Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೧೧ — ವಿಷಯವಾಕ್ಯಗಳು
ವಿಷಯವಾಕ್ಯಗಳು
೧೧.೧ ಪೀಠಿಕೆ
ಹಳೆಗನ್ನಡದಲ್ಲಿ ಮುಖ್ಯವಾಗಿ ಎರಡು ರೀತಿಯ ವಾಕ್ಯಗಳು ಬಳಕೆಯಲ್ಲಿವೆ. ಇವನ್ನು “ಕ್ರಿಯಾವಾಕ್ಯ’ ಮತ್ತು “ವಿಷಯವಾಕ್ಯ’ ಎಂದು ಕರೆಯಬಹುದು. ಇವುಗಳಲ್ಲಿ ಕ್ರಿಯಾವಾಕ್ಯಗಳು ಒಂದು ಘಟನೆಯನ್ನೂ, ವಿಷಯವಾಕ್ಯಗಳು ಒಂದು ವಿಷಯ ಇಲ್ಲ ವೇ ಸಂಗತಿಯನ್ನೂ ತಿಳಿಸುತ್ತವೆ.
(೧ಕ) ನೀಂ ಈಗಳ್ ಪೇಟುಂ “ನೀವು ಈಗ ಹೇಳಿ’ (೧ಖ) ನೀಂ ಆದಿತ್ಯನನಳಿಪ ತೇಜರಿರ್ “ನೀವು ಸೂರ್ಯನನ್ನು ತಿರಸ್ಕರಿಸುವ ತೇಜಸ್ಸುಳ್ಳವರು’
(೧ಕ) ವಾಕ್ಯ ಕೇಳುಗ ಏನು ಮಾಡಬೇಕು ಎಂಬುದಾಗಿ ಆತನು ನಡೆಸಬೇಕಾಗಿರುವ ಒಂದು ಘಟನೆಯನ್ನು ಸೂಚಿಸುವುದಾದ ಕಾರಣ, ಕ್ರಿಯಾವಾಕ್ಯ, ಮತ್ತು (೧ಖ) ವಾಕ್ಯ ಕೇಳುಗ ಎಂತಹವನು (“ಸೂರ್ಯನನ್ನು ತಿರಸ್ಕರಿಸುವ ತೇಜಸ್ಸುಳ್ಳವನು’) ಎಂಬುದಾಗಿ ಒಂದು ಸಂಗತಿಯನ್ನು ಸೂಚಿಸುತ್ತಿದೆಯಾದ ಕಾರಣ, ವಿಷಯವಾಕ್ಯ.
ಹಿಂದಿನ ಅಧ್ಯಾಯಗಳಲ್ಲೆಲ್ಲ ನಾವು ಮುಖ್ಯವಾಗಿ ಹಳೆಗನ್ನಡದ ಕ್ರಿಯಾವಾಕ್ಯಗಳು ಹೇಗೆ ಸಂಸ್ಕೃತದ ಕ್ರಿಯಾವಾಕ್ಯಗಳಿಂದ ಭಿನ್ನವಾಗಿವೆ ಎಂಬುದನ್ನು ಪರಿಶೀಲಿಸಿರುವೆವು. ಇದಲ್ಲದೆ, ಹಳೆಗನ್ನಡ ವೈಯಾಕರಣಿಗಳಿಗೆ ಈ ವ್ಯತ್ಯಾಸಗಳ ಅರಿವಿರಲಿಲ್ಲವಾದ ಕಾರಣ, ಅವರು ಹೇಗೆ ಹಳೆಗನ್ನಡದ ಕ್ರಿಯಾವಾಕ್ಯಗಳನ್ನು ಸಂಸ್ಕೃತ ವಾಕ್ಯಗಳ ಮಾದರಿಯಲ್ಲೇನೇ ವರ್ಣಿಸಲು ಪ್ರಯತ್ನಿಸಿದ್ದರು, ಮತ್ತು ಇದರಿಂದಾಗಿ, ಅವರು ಹೇಗೆ ಹಲವು ಸಮಸ್ಯೆಗಳಿಗೆ ಮತ್ತು ಗೊಂದಲಗಳಿಗೆ ಒಳಗಾಗಿದ್ದರು ಎಂಬುದನ್ನೂ ಪರಿಶೀಲಿಸಿರುವೆವು.
ಈ ಅಧ್ಯಾಯದಲ್ಲಿ ಹಳೆಗನ್ನಡದ ವಿಷಯ ವಾಕ್ಯಗಳಿಗೂ ಸಂಸ್ಕೃತದ ವಿಷಯ ವಾಕ್ಯಗಳಿಗೂ ನಡುವೆ ಮುಖ್ಯವಾಗಿ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು ವಿವರಿಸಲಾಗಿದೆ. ಇವನ್ನೂ ಹಳೆಗನ್ನಡ ವೈಯಾಕರಣಿಗಳು ಸರಿಯಾಗಿ ಗಮನಿಸಿಲ್ಲ, ಮತ್ತು ಇದರಿಂದಾಗಿ, ಹಳೆಗನ್ನಡದ ಹಲವು ವೈಶಿಷ್ಟ ಗಳನ್ನು ವಿವರಿಸಲು ಅವರಿಗೆ ಸಾಧ್ಯವಾಗಿಲ್ಲ.
೧೧.೨ ವಿಷಯ ವಾಕ್ಯಗಳ ವಿಭಜನೆ
ಹಳೆಗನ್ನಡದ ವಿಷಯ ವಾಕ್ಯಗಳಿಗೆ ಮೂರು ಮುಖ್ಯ ಉದ್ದೇಶಗಳಿವೆ: (೧) ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಗುಣಧರ್ಮವನ್ನು ತಿಳಿಸುವುದು, (೨) ಆತನಿಗೂ ಇನ್ನೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವಿರುವ ಸಂಬಂಧವನ್ನು ತಿಳಿಸುವುದು, ಮತ್ತು (೩) ಒಂದು ಜಾಗದಲ್ಲಿ ಒ
cE
ವ್ಯಕ್ತಿ ಇಲ್ಲವೇ ವಸ್ತುವಿನ ಇರವನ್ನು ತಿಳಿಸುವುದು ಎಂಬುವೇ ಈ ಮೂರು ಮುಖ್ಯ ಉದ್ದೇಶಗಳು.
ಇವನ್ನವಲಂಬಿಸಿ, ಹಳೆಗನ್ನಡದ ವಿಷಯವಾಕ್ಯಗಳನ್ನು ಅನುಕ್ರಮವಾಗಿ “ಗುಣವಾಕ್ಯಗಳು’, “ಸಂಬಂಧ ವಾಕ್ಯಗಳು’ ಮತ್ತು “ಇರುವಿಕೆಯ ವಾಕ್ಯಗಳು’ ಎಂಬ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು (ಭಟ್ ೨೦೦೪:೬೪ ನೋಡಿ).
(ಕ) ಗುಣಧರ್ಮವನ್ನು ತಿಳಿಸುವ ವಿಷಯವಾಕ್ಯಗಳು (೨ಕ) ಅವರ್ ಪಿರಿಯರ್ “ಅವರು ಹಿರಿಯರು’ (೨ಖ) ಇವಳ್ ಗಂಧರ್ವ ವನಿತೆ ಇವಳು ಗಂಧರ್ವ ಸ್ತ್ರೀ’ (೨ಗ) ಆತನೆ ವಲಂ ತಕ್ಕಂ “ಅವನು ನಿಜವಾಗಿಯೂ ತಕ್ಕವನು’ (೨ಘ) ಈ ಬನಂ ಹಿಡಿಂಬವನಂ “ಈ ಬನ ಹಿಡಿಂಬವನ’
(ಖ) ಸಂಬಂಧವನ್ನು ತಿಳಿಸುವ ವಿಷಯವಾಕ್ಯಗಳು (೩ಕ) ಎನಗೆ ಅಯ್ವರ್ ಮಕ್ಕಳ್ ಒಳರ್
“ನನಗೆ ಐವರು ಮಕ್ಕಳು ಇದ್ದಾ ಧೆ (೩ಖ) ಕಾರ್ಯಸಿದ್ಧಿ ಪ್ರಾದುರ್ಭಾವಕ್ಕೆ ವಿಘ್ನಂ ಪಲವು ಒಳವು
“ಫಲಪ್ರಾಪ್ತಿಯಾಗುವುದಕ್ಕೆ ಹಲವು ವಿಘ್ನಗಳು ಇವೆ’ (೩ಗ) ಎನಗೆ ಗಂಧರ್ವರ ಕಾಪಸದಳಂ ಉಂಟು
“ನನಗೆ ಗಂಧರ್ವರ ರಕ್ಷಕದಳ ಇದೆ’
(ಗ) ಇರುವಿಕೆಯನ್ನು ತಿಳಿಸುವ ವಿಷಯವಾಕ್ಯಗಳು (೪ಕ) ಐಹಿಕದ ತೊಡರ್ಪು ಎನ್ನಿರವಿನೊಳ್ ಉಂಟು “ಇಹಲೋಕದ ಬಂಧನ ನನ್ನ ಸ್ಥಿತಿಯಲ್ಲಿ ಇದೆ’ (೪ಖ) ಮೇರುವ ಪೊನ್ ಭಂಡಾರದೊಳ್ ಉಂಟು “ಮೇರುಪರ್ವತದ ಚಿನ್ನ ಭಂಡಾರದಲ್ಲಿ ಇದೆ’ (೪ಗ) ಇನ್ನುಂ ಪಾಂಡವರ್ ಒಳರ್ : “ಪಾಂಡವರು ಇನ್ನೂ ಇದ್ದಾರೆ’
೧೧.೩ ಗುಣವಾಕ್ಯಗಳ ರಚನೆ
ಗುಣಧರ್ಮವನ್ನು ಸೂಚಿಸುವ ವಿಷಯ ವಾಕ್ಯಗಳಲ್ಲಿ ಮುಖ್ಯವಾಗಿ ಒಬ್ಬ ವ್ಯಕ್ತಿ, ವಸ್ತು, ಇಲ್ಲವೇ ಸಂಗತಿಯನ್ನು ಸೂಚಿಸುವ ಒಂದು ಘಟಕವೂ, ಅದರ ಗುಣಧರ್ಮವನ್ನು ಸೂಚಿಸುವ
ಒಂದು ಆಖ್ಯಾತ ಪದವೂ ಇರುತ್ತವೆ.
ಮೇಲೆ (೨ಕ)ದಲ್ಲಿ ಬಂದಿರುವ ಗುಣವಾಕ್ಯದಲ್ಲಿ ಅವರ್ ಎಂಬುದು ಒಬ್ಬ ವ್ಯಕ್ತಿಯನ್ನು ಸೂಚಿಸುವ ಘಟಕ, ಮತ್ತು ಪಿರಿಯರ್ “ಹಿರಿಯರು’ ಎಂಬುದು ಆ ವ್ಯಕ್ತಿಯ ಗುಣಧರ್ಮವನ್ನು ಸೂಚಿಸುವ ಆಖ್ಯಾತ ಪದ. (೨ಘ)ದಲ್ಲಿ ಈ ಬನಂ ಎಂಬುದು ಘಟಕ ಮತ್ತು ಹಿಡಿಂಬವನಂ ಎಂಬುದು ಆಖ್ಯಾತ ಪದ. ಘಟಕದ ಗುಣಧರ್ಮಗಳಲ್ಲೊಂದನ್ನು (ಅದರ ಹೆಸರನ್ನು) ಆಖ್ಯಾತ ಪದ ಸೂಚಿಸುತ್ತದೆ.
ಕೆಳಗಿನ ವಾಕ್ಯಗಳಲ್ಲಿ ಈ ರೀತಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧರ್ಮವನ್ನು ಸೂಚಿಸುವ ಬದಲು, ಒಂದು ಸಂಗತಿ ಇಲ್ಲವೇ ಘಟನೆಯ ಗುಣಧರ್ಮವನ್ನು ಸೂಚಿಸಲಾಗಿದೆ.
(೫ಕ) ಈಕೆಯಂ ಕೈಕೊಳ್ವುದೆ ಕಜ್ಜಂ “ಈಕೆಯನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ’ (೫ಖ) ಎನ್ನೊಳಾದ ಕಿಸುರ್ ಎನ್ನೊಡವೋಪುದು ಒಳ್ಳಿತು “ನನ್ನಲ್ಲಿ ಹುಟ್ಟಿದ ಈ ಜಗಳವು ನನ್ನ ಜೊತೆಯಲ್ಲಿಯೇ ಹೋಗುವುದು ಒಳ್ಳೆಯದು’
(೫ಖ)ದಲ್ಲಿ ಈಕೆಯಂ ಕೈಕೊಳ್ಳುದು ಎಂಬ ಘಟನೆಯ ಗುಣಧರ್ಮವನ್ನು ಕಜ್ಜಂ “(ನಿನಗೆ ಯೋಗ್ಯವಾದ) ಕಾರ್ಯ’ ಎಂಬ ಆಖ್ಯಾತ ಪದ ಸೂಚಿಸುತ್ತದೆ.
೧೧.೩.೧ ಲಿಂಗ-ವಚನ ಪ್ರತ್ಯಯಗಳು
ಗುಣಪದಗಳು ಗುಣವಾಕ್ಯದ ಆಖ್ಯಾತ ಪದವಾಗಿ ಬರಬೇಕಿದ್ದಲ್ಲಿ , ಅವುಗಳೊಂದಿಗೆ ಘಟಕದ ಲಿಂಗವಚನಗಳನ್ನು ಸೂಚಿಸುವ ಪ್ರತ್ಯಯ ಬರಬೇಕು ಎಂಬದೊಂದು ನಿಯಮ ಹಳೆಗನ್ನಡದಲ್ಲಿದೆ. ಹಾಗಾಗಿ, ನಿಜಕ್ಕೂ ಗುಣಪದಗಳು ಇಲ್ಲಿ ಅವುಗಳ ನಾಮರೂಪದಲ್ಲಿ ಬಳಕೆಯಾಗುತ್ತವೆ.
ಇದಲ್ಲದೆ, ಇಂತಹ ವಾಕ್ಯಗಳಲ್ಲಿ ಗುಣಧರ್ಮವನ್ನು ಸೂಚಿಸುವುದಕ್ಕಾಗಿ ನಾಮಪದಗಳೂ ಆಖ್ಯಾತ ಪದಗಳಾಗಿ ಬರಬಲ್ಲುವು, ಮತ್ತು ಈ ಆಖ್ಯಾತ ಪದಗಳ ಕೊನೆಯಲ್ಲಿ ಲಿಂಗ- ವಚನಗಳನ್ನು ಸೂಚಿಸುವ ಪ್ರತ್ಯಯಗಳು ಬಾರದೆಯೂ ಇರಲು ಸಾಧ್ಯವಿದೆ:
(೬ಕ) ಛತ್ರವತಿಯೆಂಬುದು ದೃಪದನ ಪೊಲಲ್
“ಛತ್ರವತಿ ಎಂಬುದು ದೃಪದನ ವಾಸಸ್ಥಳ (ರಾಜಧಾನಿ)’ (೬ಖ) ಇದು ನಿನ್ನ ಕೊಟ್ಟ ತಲೆ
“ಇದು ನೀನು ಕೊಟ್ಟ (ಬದುಕಿಸಿ ಉಳಿಸಿದ) ತಲೆ’
೧೧.೩.೨ ಆಖ್ಯಾತ ಪ್ರತ್ಯಯಗಳು
ಹಳೆಗನ್ನಡದ ಗುಣವಾಕ್ಯಗಳಲ್ಲಿ ಅವುಗಳ ಆಡುಗ ಇಲ್ಲವೇ ಕೇಳುಗನ ಗುಣಧರ್ಮವನ್ನು ಸೂಚಿಸಲಾಗಿದೆಯಾದರೆ, ಅವುಗಳ ಆಖ್ಯಾತ ಪದದೊಂದಿಗೆ ಆ ಎರಡು ಪುರುಷಗಳನ್ನು (ಉತ್ತಮ ಮತ್ತು ಮಧ್ಯಮ ಪುರುಷಗಳನ್ನು) ಮತ್ತು ಅವುಗಳ ವಚನವನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳನ್ನೂ ಬಳಸಬೇಕಾಗುತ್ತದೆ. ಈ ಪ್ರತ್ಯಯಗಳು ಘಟಕದ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯದ
ಅನಂತರ ಬರುತ್ತವೆ:
(೬ಕ) ಆನ್ ವಿವಿಧ ಗಂಧಂಗಳನು ಅವಯವದೊಳ್ ಮಾಡುವ ಫಟ್ಟಿವಳ್ತಿಯೆನ್ “ನಾನು ವಿವಿಧ ಗಂಧಗಳನ್ನು ಶ್ರಮವಿಲ್ಲದೆ ತಯಾರಿಸುವ ಘಟ್ಟಿವಲ್ಲಿ’ (೬ಖ) ನೀಂ ಉದಿತೋದಿತನಯ್ “ನೀನು ಅಭಿವೃದ್ಧಿಯಾಗುವವನು’ (೬ಗ) ಭರತಕುಲತಿಳಕರಿರ್, ವರಶರಾಸನವ್ಯಗ್ರಹಸ್ತರಿರ್, ಬಳಯುತರಿರ್ “(ನೀವು) ಭರತವಂಶತಿಲಕರು, ಬಿಲ್ವಿದ್ಯೆಯಲ್ಲಿ ಪರಿಣತರು, (ಮತ್ತು) ಬಲಿಷ್ಠರು’ (೬ಘ) ನಾಮೆಲ್ಲಮೊಂದೆ ಗರುಡಿಯೊಳೋದಿದ ಮಾನಸರೆವು “ನಾವೆಲ್ಲ ಒಂದೇ ಗರಡಿಯಲ್ಲಿ ಕಲಿತ ಮನುಷ್ಯರು’
(೬ಕ) ವಾಕ್ಯದಲ್ಲಿ ಆಖ್ಯಾತ ಪದವಾಗಿ ಘಟ್ಟಿವಳ್ತಿ ಎಂಬುದು ಬಂದಿದ್ದು, ಅದರ ಕೊನೆಯ ಇಕಾರ ಘಟಕದ ಲಿಂಗ-ವಚನಗಳನ್ನು ಸೂಚಿಸುತ್ತದೆ, ಮತ್ತು ಆಡುಗನನ್ನು ಸೂಚಿಸುವ ಆಖ್ಯಾತ ಪ್ರತ್ಯಯ (ಎನ್ ಎಂಬುದು) ಈ ಇಕಾರದ ಅನಂತರ ಬಂದಿದೆ; (೬ಖ) ವಾಕ್ಯದಲ್ಲಿ ಆಖ್ಯಾತ ಪದವಾಗಿ ಉದಿತೋದಿತ ಎಂಬುದು ಬಂದಿದ್ದು, ಅದರ ಕೊನೆಯಲ್ಲಿ ಘಟಕದ ಲಿಂಗ-ವಚನಗಳನ್ನು ಸೂಚಿಸುವ ಅನ್ ಪ್ರತ್ಯಯ ಬಂದಿದೆ, ಮತ್ತು ಅದರ ಅನಂತರ ಕೇಳುಗನನ್ನು ಸೂಚಿಸುವ ಆಯ್ ಆಖ್ಯಾತ ಪ್ರತ್ಯಯ ಬಂದಿದೆ.
(೬ಗ) ವಾಕ್ಯದಲ್ಲಿ ಮೂರು ಆಖ್ಯಾತ ಪದಗಳು ಬಂದಿದ್ದು, ಆ ಮೂರು ಪದಗಳ ಕೊನೆಯಲ್ಲೂ ಘಟಕದ ಲಿಂಗ-ವಚನಗಳನ್ನು ಸೂಚಿಸುವ ಅರ್ ಪ್ರತ್ಯಯ, ಮತ್ತು ಅದರ ಅನಂತರ ಕೇಳುಗರನ್ನು ಸೂಚಿಸುವ ಬಹುವಚನದ ಇರ್ ಆಖ್ಯಾತ ಪ್ರತ್ಯಯಗಳು ಬಂದಿವೆ; (ಓಘ) ವಾಕ್ಯದ ಆಖ್ಯಾತ ಪದ ಮಾನಸರೆವು ಎಂಬುದರಲ್ಲೂ ಘಟಕದ ಲಿಂಗ-ವಚನಗಳನ್ನು ಸೂಚಿಸುವ ಅರ್ ಪ್ರತ್ಯಯದ ಅನಂತರ ಆಡುಗನೊಂದಿಗೆ ಇತರರನ್ನೂ ಸೇರಿಸಿ ಸೂಚಿಸುವ ಬಹುವಚನದ ಎವು ಆಖ್ಯಾತ ಪ್ರತ್ಯಯ ಬಂದಿದೆ.
ಆಡುಗ ಮತ್ತು ಕೇಳುಗರನ್ನು ಬಿಟ್ಟು, ಇತರ ವ್ಯಕ್ತಿಗಳು ಘಟಕಗಳಾಗಿ ಬಂದಿವೆಯಾದಲ್ಲಿ, ಈ ರೀತಿ ಆಖ್ಯಾತ ಪದದೊಂದಿಗೆ ಆಖ್ಯಾತ ಪ್ರತ್ಯಯ ಬರುವುದಿಲ್ಲ, ಲಿಂಗ-ವಚನ ಪ್ರತ್ಯಯಗಳು ಮಾತ್ರ ಬರುತ್ತವೆ (೨ಕ-ಘ ನೋಡಿ).
ಗುಣವಾಕ್ಯಗಳು ಸೂಚಿಸುವ ಸಂಗತಿಯನ್ನು (ಎಂದರೆ, ವ್ಯಕ್ತಿ, ವಸ್ತು ಮೊದಲಾದುವಕ್ಕೂ ಗುಣಧರ್ಮಕ್ಕೂ ನಡುವಿರುವ ಸಂಬಂಧವನ್ನು) ಅಲ್ಲಗಳೆಯುವ ಅಲ್ಲ ಪದ ಇಂತಹ ವಾಕ್ಯಗಳ ಕೊನೆಯಲ್ಲಿ ಬಂದಿದೆಯಾದರೆ, ಆಡುಗ ಇಲ್ಲವೇ ಕೇಳುಗನನ್ನು ಸೂಚಿಸುವ ಆಖ್ಯಾತ ಪ್ರತ್ಯಯ ಅಲ್ಲ ಪದದೊಂದಿಗೆ ಮಾತ್ರ ಬರಬಲ್ಲುದು, ಇಲ್ಲವೇ ಆಖ್ಯಾತ ಪದದೊಂದಿಗೂ ಬರಬಲ್ಲುದು.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯಗಳನ್ನು ಗಮನಿಸಬಹುದು:
(೭ಕ) ಕಣ್ಣಣುಯದ ಬೆಳ್ಳನಲ್ಲೆನ್ (೪.೭೬)
“(ನಾನು) ದೃಷ್ಟಿಯ ಮರ್ಮವನ್ನು ತಿಳಿಯದ ಬೆಪ್ಪನಲ್ಲ’ (೭ಖ) ಆನ್ ಗಂಡವಳ್ತಿಯೆನ್ ಅಲ್ಲೆಂ (೮.೫೬)
“ನಾನು ಗಂಡನಿರುವವಳು ಅಲ್ಲ’
(೭ಕ)ದಲ್ಲಿ ವಾಕ್ಯದ ಆಡುಗನನ್ನು ಸೂಚಿಸುವ ಎನ್ ಪ್ರತ್ಯಯ ಅಲ್ಲ ಪದದೊಂದಿಗೆ ಮಾತ್ರ ಬಂದಿದೆ; ಆದರೆ, (೭ಖ)ದಲ್ಲಿ ಅದು ಗಂಡವಲ್ಲಿ ಎಂಬ ಆಖ್ಯಾತ ಪದದೊಂದಿಗೂ ಬಂದಿದೆ.
ವಿಷಯವಾಕ್ಯಗಳು 8s
ಕೆಲವೊಮ್ಮೆ ಆಡುಗ ಮತ್ತು ಕೇಳುಗರನ್ನು ಸೂಚಿಸುವ ಪ್ರತ್ಯಯಗಳು ಈ ರೀತಿ ಲಿಂಗ- ವಚನ ಪ್ರತ್ಯಯಗಳ ಅನಂತರ ಬರುವ ಬದಲು, ನೇರವಾಗಿ ಗುಣ ಪದಗಳ ಅನಂತರವೂ ಬಳಕೆಯಾಗುವುದಿದೆ. ಕೇಶಿರಾಜನು (ಸೂ. ೨೩೦) ಉತ್ತಮ ಪುರುಷ ಮತ್ತು ಮಧ್ಯಮ ಪುರುಷಗಳಲ್ಲಿ ಎರಡೆರಡು ರೂಪಗಳನ್ನು (ಪೆಜನೆನ್-ಪೆಅಕೆನ್, ಪಜಕಿವು-ಪೆಅರೆವು, ಒಳ್ಳಿದನಯ್-ಒಳ್ಳಿದಯ್, ಒಳ್ಳಿದರಿರ್-ಒಳ್ಳಿದಿರ್, ಇತ್ಯಾದಿ) ಕೊಟ್ಟಿರುವುದನ್ನು ಗಮನಿಸಬಹುದು (ವೆಂಕಟಾಚಲ ಶಾಸ್ತ್ರ e ೧೯೯೪:೧೦೭ ನೋಡಿ).
ಇಂತಹ ಪ್ರಯೋಗಗಳು ಕೇಶಿರಾಜನನ್ನು ಮತ್ತು ಇತರ ವಿದ್ದಾ ್ರಿಂಸರನ್ನು ದಾರಿತಪ್ಪಿಸಿರುವ ಹಾಗೆ ಕಾಣಿಸುತ್ತದೆ. ಯಾಕೆಂದರೆ, ಕೇಶಿರಾಜನು ಮೇಲೆ ವಿವರಿಸಿದಂತಹ ವಾಕ್ಯಗಳ ಆಖ್ಯಾತಗಳಾಗಿ ಬರುವ ಒಳ್ಳಿದನ್, ಒಳ್ಳಿದರ್ ಮೊದಲಾದವುಗಳಲ್ಲೂ ಆಖ್ಯಾತ(ವಿಭಕ್ತಿ) ಪ್ರತ್ಯಯಗಳು ಬಂದಿವೆಯೆಂಬುದಾಗಿ ಪ್ರಯೋಗಗಳನ್ನು ಉದಾಹರಿಸಿದ್ದಾನೆ.
ಆದರೆ, ನಿಜಕ್ಕೂ ಈ ಆಖ್ಯಾತ ಪದಗಳಲ್ಲಿ ಕಾಣಿಸುವ ಅನ್, ಅರ್ ಮೊದಲಾದ ಪ್ರತ್ಯಯಗಳು ಲಿಂಗ-ವಚನ ಪ್ರತ್ಯಯಗಳಲ್ಲದೆ, ಪ್ರಥಮ ಪುರುಷದ ಆಖ್ಯಾತ ಪ್ರತ್ಯಯಗಳಲ್ಲ. ಯಾಕೆಂದರೆ, ಅವು ಈ ಜಾಗದಲ್ಲಿ ಮಾತ್ರವಲ್ಲದೆ ಬೇರೆ ಜಾಗಗಳಲ್ಲೂ ಬರುತ್ತವೆ. ಈ ಗುಣಪದಗಳನ್ನು ನಾಮಪದಗಳ ಜಾಗದಲ್ಲಿ ಬಳಸಬೇಕಾಗಿರುವಲ್ಲೆಲ್ಲ ಅವಕ್ಕೆ ಈ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (೪.೨.೧ ನೋಡಿ).
ಇದಲ್ಲದೆ, ಒಳ್ಳಿದನೆನ್, ಒಳ್ಳಿದರೆವು, ಒಳ್ಳಿದನಯ್, ಒಳ್ಳಿದರಯ್ ಮೊದಲಾದ ಉತ್ತಮ ಮತ್ತು ಮಧ್ಯಮಪುರುಷ ಆಖ್ಯಾತ ಪದಗಳಲ್ಲೂ ಈ ಪ್ರತ್ಯಯಗಳ ಬಳಕೆಯಾಗುವುದಾದ ಕಾರಣ, ಅವನ್ನು ಆಖ್ಯಾತ ಪ್ರತ್ಯಯಗಳಿಂದ ಭಿನ್ನವಾದ ಲಿಂಗ-ವಚನ ಪ್ರತ್ಯಯಗಳೆಂದು ಪರಿಗಣಿಸದೆ ಬೇರೆ ದಾರಿಯಿಲ್ಲ.
೧೧.೩.೩ ಕ್ರಿಯಾಪದದ ಬಳಕೆ
ಹಳೆಗನ್ನಡದ ಗುಣವಾಕ್ಯಗಳಲ್ಲಿ ಆಗು ಕ್ರಿಯಾಪದದ ಮುಂದಿನ ಸಮಯದ ರೂಪಗಳನ್ನು ಈಗಿನ ಸಮಯದ ಅರ್ಥದಲ್ಲಿ ಬಳಸಲು ಸಾಧ್ಯವಿದ್ದು, ಇದಕ್ಕೆ ವಾಕ್ಯ ತಿಳಿಸುವ ಸಂಗತಿಯನ್ನು ಒತ್ತಿ ಹೇಳುವ ಅರ್ಥವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯವನ್ನು ಗಮನಿಸಬಹುದು:
(೮) ಅಖಿಳಾಸ್ತ್ರ ವಿಶಾರದನಪ್ಪನುಂ ಗೆಲಲ್ಕರಿಯನುಂ ಒಂದಿ ಬಾರದನುಂ ಅಂಕದ ಕರ್ಣನೆ (೯.೬೧) “ಎಲ್ಲಾ ಅಸ್ತಗಳಲ್ಲೂ ವಿಶಾರದನಾಗಿರುವವನೂ, ಜಯಿಸುವುದಕ್ಕೆ ಅಸಾಧ್ಯ(ನಾಗಿರುವವನೂ) ಮತ್ತು ನಮ್ಮ ಜೊತೆಯಲ್ಲಿ ಬಾರದವ (ನಾಗಿರುವವನೂ) ಪ್ರಸಿದ್ಧನಾದ ಕರ್ಣನೇ’
(೮)ನೇ ವಾಕ್ಯದಲ್ಲಿ ಮೂರು ಗುಣವಾಕ್ಯಗಳನ್ನು ಉಂ ಪ್ರತ್ಯಯದ ಮೂಲಕ ಒಟ್ಟಿಗೆ ಸೇರಿಸಿ ಹೇಳಲಾಗಿದೆ. ಈ ಮೂರು ಗುಣವಾಕ್ಯಗಳಲ್ಲಿ ಮೊದಲನೆಯದು ಮಾತ್ರ ಅಪ್ಪನ್ ಕ್ರಿ ಯಾಪದದೊಂದಿಗೆ ಬಳಕೆಯಾಗಿದೆ. ಅದಿಲ್ಲದೆಯೂ (ಅಖಿಳಾಸ್ತ್ರ ವಿಶಾರದನುಂ ಕರ್ಣನೆ ಎಂಬುದಾಗಿ) ಈ ವಾಕ್ಯವನ್ನು ತಯಾರಿಸಲು ಸಾಧ್ಯವಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.
೧೧.೪ ಸಂಬಂಧ ವಾಕ್ಯಗಳ ರಚನೆ
ಹಳೆಗನ್ನಡದ ಸಂಬಂಧ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ಘಟಕಗಳು ಬಂದಿರುತ್ತ ವೆ. ಇವುಗಳಲ್ಲಿ ಒಂದು ಘಟಕ ಗೆ ಪ್ರತ್ಯಯದೊಂದಿಗೆ ಬರುತ್ತಿದ್ದು, ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತದೆ, ಮತ್ತು ಇನ್ನೊಂದು ಘಟಕ ಯಾವ ಪ್ರತ್ಯಯವೂ ಇಲ್ಲದೆ ಬರುತ್ತಿದ್ದು, ಅಂತಹ ವ್ಯಕ್ತಿ, ವಸ್ತು ಮೊದಲಾದುವುಗಳಿಗೆ ಸಂಬಂಧಿಸಿರುವಂತಹ ಬೇರೊಂದು ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುತ್ತದೆ.
ಇದಲ್ಲದೆ, ಇಂತಹ ಸಂಬಂಧ ವಾಕ್ಯಗಳಲ್ಲಿ ಸಾಮಾನ್ಯವಾಗಿ ಒಳ್ (ಉಳ್) ಕ್ರಿಯಾಪದದ ಒಂದು ರೂಪವೂ ಬರುತ್ತದೆ. ಈ ಕ್ರಿಯಾಪದವು ಸಂಬಂಧಿಸಿರುವ ವ್ಯಕ್ತಿಯ ಪುರುಷ-ಲಿಂಗ- ವಚನಗಳನ್ನು ಸೂಕ್ಷ್ಮವಾಗಿ ಸೂಚಿಸುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಬಂಧ ವಾಕ್ಯವನ್ನು ಪರಿಶೀಲಿಸಬಹುದು:
(೯ಕ) ಎನಗೆ ಆಯ್ವರ್ ಮಕ್ಕಳ್ ಒಳರ್ “ನನಗೆ ಐವರು ಮಕ್ಕಳು ಇದ್ದಾ ರೆ”
(೯ಕ)ದಲ್ಲಿ ಎನಗೆ ಘಟಕ ಆಡುಗನನ್ನೂ, ಅಯ್ತರ್ ಮಕ್ಕಳ್ ಘಟಕ ಆಡುಗನೊಂದಿಗೆ ಸಂಬಂಧಿಸಿರುವ ವ್ಯಕ್ತಿಗಳನ್ನೂ ಸೂಚಿಸುತ್ತವೆ. ಇಂತಹ ವಾಕ್ಯಗಳಲ್ಲಿ ಒಳ್ ಕ್ರಿಯಾಪದ ಬಾರದಿರಲೂ ಸಾಧ್ಯವಿದೆ.
(೯ಖ) ಎನಗೆ ನೀನೆ ಪತಿ “ನನಗೆ ನೀನೇ ಪತಿ’
೧೧.೫ ಇರುವಿಕೆಯ ವಾಕ್ಯಗಳು
ಸಂಬಂಧ ವಾಕ್ಯಗಳ ಹಾಗೆ ಇರುವಿಕೆಯ ವಾಕ್ಯಗಳಲ್ಲೂ ಮುಖ್ಯವಾಗಿ ಎರಡು ಘಟಕಗಳು ಮತ್ತು ಒಳ್ (ಉಳ್) ಕ್ರಿಯಾಪದ ಬಳಕೆಯಾಗುತ್ತವೆ. ಇವುಗಳಲ್ಲಿ ಬರುವ ಎರಡು ಘಟಕಗಳಲ್ಲಿ ಒಂದು ಇರುವಿಕೆಯ ಜಾಗವನ್ನು ಸೂಚಿಸುತ್ತಿ ದ್ದು, ಒಳ್ ಪ್ರತ್ಯಯದೊಂದಿಗೆ ಬರುತ್ತದೆ:
(೧೦ಕ) ಮೇರುವ ಪೊನ್ ಭಂಡಾರದೊಳ್ ಉಂಟು “ಮೇರುಪರ್ವತದ ಚಿನ್ನ ಭಂಡಾರದಲ್ಲಿ ಇದೆ’
(೧೦ಖ) ಅಡವಿಗಳೊಳ್ ಪಣ್ಬಲಂ ಒಳವು “ಕಾಡುಗಳಲ್ಲಿ ಹಣ್ಣುಹಂಪಲುಗಳು ಇವೆ’
ಇಂತಹ ವಾಕ್ಯಗಳಲ್ಲಿ ಒಳ್ (ಉಳ್) ಕ್ರಿಯಾಪದವನ್ನು ಬಳಸದೆಯೂ ಇರಲು ಸಾಧ್ಯವಿದೆ ಎಂಬುದನ್ನು ಕೆಳಗೆ ಕೊಟ್ಟಿರುವ (೧೦ಗ) ವಾಕ್ಯದಲ್ಲಿ ಕಾಣಬಹುದು:
(೧೦ಗ) ಎಮ್ಮ ಮನೆಯೊಳ್ ಆನುಂ ಎಮ್ಮ ಧರ್ಮಪತ್ನಿಯುಂ ಮಗನುಂ ಮಗಳುಂ ಇಂತೀ ನಾಲ್ವರೆ ಮಾನಸರ್ “ನಮ್ಮ ಮನೆಯಲ್ಲಿ ನಾನು, ನನ್ನ ಹೆಂಡತಿ, ಮಗ, ಮಗಳು, ಹೀಗೆ ನಾಲ್ಕು ಜನರು ಮಾತ್ರ (ಇದ್ದಾರೆ)’
ಹಳೆಗನ್ನಡದಲ್ಲಿ ಒಳ್ (ಉಳ್) ಕ್ರಿಯಾಪದದ ಅರ್ಥದಲ್ಲೇ ಬಳಕೆಯಾಗುವ ಇರ್ ಎಂಬ ಇನ್ನೊಂದು ಕ್ರಿಯಾಪದವೂ ಇದೆ. ಈ ಎರಡು ಕ್ರಿಯಾಪದಗಳ ನಡುವಿನ ಮುಖ್ಯ ವ್ಯತ್ಯಾಸವೇನೆಂದರೆ, ಒಳ್ ಕ್ರಿಯಾಪದದೊಂದಿಗೆ ಸಮಯವನ್ನು ಸೂಚಿಸುವ ಪ್ರತ್ಯಯಗಳು ಬರುವುದಿಲ್ಲ, ಆದರೆ ಇರ್ ಕ್ರಿಯಾಪದದೊದಿಗೆ ಹಿಂದಿನ ಸಮಯವನ್ನು ಸೂಚಿಸುವ ದ್ ಪ್ರತ್ಯಯ ಮತ್ತು ಮುಂದಿನ (ಇಲ್ಲವೇ ಈಗಿನ) ಸಮಯವನ್ನು ಸೂಚಿಸುವ ಪ್ ಪ್ರತ್ಯಯ ಇವೆರಡೂ ಬರುತ್ತವೆ.
(೧೧ಕ) ಅನಿಬರುಂ ಮೌನವ್ರತದೆ ಇರ್ದರ್ “ಅಷ್ಟು ಮಂದಿಯೂ ಮೌನವಾಗಿದ್ದರು’ (೧೧ಖ) ಕುಡಲ್ ಇರ್ಪಂ ಬಲದೇವನೆನ್ನನುಜೆಯಂ ದುರ್ಯೋಧನಂಗೆ “ಬಲರಾಮನು ನನ್ನ ತಂಗಿಯನ್ನು ದುರ್ಯೋಧನನಿಗೆ ಕೊಡಲಿದ್ದಾನೆ’ (೧೧ಗ) ಪಿರಿದುಂ ಪೊಟ್ಟು ತಡೆದಿರ್ಪೆವು “ಬಹಳ ಹೊತ್ತು ತಡೆದಿದ್ದೆ ಅವೆ”
ಈ ಕಾರಣಕ್ಕಾಗಿ, ಹಳೆಗನ್ನಡದಲ್ಲಿ ಇರ್ ಕ್ರಿಯಾಪದವಿರುವ ವಾಕ್ಯಗಳನ್ನು (ಅವು ಇರುವಿಕೆಯನ್ನು ಸೂಚಿಸುತ್ತಿವೆಯಾದರೂ) ಕ್ರಿಯಾವಾಕ್ಯಗಳೆಂದು, ಮತ್ತು ಒಳ್ ಕ್ರಿಯಾಪದವಿರುವ ವಾಕ್ಯಗಳನ್ನು ವಿಷಯವಾಕ್ಯಗಳೆಂದು ಪರಿಗಣಿಸಲು ಸಾಧ್ಯವಿದೆ.
ಈ ವಿಷಯದಲ್ಲಿ ಹೊಸಗನ್ನಡ ಹಳೆಗನ್ನಡಕ್ಕಿಂತ ಭಿನ್ನವಾಗಿದೆಯೆಂಬುದನ್ನು ಗಮನಿಸಬಹುದು. ಹೊಸಗನ್ನಡದಲ್ಲಿ ಇರು ಕ್ರಿಯಾಪದವೇ ಇಂತಹ ಇರುವಿಕೆಯ ವಾಕ್ಯಗಳಲ್ಲಿ ಬಳಕೆಯಾಗುತ್ತಿದ್ದು, ಅದಕ್ಕೆ ಹಿಂದಿನ, ಮುಂದಿನ ಮತ್ತು ಈಗಿನ ಎಂಬುದಾಗಿ ಮೂರು ರೀತಿಯ ಸಮಯಗಳನ್ನು ಸೂಚಿಸುವ ಕ್ರಿಯಾರೂಪಗಳಿವೆ:
(೧೨ಕ) ನಾನು ನಿನ್ನೆ ಮನೆಯಲ್ಲೇ ಇದ್ದೆ (೧೨ಖ) ನಾನು ನಾಳೆ ಮನೆಯಲ್ಲೇ ಇರುತ್ತೇನೆ (೧೨ಗ) ನಾನು ಈಗ ಮನೆಯಲ್ಲೇ ಇದ್ದೇನೆ
ಆದರೆ, ಹಳೆಗನ್ನಡದಲ್ಲಿ ಇರ್ ಕ್ರಿಯಾಪದಕ್ಕೆ ಎರಡು ಸಮಯಗಳನ್ನು ಸೂಚಿಸುವ ಕ್ರಿಯಾರೂಪಗಳು ಮಾತ್ರ ಇವೆ; ಹಾಗಾಗಿ, ಮುಂದಿನ ಸಮಯವನ್ನು ಸೂಚಿಸುವ ಇರ್ಪನ್, ಇರ್ಪೆನ್ ಮೊದಲಾದ ರೂಪಗಳನ್ನೇ ಈಗಿನ ಸಮಯವನ್ನು ಸೂಚಿಸುವುದಕ್ಕಾಗಿಯೂ ಬಳಸಲಾಗುತ್ತದೆ (೧೧ಗ ನೋಡಿ).
ಆದರೆ ಮೇಲೆ ಸೂಚಿಸಿದ ಹಾಗೆ, ಇರ್ ಎಂಬುದಕ್ಕಿಂತ ಭಿನ್ನವಾದ ಒಳ್ (ಉಳ್) ಎಂಬ ಬೇರೊಂದು ಕ್ರಿಯಾಪದವೂ ಹಳೆಗನ್ನಡದಲ್ಲಿ ಬಳಕೆಯಾಗುವುದಾದ ಕಾರಣ, ಘಟನೆ ಮತ್ತು ಸಂಗತಿಗಳ ನಡುವಿನ ವ್ಯತ್ಯಾಸವನ್ನು ಈ ಕ್ರಿಯಾಪದಗಳಲ್ಲಿನ ವ್ಯತ್ಯಾಸವೇ ಸೂಚಿತ್ತದೆಯೆಂದು ಹೇಳುವ ಸಾಧ್ಯತೆಯಿದೆ. ಆದರೆ, ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸುವ ಅವಶ್ಯಕತೆಯಿದೆ.
೧೧.೬ ಸಂಸ್ಕೃತದ ವಿಷಯವಾಕ್ಯಗಳು
ಹಳೆಗನ್ನಡದ ಹಾಗೆ ಸಂಸ್ಕೃತದಲ್ಲೂ ಮೂರು ರೀತಿಯ ವಿಷಯವಾಕ್ಯಗಳನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು:
(೧೩ಕ) ಅಹಂ ವೃದ್ಧೋಸ್ಮಿ “ನಾನು ಮುದುಕ’
(೧೩ಖ) ತಸ್ಯ ಭೂಪತೇಃ ಚತ್ವಾರಃ ಪುತ್ರಾಃ ಸಂತಿ “ಆ ರಾಜನಿಗೆ ನಾಲ್ವರು ಹುಡುಗರು ಇದ್ದಾ ರೆ’
(೧೩ಗ) ಅಸ್ತಿ ಗಂಗಾತೀರೇ ಪಾಟಲಿಪುತ್ರ ನಾಮಧೇಯಂ ನಗರಂ “ಗಂಗಾನದಿಯ ದಡದಲ್ಲಿ ಪಾಟಲಿಪುತ್ರವೆಂಬ ಹೆಸರಿನ ನಗರವಿದೆ’
ಸಂಬಂಧಿಸುವ ವಾಕ್ಯಗಳಲ್ಲಿ ಹಳೆಗನ್ನಡದ ಗೆ (ಚತುರ್ಥೀ) ಪ್ರತ್ಯಯದ ಬದಲು ಸಂಸ್ಕ ತದಲ್ಲಿ ಷಷ್ಠೀ ವಿಭಕ್ತಿಯ ಬಳಕೆಯಾಗುವುದೆಂಬುದನ್ನು (೧೩ಖ)ದಲ್ಲಿ ಕಾಣಬಹುದು. ಈ ವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು ಬಳಸದೆಯೂ ಇರಲು ಸಾಧ್ಯವಿದೆ (೧೪ಕ-ಗ ನೋಡಿ). ಆದರೆ, ಹಳೆಗನ್ನಡದ ಹಾಗೆ ಸಂಸ್ಕೃತದ ಗುಣವಾಕ್ಯಗಳಲ್ಲಿ ಆಡುಗ ಮತ್ತು ಕೇಳುಗರನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳು ಬರುವುದಿಲ್ಲ |
(೧೪ಕ) ವೃದ್ಧೊ ೀಹಂ “ನಾನು ಮುದುಕ’
(೧೪ಖ) ತಸ್ಯ ಭೂಪತೇಃ ಚತ್ವಾರಃ ಪುತ್ರಾಃ “ಆ ರಾಜನಿಗೆ ನಾಲ್ವರು ಹುಡುಗರು’
(೧೪ಗ) ಗಂಗಾತೀರೇ ಪಾಟಲಿಪುತ್ರ ನಾಮಧೇಯಂ ನಗರಂ “ಗಂಗಾನದಿಯ ದಡದಲ್ಲಿ ಪಾಟಲಿಪುತ್ರವೆಂಬ ಹೆಸರಿನ ನಗರ’
(೧೪ಕ) ವಾಕ್ಯದಲ್ಲಿ ಆಡುಗನನ್ನು ಸೂಚಿಸುವ ಅಹಂ “ನಾನು’ ಘಟಕ ಬಂದಿದೆಯಾದರೂ, ಗುಣಧರ್ಮವನ್ನು ಸೂಚಿಸುವ ವೃದ್ಧ ಪದದೊಂದಿಗೆ ಉತ್ತಮ ಪುರುಷದ ಆಖ್ಯಾತ ಪ್ರತ್ಯಯ ಬಂದಿಲ್ಲ ಎಂಬುದನ್ನು ಗಮನಿಸಬಹುದು.
೧೧.೬.೧ ಗುಣವಾಕ್ಯಗಳಲ್ಲಿ ವ್ಯತ್ಯಾಸ
ಹಳೆಗನ್ನಡದ ಗುಣವಾಕ್ಯಗಳಿಗೂ ಸಂಸ್ಕೃತದ ಗುಣವಾಕ್ಯಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಸಂಸ್ಕೃತದ ಗುಣವಾಕ್ಯಗಳಲ್ಲಿ, ಹಳೆಗನ್ನಡದಲ್ಲಿರುವ ಹಾಗೆ, ಘಟಕ ಮತ್ತು ಆಖ್ಯಾತಗಳೆಂಬ ಭೇದವಿಲ್ಲ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳನ್ನು ಗಮನಿಸಬಹುದು:
(೧೫ಕ) ಇದಂ ಮಮ ಗೃಹಂ “ಇದು ನನ್ನ ಮನೆ’
(೧೫ಖ) ಇಯಮ್ ಗೌಃ ಶುಕ್ಲಾ “ಈ ದನ ಬಿಳಿ’
(೧೫ಗ) ಸರ್ವಂ ಖಲ್ವಿದಂ ಬ್ರಹ್ಮ “ಇದೆಲ್ಲವೂ ಬ್ರಹ್ಮ’
ಮೇಲೆ ಕೊಟ್ಟಿರುವ (೧೫ಕ-ಗ) ವಾಕ್ಯಗಳಲ್ಲಿ ಎರಡೆರಡು ವಾಕ್ಯಾಂಶಗಳಿದ್ದು, ಇವುಗಳಲ್ಲಿ ಯಾವುದು ಒಬ್ಬ ವ್ಯಕ್ತಿ ಇಲ್ಲವೇ ವಸ್ತುವನ್ನು ಸೂಚಿಸುವ ಘಟಕ, ಮತ್ತು ಯಾವುದು ಅದರ ಗುಣಧರ್ಮವನ್ನು ಸೂಚಿಸುವ “ಆಖ್ಯಾತ ಪದ’ ಎಂಬುದಾಗಿ ನಿರ್ಧರಿಸುವುದು ಕಷ್ಟ.
ಹಳೆಗನ್ನಡದ ಗುಣವಾಕ್ಯಗಳಲ್ಲಿ ಸಾಮಾನ್ಯವಾಗಿ ಮೊದಲು ಬರುವ ವಾಕ್ಯಾಂಶವನ್ನು ಆ ವಾಕ್ಯದ ಘಟಕವೆಂದು, ಮತ್ತು ಅದರ ಅನಂತರ ಬರುವ ವಾಕ್ಯಾಂಶವನ್ನು ಆಖ್ಯಾತ ಪದವೆಂದು ಪರಿಗಣಿಸಲು ಸಾಧ್ಯವಿದೆ. ಇದಲ್ಲದೆ, ಆಡುಗ ಮತ್ತು ಕೇಳುಗರನ್ನು ಸೂಚಿಸುವ ಆಖ್ಯಾತ ಪ್ರತ್ಯಯಗಳ ಬಳಕೆಯಾಗಿರುವಲ್ಲಿ, ಅಂತಹ ಪ್ರತ್ಯಯವಿರುವ ವಾಕ್ಯಾಂಶವೇ ಆಖ್ಯಾತ ಪದ ಎಂದು ಹೇಳಲು ಸಾಧ್ಯವಿದೆ.
ಆದರೆ, ಸಂಸ್ಕೃತದ ಗುಣವಾಕ್ಯಗಳಲ್ಲಿ ಈ ರೀತಿ ಘಟಕ ಮತ್ತು ಆಖ್ಯಾತ ಪದಗಳ ನಡುವೆ ವ್ಯತ್ಯಾಸವಿಲ್ಲ. ಈ ವಿಷಯವನ್ನು ವೇದ, ಉಪನಿಷತ್ತು ಮೊದಲಾದವುಗಳನ್ನು ಇಂಗ್ಲಿಷ್, ಫ್ರೆಂಚ್, ಜರ್ಮನ್ ಮೊದಲಾದ ಪಾಶ್ಚಾತ್ಯ ಭಾಷೆಗಳಿಗೆ ಅನುವಾದಿಸಲು ನಡೆಸಿರುವ ವಿದ್ವಾಂಸರ ಪ್ರಯತ್ನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.
ಈ ಪಾಶ್ಚಾತ್ಯ ಭಾಷೆಗಳ ಗುಣವಾಕ್ಯಗಳಲ್ಲಿ, ಹಳೆಗನ್ನಡದ ಹಾಗೆ, ಘಟಕ ಮತ್ತು ಆಖ್ಯಾತ ಪದಗಳ ನಡುವೆ ವ್ಯತ್ಯಾಸವಿದೆ. ವಾಕ್ಯದಲ್ಲಿ ಮೊದಲು ಬರುವುದು ಘಟಕ ಮತ್ತು ಅನಂತರ ಬರುವುದು ಆಖ್ಯಾತ ಪದ. ಇದಲ್ಲದೆ, ಈ ಎರಡು ವಾಕ್ಯಾಂಶಗಳ ನಡುವೆ (ಹಳೆಗನ್ನಡದಲ್ಲಿರುವ ಹಾಗೆ) ಅವುಗಳ ಸ್ವರೂಪದಲ್ಲೂ ವ್ಯತ್ಯಾಸಗಳಿವೆ.
ಆದರೆ, ಸಂಸ್ಕೃತದಲ್ಲಿ ಇಂತಹ ವ್ಯತ್ಯಾಸಗಳಿಲ್ಲ, ಮತ್ತು ಇಂತಹ ವಾಕ್ಯಗಳಲ್ಲಿ ಬರುವ ವಾಕ್ಯಾಂಶಗಳ ಜಾಗವನ್ನು ಹೇಗೆ ಬೇಕಿದ್ದರೂ ಅದಲು ಬದಲು ಮಾಡುವ ಸ್ವಾತಂತ್ರ್ಯ ಸಂಸ್ಕೃತದಲ್ಲಿದೆ. ಹಾಗಾಗಿ, ಇಂತಹ ವಾಕ್ಯಗಳ ಎರಡು ವಾಕ್ಯಾಂಶಗಳಲ್ಲಿ ಯಾವುದನ್ನು ಘಟಕವೆಂಬುದಾಗಿ ಅನುವಾದಿಸಬೇಕು, ಮತ್ತು ಯಾವುದನ್ನು ಆಖ್ಯಾತ ಪದವೆಂಬುದಾಗಿ ಅನುವಾದಿಸಬೇಕು ಎಂಬುದು ಈ ವಿದ್ವಾಂಸರಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ.
ಸಂಸ್ಕೃತದ ಈ ವೈಶಿಷ್ಟ್ಯವನ್ನು ಗೈನ್-ಎಕ್ತುಂಡ್ (೧೯೭೮) ಅವರು ಕೂಲಂಕಶವಾಗಿ ಚರ್ಚಿಸಿದ್ದಾ ರೆ. ಕೆಲವರು ಅನುವಾದಕರು ಇಂತಹ ವಾಕ್ಯಗಳಲ್ಲೆ ಲ್ಲ ಎರಡನೆಯ ವಾಕ್ಯಾಂಶವೇ ಅಖ್ಯಾತ ಪದವೆಂಬುದಾಗಿ ಪರಿಗಣಿಸಿರುವರಾದರೆ, ಬೇರೆ ಕೆಲವರು ಎಲ್ಲೆಡೆಯಲ್ಲೂ ಮೊದಲನೆಯ ವಾಕ್ಯಾಂಶವನ್ನೇ ಆಖ್ಯಾತ ಪದವೆಂದು ಪರಿಗಣಿಸಿದ್ದಾರೆ. ಇನ್ನು ಕೆಲವರು ತಮ್ಮ ಅನುಕೂಲಕ್ಕೆ ಸರಿಯಾಗಿ (ಎಂದರೆ ತಾವು ಪ್ರತಿಪಾದಿಸುವ ತತ್ವಜ್ಞಾನಕ್ಕೆ ಅನುಕೂಲವಾಗುವಂತೆ) ಕೆಲವು ಕಡೆಗಳಲ್ಲಿ ಮೊದಲನೆಯ ವಾಕ್ಯಾಂಶವನ್ನೂ, ಬೇರೆ ಕೆಲವು ಕಡೆಗಳಲ್ಲಿ ಎರಡನೆಯ ವಾಕ್ಯಾಂಶವನ್ನೂ ಆಖ್ಯಾತ ಪದವೆಂಬುದಾಗಿ ಪರಿಗಣಿಸಿದ್ದಾರೆ.
ಉದಾಹರಣೆಗಾಗಿ, ಮೇಲೆ (೧೫ಗ)ದಲ್ಲಿ ಕೊಟ್ಟಿರುವ ಸರ್ವಂ ಖಲ್ವಿದಂ ಬ್ರಹ್ಮ ಎಂಬ ವಾಕ್ಯವನ್ನು ಗೈನ್-ಎಕ್ಲುಂಡ್ (೧೯೭೮) ಅವರು ಪರಿಶೀಲಿಸಿದ ಹದಿನೈದು ಅನುವಾದಗಳಲ್ಲಿ ಹತ್ತು ಅನುವಾದಗಳು “ಇದೆಲ್ಲವೂ ಬ್ರಹ್ಮ’ ಎಂಬುದಾಗಿ, ಎಂದರೆ ಬ್ರಹ್ಮ ಪದವನ್ನು ಆಖ್ಯಾತ ಪದವೆಂಬುದಾಗಿ ಪರಿಗಣಿಸಿ ಅನುವಾದಿಸಿವೆ; ಆದರೆ, ಉಳಿದ ಐದು ಅನುವಾದಗಳು “ಬ್ರಹ್ಮನೇ ಇದೆಲ್ಲ’ ಎಂಬುದಾಗಿ, ಎಂದರೆ (ಸರ್ವಂ ಖಲು) ಇದಂ ಎಂಬುದನ್ನು ಆಖ್ಯಾತ ಪದವೆಂಬುದಾಗಿ ಪರಿಗಣಿಸಿ ಅನುವಾದಿಸಿವೆ.
೧೧.೬.೨ ಗುಣವಾಕ್ಯ ಮತ್ತು ನಾಮಪದಕಂತೆ
ಸಂಸ್ಕೃತದ ನಾಮಪದಕಂತೆಗಳಲ್ಲೂ ಇಂತಹದೇ ಸಮಸ್ಯೆಯಿದೆ. ಅವುಗಳಲ್ಲಿ ಎರಡು ಪದಗಳಿದ್ದು, ಒಂದು ಇನ್ನೊಂದರ ಗುಣಧರ್ಮವನ್ನು ಸೂಚಿಸುತ್ತಿದೆಯಾದರೆ, ಯಾವ ಪದ ಗುಣಧರ್ಮವನ್ನು ಸೂಚಿಸುವ “ವಿಶೇಷಣ’ ಪದ, ಮತ್ತು ಯಾವುದು ಅಂತಹ ಗುಣಧರ್ಮವಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವ “ವಿಶೇಷ್ಯ’ ಪದ ಎಂಬುದಾಗಿ ನಿರ್ಧರಿಸುವುದು ಬಹಳ ಕಷ್ಟ.
ಉದಾಹರಣೆಗಾಗಿ, ಕೃಷ್ಣಃ ಸರ್ಪಃ ಎಂಬ ಪದಕಂತೆಯನ್ನು “ಕಪ್ಪಾಗಿರುವ ಸರ್ಪ’ ಎಂದಾಗಲಿ, ಇಲ್ಲವೇ “ಸರ್ಪವಾಗಿರುವ ಕಪ್ಪು (ಪ್ರಾಣಿ)’ ಎಂದಾಗಲಿ ಅನುವಾದಿಸಲು ಸಾಧ್ಯವಿದ್ದು, ಆ ಎರಡು ಪದಗಳಲ್ಲಿ ಯಾವುದು ವಿಶೇಷ್ಯ, ಮತ್ತು ಯಾವುದು ವಿಶೇಷಣ ಎಂಬುದನ್ನು ನಿರ್ಧರಿಸುವುದು ಕಷ್ಟ (ಜೋಶಿ ೧೯೬೭ ನೋಡಿ). ಈ ಪದಕಂತೆಯನ್ನು ಸರ್ಪಃ ಕೃಷ್ಣಃ ಎಂಬುದಾಗಿಯೂ ಬದಲಾಯಿಸಲು ಸಾಧ್ಯವಿದ್ದು, ಹೀಗೆ ಮಾಡುವುದರಿಂದ ಈ ಪದಕಂತೆಯ ಅರ್ಥದಲ್ಲಿ ಬದಲಾವಣೆಯಾಗಬೇಕೆಂದೇನೂ ಇಲ್ಲ. ಇಂತಹ ಪದಕಂತೆಗಳ ಎರಡು ಅಂಗಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲದಿರುವುದು, ಮತ್ತು ಅವುಗಳನ್ನು ಯಾವ ಅನುಕ್ರಮದಲ್ಲೂ ಬಳಸಲು ಸಾಧ್ಯ ಎಂಬುದೇ ಇಲ್ಲಿ ಸಮಸ್ಯೆಯಾಗಿದೆ.
ಇದಲ್ಲದೆ, ಸಂಸ್ಕೃತದಲ್ಲಿ ಒಂದು ಪದಕಂತೆಯ ಎರಡು ಅಂಗಗಳ ನಡುವೆ ಆ ಪದಕಂತೆಗೆ ಸಂಬಂಧಿಸದ ಬೇರೆ ಪದಗಳನ್ನು ಇರಿಸಿ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ಸರ್ಪಃ ಮೃತಃ ಕೃಷ್ಣ ಃ ಎಂಬುದು “ಕಪ್ಪು ಹಾವು ಸತ್ತಿ ತು’ ಎಂಬ ಅರ್ಥದ ಒಂದು ವಾಕ್ಯವಾಗಿರಲು ಸಾಧ್ಯವಿದ್ದು ಕೃಷ್ಣಃ ಸರ್ಪಃ ಎಂಬ ಪದಕಂತೆಯ ಹೊರಗಿರಬೇಕಾದ ಮೃತಃ ಪದ ಅದರೊಳಗೆ ಬಂದಿರಲು ಸಾಧ್ಯವಾಗಿದೆ.
ಹಳೆಗನ್ನಡಕ್ಕೂ ಸಂಸ್ಕೃತಕ್ಕೂ ನಡುವೆ ಇಂತಹ ವಾಕ್ಯಗಳ ರಚನೆಯಲ್ಲಿ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ಹಳೆಗನ್ನಡದಲ್ಲಿ ಪದಕಂತೆ ಮತ್ತು ಗುಣವಾಕ್ಯಗಳ ನಡುವೆ ವ್ಯತ್ಯಾಸವಿದೆ, ಆದರೆ ಸಂಸ್ಕೃತದಲ್ಲಿ ಇಲ್ಲ. ಕ್ರಿಯಾಪದಗಳ ಸಂಬಂಧಿಸುವ ರೂಪಗಳನ್ನು ಬಳಸುವಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತ ದೆಃ
(೧೬ಕ) ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನ ಜನ್ನವಿರಂಗಳ್ “ಶ್ರೇಷ್ಠವಾದ ಅಗ್ರಹಾರಗಳ ಮಹಾಜನಗಳು ಕೊಟ್ಟಂತಹ ಚಿನ್ನದ ಯಜ್ಞೋ ಪವೀತಗಳು’
(೧೬ಖ) ತಿರಸಮಿದು ಧರಣೀಂದ್ರನ ಕೊಟ್ಟುದು “ಈ ಮೂರೆಳೆಯ ಹಾರ ಧರಣೀಂದ್ರನೆಂಬ (ಸರ್ಪರಾಜನು) ಕೊಟ್ಟುದು’
(೧೬ಕ) ಒಂದು ಪದಕಂತೆ ಮತ್ತು (೧೬ಖ) ಒಂದು ವಿಷಯ ವಾಕ್ಯ (ಗುಣವಾಕ್ಯ). (೧೬ಕ)ದಲ್ಲಿ ಕುಡು ಕ್ರಿಯಾಪದದ ಸಂಬಂಧಿಸುವ ರೂಪ(ಕೃದಂತ)ವಾದ ಕೊಟ್ಟ ಬಂದಿದೆ, ಮತ್ತು (೧೬ಖ)ದಲ್ಲಿ ಅದೇ ಕ್ರಿಯಾಪದದ ನಾಮರೂಪವಾದ ಕೊಟ್ಟುದು ಬಂದಿದೆ.
ಆದರೆ, ಸಂಸ್ಕೃತದಲ್ಲಿ ಈ ರೀತಿ ಪದಕಂತೆ ಮತ್ತು ಗುಣವಾಕ್ಕಗಳ ನಡುವೆ ವ್ಯತ್ಯಾಸವನ್ನು ಸಾಧಿಸಲು ಸಾಧ್ಯವಾಗದು. ಮೇಲೆ ಗುಣವಾಕ್ಯಗಳಿಗೆ ಉದಾಹರಣೆಗಳಾಗಿ ಕೊಟ್ಟಿರುವ ವಾಕ್ಯಗಳೆಲ್ಲ ಪದಕಂತೆಗಳಾಗಿರಲೂ ಸಾಧ್ಯವಿದೆ.
(೧೭ಕ) ಸರ್ಪಃ ಮೃತಃ “ಸರ್ಪ ಸತ್ತುದು’ (೧೭ಖ) ಸರ್ಪಃ ಮೃತಃ ಅತ್ರಾಸ್ತಿ “ಸತ್ತ ಸರ್ಪ ಇಲ್ಲಿ ದೆ’
(೧೭ಕ)ದಲ್ಲಿ ಸರ್ಪಃ ಮೃತಃ ಎಂಬುದು ಒಂದು ಗುಣವಾಕ್ಯವಾಗಿ ಬಳಕೆಯಾಗಿದೆ; ಆದರೆ (೧೭ಖ)ದಲ್ಲಿ ಅದೇ ಬೇರೊಂದು ವಿಷಯವಾಕ್ಯದ ವಾಕ್ಯಾಂಶವಾಗಿ, ಎಂದರೆ ಪದಕಂತೆಯಾಗಿ ಬಳಕೆಯಾಗಿದೆ. ಮೇಲೆ (೪.೨.೨)ರಲ್ಲಿ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಕೃದಂತಗಳಿಗೂ ಕೃಲ್ಲಿಂಗಗಳಿಗೂ ನಡುವೆ ವ್ಯತ್ಯಾಸವಿದೆ, ಆದರೆ ಸಂಸ್ಕೃತದಲ್ಲಿ ಅಂತಹ ವ್ಯತ್ಯಾಸವಿಲ್ಲ ಎಂಬುದೇ ಈ ರೀತಿ ಗುಣವಾಕ್ಯ ಮತ್ತು ಪದಕಂತೆಗಳು ಹಳೆಗನ್ನಡದಲ್ಲಿ ಭಿನ್ನವಾಗಿದ್ದು ಸಂಸ್ಕೃತದಲ್ಲಿ ಭಿನ್ನವಾಗಿಲ್ಲದಿರುವುದಕ್ಕೆ ಮುಖ್ಯ ಕಾರಣ.
೧೧.೭ ಸಾರಾಂಶ
ವಿಷಯ ವಾಕ್ಯಗಳ ರಚನೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಹಲವು ಮೂಲಭೂತವಾದ ವ್ಯತ್ಯಾಸಗಳಿವೆ. ಇವನ್ನು ಗಮನಿಸದ ಕಾರಣ, ಹಳೆಗನ್ನಡದ ವೈಯಾಕರಣಿಗಳಿಗೆ ಹಳೆಗನ್ನಡದ ವಿಷಯವಾಕ್ಯಗಳನ್ನು ಸ್ಪಷ್ಟವಾಗಿ ವರ್ಣಿಸಲು ಸಾಧ್ಯವಾಗಿಲ್ಲ - ನಿಜಕ್ಕೂ ಹಳೆಗನ್ನಡದ ವಿಷಯ ವಾಕ್ಯಗಳು ಎಂತಹವು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಿದ್ದ ಲ್ಲಿ ಇನ್ನೂ ಬಹಳಷ್ಟು ಸಂಶೋಧನೆಗಳನ್ನು ನಡೆಸುವ ಅವಶ್ಯಕತೆಯಿದೆ.