Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9
೩.೧ ಹೆಸರಿಸುವುದು ಮತ್ತು ವರ್ಣಿಸುವುದು
ವಾಕ್ಯದ ಮೂಲಕ ಒಂದು ಘಟನೆಯನ್ನು ತಿಳಿಸಬೇಕಾದಲ್ಲಿ, ಇಲ್ಲವೇ ವಿಧಿಸುವುದು, ನಿಷೇಧಿಸುವುದು, ಪ್ರಶ್ನಿಸುವುದು ಮೊದಲಾದ ಇತರ ಮಾತಿನ ಕೆಲಸಗಳಲ್ಲಿ ಅದನ್ನು ತೊಡಗಿಸಬೇಕಾದಲ್ಲಿ, ಅಂತಹ ಘಟನೆಯಲ್ಲಿ ನಿರತ ರಾಗಿರುವ ಇಲ್ಲವೇ ನಿರತರಾಗಲಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾ ದವುಗಳನ್ನು ಅವು ಇಂತಹವೇ ಎಂಬುದಾಗಿ ಗುರುತಿಸಿ ಹೇಳುವ ಅವಶ್ಯಕತೆ ಯಿದೆ. ಹೀಗೆ ಗುರುತಿಸಿ ಹೇಳುವುದಕ್ಕಾಗಿ ನಾವು ನಾಮಪದಗಳನ್ನು ಇಲ್ಲವೇ ನಾಮಪದಗುಚ್ಛಗಳನ್ನು ಬಳಸುತ್ತೇವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ (೧)ನೇ ವಾಕ್ಯವನ್ನು ಗಮನಿಸಬಹುದು.
(೧) ರಾಜು ಅವನ ಹೆಂಡತಿಗೆ ಮೈಸೂರಿನಿಂದ ರೇಷ್ಮೆ ಸೀರೆ ತಂದಿದ್ದಾನೆ.
(೧)ನೇ ವಾಕ್ಯದಲ್ಲಿ ರಾಜು ಮತ್ತು ಅವನ ಹೆಂಡತಿ ಎಂಬ ಎರಡು ವ್ಯಕ್ತಿಗಳನ್ನೂ, ಮೈಸೂರು ಎಂಬ ಒಂದು ಸ್ಥಳವನ್ನೂ, ಮತ್ತು ರೇಷ್ಮೆ ಸೀರೆ ಎಂಬ ಒಂದು ವಸ್ತುವನ್ನೂ ಗುರುತಿಸಿ ಹೇಳಲಾಗಿದೆ. ಇವು ತರು ಎಂಬ ಕ್ರಿಯಾಪದವು ತಿಳಿಸುವ ಘಟನೆಯಲ್ಲಿ ತೊಡಗಿದ್ದ ವ್ಯಕ್ತಿ, ಸ್ಥಳ ಮತ್ತು ವಸ್ತು ಗಳಾಗಿವೆ.
ಈ ರೀತಿ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸಿ ಹೇಳುವ ಕೆಲಸ ವನ್ನು ನಾಮಪದಗಳು ಎರಡು ಮುಖ್ಯವಾದ ವಿಧಾನಗಳ ಮೂಲಕ ನಡೆಸಿ ಕೊಡಬಲ್ಲುವು. ಆ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಹೆಸರಿಸುವುದರ ಮೂಲಕ ಅವನ್ನು ಗುರುತಿಸುವುದು ಒಂದು ವಿಧಾನ, ಮತ್ತು ಅವುಗಳಲ್ಲಿ
ಕಾಣಿಸುವುದ ವಿಶಿಷ್ಟವಾದೊಂದು ಗುಣಧರ್ಮವನ್ನು ವರ್ಣಿಸುವುದರ ಮೂಲಕ ಅವನ್ನು ಗುರುತಿಸುವುದು ಇನ್ನೊಂದು ವಿಧಾನ.
ಮೇಲೆ ಕೊಟ್ಟಿರುವ (೧)ನೇ ವಾಕ್ಯದಲ್ಲಿ ಈ ಎರಡು ರೀತಿಯ ಗುರುತಿಸುವ ವಿಧಾನಗಳನ್ನೂ ಬಳಸಲಾಗಿದೆಯೆಂಬುದನ್ನು ಗಮನಿಸಬಹುದು. ರಾಜು ಮತ್ತು ಮೈಸೂರು ಎಂಬ ಎರಡು ನಾಮಪದಗಳು ಹೆಸರಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿ ಮತ್ತು ಒಂದು ಸ್ಥಳವನ್ನು ಗುರುತಿಸುತ್ತವೆ. ಇದಕ್ಕೆ ಬದಲು, ಅವನ ಹೆಂಡತಿ ಮತ್ತು ರೇಷ್ಮೆ ಸೀರೆ ಎಂಬ ಎರಡು ನಾಮಪದಗುಚ್ಛಗಳು ವರ್ಣಿಸುವ ವಿಧಾನದ ಮೂಲಕ ಇನ್ನೊಬ್ಬ ವ್ಯಕ್ತಿಯನ್ನು ಮತ್ತು ಇನ್ನೊಂದು ವಸ್ತುವನ್ನು ಗುರುತಿಸುತ್ತವೆ.
ಹೆಸರಿಸುವ ನಾಮಪದಗಳು ವ್ಯಕ್ತಿ, ವಸ್ತು ಮೊದಲಾದವುಗಳ ಅಂಕಿತ ನಾಮಗಳಿರಬಹುದು ಇಲ್ಲವೇ ರೂಢನಾಮಗಳಿರಬಹುದು (೩.೫.೧ ನೋಡಿ). ಮೇಲೆ ಕೊಟ್ಟಿರುವ (೧)ನೇ ವಾಕ್ಯದಲ್ಲಿ ಬಂದಿರುವ ಹೆಸರಿಸುವ ನಾಮಪದ ಗಳೆರಡೂ ಅಂಕಿತ ನಾಮಗಳೇ. ಆದರೆ ಈ ಕೆಲಸವನ್ನು ರೂಢನಾಮಗಳೂ ನಡೆಸಬಲ್ಲುವೆಂಬುದನ್ನು ಕೆಳಗೆ ಕೊಟ್ಟಿರುವ (೨)ನೇ ವಾಕ್ಯದಿಂದ ತಿಳಿಯ ಬಹುದು.
(೨) ಅಗಸ ಕತ್ತೆಗೆ ಹೊಡೆಯುತ್ತಿದ್ದಾನೆ.
ಈ (೨)ನೇ ವಾಕ್ಯದಲ್ಲಿ ಅಗಸ ಮತ್ತು ಕತ್ತೆ ಎಂಬ ಎರಡು ರೂಢನಾಮಗಳು ಹೆಸರಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿ ಮತ್ತು ಒಂದು ಪ್ರಾಣಿಯನ್ನು ಗುರುತಿಸುತ್ತವೆ.
ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿರುವ ಗುಣಧರ್ಮವೊಂದನ್ನು ವರ್ಣಿಸು ವುದರ ಮೂಲಕ ಅವನ್ನು ಗುರುತಿಸುವಂತಹ ನಾಮಪದಗುಚ್ಛಗಳಲ್ಲೂ ಹೆಸರಿಸುವ ನಾಮಪದಗಳಿರಬಲ್ಲುವು. ಆದರೆ ಇವು ಬೇರೆ ಹೆಸರಿಸುವ ನಾಮ ಪದಗಳೊಂದಿಗೆ, ಇಲ್ಲವೇ ಗುಣಪದ, ಸಂಖ್ಯಾಪದ, ಸರ್ವನಾಮ ಮೊದಲಾದವು ಗಳೊಂದಿಗೆ ಸೇರಿಕೊಂಡು ಈ ರೀತಿ ವರ್ಣಿಸುವ ಕೆಲಸವನ್ನು ನಡೆಸುತ್ತವೆ.
ಉದಾಹರಣೆಗಾಗಿ, ರಾಜುವಿನ ಅಣ್ಣ ಎಂಬ ನಾಮಪದಗುಚ್ಛದಲ್ಲಿ ಅಣ್ಣ ಎಂಬ ಹೆಸರಿಸುವ ನಾಮಪದ(ರೂಢನಾಮ)ವು ರಾಜು ಎಂಬ ಇನ್ನೊಂದು ಹೆಸರಿಸುವ ನಾಮಪದ(ಅಂಕಿತನಾಮ)ದೊಂದಿಗೆ ಸೇರಿ, ವರ್ಣಿಸುವ ಕೆಲಸವನ್ನು ನಡೆಸುತ್ತದೆ. ಕೆಂಪು ಗುಲಾಬಿ ಎಂಬ ನಾಮಪದಗುಚ್ಛದಲ್ಲಿ ಗುಲಾಬಿ ಎಂಬ ಹೆಸರಿಸುವ ನಾಮಪದವು ಕೆಂಪು ಎಂಬ ಗುಣಪದದೊಂದಿಗೆ ಸೇರಿ ಈ ಕೆಲಸವನ್ನು ನಡೆಸುತ್ತದೆ.
ವರ್ಣಿಸುವ ಕೆಲಸವನ್ನು ಒಂದಕ್ಕಿಂತ ಜಾಸ್ತಿ ಪದಗಳಿರುವ ‘ಪದಗುಚ್ಛ’ವೇ ನಡೆಸಿಕೊಡಬೇಕೆಂಬ ನಿಯಮವೇನೂ ಇಲ್ಲ. ಒಂದೇ ಒಂದು ನಾಮಪದದ
ಬಳಕೆಯಾಗಿರುವಾಗಲೂ ಅದು ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಹೆಸರಿಸುವ ಬದಲು ವರ್ಣಿಸುತ್ತಿರಲು ಸಾಧ್ಯವಿದೆ. ಆದರೆ ಇಂತಹ ಬಳಕೆಯಲ್ಲಿ ಬರುವ ನಾಮಪದಗಳು ಒಬ್ಬ ವಿಶಿಷ್ಟವಾದ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುವುದಿಲ್ಲ. ಉದಾಹರಣೆಗಾಗಿ ಕೆಳಗೆ ಕೊಟ್ಟಿರುವ (೩)ನೇ ವಾಕ್ಯವನ್ನು ಗಮನಿಸಬಹುದು.
- (೩) ಆಕೆಗೆ ಹೆಪ್ಪು ಹಾಕಲು ಮಜ್ಜಿಗೆ ಬೇಕಾಗಿದೆ.
- ಈ (೩)ನೇ ವಾಕ್ಯದಲ್ಲಿ ಬಂದಿರುವ ಮಜ್ಜಿಗೆ ಎಂಬ ನಾಮಪದ ಯಾವುದೇ
- ಒಂದು ವಿಶಿಷ್ಟವಾದ ವಸ್ತುವನ್ನು ಗುರುತಿಸುತ್ತಿಲ್ಲ. ಅಂತಹ ವಸ್ತುವಿನ ವರ್ಣನೆ
- ಯನ್ನು ಮಾತ್ರ ಅದು ಕೊಡುತ್ತಿದೆ. ಆ ವರ್ಣನೆಗೆ ಹೊಂದುವಂತಹ ವಸ್ತು
- ವೊಂದನ್ನು ಗುರುತಿಸುವ ಕೆಲಸ ಮಾತನಾಡುವವನದಲ್ಲ, ಬೇರೊಬ್ಬನದು -
- ಎಂದರೆ ಮಜ್ಜಿಗೆಯನ್ನು ಕೊಡಬೇಕಾಗಿರುವ ವ್ಯಕ್ತಿಯದು - ಎಂಬುದನ್ನಿಲ್ಲಿ
- ಗಮನಿಸಬಹುದು.
- ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳನ್ನು
- ಗುರುತಿಸುವ ಕೆಲಸವನ್ನು ನಾಮಪದಗುಚ್ಛಗಳು ಮಾತ್ರವಲ್ಲದೆ ಕ್ರಿಯಾಪದ
- ಮತ್ತು ಗುಣಪದಗಳೂ ನಡೆಸಬಲ್ಲುವು. ಆದರೆ ಇದಕ್ಕಾಗಿ ಕ್ರಿಯಾಪದಗಳಿಗೆ
- ಮತ್ತು ಗುಣಪದಗಳಿಗೆ ಕೆಲವು ವಿಶಿಷ್ಟವಾದ ಪ್ರತ್ಯಯಗಳನ್ನು ಸೇರಿಸಿಕೊಳ್ಳುವ
- ಅವಶ್ಯಕತೆಯಿದೆ. ಉದಾಹರಣೆಗಾಗಿ ಕ್ರಿಯಾಪದಗಳಿಗೆ -ಇಕೆ ಎಂಬ ಪ್ರತ್ಯಯ
- ವನ್ನು ಸೇರಿಸುವುದರ ಮೂಲಕ ದೊರೆಯುವ ಕ್ರಿಯಾರೂಪಗಳು ಅಂತಹ ಕ್ರಿಯಾ
- ಪದಗಳು ನಿರ್ದೇಶಿಸುವ ಘಟನೆಗಳನ್ನು ವರ್ಣಿಸುವ ವಿಧಾನದ ಮೂಲಕ
- ಗುರುತಿಸಬಲ್ಲುವು.
- (೪) ಅವನ ಬರೆಯುವಿಕೆ ಇನ್ನೂ ಮುಗಿದಿಲ್ಲ.
- (೫) ಅಜ್ಜನ ಬೈಯುವಿಕೆಗೆ ಯಾರೂ ಸೊಪ್ಪು ಹಾಕುವುದಿಲ್ಲ.
- ಇದೇ ರೀತಿಯಲ್ಲಿ ಗುಣಪದಗಳಿಗೆ -ತನ ಎಂಬ ಪ್ರತ್ಯಯವನ್ನು ಸೇರಿಸು
- ವುದರ ಮೂಲಕ ದೊರೆಯುವ ಗುಣಪದರೂಪಗಳು ಆ ಗುಣಪದಗಳು
- ಸೂಚಿಸುವ ಗುಣಧರ್ಮಗಳನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸ
- ಬಲ್ಲುವು.
- (೬) ಅವನ ದೊಡ್ಡನತವನ್ನು ಎಲ್ಲರೂ ಬಲ್ಲರು.
- (೭) ಅವನ ಒಳ್ಳೆತನವನ್ನು ಕೆಲವರು ತಮ್ಮ ಲಾಭಕ್ಕೆ ಬಳಸಿಕೊಂಡಿ
- ದ್ದಾರೆ.
ಕನ್ನಡ ವಾಕ್ಯಗಳಲ್ಲಿ ಬರುವ ನಾಮಪದಗಳ ಒಳರಚನೆಯಂತಹದು ಎಂಬು ದನ್ನು ತಿಳಿಯುವಲ್ಲಿ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವಂತಹ ನಾಮಪದಗಳನ್ನು ಮಾತ್ರವೇ ಗಮನಕ್ಕೆ ತೆಗೆದುಕೊಂಡರೆ ಸಾಕು. ಯಾಕೆಂದರೆ, ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುವವುಗಳೆಲ್ಲ ನಾಮಪದಗುಚ್ಛಗಳು (ಇಲ್ಲವೇ ಕ್ರಿಯಾಪದ ರೂಪಗಳು ಅಥವಾ ಗುಣಪದ ರೂಪಗಳು). ಬರಿಯ ನಾಮಪದಗಳು ಆ ರೀತಿ ಬಳಕೆಯಾಗುವುದಿಲ್ಲ.
ವರ್ಣಿಸುವ ನಾಮಪದಗುಚ್ಛಗಳ ಒಳರಚನೆ ವಾಕ್ಯರಚನೆಯ ತತ್ವಗಳ ನ್ನನುಸರಿಸಿದೆಯಲ್ಲದೆ ಪದರಚನೆಯ ತತ್ವಗಳನ್ನನುಸರಿಸಿಲ್ಲವಾದ ಕಾರಣ ಪದ ರಚನೆಯನ್ನು ವಿಶ್ಲೇಷಿಸುವ ಈ ಪುಸ್ತಕದಲ್ಲಿ ಅವನ್ನು ಪರಿಶೀಲಿಸುವ ಅವಶ್ಯಕತೆ ಯಿಲ್ಲ.
ಆದರೆ, ಕನ್ನಡ ವೈಯಾಕರಣಿಗಳಲ್ಲಿ ಹೆಚ್ಚಿನವರೂ ಈ ವ್ಯತ್ಯಾಸವನ್ನು ಸರಿಯಾಗಿ ಗಮನಿಸಿದಂತಿಲ್ಲ. ಉದಾಹರಣೆಗಾಗಿ, ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವೂ ಮಾವಿನ ಮರ, ನೆರೆಮನೆ ಸುದ್ದಿ, ಕೆಟ್ಟ ಬುದ್ಧಿ, ಬಿಳಿಯ ಬಟ್ಟೆ ಮೊದಲಾದುವನ್ನು ಸಮಾಸಕ್ಕೆ ಉದಾಹರಣೆಗಳನ್ನಾಗಿ ಕೊಟ್ಟಿರುವುದನ್ನು ಕಾಣ ಬಹುದು. ನಿಜಕ್ಕೂ ಇವು ವರ್ಣಿಸುವ ವಿಧಾನದ ಮೂಲಕ ವಸ್ತು, ವಿಷಯ ಮೊದಲಾದನ್ನು ಗುರುತಿಸುತ್ತವೆಯಲ್ಲದೆ ಹೆಸರಿಸುವ ವಿಧಾನದ ಮೂಲಕ ಗುರುತಿಸುತ್ತಿಲ್ಲ. ಎಂದರೆ, ಇವೆಲ್ಲ ನಾಮಪದಗುಚ್ಛಗಳಲ್ಲದೆ ನಾಮಪದಗಳಲ್ಲ. ಹಾಗಾಗಿ, ಇವನ್ನು ‘ಸಮಾಸ’ ಎಂಬ ಪದರಚನೆಯ ವಿಧಾನದಿಂದ ಸಿದ್ಧವಾದ ನಾಮಪದಗಳೆಂದು ಹೇಳುವುದು ತಪ್ಪು.
ಕನ್ನಡದ ವೈಯಾಕರಣಿಗಳು ಈ ರೀತಿ ನಾಮಪದ ಮತ್ತು ನಾಮಪದ ಗುಚ್ಛ ಇವೆರಡರ ನಡುವಿರುವ ವ್ಯತ್ಯಾಸವನ್ನು ಗಮನಿಸದಿರಲು ಒಂದು ಮುಖ್ಯ ವಾದ ಕಾರಣವಿದೆ. ಅವರು ಕನ್ನಡದ ಸಮಾಸವನ್ನು ನೇರವಾಗಿ ಕನ್ನಡದಲ್ಲಿ ಬರುವ ಪದಗಳ ಪರಿಶೀಲನೆಯ ಆಧಾರದ ಮೇಲೆ ವರ್ಣಿಸುವ ಬದಲು, ಸಂಸ್ಕೃತ ಸಮಾಸಗಳನ್ನು ಮೊದಲು ವರ್ಣಿಸಿ, ಅನಂತರ ಅವಕ್ಕೆ ಸರಿಹೊಂದು ವಂತೆ ಕನ್ನಡದಲ್ಲಿ ಉದಾಹರಣೆಗಳನ್ನು ಕಂಡುಹಿಡಿಯುವ ಇಲ್ಲವೇ ತಯಾರಿಸಿ ಕೊಳ್ಳುವ ಪ್ರಯತ್ನವನ್ನು ಮಾಡಿರುತ್ತಾರೆ. ಈ ಪದ್ಧತಿ ಕೇಶಿರಾಜನ ಕಾಲ ದಿಂದಲೂ ನಡೆದು ಬಂದಿದೆಯಾದ ಕಾರಣ, ಕನ್ನಡ ವ್ಯಾಕರಣಗಳ ಮಟ್ಟಿಗೆ ಸಮಾಸವೆಂಬುದು ಒಂದು ಅರ್ಥವಾಗದ ಕಗ್ಗಂಟಾಗಿದೆ.
ಕನ್ನಡದಲ್ಲಿ ಬಳಕೆಯಲ್ಲಿರುವ ನಾಮಪದಗಳು ಎಂತಹವು, ಅವುಗಳ ಒಳರಚನೆಗೂ ಮತ್ತು ಅವುಗಳ ಬಳಕೆಗೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು, ‘ಸಮಾಸ’ ಎಂಬ ವ್ಯಾಕರಣ ವಿಧಾನಕ್ಕೆ ಈ ನಾಮಪದಗಳ ರಚನೆಯಲ್ಲಿ ಯಾವ ಸ್ಥಾನವಿದೆ ಎಂಬುದನ್ನು ಪರಿಶೀಲಿಸಿ
ದಾಗ ಮಾತ್ರ ಕನ್ನಡದ ಸಮಾಸವೆಂತಹದು ಎಂಬ ವಿಷಯ ಸ್ಪಷ್ಟವಾದೀತು. ಇಂತಹ ಪರಿಶೀಲನೆಗೆ ಅನುಕೂಲವಾಗುವಂತೆ ಮೊದಲು ಹೆಸರಿಸುವ ಮತ್ತು ವರ್ಣಿಸುವ ವಿಧಾನಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ. ಈ ಎರಡು ರೀತಿಯ ವಿಧಾನಗಳನ್ನು ಬಳಸುವ ನಾಮಪದ ಮತ್ತು ನಾಮಪದಗುಚ್ಛಗಳನ್ನು ಬೇರ್ಪಡಿಸುವ ಬಗೆ ಹೇಗೆ ಎಂಬು ದನ್ನು ಅನಂತರ ತಿಳಿದುಕೊಳ್ಳಬಹುದು.
೩.೨ ಜೋಡುಪದಗಳು ಮತ್ತು ನಾಮಪದಗುಚ್ಛಗಳು
ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನಗಳ ನಡುವಿನ ಮುಖ್ಯ ವ್ಯತ್ಯಾಸವೆಂತಹದು ಎಂಬುದನ್ನು ಹೆಸರಿಸುವ ವಿಧಾನವನ್ನು ಬಳಸುವ ‘ಜೋಡುಪದ’ಗಳಿಗೂ (ಎಂದರೆ ಎರಡು ಅಥವಾ ಜಾಸ್ತಿ ಪದಗಳನ್ನು ‘ಸಮಾಸ’ ವೆಂಬ ವಿಧಾನದ ಮೂಲಕ ಜೋಡಿಸುವುದರ ಮೂಲಕ ತಯಾರಾದ ಪದ ಗಳಿಗೂ) ಮತ್ತು ನಾಮಪದಗುಚ್ಛಗಳಿಗೂ ನಡುವಿರುವ ವ್ಯತ್ಯಾಸವೆಂತಹದು ಎಂಬುದನ್ನು ಪರಿಶೀಲಿಸುವುದರ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಕರಿಹಲಗೆ ಎಂಬ ಜೋಡುಪದದೊಂದಿಗೆ ಬಿಳಿಸೀರೆ ಎಂಬ ನಾಮಪದಗುಚ್ಛವನ್ನು ಹೋಲಿಸಿ ನೋಡಬಹುದು.
ಇವೆರಡರ ನಡುವೆ ಬಳಕೆಯಲ್ಲಿ ಬಹಳ ವ್ಯತ್ಯಾಸವಿದೆಯೆಂಬುದನ್ನು ಗಮನಿಸಬೇಕು. ಬಿಳಿ ಸೀರೆ ಎಂಬುದರ ಮೂಲಕ ಬೆಳ್ಳಗಿರುವ ಯಾವುದೇ ಸೀರೆಯನ್ನು ಬೇಕಿದ್ದರೂ ಗುರುತಿಸಿ ಹೇಳಲು ಸಾಧ್ಯವಿದೆ. ಆದರೆ ಈ ಸೀರೆ ಬಿಳಿ ಬಣ್ಣದ್ದೇ ಆಗಿರುವುದು ಅವಶ್ಯ. ಕೆಂಪು, ಕಪ್ಪು, ನೀಲಿ, ಹಳದಿ ಮೊದಲಾದ ಬಣ್ಣಗಳಲ್ಲಿರುವ ಸೀರೆಗಳನ್ನು ಈ ಪದಗುಚ್ಛದ ಮೂಲಕ ಗುರುತಿಸಿ ಹೇಳಲು ಸಾಧ್ಯವಾಗದು.
ಇದಲ್ಲದೆ ಬಿಳಿಸೀರೆ ಎಂಬುದು ಗುರುತಿಸುವ ವಸ್ತು ಒಂದು ಸೀರೆಯೇ ಆಗಿರುವುದೂ ಅವಶ್ಯ. ಬಿಳಿ ಬಣ್ಣದಲ್ಲಿರುವ ಬೇರೆ ವಸ್ತುಗಳನ್ನು (ಉದಾ: ಪಂಚೆ, ಟೋಪಿ, ಕಾಗದ ಮೊದಲಾದುವನ್ನು) ಬಿಳಿಸೀರೆ ಎಂಬ ಈ ಪದಗುಚ್ಛದ ಮೂಲಕ ಗುರುತಿಸಿ ಹೇಳಲು ಸಾಧ್ಯವಾಗದು. ಬಿಳಿಸೀರೆ ಎಂಬುದು ಒಂದು ವಿಶಿಷ್ಟವಾದ ಗುಣಧರ್ಮವನ್ನು ಪಡೆದಿರುವ ವಸ್ತುವನ್ನು (ಬಿಳಿಯಾಗಿರುವ ಸೀರೆಯನ್ನು) ವರ್ಣಿಸುತ್ತಿರುವುದೇ ಇದಕ್ಕೆ ಕಾರಣ.
ಕರಿಹಲಗೆ ಎಂಬ ಜೋಡುಪದದ ಬಳಕೆ ಇದರಿಂದ ತೀರ ಭಿನ್ನವಾದುದು. ಅದು ಶಾಲೆಯಲ್ಲಿ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಕಾಣಿಸುವಂತೆ ದೊಡ್ಡ ಅಕ್ಷರಗಳಲ್ಲಿ ಬರೆಯಲು ಬಳಸುವ ಒಂದು ಸಾಧನವನ್ನು ಹೆಸರಿಸುತ್ತದೆ. ಈ ಸಾಧನ ಕಪ್ಪು ಬಣ್ಣದ್ದೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಹಸುರು, ನೀಲಿ ಮೊದಲಾದ ಇತರ ಬಣ್ಣದವೂ ಆಗಿರಬಹುದು. ಎಂದರೆ, ಬಣ್ಣ ತಪ್ಪಿಲ್ಲದಿದ್ದರೂ
ಈ ಸಾಧನವನ್ನು ಕರಿದಲಿಗೆ ಎಂಬ ಜೋಡುಪದದ ಮೂಲಕ ಗುರುತಿಸಿ ಹೇಳಲು ಸಾಧ್ಯವಿದೆ.
ಇದಲ್ಲದೆ, ಈ ಸಾಧನದ ರಚನೆಯಲ್ಲಿ ಹಲಗೆಯ ಉಪಯೋಗವಾಗಿರ ಬೇಕೆಂಬ ನಿಯಮವೂ ಇಲ್ಲ. ಅದು ರಟ್ಟಿನದಿರಬಹುದು, ಇಲ್ಲವೇ ಪ್ಲಾಸ್ಟಿಕ್‌ನ ದಿರಬಹುದು. ಗೋಡೆಯ ಒಂದು ಭಾಗಕ್ಕೆ ಬಣ್ಣ ಹಚ್ಚಿ, ಸೀಮೆ ಸುಣ್ಣದಲ್ಲಿ (ಇಲ್ಲವೇ ಇತರ ಬರೆಯುವ ಸಾಧನದಲ್ಲಿ) ಬರೆದುದು ಕಾಣಿಸುವಂತೆ ಮಾಡ ಲಾಗಿದೆಯಾದರೂ ಅದನ್ನು ಕರಿಹಲಗೆ ಎಂಬ ಜೋಡುಪದದ ಸಹಾಯದಿಂದ ಗುರುತಿಸಿ ಹೇಳಲು ಸಾಧ್ಯವಿದೆ.
ಇಂತಹ ಬರೆಯುವ ಸಾಧನವೊಂದನ್ನು ಬಿಟ್ಟು ಬೇರೆ ವಸ್ತುಗಳು ಕಪ್ಪು ಬಣ್ಣದವಾಗಿದ್ದು, ಹಲಗೆಯಿಂದ ರಚಿತವಾಗಿವೆಯಾದರೂ ಅವನ್ನು ಕರಿಹಲಗೆ ಎಂಬ ಈ ಜೋಡುಪದದ ಮೂಲಕ ಗುರುತಿಸಲು ಸಾಧ್ಯವಾಗದು. ಅಂತಹ ವಸ್ತುಗಳನ್ನು ಗುರುತಿಸಲು ಕಪ್ಪುಹಲಗೆ ಎಂಬ ಬೇರೆಯೇ ಒಂದು ನಾಮಪದ ಗುಚ್ಛವನ್ನು ಬಳಸಬೇಕಾದೀತು.
ಕರಿಹಲಗೆ ಎಂಬ ಪದ ಒಂದು ವಿಶಿಷ್ಟವಾದ ವಸ್ತುವನ್ನು ಹೆಸರಿಸುತ್ತಿದ್ದು, ಆ ಪದಕ್ಕೂ ಮತ್ತು ಅದು ಹೆಸರಿಸುವ ವಸ್ತುವಿಗೂ ನಡುವೆ ರೂಢಿಮೂಲವಾದ ಒಂದು ಸಂಬಂಧವೇರ್ಪಟ್ಟಿದೆಯಲ್ಲದೆ ಅದು ಆ ವಸ್ತುವನ್ನು ವರ್ಣಿಸುತ್ತಿಲ್ಲ ಎಂಬುದೇ ಆ ಜೋಡುಪದದ ಅಂಗಗಳಾಗಿರುವ ಕರಿ ಮತ್ತು ಹಲಗೆ ಎಂಬ ಪದಗಳಿಗೂ ಮತ್ತು ಅದು ಹೆಸರಿಸುವ ವಸ್ತುವಿಗೂ ನಡುವೆ ನೇರವಾದ ಸಂಬಂಧವಿಲ್ಲ ಎಂಬುದಕ್ಕೆ ಮುಖ್ಯ ಕಾರಣ.
ಹೆಸರಿಸುವ ವಿಧಾನವನ್ನು ಬಳಸುವ ಜೋಡುಪದಕ್ಕೂ ಮತ್ತು ವರ್ಣಿಸುವ ವಿಧಾನವನ್ನು ಬಳಸುವ ನಾಮಪದಗುಚ್ಛಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಇನ್ನೊಂದು ಉದಾಹರಣೆಗೆ ಮೂಲಕ ಇನ್ನಷ್ಟು ಸ್ಪಷ್ಟವಾಗುವಂತೆ ಮಾಡ ಬಹುದು. ಚಿಕ್ಕಮ್ಮ ಎಂಬುದು ಒಂದು ಜೋಡುಪದ. ಅದು ಹೆಸರಿಸುವ ವಿಧಾನದ ಮೂಲಕ ಒಂದು ವಿಶಿಷ್ಟವಾದ ಸಂಬಂಧವನ್ನು (ಮತ್ತು ಆ ಸಂಬಂಧದಲ್ಲಿರುವ ವ್ಯಕ್ತಿಯನ್ನು) ಗುರುತಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಿಕ್ಕ ಹುಡುಗಿ ಎಂಬುದು ಒಂದು ನಾಮಪದಗುಚ್ಛ. ಅದು ವರ್ಣಿಸುವ ವಿಧಾನದ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ.
ಚಿಕ್ಕಮ್ಮ ಎಂಬ ಜೋಡುಪದದ ಅಂಗಗಳಾಗಿರುವ ಚಿಕ್ಕ ಮತ್ತು ಅಮ್ಮ ಎಂಬ ಎರಡು ಪದಗಳು ಅದು ಗುರುತಿಸುವ ಸಂಬಂಧ ಎಂತಹದು ಎಂಬುದನ್ನು ಸೂಚಿಸುತ್ತವೆಯೇನೋ ನಿಜ; ಆದರೆ, ಚಿಕ್ಕಮ್ಮ ಎಂಬ ಪದದ ಅರ್ಥವನ್ನು ನೇರವಾಗಿ ಈ ଅଙ୍ଗಗಳ ಅರ್ಥದಿಂದ ಸಾಧಿಸಲು ಸಾಧ್ಯವಾಗದು. ಯಾಕೆಂದರೆ, ಒಬ್ಬ ವ್ಯಕ್ತಿಯ ಚಿಕ್ಕಮ್ಮ ವಯಸ್ಸಿನಲ್ಲಿ ಆತನ ತಾಯಿಗಿಂತ ದೊಡ್ಡವಳಾಗಿರಲು ಸಾಧ್ಯವಿದೆ. (ಆಕೆ ಚಿಕ್ಕಪ್ಪನ ಮಡದಿಯಾಗಿದ್ದರೆ ಸಾಕು). ಅಷ್ಟೇ ಅಲ್ಲ, ಒಬ್ಬ
ವ್ಯಕ್ತಿಯ ಚಿಕ್ಕಮ್ಮ ಆ ವ್ಯಕ್ತಿಗಿಂತ ಚಿಕ್ಕವಳಾಗಿಯೂ ಇರಲು ಸಾಧ್ಯವಿದೆ. (ಆತನ ಅಮ್ಮ ಹೀಗಿರಲು ಸಾಧ್ಯವಿಲ್ಲ ತಾನೇ!).
ಇದಲ್ಲದೆ, ಚಿಕ್ಕ ಎಂಬ ಪದಕ್ಕಿರುವ ಇತರ ಅರ್ಥಗಳೂ ಈ ಜೋಡು ಪದದ ಅರ್ಥವನ್ನು ಸಾಧಿಸುವಲ್ಲಿ ಸಹಾಯಕವಾಗಲಾರವು. ಉದಾಹರಣೆಗಾಗಿ, ಒಬ್ಬ ವ್ಯಕ್ತಿಯ ಚಿಕ್ಕಮ್ಮ ಆತನ ಅಮ್ಮನಿಗಿಂತ ಗಾತ್ರದಲ್ಲಿ ಚಿಕ್ಕವಳಾಗಿರ ಬೇಕೆಂದೇನಿಲ್ಲ.
ಚಿಕ್ಕಮ್ಮ ಎಂಬ ಪದ ಒಂದು ವಿಶಿಷ್ಟವಾದ ಸಂಬಂಧವನ್ನು ಹೆಸರಿಸುತ್ತಿದ್ದು, ಅದನ್ನು ಆ ಸಂಬಂಧದೊಂದಿಗೆ ಜೋಡಿಸುವುದು ಬರಿಯ ರೂಢಿಯಲ್ಲದೆ ಬೇರೇ ನಲ್ಲ ಎಂಬುದೇ ಅದರ ಅರ್ಥದಲ್ಲಿ ಕಾಣಿಸುವ ಈ ವೈಶಿಷ್ಟ್ಯಗಳಿಗೆ ಕಾರಣ.
ಇದಕ್ಕೆ ವ್ಯತಿರಿಕ್ತವಾಗಿ, ಚಿಕ್ಕ ಹುಡುಗಿ ಎಂಬ ನಾಮಪದಗುಚ್ಛದ ಅರ್ಥವನ್ನು ನೇರವಾಗಿ ಅದರ ಅಂಗಗಳಾಗಿ ಬಂದಿರುವ ಚಿಕ್ಕ ಮತ್ತು ಹುಡುಗಿ ಎಂಬ ಪದಗಳ ಸಹಾಯದಿಂದ ಪಡೆಯಲು ಸಾಧ್ಯವಿದೆ. ಈ ಎರಡು ಪದಗಳು ಒಟ್ಟಾಗಿ ಕೊಡುವ ಅರ್ಥಕ್ಕೆ ವ್ಯತಿರಿಕ್ತವಾಗುವಂತಹ ಅರ್ಥ ಈ ನಾಮಪದ ಗುಚ್ಛಕ್ಕೆ ಬರಲಾರದು. ಚಿಕ್ಕ ಹುಡುಗಿ ಎಂಬುದು ಒಂದು ವಿಶಿಷ್ಟವಾದ ಗುಣ ಧರ್ಮವನ್ನು ಸೂಚಿಸುತ್ತಿದ್ದು, ಅದು ಆ ಗುಣಧರ್ಮವಿರುವ ವ್ಯಕ್ತಿಯನ್ನು ವರ್ಣಿಸುವ ವಿಧಾನದ ಮೂಲಕ ಗುರುತಿಸುತ್ತಿರುವುದೇ ಇದಕ್ಕೆ ಕಾರಣ.
ಜೋಡುಪದಗಳು ಮಾತ್ರವಲ್ಲದೆ, ತೆರಿಗೆ, ಕಟ್ಟಡ, ಉಡುಪು, ಮೆಟ್ಟಲು ಮೊದಲಾದ ಪ್ರತ್ಯಯವಿರುವ ನಾಮಪದಗಳೂ ಇದೇ ರೀತಿಯಲ್ಲಿ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಅವುಗಳ ಅರ್ಥವನ್ನು ನೇರವಾಗಿ ಅವುಗಳ ಅಂಗಗಳಾಗಿರುವ ಪದ ಮತ್ತು ಪ್ರತ್ಯಯಗಳ ಸಹಾಯದಿಂದ ಸಾಧಿಸಲು ಸಾಧ್ಯವಾಗದು. ಅವಕ್ಕೂ ಅವುಗಳ ಅರ್ಥಕ್ಕೂ ನಡುವಿರುವ ಸಂಬಂಧ ರೂಢಿಯಿಂದ ಸಿದ್ದವಾದುದೆಂಬುದೇ ಇದಕ್ಕೆ ಕಾರಣ.
ಇದೇ ರೀತಿಯಲ್ಲಿ ಯಾವ ಒಳರಚನೆಯೂ ಇಲ್ಲದ ಮರ, ಆನೆ, ಗಿಡ, ಗಾಣ ಮೊದಲಾದ ನಾಮಪದಗಳೂ ಹೆಸರಿಸುವ ವಿಧಾನದ ಮೂಲಕವೇ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಗುರುತಿಸುತ್ತವೆ. ಅವಕ್ಕೆ ಅವು ಕೊಡುವ ಅರ್ಥ ದೊಂದಿಗೆ ರೂಢಿಯಿಂದ ದೊರೆತ ಸಂಬಂಧವನ್ನು ಮಾತ್ರವೇ ಕಲ್ಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಇಲ್ಲಿ ಗಮನಿಸಬಹುದು.
ಉದಾಹರಣೆಗಾಗಿ, ಮರ ಎಂಬ ನಾಮಪದಕ್ಕೆ ಅರ್ಥವನ್ನು ಕೊಡಬಲ್ಲ ಒಳರಚನೆ ಆ ಪದದಲ್ಲಿಲ್ಲ. ಮಕಾರ, ಅಕಾರ, ರಕಾರ ಮತ್ತು ಅಕಾರಗಳು ಸೇರಿ ಅದು ಸಿದ್ಧವಾಗಿದೆಯಾದರೂ, ಅದರ ರಚನೆಯಲ್ಲಿ ಬರುವ ಈ ವರ್ಣಗಳಿಗೆ ಅಥವಾ ಅವುಗಳ ಬೇರೆ ಬೇರೆ ಸೇರಿಕೆಗಳಿಗೆ (ಮ, ರ, ಮರ್, ಅರ್, ಅರ ಇತ್ಯಾದಿಗಳಿಗೆ) ಮರ ಎಂಬುದರ ಅರ್ಥವನ್ನು ಸಾಧಿಸುವಲ್ಲಿ ಸಹಾಯಕವಾಗು
ವಂತಹ ಸ್ವತಂತ್ರವಾದ ಅಸ್ತಿತ್ವವಿಲ್ಲ. ಹಾಗಾಗಿ ಮರ ಎಂಬ ನಾಮಪದಕ್ಕೆ ಒಳ ರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯವಾಗದು.
ಪ್ರತ್ಯಯವಿರುವ ನಾಮಪದಗಳು ಈ ರೀತಿಯವಲ್ಲವೇನೋ ನಿಜ. ಯಾವು ದಾದರೊಂದು ಪದಕ್ಕೆ ಒಂದೋ ಎರಡೋ ಪ್ರತ್ಯಯಗಳನ್ನು ಸೇರಿಸಿ ಅವನ್ನು ತಯಾರಿಸಲಾಗಿದೆ. ಅವುಗಳ ರಚನೆಯಲ್ಲಿ ಬರುವ ಪದಗಳಿಗೆ ಮತ್ತು ಪ್ರತ್ಯಯ ಗಳಿಗೆ ಅರ್ಥ ಹೇಳಲು ಸಾಧ್ಯವಿದ್ದು, ಈ ಅರ್ಥದ ಆಧಾರದ ಮೇಲೆ ಅವಕ್ಕೂ ಅರ್ಥವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿದೆ. ಆದರೆ ನಿಜಕ್ಕೂ ಅವುಗಳ ಬಳಕೆ ಈ ರೀತಿ ಅವುಗಳ ಒಳರಚನೆಯಿಂದ ದೊರೆಯುವ ಅರ್ಥದ ಮೇಲೆ ಅವಲಂಬಿಸಿರು ವುದಿಲ್ಲ. ಜೋಡುಪದಗಳ ಬಳಕೆಯ ಹಾಗೆ ಅವುಗಳ ಬಳಕೆಯೂ ಅವಕ್ಕೂ ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದುವಕ್ಕೂ ನಡುವೆ ರೂಢಿಯಲ್ಲಿರುವ ಸಂಬಂಧದ ಮೇಲೆ ಮಾತ್ರವೇ ಅವಲಂಬಿಸಿರುತ್ತದೆ.
ಉದಾಹರಣೆಗಾಗಿ ನಡತೆ ಎಂಬ ನಾಮಪದದ ಬಳಕೆಯನ್ನು ಪರಿಶೀಲಿಸ ಬಹುದು. ಈ ನಾಮಪದವನ್ನು ನಡೆ ಎಂಬ ಕ್ರಿಯಾಪದಕ್ಕೆ ತೆಂಬ ಪ್ರತ್ಯಯ ವನ್ನು ಸೇರಿಸಿ ರಚಿಸಲಾಗಿದೆ. ಆದರೆ ಈ ನಾಮಪದಕ್ಕೆ ಅರ್ಥ ಹೇಳಲು ಅದರ ಒಳರಚನೆಯನ್ನು ಮಾತ್ರವೇ ಪರಿಶೀಲಿಸಿದರೆ ಸಾಕಾಗದು. ನಡತೆ ಎಂಬ ಪದ ಒಬ್ಬ ವ್ಯಕ್ತಿ ಹೇಗೆ ನಡೆಯುತ್ತಾನೆ ಎಂಬುದನ್ನು ತಿಳಿಸುವುದಕ್ಕಿಂತಲೂ ಅವನು ಬೇರೆ ಬೇರೆ ರೀತಿಯ ಕೆಲಸಗಳನ್ನು ಹೇಗೆ ಮಾಡುತ್ತಾನೆ, ಬೇರೆ ಬೇರೆ ಸಂದರ್ಭ ಗಳಲ್ಲಿ ಹೇಗೆ ವರ್ತಿಸುತ್ತಾನೆ ಎಂಬುದನ್ನು ತಿಳಿಸುತ್ತದೆ. ಎಂದರೆ, ಈ ಪ್ರತ್ಯಯ ವಿರುವ ನಾಮಪದದ ಅರ್ಥ ಹೇಳಲು ಅದಕ್ಕೆ ಎಂತಹ ಬಳಕೆ ರೂಢಿಯಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.
ಪ್ರತ್ಯಯವಿರುವ ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಹೆಸರಿಸುವ ವಿಧಾನದ ಮೂಲಕ ಗುರುತಿಸುವುವಲ್ಲದೆ ವರ್ಣಿಸುವ ವಿಧಾನದ ಮೂಲಕ ಗುರುತಿಸುವುದಿಲ್ಲ ಎಂಬುದೇ ಅವುಗಳ ಬಳಕೆಯಲ್ಲಿ ಮತ್ತು ಅರ್ಥದಲ್ಲಿ ಕಾಣಿಸುವ ಈ ವೈಶಿಷ್ಟ್ಯಗಳಿಗೆ ಮೂಲ ಕಾರಣ.
೩.೩ ವ್ಯತ್ಯಾಸಗಳು
ಮೇಲೆಯೇ ಸೂಚಿಸಿರುವಂತೆ, ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವು ದಕ್ಕಾಗಿ ಹೆಸರಿಸುವ ವಿಧಾನವನ್ನು ಬಳಸುವ ನಾಮಪದಗಳಿಗೂ ಮತ್ತು ವರ್ಣಿಸುವ ವಿಧಾನವನ್ನು ಬಳಸುವ ನಾಮಪದಗುಚ್ಛಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ. ಅವುಗಳಿಗೆ ಅರ್ಥ ಹೇಳುವ ಕ್ರಮದಲ್ಲಿ, ವಾಕ್ಯಗಳಲ್ಲಿ ಬಳಸ ಬೇಕಾದಾಗ ಅವನ್ನು ಆಯ್ದುಕೊಳ್ಳುವ ಕ್ರಮದಲ್ಲಿ, ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳ ಸ್ವರೂಪದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇವೆಲ್ಲವಕ್ಕೂ ಅವು ಬಳಸುವ ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಈ ಎರಡು
ವಿಧಾನಗಳ ನಡುವಿರುವ ವ್ಯತ್ಯಾಸಗಳೇ ಮೂಲಕಾರಣವೆಂಬುದನ್ನು ಈ ವ್ಯತ್ಯಾಸ ಗಳ ಪರಿಶೀಲನೆಯಿಂದ ತಿಳಿಯಬಹುದು.
೩.೩.೧ ತಯಾರಿಕೆ ಮತ್ತು ಬಳಕೆ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವೆ ಅವುಗಳ ತಯಾರಿಕೆ ಮತ್ತು ಬಳಕೆಗಳಲ್ಲಿ ವ್ಯತ್ಯಾಸವಿದೆ. ಹೆಸರಿಸುವ ನಾಮಪದಗಳಲ್ಲಿ ಪ್ರತಿಯೊಂದನ್ನೂ ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳ ಅವಶ್ಯಕತೆ ತೋರಿಬಂದಾಗ ಭಾಷೆಯನ್ನು ಬಳಸುವ ಒಬ್ಬ ವ್ಯಕ್ತಿ ತಯಾರಿಸಿರು ತಾನೆ ಇಲ್ಲವೇ ಬೇರೆ ಭಾಷೆಯಿಂದ ಎರವಲಾಗಿ ಪಡೆದಿರುತ್ತಾನೆ. ಅನಂತರ ಸಮಾಜದ ಮನ್ನಣೆ ಪಡೆದು, ಇಂತಹ ಪದಗಳೆಲ್ಲವೂ ಒಂದೊಂದಾಗಿ ಭಾಷೆಯಲ್ಲಿ ಬಳಕೆಗೆ ಬಂದಿರುತ್ತವೆ. ಇದಕ್ಕೆ ವಿರುದ್ಧವಾಗಿ, ವರ್ಣಿಸುವ ನಾಮಪದಗುಚ್ಛಗಳು ಅವನ್ನು ಬಳಸಬೇಕಾಗಿರುವ ಪ್ರತಿಯೊಂದು ಸಂದರ್ಭ ದಲ್ಲೂ ವ್ಯಾಕರಣ ನಿಯಮಗಳಿಗನುಸಾರವಾಗಿ ಪುನಃ ಪುನಃ ರಚಿತವಾಗುತ್ತವೆ.
ಉದಾಹರಣೆಗಾಗಿ ಉಗಿಬಂಡಿ ಎಂಬ ಹೆಸರಿಸುವ ನಾಮಪದವನ್ನು ಪರಿ ಶೀಲಿಸಬಹುದು. ಅದು ಹೆಸರಿಸುವ ಸಾಧನ ನಮ್ಮ ಗಮನಕ್ಕೆ ಇಲ್ಲವೇ ಉಪ ಯೋಗಕ್ಕೆ ಬಂದಾಗ ಅದನ್ನು ಹೆಸರಿಸುವುದಕ್ಕಾಗಿ ಯಾರೋ ಒಬ್ಬರು ಆ ಪದವನ್ನು ರಚಿಸಿರಬೇಕು. ಮತ್ತು ಅನಂತರ ಇತರರೂ ಆ ಪದ ಸರಿಯಾದು ದೆಂದು ಅದನ್ನು ಬಳಸತೊಡಗಿದುದರಿಂದ ಅದು ನಮ್ಮ ಭಾಷೆಯಲ್ಲಿ ಬಳಕೆಗೆ ಬಂದಿರಬೇಕು. ಇದಕ್ಕೆ ಬದಲಾಗಿ, ಬಸ್ಸು ಎಂಬ ಪದ ಸೂಚಿಸುವ ಇಂತಹದೇ ಇನ್ನೊಂದು ಸಾಧನವನ್ನು ನಾವು ಬಳಸತೊಡಗಿದಾಗ ಅದನ್ನು ಹೆಸರಿಸಲು ಇಂಗ್ಲಿಷ್ ಭಾಷೆಯಿಂದ ಪದವೊಂದನ್ನು ಎರವಲಾಗಿ ಪಡೆದಿದ್ದು, ಆ ಪದವೇ ರೂಡಿಗೆ ಬಂದಿರಬೇಕು. ಇಂತಹ ಹೆಸರಿಸುವ ನಾಮಪದಗಳೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ತಯಾರಾಗಿ ಇಲ್ಲವೇ ಎರವಲಾಗಿ ಬೇರೆ ಭಾಷೆಗಳಿಂದ ಬಂದು ನಮ್ಮ ಭಾಷೆಯಲ್ಲಿ ರೂಢಿಯಾಗಿರುವ ಪದಗಳು.
ವರ್ಣಿಸುವ ನಾಮಪದಗುಚ್ಛಗಳ ಬಳಕೆ ಈ ರೀತಿಯದಲ್ಲ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸಬೇಕಾದಾಗ, ಅವುಗಳಲ್ಲಿ ಕಾಣಿಸುವ ಇಲ್ಲವೇ ಬೇರೆ ರೀತಿಯಲ್ಲಿ ನಮ್ಮ ಗೋಚರಕ್ಕೆ ಬರುವ ಗುಣಧರ್ಮಗಳ ಲ್ಲೊಂದನ್ನು ಆರಿಸಿ, ಅದರ ಮೂಲಕ ಆ ವ್ಯಕ್ತಿ ಇಲ್ಲವೇ ವಸ್ತುವನ್ನು ವರ್ಣಿಸಿ ಹೇಳಲು ನಾಮಪದಗುಚ್ಛವೊಂದನ್ನು ರಚಿಸಿಕೊಳ್ಳುತ್ತೇವೆ.
ಉದಾಹರಣೆಗಾಗಿ ಮೇಜಿನ ಮೇಲೆ ಮೂರು ನಾಲ್ಕು ಚೆಂಡುಗಳಿದ್ದು ಅವಲ್ಲೊಂದನ್ನು ಗುರುತಿಸಿ ಹೇಳಲು (ಎಂದರೆ ಇತರ ಚೆಂಡುಗಳಿಂದ ಅದನ್ನು ಪ್ರತ್ಯೇಕಿಸಿ ಹೇಳಲು) ಆ ಚೆಂಡಿನಲ್ಲಿ ಕಾಣಿಸುವ ಮತ್ತು ಇತರ ಚೆಂಡುಗಳಲ್ಲಿ ಕಾಣಿಸದಿರುವ ಗುಣಧರ್ಮವೊಂದನ್ನು ಆರಿಸಿಕೊಳ್ಳುತ್ತೇವೆ, ಮತ್ತು ಅದನ್ನು ಸೂಚಿಸುವಂತಹ ಪದಗುಚ್ಛವೊಂದನ್ನು ರಚಿಸಿಕೊಳ್ಳುತ್ತೇವೆ. ಈ ರೀತಿ, ಸಂದರ್ಭ
ಕ್ಕನುಸಾರವಾಗಿ, ಕೆಂಪು ಚೆಂಡು, ದೊಡ್ಡ ಚೆಂಡು, ಒಡೆದ ಚೆಂಡು ಮೊದಲಾದ ಪದಗುಚ್ಛಗಳಲ್ಲೊಂದನ್ನು ರಚಿಸಿ, ಅದು ಆ ಗುಣಧರ್ಮವನ್ನು ವರ್ಣಿಸುವುದರ ಮೂಲಕ ನಾವು ಗುರುತಿಸಬೇಕಾಗಿರುವ ಚೆಂಡನ್ನು ಗುರುತಿಸು ವಂತೆ ಮಾಡುತ್ತೇವೆ.
೩.೩.೨ ಗುಣಧರ್ಮದ ಆಯ್ಕೆ
ಮೇಲೆ ಸೂಚಿಸಿರುವ ವ್ಯತ್ಯಾಸದ ಫಲವೇನೆಂದರೆ, ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭದಲ್ಲಿ ಅವು ಗುರುತಿಸ ಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂದಿಲ್ಲ. ಆದರೆ, ವರ್ಣಿಸುವ ನಾಮಪದ ಗುಚ್ಛಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭಗಳಲ್ಲೆಲ್ಲ ಅವಶ್ಯವಾಗಿಯೂ ಅವು ಗುರುತಿಸಬೇಕಾಗಿರುವ ವಸ್ತುವಿನಲ್ಲಿ ಇರಲೇಬೇಕೆಂಬ ನಿಯಮವಿದೆ. ಹೆಸರಿಸುವ ನಾಮಪದಗಳು ಸೂಚಿಸುವ ಗುಣಧರ್ಮ ಆ ಹೆಸರನ್ನು ಉತ್ಪಾದಿಸುವ ಸಮಯದಲ್ಲಿ ಮಾತ್ರವೇ ಅವು ಗುರುತಿಸುವ ವಸ್ತು ವಿನಲ್ಲಿ ಇದ್ದಿರಲು ಸಾಧ್ಯವಿದೆ.
ಉದಾಹರಣೆಗಾಗಿ, ಹೊಸಮನೆ ಎಂಬ ನಾಮಪದ ಒಂದು ವಠಾರದಲ್ಲಿ ಇರುವ ಒಂದು ಮನೆಗೆ ಆ ವಠಾರದವರು ಕೊಟ್ಟಿರುವ ಮತ್ತು ಅನಂತರ ರೂಢಿಗೆ ಬಂದಿರುವ ಹೆಸರಾಗಿರಲು ಸಾಧ್ಯವಿದೆ. ಆ ಮನೆ ಹಳೆಯದಾದ ಮೇಲೂ ಅದನ್ನು ಅದೇ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ, ಮತ್ತು ಬೇರೆ ಹಲವಾರು ಹೊಸ ಹೊಸ ಮನೆಗಳನ್ನು ಅದರ ಸುತ್ತ ಮುತ್ತ ಕಟ್ಟಲಾಗಿದೆಯಾದರೂ, ಆ ಹಳೆಯದಾಗಿರುವ ಮನೆಯನ್ನೇ ಹೊಸಮನೆಯೆಂಬ ಹೆಸರಿನಿಂದ ಗುರುತಿಸುತ್ತಿರಲು ಸಾಧ್ಯವಿದೆ.
ಮೇಲೆ ಕೊಟ್ಟಿರುವ ಕರಿಹಲಗೆಯೆಂಬ ಪದದ ಬಳಕೆಯೂ ಇದೇ ರೀತಿ ಯದು. ಆ ಪದವನ್ನು ಮೊದಲ ಬಾರಿಗೆ ತಯಾರಿಸಿ, ಬಳಸಿದ ಸಮಯದಲ್ಲಿ ಉಪಾಧ್ಯಾಯರು ಕ್ಲಾಸಿನಲ್ಲಿ ಬರೆಯಲು ಬಳಸುತ್ತಿದ್ದ ಸಾಧನ ಹಲಗೆಗೆ ಕಪ್ಪು ಬಣ್ಣ ಬಳಿಯುವುದರ ಮೂಲಕ ರಚಿತವಾಗಿದ್ದುದಾಗಿರಬೇಕು. ಹಾಗಾಗಿ, ಕರಿಹಲಗೆ ಎಂಬ ಹೆಸರು ಆವತ್ತಿನ ಕಾಲದಲ್ಲಿ ಸರಿಯಾಗಿಯೇ ಆ ಸಾಧನದ ಗುಣಧರ್ಮವೊಂದನ್ನು ಸೂಚಿಸುತ್ತಿತ್ತು. ಆದರೆ, ಅನಂತರ ಬೇರೆ ಬೇರೆ ಬಣ್ಣದ ಮತ್ತು ಬೇರೆ ಬೇರೆ ದ್ರವ್ಯಗಳಿಂದ ಮಾಡಿದ ಸಾಧನಗಳು ಆ ಕಾರ್ಯಕ್ಕಾಗಿ ಬಳಕೆಗೆ ಬಂದಿವೆಯಾದರೂ ಕರಿಹಲಗೆ ಎಂಬ ಆ ಸಾಧನದ ಹೆಸರು ಬದಲಾಗದೆ ಹಾಗೆಯೇ ರೂಢಿಯಲ್ಲಿ ಉಳಿದಿದೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗಳಿಗೂ ನಡುವೆ ಅವು ಸೂಚಿಸಬೇಕಾಗಿರುವ ಗುಣಧರ್ಮವನ್ನು ಆಯ್ದುಕೊಳ್ಳುವ ಕ್ರಮದಲ್ಲಿ ವ್ಯತ್ಯಾಸವಿದೆ. ಹೆಸರುಗಳು ಸೂಚಿಸುವ ಗುಣಧರ್ಮ ಆ ಪದಗಳನ್ನು ತಯಾರಿಸುವ ಸಮಯದಲ್ಲಿ ಆಯ್ಕೆ
ಗೊಳ್ಳುತ್ತದೆ, ಆದರೆ ವರ್ಣನೆಗಳು ಸೂಚಿಸುವ ಗುಣಧರ್ಮ ಅವನ್ನು ಬಳಸುವ ಸಂದರ್ಭಗಳಲ್ಲೆಲ್ಲ ಪ್ರತಿಯೊಂದು ಬಾರಿಯೂ ಪುನಃ ಪುನಃ ಆಯ್ಕೆಗೊಳ ಗಾಗುತ್ತಿರುತ್ತದೆ. ಈ ಕಾರಣದಿಂದಾಗಿ, ಹೆಸರನ್ನು ಬಳಸುವ ಸಂದರ್ಭಗಳಲ್ಲಿ ವರ್ಣನೆಗಳನ್ನು ಬಳಸುವಾಗ ಇರುವ ಹಾಗೆ ಅವು ಸೂಚಿಸುವ ಗುಣಧರ್ಮ ಜನರ ಮನಸ್ಸಿನಲ್ಲಿ ಇರುವುದಿಲ್ಲ.
ಉದಾಹರಣೆಗಾಗಿ, ಕರಿಹಲಗೆ ಎಂಬ ಪದವನ್ನು ಪ್ರಯೋಗಿಸಿದಾಗ, ಒಂದು ವಿಶಿಷ್ಟವಾದ ಸಾಧನ ನಮ್ಮ ಮನಸ್ಸಿಗೆ ಬರುವುದಲ್ಲದೆ, ‘ಕಪ್ಪು ಬಣ್ಣ’ ಇಲ್ಲವೇ ‘ಹಲಗೆಯಿಂದ ರಚಿತವಾದ ಸಾಧನ’ ಎಂಬ ಅಂಶಗಳು ನಮ್ಮ ಮನಸ್ಸಿಗೆ ಬರುವುದಿಲ್ಲ. ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಮಾತ್ರ ಇವು ನಮ್ಮ ಗಮನಕ್ಕೆ ಬಂದು, ಇಲ್ಲವೇ ಯಾರಾದರೂ ಇವನ್ನು ನಮ್ಮ ಗಮನಕ್ಕೆ ತಂದು, ಅಂತಹ ಸಮಯದಲ್ಲಿ ಆ ಹೆಸರಿಗೂ ಮತ್ತು ಅದು ಗುರುತಿಸುವ ವಸ್ತುವಿಗೂ ನಡುವೆ ಗುಣಧರ್ಮದ ಮಟ್ಟಿಗೆ ಅಸಾಂಗತ್ಯವಿದೆಯೆಂಬ ವಿಷಯ ನಮ್ಮ ಗಮನಕ್ಕೆ ಬರುತ್ತದೆ.
ಗುಣಧರ್ಮದ ಆಯ್ಕೆಯಲ್ಲಿ ಹೆಸರುಗಳಿಗೂ ಮತ್ತು ವರ್ಣನೆಗಳಿಗೂ ನಡುವೆ ಇನ್ನೊಂದು ವ್ಯತ್ಯಾಸವಿದೆ. ಒಂದು ವಸ್ತುವನ್ನು ಹೆಸರಿಸುವಾಗ, ಅದರಲ್ಲಿ ಕಾಣಿಸುವ ಹಲವಾರು ಗುಣಧರ್ಮಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಜಿಲಿಜನಕ ಎಂಬುದು ಒಂದು ವಿಶಿಷ್ಟವಾದ ಅನಿಲದ ಹೆಸರು. ಇದು ನೀರಿನ ಒಂದು ಘಟಕವಾಗಿದ್ದು, ಆಮ್ಲಜನಕವೆಂಬ ಇನ್ನೊಂದು ಅನಿಲದೊಡನೆ ಸೇರಿ ನೀರನ್ನುಂಟುಮಾಡುವ ಗುಣಧರ್ಮ ಇದಕ್ಕಿದೆ. ಈ ಗುಣ ಧರ್ಮದ ಆಧಾರದ ಮೇಲೆ ಇದನ್ನು ಜಿಲಿಜನಕ ಎಂಬ ಹೆಸರಿನಿಂದ ಕರೆಯಲಾಗಿದೆ.
ಈ ಒಂದು ಗುಣಧರ್ಮ ಮಾತ್ರವಲ್ಲದೆ ಬೇರೆಯೂ ಹಲಕೆಲವು ಗುಣ ಧರ್ಮಗಳು ಜಲಿಜನಕವೆಂಬ ಈ ಅನಿಲಕ್ಕಿವೆ. ಉದಾಹರಣೆಗಾಗಿ, ಇದು ಅತ್ಯಂತ ಹಗುರವಾದ, ಬಣ್ಣವೂ ವಾಸನೆಯೂ ಇಲ್ಲದ, ಕಣ್ಣಿಗೆ ಕಾಣಿಸದ ಒಂದು ಮೂಲ ಧಾತು. ಇದನ್ನು ಹೆಸರಿಸಲು ಈ ಗುಣಧರ್ಮಗಳಲ್ಲಿ ಯಾವು ದನ್ನು ಬೇಕಿದ್ದರೂ ಆರಿಸಿಕೊಳ್ಳಬಹುದಿತ್ತು. ಆದರೆ ನೀರಿನ ಘಟಕವೆಂಬ ಅಂಶ ಮುಖ್ಯವಾಗಿ ತೋರಿದ ಕಾರಣ, ಅದನ್ನೇ ಆ ಹೆಸರನ್ನು ತಯಾರಿಸುವವರು ಆರಿಸಿಕೊಂಡಿರಬೇಕು. ಸಾಮಾನ್ಯವಾಗಿ ಕಣ್ಣಿಗೆ ಅಥವಾ ಮನಸ್ಸಿಗೆ ಎದ್ದು ಕಾಣಿಸು ವಂತಹ ಮತ್ತು ಶಾಶ್ವತವಾಗಿ ಉಳಿಯಬಹುದೆಂದು ಮನಸ್ಸಿಗೆ ಅನಿಸುವಂತಹ ಗುಣಧರ್ಮವನ್ನು ವಸ್ತುವೊಂದಕ್ಕೆ ಹೆಸರಿಡುವಾಗ ಆರಿಸಿಕೊಳ್ಳುವುದು ರೂಢಿ.
ಹೆಸರಿಸುವ ನಾಮಪದಗಳ ಉತ್ಪಾದನೆಯಲ್ಲಿ ಕಾಣಿಸುವ ಈ ಆಯ್ಕೆಯೆಂಬ ಅಂಶ ವರ್ಣಿಸುವ ನಾಮಪದಗುಚ್ಛಗಳ ಉತ್ಪಾದನೆ ಇಲ್ಲವೇ ಬಳಕೆಯಲ್ಲಿ ಕಾಣಿಸುವುದಿಲ್ಲ. ಒಂದು ವಸ್ತುವಿನಲ್ಲಿ ಎಷ್ಟೆಲ್ಲಾ ಗುಣಧರ್ಮಗಳಿವೆಯೋ ಅವೆಲ್ಲವನ್ನೂ ಬೇರೆ ಬೇರೆ ವರ್ಣಿಸುವ ಪದಗುಚ್ಛಗಳ ಮೂಲಕ ಸೂಚಿಸಲು
ಸಾಧ್ಯವಿದೆ. ಈ ಗುಣಧರ್ಮಗಳು ಶಾಶ್ವತವಿರಬಹುದು, ಇಲ್ಲವೇ ಕ್ಷಣಿಕವಿರ ಬಹುದು; ಕಣ್ಣಿಗೆ ಎದ್ದು ಕಾಣಿಸುವಂತಹವಿರಬಹುದು, ಇಲ್ಲವೇ ಅಸ್ಪಷ್ಟವಾದು ವಾಗಿರಲೂಬಹುದು.
ಇದಲ್ಲದೆ, ಹೆಸರಿಸುವುದಕ್ಕಾಗಿ ಗುಣಧರ್ಮವೊಂದನ್ನು ಆರಿಸುವಾಗ, ಹೆಸರಿಸಬೇಕಾಗಿರುವ ವ್ಯಕ್ತಿ, ವಸ್ತು ಮೊದಲಾದವುಗಳನ್ನು ಅಂತಹವೇ ಇತರ ವ್ಯಕ್ತಿ, ವಸ್ತು ಮೊದಲಾದವುಗಳಿಗಿಂತ ಭಿನ್ನವಾದವುಗಳೆಂಬುದನ್ನು ತೋರಿಸ ಬಲ್ಲಂತಹ ಗುಣಧರ್ಮವನ್ನೇ ಆರಿಸಿಕೊಳ್ಳುವ ಕ್ರಮ ರೂಢಿಯಲ್ಲಿದೆ. ಉದಾ ಹರಣೆಗಾಗಿ, ಯುದ್ಧದಲ್ಲಿ ತೊಡಗಿರುವ ಸೈನಿಕರಲ್ಲಿ ಕಾಲಿನಲ್ಲಿ ಚಲಿಸಿ ಕಾದಾಡುವವರನ್ನು ಹೆಸರಿಸಲು ಕಾಲಾಳು ಎಂಬ ಪದ ರೂಢಿಗೆ ಬಂದಿದೆ. ಈ ಹೆಸರು ಕುದುರೆಯ ಮೇಲೆ ಇಲ್ಲವೇ ಆನೆಯ ಮೇಲೆ ಕುಳಿತು ಕಾದಾಡುವ ಇತರ ಸೈನಿಕರಿಗಿಂತ ಅವರು ಭಿನ್ನರಾಗಿರುವುದನ್ನು ಸೂಚಿಸುತ್ತದೆ. ಬೇರೆ ಸಂದರ್ಭ ಗಳಲ್ಲಿ ಕಾಲಿನಿಂದ ಚಲಿಸುವವರನ್ನು (ಉದಾ: ರಸ್ತೆಯಲ್ಲಿ ಚಲಿಸುವವರನ್ನು) ಕಾಲಾಳು ಎಂಬ ಈ ಪದ ಗುರುತಿಸಲಾರದು. ಅವರು ಸೈಕಲ್, ಸ್ಕೂಟರ್, ಕಾರು ಮೊದಲಾದವುಗಳಲ್ಲಿ ಚಲಿಸುವವರಿಗಿಂತ ಬೇರೆ ಎಂಬುದನ್ನು ಸೂಚಿಸಲು ಪಾದಚಾರಿ ಎಂಬ ಸಂಸ್ಕೃತದಿಂದ ಎರವಲಾಗಿ ಬಂದ ಬೇರೆಯೇ ಒಂದು ಹೆಸರು ರೂಢಿಗೆ ಬಂದಿದೆ.
೩.೩.೩ ಅರ್ಥದಲ್ಲಿ ವ್ಯತ್ಯಾಸ
ವರ್ಣಿಸುವ ನಾಮಪದಗುಚ್ಛಗಳಿಗೆ ಅರ್ಥ ಹೇಳುವುದು ಸುಲಭ. ಅವುಗಳ ಅಂಗ ಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳಿಂದ ಸಿದ್ಧವಾಗುವ ಅರ್ಥವೇ ಅವುಗಳ ಅರ್ಥವೂ ಆಗಿರುವುದರಿಂದ ಈ ಕೆಲಸವನ್ನು ಭಾಷೆಯನ್ನು ಬಳಸು ವವರೆಲ್ಲರೂ ಮಾಡಬಲ್ಲರು. ಉದಾಹರಣೆಗಾಗಿ ಕೆಂಪು ಚೆಂಡು ಎಂಬ ವರ್ಣಿಸುವ ನಾಮಪದಗುಚ್ಛಕ್ಕೆ ಅರ್ಥ ಹೇಳುವುದು ಸುಲಭ. ಕೆಂಪು ಮತ್ತು ಚೆಂಡು ಎಂಬ ಎರಡು ಪದಗಳ ಸೇರಿಕೆಯಿಂದ ಈ ಪದಗುಚ್ಛವನ್ನು ತಯಾರಿಸ ಲಾಗಿದ್ದು, ‘ಕೆಂಪಾಗಿರುವ ಚೆಂಡು’ ಎಂಬುದಾಗಿ ಇದಕ್ಕೆ ಅರ್ಥವನ್ನು ಹೇಳ ಬಹುದು.
ಹೆಸರಿಸುವ ನಾಮಪದಗಳು ಇವಕ್ಕಿಂತ ತೀರ ಭಿನ್ನವಾದವುಗಳು. ಮೇಲೆ ಸೂಚಿಸಿದಂತೆ, ಅವುಗಳ ಅರ್ಥವೇನೆಂಬುದನ್ನು ತಿಳಿಯಲು ಆ ಪದಗಳ ಒಳ ರಚನೆ ಸಹಾಯಕವಾಗಬಲ್ಲುದಾದರೂ ಅದೊಂದೇ ಅವುಗಳ ಅರ್ಥಕ್ಕೆ ಆಧಾರ ವಾಗಲಾರದು. ಹೆಸರಿಸುವ ನಾಮಪದವೊಂದು ಎಂತಹ ವಸ್ತುಗಳನ್ನು ಇಲ್ಲವೇ ವ್ಯಕ್ತಿಗಳನ್ನು ಹೆಸರಿಸುತ್ತದೆ, ಮತ್ತು ಅವುಗಳಲ್ಲಿ ಸಮಾನವಾಗಿರುವ ಗುಣಧರ್ಮ ಗಳು ಯಾವುವು ಎಂಬುದನ್ನು ಪರಿಶೀಲಿಸಿದ ಮೇಲೇನೇ ಆ ಪದಕ್ಕೆ ಸರಿಯಾದ ಅರ್ಥವನ್ನು ಹೇಳಲು ಸಾಧ್ಯವಾದೀತು.
ಉದಾಹರಣೆಗಾಗಿ ಹೊಗೆಸೊಪ್ಪು ಎಂಬ ನಾಮಪದವನ್ನು ಪರಿಶೀಲಿಸ ಬಹುದು. ಇದೊಂದು ಹೆಸರಿಸುವ ನಾಮಪದ. ಹೊಗೆ ಮತ್ತು ಸೊಪ್ಪು ಎಂಬ ಎರಡು ಪದಗಳ ಜೋಡಣೆಯಿಂದ ಈ ಪದ ತಯಾರಾಗಿದೆ. ಅದರ ಈ ಒಳರಚನೆ ಅದರ ಅರ್ಥವೇನೆಂಬುದನ್ನು ಸೂಕ್ಷ್ಮವಾಗಿ ತಿಳಿಸಬಲ್ಲುದು, ಆದರೆ ಸ್ಪಷ್ಟವಾಗಿ ತಿಳಿಸಲಾರದು. ಎಲ್ಲಾ ರೀತಿಯ ಎಲೆಗಳನ್ನು ಉರಿಸಿದಾಗಲೂ ಹೊಗೆ ಹೊರಬರುತ್ತದೆ. ಆದರೆ ಅವನ್ನೆಲ್ಲ ನಾವು ಹೊಗೆಸೊಪ್ಪು ಎಂಬ ಹೆಸರಿನಿಂದ ಕರೆಯುವುದಿಲ್ಲ. ಹೊಗೆ ಸೇದುವುದಕ್ಕಾಗಿ ಬೀಡಿ, ಸಿಗರೇಟ್ ಮೊದಲಾದುವನ್ನು ತಯಾರಿಸಲು ಬಳಸುವ, ಮತ್ತು ಹೊಗೆಯನ್ನು ಬರಿಸದೇನೇ ನೇರವಾಗಿ ಬಾಯ ಲ್ಲಿಟ್ಟು ಜಗಿಯುವ, ಇಲ್ಲವೇ ಪುಡಿಮಾಡಿ ನಸ್ಯವಾಗಿ ಬಳಸುವ ಒಂದು ವಿಶಿಷ್ಟ ವಾದ ಗಿಡವನ್ನು ಮತ್ತು ಅದರ ಎಲೆಯನ್ನು ಮಾತ್ರವೇ ಅದು ಗುರುತಿಸುತ್ತದೆ. ಈ ಗಿಡದ ಗುಣಧರ್ಮಗಳನ್ನು ಮಾತ್ರವೇ ಹೊಗೆಸೊಪ್ಪು ಎಂಬ ಪದಕ್ಕೆ ಅರ್ಥ ಹೇಳುವಾಗ ಬಳಸಿಕೊಳ್ಳಲು ಸಾಧ್ಯ.
ಮೇಲೆ ಕೊಟ್ಟಿರುವ ಜಲಜನಕ ಎಂಬ ಪದದ ಅರ್ಥವೂ ಹೀಗೆಯೇ. ‘ನೀರನ್ನುಂಟುಮಾಡುವ ಅನಿಲ’ ಎಂಬುದಾಗಿ ಬರಿಯ ಒಳರಚನೆಯ ಆಧಾರದ ಮೇಲೆ ಅದಕ್ಕೆ ಅರ್ಥ ಕೊಟ್ಟೆವಾದರೆ ಅದು ತಪ್ಪಾದೀತು. ಯಾಕೆಂದರೆ, ಆಮ್ಲ ಜನಕವೆಂಬ ಇನ್ನೊಂದು ಅನಿಲವೂ (ಜಲಜನಕದ ಜತೆ ಸೇರಿ) ನೀರನ್ನುಂಟು ಮಾಡಬಲ್ಲುದು. ಜಲಜನಕವೆಂಬ ಹೆಸರು ರೂಢಿಯಲ್ಲಿ ಯಾವ ಅನಿಲವನ್ನು ಗುರುತಿಸುತ್ತದೆಯೋ ಆ ಅನಿಲದ ಬೇರೆ ಬೇರೆ ಗುಣಧರ್ಮಗಳ ಆಧಾರದ ಮೇಲೆ ಮಾತ್ರವೇ ಆ ಪದದ ಅರ್ಥವನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ವಿವರಿಸಿ ಹೇಳಲು ಸಾಧ್ಯ.
ಪ್ರತ್ಯಯವಿರುವ ಪದಗಳು ಹೆಸರಿಸುವ ವಿಧಾನದಲ್ಲಿ ಬಳಕೆಯಾಗುತ್ತಿವೆ ಯಾದರೆ, ಅವಕ್ಕೆ ಅರ್ಥ ಹೇಳಬೇಕಿದ್ದರೂ ನಾವು ಇದೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗಾಗಿ, ಅಂಜಿಕೆ, ನಂಬಿಕೆ, ಹೊದಿಕೆ, ಹೇಳಿಕೆ, ಮೊಳಕೆ, ಹಿಡಿಕೆ ಮೊದಲಾದ ನಾಮಪದಗಳು ಇಕೆ ಎಂಬ ಪ್ರತ್ಯಯ ವನ್ನು ಅಂಜು, ನಂಬು, ಹೊದೆ, ಹೇಳು, ಮೊಳೆ, ಹಿಡಿ ಮೊದಲಾದ ಬೇರೆ ಬೇರೆ ಕ್ರಿಯಾಪದಗಳಿಗೆ ಸೇರಿಸುವುದರ ಮೂಲಕ ಸಿದ್ಧವಾಗಿವೆ. ಈ ಎಲ್ಲಾ ಪದಗಳದೂ ಒಳರಚನೆ ಒಂದೇ ರೀತಿಯದಾಗಿದೆಯಾದರೂ ಇವುಗಳಿಗಿರುವ ಅರ್ಥ ಒಂದೇ ರೀತಿಯದಾಗಿಲ್ಲ.
ಈ ಪದಗಳಲ್ಲಿ ಕೆಲವಕ್ಕೆ ಅವುಗಳ ಅಂಗವಾಗಿ ಬರುವ ಕ್ರಿಯಾಪದಕ್ಕೆ ಸಂಬಂಧಿಸಿದಂತಹ ಭಾವಾರ್ಥವಿದೆ (ಉದಾ: ನಂಬಿಕೆ); ಆದರೆ, ಇನ್ನು ಕೆಲವಕ್ಕೆ ಅಂತಹ ಕ್ರಿಯೆಯಲ್ಲಿ ಬಳಸುವ (ಉದಾ: ಹೊದಿಕೆ, ಹಿಡಿಕೆ) ಇಲ್ಲವೇ ಅಂತಹ ಕ್ರಿಯೆಯಿಂದ ದೊರಕುವ (ಉದಾ: ಮೊಳಕೆ) ವಿಶಿಷ್ಟವಾದ ವಸ್ತುಗಳನ್ನು ಗುರುತಿಸುವ ಅರ್ಥವಿದೆ (೪.೩.(೧) ನೋಡಿ). ಹಾಗಾಗಿ, ಜೋಡುಪದಗಳ ಹಾಗೆ ಹೆಸರಿಸುವ ವಿಧಾನವನ್ನು ಬಳಸುವಂತಹ ಪ್ರತ್ಯಯವಿರುವ ಪದಗಳಿಗೂ
ಅರ್ಥ ಹೇಳಬೇಕಿದ್ದಲ್ಲಿ, ಭಾಷೆಯಲ್ಲಿ ಅವುಗಳ ಬಳಕೆಯಂತಹದು ಎಂಬುದನ್ನು ತಿಳಿಯುವುದು ಅತ್ಯವಶ್ಯ.
ಈ ಕಾರಣಕ್ಕಾಗಿ, ಹೆಸರಿಸುವ ಪದಗಳ ಸರಿಯಾದ ಅರ್ಥವನ್ನು ಭಾಷಾ ಶಾಸ್ತ್ರಜ್ಞರು ಮಾತ್ರವೇ ನಿರ್ಧರಿಸಿ ಹೇಳಬಲ್ಲರು. ಭಾಷೆಯನ್ನು ಬಳಸುವ ಇತರ ಜನರಿಗೆ ಆ ಅರ್ಥ ತಿಳಿದಿದೆಯಾದರೂ ಅವರ ತಿಳುವಳಿಕೆ ಮಿದುಳಿನಲ್ಲಿ ಅರಿವಿಗೆ ಬಾರದಂತಹ (ಆದರೂ ಪದಗಳ ಪ್ರಯೋಗವನ್ನು ಸರಿಯಾಗಿ ಮಾಡಲು ಸಹಾಯಕವಾಗುವಂತಹ) ಸ್ಥಿತಿಯಲ್ಲಿರುತ್ತದೆ.
ಹೆಸರಿಸುವ ನಾಮಪದಗಳ ಅರ್ಥ ಊರಿನಿಂದ ಊರಿಗೆ ಮತ್ತು ಜಾತಿ ಯಿಂದ ಜಾತಿಗೆ ಬೇರೆ ಬೇರಾಗಿರಲು ಸಾಧ್ಯವಿದೆ. ಕಾಲದಿಂದ ಕಾಲಕ್ಕೂ ಇದು ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. ಆದರೆ ವರ್ಣಿಸುವ ನಾಮಪದಗುಚ್ಛಗಳ ಅರ್ಥ ಈ ರೀತಿ ಊರಿಂದೂರಿಗೆ ವ್ಯತ್ಯಾಸಗೊಳ್ಳುವುದಿಲ್ಲ. ಉದಾಹರಣೆಗಾಗಿ, ಬಿಳಿಸೀರೆ ಎಂಬ ಪದಗುಚ್ಛಕ್ಕೆ ಎಲ್ಲಾ ಊರುಗಳಲ್ಲೂ ‘ಬೆಳ್ಳಗಿನ ಬಣ್ಣವಿರುವ ಸೀರೆ’ ಎಂಬ ಒಂದೇ ಅರ್ಥವಿದೆ. ವರ್ಣಿಸುವ ನಾಮಪದಗುಚ್ಛಗಳ ಅರ್ಥದಲ್ಲಿ ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳು ಕಾಣಿಸಿಕೊಳ್ಳಬೇಕಿದ್ದಲ್ಲಿ ಸಾಮಾನ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಹೆಸರಿಸುವ ನಾಮಪದಗಳ ಅರ್ಥದಲ್ಲಿ ಅಂತಹ ಪ್ರಾದೇಶಿಕ ಇಲ್ಲವೇ ಸಾಮಾಜಿಕ ವ್ಯತ್ಯಾಸಗಳಿರ ಬೇಕಾಗುತ್ತದೆ.
ಹೆಸರಿಸುವ ನಾಮಪದಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳೆಂದು ಎರಡು ವಿಧವಿದ್ದು, ಇವುಗಳ ನಡುವೆ ಅರ್ಥದಲ್ಲಿ ಕೆಲವು ವ್ಯತ್ಯಾಸಗಳಿವೆ ಯೆಂಬುದನ್ನು ಮುಂದೆ (೩.೫)ರಲ್ಲಿ ನೋಡಲಿರುವೆವು. ಆದರೆ ಈ ಎರಡು ರೀತಿಯ ನಾಮಪದಗಳಿಗೂ ಅರ್ಥ ಹೇಳಲು ಅವು ಎಂತಹ ವ್ಯಕ್ತಿ, ವಸ್ತು, ಮೊದಲಾದುವನ್ನು ಗುರುತಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ.
೩.೩.೪ ಪರಿಮಿತಿಯಲ್ಲಿ ವ್ಯತ್ಯಾಸ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸವೇನೆಂದರೆ, ಭಾಷೆಯೊಂದರಲ್ಲಿ ಬಳಕೆ ಯಲ್ಲಿರುವ ಹೆಸರಿಸುವ ನಾಮಪದಗಳಿಗೆ ಅವುಗಳ ಸಂಖ್ಯೆಯ ಮಟ್ಟಿಗೆ ಒಂದು ಪರಿಮಿತಿಯಿದೆ, ಆದರೆ ವರ್ಣಿಸುವ ನಾಮಪದಗುಚ್ಛಗಳಿಗೆ ಇಂತಹ ಪರಿಮಿತಿ ಯಿಲ್ಲ. ಹೊಸ ಹೊಸ ಸಂದರ್ಭಗಳಲ್ಲಿ ಹೊಸ ಹೊಸ ವರ್ಣನೆಗಳನ್ನು ಮಾತನಾಡುವವನೇ ರಚಿಸಿಕೊಳ್ಳಬೇಕಾಗುವುದಾದ ಕಾರಣ ಒಂದು ಭಾಷೆಯಲ್ಲಿ ವರ್ಣಿಸುವ ನಾಮಪದಗುಚ್ಛಗಳು ಇಷ್ಟೇ ಇವೆಯೆಂಬುದಾಗಿ ಅವುಗಳ ಸಂಖ್ಯೆಯ ಮೇಲೆ ಒಂದು ಪರಿಮಿತಿಯನ್ನಿರಿಸಿ ಹೇಳಲು ಸಾಧ್ಯವಾಗದು.
ಇದಲ್ಲದೆ ಮಾತನಾಡುವವನ ಕಲ್ಪನಾಶಕ್ತಿಯನ್ನನುಸರಿಸಿ, ಹೊಸ ಹೊಸ ರೀತಿಯ ವರ್ಣನೆಗಳನ್ನು ತಯಾರಿಸಿ ಹೇಳಲು ಎಲ್ಲಾ ಭಾಷೆಗಳಲ್ಲೂ
ಆಸ್ಪದವಿದ್ದೇ ಇರುತ್ತದೆ. ಈ ಕಾರಣಕ್ಕಾಗಿಯೂ ವರ್ಣಿಸುವ ನಾಮಪದಗಳ ಸಂಖ್ಯೆ ಅಪರಿಮಿತವಾದುದೆಂದು ಹೇಳುವ ಅವಶ್ಯಕತೆಯಿದೆ.
ಹೆಸರಿಸುವ ನಾಮಪದಗಳನ್ನೂ ಹೊಸದಾಗಿ ರಚಿಸಿಕೊಳ್ಳಲು ಸಾಧ್ಯವಿದೆ ಯೇನೋ ನಿಜ. ಆದರೆ, ಈ ರೀತಿ ಅವನ್ನು ರಚಿಸಿಕೊಳ್ಳುವುದು ಒಂದು ಭಾಷೆಯಲ್ಲಾಗುವ ಬದಲಾವಣೆಯನ್ನು ಸೂಚಿಸುತ್ತದಲ್ಲದೆ ಅದರ ದಿನನಿತ್ಯದ ಬಳಕೆಯನ್ನಲ್ಲ. ಭಾಷೆಯೊಂದನ್ನು ಬಳಸುತ್ತಿರುವ ಸಮಯದಲ್ಲಿ, ಅದರಲ್ಲಿ ಆಗಲೇ ರಚಿತವಾಗಿ ರೂಢಿಗೆ ಬಂದಿರುವ ನಾಮಪದಗಳನ್ನು ಮಾತ್ರವೇ ಆ ಭಾಷೆಯ ‘ಹೆಸರಿಸುವ ನಾಮಪದ’ಗಳೆಂದು ಪರಿಗಣಿಸಲು ಸಾಧ್ಯ. ಇಂತಹ ನಾಮಪದಗಳ ಸಂಖ್ಯೆಗೆ ಒಂದು ಪರಿಮಿತಿಯಿದೆ. ಬಾಷೆಯನ್ನು ಬಳಸುವವರ ನೆನಪಿನಲ್ಲಿ ಉಳಿಯಬಲ್ಲಷ್ಟು ನಾಮಪದಗಳು ಮಾತ್ರ ಈ ವಿಧಾನದ ಮೂಲಕ ಪ್ರಯುಕ್ತವಾಗಬಲ್ಲುವಾದುದರಿಂದ ಭಾಷೆಯನ್ನು ಬಳಸುವವರ ನೆನಪಿನ ಶಕ್ತಿಯೇ ಈ ಸಂಖ್ಯೆಗೆ ಪರಿಮಿತಿಯನ್ನು ತಂದೊಡ್ಡುತ್ತದೆ.
ಆದರೆ ಇದು ಇಡೀ ಸಮಾಜದ ನೆನಪಿನ ಶಕ್ತಿಯನ್ನವಲಂಬಿಸಿರುತ್ತದಲ್ಲದೆ ಒಬ್ಬ ವ್ಯಕ್ತಿಯ ನೆನಪಿನ ಶಕ್ತಿಯನ್ನಲ್ಲ. ಯಾಕೆಂದರೆ ಈ ನೆನಪಿನ ಶಕ್ತಿ ಒಂದು ಭಾಷೆಯನ್ನು ಬಳಸುವ ಎಲ್ಲಾ ಜನರಲ್ಲೂ ಒಂದೇ ರೀತಿಯದಾಗಿರುವುದಿಲ್ಲ. ಕೆಲವರಿಗೆ ಹೆಚ್ಚು ನೆನಪಿನ ಶಕ್ತಿಯಿರುತ್ತದೆ ಮತ್ತು ಕೆಲವರಿಗೆ ಕಡಿಮೆಯಿರುತ್ತದೆ. ಹಾಗಾಗಿ, ಕೆಲವರಿಗೆ ಜಾಸ್ತಿ ಹೆಸರಿಸುವ ನಾಮಪದಗಳ ಜ್ಞಾನವಿರುತ್ತದೆ, ಮತ್ತು ಕೆಲವರಿಗೆ ಕಡಿಮೆ ಪದಗಳ ಜ್ಞಾನವಿರುತ್ತದೆ. ನೆನಪಿನ ಶಕ್ತಿ ಕಡಿಮೆ ಇರುವವರು ತಮಗೆ ತಿಳಿಯದಿರುವ ಮತ್ತು ಭಾಷೆಯಲ್ಲಿ ಬಳಕೆಯಲ್ಲಿರುವ ನಾಮಪದಗಳನ್ನು ಬೇರಾರಾದರೂ ಬಳಸಿದಾಗ ಅವುಗಳ ಅರ್ಥವೇನೆಂಬುದನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ, ಇಲ್ಲವೇ ಆ ಭಾಷೆಗೆ ಅರ್ಥಕೋಶ, ವಸ್ತು ಕೋಶ ಮೊದಲಾದವುಗಳಿದ್ದಲ್ಲಿ ಅವುಗಳಲ್ಲಿ ನೋಡಿ ತಿಳಿದುಕೊಳ್ಳಬೇಕಾಗುತ್ತದೆ.
ಇದಲ್ಲದೆ, ಬೇರೆ ಬೇರೆ ವ್ಯವಹಾರಗಳಲ್ಲಿರುವ ಜನರಲ್ಲಿ ಬೇರೆ ಬೇರೆ ರೀತಿಯ ಹೆಸರಿಸುವ ನಾಮಪದಗಳು ಬಳಕೆಯಲ್ಲಿದ್ದು, ಈ ವಿಷಯದಲ್ಲೂ ಒಂದೇ ಭಾಷೆಯನ್ನಾಡುವ ಜನರೊಳಗೆ ವ್ಯತ್ಯಾಸ ತೋರಿಬರುತ್ತದೆ. ಉದಾ ಹರಣೆಗಾಗಿ, ಸಮುದ್ರದ ಬದಿಯಲ್ಲಿ ವಾಸಿಸುವ ಮೀನುಗಾರರ ಮಾತಿನಲ್ಲಿ ಮೀನಿಗೆ ಮತ್ತು ಸಮುದ್ರಕ್ಕೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ ಇರುತ್ತವೆ, ಮತ್ತು ಕಾಡಿನಲ್ಲಿ ಬೇಟೆಯಾಡಿ ಬದುಕುವ ಬೇಟೆಗಾರರ ಮಾತಿನಲ್ಲಿ ಕಾಡಿಗೆ ಮತ್ತು ಬೇಟೆಗೆ ಸಂಬಂಧಿಸಿದ ಹೆಸರಿಸುವ ನಾಮಪದಗಳು ಜಾಸ್ತಿ ಇರುತ್ತವೆ. ಇಂತಹ ವ್ಯತ್ಯಾಸಗಳಾವುವೂ ವರ್ಣಿಸುವ ನಾಮಪದಗುಚ್ಛಗಳಲ್ಲಿ ಕಾಣಿಸುವುದಿಲ್ಲ.
ಬೇರೆ ಬೇರೆ ಶಾಸ್ತ್ರಗಳಿಗೆ ಸಂಬಂಧಿಸಿದಂತಹ ಹೆಸರಿಸುವ ನಾಮಪದಗಳೂ ಬೇರೆ ಬೇರಾಗಿದ್ದು, ಇವನ್ನು ಆಯಾ ಶಾಸ್ತ್ರಗಳನ್ನು ಕಲಿಯುವವರು ನೆನಪಿನಲ್ಲಿ
ಇರಿಸಿಕೊಳ್ಳಬೇಕಾಗುತ್ತದೆ. ಇಂತಹ ಹೆಸರಿಸುವ ನಾಮಪದಗಳಿಗೆ ‘ಪಾರಿಭಾಷಿಕ ಪದ’ಗಳೆಂಬ ಹೆಸರಿದೆ. ಈ ಪದಗಳನ್ನು ಅವು ಹೆಸರಿಸುವ ವಸ್ತುಗಳನ್ನು ಕಂಡು ಹಿಡಿದಾಗ ಇಲ್ಲವೇ ತಯಾರಿಸಿದಾಗ ಉತ್ಪಾದಿಸಿ ಬಳಕೆಗೆ ತರಲಾಗಿತ್ತು. ಇಂತಹ ಪದಗಳನ್ನೆಲ್ಲ ಸಂಗ್ರಹಿಸಿ, ಬೇರೆ ಬೇರೆ ಶಾಸ್ತ್ರಗಳಿಗೆ ಬೇರೆ ಬೇರೆ ಪಾರಿಭಾಷಿಕ ಪದಗಳ ‘ಕೋಶ’ಗಳನ್ನು ರಚಿಸಲು ಸಾಧ್ಯವಿದೆಯೆಂಬುದರಿಂದ, ಅಂತಹ ಹೆಸರಿಸುವ ನಾಮಪದಗಳಿಗೂ ಒಂದು ಪರಿಮಿತಿಯಿದೆಯೆಂಬ ವಿಷಯ ಸ್ಪಷ್ಟ ವಾಗುತ್ತದೆ. ಆದರೆ, ಈ ಶಾಸ್ತ್ರಗಳಲ್ಲಿ ಬಳಕೆಯಾಗುವ ವರ್ಣಿಸುವ ನಾಮಪದ ಗುಚ್ಛಗಳಿಗೆ ಇಂತಹ ಪರಿಮಿತಿಯಿಲ್ಲ, ಮತ್ತು ಅವನ್ನು ಅರ್ಥಕೋಶಗಳಲ್ಲಿ ಸಂಗ್ರಹಿಸುವ ಅವಶ್ಯಕತೆಯೂ ಇಲ್ಲ ಸಾಧ್ಯತೆಯೂ ಇಲ್ಲ.
೩.೩.೫ ಬದಲಾವಣೆಯಲ್ಲಿ ವ್ಯತ್ಯಾಸ
ಭಾಷೆಯಲ್ಲಿ ಕಾಲದಿಂದ ಕಾಲಕ್ಕೆ ನಡೆಯುವ ಬದಲಾವಣೆಗಳು ಅದರಲ್ಲಿ ಬಳಕೆ ಯಾಗುವ ನಾಮಪದಗಳನ್ನೂ ಬಾಧಿಸುತ್ತವೆ. ಆದರೆ ಈ ಬದಲಾವಣೆಗಳು ಎಂತಹವು ಎಂಬ ವಿಷಯದಲ್ಲಿ ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿ ಸುವ ನಾಮಪದಗುಚ್ಛಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ. ಈ ವ್ಯತ್ಯಾಸ ಗಳಿಗೂ ಅವುಗಳ ತಯಾರಿಕೆ ಮತ್ತು ಬಳಕೆಗಳ ನಡುವಿರುವ ವ್ಯತ್ಯಾಸಗಳೇ ಕಾರಣ ಎಂಬುದನ್ನು ಗಮನಿಸಬಹುದು.
ಹೆಸರಿಸುವ ನಾಮಪದಗಳಿಗೆ ಅರ್ಥ ಹೇಳಲು ಅವುಗಳ ಒಳರಚನೆ ಮುಖ್ಯವಲ್ಲ. ಅವು ರೂಢಿಯಲ್ಲಿ ಎಂತಹ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಅನ್ವಯಿಸುತ್ತವೆ ಎಂಬುದು ಮುಖ್ಯ ಎಂಬುದನ್ನು ನಾವು ಮೇಲೆಯೇ ನೋಡಿರುವೆವು. ಈ ಕಾರಣಕ್ಕಾಗಿ, ಅವುಗಳ ಒಳರಚನೆಯನ್ನು ಬದಲಾಗದಂತೆ ಉಳಿಸಿಕೊಳ್ಳುವ ಅವಶ್ಯಕತೆಯಿಲ್ಲ. ಇದಲ್ಲದೆ, ಹೆಸರಿಸುವ ನಾಮಪದಗಳನ್ನು ನೆನಪಿನಲ್ಲಿಟ್ಟುಕೊಂಡು ಬಳಸಬೇಕಾಗಿದೆಯಾದ ಕಾರಣ, ಅವು ಸಂಕ್ಷಿಪ್ತವಾಗಿ ಇದ್ದಷ್ಟೂ ಬಳಕೆಗೆ ಅನುಕೂಲ.
ಹಾಗಾಗಿ, ಅಂತಹ ನಾಮಪದಗಳು ಸಮಯ ಕಳೆದಂತೆಲ್ಲ ಬದಲಾವಣೆಗಳ ಮೂಲಕ ಸಂಕ್ಷಿಪ್ತಗೊಳ್ಳುತ್ತಾ ಹೋಗುವುದನ್ನು ನಾವು ಕಾಣಬಹುದು. ಪ್ರತ್ಯಯ ವಿರುವ ಪದಗಳಲ್ಲಿರುವ ಪ್ರತ್ಯಯ ಮತ್ತು ಪದಗಳು ಒಟ್ಟುಸೇರಿ, ಪ್ರತ್ಯಯದ ಗುರುತಿಲ್ಲದಂತಾಗುತ್ತದೆ, ಮತ್ತು ಜೋಡುಪದಗಳ ಅಂಗಗಳಾಗಿ ಬಂದಿರುವ ಪದಗಳು ಒಂದಾಗಿ, ಅವು ಬೇರೆ ಬೇರೆ ಪದಗಳಾಗಿದ್ದುವೆಂಬ ವಿಷಯವೇ ಗೋಚರಕ್ಕೆ ಬರದಂತಾಗುತ್ತದೆ. ಇಂತಹ ಪದಗಳ ಅಂಗಗಳಲ್ಲಿ ಯಾವುದಾದರೂ ಒಂದು ಸಂಕ್ಷಿಪ್ತಗೊಂಡು ಪ್ರತ್ಯಯದ ಹಾಗೆ ಕಾಣಿಸತೊಡಗುವುದೂ ಇಂತಹ ಬದಲಾವಣೆಗಳಲ್ಲೊಂದು.
ಉದಾಹರಣೆಗಾಗಿ, ಹೆಗ್ಗಡೆ, ಹೆಜ್ಜೆನು, ಹೆದ್ದಾರಿ, ಹೆಬ್ಬಾವು ಮೊದಲಾದ ಪದಗಳಲ್ಲಿ ಹಿರಿ ಎಂಬ ಪದ (ಪೆರ್ ಎಂಬುದು ಇದರ ಹಳೆಯ
ರೂಪ) ಮೊದಲನೆಯ ಅಂಗವಾಗಿ ಬಂದಿದೆಯೆಂಬ ವಿಷಯ ಈ ಪದಗಳ ಚಾರಿತ್ರಿಕ ಅಧ್ಯಯನದಿಂದ ಸ್ಪಷ್ಟವಾಗುತ್ತದೆ. ಆದರೆ, ಈ ಪದಗಳ ಅರ್ಥವೇನೆಂಬುದನ್ನು ತಿಳಿಯಲು ಇವುಗಳ ಒಳರಚನೆಯಂತಹದು ಎಂಬುದನ್ನು ಇಲ್ಲವೇ ಆ ರಚನೆ ಯಲ್ಲಿ ಹಿರಿ ಎಂಬ ಪದ ಬಂದಿದೆಯೆಂಬುದನ್ನು ತಿಳಿಯುವ ಅವಶ್ಯಕತೆಯಿಲ್ಲ. ಹಾಗಾಗಿ, ಅವು ಮೇಲೆ ಸೂಚಿಸಿದಂತಹ ಬದಲಾವಣೆಗಳಿಗೆ ಒಳಗಾಗಲು ಸಾಧ್ಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಮನೆ, ದೊಡ್ಡ ಮರ, ದೊಡ್ಡ ಹಾವು ಮೊದಲಾದ ವರ್ಣಿಸುವ ಪದಗುಚ್ಛಗಳಲ್ಲಿ ಅಂಗವಾಗಿ ಬರುವ ದೊಡ್ಡ ಎಂಬ ಪದ ಈ ರೀತಿ ಸಂಕ್ಷಿಪ್ತಗೊಳ್ಳದೆ ಪ್ರತ್ಯೇಕವಾಗಿಯೇ ಉಳಿಯಬೇಕಾಗು ತ್ತದೆ.
ವರ್ಣಿಸುವ ಪದಗುಚ್ಛಗಳ ಅರ್ಥವೇನೆಂಬುದನ್ನು ಅವುಗಳ ಒಳರಚನೆ ಯಿಂದ ಮಾತ್ರವೇ ತಿಳಿದುಕೊಳ್ಳಲು ಸಾಧ್ಯವಿದೆಯಾದ ಕಾರಣ, ಅವುಗಳ ಒಳ ರಚನೆ ಯಾವಾಗಲೂ ಸ್ಪಷ್ಟವಾಗಿ ತಿಳಿಯುವಂತಿರಬೇಕಾಗುತ್ತದೆ. ಈ ಕಾರಣ ಕ್ಕಾಗಿ, ಅವು ಯಾವಾಗಲೂ ನಾಮಪದಗುಚ್ಛಗಳಾಗಿಯೇ ಉಳಿಯುತ್ತವಲ್ಲದೆ ಪದಗಳಾಗಿ ಸಂಕ್ಷಿಪ್ತಗೊಳ್ಳುವುದಿಲ್ಲ. ಅವನ್ನು ಬಾಧಿಸುವ ಬದಲಾವಣೆಗಳೆಂದರೆ, ಅವುಗಳ ಒಳರಚನೆಯಲ್ಲಿ ಕಾಣಿಸುವ ಬೇರೆ ಬೇರೆ ರೀತಿಯ ಪದಗಳನ್ನು ಮತ್ತು ಪ್ರತ್ಯಯಗಳನ್ನು ವೈಯಕ್ತಿಕವಾಗಿ ಬಾಧಿಸುವ ಬದಲಾವಣೆಗಳು ಮತ್ತು ಅವುಗಳ ರಚನೆಯಲ್ಲಿ ಬರುವ ನಿಯಮಗಳನ್ನು ಬಾಧಿಸುವ ಬದಲಾವಣೆಗಳು ಮಾತ್ರ.
೩.೩.೬ ಒಳರಚನೆಯ ನಿಯಮಗಳಲ್ಲಿ ವ್ಯತ್ಯಾಸ
ಹೆಸರಿಸುವ ನಾಮಪದಗಳಿಗೂ ಮತ್ತು ವರ್ಣಿಸುವ ನಾಮಪದಗುಚ್ಛಗಳಿಗೂ ನಡುವೆ ಅವುಗಳ ಒಳರಚನೆಯಲ್ಲಿ ಬರುವ ನಿಯಮಗಳ ಮಟ್ಟಿಗೂ ಹಲವಾರು ವ್ಯತ್ಯಾಸಗಳು ಕಾಣಿಸುತ್ತವೆ. ವರ್ಣಿಸುವ ನಾಮಪದಗುಚ್ಛಗಳ ರಚನೆಯಲ್ಲಿ ಬರುವ ನಿಯಮಗಳು ವ್ಯವಸ್ಥಿತವಾಗಿದ್ದು, ಕೆಲವೇ ಕೆಲವು ಸಾರ್ವತ್ರಿಕ ನಿಯಮ ಗಳ ಮೂಲಕ ಈ ಪದಗುಚ್ಛಗಳ ರಚನೆಯನ್ನು ವಿವರಿಸಿ ಹೇಳಲು ಸಾಧ್ಯವಿದೆ.
ಆದರೆ ಹೆಸರಿಸುವ ನಾಮಪದಗಳ ರಚನೆಯಲ್ಲಿ ಹಲವಾರು ನಿಯಮಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಹೆಚ್ಚಿನವೂ ಬಹಳ ಅವ್ಯವಸ್ಥಿತವಾಗಿರುತ್ತವೆ ಮತ್ತು ತೊಡಕು ತೊಡಕಾಗಿರುತ್ತವೆ. ಹಲವಾರು ನಾಮಪದಗಳಿಗೆ ಅವುಗಳವೇ ಆದ ವಿಶಿಷ್ಟ ನಿಯಮಗಳ ಅವಶ್ಯಕತೆಯಿದ್ದು, ಅವುಗಳ ರಚನೆ ಅನಿಯಮಿತವೆಂದೇ ಹೇಳಲೂ ಬರುತ್ತದೆ.
ಮೇಲೆಯೇ ತಿಳಿಸಿರುವಂತೆ, ಹೆಸರಿಸುವ ನಾಮಪದಗಳ ಒಳರಚನೆ ಅವುಗಳ ಅರ್ಥವನ್ನು ತಿಳಿದುಕೊಳ್ಳುವಲ್ಲಿ ಅವಶ್ಯವಾದುದಲ್ಲ ಮತ್ತು ಅವನ್ನು ಹಾಗೆಯೇ ನೆನಪಿನಲ್ಲಿ ಇರಿಸಿಕೊಂಡು ಬಳಸಬೇಕಾಗುತ್ತದೆ ಎಂಬ ಈ ಎರಡು ವಿಷಯಗಳು ಅವುಗಳ ಒಳರಚನೆ ಮೇಲೆ ಸೂಚಿಸಿದ ಹಾಗೆ ಭಾಷೆಯಲ್ಲಾಗುವ ಬೇರೆ ಬೇರೆ ಬದಲಾವಣೆಗಳ ಮೂಲಕ ಕ್ಲಿಷ್ಟವಾಗುತ್ತಾ ಹೋಗಲು ಸಾಧ್ಯವಾಗುವಂತೆ
ಮಾಡುತ್ತವೆ. ವರ್ಣಿಸುವ ನಾಮಪದಗುಚ್ಛಗಳನ್ನು ಪ್ರತಿಯೊಂದು ಬಾರಿ ಬಳಸು ವಾಗಲೂ ಹೊಸದಾಗಿ ತಯಾರಿಸಿಕೊಳ್ಳಬೇಕಾಗಿದೆಯಾದ ಕಾರಣ, ಮತ್ತು ಅವುಗಳ ಅರ್ಥವನ್ನು ನೇರವಾಗಿ ಅವುಗಳ ಒಳರಚನೆಯಿಂದಲೇ ಸಾಧಿಸಿಕೊಳ್ಳ ಬೇಕಾಗುವುದಾದ ಕಾರಣ, ಅವು ಇಂತಹ ಬದಲಾವಣೆಗಳಿಗೆ ಒಳಗಾಗದಿರುತ್ತವೆ.
ಉದಾಹರಣೆಗಾಗಿ ಪೂರ್ವದ ಹಳೆಗನ್ನಡದಲ್ಲಿ ಹೊಸಗನ್ನಡದ ಹಿರಿಯ ಎಂಬ ಪದ ಪಿರಿಯ ಎಂದಿತ್ತು. ಎರಡನೆಯ ಅಕ್ಷರದಲ್ಲಿ (ರಿ ಎಂಬುದರಲ್ಲಿ) ಇಕಾರ ಬಂದುದರಿಂದಾಗಿ ಆ ಪದದ ಮೊದಲನೆಯ ಅಕ್ಷರದ ಎಕಾರ ಇಕಾರ ವಾಯಿತು ಮತ್ತು ಹಾಗಾಗಿ ಅದು ಹಳೆಗನ್ನಡದಲ್ಲಿ ಪಿರಿಯ ಎಂದಾಯಿತು. ಅನಂತರ ಅದರ ಮೊದಲನೆಯ ಅಕ್ಷರದಲ್ಲಿರುವ ಪಕಾರ ಹಕಾರವಾದುದ ರಿಂದಾಗಿ ಅದು ಅನಂತರ ಹೊಸಗನ್ನಡದಲ್ಲಿ ಹಿರಿಯ ಎಂದಾಯಿತು.
ಹೊಸಗನ್ನಡದ ನಾಮಪದಗುಚ್ಛಗಳಲ್ಲೆಲ್ಲ ಇದು ಈ ಹಿರಿಯ ಎಂಬ ಹೊಸ ರೂಪದಲ್ಲೇ ಬರುತ್ತದೆ (ಉದಾ: ಹಿರಿಯ ಮಗ, ಹಿರಿಯ ವಿದ್ವಾಂಸರು, ಇತ್ಯಾದಿ). ಆದರೆ ಕೆಲವು ಹೆಸರಿಸುವ ನಾಮಪದಗಳಲ್ಲಿ ಇದು ಇವತ್ತಿಗೂ ಅದರ ಹಳೆಯ ರೂಪವನ್ನು ಸ್ವಲ್ಪಮಟ್ಟಿಗೆ ಉಳಿಸಿಕೊಂಡಿದೆ. ಉದಾಹರಣೆಗಾಗಿ, ಹೆಬ್ಬಾವು ಎಂಬ ಪದದ ಎರಡನೇ ಅಕ್ಷರದಲ್ಲಿ ಇಕಾರವಿಲ್ಲದ ಕಾರಣ, ಮೊದಲನೆಯ ಅಕ್ಷರದ ಎಕಾರ ಬದಲಾಗದೆ ಹಾಗೆಯೇ ಉಳಿದಿದೆ. ಇದಲ್ಲದೆ ಎರಡನೇ ಅಕ್ಷರದಲ್ಲಿದ್ದ ರಕಾರವು ಮೂರನೇ ಅಕ್ಷರದ ವ್ಯಂಜನದೊಡನೆ ಸೇರಿ ಸಮಾನತೆಯನ್ನು ಪಡೆದಿದೆ. ಹೆಬ್ಬಾವು ಎಂಬ ಈ ಪದದೊಡನೆ ಹೆದ್ದಾರಿ, ಹೆಜ್ಜೆನು, ಹೆಗ್ಗಡೆ ಮೊದಲಾದ ಪದಗಳನ್ನು ಹೋಲಿಸಿ ನೋಡಿದಾಗ ಈ ಎರಡನೆಯ ವಿಷಯ ಸ್ಪಷ್ಟವಾಗುತ್ತದೆ.
ಇದೇ ರೀತಿಯಲ್ಲಿ ಹಳೆಗನ್ನಡದ ಪಕಾರ ಹಕಾರವಾಗದೆ ಉಳಿದಿರುವಂತಹ ಬೇರೆ ಕೆಲವು ಬಳಕೆಗಳು ಅನಿಯಮಿತವಾಗಿ ಹೆಸರಿಸುವ ನಾಮಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೈಪಿಡಿ ಎಂಬ ಪದದಲ್ಲಿ ಹಿಡಿ ಎಂಬ ಪದವು ಪಿಡಿ ಎಂಬ ಅದರ ಹಳೆಯ ರೂಪದಲ್ಲೇ ಉಳಿದಿದೆ. ಕಂಬನಿ ಎಂಬುದರಲ್ಲೂ ಹನಿ ಎಂಬ ಪದ ಅದರೆ ಹಳೆಯ ಪಕಾರವನ್ನು ಹಕಾರವಾಗಿ ಮಾಡಿಕೊಳ್ಳದೆ ಬಕಾರವಾಗಿ ಮಾಡಿ ಉಳಿಸಿಕೊಂಡಿದೆ. ಹೊಂಬಣ್ಣ, ಬೆಂಗಾವಲು ಮೊದಲಾದ ಪದಗಳ ಅಂಗಗಳಾಗಿ ಬಂದಿರುವ ಹೊನ್ನು, ಬೆನ್ನು ಮೊದಲಾದ ಪದಗಳು ಅವುಗಳ ಹಳೆಯ ಏಕಾಕ್ಷರ ರೂಪದಲ್ಲೇ ಉಳಿದಿವೆ. ಹೊಸಗನ್ನಡದಲ್ಲಿ ಇವು ಉಕಾರದ ಸೇರಿಕೆಯಿಂದಾಗಿ ಎರಡಕ್ಷರದವುಗಳಾಗಿವೆ ಮತ್ತು ಹೊನ್ನಿನ ಬಣ್ಣ, ಬೆನ್ನಿನ ಕಾವಲು ಮೊದಲಾದ ವರ್ಣಿಸುವ ನಾಮಪದಗುಚ್ಛಗಳಲ್ಲಿ ಈ ಹೊಸ ಎರಡಕ್ಷರದ ರೂಪಗಳೇ ಕಾಣಿಸಿಕೊಳ್ಳುತ್ತವೆ.
೩.೩.೭ ನಾಮಪದಗಳು ಮತ್ತು ನಾಮಪದಗುಚ್ಛಗಳು
ವರ್ಣಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸು ವುದಕ್ಕಾಗಿ ನಾವು ನಾಮಪದಗುಚ್ಛಗಳನ್ನು ಬಳಸುತ್ತೇವಲ್ಲದೆ ಬರಿಯ ನಾಮಪದ ಗಳನ್ನು ಬಳಸುವುದಿಲ್ಲ ಎಂಬುದನ್ನು ಮೇಲೆಯೇ ನೋಡಿರುವೆವು. ಬರಿಯ ನಾಮಪದಗಳನ್ನು ವರ್ಣಿಸುವ ಕಾರ್ಯದಲ್ಲಿ ಬಳಸಬಲ್ಲೆವಾದರೂ, ವ್ಯಕ್ತಿ, ವಸ್ತು ಮೊದಲಾದುವನ್ನು ‘ಗುರುತಿಸ’ಬೇಕಾದಾಗಲೆಲ್ಲ ಅವನ್ನು ಹೆಸರಿಸುವ ವಿಧಾನ ದಲ್ಲಿ ಮಾತ್ರವೇ ಬಳಸುವುದು ರೂಢಿ. ಈ ಕಾರಣಕ್ಕಾಗಿ, ಮೇಲೆ ನಾಮಪದ ಮತ್ತು ನಾಮಪದಗುಚ್ಛಗಳ ನಡುವಿರುವ ವ್ಯತ್ಯಾಸವೆಂಂತಹದು ಎಂಬುದನ್ನು ತಿಳಿಯುವುದರ ಮೂಲಕ, ಹೆಸರಿಸುವ ವಿಧಾನಕ್ಕೂ ಮತ್ತು ವರ್ಣಿಸುವ ವಿಧಾನಕ್ಕೂ ನಡುವಿನ ವ್ಯತ್ಯಾಸಗಳೆಂತಹವು ಎಂಬುದನ್ನು ತಿಳಿಯಲು ಸಾಧ್ಯ ವಾಗಿತ್ತು.
ಆದರೆ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಕನ್ನಡದಲ್ಲಿ ಬರಿಯ ನಾಮಪದಗಳನ್ನು ಮಾತ್ರವಲ್ಲದೆ ನಾಮಪದ ಗುಚ್ಛಗಳನ್ನೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಹೂವಿನ ಗಿಡ ಎಂಬ ನಾಮಪದಗುಚ್ಛದ ಬಳಕೆಯನ್ನು ಪರಿಶೀಲಿಸಬಹುದು. ಈ ಪದಗುಚ್ಛದ ಮೂಲಕ ನಾವು ಒಂದು ವಿಶಿಷ್ಟವಾದ ಜಾತಿಗೆ ಸೇರಿದ ಗಿಡವನ್ನು (ಎಂದರೆ ಅದರ ಹೂವಿನ ಅಂದಕ್ಕಾಗಿ ಸಾಕುವ ಗಿಡವನ್ನು) ಗುರುತಿಸುತ್ತೇವೆ. ಹೂವಿನ ಗಿಡದಲ್ಲಿ ಎಲ್ಲಾ ಸಮಯಗಳಲ್ಲೂ ಹೂವಿರಬೇಕೆಂದೇನಿಲ್ಲ. ಆ ಜಾತಿಗೆ ಸೇರಿದ ಗಿಡ ವೊಂದರಲ್ಲಿ ಹೂವೇ ಆಗದಿರಲೂ ಸಾಧ್ಯವಿದೆ.
ಈ ಕಾರಣಗಳಿಂದಾಗಿ, ಈ ನಾಮಪದಗುಚ್ಛವನ್ನು, ಮತ್ತು ಇಂತಹವೇ ಬೇರೆ ಹಲವಾರು ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವವುಗಳೆಂದು ಹೇಳಬೇಕಲ್ಲದೆ ವರ್ಣಿಸುವ ವಿಧಾನದ ಮೂಲಕ ಗುರುತಿಸುವವುಗಳೆಂದು ಹೇಳಲು ಸಾಧ್ಯ ವಾಗದು. ಹೂವಿಲ್ಲದ ಇಲ್ಲವೇ ಹೂವೇ ಆಗದ ಗಿಡವನ್ನು ಹೂವಿನ ಗಿಡವೆಂದು ‘ವರ್ಣಿಸಲು’ ಸಾಧ್ಯವಿಲ್ಲವಾದ ಕಾರಣ ಹೂವಿನ ಗಿಡ ಎಂಬುದು ಒಂದು ಗಿಡದ ವರ್ಣನೆಯಾಗಲಾರದು.
ಈ ರೀತಿ, ಹೆಸರಿಸುವ ವಿಧಾನ ಮತ್ತು ವರ್ಣಿಸುವ ವಿಧಾನಗಳೆಂಬ ಈ ಎರಡು ವಿಧಾನಗಳಲ್ಲೂ ನಾಮಪದಗುಚ್ಛಗಳನ್ನು ಬಳಸಲು ಸಾಧ್ಯವಿದೆ. ಆದರೆ, ಈ ಎರಡು ವಿಧಾನಗಳಲ್ಲಿ ಬಳಕೆಯಾಗುವ ನಾಮಪದಗುಚ್ಛಗಳ ನಡುವೆ ಒಳ ರಚನೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗಾಗಿ, ಎರಡು ನಾಮಪದ ಗಳನ್ನು ಅ ಎಂಬ ಪ್ರತ್ಯಯದ ಮೂಲಕ ಸಂಬಂಧಿಸಿ ಪದಗುಚ್ಛಗಳನ್ನು ತಯಾರಿಸಲು ಸಾಧ್ಯವಿದೆಯಷ್ಟೆ. ಇಂತಹ ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲೂ ಬಳಸಬಹುದು ಮತ್ತು ವರ್ಣಿಸುವ ವಿಧಾನದಲ್ಲೂ ಬಳಸ ಬಹುದು. ಆದರೆ ಈ ಎರಡು ರೀತಿಯ ಬಳಕೆಗಳ ನಡುವೆ ಅವು ಯಾವ ಅರ್ಥದಲ್ಲಿ ಸಂಬಂಧಿತವಾಗುತ್ತವೆ ಎಂಬುದರಲ್ಲಿ ವ್ಯತ್ಯಾಸವಿದೆ. ಕೆಳಗೆ
ಕೊಟ್ಟಿರುವ ನಾಮಪದಗುಚ್ಛಗಳನ್ನು ಹೋಲಿಸಿ ನೋಡಿದಾಗ ಈ ವಿಷಯ ಸ್ಪಷ್ಟ ವಾಗುತ್ತದೆ.
- ಷಷ್ಠಿ ಸಂಬಂಧದ ಅರ್ಥ ಹೆಸರಿಸುವ ವಿಧಾನ ವರ್ಣಿಸುವ ವಿಧಾನ
- (ಕ) ಆಕರ ಹಾಲಿನ ಕೊಡ ಕೊಡದ ಹಾಲು
- ಪುಸ್ತಕದ ಕಪಾಟು ಕಪಾಟಿನ ಪುಸ್ತಕ
- (ಖ) ಅಂಗ ಹೂವಿನ ಗಿಡ ಗಿಡದ ಹೂವು
- ಬಾಲದ ಹುಳ ಹುಳದ ಬಾಲ
- (ಗ) ಒಡೆತನ ಹಣದ ಮುದುಕ ಮುದುಕನ ಹಣ
- ಟೊಪ್ಪಿಯ ಹುಡುಗ ಹುಡುಗನ ಟೊಪ್ಪಿ
- (ಘ) ಗುಣಧರ್ಮ ಬಣ್ಣದ ಚಿಟ್ಟೆ ಚಿಟ್ಟೆಯ ಬಣ್ಣ
- ಧೈರ್ಯದ ಹುಡುಗ ಹುಡುಗನ ಧೈರ್ಯ
- (ಇ) ಭಾವನೆ ಹೆದರಿಕೆಯ ಹುಡುಗ ಹುಡುಗನ ಹೆದರಿಕೆ
- ಪ್ರೀತಿಯ ಹೆಂಡತಿ ಹೆಂಡತಿಯ ಪ್ರೀತಿ
ಮೇಲೆ ಎರಡನೇ ಕಾಲಂನಲ್ಲಿ ಕೊಟ್ಟಿರುವ ನಾಮಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲೂ ಮತ್ತು ಮೂರನೇ ಕಾಲಂನಲ್ಲಿ ಕೊಟ್ಟಿರುವ ನಾಮ ಪದಗುಚ್ಛಗಳನ್ನು ವರ್ಣಿಸುವ ವಿಧಾನದಲ್ಲೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಲು ಬಳಸುವುದು ರೂಢಿ. ಉದಾಹರಣೆಗಾಗಿ, ಈ ಹೂವಿನ ಗಿಡದಲ್ಲಿ ಹೂವೇ ಇಲ್ಲ ಎನ್ನಬಹುದು ಆದರೆ ನೇರವಾಗಿ ಈ ಗಿಡದ ಹೂ ಗಿಡದ್ದಲ್ಲ ಎನ್ನಲು ಸಾಧ್ಯವಾಗದು (‘ಕಾಗದದ ಹೂವೊಂದನ್ನು ಈ ಗಿಡಕ್ಕೆ ಸಿಕ್ಕಿಸಿದ್ದಾರೆ’ ಎಂಬಂತಹ ವಿಶಿಷ್ಟವಾದ ಅರ್ಥದಲ್ಲಿ ಮಾತ್ರ ಅಂತಹ ಪ್ರಯೋಗ ಸಾಧ್ಯ). ಗಿಡದ ಹೂ ಎಂಬ ಪದಗುಚ್ಛವನ್ನು ಸಾಮಾನ್ಯವಾಗಿ ವರ್ಣಿಸುವ ವಿಧಾನದಲ್ಲಿ ಬಳಸುವುದೇ ಜಾಸ್ತಿ ಎಂಬುದೇ ಇದಕ್ಕೆ ಕಾರಣ.
ಈ ಎರಡು ರೀತಿಯ ನಾಮಪದಗುಚ್ಛಗಳ ನಡುವೆ ಬಂದಿರುವ ಅ ಎಂಬ ಪ್ರತ್ಯಯ ಎಂತಹ ಸಂಬಂಧವನ್ನು ಸೂಚಿಸುತ್ತದೆ ಎಂಬ ವಿಷಯದಲ್ಲಿ ವ್ಯತ್ಯಾಸ ವಿದೆಯೆಂಬುದನ್ನು ಗಮನಿಸಬಹುದು. ಉದಾಹರಣೆಗಾಗಿ (ಕ)ದಲ್ಲಿ ಬಂದಿರುವ ಮೊದಲನೆಯ ಕಾಲಂನ ಹಾಲಿನ ಕೊಡ ಮತ್ತು ಪುಸ್ತಕದ ಕಪಾಟು ಎಂಬೆರಡು ನಾಮಪದಗುಚ್ಛಗಳು ವಸ್ತುಗಳ ಮೂಲಕ ಅವನ್ನಿರಿಸುವ ಆಕರಗಳನ್ನು ಗುರುತಿಸುವುವಾದರೆ, ಅದೇ ಸಾಲಿನ ಮೂರನೆಯ ಕಾಲಂನಲ್ಲಿ
ಬಂದಿರುವ ಕೊಡದ ಹಾಲು ಮತ್ತು ಕಪಾಟಿನ ಪುಸ್ತಕ ಎಂಬೆರಡು ನಾಮ ಪದಗುಚ್ಛಗಳು ಆಕರಗಳ ಮೂಲಕ ಅವುಗಳಲ್ಲಿರಿಸುವ ವಸ್ತುಗಳನ್ನು ಗುರುತಿಸು ತ್ತವೆ. ಈ ಎರಡು ರೀತಿಯ ಆಕರ ಸಂಬಂಧಗಳಲ್ಲಿ ಮೊದಲನೆಯದನ್ನು ಸಾಮಾನ್ಯವಾಗಿ ಹೆಸರಿಸುವುದಕ್ಕೂ ಮತ್ತು ಎರಡನೆಯದನ್ನು ವರ್ಣಿಸುವುದಕ್ಕೂ ಬಳಸುವ ರೂಢಿ ಕನ್ನಡದಲ್ಲಿದೆ.
ಮೇಲೆ ಕೊಟ್ಟಿರುವ ಇತರ ನಾಮಪದಗುಚ್ಛಗಳಲ್ಲಿಯೂ ಇದೇ ರೀತಿಯ ವಿರುದ್ಧ ಪ್ರಯೋಗಗಳಿರುವುದನ್ನು ಕಾಣಬಹುದು. (ಖ)ದಲ್ಲಿ ಬಂದಿರುವ ಹೂವಿನ ಗಿಡ ಮತ್ತು ಬಾಲದ ಹುಳ ಎಂಬೆರಡು ಪದಗುಚ್ಛಗಳು ಅಂಗಗಳ ಮೂಲಕ ಆ ಅಂಗಗಳನ್ನು ಹೊಂದಿರುವ ಸಸ್ಯ ಮತ್ತು ಪ್ರಾಣಿಗಳನ್ನು ಗುರುತಿಸು ವುವಾದರೆ, ಅವುಗಳ ಎದುರು ಕೊಟ್ಟಿರುವ ಗಿಡದ ಹೂ ಮತ್ತು ಹುಳದ ಬಾಲ ಎಂಬೆರಡು ಪದಗುಚ್ಛಗಳು ಅಂಗಗಳನ್ನು ಹೊಂದಿರುವ ಸಸ್ಯ ಮತ್ತು ಪ್ರಾಣಿಗಳ ಮೂಲಕ ಅವುಗಳ ಅಂಗಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಮೊದಲನೆಯ ವನ್ನು ಹೆಸರಿಸುವುದಕ್ಕಾಗಿಯೂ ಮತ್ತು ಎರಡನೆಯದನ್ನು ವರ್ಣಿಸುವು ದಕ್ಕಾಗಿಯೂ ಬಳಸುವುದು ಕನ್ನಡದಲ್ಲಿ ರೂಢಿಯಾಗಿದೆ.
ಇದೇ ರೀತಿಯಲ್ಲಿ ವಸ್ತುವಿನ ಒಡೆಯನನ್ನು ವಸ್ತುವಿನಿಂದ ಗುರುತಿಸುವ ಪದಗುಚ್ಛವನ್ನು (ಉದಾ: ಹಣದ ಮುದುಕ ಮತ್ತು ಟೊಪ್ಪಿಯ ಹುಡುಗ) ಹೆಸರಿಸುವುದಕ್ಕಾಗಿಯೂ ಮತ್ತು ಒಡೆಯನಿಂದ ವಸ್ತುವನ್ನು ಗುರುತಿಸುವ ಪದ ಗುಚ್ಛವನ್ನು (ಉದಾ: ಮುದುಕನ ಹಣ ಮತ್ತು ಹುಡುಗನ ಟೊಪ್ಪಿ) ವರ್ಣಿಸುವುದಕ್ಕಾಗಿಯೂ ಬಳಸುವುದನ್ನು ಒಡೆತನವೆಂಬ ಸಂಬಂಧವನ್ನು ತೋರಿಸುವ (ಗ)ದ ಸಾಲುಗಳಲ್ಲಿ ಕಾಣಬಹುದು, ಗುಣಧರ್ಮದಿಂದ ಗುಣ ಧರ್ಮವುಳ್ಳುದನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಬಣ್ಣದ ಚಿಟ್ಟೆ ಮತ್ತು ಧೈರ್ಯದ ಹುಡುಗ) ಹೆಸರಿಸುವುದಕ್ಕಾಗಿಯೂ ಮತ್ತು ಗುಣಧರ್ಮ ವುಳ್ಳುದರಿಂದ ಗುಣಧರ್ಮವನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಚಿಟ್ಟೆಯ ಬಣ್ಣ ಮತ್ತು ಹುಡುಗನ ಧೈರ್ಯ) ವರ್ಣಿಸುವುದಕ್ಕಾಗಿಯೂ ಬಳಸು ವುದನ್ನು ಗುಣಧರ್ಮವೆಂಬ ಸಂಬಂಧವನ್ನು ತೋರಿಸುವ (ಘ)ದ ಸಾಲುಗಳಲ್ಲಿ ಕಾಣಬಹುದು ಮತ್ತು ಭಾವನೆಯಿಂದ ಭಾವಿಸುವವನನ್ನು ಗುರುತಿಸುವ ಪದ ಗುಚ್ಛವನ್ನು (ಉದಾ: ಹೆದರಿಕೆಯ ಹುಡುಗ ಮತ್ತು ಪ್ರೀತಿಯ ಹೆಂಡತಿ) ಹೆಸರಿಸುವುದಕ್ಕಾಗಿಯೂ ಮತ್ತು ಭಾವಿಸುವವನಿಂದ ಭಾವನೆಯನ್ನು ಗುರುತಿಸುವ ಪದಗುಚ್ಛವನ್ನು (ಉದಾ: ಹುಡುಗನ ಹೆದರಿಕೆ ಮತ್ತು ಹೆಂಡತಿಯ ಪ್ರೀತಿ) ವರ್ಣಿಸುವುದಕ್ಕಾಗಿ ಬಳಸುವುದನ್ನು ಭಾವನೆಯೆಂಬ ಸಂಬಂಧವನ್ನು ತೋರಿಸುವ (ಇ)ದ ಸಾಲುಗಳಲ್ಲಿ ಕಾಣಬಹುದು.
ಆದರೆ ಈ ಎರಡು ರೀತಿಯ ವಿರುದ್ಧ ಸಂಬಂಧಗಳಲ್ಲಿ ಬರುವ ಪದಗುಚ್ಛ ಗಳ ಬಳಕೆ ಅಷ್ಟೊಂದು ಕಟ್ಟುನಿಟ್ಟಿನದೇನಲ್ಲ. ಎರಡನೇ ಕಾಲಂನಲ್ಲಿ ಬರುವ
ಪದಗುಚ್ಛಗಳನ್ನು ಹೆಸರಿಸುವ ವಿಧಾನದಲ್ಲಿ ಮಾತ್ರವಲ್ಲದೆ ವರ್ಣಿಸುವ ವಿಧಾನ ದಲ್ಲೂ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ ಧೈರ್ಯದ ಹುಡುಗ ಎಂಬ ಪದಗುಚ್ಛ ಧೈರ್ಯದ ಹುಡುಗನ ಧೈರ್ಯವೆಲ್ಲ ಇಂಗಿಹೋಗಿದೆ ಎಂಬ ವಾಕ್ಯದಲ್ಲಿ ಒಬ್ಬ ಹುಡುಗನನ್ನು ವರ್ಣಿಸುವ ಬದಲು ಹೆಸರಿಸುತ್ತಿರುವ ಹಾಗೆ ಕಾಣಿಸುತ್ತದೆ. ಇದೇ ರೀತಿಯಲ್ಲಿ ಮೂರನೇ ಕಾಲಂನಲ್ಲಿ ಬರುವ ಪದಗುಚ್ಛ ಗಳಲ್ಲಿ ಕೆಲವನ್ನು ಹೆಸರಿಸುವ ವಿಧಾನದ ಮೂಲಕ ಬಳಸಲೂ ಸಾಧ್ಯವಿದೆ. ಆದರೆ ಅಂತಹ ಪ್ರಯೋಗಗಳು ಬಹಳ ಕಡಿಮೆ.
೩.೪ ವಿಭಜನೆಯ ಕೆಲವು ಸಮಸ್ಯೆಗಳು
ಕನ್ನಡದಲ್ಲಿ ನಾಮಪದಗಳ ಒಳರಚನೆಯಂತಹದು ಎಂಬುದನ್ನು ನಿರ್ಧರಿಸಲು ಹೊರಡುವ ಮೊದಲು ನಾಮಪದಗಳನ್ನು ಇತರ ವಾಕ್ಯಾಂಶಗಳಿಂದ (ಅದರಲ್ಲೂ ನಾಮಪದಗುಚ್ಛಗಳಿಂದ) ಪ್ರತ್ಯೇಕಿಸುವುದು ಅವಶ್ಯ ಎಂಬುದನ್ನು ಮೇಲೆ ನೋಡಿದ್ದೆವು. ಹೀಗೆ ಪ್ರತ್ಯೇಕಿಸುವಲ್ಲಿ ಕೆಲವು ಸಮಸ್ಯೆಗಳಿವೆ. ಸಾಮಾನ್ಯವಾಗಿ ನಾಮಪದಗಳು ಹೆಸರಿಸುವ ವಿಧಾನದ ಮೂಲಕವೂ ಮತ್ತು ನಾಮಪದ ಗುಚ್ಛಗಳು ವರ್ಣಿಸುವ ವಿಧಾನದ ಮೂಲಕವೂ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತವೆ. ಹಾಗಾಗಿ ಈ ವ್ಯತ್ಯಾಸದ ಆಧಾರದ ಮೇಲೆ ಅವೆರಡನ್ನು ಹೆಚ್ಚಿನ ಸಂದರ್ಭಗಳಲ್ಲೂ ಪ್ರತ್ಯೇಕಿಸಿ ಹೇಳಲು ಸಾಧ್ಯವಿದೆ.
ಆದರೆ ಮೇಲೆ ಸೂಚಿಸಿದಂತೆ, ಕೆಲವೊಂದು ಸಂದರ್ಭಗಳಲ್ಲಿ ನಾಮಪದ ಗುಚ್ಛಗಳನ್ನೂ ಹೆಸರಿಸುವ ವಿಧಾನದ ಮೂಲಕ ಗುರುತಿಸುವ ಕಾರ್ಯದಲ್ಲಿ ಬಳಸಲು ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಈ ಎರಡು ರೀತಿಯ ವಾಕ್ಯಾಂಶಗಳನ್ನು ವಾಕ್ಯದಲ್ಲಿ ಅವು ನಡೆಸುವ ಕೆಲಸವೇನು ಎಂಬುದರ ಸಹಾಯದಿಂದ ಬೇರ್ಪಡಿಸಲು ಸಾಧ್ಯವಾಗದು.
ನಾಮಪದ ಮತ್ತು ನಾಮಪದಗುಚ್ಛಗಳ ನಡುವೆ ಅವುಗಳ ಹೆಚ್ಚಿನ ಬಳಕೆಗಳಲ್ಲೂ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ನಾಮಪದಗುಚ್ಛಗಳ ಅಂಗಗಳಾಗಿ ಬರುವ ಪದಗಳು ಬೇರೆ ಬೇರಾಗಿರುತ್ತವೆ ಮತ್ತು ಅವುಗಳಲ್ಲಿ ಒಂದರೊಡನೆ ಇನ್ನೊಂದನ್ನು ಸಂಬಂಧಿಸಲು ಪದರೂಪ ಪ್ರತ್ಯಯಗಳು (ಉದಾ: ಅ ಎಂಬ ಪ್ರತ್ಯಯ) ಬಳಕೆಯಾಗಿರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನಾಮಪದಗಳ ಅಂಗಗಳಾಗಿ ಬರುವ ಪದಗಳು ಒಟ್ಟು ಸೇರಿ ಒಂದೇ ಪದವಾಗಿರುತ್ತವೆ, ಮತ್ತು ಅವುಗಳ ನಡುವೆ ಪ್ರತ್ಯಯಗಳಾವುವೂ ಬರುವುದಿಲ್ಲ. ಹಾಗೇನಾದರೂ ಪ್ರತ್ಯಯ ಗಳು ಬರುವುದಿದ್ದರೂ ಅವು ಪದಪ್ರತ್ಯಯಗಳಾಗಿರುತ್ತವಲ್ಲದೆ ಪದರೂಪ ಪ್ರತ್ಯಯಗಳಾಗಿರುವುದಿಲ್ಲ.
ಆದರೆ ನಾಮಪದಗಳನ್ನು ನಾಮಪದಗುಚ್ಛಗಳಿಂದ ಪ್ರತ್ಯೇಕಿಸಲು ಈ ರೀತಿ ಒಳರಚನೆಯನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸಲು ಸಾಧ್ಯವಾಗದು. ಉದಾ ಹರಣೆಗಾಗಿ, ಕನ್ನಡದಲ್ಲಿ ನಾಮಪದಗಳೊಂದಿಗೆ ಗುಣಪದಗಳನ್ನು ಬಳಸುವಾಗ
ಅವಕ್ಕೆ ಪದರೂಪ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿಲ್ಲ. ಗುಣಪದಗಳು ನೇರವಾಗಿ ನಾಮಪದಗಳ ಮುಂದೆ ಬಂದು ನಿಲ್ಲುತ್ತವೆ. ಕೆಂಪು ಗೋಡೆ, ಕಪ್ಪು ಬಣ್ಣ, ದೊಡ್ಡ ಮನೆ ಮೊದಲಾದ ನಾಮಪದಗುಚ್ಛಗಳಲ್ಲಿ ಈ ರೀತಿ ಪದಗ ಳೆರಡು ಪದರೂಪ ಪ್ರತ್ಯಯಗಳ ಸಹಾಯವಿಲ್ಲದೆ ನೇರವಾಗಿ ಸಂಬಂಧಿತ ವಾಗಿರುವುದನ್ನು ಕಾಣಬಹುದು. ಇಂತಹ ವಾಕ್ಯಾಂಶಗಳು ನಾಮಪದಗುಚ್ಛಗಳೇ ಅಥವಾ ಬರಿಯ ನಾಮಪದಗಳೇ (ಎಂದರೆ ಜೋಡುಪದಗಳೇ) ಎಂಬ ವಿಷಯ ದಲ್ಲಿ ಸಂದಿಗ್ಧತೆಯುಂಟಾಗಲು ಸಾಧ್ಯವಿದೆ.
ಉದಾಹರಣೆಗಾಗಿ, ಬಿಸಿನೀರು ಎಂಬ ವಾಕ್ಯಾಂಶದಲ್ಲಿ ಬಿಸಿ ಎಂಬ ಗುಣ ಪದವನ್ನು ನೀರು ಎಂಬ ನಾಮಪದದೊಂದಿಗೆ ಬಳಸಲಾಗಿದೆ. ಇವುಗಳ ನಡುವೆ ಪದರೂಪ ಪ್ರತ್ಯಯವಾವುದೂ ಇಲ್ಲ. ಹಾಗಾಗಿ ಇಲ್ಲಿ ಅಂಗಗಳಾಗಿ ಬಂದಿರುವ ಪದಗಳು ಬೇರೆ ಬೇರಾಗಿವೆಯೇ (ಎಂದರೆ ಇದು ಒಂದು ನಾಮಪದಗುಚ್ಛವೇ) ಅಥವಾ ಒಟ್ಟು ಸೇರಿ ಒಂದೇ ಪದವಾಗಿ ಬಂದಿವೆಯೇ (ಎಂದರೆ ಇದು ಜೋಡುಪದವೇ) ಎಂಬುದನ್ನು ಈ ಪದದ ಒಳರಚನೆಯ ಆಧಾರದ ಮೇಲೆ ಮಾತ್ರವೇ ನಿರ್ಧರಿಸಿ ಹೇಳಲು ಸಾಧ್ಯವಾಗದು. ಈ ವಾಕ್ಯಾಂಶವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ ಮತ್ತು ಬಳಸುವವನ ಆಶಯವೇನು ಎಂಬುದನ್ನು ತಿಳಿಯುವ ಮೂಲಕ ಮಾತ್ರವೇ ಇಂತಹ ಸಂದರ್ಭಗಳಲ್ಲಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯ.
ಬಿಸಿನೀರು ಎಂಬ ವಾಕ್ಯಾಂಶಕ್ಕೆ ಕನ್ನಡದಲ್ಲಿ ನಾಮಪದಗುಚ್ಛವಾಗಿಯೂ ಬಳಕೆಯಿದೆ ಮತ್ತು ಬರಿಯ ನಾಮಪದ (ಜೋಡುಪದ)ವಾಗಿಯೂ ಬಳಕೆಯಿದೆ. ಅದಕ್ಕೆ ‘ಬೆಚ್ಚಗಿರುವ ನೀರು’ ಎಂಬ ಅರ್ಥವಿದೆಯಾದರೆ ಅದನ್ನು ಒಂದು ನಾಮ ಪದಗುಚ್ಛವೆಂದೂ ಮತ್ತು ‘ಒಮ್ಮೆ ಬಿಸಿಮಾಡಿದ (ಎಂದರೆ ಕುದಿಸಿ ಆರಿಸಿದ) ನೀರು’ ಎಂಬ ಅರ್ಥವಿದೆಯಾದರೆ ಜೋಡುಪದವೆಂದೂ ಹೇಳಬಹುದು. ಮೊದಲನೆಯದು ಒಂದು ವಸ್ತುವನ್ನು ವರ್ಣಿಸುತ್ತದೆ ಮತ್ತು ಎರಡನೆಯದು ಹೆಸರಿಸುತ್ತದೆ. ಇಂತಹ ಅರ್ಥಸಂದಿಗ್ಧತೆಗಳಿರುವಲ್ಲಿ ಸಾಮಾನ್ಯವಾಗಿ ಬಳಕೆಯ ಸಂದರ್ಭಗಳೇ ಸರಿಯಾದ ಅರ್ಥವನ್ನು ಒದಗಿಸಿಕೊಡುತ್ತವೆ. ಉದಾಹರಣೆಗಾಗಿ, ಸ್ನಾನ ಮಾಡಲು ಹೊರಟವನು ಬಿಸಿನೀರು ಬೇಕೆಂದು ಹೇಳಿದಲ್ಲಿ ಬೆಚ್ಚಗಿನ ನೀರು ಬೇಕೆಂಬ ಆಶಯ ಆಡುಗನದಾಗಿರಬೇಕಾದ ಕಾರಣ, ಇಲ್ಲಿ ಬಿಸಿನೀರು ಎಂಬುದನ್ನು ಒಂದು ವರ್ಣನೆಯೆಂದು ಹೇಳಬೇಕಾಗುತ್ತದೆ. ಆದರೆ, ಊಟಕ್ಕೆ ಕುಳಿತವನು ಬಿಸಿನೀರು ಬೇಕೆಂದು ಹೇಳಿದಲ್ಲಿ ಸಾಮಾನ್ಯವಾಗಿ ಕುಡಿಯಲು ಬಿಸಿಮಾಡಿ ತಣಿಸಿರುವ (ಎಂದರೆ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿರುವ) ನೀರು ಬೇಕೆಂಬುದಾಗಿ ಆಡುಗನ ಆಶಯವಿರಬೇಕಾದ ಕಾರಣ, ಬಿಸಿನೀರು ಎಂಬುದು ಇಲ್ಲಿ ಒಂದು ಹೆಸರಿಸುವ ನಾಮಪದವಾಗಿ (ಜೋಡುಪದವಾಗಿ) ಬಂದಿದೆಯೆಂದು ಹೇಳಬೇಕಾಗುತ್ತದೆ.
೩.೫ ಹೆಸರಿಸುವ ನಾಮಪದಗಳಲ್ಲಿ ವೈವಿಧ್ಯ
ಹೆಸರಿಸುವ ನಾಮಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತತ್ವಗಳ ಆಧಾರದ ಮೇಲೆ ವಿಭಜಿಸಲು ಸಾಧ್ಯವಿದೆ. ಇವುಗಳಲ್ಲಿ ರೂಢನಾಮ ಮತ್ತು ಅಂಕಿತನಾಮಗಳೆಂಬ ವಿಭಜನೆ ಅತ್ಯಂತ ಪ್ರಾಮುಖ್ಯವಾದುದು. ಇದು ನಾಮ ಪದಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳೊಂದಿಗೆ ಯಾವ ರೀತಿಯಲ್ಲಿ ಸಂಬಂಧಿತವಾಗಿವೆ, ಎಂದರೆ ಅವಕ್ಕೆ ಆ ಹೆಸರುಗಳು ಹೇಗೆ ಬಂದಿವೆ ಎಂಬುದರ ಮೇಲೆ ಅವಲಂಬಿಸಿದೆ. ಅಂಕಿತನಾಮಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳಲ್ಲಿ ಪ್ರತಿಯೊಂದಕ್ಕೂ ಬೇರೆ ಬೇರಾಗಿ ಸಂಬಂಧಿತ ವಾಗಿರುವುವಾದರೆ, ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗಿರುತ್ತವೆ (ವಿವರಗಳಿಗೆ ೩.೫.೧ ನೋಡಿ).
ಸಾಮಾನ್ಯವಾಗಿ ಅಂಕಿತನಾಮಗಳನ್ನು ಮಾತ್ರವೇ ‘ಹೆಸರು’ ಎಂಬ ಪದದ ಮೂಲಕ ಗುರುತಿಸುವುದು ರೂಢಿ. ಆದರೆ ಈ ಪುಸ್ತಕದಲ್ಲಿ ಹೆಸರಿಸು ಎಂಬ ಪದವನ್ನು ವರ್ಣಿಸು ಎಂಬ ಪದಕ್ಕೆ ಎದುರಾಗಿ ನಿಲ್ಲಿಸಿರುವ ಕಾರಣ, ಹೆಸರು ಎಂಬ ಪದಕ್ಕೆ ಈ ಎರಡು ರೀತಿಯ ನಾಮಪದಗಳನ್ನೂ ಗುರುತಿಸುವಂತಹ ಅರ್ಥ ಬಂದಿದೆ. ಇದನ್ನು ಹೆಸರಿಸು ಮತ್ತು ಹೆಸರು ಎಂಬ ಪದಗಳ ಪಾರಿ ಭಾಷಿಕ ಪ್ರಯೋಗವೆಂದು ಪರಿಗಣಿಸಬಹುದು.
ಹೆಸರಿಸುವ ನಾಮಪದಗಳನ್ನು ಅವುಗಳ ಒಳರಚನೆಯ ಆಧಾರದ ಮೇಲೂ ವಿಭಜಿಸಲು ಸಾಧ್ಯವಿದೆ. ಆದರೆ ಈ ವಿಭಜನೆ ಮೇಲೆ ಕೊಟ್ಟಿರುವ ರೂಢನಾಮ-ಅಂಕಿತನಾಮ ಎಂಬ ವಿಭಜನೆಯನ್ನು ಅಡ್ಡಕ್ಕೆ ಕತ್ತರಿಸುತ್ತದೆ. ಈ ವಿಭಜನೆಯಲ್ಲಿ ಯಾವ ಒಳರಚನೆಯನ್ನೂ ತೋರಿಸದಿರುವ ನೀರು, ಗಿಡ, ಮರ, ಸೀತೆ ಮೊದಲಾದವುಗಳದು ಒಂದು ವಿಭಾಗವಾದರೆ, ಯಾವುದಾದರೂ ಒಂದು ಪ್ರತ್ಯಯವನ್ನು ಸೇರಿಸುವುದರ ಮೂಲಕ ಸಿದ್ಧವಾದ ‘ಪ್ರತ್ಯಯವಿರುವ’ ನಾಮ ಪದಗಳದು (ಉದಾ: ಅಂಜಿಕೆ, ಕುಣಿತ, ಅಳಿವು, ತಟ್ಟೆ ಇತ್ಯಾದಿ) ಇನ್ನೊಂದು ವಿಭಾಗ, ಮತ್ತು ಎರಡು (ಅಥವಾ ಜಾಸ್ತಿ) ಪದಗಳ ಸೇರಿಕೆಯಿಂದ (ಎಂದರೆ ಸಮಾಸದಿಂದ) ಸಿದ್ಧವಾದ ‘ಜೋಡುಪದ’ಗಳದು (ಉದಾ: ಕಸಬರಿಕೆ, ಕಣ್ಣೀರು, ದೊಡ್ಡಮ್ಮ, ಕೈಗಂಬ ಇತ್ಯಾದಿ) ಮತ್ತೊಂದು ವಿಭಾಗ.
ಇದಲ್ಲದೆ ನಾಮಪದಗಳ ಅರ್ಥ, ಅವು ವಾಕ್ಯದಲ್ಲಿ ನಡೆಸಬೇಕಾಗಿರುವ ಕೆಲಸ, ಮೊದಲಾದವುಗಳನ್ನಾಧರಿಸಿಯೂ ಅವನ್ನು ಬೇರೆ ಬೇರೆ ಪಂಗಡಗಳಾಗಿ ವಿಂಗಡಿಸಲು ಸಾಧ್ಯವಿದೆ. ಘಟನೆಗಳನ್ನು ಹೆಸರಿಸುವ ಭಾವನಾಮಗಳು, ಗುಣಧರ್ಮಗಳನ್ನು ಹೆಸರಿಸುವ ಗುಣನಾಮಗಳು, ಗಣ್ಯ ಮತ್ತು ಅಗಣ್ಯ ನಾಮಪದಗಳು, ಸಜೀವಿ ಮತ್ತು ನಿರ್ಜೀವಿ ನಾಮಪದಗಳು, ಮನುಷ್ಯ- ಮನುಷ್ಯೇತರ ನಾಮಪದಗಳು, ಸಂಖ್ಯಾಪದಗಳು, ಸರ್ವನಾಮಗಳು ಇತ್ಯಾದಿ ವಿಭಜನೆಗಳನ್ನು ಇಲ್ಲಿ ಉದಾಹರಿಸಬಹುದು.
ಕ್ರಿಯಾಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ನಿರ್ದೇಶಿಸುವ ಕ್ರಿಯೆಯನ್ನು ಹೆಸರಿಸಲು ಸಾಧ್ಯವಿದೆ. ಉದಾಹರಣೆಗಾಗಿ ಕುಣಿ ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಕುಣಿತ ಎಂಬ ನಾಮಪದ ಹೆಸರಿಸುತ್ತದೆ; ಬೆದರು ಎಂಬ ಕ್ರಿಯಾಪದವು ನಿರ್ದೇಶಿಸುವ ಕ್ರಿಯೆಯನ್ನು ಬೆದರಿಕೆ ಎಂಬ ನಾಮಪದವು ಹೆಸರಿಸುತ್ತದೆ. ಇಂತಹ ಪ್ರತ್ಯಯವಿರುವ ನಾಮಪದಗಳನ್ನು ‘ಭಾವನಾಮ’ಗಳೆಂದು ಕರೆಯುವ ರೂಢಿಯಿದೆ.
ಇದೇ ರೀತಿಯಲ್ಲಿ ಗುಣಪದಗಳಿಗೆ ಕೆಲವು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಅವು ಸೂಚಿಸುವ ಗುಣಧರ್ಮಗಳನ್ನು ಹೆಸರಿಸುವಂತಹ ನಾಮಪದ ಗಳನ್ನು ರಚಿಸಲು ಸಾಧ್ಯವಿದೆ. ಉದಾಹರಣೆಗಾಗಿ ಬಿಳಿ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಬಿಳುಪು ಎಂಬ ನಾಮಪದ ಹೆಸರಿಸುತ್ತದೆ; ಜಾಣ ಎಂಬ ಗುಣಪದವು ಸೂಚಿಸುವ ಗುಣಧರ್ಮವನ್ನು ಜಾಣ್ಮೆ ಎಂಬ ನಾಮಪದ ಹೆಸರಿಸುತ್ತದೆ. ಇಂತಹ ಪ್ರತ್ಯಯವಿರುವ ನಾಮಪದಗಳನ್ನು ‘ಗುಣನಾಮ’ಗಳೆಂದು ಕರೆಯಬಹುದು.
ಸಂಖ್ಯಾಪದಗಳೊಂದಿಗೆ ಬರುವ ಸಾಧ್ಯತೆಯನ್ನವಲಂಬಿಸಿ ನಾಮಪದಗಳನ್ನು ‘ಗಣ್ಯ’ ಮತ್ತು ‘ಅಗಣ್ಯ’ಗಳೆಂದು ಎರಡು ವಿಭಾಗಗಳಾಗಿ ವಿಂಗಡಿಸಲು ಸಾಧ್ಯ ವಿದೆ. ಆದರೆ ಈ ವಿಭಜನೆ ರೂಢನಾಮಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂಕಿತನಾಮಗಳೆಲ್ಲ ಗಣ್ಯನಾಮಪದಗಳಾಗಿ ಮಾತ್ರವೇ ಇರಬಲ್ಲುವೆಂಬುದನ್ನು ಮುಂದೆ (೩.೫.೧)ರಲ್ಲಿ ನೋಡಲಿರುವೆವು.
ಸಜೀವಿ ಮತ್ತು ನಿರ್ಜೀವಿ ಎಂಬುದಾಗಿ ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು, ಪ್ರಾಣಿ ಮೊದಲಾದುವನ್ನು ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿದ್ದು, ಅವನ್ನು ಹೆಸರಿಸುವ ನಾಮಪದಗಳನ್ನೂ ಈ ಎರಡು ವಿಭಾಗಗಳಲ್ಲಿ ವಿಂಗಡಿಸಿ ಹೇಳಲು ಸಾಧ್ಯವಿದೆ. ಇದಲ್ಲದೆ, ಮನುಷ್ಯ-ಮನುಷ್ಯೇತರ ಎಂಬ ಇನ್ನೊಂದು ಸಜೀವಿಗಳ ವಿಭಜನೆ ಮತ್ತು ಗಂಡು-ಹೆಣ್ಣು ಎಂಬ ಮತ್ತೊಂದು ಸಜೀವಿಗಳ ವಿಭಜನೆ - ಇವೂ ಕೂಡ ಕನ್ನಡದ ನಾಮಪದಗಳಲ್ಲಿ ಕಾಣಿಸುತ್ತವೆ. ವಾಕ್ಯದಲ್ಲಿ ನಾಮಪದಗಳು ನಡೆಸುವ ಕೆಲಸವನ್ನಾಧರಿಸಿಯೂ ಅವನ್ನು ಬೇರೆ ಬೇರೆ ವಿಭಜನೆಗಳಿಗೆ ಒಳಪಡಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಗಣ್ಯ ವಸ್ತುಗಳ ಗಣನೆಯಲ್ಲಿ ಪ್ರಯುಕ್ತವಾಗುವ ಒಂದು, ಎರಡು, ಮೂರು ಮೊದಲಾದುವನ್ನು ಸಂಖ್ಯಾಪದಗಳೆಂಬ ವಿಭಾಗದಲ್ಲೂ ಮತ್ತು ಮಾತಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕೆಲಸಗಳನ್ನು ಸಾಧಿಸಿಕೊಡುವ ವ್ಯಕ್ತಿಗಳನ್ನು ಗುರುತಿಸುವ ನಾನು, ನೀನು, ಅವನು, ತಾನು ಮೊದಲಾದುವನ್ನು ‘ಸರ್ವನಾಮ’ಗಳೆಂಬ ವಿಭಾಗದಲ್ಲೂ ಸೇರಿಸಿ ಹೇಳಲು ಸಾಧ್ಯವಿದೆ. ಇಂತಹ ವಿಭಜನೆಗಳೂ ರೂಢನಾಮಗಳಲ್ಲಿ ಮಾತ್ರ ಕಾಣಿಸುತ್ತವೆ.
ನಾಮಪದಗಳ ಈ ಬೇರೆ ಬೇರೆ ರೀತಿಯ ವಿಭಜನೆಗಳಲ್ಲಿ ಅತ್ಯಂತ ಪ್ರಾಮುಖ್ಯವಾಗಿರುವ ರೂಢನಾಮ-ಅಂಕಿತನಾಮ ಎಂಬ ವಿಭಜನೆಯನ್ನು ಈ ಕೆಳಗೆ ಸ್ವಲ್ಪ ವಿಸ್ತಾರವಾಗಿ ಪರಿಶೀಲಿಸಲಾಗಿದೆ.
೩.೬ ರೂಢನಾಮಗಳು ಮತ್ತು ಅಂಕಿತನಾಮಗಳು
ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸಬಲ್ಲ ನಾಮಪದಗಳನ್ನು ರೂಢನಾಮಗಳು ಮತ್ತು ಅಂಕಿತನಾಮಗಳು ಎಂಬ ಎರಡು ಮುಖ್ಯ ಪಂಗಡಗಳಲ್ಲಿ ವಿಂಗಡಿಸಲು ಸಾಧ್ಯವೆಂಬುದನ್ನು ಮೇಲೆ ನೋಡಿರುವೆವು. ಈ ಎರಡರ ನಡುವಿರುವ ಮುಖ್ಯ ವ್ಯತ್ಯಾಸವೇನೆಂದರೆ, ಅಂಕಿತನಾಮಗಳು ಅವು ಹೆಸರಿಸುವ ವ್ಯಕ್ತಿ, ವಸ್ತು ಇಲ್ಲವೇ ಸ್ಥಳಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಸಂಬಂಧಿತ ವಾಗುತ್ತವೆ, ಆದರೆ ರೂಢನಾಮಗಳು ಅಂತಹವುಗಳಿಗೆಲ್ಲ ಒಂದೇ ಬಾರಿಗೆ ಸಂಬಂಧಿತವಾಗುತ್ತವೆ.
ಉದಾಹರಣೆಗಾಗಿ ಬಸವಪ್ಪ ಎಂಬ ಅಂಕಿತನಾಮವನ್ನು ಪರಿಶೀಲಿಸ ಬಹುದು. ಒಂದೇ ಊರಿನಲ್ಲಿ ಈ ಹೆಸರಿನವರು ಹಲವು ಮಂದಿ ಇರಲು ಸಾಧ್ಯವಿದೆ. ಆದರೆ ಇವರೆಲ್ಲರಿಗೂ ಒಂದೇ ಬಾರಿಗೆ ಈ ಹೆಸರನ್ನು ಕೊಟ್ಟಿಲ್ಲ. ಪ್ರತಿಯೊಬ್ಬನಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಜನರು ಈ ಹೆಸರನ್ನಿಡಲು ನಿರ್ಧರಿಸಿರುತ್ತಾರೆ. ಇದಲ್ಲದೆ, ಹೆಸರು ಒಂದೇ ಆದರೂ ಈ ವ್ಯಕ್ತಿಗಳೊಳಗೆ ಬೇರೆ ಯಾವ ಸಾಮ್ಯತೆಯೂ ಇರಬೇಕಾಗಿಲ್ಲ.
ರೂಢನಾಮಗಳ ಬಳಕೆ ಇದರಿಂದ ತೀರ ಭಿನ್ನವಾದುದು. ಉದಾಹರಣೆಗಾಗಿ ಬಡಗಿ ಎಂಬ ರೂಢನಾಮವನ್ನು ಪರಿಶೀಲಿಸಬಹುದು. ಒಂದೇ ಊರಿನಲ್ಲಿ ಈ ನಾಮಪದ ಹೆಸರಿಸುವ ವ್ಯಕ್ತಿಗಳು ಹಲವಾರು ಮಂದಿ ಇರಲು ಸಾಧ್ಯವಿದೆ ಯೇನೋ ನಿಜ. ಆದರೆ, ಇಂತಹ ವ್ಯಕ್ತಿಗಳನ್ನೆಲ್ಲ ಈ ಪದದ ಮೂಲಕ ಹೆಸರಿಸುವ ನಿರ್ಧಾರವನ್ನು ಕನ್ನಡ ಭಾಷೆಯನ್ನಾಡುವ ಸಮಾಜದಲ್ಲಿ ಯಾವಾಗಲೋ ಒಮ್ಮೆ ಮಾಡಿರಬೇಕು. ಆ ನಿರ್ಧಾರದ ಫಲವಾಗಿ ಆವತ್ತು ಜೀವಿಸುತ್ತಿದ್ದ ಕೆಲವು ವಿಶಿಷ್ಟ ವ್ಯಕ್ತಿಗಳನ್ನು ಮಾತ್ರವಲ್ಲದೆ ಮುಂದೆ ಜೀವಿಸ ಲಿರುವ (ಮತ್ತು ಅದಕ್ಕಿಂತ ಹಿಂದೆ ಜೀವಿಸುತ್ತಿದ್ದ) ಅಂತಹ ಇತರ ಎಲ್ಲಾ ವ್ಯಕ್ತಿಗಳನ್ನೂ ಅದು ಹೆಸರಿಸುವಂತಾಯಿತು. ಈ ಪದ ಹೆಸರಿಸುವ ವ್ಯಕ್ತಿಗಳೊಳಗೆ ಒಂದು ರೀತಿಯ ಸಾಮ್ಯವೂ ಇದೆ. ಅವರೆಲ್ಲ ಒಂದೇ ರೀತಿಯ (ಮರದ ಕೆಲಸ ಮಾಡುವ) ವೃತ್ತಿಯಲ್ಲಿರುವವರು ತಾನೇ!.
೩.೬.೧ ಅರ್ಥದಲ್ಲಿ ವ್ಯತ್ಯಾಸ
ಆದರೆ ಈ ವ್ಯತ್ಯಾಸವನ್ನಾಧರಿಸಿ ರೂಢನಾಮಗಳಿಗೆ ಅರ್ಥವಿದೆ (ಆ ಅರ್ಥವು ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳೊಳಗೆ ಸಮಾನವಾಗಿರುವ ಗುಣಧರ್ಮವನ್ನವಲಂಬಿಸಿರುತ್ತದೆ) ಮತ್ತು ಅಂಕಿತನಾಮಗಳಿಗೆ (ಅವು
ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ನಡುವೆ ಸಾಮ್ಯವಿರಬೇಕಾಗಿಲ್ಲ ಎಂಬುದರಿಂದಾಗಿ) ಅರ್ಥವಿಲ್ಲ ಎಂದು ವಾದಿಸಿದೆವಾದರೆ, ಅದು ತಪ್ಪಾದೀತು. ಯಾಕೆಂದರೆ, ಎರಡಕ್ಕೂ ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮಗಳನ್ನಾಧರಿಸಿ ಅರ್ಥ ಹೇಳಲು ಸಾಧ್ಯವಿದೆ ಮತ್ತು ಎರಡಕ್ಕೂ ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯ ವಿಲ್ಲ.
ಅರ್ಥದ ಮಟ್ಟಿಗೆ ಈ ಎರಡು ರೀತಿಯ ನಾಮಪದಗಳ ನಡುವಿರುವ ವ್ಯತ್ಯಾಸವೇನೆಂದರೆ, ಒಂದು ರೂಢನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಒಂದೇ ಬಾರಿಗೆ ಸಂಬಂಧಿತವಾಗುವುದಾದ ಕಾರಣ, ಅವೆಲ್ಲವುಗಳಿಗೂ ಸಮಾನವಾಗಿರುವಂತಹ ಗುಣಧರ್ಮಗಳು ಅದರ ಅರ್ಥವಾಗ ಬಲ್ಲುವು. ಆದರೆ, ಒಂದು ಅಂಕಿತನಾಮ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಬೇರೆ ಬೇರಾಗಿ ಸಂಬಂಧಿತವಾಗುವುದಾದ ಕಾರಣ, ಅದು ಹೆಸರಿಸುವ ಪ್ರತಿಯೊಂದು ವ್ಯಕ್ತಿ ಇಲ್ಲವೇ ವಸ್ತುವಿಗೂ ಸಂಬಂಧಿಸಿದಂತೆ ಅದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳಿರುತ್ತವೆ. ಈ ಎರಡು ರೀತಿಯ ನಾಮಪದಗಳ ಬಳಕೆಗೂ ಅರ್ಥದ ಅವಶ್ಯಕತೆಯಿದೆಯೆಂಬುದನ್ನು ಈ ಕೆಳಗಿನ ವಿಷಯ ಸ್ಪಷ್ಟಪಡಿಸುತ್ತದೆ.
ರೂಢನಾಮದ ಅರ್ಥವನ್ನಾಧರಿಸಿ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತು ವನ್ನು ಗುರುತಿಸಲು ಸಾಧ್ಯವಿರುವಂತೆ, ಅಂಕಿತನಾಮದ ಅರ್ಥವನ್ನಾಧರಿಸಿ ಅದು ಹೆಸರಿಸುವ ವ್ಯಕ್ತಿ ಇಲ್ಲವೇ ವಸ್ತುವನ್ನೂ ಗುರುತಿಸಲು ಸಾಧ್ಯವಿದೆ. ಉದಾ ಹರಣೆಗಾಗಿ ನಳಿನಿ ಎಂಬ ಅಂಕಿತನಾಮ ನಮಗೆ ಪರಿಚಯವಿರುವ ಹುಡುಗಿ ಯೊಬ್ಬಳನ್ನು ಹೆಸರಿಸುವುದಿದ್ದಲ್ಲಿ, ಆ ಹುಡುಗಿಯ ಕೆಲವು ವಿಶಿಷ್ಟವಾದ ಗುಣ ಧರ್ಮಗಳನ್ನು ಅದರ ಅರ್ಥವೆಂದು ಪರಿಗಣಿಸಲು ಸಾಧ್ಯವಿದೆ. ನಳಿನಿ ಎಂಬ ಪದದ ಮೂಲಕ ನಾವು ಆ ಹುಡುಗಿಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ - ಆಕೆ ಲಂಗ ಹಾಕಿರುವಾಗ, ಸೀರೆ ತೊಟ್ಟಿರುವಾಗ, ಇಲ್ಲವೇ ಕಾಯಿಲೆಯಿಂದ ಬಹಳ ಕೃಶವಾಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ಗುರುತಿಸಬೇಕಿದ್ದಲ್ಲಿ ಈ ವಿಶಿಷ್ಟ ಗುಣಧರ್ಮಗಳು, ಎಂದರೆ ನಳಿನಿ ಎಂಬ ಪದಕ್ಕೆ ನಾವು ಕೊಡಬಹುದಾದ ಅರ್ಥ, ಸಹಾಯಕವಾಗುತ್ತದೆ.
ಹುಡುಗಿ ಎಂಬ ರೂಢನಾಮಕ್ಕೂ ಅದು ಹೆಸರಿಸುವ ವ್ಯಕ್ತಿಗಳಲ್ಲಿ ಕಾಣಿಸುವ ಕೆಲವು ವಿಶಿಷ್ಟವಾದ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳಬೇಕಾಗುತ್ತದೆ, ಮತ್ತು ಈ ವ್ಯಕ್ತಿಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹುಡುಗಿ ಎಂಬ ಹೆಸರಿನ ಮೂಲಕ ಗುರುತಿಸಬೇಕಾದಾಗ ಈ ಗುಣಧರ್ಮಗಳು
- ಎಂದರೆ ಅವನ್ನಾಧರಿಸಿ ಸಾಧಿಸಲಾಗಿರುವ ಹುಡುಗಿ ಎಂಬ ಪದದ ಅರ್ಥ ಸಹಾಯಕ್ಕೆ ಬರುತ್ತದೆ. ಆದರೆ ಅಂಕಿತನಾಮದ ಹಾಗೆ ಇಲ್ಲಿ ಒಂದೇ ವ್ಯಕ್ತಿಯ ಗುಣಧರ್ಮದ ಆಧಾರದ ಮೇಲೆ ಅರ್ಥ ಹೇಳುವುದಿಲ್ಲ. ಇದಕ್ಕೆ ಬದಲು ಆ
ಪದ ಹೆಸರಿಸುವ ಬೇರೆ ಬೇರೆ ಹಲವಾರು ವ್ಯಕ್ತಿಗಳಿಗೆ ಸಮಾನವಾಗಿರುವ ಗುಣಧರ್ಮಗಳ ಆಧಾರದ ಮೇಲೆ ಅರ್ಥ ಹೇಳುತ್ತೇವೆ.
ಆದರೆ, ಒಂದು ಅಂಕಿತನಾಮ ಈ ರೀತಿ ಹಲವಾರು ವ್ಯಕ್ತಿಗಳನ್ನು ಹೆಸರಿಸುತ್ತಿದೆಯಾದರೆ (ಎಂದರೆ, ನಳಿನಿ ಎಂಬ ಹೆಸರಿನ ಹುಡುಗಿಯರು ಹಲವರಿರುವರಾದರೆ) ಅವರಲ್ಲಿ ಪ್ರತಿಯೊಬ್ಬರಿಗೂ ಸಂಬಂದಿಸಿದಂತೆ ಆ ಪದಕ್ಕೆ ಹಲವಾರು ಬೇರೆ ಬೇರೆ ಅರ್ಥಗಳನ್ನು ಸಾಧಿಸಿಕೊಳ್ಳಬೇಕಾದೀತು. ಅಂಕಿತನಾಮ ವನ್ನು ಈ ವ್ಯಕ್ತಿಗಳಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರಾಗಿ ಸಂಬಂಧಿಸ ಲಾಗಿದೆ ಮತ್ತು ರೂಢನಾಮವನ್ನು ಒಂದೇ ಸಂದರ್ಭದಲ್ಲಿ ಎಲ್ಲರಿಗೂ ಒಟ್ಟಾಗಿ ಸಂಬಂಧಿಸಲಾಗಿದೆ ಎಂಬುದೇ ಈ ವ್ಯತ್ಯಾಸಕ್ಕೆ ಮೂಲ ಕಾರಣ.
ರೂಢನಾಮದ ಅರ್ಥವನ್ನು ನೇರವಾಗಿ ಅದರ ಒಳರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದೆಂಬುದನ್ನು ಮೇಲೆಯೇ ನೋಡಿರುವೆವು. ಕರಿಹಲಗೆ ಎಂಬ ರೂಢನಾಮವು ಗುರುತಿಸುವ ಸಾಧನ ಕಪ್ಪಾಗಿಯೂ ಇರ ಬೇಕಾಗಿಲ್ಲ, ಹಲಗೆಯಿಂದ ತಯಾರಿಸಿದ್ದೂ ಆಗಬೇಕಾಗಿಲ್ಲ; ಊಟದ ಸಮಯ ದಲ್ಲಿ ಕೊಡುವ ಬಿಸಿನೀರು ತಣ್ಣೀರಿಗಿಂತಲೂ ತಣ್ಣಗಾಗಿರಲು ಸಾಧ್ಯವಿದೆ; ಚಿಕ್ಕಮ್ಮನು ಪ್ರಾಯದಲ್ಲಿ ಮತ್ತು ಗಾತ್ರದಲ್ಲಿ ಅಮ್ಮನಿಗಿಂತ ದೊಡ್ಡವಳಾಗಿರಲು ಸಾಧ್ಯವಿದೆ; ಇಂತಹ ಹಲವಾರು ಉದಾಹರಣೆಗಳನ್ನು ಇದಕ್ಕೆ ಆಧಾರವಾಗಿ ಕೊಡಬಹುದು.
ಅಂಕಿತನಾಮದ ಅರ್ಥವನ್ನೂ ಇದೇ ರೀತಿಯಲ್ಲಿ ನೇರವಾಗಿ ಅವುಗಳ ಒಳರಚನೆಯ ಆಧಾರದ ಮೇಲೆ ಸಾಧಿಸಲು ಸಾಧ್ಯವಾಗದು. ಉದಾಹರಣೆಗಾಗಿ, ಕ್ಷೀರಸಾಗರ ಎಂಬ ಹೆಸರು (ಅಂಕಿತನಾಮ) ಇರುವ ಒಬ್ಬ ವ್ಯಕ್ತಿಯ ಮನೆಯಲ್ಲಿ ಸ್ವಲ್ಪವೂ ಹಾಲಿಲ್ಲದಿರಲು ಸಾಧ್ಯವಿದೆ; ಕರಿಯಪ್ಪ ಎಂಬ ಹೆಸರಿನ ವ್ಯಕ್ತಿ ಬೆಳ್ಳಪ್ಪ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿಗಿಂತ ಹೆಚ್ಚು ಬೆಳ್ಳಗಿರಲು ಸಾಧ್ಯವಿದೆ; ವಿದ್ಯಾಶಾಸ್ತ್ರಿ ಎಂಬ ಹುಡುಗಿ ನಾಲ್ಕು ಬಾರಿ ಪರೀಕ್ಷೆಯಲ್ಲಿ ಫೇಲಾಗಿರಲು ಸಾಧ್ಯವಿದೆ; ಇತ್ಯಾದಿ. ಈ ಎರಡು ರೀತಿಯ ನಾಮಪದಗಳೂ ಹೆಸರಿಸುವ ವಿಧಾನದ ಮೂಲಕ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವುವಾದ ಕಾರಣ, ಅವುಗಳ ಅರ್ಥವನ್ನು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾ ದವುಗಳ ಗುಣಧರ್ಮದ ಆಧಾರದ ಮೇಲೆ ಮಾತ್ರವೇ ಸಾಧಿಸಲು ಸಾಧ್ಯ. ಈ ವಿಷಯದಲ್ಲಿ ರೂಢನಾಮ ಮತ್ತು ಅಂಕಿತನಾಮಗಳ ನಡುವೆ ವ್ಯತ್ಯಾಸವಿಲ್ಲ ಎಂಬುದನ್ನಿಲ್ಲಿ ಗಮನಿಸಿಕೊಳ್ಳುವುದು ಅವಶ್ಯ.
೩.೬.೨ ಸಂಬಂಧದಲ್ಲಿ ವ್ಯತ್ಯಾಸ
ಒಂದು ಭಾಷೆಯಲ್ಲಿ ಬರುವ ರೂಢನಾಮಗಳ ನಡುವೆ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಅಂಕಿತನಾಮಗಳ ನಡುವೆ ಇಂತಹ ಸಂಬಂಧಗಳಿರುವುದಿಲ್ಲ ಎಂಬುದು ಈ ಎರಡು ರೀತಿಯ ನಾಮಪದಗಳ
ನಡುವಿರುವ ಇನ್ನೊಂದು ಮುಖ್ಯ ವ್ಯತ್ಯಾಸ. ಇದಕ್ಕೂ ಕೂಡ ರೂಢನಾಮಗಳು ತಾವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದುವನ್ನು ಒಟ್ಟಾಗಿ ಹೆಸರಿಸುತ್ತವೆ, ಮತ್ತು ಅಂಕಿತನಾಮಗಳು ಅವನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೆಸರಿಸುತ್ತವೆ ಎಂಬುದೇ ಮೂಲ ಕಾರಣ.
ಒಬ್ಬ ವ್ಯಕ್ತಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಸಮಾನ ಗುಣಧರ್ಮಗಳನ್ನು ತೋರಿಸುತ್ತಿರಲು ಸಾಧ್ಯವಿದೆಯಾದ ಕಾರಣ, ಆ ವ್ಯಕ್ತಿಯನ್ನು ಬೇರೆ ಬೇರೆ ರೂಢನಾಮಗಳ ಮೂಲಕ ಗುರುತಿಸಲು ಸಾಧ್ಯವಿದೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿಯನ್ನು ಮುದುಕ, ಬಡವ, ಕುಳ್ಳ, ಮೇಷ್ಟ್ರು, ಬ್ರಹ್ಮಚಾರಿ, ಕುರುಡ ಮೊದಲಾದ ಹಲವಾರು ರೂಢನಾಮಗಳ ಮೂಲಕ ಗುರುತಿಸಿ ಹೇಳಲು ಸಾಧ್ಯ ವಿದೆ. ಆತನಿಗೆ ಇತರ ಮುದುಕರೊಂದಿಗೆ ಸಮಾನ ಗುಣಧರ್ಮಗಳಿವೆಯಾದರೆ ಆತನನ್ನು ಮುದುಕ ಎಂಬ ರೂಢನಾಮದಿಂದ ಗುರುತಿಸಬಹುದು, ಮತ್ತು ಅದೇ ವ್ಯಕ್ತಿಗೆ ಇತರ ಬಡವರೊಂದಿಗೆ ಸಮಾನ ಗುಣಧರ್ಮಗಳಿವೆಯಾದರೆ ಆತನನ್ನು ಬಡವ ಎಂಬ ರೂಢನಾಮದಿಂದ ಗುರುತಿಸಬಹುದು, ಇತ್ಯಾದಿ.
ಇದಲ್ಲದೆ, ರೂಢನಾಮಗಳು ಗುರುತಿಸುವ ವ್ಯಕ್ತಿಗಳು ಎಂತೆಂತಹ ಗುಂಪು ಗಳಲ್ಲೆಲ್ಲ ಸೇರಿಕೊಂಡಿರಬಲ್ಲರು ಮತ್ತು ಆ ಗುಂಪುಗಳ ನಡುವೆ ಯಾವ ಯಾವ ರೀತಿಯ ಸಂಬಂಧಗಳೆಲ್ಲ ಇವೆ ಎಂಬ ವಿಷಯದ ಆಧಾರದ ಮೇಲೆ ಅವರನ್ನು ಗುರುತಿಸುವ ರೂಢನಾಮಗಳ ನಡುವೆಯೂ ಬೇರೆ ಬೇರೆ ರೀತಿಯ ಸಂಬಂಧ ಗಳನ್ನು ಕಾಣಲು ಸಾಧ್ಯವಿದೆ. ಉದಾಹರಣೆಗಾಗಿ, ಒಂದು ರೂಢನಾಮವು ಗುರುತಿಸುವ ವ್ಯಕ್ತಿಗಳನ್ನೆಲ್ಲ ಇನ್ನೊಂದು ರೂಢನಾಮವೂ ಗುರುತಿಸಬಲ್ಲುದಾದರೆ (ಉದಾ: ನೌಕರ ಮತ್ತು ಸೇವಕ) ಅಂತಹ ಎರಡು ಪದಗಳು ಸಮಾನಾರ್ಥಕಗಳು ಇಲ್ಲವೇ ‘ಪರ್ಯಾಯ’ ಪದಗಳೆಂದು ಹೇಳಬಹುದು. ಎರಡನೆಯ ಪದ ಬೇರೆಯೂ ಕೆಲವು ವ್ಯಕ್ತಿಗಳನ್ನು ಗುರುತಿಸಬಲ್ಲುದಾದರೆ (ಉದಾ: ಗಂಡಸು ಮತ್ತು ಮನುಷ್ಯ) ಅವುಗಳಲ್ಲಿ ಮೊದಲನೆಯದು ಎರಡನೆಯದರಲ್ಲಿ ‘ಅಂತರ್ಗತ’ವಾಗಿರುವ ಪದವೆಂದು ಹೇಳಬಹುದು.
ಎರಡು ರೂಢನಾಮಗಳಲ್ಲಿ ಒಂದು ಗುರುತಿಸುವ ವ್ಯಕ್ತಿಗಳಲ್ಲಿ ಕೆಲವರನ್ನು ಮಾತ್ರ ಇನ್ನೊಂದು ಗುರುತಿಸುತ್ತಿದ್ದು, ಅದು ಬೇರೆ ಕೆಲವು ವ್ಯಕ್ತಿಗಳನ್ನೂ ಗುರುತಿಸುತ್ತಿದೆಯಾದರೆ (ಉದಾ: ಮುದುಕ ಮತ್ತು ಬಡವ) ಅವುಗಳೊಳಗೆ ಒಂದನ್ನೊಂದು ‘ಸೀಳುವ’ ಸಂಬಂಧವಿದೆಯೆಂದು ಹೇಳಬಹುದು. ಮತ್ತು ಎರಡು ರೂಢನಾಮಗಳು ಗುರುತಿಸುವ ವ್ಯಕ್ತಿಗಳು ಭಿನ್ನ ಭಿನ್ನರಾಗಿರುವರಾದರೆ (ಉದಾ: ಗಂಡಸು ಮತ್ತು ಹೆಂಗಸು) ಅವುಗಳ ನಡುವೆ ‘ಅಸಂಗತ’ ಸಂಬಂಧವಿದೆ ಯೆಂದು ಹೇಳಬಹುದು.
ಆದರೆ, ಅಂಕಿತನಾಮಗಳ ನಡುವೆ ಈ ರೀತಿ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಕಾಣಲು ಸಾಧ್ಯವಾಗದು. ಹೆಚ್ಚಿನ ಅಂಕಿತನಾಮಗಳಿಗೂ ಅವು ಗುರುತಿಸುವ ವ್ಯಕ್ತಿಗಳು (ಇಲ್ಲವೇ ವಸ್ತುಗಳು) ಹಲವಿರುವುದು ನಿಜವಾದರೂ
ಇಂತಹ ವ್ಯಕ್ತಿ ಇಲ್ಲವೇ ವಸ್ತುಗಳೊಳಗೆ ಸಾಮ್ಯವೇನೂ ಇರಬೇಕಾಗಿಲ್ಲ. ಈ ನಿಯಮಕ್ಕೆ ಕೆಲವು ಅಪವಾದಗಳಿವೆಯೇನೋ ನಿಜ. ಉದಾಹರಣೆಗಾಗಿ, ಗಂಡಸರನ್ನು ಮತ್ತು ಹೆಂಗಸರನ್ನು ಗುರುತಿಸುವ ಅಂಕಿತನಾಮಗಳು ಸಾಮಾನ್ಯ ವಾಗಿ ಬೇರೆ ಬೇರಾಗಿರುತ್ತವೆ. ಜಾನಕಿ ಎಂಬ ಹೆಸರನ್ನು ಗಂಡಸರಿಗಾಗಲೀ ಇಲ್ಲವೇ ರಾಜು ಎಂಬ ಹೆಸರನ್ನು ಹೆಂಗಸರಿಗಾಗಲೀ ಕೊಟ್ಟಿರುವುದನ್ನು ನಾವು ಕಾಣುವುದಿಲ್ಲ. ಹಾಗಾಗಿ, ಈ ಎರಡು ರೀತಿಯ ಪದಗಳ ನಡುವೆ ‘ಅಸಂಗತ’ ಎಂಬ ಸಂಬಂಧವಿದೆಯೆಂದು ವಾದಿಸಲು ಸಾಧ್ಯವಿದೆ.
ಆದರೆ ಈ ನಿಯಮಕ್ಕೆ ಅಪವಾದಗಳಿರಲೂ ಸಾಧ್ಯವಿದೆ. ಇಲ್ಲಿ ಗಮನಿಸ ಬೇಕಾಗಿರುವ ಮುಖ್ಯವಾದ ಅಂಶವೇನೆಂದರೆ, ಅಂಕಿತನಾಮಗಳ ಬಳಕೆಗೆ ಅವು ಗುರುತಿಸುವ ಬೇರೆ ಬೇರೆ ವ್ಯಕ್ತಿಗಳ ಇಲ್ಲವೇ ವಸ್ತುಗಳ ನಡುವೆ ಸಾಮ್ಯವಿರುವ ಅವಶ್ಯಕತೆಯಿಲ್ಲ, ಮತ್ತು ಹಾಗೆ ಇದ್ದರೂ ಅದು ಅವುಗಳ ತಯಾರಿಕೆ ಮತ್ತು ಬಳಕೆಯ ಹಿಂದಿರುವ ಮೂಲ ತತ್ವಗಳಿಂದ ಸಾಧಿತವಾದುದಲ್ಲ.
೩.೬.೩ ಗಣ್ಯ ಮತ್ತು ಅಗನ್ಯ
ರೂಢನಾಮಗಳನ್ನು ಗಣ್ಯ ಮತ್ತು ಅಗಣ್ಯವೆಂದು ಎರಡು ವಿಧವಾಗಿ ವಿಂಗಡಿಸಲು ಸಾಧ್ಯವಿದೆ. ಗಣ್ಯನಾಮಗಳು ಗುರುತಿಸುವ ವಸ್ತುಗಳನ್ನು ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ಲೆಕ್ಕ ಹಾಕಿ ಹೇಳಲು ಸಾಧ್ಯವಿದೆ (ಉದಾ: ಬಾಲೆಹಣ್ಣು) ಮತ್ತು ಅಗಣ್ಯನಾಮಗಳು ಗುರುತಿಸುವ ವಸ್ತುಗಳನ್ನು ಈ ರೀತಿ ಲೆಕ್ಕ ಹಾಕಿ ಹೇಳಲು ಸಾಧ್ಯವಿಲ್ಲ (ಉದಾ: ನೀರು) ಎಂಬುದೇ ಈ ಎರಡು ರೀತಿಯ ರೂಢನಾಮಗಳ ನಡುವಿರುವ ವ್ಯತ್ಯಾಸ. ಗಣ್ಯನಾಮಗಳು ಗುರುತಿಸುವ ವಸ್ತುಗಳು ನಮ್ಮ ಕಣ್ಣಿಗೆ ಕಾಣಿಸುವಂತೆ ಪ್ರತ್ಯೇಕ ಪ್ರತ್ಯೇಕವಾದ ಅಸ್ತಿತ್ವವಿರುವ ಹಲವು ವಸ್ತುಗಳ ಸಮುದಾಯವಾಗಿರುವುದೇ ಇದಕ್ಕೆ ಕಾರಣ.
ಆದರೆ, ಅಂಕಿತನಾಮಗಳನ್ನು ಈ ರೀತಿ ಗಣ್ಯ ಮತ್ತು ಅಗಣ್ಯ ಎಂಬುದಾಗಿ ವಿಂಗಡಿಸಲು ಸಾಧ್ಯವಾಗದು. ಅವುಗಳ ಮೂಲಕ ಸಾಮಾನ್ಯವಾಗಿ ಗಣ್ಯವಸ್ತು ಗಳನ್ನು ಮಾತ್ರವೇ ಗುರುತಿಸಲಾಗುತ್ತದೆ ಎಂಬುದೇ ಇದಕ್ಕೆ ಕಾರಣ. ಇದು ಈ ಎರಡು ರೀತಿಯ ನಾಮಪದಗಳ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವೆಂದು ಹೇಳಬಹುದು. ನೀರಿನಂತಹ ಅಗಣ್ಯವಸ್ತುಗಳು ಅವುಗಳ ಪಾತ್ರೆಗಳ ಆಧಾರದ ಮೇಲೆ ಪ್ರತ್ಯೇಕತೆಯನ್ನು ಪಡೆದು ಗಣ್ಯವಸ್ತುಗಳಾದಾಗ ಮಾತ್ರ ಅವನ್ನು ಅಂಕಿತನಾಮಗಳ ಮೂಲಕ ಗುರುತಿಸಲು ಸಾಧ್ಯವಾದೀತು. ಉದಾಹರಣೆಗಾಗಿ ಒಂದು ನದಿಯಾಗಿ ಹರಿಯುವ ನೀರನ್ನು ಕಾವೇರಿ ಎಂಬ ಅಂಕಿತನಾಮದ ಮೂಲಕ ಗುರುತಿಸಬಲ್ಲೆವು ಮತ್ತು ಒಂದು ದೇಶವಾಗಿ ನಿಲ್ಲುವ ಮಣ್ಣನ್ನು ಭಾರತ ಎಂಬ ಅಂಕಿತನಾಮದ ಮೂಲಕ ಗುರುತಿಸಬಲ್ಲೆವು, ಇತ್ಯಾದಿ.
ಅಂಕಿತನಾಮಗಳನ್ನು ಅವು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಅನ್ವಯಿಸಬೇಕಾಗಿದೆಯಾದ ಕಾರಣ ಮತ್ತು ಅಗಣ್ಯ ವಸ್ತು
ಗಳು ಈ ರೀತಿ ಪ್ರತ್ಯೇಕ ಪ್ರತ್ಯೇಕವಾಗಿ ಒಡೆದುಕೊಂಡಿಲ್ಲವಾದ ಕಾರಣ, ಅಂಕಿತನಾಮಗಳು ಅಗಣ್ಯವಸ್ತುಗಳಿಗೆ ಹೆಸರುಗಳಾಗಿ ಬರುವುದಿಲ್ಲವೆಂದು ಹೇಳ ಬಹುದು. ಹೀಗೆ ಈ ಮೂರನೆಯ ಮುಖ್ಯ ವ್ಯತ್ಯಾಸವೂ ಈ ಎರಡು ರೀತಿಯ ನಾಮಪದಗಳು ಯಾವ ರೀತಿಯಲ್ಲಿ ಅವು ಗುರುತಿಸುವ ವಸ್ತುಗಳೊಂದಿಗೆ ಸಂಬಂಧಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ.
೩.೭ ಸಾರಾಂಶ
ನಾಮಪದ ಇಲ್ಲವೇ ನಾಮಪದಗುಚ್ಛಗಳನ್ನು ಪ್ರಾಮುಖ್ಯವಾಗಿ ವ್ಯಕ್ತಿ, ವಸ್ತು, ವಿಷಯ ಮೊದಲಾದವುಗಳನ್ನು ಗುರುತಿಸುವುದಕ್ಕಾಗಿ ವಾಕ್ಯಗಳಲ್ಲಿ ಬಳಸುತ್ತೇವೆ. ಈ ಗುರುತಿಸುವ ಕೆಲಸವನ್ನು ಹೆಸರಿಸುವುದು ಮತ್ತು ವರ್ಣಿಸುವುದು ಎಂಬ ಎರಡು ಬೇರೆ ಬೇರೆ ವಿಧಾನಗಳ ಮೂಲಕ ನಡೆಸಲು ಸಾಧ್ಯವಿದೆ. ಸಾಮಾನ್ಯ ವಾಗಿ, ನಾಮಪದಗಳು ಹೆಸರಿಸುವ ವಿಧಾನದಲ್ಲೂ ಮತ್ತು ನಾಮಪದಗುಚ್ಛಗಳು ವರ್ಣಿಸುವ ವಿಧಾನದಲ್ಲೂ ಬಳಕೆಯಾಗುತ್ತವೆ. ಆದರೆ ಕೆಲವು ವಿಶಿಷ್ಟವಾದ ನಾಮಪದಗುಚ್ಛಗಳು ಹೆಸರಿಸುವ ವಿಧಾನದಲ್ಲೂ ಬಳಕೆಯಾಗಬಲ್ಲುವು. ಇದ ಲ್ಲದೆ, ವರ್ಣಿಸುವ ವಿಧಾನದಲ್ಲಿ ಕ್ರಿಯಾಪದಗಳ ಮತ್ತು ಗುಣಪದಗಳ ಕೆಲವು ರೂಪಗಳೂ ಬರಬಲ್ಲುವು.
ಕೆಲವು ಸಂದರ್ಭಗಳಲ್ಲಿ ನಾಮಪದಗಳನ್ನು ನಾಮಪದಗುಚ್ಛಗಳಿಂದ ಪ್ರತ್ಯೇ ಕಿಸುವುದು ಸ್ವಲ್ಪ ಕಷ್ಟವೆಂದು ತೋರಬಹುದು. ಆದರೆ ಹೆಸರಿಸುವ ವಿಧಾನದಲ್ಲಿ ಬಳಕೆಯಾಗುವ ಪದಕ್ಕೂ ಮತ್ತು ವರ್ಣಿಸುವ ವಿಧಾನದಲ್ಲಿ ಬಳಕೆಯಾಗುವ ಪದಗುಚ್ಛ ಇಲ್ಲವೇ ಪದರೂಪಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಈ ಎಲ್ಲಾ ವ್ಯತ್ಯಾಸಗಳನ್ನೂ ಆಧಾರವಾಗಿರಿಸಿಕೊಂಡು ಅವನ್ನು ಬೇರ್ಪಡಿಸಲು ಸಾಧ್ಯ. ಪದಗಳ ಒಳರಚನೆಯನ್ನು ವರ್ಣಿಸುವ ಈ ಪುಸ್ತಕದಲ್ಲಿ ಹೆಸರಿಸುವ ವಿಧಾನ ದಲ್ಲಿ ಬಳಕೆಯಾಗುವ ಪದಗಳನ್ನು ಮಾತ್ರ ಪರಿಶೀಲಿಸುವ ಅವಶ್ಯಕತೆಯಿದೆ. ವರ್ಣಿಸುವ ವಿಧಾನದಲ್ಲಿ ಬರುವ ಪದಗುಚ್ಛಗಳು ಮತ್ತು ಪದರೂಪಗಳು ವಾಕ್ಯರಚನೆಯ ನಿಯಮಕ್ಕೆ ಅನುಸಾರವಾಗಿ ತಯಾರಾಗುವ ಕಾರಣ, ಅವನ್ನು ವಾಕ್ಯಗಳ ಒಳರಚನೆಯೆಂಬ ಬೇರೊಂದು ಪುಸ್ತಕದಲ್ಲಿ ಪರಿಶೀಲಿಸಬಹುದು.
ಹೆಸರಿಸುವ ವಿಧಾನದಲ್ಲಿ ಬರುವ ಪದಗಳನ್ನು ಬೇರೆ ಬೇರೆ ರೀತಿಯಲ್ಲಿ ವಿಂಗಡಿಸಲು ಸಾಧ್ಯವಿದೆ. ಇವುಗಳಲ್ಲಿ ರೂಢನಾಮ ಮತ್ತು ಅಂಕಿತನಾಮ ಎಂಬ ವಿಂಗಡನೆ ಬಹಳ ಪ್ರಾಮುಖ್ಯವಾದುದು. ಅಂಕಿತನಾಮಗಳಲ್ಲಿ ಪ್ರತಿಯೊಂದನ್ನೂ ಅವು ಹೆಸರಿಸುವ ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಅನ್ವಯಿಸಲಾಗಿದೆ, ಮತ್ತು ರೂಢನಾಮಗಳಲ್ಲಿ ಪ್ರತಿಯೊಂದನ್ನೂ ಅವು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾದವುಗಳಿಗೆ ಒಂದೇ ಬಾರಿಗೆ ಅನ್ವಯಿಸ
ಲಾಗಿದೆ ಎಂಬುದೇ ಈ ಎರಡು ರೀತಿಯ ನಾಮಪದಗಳ ನಡುವಿರುವ ಮುಖ್ಯ ವ್ಯತ್ಯಾಸ.