← Ch 4 · Contents · ↑ Contents
Chapters: Ch 1 · Ch 2 · Ch 3 · Ch 4 · Ch 5
ಭಾಗ ಐದು — ಜಗತ್ತಿನ ಭಾಷೆಗಳು
ಜಗತ್ತಿನ ಭಾಷೆಗಳು
ಪ್ರಪಂಚದಲ್ಲಿ ಒಟ್ಟು ಎಷ್ಟು ಭಾಷೆಗಳಿವೆ ಎಂಬ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ಕೊಡುವುದು ಸ್ವಲ್ಪ ಕಷ್ಟ. ಇದಕ್ಕೆ ಹಲವು ಕಾರಣಗಳಿವೆ. ಸಂಶೋಧಕರ ಗಮನಕ್ಕೆ ಬಾರದಿರುವ ಭಾಷೆಗಳು ಹಲವಿವೆಯೆಂಬುದು ಒಂದು ಮುಖ್ಯವಾದ ಕಾರಣ. ಉದಾಹರಣೆಗಾಗಿ, ದಕ್ಷಿಣ ಅಮೆರಿಕಾದ ಅಭೇದ್ಯವಾದ ಕಾಡುಗಳಲ್ಲಿ ವಾಸಿಸುವ ಹಲವು ಜನಾಂಗಗಳನ್ನು ಮತ್ತು ಅವರಾಡುವ ಭಾಷೆಗಳನ್ನು ಸಂಶೋಧಕರಿನ್ನೂ ಸರಿಯಾಗಿ ಅಭ್ಯಾಸ ಮಾಡಿಲ್ಲ. ನಮ್ಮ ದೇಶದಲ್ಲೂ ಗುಡ್ಡ ಕಾಡುಗಳಲ್ಲಿ ವಾಸಿಸುವ ಹಲಕೆಲವು ಜನಾಂಗಗಳ ಭಾಷೆಗಳೆಂತಹವೆಂಬುದನ್ನು ನಾವಿನ್ನೂ ಸರಿಯಾಗಿ ತಿಳಿದಿಲ್ಲ.
ಎರಡನೆಯದಾಗಿ, ಎರಡು ಸಮಾಜಗಳಲ್ಲಿ ಬಳಕೆಯಲ್ಲಿರುವ ಭಾಷಾ ಪ್ರಭೇದಗಳನ್ನು ಎರಡು ಭಾಷೆಗಳೆಂದು ಪರಿಗಣಿಸಬೇಕೇ, ಇಲ್ಲವೇ ಒಂದೇ ಭಾಷೆಯ ಎರಡು ಪ್ರಭೇದಗಳೆಂದು ಪರಿಗಣಿಸಬೇಕೇ ಎಂಬ ವಿಷಯದಲ್ಲಿ ಅಭಿಪ್ರಾಯಭೇದಗಳಿರಲು ಸಾಧ್ಯ. ಈ ಕಾರಣಕ್ಕಾಗಿಯೂ ಬೇರೆ ಬೇರೆ ವಿದ್ವಾಂಸರು ಕೊಡುವ ಭಾಷೆಗಳ ಪಟ್ಟಿ ಬೇರೆ ಬೇರಾಗಲು ಸಾಧ್ಯವಿದೆ.
ಕೆಲವು ವಿದ್ವಾಂಸರ ಮತದಂತೆ, ಪ್ರಪಂಚದಲ್ಲಿ ಒಟ್ಟು ಸುಮಾರು ಐದು ಸಾವಿರ ಭಾಷೆಗಳು ಬಳಕೆಯಲ್ಲಿವೆ. ಈ ಸಂಖ್ಯೆ ಇದಕ್ಕೆ ಎರಡರಷ್ಟು, ಎಂದರೆ ಸುಮಾರು ಹತ್ತು ಸಾವಿರದಷ್ಟೆಂದು ಹೇಳುವವರೂ ಕೆಲವರಿದ್ದಾರೆ, ಮತ್ತು ಇದನ್ನು ಮೂರು ಸಾವಿರಕ್ಕೆ ಇಳಿಸುವವರೂ ಕೆಲವರಿದ್ದಾರೆ. ಈ ಭಾಷೆಗಳಲ್ಲಿ ಹೆಚ್ಚಿನವನ್ನೂ ಇಂಡೋ-ಯುರೋಪಿಯನ್, ಟಿಬೆಟೋ-ಬರ್ಮನ್, ಆಫ್ರಿ- ಏಶಿಯಾಟಿಕ್, ಆಸ್ಟ್ರಿಕ್, ಇಂಡೋ-ಪೆಸಿಫಿಕ್ ಮೊದಲಾದ ಕೆಲವು ಭಾಷಾ ಕುಟುಂಬಗಳಲ್ಲಿ ಸೇರಿಸಿ ಹೇಳುವ ಪ್ರಯತ್ನವೂ ನಡೆದಿದೆ. ಮುಖ್ಯವಾಗಿ ಇಂತಹ ಹದಿನೈದಿಪ್ಪತ್ತು ಭಾಷಾಕುಟುಂಬಗಳನ್ನು ಇದಕ್ಕಾಗಿ ಕಲ್ಪಿಸಿಕೊಳ್ಳಲಾಗಿದೆ.
ಪ್ರಪಂಚದಲ್ಲಿ ಕಾಣಿಸುವ ಈ ಭಾಷಾವೈವಿಧ್ಯ ಒಂದು ರೀತಿಯಲ್ಲಿ ಮಾನವ ಸಂಸ್ಕೃತಿಯ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆಯೆಂದೂ ಹೇಳಬಹುದು. ಪ್ರತಿಯೊಂದು ಸಮಾಜದ ಭಾಷೆಯೂ ಆ ಸಮಾಜದಲ್ಲಿರುವ ಜನರ ದಿನನಿತ್ಯದ ಜೀವನಕ್ಕೆ ಹೊಂದಿಕೊಳ್ಳುವಂತೆ ಸಾವಿರಾರು ವರ್ಷಗಳಿಂದ ಬದಲಾಗುತ್ತಾ ಬಂದಿದೆ. ಆದರೆ, ಈ ಬದಲಾವಣೆ ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ
ದಿಕ್ಕಿನಲ್ಲಿ ಸಾಗುವುದೇ ಪ್ರಪಂಚದಲ್ಲಿ ಇವತ್ತು ಕಾಣಿಸುವ ಭಾಷಾ ವೈವಿಧ್ಯಕ್ಕೆ ಮೂಲ ಕಾರಣ.
ಮನಸ್ಸಿನಲ್ಲೇನಿದೆಯೆಂಬುದನ್ನು ಇತರರಿಗೆ ತಿಳಿಸಲು, ಮತ್ತು ಇತರರ ಮನಸ್ಸಿನಲ್ಲೇನಿದೆಯೆಂಬುದನ್ನು ತಿಳಿಯಲು ನಮ್ಮಲ್ಲಿರುವ ಅತ್ಯಂತ ಮುಖ್ಯವಾದ ಸಾಧನವೆಂದರೆ ಈ ಭಾಷೆಯೇ. ಇಬ್ಬರು ವ್ಯಕ್ತಿಗಳಾಡುವ ಭಾಷೆಗಳ ನಡುವೆ ಎಷ್ಟು ವ್ಯತ್ಯಾಸವಿರುತ್ತದೆಯೋ, ಅವರಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಳ್ಳಲು ಅಷ್ಟೇ ಕಷ್ಟವೂ ಆಗುತ್ತದೆ. ಹಾಗಾಗಿ, ಭಾಷೆಯೆಂಬುದು ಮನಸ್ಸುಗಳ ನಡುವಿನ ಕೊಂಡಿಯೂ ಹೌದು, ಗೋಡೆಯೂ ಹೌದು. ಈ ಕಾರಣಕ್ಕಾಗಿ, ಭಾಷೆ ಯೊಂದರ ಸ್ವಭಾವವೇನೆಂಬುದನ್ನು ತಿಳಿಯುವಷ್ಟೇ ಭಾಷೆಗಳ ನಡುವಿನ ವ್ಯತ್ಯಾಸ ಗಳೆಂತಹವೆಂಬುದನ್ನು ತಿಳಿಯುವುದೂ ಅತ್ಯವಶ್ಯ.
೫.೧ ಭಾರತದ ಭಾಷೆಗಳು
ಭಾರತದಲ್ಲಿ ಮುಖ್ಯವಾಗಿ ಇಂಡೋ-ಆರ್ಯನ್, ದ್ರವಿಡಿಯನ್ (ದ್ರಾವಿಡ), ಟಿಬೆಟೋ-ಬರ್ಮನ್ ಮತ್ತು ಆಸ್ಟ್ರೋ-ಏಶಿಯಾಟಿಕ್ ಎಂಬುದಾಗಿ ನಾಲ್ಕು ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳು ಬಳಕೆಯಲ್ಲಿವೆ:
- (೧) ಹಿಂದಿ, ಬಂಗಾಲಿ, ಮರಾಠಿ, ಗುಜರಾತಿ ಮೊದಲಾದವುಗಳು
- ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು;
- (೨) ಕನ್ನಡ, ತಮಿಳು, ತೆಲುಗು, ಮಲಯಾಳ, ತುಳು ಮೊದಲಾದವುಗಳು
- ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳು;
- (೩) ಮಣಿಪುರಿ (ಮಯ್‌ತಯ್), ಬೋಡೊ, ಅಂಗಾಮಿ, ಆವೊ, ಲುಶಾಯಿ,
- ಮೊದಲಾದವುಗಳು ಟಿಬೆಟೋ-ಬರ್ಮನ್ ಭಾಷಾ ಕುಟುಂಬಕ್ಕೆ ಸೇರಿದವುಗಳು;
- ಮತ್ತು
- (೪) ಸಂತಾಲಿ, ಮುಂಡಾರಿ, ಖಡಿಯಾ, ಸೋರಾ ಮೊದಲಾದವುಗಳು
- ಆಸ್ಟ್ರೋ-ಏಶಿಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದವುಗಳು.
ಇವಲ್ಲದೆ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಬಳಕೆ ಯಲ್ಲಿರುವ ಬೇರೆ ಕೆಲವು ಭಾಷೆಗಳು ಇಂಡೋ-ಪೆಸಿಫಿಕ್ ಎಂಬ ಬೇರೊಂದು ಭಾಷಾಕುಟುಂಬಕ್ಕೆ ಸೇರುತ್ತವೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಧ್ಯ ಪ್ರದೇಶದ ನಿಮಾರ್ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ನಹಾಲಿ ಎಂಬ ಇನ್ನೊಂದು ಭಾಷೆ ಈ ಕುಟುಂಬಗಳಲ್ಲಿ ಯಾವುದಕ್ಕೂ ಸೇರದೆ ಏಕಾಕಿಯಾಗಿರುವುದೆಂದು ಕೆಲವರ ಅಭಿಪ್ರಾಯ.
ಭಾರತದಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂಬ ಪ್ರಶ್ನೆಗೆ ಉತ್ತರ ಹೇಳುವು ದೆಂದರೆ, ಪ್ರಪಂಚದಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂಬ ಪ್ರಶ್ನೆಗೆ ಉತ್ತರ
ಹೇಳುವಷ್ಟೇ ಕಷ್ಟ. ಹೆಚ್ಚು ಕಡಿಮೆ ಇನ್ನೂರು ಭಾಷೆಗಳು ಭಾರತದಲ್ಲಿವೆಯೆಂದು ಹೇಳಬಹುದಾದರೂ, ಈ ಸಂಖ್ಯೆ ಕಾಡುಗುಡ್ಡಗಳಲ್ಲಿ ವಾಸಿಸುವ ಜನರ ಭಾಷೆ ಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಂತೆಲ್ಲ ಹೆಚ್ಚಾಗಲು (ಇಲ್ಲವೇ ಕಡಿಮೆಯಾಗಲು) ಸಾಧ್ಯವಿದೆ. ಇದಲ್ಲದೆ, ಭಾಷೆ ಮತ್ತು ಉಪಭಾಷೆಗಳ ನಡುವಿನ ವ್ಯತ್ಯಾಸವೇನೆಂಬುದನ್ನು ನಿರ್ಧರಿಸುವಲ್ಲಿ ನಮ್ಮ ನಿಲುವೇನು ಎಂಬು ದರ ಮೇಲೂ ನಾವು ಕೊಡುವ ಭಾಷೆಗಳ ಸಂಖ್ಯೆ ಹೆಚ್ಚುಕಡಿಮೆಯಾಗಬಲ್ಲುದು.
ಭಾರತದಲ್ಲಿ ಬಳಕೆಯಲ್ಲಿರುವ ಈ ಇನ್ನೂರು ಭಾಷೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಷೆಗಳು ಹಿಮಾಲಯದ ಪರ್ವತಶ್ರೇಣಿಯಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷಾಕುಟುಂಬಕ್ಕೆ ಸೇರಿವೆ. ಆದರೆ, ಭಾರತದ ಜನಸಂಖ್ಯೆ ಯಲ್ಲಿ ಈ ಭಾಷೆಗಳನ್ನಾಡುವವರದು ಶೇಕಡಾ ಒಂದಕ್ಕಿಂತಲೂ ಕಡಿಮೆ! ಹಿಮಾಲಯದ ಗುಡ್ಡಕಾಡುಗಳಲ್ಲಿ ಪ್ರತಿಯೊಂದು ಹಳ್ಳಿಗೂ ಒಂದೊಂದು ವಿಶಿಷ್ಟ ವಾದ ಭಾಷೆಯಿರುವುದನ್ನು ಕಾಣಬಹುದು. ಈ ಹಳ್ಳಿಗಳ ನಡುವೆ ಅನಾದಿಕಾಲ ದಿಂದಲೂ ಪರಸ್ಪರ ಸಂಪರ್ಕ ಬಹಳ ಕಡಿಮೆಯಾಗಿದ್ದುದೇ ಇದಕ್ಕೆ ಕಾರಣ.
ಇಂಡೋ-ಆರ್ಯನ್ ಕುಟುಂಬಕ್ಕೆ ಸೇರಿದ ಸುಮಾರು ೫೦ ಭಾಷೆಗಳು, ದ್ರಾವಿಡ ಕುಟುಂಬಕ್ಕೆ ಸೇರಿದ ೨೬ ಭಾಷೆಗಳು, ಮತ್ತು ಆಸ್ಟೋ-ಏಶಿಯಾಟಿಕ್ ಕುಟುಂಬಕ್ಕೆ ಸೇರಿದ ೨೦ ಭಾಷೆಗಳು ಭಾರತದಲ್ಲಿ ಬಳಕೆಯಲ್ಲಿವೆ. ಇವಲ್ಲದೆ, ಯಾವ ಕುಟುಂಬಕ್ಕೂ ಸೇರದ ನಹಾಲಿಯಂತಹ ಕೆಲವು ಭಾಷೆಗಳೂ, ಇಂಡೋ -ಪೆಸಿಫಿಕ್ ಕುಟುಂಬಕ್ಕೆ ಸೇರಬಲ್ಲ ಅಂಡಮನೀಸ್ ಮತ್ತು ನಿಕೊಬರೀಸ್ ದ್ವೀಪ ಗಳ ಕೆಲವು ಭಾಷೆಗಳೂ ಭಾರತದಲ್ಲಿವೆ.
ಇಂಡೋ-ಆರ್ಯನ್ ಭಾಷೆಗಳು
ಇವುಗಳಲ್ಲಿ ಇಂಡೋ-ಆರ್ಯನ್ (ಆರ್ಯ) ಕುಟುಂಬಕ್ಕೆ ಸೇರಿದ ಭಾಷೆಗಳು ಯುರೋಪಿನ ಮುಖ್ಯ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಜರ್ಮನ್ ಮೊದಲಾದ ಭಾಷೆಗಳಿಗೆ ಸಂಬಂಧಿಸಿದ್ದು, ಆ ಕುಟುಂಬ ಇಂಡೋ-ಯುರೋ ಪಿಯನ್ ಎಂಬ ದೊಡ್ಡದೊಂದು ಭಾಷಾಕುಟುಂಬದ ಶಾಖೆಯಾಗಿದೆ. ಭಾರತ ದಲ್ಲಿ ಈ ಕುಟುಂಬಕ್ಕೆ ಸೇರಿದ ನೆಪಾಲಿ, ಅಸ್ಸಾಮೀಸ್, ಬಂಗಾಲಿ, ಒಡಿಯಾ, ಮರಾಠಿ, ಗುಜರಾತಿ, ಪಂಜಾಬಿ, ಕಾಶ್ಮೀರಿ ಮೊದಲಾದ ಹಲವು ಭಾಷೆಗಳು ವೃತ್ತಾಕಾರವಾಗಿ ಹರಡಿದ್ದು, ಅವುಗಳ ನಡುವೆ ಹಿಂದಿ ಮತ್ತು ಅದರ ಉಪಭಾಷೆಗಳಾಗಿರುವ ಬಾಂಗ್ರು, ಬ್ರಜ್, ಬುನ್ದೇಲಿ, ಅವಧಿ, ಭೋಜ್‌ಪುರಿ, ಮೊದಲಾದವುಗಳು ನೆಲೆಸಿವೆ.
ನಿಜಕ್ಕೂ ಇಂಡೋ-ಆರ್ಯನ್ ಭಾಷೆಗಳು ಬಳಕೆಯಲ್ಲಿರುವ ಈ ಪ್ರದೇಶ ಭಾಷೆಯ ಮಟ್ಟಿಗೆ ಒಂದು ಅವಿಚ್ಛಿನ್ನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಇಲ್ಲವೇ ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣ ಮಾಡಿದಲ್ಲಿ, ಹಳ್ಳಿಯಿಂದ ಹಳ್ಳಿಗೆ ಮಾತಿನ ಭಾಷೆ ಸ್ವಲ್ಪ ಸ್ವಲ್ಪವೇ ಬದಲಾಗುತ್ತಾ ಬರುವುದು
ಕಂಡುಬರುತ್ತದೆ. ಆದರೆ ಎಲ್ಲಿ ಒಂದು ಭಾಷೆ ಮುಗಿದು ಇನ್ನೊಂದು ಭಾಷೆ ಪ್ರಾರಂಭಿಸುತ್ತದೆ ಎಂಬುದನ್ನು ಜನರ ಮಾತಿನಲ್ಲಿ ಕಾಣಿಸುವ ವ್ಯತ್ಯಾಸಗಳ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಾಗದು.
ಉದಾಹರಣೆಗಾಗಿ, ಮರಾಠಿ ಮತ್ತು ಗುಜರಾತಿ ಭಾಷೆಗಳನ್ನಾಡುವ ಪ್ರದೇಶ ಗಳ ನಡುವೆ ರಾಜಕೀಯವಾದ ಗಡಿಯಿರುವುದು ನಿಜವಾದರೂ, ಆ ಗಡಿಪ್ರದೇಶ ಗಳಲ್ಲಿ ಜನರು ಆಡುವ ಮಾತಿನ ಆಧಾರದ ಮೇಲೆ ಭಾಷೆಯ ಗಡಿ ಎಲ್ಲಿ ಹಾದುಹೋಗುವುದೆಂಬುದನ್ನು ನಿರ್ಧರಿಸಲು ಸಾಧ್ಯವಾಗದು. ಈ ಕಾರಣಕ್ಕಾಗಿ, ಇಂತಹ ಗಡಿಪ್ರದೇಶದಲ್ಲಿರುವ ಖಾಂದೇಶಿಯನ್ನು ಮರಾಠಿಯ ಉಪಭಾಷೆ ಯೆಂದು ಹೇಳಬೇಕೇ, ಇಲ್ಲವೇ ಗುಜರಾತಿಯ ಉಪಭಾಷೆಯೆಂದು ಹೇಳಬೇಕೇ ಎಂಬುದರಲ್ಲಿ ಮತಭೇದವಿದೆ. ಇದೇ ರೀತಿಯಲ್ಲಿ, ಮರಾಠಿ ಮತ್ತು ಒಡಿಯಾ ಭಾಷೆಗಳ ನಡುವೆ ಕಾಣಿಸುವ ಹಲ್ಬಿ ಎಂಬ ಉಪಭಾಷೆ ಅವೆರಡರಲ್ಲಿ ಯಾವುದಕ್ಕೆ ಸೇರಬೇಕು ಎಂಬ ವಿಷಯದಲ್ಲಿ ಮತಭೇದವಿದೆ.
ದ್ರಾವಿಡ ಭಾಷೆಗಳ ನಡುವಿರುವ ಗಡಿ ಪ್ರದೇಶ ಇದಕ್ಕಿಂತ ತೀರ ಭಿನ್ನ ವಾದುದು. ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ, ಇಲ್ಲವೇ ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸ್ಪಷ್ಟವಾದ ಗಡಿಯಿದ್ದು ಇಲ್ಲಿ ವಾಸಿಸುವ ಜನರಲ್ಲಿ, ಅವರಾಡುವ ಮಾತನ್ನಾಧರಿಸಿ, ಯಾರು ಕನ್ನಡಿಗರು, ಯಾರು ತೆಲುಗರು, ಮತ್ತು ಯಾರು ತಮಿಳರು ಎಂಬುದನ್ನು ನಿರ್ಧರಿಸುವಲ್ಲಿ ಯಾವ ತೊಂದರೆಯೂ ಇಲ್ಲ. ಇವುಗಳಲ್ಲಿ ಒಂದು ಭಾಷೆಯನ್ನಾಡುವವರು ಇನ್ನೊಂದು ಭಾಷೆಯನ್ನೂ ಅರಿತಿರಬಹುದು, ಆದರೆ ಅವರಲ್ಲಿ ಯಾರ ಮಾತೃಭಾಷೆ ಯಾವುದು ಎಂಬ ವಿಷಯ ಸ್ಪಷ್ಟವಾಗಿಯೇ ಇರುತ್ತದೆ.
ಇಂಡೋ-ಆರ್ಯನ್ ಭಾಷೆಗಳು ಪರ್ಶಿಯನ್, ಬಲೂಚಿ, ಪಶೊ ಮೊದಲಾದ ಇರಾನಿಯನ್ ಭಾಷೆಗಳೊಂದಿಗೆ ಹತ್ತಿರದ ಸಂಬಂಧವನ್ನು ಪಡೆ ದಿದ್ದು, ಅವನ್ನೆಲ್ಲ ಒಟ್ಟಿಗೆ ಇಂಡೋ-ಇರಾನಿಯನ್ ಎಂಬ ಶಾಖೆಯಲ್ಲಿ ಸೇರಿಸಿ ಹೇಳುವುದು ರೂಢಿ. ಇವುಗಳಲ್ಲಿ ಇಂಡೋ-ಆರ್ಯನ್ ಭಾಷೆಗಳಿಗೆಲ್ಲ ಸಂಸ್ಕೃತ ಭಾಷೆಯೇ ಮೂಲವೆಂದು ಕೆಲವರ ಅಭಿಪ್ರಾಯ.
ಇನ್ನು ಕೆಲವರ ಮತದಂತೆ, ಈ ಭಾಷೆಗಳಿಗೆಲ್ಲ ಮೂಲವಾಗಿದ್ದ ಭಾಷೆ ಬೇರೊಂದಿತ್ತು; ಬರವಣಿಗೆಯ ಬಳಕೆಗಾಗಿ, ಆ ಮೂಲಭಾಷೆಯ ಆಧಾರದ ಮೇಲೆ, ಸಂಸ್ಕೃತವೆಂಬ ವಿಶಿಷ್ಟವಾದ ಭಾಷೆಯೊಂದನ್ನು ವಿದ್ವಾಂಸರು ಬೆಳೆಸಿರ ಬೇಕು. ಇಂಡೋ-ಆರ್ಯನ್ ಮೂಲಭಾಷೆಯನ್ನು ಬಳಸುತ್ತಿದ್ದ ಬೇರೆ ಬೇರೆ ಸಮಾಜಗಳಲ್ಲಿ ನಡೆದ ಬದಲಾವಣೆಗಳ ಫಲವಾಗಿ, ಆ ಮೂಲಭಾಷೆ ಪಾಲಿ, ಪ್ರಾಕೃತ, ಅಪಭ್ರಂಶ ಮೊದಲಾದ ರೂಪಗಳನ್ನು ಪಡೆಯಿತು. ಅನಂತರ ನಡೆದ ಬದಲಾವಣೆಗಳ ಫಲವಾಗಿ, ಅವೇ ಭಾಷೆಗಳು ಹಿಂದಿ, ಮರಾಠಿ, ಗುಜರಾತಿ ಮೊದಲಾದ ಇಂದಿನ ಬೇರೆ ಬೇರೆ ಇಂಡೋ-ಆರ್ಯನ್ ಭಾಷೆಗಳಾಗಿ ಕಾಣಿಸಿಕೊಳ್ಳುತ್ತಿವೆ.
ದ್ರಾವಿಡ ಭಾಷೆಗಳು
ಕನ್ನಡ, ತಮಿಳು, ತೆಲುಗು ಮೊದಲಾದ ಮುಖ್ಯವಾಗಿ ಭಾರತದ ದಕ್ಷಿಣ ವಿಭಾಗ ದಲ್ಲಿ ಬಳಕೆಯಲ್ಲಿರುವ ಭಾಷೆಗಳಿಗೆ ಈ ಇಂಡೋ-ಆರ್ಯನ್ ಭಾಷೆಗಳಿಗಿಂತ ತೀರ ಭಿನ್ನವಾದ ಮೂಲವಿದೆ. ಹಾಗಾಗಿ, ಇವನ್ನು ದ್ರಾವಿಡ ಎಂಬ ಬೇರೆಯೇ ಒಂದು ಕುಟುಂಬದಲ್ಲಿ ಸೇರಿಸುವ ಅವಶ್ಯಕತೆಯಿದೆ. ಇಂಡೋ-ಆರ್ಯನ್ ಭಾಷೆಗಳನ್ನಾಡುವ ಜನರು ಭಾರತಕ್ಕೆ ವಲಸೆಗಾರರಾಗಿ ಬರುವ ಮೊದಲೇ ಈ ದ್ರಾವಿಡ ಭಾಷೆಗಳನ್ನಾಡುವ ಜನರು ಭಾರತದಲ್ಲಿ ನೆಲೆಸಿದ್ದರೆಂದು ವಿದ್ವಾಂಸರ ಊಹೆ.
ಭಾರತದ ಹೊರಗಿರುವ ಬೇರೆ ಕೆಲವು ಭಾಷಾಕುಟುಂಬಗಳೊಂದಿಗೆ ದ್ರಾವಿಡ ಭಾಷೆಗಳನ್ನು ಸಂಬಂಧಿಸುವ ಪ್ರಯತ್ನಗಳಲ್ಲಿ ಒಂದೂ ಇದುವರೆಗೆ ಸಫಲ ವಾಗಿಲ್ಲ. ಯುರೋಪಿನ ಯುರಾಲಿಕ್ ಕುಟುಂಬದ ಉಪಕುಟುಂಬವಾದ ಫಿನ್ನೋ -ಉಗ್ರಿಕ್‌ನೊಂದಿಗೆ ಇವನ್ನು ಸಂಬಂಧಿಸಬಹುದೆಂದು ಕೆಲವರ ಅಭಿಪ್ರಾಯ ವಾದರೆ, ಉತ್ತರ ಆಫ್ರಿಕಾದ ಕೆಲವು ಭಾಷೆಗಳೊಂದಿಗೆ ಇವನ್ನು ಸಂಬಂಧಿಸ ಬಹುದೆಂದು ಬೇರೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮೊಹೆಂಜದಾರೋದಲ್ಲಿ ಸಿಕ್ಕಿದ ಬರಹಗಳ ಹಿಂದಿರುವ ಭಾಷೆ ಒಂದು ದ್ರಾವಿಡ ಭಾಷೆಯಾಗಿರ ಬಹುದೆಂದು ಸಾಧಿಸಲು ಬೇರೆ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲಾ ಪ್ರಯತ್ನಗಳೂ ಊಹಾಪೋಹದ ಸ್ಥಿತಿಯಲ್ಲೇ ಉಳಿದಿವೆ.
ದ್ರಾವಿಡ ಭಾಷೆಗಳನ್ನು ಮುಖ್ಯವಾಗಿ ನಾಲ್ಕು ಶಾಖೆಗಳಲ್ಲಿ ವಿಂಗಡಿಸಬಹು ದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ:
- (೧) ಕನ್ನಡ, ತುಳು, ತಮಿಳು, ಮಲಯಾಳ, ಕೊಡಗು, ತೊದ ಮೊದಲಾದ
- ಭಾಷೆಗಳು ದಕ್ಷಿಣ ದ್ರಾವಿಡ ವಿಭಾಗದಲ್ಲೂ,
- (೨) ತೆಲುಗು, ಗೋಂಡಿ, ಕೊಂಡ, ಕೂಯಿ, ಮಾಂಡ, ಪೆಂಗೊ ಮೊದಲಾದ
- ಭಾಷೆಗಳು ದಕ್ಷಿಣ-ಮಧ್ಯ ವಿಭಾಗದಲ್ಲೂ,
- (೩) ಕೋಲಾಮಿ, ಪಾರ್ಜಿ, ಗದಬ ಮೊದಲಾದವುಗಳು ಮಧ್ಯ ವಿಭಾಗ
- ದಲ್ಲೂ, ಮತ್ತು
- (೪) ಕುಡುಖ್, ಮಾಲ್ತೋ ಮತ್ತು ಬ್ರಾಹುಯೀ ಭಾಷೆಗಳು ಉತ್ತರ
- ವಿಭಾಗದಲ್ಲೂ ಸೇರುತ್ತವೆ.
ದ್ರಾವಿಡ ಭಾಷೆಗಳ ಈ ವಿಭಜನೆ ಅವು ಮೂಲಭಾಷೆಯಿಂದ ಯಾವ ರೀತಿ ಯಲ್ಲಿ ಕವಲೊಡೆದಿರಬೇಕು ಎಂಬುದನ್ನು ಅವಲಂಬಿಸಿದೆಯಾದರೂ, ಇವತ್ತು ಅವನ್ನಾಡುವ ಜನರು ನೆಲೆಸಿರುವ ಪ್ರದೇಶವನ್ನೂ ಈ ವಿಭಜನೆ ಪ್ರತಿಬಿಂಬಿಸು ತ್ತದೆ. ದಕ್ಷಿಣ ದ್ರಾವಿಡ ಭಾಷೆಗಳನ್ನಾಡುವ ಜನರು ಮುಖ್ಯವಾಗಿ ಭಾರತದ ದಕ್ಷಿಣ ಭಾಗದಲ್ಲಿ (ತಮಿಳುನಾಡು, ಕೇರಳ, ಮತ್ತು ಕರ್ಣಾಟಕಗಳಲ್ಲಿ) ನೆಲೆಸಿ ದ್ದಾರೆ.
ಇದೇ ರೀತಿಯಲ್ಲಿ, ಉತ್ತರ ವಿಭಾಗದ ಕುಡುಖ್ ಭಾಷೆಯನ್ನಾಡುವ ಜನರು ಒರಿಸ್ಸಾ, ಬಿಹಾರ್ ಮತ್ತು ಮಧ್ಯಪ್ರದೇಶದ ಉತ್ತರ ಭಾಗಗಳಲ್ಲೂ, ಮಾಲ್ತೋ ಭಾಷೆಯನ್ನಾಡುವವರು ಬಿಹಾರದ ರಾಜಮಹಾಲ್ ಪರ್ವತ ಶ್ರೇಣಿಯಲ್ಲೂ ನೆಲೆಸಿದ್ದಾರೆ. ನೇಪಾಳದಲ್ಲಿ ನೆಲಿಸಿರುವ ಧನಗರ್ ಜನಾಂಗದವರೂ ಕುಡುಖ್ ಭಾಷೆಯನ್ನಾಡುತ್ತಾರೆ. ಉತ್ತರ ವಿಭಾಗದ ಮೂರನೇ ಭಾಷೆಯಾದ ಬ್ರಾಹುಯಿ ಯನ್ನಾಡುವವರು ಪಾಕಿಸ್ತಾನದ ಉತ್ತರ ವಿಭಾಗದಲ್ಲಿ ಕ್ವೆಟ್ಟಾದಿಂದ ಲಸ್‌ಬೆಲಾ ದವರೆಗೆ ಕ್ವಾಲಾತ್, ಹರಿಪುರ್ ಮತ್ತು ಹೈದರಾಬಾದ್ ಜಿಲ್ಲೆಗಳಲ್ಲಿ ನೆಲೆಸಿ ದ್ದಾರೆ.
ದಕ್ಷಿಣ-ಮಧ್ಯ ದ್ರಾವಿಡ ಭಾಷೆಗಳಾದ ತೆಲುಗು ಭಾಷೆಯನ್ನಾಡುವವರು ಆಂಧ್ರ ಪ್ರದೇಶದಲ್ಲಿ, ಗೋಂಡಿ ಭಾಷೆಯನ್ನಾಡುವವರು ಮಧ್ಯಪ್ರದೇಶದಲ್ಲಿ, ಮತ್ತು ಕೊಂಡ, ಕೂಯಿ ಮತ್ತು ಕೂವಿ ಭಾಷೆಗಳನ್ನಾಡುವವರು ಒರಿಸ್ಸಾದಲ್ಲಿ ನೆಲೆಸಿದ್ದಾರೆ. ಇದಕ್ಕೆ ಬದಲು, ಮಧ್ಯ ದ್ರಾವಿಡ ಭಾಷೆಗಳಾದ ಕೋಲಾಮಿ ಮತ್ತು ನಾಯ್ಕಿ ಭಾಷೆಗಳನ್ನಾಡುವವರು ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ, ಪಾರ್ಜಿ ಭಾಷೆಯನ್ನಾಡುವವರು ಮಧ್ಯ ಪ್ರದೇಶದ ಬಸ್ತಾರ್ ಜಿಲ್ಲೆಯಲ್ಲಿ, ಮತ್ತು ಗದಬ ಭಾಷೆಯನ್ನಾಡುವವರು ಒರಿಸ್ಸಾದಲ್ಲಿ ನೆಲೆಸಿದ್ದಾರೆ.
ಈ ರೀತಿ, ದಕ್ಷಿಣ, ದಕ್ಷಿಣ-ಮಧ್ಯ, ಮಧ್ಯ, ಮತ್ತು ಉತ್ತರ ದ್ರಾವಿಡ ಭಾಷೆಗಳು ಒಂದರ ಉತ್ತರಕ್ಕೆ ಇನ್ನೊಂದರಂತೆ ಭೌಗೋಳಿಕ ಹರವನ್ನು ತೋರಿಸುತ್ತಿವೆಯಾದರೂ, ಈ ಭಾಷೆಗಳಲ್ಲಿ ಕೆಲವು ಬೇರೆ ಪ್ರದೇಶದಲ್ಲಿರುವ ದ್ರಾವಿಡ ಭಾಷೆಗಳ ವೈಶಿಷ್ಟ್ಯಗಳನ್ನೂ ತೋರಿಸುತ್ತಿರುವುದು ಈ ವಿಭಜನೆಯ ಒಂದು ಸಮಸ್ಯೆಯಾಗಿದೆ.
ಉದಾಹರಣೆಗಾಗಿ, ದಕ್ಷಿಣದಲ್ಲಿ ಬಳಕೆಯಲ್ಲಿರುವ ತುಳು ಭಾಷೆ ಹಲವು ವಿಷಯಗಳಲ್ಲಿ ದಕ್ಷಿಣದ ಇತರ ಭಾಷೆಗಳಿ೦ದ ಭಿನ್ನವಾಗಿದ್ದು, ಮಧ್ಯದ್ರಾವಿಡ ಭಾಷೆಗಳನ್ನು ಹೋಲುತ್ತದೆ. ದಕ್ಷಿಣದಲ್ಲೇ ಇರುವ ಕೊರಗ ಎಂಬ ಇನ್ನೊಂದು ಭಾಷೆ ಕೆಲವು ವಿಷಯಗಳಲ್ಲಿ ಉತ್ತರದ ಕುಡುಖ್ ಮತ್ತು ಮಾಲ್ತೋ ಭಾಷೆಗಳನ್ನು ಹೋಲುತ್ತದೆ. ದಕ್ಷಿಣ-ಮಧ್ಯ ದ್ರಾವಿಡ ಭಾಷೆಯೆನಿಸಿದ ತೆಲುಗು ಹಲವು ವಿಷಯಗಳಲ್ಲಿ ದಕ್ಷಿಣ ದ್ರಾವಿಡ ಭಾಷೆಗಳನ್ನು ಹೋಲುತ್ತದೆ, ಇತ್ಯಾದಿ.
ದ್ರಾವಿಡ ಭಾಷೆಗಳ ನಡುವಿನ ಕೆಲವು ವ್ಯತ್ಯಾಸಗಳು
ಈ ನಾಲ್ಕು ವಿಭಾಗಗಳಿಗೆ ಸೇರಿದ ದ್ರಾವಿಡ ಭಾಷೆಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಇವತ್ತಿನ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದು ಬೇರೆ ಬೇರೆ ಬಾಷೆಗಳಾಗುತ್ತಿರುವಂತೆ, ಅವುಗಳಲ್ಲಿ ಇಂತಹ ವ್ಯತ್ಯಾಸಗಳು ಮೂಡಿಬಂದಿವೆ.
ಮೂಲ ದ್ರಾವಿಡದ ವೈಶಿಷ್ಟ್ಯಗಳಲ್ಲಿ ಕೆಲವನ್ನು ಕೆಲವು ಭಾಷೆಗಳು ಉಳಿಸಿ ಕೊಂಡಿವೆ, ಮತ್ತು ಕೆಲವು ಭಾಷೆಗಳು ಉಳಿಸಿಕೊಂಡಿಲ್ಲ ಎಂಬುದರಿಂದ ಈ
ವ್ಯತ್ಯಾಸಗಳಲ್ಲಿ ಕೆಲವು ಹುಟ್ಟಿಕೊಂಡಿವೆ, ಮತ್ತು ಇನ್ನು ಕೆಲವು ವ್ಯತ್ಯಾಸಗಳು ಮೂಲ ದ್ರಾವಿಡದಲ್ಲಿ ಇಲ್ಲದಿದ್ದ ವೈಶಿಷ್ಟ್ಯಗಳನ್ನು ಆಧುನಿಕ ಭಾಷೆಗಳು ಬೆಳೆಸಿಕೊಂಡು ಬಂದಿರುವುದರಿಂದಾಗಿ ತಲೆದೋರಿವೆ.
ಉದಾಹರಣೆಗಾಗಿ, ಮೂಲದ್ರಾವಿಡದ ಸರ್ವನಾಮಗಳಲ್ಲಿ ಕೇಳುಗನನ್ನು ಸೇರಿಸಿ ಹೇಳುವವುಗಳು, ಮತ್ತು ಕೇಳುಗನನ್ನು ಬಿಟ್ಟು ಹೇಳುವವುಗಳು ಎಂಬು ದಾಗಿ ಎರಡು ರೀತಿಯ ಬಹುವಚನ ರೂಪಗಳಿದ್ದುವು. ತಮಿಳು, ಮಲಯಾಳ, ತುಳು ಮೊದಲಾದ ಭಾಷೆಗಳಲ್ಲಿ ಈ ವೈಶಿಷ್ಟ್ಯ ಉಳಿದಿದೆ, ಆದರೆ ಕನ್ನಡದಲ್ಲಿ ಉಳಿದಿಲ್ಲ. ಮಲಯಾಳದಲ್ಲಿರುವ ಇಚ್ಚಳ್ ‘ನಾವು ಮಾತ್ರ’ ಮತ್ತು ಇಾಮ್ ‘ನಾವು ಮತ್ತು ನೀವು’ ಎಂಬ ಎರಡು ಸರ್ವನಾಮಗಳಿಗೆ ಬದಲಾಗಿ ಕನ್ನಡದಲ್ಲಿ ನಾವು ಎಂಬ ಒಂದೇ ಒಂದು ಸರ್ವನಾಮವಿದೆ ಎಂಬುದನ್ನು ಇಲ್ಲಿ ಗಮನಿಸ ಬಹುದು. ಕರಾವಳಿಯ ಕೆಲವು ಕನ್ನಡ ಪ್ರಭೇದಗಳಲ್ಲಿ ಮಾತ್ರ ಈ ವೈಶಿಷ್ಟ್ಯ ಇವತ್ತಿಗೂ ಉಳಿದುಕೊಂಡಿದೆ (ಉದಾ: ಹವ್ಯಕದ ಎಂಗೊ ಮತ್ತು ನಾವು). ಹಳೆಗನ್ನಡದಲ್ಲೂ ಈ ವ್ಯತ್ಯಾಸವಿತ್ತು.
ದಕ್ಷಿಣ-ಮಧ್ಯ ದ್ರಾವಿಡ ಭಾಷೆಗಳಲ್ಲೆಲ್ಲ ನಡೆದ ಒಂದು ಬದಲಾವಣೆ ಯೆಂದರೆ, ಪದದ ಎರಡನೇ ಅಕ್ಷರದಲ್ಲಿದ್ದ ರಕಾರ, ಡಕಾರ, ಳಕಾರ, ಮತ್ತು ಲಕಾರಗಳು ಕೆಲವು ವಿಶಿಷ್ಟವಾದ ಸನ್ನಿವೇಶಗಳಲ್ಲಿ ಮೊದಲನೆಯ ಅಕ್ಷರಕ್ಕೆ ಸ್ಥಳಾಂತರಿಸಿವೆ. ಈ ಬದಲಾವಣೆಯ ಪರಿಣಾಮವಾಗಿ ಕನ್ನಡದ ಎಳೆಯವನು ಎಂಬ ಪದ ಕೂವಿ ಭಾಷೆಯಲ್ಲಿ ಲಾವೆಂಜು ಎಂದಾಗುತ್ತದೆ, ಮತ್ತು ಗೋಂಡಿ ಭಾಷೆಯಲ್ಲಿ ಲೆಯ್ಯೋ ಎಂದಾಗುತ್ತದೆ. ಇದೇ ರೀತಿಯಲ್ಲಿ ಕನ್ನಡದ ಬರೆಯು ಎಂಬುದು ತೆಲುಗಿನಲ್ಲಿ ರಾಯು ಎಂದಾಗುತ್ತದೆ, ಅಡಗು ಎಂಬುದು ಡಾಗು ಎಂದಾಗುತ್ತದೆ, ಉದ್ದು (ಉರ್ದು) ಎಂಬುದು ರುದ್ದು ಎಂದಾಗುತ್ತದೆ, ಇಲ್ಲ ಎಂಬುದು ಲೇದು ಎಂದಾಗುತ್ತದೆ, ಇತ್ಯಾದಿ.
ದ್ರಾವಿಡ ಮತ್ತು ಆರ್ಯ ಭಾಷೆಗಳ ನಡುವಿನ ವ್ಯತ್ಯಾಸಗಳು
ದ್ರಾವಿಡ ಮತ್ತು ಆರ್ಯ (ಇಂಡೋ-ಆರ್ಯನ್) ಭಾಷೆಗಳ ನಡುವೆಯೂ ವ್ಯಾಕರಣದ ಮಟ್ಟಿಗೆ ಹಲವು ರೀತಿಯ ವ್ಯತ್ಯಾಸಗಳು ಕಂಡುಬರುತ್ತಿವೆ. ಇವು ಗಳಲ್ಲಿ ಹೆಚ್ಚಿನವಕ್ಕೂ ಈ ಭಾಷೆಗಳಿಗೆ ಮೂಲವಾಗಿದ್ದ ಮೂಲದ್ರಾವಿಡ ಮತ್ತು ಮೂಲ ಇಂಡೋ-ಯುರೋಪಿಯನ್ ಭಾಷೆಗಳು ವಾಕ್ಯರಚನೆಗಾಗಿ ಬೇರೆ ಬೇರೆ ವ್ಯಾಕರಣ ತಂತ್ರಗಳನ್ನು ಬಳಸಿಕೊಂಡಿದ್ದುದೇ ಕಾರಣವೆಂದು ಹೇಳಬಹುದು.
ಆರ್ಯ ಭಾಷೆಗಳನ್ನಾಡುವ ಜನರು ಭಾರತಕ್ಕೆ ವಲಸೆ ಬಂದ ಮೇಲೆ ಅವರ ಭಾಷೆಗಳಲ್ಲಿ ಹಲವಾರು ಬದಲಾವಣೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನವೂ ಆ ಕಾಲದಲ್ಲಿ ಭಾರತದಲ್ಲಿ ಬಳಕೆಯಲ್ಲಿದ್ದ ದ್ರಾವಿಡ (ಮತ್ತು ಇತರ) ಭಾಷೆಗಳ ಸಂಪರ್ಕದಿಂದಾಗಿ ಅವನ್ನು ಹೆಚ್ಚು ಹೆಚ್ಚು ಹೋಲುವಂತೆ ಮಾಡುವ ಬದಲಾವಣೆ ಗಳೇ ಆಗಿವೆ. ಹೀಗಿದ್ದರೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳ
ನಡುವೆ ಇವತ್ತಿಗೂ ಹಲವು ಮುಖ್ಯವಾದ ವ್ಯತ್ಯಾಸಗಳು ಉಳಿದಿರುವುದನ್ನು ಕಾಣ ಬಹುದು.
ಆರ್ಯ ಭಾಷೆಗಳಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಮುಖ್ಯವಾದ ಪದವರ್ಗಗಳು ಮಾತ್ರ ಇವೆ; ಆದರೆ, ದ್ರಾವಿಡ ಭಾಷೆಗಳಲ್ಲಿ ಈ ಎರಡು ಪದವರ್ಗಗಳು ಮಾತ್ರವಲ್ಲದೆ, ಗುಣಪದ ಎಂಬ ಮೂರನೆಯದೊಂದು ಪದವರ್ಗವೂ ಇದೆ ಎಂಬುದು ಇಂತಹ ವ್ಯತ್ಯಾಸಗಳಲ್ಲಿ ಮುಖ್ಯವಾದುದು. ಈ ವ್ಯತ್ಯಾಸದ ಪರಿಣಾಮವಾಗಿ, ವಾಕ್ಯರಚನೆಯ ಮತ್ತು ಪದರಚನೆಯ ಹಲವು ನಿಯಮಗಳು ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳಲ್ಲಿ ಭಿನ್ನ ಭಿನ್ನ ವಾಗಿವೆ.
ಎರಡನೆಯದಾಗಿ, ನಾಮಪದಗಳನ್ನು ಬೇರೆ ಬೇರೆ ಲಿಂಗಗಳಲ್ಲಿ ವಿಂಗಡಿಸು ವುದಕ್ಕಾಗಿ ಆರ್ಯ ಭಾಷೆಗಳು ಬಳಸುವ ವಿಧಾನ ದ್ರಾವಿಡ ಭಾಷೆಗಳು ಬಳಸುವ ವಿಧಾನಕ್ಕಿಂತ ತೀರ ಭಿನ್ನವಾದುದು. ನಾಮಪದಗಳನ್ನು ಮುಖ್ಯವಾಗಿ ಅವುಗಳ ಅಂತ್ಯಾಕ್ಷರಗಳ ಆಧಾರದ ಮೇಲೆ ವಿಭಜಿಸುವ ಕ್ರಮ ಆರ್ಯ ಭಾಷೆಗಳದಾದರೆ, ಅರ್ಥದ ಆಧಾರದ ಮೇಲೆ ವಿಭಜಿಸುವುದು ದ್ರಾವಿಡ ಭಾಷೆಗಳು ಬಳಸುವ ವಿಧಾನ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ‘ಹೆಂಡತಿ’ ಎಂಬ ಒಂದೇ ಅರ್ಥ ವಿರುವ ಪದಗಳಲ್ಲಿ ದಾರಾ: ಎಂಬುದು ಪುಲ್ಲಿಂಗ, ಪತ್ನಿ ಎಂಬುದು ಸ್ತ್ರೀಲಿಂಗ, ಮತ್ತು ಕಲಿತ್ರಂ ಎಂಬುದು ನಪುಂಸಕಲಿಂಗ. ದ್ರಾವಿಡ ಭಾಷೆಗಳಲ್ಲಿ ಬಳಸುವು ದಿದ್ದರೆ, ಈ ಮೂರೂ ಸ್ತ್ರೀಲಿಂಗ ಪದಗಳೇ ಆಗಿರುತ್ತವೆ.
ವಿಭಕ್ತಿಗಳ ಬಳಕೆಯಲ್ಲೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ದ್ರಾವಿಡ ಭಾಷೆಗಳಲ್ಲಿ ವಿಭಕ್ತಿ ಪ್ರತ್ಯಯ ಗಳಿಗೆ ಅರ್ಥದೊಡನೆ ನೇರವಾದ ಸಂಬಂಧವಿದೆ. ಆದರೆ ಆರ್ಯ ಭಾಷೆಗಳಲ್ಲಿ ಇಂತಹ ನೇರವಾದ ಸಂಬಂಧವಿಲ್ಲ. ಈ ಕಾರಣಕ್ಕಾಗಿ, ವಿಭಕ್ತಿಗಳ ಬಳಕೆಯನ್ನು ವರ್ಣಿಸಲು ಆರ್ಯ ಭಾಷೆಗಳಲ್ಲಿ ಕಾರಕಗಳೆಂಬ ವ್ಯಾಕರಣ ತತ್ವವನ್ನು ಬಳಸ ಬೇಕಾಗುತ್ತದೆ. ಅವುಗಳ ವಾಕ್ಯರಚನೆಯಲ್ಲಿ ಕಾಣಿಸುವ ಕರ್ತರಿ-ಕರ್ಮಣಿ ಪ್ರಯೋಗಗಳ ಬಳಕೆಯೂ ಇದೇ ಕಾರಣಕ್ಕಾಗಿ ಉದ್ಭವಿಸಿದೆ. ಆದರೆ, ಈ ವಿಷಯದಲ್ಲಿ ಇವತ್ತಿನ ಆರ್ಯ ಭಾಷೆಗಳು ಸ್ವಲ್ಪ ಬದಲಾಗಿವೆ.
ಪದರಚನೆಯ ವಿಧಾನವೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆ ಗಳಲ್ಲಿ ಬೇರೆ ಬೇರಾಗಿದೆ. ಆರ್ಯ ಭಾಷೆಗಳಲ್ಲಿ ಧಾರಾಳವಾಗಿ ಕಾಣಿಸುವ ಪೂರ್ವ ಪ್ರತ್ಯಯಗಳ ಬಳಕೆ ದ್ರಾವಿಡ ಭಾಷೆಗಳಲ್ಲಿಲ್ಲ. ಹೆಚ್ಚಿನ ಪದಗಳಿಗೂ ಕ್ರಿಯಾಧಾತುಗಳೇ ಮೂಲ ಎಂಬ ನಿಯಮ ಆರ್ಯ ಭಾಷೆಗಳಲ್ಲಿದೆ, ಆದರೆ ದ್ರಾವಿಡ ಭಾಷೆಗಳಲ್ಲಿಲ್ಲ.
ಸಮಸ್ತಪದಗಳ ವಿಭಜನೆಯಲ್ಲೂ ಆರ್ಯ ಮತ್ತು ದ್ರಾವಿಡ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಆರ್ಯ ಭಾಷೆಗಳಲ್ಲಿ ಈ ವಿಭಜನೆಯನ್ನು ಸಮಸ್ತಪದದ ಅಂಗಗಳಾಗಿ ಬಂದ ಪದಗಳಲ್ಲಿ ಪ್ರಧಾನ ಪದ ಯಾವುದು ಎಂಬ
ವಿಷಯದ ಆಧಾರದ ಮೇಲೆ ನಡೆಸಬಹುದಾದರೆ, ದ್ರಾವಿಡ ಭಾಷೆಗಳಲ್ಲಿ, ಸಮಸ್ತಪದದ ಮೊದಲನೆಯ ಪದ ಯಾವ ವರ್ಗಕ್ಕೆ ಸೇರುತ್ತದೆ ಎಂಬ ವಿಷಯದ ಆಧಾರದ ಮೇಲೆ ನಡೆಸಬೇಕಾಗುತ್ತದೆ.
ದ್ರಾವಿಡ ಭಾಷೆಗಳಲ್ಲಿ ಕ್ರಿಯಾಪದಗಳು ‘ಕಾಲಭೇದ’ವನ್ನು ಸೂಚಿಸುವು ವಾದರೆ, ಆರ್ಯ ಭಾಷೆಗಳಲ್ಲಿ ‘ಕಾಲವ್ಯವಸ್ಥೆ’ಯ ಭೇದವನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕನ್ನಡದ ಹೊಡೆಯುತ್ತಾನೆ ಎಂಬ ಕ್ರಿಯಾರೂಪ ಮಾತ ನಾಡುವ ಸಮಯಕ್ಕಿಂತ ಅನಂತರ ನಡೆಯುವ ಇಲ್ಲವೇ ಮಾತನಾಡುವ ಸಮಯ ದಲ್ಲೇನೇ ನಡೆಯುತ್ತಿರುವ ಘಟನೆಯನ್ನೂ, ಹೊಡೆದ ಎಂಬ ಕ್ರಿಯಾರೂಪ ಮಾತನಾಡುವ ಸಮಯಕ್ಕಿಂತ ಮೊದಲು ನಡೆದ ಘಟನೆಯನ್ನೂ ಸೂಚಿಸುತ್ತವೆ.
ಇದಕ್ಕೆ ಬದಲಾಗಿ, ಹಿಂದೀ ಭಾಷೆಯಲ್ಲಿ ಬರುವ ಆತಾ ‘ಬರುತ್ತಾನೆ’ ಎಂಬ ಕ್ರಿಯಾರೂಪ ಒಂದು ಅಪೂರ್ಣ ಕ್ರಿಯೆಯನ್ನೂ, ಆಯಾ ‘ಬಂದ’ ಎಂಬ ಕ್ರಿಯಾ ರೂಪ ಒಂದು ಪೂರ್ಣ ಕ್ರಿಯೆಯನ್ನೂ ಸೂಚಿಸುತ್ತವೆ. ಇಲ್ಲಿ ಕಾಲಭೇದ ಮುಖ್ಯ ವಲ್ಲ. ಈ ಎರಡು ಕ್ರಿಯಾರೂಪಗಳನ್ನೂ ವರ್ತಮಾನಾರ್ಥ ಕೊಡುವ ಹೈ ಎಂಬ ಉಪಕ್ರಿಯಾಪದದೊಂದಿಗೆ (ಆತಾ ಹೈ, ಆಯಾ ಹೈ), ಇಲ್ಲವೇ ಭೂತಾರ್ಥ ವನ್ನು ಕೊಡುವ ಥಾ ಎಂಬ ಉಪಕ್ರಿಯಾಪದದೊಂದಿಗೆ (ಆತಾ ಥಾ, ಆಯಾ ಥಾ) ಬಳಸಲು ಸಾಧ್ಯವಿದೆ. ಸಂಸ್ಕೃತದಲ್ಲೂ ಈ ಪೂರ್ಣ ಮತ್ತು ಅಪೂರ್ಣ ಎಂಬ ಕಾಲವ್ಯವಸ್ಥೆಯ ಭೇದ ಭೂತ ಮತ್ತು ಅಭೂತ ಎಂಬ ಕಾಲಭೇದಕ್ಕಿಂತ ಹೆಚ್ಚು ಮುಖ್ಯವಾದುದು.
ಟಿಬೆಟೋ-ಬರ್ಮನ್ ಭಾಷೆಗಳು
ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ತ್ರಿಪುರಾದವರೆಗೂ ಹರಡಿರುವ ಹಿಮಾ ಲಯದ ಪರ್ವತಶ್ರೇಣಿಯಲ್ಲಿ ಟಿಬೆಟೋ-ಬರ್ಮನ್ ಎಂಬ ಭಾಷಾ ಕುಟುಂಬಕ್ಕೆ ಸೇರಿದ ಲಡಾಖಿ, ನೆವಾರಿ, ಲೆಪ್ಪಾ, ಬೋಡೋ, ಗಾರೋ, ಆವೋ ನಾಗ, ಮಣಿ ಪುರಿ, ಲುಶಾಯಿ, ತ್ರಿಪುರಿ, ಮೊದಲಾದ ನೂರಕ್ಕೂ ಹೆಚ್ಚು ಭಾಷೆಗಳನ್ನಾಡುವ ಜನರು ವಾಸಿಸುತ್ತಾರೆ.
ಟಿಬೆಟನ್ ಮತ್ತು ಬರ್ಮೀಸ್ ಭಾಷೆಗಳೊಂದಿಗೆ ಮಾತ್ರವಲ್ಲ, ಚೈನೀಸ್ ಭಾಷೆಯೊಂದಿಗೂ ಈ ಭಾಷೆಗಳಿಗೆ ಹತ್ತಿರದ ಸಂಬಂಧವಿದ್ದು, ಇವೆಲ್ಲ ಒಂದೇ ಮೂಲಭಾಷೆಯಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ಭಿನ್ನ ಭಿನ್ನ ಭಾಷೆಗಳಾದವುಗಳೆಂದು ವಿದ್ವಾಂಸರು ಕಂಡುಹಿಡಿದಿದ್ದಾರೆ. ಟಿಬೆಟೋ- ಬರ್ಮನ್ ಭಾಷೆಗಳಿಗೂ, ಚೈನೀಸ್ ಭಾಷೆಗೂ ನಡುವೆ ಸಂಬಂಧವಿದೆಯೆಂಬು ದನ್ನು ಸೂಚಿಸುವುದಕ್ಕಾಗಿ ಅದನ್ನು ಸಿನೋ-ಟಿಬೆಟನ್ ಎಂಬ ಇನ್ನಷ್ಟು ವಿಸ್ತಾರ ವಾದ ಭಾಷಾ ಕುಟುಂಬದ ಉಪಕುಟುಂಬವೆಂದು ಹಿಂದಿನವರು ಪರಿಗಣಿಸಿದ್ದರು.
ಆದರೆ, ಇತ್ತೀಚೆಗೆ ನಡೆದ ಕೆಲವು ಸಂಶೋಧನೆಗಳು ಚೈನೀಸ್ ಭಾಷೆ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕೆಲವಕ್ಕೆ (ಎಂದರೆ ಬೋಡೊ, ಗಾರೋ,
ಕಿರಾಂತೀ, ಮೊದಲಾದುವಕ್ಕೆ) ಉಳಿದುವಕ್ಕಿಂತ ಹೆಚ್ಚು ಹತ್ತಿರವೆಂಬುದನ್ನು ತೋರಿಸಿಕೊಟ್ಟಿವೆ; ಮತ್ತು ಈ ಸಂಶೋಧನೆಗಳ ಆಧಾರದ ಮೇಲೆ, ಚೈನೀಸ್ ಮತ್ತು ಅದಕ್ಕೆ ಸಂಬಂಧಿಸಿದ ಬೇರೆ ಕೆಲವು ಭಾಷೆಗಳನ್ನು ಒಟ್ಟಾಗಿ ಟಿಬೆಟೋ- ಬರ್ಮನ್ ಎಂಬ ಭಾಷಾ ಕುಟುಂಬದ ಒಂದು ಉಪಕುಟುಂಬವೆಂಬುದಾಗಿ ಪರಿಗಣಿಸುವ ಅವಶ್ಯಕತೆಯುಂಟಾಗಿದೆ.
ಜಗತ್ತಿನ ಭಾಷೆಗಳಲ್ಲೆಲ್ಲ ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಭಾಷೆಗಳನ್ನು ಬಿಟ್ಟರೆ ಈ ಟಿಬೆಟೋ-ಬರ್ಮನ್ ಎಂಬ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳೇ ಅತೀ ಹೆಚ್ಚು ಜನರ ಮನೆಮಾತಾಗಿವೆ. ಆದರೆ, ಈ ಭಾಷಾ ಕುಟುಂಬಕ್ಕಿರುವ ಜನಸಂಖ್ಯೆಯ ಬಲ ಮುಖ್ಯವಾಗಿ ಚೈನೀಸ್ ಭಾಷೆಯ ಜನ ಸಂಖ್ಯಾಬಲದ ಮೇಲೆ ಅವಲಂಬಿಸಿದೆ. ಸುಮಾರು ನೂರು ಮಿಲಿಯ ಜನರ ಮಾತಾಗಿರುವ ಆ ಭಾಷೆಯನ್ನು ಬಿಟ್ಟರೆ, ಉಳಿದ ಭಾಷೆಗಳಲ್ಲಿ ೨೨ ಮಿಲಿಯ ಜನರ ಮಾತಾಗಿರುವ ಬರ್ಮೀಸ್ ಮತ್ತು ನಾಲ್ಕು ಮಿಲಿಯ ಜನರ ಮಾತಾ ಗಿರುವ ಟಿಬೆಟನ್ ಮುಖ್ಯವಾದವುಗಳು.
ಭಾರತದಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಒಂದು ಮಿಲಿಯಕ್ಕಿಂತ ಜಾಸ್ತಿ ಜನರ ಮಾತಾಗಿರುವ ಭಾಷೆಗಳು ಮಣಿಪುರಿ ಮತ್ತು ಬೋಡೋ ಮಾತ್ರ. ಇವಲ್ಲದೆ, ೧೭೨ ಸಾವಿರ ಜನರ ಮನೆ ಮಾತಾಗಿರುವ ಆವೋ, ಮತ್ತು ೯೭ ಸಾವಿರ ಜನರ ಮನೆ ಮಾತಾಗಿರುವ ಅಂಗಾಮಿ ನಾಗಾ ಭಾಷೆಗಳೂ ಈ ಕುಟುಂಬಕ್ಕೆ ಸೇರುತ್ತವೆ. ಇವಕ್ಕಿಂತ ಕಡಿಮೆ ಜನರು ಮಾತ ನಾಡುವ ಈ ಕುಟುಂಬದ ಭಾಷೆಗಳು ಭಾರತದಲ್ಲಿ ಒಟ್ಟು ನೂರಕ್ಕಿಂತಲೂ ಜಾಸ್ತಿ ಇವೆ.
ಈ ಭಾಷೆಗಳನ್ನೆಲ್ಲ ಪಶ್ಚಿಮ ಮತ್ತು ಪೂರ್ವ ಭಾಷೆಗಳೆಂದು ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಪೂರ್ವ ವಿಭಾಗವನ್ನು ಉತ್ತರ ಮತ್ತು ದಕ್ಷಿಣ ವಿಭಾಗಗಳೆಂದು ವಿಂಗಡಿಸಲು ಸಾಧ್ಯವಿದ್ದು, ಚೈನೀಸ್, ಬೋಡೋ ಮೊದಲಾದವುಗಳು ಉತ್ತರ ವಿಭಾಗದಲ್ಲೂ, ಬರ್ಮೀಸ್, ಲೋಲೋ, ಮಣಿಪುರಿ ಮೊದಲಾದವುಗಳು ದಕ್ಷಿಣ ವಿಭಾಗದಲ್ಲೂ ಸೇರುತ್ತವೆ.
ಮಣಿಪುರಿ ಭಾಷೆಯಲ್ಲಿ ಹದಿನೈದನೇ ಶತಮಾನದಿಂದಲೂ ಸಾಹಿತ್ಯ ರಚನೆ ನಡೆಯುತ್ತಿದೆ. ಮೊದಲಿಗೆ ಈ ಸಾಹಿತ್ಯ ಗ್ರಂಥಗಳನ್ನು ಅವರದೇ ಆದ ಮಣಿಪುರಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಆದರೆ ಅನಂತರ, ಮಣಿಪುರಿ ಜನರ ಮೇಲೆ ವೈಷ್ಣವ ಪ್ರಭಾವ ಬೆಳೆದುಬಂದ ಸಮಯದಲ್ಲಿ, ಈ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ಬೆಂಗಾಲಿ ಲಿಪಿಯನ್ನು ಬಳಸುವ ಕ್ರಮ ರೂಢಿಗೆ ಬಂತು.
ಆದರೆ, ಈ ಲಿಪಿಯಲ್ಲಿ ಮಣಿಪುರಿ ಭಾಷೆಗೆ ಅವಶ್ಯವಿಲ್ಲದಿರುವ ಹಲವಾರು ಸ್ವರ ಮತ್ತು ವ್ಯಂಜನ ಸಂಜ್ಞೆಗಳಿರುವ ಕಾರಣ, ಮತ್ತು ಆ ಲಿಪಿಯನ್ನು ತಮ್ಮ ಭಾಷೆಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ಮಣಿಪುರಿ ವಿದ್ವಾಂಸರು ಈ
ಅವಶ್ಯವಿಲ್ಲದ ಸಂಜ್ಞೆಗಳನ್ನೆಲ್ಲ ಹಾಗೆಯೇ ಉಳಿಸಿಕೊಂಡಿರುವ ಕಾರಣ, ಅವರ ಭಾಷೆಯ ಇಂದಿನ ಬರಹ ತುಂಬಾ ತೊಡಕು ತೊಡಕಾಗಿದೆ.
ವ್ಯಾಕರಣದ ಕೆಲವು ವೈಶಿಷ್ಟ್ಯಗಳು
ವ್ಯಾಕರಣದ ಮಟ್ಟಿಗೆ ಭಾರತದಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷೆಗಳು ಹಲವಾರು ವೈಶಿಷ್ಟ್ಯಗಳನ್ನು ತೋರಿಸುತ್ತವೆ. ಈ ವ್ಯಾಕರಣ ವೈಶಿಷ್ಟ್ಯ ಗಳು ವಾಕ್ಯರಚನೆಗಾಗಿ ಈ ಭಾಷೆಗಳು ಸಿದ್ಧಪಡಿಸಿಕೊಂಡಿರುವ ವಿಶಿಷ್ಟವಾದ ತಂತ್ರಗಳಾಗಿವೆಯಾದ ಕಾರಣ, ಇವು ಈ ಭಾಷೆಗಳನ್ನಾಡುವ ಜನರ ಸಂಸ್ಕೃತಿ ಯನ್ನೂ ಪ್ರತಿಬಿಂಬಿಸುತ್ತವೆಯೆಂದು ಹೇಳಬಹುದು. ಹಾಗಾಗಿ, ಈ ಭಾಷೆಗಳ ನ್ನಾಡುವ ಜನರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದಿದ್ದರೆ, ಅವರ ಭಾಷೆ ಗಳಲ್ಲಿ ಕಾಣಿಸುವ ಈ ವ್ಯಾಕರಣ ವೈಶಿಷ್ಟ್ಯಗಳನ್ನೂ ಸರಿಯಾಗಿ ತಿಳಿದುಕೊಳ್ಳು ವುದು ಅವಶ್ಯ.
ಆರ್ಯ ಭಾಷೆಗಳ ಹಾಗೆ, ಈ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲೂ ನಾಮ ಪದ ಮತ್ತು ಕ್ರಿಯಾಪದಗಳೆಂಬ ಎರಡು ಪದವರ್ಗಗಳು ಮಾತ್ರ ಕಾಣಿಸುತ್ತವೆ. ಆದರೆ, ಗುಣಪದಗಳನ್ನು ಆರ್ಯ ಭಾಷೆಗಳು ನಾಮಪದಗಳೊಂದಿಗೆ ಸೇರಿಸು ತ್ತವೆಯಾದರೆ, ಈ ಕುಟುಂಬದ ಭಾಷೆಗಳು ಕ್ರಿಯಾಪದಗಳೊಂದಿಗೆ ಸೇರಿಸು ತ್ತವೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕೃಷ್ಣ: ‘ಕಪ್ಪು’ ಎಂಬುದು ಒಂದು ನಾಮಪದ, ಆದರೆ, ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಮಣಿಪುರಿ ಭಾಷೆಯಲ್ಲಿ ಮೂ ‘ಕಪ್ಪು’ ಎಂಬುದು ಒಂದು ಕ್ರಿಯಾಪದ. ಸಂಸ್ಕೃತದಲ್ಲಿ ಕೃಷ್ಣ: ಎಂಬ ಪದಕ್ಕೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಹಾಗೆ, ಮಣಿಪುರಿಯಲ್ಲಿ ಮೂ ಎಂಬ ಪದಕ್ಕೆ ಕಾಲಪ್ರತ್ಯಯಗಳನ್ನು ಮತ್ತು ಅಖ್ಯಾತ ಪ್ರತ್ಯಯಗಳನ್ನು ಸೇರಿಸಬಹುದು.
ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲೂ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಉದಾಹರಣೆಗಾಗಿ, ಮಣಿಪುರಿ ಭಾಷೆ ಯಲ್ಲಿ ಬರುವ ದ ಎಂಬ ಸಪ್ತಮೀ ವಿಭಕ್ತಿ ಪ್ರತ್ಯಯವನ್ನು ಕನ್ನಡದ ಇಂದ, ಗೆ ಮತ್ತು ಅಲ್ಲಿ ಎಂಬ ಮೂರು ವಿಭಕ್ತಿಗಳ ಅರ್ಥದಲ್ಲೂ ಬಳಸಲು ಬರುತ್ತದೆ. ಇವುಗಳೊಳಗೆ ವ್ಯತ್ಯಾಸವನ್ನು ತೋರಿಸಬೇಕಿದ್ದಲ್ಲಿ, ಈ ಪ್ರತ್ಯಯದೊಂದಿಗೆ ಬೇರೆ ಪ್ರತ್ಯಯ ಇಲ್ಲವೇ ಪದಗಳನ್ನು ಬಳಸಬೇಕಾಗುತ್ತದೆ.
ಕನ್ನಡದ ವಿಭಕ್ತಿ ಪ್ರತ್ಯಯಗಳಲ್ಲಿ ಅನ್ನು ಎಂಬುದನ್ನು ಬಳಸುವಲ್ಲಿ ನಮಗೆ ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯವಿದೆ ಎಂದು ಹೇಳಬಹುದು. ಹಲವು ಸಂದರ್ಭಗಳಲ್ಲಿ ಅದನ್ನು ಬಳಸದಿರಲೂ ಸಾಧ್ಯವಿದೆ: ಮನೆ ಮಾರಿದ ಮತ್ತು ಮನೆಯನ್ನು ಮಾರಿದ ಎಂಬಂತಹ ವಿಕಲ್ಪವಾದ ಪ್ರಯೋಗಗಳನ್ನು ಕನ್ನಡದಲ್ಲಿ ಕಾಣಬಹುದು. ಆದರೆ ಬೇರೆ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ.
ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಇಂತಹ ಸ್ವಾತಂತ್ರ್ಯವನ್ನು ಹೆಚ್ಚಿನ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲೂ ಕಾಣಬಹುದು. ಇದಲ್ಲದೆ, ವಿಭಕ್ತಿ ಪ್ರತ್ಯಯ ವೊಂದರ ಪ್ರಯೋಗವಾಗಿದೆಯೇ, ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ, ಬೇರೆ ಕೆಲವು ಅರ್ಥ ವ್ಯತ್ಯಾಸಗಳನ್ನೂ ಈ ಭಾಷೆಗಳಲ್ಲಿ ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಮಣಿಪುರಿಯಲ್ಲಿ ಕನ್ನಡದ ಅನ್ನು ಎಂಬ ಪ್ರತ್ಯಯದ ಅರ್ಥವಿರುವ ಬು ಎಂಬ ಪ್ರತ್ಯಯವನ್ನು ಅವಶ್ಯವಿಲ್ಲದಲ್ಲಿ ಬಳಸಿದಾಗ ‘ಅನ್ನು ಮಾತ್ರ’ ಎಂಬ ಅರ್ಥ ಬರುತ್ತದೆ (ಕಾರು ಎಂಬ ಪದದೊಂದಿಗೆ ಅದನ್ನು ಬಳಸದಿರುವಲ್ಲಿ ‘ಕಾರನ್ನು’ ಎಂಬ ಅರ್ಥ ಬರುವು ದಾದರೆ, ಬಳಸಿರುವಲ್ಲಿ ‘ಕಾರನ್ನು ಮಾತ್ರ’ ಎಂಬ ಅರ್ಥ ಬರುತ್ತದೆ.)
ವಿಭಕ್ತಿಗಳ ಬಳಕೆಯಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಈ ಭಾಷೆ ಗಳಲ್ಲಿ ಕಾಣಬಹುದು. ಉದಾಹರಣೆಗಾಗಿ, ಅಂಗಾಮೀ ನಾಗಾ ಭಾಷೆಯಲ್ಲಿ ಗಿನು ಮತ್ತು ನುನು ಎಂಬ ಎರಡು ಸಪ್ತಮೀ ವಿಭಕ್ತಿ ಪ್ರತ್ಯಯಗಳಿವೆ. ಇವುಗಳಲ್ಲಿ ಮೊದಲನೆಯದನ್ನು ಬಹಳ ಎತ್ತರದಲ್ಲಿರುವ ಸ್ಥಾನವನ್ನು ಸೂಚಿಸುವಲ್ಲಿ ಬಳಸ ಬೇಕು, ಮತ್ತು ಎರಡನೆಯದನ್ನು ಬಹಳ ತಗ್ಗಿನಲ್ಲಿರುವ ಸ್ಥಾನವನ್ನು ಸೂಚಿಸು ವಲ್ಲಿ ಬಳಸಬೇಕು. ಉದಾಹರಣೆಗಾಗಿ, ಬಸ್ಸಿನಲ್ಲಿ ಕುಳಿತೆ ಎಂದು ಹೇಳ ಬೇಕಾದಾಗ, ಆ ಬಸ್ಸು ಪರ್ವತದ ತುದಿಯಲ್ಲಿ ಸಾಗುತ್ತಿದ್ದರೆ ಅಂಗಾಮಿ ಭಾಷೆ ಯಲ್ಲಿ ಗಿನು ಎಂಬ ಪ್ರತ್ಯಯವನ್ನೂ, ಅದು ಕೆಳಗೆ ಕಣಿವೆಯಲ್ಲಿ ಸಾಗುತ್ತಿದ್ದರೆ ನುನು ಎಂಬ ಪ್ರತ್ಯಯವನ್ನೂ ಬಳಸಬೇಕಾಗುತ್ತದೆ.
ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಬೋಡೋ ಎಂಬ ಇನ್ನೊಂದು ಭಾಷೆಯಲ್ಲಿ ಕ್ರಿಯಾಪದಗಳು ತಿಳಿಸುವ ಘಟನೆಗಳ ಸ್ಥಾನ ವೈಶಿಷ್ಟ್ಯವನ್ನು ಸೂಚಿ ಸುವುದಕ್ಕಾಗಿ ಅವುಗಳೊಂದಿಗೆ ಹಲವಾರು ಪ್ರತ್ಯಯಗಳನ್ನು ಸೇರಿಸಿ ಹೇಳ ಲಾಗುತ್ತದೆ. ಉದಾಹರಣೆಗಾಗಿ, ದ್ದಾ ‘ತಿನ್ನು’ ಎಂಬ ಕ್ರಿಯಾಪದದೊಂದಿಗೆ ಕ್ಲಾಯ್ ಎಂಬ ಪ್ರತ್ಯಯವನ್ನು ಸೇರಿಸಿದಲ್ಲಿ ‘ಕೆಳಗಿನಿಂದ ಮೇಲಕ್ಕೆ ತಿನ್ನು’ ಎಂಬ ಅರ್ಥವೂ, ದ್ದ ಪ್ರತ್ಯಯವನ್ನು ಸೇರಿಸಿದಲ್ಲಿ ‘ನೆಕ್ಕಿ ತಿನ್ನು’ ಎಂಬ ಅರ್ಥವೂ, ಪ್ರು ಪ್ರತ್ಯಯವನ್ನು ಸೇರಿಸಿದಲ್ಲಿ ‘ಮಧ್ಯದಿಂದ ಕಚ್ಚಿ ತಿನ್ನು’ ಎಂಬ ಅರ್ಥವೂ, ಸ್ಲೆರ್ ಪ್ರತ್ಯಯವನ್ನು ಸೇರಿಸಿದಲ್ಲಿ ‘ಬದಿಯಿಂದ ತಿನ್ನು’ ಎಂಬ ಅರ್ಥವೂ, ದ್ದೊಬ್ ಪ್ರತ್ಯಯವನ್ನು ಸೇರಿಸಿದಲ್ಲಿ ‘ಮೇಲಿನಿಂದ ತಿನ್ನು’ ಎಂಬ ಅರ್ಥವೂ ಬರುತ್ತದೆ. ಈ ಭಾಷೆಯಲ್ಲಿ ಇಂತಹ ಹಲವು ಬಗೆಯ ಅರ್ಥಗಳನ್ನು ಕೊಡಬಲ್ಲ ಒಟ್ಟು ಇನ್ನೂರ ಐವತ್ತಕ್ಕಿಂತಲೂ ಜಾಸ್ತಿ ಪ್ರತ್ಯಯಗಳು ಬಳಕೆಯಲ್ಲಿವೆ.
ಕನ್ನಡದಲ್ಲಿ ಬರಬಹುದು ಎಂಬುದಕ್ಕೆ ‘ಬರುವುದು ಸಾಧ್ಯ’ ಎಂಬ ಅರ್ಥವೂ ಇದೆ, ‘ಬರುವುದಕ್ಕೆ ಒಪ್ಪಿಗೆಯಿದೆ’ ಎಂಬ ಅರ್ಥವೂ ಇದೆ. ಇದೇ ರೀತಿಯಲ್ಲಿ, ಬರಬೇಕು ಎಂಬುದಕ್ಕೆ ‘ಬರುವುದು ನಿಶ್ಚಯ’ ಎಂಬ ಅರ್ಥವೂ ಇದೆ, ‘ಬರುವುದು ಅವಶ್ಯ’ ಎಂಬ ಅರ್ಥವೂ ಇದೆ. ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಈ ಎರಡು ರೀತಿಯ ಅರ್ಥಗಳನ್ನು ಸೂಚಿಸಲು ಬೇರೆ ಬೇರೆ ಪ್ರತ್ಯಯಗಳನ್ನು ಇಲ್ಲವೇ ಪದಗಳನ್ನು ಪ್ರಯೋಗಿಸಲಾಗುತ್ತದೆ. ಹಾಗಾಗಿ,
ದ್ರಾವಿಡ ಮತ್ತು ಆರ್ಯ ಭಾಷೆಗಳಲ್ಲಿ ಕಾಣಿಸುವ ಈ ಅರ್ಥಸಂದಿಗ್ಧತೆ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕಾಣಿಸುವುದಿಲ್ಲ.
ನಮ್ಮ ದೇಶದ ಈಶಾನ್ಯ ಗಡಿಪ್ರದೇಶದಲ್ಲಿ ನಾವು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅಲ್ಲಿನ ಜನರು ಆಡುವ ಭಾಷೆಗಳು ದಿಲ್ಲಿಯ ರಾಜಕಾರಣಿಗಳ ಭಾಷೆಗಳಿಗಿಂತ ತೀರಾ ಭಿನ್ನವಾಗಿರುವುವಾದ ಕಾರಣ, ಅವರ ಅನಿಸಿಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ದಿಲ್ಲಿಯ ರಾಜ ಕಾರಣಿಗಳು ಎಡವುತ್ತಿದ್ದಾರೆ. ಬಹುಶಃ ಗಡಿಪ್ರದೇಶದ ತೊಂದರೆಗಳಿಗೆ ನಮ್ಮ ರಾಜಕಾರಣಿಗಳು ಅನುಭವಿಸುತ್ತಿರುವ ಈ ಭಾಷಾವಿಷಯಕ ಸಮಸ್ಯೆಯೂ ಒಂದು ಕಾರಣವಾಗಿರಬಲ್ಲುದು. ಈ ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀ ಲಿಸುವ ಅವಶ್ಯಕತೆಯಿದೆ.
ಆಸ್ಟೋ-ಏಶಿಯಾಟಿಕ್ ಭಾಷೆಗಳು
ಭಾರತದಲ್ಲಿ ಆಸ್ಟೋ-ಏಶಿಯಾಟಿಕ್ ಎಂಬ ಹೆಸರಿನ ಈ ಕುಟುಂಬಕ್ಕೆ ಸೇರಿದ ಭಾಷೆಗಳು ಮುಖ್ಯವಾಗಿ ಬಿಹಾರ್, ಒರಿಸ್ಸಾ, ಮತ್ತು ಮಧ್ಯಪ್ರದೇಶಗಳ ಗುಡ್ಡ ಕಾಡುಗಳಲ್ಲಿ ನೆಲೆಸಿರುವ ಜನರಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳನ್ನಾಡುವ ಜನರ ಹಾಗೆ, ಈ ಭಾಷೆಗಳನ್ನಾಡುವ ಜನರೂ ಆರ್ಯರು ಭಾರತಕ್ಕೆ ವಲಸೆ ಬರುವ ಮೊದಲೇ ಇಲ್ಲಿ ನೆಲೆಸಿದ್ದಿರಬೇಕು. ಈ ಭಾಷೆಗಳಲ್ಲಿ ಐವತ್ತೆರಡು ಲಕ್ಷ ಜನರ ಮನೆಮಾತಾಗಿರುವ ಸಂತಾಲಿ, ಮತ್ತು ಎಂಟೂವರೆ ಲಕ್ಷ ಜನರ ಮನೆ ಮಾತಾಗಿರುವ ಮುಂಡಾರಿ ಭಾಷೆಗಳು ಮುಖ್ಯವಾದವುಗಳು.
ಈ ಭಾಷೆಗಳನ್ನು ಮುಂಡ ಮತ್ತು ಮೋನ್-ಖ್ಮೇರ್ ಎಂಬ ಎರಡು ಉಪ ಕುಟುಂಬಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮುಂಡ ವಿಭಾಗಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯಾ, ಭೂಮಿಜ್, ಕೊರ್ಕು, ಸೋರಾ ಮೊದಲಾದ ಒಟ್ಟು ಸುಮಾರು ಹದಿನೆಂಟು ಭಾಷೆಗಳೂ, ಮೋನ್-ಖ್ಮೇರ್ ವಿಭಾಗಕ್ಕೆ ಸೇರಿದ ಖಾಸಿ ಮತ್ತು ನಿಕೊಬರೀಸ್ ಎಂಬ ಎರಡು ಭಾಷೆಗಳೂ ಭಾರತದಲ್ಲಿ ಬಳಕೆಯಲ್ಲಿವೆ.
ಭಾರತದ ಹೊರಗೆ ಬಳಕೆಯಲ್ಲಿರುವ ವಿಯಟ್ನಮೀಸ್, ಖ್ಮೇರ್ (ಕಂಬೋ ಡಿಯನ್) ಮೊದಲಾದ ಬೇರೆ ಹಲವು ಭಾಷೆಗಳೂ ಈ ಮೋನ್-ಖ್ಮೇರ್ ಗುಂಪಿಗೆ ಸೇರುತ್ತವೆ. ಆದರೆ, ಮುಂಡ ವಿಭಾಗಕ್ಕೆ ಸೇರಿದ ಭಾಷೆಗಳು ಭಾರತ ದಲ್ಲಿ ಮಾತ್ರ ಬಳಕೆಯಲ್ಲಿವೆ. ಅವನ್ನು ಮುಖ್ಯವಾಗಿ ದಕ್ಷಿಣ ಮುಂಡ (ಸೋರ, ಗೋರುಮ್), ಕೊರಾಪುತ್ ಮುಂಡ (ಗುಥೋಬ್, ರೆಮೋ), ಮಧ್ಯ ಮುಂಡ (ಖಡಿಯಾ, ಜುವಾಂಗ್), ಮತ್ತು ಉತ್ತರ ಮುಂಡ (ಕೊರ್ಕು, ಸಂತಾಲಿ, ಮುಂಡಾರಿ, ಕೊರ್ವ, ಹೋ, ಇತ್ಯಾದಿ) ಎಂಬುದಾಗಿ ವಿಂಗಡಿಸಲಾಗುತ್ತದೆ.
ಆಸ್ಟ್ರೋ-ಏಶಿಯಾಟಿಕ್ ಭಾಷಾಕುಟುಂಬವನ್ನು ಚೈನಾ, ವಿಯೆಟ್ನಾಂ ಮೊದ ಲಾದ ಭಾರತದ ಹೊರಗಿರುವ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಮಿಯನ್
ಮತ್ತು ಇತರ ಮಿಯಾವ್-ಯಾವ್ ಭಾಷೆಗಳೊಂದಿಗೆ, ಮತ್ತು ಥಾಯ್‌ಲೇಂಡಿನ ಥಾಯಿ, ಲಾವೋ, ಜುವಾಂಗ್ ಮೊದಲಾದ ದಾಯಿಕ್ ಭಾಷೆಗಳೊಂದಿಗೆ ಸೇರಿಸಿ, ಆಸ್ಟ್ರಿಕ್ ಎಂಬ ದೊಡ್ಡದೊಂದು ಭಾಷಾಕುಟುಂಬವನ್ನು ಕಲ್ಪಿಸಿಕೊಳ್ಳ ಬಹುದೆಂದು ಕೆಲವರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ವ್ಯಾಕರಣದ ಕೆಲವು ವೈಶಿಷ್ಟ್ಯಗಳು
ಈ ಕುಟುಂಬಕ್ಕೆ ಸೇರಿದ ಭಾಷೆಗಳು ಹಲವು ವಿಷಯಗಳಲ್ಲಿ ಭಾರತದ ಇತರ ಭಾಷೆಗಳಿಂದ ಭಿನ್ನವಾಗಿವೆ. ಉದಾಹರಣೆಗಾಗಿ, ಮುಂಡ ವಿಭಾಗಕ್ಕೆ ಸೇರಿದ ಮುಂಡಾರಿ ಭಾಷೆಯಲ್ಲಿ ಎಲ್ಲಾ ಪದಗಳೂ ಒಂದೇ ಪದವರ್ಗದಲ್ಲಿ ಬರುತ್ತವೆ. ಎಂದರೆ, ಅವುಗಳಲ್ಲಿ ಯಾವುದನ್ನು ಬೇಕಿದ್ದರೂ ನಾಮಪದವಾಗಿ, ಕ್ರಿಯಾಪದ ವಾಗಿ ಇಲ್ಲವೇ ಗುಣಪದವಾಗಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಮುಂಡಾರಿ ಭಾಷೆಯಲ್ಲಿ ‘ಮತ್ತು’ ಎಂಬ ಅರ್ಥವನ್ನು ಕೊಡುವ ಒಡೊ ಎಂಬ ಪದವನ್ನು ಆ ಅರ್ಥದಲ್ಲಿ ಮಾತ್ರವಲ್ಲದೆ, ವಿಭಕ್ತಿ ಪ್ರತ್ಯಯಗಳೊಂದಿಗೆ ‘ಹೆಚ್ಚಿ ನವರು’ ಎಂಬ ಅರ್ಥದಲ್ಲೂ ಬಳಸಬಹುದು, ಮತ್ತು ಆಖ್ಯಾತ ಪ್ರತ್ಯಯ ಗಳೊಂದಿಗೆ ‘ಇನ್ನೊಮ್ಮೆ ಮಾಡು’ ಎಂಬ ಅರ್ಥದಲ್ಲೂ ಬಳಸಬಹುದು.
ಮುಂಡಾರಿ ಭಾಷೆಯಲ್ಲಿ ಬರುವ ಬೇರೆ ಕೆಲವು ಪದಗಳ ಅರ್ಥವನ್ನು ಪರಿಶೀಲಿಸಿದಲ್ಲಿ, ಅದಕ್ಕೂ ಇತರ ಭಾಷೆಗಳಿಗೂ ನಡುವೆ ಇರುವ ಈ ವ್ಯತ್ಯಾಸ ಸ್ಪಷ್ಟವಾದೀತು. ಅದರ ಹೆಚ್ಚಿನ ಪದಗಳಲ್ಲೂ ‘ವಸ್ತು (ಇಲ್ಲವೇ ವಿಷಯ)’ ಮತ್ತು ‘ಅದಕ್ಕೆ ಸಂಬಂಧಿಸಿದ ಘಟನೆ’ ಎಂಬ ಈ ಎರಡು ರೀತಿಯ ಪರಿಕಲ್ಪನೆಗಳೂ ಹುದುಗಿರುತ್ತವೆ; ಇದನ್ನು ಕೆಳಗೆ ಕೊಟ್ಟಿರುವ ಮುಂಡಾರಿ ಪದಗಳಲ್ಲಿ ಕಾಣಬಹುದು.
| ಮುಂಡಾರಿ ಪದ | ವಸ್ತು | ಸಂಬಂಧಿಸಿದ ಘಟನೆ |
|---|---|---|
| ಬುರು | ‘ಪರ್ವತ’ | ‘ರಾಶಿ ಹಾಕು’ |
| ಗಪ | ‘ನಾಳೆ’ | ‘ಮುಂದೂಡು’ |
| ಕುಮ್ಮು | ‘ಕಳ್ಳ’ | ‘ಕದ್ದು ಕೋ’ |
| ಲುತುರ್ | ‘ಕಿವಿ’ | ‘ಕೇಳು’ |
ಮುಂಡಾರಿ ಭಾಷೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಇದರ ಕ್ರಿಯಾಪದ ಗಳು ತಿಳಿಸುವ ಘಟನೆಗಳಲ್ಲಿ ಬೇರೆ ಬೇರೆ ಕಾರ್ಯಗಳಿಗಾಗಿ ತೊಡಗಿಕೊಳ್ಳುವ ವ್ಯಕ್ತಿಗಳನ್ನು ಸೂಚಿಸಲು ಆ ಕ್ರಿಯಾಪದಗಳಲ್ಲೇನೇ ಆಖ್ಯಾತ ಪ್ರತ್ಯಯಗಳನ್ನು ಬಳಸುವ ವ್ಯವಸ್ಥೆಯಿದೆ.
ಉದಾಹರಣೆಗಾಗಿ, ದಲ್ ‘ಹೊಡೆ’ ಎಂಬ ಕ್ರಿಯಾಪದವನ್ನು ಬಳಸುವು ದಿದ್ದಲ್ಲಿ, ಅದರೊಂದಿಗೆ ‘ಹೊಡೆದದ್ದು ಯಾವಾಗ’ ಎಂಬುದನ್ನು ಮಾತ್ರವಲ್ಲದೆ,
ವಿಷ್ಯದ ಭಾಷೆಗಳು
‘ಹೊಡೆದದ್ದು ಯಾರು’, ಮತ್ತು ‘ಹೊಡೆದದ್ದು ಯಾರಿಗೆ’ ಎಂಬ ಬೇರೆ ಎರಡು ವಿಷಯಗಳನ್ನೂ ಸೂಚಿಸಲು ಆಖ್ಯಾತ ಪ್ರತ್ಯಯಗಳನ್ನು ಬಳಸಬಹುದು. ಈ ಭಾಷಾವೈಶಿಷ್ಟ್ಯವನ್ನು ಅಮೆರಿಕಾದ ಸಾಲಿಶ್ ಭಾಷೆಗಳಲ್ಲೂ ಕಾಣಬಹುದು.
ಸಂಸ್ಕೃತ ಭಾಷೆಯ ಹಾಗೆ, ಮುಂಡಾರಿ ಭಾಷೆಯಲ್ಲೂ ಮೂರು ವಚನ ಗಳಿವೆ ಮಾತ್ರವಲ್ಲ, ದ್ವಿವಚನ ಮತ್ತು ಬಹುವಚನಗಳೆರಡರಲ್ಲೂ ಕೇಳುಗನನ್ನು ಬಿಟ್ಟು ಇಲ್ಲವೇ ಸೇರಿಸಿ ಹೇಳುವಂತೆ ಎರಡೆರಡು ಸರ್ವನಾಮ ರೂಪಗಳಿವೆ. ಸಂಸ್ಕೃತದ ಕ್ರಿಯಾರೂಪಗಳನ್ನು ಮುಂಡಾರಿ ಭಾಷೆಯ ಕ್ರಿಯಾರೂಪಗಳೊಂದಿಗೆ ಹೋಲಿಸಿ ನೋಡಿದೆವಾದರೆ, ಸಂಸ್ಕೃತಕ್ಕಿಂತ ಎಷ್ಟೋ ಪಾಲು ಜಾಸ್ತಿ ಕ್ರಿಯಾ ರೂಪಗಳು ಮುಂಡಾರಿಯಲ್ಲಿರುವುದನ್ನು ಕಾಣಬಹುದು.
ಕನ್ನಡದಲ್ಲಿ ಅಲ್ಲಿ ಮತ್ತು ಇಲ್ಲಿ ಎಂಬ ಎರಡು ಸ್ಥಾನಗಳನ್ನು ನಿರ್ದೇಶಿಸುವ ಸರ್ವನಾಮಗಳಿವೆಯಾದರೆ, ಮುಂಡಾರಿ ಭಾಷೆಯಲ್ಲಿ ಒಟ್ಟು ಒಂಬತ್ತು ಸ್ಥಾನ ಗಳನ್ನು ನಿರ್ದೇಶಿಸುವ ಸರ್ವನಾಮಗಳಿವೆ. ‘ಮಾತನಾಡುವವನ ಹತ್ತಿರ’, ‘ದೂರ’, ಮತ್ತು ‘ಇವುಗಳ ನಡುವೆ’ ಎಂಬ ಮೂರು ಸ್ಥಾನಭೇದಗಳನ್ನು ಮಾತ್ರವಲ್ಲದೆ, ಇವುಗಳಲ್ಲಿ ಪ್ರತಿಯೊಂದೂ ‘ಹತ್ತಿರ’, ‘ಬಹಳ ಹತ್ತಿರ’, ಮತ್ತು ‘ಇನ್ನಷ್ಟು ಹತ್ತಿರ’ ಎಂಬುದಾಗಿ ಮೂರು ಹೆಚ್ಚಿನ ರೂಪಗಳನ್ನು ತೋರಿಸುತ್ತವೆ.
ಆಸ್ಟ್ರೋ-ಏಶಿಯಾಟಿಕ್ ಕುಟುಂಬದಲ್ಲೇನೇ ಮೋನ್-ಖ್ಮೇರ್ ಎಂಬ ಉಪ ಕುಟುಂಬಕ್ಕೆ ಸೇರುವ, ಮತ್ತು ಮೇಘಾಲಯದಲ್ಲಿ ಬಳಕೆಯಲ್ಲಿರುವ, ಖಾಸಿ ಭಾಷೆ ಮುಂಡ ಭಾಷೆಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಉದಾ ಹರಣೆಗಾಗಿ, ಖಾಸಿ ಭಾಷೆಯಲ್ಲಿ ನಾಮಪದಗಳನ್ನು ಬಳಸುವಾಗಲೆಲ್ಲ ಉ ‘ಪುಲ್ಲಿಂಗ’ ಇಲ್ಲವೇ ಕ ‘ಸ್ತ್ರೀಲಿಂಗ’ ಎಂಬ ಎರಡು ಸರ್ವನಾಮಗಳಲ್ಲಿ ಯಾವು ದಾದರೂ ಒಂದನ್ನು ಅವುಗಳೊಂದಿಗೆ ಬಳಸಲೇಬೇಕೆಂಬ ನಿಯಮವಿದೆ.
ಬಹುವಚನದಲ್ಲಾದರೆ, ಇವೆರಡಕ್ಕೂ ಬದಲಾಗಿ ಕಿ ಎಂಬ ಸರ್ವನಾಮವನ್ನು ಬಳಸಬಹುದು. ಈ ಸರ್ವನಾಮಗಳು ಲಿಂಗಭೇದವನ್ನು ಮಾತ್ರವಲ್ಲ, ಅಪ್ರಾಣಿ ವಾಚಕ ಪದಗಳೊಂದಿಗೆ ಬಂದಾಗ ಅವುಗಳ ಆಕಾರ ಇಲ್ಲವೇ ಗಾತ್ರವನ್ನೂ ಸೂಚಿಸಬಲ್ಲುವು (ಉ ಸ್ಲ ‘ಚಿಕ್ಕ ಎಲೆ’, ಕ ಸ್ಲ ‘ದೊಡ್ಡ ಎಲೆ’)
೫.೨ ಏಷ್ಯಾದ ಭಾಷೆಗಳು
ಭಾರತದಲ್ಲಿ ಬಳಕೆಯಲ್ಲಿರುವ ಭಾಷಾಕುಟುಂಬಗಳಾದ ಇಂಡೋ-ಆರ್ಯನ್ (ಇಂಡೋ-ಯುರೋಪಿಯನ್), ದ್ರವಿಡಿಯನ್, ಟಿಬೆಟೋ-ಬರ್ಮನ್ ಮತ್ತು ಆಸ್ಟ್ರೋ-ಏಶಿಯಾಟಿಕ್ ಎಂಬವುಗಳಿಗೆ ಸೇರಿದ ಭಾಷೆಗಳು ಮಾತ್ರವಲ್ಲದೆ, ಉರಾಲಿಕ್ ಮತ್ತು ಅಲ್ಟೇಯಿಕ್ ಎಂಬ ಬೇರೆ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳೂ ಏಶ್ಯಾಖಂಡದಲ್ಲಿ ಬಳಕೆಯಲ್ಲಿವೆ. ಇವಲ್ಲದೆ, ಚುಕ್ಚಿ-ಕಾಮ್ಚತ್
ಕಾನ್, ಮಿಯಾವ್-ಯಾವ್ ಮತ್ತು ದಾಯಿಕ್ ಎಂಬ ಇನ್ನೂ ಮೂರು ಕುಟುಂಬಗಳಿಗೆ ಸೇರಿದ ಭಾಷೆಗಳೂ ಈ ಖಂಡದಲ್ಲಿ ಬಳಕೆಯಲ್ಲಿವೆ.
ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಇರೇ ನಿಯನ್ ಮತ್ತು ಆರ್ಮೇನಿಯನ್ ಭಾಷೆಗಳು ಏಶ್ಯಾದ ನೈಋತ್ಯ ಭಾಗದಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರವಲ್ಲದೆ, ಪಾಕಿಸ್ತಾನ (ಬ್ರಾಹುಯೀ), ನೇಪಾಲ (ಕುಡುಖ್), ಬಂಗ್ಲಾದೇಶ ಮೊದಲಾದ ಏಶ್ಯಾದ ಬೇರೆ ಕೆಲವು ದೇಶಗಳಲ್ಲೂ ಬಳಕೆಯಲ್ಲಿವೆ.
ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಚೈನೀಸ್ ಭಾಷೆ (ನಿಜಕ್ಕೂ ಇದು ಮಂದಾರಿನ್, ಕೆಂಟೊನೀಸ್, ವೂ, ದಕ್ಷಿಣ ಮತ್ತು ಉತ್ತರ ಮಿನ್, ಕೇಜಾ ಮೊದಲಾದ ಹಲವು ಭಾಷೆಗಳ ಒಂದು ಉಪಕುಟುಂಬ) ಏಶ್ಯಾ ಖಂಡದ ಒಂದು ಮುಖ್ಯವಾದ ಭಾಷೆ. ಇದಲ್ಲದೆ, ಈ ಕುಟುಂಬಕ್ಕೆ ಸೇರಿದ ಟಿಬೆಟನ್ ಮತ್ತು ಬರ್ಮೀಸ್ ಎಂಬ ಇನ್ನೆರಡು ಮುಖ್ಯವಾದ ಭಾಷೆಗಳೂ ಏಶ್ಯಾದಲ್ಲಿ ಬಳಕೆ ಯಲ್ಲಿವೆ.
ಆಸ್ಟ್ರೋ-ಏಶಿಯಾಟಿಕ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಭಾರತದ ಹೊರಗೆ ಏಶ್ಯಾದಲ್ಲಿ ಬಳಕೆಯಲ್ಲಿರುವ ಭಾಷೆಗಳೆಲ್ಲ ಮೋನ್-ಖ್ಮೆರ್ ಎಂಬ ಉಪಕುಟುಂಬಕ್ಕೆ ಸೇರುತ್ತವೆ. ವಿಯಟ್ನಮೀಸ್ ಮತ್ತು ಖ್ಮೆರ್ (ಕಂಬೋ ಡಿಯನ್) ಭಾಷೆಗಳು ಇವುಗಳಲ್ಲಿ ಮುಖ್ಯವಾದವುಗಳು. ಇಂತಹ ನೂರೈವತ್ತು ಭಾಷೆಗಳು ಏಶ್ಯಾದಲ್ಲಿ ಬಳಕೆಯಲ್ಲಿವೆ.
ಥಾಯಿ, ಲಾವೋ ಮೊದಲಾದ ಒಟ್ಟು ಅರುವತ್ತು ಭಾಷೆಗಳನ್ನೊಳಗೊಂಡ ದಾಯಿಕ್ ಕುಟುಂಬ, ಮತ್ತು ಚೈನಾ, ವಿಯೆಟ್ನಾಂ, ಥೈಲೇಂಡ್ ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿರುವ ಮಿಯಾವ್-ಯಾವ್ ಕುಟುಂಬ - ಇವೆರಡನ್ನೂ ಆಸ್ಟ್ರೋ-ಏಶಿಯಾಟಿಕ್ ಎಂಬ ಕುಟುಂಬದೊಂದಿಗೆ ಸೇರಿಸಿ, ಆಸ್ಟ್ರಿಕ್ ಎಂಬ ದೊಡ್ಡದೊಂದು ಭಾಷಾಕುಟುಂಬವನ್ನು ಸಾಧಿಸಬಹುದೆಂದು ಕೆಲವರು ಅಭಿ ಪ್ರಾಯಪಟ್ಟಿದ್ದಾರೆ.
ಮುಖ್ಯವಾಗಿ ಯುರೋಪ್‌ನಲ್ಲಿ ಬಳಕೆಯಲ್ಲಿರುವ ಯುರಾಲಿಕ್ ಭಾಷೆಗಳಲ್ಲಿ ಸಮೊಯೆದ್ ಎಂಬ ಉಪಕುಟುಂಬಕ್ಕೆ ಸೇರಿದ ಭಾಷೆಗಳು ಏಶ್ಯಾದ ಯುರಾಲ್ ಪರ್ವತಶ್ರೇಣಿಯಲ್ಲಿ ಬಳಕೆಯಲ್ಲಿವೆ. ಅಲ್ಟಯಿಕ್ ಕುಟುಂಬದಲ್ಲಿ ಟರ್ಕಿಕ್, ಮೊಂಗೋಲಿಯನ್, ಮಂಚು-ತುಂಗುಸ್ ಮತ್ತು ಕೊರಿಯನ್ ಎಂಬ ನಾಲ್ಕು ಉಪಕುಟುಂಬಗಳು ಸೇರುತ್ತವೆ. ಐವತ್ತು ಮಿಲಿಯ ಜನರ ಮನೆಮಾತಾದ ಟರ್ಕಿಶ್ ಭಾಷೆ ಇವುಗಳಲ್ಲಿ ಮುಖ್ಯವಾದುದು. ಕೆಲವರ ಅಭಿಪ್ರಾಯದಂತೆ, ಜಪಾನೀಸ್ ಮತ್ತು ಐನು ಭಾಷೆಗಳನ್ನೂ ಈ ಅಲ್ಟಯಿಕ್ ಕುಟುಂಬದಲ್ಲಿ ಸೇರಿಸಬಹುದು.
೫.೩ ಯುರೋಪಿನ ಭಾಷೆಗಳು
ಯುರೋಪ್ ಖಂಡದಲ್ಲಿ ಮುಖ್ಯವಾಗಿ ಇಂಡೋ-ಯುರೋಪಿಯನ್, ಯುರಾಲಿಕ್ ಮತ್ತು ಕೌಕೇಶಿಯನ್ ಎಂಬ ಮೂರು ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳು ಬಳಕೆಯಲ್ಲಿವೆ. ಇವುಗಳಲ್ಲಿ ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಶ್, ರಶ್ಯನ್ ಮೊದಲಾದ ಭಾಷೆಗಳನ್ನಾಡುವ ಜನರು ಅಮೆರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಮೊದಲಾದ ಬೇರೆ ಭೂಖಂಡಗಳಿಗೂ ವಲಸೆ ಹೋಗಿ ಅಲ್ಲೂ ವಿಸ್ತಾರವಾಗಿ ಹರಡಿಕೊಂಡಿದ್ದಾರೆ. ಇದರಿಂದಾಗಿ, ಇವತ್ತು ಜಗತ್ತಿನ ಒಟ್ಟು ಜನಸಂಖ್ಯೆಯ ಲೆಕ್ಕವನ್ನು ಹಿಡಿದಲ್ಲಿ, ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳಿಗೆ ಮೊದಲನೆಯ ಸ್ಥಾನ ಸಿಗುತ್ತದೆ.
ಇಂಡೋ-ಯುರೋಪಿಯನ್ ಭಾಷೆಗಳು
ಈ ಕುಟುಂಬಕ್ಕೆ ಸೇರಿದ ಭಾಷೆಗಳ ಸಂಖ್ಯೆ ನೂರೈವತ್ತಕ್ಕಿಂತ ಜಾಸ್ತಿಯಿಲ್ಲ. ಈ ಭಾಷೆಗಳನ್ನಾಡುವ ಜನರ ಮೂಲ ಯುರೋಪ್ ಖಂಡವಾಗಿದೆಯಾದರೂ ಮೊದಲಿಗೆ ಹತ್ತಿರದ ಏಶ್ಯಾ ಖಂಡಕ್ಕೆ ಮತ್ತು ಇತ್ತೀಚೆಗೆ ಇತರ ಎಲ್ಲಾ ಖಂಡ ಗಳಿಗೂ ಈ ಜನರು ವಲಸೆ ಹೋಗಿ, ಇವತ್ತು ಇಡೀ ಭೂಮಿಯನ್ನೇ ಆಕ್ರಮಿಸಿ ಕೊಂಡಿದ್ದಾರೆ. ಈ ಕುಟುಂಬಕ್ಕೆ ಸೇರಿದ ಇಂಗ್ಲಿಷ್ ಭಾಷೆ ಇವತ್ತು ಜಗತ್ತಿನ ಭಾಷೆಯೆನಿಸಿದೆ.
ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದೆ ಇವತ್ತಿನ ಟರ್ಕಿಯಲ್ಲಿ ಬಳಕೆಯಲ್ಲಿದ್ದು, ಅನಂತರ ನಶಿಸಿಹೋಗಿದ್ದ ಹಿಟ್ಟೈಟ್ ಎಂಬ ಭಾಷೆ ಇಂಡೋ-ಯುರೋಪಿಯನ್ ಭಾಷೆಗಳಿಗೆ ಸಂಬಂಧಿಸಿದ್ದೆಂದೂ, ಮತ್ತು ಈ ಭಾಷೆಯನ್ನು ಇಂಡೋ-ಯುರೋಪಿಯನ್ ಭಾಷೆಗಳೊಂದಿಗೆ ಸೇರಿಸಿ ಒಟ್ಟಾಗಿ ಇಂಡೋ-ಹಿಟ್ಟೈಟ್ ಎಂಬ ಇನ್ನೂ ದೊಡ್ಡ ಭಾಷಾಕುಟುಂಬವೊಂದನ್ನು ಸಾಧಿಸಲು ಸಾಧ್ಯ ವೆಂದೂ ಕೆಲವರು ವಾದಿಸಿದ್ದಾರೆ.
ಇಂಡೋ-ಯುರೋಪಿಯನ್ ಭಾಷೆಗಳನ್ನು ಶ-ಕ ಭೇದದ ಆಧಾರದ ಮೇಲೆ ಪೂರ್ವ ಮತ್ತು ಪಶ್ಚಿಮ ಭಾಷೆಗಳೆಂದು ವಿಂಗಡಿಸುವ ಕ್ರಮ ಬಳಕೆ ಯಲ್ಲಿತ್ತು. ಆದರೆ ಕಕಾರವನ್ನು ಶಕಾರವಾಗಿ ಮಾಡಿರುವ ಭಾಷೆಗಳ ನಡುವೆ ಕಕಾರವನ್ನು ಉಳಿಸಿಕೊಂಡಿರುವ ಹಿಟ್ಟೈಟ್ ಭಾಷೆಯಿದೆಯೆಂಬುದನ್ನು ಕಂಡು ಹಿಡಿದಾಗ, ಈ ವಿಭಜನೆಗೆ ಬೆಲೆಯಿಲ್ಲದಾಯಿತು. ಸದ್ಯಕ್ಕೆ ಇಂಡೋ- ಯುರೋಪಿಯನ್ ಭಾಷೆಗಳನ್ನು ಇಂಡೋ-ಇರೇನಿಯನ್, ಜರ್ಮೇನಿಕ್, ಸ್ಲಾವಿಕ್, ಬಾಲ್ಟಿಕ್, ಕೆಲ್ಟಿಕ್, ಇಟಾಲಿಕ್, ಮೊದಲಾದ ಒಟ್ಟು ಹನ್ನೆರಡು ಉಪಕುಟುಂಬಗಳಲ್ಲಿ ವಿಂಗಡಿಸುವುದು ರೂಢಿ. ಈ ಉಪಕುಟುಂಬಗಳಲ್ಲಿ ಗ್ರೀಕ್,
ಆರ್ಮೇನಿಯನ್ ಮತ್ತು ಅಲ್ಬೇನಿಯನ್‌ಗಳಲ್ಲಿ ಒಂದೊಂದು ಭಾಷೆ (ಮತ್ತು ಅವುಗಳ ಉಪಭಾಷೆಗಳು) ಮಾತ್ರ ಇದೆ.
ಇತರ ಭಾಷೆಗಳು
ಯುರಾಲಿಕ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಮಧ್ಯಯುರೋಪಿನಲ್ಲಿ ಬಳಕೆ ಯಲ್ಲಿರುವ ಸುಮಾರು ಹದಿನೈದು ಮಿಲಿಯ ಜನರ ಮನೆಮಾತಾದ ಹಂಗೇರಿಯನ್ ಮುಖ್ಯವಾದುದು. ಇದಲ್ಲದೆ, ಫಿನ್‌ಲೇಂಡಿನಲ್ಲಿ ಸುಮಾರು ಐದು ಮಿಲಿಯ ಜನರ ಮನೆಮಾತಾಗಿರುವ ಫಿನ್ನಿಶ್ ಭಾಷೆಯೂ ಈ ಕುಟುಂಬಕ್ಕೆ ಸೇರುತ್ತದೆ. ಎಸ್ಟೋನಿಯಾದ ಎಸ್ತೋನಿಯನ್, ಸ್ಕೇಂಡಿನೇವಿಯಾದ ಲಾಪ್, ಕರೇಲಿಯನ್, ಮೋರ್ಡ್ವಿನ್ ಮೊದಲಾದ ಈ ಕುಟುಂಬದ ಇತರ ಮೂವತ್ತು ಭಾಷೆಗಳನ್ನಾಡುವ ಜನರ ಒಟ್ಟು ಸಂಖ್ಯೆ ಐದು ಮಿಲಿಯಕ್ಕಿಂತ ಜಾಸ್ತಿ ಇಲ್ಲ. ಏಶ್ಯಾದ ಉತ್ತರ ಭಾಗದಲ್ಲೂ ಈ ಕುಟುಂಬಕ್ಕೆ ಸೇರಿದ ಅಥವಾ ಸಂಬಂಧಿಸಿದ ಯುಕಾಘಿರ್, ಮಾನ್ಸಿ ಮೊದಲಾದ ಭಾಷೆಗಳಿವೆ.
ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ ಇವುಗಳ ಪದಗಳಲ್ಲೆಲ್ಲ ಸ್ವರಗಳ ಸಾಮರಸ್ಯ ಕಾಣಿಸುತ್ತದೆ. ಇದಕ್ಕಾಗಿ ಪದಗಳಲ್ಲಿ ಬರುವ ಸ್ವರಗಳನ್ನು ಪೂರ್ವ ಮತ್ತು ಪಶ್ಚ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸುವ ಅವಶ್ಯಕತೆ ಯಿದೆ. ಇಕಾರ ಮತ್ತು ಎಕಾರಗಳು ಪೂರ್ವ ಸ್ವರಗಳು, ಮತ್ತು ಉಕಾರ, ಒಕಾರ ಮತ್ತು ಅಕಾರಗಳು ಪಶ್ಚ ಸ್ವರಗಳು. ಯಾವ ಪದದಲ್ಲೂ ಪೂರ್ವ ಮತ್ತು ಪಶ್ಚ ಸ್ವರಗಳು ಒಟ್ಟಾಗಿ ಬರಲಾರವು. ಹಾಗಾಗಿ, ಈ ಭಾಷೆಗಳಲ್ಲಿ ಬರುವ ಪ್ರತ್ಯಯ ಗಳಿಗೆಲ್ಲ ಪೂರ್ವಸ್ವರಯುಕ್ತ ಮತ್ತು ಪಶ್ಚಸ್ವರಯುಕ್ತಗಳೆಂಬ ಎರಡೆರಡು ರೂಪ ಗಳಿರುತ್ತವೆ.
ಉದಾಹರಣೆಗಾಗಿ, ಹಂಗೇರಿಯನ್ ಭಾಷೆಯಲ್ಲಿ ‘ಮೇಲೆ’ ಎಂಬ ಅರ್ಥದ ಪ್ರತ್ಯಯಕ್ಕೆ ಎನ್ ಮತ್ತು ಒನ್ ಎಂಬ ಎರಡು ರೂಪಗಳಿವೆ. ಒಂದು ನಾಮಪದ ಪೂರ್ವಸ್ವರಯುಕ್ತವಾಗಿದ್ದರೆ ಅದರೊಂದಿಗೆ ಈ ಪ್ರತ್ಯಯದ ಎನ್ ಎಂಬ ರೂಪ ವನ್ನೂ (ವಿದ್ಸೆನ್ ‘ನೀರಿನ ಮೇಲೆ’), ಮತ್ತು ಪಶ್ಚಸ್ವರಯುಕ್ತವಾಗಿದ್ದರೆ ಒನ್ ಎಂಬ ರೂಪವನ್ನೂ (ಲೊವೊನ್ ‘ಕುದುರೆಯ ಮೇಲೆ’) ಬಳಸಬೇಕಾಗುತ್ತದೆ.
ಈ ಭಾಷೆಗಳಲ್ಲಿ ವಿಭಕ್ತಿ ಪ್ರತ್ಯಯಗಳ ಸಂಖ್ಯೆ ಸಾಮಾನ್ಯವಾಗಿ ಬಹಳ ದೊಡ್ಡದು. ಉದಾಹರಣೆಗಾಗಿ, ಪೆರ್‌ಮ್ಯಾಕ್ ಎಂಬ ಭಾಷೆಯಲ್ಲಿ ೨೮ ವಿಭಕ್ತಿ ಪ್ರತ್ಯಯಗಳಿವೆ. ಈ ಪ್ರತ್ಯಯಗಳು ಮುಖ್ಯವಾಗಿ ಹಲವು ಬಗೆಯ ಸ್ಥಾನಗಳನ್ನು ಸೂಚಿಸಲು ಬಳಕೆಯಾಗುತ್ತವೆ. ಕನ್ನಡದಲ್ಲಿ ಇಂದ ಮತ್ತು ಗೆ ಎಂಬ ಎರಡು ಅಸ್ಥಾಯಿ ಸ್ಥಾನಗಳನ್ನು ಸೂಚಿಸುವ ಪ್ರತ್ಯಯಗಳೂ, ಅಲ್ಲಿ ಎಂಬ ಸ್ಥಾಯಿ ಸ್ಥಾನವನ್ನು ಸೂಚಿಸುವ ವಿಭಕ್ತಿಯೂ ಇದೆಯಾದರೆ, ಈ ಭಾಷೆಗಳಲ್ಲಿ ಹಲವು ಬಗೆಯ ಸ್ಥಾಯಿ ಸ್ಥಾನಗಳನ್ನು ಸೂಚಿಸುವ ಪ್ರತ್ಯಯಗಳಿವೆ.
ಕೌಕೇಶಿಯನ್ ವಿಭಾಗಕ್ಕೆ ಸೇರಿದ ಭಾಷೆಗಳಲ್ಲಿ ಹೆಚ್ಚಿನವೂ ಹಿಂದಿನ ಸೋವಿಯೆಟ್ ಯೂನಿಯನ್‌ನಲ್ಲಿದ್ದ ಕೌಕಸಸ್ ಪ್ರದೇಶದಲ್ಲಿ ಬಳಕೆಯಲ್ಲಿವೆ. ಇವುಗಳಲ್ಲಿ ಜಾರ್ಜಿಯನ್ ಮುಖ್ಯವಾದುದು. ಅಬ್‌ಖಾಜ್, ಚೆಚನ್, ಘಸ್ತಾನಿ, ದರ್ಗ್ವಾ, ಲೆಜ್‌ಗಿ ಮೊದಲಾದ ಒಟ್ಟು ಸುಮಾರು ೩೭ ಭಾಷೆಗಳನ್ನು ಈ ವಿಭಾಗದಲ್ಲಿ ಸೇರಿಸುವುದು ರೂಢಿ. ನಿಜಕ್ಕೂ ಈ ಎಲ್ಲಾ ಭಾಷೆಗಳನ್ನೂ ಒಟ್ಟಾಗಿ ಒಂದು ಭಾಷಾಕುಟುಂಬವೆಂದು ಪರಿಗಣಿಸುವುದಕ್ಕೆ ಸಾಕಷ್ಟು ಆಧಾರವಿನ್ನೂ ದೊರೆತಿಲ್ಲ. ಹಾಗಾಗಿ, ಕೌಕೇಶಿಯನ್ ಎಂಬುದು ಒಂದು ಭಾಷಾಕುಟುಂಬ ವೆನ್ನುವುದಕ್ಕಿಂತಲೂ ಒಂದು ಪ್ರಾದೇಶಿಕ ವಿಭಜನೆಯೆಂದು ಹೇಳುವುದೇ ಲೇಸು.
ಈ ಭಾಷೆಗಳನ್ನು ಉತ್ತರ ಮತ್ತು ದಕ್ಷಿಣ (ಕರ್ತೇಲಿಯನ್) ಎಂಬ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಉತ್ತರದ ಭಾಷೆಗಳಲ್ಲಿ ಕಾಣಿಸಿ ಕೊಳ್ಳುವ ವರ್ಣಗಳ ಸಂಖ್ಯೆ ಸಾಮಾನ್ಯವಾಗಿ ಬಹಳ ದೊಡ್ಡದು. ಉದಾಹರಣೆ ಗಾಗಿ, ಯುಬಿಖ್ ಭಾಷೆಯಲ್ಲಿ ಒಟ್ಟು ೮೦ ವ್ಯಂಜನ ವರ್ಣಗಳಿವೆ. ಆದರೆ ಈ ಭಾಷೆಯಲ್ಲಿರುವ ಸ್ವರಗಳ ಸಂಖ್ಯೆ ಮಾತ್ರ ಬರೇ ಎರಡು (ಇವು ಎರಡು ಬಗೆಯ ಅಕಾರಗಳು). ಈ ಭಾಷೆಯಲ್ಲಿ ಉ, ಒ, ಇ, ಎ ಮೊದಲಾದ ಅಕಾರಕ್ಕಿಂತ ಭಿನ್ನವಾದ ಸ್ವರಗಳಿಲ್ಲ.
ಕರ್ತೇಲಿಯನ್ ಭಾಷೆಗಳಲ್ಲಿ ವಿಭಕ್ತಿಗಳ ಸಂಖ್ಯೆ ಅಧಿಕ. ಉದಾಹರಣೆಗಾಗಿ, ಲಾಕ್ ಭಾಷೆಯಲ್ಲಿ ಒಟ್ಟು ೪೦ ವಿಭಕ್ತಿಗಳಿವೆ. ತಬಸಾರಸ್ ಎಂಬ ಇನ್ನೊಂದು ಭಾಷೆಯಲ್ಲಿ ೪೬ ವಿಭಕ್ತಿಗಳಿವೆ. ಇದರ ಕೆಲವು ಉಪಭಾಷೆಗಳಲ್ಲಿ ಇನ್ನೂ ಜಾಸ್ತಿ ವಿಭಕ್ತಿಗಳಿವೆ. ಇವುಗಳಲ್ಲಿ ಹೆಚ್ಚಿನವೂ ಬೇರೆ ಬೇರೆ ಸ್ಥಾನಗಳನ್ನು ಸೂಚಿಸುವು ದಕ್ಕಾಗಿ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕನ್ನಡದ ಸಪ್ತಮಿಗೆ ಬದಲಾಗಿ ಸ್ಥಾನದ ಸ್ವರೂಪವನ್ನಾಧರಿಸಿ, ಎಂದರೆ ‘ಸಮತಟ್ಟಾದ ಜಾಗ’, ‘ಇಳಿಜಾರಾದ ಜಾಗ’, ‘ಮೇಲ್ಮೈ’, ‘ಕೆಳಮೈ’, ‘ಖಾಲಿ ಜಾಗ’, ‘ತುಂಬಿದ ಜಾಗ’, ಮೊದಲಾದ ಭೇದಗಳನ್ನಾಧರಿಸಿ, ಈ ಭಾಷೆಗಳಲ್ಲಿ ಹಲವಾರು ಪ್ರತ್ಯಯಗಳನ್ನು ಬಳಸ ಲಾಗುತ್ತದೆ.
೫.ಆಫ್ರಿಕಾದ ಭಾಷೆಗಳು
ಆಫ್ರಿಕಾದಲ್ಲಿ ಒಟ್ಟು ಸುಮಾರು ಒಂದೂವರೆ ಸಾವಿರದಿಂದ ಹಿಡಿದು ಎರಡು ಸಾವಿರದಷ್ಟು ಭಾಷೆಗಳು ಬಳಕೆಯಲ್ಲಿಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಈ ಭಾಷೆಗಳನ್ನೆಲ್ಲ ಆಫ್ರೋ-ಏಶಿಯಾಟಿಕ್, ನೈಲೋ-ಸಹರಾನ್, ನೈಜರ್-ಕೊರ್ಡೋಫೇನಿಯನ್, ಮತ್ತು ಖೊಯ್ಸಾನ್ ಎಂಬ ನಾಲ್ಕು ಮುಖ್ಯ ಕುಟುಂಬಗಳಲ್ಲಿ ವಿಂಗಡಿಸಬಹುದೆಂದು ಇವರಲ್ಲಿ ಹೆಚ್ಚಿನವರೂ ಅಭಿಪ್ರಾಯ ಪಡುತ್ತಾರೆ. ಆಫ್ರಿಕಾದಲ್ಲಿ ಈ ನಾಲ್ಕು ಕುಟುಂಬಗಳಿಗೂ ಸೇರದೆ ಪ್ರತ್ಯೇಕವಾಗಿ ಉಳಿಯುವ ಭಾಷೆಗಳೂ ಕೆಲವಿವೆ.
ಆಫ್ರಿ-ಏಶಿಯಾಟಿಕ್ ಭಾಷೆಗಳು
ಈ ವಿಭಾಗಕ್ಕೆ ಸೇರುವ ಸುಮಾರು ಇನ್ನೂರ ನಲುವತ್ತು ಭಾಷೆಗಳು ಆಫ್ರಿಕಾದ ಉತ್ತರ ಭಾಗದಲ್ಲಿ ಬಳಕೆಯಲ್ಲಿವೆ. ಇವನ್ನು ಈಜಿಪ್ಟಿಯನ್, ಸೆಮಿಟಿಕ್, ಬೆರ್ಬೆರ್, ಚಾದಿಕ್, ಮತ್ತು ಕುಶಿಟಿಕ್ ಎಂಬ ಐದು ಉಪವಿಭಾಗಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಕೆಲವು ಭಾಷೆಗಳನ್ನು ಒಮೋಟಿಕ್ ಎಂಬ ಇನ್ನೊಂದು ಪ್ರತ್ಯೇಕವಾದ ವಿಭಾಗದಲ್ಲಿ ಸೇರಿಸಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಉಪವಿಭಾಗಗಳಲ್ಲಿ ಈಜಿಪ್ಟಿಯನ್ ಎಂಬುದಕ್ಕೆ ಸೇರಿದ ಭಾಷೆ ಗಳೆಲ್ಲ ಈಗ ಅಳಿದು ಹೋಗಿವೆ. ಹಳೇ ಈಜಿಪ್ಟಿಯನ್ ಭಾಷೆಯ ಬರಹಗಳು ಐದು ಸಾವಿರ ವರ್ಷಗಳಷ್ಟು ಹಳೆಯವು. ಅದರ ಇತ್ತೀಚೆಗಿನ ಪ್ರಭೇದವೆಂದರೆ ಹದಿನಾರನೇ ಶತಮಾನದ ಕೋಪ್ಟಿಕ್ ಭಾಷೆ.
ಸೆಮಿಟಿಕ್ ಕುಟುಂಬಕ್ಕೆ ಸೇರಿದ ಭಾಷೆಗಳು ಅರಬ್ ದೇಶಗಳಾದ ಸೌದೀ ಅರೇಬಿಯ, ಜೋರ್ಡಾನ್, ಇರಾಕ್, ಇಸ್ರೇಲ್, ಲೆಬನಾನ್, ಸಿರಿಯಾಗಳಲ್ಲೂ, ಸೋಮಾಲಿಯಾ ಮತ್ತು ಇಥಿಯೋಪಿಯಾದ ಹೆಚ್ಚಿನ ಭಾಗಗಳಲ್ಲೂ, ಮತ್ತು ಇರಾನ್ ಹಾಗೂ ಟರ್ಕಿ ದೇಶಗಳ ಕೆಲವು ಭಾಗಗಳಲ್ಲೂ ಬಳಕೆಯಲ್ಲಿವೆ. ಅಕ್ಕಾಡಿಯನ್ ಎಂಬುದು ಈ ವಿಭಾಗಕ್ಕೆ ಸೇರಿದ ಒಂದು ಹಳೇ ಭಾಷೆ.
ನೂರು ಮಿಲಿಯ ಜನರ ಮನೆಮಾತಾಗಿರುವ ಅರೇಬಿಕ್, ಎಂಟು ಮಿಲಿಯ ಜನರ ಮಾತಾಗಿರುವ ಅಮ್ಹಾರಿಕ್, ನಾಲ್ಕು ಮಿಲಿಯ ಜನರ ಮಾತಾಗಿರುವ ತಿಗ್ರೀನಿಯಾ ಮೊದಲಾದವುಗಳು ಈ ಸೆಮಿಟಿಕ್ ವಿಭಾಗಕ್ಕೆ ಸೇರಿದ ಆಧುನಿಕ ಭಾಷೆಗಳು. ಇಸ್ರೇಲಿನ ಹೀಬ್ರೂ ಭಾಷೆಯೂ ಇದೇ ವಿಭಾಗಕ್ಕೆ ಸೇರುತ್ತದೆ. ಕ್ರೈಸ್ತನ ಕಾಲದಲ್ಲಿ ಹೆಚ್ಚು ಕಡಿಮೆ ಪೂರ್ತಿ ನಷ್ಟವಾಗಿ ಹೋಗಿದ್ದ ಈ ಭಾಷೆ ಯನ್ನು ಪುನರುಜ್ಜೀವನಗೊಳಿಸಿ ಆಧುನಿಕ ಆಡಳಿತ ಭಾಷೆಯನ್ನಾಗಿ ಮಾಡ ಲಾಗಿದೆ. ಇವತ್ತು ಇದನ್ನು ಬಳಸುತ್ತಿರುವವರ ಸಂಖ್ಯೆ ಸುಮಾರು ಮೂರು ಮಿಲಿಯ.
ಸೆಮಿಟಿಕ್ ವಿಭಾಗಕ್ಕೆ ಸೇರಿದ ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳ ಪದಗಳಲ್ಲಿ ಹೆಚ್ಚಿನವುಗಳಲ್ಲೂ ಮೂರು ವ್ಯಂಜನಗಳ ಒಂದು ಧಾತು ವಿರುತ್ತದೆ. ಈ ಧಾತುವಿನೊಂದಿಗೆ ಕೆಲವೇ ಕೆಲವು ಸ್ವರಗಳ ವಿನ್ಯಾಸಗಳನ್ನು ಬಳಸುವುದರ ಮೂಲಕ, ಈ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಪದಗಳನ್ನು ಮತ್ತು ಪದರೂಪಗಳನ್ನು ಸಾಧಿಸಬಹುದು.
ಉದಾಹರಣೆಗಾಗಿ, ಅರೇಬಿಕ್ ಭಾಷೆಯಲ್ಲಿ ಕ್-ತ್-ಬ್ ಎಂಬುದು ‘ಬರೆ’ ಎಂಬರ್ಥದ ಒಂದು ಧಾತು. ಇದನ್ನು ಬೇರೆ ಬೇರೆ ಸ್ವರವಿನ್ಯಾಸಗಳೊಂದಿಗೆ ಬಳಸಿ, ಕಿತಾಬ್ ‘ಪುಸ್ತಕ’, ಕಾತಿಬ್ ‘ಲೇಖಕ’, ಕುತುಬಿ ‘ಪುಸ್ತಕ ವ್ಯಾಪಾರಿ’, ಕತಬ ‘ಬರವಣಿಗೆಯವನು’, ಕಿತಾಬ್ ‘ಬರಹ’, ಕುತ್ತಾಬ್ ‘ಪ್ರಾಥಮಿಕ ಶಾಲೆ’ ಮೊದಲಾದ ಪದಗಳನ್ನು ಸಾಧಿಸಬಹುದು. ಇದಲ್ಲದೆ, ಇವಕ್ಕೆ ಬೇರೆ ಕೆಲವು ವ್ಯಂಜನಗಳನ್ನು ಸೇರಿಸಿ, ಮಕ್ಕೂಬ್ ‘ಪತ್ರ’, ಮಿಕ್ತಾಬ್ ‘ಟೈಪ್‌ರೈಟರ್’,
ಮಕ್ಕಬ್ ‘ಕಚೇರಿ’, ಮಕ್ಕಬ ‘ಗ್ರಂಥಾಲಯ’, ಇಸ್ತ್ರಿಕ್ತಾಬ್ ‘ಹೇಳಿ ಬರೆಯಿಸು’, ಇಕ್ತಿತಾಬ್ ‘ನೋಂದಾಯಿಸು’ ಮೊದಲಾದ ಬೇರೆ ಹಲವು ಪದಗಳನ್ನು ರಚಿಸಬಹುದು.
ಈ ರೀತಿ, ಧಾತುಗಳ ನಡುವಿನ ಅರ್ಥವ್ಯತ್ಯಾಸವನ್ನು ಸೂಚಿಸಲು ಈ ಭಾಷೆ ಯಲ್ಲಿ ಸ್ವರಗಳ ಅವಶ್ಯಕತೆಯಿಲ್ಲವಾದ ಕಾರಣ, ಇದರ ಬರಹದಲ್ಲಿ ಸಾಮಾನ್ಯ ವಾಗಿ ವ್ಯಂಜನಗಳನ್ನು ಮತ್ತು ದೀರ್ಘಸ್ವರಗಳನ್ನು ಮಾತ್ರ ಬರೆಯುವ ಕ್ರಮ ಬಳಕೆಗೆ ಬಂದಿದೆ. ಹ್ರಸ್ವ ಸ್ವರಗಳನ್ನು, ಪದಗಳ ಕೊನೆಯಲ್ಲಿ ಬರುವ ವ್ಯಂಜನ ಗಳನ್ನು, ಮತ್ತು ಒತ್ತಕ್ಷರಗಳನ್ನು ಚಿಕ್ಕಮಕ್ಕಳ ಪಠ್ಯಪುಸ್ತಕಗಳಲ್ಲಿ ಮತ್ತು ಕುರಾನ್ ನಲ್ಲಿ ಮಾತ್ರ ಸೂಚಿಸಲಾಗುತ್ತದೆ.
ಆಸ್ಟ್ರೋ-ಏಶಿಯಾಟಿಕ್ ಕುಟುಂಬದ ಕುಶಿಟಿಕ್ ಎಂಬ ಇನ್ನೊಂದು ಉಪ ವಿಭಾಗಕ್ಕೆ ಸೇರಿದ ಸೊಮಾಲಿ, ಒರೊಮೋ, ಅಫಾರ್ ಮೊದಲಾದ ಭಾಷೆಗಳು ಸುಡಾನ್, ಇಥಿಯೋಪಿಯಾ, ಸೊಮಾಲಿಯಾ ಮೊದಲಾದ ದೇಶಗಳಲ್ಲಿ ಬಳಕೆ ಯಲ್ಲಿವೆ. ಬೆರ್ಬೆರ್ ಭಾಷೆಗಳು ಮೊರೊಕ್ಕೊ ಮತ್ತು ಅಲ್ಜೀರಿಯಾಗಳಲ್ಲಿ ಬಳಕೆಯಲ್ಲಿವೆ. ಚಾದಿಕ್ ಭಾಷೆಗಳಲ್ಲಿ ಹೌಸಾ ಅತ್ಯಂತ ಮುಖ್ಯವಾದುದು. ಈ ಭಾಷೆಯನ್ನು ಮನೆಮಾತಾಗಿ ಬಳಸುವವರ ಸಂಖ್ಯೆ ಸುಮಾರು ಹನ್ನೆರಡು ಮಿಲಿಯ, ಮತ್ತು ಎರಡನೇ ಭಾಷೆಯಾಗಿ ಬಳಸುವವರ ಸಂಖ್ಯೆ ಸುಮಾರು ಹದಿಮೂರು ಮಿಲಿಯ. ಈ ಭಾಷೆ ಮಾತ್ರವಲ್ಲದೆ, ಬುರಾ, ಮಾರ್ಬ ಮೊದ ಲಾದ ಬೇರೆ ಸುಮಾರು ನೂರ ಇಪ್ಪತ್ತು ಭಾಷೆಗಳೂ ಈ ಉಪವಿಭಾಗದಲ್ಲಿವೆ. ಇಥಿಯೋಪಿಯಾ ಮತ್ತು ಕೆನ್ಯಾಗಳಲ್ಲಿ ಬಳಕೆಯಲ್ಲಿರುವ ಸುಮಾರು ಮೂವ ತ್ತೈದು ಭಾಷೆಗಳು ಒಮೋಟಿಕ್ ವಿಭಾಗಕ್ಕೆ ಸೇರುತ್ತವೆ.
ಆಫ್ರೋ-ಏಶಿಯಾಟಿಕ್ ಭಾಷೆಗಳ ಇನ್ನೊಂದು ವೈಶಿಷ್ಟ್ಯವೇನೆಂದರೆ, ಇವು ಗಳ ವಾಕ್ಯಗಳಲ್ಲಿ ಸಾಮಾನ್ಯವಾಗಿ ಕ್ರಿಯಾಪದ ಮೊದಲಿಗೆ ಬರುತ್ತದೆ. (ಕನ್ನಡ ದಲ್ಲಿ ಇದು ಕೊನೆಗೆ ಬರುತ್ತದೆ).
ನೈಲೋ-ಸಹರಾನ್ ಭಾಷೆಗಳು
ನೈಜೀರಿಯಾದ ಕನುರಿ, ಚಾದ್‌ನ ನೈಜೆರ್, ಕೆನ್ಯಾದ ಲುವೋ ಮೊದಲಾದ ಸುಮಾರು ತೊಂಬತ್ತು ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ. ಈ ಭಾಷೆಗಳು ಆಫ್ರಿಕಾದಲ್ಲಿ ಆಫ್ರೋ-ಏಶಿಯಾಟಿಕ್ ಮತ್ತು ನೈಜರ್-ಕೋಂಗೋ ಭಾಷೆಗಳ ನಡುವೆ ವಿಸ್ತರಿಸಿವೆ. ಸುಡಾನ್ ಮತ್ತು ಈಜಿಪ್ಟ್ಗಳಲ್ಲಿ ಬಳಕೆಯಲ್ಲಿರುವ ನುಬಿಯನ್ ಭಾಷೆಗಳೂ ಈ ಕುಟುಂಬಕ್ಕೆ ಸೇರಿದ್ದು, ಇವುಗಳ ಬರಹಗಳು ಎಂಟನೇ ಶತಮಾನದಿಂದಲೂ ಉಳಿಸಿಕೊಂಡು ಬರಲಾಗಿದೆ; ಇದಕ್ಕಾಗಿ ಇವು ಗ್ರೀಕ್ ಲಿಪಿಯನ್ನು ಬಳಸುತ್ತಿವೆ.
ಈ ಭಾಷೆಗಳನ್ನು ಸೊಂಘಾಯ್, ಪೂರ್ವ ಸುಡಾನಿಕ್, ಮತ್ತು ಮಧ್ಯ ಸುಡಾನಿಕ್ ಎಂಬುದಾಗಿ ಮೂರು ಗುಂಪುಗಳಲ್ಲಿ ವಿಭಜಿಸಬಹುದು. ಈ ಎಲ್ಲಾ
ಭಾಷೆಗಳೂ ವೇದ ಕಾಲದ ಸಂಸ್ಕೃತದ ಹಾಗೆ ಉದಾತ್ತ, ಅನುದಾತ್ತ ಮೊದ ಲಾದ ನಾದವೈವಿಧ್ಯಗಳನ್ನು ತೋರಿಸುತ್ತವೆ. ಕೆಲವು ಭಾಷೆಗಳಲ್ಲಿ ಈ ವೈವಿಧ್ಯ ವನ್ನು ವಿಭಕ್ತಿಗಳ ನಡುವಿನ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿಯೂ ಬಳಸಲಾಗು ಇದೆ. ಪೂರ್ವ ಮತ್ತು ದಕ್ಷಿಣ ಪ್ರದೇಶದ ಭಾಷೆಗಳಲ್ಲಿ ಕ್ರಿಯಾಪದವು ವಾಕ್ಯದ ಮೊದಲ ಪದವಾಗಿ ಬರುತ್ತಿದ್ದು, ಅವು ಅದಕ್ಕನುಗುಣವಾದ ಬೇರೆಯೂ ಹಲವು ವೈಶಿಷ್ಟ್ಯಗಳನ್ನು ತೋರಿಸುತ್ತವೆ.
ನೈಜರ್-ಕೊಡೋಫೇನಿಯನ್ ಭಾಷೆಗಳು
ಆಫ್ರಿಕಾಖಂಡದಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ಹೆಚ್ಚಿನವೂ, ಎಂದರೆ ಸುಮಾರು ಎರಡು ಸಾವಿರ ಭಾಷೆಗಳಲ್ಲಿ ಒಂದೂವರೆ ಸಾವಿರ ಭಾಷೆಗಳೂ ನೈಜರ್-ಕೊರ್ಡೋಫೇನಿಯನ್ ಕುಟುಂಬಕ್ಕೆ ಸೇರುತ್ತವೆ. ಈ ಕುಟುಂಬವನ್ನು ನೈಜರ್-ಕೋಂಗೋ ಮತ್ತು ಕೊರ್ಡೋಫೇನಿಯನ್ ಎಂಬುದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಬಹುದು; ಇದಲ್ಲದೆ, ನೈಜರ್-ಕೋಂಗೋ ವನ್ನು ಪಶ್ಚಿಮ ಅಟ್ಲಾಂಟಿಕ್, ಮಾಂದೇ, ಗುರ್, ಕ್ವಾ, ಬೆನು-ಕೋಂಗೋ, ಪೂರ್ವ ಅಡಮಾವಾ ಮೊದಲಾದ ಬೇರೆ ಬೇರೆ ಉಪವಿಭಾಗಗಳಾಗಿ ವಿಂಗಡಿಸ ಬಹುದು.
ನೈಜೀರಿಯಾದ ಯೊರುಬಾ, ಸುಡಾನಿನ ತೆಗಾಲಿ, ಸೆನೆಗಲ್‌ನ ಫುಲಕುನ್ದ, ಪೂರ್ವ ಆಫ್ರಿಕಾದ ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಸ್ವಹಿಲಿ, ಜಿಂಬಾಬ್ವೆಯ ಶೋನಾ, ರ್ವಾಂಡಾ ಮತ್ತು ಯುಗಾಂಡಗಳಲ್ಲಿ ಬಳಕೆಯಲ್ಲಿರುವ ಕಿನ್ಯಾರ್‌ವಾಂದಾ, ದಕ್ಷಿಣ ಆಫ್ರಿಕಾದ ಜುಲು ಇತ್ಯಾದಿ ಭಾಷೆಗಳು ಈ ವಿಭಾಗಕ್ಕೆ ಸೇರುತ್ತವೆ.
ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಹರಡಿಕೊಂಡಿರುವ ಸುಮಾರು ಐನೂರು ಬಂಟು ಭಾಷೆಗಳೂ ಈ ನೈಜರ್-ಕೋಂಗೋ ಉಪವಿಭಾಗಕ್ಕೆ ಸೇರು ತ್ತವೆ. ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳಲ್ಲಿ ಬರುವ ನಾಮ ಪದಗಳಲ್ಲೆಲ್ಲ ಎರಡು ಅಂಗಗಳಿರುತ್ತವೆ; ಆ ಪದಗಳ ಲಿಂಗವನ್ನು ಸೂಚಿಸುವ ಅಂಗ ಮೊದಲಿನದು, ಮತ್ತು ಅದರ ಅರ್ಥವನ್ನು ಸೂಚಿಸುವ ಅಂಗ ಎರಡ ನೆಯದು. ಉದಾಹರಣೆಗಾಗಿ, ಬಂಟು ಎಂಬ ಈ ಭಾಷೆಗಳ ಹೆಸರಿನಲ್ಲಿ ಬ ಎಂಬುದು ಒಂದು ಲಿಂಗಸೂಚಕ ಪ್ರತ್ಯಯ; ಅದು ಮನುಷ್ಯರನ್ನು ಸೂಚಿಸುತ್ತದೆ.
ಈ ಭಾಷೆಗಳಲ್ಲಿ ಇಂತಹ ಹತ್ತು-ಹದಿನೈದು ಲಿಂಗಸೂಚಕ ಪ್ರತ್ಯಯ ಗಳಿರುತ್ತವೆ. ಇವುಗಳಲ್ಲಿ ಕೆಲವಕ್ಕೆ ಏಕವಚನ ಮತ್ತು ಬಹುವಚನಗಳಲ್ಲಿ ಬೇರೆ ಬೇರೆ ರೂಪಗಳಿರುತ್ತವೆ. ಇವು ವ್ಯಕ್ತಿ, ಮರ-ಗಿಡ, ಜೋಡಿ ವಸ್ತುಗಳು (ಕಣ್ಣು, ಕಿವಿ, ಇತ್ಯಾದಿ), ಪ್ರಾಣಿ, ಅಪ್ರಾಣಿ, ಚಿಕ್ಕ ವಸ್ತುಗಳು, ಇತ್ಯಾದಿ ವರ್ಗಗಳಲ್ಲಿ ನಾಮಪದಗಳನ್ನು ಹಂಚುತ್ತವೆ. ನಾಮಪದಗಳ ಅಂಗಗಳಾಗಿ ಬರುವ ಈ
ಅಮೆರಿಕಾದ ಭಾಷೆಗಳು
ಲಿಂಗಭೇದವನ್ನು ವಾಕ್ಯದಲ್ಲಿ ಬರುವ ಬೇರೆ ಹಲವಾರು ಪದಗಳೂ ಸೂಚಿಸು ತ್ತವೆ.
ಬೊಯ್ಸಾನ್ ಭಾಷೆಗಳು
ಆಫ್ರಿಕಾದ ನೈಋತ್ಯ ಭಾಗದ ಕಲಹಾರಿ ಮರುಭೂಮಿ ಪ್ರದೇಶದಲ್ಲಿ ಬಳಕೆ ಯಲ್ಲಿರುವ ಖೂ, ನಾಮ ಹೊಟ್ಟೆಂಟೋಟ್, ಸಂದಾವೇ, ಹತ್ಸ ಮೊದಲಾದ ಸುಮಾರು ಮೂವತ್ತು ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ. ಇವುಗಳ ನ್ನಾಡುವ ಜನರಲ್ಲಿ ಹೆಚ್ಚಿನವರೂ ಕುಳ್ಳರು. ಹಿಂದಿನ ಕಾಲದಲ್ಲಿ ಇವರು ಆಫ್ರಿಕಾದ ದಕ್ಷಿಣ ಭಾಗದಲ್ಲೆಲ್ಲ ಹರಡಿದ್ದರೆಂದು ತೋರುತ್ತದೆ. ಆದರೆ ಉತ್ತರ ದಿಂದ ಬಂಟು ಭಾಷೆಯನ್ನಾಡುವ ಜನರೂ, ದಕ್ಷಿಣದಿಂದ ಡಚ್ ಭಾಷೆಯ ನ್ನಾಡುವ ವಸಾಹತುದಾರರೂ ಒಟ್ಟಿಗೆ ಸೇರಿ ಇವರನ್ನು ಮರುಭೂಮಿಗೆ ತಳ್ಳಿ ದ್ದಾರೆ.
ಓಷ್ಟ್ಯ, ತಾಲವ್ಯ, ಘೋಷ, ಅಘೋಷ ಮೊದಲಾದ ಹಲವು ಬಗೆಯ ‘ಕ್ಲಿಕ್’ವರ್ಣಗಳಿರುವುದು ಈ ಭಾಷೆಗಳ ಒಂದು ಪ್ರಾಮುಖ್ಯವಾದ ವೈಶಿಷ್ಟ್ಯ.
೫.೫ ಅಮೆರಿಕಾದ ಭಾಷೆಗಳು
ಅಮೆರಿಕಾ ಖಂಡಗಳನ್ನು ಯುರೋಪಿನ ಜನರು ಕಂಡುಹಿಡಿಯುವುದಕ್ಕಿಂತ ಮೊದಲು ಅಲ್ಲಿ ನೂರಾರು ಭಾಷೆಗಳನ್ನಾಡುವ ಜನರು ವಾಸಿಸುತ್ತಿದ್ದರು. ಉತ್ತರ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಒಟ್ಟಿಗೆ ಇಂತಹ ಸುಮಾರು ಒಂದು ಸಾವಿರ ಭಾಷೆಗಳು ಬಳಕೆಯಲ್ಲಿ ದ್ದಿರಬೇಕು.
ಇವುಗಳಲ್ಲಿ ಹಲವು ಅವುಗಳನ್ನಾಡುವ ಜನಾಂಗಗಳೊಂದಿಗೆ ನಾಶ ಗೊಂಡಿವೆ. ಇನ್ನು ಹಲವು ನಾಶದ ಹಾದಿಯಲ್ಲಿವೆ. ಇವುಗಳಲ್ಲಿ ಕೆಲವನ್ನು ಸದ್ಯಕ್ಕೆ ಬಳಸುತ್ತಿರುವವರು ಇಬ್ಬರೋ ಮೂವರೋ ಮುದುಕರು ಮಾತ್ರ. ಈ ರೀತಿ ಬಹಳಮಟ್ಟಿಗೆ ಅಳಿದು ಹೋಗಿ, ಈಗ ಉಳಿದಿರುವ, ಆದರೂ ಶೀಘ್ರವಾಗಿ ಅಳಿಯುತ್ತಿರುವ, ಸುಮಾರು ೬೫೦ ಭಾಷೆಗಳು ಈ ಬೇರೆ ಬೇರೆ ಜನಾಂಗಗಳಲ್ಲಿ ಇವತ್ತು ಬಳಕೆಯಲ್ಲಿವೆ.
ಅಮೆರಿಕಾದ ಎರಡು ಖಂಡಗಳಲ್ಲಿ ಹರಡಿರುವ ಈ ಭಾಷೆಗಳನ್ನೆಲ್ಲ ಎಸ್ಕಿಮೋ-ಅಲೆಯುತ್, ನಾ-ಡೆನೆ, ಮತ್ತು ಅಮೆರಿಂಡ್ ಎಂಬ ಮೂರು ಮುಖ್ಯ ಕುಟುಂಬಗಳಲ್ಲಿ ಸೇರುವಂತೆ ವಿಭಜಿಸಬಹುದೆಂದು ವಿದ್ವಾಂಸರು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯದಂತೆ, ಎಸ್ಕಿಮೋ-ಅಲೆಯುತ್‌ಗೆ ಸೇರಿದ ಹತ್ತು ಭಾಷೆಗಳು, ಮತ್ತು ನಾ-ಡೆನೆಗೆ ಸೇರಿದ ಮೂವತ್ತಮೂರು ಭಾಷೆಗಳನ್ನು ಬಿಟ್ಟರೆ ಉಳಿದುವೆಲ್ಲವೂ ಅಮೆರಿಂಡ್ ಎಂಬ ಭಾಷಾ ಕುಟುಂಬಕ್ಕೆ ಸೇರುತ್ತವೆ.
ಎಸ್ಕಿಮೋ ಭಾಷೆಗಳು
ಎಸ್ಕಿಮೋ-ಅಲೆಯುತ್ ಭಾಷೆಗಳು ಅಲಾಸ್ಕಾ, ಗ್ರೀನ್‌ಲೇಂಡ್, ಸೈಬೀರಿಯಾ ಮೊದಲಾದ ಉತ್ತರಧ್ರುವಕ್ಕೆ ಸಮೀಪದ ಪ್ರದೇಶಗಳಲ್ಲಿ ಬಳಕೆಯಲ್ಲಿವೆ. ಅಲೆಯುತ್, ಯೂಪಿಕ್, ಇನುಯಿತ್, ಅಲಾಸ್ಕನ್ ಮೊದಲಾದ ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ.
ಎಸ್ಕಿಮೋ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಒಂದು ದೊಡ್ಡ ವಾಕ್ಯ ದಲ್ಲಿ ಬರಬಲ್ಲ ವಿಷಯಗಳನ್ನೆಲ್ಲ ಬರೇ ಒಂದು ಪದದಲ್ಲಿ ಅಡಕವಾಗಿ ಹೇಳುವ ಕ್ರಮ ಈ ಭಾಷೆಗಳಲ್ಲಿದೆ. ಆದರೆ, ಇದಕ್ಕಾಗಿ ಆ ಪದದೊಂದಿಗೆ ಹಲವಾರು ಪ್ರತ್ಯಯಗಳನ್ನು ಸೇರಿಸಿ ಹೇಳಬೇಕಾಗುತ್ತದೆ. ಒಂದು ಘಟನೆಯನ್ನು ಸೂಚಿಸುವ ಪದದೊಂದಿಗೆ ಯಾರು, ಯಾರನ್ನು, ಯಾವಾಗ, ಯಾಕೆ, ಎಲ್ಲಿ, ಯಾರಿಗಾಗಿ ಆ ಘಟನೆಯಲ್ಲಿ ತೊಡಗಿಸಿದರು ಎಂಬುದನ್ನು ತಿಳಿಸುವುದಕ್ಕಾಗಿ ಈ ರೀತಿ ಹಲವು ಬಗೆಯ ಪ್ರತ್ಯಯಗಳನ್ನು ಕ್ರಿಯಾಪದಗಳಿಗೆ ಸೇರಿಸಬಹುದು. ಈ ಕಾರಣಕ್ಕಾಗಿ, ಭಾರತದ ಮುಂಡಾರಿ ಭಾಷೆಯ ಹಾಗೆ, ಮತ್ತು ಅಮೆರಿಕಾದ ಸಾಲಿಶಾನ್ ಭಾಷೆ ಗಳ ಹಾಗೆ, ಈ ಭಾಷೆಗಳನ್ನೂ ‘ಪೋಲಿಸಿಂಥೆಟಿಕ್’ ಭಾಷೆಗಳೆಂದು ಪರಿಗಣಿಸ ಲಾಗುತ್ತದೆ.
ನಾ-ಡೆನೆ ಭಾಷೆಗಳು
ನಾ-ಡೆನೆ ಭಾಷೆಗಳೆಂದರೆ ಮುಖ್ಯವಾಗಿ ಅಥಬಾಸ್ಕನ್ ಎಂಬ ಉಪಕುಟುಂಬಕ್ಕೆ ಸೇರಿದ ನವಹೋ, ಅಪಾಚೇ, ಸಾರ್ಸೀ ಮೊದಲಾದ ಸುಮಾರು ಮೂವತ್ತು ಭಾಷೆಗಳು, ಮತ್ತು ಇವಕ್ಕಿಂತ ಭಿನ್ನವಾದ ಎಯಾಕ್, ಹೈದಾ ಮತ್ತು ತ್ಲಿಂಗಿತ್ ಎಂಬ ಭಾಷೆಗಳು. ಇವುಗಳಲ್ಲಿ ಎಯಾಕ್ ಭಾಷೆಯನ್ನಾಡುವವರಲ್ಲಿ ಇವತ್ತು (೧೯೯೬ರಲ್ಲಿ) ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿದ್ದಾನೆ.
ಉತ್ತರ ಅಮೆರಿಕಾದಲ್ಲಿ ಯುಟೋ-ಅಜ್‌ಟೆಕನ್ ಭಾಷೆಗಳನ್ನು ಬಿಟ್ಟರೆ, ಅತಿ ಹೆಚ್ಚು ಭಾಷೆಗಳಿರುವ ಮತ್ತು ಅತಿ ಹೆಚ್ಚು ಜನರು ಬಳಸುವ ಭಾಷಾ(ಉಪ) ಕುಟುಂಬವೆಂದರೆ, ಈ ಅಥಬಾಸ್ಕನ್ ಎಂಬುದಾಗಿದೆ.
ಅಮೆರಿಕನ್ ಭಾಷೆಗಳು
ಅಮೆರಿಂಡ್ ಎಂಬುದು ಅಮೆರಿಕನ್ ಇಂಡಿಯನ್ ಎಂಬುದರ ಸಂಕ್ಷಿಪ್ತ ರೂಪ. ಅಮೆರಿಕಾ ಖಂಡಗಳನ್ನು ಮೊದಲ ಬಾರಿಗೆ ತಲುಪಿದ ಪಾಶ್ಚಾತ್ಯರ ತಪ್ಪು ಕಲ್ಪನೆಯಿಂದಾಗಿ, ಇಂಡಿಯನ್ ಎಂಬ ಹೆಸರು ಇವರಿಗೆ ಬಂದಿದೆಯಾದರೂ ಇವರ ಭಾಷೆಗಳಿಗೂ ಭಾರತದ ಭಾಷೆಗಳಿಗೂ ನಡುವೆ ನಮಗೆ ತಿಳಿದಂತೆ ಯಾವ ಸಂಬಂಧವೂ ಇಲ್ಲ. ಕೆನಡಾದಿಂದ ಹಿಡಿದು, ದಕ್ಷಿಣ ಅಮೆರಿಕಾದ ದಕ್ಷಿಣದ ಕೊನೆಯವರೆಗೂ ಈ ಭಾಷೆಗಳು ಬಳಕೆಯಲ್ಲಿವೆ.ಜನಸಂಖ್ಯೆಯ
ಮಟ್ಟಿಗೆ ಈ ಭಾಷೆಗಳನ್ನಾಡುವವರು ದಕ್ಷಿಣ ಅಮೆರಿಕಾದಲ್ಲಿ ಇವತ್ತಿಗೂ ಪ್ರಬಲರಾಗಿದ್ದಾರೆ. ಎಪ್ಪತ್ತು ಲಕ್ಷ ಜನರ ಮಾತಾಗಿರುವ ಕ್ವೆಚುವಾ ಭಾಷೆ ಕೊಲಂಬಿಯಾ, ಯುಕಡೋರ್, ಪೆರು ಮತ್ತು ಬೊಲೀವಿಯಾಗಳಲ್ಲೂ, ಮೂವತ್ತು ಲಕ್ಷ ಜನರ ಮಾತಾಗಿರುವ ಗುವಾರಾನೀ ಭಾಷೆ ಪರಾಗ್ವೇ, ಬ್ರೇಜಿಲ್ ಮತ್ತು ಅರ್ಜೆಂಟೀನಾಗಳಲ್ಲೂ, ಹದಿನೈದು ಲಕ್ಷ ಜನರ ಮಾತಾಗಿರುವ ಅಯ್ಯಾರಾ ಭಾಷೆ ಪೆರು ಮತ್ತು ಬೊಲೀವಿಯಾಗಳಲ್ಲೂ, ಮತ್ತು ಹತ್ತು ಲಕ್ಷ ಜನರ ಮಾತಾಗಿರುವ ನಹುವಾತ್ಸ್ ಭಾಷೆ ದಕ್ಷಿಣ ಮೆಕ್ಸಿಕೋದಲ್ಲೂ ಬಳಕೆ ಯಲ್ಲಿವೆ.
ಇದಕ್ಕೆ ವಿರುದ್ಧವಾಗಿ, ಕೆನಡಾ ಮತ್ತು ಉತ್ತರ ಅಮೆರಿಕಾಗಳಲ್ಲಿ ಈ ಭಾಷೆ ಗಳನ್ನಾಡುವ ಜನರ ಸಂಖ್ಯೆ ಹೆಚ್ಚೆಂದರೆ ಕೆಲವು ಸಾವಿರಗಳಷ್ಟು ಮಾತ್ರ ಕಾಣಿಸು ತ್ತದೆ. ದಕ್ಷಿಣ ಅಮೆರಿಕಾದಲ್ಲಿ ದಟ್ಟವಾದ ಕಾಡುಗಳಿದ್ದ ಕಾರಣ ಈ ಭಾಷೆಗಳ ನ್ನಾಡುವವರು ಪಾಶ್ಚಾತ್ಯ ವಸಾಹತುದಾರರ ಗುಂಡಿಗೆ ಸಿಕ್ಕದೆ ತಪ್ಪಿಸಿಕೊಂಡು ಇದ್ದುದು, ಮತ್ತು ಉತ್ತರ ಅಮೆರಿಕಾದಲ್ಲಿ ಕಾಡು ಪ್ರದೇಶ ಕಡಿಮೆಯಿದ್ದ ಕಾರಣ ಅವರಲ್ಲಿ ಹೆಚ್ಚಿನವರೂ ನಾಶಹೊಂದಿದ್ದುದೇ ಇದಕ್ಕೆ ಮುಖ್ಯ ಕಾರಣ.
ಅಮೆರಿಂಡ್ ಭಾಷೆಗಳನ್ನು ಉತ್ತರ, ಮಧ್ಯ, ಛಿಬ್‌ಛಾನ್-ಪೇಜಾನ್, ಆಂಡಿಯನ್, ತುಕಾನೊವನ್, ಮತ್ತು ಗೇ-ಪಾನೋ-ಕಾರಿಬ್ ಎಂಬ ಆರು ಉಪಕುಟುಂಬಗಳಲ್ಲಿ ವಿಭಜಿಸಿ ಹೇಳಲು ಸಾಧ್ಯವಿದೆಯೆಂದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರ ಮತದಂತೆ, ಈ ಭಾಷೆಗಳನ್ನೊಳಗೊಂಡ ಭಾಷಾಕುಟುಂಬಗಳ ಸಂಖ್ಯೆ ನೂರಕ್ಕಿಂತಲೂ ಜಾಸ್ತಿ.
ಇವುಗಳಲ್ಲಿ ಕೆಲವು ಭಾಷಾಕುಟುಂಬಗಳನ್ನು ಹೆಚ್ಚಿನವರೂ ಒಪ್ಪಿಕೊಳ್ಳು ತ್ತಾರೆ. ಅಲ್ಗೋಂಕಿಯನ್, ಸಾಲಿಶ್, ಕಡೋವನ್, ಸಿಯೊವನ್, ಇರೋಕ್ವೊ ಯಿಯನ್, ಹೋಕನ್, ಪೆನುಟಿಯನ್, ತನೊವನ್, ಯುಟೋ-ಅಜ್‌ಟೆಕನ್ ಮೊದಲಾದ ಕುಟುಂಬಗಳು ಇಂತಹವು.
ಈ ಭಾಷೆಗಳ ಮತ್ತು ಭಾಷಾಕುಟುಂಬಗಳ ನಡುವಿರುವ ವೈವಿಧ್ಯವನ್ನು ಸಂಕ್ಷಿಪ್ತವಾಗಿ ಬಣ್ಣಿಸಬೇಕಿದ್ದರೂ ಅದು ಒಂದು ದೊಡ್ಡ ಪುಸ್ತಕವೇ ಆದೀತು. ಇಡೀ ವಾಕ್ಯದ ಅರ್ಥವನ್ನು ಒಂದು ಪದದೊಳಗೆ ತುಂಬಿಸಬಲ್ಲ ಸಾಲಿಶಾನ್ ಭಾಷೆಗಳಿಂದ ಹಿಡಿದು, ಚೈನೀಸ್‌ನ ಹಾಗೆ ಪದಗಳಲ್ಲಿ ಸ್ವಲ್ಪವೂ ಆಂತರಿಕ ರಚನೆಯೇ ಇಲ್ಲದಿರುವಂತಹ ಭಾಷೆಗಳೂ ಈ ಕುಟುಂಬದಲ್ಲಿ ಕಾಣಿಸುತ್ತವೆ.
೫. ಆಸ್ಟ್ರೇಲಿಯಾದ ಭಾಷೆಗಳು
ಆಸ್ಟ್ರೇಲಿಯಾದಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆಂದು ಹೆಚ್ಚಿನವರೂ ಭಾವಿಸುತ್ತಿರಬಹುದು; ಆದರೆ, ನಿಜಕ್ಕೂ ಇಂಗ್ಲಿಷ್ ಮಾತನಾಡುವ ಜನ
ಆಸ್ಟ್ರೇಲಿಯಾ ಖಂಡಕ್ಕೆ ಬಂದು ನೆಲೆಸುವ ಮೊದಲು, ಇಂಗ್ಲಿಷ್‌ಗಿಂತ ತೀರ ಭಿನ್ನವಾಗಿರುವ ಇನ್ನೂರು-ಮುನ್ನೂರು ಭಾಷೆಗಳನ್ನಾಡುವ ಜನ ಅಲ್ಲಿ ನೆಲೆ ಸಿದ್ದರು.
ವಸಾಹತುಗಾರರಾಗಿ ಬಂದ ಇಂಗ್ಲಿಷರ ಕಾಲ ತುಳಿತಕ್ಕೆ ಸಿಕ್ಕಿ, ಈ ಮೂಲ ನಿವಾಸಿಗಳಲ್ಲಿ ಹೆಚ್ಚಿನವರೂ ಈಗ ಅಳಿದುಹೋಗಿದ್ದಾರೆ. ಅವರೊಂದಿಗೆ ಅವರು ಆಡುತ್ತಿದ್ದ ನೂರಾರು ಭಾಷೆಗಳೂ ಹೆಚ್ಚಿನ ಮಟ್ಟಿಗೆ ಅಳಿದುಹೋಗಿವೆ. ಈಗ ಅಲ್ಲೊಂದು ಇಲ್ಲೊಂದು ಎಂಬುದಾಗಿ, ಗುಡ್ಡಗಾಡುಗಳಲ್ಲಿ ಮತ್ತು ಮರುಭೂಮಿ ಗಳಲ್ಲಿ ಮಾತ್ರ ಕೆಲವು ಭಾಷೆಗಳು ಉಳಿದುಕೊಂಡಿವೆ. ಅವುಗಳಲ್ಲಿ ಮುಂದಿನ ತಲೆಮಾರಿನ ವರೆಗೆ ಉಳಿಯಬಲ್ಲವುಗಳು ಇಪ್ಪತ್ತಕ್ಕಿಂತಲೂ ಕಡಿಮೆ.
ಆಸ್ಟ್ರೇಲಿಯಾ ಖಂಡಕ್ಕೆ ಇಂಗ್ಲಿಷರು ವಲಸೆ ಬಂದಾಗ, ಎಂದರೆ ಸುಮಾರು ಇನ್ನೂರು ವರ್ಷಗಳಷ್ಟು ಹಿಂದೆ, ಅಲ್ಲಿ ಬಹಳ ಕಡಿಮೆಯೆಂದರೂ ಸುಮಾರು ಮೂರು ಲಕ್ಷ ಮೂಲ ನಿವಾಸಿಗಳಿದ್ದಿರಬೇಕೆಂದು ಊಹಿಸಲಾಗಿದೆ. ನಿಜಕ್ಕೂ ಇವರ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದ್ದಿರಲು ಸಾಧ್ಯವಿದೆ.
ಅವರ ದೈನಂದಿನದ ಜೀವನ ನಿಸರ್ಗದೊಂದಿಗೆ ಹೆಣೆದುಕೊಂಡಿತ್ತು. ತಮ್ಮ ಪರಿಸರವನ್ನು ಸ್ವಲ್ಪವೂ ಕೆಡಿಸದೆ, ಅದರ ಒಂದು ಅಂಗವಾಗಿ ಬದುಕುವ ಕ್ರಮ ಸಾವಿರಾರು ವರ್ಷಗಳಿಂದಲೂ ಅವರಲ್ಲಿ ಪರಂಪರಾಗತವಾಗಿ ಬೆಳೆದುಬಂದಿತ್ತು. ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬೇಕಾದಷ್ಟೇ ಆಹಾರ ಮತ್ತು ಇತರ ವಸ್ತು ಗಳನ್ನು ಅವರು ತಮ್ಮ ಪರಿಸರದಿಂದ ಆಯ್ದುಕೊಳ್ಳುತ್ತಿದ್ದರು. ಬೇಕಾದ್ದಕ್ಕಿಂತ ಹೆಚ್ಚು ಸೊತ್ತುಗಳನ್ನು ಕೂಡಿಹಾಕುವ ಗೋಜಿಗೇ ಅವರು ಹೋಗುತ್ತಿರಲಿಲ್ಲ. ಇದರಿಂದಾಗಿ, ಅವರ ಪರಿಸರ ನಾಶವಾಗದೆ ಎಲ್ಲರಿಗೂ ತೃಪ್ತಿಯನ್ನ ಕೊಡು ತಿತ್ತು.
ಇಂಗ್ಲೆಂಡ್‌ನಿಂದ ಮತ್ತು ಯುರೋಪಿನ ಇತರ ದೇಶಗಳಿಂದ ವಲಸೆ ಬಂದ ಜನರು ಈ ಮೂಲ ನಿವಾಸಿಗಳ ಹಾಗೆ ಅಲ್ಪತೃಪ್ತರಾಗಿರಲಿಲ್ಲ. ತಮಗೆ ಎಷ್ಟು ಭೂಮಿಯಿದ್ದರೂ ಸಾಲದು, ಎಷ್ಟು ಸಂಪತ್ತಿದ್ದರೂ ಸಾಲದು ಎಂಬ ಮನೋ ಭಾವ ಅವರದಾಗಿತ್ತು. ತಮ್ಮ ಕಾಲಕ್ಕೆ ಮಾತ್ರವಲ್ಲದೆ ತಮ್ಮ ಮಕ್ಕಳ ಮತ್ತು ಅವರ ಮಕ್ಕಳ ಕಾಲಕ್ಕೂ ಸಾಕಾಗುವಷ್ಟು ಸಂಪತ್ತನ್ನು ಕೂಡಿಹಾಕಿದರೂ ಅವರಿಗೆ ಸಮಾಧಾನವಿಲ್ಲ. ಅವರ ಈ ಉದ್ದೇಶಕ್ಕೆ ಅಡ್ಡ ಬಂದ ಮೂಲ ನಿವಾಸಿಗಳನ್ನು ಒಂದೋ ಗುಂಡಿನಿಂದ ಸುಟ್ಟು ಹಾಕಿದರು, ಇಲ್ಲವೇ ಫಲವತ್ತಾದ ಭೂಮಿಯನ್ನು ಬಿಟ್ಟು ಮರಳುಗಾಡಿನೊಳಕ್ಕೆ ಓಡಿಹೋಗುವ ಹಾಗೆ ಮಾಡಿದರು.
ತಮ್ಮ ಜೀವನಕ್ಕೆ ಹೊಂದಿಕೊಂಡಿದ್ದ ಭೂಮಿಯಿಂದ ಬೇರಾದ ಈ ಅಳಿದುಳಿದ ಜನಾಂಗ ಬಹುಬೇಗ ನಷ್ಟವಾಗುತ್ತಾ ಹೋಯಿತು. ಇತ್ತೀಚೆಗಿನ ಅಂಕೆಸಂಖ್ಯೆಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಮೂಲ ಭಾಷೆಗಳನ್ನಾಡುವ ಜನರ ಸಂಖ್ಯೆ ಕಳೆದ ನೂರು-ನೂರೈವತ್ತು ವರ್ಷಗಳಲ್ಲಿ ಮೂರು ಲಕ್ಷವಿದ್ದುದು ಮೂವತ್ತು ಸಾವಿರಕ್ಕಿಳಿದಿದೆ. ಅವರ ಹೆಚ್ಚಿನ ಭಾಷೆಗಳೂ ನಾಶದ ಹಾದಿಯಲ್ಲಿವೆ.
ಯೊಲ್ನ್‌ಗು, ವಾರ್ಲ್‌ಪಿರಿ, ಮತ್ತು ಪಶ್ಚಿಮ ಮರುಭೂಮಿಯ ಕೆಲವು ಭಾಷೆಗಳು ಮಾತ್ರ ಇವತ್ತು ಶಾಲೆಗಳಲ್ಲಿ ಇಂಗ್ಲಿಷ್‌ನೊಂದಿಗೆ ಪಠ್ಯಗಳಾಗಿವೆ. ಇಂತಹ ಭಾಷೆಗಳ ಸಂಖ್ಯೆ ಹತ್ತಕ್ಕಿಂತಲೂ ಕಡಿಮೆ.
ಆಸ್ಟ್ರೇಲಿಯಾದಲ್ಲಿ ಬಳಕೆಯಲ್ಲಿರುವ ಮೂಲ ಭಾಷೆಗಳಲ್ಲಿ ಹೆಚ್ಚಿನವೂ ಒಂದೇ ಭಾಷಾಕುಟುಂಬಕ್ಕೆ ಸೇರಿದವುಗಳಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಅಪವಾದವೆಂದರೆ, ಮಿರಿಯಂ ಎಂಬ ಪಾಪುವಾನ್ ಭಾಷೆ, ಮತ್ತು ತಾಸ್ಮೇನಿಯಾದಲ್ಲಿ ಬಳಕೆಯಲ್ಲಿದ್ದ, ಮತ್ತು ಈಗ ಅಳಿದು ಹೋಗಿರುವ ಬೇರೆ ಎರಡು ಭಾಷೆಗಳು.
ಆಸ್ಟ್ರೇಲಿಯಾದ ಭಾಷೆಗಳನ್ನು ಒಟ್ಟು ೨೬ ಉಪಕುಟುಂಬಗಳಲ್ಲಿ ಪ್ರತ್ಯೇಕಿಸ ಬಹುದು. ಇವುಗಳಲ್ಲಿ ಮಾಮಾ-ನ್ಯುಂಗಾನ್ ಎಂಬ ಒಂದೇ ಒಂದು ಉಪ ಕುಟುಂಬಕ್ಕೆ ಸೇರಿದ ಭಾಷೆಗಳೇ ಆಸ್ಟ್ರೇಲಿಯಾದ ಹೆಚ್ಚಿನ ಭಾಗಗಳಲ್ಲೂ ಬಳಕೆ ಯಲ್ಲಿವೆ. ಉಳಿದ ೨೫ ಉಪಕುಟುಂಬಗಳಿಗೆ ಸೇರಿದ ಭಾಷೆಗಳೆಲ್ಲ ಆಸ್ಟ್ರೇಲಿಯಾ ಖಂಡದ ಉತ್ತರ ತುದಿಯಲ್ಲಿ ಸಂಗ್ರಹಿತವಾಗಿವೆ.
ವ್ಯಾಕರಣದ ವೈಶಿಷ್ಟ್ಯ
ಆಸ್ಟ್ರೇಲಿಯಾದ ಈ ಮೂಲ ಭಾಷೆಗಳಲ್ಲಿ ಸಾಮಾನ್ಯವಾಗಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರ ಇರುತ್ತವೆ. ಇವಕ್ಕಿಂತ ಭಿನ್ನವಾದ ಎ ಮತ್ತು ಒ ಸ್ವರಗಳಾಗಲೀ, ದೀರ್ಘಸ್ವರಗಳಾಗಲೀ ಇವುಗಳಲ್ಲಿಲ್ಲ. ಇದಲ್ಲದೆ, ಈ ಭಾಷೆಗಳಲ್ಲಿ ಸ್ವರದಿಂದ ಸುರುವಾಗುವ ಪದಗಳು ಅಪರೂಪ.
ವ್ಯಂಜನಗಳಲ್ಲಿ ಗ, ಜ, ಡ, ದ ಮತ್ತು ಬ ಎಂಬ ಐದು ಸ್ಪರ್ಶಗಳು ಮಾತ್ರ ವಲ್ಲದೆ, ನಾಲಿಗೆಯನ್ನು ಹಲ್ಲುಗಳ ನಡುವೆ ಇರಿಸಿ ಉಚ್ಚರಿಸುವ ಆರನೆಯ ದೊಂದು ಸ್ಪರ್ಶವೂ ಇವುಗಳಲ್ಲಿರುತ್ತದೆ. ಇದೇ ರೀತಿ ಆರು ಅನುನಾಸಿಕಗಳೂ ಇರುತ್ತವೆ. ಆದರೆ, ಕ, ಚ, ಟ, ತ, ಪ ಮೊದಲಾದ ಅಘೋಷ ಸ್ಪರ್ಶ ಗಳಾಗಲೀ, ಖ, ಛ, ಠ, ಥ, ಫ ಮೊದಲಾದ ಮಹಾಪ್ರಾಣಾಕ್ಷರಗಳಾಗಲೀ, ಇಲ್ಲವೇ ಸ, ಶ, ಹ ಮೊದಲಾದ ಊಷ್ಮ ವ್ಯಂಜನಗಳಾಗಲೀ ಈ ಭಾಷೆಗಳಲ್ಲಿ ಕಾಣಿಸುವುದು ಅಪರೂಪ.
ಈ ಭಾಷೆಗಳ ಸರ್ವನಾಮಗಳು ಏಕವಚನ, ದ್ವಿವಚನ, ಮತ್ತು ಬಹುವಚನ ಎಂಬುದಾಗಿ ಮೂರು ವಚನಗಳನ್ನು ಸೂಚಿಸಬಲ್ಲುವು. ಉದಾಹರಣೆಗಾಗಿ, ದ್ವಿರ್ಬಲ್ ಎಂಬ ಭಾಷೆಯಲ್ಲಿ ಬಯ್ಗು ಎಂದರೆ ‘ನಾನು’, ಬಿಲಿ ಎಂದರೆ ‘ನಾವಿಬ್ಬರು’, ಮತ್ತು ಜನ ಎಂದರೆ ‘ನಾವು ಮೂವರು’ ಇಲ್ಲವೇ ‘ಜಾಸ್ತಿ ಜನ’ ಎಂಬ ಅರ್ಥ ಬರುತ್ತದೆ.
ಇದಲ್ಲದೆ, ಉತ್ತಮ ಪುರುಷ ದ್ವಿವಚನ ಮತ್ತು ಬಹುವಚನಗಳಲ್ಲಿ ಮಧ್ಯಮ ಪುರುಷಯುಕ್ತ ಮತ್ತು ಮಧ್ಯಮಪುರುಷರಹಿತ ಎಂಬ ವ್ಯತ್ಯಾಸವನ್ನೂ ಈ ಭಾಷೆಯ ಸರ್ವನಾಮಗಳು ತೋರಿಸುತ್ತವೆ. ಉದಾಹರಣೆಗಾಗಿ, ಐಲಿತ್ಯ
ಎಂದರೆ ‘ನೀನು ಮತ್ತು ನಾನು’ ಎಂದೂ, ಜಿಲಿ ಎಂದರೆ ‘ನಿನ್ನನ್ನು ಬಿಟ್ಟು ನಾವಿಬ್ಬರು’ ಎಂದೂ ಅರ್ಥ ಬರುತ್ತದೆ. ಹೀಗೆಯೇ, ಜಂತು ಎಂದರೆ ‘ನೀನು ಮತ್ತು ನಾವು (ಮೂರು ಇಲ್ಲವೇ ಹೆಚ್ಚು ಮಂದಿ)’ ಎಂದೂ, ಜಿನ್ನು ಎಂದರೆ ‘ನಿನ್ನನ್ನು ಬಿಟ್ಟು ನಾವು (ಮೂರು ಇಲ್ಲವೇ ಹೆಚ್ಚು ಮಂದಿ)’ ಎಂದೂ ಅರ್ಥ ಬರುತ್ತದೆ.
ಹಿಂದೆ-ಮುಂದೆ, ಎಡಕ್ಕೆ-ಬಲಕ್ಕೆ
ಸ್ಥಾನಸೂಚಕ ಪದಗಳ ಬಳಕೆಯಲ್ಲೂ ಆಸ್ಟ್ರೇಲಿಯಾದ ಭಾಷೆಗಳಲ್ಲಿ ಕೆಲವು ವೈಶಿಷ್ಟ್ಯಗಳು ಕಾಣಿಸುತ್ತವೆ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಎಲ್ಲಿದೆ ಎಂಬುದನ್ನು ತಿಳಿಸುವುದಕ್ಕೆ ನಾವು ಹಿಂದೆ-ಮುಂದೆ, ಎಡಕ್ಕೆ-ಬಲಕ್ಕೆ, ಮೇಲೆ-ಕೆಳಗೆ ಎಂಬ ವಿಶೇಷಣಗಳನ್ನು ಬಳಸುತ್ತೇವೆ. ಆತ ಮನೆಯ ಮುಂದೆ ನಿಂತಿದ್ದಾನೆ, ತೆಂಗಿನ ಮರ ಮನೆಯ ಎಡಕ್ಕೆ ಇದೆ ಎಂಬಂತಹ ವಾಕ್ಯಗಳಲ್ಲಿ ಇವುಗಳ ಪ್ರಯೋಗವನ್ನು ಕಾಣಬಹುದು.
ಆಸ್ಟ್ರೇಲಿಯಾದ ಕೆಲವು ಭಾಷೆಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಎಲ್ಲಿದೆಯೆಂಬುದನ್ನು ಹೀಗೆ ಇನ್ನೊಂದು ವಸ್ತುವಿನ ಇಲ್ಲವೇ ಮಾತನಾಡುವವನ ದೃಷ್ಟಿಕೋನದ ಮೂಲಕ ತಿಳಿಸುವ ಬದಲು, ಪೂರ್ವ-ದಕ್ಷಿಣ-ಪಶ್ಚಿಮ- ಉತ್ತರ ಎಂಬ ದಿಕ್ಕುಗಳ ಸಹಾಯದಿಂದಲೇನೇ ತಿಳಿಸಲಾಗುತ್ತದೆ.
ಗೂಗು-ಯಿಮ್‌ಧಿರ್ ಎಂಬ ಭಾಷೆ ಇಂತಹದು. ಮೇಲೆ ಕೊಟ್ಟಿರುವ ಎರಡು ವಾಕ್ಯಗಳು ತಿಳಿಸುವ ಸಂಗತಿಯನ್ನು ಈ ಭಾಷೆಯಲ್ಲಿ ದಿಕ್ಕುಗಳ ಸಹಾಯದಿಂದ ಮಾತ್ರವೇ (ಮನೆಯ ಪೂರ್ವಕ್ಕೆ, ಮನೆಯ ಪಶ್ಚಿಮಕ್ಕೆ, ಇತ್ಯಾದಿ) ತಿಳಿಸಲಾಗುತ್ತದೆ.
ಚಿತ್ರವೊಂದರಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಇನ್ನೊಬ್ಬನ ಬಲಬದಿಗೆ ನಿಂತಿದ್ದಾನೆ ಎನ್ನಲೂ ಈ ಭಾಷೆಯಲ್ಲಿ ಸಾಧ್ಯವಾಗದು. ಅಲ್ಲೂ ನಿಜವಾದ ದಿಕ್ಕನ್ನೇ ತಿಳಿಸಬೇಕು, ಮತ್ತು ಚಿತ್ರವನ್ನು ಸ್ವಲ್ಪ ತಿರುಗಿಸಿ ಹಿಡಿದರೆ, ದಿಕ್ಕು ಬದಲಾಗಿರುವುದನ್ನೂ ಸರಿಯಾಗಿ ಅರಿತು ಹೇಳಬೇಕು.
ಈ ರೀತಿ ಚಿಕ್ಕ ಚಿಕ್ಕ ವಸ್ತುಗಳ ಸ್ಥಾನವನ್ನೂ ದಿಕ್ಕುಗಳ ಸಹಾಯದಿಂದ ತಿಳಿಸುವುದು ನಮಗೆ ತೀರ ವಿಚಿತ್ರ ಮತ್ತು ಬಹಳ ಕಷ್ಟದ ಕೆಲಸ ಎಂದು ಅನಿಸ ಬಹುದು. ಆದರೆ, ಆಸ್ಟ್ರೇಲಿಯಾದ ಈ ಮೂಲನಿವಾಸಿಗಳು ಮರುಭೂಮಿಯಲ್ಲಿ ಸಂಚರಿಸುತ್ತಿರಬೇಕಾಗಿದೆಯಾದ ಕಾರಣ, ಅವರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗುತ್ತದೆ. ಮರುಭೂಮಿಯಲ್ಲಿ ಸ್ಥಾನ ಸೂಚಕಗಳಾಗಿ ಬಳಸಲು ಮರ, ಗುಡ್ಡ ಮೊದಲಾದ ಗುರುತುಗಳಾವುವೂ ಇರುವುದಿಲ್ಲ; ಹಾಗಾಗಿ, ದಿಕ್ಕಿನ ಜ್ಞಾನವೊಂದರಿಂದಲೇ ಅವರು ಯಾವಾಗಲೂ ತಾವೆಲ್ಲಿ ಇರುವೆವೆಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.
ಅತ್ತೆಭಾಷೆ
ಆಸ್ಟ್ರೇಲಿಯಾದ ಕೆಲವು ಭಾಷೆಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಭಾವ ಮೊದಲಾದ ಸಂಬಂಧಿಗಳೊಂದಿಗೆ ಮಾತನಾಡುವಾಗ ಬಳಸುವ ಭಾಷೆ ಇತರ ಸಂದರ್ಭ ಗಳಲ್ಲಿ ಬಳಸುವ ಭಾಷೆಗಿಂತ ತೀರಾ ಭಿನ್ನವಾಗಿರುತ್ತದೆ. ಎರಡರಲ್ಲೂ ವ್ಯಾಕರಣ ಒಂದೇ; ಆದರೆ, ಪದಗಳು ಮಾತ್ರ ಬೇರೆ ಬೇರೆ. ಇತರರೊಂದಿಗೆ ಮಾತನಾಡು ವಾಗ ಬಳಸುವ ಪದಗಳಲ್ಲಿ ಒಂದನ್ನೂ ಈ ಅತ್ತೆಭಾಷೆಯಲ್ಲಿ ಬಳಸಲು ಸಾಧ್ಯ ವಿಲ್ಲ.
ಉದಾಹರಣೆಗಾಗಿ, ದ್ಯರ್ಬಲ ಎಂಬ ಭಾಷೆಯಲ್ಲಿ ಸಾಮಾನ್ಯವಾಗಿ ‘ಹೊರಗೆ ಬಾ’ ಎನ್ನಲು ಮಯಿನ್ ಎನ್ನುತ್ತಾರೆ, ಆದರೆ ಅದರ ಅತ್ತೆಭಾಷೆಯಲ್ಲಿ ಯಿಲ್ ವುನ್ ಎನ್ನುತ್ತಾರೆ; ‘ತಿನ್ನು’ ಎನ್ನುವುದಕ್ಕೆ ಸಾಮಾನ್ಯ ಭಾಷೆಯಲ್ಲಿ ದ್ಯಂಗ್‌ಇು ಎನ್ನುತ್ತಾರೆ, ಆದರೆ ಅತ್ತೆಭಾಷೆಯಲ್ಲಿ ಯಲ್‌ಮಿಇು ಎನ್ನುತ್ತಾರೆ.
ಈ ವಿಶಿಷ್ಟವಾದ ಅತ್ತೆಭಾಷೆಯನ್ನು ಗಂಡಸರು ತಮ್ಮ ಅತ್ತೆ (ಹೆಂಡತಿಯ ತಾಯಿ), ಸೊಸೆ (ಮಗನ ಹೆಂಡತಿ), ಅತ್ತಿಗೆ (ತಾಯಿಯ ಸಹೋದರನ ಇಲ್ಲವೇ ತಂದೆಯ ಸಹೋದರಿಯ ಮಗಳು) - ಇವರೊಂದಿಗೂ, ಹೆಂಗಸರು ತಮ್ಮ ಮಾವ (ಗಂಡನ ತಂದೆ), ಅಳಿಯ (ಮಗಳ ಗಂಡ), ಮತ್ತು ಭಾವ (ತಾಯಿಯ ಸಹೋದರನ ಇಲ್ಲವೇ ತಂದೆಯ ಸಹೋದರಿಯ ಮಗ) - ಇವರೊಂದಿಗೂ ಕಡ್ಡಾಯವಾಗಿ ಬಳಸಬೇಕಾಗುತ್ತದೆ.
ಬೇರೆ ಕೆಲವು ಸಂಬಂಧಿಗಳೊಂದಿಗೂ (ಉದಾ: ಗಂಡಸರ ಮಟ್ಟಿಗೆ ತಾಯಿಯ ಸಹೋದರನ ಮಗ, ಮತ್ತು ಹೆಂಗಸರ ಮಟ್ಟಿಗೆ ತಾಯಿಯ ಸಹೋ ದರನ ಮಗಳು) ಅತ್ತೆಭಾಷೆಯನ್ನು ಬಳಸಬಹುದಾದರೂ, ಇದರಲ್ಲಿ ಕಡ್ಡಾಯ ವಿಲ್ಲ. ಉಳಿದವರೊಂದಿಗೆ ಮಾತ್ರ, ಈ ಅತ್ತೆಭಾಷೆಯನ್ನು ಬಳಸಬಾರದು; ಸಾಮಾನ್ಯ ಭಾಷೆಯನ್ನೇ ಬಳಸಬೇಕು.
ಈ ಅತ್ತೆಭಾಷೆಯ ಒಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಬಳಕೆಯಾಗುವ ಪದಗಳು ಬಹಳ ಕಡಿಮೆ, ಎಂದರೆ ಸಾಮಾನ್ಯ ಭಾಷೆಯಲ್ಲಿ ಇರುವುದರ ಕಾಲು ಭಾಗದಷ್ಟು ಪದಗಳು ಮಾತ್ರ ಇದರಲ್ಲಿ ಬಳಕೆಯಾಗುತ್ತವೆ. ಹೀಗಿದ್ದರೂ, ಹೇಳ ಬೇಕೆಂದಿರುವ ಸಂಗತಿಗಳನ್ನೆಲ್ಲ ಅದರ ಮೂಲಕ ಹೇಳಲು ಏನೂ ತೊಂದರೆ ಯಾಗುವುದಿಲ್ಲ. ಈ ರೀತಿ ಪದಗಳ ಸಂಖ್ಯೆ ಅತ್ತೆಭಾಷೆಯಲ್ಲಿ ಕಡಿಮೆಯಿರಲು ಮುಖ್ಯ ಕಾರಣವೇನೆಂದರೆ, ಸಾಮಾನ್ಯ ಭಾಷೆಯಲ್ಲಿ ಬರುವ ಮೂರು-ನಾಲ್ಕು ಪದಗಳಿಗೆ ಬದಲಾಗಿ, ಅತ್ತೆಭಾಷೆಯಲ್ಲಿ ಒಂದೇ ಪದವಿರುತ್ತದೆ.
ಉದಾಹರಣೆಗಾಗಿ, ಅತ್ತೆಭಾಷೆಯಲ್ಲಿ ‘ನೋಡು’ ಎಂಬರ್ಥದ ಇಮ್ಮಲ್ ಎಂಬ ಒಂದು ಪದಕ್ಕೆ ಬದಲಾಗಿ, ಸಾಮಾನ್ಯ ಭಾಷೆಯಲ್ಲಿ ವಬಲ್ ‘ಮೇಲೆ ನೋಡು’, ಬಿಡ್ಇದ್ಸಯ್ ‘ಎವೆಯಿಕ್ಕದೆ ನೋಡು’, ಗಿಂದಲ್ ‘ರಾತ್ರಿ ಹೊತ್ತು ದೀಪದ ಬೆಳಕಿನಲ್ಲಿ ನೋಡು’, ಮಮಿಲ್ ‘ಗೊತ್ತಾಗದ ಹಾಗೆ ನೋಡು’, ಬುಡಲ್ ‘ಒಬ್ಬನ ಕಡೆಗೆ ನೋಡು’ ಮೊದಲಾದ ಪದಗಳಿವೆ.
ಈ ಎರಡು ರೀತಿಯ ಭಾಷೆಗಳು ದ್ಯರ್ಬಲ್‌ನಲ್ಲಿ ಹಳಬರಲ್ಲಿ ಮಾತ್ರ ಉಳಿ ದಿವೆಯಲ್ಲದೆ, ತರುಣ-ತರುಣಿಯರ ಮತ್ತು ಹುಡುಗ-ಹುಡುಗಿಯರ ಮಾತಿನಲ್ಲಿ ಉಳಿದಿಲ್ಲ. ಈ ಮೂಲನಿವಾಸಿಗಳ ಇತರ ಸಂಪ್ರದಾಯಗಳ ಹಾಗೆ, ಈ ಭಾಷಾ ಸಂಪ್ರದಾಯವೂ ನಶಿಸಿ ಹೋಗುತ್ತಿದೆ.
ಆಸ್ಟ್ರೇಲಿಯಾದ ಮೂಲನಿವಾಸಿಗಳ ಭಾಷೆಯಲ್ಲಿ ಕಾಣಿಸುವ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅವರ ಸಮಾಜದಲ್ಲಿ ಯಾರಾದರೂ ಸತ್ತರೆ ಆತನ ಹೆಸರನ್ನು ಹೋಲುವ ಪದ ಅವರ ಭಾಷೆಯಲ್ಲಿ ಯಾವುದಿದ್ದರೂ ಅದನ್ನು ಅನಂತರ ಉಚ್ಚರಿಸುವಂತಿಲ್ಲ; ಹಾಗೆ ಉಚ್ಚರಿಸಿದಲ್ಲಿ ಆತನ ಆತ್ಮ ಅವರಿರು ವಲ್ಲಿಗೆ ಬಂದೀತೆಂಬ ನಂಬಿಕೆಯೇ ಇದಕ್ಕೆ ಕಾರಣ. ಈ ಸಂಪ್ರದಾಯದಿಂದಾಗಿ, ಅವರ ಭಾಷೆಯ ಹಲವು ಪದಗಳು ಒಂದೊಂದಾಗಿ ಬಳಕೆಯಿಂದ ಹೊರ ಬೀಳುತ್ತಿರುತ್ತವೆ, ಮತ್ತು ಅವುಗಳ ಜಾಗವನ್ನು ಬೇರೆ ಪದಗಳು ಆಕ್ರಮಿಸು ತಿರುತ್ತವೆ. ಆದರೆ, ಒಂದು ಸಮಾಜದಲ್ಲಿ ಈ ರೀತಿ ಕಾಣೆಯಾದ ಪದಗಳನ್ನು ಪಕ್ಕದ ಸಮಾಜದಲ್ಲಿ ಕಾಣಬಹುದು.
೫.೭ ಓಶಿಯಾನಾದ ಭಾಷೆಗಳು
ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಹರಡಿರುವ ಸಾವಿರಾರು ದ್ವೀಪ ಗಳಲ್ಲಿ ವಾಸಿಸುವ ಜನರಲ್ಲಿ ಸಾವಿರಾರು ಭಿನ್ನ ಭಿನ್ನವಾದ ಭಾಷೆಗಳು ಬಳಕೆ ಯಲ್ಲಿವೆ. ಈ ದ್ವೀಪಗಳಲ್ಲಿ ಕಾಣಿಸುವ ಭಾಷೆಗಳ ಸಂಖ್ಯೆ ಜಗತ್ತಿನ ಒಟ್ಟು ಭಾಷೆಗಳ ಶೇಕಡಾ ನಲುವತ್ತರಷ್ಟಾಗಬಹುದೆಂದು ಕೆಲವರು ಲೆಕ್ಕ ಹಾಕಿದ್ದಾರೆ. ಇವನ್ನು ಮುಖ್ಯವಾಗಿ ಆಸ್ಟೋನೇಶಿಯನ್ ಮತ್ತು ಇಂಡೋ-ಪೆಸಿಫಿಕ್ ಎಂಬ ಎರಡು ಭಾಷಾಕುಟುಂಬಗಳಲ್ಲಿ ವಿಂಗಡಿಸಬಹುದು.
ಇವುಗಳಲ್ಲಿ ಆಸ್ಟ್ರೇನೇಶಿಯನ್ ಭಾಷೆಗಳು ಬಹಳ ವಿಸ್ತಾರವಾಗಿ ಈ ಎರಡು ಮಹಾಸಾಗರಗಳಲ್ಲಿರುವ ಎಲ್ಲಾ ದ್ವೀಪಗಳಲ್ಲೂ ಎಂದರೆ, ಆಫ್ರಿಕಾ ಖಂಡದ ಹತ್ತಿರವಿರುವ ಮೆಡಗಾಸ್ಕರ್ ದ್ವೀಪದಿಂದ ಹಿಡಿದು ಇಂಡೋನೇಶಿಯಾ, ಫಿಲಿಪೈನ್ಸ್ ದ್ವೀಪಗಳನ್ನು ದಾಟಿ, ಮುಂದೆ ಪೆಸಿಫಿಕ್ ಮಹಾಸಾಗರದಲ್ಲಿರುವ ಹವಾಯಿ ದ್ವೀಪಗಳವರೆಗೂ ಹಬ್ಬಿಕೊಂಡಿರುವುವಾದರೆ, ಇಂಡೋ-ಪೆಸಿಫಿಕ್ ಭಾಷೆಗಳು ನ್ಯೂಗಿನಿ ಮತ್ತು ಅದರ ಸುತ್ತುಮುತ್ತಲಿನ ದ್ವೀಪಗಳಲ್ಲಿ ಮಾತ್ರ ಬಳಕೆಯಲ್ಲಿವೆ.
ಆದರೆ, ಆಸ್ಟ್ರೇನೇಶಿಯನ್ ಭಾಷೆಗಳೆಲ್ಲ ಒಂದಕ್ಕೊಂದು ತೀರ ಹತ್ತಿರದ ಸಂಬಂಧವನ್ನು ತೋರಿಸುತ್ತಿವೆ, ಮತ್ತು ಇದಕ್ಕೆ ವಿರುದ್ಧವಾಗಿ, ಇಂಡೋ- ಪೆಸಿಫಿಕ್ ಭಾಷೆಗಳು ಒಂದೇ ಕಡೆ ಸೇರಿದ್ದರೂ ಹಲವಾರು ರೀತಿಯ ವೈವಿಧ್ಯ ಗಳನ್ನು ತೋರಿಸುತ್ತಿದ್ದು, ಅವನ್ನೆಲ್ಲ ಒಂದೇ ಕುಟುಂಬದಲ್ಲಿ ಸೇರಿಸಿ ಹೇಳಲು ಸಾಧ್ಯವೇ ಎಂಬ ವಿಷಯದಲ್ಲಿ ವಿದ್ವಾಂಸರೊಳಗೆ ಮತಭೇದವಿದೆ.
ಆಸ್ಟೋನೇಶಿಯನ್ ಭಾಷೆಗಳು
ಮಡಗಾಸ್ಕರ್‌ನ ಮಲಗಾಸಿ, ಮಲಯೇಶಿಯಾದ ಮಲಯ್, ಇಂಡೋನೇಶಿಯಾದ ಬಹಸಾ ಇಂಡೋನೇಶಿಯಾ, ಜಾವನೀಸ್, ಸುಂಡನೀಸ್, ಮಾದುರೀಸ್, ಬಾಲಿ, ಫಿಲಿಪೈನ್ಸ್‌ನ ಪಿಲಿಪಿನೋ (ತಗಲೋಗ್), ಪೋಲಿನೇಶ್ಯಾದ ಸಮೋವನ್, ತಹಿತಿಯನ್ ಮತ್ತು ಹವಾಯಿಯನ್ ಮೊದಲಾದ ಒಟ್ಟು ಒಂದು ಸಾವಿರ ಭಾಷೆಗಳು ಆಸ್ಟೋನೇಶಿಯನ್ ಕುಟುಂಬಕ್ಕೆ ಸೇರುತ್ತವೆ. ಈ ಭಾಷೆಗಳನ್ನು ಮುಖ್ಯವಾಗಿ ಮಲಯೋ-ಪೋಲಿನೇಶಿಯನ್ ಎಂಬ ಒಂದು ದೊಡ್ಡ ಉಪ ಕುಟುಂಬದಲ್ಲೂ, ಅತಾಯಲಿಕ್, ತ್ಸೌಯಿಕ್ ಮತ್ತು ಪೈವನಿಕ್ ಎಂಬ ಮೂರು ಚಿಕ್ಕ ಉಪಕುಟುಂಬಗಳಲ್ಲೂ ಸೇರಿಸಿ ಹೇಳಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಈ ಕುಟುಂಬಕ್ಕೆ ಸೇರಿದ ಸುಮಾರು ಇನ್ನೂರರಿಂದ ಮುನ್ನೂರರಷ್ಟು ಭಾಷೆ ಗಳು ನ್ಯೂಗಿನಿಯಿಂದ ಪಶ್ಚಿಮಕ್ಕೆ ಬಳಕೆಯಲ್ಲಿದ್ದು, ಇವನ್ನಾಡುವವರ ಸಂಖ್ಯೆ ೨೦೦ ಮಿಲಿಯದಷ್ಟಿದೆ. ನ್ಯೂಗಿನಿಯಿಂದ ಪೂರ್ವಕ್ಕೆ ಇದಕ್ಕಿಂತಲೂ ಜಾಸ್ತಿ, ಎಂದರೆ ಸುಮಾರು ಮುನ್ನೂರರಿಂದ ನಾನ್ನೂರರ ವರೆಗೆ ಭಾಷೆಗಳಿವೆಯಾದರೂ, ಇವನ್ನಾಡುವವರ ಸಂಖ್ಯೆ ಮಾತ್ರ ಎರಡು ಮಿಲಿಯದಷ್ಟು ಮಾತ್ರ ಇದೆ. ೬೫ ಮಿಲಿಯ ಜನರ ಜಾವನೀಸ್, ೨೦ ಮಿಲಿಯ ಜನರ ಸುಂಡನೀಸ್, ಮತ್ತು ೧೦ ಮಿಲಿಯ ಜನರ ತಗಲೋಗ್ (ಫಿಲಿಪೈನ್ಸ್‌ನ ಭಾಷೆ) ಎಂಬವು ಈ ಭಾಷೆಗಳಲ್ಲಿ ಜನಸಂಖ್ಯೆಯ ಮಟ್ಟಿಗೆ ಮುಖ್ಯವಾದವುಗಳು.
ಸಾಮಾನ್ಯವಾಗಿ ಈ ಭಾಷೆಗಳಲ್ಲಿ ಬಳಕೆಯಾಗುವ ವರ್ಣಗಳ ಸಂಖ್ಯೆ ಬಹಳ ಚಿಕ್ಕದು. ಉದಾಹರಣೆಗಾಗಿ, ಮವೊರಿ ಭಾಷೆಯಲ್ಲಿ ಒಟ್ಟು ಹತ್ತು ವ್ಯಂಜನಗಳು (ಕ್, ತ್, ಪ್, ಫ್, ಹ್, ಮ್, ನ್, ಜ್, ರ್, ವ್) ಮಾತ್ರ ಬಳಕೆಯಲ್ಲಿವೆ. ಆದರೆ, ಸ್ವರಗಳು ಹತ್ತು (ಹ್ರಸ್ವ ಮತ್ತು ದೀರ್ಘ ಸ್ವರಗಳು ಸೇರಿ) ಇವೆ.
ಮಲಯೋ-ಪೋಲಿನೇಶಿಯನ್ ಕುಟುಂಬದ ಒಂದು ವಿಭಾಗವಾದ ಓಶಿಯಾನಿಕ್ ಇಲ್ಲವೇ ಮೆಲನೇಶಿಯನ್ ಭಾಷೆಗಳ ಒಂದು ವೈಶಿಷ್ಟ್ಯ ವೇನೆಂದರೆ, ಇವುಗಳಲ್ಲಿ ನಿರ್ದೇಶಕ ಸರ್ವನಾಮಗಳು ‘ಮಾತನಾಡುವವನ ಹತ್ತಿರ’, ‘ಕೇಳುಗನ ಹತ್ತಿರ’, ಮತ್ತು ‘ಇಬ್ಬರಿಂದಲೂ ದೂರ’ ಎಂಬುದಾಗಿ ಮೂರು ವಿಶಿಷ್ಟವಾದ ಸ್ಥಾನಗಳನ್ನು ಸೂಚಿಸುತ್ತವೆ. ಭಾರತದಲ್ಲಿ ಬಳಕೆ ಯಲ್ಲಿರುವ ಕೆಲವು ಟಿಬೆಟೋ-ಬರ್ಮನ್ ಭಾಷೆಗಳಲ್ಲೂ, ಯುರೋಪಿನ ಯುರಾಲಿಕ್ ಭಾಷೆಗಳಲ್ಲೂ ಇಂತಹ ಮೂರು ರೀತಿಯ ಸ್ಥಾನನಿರ್ದೇಶಕ ಸರ್ವನಾಮಗಳನ್ನು ಕಾಣಬಹುದು.
ಭಾಷೆಗಳ ಬಗ್ಗೆ ನೀವೇನು ಬಲ್ಲಿರಿ?
ಇಂಡೋ-ಪೆಸಿಫಿಕ್ ಭಾಷೆಗಳು
ಈ ಕುಟುಂಬಕ್ಕೆ ಸೇರಿದ ಭಾಷೆಗಳ ಸಂಖ್ಯೆ ಸಾವಿರಕ್ಕೆ ಹತ್ತಿರ ಇದೆಯಾದರೂ, ಇವನ್ನಾಡುವ ಜನರ ಸಂಖ್ಯೆ ಒಟ್ಟು ಇಪ್ಪತ್ತು ಲಕ್ಷಕ್ಕಿಂತ ಜಾಸ್ತಿಯಿಲ್ಲ. ಮುಖ್ಯ ವಾಗಿ ನ್ಯೂಗಿನಿ ಎಂಬ ಒಂದೇ ಒಂದು ದ್ವೀಪದಲ್ಲಿ ಹರಡಿವೆಯಾದರೂ, ಈ ಭಾಷೆಗಳು ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದು ಅವನ್ನೆಲ್ಲ ಒಂದೇ ಕುಟುಂಬ ದಲ್ಲಿ ಸೇರಿಸಿ ಹೇಳಬಹುದೆಂಬ ವಾದವನ್ನು ಎಲ್ಲರೂ ಒಪ್ಪುವುದಿಲ್ಲ.
ಭಾರತದ ಅಂಡಮಾನ್ ದ್ವೀಪದಲ್ಲಿ ಬಳಕೆಯಲ್ಲಿರುವ ಕೆಲವು ಭಾಷೆ ಗಳನ್ನೂ ಈ ಕುಟುಂಬದಲ್ಲಿ ಸೇರಿಸಬಹುದೆಂದು ಕೆಲವರು ಅಭಿಪ್ರಾಯಪಟ್ಟಿ ದ್ದಾರೆ. ಇವಲ್ಲದೆ, ಈಗ ಪೂರ್ತಿ ಅಳಿದು ಹೋಗಿರುವ ತಸ್ಮೀನಿಯಾದ ಭಾಷೆ ಗಳು, ನ್ಯೂಗಿನಿಯ ಮಧ್ಯಭಾಗದಲ್ಲಿ ಬಳಕೆಯಲ್ಲಿರುವ ಭಾಷೆಗಳು, ಪಶ್ಚಿಮದ ಪಾಪುವಾನ್ ಭಾಷೆಗಳು, ಪೂರ್ವದ ಭಾಷೆಗಳು, ವಾಯವ್ಯದ ಭಾಷೆಗಳು ಮತ್ತು ಪೆಸಿಫಿಕ್ ಭಾಷೆಗಳು ಎಂಬುದಾಗಿ ಈ ಭಾಷೆಗಳನ್ನು ಏಳು ವಿಭಾಗಗಳಾಗಿ ಹಂಚಲು ಸಾಧ್ಯವಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಗಿನಿ ದ್ವೀಪದಲ್ಲಿ ಬಳಕೆಯಲ್ಲಿರುವ ಒಟ್ಟು ಒಂದು ಸಾವಿರ ಭಾಷೆಗಳಲ್ಲಿ ಮುಕ್ಕಾಲು ಪಾಲಷ್ಟು, ಎಂದರೆ ಸುಮಾರು ೭೫೦ ಭಾಷೆಗಳು ಪಾಪುವಾನ್ ಎಂಬ ಒಂದು ವಿಭಾಗಕ್ಕೆ ಸೇರುತ್ತವೆ. ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳಲ್ಲಿ ಸ್ವತಂತ್ರ ಮತ್ತು ಅಸ್ವತಂತ್ರಗಳೆಂಬ ಎರಡು ರೀತಿಯ ಕ್ರಿಯಾಪದ ಗಳಿರುತ್ತವೆ. ಆಖ್ಯಾತ ಮತ್ತು ಕಾಲ ಪ್ರತ್ಯಯಗಳಲ್ಲಿ ಹೆಚ್ಚಿನವೂ ಸ್ವತಂತ್ರ ಕ್ರಿಯಾಪದಗಳೊಂದಿಗೆ ಮಾತ್ರ ಬರುತ್ತವೆ.
೫.೮ ಮುಕ್ತಾಯ
ಜಗತ್ತಿನಲ್ಲಿರುವ ಜನರೆಲ್ಲ ಒಂದೇ ಭಾಷೆಯನ್ನಾಡುವ ಹಾಗಿದ್ದರೆ ಬಹಳ ಒಳ್ಳೆಯದು ಎಂದು ಭಾವಿಸುವ ಮಂದಿ ನಮ್ಮಲ್ಲಿ ಕೆಲವರಿದ್ದಾರೆ. ಹೀಗಾದಲ್ಲಿ, ಬೇರೆ ಬೇರೆ ಭಾಷೆಗಳನ್ನು ಕಲಿಯುವ ಕೆಲಸ ತಪ್ಪಬಹುದು ಮಾತ್ರವಲ್ಲ, ಭಾಷೆಯ ಹೆಸರಿನಲ್ಲಿ ಇವತ್ತು ನಡೆಯುತ್ತಿರುವ ನೂರಾರು ಹೋರಾಟಗಳೂ ಇಲ್ಲವಾಗಬಹುದೆಂದು ಈ ಜನರು ಭಾವಿಸುತ್ತಾರೆ.
ಆದರೆ, ನಿಜಕ್ಕೂ ನಮಗೆ ಇಂತಹ ಏಕರೂಪತೆ ಬೇಕೇ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಎಲ್ಲರೂ ಒಂದೇ ರೀತಿಯ ಬಟ್ಟೆಗಳನ್ನು ಉಡುವ ಹಾಗಾದಲ್ಲಿ, ಒಂದೇ ರೀತಿಯ ಸಾಮಾನುಗಳನ್ನು ಬಳಸುವ ಹಾಗಾದಲ್ಲಿ, ಮತ್ತು ಒಂದೇ ರೀತಿಯ ಗಿಡಗಳನ್ನು ನೆಡುವ ಹಾಗಾದಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಕಡಿಮೆ ಮಾಡಬಹುದೇನೋ
ನಿಜ; ಆದರೆ, ಇದರಿಂದಾಗಿ ನಮ್ಮ ಜೀವನದಲ್ಲಿ ಈಗ ಕಾಣಿಸುವ ವೈವಿಧ್ಯತೆಯೇ ಇಲ್ಲವಾಗಿ, ಎಲ್ಲವೂ ನೀರಸವಾಗಬಲ್ಲುದು.
ಇದಲ್ಲದೆ, ಕಾಲ ಬದಲಾದಂತೆಲ್ಲ ಪ್ರಪಂಚದಲ್ಲಿ ಕಾಣಿಸುವ ಜೀವಿಗಳಲ್ಲಿ ಕೆಲವು ಹೊಸ ಕಾಲಕ್ಕೆ ಹೊಂದಿಕೊಳ್ಳಲು ಅಸಮರ್ಥವಾಗಿ ನಾಶಗೊಳ್ಳುವುದನ್ನು ನಾವು ಕಾಣುತ್ತೇವೆ. ಯಾವ ರೀತಿಯ ಜೀವಿ ಈ ರೀತಿ ಅಳಿದುಹೋಗಬಲ್ಲುದು, ಮತ್ತು ಯಾವುದು ಉಳಿಯಬಲ್ಲುದು ಎಂಬುದನ್ನು ನಾವು ಅವುಗಳ ಇವತ್ತಿನ ನಡತೆಯ ಇಲ್ಲವೇ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾರೆವು. ಹಾಗಾಗಿ, ಜೀವಿಗಳಲ್ಲಿ ಕಾಣಿಸುವ ವೈವಿಧ್ಯತೆಯನ್ನು ಅಳಿಸಿ ಹಾಕಿದಲ್ಲಿ, ಮುಂದೆ ಬರಲಿರುವ ಒಂದು ಕಾಲದಲ್ಲಿ ಉಳಿಯಬಹುದಾದ ಜೀವಿಯೇ ಇಲ್ಲವೆಂದಾಗಲು ಸಾಧ್ಯವಿದೆ.
ಭಾಷೆಯಲ್ಲಿ ಕಾಣಿಸುವ ವೈವಿಧ್ಯತೆಯೂ ಇದೇ ರೀತಿಯದು. ನಮ್ಮ ಜೀವನದಲ್ಲಿ ಕಾಣಿಸುವ ಇತರ ವೈವಿಧ್ಯತೆಗಳಂತೆಯೇ ಅದೂ ಅತ್ಯವಶ್ಯ ವಾದುದು. ಇವತ್ತಿನ ಅವಶ್ಯಕತೆಗಳನ್ನು ಪೂರೈಸಲು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆ ಅತ್ಯಂತ ಸಮರ್ಥವೆಂದು ಕೆಲವರು ಭಾವಿಸಬಹುದು. ಆದರೆ ಮುಂದೆ ಬರುವ ಒಂದು ದಿವಸದಲ್ಲಿ ಅವುಗಳ ಬದಲು ಈಗ ತೀರಾ ಕೆಳಮಟ್ಟದಲ್ಲಿರುವ ಗುಡ್ಡಗಾಡಿನ ಜನರ ಒಂದು ಭಾಷೆ ಹೆಚ್ಚು ಸಮರ್ಥವೆಂದು ಸಿದ್ಧವಾಗಲು ಸಾಧ್ಯವಿದೆ. ಹಾಗಾಗಿ, ಭಾಷೆಯ ಉಳಿವೇ ಅದರಲ್ಲಿ ಕಾಣಿಸುವ ವೈವಿಧ್ಯತೆಯ ಮೇಲೆ ಅವಲಂಬಿಸಿದೆಯೆಂದು ಹೇಳಬಹುದು.
ಭಾಷೆಗಳಲ್ಲಿ ಕಾಣಿಸುವ ಈ ವೈವಿಧ್ಯತೆಯನ್ನು ಅರಿತಷ್ಟೂ ಭಾಷೆಯ ಸ್ವರೂಪ ನಮಗೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ, ಈ ವಿಷಯದಲ್ಲಿ ನಾವು ತಿಳಿಯಬೇಕಾದದ್ದು ಇನ್ನೂ ಬಹಳ ಜಾಸ್ತಿ ಇದೆ. ನೂರಾರು ವರ್ಷಗಳಿಂದಲೂ ಸಾವಿರಾರು ಮಂದಿ ಸಂಶೋಧಕರು ಇಂಗ್ಲಿಷ್ ಭಾಷೆಯ ಮೇಲೆ ಸಂಶೋಧನೆಗಳನ್ನು ನಡೆಸುತ್ತಾ ಬಂದಿದ್ದಾರೆ; ಹಾಗಿದ್ದರೂ, ಆ ಭಾಷೆಯ ಕುರಿತಾಗಿ ಇವತ್ತಿಗೂ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಹೀಗಿರು ವಾಗ, ಒಬ್ಬರೋ ಇಬ್ಬರೋ ಸಂಶೋಧನೆ ನಡೆಸುತ್ತಿರುವ ಇತರ ಭಾಷೆಗಳ ಪಾಡೇನು?
ಇದಲ್ಲದೆ, ಸಂಶೋಧಕರು ಸಾಮಾನ್ಯವಾಗಿ ಜಾಸ್ತಿ ಸಂಶೋಧನೆ ಮಾಡಿದ ಭಾಷೆಯ ಸ್ವರೂಪವನ್ನೇ ಇತರ ಭಾಷೆಗಳಲ್ಲೂ ಕಾಣುತ್ತಾರೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡದಲ್ಲಿ ಕಂಡ ಕನ್ನಡ ವೈಯಾಕರಣಿಗಳ ಅವಸ್ಥೆ ಇಂತಹದು. ತಾವು ಅಭ್ಯಾಸ ಮಾಡುವ ಭಾಷೆಯ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಇವರು ಇನ್ನಷ್ಟು ಆಳವಾದ ಸಂಶೋಧನೆಗಳನ್ನು ಮಾಡ ಬೇಕಾಗುತ್ತದೆ. ಪ್ರಪಂಚದಲ್ಲಿರುವ ಸಾವಿರಗಟ್ಟಲೆ ಭಾಷೆಗಳಲ್ಲಿ ಎಷ್ಟನ್ನು ಈ ರೀತಿ ಅಭ್ಯಾಸ ಮಾಡಲು ಸಾಧ್ಯ?
ಭಾಷೆಗಳ ಕುರಿತು ನಮಗಿರುವ ಅಜ್ಞಾನ ಎಂತಹದು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಈ ಅಜ್ಞಾನವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು ಮಾತ್ರವಲ್ಲ, ಆದಷ್ಟು ಮಟ್ಟಿಗೆ ಭಾಷೆಗಳ ನಡುವಿರುವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕೂ ನಾವು ಪ್ರಯತ್ನಿಸಬೇಕು. ಕನ್ನಡದ ಉಪಭಾಷೆಗಳ ನಡುವಿನ ವ್ಯತ್ಯಾಸಗಳು ಕನ್ನಡದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಆ ಉಪಭಾಷೆಗಳಲ್ಲಿ ಒಂದು ಸರಿ ಉಳಿದುವೆಲ್ಲ ತಪ್ಪು ಎಂಬ ಭಾವನೆಯನ್ನು ನಾವು ತೊಡೆದು ಹಾಕಬೇಕು. ನಿಜಕ್ಕೂ ಕನ್ನಡದ ಉಳಿವು ಈ ವೈವಿಧ್ಯತೆಯನ್ನವಲಂಬಿಸಿದೆ ಎಂಬುದನ್ನು ನಾವು ಮರೆಯಬಾರದು.