← Ch 4  ·  Contents  ·  Ch 6 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9

ಅಧ್ಯಾಯ ಐದು ಜೋಡುಪದಗಳು

Eke →

೫.೧ ಗೊಂದಲವನ್ನು ಹೋಗಲಾಡಿಸುವುದು

ಕೇಶಿರಾಜನ ಕಾಲದಿಂದಲೂ ಕನ್ನಡ ವ್ಯಾಕರಣಗಳಲ್ಲಿ ಸಮಾಸಗಳ ವರ್ಣನೆ ಯೆಂಬುದು ಒಂದು ದೊಡ್ಡ ಗೋಜಲುಮಯ ವಿಷಯವಾಗಿದೆ. ಸಂಸ್ಕೃತ ಸಮಾಸಗಳ ಪರಿಶೀಲನೆಯ ಮೂಲಕ ಕನ್ನಡ ಸಮಾಸಗಳನ್ನು ವಿವರಿಸಲು ಯತ್ನಿಸಿರುವುದು ಇದಕ್ಕೆ ಒಂದು ಕಾರಣವಾದರೆ, ಜೋಡುಪದಗಳಿಗೂ ಮತ್ತು ಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳದಿರು ವುದು ಇನ್ನೊಂದು ಕಾರಣ. ನಾವು ಪರಿಶೀಲಿಸಬೇಕಾದ ವಸ್ತು ಯಾವುದು ಎಂಬುದನ್ನೇ ಸರಿಯಾಗಿ ತಿಳಿದುಕೊಳ್ಳದೆ ಸ್ಪಷ್ಟವಾಗಿ ಅರ್ಥವಾಗುವಂತಹ ವರ್ಣನೆಯೊಂದನ್ನು ಕೊಡಲು ಸಾಧ್ಯವಿಲ್ಲ ತಾನೆ?

ಈ ಗೊಂದಲವನ್ನು ಹೋಗಲಾಡಿಸಲು ನಾವು ಮುಖ್ಯವಾಗಿ ಮಾಡ ಬೇಕಾದ ಕೆಲಸಗಳಿವು: ಹೊಸಗನ್ನಡದಲ್ಲಿ ಬರುವ ಸಮಾಸಗಳೆಂತಹವು ಎಂಬು ದನ್ನು ತಿಳಿಯಬೇಕಿದ್ದರೆ ನಾವು ಸಂಸ್ಕೃತದಲ್ಲಿ ಬರುವ ಸಮಾಸಗಳೆಂತಹವು ಎಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿದುಕೊಳ್ಳುವಲ್ಲಿ ಮಾತ್ರ ಸಂಸ್ಕೃತ ಸಮಾಸಗಳ ತಿಳುವಳಿಕೆ ಸಹಾಯಕವಾಗಬಲ್ಲುದಾದರೂ ಅಲ್ಲಿಯೂ ಅದು ಅತ್ಯವಶ್ಯವೇನಲ್ಲವೆಂಬುದನ್ನು ಮುಂದೆ (೮.೩.೭ರಲ್ಲಿ) ನೋಡ ಲಿರುವೆವು. ಹಾಗಾಗಿ, ಹೊಸಗನ್ನಡದಲ್ಲಿ ಬರುವ ಜೋಡುಪದಗಳ ಒಳರಚನೆ ಯನ್ನು ವರ್ಣಿಸುವಲ್ಲಿ ಸಂಸ್ಕೃತದ ಸಮಾಸಗಳನ್ನು ಗಮನಕ್ಕೆ ತೆಗೆದುಕೊಳ್ಳ ದಿರುವುದೇ ಒಳ್ಳೆಯದು.

ಇದೇ ರೀತಿಯಲ್ಲಿ, ಹಳೆಗನ್ನಡ ಇಲ್ಲವೇ ನಡುಗನ್ನಡದಲ್ಲಿ ಮಾತ್ರವೇ ಬಳಕೆ ಯಲ್ಲಿರುವಂತಹ ಜೋಡುಪದಗಳ ಒಳರಚನೆಯನ್ನೂ ಹೊಸಗನ್ನಡದಲ್ಲಿ ಬರುವ ಜೋಡುಪದಗಳನ್ನು ವರ್ಣಿಸುವವರು ಗಮನಕ್ಕೆ ತೆಗೆದುಕೊಳ್ಳಬೇಕಾಗಿಲ್ಲ. ಕನ್ನಡ

ಭಾಷೆಯಲ್ಲಿ ಬರುವ ಪದಗಳ ಚರಿತ್ರೆಯಂತಹದು ಎಂಬುದನ್ನು ತಿಳಿಯುಬೇಕೆಂದಿ ರುವವರು ಮಾತ್ರ ಈ ರೀತಿ ಹಳೆಗನ್ನಡ ಮತ್ತು ನಡುಗನ್ನಡ ಪದಗಳ ಒಳರಚನೆ ಯನ್ನು ತಿಳಿಯುವ ಅವಶ್ಯಕತೆಯಿದೆ.

ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ತತ್ಪುರುಷ, ಕರ್ಮಧಾರಯ, ದ್ವಿಗು, ದ್ವಂದ್ವ, ಬಹುವ್ರೀಹಿ ಮೊದಲಾದ ಪಾರಿಭಾಷಿಕ ಪದಗಳನ್ನೇ ಕನ್ನಡದ ಜೋಡುಪದಗಳನ್ನು (ಮತ್ತು ಅವುಗಳ ಒಳರಚನೆಯಲ್ಲಿ ಕಾಣಿಸುವ ‘ಸಮಾಸ’ ವೆಂಬ ಹೆಸರಿನ ವಿಧಾನವನ್ನು) ವರ್ಣಿಸುವುದಕ್ಕಾಗಿಯೂ ಬಳಸುವುದು ರೂಢಿ. ಆದರೆ ಈ ಪದಗಳು ನಮ್ಮೆದುರು ಸಂಸ್ಕೃತ ಸಮಾಸಗಳನ್ನೇ ತಂದಿರಿಸುವ ಕಾರಣ, ಅವನ್ನು ಬಳಸಿದಲ್ಲಿ ಕನ್ನಡ ಜೋಡುಪದಗಳ ವರ್ಣನೆಯಲ್ಲಿ ಸಂಸ್ಕೃತ ಸಮಾಸಗಳಿಂದಾಗಿರುವ ಗೊಂದಲವನ್ನು ಹೋಗಲಾಡಿಸಲು ಸಾಧ್ಯವಾಗದು.

ಹಾಗಾಗಿ, ಈ ಅಧ್ಯಾಯದಲ್ಲಿ ಕನ್ನಡದ ಜೋಡುಪದಗಳನ್ನು ನೇರವಾಗಿ ಕನ್ನಡದಲ್ಲಿ ಅವಕ್ಕಿರುವ ಒಳರಚನೆಯಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ವರ್ಣಿಸಲಾಗಿದೆ. ಹಳೆಗನ್ನಡ ಇಲ್ಲವೇ ನಡುಗನ್ನಡದಲ್ಲಿ ಮಾತ್ರವೇ ಕಾಣಿಸುವ ಜೋಡುಪದಗಳನ್ನು ಇಲ್ಲಿ ಗಮನಿಸಿಲ್ಲ. ಸಂಸ್ಕೃತದ ಸಮಾಸಗಳನ್ನೂ ಈ ವರ್ಣನೆಯಲ್ಲಿ ಪರಿಶೀಲಿಸಿಲ್ಲ. ಇದಲ್ಲದೆ, ಈ ವರ್ಣನೆಯಲ್ಲಿ ತತ್ಪುರುಷ, ಕರ್ಮಧಾರಯ ಮೊದಲಾದ ಸಂಸ್ಕೃತದ ಪಾರಿಭಾಷಿಕ ಪದಗಳನ್ನೂ ಬಳಸಿಲ್ಲ. ಕನ್ನಡದ ಜೋಡುಪದಗಳನ್ನು ನೇರವಾಗಿ ಆ ಪದಗಳ ಒಳರಚನೆಯಲ್ಲಿ ಬರುವ ಪದಗಳ ಸಂಖ್ಯೆ, ಪದವರ್ಗ, ಅವುಗಳ ನಡುವೆ ಕಾಣಿಸುವ ಸಂಬಂಧ ಮೊದ ಲಾದ ವಿಷಯಗಳನ್ನಾಧರಿಸಿ ವರ್ಣಿಸಲಾಗಿದೆ.

ಅನಂತರ ಬೇರೆಯೇ ಒಂದು ವಿಭಾಗದಲ್ಲಿ (೫.೮ರಲ್ಲಿ) ಇವತ್ತು ಕನ್ನಡದ ವ್ಯಾಕರಣ ಪುಸ್ತಕಗಳಲ್ಲಿ ಕಾಣಿಸುವ ಜೋಡುಪದಗಳ (ಮತ್ತು ಕನ್ನಡ ಸಮಾಸ ಗಳ) ವರ್ಣನೆಗಳು ಯಾಕೆ ಇಷ್ಟೊಂದು ತೊಡಕು ತೊಡಕಾಗಿವೆ ಮತ್ತು ಕನ್ನಡದ ಜೋಡುಪದಗಳನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ತಿಳಿಸಿಕೊಡುವಲ್ಲಿ ಅಸಮರ್ಥ ವಾಗಿವೆ ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಕನ್ನಡದ ಜೋಡುಪದಗಳ ವರ್ಣನೆಯಲ್ಲಿ ಸಂಸ್ಕೃತದ ತತ್ಪುರುಷ, ಕರ್ಮಧಾರಯ ಮೊದಲಾದ ಪಾರಿ ಭಾಷಿಕ ಪದಗಳ ಬಳಕೆ ಯಾಕೆ ಸಮಾಧಾನಕಾರಕವಲ್ಲ ಎಂಬುದನ್ನೂ ವಿವರಿಸ ಲಾಗಿದೆ.

Eke →

೫.೨ ಜೋಡುಪದಗಳು ಮತ್ತು ಪದಗುಚ್ಛಗಳು

ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಾಗಿ ಜೋಡಿಸಿ ಒಂದೇ ಪದವಾಗಿ ಮಾಡುವ ವಿಧಾನಕ್ಕೆ ಸಮಾಸವೆಂದೂ ಮತ್ತು ಅಂತಹ ವಿಧಾನದ ಮೂಲಕ ತಯಾರಾದ ಪದವನ್ನು ಜೋಡುಪದವೆಂದೂ ಕರೆಯಬಹುದು. ಉದಾಹರಣೆ ಗಾಗಿ, ಕೆಳದುಟಿ ಎಂಬುದು ಒಂದು ಜೋಡುಪದ. ಯಾಕೆಂದರೆ, ಇದರಲ್ಲಿ ಕೆಳಗೆ ಮತ್ತು ತುಟಿ ಎಂಬ ಎರಡು ಪದಗಳನ್ನು ಒಟ್ಟಾಗಿ ಜೋಡಿಸಿ ಬೇರೆಯೇ

ಒಂದು ಪದವನ್ನು ತಯಾರಿಸಲಾಗಿದೆ, ಮತ್ತು ಈ ಪದದ ಮೂಲಕ ಬಾಯಲ್ಲಿ ರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಹೆಸರಿಸಲಾಗಿದೆ. ಕನ್ನಡದಲ್ಲಿ ಸಾಮಾನ್ಯ ವಾಗಿ ಇಂತಹ ಪದಗಳಲ್ಲಿ ಎರಡು ಪದಗಳು ಮಾತ್ರವೇ ಸೇರಿರುತ್ತವೆಯಾದ ಕಾರಣ, ಜೋಡುಪದ ಎಂಬ ಈ ಹೆಸರು ಸೂಚಿಸಬಹುದಾದ ‘ಎರಡು’ ಎಂಬ ಅರ್ಥದಿಂದಲೂ ಕನ್ನಡದ ಮಟ್ಟಿಗೆ ತೊಂದರೆಯಾಗುವುದಿಲ್ಲ.

ಕನ್ನಡದಲ್ಲಿ ಯಾವ ರೀತಿಯ ಜೋಡುಪದಗಳೆಲ್ಲ ಬಳಕೆಯಲ್ಲಿವೆ ಮತ್ತು ಅವುಗಳ ಒಳರಚನೆಯಂತಹದು ಎಂಬುದನ್ನು ವಿವರಿಸಿ ಹೇಳುವುದೇ ಈ ಅಧ್ಯಾಯದ ಮುಖ್ಯ ಉದ್ದೇಶ. ಈ ಉದ್ದೇಶವನ್ನು ಸರಿಯಾಗಿ ನೆರವೇರಿಸುವು ದಕ್ಕಾಗಿ ಮೊದಲಿಗೆ ಜೋಡುಪದಗಳಿಗೂ ಮತ್ತು ಕೆಲವು ವಿಷಯಗಳಲ್ಲಿ ಅವುಗಳ ಹಾಗೆಯೇ ಕಾಣಿಸುವ ಪದಗುಚ್ಛಗಳಿಗೂ ನಡುವೆ ಎಂತಹ ವ್ಯತ್ಯಾಸ ಗಳಿವೆ ಎಂಬುದನ್ನು ತಿಳಿಯುವ ಅವಶ್ಯಕತೆಯಿದೆ. ಇದಲ್ಲದೆ, ಜೋಡುಪದ ಗಳಿಗೂ ಮತ್ತು ಹಿಂದಿನ (ನಾಲ್ಕನೇ) ಅಧ್ಯಾಯದಲ್ಲಿ ವಿವರಿಸಿರುವ ಪ್ರತ್ಯಯ ವಿರುವ ಪದಗಳಿಗೂ ನಡುವೆ ಎಂತಹ ವ್ಯತ್ಯಾಸವಿದೆಯೆಂಬುದನ್ನೂ ತಿಳಿದು ಕೊಳ್ಳುವ ಅವಶ್ಯಕತೆಯಿದೆ.

ಜೋಡುಪದ ಮತ್ತು ಪದಗುಚ್ಛಗಳ ನಡುವಿರುವ ವ್ಯತ್ಯಾಸವನ್ನು ತಿಳಿದು ಕೊಳ್ಳುವುದು ಕನ್ನಡದ ಮಟ್ಟಿಗೆ ಒಂದು ಪ್ರಾಮುಖ್ಯವಾದ ಕೆಲಸ. ಯಾಕೆಂದರೆ, ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ಈ ಎರಡು ರೀತಿಯ ವಾಕ್ಯಾಂಶಗಳ ನಡು ವಿರುವ ವ್ಯತ್ಯಾಸ ಅಸ್ಪಷ್ಟವಾಗಿಯೇ ಉಳಿದಿದೆ ಮಾತ್ರವಲ್ಲ, ಕೆಲವೆಡೆಗಳಲ್ಲಿ ಅವೆರಡೂ ಒಂದೇ ಎಂಬ ಭಾವನೆಯೂ ಬರುವಂತಿದೆ. ಉದಾಹರಣೆಗಾಗಿ, ಆ ಮನೆ, ಬಾಳೆಯ ಹಣ್ಣು, ಓದುವ ಹುಡುಗ ಮೊದಲಾದವುಗಳಲ್ಲಿ ಗಮಕ, ತತ್ಪುರುಷ ಮೊದಲಾದ ಸಮಾಸಗಳಿವೆಯೆಂಬುದಾಗಿ ಕನ್ನಡ ವ್ಯಾಕರಣಗಳಲ್ಲಿ ಬರೆದಿರುವುದನ್ನು ಕಾಣಬಹುದು.

ಆದರೆ ನಿಜಕ್ಕೂ ಆ ಮನೆ ಎಂಬುದರಲ್ಲಿ ಆ ಎಂಬ ನಿರ್ದೇಶಕ ಪದ ದೊಂದಿಗೆ ಮನೆ ಎಂಬ ನಾಮಪದವನ್ನು ಬಳಸಲಾಗಿದ್ದು, ಅದೊಂದು ಪದಗುಚ್ಛ ವಾಗಿದೆ. ಇದೇ ರೀತಿಯಲ್ಲಿ ಬಾಳೆಯ ಹಣ್ಣು ಎಂಬುದರಲ್ಲಿ ಎರಡು ನಾಮ ಪದಗಳನ್ನು ಅ ಎಂಬ ಪ್ರತ್ಯಯದ ಮೂಲಕ ಸಂಬಂಧಿಸಲಾಗಿದೆ, ಮತ್ತು ಓದುವ ಹುಡುಗ ಎಂಬುದರಲ್ಲಿ ಓದು ಎಂಬ ಕ್ರಿಯಾಪದವನ್ನು ಅದರ ಸಂಬಂಧಕ ಕ್ರಿಯಾರೂಪದ ಮೂಲಕ ಹುಡುಗ ಎಂಬ ನಾಮಪದದೊಂದಿಗೆ ಸಂಬಂಧಿಸಲಾಗಿದೆ. ಈ ಮೂರು ಕಡೆಗಳಲ್ಲೂ ಎರಡೆರಡು ಪದಗಳು ಬಂದಿದ್ದು, ಅವು ಪದಗುಚ್ಛಗಳಾಗಿ ಉಳಿದಿವೆಯಲ್ಲದೆ ಒಂದೇ ಪದವಾಗಿ ಒಟ್ಟು ಸೇರಿಲ್ಲ.

ಜೋಡುಪದಗಳು ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿ ಒಂದೇ ಪದವಾಗುವುದರ ಮೂಲಕ ಸಿದ್ಧವಾದ ಸಂಜ್ಞೆಗಳಲ್ಲದೆ ಪದಗುಚ್ಛಗಳಲ್ಲ. ಎರಡು ಅಥವಾ ಜಾಸ್ತಿ ಪದಗಳು ಒಟ್ಟಿಗೆ ಬಂದಿವೆಯಾದರೂ ಒಂದೇ ಸಂಜ್ಞೆ ಯಾಗದೆ ಬೇರೆ ಬೇರೆ ಸಂಜ್ಞೆಗಳಾಗಿ ಉಳಿದಿವೆಯಾದರೆ ಅದನ್ನು ಪದಗುಚ್ಛವೆನ್ನು

ತ್ತೇವೆ. ಜೋಡುಪದಗಳ ರಚನೆಯಲ್ಲಿ ಪದರಚನೆಯ ನಿಯಮಗಳು ಬರುತ್ತ ವಾದರೆ, ಪದಗುಚ್ಛಗಳ ರಚನೆಯಲ್ಲಿ ವಾಕ್ಯರಚನೆಯ ನಿಯಮಗಳು ಬರುತ್ತವೆ.

ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದವನ್ನು ಕೆಳಗಿನ ತುಟಿ ಎಂಬ ಪದಗುಚ್ಛದೊಂದಿಗೆ ಹೋಲಿಸಿ ನೋಡಬಹುದು. ಇವುಗಳಲ್ಲಿ ಮೊದಲನೆ ಯದನ್ನು ತಯಾರಿಸುವಲ್ಲಿ ಕೆಳಗೆ ಎಂಬ ಪದದ ಗಿಡ್ಡರೂಪವಾದ ಕೆಳ ಎಂಬು ದನ್ನು ಬಳಸಲಾಗಿದೆ ಮತ್ತು ತುಟಿ ಎಂಬ ಪದದಲ್ಲಿ ಮೊದಲಿಗೆ ಬರುವ ತಕಾರವನ್ನು ದಕಾರವಾಗಿ ಬದಲಾಯಿಸಲಾಗಿದೆ. ಕನ್ನಡದಲ್ಲಿ ಇವೆರಡೂ ಪದ ರಚನೆಯಲ್ಲಿ ಬರುವ ಬದಲಾವಣೆಯ ನಿಯಮಗಳು (೫.೭ ನೋಡಿ). ಇದಕ್ಕೆ ಬದಲು ಕೆಳಗಿನ ತುಟಿ ಎಂಬ ಪದಗುಚ್ಛದಲ್ಲಿ ಈ ಎರಡು ಪದಗಳು ಬದಲಾಗದೆ ಉಳಿದಿವೆ ಮಾತ್ರವಲ್ಲ, ಅವುಗಳಲ್ಲಿ ಒಂದನ್ನು ಇನ್ನೊಂದರೊಡನೆ ಸಂಬಂಧಿಸುವುದಕ್ಕಾಗಿ ಕೆಳಗೆ ಎಂಬ ಪದದೊಂದಿಗೆ ಅ ಎಂಬ ಪ್ರತ್ಯಯವನ್ನು ಬಳಸಲಾಗಿದೆ. ಇದು ವಾಕ್ಯರಚನೆಯ ನಿಯಮವಲ್ಲದೆ ಪದರಚನೆಯ ನಿಯಮ ವಲ್ಲ.

ಜೋಡುಪದ ಮತ್ತು ಪದಗುಚ್ಛಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಮೇಲೆ ಮೂರನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ (೩.೩.೩ ನೋಡಿ), ಒಂದು ನಾಮಪದಗುಚ್ಛದ ಅರ್ಥವೇನೆಂಬುದನ್ನು ನೇರವಾಗಿ ಅದರ ಒಳರಚನೆಯನ್ನು ಪರಿಶೀಲಿಸುವುದರ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಆದರೆ, ಒಂದು ಜೋಡುಪದದ ಅರ್ಥವನ್ನು ಈ ರೀತಿ ನೇರವಾಗಿ ಅದರ ಒಳರಚನೆಯ ಸಹಾಯದಿಂದ ತಿಳಿದುಕೊಳ್ಳಲು ಸಾಧ್ಯವಾಗದು. ಅಂತಹ ಪದ ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೇನು ಎಂಬುದನ್ನು ತಿಳಿಯುವುದರ ಮೂಲಕವೇನೇ ಅದರ ಅರ್ಥವೇನೆಂದು ಹೇಳಲು ಸಾಧ್ಯ. ಜೋಡುಪದಗಳ ಅರ್ಥವನ್ನು ಅವುಗಳ ಒಳರಚನೆಯಿಂದ ಊಹಿಸಲು ಸಾಧ್ಯವಿದೆಯಾದರೂ ಹೆಚ್ಚಿನ ಸಂದರ್ಭಗಳಲ್ಲೂ ಅಂತಹ ಊಹೆ ತಪ್ಪಾಗಲು ಸಾಧ್ಯವಿದೆ.

ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದದ ಒಳರಚನೆಯಲ್ಲಿ ಕೆಳಗಿನ ತುಟಿ ಎಂಬ ನಾಮಪದಗುಚ್ಛವನ್ನು ಕಾಣುವೆವಾದರೂ ‘ಕೆಳಗಿನ ತುಟಿ’ ಗಳೆಲ್ಲ ಕೆಳದುಟಿಗಳಾಗಿರಬೇಕಾಗಿಲ್ಲ. ಎರಡು ತುಟಿಗಳ ಒಂದು ಚಿತ್ರದಲ್ಲಿ ಕೆಳಗಿನದು ಕೆಳಗಿನ ತುಟಿಯಾಗಿದೆಯಾದರೂ ಕೆಳದುಟಿಯಾಗಿಲ್ಲದಿರಲು ಸಾಧ್ಯ ವಿದೆ. ಯಾಕೆಂದರೆ ಆ ಚಿತ್ರದಲ್ಲಿ ಒಂದರ ಕೆಳಗೆ ಒಂದಾಗಿ ಚಿತ್ರಿಸಿರುವ ತುಟಿಗಳೆರಡೂ ಮೇಲ್ದುಟಿಯ ಚಿತ್ರಗಳಾಗಿರಲು ಸಾಧ್ಯವಿದೆ. ಇದಲ್ಲದೆ, ಇನ್ನೊಂದು ಚಿತ್ರದಲ್ಲಿ ಕೆಳದುಟಿಯನ್ನು ಮೇಲೆ ಮತ್ತು ಮೇಲ್ದುಟಿಯನ್ನು ಅದರ ಕೆಳಗೆ ಚಿತ್ರಿಸಿರಲು ಸಾಧ್ಯವಿದೆಯಾದ ಕಾರಣ, ಅದರಲ್ಲಿ ‘ಮೇಲಿನ ತುಟಿ’ಯೇ ಕೆಳದುಟಿಯಾಗಿರಲು ಸಾಧ್ಯವಿದೆ.

ಕೆಳದುಟಿ ಎಂಬ ಪದ ಒಬ್ಬ ವ್ಯಕ್ತಿಯ (ಇಲ್ಲವೇ ಪ್ರಾಣಿಯ) ಮುಖ ದಲ್ಲಿರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಹೆಸರಿಸುತ್ತದೆ. ಇದು ಈ ಜೋಡು ಪದಕ್ಕೆ ನಮ್ಮ ಭಾಷೆಯಲ್ಲಿ ರೂಢವಾಗಿ ಬಂದಿರುವಂತಹ ಬಳಕೆ. ಈ ಬಳಕೆಯ ಪ್ರಕಾರ, ಮುಖದಲ್ಲಿ ಕೆಳಗಿರುವ ತುಟಿಯ ಗುಣಧರ್ಮಗಳು ಯಾವುವೋ ಅವುಗಳ ಆಧಾರದ ಮೇಲೆ ಮಾತ್ರ ಕೆಳದುಟಿ ಎಂಬ ಈ ಜೋಡುಪದದ ಅರ್ಥವನ್ನು ನಿರ್ಧರಿಸಿ ಹೇಳಬೇಕಾಗುತ್ತದೆ. ಆ ಪದದ ಒಳರಚನೆಯಲ್ಲಿ ಬರುವ ಕೆಳ ಮತ್ತು ತುಟಿ ಎಂಬ ಪದಗಳ ಅರ್ಥದಿಂದ ನೇರವಾಗಿ ಅದರ ಅರ್ಥವನ್ನು ಪಡೆಯಲು ಸಾಧ್ಯವಾಗದು.

ಜೋಡುಪದ ಮತ್ತು ಪದಗುಚ್ಛಗಳ ನಡುವೆ ಈ ರೀತಿ ಬಹಳ ಮುಖ್ಯವಾದ ಮತ್ತು ಸ್ಪಷ್ಟವಾದ ವ್ಯತ್ಯಾಸಗಳಿವೆಯಾದರೂ, ಕೆಲವೊಂದು ಸಂದರ್ಭಗಳಲ್ಲಿ ಅವುಗಳನ್ನು ಬೇರ್ಪಡಿಸಿ ಹೇಳುವುದು ಸ್ವಲ್ಪ ಕಷ್ಟವೆಂದೇ ತೋರಲು ಸಾಧ್ಯವಿದೆ. ಇದಕ್ಕೆ ಕಾರಣವೇನೆಂದರೆ, ನಮ್ಮೆದುರಿರುವ ಒಂದು ವಾಕ್ಯಾಂಶ ಜೋಡುಪದವೇ ಅಥವಾ ಪದಗುಚ್ಛವೇ ಎಂಬುದನ್ನು ಬರಿಯ ಆ ವಾಕ್ಯಾಂಶವನ್ನು ಮಾತ್ರ ನೋಡಿ ನಿರ್ಧರಿಸಲು ಬರುವುದಿಲ್ಲ. ವಾಕ್ಯದಲ್ಲಿ ಅದರ ಬಳಕೆಯಂತಹದು, ಅದನ್ನು ಬಳಸಿರುವ ವ್ಯಕ್ತಿಯ ಆಶಯವೇನು ಎಂಬುದನ್ನೂ ಗಮನಿಸಿಕೊಳ್ಳುವುದು ಅವಶ್ಯ. ಉದಾಹರಣೆಗಾಗಿ, ನಾವು ಮೇಲೆ ಮೂರನೇ ಅಧ್ಯಾಯದಲ್ಲಿ (೩.೪ರಲ್ಲಿ) ನೋಡಿರುವಂತೆ, ಬಿಸಿನೀರು ಎಂಬ ವಾಕ್ಯಾಂಶ ಕೆಲವೊಂದು ಸಂದರ್ಭಗಳಲ್ಲಿ (ಉದಾ: ಆಡುಗನು ಸ್ನಾನ ಮಾಡಬೇಕೆಂದಿರುವಾಗ) ಪದಗುಚ್ಛವಾಗಿಯೂ ಮತ್ತು ಬೇರೆ ಕೆಲವು ಸಂದರ್ಭಗಳಲ್ಲಿ (ಉದಾ: ಆಡುಗನು ಊಟಕ್ಕೆ ಕುಳಿತಿರುವಾಗ) ಜೋಡುಪದವಾಗಿಯೂ ಬಳಕೆಯಾಗಿರಲು ಸಾಧ್ಯವಿದೆ. ಮೊದಲನೆಯ ಬಳಕೆ ಯಲ್ಲಿ ಅದರ ಅರ್ಥವನ್ನು ಅದರ ಅಂಗಗಳಾಗಿರುವ ಬಿಸಿ ಮತ್ತು ನೀರು ಎಂಬ ಎರಡು ಪದಗಳ ಅರ್ಥದಿಂದ ಪಡೆಯಲು ಸಾಧ್ಯವಿದೆ, ಆದರೆ ಎರಡನೆಯ ಬಳಕೆಯಲ್ಲಿ ಇದು ಸಾಧ್ಯವಾಗದು.

ಆದರೆ ಇದು ಭಾಷೆಯ ಇತರ ಪದಗಳ ಇಲ್ಲವೇ ವಾಕ್ಯಾಂಶಗಳ ಬಳಕೆ ಯಲ್ಲೂ ಕಾಣಿಸುವ ವೈಶಿಷ್ಟ್ಯವಲ್ಲದೆ ಜೋಡುಪದಗಳ ಬಳಕೆಯಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಸಮಸ್ಯೆಯೇನಲ್ಲ. ಒಂದು ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗಿದೆ ಮತ್ತು ಹಾಗೆ ಬಳಸಿದ ವ್ಯಕ್ತಿಯ ಆಶಯವೇನು ಎಂಬುದನ್ನು ತಿಳಿಯದೆ ಆ ಪದದ ಅರ್ಥ ಇಂತಹದು ಎಂದು ಸ್ಪಷ್ಟವಾಗಿ ಹೇಳಲು ಹೆಚ್ಚಿನಡೆ ಗಳಲ್ಲೂ ಸಾಧ್ಯವಾಗದು. ಉದಾಹರಣೆಗಾಗಿ, ಕನ್ನಡದ ಹಲವು ಪದಗಳು (ಹುಟ್ಟು, ತಗ್ಗು, ದೂರು, ಸೊಲು, ಅಳು, ತಡೆ ಇತ್ಯಾದಿ) ನಾಮಪದಗಳೇ ಅಥವಾ ಕ್ರಿಯಾಪದಗಳೇ ಎಂಬುದನ್ನು ಅವುಗಳ ಬಳಕೆಯಿಂದ ಮಾತ್ರವೇ ನಿರ್ಧರಿಸಲು ಸಾಧ್ಯವಿದೆ.

(೧ಕ) ಅವನು ದೂರಿದ.

(೧ಖ) ಅವನ ದೂರು ಕೇಳಿಸಿತು.

(೧ಕ)ದಲ್ಲಿ ದೂರು ಎಂಬುದು ಕ್ರಿಯಾಪದವಾಗಿಯೂ ಮತ್ತು (೧ಖ)ದಲ್ಲಿ ನಾಮಪದವಾಗಿಯೂ ಬಂದಿರುವುದನ್ನು ಗಮನಿಸಬಹುದು. ಹೀಗಿದ್ದರೂ ನಾಮ ಪದ ಮತ್ತು ಕ್ರಿಯಾಪದಗಳ ನಡುವಿರುವ ವ್ಯತ್ಯಾಸ ಕನ್ನಡ ವ್ಯಾಕರಣದಲ್ಲಿ ಒಂದು ಪ್ರಾಮುಖ್ಯವಾದ ವ್ಯತ್ಯಾಸ ಎಂಬುದರಲ್ಲಿ ಸಂಶಯವಿಲ್ಲ.

ಪದಗಳ ಅರ್ಥವನ್ನು ನಿರ್ಧರಿಸುವಲ್ಲೂ ಇದೇ ರೀತಿಯಲ್ಲಿ ಬಳಕೆಯ ಸಂದರ್ಭ ಮತ್ತು ಬಳಸುವವನ ಆಶಯ ಎಂಬೆರಡು ವಿಷಯಗಳು ಪ್ರಾಮುಖ್ಯ ವಾದ ಪಾತ್ರವನ್ನು ವಹಿಸುತ್ತವೆ. ಭಾಷೆಯೊಂದರಲ್ಲಿ ಬರುವ ಪದಗಳಲ್ಲಿ ಹೆಚ್ಚಿನ ವಕ್ಕೂ ಒಂದಕ್ಕಿಂತ ಜಾಸ್ತಿ ಅರ್ಥಗಳಿದ್ದು, ಒಂದು ಬಳಕೆಯಲ್ಲಿ ಅವಕ್ಕೆ ಯಾವ ಅರ್ಥವನ್ನು ಕೊಡಬೇಕು ಎಂಬುದನ್ನು ಈ ಎರಡು ವಿಷಯಗಳ ಆಧಾರದ ಮೇಲೆ ಮಾತ್ರವೇ ನಿರ್ಧರಿಸಿ ಹೇಳಲು ಸಾಧ್ಯ,

ಉದಾಹರಣೆಗಾಗಿ, ಕರೆ ಎಂಬ ಪದಕೆ ‘ಬರಹೇಳು’ ಎಂಬ ಅರ್ಥವೂ ಇದೆ, ‘ಹಾಲನ್ನು ಹಿಂಡು’ ಎಂಬ ಅರ್ಥವೂ ಇದೆ. ಈ ಪದವನ್ನು ಒಬ್ಬ ವ್ಯಕ್ತಿ ಬಳಸಿರುವನಾದರೆ, ಅವನು ಅದನ್ನು ಯಾವ ಅರ್ಥದಲ್ಲಿ ಬಳಸಿರಬಹುದು ಎಂಬುದನ್ನು ಆ ವ್ಯಕ್ತಿಯ ಆಶಯ ಮತ್ತು ಅದನ್ನು ಬಳಸಿರುವ ಸಂದರ್ಭ - ಇವೆರಡರ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯ. ಪದಗಳಿಗೆ ಈ ರೀತಿ ಅರ್ಥಗಳು ಹಲವಿರುವುದು ಅಪರೂಪವೇನಲ್ಲ ಎಂಬುದು ಒಂದು ಅರ್ಥ ಕೋಶದ ಹಾಳೆಗಳನ್ನು ಮಗುಚಿ ನೋಡಿದರೆ ಸುಲಭವಾಗಿ ಮನದಟ್ಟಾಗ ಬಹುದು.

Eke →

೫.೩ ಜೋಡುಪದಗಳು ಮತ್ತು ಪ್ರತ್ಯಯವಿರುವ ಪದಗಳು

ಜೋಡುಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ವ್ಯತ್ಯಾಸವೂ ಕೆಲವು ವಿಷಯದಲ್ಲಿ ಮೇಲಿನ ವ್ಯತ್ಯಾಸದ ಹಾಗೆಯೇ ಅಸ್ಪಷ್ಟವಾಗಿದೆ. ಆದರೆ ಇದಕ್ಕೆ ಬೇರೆಯೇ ಒಂದು ಕಾರಣವಿದೆ. ಒಂದು ಪದಕ್ಕೆ ಒಂದು ಅಥವಾ ಜಾಸ್ತಿ ಪ್ರತ್ಯಯ ಗಳನ್ನು ಸೇರಿಸುವುದರ ಮೂಲಕ ಪ್ರತ್ಯಯವಿರುವ ಪದ ತಯಾರಾಗುತ್ತದೆ ಮತ್ತು ಎರಡು ಅಥವಾ ಜಾಸ್ತಿ ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡು ವುದರ ಮೂಲಕ ಜೋಡುಪದ ತಯಾರಾಗುತ್ತದೆ ಎಂಬುದಾಗಿ ಇವುಗಳ ನಡು ವಿರುವ ವ್ಯತ್ಯಾಸವೇನೋ ಸ್ಪಷ್ಟವಾಗಿದೆ, ಆದರೆ ಪದ ಮತ್ತು ಪ್ರತ್ಯಯಗಳ ನಡು ವಿರುವ ವ್ಯತ್ಯಾಸ ಅಷ್ಟೊಂದು ಸ್ಪಷ್ಟವಾದುದಲ್ಲ.

ಉದಾಹರಣೆಗಾಗಿ, ಹಿಂಗಾಲು ಎಂಬ ಪದದಲ್ಲಿರುವ ಹಿಂ ಎಂಬುದು ಹಿಂದು ಅಥವಾ ಹಿಂದೆ ಎಂಬುದರ ಗಿಡ್ಡರೂಪವೆಂದು ಹೇಳಿದಲ್ಲಿ ಅದೊಂದು ಪದವೆನಿಸುತ್ತದೆ. ಇದಕ್ಕೆ ಬದಲು ಅದು ಚಾರಿತ್ರಿಕವಾಗಿ ಮಾತ್ರ ಹಿಂದೆ ಎಂಬು ದಕ್ಕೆ ಸಂಬಂಧಿಸಿದೆ ಎಂದು ವಾದಿಸಿದಲ್ಲಿ ಅದೊಂದು ಪ್ರತ್ಯಯವೆನಿಸುತ್ತದೆ.

ಇದೇ ರೀತಿಯಲ್ಲಿ ಹೆಜ್ಜೆನು, ಕೆಂಗಣ್ಣು, ಇಬ್ಬದಿ ಮೊದಲಾದ ಪದಗಳಲ್ಲಿ ಕಾಣಿಸುವ ಹೆಜ್, ಕೆ, ಇಬ್ ಮೊದಲಾದ ಅಂಶಗಳು ಪದಗಳೇ ಅಥವಾ ಪ್ರತ್ಯಯಗಳೇ ಎಂಬ ವಿಷಯದಲ್ಲಿ ಅಭಿಪ್ರಾಯಭೇದಗಳು ಕಾಣಿಸಲು ಸಾಧ್ಯವಿದೆ.

ಪದ ಮತ್ತು ಪ್ರತ್ಯಯಗಳ ನಡುವಿರುವ ವ್ಯತ್ಯಾಸ ಈ ರೀತಿ ಅಸ್ಪಷ್ಟವಾಗಿ ಕಾಣಿಸಲು ಮತ್ತು ವಿವಾದಕ್ಕೆ ಎಡೆಮಾಡಿಕೊಡಲು ಮುಖ್ಯ ಕಾರಣವೇನೆಂದರೆ, ಚಾರಿತ್ರಿಕವಾಗಿ ಹೆಚ್ಚಿನ ಪ್ರತ್ಯಯಗಳೂ ಪದಗಳಿಂದ ಬೆಳೆದು ಬಂದವುಗಳು. ಮೊದಲಿಗೆ ಸ್ವತಂತ್ರವಾಗಿದ್ದ ಈ ಪದಗಳು ಕ್ರಮೇಣ ಗಿಡ್ಡವಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ ಮತ್ತು ಪ್ರತ್ಯಯಗಳಾಗಿ ಬದಲಾಗುತ್ತವೆ. ಸಾಮಾನ್ಯವಾಗಿ ಇಂತಹ ಪದಗಳು ಬೇರೆ ಸಂದರ್ಭಗಳಲ್ಲಿ ತಮ್ಮ ಉದ್ದರೂಪ ದಲ್ಲಿ ಬರುವುವಾದರೆ ಅವನ್ನು ಪ್ರತ್ಯಯಗಳೆಂದು ಹೇಳದೆ ಪದಗಳೆಂದು ಹೇಳು ವುದೇ ರೂಢಿ.

ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಇಸು ಎಂಬುದು ಒಂದು ಸ್ವತಂತ್ರ ಪದ (ಕ್ರಿಯಾಪದ)ವಾಗಿ ಬಳಕೆಯಲ್ಲಿತ್ತು. ಅದಕ್ಕಿದ್ದ ಅರ್ಥಗಳಲ್ಲಿ ‘ಅನುಮತಿಸು’ ಎಂಬುದೂ ಒಂದು ಎಂಬುದನ್ನು ಕಾಣಲಿಸದೆ, ಸೇರಿಸಿದರೆ ಮೊದಲಾದ ಬಳಕೆಗಳಿಂದ ತಿಳಿಯಬಹುದು. ನೇರವಾಗಿ ಬೇರೆ ಕ್ರಿಯಾಪದಗಳೊಂದಿಗೆ ಸೇರಿ ಕೂಡುಪದಗಳಾಗಿ ಬಂದಾಗಲೂ (ಉದಾ: ಮಾಡಿಸು, ಬರೆಸು, ತಿನ್ನಿಸು, ಇತ್ಯಾದಿ) ಇದಕ್ಕೆ ಈ ಅರ್ಥಕ್ಕೆ ಸಂಬಂಧಿಸಿದಂತಹ ಅರ್ಥವೇ ಬರುತ್ತದೆ. ಹಾಗಾಗಿ, ಹಳೆಗನ್ನಡದ ಮಟ್ಟಿಗೆ ಮಾಡಿಸು, ತಿನ್ನಿಸು ಮೊದಲಾದ ಕ್ರಿಯಾ ರೂಪಗಳಲ್ಲಿ ಬರುವ ಇಸು ಎಂಬುದನ್ನು ಒಂದು ಪ್ರತ್ಯಯವೆಂದು ಹೇಳುವ ಬದಲು ಕ್ರಿಯಾಪದವೆಂದು ಹೇಳುವುದೇ ಸರಿ.

ಆದರೆ, ಹೊಸಗನ್ನಡದಲ್ಲಿ ಇಸು (ಇಲ್ಲವೇ ಸು) ಎಂಬುದಕ್ಕೆ ಸ್ವತಂತ್ರ ಕ್ರಿಯಾಪದವಾಗಿ ಬಳಕೆಯಿಲ್ಲ. ಬೇರೆ ಕ್ರಿಯಾಪದಗಳೊಂದಿಗೆ ಬರೆಸು, ಕರೆಸು, ಮಾಡಿಸು ಮೊದಲಾದ ಕ್ರಿಯಾರೂಪಗಳಲ್ಲಿ ಮಾತ್ರವೇ ಅದು ಬರಬಲ್ಲುದು. ಹಾಗಾಗಿ, ಹೊಸಗನ್ನಡದ ಮಟ್ಟಿಗೆ ಅದೊಂದು ಪ್ರತ್ಯಯ ಮಾತ್ರ ಎಂದು ಹೇಳ ಬೇಕಾಗುತ್ತದೆ.

ಮೇಲೆ ಸೂಚಿಸಿದಂತೆ, ಚಾರಿತ್ರಿಕವಾಗಿ ಒಂದು ಪದದ ಅಂಶ ಇನ್ನೊಂದು ಪದದ ಗಿಡ್ಡರೂಪವಾಗಿದೆಯಾದರೂ ವರ್ತಮಾನ ಕಾಲದಲ್ಲಿ ಅವೆರಡರೊಳಗೆ ಯಾವ ಸಂಬಂಧವೂ ಇಲ್ಲ ಎಂಬುದಾಗಿಯೂ ವಾದಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ಮೇಲೆ ಮೊದಲನೆಯ ಅಧ್ಯಾಯದಲ್ಲಿ (೧.೧ರಲ್ಲಿ) ಸೂಚಿಸಿದಂತೆ, ಎಣ್ಣೆ ಎಂಬ ಪದದ ಎಣ್ ಎಂಬ ಅಂಶ ಚಾರಿತ್ರಿಕವಾಗಿ ಎಳ್ಳು ಎಂಬ ಪದಕ್ಕೆ ಸಂಬಂಧಿಸಿದೆ. ಆದರೆ ಕನ್ನಡದ ಆಧುನಿಕ ರೂಪದಲ್ಲಿ ಇವೆರಡಕ್ಕೆ ಸಂಬಂಧವನ್ನು ಕಲ್ಪಿಸಿ, ಎಣ್ಣೆ ಎಂಬುದು ಜೋಡುಪದ ಎಂದು ಹೇಳಲು ಸಾಧ್ಯವಾಗದು.

ಆದರೆ ಇಂತಹ ವಿವಾದವಿರುವ ಸಂದರ್ಭಗಳಲ್ಲೆಲ್ಲ ವೈಯಾಕರಣಿಗಳು ಯಾವುದಾದರೊಂದು ನಿರ್ಧಾರಕ್ಕೆ ಬರುವ ಅವಶ್ಯಕತೆಯಿದೆ. ಹಾಗಾಗಿ, ಅವರು ಅಂತಹ ಒಂದು ನಿರ್ಧಾರಕ್ಕೆ ಬಂದಾಗ, ಪದ ಮತ್ತು ಪ್ರತ್ಯಯಗಳ ನಡುವೆ ಕಾಣಿಸುವ ಈ ಅಸ್ಪಷ್ಟತೆ ಮಾಯವಾಗುತ್ತದೆ ಮತ್ತು ಅದರೊಂದಿಗೆ ಜೋಡು ಪದ ಮತ್ತು ಪ್ರತ್ಯಯವಿರುವ ಪದಗಳ ನಡುವಿರುವ ಅಸ್ಪಷ್ಟತೆಯೂ ಮಾಯ ವಾಗುತ್ತದೆ.

ಜೋಡುಪದ ಮತ್ತು ಪ್ರತ್ಯಯವಿರುವ ಪದಗಳ ನಡುವೆ ಇನ್ನೊಂದು ರೀತಿಯ ಅಸ್ಪಷ್ಟತೆಯಿರುವುದನ್ನೂ ಇಲ್ಲಿ ಗಮನಿಸಬಹುದು. ಕೆಲವು ಜೋಡು ಪದಗಳ ಅಂಗಗಳಾಗಿ ಎರಡು ಅಥವಾ ಜಾಸ್ತಿ ಪದಗಳು ಮಾತ್ರವಲ್ಲದೆ ಒಂದು ಅಥವಾ ಜಾಸ್ತಿ ಪ್ರತ್ಯಯಗಳೂ ಬಂದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಕಸಬರಿಕೆ ಎಂಬ ಪದದಲ್ಲಿ ಕಸ ಮತ್ತು ಬರಿ(ದು) ಎಂಬ ಎರಡು ಪದಗಳು ಮಾತ್ರವಲ್ಲದೆ, ಕೆ ಎಂಬ ಪ್ರತ್ಯಯವೂ ಬಂದಿದೆ. ಹಾವಾಡಿಗ ಎಂಬ ಪದದಲ್ಲಿ ಹಾವು ಮತ್ತು ಆಡು ಎಂಬ ಎರಡು ಪದಗಳು ಮಾತ್ರವಲ್ಲದೆ ಇರ ಎಂಬ ಪ್ರತ್ಯಯವೂ ಸೇರಿಕೊಂಡಿದೆ.

ಇಂತಹ ಪದಗಳನ್ನು ಜೋಡುಪದಗಳೆಂದೂ ಹೇಳಬಹುದು ಇಲ್ಲವೇ ಪ್ರತ್ಯಯವಿರುವ ಪದಗಳೆಂದೂ ಹೇಳಬಹುದು. ಆದರೆ ಸಾಮಾನ್ಯವಾಗಿ ವ್ಯಾಕರಣ ಗಳಲ್ಲಿ ಈ ರೀತಿ ಒಂದಕ್ಕಿಂತ ಜಾಸ್ತಿ ಪದಗಳಿರುವವುಗಳನ್ನೆಲ್ಲ (ಅವುಗಳೊಂದಿಗೆ ಪ್ರತ್ಯಯಗಳು ಬಂದಿರಲಿ ಅಥವಾ ಬಾರದಿರಲಿ) ಜೋಡುಪದಗಳೆಂದೇ ಕರೆಯು ವುದು ರೂಢಿ.

Eke →

೫.೪ ಜೋಡುಪದಗಳ ಗುಣಧರ್ಮಗಳು

ಜೋಡುಪದಗಳ ಎರಡು ಮುಖ್ಯವಾದ ಗುಣಧರ್ಮಗಳನ್ನು ನಾವು ಮೇಲೆಯೇ ನೋಡಿರುವೆವು. ಪದರಚನೆಯ ನಿಯಮಗಳಿಗೆ ಅನುಸಾರವಾಗಿ ಎರಡು ಅಥವಾ ಜಾಸ್ತಿ ಪದಗಳು ಒಟ್ಟು ಸೇರಿ ಒಂದೇ ಪದವಾಗಿವೆ ಎಂಬುದು ಅವುಗಳ ಒಂದು ಗುಣಧರ್ಮ; ಮತ್ತು ಹೀಗೆ ತಯಾರಾದ ಪದಗಳ ಅರ್ಥವನ್ನು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ನಿರ್ಧರಿಸಲು ಸಾಧ್ಯ ಎಂಬುದು ಅವುಗಳ ಇನ್ನೊಂದು ಗುಣಧರ್ಮ. ಜೋಡು ಪದಗಳನ್ನು ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವುದಕ್ಕಾಗಿ ಬಳಸಬೇಕಾ ಗಿದೆಯಾದ ಕಾರಣ, ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಾಗುವುದಿಲ್ಲ.

ಈ ಎರಡು ಮುಖ್ಯವಾದ ಗುಣಧರ್ಮಗಳು ಮಾತ್ರವಲ್ಲದೆ ಬೇರೆಯೂ ಕೆಲವು ಗುಣಧರ್ಮಗಳನ್ನು ಜೋಡುಪದಗಳಲ್ಲಿ ಕಾಣಲು ಸಾಧ್ಯವಿದೆ. ಇಂತಹ ಗುಣಧರ್ಮಗಳೂ ಜೋಡುಪದಗಳನ್ನು ಪದಗುಚ್ಛಗಳಿಂದ ಬೇರ್ಪಡಿಸಲು ಸಹಾಯಕವಾಗಬಲ್ಲುವು. ಸಾಮಾನ್ಯವಾಗಿ, ಪದಗುಚ್ಛಗಳಲ್ಲಿ ಬರುವ ಪದಗಳು

ಬೇರೆ ಬೇರೆ ಸ್ವತಂತ್ರ ಪದಗಳಾಗಿರುತ್ತವಲ್ಲದೆ ಒಂದೇ ಪದವಾಗಿ ಒಟ್ಟು ಸೇರುವುದಿಲ್ಲ. ಹಾಗಾಗಿ, ಅವುಗಳ ನಡುವೆ ಬೇರೆ ಪದಗಳನ್ನು ಸೇರಿಸಿ ಹೇಳಲು ಸಾಧ್ಯವಿದೆ. ಆದರೆ ಜೋಡುಪದಗಳಲ್ಲಿ ಬರುವ ಪದಗಳು ಒಟ್ಟು ಸೇರಿ ಒಂದೇ ಪದವಾಗಿದ್ದು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿವೆ. ಹಾಗಾಗಿ ಅವುಗಳ ನಡುವೆ ಬೇರೆ ಪದಗಳನ್ನು ನುಗ್ಗಿಸಿ ಹೇಳಲು ಸಾಧ್ಯವಾಗದು.

ಉದಾಹರಣೆಗಾಗಿ, ಕೆಳಗಿನ ತುಟಿ ಎಂಬ ಪದಗುಚ್ಛದಲ್ಲಿ ಕೆಳಗಿನ ಮತ್ತು ತುಟಿ ಎಂಬ ಎರಡು ಸ್ವತಂತ್ರವಾದ ಪದಗಳು ಒಟ್ಟಿಗೆ ಬಂದಿವೆಯಾದರೂ ಬೇರೆ ಬೇರೆ ಪದಗಳಾಗಿ ಉಳಿದಿವೆ. ಹಾಗಾಗಿ, ಅವುಗಳ ನಡುವೆ ಕೆಂಪು, ಒಡೆದ ಮೊದಲಾದ ಬೇರೆ ಪದಗಳನ್ನು ಇರಿಸಿ, ಕೆಳಗಿನ ಕೆಂಪು ತುಟಿ, ಕೆಳಗಿನ ಒಡೆದ ತುಟಿ ಮೊದಲಾದ ಅವುಗಳಿಗಿಂತ ಜಾಸ್ತಿ ಉದ್ದವಾದ ಪದಗುಚ್ಛಗಳನ್ನು ತಯಾರಿಸಿ ಹೇಳಲು ಸಾಧ್ಯವಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಳದುಟಿ ಎಂಬ ಜೋಡುಪದದಲ್ಲಿ ಕೆಳ(ಗೆ) ಮತ್ತು ದುಟಿ (ತುಟಿ) ಎಂಬ ಎರಡು ಪದಗಳು ಸ್ವತಂತ್ರ ಪದಗಳಾಗಿ ಉಳಿದಿಲ್ಲ ಮತ್ತು ಈ ಕಾರಣಕ್ಕಾಗಿ, ಅವುಗಳ ನಡುವೆ ಬೇರೆ ಪದಗಳನ್ನಿರಿಸಲು ಸಾಧ್ಯವಾಗದು.

ಹೆಚ್ಚಿನ ಪದಗುಚ್ಛಗಳೂ ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುತ್ತವೆ. ಆದರೆ ಇದಕ್ಕೆ ಅಪವಾದವಾಗಿ ಕನ್ನಡದಲ್ಲಿ ಕೆಲವು ವಿಶಿಷ್ಟವಾದ ಪದಗುಚ್ಛಗಳು ಹೆಸರಿಸುವ ವಿಧಾನದಲ್ಲೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವಲ್ಲಿ ಬಳಕೆಯಾಗು ತ್ತವೆ ಎಂಬುದನ್ನು ನಾವು ಮೇಲೆ ಮೂರನೆಯ ಅಧ್ಯಾಯದಲ್ಲಿ (೩.೩.೭ರಲ್ಲಿ) ನೋಡಿರುವೆವು. ಈ ರೀತಿ ಹೆಸರಿಸುವ ವಿಧಾನದಲ್ಲಿ ಬಳಕೆಯಾಗಿರುವ ಪದ ಗುಚ್ಛಗಳ ನಡುವೆಯೂ ಬೇರೆ ಪದಗಳನ್ನು ಸೇರಿಸಲು ಸಾಧ್ಯವಾಗದು. ಉದಾ ಹರಣೆಗಾಗಿ, ಹೂವಿನ ಗಿಡ ಎಂಬುದು ಒಂದು ಪದಗುಚ್ಛವಾಗಿದೆಯಾದರೂ ಅದನ್ನು ಒಂದು ವಿಶಿಷ್ಟವಾದ ಗಿಡವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸುವುದಕ್ಕಾಗಿ ಬಳಸಲಾಗುತ್ತದೆ. ಹಾಗಾಗಿ, ಅದರಲ್ಲಿ ಬರುವ ಹೂವಿನ ಮತ್ತು ಗಿಡ ಎಂಬ ಎರಡು ಪದಗಳ ನಡುವೆ ಬೇರೆ ಪದಗಳನ್ನು (ಉದಾ: ದೊಡ್ಡ ಎಂಬುದನ್ನು) ಸೇರಿಸಿ ಹೇಳಲು (*ಹೂವಿನ ದೊಡ್ಡ ಗಿಡ ಎಂಬುದಾಗಿ ಹೇಳಲು) ಸಾಧ್ಯವಾಗದು.

ಆದರೆ ಇನ್ನೊಂದು ವಿಷಯದಲ್ಲಿ ಇಂತಹ ಹೆಸರಿಸುವ ಪದಗುಚ್ಛಗಳೂ ಜೋಡುಪದಗಳಿಂದ ಭಿನ್ನವಾಗಿವೆ. ಅವುಗಳಲ್ಲಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಗುಣಪದಗಳ ಸಹಾಯದಿಂದ ಬದಲಾಯಿಸಲು ಸಾಧ್ಯವಿದೆ, ಆದರೆ ಜೋಡುಪದಗಳಲ್ಲಿ ಬಂದಿರುವ ಪದಗಳ ಅರ್ಥವನ್ನು ಈ ರೀತಿ ಬೇರೆ ಬೇರಾಗಿ ಬದಲಾಯಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಹೂವಿನ ಗಿಡ ಎಂಬ ಪದಗುಚ್ಛಕ್ಕೆ ಬೇರೆ ಪದಗಳನ್ನು ಸೇರಿಸುವುದರ ಮೂಲಕ ಅದಲ್ಲಿ

ಬಂದಿರುವ ಎರಡು ಪದಗಳಲ್ಲಿ ಯಾವುದರ ಅರ್ಥವನ್ನು ಬೇಕಿದ್ದರೂ ಬದಲಾ ಯಿಸಲು ಸಾಧ್ಯವಿದೆ.

  1. (೨ಕ) ಕೆಂಪು ಹೂವಿನ ಗಿಡ
  2. (೨ಖ) ನಮ್ಮ ಹೂವಿನ ಗಿಡ
  3. (೨ಗ) ದೊಡ್ಡ ಹೂವಿನ ಗಿಡ

(೨ಕ)ದಲ್ಲಿ ಬಂದಿರುವ ಕೆಂಪು ಎಂಬ ಪದ ಹೂವಿನ ಗಿಡ ಎಂಬ ಪದಗುಚ್ಛದ ಮೊದಲನೆಯ ಪದದ ಅರ್ಥವನ್ನು ಹೆಚ್ಚಿಸಿದೆ. ಅದು ‘ಒಂದು ಗಿಡದ ಹೂ ಕೆಂಪಾಗಿದೆ’ಯೆಂದು ತಿಳಿಸುತ್ತದಲ್ಲದೆ, ‘ಗಿಡವೇ ಕೆಂಪಾಗಿದೆ’ಯೆಂದು ತಿಳಿಸುವು ದಿಲ್ಲ. ಆದರೆ (೨ಖ)ದಲ್ಲಿ ನಮ್ಮ ಎಂಬ ಪದದ ಮೂಲಕ ಅದೇ ಪದಗುಚ್ಛದ ಎರಡನೆಯ ಪದದ ಅರ್ಥವನ್ನು ಬದಲಾಯಿಸಲು ಸಾಧ್ಯವಾಗಿದೆ. (೨ಖ)ಕ್ಕೆ ‘ನಮ್ಮ ಗಿಡ’ ಎಂಬ ಅರ್ಥವಿದೆಯಲ್ಲದೆ ‘ನಮ್ಮ ಹೂವು’ ಎಂಬ ಅರ್ಥವಿಲ್ಲ. (೨ಗ)ದಲ್ಲಿ ಈ ಎರಡು ರೀತಿಯ ಅರ್ಥಗಳೂ ಬರಲು ಸಾಧ್ಯವಿದೆ. ಅದಕ್ಕೆ ‘ದೊಡ್ಡ ಹೂ ಬಿಡುವ ಗಿಡ’ ಎಂಬ ಅರ್ಥವಾಗಲೀ ಇಲ್ಲವೇ ‘ಹೂ ಬಿಡುವ ದೊಡ್ಡ ಗಿಡ’ ಎಂಬ ಅರ್ಥವಾಗಲೀ ಬರಲು ಸಾಧ್ಯವಿದ್ದು ಇಲ್ಲಿ ಅರ್ಥಸಂದಿಗ್ಧತೆ ಯಿದೆ.

ಆದರೆ, ಜೋಡುಪದಗಳ ಬಳಕೆಯಲ್ಲಿ ಇಂತಹ ಅರ್ಥಸಂದಿಗ್ಧತೆಗಳಿಗೆ ಅವಕಾಶವಿಲ್ಲ ಎಂಬುದನ್ನು ಗಮನಿಸಬಹುದು. ಇದಕ್ಕೆ ಕಾರಣವೇನೆಂದರೆ, ಜೋಡುಪದದೊಂದಿಗೆ ಬರುವ ಪದಗಳು ಆ ಪದದ ಒಟ್ಟು ಅರ್ಥವೇನಿದೆಯೋ ಅದನ್ನು ಮಾತ್ರ ಬದಲಾಯಿಸಬಲ್ಲುವಲ್ಲದೆ ಅದರ ಅಂಗಗಳಾಗಿ ಬರುವ ಪದಗಳ ಅರ್ಥವನ್ನು ಬೇರೆ ಬೇರಾಗಿ ಬದಲಾಯಿಸಲಾರವು. ಉದಾಹರಣೆಗಾಗಿ, ಮುಳ್ಳು ಹಂದಿ ಎಂಬ ಜೋಡುಪದಕ್ಕೆ ಚೂಪಾದ ಎಂಬ ಪದವನ್ನು ಸೇರಿಸಿ ಆ ಜೋಡುಪದದ ಅಂಗವಾಗಿ ಬಂದಿರುವ ಮುಳ್ಳು ಎಂಬ ಪದದ ಅರ್ಥವನ್ನು ಹೆಚ್ಚಿಸಲು ಸಾಧ್ಯವಾಗದು. ಇದೇ ರೀತಿಯಲ್ಲಿ ಕಣ್ಣೀರು ಎಂಬ ಜೋಡುಪದಕ್ಕೆ ಕೆಂಪು ಎಂಬ ಗುಣಪದವನ್ನು ಸೇರಿಸಿದಲ್ಲಿ, ಅದು ಇಡೀ ಪದವು ಸೂಚಿಸುವ ಅರ್ಥವನ್ನು (‘ಕೆಂಪಾಗಿರುವ ಕಣ್ಣೀರು’ ಎಂಬುದಾಗಿ) ಬದಲಾಯಿಸಬಲ್ಲುದಲ್ಲದೆ ಆ ಪದದ ಒಂದು ಅಂಗ ಸೂಚಿಸುವ ಅರ್ಥವನ್ನು ಮಾತ್ರವೇ ಬದಲಾಯಿಸ ಲಾರದು. ಕೆಂಪು ಕಣ್ಣೀರು ಎಂಬುದಕ್ಕೆ ‘ಕೆಂಪಾಗಿರುವ ಕಣ್ಣಿನ ನೀರು’ ಎಂಬ ಅರ್ಥ ಬರಲಾರದು.

Eke →

೫.೫ ಜೋಡುಪದಗಳ ಒಳರಚನೆ

ಪ್ರತ್ಯಯವಿರುವ ಪದಗಳ ಒಳರಚನೆಯನ್ನು ವಿವರಿಸುವಲ್ಲಿ ಮುಖ್ಯವಾಗಿ ಎರಡು ಸಂಗತಿಗಳನ್ನು ಪರಿಶೀಲಿಸಿದರೆ ಸಾಕಾಗಿತ್ತು. ಅವುಗಳಲ್ಲಿ ಯಾವ ಪ್ರತ್ಯಯಗಳನ್ನು

ಬಳಸಲಾಗಿದೆ ಎಂಬುದನ್ನೂ ಮತ್ತು ಈ ಪ್ರತ್ಯಯಗಳನ್ನು ಯಾವ ವರ್ಗಕ್ಕೆ ಸೇರಿದ ಪದಗಳೊಂದಿಗೆ (ಎಂದರೆ ನಾಮಪದ, ಕ್ರಿಯಾಪದ ಇಲ್ಲವೇ ಗುಣಪದ ಗಳೊಂದಿಗೆ) ಬಳಸಲಾಗಿದೆ ಎಂಬುದನ್ನೂ ಪರಿಶೀಲಿಸಿದರೆ ಸಾಕಾಗಿತ್ತು. ಕೆಲವು ಪ್ರತ್ಯಯವಿರುವ ಪದಗಳಲ್ಲಿ ಹೀಗೆ ಪದ ಮತ್ತು ಪ್ರತ್ಯಯಗಳನ್ನು ಒಟ್ಟಿಗೆ ಸೇರಿಸು ವಾಗ ಅವುಗಳಲ್ಲಿ ಕೆಲವು ಬದಲಾವಣೆಗಳು ನಡೆಯುವುವಾದ ಕಾರಣ, ಇಂತಹ ಬದಲಾವಣೆಗಳನ್ನೂ ‘ಸೇರಿಕೆಯ ನಿಯಮ’ಗಳು (ಇಲ್ಲವೇ ಸಂಧಿನಿಯಮಗಳು) ಎಂಬ ಹೆಸರಿನಲ್ಲಿ ವರ್ಣಿಸುವ ಅವಶ್ಯಕತೆಯಿತ್ತು.

ಜೋಡುಪದಗಳ ಒಳರಚನೆಯನ್ನು ವಿವರಿಸುವಾಗ ಈ ರೀತಿ ಅವುಗಳ ರಚನೆಯಲ್ಲಿ ಬಳಕೆಯಾಗುವ ಪದಗಳು, ಅವುಗಳ ಪದವರ್ಗ ಮತ್ತು ಅವುಗಳ ರಚನೆಯ ಹಿಂದಿರುವ ಸೇರಿಕೆಯ ನಿಯಮಗಳು ಎಂಬ ಈ ಮೂರು ವಿಷಯ ಗಳನ್ನು ಮಾತ್ರವಲ್ಲದೆ, ಆ ಪದಗಳ ನಡುವಿರುವ ಸಂಬಂಧವೇನು ಎಂಬುದನ್ನೂ ವಿವರಿಸಿ ಹೇಳುವ ಕ್ರಮ ರೂಢಿಯಲ್ಲಿದೆ. ಪದಗಳೆರಡನ್ನು ಈ ರೀತಿ ಸಂಬಂಧಿಸಲು ಒಂದು ವಾಕ್ಯ ಇಲ್ಲವೇ ವಾಕ್ಯಾಂಶವನ್ನು ಬಳಸಬೇಕಾಗಿದ್ದು, ಇದನ್ನು ಸಂಸ್ಕೃತ ವ್ಯಾಕರಣಗಳಲ್ಲಿ ಮತ್ತು ಅವುಗಳನ್ನನುಸರಿಸುವ ಕನ್ನಡ ವ್ಯಾಕರಣಗಳಲ್ಲಿ ‘ವಿಗ್ರಹ ವಾಕ್ಯ’ ಎಂದು ಕರೆಯಲಾಗಿದೆ.

ಕನ್ನಡದಲ್ಲಿ ಇವು ಹೆಚ್ಚಿನಡೆಗಳಲ್ಲೂ ವಾಕ್ಯರೂಪದಲ್ಲಿರದೆ ಒಂದು ಪದ ಗುಚ್ಛದ ರೂಪದಲ್ಲಿರುತ್ತವೆ. ಹಾಗಾಗಿ ಇವನ್ನು ‘ವಾಕ್ಯ’ ಎಂದು ಕರೆಯುವುದು ಕನ್ನಡದ ಮಟ್ಟಿಗಂತೂ ಅಷ್ಟೊಂದು ತೃಪ್ತಿಕರವಾಗಿಲ್ಲ. ಜೋಡುಪದಗಳ ಒಳ ರಚನೆಯನ್ನು ಸೂಕ್ಷ್ಮವಾಗಿ ವಿವರಿಸಿ ಹೇಳುವುದಕ್ಕಾಗಿ ಇವು ಬಳಕೆಯಾಗುತ್ತಿವೆ ಯಾದ ಕಾರಣ ಈ ವಿಷಯವನ್ನು ಸೂಚಿಸುವ ಜೋಡುಪದಗಳ ‘ಒಳನುಡಿ’ ಎಂಬ ಹೆಸರನ್ನು ಇಲ್ಲಿ ಬಳಸಲಾಗಿದೆ.

ಉದಾಹರಣೆಗಾಗಿ, ಮಿಂಚುಹುಳ ಎಂಬ ಜೋಡುಪದದಲ್ಲಿ ಮಿಂಚು ಮತ್ತು ಹುಳ ಎಂಬ ಎರಡು ಪದಗಳು ಒಟ್ಟು ಸೇರಿವೆ. ಈ ಪದಗಳ ನಡುವಿರುವ ಸಂಬಂಧವನ್ನು ಮಿಂಚುವ ಹುಳ ಎಂಬ ಪದಗುಚ್ಛದ ವಿವರಿಸ ಬಹುದು. ಈ ಹುಳ ಮಿಂಚುತ್ತದೆ ಎಂಬ ವಾಕ್ಯ ಈ ಸಂಬಂಧವನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಇದೇ ರೀತಿಯಲ್ಲಿ ತಲೆಗೂದಲು ಎಂಬ ಜೋಡುಪದದ ಅಂಗಗಳಾಗಿ ಬಂದಿರುವ ತಲೆ ಮತ್ತು ಕೂದಲು ಎಂಬೆರಡು ಪದಗಳ ನಡುವಿರುವ ಸಂಬಂಧವನ್ನು ತಲೆಯ ಕೂದಲು ಇಲ್ಲವೇ ತಲೆಯಲ್ಲಿ ಬೆಳೆಯುವ ಕೂದಲು ಎಂಬ ಪದಗುಚ್ಛ ತೋರಿಸಿಕೊಡುತ್ತದೆ. ಇಂತಹ ಪದಗುಚ್ಛಗಳನ್ನು (ಇಲ್ಲವೇ ಹೆಚ್ಚು ವಿವರವಾಗಿ ಒಳರಚನೆಯನ್ನು ತಿಳಿಸುವ ವಾಕ್ಯಗಳನ್ನು) ಆ ಜೋಡುಪದಗಳ ಒಳನುಡಿಗಳೆಂದು ಹೇಳಬಹುದು.

ಜೋಡುಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಲು ಈ ರೀತಿ ಅವುಗಳಲ್ಲಿ ಬಂದಿರುವ ಪದಗಳ ನಡುವಿರುವ ಸಂಬಂಧವನ್ನೂ ತಿಳಿಯುವುದು ಯಾಕೆ ಅವಶ್ಯ ಎಂಬುದನ್ನು ಸ್ಪಷ್ಟಪಡಿಸಲು ಬೇರೆ ಕೆಲವು ಉದಾಹರಣೆಗಳನ್ನು

ಗಮನಿಸಬಹುದು. ನಡುಬೆರಳು ಮತ್ತು ನಡುಹಗಲು ಎಂಬ ಎರಡು ಜೋಡು ಪದಗಳಲ್ಲೂ ಮೇಲಿನಿಂದ ಮೇಲೆ ನೋಡುವಾಗ ಒಳರಚನೆ ಒಂದೇ ರೀತಿಯ ದೆಂದು ಅನಿಸುತ್ತದೆ. ಎರಡರಲ್ಲೂ ನಡು ಎಂಬ ಗುಣಪದದೊಂದಿಗೆ ನಾಮ ಪದವೊಂದನ್ನು (ಬೆರಳು ಇಲ್ಲವೇ ಹಗಲು ಎಂಬುದನ್ನು) ಸೇರಿಸಿ ಹೇಳಿರುವು ದನ್ನು ಕಾಣಬಹುದು.

ಆದರೆ ಈ ಎರಡು ಪದಗಳ ನಡುವಿರುವ ಸಂಬಂಧ ಮಾತ್ರ ಮೇಲೆ ಕೊಟ್ಟಿರುವ ಜೋಡುಪದಗಳಲ್ಲಿ ಬೇರೆ ಬೇರಾಗಿದೆ. ನಡುಬೆರಳು ಎಂಬುದು ಕೈಯಲ್ಲಿ ಐದು ಬೆರಳುಗಳ ನಡುವಿನಲ್ಲಿರುವ ಬೆರಳನ್ನು ಗುರುತಿಸುವುದಾದ ಕಾರಣ, ಅದರಲ್ಲಿ ನಡು ಎಂಬ ಗುಣಪದ ಬೆರಳು ಎಂಬ ಪದದ ಅರ್ಥವನ್ನು ಹೆಚ್ಚಿಸುವುದಕ್ಕಾಗಿ ಬಂದಿದೆಯೆಂದು ಹೇಳಲು ಸಾಧ್ಯವಿದೆ. ಹಾಗಾಗಿ ಅವುಗಳ ನಡುವಿರುವ ಸಂಬಂಧವನ್ನು ನಡುವಿನ ಬೆರಳು ಎಂಬ ಪದಗುಚ್ಛ ಸರಿಯಾಗಿ ಸೂಚಿಸಬಲ್ಲುದು. ಆದರೆ ನಡುಹಗಲು ಎಂಬ ಜೋಡುಪದ ‘ನಡುವಿನಲ್ಲಿರುವ ಹಗಲ’ನ್ನು ಸೂಚಿಸುವುದಿಲ್ಲ, ಇದಕ್ಕೆ ಬದಲು ಅದು ‘ಹಗಲಿನ ನಡುಭಾಗವನ್ನು’ ಸೂಚಿಸುತ್ತದೆ. ಹಾಗಾಗಿ, ಈ ಜೋಡುಪದದಲ್ಲಿ ಬಂದಿರುವ ನಡು ಮತ್ತು ಹಗಲು ಎಂಬ ಪದಗಳ ನಡುವಿರುವ ಸಂಬಂಧವನ್ನು ನಡುವಿನ ಹಗಲು ಎಂಬ ಪದಗುಚ್ಛದ ಮೂಲಕ ಸೂಚಿಸಲು ಸಾಧ್ಯವಾಗದು. ಇದಕ್ಕೆ ಬದಲಾಗಿ, ಹಗಲಿನ ನಡುಭಾಗ ಎಂಬ ಬೇರೊಂದು ರೀತಿಯ ಪದಗುಚ್ಛವನ್ನು ಇಲ್ಲಿ ಬಳಸಬೇಕಾಗು ತ್ತದೆ.

ಇದೇ ರೀತಿಯಲ್ಲಿ ಕೆಳದುಟಿ ಎಂಬುದಕ್ಕೆ ಕೆಳಗಿನ ತುಟಿ (ಇಲ್ಲವೇ ಮುಖದಲ್ಲಿ ಕೆಳಗೆ ಇರುವ ತುಟಿ) ಎಂಬ ಒಳನುಡಿಯನ್ನು (ವಿಗ್ರಹವಾಕ್ಯವನ್ನು) ಕೊಡಲು ಸಾಧ್ಯವಿದೆ; ಆದರೆ ತುದಿಗಾಲು ಎಂಬುದಕ್ಕೆ ಅದೇ ರೀತಿಯಲ್ಲಿ ತುದಿಯ ಕಾಲು (ಇಲ್ಲವೇ ತುದಿಯಲ್ಲಿರುವ ಕಾಲು) ಎಂಬುದಾಗಿ ಒಳನುಡಿನ್ನು ಕೊಟ್ಟಲ್ಲಿ ಅದು ಸರಿಯಾಗಲಾರದು. ಈ ಎರಡನೆಯ ಜೋಡು ಪದಕ್ಕೆ ಕಾಲಿನ ತುದಿ ಇಲ್ಲವೇ ಕಾಲಿನ ತುದಿಯಲ್ಲಿರುವ ಭಾಗ ಎಂಬುದಾಗಿ ಒಳನುಡಿಯನ್ನು ಹೇಳಬೇಕಾಗುತ್ತದೆ. ಈ ಎರಡು ಜೋಡುಪದಗಳಲ್ಲೂ ನಾಮಪದವೊಂದಕ್ಕೆ ಗುಣಪದವೊಂದನ್ನು ಸೇರಿಸಿ ಹೇಳಲಾಗಿದೆಯಾದರೂ ಅವುಗಳ ನಡುವಿರುವ ಸಂಬಂಧ ಒಂದೇ ಅಲ್ಲ ಎಂಬುದನ್ನು ಈ ಎರಡು ಭಿನ್ನ ಭಿನ್ನವಾದ ಒಳನುಡಿಗಳು ತಿಳಿಸುತ್ತವೆ.

ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ಒಳನುಡಿಗಳ ಮೂಲಕ ಸಂಬಂಧಿಸುವಲ್ಲಿ ಒಂದು ಮುಖ್ಯವಾದ ಸಮಸ್ಯೆಯಿದೆ ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ. ನಾವು ಮೂರನೆಯ ಅಧ್ಯಾಯದಲ್ಲಿ (೩.೩.೧ರಲ್ಲಿ) ನೋಡಿರುವಂತೆ, ಜೋಡುಪದಗಳ ತಯಾರಿಕೆ ಮತ್ತು ಬಳಕೆಗಳ ನಡುವೆ ಅಸಾಂಗತ್ಯವಿರಲು ಸಾಧ್ಯವಿದೆ. ಅವನ್ನು ತಯಾರಿಸುವ ಸಮಯದಲ್ಲಿ ಅವು ಹೆಸರಿಸಬೇಕಾಗಿರುವ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಕಣ್ಣಿಗೆ ಎದ್ದು ಕಾಣಿಸು

ವಂತಹ ಯಾವುದಾದರೂ ಒಂದು ಗುಣಧರ್ಮವನ್ನು ಆಧಾರವಾಗಿರಿಸಿಕೊಂಡು ಅವನ್ನು ರಚಿಸಿರಬೇಕು. ಆದರೆ ಅವುಗಳ ಬಳಕೆಯಾಗುತ್ತಿರುವ ಸಮಯದಲ್ಲಿ ಈ ಗುಣಧರ್ಮ ಆ ವ್ಯಕ್ತಿ ಇಲ್ಲವೇ ವಸ್ತುವಿನಲ್ಲಿ ಹಾಗೆಯೇ ಉಳಿಯಬೇಕೆಂದೇನೂ ಇಲ್ಲ.

ಉದಾಹರಣೆಗಾಗಿ, ಹೊಸಮನೆ ಎಂಬ ಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಹೆಸರಿಸುತ್ತಿರಲು ಸಾಧ್ಯವಿದೆ. ಆ ಮನೆಗೆ ಹೊಸಮನೆ ಎಂಬುದಾಗಿ ಹೆಸರು ಕೊಡುವ ಸಮಯದಲ್ಲಿ ಅದು ಹತ್ತಿರದಲ್ಲಿದ್ದ ಉಳಿದ ಎಲ್ಲಾ ಮನೆಗಳಿಂದಲೂ ಹೊಸತಾಗಿದ್ದಿರಬೇಕು; ಅನಂತರ ಆ ಹೆಸರು ಬಳಕೆ ಯಾಗುತ್ತಿರುವ ಸಮಯದಲ್ಲಿ ಅದು ಕ್ರಮೇಣ ಹಳೆಯದಾಗುತ್ತಾ ಬಂದರೂ, ಮತ್ತು ಹತ್ತಿರವೇ ಬೇರೆ ಮನೆಗಳು ಹೊಸದಾಗಿ ಮೇಲೆದ್ದಿವೆಯಾದರೂ, ಹೊಸಮನೆ ಎಂಬ ಅದರ ಹೆಸರನ್ನು ಬದಲಿಸಿ ಹಳೆಮನೆ ಎಂದು ಹೇಳಲು ಯಾರೂ ಪ್ರಯತ್ನಿಸುವುದಿಲ್ಲ. ಒಂದು ಹೆಸರಿನ ಬಳಕೆಗೆ (ಎಂದರೆ ಅದರ ಅರ್ಥಕ್ಕೆ) ಅದರ ಒಳರಚನೆಯಿಂದ ದೊರಕುವ ಅರ್ಥ ಆಧಾರವಾಗುವುದಿಲ್ಲ ವೆಂಬುದೇ ಇದಕ್ಕೆ ಕಾರಣ.

ಜೋಡುಪದಗಳ ತಯಾರಿಕೆ ಮತ್ತು ಆ ತಯಾರಿಕೆಯಲ್ಲಿ ಬಳಕೆಯಾಗುವ ಗುಣಧರ್ಮ ಇವೆರಡೂ ಆ ಪದಗಳ ಚರಿತ್ರೆಗೆ ಸಂಬಂಧಿಸಿದ ವಿಷಯಗಳೆಂದು ಹೇಳಬಹುದು. ಅವುಗಳ ಬಳಕೆ ಮತ್ತು ಬಳಕೆಗೆ ಸಂಬಂಧಿಸಿದ ಗುಣಧರ್ಮ (ಎಂದರೆ ಅವುಗಳ ಈಗಿನ ಅರ್ಥ) ಇವೆರಡೂ ಈಗಿನ ಕಾಲಕ್ಕೆ ಸಂಬಂಧಿಸಿದ ವಿಷಯಗಳು. ಜೋಡುಪದವೊಂದರ ಒಳರಚನೆಯನ್ನು ವಿವರಿಸುವಾಗ ಅದರಲ್ಲಿ ಬರುವ ಪದಗಳನ್ನು ಸಂಬಂಧಿಸುವಂತಹ ಒಳನುಡಿಗಳನ್ನು ಇವೆರಡು ವಿಷಯ ಗಳಲ್ಲಿ ಯಾವುದರ ಆಧಾರದ ಮೇಲೆ ಹೇಳಬೇಕು (ಚಾರಿತ್ರಿಕ ಆಧಾರದ ಮೇಲೋ ಅಥವಾ ಈಗಿನ ಕಾಲಕ್ಕೆ ಸಂಬಂಧಿಸಿದ ವಿಷಯಗಳ ಆಧಾರದ ಮೇಲೋ) ಎಂಬುದೇ ಇಲ್ಲಿ ತಲೆದೋರುವ ಸಮಸ್ಯೆ. ಸಾಮಾನ್ಯವಾಗಿ ಜೋಡು ಪದಗಳ ತಯಾರಿಕೆಗೆ ಸಂಬಂಧಿಸಿದಂತಹ ಚಾರಿತ್ರಿಕ ಅಂಶಗಳ ಆಧಾರದ ಮೇಲೇನೇ ಒಳನುಡಿಗಳನ್ನು ಹೇಳುವುದು ರೂಢಿಯಾದರೂ, ಅದು ಆ ಪದಗಳ ಈಗಿನ ಬಳಕೆಯೆಂತಹದು (ಎಂದರೆ ಅದರ ಅರ್ಥವೆಂತಹದು) ಎಂಬುದನ್ನು ಸೂಚಿಸುವಂತಿದ್ದರೆ ಒಳ್ಳೆಯದು ಎಂದೂ ಅನಿಸದಿರುವುದಿಲ್ಲ.

ಕೆಲವೊಮ್ಮೆ ಇವೆರಡನ್ನೂ ಹೊಂದಿಸಿಕೊಳ್ಳಲು ಸಾಧ್ಯವಾಗದಿರಬಹುದು. ಉದಾಹರಣೆಗಾಗಿ, ಹೊಸಮನೆ ಎಂಬ ಜೋಡುಪದ ಬಹಳ ಹಳೆಯದಾಗಿರುವ ಒಂದು ಮನೆಯನ್ನು ಹೆಸರಿಸುವುದಾದರೂ ಅದರ ಒಳನುಡಿಯನ್ನು ಹೊಸ ದಾದ ಮನೆ ಎಂದೇ ಕೊಡಬೇಕಾಗುತ್ತದೆ. ಆ ಮನೆಯಲ್ಲಿ ಈಗ ಕಾಣಿಸುವ ಯಾವ ಗುಣಧರ್ಮವೂ ಈ ಒಳನುಡಿಗೆ ಆಧಾರವಾಗಲಾರದು. ಇದೇ ರೀತಿ ಯಲ್ಲಿ ಉಗಿಬಂಡಿ ಎಂಬ ಜೋಡುಪದ ಇವತ್ತು ಉಗಿಯ ಬದಲು ಡೀಸೆಲ್ ಇಲ್ಲವೇ ವಿದ್ಯುಚ್ಛಕ್ತಿಯನ್ನು ಬಳಸಿ ಓಡುವ ಸಾಧನವನ್ನು ಹೆಸರಿಸುವುದೇ ಜಾಸ್ತಿ

ಯಾಗಿದೆಯಾದರೂ ಆ ಪದದ ಒಳನುಡಿಯನ್ನು ಉರಿಯ ಸಹಾಯದಿಂದ ಚಲಿಸುವ ಬಂಡಿ ಎಂದೇ ಕೊಡಬೇಕಾಗುತ್ತದೆ. ಒಳನುಡಿಗಳು ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳನ್ನು ಸಂಬಂಧಿಸುವಂತಿರಬೇಕೆಂಬುದೇ ಈ ರೀತಿ ಜೋಡುಪದಗಳ ಒಳನುಡಿಗಳಿಗೂ ಮತ್ತು ಅವುಗಳ ಅರ್ಥಕ್ಕೂ ನಡುವೆ ಕಾಣಿಸುವ ಅಸಾಂಗತ್ಯವನ್ನು ತೊಡೆದು ಹಾಕಲು ಸಾಧ್ಯವಿಲ್ಲದಂತೆ ಮಾಡಿದೆ.

ಬಹುಶಃ ಇಂತಹ ಸಂದರ್ಭಗಳಲ್ಲಿ ಜೋಡುಪದಗಳಿಗೆ ಅವುಗಳ ‘ಚರಿತ್ರೆ ಯನ್ನು ಸೂಚಿಸುವ ಒಳನುಡಿ’ ಮತ್ತು ‘ಈಗಿನ ಅರ್ಥವನ್ನು ಸೂಚಿಸುವ ಒಳ ನುಡಿ’ ಎಂಬುದಾಗಿ ಎರಡು ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯ ವಾದೀತು. ಉದಾಹರಣೆಗಾಗಿ ಹೊಸಮನೆ ಎಂಬ ಪದಕ್ಕೆ ಅದರ ಚರಿತ್ರೆಯನ್ನು ಸೂಚಿಸುವ ಹೊಸದಾದ ಮನೆ ಎಂಬ ಒಳನುಡಿಯನ್ನೂ ಮತ್ತು ಅದರ ಇವತ್ತಿನ ಅರ್ಥವನ್ನು ಸೂಚಿಸುವ ಹಳೆಯದಾಗಿರುವ ಮನೆ ಎಂಬ ಒಳನುಡಿ ಯನ್ನೂ ಹೇಳಲು ಸಾಧ್ಯವಾದೀತು. ಆದರೆ ಇಂತಹ ಒಳನುಡಿಗಳಲ್ಲಿ ಎರಡನೆಯದು ಜೋಡುಪದದ ‘ಒಳರಚನೆ’ಯನ್ನು ವಿವರಿಸುತ್ತದೆ ಎಂದು ಹೇಳುವುದು ಮಾತ್ರ ಸ್ವಲ್ಪ ಕಷ್ಟ. ಯಾಕೆಂದರೆ, ಹೊಸಮನೆ ಎಂಬ ಜೋಡು ಪದದ ಒಳರಚನೆಯಲ್ಲಿ ಹಳೆಯದಾಗಿರುವ ಎಂಬ ಅಂಶವನ್ನಾಗಲಿ, ಇಲ್ಲವೇ ಉಗಿಬಂಡಿ ಎಂಬ ಜೋಡುಪದದ ಒಳರಚನೆಯಲ್ಲಿ ಡೀಸೆಲ್ ಅಥವಾ ವಿದ್ಯುಚ್ಛಕ್ತಿಯನ್ನು ಬಳಸುವ ಎಂಬ ಅಂಶವನ್ನಾಗಲಿ ಕಾಣಿಸುವುದು ಕಷ್ಟ.

ಒಂದು ಜೋಡುಪದದ ಚರಿತ್ರೆಯನ್ನು ಸೂಚಿಸಬಲ್ಲಂತಹ ಒಳನುಡಿಯನ್ನು ಕಂಡುಹಿಡಿಯುವುದರಲ್ಲೂ ಹಲಕೆಲವು ಸಮಸ್ಯೆಗಳೇಳಬಲ್ಲುವು. ಯಾಕೆಂದರೆ, ಸಾಮಾನ್ಯವಾಗಿ ನಾವು ಒಂದು ಜೋಡುಪದದ ಇವತ್ತಿನ ಬಳಕೆಯ ಆಧಾರದ ಮೇಲೆ ಮತ್ತು ಅದರ ಒಳರಚನೆಯ ಆಧಾರದ ಮೇಲೆ, ಅದರ ತಯಾರಿಕೆಯಲ್ಲಿ ಎಂತಹ ಗುಣಧರ್ಮ ಬಳಕೆಯಾಗಿದ್ದಿರಬೇಕು ಎಂದು ಊಹಿಸಬೇಕಾಗುತ್ತದೆ. ಹೀಗೆ ಊಹಿಸಿಕೊಳ್ಳುವಾಗ ನಾವು ತಪ್ಪಿಬೀಳಲು ಸಾಧ್ಯವಿದೆ ಮತ್ತು ಕೆಲವೊಮ್ಮೆ ಒಂದಕ್ಕಿಂತ ಜಾಸ್ತಿ ಒಳನುಡಿಗಳನ್ನು ಕೊಡಲು ಸಾಧ್ಯವಿದ್ದು ಅವುಗಳಲ್ಲಿ ಯಾವುದು ಜೋಡುಪದದ ತಯಾರಿಕೆಯಲ್ಲಿ ಬಳಕೆಯಾಗಿದ್ದ ನಿಜವಾದ ಚಾರಿತ್ರಿಕ ಘಟನೆಯನ್ನು ಸೂಚಿಸುತ್ತದೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗ ದಿರಬಹುದು.

ಉದಾಹರಣೆಗಾಗಿ, ಉಗಿಬಂಡಿ ಎಂಬ ಜೋಡುಪದಕ್ಕೆ ಉಗಿಯ ಸಹಾಯ ದಿಂದ ಚಲಿಸುವ ಬಂಡಿ ಎಂದಾಗಲಿ, ಇಲ್ಲವೇ ಉಗಿಯನ್ನು ಉಗುಳುತ್ತಾ ಚಲಿಸುವ ಬಂಡಿ ಎಂದಾಗಲಿ ಚಾರಿತ್ರಿಕ ಒಳನುಡಿಯನ್ನು ಕೊಡಲು ಸಾಧ್ಯವಿದೆ. ಆದರೆ ಇವುಗಳಲ್ಲಿ ಯಾವುದು ಸರಿ ಎಂಬುದನ್ನು ನಿರ್ಧರಿಸಲು ಉಗಿಬಂಡಿ ಎಂಬ ಜೋಡುಪದವನ್ನು ತಯಾರಿಸಿದಾಗ ಈ ಎರಡು ಒಳನುಡಿಗಳು ಸೂಚಿಸುವ ಗುಣಧರ್ಮಗಳಲ್ಲಿ ಯಾವುದನ್ನು ಗಮನದಲ್ಲಿರಿಸಿಕೊಳ್ಳಲಾಗಿತ್ತು ಎಂಬ ಚಾರಿತ್ರಿಕ ಅಂಶ ಮಾತ್ರವೇ ಆಧಾರವಾಗಬಲ್ಲುದು. ಆದರೆ ಇಂತಹ

ಚಾರಿತ್ರಿಕ ಅಂಶಗಳನ್ನು ಕಂಡುಹಿಡಿಯುವುದು ಕಷ್ಟಸಾಧ್ಯವಾದ ಕಾರಣ, ಈ ರೀತಿ ಒಂದಕ್ಕಿಂತ ಜಾಸ್ತಿ ಒಳನುಡಿಗಳನ್ನು ಕೊಡಲು ಸಾಧ್ಯವಿರುವ ಸಂದರ್ಭಗಳಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನಿರ್ಧರಿಸಲು ಸಾಧ್ಯವಾಗದು.

೫. ಜೋಡುಪದಗಳ ವಿಭಜನೆ

ಕನ್ನಡದ ಜೋಡುಪದಗಳನ್ನು ಅವುಗಳಲ್ಲಿ ಕಾಣಿಸುವ ವ್ಯತ್ಯಾಸಗಳ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಸಾಮಾನ್ಯವಾಗಿ ಅವುಗಳ ಒಳರಚನೆಯಲ್ಲಿ ಕಾಣಿಸುವ ವ್ಯತ್ಯಾಸಗಳನ್ನೇ ಇಂತಹ ವಿಭಜನೆಗೆ ಆಧಾರವಾಗಿ ತೆಗೆದುಕೊಳ್ಳುವುದು ರೂಢಿ. ಜೋಡುಪದಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆ ಮತ್ತು ಪದವರ್ಗ, ಈ ಪದಗಳ ನಡುವಿರುವ ಸಂಬಂಧ, ಮತ್ತು ಜೋಡುಪದಗಳ ಕೇಂದ್ರಬಿಂದು ಅವುಗಳ ಒಳಗೆಯೇ ಇದೆಯೇ ಅಥವಾ ಹೊರಗಿದೆಯೇ, ಒಳಗಿದೆಯಾದರೆ ಯಾವ ಪದದ ಮೇಲಿದೆ (ಮೊದಲಿನದರ ಮೇಲೆಯೇ ಅಥವಾ ಕೊನೆಯದರ ಮೇಲೆಯೇ) ಎಂಬಂತಹ ವಿಷಯಗಳ ಆಧಾರದ ಮೇಲೆ ಕನ್ನಡದ ಜೋಡುಪದಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಹೇಳಲು ಸಾಧ್ಯವಿದೆ.

ಇಲ್ಲಿ ಗಮನಿಸಬೇಕಾಗಿರುವ ಒಂದು ಮುಖ್ಯ ಅಂಶವೇನೆಂದರೆ, ಜೋಡು ಪದಗಳ ಈ ವಿಭಜನೆಗಳೆಲ್ಲ ಅವುಗಳ ಒಳರಚನೆಯ ಮೇಲೆ ಮತ್ತು ಅಂತಹ ರಚನೆಯಲ್ಲಿ ಬಳಕೆಯಾಗುವ ಪದಗಳ ಸ್ವಭಾವದ ಮೇಲೆ ಅವಲಂಬಿಸಿದೆಯಾದ ಕಾರಣ, ಇವು ಜೋಡುಪದಗಳ ಚರಿತ್ರೆಗೆ ಸಂಬಂಧಿಸಿದ ವಿಭಜನೆಗಳಲ್ಲದೆ ಅವುಗಳ ಈಗಿನ ಬಳಕೆಗೆ ಸಂಬಂಧಿಸಿದುವಲ್ಲ. ಬಳಕೆಗೆ ಸಂಬಂಧಿಸಿದಂತೆ ಕನ್ನಡದ ನಾಮಪದಗಳನ್ನು ಹೇಗೆ ವಿಭಜಿಸಬಹುದೆಂಬುದನ್ನು ನಾವು ಮೇಲೆಯೇ (೩.೫ರಲ್ಲಿ) ನೋಡಿರುವೆವು. ಜೋಡುಪದಗಳನ್ನೂ ಇದೇ ವಿಧಾನದ ಮೂಲಕ ಅಂಕಿತನಾಮ, ರೂಢನಾಮ ಇತ್ಯಾದಿಯಾಗಿ ವಿಂಗಡಿಸಲು ಸಾಧ್ಯವಿದೆ. ಆದರೆ ಇದು ಜೋಡುಪದಗಳಿಗೆ ಮಾತ್ರ ಅನ್ವಯಿಸುವ ವಿಭಜನೆಯಾಗಲಾರದು, ಮತ್ತು ಜೋಡುಪದಗಳ ವಿಶಿಷ್ಟ ಗುಣಗಳ ಮೇಲೆ ಅವಲಂಬಿಸುವ ವಿಭಜನೆಯೂ ಆಗ ಲಾರದು.

ಕನ್ನಡದಲ್ಲಿ ‘ಕ್ರಿಯಾಸಮಾಸ’ ಎಂಬೊಂದು ಸಮಾಸವಿದೆಯೆಂದು ಕೇಶಿರಾಜ ನಿಂದ ಆರಂಭಿಸಿ ಹಲವಾರು ವೈಯಾಕರಣಿಗಳು ಹೇಳುತ್ತಿದ್ದಾರೆ. ಹಾಗಾಗಿ, ಕನ್ನಡದ ಜೋಡುಪದಗಳನ್ನು ನಾಮಪದ ಮತ್ತು ಕ್ರಿಯಾಪದ ಎಂಬುದಾಗಿ ಎರಡು ವಿಧದವುಗಳೆಂದು ವಿಂಗಡಿಸಲು ಸಾಧ್ಯ ಎಂಬ ಅಭಿಪ್ರಾಯ ಕೆಲವರದಿರ ಬಹುದು. ಆದರೆ ಈ ‘ಕ್ರಿಯಾಸಮಾಸ’ದಿಂದ ತಯಾರಾಗುವ ವಾಕ್ಯಾಂಶಗಳೆಲ್ಲ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ ಎಂಬುದನ್ನು ಮುಂದೆ (೫.೮.೮ರಲ್ಲಿ) ನೋಡಲಿರುವೆವು. ಹಾಗಾಗಿ ‘ಕ್ರಿಯಾಸಮಾಸ’ವೆಂಬುದು ಕನ್ನಡದಲ್ಲಿ ಸಮಾಸ ವಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಜೋಡುಪದಗಳಿಗೂ ಮತ್ತು

ಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವನ್ನು ನಾಮಪದಗಳಲ್ಲಿ ಮಾತ್ರ ಕಾಣಬಲ್ಲೆವಲ್ಲದೆ ಕ್ರಿಯಾಪದ ಇಲ್ಲವೇ ಗುಣಪದಗಳಲ್ಲಿ ಕಾಣಲಾರೆವೆಂಬುದೇ ಈ ರೀತಿ ಜೋಡುಪದಗಳು ನಾಮಪದಗಳಾಗಿ ಮಾತ್ರ ಬರಬಲ್ಲುವೆಂಬುದಕ್ಕೆ ಮುಖ್ಯ ಕಾರಣ.

ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ (‘ಸಮಾಸ’ಗಳೆಂಬ ಹೆಸರಿನ) ಜೋಡು ಪದಗಳ ವಿಭಜನೆಗೆ ಮೇಲೆ ಸೂಚಿಸಿದ ವ್ಯತ್ಯಾಸಗಳಲ್ಲಿ ಹಲವನ್ನು ಒಟ್ಟಾಗಿ ಬಳಸಲಾಗುತ್ತದೆ. ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಭಜನೆಯನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲಾಗಿದೆಯಾದ ಕಾರಣ, ಕನ್ನಡದ ಮಟ್ಟಿಗೆ ಇದು ಸ್ವಲ್ಪವೂ ತೃಪ್ತಿಕರವಾಗಿಲ್ಲ ಎಂಬುದನ್ನು ನಾವು ಮುಂದಿನ ಒಂದು ವಿಭಾಗದಲ್ಲಿ (೫.೮ರಲ್ಲಿ) ನೋಡಲಿರುವೆವು.

೫.೬.೧ ಸಂಖ್ಯೆಯನ್ನು ಬಳಸುವ ವಿಭಜನೆ

ಜೋಡುಪದಗಳನ್ನು ಅವುಗಳ ಅಂಗಗಳಾಗಿ ಬರುವ ಪದಗಳ ಸಂಖ್ಯೆಯ ಆಧಾರದ ಮೇಲೆ ವಿಂಗಡಿಸಿ ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಬರುವ ಜೋಡುಪದಗಳಲ್ಲಿ ಹೆಚ್ಚಿನವೂ ಎರಡು ಪದಗಳ ಸೇರಿಕೆಯಿಂದ ಮಾತ್ರವೇ ತಯಾರಾದವುಗಳಾದ ಕಾರಣ ಇಂತಹ ವಿಭಜನೆ ಕನ್ನಡದ ಮಟ್ಟಿಗೆ ಜಾಸ್ತಿ ಉಪಯುಕ್ತವಲ್ಲ. ಎರಡಕ್ಕಿಂತ ಜಾಸ್ತಿ ಪದಗಳಿಂದ ತಯಾರಾದ ಜೋಡುಪದ ಗಳು ಕನ್ನಡದಲ್ಲಿ ಬಹಳ ಅಪರೂಪ.

ಜೋಡುಪದಗಳ ಒಳರಚನೆಯಲ್ಲಿ ಪದಗಳು ಮಾತ್ರವಲ್ಲದೆ ಪ್ರತ್ಯಯಗಳೂ ಬರಲು ಸಾಧ್ಯವಿದ್ದು, ಇಂತಹ ಜೋಡುಪದಗಳನ್ನು ಉಳಿದ ಜೋಡುಪದಗಳಿಂದ ಬೇರ್ಪಡಿಸಿ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ, ದಾರಿಹೋಕ ಎಂಬುದ ರಲ್ಲಿ ದಾರಿ ಮತ್ತು ಹೋಗು ಎಂಬೆರಡು ಪದಗಳು ಮಾತ್ರವಲ್ಲದೆ ಅ ಎಂಬ ಪ್ರತ್ಯಯವೂ ಕಾಣಿಸುತ್ತದೆ. (ಈ ಪ್ರತ್ಯಯ ಸೇರಿದಾಗ ಹೋಗು ಎಂಬುದರ ಕೊನೆಯ ಉಕಾರ ಬಿದ್ದುಹೋಗುತ್ತದೆ ಮತ್ತು ಗಕಾರ ಕಕಾರವಾಗುತ್ತದೆ).

ಇದೇ ರೀತಿಯಲ್ಲಿ ಹಾವಾಡಿಗ ಎಂಬುದರಲ್ಲಿ ಹಾವು ಮತ್ತು ಆಡು ಎಂಬ ಪದಗಳು ಮಾತ್ರವಲ್ಲದೆ ಇಗ ಎಂಬ ಪ್ರತ್ಯಯವೂ ಕಾಣಿಸುತ್ತದೆ. ಕನ್ನಡದಲ್ಲಿ *ಹೋಕ ಮತ್ತು *ಆಡಿಗ ಎಂಬವುಗಳು ಸ್ವತಂತ್ರ ಪದಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ ಈ ರೀತಿ ಮೇಲಿನ ಜೋಡುಪದಗಳಲ್ಲಿ ಎರಡು ಪದಗಳೊಂದಿಗೆ ಒಂದು ಪ್ರತ್ಯಯವೂ ಸೇರಿಕೊಂಡಿದೆಯೆಂದು ಹೇಳುವ ಅವಶ್ಯ ಕತೆಯುಂಟಾಗುತ್ತದೆ. ಆದರೆ ಬೇರೆ ವಿಷಯಗಳಲ್ಲಿ ಇವು ಎರಡು ಪದಗಳಿಂದ ತಯಾರಾದ ಇತರ ಜೋಡುಪದಗಳ ಹಾಗೆಯೇ (ಉದಾ: ಬಯಲಾಟ, ತಲೆ ತಿರುಕ, ಇತ್ಯಾದಿ) ಕಾಣಿಸುವುವಾದ ಕಾರಣ, ಇವು ತಯಾರಾಗುವ ಸಮಯದಲ್ಲಿ *ಹೋಕ, *ಆಡಿಗ ಮೊದಲಾದವುಗಳು ಸ್ವತಂತ್ರ ಪದಗಳಾಗಿದ್ದುವೆಂದು ಕಲ್ಪಿಸಿ ಕೊಳ್ಳಲೂ ಸಾಧ್ಯವಿದೆ.

೫.೬.೨ ಪದವರ್ಗಗಳನ್ನು ಬಳಸುವ ವಿಭಜನೆ

ಜೋಡುಪದಗಳನ್ನು ತಯಾರಿಸಲು ಬಳಸಿರುವ ಪದಗಳು ಯಾವ ಪದವರ್ಗಕ್ಕೆ ಸೇರಿವೆ ಎಂಬ ವಿಷಯದ ಆಧಾರದ ಮೇಲೆ ಅವನ್ನು ಮೂರು ಮುಖ್ಯ ವಿಭಾಗ ಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಕನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಅಂಗ ನಾಮಪದವಾಗಿರುತ್ತದೆ. ಮೊದಲನೆಯದು ಮಾತ್ರ ನಾಮ ಪದವಿರಬಹುದು, ಕ್ರಿಯಾಪದವಿರಬಹುದು ಇಲ್ಲವೇ ಗುಣಪದವಿರಬಹುದು. ಈ ಕಾರಣಕ್ಕಾಗಿ, ಕನ್ನಡದ ಹೆಚ್ಚಿನ ಜೋಡುಪದಗಳನ್ನೂ ಅವುಗಳ ಮೊದಲನೆಯ ಅಂಗವಾಗಿ ಬರುವ ಪದಗಳ ವರ್ಗವನ್ನಾಧರಿಸಿ ನಾಮಪದವಿರುವವು, ಕ್ರಿಯಾ ಪದವಿರುವವು ಮತ್ತು ಗುಣಪದವಿರುವವು ಎಂಬುದಾಗಿ ಮೂರು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಿ ಹೇಳಬಹುದು.

ಮೊದಲನೆಯ ಅಂಗವಾಗಿ ನಾಮಪದ ಬಂದಿರುವ ಜೋಡುಪದಗಳು

ಆನೆಕಾಲು ಬಯಲಾಟ
ಬೆಂಕಿಪೆಟ್ಟಿಗೆ ಕೈಮಗ್ಗ
ಕಾಲ್ಮಣೆ ನೆಲಗಡಲೆ
ಮೊದಲನೆಯ ಅಂಗವಾಗಿ ಕ್ರಿಯಾಪದ ಬಂದಿರುವ ಜೋಡುಪದಗಳು
ಊರುಗೋಲು ಕಡೆಗೋಲು
ತೂಗುದೀಪ ಅರಳುಮೊಗ್ಗು
ಸಿಡಿಮದ್ದು ಬಿಚ್ಚು ಕತ್ತಿ
ಮೊದಲನೆಯ ಅಂಗವಾಗಿ ಗುಣಪದ ಬಂದಿರುವ ಜೋಡುಪದಗಳು
ದೊಡ್ಡಮ್ಮ ಬೆಳ್ಳುಳ್ಳಿ
ಬಿಸಿನೀರು ಕಿರುಬೆರಳು
ಮುಂಗಾಲು ಹಿಮ್ಮೇಳ

ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಪದ ನಾಮಪದ ವಾಗಿರುವ ಬದಲು ಕ್ರಿಯಾಪದವಾಗಿರಲೂ ಸಾಧ್ಯವಿದೆಯೆಂಬುದನ್ನು (ಉದಾ: ಕೈಪಿಡಿ, ಬಾನುಲಿ), ಮುಂದೆ (೫.೬.೩ರಲ್ಲಿ) ನೋಡಲಿರುವೆವು. ಅದಕ್ಕೆ ಮೊದಲು ಕನ್ನಡದಲ್ಲಿ ಮುಖ್ಯವಾಗಿ ಬರುವ ಮೇಲೆ ಹೇಳಿದ ಮೂರು ರೀತಿಯ ಜೋಡುಪದಗಳ ಸ್ವರೂಪವೆಂತಹದೆಂಬುದನ್ನು ಈ ಕೆಳಗೆ ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.

(ಕ) ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು

ಎರಡು ನಾಮಪದಗಳನ್ನು ಒಟ್ಟು ಸೇರಿಸುವುದರ ಮೂಲಕ ತಯಾರಾಗಿರುವ ಜೋಡುಪದಗಳು ಕನ್ನಡದಲ್ಲಿ ಹಲವಿವೆ. ಇವುಗಳಲ್ಲಿ ಹೆಚ್ಚಿನವೂ ಅ ಎಂಬ ಸಂಬಂಧಕ ಪ್ರತ್ಯಯದ ಮೂಲಕ ಎರಡು ನಾಮಪದಗಳನ್ನು ಒಟ್ಟು ಸೇರಿಸುವು ದರ ಮೂಲಕ ತಯಾರಾದವುಗಳು. ಉದಾ:

ಒಳನುಡಿ ಜೋಡುಪದ
ಬಯಲಿನ ಆಟ ಬಯಲಾಟ
ಬೆಂಕಿಯ ಪೆಟ್ಟಿಗೆ ಬೆಂಕಿಪೆಟ್ಟಿಗೆ
ನೆಲದ ಕಡಲೆ ನೆಲಿಕಡಲೆ
ಕಾಲಿನ ಮಣೆ ಕಾಲ್ಮಣಿ
ಕೈಯ ಮಗ್ಗ ಕೈಮಗ್ಗ

ಈ ರೀತಿ ಸಂಬಂಧಕ ಪ್ರತ್ಯಯದ ಮೂಲಕ ತಯಾರಾಗಿರುವ ಜೋಡುಪದ ಗಳ ನಡುವೆಯೂ ಹಲಕೆಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ತೋರಿಸಿ ಕೊಡಲು ಇವಕ್ಕೆ ಸಂಬಂಧಕ ಪ್ರತ್ಯಯದ ಮೂಲಕ ಒಳನುಡಿಗಳನ್ನು ಹೇಳುವ ಬದಲು ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳನ್ನು ಬಳಸಿ ಒಳನುಡಿಗಳನ್ನು ಹೇಳ ಬೇಕಾಗುತ್ತದೆ, ಮತ್ತು ಇದಕ್ಕಾಗಿ ಈ ಒಳನುಡಿಗಳಲ್ಲಿ ಜೋಡುಪದಗಳಲ್ಲಿ ಕಾಣಿಸದಿರುವಂತಹ ಬೇರೆ ಬೇರೆ ಕ್ರಿಯಾಪದಗಳನ್ನೂ ಬಳಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಎರಡು ನಾಮಪದಗಳ ನಡುವಿನ ಸಂಬಂಧವನ್ನು ಜಾಸ್ತಿ ವಿವರಗಳನ್ನು ಕೊಡದೆ ಚುಟುಕಾಗಿ ಸೂಚಿಸಲು ಸಂಬಂಧಕ ಪ್ರತ್ಯಯವನ್ನು ಬಳಸುತ್ತೇವೆ. ಈ ಪ್ರತ್ಯಯ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸು ತ್ತದೆ. ವಿಭಕ್ತಿ ಪ್ರತ್ಯಯಗಳು ಈ ರೀತಿ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸುವುದಿಲ್ಲ. ಇದಕ್ಕೆ ಬದಲು ಅವು ಯಾವುದಾದರೊಂದು ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾ ದವುಗಳು ಯಾವ ರೀತಿಯಲ್ಲಿ ನಿರತವಾಗಿವೆ ಎಂಬುದನ್ನು ತಿಳಿಸುವುದರ ಮೂಲಕ ಅಂತಹ ನಾಮಪದಗಳನ್ನು ಸಂಬಂಧಿಸುತ್ತವೆ.

ಉದಾಹರಣೆಗಾಗಿ, ಕಣ್ಣಿನ ನೀರು ಎಂಬುದರಲ್ಲಿ ಕಣ್ಣು ಎಂಬ ಪದ ದೊಂದಿಗೆ ಬಂದಿರುವ ಸಂಬಂಧಕ ಪ್ರತ್ಯಯ ಕಣ್ಣಿಗೂ ಮತ್ತು ನೀರಿಗೂ ನಡುವಿರುವ ಸಂಬಂಧವನ್ನು ನೇರವಾಗಿ ಸೂಚಿಸುತ್ತದೆ. ಇದಕ್ಕೆ ಬದಲು, ಕಣ್ಣಿನಲ್ಲಿ ಬರುವ ನೀರು ಎಂಬುದರಲ್ಲಿ ಅದೇ ಕಣ್ಣು ಎಂಬ ಪದದೊಂದಿಗೆ ಬಂದಿರುವ ಅಲ್ಲಿ ಎಂಬ ವಿಭಕ್ತಿ ಪ್ರತ್ಯಯ ಬರು ಎಂಬ ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ಕಣ್ಣು ಮತ್ತು ನೀರು ಎಂಬವುಗಳು ಯಾವ

ರೀತಿಯಲ್ಲಿ ನಿರತವಾಗಿವೆ (ಕಣ್ಣು ಆಕರವಾಗಿ ಮತ್ತು ನೀರು ಅಂತಹ ಆಕರದಲ್ಲಿ ಕಾಣಿಸುವ ವಸ್ತುವಾಗಿ) ಎಂಬುದನ್ನು ತಿಳಿಸುವುದರ ಮೂಲಕ ಸಂಬಂಧಿಸುತ್ತದೆ.

ಇದೇ ರೀತಿಯಲ್ಲಿ ಜೇನಿನ ಹುಳ ಎಂಬುದರಲ್ಲಿ ಕಾಣಿಸುವ ಸಂಬಂಧಕ ಪ್ರತ್ಯಯ ಜೇನು ಮತ್ತು ಹುಳ ಎಂಬ ಎರಡು ನಾಮಪದಗಳನ್ನು ನೇರವಾಗಿ ಸಂಬಂಧಿಸುವುದಾದರೆ, ಜೇನನ್ನು ಸಂಗ್ರಹಿಸುವ ಹುಳ ಎಂಬುದರಲ್ಲಿ ಬರುವ ಅನ್ನು ಎಂಬ ವಿಭಕ್ತಿ ಪ್ರತ್ಯಯ ಸಂಗ್ರಹಿಸು ಎಂಬ ಘಟನೆಯಲ್ಲಿ ಜೇನು ಮತ್ತು ಹುಳ ಎಂಬ ಪದಗಳು ಯಾವ ರೀತಿಯಲ್ಲಿ ಸಂಗ್ರಹಿಸು ಎಂಬ ಕ್ರಿಯಾಪದದೊಂದಿಗೆ ಸಂಬಂಧಿಸಿವೆ ಎಂಬುದನ್ನು ತಿಳಿಸುವುದರ ಮೂಲಕ ಆ ಎರಡು ನಾಮಪದಗಳ ನಡುವಿರುವ ಸಂಬಂಧವನ್ನು ಸುತ್ತು ಬಳಸಿ ಹೇಳುತ್ತವೆ.

ಈ ರೀತಿ ಸಂಬಂಧಕ ಪ್ರತ್ಯಯದ ಬದಲು ಬೇರೆ ಬೇರೆ ವಿಭಕ್ತಿ ಪ್ರತ್ಯಯ ಗಳನ್ನು (ಕ್ರಿಯಾಪದಗಳೊಂದಿಗೆ) ಬಳಸುವುದರ ಮೂಲಕ ಎರಡು ನಾಮಪದ ಗಳಿರುವ ಜೋಡುಪದಗಳಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ತೋರಿಸಲು ಸಾಧ್ಯವಿದೆ ಮತ್ತು ಈ ವೈವಿಧ್ಯತೆಯ ಆಧಾರದ ಮೇಲೆ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಲು ಸಾಧ್ಯವಿದೆ. ಇಂತಹ ಒಳನುಡಿಗಳಲ್ಲಿ ಯಾವ ವಿಭಕ್ತಿ ಪ್ರತ್ಯಯ ಬಂದಿದೆ ಎಂಬುದು ಈ ವಿಭಜನೆಗೆ ಒಂದು ಆಧಾರವಾಗಬಲ್ಲುದು.

ಜೋಡುಪದ ಸಂಬಂಧಕ ಪ್ರತ್ಯಯ ವಿಭಕ್ತಿ ಪ್ರತ್ಯಯಗಳು ಜೇನುಹುಳ ಜೇನಿನ ಹುಳ ಜೇನನ್ನು ಸಂಗ್ರಹಿಸುವ ಹುಳ ಅಡಕತ್ತರಿ ಅಡಕೆಯ ಕತ್ತರಿ ಅಡಕೆಯನ್ನು ಕತ್ತರಿಸುವ ಕತ್ತರಿ ಬೆಂಕಿಪೆಟ್ಟಿಗೆ ಬೆಂಕಿಯ ಪೆಟ್ಟಿಗೆ ಬೆಂಕಿಯನ್ನು ಮಾಡಲು ಬಳಸುವ ಪೆಟ್ಟಿಗೆ ಕಣ್ಣುಸನ್ನೆ ಕಣ್ಣಿನ ಸನ್ನೆ ಕಣ್ಣಿನಿಂದ ಮಾಡಿದ ಸನ್ನೆ ನೂಲೇಣಿ ನೂಲಿನ ಏಣಿ ನೂಲಿನಿಂದ ಮಾಡಿದ ಏಣಿ ಕೈಕೊಡಲಿ ಕೈಯ ಕೊಡಲಿ ಕೈಯಿಂದ ಕಡಿಯಲು ಬಳಸುವ ಕೊಡಲಿ ಮೂರುದಾರ ಮೂಗಿನ ದಾರ (ಎತ್ತಿನ) ಮೂರಿಗೆ ಕಟ್ಟಿದ ದಾರ ತಪ್ಪು ಕಾಣಿಕೆ ತಪ್ಪಿನ ಕಾಣಿಕೆ ತಪ್ಪಿಗೆ ಕೊಡುವ ಕಾಣಿಕೆ ಕೈನೀರು ಕೈಯ ನೀರು (ಮದುವೆಯಲ್ಲಿ) ಕೈಗೆ ಎರೆಯುವ ನೀರು ಕಣ್ಣೀರು ಕಣ್ಣಿನ ನೀರು ಕಣ್ಣಿನಲ್ಲಿ ಬರುವ ನೀರು ತಲೆಗೂದಲು ತಲೆಯ ಕೂದಲು ತಲೆಯಲ್ಲಿ ಬೆಳೆಯುವ ಕೂದಲು ಕಾಳ್ಳಿಚ್ಚು ಕಾಡಿನ ಕಿಚ್ಚು ಕಾಡಿನಲ್ಲಿ ಉರಿಯುವ ಕಿಚ್ಚು (ಬೆಂಕಿ)

ಮೇಲೆ ಮೊದಲನೆಯ ಕಾಲಂನಲ್ಲಿ ಕೊಟ್ಟಿರುವ ಜೋಡುಪದಗಳಿಗೆಲ್ಲ ಅ ಎಂಬ ಸಂಬಂಧಕ ಪ್ರತ್ಯಯವನ್ನು ಬಳಸಿ ಒಂದೇ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆಯೆಂಬುದನ್ನು ಎರಡನೆಯ ಕಾಲಂನಿಂದಲೂ ಮತ್ತು ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲೊಂದನ್ನು ಬಳಸಿ ಅವಕ್ಕೇನೇ ಬೇರೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯವಿದೆ ಯೆಂಬುದನ್ನು ಮೂರನೆಯ ಕಾಲಂನಿಂದಲೂ ತಿಳಿಯಬಹುದು.

ಈ ರೀತಿ ಬೇರೆ ಬೇರೆ ವಿಭಕ್ತಿ ಪ್ರತ್ಯಯಗಳಲ್ಲಿ ಯಾವುದರ ಮೂಲಕ ಈ ಜೋಡುಪದಗಳ ಅಂಗಗಳಾಗಿ ಬರುವ ನಾಮಪದಗಳನ್ನು ಸಂಬಂಧಿಸಬಹುದು ಎಂಬ ವಿಷಯದ ಆಧಾರದ ಮೇಲೆ ಅವನ್ನು ವಿಂಗಡಿಸುವ ಬದಲು, ಹಾಗೆ ಸಂಬಂಧಿಸುವುದಕ್ಕಾಗಿ ಬಳಸುವ ಕ್ರಿಯಾಪದಗಳು ಯಾವುವು ಎಂಬ ವಿಷಯದ ಆಧಾರದ ಮೇಲೂ ಇವನ್ನು ವಿಂಗಡಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಜೋಡುಪದಗಳಿಗೆಲ್ಲ ಮಾಡು ಎಂಬ ಕ್ರಿಯಾಪದವನ್ನು ಬಳಸಿ ಒಳನುಡಿಯನ್ನು ತಯಾರಿಸಲು ಸಾಧ್ಯವಿದೆ.

ಕಣ್ಣುಸನ್ನೆ ಕಣ್ಣಿನಿಂದ ಮಾಡುವ ಸನ್ನೆ
ನೂಲೇಣಿ ನೂಲಿನಿಂದ ಮಾಡಿದ ಏಣಿ
ಮರಗಾಲು ಮರದಿಂದ ಮಾಡಿದ ಕಾಲು
ಮರಗಾಣ ಮರದಿಂದ ಮಾಡಿದ ಗಾಣ

ಎರಡು ನಾಮಪದಗಳನ್ನು ಸೇರಿಸಿ ತಯಾರಿಸಿರುವ ಎಲ್ಲಾ ಜೋಡುಪದ ಗಳಿಗೂ ಸಂಬಂಧಕ ಪ್ರತ್ಯಯವನ್ನು ಬಳಸಿ ಒಳನುಡಿಯನ್ನು ಕೊಡಲು ಸಾಧ್ಯ ವಾಗದು. ಉದಾಹರಣೆಗಾಗಿ, ಆನೆಕಾಲು ಎಂಬ ಜೋಡುಪದಕ್ಕೆ ಕಾಲುಗಳು ಆನೆಯ ಕಾಲಿನ ಹಾಗೆ ದಪ್ಪವಾಗುವ ಒಂದು ರೋಗವನ್ನು ಹೆಸರಿಸುವ ಅರ್ಥ ವಿದೆಯಾದ ಕಾರಣ, ಅದಕ್ಕೆ ಆನೆಯ ಕಾಲು ಎಂಬುದಾಗಿ ಸಂಬಂಧಕ ಪ್ರತ್ಯಯ ವಿರುವ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಇದೇ ರೀತಿಯಲ್ಲಿ ಇಲಿಕಿವಿ ಎಂಬ ಜೋಡುಪದಕ್ಕೂ ಇಲಿಯ ಕಿವಿ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಯಾಕೆಂದರೆ, ಅದು ಇಲಿಯ ಕಿವಿಯ ಹಾಗೆ ಕಾಣಿಸುವ ಎಲೆಗ ಳಿರುವ ಒಂದು ಗಿಡವನ್ನು ಹೆಸರಿಸುತ್ತದೆ.

ಕನ್ನಡದಲ್ಲಿ ಇಂತಹ ಮೂರು ರೀತಿಯ ಜೋಡುಪದಗಳು ಬಳಕೆಯಲ್ಲಿವೆ. ಆನೆಕಾಲು, ಇಲಿಕಿವಿ, ಕೈಗೊಂಬೆ ಮೊದಲಾದವುಗಳ ಹಾಗೆ ಅಂಗಗಳಾಗಿ ಬಂದಿರುವ ಪದಗಳಲ್ಲಿ ಎರಡೂ ಉಪಮಾನಕ್ಕೆ ಸಂಬಂಧಿಸಿದವುಗಳು, ಕಲ್ಲೆದೆ, ತಾಯಿಬೇರು, ಕೈಗಂಬ ಮೊದಲಾದವುಗಳ ಹಾಗೆ ಮೊದಲನೆಯ ಪದ ಮಾತ್ರ ಉಪಮಾನಕ್ಕೆ ಸಂಬಂಧಿಸಿ ಇರುವವುಗಳು, ಮತ್ತು ಜೇನುತುಪ್ಪ, ನೆಲದಾವರೆ, ಮೈಗಳ್ಳ ಮೊದಲಾದವುಗಳ ಹಾಗೆ ಎರಡನೆಯ ಪದ ಮಾತ್ರ ಉಪಮಾನಕ್ಕೆ

ಸಂಬಂಧಿಸಿ ಇರುವವುಗಳು ಎಂಬುದಾಗಿ ಈ ಮೂರು ವಿಧದ ಜೋಡುಪದ ಗಳನ್ನು ವರ್ಣಿಸಬಹುದು. ಉದಾ:

  1. (೧) ಅಂಗಗಳೆರಡೂ ಉಪಮೆಗಳು
  2. ಇಲಿಕಿವಿ ಇಲಿಯ ಕಿವಿಯಂತಿರುವ ಎಲೆಗಳಿರುವ ಗಿಡ
  3. ಕೈಗೊಂಬೆ ಕೈಯ ಗೊಂಬೆಯಂತೆ ವಶದಲ್ಲಿರುವವನು
  4. (೨) ಮೊದಲನೆಯ ಅಂಗ ಉಪಮೆ
  5. ಕಲ್ಲೆದೆ ಕಲ್ಲಿನ ಹಾಗೆ ಕಠಿಣವಾಗಿರುವ ಎದೆ
  6. ಕೈಗಂಬ ಕೈಯಿಂದ ತೋರಿಸುವ ಹಾಗೆ ದಾರಿ ತೋರಿಸುವ ಕಂಬ
  7. (೩) ಎರಡನೆಯ ಅಂಗ ಉಪಮೆ
  8. ನೆಲದಾವರೆ ನೆಲದಲ್ಲಿ ಬೆಳೆವ ತಾವರೆಯಂತಿರುವ ಹೂ
  9. ಜೇನುತುಪ್ಪ ಜೇನುಹುಳ ತಯಾರಿಸುವ ತುಪ್ನದಂತಿರುವ ದ್ರವ

(ಖ) ಮೊದಲನೆಯ ಅಂಗ ಕ್ರಿಯಾಪದವಾಗಿರುವ ಜೋಡುಪದಗಳು

ಮೊದಲನೆಯ ಅಂಗ ಕ್ರಿಯಾಪದವಾಗಿಯೂ ಮತ್ತು ಎರಡನೆಯ ಅಂಗ ನಾಮ ಪದವಾಗಿಯೂ ಇರುವ ಜೋಡುಪದಗಳು ಕನ್ನಡದಲ್ಲಿ ಕೆಲವಿವೆ. ಇವುಗಳಲ್ಲಿ ಬರುವ ಕ್ರಿಯಾಪದವು ಒಂದು ಘಟನೆಯನ್ನು ತಿಳಿಸುತ್ತಿದ್ದು, ಜೋಡುಪದವನ್ನು ತಯಾರಿಸುವ ಸಮಯದಲ್ಲಿ ಆ ಘಟನೆಯನ್ನು ಜೋಡುಪದವು ಹೆಸರಿಸಬೇಕಾ ಗಿರುವ ವ್ಯಕ್ತಿ ಇಲ್ಲವೇ ವಸ್ತುವಿನ ಗುಣಧರ್ಮವನ್ನಾಗಿ ಆರಿಸಲಾಗಿತ್ತೆಂದು ನಾವು ಊಹಿಸಬಹುದು. ಉದಾ:

ಸುಳಿಗಾಳಿ ಸುಳಿಯುವ ಗಾಳಿ ಸುರಿಮಳೆ ಸುರಿಯುವ ಮಳೆ ಸಿಡಿಮದ್ದು ಸಿಡಿಯುವ ಮದ್ದು ಬೀಸುಗಲ್ಲು (ಧಾನ್ಯವನ್ನು) ಬೀಸುವ ಕಲ್ಲು ನಿಲುಗಡೆ (ವಾಹನವನ್ನು) ನಿಲ್ಲಿಸುವ ಕಡೆ ಜಾರುಬಂಡಿ (ಮಕ್ಕಳು) ಜಾರುವ (ಆಟವಾಡುವ) ಬಂಡಿ ಚುಚ್ಚುಮದ್ದು ಚುಚ್ಚುವ (ಚುಚ್ಚಿಕೊಡುವ) ಮದ್ದು ಊರುಗೋಲು ಊರಲು ಬಳಸುವ ಕೋಲು ತೋರುಬೆರಳು (ಯಾವುದನ್ನಾದರೂ) ತೋರಿಸಲು ಬಳಸುವ ಬೆರಳು

ಇಂತಹ ಜೋಡುಪದಗಳಲ್ಲಿ ಮೊದಲನೆಯ ಅಂಗವಾಗಿ ಬರುವ ಕ್ರಿಯಾ ಪದಕ್ಕೂ ಮತ್ತು ಎರಡನೆಯ ಅಂಗವಾಗಿ ಬರುವ ನಾಮಪದಕ್ಕೂ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳಿರಲು ಸಾಧ್ಯವಿದೆ. ಉದಾಹರಣೆಗಾಗಿ, ಸುಳಿಗಾಳಿ, ಸಿಡಿಮದ್ದು ಮೊದಲಾದವುಗಳಲ್ಲಿ ಕ್ರಿಯಾಪದವು ಸೂಚಿಸುವ ಘಟನೆಯಲ್ಲಿ ನಾಮಪದವು ಗುರುತಿಸುವ ವಸ್ತು ತೊಡಗಿಕೊಂಡಿರುವುದನ್ನೂ ಮತ್ತು ತೂಗುದೀಪ, ಚುಚ್ಚುಮದ್ದು ಮೊದಲಾದವುಗಳಲ್ಲಿ ಬೇರಾರಾದರೂ ಅವನ್ನು ಆ ರೀತಿ ತೊಡಗಿಸಿರುವುದನ್ನೂ ಕಾಣಬಹುದು. ನಾಮಪದವು ಗುರುತಿಸುವ ವಸ್ತು ಕ್ರಿಯಾಪದವು ಸೂಚಿಸುವ ಘಟನೆಗೆ ಬೀಸುಗಲ್ಲು, ಕಡೆಗೋಲು ಮೊದ ಲಾದವುಗಳಲ್ಲಿ ಕರಣವಾಗಿದೆಯಾದರೆ, ಸುಡುಗಾಡು, ಜಾರುಬಂಡಿ ಮೊದಲಾ ದವುಗಳಲ್ಲಿ ಆಕರವಾಗಿದೆ. ಜೋಡುಪದಗಳ ನಡುವೆ ಕಾಣಿಸುವ ಈ ವ್ಯತ್ಯಾಸದ ಆಧಾರದ ಮೇಲೂ ಅವನ್ನು ಬೇರೆ ಬೇರೆ ಗುಂಪುಗಳಲ್ಲಿ ಹಂಚಿ ಹೇಳಲು ಸಾಧ್ಯವಿದೆ.

ಜೋಡುಪದದ ಒಳರಚನೆಯಲ್ಲಿ ಕಾಣಿಸುವ ಘಟನೆ ಹಲವು ಸಂದರ್ಭ ಗಳಲ್ಲಿ ನಡೆಯುವಂತಹದಾಗಿರಬಹುದು ಇಲ್ಲವೇ ಒಂದು ಬಾರಿ ಮಾತ್ರವೇ ನಡೆದುದಾಗಿರಬಹುದು. ಈ ವ್ಯತ್ಯಾಸವನ್ನು ಜೋಡುಪದದ ಒಳನುಡಿಯಲ್ಲಿ ಬರುವ ಕ್ರಿಯಾಪದದೊಂದಿಗೆ ವ ಇಲ್ಲವೇ ದ ಎಂಬ ಕಾಲವಾಚಕ ಪ್ರತ್ಯಯ ವನ್ನು ಬಳಸುವ ಮೂಲಕ ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಕೆಳಗೆ (೩ಕ)ದಲ್ಲಿ ಕೊಟ್ಟಿರುವ ಜೋಡುಪದಗಳ ಒಳರಚನೆಯಲ್ಲಿ ಹಲವು ಸಂದರ್ಭ ಗಳಲ್ಲಿ ನಡೆಯುವ ಘಟನೆಯೂ ಮತ್ತು (೩ಖ)ದಲ್ಲಿ ಕೊಟ್ಟಿರುವ ಜೋಡುಪದ ಗಳ ಒಳರಚನೆಯಲ್ಲಿ ಒಂದು ಬಾರಿಗೆ ಮಾತ್ರವೇ ನಡೆಯುವ ಘಟನೆಯೂ ಬಂದಿರುವುದನ್ನು ಕಾಣಬಹುದು.

(೩ಕ) ಜಾರುಬಂಡಿ ಮಕ್ಕಳು ಜಾರುವ ಬಂಡಿ ನಿಲುಗಡೆ ವಾಹನವನ್ನು ನಿಲ್ಲಿಸುವ ಜಾಗ ಸಿಡಿಮದ್ದು ಸಿಡಿಯುವ ಮದ್ದು ಊರುಗೋಲು ಊರಲು ಬಳಸುವ ಕೋಲು

(೩ಖ) ಬಿಡುಮುಡಿ ಬಿಟ್ಟ (ಕೆದರಿದ) ಮುಡಿ (ಕೂದಲು) ಕಡಿಯಕ್ಕಿ ಕಡಿದ (ತುಂಡಾದ) ಅಕ್ಕಿ ಹುಟ್ಟುಹಬ್ಬ ಹುಟ್ಟಿದ (ದಿನದ) ಹಬ್ಬ ಬಿಚ್ಚುಗತ್ತಿ ಬಿಚ್ಚಿದ ಕತ್ತಿ

ಜೋಡುಪದದ ಒಳರಚನೆಯಲ್ಲಿ ಕಾಣಿಸುವ ಕ್ರಿಯಾಪದವು ನಿಜವಾಗಿಯೂ ನಡೆದಿರುವ ಘಟನೆಯೊಂದನ್ನು ಸೂಚಿಸುವ ಬದಲು ಉಪಮೆಯಾಗಿರಲೂ ಸಾಧ್ಯ ವೆಂಬುದನ್ನು ಹಾಸುಗಲ್ಲು (ಹಾಸಿದ ಹಾಗೆ ಕಾಣಿಸುವ ಕಲ್ಲು) ಎಂಬುದರಲ್ಲಿ ನೋಡಬಹುದು.

ಮೊದಲನೆಯ ಅಂಗವು ಕ್ರಿಯಾಪದವೇ ಅಥವಾ ನಾಮಪದವೇ ಎಂಬ ವಿಷಯದಲ್ಲಿ ಸಂದೇಹವೇಳುವಂತಹ ಜೋಡುಪದಗಳೂ ಕೆಲವಿವೆ. ಉದಾ ಹರಣೆಗಾಗಿ, ಹುಟ್ಟುಕುರುಡ ಎಂಬ ಜೋಡುಪದದಲ್ಲಿ ಬರುವ ಹುಟ್ಟು ಎಂಬ ಪದವನ್ನು ಕ್ರಿಯಾಪದವೆಂದು ಪರಿಗಣಿಸಿ, ಹುಟ್ಟುವಾಗಲೇ ಕುರುಡನಾಗಿದ್ದ ವನು ಎಂಬುದಾಗಿ ಒಳನುಡಿಯನ್ನು ಕೊಡಬಹುದು, ಇಲ್ಲವೇ ಅದನ್ನು ನಾಮ ಪದವೆಂದು ಪರಿಗಣಿಸಿ, ಹುಟ್ಟಿನಲ್ಲೇ ಕುರುಡನಾಗಿದ್ದವನು ಎಂಬುದಾಗಿಯೂ ಒಳನುಡಿಯನ್ನು ಕೊಡಬಹುದು. ಇದೇ ರೀತಿಯಲ್ಲಿ ಹುಟ್ಟುಗುಣ (ಹುಟ್ಟು ವಾಗಲೇ ಪಡೆದಿದ್ದ ಗುಣ ಇಲ್ಲವೇ ಹುಟ್ಟಿನಲ್ಲೇ ಪಡೆದಿದ್ದ ಗುಣ), ಕಚ್ಚು ಗಾಲಿ (ಕಚ್ಚಿ ಹಿಡಿಯುವ ಗಾಲಿ ಇಲ್ಲವೇ ಕಚ್ಚುಗಳಿರುವ ಗಾಲಿ) ಎಂಬವು ಗಳ ಒಳರಚನೆಯಲ್ಲೂ ಮೊದಲನೆಯ ಪದವಾಗಿ ಕ್ರಿಯಾಪದ ಇಲ್ಲವೇ ನಾಮ ಪದವನ್ನು ಕಾಣಲು ಸಾಧ್ಯವಿದೆ.

(ಗ) ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದಗಳು

ಕನ್ನಡದಲ್ಲಿ ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ರಚಿಸಿದ ಜೋಡು ಪದಗಳೇ ಜಾಸ್ತಿಯೆಂದು ಹೇಳಬಹುದು. ಇವುಗಳಲ್ಲಿ ಬರುವ ನಾಮಪದಗಳು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಅಥವಾ ವಿಷಯವನ್ನು ಗುರುತಿಸುತ್ತಿದ್ದು, ಗುಣಪದಗಳು ಅವುಗಳಲ್ಲಿ ಕಾಣಿಸುವ ಬೇರೆ ಬೇರೆ ರೀತಿಯ ಗುಣಧರ್ಮಗಳನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕೆಂದಾಳಿ ಎಂಬ ಜೋಡುಪದಕ್ಕೆ (ಕೆಂಪು ತಾಳಿ (ತೆಂಗು)) ಎಂಬ ಒಳರಚನೆಯನ್ನು ಕೊಡಲು ಸಾಧ್ಯವಿದೆ. ಇದರಲ್ಲಿ ಕೆಂ (ಕೆಂಪು) ಎಂಬ ಗುಣಪದವೂ ಮತ್ತು ತಾಳಿ (ತೆಂಗು) ಎಂಬ ನಾಮಪದವೂ ಕಾಣಿಸುತ್ತಿದ್ದು, ನಾಮಪದವು ಗುರುತಿಸುವ ಮರದ ಗುಣಧರ್ಮವೊಂದನ್ನು ಗುಣಪದ ಸೂಚಿಸುತ್ತಿದೆ.

ಇಂತಹ ಜೋಡುಪದಗಳಲ್ಲಿ ಬರುವ ಗುಣಪದಗಳ ನಡುವೆ ಬೇರೆ ಬೇರೆ ರೀತಿಯ ವ್ಯತ್ಯಾಸಗಳನ್ನು ಕಾಣಲು ಸಾಧ್ಯವಿದ್ದು, ಅಂತಹ ವ್ಯತ್ಯಾಸಗಳನ್ನಾಧರಿಸಿ ಗುಣಪದವಿರುವ ಜೋಡುಪದಗಳನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಇಂತಹ ವಿಂಗಡನೆಗಳಲ್ಲಿ ಮುಖ್ಯವಾದುವನ್ನು ಕೆಳಗೆ ಸ್ವಲ್ಪ ವಿವರವಾಗಿ ಕೊಡಲಾಗಿದೆ.

(೧) ನಾಮವಿಶೇಷಣ ಮತ್ತು ಕ್ರಿಯಾವಿಶೇಷಣ

ಗುಣಪದಗಳು ಕೆಳಗೆ (೪ಕ)ದಲ್ಲಿ ತೋರಿಸಿರುವಂತೆ ನೇರವಾಗಿ ಜೋಡುಪದಗಳ ಒಳರಚನೆಯಲ್ಲಿ ಕಾಣಿಸುವ ನಾಮಪದಗಳ ವಿಶೇಷಣಗಳಾಗಿರಬಹುದು ಇಲ್ಲವೇ (೪ಖ)ದಲ್ಲಿ ತೋರಿಸಿದಂತೆ ಅಂತಹ ನಾಮಪದಗಳಿಗೆ ಸಂಬಂಧಿಸಿದಂತಹ ಕ್ರಿಯಾಪದವೊಂದರ ವಿಶೇಷಣಗಳಾಗಿರಬಹುದು.

(೪ಕ) ಹೆಬ್ಬೆರಳು ಹಿರಿ (ದೊಡ್ಡ) ಬೆರಳು ಚಿಕ್ಕಾಸು ಚಿಕ್ಕ ಕಾಸು ಕೆಂದಾಳಿ ಕೆಂಪು ತಾಳಿ (ತೆಂಗು) ಕರಿತುಳಸಿ ಕರಿ (ಕಪ್ಪು) ತುಳಸಿ

(೪ಖ) ಮುಂಗಡ (ಕೆಲಸಕ್ಕೆ) ಮುಂದಾಗಿ ಕೊಡುವ ಕಡ (ಸಾಲಿ) ಅಡ್ಡದಾರಿ ಅಡ್ಡಲಾಗಿ (ಅಡ್ಡಕ್ಕೆ) ಹೋಗುವ ದಾರಿ ಬಳಕೋಣೆ (ಮನೆಯ) ಒಳಗಿರುವ ಕೋಣೆ ಹೊರಬಾಗಿಲು (ಮನೆಯ) ಹೊರಗಿರುವ ಬಾಗಿಲು

ಮೇಲೆ (೪ಕ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಹಿರಿ, ಚಿಕ್ಕ, ಕೆಂ(ಪು) ಮತ್ತು ಕರಿ ಎಂಬ ಗುಣಪದಗಳು ನೇರವಾಗಿ ಆ ಜೋಡುಪದಗಳಲ್ಲಿ ಬಂದಿರುವ ಬೆರಳು, ಕಾಸು, ತಾಳಿ ಮತ್ತು ತುಳಸಿ ಎಂಬ ನಾಮಪದ ಗಳೊಂದಿಗೆ ಸಂಬಂಧಿಸಿವೆ. ಆದರೆ (೪ಖ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಕಾಣಿಸುವ ಮುಂದೆ, ಅಡ್ಡಲಾಗಿ, ಒಳಗೆ ಮತ್ತು ಹೊರಗೆ ಎಂಬ ಗುಣಪದಗಳು ಅವುಗಳಲ್ಲಿರುವ ನಾಮಪದಗಳೊಂದಿಗೆ ಈ ರೀತಿ ನೇರವಾಗಿ ಸಂಬಂಧಿಸುವ ಬದಲು ಅವುಗಳ ಒಳರಚನೆಯಲ್ಲಿ ಮಾತ್ರವೇ ಕಾಣಿಸುವ ಕೊಡು, ಹೋಗು ಮತ್ತು ಇರು ಎಂಬ ಕ್ರಿಯಾಪದಗಳ ಮೂಲಕ ಸಂಬಂಧಿಸಿವೆ ಎಂಬುದನ್ನು ಅವುಗಳ ಎದುರು ಕೊಟ್ಟಿರುವ ಒಳನುಡಿಗಳಿಂದ ತಿಳಿಯಬಹುದು.

ಮೇಲೆ (೪ಕ)ದಲ್ಲಿ ಕೊಟ್ಟಿರುವಂತಹ ಜೋಡುಪದಗಳಿಗೆ ಒಳನುಡಿಗಳನ್ನು ಸೂಚಿಸುವಾಗ ಗುಣಪದಗಳನ್ನು ಬಳಸುವ ಬದಲು ಅದೇ ರೂಪದ ನಾಮ ಪದಗಳ ಸಂಬಂಧಕ ರೂಪವನ್ನು (ಇಲ್ಲವೇ ಕ್ರಿಯಾಪದದೊಂದಿಗೆ ಬರುವ ಗುಣಪದರೂಪವನ್ನು) ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಕರಿತುಳಸಿ ಎಂಬ ಜೋಡುಪದಕ್ಕೆ ಒಳನುಡಿಯನ್ನು ಕರಿ (ಕಪ್ಪು) ತುಳಸಿ ಎಂದಷ್ಟೇ ಕೊಡುವ ಬದಲು ಕರಿಯ ತುಳಸಿ (ಇಲ್ಲವೇ ಕಪ್ಪಾದ ತುಳಸಿ) ಎಂದಾಗಲಿ, ಮತ್ತು ಹೆಬ್ಬೆರಳು ಎಂಬ ಜೋಡುಪದಕ್ಕೆ ಹಿರಿ (ದೊಡ್ಡ) ಬೆರಳು ಎಂದಷ್ಟೇ ಕೊಡುವ ಬದಲು ಹಿರಿದಾದ ಬೆರಳು ಎಂದಾಗಲಿ ಕೊಡಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಗುಣಪದಗಳು ಪದಗುಚ್ಛಗಳಲ್ಲಿ ನೇರವಾಗಿ ನಾಮಪದಗಳೊಂದಿಗೆ

ಬರಬಲ್ಲುವಾದ ಕಾರಣ, ಒಳನುಡಿಗಳಲ್ಲೂ ಅಂತಹ ನೇರವಾದ ಸಂಬಂಧವನ್ನು ಸೂಚಿಸಲು ಸಾಧ್ಯವಿರುವಲ್ಲೆಲ್ಲ ಅದನ್ನೇ ಸೂಚಿಸುವುದು ಒಳ್ಳೆಯದು.

  1. (೨) ಜೋಡುಪದದ ಒಳಗಿನ ಇಲ್ಲವೇ ಹೊರಗಿನ ಪದದ ವಿಶೇಷಣ
  2. ಗುಣಪದಗಳ ಬಳಕೆಯಲ್ಲಿ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ಅವು
  3. ಗಳಲ್ಲಿ ಕೆಲವು ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವಿನ ಗುಣಧರ್ಮ
  4. ವನ್ನು ಸೂಚಿಸುವುವಾದರೆ ಬೇರೆ ಕೆಲವು ಆ ವ್ಯಕ್ತಿ ಇಲ್ಲವೇ ವಸ್ತುವಿಗೂ ಮತ್ತು
  5. ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವೆ ಅಂತಹ ಗುಣಧರ್ಮದ ಮಟ್ಟಿಗೆ
  6. ಎಂತಹ ವ್ಯತ್ಯಾಸವಿದೆಯೆಂಬುದನ್ನು ತಿಳಿಸುತ್ತವೆ.
  7. ಉದಾಹರಣೆಗಾಗಿ, ಕರಿತುಳಸಿ ಎಂಬುದರಲ್ಲಿ ಬಂದಿರುವ ಕರಿ ಎಂಬ ಗುಣ
  8. ಪದ ನೇರವಾಗಿ ತುಳಸಿ ಎಂಬ ನಾಮಪದವು ಗುರುತಿಸುವ ಗಿಡದ ಗುಣಧರ್ಮ
  9. ವನ್ನು ಸೂಚಿಸುತ್ತದೆ, ಆದರೆ ದೊಡ್ಡಚೆಂಡು ಎಂಬುದರಲ್ಲಿ ಬಂದಿರುವ
  10. ದೊಡ್ಡ ಎಂಬ ಗುಣಪದ ಈ ರೀತಿ ನೇರವಾಗಿ ಚೆಂಡು ಎಂಬ ವಸ್ತುವಿನ
  11. ಗುಣಧರ್ಮ ವನ್ನು ಸೂಚಿಸುವ ಬದಲು ಬೇರೆ ಚೆಂಡುಗಳಿಗೂ ಅದಕ್ಕೂ ನಡುವೆ
  12. ಗಾತ್ರದಲ್ಲಿ ರುವ ವ್ಯತ್ಯಾಸವನ್ನು ಸೂಚಿಸುತ್ತದೆ.
  13. ನಾಮವಿಶೇಷಣಗಳ ಹಾಗೆ ಕ್ರಿಯಾವಿಶೇಷಣಗಳ ಬಳಕೆಯಲ್ಲಿಯೂ ಇಂತಹ
  14. ವ್ಯತ್ಯಾಸವನ್ನು ಕಾಣಬಹುದು. ಉದಾಹರಣೆಗಾಗಿ ಸ್ಥಾನಸೂಚಕಗಳಾದ ಮೇಲೆ,
  15. ಕೆಳಗೆ, ನಡುವೆ, ಒಳಗೆ ಮೊದಲಾದವುಗಳು ನೇರವಾಗಿ ಘಟನೆಯೊಂದರ
  16. ಗುಣ ಧರ್ಮವನ್ನು ಸೂಚಿಸುವ ಬದಲು ಯಾವುದಾದರೊಂದು ಸ್ಥಾನಕ್ಕೆ
  17. ಸಂಬಂಧಿಸಿ ದಂತೆ ಘಟನೆಯ ಸ್ಥಾನವನ್ನು ಸೂಚಿಸುತ್ತವೆ.
  18. ಈ ರೀತಿ ಎರಡು ಬೇರೆ ಬೇರೆ ಪದಗಳಿಗೆ ಸಂಬಂಧಿಸಿರುವಂತಹ ಗುಣ
  19. ಪದಗಳನ್ನು ಜೋಡುಪದಗಳಲ್ಲಿ ಬಳಸುವಾಗ ಅವು ಅಂತಹ ಜೋಡುಪದ
  20. ದಲ್ಲೇನೇ ಬಂದಿರುವ ಪದದ ಗುಣಧರ್ಮವನ್ನು ಬೇರೆ ಪದದ ಗುಣಧರ್ಮಕ್ಕೆ
  21. ಸಂಬಂಧಿಸಿದಂತೆ ಸೂಚಿಸುವುದೇ ಅಥವಾ ಆ ಪದಕ್ಕೆ ಸಂಬಂಧಿಸಿದಂತೆ ಬೇರೆ
  22. ಪದದ ಗುಣಧರ್ಮವನ್ನು ಸೂಚಿಸುವುದೇ ಎಂಬ ವಿಷಯದ ಆಧಾರದ ಮೇಲೆ
  23. ಜೋಡುಪದಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲು ಸಾಧ್ಯವಿದೆ.
  24. ಉದಾಹರಣೆಗಾಗಿ ಚಿಕ್ಕಾಸು ಎಂಬ ಜೋಡುಪದವನ್ನು ಚಿಕ್ಕಮ್ಮ ಎಂಬ
  25. ಜೋಡುಪದದೊಂದಿಗೆ ಹೋಲಿಸಿ ನೋಡಬಹುದು. ಚಿಕ್ಕಾಸು ಎಂಬುದಕ್ಕೆ ಚಿಕ್ಕ
  26. ಕಾಸು ಎಂದರೆ ‘ಬೇರೆ ಕಾಸುಗಳಿಂದ ಚಿಕ್ಕದಾಗಿರುವ ಕಾಸು’ ಎಂಬ ಅರ್ಥವಿದೆ.
  27. ಆದರೆ, ಚಿಕ್ಕಮ್ಮ ಎಂಬುದಕ್ಕೆ ಈ ರೀತಿ ಚಿಕ್ಕ ಅಮ್ಮ ಇಲ್ಲವೇ ‘ಇತರ
  28. ಅಮ್ಮಂದಿರಿಗಿಂತ ಚಿಕ್ಕ ಅಮ್ಮ’ ಎಂಬ ಅರ್ಥವಿಲ್ಲ. ಇದಕ್ಕೆ ಬದಲು ಅದಕ್ಕೆ
  29. ಅಮ್ಮನಿಗಿಂತ ಚಿಕ್ಕ ಹೆಂಗಸು ಎಂದರೆ ‘ಅಮ್ಮನ ತಂಗಿ’ ಎಂಬ ಅರ್ಥವಿದೆ.
  30. ಚಿಕ್ಕಾಸು ಎಂಬುದರಲ್ಲಿ ಚಿಕ್ಕ ಎಂಬ ಗುಣಪದ ನೇರವಾಗಿ ಆ ಜೋಡುಪದದ
  31. ಅಂಗವಾಗಿ ಬಂದಿರುವ ಕಾಸು ಎಂಬುದರ ಗುಣಧರ್ಮವನ್ನು ಸೂಚಿಸುತ್ತದೆ,

ಆದರೆ ಚಿಕ್ಕಮ್ಮ ಎಂಬುದರಲ್ಲಿ ಅದೇ ಗುಣಪದ ಜೋಡುಪದದ ಹೊರಗಿರುವ ಹೆಂಗಸು ಎಂಬ ಪದ ಸೂಚಿಸುವ ವ್ಯಕ್ತಿಯ ಗುಣಧರ್ಮವನ್ನು ಜೋಡುಪದ ದಲ್ಲಿ ಬಂದಿರುವ ಅಮ್ಮ ಎಂಬುದಕ್ಕೆ ಸಂಬಂಧಿಸಿರುವಂತೆ ಸೂಚಿಸುತ್ತದೆ.

ಈ ರೀತಿ ಸಂಬಂಧಿತವಾಗುವ ನಾಮಪದಗಳು ಒಳನುಡಿಯಲ್ಲಿ ಮೊದಲ ನೆಯವಾಗಿ ಬರುವುವಾದರೂ ಜೋಡುಪದದಲ್ಲಿ ಎರಡನೆಯವಾಗಿ ಬರುತ್ತವೆ. ಹಾಗಾಗಿ, ಇಂತಹ ಜೋಡುಪದಗಳಲ್ಲಿ ಅವುಗಳ ಅಂಗಗಳಾಗಿ ಬಂದಿರುವ ಪದಗಳ ಸ್ಥಾನಗಳು ಅದಲು ಬದಲಾಗಿರುವ ಹಾಗೆ ತೋರುತ್ತದೆ. ಉದಾಹರಣೆ ಗಾಗಿ, ಅಮ್ಮನಿಗಿಂತ ಚಿಕ್ಕ ಹೆಂಗಸು ಎಂಬ ಒಳನುಡಿಯಲ್ಲಿ ಅಮ್ಮ ಎಂಬ ಪದ ಚಿಕ್ಕ ಎಂಬುದಕ್ಕಿಂತ ಮೊದಲು ಬಂದಿದೆ, ಆದರೆ ಅದರಿಂದ ತಯಾರಾದ ಚಿಕ್ಕಮ್ಮ ಎಂಬ ಜೋಡುಪದದಲ್ಲಿ ಚಿಕ್ಕ ಎಂಬುದು ಮೊದಲು ಬಂದಿದೆ. ಇದೇ ರೀತಿಯಲ್ಲಿ ದೊಡ್ಡಪ್ಪ ಎಂಬ ಜೋಡುಪದದಲ್ಲಿ ಅಪ್ಪನಿಗಿಂತ ದೊಡ್ಡ ಗಂಡುಸು ಎಂಬ ಒಳನುಡಿಯಲ್ಲಿ ಬಂದಿರುವ ಅಪ್ಪ ಮತ್ತು ದೊಡ್ಡ ಎಂಬ ಎರಡು ಪದಗಳ ಸ್ಥಾನಗಳು ಅದಲು ಬದಲಾಗಿವೆ. ಆದರೆ, ಗುಣಪದವನ್ನು ನೇರವಾಗಿ ಸಂಬಂಧಿಸಿರುವ ದೊಡ್ಡಮನೆ ಎಂಬ ಜೋಡುಪದದಲ್ಲಿ ಈ ರೀತಿ ಪದಗಳ ಸ್ಥಾನಗಳು ಅದಲು ಬದಲಾಗಿಲ್ಲ.

ಕ್ರಿಯಾವಿಶೇಷಣಗಳಾಗಿ ಬರುವ ಗುಣಪದಗಳನ್ನು ಬಳಸಿ ತಯಾರಿಸಿದ ಜೋಡುಪದಗಳನ್ನೂ ಇದೇ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಉದಾ ಹರಣೆಗಾಗಿ, ನಡುಬೆರಳು ಎಂಬ ಜೋಡುಪದವನ್ನು ನಡುಹಗಲು ಎಂಬ ಜೋಡುಪದದೊಂದಿಗೆ ಹೋಲಿಸಿ ನೋಡಬಹುದು. ನಡುಬೆರಳು ಎಂಬುದು ಕೈಯಲ್ಲಿರುವ ಇತರ ಬೆರಳುಗಳ ನಡುವೆ ಇರುವ ಬೆರಳನ್ನು ಗುರುತಿಸುತ್ತದೆ. ಹಾಗಾಗಿ ಆ ಜೋಡುಪದದಲ್ಲಿ ನಡು ಎಂಬ ಗುಣಪದ (ಇರು ಎಂಬ ಕ್ರಿಯಾಪದದ ಮೂಲಕ) ಆ ಪದದ ಎರಡನೆಯ ಪದವಾದ ಬೆರಳು ಎಂಬುದರ ಗುಣಧರ್ಮವನ್ನು ಸೂಚಿಸುತ್ತದೆ.

ಆದರೆ ನಡುಹಗಲು ಎಂಬುದು ಈ ರೀತಿ ಇತರ ಹಗಲುಗಳ ನಡುವಿರುವ ಹಗಲನ್ನು ಸೂಚಿಸುವುದಿಲ್ಲ. ಇದಕ್ಕೆ ಬದಲು ಅದು ಹಗಲಿನ ನಡುವಿನಲ್ಲಿರುವ ಒಂದು ಭಾಗವನ್ನು ಸೂಚಿಸುತ್ತದೆ. ಎಂದರೆ, ಇರು ಎಂಬ ಕ್ರಿಯಾಪದದ ಮೂಲಕ ಅದು ಆ ಜೋಡುಪದದಲ್ಲಿಲ್ಲದಿರುವ ಭಾಗ ಎಂಬುದರ ಗುಣಧರ್ಮ ವನ್ನು ಸೂಚಿಸುತ್ತದಲ್ಲದೆ ಹಗಲು ಎಂಬುದರ ಗುಣಧರ್ಮವನ್ನು ಸೂಚಿಸುವು ದಿಲ್ಲ. ಹಗಲಿನ ನಡುವಿನಲ್ಲಿರುವ ಭಾಗ ಎಂಬ ಒಳನುಡಿಯಲ್ಲಿ ಹಗಲು ಎಂಬುದು ನಡು ಎಂಬುದಕ್ಕಿಂತ ಮೊದಲು ಬಂದಿದೆ ಮತ್ತು ನಡು ಹಗಲು ಎಂಬುದರಲ್ಲಿ ಇವೆರಡರ ಸ್ಥಾನಗಳು ಅದಲು ಬದಲಾಗಿವೆ, ಆದರೆ ನಡುಬೆರಳು ಎಂಬುದರಲ್ಲಿ ಈ ರೀತಿ ಪದಗಳ ಸ್ಥಾನ ಅದಲು ಬದಲಾಗಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.

ಇಂತಹದೇ ವ್ಯತ್ಯಾಸವನ್ನು ತೋರಿಸುವ ಬೇರೆ ಕೆಲವು ಜೋಡುಪದಗಳನ್ನು ಈ ಕೆಳಗೆ ಕೊಡಲಾಗಿದೆ.

  1. (೫ಕ) ಕಡೆಹಲ್ಲು (ಬಾಯಿಯ) ಕಡೆಯಲ್ಲಿರುವ ಹಲ್ಲು
  2. (೫ಖ) ಕಡೆಗಣ್ಣು ಕಣ್ಣಿನ ಕಡೆಯಲ್ಲಿರುವ (ಭಾಗ)
  3. (೬ಕ) ಮುಂಬಾಗಿಲು (ಮನೆಯ) ಮುಂದಿರುವ ಬಾಗಿಲು
  4. (೬ಖ) ಮುಂಗೈ ಕೈಯಲ್ಲಿ ಮುಂದಿರುವ (ಭಾಗ)
  5. (೭ಕ) ಹಿಮ್ಮೇಳ (ನರ್ತಕರ) ಹಿಂಬದಿಯಲ್ಲಿರುವ ಮೇಳ
  6. (೭ಖ) ಹಿಂಗಾಲು ಕಾಲಿನ ಹಿಂಬದಿಯಲ್ಲಿರುವ (ಭಾಗ)
  7. (೮ಕ) ಒಳಕೋಣೆ (ಮನೆಯ) ಒಳಭಾಗದಲ್ಲಿರುವ ಕೋಣೆ
  8. (೮ಖ) ಒಳದವಡೆ ದವಡೆಯ ಒಳಗಿರುವ (ಭಾಗ)

ಮೇಲೆ (ಕ)ದಲ್ಲಿ ಕೊಟ್ಟಿರುವ ಜೋಡುಪದಗಳಲ್ಲಿ ಬಂದಿರುವ ಗುಣಪದಗಳು ನೇರವಾಗಿ ಅವುಗಳಲ್ಲೇನೇ ಬಂದಿರುವ ನಾಮಪದದ ಗುಣಧರ್ಮವನ್ನು ಸೂಚಿಸುತ್ತವೆ, ಆದರೆ (ಖ)ದಲ್ಲಿ ಕೊಟ್ಟಿರುವ ಗುಣಪದಗಳು ಜೋಡುಪದಗಳ ಲ್ಲಿಲ್ಲದಿರುವ ಮತ್ತು ಒಳನುಡಿಗಳಲ್ಲಿ ಕಂಸದೊಳಗೆ ಕೊಟ್ಟಿರುವ ಭಾಗ ಎಂಬುದರ ಗುಣಧರ್ಮವನ್ನು ಸೂಚಿಸುತ್ತವೆ ಎಂಬುದನ್ನು ಗಮನಿಸಬಹುದು.

ನಾಲ್ಕು ಕಾಲಿರುವ ದನ, ನಾಯಿ ಮೊದಲಾದವುಗಳ ಬಗ್ಗೆ ಹೇಳುವಾಗ ಹಿಂಗಾಲು ಎಂಬುದು ‘ಹಿಂದಿರುವ ಕಾಲ’ನ್ನು ಗುರುತಿಸುವುದಾದ ಕಾರಣ, ಅಂತಹ ಸಂದರ್ಭಗಳಲ್ಲಿ ಅದು (ಖ) ವಿಭಾಗದ ಬದಲು (ಕ) ವಿಭಾಗಕ್ಕೆ ಸೇರುತ್ತದೆ. ಆದರೆ, ಮನುಷ್ಯರ ಕಾಲಿಗೆ ಸಂಬಂಧಿಸಿದಂತೆ ಆ ಪದವನ್ನು ಬಳಸಿದಾಗ, ಅದು ಮೇಲೆ ಸೂಚಿಸಿದಂತೆ (ಖ) ವಿಭಾಗದಲ್ಲಿ ಬರುತ್ತದೆ. ಮುಂಗಾಲು ಎಂಬ ಜೋಡುಪದಕ್ಕೂ ಇದೇ ರೀತಿಯಲ್ಲಿ ಸಂದರ್ಭಕ್ಕನುಸಾರ ವಾಗಿ ಈ ಎರಡು ಬೇರೆ ಬೇರೆ ರೀತಿಯ ಒಳನುಡಿಗಳನ್ನು ಕೊಡಲು ಸಾಧ್ಯ ವಿದೆ.

೫.೬.೩ ಎರಡನೆಯ ಅಂಗದಲ್ಲಿ ವೈವಿಧ್ಯ

ಮೇಲೆ ವಿವರಿಸಿದ ಜೋಡುಪದಗಳಲ್ಲೆಲ್ಲ ಎರಡನೆಯ ಅಂಗವಾಗಿ ನಾಮಪದ ಮಾತ್ರವೇ ಬಳಕೆಯಾಗಿದ್ದು, ಮೊದಲನೆಯ ಅಂಗವಾಗಿ ಮಾತ್ರ ನಾಮಪದ, ಕ್ರಿಯಾಪದ, ಇಲ್ಲವೇ ಗುಣಪದದ ಬಳಕೆಯಾಗಿದೆ. ಕನ್ನಡದ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿಯೂ ನಾಮಪದ ಮಾತ್ರವಲ್ಲದೆ ಕ್ರಿಯಾಪದ ಮತ್ತು

ಗುಣಪದಗಳು ಬರಬಲ್ಲವೇ ಎಂಬ ಪ್ರಶ್ನೆಯನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆ ಯಿದೆ.

ಗುಣಪದಗಳಿರುವ ಜೋಡುಪದಗಳಿಗೆ ಎರಡು ರೀತಿಯ ಒಳರಚನೆಗಳಿರಲು ಸಾಧ್ಯ ಎಂಬುದನ್ನು ನಾವು ಹಿಂದಿನ ವಿಭಾಗದಲ್ಲಿ ನೋಡಿರುವೆವು. ಈ ವ್ಯತ್ಯಾಸ ವನ್ನು ಅವುಗಳಿಗಿ ಕೊಡಬಹುದಾದ ಒಳನುಡಿಗಳಲ್ಲಿ ಕಾಣಬಹುದು. ಉದಾ ಹರಣೆಗಾಗಿ, ಮುಂಬಾಗಿಲು ಎಂಬ ಜೋಡುಪದಕ್ಕೆ (ಮನೆಯ) ಮುಂದಿರುವ ಬಾಗಿಲು ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರಲ್ಲಿ ಮುಂ(ದೆ) ಎಂಬ ಗುಣಪದ ಬಾಗಿಲು ಎಂಬ ನಾಮಪದದ ಎಡಕ್ಕೆ ಬಂದಿದೆ. ಆದರೆ ಮುಂಗೈ ಎಂಬ ಜೋಡುಪದಕ್ಕೆ ಕೈಯಲ್ಲಿ ಮುಂದಿರುವ (ಭಾಗ) ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದರಲ್ಲಿ ಮುಂ(ದೆ) ಎಂಬ ಗುಣಪದ ಕೈ ಎಂಬ ನಾಮಪದದ ಬಲಕ್ಕೆ ಬಂದಿದೆ. ಈ ರೀತಿ ಒಳನುಡಿ ಯಲ್ಲಿ ಗುಣಪದ ನಾಮಪದದ ಮೊದಲು ಇಲ್ಲವೇ ಅನಂತರ ಬರಬಲ್ಲು ದಾದರೂ ಜೋಡುಪದದಲ್ಲಿ ಅದು ಸಾಮಾನ್ಯವಾಗಿ ನಾಮಪದದ ಮೊದಲಿ ಗೇನೇ (ಎಡಕ್ಕೆ) ಬರುತ್ತದೆ.

ಆದರೆ ಕ್ರಿಯಾಪದಗಳ ವಿಷಯ ಇದಕ್ಕಿಂತ ಸ್ವಲ್ಪ ಭಿನ್ನವಾದುದು. ಒಳನುಡಿ ಯಲ್ಲಿ ನಾಮಪದದ ಅನಂತರ (ಅದರ ಬಲಕ್ಕೆ) ಬಂದಿರುವ ಕ್ರಿಯಾಪದ ಗುಣ ಪದದ ಹಾಗೆ ನಾಮಪದದೊಂದಿಗೆ ತನ್ನ ಸ್ಥಾನವನ್ನು ಅದಲು ಬದಲು ಮಾಡಿ ಕೊಳ್ಳುವುದಿಲ್ಲ; ಇದಕ್ಕೆ ಬದಲು, ಹೆಚ್ಚಿನ ಸಂದರ್ಭಗಳಲ್ಲೂ ಆ ಕ್ರಿಯಾಪದವೇ ನಾಮಪದವಾಗಿ ಬದಲಾಗುತ್ತದೆ. ಉದಾಹರಣೆಗಾಗಿ, ಹಾವಾಡಿಗ ಎಂಬ ಜೋಡುಪದಕ್ಕೆ ಹಾವನ್ನು ಆಡಿಸುವ ಮನುಷ್ಯ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು ಇದರಲ್ಲಿ ಆಡು ಎಂಬ ಕ್ರಿಯಾಪದ ಹಾವು ಎಂಬ ನಾಮಪದದ ಅನಂತರ ಬರುತ್ತದೆ; ಆದರೆ ಜೋಡುಪದದಲ್ಲಿ ಈ ಕ್ರಿಯಾಪದದೊಂದಿಗೆ ಇಗ ಎಂಬ ಪ್ರತ್ಯಯ ಸೇರಿ ಅದು ನಾಮಪದವಾಗಿದೆ.

ಈ ರೀತಿ ಒಳನುಡಿಯಲ್ಲಿ ಎರಡನೆಯ ಪದವಾಗಿ ಬಂದ ಕ್ರಿಯಾಪದವು ಜೋಡುಪದದಲ್ಲಿ ನಾಮಪದವಾಗಿ ಬದಲಾಗಿರುವುದನ್ನು ಈ ಕೆಳಗಿನ ಉದಾ ಹರಣೆಗಳಲ್ಲೂ ಕಾಣಬಹುದು.

ತಲೆತಿರುಕ ತಲೆ ತಿರುಗಿದ ವ್ಯಕ್ತಿ ದಾರಿಹೋಕ ದಾರಿಯಲ್ಲಿ ಹೋಗುವ ವ್ಯಕ್ತಿ ಕಲ್ಲು ಕುಟಿಗ ಕಲ್ಲನ್ನು ಕುಟ್ಟುವ ವ್ಯಕ್ತಿ ನಾಡಾಡಿ ನಾಡಿನಲ್ಲಿ ಆಡುವ (ತಿರುಗಾಡುವ) ವ್ಯಕ್ತಿ ಕಸಬರಿಕೆ ಕಸವನ್ನು ಬರಿದು ಮಾಡುವ ಸಾಧನ ಬಯಲಾಟ ಬಯಲಿನಲ್ಲಿ ಆಡುವ ನೃತ್ಯನಾಟಕ ತಲೆಹೊರೆ ತಲೆಯಲ್ಲಿ ಹೊರಬಹುದಾದ ಮೂಟೆ

ಇಂತಹ ಜೋಡುಪದಗಳ ಒಳರಚನೆಯಲ್ಲಿ ಎರಡನೆಯ ಪದವಾಗಿ ಕ್ರಿಯಾ ಪದವೊಂದು ಬಂದಿದೆಯೆಂದು ಹೇಳುವ ಬದಲು, ನಾಮಪದವೇ ಬಂದಿದೆ ಯೆಂದೂ ಹೇಳಲು ಸಾಧ್ಯವಿದೆ. ಹಾಗಿದ್ದಲ್ಲಿ ಅದು ನಾಮಪದಗಳೆರಡನ್ನು ಸೇರಿಸಿ ತಯಾರಿಸಿದ ಜೋಡುಪದವಾದೀತು. ಉದಾಹರಣೆಗಾಗಿ, ತಲೆಹೊರೆ ಎಂಬುದಕ್ಕೆ ತಲೆಯಲ್ಲಿ ಹೊರಬಹುದಾದ ಮೂಟೆ ಎಂಬ ಒಳನುಡಿಯನ್ನು ಕೊಡುವ ಬದಲು ತಲೆಯ ಹೊರೆ ಇಲ್ಲವೇ ತಲೆಯಲ್ಲಿ ಹೊರಬಹುದಾದ ಹೊರೆ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದೆ. ಇದೇ ರೀತಿಯಲ್ಲಿ ಹಣೆ ಬರಹ ಎಂಬುದಕ್ಕೆ ಹಣೆಯ ಬರಹ ಎಂದಾಗಲೀ ಇಲ್ಲವೇ ಹಣೆಯಲ್ಲಿ ಬರೆದಿರುವ ಬರಹ ಎಂದಾಗಲಿ ಒಳನುಡಿಯನ್ನು ಕೊಡಲು ಸಾಧ್ಯವಿದೆ. ತಲೆ ನೋವು, ಹುಲ್ಲುಗಾವಲು, ಹೊಟ್ಟೆನೋವು ಮೊದಲಾದುವಕ್ಕೂ ಇದೇ ರೀತಿಯಲ್ಲಿ ಎರಡನೆಯ ಅಂಗ ಕ್ರಿಯಾಪದದಿಂದ ಇಲ್ಲವೇ ನಾಮಪದದಿಂದ ಸಿದ್ಧವಾಗಿರುವಂತೆ ಒಳನುಡಿಗಳನ್ನು ಕೊಡಲು ಸಾಧ್ಯವಿದೆ.

ಆದರೆ ಎಲ್ಲಾ ಸಂದರ್ಭಗಳಲ್ಲೂ ಈ ರೀತಿ ಕ್ರಿಯಾಪದದ ಬದಲು ನಾಮ ಪದವನ್ನು ಬಳಸಿ ಒಳನುಡಿಯನ್ನು ಕೊಡಲು ಸಾಧ್ಯವಾಗದು. ಇದಕ್ಕೆ ಕಾರಣ ವೇನೆಂದರೆ, ಹೊಸಗನ್ನಡದಲ್ಲಿ -ಹೋಕ, -ಅಡಿಗ, -ಆಡಿ ಮೊದಲಾದವುಗಳು ಸ್ವತಂತ್ರ ನಾಮಪದಗಳಾಗಿ ಬಳಕೆಯಲ್ಲಿಲ್ಲ. ಇದಲ್ಲದೆ ಬೇರೆ ಕೆಲವು ಜೋಡು ಪದಗಳಲ್ಲಿ ಬರುವ ನಾಮಪದಗಳಿಗೆ (ಉದಾ: ತಲೆತಿರುಕ ಎಂಬುದರಲ್ಲಿ ಬರುವ ತಿರುಕ ಎಂಬ ಪದಕ್ಕೆ ಇಲ್ಲವೇ ಬಯಲಾಟ ಎಂಬುದರಲ್ಲಿ ಬರುವ ಆಟ ಎಂಬ ಪದಕ್ಕೆ) ಜೋಡುಪದಗಳಲ್ಲಿ ಕೊಡಬೇಕಾಗಿರುವ ಅರ್ಥದಲ್ಲಿ ಸ್ವತಂತ್ರವಾದ ಬಳಕೆಯಿಲ್ಲ.

ಒಳನುಡಿಯಲ್ಲಿ ಬರುವ ಕ್ರಿಯಾಪದವು ಹಾಗೆಯೇ ಉಳಿದಿರುವಂತಹ ಜೋಡುಪದಗಳೂ ಕನ್ನಡದಲ್ಲಿ ಕೆಲವಿವೆ. ಉದಾಹರಣೆಗಾಗಿ ಕೈಪಿಡಿ ಎಂಬ ಪದಕ್ಕೆ ಕೈಯಲ್ಲಿ ಪಿಡಿ(ಹಿಡಿ)ಯುವಷ್ಟು ಚಿಕ್ಕ ಪುಸ್ತಕ ಎಂಬುದಾಗಿ ಒಳನುಡಿ ಯನ್ನು ಕೊಡಲು ಸಾಧ್ಯವಿದ್ದು, ಪಿಡಿ ಎಂಬ ಹಳೆಯ ಕ್ರಿಯಾಪದ ಆ ಜೋಡು ಪದದಲ್ಲಿ ಹಾಗೆಯೇ ಉಳಿದಿದೆ. ಬಾನುಲಿ ಎಂಬ ಪದಕ್ಕೆ ಬಾನಿನಿಂದ ಉಲಿಯುವ ಸಂಸ್ಥೆ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಇಲ್ಲೂ ಉಲಿ ಎಂಬ ಕ್ರಿಯಾಪದ ಜೋಡುಪದದಲ್ಲಿ ಹಾಗೆಯೇ ಉಳಿದಿದೆ. ಆದರೆ ಇಂತಹ ಜೋಡುಪದಗಳು ಕನ್ನಡದಲ್ಲಿ ಬಹಳ ಅಪರೂಪವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ.

ಇನ್ನು ಕೆಲವು ಜೋಡುಪದಗಳಲ್ಲಿ ಎರಡನೆಯದಾಗಿ ಬರುವ ಅಂಗ ಕ್ರಿಯಾ ಪದದಂತಿದ್ದರೂ ಅದನ್ನು ಅದೇ ರೂಪದಲ್ಲಿರುವ ನಾಮಪದವೆಂದು ಪರಿಗಣಿ ಸಲು ಸಾಧ್ಯವಿದೆ. ಉದಾಹರಣೆಗಾಗಿ ಎದೆಗುದಿ ಎಂಬ ಜೋಡುಪದಕ್ಕೆ ಎದೆ ಯಲ್ಲಿ ಆಗುವ ಕುದಿ ಎಂಬುದಾಗಿ ಒಳನುಡಿಯನ್ನು ಕೊಟ್ಟು ಅದರಲ್ಲಿ ಬರುವ

ಎರಡನೆಯ ಪದ ಒಂದು ನಾಮಪದವೆಂದು ಹೇಳಲು ಸಾಧ್ಯವಿದೆ. ಇದೇ ರೀತಿಯಲ್ಲಿ ಕಣ್ಣುರಿ (ಕಣ್ಣಿನಲ್ಲಿ ಆಗುವ ಉರಿ), ಕಂಬನಿ (ಕಣ್ಣಿನಲ್ಲಿ ಬರುವ ಹನಿ), ನಾಣ್ಣುಡಿ (ನಾಡಿನಲ್ಲಿ ರೂಢಿಯಾಗಿರುವ ನುಡಿ) ಮೊದಲಾದವುಗ ಳಲ್ಲೂ ಎರಡನೆಯ ಅಂಗವನ್ನು ಕ್ರಿಯಾಪದವೆಂದು ಹೇಳುವ ಬದಲು ನಾಮ ಪದವೆಂದು ವಾದಿಸಲು ಸಾಧ್ಯವಿದೆ.

ಮೊದಲನೆಯ ಅಂಗ ಕ್ರಿಯಾಪದ ಇಲ್ಲವೇ ಗುಣಪದವಾಗಿದ್ದು, ಎರಡನೆಯ ಅಂಗ ಕ್ರಿಯಾಪದವಾಗಿರುವ ಜೋಡುಪದಗಳು ಕನ್ನಡದಲ್ಲಿ ಬಹಳ ಅಪರೂಪ. ಇಳಿಜಾರು ಎಂಬುದರಲ್ಲಿ ಇಳಿ ಮತ್ತು ಜಾರು ಎಂಬ ಎರಡು ಕ್ರಿಯಾಪದಗಳು ಅಂಗಗಳಾಗಿ ಬಂದಿವೆಯೆಂದು ಹೇಳಲು ಸಾಧ್ಯವಿದೆಯಾದರೂ, ಜಾರು ಎಂಬ ಪದಕ್ಕೆ ‘ಜಾರುವ ಸ್ಥಳ’ ಎಂಬ ಅರ್ಥದಲ್ಲಿ ನಾಮಪದವಾಗಿ ಬಳಕೆಯಿದೆ. ಇದೇ ರೀತಿಯಲ್ಲಿ ಒಡಹುಟ್ಟು ಎಂಬುದರಲ್ಲಿ ಒಡ(ನೆ) ಎಂಬ ಗುಣಪದದೊಂದಿಗೆ ಹುಟ್ಟು ಎಂಬ ಕ್ರಿಯಾಪದ ಬಂದಿರುವಂತೆ ಕಾಣಿಸುವುದಾದರೂ ಹುಟ್ಟು ಎಂಬುದಕ್ಕೆ ‘ಹುಟ್ಟಿರುವಿಕೆ’ ಎಂಬ ಅರ್ಥದಲ್ಲಿ ನಾಮಪದವಾಗಿ ಬಳಕೆಯಿದೆ. ಹಾಗಾಗಿ, ಇಂತಹ ಜೋಡುಪದಗಳಲ್ಲೂ ಎರಡನೆಯ ಅಂಗವಾಗಿ ನಾಮಪದವೇ ಬಂದಿದೆಯೆಂದು ವಾದಿಸಲು ಸಾಧ್ಯವಿದೆ.

೫.೬.೪ ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ

ಜೋಡುಪದಗಳು ಎಂತಹ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತವೆ ಎಂಬು ದರ ಆಧಾರದ ಮೇಲೆ ಅವುಗಳಿಗೊಂದು ಕೇಂದ್ರ ಬಿಂದುವನ್ನು ಕಲ್ಪಿಸಿಕೊಳ್ಳಲು ಬರುತ್ತದೆ. ಈ ಕೇಂದ್ರ ಬಿಂದು ಜೋಡುಪದದ ಒಳಗೇನೇ ಇರಬಹುದು ಇಲ್ಲವೇ ಅದರೆ ಹೊರಗಿರಬಹುದು. ಜೋಡುಪದದ ಒಳಗೇನೇ ಇದೆಯಾದರೆ, ಅದರ ಮೊದಲನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು ಇಲ್ಲವೇ ಎರಡನೆಯ ಅಂಗವಾಗಿರುವ ಪದದ ಮೇಲೆ ಬಿದ್ದಿರಬಹುದು. ಈ ಬೇರೆ ಬೇರೆ ಸಾಧ್ಯತೆಗಳ ಆಧಾರದ ಮೇಲೆ ಜೋಡುಪದಗಳನ್ನು ಬೇರೆ ಬೇರೆ ವರ್ಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ.

ಉದಾಹರಣೆಗಾಗಿ, ಕೆಳದುಟಿ ಎಂಬ ಜೋಡುಪದಕ್ಕೆ ಕೆಳಗಿರುವ ತುಟಿ ಎಂಬ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದು ಎರಡು ರೀತಿಯ ತುಟಿ ಗಳಲ್ಲಿ (ಮೇಲ್ದುಟಿ ಮತ್ತು ಕೆಳದುಟಿ ಎಂಬವುಗಳಲ್ಲಿ) ಒಂದನ್ನು ಗುರುತಿಸು ತ್ತದೆ. ಈ ರೀತಿ ಅದು ಹೆಸರಿಸುವುದು ಒಂದು ತುಟಿಯನ್ನಾದ ಕಾರಣ, ಅದರ ಕೇಂದ್ರ ಬಿಂದು ತುಟಿ ಎಂಬ ಅದರ ಎರಡನೆಯ ಅಂಗದ ಮೇಲಿದೆಯೆಂದು ಹೇಳಬಹುದು. ಇದಕ್ಕೆ ವ್ಯತಿರಿಕ್ತವಾಗಿ ಆನೆಕಾಲು ಎಂಬ ಜೋಡುಪದಕ್ಕೆ ಆನೆಯ ಕಾಲಿನಂತಿರುವ ಕಾಲನ್ನು ಹೊಂದುವ ರೋಗ ಎಂಬುದಾಗಿ ಒಳನುಡಿಯನ್ನು ಕೊಡಲು ಸಾಧ್ಯವಿದ್ದು, ಅದು ಒಂದು ರೀತಿಯ ರೋಗವನ್ನು ಹೆಸರಿಸುವುದಾದ ಕಾರಣ (ಮತ್ತು ಒಂದು ರೀತಿಯ ಆನೆಯನ್ನಾಗಲೀ ಇಲ್ಲವೇ

ಕಾಲನ್ನಾಗಲೀ ಹೆಸರಿಸುವುದಿಲ್ಲವಾದ ಕಾರಣ) ಅದರ ಕೇಂದ್ರ ಬಿಂದು ಜೋಡು ಪದದ ಹೊರಗಿರುವ ರೋಗ ಎಂಬ ಪದದ ಮೇಲಿದೆಯೆಂದು ಹೇಳಬೇಕಾಗು ತ್ತದೆ.

ಕನ್ನಡದಲ್ಲಿ ಬರುವ ಹೆಚ್ಚಿನ ಜೋಡುಪದಗಳಿಗೂ ಅವುಗಳ ಕೇಂದ್ರ ಬಿಂದು ಜೋಡುಪದದಲ್ಲೇ ಇದ್ದು, ಅದು ಅವುಗಳ ಎರಡನೆಯ ಅಂಗವಾದ ನಾಮ ಪದದ ಮೇಲೆ ಬಿದ್ದಿರುತ್ತದೆ. ನಾವು ಮೇಲೆ (೫.೬.೨ರಲ್ಲಿ) ನೋಡಿರುವಂತೆ, ಕನ್ನಡದ ಜೋಡುಪದಗಳ ಮೊದಲನೆಯ ಅಂಗವಾಗಿ ನಾಮಪದ, ಕ್ರಿಯಾಪದ ಇಲ್ಲವೇ ಗುಣಪದ ಬರಬಲ್ಲುದು, ಆದರೆ ಎರಡನೆಯ ಅಂಗವಾಗಿ ಹೆಚ್ಚಿನೆಡೆ ಗಳಲ್ಲೂ ನಾಮಪದ ಮಾತ್ರವೇ ಬರಬಲ್ಲುದು. ಮೊದಲನೆಯ ಅಂಗ ಕ್ರಿಯಾಪದ ಇಲ್ಲವೇ ಗುಣಪದವಾಗಿರುವಂತಹ ಜೋಡುಪದಗಳಲ್ಲಿ ಆ ಕ್ರಿಯಾಪದ ಇಲ್ಲವೇ ಗುಣಪದ ಎರಡನೆಯ ಅಂಗವಾಗಿರುವ ನಾಮಪದವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮವೊಂದನ್ನು ಸೂಚಿಸುವುವಾದ ಕಾರಣ, ಅಂತಹ ಜೋಡುಪದಗಳ ಕೇಂದ್ರ ಬಿಂದು ಎರಡನೆಯ ಅಂಗವಾಗಿರುವ ನಾಮಪದದ ಮೇಲೆ ಬೀಳುವುದು ಸ್ವಾಭಾವಿಕ.

ಉದಾಹರಣೆಗಾಗಿ, ಚುಚ್ಚುಮದ್ದು ಎಂಬ ಜೋಡುಪದದಲ್ಲಿ ಬರುವ ಚುಚ್ಚು ಎಂಬ ಕ್ರಿಯಾಪದವು ಆ ಜೋಡುಪದವು ಗುರುತಿಸುವ ಮದ್ದಿನ ಗುಣ ಧರ್ಮವೊಂದನ್ನು (ಚುಚ್ಚಿ ಕೊಡುವ ಮದ್ದು ಎಂಬುದಾಗಿ) ಸೂಚಿಸುತ್ತಿದೆ. ಚುಚ್ಚುಮದ್ದು ಎಂಬುದು ಒಂದು ರೀತಿಯ ಮದ್ದನ್ನು (ಎಂದರೆ ಔಷಧವನ್ನು) ಹೆಸರಿಸುತ್ತಿದೆಯಲ್ಲದೆ ಒಂದು ರೀತಿಯ ಚುಚ್ಚುವಿಕೆಯನ್ನಲ್ಲ. ಹಾಗಾಗಿ, ಇದರ ಕೇಂದ್ರ ಬಿಂದು ಮದ್ದು ಎಂಬುದರ ಮೇಲಿದೆಯೆಂದು ಹೇಳಬೇಕಾಗುತ್ತದೆ.

ಇದೇ ರೀತಿಯಲ್ಲಿ ಅಡ್ಡಹೆಸರು ಎಂಬ ಜೋಡುಪದದಲ್ಲಿ ಬರುವ ಅಡ್ಡ ಎಂಬ ಗುಣಪದವು ಹೆಸರಿನ ಗುಣಧರ್ಮವೊಂದನ್ನು ಸೂಚಿಸುತ್ತಿದೆ; ಅಡ್ಡಹೆಸರು ಎಂಬುದು ವಿಶಿಷ್ಟವಾದೊಂದು ರೀತಿಯ ಹೆಸರನ್ನು ಗುರುತಿಸು ತ್ತದೆ. ಹಾಗಾಗಿ, ಇಲ್ಲೂ ಕೂಡ ಜೋಡುಪದದ ಕೇಂದ್ರ ಬಿಂದು ಅದರ ಎರಡನೆಯ ಅಂಗವಾದ ಹೆಸರು ಎಂಬ ಪದದ ಮೇಲೆ ಬೀಳುತ್ತದೆಯೆಂದು ಹೇಳಬೇಕಾಗುತ್ತದೆ.

ಆದರೆ ಈ ನಿಯಮಕ್ಕೆ ಅಪವಾದವಾಗಬಲ್ಲ ಗುಣಪದಗಳಿರುವ ಜೋಡು ಪದಗಳು ಕೆಲವು ಕನ್ನಡದಲ್ಲಿ ಬಳಕೆಯಲ್ಲಿವೆ. ಉದಾಹರಣೆಗಾಗಿ, ನಾವು ಮೇಲೆ (೫.೬.೨(೩)ರಲ್ಲಿ) ನೋಡಿರುವಂತೆ, ಚಿಕ್ಕಮ್ಮ, ದೊಡ್ಡಪ್ಪ, ಮುಂಗಾಲು, ಹಿಂಗಾಲು ಮೊದಲಾದ ಕೆಲವು ಗುಣಪದಗಳಿರುವ ಜೋಡುಪದಗಳಲ್ಲಿ ಎರಡನೆಯ ಅಂಗವಾಗಿ ಬರುವ ಅಮ್ಮ, ಅಪ್ಪ, ಕಾಲು ಮೊದಲಾದ ನಾಮ ಪದಗಳು ಒಳನುಡಿಯಲ್ಲಿ ಮೊದಲನೆಯ ಪದವಾಗಿ ಬರುತ್ತವೆ. ಇಂತಹ ಜೋಡುಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತು ಈ ನಾಮಪದಗಳು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿಗಿಂತ ಭಿನ್ನವಾಗಿರುವುದಾದ ಕಾರಣ, ಈ

ಜೋಡುಪದಗಳ ಕೇಂದ್ರ ಬಿಂದುವನ್ನು ಅವುಗಳ ಒಳಗೇನೇ ಕಾಣಲು ಸಾಧ್ಯ ವಾಗದು.

ಉದಾಹರಣೆಗಾಗಿ, ಚಿಕ್ಕಮ್ಮ ಎಂಬ ಜೋಡುಪದ ಅಮ್ಮನಿಗಿಂತ ಚಿಕ್ಕವ ಳಾಗಿರುವ ಹೆಂಗಸನ್ನು ಎಂದರೆ ಅಮ್ಮನ ತಂಗಿಯನ್ನು ಗುರುತಿಸುವುದಾದ ಕಾರಣ, ಅದರ ಕೇಂದ್ರ ಬಿಂದು ಆ ಜೋಡುಪದದ ಹೊರಗಿರುವ ಹೆಂಗಸು (ಇಲ್ಲವೇ ತಂಗಿ) ಎಂಬ ಪದದ ಮೇಲೆ ಬೀಳುತ್ತದಲ್ಲದೆ ಅದರ ಒಳಗಿರುವ ಅಮ್ಮ (ಇಲ್ಲವೇ ಚಿಕ್ಕ) ಎಂಬ ಪದದ ಮೇಲೆ ಬೀಳುವುದಿಲ್ಲ.

ಇದೇ ರೀತಿಯಲ್ಲಿ ಹಿಂಗಾಲು ಎಂಬುದು ಕಾಲಿನ ಹಿಂದಿರುವ ಒಂದು ಭಾಗವನ್ನು ಗುರುತಿಸುವುದಾದ ಕಾರಣ, ಅದರ ಕೇಂದ್ರ ಬಿಂದು ಜೋಡುಪದದ ಹೊರಗಿರುವ ಭಾಗ ಎಂಬ ಒಂದು ಪದದ ಮೇಲೆ ಬೀಳುತ್ತದಲ್ಲದೆ, ಅದರ ಅಂಗಗಳಾಗಿರುವ ಹಿಂ(ದೆ) ಇಲ್ಲವೇ ಕಾಲು ಎಂಬ ಪದದ ಮೇಲೆ ಬೀಳುವು ದಿಲ್ಲ. ಅವಕ್ಕೂ ಮತ್ತು ಕೇಂದ್ರ ಬಿಂದು ಜೋಡುಪದದ ಒಳಗೇನೇ ಬರು ವಂತಹ ಕೆಳದುಟಿ, ಕಡೆಹಲ್ಲು, ಒಳಕೋಣೆ ಮೊದಲಾದುವಕ್ಕೂ ನಡುವಿರುವ ವ್ಯತ್ಯಾಸವೇನೆಂಬುದನ್ನು ನಾವು ಮೇಲೆಯೇ ವಿವರವಾಗಿ ಪರಿಶೀಲಿಸಿರುವೆವು.

ಎರಡು ಅಂಗಗಳೂ ನಾಮಪದಗಳಾಗಿರುವ ಜೋಡುಪದಗಳಲ್ಲಿ ಸಾಮಾನ್ಯ ವಾಗಿ ಕೇಂದ್ರಬಿಂದು ಎರಡನೆಯ ಪದದ ಮೇಲೇನೇ ಬೀಳುತ್ತದೆ. ಉದಾಹರಣೆ ಗಾಗಿ, ಕಣ್ಣೀರು ಎಂಬ ಜೋಡುಪದಕ್ಕೆ ಕಣ್ಣಿನಲ್ಲಿ ಬರುವ ನೀರು ಎಂಬುದಾಗಿ ವಿಗ್ರಹವಾಕ್ಯವನ್ನು ಹೇಳಲು ಸಾಧ್ಯವಿದ್ದು, ಅದು ಒಂದು ರೀತಿಯ ನೀರನ್ನು ಗುರುತಿಸುತ್ತದೆಯೆಂದು ಹೇಳಬಹುದು. ಹಾಗಾಗಿ, ಈ ಜೋಡುಪದದ ಕೇಂದ್ರ ಬಿಂದು ಅದರ ಎರಡನೆಯ ಅಂಗವಾಗಿರುವ ನೀರು ಎಂಬ ಪದದ ಮೇಲಿದೆ.

ಇದೇ ರೀತಿಯಲ್ಲಿ ಹೊಗೆಸೊಪ್ಪು ಎಂಬ ಪದ ಒಂದು ರೀತಿಯ ಸೊಪ್ಪನ್ನು (ಎಂದರೆ ಎಲೆಯನ್ನು) ಗುರುತಿಸುತ್ತದೆ, ಮತ್ತು ಬೆಂಕಿಕಡ್ಡಿ ಎಂಬ ಪದ ಒಂದು ರೀತಿಯ ಕಡ್ಡಿಯನ್ನು ಗುರುತಿಸುತ್ತದೆ. ಹಾಗಾಗಿ ಇಲ್ಲೂ ಕೂಡ ಕೇಂದ್ರ ಬಿಂದು ಜೋಡುಪದದ ಎರಡನೆಯ ಅಂಗವಾಗಿರುವ ಪದದ ಮೇಲೆ ಬೀಳುತ್ತದೆ.

ಈ ನಿಯಮಕ್ಕೆ ಅಪವಾದಗಳಾಗಿರುವ ಜೋಡುಪದಗಳು ಕೆಲವು ಕನ್ನಡ ದಲ್ಲಿವೆ. ಉದಾಹರಣೆಗಾಗಿ, ಎರಡನೆಯ ಪದ ಉಪಮಾನವಗಿರುವಂತಹ ಕೈ ಗೊಂಬೆ, ಇಲಿಕಿವಿ ಮೊದಲಾದ ಕೆಲವು ಜೋಡುಪದಗಳಲ್ಲಿ ಕೇಂದ್ರ ಬಿಂದು ಜೋಡುಪದಗಳ ಹೊರಗೆ ಬೀಳುತ್ತದಲ್ಲದೆ ಅವುಗಳ ಒಳಗಿರುವ ಪದಗಳ ಮೇಲೆ ಬೀಳುವುದಿಲ್ಲ. ಕೈಗೊಂಬೆ ಎಂಬ ಪದ ಒಂದು ಗೊಂಬೆಯನ್ನು ಗುರುತಿಸುವ ಬದಲು ಗೊಂಬೆಯ ಹಾಗೆ ವಶವರ್ತಿಯಾಗುವ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಇಲಿಕಿವಿ ಎಂಬ ಪದ ಒಂದು ರೀತಿಯ ಕಿವಿಯನ್ನು ಗುರುತಿಸುವ ಬದಲು ಇಲಿಯ ಕಿವಿಯ ಹಾಗೆ ಕಾಣಿಸುವ ಎಲೆಗಳಿರುವ ಒಂದು ರೀತಿಯ ಗಿಡವನ್ನು ಗುರುತಿಸುತ್ತದೆ. ಹಾಗಾಗಿ, ಇಂತಹ ಜೋಡುಪದಗಳಲ್ಲಿ ಕೇಂದ್ರ

ಒಂದು ಆ ಜೋಡುಪದಗಳ ಹೊರಗಿರುವ ವ್ಯಕ್ತಿ, ಗಿಡ ಮೊದಲಾದವುಗಳ ಮೇಲೆ ಬೀಳುತ್ತದೆಯೆಂದು ಹೇಳಬೇಕಾಗುತ್ತದೆ.

Eke →

೫.೭ ಸೇರಿಕೆಯ ನಿಯಮಗಳು

ಜೋಡುಪದಗಳಲ್ಲಿ ಎರಡು ಪದಗಳು ಒಟ್ಟು ಸೇರಿ ಒಂದೇ ಪದವಾಗುವುವಾದ ಕಾರಣ, ಹೀಗೆ ಒಟ್ಟು ಸೇರುವ ಪದಗಳಲ್ಲಿ ಪ್ರಾಮುಖ್ಯವಾಗಿ ಮೊದಲನೆಯ ಪದದ ಕೊನೆಯ ಭಾಗದಲ್ಲಿ ಮತ್ತು ಎರಡನೆಯ ಪದದ ಮೊದಲ ಭಾಗದಲ್ಲಿ ಕೆಲವು ಬದಲಾವಣೆಗಳು ನಡೆಯುತ್ತವೆ. ಆದರೆ ಈ ಬದಲಾವಣೆಗಳು ನಿಯಮಿತವಾಗಿ ಎಲ್ಲಾ ಪದಗಳಲ್ಲೂ ನಡೆಯುವ ಬದಲಾವಣೆಗಳಲ್ಲ. ಕೆಲವು ಪದಗಳಲ್ಲಿ ನಡೆಯುತ್ತವೆ ಆದರೆ ಬೇರೆ ಕೆಲವು ಪದಗಳಲ್ಲಿ ನಡೆಯುವುದಿಲ್ಲ. ಪದರಚನೆಯಲ್ಲಿ ‘ನಿಯಮ’ಗಳಿಗಿಂತಲೂ ‘ಒಲವು’ಗಳಿರುವುದೇ ಜಾಸ್ತಿ ಎಂಬುದೇ ಇದಕ್ಕೆ ಕಾರಣ.

ಜೋಡುಪದಗಳ ರಚನೆಯಲ್ಲಿ ಕಾಣಿಸುವ ಇಂತಹ ಬದಲಾವಣೆಗಳಲ್ಲಿ ಕೆಲವು ಪ್ರಾಮುಖ್ಯವಾದುವನ್ನು ಈ ಕೆಳಗೆ ವಿವರಿಸಲಾಗಿದೆ.

೫.೨.೧ ಎರಡನೆಯ ಪದದಲ್ಲಿ ನಡೆಯುವ ಬದಲಾವಣೆಗಳು

ಜೋಡುಪದಗಳ ಎರಡನೆಯ ಪದದಲ್ಲಿ ಒಂದು ಮುಖ್ಯವಾದ ಬದಲಾವಣೆ ಮಾತ್ರ ಕಾಣಿಸಿಕೊಳ್ಳುವುದಾದ ಕಾರಣ, ಅದನ್ನು ಮೊದಲಿಗೆ ಪರಿಶೀಲಿಸಬಹುದು. ಈ ಪದಗಳ ಮೊದಲಿಗೆ ಬರುವ ಕ್, ತ್, ಪ್ ಇಲ್ಲವೇ ಸ್ ಎಂಬ ವ್ಯಂಜನ ಗ್, ದ್, ಬ್ ಇಲ್ಲವೇ ಜ್ ಎಂಬುದಾಗಿ ಬದಲಾಗುವುದೇ ಈ ಬದಲಾವಣೆ. ಈ ಬದಲಾವಣೆಯ ಮೂಲಕ ಕಕಾರ ಗಕಾರವಾಗುವುದನ್ನು ಹಲವಾರು ಜೋಡು ಪದಗಳಲ್ಲಿ ಕಾಣಬಹುದು. ತಕಾರ ದಕಾರವಾಗುವುದೂ ಉಳಿದ ಎರಡು ಬದಲಾವಣೆಗಳಿಗಿಂತ ಜಾಸ್ತಿ ಪದಗಳಲ್ಲಿ ಕಾಣಿಸಿಕೊಳ್ಳುತ್ತದೆ.

(೧) ಜೋಡುಪದದಲ್ಲಿ ಬರುವ ಮೊದಲನೆಯ ಪದದ ಕೊನೆಯ ಅಕ್ಷರ ಬಿದ್ದುಹೋಗಿ, ಸೊನ್ನೆ ಮಾತ್ರ ಉಳಿದಿದೆಯಾದರೆ, ಇಂತಹ ಬದಲಾವಣೆಗಳು ಎಲ್ಲಾ ಪದಗಳಲ್ಲೂ ನಡೆಯುವ ಹಾಗೆ ಕಾಣಿಸುತ್ತದೆ. ಉದಾ:

ಸೊನ್ನೆಯ ಅನಂತರ ಬದಲಾವಣೆಯಾಗಿರುವುದು

ಹಿಂ(ದೆ) + ತಲೆ ಹಿಂದಲೆ
ಮುಂ(ದೆ) + ಕತ್ತಲೆ ಮುಂಗತ್ತಲೆ
ಮುಂ(ದೆ) + ಕಾಲು ಮುಂಗಾಲು
ಮುಂ(ದೆ) + ಕುರುಳು ಮುಂಗುರುಳು
ಹಿಂ(ದೆ) + ಸರಿ ಹಿಂಜರಿ
ಮುಂ(ದೆ) + ಪರಿ ಮುಂಬರಿ

ಕಂ(ಣು) + ಪನಿ (ಹನಿ) ಕಂಬನಿ

  1. (೨) ಜೋಡುಪದದಲ್ಲಿ ಬರುವ ಮೊದಲನೆಯ ಪದದ ಕೊನೆಯ ಸ್ವರ
  2. ಉಳಿದಿದೆಯಾದರೆ, ಮೇಲಿನ ಬದಲಾವಣೆ ಕೆಲವು ಪದಗಳಲ್ಲಿ ನಡೆಯುತ್ತದೆ,
  3. ಆದರೆ ಬೇರೆ ಕೆಲವು ಪದಗಳಲ್ಲಿ ನಡೆಯುವುದಿಲ್ಲ. ಉದಾ:
  4. (ಕ) ಸ್ವರದ ಅನಂತರ ಬದಲಾವಣೆಯಾಗಿರುವುದು
  5. ಮನೆ + ಕೆಲಸ ಮನಗೆಲಸ
  6. ನೆಲ + ಕಡಲೆ ನೆಲಗಡಲೆ
  7. ಕೈ + ಕಡ ಕೈಗಡ
  8. ಊರು + ಕೋಲು ಊರುಗೋಲು
  9. ಸುಡು + ಕಾಡು ಸುಡುಗಾಡು
  10. ಹುರಿ + ಕಡಲೆ ಹುರಿಗಡಲೆ
  11. ಎದೆ + ಕುದಿ ಎದೆಗುದಿ
  12. ನೆಲ + ತಾವರೆ ನೆಲದಾವರೆ
  13. ಕೆಳ(ಗೆ) + ತುಟಿ ಕೆಳದುಟಿ
  14. (ಖ) ಸ್ವರದ ಅನಂತರ ಬದಲಾವಣೆಯಾಗದಿರುವುದು
  15. ಒಳ(ಗೆ) + ಕೋಣೆ ಒಳಕೋಣೆ
  16. ಕೈ + ಕೆಲಸ ಕೈಕೆಲಸ
  17. ಆನೆ + ಕಾಲು ಆನೆಕಾಲು
  18. ತಲೆ + ತೆರಿಗೆ ತಲೆತೆರಿಗೆ
  19. ಕರಿ + ತುಳಸಿ ಕರಿತುಳಸಿ
  20. ಈ ರೀತಿ ಸ್ವರದ ಅನಂತರ ಬದಲಾವಣೆಯಾಗದಿರುವುದಕ್ಕೆ ಕಕಾರ, ತಕಾರ
  21. ಮೊದಲಾದವುಗಳ ಹಿಂದೆ ಅಥವಾ ಮುಂದೆ ಒತ್ತಕ್ಷರವಿರುವುದೂ ಒಂದು
  22. ಕಾರಣವಿರಬಹುದು ಎಂಬುದನ್ನು ಕೆಳಗಿನ ಉದಾಹರಣೆಗಳು ಸೂಚಿಸುತ್ತವೆ.
  23. ಹೊಟ್ಟೆ + ಕಿಚ್ಚು ಹೊಟ್ಟೆಕಿಚ್ಚು
  24. ಬಿಚ್ಚು + ಶಕ್ತಿ ಬಿಚ್ಚುಕತ್ತಿ
  25. ಅಣೆ + ಕಟ್ಟು ಅಣೆಕಟ್ಟು
  26. ಬಟ್ಟ + ತಲೆ ಬಟ್ಟತಲೆ
  27. ೭.೨ ಮೊದಲನೆಯ ಪದದಲ್ಲಿ ನಡೆಯುವ ಬದಲಾವಣೆಗಳು

ಜೋಡುಪದಗಳ ಮೊದಲನೆಯ ಪದ ಹಲವು ಬೇರೆ ಬೇರೆ ರೀತಿಯ ಬದಲಾ ವಣೆಗಳಿಗೊಳಗಾಗುತ್ತದೆ. ಇವುಗಳಲ್ಲಿ ಮುಖ್ಯವಾದುದೆಂದರೆ ಅವುಗಳ ಕೊನೆಯ ಸ್ವರದಲ್ಲಿ ಕಾಣಿಸುವ ಬದಲಾವಣೆಗಳು.

  1. (೧) ಕೊನೆಯ ಸ್ವರ ಉಕಾರ ಇಲ್ಲವೇ ಅಕಾರವಾಗಿದ್ದಲ್ಲಿ
  2. ಮೊದಲನೆಯ ಪದದ ಕೊನೆಯಲ್ಲಿ ಉಕಾರ ಇಲ್ಲವೇ ಅಕಾರ ಬಂದಿದೆಯಾದರೆ,
  3. ಅದರೊಂದಿಗೆ ಸ್ವರದಲ್ಲಿ ಸುರುವಾಗುವ ಎರಡನೆಯ ಪದ ಸೇರಿದಾಗ ಮೊದಲ
  4. ನೆಯ ಪದ ತನ್ನ ಕೊನೆಯ ಸ್ವರವನ್ನು ಕಳೆದುಕೊಳ್ಳುತ್ತದೆ. ಉದಾ:
  5. ಉಕಾರ ಬಿದ್ದು ಹೋಗುವುದು
  6. ಕಲ್ಲು + ಇದ್ದಲು ಕಲ್ಲಿದ್ದಲು
  7. ನೂಲು + ಏಣಿ ನೂಲೇಣಿ
  8. ಕಣ್ಣು + ಉರಿ ಕಣ್ಣುರಿ
  9. ಬಯಲು + ಆಟ ಬಯಲಾಟ
  10. ಕಲ್ಲು + ಎದೆ ಕಲ್ಲೆದೆ
  11. ಅಕಾರ ಬಿದ್ದು ಹೋಗುವುದು
  12. ಚಿಕ್ಕ + ಅಮ್ಮ ಚಿಕ್ಕಮ್ಮ
  13. ಹುಡುರ + ಆಟ ಹುಡುಗಾಟ
  14. (ಕ) ಕಡು, ನಡು ಮತ್ತು ನಿಡು ಎಂಬ ಮೂರು ಗುಣಪದಗಳು ಮೊದಲನೆಯ
  15. ಪದವಾಗಿ ಬಂದಿದ್ದು, ಅವುಗಳೊಂದಿಗೆ ಸ್ವರದಲ್ಲಿ ಸುರುವಾಗುವ ಎರಡನೆಯ
  16. ಪದವೊಂದು ಸೇರಿದಾಗ ಅವುಗಳ ಕೊನೆಯ ಉಕಾರ ಬಿದ್ದು ಹೋಗುವುದು
  17. ಮಾತ್ರವಲ್ಲದೆ, ಡಕಾರ ಟ್ಸ್ ಎಂಬ ಒತ್ತಕ್ಷರವಾಗುತ್ತದೆ. ಉದಾ:
  18. ಕಡು + ಇರುವೆ ಕಟ್ಟಿರುವೆ
  19. ಕಡು + ಆಳು ಕಟ್ಟಾಳು
  20. ನಿಡು + ಉಸಿರು ನಿಟ್ಟುಸಿರು
  21. ನಡು + ಅಡವಿ ನಟ್ಟಡವಿ
  22. ನಡು + ಇರುಳು ನಟ್ಟಿರುಳು
  23. ಕಡು ಎಂಬ ಪದ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳೊಂದಿಗೆ
  24. ಸೇರಿದಾಗಲೂ (ಆ ಪದಗಳು ಸ್ವರದಲ್ಲಿ ಸುರುವಾಗಿವೆಯಾದರೆ) ಈ ರೀತಿ ಕಟ್

ಎಂಬುದಾಗಿ ಬದಲಾಗುವುದನ್ನು ಕಟ್ಟಾಜ್ಞೆ, ಕಟ್ಟಪ್ಪಣೆ ಮೊದಲಾದ ಪದಗಳಲ್ಲಿ ಕಾಣಬಹುದು.

  1. (ಖ) ಎರಡನೆಯ ಪದ ವ್ಯಂಜನದಲ್ಲಿ ಸುರುವಾಗುವುದಾದರೆ ಸಾಮಾನ್ಯವಾಗಿ
  2. ಈ ಪದಗಳು ಬದಲಾಗುವುದಿಲ್ಲ. ಆದರೆ ಆ ವ್ಯಂಜನ ಕಕಾರ ಇಲ್ಲವೇ ಗಕಾರ
  3. ವಾಗಿದೆಯಾದರೆ, ಕಡು ಎಂಬುದು ಕರ್ ಎಂದಾಗುತ್ತದೆ ಮತ್ತು ಅದರ
  4. ಅನಂತರ ಬರುವ ಕಕಾರ ಗಕಾರವಾಗುತ್ತದೆ. ಉದಾ:
  5. ಬದಲಾವಣೆಯಿಲ್ಲದಿರುವುದು
  6. ನಡು + ಹಗಲು ನಡುಹಗಲು
  7. ನಡು + ಬೆರಳು ನಡುಬೆರಳು
  8. ಕಡು + ಬಿಸಿಲು ಕಡುಬಿಸಿಲು
  9. ಕಡು + ಬಡವ ಕಡುಬಡವ
  10. ಕಕಾರ ಇಲ್ಲವೇ ಗಕಾರದೆದುರು ಬದಲಾವಣೆ
  11. ಕಡು + ಕತ್ತಲೆ ಕಗ್ಗತ್ತಲೆ
  12. ಕಡು + ಗಂಟು ಕಗ್ಗಂಟು
  13. (ಗ) ಕೆಂಪು ಮತ್ತು ತಂಪು ಎಂಬ ಎರಡು ಪದಗಳು ಅನಿಯಮಿತವಾಗಿ ಕೆಲವು
  14. ಜೋಡುಪದಗಳಲ್ಲಿ ಕೆಂ ಮತ್ತು ತಂ ಎಂಬ ಗಿಡ್ಡರೂಪವನ್ನು ಪಡೆಯುತ್ತವೆ.
  15. ಇದೇ ರೀತಿಯಲ್ಲಿ ಬೆನ್ನು ಎಂಬುದು ಬೆಂ ಎಂಬ ರೂಪವನ್ನೂ, ಕಣ್ಣು
  16. ಎಂಬುದು ಕಂ ಎಂಬ ರೂಪವನ್ನೂ ಮತ್ತು ಹೊನ್ನು ಎಂಬುದು ಹೊಂ ಎಂಬ
  17. ರೂಪವನ್ನೂ ಕೆಲವು ಜೋಡುಪದಗಳಲ್ಲಿ ಪಡೆಯುತ್ತವೆ. ಉದಾ:
  18. ಕೆಂಪು + ತಾಳಿ ಕೆಂದಾಳಿ
  19. ತಂಪು + ಗಾಳಿ ತಂಗಾಳಿ
  20. ಬೆನ್ನು + ಕಾವಲು ಬೆಂಗಾವಲು
  21. ಕಣ್ಣು + ಪನಿ (ಹನಿ) ಕಂಬನಿ
  22. ಹೊನ್ನು + ಬಣ್ಣ ಹೊಂಬಣ್ಣ
  23. (೨) ಕೊನೆಯ ಸ್ವರ ಇಕಾರ ಇಲ್ಲವೇ ಎಕಾರವಾಗಿದ್ದಲ್ಲಿ
  24. ಮೊದಲನೆಯ ಪದದ ಕೊನೆಯಲ್ಲಿ ಇಕಾರ ಇಲ್ಲವೇ ಎಕಾರ ಬಂದಿದೆಯಾದರೆ,
  25. ಅದು ಸ್ವರದಲ್ಲಿ ಸುರುವಾಗುವ ಎರಡನೆಯ ಪದದೆದುರು ಬಿದ್ದು ಹೋಗುವು

ದಿಲ್ಲ. ಇದಕ್ಕೆ ಬದಲು ಆ ಎರಡು ಸ್ವರಗಳ ನಡುವೆ ಯಕಾರ ಒಂದು ಸೇರುತ್ತದೆ.

ಕೊನೆಯಲ್ಲಿ ಇಕಾರ ಬಂದಾಗ ಕಡಿ + ಅಕ್ಕಿ ಕಡಿಯಕ್ಕಿ

ಕೊನೆಯಲ್ಲಿ ಎಕಾರ ಬಂದಾಗ ನೆರೆ + ಊರು ನೆರೆಯೂರು ಮನೆ + ಆಳು ಮನೆಯಾಳು

  1. (ಕ) ಮುಂದೆ ಮತ್ತು ಹಿಂದೆ ಎಂಬ ಎರಡು ಪದಗಳು ಜೋಡುಪದಗಳ
  2. ಮೊದಲನೆಯ ಅಂಗವಾಗಿ ಬರುವಾಗ ಮುಂ ಮತ್ತು ಹಿಂ ಎಂಬ ಗಿಡ್ಡರೂಪ
  3. ವನ್ನು ಪಡೆಯುತ್ತವೆ. ಇವುಗಳ ಕೊನೆಯಲ್ಲಿರುವ ಸೊನ್ನೆ ಎರಡನೆಯ ಪದ
  4. ನಕಾರ ಇಲ್ಲವೇ ಮಕಾರದಲ್ಲಿ ಸುರುವಾಗಿರುವುದಾದರೆ ನಕಾರ ಮತ್ತು ಮಕಾರ
  5. ವಾಗಿ ಬದಲಾಗುತ್ತದೆ. ಉದಾ:
  6. ಮುಂದೆ + ಗೇಣಿ
  7. ಮುಂಗೇಣಿ
  8. ಮುಂದೆ + ಕತ್ತಲೆ
  9. ಮುಂಗತ್ತಲೆ
  10. ಮುಂದೆ + ತಲೆ
  11. ಮುಂದಲೆ
  12. ಮುಂದೆ + ನುಡಿ
  13. ಮುನ್ನುಡಿ
  14. ಹಿಂದೆ + ಕಾಳು
  15. ಹಿಂಗಾಲು
  16. ಹಿಂದೆ + ತಲೆ
  17. ಹಿಂದಲೆ
  18. ಹಿನ್ನೋಟ
  19. ಹಿಮ್ಮೇಳ
  20. (ಖ) ಬಿಳಿ ಎಂಬ ಪದ ಜೋಡುಪದಗಳಲ್ಲಿ ಬೆಳ್ ಇಲ್ಲವೇ ಬೆಣ್ ಎಂದಾಗುವು
  21. ದನ್ನು ಈ ಕೆಳಗಿನ ಪದಗಳಲ್ಲಿ ಕಾಣಬಹುದು.
  22. ಬಿಳಿ + ತಿಂಗಳು
  23. ಬೆಳ್ಳೆಂಗಳು
  24. ಬಿಳಿ + ಕಲ್ಲು
  25. ಬೆಳ್ಳಲ್ಲು, ಬೆಣ್ಣಲ್ಲು
  26. (ಗ) ಹಿರಿ ಎಂಬ ಪದ ಅದರ ಮುಂದಿರುವ ವ್ಯಂಜನವನ್ನನುಸರಿಸಿ ಹೆಗ್, ಹೆಜ್,
  27. ಹೆದ್, ಇಲ್ಲವೇ ಹೆಬ್ ಎಂಬುದಾಗಿ ಬದಲಾಗುವುದನ್ನು ಈ ಕೆಳಗಿನ ಜೋಡು

ಪದಗಳಲ್ಲಿ ಕಾಣಬಹುದು. ಅದರ ಮುಂದಿರುವ ಕಕಾರ ಮತ್ತು ಪಕಾರಗಳು ಗಕಾರ ಮತ್ತು ಬಕಾರಗಳಾಗುತ್ತವೆ.

  1. ಹಿರಿ + ಕಡೆ ಹೆಗ್ಗಡೆ
  2. ಹಿರಿ + ಜೇನು ಹೆಜ್ಜೆನು
  3. ಹಿರಿ + ದಾರಿ ಹೆದ್ದಾರಿ
  4. ಹಿರಿ + ಪುಲಿ (ಹುಲಿ) ಹೆಬ್ಬುಲಿ
  5. ಹಿರಿ + ಬಾಗಿಲು ಹೆಬ್ಬಾಗಿಲು

(ಘ) ಕರಿ ಎಂಬ ಪದವೂ ಕಕಾರ ಮತ್ತು ಗಕಾರಗಳೆದುರು ಕರ್ ಎಂಬುದಾಗಿ ಬದಲಾಗುತ್ತದೆ ಮತ್ತು ಅದರ ಮುಂದಿರುವ ಕಕಾರ ಗಕಾರವಾಗುತ್ತದೆ. ಉದಾ:

ಕರಿ + ಗವಿ

ಕಗ್ಗವಿ

ಕರಿ + ಕಲ್ಲು

ಕಗ್ಗಲ್ಲು

(೩) ಮೇಲೆ ವಿವರಿಸಿರುವ ‘ಬದಲಾವಣೆ’ಗಳಲ್ಲಿ ಕೆಲವು ಜೋಡುಪದಗಳ ಅಂಗ ಗಳಾಗಿ ಬಂದಿರುವ ಪದಗಳು ಹಳೆಗನ್ನಡದಲ್ಲಿ ಅಥವಾ ಅದಕ್ಕೂ ಹಿಂದೆ ಅವ ಕ್ಕಿದ್ದ ರೂಪವನ್ನು ಜೋಡುಪದಗಳಲ್ಲಿ ಮಾತ್ರ ಹಾಗೆಯೇ ಉಳಿಸಿಕೊಂಡುದರಿಂದ ಕಾಣಿಸಿಕೊಳ್ಳುತ್ತಿವೆ. ಉದಾಹರಣೆಗಾಗಿ, ಹಿರಿ ಎಂಬ ಪದ ಪೂರ್ವದ ಹಳೆಗನ್ನಡ ದಲ್ಲಿ ಪೆರಿ ಎಂಬ ರೂಪದಲ್ಲಿತ್ತು. ಅನಂತರ ಈ ಪದದ ಸ್ವತಂತ್ರ ಪ್ರಯೋಗ ದಲ್ಲಿ (ಎಂದರೆ ಪದದ ಕೊನೆಯಲ್ಲಿ ಇಕಾರವಿದ್ದಗ) ಪಿರಿ ಎಂದು ಬದಲಾಗಿ ಅನಂತರ ಹೊಸಗನ್ನಡದಲ್ಲಿ ಹಿರಿ ಎಂದಾಯಿತು. ಹೆಗ್ಗಡೆ, ಹೆದ್ದಾರಿ ಮೊದಲಾದ ಜೋಡುಪದಗಳಲ್ಲಿ ಈ ಇಕಾರ ಬಿದ್ದುಹೋಗಿದೆಯಾದ ಕಾರಣ, ಈ ಪದದ ಮೊದಲನೆಯ ಅಕ್ಷರ ಪ್ ಎಂದೇ ಉಳಿದು ಅನಂತರ ಹೊಸಗನ್ನಡದಲ್ಲಿ ಹೆ ಎಂಬ ರೂಪವನ್ನು ಪಡೆಯಿತು. ಬಿಳಿ ಎಂಬ ಪದದಲ್ಲೂ ಇಂತಹದೇ ಬದಲಾವಣೆ ನಡೆದಿದೆಯೆಂಬುದನ್ನು ಬೆಳುದಿಂಗಳು, ಬೆಣ್ಯಲ್ಲು ಮೊದಲಾದ ಜೋಡುಪದಗಳೊಂದಿಗೆ ಅದನ್ನು ಹೋಲಿಸುವುದರ ಮೂಲಕ ತಿಳಿಯಬಹುದು.

ಬೆನ್ನು, ಕಣ್ಣು, ಹೊನ್ನು ಮೊದಲಾದ ಪದಗಳು ಅವುಗಳ ಎಲ್ಲಾ ಬಳಕೆ ಗಳಲ್ಲೂ ಬೆನ್, ಕಣ್, ಪೊನ್ ಎಂಬ ಕೊನೆಯಲ್ಲಿ ವ್ಯಂಜನವಿರುವ ರೂಪದ ಲ್ಲಿದ್ದುವು. ಹೊಸಗನ್ನಡದಲ್ಲಿ ಅವು ಸ್ವತಂತ್ರ ಪ್ರಯೋಗದಲ್ಲಿ ಮಾತ್ರ ಉಕಾರ ದಲ್ಲಿ ಕೊನೆಗೊಳ್ಳುತ್ತವೆ, ಜೋಡುಪದಗಳಲ್ಲಿ ಬರುವಾಗ ಅವುಗಳಿಗೆ ಈ ಉಕಾರ ಸೇರುವುದಿಲ್ಲ.

ಇಂತಹ ಜೋಡುಪದಗಳ ಒಳರಚನೆಯನ್ನು ವಿವರಿಸುವಾಗ ಅವುಗಳ ಅಂಗಗಳಾಗಿ ಬರುವ ಪದಗಳ ಸ್ವತಂತ್ರ ಪ್ರಯೋಗದಲ್ಲಿ ಬದಲಾವಣೆಯಾಗಿದೆ ಯೆಂದು ಹೇಳುವ ಬದಲು, ಜೋಡುಪದದಲ್ಲಿ ಬದಲಾವಣೆಯಾಗಿದೆಯೆಂದು ಹೇಳುವುದು ರೂಢಿ. ಆದರೆ ಇದು ಚಾರಿತ್ರಿಕ ಬದಲಾವಣೆಗಳ ವರ್ಣನೆಯಲ್ಲ ಎಂಬುದನ್ನಿಲ್ಲಿ ಗಮನಿಸುವುದು ಅವಶ್ಯ.

Eke →

೫.೮ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಳು

ಕನ್ನಡದ ಹೆಚ್ಚಿನ ವ್ಯಾಕರಣಗಳಲ್ಲೂ ‘ಸಮಾಸಗಳು’ ಎಂಬ ಒಂದು ಅಧ್ಯಾಯ ವಿದ್ದು, ಅದರಲ್ಲಿ ಕನ್ನಡದ ಜೋಡುಪದಗಳ ವಿಭಜನೆ ಮತ್ತು ವರ್ಣನೆ ಯಿರುತ್ತದೆ. ಆದರೆ ಈ ವಿಭಜನೆ ಹೆಚ್ಚಿನ ಮಟ್ಟಿಗೆ ಸಂಸ್ಕೃತ ವೈಯಾಕರಣಿಗಳು ಆ ಭಾಷೆಯಲ್ಲಿ ಬರುವ ಜೋಡುಪದಗಳ ವಿಭಜನೆಗಾಗಿ ಬಳಸಿದ ವಿಧಾನವನ್ನೇ ಅವಲಂಬಿಸಿದೆ. ಸಂಸ್ಕೃತದ ಸಮಾಸಗಳು ಯಾವುವು, ಅವುಗಳಲ್ಲಿ ಯಾವುವು ಕನ್ನಡದಲ್ಲೂ ಕಾಣಿಸುತ್ತವೆ, ಮತ್ತು ಸಂಸ್ಕೃತದಲ್ಲಿಲ್ಲದಂತಹ ಬೇರೆ ಯಾವ ಸಮಾಸಗಳು ಕನ್ನಡದಲ್ಲಿವೆ ಎಂಬಂತಹ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತ ಈ ವಿಭಜನೆ ಸಾಗುತ್ತದೆ.

ಆದರೆ ಈ ರೀತಿ ಸಂಸ್ಕೃತ ಸಮಾಸಗಳ ದೃಷ್ಟಿಕೋನದ ಮೂಲಕ ಕನ್ನಡದ ಜೋಡುಪದಗಳನ್ನು ವರ್ಣಿಸುವುದರಿಂದಾಗಿ ಆ ವರ್ಣನೆ ಅನವಶ್ಯಕವಾಗಿ ಬಹಳ ಕ್ಲಿಷ್ಟವಾಗುತ್ತದೆ ಮಾತ್ರವಲ್ಲ, ನಿಜಕ್ಕೂ ಕನ್ನಡದ ಜೋಡುಪದಗಳು ಯಾವ ರೀತಿ ಯವು ಎಂಬ ಪ್ರಶ್ನೆಗೆ ನೇರವಾದ ಉತ್ತರ ಸಿಗುವುದೇ ಇಲ್ಲ. ಮೇಲೆ (೫.೬ರಲ್ಲಿ) ಈ ತೊಡಕು ತೊಡಕಾದ ವಿಧಾನವನ್ನು ತೊರೆದು, ಕನ್ನಡದಲ್ಲಿ ಬಳಕೆಯಲ್ಲಿರುವ ಜೋಡುಪದಗಳನ್ನು ನೇರವಾಗಿ ಅವುಗಳ ಒಳರಚನೆಯಲ್ಲಿ ಕಾಣಿಸುವ ವೈಶಿಷ್ಟ್ಯ ಗಳ ಆಧಾರದ ಮೇಲೆ ವಿಭಜಿಸಿ ವಿವರಿಸಲಾಗಿದೆ.

ಈ ರೀತಿ ಕನ್ನಡದ ಜೋಡುಪದಗಳ ನೇರವಾದ ಪರಿಶೀಲನೆಯಿಂದ ಸಿದ್ದ ವಾದ ವಿಭಜನೆ ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ಸ್ವಲ್ಪ ಸ್ಕೂಲವಾಗಿಯಾದರೂ ಪರಿ ಶೀಲಿಸುವುದು ಅವಶ್ಯ. ಯಾಕೆಂದರೆ, ಹಾಗೆ ಮಾಡುವುದರಿಂದ ಈ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ವಿಭಜನೆಗಳು ಯಾವ ರೀತಿಯಲ್ಲೆಲ್ಲ ಅಸಮರ್ಪಕ ವಾಗಿವೆ ಎಂಬ ವಿಷಯ ಸ್ಪಷ್ಟವಾದೀತು.

ತತ್ಪುರುಷ, ಕರ್ಮಧಾರಯ, ದ್ವಿಗು, ಬಹುವ್ರೀಹಿ, ದ್ವಂದ್ವ ಮತ್ತು ಅವ್ಯಯಿಭಾವಗಳೆಂಬ ಆರು ಸಂಸ್ಕೃತ ಸಮಾಸಗಳನ್ನೂ ಮತ್ತು ಇವಕ್ಕಿಂತ ಭಿನ್ನವಾದ ಕ್ರಿಯಾಸಮಾಸ ಮತ್ತು ಗಮಕಸಮಾಸಗಳೆಂಬ ಬೇರೆ ಎರಡು ರೀತಿಯ ಸಮಾಸಗಳನ್ನೂ ತೋರಿಸುವ ಜೋಡುಪದಗಳು ಕನ್ನಡದಲ್ಲಿವೆಯೆಂಬು ದಾಗಿ ಹದಿಮೂರನೆಯ ಶತಮಾನದ ಶಬ್ದಮಣಿದರ್ಪಣವೆಂಬ ವ್ಯಾಕರಣದಲ್ಲಿ ಹೇಳಲಾಗಿದೆ. ಇದು ಹಳೆಗನ್ನಡದಲ್ಲಿ ಬರುವ ಜೋಡುಪದಗಳ ವಿಭಜನೆ

ಯಾಗಿದೆಯಾದರೂ ಹೊಸಗನ್ನಡಕ್ಕೂ ಇದನ್ನೇ ಅನ್ವಯಿಸಿ ಹೇಳುವುದು ರೂಢಿ. ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವುಗಳಲ್ಲೂ ಈ ವಿಭಜನೆಯನ್ನೇ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿ ಹೊಸಗನ್ನಡದ್ದೆಂದು ಹೇಳಿರುವುದನ್ನು ಕಾಣ ಬಹುದು.

೫.೮.೧ ವಿಭಜನೆಯ ಆಧಾರ

ಈ ವಿಭಜನೆಗೆ ಆಧಾರವಾಗಿ ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗ, ಅವುಗಳ ನಡುವಿರುವ ಸಂಬಂಧ, ಮತ್ತು ಜೋಡುಪದಗಳಲ್ಲಿ ಕೇಂದ್ರ ಬಿಂದುವಿನ ಸ್ಥಾನ ಎಂಬ ಈ ಮೂರು ವಿಷಯಗಳನ್ನೂ ಒಟ್ಟಾಗಿ ಬಳಸಿಕೊಳ್ಳ ಲಾಗಿದೆ. ಉದಾಹರಣೆಗಾಗಿ, ಜೋಡುಪದದ ಮೊದಲನೆಯ ಅಂಗ ಸಂಖ್ಯಾ ವಾಚಕವಾಗಿದ್ದರೆ ಅದನ್ನು ದ್ವಿಗುವೆಂದೂ, ಮತ್ತು ಎರಡನೆಯದು ಕ್ರಿಯಾಪದ ವಾಗಿದ್ದರೆ ಅದನ್ನು ಕ್ರಿಯಾಸಮಾಸವೆಂದೂ ಕರೆಯಲಾಗುತ್ತದೆ. ಇದು ಜೋಡು ಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗವನ್ನಾಧರಿಸಿದ ವಿಭಜನೆ.

ಜೋಡುಪದದ ಅಂಗಗಳೆರಡು ನಾಮಪದಗಳಾಗಿದ್ದು ಬೇರೆ ಬೇರೆ ವಿಭಕ್ತಿ ಗಳಲ್ಲಿದ್ದರೆ ಅದನ್ನು ತತ್ಪುರುಷವೆಂದು ಕರೆಯಲಾಗುತ್ತದೆ, ಮತ್ತು ಒಂದೇ ವಿಭಕ್ತಿಯಲ್ಲಿದ್ದರೆ ಅದನ್ನು ಕರ್ಮಧಾರಯವೆಂದು ಕರೆಯಲಾಗುತ್ತದೆ. ಇದು ಜೋಡುಪದದ ಅಂಗಗಳ ನಡುವಿರುವ ಸಂಬಂಧವನ್ನಾಧರಿಸಿದ ವಿಭಜನೆ.

ಜೋಡುಪದದ ಕೇಂದ್ರ ಬಿಂದು ಎರಡನೆಯ ಅಂಗದ ಮೇಲಿದ್ದರೆ ಅದನ್ನು ತತ್ಪುರುಷವೆಂದೂ, ಮೊದಲನೆಯ ಅಂಗದ ಮೇಲಿದ್ದರೆ ಅವ್ಯಯಿಭಾವ (ಇಲ್ಲವೇ ಅಂಶಿ ಸಮಾಸ) ಎಂದೂ, ಎರಡರ ಮೇಲೂ ಇದ್ದರೆ ದ್ವಂದ್ವ ವೆಂದೂ ಮತ್ತು ಕೇಂದ್ರ ಬಿಂದು ಜೋಡುಪದದ ಯಾವ ಅಂಗದ ಮೇಲೂ ಬೀಳದೆ ಅದರ ಹೊರಗಿರುವ ಒಂದು ಪದದ ಮೇಲೆ ಬಿದ್ದಿದೆಯಾದರೆ ಅದನ್ನು ಬಹುವ್ರೀಹಿಯೆಂದೂ ಕರೆಯಲಾಗುತ್ತದೆ. ಇದು ಜೋಡುಪದದಲ್ಲಿ ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ. (ಜೋಡುಪದದ ಕೇಂದ್ರ ಬಿಂದು ವಿನಲ್ಲಿರುವ ಪದವನ್ನು ಕನ್ನಡ ವ್ಯಾಕರಣಗಳಲ್ಲಿ ‘ಪ್ರಧಾನ ಪದ’ ಎಂಬುದಾಗಿ ಕರೆಯುವುದು ರೂಢಿ).

ಕನ್ನಡದ ಜೋಡುಪದಗಳ ವಿಭಜನೆಯನ್ನು ಈ ರೀತಿ ಮೂರು ಬೇರೆ ಬೇರೆ ವಿಷಯಗಳನ್ನು ಒಟ್ಟಿಗೆ ಆಧಾರವಾಗಿ ಇರಿಸಿಕೊಡು ತಯಾರಿಸಿರುವ ಕಾರಣ ಅನವಶ್ಯಕವಾಗಿ ಗೊಂದಲಕ್ಕೆಡೆಯಾಗಿದೆ. ಉದಾಹರಣೆಗಾಗಿ, ಕೇಂದ್ರ ಬಿಂದು ಎರಡನೆಯ ಅಂಗದ ಮೇಲಿರುವ ಕರ್ಮಧಾರಯ, ದ್ವಿಗು, ಕ್ರಿಯಾಸಮಾಸ ಮತ್ತು ಗಮಕಸಮಾಸಗಳು ತತ್ಪುರುಷದ ಪ್ರಭೇದಗಳೆಂದು ಹೇಳಬೇಕಾಗು ಇದೆ, ಮತ್ತು ಅಂಗಗಳೆರಡೂ ಒಂದೇ ವಿಭಕ್ತಿಯಲ್ಲಿ ಬರುವ ದ್ವಿಗುಸಮಾಸ ವೆಂಬುದು ಕರ್ಮಧಾರಯದ ಪ್ರಭೇದವೆಂದು ಹೇಳಬೇಕಾಗುತ್ತದೆ. ಯಾವು

ದಾದರೊಂದು ಸಂಖ್ಯೆ ಮೊದಲನೆಯ ಅಂಗವಾಗಿ ಬಂದಿರುವ ಜೋಡುಪದ ದ್ವಿಗುವಾಗಿರಲೂ ಸಾಧ್ಯವಿದೆ, ಗಮಕವಾಗಿರಲೂ ಸಾಧ್ಯವಿದೆ; ಹಾಗಾಗಿ, ನಿಜಕ್ಕೂ ಅವೆರಡರ ನಡುವಿನ ವ್ಯತ್ಯಾಸವೇನು, ಗಮಕವೆಂಬ ಸಮಾಸ ವಿಧಾನ ಕನ್ನಡಕ್ಕೆ ಅವಶ್ಯವೇ ಎಂದೆಲ್ಲ ವಾದ ವಿವಾದಗಳು ಇದರಿಂದಾಗಿ ಮೂಡಿ ಬಂದಿವೆ.

ಇದಲ್ಲದೆ, ಕೇಂದ್ರ ಬಿಂದುವಿನ ಸ್ಥಾನವನ್ನಾಧರಿಸಿದ ವಿಭಜನೆ ಕನ್ನಡದ ಮಟ್ಟಿಗೆ ಅಷ್ಟೊಂದು ಉಪಯುಕ್ತವಾದುದಲ್ಲ. ಯಾಕೆಂದರೆ, ಕನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಅಂಗ ನಾಮಪದವಾಗಿದ್ದು, ಕೇಂದ್ರ ಬಿಂದು ಆ ಎರಡನೆಯ ಪದದ ಮೇಲೆಯೇ ಬೀಳುತ್ತದೆ. ಕೆಲವು ಜೋಡುಪದಗಳಲ್ಲಿ (ಪ್ರಾಮುಖ್ಯವಾಗಿ ಗುಣಪದಗಳಿರುವವುಗಳಲ್ಲಿ) ಮಾತ್ರ ಕೇಂದ್ರ ಬಿಂದು ಅದರ ಹೊರಗಿರಲು ಸಾಧ್ಯ (೫.೬.೪ ನೋಡಿ). ಆದರೆ ಸಂಸ್ಕೃತದ ಜೋಡುಪದ ಗಳನ್ನು ವಿಭಜಿಸುವಲ್ಲಿ ಕೇಂದ್ರ ಬಿಂದುವಿನ ಸ್ಥಾನವೆಂಬ ಈ ವಿಷಯ ಪ್ರಾಮುಖ್ಯ ವಾದ ಪಾತ್ರವನ್ನು ವಹಿಸುತ್ತದೆ. ಈ ಕಾರಣಕ್ಕಾಗಿಯೂ ಸಂಸ್ಕೃತದ ಸಮಾಸ ಗಳನ್ನು ಅಲ್ಪಸ್ವಲ್ಪ ಬದಲಾವಣೆಗಳ ಮೂಲಕ ಕನ್ನಡಕ್ಕೆ ಅಳವಡಿಸುವ ಪ್ರಯತ್ನ ದಿಂದಾಗಿ ಗೊಂದಲವುಂಟಾಗಿದೆ.

ಜೋಡುಪದಗಳ ವಿಭಜನೆಗೆ ಆಧಾರವಾಗಬಲ್ಲ ಬೇರೆ ಬೇರೆ ವಿಷಯ ಗಳನ್ನು ಈ ರೀತಿ ಒಟ್ಟು ಸೇರಿಸಲು ಯತ್ನಿಸದೆ ಅವನ್ನು ಬೇರೆ ಬೇರಾಗಿ ಇರಿಸಿ ಕೊಂಡು, ಅವು ಜೋಡುಪದಗಳ ವಿಭಜನೆಗೆ ಯಾವ ರೀತಿಯಲ್ಲೆಲ್ಲ ಸಹಾಯಕ ವಾಗಬಲ್ಲುವು ಎಂಬುದನ್ನು ಪರಿಶೀಲಿಸಿ, ಅನಂತರ ಅವುಗಳಲ್ಲಿ ಅತ್ಯಂತ ಹೆಚ್ಚು ಸಹಾಯಕವಾಗಬಲ್ಲ ವಿಷಯವನ್ನು ವಿಭಜನೆಗೆ ಆಧಾರವಾಗಿ ತೆಗೆದುಕೊಳ್ಳು ವುದೇ ಸರಿಯಾದ ದಾರಿ. ಕನ್ನಡದ ಮಟ್ಟಿಗೆ ಮೇಲೆ (೫.೬.೪ರಲ್ಲಿ) ವಿವರಿಸಿ ದಂತೆ, ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳ ವರ್ಗವನ್ನಾಧರಿಸಿದ ವಿಭಜನೆಯೇ ಅತ್ಯಂತ ಉಪಯುಕ್ತವಾದ ವಿಭಜನೆ.

೫.೮.೨ ಪದವರ್ಗಗಳ ಸಂಖ್ಯೆ

ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡುಪದಗಳ ವಿಭಜನೆಗಳು ಪದವರ್ಗ ಗಳ ವಿಷಯದಲ್ಲಿ ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವಿರುವ ಪ್ರಾಮುಖ್ಯ ವಾದ ಒಂದು ವ್ಯತ್ಯಾಸವನ್ನು ಸರಿಯಾಗಿ ಗಮನಿಸದಿರುವುದರಿಂದಾಗಿ ಬಹಳ ಮಟ್ಟಿಗೆ ತಪ್ಪು ಹಾದಿ ಹಿಡಿದಿವೆ. ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದ ಗಳೆಂಬ ಎರಡೇ ಎರಡು ಮುಖ್ಯ ಪದವರ್ಗಗಳಿದ್ದು, ಗುಣಪದಗಳ ಅರ್ಥ ಕೊಡುವ ಪದಗಳಲ್ಲಿ ಹೆಚ್ಚಿನವೂ ನಾಮಪದವೆಂಬ ಪದವರ್ಗದಲ್ಲೇನೇ ಸೇರಿ ಕೊಳ್ಳುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬೇರೆ ಬೇರೆ ಮುಖ್ಯ ಪದವರ್ಗಗಳಿವೆ ಎಂಬುದನ್ನು ನಾವು ಮೇಲೆ ಎರಡನೆಯ ಅಧ್ಯಾಯದಲ್ಲಿ (೨.೨ರಲ್ಲಿ) ನೋಡಿರುವೆವು.

ಗುಣಪದಗಳ ಅರ್ಥ ಕೊಡುವ ನಾಮಪದಗಳನ್ನು ಇನ್ನೊಂದು ನಾಮಪದ ದೊಂದಿಗೆ ಸೇರಿಸಿ ಪದಗುಚ್ಛವೊಂದನ್ನು ತಯಾರಿಸಬೇಕಿದ್ದಲ್ಲಿ, ಅದಕ್ಕೆ ಆ ನಾಮ ಪದದ ಲಿಂಗ-ವಚನ-ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಿಕೊಳ್ಳ ಬೇಕು ಎಂಬುದು ಸಂಸ್ಕೃತದ ವಾಕ್ಯರಚನೆಯ ಒಂದು ನಿಯಮ. ಉದಾಹರಣೆ ಗಾಗಿ, ಈ ಕೆಳಗಿನ ಸಂಸ್ಕೃತ ವಾಕ್ಯಗಳನ್ನು ಗಮನಿಸಬಹುದು.

  1. (೯ಕ) ತತ್ರ ಏಕಃ ಕೃಷ್ಣಃ ಸರ್ಪಃ ಅಸ್ತಿ.
  2. ಅಲ್ಲಿ ಒಂದು ಕಪ್ಪು ಹಾವು ಇದೆ.
  3. (೧೦ಕ) ಹರಿಃ ಏಕಂ ಕೃಷ್ಣಂ ಸರ್ಪಂ ಅಪಶ್ಯತ್.
  4. ಹರಿ ಒಂದು ಕಪ್ಪು ಹಾವನ್ನು ನೋಡಿದ.
  5. (೧೧ಕ) ಹರಿಃ ಏಕೇನ ಕೃಷ್ಣೇನ ಸರ್ಪೇಣ ದಷ್ಟಃ.
  6. ಹರಿ ಒಂದು ಕಪ್ಪು ಹಾವಿನಿಂದ ಕಚ್ಚಲ್ಪಟ್ಟ.

ಮೇಲೆ ಕೊಟ್ಟಿರುವ (೯ಕ) ವಾಕ್ಯದಲ್ಲಿ ಏಕಃ ಕೃಷ್ಣಃ ಸರ್ಪಃ ‘ಒಂದು ಕಪ್ಪು ಹಾವು’ ಎಂಬ ನಾಮಪದಗುಚ್ಛ ಬಂದಿದ್ದು, ಅದರಲ್ಲಿರುವ ಮೂರು ಪದಗಳೂ ಪುಲ್ಲಿಂಗ-ಏಕವಚನ-ಪ್ರಥಮಾವಿಭಕ್ತಿ ಪ್ರತ್ಯಯದೊಂದಿಗೆ ಬಂದಿವೆ.

ಇದೇ ನಾಮಪದಗುಚ್ಛ (೧೦ಕ) ಮತ್ತು (೧೧ಕ) ವಾಕ್ಯಗಳಲ್ಲೂ ಬಂದಿದ್ದು, ಅದರಲ್ಲಿರುವ ಮೂರು ಪದಗಳೂ (೧೦ಕ) ವಾಕ್ಯದಲ್ಲಿ ಪುಲ್ಲಿಂಗ-ಏಕವಚನ- ದ್ವಿತೀಯಾವಿಭಕ್ತಿ ಪ್ರತ್ಯಯದೊಂದಿಗೂ (ಏಕಂ ಕೃಷ್ಣಂ ಸರ್ಪಂ ಎಂಬುದಾಗಿ), ಮತ್ತು (೧೧ಕ) ವಾಕ್ಯದಲ್ಲಿ ಪುಲ್ಲಿಂಗ-ಏಕವಚನ-ತೃತೀಯಾ ವಿಭಕ್ತಿ ಪ್ರತ್ಯಯ ದೊಂದಿಗೂ (ಏಕೇನ ಕೃಷ್ಣೇನ ಸರ್ಪೇಣ ಎಂಬುದಾಗಿ) ಬಂದಿವೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ, ಈ ಪದಗುಚ್ಛದ ಮೂರನೆಯ ಅಂಗವಾದ ಸರ್ಪಃ ‘ಹಾವು’ ಎಂಬ ಪದ ಮಾತ್ರವಲ್ಲದೆ ಅದರ ಮೊದಲನೆಯ ಅಂಗವಾದ ಏಕಃ ‘ಒಂದು’ ಎಂಬ ಪದ ಮತ್ತು ಎರಡನೆಯ ಅಂಗವಾದ ಕೃಷ್ಣಃ ‘ಕಪ್ಪು’ ಎಂಬ ಪದ - ಇವೆರಡೂ ಈ ರೀತಿ ಲಿಂಗ- ವಚನ-ವಿಭಕ್ತಿ ಪ್ರತ್ಯಯದೊಂದಿಗೆ ಬರಬೇಕಾಗಿದೆ. ಇದು ಸಂಸ್ಕೃತದಲ್ಲಿ ಪದಗುಚ್ಛಗಳನ್ನು ತಯಾರಿಸುವ ಒಂದು ನಿಯಮ.

ಕನ್ನಡ ಪದಗುಚ್ಛಗಳ ರಚನೆ ಇದಕ್ಕಿಂತ ತೀರ ಭಿನ್ನವಾದುದು. ಅವುಗಳಲ್ಲಿ ಬರುವ ಪದಗಳಲ್ಲಿ ಕೊನೆಯದಕ್ಕೆ ಮಾತ್ರ ವಿಭಕ್ತಿ ಪ್ರತ್ಯಯಗಳನ್ನು ಮತ್ತು ವಚನ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಿದೆ. ಮೇಲೆ ಕೊಟ್ಟಿರುವ ಸಂಸ್ಕೃತ ವಾಕ್ಯಗಳ ಕನ್ನಡ ಅನುವಾದಗಳನ್ನು ಗಮನಿಸಿದೆವಾದರೆ ಈ ವಿಷಯ ಸ್ಪಷ್ಟವಾದೀತು. ಏಕಃ ಕೃಷ್ಣಃ ಸರ್ಪಃ ಎಂಬ ಸಂಸ್ಕೃತ ಪದಗುಚ್ಛದ

ಮೊದಲನೆಯ ಪದದ ಕನ್ನಡ ಅನುವಾದ ಒಂದು ಎಂಬುದು. ಈ ಪದ ಮೇಲೆ ಕೊಟ್ಟಿರುವ ಮೂರು ವಾಕ್ಯ ಗಳಲ್ಲೂ ಒಂದೇ ರೂಪದಲ್ಲಿ ಬಂದಿರುವುದನ್ನು ಗಮನಿಸಬಹುದು.

ಇದೇ ರೀತಿಯಲ್ಲಿ ಅದೇ ಪದಗುಚ್ಛದ ಎರಡನೆಯ ಪದದ ಅನುವಾದವಾದ ವಾಗಿರುವ ಕಪ್ಪು ಎಂಬ ಪದವೂ ಕನ್ನಡದ ಈ ಮೂರು ವಾಕ್ಯಗಳಲ್ಲೂ ಒಂದೇ ರೂಪದಲ್ಲಿ ಬಂದಿದೆ. ಅನ್ನು ಮತ್ತು ಇಂದ ಎಂಬ ವಿಭಕ್ತಿ ಪ್ರತ್ಯಯಗಳನ್ನು (೧೦ಕ) ಮತ್ತು (೧೧ಕ) ವಾಕ್ಯಗಳಲ್ಲಿ ಈ ಪದಗುಚ್ಛದ ಮೂರನೆಯ ಪದವಾದ ಹಾವು ಎಂಬುದಕ್ಕೆ ಮಾತ್ರವೇ ಸೇರಿಸಲಾಗಿದೆಯಲ್ಲದೆ, ಸಂಸ್ಕೃತದಲ್ಲಿರುವ ಹಾಗೆ ಮೊದಲನೆಯ ಮತ್ತು ಎರಡನೆಯ ಪದಗಳಿಗೆ ಸೇರಿಸಿಲ್ಲ ಎಂಬುದನ್ನು ಗಮನಿಸಬಹುದು.

ಕನ್ನಡದಲ್ಲಿ ಗುಣಪದಗಳು ನಾಮಪದಗಳಿಗಿಂತ ಭಿನ್ನವಾದ ಬೇರೆಯೇ ಒಂದು ಪದವರ್ಗದಲ್ಲಿ ಬರುತ್ತವೆ ಮತ್ತು ನಾಮಪದಗಳೊಂದಿಗೆ ಅವನ್ನು ನೇರವಾಗಿ (ವಿಭಕ್ತಿ ಪ್ರತ್ಯಯಗಳ ಸಹಾಯವಿಲ್ಲದೆ) ಬಳಸಲು ಸಾಧ್ಯ ಎಂಬ ಕನ್ನಡ ವಾಕ್ಯರಚನೆಯ ನಿಯಮ ಮೇಲೆ ಕೊಟ್ಟಿರುವ ಸಂಸ್ಕೃತ ವಾಕ್ಯರಚನೆಯ ನಿಯಮಕ್ಕಿಂತ ಭಿನ್ನವಾಗಿರುವುದೇ ಈ ವ್ಯತ್ಯಾಸಕ್ಕೆ ಕಾರಣ.

ಸಂಸ್ಕೃತದಲ್ಲಿ ಏಕಃ ಕೃಷ್ಣಃ ಸರ್ಪಃ ಎಂಬ ಪದಗುಚ್ಛದ ಬದಲು ಏಕಃ ಕೃಷ್ಣಸರ್ಪಃ ಎಂಬುದಾಗಿ ಅದರಲ್ಲಿರುವ ಎರಡನೆಯ ಮತ್ತು ಮೂರನೆಯ ಪದ ಗಳನ್ನು ಒಟ್ಟು ಸೇರಿಸಿ ಒಂದು ಜೋಡುಪದವನ್ನಾಗಿ ಮಾಡಿ ಬಳಸಲು ಸಾಧ್ಯ ವಿದೆ. ಇಂತಹ ಜೋಡುಪದದಲ್ಲಿ ಮೊದಲನೆಯ ಅಂಗವಾಗಿ ಬರುವ ಪದ ತನ್ನ ಲಿಂಗ-ವಚನ-ವಿಭಕ್ತಿ ಪ್ರತ್ಯಯವನ್ನು ಕಳೆದುಕೊಳ್ಳುತ್ತದೆ ಎಂಬುದು ಸಂಸ್ಕೃತದ ಒಂದು ಪದರಚನೆಯ ನಿಯಮ. ಈ ಕಾರಣಕ್ಕಾಗಿ, ಕೃಷ್ಣಃ ಎಂಬ ಪದವನ್ನು ಒಂದು ಜೋಡುಪದದ ಅಂಗವಾಗಿ ಬಳಸಿದಾಗ ಅದು ಎಲ್ಲಾ ರೀತಿಯ ವಾಕ್ಯಗಳಲ್ಲೂ ಒಂದೇ ರೂಪದಲ್ಲಿ ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ (ಖ) ವಾಕ್ಯಗಳಲ್ಲಿ ಕಾಣಬಹುದು.

  1. (೯ಖ) ತತ್ರ ಏಕಃ ಕೃಷ್ಣಸರ್ಪಃ ಅಸ್ತಿ.
  2. ಅಲ್ಲಿ ಒಂದು ಕಪ್ಪು ಹಾವು ಇದೆ.
  3. (೧೦ಖ) ಹರಿಃ ಏಕಂ ಕೃಷ್ಣಸರ್ಪಂ ಅಪಶ್ಯತ್.
  4. ಹರಿ ಒಂದು ಕಪ್ಪು ಹಾವನ್ನು ನೋಡಿದ.
  5. (೧೧ಖ) ಹರಿಃ ಏಕೇನ ಕೃಷ್ಣಸರ್ಪೇಣ ದಷ್ಟಃ.
  6. ಹರಿ ಒಂದು ಕಪ್ಪು ಹಾವಿನಿಂದ ಕಚ್ಚಲ್ಪಟ್ಟ.

ಮೇಲಿನ ಕನ್ನಡ ವಾಕ್ಯಗಳಲ್ಲಿ ಬಂದಿರುವ ಕಪ್ಪು ಹಾವು ಎಂಬ ಪದಗುಚ್ಛ ಸಂಸ್ಕೃತದ ಈ ಕೃಷ್ಣಸರ್ಪಃ ಎಂಬ ಜೋಡುಪದವನ್ನು ಹೋಲುವುದಾದ ಕಾರಣ (ಎರಡರಲ್ಲೂ ಮೊದಲಿನ ಅಂಗವಾಗಿ ಬರುವ ಪದದೊಂದಿಗೆ ವಿಭಕ್ತಿ ಪ್ರತ್ಯಯ ಬಂದಿಲ್ಲವಾದ ಕಾರಣ) ಅದೂ ಕರ್ಮಧಾರಯವೆಂಬ ಸಮಾಸದಿಂದ ತಯಾರಾದ ಜೋಡುಪದವೆಂಬುದಾಗಿ ಕನ್ನಡ ವೈಯಾಕರಣಿಗಳೆಲ್ಲರೂ ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ನಿಜಕ್ಕೂ ಕಪ್ಪು ಹಾವು ಎಂಬುದು ಕನ್ನಡದ ವಾಕ್ಯ ರಚನೆಯ ನಿಯಮಗಳ ಪ್ರಕಾರ ತಯಾರಾದ ಪದಗುಚ್ಛವಲ್ಲದೆ ಜೋಡುಪದ ವಲ್ಲ. ಜೋಡುಪದಗಳಲ್ಲಿ ಕಾಣಿಸುವ ಗುಣಧರ್ಮಗಳಾವುವೂ ಅದರಲ್ಲಿ ಕಾಣಿ ಸುವುದಿಲ್ಲ.

ಇದೇ ರೀತಿಯಲ್ಲಿ ನಾಮಪದದೊಂದಿಗೆ ಗುಣಪದವೊಂದನ್ನು ಸೇರಿಸಿ ತಯಾರಿಸಿದ ದೊಡ್ಡ ಮನೆ, ಚಿಕ್ಕ ಪುಸ್ತಕ, ಕೆಂಪು ಶಾಯಿ, ಬಿಳಿ ಕಾಗದ ಮೊದಲಾದವುಗಳಲ್ಲಿ ಮೊದಲನೆಯ ಅಂಗವಾಗಿ ಬಂದಿರುವ ಪದ ವಿಭಕ್ತಿ ಪ್ರತ್ಯಯದೊಂದಿಗೆ ಬಂದಿಲ್ಲವಾದರೂ ಕನ್ನಡದಲ್ಲಿ ಜೋಡುಪದಗಳಲ್ಲ, ಬರಿಯ ಪದಗುಚ್ಛಗಳು.

ಇಲ್ಲಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಅಂಗಗಳಾಗಿ ಬರುವ ಎರಡು ಪದಗಳನ್ನು ವಿಭಕ್ತಿ ಪ್ರತ್ಯಯವೊಂದು ಪ್ರತ್ಯೇಕಿಸುತ್ತದೆಯೇ ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ ಸಂಸ್ಕೃತದಲ್ಲಿ ಪದಗುಚ್ಛಗಳನ್ನು ಜೋಡುಪದಗಳಿಂದ ಬೇರ್ಪಡಿಸಿ ಹೇಳಲು ಸಾಧ್ಯವಿದೆ, ಆದರೆ ಕನ್ನಡದಲ್ಲಿ ಇದು ಸಾಧ್ಯವಿಲ್ಲ.

೫.೮.೩ ವಿಶೇಷಣಗಳು ಮತ್ತು ವಿಶೇಷ್ಯಗಳು

ಸಂಸ್ಕೃತದಲ್ಲಿ ನಾಮಪದ ಮತ್ತು ಗುಣಪದಗಳೆಂಬ ಎರಡು ಬೇರೆ ಬೇರೆ ಪದವರ್ಗಗಳಿಗೆ ಸೇರುವ ಪದಗಳಿಲ್ಲವಾದ ಕಾರಣ, ಅದರ ಪದಗುಚ್ಛಗಳಲ್ಲಿ ಬರುವ ಪದಗಳೊಳಗೆ ವಿಶೇಷಣ-ವಿಶೇಷ್ಯ ಸಂಬಂಧವನ್ನು ಕಲ್ಪಿಸುವುದು ಬಹಳ ಕಷ್ಟ. ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಕೃಷ್ಣಃ ಸರ್ಪಃ ಎಂಬ ಪದಗುಚ್ಛ ದಲ್ಲಿ ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದನ್ನು ನಿಷ್ಕೃಷ್ಟ ವಾಗಿ ತಿಳಿಸಿ ಹೇಳಲು ಸಾಧ್ಯವಾಗದು.

ಪದಗುಚ್ಛಗಳ ಮೊದಲನೆಯ ಸ್ಥಾನದಲ್ಲಿ ಬರುವ ಪದ ವಿಶೇಷಣವೆಂದು ಹೇಳುವುದಾದರೆ, ಸರ್ಪಃ ಕೃಷ್ಣಃ ಎಂಬುದಾಗಿ ಆ ಪದಗುಚ್ಛದಲ್ಲಿರುವ ಪದಗಳ ಸ್ಥಾನವನ್ನು ಬದಲಿಸಿ ಹೇಳಲು ಸಾಧ್ಯವಿದೆಯಾದ ಕಾರಣ, ಸರ್ಪಃ ಎಂಬ ಪದವೂ ಮೊದಲನೆಯ ಸ್ಥಾನಕ್ಕೆ ಬಂದು ವಿಶೇಷಣವೆಂದೆನಿಸಬಲ್ಲುದು. ಈ ಕಾರಣಕ್ಕಾಗಿ, ಯಾವುದು ವಿಶೇಷಣ ಮತ್ತು ಯಾವುದು ವಿಶೇಷ್ಯ ಎಂಬುದು ಇಂತಹ ಪದಗುಚ್ಛಗಳನ್ನು ಬಳಸುವವರ ದೃಷ್ಟಿಕೋನವನ್ನವಲಂಬಿಸಿದೆಯಲ್ಲದೆ ಅವುಗಳಲ್ಲಿ ಅಂಗಗಳಾಗಿ ಬರುವ ಪದಗಳ ಸ್ವರೂಪ ಇಲ್ಲವೇ ಗುಣಧರ್ಮ

ವನ್ನವಲಂಬಿಸಿಲ್ಲ ಎಂಬುದಾಗಿ ಪತಂಜಲಿಯಂತಹ ಸಂಸ್ಕೃತ ವೈಯಾಕರಣಿಗಳು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಪದಗುಚ್ಛಗಳು ಇದಕ್ಕಿಂತ ತೀರ ಭಿನ್ನವಾದವುಗಳು. ಕನ್ನಡದ ಕಪ್ಪು ಹಾವು ಎಂಬ ಪದಗುಚ್ಛದಲ್ಲಿ ಕಪ್ಪು ಎಂಬುದು ವಿಶೇಷಣವಾಗಿ ಮಾತ್ರವೇ ನಿಲ್ಲಬಲ್ಲುದು ಮತ್ತು ಹಾವು ಎಂಬುದು ವಿಶೇಷವಾಗಿ ಮಾತ್ರವೇ ನಿಲ್ಲಬಲ್ಲುದು. ಅದರಲ್ಲಿರುವ ಪದಗಳ ಸ್ಥಾನವನ್ನು ಬದಲಾಯಿಸಿ ಹಾವು ಕಪ್ಪು ಎಂದು ಹೇಳಿದೆವಾದರೆ ಅದು ಸಂಸ್ಕೃತದಲ್ಲಿರುವಂತೆ ಒಂದು ಪದಗುಚ್ಛವಾಗಿ ಉಳಿಯದೆ ಒಂದು ವಾಕ್ಯವಾಗಿಬಿಡುತ್ತದೆ.

ಕನ್ನಡದಲ್ಲಿ ಮೊದಲನೆಯ ಅಂಗ ನಾಮಪದವಾಗಿರುವ ಕೈದೀಪ, ತಾಯಿ ಮನೆ ಮೊದಲಾದ ಜೋಡುಪದಗಳಿಗೂ ಮತ್ತು ಮೊದಲನೆಯ ಅಂಗ ಗುಣ ಪದವಾಗಿರುವ ದೊಡ್ಡಮ್ಮ, ಬೆಣ್ಕಲ್ಲು ಮೊದಲಾದ ಜೋಡುಪದಗಳಿಗೂ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ. ಆದರೆ ಸಂಸ್ಕೃತದ ಜೋಡುಪದಗಳಲ್ಲಿ ಇಂತಹ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗದು. ಹಾಗಾಗಿ, ಗುಣಧರ್ಮವನ್ನು ಸೂಚಿಸುವ ಪದವೊಂದನ್ನು ಬಳಸಿ ರಚಿಸಿದ ಕೃಷ್ಣಸರ್ಪಃ ಎಂಬಂತಹ ಜೋಡು ಪದಗಳನ್ನು ಮಾತ್ರವಲ್ಲದೆ ವಸ್ತುವನ್ನು ಸೂಚಿಸುವ ಪದವೊಂದನ್ನು ಬಳಸಿ ರಚಿಸಿದ ಚಂದ್ರಮುಖಂ, ಗೋಗರ್ಭಿಣೀ ಎಂಬಂತಹ ಜೋಡುಪದಗಳನ್ನೂ ಸಂಸ್ಕೃತದ ವೈಯಾಕರಣಿಗಳು ಕರ್ಮಧಾರಯವೆಂದು ಪರಿಗಣಿಸಬೇಕಾಗಿದೆ.

ನಿಜಕ್ಕೂ ಕೃಷ್ಣಃ ಎಂಬ ಪದ ಸಂಸ್ಕೃತದಲ್ಲಿ ಕನ್ನಡದ ಕಪ್ಪು ಎಂಬ ಪದದ ಹಾಗೆ ಒಂದು ಗುಣಧರ್ಮವನ್ನು ಸೂಚಿಸುವುದಿಲ್ಲ. ಇದಕ್ಕೆ ಬದಲು ಆ ಗುಣಧರ್ಮವನ್ನು ಪಡೆದಿರುವ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಅದು ಸೂಚಿಸುತ್ತದೆ (೨.೨ ನೋಡಿ). ಹಾಗಾಗಿ, ಸಂಸ್ಕೃತದಲ್ಲಿ ಎರಡು ನಾಮಪದಗಳ ಸೇರಿಕೆಯಿಂದ ತಯಾರಾದ ತತ್ಪುರುಷಕ್ಕೂ ಮತ್ತು ಈ ಕರ್ಮಧಾರಯಕ್ಕೂ ನಡುವಿರುವ ವ್ಯತ್ಯಾಸ ಅವುಗಳ ಅಂಗಗಳಾಗಿ ಬರುವ ಪದಗಳು ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಯಾವ ವಿಭಕ್ತಿಯ ಮೂಲಕ ಸಂಬಂಧಿತವಾಗುತ್ತವೆ ಎಂಬುದು ಮಾತ್ರ. ಅವು ಪ್ರಥಮಾ ವಿಭಕ್ತಿಯ ಮೂಲಕ ಸಂಬಂಧಿತವಾಗುವು ವಾದರೆ ಕರ್ಮಧಾರಯವೆನಿಸುತ್ತವೆ ಮತ್ತು ಇತರ ವಿಭಕ್ತಿಗಳ ಮೂಲಕ ಸಂಬಂಧಿತವಾಗುವುವಾದರೆ ತತ್ಪುರುಷವೆನಿಸುತ್ತವೆ.

ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವೆ ಇಂತಹ ಜೊಡುಪದಗಳ ರಚನೆ ಯಲ್ಲಿ ಬಹಳ ಮುಖ್ಯವಾದ ವ್ಯತ್ಯಾಸಗಳಿವೆಯಾದ ಕಾರಣ, ಕನ್ನಡದ ಜೋಡು ಪದಗಳು ಸಂಸ್ಕೃತದ ಜೋಡುಪದಗಳ ಹಾಗೆಯೇ ಎಂಬುದಾಗಿ ಭ್ರಮಿಸಿ ಅವನ್ನು ವಿವರಿಸಲು ಯತ್ನಿಸಿದಲ್ಲಿ, ಮತ್ತು ಅವನ್ನು ಸಂಸ್ಕೃತದ ತತ್ಪುರುಷ, ಕರ್ಮಧಾರಯ ಮತ್ತು ದ್ವಿಗುಗಳೆಂಬ ಸಮಾಸಗಳೆಂಬ ಹೆಸರುಗಳನ್ನು ಬಳಸಿ ವಿಂಗಡಿಸಲು ಯತ್ನಿಸಿದಲ್ಲಿ ಅನವಶ್ಯಕವಾಗಿ ಗೊಂದಲವುಂಟಾಗದಿರದು.

೫.೮.೪ ಸುಬಂತ ಪ್ರತ್ಯಯ

ಸಂಸ್ಕೃತದ ನಾಮಪದಗಳು ಮನುಷ್ಯರನ್ನು ಗುರುತಿಸುತ್ತಿರಲಿ, ಇಲ್ಲವೇ ಬೇರೆ ಪ್ರಾಣಿ, ಮರ-ಗಿಡ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುತ್ತಿರಲಿ, ಅವುಗಳ ಲಿಂಗವೆಂಬುದು ಆ ಪದಗಳ ಕೊನೆಯ ಅಕ್ಷರವೆಂತಹದು ಮತ್ತು ಅವುಗಳೊಂದಿಗೆ ಬರುವ ವಿಭಕ್ತಿ ಪ್ರತ್ಯಯಗಳಿಗೆ ಎಂತಹ ರೂಪವಿದೆ ಎಂಬ ವಿಷಯದ ಮೇಲೆ ಅವಲಂಬಿಸಿದೆ. ಆ ಪದಗಳ ಅರ್ಥವೇನು ಎಂಬುದು ಇಲ್ಲಿ ಪ್ರಾಮುಖ್ಯವಾದ ವಿಷಯವಲ್ಲ. ಕೆಳಗೆ ಕೊಟ್ಟಿರುವ ಸಂಸ್ಕೃತದ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗದ ಪದಗಳನ್ನು ಪರಿಶೀಲಿಸಿದಲ್ಲಿ ಈ ವಿಷಯ ಸ್ಪಷ್ಟವಾದೀತು.

ಪುಲ್ಲಿಂಗ ಸ್ತ್ರೀಲಿಂಗ ನಪುಂಸಕ ಲಿಂಗ ನೃಪಃ ‘ಅರಸು’ ಜನನೀ ‘ತಾಯಿ’ ಜ್ಞಾನಂ ‘ತಿಳುವಳಿಕೆ’ ವೃಕ್ಷಃ ‘ಮರ’ ಮಾಲಾ ‘ಮಾಲೆ’ ಉದಕಂ ‘ನೀರು’ ಅಶ್ವಃ ‘ಕುದುರೆ’ ಆಜ್ಞಾ ‘ಆಜ್ಞೆ’ ಬ್ರಹ್ಮ ‘ಪರಮಾತ್ಮ’ ಅನಿಲಃ ‘ಗಾಳಿ’ ಧನೂ ‘ಬಿಲ್ಲು’ ಕಲತ್ರಂ ‘ಹೆಂಡತಿ’ ದಾರಾಃ ‘ಹೆಂಡತಿ’ ಪತ್ನಿ ‘ಹೆಂಡತಿ’ ಪುರಂ ‘ಪಟ್ಟಣ’

ಇವುಗಳಲ್ಲಿ ದಾರಾಃ ‘ಹೆಂಡತಿ’ ಎಂಬ ಪದ ಬಹುವಚನದಲ್ಲಿ ಮಾತ್ರ ಬರುತ್ತದೆ.

ಸಂಸ್ಕೃತದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಲಿಂಗ, ವಚನ ಮತ್ತು ವಿಭಕ್ತಿಗಳನ್ನು ಸೂಚಿಸಲು ಕನ್ನಡದಲ್ಲಿರುವ ಹಾಗೆ ಬೇರೆ ಬೇರೆ ಪ್ರತ್ಯಯ ಗಳಿಲ್ಲ. ಇವು ಮೂರನ್ನೂ ಪದದ ಕೊನೆಯಲ್ಲಿ ಬರುವ ಸುಬಂತ ಎಂಬ ಹೆಸರಿನ ಒಂದೇ ಪ್ರತ್ಯಯ ಸೂಚಿಸುತ್ತದೆ. ಉದಾಹರಣೆಗಾಗಿ ಮೇಲೆ ಕೊಟ್ಟಿರುವ ಪದಗಳೆಲ್ಲವೂ (ದಾರಾಃ ಎಂಬುದನ್ನು ಬಿಟ್ಟು) ಅಲ್ಲಿ ಸೂಚಿಸಿರುವ ಲಿಂಗವನ್ನು ಮಾತ್ರವಲ್ಲದೆ ಏಕವಚನ ಮತ್ತು ಪ್ರಥಮಾ ವಿಭಕ್ತಿಗಳನ್ನೂ ಸೂಚಿಸುವ ಪ್ರತ್ಯಯ ವೊಂದರೊಂದಿಗೆ ಬಂದಿವೆ.

ಕನ್ನಡದ ನಾಮಪದಗಳ ಲಿಂಗ ಭೇದ ಈ ರೀತಿ ಕೊನೆಯ ಅಕ್ಷರವನ್ನು ಇಲ್ಲವೇ ವಿಭಕ್ತಿ ಪ್ರತ್ಯಯದ ರೂಪವನ್ನು ಅವಲಂಬಿಸಿರದೆ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಸ್ವರೂಪವನ್ನವಲಂಬಿಸಿದೆ. ಸಾಮಾನ್ಯವಾಗಿ ಗಂಡಸರನ್ನು ಗುರುತಿಸುವ ನಾಮಪದಗಳು ಪುಲ್ಲಿಂಗದಲ್ಲೂ, ಹೆಂಗಸರನ್ನು ಗುರುತಿಸುವ ನಾಮಪದಗಳು ಸ್ತ್ರೀಲಿಂಗದಲ್ಲೂ ಮತ್ತು ಉಳಿದ ನಾಮಪದಗಳು ನಪುಂಸಕ ಲಿಂಗದಲ್ಲೂ ಬರುತ್ತವೆಯೆಂದು ಕನ್ನಡದಲ್ಲಿ ಒಂದು ನಿಯಮವನ್ನು ಮಾಡಲು ಸಾಧ್ಯವಿದೆ. ಇದಕ್ಕೆ ಕೆಲವೇ ಕೆಲವು ಅಪವಾದಗಳು ಮಾತ್ರ ಇವೆ.

ಈ ಕಾರಣಕ್ಕಾಗಿ, ಕನ್ನಡದ ಅರ್ಥಕೋಶಗಳಲ್ಲಿ ನಾಮಪದಗಳ ಲಿಂಗ ಯಾವುದು ಎಂಬುದನ್ನು ಸೂಚಿಸುವ ಅವಶ್ಯಕತೆಯಿಲ್ಲ. ಆದರೆ ಸಂಸ್ಕೃತದ ಅರ್ಥಕೋಶದಲ್ಲಿ ಪ್ರತಿಯೊಂದು ನಾಮಪದದೆದುರು ಅದರ ಲಿಂಗ ಯಾವುದು ಎಂಬುದನ್ನು ಸೂಚಿಸುವುದು ಅತ್ಯವಶ್ಯ.

ಕನ್ನಡದಲ್ಲಿ ಬಹುವ್ರೀಹಿ ಎಂಬ ಹೆಸರಿನ ಸಮಾಸವಿದೆಯೇ ಅಥವಾ ಇಲ್ಲವೇ, ಮತ್ತು ಇದೆಯಾದರೆ ಅದಕ್ಕೆ ಕನ್ನಡ ವ್ಯಾಕರಣಗಳು ಕೊಡುವ ಚಲ ವಾದಿ, ಹಣೆಗಣ್ಣ, ಗೆಡ್ಡೆಮೂಗ ಮೊದಲಾದ ಜೋಡುಪದಗಳು ಉದಾಹರಣೆ ಗಳಾಗಬಲ್ಲುವೇ ಎಂಬುದನ್ನು ತಿಳಿಯಲು ಕನ್ನಡಕ್ಕೂ ಮತ್ತು ಸಂಸ್ಕೃತಕ್ಕೂ ನಡುವೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳ ಪ್ರಯೋಗದಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಒಂದು ಜೋಡುಪದದ ಕೇಂದ್ರ ಬಿಂದು ಆ ಪದದ ಅಂಗಗಳಾಗಿರುವ ಪದಗಳ ಮೇಲೆ ಬೀಳದೆ ಹೊರಗಿರುವ ಪದವೊಂದರ ಮೇಲೆ ಬಿದ್ದಿದೆಯಾದರೆ (ಎಂದರೆ ಹೊರಗಿರುವ ಪದ ‘ಪ್ರಧಾನ ಪದ’ವಾಗಿದೆಯಾದರೆ), ಅಂತಹ ಪದದ ತಯಾರಿಕೆಯಲ್ಲಿ ಬಹು ವ್ರೀಹಿ ಎಂಬ ಸಮಾಸ ವಿಧಾನ ಬಳಕೆಯಾಗಿದೆಯೆಂದು ಹೇಳಬಹುದು.

ಸಂಸ್ಕೃತದಲ್ಲಿ ಪೀತಾಂಬರಃ ಎಂಬ ಜೋಡುಪದ ಪೀತ ‘ಹಳದಿ’ ಮತ್ತು ಅಂಬರ ‘ಬಟ್ಟೆ’ ಎಂಬ ಎರಡು ಪದಗಳ ಜೋಡಣೆಯಿಂದ ತಯಾರಾಗಿದ್ದು, ಅದರ ಕೊನೆಯಲ್ಲಿ ಬಂದಿರುವ ವಿಸರ್ಗ ಅಸ್ ಎಂಬ ಪುಲ್ಲಿಂಗ-ಏಕವಚನ- ಪ್ರಥಮಾವಿಭಕ್ತಿ ಪ್ರತ್ಯಯವನ್ನು ಸೂಚಿಸುತ್ತದೆ. ವಚನ ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳು ಪದರೂಪ ಪ್ರತ್ಯಯಗಳಲ್ಲದೆ ಪದಪ್ರತ್ಯಯಗಳಲ್ಲ. ಹಾಗಾಗಿ ಪೀತಾಂಬರಃ ಎಂಬ ಪದದಲ್ಲಿ ಪೀತ ಮತ್ತು ಅಂಬರ ಎಂಬ ಎರಡು ಪದಗಳು ಮಾತ್ರ ಇವೆ. ಆದರೆ, ಇವುಗಳಲ್ಲಿ ಒಂದೂ ಈ ಪದದ ಕೇಂದ್ರ ಬಿಂದುವಾಗಿರಲು ಸಾಧ್ಯವಾಗದು. ಯಾಕೆಂದರೆ, ಈ ಪದಕ್ಕೆ ‘ಹಳದಿ ಬಟ್ಟೆಯನ್ನು ಉಟ್ಟಿರುವ ವ್ಯಕ್ತಿ’ ಎಂಬ ಅರ್ಥವಿದೆಯಲ್ಲದೆ ‘ಹಳದಿ ಬಟ್ಟೆ’ ಎಂಬ ಅರ್ಥವಿಲ್ಲ. ಹಾಗಾಗಿ, ಇದರ ಕೇಂದ್ರ ಬಿಂದು ಜೋಡುಪದದ ಹೊರಗಿರುವ ವ್ಯಕ್ತಿ ಎಂಬ ಪದದ ಮೇಲೆ ಬೀಳುತ್ತದಲ್ಲದೆ ಪೀತ ‘ಹಳದಿ’ ಇಲ್ಲವೇ ಅಂಬರ ‘ಬಟ್ಟೆ’ ಎಂಬ ಜೋಡುಪದದ ಅಂಗವಾಗಿರುವ ಪದದ ಮೇಲೆ ಬೀಳುವುದಿಲ್ಲ. ಹಾಗಾಗಿ ಇದು ಬಹುವ್ರೀಹಿ ಎಂಬ ಸಮಾಸಕ್ಕೆ ಉದಾಹರಣೆಯಾಗಬಲ್ಲುದು.

ಆದರೆ ಕನ್ನಡದಲ್ಲಿ ಇದಕ್ಕೆ ಸಮಾನವಾಗಿ ತೋರುವ ಹಣೆಗಣ್ಣ, ಚಲವಾದಿ ಮೊದಲಾದ ಜೋಡುಪದಗಳ ಕೊನೆಯಲ್ಲಿ ಬರುವ ಅ ಇಲ್ಲವೇ ಇ ಎಂಬ ಪ್ರತ್ಯಯಗಳು ಪದಪ್ರತ್ಯಯಗಳಲ್ಲದೆ ಪದರೂಪ ಪ್ರತ್ಯಯಗಳಲ್ಲ. ಹಾಗಾಗಿ ಇವು ಈ ಜೋಡುಪದಗಳ ಅಂಗಗಳಾಗಿರುತ್ತವೆ. ಚಲವಾದಿ ಎಂಬ ಜೋಡುಪದದಲ್ಲಿ ಚಲಿ ಮತ್ತು ವಾದಿ ಎಂಬ ಎರಡು ಪದಗಳನ್ನು ಸೇರಿಸಲಾಗಿದ್ದು, ಕೇಂದ್ರಬಿಂದು ವಾದಿ ಎರಡನೆಯ ಪದದ ಮೇಲೆ ಬೀಳುವ ಕಾರಣ ಅದು ತತ್ಪುರುಷಕ್ಕೆ ಉದಾಹರಣೆಯಾಗಬಲ್ಲುದಲ್ಲದೆ ಬಹುವ್ರೀಹಿಗೆ ಉದಾಹರಣೆಯಾಗಲಾರದು.

ಹಣೆಗಣ್ಣ ಎಂಬ ಪದವೂ ಹೀಗೆಯೇ. ಹೊಸಗನ್ನಡದಲ್ಲಿ ‘ಕಣ್ಣಿರುವವನು’ ಎಂಬ ಅರ್ಥದಲ್ಲಿ ಸ್ವತಂತ್ರವಾಗಿ ಕಣ್ಣ ಎಂಬ ಪದದ ಪ್ರಯೋಗವಿಲ್ಲದಿದ್ದರೂ, ಈ ಜೋಡುಪದದಲ್ಲಿ ಅಂತಹ ಪದದ ಪ್ರಯೋಗವಾಗಿದೆಯೆಂದೂ ಮತ್ತು ಆ ಪದವೇ ಅದರ ಕೇಂದ್ರ ಬಿಂದುವಾಗಿದೆಯೆಂದೂ ಇಲ್ಲಿ ಹೇಳಬೇಕಾಗುತ್ತದೆ.

೫.೮.೫ ಅವ್ಯಯೀಭಾವ ಸಮಾಸ

ಸಂಸ್ಕೃತದಲ್ಲಿ ಒಂದು ಅವ್ಯಯದೊಂದಿಗೆ ನಾಮಪದವೊಂದನ್ನು ಸೇರಿಸಿ ರಚಿಸಿದ ಯಥಾಶಕ್ತಿ, ಉಪಕೃಷ್ಣಂ, ಪ್ರತಿದಿನಂ, ಪರೋಕ್ಷಂ ಮೊದಲಾದ ಜೋಡುಪದ ಗಳನ್ನು ಅವ್ಯಯಿಭಾವವೆಂಬ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡುವುದು ಕ್ರಮ. ಈ ಜೋಡುಪದಗಳು ಅವ್ಯಯಗಳಾಗಿ ಬಳಕೆಯಾಗುವುವಾದ ಕಾರಣ, ಅವುಗಳ ಕೇಂದ್ರ ಬಿಂದು ಅವುಗಳ ಮೊದಲನೆಯ ಅಂಗವಾಗಿರುವ ಅವ್ಯಯದ ಮೇಲೆ ಬೀಳುತ್ತದೆಯೆಂದು ಹೇಳಬಹುದು. ಉದಾಹರಣೆಗಾಗಿ, ಉಪಕೃಷ್ಣಂ ಎಂಬ ಪದಕ್ಕೆ ‘ಕೃಷ್ಣನ ಹತ್ತಿರ’ ಎಂಬ ಅರ್ಥವಿದ್ದು, ಅದರ ಕೇಂದ್ರ ಬಿಂದು ಉಪ ‘ಹತ್ತಿರ’ ಎಂಬ ಪದದ (ಅವ್ಯಯದ) ಮೇಲೆ ಬೀಳುತ್ತದೆ.

ಕನ್ನಡದಲ್ಲಿ ಈ ರೀತಿ ‘ಅವ್ಯಯ’ಗಳಾಗಿ ಬರುವ ಹಾಗೂ ಕೇಂದ್ರ ಬಿಂದು ಮೊದಲನೆಯ ಪದದ ಮೇಲೆ ಬೀಳುವ ಜೋಡುಪದಗಳಿಲ್ಲ. ಆದರೆ, ಸಂಸ್ಕೃದ ಅವ್ಯಯೀಭಾವ ಸಮಾಸದ ಇನ್ನೊಂದು ವೈಶಿಷ್ಟ್ಯದ ಆಧಾರದ ಮೇಲೆ ಕನ್ನಡ ದಲ್ಲೂ ಅವ್ಯಯೀಭಾವ ಸಮಾಸವನ್ನು ಕಾಣಲು ಕನ್ನಡದ ಕೆಲವರು ವೈಯಾ ಕರಣಿಗಳು ಪ್ರಯತ್ನಿಸಿದ್ದಾರೆ. ಯಥಾಶಕ್ತಿ, ಉಪಕೃಷ್ಣಂ ಮೊದಲಾದ ಜೋಡು ಪದಗಳ ಒಳನುಡಿಯಲ್ಲಿ (ವಿಗ್ರಹವಾಕ್ಯದಲ್ಲಿ) ಅವ್ಯಯ ನಾಮಪದದ ಬಲಕ್ಕೆ ಬರುತ್ತದೆ, ಆದರೆ ಜೋಡುಪದಗಳಲ್ಲಿ ಇವುಗಳ ಸ್ಥಾನಪಲ್ಲಟವಾಗಿ, ಅವ್ಯಯ ನಾಮಪದದ ಎಡಕ್ಕೆ ಬರುತ್ತದೆ.

ಕನ್ನಡದಲ್ಲಿ ಈ ರೀತಿ ಜೋಡುಪದಗಳಿಗೂ ಮತ್ತು ಅವುಗಳ ಒಳನುಡಿ ಗಳಿಗೂ ನಡುವೆ ಅಂಗಗಳಾಗಿ ಬಂದಿರುವ ಪದಗಳ ಸ್ಥಾನದಲ್ಲಿ ಬದಲಾವಣೆ ಯನ್ನು ತೋರಿಸುವ ತುದಿನಾಲಿಗೆ (ನಾಲಿಗೆಯ ತುದಿ), ಹಿಂಗಾಲು (ಕಾಲಿನ ಹಿಂಭಾಗ), ನಡುಹಗಲು (ಹಗಲಿನ ನಡುಭಾಗ) ಮೊದಲಾದವುಗಳನ್ನು ಅವ್ಯಯೀಭಾವ ಸಮಾಸಕ್ಕೆ ಉದಾಹರಣೆಗಳನ್ನಾಗಿ ಹೇಳಬಹುದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ ಪದಗಳು ಸಂಸ್ಕೃತದಲ್ಲಿ ಕಾಣಿಸುವ ಹಾಗೆ ಅವ್ಯಯಗಳಲ್ಲ, ಅವ್ಯಯಗಳ ಅರ್ಥ ಕೊಡುವ ಗುಣಪದಗಳೂ ಅಲ್ಲ. ಕನ್ನಡದಲ್ಲಿ ಇವು ನಾಮ ಪದಗಳಾಗಿ ಮಾತ್ರವೇ ಬಳಕೆಯಲ್ಲಿವೆ. ಹಾಗಾಗಿ, ಇವುಗಳಲ್ಲಿ ಅವ್ಯಯಿ ಭಾವವೆಂಬ ಸಮಾಸವಿದೆಯೆಂದು ವಾದಿಸುವುದು ಸ್ವಲ್ಪ ಕಷ್ಟ. ಈ ಪದಗಳಲ್ಲಿ ಒಂದು ಅಂಗ ಇನ್ನೊಂದು ಅಂಗದ ‘ಅಂಶ’ (ಭಾಗ)ವೊಂದನ್ನು ಸೂಚಿಸುವುದಾದ

ಕಾರಣ ಇವುಗಳಲ್ಲಿರುವ ಸಮಾಸವನ್ನು ‘ಅಂಶಿ’ ಎಂಬುದಾಗಿ ಕರೆಯಬಹುದೆಂದು ಬೇರೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಇದರಲ್ಲೂ ಕೆಲವು ಸಮಸ್ಯೆಗಳಿವೆ. ಕನ್ನಡದಲ್ಲಿ ಬರುವ ಇಂತಹ ಎಲ್ಲಾ ಜೋಡುಪದಗಳಲ್ಲೂ ಈ ರೀತಿ ಮೊದಲನೆಯ ಅಂಗ ಎರಡನೆಯ ಅಂಗದ ‘ಅಂಶ’ವೊಂದನ್ನು ಗುರುತಿಸುವುದಿಲ್ಲ. ಉದಾಹರಣೆಗಾಗಿ ಚಿಕ್ಕಮ್ಮ ಎಂಬ ಪದ ಒಳರಚನೆಯಲ್ಲಿ ತುದಿನಾಲಿಗೆ ಎಂಬುದರ ಹಾಗೆಯೇ ಇದೆ ಯಾದರೂ ಅದರ ಮೊದಲನೆಯ ಅಂಗವಾಗಿ ಬಂದಿರುವ ಚಿಕ್ಕ ಎಂಬ ಪದ ಅಮ್ಮ ಎಂಬ ಎರಡನೆಯ ಪದ ಸೂಚಿಸುವ ವ್ಯಕ್ತಿಯ ಅಂಶವೊಂದನ್ನು ಸೂಚಿಸುವುದಿಲ್ಲ (೫.೬.೨(ಗ) ನೋಡಿ).

ಎರಡನೆಯದಾಗಿ, ‘ಅಂಶಿ’ ಎಂಬ ಸಮಾಸಕ್ಕೆ ಕನ್ನಡದ ವೈಯಾಕರಣಿಗಳು ಉದಾಹರಣೆಗಳಾಗಿ ಕೊಡುವ ಜೋಡುಪದಗಳಲ್ಲಿ ಕೆಲವನ್ನು ಮಾತ್ರ (ಉದಾ: ತುದಿನಾಲಿಗೆ) ‘ಮೊದಲನೆಯ ಪದ ಪ್ರಧಾನವಾಗಿರುವವುಗಳು’ ಎಂಬುದಾಗಿ ಪರಿಗಣಿಸಲು ಸಾಧ್ಯ. ಉಳಿದವುಗಳಲ್ಲಿ ಪ್ರಧಾನ ಪದ ಎರಡನೆಯದಿರಬಹುದು ಇಲ್ಲವೇ ಅವೆರಡು ಪದಗಳಿಗಿಂತಲೂ ಭಿನ್ನವಾಗಿರುವ ಹೊರಗಿನದೊಂದು ಪದ ವಿರಬಹುದು. ಹಾಗಾಗಿ, ಇಂತಹ ಪದಗಳನ್ನು ಕರ್ಮಧಾರಯ ಇಲ್ಲವೇ ಬಹು ವ್ರೀಹಿ ಎಂಬ ಸಮಾಸಕ್ಕೆ ಮಾತ್ರವೇ ಉದಾಹರಣೆಗಳೆಂದು ಹೇಳಲು ಸಾಧ್ಯ.

ಕೆಳದುಟಿ ಎಂಬ ಜೋಡುಪದದಲ್ಲಿ ಎರಡನೆಯ ಅಂಗ ಪ್ರಧಾನ ಪದ ವಾಗಿದೆ ಎಂಬುದನ್ನು ಸಾಧಿಸುವುದಕ್ಕಾಗಿ ಕೆಲವರು ವೈಯಾಕರಣಿಗಳು ಅದಕ್ಕೆ ತುಟಿಯ ಕೆಳಗು ಎಂಬುದಾಗಿ ವಿಗ್ರಹವಾಕ್ಯವನ್ನು ಕೊಟ್ಟಿದ್ದಾರೆ. ಆದರೆ ನಿಜಕ್ಕೂ ಕನ್ನಡದ ಕೆಳದುಟಿ ಎಂಬ ಪದ ಬಾಯಿಯಲ್ಲಿರುವ ಎರಡು ತುಟಿಗಳಲ್ಲಿ ಕೆಳಗಿನದನ್ನು ಸೂಚಿಸುವುದಲ್ಲದೆ, ತುಟಿಯ ಕೆಳಭಾಗವನ್ನು ಸೂಚಿಸುವುದಿಲ್ಲ. ಹಾಗಾಗಿ ಅದಕ್ಕೆ ತುಟಿಯ ಕೆಳಗು ಎಂಬುದಕ್ಕಿಂತಲೂ ಕೆಳಗಿನ ತುಟಿ ಎಂಬ ಒಳನುಡಿಯೇ ಸರಿ, ಮತ್ತು ಈ ಕಾರಣಕ್ಕಾಗಿ ಅದು ಕರ್ಮಧಾರಯಕ್ಕೆ ಉದಾಹರಣೆಯಾಗಬಲ್ಲುದಲ್ಲದೆ ಅಂಶಿ ಇಲ್ಲವೇ ಅವ್ಯಯಿಭಾವಕ್ಕೆ ಉದಾ ಹರಣೆಯಾಗಲಾರದು. ಹೊರಬಾಗಿಲು ಎಂಬ ಪದವೂ ಇದೇ ರೀತಿಯದು.

ಹಿಂಗಾಲು, ಹೊರಮೈ, ನಡುಹಗಲು ಮೊದಲಾದ ಬೇರೆ ಕೆಲವು ಜೋಡುಪದಗಳಲ್ಲಿ ಕಾಣಿಸುವ ಅಂಗಗಳಲ್ಲಿ ಯಾವುದೂ ಅವುಗಳ ಪ್ರಧಾನ ಪದವಾಗಿ ಇಲ್ಲವಾದ ಕಾರಣ, ಅವೂ ಕೂಡ ಅಂಶಿ ಇಲ್ಲವೇ ಅವ್ಯಯಿಭಾವ ಸಮಾಸಕ್ಕೆ ಉದಾಹರಣೆಗಳಾಗಲಾರವು. ನಡುಹಗಲು ಎಂಬ ಪದ ಹಗಲಿನ ನಡುವಿರುವ ಒಂದು ಭಾಗವನ್ನು ಗುರುತಿಸುವುದಾದ ಕಾರಣ, ಅದರ ಅಂಗ ಗಳಾಗಿ ಬಂದಿರುವ ನಡು ಇಲ್ಲವೇ ಹಗಲು ಎಂಬ ಎರಡು ಪದಗಳಲ್ಲಿ ಯಾವುದೂ ಅದರ ಪ್ರಧಾನ ಪದವೆನಿಸಲಾರದು. ಅವೆರಡಕ್ಕಿಂತಲೂ ಭಿನ್ನವಾದ ಭಾಗ ಎಂಬ ಪದದ ಮೇಲೆ ಆ ಜೋಡುಪದದ ಕೇಂದ್ರ ಬಿಂದು ಬೀಳುತ್ತದೆ. ಹಾಗಾಗಿ ಅದನ್ನೇ ಆ ಪದದ ಪ್ರಧಾನ ಪದವೆಂದು ಪರಿಗಣಿಸಬೇಕಾಗುತ್ತದೆ,

ಮತ್ತು ಈ ಕಾರಣಕ್ಕಾಗಿ ಅದನ್ನು ಬಹುವ್ರೀಹಿ ಎಂಬ ಸಮಾಸಕ್ಕೆ ಉದಾಹರಣೆ ಯಾಗಿ ಕೊಡಬೇಕಾಗುತ್ತದೆ.

೫.೮.೬ ದ್ವಂದ್ವ ಸಮಾಸ

ಕನ್ನಡ ವ್ಯಾಕರಣಗಳಲ್ಲಿ ‘ದ್ವಂದ್ವ’ ಎಂಬ ಸಮಾಸಕ್ಕೆ ಕೊಟ್ಟಿರುವ ಉದಾಹರಣೆ ಗಳೆಲ್ಲ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ. ಸಂಸ್ಕೃತದಲ್ಲಿ ರಾಮ ಲಕ್ಷ್ಮಣ, ಮಾತಾಪಿತರ ಮೊದಲಾದವುಗಳನ್ನು ಜೋಡುಪದಗಳೆಂದು ಕರೆಯಲು ಅವುಗಳ ಅಂಗಗಳಾಗಿರುವ ಪದಗಳಲ್ಲಿ ಕೊನೆಯದರೊಂದಿಗೆ ಮಾತ್ರ ವಿಭಕ್ತಿ ಪ್ರತ್ಯಯಗಳು ಬರುವುವೆಂಬುದೇ ಕಾರಣ. ಕನ್ನಡದ ರಾಮಲಕ್ಷ್ಮಣರು, ಅಣ್ಣತಮ್ಮಂದಿರು ಎಂಬಂತಹವುಗಳಲ್ಲಿ ಇದೇ ರೀತಿಯಲ್ಲಿ ವಿಭಕ್ತಿಪ್ರತ್ಯಯ ಕೊನೆಯ ಪದದೊಂದಿಗೆ ಮಾತ್ರ ಬರುವುದಾದ ಕಾರಣ (ಉದಾ: ರಾಮಲಕ್ಷ್ಮಣ ರನ್ನು) ಅವನ್ನು ದ್ವಂದ್ವಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ.

ಆದರೆ ಕನ್ನಡದಲ್ಲಿ ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯದ ಬಳಕೆಯ ಆಧಾರದ ಮೇಲೆ ಜೋಡುಪದಗಳನ್ನು ಪದಗುಚ್ಛಗಳಿಂದ ಬೇರ್ಪಡಿಸಲು ಸಾಧ್ಯ ವಾಗದೆಂಬುದನ್ನು ನಾವು ಮೇಲೆಯೇ (೫.೮.೨ರಲ್ಲಿ) ನೋಡಿರುವೆವು. ಕನ್ನಡದ ರಾಮಲಕ್ಷ್ಮಣರು ಎಂಬಂತಹ ಬಳಕೆಗಳಲ್ಲಿ ಎರಡು ನಾಮಪದಗಳನ್ನು ಒಟ್ಟು ಸೇರಿಸಿ ಬಹುವಚನ ಪ್ರತ್ಯಯದೊಂದಿಗೆ ಹೇಳಲಾಗಿದೆಯಲ್ಲದೆ ಅವನ್ನು ಒಂದೇ ಪದವಾಗಿ ಪರಿವರ್ತಿಸಿಲ್ಲ. ಅವುಗಳ ಅರ್ಥವನ್ನೂ ನೇರವಾಗಿ ಅವುಗಳ ಒಳ ರಚನೆಯಿಂದಲೇನೇ ಪಡೆಯಲು ಸಾಧ್ಯವಿದೆ. ಹಾಗಾಗಿ ಇವು ಜೋಡುಪದಗಳಲ್ಲ.

೫.೮.೭ ಗಮಕ ಸಮಾಸ

ಕನ್ನಡಕ್ಕೇನೇ ವಿಶಿಷ್ಟವಾದುವೆಂದು ಹೇಳುವ ಗಮಕ ಮತ್ತು ಕ್ರಿಯಾಸಮಾಸಗಳ ಅವಸ್ಥೆಯೂ ಇದೇ ರೀತಿಯದು. ಅವುಗಳಿಗೆ ವೈಯಾಕರಣಿಗಳು ಕೊಡುವ ಇಪ್ಪತ್ತೈದು, ಕಿರಿಯ ಮಗ, ತೂಗುವ ತೊಟ್ಟಿಲು, ಕಂಡ ವಿಚಾರ ಮೊದ ಲಾದ ಉದಾಹರಣೆಗಳೆಲ್ಲ ಬರಿಯ ಪದಗುಚ್ಛಗಳಲ್ಲದೆ ಜೋಡುಪದಗಳಲ್ಲ. ಅವುಗಳಲ್ಲಿ ಎರಡು ಪದಗಳು ಒಟ್ಟಿಗೆ ಬಂದಿವೆಯೇನೋ ನಿಜ; ಆದರೆ ಅವು ಒಟ್ಟು ಸೇರಿ ಒಂದೇ ಪದವಾಗಿಲ್ಲ. ಎಂದರೆ, ಅವು ಕನ್ನಡದ ವಾಕ್ಯರಚನೆಯ ನಿಯಮಗಳಿಗೆ ಅನುಸಾರವಾಗಿ ಒಟ್ಟು ಸೇರಿವೆಯಲ್ಲದೆ, ಪದರಚನೆಯ ನಿಯಮ ಗಳಿಗೆ ಅನುಸಾರವಾಗಿ ಒಟ್ಟು ಸೇರಿಲ್ಲ.

ಕನ್ನಡದ ವೈಯಾಕರಣಿಗಳು ಇಲ್ಲಿಯೂ ಮೇಲೆ ಕರ್ಮಧಾರಯ ಸಮಾಸದ ವಿಷಯದಲ್ಲಿ ಮಾಡಿರುವಂತಹ ತಪ್ಪನ್ನೇ ಮಾಡಿದ್ದಾರೆ (೫.೮.೨ ನೋಡಿ). ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ವಾಕ್ಯರಚನೆಯಲ್ಲಿ ಕಾಣಿಸುವ ಅತ್ಯಂತ ಪ್ರಾಮುಖ್ಯವಾದ ವ್ಯತ್ಯಾಸವೊಂದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬುದೇ ಇದಕ್ಕೆ ಕಾರಣ. ಕ್ರಿಯಾಪದಗಳ ಸಂಬಂಧಕ ರೂಪ

ವನ್ನು (ಮಾಡುವ, ಮಾಡಿದ, ಮಾಡದ ಎಂಬಂತಹ ಕ್ರಿಯಾರೂಪಗಳನ್ನು) ಬಳಸುವಲ್ಲಿ ಈ ಎರಡು ಭಾಷೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಕೆಳಗಿನ ವಾಕ್ಯಗಳಿಂದ ತಿಳಿಯಬಹುದು.

  1. (೧೨ಕ) ತತ್ರ ಏಕಃ ಮೃತಃ ಸರ್ಪಃ ಅಸ್ತಿ.
  2. ಅಲ್ಲಿ ಒಂದು ಸತ್ತ ಹಾವು ಇದೆ.
  3. (೧೩ಕ) ರಾಮಃ ಏಕಂ ಮೃತಂ ಸರ್ಪ೦ ಅಪಶ್ಯತ್.
  4. ರಾಮ ಒಂದು ಸತ್ತ ಹಾವನ್ನು ನೋಡಿದ.
  5. (೧೪ಕ) ರಾಮಃ ಏಕೇನ ಮೃತೇನ ಸರ್ಪೇಣ ಭೀತಃ.
  6. ರಾಮ ಒಂದು ಸತ್ತ ಹಾವಿಗೆ ಹೆದರಿದ.
  7. (೧೫ಕ) ರಾಮಃ ಏಕಸ್ಯ ಮೃತಸ್ಯ ಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್.
  8. ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ.

ಮೇಲಿನ ವಾಕ್ಯಗಳಲ್ಲಿ ಮೃತಃ ಎಂಬುದು ಸಂಸ್ಕೃತದ ‘ಕೃದಂತ’ ಎಂಬ ಹೆಸರಿನ ಸಂಬಂಧಕ ಕ್ರಿಯಾರೂಪ (ಅದು ಸಾಯುವ ಘಟನೆಯನ್ನು ಸರ್ಪಃ ‘ಹಾವು’ ಎಂಬುದರೊಂದಿಗೆ ಸಂಬಂಧಿಸುತ್ತದೆ); ಇದೇ ಕೆಲಸವನ್ನು ಮಾಡುವುದ ಕ್ಕಾಗಿ ಕನ್ನಡದಲ್ಲಿ ಸತ್ತ ಎಂಬ ರೂಪ ಬಳಕೆಯಲ್ಲಿದೆ. ಇವುಗಳಲ್ಲಿ ಸಂಸ್ಕೃತದ ಮೃತಃ ಎಂಬುದು ಬೇರೆ ಬೇರೆ ವಾಕ್ಯಗಳಲ್ಲಿ ಬೇರೆ ಬೇರೆ ಲಿಂಗ-ವಚನ- ವಿಭಕ್ತಿಗಳೊಂದಿಗೆ ಬಂದಿದೆಯಾದರೆ, ಕನ್ನಡದ ಸತ್ತ ಎಂಬುದು ಎಲ್ಲಾ ವಾಕ್ಯ ಗಳಲ್ಲೂ ಒಂದೇ ರೂಪದಲ್ಲಿ ಬಂದಿದೆ.

ಕನ್ನಡದಲ್ಲಿ ಸಂಸ್ಕೃತದ ಹಾಗೆ ಸಂಬಂಧಕಗಳಿಗೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ ಮಾತ್ರವಲ್ಲ, ಹಾಗೆ ಸೇರಿಸಲು ಸಾಧ್ಯವೂ ಇಲ್ಲ. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ಸಂಬಂಧಕಗಳು ಗುಣಪದಗಳ ಹಾಗೆ ಬಳಕೆಯಾಗುತ್ತವಲ್ಲದೆ ಸಂಸ್ಕೃತದಲ್ಲಿರುವಂತೆ ನಾಮ ಪದಗಳ ಹಾಗೆ ಬಳಕೆಯಾಗುವುದಿಲ್ಲ. ನಾಮಪದಗಳ ಹಾಗೆ ಬಳಕೆಯಾಗಲು ಅವಕ್ಕೆ ಅವನು, ಅದು ಮೊದಲಾದ ಸರ್ವನಾಮಗಳನ್ನು ಸೇರಿಸಿಕೊಳ್ಳಬೇಕಾಗು ಇದೆ (ಉದಾ: ಸತ್ತುದನ್ನು, ಸತ್ತುದಕ್ಕೆ, ಸತ್ತುದರಿಂದ, ಸತ್ತುದರಲ್ಲಿ, ಇತ್ಯಾದಿ).

ಸಂಸ್ಕೃತದ ಸಂಬಂಧಕ ಕ್ರಿಯಾರೂಪಗಳನ್ನು ಅವಕ್ಕೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸದೆಯೂ ಬಳಸಲು ಸಾಧ್ಯವಿದೆ. ಆದರೆ ಅಂತಹ ಬಳಕೆ ಗಳನ್ನು ಮೇಲೆ ಕೊಟ್ಟಿರುವ ಬಳಕೆಗಳಿಂದ ಭಿನ್ನವಾದವುಗಳೆಂದು ತೋರಿಸುವು

ದಕ್ಕಾಗಿ ಜೋಡುಪದಗಳೆಂದು ಪರಿಗಣಿಸುವ ಅವಶ್ಯಕತೆಯಿದೆ. ಇಂತಹ ಬಳಕೆ ಗಳನ್ನು ಕೆಳಗಿನ (ಖ) ವಾಕ್ಯಗಳಲ್ಲಿ ಕಾಣಬಹುದು.

  1. (೧೨ಖ) ತತ್ರ ಏಕಃ ಮೃತಸರ್ಪಃ ಅಸ್ತಿ.
  2. ಅಲ್ಲಿ ಒಂದು ಸತ್ತ ಹಾವು ಇದೆ.
  3. (೧೩ಖ) ರಾಮಃ ಏಕಂ ಮೃತಸರ್ಪ೦ ಅಪಶ್ಯತ್.
  4. ರಾಮ ಒಂದು ಸತ್ತ ಹಾವನ್ನು ನೋಡಿದ.
  5. (೧೪ಖ) ರಾಮಃ ಏಕೇನ್ ಮೃತಸರ್ಪೇಣ ಭೀತಃ.
  6. ರಾಮ ಒಂದು ಸತ್ತ ಹಾವಿಗೆ ಹೆದರಿದ.
  7. (೧೫ಖ) ರಾಮಃ ಏಕಸ್ಯ ಮೃತಸರ್ಪಸ್ಯ ಉಪರಿ ಪಾದಂ ನಿಕ್ಷಿಪತ್.
  8. ರಾಮ ಒಂದು ಸತ್ತ ಹಾವಿನ ಮೇಲೆ ಕಾಲಿರಿಸಿದ.

ಮೇಲೆ (೧೨ಖ-೧೫ಖ)ಗಳಲ್ಲಿ ಕೊಟ್ಟಿರುವ ಎಲ್ಲಾ ಸಂಸ್ಕೃತ ವಾಕ್ಯ ಗಳಲ್ಲೂ ಮೃತ ಎಂಬ ಸಂಬಂಧಕ (ಕೃದಂತ) ರೂಪ ಲಿಂಗ-ವಚನ-ವಿಭಕ್ತಿ ಪ್ರತ್ಯಯವಿಲ್ಲದೆ ನೇರವಾಗಿ ಸರ್ಪ ಎಂಬ ನಾಮಪದದೊಂದಿಗೆ ಬಂದಿರುವುದನ್ನು ಕಾಣಬಹುದು. ಇದಕ್ಕೆ ಮೊದಲೇ ಕೊಟ್ಟಿರುವ (೧೨ಕ-೧೫ಕ) ವಾಕ್ಯಗಳಲ್ಲಿ ಈ ಪದದೊಂದಿಗೆ ಬೇರೆ ಬೇರೆ ವಿಭಕ್ತಿಪ್ರತ್ಯಯಗಳು ಬಂದಿದ್ದು, ಅವು ಇಲ್ಲಿ ಬಿದ್ದು ಹೋಗಿರುವುದು ಸಂಸ್ಕೃತದ ಮಟ್ಟಿಗೆ ಒಂದು ಪದರಚನೆಯ ನಿಯಮವೆಂದು ವೈಯಾಕರಣಿಗಳ ಅಭಿಪ್ರಾಯಪಟ್ಟಿದ್ದಾರೆ, ಮತ್ತು ಈ ಕಾರಣಕ್ಕಾಗಿ ಮೃತಸರ್ಪ ಎಂಬ ಪದದಲ್ಲಿ ಮೃತ ಮತ್ತು ಸರ್ಪ ಎಂಬ ಎರಡು ಪದಗಳು ಸಮಾಸವೆಂಬ ಪದರಚನೆಯ ವಿಧಾನದ ಮೂಲಕ ಒಟ್ಟುಸೇರಿವೆಯೆಂದು ಅವರು ವಾದಿಸು ತ್ತಾರೆ.

ಕನ್ನಡದ ಸತ್ತ ಹಾವು ಎಂಬುದು (೧೨ಖ-೧೫ಖ)ಗಳಲ್ಲಿ ಇದರ ಹಾಗೆಯೇ ಕಾಣಿಸುವುದಾದರೂ ಅದು ಒಂದು ಪದಗುಚ್ಛವಲ್ಲದೆ ಜೋಡುಪದ ವಲ್ಲ. ಯಾಕೆಂದರೆ, ಇಲ್ಲಿ ಸತ್ತ ಎಂಬ ಪದ ಲಿಂಗ-ವಚನ-ವಿಭಕ್ತಿ ಪ್ರತ್ಯಯ ಗಳೊಂದಿಗೆ ಬಾರದಿರುವುದಕ್ಕೆ ಮೇಲೆ ಸೂಚಿಸಿರುವಂತೆ ಕಾರಣ ಬೇರೆಯೇ ಇದೆ. ಕನ್ನಡಕ್ಕೂ ಸಂಸ್ಕೃತಕ್ಕೂ ನಡುವಿರುವ ಈ ಪ್ರಾಮುಖ್ಯವಾದ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಈ ರೀತಿ ಕ್ರಿಯಾಪದಗಳ ಸಂಬಂಧಕ ರೂಪಗಳನ್ನೊಳಗೊಂಡಿರುವ ಪದಗುಚ್ಛಗಳನ್ನು ಗಮಕ ಸಮಾಸದಲ್ಲಿ ಬಂದಿರುವ ಜೋಡುಪದಗಳೆಂದು ಭಾವಿಸಲು ಕಾರಣವಿರಬೇಕು.

೫.೮.೮ ಕ್ರಿಯಾಸಮಾಸ

ಸಂಸ್ಕೃತದಲ್ಲಿಲ್ಲದ ಕ್ರಿಯಾಸಮಾಸವೆಂಬ ಇನ್ನೊಂದು ರೀತಿಯ ಪದರಚನೆಯ ವಿಧಾನವೂ ಕನ್ನಡದಲ್ಲಿದೆಯೆಂದು ಅದರೆ ವೈಯಾಕರಣಿಗಳು ಹೇಳಿರುವುದು ಇಂತಹದೇ ಕಾರಣದಿಂದ ಎಂದು ಹೇಳಬಹುದು. ಮರವೇರು, ಕೈಮುಗಿ, ನಿದ್ದೆ ಮಾಡು ಮೊದಲಾದವುಗಳನ್ನು ಈ ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಡ ಲಾಗಿದೆ. ಆದರೆ ಇಲ್ಲಿ ಮೊದಲನೆಯ ಪದದೊಂದಿಗೆ ಬಂದಿದ್ದ ಅನ್ನು ಎಂಬ ವಿಭಕ್ತಿ ಪ್ರತ್ಯಯ ಬಿದ್ದುಹೋಗಿರುವುದು ಕನ್ನಡದ ಒಂದು ವಾಕ್ಯರಚನೆಯ ನಿಯಮದ ಆಧಾರದ ಮೇಲಲ್ಲದೆ, ಪದರಚನೆಯ ನಿಯಮದ ಆಧಾರದ ಮೇಲಲ್ಲ.

ಇದಲ್ಲದೆ, ಕ್ರಿಯಾಪದದೊಂದಿಗೆ ಬರುವ ಈ ನಾಮಪದಗಳನ್ನು ವಾಕ್ಯದ ಇತರ ಸ್ಥಾನಗಳಿಗೆ ವರ್ಗಾಯಿಸಿದಾಗ, ಇಲ್ಲವೇ ಅವುಗಳೊಂದಿಗೆ ಒತ್ತಿಹೇಳುವ ಅರ್ಥವಿರುವ ಊ ಎಂಬ ಪ್ರತ್ಯಯವನ್ನು ಬಳಸಿದಾಗ, ಹೀಗೆ ಬಿದ್ದು ಹೋದ ಅನ್ನು ಎಂಬ ಪ್ರತ್ಯಯ ಪುನಃ ಕಾಣಿಸಿಕೊಳ್ಳುತ್ತದೆ. ಉದಾ:

  1. (೧೬ಕ) ರಾಜು ನಿನ್ನೆ ಸರಿಯಾಗಿ ನಿದ್ದೆ ಮಾಡಿರಲಿಲ್ಲ.
  2. (೧೬ಖ) ರಾಜು ನಿನ್ನೆ ನಿದ್ದೆಯನ್ನು ಸರಿಯಾಗಿ ಮಾಡಿರಲಿಲ್ಲ.
  3. (೧೭ಕ) ರಾಜು ದೇವರಿಗೆ ಹೂಹಾಕಿ ಕೈಮುಗಿದ.
  4. (೧೭ಖ) ರಾಜು ದೇವರಿಗೆ ಹೂವನ್ನೂ ಹಾಕಿದ, ಕೈಯನ್ನೂ ಮುಗಿದ.

ಜೋಡುಪದಗಳ ಅಂಗಗಳಾಗಿ ಬರುವ ಪದಗಳನ್ನು ಈ ರೀತಿ ವಾಕ್ಯದಲ್ಲಿ ಬೇರೆ ಸ್ಥಾನಗಳಿಗೆ ವರ್ಗಾಯಿಸಲು ಇಲ್ಲವೇ ಅವುಗಳಲ್ಲಿ ಮೊದಲಿನದರೊಂದಿಗೆ ಊ ಎಂಬ ಒತ್ತಿಹೇಳುವ ಪ್ರತ್ಯಯವನ್ನು ಸೇರಿಸಿ ಬಳಸಲು ಸಾಧ್ಯವಾಗದೆಂಬುದನ್ನು ಇಲ್ಲಿ ಗಮನಿಸಬಹುದು.

ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ಕೆಲವು ಕ್ರಿಯಾಪದಗಳಲ್ಲಿ (ಉದಾ: ಮರೆಹೊಗು) ಈ ರೀತಿ ಮೊದಲನೆಯ ಅಂಗದೊಂದಿಗೆ ಅನ್ನು ಎಂಬ ಪ್ರತ್ಯಯ ವನ್ನು ಬಳಸಲು ಸಾಧ್ಯವಾಗದಿರಬಹುದು. ಆದರೆ ಇವನ್ನು ಜೋಡುಪದಗಳೆಂದು ಪರಿಗಣಿಸದೆ ನುಡಿಗಟ್ಟುಗಳೆಂದು ಪರಿಗಣಿಸುವುದೇ ಉತ್ತಮ. ಸಮಾಸವೆಂಬ ಪದರಚನೆಯ ವಿಧಾನದ ಮೂಲಕ ‘ಜೋಡು’ಕ್ರಿಯಾಪದಗಳನ್ನು ತಯಾರಿಸ ದಿರಲು ಕಾರಣವೇನೆಂಬುದನ್ನು ಆರನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.

Eke →

೫.೯ ಸಾರಾಂಶ

ಎರಡು ಪದಗಳನ್ನು ಒಟ್ಟಿಗೆ ಸೇರಿಸಿ ಒಂದೇ ಪದವಾಗಿ ಮಾಡಿರುವ ನಾಮಪದ ಗಳನ್ನು ಜೋಡುಪದಗಳೆಂದು ಕರೆಯಬಹುದು. ಕನ್ನಡದಲ್ಲಿ ಇಂತಹ ಪದಗಳು

ಹಲವಿದ್ದು, ಅವುಗಳಲ್ಲಿ ಎರಡನೆಯ ಅಂಗ ಹೆಚ್ಚಿನ ಕಡೆಗಳಲ್ಲೂ ನಾಮಪದ ವಾಗಿರುತ್ತದೆ. ಮೊದಲನೆಯ ಅಂಗ ಮಾತ್ರ ನಾಮಪದವಿರಬಹುದು, ಕ್ರಿಯಾಪದ ವಿರಬಹುದು ಇಲ್ಲವೇ ಗುಣಪದವಿರಬಹುದು. ಈ ವಿಷಯವನ್ನು ಬಳಸಿ ಕನ್ನಡದ ಜೋಡುಪದಗಳನ್ನು ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಲು ಸಾಧ್ಯವಿದೆ.

ಇವತ್ತಿನ ಕನ್ನಡ ವ್ಯಾಕರಣಗಳಲ್ಲಿ ಕಾಣಿಸುವ ಜೋಡುಪದಗಳ ವರ್ಣನೆ ಗಳು (ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಿರುವ ಸಮಾಸ ಎಂಬ ಪದ ರಚನೆಯ ವಿಧಾನದ ವರ್ಣನೆಗಳು) ಈ ವಿಷಯಕ್ಕೆ ಜಾಸ್ತಿ ಗಮನ ಕೊಟ್ಟಿಲ್ಲ. ಇದಕ್ಕೆ ಬದಲು, ಸಂಸ್ಕೃತ ವ್ಯಾಕರಣಗಳನ್ನನುಸರಿಸಿ, ಜೋಡುಪದದ ಅಂಗ ಗಳಾಗಿ ಬಂದಿರುವ ಪದಗಳಲ್ಲಿ ಯಾವುದು ‘ಪ್ರಧಾನ ಪದ’ ಎಂಬ ವಿಷಯಕ್ಕೆ ಅವು ಹೆಚ್ಚಿನ ಗಮನ ಕೊಟ್ಟಿವೆ. ಇದರಿಂದಾಗಿ ಅವುಗಳಲ್ಲಿ ಬರುವ ಜೋಡುಪದ ಗಳ ವರ್ಣನೆ ಕನ್ನಡದ ಮಟ್ಟಿಗೆ ಅಷ್ಟೊಂದು ತೃಪ್ತಿಕರವಾಗಿಲ್ಲ.