← Ch 3  ·  Contents  ·  Ch 5 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9

ಅಧ್ಯಾಯ ನಾಲ್ಕು

ಪ್ರತ್ಯಯವಿರುವ ನಾಮಪದಗಳು

Eke →

೪.೧ ಪೀಠಿಕೆ

ಕನ್ನಡದಲ್ಲಿ ಮುಖ್ಯವಾಗಿ ಮೂರು ರೀತಿಯ ಪ್ರತ್ಯಯವಿರುವ ನಾಮಪದಗಳು ಬಳಕೆಯಲ್ಲಿವೆ. ಇವು ಅನುಕ್ರಮವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳಿಗೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಾಗಿರುತ್ತವೆ. ಉದಾಹರಣೆಗಾಗಿ ಗಾಣಿಗ ಎಂಬ ಪ್ರತ್ಯಯವಿರುವ ನಾಮ ಪದವು ಗಾಣ ಎಂಬ ನಾಮಪದಕ್ಕೆ ಇಗ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಅಗಲಿಕೆ ಎಂಬ ನಾಮಪದವು ಅಗಲು ಎಂಬ ಕ್ರಿಯಾ ಪದಕ್ಕೆ ಇಕೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ; ಮತ್ತು ಬಡವ ಎಂಬ ನಾಮಪದವು ಬಡ ಎಂಬ ಗುಣಪದಕ್ಕೆ ವ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗಿದೆ.

ಈ ಮೂರು ರೀತಿಯ ಪ್ರತ್ಯಯವಿರುವ ನಾಮಪದಗಳಲ್ಲಿ ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಾಗಿರುವ ಎರಡನೆಯ ರೀತಿಯ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಆದರೆ ಕೆಲವು ಸಂದರ್ಭಗಳಲ್ಲಿ ಇಂತಹ ನಾಮಪದಗಳನ್ನು ಕ್ರಿಯಾಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೇ ಅಥವಾ ಅದೇ ರೂಪದ ನಾಮಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೇ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದಿರುವುದೂ ಇದೆ. ಉದಾಹರಣೆಗಾಗಿ ಹಿಡಿಕೆ ಎಂಬ ನಾಮಪದವನ್ನು ಹಿಡಿ (ಉದಾ: ಕತ್ತಿಯನ್ನು ಹಿಡಿ) ಎಂಬ ಕ್ರಿಯಾಪದದಿಂದಲಾಗಲಿ ಇಲ್ಲವೇ ಅದೇ ರೂಪದ ಹಿಡಿ (ಉದಾ: ಕತ್ತಿಯ ಹಿಡಿ) ಎಂಬ ನಾಮಪದದಿಂದಲಾಗಲಿ ತಯಾರಿಸಿರಲು ಸಾಧ್ಯವಿದೆ. (ಹಿಡಿ ಎಂಬ ನಾಮಪದದಲ್ಲಿ ‘ಸೊನ್ನೆ’ ಪ್ರತ್ಯಯವಿದೆಯೆಂದು ಹೇಳುವುದು (೪.೩.೧೧

ನೋಡಿ) ಈ ಸಮಸ್ಯೆಗೆ ವ್ಯಯಾಕರಣಿಗಳು ಕಂಡುಹಿಡಿದಿರುವ ಒಂದು ಪರಿಹಾರ.)

ಪ್ರತ್ಯಯವಿರುವ ನಾಮಪದಗಳಲ್ಲಿ ಹೆಚ್ಚಿನವೂ ಒಂದು ಪದಕ್ಕೆ ಒಂದು ಪ್ರತ್ಯಯವನ್ನು ಮಾತ್ರ ಸೇರಿಸುವುದರ ಮೂಲಕ ತಯಾರಾದವುಗಳು. ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿರುವ ನಾಮಪದಗಳ ಸಂಖ್ಯೆ ಕನ್ನಡ ದಲ್ಲಿ ಬಹಳ ಕಡಿಮೆ. ತಿಳುವಳಿಕೆ ಎಂಬುದು ಈ ರೀತಿ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳಿರುವ ನಾಮಪದ. ಇದರಲ್ಲಿ ತಿಳಿ ಎಂಬ ಕ್ರಿಯಾಪದಕ್ಕೆ ವಳಿ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳನ್ನು ಸೇರಿಸಲಾಗಿದೆ. ಇಂತಹ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳಿರುವ ನಾಮಪದಗಳಲ್ಲಿ ಹೆಚ್ಚಿನವೂ ಪ್ರತ್ಯಯಗಳನ್ನು ಒಂದೊಂದಾಗಿ ಎಂದರೆ, ಎರಡು ಬೇರೆ ಬೇರೆ ಸ್ತರಗಳಲ್ಲಿ ಸೇರಿಸುವುದರ ಮೂಲಕ ತಯಾ ರಾಗಿರುತ್ತವೆ ಎಂಬುದನ್ನು ಗಮನಿಸಬಹುದು.

ಉದಾಹರಣೆಗಾಗಿ ಮೀನುಗಾರಿಕೆ ಎಂಬ ಪದದಲ್ಲಿ ಮೀನು ಎಂಬ ನಾಮ ಪದದೊಂದಿಗೆ ಗಾರ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳು ಬರುವು ವಾದರೂ ಅದನ್ನು ಮೊದಲಿಗೆ ಮೀನು ಎಂಬ ಪದಕ್ಕೆ ಗಾರ ಎಂಬ ಪ್ರತ್ಯಯ ವನ್ನು ಸೇರಿಸಿ ಮೀನುಗಾರ ಎಂಬ ಪದವನ್ನು ತಯಾರಿಸಿ, ಅನಂತರ ಆ ಪದಕ್ಕೆ ಇಕೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ. ತಿಳುವಳಿಕೆ ಎಂಬುದರ ಹಿಂದೆ ತಿಳುವಳಿ ಎಂಬ ಪದವಿಲ್ಲ ದಿದ್ದರೂ ಅದಕ್ಕೆ ಸಮನಾಗಿರುವ ಹಿಡುವಳಿ, ಗೊತ್ತುವಳಿ ಮೊದಲಾದವು ಗಳಿವೆಯೆಂಬುದನ್ನು ಗಮನಿಸಬಹುದು.

ಕನ್ನಡದಲ್ಲಿ ಬರುವ ಪ್ರತ್ಯಯಗಳೆಲ್ಲವೂ ಪರಪ್ರತ್ಯಯಗಳು, ಎಂದರೆ, ನಾಮ ಪದ, ಕ್ರಿಯಾಪದ ಇಲ್ಲವೇ ಗುಣಪದಗಳ ಅನಂತರ ಬರುವವುಗಳು. ಉದಾ: ಮೆಚ್ಚು-ಗೆ, ನಡ-ತೆ, ಅಳಿ-ವು ಇತ್ಯಾದಿ. ಪೂರ್ವಪ್ರತ್ಯಯಗಳು ಎಂದರೆ ಪದಗಳ ಮೊದಲ ಭಾಗವಾಗಿ ಬರುವ ಪ್ರತ್ಯಯಗಳು ಕನ್ನಡದಲ್ಲಿ ಬೇರೆ ಭಾಷೆ ಗಳಿಂದ ಎರವಲಾಗಿ ಬಂದ ಪದಗಳಲ್ಲಿ ಮಾತ್ರ ಕಾಣಿಸುತ್ತವೆ. ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದ ಅ-ತೃಪ್ತಿ, ನಿರ್-ಭಾಗ್ಯ, ವಿ-ಜ್ಞಾನ ಮೊದಲಾದ ನಾಮಪದಗಳಲ್ಲಿ ಅ-, ನಿರ್-, ವಿ- ಮೊದಲಾದ ಪೂರ್ವ ಪ್ರತ್ಯಯಗಳು ಕಾಣಿಸುತ್ತವೆ (೮.೩.೫ ನೋಡಿ). ಇದಲ್ಲದೆ, ಹೀಗೆ ಎರವಲಾಗಿ ಬಂದ ಪದಗಳಲ್ಲಿ ಕಾಣಿಸುವ ಕೆಲವು ಪೂರ್ವಪ್ರತ್ಯಯಗಳು ಕನ್ನಡದವೇ ಆದ ಪದಗಳಿಗೂ ಅಂಟಿಕೊಳ್ಳುವುದನ್ನು ಅಪ-ನಂಬಿಕೆ ಎಂಬಂತಹ ಪ್ರತ್ಯಯವಿರುವ ಪದಗಳಲ್ಲಿ ಅಪರೂಪವಾಗಿ ಕಾಣಬಹುದು.

ಇತ್ತೀಚೆಗೆ ಶ್ರೀಧರ್ (೧೯೯೫:೧೩೩,೧೫೭) ಅವರು ಕನ್ನಡದಲ್ಲಿ ಬರುವ ಹೆಜ್ಜೆನು, ಹಿಂಗಾಲು, ಇಬ್ಬದಿ, ಕೆಮ್ಮಣ್ಣು ಮೊದಲಾದ ಪದಗಳಲ್ಲಿ ಪೂರ್ವಪ್ರತ್ಯಯದ ಪ್ರಯೋಗವಿದೆಯೆಂದು ವಾದಿಸಿದ್ದಾರೆ. ಸಾಮಾನ್ಯವಾಗಿ ಇಂತಹ ಪದಗಳನ್ನು ಜೋಡುಪದಗಳೆಂದೂ ಮತ್ತು ಅವುಗಳ ಆದಿಯಲ್ಲಿ

ಬರುವ ಹೆಜ್, ಹಿಮ್, ಇನ್, ಇಬ್, ಕೆಮ್ ಮೊದಲಾದ ಅಂಗಗಳನ್ನು ಪದಗಳೆಂದೂ ಪರಿಗಣಿಸುವುದು ರೂಢಿ. ಶ್ರೀಧರ್ ಅವರು ಇದು ಸರಿಯಲ್ಲ, ಇವುಗಳ ಆದಿಯಲ್ಲಿ ಬರುವ ಅಂಗಗಳು ಪ್ರತ್ಯಯಗಳಲ್ಲದೆ ಪದಗಳಲ್ಲ ಎಂದು ವಾದಿಸಿದ್ದಾರೆ.

ಪದ ಮತ್ತು ಪ್ರತ್ಯಯಗಳ ನಡುವಿರುವ ವಿಭಜನೆ ಕೆಲವೊಂದು ಸಂದರ್ಭ ಗಳಲ್ಲಿ ಅಸ್ಪಷ್ಟವಾಗಿರಲು ಸಾಧ್ಯವಿದೆಯಾದ ಕಾರಣ, ಮತ್ತು ಚಾರಿತ್ರಿಕವಾಗಿ ಪ್ರತ್ಯಯಗಳು ಸ್ವತಂತ್ರವಾಗಿದ್ದ ಪದಗಳಿಂದ ಬೆಳೆದು ಬಂದಿರಲು ಸಾಧ್ಯವಿದೆ ಯಾದ ಕಾರಣ, ಇಂತಹ ವಾದಗಳಿಗೆ ಕೆಲವೊಮ್ಮೆ ಕೊನೆಯೇ ಇಲ್ಲವೆಂದಾಗುವು ದಿದೆ. ಆದರೆ ಈ ಮೇಲಿನ ವಾದ ಅಂತಹದಲ್ಲವೆಂದು ತೊರುತ್ತದೆ. ಕನ್ನಡದಲ್ಲಿ ಸ್ವತಂತ್ರವಾಗಿ ಬರುವ ಹಿರಿದು, ಹಿಂದೆ, ಎರಡು, ಕೆಂಪು ಮೊದಲಾದ ಪದ ಗಳಿಗೂ ಮತ್ತು ಮೇಲೆ ಕೊಟ್ಟಿರುವ ಹೆಜ್ಜೆನು, ಹಿಂಗಾಲು ಮೊದಲಾದ ಪದಗಳ ಆದಿಯಲ್ಲಿ ಬರುವ ಅಂಗಗಳಿಗೂ ನಡುವೆ ಸ್ಪಷ್ಟವಾದ ಸಂಬಂಧವಿದೆ. ಈ ಸಂಬಂಧ ಎಂತಹದು ಎಂಬುದನ್ನು ನಿರ್ಧರಿಸಿದಾಗ ಹೆಜ್, ಹಿಮ್ ಮೊದಲಾದವುಗಳು ಪ್ರತ್ಯಯಗಳೇ ಅಥವಾ ಪದಗಳೇ ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತದೆ.

ಹಿರಿದು ಎಂಬುದರಲ್ಲಿ ಬರುವ ದು ಎಂಬ ಅಂಗ ದೊಡ್ಡದು, ಬಿಳಿದು ಮೊದಲಾದವುಗಳಲ್ಲಿ ಕಾಣಿಸುವ ನಪುಂಸಕ ಏಕವಚನ ಪ್ರತ್ಯಯ; ಹಿರಿ ಎಂಬುದು ಬೇರೆಡೆಗಳಲ್ಲಿ ಸ್ವತಂತ್ರವಾಗಿ ಬರಬಲ್ಲ ಗುಣಪದ (ಉದಾ: ಹಿರಿ ಮಗಳು); ಹಿಂದೆ ಎಂಬುದನ್ನು ದೆ ಎಂಬ ಪ್ರತ್ಯಯದ ಮೂಲಕ ತಯಾರಿಸಲು ಸಾಧ್ಯವಿದ್ದು, ಇದರಲ್ಲಿ ಹಿಂ ಎಂಬ ಮೊದಲನೆಯ ಭಾಗವೇ ಪದವೆಂದು ಹೇಳ ಬೇಕಾಗುತ್ತದೆ; ಎರಡು ಎಂಬುದರಲ್ಲೂ ಡು ಎಂಬುದು ಒಂದು ಪ್ರತ್ಯಯ ಮತ್ತು ಅದರ ಮುಂದಿರುವ ಎರ ಎಂಬುದೇ ಪದ; ಕೆಂಪು ಎಂಬುದರಲ್ಲಿ ಬರುವ ಪು ಎಂಬ ಅಂಗ ತಂಪು, ನುಣುಪು, ಬಿಳುಪು, ಇಂಪು ಮೊದಲಾ ದವುಗಳಲ್ಲಿ ಕಾಣಿಸುವ ಪ್ರತ್ಯಯವಾಗಿದ್ದು, ಅದರ ಮುಂದಿರುವ ಕೆಂ ಎಂಬುದೇ ಪದವಾಗಿದೆ.

ಮೇಲೆ ಕೊಟ್ಟಿರುವ ಹೆಜ್ಜೆನು, ಹಿಂಗಾಲು, ಇನ್ನೂರು ಮೊದಲಾದ ಜೋಡುಪದಗಳಲ್ಲಿ ಈ ಪದಗಳು ಮೊದಲನೆಯ ಅಂಗವಾಗಿ ಬಂದಿದ್ದು ಅವು ಹಿರಿದು, ಹಿಂದೆ, ಎರಡು ಮೊದಲಾದವುಗಳಲ್ಲಿ ಕಾಣಿಸುವ ಪ್ರತ್ಯಯಗಳನ್ನು ಕಳೆದುಕೊಂಡು ಈ ಜೋಡುಪದಗಳಲ್ಲಿ ಬಂದಿವೆಯೆಂದು ಹೇಳುವುದೇ ಸರಿ ಯೆಂದು ತೋರುತ್ತದೆ. ಇವುಗಳಲ್ಲಿ ಹಿರಿ ಎಂಬುದು ಹೆರ್ (ಹೆಜ್) ಎಂಬ ರೂಪದಲ್ಲೂ ಮತ್ತು ಎರ ಎಂಬುದು ಇರ್ (ಇಜ್, ಇನ್) ಎಂಬ ರೂಪದಲ್ಲೂ ಬರಲು ಕನ್ನಡದಲ್ಲಿ ನಡೆದ ಎರಡು ಧ್ವನಿ ಬದಲಾವಣೆಗಳು ಕಾರಣ.

(೧) ಹೆರ್ ಎಂಬುದರ ಎಕಾರ ಹಿರಿ ಎಂಬುದರಲ್ಲಿ ಇಕಾರವಾಗಿದೆ. ಈ ಪದದ ಎರಡನೆಯ ಅಕ್ಷರದಲ್ಲಿ ಇಕಾರವಿದ್ದುದೇ ಈ ಬದಲಾವಣೆಗೆ ಕಾರಣ.

(ಇದೇ ಬದಲಾವಣೆಯನ್ನು ಬೆಳ್ಳಗೆ-ಬಿಳಿ ಎಂಬುದರಲ್ಲೂ ಕಾಣಬಹುದು). (೨) ಇರ್ ಎಂಬುದರ ಇಕಾರ ಎರಡು ಎಂಬುದರಲ್ಲಿ ಎಕಾರವಾಗಿದೆ. ಈ ಬದಲಾವಣೆಗೆ ಎರಡು ಎಂಬ ಪದದ ಎರಡನೆಯ ಅಕ್ಷದಲ್ಲಿ ಅಕಾರ ಬಂದಿರುವುದೇ ಕಾರಣ (ಇದೇ ಬದಲಾವಣೆಯನ್ನು ನಿಲ್ಲು-ನೆಲಸು ಎಂಬುದರಲ್ಲೂ ಕಾಣಬಹುದು).

ಈ ಸಂದರ್ಭದಲ್ಲಿ ಒಂದು ಮುಖ್ಯವಾದ ವಿಷಯವನ್ನು ಗಮನಕ್ಕೆ ತಂದು ಕೊಳ್ಳುವುದು ಅವಶ್ಯ. ಜೋಡುಪದವೊಂದರ ಒಳರಚನೆಯೆಂಬುದು ಮುಖ್ಯವಾಗಿ ಅದರ ಚಾರಿತ್ರಿಕ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಅದನ್ನು ತಯಾರಿಸಿ ಬಳಕೆಗೆ ತಂದಾಗ ಯಾವ ಗುಣಧರ್ಮವನ್ನು ಆರಿಸಲಾಗಿತ್ತು ಮತ್ತು ಆ ಗುಣಧರ್ಮವನ್ನು ಸೂಚಿಸಲು ಯಾವ ಪದಗಳನ್ನು ಬಳಸಲಾಗಿತ್ತು ಎಂಬುದು ಅದರ ಒಳರಚನೆಯಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಹಾಯಕ ವಾಗುತ್ತದೆ (ಮುಂದೆ ೫.೫ ನೋಡಿ). ಹಳೆಗನ್ನಡದಲ್ಲೇನೇ ಕಾಣಿಸುವ ಕೆಮ್ಮಣ್ಣು, ಇನ್ನೂರು ಮೊದಲಾದ ಪದಗಳನ್ನು ಚಾರಿತ್ರಿಕವಾಗಿ ಎರಡು ಪದಗಳ ಜೋಡಣೆಯಿಂದ (ಸಮಾಸದಿಂದ) ಸುಲಭವಾಗಿ ಸಾಧಿಸಲು ಸಾಧ್ಯವಿದೆಯಾದ ಕಾರಣ, ಇವನ್ನು ಜೋಡುಪದಗಳೆಂದು ಪರಿಗಣಿಸುವುದರಲ್ಲಿ ಯಾವ ತೊಂದರೆಯೂ ಇಲ್ಲ. ಹಾಗಾಗಿ, ಇವುಗಳಲ್ಲಿ ಪೂರ್ವಪ್ರತ್ಯಯಗಳಿವೆಯೆಂದು ಕಲ್ಪಿಸಿಕೊಂಡು ಇವನ್ನು ಪ್ರತ್ಯಯವಿರುವ ಪದಗಳೆಂದು ಹೇಳುವುದು ಸರಿಯಾಗ ಲಾರದು.

Eke →

೪.೨ ಪ್ರತ್ಯಯಗಳ ಸ್ವರೂಪ

ಪದಗಳ ಒಳರಚನೆಯಲ್ಲಿ ಬಳಕೆಯಾಗುವ ಪದಪ್ರತ್ಯಯಗಳಲ್ಲಿ ಹೆಚ್ಚಿನವೂ ಕೆಲವೇ ಕೆಲವು ಪದಗಳೊಂದಿಗೆ ಮಾತ್ರ ಬಳಕೆಯಾಗುವುವಾದ ಕಾರಣ, ಅವುಗಳ ಸ್ವರೂಪವನ್ನು ನಿಯಮಗಳ ಸಹಾಯದಿಂದ ವರ್ಣಿಸುವುದು ಕಷ್ಟ. ಆದರೂ ಕೂಡ, ಅವುಗಳ ಪ್ರಯೋಗದಲ್ಲಿ ಕೆಲವು ‘ಒಲವು’ಗಳನ್ನು ಕಾಣಲು ಸಾಧ್ಯವಿದೆ ಯಾದ ಕಾರಣ ಅಂತಹ ಒಲವುಗಳನ್ನು ನಿಯಮಗಳ ರೂಪದಲ್ಲಿ ವರ್ಣಿಸುವು ದರ ಮೂಲಕ ಈ ಪ್ರತ್ಯಯಗಳ ಸ್ವರೂಪದ ಮೇಲೆ ಬೆಳಕನ್ನು ಚೆಲ್ಲಲು ಸಾಧ್ಯವಿದೆ.

ಉದಾಹರಣೆಗಾಗಿ ಇಕೆ-ಇಗೆ ಎಂಬ ಪ್ರತ್ಯಯ ಎಲ್ಲಾ ರೀತಿಯ ಕ್ರಿಯಾಪದ ಗಳೊಂದಿಗೂ ಬರಬಲ್ಲುದಾದರೆ, ತ-ತೆ ಎಂಬ ಪ್ರತ್ಯಯ ಸಾಮಾನ್ಯವಾಗಿ ಇಕಾರಾಂತ ಮತ್ತು ಎಕಾರಾಂತ ಕ್ರಿಯಾಪದಗಳೊಂದಿಗೆ ಮಾತ್ರವೇ ಬರ ಬಲ್ಲುದು; ಅಲು ಎಂಬ ಇನ್ನೊಂದು ಪ್ರತ್ಯಯ ಉಕಾರಾಂತ ಕ್ರಿಯಾಪದ ಗಳೊಂದಿಗೆ ಮಾತ್ರವೇ ಬರಬಲ್ಲುದು. ಇಂತಹ ಹಲವು ಹೇಳಿಕೆಗಳನ್ನು ಕನ್ನಡದಲ್ಲಿ ಬಳಕೆಯಲ್ಲಿರುವ ನಾಮಪದಗಳನ್ನು ಪರಿಶೀಲಿಸುವುದರ ಮೂಲಕ ರಚಿಸಿ ಹೇಳಲು ಸಾಧ್ಯವಿದೆಯಾದರೂ ಇವಕ್ಕೆಲ್ಲ ಒಂದಲ್ಲ ಒಂದು ಅಪವಾದ

ವನ್ನು ಕಾಣಲು ಸಾಧ್ಯವಿದೆಯಾದ ಕಾರಣ ಇವು ಒಲವುಗಳಲ್ಲದೆ ನಿಯಮಗಳಲ್ಲ. ಪದಪ್ರತ್ಯಯಗಳು ಈ ರೀತಿ ನಿಯಮಬದ್ಧವಾಗಿ ಇಲ್ಲದಿರುವುದಕ್ಕೆ ಅವುಗಳ ಒಳರಚನೆಗೆ ಚಾರಿತ್ರಿಕ ಮಹತ್ವವಿದೆಯಲ್ಲದೆ ಮಾತಿನ ಬಳಕೆಯಲ್ಲಿ ಹೆಚ್ಚಿನ ಮಹತ್ವವಿಲ್ಲವೆಂಬುದೇ ಮುಖ್ಯ ಕಾರಣ.

ಪದಪ್ರತ್ಯಯಗಳ ಸ್ವರೂಪವೇನೆಂಬುದನ್ನು ವರ್ಣಿಸುವಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆಯೇನೆಂದರೆ, ಸಾಮಾನ್ಯವಾಗಿ ಈ ಪ್ರತ್ಯಯಗಳು ಪದರೂಪ ಪ್ರತ್ಯಯಗಳ ಹಾಗೆ ಒಂದಕ್ಕೊಂದು ಸಂಬಂಧಿತವಾಗಿರುವುದಿಲ್ಲ. ಉದಾಹರಣೆ ಗಾಗಿ, ಪದರೂಪಪ್ರತ್ಯಯಗಳನ್ನು ವಚನಪ್ರತ್ಯಯಗಳು, ವಿಭಕ್ತಿ ಪ್ರತ್ಯಯಗಳು, ಕಾಲಪ್ರತ್ಯಯಗಳು, ಆಖ್ಯಾತಪ್ರತ್ಯಯಗಳು ಇತ್ಯಾದಿಯಾಗಿ ಬೇರೆ ಬೇರೆ ಗುಂಪು ಗಳಲ್ಲಿ ವಿಂಗಡಿಸಲು ಸಾಧ್ಯವಿದೆ, ಮತ್ತು ಕೆಲವು ಸಂದರ್ಭಗಳಲ್ಲಿ ಇಂತಹ ಒಂದು ಗುಂಪಿಗೆ ಸೇರಿದ ಪದರೂಪಪ್ರತ್ಯಯಗಳಲ್ಲಿ ಯಾವುದಾದರೂ ಒಂದನ್ನು ಖಡ್ಡಾಯವಾಗಿಯೂ ಬಳಸಲೇಬೇಕೆಂಬ ನಿಯಮವನ್ನು ಮಾಡಲು ಸಾಧ್ಯವಿದೆ. ಉದಾಹರಣೆಗಾಗಿ ಬಂದೆ ಎಂಬಂತಹ ಪೂರ್ಣ ಕ್ರಿಯಾರೂಪಗಳಲ್ಲಿ ಘಟನೆಯ ಸಮಯವನ್ನು ಸೂಚಿಸುವ ಕಾಲಪ್ರತ್ಯಯಗಳಲ್ಲೊಂದನ್ನು ಮತ್ತು ಅದರ ಅನಂತರ ಆಖ್ಯಾತ ಪ್ರತ್ಯಯಗಳಲ್ಲೊಂದನ್ನು ಬಳಸಲೇಬೇಕೆಂಬ ನಿಯಮವಿದೆ.

ಪದಪ್ರತ್ಯಯಗಳನ್ನು ಈ ರೀತಿ ವಿಶಿಷ್ಟವಾದ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಾಗುವುದಿಲ್ಲ, ಮತ್ತು ಅವುಗಳ ಬಳಕೆಯಲ್ಲಿ ಖಡ್ಡಾಯವೆಂದು ಹೇಳ ಬಹುದಾದ ನಿಯಮಗಳೂ ಇಲ್ಲ. ಈ ಕಾರಣಕ್ಕಾಗಿ ಅವುಗಳನ್ನು ಬರಿಯ ಒಂದು ಪಟ್ಟಿಯಲ್ಲಿ ಕೊಟ್ಟು, ಒಂದೊಂದಾಗಿ ಅವುಗಳ ಬಳಕೆಯಲ್ಲಿ ಕಾಣಿಸುವ ಒಲವುಗಳನ್ನಷ್ಟೇ ವರ್ಣಿಸಲು ಸಾಧ್ಯವಾಗುತ್ತದೆ. ಪದಪ್ರತ್ಯಯಗಳ ಅರ್ಥವೂ ಅನಿಯಮಿತವಾದುದಾದ ಕಾರಣ ಅವನ್ನು ಅವು ಕೊಡುವ ಅರ್ಥದ ಆಧಾರದ ಮೇಲೂ ನಿಯಮಿತವಾಗಿ ವರ್ಗೀಕರಿಸಲು ಸಾಧ್ಯವಾಗುವುದಿಲ್ಲ.

ಈ ಪ್ರತ್ಯಯಗಳು ಎಂತಹ ಪದಗಳೊಂದಿಗೆ ಬರುತ್ತವೆ, ಎಂದರೆ ನಾಮಪದ ಗಳೊಂದಿಗೆ ಬರುತ್ತವೆಯೇ, ಕ್ರಿಯಪದಗಳೊಂದಿಗೆ ಬರುತ್ತವೆಯೇ ಅಥವಾ ಗುಣಪದಗಳೊಂದಿಗೆ ಬರುತ್ತವೆಯೇ ಎಂಬುದರ ಆಧಾರದ ಮೇಲೂ ಅವನ್ನು ವ್ಯವಸ್ಥಿತವಾಗಿ ವರ್ಗೀಕರಿಸಲು ಸಾಧ್ಯವಾಗುವುದಿಲ್ಲ. ಅವು ಪ್ರಾಮುಖ್ಯವಾಗಿ ಯಾವ ವರ್ಗದ ಪದಗಳೊಂದಿಗೆ ಬರುತ್ತವೆ ಎಂದಷ್ಟೇ ಹೇಳಲು ಸಾಧ್ಯವಾಗು ತ್ತದೆ. ಉದಾಹರಣೆಗಾಗಿ ಇಕೆ-ಇಗೆ ಎಂಬ ಪ್ರತ್ಯಯ ಪ್ರಾಮುಖ್ಯವಾಗಿ ಕ್ರಿಯಾ ಪದಗಳೊಂದಿಗೆ ಬರುವುದಾದರೂ (ಉದಾ: ನಂಬಿಕೆ, ಬಳಲಿಕೆ, ಇತ್ಯಾದಿ), ಬಿಲ್ಲುಗಾರಿಕೆ, ತಿಳುವಳಿಕೆ ಮೊದಲಾದ ಬೇರೆ ಕೆಲವು ಪದಗಳಲ್ಲಿ ನಾಮಪದ ಗಳೊಂದಿಗೂ ಬಂದಿರುವುದನ್ನು ಕಾಣಬಹುದು. ಇಲ್ಲೂ ಪದಪ್ರತ್ಯಯಗಳ ಬಳಕೆ ಯಲ್ಲಿ ಅನಿಯಮಿತತೆಯೇ ಎದ್ದು ಕಾಣಿಸುತ್ತದೆ.

ಈ ಕಾರಣಗಳಿಗಾಗಿ, ಪ್ರತ್ಯಯವಿರುವ ಪದಗಳಲ್ಲಿ ಕಾಣಿಸುವ ಪದಪ್ರತ್ಯಯ ಗಳನ್ನು ಈ ಕೆಳಗೆ ಬರಿಯ ಪಟ್ಟಿಯ ಮೂಲಕ ಮಾತ್ರವೇ ವಿವರಿಸಿ ಹೇಳಲು

ಸಾಧ್ಯವಾಗಿದೆ. ಪ್ರತಿಯೊಂದು ಪ್ರತ್ಯಯದ ಕೆಳಗೂ ಅದರ ಬಳಕೆಯಲ್ಲಿ ಕಾಣಿಸುವ ಕೆಲವು ಒಲವುಗಳನ್ನು ಉದಾಹರಣೆಗಳ ಮೂಲಕ ವಿವರಿಸಲು ಪ್ರಯತ್ನಿಸ ಲಾಗಿದೆ. ಈ ಪ್ರತ್ಯಯಗಳ ಸಹಾಯದಿಂದ ಕ್ರಿಯಾಪದ ಇಲ್ಲವೇ ಗುಣಪದಗಳನ್ನು ನಾಮಪದಗಳನ್ನಾಗಿ ಪರಿವರ್ತಿಸಲಾಗಿದೆಯೇ ಅಥವಾ ನಾಮಪದಗಳನ್ನೇ ಅವಕ್ಕಿಂತ ಭಿನ್ನವಾದ ಬೇರೆ ನಾಮಪದಗಳನ್ನಾಗಿ ಬದಲಾಯಿಸಲಾಗಿದೆಯೇ ಎಂಬುದನ್ನು ತಿಳಿಸುವುದಕ್ಕಾಗಿ ಮಾತ್ರ ಈ ಪ್ರತ್ಯಯಗಳನ್ನು ಮೂರು ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲು ಪ್ರಯತ್ನಿಸಲಾಗಿದೆ. ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಯಾವುದೂ ಸಂಪೂರ್ಣವಾದುದಲ್ಲ. ಈ ಪ್ರತ್ಯಯಗಳ ಸ್ವರೂಪವೆಂತಹದು ಎಂಬುದನ್ನು ತಿಳಿಸಲು ಸಹಾಯಕವಾಗುವಂತೆ ಜಾಸ್ತಿ ಬಳಕೆಯಲ್ಲಿರುವ ಪ್ರತ್ಯಯವಿರುವ ನಾಮಪದಗಳಲ್ಲಿ ಕಾಣಿಸುವ ಪದಪ್ರತ್ಯಯಗಳನ್ನು ಮಾತ್ರವೇ ಇಲ್ಲಿ ಪರಿಶೀಲಿಸಲಾಗಿದೆ.

Eke →

೪.೩ ಕ್ರಿಯಾಪದಗಳಿಂದ ತಯಾರಾದ ನಾಮಪದಗಳು

ಕನ್ನಡದ ನಾಮಪದಗಳಲ್ಲಿ ಕಾಣಿಸುವ ಪದಪ್ರತ್ಯಯಗಳಲ್ಲಿ ಹೆಚ್ಚಿನವೂ ಕ್ರಿಯಾ ಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುವ ಪ್ರತ್ಯಯ ಗಳು. ಗುಣಪದಗಳಿಂದ ಇಲ್ಲವೇ ನಾಮಪದಗಳಿಂದ ಬೇರೆ ನಾಮಪದಗಳನ್ನು ತಯಾರಿಸಲು ಬಳಸುವ ಪದಪ್ರತ್ಯಯಗಳ ಸಂಖ್ಯೆ ಕನ್ನಡದಲ್ಲಿ ಬಹಳ ಕಡಿಮೆ. ಇದಕ್ಕಾಗಿ, ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದರಲ್ಲಿ ಬಳಕೆ ಯಾಗುವ ಪದಪ್ರತ್ಯಯಗಳನ್ನು ಇಲ್ಲಿ ಮೊದಲಿಗೆ ಪರಿಶೀಲಿಸಲಾಗಿದೆ.

೪.೩.೧ ಇಕೆ-ಇಗೆ ಪ್ರತ್ಯಯ

ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸಲು ಬಳಸುವ ಪದಪ್ರತ್ಯಯ ಗಳಲ್ಲಿ ಇಕೆ-ಇಗೆ ಮತ್ತು ಕೆ-ಗೆ ಎಂಬ ರೂಪಗಳಲ್ಲಿ ಬರುವ ಪ್ರತ್ಯಯವೇ ಅತ್ಯಂತ ಪ್ರಾಮುಖ್ಯವಾದುದು. ಬಳಲು-ಬಳಲಿಕೆ, ಒಪ್ಪು-ಒಪ್ಪಿಗೆ, ಕೊಡು- ಕೊಡುಗೆ, ಹಿಡಿ-ಹಿಡಿಕೆ ಮೊದಲಾದ ಪದಯುಗ್ಧಗಳಲ್ಲಿ ಇದು ಕ್ರಿಯಾಪದಗಳಿಗೆ ಸೇರಿಕೊಳ್ಳುವುದೆಂಬ ವಿಷಯ ಸ್ಪಷ್ಟವಾಗಿರುವುದಾದರೂ, ತುರಿಸು-ತುರಿಕೆ, ಬಯಸು-ಬಯಕೆ, ಬೇಸರಿಸು (ಬೇಸರ)-ಬೇಸರಿಕೆ ಮೊದಲಾದವುಗಳಲ್ಲಿ ಈ ವಿಷಯ ಅಷ್ಟೊಂದು ಸ್ಪಷ್ಟವಾಗಿಲ್ಲ. ಬಯಸು ಎಂಬುದರಲ್ಲಿ ಸು ಎಂಬ ಪ್ರತ್ಯಯ ಮತ್ತು ಬಯಕೆ ಎಂಬುದರಲ್ಲಿ ಕೆ ಎಂಬ ಪ್ರತ್ಯಯ ಯಾವ ವರ್ಗಕ್ಕೂ ಸೇರದ ಬಯ- ಎಂಬ ಅಸ್ವತಂತ್ರ ಪದವೊಂದಕ್ಕೆ ಸೇರಿವೆಯೆಂದು ಹೇಳಲೂ ಸಾಧ್ಯವಿದೆ. ಹೀಗಿದ್ದರೂ ಇಕೆ-ಇಗೆ ಎಂಬ ಈ ಪ್ರತ್ಯಯವನ್ನೊಳಗೊಂಡಿರುವ ಹೆಚ್ಚಿನ ಪದಗಳಿಗೂ ಕ್ರಿಯಾಪದವೇ ಮೂಲ ಎಂಬುದನ್ನು ಮುಂದೆ ನೋಡ ಲಿರುವೆವು.

ಕ್ರಿಯಾಪದಗಳಿಂದ ಕ್ರಿಯಾರೂಪವೊಂದನ್ನು ಪಡೆಯುವುದಕ್ಕಾಗಿ ಬಳಸುವ ಇಕೆ ಎಂಬ ಪ್ರದರೂಪ ಪ್ರತ್ಯಯವೊಂದಿದೆ. ಇದನ್ನು ಬಳಲುವಿಕೆ, ಒಪ್ಪುವಿಕೆ, ಹಿಡಿಯುವಿಕೆ, ಕೊಡುವಿಕೆ ಮೊದಲಾದ ಪದರೂಪಗಳಲ್ಲಿ ಕಾಣಬಹುದು. ಇದು ರೂಪದಲ್ಲಿ ಮೇಲಿನ ಪ್ರತ್ಯಯವನ್ನೇ ಹೋಲುತ್ತಿದೆಯಾದರೂ ಅದಕ್ಕಿಂತ ಭಿನ್ನ ವಾದುದೆಂಬುದನ್ನು ಮುಂದೆ ನೋಡಲಿರುವೆವು.

ಸಂಸ್ಕೃತದಿಂದ ಎರವಲಾಗಿ ಬಂದ ಹಲವಾರು ಪದಗಳಲ್ಲಿ ಇಕೆ ಎಂಬ ಬೇರೊಂದು ಪ್ರತ್ಯಯ ಕಾಣಿಸುತ್ತದೆ. ಉದಾ: ಪೂರ್ವ-ಪೂರ್ವಿಕ, ಸಮಾಜ- ಸಾಮಾಜಿಕ, ಕ್ಷಣ-ಕ್ಷಣಿಕ, ವರ್ಷ-ವಾರ್ಷಿಕ ಇತ್ಯಾದಿ. ಇದು ಸಾಮಾನ್ಯವಾಗಿ ನಾಮಪದಗಳಿಂದ ನಾಮವಿಶೇಷಣಗಳನ್ನು ಸಾಧಿಸುವಲ್ಲಿ ಬಳಕೆಯಾಗುತ್ತದೆ. ಕನ್ನಡದ ಇಕೆ-ಇಗೆ ಪ್ರತ್ಯಯ ಸಂಸ್ಕೃತದಿಂದ ಬಂದುದೇನೋ ಎಂದು ಕಿಟ್ಟೆಲ್ (೧೮೯೪:೧೮೦,೪೬೨) ಅವರು ಸೂಚಿಸಲು ಈ ಎರಡು ಪ್ರತ್ಯಯಗಳ ನಡುವಿರುವ ಸಾರೂಪ್ಯ ಕಾರಣವಿರಬಹುದು. ಆದರೆ ಇವೆರಡಕ್ಕೂ ನಡುವೆ ಹಲವಾರು ವ್ಯತ್ಯಾಸಗಳಿದ್ದು, ಕನ್ನಡ ನಾಮಪದಗಳ ರಚನೆಯಲ್ಲಿ ಅತ್ಯಂತ ಪ್ರಾಮುಖ್ಯವಾದ ಸ್ಥಾನವನ್ನು ಪಡೆದಿರುವ ಇಕೆ-ಇಗೆ ಪ್ರತ್ಯಯ ಕನ್ನಡದ್ದೇ ಎಂದು ಪರಿಗಣಿಸುವುದು ಹೆಚ್ಚು ಸಮಂಜಸವೆಂದು ತೋರುತ್ತದೆ.

(ಕ) ರೂಪಭೇದಗಳು

ಈ ಪ್ರತ್ಯಯಕ್ಕೆ ಇಕೆ, ಕೆ, ಇಗೆ ಮತ್ತು ಗೆ ಎಂಬುದಾಗಿ ನಾಲ್ಕು ಬೇರೆ ಬೇರೆ ರೂಪಗಳಿವೆ. ಇವುಗಳಲ್ಲಿ ಇಕೆ ಎಂಬುದು ಮುಖ್ಯವಾಗಿ ಉಕಾರದಲ್ಲಿ ಕೊನೆ ಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ ಮತ್ತು ಈ ಪ್ರತ್ಯಯ (ಹಾಗೂ ಇದರ ಇಗೆ ಎಂಬ ರೂಪ) ಸೇರಿದಾಗ ಕ್ರಿಯಾಪದದ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಉದಾ:

ಬಳಲು ಬಳಲಿಕೆ ಹೇಳು ಹೇಳಿಕೆ ಬೆದರು ಬೆದರಿಕೆ ತೋರು ತೋರಿಕೆ ಹೊಗಳು ಹೊಗಳಿಕೆ ಅಂಜು ಅಂಜಿಕೆ ಅಗಲು ಅಗಲಿಕೆ ನಂಬು ನಂಬಿಕೆ

ಮೇಲೆ ಕೊಟ್ಟಿರುವ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲಿ ಮೂರಕ್ಷರದವುಗಳು (ಮೊದಲನೆಯ ಕಾಲಂ) ಮತ್ತು ಎರಡಕ್ಷರದವುಗಳು (ಮೂರನೆಯ ಕಾಲಂ) ಎಂಬುದಾಗಿ ಎರಡು ವಿಧದವುಗಳಿವೆ. ಇವುಗಳಲ್ಲಿ ಎರಡಕ್ಷರದವುಗಳು ಮೊದಲನೆಯ ಅಕ್ಷರದಲ್ಲಿ ಉದ್ದಸ್ವರವುಳ್ಳವುಗಳು (ಹೇಳು ಮತ್ತು ತೋರು) ಮತ್ತು ಗಿಡ್ಡಸ್ವರವಿದ್ದರೂ ಸೊನ್ನೆಯೊಂದಿಗೆ ಬರುವವುಗಳು

(ಅಂಜು ಮತ್ತು ನಂಬು) ಎಂಬುದಾಗಿ ಎರಡು ವಿಧದವುಗಳೆಂಬುದನ್ನು ಗಮನಿಸಬಹುದು.

ಉಕಾರದಲ್ಲಿ ಕೊನೆಗೊಳ್ಳುವ ಮತ್ತು ಎರಡಕ್ಷರವಿರುವ ಕ್ರಿಯಾಪದಗಳ ಮೊದಲನೆಯ ಅಕ್ಷರದಲ್ಲಿ ಗಿಡ್ಡಸ್ವರ ಮಾತ್ರ ಇದೆಯಾದರೆ ಅಥವಾ ಗಿಡ್ಡಸ್ವರ ದೊಂದಿಗೆ ಎರಡನೆಯ ಅಕ್ಷರದಲ್ಲಿ ಒತ್ತಕ್ಷರವಿದೆಯಾದರೆ, ಅಂತಹ ಕ್ರಿಯಾಪದ ಗಳೊಂದಿಗೆ ಈ ಪ್ರತ್ಯಯ ಗೆ ಇಲ್ಲವೇ ಇಗೆ ಎಂಬ ರೂಪದಲ್ಲಿ ಬರುತ್ತದೆ. ಉದಾ:

ಕೊಡು ಕೊಡುಗೆ ಬಪ್ಪು ಬಪ್ಪುಗೆ/ಬಪ್ಪಿಗೆ
ಉಡು ಉಡುಗೆ ಮೆಚ್ಚು ಮೆಚ್ಚುಗೆ
ತೊಡು ತೊಡುಗೆ
ಹೆರು ಹೆರಿಗೆ ಮುಚ್ಚು
ಮುಚ್ಚಿಗೆ
ತೆರು ತೆರಿಗೆ ಮುತ್ತು ಮುತ್ತಿಗೆ

ಆದರೆ ಇವುಗಳಲ್ಲಿ ಇಗೆ ಎಂಬುದು ಎಲ್ಲಿ ಬರುತ್ತದೆ ಮತ್ತು ಗೆ ಎಂಬುದು ಎಲ್ಲಿ ಬರುತ್ತದೆ ಎಂದು ಹೇಳುವುದು ಕಷ್ಟ. ಇದಲ್ಲದೆ, ಈ ನಿಯಮಗಳಿಗೆ ಬೇರೆಯೂ ಕೆಲವು ಅಪವಾದಗಳಿವೆ. ಉದಾಹರಣೆಗಾಗಿ, ಇಗೆ ಮತ್ತು ಗೆ ಎಂಬ ರೂಪಗಳು ಕೆಲವು ಉದ್ದಸ್ವರವಿರುವ ಎರಡಕ್ಷರದ ಕ್ರಿಯಾಪದಗಳೊಂದಿಗೂ ಬರ ಬಲ್ಲುವು ಮತ್ತು ಬೇರೆ ಕೆಲವು ಗಿಡ್ಡಸ್ವರದೊಂದಿಗೆ ಸೊನ್ನೆಯಿರುವ ಎರಡಕ್ಷರದ ಕ್ರಿಯಾಪದಗಳೊಂದಿಗೂ ಬರಬಲ್ಲುವು.

ನಾಚು ನಾಚುಗೆ ನಂಬು ನಂಬುಗೆ
ಏಳು ಏಳಿಗೆ ಹೇಸು ಹೇಸಿಗೆ

ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳು ಸು (ಇಲ್ಲವೇ ಇಸು) ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವುವಾದರೆ ಅವುಗಳೊಂದಿಗೆ ಕೆ ಎಂಬ ರೂಪ ದಲ್ಲಿರುವ ಪ್ರತ್ಯಯ ಬರುತ್ತದೆ, ಮತ್ತು ಈ ಪ್ರತ್ಯಯ ಸೇರಿದಾಗ ಅವುಗಳ ಕೊನೆ ಯಲ್ಲಿರುವ ಸು ಎಂಬ ಪ್ರತ್ಯಯ ಬಿದ್ದುಹೋಗುತ್ತದೆ. ಉದಾ:

ಬಯಸು ಬಯಕೆ ಹಾರೈಸು
ಹಾರೈಕೆ ಮಡಿಸು ಗದರಿಸು
ಮಡಿಕೆ ಗದರಿಕೆ
ಬೆರಸು ಬೆರಕೆ ಆಕಳಿಸು
ಆಕಳಿಕೆ
ತುರಿಸು ತುರಿಕೆ ಮೂದಲಿಸು ಮೂದಲಿಕೆ
ಬಳಸು ಬಳಕೆ ತೂಕಡಿಸು
ತೂಕಡಿಕೆ

ಮೇಲೆಯೇ ಸೂಚಿಸಿರುವಂತೆ, ಇಲ್ಲಿ ಸು ಎಂಬ ಪ್ರತ್ಯಯದಲ್ಲಿ ಕೊನೆ ಗೊಳ್ಳುವ ಕ್ರಿಯಾಪದಕ್ಕೆ ಕೆ ಎಂಬ ಪ್ರತ್ಯಯವನ್ನು ಸೇರಿಸಿ ನಾಮಪದವನ್ನು ತಯಾರಿಸಲಾಗಿದೆ ಎಂದು ಹೇಳುವ ಬದಲು, ಯಾವ ಪದವರ್ಗಕ್ಕೂ ಸೇರದ ಬಯ-, ಮಡಿ-, ಬೆರ-, ಬಳ-, ಹರ-, ಆಕಳಿ- ಮೊದಲಾದ ಅಸ್ವತಂತ್ರ ಪದಗಳಿಗೆ ಸು ಎಂಬ ಪ್ರತ್ಯಯವನ್ನು ಸೇರಿಸಿ ಕ್ರಿಯಾಪದವನ್ನೂ ಮತ್ತು ಕೆ ಎಂಬ ಪ್ರತ್ಯಯವನ್ನು ಸೇರಿಸಿ ನಾಮಪದವನ್ನೂ ತಯಾರಿಸಲಾಗಿದೆ ಎಂದು ಹೇಳಲು ಸಾಧ್ಯವಿದೆ.

ಇದಲ್ಲದೆ, ಸು ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ಬೇರೆ ಕೆಲವು ಕ್ರಿಯಾ ಪದಗಳಿಗೆ ಅ ಇಲ್ಲವೇ ಕೆ ಎಂಬ ಎರಡು ಪ್ರತ್ಯಯಗಳಲ್ಲಿ ಒಂದನ್ನು ಸೇರಿಸು ವುದರ ಮೂಲಕ (ಮತ್ತು ಅವುಗಳ ಕೊನೆಯಲ್ಲಿ ಬರುವ ಸು ಎಂಬುದನ್ನು ತೆಗೆದು ಹಾಕುವುದರ ಮೂಲಕ) ಎರಡು ಬೇರೆ ಬೇರೆ ರೀತಿಯ ನಾಮಪದ ಗಳನ್ನು ತಯಾರಿಸಲು ಸಾಧ್ಯವಿದೆ. ಅ ಎಂಬ ಪ್ರತ್ಯಯ ಸೇರಿದಾಗ ಇವುಗಳ ಕೊನೆಯ ಇಕಾರವೂ ಬಿದ್ದುಹೋಗುತ್ತದೆ.

ಹಂಬಲಿಸು ಹಂಬಲ ಹಂಬಲಿಕೆ
ಬೇಸರಿಸು ಬೇಸರ ಬೇಸರಿಕೆ
ಎಚ್ಚರಿಸು ಎಚ್ಚರ ಎಚ್ಚರಿಕೆ
ಅಬ್ಬರಿಸು ಅಬ್ಬರ ಅಬ್ಬರಿಕೆ

ಎಕಾರಾಂತ ಕ್ರಿಯಾಪದಗಳಿಗೆ ಕೆ ಎಂಬ ಪ್ರತ್ಯಯವನ್ನು ಸೇರಿಸಿದಾಗ ಅವುಗಳ ಕೊನೆಯಲ್ಲಿ ಬರುವ ಎಕಾರ ಅಕಾರವಾಗುತ್ತದೆ ಎಂಬುದನ್ನು ಮೊಳೆ- ಮೊಳಕೆ ಮತ್ತು ಬೆರೆ-ಬೆರಕೆ ಎಂಬ ಉದಾಹರಣೆಗಳಲ್ಲಿ ಕಾಣಬಹುದು. ಆದರೆ ಹೊದೆ-ಹೊದಿಕೆ ಎಂಬುದರಲ್ಲಿ ಈ ಎಕಾರ ಇಕಾರವಾಗಿದೆ (ಅಥವಾ ಮೇಲಿನ ಇಕೆ-ಇಗೆ ಪ್ರತ್ಯಯ ಅದರ ಇಕೆ ಎಂಬ ರೂಪದಲ್ಲಿ ಬಂದಿದ್ದು, ಕ್ರಿಯಾಪದದ ಕೊನೆಯ ಎಕಾರ ಬಿದ್ದುಹೋಗಿದೆ) ಮತ್ತು ನಡೆ-ನಡುಗೆ ಎಂಬುದರಲ್ಲಿ ಎಕಾರ ಉಕಾರವಾಗಿದೆ. ಇದಲ್ಲದೆ, ಈ ಕೊನೆಯ ಪದದಲ್ಲಿ ಕೆಯ ಬದಲು ಗೆ ಬಂದಿದೆ.

ಇಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಗೆ ಎಂಬ ರೂಪದಲ್ಲಿ ಬರುವುದನ್ನು ಸುಲಿ-ಸುಲಿಗೆ ಮತ್ತು ಹೊಲಿ-ಹೊಲಿಗೆ ಎಂಬ ಉದಾಹರಣೆಗಳಲ್ಲಿ ಕಾಣಬಹುದು. ಆದರೆ ಹಿಡಿ-ಹಿಡಿಕೆ ಎಂಬುದರಲ್ಲಿ ಇದು ಕೆ ಎಂಬ ರೂಪದಲ್ಲಿ ಬಂದಿದೆ. ಇದಲ್ಲದೆ, ಮೇಲೆ ಸೂಚಿಸಿದಂತೆ ಹಿಡಿ ಎಂಬುದು ಕನ್ನಡದಲ್ಲಿ ಕ್ರಿಯಾಪದವೂ ಹೌದು, ನಾಮಪದವೂ ಹೌದು.

ಪ್ರತ್ಯಯವಿರುವ ಪದಗಳ ಒಳರಚನೆಯಲ್ಲಿ ಬಳಕೆಯಾಗುವ ನಿಯಮಗಳು ಒಲವುಗಳು ಮಾತ್ರ, ಅವುಗಳಿಗೆ ಅಪವಾದಗಳಿರುವುದು ಜಾಸ್ತಿ ಎಂಬುದನ್ನು ಈ ಇಕೆ-ಇಗೆ ಪ್ರತ್ಯಯದ ಬಳಕೆಯ ಹಿಂದಿರುವ ‘ನಿಯಮ’ವನ್ನು ಬರೆಯಲು ನಡೆಸಿದ ಈ ಪ್ರಯತ್ನ ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಕನ್ನಡದ ಕ್ರಿಯಾಪದಗಳಲ್ಲಿ ಯಾವವುಗಳೊಂದಿಗೆ ಈ ಪ್ರತ್ಯಯ ಬರಬಲ್ಲುದು ಮತ್ತು ಯಾವವುಗಳೊಂದಿಗೆ ಬರಲಾರದು ಎಂಬ ವಿಷಯದಲ್ಲೂ ಬಹಳಷ್ಟು ಅನಿಯಮಿತತೆ ಇದೆ. ಉದಾ ಹರಣೆಗಾಗಿ, ಮಾಡು, ಕುಡಿ, ಬರೆ, ಅಡಗು, ಹೊರಡು, ಕೊಲ್ಲು, ಕಟ್ಟು, ತುಂಬು, ಊದು ಮೊದಲಾದ ಹಲವಾರು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬಳಕೆಯಾಗಿಲ್ಲ.

(ಖ) ಅರ್ಥಭೇದಗಳು

ಕ್ರಿಯಾಪದಗಳಿಗೆ ಇಕೆ-ಇಗೆ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾಗುವ ಈ ಪ್ರತ್ಯಯವಿರುವ ನಾಮಪದಗಳಿಗೆ ಅರ್ಥ ಹೇಳುವುದೂ ಬಹಳ ಕಷ್ಟವಾದ ಕೆಲಸವಾಗಿದೆ. ಸಾಮಾನ್ಯವಾಗಿ ಈ ನಾಮಪದಗಳು ಅವುಗಳ ಒಳರಚನೆಯಲ್ಲಿ ಬಂದಿರುವ ಕ್ರಿಯಾಪದಗಳು ಯಾವ ಘಟನೆಗಳನ್ನು ನಿರ್ದೇಶಿಸು ತ್ತವೆಯೋ ಅವನ್ನೇ ಹೆಸರಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಕ್ರಿಯಾಪದಗಳು ಬೇರೆ ಬೇರೆ ರೀತಿಯ ಘಟನೆಗಳನ್ನು ನಿರ್ದೇಶಿಸುತ್ತಿದ್ದು, ಅವನ್ನೇ ಎರಡನೆಯ ಕಾಲಂನಲ್ಲಿ ಕೊಟ್ಟಿರುವ ನಾಮಪದ ಗಳು ಹೆಸರಿಸುತ್ತಿವೆಯೆಂಬುದನ್ನು ಗಮನಿಸಬಹುದು.

ಅಂಜು ಅಂಜಿಕೆ ಹೊಗಳು ಹೊಗಳಿಕೆ ಬಯಸು ಬಯಕೆ ತೂಕಡಿಸು ತೂಕಡಿಕೆ

ಆದರೆ, ಈ ನಿಯಮಕ್ಕೆ ಹಲವಾರು ಬೇರೆ ಬೇರೆ ರೀತಿಯ ಅಪವಾದಗಳಿವೆ. ಉದಾಹರಣೆಗಾಗಿ, ಮೊಳಕೆ, ಕೆತ್ತಿಗೆ, ಹಾಸಿಗೆ, ತೆರಿಗೆ ಮೊದಲಾದವುಗಳು ಅವುಗಳ ಒಳರಚನೆಯಲ್ಲಿ ಬರುವ ಮೊಳೆ, ಕೆತ್ತು, ಹಾಸು, ತೆರು ಮೊದಲಾದ ಕ್ರಿಯಾಪದಗಳು ನಿರ್ದೇಶಿಸುವ ಘಟನೆಗಳನ್ನು ಹೆಸರಿಸುವ ಬದಲು, ಆ ಘಟನೆ

ಗಳಿಂದ ಸಿದ್ಧವಾದ ವಸ್ತುಗಳನ್ನು ಹೆಸರಿಸುತ್ತವೆ; ಹಿಡಿಕೆ, ಹೊದಿಕೆ ಮೊದಲಾ ದವುಗಳು ಅಂತಹ ಘಟನೆಗಳನ್ನು ನಡೆಸಲು ಬೇಕಾಗುವ ಉಪಕರಣಗಳನ್ನು ಹೆಸರಿಸುತ್ತವೆ. ಪ್ರತ್ಯಯವಿರುವ ಪದಗಳು ‘ಹೆಸರಿಸುವ’ ಪದಗಳಾಗಿದ್ದು, ಅಂತಹ ಹೆಸರಿಸುವ ಪದಗಳ ಅರ್ಥವನ್ನು ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸುವ ಅವಶ್ಯಕತೆಯಿಲ್ಲವೆಂಬುದೇ (೩.೩.೩ ನೋಡಿ) ಅವುಗಳ ಅರ್ಥ ದಲ್ಲಿ ಇಂತಹ ಅನಿಯಮಿತತೆ ಕಾಣಿಸಿಕೊಳ್ಳಲು ಮುಖ್ಯ ಕಾರಣ.

(ಗ) ನಾಮಪದದೊಂದಿಗೆ ಬಳಕೆ

ಇಕೆ-ಇಗೆ ಪ್ರತ್ಯಯವು ಅದರ ಇಕೆ ಎಂಬ ರೂಪದಲ್ಲಿ ನೇರವಾಗಿ ಕ್ರಿಯಾಪದದ ಅನಂತರ ಬರುವ ಬದಲು ವಳಿ ಇಲ್ಲವೇ ಅಳೆ ಎಂಬ ಪ್ರತ್ಯಯದ ಅನಂತರ ಬರಬಲ್ಲುದು, ಮತ್ತು ಅದರ ಇಗೆ ಎಂಬ ರೂಪದಲ್ಲಿ ಅಣೆ ಎಂಬ ಪ್ರತ್ಯಯದ ಅನಂತರವೂ ಬರಬಲ್ಲುದು ಎಂಬುದನ್ನು ಕೆಳಗೆ ಕೊಟ್ಟಿರುವ ಪದಗಳಲ್ಲಿ ಕಾಣಬಹುದು.

ನಡೆ ನಡವಳಿಕೆ ಬರೆ ಬರವಣಿಗೆ
ತಿಳಿ ತಿಳುವಳಿಕೆ ಬೆಳೆ ಬೆಳವಣಿಗೆ
ಮುಚ್ಚು ಮುಚ್ಚಳಿಕೆ ಮೆರೆ ಮೆರವಣಿಗೆ
ಬೀಸು ಬೀಸಣಿಗೆ

ಆದರೆ, ಸಾಗಣಿಕೆ ಎಂಬುದರಲ್ಲಿ ಈ ಪ್ರತ್ಯಯ ಅಣ್ (ಇಲ್ಲವೇ ಅಣೆ) ಎಂಬು ದರ ಮುಂದೆ ಇಕೆ ಎಂಬ ರೂಪದಲ್ಲಿ ಬಂದಿದೆ. ದಬ್ಬಾಳಿಕೆ ಎಂಬುದರಲ್ಲಿ ಈ ಪ್ರತ್ಯಯದೊಂದಿಗೆ ಆಳೆ ಎಂಬ ಪ್ರತ್ಯಯ ಬಂದಿರುವ ಹಾಗೆ ಕಾಣಿಸುತ್ತದೆ.

ಮೇಲೆ ಕೊಟ್ಟಿರುವ ನಾಮಪದಗಳನ್ನು ಕ್ರಿಯಾಪದವೊಂದಕ್ಕೆ ಎರಡು ಬೇರೆ ಬೇರೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಲಾಗಿದೆಯೆಂದು ಹೇಳುವ ಬದಲು ಅಳಿ ಇಲ್ಲವೇ ಅಣ್ ಎಂಬ ಪ್ರತ್ಯಯಗಳ ಬಳಕೆಯಿಂದ ತಯಾರಾದ ನಾಮಪದಗಳಿಗೆ ಇಕೆ-ಇಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆಯೆಂದೂ ಹೇಳಲು ಸಾಧ್ಯ ವಿದೆ. ಹುಟ್ಟುವಳಿ, ಸಾಗುವಳಿ ಮೊದಲಾದ ಪದಗಳಲ್ಲಿ ವಳಿ ಎಂಬ ಪ್ರತ್ಯಯದ ಮೂಲಕ, ಮತ್ತು ಸಾಗಣೆ, ತಿರುಗಣೆ ಮೊದಲಾದ ಪದಗಳಲ್ಲಿ ಅಣೆ ಎಂಬ ಪ್ರತ್ಯಯದ ಮೂಲಕ ಇಂತಹ ನಾಮಪದಗಳನ್ನು ತಯಾರಿಸಲಾಗಿದೆ.

ಒಂದು ವ್ಯವಸಾಯ ಇಲ್ಲವೇ ಗುಣಧರ್ಮವನ್ನಾಧರಿಸಿ ವ್ಯಕ್ತಿಗಳನ್ನು ಹೆಸರಿಸುವಂತಹ (ಇಲ್ಲವೇ ಅಂತಹ ಗುಣಧರ್ಮವನ್ನೇ ಸೂಚಿಸುವಂತಹ) ಕೆಲವು ಶಬ್ದಗಳಿಗೆ ಇಕೆ ಎಂಬ ಪ್ರತ್ಯಯವೊಂದನ್ನು ಸೇರಿಸಿ ಆ ವ್ಯವಸಾಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವಂತಹ ನಾಮಪದವನ್ನು ತಯಾರಿಸಲು

ಸಾಧ್ಯವಿದೆ. ಇಂತಹ ಶಬ್ದಗಳು ನೇರವಾಗಿ ಸಂಸ್ಕೃತದಿಂದ ಎರವಲಾಗಿ ಬಂದು ವಿರಬಹುದು, ಇಲ್ಲವೇ ಕನ್ನಡದ ಶಬ್ದಗಳಿಗೆ ಗಾರ (ಇಲ್ಲವೇ ವಂತ) ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಿದವುಗಳಿರಬಹುದು. ಉದಾ:

ಮಧ್ಯಸ್ಥ ಮಧ್ಯಸ್ಥಿಕೆ ಬಿಲ್ಲುಗಾರ ಬಿಲ್ಲುಗಾರಿಕೆ ಶ್ರೀಮಂತ ಶ್ರೀಮಂತಿಕೆ ಮೀನುಗಾರ ಮೀನುಗಾರಿಕೆ ಉನ್ನತ ಉನ್ನತಿಕೆ ಮಡಿವಂತ ಮಡಿವಂತಿಕೆ

ಮಾಸ್ಟರಿಕ್ ಎಂಬ ಪದದಲ್ಲಿ ಈ ಪ್ರತ್ಯಯ ಇಂಗ್ಲಿಷ್‌ನಿಂದ ಎರವಲಾಗಿ ಬಂದಿರುವ ಮಾಸ್ಟರ್ ಎಂಬ ಪದದೊಂದಿಗೆ ಬಂದಿದೆ.

ಇಂತಹ ಪದಗಳಲ್ಲಿ ಬರುವ ಇಕೆ ಎಂಬ ಪ್ರತ್ಯಯ ಮೇಲೆ ವಿವರಿಸಿರುವ ಇಕೆ-ಇಗೆ ಪ್ರತ್ಯಯಕ್ಕೆ ಸಂಬಂಧಿಸಿದುದೇ ಅಥವಾ ಸಂಸ್ಕೃತದಿಂದ ಎರವಲಾಗಿ ಬಂದಿರುವ ಬೇರೆ ಕೆಲವು ಪದಗಳಲ್ಲಿ ಕಾಣಿಸುವ ಇಕ ಎಂಬ ಇನ್ನೊಂದು ಪ್ರತ್ಯಯಕ್ಕೆ (ಉದಾ: ಕ್ಷಣ-ಕ್ಷಣಿಕ, ಯಂತ್ರ-ಯಾಂತ್ರಿಕ ಇತ್ಯಾದಿ (ವಿವರಗಳಿಗೆ ೮.೩.೫ ನೋಡಿ)) ಸಂಬಂಧಿಸಿದುದೇ ಎಂಬ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರುವುದು ಸ್ವಲ್ಪ ಕಷ್ಟ.

(ಫ) ಇಕೆ ಎಂಬ ಪದರೂಪ ಪ್ರತ್ಯಯ

ಮೇಲೆ ಕೊಟ್ಟಿರುವ ಇಕೆ-ಇಗೆ ಎಂಬ ಪ್ರತ್ಯಯದಿಂದ ಭಿನ್ನವಾಗಿರುವ ಮತ್ತು ಎಲ್ಲಾ ಸಂದರ್ಭಗಳಲ್ಲೂ ಇಕೆ ಎಂಬ ಒಂದೇ ರೂಪದಲ್ಲಿರುವ ಪದರೂಪ ಪ್ರತ್ಯಯವೊಂದು ಕನ್ನಡದಲ್ಲಿ ಬಳಕೆಯಲ್ಲಿದೆ. ಇದನ್ನು ಕ್ರಿಯಾಪದಗಳಿಗೆ ಸೇರಿಸಿ ಅವುಗಳ ಕ್ರಿಯಾರೂಪವೊಂದನ್ನು ತಯಾರಿಸಲು ಸಾಧ್ಯವಿದೆ. ಇದು ಕ್ರಿಯಾಪದ ಗಳು ನಿರ್ದೇಶಿಸುವ ಘಟನೆಗಳನ್ನು ವರ್ಣಿಸುತ್ತದಲ್ಲದೆ ಹೆಸರಿಸುವುದಿಲ್ಲ. ಉದಾ:

ಅಂಜು ಅಂಜುವಿಕೆ ಬರೆ ಬರೆಯುವಿಕೆ ಮಾಡು ಮಾಡುವಿಕೆ ಕುಡಿ ಕುಡಿಯುವಿಕೆ ಹೊಗಳು ಹೊಗಳುವಿಕೆ ಇರು ಇರುವಿಕೆ ಬಯಸು ಬಯಸುವಿಕೆ ತಪ್ಪು ತಪ್ಪುವಿಕೆ

ಈ ಪ್ರತ್ಯಯವನ್ನು ಸೇರಿಸಿದಾಗ ಉಕಾರಾಂತ ಕ್ರಿಯಾಪದಗಳ ಕೊನೆಯಲ್ಲಿ ವಕಾರ ಸೇರಿಕೊಳ್ಳುತ್ತದೆ, ಮತ್ತು ಇಕಾರಾಂತ ಮತ್ತು ಎಕಾರಾಂತ ಕ್ರಿಯಾಪದ

ಗಳ ಕೊನೆಯಲ್ಲಿ ವಕಾರ ಮಾತ್ರವಲ್ಲದೆ ಯ ಎಂಬ ಅಕ್ಷರವೂ ಸೇರಿಕೊಳ್ಳುತ್ತದೆ ಎಂಬುದನ್ನು ಮೇಲಿನ ಉದಾಹರಣೆಗಳಿಂದ ತಿಳಿಯಬಹುದು.

ಇಕೆ ಎಂಬ ಈ ಪ್ರತ್ಯಯವನ್ನೊಳಗೊಂಡಿರುವ ಕ್ರಿಯಾರೂಪಗಳನ್ನು ನಾಮ ಪದಗಳ ಸ್ಥಾನದಲ್ಲಿ ಬಳಸಲು ಸಾಧ್ಯವಿದ್ದು, ಇವಕ್ಕೆ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನೂ ಸೇರಿಸಲು ಸಾಧ್ಯವಿದೆ. ಉದಾ:

  1. (೧ಕ) ಆಕೆಯ ಹಾಡುವಿಕೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ.
  2. (೧ಖ) ನಿಮ್ಮ ಹೊಗಳುವಿಕೆಯಿಂದ ಅವನು ಉಬ್ಬಿಹೋಗಿದ್ದಾನೆ.
  3. (೧ಗ) ಅವಳ ಅಳುವಿಕೆಗೆ ಕಲ್ಲೂ ಕರಗೀತು.

  4. (ಇ) ಕೆಲವು ವ್ಯತ್ಯಾಸಗಳು
  5. ಕ್ರಿಯಾಪದಗಳಿಂದ ಕ್ರಿಯಾರೂಪಗಳನ್ನು ತಯಾರಿಸಲು ಬಳಸುವ ಈ ಇಕೆ ಎಂಬ
  6. ಪ್ರತ್ಯಯ ಪದರೂಪ ಪ್ರತ್ಯಯವಲ್ಲದೆ ಪದಪ್ರತ್ಯಯವಲ್ಲ. ಅದು ಮೇಲೆ
  7. ವಿವರಿಸಿರುವ ಇಕೆ-ಇಗೆ ಎಂಬ ಪದಪ್ರತ್ಯಯಕ್ಕಿಂತ ತೀರ ಭಿನ್ನವಾದುದು. ಪದ
  8. ಪ್ರತ್ಯಯಗಳಿಗೂ ಮತ್ತು ಪದರೂಪ ಪ್ರತ್ಯಯಗಳಿಗೂ ನಡುವೆ ಎಂತಹ ವ್ಯತ್ಯಾಸ
  9. ಗಳೆಲ್ಲ ಕಾಣಿಸಬಲ್ಲುವು ಎಂಬುದನ್ನು ಮೇಲೆ ೧.೬ರಲ್ಲಿ ವಿವರಿಸಲಾಗಿದೆ.
  10. ಇಂತಹ ವ್ಯತ್ಯಾಸಗಳು ಈ ಇಕೆ-ಇಗೆ ಮತ್ತು ಇಕೆ ಎಂಬ ಎರಡು ಪ್ರತ್ಯಯಗಳ
  11. ನಡುವೆಯೂ ಕಾಣಿಸುವುವೆಂಬುದನ್ನು ಅವುಗಳ ನಡುವಿರುವ ಕೆಳಗಿನ ವ್ಯತ್ಯಾಸ
  12. ಗಳು ಸ್ಪಷ್ಟಪಡಿಸುತ್ತವೆ.
  13. (೧) ಇಕೆ ಎಂಬ ಪದರೂಪ ಪ್ರತ್ಯಯ ಎಲ್ಲಾ ಕ್ರಿಯಾಪದಗಳೊಂದಿಗೂ
  14. ಬರಬಲ್ಲುದು. ಈ ವಿಷಯದಲ್ಲಿ ಒಂದೂ ಅಪವಾದವಿಲ್ಲ. ಸಂಸ್ಕೃತದಿಂದ
  15. ಎರವಲಾಗಿ ಬಂದಿರುವ ಮತ್ತು ಇಸು ಎಂಬ ಪ್ರತ್ಯಯದ ಮೂಲಕ ಕನ್ನಡದಲ್ಲಿ
  16. ಕ್ರಿಯಾಪದವಾಗಿ ಬಳಕೆಯಾಗುವ ಪದಗಳೊಂದಿಗೂ ಇದು ಬರಬಲ್ಲುದೆಂಬು
  17. ದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
  18. ಅನುಮತಿಸು ಅನುಮತಿಸುವಿಕೆ
  19. ಶಿಕ್ಷಿಸು ಶಿಕ್ಷಿಸುವಿಕೆ
  20. ವಿರೋಧಿಸು ವಿರೋಧಿಸುವಿಕೆ
  21. ರಕ್ಷಿಸು ರಕ್ಷಿಸುವಿಕೆ
  22. ಇದಕ್ಕೆ ವ್ಯತಿರಿಕ್ತವಾಗಿ, ಇಕೆ-ಇಗೆ ಎಂಬ ಪದಪ್ರತ್ಯಯದ ಬಳಕೆ ಕೆಲವೇ
  23. ಕೆಲವು ಕ್ರಿಯಾಪದಗಳೊಂದಿಗೆ ಮಾತ್ರ ರೂಢಿಯಲ್ಲಿದೆ. ಉದಾಹರಣೆಗಾಗಿ, ಬರೆ,
  24. ಕುಡಿ, ಮಾಡು, ದುಡುಕು, ತಿರುಗು ಮೊದಲಾದ ಹಲವಾರು ಕ್ರಿಯಾಪದ
  25. ಗಳೊಂದಿಗೆ ಈ ಪ್ರತ್ಯಯದ ಬಳಕೆ ರೂಢಿಯಲ್ಲಿಲ್ಲ. ಇಕೆ ಎಂಬ ಪದರೂಪ

ಪ್ರತ್ಯಯವನ್ನು ಇವೆಲ್ಲವಕ್ಕೂ ಸೇರಿಸಿ ಹೇಳಲು ಸಾಧ್ಯವಿದೆ. ಇದಲ್ಲದೆ, ಸಂಸ್ಕೃತ ದಿಂದ ಎರವಲಾಗಿ ಬಂದಿರುವ ಅನುಮತಿಸು, ಶಿಕ್ಷಿಸು ಮೊದಲಾದ ಕ್ರಿಯಾಪದ ಗಳೊಂದಿಗೆ ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿ ಹೇಳುವ ಹಾಗೆ ಇಕೆ-ಇಗೆ ಎಂಬ ಪದಪ್ರತ್ಯಯವನ್ನು ಸೇರಿಸಿ ಹೇಳಲು ಸಾಧ್ಯವಾಗದು.

(೨) ಇಕೆ ಎಂಬ ಪದರೂಪ ಪ್ರತ್ಯಯದ ಬಳಕೆಯಲ್ಲಿ ಇಕೆ-ಇಗೆ ಎಂಬ ಪದಪ್ರತ್ಯಯದ ಬಳಕೆಯಲ್ಲಿ ಕಾಣಿಸುವಂತಹ ಅನಿಯಮಿತ ಬದಲಾವಣೆಗ ಳಾವುವೂ ಕಾಣಿಸುವುದಿಲ್ಲ. ಎಲ್ಲಾ ರೀತಿಯ ಕ್ರಿಯಾಪದಗಳೊಂದಿಗೂ ಅದು ಇಕೆ ಎಂಬ ಒಂದೇ ರೂಪದಲ್ಲಿ ಬರುತ್ತದೆ. ಮೇಲೆ ಸೂಚಿಸಿದಂತೆ, ಉಕಾರದ ಅನಂತರ ವಕಾರ ಸೇರಿಕೊಳ್ಳುವುದು ಮತ್ತು ಎಕಾರ ಹಾಗೂ ಇಕಾರಗಳ ಅನಂತರ ಯವ್ ಎಂಬುದು ಸೇರಿಕೊಳ್ಳುವುದು ಎಂಬ ಎರಡು ಸಂಧಿನಿಯಮ ಗಳು ಮಾತ್ರ ಇವುಗಳ ಬಳಕೆಯಲ್ಲಿ ಕಾಣಿಸುವ ಬದಲಾವಣೆಗಳು. ಈ ಎರಡು ಬದಲಾವಣೆಗಳು ಎಲ್ಲಾ ಸಂದರ್ಭಗಳಲ್ಲೂ ನಿಯಮಿತವಾಗಿ ಬರುತ್ತಿದ್ದು, ಅವಕ್ಕೆ ಯಾವ ಅಪವಾದವೂ ಇಲ್ಲ.

ಕ್ರಿಯಾಪದಗಳೂ ಕೂಡ, ಇಕೆ ಎಂಬ ಪದರೂಪ ಪ್ರತ್ಯಯದೊಂದಿಗೆ ಸ್ವಲ್ಪವೂ ಬದಲಾವಣೆಯಿಲ್ಲದೆ ಸೇರಿಕೊಳ್ಳುತ್ತವೆ. ಉದಾಹರಣೆಗಾಗಿ, ಕ್ರಿಯಾಪದ ಗಳ ಕೊನೆಯಲ್ಲಿ ಬರುವ ಸು ಎಂಬ ಪ್ರತ್ಯಯ ಇಲ್ಲವೇ ಉ ಎಂಬ ಸ್ವರ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗುವುದಿಲ್ಲ, ಮತ್ತು ಕ್ರಿಯಾಪದಗಳ ಕೊನೆ ಯಲ್ಲಿ ಬರುವ ಎಕಾರ ಅಕಾರವಾಗಿ ಇಲ್ಲವೇ ಉಕಾರವಾಗಿ ಬದಲಾಗುವುದಿಲ್ಲ. ಇಕೆ-ಇಗೆ ಎಂಬ ಪದಪ್ರತ್ಯಯಕ್ಕೂ ಮತ್ತು ಇಕೆ ಎಂಬ ಪದರೂಪ ಪ್ರತ್ಯಯಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಉದಾಹರಣೆಗಳಲ್ಲಿ ಕಾಣ ಬಹುದು.

ಕ್ರಿಯಾಪದ ಇಕೆ-ಇಗೆ ಇಕೆ
ಬಯಸು ಬಯಕೆ ಬಯಸುವಿಕೆ
ಬೆರಸು ಬೆರಕೆ ಬೆರಸುವಿಕೆ
ತುರಿಸು ತುರಿಕೆ ತುರಿಸುವಿಕೆ
ಅಂಜು ಅಂಜಿಕೆ ಅಂಜುವಿಕೆ
ಹೇಳು ಹೇಳಿಕೆ ಹೇಳುವಿಕೆ
ಹೊಗಳು ಹೊಗಳಿಕೆ ಹೊಗಳುವಿಕೆ
ಬೆರೆ ಬೆರಕೆ ಬೆರೆಯುವಿಕೆ
ಹೊದೆ ಹೊದಿಕೆ ಹೊದೆಯುವಿಕೆ
ನಡೆ ನಡುಗೆ ನಡೆಯುವಿಕೆ

(೩) ಅರ್ಥದ ಮಟ್ಟಿಗೂ ಈ ಎರಡು ಪ್ರತ್ಯಯಗಳ ನಡುವೆ ವ್ಯತ್ಯಾಸವಿದೆ. ಮೇಲೆಯೇ ವಿವರಿಸಿದಂತೆ, ಇಕೆ-ಇಗೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ನಾಮಪದಗಳಿಗೆ ಅವುಗಳ ಒಳರಚನೆಯ ಆಧಾರದ ಮೇಲೆ ನಿಯಮಿತವಾಗಿ ಅರ್ಥ ಹೇಳಲು ಸಾಧ್ಯವಾಗದು. ಅವೆಲ್ಲವಕ್ಕೂ ಒಳರಚನೆ ಒಂದೇ ರೀತಿಯ ದಾದರೂ ಅರ್ಥ ಮಾತ್ರ ಅನಿಯಮಿತವಾಗಿ ಬೇರೆ ಬೇರಾಗಿರುತ್ತದೆ. ಆದರೆ, ಇಕೆ ಎಂಬ ಪದರೂಪ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಎಲ್ಲಾ ಕ್ರಿಯಾರೂಪ ಗಳಿಗೂ ಒಂದೇ ರೀತಿಯ ಅರ್ಥವಿದೆ. ಅವೆಲ್ಲ ವರ್ಣಿಸುವ ವಿಧಾನದ ಮೂಲಕ ಅವುಗಳಲ್ಲಿ ಬಂದಿರುವ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಗುರುತಿಸು ತ್ತವೆ.

ಬಯಸು ಬಯಕೆ ಬಯಸುವಿಕೆ

ಕೆತ್ತು ಕೆತ್ತಿಗೆ ಕೆತ್ತುವಿಕೆ

ಹಾಸು ಹಾಸುಗೆ ಹಾಸುವಿಕೆ

ಹಿಡಿ ಹಿಡಿಕೆ ಹಿಡಿಯುವಿಕೆ

ಮೊಳೆ ಮೊಳಕೆ ಮೊಳೆಯುವಿಕೆ

ಹೊಲಿ ಹೊಲಿಗೆ ಹೊಲಿಯುವಿಕೆ

ಈ ಎಲ್ಲಾ ವ್ಯತ್ಯಾಸಗಳ ಆಧಾರದ ಮೇಲೆ ಇಕೆ ಎಂಬುದು ಕ್ರಿಯಾ ಪದಗಳಿಂದ ಕ್ರಿಯಾರೂಪಗಳನ್ನು ತಯಾರಿಸುವುದಕ್ಕಾಗಿ ಬಳಸುವ ಪದರೂಪ ಪ್ರತ್ಯಯವೆಂದೂ ಮತ್ತು ಇಕೆ-ಇಗೆ ಎಂಬುದು ಪ್ರಾಮುಖ್ಯವಾಗಿ ಕ್ರಿಯಾಪದ ಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಸುವ ಅದಕ್ಕಿಂತ ತೀರ ಭಿನ್ನವಾದ ಪದಪ್ರತ್ಯಯವೆಂದೂ ಹೇಳಬೇಕಾಗುತ್ತದೆ.

೪.೩.೨ ತ-ತೇ ಪ್ರತ್ಯಯ

ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಗೆ ತ ಇಲ್ಲವೇ ತೆ ಎಂಬ ರೂಪದಲ್ಲಿರುವ ಈ ಪ್ರತ್ಯಯವನ್ನು ಸೇರಿಸಿ ಕೆಲವು ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಎರಡು ರೂಪಗಳಲ್ಲಿ ತೆ ಎಂಬುದರ ಬಳಕೆ ಗಿಂತಲೂ ತ ಎಂಬುದರ ಬಳಕೆಯೇ ಜಾಸ್ತಿ. ಆದರೆ ಇವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬ ವಿಷಯದಲ್ಲಿ ನಿಯಮವೇನೂ ಇರುವ ಹಾಗೆ ಕಾಣಿಸುವುದಿಲ್ಲ. ತೆ ಎಂಬುದರೊಂದಿಗೆ ಬಂದಾಗ ಕ್ರಿಯಾಪದಗಳ ಕೊನೆಯ ಎಕಾರ ಅಕಾರವಾಗುತ್ತದೆ (ಉದಾ: ನಡೆ-ನಡತೆ), ಆದರೆ ತ ಎಂಬುದ ರೊಂದಿಗೆ ಬಂದಾಗ ಅದು ಹಾಗೆಯೇ ಬದಲಾಗದೆ ಉಳಿಯುತ್ತದೆ (ಉದಾ: ಹೊಡೆ-ಹೊಡೆತ).

ಈ ಪ್ರತ್ಯಯದ ಮೂಲಕ ತಯಾರಾದ ನಾಮಪದಗಳು ಸಾಮಾನ್ಯವಾಗಿ ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಇಲ್ಲವೇ ಅದರಿಂದ ಸಿದ್ಧವಾಗುವ ಗುಣಧರ್ಮವನ್ನು ಹೆಸರಿಸುತ್ತವೆ. ಉದಾ:

ಕುಣಿ ಕುಣಿತ ಅಲೆ ಅಲೆತ
ಕುಡಿ ಕುಡಿತ ನೆಗೆ ನೆಗೆತ
ಹಿಡಿ ಹಿಡಿತ ಒದೆ ಒದೆತ
ದುಡಿ ದುಡಿತ ಎಸೆ ಎಸೆತ
ಉರಿ ಉರಿತ ಮೊರೆ ಮೊರೆತ
ತುಳಿ ತುಳಿತ ಸವೆ ಸವೆತ
ಕುದಿ ಕುದಿತ ಅಗೆ ಅಗೆತ
ಅಳೆ ಅಳತೆ ನಡೆ ನಡತೆ
ಅಗೆ ಅಗತೆ ಮಿಡಿ ಮಿಡಿತೆ

ಅನಿಯಮಿತವಾಗಿ ಇಂತಹ ನಾಮಪದಗಳು ಕ್ರಿಯಾಪದವು ನಿರ್ದೇಶಿಸುವ ಘಟನೆಯಲ್ಲಿ ಬರುವ ವಸ್ತು, ಪ್ರಾಣಿ ಮೊದಲಾದುವನ್ನು ಹೆಸರಿಸುತ್ತಿರಲೂ ಸಾಧ್ಯವಿದೆ (ಉದಾ: ಮಿಡಿ-ಮಿಡಿತೆ). ತಪ್ಪು-ತಪ್ಪಿತ ಎಂಬುದರಲ್ಲಿ ಈ ಪ್ರತ್ಯಯ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೂ ಬಂದಿರುವ ಹಾಗೆ ಕಾಣಿಸುತ್ತದೆ.

ಸಂಸ್ಕೃತದಿಂದ ಎರವಲಾಗಿ ಬಂದಿರುವ ಕೆಲವು ನಾಮಪದಗಳಲ್ಲಿ ತೆ ಎಂಬ ಪ್ರತ್ಯಯವೊಂದು ಕಾಣಿಸುತ್ತದೆ. ಉದಾ:

ಅಧ್ಯಕ್ಷ ಅಧ್ಯಕ್ಷತೆ ಅರ್ಹ ಅರ್ಹತೆ ಕವಿ ಕವಿತೆ ದಕ್ಷ ದಕ್ಷತೆ

ಆದರೆ ಈ ತೆ ಎಂಬ ಪ್ರತ್ಯಯವನ್ನು ನಾಮಪದಗಳಿಗಲ್ಲದೆ ಕ್ರಿಯಾಪದಗಳಿಗೆ ಸೇರಿಸುವುದಿಲ್ಲ. ವ್ಯಕ್ತಿಯೊಬ್ಬನನ್ನು ಹೆಸರಿಸುವ ನಾಮಪದದಿಂದ ಆ ವ್ಯಕ್ತಿಯ ಗುಣಧರ್ಮವನ್ನು ಹೆಸರಿಸುವ ಬೇರೊಂದು ನಾಮಪದವನ್ನು ಸಾಧಿಸಲು ಈ ಪ್ರತ್ಯಯದ ಬಳಕೆಯಾಗುತ್ತದೆ. ಇದು ಸಂಸ್ಕೃತದ ತಾ ಎಂಬ ಪ್ರತ್ಯಯದ ಕನ್ನಡ ರೂಪ. ಮೇಲೆ ವಿವರಿಸಿರುವ ತ-ತೆ ಇದಕ್ಕಿಂತ ಭಿನ್ನವಾದುದು.

೪.೩.೩ ಆ ಪ್ರತ್ಯಯ

ಇದು ಮುಖ್ಯವಾಗಿ ಗು ಇಲ್ಲವೇ ಡು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿರುವ ಗು ಮತ್ತು ಡು ಎಂಬ ಅಕ್ಷರಗಳು ಕ್ ಮತ್ತು ಟ್ ಎಂದಾಗುತ್ತವೆ (ಎಂದರೆ, ಗಕಾರ, ಡಕಾರಗಳು ಕಕಾರ, ಟಕಾರಗಳಾಗುತ್ತವೆ ಮತ್ತು ಅವುಗಳ ಅನಂತರ ಬರುವ ಉಕಾರ ಬಿದ್ದುಹೋಗುತ್ತದೆ).

ನಡುಗು ನಡುಕ ಆಡು ಆಟ
ತಿರುಗು ತಿರುಕ ಓಡು ಓಟ
ಮರುಗು ಮರುಕ ನೋಡು ನೋಟ
ತೂಗು ತೂಕ ಕಾಡು ಕಾಟ
ಮಾಡು ಮಾಟ
ಕೂಡು ಕೂಟ

ಆಡು ಎಂಬುದರಲ್ಲಿ ಕೊನೆಗೊಳ್ಳುವ ಹಲವು ‘ಕೂಡು’ಕ್ರಿಯಾಪದಗಳು ಕನ್ನಡದಲ್ಲಿದ್ದು ಅವುಗಳಲ್ಲಿ ಕೆಲವು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬರ ಬಲ್ಲುದು. ಇಂತಹ ಬಳಕೆಯಲ್ಲೂ ಕ್ರಿಯಾಪದದ ಕೊನೆಯ ಡು ಎಂಬ ಅಕ್ಷರ ಟ್ ಎಂದಾಗುತ್ತದೆ. ಉದಾ:

ಹೋರಾಡು ಹೋರಾಟ

ತಿರುಗಾಡು ತಿರುಗಾಟ

ಓಡಾಡು ಓಡಾಟ

ಬದ್ದಾಡು ಬದ್ದಾಟ

ಆದರೆ ಈ ಪ್ರತ್ಯಯ ಇಂತಹ ಎಲ್ಲಾ ಕೂಡುಕ್ರಿಯಾಪದಗಗಳೊಂದಿಗೂ ನಿಯಮಿತವಾಗಿ ಬರುವುದಿಲ್ಲ. ಉದಾಹರಣೆಗಾಗಿ, ಬಿಸಾಡು, ನಗಾಡು, ಮಾತ ನಾಡು ಮೊದಲಾದವುಗಳೊಂದಿಗೆ ಇದು ಬರುವುದಿಲ್ಲ, ಮತ್ತು ಈ ಪ್ರತ್ಯಯವ ನ್ನೊಳಗೊಂಡಿರುವ ಮಾರಾಟ, ಹುಡುಗಾಟ ಮೊದಲಾದ ಬೇರೆ ಕೆಲವು ನಾಮಪದಗಳಿಗೆ ಸಮನಾದ ಕೂಡುಕ್ರಿಯಾಪದ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ಇದಲ್ಲದೆ, ತಲೆತಿರುಕ, ದಾರಿಹೋಕ ಮೊದಲಾದ ಬೇರೆ ಕೆಲವು ನಾಮಪದ ಗಳಲ್ಲಿ ಈ ಪ್ರತ್ಯಯ ಬಂದಿರುವ ಹಾಗೆ ಕಾಣಿಸುತ್ತದೆ, ಆದರೆ ಇವನ್ನು ತಯಾರಿಸಲು ಬೇಕಾಗುವ ಕೂಡುಕ್ರಿಯಾಪದಗಳು ಕನ್ನಡದಲ್ಲಿ ಬಳಕೆಯಲ್ಲಿಲ್ಲ.

ಊದು ಎಂಬ ಕ್ರಿಯಾಪದಕ್ಕೆ ಇದೇ ಪ್ರತ್ಯಯವನ್ನು ಸೇರಿಸಿ ಊತ ಎಂಬ ಪದವನ್ನು ತಯಾರಿಸಿರುವಲ್ಲಿ ದಕಾರ ತಕಾರವಾಗಿರುವುದನ್ನು ಕಾಣಬಹುದು.

ಈ ಪ್ರತ್ಯಯದ ಮೂಲಕ ತಯಾರಾಗುವ ನಾಮಪದಗಳ ಅರ್ಥವೂ ಅನಿಯಮಿತವಾದುದು. ಹೆಚ್ಚಿನೆಡೆಗಳಲ್ಲೂ ಇದು ಕ್ರಿಯಾಪದವು ನಿರ್ದೇಶಿಸುವ ಘಟನೆಯನ್ನು ಹೆಸರಿಸುತ್ತದೆ (ಉದಾ: ನಡುಗು-ನಡುಕ, ಮರುಗು-ಮರುಕ). ಆದರೆ, ಕೆಲವೆಡೆಗಳಲ್ಲಿ ಒಂದು ವಿಶಿಷ್ಟವಾದ ಘಟನೆಯನ್ನು ಮಾತ್ರವೇ ಹೆಸರಿಸು ತ್ತದೆ (ಉದಾ: ಮಾಡು-ಮಾಟ), ಮತ್ತು ಬೇರೆ ಕೆಲವು ಕಡೆಗಳಲ್ಲಿ ಅಂತಹ ಘಟನೆಯನ್ನು ನಡೆಸುವ ವ್ಯಕ್ತಿಯನ್ನು ಹೆಸರಿಸುತ್ತದೆ (ಉದಾ: ತಿರುಗು-ತಿರುಕ).

ಅಗಲು-ಅಗಲಿ ಮತ್ತು ತೀರು-ತೀರ ಎಂಬವುಗಳಲ್ಲಿ ಇದೇ ಪ್ರತ್ಯಯ ರು ಮತ್ತು ಲು ಎಂಬ ಅಕ್ಷರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬಂದಿರುವುದನ್ನು ಕಾಣಬಹುದು.

೪.೩.೪ ವು ಪ್ರತ್ಯಯ

ಈ ಪ್ರತ್ಯಯವು ಪ್ರಾಮುಖ್ಯವಾಗಿ ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳೊಂದಿಗೆ ಬರುತ್ತದೆ. ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳಲ್ಲಿ ಹೆಚ್ಚಿನವೂ ಈ ಪ್ರತ್ಯಯ ಸೇರಿದಾಗ ಅವುಗಳ ಕೊನೆಯಲ್ಲಿ ಬರುವ ಎಕಾರವನ್ನು ಅಕಾರವಾಗಿ ಬದಲಾಯಿಸುತ್ತವೆ. ಉದಾ:

ಅಳಿ ಅಳಿವು ಮರೆ ಮರೆವು
ದಣಿ ದಣಿವು ಕಳೆ ಕಳವು
ಹಸಿ ಹಸಿವು ನೆರೆ ನೆರವು
ತಿಳಿ ತಿಳಿವು ತೆರೆ ತೆರವು
ಅರಿ ಅರಿವು ಸೆಳೆ ಸೆಳವು
ಹರಿ ಹರಿವು

ಒಲವು ಎಂಬ ಪದದಲ್ಲಿ ಅದರ ಒಳರಚನೆಯಲ್ಲಿ ಬರುವ ಒಲಿ ಎಂಬ ಕ್ರಿಯಾಪದದ ಕೊನೆಯ ಇಕಾರವೂ ಅಕಾರವಾಗಿರುವ ಹಾಗೆ ಕಾಣಿಸುತ್ತದೆ.

ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದಗಳಲ್ಲೂ ಕೆಲವು ಈ ಪ್ರತ್ಯಯದೊಂದಿಗೆ ಸೇರಿ ನಾಮಪದಗಳಾಗಿವೆ. ಆದರೆ, ಇಂತಹ ಪದಗಳಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗಾಗಿ, ಯು ಎಂಬ ಅಕ್ಷರದಲ್ಲಿ ಕೊನೆಗೊಳ್ಳುವ ಮತ್ತು ಅದರೆ ಹಿಂದೆ ಉದ್ದಸ್ವರವಿರುವ ಕೆಲವು ಕ್ರಿಯಾಪದಗಳೊಂದಿಗೆ ಈ ಪ್ರತ್ಯಯ ಬರಲು ಸಾಧ್ಯವಿದ್ದು, ಹಾಗೆ ತಯಾ ರಾಗಿರುವ ಪದಗಳಲ್ಲಿ ಆ ಕ್ರಿಯಾಪದದ ಎರಡನೆಯ ಅಕ್ಷರ ಬಿದ್ದು ಹೋಗಿದೆ.

ಸಾಯು ಸಾವು
ನೋಯು ನೋವು
ಕಾಯು ಕಾವು
ಮೇಯು ಮೇವು

ಉಕಾರದಲ್ಲಿ ಕೊನೆಗೊಳ್ಳುವ ನಿಲ್ಲು ಮತ್ತು ಗೆಲ್ಲು ಎಂಬ ಬೇರೆ ಎರಡು ಕ್ರಿಯಾಪದಗಳೊಂದಿಗೂ ಈ ಪ್ರತ್ಯಯ ಬರುತ್ತಿದ್ದು, ಈ ಪದಗಳಲ್ಲಿರುವ ಒತ್ತಕ್ಷರದ ಒಂದು ವ್ಯಂಜನ ಈ ಪ್ರತ್ಯಯ ಸೇರಿದಾಗ ಬಿದ್ದು ಹೋಗಿದೆ.

ನಿಲ್ಲು ನಿಲುವು
ಗೆಲ್ಲು ಗೆಲುವು

ಇದಲ್ಲದೆ ಇರವು ಎಂಬುದರ ಒಳರಚನೆಯಲ್ಲಿ ಇರು ಎಂಬ ಕ್ರಿಯಾಪದದ ಕೊನೆಯ ಉಕಾರ ಅಕಾರವಾಗಿದೆ, ಮತ್ತು ತಿರುವು ಎಂಬುದರಲ್ಲಿ ತಿರುಗು ಎಂಬ ಕ್ರಿಯಾಪದದ ಮೂರನೆಯ ಅಕ್ಷರ ಬಿದ್ದು ಹೋಗಿದೆ. ಬಿಡುವು ಎಂಬುದರಲ್ಲಿ ಮಾತ್ರ ಈ ಪ್ರತ್ಯಯ ಬಿಡು ಎಂಬ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೆ ಯಾವ ಬದಲಾವಣೆಯನ್ನೂ ಮಾಡದೆ ಬಂದಿದೆ.

ಅರ್ಥದ ಮಟ್ಟಿಗೆ ಈ ಪ್ರತ್ಯಯದ ಬಳಕೆಯಲ್ಲೂ ಅನಿಯಮಿತತೆಯಿದೆ ಯೆಂಬುದನ್ನು ಗಮನಿಸಬಹುದು. ಸಾವು, ನೋವು, ಮರೆವು ಮೊದಲಾದವು ಗಳು ಘಟನೆಗಳನ್ನು ಹೆಸರಿಸುವುವಾದರೆ, ಮೇವು ಎಂಬುದು ಘಟನೆಯ ಸಾಧನ ವನ್ನೂ ಮತ್ತು ತಿರುವು ಎಂಬುದು ಘಟನೆಯ ಸ್ಥಾನವನ್ನೂ ಹೆಸರಿಸುತ್ತವೆ.

೪.೩.೫ ವಳಿ ಪ್ರತ್ಯಯ

ಕ್ರಿಯಾಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿದಾಗ, ಅವುಗಳ ಕೊನೆಯಲ್ಲಿ ಬರುವ ಎಕಾರ ಅಕಾರವಾಗುತ್ತದೆ, ಮತ್ತು ಇಕಾರ ಉಕಾರವಾಗುತ್ತದೆ. ಆದರೆ ಉಕಾರ ಮಾತ್ರ ಬದಲಾಗದೆ ಹಾಗೆಯೇ ಉಳಿಯುತ್ತದೆ. ಇದಲ್ಲದೆ, ಉದಾ:

ಹಿಡಿ ಹಿಡುವಳಿ ಸಾಗು ಸಾಗುವಳಿ
ತಿಳಿ ತಿಳುವಳಿಕೆ ಹುಟ್ಟು ಹುಟ್ಟುವಳಿ
ನಡೆ ನಡವಳಿಕೆ ಆಳು ಆಡಳಿತ

ತಿಳುವಳಿಕೆ ಮತ್ತು ನಡವಳಿಕೆ ಎಂಬ ಎರಡು ಪದಗಳಲ್ಲಿ ಈ ಪ್ರತ್ಯಯ ಕೆ ಎಂಬ ಇನ್ನೊಂದು ಪ್ರತ್ಯಯದೊಂದಿಗೆ ಬಂದಿದೆ. ಮತ್ತು ಆಡಳಿತ ಎಂಬ ಪದದಲ್ಲಿ ತ ಎಂಬ ಪ್ರತ್ಯಯದೊಂದಿಗೆ ಬಂದಿದೆ. ಇದಲ್ಲದೆ, ಆಡಳಿತ ಎಂಬ

ಪದದಲ್ಲಿ ಕ್ರಿಯಾಪದದಲ್ಲಿದ್ದ ಳಕಾರ ಡಕಾರವಾಗಿದೆ, ಮತ್ತು ವಳಿ ಪ್ರತ್ಯಯದ ವಕಾರ ಬಿದ್ದು ಹೋಗಿದೆ.

ಗೊತ್ತು ಎಂಬ ಆಖ್ಯಾತ ಪದದೊಂದಿಗೂ ಈ ಪ್ರತ್ಯಯ ಬಂದಿರುವುದನ್ನು ಗೊತ್ತುವಳಿ ಎಂಬ ನಾಮಪದದಲ್ಲಿ ಕಾಣಬಹುದು. ದಬ್ಬಾಳಿಕೆ ಎಂಬುದರಲ್ಲೂ ಇದೇ ಪ್ರತ್ಯಯ (ದಬ್ಬು ಎಂಬ ಕ್ರಿಯಾಪದದೊಂದಿಗೆ) ಬಂದಿರಲು ಸಾಧ್ಯವಿದ್ದು, ಇಲ್ಲಿ ಇದಕ್ಕೆ ಆಳಿ ಎಂಬ ರೂಪವಿದೆ.

ಅಳಿ ಎಂಬ ರೂಪದಲ್ಲಿರುವ ಪ್ರತ್ಯಯವೊಂದು ಆಕಳಿಸು, ಅಪ್ಪಳಿಸು, ಕುಪ್ಪಳಿಸು, ಬಿಕ್ಕಳಿಸು ಮೊದಲಾದ ಕೆಲವು ಕ್ರಿಯಾಪದಗಳಲ್ಲಿ ಬರುವುದೆಂಬು ದನ್ನು ಮುಂದೆ ಆರನೇ ಅಧ್ಯಾಯದಲ್ಲಿ ನೋಡಲಿರುವೆವು. ಅದು ಈ ಪ್ರತ್ಯಯಕ್ಕೆ ಸಂಬಂಧಿಸಿರಲು ಸಾಧ್ಯವಿದೆ. ಇದೇ ಪ್ರತ್ಯಯ ಹೆಗ್ಗಳಿಕೆ ಎಂಬ ಪದದಲ್ಲಿ ಹಿರಿ ಎಂಬ ಗುಣಪದದ ಹೆಗ್ ಎಂಬ ರೂಪದೊಂದಿಗೆ ಬಂದಿದೆ.

೪.೩.೬ ವಣ್ ಪ್ರತ್ಯಯ

ಈ ಪ್ರತ್ಯಯ ಅದರ ಎಲ್ಲಾ ಬಳಕೆಗಳಲ್ಲೂ ಮೇಲೆ ೪.೩.೧ರಲ್ಲಿ ವಿವರಿಸಿದ ಇಕೆ-ಇಗೆ ಪ್ರತ್ಯಯದ ಇಗೆ ಎಂಬ ರೂಪದೊಂದಿಗೆ ಬರುತ್ತದೆ. ಕ್ರಿಯಾಪದದ ಕೊನೆಯ ಎಕಾರ ಈ ಪ್ರತ್ಯಯ ಸೇರಿದಾಗ ಅಕಾರವಾಗುತ್ತದೆ ಮತ್ತು ಉಕಾರ ಬಿದ್ದು ಹೋಗುತ್ತದೆ. ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದದೊಂದಿಗೆ ಇದು ಅಣ್ ಎಂಬ ರೂಪದಲ್ಲಿ ಬರುತ್ತದೆ.

ಬರೆ ಬರವಣಿಗೆ ಬೀಸು ಬೀಸಣಿಗೆ
ಮೆರೆ ಮೆರವಣಿಗೆ ಬಾಚು ಬಾಚಣಿಗೆ
ಬೆಳೆ ಬೆಳವಣಿಗೆ

ಮದುವಣಿಗ ಎಂಬ ನಾಮಪದದಲ್ಲಿ ಈ ಪ್ರತ್ಯಯ ಕ್ರಿಯಾಪದದೊಂದಿಗೆ ಬರುವ ಬದಲು ಮದುವೆ ಎಂಬ ಬೇರೊಂದು ನಾಮಪದದೊಂದಿಗೆ (ಮತ್ತು ಇಗ ಎಂಬ ಪ್ರತ್ಯಯದೊಂದಿಗೆ) ಬಂದಿರುವುದನ್ನು ಕಾಣಬಹುದು.

ತಿರುಗಣೆ, ಸಾಗಣೆ ಮತ್ತು ಬದಲಾವಣೆ ಎಂಬ ಪದಗಳಲ್ಲಿ ಕಾಣಿಸುವ ಅಣೆ ಎಂಬ ಪ್ರತ್ಯಯ ಮತ್ತು ಹೊಂದಾಣಿಕೆ, ಸಾಗಾಣಿಕೆ, ತಿದ್ದಾಣಿಕೆ ಮೊದಲಾದ ಪದಗಳಲ್ಲಿ ಕಾಣಿಸುವ ಆಣ್ ಎಂಬ ಪ್ರತ್ಯಯ - ಇವುಗಳೂ ಈ ಪ್ರತ್ಯಯಕ್ಕೆ ಸಂಬಂಧಿಸಿದವುಗಳಾಗಿರಲು ಸಾಧ್ಯವಿದೆ.

೪.೩.೭ ಎ ಪ್ರತ್ಯಯ

ಉಕಾರದಲ್ಲಿ ಕೊನೆಗೊಳ್ಳುವ ಕೆಲವು ಕ್ರಿಯಾಪದಗಳಿಗೆ ಎ ಎಂಬ ಈ ಪ್ರತ್ಯಯ ವನ್ನು ಸೇರಿಸಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಪ್ರತ್ಯಯ ಸೇರಿ

ದಾಗ ಕ್ರಿಯಾಪದಗಳ ಕೊನೆಯ ಉಕಾರ ಬಿದ್ದು ಹೋಗುತ್ತದೆ. ಆದರೆ ಬಾಳು ಎಂಬ ಕ್ರಿಯಾಪದದಲ್ಲಿ ಮಾತ್ರ, ಅದು ವಕಾರವಾಗಿ ಬದಲಾಗುತ್ತದೆ. ಇದಲ್ಲದೆ, ಕೊಲ್ಲು ಎಂಬ ಕ್ರಿಯಾಪದದಲ್ಲಿ ಬರುವ ಒತ್ತಕ್ಷರದಿಂದ ಒಂದು ವ್ಯಂಜನವೂ ಬಿದ್ದು ಹೋಗುತ್ತದೆ. ಉದಾ:

ಕಟ್ಟು ಕಟ್ಟೆ ನಗು ನಗೆ
ತಟ್ಟು ತಟ್ಟೆ ಹೊರು ಹೊರೆ
ಕೊಲ್ಲು ಕೊಲೆ ಬಾಳು ಬಾಳ್ವೆ
ಹರಟು ಹರಟೆ

ನೆಲೆ ಎಂಬ ಪದದಲ್ಲೂ ಈ ಪ್ರತ್ಯಯ ಬಂದಿದ್ದು, ಅದರಲ್ಲಿ ನಿಲ್ಲು ಇಲ್ಲವೇ ನೆಲ ಎಂಬ ಪದ ಬಳಕೆಯಾಗಿರಬೇಕು.

೪.೩.೮ ಅಲು ಪ್ರತ್ಯಯ

ಈ ಪ್ರತ್ಯಯ ಪ್ರಾಮುಖ್ಯವಾಗಿ ಉಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳೊಂದಿಗೆ ಬರುತ್ತದೆ. ಸಿಡಿ ಎಂಬುದರಿಂದ ತಯಾರಾದ ಸಿಡಿಲು ಎಂಬುದು ಮಾತ್ರ ಇದಕ್ಕೆ ಅಪವಾದವಾಗಿರುವ ಹಾಗೆ ಕಾಣಿಸುತ್ತದೆ. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಉಕಾರ ಬಿದ್ದು ಹೋಗುತ್ತದೆ. ಉದಾ:

ಕೆಮ್ಮು ಕೆಮ್ಮಲು ಮಾಸು ಮಾಸಲು
ಮೆಟ್ಟು ಮೆಟ್ಟಲು ಅಳು ಅಳಲು
ಬೀಳು ಬೀಳಲು ಮೂಡು ಮೂಡಲು

ಕೆಲವು ಕ್ರಿಯಾಪದಗಳೊಂದಿಗೆ ಇದಕ್ಕೆ ಇಲು ಎಂಬ ರೂಪವಿದೆ.

ಕೊಯ್ಯು ಕೊಯಿಲು
ಮಿಗು ಮಿಗಿಲು

ಮಡಿಸು ಎಂಬ ಕ್ರಿಯಾಪದದೊಂದಿಗೆ ಇದು ಈ ಎರಡು ರೂಪಗಳಲ್ಲೂ ಬರಲು ಸಾಧ್ಯವಿದ್ದು, ಇದರಿಂದ ತಯಾರಾಗುವ ನಾಮಪದಗಳಿಗೆ ಬೇರೆ ಬೇರೆ ಅರ್ಥಗಳಿವೆ: ಅಲು ಎಂಬುದನ್ನು ಸೇರಿಸಿ ತಯಾರಿಸಿದ ಮಡಲು ಎಂಬ ಪದಕ್ಕೆ ‘ತೆಂಗಿನ ಗರಿ’ ಎಂಬ ಅರ್ಥವೂ ಮತ್ತು ಇಲು ಎಂಬುದನ್ನು ಸೇರಿಸಿ ತಯಾರಿಸಿದ

ಮಡಿಲು ಎಂಬುದಕ್ಕೆ ‘ಉಡಿ’ ಎಂಬ ಅರ್ಥವೂ ಬರುತ್ತದೆ. ಬಿಸಿಲು ಎಂಬ ಪದದಲ್ಲಿ ಈ ಪ್ರತ್ಯಯ ಬಿಸಿ ಎಂಬ ಗುಣಪದದೊಂದಿಗೆ ಬಂದಿದೆ.

ಆ.೨.೯ ಕು ಪ್ರತ್ಯಯ

ಈ ಪ್ರತ್ಯಯವನ್ನು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳಿಗೆ ಸೇರಿಸಿ ನಾಮಪದಗಳನ್ನು ತಯಾರಿಸಬಹುದು. ಈ ಪ್ರತ್ಯಯ ಸೇರಿದಾಗ ಕ್ರಿಯಾಪದಗಳ ಕೊನೆಯಲ್ಲಿ ಬರುವ ಇಕಾರ ಉಕಾರವಾಗುತ್ತದೆ ಮತ್ತು ಎಕಾರ ಅಕಾರವಾಗುತ್ತದೆ. ಇದಲ್ಲದೆ, ಕೆಲವು ಕ್ರಿಯಾಪದಗಳೊಂದಿಗೆ ಇದಕ್ಕೆ ಕ ಎಂಬ ಅಕಾರದಲ್ಲಿ ಕೊನೆಗೊಳ್ಳುವ ರೂಪವಿದೆ. ಉದಾ:

ಬಿರಿ ಬಿರುಕು ಒಡೆ ಒಡಕು
ಹರಿ ಹರುಕು ಕೊಳೆ ಕೊಳಕು
ಮುರಿ ಮುರುಕು ಕರಿ ಕರಕು
ಕುಡಿ ಕುಡುಕ ಎರೆ ಎರಕ

೪.೩.೧೦ ‘ಸೊನ್ನೆ’ ಪ್ರತ್ಯಯ

ಕನ್ನಡದಲ್ಲಿ ಕೆಲವು ಪದಗಳನ್ನು ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದಗಳನ್ನಾಗಿ ಇಲ್ಲವೇ ಕ್ರಿಯಾಪದಗಳನ್ನಾಗಿ ಬಳಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (೨ಕ-ಗ) ವಾಕ್ಯಗಳನ್ನು ಗಮನಿಸ ಬಹುದು.

  1. (೨ಕ) ಅವಳು ಒಂದು ಹಾಡನ್ನು ಹಾಡಿದಳು.
  2. (೨ಖ) ಗುಡುಗು ಗುಡುಗಿತು, ಮಿಂಚು ಮಿಂಚಿತು.
  3. (೨ಗ) ಅವನು ಕಟ್ಟಿದ ಕಟ್ಟು ಸಡಿಲಾಗಿದೆ.

(೨ಕ)ದಲ್ಲಿ ಹಾಡು ಎಂಬ ಪದ ಎರಡು ಬಾರಿ ಬಂದಿದ್ದು, ಮೊದಲನೆಯ ಬಳಕೆ ಯಲ್ಲಿ ಅದು ನಾಮಪದವಾಗಿಯೂ ಮತ್ತು ಎರಡನೆಯ ಬಳಕೆಯಲ್ಲಿ ಕ್ರಿಯಾಪದ ವಾಗಿಯೂ ಬಂದಿದೆ. ಇದೇ ರೀತಿಯಲ್ಲಿ (೨ಖ)ದಲ್ಲಿ ಗುಡುಗು ಮತ್ತು ಮಿಂಚು ಎಂಬ ಪದಗಳು ಮತ್ತು (೨ಗ)ದಲ್ಲಿ ಕಟ್ಟು ಎಂಬ ಪದ ಯಾವ ರೀತಿಯ ಬದಲಾವಣೆಗೂ ಒಳಗಾಗದೆ ನಾಮಪದ ಮತ್ತು ಕ್ರಿಯಾಪದಗಳಾಗಿ ಬಂದಿರು ವುದನ್ನು ಕಾಣಬಹುದು.

ಇಂತಹ ಪದಗಳು ಮೂಲದಲ್ಲಿ ಕ್ರಿಯಾಪದಗಳೆಂದೂ, ಮತ್ತು ಅವಕ್ಕೊಂದು ‘ಸೊನ್ನೆ’ ಪ್ರತ್ಯಯವನ್ನು ಸೇರಿಸುವುದರ ಮೂಲಕ ಅವುಗಳಿಂದ ನಾಮಪದಗಳನ್ನು ತಯಾರಿಸಲಾಗಿದೆಯೆಂದೂ ಹೇಳುವ ಕ್ರಮವಿದೆ. ಕನ್ನಡದಲ್ಲಿ

ಸಾಮಾನ್ಯವಾಗಿ ಕ್ರಿಯಾಪದಗಳಿಂದ ಪ್ರತ್ಯಯಗಳನ್ನು ಸೇರಿಸಿ ನಾಮಪದಗಳನ್ನು ತಯಾರಿಸುವುದೇ ಜಾಸ್ತಿ. ಇಸು ಎಂಬ ಪ್ರತ್ಯಯವನ್ನು ಬಳಸಿ ನಾಮಪದಗಳಿಂದ ಕ್ರಿಯಾಪದಗಳನ್ನು ತಯಾರಿಸಲು ಸಾಧ್ಯವಿದೆಯೇನೋ ನಿಜ. ಆದರೆ ಇದಕ್ಕೆ ಕನ್ನಡದ ನಾಮಪದ ಗಳಿಗಿಂತಲೂ ಸಂಸ್ಕೃತದಿಂದ ಎರವಲಾಗಿ ಬಂದ ನಾಮಪದಗಳನ್ನು ಬಳಸು ವುದೇ ಜಾಸ್ತಿ (೬.೪ ನೋಡಿ). ಇದಕ್ಕಿಂತ ಭಿನ್ನವಾದ ಪ್ರತ್ಯಯಗಳು ಕನ್ನಡದ ಕ್ರಿಯಾಪದಗಳಲ್ಲಿ ಚಾರಿತ್ರಿಕ ಅವಶೇಷಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ (೬.೩ ನೋಡಿ).

ಈ ವಿಷಯಗಳ ಆಧಾರದ ಮೇಲೆ, ನಾಮಪದ ಮತ್ತು ಕ್ರಿಯಾಪದಗಳ ನಡುವೆ ಸಂಬಂಧವಿರುವಲ್ಲೆಲ್ಲ ಕ್ರಿಯಾಪದವೇ ಮೂಲವೆಂದೂ ಮತ್ತು ನಾಮ ಪದ ಕ್ರಿಯಾಪದಕ್ಕೆ ಯಾವುದಾದರೊಂದು ಪ್ರತ್ಯಯವನ್ನು (ಇಲ್ಲವೇ ಪದವನ್ನು) ಸೇರಿಸುವುದರ ಮೂಲಕ ತಯಾರಾಗುವಂತಹದೆಂದೂ ವಾದಿಸಲು ಸಾಧ್ಯವಿದೆ.

ಈ ರೀತಿ ನಾಮಪದಗಳಿಗೂ ಮತ್ತು ಕ್ರಿಯಾಪದಗಳಿಗೂ ಒಂದೇ ರೂಪ ವಿರುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ನಗು ಓದು ಮಿಂಚು
ಅಳು ಹಾಡು ಗುಡುಗು
ನುಡಿ ಕೆಮ್ಮು ಬೆವರು
ಉರಿ ತಪ್ಪು ಬದುಕು
ಬೆಳೆ ಕಟ್ಟು ಉಗುಳು
ಕರೆ ಗುದ್ದು ಉರುಳು

ಇಂತಹ ಪದಗಳ ಪ್ರಯೋಗದಲ್ಲಿ ಕ್ರಿಯಾಪದಗಳು ನಿಯಮಿತವಾಗಿ ಒಂದು ಘಟನೆಯನ್ನು ನಿರ್ದೇಶಿಸುವುವಾದರೆ, ನಾಮಪದಗಳು ಅನಿಯಮಿತವಾಗಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡುತ್ತವೆ. ಉದಾಹರಣೆಗಾಗಿ, ಓದು, ಅಳು, ಕೆಮ್ಮು ಮೊದಲಾದ ನಾಮಪದಗಳು ಅದೇ ರೂಪದ ಕ್ರಿಯಾಪದಗಳು ನಿರ್ದೇ ಶಿಸುವ ಘಟನೆಗಳನ್ನು ಹೆಸರಿಸುವುವಾದರೆ, ಹಾಡು, ಬೆಳೆ, ಬೆವರು ಮೊದಲಾದ ನಾಮಪದಗಳು ಅಂತಹ ಘಟನೆಗಳಿಂದ ದೊರೆಯುವ ಫಲಿತಾಂಶವನ್ನು ಹೆಸರಿಸು ತ್ತವೆ.

ಅರ್ಥದಲ್ಲಿ ಅನಿಯಮಿತತೆ ಮತ್ತು ವೈವಿಧ್ಯವನ್ನು ನಾವು ಸಾಮಾನ್ಯವಾಗಿ ಪ್ರತ್ಯಯವಿರುವ ನಾಮಪದಗಳಲ್ಲೇ ಕಾಣುವೆವಾದ ಕಾರಣ, ಇಂತಹ ನಾಮಪದ ಗಳಲ್ಲಿ ಕ್ರಿಯಾಪದಗಳೊಂದಿಗೆ ಒಂದು ‘ಸೊನ್ನೆ’ ಪ್ರತ್ಯಯ ಬಂದಿದೆಯೆಂಬ ಮೇಲಿನ ವಾದಕ್ಕೆ ಈ ನಾಮಪದಗಳ ಅರ್ಥದಲ್ಲಿ ಕಾಣಿಸುವ ಅನಿಯಮಿತತೆ ಯೂ ಒಂದು ಆಧಾರವಾಗಬಲ್ಲುದು.

೪.೩.೧೧ ಬೇರೆ ಕೆಲವು ಪ್ರತ್ಯಯಗಳು

ಮೇಲೆ ವಿವರಿಸಿರುವ ಪ್ರತ್ಯಯಗಳು ಮಾತ್ರವಲ್ಲದೆ, ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಬೇರೆಯೂ ಕೆಲವು ಪ್ರತ್ಯಯಗಳು ಕನ್ನಡದಲ್ಲಿ ಕ್ರಿಯಾಪದಗಳಿಂದ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಕೆಯಾಗುತ್ತವೆ. ಇವನ್ನು ಬೇರೆ ಬೇರಾಗಿ ವರ್ಣಿಸುವ ಬದಲು ಪಟ್ಟಿಮಾಡಿ ಹೇಳುವುದೇ ಸುಲಭ ವಾದುದರಿಂದ ಅಂತಹ ಪ್ರತ್ಯಯಗಳಿರುವ ಪದಗಳ ಪಟ್ಟಿಯೊಂದನ್ನು ಕೆಳಗೆ ಕೊಡಲಾಗಿದೆ.

  1.   ಪ್ರತ್ಯಯ ಕ್ರಿಯಾಪದ ನಾಮಪದ
  2. | :—: | :—: | :—: | :—: |
  3. ೧. ಕಟ್ಟು ಕಟ್ಟಡ
  4.     ಒತ್ತು ಒತ್ತಡ
  5.     ಹೆಚ್ಚು ಹಚ್ಚಡ
  6. ೨. ಪು ಹೊಳೆ ಹೊಳಪು
  7.     ಉಡು ಉಡುಪು
  8.     ನೆನೆ ನೆನಪು
  9.     ತೀರು ತೀರ್ಪು
  10. ೩. ಅನೆ ಕೆತ್ತು ಕೆತ್ತನೆ
  11.     ಬಿತ್ತು ಬಿತ್ತನೆ
  12. ೪. ಕೇಳು ಕೇಳುಗ
  13.     ಓದು ಓದುಗ
  14.     ನೋಡು ನೋಡುಗ
  15. ೫. ಮೆ ತಾಳು ತಾಳ್ಮೆ
  16.     ದುಡಿ ದುಡಿಮೆ
  17.     ಉಳು ಉಳುಮೆ
  18.     ನಲಿ ನಲ್ಕೆ
  19. ೬. ಅಳ ಮುಚ್ಚು ಮುಚ್ಚಳ
  20.     ಹೆಚ್ಚು ಹೆಚ್ಚಳ
  21. ೭. ಬರೆ ಬರಹ
  22. ೮. ಗಳು ಬಯ್ಯು ಬೈಗಳು
  23. ೯. ಚು ಗೀರು ಗೀಚು
  24. ೧೦. ಇಸು ತಿನ್ನು ತಿನಿಸು
  25.     ಮುನಿ ಮುನಿಸು
  26. ೧೧. ಆಯ ಒತ್ತು ಒತ್ತಾಯ
  27. ೧೨. ಅಂದ ಒಪ್ಪು ಒಪ್ಪಂದ
ಕನ್ನಡ ಪದಗಳ ಒಳರಚನೆ
೧೩. ಡಿ ತಿನ್ನು ತಿಂಡಿ
ಹೆದರು ಹೇಡಿ
೧೪. ಹಿಂಡು ಹಿಂದಿ
ಏರು ಏರಿ
೧೫. ದಿ ಹಾಯು ಹಾದಿ
೧೬. ಗೆ ನೇಯು ನೆಯ್ಯೆ
೧೭ ಪೆ ತಿರುಗು ತಿರುಪ್

ಇದಲ್ಲದೆ, ಕೇಡು ಎಂಬ ನಾಮಪದವನ್ನು ಕೆಡು ಎಂಬ ಕ್ರಿಯಾಪದದಿಂದ ಅದರ ಮೊದಲನೆಯ ಅಕ್ಷರದಲ್ಲಿ ಬರುವ ಸ್ವರವನ್ನು ಉದ್ದಸ್ವರವಾಗಿ ಮಾಡುವು ದರ ಮೂಲಕ ತಯಾರಿಸಲಾಗಿದೆ ಎಂಬುದನ್ನು ಗಮನಿಸಬಹುದು.

Eke →

೪.೪ ನಾಮಪದಗಳಿಂದ ತಯಾರಾದ ನಾಮಪದಗಳು

ಕನ್ನಡದಲ್ಲಿ ನಾಮಪದಗಳನ್ನು ಬೇರೆ ನಾಮಪದಗಳಿಗೆ ಯಾವುದಾದರೊಂದು ಪ್ರತ್ಯಯವನ್ನು ಸೇರಿಸುವುದರ ಮೂಲಕವೂ ತಯಾರಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ಗಾಣಿಗ ಎಂಬ ನಾಮಪದವನ್ನು ಗಾಣ ಎಂಬ ಬೇರೊಂದು ನಾಮ ಪದಕ್ಕೆ ಇಗ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ ಮತ್ತು ಮೂಗುತಿ ಎಂಬ ನಾಮಪದವನ್ನು ಮೂರು ಎಂಬ ಬೇರೊಂದು ನಾಮಪದಕ್ಕೆ ತಿ ಎಂಬ ಪ್ರತ್ಯಯವನ್ನು ಸೇರಿಸಿ ತಯಾರಿಸಲಾಗಿದೆ.

ಆದರೆ ಕನ್ನಡದಲ್ಲಿ ಈ ರೀತಿ ತಯಾರಿಸಲಾಗಿರುವ ನಾಮಪದಗಳ ಸಂಖ್ಯೆ ಜಾಸ್ತಿ ಇಲ್ಲ. ಸಾಮಾನ್ಯವಾಗಿ ನಾಮಪದಗಳನ್ನು ಬೇರೆ ನಾಮಪದಗಳೊಂದಿಗೆ ಇಲ್ಲವೇ ಕ್ರಿಯಾಪದ ಅಥವಾ ಗುಣಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ತಯಾರಿಸುವುದೇ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನ. ಉದಾಹರಣೆ ಗಾಗಿ, ಕೈ ಎಂಬ ನಾಮಪದವನ್ನು ಬಳಸಿ ಹಲವು ಒಳರಚನೆಯಿರುವ ನಾಮ ಪದಗಳನ್ನು ತಯಾರಿಸಲಾಗಿದ್ದು, ಇವೆಲ್ಲವೂ ಜೋಡುಪದಗಳ ರೂಪದಲ್ಲಿರುವು ದನ್ನು ಗಮನಿಸಬಹುದು.

ಕೈಕೊಡಲಿ ಕೈಗೂಸು ಕೈಗನ್ನಡಿ ಕೈಚೀಲ ಕೈಗಾಡಿ ಕೈಚಳಕ ಕೈಗೆಲಸ ಕೈಪಿಡಿ ಕೈಗೂಲಿ ಕೈಬರಹ ಕೈಗಡ ಕೈಮಗ್ಗ, ಇತ್ಯಾದಿ

ನಾಮಪದಗಳಿಂದ ಬೇರೆ ನಾಮಪದಗಳನ್ನು ತಯಾರಿಸುವುದಕ್ಕಾಗಿ ಬಳಸುವ ಪ್ರತ್ಯಯಗಳು ಕೆಲವು ಕನ್ನಡದಲ್ಲಿ ಕಾಣಿಸುವುವಾದರೂ, ಅವುಗಳಲ್ಲಿ ಸಂಸ್ಕೃತ ದಿಂದ ಎರವಲಾಗಿ ಬಂದವುಗಳು ಇಲ್ಲವೇ ಸಂಸ್ಕೃತದ ಪ್ರತ್ಯಯಗಳ ಮಾದರಿ ಯಲ್ಲಿ ಸಿದ್ಧವಾದವುಗಳೇ ಜಾಸ್ತಿ. ಉದಾಹರಣೆಗಾಗಿ, ಸಂಸ್ಕೃತದ ಕೃ ‘ಮಾಡು’ ಎಂಬ ಕ್ರಿಯಾಪದದಿಂದ ಸಿದ್ಧವಾದ ಕಾರ ಎಂಬ ಪ್ರತ್ಯಯ (ಉದಾ: ಚಿತ್ರಕಾರ, ನಮಸ್ಕಾರ, ಬಲಾತ್ಕಾರ ಇತ್ಯಾದಿ) ಕನ್ನಡದಲ್ಲಿ ಗಾರ ಎಂಬ ಪ್ರತ್ಯಯವಾಗಿ ಹಲವು ನಾಮಪದಗಳಲ್ಲಿ ಕಾಣಿಸಿಕೊಳ್ಳುತ್ತದೆ. ಉದಾ:

ಬಳೆ ಬಳೆಗಾರ ಮೋಸ ಮೋಸಗಾರ
ಮಾಲೆ ಮಾಲೆಗಾರ ಮಾಟ ಮಾಟಗಾರ
ಕೊಲೆ ಕೊಲೆಗಾರ ಮಾತು ಮಾತುಗಾರ
ಜೊತೆ ಜೊತೆಗಾರ ಎದೆ ಎದೆಗಾರ
ಬಿಲ್ಲು ಬಿಲ್ಲುಗಾರ ಕಾವಲು ಕಾವಲುಗಾರ
ಮೀನು ಮೀನುಗಾರ ಹಾಸ್ಯ ಹಾಸ್ಯಗಾರ
ಸಾಲಿ ಸಾಲಿಗಾರ ಬೇಟೆ ಬೇಟೆಗಾರ
ಹೊಣೆ ಹೊಣೆಗಾರ

ಇದೇ ರೀತಿಯಲ್ಲಿ, ಮೇಲೆ ೪.೩.೧ರಲ್ಲಿ ವಿವರಿಸಿದ ಹಾಗೆ, ಸಂಸ್ಕೃತದ ಇಕೆ ಎಂಬ ಪ್ರತ್ಯಯದ ಮಾದರಿಯಲ್ಲಿ ಒಂದು ವ್ಯವಸಾಯ ಇಲ್ಲವೇ ಗುಣಧರ್ಮ ವನ್ನಾಧರಿಸಿ ವ್ಯಕ್ತಿಗಳನ್ನು ಹೆಸರಿಸುವ ನಾಮಪದಗಳಿಂದ ಆ ವ್ಯವಸಾಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವ ನಾಮಪದವನ್ನು ತಯಾರಿಸಲು ಕನ್ನಡದಲ್ಲಿ ಇಕೆ ಎಂಬ ಪ್ರತ್ಯಯದ ಬಳಕೆಯಾಗುತ್ತದೆ. ಕೊಲೆಗಾರಿಕೆ, ಬಿಲ್ಲುಗಾರಿಕೆ, ಮೊದಲಾದ ನಾಮಪದಗಳನ್ನು ಇದಕ್ಕೆ ಉದಾಹರಣೆಗಳನ್ನಾಗಿ ಕೊಡಬಹುದು.

ಕನ್ನಡದವೇ ಆದ ಕೆಲವು ಪದಗಳಲ್ಲಿ ಕಾಣಿಸುವ ಸ್ತ್ರೀ-ಪುರುಷ ಲಿಂಗಭೇದ ವನ್ನು ಸೂಚಿಸುವ ಇ ಮತ್ತು ಅ ಎಂಬೆರಡು ಪ್ರತ್ಯಯಗಳಿಗೂ (ಉದಾ: ಮುದುಕ-ಮುದುಕಿ) ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಬೇರೆ ಹಲವು ಪದಗಳಲ್ಲಿ ಕಾಣಿಸುವ ಇದೇ ರೂಪದ ಪ್ರತ್ಯಯಗಳು (ಉದಾ: ನಟ- ನಟಿ, ಲೇಖಕ-ಲೇಖಕಿ, ಶಿಕ್ಷಕ-ಶಿಕ್ಷಕಿ, ಇತ್ಯಾದಿ) ಮಾದರಿಯಾಗಿರಲು ಸಾಧ್ಯ ವಿದೆ. ಆದರೆ, ಉಕಾರದಲ್ಲಿ ಕೊನೆಗೊಳ್ಳುವ ಹಲವು ಗುಣಪದಗಳಿಂದಲೂ ವ್ಯವಸ್ಥಿತವಾಗಿ ಈ ಪ್ರತ್ಯಯಗಳನ್ನು ಬಳಸಿ ನಾಮಪದಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಮುಂದೆ ೪.೫ರಲ್ಲಿ ನೋಡಲಿರುವೆವು.

ಗಂಡು-ಹೆಣ್ಣು ಎಂಬ ಅರ್ಥಭೇದವನ್ನು ಸೂಚಿಸುವ ಬೇರೆಯೂ ಕೆಲವು ಪ್ರತ್ಯಯಗಳು ಕನ್ನಡದಲ್ಲಿವೆ. ಉದಾಹರಣೆಗಾಗಿ, ಮೇಲೆ ಕೊಟ್ಟಿರುವ ಗಾರ

ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ನಾಮಪದಗಳಲ್ಲಿ ಕೆಲವಕ್ಕೆ ತಿ ಎಂಬ ಪ್ರತ್ಯಯವನ್ನು ಸೇರಿಸಿ ಹೆಣ್ಣು ಎಂಬ ಅರ್ಥ ಬರುವಂತೆ ಮಾಡಲು ಸಾಧ್ಯವಿದೆ. ಉದಾ:

ಬಳೆಗಾರ ಬಳೆಗಾರ್ತಿ ಮಾಲೆಗಾರ ಮಾಲೆಗಾರ್ತಿ ಎದೆಗಾರ ಎದೆಗಾರ್ತಿ ಜೊತೆಗಾರ ಜೊತೆಗಾರ್ತಿ

ವಸ್ತು, ವಿಷಯ, ಸ್ಥಳ ಮೊದಲಾದುವನ್ನು ಗುರುತಿಸುವ ನಾಮಪದಗಳಿಗೆ ಇಗ ಪ್ರತ್ಯಯವನ್ನು ಸೇರಿಸಿ, ಆ ವಸ್ತು, ವಿಷಯ, ಸ್ಥಳ ಮೊದಲಾದುವಕ್ಕೆ ಸಂಬಂಧಿಸಿರುವ ವ್ಯಕ್ತಿಗಳನ್ನು ಗುರುತಿಸುವ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಉದಾ:

ಕನ್ನಡ ಕನ್ನಡಿಗ ಒಕ್ಕಲು ಒಕ್ಕಲಿಗ
ಸಾಲಿ ಸಾಲಿಗ ಪಟ್ಟಣ ಪಟ್ಟಣಿಗ
ಗಾಣ ಗಾಣಿಗ ಹೆಣ್ಣು ಹೆಣ್ಣಿಗ
ದಾರಿ ದಾರಿಗ ಲೆಕ್ಕ ಲೆಕ್ಕಿಗ

ಇಂತಹದೇ ಅರ್ಥವನ್ನು ಕೊಡುವುದಕ್ಕಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಇಕ ಎಂಬ ಒಂದು ಪ್ರತ್ಯಯ ಕಾಣಿಸುತ್ತದೆ (ಉದಾ: ಧನ-ಧನಿಕ, ರಸ-ರಸಿಕ, ಪೂರ್ವ-ಪೂರ್ವಿಕ, ಲೋಕ-ಲೌಕಿಕ, ಇತ್ಯಾದಿ). ಕನ್ನಡದ ಇಗ ಪ್ರತ್ಯಯ ಸಂಸ್ಕೃತದ ಈ ಇಕ ಪ್ರತ್ಯಯದ ಮಾದರಿ ಯಲ್ಲಿ ತಯಾರಾಗಿರುವ ಹಾಗೆ ಕಾಣಿಸುತ್ತದೆ.

ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವ ನಾಮಪದಗಳಿಗೆ ತನ ಎಂಬ ಪ್ರತ್ಯಯವನ್ನು ಸೇರಿಸಿ, ಅಂತಹ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವಭಾವವನ್ನು ಗುರುತಿಸುವ ನಾಮಪದಗಳನ್ನು ತಯಾರಿಸಬಹುದು. ಉದಾ:

ನಂಟ ನಂಟತನ ದಡ್ಡ ದಡ್ಡತನ
ತುಂಟ ತುಂಟತನ ಗೆಳೆ(ಯ) ಗೆಳೆತನ
ಜಾಣ ಜಾಣತನ ಮನೆ ಮನೆತನ

ಈ ತನ ಎಂಬ ಪ್ರತ್ಯಯ ಗುಣಪದಗಳೊಂದಿಗೂ ಬರಬಲ್ಲುದೆಂಬುದನ್ನು ಮುಂದೆ ೪.೫ರಲ್ಲಿ ನೋಡಲಿರುವೆವು.

ಇದಲ್ಲದೆ, ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸುವಂತಹ ಬೇರೆ ಕೆಲವು ಪ್ರತ್ಯಯಗಳೂ ಕನ್ನಡದಲ್ಲಿವೆ. ಇವುಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಕಾಣಬಹುದು.

೧. ನೆಲ
ತಡ
ಕೊಕ್ಕು
ಮುಳ್ಳು
ನೆಲೆ
ತಡೆ
ಕೊಕ್ಕೆ
ಮೊಳೆ
೨. ಇತಿ ಬೀಗ ಬೀಗಿತಿ
೩. ಳು ಮಗ ಮಗಳು
೪. ತಿ ಮೂಗು ಮೂಗುತಿ
೫. ಡು ಕಿವಿ ಕಿವುಡು
೬. ಅಲು ಗಂಟು ಗಂಟಲು
೭. ವು ಗಡಿ ಗಡುವು

Eke →

೪.೫ ಗುಣಪದಗಳಿಂದ ತಯಾರಾದ ನಾಮಪದಗಳು

ಗುಣಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕವೂ ಕನ್ನಡದಲ್ಲಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಇದಲ್ಲದೆ ಕೆಲವು ಗುಣಪದಗಳು ಪ್ರತ್ಯಯಗಳ ಸಹಾಯವಿಲ್ಲದೆ ಹಾಗೆಯೇ ನೇರವಾಗಿ ನಾಮಪದಗಳಾಗಿಯೂ ಬರ ಬಲ್ಲುವು. (ಇಂತಹ ಗುಣಪದಗಳಿಗೆ ಒಂದು ‘ಸೊನ್ನೆ’ಪ್ರತ್ಯಯವನ್ನು ಸೇರಿಸ ಲಾಗಿದೆಯೆಂದೂ ಹೇಳಲು ಸಾಧ್ಯವಿದೆ).

೪.೫.೧ ನೇರವಾದ ಬಳಕೆ

ಕನ್ನಡದಲ್ಲಿ ಬರುವ ಗುಣಪದಗಳಲ್ಲಿ ಹಲವನ್ನು ಅವುಗಳಲ್ಲಿ ಯಾವ ಬದಲಾ ವಣೆಯನ್ನೂ ಮಾಡದೆ ನೇರವಾಗಿ ನಾಮಪದಗಳ ಸ್ಥಾನದಲ್ಲಿ ಬಳಸಲು ಸಾಧ್ಯ ವಿದೆ. ಉದಾಹರಣೆಗಾಗಿ, ಕೆಂಪು ಎಂಬ ಪದ ಗುಣಪದವಾಗಿಯೂ ಬಳಕೆಯಾಗ ಬಲ್ಲುದು ಮತ್ತು ನಾಮಪದವಾಗಿಯೂ ಬಳಕೆಯಾಗಬಲ್ಲುದು. ಉದಾ:

(೩ಕ) ಈ ಗೋಡೆಗೆ ಕೆಂಪು ಬಣ್ಣ ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು. (೩ಖ) ಈ ಗೋಡೆಗೆ ಕೆಂಪು ಹಾಕಿದ್ದು ಸ್ವಲ್ಪ ಜಾಸ್ತಿಯಾಯಿತು.

(೩ಕ)ದಲ್ಲಿ ಕೆಂಪು ಎಂಬುದು ಗುಣಪದವಾಗಿ ಬಂದಿದೆ ಮತ್ತು (೩ಖ)ದಲ್ಲಿ ಅದೇ ಪದ ಯಾವ ಬದಲಾವಣೆಯೂ ಇಲ್ಲದೆ ನಾಮಪದವಾಗಿ ಬಂದಿದೆ.

ಈ ರೀತಿ ಗುಣಧರ್ಮವನ್ನು ಹೆಸರಿಸುವ ಬದಲು ಅಂತಹ ಗುಣಧರ್ಮ ವನ್ನೊಳಗೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿಯೂ ಕೆಲವು ಗುಣಪದಗಳು ಪ್ರತ್ಯಯಗಳ ಸಹಾಯವಿಲ್ಲದೆ ನಾಮಪದಗಳಾಗಿ ಬರ ಬಲ್ಲುವು. ಉದಾ:

(೪ಕ) ಪಾರ್ವತಮ್ಮನವರು ಇವತ್ತು ಒಂದು ಸಿಹಿ ತಿಂಡಿ ಮಾಡಿದ್ದರೆ. (೪ಖ) ಪಾರ್ವತಮ್ಮನವರು ಇವತ್ತು ಒಂದು ಸಿಹಿ ಮಾಡಿದ್ದಾರೆ.

(೪ಕ)ದಲ್ಲಿ ಸಿಹಿ ಎಂಬುದು ಒಂದು ಗುಣಪದವಾಗಿ ಬಂದಿದೆ ಮತ್ತು (೪ಖ) ದಲ್ಲಿ ಅದೇ ಪದ ಒಂದು ನಾಮಪದವಾಗಿ ಬಂದಿದೆ. ಆದರೆ ಈ ಎರಡನೆಯ ಬಳಕೆಯಲ್ಲಿ ಅದು ಸಿಹಿ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಹೆಸರಿಸುವ ಬದಲು ಅಂತಹ ಗುಣಧರ್ಮವನ್ನು ಪಡೆದಿರುವ ಒಂದು ವಸ್ತುವನ್ನು (ಸಿಹಿಯಾಗಿರುವ ತಿಂಡಿಯನ್ನು) ಹೆಸರಿಸುತ್ತದೆ.

ಹುಳಿ, ಗಟ್ಟಿ, ದಡ್ಡ, ಜಾಣ ಮೊದಲಾದ ಗುಣಪದಗಳೂ ಇದೇ ರೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲದೆ ನಾಮಪದಗಳಾಗಿ ಗುಣಧರ್ಮ ವನ್ನು ಪಡೆದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸಲು ಬರಬಲ್ಲುವು.

ಗುಣಪದಗಳನ್ನು ಅವುಗಳ ಅರ್ಥದ ಆಧಾರದ ಮೇಲೆ ಅಳತೆ, ಪ್ರಾಯ, ಬೆಲೆ, ಬಣ್ಣ, ಭೌತಿಕ ಗುಣಧರ್ಮ, ಮಾನವೀಯ ಗುಣಧರ್ಮ ಮತ್ತು ವೇಗ ಎಂಬುದಾಗಿ ಬೇರೆ ಬೇರೆ ಉಪವರ್ಗಗಳಲ್ಲಿ ವಿಂಗಡಿಸಲು ಸಾಧ್ಯವಿದ್ದು, ಇವುಗಳಲ್ಲಿ ಮೊದಲನೆಯ ನಾಲ್ಕು ಉಪವರ್ಗಗಳಲ್ಲಿ ಬರುವ ಪದಗಳು ಮಾದರಿ ಗುಣಪದಗಳಾಗಿರುತ್ತವೆ. ಉಳಿದ ಪದಗಳು ಕೆಲವು ವಿಷಯಗಳಲ್ಲಿ ಗುಣಪದಗಳ ಹಾಗಿದ್ದರೆ, ಬೇರೆ ಕೆಲವು ವಿಷಯಗಳಲ್ಲಿ ನಾಮಪದಗಳ ಹಾಗಿರುತ್ತವೆ. ಸಾಮಾನ್ಯವಾಗಿ ನಾಮಪದ ಮತ್ತು ಗುಣಪದಗಳೆಂಬ ಎರಡೂ ವರ್ಗಗಳಲ್ಲಿ ಬರುವ ಪದಗಳು ಇಂತಹವು.

ಮಾದರಿ ಗುಣಪದಗಳನ್ನು ನಾಮಪದಗಳಾಗಿ ಬಳಸಬೇಕಿದ್ದಲ್ಲಿ ಅವುಗಳಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಇಲ್ಲವೇ ಬೇರೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಉದಾಹರಣೆಗಾಗಿ, ವ್ಯಕ್ತಿ, ಪ್ರಾಣಿ, ವಸ್ತು ಮೊದಲಾದವುಗಳ ಅಳತೆ ಇಲ್ಲವೇ ಪರಿಮಾಣವನ್ನು ಸೂಚಿಸುವ ಗುಣಪದಗಳನ್ನು ಉದ್ದ-ಗಿಡ್ಡ, ಎತ್ತರ-ತಗ್ಗು, ಅಗಲ-ಸಪುರ, ದಪ್ಪ-ತೆಳು, ಭಾರ-ಹಗುರ ಎಂಬಂತಹ ಬೇರೆ ಬೇರೆ ವಿರುದ್ಧಾರ್ಥದ ಜೋಡಿಗಳಾಗಿ ಸೇರಿಸಿ ಹೇಳಲು ಸಾಧ್ಯವಿದೆ.

ಇಂತಹ ಗುಣಪದಗಳ ಪ್ರತಿಯೊಂದು ಜೋಡಿಯಲ್ಲೂ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಗುಣಪದವನ್ನು ಮಾತ್ರ ನೇರವಾಗಿ ಒಂದು ನಾಮಪದದ ಸ್ಥಾನದಲ್ಲಿ ಬಳಸಲು ಸಾಧ್ಯವಿದೆ. ಇದಲ್ಲದೆ, ಆ ಎರಡು ಪದಗಳೂ ಒಟ್ಟಾಗಿ

ಸೂಚಿಸುವ ಅಳತೆಯನ್ನು ಈ ಒಂದೇ ಗುಣಪದ ಹೆಸರಿಸುತ್ತದೆ. ಉದಾಹರಣೆ ಗಾಗಿ ಕೆಳಗೆ ಕೊಟ್ಟಿರುವ (೫ಕ-ಗ) ವಾಕ್ಯಗಳನ್ನು ಗಮನಿಸಬಹುದು.

(ಆಕ) ಆ ಕೋಲು ಈ ಕೋಲಿಗಿಂತ ಉದ್ದ.

(೫೨) ಈ ಕೋಲು ಆ ಕೋಲಿಗಿಂತ ಗಿಡ್ಡ.

(೫ಗ) ಆ ಕೋಲಿನ ಉದ್ದ ನಾಲ್ಕಡಿ, ಮತ್ತು ಈ ಕೋಲಿನ ಉದ್ದ ಮೂರಡಿ.

ಮೇಲೆ (೫ಕ) ವಾಕ್ಯದಲ್ಲಿ ಆಖ್ಯಾತವಾಗಿ ಬಂದಿರುವ ಉದ್ದ ಎಂಬ ಗುಣಪದಕ್ಕೂ ಮತ್ತು (೫ಖ) ವಾಕ್ಯದಲ್ಲಿ ಬಂದಿರುವ ಗಿಡ್ಡ ಎಂಬ ಗುಣಪದಕ್ಕೂ ಪ್ರತಿಯಾಗಿ (೫ಗ) ವಾಕ್ಯದಲ್ಲಿ ಉದ್ದ ಎಂಬುದೇ ನಾಮಪದವಾಗಿ ಬಂದಿದೆಯೆಂಬುದನ್ನು ಗಮನಿಸಬಹುದು. ಕೋಲು ಉದ್ದ ಇದ್ದರೂ ಗಿಡ್ಡ ಇದ್ದರೂ ಅದರ ಅಳತೆಯನ್ನು ಸೂಚಿಸಲು ಉದ್ದ ಎಂಬ ಪದವನ್ನೇ ನಾಮಪದವಾಗಿ ಬಳಸಬೇಕಾಗುತ್ತದೆ.

ಇದೇ ರೀತಿಯಲ್ಲಿ ಎತ್ತರ ಮತ್ತು ತಗ್ಗು ಎಂಬ ಗುಣಪದಗಳು ಸೂಚಿಸುವ ಅಳತೆಯನ್ನು ಹೆಸರಿಸಲು ಎತ್ತರ ಎಂಬ ಪದವೇ ನಾಮಪದವಾಗಿ ಬಳಕೆ ಯಾಗುತ್ತದೆ, ಮತ್ತು ಅಗಲಿ ಹಾಗೂ ಸಪುರ ಎಂಬ ಗುಣಪದಗಳು ಸೂಚಿಸುವ ಅಳತೆಯನ್ನು ಹೆಸರಿಸಲು ಅಗಲಿ ಎಂಬುದೇ ನಾಮಪದವಾಗಿ ಬಳಕೆಯಾಗುತ್ತದೆ. ಮೇಲೆ ಕೊಟ್ಟಿರುವ ಇತರ ಪದಗಳ ಬಳಕೆಯೂ ಇಂತಹದೇ ಎಂಬುದನ್ನು ಗಮನಿಸಬಹುದು.

೪.೫.೨ ಪ್ರತ್ಯಯಗಳ ಬಳಕೆ

ಕುರುಡು, ಕಿವುಡು, ಕುಳ್ಳು, ಹುಚ್ಚು ಮೊದಲಾದ ಮನುಷ್ಯರಲ್ಲಿ ಕಾಣಿಸುವ ಗುಣಧರ್ಮಗಳನ್ನು (ಅದರಲ್ಲೂ ಪ್ರಾಮುಖ್ಯವಾಗಿ ಕೊರತೆಗಳನ್ನು) ಸೂಚಿಸುವ ಕೆಲವು ಗುಣಪದಗಳು ಸಾಮಾನ್ಯವಾಗಿ ಉಕಾರದಲ್ಲಿ ಕೊನೆಗೊಳ್ಳುತ್ತವೆ. ಇಂತಹ ಗುಣಪದಗಳಿಗೆ ಅ ‘ಗಂಡಸು’ ಮತ್ತು ಇ ‘ಹೆಂಗಸು’ ಎಂಬ ಪ್ರತ್ಯಯಗಳ ಲ್ಲೊಂದನ್ನು ಸೇರಿಸಿ ನಾಮಪದಗಳನ್ನು ತಯಾರಿಸಲು ಸಾಧ್ಯವಿದೆ. ಈ ಪ್ರತ್ಯಯಗಳನ್ನು ಸೇರಿಸಿದಾಗ ಗುಣಪದಗಳ ಕೊನೆಯ ಉಕಾರ ಬಿದ್ದು ಹೋಗು ತ್ತದೆ. ಉದಾ:

ಗುಣಪದ ನಾಮಪದಗಳು
ಗಂಡಸು ಹೆಂಗಸು
ಕುರುಡು ಕುರುಡ ಕುರುಡಿ
ಕಿವುಡು ಕಿವುಡ ಕಿವುಡಿ
ಕುಂಟು ಕುಂಟ ಕುಂಟಿ
ಕುಳ್ಳು ಕುಳ್ಳ ಕುಳ್ಳಿ
ಮರುಳು ಮರುಳ ಮರುಳಿ
ಹುಚ್ಚು ಹುಚ್ಚ ಹುಚ್ಚಿ
ತುಂಟು ತುಂಟ ತುಂಟಿ
ಬೆಲುವು ಬೆಲುವ ಬೆಲುವಿ
ಹೆಡ್ಡು ಹೆಡ್ಡ ಹೆಡ್ಡಿ

ಇಂತಹ ಗುಣಪದಗಳಲ್ಲಿ ಕೆಲವು (ಉದಾ: ಕುರುಡು, ಕಿವುಡು) ಪ್ರತ್ಯಯಗಳ ಸಹಾಯವಿಲ್ಲದೆಯೂ ನಾಮಪದಗಳಾಗಿ ಬರಬಲ್ಲುವಾಗಿದ್ದು, ಅಂತಹ ಬಳಕೆ ಯಲ್ಲಿ ಅವಕ್ಕೆ ಗುಣಧರ್ಮವಿರುವವರನ್ನು ಹೆಸರಿಸುವ ಬದಲು ಗುಣಧರ್ಮ ವನ್ನೇ ಹೆಸರಿಸುವ ಅರ್ಥವಿರುತ್ತದೆ.

(ಟಕ) ಅವನದು ಕುರುಡು ಬುದ್ಧಿ.

(ಟವಿ) ಅವನ ಕಿವುದಿಗೆ ಮದ್ದಿಲ್ಲ.

ಕೆಲವು ಗುಣಪದಗಳಿಗೆ ತನ ಎಂಬ ಪ್ರತ್ಯಯವನ್ನು ಸೇರಿಸಿ, ಅವು ಸೂಚಿಸುವ ಗುಣಧರ್ಮವನ್ನು ಹೆಸರಿಸಲು ಸಾಧ್ಯವಿದೆ. ಉದಾ:

ಬಳ್ಳೆ ಬಳ್ಳೆತನ ದೊಡ್ಡ ದೊಡ್ಡತನ
ಬಡ ಬಡತನ ಹೊಸ ಹೊಸತನ
ಮುದಿ ಮುದಿತನ ಹಿರಿ ಹಿರಿತನ
ಎಳೆ ಎಳೆತನ ಮಂಕು ಮಂಕುತನ

ಈ ಪ್ರತ್ಯಯ ಪದಪ್ರತ್ಯಯವೇ ಅಥವಾ ಪದರೂಪ ಪ್ರತ್ಯಯವೇ (ಎಂದರೆ ಈ ಪ್ರತ್ಯಯವಿರುವ ಪದಗಳು ನಾಮಪದಗಳೇ ಅಥವಾ ಗುಣಪದಗಳ ಪದ ರೂಪಗಳೇ) ಎಂಬ ವಿಷಯದಲ್ಲಿ ಸಂದೇಹವಿದೆ. ಈ ಪ್ರತ್ಯಯ ಎಲ್ಲಾ ರೀತಿಯ ಗುಣಪದಗಳೊಂದಿಗೂ ಬಾರದಿರುವುದು ಇದನ್ನು ಪದಪ್ರತ್ಯಯವೆಂದು ಹೇಳಲು ಆಧಾರವಾಗಬಲ್ಲುದು. ಉದಾಹರಣೆಗಾಗಿ, ಕಪ್ಪು ಇಲ್ಲವೇ ಕೆಂಪು ಎಂಬ ಗುಣಪದದೊಂದಿಗೆ ಈ ಪ್ರತ್ಯಯ ಬರಲಾರದು.

ಆದರೆ ಇದು ಬರುವಲ್ಲೆಲ್ಲ ನಿಯಮಿತವಾಗಿ ಒಂದು ಗುಣಧರ್ಮವನ್ನೇ ಸೂಚಿಸುವ ಕಾರಣ, ಇದು ವರ್ಣಿಸುವ ವಿಧಾನದ ಮೂಲಕ (೩.೧ ನೋಡಿ) ಆ ಗುಣಧರ್ಮವನ್ನು ಗುರುತಿಸುವುದೆಂದು ಹೇಳಲು ಸಾಧ್ಯವಿದೆ. ಈ ವಿಷಯದ ಆಧಾರದ ಮೇಲೆ ಅದನ್ನು ಗುಣಪದದ ಪದರೂಪವೆಂದೂ ಹೇಳಲು ಸಾಧ್ಯವಿದೆ.

ಒಂದೆರಡು ನಾಮಪದಗಳಲ್ಲಿ ಮಾತ್ರವೇ ಕಾಣಿಸುವ ಬೇರೆ ಕೆಲವು ಪ್ರತ್ಯಯ ಗಳೂ ಕನ್ನಡದಲ್ಲಿ ಗುಣಪದಗಳಿಂದ ನಾಮಪದಗಳನ್ನು ತಯಾರಿಸಲು ಬಳಕೆ ಯಲ್ಲಿವೆ. ಇಂತಹ ಪದಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ.

ಪ್ರತ್ಯಯ ಗುಣಪದ ನಾಮಪದ
೧. ಹೊಸ
ಹಳೆ
ಹೊಸಬ
ಹಳಬ
೨. ತು ಹೊಸ
ಹಳೆ
ಎಳೆ
ಹೊಸತು
ಹಳತು
ಎಳತು
೩. ಪು ಬಿಳಿ
ತೆಳು
ಮುದಿ
ಬಿಳುಪು
ತೇಳುಪು
ಮುಪ್ಪು
೪. ಮೆ ಹಿರಿ
ಜಾಣ
ಹೆಮ್ಮೆ
ಜಾಣ್ಮೆ
೫. ಗಟ್ಟಿ ಗಟ್ಟಿಗ
೬. ಮುದಿ ಮುದುಕ
೭. ಕೆ ತುರಿ ತುರಿಕೆ
೮. ಅಡ್ಡ ಅಡ್ಡಿ
೯. ಸೆ ಹುಳಿ ಹುಣಿಸೆ

೪. ಸಾರಾಂಶ

ಪ್ರತ್ಯಯಗಳನ್ನು ಬಳಸಿ ತಯಾರಿಸಿದ ನಾಮಪದಗಳು ಕನ್ನಡದಲ್ಲಿ ಜಾಸ್ತಿ ಇಲ್ಲ. ಪದಗಳಿಗೆ ಪ್ರತ್ಯಯಗಳನ್ನು ಸೇರಿಸುವುದಕ್ಕಿಂತಲೂ ಬೇರೆ ಪದಗಳನ್ನೇ ಸೇರಿಸಿ ಜೋಡುಪದಗಳನ್ನು ತಯಾರಿಸುವುದೇ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿರುವ ವಿಧಾನ. ಇದಲ್ಲದೆ, ಪ್ರತ್ಯಯಗಳನ್ನು ಬಳಸುವಲ್ಲೂ ಒಂದು ಪದಕ್ಕೆ ಒಂದಕ್ಕಿಂತ ಜಾಸ್ತಿ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ಪದಗಳು ಕನ್ನಡದಲ್ಲಿ ಬಹಳ ಕಡಿಮೆ.

ಪ್ರತ್ಯಯಗಳನ್ನು ಬಳಸಿ ತಯಾರಿಸಿದ ನಾಮಪದಗಳಲ್ಲಿ ಕ್ರಿಯಾಪದಕ್ಕೆ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ನಾಮಪದಗಳೇ ಕನ್ನಡದಲ್ಲಿ ಜಾಸ್ತಿ. ಇಂತಹ ನಾಮಪದಗಳಲ್ಲಿ ಕಾಣಿಸುವ ಪ್ರತ್ಯಯಗಳಲ್ಲಿ ಇಕೆ-ಇಗೆ ಎಂಬುದೇ ಪ್ರಾಮುಖ್ಯ ವಾದುದು. ನಾಮಪದ ಮತ್ತು ಗುಣಪದಗಳಿಗೆ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ನಾಮಪದಗಳು ಕೆಲವು ಕನ್ನಡದಲ್ಲಿ ಕಾಣಿಸುವುವಾದರೂ ಇಂತಹ ಪದಗಳ ಸಂಖ್ಯೆ ಬಹಳ ಕಡಿಮೆ. ಇದಲ್ಲದೆ, ನಾಮಪದಗಳೊಂದಿಗೆ ಬರುವ ಪದ

ಪ್ರತ್ಯಯಗಳಲ್ಲಿ ಹೆಚ್ಚಿನವೂ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಪ್ರತ್ಯಯಗಳ ಮಾದರಿಯಲ್ಲಿ ತಯಾರಾದವುಗಳ ಹಾಗಿವೆ.