಿಕೊಂಡಿರುವರಾದ ಕಾರಣ, ಆ ಭಾಷೆಯಲ್ಲಿ ಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಅಳಿದುಹೋಗಿದೆ.

ಪದ ಮತ್ತು ಪದಕಂತೆಗಳ ನಡುವಿನ ಈ ವ್ಯತ್ಯಾಸ ಎಂತಹದು ಎಂಬುದನ್ನು ತಿಳಿಯಬೇಕಿದ್ದಲ್ಲಿ, ಮೊದಲಿಗೆ ಈ ವ್ಯತ್ಯಾಸ ಭಾಷೆಗಳಿಗೆ ಯಾಕೆ ಬೇಕು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ.

ಒಂದು ಘಟನೆ ಇಲ್ಲವೇ ಸಂಗತಿಯನ್ನು ತಿಳಿಸಬೇಕಿದ್ದ ಲ್ಲಿ, ಮೊದಲಿಗೆ ಆ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಬಿದ್ದ ಇಲ್ಲವೇ ಬಿತ್ತು ಎಂದಿಷ್ಟೇ ಹೇಳಿದರೆ, ಸಾಮಾನ್ಯವಾಗಿ ನಾವು ತಿಳಿಸಬೇಕೆಂದಿರುವ ವಿಷಯ ಸ್ಪಷ್ಟವಾಗುವುದಿಲ್ಲ, ಬಿದ್ದವರು ಯಾರು (ರಾಜು ಬಿದ್ದ) ಇಲ್ಲವೇ ಬಿದ್ದುದು ಏನು (ಹಣ್ಣು ಬಿತ್ತು) ಎಂಬುದನ್ನೂ ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಬಿದ್ದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸಬೇಕಾಗುತ್ತದೆ.

ಈ ರೀತಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಹೆಚ್ಚಿನ ಭಾಷೆಗಳಲ್ಲೂ ಎರಡು ವಿಧಾನಗಳು ಬಳಕೆಯಲ್ಲಿರುತ್ತವೆ. ಆ ವ್ಯಕ್ತಿ ಇಲ್ಲವೇ ವಸ್ತುಗಳಿಗಿರುವ ಹೆಸರನ್ನು ಬಳಸಿ ಗುರುತಿಸುವುದು (ಹೆಸರಿಸುವುದು) ಒಂದು ವಿಧಾನ, ಮತ್ತು ಅವುಗಳ ವರ್ಣನೆಯೊಂದನ್ನು ಕೊಡುವುದು (ವರ್ಣಿಸುವುದು) ಇನ್ನೊಂದು ವಿಧಾನ. ಉದಾಹರಣೆಗಾಗಿ, ರಾಜು ಎಂಬುದು ಒಬ್ಬ ವ್ಯಕ್ತಿಯನ್ನು ಹೆಸರಿಸಿ ಗುರುತಿಸುತ್ತದೆ, ಮತ್ತು ಚಿಕ್ಕ ಹುಡುಗ ಎಂಬುದು ಒಬ್ಬ ವ್ಯಕ್ತಿಯನ್ನು ವರ್ಣಿಸಿ ಗುರುತಿಸುತ್ತದೆ.

ಹೆಸರಿಸುವುದರಲ್ಲೂ ಎರಡು ವಿಧಾನಗಳಿವೆ: ಒಬ್ಬ ವ್ಯಕ್ತಿಯನ್ನು ಆತನದೇ ಆದ ಹೆಸರಿನಿಂದ (ಅಂಕಿತನಾಮದಿಂದ) ಗುರುತಿಸುವುದು ಒಂದು ವಿಧಾನ, ಮತ್ತು ಅಂತಹ ಹಲವು ವ್ಯಕ್ತಿಗಳಿಗೆ ಸಮಾನವಾಗಿರುವ ಹೆಸರಿನಿಂದ (ರೂಢನಾಮದಿಂದ) ಗುರುತಿಸುವುದು ಇನ್ನೊಂದು ವಿಧಾನ. ಉದಾಹರಣೆಗಾಗಿ, ರಾಜು ಎಂಬ ಪದವನ್ನು ಬಳಸುವಲ್ಲಿ ಮೊದಲನೆಯ ವಿಧಾನ ಬಳಕೆಯಾಗುತ್ತದೆ, ಮತ್ತು ಹಣ್ಣು ಎಂಬ ಪದವನ್ನು ಬಳಸುವಲ್ಲಿ ಎರಡನೆಯ ವಿಧಾನ ಬಳಕೆಯಾಗುತ್ತದೆ (ಹೆಚ್ಚಿನ ವಿವರಗಳಿಗೆ ಭಟ್‌ ೨೦೦೨:೮೦ ನೋಡಿ).

ಮಾತಿನ ಮೂಲಕ ಗುರುತಿಸಬೇಕಾಗಿ ಬರುವ ವ್ಯಕ್ತಿ ಇಲ್ಲವೇ ವಸ್ತುಗಳ ಸಂಖ್ಯೆ ಅನಂತವಾಗಿದ್ದು, ಅವುಗಳಲ್ಲಿ ಕೆಲವೇ ಕೆಲವನ್ನು ಮಾತ್ರ ನಾವು ಹೆಸರುಗಳ ಮೂಲಕ ಗುರುತಿಸಬಲ್ಲೆವು. ಉದಾಹರಣೆಗಾಗಿ, ನಮ್ಮ ಸುತ್ತಮುತ್ತ ಮಿಲಿಯಗಟ್ಟಲೆ ಕ್ರಿಮಿಕೀಟಗಳಿದ್ದು ಅವುಗಳಲ್ಲಿ ಕೆಲವಕ್ಕೆ ಮಾತ್ರ ನಮ್ಮ ಭಾಷೆಯಲ್ಲಿ ಹೆಸರು (ರೂಢನಾಮ)ಗಳಿವೆ. ಹೆಸರಿಲ್ಲದ

ಕ್ರಿಮಿಯೊಂದನ್ನು ಗುರುತಿಸಬೇಕಾದಾಗ, ಅದಕ್ಕೊಂದು ಹೆಸರನ್ನು ಕೊಡುವುದು ಒಂದು ದಾರಿ, ಮತ್ತು ಅದನ್ನು ವರ್ಣಿಸಿ ಹೇಳುವುದು ಇನ್ನೊಂದು ದಾರಿ.

ಸಾಮಾನ್ಯವಾಗಿ, ಒಂದು ವಸ್ತು ಇಲ್ಲವೇ ಪ್ರಾಣಿಯನ್ನು ಆಗಾಗಗುರುತಿಸಬೇಕಾಗುವುದಿದ್ದಲ್ಲಿ, ಅದಕ್ಕೊಂದು ಹೆಸರು ಕೊಡುತ್ತೇವೆ; ಇದಕ್ಕೆ ಬದಲು, ಅವನ್ನು ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಗುರುತಿಸಬೇಕಾಗುವುದಾದಲ್ಲಿ, ಅದಕ್ಕಾಗಿ ಹೆಸರೊಂದನ್ನು ಸೃಷ್ಟಿಸುವ ತೊಂದರೆಗೆ ಹೋಗುವ ಬದಲು, ವರ್ಣಿಸಿ ಗುರುತಿಸುತ್ತೇವೆ. ಇಂತಹ ವರ್ಣನೆಯೇ ಕಾಲಕ್ರಮೇಣ ಆ ವಸ್ತು ಇಲ್ಲವೇ ಪ್ರಾಣಿಯ ಹೆಸರಾಗಲೂ ಸಾಧ್ಯವಿದೆ. ಆದರೆ, ಇವೆರಡರ ನಡುವೆ ವ್ಯತ್ಯಾಸವಿದೆ.

ಉದಾಹರಣೆಗಾಗಿ, ಕರಿಹಲಗೆ ಎಂಬುದನ್ನು ಮೊದಲಿಗೆ ಒಂದು ವರ್ಣನೆಯಾಗಿ ಬಳಸಿರಲು ಸಾಧ್ಯವಿದೆ. ಆದರೆ, ಸದ್ಯಕ್ಕೆ ಅದು ಒಂದು ಹೆಸರು(ರೂಢನಾಮ)ವಾಗಿಯೇ ಬಳಕೆಯಲ್ಲಿದೆ. ಈ ವ್ಯತ್ಯಾಸಕ್ಕೆ ಆಧಾರವೇನೆಂದರೆ, ಅದು ಒಂದು ವರ್ಣನೆಯಾಗಿದ್ದಲ್ಲಿ, ಕಪ್ಪು ಬಣ್ಣದ ಎಲ್ಲಾ ಹಲಗೆಗಳನ್ನೂ ಗುರುತಿಸಬೇಕು, ಮತ್ತು ಬೇರೆ ಬಣ್ಣದ ಹಲಗೆಗಳನ್ನಾಗಲಿ, ಇಲ್ಲವೇ ಹಲಗೆಯಲ್ಲ ದವುಗಳನ್ನಾಗಲಿ ಗುರುತಿಸದಿರಬೇಕು.

ಆದರೆ, ಹೊಸಗನ್ನಡದಲ್ಲಿ ಕರಿಹಲಗೆ ಎಂಬ ಪದ ಗುರುತಿಸುವಂತಹದು ಕಪ್ಪಾಗಿಯೂ ಇರಬೇಕಾಗಿಲ್ಲ (ಅದು ನೀಲಿ ಇಲ್ಲವೇ ಹಸಿರು ಬಣ್ಣದ್ದಿರಬಹುದು), ಮತ್ತು ಹಲಗೆಯಾಗಿಯೂ ಇರಬೇಕಾಗಿಲ್ಲ (ಗೋಡೆಯ ಒಂದು ಭಾಗವಾಗಿರಬಹುದು). ಇದಲ್ಲದೆ, ಎಲ್ಲಾ ರೀತಿಯ ಕಪ್ಪು ಬಣ್ಣದ ಹಲಗೆಗಳನ್ನೂ ಕರಿಹಲಗೆಯೆಂದು ಕರೆಯಲು ಸಾಧ್ಯವಾಗದು. ಒಂದು ವಿಶಿಷ್ಟವಾದ ಕೆಲಸದಲ್ಲಿ ಬಳಕೆಯಾಗುವ ವಸ್ತುವನ್ನು ಮಾತ್ರ ಆ ಹೆಸರಿನಿಂದ ಗುರುತಿಸಲು ಸಾಧ್ಯ. ಹಾಗಾಗಿ, ಅದು ಹೊಸಗನ್ನಡದಲ್ಲಿ ಹೆಸರಲ್ಲದೆ ವರ್ಣನೆಯಲ್ಲ.

ಮೇಲೆ ವಿವರಿಸಿದ ಹಾಗೆ, ವ್ಯಕ್ತಿ ಇಲ್ಲವೇ ವಸ್ತುಗಳಿಗೆ ಹೆಸರನ್ನು ಕೊಡುವುದಕ್ಕಾಗಿ ಕನ್ನಡದಲ್ಲಿ ಎರಡು ವಿಧಾನಗಳು ಬಳಕೆಯಲ್ಲಿವೆ. ನಾಮಪದ, ಗುಣಪದ, ಇಲ್ಲ ವೇಕ್ರಿಯಾಪದಕ್ಕೆ (೧) ಒಂದು ಪ್ರತ್ಯಯವನ್ನು ಸೇರಿಸಿ ಹೊಸ ಪದವನ್ನು ಸೃಷ್ಟಿಸುವುದು (೫.೨.೧ ನೋಡಿ), ಮತ್ತು (೨) ಬೇರೊಂದು ನಾಮಪದವನ್ನು ಸೇರಿಸಿ ಹೊಸ ಪದವನ್ನು ಸೃಷ್ಟಿಸುವುದು (ಕರಿಹಲಗೆ). ಈ ಎರಡನೆಯ ವಿಧಾನಕ್ಕೆ ಸಮಾಸವೆಂದು ಹೆಸರು.

ಸಮಸ್ತಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸ ಈ ವಿವರಣೆಯಿಂದ ಸ್ಪಷ್ಟವಾಗಿರಬಹುದು. ಎರಡು ಪದಗಳನ್ನು ಒಟ್ಟು ಸೇರಿಸಿ ಒಂದು ಹೆಸರನ್ನು ತೆಯಾರಿಸಲಾಗಿದೆಯಾದರೆ ಅದು ಸಮಸ್ತಪದ, ಮತ್ತು ಒಂದು ವರ್ಣನೆಯನ್ನು ತಯಾರಿಸಲಾಗಿದೆಯಾದರೆ ಅದು ಪದಕಂತೆ. ಸಮಸ್ತಪದದ ತಯಾರಿಕೆಯಲ್ಲಿ ಸಮಾಸವೆಂಬ ವಿಧಾನದ ಬಳಕೆಯಾಗಿದೆ, ಮತ್ತು ಪದಕಂತೆಯ ತಯಾರಿಕೆಯಲ್ಲಿ ಅದಕ್ಕಿಂತ ಭಿನ್ನವಾದ ಬೇರೆಯೇ ಒಂದು ವಿಧಾನದ ಬಳಕೆಯಾಗಿದೆ. ಸಮಸ್ತಪದಗಳ ತಯಾರಿಕೆಯಲ್ಲಿ ಬಳಕೆಯಾಗುವ ಸಮಾಸ ಎಂಬುದು ಪದರಚನೆಯ ವಿಧಾನ, ಮತ್ತು ಪದಕಂತೆಯ ತಯಾರಿಕೆಯಲ್ಲಿ ಬಳಕೆಯಾಗುವುದು ವಾಕ್ಯರಚನೆಯ ವಿಧಾನ.

ಉದಾಹರಣೆಗಾಗಿ, ಬೆಳ್ಳಿಂಗಳ್‌ ಎಂಬುದು ಚಂದ್ರನ ಬೆಳಕನ್ನು ಹೆಸರಿಸುವ ಪದವಾದ ಕಾರಣ, ಹಳೆಗನ್ನಡದಲ್ಲಿ ಸಮಾಸಕ್ಕೆ ಉದಾಹರಣೆಯಾಗಬಲ್ಲುದು. ಆದರೆ, ಬೆಳ್ಮುಗಿಲ್‌ ಎಂಬುದು ಮುಗಿಲು ಎಂತಹದು (ಅದು ಬಿಳಿ ಬಣ್ಣದ್ದು) ಎಂಬುದಾಗಿ ವರ್ಣನೆಯೊಂದನ್ನು ಕೊಡುತ್ತಿದೆಯಾದ ಕಾರಣ, ಪದಕಂತೆಗೆ ಉದಾಹರಣೆಯಾಗಬಲ್ಲುದಲ್ಲದೆ ಸಮಾಸಕ್ಕೆ ಉದಾಹರಣೆಯಾಗಲಾರದು.

ಹೆಸರು ಮತ್ತು ವರ್ಣನೆಗಳ ನಡುವಿರುವ ಈ ವ್ಯತ್ಯಾಸ ಮಾತಿನ ಬಳಕೆಯಲ್ಲಿರುವ ಭಾಷೆಗಳಲ್ಲೆಲ್ಲ ಸ್ಪಷ್ಟವಾಗಿ ಮೂಡಿರುತ್ತದೆ. ಆದರೆ, ಮಾತಿನ ಬಳಕೆ ತಪ್ಪಿಹೋಗಿರುವ ಭಾಷೆಗಳು ಕೆಲವೇ ಕೆಲವು ಪಂಡಿತರ ಮತ್ತು ಕವಿಗಳ ಹಿಡಿತದಲ್ಲಿ ಉಳಿಯುವುವಾದ ಕಾರಣ, ಅವುಗಳಲ್ಲಿ ಈ ವ್ಯತ್ಯಾಸ ಬಹಳ ಬೇಗ ಅಳಿದುಹೋಗುತ್ತದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ನೀಲೋತ್ಸಲ ಎಂಬ ಪದಕ್ಕೆ ಒಂದು ಜಾತಿಯ ಕಮಲವನ್ನು ಸೂಚಿಸುವ ಅರ್ಥವಿದೆ. ಹಾಗಾಗಿ, ಅದನ್ನೊಂದು ಹೆಸರೆಂದು ಪರಿಗಣಿಸಲು ಸಾಧ್ಯವಿದೆ. ಆದರೆ, ಸಂಸ್ಕೃತದ ಕವಿಗಳು ಈ ಪದವನ್ನು ಆ ಜಾತಿಗೆ ಸೇರದಿರುವಂತಹ ಕಮಲಗಳನ್ನು (ಅವಕ್ಕೆ ನೀಲಿ ಬಣ್ಣವಿದ್ದಲ್ಲಿ) ಗುರುತಿಸುವುದಕ್ಕಾಗಿಯೂ ಬಳಸಬಲ್ಲರು. ಇಂತಹ ಬಳಕೆಗಳನ್ನು ವಿರೋಧಿಸುವ ಮತ್ತು ನಿಯಂತ್ರಿಸುವ ಸಮಾಜದ ಕಟ್ಟು ಸಂಸ್ಕೃತಕ್ಕಿರಲಿಲ್ಲವಾದ ಕಾರಣ, ಇಂತಹ ಬಳಕೆಗಳು ಜಾಸ್ತಿಯಾಗುತ್ತಾ ಹೋಗಿ, ಕಾವ್ಯಗಳ ಕಾಲದಲ್ಲಿ ಸಮಾಸವೆಂಬುದು ಅದರ ಮೂಲಾರ್ಥವನ್ನು ಕಳೆದುಕೊಂಡಿದೆ.

ವೇದಕಾಲದ ಸಂಸ್ಕೃತಕ್ಕೆ ಮಾತಿನ ಬಳಕೆ ಆಧಾರವಾಗಿತ್ತು. ಹಾಗಾಗಿ, ಅದರಲ್ಲಿ ಹೆಸರು ಮತ್ತು ವರ್ಣನೆಗಳ ನಡುವಿನ ವ್ಯತ್ಯಾಸ ಉಳಿದುಕೊಂಡಿತ್ತು. ಇದಲ್ಲದೆ, ಅದರಲ್ಲಿ ಬಳಕೆಯಾಗುತ್ತಿದ್ದ ಸಮಸ್ತಪದಗಳಲ್ಲಿ ಎರಡಕ್ಕಿಂತ ಜಾಸ್ತಿ ಪದಗಳು ಅಂಗಗಳಾಗಿರುವುದು ಬಹಳ ಅಪರೂಪ. ಆದರೆ ಕಾವ್ಯಗಳ ಕಾಲದ ಸಂಸ್ಕೃತದಲ್ಲಿ ಉದ್ದುದ್ದವಾದ ಸಮಸ್ತಪದಗಳ ಬಳಕೆಯನ್ನು ಕಾಣಬಹುದು. ಮಾತಿನ ಬಳಕೆ ತಪ್ಪಿದುದರಿಂದಾಗಿ ಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಅಳಿದುಹೋಗಿರುವುದೇ ಇದಕ್ಕೆ ಕಾರಣ.

Eke →

೫.೪ ಹಳೆಗನ್ನಡ ವ್ಯಾಕರಣಗಳಲ್ಲಿ ಸಮಾಸ

ಹಳೆಗನ್ನಡದ ವೈಯಾಕರಣಿಗಳು ಸಂಸ್ಕೃತ ವ್ಯಾಕರಣಗಳಲ್ಲಿ ಸಿದ್ಧ ವಾಗಿರುವ ಸಮಸ್ತಪದಗಳ ವಿಭಜನೆಯನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದ್ದಾ ರೆ; ಹೀಗೆ ಮಾಡಿದುದರಿಂದಾಗಿ, ಅವರಿಗೆ ಈ ಪದಗಳ ರಚನೆಯಲ್ಲಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ಇರುವ ಹಲವು ಮೂಲಭೂತವಾದ ವ್ಯತ್ಯಾಸಗಳನ್ನು ಗಮನಿಸಲು ಸಾಧ್ಯವಾಗಲಿಲ್ಲ

ಉದಾಹರಣೆಗಾಗಿ, ಸಮಾಸ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸವನ್ನು ಇವರು ಪರಿಗಣಿಸಲಿಲ್ಲ. ಆದರೆ, ಇದು ಹಳೆಗನ್ನಡಕ್ಕೆ ಅವಶ್ಯ ಎಂದು ನನ್ನ ಭಾವನೆ. ನಾಮಪದಗಳೊಂದಿಗೆ ಗುಣಪದಗಳನ್ನು ಬಳಸಿ ತಯಾರಿಸಿದ ರಚನೆಗಳಲ್ಲಿ ಈ ವ್ಯತ್ಯಾಸ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ.

ಸಂಸ್ಕೃತದವೇ ಆದ ಸಮಾಸದ ನಿಯಮಗಳನ್ನು ಬಳಸಿದರೂ (ಎಂದರೆ ಸಮಸ್ತಪದ- ಪದಕಂತೆಗಳ ನಡುವಿನ ವ್ಯತ್ಯಾಸವನ್ನು ಕಡೆಗಣಿಸಿದರೂ) ಹಳೆಗನ್ನಡ ವೈಯಾಕರಣಿಗಳು ವರ್ಣಿಸುವ ಸಮಾಸಗಳು ನಿಜಕ್ಕೂ ಆ ಭಾಷೆಯಲ್ಲಿ ಸಮಾಸಗಳಲ್ಲ ಎಂಬುದು ಕೆಳಗಿನ ಪರಿಶೀಲನೆಯಿಂದ

೫.೪.೧ ಗುಣಪದಗಳ ಬಳಕೆ

ಹಳೆಗನ್ನಡದಲ್ಲಿ ಗುಣಪದಗಳು ನಾಮಪದಗಳಿಂದ ಭಿನ್ನವಾಗಿದ್ದು, ಅವನ್ನು ನಾಮಪದಗಳೊಂದಿಗೆ ಬಳಸಬೇಕಿದ್ದಲ್ಲಿ ಅವಕ್ಕೆ ಯಾವ ಪ್ರತ್ಯಯವನ್ನೂ ಸೇರಿಸಬೇಕಾಗುವುದಿಲ್ಲ. ಆದರೆ, ಸಂಸ್ಕೃತದಲ್ಲಿ ಗುಣಪದಗಳು ನಾಮಪದಗಳೇ ಆಗಿದ್ದು, ಅವನ್ನು ಬೇರೆ ನಾಮಪದಗಳೊಂದಿಗೆ

ಲೆಸ್‌ ೨೧೦ ಬಾವಿ ಇಲೆ ಇ ನಗಲೆ ವೇಗಿ ಹಾ ಇ ಬಳಸಬೇಕಿದ್ದಲ್ಲಿ ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿದೆ.

ಇದು ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಒಂದು ಮುಖ್ಯ ವ್ಯತ್ಯಾಸ. ಸಂಸ್ಕೃತದಲ್ಲಿ ಗುಣಪದಗಳನ್ನು ವಿಭಕ್ತಿ ಪ್ರತ್ಯಯ ಸೇರಿಸದೆ ನೇರವಾಗಿ ನಾಮಪದದೊಂದಿಗೆ ಬಳಸಿದಲ್ಲಿ ಅದು ಸಮಸ್ತಪದವಾಗಿ ಬಿಡುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಎರಡು

ವಾಕ್ಯಗಳನ್ನು ಗಮನಿಸಬಹುದು:

(೨ಕ) ಕೃಷ್ಣಂ ಸರ್ಪಂ ಅಪಶ್ಯತ್‌ “ಕಪ್ಪು ಹಾವನ್ನು ನೋಡಿದ’

(೨ಖ) ಕೃಷ್ಣ ಸರ್ಪಂ ಅಪಶ್ಯತ್‌ “ಕಪ್ಪುಹಾವನ್ನು ನೋಡಿದ’

(೨ಕ)ದಲ್ಲಿ ಕೃಷ್ಣ ಮತ್ತು ಸರ್ಪ ಎಂಬ ಎರಡು ಪದಗಳೂ ದ್ವಿತೀಯಾ-ಏಕವಚನದಲ್ಲಿ ಬಂದಿವೆ; ಆದರೆ, (೨ಖ)ದಲ್ಲಿ ಸರ್ಪ ಎಂಬುದು ಮಾತ್ರ ದ್ವಿತೀಯಾ-ಏಕವಚನದಲ್ಲಿ ಬಂದಿದ್ದು, ಕೃಷ್ಣ ಎಂಬುದು ಯಾವ ವಿಭಕ್ತಿ ಪ್ರತ್ಯಯವೂ ಇಲ್ಲದೆ ಬಂದಿದೆ. ಈ ವ್ಯತ್ಯಾಸವನ್ನು ವಿವರಿಸುವುದಕ್ಕಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ (೨ಖ) ವಾಕ್ಯದಲ್ಲಿ ಕಾಣಿಸುವ ಕೃಷ್ಣಸರ್ಪ ಎಂಬುದರಂತಹ ಬಳಕೆಗಳಲ್ಲಿ ಕರ್ಮಧಾರಯವೆಂಬ ಸಮಾಸವಾಗಿದೆಯೆಂದು ಹೇಳಲಾಗುತ್ತದೆ.

ಆದರೆ, ಹಳೆಗನ್ನಡದಲ್ಲಿ ಗುಣಪದಗಳು ಸಹಜವಾಗಿಯೇ, ಯಾವ ವಿಭಕ್ತಿ ಪ್ರತ್ಯಯದ ಸಹಾಯವೂ ಇಲ್ಲದೆ, ನಾಮಪದಗಳೊಂದಿಗೆ ಬರುತ್ತವೆ. ಅವನ್ನು ಸಂಸ್ಕೃತದ ಹಾಗೆ, ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಬಳಸಲು ಸಾಧ್ಯವಾಗದು. ಹಾಗಾಗಿ, ಅವುಗಳ ಸಹಜ ಬಳಕೆಗಳಾಗಿರುವ ಎಳಗೊಂಬು, ಪೇರಾನೆ, ಪೆರ್ದೆರೆ, ನಿಡುಗಣ್‌, ಪಟನವಿರ್‌, ಪೊಸನೆತ್ತರ್‌ ಮೊದಲಾದವುಗಳಲ್ಲಿ ಕರ್ಮಧಾರಯ ಸಮಾಸವಾಗಿದೆಯೆಂದು ಹೇಳುವುದಕ್ಕೆ ಹಳೆಗನ್ನಡದಲ್ಲಿ ಯಾವ ಆಧಾರವೂ ಇಲ್ಲ.

ಪಂಪಭಾರತದಲ್ಲಿ ಇಂತಹ ಪದಗಳ ಬಳಕೆ ಹೇಗಿದೆಯೆಂಬುದನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾಗುತ್ತದೆ. ಪೊಸ-ಪೊಸತು, ಕಿಳು-ಕಿಅುದು (ಕಿಲುಯರ್‌), ಚೆನ್ನ-ಚೆನ್ನರ್‌, ತೆಳ್‌-ತೆಳ್ಳಿದುವು ಮೊದಲಾದ ಪದಯುಗ್ಮಗಳಲ್ಲಿ ಮೊದಲನೆಯದು ನಾಮಪದಗಳೊಂದಿಗೆ ಬರುತ್ತದೆ, ಮತ್ತು ಎರಡನೆಯದು ನಾಮಪದದ ಜಾಗದಲ್ಲಿ ಬರುತ್ತದೆ:

(೧) ನಾಮಪದಗಳೊಂದಿಗೆ ಬಳಕೆ: (೩ಕ) ಪೂವಿನ ಪೊಸ ಗೊಂಚಲಿಂ ಮರನಿದೇನೆಸೆದಿರ್ದುವೊ (೧.೧೧೬) “ಹೂವಿನ ಹೊಸ ಗೊಂಚಲಿನಿಂದ ಮರಗಳು ಎಷ್ಟು ಸೊಗಸಾಗಿವೆ! (೩ಖ) ಕಿಉನಗೆ ನಕ್ಕು (೯.೨೮ವ) “ಹುಸಿನಗೆ ನಕ್ಕು’ (೩ಗ) ಚೆನ್ನ ಪೂಗಳನ್‌ ಒಯ್ಯನೆ ಓಸರಿಸುತುಂ (೨.೧೭) “ಸೊಗಸಾದ ಹೂವುಗಳನ್ನು ನಿಧಾನವಾಗಿ ಪಕ್ಕಕ್ಕೆ ಸರಿಸುತ್ತ

(೨) ನಾಮಪದಗಳ ಜಾಗದಲ್ಲಿ ಬಳಕೆ: (೪ಕ) ಪೊಸತಂ ಪಲದುಮನಲುದು (೫.೪೬ವ) “ಹೊಸತನ್ನೂ ಹಳೆಯದನ್ನೂ ತಿಳಿದು’

(೪ಖ) ಆತನಿಂ ಕಿಉಯರಂ ಪನ್ನೊರ್ವರಂ ಕೊಂದು (೧೧.೫೯) “ಆತನಿಂದ ಕಿರಿಯರಾದ ಹನ್ನೊಂದು ಜನರನ್ನೂ ಕೊಂದು’ (೪ಗ) ಚೆನ್ನರನ್‌ ಅಡಿಗೊತ್ತಿ(೨.೭೭) “ಪರಾಕ್ರಮಿಗಳನ್ನು ಕಾಲಿನ ಕೆಳಕ್ಕೆ ಅದುಮಿ’

ಪೊಸ, ಕಿಆ, ಚೆನ್ನ ಮೊದಲಾದ ಗುಣಪದಗಳನ್ನು ನಾಮಪದಗಳ ವಿಶೇಷಣಗಳನ್ನಾಗಿ ಮಾಡಿ ಬಳಸಬೇಕೆಂದಿದ್ದಲ್ಲಿ ಅವಕ್ಕೆ ಯಾವ ಪ್ರತ್ಯಯವನ್ನೂ ಸೇರಿಸುವ ಅವಶ್ಯಕತೆಯಿಲ್ಲ . ಆದರೆ, ಅವನ್ನು ನಾಮಪದಗಳ ಜಾಗದಲ್ಲಿ, ಎಂದರೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಬಳಸಬೇಕೆಂದಿದ್ದ ಲ್ಲಿ, ಅವಕ್ಕೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿದೆ ಎಂಬ ವಾಕ್ಯರಚನೆಯ ನಿಯಮ ಹಳೆಗನ್ನಡದಲ್ಲಿದೆ.

ಹಾಗಾಗಿ, ನಾಮಪದಗಳ ಜಾಗದಲ್ಲಿ ಬರುವ ಪೊಸತು, ಕಿಅುಯರ್‌, ಚೆನ್ನರ್‌ ಮೊದಲಾದವುಗಳನ್ನು ಹಳೆಗನ್ನಡದಲ್ಲಿ ಪೊಸ, ಕಿಅು, ಚೆನ್ನ ಮೊದಲಾದ ಗುಣಪದಗಳ ನಾಮರೂಪಗಳೆಂದು ಕರೆಯುವ ಅವಶ್ಯಕತೆಯಿದೆ.

ಹಳೆಗನ್ನಡದ ವೈಯಾಕರಣಿಗಳು ಹೇಳುವ ಹಾಗೆ, ಇಲ್ಲಿ ಪೊಸತು, ಕಿಆದು ಮೊದಲಾದವುಗಳು ಮೂಲರೂಪಗಳಲ್ಲ; ಪೊಸ, ಕಿಜು ಮೊದಲಾದವುಗಳೇ ಮೂಲರೂಪಗಳು. ಪೊಸತು, ಕಿರಿದು ಮೊದಲಾದವುಗಳು ಬೇರೆ ಪದವರ್ಗಕ್ಕೆ ಸೇರಿದ ಪದಗಳ ಜಾಗದಲ್ಲಿ (ನಾಮಪದಗಳ ಜಾಗದಲ್ಲಿ) ಬಳಸುವುದಕ್ಕಾಗಿ ಅವಕ್ಕೆ ಲಿಂಗ-ವಚನ ಪ್ರತ್ಯಯವನ್ನು ಸೇರಿಸಿ ರಚಿಸಿದ ರೂಪಗಳು.

೫.೪.೨ ಕೃದಂತಗಳ ಬಳಕೆ

ಇದೇ ರೀತಿಯಲ್ಲಿ ಹಳೆಗನ್ನಡದ ಕೃದಂತಗಳೂ ಸಂಸ್ಕೃತದ ಕೃದಂತಗಳಿಂದ ಭಿನ್ನವಾಗಿವೆ. ಸಂಸ್ಕೃತದಲ್ಲಿ ಅವನ್ನು ನಾಮಪದಗಳೊಂದಿಗೆ ಬಳಸಬೇಕಿದ್ದಲ್ಲಿ, ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ; ಆದರೆ, ಹಳೆಗನ್ನಡದ ಕೃದಂತಗಳಿಗೆ ಈ ರೀತಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು. ನಾಮಪದಗಳೊಂದಿಗೆ ಅವನ್ನು ಹಾಗೆಯೇ ಬಳಸಬೇಕೆಂಬುದೇ ಹಳೆಗನ್ನಡದ ನಿಯಮ.

(೫5) ಮೃತಂ ಸರ್ಪಂ ಅಪಶ್ಯತ್‌ “ಸತ್ತ ಹಾವನ್ನು ನೋಡಿದ’

(೫ಖ) ಬಂದ ಬಟ್ಟೆಯಿನೆ ಬಿಜಯಂಗೆಯ್ಯಿಂ “ಬಂದ ದಾರಿಯಲ್ಲೇ ಹೋಗಿ’

(೫ಕ) ಸಂಸ್ಕೃತ ವಾಕ್ಯದಲ್ಲಿ ಮೃತ “ಸತ್ತ’ ಕೃದಂತವನ್ನು ದ್ವಿತೀಯಾ ವಿಭಕ್ತಿ ಪ್ರತ್ಯಯದೊಂದಿಗೆ ಬಳಸಲಾಗಿದೆ, ಆದರೆ (೫ಖ) ಹಳೆಗನ್ನಡ ವಾಕ್ಯದಲ್ಲಿ ಬಂದ ಕೃದಂತವನ್ನು ಹಾಗೆಯೇ ಯಾವ ಪ್ರತ್ಯಯವನ್ನೂ ಸೇರಿಸದೆ ಬಳಸಲಾಗಿದೆ. ಹಳೆಗನ್ನಡದ ಈ ಬಂದ ಕೃದಂತಕ್ಕೆ ಸಂಸ್ಕೃತದ ಹಾಗೆ ದ್ವಿತೀಯಾ ವಿಭಕ್ತಿಯನ್ನು ಸೇರಿಸಿ ಹೇಳಲು ಸಾಧ್ಯವಾಗದು.

ಹಳೆಗನ್ನಡದಲ್ಲಿ ಕೃದಂತವೊಂದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಬೇಕಿದ್ದ ಲ್ಲಿ, ಅದಕ್ಕೆ ಲಿಂಗ-ವಚನ ಪ್ರತ್ಯಯವನ್ನು ಸೇರಿಸುವ ಅವಶ್ಯಕತೆಯಿದೆ. ಆದರೆ, ಹೀಗೆ ಸೇರಿಸಿದ ಪದರೂಪ

ಪದಗಳ ಒಳರಚನೆ ತೆ

ನಾಮಪದದ ಜಾಗದಲ್ಲಿ ಬರಬಲ್ಲುದಲ್ಲದೆ, ಬೇರೊಂದು ನಾಮಪದದೊಂದಿಗೆ ಅದರ ವಿಶೇಷಣವಾಗಿ ಬರಲಾರದು.

(೫ಗ) ಇರ್ದರಂ ನೆಲ್‌ಯೆ ಮೋಹಿಸಿ “(ಸಭೆಯಲ್ಲಿ) ಇದ್ದವರನ್ನು ಪೂರ್ಣವಾಗಿ ಮೂರ್ಛೆಗೊಳಿಸಿ’ (೫ಘ) ಉಟುದುದಂ ಮಾಣಿಸಲ್‌ ನಾನೆ ಸಾಲ್ವೆನ್‌ “ಉಳಿದುದನ್ನು ನಿಲ್ಲಿಸಲು ನಾನು ಸಾಕು’ (೫ಗ)ದಲ್ಲಿ ಇರ್ದ ಕೃದಂತಕ್ಕೆ ಲಿಂಗ-ವಚನಗಳನ್ನು ಸೂಚಿಸುವ ಅರ್‌ ಪ್ರತ್ಯಯವನ್ನು ಸೇರಿಸಿ, ಅನಂತರ ಅಂ ವಿಭಕ್ತಿ ಪ್ರತ್ಯಯವನ್ನು ಸೇರಿಸಲಾಗಿದೆ. ಆದರೆ, ಈ ಪದವನ್ನು ಇಲ್ಲಿ ಸ್ವತಂತ್ರವಾದ ನಾಮಪದದ ಜಾಗದಲ್ಲಿ ಬಳಸಲಾಗಿದೆಯಲ್ಲದೆ, ಬೇರೊಂದು ಪದದ ವಿಶೇಷಣವಾಗಿ ಬಳಸಿಲ್ಲ. (೫ಘ)ದಲ್ಲೂ ಹೀಗೆಯೇ. ಹಾಗಾಗಿ, ಬಂದ ಬಟ್ಟೆ, ತೊಳಪ ದಾಡೆ, ಇಲ್ಲದ ನಲ್ಮೆ ಎಂಬಂತಹ ಬಳಕೆಗಳಲ್ಲಿ ಕೃದಂತಗಳಿಗೆ ಸಹಜವಾಗಿರುವಂತಹ ಬಳಕೆಯೇ ಕಾಣಿಸುತ್ತಿದೆಯಲ್ಲದೆ ಸಮಾಸವಾಗಿಲ್ಲ. ಇದಕ್ಕೆ ಬದಲು, ಸಂಸ್ಕೃತದ ಮೃತಸರ್ಪ “ಸತ್ತ ಹಾವು’, ಹತಶತ್ರು “ಕೊಂದ ಶತ್ರು’ ಮೊದಲಾದವುಗಳಲ್ಲಿ ಮೃತ, ಹತ ಮೊದಲಾದ ಕೃದಂತಗಳಿಗೆ “ಅಸಹಜ’ವಾದ ಬಳಕೆಯಿದೆಯೆಂದು ಹೇಳಲು ಸಾಧ್ಯವಿದೆ. ಯಾಕೆಂದರೆ, ಸಂಸ್ಕೃತದ ಕೃದಂತಗಳು ನಾಮಪದಗಳಾಗಿದ್ದು, ಬೇರೆ ನಾಮಪದಗಳೊಂದಿಗೆ ಸಹಜರೂಪದಲ್ಲಿ ಬರುವಾಗಲೆಲ್ಲ ಅವು ವಿಭಕ್ತಿ ಪ್ರತ್ಯಯದೊಂದಿಗೆ ಬರುತ್ತವೆ; ಮೃತಸರ್ಪ, ಹತಶತ್ರು ಮೊದಲಾದ ಬಳಕೆಗಳಲ್ಲಿ ಈ ವಿಭಕ್ತಿ ಪ್ರತ್ಯಯ ಬಿದ್ದುಹೋಗಿದೆಯೆಂದು ಹೇಳಲು ಸಾಧ್ಯವಿದೆಯಾದ ಕಾರಣ, ಇಲ್ಲಿ ಸಮಾಸವಾಗಿದೆಯೆಂದೂ ಹೇಳಲು ಸಾಧ್ಯವಿದೆ. ಆದರೆ, ಹಳೆಗನ್ನಡದ ಬಂದ ಬಟ್ಟೆ, ತೊಳಪ ದಾಡೆ ಮೊದಲಾದವುಗಳಲ್ಲಿ ಈ ರೀತಿ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿದೆಯೆಂದು ಹೇಳಲು ಸಾಧ್ಯವಿಲ್ಲವಾದ ಕಾರಣ, ಇವುಗಳಲ್ಲಿ ಸಮಾಸವಾಗಿದೆಯೆಂದು ಹೇಳಲು ಸಾಧ್ಯವಾಗದು.

೫.೪.೩ ಬೇರೆ ಪದಗಳ ಬಳಕೆ

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಎಣಿಕೆಯ ಪದಗಳನ್ನಾಗಲಿ, ಇಲ್ಲ ವೇ ನಿರ್ದೇಶಕ ಪದಗಳನ್ನಾಗಲಿ ಬಳಸುವುದಿದ್ದರೂ, ಆ ನಾಮಪದಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳನ್ನು

ಅಂತಹ ಎಣಿಕೆಯ ಪದ ಇಲ್ಲ ವೇ ನಿರ್ದೇಶಕ ಪದಗಳಿಗೂ ಸೇರಿಸಬೇಕೆಂಬ ನಿಯಮವಿದೆ.

(೬ಕ) ಅಹಂ ಏಕಂ ಘಟಂ ದೃಷ್ಟವಾನ್‌

“ನಾನು ಒಂದು ಕೊಡವನ್ನು ನೋಡಿದೆ’ (೬ಖ) ತೇನ ಸೂತೇನ ಅಶ್ವಾಃ ಯೋಜಿತಾಃ

“ಆ ಸೂತನು ಕುದುರೆಗಳನ್ನು ರಥಕ್ಕೆ ಕಟ್ಟಿದ’

(೬ಕ)ದಲ್ಲಿ ಏಕ “ಒಂದು’ ಎಂಬ ಎಣಿಕೆಯ ಪದ ದ್ವಿತೀಯಾ ವಿಭಕ್ತಿಯಲ್ಲಿ ಬಂದಿದೆ, ಮತ್ತು (೬ಖ)ದಲ್ಲಿ ಸ “ಆ’ ಎಂಬ ನಿರ್ದೇಶಕ ಪದ ತೇನ ಎಂಬ ತೃತೀಯಾರೂಪದಲ್ಲಿ ಬಂದಿದೆ. ಅವುಗಳೊಂದಿಗೆ ಬಂದಿರುವ ನಾಮಪದಗಳು ಇವೇ ವಿಭಕ್ತಿಗಳಲ್ಲಿ (ಘಟ ಎಂಬುದು ದ್ವಿತೀಯೆಯಲ್ಲಿ ಮತ್ತು ಸೂತ ಎಂಬುದು ತೃತೀಯೆಯಲ್ಲಿ) ಬಂದಿವೆ ಎಂಬುದನ್ನು ಗಮನಿಸಬಹುದು.

ಆದರೆ, ಹಳೆಗನ್ನಡದಲ್ಲಿ ಎಣಿಕೆಯ ಪದಗಳನ್ನಾಗಲಿ, ಇಲ್ಲವೇ ನಿರ್ದೇಶಕ ಪದಗಳನ್ನಾಗಲಿ ನಾಮಪದಗಳೊಂದಿಗೆ ಬಳಸಬೇಕಿದ್ದಲ್ಲಿ, ಅವಕ್ಕೆ ಈ ರೀತಿ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ, ಮತ್ತು ಹಾಗೆ ಸೇರಿಸಲು ಸಾಧ್ಯವೂ ಇಲ್ಲ.

(೭ಕ) ಓರಡಿಯನಣಂ ನಡೆಯಲುಂ ಆದೆ “ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಾಗದೆ’ (೭ಖ) ತೇಜೋಗುಣಂ ಆ ಕ್ಚತ್ರಿಯರೊಳ್‌ ನೆಲಸಿ ನಿಂದುದು “ತೇಜೋಗುಣ ಆ ಕ್ಚತ್ರಿಯರಲ್ಲಿ ಸ್ಥಿರವಾಗಿ ನಿಂದಿತು’

(೭ಕ)ದಲ್ಲಿ ಓರ್‌ ಎಣಿಕೆಯ ಪದ, ಮತ್ತು (೭ಖ)ದಲ್ಲಿ ಆ ಎಂಬ ನಿರ್ದೇಶಕ ಪದ ಇವೆರಡೂ ವಿಭಕ್ತಿ ಪ್ರತ್ಯಯಗಳ ಸಹಾಯವಿಲ್ಲದೆ ನಾಮಪದಗಳೊಂದಿಗೆ ಬಂದಿವೆ. ಹಳೆಗನ್ನಡದಲ್ಲಿ ಇವು

ವಿಭಕ್ತಿ ಪ್ರತ್ಯಯಗಳೊಂದಿಗೆ ಬರಬೇಕಿದ್ದಲ್ಲಿ, ವಿಶೇಷಣಗಳಾಗಿ ಬರುವ ಬದಲು, ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ಕಾಣಿಸಿದ ಹಾಗೆ, ನಾಮಪದಗಳ ಜಾಗದಲ್ಲಿ ಬರಬೇಕು.

(೮ಕ) ನರೇಂದ್ರಂ ತನಗೆ ಒಂದಂ ತಂದನ್‌ “ರಾಜನು ತನಗೆ ಒಂದನ್ನು ತಂದನು’

(೮ಖ) ತೇಜೋಗುಣಂ ಅವರೊಳ್‌ ನೆಲಸಿ ನಿಂದುದು “ತೇಜೋಗುಣ ಅವರಲ್ಲಿ ಸ್ಥಿರವಾಗಿ ನಿಂದಿತು’

ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ಇಂತಹ ವ್ಯತ್ಯಾಸವಿದೆಯಾದ ಕಾರಣ, ಸಂಸ್ಕೃತದ ಏಕಘಟ ಮತ್ತು ತತ್ಸೂತ ಎಂಬವುಗಳ ಹಾಗೆ ಹಳೆಗನ್ನಡದ ಓರಡಿ ಮತ್ತು ಆ ಕ್ಷತ್ರಿಯ ಎಂಬವುಗಳನ್ನು ಸಮಸ್ತಪದಗಳೆಂದು ಪರಿಗಣಿಸಲು ಆಧಾರವಿಲ್ಲ.

ಹಳೆಗನ್ನಡದಲ್ಲಿ ಕೆಲವು ಎಣಿಕೆಯ ಪದಗಳ ಮತ್ತು ಗುಣಪದಗಳ ನಾಮರೂಪಗಳು ಮಾತ್ರ ನಾಮಪದಗಳೊಂದಿಗೂ (ಪದಕಂತೆಗಳಲ್ಲಿ) ಬರಬಲ್ಲುವು. ಆದರೆ ಈ ರೂಪಗಳೂ ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವುದಿಲ್ಲ. ಉದಾಹರಣೆಗಾಗಿ, ಕೆಳಗಿನ ಬಳಕೆಗಳನ್ನು ಗಮನಿಸಬಹುದು:

(ಕ) ನರೇಂದ್ರಂ ತನಗೆ ಒಂದು ಮಾರಿಯಂ ತಂದನ್‌ “ರಾಜನು ತನಗೆ ಒಂದು ಮಾರಿಯನ್ನು ತಂದುಕೊಂಡನು’ (೯ಖ) ಆನನಕ್ಕೆ ಪಿರಿದುಂ ದೀನತ್ವಮಂ ಮಾಡಿದನಾವನ್‌ “ಮುಖಕ್ಕೆ ವಿಶೇಷವಾದ ಬಾಡುವಿಕೆಯನ್ನು ಉಂಟು ಮಾಡಿದವನು ಯಾರು’

(೯ಕ)ದಲ್ಲಿ ಒಂದು ಎಂಬುದು (ಎಣಿಕೆಯ ಪದದ ನಾಮರೂಪ) ಮಾರಿ ಎಂಬ ನಾಮಪದದೊಂದಿಗೆ ಬಂದಿದೆ; ಆದರೆ, ಅದರೊಂದಿಗೆ ಅಂ ಪ್ರತ್ಯಯ ಬಂದಿಲ್ಲ. ಇದೇ ರೀತಿಯಲ್ಲಿ, (೯ಖ)ದಲ್ಲಿ ಪಿರಿದು ಎಂಬುದು (ಗುಣಪದದ ನಾಮರೂಪ) ದೀನತ್ವ ಎಂಬ ನಾಮಪದದೊಂದಿಗೆ ಬಂದಿದೆ; ಆದರೆ, ಅದರೊಂದಿಗೆ ಅಂ ವಿಭಕ್ತಿ ಪ್ರತ್ಯಯ ಬಂದಿಲ್ಲ.

ಮೇಲೆ ವಿವರಿಸಿದ ಹಾಗೆ, ಸಂಸ್ಕೃತದ ಸಮಸ್ತಪದಗಳ ರಚನೆಯಲ್ಲಿ ನಾಮಪದಗಳು ಮಾತ್ರ ಬಳಕೆಯಾಗುತ್ತವೆ; ಅವ್ಯಯಗಳ ಬಳಕೆಯೂ ಇರುವುದು ನಿಜವಾದರೂ, ಸಂಸ್ಕೃತದ

ವೈಯಾಕರಣಿಗಳು ಅವನ್ನು ನಾಮಪದಗಳ ವರ್ಗದಲ್ಲೇ ಸೇರಿಸಿರುವರಾದ ಕಾರಣ, ಸಂಸ್ಕೃತದ ಸಮಸ್ತಪದಗಳನ್ನು ವರ್ಣಿಸುವಾಗ ನಾಮಪದಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಕು.

ಹಳೆಗನ್ನಡದ ಸಮಸ್ತ ಪದಗಳನ್ನು ವರ್ಣಿಸುವಾಗಲೂ ಸಂಸ್ಕೃತದ ಈ ನಿಯಮವನ್ನೇ ಅನುಸರಿಸಿ, ನಾಮಪದಗಳು ಒಟ್ಟುಸೇರಿ ಸಮಾಸವಾಗುವುದೆಂದು ಪ್ರಾಚೀನ ವೈಯಾಕರಣಿಗಳು ಹೇಳಿದ್ದಾ ರೆ. (ಕೇಶಿರಾಜ, ಸೂ. ೧೭೩ ನೋಡಿ). ಆದರೆ, ನಿಜಕ್ಕೂ ಹಳೆಗನ್ನಡ ಸಮಸ್ತಪದಗಳಲ್ಲಿ ಎರಡನೆಯ ಪದ ಮಾತ್ರ ನಾಮಪದವಾಗಿರುವ ಅವಶ್ಯಕತೆಯಿದೆ. ಮೊದಲನೆಯದು ನಾಮಪದವಿರಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು. ಅದು ಒಂದು ಅವ್ಯಯವಾಗಿರಲೂ ಸಾಧ್ಯವಿದೆ.

ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವಿರುವ ಈ ಮುಖ್ಯವಾದ ಮತ್ತು ವ್ಯಾಕರಣದ ಮೂಲತತ್ವದಲ್ಲೇನೇ ಕಾಣಿಸುವಂತಹ ವ್ಯತ್ಯಾಸವನ್ನು ಹಳೆಗನ್ನಡದ ವೈಯಾಕರಣಿಗಳು ಸರಿಯಾಗಿ ಗಮನಿಸಿಲ್ಲ.

೫.೪.೪ ಹಳೆಗನ್ನಡದ ಬಹುವ್ರೀಹಿ

ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ರಚಿಸಿದಾಗ, ಆ ಎರಡು ಪದಗಳಲ್ಲಿ ಒಂದೂ ಅದರ ಪ್ರಧಾನ ಪದವಾಗಿರದೆ, ಹೊರಗಿನದೊಂದು ಪದ ಪ್ರಧಾನ ಪದವಾಗಿದೆಯಾದರೆ, ಅದಕ್ಕೆ ಬಹುವ್ರೀಹಿ ಎಂದು ಹೆಸರು (೫.೩.೧ ನೋಡಿ). ಬಹುವ್ರೀಹಿ ಎಂಬ ಹೆಸರೇ ಸಂಸ್ಕೃತದಲ್ಲಿ ಈ ಸಮಾಸಕ್ಕೆ ಒಂದು ಉದಾಹರಣೆ:

ಬಹು “ಹೆಚ್ಚು’ ಮತ್ತು ವ್ರೀಹಿ “ಬತ್ತ’ ಎಂಬ ಎರಡು ಪದಗಳನ್ನು ಒಟ್ಟು ಸೇರಿಸಿ ರಚಿಸಿದ ಈ ಪದ ಹೆಚ್ಚು ಬತ್ತವನ್ನು ಸಂಗ್ರಹಿಸಿಟ್ಟಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತಿದೆಯಾದ ಕಾರಣ, ಇಲ್ಲಿ ಈ ಪದದ ಅಂಗಗಳಾಗಿರುವ ಬಹು ಮತ್ತು ವ್ರೀಹಿ ಎಂಬ ಎರಡು ಪದಗಳ ಬದಲು, “ವ್ಯಕ್ತಿ’ ಎಂಬ ಬೇರೆಯೇ ಒಂದು ಪದ ಪ್ರಧಾನ ಪದವಾಗಿದೆ.

ಬಹುವ್ರೀಹಿ ಸಮಾಸಕ್ಕೆ ಹಳೆಗನ್ನಡದ ವೈಯಾಕರಣಿಗಳು ಕೊಡುವ ಉದಾಹರಣೆಗಳು ಕರ್ಬುವಿಲ್ಲಂ, ಕಡುಚಾಗಿ, ಚಲವಾದಿ, ನಿಡುಗಣ್ಣಂ ಮೊದಲಾದವುಗಳು. ನಿಜಕ್ಕೂ ಇಲ್ಲಿ ಬಹುವ್ರೀಹಿ ಸಮಾಸವಿದೆಯೆಂದು ಹೇಳುವುದು ಬಹಳ ಕಷ್ಟ. ಉದಾಹರಣೆಗಾಗಿ, ಕರ್ಬುವಿಲ್ಲಂ ಎಂಬುದು “ಕಬ್ಬನ್ನು ಬಿಲ್ಲಾಗಿ ಪಡೆದವನು’ ಎಂಬ ಅರ್ಥವನ್ನು ಕೊಡುತ್ತಿದ್ದು, ಅದು ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ; ಹಾಗಾಗಿ ಕರ್ಬು ಮತ್ತು ಬಿಲ್ಲು ಎಂಬೆರಡು ಪದಗಳೂ ಇಲ್ಲಿ ಪ್ರಧಾನ ಪದಗಳಲ್ಲ ಎಂಬುದಾಗಿ ವಿವರಣೆಯನ್ನೇನೋ ಕೊಡಬಹುದು.

ಆದರೆ, ಕರ್ಬುವಿಲ್ಲಂ ಪದದಲ್ಲಿ ಕರ್ಬು ಮತ್ತು ವಿಲ್‌ ಎಂಬೆರಡು ಪದಗಳು ಮಾತ್ರವಲ್ಲದೆ, ಅಂ ಎಂಬ ಪ್ರತ್ಯಯವೂ ಬಂದಿದೆ. ಸಮಸ್ತಪದದ ಅಂಗವಾಗಿರುವ ಈ ಪ್ರತ್ಯಯವೇ “ವ್ಯಕ್ತಿ’ ಎಂಬ ಅರ್ಥವನ್ನು ಕೊಡುವುದಾದ ಕಾರಣ, ಇಲ್ಲಿ ಪ್ರಧಾನ ಪದ ಹೊರಗಿನದು ಎಂದು ವಾದಿಸುವುದಕ್ಕೆ ಆಧಾರವಿಲ್ಲ.

ಇಂತಹ ಪದಗಳ ರಚನೆಯಲ್ಲಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವಿರುವ ವ್ಯತ್ಯಾಸವೇ ಈ ರೀತಿ ಹಳೆಗನ್ನಡ ವೈಯಾಕರಣಿಗಳು ಕೊಡುವ ಸಮಸ್ತಪದಗಳನ್ನು ಬಹುವ್ರೀಹಿಗೆ ಉದಾಹರಣೆಗಳನ್ನಾಗಿ ಮಾಡಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣ. ಸಂಸ್ಕೃತದ ಪೀತಾಂಬರ, ದೀರ್ಫಬಾಹು, ಪ್ರಾಪ್ತೋದಕ ಮೊದಲಾದ ಬಹುವ್ರೀಹಿ ಪದಗಳಿಗೆ ವಿಭಕ್ತಿ ಪ್ರತ್ಯಯಗಳಿಂದ

ಭಿನ್ನವಾದ ಲಿಂಗ-ವಚನ ಪ್ರತ್ಯಯಗಳ ಸೇರಿಕೆಯಾಗುವುದಿಲ್ಲ. ಹಾಗಾಗಿ, ಅವುಗಳ ಅಂಗಗಳಾಗಿ ಎರಡು ಪದಗಳು ಮಾತ್ರ ಬರುತ್ತವೆ.

ಆದರೆ, ಹಳೆಗನ್ನಡದಲ್ಲಿ ಇಂತಹ ಪದಗಳ ಕೊನೆಯಲ್ಲಿ ಲಿಂಗ-ವಚನ ಪ್ರತ್ಯಯಗಳನ್ನೂ ಸೇರಿಸಬೇಕಾಗಿದ್ದು, ಇವು ವಿಭಕ್ತಿ ಪ್ರತ್ಯಯಗಳಿಂದ ಭಿನ್ನವಾಗಿವೆ. ಅಲ್ಲದೆ, ಈ ಪ್ರತ್ಯಯಗಳನ್ನು ಪದದ ಒಂದು ಅಂಗವೆಂದೇ ಪರಿಗಣಿಸುವ ಅವಶ್ಯಕತೆಯಿದೆ; ಯಾಕೆಂದರೆ, ಮೇಲಿನವುಗಳ ಅರ್ಥವನ್ನು ಇಂತಹ ಲಿಂಗ-ವಚನ ಪ್ರತ್ಯಯವನ್ನು ಪಡೆಯದಿರುವ ಕರ್ಬುವಿಲ್‌, ಕಡುಚಾಗ, ಚಲವಾದ, ನಿಡುಗಣ್‌ ಮೊದಲಾದ ಪದಗಳು ಕೊಡಲಾರವು. ಹಾಗಾಗಿ, ಮೇಲೆ ಕೊಟ್ಟಿರುವ ಹಳೆಗನ್ನಡ ಪದಗಳು ಬಹುವ್ರೀಹಿಗೆ ಉದಾಹರಣೆಗಳಾಗಲಾರವು (೫.೪.೪ ನೋಡಿ).

ವೆಂಕಟಾಚಲ ಶಾಸ್ತ್ರೀ (೧೯೯೪:೮೮) ಸೂಚಿಸಿದ ಹಾಗೆ, ಕರ್ಮಧಾರಯದಂತಹ ಸಮಾಸದಿಂದ ಸಿದ್ಧ ವಾದ ಪದಕ್ಕೆ ಪ್ರತ್ಯಯವೊಂದನ್ನು ಸೇರಿಸಿ ರಚಿಸಿದ ಪದಗಳನ್ನೇ ಹೆಚ್ಚಾಗಿ ಈ ವೈಯಾಕರಣಿಗಳು ಬಹುವ್ರೀಹಿಗೆ ಉದಾಹರಣೆಗಳನ್ನಾಗಿ ಕೊಟ್ಟಿದ್ದಾರೆ. ಇವುಗಳಲ್ಲಿ ಕರ್ಮಧಾರಯಕ್ಕಿಂತ ಭಿನ್ನವಾಗಿರುವ ಬೇರೊಂದು ಸಮಾಸ ಇದೆ ಎನ್ನುವುದಕ್ಕಿಂತಲೂ ಕರ್ಮಧಾರಯದಿಂದ ಸಿದ್ಧ ವಾದ ನಾಮಪದಕ್ಕೆ ತದ್ದಿ ತ ಪ್ರತ್ಯಯವೊಂದು ಸೇರಿದೆ (ಕಡುವಿಲ್‌- ಕಡುವಿಲ್ಲಂ, ಅಲರ್ಗಣ್‌-ಅಲರ್ಗಣ್ಣ ಛ್‌ ಅಲರ್ಗಣ್ಣ ರ್‌, ನಿಡುಮೂಗು-ನಿಡುಮೂಗಿ) ಎಂದು ಹೇಳುವುದೇ ಉತ್ತಮ.

ಕಲ್ಲೆರ್ದೆ, ಕಡುಗಲ್ಲೆರ್ದೆ, ಧೈರ್ಯಾಂಬುರಾಶಿ, ಕಿತ್ತಡಿ ಎಂಬಂತಹ ಪದಗಳಲ್ಲಿ ಮಾತ್ರ ಈ ರೀತಿ ಪ್ರತ್ಯಯ ಸೇರದಿದ್ದರೂ ಅನ್ಯಪದದ ಅರ್ಥ ಪ್ರಧಾನವಾಗಿದೆಯಾದ ಕಾರಣ, ಅಂತಹ ಪದಗಳನ್ನು ಮಾತ್ರ ನ್ಯಾಯವಾಗಿ ಬಹುವ್ರೀಹಿಗೆ ಉದಾಹರಣೆಗಳೆಂದು ಹೇಳಲು ಸಾಧ್ಯವಿದೆ (ವೆಂಕಟಾಚಲ ಶಾಸ್ತ್ರಿ € ೧೯೯೪:೮೮ ನೋಡಿ).

೫.೪.೫ ಅವ್ಯಯೀಭಾವ

ಹಳೆಗನ್ನಡದ ಕಿಳ್ಳೊಡೆ, ಕಿಟಕ್ಕೆಆಕೆ, ಮುಂಗೈ, ಅಂಗೈ, ಬೆಂಬಿಸಿಲ್‌, ಅಂಗಾಲ್‌ ಮೊದಲಾದುವನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ. ಇವು ಹಳೆಗನ್ನಡದಲ್ಲಿ “ಅವ್ಯಯ’ಗಳಲ್ಲ ವಾದ ಕಾರಣ, ಅವ್ಯಯೀಭಾವ ಎಂಬ ಹೆಸರು ಇವಕ್ಕೆ ತಕ್ಕುದಲ್ಲ. ಇದನ್ನು ಗಮನಿಸಿದ ಭಟ್ಟಾಕಳಂಕನು ಈ ಸಮಾಸಕ್ಕೆ “ಅಂಶಿ’ ಎಂಬ ಬೇರೊಂದು ಹೆಸರನ್ನು ಬಳಸಿದ್ದಾನೆ (ಸೂ. ೩೦೬). ಇವುಗಳಲ್ಲಿ ಬಳಕೆಯಾಗಿರುವ ಎರಡು ಪದಗಳ ನಡುವೆ ಅಂಶಾಂಶಿ ಸಂಬಂಧವಿದೆ; ಈ ಪದಗಳಲ್ಲಿ ಮೊದಲನೆಯದು ಒಂದು ಅಂಶವನ್ನೂ ಎರಡನೆಯದು ಆ ಅಂಶವನ್ನು ಪಡೆದಿರುವ ಒಂದು ಅಂಶಿಯನ್ನೂ ಸೂಚಿಸುತ್ತವೆ ಎಂಬುದೇ ಇದಕ್ಕೆ ಆಧಾರ.

ಈ ಸಮಾಸಕ್ಕೆ ವೈಯಾಕರಣಿಗಳು ಕೊಡುವ ಉದಾಹರಣೆಗಳಲ್ಲಿ ಎಲ್ಲವೂ ಈ ರೀತಿ ಅಂಶಾಂಶಿ ಸಂಬಂಧವನ್ನು ತೋರಿಸುವ ಹಾಗೆ ಕಾಣಿಸುವುದಿಲ್ಲ, ಮತ್ತು ಎಲ್ಲವುಗಳಲ್ಲೂ ಪ್ರಧಾನಪದ ಮೊದಲನೆಯ ಅಂಗವಾಗಿರುವ ಹಾಗೆಯೂ ಕಾಣಿಸುವುದಿಲ್ಲ.

ಉದಾಹರಣೆಗಾಗಿ, ಕಿಟೊಡೆ ಎಂಬುದು ಹೊಟ್ಟೆಯ ಕೆಳಭಾಗವನ್ನು ಸೂಚಿಸುವುದಾದ ಕಾರಣ, ಅದರಲ್ಲಿ ಬಂದಿರುವ ಪದಗಳಲ್ಲಿ ಕಿಟ್‌ “ಕೆಳಗೆ’ ಎಂಬುದಾಗಲೀ, ಇಲ್ಲವೇ ಪೊಡೆ “ಹೊಟ್ಟೆ’ ಎಂಬುದಾಗಲೀ ಅದರ ಪ್ರಧಾನ ಪದವಾಗಲಾರದು. ಇದಕ್ಕೆ ಬದಲು, ಭಾಗ ಎಂಬ ಈ ಸಮಸ್ತಪದದ ಹೊರಗಿರುವ ಪದವೇ ಅದರ ಪ್ರಧಾನ ಪದವೆಂದು ಹೇಳಬೇಕಾಗುತ್ತದೆ. ಹಾಗಾಗಿ, ಇದು ಅವ್ಯಯೀಭಾವಕ್ಕಿಂತಲೂ ಬಹುವ್ರೀಹಿಗೆ ಉತ್ತಮ ಉದಾಹರಣೆಯಾಗಬಲ್ಲುದು.

ಅಂಗೈ, ಅಂಗಾಲ್‌, ಮುಂಗೈ ಮೊದಲಾದವುಗಳೂ ಇಂತಹವೇ ಎಂದು ತೋರುತ್ತದೆ. ಕಿಬತ್ಯೆಆೆ ಎಂಬುದಕ್ಕೆ ಕಿಟ್ಟೆಲ್‌ ಡಿಕ್ಬ್‌ನರಿಯಲ್ಲಿ “ಕೆಳಗಿನ ಕೆರೆ’ ಎಂಬ ಅರ್ಥ ಕೊಡಲಾಗಿದೆ. ಈ ಅರ್ಥದಲ್ಲಿ ಅದು ಕರ್ಮಧಾರಯವಾಗ ಬಲ್ಲುದಲ್ಲದೆ ಅವ್ಯಯೀಭಾವವಾಗಲಾರದು. “ಕೆರೆಯ ಕೆಳಭಾಗ’ ಎಂಬ ಅರ್ಥವೂ ಇದಕ್ಕಿದೆ; ಆದರೆ ಈ ಅರ್ಥದಲ್ಲಿ ಅದು ಬಹುವ್ರೀಹಿಗೆ ಉದಾಹರಣೆಯಾಗಬಲ್ಲುದಲ್ಲದೆ ಅವ್ಯಯೀಭಾವಕ್ಕೆ ಉದಾಹರಣೆಯಾಗಲಾರದು.

ನಾಗವರ್ಮನು (ಸೂ. ೧೨೯)ರಲ್ಲಿ ಈ ಪದವನ್ನು ಅವ್ಯಯೀಭಾವಕ್ಕೆ ಉದಾಹರಣೆಯಾಗಿ ಕೊಟ್ಟಿದ್ದಾ ನೆ; ಆದರೆ, ಯಾವ ಅರ್ಥದಲ್ಲಿ ಇದು ಅವ್ಯಯೀಭಾವವಾಗಬಲ್ಲುದು ಎಂಬುದು

ಇದ ಸ್ಪಷ್ಟವಾಗಿಲ್ಲ.

೫.೪.೬ ಕ್ರಿಯಾಸಮಾಸ

ಸಮಸ್ತಪದಗಳಲ್ಲಿ ಮೊದಲನೆಯ ಅಂಗ ಕ್ರಿಯಾಪದವಾಗಿದ್ದರೆ (ಸುಡುಗಾಡು, ಬಿಡುವೆಣ್‌, ಅಡುಗಬ್ಬು), ಅದನ್ನು “ಕ್ರಿಯಾಸಮಾಸ’ವೆಂದು ಕರೆಯಲು ಸಾಧ್ಯ ಎಂಬುದಾಗಿ ಮೇಲೆ ೫.೩.೨ರಲ್ಲಿ ಸೂಚಿಸಿದ್ದೆ. ಆದರೆ ಹಳೆಗನ್ನಡದ ವ್ಯಾಕರಣಗಳಲ್ಲಿ ಕ್ರಿಯಾಸಮಾಸವೆಂಬ ಪದವನ್ನು ಬೇರೆಯೇ ಒಂದು ಅರ್ಥದಲ್ಲಿ ಬಳಸಲಾಗಿದೆ.

ಮೊದಲನೆಯ ಅಂಗ ನಾಮಪದವಾಗಿದ್ದು, ಎರಡನೆಯದು ಕ್ರಿಯಾಪದವಾಗಿರುವ ಸೆಅಾಯಿರ್ದಂ, ಗುಣಂಗೊಂಡಂ, ಬಳೆದೊಟ್ಟಂ, ಪಾಲ್ಕುಡಿದೆಂ ಮೊದಲಾದವುಗಳಲ್ಲಿ ಕ್ರಿಯಾಸಮಾಸವಿದೆಯೆಂದು ಈ ವೈಯಾಕರಣಿಗಳು ಹೇಳುತ್ತಾರೆ. ಕೇಶಿರಾಜನ ಪ್ರಕಾರ, ಇದನ್ನು ಮತ್ತು ಗಮಕ ಸಮಾಸವನ್ನು (೫.೪.೬ ನೋಡಿ) ಕನ್ನಡದ ವಿಶೇಷ ಲಕ್ಷಣಗಳೆಂದು ಪರಿಗಣಿಸುವ ಅವಶ್ಯಕತೆಯಿದೆ.

ಆದರೆ, ನಿಜಕ್ಕೂ ಈ ಪದಗಳಲ್ಲಿ ಎರಡು ಪದಗಳು ಸೇರಿ ಹೊಸದೊಂದು ಪದ ಸೃಷ್ಟಿಯಾಗಿಲ್ಲ. ಹಾಗಾಗಿ, ಇವನ್ನು ಸಮಾಸವೆಂಬ “ಪದರಚನೆ’ಯ ವಿಧಾನದ ಮೂಲಕ ವರ್ಣಿಸುವ ಬದಲು, ಅದಕ್ಕಿಂತ ತೀರ ಭಿನ್ನವಾಗಿರುವ “ವಾಕ್ಯರಚನೆ’ಯ ವಿಧಾನದ ಮೂಲಕ ವರ್ಣಿಸುವುದೇ ಒಳ್ಳೆಯದು.

ಈ ಪ್ರಯೋಗಗಳಲ್ಲಿ ಸಾಮಾನ್ಯವಾಗಿ ನಾಮಪದದ ದ್ವಿತೀಯಾ ವಿಭಕ್ತಿ ಲೋಪಗೊಂಡಿರುವುದನ್ನು (ಪಾಲಂ ಕುಡಿದೆಂ>ಪಾಲ್ಕುಡಿದೆಂ) ಕಾಣುತ್ತೇವೆ. ಮುಂದೆ ೮.೨ರಲ್ಲಿ ಸೂಚಿಸಿರುವ ಹಾಗೆ, ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವಶ್ಯವಿಲ್ಲದಲ್ಲಿ ಬಳಸದಿರಲೂ ಸಾಧ್ಯ ಎಂಬ ನಿಯಮವೇ ಇಂತಹ ಪ್ರಯೋಗಗಳಿಗೆ ಆಧಾರ. ಹಾಗಾಗಿ, ಈ ಪ್ರಯೋಗಗಳಲ್ಲಿ ಕಾಣಿಸುವುದು ವಾಕ್ಯರಚನೆಯ ನಿಯಮವಲ್ಲದೆ ಪದರಚನೆಯ ನಿಯಮವಲ್ಲ. ಇಂತಹ ಕೆಲವು ಬಳಕೆಗಳಲ್ಲಿ ದ್ವಿತೀಯಾ ವಿಭಕ್ತಿ ಸಂಕ್ಷಿಪ್ತಗೊಂಡು ಬಿಂದು ರೂಪದಲ್ಲಿ ಉಳಿಯುವುದೂ ಇದೆ (ಪದಂಗೊಂಡಂ, ಮೊಗಂನೋಡಿದಂ).

೫.೪.೭ ಗಮಕ ಸಮಾಸ

ಈ ಸಮಾಸಕ್ಕೆ ಹಳೆಗನ್ನಡ ವೈಯಾಕರಣಿಗಳು ಕೊಟ್ಟಿರುವ ಉದಾಹರಣೆಗಳನ್ನು ಪರಿಶೀಲಿಸಿದಾಗ, ಒಂದು ವಿಷಯ ಸ್ಪಷ್ಟವಾಗುತ್ತದೆ: ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕಾಣಿಸುವ ಒಂದು ಮುಖ್ಯವಾದ ವ್ಯತ್ಯಾಸವನ್ನು ಅವರು ಪರಿಗಣಿಸದಿರುವುದೇ ಇವನ್ನು ಗಮಕ ಸಮಾಸವೆಂಬ ಒಂದು ಹೊಸ ರೀತಿಯ ಸಮಾಸವೆಂಬುದಾಗಿ, ಮತ್ತು ಕನ್ನಡದ ವಿಶೇಷ

ಲಕ್ಷಣಗಳಲ್ಲಿ ಒಂದೆಂಬುದಾಗಿ, ತಿಳಿಯಲು ಕಾರಣ.

ಸಂಸ್ಕ ತದಲ್ಲಿ ಗುಣಪದ, ನಿರ್ದೇಶಕ ಪದ, ಕೃದಂತ ಮೊದಲಾದವುಗಳು ನಾಮಪದಗಳೇ. ಹಾಗಾಗಿ, ಅವನ್ನು ಇನ್ನೊಂದು ನಾಮಪದದೊಂದಿಗೆ (ಅವುಗಳ ವಿಶೇಷಣಗಳನ್ನಾಗಿ ಮಾಡಿ) ಬಳಸಬೇಕಿದ್ದಲ್ಲಿ, ಅವುಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಬಳಸುವ ಅವಶ್ಯಕತೆಯಿದೆ (೫.೪.೧- ೩ ನೋಡಿ).

ಆದರೆ, ಹಳೆಗನ್ನಡದಲ್ಲಿ ಇವು ನಾಮಪದಗಳಿಗಿಂತ ಭಿನ್ನವಾಗಿರುವ ಪದವರ್ಗಗಳಲ್ಲಿ ಬರುತ್ತಿದ್ದು, ಅವನ್ನು ಹಾಗೆಯೇ ನಾಮಪದಗಳ ವಿಶೇಷಣಗಳನ್ನಾಗಿ ಬಳಸಲು ಸಾಧ್ಯವಿದೆ. ಅವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿ, ಅವನ್ನು ನಾಮರೂಪಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತ ದೆ. ಇದಲ್ಲದೆ, ಸಾಮಾನ್ಯವಾಗಿ ಇಂತಹ ಗುಣಪದ, ನಿರ್ದೇಶಕ ಪದ, ಕೃದಂತ ಮೊದಲಾದವುಗಳ ನಾಮರೂಪಗಳು ಬೇರೊಂದು ನಾಮಪದದ ವಿಶೇಷಣಗಳಾಗಿ ಬರಲಾರವು.

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಈ ಪದಗಳನ್ನು ವಿಭಕ್ತಿ ಪ್ರತ್ಯಯವನ್ನು ಸೇರಿಸದೆಯೂ ಬಳಸಲು ಸಾಧ್ಯವಿದೆ, ಮತ್ತು ಇಂತಹ ಸಂದರ್ಭಗಳಲ್ಲಿ ಅವು ನಾಮಪದದೊಂದಿಗೆ ಸೇರಿ ಸಮಸ್ತಪದಗಳಾಗಿವೆಯೆಂದು ಹೇಳಲು ಸಾಧ್ಯವಿದೆ (೫.೪.೧-೩ ನೋಡಿ). ಯಾಕೆಂದರೆ, ಇಂತಹ ಪ್ರಯೋಗಗಳಲ್ಲಿ ಈ ಪದಗಳ ವಿಭಕ್ತಿ ಪ್ರತ್ಯಯ ಲೋಪಗೊಂಡಿದೆಯೆಂದು ಹೇಳಲು ಸಾಧ್ಯವಿದೆ.

ಆದರೆ, ಹಳೆಗನ್ನಡದಲ್ಲಿ ವಿಭಕ್ತಿ ಪ್ರತ್ಯಯವಿಲ್ಲದೆ ಬರುವುದೇ ಇವುಗಳ ಸಹಜ ಪ್ರಯೋಗ. ಹಾಗಾಗಿ, ಇವುಗಳ ಬಳಕೆಯಲ್ಲಿ ವಿಭಕ್ತಿ ಪ್ರತ್ಯಯ ಲೋಪಗೊಂಡಿದೆಯೆಂದು ಹೇಳಲು ಸಾಧ್ಯವಾಗದು. ಹಾಗಾಗಿ, ಇವುಗಳ ಬಳಕೆಯಲ್ಲಿ ಸಮಾಸವೆಂಬ ಪ್ರಕ್ರಿಯೆ ನಡೆದಿದೆಯೆಂದು ಹೇಳಲೂ ಕೂಡ ಸಾಧ್ಯವಾಗದು.

ಹಳೆಗನ್ನಡದ ವೈಯಾಕರಣಿಗಳು ಹೇಳುವಂತಹ ಕ್ರಿಯಾಸಮಾಸ ಮತ್ತು ಗಮಕ ಸಮಾಸಗಳು ನಿಜಕ್ಕೂ ಸಮಾಸಗಳಲ್ಲ, ವಾಕ್ಕಾಂಗಗಳು ಮಾತ್ರ ಎಂದು ವಾದಿಸುವುದಕ್ಕೆ ಅವುಗಳಿಗೂ ಇತರ ಸಮಾಸಗಳಿಗೂ ನಡುವಿರುವ ಕೆಲವು ವ್ಯತ್ಯಾಸಗಳನ್ನೂ ಆಧಾರವಾಗಿ ಕೊಡಬಹುದು (ವೆಂಕಟಾಚಲ ಶಾಸ್ತ್ರಿ € ೧೯೯೪:೮೨-೩ ನೋಡಿ):

(೧) ಸಮಾಸದಲ್ಲಿ ಎರಡು ಪದಗಳು ಒಟ್ಟು ಸೇರಿ ಒಂದೇ ಪದವಾಗುತ್ತದೆ ಎಂಬ ನಿಯಮವಿದೆ. ಈ ನಿಯಮಕ್ಕೆ ಗಮಕ ಸಮಾಸ ಅಪವಾದ. ಎರಡು ಪದಗಳು ಇಲ್ಲಿ ಬಿಡಿ ಬಿಡಿಯಾಗಿ ಬರುತ್ತವೆ (ಬಿಳಿಯ ಕೊಡೆ, ಆಡುವ ಪೊಲಂ).

(೨) ಗಮಕ ಸಮಾಸದ ಎರಡು ಪದಗಳ ನಡುವೆ ಬೇರೆ ಪದಗಳನ್ನು ಇರಿಸಿದರೂ ಆ “ಸಮಸ್ತಪದ’ದ ಅರ್ಥದಲ್ಲಿ ವ್ಯತ್ಯಾಸವಾಗುವುದಿಲ್ಲ.

(೩) ಕರ್ಮಧಾರಯವೇ ಮೊದಲಾದ ಸಮಸ್ತಪದಗಳಿಗೆ ಗಮಕ ಸಮಾಸದಲ್ಲಿರುವ ಸಮಸ್ತಪದವೊಂದನ್ನು “ವಿಗ್ರಹವಾಕ್ಯ’ವಾಗಿ ಕೊಡಲು ಸಾಧ್ಯವಿದೆ. ಉದಾಹರಣೆಗಾಗಿ, ಬೆಳ್ಗೊಡೆ ಎಂಬುದು ಕರ್ಮಧಾರಯ ಸಮಾಸದಲ್ಲಿರುವ ಸಮಸ್ತಪದ; ಇದಕ್ಕೆ ವಿಗ್ರಹವಾಕ್ಯವಾಗಿ ಕೊಡುವ ಬಿಳಿಯ ಕೊಡೆ ಎಂಬುದು ಗಮಕ ಸಮಾಸದಲ್ಲಿರುವ ಸಮಸ್ತಪದ.

(೪) ಗಮಕ ಸಮಾಸದಲ್ಲಿ ಒಟ್ಟಿಗೆ ಸೇರಿಕೊಳ್ಳುವ ಎರಡು ಪದಗಳೂ ತಮ್ಮ ಅರ್ಥವನ್ನು ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳುತ್ತವೆ. ಇದು ಸಮಾಸದ ಒಂದು ಮುಖ್ಯ ಗುಣಧರ್ಮಕ್ಕೆ ವಿರುದ್ಧ ವಾಗಿದೆ.

(೫) ಹಳೆಗನ್ನಡದ ಸಮಾಸಗಳಲ್ಲೆಲ್ಲ ಎರಡನೆಯ ಪದ ನಾಮಪದ ಎಂಬ ನಿಯಮಕ್ಕೆ (೫.೩.೨ ನೋಡಿ) ಗಮಕ ಸಮಾಸ ಮತ್ತು ಕ್ರಿಯಾಸಮಾಸಗಳು ಮಾತ್ರ ಅಪವಾದಗಳಾಗುತ್ತವೆ.

(೬) ಹಳೆಗನ್ನಡ ಸಮಸ್ತಪದಗಳಲ್ಲಿ ಕನ್ನಡ ಪದಗಳೊಂದಿಗೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ಸೇರುವುದಿಲ್ಲ ಎಂಬ ನಿಯಮಕ್ಕೆ ಗಮಕ ಮತ್ತು ಕ್ರಿಯಾಸಮಾಸಗಳು ಅಪವಾದಗಳಾಗುತ್ತವೆ (ಪೂಸಿದ ಭಸ್ಮಪರಾಗಂ, ಪ್ರಿಯಂನುಡಿದಂ).

(೭) ಕೇಶಿರಾಜನು ಮೊದಲಿಗೆ (ಸೂ. ೧೭೨ರಲ್ಲಿ) ಕೊಟ್ಟಿರುವ ಸಮಾಸದ ವರ್ಣನೆಗೆ (ನಾಮಪದಂಗಳ್‌ ಅರ್ಥದೊಳ್‌ ಅನುಗತಂಗಳಾಗೆ ಸಮಾಸಂ ಘಟಿಸುಗುಂ ಎಂಬುದಕ್ಕೆ) ಗಮಕ ಮತ್ತು ಕ್ರಿಯಾ ಸಮಾಸಗಳು ಅಪವಾದಗಳಾಗುತ್ತವೆ. ಯಾಕೆಂದರೆ, ಅವುಗಳಲ್ಲಿ ನಾಮಪದವಲ್ಲದವೂ ಬರುತ್ತವೆ.

ಈ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಪದ ಮತ್ತು ಪದಕಂತೆಗಳ ನಡುವಿರುವ ವ್ಯತ್ಯಾಸಗಳೇ ಎಂಬುದನ್ನು ಇಲ್ಲಿ ಗಮನಿಸಬಹುದು.

Eke →

೫.೫ ಸಾರಾಂಶ

ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಹಳೆಗನ್ನಡ ವೈಯಾಕರಣಿಗಳು ಹಲವು ತಪ್ಪುಗಳನ್ನು ಮಾಡಿದ್ದಾ. ರೆ. ಇವುಗಳಲ್ಲಿ ಹೆಚ್ಚಿ ನವೂ ಸಂಸ್ಕೃತದ ಪದರಚನೆಯ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದುದರಿಂದಾಗಿ ಮೂಡಿಬಂದಿವೆ.

ಉದಾಹರಣೆಗಾಗಿ, ಹಳೆಗನ್ನಡದ ಸಮಸ್ತಪದಗಳಲ್ಲಿ ಮೊದಲನೆಯ ಪದ ಯಾವ ಪದವರ್ಗಕ್ಕೆ ಸೇರುತ್ತದೆ ಎಂಬುದೇ ಆದರ ಸಮಾಸಗಳನ್ನು ವಿಭಜಿಸಲು ಉತ್ತಮ ಆಧಾರ. ಆದರೆ, ಸಂಸ್ಕೃತದಲ್ಲಿ ಪ್ರಧಾನ ಪದ ಯಾವುದು ಎಂಬ ವಿಷಯವನ್ನು ಇಂತಹ ವಿಭಜನೆಗೆ ಆಧಾರವಾಗಿ ಮಾಡಲಾಗಿದೆ. ಹಳೆಗನ್ನಡದ ಸಮಸ್ತಪದಗಳಿಗೆ ಸಂಸ್ಕೃತದ ಈ ವಿಭಜನೆ ಯೋಗ್ಯವಾದುದಲ್ಲ.

ಈ ಎರಡು ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೆ €ನೇ ಕಾಣಿಸುವಂತಹ ವ್ಯತ್ಯಾಸಗಳನ್ನು ಗಮನದಲ್ಲಿರಿಸಿಕೊಂಡು, ಹಳೆಗನ್ನಡದ ಪದರಚನೆಯ ನಿಯಮಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದಲ್ಲಿ ಮಾತ್ರ, ಅವುಗಳ ಹಿಂದಿರುವ ನಿಯಮಗಳು ಎಂತಹವೆಂಬ ವಿಷಯ ಸ್ಪಷ್ಟವಾದೀತು.