Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12
ಅಧ್ಯಾಯ ೧೦ — ವಾಕ್ಯಗಳ ಜೋಡಣೆ
ವಾಕ್ಯಗಳ ಜೋಡಣೆ
೧೦.೧ ಪೀಠಿಕೆ
ಅರ್ಥದಲ್ಲಿ ಒಂದಕ್ಕೊಂದು ಸಂಬಂಧಿಸಿರುವ ಎರಡು ಅಥವಾ ಜಾಸ್ತಿ ವಾಕ್ಯಗಳನ್ನು ಒಟ್ಟು ಸೇರಿಸಿ ಒಂದೇ ವಾಕ್ಯವನ್ನಾಗಿ ಮಾಡಿ ಹೇಳಲು ಭಾಷೆಗಳಲ್ಲಿ ಹಲವು ರೀತಿಯ ವಿಧಾನಗಳು ಬಳಕೆಯಲ್ಲಿರುತ್ತವೆ. ಈ ವಿಷಯದಲ್ಲೂ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ.
ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಪದಗಳನ್ನು ಬಳಸಬಹುದು, ಇಲ್ಲವೇ ಪ್ರತ್ಯಯಗಳನ್ನು ಬಳಸಬಹುದು. ಉದಾಹರಣೆಗಾಗಿ, “ಅಥವಾ’ ಎಂಬ ಅರ್ಥವನ್ನು ಕೊಡಲು ಹಳೆಗನ್ನಡದಲ್ಲಿ ಮೇಣ್ ಪದವನ್ನು ಬಳಸಲಾಗುತ್ತದೆ.
(೧ಕ) ಬಾಳ ದಿನೇಶ ಬಿಂಬದ ನೆಬಲ್ ಜಲದೊಳ್ ನೆಲೆಸಿತ್ತೊ ಮೇಣ್ ಫಣೀಂದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳ ರಶ್ಮಿ ಯೋ (೧.೯೬) “ಬಾಲಸೂರ್ಯಮಂಡಲದ ನೆಳಲು ನೀರಲ್ಲಿ ನೆಲೆಸಿದೆಯೋ ಅಥವಾ ನಾಗಲೋಕದಿಂದ ಭೇದಿಸಿಕೊಂಡು ಬಂದ ಹೆಡೆವಣಿಗಳ ಮಂಗಳ ಕಿರಣಗಳೋ’
ಆದರೆ, “ಮತ್ತು’ ಎಂಬರ್ಥವನ್ನು ಕೊಡಲು ಉಮ್ (ಅಮ್) ಪ್ರತ್ಯಯವನ್ನು ಬಳಸಲಾಗುತ್ತದೆ.
a ವ್
ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡೆದಿಲ್ಲದಿರೆನ್ (೨.೪೬ ವ) “ನಿನ್ನನ್ನು ಕೊಲ್ಲು ವಂತಹ ಒಬ್ಬ ಮಗನನ್ನೂ ಮತ್ತು ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದಿರುವುದಿಲ್ಲ’
(೧ಖ) ನಿನ್ನಂ ಕೊಲ್ಲನ್ನನೊರ್ವ ಮುಗನುಮುಂ ವಿಕ್ರವಾರ್ಜುನಂಗೆ ಎಡಿ
ಹಳೆಗನ್ನಡದಲ್ಲಿ ಸಾಮಾನ್ಯವಾಗಿ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಪದಗಳಿಗಿಂತಲೂ ಪ್ರತ್ಯಯಗಳನ್ನು ಬಳಸುವುದೇ ಜಾಸ್ತಿ. ಇದಲ್ಲದೆ, ಹಳೆಗನ್ನಡದ ಕ್ರಿಯಾಪದಗಳಿಗೆ ಕೆಲವು ವಿಶಿಷ್ಟವಾದ “ಜೋಡಿಸುವ’ ರೂಪಗಳಿದ್ದು, ಅವನ್ನೂ ಈ ರೀತಿ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಬಳಸಲಾಗುತ್ತದೆ.
(೨5) ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಂ (೫. ೨೦ವ) “ದಿವ್ಶ ರಥವನ್ನು ನಡೆಸಲು ದಾರುಕನೆಂಬ ಸಾರಥಿಯನ್ನು ಕೊಟ್ಟಾಗ’ (೨ಖ) ತಾಂ ಮುನ್ನ ತಂದ ಅರಗಿಣಿಯಂ ಕೊಟ್ಟು ಕೃತಾಂತನಂತ ರ್ಧಾನಕ್ಕೆ ಸಂದಂ
ಭ್ಯ pe) ಕೀಫೆ ಆಟೊ “ತಾನು ತಂದಿದ ಅರಗಿಣಿಯನ್ನು ಕೊಟ್ಟು ಯಮನು ಅದೃಶ್ಯನಾದನು ಎ
(೨ಗ) ಓಗರವೂಗಳ ಬಂಡನೆಯ್ದೆ ಪೀರುತ್ತೆ ಮಜುದುಂಬಿಗಳ್ ಒಡವಂದುವು (೧೧.೮೧) “ಮಿಶ್ರಹೂಗಳ ಮಕರಂದವನ್ನು ಪೂರ್ಣವಾಗಿ ಹೀರುತ್ತಾ ಮರಿದುಂಬಿಗಳು ಜೊತೆಯಲ್ಲೇ ಬಂದುವು’
ದಿವ್ಯರಥಮನೆಸಗುವಂ ಮತ್ತು ದಾರುಕನೆಂಬ ಸಾರಥಿಯನ್ ಈವನ್ ಎಂಬ ಎರಡು ವಾಕ್ಯಗಳನ್ನು (೨ಕ)ದಲ್ಲಿ ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಮೊದಲನೆಯ ವಾಕ್ಯದಲ್ಲಿ ಎಸಗು ಕ್ರಿಯಾಪದದ ಜೋಡಿಸುವ ರೂಪವಾದ ಎಸಗಲ್ ಎಂಬುದನ್ನು ಬಳಸಲಾಗಿದೆ.
ಇದೇ ರೀತಿಯಲ್ಲಿ (೨ಖ)ದಲ್ಲಿ ಕುಡು ಕ್ರಿಯಾಪದದ ಜೋಡಿಸುವ ರೂಪವಾಗಿರುವ ಕೊಟ್ಟು ಎಂಬುದನ್ನೂ, (೨ಗ)ದಲ್ಲಿ ಪೀರು ಕ್ರಿಯಾಪದದ ಜೋಡಿಸುವ ರೂಪವಾಗಿರುವ ಪೀರುತ್ತೆ ಎಂಬುದನ್ನೂ ಬಳಸಲಾಗಿದೆ.
ಇಂತಹ ಜೋಡಿಸುವ ಕ್ರಯಾರೂಪಗಳ ಬಳಕೆಯಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿದ್ದು, ಅವನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.
೧೦.೨ ಹಳೆಗನ್ನಡದ ಜೋಡಿಸುವ ಕ್ರಿಯಾರೂಪಗಳು
ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಹಲವು ರೀತಿಯ ಕ್ರಿಯಾರೂಪಗಳು ಬಳಕೆಯಾಗುತ್ತಿದ್ದು, ಅವು ಈ ವಾಕ್ಯಗಳು ತಿಳಿಸುವ ಘಟನೆಗಳ ನಡುವೆ ಕಾಣಿಸುವ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಸೂಚಿಸುತ್ತವೆ. ಇಂತಹ ಸಂಬಂಧಗಳು ಆ ಘಟನೆಗಳ ಸಮಯಕ್ಕೆ ಸಂಬಂಧಿಸಿರಬಹುದು (೧೦.೨.೧), ಇಲ್ಲವೇ ಅವುಗಳಲ್ಲಿ ಒಂದು ನಡೆಯದೆ ಇನ್ನೊಂದು ನಡೆದಿದೆ (ಕೆಳಗೆ ಕೊಟ್ಟಿರುವ (೬ಕ-ಗ) ವಾಕ್ಯಗಳನ್ನು ನೋಡಿ), ಅಥವಾ ಒಂದು ನಡೆಯುವುದು ಇನ್ನೊಂದು ನಡೆಯುವುದಕ್ಕೆ ಷರತ್ತು (೧೦.೨.೩) ಎಂಬಂತಹ ಬೇರೆ ರೀತಿಯವೂ ಇರಬಹುದು.
೧೦.೨.೧ ಸಮಯದ ಸೂಚನೆ
ಮೇಲೆ (೨ಕ-ಗ) ವಾಕ್ಯಗಳಲ್ಲಿ ಎಸಗಲ್, ಕೊಟ್ಟು, ಮತ್ತು ಪೀರುತ್ತೆ ಎಂಬುದಾಗಿ ಮೂರು ರೀತಿಯ ಜೋಡಿಸುವ ರೂಪಗಳು ಬಳಕೆಯಾಗಿವೆ. ಇವು ಎರಡು ಘಟನೆಗಳ ನಡುವೆ ಕಾಣಿಸಬಲ್ಲ ಮೂರು ರೀತಿಯ ಸಮಯ ಸಂಬಂಧಗಳನ್ನು ಸೂಚಿಸುತ್ತವೆ:
(ಕ) ಒಂದು ಘಟನೆ ಇನ್ನೊಂದು ಘಟನೆಯ ಅನಂತರ ನಡೆಯುವಂತಹದಿರಬಹುದು. ಇದನ್ನು ಸೂಚಿಸುವುದಕ್ಕಾಗಿ, ಹಳೆಗನ್ನಡದಲ್ಲಿ ಮೇಲೆ (೨ಕ)ದಲ್ಲಿ ಕಾಣಿಸಿದ ಹಾಗೆ, ಕ್ರಿಯಾಪದಕ್ಕೆ ನೇರವಾಗಿ ಅಲ್ ಪ್ರ ತ್ಯಯವನ್ನು ಸೇರಿಸಲಾಗುತ್ತದೆ (ಮಾಡಲ್, ಉಣಲ್, ಬರಲ್, ಕೊಲಲ್, ತರಲ್ ಮೊದಲಾದವು ಇಂತಹವೇ ಬೇರೆ ಕ್ರಿಯಾರೂಪಗಳು). ಇವುಗಳ ಬಳಕೆಯನ್ನು ಕೆಳಗಿನ ಉದಾಹರಣೆಗಳಲ್ಲೂ ಕಾಣಬಹುದು:
(೩ಕ) ಕೀಚಕಂ ತಮ್ಮಕ್ಕನಂ ಕಾಣಲ್ ಪೋದಂ “ಕೀಚಕನು ತನ್ನ ಅಕ್ಕನನ್ನು ಕಾಣಲು ಹೋದನು’ (೩ಖ) ಭೀಮನ ಮೊನೆಯಂ ಆರಯಲ್ ವನೀಪಕರನಟ್ಟಿ “ಭೀಮನ ಯುದ್ಧರೀತಿಯನ್ನು ಕಂಡುಹಿಡಿಯಲು ಗೂಢಚಾರರನ್ನು ಕಳಿಸಿ’
(೩ಗ) ಮಂತ್ರಮನುಪದೇಶಂ ಗೆಯ್ಯಲ್ ಬಂದೆವು “ಮಂತ್ರವನ್ನು ಉಪದೇಶ ಮಾಡಲು ಬಂದಿದ್ದೇವೆ’
(ಖ) ಒಂದು ಘಟನೆ ಇನ್ನೊಂದು ಘಟನೆಗಿಂತ ಮೊದಲೇ ನಡೆಯುವಂತಹದಿರಬಹುದು. ಇದನ್ನು ಸೂಚಿಸುವುದಕ್ಕಾಗಿ ಮೇಲೆ (೨ಖ)ದಲ್ಲಿ ಕಾಣಿಸಿದ ಹಾಗೆ, ಕ್ರಿಯಾಪದಕ್ಕೆ ನೇರವಾಗಿ ಇ ಪ್ರತ್ಯಯವನ್ನು ಸೇರಿಸಲಾಗುತ್ತದೆ (ಅಲ್ವಿ, ಓಡಿ, ನೆಲಸಿ, ಮೆಚ್ಚಿ ಮೊದಲಾದವು ಇಂತಹವೇ ಬೇರೆ ಕ್ರಿಯಾರೂಪಗಳು).
ಕೆಲವು ಕ್ರಿಯಾಪದಗಳಲ್ಲಿ ಈ ಪ್ರತ್ಯಯದೊಂದಿಗೆ ಹಿಂದಿನ ಸಮಯವನ್ನು ಸೂಚಿಸುವ ದ್ ಪ್ರತ್ಯಯವೂ ಬರುತ್ತದೆ, ಮತ್ತು ಈ ರೀತಿ ಹಿಂದಿನ ಸಮಯವನ್ನು ಸೂಚಿಸುವ ಪ್ರತ್ಯಯ : ಬಂದಿರುವಲ್ಲಿ ಜೋಡಿಸುವ ಪ್ರತ್ಯಯಕ್ಕೆ ಇ ಎಂಬುದರ ಬದಲು ಉ ಎಂಬ ರೂಪವಿದೆ (ಕೊಯ್ದು, ಗೆಯ್ದು, ತಿಂದು, ಕೊಂದು).
ಈ ನಿಯಮಕ್ಕೆ ಅಪವಾದವಾಗಿ, ಕೆಲವು ಕ್ರಿಯಾಪದಗಳೊಂದಿಗೆ ದ್ ಪ್ರತ್ಯಯ ಬಂದಿದೆಯಾದರೂ ಅದರ ಅನಂತರ ಈ ಪ್ರತ್ಯಯ ಇ ರೂಪದಲ್ಲೇ ಬರುತ್ತದೆ (ತೆರಳಿ, ನಾಂದಿ).
(೪ಕ) ಆ ಮಾತಿಂಗೆ ಮೆಚ್ಚಿ ಕುಂಭಸಂಭವಂ ಗಾಂಗೇಯನನಿಂತೆಂದಂ “ಆ ಮಾತಿಗೆ ಮೆಚ್ಚಿ ದ್ರೋಣನು ಭೀಷ್ಮನಿಗೆ ಹೀಗೆ ಹೇಳಿದನು’ (೪ಖ) ನೀಂ ಎನ್ನ ಕಾಳೆಗಮಂ ಪೆಜಗಿರ್ದು ನೋಡಿಂ “ನೀವು ನನ್ನ ಯುದ್ಧವನ್ನು ಹೊರಗೆ ಇದ್ದು ನೋಡಿ’ (೪ಗ) ವಿದುರಂ ರಥಾರೂಢನಾಗಿ ಪಾಂಚಳ ರಾಜಪುರಕ್ಕೆ ವಂದು ಪಾಂಡುಪುತ್ರರಂ ಕಂಡು… “ವಿದುರನು ರಥವನ್ನೇರಿ, ದೃಪದನ ಪಟ್ಟಣಕ್ಕೆ ಬಂದು, ಪಾಂಡವರನ್ನು ಕಂಡು…’
(ಗ) ಒಂದು ಘಟನೆ ಇನ್ನೊಂದು ಘಟನೆ ನಡೆಯುವ ಸಮಯದಲ್ಲೇನೇ ನಡೆಯುವಂತಹದಿರಬಹುದು. ಇದನ್ನು ಸೂಚಿಸುವುದಕ್ಕಾಗಿ ಕ್ರಿಯಾಪದಕ್ಕೆ ನೇರವಾಗಿ ಉತ್ತೆ ಪ್ರತ್ಯಯವನ್ನು ಸೇರಿಸಲಾಗುತ್ತದೆ (ಮಾಡುತ್ತೆ, ನೋಡುತ್ತೆ, ಕೇಳುತ್ತೆ, ತೆಗಳುತ್ತೆ, ಎನುತ್ತೆ, ಇಸುತ್ತೆ).
(೫ಕ) ಓಗರವೂಗಳ ಬಂಡನೆಯ್ದೆ ಪೀರುತ್ತೆ ಮಣುದುಂಬಿಗಳ್ ಒಡವಂದುವು “ಮಿಶ್ರಹೂಗಳ ಜೇನನ್ನು ಚನ್ನಾಗಿ ಹೀರುತ್ತಾ ಮರಿದುಂಬಿಗಳು ಜೊತೆಯಲ್ಲೇ ಬಂದುವು’
(೫ಖ) ಪೆಅಗೆ ಕೃತಕ ಕಿರಾತಂ (ವರಾಹನಂ) ಅಟ್ಟುತ್ತುಂ ಬಂದಂ “ಹಿಂದಿನಿಂದ ಕೃತಕ ಕಿರಾತನು (ಹಂದಿಯನ್ನು) ಅಟ್ಟುತ್ತಲೂ ಬಂದನು’
(೫ಗ) ವಎಂದೊರ್ವರೊರ್ವರ್ ಒಂದೊಂದನೆ ನುಡಿಯುತ್ತುಂ ಪೋಗೆ “ಎಂಬುದಾಗಿ ಒಬ್ಬೊಬ್ಬರು ಒಂದೊಂದನ್ನೂ ಆಡುತ್ತಾ ಹೋಗುತ್ತಿರುವಾಗ’
ಮೇಲೆ ವಿವರಿಸಿದಂತಹ ಮೂರು ಬಗೆಯ ಜೋಡಿಸುವ ಕ್ರಿಯಾರೂಪಗಳು ಮಾತ್ರವಲ್ಲದೆ, ಒಂದು ಘಟನೆ ನಡೆಯದೆ ಇನ್ನೊಂದು ಘಟನೆ ನಡೆದಿದೆ (ಇಲ್ಲವೇ ನಡೆಯಲಿದೆ) ಎಂಬುದನ್ನು
ಸೂಚಿಸುವುದಕ್ಕಾಗಿ ಕ್ರಿಯಾಪದಕ್ಕೆ ಅದೆ ಪ್ರತ್ಯಯವನ್ನು ಸೇರಿಸಿ ರಚಿಸಿರುವ ಇನ್ನೊಂದು ರೀತಿಯ (ಅಲ್ಲಗಳೆಯುವ) ಜೋಡಿಸುವ ಕ್ರಿಯಾರೂಪವೂ ಹಳೆಗನ್ನಡದಲ್ಲಿ ಬಳಕೆಯಲ್ಲಿದೆ (ಅಜುಯದೆ, ಪೋಗದೆ, ನಿಲ್ಲದೆ, ಉಣ್ಣದೆ, ತುಡದೆ).
(೬ಕ) ನಿಮ್ಮೊಡನೆ ಆಳೋಚಿಸದೆ ಎಮಗೆ ನೆಗಟಲ್ ಏಂ ನೆರವುಂಟೇ “ನಿನ್ನೊಡನೆ ಆಲೋಚಿಸದೆ ಮಾಡಲು ನಮಗೆ ಸಾಧ್ಯವೆ?’ (೬ಖ) ವಎತ್ತಲಣ್ಮದೆ ಕಾಲದೆಸೆಯೊಳ್ ಉಸಿರದೆ ಕುಳ್ಳಿರೆ “ಎಬ್ಬಿಸಲು ಇಷ್ಟಪಡದೆ ಕಾಲಿನ ಹತ್ತಿರ ಮಾತನಾಡದೆ ಕುಳಿತಿರಲು’ (೬ಗ) ಎವೆಯಿಕ್ಕದೆ ನೋಟ್ಪ್ಬ ಕಣ್ “ರೆಪ್ಪೆ ಹೊಡೆಯದೆ ನೋಡುವ ಕಣ್ಣು’
೧೦.೨.೨ ಬಳಕೆಗೆ ನಿರ್ಬಂಧ
ಈ ಜೋಡಿಸುವ ರೂಪಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳ ಮೂಲಕ ಜೋಡಿಸಿರುವ ವಾಕ್ಯಗಳೆರಡರಲ್ಲೂ ಸ್ವೇಚ್ಛೆಯಿಂದ ನಡೆಸುವಂತಹ ಘಟನೆಗಳನ್ನು ಸೂಚಿಸಲಾಗಿದೆಯಾದರೆ, ಆ ಎರಡು ಘಟನೆಗಳನ್ನೂ ಒಬ್ಬನೇ ವ್ಯಕ್ತಿ (ಮಾಡುಗ ಘಟಕ) ನಡೆಸುತ್ತಿರಬೇಕು ಎಂಬ ನಿರ್ಬಂಧವಿದೆ. ಎರಡು ವಾಕ್ಯಗಳಲ್ಲಿ ಒಂದು ಇಲ್ಲವೇ ಎರಡು ವಾಕ್ಯಗಳೂ ಈ ರೀತಿ ಸ್ವೇಚ್ಛೆಯಿಂದ ನಡೆಸುವ ಘಟನೆಯನ್ನು ಸೂಚಿಸುವುದಿಲ್ಲವಾದರೆ, ಅವುಗಳ ಮೇಲೆ ಈ ನಿರ್ಬಂಧವಿಲ್ಲ.
(೭) ಪ್ರಿಯನಂ ಕಂಡು ಸುಖಮಾದುದು “ಪ್ರಿಯನನ್ನು ನೋಡಿ (ನನಗೆ) ಸುಖವಾಯಿತು’
(೭)ನೇ ವಾಕ್ಯದಲ್ಲಿ ಮೊದಲನೆಯ ವಾಕ್ಯದ ಕರ್ತ ನಾನು (ಇಲ್ಲವೇ ಸುಖ ಎಂಬುದಕ್ಕಿಂತ ಭಿನ್ನವಾದ ಬೇರೊಂದು ಪದ) ಮತ್ತು ಎರಡನೆಯದರ ಕರ್ತ ಸುಖ. ಹೀಗಿದ್ದರೂ ಇಲ್ಲಿ ಕಂಡು ಕ್ರಿಯಾರೂಪದ ಬಳಕೆಯಾಗಿದೆ. ಎರಡನೆಯ ವಾಕ್ಯದಲ್ಲಿ ಸುಖ ಎಂಬುದು ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗುವ ಮಾಡುಗನಲ್ಲ ಎಂಬುದೇ ಇಂತಹ ಬಳಕೆ ಸಾಧ್ಯವಾಗಲು ಕಾರಣ.
ಹೊಸಗನ್ನಡದಲ್ಲೂ ಇಂತಹದೇ ನಿರ್ಬಂಧವಿದೆ ಎಂಬುದನ್ನು ಭಟ್ (೨೦೦೪:೧೯೬)ರಲ್ಲಿ ವಿವರಿಸಲಾಗಿದೆ.
೧೦.೨.೩ ಎ ಪ್ರತ್ಯಯದ ಬಳಕೆ
ಬೇರೆ ಬೇರೆ ವ್ಯಕ್ತಿಗಳು ಸ್ವೇಚ್ಛೆಯಿಂದ ನಡೆಸುವಂತಹ ಘಟನೆಗಳನ್ನು ಸೂಚಿಸುವ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಬೇರೆಯೇ ಒಂದು ಕ್ರಿಯಾರೂಪ ಬಳಕೆಯಲ್ಲಿದೆ. ಕ್ರಿಯಾಪದಕ್ಕೆ ಎ ಪ್ರತ್ಯಯವನ್ನು ಸೇರಿಸಿ ಈ ಕ್ರಿಯಾರೂಪವನ್ನು ತಯಾರಿಸಲಾಗುತ್ತದೆ (ಸುಡೆ, ಆಡೆ, ಆಗೆ, ಸೋಂಕೆ, ಪಿಡಿಯೆ).
ಈ ಕ್ರಿಯಾರೂಪದ ಮೂಲಕ ಸೂಚಿತವಾಗುವ ಘಟನೆ ಅದರ ಅನಂತರ ಸೂಚಿತವಾಗುವ ಘಟನೆಗಿಂತ ಮೊದಲೇ ನಡೆದಿದೆಯೆಂಬ ಅರ್ಥವೂ (ಎಂದರೆ ಇ (ಉ) ಪ್ರತ್ಯಯದ ಮೂಲಕ ರಚಿತವಾಗಿರುವ ಕ್ರಿಯಾರೂಪದ ಅರ್ಥವೂ) ಈ ಕ್ರಿಯಾರೂಪಕ್ಕಿದೆ.
(೮ಕ) ಪಾಂಡ್ಯನ್ ತೋಮರದಿಂದ ಇಡೆ ಗುರುತನೂಜಂ ಎಡೆಯೊಳ್ ಕಡಿದಂ “ಪಾಂಡ್ಯನು ತೋಮರದಿಂದ ಹೊಡೆದಾಗ ಅಶ್ವತ್ಥಾಮನು (ಅದನ್ನು) ಮಧ್ಯಮಾರ್ಗದಲ್ಲೇ ಕಡಿದನು’
(೮ಖ) ಪಾಂಚಾಳರಾಜತನೂಜೆವೆರಸು ಪಾಂಡವರ್ ಪೊಟಲಂ ಪೊಅಮಡೆ ಪುರಜನಂಗಳೆಲ್ಲ ತಮ್ಮೊಳಿಂತೆಂದರ್ “ಪಾಂಡವರು ದ್ರೌಪದಿಯೊಡನೆ ಪಟ್ಟಣವನ್ನು ಬಿಟ್ಟು ಹೋದಾಗ ಪಟ್ಟಣದ ಜನರೆಲ್ಲ ತಮ್ಮೊಳಗೆ ಹೀಗೆ ಹೇಳಿಕೊಂಡರು’
(೮ಕ)ದಲ್ಲಿ ತೋಮರದಿಂದ ಹೊಡೆಯುವ ಘಟನೆ, ಮತ್ತು ಅದನ್ನು ಮಾರ್ಗ ಮಧ್ಯದಲ್ಲೇ ಕಡಿಯುವ ಘಟನೆ - ಇವೆರಡೂ ಸ್ವೇಚ್ಛೆಯಿಂದ ನಡೆಸುವ ಘಟನೆಗಳು. ಇವನ್ನು ಬೇರೆ ಬೇರೆ ವ್ಯಕ್ತಿಗಳು (ಪಾಂಡ್ಯ ಮತ್ತು ಅಶ್ವತ್ಥಾಮ) ನಡೆಸುತ್ತಿರುವ ಕಾರಣ, ಈ ವಾಕ್ಯಗಳನ್ನು ಜೋಡಿಸಲು (೮ಕ)ದಲ್ಲಿ ಇಡು ಕ್ರಿಯಾಪದದ ಇಟ್ಟು ರೂಪದ ಬದಲು, ಇಡೆ ರೂಪವನ್ನು ಬಳಸಲಾಗಿದೆ. (೮ಖ)ದಲ್ಲೂ ಹೀಗೆಯೇ.
ಆದರೆ, ಎ ಪ್ರತ್ಯಯದಿಂದ ರಚಿತವಾಗಿರುವ ಈ ಕ್ರಿಯಾರೂಪವನ್ನು ಒಬ್ಬನೇ ವ್ಯಕ್ತಿ ಮಾಡುಗನಾಗಿ ನಡೆಸುವ ಎರಡು ವಾಕ್ಯಗಳನ್ನು ಜೋಡಿಸುವಲ್ಲೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯವನ್ನು ಗಮನಿಸಬಹುದು:
(೯) ಅರಾತಿಕಾಳಾನಳನ್ ತಾನುಂ ಭೀಮಸೇನನುಂ ದಿವ್ಯಶರಾಸನಂಗಳಂ ಕೊಂಡು ಪೂಣೆ ಪುಗುವ ಅರಾತಿಬಲಮಂ ವಾರ್ಕೊಂಡು ತೆಗೆ ನೆಅಕಿದಿಸೆ ತಳರ್ದತ್ತರಾತಿಬಲಂ “ಅರ್ಜುನನು ತಾನೂ ಭೀಮನೂ ಬಿಲ್ಲುಗಳನ್ನು ತೆಗೆದುಕೊಂಡು, ಪ್ರತಿಜ್ಞೆ ಮಾಡಿ, ಪ್ರವೇಶಿಸುವ ಶತ್ರುಸೈನ್ಯವನ್ನು ಪ್ರತಿಭಟಿಸಿ, (ಬಿಲ್ಲು ಗಳನ್ನು) ದೀರ್ಫ್ಥವಾಗಿ ಎಳೆದು (ಬಾಣಗಳನ್ನು) ಪ್ರಯೋಗಿಸಿದಾಗ ಶತ್ರುಸೈನ್ಯ ಹಿಮ್ಮೆಟ್ಟಿತು’
(೯)ನೇ ವಾಕ್ಯದಲ್ಲಿ ಸ್ವೇಚ್ಛೆಯಿಂದ ನಡೆಸುವ ಹಲವು ಘಟನೆಗಳನ್ನು ಒಟ್ಟಿಗೆ ಸೇರಿಸಲಾಗಿದ್ದು, ಅವುಗಳಲ್ಲಿ ಕೊನೆಯದನ್ನು (“ಶತ್ರುಸೈನ್ಯ ಹಿಮ್ಮೆಟ್ಟಿತು’ ಎಂಬುದನ್ನು) ಬಿಟ್ಟು, ಉಳಿದ ಎಲ್ಲಾ ಘಟನೆಗಳನ್ನೂ ಅರ್ಜುನ ಮತ್ತು ಭೀಮ ಎಂಬವರೇ ನಡೆಸಿದ್ದಾ ರೆ. ಆದರೆ, ಇವುಗಳಲ್ಲಿ ಬರುವ ಜೋಡಿಸುವ ಕ್ರಿಯಾರೂಪಗಳಲ್ಲಿ ಎರಡನ್ನು (ಕೊಂಡು ಮತ್ತು ಮಾರ್ಕೊಂಡು) ಉ ಪ್ರತ್ಯಯದ
ಮೂಲಕವೂ ಬೇರೆ ಎರಡನ್ನು (ಪೂಣೆ ಮತ್ತು ತೆಗೆ) ಎ ಪ್ರತ್ಯಯದ ಮೂಲಕವೂ ರಚಿಸಲಾಗಿದೆ.
೧೦.೨.೪ ಅಲ್ ಪ್ರತ್ಯಯದ ಬಳಕೆ
ಕ್ರಿಯಾಪದಗಳಿಗೆ ಅಲ್ ಪ್ರತ್ಯಯವನ್ನು ಸೇರಿಸಿ ರಚಿಸಿದ ಕ್ರಿಯಾರೂಪಗಳನ್ನು ಮೂರು ಅರ್ಥಗಳಲ್ಲಿ (ಮೊದಲು ನಡೆದ ಘಟನೆ, ಅನಂತರ ನಡೆದ ಘಟನೆ, ಮತ್ತು ಘಟನೆಯನ್ನು ನಡೆಸುವುದು ಬೇಡ ಎಂಬರ್ಥಗಳಲ್ಲಿ) ಬಳಸಲು ಸಾಧ್ಯವಿದೆ ಎಂಬುದನ್ನು ನಾವು ಮೇಲೆ (೯.೫.೧)ರಲ್ಲಿ ನೋಡಿರುವೆವು. ಇವುಗಳಲ್ಲಿ ಮೊದಲನೆಯ ಎರಡು ಅರ್ಥಗಳಲ್ಲಿ ಬರುವ ಕ್ರಿಯಾರೂಪಗಳನ್ನು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಬಳಸಲಾಗುತ್ತದೆ.
ಮೊದಲನೆಯ ಅರ್ಥದಲ್ಲಿ (ಎಂದರೆ ಮೊದಲು ನಡೆದ ಘಟನೆಯನ್ನು ಸೂಚಿಸುವ ಅರ್ಥದಲ್ಲಿ) ಈ ಕ್ರಿಯಾರೂಪವನ್ನು ಬಳಸಲಾಗಿದೆಯಾದರೆ, ಅಂತಹ ಬಳಕೆಯ ಮೇಲೆ (೧೦.೨.೨)ರಲ್ಲಿ ಸೂಚಿಸಿದ ನಿರ್ಬಂಧವಿಲ್ಲ ಎಂಬುದನ್ನು ಪಂಪಭಾರತದ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು:
(೧೦ಕ) ಎಂದು ನುಡಿದು ಕಟುಪಲ್ ಆ ದ್ರೌಪದಿ ಸಂತಸಂಬಟ್ಟು ಅಂತೆ ಗೆಯ್ವೆನೆಂದು ಪೋಗಿ (೮.೭೨ವ) “(ಕೀಚಕನು) ಹಾಗೆ ಹೇಳಿ ಕಳುಹಿಸಿದಾಗ ದ್ರೌಪದಿ ಸಂತೋಷಪಟ್ಟು ಹಾಗೆಯೇ ಮಾಡುತ್ತೇನೆಂದು (ಹೇಳಿ) (ಹೋದಳು); ಹೋಗಿ..’
(೧೦ಖ) ರಥಮನೇಅಲೊಡಂ ಪಾವಕನಲ್ವು ಖಾಂಡವಮನುಂಡಪನ್ (೫.೭೭ವ-೭೮) “(ಅರ್ಜುನನು) ರಥವನ್ನೇರಿದೊಡನೆಯೇ ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ’
(೧೦ಕ)ದಲ್ಲಿ ಕಳಿಸುವುದು ಮತ್ತು ಹೋಗುವುದು ಎಂಬ ಎರಡು ಸ್ವೇಚ್ಛೆಯಿಂದ ನಡೆಸುವ ಘಟನೆಗಳನ್ನು ಅಲ್ ಪ್ರತ್ಯಯದ ಮೂಲಕ ಜೋಡಿಸಲಾಗಿದೆ. ಆದರೆ, ಈ ಎರಡು ಘಟನೆಗಳನ್ನು ನಡೆಸುವವರು ಬೇರೆ ಬೇರೆ ವ್ಯಕ್ತಿಗಳು ಎಂಬುದನ್ನೂ, ಮತ್ತು ಇಲ್ಲಿ ಅಲ್ ಪ್ರತ್ಯಯಕ್ಕೆ ಮೊದಲಿನ ಘಟನೆಯನ್ನು ಸೂಚಿಸುವ ಅರ್ಥವಿದೆಯಲ್ಲದೆ ಅನಂತರದ ಘಟನೆಯನ್ನು ಸೂಚಿಸುವ ಅರ್ಥವಿಲ್ಲ ಎಂಬುದನ್ನೂ ಗಮನಿಸಬಹುದು.
ಆದರೆ, ಎರಡನೆಯ ಅರ್ಥದಲ್ಲಿ (ಎಂದರೆ ಅನಂತರ ನಡೆಯುವ ಘಟನೆಯನ್ನು ಸೂಚಿಸುವ ಅರ್ಥದಲ್ಲಿ) ಈ ಪ್ರತ್ಯಯವನ್ನು ಬಳಸಲಾಗಿದೆಯಾದರೆ, ಮೇಲೆ (೧೦.೨.೨)ರಲ್ಲಿ ಕೊಟ್ಟಿರುವ ನಿರ್ಬಂಧ ಅಂತಹ ಬಳಕೆಯ ಮೇಲೆ ಅನ್ವಯಿಸುತ್ತದೆ.
೧೦.೨.೫ ಷರತ್ತನ್ನು ಸೂಚಿಸುವುದು
ಷರತ್ತನ್ನು ಸೂಚಿಸುವ ಒಂದು ವಾಕ್ಯದೊಂದಿಗೆ ಆ ಷರತ್ತಿನ ಮೇಲೆ ಅವಲಂಬಿಸಿರುವ ಇನ್ನೊಂದು ವಾಕ್ಯವನ್ನು ಜೋಡಿಸಿ ಹೇಳುವುದಕ್ಕಾಗಿಯೂ ಹಳೆಗನ್ನಡದಲ್ಲಿ ಜೋಡಿಸುವ ಕ್ರಿಯಾರೂಪದ ಬಳಕೆಯಾಗುತ್ತದೆ. ಇಂತಹ ಕ್ರಿಯಾರೂಪವನ್ನು ತಯಾರಿಸಬೇಕಿದ್ದಲ್ಲಿ, ಕ್ರಿಯಾಪದದ ಸಂಬಂಧಿಸುವ ರೂಪಕ್ಕೆ ಒಡೆ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ.
ಕ್ರಿಯಾಪದಗಳಿಗೆ ಮುಂದಿನ ಸಮಯದ ರೂಪ, ಹಿಂದಿನ ಸಮಯದ ರೂಪ, ಮತ್ತು ಅಲ್ಲಗಳೆಯುವ ರೂಪ ಎಂಬುದಾಗಿ ಮೂರು ರೀತಿಯ ಸಂಬಂಧಿಸುವ ರೂಪಗಳಿದ್ದು, ಈ ಮೂರರೊಂದಿಗೂ ಒಡೆ ಪ್ರತ್ಯಯವನ್ನು ಬಳಸಿ ಷರತ್ತನ್ನು ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಗಳನ್ನು ಗಮನಿಸಬಹುದು:
(೧೧ಕ) ಎಮ್ಮ ಮಗಳ್ಗೆ ಪುಟ್ಟಿದಾತಂ ರಾಜ್ಯಕ್ಕೊಡೆಯನ್ ಅಪ್ಪೊಡೆ ಕುಡುವೆಂ (೧.೭೦ ವ) “ನಮ್ಮ ಮಗಳಿಗೆ ಹುಟ್ಟುವವನು ರಾಜ್ಯಕ್ಕೆ ಒಡೆಯನಾಗುವುದಾದರೆ (ಮಗಳನ್ನು) ಕೊಡುವೆವು’
(೧೧ಖ) ಎನ್ನಯ ದೂಸಉುಂ ಪತಿ ಸತ್ತೊಡೆ ಸತ್ತ ಪಾಪಮೆನ್ನನ್ ನರಕಂಗಳೊಳ್ ಅಲ್ಲು ಗುಂ (೧.೭೩) “ನನ್ನಿಂದಾಗಿ ಪತಿ ಸತ್ತರೆ ಸತ್ತ ಪಾಪವು ನನ್ನನ್ನು ನರಕದಲ್ಲಿ ಮುಳುಗಿಸೀತು’ (೧೧ಗ) ಪೇಟದೊಡೆ ಪೋಗದಿರ್ (೧೩.೫೫) “ಹೇಳದಿದ್ದರೆ ಹೋಗಬೇಡ’
(೧೧ಕ)ದಲ್ಲಿ ಷರತ್ತನ್ನು ಸೂಚಿಸುವ ಅಪ್ಪೊಡೆ ಕ್ರಿಯಾರೂಪವನ್ನು ಮುಂದಿನ ಸಮಯವನ್ನು ಸೂಚಿಸುವ ಅಪ್ಪ ಕ್ರಿಯಾರೂಪಕ್ಕೆ ಒಡೆ ಪ್ರತ್ಯಯವನ್ನು ಸೇರಿಸಿ ರಚಿಸಲಾಗಿದೆ; ಆದರೆ, (೧೧ಖ)ದಲ್ಲಿ ಇದೇ ಪ್ರತ್ಯಯವನ್ನು ಹಿಂದಿನ ಸಮಯವನ್ನು ಸೂಚಿಸುವ ಸತ್ತ ಕ್ರಿಯಾರೂಪಕ್ಕೂ (ಸತ್ತೊಡೆ), (೧೧ಗ)ದಲ್ಲಿ ಅಲ್ಲಗಳೆಯುವ ಪೋಗದ ಕ್ರಿಯಾರೂಪಕ್ಕೂ (ಪೋಗದೊಡೆ) ಸೇರಿಸಿ ರಚಿಸಲಾಗಿದೆ.
ಇಂತಹ ಷರತ್ತಿನ ಕ್ರಿಯಾರೂಪಗಳಲ್ಲಿ ಬರುವ ದ ಮತ್ತು ವ (ಪ) ಪ್ರತ್ಯಯಗಳಿಗೆ ಬೇರೆ ಕ್ರಿಯಾರೂಪಗಳಲ್ಲಿ ಬರುವ ಪ್ರತ್ಯಯಗಳಿಗಿಂತ ತೀರ ಭಿನ್ನವಾಗಿರುವಂತಹ ಸಮಯವನ್ನು ಸೂಚಿಸುವ ಅರ್ಥವಿದೆಯೆಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಸಾಮಾನ್ಯವಾಗಿ, ಇಂತಹ ಷರತ್ತನ್ನು ಸೂಚಿಸುವ ಕ್ರಿಯಾರೂಪಗಳಲ್ಲಿ ಈ ಎರಡು ಪ್ರತ್ಯಯಗಳೂ ಮಾತಿನ ಸಮಯದ ಅನಂತರ ನಡೆಯುವ (ಎಂದರೆ ಮುಂದಿನ ಸಮಯದಲ್ಲಿ ಅಥವಾ ಭವಿಷ್ಯತ್ ಕಾಲದಲ್ಲಿ ನಡೆಯುವ) ಘಟನೆಯನ್ನೇ ಸೂಚಿಸುತ್ತವೆ.
ಇತರ ಬಳಕೆಗಳಲ್ಲಿ ಕಾಣಿಸುವ ಹಾಗೆ, ದ ಪ್ರತ್ಯಯಕ್ಕೆ ಮಾತಿನ ಸಮಯಕ್ಕಿಂತ ಮೊದಲು (ಎಂದರೆ ಹಿಂದಿನ ಸಮಯದಲ್ಲಿ ಅಥವಾ ಭೂತಕಾಲದಲ್ಲಿ) ನಡೆಯುವ ಘಟನೆಯನ್ನು ಸೂಚಿಸುವ ಅರ್ಥ ಈ ಷರತ್ತನ್ನು ಸೂಚಿಸುವ ಕ್ರಿಯಾರೂಪಗಳಲ್ಲಿಲ್ಲ. ಉದಾಹರಣೆಗಾಗಿ, (೧೧ಖ)ದಲ್ಲಿ ಸತ್ತೊಡೆ ಕ್ರಿಯಾರೂಪ ಹಿಂದಿನ ಸಮಯದ ಘಟನೆಯನ್ನು ಸೂಚಿಸುವುದಿಲ್ಲ. ಆ ವಾಕ್ಯವನ್ನಾಡಿರುವ ಸಮಯದ ಅನಂತರ ನಡೆಯಬಹುದಾದ ಘಟನೆಯೊಂದನ್ನು ಮಾತ್ರವೇ ಅದು (ಷರತ್ತಾಗಿ) ಸೂಚಿಸುತ್ತದೆ.
ಇಂತಹ ಷರತ್ತಿನ ರೂಪಗಳಲ್ಲಿ ದ ಮತ್ತು ವ (ಪ) ಪ್ರತ್ಯಯಗಳ ನಡುವೆ ಬೇರೆಯೇ ಒಂದು ಅರ್ಥವ್ಯತ್ಯಾಸ ಕಾಣಿಸುತ್ತದೆ: ದ ಪ್ರತ್ಯಯ ಬಂದಿದೆಯಾದರೆ, ಅದಕ್ಕೆ ಆ ಷರತ್ತು ಸೂಚಿಸುವ ಘಟನೆ ಅದನ್ನು ಅವಲಂಬಿಸಿರುವ ಘಟನೆಗಿಂತ ಮೊದಲೇ ನಡೆದಿರಬೇಕೆಂಬ ಅರ್ಥ ಬರುತ್ತದೆ, ಮತ್ತು ವ (ಪ) ಪ್ರತ್ಯಯ ಬಂದಿದೆಯಾದರೆ, ಅದಕ್ಕೆ ಆ ಘಟನೆ ಅದರ ಮೇಲೆ ಅವಲಂಬಿಸಿರುವ ಘಟನೆಗಿಂತ ಅನಂತರ ನಡೆಯಬೇಕಾಗಿದೆಯೆಂಬ ಅರ್ಥ, ಇಲ್ಲವೇ ಅವರೆಡೂ ಒಂದೇ ಸಮಯದಲ್ಲಿ ನಡೆಯುವಂತಹವೆಂಬ ಅರ್ಥ ಬರುತ್ತದೆ.
ಉದಾಹರಣೆಗಾಗಿ, ಮೇಲೆ (೧೧ಕ) ವಾಕ್ಯದ ಷರತ್ತಿನ ಕ್ರಿಯಾರೂಪದಲ್ಲಿ ಪ ಪ್ರತ್ಯಯ ಬಂದಿದೆ (ಅಪ್ಪೊಡೆ), ಮತ್ತು ರಾಜನಾಗುವ ಷರತ್ತಿನ ಘಟನೆ ಅದನ್ನು ಅವಲಂಬಿಸಿರುವ ಕೊಡುವ ಘಟನೆಯ ಅನಂತರ ನಡೆಯುವಂತಹದೆಂಬ ಅರ್ಥ ಬರುತ್ತದೆ; ಆದರೆ, (೧೧ಖ)ದಲ್ಲಿ ದ (ತ) ಪ್ರತ್ಯಯ ಬಂದಿದೆ (ಸತ್ತೊಡೆ), ಮತ್ತು ಸಾಯುವ ಘಟನೆ (ಷರತ್ತು) ಅದನ್ನು ಅವಲಂಬಿಸಿರುವ ನರಕಕ್ಕೆ ಹೋಗುವ ಘಟನೆಗಿಂತ ಮೊದಲೇ ನಡೆಯುವಂತಹದೆಂಬ ಅರ್ಥ ಬರುತ್ತದೆ (೧೦.೪.(೧))
ನೋಡಿ).
೧೦.೩ ಸಂಸ್ಕೃತದಲ್ಲಿ ಜೋಡಿಸುವ ಕ್ರಿಯಾರೂಪಗಳು
ಸಂಸ್ಕೃತದಲ್ಲಿಯೂ ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಕ್ರಿಯಾರೂಪಗಳನ್ನು ಬಳಸಲು ಸಾಧ್ಯವಿದೆ. ಇದಕ್ಕಾಗಿ ಬಳಕೆಯಾಗುವ ಕ್ರಿಯಾರೂಪಗಳು ನಾಮಪದಗಳಿರಬಹುದು, ನಾಮಪದಗಳ ವಿಭಕ್ತಿ ರೂಪಗಳಿರಬಹುದು, ಇಲ್ಲವೇ ಈ ಕೆಲಸಕ್ಕಾಗಿಯೇ ಸಿದ್ಧವಾಗಿರುವ ವಿಶಿಷ್ಟ ಕ್ರಿಯಾರೂಪಗಳಿರಬಹುದು. ಆದರೆ, ಹಳೆಗನ್ನಡದಲ್ಲಿ ಕಾಣಿಸುವಂತಹ ಅಚ್ಚುಕಟ್ಟು ಸಂಸ್ಕೃತದ ಈ ಪದರೂಪಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.
ಇದಕ್ಕೆ ಕಾರಣವೇನೆಂದರೆ, ವಾಕ್ಯಗಳ ಜೋಡಣೆಗಾಗಿ ಈ ರೀತಿ ಕ್ರಿಯಾಪದಗಳ ಜೋಡಿಸುವ ರೂಪವನ್ನು ಬಳಸುವ ವಿಧಾನ ಸಂಸ್ಕೃತಕ್ಕೆ ದ್ರಾವಿಡ ಭಾಷೆಗಳ ಪ್ರಭಾವದಿಂದಾಗಿ ಬಂದಿರಬೇಕು. ಅದು ಇಂಡೋ-ಯುರೋಪಿಯನ್ ಮೂಲಭಾಷೆಯಿಂದ ಆನುವಂಶಿಕವಾಗಿ ಆ ಭಾಷೆ ಪಡೆದಿರುವ ವಿಧಾನವಲ್ಲ.
೧೦.೩.೧ ಕೃದಂತಗಳ ಬಳಕೆ
ಸಂಸ್ಕೃತದಲ್ಲಿ ಜೋಡಿಸುವ ಕೆಲಸವನ್ನು ಕ್ರಿಯಾಪದಗಳಿಂದ ರಚಿತವಾದ ಕೃದಂತಗಳೇ ನಡೆಸಬಲ್ಲುವು; ಪದಕಂತೆಗಳ ತಯಾರಿಕೆಯಲ್ಲೂ ಇವನ್ನೇ ಬಳಸಲಾಗುತ್ತದೆಯಾದ ಕಾರಣ, ಈ ವಿಷಯದಲ್ಲಿ ಸಂಸ್ಕೃತ ಹಳೆಗನ್ನಡಕ್ಕಿಂತ ತೀರ ಭಿನ್ನವಾಗಿದೆ.
(೧೨ಕ) ಅಹಂ ದಕ್ಷಿಣಾರಣ್ಯೇ ಚರನ್ ಮೃಗಮೇಕಂ ಅಪಶ್ಯಂ
“ನಾನು ದಕ್ಷಿಣಾರಣ್ಯದಲ್ಲಿ ನಡೆಯುತ್ತಾ ಒಂದು ಮೃಗವನ್ನು ನೋಡಿದೆ’ (೧೨ಖ) ಉದ್ಯಾನೇ ಕ್ರೀಡಂತೀಂ ಬಾಲಾಂ ವೀರಃ ಅಪಶ್ಯತ್
“ಉದ್ಯಾನದಲ್ಲಿ ಆಡುವ ಹುಡುಗಿಯನ್ನು ವೀರನು ನೋಡಿದನು’
(೧೨ಕ)ದಲ್ಲಿ ಚರನ್ “ನಡೆಯುತ್ತಾ ‘ಎಂಬ ಕೃದಂತವನ್ನು ಎರಡು ವಾಕ್ಯಗಳನ್ನು ಜೋಡಿಸುವ ಕೆಲಸದಲ್ಲಿ ಬಳಸಲಾಗಿದೆ; ಆದರೆ, (೧೨ಖ)ದಲ್ಲಿ ಅಂತಹದೇ ಕ್ರೀಡನ್ “ಆಡುತ್ತಾ’ ಎಂಬ ಇನ್ನೊಂದು ಕೃದಂತವನ್ನು (ಅದರ ದ್ವಿತೀಯಾ-ಏಕವಚನ (ಸ್ತ್ರೀಲಿಂಗ) ರೂಪದಲ್ಲಿ) ಬಾಲಾಂ ನಾಮಪದದೊಂದಿಗೆ ಸೇರಿಸಿ ಪದಕಂತೆಯೊಂದನ್ನು ತಯಾರಿಸುವಲ್ಲಿ ಬಳಸಲಾಗಿದೆ.
ಹಳೆಗನ್ನಡದಲ್ಲಿ ಇಂತಹ ಜೋಡಿಸುವ ಕ್ರಿಯಾರೂಪಗಳು (ನಡೆಯುತ್ತೆ, ಆಡುತ್ತೆ ಎಂಬಂತಹವುಗಳು) ಪದಕಂತೆಯ ಅಂಗವಾಗಿ ಬರಬಲ್ಲ ಕ್ರಿಯಾರೂಪಗಳಿಗಿಂತ (ನಡೆವ, ಆಡುವ ಎಂಬಂತಹವುಗಳಿಗಿಂತ) ತೀರ ಭಿನ್ನವಾಗಿವೆಯೆಂಬುದನ್ನು ಇಲ್ಲಿ ಗಮನಿಸಬಹುದು.
೧೦.೩.೨ ತ್ವಾ ಪ್ರತ್ಯಯದ ಬಳಕೆ
ಸಂಸ್ಕೃತದಲ್ಲಿ ವಾಕ್ಯಗಳನ್ನು ಜೋಡಿಸುವ ಕೆಲಸಕ್ಕಾಗಿ ಮಾತ್ರ ಬಳಕೆಯಾಗಬಲ್ಲ ಕ್ರಿಯಾರೂಪವೊಂದಿದೆ. ಇದನ್ನು ಕ್ರಿಯಾಪದಕ್ಕೆ ತ್ವಾ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗುತ್ತದೆ (ಗತ್ವಾ “ಹೋಗಿ’ ಕೃತ್ವಾ “ಮಾಡಿ’, ಶೃತ್ವಾ “ಕೇಳಿ’, ಪೀತ್ವಾ “ಕುಡಿದು’). ಈ ಕ್ರಿಯಾರೂಪಕ್ಕೆ ಅದು ಸೂಚಿಸುವ ಘಟನೆ ಅದರ ಅನಂತರದ ವಾಕ್ಯ ಸೂಚಿಸುವ ಘಟನೆಗಿಂತ ಮೊದಲೇ ನಡೆದಿದೆ ಎಂಬ ಅರ್ಥವಿದೆ.
(೧೩ಕ) ಛಾಗಂ ತ್ಯಕ್ತ್ವಾ ಸ್ವಗೃಹಂ ಯಯೌ
“ಆಡನ್ನು ತ್ಯಜಿಸಿ (ಅವನು) ತನ್ನ ಮನೆಗೆ ಹೋದ’ (೧೩ಖ) ಭೋಜನಂ ಕೃತ್ವಾ ಗ್ರಾಮಃ ಗಂತವ್ಯಃ
“ಊಟ ಮಾಡಿ ಊರಿಗೆ ಹೋಗಬೇಕು’
ಕ್ರಿಯಾಪದದಲ್ಲಿ ಉಪಸರ್ಗವೊಂದು ಸೇರಿದೆಯಾದಲ್ಲಿ ಈ ಪ್ರತ್ಯಯಕ್ಕೆ ಯ ಎಂಬ ರೂಪವಿದೆ.
(೧೪ಕ) ನರಾಃ ಶಾಸ್ತ್ರಂ ಅಧೀತ್ಯ ಪಂಡಿತಾಃ ಭವಂತಿ “ಮಾನವರು ಶಾಸ್ತ್ರಗಳನ್ನು ಓದಿ ಪಂಡಿತರಾಗುತ್ತಾರೆ’ (೧೪ಖ) ಶತ್ರೂನ್ ನಿಗೃಹ್ಯ ಅಹಂ ಆಗಮಿಷ್ಯಾಮಿ
“ನಾನು ಶತ್ರುಗಳನ್ನು ನಿಗ್ರಹಿಸಿ ಬರುತ್ತೇನೆ’
ಆದರೆ, ಈ ಕ್ರಿಯಾರೂಪ ಸಂಸ್ಕೃತಕ್ಕೆ ಅದರ ಮೂಲಭಾಷೆಯಾದ ಇಂಡೋ- ಯುರೋಪಿಯನ್‌ದಿಂದ ಬಂದುದಲ್ಲ. ಕಾವ್ಯಗಳ ಕಾಲದಲ್ಲಿ ಜಾಸ್ತಿ ಬಳಕೆಗೆ ಬಂದಿರುವ ಈ ಕ್ರಿಯಾರೂಪ ದ್ರಾವಿಡ ಭಾಷೆಗಳ ಸಂಸರ್ಗದಿಂದಾಗಿ ಸಿದ್ಧವಾದುದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ (ಬರೋ ೧೯೫೫ ನೋಡಿ).
ಸಂಸ್ಕೃತದಲ್ಲಿ ಈ ಕ್ರಿಯಾರೂಪವನ್ನು ಬಳಸಬೇಕಿದ್ದರೆ, ಅದರ ಮೂಲಕ ಜೋಡಿಸಲಾಗಿರುವ ಎರಡು ವಾಕ್ಯಗಳಲ್ಲೂ ಕತೃ ಒಂದೇ ಆಗಿರುವ ಅವಶ್ಯಕತೆಯಿದೆ. ಈ ರೀತಿ ಕರ್ಕ ಒಂದೇ ಆಗಿಲ್ಲವಾದಲ್ಲಿ, ಈ ಕ್ರಿಯಾರೂಪವನ್ನು ಬಳಸುವ ಬದಲು “ಸತಿ ಸಪ್ತಮಿ’ ಎಂಬ ಬೇರೊಂದು ರಚನೆಯನ್ನು ಬಳಸಬೇಕಾಗುತ್ತದೆ (೧೦.೩.೪ ನೋಡಿ).
೧೦.೩.೩ ತುಂ ಪ್ರತ್ಯಯದ ಬಳಕೆ
ವಾಕ್ಯಗಳನ್ನು ಜೋಡಿಸುವ ಕೆಲಸದಲ್ಲಿ ಮಾತ್ರ ಬಳಕೆಯಾಗುವ ಇನ್ನೊಂದು ಕ್ರಿಯಾರೂಪವೂ ಸಂಸ್ಕೃತದಲ್ಲಿದೆ. ಕ್ರಿಯಾಪದಕ್ಕೆ ತುಂ ಪ್ರತ್ಯಯವನ್ನು ಸೇರಿಸು ವುದರ ಮೂಲಕ ಈ ಕ್ರಿಯಾರೂಪವನ್ನು ತಯಾರಿಸಲಾಗುತ್ತದೆ (ಗಂತುಂ “ಹೋಗಲು’, ಕರ್ತುಂ “ಮಾಡಲು’, ಅಧ್ಯೇತುಂ “ಕಲಿಯಲು’).
ಚಾರಿತ್ರಿಕವಾಗಿ ಈ ಕ್ರಿಯಾರೂಪ ವಿಭಕ್ತಿ ಪ್ರತ್ಯಯವಿರುವ ಒಂದು ನಾಮಪದವಾಗಿತ್ತು; ಇದರಲ್ಲಿ ಬರುವ ತುಂ ಪ್ರತ್ಯಯ ದ್ವಿತೀಯಾ ಪ್ರತ್ಯಯದ ಪಳೆಯಳಿಕೆಯಿರಬೇಕೆಂದು ವಿದ್ವಾಂಸರ ಊಹೆ. ವೇದ ಕಾಲದ ಸಂಸ್ಕೃತದಲ್ಲಿ ಬೇರೆ ವಿಭಕ್ತಿ ಪ್ರತ್ಯಯಗಳೂ ಈ ಕ್ರಿಯಾರೂಪದೊಂದಿಗೆ ಬರಬಲ್ಲುವಾಗಿದ್ದುವು (ಹಂತವೇ “ಕೊಲ್ಲಲು (ಚತುರ್ಥೀ)’, ಅವಪದಃ (ಪಂಚಮೀ), ಇತ್ಯಾದಿ.
೧೦.೩.೪ ಸತಿಸಪ್ತಮಿ
ಜೋಡಿಸಬೇಕಾಗಿರುವ ಎರಡು ವಾಕ್ಯಗಳಲ್ಲಿ ಒಂದರ ಕರ್ತಪದ ಇನ್ನೊಂದರ ಕತಣೃಪದಕ್ಕಿಂತ ಭಿನ್ನವಾಗಿದ್ದಲ್ಲಿ, ಮೇಲೆ ವಿವರಿಸಿದ ಕ್ರಿಯಾರೂಪಗಳನ್ನು ಬಳಸಲು ಸಾಧ್ಯವಾಗದು. ಹಾಗಾಗಿ, ಅಂತಹ ಸಂದರ್ಭಗಳಲ್ಲಿ “ಸತಿಸಪ್ತಮಿ’ ಎಂಬ ಹೆಸರಿನ ಬೇರೆಯೇ ಒಂದು ರಚನೆಯನ್ನು
ಬಳಸಬೇಕಾಗುತ್ತದೆ. ನಿಜಕ್ಕೂ ಇಲ್ಲಿ ಸಪ್ತಮೀ ವಿಭಕ್ತಿ ಮಾತ್ರವಲ್ಲದೆ ಷಷ್ಠೀ ವಿಭಕ್ತಿಯನ್ನೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಪರಿಶೀಲಿಸಬಹುದು: (೧೫ಕ) ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್ “ಅವನು ರಾಜನಾಗಿರುವಾಗ ಭೂಮಂಡಲವನ್ನು ಯಾರು ಗೆದ್ದಾ ರು?’ (೧೫ಖ) ತಸ್ಯ ಕೀರ್ತಿಮತೋ ರಾಜ್ಞೋ ಧರ್ಮಂ ವಿದಧಾನಸ್ಯಾಪಿ ಸರ್ವಾಃ ಪ್ರಜಾಃ ದುಃಖಿನ್ಯ ಏವಾಭವನ್ “ಕೀರ್ತಿವಂತನಾದ ಆ ರಾಜನು ಧರ್ಮವನ್ನು ಸ್ಥಾ ಪಿಸಿರುವಾಗಲೂ ಎಲ್ಲಾ ಪ್ರಜೆಗಳೂ ದುಃಖಿಗಳಾಗಿಯೇ ಇದ್ದರು’
(೧೫ಕ)ದಲ್ಲಿ ಮೊದಲನೆಯ ವಾಕ್ಯದ ಪದ (ಇಲ್ಲವೇ ಪದಕಂತೆ)ಗಳನ್ನೆಲ್ಲ ಸಪ್ತಮೀ ವಿಭಕ್ತಿಯಲ್ಲಿರಿಸಲಾಗಿದೆ, ಮತ್ತು (೧೫ಖ)ದಲ್ಲಿ ಷಷ್ಠೀ ವಿಭಕ್ತಿಯಲ್ಲಿ ರಿಸಲಾಗಿದೆ. ಸಾಮಾನ್ಯವಾಗಿ ತಿರಸ್ಕಾರವನ್ನು ಸೂಚಿಸಬೇಕಾಗಿರುವಲ್ಲಿ ಷಷ್ಠೀ ವಿಭಕ್ತಿಯನ್ನು ಬಳಸಲಾಗುತ್ತ ದೆ.
ಈ ರಚನೆಗಳು ಮೇಲೆ ವಿವರಿಸಿದ ರಚನೆಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿವೆ ಎಂಬುದನ್ನು ಗಮನಿಸಬಹುದು. ಇಲ್ಲಿ ಬರುವ ಎರಡು ವಾಕ್ಯಗಳ ಕರ್ತ)ಗಳು ಭಿನ್ನವಾಗಿರಬೇಕು ಮಾತ್ರವಲ್ಲ, ಅವುಗಳಲ್ಲಿ ಮೊದಲನೆಯ ವಾಕ್ಯವನ್ನು ಒಂದು ಪದಕಂತೆಯನ್ನಾಗಿಯೂ ಬದಲಾಯಿಸಬೇಕಾಗುತ್ತದೆ. ಅದರ ಅಂಗಗಳಾಗಿ ಬರುವ ಪದ ಇಲ್ಲವೇ ಪದಕಂತೆಗಳೆಲ್ಲ ಒಂದೇ ವಿಭಕ್ತಿಯಲ್ಲಿರಬೇಕೆಂಬ ನಿಯಮಕ್ಕೆ ಇದೇ ಕಾರಣ.
೧೦.೩.೫ ಷರತ್ತನ್ನು ಸೂಚಿಸುವುದು
ಸಂಸ್ಕ ತದಲ್ಲಿ ಷರತ್ತ ನ್ನು ಸೂಚಿಸುವುದಕ್ಕಾಗಿ ಹಳೆಗನ್ನಡದಲ್ಲಿ ರುವುದಕ್ಕಿಂತ ತೀರ ಭಿನ್ನವಾದ ವ್ಯಾಕರಣತತ್ವವನ್ನು ಅನುಸರಿಸಲಾಗುತ್ತದೆ, ಮತ್ತು ಇದರಿಂದಾಗಿ, ಹಳೆಗನ್ನಡದಲ್ಲಿ ಕಾಣಿಸುವ ಸಾಧ್ಯತೆಗಳಿಗಿಂತ ಸಂಸ್ಕೃತದಲ್ಲಿ ಕಾಣಿಸುವ ಸಾಧ್ಯತೆಗಳು ತೀರ ಭಿನ್ನವಾಗಿವೆ. ಸಂಸ್ಕೃತದಲ್ಲಿ ಮುಖ್ಯವಾಗಿ ಎರಡು ವಿಧಾನಗಳ ಮೂಲಕ ಷರತ್ತನ್ನು ಸೂಚಿಸಲು ಸಾಧ್ಯವಿದೆ:
ವಾಕ್ಯವನ್ನು ಅದರ ಸಂಬಂಧಿಸುವ ರೂಪಕ್ಕೆ ಬದಲಾಯಿಸುವುದು ಒಂದು ವಿಧಾನ, ಮತ್ತು ಆ ವಾಕ್ಯದಲ್ಲಿ ಚೇತ್ ಪದವನ್ನು, ಇಲ್ಲವೇ ಯದಿ ಸರ್ವನಾಮವನ್ನು ಬಳಸುವುದು ಇನ್ನೊಂದು ವಿಧಾನ.
(೧೬ಕ) ಯದಿ ಅಹಂ ತಸ್ಕರೋಸ್ಮಿ, ಬದ್ದೀತ ಮಾಂ “ನಾನು ಕಳ್ಳನಾದರೆ, ನನ್ನನ್ನು ಬಂಧಿಸಿ’
(೧೬ಖ) ವೇತ್ತಿ ಚೇತ್ ಭವಾನ್ ವಕ್ತು “(ನಿಮಗೆ) ಗೊತ್ತಿದೆಯಾದರೆ ಹೇಳಿ’
(೧೬ಗ) ಯದಿ ಸ ಮಯಾ ದೃಷ್ಟೋ ಅಭವಿಷ್ಯತ್ ತತೋ ಅಭೋಕ್ಸ್ಯತ “ನಾನು ಅವನನ್ನು ಕಂಡಿದ್ದರೆ ನುಂಗಿಬಿಡುತ್ತಿದ್ದೆ’
ಆದರೆ, ಹಳೆಗನ್ನಡದ ಹಾಗೆ (೧೦.೨.೩ ನೋಡಿ) ಇಲ್ಲಿ ವಿಶಿಷ್ಟವಾದ ಕ್ರಿಯಾರೂಪಗಳ ಬಳಕೆಯಿಲ್ಲ ಎಂಬುದನ್ನು ಗಮನಿಸಬಹುದು.
೧೦.೪ ಹಳೆಗನ್ನಡ ವೈಯಾಕರಣಿಗಳ ಸಮಸ್ಯೆಗಳು
ಜೋಡಿಸುವ ಕ್ರಿಯಾರೂಪಗಳನ್ನು ವಿವರಿಸುವಲ್ಲಿ ಹಳೆಗನ್ನಡ ವೈಯಾಕರಣಿಗಳಿಗೆ ಅವುಗಳ ಹಿಂದಿರುವ ವ್ಯವಸ್ಥೆಯನ್ನು ಮತ್ತು ವ್ಯಾಕರಣ ತತ್ವಗಳನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಮೇಲೆ (೧೦.೩(೧-೫))ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದಲ್ಲಿ ಬಳಕೆಯಾಗುವ ಜೋಡಿಸುವ ಕ್ರಿಯಾರೂಪಗಳ ಹಿಂದೆ ಹಳೆಗನ್ನಡದಲ್ಲಿರುವಂತಹ ವ್ಯವಸ್ಥೆ ಇಲ್ಲವೇ ಅಚ್ಚುಕಟ್ಟು ಇಲ್ಲದಿರುವುದೇ ಇದಕ್ಕೆ ಕಾರಣವಿರಬಹುದು.
(೧) ನೆಚ್ಚಿ ಕ ಮೆಚ್ಚ , ನೆನೆದು ಮೊದಲಾದ ಕ್ರಿಯಾರೂಪಗಳು ಪೂರ್ವ (ಭೂತ)ಕಾಲದ ಕ್ರಿಯೆಯನ್ನೂ ಕೆತ್ತುತ್ತೆ, ಪರಸುತ್ತೆ, ಎನುತೆ ಮೊದಲಾದವುಗಳು ವರ್ತಮಾನ ಕಾಲದ ಕ್ರಿಯೆಯನ್ನೂ ಸೂಚಿಸುತ್ತವೆಯೆಂದು ಕೇಶಿರಾಜನು (ಸೂ. ೨೪೯) ಹೇಳಿದ್ದಾನೆ.
ಆದರೆ, ಮೇಲೆ (೧೦.೨.೧)ರಲ್ಲಿ ಸೂಚಿಸಿದ ಹಾಗೆ, ನಿಜಕ್ಕೂ ಇವು ನೆಚ್ಚಿದಂ, ಮೆಚ್ಚಿದಂ ಮೊದಲಾದ ಭೂತಕಾಲದ ಕ್ರಿಯಾರೂಪಗಳಿಂದ ಮತ್ತು ನೆಚ್ಚಿದಪಂ, ಮೆಚ್ಚಿದಪಂ (ಇಲ್ಲವೇ ಮೆಚ್ಚು ವಂ, ನೆಚ್ಚು ವಂ) ಮೊದಲಾದ ವರ್ತಮಾನ ಕಾಲದ ಕ್ರಿಯಾರೂಪಗಳಿಂದ ಸಮಯ ಸೂಚನೆಯಲ್ಲಿ ತೀರ ಭಿನ್ನವಾಗಿವೆ.
ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯಗಳನ್ನು ಪರಿಶೀಲಿಸಬಹುದು:
(೧೭ಕ) ಅಂತು ದ್ರೋಣಾಚಾರ್ಯನ್ ಪಾಂಡವ ಕೌರವರ್ಗೆ ಉಪದೇಶಂ ಗೆಯ್ಯುತ್ತುಂ ಇರೆಯಿರೆ ನಾನಾದೇಶ ನರೇಂದ್ರರುಂ ಧನುರ್ವೇದಮನೆ ಕಲಲ್ ಬಂದಾಳಾದರ್ (೨.೫೫-೬)
“ಹಾಗೆ ದ್ರೋಣಾಚಾರ್ಯನು ಪಾಂಡವ ಕೌರವರುಗಳಿಗೆ ಉಪದೇಶ ಮಾಡುತ್ತಿರುವಾಗ, ಬೇರೆ ಬೇರೆ ದೇಶದ ರಾಜರೂ ಧನುರ್ವಿದ್ಯೆಯನ್ನು ಕಲಿಯಲು ಬಂದು ಆತನ ಶಿಶ್ಯರಾದರು’
(೧೭ಖ) ನೀಮೆನ್ನ ಕಾಳೆಗಮಂ ಪೆಜಗಿರ್ದು ನೋಡಿಂ (೩.೬೯ವ)
“ನೀವು ನನ್ನ ಯುದ್ಧವನ್ನು ಹೊರಗೆ ಇದ್ದು ನೋಡಿ’
(೧೭ಕ)ದಲ್ಲಿ ಗೆಯ್ಯುತ್ತುಂ ಎಂಬುದರಲ್ಲಿ ವರ್ತಮಾನ ಕಾಲದ ಉತ್ತೆ ಪ್ರತ್ಯಯ ಬಂದಿದೆಯಾದರೂ ಅದು ನಿಜಕ್ಕೂ “ಭೂತ’ಕಾಲದಲ್ಲಿ (ಎಂದರೆ ಆ ವಾಕ್ಯವನ್ನು ಆಡಿರುವ (ಇಲ್ಲವೇ ಬರೆದಿರುವ) ಸಮಯಕ್ಕಿಂತ ಮೊದಲು) ನಡೆದಿರುವ ಘಟನೆಯೊಂದನ್ನು ಸೂಚಿಸುತ್ತದೆಯಲ್ಲದೆ “ವರ್ತಮಾನ’ ಕಾಲದಲ್ಲಿ ನಡೆಯುವ ಘಟನೆಯನ್ನು ಸೂಚಿಸುವುದಿಲ್ಲ. ಈ ಘಟನೆ ಅದರ ಅನಂತರ ಬಂದಿರುವ ಇರ್ದು ಕ್ರಿಯಾಪದ ಸೂಚಿಸುವ ಘಟನೆಯ ಸಮಯದಲ್ಲೇನೇ ನಡೆಯುತ್ತಿತ್ತು ಎಂಬುದನ್ನು ಆ ಜೋಡಿಸುವ ಕ್ರಿಯಾರೂಪದಲ್ಲಿರುವ ಉತ್ತೆ (*ಉಂ) ಪ್ರತ್ಯಯ ಸೂಚಿಸುತ್ತದೆ. ಎಂದರೆ, ಇಲ್ಲಿ ಉತ್ತೆ ಪ್ರತ್ಯಯಕ್ಕೆ “ಒಂದೇ ಸಮಯ’ ಎಂಬ ಅರ್ಥವಿದೆಯಲ್ಲದೆ
ವರ್ತಮಾನಾರ್ಥವಿಲ್ಲ.
ಇದೇ ರೀತಿಯಲ್ಲಿ, (೧೭ಖ)ದಲ್ಲಿ ಬಂದಿರುವ ಪೆಅಗಿರ್ದು ಎಂಬುದರಲ್ಲಿ ಭೂತಕಾಲದ ದ ಪ್ರತ್ಯಯ ಬಂದಿದೆಯಾದರೂ, ಅದು ಭವಿಷ್ಯತ್ ಕಾಲದಲ್ಲಿ ನಡೆಯಬೇಕಾಗಿರುವ ಒಂದು ಘಟನೆಯನ್ನು ಸೂಚಿಸುತ್ತದೆಯಲ್ಲದೆ ಭೂತಕಾಲದಲ್ಲಿ ನಡೆದಿರುವ ಘಟನೆಯನ್ನು ಸೂಚಿಸುವುದಿಲ್ಲ. ಆ ವಾಕ್ಯವನ್ನು ಅರ್ಜುನನು ಹೇಳಿರುವ ಸಮಯದಲ್ಲಿ ಈ “ಹೊರಗಿರುವ’ ಘಟನೆಯಿನ್ನೂ ನಡೆದಿಲ್ಲ. “ನೋಡುವ’ ಘಟನೆಗಿಂತ ಮೊದಲು “ಹೊರಗಿರುವ’ ಘಟನೆ ನಡೆಯಬೇಕು ಎಂಬುದಾಗಿ ಇಲ್ಲಿ ದ್(*ಉ) ಪ್ರತ್ಯಯಕ್ಕೆ “ಮೊದಲಿನ ಸಮಯ’ದ ಅರ್ಥವಿದೆಯಲ್ಲದೆ “ಭೂತ’ ಕಾಲದ (ಹಿಂದಿನ ಸಮಯದ) ಅರ್ಥವಿಲ್ಲ.
ಇಂತಹ ಬಳಕೆಗಳನ್ನು ವಿವರಿಸುವುದಕ್ಕಾಗಿ ಹಳೆಗನ್ನಡದಲ್ಲಿ ಎರಡು ರೀತಿಯ ಸಮಯಭೇದಗಳನ್ನು ಸೂಚಿಸುವ ಪ್ರತ್ಯಯಗಳಿವೆಯೆಂದು ಹೇಳಬೇಕಾಗುತ್ತದೆ. ಕ್ರಿಯಾರೂಪಗಳಲ್ಲಿ ಅವು ಬಂದಿರುವ ವಾಕ್ಯವನ್ನು ಆಡಿರುವ ಸಮಯಕ್ಕೂ ಅವು ತಿಳಿಸುವ ಘಟನೆಯ ಸಮಯಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ತಿಳಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಹಿಂದಿನ ಸಮಯ (ಭೂತಕಾಲ), ಮುಂದಿನ ಸಮಯ (ಭವಿಷ್ಯತ್ ಕಾಲ) ಮತ್ತು ಈಗಿನ ಸಮಯ (ವರ್ತಮಾನ ಕಾಲ) ಎಂಬ ಪಾರಿಭಾಷಿಕ ಪದಗಳನ್ನು ಬಳಸುವ ಅವಶ್ಯಕತೆಯಿದೆ.
ಆದರೆ, ಜೋಡಿಸುವ ಕ್ರಿಯಾರೂಪಗಳನ್ನು ಬಳಸುವ ಸಂದರ್ಭಗಳಲ್ಲಿ ಇದಕ್ಕಿಂತ ತೀರ ಭಿನ್ನವಾದ ಸಮಯಭೇದಗಳನ್ನು ಸೂಚಿಸಬೇಕಾಗುತ್ತದೆ. ಅಂತಹ ಕಡೆಗಳಲ್ಲಿ ಎರಡು (ಅಥವಾ ಜಾಸ್ತಿ) ಕ್ರಿಯಾಪದಗಳು ಬಳಕೆಯಾಗುತ್ತಿದ್ದು, ಅವು ಸೂಚಿಸುವ ಘಟನೆಗಳ ನಡುವೆ ಸಮಯದ ಮಟ್ಟಿಗೆ ಎಂತಹ ಸಂಬಂಧವಿದೆ (ಅವುಗಳಲ್ಲಿ ಒಂದು ಇನ್ನೊಂದರ “ಮೊದಲು’ ನಡೆದಿದೆಯೇ, “ಅನಂತರ’ ನಡೆದಿದೆಯೇ ಅಥವಾ ಎರಡೂ “ಒಂದೇ ಸಮಯ’ದಲ್ಲಿ ನಡೆದಿವೆಯೇ) ಎಂಬುದನ್ನು ತಿಳಿಸಬೇಕಾಗುತ್ತದೆ.
ಈ ಮೂರು ರೀತಿಯ ಸಮಯಗಳೂ ಮಾತಿನ ಸಮಯಕ್ಕಿಂತ ಹಿಂದೆ ನಡೆದಿರಬಹುದು, ಇಲ್ಲವೇ ಅನಂತರ ನಡೆಯುವಂತಹವಿರಬಹುದು. ಹಾಗಾಗಿ, ಇವು ಮೂರೂ ಹಿಂದಿನ (ಭೂತ) ಇಲ್ಲವೇ ಮುಂದಿನ (ಭವಿಷ್ಯತ್) ಕಾಲದವಾಗಿರಲು ಸಾಧ್ಯವಿದೆ. ಈ ವ್ಯತ್ಯಾಸವನ್ನು ಜೋಡಿಸುವ ಕ್ರಿಯಾರೂಪಗಳನ್ನು ಬಳಸಿರುವ ವಾಕ್ಯಗಳ ಕೊನೆಯಲ್ಲಿ ಬರುವ ಕ್ರಿಯಾರೂಪಗಳು ತಿಳಿಸುತ್ತವಲ್ಲದೆ, ಜೋಡಿಸುವ ಕ್ರಿಯಾರೂಪಗಳು ತಿಳಿಸುವುದಿಲ್ಲ.
ಈ ಕಾರಣಕ್ಕಾಗಿ, ಜೋಡಿಸುವ ಕ್ರಿಯಾರೂಪಗಳಲ್ಲಿ ಕಂಡುಬರುವ ಸಮಯ ಸಂಬಂಧವನ್ನು ಸೂಚಿಸುವುದಕ್ಕಾಗಿ ಮೊದಲಿನ ಸಮಯ, ಅನಂತರದ ಸಮಯ ಮತ್ತು ಒಂದೇ ಸಮಯ ಎಂಬುದಾಗಿ ಬೇರೆಯೇ ಪಾರಿಭಾಷಿಕ ಪದಗಳನ್ನು ಬಳಸುವ ಅವಶ್ಯಕತೆಯಿದೆ (ವಿವರಗಳಿಗೆ ೯.೨.೩ ನೋಡಿ).
(೨) ಮಾಡೆ, ನೋಡೆ, ಪೊಅಮಡೆ ಮೊದಲಾದವುಗಳ ಬಳಕೆಯನ್ನು “ಸತಿಸಪ್ತಮಿ’ಯೆಂದು ಕರೆಯಲಾಗಿದೆ (ಕೇಶಿರಾಜ ಸೂ. ೨೬೦). ಆದರೆ ಬೇರೆ ಹಲವು ವಿದ್ವಾಂಸರು ಸೂಚಿಸಿರುವ ಹಾಗೆ, ಹಳೆಗನ್ನಡದ ಈ ರಚನೆ ಸಂಸ್ಕೃತದ ಸತಿಸಪ್ತಮಿಗಿಂತ ತೀರ ಭಿನ್ನವಾಗಿದೆ (೧೦.೩.೪ ನೋಡಿ). ಕರ್ತೃಪದ ಭಿನ್ನವಾಗಿರಬಹುದೆಂಬ ಒಂದು ವಿಷಯದಲ್ಲಿ ಮಾತ್ರ ಇವೆರಡರೊಳಗೆ ಸಮಾನತೆಯಿದೆ.
ಆದರೆ, ಇಲ್ಲೂ ಕರ್ತೃಪದ ಎಂಬುದಕ್ಕಿಂತಲೂ ಮಾಡುಗ (ಸ್ವೇಚ್ಛೆಯಿಂದ ಘಟನೆಯಲ್ಲಿ ತೊಡಗಿಕೊಂಡಿರುವವನು) ಎಂಬುದೇ ಹಳೆಗನ್ನಡದ ಮಟ್ಟಿಗೆ ಯೋಗ್ಯವಾಗಿರುವ ಕಲ್ಪನೆ.
(೩) ಕರ್ತೃಪದ ಭಿನ್ನವಾಗಿರುವಲ್ಲಿ ಆಲ್ ಪ್ರತ್ಯಯವನ್ನು ಬಳಸಬಾರದು, ಅಲೊಡಂ ಎಂಬುದನ್ನು ಬಳಸಬೇಕು ಎಂಬುದಾಗಿ ಕೇಶಿರಾಜ (ಸೂ. ೨೬೦) ಹೇಳಿದ್ದಾ ನೆ. ಅಲ್ ಪ್ರ ತ್ಯಯ ಸೇರಿರುವ ಕ್ರಿಯಾರೂಪಕ್ಕೆ “ಅನಂತರದ’ ಘಟನೆಯನ್ನು ಮಾತ್ರವಲ್ಲದೆ, “ಮೊದಲಿನ’ ಘಟನೆಯನ್ನು ಸೂಚಿಸುವ ಅರ್ಥವೂ ಇದೆಯೆಂಬುದನ್ನು (ಎಂದರೆ ಹಳೆಗನ್ನಡದಲ್ಲಿ ಅಲ್ ರೂಪದ ಎರಡು ಬೇರೆ ಬೇರೆ ಪ್ರತ್ಯಯಗಳಿವೆಯೆಂಬುದನ್ನು) ಆತನು ಗಮನಿಸದಿರುವುದೇ ಆತ ಹೀಗೆ ಹೇಳಲು ಕಾರಣವಿರಬೇಕು.
ಯಾಕೆಂದರೆ, “ಮೊದಲಿನ’ ಘಟನೆಯನ್ನು ಸೂಚಿಸುವಲ್ಲಿ ಈ ಕ್ರಿಯಾರೂಪಕ್ಕೆ ಮೇಲಿನ ನಿರ್ಬಂಧವಿಲ್ಲವೆಂಬುದು ಹಲವು ಕವಿಗಳ ಪ್ರಯೋಗಗಳಿಂದ ಸ್ಪ ಷ್ಟವಾಗುತ್ತದೆ (೧೦.೨.೪ ನೋಡಿ). ಅಲೊಡಂ ಎಂಬುದರಲ್ಲಿ ಈ ಪ್ರತ್ಯಯದ ಮುಂದೆ ಒಡಂ “ಒಡನೆಯೇ’ ಪದ ಬಂದಿದ್ದು, ಇದರಿಂದಾಗಿ ಅದಕ್ಕೆ “ಮೊದಲಿನ’ ಘಟನೆಯನ್ನು ಸೂಚಿಸುವ ಅರ್ಥ ಬರಬಲ್ಲುದಲ್ಲದೆ, “ಅನಂತರ’ದ ಘಟನೆಯನ್ನು ಸೂಚಿಸುವ ಅರ್ಥ ಬರಲಾರದು. ಒಡಂ ಎಂಬುದು ಈ ಪ್ರತ್ಯಯಕ್ಕಿರುವ ಮೇಲಿನ ಎರಡು ಅರ್ಥಗಳನ್ನು ಪ್ರತ್ಯೇಕಿಸಿ, ಅವುಗಳಲ್ಲಿ ಒಂದು ಮಾತ್ರ ಸೂಚಿತವಾಗುವಂತೆ ಮಾಡುತ್ತದೆ.
ಕೇಶಿರಾಜನು ಅಲೊಡಂ ಎಂಬುದರಲ್ಲೂ ಅಲ್ ಇದೆ ಎಂಬುದನ್ನು ಗಮನಿಸಿ, ಅಲ್ ಪ್ರತ್ಯಯದ ಬಳಕೆಯಲ್ಲಿ ಅರ್ಥದ ಮಟ್ಟಿಗೆ ಸಂಶಯ ಹುಟ್ಟುವ ಸಂದರ್ಭಗಳಲ್ಲಿ ಮಾತ್ರ ಅದರೊಂದಿಗೆ ಒಡಂ ಎಂಬುದನ್ನು ಸೇರಿಸಿ ಬಳಸಬೇಕು ಎಂದು ಹೇಳಿರಬೇಕಿತ್ತಲ್ಲದೆ, ಹಾಗೆ ಒಡಂ ಎಂಬುದನ್ನು ಸೇರಿಸದೆ ಕೆಲವರು ಬಳಸಿರುವುದು “ಅಬದ್ಧ ‘ ಎಂದು ಹೇಳುವ ಅವಶ್ಯಕತೆಯಿರಲಿಲ್ಲ.
ವೆಂಕಟಾಚಲ ಶಾಸ್ತ್ರಿ ಗಳು (೧೯೯೪:೧೨೧) ಹೇಳಿರುವ ಹಾಗೆ, ಆತನು ಈ ರೀತಿ ಹೇಳಿರುವುದು ಆತನ ಧೈರ್ಯ ಮತ್ತು ವಿಚಿಕಿತ್ಸಕ ಬುದ್ಧಿ ಗಳನ್ನು ತೋರಿಸುವುದಿಲ್ಲ; ಅದಕ್ಕೆ ಬದಲು, ಆತನ ಭಂಡ ಧೈರ್ಯ ಮತ್ತು ಅಜ್ಞಾನಗಳನ್ನು ತೋರಿಸುತ್ತದೆ.
(೪) ಪಕ್ಬಾರ್ಥವನ್ನು (ಷರತ್ತನ್ನು) ಸೂಚಿಸುವ ಒಡೆ ಪ್ರತ್ಯಯ ಧಾತುವಿನ ಕೊನೆಯಲ್ಲಿ ಬರುವುದೆಂದು ಕೇಶಿರಾಜನು ಹೇಳಿರುತ್ತಾನೆ (ಸೂ. ೨೬೧ ನೋಡಿ). ಇದು ಕಾಲತ್ರಯದಲ್ಲೂ ಬರಬಲ್ಲುದೆಂಬುದಕ್ಕೆ ಪ್ರಯೋಗಗಳನ್ನು ಮಾತ್ರ (ಪುಸಿದೊಡೆ ಬಿಟ್ಟಂ, ಪಟಂಚಿದಪೊಡೆ ಕೊಂದಪಂ, ಚಿತ್ರಿಪೊಡೆ ತೂಳಿಕೆಯಂ ತರಿಸುವಂ) ಕೊಡುತ್ತಾನೆ.
ಭಟ್ಟಾಕಳಂಕನು ಈ ಪ್ರತ್ಯಯಕ್ಕೆ ದೊಡೆ ಮತ್ತು ವೊಡೆ ರೂಪಗಳಿವೆ ಎಂದು ಹೇಳಿ, ಇವು ಭೂತ ಮತ್ತು ವರ್ತಮಾನ ಕಾಲದಕ್ರಿಯೆಗಳನ್ನು ಜ್ಞಾಪಿಸುವುದಕ್ಕಾಗಿ ಬರುತ್ತವೆಯೆಂದು ಹೇಳಿದ್ದಾನೆ (ಸೂ. ೫೮೯-೯೦).
ಆದರೆ, ನಿಜಕ್ಕೂ ಇವು ಭೂತ ಮತ್ತು ವರ್ತಮಾನ (ಇಲ್ಲವೇ ಭವಿಷ್ಯತ್) ಕಾಲಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುವ ಬದಲು, ಎರಡು ಘಟನೆಗಳ ನಡುವಿರುವ ಸಮಯ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಬಳಕೆಯಾಗುತ್ತ ವೆ ಎಂಬುದನ್ನು ನಾವು ಮೇಲೆ (೧೦.೨.೩)ರಲ್ಲಿ ನೋಡಿರುವೆವು.
ಇದಲ್ಲದೆ, ಹಳೆಗನ್ನಡದಲ್ಲಿ ಈ ಪ್ರತ್ಯಯಗಳನ್ನು ಕ್ರಿಯಾಪದಗಳ ಕೃದಂತ (ಸಂಬಂಧಿಸುವ) ರೂಪಕ್ಕೆ ಸೇರಿಸಲಾಗುತ್ತದಲ್ಲದೆ, ಧಾತುವಿಗೆ ಇಲ್ಲವೇ ಧಾತುವಿನ ಭೂತ ಮತ್ತು ಭವಿಷ್ಯತ್ ರೂಪಗಳಿಗಲ್ಲ. ಅಲ್ಲಗಳೆಯುವ ಷರತ್ತಿನ ರೂಪಗಳನ್ನು ಪರಿಶೀಲಿಸಿದಾಗ ಈ ವಿಷಯ
ಅಲ್ಲಗಳೆಯುವ ರೂಪಗಳಿವೆ, ಮತ್ತು ಪೇಟದ ಎಂಬ ಅಲ್ಲಗಳೆಯುವ ಕೃದಂತ ರೂಪವಿದೆ. ಇವುಗಳಲ್ಲಿ ಅಲ್ಲಗಳೆಯುವ ರೂಪಗಳಿಂದ ಘಟಕವನ್ನು ಸೂಚಿಸುವ ಆಖ್ಯಾತ ಪ್ರತ್ಯಯವನ್ನು ಕಳೆದಾಗ ಉಳಿಯುವುದು ಪೇಲ (ಇಲ್ಲವೇ ಪೇಟ್) ಎಂಬುದು.
ಆದರೆ, ಪೇಟದೊಡೆ ಎಂಬ ಪಕ್ಬಾರ್ಥದ ರೂಪವನ್ನು ಈ ಪೇಟ ಎಂಬುದರಿಂದ ಸಾಧಿಸಲು ಸಾಧ್ಯವಾಗದು. ಪೇಟದ ಎಂಬ ಕೃದಂತ ರೂಪದಿಂದಲೇನೇ ಅದನ್ನು ಸಾಧಿಸಬೇಕಾಗುತ್ತದೆ.
ಒಡೆ ಪ್ರತ್ಯಯ ಹಿಂದಿನ ಮತ್ತು ಮುಂದಿನ ಸಮಯದ ಸಂಬಂಧಿಸುವ ರೂಪಗಳೊಂದಿಗೆ ಮಾತ್ರವಲ್ಲದೆ, ಅಲ್ಲಗಳೆಯುವ ಸಂಬಂಧಿಸುವ ರೂಪದೊಂದಿಗೂ ಬರಬಲ್ಲುದು ಎಂಬುದನ್ನು ಹಳೆಗನ್ನಡದ ಪ್ರಾಚೀನ ವೈಯ್ಯಾಕರಣಿಗಳು ಗಮನಿಸದಿದ್ದುದೇ ಈ ರೀತಿ ಕ್ರಿಯಾಪದಗಳ ಸಂಬಂಧಿಸುವ ರೂಪದಿಂದ (ಎಂದರೆ ಕೃದಂತದಿಂದ) ಈ ರೂಪಗಳನ್ನು ಸಾಧಿಸಬೇಕಾಗುತ್ತದೆ ಎಂಬುದನ್ನು ಅವರು ಗಮನಿಸದಿರಲು ಕಾರಣವಿರಬಹುದು.
೧೦.೫ ಸಾರಾಂಶ
ಎರಡು ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಜೋಡಿಸುವ ಕ್ರಿಯಾರೂಪಗಳ ಬಳಕೆಯಾಗುತ್ತದೆ. ಸಂಸ್ಕೃತದಲ್ಲೂ ಇಂತಹ ಕ್ರಿಯಾರೂಪಗಳ ಬಳಕೆಯಾಗುತ್ತದೆಯಾದರೂ ಹಳೆಗನ್ನಡದಲ್ಲಿ ಕಾಣಿಸುವಂತಹ ವ್ಯವಸ್ಥೆ ಇಲ್ಲವೇ ಅಚ್ಚುಕಟ್ಟು ಸಂಸ್ಕೃತದ ಕ್ರಿಯಾರೂಪಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.
ಸಂಸ್ಕೃತ ತನ್ನಲ್ಲಿಲ್ಲದ ಈ ವ್ಯವಸ್ಥೆಯನ್ನು ದ್ರಾವಿಡ ಭಾಷೆಗಳ ಸಂಪರ್ಕವಾದನಂತರ ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿರುವುದೇ ಈ ರೀತಿ ಆ ಭಾಷೆಯಲ್ಲಿ ಹಳೆಗನ್ನಡದ ಜೋಡಿಸುವ ಕ್ರಿಯಾರೂಪಗಳ ಬಳಕೆಯಲ್ಲಿ ಕಾಣಿಸುವಂತಹ ಅಚ್ಚುಕಟ್ಟು ಕಾಣಿಸದಿರುವುದಕ್ಕೆ ಕಾರಣವಿರಬೇಕು.
ಸಂಸ್ಕೃತ ವೈಯಾಕರಣಿಗಳು ಆ ಭಾಷೆಯ ಕುರಿತಾಗಿ ಹೇಳಿರುವುದನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಪ್ರಯತ್ನಿಸಿದುದರಿಂದಾಗಿ, ಅದರ ವೈಯಾಕರಣಿಗಳಿಗೆ ಹಳೆಗನ್ನಡದ ಈ ಅತ್ಯುತ್ತಮವಾದ ವ್ಯವಸ್ಥೆಯನ್ನು ವಿವರಿಸಲು ಸಾಧ್ಯವಾಗಿಲ್ಲ.