Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9
ಅಧ್ಯಾಯ ಆರು
ಕ್ರಿಯಾಪದಗಳ ಒಳರಚನೆ
ಓ.೧ ಪೀಠಿಕೆ
ಕನ್ನಡದ ಕ್ರಿಯಾಪದಗಳನ್ನೂ ನಾಮಪದಗಳ ಹಾಗೆ ಒಳರಚನೆಯಿರುವವುಗಳು ಮತ್ತು ಇಲ್ಲದವುಗಳು ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಮುಂದಾಗು ಎಂಬ ಕ್ರಿಯಾಪದದಲ್ಲಿ ಮುಂದೆ ಎಂಬ ಗುಣಪದವೂ ಮತ್ತು ಆಗು ಎಂಬ ಕ್ರಿಯಾಪದವೂ ಸೇರಿಕೊಂಡಿವೆ; ಹಂಬಲಿಸು ಎಂಬ ಕ್ರಿಯಾಪದದಲ್ಲಿ ಹಂಬಲ ಎಂಬ ನಾಮಪದವೂ ಮತ್ತು ಇಸು ಎಂಬ ಪ್ರತ್ಯಯವೂ ಸೇರಿಕೊಂಡಿವೆ.
ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ನಡುವಿರುವ ಒಂದು ಮುಖ್ಯ ವ್ಯತ್ಯಾಸವೇನೆಂದರೆ, ಒಳರಚನೆಯಿರುವ ಕ್ರಿಯಾಪದಗಳ ಅರ್ಥವನ್ನು ಹೆಚ್ಚಿನ ಸಂದರ್ಭಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಇಲ್ಲವೇ ಪ್ರತ್ಯಯಗಳ ಸಹಾಯದಿಂದ ಪಡೆಯಲು ಸಾಧ್ಯವಿದೆ. ಇದಕ್ಕೆ ಕೆಲವೇ ಕೆಲವು ಅಪವಾದಗಳಿದ್ದು, ಅವನ್ನು ‘ನುಡಿಗಟ್ಟು’ಗಳೆಂದು ಪರಿಗಣಿಸಲು ಸಾಧ್ಯ ವಿದೆ. ಒಳರಚನೆಯಿರುವ ನಾಮಪದಗಳ ಬಳಕೆಯಲ್ಲಿ ಕಾಣಿಸುವಂತಹ ಜೋಡು ಪದ ಮತ್ತು ಪದಗುಚ್ಛ ಎಂಬ ಭೇದ (೫.೨ ನೋಡಿ) ಒಳರಚನೆಯಿರುವ ಈ ಕ್ರಿಯಾಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.
೬.೧.೧ ಕ್ರಿಯಾಪದಗಳ ಕೆಲಸ
ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ನಡುವೆ ಅವುಗಳ ಒಳರಚನೆ ಯಲ್ಲಿ ಕಾಣಿಸುವ ಈ ಪ್ರಾಮುಖ್ಯವಾದ ವ್ಯತ್ಯಾಸಕ್ಕೆ ಅವು ವಾಕ್ಯದಲ್ಲಿ ನಡೆಸ ಬೇಕಾಗಿರುವ ಕೆಲಸಗಳು ಬೇರೆ ಬೇರಾಗಿರುವುದೇ ಮುಖ್ಯ ಕಾರಣ. ನಾಮಪದ ಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬೇಕಾಗಿದೆಯಾದ ಕಾರಣ, ಅವುಗಳನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬುದಾಗಿ ಎರಡು ಬೇರೆ
ಬೇರೆ ವಿಧಾನಗಳಲ್ಲಿ ಬಳಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ, ಅವನ್ನು ನೇರವಾಗಿ ಬಳಸಿದಾಗಲೆಲ್ಲ ಅವು ಹೆಸರಿಸುವ ಕೆಲಸವನ್ನೂ ಮತ್ತು ಪದಗುಚ್ಛ ಗಳ ರೂಪದಲ್ಲಿ ಬಳಸಿದಾಗ ವರ್ಣಿಸುವ ಕೆಲಸವನ್ನೂ ನಡೆಸುತ್ತವೆಯೆಂಬುದನ್ನು ನಾವು ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು.
ವಾಕ್ಯಗಳಲ್ಲಿ ಕ್ರಿಯಾಪದಗಳು ನಡೆಸಬೇಕಾಗಿರುವ ಕೆಲಸ ಇದಕ್ಕಿಂತ ತೀರ ಭಿನ್ನವಾದುದು. ಅವು ವಾಕ್ಯದ ಪ್ರಧಾನ ಪದವಾಗಿ ಬೇರೆ ಬೇರೆ ರೀತಿಯ ಘಟನೆ ಗಳನ್ನು ವರದಿ ಮಾಡಬೇಕಾಗುತ್ತದೆ, ಇಲ್ಲವೇ ಕೇಳುವುದು, ಬೇಡುವುದು, ಬಯಸುವುದು, ಅಲ್ಲಗಳೆಯುವುದು ಮೊದಲಾದ ಬೇರೆ ಬೇರೆ ರೀತಿಯ ‘ಮಾತಿನ ಕೆಲಸ’ಗಳಲ್ಲಿ ಅವನ್ನು ತೊಡಗಿಸಬೇಕಾಗುತ್ತದೆ. ಕ್ರಿಯಾಪದಗಳು ನಡೆಸ ಬಲ್ಲ ಇಂತಹ ಬೇರೆ ಬೇರೆ ರೀತಿಯ ಕೆಲವು ಮಾತಿನ ಕೆಲಸಗಳನ್ನು ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು.
- (೧ಕ) ರಾಜು ಪೇಟೆಗೆ ಹೋಗಿದ್ದಾನೆ.
- (೧ಖ) ರಾಜು ಪೇಟೆಗೆ ಹೋಗಿದ್ದಾನೋ?
- (೧ಗ) ರಾಜು ಪೇಟೆಗೆ ಹೋಗಲಿ.
- (೧ಘ) ರಾಜು ಪೇಟೆಗೆ ಹೋಗಲಿಲ್ಲ.
- (೧ಜ) ರಾಜು ಪೇಟೆಗೆ ಹೋಗಬಾರದು.
ಇಂತಹ ಬೇರೆ ಬೇರೆ ರೀತಿಯ ಮಾತಿನ ಕೆಲಸಗಳಲ್ಲಿ ಬರುವ ಘಟನೆಗಳು ವ್ಯಕ್ತಿ, ವಸ್ತು ಮೊದಲಾದವುಗಳ ಹಾಗೆ ಸ್ಥಾಯಿ (ಎಂದರೆ ಬದಲಾಗದ) ರೂಪದ ಲ್ಲಿರುವ ಬದಲು ಅಸ್ಥಾಯಿ ರೂಪದಲ್ಲಿರುತ್ತವೆ. ಹಾಗಾಗಿ, ವ್ಯಕ್ತಿ, ವಸ್ತು ಮೊದಲಾದವುಗಳಿಗೆ ನಾಮಪದಗಳ ಮೂಲಕ ಹೆಸರುಗಳನ್ನು ಕೊಡುವ ಹಾಗೆ, ಘಟನೆಗಳಿಗೆ ಕ್ರಿಯಾಪದಗಳ ಮೂಲಕ ಹೆಸರುಗಳನ್ನು ಕೊಡಲು ಸಾಧ್ಯ ವಾಗುವುದಿಲ್ಲ. ವರ್ಣನೆಯೆಂಬುದೊಂದೇ ಅವುಗಳ ಬಳಕೆಯಲ್ಲಿ ಕಾಣಿಸಿ ಕೊಳ್ಳುವ ವಿಧಾನ. ಈ ಕಾರಣಕ್ಕಾಗಿ ಒಳರಚನೆಯಿರುವ ಕ್ರಿಯಾಪದಗಳ ಅರ್ಥ ವನ್ನು ಹೆಚ್ಚಿನ ಸಂದರ್ಭಗಳಲ್ಲೂ ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಅರ್ಥದಿಂದಲೇನೇ ಪಡೆಯಲು ಸಾಧ್ಯವಾಗುತ್ತದೆ.
ನಾಮಪದಗಳನ್ನು ಪ್ರಾಮುಖ್ಯವಾಗಿ ಅಂಕಿತನಾಮ ಮತ್ತು ರೂಢನಾಮ ಎಂಬುದಾಗಿ ಎರಡು ವರ್ಗಗಳಲ್ಲಿ ವಿಂಗಡಿಸಲು ಸಾಧ್ಯ ಎಂಬುದನ್ನು ನಾವು (೩.೫)ರಲ್ಲಿ ನೋಡಿರುವೆವು. ಅವು ಹೆಸರಿಸುವ ಪ್ರತಿಯೊಂದು ವ್ಯಕ್ತಿ, ವಸ್ತು ಮೊದಲಾದುವಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಬಂಧಿತವಾಗಿವೆಯಾದರೆ ಅಂಕಿತನಾಮಗಳು ಮತ್ತು ಒಟ್ಟಿಗೆ ಒಂದೇ ಬಾರಿ ಸಂಬಂಧಿತವಾಗಿವೆಯಾದರೆ ರೂಢನಾಮಗಳು ಎಂಬುದಾಗಿ ಈ ಎರಡು ರೀತಿಯ ನಾಮಪದಗಳ ನಡುವಿರುವ ಮುಖ್ಯ ವ್ಯತ್ಯಾಸವನ್ನು ವಿವರಿಸಿ ಹೇಳಬಹುದು.
ಆದರೆ ಕ್ರಿಯಾಪದಗಳನ್ನು ಈ ರೀತಿ ಅಂಕಿತಕ್ರಿಯೆ ಮತ್ತು ರೂಢಕ್ರಿಯೆ ಎಂಬುದಾಗಿ ವಿಂಗಡಿಸಲು ಸಾಧ್ಯವಾಗದು. ಅವು ಕ್ರಿಯೆಗಳನ್ನು ಹೆಸರಿಸುವುದಕ್ಕಾಗಿ ಬಳಕೆಯಾಗುವ ಬದಲು ನಿರ್ದೇಶಿಸುವುದಕ್ಕಾಗಿ ಬಳಕೆಯಾಗುತ್ತಿರುವುದೇ ಈ ರೀತಿ ಎರಡು ರೀತಿಯ ಕ್ರಿಯಾಪದಗಳಿಲ್ಲದಿರುವುದಕ್ಕೆ ಮುಖ್ಯ ಕಾರಣ.
೬.೧.೨ ಕ್ರಿಯಾಸಮಾಸ
ಕನ್ನಡದಲ್ಲಿ ಕ್ರಿಯಾಸಮಾಸ ಎಂಬುದಾಗಿ ಒಂದು ವಿಶಿಷ್ಟವಾದ ಸಮಾಸವಿದೆ ಯೆಂದು ಕನ್ನಡದ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಅಭಿ ಪ್ರಾಯಕ್ಕೆ ಆಧಾರವಾಗಿ ಅವರು ಕೊಡುವ ಕೈಮುಗಿ, ಮರವೇರು ಮೊದಲಾದ ಉದಾಹರಣೆಗಳೆಲ್ಲ ನಿಜಕ್ಕೂ ಜೋಡುಪದಗಳಲ್ಲ, ಬರಿಯ ಪದಗುಚ್ಛಗಳು ಮಾತ್ರ ಎಂಬುದನ್ನು ಹಿಂದಿನ ಅಧ್ಯಾಯದಲ್ಲಿ (೫.೮.೮ರಲ್ಲಿ) ನೋಡಿರುವೆವು. ಸಮಾಸವೆಂಬ ವ್ಯಾಕರಣ ವಿಧಾನವನ್ನು ನಾವು ಹೆಸರಿಸುವ ನಾಮಪದಗಳನ್ನು ತಯಾರಿಸುವುದಕ್ಕಾಗಿ ಮಾತ್ರ ಬಳಸುತ್ತೇವೆ. ಕ್ರಿಯಾಪದಗಳ ಮೂಲಕ ಘಟನೆ ಗಳನ್ನು ಹೆಸರಿಸಬೇಕಾಗುವುದಿಲ್ಲವಾದ ಕಾರಣ ಅವುಗಳ ತಯಾರಿಕೆಯಲ್ಲಿ ಸಮಾಸವೆಂಬ ವಿಧಾನಕ್ಕೆ ಯಾವ ಸ್ಥಾನವೂ ಇಲ್ಲ.
ಕ್ರಿಯಾಪದಗಳು ತಿಳಿಸುವ ಘಟನೆಯಿಂದ ಬಾಧಿತವಾಗುವ ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ನಾಮಪದದೊಂದಿಗೆ ಅನ್ನು ಎಂಬ ವಿಭಕ್ತಿ ಪ್ರತ್ಯಯವನ್ನು ಬಳಸುವ ಕ್ರಮವಿದೆ. ಆದರೆ, ಈ ಪ್ರತ್ಯಯ ವನ್ನೊಳಗೊಂಡಿರುವ ನಾಮಪದ ಕ್ರಿಯಾಪದದ ಹತ್ತಿರ ಬಂದಾಗಲೆಲ್ಲ ಕ್ರಿಯಾ ಪದಕ್ಕೂ ನಾಮಪದಕ್ಕೂ ನಡುವೆ ಹತ್ತಿರದ ಸಂಬಂಧವಿರುವುದನ್ನು ಸೂಚಿಸಲು ಆ ಪ್ರತ್ಯಯ ಬಿದ್ದು ಹೋಗುವುದೇ ಜಾಸ್ತಿ. ವ್ಯಕ್ತಿಗಳನ್ನು ಗುರುತಿಸುವ ನಾಮಪದ ಗಳಲ್ಲಿ ಮಾತ್ರ ಈ ರೀತಿ ಅನ್ನು ಎಂಬ ಪ್ರತ್ಯಯ ಬಿದ್ದು ಹೋಗುವುದಿಲ್ಲ.
- (೨ಕ) ಸರಲೆ ಮಗುವನ್ನು ತೂಗುತ್ತಿದ್ದಾಳೆ.
- (೨ಖ) ಆಕೆ ಅಕ್ಕಿಯಿಂದ ಕಲ್ಲು ಹೆಕ್ಕುತ್ತಿದ್ದಾಳೆ.
- (೨ಗ) ಅವನು ಮೈಸೂರಿನಿಂದ ಒಂದು ಆನೆ ತಂದಿದ್ದಾನೆ.
(೨ಕ)ದಲ್ಲಿ ಅನ್ನು ಎಂಬ ಪ್ರತ್ಯಯ ವ್ಯಕ್ತಿಯೊಂದನ್ನು ಸೂಚಿಸುವ ಮಗು ಎಂಬ ಪದದೊಂದಿಗೆ ಬಂದಿದೆಯಾದ ಕಾರಣ ಕ್ರಿಯಾಪದದ ಹತ್ತಿರವೇ ಇದ್ದರೂ ಬಿದ್ದು ಹೋಗಿಲ್ಲ. ಆದರೆ (೨ಖ-ಗ)ಗಳಲ್ಲಿ ಕಲ್ಲು ಮತ್ತು ಆನೆ ಎಂಬ ಪದಗಳಿಂದ ಇದು ಬಿದ್ದು ಹೋಗಿದೆ.
ಈ ನಾಮಪದಗಳನ್ನು ವಾಕ್ಯದಲ್ಲೇನೇ ಬೇರೆ ಕಡೆಗಳಿಗೆ ವರ್ಗಾಯಿಸಿದಾಗ (ಕೆಳಗೆ ಕೊಟ್ಟಿರುವ (೩ಕ-ಖ) ವಾಕ್ಯಗಳನ್ನು ನೋಡಿ), ಇಲ್ಲವೇ ಅವು ಗಳೊಂದಿಗೆ ಒತ್ತುಕೊಡುವ ಏ ಎಂಬ ಪ್ರತ್ಯಯ ಅಥವಾ ‘ಮತ್ತು’ ಎಂಬ
ಅರ್ಥದ ಊ ಎಂಬ ಪ್ರತ್ಯಯವನ್ನು ಸೇರಿಸಿ ಹೇಳಿದಾಗ (೪ಕ-ಗ ನೋಡಿ), ಬಿದ್ದು ಹೋಗಿರುವ ಈ ವಿಭಕ್ತಿ ಪ್ರತ್ಯಯ ಪುನಃ ಕಾಣಿಸಿಕೊಳ್ಳುತ್ತದೆ.
- (೩ಕ) ರಾಜು ಒಂದು ಲೋಟ ನೀರು ಕುಡಿದ.
- (೩ಖ) ಒಂದು ಲೋಟ ನೀರನ್ನು ರಾಜು ಕುಡಿದ.
- (೪ಕ) ರಾಜು ಸ್ವಲ್ಪ ಹೊತ್ತು ಪಾಠ ಓದಲಿ.
- (೪ಖ) ರಾಜು ಸ್ವಲ್ಪ ಹೊತ್ತು ಪಾಠವನ್ನೇ ಓದಲಿ.
- (೪ಗ) ರಾಜು ಸ್ವಲ್ಪ ಹೊತ್ತು ಪಾಠವನ್ನೂ ಓದಲಿ.
ಈ ಕಾರಣಕ್ಕಾಗಿ, ಕನ್ನಡದಲ್ಲಿ ಕೈಮುಗಿ (ಕೈಯನ್ನು ಮುಗಿ), ಮರವೇರು (ಮರವನ್ನು ಏರು), ಕರೆನೀಡು (ಕರೆಯನ್ನು ನೀಡು) ಎಂಬಂತಹ ಕ್ರಿಯಾಪದ ಗಳಲ್ಲಿ ಅನ್ನು ಎಂಬ ವಿಭಕ್ತಿ ಪ್ರತ್ಯಯ ಬಿದ್ದು ಹೋಗಿರುವುದು ಸಮಾಸವೆಂಬ ಪದರಚನೆಯ ನಿಯಮದಿಂದಲ್ಲ, ಮೇಲೆ ಸೂಚಿಸಿರುವ ವಾಕ್ಯರಚನೆಯ ನಿಯಮ ದಿಂದ ಎಂದು ಹೇಳಲು ಸಾಧ್ಯವಿದೆ.
ನಾಮಪದ ಇಲ್ಲವೇ ಗುಣಪದದೊಂದಿಗೆ ಕ್ರಿಯಾಪದ ಸೇರಿ ಜೋಡುಪದ ವಾಗಿರುವಂತೆ ಕಾಣಿಸುವ ಬೇರೆಯೂ ಕೆಲವು ಪದಗಳು ಕನ್ನಡದಲ್ಲಿವೆ. ಇವನ್ನು ಜೋಡುಪದಗಳೆಂದು ಕರೆಯುವುದಕ್ಕಿಂತಲೂ ‘ಕೂಡುಪದ’ವೆಂಬ ಬೇರೊಂದು ಹೆಸರಿನಿಂದ ಕರೆಯುವುದೇ ಒಳ್ಳೆಯದೆಂಬುದನ್ನು ಮುಂದೆ ೬.೪ರಲ್ಲಿ ನೋಡಲಿರು ವೆವು. ಜೋಡುಪದಗಳ ಬಳಕೆಯಲ್ಲಿ ಕಾಣಿಸುವ ಅತ್ಯಂತ ಪ್ರಾಮುಖ್ಯವಾದ ಗುಣಧರ್ಮಗಳಾವುವೂ ಈ ಕೂಡುಪದಗಳ ಬಳಕೆಯಲ್ಲಿ ಕಾಣಿಸದಿರುವುದೇ ಅವನ್ನು ಈ ರೀತಿ ಜೋಡುಪದಗಳಿಂದ ಭಿನ್ನವಾದವುಗಳೆಂದು ಪರಿಗಣಿಸಲು ಕಾರಣ.
೬.೨ ಒಳರಚನೆಯಿಲ್ಲದ ಕ್ರಿಯಾಪದಗಳು
ಮೇಲೆ ಸೂಚಿಸಿರುವಂತೆ, ಕನ್ನಡದಲ್ಲಿ ಬಳಕೆಯಾಗುವ ಕ್ರಿಯಾಪದಗಳಿಗೆ ಒಳ ರಚನೆಯಿರಬಹುದು ಅಥವಾ ಇಲ್ಲದಿರಬಹುದು. ಇವುಗಳಲ್ಲಿ ಒಳರಚನೆಯಿಲ್ಲ ದಿರುವ ಅಳು, ಕೊಡು, ಕಲಿ, ಮರೆ ಮೊದಲಾದ ಕ್ರಿಯಾಪದಗಳನ್ನು ‘ಕ್ರಿಯಾಧಾತು’ಗಳೆಂದು ಕರೆಯಬಹುದು. ಇಂತಹ ಪದಗಳನ್ನು ಅವುಗಳಲ್ಲಿ ಬರುವ ಅಕ್ಷರಗಳ ಸಂಖ್ಯೆ ಮತ್ತು ಸ್ವರೂಪಗಳ ಆಧಾರದ ಮೇಲೆ ಮತ್ತು ಅವುಗಳ ಕೊನೆಯ ಸ್ವರದ ಆಧಾರದ ಮೇಲೆ ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲು ಸಾಧ್ಯವಿದೆ. ಇಂತಹ ವಿಂಗಡಣೆ ಅವುಗಳೊಂದಿಗೆ ಬರಬಹುದಾದ ಪ್ರತ್ಯಯಗಳ ಸ್ವರೂಪವನ್ನು ಮತ್ತು ಈ ರೀತಿ ಪ್ರತ್ಯಯಗಳು ಸೇರಿದಾಗ ಅವು
ಗಳಲ್ಲಿ ಇಲ್ಲವೇ ಪ್ರತ್ಯಯಗಳಲ್ಲಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ವರ್ಣಿಸು ವಲ್ಲಿ ಸಹಾಯಕವಾಗುತ್ತದೆ.
ಕ್ರಿಯಾಧಾತುಗಳನ್ನು ಎಕಾರದಲ್ಲಿ ಕೊನೆಗೊಳ್ಳುವವು, ಇಕಾರದಲ್ಲಿ ಕೊನೆ ಗೊಳ್ಳುವವು ಮತ್ತು ಉಕಾರದಲ್ಲಿ ಕೊನೆಗೊಳ್ಳುವವು ಎಂಬುದಾಗಿ ಮೂರು ವರ್ಗಗಳಲ್ಲಿ ವಿಂಗಡಿಸುವುದು ಕನ್ನಡದ ಮಟ್ಟಿಗೆ ಒಂದು ಪ್ರಾಮುಖ್ಯವಾದ ವಿಂಗಡಣೆ. ಎಕಾರ ಮತ್ತು ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳೆಲ್ಲ ಎರಡಕ್ಷರದವುಗಳಾಗಿದ್ದು ಅವುಗಳಲ್ಲಿ ಬರುವ ಅಕ್ಷರಗಳೆರಡೂ ಲಘುವಾಗಿರು ತ್ತವೆ (ಎಂದರೆ, ಅವುಗಳಲ್ಲಿ ಉದ್ದಸ್ವರ, ಒತ್ತಕ್ಷರ ಇಲ್ಲವೇ ಸೊನ್ನೆ ಕಾಣಿಸುವು ದಿಲ್ಲ). ಉದಾ:
(೧) ಏಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು
| ಅಗೆ | ನಡೆ | ಒದೆ | ಕೊರೆ | ಅಲೆ | ಮಸೆ |
| ಒಗೆ | ತಡೆ | ನೆನೆ | ಮರೆ | ಬೆಳೆ | ಎಸೆ |
| ನೆಗೆ | ಒಡೆ | ಹೆಣೆ | ಬರೆ | ಕೊಳೆ | ಸವೆ |
| (೨) ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು | |||||
|---|---|---|---|---|---|
| ಅಗಿ | ಕಡಿ | ತಣಿ | ಹರಿ | ಕಲಿ | ಸವಿ |
| ಜಿಗಿ | ಕುಡಿ | ಮುನಿ | ಮುರಿ | ಉಳಿ | ಕವಿ |
| ಬಿಗಿ | ಕುದಿ | ಹನಿ | ಬಸಿ | ಇಳಿ | ತಿವಿ |
ಉಕಾರಾಂತ ಕ್ರಿಯಾಧಾತುಗಳಲ್ಲಿ ಮಾತ್ರ ಅಕ್ಷರದ ಸಂಖ್ಯೆಯಲ್ಲಿ ಮತ್ತು ಸ್ವರೂಪದಲ್ಲಿ ವೈವಿಧ್ಯತೆ ಕಾಣಿಸುತ್ತದೆ. ಇವುಗಳಲ್ಲಿ ಅಕ್ಷರಗಳು ಎರಡಿರ ಬಹುದು ಇಲ್ಲವೇ ಮೂರಿರಬಹುದು; ಅಕ್ಷರಗಳು ಎರಡೇ ಇದ್ದಲ್ಲಿ, ಅವೆರಡೂ ಲಘುವಾಗಿರಬಹುದು ಇಲ್ಲವೇ ಅವುಗಳಲ್ಲಿ ಮೊದಲನೆಯದು ಗುರುವಾಗಿರ ಬಹುದು; ಈ ರೀತಿ ಮೊದಲನೆಯ ಅಕ್ಷರ ಗುರುವಾಗಿರುವುದಕ್ಕೆ ಅದರ ಸ್ವರ ಉದ್ದವಾಗಿರುವುದು, ಆ ಸ್ವರದ ಅನಂತರ ಸೊನ್ನೆ ಬರುವುದು ಮತ್ತು ಎರಡನೆಯ ಅಕ್ಷರ ಒತ್ತಕ್ಷರವಾಗಿರುವುದು ಎಂಬುದಾಗಿ ಮೂರು ಬೇರೆ ಬೇರೆ ಕಾರಣಗಳಿರಲು ಸಾಧ್ಯವಿದೆ. ಮೂರು ಅಕ್ಷರಗಳಿರುವ ಉಕಾರಾಂತ ಕ್ರಿಯಾಧಾತು ಗಳಲ್ಲಿ ಮಾತ್ರ ಎಲ್ಲಾ ಅಕ್ಷರಗಳೂ ಲಘುವಾಗಿಯೇ ಇರುತ್ತವೆ.
ಈ ಬೇರೆ ಬೇರೆ ಸಾಧ್ಯತೆಗಳ ಆಧಾರದ ಮೇಲೆ ಉಕಾರದಲ್ಲಿ ಕೊನೆ ಗೊಳ್ಳುವ ಕ್ರಿಯಾಧಾತುಗಳನ್ನು ಕೆಳಗೆ ತೋರಿಸಿರುವಂತೆ ಎರಡು ಮುಖ್ಯ ವರ್ಗಗಳಲ್ಲಿ ಮತ್ತು ಅವುಗಳಲ್ಲಿ ಎರಡನೆಯ ವರ್ಗದವನ್ನು ನಾಲ್ಕು ಉಪವರ್ಗ ಗಳಲ್ಲಿ ವಿಂಗಡಿಸಬಹುದು. ಪ್ರತಿಯೊಂದು ವರ್ಗ ಇಲ್ಲವೇ ಉಪವರ್ಗದಲ್ಲಿ ಬರಬಲ್ಲ ಕ್ರಿಯಾಧಾತುಗಳಿಗೂ ಇಲ್ಲಿ ಉದಾಹರಣೆಗಳನ್ನಾಗಿ ಕೊಡಲಾಗಿದೆ.
- (೩) ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಧಾತುಗಳು
- (೧) ಎರಡು ಲಘು ಅಕ್ಷರವಿರುವವುಗಳು
- ನಗು ಕೊಡು ಇರು ಅಳು
- ಸಿಗು ಸುಡು ಬರು ಉಳು
- ಸಿಗು ಸುಡು ತರು
- (೨) ಉಕಾರದಲ್ಲಿ ಕೊನೆಗೊಳ್ಳುವ ಇತರ ಕ್ರಿಯಾಧಾತುಗಳು
- (ಕ) ಮೊದಲನೆಯ ಅಕ್ಷರದಲ್ಲಿ ಉದ್ದಸ್ವರ ಇರುವವುಗಳು
- ಓಡು ಹೋಗು ಬೀಸು
- ಸಾಯು ತೇಲು ಕೇಳು
- (ಖ) ಸೊನ್ನೆಯಿರುವವುಗಳು
- ನುಂಗು ಮಿಂಚು ನಂಬು ಹೊಂದು
- ಅಂಜು ಹಂಚು ತುಂಬು ಕುಂಟು
- (ಗ) ಒತ್ತಕ್ಷರವಿರುವವುಗಳು
- ಹೆಕ್ಕು ಚುಚ್ಚು ಗುದ್ದು ಒಪ್ಪು ಕೊಲ್ಲು
- ಉಜ್ಜು ಮೆಟ್ಟು ತಿನ್ನು ಹಬ್ಬು ತಳ್ಳು
- ಚಿಮ್ಮು ಎತ್ತು ಕುಗ್ಗು ಬಯ್ಯು ಉಣ್ಣು
- (ಘ) ಮೂರು ಅಕ್ಷರಗಳಿರುವವುಗಳು
- ಅಡಗು ಕದಡು ಬೆವರು ಅರಳು
- ಕಿರುಚು ತಲಿಪು ಎಡವು ಬಳಲು
- ಮಡಚು ದುಡುಕು ಕೆಡವು ಕದಲು
- ಅಮುಕು ಹೊರಡು ಚಿಗುರು ಹೊಗಳು
೬.೩ ಕೆಲವು ಪಳೆಯುಳಿಕೆಗಳು
ಹೊಸಗನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಎಂಬ ಒಂದು ಪ್ರತ್ಯಯ ವನ್ನು ಬಿಟ್ಟರೆ (ಇದೂ ಕೂಡ ಹಳೆಗನ್ನಡದ ಕಾಲದಲ್ಲಿ ಒಂದು ಕ್ರಿಯಾಪದ ವಾಗಿತ್ತು), ಬೇರೆ ಪ್ರತ್ಯಯಗಳ ಬಳಕೆಯೇ ಇಲ್ಲವೆಂದೂ ಹೇಳಲು ಸಾಧ್ಯವಿದೆ.
ಈ ಮಾತಿಗೆ ಅಪವಾದವಾಗಿ ಕೆಲವು ಪಳೆಯಳಿಕೆಗಳನ್ನು ಮೇಲೆ ಕೊಟ್ಟಿರುವ ‘ಕ್ರಿಯಾಧಾತು’ಗಳಲ್ಲಿ ಕಾಣಬಹುದು. ಇವೆಲ್ಲ ಕನ್ನಡ, ತಮಿಳು, ತೆಲುಗು, ಗೋಂಡಿ, ಕುಯಿ, ಕುಡುಖ್ ಮೊದಲಾದ ಭಾಷೆಗಳಿಗೆ ಮೂಲವಾಗಿದ್ದ
‘ದ್ರಾವಿಡ’ಭಾಷೆಯ ಕ್ರಿಯಾಪದಗಳಲ್ಲಿ ಇದ್ದಿರಬಹುದಾದ ಒಳರಚನೆಯ ಪಳೆ ಯಳಿಕೆಗಳು. ಇವುಗಳಲ್ಲಿ ಕೆಲವನ್ನು ಪ್ರತ್ಯಯಗಳೆಂದು ಹೇಳಲು ಕನ್ನಡದಲ್ಲೇನೇ ಅಧಾರ ಸಿಗುವುದಾದರೂ ಕನ್ನಡದ ವ್ಯಾಕರಣದಲ್ಲಿ ಇವಕ್ಕೆ ಹೆಚ್ಚಿನ ಪ್ರಾಧಾನ್ಯ ವಿಲ್ಲ.
ಈ ಮೂಲ ಭಾಷೆಯಲ್ಲಿ ಕ್ರಿಯಾಧಾತುಗಳೆಲ್ಲ ಒಂದೇ ಅಕ್ಷರದವುಗಳಾಗಿ ಇದ್ದಿರಬೇಕೆಂದು ಬೇರೆ ಬೇರೆ ದ್ರಾವಿಡ ಭಾಷೆಗಳನ್ನು ಹೋಲಿಸಿ ನಡೆಸಿದ ಚಾರಿತ್ರಿಕ ಅಭ್ಯಾಸದ ಆಧಾರದ ಮೇಲೆ ಹೇಳಲು ಸಾಧ್ಯವಿದೆ. ಈ ಒಂದಕ್ಷರದ ಧಾತುಗಳಲ್ಲಿ ಹೆಚ್ಚಿನವೂ ಬೇರೆ ಬೇರೆ ಪ್ರತ್ಯಯಗಳೊಂದಿಗೆ ಸೇರಿಕೊಂಡು ಎರಡು ಮತ್ತು ಮೂರು ಅಕ್ಷರದವುಗಳಾಗಿವೆ. ಹಳೆಗನ್ನಡದಲ್ಲಿ ಇಂತಹ ಕೆಲವು ಒಂದಕ್ಷರದ ಧಾತುಗಳು ಕಾಣಿಸುತ್ತವೆಯಾದರೂ ಹೊಸಗನ್ನಡದಲ್ಲಿ ಅವೆಲ್ಲವೂ ಎರಡಕ್ಷರದವುಗಳಾಗಿವೆ (ಉದಾ: ಇರ್-ಇರು, ಸೋಲ್-ಸೋಲು, ಕಾಯ್- ಕಾಯು, ಇತ್ಯಾದಿ).
ಹೊಸಗನ್ನಡದಲ್ಲಿ ಬರುವ ಕ್ರಿಯಾಪದಗಳ ಒಳರಚನೆಯಂತಹದು ಎಂಬು ದನ್ನು ವಿವರಿಸುವಾಗ, ಅವು ಈ ರೀತಿ ಒಂದಕ್ಷರದ ಧಾತುಗಳಿಗೆ ಪ್ರತ್ಯಯಗಳು ಸೇರುವುದರ ಮೂಲಕ ಬೆಳೆದು ಬಂದವುಗಳೆಂಬ ಚಾರಿತ್ರಿಕ ವಿಷಯವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲವಾದರೂ, ಅದನ್ನು ಪ್ರತಿಬಿಂಬಿಸುವಂತಹ ಕೆಲವು ಅಂಶಗಳನ್ನು ಗಮನಿಸದಿರಲು ಸಾಧ್ಯವಾಗದು. ಉದಾಹರಣೆಗಾಗಿ, ಮೂರು ಅಕ್ಷರಗಳಿರುವ ಕ್ರಿಯಾಧಾತುಗಳಲ್ಲಿ ಕೆಲವು ಎರಡು ಅಕ್ಷರವಿರುವ ಕ್ರಿಯಾಧಾತು ಗಳಿಗೆ ಇಲ್ಲವೇ ಬೇರೆ ಮೂರು ಅಕ್ಷರಗಳಿರುವ ಕ್ರಿಯಾಧಾತುಗಳಿಗೆ ಸಂಬಂಧಿಸಿ ದಂತಿದ್ದು, ಅವುಗಳಲ್ಲಿ ಬರುವ ಮೂರನೆಯ ಅಕ್ಷರ ಒಂದು ಪ್ರತ್ಯಯವಾಗಿರು ವಂತೆ ತೋರುತ್ತದೆ. ಇಂತಹ ಕೆಲವು ಪ್ರತ್ಯಯಗಳನ್ನು ಕೆಳಗಿನ ವಿಭಾಗಗಳಲ್ಲಿ ಕೊಡಲಾಗಿದೆ.
ಟ.ಖ.ಗ ಚು ಎಂಬ ಪ್ರತ್ಯಯ
ಚು ಎಂಬ ಅಕ್ಷರದಲ್ಲಿ ಕೊನೆಗೊಳ್ಳುವ ತಿರುಚು, ನುಣುಚು, ಎರಚು, ಕಳಚು ಮೊದಲಾದ ಕೆಲವು ಕ್ರಿಯಾಪದಗಳ ಕೊನೆಯಲ್ಲಿ ಕಾಣಿಸುವ ಚು ಎಂಬುದು ಒಂದು ಪ್ರತ್ಯಯವಿರಬಹುದು ಎಂದು ವಾದಿಸಲು ಈ ಕೆಳಗಿನ ಹೋಲಿಕೆಗಳು ಆಧಾರವಾಗಬಲ್ಲುವು. ಇಲ್ಲಿ ಹೋಲಿಕೆಗಾಗಿ ಕ್ರಿಯಾಪದಗಳನ್ನು ಮಾತ್ರವಲ್ಲದೆ ನಾಮಪದ ಮತ್ತು ಗುಣಪದಗಳನ್ನೂ ಕೊಡಲಾಗಿದೆ.
| ತಿರುಗು | ತಿರುಚು | ಎರೆ | ಎರಚು |
| ನುಣುಪು | ನುಣುಚು | ಕಳೆ | ಕಳಚು |
| ಕೀರು | ಕಿರುಚು | ಮೊನೆ | ಮೊನಚು |
| ಮಡಿಕೆ | ಮಡಿಚು |
ಎರಡು ಅಕ್ಷರಗಳಿರುವ ಕ್ರಿಯಾಪದಗಳಲ್ಲೂ ಕೊನೆಯಲ್ಲಿ ಚಕಾರವಿರುವ ಕೆಲವು ಪದಗಳು ಈ ರೀತಿ ಚು ಎಂಬ ಪ್ರತ್ಯಯವನ್ನು ಬಳಸಿ ತಯಾರಿಸಿದವುಗಳ ಹಾಗೆ ಕಾಣಿಸುತ್ತವೆ. ಉದಾ:
ಗೀರು ಗೀಚು ಬಿರಿ ಬಿಚ್ಚು ತೋರು ತೋಚು ಮಿನುಗು ಮಿಂಚು
೬.೩.೨ ಬೇರೆ ಕೆಲವು ಪ್ರತ್ಯಯಗಳು
ಇದೇ ರೀತಿಯಲ್ಲಿ ಬೇರೆ ಕೆಲವು ಪ್ರತ್ಯಯಗಳನ್ನು ತೋರಿಸುವ ಕ್ರಿಯಾಪದ ಗಳನ್ನು ಈ ಕೆಳಗಿನ ಹೋಲಿಕೆಗಳಲ್ಲಿ ಕಾಣಬಹುದು.
| ಪ್ರತ್ಯಯ | ಆಧಾರವಾಗಬಲ್ಲ ಪದಗಳು | ||
|---|---|---|---|
| ೧. | ಗು | ಬಣ ಕೊರತೆ ಬೆಳಕು ತಿರಿ ತೊಲೆ ಹೆಣ ತಾಳು | ಬಣಗು ಕೊರಗು ಬೆಳಗು ತಿರುಗು ತೊಲಗು ಹೆಣಗು ತಗ್ಗು |
| ೨. | ಕು | ತೂರು ದೊರೆ ನಿಲ್ಲು ಕುಟ್ಟು ಕಲೆ ಹಿಸಿ | ತುರುಕು ದೊರಕು ನಿಲುಕು ಕುಟುಕು ಕಲಕು ಹಿಸುಕು |
| ೩. | ಡು | ಕದಲು ಹೊರ ಹಬ್ಬು ಕಲೆ | ಕದಡು ಹೊರಡು ಹರಡು ಕಲಿಡು |
| ೪. | ಳು | ಉಗಿ ನುಸಿ ಸಿರಿ | ಉಗುಳು ನುಸುಳು ಸೀಳು |
| ೫. | ಬು | ಅಲೆ | ಅಲುಬು |
| ಹರಡು ಊದು | ಹಬ್ಬು ಉಬ್ಬು | ||
|---|---|---|---|
| ೬. | ಯು | ನೋವು ನೇಕಾರ | ನೋಯು ನೇಯು |
| ಎಡರು ಎಡವು | ಎಡವು ತಿರುವು |
ಇದಲ್ಲದೆ, ಕ್ರಿಯಾಪದಗಳ ಕೊನೆಯಲ್ಲಿ ಬರುವ ಇಕಾರ, ಎಕಾರ ಮತ್ತು ಉಕಾರಗಳೂ ಮೂಲಭಾಷೆಯಲ್ಲಿ ಪ್ರತ್ಯಯಗಳೇ ಆಗಿದ್ದಿರಲು ಸಾಧ್ಯವಿದೆ. ಕನ್ನಡದ ಎಕಾರಾಂತ ಕ್ರಿಯಾಪದಗಳಲ್ಲಿ ಕೆಲವು ಮೂಲದಲ್ಲಿ ಅಯ್ ಎಂಬುದ ರಲ್ಲೂ ಮತ್ತು ಬೇರೆ ಕೆಲವು ಅ ಎಂಬುದರಲ್ಲೂ ಕೊನೆಗೊಂಡಿದ್ದುವೆಂದು ವಾದಿಸುವುದಕ್ಕೆ ಬೇರೆ ದ್ರಾವಿಡ ಭಾಷೆಗಳ ಆಧಾರವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಕನ್ನಡದ ಕ್ರಿಯಾಪದಗಳನ್ನು ತಮಿಳು ಭಾಷೆಯ ಕ್ರಿಯಾಪದ ಗಳೊಂದಿಗೆ ಹೋಲಿಸಿ ನೋಡಬಹುದು.
| ಕನ್ನಡ | ತಮಿಳು | ಕನ್ನಡ | ತಮಿಳು |
|---|---|---|---|
| ಅಳೆ | அள | ಬೆಳೆ | விಳಯ್ |
| ಮರೆ | மఱಿ | ಕೊರೆ | ಕುಅಯ್ |
| ನಡೆ | நட | ಒಡೆ | ಉಡಯ್ |
| ಕರೆ | கఱ | ಕರೆ | ಕರಯ್ |
ಕನ್ನಡದ ಕರೆ ಎಂಬುದಕ್ಕೆ ಹಾಲನ್ನು, ಕರೆ ಮತ್ತು ಆತನನ್ನು, ಕರೆ ಎಂಬ ಎರಡು ಬಳಕೆಗಳಲ್ಲಿ ಕಾಣಿಸುವಂತೆ ಎರಡು ಬೇರೆ ಬೇರೆ ಅರ್ಥಗಳಿದ್ದು, ನಿಜಕ್ಕೂ ಆ ರೂಪದಲ್ಲಿ ಎರಡು ಎರಡು ಬೇರೆ ಬೇರೆ ಕ್ರಿಯಾಪದಗಳಿವೆ. ಇವುಗಳಲ್ಲಿ ಮೊದಲನೆಯದರ ಕೊನೆಯ ಎಕಾರ ಅಕಾರದಿಂದಲೂ ಮತ್ತು ಎರಡನೆಯದರ ಕೊನೆಯ ಎಕಾರ ಅಯ್ ಎಂಬುದರಿಂದಲೂ ಬಂದಿದೆಯೆಂಬುದನ್ನು ಅವುಗಳ ಎದುರು ಕೊಟ್ಟಿರುವ ತಮಿಳು ಪದಗಳು ಸ್ಪಷ್ಟಪಡಿಸುತ್ತವೆ.
೬.೪ ಇಸು ಎಂಬ ಪ್ರತ್ಯಯದ ಬಳಕೆ
ಮೇಲೆ ಕೊಟ್ಟಿರುವಂತಹ ಪಳೆಯಳಿಕೆಗಳಾಗಿ ಉಳಿದಿರುವ ಪ್ರತ್ಯಯಗಳನ್ನು ಬಿಟ್ಟರೆ, ಕನ್ನಡ ಕ್ರಿಯಾಪದಗಳ ಒಳರಚನೆಯಲ್ಲಿ ಪ್ರತ್ಯಯಗಳ ಬಳಕೆಯೇ ಇಲ್ಲವೆಂದೂ ಹೇಳಲು ಸಾಧ್ಯವಿದೆ. ಆದರೆ ಇದಕ್ಕೆ ಅಪವಾದವಾಗಿ, ಕನ್ನಡದ ಕೆಲವು ಕ್ರಿಯಾಪದಗಳಲ್ಲಿ ಇಸು ಎಂಬ ಒಂದು ಪ್ರತ್ಯಯ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಈ ಪ್ರತ್ಯಯವನ್ನು ಸಂಸ್ಕೃತದಿಂದ ಎರವಲಾಗಿ ಬಂದ ನಾಮ ಪದಗಳನ್ನು ಕ್ರಿಯಾಪದಗಳ ಸ್ಥಾನದಲ್ಲಿ ಇರಿಸುವುದಕ್ಕಾಗಿ ಬಳಸಲಾಗುತ್ತದೆ ಯಾದರೂ (೮.೩.೬ ನೋಡಿ), ಕನ್ನಡದವೇ ಆದ ಕ್ರಿಯಾಪದಗಳಲ್ಲೂ ಕೆಲ ವೊಂದು ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಕಾಣಬಹುದು. ಉದಾ:
| ಅಬ್ಬರ | ಅಬ್ಬರಿಸು | ಹಂಗು | ಹಂಗಿಸು |
| ಹಂಬಲ | ಹಂಬಲಿಸು | ತುಂಡು | ತುಂಡಿಸು |
| ಬೇಸರ | ಬೇಸರಿಸು | ಹೆಸರು | ಹೆಸರಿಸು |
| ಕನ್ನಡ | ಕನ್ನಡಿಸು | ಮುದ್ದು | ಮುದ್ದಿಸು |
| ಒತ್ತಾಯ | ಒತ್ತಾಯಿಸು | ನೆಲೆ | ನೆಲಸು |
ಗುಣಪದಗಳಿಂದಲೂ ಕ್ರಿಯಾಪದಗಳನ್ನು ಈ ರೀತಿ ತಯಾರಿಸಲು ಸಾಧ್ಯವಿದೆ ಯೆಂಬುದನ್ನು ಕೆಳಗಿನ ಉದಾಹರಣೆಗಳು ತೋರಿಸಿಕೊಡುತ್ತವೆ. ಆದರೆ ಕನ್ನಡ ದವೇ ಆದ ಗುಣಪದಗಳೊಂದಿಗೆ ಈ ಇಸು ಪ್ರತ್ಯಯದ ಬಳಕೆ ಅಪರೂಪ.
| ಎತ್ತರ | ಎತ್ತರಿಸು | ತಂಪು | ತಂಪಿಸು |
| ಇದಿರು | ಇದಿರಿಸು | ಬೋಳು | ಬೋಳಿಸು |
ಯಾವುದಾದರೊಂದು ಶಬ್ದವನ್ನು ಅಣಕಿಸಿ ಹೇಳುವ ಬಡಬಡ, ಚಟಚಟ, ಗಹಗಹ ಎಂಬಂತಹ ಪದಗಳಿಗೆ, ಮತ್ತು ಬೇರೆ ಕೆಲವು ಅನುಭವಗಳನ್ನು ಸೂಚಿಸುವ ತಳತಳ, ಗಮಗಮ, ಎಂಬಂತಹ ಪದಗಳಿಗೆ ಇಸು ಪ್ರತ್ಯಯವನ್ನು ಸೇರಿಸಿ ಕ್ರಿಯಾಪದಗಳನ್ನೂ ಮತ್ತು ನೆ ಎಂಬ ಪ್ರತ್ಯಯವನ್ನು ಸೇರಿಸಿ ಗುಣಪದಗಳನ್ನೂ ತಯಾರಿಸಲು ಸಾಧ್ಯವಿದೆ.
| ಬಡಬಡಿಸು | ಬಡಬಡನೆ | ತಳತಳಿಸು | ತಳತಳನೆ |
| ಚಟಚಟಿಸು | ಚಟಚಟನೆ | ಗಮಗಮಿಸು | ಗಮಗಮನೆ |
| ಗಹಗಹಿಸು | ಗಹಗಹನೆ | ಬಗಬಗಿಸು | ಬಗಬಗನೆ |
ಕೆಲವು ಪದಗಳು ಇಕೆ ಅಥವಾ ಕೆ ಎಂಬ ಪ್ರತ್ಯಯ ಸೇರಿದಾಗ ನಾಮಪದ ಗಳಾಗಿಯೂ ಮತ್ತು ಇಸು ಎಂಬ ಪ್ರತ್ಯಯ ಸೇರಿದಾಗ ಕ್ರಿಯಾಪದಗಳಾಗಿಯೂ ಬಳಕೆಯಾಗುತ್ತವೆ. ಇವುಗಳಲ್ಲಿ ಕೆ ಎಂಬ ಪ್ರತ್ಯಯವಿರುವ ಪದಗಳೆದುರು ಇಸು ಎಂಬ ಈ ಪ್ರತ್ಯಯಕ್ಕೆ ಸು ಎಂಬ ರೂಪವಿದೆ. ಉದಾ:
| ಆಕಳಿಕೆ | ಆಕಳಿಸು | ಬಯಕೆ | ಬಯಸು |
| ಕ್ರಿಯಾಪದಗಳ ಒಳರಚನೆ | |||
|---|---|---|---|
| ಬೆದರಿಕೆ | ಬೆದರಿಸು | ಹರಕೆ | ಹರಸು |
| ಮೂದಲಿಕೆ | ಮೂಡಲಿಸು | ಬಳಕೆ | ಬಳಸು |
ಇನ್ನು ಕೆಲವು ಇಸು ಎಂಬುದರಲ್ಲಿ ಕೊನೆಗೊಳ್ಳುವ ಪದಗಳು ಕ್ರಿಯಾಪದ ಗಳಾಗಿ ಮಾತ್ರ ಬಳಕೆಯಲ್ಲಿವೆ. ಇವುಗಳಲ್ಲಿ ಕೆಲವಕ್ಕೆ ಚಾರಿತ್ರಿಕವಾಗಿ ಬೇರೆ ಪದಗಳೊಂದಿಗೆ ಸಂಬಂಧವಿದೆಯಾದರೂ ಹೊಸಗನ್ನಡದಲ್ಲಿ ಇಂತಹ ಸಂಬಂಧ ಉಳಿದಿಲ್ಲ. ಉದಾ:
ಈ ಕೆಳಗಿನ ಕ್ರಿಯಾಪದಗಳಲ್ಲಿ ಇಸು ಎಂಬ ಪ್ರತ್ಯಯ ಬೇರೊಂದು ಪ್ರತ್ಯಯದೊಂದಿಗೆ ಇಲ್ಲವೇ ಬೇರೊಂದು ಕ್ರಿಯಾಧಾತುವಿನ ಸಂಕ್ಷಿಪ್ತ ರೂಪ ದೊಂದಿಗೆ ಬಂದಿರುವ ಹಾಗೆ ಕಾಣಿಸುತ್ತದೆ.
ಚಪ್ಪರಿಸು ಅಪ್ಪಳಿಸು ಓಲೈಸು ಮುಗ್ಗರಿಸು ಕುಪ್ಪಳಿಸು ಕೋರೈಸು ಕೇಕರಿಸು ಬಿಕ್ಕಳಿಸು ಆಕಳಿಸು
ಕ್ರಿಯಾಪದಗಳ ಒಳರಚನೆಯಲ್ಲಿ ಬರುವ ಈ ಇಸು ಎಂಬ ಪದಪ್ರತ್ಯಯ ವನ್ನೇ ಹೋಲುವ ಪದರೂಪ ಪ್ರತ್ಯಯವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಕ್ರಿಯಾಪದವೊಂದಕ್ಕೆ ಸೇರಿಸಿ, ‘ಅದು ಸೂಚಿಸುವ ಕೆಲಸವನ್ನು ಬೇರೆ ಯವರ ಮೂಲಕ ನಡೆಸಲಾಗಿದೆ’ ಎಂಬ ‘ಪ್ರೇರಣಾರ್ಥ’ವನ್ನು ಪಡೆಯಲು ಸಾಧ್ಯ ವಾಗುತ್ತದೆ (ಉದಾ: ಮಾಡು-ಮಾಡಿಸು, ತಿನ್ನು-ತಿನ್ನಿಸು, ಬೀಳು-ಬೀಳಿಸು, ಇತ್ಯಾದಿ). ಈ ಎರಡು ಪ್ರತ್ಯಯಗಳ ರೂಪ ಒಂದೇ ಆದರೂ ಅವುಗಳಲ್ಲಿ ಮೊದಲನೆಯದು ಮಾತ್ರ ಪದರಚನೆಗೆ ಸಂಬಂಧಿಸಿದುದು ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.
೬.೫ ಕೂಡುಪದಗಳು
ಆಗು, ಆಡು, ಕೊಡು, ಬಿಡು, ಕಚ್ಚು, ಬೀಳು, ಮಾಡು, ಹಾಕು ಮೊದಲಾದ ಕೆಲವು ವಿಶಿಷ್ಟವಾದ ಕ್ರಿಯಾಪದಗಳೊಂದಿಗೆ ಇತರ ಕ್ರಿಯಾಪದಗಳನ್ನು ಸೇರಿಸಿ ‘ಕೂಡುಪದ’ಗಳನ್ನು ತಯಾರಿಸುವ ವಿಧಾನವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಈ ಕ್ರಿಯಾಪದಗಳೊಂದಿಗೆ ಬೇರೆ ಕ್ರಿಯಾಪದಗಳನ್ನು ಮಾತ್ರವಲ್ಲದೆ, ನಾಮಪದ
ಇಲ್ಲವೇ ಗುಣಪದಗಳನ್ನು ಸೇರಿಸಿಯೂ ಇಂತಹ ಕೂಡುಪದಗಳನ್ನು ತಯಾರಿ ಸಲು ಸಾಧ್ಯವಿದೆ. ಈ ಕೆಳಗಿನ ಕೆಲವು ಒಳರಚನೆಯಿರುವ ಕ್ರಿಯಾಪದಗಳನ್ನು ಈ ವಿಧಾನಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.
ಹೊಡೆದಾಡು ಬೊಬ್ಬೆಹಾಕು ಅಡ್ಡಬೀಳು ಕಂಡುಬರು ಮಾತುಕೊಡು ಮುಂದೂಡು ಓಡಾಡು ಬೇರುಬಿಡು ಹಾಳಾಗು
೬.೫.೧ ಕೊಡುಪದಗಳು ಮತ್ತು ಜೋಡುಪದಗಳು
ಇಂತಹ ಒಳರಚನೆಯಿರುವ ಕ್ರಿಯಾಪದಗಳನ್ನು ಜೋಡುಪದಗಳೆಂದು ಕರೆಯದೆ ‘ಕೂಡುಪದ’ಗಳೆಂಬ ಬೇರೆಯೇ ಒಂದು ಹೆಸರಿನಿಂದ ಕರೆಯಲು ಜೋಡುಪದ ಗಳಿಗೂ ಮತ್ತು ನಾಮಪದಗುಚ್ಛಗಳಿಗೂ ನಡುವೆ ಅರ್ಥದಲ್ಲಿ ಇಲ್ಲವೇ ಬಳಕೆ ಯಲ್ಲಿ ಕಾಣಿಸುವಂತಹ ವ್ಯತ್ಯಾಸಗಳು (೩.೨ ನೋಡಿ) ಈ ಕ್ರಿಯಾಪದಗಳಿಗೂ ಮತ್ತು ಕ್ರಿಯಾಪದಗುಚ್ಛಗಳಿಗೂ ನಡುವೆ ಕಾಣಿಸದಿರುವುದೇ ಮುಖ್ಯ ಕಾರಣ. ನಿಜಕ್ಕೂ ಇವನ್ನು ಕ್ರಿಯಾಪದಗಳೆಂದು ಕರೆಯದೆ ಕ್ರಿಯಾಪದಗುಚ್ಛಗಳೆಂದು ಕರೆ ಯಲೂ ಸಾಧ್ಯವಿದೆ.
ಮೇಲೆ ಮೂರನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ, ಜೋಡುಪದಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸಿ ಹೇಳಲು ಸಾಧ್ಯವಾಗದು. ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಅವುಗಳ ಅರ್ಥವನ್ನು ನಿರ್ಧರಿಸಲು ಸಾಧ್ಯ. ಆದರೆ ಕೂಡುಪದಗಳಾಗಿ ಬರುವ ಕ್ರಿಯಾಪದಗಳ ಅರ್ಥವನ್ನು ನಿರ್ಧರಿಸುವಲ್ಲಿ ಇಂತಹ ಸಮಸ್ಯೆಯಿಲ್ಲ. ಹೆಚ್ಚಿನಡೆಗಳಲ್ಲಿಯೂ ಅವುಗಳ ಅರ್ಥ ವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೇನೇ ನಿರ್ಧರಿಸಿ ಹೇಳಲು ಸಾಧ್ಯವಿದೆ. ಇದಕ್ಕೆ ಕೆಲವು ಅಪವಾದಗಳಿವೆಯೇನೋ ನಿಜ; ಆದರೆ ಇಲ್ಲೂ ಜೋಡುಪದ ಮತ್ತು ಪದಗುಚ್ಛಗಳ ನಡುವೆ ಅವುಗಳ ಬಳಕೆಯಲ್ಲಿ ಕಾಣಿಸುವಂತಹ ವ್ಯತ್ಯಾಸವಿಲ್ಲ.
ಕ್ರಿಯಾಪದಗಳ ಒಳರಚನೆಯಲ್ಲಿ ಈ ರೀತಿ ಜೋಡುಪದಗಳಿಗಿಂತ ಭಿನ್ನ ವಾದ ‘ಕೂಡುಪದ’ ಎಂಬುದರ ಬಳಕೆ ಕಾಣಿಸುವುದಕ್ಕೆ ನಾಮಪದಗಳ ಹಾಗೆ ಅವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ವಿಧಾನಗಳಲ್ಲಿ ಬಳಸಲು ಸಾಧ್ಯವಾಗದಿರುವುದೇ ಮುಖ್ಯ ಕಾರಣ. ಕ್ರಿಯಾಪದಗಳು ಘಟನೆಗಳನ್ನು ನಿರ್ದೇಶಿಸುತ್ತವಲ್ಲದೆ ಗುರುತಿಸುವುದಿಲ್ಲ. ಅವು ಏನಾಯಿತು (ಯಾವ ಘಟನೆ ಜರಗಿತು) ಎಂಬುದನ್ನು ನೇರವಾಗಿ ತಿಳಿಸುತ್ತವಲ್ಲದೆ, ಘಟನೆಯೊಂದನ್ನು ಗುರುತಿಸಿ (ಹೆಸರಿಸಿ ಇಲ್ಲವೇ ವರ್ಣಿಸಿ), ಅನಂತರ ಆ ಘಟನೆಯ ಕುರಿತಾಗಿ ಏನಾಯಿತು (ಅದು ನಡೆಯಿತೇ, ನಡೆಯಲಿಲ್ಲವೇ, ನಡೆಯಬಹುದೇ, ಇತ್ಯಾದಿ
ಯಾಗಿ) ಎಂಬುದನ್ನು ತಿಳಿಸಲು ಪ್ರಯತ್ನಿಸುವುದಿಲ್ಲ. ಹಾಗಾಗಿ, ಅವುಗಳ ಬಳಕೆ ಯಲ್ಲಿ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ವ್ಯತ್ಯಾಸ ಕಾಣಿಸಲು ಸಾಧ್ಯ ವಿಲ್ಲ.
ಟ.ಜಿ.೨ ಕೊಡುಪದಗಳ ರಚನೆ
ಕೂಡುಪದಗಳಲ್ಲಿ ಎರಡು (ಅಥವಾ ಜಾಸ್ತಿ) ಪದಗಳು ಒಟ್ಟು ಸೇರಿರುತ್ತವೆ. ಇವುಗಳಲ್ಲಿ ಯಾವಾಗಲೂ ಕೊನೆಯ ಪದ ಕ್ರಿಯಾಪದವಾಗಿರುವುದು ಅವಶ್ಯ. ಮೇಲೆಯೇ ಸೂಚಿಸಿರುವಂತೆ, ಇವುಗಳ ಮೊದಲನೆಯ ಪದ ಕ್ರಿಯಾಪದವಿರ ಬಹುದು, ನಾಮಪದವಿರಬಹುದು, ಇಲ್ಲವೇ ಗುಣಪದವಿರಬಹುದು.
ಇದಲ್ಲದೆ, ಇವುಗಳ ಮೊದಲನೆಯ ಅಂಗವಾಗಿ ಬಂದಿರುವ ಕ್ರಿಯಾಪದವು ಧಾತು ರೂಪದಲ್ಲಿರಬಹುದು, ಇಲ್ಲವೇ ಅದರ ಯಾವುದಾದರೊಂದು ಕ್ರಿಯಾ ಪದರೂಪದಲ್ಲಿರಬಹುದು. ಉದಾಹರಣೆಗಾಗಿ, ಕುಣಿದಾಡು, ಕಂಡುಬರು, ತೇಲಿ ಬಿಡು, ಹೋಗಲಾಡಿಸು ಮೊದಲಾದ ಕೂಡುಪದಗಳಲ್ಲಿ ಕುಣಿದು, ಕಂಡು, ತೇಲಿ, ಹೋಗಲು ಮೊದಲಾದ ಕ್ರಿಯಾಪದರೂಪಗಳು ಮೊದಲನೆಯ ಅಂಗವಾಗಿ ಬಂದಿವೆ. ಅಪರೂಪವಾಗಿ ನಾಮಪದಗಳೂ ಅವುಗಳ ವಿಭಕ್ತಿ ರೂಪದಲ್ಲಿ ಇಂತಹ ಕೂಡುಪದಗಳ ಮೊದಲನೆಯ ಅಂಗವಾಗಿ ಬರಬಲ್ಲು ವೆಂಬುದಕ್ಕೆ ಮಾತನಾಡು (ಮಾತನ್ನು ಆಡು) ಎಂಬ ಉದಾಹರಣೆಯನ್ನು ಕೊಡಬಹುದು.
ಕೂಡುಪದಗಳ ಮೊದಲನೆಯ ಅಂಗವಾಗಿ ಬರುವ ನಾಮಪದ ಕನ್ನಡದ್ದೇ ಇರಬಹುದು, ಅಥವಾ ಇಂಗ್ಲಿಷ್ ಮೊದಲಾದ ಬೇರೆ ಭಾಷೆಗಳಿಂದ ಎರವಲಾಗಿ ಬಂದುದಿರಬಹುದು. ಬಂದಾಗು, ಸ್ಟಾರ್ಟ್‌ಮಾಡು, ದುಃಖವಾಗು ಮೊದಲಾ ದುವನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು. ಈ ರೀತಿ ಎರವಲಾಗಿ ಬಂದ ಪದಗಳು ಬಹಳ ಸುಲಭವಾಗಿ ಇಂತಹ ಕೂಡುಪದಗಳಲ್ಲಿ ಸೇರಿಕೊಳ್ಳು ತ್ತವೆಯೆಂಬುದು ಅವಕ್ಕೂ ಮತ್ತು ಜೋಡುಪದಗಳಿಗೂ ನಡುವಿರುವ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸ.
ಕನ್ನಡದಲ್ಲಿ ಬಳಕೆಯಲ್ಲಿರುವ ಕೂಡುಪದಗಳನ್ನು ಈ ಕೆಳಗೆ ಅವುಗಳ ಕೊನೆಯಲ್ಲಿ ಬರುವ ಕ್ರಿಯಾಪದಗಳ ಪರಿಶೀಲನೆಯ ಮೂಲಕ ವಿವರಿಸಲು ಯತ್ನಿಸಲಾಗಿದೆ.
(ಕ) ಆಗು
ಈ ಕ್ರಿಯಾಪದವನ್ನು ಮುಖ್ಯವಾಗಿ ನಾಮಪದ ಮತ್ತು ಗುಣಪದಗಳೊಂದಿಗೆ ಬಳಸಿ ಕೂಡುಪದಗಳನ್ನು ರಚಿಸಲು ಸಾಧ್ಯವಿದೆ. ಇಂತಹ ಕೂಡುಪದಗಳಲ್ಲೆಲ್ಲ ಆಗು ಎಂಬ ಕ್ರಿಯಾಪದಕ್ಕೆ ಅದರದೇ ಅರ್ಥವಿದ್ದು, ಕೂಡುಪದಗಳ ಅರ್ಥವನ್ನು
ನೇರವಾಗಿ ಅವುಗಳ ಒಳರಚನೆಯ ಸಹಾಯದಿಂದಲೇ ಪಡೆಯಲು ಸಾಧ್ಯ ಎಂಬುದನ್ನು ಗಮನಿಸಬಹುದು.
ಉಕಾರದಲ್ಲಿ ಕೊನೆಗೊಳ್ಳುವ ಪದಗಳೊಂದಿಗೆ ಈ ಕ್ರಿಯಾಪದ ಬಂದಾಗ ಅವುಗಳ ಕೊನೆಯಲ್ಲಿರುವ ಉಕಾರ ಬಿದ್ದು ಹೋಗುತ್ತದೆ. ಆದರೆ ಇತರ ಪದ ಗಳೊಂದಿಗೆ ಬಂದಾಗ ಈ ರೀತಿ ಕೊನೆಯ ಸ್ವರ ಬಿದ್ದು ಹೋಗುವುದಿಲ್ಲ. ಇದಕ್ಕೆ ಬದಲು, ಅವುಗಳ ಕೊನೆಯಲ್ಲಿ ಇಕಾರ ಇಲ್ಲವೇ ಎಕಾರವಿದೆಯಾದಲ್ಲಿ ಆ ಎರಡು ಪದಗಳ ನಡುವೆ ಯಕಾರ ಬಂದು ಸೇರಿಕೊಳ್ಳುತ್ತದೆ, ಮತ್ತು ಅವುಗಳ ಕೊನೆಯಲ್ಲಿ ಅಕಾರವಿದೆಯಾದಲ್ಲಿ ವಕಾರ ಸೇರಿಕೊಳ್ಳುತ್ತದೆ. ಗುಣಪದ ಗಳೊಂದಿಗೆ ಈ ಕ್ರಿಯಾಪದ ಬಂದಿರುವಾಗ ಮಾತ್ರ ಕೆಲವೊಮ್ಮೆ ಈ ನಿಯಮಕ್ಕೆ ಅಪವಾದವಾಗಿ ಗುಣಪದಗಳ ಕೊನೆಯ ಅಕಾರ ಇಲ್ಲವೇ ಎಕಾರ ಬಿದ್ದುಹೋಗು ವುದನ್ನು ಕಾಣಬಹುದು.
- (೧) ನಾಮಪದಗಳೊಂದಿಗೆ ಬಳಕೆ
- ಪೆಟ್ಟಾಗು ಬಲಿಯಾಗು ಗುಣವಾಗು
- ಸಿಟ್ಟಾಗು ಗುರಿಯಾಗು ತಡವಾಗು
- ನೀರಾಗು ಎಡೆಯಾಗು ಮಾಯವಾಗು
- ಒಂದಾಗು
- (೨) ಗುಣಪದಗಳೊಂದಿಗೆ ಬಳಕೆ
- ಹಾಳಾಗು ಬಡವಾಗು ಮುಂದಾಗು
- ಕಪ್ಪಾಗು ಕಪ್ಪಗಾಗು ಮೇಲಾಗು
- ಇದಿರಾಗು ಅಡ್ಡಾಗು
- (೩) ಇತರ ಪದಗಳೊಂದಿಗೆ ಬಳಕೆ
- ಆಗು ಎಂಬ ಈ ಕ್ರಿಯಾಪದ ಸಾಮಾನ್ಯವಾಗಿ ಬೇರೆ ಕ್ರಿಯಾಪದಗಳೊಂದಿಗೆ
- ಕೂಡುಪದಗಳಲ್ಲಿ ಬಳಕೆಯಾಗುವುದಿಲ್ಲ. ಆದರೆ, ಅನಿಯಮಿತ ರೂಪಗಳಿರುವ
- ಬೇಕು, ಬೇಡು, ಸಾಕು, ಇಲ್ಲಿ ಎಂಬಂತಹವುಗಳೊಂದಿಗೆ, ಮತ್ತು ಕ್ರಿಯಾಪದ
- ಗಳ ಸ್ಥಾನದಲ್ಲಿ ಬರುವ ಸರಿ, ತಪ್ಪು, ಸುಳ್ಳು ಎಂಬಂತಹವುಗಳೊಂದಿಗೆ ಸೇರಿ
- ಇದು ಕೂಡುಪದಗಳಲ್ಲಿ ಬರಬಲ್ಲುದು. ಉದಾ:
- ಬೇಕಾಗು ತಪ್ಪಾಗು
- ಸಾಕಾಗು ಸರಿಯಾಗು
- ಬೇಡವಾಗು ಸುಳ್ಳಾಗು
- ಇಲ್ಲವಾಗು ಉಂಟಾಗು
ಇಂಗ್ಲಿಷ್‌ನಂತಹ ಬೇರೆ ಭಾಷೆಗಳಿಂದ ಎರವಲಾಗಿ ಬಂದ ಕ್ರಿಯಾಪದ ಗಳನ್ನು ಕ್ರಿಯಾಪದದ ಸ್ಥಾನದಲ್ಲಿ ಬಳಸುವುದಕ್ಕಾಗಿ ಕನ್ನಡದಲ್ಲಿ ಅವುಗಳೊಂದಿಗೆ ಆಗು ಮತ್ತು ಮಾಡು ಎಂಬ ಎರಡು ಕ್ರಿಯಾಪದಗಳನ್ನು ಸೇರಿಸಿ ಕೂಡುಪದ ಗಳಾಗಿ ಮಾಡಿ ಬಳಸುವ ವಿಧಾನ ಬಳಕೆಯಲ್ಲಿದೆ. ಇವುಗಳಲ್ಲಿ ಆಗು ಎಂಬುದು ಒಂದು ಘಟನೆಯನ್ನೂ ಮತ್ತು ಮಾಡು ಎಂಬುದು ಒಂದು ಕೆಲಸವನ್ನೂ ತಿಳಿಸು ತ್ತವೆ. (ಉದಾ: ಸ್ಟಾರ್ಟಾಗು, ಸ್ಟಾರ್ಟ್‌ಮಾಡು, ದಿಪ್ರೆಸ್ಸಾಗು, ಕೌಂಟ್ ಮಾಡು, ಇತ್ಯಾದಿ).
(ಖ) ಆಡು
ಈ ಕ್ರಿಯಾಪದವನ್ನು ಬಳಸಿ ರಚಿಸುವ ಕೂಡುಪದಗಳನ್ನು ಕ್ರಿಯಾಪದ, ನಾಮ ಪದ ಇಲ್ಲವೇ ಗುಣಪದಗಳಿಂದ ತಯಾರಿಸಲು ಸಾಧ್ಯವಿದೆ. ಕ್ರಿಯಾಪದಗಳನ್ನು ಸಾಮಾನ್ಯವಾಗಿ ಅವುಗಳ ‘ಭೂತನ್ಯೂನ’ ರೂಪದಲ್ಲಿ ಬಳಸುವುದು ರೂಢಿ. ಇಂತಹ ಕೂಡುಪದಗಳಲ್ಲಿ ಆಡು ಎಂಬ ಕ್ರಿಯಾಪದಕ್ಕೆ ಒಂದು ಘಟನೆ ಹಲವು ಬಾರಿ ಅಥವಾ ಬಹಳ ಹೊತ್ತು ನಡೆಯುವುದೆಂಬ ಅರ್ಥ ಬರುತ್ತದೆ. ಸಾಮಾನ್ಯವಾಗಿ ಇದು ಚಲನೆಯನ್ನು ಸೂಚಿಸುವಂತಹ ನಲಿ, ಕುಣಿ, ತಿರುಗು, ಹಾರು, ಓಡು, ತೇಲು, ತೂಗು, ಹೊರಳು ಮೊದಲಾದ ಕ್ರಿಯಾಪದಗಳೊಂದಿಗೆ ಬರುತ್ತದೆ. ಉದಾ:
| ಕುಣಿ | ಕುಣಿದಾಡು | ಎಳೆ | ಎಳೆದಾಡು |
| ಸುಳಿ | ಸುಳಿದಾಡು | ಅಲೆ | ಅಲೆದಾಡು |
| ನಲಿ | ನಲಿದಾಡು | ಹೊಡೆ | ಹೊಡೆದಾಡು |
ಉಕಾರದಲ್ಲಿ ಕೊನೆಗೊಳ್ಳುವ ಓಡು, ತಿರುಗು, ಹೊರಳು ಮೊದಲಾದ ಕ್ರಿಯಾಪದಗಳಿಗೆ ಇಕಾರದಲ್ಲಿ ಕೊನೆಗೊಳ್ಳುವ ಓಡಿ, ತಿರುಗಿ, ಹೊರಳಿ ಎಂಬಂತಹ ಭೂತನ್ಯೂನ ರೂಪಗಳಿದ್ದು, ಈ ಕ್ರಿಯಾಪದಗಳೊಂದಿಗೆ ಆಡು ಎಂಬ ಪದ ಸೇರಿದಾಗ ಅವುಗಳ ಕೊನೆಯ ಇಕಾರ ಬಿದ್ದು ಹೋಗುತ್ತದೆ. ಹಾಗಾಗಿ, ಈ ಕ್ರಿಯಾಪದಗಳಿಂದ ತಯಾರಾದ ಕೂಡುಪದಗಳಲ್ಲಿ ಇವು ನೇರವಾಗಿ ಧಾತುರೂಪದಲ್ಲೇ ಬಂದಿವೆಯೇನೋ ಎಂದು ತೋರುತ್ತದೆ. ಉದಾ:
| ಓಡು | ಓಡಾಡು | ತಿರುಗು | ತಿರುಗಾಡು |
| ತೂಗು | ತೂಗಾಡು | ಹೊರಳು | ಹೊರಳಾಡು |
| ಕಚ್ಚು | ಕಚ್ಚಾಡು | ಹೆಣಗು | ಹೆಣಗಾಡು |
| ಗುದ್ದು | ಗುದ್ದಾಡು | ಹುಡುಕು | ಹುಡುಕಾಡು |
ಆದರೆ, ನಗು ಎಂಬ ಕ್ರಿಯಾಪದಕ್ಕೆ ನಕ್ಕು ಎಂಬ ಭೂತನ್ಯೂನ ರೂಪವಿದೆ ಯಾದರೂ ಅದರ ಕೂಡುಪದವಾದ ನಗಾಡು ಎಂಬುದರಲ್ಲಿ ಅದು ಧಾತು ರೂಪದಲ್ಲೇ ಬಂದಿರುವುದನ್ನು ಗಮನಿಸಬಹುದು.
ಆಡು ಎಂಬ ಈ ಕ್ರಿಯಾಪದವನ್ನು ಕೆಲವು ನಾಮಪದಗಳೊಂದಿಗೂ ಬಳಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ. ಆದರೆ ಕ್ರಿಯಾಪದಗಳ ಭೂತನ್ಯೂನರೂಪದೊಂದಿಗೆ ಬಳಸಿ ದಾಗ ದೊರೆಯುವ ಅರ್ಥ (ಹಲವು ಬಾರಿ ಇಲ್ಲವೇ ಬಹಳ ಹೊತ್ತು ಎಂಬುದು) ಅದಕ್ಕೆ ಈ ಬಳಕೆಯಲ್ಲಿ ಬರುವುದಿಲ್ಲ. ಉದಾ:
ಜೂಜು ಜೂಜಾಡು
ಉಸಿರು ಉಸಿರಾಡು
ಜಗಳ ಜಗಳಾಡು
ಮಾತನಾಡು ಎಂಬ ಕೂಡುಪದದಲ್ಲಿ ಮಾತು ಎಂಬ ನಾಮಪದ ಅನ್ನು (ಅನ್) ಎಂಬ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿರುವುದನ್ನು ಕಾಣಬಹುದು. ಇದೊಂದು ಅನಿಯಮಿತವಾದ ಬಳಕೆ.
ಆಡು ಎಂಬ ಕ್ರಿಯಾಪದ ಗುಣಪದಗಳೊಂದಿಗೂ ಕೂಡುಪದಗಳಲ್ಲಿ ಬರ ಬಲ್ಲುದು ಎಂಬುದಕ್ಕೆ ಕೆಳಗಿನ ಉದಾಹರಣೆಗಳನ್ನು ಕೊಡಬಹುದು.
ಅಡ್ಡ ಅಡ್ಡಾಡು ಬಡನೆ ಬಡನಾಡು
(ಗ) ಕೊಡು
ಈ ಕ್ರಿಯಾಪದವನ್ನು ನಿಯಮಿತವಾಗಿ ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಕೂಡುಪದಗಳಲ್ಲಿ ಬಳಸಲು ಸಾಧ್ಯವಿದೆ. ಆದರೆ, ಒಂದು ಕೆಲಸವನ್ನು ಇನ್ನೊಬ್ಬನ ಹಿತಕ್ಕಾಗಿ ಮಾಡುವುದೆಂಬ ಅರ್ಥ ಇದಕ್ಕಿದೆಯಾದ ಕಾರಣ, ಅಂತಹ ಅರ್ಥವನ್ನು ಕೊಡಬಲ್ಲ ಕ್ರಿಯಾಪದಗಳೊಂದಿಗೆ ಮಾತ್ರ ಇದು ಬರಬಲ್ಲುದು. ಇದರೊಂದಿಗೆ ಕ್ರಿಯಾಪದಗಳು ಅವುಗಳ ಭೂತನ್ಯೂನರೂಪದಲ್ಲಿ ಬರುತ್ತವೆ. ಉದಾ:
| ಮಾಡು | ಮಾಡಿಕೊಡು | ತರು | ತಂದುಕೊಡು |
| ಹುಡುಕು | ಹುಡುಕಿಕೊಡು | ಬರೆ | ಬರೆದುಕೊಡು |
| ತಿದ್ದು | ತಿದ್ದಿಕೊಡು | ಸುಲಿ | ಸುಲಿದುಕೊಡು |
ಇದಲ್ಲದೆ ಅನಿಯಮಿತವಾಗಿ ಬೀಳ್ಕೊಡು ಎಂಬುದರಲ್ಲಿ ಇದು ನೇರವಾಗಿ ಒಂದು ಕ್ರಿಯಾಧಾತುವಿನೊಂದಿಗೂ, ಬರಗೊಡು ಎಂಬುದರಲ್ಲಿ ಬರು ಎಂಬ ಕ್ರಿಯಾಪದದ ಬರ(ಲು) ಎಂಬ ರೂಪದೊಂದಿಗೂ ಮತ್ತು ಕಿವಿಗೊಡು, ಬೆಲೆಕೊಡು ಎಂಬವುಗಳಲ್ಲಿ ನಾಮಪದಗಳೊಂದಿಗೂ ಬಂದಿರುವುದನ್ನು ಕಾಣ ಬಹುದು.
(ಫ) ಕೊಕ್ಕು
ಕನ್ನಡದಲ್ಲಿ ಈ ಕ್ರಿಯಾಪದಕ್ಕೆ ಸ್ವತಂತ್ರವಾದ ಬಳಕೆಯಿಲ್ಲ. ಆದರೆ ಕೂಡುಪದಗಳಲ್ಲಿ ಇದನ್ನು ಹೆಚ್ಚು ಕಡಿಮೆ ಎಲ್ಲಾ ರೀತಿಯ ಕ್ರಿಯಾಪದಗ ಳೊಂದಿಗೂ ಬಳಸಲು ಸಾಧ್ಯವಿದೆ. ಇಂತಹ ಕೂಡುಪದಗಳಲ್ಲಿ ಕ್ರಿಯಾಪದಗಳು ಅವುಗಳ ಭೂತನ್ಯೂನ ರೂಪದಲ್ಲಿ ಬರುತ್ತವೆ, ಮತ್ತು ಈ ಕೂಡುಪದಗಳಿಗೆ ಒಂದು ಘಟನೆ ತಾನಾಗಿ ನಡೆದಿದೆ ಇಲ್ಲವೇ ಒಂದು ಕೆಲಸವನ್ನು ಒಬ್ಬ ವ್ಯಕ್ತಿ ತನಗಾಗಿ ನಡೆಸಿದ್ದಾನೆ ಎಂಬ ಅರ್ಥ ಬರುತ್ತದೆ. ಉದಾ:
| ಮಾಡು | ಮಾಡಿಕೊಳ್ಳು | ಬರೆ | ಬರೆದುಕೊಳ್ಳು |
| ತಿನ್ನು | ತಿಂದುಕೊಳ್ಳು | ಕುಡಿ | ಕುಡಿದುಕೊಳ್ಳು |
| ಅಡಗು | ಅಡಗಿಕೊಳ್ಳು | ಇಡು | ಇಟ್ಟುಕೊಳ್ಳು |
ಕೊಳ್ಳು ಎಂಬ ಅಸ್ವತಂತ್ರ ಕ್ರಿಯಾಪದವೂ ಕೊಂಡುಕೊಳ್ಳು ಎಂಬ ಕೂಡು ಪದದಲ್ಲಿ ಮೊದಲನೆಯ (ನ್ಯೂನರೂಪದ) ಕ್ರಿಯಾಪದವಾಗಿ ಬಂದಿರುವುದನ್ನು ಕಾಣಬಹುದು. ಇದಲ್ಲದೆ ಬೇರೆಯೂ ಕೆಲವು ಕ್ರಿಯಾಪದಗಳು ಈ ರೀತಿ ಅಸ್ವತಂತ್ರ ಕ್ರಿಯಾಪದಗಳಾಗಿ ಇಂತಹ ಕೂಡುಪದಗಳಲ್ಲಿ ಬಂದಿರುವುದನ್ನು ಕದ್ದುಕೊಳ್ಳು, ಕುಳಿತುಕೊಳ್ಳು ಎಂಬಂತಹವುಗಳಲ್ಲಿ ಕಾಣಬಹುದು.
ಕೆಲವು ನಾಮಪದ ಮತ್ತು ಗುಣಪದಗಳೊಂದಿಗೂ ಕೊಳ್ಳು ಎಂಬ ಈ ಕ್ರಿಯಾಪದವನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಕೆಳಗಿನ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.
| ನೆಲೆ | ನೆಲೆಗೊಳ್ಳು | ಇದಿರು | ಇದಿರುಗೊಳ್ಳು |
| ಮೋಸ | ಮೋಸಗೊಳ್ಳು | ||
| ಸಿಟ್ಟು | ಸಿಟ್ಟುಗೊಳ್ಳು | ||
| ಕೈ | ಕೈಗೊಳ್ಳು |
ಹದಗೊಳಿಸು ಮತ್ತು ಸಜ್ಜುಗೊಳಿಸು ಎಂಬವುಗಳಲ್ಲಿ ಕಾಣಿಸುವ ಕೂಡು ಪದಗಳು ಇಸು ಎಂಬ ಪ್ರತ್ಯಯದೊಂದಿಗೆ ಮಾತ್ರ ಬರಬಲ್ಲುವು.
(ಜ) ಬರು
ಈ ಕ್ರಿಯಾಪದವನ್ನೂ ಬೇರೆ ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಕೆಲವು ಬಳಕೆಗಳಲ್ಲಿ ಬರು ಎಂಬುದಕ್ಕೆ ಅದರ ನೇರವಾದ ಅರ್ಥವಿದೆಯಾದರೆ, ಇನ್ನು ಕೆಲವು ಬಳಕೆಗಳಲ್ಲಿ ಈ ಅರ್ಥಕ್ಕೇನೇ ಸಂಬಂಧಿಸಿದ ಬೇರೆ ಅರ್ಥಗಳು ಬಂದಿವೆ. ಉದಾ:
| ಓಡು | ಓಡಿಬರು | ಕಾಣು | ಕಂಡುಬರು |
| ಇಳಿ | ಇಳಿದುಬರು | ಕೂಡು | ಕೂಡಿಬರು |
| ಬೆಳೆ | ಬೆಳೆದುಬರು | ತೋರು | ತೋರಿಬರು |
ಕೆಲವು ನಾಮಪದ ಮತ್ತು ಗುಣಪದಗಳೊಂದಿಗೂ ಈ ಕ್ರಿಯಾಪದವನ್ನು ಸೇರಿಸಿ ಕೂಡುಪದಗಳನ್ನು ತಯಾರಿಸಲು ಸಾಧ್ಯವಿದೆ. ಉದಾ:
| ಹೆಸರು | ಹೆಸರುಬರು | ಅಡ್ಡ | ಅಡ್ಡಬರು |
| ಅಡ್ಡಿ | ಅಡ್ಡಿಬರು | ಮುಂದೆ | ಮುಂದೆಬರು |
ಬರಬರುತ್ತಾ ಎಂಬುದರಲ್ಲಿ ಈ ಕ್ರಿಯಾಪದದೊಂದಿಗೆ ಬರು ಎಂಬ ಕ್ರಿಯಾ ಪದವೇ ಅದರ ಬರ(ಲು) ಎಂಬ ರೂಪದಲ್ಲಿ ಬಂದಿದೆ.
೬.೫.೩ ಬೇರೆ ಕೆಲವು ಕ್ರಿಯಾಪದಗಳ ಬಳಕೆ
ಇಂತಹ ಕೂಡುಪದಗಳಲ್ಲಿ ಎರಡನೆಯ ಕ್ರಿಯಾಪದವಾಗಿ ಕಾಣಿಸುವ ಇತರ ಕ್ರಿಯಾಪದಗಳಲ್ಲಿ ಪ್ರಾಮುಖ್ಯವಾದವುಗಳು ಈ ಕೆಳಗಿನವು. ಇವುಗಳಲ್ಲಿ ಕೆಲವು (ಉದಾ: ಮಾಡು, ಕೆಡು, ಎತ್ತು) ನಾಮಪದ ಮತ್ತು ಗುಣಪದಗಳೊಂದಿಗೆ ಮಾತ್ರ ಬರಬಲ್ಲುವೆಂದು ತೋರುತ್ತದೆ.
| ಬಿಡು | ಕಟ್ಟು | ಇಡು |
| ಬೀಳು | ಹಾಕು | ಕೆಡು |
| ಮಾಡು | ಎತ್ತು | ಹೋಗು |
ಕೂಡಪದಗಳಲ್ಲಿ ಈ ಕ್ರಿಯಾಪದಗಳ ಬಳಕೆಯನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
ಕೈಬಿಡು
ಅಡ್ಡ ಕಟ್ಟು
ಬಾಯಿಬಿಡು
ಕಣ್ಣೆಡು
ಬೆಲೆಕಟ್ಟು
ಹೆಸರಿಡು
ತೇಲಿಬಿಡು
ಹೆಪ್ಪುಗಟ್ಟಿ
ಮುಚ್ಚಿಡು
ಎಡಬಿಡ(ದೆ)
ಎತ್ತಿ ಕಟ್ಟು
ಬರೆದಿಡು
ಅಡ್ಡಬೀಳು
ಬೊಬೆ ಹಾಕು
ಅಂದಗೆಡು
ಹಿಂದೆಬೀಳು
ತೆಗೆದುಹಾಕು
ಕಂಗೆಡು
ಗಂಟುಬೀಳು
ತೂಗಹಾಕು
ಎದೆಗೆಡು
ತಿರುಗಿಬೀಳು
ಕೈಹಾಕು
ಹದಗೆಡು
ಕೈಮಾಡು
ಉಸಿರೆತ್ತು
ಮೋಸಹೋಗು
ಹಾಳುಮಾಡು
ಕಣ್ಣೆತ್ತು
ಓಡಿಹೋಗು
ತಡಮಾಡು
ತಲೆಯೆತ್ತು
ಸೋತುಹೋಗು
ಊಟಮಾಡು
ಕೈಯೆತ್ತು
ಸತ್ತುಹೋಗು
ಈ ಕ್ರಿಯಾಪದಗಳಲ್ಲಿ ಕೆಡು ಎಂಬುದರ ಮೊದಲನೆಯ ಅಕ್ಷರದಲ್ಲಿರುವ ಕಕಾರ ಗಕಾರವಾಗಿರುವುದನ್ನು ಗಮನಿಸಬಹುದು. ಇಂತಹ ಸೇರಿಕೆಯ ಬದಲಾ ವಣೆಗಳು ಬೇರೆ ಕೆಲವು ಕೂಡುಪದಗಳಲ್ಲೂ ಕಾಣಿಸುತ್ತವೆ. ಕೆಲವು ಕ್ರಿಯಾಪದ ಗಳಲ್ಲಿ ಇವು ನಿಯಮಿತವಾಗಿ ಎಲ್ಲಾ ಕೂಡುಪದಗಳಲ್ಲೂ ಕಾಣಿಸುವುವಾದರೆ (ಉದಾ: ಕಾಣು-ಗಾಣು, ಕುಟ್ಟು-ಗುಟ್ಟು, ಕೆದರು-ಗೆದರು), ಬೇರೆ ಕೆಲವು ಕ್ರಿಯಾಪದಗಳಲ್ಲಿ ಅನಿಯಮಿತವಾಗಿ ಕಾಣಿಸಿಕೊಳ್ಳುತ್ತವೆ (ಉದಾ: ಕಟ್ಟು-ಗಟ್ಟು, ಕಳೆ-ಗಳೆ, ತಿರುಗು-ದಿರುಗು). ಉದಾ:
ಕಿರುಗುಟ್ಟು ಕೊನೆಗಾಣು ಕಳೆಗುಂದು ಬುಸುಗುಟ್ಟು ಮನಗಾಣು ಎದೆಗುಂದು
ಬಡಂಬಡು ತಡೆಗಟ್ಟಿ ಹಿಂದಿರುಗು ಬಳಪಡು ಅಡ್ಡಕಟ್ಟು ತಲೆತಿರುಗು
ಮೇಲೆ ಕೊಟ್ಟಿರುವ ಕ್ರಿಯಾಪದಗಳು ಮಾತ್ರವಲ್ಲದೆ ಬೇರೆಯೂ ಹಲವಾರು ಕ್ರಿಯಾಪದಗಳು ಇಂತಹ ಕೂಡುಪದಗಳ ಎರಡನೆಯ ಪದವಾಗಿ ಬರಬಲ್ಲು ವೆಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು.
ಬಾಯಾರು ಕೈಯೊಡ್ಡು ಕಾಲತಳ್ಳು
| ಕೈಯಿಕ್ಕು | ಜಗಳಕಾಯು | ತಲೆದೂಗು |
| ಕುಳ್ಳಿರಿಸು | ಹಲ್ಲುಕಿರಿ | ಮುಂದೂಡು |
| ಬೇರೂರು | ಕಸಗುಡಿಸು | ಮುನ್ನಡೆ |
| ಈಡೇರು | ಹರಟೆಕೊಚ್ಚು | ಹಾರಿನೋಡು |
| ಗುಲ್ಲೆಬ್ಬಿಸು | ತಲೆಕೊಡು | ತಲೆಬಾಗು |
| ಕವಲೊಡೆ | ಕೈಬಾಚು | ಕೈಮುಗಿ |
| ಕಂಡುಹಿಡಿ | ಕೈಸೇರು | ಒರೆಹಚ್ಚು |
| ಕೈಹಾಕು | ಹಿಮ್ಮೆಟ್ಟು | ಮೊರೆಹೊಗು |
ಓ.ಓ ಸಾರಾಂಶ
ಕನ್ನಡದ ಕ್ರಿಯಾಪದಗಳ ಒಳರಚನೆಯಲ್ಲಿ ಇಸು ಎಂಬುದನ್ನು ಬಿಟ್ಟರೆ ಬೇರೆ ಪ್ರತ್ಯಯಗಳ ಬಳಕೆ ಬಹಳ ಅಪರೂಪ. ಪಳೆಯಳಿಕೆಗಳಾಗಿರುವ ಕೆಲವು ಪ್ರತ್ಯಯ ಗಳನ್ನು ಮಾತ್ರ ಅವುಗಳಲ್ಲಿ ಕಾಣಲು ಸಾಧ್ಯವಿದೆ. ಇದಲ್ಲದೆ ನಾಮಪದಗಳ ಒಳರಚನೆಯಲ್ಲಿ ಕಾಣಿಸುವಂತಹ ಜೋಡುಪದಗಳ ಬಳಕೆಯೂ ಕ್ರಿಯಾಪದಗಳ ಲ್ಲಿಲ್ಲ. ಕನ್ನಡ ವೈಯಾಕರಣಿಗಳು ವರ್ಣಿಸುವ ಕ್ರಿಯಾಸಮಾಸವೆಂಬವುಗಳು ನಿಜಕ್ಕೂ ಪದಗುಚ್ಛಗಳಲ್ಲದೆ ಜೋಡುಪದ(ಸಮಸ್ತಪದ)ಗಳಲ್ಲ.
ಕ್ರಿಯಾಪದಗಳ ಭೂತನ್ಯೂನ ರೂಪದೊಂದಿಗೆ ಮತ್ತು ಕೆಲವು ನಾಮಪದ ಮತ್ತು ಗುಣಪದಗಳೊಂದಿಗೆ ಕೆಲವು ವಿಶಿಷ್ಟವಾದ ಕ್ರಿಯಾಪದಗಳನ್ನು ಬಳಸಿ ‘ಕೂಡುಪದ’ಗಳೆಂಬ ಅಡಕವಾದ ಪದಗುಚ್ಛಗಳನ್ನು ತಯಾರಿಸಿ ಬಳಸುವುದು ಕನ್ನಡದ ಕ್ರಿಯಾಪದಗಳ ಇನ್ನೊಂದು ವೈಶಿಷ್ಟ್ಯ.