↑ Contents · Contents · Ch 2 →
Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಧ್ಯಾಯ ಒಂದು — ಪೀಠಿಕೆ
1.1 ಮಾತಿನ ಕೆಲಸಗಳು
ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಬೇರೆ ಬೇರೆ ರೀತಿಯ ‘ಮಾತಿನ ಕೆಲಸ’ ಗಳನ್ನು ನಡೆಸುವುದಕ್ಕಾಗಿ ಹಲವಾರು ರೀತಿಯ ವಾಕ್ಯಗಳನ್ನು ಬಳಸುತ್ತಿರುತ್ತೇವೆ. ಉದಾಹರಣೆಗಾಗಿ, ತಿಳಿದಿರುವ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿಹೇಳುವು ದಕ್ಕಾಗಿ ಕೆಳಗೆ (1ಕ-ಘ)ಗಳಲ್ಲಿ ಕೊಟ್ಟಿರುವಂತಹ ಒಂದು ರೀತಿಯ ವಾಕ್ಯಗಳನ್ನು ಬಳಸುತ್ತೇವಾದರೆ, ತಿಳಿಯದೆ ಇರುವ ಸಂಗತಿಗಳನ್ನು ಕೇಳಿ ತಿಳಿದುಕೊಳ್ಳುವು ದಕ್ಕಾಗಿ (2ಕ-ಘ)ಗಳಲ್ಲಿ ಕೊಟ್ಟಿರುವಂತಹ ಅವಕ್ಕಿಂತ ಭಿನ್ನವಾಗಿರುವ ಬೇರೆ ರೀತಿಯ ವಾಕ್ಯಗಳನ್ನು ಬಳಸುತ್ತೇವೆ. ರಾಜು ಮರದಿಂದ ಕೆಳಗೆ ಹಾರಿದ. (1ಖ) ದೊರೆಸ್ವಾಮಿ ನಾಳೆ ಬೆಂಗಳೂರಿಗೆ ಹೋಗುತ್ತಾರೆ. (1ಗ) ನನ್ನ ಹತ್ತಿರ ನೂರೈವತ್ತು ರುಪಾಯಿ ಇದೆ. (1ಘ) ಈ ಪುಸ್ತಕ ನಮ್ಮದು. (2ಕ) ಮರದಿಂದ ಕೆಳಗೆ ಹಾರಿದ್ದು ಯಾರು? (2ಖ) ದೊರೆಸ್ವಾಮಿ ನಾಳೆ ಬೆಂಗಳೂರಿಗೆ ಹೋಗುತ್ತಾರೋ? (2ಗ) ನಿಮ್ಮ ಹತ್ತಿರ ಎಷ್ಟು ಹಣವಿದೆ? (2ಘ) ಈ ಪುಸ್ತಕ ನಮ್ಮದೋ? ಇದಲ್ಲದೆ, ಮಾಡಲಾಗದ ಕೆಲಸಗಳನ್ನು ಇನ್ನೊಬ್ಬರ ಹತ್ತಿರ ಹೇಳಿ ಮಾಡಿಸಿ ಕೊಳ್ಳುವುದು, ಮಾಡಬೇಕೆಂದಿರುವ ಕೆಲಸಗಳನ್ನು ಮಾಡಲು (ಅವಶ್ಯಬಿದ್ದಲ್ಲಿ) ಇನ್ನೊಬ್ಬರ ಒಪ್ಪಿಗೆ ಕೇಳುವುದು, ಮನಸ್ಸಿಗಾಗದ ಕೆಲಸವನ್ನು ಯಾರಾದರೂ ಮಾಡಿದಲ್ಲಿ ಅವರನ್ನು ತೆಗಳುವುದು, ಮನಸ್ಸಿಗೆ ಹಿಡಿಸಿದ ಕೆಲಸವನ್ನು ಯಾರಾ ದರೂ ಮಾಡಿದಲ್ಲಿ ಅವರನ್ನು ಹೊಗಳುವುದು, ಇತ್ಯಾದಿಯಾಗಿ ಹಲವಾರು ರೀತಿಯ ಮಾತಿನ ಕೆಲಸಗಳನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಡೆಸ ಬೇಕಾಗಿದ್ದು, ಇದಕ್ಕಾಗಿಯೂ ನಾವು ಬೇರೆ ಬೇರೆ ರೀತಿಯ ವಾಕ್ಯಗಳನ್ನು ಬಳಸ ಬಲ್ಲೆವು.
(3ಕ) ಈ ಸಿಲಿಂಡರನ್ನು ಹೊರಗೆ ಇರಿಸಿ. (3ಖ) ಇವತ್ತು ನಾವು ಬೆಂಗಳೂರಿಗೆ ಹೋಗೋಣ. (3ಗ) ಆ ಹುಡುಗಿ ಎಷ್ಟು ಚೆನ್ನಾಗಿ ಕುಣಿಯುತ್ತಿದ್ದಾಳೆ! (3ಘ) ಆಕೆ ಇವತ್ತು ಅಥವಾ ನಾಳೆ ಬರಬಹುದು. ಒಂದೇ ಘಟನೆ ಇಲ್ಲವೇ ವಿಷಯವನ್ನು ತಿಳಿಸುವ ವಾಕ್ಯವನ್ನೂ ಈ ರೀತಿ ಬೇರೆ ಬೇರೆ ಮಾತಿನ ಕೆಲಸಗಳನ್ನು ಸಾಧಿಸುವುದಕ್ಕಾಗಿ ಬಳಸಲು ಸಾಧ್ಯವಿದೆ, ಮತ್ತು ಅದಕ್ಕಾಗಿ ಆ ವಾಕ್ಯದಲ್ಲಿ ಕೆಳಗೆ ಕಾಣಿಸಿರುವಂತೆ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ರಾಜು ಪೇಟೆಗೆ ಹೋಗಿದ್ದಾನೆ. (4ಖ) ರಾಜು ಪೇಟೆಗೆ ಹೋಗಿದ್ದಾನೋ? ರಾಜು ಪೇಟೆಗೆ ಹೋಗಿರಬಹುದು. (4ಘ) ರಾಜು ಪೇಟೆಗೆ ಹೋಗಲಿ. (4ಙ) ರಾಜು ಪೇಟೆಗೆ ಹೋಗುವುದು ಬೇಡ. ಮೇಲೆ ಕೊಟ್ಟಿರುವ (4ಕ-ಙ)ಗಳಲ್ಲಿ ‘ರಾಜು ಪೇಟೆಗೆ ಹೋಗುವುದು’ ಎಂಬ ಘಟನೆಯನ್ನು ಸೂಚಿಸುವ ಒಂದೇ ಒಂದು ವಾಕ್ಯವನ್ನು ಐದು ಬೇರೆ ಬೇರೆ ‘ಮಾತಿನ ಕೆಲಸ’ಗಳನ್ನು ನಡೆಸುವುದಕ್ಕಾಗಿ ಬಳಸಿಕೊಳ್ಳಲಾಗಿದೆಯೆಂಬುದನ್ನು ಗಮನಿಸಬಹುದು. (4ಕ) ವಾಕ್ಯ ಆ ಘಟನೆ ನಡೆದಿದೆಯೆಂದು ತಿಳಿಸುತ್ತದೆ, (4ಖ) ವಾಕ್ಯ ಅದು ನಡೆದಿದೆಯೇ ಎಂದು ಕೇಳುತ್ತದೆ, (4ಗ) ವಾಕ್ಯ ಅದು ನಡೆದಿರಲು ಸಾಧ್ಯ ಎಂಬುದನ್ನು ತಿಳಿಸುತ್ತದೆ, (4ಘ) ವಾಕ್ಯ ಅದು ನಡೆಯಲು ಆಡುಗನ ಒಪ್ಪಿಗೆಯಿದೆಯೆಂಬುದನ್ನು ಸೂಚಿಸುತ್ತದೆ, ಮತ್ತು (4ಙ) ವಾಕ್ಯ ಅದು ನಡೆಯದಂತೆ ತಡೆಹಾಕುತ್ತದೆ.
ವಾಕ್ಯಗಳ ಮೂಲಕ ನಡೆಸಲು ಸಾಧ್ಯವಿರುವ ಈ ಹಲವು ರೀತಿಯ ‘ಮಾತಿನ ಕೆಲಸ’ಗಳಲ್ಲಿ ನಡೆದಿರುವ ಅಥವಾ ನಡೆಯಲಿರುವ ಘಟನೆಗಳನ್ನು ಇಲ್ಲವೇ ಸಂಗತಿಗಳನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವುದೇ ಅತ್ಯಂತ ಪ್ರಾಮುಖ್ಯವಾದ ಕೆಲಸವೆಂದು ಹೇಳಬಹುದು. ಹಾಗಾಗಿ, ಕನ್ನಡ ವಾಕ್ಯಗಳ ಒಳರಚನೆಯೇನು ಎಂಬುದನ್ನು ತಿಳಿದುಕೊಳ್ಳಬೇಕೆಂದಿರುವವರು ಮೊದಲಿಗೆ ಈ ರೀತಿ ಬೇರೆ ಬೇರೆ ಘಟನೆಗಳನ್ನು ಇಲ್ಲವೇ ಸಂಗತಿಗಳನ್ನು ಇನ್ನೊಬ್ಬರಿಗೆ ತಿಳಿಸಿಹೇಳುವುದಕ್ಕಾಗಿ ಎಂತಹ ವಾಕ್ಯಗಳನ್ನು ಬಳಸಲಾಗುತ್ತದೆ, ಮತ್ತು ಆ ವಾಕ್ಯಗಳ ಒಳರಚನೆ ಎಂತಹದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಇತರ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಬಳಸುವ ವಾಕ್ಯಗಳನ್ನೆಲ್ಲ ಇಂತಹ ಘಟನೆ ಇಲ್ಲವೇ ಸಂಗತಿಗಳನ್ನು ತಿಳಿಸಿ ಹೇಳಲು ಬಳಸುವ ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡುವುದರ ಮೂಲಕ ಸಾಧಿಸಲು ಸಾಧ್ಯವಿದೆ. ಹಾಗಾಗಿ, ತಿಳಿಸಿ ಹೇಳುವ ವಾಕ್ಯಗಳನ್ನು ಮೂಲ ವಾಕ್ಯಗಳೆಂದೂ ಮತ್ತು ಇತರ ವಾಕ್ಯಗಳನ್ನು ಅಂತಹ ಮೂಲ ವಾಕ್ಯಗಳಿಂದ ತಯಾರಾಗುವ ‘ಸಾಧಿತ’ ವಾಕ್ಯಗಳೆಂದೂ ಕಲ್ಪಿಸಿಕೊಂಡಲ್ಲಿ ಕನ್ನಡ ವಾಕ್ಯಗಳ ಒಳರಚನೆಯನ್ನು ತಿಳಿದುಕೊಳ್ಳುವ ಕೆಲಸ ಸುಲಭವಾಗಬಲ್ಲುದು. ಈ ಕಾರಣಕ್ಕಾಗಿ, ಮುಂದಿನ ಏಳು ಅಧ್ಯಾಯಗಳಲ್ಲಿ ತಿಳಿಸುವ ವಾಕ್ಯಗಳ ಒಳರಚನೆಯೇನೆಂಬುದನ್ನು ಮಾತ್ರವೇ ವಿವರಿಸಿ ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ತಿಳಿಸುವ ವಾಕ್ಯಗಳಲ್ಲೂ ಒಂದು ಘಟನೆಯನ್ನು ನೇರವಾಗಿ ತಿಳಿಸುವವುಗಳು ಮತ್ತು ಒಂದು ಘಟನೆಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಒಂದಕ್ಕೆ ಆ ಘಟನೆಯೊಂದಿಗಿರುವ ‘ಸಂಬಂಧ’ವನ್ನು ತಿಳಿಸುವವುಗಳು ಎಂಬುದಾಗಿ ಎರಡು ರೀತಿಯವುಗಳನ್ನು ಕಾಣಬಹುದು.
ರಾಜು ಬೆಂಗಳೂರಿಗೆ ಹೋದ. (5ಖ) ರಾಜು ಹೋದದ್ದು ಬೆಂಗಳೂರಿಗೆ. (5ಕ)ದಲ್ಲಿ ಒಂದು ಘಟನೆ ನಡೆದಿರುವುದನ್ನು ತಿಳಿಸಲಾಗಿದೆ, ಆದರೆ (5ಖ)ದಲ್ಲಿ ಬೆಂಗಳೂರು ಎಂಬ ಜಾಗಕ್ಕೂ ಮತ್ತು ಆ ಘಟನೆಗೂ ನಡುವಿರುವ ಸಂಬಂಧ ವನ್ನು ತಿಳಿಸಲಾಗಿದೆ ಇದಲ್ಲದೆ, ಘಟನೆ ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದಾಗಿ ಸೂಚಿಸು ವವುಗಳು (5ಕ) ಮತ್ತು ಅದನ್ನು ‘ಅಲ್ಲಗಳೆ’ಯುವವುಗಳು (5ಗ) ಎಂಬು ದಾಗಿಯೂ ಮತ್ತು ಸಂಗತಿ ಇದೆ, ಇತ್ತು ಅಥವಾ ಇರುತ್ತದೆ ಎಂಬುದನ್ನು ಸೂಚಿಸುವವುಗಳು (5ಘ) ಮತ್ತು ಅದನ್ನು ಅಲ್ಲಗಳೆಯುವವುಗಳು (5ಙ) ಎಂಬುದಾಗಿಯೂ ಬೇರೆ ಎರಡು ರೀತಿಯವನ್ನೂ ಕಾಣಬಹುದು.
ರಾಜು ಬೆಂಗಳೂರಿಗೆ ಹೋಗಲಿಲ್ಲ. (5ಘ) ರಾಜು ಬೆಂಗಳೂರಿನಲ್ಲಿ ಇದ್ದಾನೆ. (5ಙ) ರಾಜು ಬೆಂಗಳೂರಿನಲ್ಲಿ ಇಲ್ಲ. (5ಕ)ದಲ್ಲಿ ತಿಳಿಸಿರುವ ಘಟನೆ ನಡೆದಿಲ್ಲವೆಂಬುದಾಗಿ (5ಗ)ದಲ್ಲಿ ಆ ಘಟನೆ ಯನ್ನು ಅಲ್ಲಗಳೆಯಲಾಗಿದೆ. (5ಘ)ದಲ್ಲಿ ಒಂದು ಸಂಗತಿಯನ್ನು ತಿಳಿಸಲಾಗಿದೆ ಮತ್ತು (5ಙ)ದಲ್ಲಿ ಅದನ್ನು ಅಲ್ಲಗಳೆಯಲಾಗಿದೆ. ಘಟನೆಯೊಂದಿಗೆ ಅದರ ಘಟಕಗಳಲ್ಲೊಂದನ್ನು ಸಂಬಂಧಿಸುವ ಮತ್ತು ಘಟನೆ, ಸಂಗತಿ ಇಲ್ಲವೇ ಸಂಬಂಧಗಳನ್ನು ಅಲ್ಲಗಳೆಯುವ ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ಒಂಬತ್ತನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಇತರ ಮಾತಿನ ಕೆಲಸಗಳನ್ನು ನಡೆಸುವುದಕ್ಕಾಗಿ ಎಂತಹ ವಾಕ್ಯಗಳನ್ನು ಬಳಸಲಾಗುತ್ತದೆ ಎಂಬುದನ್ನು ಮತ್ತು ತಿಳಿಸುವ ವಾಕ್ಯಗಳಿಂದ ಅಂತಹ ವಾಕ್ಯ ಗಳನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ಹತ್ತನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಒಂಬತ್ತು ಅಧ್ಯಾಯಗಳಲ್ಲಿ (2-10) ಬರುವ ವಿಷಯಗಳು ಎಂತಹವು ಎಂಬುದನ್ನು ಕೆಳಗಿನ ವಿಭಾಗಗಳಲ್ಲಿ ಸ್ವಲ್ಪ ಚುಟುಕಾಗಿ ಸೂಚಿಸ
1.2 ಕ್ರಿಯಾವಾಕ್ಯಗಳು ಮತ್ತು ವಿಷಯವಾಕ್ಯಗಳು
ತಿಳಿಸುವ ವಾಕ್ಯಗಳಲ್ಲಿ ಯಾವುದಾದರೊಂದು ‘ಘಟನೆ’ಯನ್ನು (ಅದು ನಡೆದಿರು ವುದನ್ನು ಇಲ್ಲವೇ ನಡೆಯಲಿರುವುದನ್ನು) ತಿಳಿಸುವವು ಮತ್ತು ಒಂದು ಸಂಗತಿ ಯನ್ನು ತಿಳಿಸುವವು ಎಂಬುದಾಗಿ ಎರಡು ಮುಖ್ಯ ವಿಭಾಗಗಳನ್ನು ಮಾಡ ಬಹುದು. ಘಟನೆಯನ್ನು ತಿಳಿಸುವ ವಾಕ್ಯಗಳಲ್ಲೆಲ್ಲ ಆ ಘಟನೆಯನ್ನು ಸೂಚಿಸು ವುದಕ್ಕಾಗಿ ಯಾವುದಾದರೊಂದು ಕ್ರಿಯಾಪದ ಬಂದಿರುವ ಕಾರಣ ಅವನ್ನೆಲ್ಲ ‘ಕ್ರಿಯಾವಾಕ್ಯ’ಗಳೆಂದು ಕರೆಯಬಹುದು. ರಾಜು ಮರದಿಂದ ಕೆಳಗೆ ಹಾರಿದ. (6ಖ) ಒಬ್ಬ ಮುದುಕ ನಿಮ್ಮನ್ನು ಕಾಣಲು ಬಂದಿದ್ದ. (6ಗ) ದೊರೆಸ್ವಾಮಿಗಳು ನಾಳೆ ಬೆಂಗಳೂರಿಗೆ ಹೋಗುತ್ತಾರೆ. (6ಘ) ಶಾಮಣ್ಣೋರು ನಿಮ್ಮನ್ನು ಬಹಳ ಹೊಗಳಿದರು. ಮೇಲೆ (6ಕ-ಘ)ದಲ್ಲಿ ಬಂದಿರುವ ವಾಕ್ಯಗಳೆಲ್ಲ ಕ್ರಿಯಾವಾಕ್ಯಗಳು. ಅವು ಹಾರು, ಬರು, ಹೋಗು ಮತ್ತು ಹೊಗಳು ಎಂಬ ಕ್ರಿಯಾಪದಗಳ ಮೂಲಕ ಬೇರೆ ಬೇರೆ ಘಟನೆಗಳು ನಡೆದಿರುವುದನ್ನು ಇಲ್ಲವೇ ನಡೆಯಲಿರುವುದನ್ನು ಸೂಚಿಸುತ್ತವೆ. ಸಂಗತಿಯನ್ನು ತಿಳಿಸುವ ವಾಕ್ಯಗಳಲ್ಲೂ ಸಾಮಾನ್ಯವಾಗಿ ಒಂದು ಕ್ರಿಯಾ ಪದ ಬಂದಿರುತ್ತದೆ. ಆದರೆ ಇದು ಇಂತಹ ಎಲ್ಲಾ ವಾಕ್ಯಗಳಲ್ಲೂ ಇರು ಎಂಬ ಒಂದೇ ಕ್ರಿಯಾಪದವಾಗಿರುತ್ತದೆ. ಹಾಗಾಗಿ ಕೆಲವೊಮ್ಮೆ ಅದನ್ನು ಬಳಸದಿರಲೂ ಸಾಧ್ಯವಿದೆ. ಸಂಗತಿಯನ್ನು ತಿಳಿಸುವ ಈ ವಾಕ್ಯಗಳು ಘಟನೆಯನ್ನು ತಿಳಿಸುವ ವಾಕ್ಯಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿರುವ ಕಾರಣ, ಇವನ್ನು ಬೇರೊಂದು ಹೆಸರಿನಿಂದ ಕರೆಯುವ ಅವಶ್ಯಕತೆಯಿದೆ. ಈ ಪುಸ್ತಕದಲ್ಲಿ ಇವನ್ನು ‘ವಿಷಯವಾಕ್ಯ’ಗಳೆಂದು ಕರೆಯಲಾಗಿದೆ. ರಾಜುವಿನ ಕೈಯಲ್ಲಿ ಒಂದು ಹಣ್ಣಿದೆ. (7ಖ) ಅವರ ಮನೆ ಬಹಳ ದೊಡ್ಡದಿದೆ. (7ಘ) ಆ ಹುಡುಗ ಓದಿನಲ್ಲಿ ಸ್ವಲ್ಪ ಹಿಂದೆ ಇದ್ದಾನೆ. ಶಾಲೆಯ ಹುಡುಗರಿಗೆ ಇವತ್ತು ರಜೆ ಇದೆ. (7ಕ-ಘ)ದಲ್ಲಿ ಬಂದಿರುವ ವಾಕ್ಯಗಳೆಲ್ಲ ವಿಷಯವಾಕ್ಯಗಳು. ಇವು ಇರು ಕ್ರಿಯಾ ಪದದ ಮೂಲಕ ಬೇರೆ ಬೇರೆ ರೀತಿಯ ಸಂಗತಿಗಳ ಇರುವಿಕೆಯನ್ನು ಸೂಚಿಸು ತ್ತವೆ.
1.2.1 ಕ್ರಿಯಾಪದದ ಬಳಕೆ
ಮೇಲೆ ಸೂಚಿಸಿದ ಹಾಗೆ, ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳ ನಡುವೆ ಕೆಲವು ಪ್ರಾಮುಖ್ಯವಾದ ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಕ್ರಿಯಾವಾಕ್ಯಗಳಲ್ಲಿ ಬೇರೆ ಬೇರೆ ಕ್ರಿಯಾಪದಗಳು ಕೇಂದ್ರಗಳಾಗಿ ಬರುತ್ತಿದ್ದು, ಅವು ವಾಕ್ಯವು ತಿಳಿಸಬೇಕಾ ಗಿರುವ ಘಟನೆಯನ್ನು ಸೂಚಿಸುವುವಾದ ಕಾರಣ, ಅವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯಿದೆ. ಆದರೆ, ವಿಷಯವಾಕ್ಯಗಳಲ್ಲೆಲ್ಲ ಇರು ಎಂಬ ಒಂದೇ ಕ್ರಿಯಾಪದ ಬರು ತ್ತಿದ್ದು, ಅದು ವಾಕ್ಯದ ಘಟಕಗಳು ಒಟ್ಟಾಗಿ ಸೂಚಿಸುವ ಒಂದು ಸಂಗತಿಯ ಇರುವಿಕೆಯನ್ನು ಮಾತ್ರ ತಿಳಿಸುವುದಾದ ಕಾರಣ ಅದಕ್ಕೆ ಅಂತಹ ಮಹತ್ವದ ಸ್ಥಾನವಿಲ್ಲ. ಹಾಗಾಗಿ, ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು ಬಳಸದಿರುವುದು ಕಷ್ಟ, ಆದರೆ ವಿಷಯವಾಕ್ಯಗಳಲ್ಲಿ ಬರುವ ಕ್ರಿಯಾಪದವನ್ನು (ಇರು ಎಂಬು ದನ್ನು) ಬಳಸದಿರುವುದು ಸುಲಭ. ಸಾಮಾನ್ಯವಾಗಿ ಒಂದು ಸಂಗತಿಯ ಇರುವಿಕೆಯ ಕುರಿತಾಗಿ ಹೆಚ್ಚಿನದೇನನ್ನೂ ಹೇಳಬೇಕಾಗಿಲ್ಲವಾದಲ್ಲಿ ಈ ರೀತಿ ಅಂತಹ ವಿಷಯವಾಕ್ಯಗಳಲ್ಲಿ ಕ್ರಿಯಾಪದವನ್ನು ಬಳಸದಿರಲು ಸಾಧ್ಯವಿದೆ.
ಉದಾಹರಣೆಗಾಗಿ, ಒಂದು ಸಂಗತಿ ಇರುವುದು ಇಲ್ಲವೇ ಇದ್ದುದು ಯಾವಾಗ ಎಂಬುದಾಗಿ ಅದರ ಸಮಯವನ್ನು ಬೇರೆಯೇ ಒಂದು ಪದದ ಮೂಲಕ ಸೂಚಿಸಲಾಗಿದೆಯಾದರೆ (8ಕ-ಖ ನೋಡಿ), ಅಥವಾ ಹಾಗೆ ಸೂಚಿಸುವ ಅವಶ್ಯಕತೆಯಿಲ್ಲವಾದರೆ (8ಗ), ಅಂತಹ ಸಂದಭ್ರಗಳಲ್ಲಿ ವಿಷಯ ವಾಕ್ಯಗಳನ್ನು ಇರು ಕ್ರಿಯಾಪದವಿಲ್ಲದೆಯೂ ಬಳಸಲು ಸಾಧ್ಯವಿದೆ.
(8ಕ) ಮಕ್ಕಳಿಗೆ ಇವತ್ತು ಶಾಲೆಗೆ ರಜೆ. (8ಖ) ಶಾಮರಾಯರ ಮನೆಯಲ್ಲಿ ನಾಳೆ ಮದುವೆ. (8ಗ) ರಾಜುವಿನ ಮನೆ ಬಹಳ ಚಿಕ್ಕದು.
(8ಕ) ಮತ್ತು (8ಖ) ವಾಕ್ಯಗಳು ಸಂಗತಿಗಳನ್ನು ತಿಳಿಸುತ್ತಿದ್ದು, ಆ ಸಂಗತಿಗಳ ಸಮಯವನ್ನು ಇವತ್ತು ಮತ್ತು ನಾಳೆ ಎಂಬ ಪದಗಳ ಮೂಲಕ ಸೂಚಿಸಲಾಗಿದೆ. ಹಾಗಾಗಿ, ಈ ವಾಕ್ಯಗಳಲ್ಲಿ ಇರು ಪದವನ್ನು ಬಳಸುವ ಅವಶ್ಯಕತೆಯಿಲ್ಲ. ಇದೇ ರೀತಿಯಲ್ಲಿ (8ಗ) ವಾಕ್ಯವು ಹಿಂದಿನ ಮತ್ತು ಮುಂದಿನ ಸಮಯಗಳೆರಡಕ್ಕೂ ಸಂಬಂಧಿಸಿರುವ ಸಂಗತಿಯೊಂದನ್ನು ತಿಳಿಸುತ್ತಿದೆಯಾದ ಕಾರಣ, ಅದರಲ್ಲೂ ಇರು ಪದವನ್ನು ಬಳಸುವ ಅವಶ್ಯಕತೆಯಿಲ್ಲ.
1.2.2 ಸಮಯ ಸೂಚನೆಯಲ್ಲಿ ವ್ಯತ್ಯಾಸ
ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳ ನಡುವೆ ಅವು ಸೂಚಿಸುವ ಸಮಯ ಭೇದದಲ್ಲೂ ವ್ಯತ್ಯಾಸವಿದೆ. ಕ್ರಿಯಾವಾಕ್ಯಗಳಲ್ಲಿ ಬರುವ ಕ್ರಿಯಾಪದಗಳು ‘ಹಿಂದಿನವು’ ಮತ್ತು ‘ಮುಂದಿನವು’ ಎಂಬುದಾಗಿ ಅವು ತಿಳಿಸುವ ಘಟನೆಗಳ ಕುರಿತಾಗಿ ಎರಡು ರೀತಿಯ ಸಮಯಗಳನ್ನು ಮಾತ್ರ ಸೂಚಿಸಬಲ್ಲುವು. ಆದರೆ ಇದಕ್ಕೆ ಬದಲಾಗಿ, ವಿಷಯವಾಕ್ಯಗಳಲ್ಲಿ ಬರುವ ಇರು ಕ್ರಿಯಾಪದ ‘ಹಿಂದಿನವು’, ‘ಈಗಿನವು’ ಮತ್ತು ‘ಮುಂದಿನವು’ ಎಂಬುದಾಗಿ ಅವು ತಿಳಿಸುವ ಸಂಗತಿಗಳ ಕುರಿತಾಗಿ ಮೂರು ಬೇರೆ ಬೇರೆ ಸಮಯಗಳನ್ನು ಸೂಚಿಸಬಲ್ಲುವು.
ರಾಜು ಮರಕ್ಕೆ ಹತ್ತಿದ. (9ಖ) ರಾಜು ಮರಕ್ಕೆ ಹತ್ತುತ್ತಾನೆ. (10ಕ) ಆಕೆಗೆ ನಿಮ್ಮ ಮೇಲೆ ಬಹಳ ಕೋಪ ಇತ್ತು. (10ಖ) ಆಕೆಗೆ ನಿಮ್ಮ ಮೇಲೆ ಬಹಳ ಕೋಪ ಇದೆ. (10ಗ) ಆಕೆಗೆ ನಿಮ್ಮ ಮೇಲೆ (ನಾಳೆ ಭೇಟಿಗೆ ಹೋಗುವಾಗ) ಬಹಳ ಕೋಪ ಇರುತ್ತದೆ. ಕನ್ನಡದಲ್ಲಿ ಇರು ಕ್ರಿಯಾಪದಕ್ಕೆ ಇತ್ತು, ಇದೆ ಮತ್ತು ಇರುತ್ತದೆ ಎಂಬ ಮೂರು ಕ್ರಿಯಾರೂಪಗಳಿದ್ದು, ಅವನ್ನು ಬಳಸಿ ತಯಾರಿಸುವ ವಿಷಯವಾಕ್ಯಗಳು ಹಿಂದಿನ ಸಂಗತಿ, ಈಗಿನ ಸಂಗತಿ ಮತ್ತು ಮುಂದಿನ ಸಂಗತಿ ಎಂಬುದಾಗಿ ಮೂರು ಸಮಯಗಳಲ್ಲಿ ಕಾಣಿಸಿಕೊಳ್ಳುವ ಸಂಗತಿಗಳನ್ನು ಸೂಚಿಸಬಲ್ಲುವು ಎಂಬುದನ್ನು (10ಕ-ಗ) ವಾಕ್ಯಗಳಲ್ಲಿ ಕಾಣಬಹುದು.
ಆದರೆ ಕನ್ನಡದ ಇತರ ಕ್ರಿಯಾಪದಗಳಿಗೆ ಹಿಂದಿನ ಮತ್ತು ಮುಂದಿನ ಎಂಬ ಎರಡು ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆಯಾದ ಕಾರಣ, ಅವು ‘ಹಿಂದಿನ ಘಟನೆ’’ಮತ್ತು ‘ಮುಂದಿನ ಘಟನೆ’’ಎಂಬುದಾಗಿ ಎರಡು ಸಮಯಗಳಲ್ಲಿ ಕಾಣಿಸಿಕೊಳ್ಳುವ ಘಟನೆಗಳನ್ನು ಮಾತ್ರ ಸೂಚಿಸಬಲ್ಲುವು.
ಉದಾಹರಣೆಗಾಗಿ, ವಾಕ್ಯಗಳಲ್ಲಿ ಬಂದಿರುವ ಹತ್ತು ಕ್ರಿಯಾಪದಕ್ಕೆ ಹತ್ತಿದ ಮತ್ತು ಹತ್ತುತ್ತಾನೆ ಎಂಬ ಎರಡು ಸಮಯಗಳನ್ನು ಸೂಚಿಸುವ ರೂಪಗಳು ಮಾತ್ರ ಇವೆ. ಹಾಗಾಗಿ ಕ್ರಿಯಾವಾಕ್ಯಗಳಲ್ಲಿ ಮಾತಿನ ಸಮಯಕ್ಕಿಂತ ಮೊದಲು ನಡೆದ ಹತ್ತುವಿಕೆ ಮತ್ತು ಮಾತಿನ ಸಮಯದ ಅನಂತರ ನಡೆಯುವ ಹತ್ತುವಿಕೆ ಎಂಬುದಾಗಿ ಹತ್ತುವಿಕೆಯಲ್ಲಿ ಎರಡು ರೀತಿಯ ಸಮಯಭೇದವನ್ನು ಮಾತ್ರ ಈ ಕ್ರಿಯಾಪದದ ಮೂಲಕ ನೇರವಾಗಿ ಸೂಚಿಸಲು ಸಾಧ್ಯ.
ವಿಶಿಷ್ಟವಾಗಿ ಒಂದು ಘಟನೆ ಮಾತನಾಡುವ ಸಮಯದಲ್ಲೇನೇ ನಡೆಯು ತ್ತಿದೆ ಎಂಬುದಾಗಿ ಅದರ ಸಮಯವನ್ನು ಸೂಚಿಸಬೇಕಾದಾಗ, ಕನ್ನಡದಲ್ಲಿ ಕೆಳಗೆ (9ಗ)ದಲ್ಲಿ ಕಾಣಿಸಿರುವ ಹಾಗೆ ಕ್ರಿಯಾಪದವನ್ನು ಇರು ಎಂಬುದರ ಈಗಿನ ಸಮಯವನ್ನು ಸೂಚಿಸುವ ರೂಪದೊಂದಿಗೆ ಸೇರಿಸಿ ಬಳಸಬೇಕಾಗುತ್ತದೆ. (ಈ (9ಗ) ವಾಕ್ಯಕ್ಕೆ ರೂಢಿಯಲ್ಲಿರುವ ಘಟನೆಯನ್ನು ಸೂಚಿಸುವ ಇನ್ನೊಂದು ಅರ್ಥವೂ ಇದೆಯೆಂಬುದನ್ನು ಮುಂದೆ ನೋಡಲಿರುವೆವು). ರಾಜು ಮರಕ್ಕೆ ಹತ್ತುತ್ತಿದ್ದಾನೆ.
1.2.3 ಎರಡರ ನಡುವಿನ ಸಂಬಂಧ
ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳು ಈ ರೀತಿ ಒಂದರಿಂದೊಂದು ಭಿನ್ನ ವಾಗಿವೆಯಾದರೂ ಅವುಗಳ ನಡುವೆ ಹತ್ತಿರದ ಸಂಬಂಧವಿದೆ. ಸಾಮಾನ್ಯವಾಗಿ ಎರಡು ವಿಷಯವಾಕ್ಯಗಳು ತಿಳಿಸುವ ಸಂಗತಿಗಳನ್ನು ಒಂದು ಕ್ರಿಯಾವಾಕ್ಯ ಸಂಬಂಧಿಸಬಲ್ಲುದು.
(11ಕ) ರಾಜು ಮರದ ಕೆಳಗಿದ್ದಾನೆ. (11ಖ) ರಾಜು ಮರದ ಮೇಲಿದ್ದಾನೆ. (11ಗ) ರಾಜು ಮರಕ್ಕೆ ಹತ್ತಿದ. (11ಕ-ಖ)ಗಳು ವಿಷಯವಾಕ್ಯಗಳು. ಅವು ಎರಡು ಬೇರೆ ಬೇರೆ ಸಂಗತಿಗಳನ್ನು ತಿಳಿಸುತ್ತವೆ. ಆದರೆ, (11ಗ) ಒಂದು ಕ್ರಿಯಾವಾಕ್ಯ. ಅದು ಈ ಎರಡು ಸಂಗತಿಗಳನ್ನು ಸಂಬಂಧಿಸುತ್ತದೆ. ಅದು ತಿಳಿಸುವ ಘಟನೆಯಿಂದಾಗಿ (11ಕ) ತಿಳಿಸುವ ಸಂಗತಿ (11ಖ) ತಿಳಿಸುವ ಸಂಗತಿಯಾಗಿ ಬದಲಾಗಿದೆ ಎಂದು ಹೇಳಬಹುದು. ಈ ರೀತಿ ಕ್ರಿಯಾವಾಕ್ಯ ಮತ್ತು ವಿಷಯವಾಕ್ಯಗಳು ಒಂದಕ್ಕೊಂದು ಸಂಬಂಧಿಸಿವೆಯಾದರೂ ಅವುಗಳ ನಡುವೆ ಹಲವು ವ್ಯತ್ಯಾಸಗಳಿವೆಯಾದ ಕಾರಣ, ಕ್ರಿಯಾವಾಕ್ಯಗಳ ಒಳರಚನೆಯನ್ನು ಎರಡನೆಯ ಅಧ್ಯಾಯದಲ್ಲೂ ಮತ್ತು ವಿಷಯವಾಕ್ಯಗಳ ಒಳರಚನೆಯನ್ನು ಮೂರನೆಯ ಅಧ್ಯಾಯದಲ್ಲೂ ವಿವರಿಸ ಲಾಗಿದೆ.
1.3 ವಾಕ್ಯದ ಘಟಕಗಳು
ಮೇಲೆ ವಿವರಿಸಿರುವ ಎರಡು ರೀತಿಯ ತಿಳಿಸುವ ವಾಕ್ಯಗಳಲ್ಲೂ ಕೇಂದ್ರಸ್ಥಾನ ದಲ್ಲಿ ಒಂದು ಕ್ರಿಯಾಪದ ಬರುತ್ತದೆ. ಕ್ರಿಯಾವಾಕ್ಯಗಳಲ್ಲಿ ಇದು ಆ ವಾಕ್ಯಗಳು ತಿಳಿಸುವ ಘಟನೆಯನ್ನು ಸೂಚಿಸುತ್ತದೆ ಮತ್ತು ವಿಷಯವಾಕ್ಯಗಳಲ್ಲಿ ಅವು ತಿಳಿಸುವ ಸಂಗತಿಯ ಇರುವಿಕೆಯನ್ನು ಸೂಚಿಸುತ್ತದೆ. ಈ ಕೇಂದ್ರದೊಂದಿಗೆ ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ಈ ವಾಕ್ಯಗಳಲ್ಲಿ ಕೆಲವು ‘ಘಟಕ’ ಗಳೂ ಬಂದಿರುತ್ತವೆ. ಉದಾಹರಣೆಗಾಗಿ ಕೆಳಗಿನ ಎರಡು ವಾಕ್ಯಗಳನ್ನು ಗಮನಿಸ ಬಹುದು. (12ಕ) ರಾಜು ಬೆಕ್ಕಿಗೆ ಹಾಲು ಕುಡಿಸಿದ. (12ಖ) ಈ ಪುಸ್ತಕಕ್ಕೆ ಕೆಂಪು ಬಣ್ಣದ ತಟ್ಟಿ ಇದೆ. (12ಕ)ದಲ್ಲಿ ಕೊಟ್ಟಿರುವ ಕ್ರಿಯಾವಾಕ್ಯದಲ್ಲಿ ಕುಡಿಸಿದ ಎಂಬ ಕ್ರಿಯಾಪದ ಮಾತ್ರವಲ್ಲದೆ ರಾಜು, ಬೆಕ್ಕಿಗೆ ಮತ್ತು ಹಾಲು ಎಂಬ ಮೂರು ಘಟಕಗಳು ಬಂದಿವೆ. ಈ ಘಟಕಗಳು ಕುಡಿಸುವ ಘಟನೆಗೆ ಸಂಬಂಧಿಸಿರುವ ಮೂರು ವ್ಯಕ್ತಿ, ಪ್ರಾಣಿ ಮತ್ತು ವಸ್ತುಗಳನ್ನು ಸೂಚಿಸುತ್ತಿವೆ.
ಇದೇ ರೀತಿಯಲ್ಲಿ (12ಖ)ದಲ್ಲಿ ಕೊಟ್ಟಿರುವ ವಿಷಯವಾಕ್ಯದಲ್ಲಿ ಇದೆ ಕ್ರಿಯಾಪದ ಮಾತ್ರವಲ್ಲದೆ, ಈ ಪುಸ್ತಕಕ್ಕೆ ಮತ್ತು ಕೆಂಪು ಬಣ್ಣದ ತಟ್ಟಿ ಎಂಬ ಎರಡು ಘಟಕಗಳು ಬಂದಿದ್ದು, ಅವು ಈ ವಾಕ್ಯ ತಿಳಿಸುವ ಸಂಗತಿಗೆ ಸಂಬಂಧಿಸಿರುವ ವಸ್ತು ಮತ್ತು ಅದರ ಗುಣಧರ್ಮಗಳನ್ನು ಸೂಚಿಸುತ್ತವೆ. ಒಂದು ಘಟನೆ ಇಲ್ಲವೇ ಸಂಗತಿಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವ ಘಟಕಗಳ ತಯಾರಿಕೆಯಲ್ಲಿ ಪದ ಮತ್ತು ಪದಕಂತೆ ಎಂಬುದಾಗಿ ಎರಡು ಮಟ್ಟಗಳಲ್ಲಿ ಬರುವ ವಾಕ್ಯಾಂಗಗಳು ಬಳಕೆ ಯಾಗುತ್ತವೆ. ಇವುಗಳಲ್ಲಿ ಮೊದಲನೆಯದು ವ್ಯಕ್ತಿ, ವಸ್ತು ಮೊದಲಾದುವನ್ನು ‘ಹೆಸರಿಸುವ’ ಮೂಲಕ ಗುರುತಿಸುತ್ತದೆ ಮತ್ತು ಎರಡನೆಯದು ಅವನ್ನೇ ‘ವರ್ಣಿಸುವ’ ಮೂಲಕ ಗುರುತಿಸುತ್ತದೆ. ಈ ಎರಡು ರೀತಿಯ ವಾಕ್ಯಾಂಗಗಳ ಬಳಕೆಯೆಂತಹದು ಎಂಬುದನ್ನು ನಾಲ್ಕನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.
1.3.1 ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು
ವಾಕ್ಯದ ಕ್ರಿಯಾಪದದೊಂದಿಗೆ ಬರುವ ಈ ಘಟಕಗಳು ಅದು ತಿಳಿಸುವ ಘಟನೆಗೆ ಬೇರೆ ಬೇರೆ ರೀತಿಯಲ್ಲಿ ಸಂಬಂಧಿಸಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾ ದವುಗಳನ್ನು ಸೂಚಿಸುತ್ತವೆ. ಇವನ್ನು ಮುಖ್ಯ ಘಟಕಗಳು ಮತ್ತು ಮುಖ್ಯವಲ್ಲದ ಘಟಕಗಳು ಎಂಬುದಾಗಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಸಾಮಾನ್ಯವಾಗಿ ಒಂದು ವಾಕ್ಯದ ಕೇಂದ್ರವಾಗಿರುವ ಕ್ರಿಯಾಪದದ ಸ್ವರೂಪ ಮತ್ತು ಗುಣಧರ್ಮಗಳನ್ನವಲಂಬಿಸಿ ಬರುವ ಘಟಕಗಳನ್ನು ಅದರ ಮುಖ್ಯ ಘಟಕಗಳೆಂದು ಕರೆಯಬಹುದು. ಉದಾಹರಣೆಗಾಗಿ, ಬೀಳು ಕ್ರಿಯಾಪದವಿರುವ ಒಂದು ವಾಕ್ಯದಲ್ಲಿ ಒಬ್ಬ ವ್ಯಕ್ತಿಯನ್ನು (ಇಲ್ಲವೇ ಒಂದು ವಸ್ತುವನ್ನು) ಸೂಚಿಸು ವಂತಹ ಒಂದೇ ಒಂದು ಮುಖ್ಯ ಘಟಕ ಮಾತ್ರ ಬರುತ್ತದೆ. ಯಾಕೆಂದರೆ, ಬೀಳುವ ಘಟನೆಗೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಮಾತ್ರವೇ ಸಂಬಂಧಿ ಸಿರಲು ಸಾಧ್ಯ.
(13ಕ) ಸುರೇಶ ಬಿದ್ದ. (13ಖ) ಕೊಡ ಬಿತ್ತು. ಆದರೆ, ಬೀಳಿಸು ಕ್ರಿಯಾಪದವಿರುವ ವಾಕ್ಯದಲ್ಲಿ ಇಬ್ಬರು ವ್ಯಕ್ತಿಗಳನ್ನು (ಇಲ್ಲವೇ ಒಬ್ಬ ವ್ಯಕ್ತಿ ಮತ್ತು ಒಂದು ವಸ್ತುವನ್ನು) ಸೂಚಿಸಬೇಕಾಗುವುದಾದ ಕಾರಣ, ಅದರೊಂದಿಗೆ ಎರಡು ಮುಖ್ಯ ಘಟಕಗಳನ್ನು ಬಳಸುವ ಅವಶ್ಯಕತೆ ಯಿದೆ. ಯಾಕೆಂದರೆ, ‘ಬೀಳಿಸುವ ಘಟನೆ’ಗೆ ‘ಬೀಳುವ ವ್ಯಕ್ತಿ (ಇಲ್ಲವೇ ವಸ್ತು)’ ಮಾತ್ರವಲ್ಲದೆ, ‘ಬೀಳಿಸುವಂತಹ ಇನ್ನೊಂದು ವ್ಯಕ್ತಿ’ಯೂ ಸಂಬಂಧಿಸಿರುತ್ತದೆ.
(14ಕ) ಜಾನಕಿ ಸುರೇಶನನ್ನು ಬೀಳಿಸಿದಳು. (14ಖ) ಜಾನಕಿ ಕೊಡವನ್ನು ಬೀಳಿಸಿದಳು. ಎರಡಕ್ಕಿಂತ ಜಾಸ್ತಿ ಮುಖ್ಯ ಘಟಕಗಳು ಬೇಕಾಗುವ ಕ್ರಿಯಾಪದಗಳೂ ಕನ್ನಡದಲ್ಲಿವೆ. ಉದಾಹರಣೆಗಾಗಿ, ಕೊಡು ಕ್ರಿಯಾಪದವಿರುವ ವಾಕ್ಯದಲ್ಲಿ ‘ಕೊಡುವ ವ್ಯಕ್ತಿ’, ‘ಕೊಡುವ ವಸ್ತು’ ಮತ್ತು ‘ಕೊಟ್ಟುದನ್ನು ಪಡೆಯುವ ವ್ಯಕ್ತಿ’ ಎಂಬುದಾಗಿ ಮೂರು ವ್ಯಕ್ತಿ ಮತ್ತು ವಸ್ತುಗಳನ್ನು ಸೂಚಿಸುವ ಘಟಕಗಳನ್ನು ಬಳಸಬೇಕಾಗುತ್ತದೆ. ಇದೇ ರೀತಿಯಲ್ಲಿ ತಿನ್ನಿಸು ಕ್ರಿಯಾಪದವಿರುವ ವಾಕ್ಯದಲ್ಲಿ ‘ತಿನ್ನಿಸಿದವರು ಯಾರು’, ‘ತಿನ್ನಿಸಿದ್ದು ಯಾರಿಗೆ’ ಮತ್ತು ‘ತಿನ್ನಿಸಿದ್ದು ಏನನ್ನು’ ಎಂಬ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲ ಮೂರು ಘಟಕಗಳನ್ನು ಬಳಸುವ ಅವಶ್ಯಕತೆಯಿದೆ. (15ಕ) ರಂಗೇಗೌಡರು ಎತ್ತುಗಳನ್ನು ಕರೀಮನಿಗೆ ಕೊಟ್ಟರು. (15ಖ) ಸೀತಾಬಾಯಿ ಮಕ್ಕಳಿಗೆ ತಿಂಡಿ ತಿನ್ನಿಸಿದಳು. ಈ ರೀತಿ ವಾಕ್ಯವೊಂದರಲ್ಲಿ ಎಷ್ಟು ಮುಖ್ಯ ಘಟಕಗಳು ಬರುತ್ತವೆ ಎಂಬುದು ಮಾತ್ರವಲ್ಲ, ಎಂತಹ ಮುಖ್ಯ ಘಟಕಗಳು ಬರುತ್ತವೆ ಎಂಬುದೂ ವಾಕ್ಯದ ಕ್ರಿಯಾಪದ ಎಂತಹದು ಎಂಬುದನ್ನವಲಂಬಿಸಿದೆ. ಉದಾಹರಣೆಗಾಗಿ, ಹೋಗು ಕ್ರಿಯಾಪದವಿರುವ ವಾಕ್ಯದಲ್ಲಿ ‘ಹೋಗುವ ವ್ಯಕ್ತಿ’ ಮತ್ತು ‘ಹೋಗುವ ಜಾಗ’ ಎಂಬುದಾಗಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ಜಾಗವನ್ನು ಸೂಚಿಸುವ ಘಟಕಗಳು ಬರಬೇಕಾಗುತ್ತದಾದರೆ, ಮರೆ ಕ್ರಿಯಾಪದವಿರುವ ವಾಕ್ಯದಲ್ಲಿ ‘ಮರೆತ ವ್ಯಕ್ತಿ’ ಮತ್ತು ‘ಮರೆತ ವಿಷಯ’ ಎಂಬುದಾಗಿ ಒಬ್ಬ ವ್ಯಕ್ತಿಯನ್ನು ಮತ್ತು ಒಂದು ವಿಷಯವನ್ನು ಸೂಚಿಸುವ ಘಟಕಗಳು ಬರಬೇಕಾಗುತ್ತದೆ.
(16ಕ) ರಾಜು ಬೆಂಗಳೂರಿಗೆ ಹೋದ. (16ಖ) ರಾಜು ಆಕೆಯನ್ನು ಮರೆತಿದ್ದಾನೆ. ಕ್ರಿಯಾವಾಕ್ಯಗಳಲ್ಲಿ ಈ ರೀತಿ ಕ್ರಿಯಾಪದದ ಸ್ವರೂಪವನ್ನವಲಂಬಿಸಿ ಬರುವ ಮುಖ್ಯ ಘಟಕಗಳು ಮಾತ್ರವಲ್ಲದೆ ಬೇರೆ ಕೆಲವು ಮುಖ್ಯವಲ್ಲದ ಘಟಕಗಳೂ ಬರಬಲ್ಲುವು. ಇಂತಹ ಮುಖ್ಯವಲ್ಲದ ಘಟಕಗಳು ಎಲ್ಲಾ ವಾಕ್ಯಗಳಿಗೂ ಸಮಾನ ವಾಗಿದ್ದು, ಆ ವಾಕ್ಯಗಳು ತಿಳಿಸುವ ಘಟನೆಯ ಸಮಯ, ಜಾಗ, ಕಾರಣ, ಉದ್ದೇಶ, ಮೊದಲಾದುವನ್ನು ಸೂಚಿಸುತ್ತವೆ.
(17ಕ) ರಾಜು ಬೆಂಗಳೂರಿಗೆ ರೈಲಿನಲ್ಲಿ ಹೋದ. (17ಖ) ಆಕೆ ಬಿಸಿಲಿನಲ್ಲಿ ಹಪ್ಪಳ ಒಣಗಿಸಿದಳು. (17ಗ) ವತ್ಸಲಾ ಸೋಮವಾರ ಒಂದು ಸಿನೆಮಾ ನೋಡಿದ್ದಳು. (17ಘ) ಆತ ಮಣ್ಣಿನಲ್ಲಿ ಒಂದು ಗೊಂಬೆ ಮಾಡಿದ. (17ಙ) ರಾಜು ಹರಿಯೊಂದಿಗೆ ಪೇಟೆಗೆ ಹೋದ. ಮೇಲಿನ ವಾಕ್ಯಗಳಲ್ಲಿ ರೈಲಿನಲ್ಲಿ, ಬಿಸಿಲಿನಲ್ಲಿ, ಸೋಮವಾರ, ಮಣ್ಣಿನಲ್ಲಿ ಮತ್ತು ಹರಿಯೊಂದಿಗೆ ಎಂಬ ಮುಖ್ಯವಲ್ಲದ ಘಟಕಗಳು ಬಂದಿರುವುದನ್ನು ಗಮನಿಸಬಹುದು. ಇವು ಹೆಚ್ಚು ಕಡಿಮೆ ಎಲ್ಲಾ ರೀತಿಯ ವಾಕ್ಯಗಳಲ್ಲೂ ಬರಬಲ್ಲ ಜಾಗ, ಸಮಯ, ಜೊತೆಗಾರ ಮೊದಲಾದವುಗಳನ್ನು ಸೂಚಿಸುತ್ತವೆ. ಸಂಗತಿಯನ್ನು ಸೂಚಿಸುವ ವಿಷಯವಾಕ್ಯಗಳಲ್ಲೂ ಇದೇ ರೀತಿಯಲ್ಲಿ ಮುಖ್ಯವಾದ ಮತ್ತು ಮುಖ್ಯವಲ್ಲದ ಘಟಕಗಳು ಬರಬಲ್ಲುವು. ವಿಷಯವಾಕ್ಯ ಗಳಲ್ಲೆಲ್ಲ ಇರು ಎಂಬ ಒಂದೇ ಕ್ರಿಯಾಪದ ಬರುವುದಾದ ಕಾರಣ, ಅವುಗಳ ಲ್ಲೆಲ್ಲ ಎರಡೆರಡು ಮುಖ್ಯ ಘಟಕಗಳು ಬರುತ್ತವೆ. ಆದರೆ ಅವು ಸೂಚಿಸುವ ಸಂಗತಿಯ ಸ್ವರೂಪವನ್ನಾಧರಿಸಿ, ಈ ಘಟಕಗಳು ಬೇರೆ ಬೇರೆ ರೂಪದಲ್ಲಿ ಬರುತ್ತಿದ್ದು, ವಸ್ತು, ಜಾಗ, ಗುಣಧರ್ಮ ಮೊದಲಾದುವನ್ನು ಸೂಚಿಸುತ್ತವೆ. (18ಕ) ಇವತ್ತು ಬೆಳಿಗ್ಗೆ ಆ ಟಾಂಕಿಯಲ್ಲಿ ಒಂದು ಹೆಣ ಇತ್ತು. (18ಖ) ನಾರಾಯಣಸ್ವಾಮಿಯ ತಲೆ ನುಣ್ಣಗಿದೆ. (18ಗ) ಈ ಮುದುಕನಿಗೆ ನೂರು ಮುಡಿ ಗದ್ದೆಯಿದೆ. (18ಕ) ವಾಕ್ಯದಲ್ಲಿ ಆ ಟಾಂಕಿಯಲ್ಲಿ ಎಂಬುದು ಒಂದು ಜಾಗವನ್ನೂ ಮತ್ತು ಒಂದು ಹೆಣ ಎಂಬುದು ಒಂದು ವಸ್ತುವನ್ನೂ ಸೂಚಿಸುವುದಕ್ಕಾಗಿ ಬಂದಿರುವ ಎರಡು ಮುಖ್ಯ ಘಟಕಗಳು. ಇವು ಒಟ್ಟಾಗಿ ಯಾವ ಜಾಗದಲ್ಲಿ ಯಾವ ವಸ್ತು ವಿದೆ ಎಂಬ ಸಂಗತಿಯನ್ನು ತಿಳಿಸುತ್ತವೆ. ಈ ವಾಕ್ಯದಲ್ಲಿ ಈ ಎರಡು ಮುಖ್ಯ ಘಟಕಗಳು ಮಾತ್ರವಲ್ಲದೆ ಸಂಗತಿಯ ಸಮಯವನ್ನು ಸೂಚಿಸುವ ಇವತ್ತು ಬೆಳಿಗ್ಗೆ ಎಂಬ ಒಂದು ಮುಖ್ಯವಲ್ಲದ ಘಟಕವೂ ಇದೆ. ಇದು ಇತ್ತು ಕ್ರಿಯಾಪದ ಕುರಿತಾಗಿ ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ. ಈ ರೀತಿ (18ಕ) ವಾಕ್ಯ ಒಂದು ಜಾಗದಲ್ಲಿ ವಸ್ತುವೊಂದರ ಇರುವಿಕೆ ಯನ್ನು ಸೂಚಿಸುವುದಾದರೆ, (18ಖ) ವಾಕ್ಯ ಒಂದು ವಸ್ತುವಿನ (ನಾರಾಯಣ ಸ್ವಾಮಿಯ ತಲೆಯ) ಗುಣಧರ್ಮವೊಂದನ್ನು (ನುಣ್ಣಗೆ ಎಂಬುದಾಗಿ) ತಿಳಿಸು ತ್ತದೆ, ಮತ್ತು (18ಗ) ವಾಕ್ಯ ಒಬ್ಬ ವ್ಯಕ್ತಿಗೂ (ಈ ಮುದುಕನಿಗೂ) ಮತ್ತು ಒಂದು ವಸ್ತುವಿಗೂ (ನೂರು ಮುಡಿ ಗದ್ದೆಗೂ) ನಡುವೆ ಒಂದು ಸಂಬಂಧ ಇದೆ ಎಂಬುದನ್ನು ತಿಳಿಸುತ್ತದೆ.
ಸೂಚಿಸುವ ಸಮಯದ ಈ ಮೂರು ರೀತಿಯ ವಾಕ್ಯಗಳಲ್ಲಿ ಬರುವ ಮುಖ್ಯ ಘಟಕಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಅವು ಸೂಚಿಸುವ ಸಂಗತಿಗಳ ನಡುವಿರುವ ವ್ಯತ್ಯಾಸ ಗಳೇ ಕಾರಣ.
1.3.2 ವಿಭಕ್ತಿ ಪ್ರತ್ಯಯಗಳ ಬಳಕೆ
ವಾಕ್ಯವೊಂದರಲ್ಲಿ ಒಂದಕ್ಕಿಂತ ಜಾಸ್ತಿ ಘಟಕಗಳು ಬಂದಾಗ ಅವು ಯಾವ ರೀತಿಯಲ್ಲಿ ಕ್ರಿಯಾಪದದೊಂದಿಗೆ (ಎಂದರೆ ಕ್ರಿಯಾಪದ ಸೂಚಿಸುವ ಘಟನೆಯಲ್ಲಿ ಅವು ಹೇಗೆ ತೊಡಗಿಕೊಂಡಿವೆ) ಎಂಬುದನ್ನು ತಿಳಿಸು ವುದಕ್ಕಾಗಿ ಅವುಗಳೊಂದಿಗೆ ವಿಭಕ್ತಿ ಪ್ರತ್ಯಯಗಳನ್ನು ಇಲ್ಲವೇ ಇತರ ಪದಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಬಹುದು. ಸಂಬಂಧಿಸಿವೆ (19ಕ) ರಾಜು ಹರಿಯನ್ನು ದೂಡಿದ. (19ಖ) ರಾಜುವನ್ನು ಹರಿ ದೂಡಿದ. (19ಕ-ಖ)ವಾಕ್ಯಗಳಲ್ಲಿ ದೂಡು ಕ್ರಿಯಾಪದದೊಂದಿಗೆ ಎರಡು ಬೇರೆ ಬೇರೆ ವ್ಯಕ್ತಿಗಳನ್ನು ಸೂಚಿಸುವ ರಾಜು ಮತ್ತು ಹರಿ ಎಂಬ ಘಟಕಗಳು ಬಂದಿವೆ. ಇವುಗಳಲ್ಲಿ ಒಂದನ್ನು (ಎಂದರೆ ದೂಡುವ ವ್ಯಕ್ತಿಯನ್ನು ಸೂಚಿಸುವ ಘಟಕ ವನ್ನು) ಯಾವ ವಿಭಕ್ತಿ ಪ್ರತ್ಯಯವೂ ಇಲ್ಲದೆ ಹಾಗೆಯೇ ಬಳಸಲಾಗಿದೆ ಮತ್ತು ಇನ್ನೊಂದನ್ನು (ಎಂದರೆ ದೂಡಲ್ಪಡುವ ವ್ಯಕ್ತಿಯನ್ನು ಸೂಚಿಸುವ ಘಟಕವನ್ನು) ಅನ್ನು ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬಳಸಲಾಗಿದೆ.
ದೂಡುವ ವ್ಯಕ್ತಿ (19ಕ)ದಲ್ಲಿ ರಾಜು ಘಟಕ ಮತ್ತು (19ಕ)ದಲ್ಲಿ ಹರಿ ಘಟಕ; ಹಾಗಾಗಿ ಇವೆರಡೂ ವಿಭಕ್ತಿ ಪ್ರತ್ಯಯವಿಲ್ಲದೆ ಬಂದಿವೆ. ದೂಡಲ್ಪಡುವ ವ್ಯಕ್ತಿ (19ಕ)ದಲ್ಲಿ ಹರಿ ಘಟಕ ಮತ್ತು (19ಖ)ದಲ್ಲಿ ರಾಜು ಘಟಕ; ಹಾಗಾಗಿ ಇವೆರಡೂ ಅನ್ನು ಪ್ರತ್ಯಯದೊಂದಿಗೆ ಬಂದಿವೆ. ಈ ರೀತಿ ಘಟಕಗಳಿಗೂ ಮತ್ತು ಕ್ರಿಯಾಪದಕ್ಕೂ ನಡುವಿರುವ ಸಂಬಂಧ
ಗಳನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು ವಿಭಕ್ತಿ
ಪ್ರತ್ಯಯಗಳು ಬಳಕೆಯಾಗುತ್ತವೆ. ಬಾಧಿತ: ಅನ್ನು (ಘಟನೆಯಿಂದ ಬಾಧಿತವಾಗುವ ವ್ಯಕ್ತಿ ಇಲ್ಲವೇ ವಸ್ತು). ಸುರು: ಇಂದ (ಘಟನೆ ಸುರುವಾಗುವ ಜಾಗ). ಕೊನೆ: ಗೆ (ಘಟನೆ ಕೊನೆಗೊಳ್ಳುವ ಜಾಗ). ಜಾಗ: ಅಲ್ಲಿ (ಘಟನೆಯ ಜಾಗ). ಈ ನಾಲ್ಕು ವಿಭಕ್ತಿ ಪ್ರತ್ಯಯಗಳ ಮುಖ್ಯ ಬಳಕೆಗಳನ್ನು ಕೆಳಗಿನ ವಾಕ್ಯ ಗಳಲ್ಲಿ ಕಾಣಬಹುದು. (20ಕ) ಅವರು ಆ ಹುಡುಗನನ್ನು ದೂಡಿದರು. (20ಖ) ಅವರು ಮನೆಯಿಂದ ಹೊರಟಿದ್ದಾರೆ. (20ಗ) ಅವರು ಮನೆಗೆ ತಲಪಿದ್ದಾರೆ. (20ಘ) ಅವರು ಅಂಗಳದಲ್ಲಿ ಹಾಡುತ್ತಿದ್ದಾರೆ. ಈ ನಾಲ್ಕು ಮುಖ್ಯ ಬಳಕೆಗಳು ಮಾತ್ರವಲ್ಲದೆ ಬೇರೆಯೂ ಹಲವು ಬಳಕೆಗಳು ಈ ಪ್ರತ್ಯಯಗಳಿಗಿದ್ದು ಅವು ಸಂದಭ್ರಕ್ಕನುಸಾರವಾಗಿ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಸೂಚಿಸಬಲ್ಲುವು ಎಂಬುದನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು. (21ಕ) ಮನೋಹರನಿಗೆ ಆರು ಮಂದಿ ಹುಡುಗಿಯರಿದ್ದಾರೆ. (21ಖ) ರಂಗಣ್ಣ ಕೊಡಲಿಯಿಂದ ಮರದ ಗೆಲ್ಲುಗಳನ್ನು ಕಡಿದ. (21ಕ)ದಲ್ಲಿ ಗೆ ಪ್ರತ್ಯಯ ಮನೋಹರನಿಗೂ ಮತ್ತು ಆರು ಮಂದಿ ಹುಡುಗಿ ಯರಿಗೂ ನಡುವಿರುವ ಸಂಬಂಧವನ್ನು ಸೂಚಿಸುವುದಕ್ಕಾಗಿ ಬಳಕೆಯಾಗಿದೆ ಮತ್ತು (21ಖ)ದಲ್ಲಿ ಇಂದ ಪ್ರತ್ಯಯ ಕಡಿಯುವ ಘಟನೆಯಲ್ಲಿ ತೊಡಗಿಸ ಲಾಗಿರುವ ಸಾಧನವೊಂದನ್ನು ಸೂಚಿಸಲು ಬಳಕೆಯಾಗಿದೆ. ಇಂತಹ ಹೆಚ್ಚಿನ ಬಳಕೆಗಳನ್ನೆಲ್ಲ ಮೇಲೆ ಸೂಚಿಸಿರುವ ಮುಖ್ಯ ಬಳಕೆಗಳಿಂದ ಸಾಧಿಸಲು ಸಾಧ್ಯವಿದೆ ಎಂಬುದನ್ನು ಎರಡನೇ ಅಧ್ಯಾಯದಲ್ಲಿ ನೋಡಲಿರುವೆವು.
1.3.3 ಎರಡು ರೀತಿಯ ಸಂಬಂಧಗಳು
ವಾಕ್ಯದ ಮುಖ್ಯ ಕ್ರಿಯಾಪದಕ್ಕೂ ಮತ್ತು ಅದರ ಘಟಕಗಳಿಗೂ ನಡುವಿರುವ ಸಂಬಂಧವನ್ನು ಮೇಲೆ ಸೂಚಿಸಿದ ಹಾಗೆ ವಿಭಕ್ತಿ ಪ್ರತ್ಯಯಗಳ ಮೂಲಕ ತಿಳಿಸಲಾಗುತ್ತದೆ. ಇಂತಹ ಸಂಬಂಧಗಳು ವಾಕ್ಯದ ಅರ್ಥಕ್ಕೆ ಸಂಬಂಧಿಸಿವೆಯಾದ ಕಾರಣ, ಅವನ್ನು ‘ಅರ್ಥ’ ಸಂಬಂಧಗಳೆಂದು ಕರೆಯಬಹುದು. ಇಂತಹ ಸಂಬಂಧಗಳು ಮಾತ್ರವಲ್ಲದೆ, ವಾಕ್ಯದ ಘಟಕಗಳಿಗೂ ಮತ್ತು ಮಾತಿನ ಸನ್ನಿವೇಶಕ್ಕೂ ನಡುವೆ ಕಾಣಿಸುವಂತಹ ಬೇರೆ ಕೆಲವು ಸಂಬಂಧಗಳೂ ಇವೆ. ಉದಾಹರಣೆಗಾಗಿ, ಒಂದು ವಾಕ್ಯದ ಮೂಲಕ ಕೇಳುಗನಿಗೆ ತಿಳಿದಿರುವಂತಹ ಒಂದು ವಿಷಯದ ಕುರಿತಾಗಿ ಆಡುಗ ಏನಾದರೊಂದು ಸುದ್ದಿಯನ್ನು ತಿಳಿಸುತ್ತಿರ ಬಹುದು. ಕನ್ನಡದಲ್ಲಿ ತಿಳಿದಿರುವ ಅಂಶವನ್ನು ವಾಕ್ಯದಲ್ಲಿ ಮೊದಲು ಸೂಚಿಸ ಲಾಗುತ್ತದೆ, ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಯನ್ನು ಅನಂತರ ಸೂಚಿಸಲಾಗು (22ಕ) ರಾಜುವನ್ನು ಸುರೇಶ ಕರೆದಿದ್ದಾನೆ. (22ಖ) ಸುರೇಶ ರಾಜುವನ್ನು ಕರೆದಿದ್ದಾನೆ. (22ಕ)ದಲ್ಲಿ ರಾಜು ಘಟಕ ಮೊದಲು ಬಂದಿದೆ, ಮತ್ತು (22ಖ)ದಲ್ಲಿ ಸುರೇಶ ಘಟಕ ಮೊದಲು ಬಂದಿದೆ. ಈ ಕಾರಣಕ್ಕಾಗಿ (22ಕ)ದಲ್ಲಿ ಒಂದು ಸುದ್ದಿಯನ್ನು ರಾಜುವಿನ ಕುರಿತಾಗಿ ತಿಳಿಸಲಾಗಿದೆ ಮತ್ತು (22ಖ)ದಲ್ಲಿ ಸುರೇಶನ ಕುರಿತಾಗಿ ತಿಳಿಸಲಾಗಿದೆ. ಇಂತಹ ಸುದ್ದಿಗಳಲ್ಲೂ ಯಾವುದಾದರೂ ಒಂದು ಅಂಶ ಉಳಿದುವಕ್ಕಿಂತ ಪ್ರಾಮುಖ್ಯವಾಗಿರಲು ಸಾಧ್ಯವಿದೆ. ಕನ್ನಡದಲ್ಲಿ ಸಾಮಾನ್ಯವಾಗಿ ಕ್ರಿಯಾಪದದ ಎಡಕ್ಕೆ ಬರುವ ಅಂಶ ಉಳಿದ ಅಂಶಗಳಿಗಿಂತ ಮುಖ್ಯವಾದುದಾಗಿರುತ್ತದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ವಾಕ್ಯಗಳಲ್ಲಿ ನಿಮ್ಮ ಪುಸ್ತಕ ಎಂಬುದು (23ಕ)ದಲ್ಲೂ ಮತ್ತು ನನಗೆ ಎಂಬುದು (23ಖ)ದಲ್ಲೂ ಮುಖ್ಯ ಅಂಶಗಳಾಗಿ ಬಂದಿವೆ. (23ಕ) ಅವಳು ನನಗೆ ನಿಮ್ಮ ಪುಸ್ತಕ ಕೊಟ್ಟಿದ್ದಾಳೆ. (23ಖ) ಅವಳು ನಿಮ್ಮ ಪುಸ್ತಕವನ್ನು ನನಗೆ ಕೊಟ್ಟಿದ್ದಾಳೆ. ವಾಕ್ಯದ ಘಟಕಗಳಿಗೂ ಮತ್ತು ಮಾತಿನ ಸನ್ನಿವೇಶಕ್ಕೂ ನಡುವೆ ಕಾಣಿಸುವ ಇಂತಹ ಸಂಬಂಧಗಳನ್ನು ‘ವ್ಯವಹಾರ’ ಸಂಬಂಧಗಳೆಂದು ಕರೆಯಬಹುದು. ಇವು ಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಎರಡನೆಯ ಅಧ್ಯಾಯದ (2.7)ನೇ ವಿಭಾಗದಲ್ಲಿ ಕಾಣಬಹುದು.
1.4 ಗುಣಪದಗಳ ಬಳಕೆ
ಮೇಲೆ ವಿವರಿಸಿದ ಹಾಗೆ, ವಾಕ್ಯವೊಂದರಲ್ಲಿ ಅದರ ಮುಖ್ಯ ಅಂಗವಾಗಿ ಒಂದು ಕ್ರಿಯಾಪದವನ್ನೂ ಮತ್ತು ಆ ಕ್ರಿಯಾಪದ ಸೂಚಿಸುವ ಘಟನೆ ಇಲ್ಲವೇ ಸಂಗತಿ ಯಲ್ಲಿ ತೊಡಗಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಬೇರೆ ಬೇರೆ ರೀತಿಯ ಘಟಕಗಳನ್ನೂ ಬಳಸುವುದು ಮಾತ್ರವಲ್ಲದೆ, ಘಟನೆಯ ಗುಣ ಧರ್ಮಗಳನ್ನು ಸೂಚಿಸುವುದಕ್ಕಾಗಿ ಕೆಲವು ಗುಣಪದಗಳನ್ನೂ ಬಳಸಲು ಸಾಧ್ಯ (24ಕ) ಅವರು ಕಳ್ಳನಿಗೆ ಚನ್ನಾಗಿ ಹೊಡೆದರು. (24ಖ) ಆ ಹುಡುಗ ಬೆಂಚಿನ ಮೇಲೆ ನೆಟ್ಟಗೆ ನಿಂತಿದ್ದಾನೆ. (24ಗ) ಒಲೆಯಲ್ಲಿ ನೀರು ಕತಕತನೆ ಕುದಿಯುತ್ತಿತ್ತು. (24ಘ) ಅವನು ಗಡಗಡ ನಡುಗಿದ. (24ಕ)ದಲ್ಲಿ ಚನ್ನಾಗಿ ಗುಣಪದ ಹೊಡೆದುದು ಹೇಗೆ ಎಂಬುದನ್ನು ತಿಳಿಸುತ್ತದೆ, ಮತ್ತು (24ಗ)ದಲ್ಲಿ ಕತಕತನೆ ಗುಣಪದ ಕುದಿಯುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಘಟನೆಯ ಜಾಗ ಮತ್ತು ಸಮಯಗಳನ್ನು ಸೂಚಿಸುವುದಕ್ಕಾಗಿ ಘಟಕಗಳನ್ನು ಬಳಸುವ ಬದಲು ಗುಣಪದಗಳನ್ನು ಬಳಸಲೂ ಸಾಧ್ಯವಿದೆ. (25ಕ) ಅವನು ನಾಳೆ ಬೆಂಗಳೂರಿಗೆ ಹೋಗುತ್ತಾನೆ. (25ಖ) ಅವನನ್ನು ಅಲ್ಲಿ ಯಾರೂ ಮಾತನಾಡಿಸಲಿಲ್ಲ. (25ಕ)ದಲ್ಲಿ ನಾಳೆ ಗುಣಪದ ಹೋಗುವ ಘಟನೆಯ ಸಮಯವನ್ನೂ ಮತ್ತು (25ಖ)ದಲ್ಲಿ ಅಲ್ಲಿ ಗುಣಪದ (ಪ್ರತಿನಾಮ) ಮಾತನಾಡಿಸದಿದ್ದ ಜಾಗವನ್ನೂ ಸೂಚಿಸುತ್ತವೆ. ವಾಕ್ಯದಲ್ಲಿ ಕ್ರಿಯಾಪದದೊಂದಿಗೆ ಬರುವ ಘಟಕಗಳು ಮತ್ತು ಗುಣಪದಗಳು
- ಇವೆರಡೂ ಹೆಚ್ಚು ಕಡಿಮೆ ಒಂದೇ ರೀತಿಯ ಕೆಲಸಗಳನ್ನು ನಡೆಸಬೇಕಾಗಿದೆ. ಹಾಗಾಗಿ, ಅವುಗಳ ನಡುವಿನ ವ್ಯತ್ಯಾಸ ಅಷ್ಟೊಂದು ಕಟ್ಟುನಿಟ್ಟಿನದೇನಲ್ಲ. ಘಟನೆಯ ಕುರಿತಾಗಿ ಕ್ರಿಯಾಪದ ತಿಳಿಸದಿರುವ ಕೆಲವು ಸಂಗತಿಗಳನ್ನು, ಇಲ್ಲವೇ ಘಟನೆಯ ಗುಣಧರ್ಮಗಳನ್ನು ಅವು ತಿಳಿಸುತ್ತವೆ. ಇದಲ್ಲದೆ ವಾಕ್ಯದ ಕೊನೆ ಯಲ್ಲಿ ಬರುವ ಕ್ರಿಯಾರೂಪದಲ್ಲಿ ಕೆಲವು ಪ್ರತ್ಯಯಗಳ ಮೂಲಕ ಚುಟುಕಾಗಿ ತಿಳಿಸಿರುವ ಸಂಗತಿಗಳ ಕುರಿತಾಗಿಯೂ ಇವು ಹೆಚ್ಚಿನ ವಿವರಗಳನ್ನು ಒದಗಿಸು ತ್ತವೆ (ಗುಣಪದಗಳ ಕುರಿತು ಹೆಚ್ಚಿನ ವಿವರಗಳಿಗೆ ಆರನೆಯ ಅಧ್ಯಾಯವನ್ನು ನೋಡಬಹುದು).
1.5 ಒಳವಾಕ್ಯಗಳ ಬಳಕೆ
ಘಟಕಗಳ ತಯಾರಿಕೆಯಲ್ಲಿ ಪದಗಳನ್ನು ಮಾತ್ರವಲ್ಲದೆ ಇಡೀ ವಾಕ್ಯಗಳನ್ನೇ ಬಳಸಲೂ ಸಾಧ್ಯವಿದೆ. ಇವು ನೇರವಾಗಿ ಒಂದು ಘಟಕದ ಜಾಗದಲ್ಲಿ ಬರ ಬಹುದು ಇಲ್ಲವೇ ಒಂದು ಘಟಕದ ಅಂಗವಾಗಿ ಬರಬಹುದು. ಈ ರೀತಿಯಾಗಿ ಬೇರೊಂದು ವಾಕ್ಯದ ಅಂಗವಾಗಿ ಬರುವ ವಾಕ್ಯಗಳನ್ನು ‘ಒಳವಾಕ್ಯ’ಗಳೆಂದು ಕರೆಯಬಹುದು. (26ಕ) ಅವನು ಎಲ್ಲಿಗೆ ಹೋಗಿದ್ದಾನೋ ಗೊತ್ತಿಲ್ಲ. (26ಖ) ರಾಜು ಇರುವ ಊರಿನಲ್ಲಿ ಈಗ ಭಾರೀ ಮಳೆ. (26ಕ)ದಲ್ಲಿ ಅವನು ಎಲ್ಲಿಗೆ ಹೋಗಿದ್ದಾನೆ ಎಂಬ ವಾಕ್ಯ ಒಳವಾಕ್ಯವಾಗಿ ಬಂದಿದೆ ಮತ್ತು ಇದಕ್ಕಾಗಿ ಅದಕ್ಕೆ ಓ ಪ್ರತ್ಯಯವನ್ನು ಸೇರಿಸಲಾಗಿದೆ. ಇದಕ್ಕೆ ಬದಲು (26ಖ)ದಲ್ಲಿ ರಾಜು (ಒಂದು ಊರಿನಲ್ಲಿ) ಇದ್ದಾನೆ ಎಂಬ ವಾಕ್ಯ ಒಂದು ಘಟಕದ ಅಂಗವಾಗಿ ಬಂದಿದೆ ಮತ್ತು ಇದಕ್ಕಾಗಿ ಅದಕ್ಕೆ ಅ ಪ್ರತ್ಯಯವನ್ನು ಸೇರಿಸಲಾಗಿದೆ ಮತ್ತು ಅದರಲ್ಲಿ ಬಂದಿರುವ ಒಂದು ಊರಿನಲ್ಲಿ ಎಂಬ ಘಟಕವನ್ನು (ಅದು ಹೊರವಾಕ್ಯದಲ್ಲೂ ಬರುವ ಕಾರಣ) ತೆಗೆದು ಹಾಕಲಾಗಿದೆ. ಒಂದು ವಾಕ್ಯವನ್ನು ಬೇರೊಂದು ವಾಕ್ಯದ ಘಟಕವನ್ನಾಗಿ ಇಲ್ಲವೇ ಘಟಕದ ಅಂಗವನ್ನಾಗಿ ಮಾಡಲು ಎಂತಹ ವಿಧಾನಗಳನ್ನೆಲ್ಲ ಬಳಸಬಹುದು ಎಂಬುದನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ. ಮತ್ತು ಷರತ್ತು ಎಂಬುದಾಗಿ
1.6 ವಾಕ್ಯಗಳ ಜೋಡಣೆ
ಈ ರೀತಿ ಒಂದು ವಾಕ್ಯವನ್ನು ಇನ್ನೊಂದು ವಾಕ್ಯದ ಅಂಗವನ್ನಾಗಿ ಮಾಡುವ ಬದಲು ಎರಡು ವಾಕ್ಯಗಳನ್ನು ಜೋಡಿಸಿ ಹೇಳಲೂ ಸಾಧ್ಯವಿದೆ. ಹೀಗೆ ಜೋಡಿಸಿ ಹೇಳಬೇಕಾದಲ್ಲಿ ಅವು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳ ನಡುವೆ ಯಾವು ದಾದರೂ ಒಂದು ರೀತಿಯ ಸಂಬಂಧವಿರುವುದು ಅವಶ್ಯ. ಮುಖ್ಯವಾಗಿ ಕೂಡಿಕೆ, ಬದಲಿ ಮೂರು ರೀತಿಯ ಸಂಬಂಧಗಳನ್ನು ಸೂಚಿಸುವುದಕ್ಕಾಗಿ ಈ ರೀತಿ ವಾಕ್ಯಗಳೆರಡನ್ನು ಜೋಡಿಸಿ ಹೇಳಲಾಗುತ್ತದೆ. ಕೂಡಿಕೆಯ ಸಂಬಂಧದಲ್ಲಿ ವಾಕ್ಯಗಳೆರಡು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳನ್ನು ಸೇರಿಸಿ ಹೇಳಲಾಗುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಮತ್ತು ಪದವನ್ನು ಬಳಸಬಹುದು ಇಲ್ಲವೇ ಎರಡರ ಕೊನೆ ಯಲ್ಲೂ ಊ ಪ್ರತ್ಯಯವನ್ನು ಬಳಸಬಹುದು. ಇದಲ್ಲದೆ, ಮೊದಲನೆಯ ವಾಕ್ಯದ ಕೊನೆಯಲ್ಲಿ ಜೋಡಿಸುವ ಕ್ರಿಯಾರೂಪವನ್ನು ಬಳಸುವುದೆಂಬ ಮೂರನೆಯ ವಿಧಾನವೂ ಕನ್ನಡದಲ್ಲಿ ಬಳಕೆಯಲ್ಲಿದೆ. (27ಕ) ರಾಜು ಮನೆಗೆ ಹೋದ ಮತ್ತು ಸ್ನಾನ ಮಾಡಿದ. (27ಖ) ರಾಜು ಮನೆಗೂ ಹೋದ, ಸ್ನಾನವನ್ನೂ ಮಾಡಿದ. (27ಗ) ರಾಜು ಮನೆಗೆ ಹೋಗಿ ಸ್ನಾನ ಮಾಡಿದ. (27ಕ)ದಲ್ಲಿ ಮತ್ತು ಪದದ ಮೂಲಕ ಎರಡು ವಾಕ್ಯಗಳನ್ನು ಜೋಡಿಸಲಾಗಿದೆ ಮತ್ತು (27ಖ)ದಲ್ಲಿ ಎರಡು ವಾಕ್ಯಗಳಲ್ಲೂ ಊ ಪ್ರತ್ಯಯವನ್ನು ಬಳಸುವುದರ ಮೂಲಕ ಅವನ್ನು ಜೋಡಿಸಲಾಗಿದೆ. (27ಗ)ದಲ್ಲಿ ಮೊದಲನೆಯ ವಾಕ್ಯವನ್ನು ಅದರ ಕ್ರಿಯಾಪದದ ಹೋಗಿ ಎಂಬ ಜೋಡಿಸುವ ರೂಪದ ಮೂಲಕ ಎರಡನೆ ಯದರೊಂದಿಗೆ ಜೋಡಿಸಲಾಗಿದೆ. ಬದಲಿ ಸಂಬಂಧದ ಮೂಲಕ ಜೋಡಿಸಿರುವ ವಾಕ್ಯಗಳಲ್ಲಿ ಅವೆರಡು ಸೂಚಿಸುವ ಘಟನೆ ಇಲ್ಲವೇ ಸಂಗತಿಗಳಲ್ಲಿ ಒಂದು ಮಾತ್ರ ಸ್ವೀಕೃತವಾಗ ಬೇಕೆಂದಿರುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಇಲ್ಲವೇ ಎಂಬ ಪದವನ್ನು ಬಳಸುವ ಕ್ರಮ ಕನ್ನಡದಲ್ಲಿದೆ. ಸಂಸ್ಕೃತದಿಂದ ಎರವಲಾಗಿ ಬಂದ ಅಥವಾ ಎಂಬ ಪದವೂ ಇಂತಹ ಜೋಡಣೆಯಲ್ಲಿ ಬಳಕೆಯಲ್ಲಿದೆ. ಮನೆಗೆ ಹೋಗಿದ್ದಾನೆ, ಇಲ್ಲವೇ ಅಲ್ಲೆಲ್ಲೋ ಅಡಗಿದ್ದಾನೆ. (28ಖ) ಅವರಿಗೊಂದು ಕುಚ್ರಿ ಕೊಡಿ ಅಥವಾ ಇಲ್ಲಿಗೆ ಬರಹೇಳಿ. ಷರತ್ತಿನ ಸಂಬಂಧದಲ್ಲಿ ಒಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿ ಇನ್ನೊಂದು ವಾಕ್ಯ ಸೂಚಿಸುವ ಘಟನೆ ಇಲ್ಲವೇ ಸಂಗತಿಗೆ ಷರತ್ತು ಎಂಬುದಾಗಿ ತಿಳಿಸಲಾಗುತ್ತದೆ. ಇದಕ್ಕಾಗಿ ಮೊದಲನೆಯ ವಾಕ್ಯದ ಕೊನೆಯಲ್ಲಿ ಒಂದು ವಿಶಿಷ್ಟವಾದ ಕ್ರಿಯಾರೂಪದ ಬಳಕೆಯಾಗುತ್ತದೆ. (29ಕ) ರಾಜು ಬೇಗನೆ ಬಂದರೆ ನಮಗೆ ಮನೆಗೆ ಹೋಗಬಹುದು. (29ಖ) ರಾಜು ಬೇಗನೆ ಬಂದಿದ್ದರೆ ನಮಗೆ ಮನೆಗೆ ಹೋಗಬಹುದಿತ್ತು. ವಾಕ್ಯಗಳನ್ನು ಜೋಡಿಸುವುದಕ್ಕಾಗಿ ಮೇಲೆ ಕೊಟ್ಟಿರುವ ವಿಧಾನಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಎಂಟನೆಯ ಅಧ್ಯಾಯದಲ್ಲಿ ವಿವರಿಸ
1.7 ಕನ್ನಡದ ಕೆಲವು ವೈಶಿಷ್ಟ್ಯಗಳು
ಮೇಲೆ ಸೂಚಿಸಿರುವ ಹಾಗೆ, ಈ ಪುಸ್ತಕದ ಎರಡನೆಯ ಅಧ್ಯಾಯದಿಂದ ಹತ್ತನೆಯ ಅಧ್ಯಾಯದ ವರೆಗಿನ ಭಾಗದಲ್ಲಿ ಮುಖ್ಯವಾಗಿ ಕನ್ನಡ ವಾಕ್ಯಗಳ ರಚನೆಯೆಂತಹದು ಎಂಬುದನ್ನು ವಿವರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಬರುವ ಹನ್ನೊಂದನೆಯ ಅಧ್ಯಾಯದಲ್ಲಿ ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ವಾಕ್ಯರಚನೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಸ್ವಲ್ಪ ಚುಟುಕಾಗಿ ಪ್ರಸ್ತಾಪಿಸಲಾಗಿದೆ. ವಾಕ್ಯಗಳ ಒಳರಚನೆಯಲ್ಲಿ ಕನ್ನಡ ಭಾಷೆ ಪ್ರಪಂಚದ ಇತರ ಭಾಷೆಗಳಿಂದ ಹಲವು ರೀತಿಯಲ್ಲಿ ಭಿನ್ನವಾಗಿದೆ. ಕನ್ನಡಕ್ಕೂ ಮತ್ತು ಜಗತ್ತಿನ ಇತರ ಭಾಷೆ ಗಳಿಗೂ ನಡುವೆ ಕಾಣಿಸುವ ಈ ವ್ಯತ್ಯಾಸಗಳಿಗೆ ಮುಖ್ಯವಾಗಿ ಎರಡು ಕಾರಣ ಗಳಿವೆ.
ತಮಿಳು, ತೆಲುಗು, ಮಲಯಾಳ, ತುಳು ಮೊದಲಾದ ಇತರ ದ್ರಾವಿಡ ಭಾಷೆಗಳಿಗೂ ಮತ್ತು ಕನ್ನಡಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಈ ಎಲ್ಲಾ ಭಾಷೆಗಳೂ ಮೂಲ ದ್ರಾವಿಡ ಭಾಷೆಯೊಂದರಿಂದ ಪ್ರತ್ಯೇಕವಾಗುತ್ತಿರುವಂತೆ ಅವುಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳು ನಡೆದಿರುವುದು ಕಾರಣ. ಹೊಸ ಹೊಸ ಮಾತಿನ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದಕ್ಕಾಗಿ ಭಾಷೆಗಳಲ್ಲಿ ಇಂತಹ ಬದಲಾವಣೆಗಳು ನಡೆಯುತ್ತಿರುವುದು ಅತ್ಯವಶ್ಯ. ಇವುಗಳ ಮೂಲಕ ಭಾಷೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತವೆ.
ದ್ರಾವಿಡ ಭಾಷಾಕುಟುಂಬಕ್ಕೆ ಸೇರದೆ ಇರುವ ಜಗತ್ತಿನ ಇತರ ಭಾಷೆಗಳಿಗೂ ಮತ್ತು ಕನ್ನಡಕ್ಕೂ ನಡುವೆ ಕಾಣಿಸುವ ವ್ಯತ್ಯಾಸಗಳಿಗೆ ಪ್ರಾಮುಖ್ಯವಾಗಿ ಆ ಭಾಷೆಗಳು ವಾಕ್ಯರಚನೆಯ ನಿಯಮಗಳನ್ನು ಬೇರೆ ಬೇರೆ ಮೂಲ ಭಾಷೆಗಳಿಂದ ಪಡೆದಿರುವುದೇ ಕಾರಣ. ಈ ಪುಸ್ತಕದ ಕೊನೆಯ (ಹನ್ನೊಂದನೆಯ) ಅಧ್ಯಾಯ ದಲ್ಲಿ ಇಂತಹ ಕೆಲವು ವ್ಯತ್ಯಾಸಗಳನ್ನು ಪರಿಶೀಲಿಸಲಾಗಿದೆ. ಇವು ಭಾಷೆಗಳು ವಿಕಸನಗೊಳ್ಳುವ ಸಮಯದಲ್ಲಿ ಎದುರಾಗಿದ್ದ ಸಮಸ್ಯೆಗಳಿಗೆ ಈ ಮೂಲ ಭಾಷೆಗಳು ಕಂಡುಕೊಂಡಿದ್ದ ಬೇರೆ ಬೇರೆ ಪರಿಹಾರಗಳನ್ನು ಸೂಚಿಸುತ್ತವೆ.
ಕನ್ನಡಕ್ಕೂ ಮತ್ತು ಪ್ರಪಂಚದ ಇತರ ಭಾಷೆಗಳಿಗೂ ನಡುವೆ ಕಾಣಿಸುವ ಈ ವ್ಯತ್ಯಾಸಗಳು ವಾಕ್ಯರಚನೆಯಲ್ಲಿ ಕನ್ನಡದ (ಮತ್ತು ಇತರ ದ್ರಾವಿಡ ಭಾಷೆಗಳ) ಕೊಡುಗೆ ಎಂತಹದು ಎಂಬುದನ್ನು ಸೂಚಿಸುತ್ತವೆ. ಇವನ್ನು ಕನ್ನಡದ ವ್ಯಾಕರಣ ಸಂಪತ್ತೆಂದು ಪರಿಗಣಿಸಬಹುದು.