↑ Contents  ·  Contents  ·  Ch 2 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9

Eke →

೧.೧ ಒಳರಚನೆ

ಕನ್ನಡದ ಸೊಲ್ಲುಗಳಲ್ಲಿ ಮುಕ್ಯವಾಗಿ ಎರಡು ರೀತಿಯ ಪದಗಳು ಬಳಕೆಯಲ್ಲಿವೆ. ಒಳರಚನೆಯಿರುವ ಪದಗಳು ಮತ್ತು ಒಳರಚನೆಯಿಲ್ಲದ ಪದಗಳು. ಎತ್ತುಗೆಗಾಗಿ, ಮುನ್ನುಡಿ ಎಂಬ ಪದಕ್ಕೆ ಒಳರಚನೆಯಿದೆ. ಮುಂದೆ ಮತ್ತು ನುಡಿ ಎಂಬ ಎರಡು ಪದಗಳು ಒಟ್ಟು ಸೇರಿ ಈ ಮುನ್ನುಡಿ ಎಂಬ ಪದ ತಯಾರಾಗಿದೆ; ಮತ್ತು ಹೀಗೆ ತಯಾರಾಗುವಾಗ, ಮುಂದೆ ಎಂಬ ಪದ ಅದರ ಮುನ್ ಎಂಬ ಅಡಕ ರೂಪದಲ್ಲಿ ಬಂದಿದೆ.

ಇದಕ್ಕೆ ಬದಲು, ತಲೆ ಎಂಬ ಪದಕ್ಕೆ ಒಳರಚನೆಯೆಂಬುದಿಲ್ಲ. ಅದು ತಕಾರ, ಅಕಾರ, ಲಕಾರ ಮತ್ತು ಎಕಾರಗಳ ಸೇರಿಕೆಯಿಂದ ತಯಾರಾಗಿದೆಯೇನೋ ನಿಜ; ಆದರೆ, ಹೀಗೆ ಒಟ್ಟು ಸೇರಿರುವ ಈ ಉಲಿಗಳನ್ನು ಮುನ್ನುಡಿ ಎಂಬ ಒಳರಚನೆಯಿರುವ ಪದದಲ್ಲಿ ಕಾಣಿಸುವ ಹಾಗೆ ಎರಡು ಪದಗಳಾಗಿ, ಇಲ್ಲವೇ ಕುಣಿತ ಎಂಬ ಇನ್ನೊಂದು ಒಳರಚನೆಯಿರುವ ಪದದಲ್ಲಿ ಕಾಣಿಸುವ ಹಾಗೆ ಕುಣಿ ಎಂಬ ಒಂದು ಪದ ಮತ್ತು ತ ಎಂಬ ಒಂದು ಒಟ್ಟು (ಒಟ್ಟು) ಎಂಬುದಾಗಿ ಒಡೆದು ಹೇಳಲಾರೆವು.

ಈ ಪುಸ್ತಕದಲ್ಲಿ ಮುಕ್ಯವಾಗಿ ಒಳರಚನೆಯಿರುವ ಕನ್ನಡ ಪದಗಳನ್ನು ಪರಿಶೀಲಿಸಬೇಕಾಗಿದೆ. ಎಂದರೆ, ಅಂತಹ ಪದಗಳ ಅಂಗಗಳಾಗಿ ಬರುವ ಪದಗಳು ಮತ್ತು ಒಟ್ಟುಗಳು ಯಾವುವು, ಅವುಗಳ ನಡುವೆ ಎಂತಹ ಸಂಬಂದವಿದೆ, ಮತ್ತು ಈ ರೀತಿ ಒಂದು ಪದದ ಅಂಗಗಳಾಗಿ ಬರುವಾಗ ಅವುಗಳಲ್ಲಿ ಎಂತಹ ಮಾರಾಡುಗಳೆಲ್ಲ ನಡೆಯುತ್ತವೆ ಎಂಬುದನ್ನು ಕಂಡುಹಿಡಿಯಬೇಕಾಗಿದೆ.

ಎತ್ತುಗೆಗಾಗಿ, ಮೇಲೆ ಕೊಟ್ಟಿರುವ ಮುನ್ನುಡಿ ಎಂಬ ಪದದ ಅಂಗವಾಗಿ ಬಂದಿರುವ ನುಡಿ ಎಂಬುದು ಒಂದು ಎಸಕಪದವೇ ಇಲ್ಲವೇ ಅದೇ ರೂಪದ ಒಂದು ಹೆಸರುಪದವೇ? ಅದಕ್ಕೂ ಮುಂದೆ ಎಂಬ ಇನ್ನೊಂದು ಅಂಗಕ್ಕೂ ಅದಕ್ಕೂ ನಡುವ ಈ ಪದದಲ್ಲಿ ಎಂತಹ ಸಂಬಂಧವಿದೆ? ನುಡಿ ಎಂಬುದು ಎಸಕಪದವಾದರೆ, ಅದರಿಂದ ಮುನ್ನುಡಿ ಎಂಬ ಹೆಸರುಪದ ಹೇಗೆ

ತಯಾರಾಗುತ್ತದೆ? ಅದು ಹೆಸರುಪದವಾದರೆ, ಮುಂದೆ ಎಂಬ ಪರಿಚೆಪದದೊಂದಿಗೆ ಅದು ಹೇಗೆ ಸಂಬಂಧಿಸುತ್ತದೆ? ಅವೆರಡರ ನಡುವೆ ಮುನ್ನುಡಿ ಎಂಬ ಪದದಲ್ಲಿ ಕಾಣಿಸದಿರುವ ಒಂದು ಇಲ್ಲವೇ ಹೆಚ್ಚು ಎಸಕಪದಗಳನ್ನಿರಿಸಿ ಮುಂದಾಗಿ ಹೇಳುವ ನುಡಿ ಎಂಬುದರೊಂದಿಗೆ ಅದನ್ನು ಸಂಬಂದಿಸಬೇಕೇ, ಇಲ್ಲವೇ ಮುಂದೆ ಎಂಬುದನ್ನು ಮುಂದಿನ ಎಂಬುದಾಗಿ ಮಾರ್ಪಡಿಸಿಕೊಳ್ಳಬೇಕೇ? ಇಂತಹ ಹಲವಾರು ಕೇಳ್ವಿಗಳು ಈ ಪದದ ಒಳರಚನೆಯನ್ನು ಪರಿಶೀಲಿಸುವಾಗ ನಮ್ಮೆದುರು ನಿಲ್ಲುತ್ತವೆ.

ಒಳರಚನೆಯಿರುವ ಪದಗಳನ್ನು ಸೊಲ್ಲುಗಳಲ್ಲಿ ಬಳಸಬೇಕಾದಾಗಲೆಲ್ಲ ನಾವು ಅವುಗಳ ಒಳರಚನೆಯಂತಹದು ಎಂಬುದನ್ನು ತಿಳಿದಿರಲೇಬೇಕೆಂದೇನೂ ಇಲ್ಲ. ಆ ಪದಗಳ ಹುರುಳೇನು ಮತ್ತು ಸೊಲ್ಲುಗಳಲ್ಲಿ ಅವುಗಳನ್ನು ಬಳಸುವ ಬಗೆ ಹೇಗೆ ಎಂದಿಶ್ಚನ್ನು ಮಾತ್ರ ತಿಳಿದಿದ್ದರೆ ಸಾಕು. ಈ ವಿಷಯದಲ್ಲಿ ಒಳರಚನೆಯಿರುವ ಪದಗಳಿಗೂ ಒಳರಚನೆಯಿಲ್ಲದ ಪದಗಳಿಗೂ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಈ ಕಾರಣಕ್ಕಾಗಿ ಪದರಚನೆಯೆಂಬುದು ಸೊಲ್ಲರಿಮೆಯ ಅಂಗವಲ್ಲವೆಂಬುದಾಗಿ ವಾದಿಸುವವರೂ ಕೆಲವರಿದ್ದಾರೆ. ಹೆಸರುಪದಗಳ ಬಳಕೆಯ ಮಟ್ಟಿಗೆ ಹೇಳುವುದಾದರೆ ಇದು ಒಂದು ರೀತಿಯಲ್ಲಿ ನಿಜವೆಂದೂ ಅನಿಸದಿರದು. ಯಾಕೆಂದರೆ ಅವುಗಳ ಹುರುಳೇನು ಎಂಬುದನ್ನು ಇಲ್ಲವೇ ಸೊಲ್ಲುಗಳಲ್ಲಿ ಅವನ್ನು ಬಳಸುವ ಬಗೆ ಹೇಗೆ ಎಂಬುದನ್ನು ಒಳರಚನೆಯ ಆದಾರದ ಮೇಲೆ ಮಾತ್ರವೇ ತಿಳಿದುಕೊಳ್ಳಲು ಹೆಚ್ಚಿನೆಡೆಗಳಲ್ಲೂ ಸಾದ್ಯವಾಗುವುದಿಲ್ಲ (೩.೩.೩ ನೋಡಿ).

ಹೀಗಿದ್ದರೂ ಕೂಡ, ಹಲವಾರು ಕಡೆಗಳಲ್ಲಿ ಪದಗಳ ಒಳರಚನೆ ನಮ್ಮ ಸಹಾಯಕ್ಕೆ ಬರುತ್ತದೆ. ಎತ್ತುಗೆಗಾಗಿ ನಮ್ಮ ನುಡಿಯಲ್ಲಿ ಬಳಕೆಯಾಗುವ ಎಲ್ಲಾ ಪದಗಳನ್ನೂ ನಾವು ತಿಳಿದಿರುವುದಿಲ್ಲ. ಇದಲ್ಲದೆ ಗೊತ್ತಿದ್ದರೂ ನೆನಪಿನಲ್ಲಿ ಉಳಿಯುವ ಪದಗಳ ಎಣಿಕೆ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ.

ನಮಗೆ ಗೊತ್ತಿಲ್ಲದ ಇಲ್ಲವೇ ನೆನಪಿನಲ್ಲಿಲ್ಲದ ಪದಗಳನ್ನು ಬೇರೆ ಯಾರಾದರೂ ಬಳಸಿದಲ್ಲಿ ಅದರ ಹುರುಳೇನಿರಬಹುದು ಎಂಬುದನ್ನು ಸ್ವಲ್ಪ ಮಟ್ಟಿಗೆ ಅದನ್ನು ಬಳಸಿದ ಸಂದರ್ಹದ ಸಹಾಯದಿಂದ ಊಹಿಸಿಕೊಳ್ಳಬಲ್ಲೆವು ಮತ್ತು ಇನ್ನು ಸ್ವಲ್ಪ ಮಟ್ಟಿಗೆ ಅದರ ಒಳರಚನೆಯೇನು ಎಂಬುದನ್ನು ಕಂಡುಹಿಡಿಯಬಲ್ಲೆವಾದರೆ ಅದರಿಂದಲೂ ಊಹಿಸಿಕೊಳ್ಳಬಲ್ಲೆವು.

ಬೇರೆ ಕೆಲವು ಸಂದರ್ಭಗಳಲ್ಲೂ ಪದಗಳ ಒಳರಚನೆ ನಮಗೆ ಒದವಿಯನ್ನೊದಗಿಸುತ್ತದೆ. ಎತ್ತುಗೆಗಾಗಿ, ಪದಗಳಿಗೆ ಹೊಸ ಹೊಸ ಬಳಕೆಗಳನ್ನು ಉಂಟುಮಾಡಿಕೊಡಲು ಬಯಸುವ ಮಾತುಗಾರರಿಗೆ ಮತ್ತು ಬರಹಗಾರರಿಗೆ ಅವುಗಳ ಒಳರಚನೆಯ ಅರಿವು ಸಹಾಯಕವಾಗಬಲ್ಲುದು.

ಸಂಶೋಧನೆಗಳಲ್ಲಿ ತೊಡಗಿರುವವರು ಹೊಸ ಹೊಸ ವಿಷಯಗಳನ್ನು ಇಲ್ಲವೇ ವಿದಾನಗಳನ್ನು ಕಂಡುಹಿಡಿದಾಗ ಅವನ್ನು ಹೆಸರಿಸುವುದಕ್ಕಾಗಿ ಹೊಸ ಹೊಸ ಪದಗಳನ್ನು ತಯಾರಿಸಿಕೊಳ್ಳಬೇಕಾಗುತ್ತದೆ; ಬೇರೆ ನುಡಿಗಳಲ್ಲಿರುವ ಬರಹಗಳನ್ನು ತಮ್ಮ ನುಡಿಗೆ ನುಡಿಮಾರ(ಅನುವಾದಿಸ)ಬೇಕಾದಾಗಲೂ ಅವುಗಳಲ್ಲಿ ಬರುವ ಪದಗಳಿಗೆ ಸರಿಹೊಂದುವ ಪದಗಳನ್ನು ತಮ್ಮ ನುಡಿಯಲ್ಲಿ ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ.

ಇದಲ್ಲದೆ ಹೊಸದಾಗಿ ಮೂಡಿಬರುವ ಸುದ್ದಿಗಳನ್ನು ಒಡನೆಯೇ ಬರೆದುಕೊಡಬೇಕಾಗಿರುವ ದಿನಪತ್ರಿಕೆಗಳ ವರದಿಗಾರರೂ ಹೊಸ ಹೊಸ ಪದಗಳನ್ನು ಆಗಾಗ ಉಂಟುಮಾಡಿಕೊಳ್ಳಬೇಕಾಗುತ್ತದೆ. ಇಂತಹ ಕಡೆಗಳಲ್ಲೆಲ್ಲ ನುಡಿಯನ್ನು ಬಳಸುವವರಿಗೆ ತಮ್ಮ ನುಡಿಯಲ್ಲಿ ಬರುವ ಪದಳ ಒಳರಚನೆಯಂತಹದು ಮತ್ತು ಅದರ ಹಿಂದಿರುವ ಕಟ್ಟಳೆ(ನಿಯಮ)ಗಳೆಂತಹವು ಎಂಬುದು ತಿಳಿದಿದೆಯಾದರೆ ಅವರ ಕೆಲಸ ಹೆಚ್ಚು ಸುಲಬವಾಗಬಲ್ಲುದು.

Eke →

೧.೨ ಒಳರಚನೆ ಮತ್ತು ಚರಿತ್ರೆ

ಪದಗಳ ಒಳರಚನೆಯೆಂಬುದು ಮುಕ್ಯವಾಗಿ ಆ ಪದಗಳ ಚರಿತ್ರೆಯ ಮೇಲೆ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಮೇಲೆ ವಿವರಿಸಿರುವ ಬೇರೆ ಬೇರೆ ರೀತಿಯ ಸಂದರ್ಭಗಳಲ್ಲಿ ನುಡಿಯೊಂದನ್ನು ಬಳಸುವ ಜನರಿಗೆ ಅವರೆದುರಿರುವ ವಸ್ತುಗಳನ್ನು ಇಲ್ಲವೇ ಅವರ ಮನಸ್ಸಿನಲ್ಲಿರುವ ವಿಷಯಗಳನ್ನು ಹೆಸರಿಸಲು ಸರಿ ಯಾದ ಪದ ಸಿಗದಿದ್ದಾಗ, ಅವರು ತಮ್ಮ ನುಡಿಯಲ್ಲಿರುವ ಎರಡು (ಇಲ್ಲವೇ ಹೆಚ್ಚು) ಪದಗಳನ್ನು ಒಟ್ಟು ಸೇರಿಸಿ, ಇಲ್ಲವೇ ಪದವೊಂದಕ್ಕೆ ಒಂದೋ ಎರಡೋ ಒಟ್ಟುಗಳನ್ನು ಸೇರಿಸಿ ಹೊಸ ಹೆಸರುಗಳನ್ನು ತಯಾರುಮಾಡಿರಬೇಕು. ಮುಂದೆ ಆ ಹೆಸರುಗಳು ಬೇರೆ ಬೇರೆ ಜನರ ಮಾತಿನಲ್ಲಿ ಸೇರಿಕೊಂಡು ನುಡಿಯ ಪದಗಳಾಗಿ ಬಳಕೆಗೆ ಬಂದಿರಬೇಕು.

ಒಳರಚನೆಯಿರುವ ಪದಗಳೆಲ್ಲವೂ ಇದೇ ರೀತಿಯಲ್ಲಿ ಬೇರೆ ಬೇರೆ ಜನರು ಬೇರೆ ಬೇರೆ ಸಂದರ್ಭಗಳಲ್ಲಿ ಉಂಟುಮಾಡಿ ಬಳಕೆಗೆ ತಂದಿರುವ ಪದಗಳೆಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ, ಅವುಗಳ ಒಳರಚನೆಯೆಂಬುದು ಯಾರು ಯಾವ ಕಾರಣಕ್ಕಾಗಿ ಯಾವ ರೀತಿಯಲ್ಲಿ ಅವನ್ನು ಮೇಲೆ ಹೇಳಿದಂತೆ ಉಂಟುಮಾಡಿ ಬಳಕೆಗೆ ತಂದರು ಎಂಬ ಚಾರಿತ್ರಿಕ ಅಂಶದ ಮೇಲೆ ಅವಲಂಬಿಸಿರುತ್ತದೆ.

ಪದವೊಂದನ್ನು ಬಳಕೆಗೆ ತಂದಿರುವ ಸಮಯದಲ್ಲಿ ಅದರ ಒಳರಚನೆ ಮತ್ತು ಚರಿತ್ರೆ ಇವೆರಡೂ ಒಂದೇ ಆಗಿರುತ್ತವೆ. ಆದರೆ, ಅದರ ಬಳಕೆಯಾಗುತ್ತಿದ್ದಂತೆ, ಈ ಚರಿತ್ರೆಗೂ ಒಳರಚನೆಗೂ ನಡುವೆ ಹಲಕೆಲವು ವ್ಯತ್ಯಾಸಗಳು ಮೂಡಿಬರಬಲ್ಲುವು. ಯಾಕೆಂದರೆ, ಪದವೊಂದಕ್ಕೆ ನುಡಿಯಲ್ಲಿ

ಇವತ್ತು ಎಂತಹ ಸ್ಥಾನವಿದೆ, ಅದಕ್ಕೂ ನುಡಿಯ ಇತರ ಪದಗಳಿಗೂ ನಡುವೆ ಇವತ್ತು ಎಂತಹ ಸಂಬಂಧವಿದೆ ಎಂಬುದರ ಮೇಲೂ ಅದರ ಒಳರಚನೆ ಅವಲಂಬಿಸಿರಬಲ್ಲುದು.

ಒಂದು ನುಡಿಯಲ್ಲಿರುವ ಪದಗಳು ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ಮಾರಾಡುಗಳಿಗೆ ಒಳಗಾಗುತ್ತಿರುತ್ತವೆ. ಈ ಮಾರಾಡುಗಳಿಂದಾಗಿ ಅವುಗಳ ಒಳರಚನೆಯಲ್ಲಿ ಬಳಕೆಯಾಗಿರುವ ಪದಗಳಲ್ಲಿ ಕೆಲವು ಮೊಟಕುಗೊಂಡು ಒಟ್ಟುಗಳ ರೂಪವನ್ನು ಪಡೆಯುತ್ತವೆ. ಎತ್ತುಗೆಗಾಗಿ ಹಳೆಗನ್ನಡದಲ್ಲಿ ಇಸು ಎಂಬುದು ಒಂದು ಎಸಕಪದವಾಗಿತ್ತು. ಆದರೆ ಇವತ್ತು ಹೊಸಗನ್ನಡದಲ್ಲಿ ಅದು ಮಾಡಿಸು, ಕೊಡಿಸು ಮೊದಲಾದ ಎಸಕಪದಗಳೊಂದಿಗೆ ಬರುವ ಒಂದು ಒಟ್ಟಾಗಿ ಮಾತ್ರ ಬಳಕೆಯಲ್ಲಿದೆ.

ಬೇರೆ ಕೆಲವು ಪದಗಳು ಇಲ್ಲವೇ ಒಟ್ಟುಗಳು ತಮ್ಮ ಬೇರ್ಪಡಿಕೆಯನ್ನೇ ಕಳೆದುಕೊಂಡು ಅವುಗಳು ಅಂಗಗಳಾಗಿ ಬಂದಿರುವ ಪದಗಳಿಗೆ ಒಳರಚನೆಯಿದೆಯೆಂಬ ವಿಷಯವೇ ಗೊತ್ತಾಗದಂತಾಗುತ್ತದೆ. ಎಂದರೆ, ಈ ಎರಡನೇ ರೀತಿಯ ಪದಗಳಿಗೆ ಒಳರಚನೆಯಿತ್ತು ಎಂಬುದನ್ನು ತೋರಿಸಿಕೊಡಲು ಆ ನುಡಿಯಲ್ಲಿ ಯಾವ ಆದಾರವೂ ಇಲ್ಲದಾಗುತ್ತದೆ.

ಎತ್ತುಗೆಗಾಗಿ, ಎಣ್ಣೆ ಎಂಬ ಪದ ಎಳ್ಳು ಮತ್ತು ನೆಯ್ ಎಂಬ ಎರಡು ಪದಗಳ ಸೇರಿಕೆಯಿಂದ ಉಂಟಾಗಿದೆಯೆಂದು ಹೇಳಲು ಚರಿತ್ರೆಯ ಆದಾರಗಳಿವೆ. ಆದರೆ ಹೊಸಗನ್ನಡದಲ್ಲಿ ಎಳ್ಳು ಎಂಬ ಪದದ ಹುರುಳು ಈ ಎಣ್ಣೆ ಎಂಬ ಪದದಲ್ಲಿ ಸ್ವಲ್ಪವೂ ಉಳಿದಿಲ್ಲವಾದ ಕಾರಣ ಇವತ್ತು ಅದನ್ನು ಎಣ್ಣೆ ಎಂಬುದರ ಒಳರಚನೆಯಲ್ಲಿ ಬರುವ ಪದವೆಂದು ಹೇಳುವುದು ಕಶ್ಚ.

ಇದೇ ರೀತಿಯಲ್ಲಿ ತಮ್ಮ, ತಂಗಿ, ತಾಯಿ, ತಂದೆ ಎಂಬಂತಹ ತಕಾರ ದಿಂದ ಮೊದಲಾಗುವ ನಂಟಿನ ಪದಗಳಿಗೆ ಒಳರಚನೆಯೊಂದಿದೆಯೆಂಬುದನ್ನು ಚರಿತ್ರೆಯ ಆದಾರದ ಮೇಲೆ ಮಾತ್ರವೇ ಹೇಳಬಲ್ಲೆವು. ಕನ್ನಡಕ್ಕೆ ಹತ್ತಿರದ ನುಡಿಯಾಗಿರುವ ತಮಿಳಿನಲ್ಲಿ ಈ ಪದಗಳಿಗೆ ಮೂರು ಮೂರು ರೂಪಗಳಿದ್ದು, ಅವುಗಳಲ್ಲಿ ಒಂದು ಮಾತ್ರ ತಕಾರದಲ್ಲಿ ಮೊದಲಾಗುತ್ತದೆ.

ತಮಿಳು ಕನ್ನಡ ತಮಿಳು ಕನ್ನಡ
ಎಂದೈ ‘ನನ್ನ ತಂದೆ’ ಎಂಗೈ ‘ನನ್ನ ತಂಗಿ’
ನುಂದೈ ‘ನಿನ್ನ ತಂದೆ’ ನುಂಗೈ ‘ನಿನ್ನ ತಂಗಿ’
ತಂದೈ ‘ಅವನ ತಂದೆ’ ತಂಗೈ ‘ಅವನ ತಂಗಿ’

ಹಾಗಾಗಿ, ಕನ್ನಡದಲ್ಲಿಯೂ ತಂದೆ, ತಂಗಿ, ತಮ್ಮ, ತಾಯಿ ಮೊದಲಾದ ಪದಗಳ ಮೊದಲಿಗೆ ಬರುವ ತಂ (ಇಲ್ಲವೇ ತ್) ಎಂಬುದು ತಾನು ಎಂಬ ತೋರುಗ ಪದದ ಅಡಕ ರೂಪ ಎಂಬುದಾಗಿ ಚರಿತ್ರೆಯ ಆದಾರದ ಮೇಲೆ ಹೇಳಲು ಬರುತ್ತದೆ. ಆದರೆ ಇವತ್ತು ಈ ತಕಾರ ತಂದೆ, ತಂಗಿ, ತಮ್ಮ ಮೊದಲಾದ ಪದಗಳಲ್ಲಿ ‘ಅವನ’ ಎಂಬ ಹುರುಳನ್ನು ಕೊಡುವುದಿಲ್ಲ. ಮೊದಲಿದ್ದ ಮೂರು ರೂಪಗಳಲ್ಲಿ ಒಂದೇ ಉಳಿದು ಅದನ್ನು ಎಲ್ಲಾ ಕಡೆಗಳಲ್ಲೂ ಬಳಸುವ ಹಾಗಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ, ಈ ಪದಗಳಿಗೆ ಹೊಸಗನ್ನಡದಲ್ಲಿ ಮೇಲೆ ಸೂಚಿಸಿದ ಒಳರಚನೆಯಿದೆಯೆಂದು ಹೇಳುವುದು ಕಶ್ಚ.

ಕನ್ನಡದಲ್ಲಿ ಬರುವ ಪದಗಳ ಚರಿತ್ರೆಯಂತಹದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವು ಹಳೆಗನ್ನಡ ಮತ್ತು ನಡುಗನ್ನಡಗಳಲ್ಲಿ ಹೇಗೆ ಬಳಕೆಯಾಗುತ್ತಿದ್ದುವು ಮತ್ತು ಕನ್ನಡದ ಬೇರೆ ಬೇರೆ ಆಡುನುಡಿಗಳಲ್ಲಿ ಇವತ್ತು ಹೇಗೆ ಬಳಕೆಯಲ್ಲಿವೆ ಎಂಬುದನ್ನು ತಿಳಿಯಬೇಕಾಗುತ್ತದೆ. ಇದಲ್ಲದೆ ತಮಿಳು, ಮಲಯಾಳ, ತೆಲುಗು, ತುಳು, ಗೋಂಡಿ, ಕುಡುಖ್ ಮೊದಲಾದ ಬೇರೆ ದ್ರಾವಿಡ ನುಡಿಗಳಲ್ಲಿ ಅವುಗಳ ರೂಪ ಮತ್ತು ಬಳಕೆ ಹೇಗಿದೆಯೆಂಬುದನ್ನೂ ತಿಳಿಯಬೇಕಾಗುತ್ತದೆ.

ಇದಕ್ಕೆ ಬದಲು ಕನ್ನಡ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಬೇಕಿದ್ದಲ್ಲಿ ಅವು ಕನ್ನಡದಲ್ಲಿ ಇವತ್ತು ಹೇಗೆ ಮತ್ತು ಎಂತಹ ರೂಪಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ತಿಳಿಯಬೇಕಾಗುತ್ತದೆ. ಪದಗಳ ಚರಿತ್ರೆಗೂ ಅವುಗಳ ಒಳರಚನೆಗೂ ನಡುವೆ ಈ ರೀತಿ ಒಂದು ಮುಕ್ಯವಾದ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು.

Eke →

೧.೩ ಪದಗಳು ಮತ್ತು ಪದರೂಪಗಳು

ಸೊಲ್ಲುಗಳನ್ನು ಪದಗಳಾಗಿ ಒಡೆಯಬಲ್ಲೆವಾದ ಕಾರಣ ಅವನ್ನು ಸೊಲ್ಲುಗಳ ಅಂಗಗಳೆಂಬುದಾಗಿ ಕರೆಯಬಹುದು. ಆದರೆ ಸೊಲ್ಲುಗಳಲ್ಲಿ ಪದಗಳು ಮಾತ್ರವಲ್ಲದೆ ಬೇರೆ ಅಂಗಗಳೂ ಬರುತ್ತವೆ. ಎತ್ತುಗೆಗಾಗಿ ಈ ಕೆಳಗಿನ ಸೊಲ್ಲನ್ನು ಗಮನಿಸಬಹುದು.

(೧) ಬಡ ಮುದುಕನನ್ನು, ರಾಜು ಬಿಸಿನೀರಿನಲ್ಲಿ ಮೆಲ್ಲಗೆ ಮುಳುಗಿಸಿದ.

(೧)ನೇ ಸೊಲ್ಲಿನಲ್ಲಿ ಬಡ, ಮುದುಕ, ರಾಜು, ಬಿಸಿ, ನೀರು, ಮೆಲ್ಲಗೆ ಮತ್ತು ಮುಳುಗಿಸು ಎಂಬ ಏಳು ಪದಗಳು ಅದರ ಅಂಗಗಳಾಗಿ ಬಂದಿವೆ. ಈ ಪದಗಳಲ್ಲಿ ಮುದುಕ ಎಂಬುದರೊಂದಿಗೆ ಅನ್ನು ಎಂಬ ಒಟ್ಟು, ನೀರು ಎಂಬುದರೊಂದಿಗೆ ಅಲ್ಲಿ ಎಂಬ ಒಟ್ಟು, ಮತ್ತು ಮುಳುಗಿಸು ಎಂಬುದರೊಂದಿಗೆ ದ್ ಮತ್ತು ಅ ಎಂಬ ಒಟ್ಟುಗಳು ಬಂದಿವೆ.

ಈ ಒಟ್ಟುಗಳಲ್ಲಿ ಕೆಲವು ಸೊಲ್ಲಿನಲ್ಲಿ ಬರುವ ಪದಗಳ ನಡುವೆ ಎಂತಹ ಸಂಬಂದವಿದೆಯೆಂಬುದನ್ನು ತಿಳಿಸುತ್ತವೆ. ಎತ್ತುಗೆಗಾಗಿ ಮುದುಕ ಪದದೊಂದಿಗೆ ಬಂದಿರುವ ಅನ್ನು ಎಂಬ ಒಟ್ಟು ಮುಳುಗಿಸುವ ಎಸಕಕ್ಕೂ ಆ ಎಸಕಕ್ಕೊಳಗಾಗಿರುವ ವ್ಯಕ್ತಿಗೂ ನಡುವಿರುವ ಸಂಬಂಧವನ್ನು ಸೂಚಿಸುತ್ತದೆ.

ಬೇರೆ ಕೆಲವು ಒಟ್ಟುಗಳು ಪದಗಳು ತಿಳಿಸುವ ಎಸಕದ ಇಲ್ಲವೇ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಕುರಿತಾಗಿ ಕೆಲವು ಹೆಚ್ಚಿನ ಸಂಗತಿಗಳನ್ನು ತಿಳಿಸುತ್ತವೆ. ಎತ್ತುಗೆಗಾಗಿ ಮುಳುಗಿಸು ಪದದೊಂದಿಗೆ ಬಂದಿರುವ ದ್ ಒಟ್ಟು ಆ ಎಸಕ ಯಾವಾಗ ನಡೆಯಿತು ಎಂಬುದನ್ನು ಸೂಚಿಸುತ್ತದೆ ಮತ್ತು ಅದರ ಅನಂತರ ಬಂದಿರುವ ಅ ಒಟ್ಟು ಆ ಎಸಕವನ್ನು ನಡೆಸಿದ ವ್ಯಕ್ತಿ ಯಾರು ಎಂಬುದನ್ನು ಚುಟುಕಾಗಿ ಸೂಚಿಸುತ್ತದೆ.

ಈ ಎಲ್ಲಾ ಒಟ್ಟುಗಳನ್ನೂ ಪದರೂಪದ ಒಟ್ಟುಗಳೆಂದು ಕರೆಯಬಹುದು. ಯಾಕೆಂದರೆ ಅವು ಸೊಲ್ಲುಗಳಲ್ಲಿ ಬರುವ ಪದಗಳಿಗೆ ಬೇರೆ ಬೇರೆ ರೂಪಗಳನ್ನು ಕೊಡುವಲ್ಲಿ ಬಳಕೆಯಾಗುತ್ತವೆ. ಈ ರೂಪಗಳ ಮೂಲಕ ಸೊಲ್ಲುಗಳಲ್ಲಿರುವ ಪದಗಳನ್ನು ಒಂದರೊಡನೊಂದು ಸಂಬಂದಿಸಲು ಸಾದ್ಯವಾಗುತ್ತದೆ ಮತ್ತು ಅವುಗಳ ಮೂಲಕ (೧)ನೇ ಸೊಲ್ಲು ಕೊಡಬೇಕಾಗಿರುವ ಹುರುಳನ್ನು ಪಡೆಯಲು ಸಾದ್ಯವಾಗುತ್ತದೆ. ಪದರೂಪಗಳಿಂದ ಇಂತಹ ಒಟ್ಟುಗಳನ್ನು ಬೇರ್ಪಡಿಸಿದಾಗ ಉಳಿಯುವ ಅಂಶಗಳೇ ಪದಗಳು.

ವಾಕ್ಯಗಳನ್ನು ಈ ರೀತಿ ಬೇರೆ ಬೇರೆ ಪದಗಳಾಗಿ ಒಡೆಯುವ ಬದಲು ಪದ ಕಂತೆಗಳಾಗಿಯೂ ಒಡೆಯಬಹುದು. ಎತ್ತುಗೆಗಾಗಿ ಮೇಲೆ ಕೊಟ್ಟಿರುವ (೧)ನೇ ಸೊಲ್ಲನ್ನು ಏಳು ಬೇರೆ ಬೇರೆ ಪದಗಳಾಗಿ ಒಡೆಯುವವ ಬದಲು ಬಡ ಮುದುಕ, ರಾಜು, ಬಿಸಿನೀರು ಮತ್ತು ಮೆಲ್ಲಿಗೆ ಮುಳುಗಿಸು ಎಂಬ ನಾಲ್ಕು ಅಂಗಗಳಾಗಿಯೂ ಒಡೆಯಬಹುದು. ಇವುಗಳಲ್ಲಿ ಬಡ ಮುದುಕ ಮತ್ತು ಬಿಸಿನೀರು ಎಂಬವುಗಳೆರಡು ಹೆಸರು ಪದಕಂತೆಗಳು ಮತ್ತು ಮೆಲ್ಲಿಗೆ ಮುಳುಗಿಸು ಎಂಬುದೊಂದು ಎಸಕ ಪದಕಂತೆ.

ಪದಗಳಿಗೆ ಒಟ್ಟುಗಳನ್ನು ಸೇರಿಸಿ ಪದರೂಪಗಳನ್ನು ಪಡೆಯುವುದು ಮತ್ತು ಎರಡು ಇಲ್ಲವೇ ಹೆಚ್ಚು ಪದಗಳನ್ನು ಒಟ್ಟು ಸೇರಿಸಿ ಪದಕಂತೆಗಳನ್ನು ಪಡೆಯುವುದು ಇವೆರಡೂ ಸೊಲ್ಲುಗಳ ಒಳರಚನೆಗೆ ಸಂಬಂಧಿಸಿದ ಕಟ್ಟಲೆಗಳನ್ನವಲಂಬಿಸಿವೆ. ಹಾಗಾಗಿ ಅವನ್ನು ಈ ಪುಸ್ತಕದಲ್ಲಿ ವಿವರಿಸಿಲ್ಲ.

ಪದಗಳನ್ನು ಇನ್ನೂ ಚಿಕ್ಕ ಅಂಗಗಳಾಗಿಯೂ ಒಡೆಯಬಹುದು. ಎತ್ತುಗೆಗಾಗಿ ಮುದುಕ ಪದವನ್ನು ಮುದಿ ಮತ್ತು ಕ ಎಂಬುದಾಗಿ, ಮೆಲ್ಲಿಗೆ ಎಂಬುದನ್ನು ಮೆಲ್ಲ ಮತ್ತು ಗೆ ಎಂಬುದಾಗಿ ಮತ್ತು ಮುಳುಗಿಸು ಎಂಬುದನ್ನು ಮುಳುಗು ಮತ್ತು ಇಸು ಎಂಬುದಾಗಿ ಒಡೆಯಬಹುದು.

ಇಂತಹ ಒಡೆಯುವಿಕೆಗಳು ಸೊಲ್ಲಿನಲ್ಲಿ ಬರುವ ಪದಗಳ ಒಡೆಯುವಿಕೆಗಳಲ್ಲದೆ ಸೊಲ್ಲಿನ ಒಡೆಯುವಿಕೆಗಳಲ್ಲ. ಇವುಗಳಲ್ಲಿ ಕಾಣಿಸುವ ಒಟ್ಟುಗಳು ಪದಗಳನ್ನು ಉಂಟುಮಾಡುವಲ್ಲಿ ಬಳಕೆಯಾಗುವುವಾದ ಕಾರಣ ಅವನ್ನು ಪದದೊಟ್ಟುಗಳೆಂದು ಕರೆಯಬಹುದು. ಅವುಗಳ ಬಳಕೆ ಮೇಲೆ ಹೇಳಿದ ಸೊಲ್ಲುಗಳ ಒಳರಚನೆಯ ಕಟ್ಟಲೆಗಳಿಂದ ಬೇರಾಗಿರುವ ಪದರಚನೆಯ ಕಟ್ಟಲೆಗಳನ್ನವಲಂಬಿಸಿದೆ.

ನಮ್ಮೆದುರಿರುವ ಒಂದು ಅಂಗ ಪದವೇ ಇಲ್ಲವೇ ಪದಕಂತೆಯೇ ಎಂಬ ವಿಶಯದಲ್ಲಿ ಸಂದೇಹವುಂಟಾಗಬಲ್ಲುದು. ಎತ್ತುಗೆಗಾಗಿ ಬಿಸಿನೀರು ಎಂಬುದು ಮೇಲಿನ ಸೊಲ್ಲಿನಲ್ಲಿ ಕಾಣಿಸುವ ಹಾಗೆ ಪದಕಂತೆಯಾಗಿ ಬಂದಿರಬಲ್ಲುದು, ಇಲ್ಲವೇ ಜೋಡುಪದವಾಗಿದ್ದು ಒಂದು ಪದವಾಗಿಯೂ ಬಂದಿರಬಲ್ಲುದು (೩.೪ ನೋಡಿ). ಸಾಮಾನ್ಯವಾಗಿ ಸೊಲ್ಲುಗಳನ್ನು ಬಳಸಿರುವ ಸಂದರ್ಬವೇ ಇಂತಹ ಸಂದೇಹಗಳನ್ನು ನಿವಾರಿಸಬಲ್ಲುದು.

ಇದಲ್ಲದೆ, ನಮ್ಮೆದುರಿರುವ ಒಂದು ಒಟ್ಟನ್ನು ಪದದೊಟ್ಟೆಂದು ಹೇಳಬೇಕೇ ಇಲ್ಲವೇ ಪದರೂಪದ ಒಟ್ಟೆಂದು ಹೇಳಬೇಕೇ ಎಂಬ ವಿಷಯದಲ್ಲೂ ಸಂದೇಹವೇಳಬಲ್ಲುದು (… ನೋಡಿ). ಆದರೆ ಇದು ಮುಕ್ಯವಾಗಿ ಒಬ್ಬ ಸೊಲ್ಲರಿಗನ ಮನಸ್ಸಿನಲ್ಲಿ ಏಳಬಹುದಾದ ಸಂದೇಹವಾಗಿದ್ದು ಅದನ್ನು ಆತನು ತಯಾರಿಸುವ ಸೊಲ್ಲರಿಮೆಯೇ ನಿವಾರಿಸಬೇಕು.

Eke →

೧.೪ ಪದಗಳು ಮತ್ತು ಒಟ್ಟುಗಳು

ಪದವೊಂದರ ಅಂಗಗಳಾಗಿ ಎರಡು ಪದಗಳು ಬಂದಿರಬಹುದು (ಚಿಕ್ಕ+ಅಮ್ಮ

ಚಿಕ್ಕಮ್ಮ), ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು ಬಂದಿರಬಹುದು (ಎಚ್ಚರ+ಇಕೆ > ಎಚ್ಚರಿಕೆ) ಎಂಬುದನ್ನು ಮೇಲೆಯೇ ನೋಡಿರುವೆವು. ಇದಲ್ಲದೆ, ಪದವೊಂದರ ಅಂಗಗಳಾಗಿ ಎರಡು ಪದಗಳು ಮಾತ್ರವಲ್ಲದೆ ಒಂದು ಒಟ್ಟು ಬಂದಿರಬಹುದು (ಹಣೆ+ಕಣ್ಣು+ಅ > ಹಣೆಗಣ್ಣ). ಆದರೆ, ಎರಡಕ್ಕಿಂತ ಹೆಚ್ಚು ಪದಗಳು ಇಲ್ಲವೇ ಒಂದಕ್ಕಿಂತ ಹೆಚ್ಚು ಒಟ್ಟುಗಳು ಪದವೊಂದರ ಅಂಗಗಳಾಗಿ ಬರುವುದು ಕನ್ನಡದ ಮಟ್ಟಿಗೆ ಅಪರೂಪವೆಂದೇ ಹೇಳಬಹುದು.

ಒಳರಚನೆಯಿರುವ ಒಂದು ಪದದಲ್ಲಿ ಎರಡು ಪದಗಳು ಒಟ್ಟುಸೇರಿವೆಯೇ ಇಲ್ಲವೇ ಒಂದು ಪದ ಮತ್ತು ಒಂದು ಒಟ್ಟು ಸೇರಿಕೊಂಡಿವೆಯೇ ಎಂಬುದನ್ನು

ತಿಳಿಯಬೇಕಿದ್ದಲ್ಲಿ ಮೊದಲಿಗೆ ಪದ ಮತ್ತು ಒಟ್ಟುಗಳ ನಡುವಿರುವ ವ್ಯತ್ಯಾಸವೇನು ಎಂಬುದನ್ನು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಬೇರೆ ಕಡೆಗಳಲ್ಲಿ ಬರುವ ಪದಗಳೊಂದಿಗೆ ರೂಪ ಮತ್ತು ಹುರುಳುಗಳಲ್ಲಿ ಸಂಬಂಧವನ್ನು ತೋರಿಸುವ ಅಂಗಗಳನ್ನು ಪದಗಳೆಂದು ಕರೆಯಬಹುದು ಮತ್ತು ಆ ರೀತಿ ಸಂಬಂಧವನ್ನು ತೋರಿಸದಿರುವ ಅಂಗಗಳನ್ನು ಒಟ್ಟುಗಳೆಂದು ಕರೆಯಬಹುದು.

ಎತ್ತುಗೆಗಾಗಿ, ಕಾಲ್ಮಣೆ ಎಂಬ ಪದದ ಮೊದಲನೆಯ ಅಂಗವಾದ ಕಾಲ್ ಎಂಬುದು ಬೇರೆ ಕಡೆಗಳಲ್ಲಿ ಬರುವ ಕಾಲು ಎಂಬ ಪದಕ್ಕೆ ಸಂಬಂಧಿಸಿದೆ, ಮತ್ತು ಅದರ ಎರಡನೆಯ ಅಂಗವಾದ ಮಣೆ ಎಂಬುದು ಬೇರೆ ಕಡೆಗಳಲ್ಲಿ ಅದೇ ರೂಪದಲ್ಲಿ ಒಂದು ಹೆಸರುಪದವಾಗಿ ಬಳಕೆಯಾಗುತ್ತದೆ. ಹಾಗಾಗಿ, ಕಾಲ್ಮಣೆ ಎಂಬುದರಲ್ಲಿ ಎರಡು ಪದಗಳು ಸೇರಿಕೊಂಡಿವೆ ಎಂದು ಹೇಳಬಹುದು.

ಕುಣಿತ ಎಂಬ ಪದದಲ್ಲೂ ಮೊದಲನೆಯ ಅಂಗವಾದ ಕುಣಿ ಎಂಬುದು ಬೇರೆ ಕಡೆಗಳಲ್ಲಿ ಎಸಕಪದವಾಗಿ ಬಳಕೆಯಾಗುತ್ತದೆ. ಆದರೆ ತ ಎಂಬ ಅದರ ಎರಡನೆಯ ಅಂಗಕ್ಕೆ ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬಳಕೆಯಿಲ್ಲ. ರೂಪ ಮತ್ತು ಹುರುಳುಗಳಲ್ಲಿ ಅದರೊಡನೆ ಸಂಬಂದವನ್ನು ತೋರಿಸುವ ಬೇರೆ ಪದವೂ ಕನ್ನಡದಲ್ಲಿಲ್ಲ. ಹಾಗಾಗಿ, ಅದನ್ನು ಒಂದು ಒಟ್ಟು ಎಂಬುದಾಗಿ ಕರೆಯಬೇಕಾಗುತ್ತದೆ.

ಆದರೆ ಎಲ್ಲಾ ಕಡೆಗಳಲ್ಲೂ ಪದಗಳ ಅಂಗಗಳನ್ನು ಈ ರೀತಿ ಅವುಗಳ ಬಳಕೆಯ ಮೇಲೆ ಒಟ್ಟುಗಳಿಂದ ಬೇರ್ಪಡಿಸಲು ಬರುವುದಿಲ್ಲ. ಎತ್ತುಗೆಗಾಗಿ ಹಾರಯ್ಸು ಎಂಬ ಪದವನ್ನು ಗಮನಿಸಬಹುದು. ಇದರಲ್ಲಿ ಹಾರಯ್ ಮತ್ತು ಸು ಎಂಬ ಎರಡು ಅಂಗಗಳಿದ್ದು, ಅವುಗಳಲ್ಲಿ ಮೊದಲನೆಯದು ಹಾರಯ್ಕೆ ಎಂಬ ಪದದಲ್ಲಿ ಕೆ ಎಂಬ ಒಟ್ಟಿನೊಡನೆ ಬರುತ್ತದೆ, ಮತ್ತು ಎರಡನೆಯದು ಕುಣಿಸು, ಬರೆಸು, ನಡೆಸು, ತಿಳಿಸು ಮೊದಲಾದ ಪದಗಳಲ್ಲಿ ಕುಣಿ, ಬರೆ, ನಡೆ, ತಿಳಿ ಮೊದಲಾದ ಬೇರೆ ಎಸಕಪದಗಳೊಡನೆ ಬರುತ್ತದೆ.

ಇವುಗಳಲ್ಲಿ ಎರಡನೆಯದಾದ ಸು ಎಂಬುದನ್ನು ಒಂದು ಒಟ್ಟು ಎಂದು ಕರೆಯುವಲ್ಲಿ ಯಾವ ತೊಂದರೆಯೂ ಇಲ್ಲ. ಯಾಕೆಂದರೆ, ಅದು ಹೊಸಗನ್ನಡದಲ್ಲಿ ಬರಬಲ್ಲ ಯಾವ ಪದದೊಡನೆಯೂ ಸಂಬಂದಿಸಿಲ್ಲ. ಚಾರಿತ್ರಿಕವಾಗಿ ಅದನ್ನು ಹಳೆಗನ್ನಡದ ಇಸು ‘ಎಸೆ’ ಎಂಬ ಎಸಕಪದದೊಂದಿಗೆ ಸಂಬಂದಿಸಬಲ್ಲೆವಾದರೂ ಹೊಸಗನ್ನಡದ ಮಟ್ಟಿಗೆ ಅದು ಒಂದು ಒಟ್ಟಾಗಿ ಮಾತ್ರ ಬಳಕೆಯಲ್ಲಿದೆ.

ಹಾರಯ್ಯು ಎಂಬ ಪದದ ಮೊದಲನೆಯ ಅಂಗವಾದ ಹಾರಯ್ ಎಂಬುದೂ ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬರಲಾರದು; ಹಾಗಾಗಿ, ಮೇಲೆ

ಕೊಟ್ಟಿರುವ ಕಟ್ಟಲೆಯ ಪ್ರಕಾರ ಅದನ್ನು ಒಂದು ಪದವೆಂದು ಹೇಳಲು ಬರುವುದಿಲ್ಲ. ಆದರೆ, ಅದನ್ನೊಂದು ಒಟ್ಟೆಂದು ಕರೆಯುವುದೂ ಸರಿಯಲ್ಲ. ಯಾಕೆಂದರೆ, ಎರಡು ಒಟ್ಟುಗಳನ್ನು ಮಾತ್ರವೇ ಒಟ್ಟು ಸೇರಿಸುವುದರ ಮೂಲಕ ಪದವೊಂದನ್ನು ತಯಾರಿಸಲು ಬರುವುದಿಲ್ಲ. ಅಂತಹ ಒಟ್ಟುಗಳಿಗೆ ಆದಾರವನ್ನು ಕೊಡಬಲ್ಲ ಒಂದು ಪದವನ್ನೂ ಅವುಗಳೊಂದಿಗೆ ಸೇರಿಸಬೇಕಾಗುತ್ತದೆ.

ಹಾಗಾಗಿ, ಹಾರಯ್ ಎಂಬುದನ್ನು ಸು ಇಲ್ಲವೇ ಕೆ ಒಟ್ಟಿನ ನೆರವಿಲ್ಲದೆ ಬರಲಾರದಂತಹ ಒಂದು ಹೊರಕುಳಿ ಪದ ಎಂಬುದಾಗಿ ಹೇಳಬೇಕಾಗುತ್ತದೆ. ಚಾರಿತ್ರಿಕವಾಗಿ ಹಾರಯ್ ಎಂಬುದು ಹಳೆಗನ್ನಡದ ಪಾರ್ ‘ನೋಡು’ ಎಂಬ ಪದಕ್ಕೆ ಸಂಬಂಧಿಸಿದೆ.

ನಮ್ಮೆದುರಿರುವ ಪದದ ಒಂದು ಅಂಗವನ್ನು ಪದವೆಂದು ಹೇಳಬೇಕೇ ಇಲ್ಲವೇ ಒಂದು ಒಟ್ಟೆಂದು ಹೇಳಬೇಕೇ ಎಂಬ ವಿಶಯದಲ್ಲಿ ಒಂದು ತೀರಾನಕ್ಕೆ ಬರುವುದು ಕೆಲವೊಮ್ಮೆ ತುಂಬಾ ಕಶ್ಚವೆಂದು ತೋರಬಲ್ಲುದು. ಎತ್ತುಗೆಗಾಗಿ, ಇಬ್ಬದಿ ಎಂಬ ಪದದಲ್ಲಿ ಬರುವ ಇಬ್ ಎಂಬ ಮೊದಲನೆಯ ಅಂಗ ಎರಡು ಎಂಬ ಸ್ವತಂತ್ರ ಪದಕ್ಕೆ ಸಂಬಂಧಿಸಿದೆಯೇ ಇಲ್ಲವೇ ಎಂಬುದರ ಮೇಲೆ ಅದು ಒಂದು ಪದವೇ ಇಲ್ಲವೇ ಒಟ್ಟೇ ಎಂಬುದು ಅವಲಂಬಿಸಿದೆ.

ಆದರೆ, ಇಬ್ಬರು ಎಂಬ ಪದದಲ್ಲೂ ಅದೇ ಇಬ್ ಎಂಬುದು ಬಂದಿದೆ, ಮತ್ತು ಅದರೊಂದಿಗೆ ಇಲ್ಲಿ ಬ ಎಂಬ ಮನುಷ್ಯರನ್ನು ಸೂಚಿಸುವ ಒಟ್ಟು ಮತ್ತು ರು ಎಂಬ ಹಲವೆಣಿಕೆಯ ಒಟ್ಟು - ಇವೆರಡು ಒಟ್ಟುಗಳು ಬಂದಿವೆ; ಹಾಗಾಗಿ, ಈ ಇಬ್ಬರು ಎಂಬ ಪದದಲ್ಲಿ ಮೊದಲನೆಯ ಅಂಗವಾಗಿ ಬಂದಿರುವ ಇಬ್ ಎಂಬುದನ್ನು ಒಂದು ಪದವೆಂದು ಕರೆಯದಿದ್ದಲ್ಲಿ ಮೂರು ಒಟ್ಟುಗಳ ಸೇರಿಕೆಯಿಂದ ಪದವೊಂದನ್ನು ಉಂಟುಮಾಡಲಾಗಿದೆಯೆಂದು ಹೇಳಬೇಕಾದೀತು. ಇದು ಪದಗಳ ಕುರಿತು ನಮಗಿರುವ ಕಲ್ಪನೆಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ, ಇಬ್ಬದಿ ಮತ್ತು ಇಬ್ಬರು ಇವೆರಡರಲ್ಲೂ ಬರುವ ಇಬ್ ಎಂಬುದು ಒಂದು ಪದವಲ್ಲದೆ ಒಟ್ಟಲ್ಲ ಎಂಬ ತೀರಾನಕ್ಕೆ ಬರಬೇಕಾಗುತ್ತದೆ.

ಈ ರೀತಿಯಾಗಿ ಪದ ಮತ್ತು ಒಟ್ಟುಗಳ ನಡುವಿನ ವ್ಯತ್ಯಾಸವನ್ನು ಎರಡು ಬೇರೆ ಬೇರೆ ಪರಿಚೆಗಳ ಮೇಲೆ ತೀರ್ಮಾನಿಸಬೇಕಾಗುತ್ತದೆ. ಬೇರೆ ಕಡೆಗಳಲ್ಲಿ ಒಂದು ಪದವಾಗಿ ಬರಬಲ್ಲುದು ಎಂಬುದು ಒಂದು ಪರಿಚೆಯಾದರೆ, ಪದವೊಂದರ ಅಂಗವಾಗಿ ಮಾತ್ರವೇ ಬರಬಲ್ಲುದಾದರೂ ಬೇರೆ ಅಂಗಗಳಿಗೆ (ಎಂದರೆ ಒಟ್ಟುಗಳಿಗೆ) ನೆಲೆಯಾಗಬಲ್ಲುದು (ಎಂದರೆ, ಪದದ ಮುಕ್ಯ ಹುರುಳನ್ನು ಕೊಡಬಲ್ಲುದು) ಎಂಬುದು ಇನ್ನೊಂದು ಪರಿಚೆ. ಈ ಎರಡು ಪರಿಚೆಗಳನ್ನೂ ತೋರಿಸದಿರುವಂತಹ ಪದಗಳ ಅಂಗಗಳು ಒಟ್ಟುಗಳು ಎಂದು ಹೇಳಬಹುದು.

ಮೇಲೆ ಸೂಚಿಸಿದಂತೆ, ಚಾರಿತ್ರಿಕವಾಗಿ ಒಟ್ಟುಗಳು ಪದಗಳಿಂದ ಬೆಳೆಯ ಬಲ್ಲುವು. ಬೇರೆ ಪದಗಳ ಅಂಗಗಳಾಗಿ ಬರುವ ಪದಗಳು ಸಾಮಾನ್ಯವಾಗಿ ತಮ್ಮ ಚುಟುಕು ರೂಪಗಳಲ್ಲಿ ಬರುವುವಾದ ಕಾರಣ, ಕೆಲವೊಮ್ಮೆ ಅವುಗಳ ಪದರೂಪಗಳು ಅಳಿದು ಹೋಗಿ, ಇಂತಹ ಚುಟುಕಾಗಿರುವ ರೂಪಗಳು ಮಾತ್ರವೇ ನುಡಿಯಲ್ಲಿ ಉಳಿದುಕೊಂಡು ಒಟ್ಟುಗಳೆನಿಸಬಲ್ಲುವು.

ಎತ್ತುಗೆಗಾಗಿ ಮೇಲೆ ಕೊಟ್ಟಿರುವ ಸು ಎಂಬ ಒಟ್ಟು ಮೊದಲಿಗೆ ಇಸು ಎಂಬ ಎಸಕಪದದೊಂದಿಗೆ ಸಂಬಂಧಿಸಿದ್ದು, ಒಂದು ಪದವಾಗಿತ್ತು. ಆದರೆ, ಅದರ ಈ ಎಸಕಪದದ ಬಳಕೆ ಅಳಿದು ಹೋಗಿ, ಈಗ ಹೊಸಗನ್ನಡದಲ್ಲಿ ಅದು ಬೇರೆ ಪದಗಳ ಅಂಗವಾಗಿ ಮಾತ್ರ ಬರುತ್ತದೆ. ಇಂತಹ ಪದಗಳಲ್ಲಿ (ಕುಣಿಸು, ಬರೆಸು) ಅದಕ್ಕೆ ಪದದ ಮುಕ್ಯ ಹುರುಳನ್ನು ತಿಳಿಸುವ ಅಳವಿಲ್ಲವಾದ ಕಾರಣ, ಅದನ್ನೊಂದು ಒಟ್ಟೆಂದು ಮಾತ್ರವೇ ಹೇಳಬಲ್ಲೆವು.

Eke →

೧.೫ ಪದದೊಟ್ಟುಗಳು ಮತ್ತು ಪದರಪದೊಟ್ಟುಗಳು

ನುಡಿಗಳಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಒಟ್ಟುಗಳು ಬಳಕೆಯಲ್ಲಿರುತ್ತವೆ: ಪದಗಳನ್ನು ತಯಾರಿಸುವಲ್ಲಿ (ಎಂದರೆ ಅವುಗಳ ಒಳರಚನೆಯಲ್ಲಿ) ಬರು ವವುಗಳು ಒಂದು ಬಗೆಯವುಗಳಾದರೆ, ಪದಗಳ ಬೇರೆ ಬೇರೆ ರೂಪಗಳನ್ನು ತಯಾರಿಸುವಲ್ಲಿ ಬರುವವುಗಳು ಇನ್ನೊಂದು ಬಗೆಯವು. ಇವನ್ನು ‘ಪದದೊಟ್ಟು’ ಮತ್ತು ‘ಪದರೂಪದೊಟ್ಟು’ ಎಂಬುದಾಗಿ ಕರೆಯಬಹುದು.

ಎತ್ತುಗೆಗಾಗಿ ಕುಣಿತ ಪದದ ಒಳರಚನೆಯಲ್ಲಿ ಕಾಣಿಸುವ ತ ಎಂಬುದು ಪದವೊಂದನ್ನು ತಯಾರಿಸುವಲ್ಲಿ ಬಳಕೆಯಾಗುವ ಪದದೊಟ್ಟು. ಈ ಒಟ್ಟನ್ನು ಕುಣಿ ಎಸಕಪದಕ್ಕೆ ಸೇರಿಸುವ ಮೂಲಕ ಕುಣಿತ ಹೆಸರುಪದವನ್ನು ತಯಾರಿಸಲಾಗಿದೆ. ಮೆಟ್ಟಲು ಎಂಬುದರಲ್ಲಿ ಕಾಣಿಸುವ ಅಲು ಎಂಬುದು ಇನ್ನೊಂದು ಪದದೊಟ್ಟು. ಈ ಒಡ್ಡನ್ನು ಮೆಟ್ಟು ಎಸಕಪದಕ್ಕೆ ಸೇರಿಸುವುದರ ಮೂಲಕ ಮೆಟ್ಟಲು ಹೆಸರುಪದವನ್ನು ತಯಾರಿಸಲಾಗಿದೆ.

ಮೆಟ್ಟಲು ಹೆಸರುಪದಕ್ಕೆ ಕೆಲವು ಪದರೂಪದೊಟ್ಟುಗಳನ್ನು ಸೇರಿಸಿ ಪದರೂಪಗಳನ್ನು ತಯಾರಿಸಬಲ್ಲೆವು. ಎತ್ತುಗೆಗಾಗಿ, ಅದಕ್ಕೆ ಗಳು ಒಟ್ಟನ್ನು ಸೇರಿಸಿ ಮೆಟ್ಟಲುಗಳು ಎಂಬ ಹಲವೆಣಿಕೆಯಲ್ಲಿರುವ ಪದರೂಪವನ್ನು ತಯಾರಿಸಬಹುದು, ಮತ್ತು ಅದೇ ಪದಕ್ಕೆ ಅನ್ನು, ಇಂದ, ಗೆ, ಅ ಮೊದಲಾದ ಬೇರೆ ಕೆಲವು ಒಟ್ಟುಗಳನ್ನು ಸೇರಿಸಿ ಮೆಟ್ಟಲನ್ನು, ಮೆಟ್ಟಲಿನಿಂದ, ಮೆಟ್ಟಲಿಗೆ, ಮೆಟ್ಟಲಿನ ಮೊದಲಾದ ಪತ್ತುಗೆರೂಪಗಳನ್ನು ತಯಾರಿಸಬಹುದು. ಈ ಎಲ್ಲಾ ಒಟ್ಟುಗಳೂ ಮೆಟ್ಟಲು ಪದದ ಬೇರೆ ಬೇರೆ ಪದರೂಪಗಳನ್ನು ತಯಾರಿಸುವಲ್ಲಿ ಬರುವುವಾದ ಕಾರಣ, ಅವೆಲ್ಲ ಪದರೂಪದೊಟ್ಟುಗಳು.

ಎಸಕಪದಗಳಿಗೂ ಇದೇ ರೀತಿಯಲ್ಲಿ ಹೊತ್ತು, ಆಡುಗ, ಗುರ್ತ, ಎಣಿಕೆ ಮೊದಲಾದುವನ್ನು ತಿಳಿಸುವ ಪದರೊಪದೊಟ್ಟುಗಳನ್ನು ಸೇರಿಸಿ ಅವುಗಳ ಬೇರೆ ಬೇರೆ ಪದರೊಪಗಳನ್ನು ತಯಾರಿಸಬಹುದು. ಎತ್ತುಗೆಗಾಗಿ, ಕುಣಿ ಎಸಕಪದಕ್ಕೆ ಮುಂಬೊತ್ತಿನ ಉತ್ತ ಒಟ್ಟನ್ನು ಮತ್ತು ಆಡುಗ-ಗುರ್ತ-ಎಣಿಕೆಗಳ ಆನೆ ಒಟ್ಟನ್ನು ಸೇರಿಸಿ ಕುಣಿಯುತ್ತಾನೆ ಎಂಬ ರೂಪವನ್ನು ಪಡೆಯಬಹುದು, ಮತ್ತು ಹಿಂಬೊತ್ತಿನ ದ ಒಟ್ಟನ್ನು, ಹಾಗೂ ಬೇರೊಂದು ಆಡುಗ-ಗುರ್ತ-ಎಣಿಕೆಯ ಳು ಒಟ್ಟನ್ನು ಸೇರಿಸಿ ಕುಣಿದಳು ಎಂಬ ರೂಪವನ್ನು ಪಡೆಯಬಹುದು. ಇಂತಹವೇ ಕುಣಿಯುತ್ತಾರೆ, ಕುಣಿಯುತ್ತದೆ, ಕುಣಿದೆ, ಕುಣಿಯಲಿ ಮೊದಲಾದ ಬೇರೆ ಬೇರೆ ಹಲವು ರೂಪಗಳೂ ಈ ಎಸಕಪದಕ್ಕಿದೆ.

ಈ ಎರಡು ಬಗೆಯ ಒಟ್ಟುಗಳ ನಡುವೆ ಹಲವಾರು ಮುಕ್ಯವಾದ ವ್ಯತ್ಯಾಸಗಳಿವೆ. ಪದದೊಟ್ಟುಗಳಿಗೆ ಒಂದು ನಿಶ್ಚಿತವಾದ ಹುರುಳನ್ನು ಕೊಡುವುದು ಕಶ್ಚ. ಅವು ಪದಗಳ ತಯಾರಿಕೆಗೆ ಸಂಬಂದಿಸಿದುವಾದ ಕಾರಣ, ಅವನ್ನು ಬಳಸಿ ತಯಾರಿಸಿದ ಪದಗಳು ನುಡಿಯಲ್ಲಿ ಬಳಕೆಗೆ ಬಂದ ಮೇಲೆ ಬೇರೆ ಬೇರೆ ಬಗೆಯ ಬದಲಾವಣೆಗಳಿಗೆ ಒಳಪಡಬಲ್ಲುವು. ಆದರೆ, ಪದರೂಪದೊಟ್ಟುಗಳಿಗೆ ನಿಶ್ಚಿತವಾದ ಹುರುಳಿದ್ದು, ನುಡಿಯಲ್ಲಿ ಬದಲಾವಣೆ ನಡೆದರೂ ಅವು ಅಷ್ಟು ಸುಲಬವಾಗಿ ತಮ್ಮ ಹುರುಳನ್ನು ಬಿಟ್ಟುಕೊಡುವುದಿಲ್ಲ. ಪದಗಳೊಂದಿಗೆ ಪದದೊಟ್ಟುಗಳು ಸುಳುವಾಗಿ ಬೇರೆ ನುಡಿಗಳಿಂದ ಎರವಲಾಗಿ ಬರಬಲ್ಲುವು, ಆದರೆ ಪದರೂಪದೊಟ್ಟುಗಳು ಆ ರೀತಿ ಎರವಲಾಗಿ ಬರುವುದು ಬಹಳ ಅಪರೂಪ. ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಇಂತಹ ವ್ಯತ್ಯಾಸಗಳಲ್ಲಿ ಕೆಲವನ್ನು ಕೆಳಗೆ ಸ್ವಲ್ಪ ವಿವರವಾಗಿ ಕೊಡಲಾಗಿದೆ.

೧.೫.೧ ತಯಾರಿಕೆ ಮತ್ತು ಬಳಕೆ

ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಪದದೊಟ್ಟು ಪದದ ಒಳರಚನೆಯಲ್ಲಿ ಬರುತ್ತಿದ್ದು ಅದಕ್ಕೆ ಪದದ ತಯಾರಿಕೆಯಲ್ಲಿ ಒಂದು ಮುಕ್ಯವಾದ ಜಾಗವಿದೆ. ಆದರೆ, ಪದದ ದಿನನಿತ್ಯದ ಬಳಕೆಯಲ್ಲಿ ಅದಕ್ಕೆ ಹೆಚ್ಚಿನ ಮಹತ್ವವಿಲ್ಲ. ಸಾಮಾನ್ಯವಾಗಿ ನಾವು ನಮ್ಮ ನುಡಿಯಲ್ಲಿರುವ ಪದಗಳನ್ನೆಲ್ಲ ನಮ್ಮ ನೆನಪಿನಲ್ಲಿರಿಸಿಕೊಂಡು ಹಾಗೆಯೇ ಇಡಿ ಇಡಿಯಾಗಿ ಬಳಸುತ್ತೇವೆ.

ಎತ್ತುಗೆಗಾಗಿ, ಮೆಟ್ಟಲು ಪದವನ್ನು ಗಮನಿಸಬಹುದು: ತಯಾರಿಕೆಯ ಕಾಲದಲ್ಲಿ ಅದನ್ನು ಮೆಟ್ಟು ಎಸಕಪದಕ್ಕೆ ಅಲು ಒಟ್ಟನ್ನು ಸೇರಿಸುವುದರ ಮೂಲಕ ಪಡೆಯಲಾಗಿದೆಯೆಂಬುದು ಸ್ಪಷ್ಟ. ಹೀಗಿದ್ದರೂ ನಮ್ಮ ದಿನನಿತ್ಯದ ಬಳಕೆಯಲ್ಲಿ ಅದು ಹೆಚ್ಚಿನ ಮಟ್ಟಿಗೆ ಒಂದು ಒಳರಚನೆಯಿಲ್ಲದ ಪದದ ಹಾಗೆಯೇ ಕಾಣಿಸುತ್ತದೆ. ಅದನ್ನು ಬಳಸುವಾಗ, ಮೆಟ್ಟು ಎಸಕಪದಕ್ಕೂ

ಅದಕ್ಕೂ ನಡುವಿರುವ ಸಂಬಂಧ ಸಾಮಾನ್ಯವಾಗಿ ನಮ್ಮ ಗಮನಕ್ಕೇ ಬರುವುದಿಲ್ಲ.

ಪದರೂಪದೊಟ್ಟುಗಳ ಬಳಕೆ ಇದಕ್ಕಿಂತ ತೀರ ಬೇರಾದುದು. ಪದ ವೊಂದನ್ನು ಅದರ ಬೇರೆ ಬೇರೆ ರೂಪಗಳಲ್ಲಿ ಬಳಸುವಾಗಲೆಲ್ಲ ನಾವು ಅವುಗಳ ರಚನೆಗೆ ಬೇಕಾಗಿರುವ ಈ ಪದರೂಪದೊಟ್ಟುಗಳನ್ನು ಆ ಪದಕ್ಕೆ ಸೇರಿಸುವುದರ ಮೂಲಕ ಒಂದೊಂದು ಬಾರಿಯೂ ಅವನ್ನು ಹೊಸದಾಗಿ ತಯಾರಿಸಿಯೇ ಬಳಸುತ್ತೇವೆ. ಈ ತಯಾರಿಕೆ ಹೆಚ್ಚಿನ ಮಟ್ಟಿಗೆ ನಮ್ಮ ಗಮನಕ್ಕೆ ಬಾರದಿರು ವಂತಹ ಮಿದುಳಿನ ಒಂದು ಕೆಲಸದಿಂದಾಗಿ ನಡೆಯುತ್ತಿದೆಯಾದರೂ ಒಂದು ಪದಕ್ಕೂ ಅದರ ಬೇರೆ ಬೇರೆ ರೂಪಗಳಿಗೂ ನಡುವಿರುವ ಸಂಬಂದ ಹೆಚ್ಚಿನಡೆಗಳಲ್ಲೂ ನಮ್ಮ ಗಮನದಲ್ಲಿರುತ್ತದೆ. ಮೇಲೆ ಕೊಟ್ಟಿರುವ ಮೆಟ್ಟಲು ಮತ್ತು ಕುಣಿ ಎಂಬ ಎರಡು ಪದಗಳ ಬೇರೆ ಬೇರೆ ಪದರೂಪಗಳನ್ನು (ಮೆಟ್ಟಲನ್ನು, ಮೆಟ್ಟಲಿನಿಂದ, ಕುಣಿಯುತ್ತಾನೆ, ಕುಣಿದನು ಮೊದಲಾದುವನ್ನು) ವಾಕ್ಯಗಳಲ್ಲಿ ಬಳಸುವಾಗ ಅವೆಲ್ಲವೂ ಆ ಎರಡು ಪದಗಳಿಗೆ ಸಂಬಂಧಿಸಿದವುಗಳೆಂಬ ವಿಶಯ ಸ್ಪಷ್ಟವಾಗಿಯೂ ನಮಗೆ ತಿಳಿದಿರುತ್ತದೆ.

೧.೫.೨ ಬಳಕೆಯಲ್ಲಿ ಕಡ್ಡಾಯ

ಪದದೊಟ್ಟು ಮತ್ತು ಪದರೂಪದೊಟ್ಟುಗಳ ನಡುವಿರುವ ಇನ್ನೊಂದು ಮುಕ್ಯ ವ್ಯತ್ಯಾಸವೇನೆಂದರೆ, ಪದರೂಪದೊಟ್ಟುಗಳು ನಿಯಮಿತವಾಗಿ ಒಂದು ಗುಂಪಿಗೆ ಸೇರಿದ ಎಲ್ಲಾ ಪದಗಳಿಗೂ ಬರಬಲ್ಲ ಒಟ್ಟುಗಳಾಗಿವೆ, ಮತ್ತು ಪದ ಗಳನ್ನು ಸೊಲ್ಲುಗಳಲ್ಲಿ ಬಳಸುವಾಗಲೆಲ್ಲ ಈ ಪದರೂಪದೊಟ್ಟುಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಕಡ್ಡಾಯವಾಗಿಯೂ ಬಳಸಲೇಬೇಕೆಂಬ ಕಟ್ಟಲೆಯಿರುತ್ತದೆ.

ಎತ್ತುಗೆಗಾಗಿ, ಒಂದು ಸೊಲ್ಲಿನ ಆಡುಗನನ್ನು ಸೂಚಿಸುವ ನೆ ಎಂಬ ಪದರೂಪದೊಟ್ಟನ್ನು ಎಲ್ಲಾ ಎಸಕಪದಗಳಿಗೂ ಸೇರಿಸಿ ಹೇಳಬಲ್ಲೆವು, ಮತ್ತು ಒಂದು ಸೊಲ್ಲು ತಿಳಿಸುವ ಎಸಕವನ್ನು ಆಡುಗನೇ ನಡೆಸಿರುವನಾದಲ್ಲಿ ಅಂತಹ ಎಸಕವನ್ನು ತಿಳಿಸುವ ಎಸಕಪದದೊಂದಿಗೆ ಈ ಒಟ್ಟನ್ನು ಬಳಸಲೇಬೇಕೆಂಬ ಕಡ್ಡಾಯವಾದ ಕಟ್ಟಲೆಯೂ ಕನ್ನಡದಲ್ಲಿದೆ. ನಾನು ನಾಳೆ ಬೆಳಿಗ್ಗೆ ಬರುತ್ತೇನೆ ಎಂಬ ಸೊಲ್ಲಿನಲ್ಲಿ ಬರು ಎಸಕಪದವನ್ನು ಅದರೊಂದಿಗೆ ಈ ನೆ ಎಂಬ ಒಟ್ಟನ್ನು ಸೇರಿಸದೆ ಮುಕ್ಯ ಎಸಕಪದವಾಗಿ ಬಳಸಲಾರೆವು.

ಪದದೊಟ್ಟುಗಳ ಬಳಕೆಯಲ್ಲಿ ಇಂತಹ ಕಟ್ಟಲೆಯಿಲ್ಲ. ಮೊದಲನೆಯದಾಗಿ ಅವು ಒಂದು ಗುಂಪಿಗೆ ಸೇರಿದ ಪದಗಳಲ್ಲಿ ಕೆಲವೇ ಕೆಲವು ಪದಗಳೊಂದಿಗೆ ಮಾತ್ರ ಬರುತ್ತವೆ. ಆ ಗುಂಪಿನಲ್ಲಿರುವ ಉಳಿದ ಪದಗಳನ್ನು ಇಂತಹ ಒಟ್ಟುಗಳಿಲ್ಲದೆಯೂ ಬಳಸಬಲ್ಲೆವು. ಎತ್ತುಗೆಗಾಗಿ, ತ ಪದದೊಟ್ಟು ಕುಣಿ, ಕುಡಿ, ನೆಗೆ, ಹೊಡೆ ಮೊದಲಾದ ಕೆಲವು ಎಸಕಪದಗಳೊಂದಿಗೆ ಮಾತ್ರ

ಬರಬಲ್ಲುದು. ಅಗಿ, ತಿಳಿ, ತೆರೆ, ಬರೆ ಮೊದಲಾದ ಅಂತಹವೇ ಬೇರೆ ಹಲವಾರು ಎಸಕಪದಗಳೊಂದಿಗೆ ಅದು ಬರಲಾರದು.

ಇದರ ಬಳಕೆಯೂ ಪದರೊಪದೊಟ್ಟುಗಳ ಹಾಗೆ ಕಡ್ಡಾಯವಲ್ಲ. ನಗು, ಓದು, ಮಿಂಚು ಮೊದಲಾದ ಎಸಕಪದಗಳು ಈ ಒಟ್ಟಿನ ನೆರವಿಲ್ಲದೇನೇ ಹೆಸರುಪದಗಳಾಗಿ ಬರುತ್ತವೆ ಮಾತ್ರವಲ್ಲ, ಬೇರೆ ಹಲವಾರು ಹೆಸರುಪದಗಳ ಬಳಕೆಯಲ್ಲಿಯೂ ಇಂತಹ ಒಟ್ಟುಗಳು ಬರಲೇಬೇಕೆಂಬ ಕಟ್ಟಲೆಯಿಲ್ಲ. ಎತ್ತುಗೆಗಾಗಿ ಒಳರಚನೆಯಿಲ್ಲದ ಮರ, ಗಿಡ ಮೊದಲಾದ ಹೆಸರುಪದಗಳ ಬಳಕೆಯನ್ನು ಗಮನಿಸಬಹುದು.

೧.೫.೩ ರೂಪಪಟ್ಟಿಗಳು

ಪದರೂಪದೊಟ್ಟುಗಳು ರೂಪಪಟ್ಟಿಗಳ ಅಂಗಗಳಾಗಿ ಬರುತ್ತವೆ. ಎತ್ತುಗೆಗಾಗಿ ಸೊಲ್ಲೊಂದರಲ್ಲಿ ಬರುವ ಹೆಸರುಪದಗಳಿಗೂ ಎಸಕಪದಕ್ಕೂ ನಡುವಿರುವ ಸಂಬಂದವೇನೆಂಬುದನ್ನು ತಿಳಿಸುವ ಪತ್ತುಗೆ ಒಟ್ಟುಗಳದೊಂದು ರೂಪಪಟ್ಟಿಯಿದೆ. ಮಾಡುಗನ (ಇಲ್ಲವೇ ಆಗುಗದ) ಆಡುಗ-ಗುರ- ಎಣಿಕೆಗಳನ್ನು ತಿಳಿಸುವ ಒಟ್ಟುಗಳದೊಂದು ರೂಪಪಟ್ಟಿಯಿದೆ, ಮತ್ತು ಹೊತ್ತುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸುವ ಹೊತ್ತಿನ ಒಟ್ಟುಗಳದೊಂದು ರೂಪಪಟ್ಟಿಯಿದೆ.

ಈ ರೂಪಪಟ್ಟಿಗಳ ಬಳಕೆ ಎಲ್ಲಿ ನಡೆಯಬೇಕೆಂಬುದನ್ನು ತಿಳಿಸುವ ಸೊಲ್ಲಿಟ್ಟಳದ ಕಟ್ಟಲೆಗಳಿವೆ, ಮತ್ತು ಹಾಗೆ ಅವನ್ನು ಬಳಸಬೇಕಾಗಿರುವಲ್ಲೆಲ್ಲ ಈ ರೂಪಪಟ್ಟಿಗಳ ಅಂಗಗಳಾಗಿ ಬಂದಿರುವ ಒಟ್ಟುಗಳಲ್ಲಿ ಯಾವುದಾದರೂ ಒಂದನ್ನು ಬಳಸಲೇಬೇಕೆಂಬ ಕಡ್ಡಾಯವೂ ಇದೆ. ಎತ್ತುಗೆಗಾಗಿ, ಎಸಕವೊಂದರ ಮಾಡುಗ ಇಲ್ಲವೇ ಆಗುಗವನ್ನು ತಿಳಿಸುವುದಕ್ಕಾಗಿ ಎಸಕಪದದೊಂದಿಗೆ ಬರಬಲ್ಲ ಏನೆ, ಏವೆ, ಈ, ಈರಿ, ಆನೆ ಮೊದಲಾದ ಒಟ್ಟುಗಳ ರೂಪಪಟ್ಟಿಯೊಂದಿದೆ ಮಾತ್ರವಲ್ಲ, ತಿಳಿಸುವ ಸೊಲ್ಲುಗಳಲ್ಲೆಲ್ಲ ಈ ರೂಪಪಟ್ಟಿಗೆ ಸೇರಿದ ಒಟ್ಟುಗಳಲ್ಲೊಂದನ್ನು ಎಸಕಪದದೊಂದಿಗೆ ಬಳಸಲೇಬೇಕೆಂಬ ಕಡ್ಡಾಯವೂ ಇದೆ.

ಪದದೊಟ್ಟುಗಳನ್ನು ಈ ರೀತಿ ಬೇರೆ ಬೇರೆ ರೂಪಪಟ್ಟಿಗಳಲ್ಲಿ ಹೊಂದಿಸಿ ಹೇಳಲು ಬರುವುದಿಲ್ಲ. ಅವು ಪದರೂಪದೊಟ್ಟುಗಳ ಹಾಗೆ ಒಂದಕ್ಕೊಂದು ಹೊಂದಿಕೊಂಡಿಲ್ಲದಿರುವುದೇ ಇದಕ್ಕೆ ಕಾರಣ. ಪದದೊಟ್ಟುಗಳನ್ನು ವರಿಸುವಾ ನುಡಿಯಲ್ಲಿ ಎಂತಹ ಒಟ್ಟುಗಳೆಲ್ಲ ಬಳಕೆಯಲ್ಲಿವೆ ಎಂಬುದಾಗಿ ಅವುಗಳ ಒಂದು ಪಟ್ಟಿಯನ್ನು ಕೊಡಲು ಮಾತ್ರ ಬರುತ್ತದೆ. ಪದರೂಪದೊಟ್ಟುಗಳ ಹಾಗೆ ಅವುಗಳಲ್ಲಿ ಒಂದನ್ನು ಬಳಸದಿದ್ದಲ್ಲಿ ಇನ್ನೊಂದನ್ನು ಬಳಸಬೇಕು ಎಂಬಂತಹ ಕಡ್ಡಾಯವೂ ಕಾಣಿಸುವುದಿಲ್ಲ.

೧.೫.೪ ಎರವಲು

ಪದದೊಟ್ಟುಗಳನ್ನು ಬೇರೆ ನುಡಿಗಳಿಂದ ತುಂಬಾ ಸುಳುವಾಗಿ ಎರವಲು ಪಡೆಯಬಹುದು. ಆದರೆ, ಪದರೂಪದೊಟ್ಟುಗಳನ್ನು ಆ ರೀತಿ ಎರವಲಾಗಿ ಪಡೆಯುವುದು ಕಶ್ಚ. ಅವನ್ನು ಎರವಲಾಗಿ ಪಡೆಯಲಾಗದೆಂದೂ ಹೇಳಬಲ್ಲೆವು. ಇದಕ್ಕೆ ಕಾರಣವೇನೆಂದರೆ, ಮೇಲೆ ತಿಳಿಸಿದ ಹಾಗೆ, ಪದರೂಪದೊಟ್ಟುಗಳು ಅಚ್ಚುಕಟ್ಟಾಗಿ ಒಂದು ರೂಪಪಟ್ಟಿಯಲ್ಲಿ ಹೊಂದಿಕೊಂಡಿರುತ್ತವೆ; ನುಡಿಯಲ್ಲಿ ಅವುಗಳಿಗಿರುವ ಕೆಲಸವೇನೆಂಬುದನ್ನು ಅಂತಹ ರೂಪಪಟ್ಟಿಗಳೇ ತೀರಾನಿಸುತ್ತವೆ. ಹಾಗಾಗಿ, ಅವನ್ನು ಎರವಲಾಗಿ ಪಡೆಯುವುದಿದ್ದಲ್ಲಿ ಇಡೀ ರೂಪಪಟ್ಟಿಯನ್ನೇ ಎರವಲಾಗಿ ಪಡೆಯಬೇಕಾದೀತು. ಇದು ಅಸಾದ್ಯವೇ.

ಎತ್ತುಗೆಗಾಗಿ, ಕನ್ನಡದಲ್ಲಿಲ್ಲದಿರುವ ಈರೆಣಿಕೆಯ (ದ್ವಿವಚನದ) ಒಟ್ಟನ್ನು ಸಂಸ್ಕೃತದಿಂದ ಎರವಲಾಗಿ ತರುವುದು ಅಸಾದ್ಯವೆಂದೇ ಹೇಳಬಹುದು. ಯಾಕೆಂದರೆ, ಸಂಸ್ಕೃತದಲ್ಲಿ ಇದು ಲಿಂಗ ಮತ್ತು ವಿಬಕ್ತಿಗಳೊಂದಿಗೆ ಸೇರಿ ‘ಸುಬಂತ’ವೆಂಬ ಒಂದು ರೂಪಪಟ್ಟಿಯಲ್ಲಿ ಬರುತ್ತಿದ್ದು, ಅದಕ್ಕೆ ಈ ರೂಪಪಟ್ಟಿಯ ಹೊರಗೆ ತನ್ನದೇ ಆದ ಇರುವಿಕೆಯಿಲ್ಲ.

ಪದದೊಟ್ಟುಗಳು ಈ ರೀತಿ ಒಂದಕ್ಕೊಂದು ಸಂಬಂಧಿಸಿಲ್ಲವಾದ ಕಾರಣ, ಅವು ಬೇರೆ ನುಡಿಗಳಿಂದ ಸುಳುವಾಗಿ ನಮ್ಮ ನುಡಿಗೆ ಎರವಲಾಗಿ ಬರಬಲ್ಲುವು. ಇಂತಹ ಹಲಕೆಲವು ಪದದೊಟ್ಟುಗಳು ಕನ್ನಡಕ್ಕೆ ಬೇರೆ ನುಡಿಗಳಿಂದ ಎರವಲಾಗಿ ಬಂದಿವೆಯೆಂಬುದನ್ನು ನಾವು ಮುಂದೆ ಎಂಟನೇ ಪಸುಗೆಯಲ್ಲಿ ನೋಡಲಿರುವೆವು. ಈ ರೀತಿ ಬೇರೆ ಪದಗಳೊಂದಿಗೆ ಎರವಲಾಗಿ ಬಂದ ಈ ಒಟ್ಟುಗಳು ನುಡಿಯಲ್ಲಿರುವ ಬೇರೆ ಪದಗಳಿಗೂ ಸೇರಿಕೊಂಡು ನುಡಿಯವೇ ಆಗಿಬಿಡುವುದೂ ಇದೆ.

ಎತ್ತುಗೆಗಾಗಿ, ಕನ್ನಡದಲ್ಲಿ ಮುನ್ನೊಟ್ಟು ಎಂಬುದಿಲ್ಲದಿದ್ದರೂ ಅಂತಹ ಒಟ್ಟನ್ನೊಳಗೊಂಡಿರುವ ಸಂಸ್ಕೃತದ ಅಪಜಯ, ಅಪಹಾರ, ಅಪವಾದ, ಅಪಮಾನ, ಅಪಮೃತ್ಯು ಮೊದಲಾದ ಹಲವಾರು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿವೆ. ಇದಲ್ಲದೆ, ಈ ಪದಗಳಲ್ಲಿರುವ ಅಪ ಎಂಬ ಮುನ್ನೊಟ್ಟು ಕನ್ನಡದವೇ ಆದ ನಂಬಿಕೆ ಎಂಬಂತಹ ಪದಗಳಿಗೂ (ಅಪನಂಬಿಕೆ) ಸೇರಿಕೊಂಡು ಹೊಸ ಪದಗಳ ತಯಾರಿಕೆಯಲ್ಲಿ ಬಳಕೆಯಾಗಿದೆ. (ಆದರೆ ಕನ್ನಡದಲ್ಲಿ ಈ ಒಟ್ಟು ಒಂದು ‘ಒಟ್ಟಾ’ಗಿ ಉಳಿಯುವ ಬದಲು ಒಂದು ಹೊರಕುಳಿ ಪದದ ಹಾಗೆ ಬಳಕೆಯಲ್ಲಿದೆ - ೮.೩.೭ ನೋಡಿ).

೧.೫.೫ ಹುರುಳಿನಲ್ಲಿ ವ್ಯತ್ಯಾಸ

ಪದರೂಪದೊಟ್ಟುಗಳಿಗೆ ಒಂದು ಹುರುಳು ಇಲ್ಲವೇ ಉದ್ದೇಶವನ್ನು ಕೊಡಲು ಬರುತ್ತದೆ. ಎತ್ತುಗೆಗಾಗಿ, ಪತ್ತುಗೆ ಒಟ್ಟುಗಳಿಗೆ ಹೆಸರುಪದಕ್ಕೂ ಎಸಕಪದಕ್ಕೂ ನಡುವಿರುವ ಸಂಬಂಧವನ್ನು ತಿಳಿಸುವ ಉದ್ದೇಶವಿದೆ, ಮತ್ತು ಅವುಗಳಲ್ಲೊಂದಾದ ಜಾಗ ಒಟ್ಟಿಗೆ ಒಂದು ಜಾಗವನ್ನು ತಿಳಿಸುವ ಹುರುಳಿದೆ. ಹೊತ್ತಿನ ಒಟ್ಟುಗಳಿಗೆ ಎಸಕಪದವು ತಿಳಿಸುವ ಎಸಕದ ಹೊತ್ತನ್ನು ಮಾತನಾಡುವವನ ಹೊತ್ತಿಗೆ ಸಂಬಂದಿಸಿದಂತೆ ತಿಳಿಸುವ ಉದ್ದೇಶ ಮತ್ತು ಹುರುಳುಗಳಿವೆ.

ಆದರೆ, ಪದದೊಟ್ಟುಗಳಿಗೆ ಹೆಚ್ಚಿನೆಡೆಗಳಲ್ಲೂ ಇಂತಹ ಒಂದು ಹುರುಳನ್ನು ಕೊಡಲು ಬರುವುದಿಲ್ಲ. ಎತ್ತುಗೆಗಾಗಿ, ಇಕೆ-ಇಗೆ ಒಟ್ಟಿಗೆ ಅದರ ಬೇರೆ ಬೇರೆ ಬಳಕೆಗಳಲ್ಲಿ ಬೇರೆ ಬೇರೆ ಹುರುಳುಗಳು ಬರುವುವೆಂಬುದನ್ನು ಮುಂದೆ ೪.೩ರಲ್ಲಿ ನೋಡಲಿರುವೆವು. ಕೆಲವು ಬಳಕೆಗಳಲ್ಲಿ ಅದಕ್ಕೆ ಎಸಕವನ್ನು ಹೆಸರಿಸುವ ಹುರುಳಿದೆಯಾದರೆ (ಹೊಗಳು-ಹೊಗಳಿಕೆ, ಅಂಜು-ಅಂಜಿಕೆ, ಮೆಚ್ಚು- ಮೆಚ್ಚುಗೆ), ಇನ್ನು ಕೆಲವು ಬಳಕೆಗಳಲ್ಲಿ ಅಂತಹ ಎಸಕದ ಮೂಲಕ ತಯಾರಾದ ವಸ್ತುಗಳನ್ನು ಹೆಸರಿಸುವ ಹುರುಳಿದೆ (ಕೆತ್ತು-ಕೆತ್ತಿಗೆ, ಮೊಳೆ-ಮೊಳಕೆ). ಹಾಗಾಗಿ, ಅವಕ್ಕೆ ನಿಶ್ಚಿತವಾಗಿ ಇಂತಹದೇ ಎಂಬುದಾಗಿ ಒಂದು ಹುರುಳನ್ನು ಕೊಡಲು ಬರುವುದಿಲ್ಲ.

ಪದಗಳನ್ನು ಬೇರೆ ಪದಗಳಿಂದ ಬೇರ್ಪಡಿಸುವುದಿಷ್ಟೇ ಪದದೊಟ್ಟುಗಳ ಮುಕ್ಯ ಕೆಲಸ; ಹಾಗಾಗಿ, ಅವಕ್ಕೊಂದು ನಿಶ್ಚಿತವಾದ ಹುರುಳಿರಬೇಕಾಗುವುದಿಲ್ಲ. ಇದಲ್ಲದೆ, ಅವು ಪದರೂಪದೊಟ್ಟುಗಳ ಹಾಗೆ ಒಂದು ಗುಂಪಿನಲ್ಲಿರುವ ಎಲ್ಲಾ ಪದಗಳೊಂದಿಗೂ ಬರುವುದಿಲ್ಲವಾದ ಕಾರಣ, ಅವಕ್ಕೆ ಎಲ್ಲ ಬಳಕೆಗಳಿಗೂ ಹೊಂದಿಕೆಯಾಗಬಲ್ಲ ಹುರುಳನ್ನು ಕೊಡಲು ಬರುವುದಿಲ್ಲ.

ಪದದೊಟ್ಟು ಮತ್ತು ಪದರೂಪದೊಟ್ಟು ಎಂಬ ಈ ಒಟ್ಟುಗಳ ಒಡೆತ ಮುಕ್ಯವಾಗಿ ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹದು. ಪದದೊಟ್ಟುಗಳನ್ನೊಳಗೊಂಡಿರುವ ಹೆಸರುಪದಗಳ ಹುರುಳು ಅವುಗಳ ಒಳರಚನೆಯ ಮೇಲೆ ನಿಂತಿರದೆ, ಅವು ಎಂತಹ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ ಎಂಬುದರ ಮೇಲೆ ನಿಂತಿದೆ ಎಂಬುದನ್ನು ಮುಂದೆ ನಾಲ್ಕನೇ ಪಸುಗೆಯಲ್ಲಿ ನೋಡಲಿರುವೆವು. ಕಾಲದಿಂದ ಕಾಲಕ್ಕೆ ಇಂತಹ ಪದಗಳಲ್ಲಾಗುವ ಹುರುಳಿನ ಬದಲಾವಣೆಗಳೂ ಅವುಗಳಲ್ಲಿರುವ ಒಟ್ಟುಗಳನ್ನು ಅವಲಂಬಿಸಿರುವುದಿಲ್ಲ. ಒಂದೇ ಪದದೊಟ್ಟನ್ನೊಳಗೊಂಡಿರುವ ಪದಗಳೆಲ್ಲವಕ್ಕೂ ಒಂದೇ ರೀತಿಯ ಹುರುಳನ್ನು ಕೊಡಲು ಬಾರದಿರುವುದಕ್ಕೆ ಇದೂ ಒಂದು ಕಾರಣ.

೧.೫.೬ ಬಳಕೆಯಲ್ಲಿಲ್ಲದ ಪದಗಳು

ಪದದೊಟ್ಟುಗಳ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಈ ಎರಡು ಕೆಲಸಗಳು ಬೇರೆ ಬೇರಾಗಿರುತ್ತವೆ. ಹಾಗಾಗಿ, ಅವನ್ನೊಳಗೊಂಡಿರುವ ಪದಗಳು ಒಂದು ಕಟ್ಟಲೆಗನುಸಾರವಾಗಿ ತಯಾರಾಗಿವೆಯಾದರೂ, ಅವುಗಳ ಬಳಕೆಯಲ್ಲಿ ಆ ಕಟ್ಟಲೆ ಕಟ್ಟುನಿಟ್ಟಾಗಿ ಕಾಣಿಸದಿರಬಲ್ಲುದು. ಎತ್ತುಗೆಗಾಗಿ, ಕನ್ನಡದಲ್ಲಿ ತ ಎಂಬ ಪದದೊಟ್ಟನ್ನು ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಎಸಕಪದಗಳಿಗೆ ಸೇರಿಸಿ ಹೆಸರುಪದಗಳನ್ನು ಉಂಟುಮಾಡಬಲ್ಲೆವು (೪.೩.೨ ನೋಡಿ). ಈ ಕಟ್ಟಲೆಯಂತೆ, ಕುಡಿ-ತ, ದುಡಿ-ತ, ನೆಗೆ-ತ, ಒದೆ-ತ ಮೊದಲಾದ ಬಳಕೆಯಲ್ಲಿರುವ ಪದಗಳನ್ನು ಮಾತ್ರವಲ್ಲದೆ ಅಗಿ-ತ, ಹುರಿ-ತ, ಕರೆ-ತ, ಅಳೆ-ತ ಮೊದಲಾದ ಬಳಕೆಯಲ್ಲಿಲ್ಲದ ಪದಗಳನ್ನೂ ಉಂಟುಮಾಡಬಲ್ಲೆವು. ಆದರೆ, ಬಳಕೆಗೆ ಬಾರದಿರುವ ಪದಗಳನ್ನು ನುಡಿಯಲ್ಲಿರುವ ಪದಗಳೆಂದು ಹೇಳಲಾರೆವಾದ ಕಾರಣ, ಅವು ಕಟ್ಟಲೆಗೆ ಹೊರಪಡಿಕೆಗಳಾಗುತ್ತವೆ.

ಈ ರೀತಿ ಪದದೊಟ್ಟುಗಳನ್ನು ಬಳಸುವಲ್ಲಿ (೧) ಬಳಕೆಯಲ್ಲಿರುವವು (ಕುಡಿತ, ನೆರೆತ), (೨) ಬಳಕೆಯಲ್ಲಿಲ್ಲದವು (ಹುರಿತ, ಅಳೆತ) ಮತ್ತು (೩) ಕಟ್ಟಲೆಗೆ ಹೊಂದಿಕೆಯಾಗದವು (*ನಡು-ತ, *ಕೊಲ್ಲು-ತ) ಎಂಬುದಾಗಿ ಮೂರು ಬಗೆಯವನ್ನು ಕಾಣಬಲ್ಲೆವು; ಆದರೆ, ಪದರೂಪದೊಟ್ಟುಗಳನ್ನು ಬಳಸುವಲ್ಲಿ ಕಟ್ಟಲೆಗೆ ಹೊಂದಿಕೆಯಾಗುವವು ಮತ್ತು ಹೊಂದಿಕೆಯಾಗದವು ಎಂಬುದಾಗಿ ಎರಡು ಬಗೆಯವನ್ನು ಮಾತ್ರ ಕಾಣಬಲ್ಲೆವು.

ಎತ್ತುಗೆಗಾಗಿ ಅಲಿ ಎಂಬ ಪದರೂಪದೊಟ್ಟನ್ನು ಎಸಕಪದಗಳಿಗೆ ಮಾತ್ರ ಸೇರಿಸಬಹುದು ಎಂಬ ಕಟ್ಟಲೆಯೊಂದಿದೆ. ಇದರಂತೆ, ಮಾಡಲಿ, ಹೋಗಲಿ, ಬರಲಿ, ಹೇಳಲಿ ಮೊದಲಾದ ಪದರೂಪಗಳು ಕಟ್ಟಲೆಗೆ ಹೊಂದಿಕೆಯಾಗುವವು; ಇದೇ ಒಟ್ಟನ್ನು ಹೆಸರುಪದಗಳಿಗೆ ಇಲ್ಲವೇ ಎಸಕಪದಗಳಿಗೆ ಸೇರಿಸಿದಲ್ಲಿ (*ಹಗಲ-ಲಿ, ಕೆಂಪ-ಲಿ), ಅಂತಹ ಪದರೂಪಗಳನ್ನು ಕಟ್ಟಲೆಗೆ ಹೊಂದಿಕೆಯಾಗದವೆಂದು ಹೇಳಬೇಕಾದೀತು. ಈ ಪದರೂಪದೊಟ್ಟಿನ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆಗಳ ನಡುವೆ ವ್ಯತ್ಯಾಸವಿಲ್ಲ; ತಯಾರಿಸಲು ಬರುವ ರೂಪಗಳೆಲ್ಲವೂ ಬಳಕೆಯಲ್ಲಿರುವವುಗಳೇ.

Eke →

೧.೬ ಬಳಕೆಗೆ ಬರುವ ಒಟ್ಟುಗಳು

ಪದಗಳ ಒಳರಚನೆ ಪದರೂಪಗಳ ಒಳರಚನೆಯಷ್ಟು ಕಟ್ಟುನಿಟ್ಟಾದುದಲ್ಲವೆಂಬುದನ್ನು ಮೇಲೆ ನೋಡಿರುವೆವು. ಹೀಗಿದ್ದರೂ ಪದಗಳಲ್ಲಿ ಕಾಣಿಸುವ ಒಳರಚನೆಗಳಲ್ಲಿ ಕೆಲವನ್ನು ಬಳಕೆಬರುವವೆಂದು ಮತ್ತು ಇನ್ನು ಕೆಲವನ್ನು ಬಳಕೆಗೆ ಬಾರದವೆಂದು ಗುರುತಿಸಬಲ್ಲೆವು. ಸಾಮಾನ್ಯವಾಗಿ ಒಂದೆರಡು ಪದಗಳಲ್ಲಿ ಮಾತ್ರವೇ ಕಾಣಿಸುವಂತಹ ಒಳರಚನೆಗಳು ಬಳಕೆಗೆ

ಬಾರದವೆಂದು ಮತ್ತು ಜಾಸ್ತಿ ಪದಗಳಲ್ಲಿ ಕಾಣಿಸುವವುಗಳನ್ನು ಬಳಕೆಗೆ ಬರುವವುಗಳೆಂದು ಹೇಳಬಹುದು.

ಹೊಸ ಪದಗಳನ್ನು ಉಂಟುಮಾಡಬೇಕಾದಾಗ (ಎತ್ತುಗೆಗಾಗಿ, ಹೊಸ ಅರಿಮೆಯ ಪದಗಳನ್ನು ಉಂಟುಮಾಡಬೇಕಾದಾಗ) ಈ ರೀತಿ ಬಳಕೆಗೆ ಬರುವ ಒಳರಚನೆಗಳನ್ನು ಬಳಸಿಕೊಂಡೆವಾದರೆ, ಅಂತಹ ಪದಗಳು ಹೆಚ್ಚು ಸುಳುವಾಗಿ ನುಡಿಯಲ್ಲಿ ಬಳಕೆಗೆ ಬರಬಲ್ಲುವು. ಕೆಲವೇ ಕೆಲವು ಪದಗಳಲ್ಲಿ ಮಾತ್ರವೇ ಬಳಕೆಯಾಗಿರುವ ರಚನೆಗಳನ್ನು ಬಳಸಿ ರಚಿಸಿದ ಪದಗಳು ಓದುಗರಿಗೆ ತುಸು ತೊಡಕಿನವೆಂದು ತೋರಬಲ್ಲುವು, ಮತ್ತು ಈ ಕಾರಣಕ್ಕಾಗಿ ಅವು ನುಡಿಯಲ್ಲಿ ರೂಡಿಗೆ ಬರದಿರಬಲ್ಲುವು.

ಎತ್ತುಗೆಗಾಗಿ, ಕನ್ನಡದ ಜೋಡುಪದಗಳಲ್ಲಿ ಎರಡಕ್ಕಿಂತ ಹೆಚ್ಚು ಅಂಗಗಳಿರುವುದು ಬಹಳ ಕಡಿಮೆ. ಹಾಗಾಗಿ, ಅಂತಹ ಜೋಡುಪದಗಳ ಒಳರಚನೆ ಕನ್ನಡದ ಮಟ್ಟಿಗೆ ಬಳಕೆಗೆ ಬಾರದವೆಂದು ಹೇಳಬಹುದು. ಅರಿವೆಯ ಪದಗಳನ್ನು ರಚಿಸುವವರು ಎರಡಕ್ಕಿಂತ ಹೆಚ್ಚು ಪದಗಳನ್ನು ಸೇರಿಸಿ ಉದ್ದುದ್ದವಾದ ಪದಗಳನ್ನು ತಯಾರಿಸಿ ಹಾಕಿದಲ್ಲಿ, ಅವು ಕನ್ನಡದಲ್ಲಿ ಬಳಕೆಗೆ ಬರುವುದು ಸ್ವಲ್ಪ ಕಶ್ಚ.

ಒಟ್ಟುಗಳಿರುವ ಪದಗಳಲ್ಲೂ ಇದೇ ರೀತಿ ಬಳಕೆಗೆ ಬರಬಲ್ಲ ಮತ್ತು ಬಳಕೆಗೆ ಬರಲಾರದ ರಚನೆಗಳನ್ನು ಕಾಣಬಹುದು. ಕನ್ನಡದಲ್ಲಿ ಇಕೆ-ಇಗೆ, ತ- ತೆ, ವು ಮೊದಲಾದ ಕೆಲವು ಒಟ್ಟುಗಳು ಹಲವು ಪದಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವನ್ನು ಬಳಸಿ ಹೊಸ ಪದಗಳನ್ನು ತಯಾರಿಸಿದಲ್ಲಿ ಅಂತಹ ಪದಗಳು ಸುಳುವಾಗಿ ನುಡಿಯಲ್ಲಿ ರೂಡಿಗೆ ಬರಬಲ್ಲುವು. ಬೇರೆ ಹಲವು ಒಟ್ಟುಗಳು ಒಂದೆರಡು ಪದಗಳಲ್ಲಿ ಮಾತ್ರ ಕಾಣಿಸುತ್ತಿದ್ದು (ಉದಾ: ಡ, ಳ, ಹ ಇತ್ಯಾದಿ), ಅವನ್ನು ಬಳಸಿ ತಯಾರಿಸಿದ ಪದಗಳು ಅಶ್ಶೊಂದು ಸುಳುವಾಗಿ ಬಳಕೆಗೆ ಬರಲಾರವು.

ಪದಗಳ ಒಳರಚನೆಗೆ ಅವುಗಳ ದಿನನಿತ್ಯದ ಬಳಕೆಯಲ್ಲಿ ವಿಶೇಷವಾದ ಸ್ಥಾನವೇನೂ ಇಲ್ಲ ಎಂಬುದನ್ನು ನಾವು ಮೇಲೆ ನೋಡಿರುವೆವು. ಹೆಚ್ಚಿನ ಕಡೆಗಳಲ್ಲೂ ಪದಗಳನ್ನು ಬಳಸುವಾಗ ಅವುಗಳಿಗೆ ಒಳರಚನೆಯೆಂಬು ದೊಂದಿದೆಯೆಂಬುದೇ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಈ ವಿಶಯದಲ್ಲಿ ಬಳಕೆಗೆ ಬರಬಲ್ಲ ರಚನೆಯಿರುವ ಪದಗಳು ಬಳಕೆಗೆ ಬರಲಾರದ ರಚನೆಯಿರುವ ಪದಗಳಿಗಿಂತ ಸ್ವಲ್ಪ ಮಟ್ಟಿಗಾದರೂ ಬೇರಾಗಿರಬಲ್ಲುವು. ಎತ್ತುಗೆಗಾಗಿ, ಕಟ್ಟಡ, ತಿಂಡಿ, ಬೀಳಲು, ಬಿರುಕು ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳ ರಚನೆಯಲ್ಲಿ ಕಟ್ಟು, ತಿನ್ನು, ಬೀಳು, ಬಿರಿ ಮೊದಲಾದ ಎಸಕಪದಗಳು ಬಳಕೆಯಾಗುವುವೆಂಬ ವಿಶಯ ನಮ್ಮ ಗಮನಕ್ಕೆ ಬಾರದಿದ್ದರೂ, ಬಳಲಿಕೆ, ನಂಬಿಕೆ, ಹೋಲಿಕೆ ಮೊದಲಾದವುಗಳನ್ನು ಬಳಸುವಾಗ ಅವುಗಳ ಒಳರಚನೆ

ಯಲ್ಲಿ ಬಳಲು, ನಂಬು, ಹೋಲು ಮೊದಲಾದ ಎಸಕಪದಗಳಿರುವುದು ನಮ್ಮ ಗಮನಕ್ಕೆ ಬರಬಲ್ಲುದು.

ಈ ವ್ಯತ್ಯಾಸದ ಮೇಲೆ, ಬಳಸಬಲ್ಲ ಒಳರಚನೆಯಿರುವ ಪದಗಳನ್ನು ಮಾತ್ರವೇ ವ್ಯಾಕರಣದಲ್ಲಿ ವಿವರಿಸಬೇಕು, ಬಳಸಲಾಗದ ಒಳರಚನೆ ಯಿರುವವುಗಳನ್ನು ವಿವರಿಸಬೇಕಾಗಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಈ ಪುಸ್ತಕದಲ್ಲಿ ಇವೆರಡು ರೀತಿಯ ಪದಗಳನ್ನೂ ಪರಿಶೀಲನೆಗೆ ತೆಗೆದುಕೊಂಡಿದ್ದು, ಎರಡಕ್ಕೂ ಒಳರಚನೆಗಳನ್ನು ಮುಕ್ಯವಾಗಿ ಚಾರಿತ್ರಿಕ ಅಂಶಗಳ ಮೇಲೆ ಕಲ್ಪಿಸಿಕೊಡಲಾಗಿದೆ.

Eke →

೧.೨ ಹೆಸರುಪದಗಳು ಮತ್ತು ಬೇರೆ ಪದಗಳು

ಪದಗಳ ಹುರುಳನ್ನು ತಿಳಿದುಕೊಳ್ಳುವಲ್ಲಿ ಒಳರಚನೆಯ ಪಾತ್ರವೆಂತಹದು ಎಂಬ ವಿಷಯದಲ್ಲಿ ಹೆಸರುಪದಗಳಿಗೂ ಮತ್ತು ಬೇರೆ ಪದಗಳಿಗೂ (ಎಸಕಪದ ಮತ್ತು ಪರಿಚೆಪದಗಳಿಗೂ) ನಡುವೆ ಮುಕ್ಯವಾದ ವ್ಯತ್ಯಾಸವಿದೆಯೆಂಬುದನ್ನು ಇಲ್ಲಿ ಗಮನಿಸಬೇಕು. ಪದಗಳ ಕುರಿತಾಗಿ ಮೇಲೆ ಹೇಳಿರುವ ಸಂಗತಿಗಳಲ್ಲಿ ಹೆಚ್ಚಿನವೂ ಹೆಸರುಪದಗಳಿಗೆ ಮಾತ್ರ ಅನ್ವಯಿಸುವಂತಹವುಗಳು. ಎಸಕಪದ ಇಲ್ಲವೇ ಪರಿಚೆಪದಗಳಿಗೆ ಅನ್ವಯಿಸುವಂತಹವುಗಳಲ್ಲ.

ಎತ್ತುಗೆಗಾಗಿ, ಒಳರಚನೆಯಿರುವ ಹೆಸರುಪದಗಳ ಹುರುಳು ಹೆಚ್ಚಿನಡೆಗಳಲ್ಲೂ ಅವುಗಳ ಒಳರಚನೆಯಿಂದ ದೊರಕುವ ಹುರುಳಿಗಿಂತ ಬೇರಾಗಿರುತ್ತದೆ. ಆದರೆ, ಒಳರಚನೆಯಿರುವ ಎಸಕಪದ ಮತ್ತು ಪರಿಚೆಪದಗಳ ಹುರುಳು ಹೆಚ್ಚಿನೆಡೆಗಳಲ್ಲೂ ಅವುಗಳ ಒಳರಚನೆಯಿಂದ ದೊರಕುವ ಹುರುಳೇ ಆಗಿರುತ್ತದೆ. ಹಾಗಾಗಿ, ಹೆಸರುಪದಗಳ ಬಳಕೆಯಲ್ಲಿ ಕಾಣಿಸುವಂತಹ ಒಳರಚನೆಯಿರುವ ಪದ ಮತ್ತು ಪದಕಂತೆ ಎಂಬವುಗಳ ನಡುವಿರುವ ವ್ಯತ್ಯಾಸ ಎಸಕಪದ ಇಲ್ಲವೇ ಪರಿಚೆಪದಗಳ ಬಳಕೆಯಲ್ಲಿ ಕಾಣಿಸುವುದಿಲ್ಲ.

ಹೆಸರುಪದಗಳಿಗೂ ಬೇರೆ ಪದಗಳಿಗೂ ನಡುವೆ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳಲು ಮುಕ್ಯ ಕಾರಣವೇನೆಂದರೆ, ಹೆಸರಿಸುವುದು ಮತ್ತು ವರಿಸು ವುದು ಎಂಬ ಎರಡು ರೀತಿಯ ಗುರುತಿಸುವ ವಿದಾನಗಳು ಹೆಸರುಪದಗಳ ಬಳಕೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವಲ್ಲದೆ ಎಸಕಪದ ಇಲ್ಲವೇ ಪರಿಚೆಪದಗಳ ಬಳಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ (೩.೧ ನೋಡಿ). ಯಾಕೆಂದರೆ, ವ್ಯಕ್ತಿ, ವಸ್ತು, ಎಸಕ, ಪರಿಚೆ, ಮೊದಲಾದುವನ್ನು ಗುರುತಿಸುವ ಕೆಲಸವನ್ನು ಹೆಸರುಪದಗಳು ಮಾತ್ರ ಮಾಡಬಲ್ಲುವು. ಎಸಕಪದಗಳು ಎಸಕಗಳನ್ನು ತಿಳಿಸುತ್ತವಲ್ಲದೆ ಗುರುತಿಸುವುದಿಲ್ಲ. ಇದೇ ರೀತಿಯಲ್ಲಿ, ಪರಿಚೆಪದಗಳು ಪರಿಚಿಗಳನ್ನು ಸೂಚಿಸುತ್ತವಲ್ಲದೆ ಗುರುತಿಸುವುದಿಲ್ಲ. ಅವು ಸೂಚಿಸುವ ಪರಿಚೆಗಳ

ಸಹಾಯದಿಂದ ವ್ಯಕ್ತಿ, ವಸ್ತು, ಎಸಕ, ಪರಿಚೆ ಮೊದಲಾದುವನ್ನು ಗುರುತಿಸುವ ಕೆಲಸವನ್ನು ಹೆಸರುಪದಗಳು ನಡೆಸುತ್ತವೆ.

ಪದಗಳ ಒಳರಚನೆಯ ಕುರಿತಾಗಿ ಮೇಲೆ ಹೇಳಿರುವ ಪರಿಚಿಗಳಲ್ಲಿ ಹೆಚ್ಚಿನವೂ ಈ ರೀತಿ ಅವು ಹೆಸರಿಸುವ ವಿದಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುದಕ್ಕಾಗಿ ಬಳಕೆಯಾಗುವ ಕಡೆಗಳಲ್ಲಿ ಅವಕ್ಕೆ ಅನ್ವಯಿಸುವಂತಹವುಗಳು. ಹಾಗಾಗಿ, ಈ ಪರಿಚಿಗಳು ಹೆಸರುಪದಗಳಿಗೆ ಮಾತ್ರ ಅನ್ವಯಿಸಬಲ್ಲುವು. ಪದಗಳ ಪರಿಚಿಗಳನ್ನು ವಿವರಿಸುವಾಗ ಈ ರೀತಿ ಹೆಸರುಪದ ಮತ್ತು ಬೇರೆ ಪದಗಳ ನಡುವಿರುವ ವ್ಯತ್ಯಾಸವನ್ನು ಗಮನಕ್ಕೆ ತೆಗೆದುಕೊಳ್ಳದಿರಲು ನುಡಿಯಲ್ಲಿ ಬರುವ ಪದಗಳಲ್ಲಿ ಹೆಚ್ಚಿನವೂ ಹೆಸರುಪದಗಳಾಗಿರುವುದೇ ಮುಕ್ಯ ಕಾರಣವೆಂದು ಹೇಳಬಹುದು.

Eke →

೧.೯ ಪುಸ್ತಕದ ಸ್ವರೂಪ

ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳ ಒಳರಚನೆಯನ್ನು ಕನ್ನಡದವೇ ಆದ ಸೊಲ್ಲರಿಮೆಯ ಕಟ್ಟಲೆಗಳ (ಇಲ್ಲವೇ ಒಲವುಗಳ) ಮೂಲಕ ವಿವರಿಸಿ ಹೇಳುವುದೇ ಈ ಪುಸ್ತಕದ ಮುಕ್ಯ ಉದ್ದೇಶ. ಇಂತಹ ನಿಯಮಗಳನ್ನು ಕನ್ನಡಕ್ಕೆ ಮೂಲವಾಗಿರುವ ಭಾಶೆಯೊಂದರಿಂದ ಇಳಿದು ಬಂದಿರುವ ಪದಗಳಲ್ಲಿ ಮತ್ತು ಬೇರೆ ಭಾಶೆಗಳಿಂದ ಎರವಲಾಗಿ ಬಂದಿದ್ದರೂ ಬೇರೆ ಬೇರೆ ಬದಲಾವಣೆಗಳ ಮೂಲಕ ಕನ್ನಡದವೇ ಆಗಿರುವ ಪದಗಳಲ್ಲಿ ಕಾಣಬಹುದು.

ಕನ್ನಡದಲ್ಲಿ ಬರುವ ಇಂತಹ ಪದಗಳ ಒಳರಚನೆಯಂತಹದು ಎಂಬುದನ್ನು ತಿಳಿಯಲು ಅವನ್ನು ಬೇರೆ ಬೇರೆ ಪದವರ್ಗಗಳಲ್ಲಿ ವಿಂಗಡಿಸಿಕೊಳ್ಳುವುದು ಅವಶ್ಯ. ಯಾಕೆಂದರೆ, ಬೇರೆ ಬೇರೆ ಪದವರ್ಗಗಳಲ್ಲಿ ಬರುವ ಪದಗಳು ವಾಕ್ಯಗಳಲ್ಲಿ ಬೇರೆ ಬೇರೆ ರೀತಿಯ ಕೆಲಸಗಳನ್ನು ನಡೆಸಬೇಕಾಗಿದ್ದು, ಇದಕ್ಕನುಗುಣವಾಗಿ ಅವು ಬೇರೆ ಬೇರೆ ಒಳರಚನೆಗಳನ್ನು ಪಡೆದಿರಬೇಕಾಗುತ್ತದೆ. ಹಾಗಾಗಿ, ಕನ್ನಡದ ಪದಗಳು ಮುಕ್ಯವಾಗಿ ಮೂರು ಪದವರ್ಗಗಳಲ್ಲಿ ಹೇಗೆ ಸೇರಿಕೊಳ್ಳುತ್ತವೆ ಎಂಬುದನ್ನು ಎರಡನೆಯ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಹೆಸರುಪದ, ಎಸಕಪದ ಮತ್ತು ಪರಿಚೆಪದಗಳೆಂಬುದಾಗಿ ಮೂರು ಮುಕ್ಯ ಪದವರಗಳಲ್ಲಿ ಸೇರುವ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಇವುಗಳಲ್ಲಿ ಹೆಸರುಪದವೆಂಬ ವರಕ್ಕೆ ಸೇರುವ ಪದಗಳಲ್ಲೇನೇ ಹೆಚ್ಚಿನ ಒಳರಚನೆಗಳೂ ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಮುಂದಿನ ಮೂರು ಅದ್ಯಾಯಗಳಲ್ಲೂ (೩-೫) ಹೆಸರುಪದಗಳ ಒಳರಚನೆಯಂತಹದು ಎಂಬುದನ್ನೇ ವಿವರಿಸಲಾಗಿದೆ. ಮೂರನೆಯ ಅದ್ಯಾಯದಲ್ಲಿ ಇವುಗಳ ಒಳರಚನೆಯಲ್ಲಿ ಕಾಣಿಸುವ ಕೆಲವು ವಯ್ಯಿಶ್ಚಗಳನ್ನು ಪರಿಶೀಲಿಸಲಾಗಿದೆ, ಮತ್ತು ಮುಂದಿನ ಎರಡು ಅಧ್ಯಾಯಗಳಲ್ಲಿ ಒಟ್ಟುಗಳನ್ನು ಬಳಸಿ ರಚಿಸಿದ ಹೆಸರುಪದಗಳನ್ನು ಮತ್ತು

ಎರಡು ಪದಗಳನ್ನು ಒಟ್ಟು ಸೇರಿಸಿ ರಚಿಸಿದ ಹೆಸರುಪದಗಳನ್ನು ಬೇರೆ ಬೇರಾಗಿ ಪರಿಶೀಲಿಸಲಾಗಿದೆ.

ಎಸಕಪದ ಮತ್ತು ಪರಿಚೆಪದಗಳ ಒಳರಚನೆಯಲ್ಲಿ ಅಶ್ಶೊಂದು ವಯ್ದಿದ್ಯತೆಯಿಲ್ಲ. ಅವುಗಳ ಒಟ್ಟು ಎಣಿಕೆಯೂ ಹೆಸರುಪದಗಳಿಗಿಂತ ಬಹಳ ಕಡಿಮೆ. ಆರು ಮತ್ತು ಏಳನೆಯ ಅಧ್ಯಾಯಗಳಲ್ಲಿ ಈ ಎರಡು ವರ್ಗಗಳಿಗೆ ಸೇರುವ ಪದಗಳ ಒಳರಚನೆಯಲ್ಲಿ ಕಾಣಿಸುವ ಕೆಲವು ಒಟ್ಟುಗಳ ಬಳಕೆಯೆಂತಹದೆಂಬುದನ್ನು ಪರಿಶೀಲಿಸಲಾಗಿದೆ.

ಬೇರೆ ನುಡಿಗಳಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಇತ್ತೀಚೆಗಿನವು ಅವನ್ನು ಎರವಲು ಕೊಟ್ಟಿರುವ ನುಡಿಯ ಹಲವು ವಯ್ದಿಶ್ಯಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತವೆ. ಬೇರೆ ಬೇರೆ ಬದಲಾವಣೆಗಳ ಮೂಲಕ ಅವು ಕನ್ನಡದವೇ ಎಂದೆನಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಾಗಾಗಿ, ಇಂತಹ ಪದಗಳ ಒಳರಚನೆಯನ್ನು ಬೇರೆಯೇ ಕೆಲವು ನಿಯಮಗಳ ಮೂಲಕ ವರಿಸಬೇಕಾಗುತ್ತದೆ. ಸಂಸ್ಕೃತದಿಂದ ಎರವಲಾಗಿ ಬಂದಿರುವ ಇಂತಹ ಹಲವು ಪದಗಳು ಕನ್ನಡದಲ್ಲಿ ಬಳಕೆಯಲ್ಲಿದ್ದು, ಅವುಗಳ ಒಳರಚನೆಯೆಂತಹದು ಎಂಬು ದನ್ನು ಎಂಟನೇ ಅದ್ಯಾಯದಲ್ಲಿ ವಿವರಿಸಲಾಗಿದೆ.

ಪುಸ್ತಕದ ಕೊನೆಯಲ್ಲಿ ಬರುವ ಒಂಬತ್ತನೆಯ ಅದ್ಯಾಯದಲ್ಲಿ ಕನ್ನಡಕ್ಕೆ ಅದರದೇ ಆದ ಸೊಲ್ಲರಿಮೆಯ ಪರಂಪರೆಯೊಂದನ್ನು ತಯಾರಿಸಿಕೊಡುವಲ್ಲಿ ಈ ಪುಸ್ತಕದ ಪಾತ್ರವೇನು ಎಂಬುದನ್ನು ವಿವರಿಸಲಾಗಿದೆ. ಇದಲ್ಲದೆ, ಈ ಪುಸ್ತಕದ ತಯಾರಿಕೆಯಲ್ಲಿ ಸಹಾಯಕವಾದ ಕೆಲವು ಪುಸ್ತಕಗಳ ಪಟ್ಟಿಯನ್ನೂ ಮತ್ತು ಈ ಪುಸ್ತಕದಲ್ಲಿ ಬರುವ ಕೆಲವು ಮುಕ್ಯ ವಿಷಯಗಳ ಪಟ್ಟಿಯನ್ನೂ ಕೊನೆಯಲ್ಲಿ ಕಾಣಬಹುದು.

೨. ಕನ್ನಡದ ಪದಗುಂಪುಗಳು