↑ Contents  ·  Contents  ·  Ch 2 →

Chapters: Ch 1 · Ch 2 · Ch 3 · Ch 4 · Ch 5

ಭಾಗ ಒಂದು — ಭಾಷೆಯ ಸ್ವರೂಪ

ಭಾಷೆಯ ಸ್ವರೂಪ

ನಾವು ದಿನನಿತ್ಯವೂ ಲೀಲಾಜಾಲವಾಗಿ ಬಳಸುತ್ತಿರುವ ಈ ಭಾಷೆ ನಮ್ಮೆಲ್ಲರಿಗೂ ತುಂಬಾ ಪರಿಚಿತವಾದುದು. ಹಾಗಾಗಿ, ಅದರ ವಿಷಯವಾಗಿ ನಮ್ಮಲ್ಲಿ ಹಲವರು ಎಲ್ಲ ತಿಳಿದವರಂತೆ ಮಾತನಾಡುತ್ತಾರೆ. ನಿಜಕ್ಕೂ ನಮ್ಮ ನಾಲಿಗೆಯ ತುದಿಯಲ್ಲಿ ಕುಣಿಯುವ ಈ ಭಾಷೆಯ ಕುರಿತು ನಾವು ತಿಳಿಯದಿರುವ ಮತ್ತು ತಪ್ಪಾಗಿ ತಿಳಿದುಕೊಂಡಿರುವ ವಿಷಯಗಳೇ ಹೆಚ್ಚು. ಹಲವು ಸಂದರ್ಭಗಳಲ್ಲಿ ಈ ತಿಳುವಳಿಕೆಯಿಲ್ಲದಿರುವುದು ಮತ್ತು ತಪ್ಪು ತಿಳುವಳಿಕೆಯಿರುವುದು ನಮ್ಮನ್ನು ಮತ್ತು ಉಳಿದವರನ್ನು ಬಗೆಬಗೆಯ ತೊಂದರೆಗಳಿಗೆ ಒಳಪಡಿಸುತ್ತದೆ.

ಭಾಷೆಯ ಕುರಿತಾಗಿ ನಮ್ಮಲ್ಲಿರುವ ಈ ಅಜ್ಞಾನದ ಫಲವನ್ನು ನಾವು ಎಲ್ಲಿ ಬೇಕಿದ್ದರೂ ಕಾಣಬಹುದು. ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅವನ ಮಾತಿ ನಿಂದ ಅಳೆಯುತ್ತೇವೆ. ನಮಗರಿಯದ ಭಾಷೆಯನ್ನಾಡುವವರನ್ನು ಸಂಶಯದಿಂದ ನೋಡುತ್ತೇವೆ. ನಮ್ಮ ಭಾಷೆಯನ್ನಾಡುವವರು ಸಿಕ್ಕಿದರೆ ಅವರನ್ನು ನಂಬಿ ಸುಲಭವಾಗಿ ಮೋಸಹೋಗುತ್ತೇವೆ. ಭಾಷೆಯ ಹೆಸರಿನಲ್ಲಿ ನಮ್ಮಲ್ಲಿ ಎಷ್ಟೆಲ್ಲ ಹೊಡೆದಾಟಗಳು ನಡೆದಿಲ್ಲ? ನಡೆಯುತ್ತಿಲ್ಲ? ಆದರೆ, ಇವೆಲ್ಲ ಸರಿಯೇ, ಅವಶ್ಯವೇ ಎಂಬುದನ್ನು ತಾಳ್ಮೆಯಿಂದ ಪರೀಕ್ಷಿಸುವವರು ಮಾತ್ರ ಬಹಳ ಕಡಿಮೆ.

ಭಾಷಾಸಹಿಷ್ಣುತೆ ಎಂಬುದು ನಮ್ಮಲ್ಲಿ ಬೆಳೆಯಬೇಕಾದರೆ, ಮುಖ್ಯವಾಗಿ ಭಾಷೆಯ ಕುರಿತು ನಮ್ಮಲ್ಲಿರುವ ಅಜ್ಞಾನವನ್ನು ತೊಡೆದು ಹಾಕುವ ಅವಶ್ಯಕತೆ ಯಿದೆ. ಭಾಷೆಗಳಲ್ಲಿ ಕಾಣಿಸುವ ವೈವಿಧ್ಯತೆ ಬೇರೆ ಬೇರೆ ಕಾರಣಗಳಿಂದಾಗಿ ಅವುಗಳಲ್ಲಿ ತಲೆದೋರುವ ಬದಲಾವಣೆಗಳ ಫಲ. ಆದರೆ ಈ ವೈವಿಧ್ಯತೆ ಭಾಷೆ ಗಳನ್ನಾಡುವ ಜನರ ಯೋಗ್ಯತೆ, ವಿಶ್ವಾಸಾರ್ಹತೆ, ಬುದ್ಧಿವಂತಿಕೆ, ಮೊದಲಾದುವ ನ್ನೇನೂ ಪ್ರತಿಬಿಂಬಿಸುವುದಿಲ್ಲ. ಒಂದೇ ಕುಟುಂಬದ ಜನರು ದೂರದೂರದ ಎರಡು ಊರುಗಳಲ್ಲಿ ಪರಸ್ಪರ ಸಂಪರ್ಕವಿಲ್ಲದೆ ಹಲವು ವರ್ಷಗಳಷ್ಟು ಕಾಲ ಉಳಿದರಾದರೆ, ಅವರ ಭಾಷೆಯಲ್ಲೂ ಹಲವಾರು ವ್ಯತ್ಯಾಸಗಳು ಮೂಡಿಬರದೆ ಇರಲಾರವು.

ಹೀಗಿದ್ದರೂ, ಭಾಷೆ ನಮ್ಮ ಜೀವನದ ಒಂದು ಅತಿ ಮುಖ್ಯ ಅಂಗವಾಗಿದೆ. ಹಾಗಾಗಿ, ಹೊರಗಿನ ಪ್ರಪಂಚವನ್ನು ನಾವು ಹೇಗೆ ಕಾಣುತ್ತೇವೆ ಮತ್ತು ಅನುಭವಿಸುತ್ತೇವೆ ಎಂಬುದರ ಮೇಲೆ ಸ್ವಲ್ಪವಾದರೂ ನಮ್ಮ ಭಾಷೆಯ ಪ್ರಭಾವ ಆಗದಿರದು. ಹಳದಿ ಬಣ್ಣದ ಕನ್ನಡಕವನ್ನು ಧರಿಸಿದ ವ್ಯಕ್ತಿಗೆ ಹೇಗೆ ಎಲ್ಲಾ ವಸ್ತು

ಗಳೂ ಹಳದಿ ಬಣ್ಣದವಾಗಿ ಕಾಣಿಸುತ್ತವೆಯೋ ಹಾಗೆಯೇ ಒಂದು ವಿಶಿಷ್ಟವಾದ ಭಾಷೆಯನ್ನಾಡುವವರಿಗೆ ಹೊರಗಿನ ಪ್ರಪಂಚ ಆ ಭಾಷೆ ಅದನ್ನು ಹೇಗೆ ತೋರಿ ಸುತ್ತದೆಯೋ ಹಾಗೆ ಕಾಣಿಸುತ್ತದೆ. ನಮ್ಮ ಆಲೋಚನೆ, ಅನುಭವ ಇವೆಲ್ಲ ಬಹಳಮಟ್ಟಿಗೆ ನಮ್ಮ ಭಾಷೆಯಲ್ಲೇ ನಡೆಯುವುವಾದ ಕಾರಣ, ಇವುಗಳ ಮೇಲೆಲ್ಲ ನಮ್ಮ ಭಾಷೆಯ ಪ್ರಭಾವ ಇದ್ದೇ ಇರುತ್ತದೆ.

ಈ ಒಂದು ವಿಷಯವನ್ನು ಗಮನದಲ್ಲಿರಿಸಿಕೊಳ್ಳದಿದ್ದರೆ, ಎರಡು ಬೇರೆ ಬೇರೆ ಭಾಷೆಗಳನ್ನಾಡುವವರೊಳಗೆ ಅನವಶ್ಯಕವಾಗಿ ತಪ್ಪು ತಿಳುವಳಿಕೆಗಳು ತಲೆ ದೋರಬಲ್ಲುವು. ಉದಾಹರಣೆಗಾಗಿ, ನಮ್ಮ ದೇಶದ ಈಶಾನ್ಯ ಗಡಿಪ್ರದೇಶದಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳಿಗೆ ಇಂತಹ ಭಾಷೆಗೆ ಸಂಬಂಧಿಸಿದ ಅಜ್ಞಾನ ಮತ್ತು ಅಸಹಿಷ್ಣುತೆಗಳೂ ಸ್ವಲ್ಪಮಟ್ಟಿಗೆ ಕಾರಣವಾಗಿರಲು ಸಾಧ್ಯವಿದೆ.

ನಮ್ಮ ಭಾಷೆಯ ಜ್ಞಾನ ನಮ್ಮಲ್ಲಿ ಅರಿವಿಗೆ ಎಟಕುವಂತಹದು ಮತ್ತು ಎಟಕದಂತಹದು ಎಂಬುದಾಗಿ ಎರಡು ಬೇರೆ ಬೇರೆ ಸ್ತರಗಳಲ್ಲಿ ಸ್ಥಾಪಿತವಾಗಿರು ಇದೆ. ಮಾತನಾಡುವಾಗಲೆಲ್ಲ ನಾವು ನೂರಾರು ವ್ಯಾಕರಣ ನಿಯಮಗಳನ್ನು ಅನವರತವಾಗಿ ಬಳಸುತ್ತಿರುತ್ತೇವೆ. ಈ ವ್ಯಾಕರಣ ನಿಯಮಗಳ ಜ್ಞಾನ ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ಸ್ಥಿತಿಯಲ್ಲಿ ನೆಲಸಿರುತ್ತದೆ. ನಾವು ಆಡುವಂತಹ ಮಾತನ್ನು ಗಣಕ ಯಂತ್ರಗಳು ಬಳಸುವಂತೆ ಮಾಡಬೇಕಿದ್ದಲ್ಲಿ ಇಂತಹ ನೂರಾರು ವ್ಯಾಕರಣ ನಿಯಮಗಳನ್ನು ಕಂಡುಹಿಡಿದು, ಅವನ್ನೆಲ್ಲ ಅವುಗ ಳೊಳಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದ, ನಮ್ಮ ದಿನನಿತ್ಯದ ಮಾತಿ ನಲ್ಲೂ ಇಂತಹ ನೂರಾರು ನಿಯಮಗಳ ಬಳಕೆ ನಮಗೆ ತಿಳಿಯದ ಹಾಗೆ ನಡೆಯುತ್ತಿರುತ್ತದೆ ಎಂಬ ವಿಷಯ ಸ್ಪಷ್ಟವಾಗುತ್ತದೆ.

ಇಂತಹ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ಮಾತ್ರವಲ್ಲದೆ ಅರಿವಿಗೆ ಎಟಕುವ ಇನ್ನೊಂದು ರೀತಿಯ ವ್ಯಾಕರಣ ಜ್ಞಾನವೂ ನಮ್ಮಲ್ಲಿದೆ. ಶಾಲೆಯಲ್ಲಿ ನಾವು ಕಲಿಯುವ ವ್ಯಾಕರಣ ಜ್ಞಾನ ಇಂತಹದು. ಈ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಸಹಾಯದಿಂದ ನಾವು ನಮ್ಮ ಭಾಷೆಯಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬಲ್ಲೆವು. ಹೊಸ ಹೊಸ ಪದಗಳನ್ನು ಸೃಷ್ಟಿಸಿ ಅದರಲ್ಲಿ ಬಳಸಿಕೊಳ್ಳಬಲ್ಲೆವು, ಮತ್ತು ಬೇರೆ ಭಾಷೆಗಳಿಂದ ನಮಗೆ ಬೇಕೆನಿಸಿದ ಪದಗಳನ್ನು ಎರವಲಾಗಿ ಪಡೆದುಕೊಳ್ಳಬಲ್ಲೆವು. ವಾಕ್ಯಗಳ ರಚನೆಯಲ್ಲೂ ಸಂದರ್ಭಕ್ಕೆ ತಕ್ಕಂತೆ, ಈ ವ್ಯಾಕರಣ ಜ್ಞಾನದ ಸಹಾಯದಿಂದ, ಹಲಕೆಲವು ಬದಲಾವಣೆಗಳನ್ನೂ ನಾವು ಮಾಡಿಕೊಳ್ಳಬಲ್ಲೆವು.

ಆದರೆ, ಕಾಲದಿಂದ ಕಾಲಕ್ಕೆ ನಮ್ಮ ಭಾಷೆಯಲ್ಲಿ ನಡೆಯುವ ಬದಲಾವಣೆ ಗಳಲ್ಲಿ ಹೆಚ್ಚಿನವೂ ನಮ್ಮಲ್ಲಿರುವ ಅರಿವಿಗೆ ಎಟಕದ ವ್ಯಾಕರಣ ಜ್ಞಾನದ ಮೂಲಕ ನಡೆಯುತ್ತವೆ. ಅವು ಯಾರ ನಿಯಂತ್ರಣಕ್ಕೂ ಒಳಗಾಗದೆ ನಡೆಯುವ ಬದಲಾವಣೆಗಳು. ನಿರಂತರವಾಗಿ ನಡೆಯುವ ಈ ಬದಲಾವಣೆಗಳನ್ನು ಭಾಷಾ ಪಂಡಿತರು ವಿರೋಧಿಸುವರಾದರೂ ಅವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ನಮ್ಮಲ್ಲಿರುವ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಆಧಾರದ ಮೇಲೆ ಇವಲ್ಲಿ

ಕೆಲವನ್ನು ದೂರ ಇರಿಸುವ ಪ್ರಯತ್ನವನ್ನೇನೋ ಮಾಡಬಲ್ಲೆವು, ಆದರೆ, ಇದರಿಂದಾಗಿ ಭಾಷೆ ಬದಲಾಗದಿರುವುದಿಲ್ಲ. ಮಾತಿನ ಭಾಷೆ ಬದಲಾಗುತ್ತಾ ಇರುತ್ತದೆ, ಆದರೆ ಬರಹದ ಭಾಷೆ ಕೆಲವು ವಿಷಯಗಳಲ್ಲಿ ಬದಲಾಗದೆ ಉಳಿದು ಅದಕ್ಕೂ ಮಾತಿನ ಭಾಷೆಗೂ ನಡುವೆ ಕಂದಕವೊಂದು ಏರ್ಪಡುತ್ತದೆ.

ನಮ್ಮಲ್ಲಿರುವ ಈ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ನಮಗೆ ಗೊತ್ತಾಗದ ಹಾಗೆ ನಮ್ಮ ದೃಷ್ಟಿಕೋನದ ಮೇಲೂ ಪ್ರಭಾವವನ್ನು ಬೀರುತ್ತಿರುತ್ತದೆ. ಈ ವಿಷಯದಲ್ಲಿ ವಿದ್ವಾಂಸರೊಳಗೆ ಭಿನ್ನಾಭಿಪ್ರಾಯವಿರುವುದೇನೋ ನಿಜ; ಆದರೆ, ಹೆಚ್ಚು ಹೆಚ್ಚು ಭಾಷೆಗಳನ್ನು ಅಭ್ಯಾಸ ಮಾಡಿದಂತೆಲ್ಲ ಈ ಅರಿವಿಗೆ ಎಟಕದ ವ್ಯಾಕರಣ ಜ್ಞಾನದಲ್ಲಿ ಭಾಷೆಯಿಂದ ಭಾಷೆಗೆ ಬಹಳಷ್ಟು ವೈವಿಧ್ಯತೆಯಿರಲು ಸಾಧ್ಯ ಎಂಬ ವಿಷಯ ಬೆಳಕಿಗೆ ಬರುತ್ತಿದೆ. ಭಾಷೆಯೆಂಬುದು ನಮ್ಮ ಅನುಭವ ಮತ್ತು ಆಲೋಚನಾ ವಿಧಾನಗಳನ್ನು ನಿಯಂತ್ರಿಸಬಲ್ಲುದಾದರೆ, ಅದರಲ್ಲಿ ಕಾಣಿಸುವ ಈ ವೈವಿಧ್ಯತೆಯೂ ನಮ್ಮ ಅನುಭವ ಮತ್ತು ಆಲೋಚನಾ ವಿಧಾನಗಳಲ್ಲಿ ಪ್ರತಿಬಿಂಬಿತವಾಗಬಲ್ಲುದಲ್ಲವೇ?

ಭಾಷೆಯ ವಿಷಯವಾಗಿ ನಮ್ಮಲ್ಲಿ ಬೆಳೆದುಬಂದಿರುವ ಅಜ್ಞಾನದ ಸ್ವರೂಪ ಎಂತಹದು ಎಂಬುದನ್ನು ಈ ಮೊದಲನೇ ವಿಭಾಗದ ಲೇಖನಗಳು ಪರಿಚಯ ಮಾಡಿಕೊಡುತ್ತವೆ.

Eke →

೧.೧ ಭಾಷೆಗಳೊಳಗೆ ಕೀಳು ಮೇಲಿಲ್ಲ

ಸುಲಭವಾದ ಭಾಷೆ, ಕ್ಲಿಷ್ಟವಾದ ಭಾಷೆ, ಕಿವಿಗಿಂಪಾದ ಭಾಷೆ, ಕಠೋರವಾದ ಭಾಷೆ, ಬೆಳೆಯುತ್ತಿರುವ ಭಾಷೆ, ಕಾಡು ಭಾಷೆ ಎಂದೆಲ್ಲ ಭಾಷೆಗಳ ಮೇಲೆ ನೂರಾರು ವಿಶೇಷಣಗಳನ್ನೇನೋ ನಾವು ಹೇರುತ್ತೇವೆ; ಆದರೆ, ಇವೆಲ್ಲವೂ ಭಾಷೆಯನ್ನು ಕೇಳುವ ಇಲ್ಲವೇ ಆಡುವ ನಮ್ಮ ಮನಸ್ಸಿನಲ್ಲಿ ಮೂಡುವ ವಿಶೇಷಣಗಳಲ್ಲದೆ ಭಾಷೆಗಳೊಳಗೆ ಈ ರೀತಿಯ ಕೀಳುಮೇಲಿಲ್ಲ. ಈ ಮಾತನ್ನು ಭಾಷಾವಿಜ್ಞಾನಿಗಳು ನಡೆಸಿರುವ ನೂರಾರು ಸಂಶೋಧನೆಗಳ ಆಧಾರದ ಮೇಲೆ ಬರೆಯಲಾಗಿದೆಯಾದರೂ ಇದನ್ನು ಹೆಚ್ಚಿನವರೂ ಸುಲಭದಲ್ಲಿ ನಂಬಲಾರರೆಂಬು ದಂತೂ ನಿಜವೇ.

Eke →

ಕಷ್ಟ-ಸುಲಭ

ಯಾವ ಭಾಷೆಯೂ ಅದನ್ನು ತಾಯ್ನುಡಿಯಾಗಿ ಆಡುತ್ತಿರುವವರಿಗೆ ಕಷ್ಟವಾಗಿ ಕಾಣಿಸುವುದಿಲ್ಲ. ಭಾಷೆಗಳಲ್ಲೆಲ್ಲ ಕನ್ನಡವೇ ಅತ್ಯಂತ ಸುಲಭವಾದುದು, ಚೈನೀಸ್ ಇದ್ದುದರಲ್ಲೆಲ್ಲ ಕಷ್ಟವಾದುದೆಂದು ನಾವೇನೋ ಹೇಳಬಲ್ಲೆವು. ಆದರೆ, ಇದೇ ವಿಷಯವನ್ನು ಚೈನೀಸ್ ಭಾಷೆಯನ್ನು ಆಡುವವನೊಬ್ಬನೊಂದಿಗೆ

ಹೋಗಿ ಕೇಳಿ ನೋಡಿರಿ. ಆತನಿಗೆ ಖಂಡಿತವಾಗಿಯೂ ಕನ್ನಡಕ್ಕಿಂತ ಜೈನೀಸೇ ಹೆಚ್ಚು ಸುಲಭವಾದ ಭಾಷೆಯೆಂದೆನಿಸದಿರದು.

ಬಾಲ್ಯದಲ್ಲಿ ನಾವು ಒಂದು ವಿಧವಾದ ಭಾಷೆಯನ್ನು ಆಡಲು ಕಲಿತಿರುತ್ತೇವೆ. ಆ ಭಾಷೆಗೂ, ಮುಂದೆ ಕಲಿಯಲಿರುವ ಎರಡನೆಯ ಭಾಷೆಗೂ ನಡುವೆ ಎಂತೆಂತಹ ವ್ಯತ್ಯಾಸಗಳಿವೆ, ಮತ್ತು ಎಷ್ಟು ವ್ಯತ್ಯಾಸಗಳಿವೆ ಎಂಬುದರ ಮೇಲೆ ಆ ಭಾಷೆ ಹೆಚ್ಚು ಇಲ್ಲವೇ ಕಡಿಮೆ ಕ್ಲಿಷ್ಟವಾದುದೆಂದು ನಮಗೆ ಅನಿಸುತ್ತದೆ.

ಕನ್ನಡ ಮತ್ತು ತಮಿಳು ಭಾಷೆಗಳೊಳಗೆ ಹಲವಾರು ವಿಷಯಗಳಲ್ಲಿ ಸಾಮ್ಯ ವಿದೆ. ಹಾಗಾಗಿ, ತಮಿಳನ್ನು ನಾವು ಬಹಳ ಸುಲಭವಾಗಿ ಕಲಿತು ಅರ್ಥ ಮಾಡಿಕೊಳ್ಳಲು ಶಕ್ತರಾಗುತ್ತೇವೆ. ಇಂಗ್ಲಿಷಿಗೂ ಕನ್ನಡಕ್ಕೂ ನಡುವೆ ಇಂತಹ ಸಮಾನತೆಗಳು ಬಹಳ ಕಡಿಮೆ. ಆದುದರಿಂದ ಮೂರು ನಾಲ್ಕು ವರ್ಷ ಕಲಿತರೂ ಇಂಗ್ಲಿಷ್ ನಮ್ಮ ಹಿಡಿತಕ್ಕೆ ಸಿಕ್ಕುವುದಿಲ್ಲ.

ಭಾಷೆಯೊಂದು ಸುಲಭವಾದುದು ಇಲ್ಲವೇ ಕ್ಲಿಷ್ಟವಾದುದು ಎಂದೆನಿಸಲು ಬೇರೆಯೂ ಕಾರಣಗಳಿವೆ. ಉದಾಹರಣೆಗಾಗಿ, ಹಿಂದೀ ಭಕ್ತರಿಗೆ ಅದರಲ್ಲಿ ಒಂದು ವಾಕ್ಯ ಸರಿಯಾಗಿ ಆಡಲು ಬಾರದಿದ್ದರೂ ಹಿಂದಿಗಿಂತ ಸುಲಭವಾದ ಭಾಷೆ ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಅವರು ಸಾರುತ್ತಿರುತ್ತಾರೆ.

ಭಾಷೆಯೊಂದರ ಮೇಲೆ ಬರೆದಿರುವ ವ್ಯಾಕರಣ ಬಹಳ ಕ್ಲಿಷ್ಟವಾಗಿದೆ ಯಾದರೂ ಆ ಭಾಷೆ ಕ್ಲಿಷ್ಟವಾಗಿದೆಯೆಂದು ಅದನ್ನು ಕಲಿಯಲು ಪ್ರಯತ್ನಿಸು ವವರಿಗೆ ಅನಿಸಬಲ್ಲುದು. ಉದಾಹರಣೆಗಾಗಿ, ಸಂಸ್ಕೃತ ಭಾಷೆಯ ಮೇಲೆ ಬಹಳ ಕ್ಲಿಷ್ಟವಾದ, ಆದರೆ ಅತ್ಯಂತ ಉತ್ತಮವಾದ ವ್ಯಾಕರಣವನ್ನು ಸಿದ್ಧಗೊಳಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಈ ವ್ಯಾಕರಣದ ಸಹಾಯದಿಂದ ಕಲಿಯಲು ಪ್ರಯತ್ನಿಸು ವವರಿಗೆ ಅದು ಬಹಳ ಕ್ಲಿಷ್ಟವಾದ ಭಾಷೆಯೆಂದು ಅನಿಸದಿರದು.

ಕನ್ನಡಕ್ಕೂ ಇಂತಹದೇ ಕ್ಲಿಷ್ಟವಾದ ವ್ಯಾಕರಣವನ್ನು ತಯಾರಿಸಿ, ಅದೂ ಬಹಳ ಕ್ಲಿಷ್ಟವಾದ ಭಾಷೆಯೆಂದು ಅದನ್ನು ಅಂತಹ ವ್ಯಾಕರಣದ ಮೂಲಕ ಕಲಿಯಲು ಪ್ರಯತ್ನಿಸುವವರಿಗೆ ಅನ್ನಿಸುವಂತೆ ಮಾಡುವುದು ಅಸಾಧ್ಯವೇನಲ್ಲ.

ಭಾಷೆಗಳಲ್ಲಿರುವ ವಿಭಕ್ತಿಗಳ ಸಂಖ್ಯೆ, ಲಿಂಗಭೇದಗಳು, ಪದನಿಷ್ಪತ್ತಿ, ಮೊದಲಾದ ವ್ಯಾಕರಣಾಂಶಗಳ ಆಧಾರದ ಮೇಲೆ ಅವುಗಳ ಸಾಪೇಕ್ಷ ಕ್ಲಿಷ್ಟತೆ ಯನ್ನು ನಿರ್ಧರಿಸಲು ಭಾಷಾವಿಜ್ಞಾನಿಗಳು ನಡೆಸಿದ ಪ್ರಯತ್ನಗಳೆಲ್ಲವೂ ನಿಷ್ಫಲ ವಾಗಿವೆ. ಕಷ್ಟ, ಸುಲಭ ಎಂಬುದೆಲ್ಲ ವ್ಯಕ್ತಿನಿಷ್ಠ ಮಾತ್ರ, ಭಾಷಾನಿಷ್ಠ ವಲ್ಲವೆಂದೇ ಈ ವಿದ್ವಾಂಸರು ಕೊನೆಯ ನಿರ್ಧಾರಕ್ಕೆ ಬರಬೇಕಾಯಿತು. ಒಂದು ಭಾಷೆಯ ಪದರಚನೆ ಎಷ್ಟೊಂದು ಸುಲಭವಾಗಿರುತ್ತದೆಯೋ ಅದರ ವಾಕ್ಯರಚನೆ ಅಷ್ಟೇ ಕ್ಲಿಷ್ಟವಾಗಿಯೂ ಇರುವಂತೆ ಕಾಣಿಸುತ್ತದೆ. ಭಾಷೆಗಳ ಎಲ್ಲಾ ಅಂಶ ಗಳನ್ನೂ ಒಟ್ಟಿಗೆ ಗಮನಕ್ಕೆ ತೆಗೆದುಕೊಂಡೆವಾದರೆ, ಕ್ಲಿಷ್ಟತೆಯಲ್ಲಿ ಅವುಗಳೊಳಗೆ ಹೆಚ್ಚು ಕಡಿಮೆಯಿರಲಾರದೆಂದೇ ವಿದ್ವಾಂಸರ ಅಭಿಪ್ರಾಯ.

Eke →

ಭಾಷೆಯ ಇಂಪು

ಲಾಲಿತ್ಯ, ಇಂಪು ಮೊದಲಾದವುಗಳೂ ವ್ಯಕ್ತಿನಿಷ್ಠವಲ್ಲದೆ ಭಾಷಾನಿಷ್ಠವಲ್ಲ. ಕರ್ನಾಟಕ ಸಂಗೀತವನ್ನು ಕೇಳಿ ಅಭ್ಯಾಸವಾಗಿರುವ ದಕ್ಷಿಣದವರಿಗೆ ಉತ್ತರಾದಿ ಸಂಗೀತದಲ್ಲಿ ಇಂಪೂ ಇಲ್ಲ, ಅಂದವೂ ಇಲ್ಲ. ಆದರೆ ಉತ್ತರಾದಿಯನ್ನು ಕೇಳಿ ಸಂತೋಷಪಡಲು ಅಭ್ಯಾಸವಾದವರಿಗೆ ಕರ್ನಾಟಕ ಸಂಗೀತದಲ್ಲಿ ದಕ್ಷಿಣದವರಿಗೆ ಕಾಣಿಸುವಂತಹ ಅಂದವೇನೂ ಕಾಣಿಸುವುದಿಲ್ಲ.

ಭಾಷೆಗಳಲ್ಲೂ ಹೀಗೆಯೇ. ಎಳೆಯ ಪ್ರಾಯದಲ್ಲಿ ನಾವು ಎಂತಹ ಸಂಸ್ಕಾರ ಕ್ಕೊಳಗಾಗಿರುವೆವೋ ಅದನ್ನಾಧರಿಸಿ ಒಂದು ವಿಧದ ಮಾತು ಅಂದವಾಗಿ ಕೇಳಿಸುತ್ತದೆ, ಮತ್ತು ಇನ್ನೊಂದು ವಿಧದ ಮಾತು ಕರ್ಕಶವಾಗಿ ಕೇಳಿಸುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಮ್ಮದೇ ಆದ ತಾಯ್ನುಡಿ ಕಿವಿಗಿಂಪಾಗಿ ಕೇಳಿಸು ತ್ತದೆ.

Eke →

ಭಾಷೆಯ ಬೆಳವಣಿಗೆ

ಭಾಷೆಗಳ ಮೇಲೆ ಅನವಶ್ಯಕವಾಗಿ ಹೇರಿರುವ ಇನ್ನೊಂದು ವಿಶೇಷಣವೆಂದರೆ, ಬೆಳವಣಿಗೆ. ಭಾರತದ ಭಾಷೆಗಳನ್ನೆಲ್ಲ ಬೆಳೆಯುತ್ತಿರುವ ಭಾಷೆಗಳೆಂದು ಕರೆಯು ವುದು ರೂಢಿ. ಈ ಮಾತನ್ನು ರಾಜಕಾರಣಿಗಳು ಮಾತ್ರವಲ್ಲ, ವಿದ್ವಾಂಸರೂ ಉಪಯೋಗಿಸುತ್ತಿರುವುದು ನಿಜಕ್ಕೂ ಶೋಚನೀಯವಾದ ಸಂಗತಿ. ನಿಜಕ್ಕೂ ಇವತ್ತು ಪ್ರಚಲಿತವಾಗಿರುವ ಭಾಷೆಗಳೆಲ್ಲವೂ ಪೂರ್ತಿ ಬೆಳೆದಿರುವ ಭಾಷೆಗಳೇ. ಅವುಗಳಲ್ಲಿ ಕಡಿಮೆ ಬೆಳೆದವುಗಳು ಮತ್ತು ಜಾಸ್ತಿ ಬೆಳೆದವುಗಳು ಎಂಬುದಾಗಿ ಇಲ್ಲವೇ ಪ್ರಬುದ್ಧವಾದವುಗಳು ಮತ್ತು ಅಪ್ರಬುದ್ಧವಾದವುಗಳು ಎಂಬುದಾಗಿ ವಿಂಗಡಿಸಿ ಹೇಳುವುದು ಅಸಾಧ್ಯ.

ಭಾಷೆಗಳ ಹುಟ್ಟು ಹೇಗಾಗಿರಬೇಕೆಂಬುದನ್ನು ತಿಳಿಯಲು ವಿದ್ವಾಂಸರು ಬಹಳಷ್ಟು ಪ್ರಯತ್ನ ನಡೆಸಿದ್ದಾರೆ ಮತ್ತು ಈ ವಿಷಯದಲ್ಲಿ ಹಲವಾರು ಗ್ರಂಥ ಗಳನ್ನು ಬರೆದಿದ್ದಾರೆ. ಆದರೆ ಈ ವಿಷಯದಲ್ಲಿ ನಡೆದಿರುವ ವಾದ ವಿವಾದ ಗಳೆಲ್ಲ ನಿಷ್ಪಲಗಳಾಗಿ ಉಳಿದಿದ್ದು, ಈ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಅತೀ ಹಿಂದಿನದೆನ್ನಬಹುದಾದ ಭಾಷೆಯೂ ಆಧುನಿಕ ಭಾಷೆಯಷ್ಟೇ ಪ್ರಬುದ್ಧ ವಾಗಿರುವಂತೆ ತೋರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ.

ಪ್ರಾಣಿಗಳ ಇಲ್ಲವೇ ಪಕ್ಷಿಗಳ ಕೂಗಿನಂತೆ ಮೊತ್ತಮೊದಲಿಗೆ ಕೆಲವೇ ಕೆಲವು ಪದಗಳನ್ನೊಳಗೊಂಡಿದ್ದ ಭಾಷೆ ಆಮೇಲೆ ಒಂದೊಂದಾಗಿ ತನ್ನ ಪದರಾಶಿಯನ್ನು ಬೆಳೆಸಿಕೊಂಡು ಇಂದಿನ ವಿಸ್ತ್ರತವಾದ ರೂಪವನ್ನು ತಾಳಿರಬೇಕೆಂದು ಕೆಲವರು ವಾದಿಸಿರುವರಾದರೂ ಇಂತಹ ವಾದಕ್ಕೆ ಆಧಾರವೇನೂ ದೊರೆತಿಲ್ಲ.

Eke →

ಗಿರಿಜನರ ಭಾಷೆ

ಗಿರಿಜನರ ಇಲ್ಲವೇ ಕಾಡುಜನರ ಭಾಷೆಗಳನ್ನು ಅರ್ಧಂಬರ್ಧವಾಗಿ ಅಭ್ಯಾಸ ಮಾಡಿದ ಮಿಶನರಿಗಳು ಆ ಭಾಷೆಗಳಲ್ಲಿ ಹಲವಾರು ಕುಂದುಕೊರತೆಗಳನ್ನು ಕಂಡರು. ಅವರ ಮತದಂತೆ, ಈ ಭಾಷೆಗಳಲ್ಲಿ ಪದಗಳ ಸಂಖ್ಯೆ ಕಡಿಮೆ; ಇರುವ ಪದಗಳೆಲ್ಲ ಕಣ್ಣಿಗೆ ಕಾಣುವ ಇಲ್ಲವೇ ಕೈಗೆ ತಗಲುವ ವಸ್ತುಗಳನ್ನಷ್ಟೇ ಸೂಚಿಸಬಲ್ಲವಲ್ಲದೆ ಅವುಗಳ ಗುಣಧರ್ಮಗಳನ್ನು ಸೂಚಿಸಲಾರವು; ಆ ಭಾಷೆಗಳ ಧ್ವನಿಗಳು ತೀರ ಕ್ಲಿಷ್ಟವಾದವುಗಳು, ಮತ್ತು ಅವುಗಳ ವ್ಯಾಕರಣಗಳು ಸಾಕಷ್ಟು ಬಲಿತುಕೊಂಡಿಲ್ಲ, ಇತ್ಯಾದಿ. ಅನಂತರ ನಡೆಸಿರುವ ಆಳವಾದ ಅಭ್ಯಾಸ ಗಳು ಮಾತ್ರ, ಇವೆಲ್ಲಾ ಅಭಿಪ್ರಾಯಗಳೂ ತಪ್ಪೆಂಬುದನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿವೆ.

ಉದಾಹರಣೆಗಾಗಿ, ಪೇಟೆಯಲ್ಲಿ ವಾಸಿಸುವ ಜನರು ಐವತ್ತೋ, ನೂರೋ ಮರಗಿಡಗಳ ಹೆಸರುಗಳನ್ನು ಅರಿತಿರುವರಾದರೆ, ಗಿರಿಜನರ ಮಾತಿನಲ್ಲಿ ಇಂತಹ ಹೆಸರುಗಳ ಸಂಖ್ಯೆ ಎರಡು ಮೂರು ಸಾವಿರವಾದರೂ ಇರಬಹುದು. ಪದ ಸಂಪತ್ತು ಆಯಾ ಬಾಷೆಯನ್ನು ಬಳಸುವ ಜನರ ಮುಖ್ಯ ಕಸುಬನ್ನಾಧರಿಸಿ ಬೇರೆ ಬೇರೆ ಶಾಖೆಗಳಲ್ಲಿ ವಿಸ್ತರಿಸಿರುತ್ತದೆ. ಬೆಸ್ತರವನೊಬ್ಬನ ನೆನಪಿನಲ್ಲಿರುವಂತಹ ಮೀನುಗಳ ಹೆಸರುಗಳನ್ನು ಮತ್ತು ಅವಕ್ಕೆ ಸಂಬಂಧಿಸಿರುವ ಇತರ ಹೆಸರುಗಳನ್ನು ಸಂಗ್ರಹಿಸಿದರೆ ಒಂದು ಪದಕೋಶವೇ ಸಿದ್ಧವಾದೀತು. ಅಂತೂ ಈ ಒಂದು ವಿಷಯದಲ್ಲಿ ಯಾವ ಭಾಷೆಯನ್ನೂ ಕೀಳೆಂದು ಕರೆಯಲು ಸಾಧ್ಯವಾಗದು.

ವ್ಯಾಕರಣದ ವಿಷಯ ಇನ್ನೊಂದು ತೆರ. ಇದರ ಕ್ಲಿಷ್ಟತೆ ಇಲ್ಲವೇ ಸರಳತೆ ಬೆಳವಣಿಗೆಯ ವಿವಿಧ ಹಂತಗಳನ್ನು ಸೂಚಿಸುವುದೆಂದು ವಾದಿಸ ಹೊರಟ ವಿದ್ವಾಂಸರೆಲ್ಲ ಒಂದಕ್ಕೊಂದು ವಿರುದ್ಧವಾದ ಹೇಳಿಕೆಗಳನ್ನು ಕೊಟ್ಟು ನಗೆ ಗೀಡಾಗಿದ್ದಾರೆ. ಸಂಸ್ಕೃತದಂತೆ ತೀರ ಕ್ಲಿಷ್ಟವಾದ ರೂಪಾವಳಿಗಳನ್ನು ತೋರಿಸುವ ಭಾಷೆಗಳೇ ಬೆಳವಣಿಗೆಯ ತುತ್ತತುದಿಯನ್ನು ಮುಟ್ಟಿದವುಗಳೆಂದು ಹೇಳು ವವರನ್ನು ಸಂಸ್ಕೃತಕ್ಕಿಂತಲೂ ನಾಲ್ಕು ಪಾಲು ಜಾಸ್ತಿ ರೂಪಾವಳಿಗಳನ್ನು ತೋರಿಸುವ ಗಿರಿಜನರ ಭಾಷೆಗಳು ದಂಗುಗೊಳಿಸಿವೆ.

ನಾಗರಿಕರೆನ್ನಿಸುವ ಇಂಗ್ಲಿಷ್, ಫ್ರೆಂಚ್ ಮೊದಲಾದ ಜನಾಂಗಗಳ ಭಾಷೆ ಗಳಿಗೆ ಈ ವಿಕಾಸವಾದದಲ್ಲಿ ಬಹಳ ಕೆಳಗಿನ ಸ್ಥಾನ ದೊರೆತೀತು! ಯಾವ ರೀತಿಯ ರೂಪಾವಳಿಗಳನ್ನೂ ತೋರಿಸದ ‘ಸುಲಭ’ವಾದ ಭಾಷೆಗಳೇ ಬೆಳವಣಿಗೆಯ ತುತ್ತತುದಿಯನ್ನು ಮುಟ್ಟಿದವುಗಳೆಂದು ವಾದಿಸಿದಲ್ಲಿ, ಇಲ್ಲೂ ನಾಗರಿಕರ ಭಾಷೆಗಳನ್ನು ಮೀರಿ ನಿಲ್ಲಬಲ್ಲ ಗಿರಿಜನರ ಭಾಷೆಗಳಿವೆ.

ವ್ಯಾಕರಣಗಳು ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿವೆಯೆಂದು ಹೇಳಿ, ಇದರಲ್ಲಿ ಬೇರೆ ಬೇರೆ ವ್ಯಾಕರಣಗಳ ಸಾಪೇಕ್ಷ ಸ್ಥಾನವೇನೆಂಬುದನ್ನು ನಿರ್ಧರಿಸ ಹೊರಟ ವಿದ್ವಾಂಸರ ಪ್ರಯತ್ನವೂ ಹೀಗೆ ಸಂಪೂರ್ಣವಾಗಿ ನಿಷ್ಪಲಗೊಂಡಿದೆ ಯೆಂದು ಹೇಳಬಹುದು. ಇದುವರೆಗೆ ಭಾಷಾವಿಜ್ಞಾನಿಗಳ ಅಭ್ಯಾಸಕ್ಕೊಳಗಾ

ಗಿರುವ ಎಲ್ಲಾ ಸಾಹಜಿಕ ಭಾಷೆಗಳ ವ್ಯಾಕರಣಗಳೂ ಪರ್ಯಾಪ್ತಗಳಾಗಿಯೇ ಇರುವುದು ಕಂಡುಬಂದಿದೆ. ಇವು ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಿರ ಬಹುದು, ಆದರೆ, ಈ ಬದಲಾವಣೆಯನ್ನು ಬೆಳವಣಿಗೆಯ ಹಂತಗಳೆಂದು ಕರೆಯಲು ಯಾವ ಆಧಾರವೂ ಇದುವರೆಗೆ ದೊರಕಿಲ್ಲ.

Eke →

ಭಾಷೆ ಮತ್ತು ವ್ಯಾಕರಣ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ತಾಯ್ನುಡಿಯನ್ನು ಕಲಿಯುವಾಗ ಒಡಹುಟ್ಟಿದವರ, ತಾಯಿತಂದೆಯರ, ಮತ್ತು ಆಟದ ಗೆಳೆಯರ ಮಾತುಗಳನ್ನು ಕೇಳಿ ಕೇಳಿ, ಅವನ್ನು ಅರ್ಥ ಮಾಡಿಕೊಳ್ಳಲು ಮತ್ತು ಇತರರಿಗೆ ಅರ್ಥವಾಗುವಂತೆ ಅಂತಹವೇ ಮಾತು ಗಳನ್ನು ಸೃಷ್ಟಿಸಿಕೊಳ್ಳಲು ಅತ್ಯಂತ ಪರ್ಯಾಪ್ತವಾದ ‘ವ್ಯಾಕರಣ’ವೊಂದನ್ನು ರಚಿಸಿಕೊಳ್ಳಬೇಕಾಗುತ್ತದೆ. ಈ ವ್ಯಾಕರಣವೇ ಆ ವ್ಯಕ್ತಿಯ ಭಾಷಾಜ್ಞಾನವೆಂದು ವಿದ್ವಾಂಸರ ಅಭಿಪ್ರಾಯ. ಭಾಷೆಯನ್ನಾಡುವ ವ್ಯಕ್ತಿ ಪಂಡಿತನಿರಲಿ, ಪಾಮರ ನಿರಲಿ, ನಾಗರಿಕನಿರಲಿ, ಅನಾಗರಿಕನಿರಲಿ, ಇಂತಹ ಪರಿಪೂರ್ಣವಾದ ವ್ಯಾಕರಣದ ಸಹಾಯವಿಲ್ಲದೆ ಆತನಿಗೆ ತನ್ನ ಭಾಷೆಯನ್ನು ಉಪಯೋಗಿಸಲು ಸಾಧ್ಯವಾಗದು.

ಆದರೆ, ಇಂತಹದೊಂದು ವ್ಯಾಕರಣಜ್ಞಾನ ತನ್ನಲ್ಲಿದೆಯೆಂದಾಗಲಿ, ಅದರ ಸ್ವರೂಪವೆಂತದೆಂದಾಗಲಿ ಅವನಿಗೆ ತಿಳಿದಿಲ್ಲ. ಅವನು ಮಾತನಾಡುವಾಗ ನೂರಾರು ವ್ಯಾಕರಣ ನಿಯಮಗಳು ಬಳಕೆಯಾಗುವುವಾದರೂ, ಆ ನಿಯಮಗಳು ಎಂತಹವೆಂಬುದನ್ನು ಆತ ವಿವರಿಸಿ ಹೇಳಲಾರ. ಮಾತನಾಡುವಾಗ ಅವನ ಅರಿವಿಲ್ಲದಂತೆಯೇ ಅವನ ಸಹಾಯಕ್ಕೆ ಬರುವಂತೆ ಈ ವ್ಯಾಕರಣ ಜ್ಞಾನ ಅವನ ಮಿದುಳಿನಲ್ಲಿ ಅಡಗಿ ಕುಳಿತಿದೆ.

ತನ್ನ ಭಾಷೆಯಲ್ಲಿ ಇದುವರೆಗೆ ಕೇಳದೇ ಇದ್ದಂತಹ ಮಾತುಗಳನ್ನು ರಚಿಸಿ ಆಡಿದರೂ ಆತ ಅರ್ಥಮಾಡಿಕೊಳ್ಳಬಲ್ಲ, ಮತ್ತು ಅಂತಹ ಮಾತುಗಳನ್ನು ಆತ ತಾನೇ ರಚಿಸಿಕೊಳ್ಳಬಲ್ಲ ಎಂಬ ವಿಷಯದಿಂದ ಇಂತಹದೊಂದು ವ್ಯಾಕರಣಜ್ಞಾನ ಅವನಲ್ಲಿ ಇರಲೇಬೇಕೆಂದು ನಾವು ಊಹಿಸಿಕೊಳ್ಳಬೇಕಾಗುತ್ತದೆ. ಈ ವ್ಯಾಕರಣ ಅಪೂರ್ಣವಾಗಿರಲಾರದು.

Eke →

೧.೨ ಭಾಷೆಗಳ ಹುಟ್ಟು-ಸಾವು

ಮಗುವೊಂದು ಹುಟ್ಟಿ ಬೆಳೆಯುತ್ತಿರುವಂತೆ ಅದರ ತೊದಲು ನುಡಿಯಾಗಿ ಹುಟ್ಟಿ, ಬೆಳೆದು, ಅದು ಮುದುಕನಾಗಿ ಸಾಯುವಾಗ ಇಲ್ಲವೇ ಬೇರಾವುದೋ ಕಾರಣ ದಿಂದ ಮೂಕನಾಗುವಾಗ ನಶಿಸಿ ಹೋಗುವಂತಹ ಭಾಷೆ, ಒಂದು ವಿಧದಲ್ಲಿ ಅದಕ್ಕೆ ಆಧಾರವಾಗಿರುವಂತಹ ವ್ಯಕ್ತಿಯೊಂದಿಗೆ ಹುಟ್ಟಿ ಸಾಯುವುದೆಂದೂ

ವಾದಿಸಬಹುದು. ಆದರೆ, ಆ ವ್ಯಕ್ತಿಯಿಂದ ಅವನ ಮಕ್ಕಳಿಗೆ, ಅವರಿಂದ ಅವರ ಮಕ್ಕಳಿಗೆ - ಹೀಗೆ ಅನವರತವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುವ ಇದೇ ಭಾಷೆ ಇನ್ನೊಂದು ವಿಧದಲ್ಲಿ ನಶ್ವರವಾಗಿರುವುದೆಂದೂ ವಾದಿಸಬಹುದು. ಭಾಷೆ ಯೊಂದರ ಹುಟ್ಟು-ಸಾವುಗಳ ಪ್ರಶ್ನೆ ನಿಜಕ್ಕೂ ಇವೆರಡು ವಾದಗಳ ನಡುವೆ ನಿಂತಿದೆ.

ಯಾವುದೇ ಒಂದು ಭಾಷೆಯನ್ನು ನಶ್ವರವಾಗಿಸುವಂತಹ ಒಂದು ಸಮಾಜದ ನಿರಂತರತೆ ಸಾವು-ನೋವುಗಳಿಂದಾಗಿ ಕಡಿದು ಹೋದಲ್ಲಿ, ಆ ಸಮಾಜದೊಡನೆ ಅದರ ಭಾಷೆಯೂ ನಷ್ಟವಾಗಿ ಹೋಗಲು ಸಾಧ್ಯವಿದೆಯೆಂಬುದನ್ನು ಗಮನಿಸ ಬೇಕು. ಉದಾಹರಣೆಗಾಗಿ, ಅಮೆರಿಕದ ಮೂಲ ನಿವಾಸಿಗಳಲ್ಲಿ ಬಳಕೆಯಲ್ಲಿದ್ದ ಹಲವಾರು ಭಾಷೆಗಳು ಆ ಮೂಲನಿವಾಸಿಗಳು ನಿರ್ನಾಮಗೊಂಡಾಗ ಅವರೊಡ ನೆಯೇ ನಷ್ಟವಾಗಿರುವುದು ಕಂಡುಬರುತ್ತದೆ. ಆಸ್ಟ್ರೇಲಿಯಾದ ಮೂಲ ನಿವಾಸಿ ಗಳಲ್ಲೂ ಇದೇ ಪರಿಸ್ಥಿತಿ ನಡೆದಿದೆ.

ಭಾರತದಲ್ಲೂ ಹಲವಾರು ಗುಡ್ಡಕಾಡುಗಳಲ್ಲಿ ವಾಸಿಸುತ್ತಿದ್ದ ಜನರ ಭಾಷೆ ಗಳು ಈ ರೀತಿ ನಷ್ಟವಾಗಿರುವುದು, ಮತ್ತು ನಷ್ಟವಾಗುತ್ತಿರುವುದು ಕಂಡು ಬರುತ್ತಿದೆ. ಒಂದು ಸಮಾಜವು ತನ್ನ ತಾಯ್ನುಡಿಯನ್ನು ಬಿಟ್ಟುಕೊಟ್ಟು ಬೇರೊಂದು ನುಡಿಯನ್ನು ಬಳಸಲು ಪ್ರಾರಂಭಿಸಿದಾಗಲೂ ಇದೇ ಫಲಿತಾಂಶ ಲಭಿಸುತ್ತದೆ. ಉದಾಹರಣೆಗಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುವ ಕೊರಗರು ತಮ್ಮದೇ ಆದ ಕೊರಗ ಎಂಬ ಭಾಷೆಯನ್ನಾಡುತ್ತಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ವಾಸಿಸುವ ಕೊರಗರೆಲ್ಲ ತಮ್ಮ ಈ ಕೊರಗ ಭಾಷೆಯನ್ನು ಬಿಟ್ಟುಕೊಟ್ಟು ತುಳು ಭಾಷೆಯನ್ನೇ ತಮ್ಮ ತಾಯ್ನುಡಿ ಯನ್ನಾಗಿ ಅಳವಡಿಸಿಕೊಂಡಿದ್ದಾರೆ. ಉಳಿದವರೂ ಇದೇ ದಾರಿ ಹಿಡಿದಲ್ಲಿ, ಈ ಕೊರಗ ಭಾಷೆ ಇನ್ನೊಂದೆರಡು ತಲೆಮಾರುಗಳಲ್ಲಿ ಸಂಪೂರ್ಣ ವಾಗಿ ನಶಿಸಿ ಹೋಗಬಲ್ಲುದು.

Eke →

ತಾಯ್ನುಡಿ

ಭಾಷೆಗಳಿಗೆ ಕಲ್ಪಿತವಾಗಿರುವ ಇನ್ನೊಂದು ವಿಧದ ನಾಶ ಇಲ್ಲವೇ ಸಾವಿಗೆ ಸಂಸ್ಕೃತ ಭಾಷೆ ಅತ್ಯುತ್ತಮ ಉದಾಹರಣೆ. ಸಾಮಾನ್ಯವಾಗಿ ಪ್ರತಿಯೊಂದು ಭಾಷೆಯಲ್ಲೂ ಹಲವಾರು ಪ್ರಭೇದಗಳು (ಉಪಭಾಷೆಗಳು) ಬಳಕೆಯಲ್ಲಿರುತ್ತವೆ. ಇವು ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳಿರಬಹುದು, ಇಲ್ಲವೇ ಬೇರೆ ಬೇರೆ ಜಾತಿಗಳಲ್ಲಿ ಅಥವಾ ಪಂಗಡಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳಿರಬಹುದು. ಇಂತಹ ಪ್ರಭೇದಗಳಲ್ಲಿ ಯಾವುದಾದರೂ ಒಂದು ಪ್ರಭೇದವು ಬರವಣಿಗೆಯ ಪ್ರಭೇದವೆಂದು ಪರಿಗಣಿಸಲ್ಪಟ್ಟು, ಸಾಹಿತ್ಯ ಕೃತಿ ಗಳಲ್ಲಿ ಬಳಕೆಯಾಗುತ್ತದೆ.

ಆಡುನುಡಿಯಾಗಿ ಬಳಕೆಯಾಗುವ ಪ್ರಭೇದಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ನಡೆಯುವುವಾದರೂ, ಈ ರೀತಿ ಬರವಣಿಗೆಯಲ್ಲಿ ಬಳಕೆಯಾಗುವ ಪ್ರಭೇದ ಮಾತ್ರ, ಬೇರೆ ಬೇರೆ ಕಾರಣಗಳಿಂದಾಗಿ, ಕೆಲವೊಮ್ಮೆ ಬಹಳ ಕಾಲದ ವರೆಗೂ ಜಾಸ್ತಿ ಬದಲಾಗದೆ ಉಳಿಯುವುದಿದೆ. ಆ ಪ್ರಭೇದದಲ್ಲಿ ಉತ್ತಮವಾದ ಸಾಹಿತ್ಯ ಕೃತಿಗಳು ರಚಿತವಾಗಿದ್ದು, ಅಂತಹ ಕಾರ್ಯಕ್ಕೆ ಆ ಪ್ರಭೇದವನ್ನು ಬಳಸುವುದು ಅನಿವಾರ್ಯವೆಂಬ ಅಭಿಪ್ರಾಯ ಬೆಳೆದು ಬರುವುದು ಇಂತಹ ಕಾರಣಗಳಲ್ಲಿ ಮುಖ್ಯವಾದುದು.

ಕಾಲಕ್ರಮೇಣ, ಆಡುನುಡಿ ಮತ್ತು ಈ ಬರಹದ ಪ್ರಭೇದಗಳ ನಡುವೆ ಅವು ಬೇರೆ ಬೇರೆ ಭಾಷೆಗಳೆನ್ನುವಲ್ಲಿವರೆಗೂ ವ್ಯತ್ಯಾಸಗಳೇರ್ಪಡುತ್ತವೆ, ಮತ್ತು ಕ್ರಾಂತಿಕಾರಿಗಳ ಕೈಯಲ್ಲಿ ಈ ಆಡುನುಡಿಯೂ ಬರಹಗಳಲ್ಲಿ ಬಳಕೆಯಾಗ ತೊಡಗುತ್ತದೆ. ಇದರ ಪರಿಣಾಮವಾಗಿ, ಹೆಚ್ಚಿನವರಿಗೂ ಸುಲಭದಲ್ಲಿ ಅರ್ಥ ವಾಗುವ ಆಡುನುಡಿ ಹಳೆಯ ಕಾಲದಿಂದಲೂ ಪ್ರಚಾರದಲ್ಲಿದ್ದ ಬರಹದ ಭಾಷೆಯ ಸ್ಥಾನವನ್ನು ಆಕ್ರಮಿಸತೊಡಗುತ್ತದೆ. ಈ ಆಕ್ರಮಣ ಸಂಪೂರ್ಣ ವಾದಾಗ, ಎಂದರೆ ಹಳೆಯ ಬರಹದ ಪ್ರಭೇದವನ್ನು ಬಳಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ, ಇಲ್ಲವೇ ಇಲ್ಲವೆನ್ನುವಂತಾದಾಗ, ಅದು ‘ಸತ್ತಿತು’ ಎನ್ನುವ ಸ್ಥಿತಿ ಬಂದೊದಗುತ್ತದೆ.

ಸಂಸ್ಕೃತದ ಸ್ಥಾನವನ್ನು ಅದರ ಆಡುನುಡಿಗಳಾದ ಪ್ರಾಕೃತ, ಹಿಂದಿ, ಮರಾಠಿ, ಗುಜರಾತಿ ಮೊದಲಾದವುಗಳು ಆಕ್ರಮಿಸಿಕೊಂಡು, ಅದನ್ನು ಬರಹದಲ್ಲಿ (ಸಾಹಿತ್ಯ ರಚನೆಯಲ್ಲಿ) ಬಳಸುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ ಯೆಂಬುದನ್ನೇ ಅದು ‘ಸಾವ’ನ್ನಪ್ಪುತ್ತಿದೆಯೆಂದು ವರ್ಣಿಸಬಹುದು. ಇದು ಸಂಸ್ಕೃತ ಭಕ್ತರಿಗೆ ಅಪ್ರಿಯವಾಗಿ ಕಾಣಿಸಬಹುದಾದರೂ ನಿಜವಾದ ಸಂಗತಿ.

Eke →

ಭಾಷೆಯ ಹುಟ್ಟು

ಭಾಷೆಗಳು ಹೇಗೆ ಸತ್ತುಹೋಗಬಲ್ಲುವೆಂಬುದನ್ನು ವಿವರಿಸಿದಷ್ಟು ಸುಲಭವಾಗಿ ಅವು ಹೇಗೆ ಹುಟ್ಟಿಕೊಳ್ಳಬಲ್ಲುವೆಂಬುದನ್ನು ವಿವರಿಸಲು ಸಾಧ್ಯವಾಗದು. ಒಂದು ಭಾಷೆಯನ್ನು ಬಳಸುತ್ತಿರುವ ಸಮಾಜವು ಬೇರೆ ಬೇರೆ ಕಾರಣಗಳಿಂದಾಗಿ ಎರಡು ಭಿನ್ನ ಭಿನ್ನವಾದ ಸಮಾಜಗಳಾಗಿ ಒಡೆದುಕೊಂಡಾಗ, ಅದು ಬಳಸುವ ಭಾಷೆಯೂ ಆ ಎರಡು ಸಮಾಜಗಳಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ಬದಲಾಗುತ್ತ ನಡೆದು, ಕೊನೆಗೆ ಎರಡು ಬೇರೆ ಬೇರೆ ಭಾಷೆಗಳಾಗಿ ಒಡೆದುಕೊಳ್ಳಲು ಸಾಧ್ಯವಿದೆ. ಆದರೆ, ಇದರಿಂದಾಗಿ ಒಂದು ಭಾಷೆ ಎರಡಾಯಿತೆಂದು ಹೇಳ ಬಹುದಲ್ಲದೆ, ಹೊಸದೊಂದು ಭಾಷೆ ಹುಟ್ಟಿಕೊಂಡಿತೆಂದು ವಾದಿಸುವುದು ಕಷ್ಟ ಸಾಧ್ಯ.

ಭೂಮಿಯ ಹುಟ್ಟನ್ನು ಮತ್ತು ಅದರಲ್ಲಿರುವ ಜೀವರಾಶಿಗಳ ವಿಕಾಸವನ್ನು ಸುಸಂಬದ್ಧವಾಗಿ ಕಲ್ಪಿಸಿಕೊಳ್ಳಲು ಆತುರರಾಗಿರುವಂತಹ ಜೀವ ವಿಜ್ಞಾನಿಗಳಿಗೆ

ಮನುಷ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಭಾಷೆಯೆಂಬ ಹೆಸರಿನ ಈ ವಿಶಿಷ್ಟ ವಾದ ಸಂಪರ್ಕ ಸಾಧನವು ಹೇಗೆ ಹುಟ್ಟಿಕೊಂಡಿರಬೇಕೆಂಬುದನ್ನು ಸರಿಯಾಗಿ ಪ್ರತಿಪಾದಿಸಲು ಸಾಧ್ಯವಾಗುವಲ್ಲಿವರೆಗೂ ಸಮಾಧಾನವಿಲ್ಲ. ಈ ವಿಷಯದಲ್ಲಿ ಹುಟ್ಟಿಕೊಂಡಿರುವ ಸಿದ್ಧಾಂತಗಳ ಮತ್ತು ಅವುಗಳ ಮೇಲೆ ಬರೆಯಲಾಗಿರುವ ಪುಟಗಳ ಸಂಖ್ಯೆಯೂ ಈ ವಿಷಯವೆಷ್ಟು ಜನಪ್ರಿಯವಾಗಿತ್ತೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಮನುಷ್ಯನಲ್ಲಿ ಮಾತ್ರವೇ ಕಾಣಿಸುವ ಈ ಭಾಷೆ ಮನುಷ್ಯನು ವಿಕಾಸ ಗೊಂಡು ಇತರ ಜೀವಿಗಳಿಂದ ಬೇರ್ಪಡುತ್ತಿದ್ದ ಸಮಯದಲ್ಲಿ ಹುಟ್ಟಿಕೊಂಡಿರ ಬೇಕೆಂದೇನೋ ವಾದಿಸಬಹುದು. ಆದರೆ ಭಾಷೆ ಬಾರದ ಇತರ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಯಾವ ರೀತಿಯ ಸಂಪರ್ಕಸಾಧನಗಳೂ ಈ ಹುಟ್ಟು ಹೇಗಿರ ಬಹುದೆಂಬುದನ್ನು ತಿಳಿಯಲು ಸಹಾಯಕವಾಗುತ್ತಿಲ್ಲ.

ಭಾಷಾವಿಜ್ಞಾನಿಗಳೂ ಈ ವಿಷಯದ ಮೇಲೆ ಬಹಳಷ್ಟು ವಾದ ವಿವಾದ ಗಳನ್ನು ನಡೆಸಿದ್ದಾರೆ. ಮಕ್ಕಳಲ್ಲಿ, ಮುದುಕರಲ್ಲಿ, ಸಂತ್ರಸ್ತರಲ್ಲಿ, ಕಿವುಡರಲ್ಲಿ, ಭಾಷೆಯೇ ಬಾರದ ಪ್ರಾಣಿಗಳಲ್ಲಿ – ಹೀಗೆ ಎಲ್ಲಾ ಕಡೆಗಳಲ್ಲೂ ಭಾಷೆಯ ಉಗಮವನ್ನರಿಯಲು ಸುಳುಹುಗಳೇನಾದರೂ ದೊರೆಯುವುದೇ ಎಂಬುದಾಗಿ ಪ್ರಯತ್ನಪಟ್ಟು ಹುಡುಕಿದ್ದಾರೆ. ಮತ್ತು ಇವೆಲ್ಲಾ ಪ್ರಯತ್ನಗಳೂ ನಿಷ್ಫಲಗಳಾಗು ತಿರುವುದನ್ನು ಕಂಡು, ಈ ಕೆಲಸ ಭಾಷಾವಿಜ್ಞಾನಿಗಳದೇ ಅಲ್ಲವೆಂದು, ಅಥವಾ ಇದನ್ನು ಪೂರ್ತಿಗೊಳಿಸಲು ಸಾಧ್ಯವೇ ಇಲ್ಲವೆಂದು ಹಲವು ಮಂದಿ ವಿದ್ವಾಂಸರು ವಾದಿಸಿದ್ದಾರೆ. ಈ ರೀತಿಯ ನಿರಾಶಾವಾದಕ್ಕೆ ಕಾರಣವಿಲ್ಲ ದಿಲ್ಲ.

Eke →

ಆಧಾರಗಳ ಕೊರತೆ

ಇಂದು ಬಳಕೆಯಲ್ಲಿರುವ ಭಾಷೆಗಳ ಆಧಾರದ ಮೇಲೆ, ಮತ್ತು ನಮಗೆ ದೊರೆತಿರುವ ಅತೀ ಪ್ರಾಚೀನವಾದ ಭಾಷಾವಿಷಯಕ ಅವಶೇಷಗಳ ಆಧಾರದ ಮೇಲೆ, ಹಲವಾರು ಮೂಲಭಾಷೆಗಳನ್ನು ಕಲ್ಪಿಸಲಾಗಿದೆ. ಆದರೆ ಇವುಗಳಲ್ಲಿ ಯಾವುದೂ ಆಧುನಿಕ ಭಾಷೆಗಳಿಗಿಂತ ಅವುಗಳ ಧ್ವನಿಯಲ್ಲಾಗಲಿ, ವ್ಯಾಕರಣ ದಲ್ಲಾಗಲಿ ಸ್ವಲ್ಪವೂ ಭಿನ್ನವಾಗಿಲ್ಲ. ಭಾಷೆಯ ಉಗಮವು ಇಂತಹ ಕಲ್ಪಿತ ಮೂಲಗಳಿಂದ ಮಿಲಿಯಗಟ್ಟಲೆ ವರ್ಷಗಳಷ್ಟು ಹಿಂದಿನದಾಗಿರಬೇಕೆಂಬುದೇ ಇದಕ್ಕೆ ಮುಖ್ಯ ಕಾರಣವಿರಬಹುದು. ಆ ಉಗಮ ಹೇಗಿದ್ದಿರಬಹುದು ಎಂಬು ದನ್ನು ಊಹಿಸುವುದಕ್ಕೂ ಕೂಡ ಈ ಕಲ್ಪಿತ ಮೂಲಗಳಲ್ಲಿ ಸೂಚನೆ ದೊರೆಯು ತ್ತಿಲ್ಲ.

ಪ್ರಪಂಚದಲ್ಲಿರುವ ಬೇರೆ ಬೇರೆ ಭಾಷೆಗಳನ್ನು ತುಲನಾತ್ಮಕವಾಗಿ ಅಭ್ಯಸಿಸಿ, ಭಾಷಾವಿಕಾಸದ ಬೇರೆ ಬೇರೆ ಹಂತಗಳಲ್ಲಿ ಅವನ್ನು ಹಂಚಿಕೊಳ್ಳಲು ನಡೆಸಿದ ಪ್ರಯತ್ನಗಳೂ ಇದೇ ರೀತಿಯಲ್ಲಿ ನಿಷ್ಪಲಗೊಂಡಿವೆ. ಬೆಳೆದಂತೆಲ್ಲ ಒಂದು ಭಾಷೆಯ ವ್ಯಾಕರಣ ಸಂಸ್ಕೃತ ಭಾಷೆಯಲ್ಲಿರುವಂತೆ ಕ್ಲಿಷ್ಟವಾಗುತ್ತ ನಡೆಯುವು

ದೆಂದು ಭಾವಿಸುವವರಿಗೆ ಸಂಸ್ಕೃತಜನ್ಯಗಳಾದ ಹಿಂದಿ, ಮರಾಠಿ ಮೊದಲಾ ದವುಗಳ ಇಲ್ಲವೇ ಲ್ಯಾಟಿನ್‌ನಿಂದ ಬೆಳೆದು ಬಂದ ಫ್ರೆಂಚ್, ಸ್ಪ್ಯಾನಿಷ್ ಮೊದಲಾದವುಗಳ ವ್ಯಾಕರಣಗಳು ಲಲಿತವಾಗುತ್ತಿರುವುದು ದೊಡ್ಡ ತಲೆ ನೋವನ್ನೇ ತಂದೊಡ್ಡಿದೆ.

ಈ ವಾದಕ್ಕೆ ವಿರುದ್ಧವಾಗಿ, ಭಾಷೆ ಬೆಳೆದಂತೆಲ್ಲ ಅದರ ವ್ಯಾಕರಣ ಲಲಿತ ವಾಗುತ್ತಾ ಹೋಗುತ್ತದೆಯೆಂದು ವಾದಿಸುವವರಿಗೂ ಎದುರು ನಿಲ್ಲಬಲ್ಲ ನಿದರ್ಶನಗಳು ಹಲವಿವೆ. ಕ್ಲಿಷ್ಟ-ಲಲಿತ ಎಂಬಂತಹ ವಿಶೇಷಣಗಳು ಭಾಷೆಗಳಿಗೆ ಅನ್ವಯಿಸುವಂತಹವೇ ಅಲ್ಲವೆಂಬುದು ಆಧುನಿಕ ಸಿದ್ದಾಂತವಾಗಿರುವಾಗ, ಈ ಮೇಲಿನ ವಾದಗಳಿಗೆಲ್ಲ ನಿಜಕ್ಕೂ ಯಾವ ಬೆಲೆಯೂ ಇಲ್ಲ.

ಭಾಷೆಯ ಉಗಮದ ಕುರಿತು ವಾದವಿವಾದಗಳನ್ನು ನಡೆಸುತ್ತಿರುವವರಲ್ಲಿ ಹೆಚ್ಚಿನವರೂ ಅದು ಮೊತ್ತಮೊದಲಿಗೆ ಅತ್ಯಂತ ರೂಕ್ಷ ರೂಪದಲ್ಲಿದ್ದು, ಕ್ರಮೇಣ ಅದನ್ನಾಡುವ ಜನ ಹೆಚ್ಚು ಹೆಚ್ಚು ನಾಗರಿಕರಾದಂತೆ ಅವರ ಭಾಷೆಯೂ ಮೆಲ್ಲಮೆಲ್ಲನೆ ಪರಿಷ್ಕೃತಗೊಳ್ಳುತ್ತ ಇಂದಿನ ವಿಶಿಷ್ಟ ರೂಪವನ್ನು ತಳೆದಿರ ಬೇಕೆಂದು ಭಾವಿಸುತ್ತಾರೆ. ಭಾಷೆಯ ಉಗಮವನ್ನು ಅನುಕರಣಾತ್ಮಕ ಪದ ಗಳಿಂದ, ಪ್ರಾಣಿಗಳ ಕೂಗುಗಳಿಂದ, ಇಲ್ಲವೇ ಬೇರೆ ಅತಿ ಸರಳವಾದ ಪದ ಗಳಿಂದ ಸಾಧಿಸಲು ಇವರು ಪ್ರಯತ್ನಿಸುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಆದರೆ, ಜೀವರಾಶಿಗಳ ಮತ್ತು ಅವುಗಳ ವಿಶೇಷಗುಣಗಳ ವಿಕಾಸವು ಈ ರೀತಿ ಸಾವಧಾನವಾಗಿ, ಸ್ವಲ್ಪ ಸ್ವಲ್ಪವೇ ಬದಲಾಗುತ್ತ ನಡೆದಿರಬೇಕೆಂದು ವಾದಿಸುವು ದಕ್ಕೆ ಇದುವರೆಗೆ ಯಾವ ಆಧಾರವೂ ದೊರೆತಿಲ್ಲ.

Eke →

ದೈವದತ್ತವಾದ ವರ

ಯಾವುದೇ ಒಂದು ಜೀವಿಯ ಆಂತರಿಕ ರಚನೆಯಲ್ಲಿ ಇದ್ದಕ್ಕಿದ್ದಂತೆ ವಿಶಿಷ್ಟವಾದ ಬದಲಾವಣೆ ನಡೆದು, ಅದು ಬೆಳೆದುಬರುವಾಗ ಹೊಸ ಹೊಸ ಚಾತುರ್ಯ ಗಳನ್ನು ಕೈವಶಮಾಡಿಕೊಳ್ಳುವಂತಹ ನವೀನವಾದೊಂದು ಶಕ್ತಿಯನ್ನು ಪಡೆದು ಕೊಳ್ಳಲು ಸಾಧ್ಯವಿದೆ; ಮತ್ತು ಮಾನವನ ವಿಕಾಸದಲ್ಲಾದ ಇಂತಹದೇ ಒಂದು ಆಂತರಿಕ ಬದಲಾವಣೆಯ ಫಲವಾಗಿ ಭಾಷೆಯೂ ಹುಟ್ಟಿಕೊಂಡಿರಬಹುದೆಂದು ಕೆಲವರು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಉಣ್ಣುವುದು, ನಡೆಯುವುದು ಮೊದಲಾದ ಇತರ ಕಾರ್ಯಗಳಂತೆ ಭಾಷೆಯೂ ಸಾಹಜವಾಗಿ, ವ್ಯಕ್ತಿಯೊಬ್ಬನ ಬೆಳವಣಿಗೆಯ ಅಂಗವಾಗಿ ಮೂಡಿ ಬರುವಂತಹದು, ಅದನ್ನು ಯಾರೂ ಪ್ರಯತ್ನ ಪೂರ್ವಕವಾಗಿ ಕಲಿಯಬೇಕಾಗಿಲ್ಲ ಮತ್ತು ಕಲಿಸಬೇಕಾಗಿಲ್ಲ ಎಂಬ ಸಿದ್ಧಾಂತವೊಂದನ್ನು ಈ ಅಭಿಪ್ರಾಯವನ್ನಾಧರಿಸಿ ಮಂಡಿಸಲಾಗಿದೆ. ಇದು ನಿಜವಾದರೆ, ಭಾಷೆಯು ಮಾನವನಿರ್ಮಿತವಲ್ಲ, ದೈವ ದತ್ತವಾದುದು ಎನ್ನುವ ಹಳೆಯ ಹೇಳಿಕೆಯು ಒಂದು ಮಟ್ಟಿಗೆ ಸರಿಯೇ ಎಂದೂ ವಾದಿಸಿದಂತಾದೀತು.

Eke →

೧.೩ ಭಾಷೆಗಳಲ್ಲಿ ಹಳತು-ಹೊಸತು

ಕರ್ಣಾಟಕದ ಕರಾವಳಿಯ ಜಿಲ್ಲೆಗಳಲ್ಲಿ ನೆಲೆಸಿರುವ ಹವ್ಯಕ, ಹಾಲಕ್ಕಿ, ಗೌಡ ಮೊದಲಾದ ಕನ್ನಡವನ್ನಾಡುವ ಕೆಲವು ಜನಾಂಗಗಳ ಮಾತನ್ನು ‘ಹಳಗನ್ನಡ’ ವೆಂದು ಕರೆಯುವ ಕ್ರಮವಿದೆ. ಆಧುನಿಕ ಬರಹದ ಕನ್ನಡಕ್ಕೂ ಈ ಜನರ ಮಾತಿಗೂ ನಡುವಿರುವ ವ್ಯತ್ಯಾಸಗಳು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಿನ ಪಂಪ-ರನ್ನರ ಕಾಲದ ಕನ್ನಡವನ್ನು ನೆನಪಿಗೆ ತರುವುದೇ ಇದಕ್ಕೆ ಕಾರಣ ವಿರಬೇಕು.

ಆದರೆ, ಅತ್ಯಾಧುನಿಕ ಕಾಲದಲ್ಲೇ ರೂಢಿಯಲ್ಲಿರುವ ಪ್ರಚಲಿತ ಭಾಷಾರೂಪ ವೊಂದನ್ನು ಈ ರೀತಿ ‘ಹಳೆ’ಯ ಕಾಲದ್ದೆಂದು ಕರೆಯುವುದರಲ್ಲಿ ಶಾಸ್ತ್ರೀಯ ವಾದಂತಹ ಔಚಿತ್ಯವೇನಾದರೂ ಇದೆಯೇ ಎಂಬುದನ್ನು ವಿಚಾರಿಸುವುದು ಅವಶ್ಯ.

Eke →

ಪರಿವರ್ತನೆಯ ಫಲ

ಕಾಲದಿಂದ ಕಾಲಕ್ಕೆ ಭಾಷೆಗಳು ಬದಲಾಗುತ್ತಾ ಹೋಗುವುವೆಂಬುದನ್ನು ಎಲ್ಲರೂ ಬಲ್ಲರು. ಹಳೆಗನ್ನಡವಿದ್ದದ್ದು ನಡುಗನ್ನಡವಾಗಿರುವುದು, ಮತ್ತು ನಡುಗನ್ನಡ ವಿದ್ದದ್ದು ಹೊಸಗನ್ನಡವಾಗಿರುವುದು ಇದಕ್ಕೊಂದು ಉತ್ತಮ ಉದಾಹರಣೆ. ಈ ರೀತಿ ಪರಿವರ್ತನೆಗೊಳ್ಳುವಾಗ, ಭಾಷೆಯಲ್ಲಿರುವ ಪದಗಳ ಉಚ್ಚಾರಣೆಯಲ್ಲಿ ಹಲವಾರು ವ್ಯತ್ಯಾಸಗಳು ತೋರಿಬರುತ್ತವೆ. ಇದಲ್ಲದೆ, ಆ ಭಾಷೆಯ ಪದಗಳಲ್ಲಿ ಕೆಲವು ರೂಢಿಯಿಂದ ಬಿದ್ದು ಹೋಗುತ್ತವೆ, ಮತ್ತು ಅವುಗಳ ಸ್ಥಾನದಲ್ಲಿ ಹೊಸ ಹೊಸ ಪದಗಳು ನಿರ್ಮಾಣಗೊಂಡು ರೂಢಿಗೆ ಬರುತ್ತವೆ. ನೆರೆಹೊರೆಯ ಭಾಷೆ ಗಳಿಂದಲೂ ಪದಗಳು ಎರವಲಾಗಿ ಬಂದು ಈ ಭಾಷೆಯಲ್ಲಿ ಸೇರಿಕೊಳ್ಳುತ್ತವೆ.

ಹೀಗೆ ಬೇರೆ ಬೇರೆ ರೀತಿಯಲ್ಲಿ ಉಂಟಾಗುವ ಬದಲಾವಣೆಗಳು ಒಂದು ಪ್ರದೇಶದಲ್ಲಿ ನಡೆದ ಹಾಗೆ ಇನ್ನೊಂದು ಪ್ರದೇಶದಲ್ಲಿ ನಡೆಯುವುದಿಲ್ಲ, ಒಂದು ಜಾತಿಯಲ್ಲಿ ನಡೆದ ಹಾಗೆ ಇನ್ನೊಂದು ಜಾತಿಯಲ್ಲಿ ನಡೆಯುವುದಿಲ್ಲ, ಒಂದು ಪಂಗಡದಲ್ಲಿ ನಡೆದ ಹಾಗೆ ಇನ್ನೊಂದು ಪಂಗಡದಲ್ಲಿ ನಡೆಯುವುದಿಲ್ಲ. ಇದರಿಂದಾಗಿ, ಊರಿನಿಂದ ಊರಿಗೆ, ಜಾತಿಯಿಂದ ಜಾತಿಗೆ, ಮತ್ತು ಪಂಗಡ ದಿಂದ ಪಂಗಡಕ್ಕೆ ಆಡುಮಾತಿನಲ್ಲಿ ವ್ಯತ್ಯಾಸಗಳು ಮೂಡಿಬರುತ್ತವೆ.

ಹಳೆಗನ್ನಡದ ಕಾಲದಿಂದ ಹೊಸಗನ್ನಡದ ಕಾಲಕ್ಕೆ ಬರಬೇಕಾದರೆ, ಇಂತಹ ಹಲವಾರು ಬದಲಾವಣೆಗಳನ್ನು ದಾಟಿಕೊಂಡು ಬರಬೇಕು. ಈ ಬದಲಾವಣೆ ಗಳಲ್ಲಿ ಕೆಲವು ಇಡೀ ಕನ್ನಡ ನಾಡನ್ನೇ ವ್ಯಾಪಿಸಿಕೊಂಡಂತಹವುಗಳು. ಇನ್ನು ಕೆಲವು ಕನ್ನಡ ನಾಡಿನಿಂದ ಹೊರಗೆ ಬೇರೆ ಭಾಷೆಗಳಿಗೂ ಹಬ್ಬಿದವುಗಳು. ಬೇರೆ

ಕೆಲವು ಕನ್ನಡನಾಡಿನೊಳಗೆ ಒಂದು ಪ್ರದೇಶ, ಜಾತಿ ಇಲ್ಲವೇ ಪಂಗಡಕ್ಕೆ ಮಾತ್ರವೇ ಸಂಬಂಧಿಸಿರುವವುಗಳು.

ಉದಾಹರಣೆಗಾಗಿ, ಹಳೆಗನ್ನಡ ಪದಗಳ ಆದಿಯಲ್ಲಿ ಬರುವ ಪಕಾರವು ಸುಮಾರು ಹತ್ತನೆಯ ಶತಮಾನದಲ್ಲಿ ಹಕಾರವಾಗಿ ಪರಿವರ್ತಿತವಾಯಿತು. ಈ ಬದಲಾವಣೆಯ ಪರಿಣಾಮವಾಗಿ, ಹಳೆಗನ್ನಡದ ಪಾಲ್ ಇಂದು ಹಾಲು ಎಂದಾಗಿದೆ, ಪತ್ತು ಎಂಬುದು ಹತ್ತು ಎಂದಾಗಿದೆ, ಪೋಗು ಎಂಬುದು ಹೋಗು ಎಂದಾಗಿದೆ, ಪೆಣ್ ಎಂಬುದು ಹೆಣ್ಣು ಎಂದಾಗಿದೆ.

ಇದೇ ರೀತಿಯಲ್ಲಿ, ಹಳೆಗನ್ನಡದಲ್ಲಿದ್ದ ಅ-ಳ ಭೇದ ಮತ್ತು ಅ-ರ ಭೇದಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ. ಆದರೆ, ಇವುಗಳಲ್ಲಿ ಅ-ರ ಭೇದ ಕನ್ನಡದ ಎಲ್ಲಾ ಪ್ರಭೇದಗಳಲ್ಲೂ ನಷ್ಟವಾಗಿಲ್ಲ. ಸೊಲಿಗರು ಮತ್ತು ಬಡಗರು ಬಳಸುವ ಕನ್ನಡದ ಪ್ರಭೇದಗಳಲ್ಲಿ ಈ ಭೇದ ಇಂದಿಗೂ ಉಳಿದುಕೊಂಡಿದೆ.

Eke →

ಕರಾವಳಿಯಲ್ಲಿ ನಡೆಯದ ಬದಲಾವಣೆಗಳು

ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಮೇಲೆ ಹೇಳಿರುವ ಬದಲಾವಣೆಗಳೆಲ್ಲ ನಡೆದಿವೆಯಾದರೂ, ಬೇರೆ ಕೆಲವು ಬದಲಾವಣೆಗಳು ನಡೆದಿಲ್ಲ. ಉದಾಹರಣೆ ಗಾಗಿ, ಕನ್ನಡದ ಎರಡು ಲಘು ಅಕ್ಷರಗಳಿರುವ ಪದಗಳ ಮೊದಲನೆಯ ಅಕ್ಷರ ದಲ್ಲಿ ಬರುವ ಎಕಾರ ಮತ್ತು ಒಕಾರಗಳು, ಎರಡನೆಯ ಅಕ್ಷರದಲ್ಲಿ ಇ ಇಲ್ಲವೇ ಉ ಇದ್ದಾಗ, ಅನುಕ್ರಮವಾಗಿ ಇಕಾರ ಮತ್ತು ಉಕಾರಗಳಾಗಿ ಕನ್ನಡದ ಹೆಚ್ಚಿನ ಪ್ರಭೇದಗಳಲ್ಲೂ ಬದಲಾಗಿವೆ.

ಈ ಬದಲಾವಣೆಯ ಪರಿಣಾಮವಾಗಿ, ಹಿಂದೆ ಕೆಡಿ ಎಂದಿದ್ದ ಪದ ಈಗ ಕಿಡಿ ಎಂದಾಗಿದೆ; ಬೆಳೆ ಎಂದಿದ್ದುದು ಬಿಳಿಯಾಗಿದೆ; ಕೊದಿ ಎಂದಿದ್ದುದು ಕುದಿ ಯಾಗಿದೆ, ಮತ್ತು ಸೊರಿ ಎಂದಿದ್ದುದು ಸುರಿಯಾಗಿದೆ.

ಈ ಬದಲಾವಣೆ ಸುಮಾರು ಹತ್ತನೇ ಶತಮಾನದ ಹೊತ್ತಿಗೆ ನಡೆದಿರ ಬೇಕೆಂದು ವಾದಿಸಲು ಶಾಸನಗಳ ಆಧಾರವಿದೆ. ಅದಕ್ಕೆ ಹಿಂದಿನ ಎಂಟು- ಒಂಬತ್ತನೇ ಶತಮಾನದ ಶಾಸನಗಳಲ್ಲಿ ಎದಿರ್ ‘ಇದಿರು’, ಪೊಗು ‘ಪುಗು > ಹುಗು’, ತೊಲು ‘ದನ’, ಪೆರಿಯ ‘ಹಿರಿಯ’ ಮೊದಲಾದ ಪದರೂಪಗಳು ಕಾಣ ಸಿಗುತ್ತಿದ್ದು, ಅವು ಈ ಬದಲಾವಣೆಯನ್ನು ತೋರಿಸುತ್ತಿಲ್ಲ.

ಈ ಬದಲಾವಣೆ ಕರಾವಳಿಯ ಹವ್ಯಕ, ಹಾಲಕ್ಕಿ, ಗೌಡ, ಮೊದಲಾದ ಕನ್ನಡ ಪ್ರಭೇದಗಳಲ್ಲೂ ನಡೆದಿಲ್ಲ. ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಹೊಸ ಗನ್ನಡದ ಬಿಳಿ ಎಂಬ ಪದ ಬೆಳೆ ಎಂದಿದೆ, ಸುಲಿ ಎಂಬುದು ಸೊಲಿ ಎಂದಿದೆ, ಉಳಿ ಎಂಬುದು ಬಳಿ ಎಂದಿದೆ, ಮತ್ತು ಕುಣಿ ಎಂಬುದು ಕೊಣಿ ಎಂದಿದೆ. ಕರಾವಳಿಯ ಇತರ ಕನ್ನಡ ಪ್ರಭೇದಗಳಲ್ಲೂ ಹೀಗೆಯೇ.

ಹಳೆಗನ್ನಡದ ಎರಡು ರೀತಿಯ ಪದಗಳಲ್ಲಿದ್ದ ಅನುಸ್ವಾರ ಹೊಸಗನ್ನಡದ ಎರಡು ಬಗೆಯ ಪದಗಳಲ್ಲಿ ಮಾಯವಾಗಿದೆ. ದಾಂಟು ಎಂಬುದು ದಾಟು ಎಂದಾದುದು, ನಾಂಟು ಎಂಬುದು ನಾಟು ಎಂದಾದುದು, ಇಲ್ಲವೇ ನೂಂಕು ಎಂಬುದು ನೂಕು ಎಂದಾದುದು ಈ ಬದಲಾವಣೆಗಳಲ್ಲಿ ಮೊದಲನೆಯದು; ಮತ್ತು ಅವುಂಕು ಎಂಬುದು ಅವುಕು ಎಂದಾದುದು, ತುಳುಂಕು ಎಂಬುದು ತುಳುಕು ಎಂದಾದುದು, ಕಲಿಂಕು ಎಂಬುದು ಕಲಿಕು ಎಂದಾದುದು, ಇಲ್ಲವೇ ಕಾಡಿಂಗೆ ಎಂಬುದು ಕಾಡಿಗೆ ಎಂದಾದುದು ಎರಡನೆಯದು.

ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಎರಡು ರೀತಿಯ ಪದಗಳಲ್ಲೂ ಅನುಸ್ವಾರ ಲೋಪಗೊಂಡಿಲ್ಲ. ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ದಾಂಟು, ನೂಂಕು, ಕಲಿಂಕು, ಮುರುಂಟು, ಕಾಡಿಂಗೆ ಮೊದಲಾದ ಪದಗಳು ಮತ್ತು ಪದರೂಪಗಳು ರೂಢಿಯಲ್ಲಿವೆ.

Eke →

ಕರಾವಳಿಯಲ್ಲಿ ನಡೆದ ಬದಲಾವಣೆಗಳು

ಇಂತಹ ಇನ್ನೂ ಕೆಲವು ಬದಲಾವಣೆಗಳು ಹೊಸಗನ್ನಡದಲ್ಲಿ, ಎಂದರೆ ಇವತ್ತಿನ ಬರಹದ ಕನ್ನಡದಲ್ಲಿ ನಡೆದಿದ್ದು, ಕರಾವಳಿಯ ಕನ್ನಡ ಪ್ರಭೇದಗಳಾದ ಹವ್ಯಕ, ಹಾಲಕ್ಕಿ, ಗೌಡ ಮೊದಲಾದವುಗಳಲ್ಲಿ ನಡೆದಿಲ್ಲ. ಹೀಗೆಂದ ಮಾತ್ರಕ್ಕೆ, ಆ ಪ್ರಭೇದಗಳು ‘ಹಳೆಯ’ವೆಂದೇನೂ ಸಿದ್ಧವಾಗುವುದಿಲ್ಲ. ಬರಹದ ಕನ್ನಡದ ಹಾಗೆ, ಮತ್ತು ಮೇಲಿನ ಬದಲಾವಣೆಗಳನ್ನು ತೋರಿಸುವ ಕನ್ನಡದ ಇತರ ಪ್ರಭೇದಗಳ ಹಾಗೆ, ಈ ಕರಾವಳಿಯ ಪ್ರಭೇದಗಳೂ ಇವತ್ತು ಬಳಕೆಯ ಲ್ಲಿರುವಂತಹ ‘ಹೊಸ’ಗನ್ನಡಗಳೇ.

ಇದಲ್ಲದೆ, ಬೇರೆ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ನಡೆದಿದ್ದು, ಬರಹದ ಕನ್ನಡದಲ್ಲಿ ಮತ್ತು ಇತರ ಕನ್ನಡದ ಪ್ರಭೇದಗಳಲ್ಲಿ ನಡೆದಿಲ್ಲ. ಉದಾಹರಣೆಗಾಗಿ, ಪದಾದಿಯ ಚಕಾರ, ಜಕಾರ, ಮತ್ತು ಗಕಾರಗಳ ಅನಂತರ ಬರುವ ಅಕಾರವು ಹವ್ಯಕದ ಹಲವು ಪದಗಳಲ್ಲಿ ಎಕಾರವಾಗಿದೆ, ಆದರೆ ಬರಹದ ಕನ್ನಡದಲ್ಲಿ ಇದು ಬದಲಾಗದೆ ಹಾಗೆಯೇ ಉಳಿದಿದೆ.

ಈ ಬದಲಾವಣೆಯ ಫಲವಾಗಿ, ಹೊಸಗನ್ನಡದ ಚಪ್ಪರ ಎಂಬುದು ಹವ್ಯಕ ದಲ್ಲಿ ಚೆಪ್ಪರ ಎಂಬುದಾಗಿ ಕಾಣಿಸುತ್ತದೆ, ಜರಿ ಎಂಬುದು ಜೆರಿ ಎಂಬುದಾಗಿ ಕಾಣಿಸುತ್ತದೆ, ಮತ್ತು ಗದ್ದೆ ಎಂಬುದು ಗೆದ್ದೆ ಎಂಬುದಾಗಿ ಕಾಣಿಸುತ್ತದೆ.

ಮೂರಕ್ಷರದ ಪದಗಳಲ್ಲಿ ಮೊದಲಿನವೆರಡು ಲಘುವಾಗಿರುವಾಗ ಮೂರನೇ ಅಕ್ಷರ ದ್ವಿತ್ವವಾಗುವುದು ಹವ್ಯಕದಲ್ಲಿ ಕಾಣಿಸುವ, ಮತ್ತು ಬರಹದ ಕನ್ನಡದಲ್ಲಿ ಕಾಣಿಸದಿರುವ ಇನ್ನೊಂದು ಬದಲಾವಣೆ. ಇದರಿಂದಾಗಿ, ಬರಹದ ಕನ್ನಡದ ಹುಡುಕು ಎಂಬ ಪದ ಹವ್ಯಕದಲ್ಲಿ ಹುಡುಕ್ಕು ಎಂಬುದಾಗಿಯೂ, ಒರತೆ ಎಂಬ ಪದ ಒರತ್ತೆ ಎಂಬುದಾಗಿಯೂ, ಮತ್ತು ಹುರುಪು ಎಂಬ ಪದ ಹುರುಪ್ಪು ಎಂಬುದಾಗಿಯೂ ಕಾಣಿಸುತ್ತದೆ.

Eke →

ಬಹುವಚನದ ಪ್ರತ್ಯಯ

ಈ ರೀತಿ ಕನ್ನಡದ ಬೇರೆ ಬೇರೆ ಪ್ರಭೇದಗಳು ಅವು ತೋರಿಸುವ ಬದಲಾವಣೆ ಗಳ ಮಟ್ಟಿಗೆ ಬೇರೆ ಬೇರಾಗಿವೆ. ಆದರೆ, ಇವನ್ನಾಧರಿಸಿ ಈ ಪ್ರಭೇದಗಳನ್ನು ಹೊಸತು-ಹಳತೆಂದು ವಿಂಗಡಿಸುವುದು ಮಾತ್ರ ಸರಿಯಲ್ಲ. ಹವ್ಯಕವು ‘ಹಳೆ ಗನ್ನಡ’ವೆಂದು ಅದನ್ನು ಕೇಳುವವರಿಗೆ ಅನಿಸುವುದಕ್ಕೆ ಬಹುವಚನ ಪ್ರತ್ಯಯ ದಲ್ಲಿ ನಡೆದ (ಮತ್ತು ನಡೆಯದಿರುವ) ಬದಲಾವಣೆಗಳು ಒಂದು ಮುಖ್ಯ ಕಾರಣವೆನ್ನಬಹುದು. ಈ ಪ್ರತ್ಯಯ ಹಳೆಗನ್ನಡದಲ್ಲಿ ಅಕಾರಾಂತ ಪದಗಳ ಮುಂದೆ ೦ಗಳ್ ಎಂದಿತ್ತು. ಮರ-ಮರಂಗಳ್, ದೇಶ, ದೇಶಂಗಳ್ ಮೊದ ಲಾದ ಪದರೂಪಗಳಲ್ಲಿ ಈ ಪ್ರತ್ಯಯದ ಪ್ರಯೋಗವನ್ನು ಕಾಣಬಹುದು.

ಆಧುನಿಕ ಬರಹದ ಕನ್ನಡದಲ್ಲಿ ಇದರ ಸೊನ್ನೆ ಮಾಯವಾಗಿ (ಮತ್ತು ಕೊನೆಯ ವ್ಯಂಜನಕ್ಕೆ ಉಕಾರ ಸೇರಿ) ಮರಗಳು, ದೇಶಗಳು ಎಂಬಂತಹ ರೂಪಗಳು ಸಿದ್ಧವಾಗಿವೆ. ಇದಕ್ಕೆ ಬದಲಾಗಿ, ಹವ್ಯಕದಲ್ಲಿ ಸೊನ್ನೆ ಉಳಿದು ಕೊಂಡಿದೆ, ಆದರೆ ಳಕಾರ ಮಾಯವಾಗಿದೆ, ಮತ್ತು ಗಕಾರದ ಅನಂತರ ಬರುವ ಅಕಾರ ಒಕಾರವಾಗಿ ಬದಲಾಗಿದೆ. ಇದರಿಂದಾಗಿ ಹವ್ಯಕದಲ್ಲಿ ಮರಂಗೊ, ದೇಶಂಗೊ ಎಂಬಂತಹ ರೂಪಗಳು ಸಿದ್ದಿಸಿವೆ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಆಧುನಿಕ ಬರಹದ ಕನ್ನಡ (ಇಲ್ಲವೇ ‘ಹೊಸಗನ್ನಡ’) ಮತ್ತು ಆಧುನಿಕ ಹವ್ಯಕ ಕನ್ನಡ - ಇವೆರಡರಲ್ಲೂ ಬದಲಾವಣೆಗಳು ನಡೆದಿವೆ. ಆದರೆ, ಒಂದರಲ್ಲಿ ನಡೆದ ಬದಲಾವಣೆಗಳು ಇನ್ನೊಂದರಲ್ಲಿ ನಡೆದಿಲ್ಲ. ಅವೆರಡರಲ್ಲೂ ಬೇರೆ ಬೇರೆ ಬದಲಾವಣೆಗಳು ನಡೆದಿವೆ ಅಷ್ಟೆ.

ಹೊಸಗನ್ನಡವನ್ನು ಕೇಳಿ ಅಭ್ಯಾಸವಾದವರಿಗೆ ಹವ್ಯಕ ಕನ್ನಡದ ಬಹುವಚನ ರೂಪದಲ್ಲಿ ಕಾಣಿಸುವ ಸೊನ್ನೆಯನ್ನು ಕೇಳಿದಾಗ ಅದು ಹಳೆಗನ್ನಡವಿರ ಬಹುದೆಂಬ ಭ್ರಮೆ ಮೂಡುತ್ತದೆ. ಆದರೆ, ಬರಹ ಕನ್ನಡದಲ್ಲಿರುವ ಮತ್ತು ಹವ್ಯಕ ಕನ್ನಡದಲ್ಲಿ ಇಲ್ಲದಿರುವ ಳಕಾರ ಬರಹ ಕನ್ನಡ ಹಳೆಯದಿರಬೇಕೆಂಬ ಭ್ರಮೆಯನ್ನು ಯಾಕೋ ಮೂಡಿಸುತ್ತಿಲ್ಲ. ಬರಹ ಕನ್ನಡವನ್ನು ಮೊದಲಿಗೇನೇ ‘ಹೊಸ’ಗನ್ನಡವೆಂದು ಪರಿಗಣಿಸಿರುವುದೇ ಇದಕ್ಕೆ ಕಾರಣವಿರಬಹುದು.

Eke →

ಇತರ ಪ್ರಭೇದಗಳು

ಕನ್ನಡದ ಇತರ ಪ್ರಭೇದಗಳನ್ನು ಗಮನಿಸಿದೆವಾದರೆ, ಅವುಗಳಲ್ಲೂ ಇದೇ ರೀತಿ ಕೆಲವು ಬದಲಾವಣೆಗಳು ಹೆಚ್ಚಿಗೆ ಕಾಣಿಸುತ್ತವೆ, ಮತ್ತು ಬೇರೆ ಕೆಲವು ಬದಲಾವಣೆಗಳು ಕಾಣಿಸುವುದಿಲ್ಲ. ಉದಾಹರಣೆಗಾಗಿ, ಮೈಸೂರಿನ ಕೆಲವು ಪ್ರಭೇದಗಳಲ್ಲಿ ಪದಾದಿಯ ಹಕಾರಗಳೆಲ್ಲ ಬಿದ್ದು ಹೋಗಿವೆ. ಹಕ್ಕಿ ಎಂಬ ಪದ ಅಕ್ಕಿ ಎಂದಾಗಿದೆ, ಹಾಲು ಎಂಬ ಪದ ಆಲು ಎಂದಾಗಿದೆ, ಹೇಳಿ ಎಂಬ ಪದ ಏಳಿ ಎಂದಾಗಿದೆ.

ಎಕಾರಾಂತವಾದ ಧಾತುಗಳೆಲ್ಲ ಈ ಕನ್ನಡದ ಪ್ರಭೇದಗಳಲ್ಲಿ ಇಕಾರಾಂತ ಗಳಾಗಿವೆ. ಬರೆ, ಅಗೆ, ಕರೆ ಮೊದಲಾದವುಗಳು ಇದರಿಂದಾಗಿ ಬರಿ, ಅಗಿ, ಕರಿ ಎಂದಾಗಿವೆ. ಆದರೆ ಈ ಕಾರಣಕ್ಕಾಗಿ, ಮೈಸೂರಿನ ಈ ಪ್ರಭೇದಕ್ಕಿಂತ ಇತರ ಪ್ರಭೇದಗಳು ‘ಹಳೆಯ’ವೆಂದು ಯಾರೂ ವಾದಿಸುವುದಿಲ್ಲ.

Eke →

ಪದಗಳ ಅಳಿವು-ಉಳಿವು

ಹಳೆಗನ್ನಡದಲ್ಲಿದ್ದ ಪದಗಳಲ್ಲೂ ಕೆಲವು ಒಂದು ಪ್ರಭೇದದಲ್ಲಿ ಉಳಿದಿರ ಬಹುದು, ಮತ್ತು ಇನ್ನೊಂದರಲ್ಲಿ ಅಳಿದಿರಬಹುದು. ಉದಾಹರಣೆಗಾಗಿ, ಹಳೆ ಗನ್ನಡದಲ್ಲಿದ್ದ ಅಬ್ಬೆ (ತಾಯಿ), ಕಿಚ್ಚು (ಬೆಂಕಿ), ಪಚ್ಚೆ (ಹಸಿರು) ಮೊದಲಾದ ಪದಗಳು ಹವ್ಯಕದಲ್ಲಿ ಉಳಿದಿವೆ, ಮತ್ತು ಇತರ ಕನ್ನಡದ ಪ್ರಭೇದಗಳಲ್ಲಿ ಅಳಿದಿವೆ.

ಆದರೆ, ಬೇರೆ ಕೆಲವು ಪದಗಳು (ಉದಾ: ಉಗುಳು, ತೆರು, ನೋಯು, ಮೊದಲಾದವುಗಳು) ಹವ್ಯಕದಲ್ಲಿ ಅಳಿದಿವೆ, ಮತ್ತು ಇತರ ಪ್ರಭೇದಗಳಲ್ಲಿ ಉಳಿದಿವೆ. ಇದರಿಂದಾಗಿ ಹವ್ಯಕ ಕನ್ನಡ ಒಂದು ಭಿನ್ನವಾದ ಪ್ರಭೇದವೆಂದು ಸಿದ್ಧ ವಾಗುತ್ತದೆಯಲ್ಲದೆ ಹಳೆಯದೆಂದೇನೂ ಸಿದ್ದವಾಗುವುದಿಲ್ಲ.

ಒಂದೇ ಭಾಷೆಯನ್ನಾಡುವ ಎರಡು ಸಮಾಜಗಳು ಎಷ್ಟು ಸಮಯ ಮತ್ತು ಎಷ್ಟು ದೂರ ಒಂದರಿಂದೊಂದು ಬೇರಾಗಿರುತ್ತವೆಯೋ ಅಷ್ಟರಮಟ್ಟಿಗೆ ಅವುಗಳೊಳಗಿನ ಭಾಷಾವ್ಯತ್ಯಾಸವೂ ಹೆಚ್ಚುತ್ತದೆ. ಕರಾವಳಿಯ ಕನ್ನಡಿಗರು ಉಳಿದ ಕನ್ನಡಿಗರಿಂದ ಬೇರ್ಪಟ್ಟು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿರ ಬೇಕಾದ್ದರಿಂದ, ಮತ್ತು ಈ ಎರಡು ಪ್ರದೇಶಗಳನ್ನು ದುರ್ಗಮವಾದ ಪಶ್ಚಿಮ ಘಟ್ಟಗಳು ಬೇರ್ಪಡಿಸುತ್ತಿದ್ದುವಾದ್ದರಿಂದ, ಈ ಎರಡು ಪಂಗಡಗಳ ನುಡಿಗಳು ಭಿನ್ನಭಿನ್ನವಾಗಿ ಬೆಳೆದು ಬಂದಿವೆ. ಇದರಲ್ಲಿ ಹಳೆತನ-ಹೊಸತನಗಳ ಪ್ರಶ್ನೆಯಿಲ್ಲ.

Eke →

೧.೪ ಭಾಷಾ ಸ್ವಾತಂತ್ರ್ಯ

ಕೊಂಕಣಿ ಮರಾಠಿಯ ಪ್ರಭೇದವೇ, ಅಥವಾ ಅದಕ್ಕಿಂತ ಭಿನ್ನವಾದ ಮತ್ತು ಸ್ವತಂತ್ರವಾದ ಭಾಷೆಯೇ ಎಂಬುದೊಂದು ಬಹಳ ಮಟ್ಟಿಗೆ ಕಾವೇರಿಸುವ ಪ್ರಶ್ನೆ. ಬಹಳ ಮಂದಿ ಇದಕ್ಕೆ ‘ಕೊನೆಯ’ ಉತ್ತರವನ್ನು ಕೊಡಲು ಪ್ರಯತ್ನಪಟ್ಟಿರುವ ರಾದರೂ ಈ ಪ್ರಶ್ನೆಯಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಮುಖ್ಯವಾಗಿ ರಾಜ ಕಾರಣಿಗಳ ಮಟ್ಟದಲ್ಲೇ ನಡೆದಿರುವ ಈ ವಾದ ವಿವಾದಗಳೆಡೆಯಲ್ಲಿ ಹಲವಾರು ತರ್ಕ ವಿತರ್ಕಗಳು ಮೇಲೆದ್ದಿವೆ. ಇವುಗಳಲ್ಲಿ ಪ್ರಸ್ತುತ ವಿಷಯಕ್ಕೆ ಸ್ವಲ್ಪವೂ ಸಂಬಂಧವಿಲ್ಲದಂತಹ ವಾದಗಳೇ ಜಾಸ್ತಿಯಾಗಿರುವುದರಿಂದ, ಅವು ‘ಕಾವ’ ನ್ನಲ್ಲದೆ ಬೇರೇನನ್ನೂ ಹುಟ್ಟಿಸಲಾರವು.

Eke →

ಲಿಪಿಯ ಬೆಲೆ

ಉದಾಹರಣೆಗಾಗಿ, ಕೊಂಕಣಿಗೆ ತನ್ನದೇ ಆದ ಒಂದು ಲಿಪಿಯಿಲ್ಲವಾದುದರಿಂದ, ಅದನ್ನು ಸ್ವತಂತ್ರವಾದ ಭಾಷೆಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ವಾದಿಸುವ ಮಂದಿ ಹಲವರಿದ್ದಾರೆ. ಕರ್ನಾಟಕದಲ್ಲಿ ಇದನ್ನು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ, ಗೋವಾದಲ್ಲಿ ದೇವನಾಗರಿ ಇಲ್ಲವೇ ರೋಮನ್ ಲಿಪಿಯಲ್ಲಿ ಬರೆಯುತ್ತಾರೆ, ಮತ್ತು ಕೇರಳದಲ್ಲಿ ಮಲಯಾಳ ಲಿಪಿಯಲ್ಲಿ ಬರೆಯುತ್ತಾರೆ.

ಆದರೆ, ಇವರ ಈ ತರ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿದೆಯಾದರೆ, ಸಂಸ್ಕೃತ ಮತ್ತು ಹಿಂದೀ ಭಾಷೆಗಳಿಗಿರುವ ಲಿಪಿಗಿಂತ ಭಿನ್ನವಾದ ಮತ್ತು ತನ್ನದೇ ಎನ್ನಿಸಿಕೊಳ್ಳಬಹುದಾದ ಲಿಪಿ ಮರಾಠಿಗೂ ಇಲ್ಲವಾದುದರಿಂದ, ಅದನ್ನೂ ಒಂದು ಸ್ವತಂತ್ರ ಭಾಷೆಯೆಂದು ಹೇಳಲು ಸಾಧ್ಯವಾಗದು. ಮಣಿಪುರಿ ಭಾಷೆಯನ್ನು ಬಂಗಾಲಿ ಲಿಪಿಯಯಲ್ಲಿ ಬರೆಯಲಾಗುತ್ತದೆ, ಮತ್ತು ಸಿಂಧಿ ಭಾಷೆಯನ್ನು ದೇವನಾಗರಿ, ಪರ್ಸೋ-ಅರೇಬಿಕ್ ಮತ್ತು ರೋಮನ್ ಲಿಪಿಗಳಲ್ಲಿ ಬರೆಯ ಲಾಗುತ್ತದೆ.

ನಿಜಕ್ಕೂ ನಮ್ಮಲ್ಲಿ ಬಹಳ ಮಂದಿ ಭಾಷೆ ಮತ್ತು ಲಿಪಿಗಳೊಳಗಿರುವ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಮನುಷ್ಯನಿಗೊಂದು ಫೊಟೊ ಇರುವ ಹಾಗೆ ಭಾಷೆಗೊಂದು ಲಿಪಿ. ಫೊಟೊ ತೆಗೆಸಿಕೊಳ್ಳಲಿಲ್ಲವೆಂಬ ಒಂದು ಕಾರಣಕ್ಕೆ ಮಾತ್ರವೇ ಮನುಷ್ಯನೊಬ್ಬನ ಸ್ವಾತಂತ್ರ್ಯಕ್ಕೆ ಇಲ್ಲವೇ ಅಸ್ತಿತ್ವಕ್ಕೆ ಹೇಗೆ ಧಕ್ಕೆ ಬರುವುದಿಲ್ಲವೋ ಹಾಗೆಯೇ ತನ್ನದೇ ಆದ ಲಿಪಿಯಿಲ್ಲವೆಂಬ ಕಾರಣ ಮಾತ್ರದಿಂದ ಭಾಷೆಯೊಂದರ ಯೋಗ್ಯತೆಗೆ ಚ್ಯುತಿ ಬರುವುದಿಲ್ಲ.

ಅಲ್ಲದೆ, ಜಗತ್ತಿನ ಲಿಪಿಗಳೆಲ್ಲ ಮೂರೋ ನಾಲ್ಕೋ ಮೂಲ ಲಿಪಿಗಳಿಂದ ಬೆಳೆದುಬಂದವುಗಳಾದ್ದರಿಂದ, ಹೆಚ್ಚಿನ ಭಾಷೆಗಳೂ ಅವು ಬಳಸುತ್ತಿರುವ ಲಿಪಿ ಗಳನ್ನು ಒಂದಲ್ಲ ಒಂದು ಕಾಲದಲ್ಲಿ ಬೇರೆ ಯಾವುದಾದರೊಂದು ಭಾಷೆಯಿಂದ ಎರವಲಾಗಿ ಪಡೆದುಕೊಂಡಿದ್ದಿರಲೇ ಬೇಕು. ಭಾರತದ ಲಿಪಿಗಳಲ್ಲಿ ಹೆಚ್ಚಿನವೂ ಅಶೋಕನ ಕಾಲದ ಬ್ರಾಹ್ಮೀ ಲಿಪಿಯಿಂದ ಬೆಳೆದು ಬಂದವುಗಳೆಂದು ವಿದ್ವಾಂಸರ ಅಭಿಪ್ರಾಯವಿದೆ.

Eke →

ಸಾಹಿತ್ಯ ಮತ್ತು ಭಾಷೆ

ಕೊಂಕಣಿಗೆ ನಿಶ್ಚಿತವಾದೊಂದು ಸಾಹಿತ್ಯ ಪರಂಪರೆಯಿಲ್ಲವಾದ್ದರಿಂದ ಅದನ್ನು ಸ್ವತಂತ್ರವಾದೊಂದು ಭಾಷೆಯೆಂದು ಕರೆಯಲು ಸಾಧ್ಯವಿಲ್ಲವೆಂದು ವಾದಿಸುವ ಮಂದಿಯೂ ಕೆಲವರಿದ್ದಾರೆ. ಆದರೆ, ಈ ವಾದವನ್ನು ಮುಂದೆ ತರುವವರು ಭಾಷೆಯ ಅತೀ ಮುಖ್ಯವಾದ ಕಾರ್ಯವೇನೆಂಬುದನ್ನೇ ಮರೆತಂತಿದೆ. ದಿನನಿತ್ಯದ ಜೀವನದಲ್ಲಿ ಒಬ್ಬನ ಮನಸ್ಸಿನಲ್ಲಿರುವ ಇಂಗಿತವನ್ನು ಇನ್ನೊಬ್ಬನಿಗೆ ತಿಳಿಸಿ ಹೇಳಲು ಸಾಧಕವಾಗಿರುವಂತಹದೇ ಭಾಷೆ. ಅದನ್ನು ಬಳಸುತ್ತಿರುವವರು ಇಬ್ಬ ರಿರಲಿ, ಎರಡು ಕೋಟಿ ಜನರಿರಲಿ, ಸಾಹಜವಾಗಿ ಬೆಳೆದು ಬಂದಿರುವ ಭಾಷೆ

ಗಳೆಲ್ಲವೂ ಈ ಕಾರ್ಯವನ್ನು ತೃಪ್ತಿಕರವಾಗಿ ನಡೆಸಬಲ್ಲುವು. ಈ ವಿಷಯದಲ್ಲಿ ಸಂಸ್ಕೃತ ಮತ್ತು ಅಸಂಸ್ಕೃತ ಜನರ ಭಾಷೆಗಳೊಳಗೆ ಯಾವ ವ್ಯತ್ಯಾಸವೂ ಇಲ್ಲ.

ಸಾಹಿತ್ಯ ರಚನೆಯೆಂಬುದು ಭಾಷೆಗಿರುವ ಅಮುಖ್ಯವಾದ ಬಳಕೆಗಳಲ್ಲಿ ಒಂದು ಮಾತ್ರ. ಮನುಷ್ಯನು ತನ್ನ ಕೈಕಾಲುಗಳನ್ನು ನಡೆಯುವುದು, ಉಣ್ಣು ವುದು, ಮೊದಲಾದ ಜೀವನಾವಶ್ಯಕ ಕೆಲಸಗಳಿಗೆ ಮಾತ್ರವಲ್ಲದೆ, ಕುಣಿಯು ವುದು, ಅಭಿನಯಿಸುವುದು ಮೊದಲಾದ ಕಲಾತ್ಮಕ ಕಾರ್ಯಗಳಲ್ಲೂ ಬಳಸಿಕೊಳ್ಳ ಬಲ್ಲನು.

ಹೀಗೆಯೇ, ತನ್ನ ಭಾಷೆಯನ್ನೂ ದಿನನಿತ್ಯದ ವ್ಯವಹಾರಗಳಲ್ಲಿ ಮಾತ್ರವಲ್ಲದೆ ಕತೆ ಕಟ್ಟುವುದು, ಕವಿತೆ ರಚಿಸುವುದು ಮೊದಲಾದ ಕಲಾತ್ಮಕ ಕಾರ್ಯಗಳಲ್ಲೂ ಬಳಸಿಕೊಳ್ಳಬಲ್ಲನು. ಯಾವುದೇ ಒಂದು ಭಾಷೆಯಲ್ಲಿ ಇಂತಹ ಕಲಾತ್ಮಕ ಕೃತಿ ಗಳು ರಚಿತವಾಗಿವೆಯೇ, ಅಥವಾ ಇಲ್ಲವೇ ಎಂಬುದು ಅವನ್ನು ರಚಿಸಬಲ್ಲ ವ್ಯಕ್ತಿಗಳನ್ನು ಅವಲಂಬಿಸಿದೆಯಲ್ಲದೆ, ಅವರು ಬಳಸುವ ಭಾಷೆಯನ್ನಲ್ಲ. ಪ್ರತಿಭಾವಂತನಾದ ವ್ಯಕ್ತಿ ಯಾವ ಭಾಷೆಯನ್ನು ಕೈಗೆ ತೆಗೆದುಕೊಂಡರೂ ಅದರಲ್ಲಿ ಮೇರು ಕೃತಿಗಳನ್ನು ರಚಿಸಬಲ್ಲನು.

ಹಾಗಾಗಿ, ಬರಿಯ ಪ್ರಭೇದವೆಂದು ಕರೆಯಬೇಕೇ, ಇಲ್ಲವೇ ಸ್ವತಂತ್ರವಾದ ಭಾಷೆಯೆಂದು ಪರಿಗಣಿಸಬೇಕೇ ಎಂಬ ಈ ಪ್ರಶ್ನೆಗೆ ಉತ್ತರ ಕೊಡಲು ಯಾವ ಭಾಷೆಯಲ್ಲೂ ಆಂತರಿಕವಾದ ಪುರಾವೆಗಳು ಸಿಗಲಾರವು. ರಾಜಕೀಯ, ಸಾಮಾಜಿಕ ಇಲ್ಲವೇ ಚಾರಿತ್ರಿಕ ಕಾರಣಗಳಿಂದಾಗಿ ಬೇರೆ ಬೇರೆ ಭಾಷಾ ಪ್ರಭೇದಗಳಿಗೆ ಬೇರೆ ಬೇರೆ ರೀತಿಯ ಮಹತ್ವ ಲಭಿಸುತ್ತದೆ.

ಹೀಗೆ ಲಭಿಸಿದ ಮಹತ್ವದಿಂದಾಗಿ, ಹೊಸ ಹೊಸ ಸನ್ನಿವೇಶಗಳಲ್ಲಿ ಪ್ರಯುಕ್ತ ವಾಗುವಂತಹ ಸಂದರ್ಭಗಳು ಅವುಗಳಿಗೆ ಬರುತ್ತವೆ. ಆದರೆ, ಹೀಗೆ ವಿಶಿಷ್ಟ ವಾದ ಕಾರ್ಯಗಳಲ್ಲಿ ಪ್ರಯುಕ್ತವಾಗಿವೆಯಾದ್ದರಿಂದ ಆ ಭಾಷೆಗಳಲ್ಲೇನೋ ವೈಶಿಷ್ಟ್ಯವಿರಬೇಕೆಂದು ವಾದಿಸುವುದಕ್ಕೆ ಮಾತ್ರ ಅಂತಹ ಭಾಷೆಗಳ ಅಭ್ಯಾಸ ದಿಂದ ಇದುವರೆಗೆ ಯಾವ ಆಧಾರವೂ ದೊರೆತಿಲ್ಲ.

Eke →

ವ್ಯತ್ಯಾಸದ ಪರಿಮಾಣ

ಎರಡು ಪ್ರಭೇದಗಳನ್ನು ಒಂದು ಭಾಷೆಯ ಪ್ರಭೇದಗಳೆಂದು ಪರಿಗಣಿಸುವ ಬದಲು, ಬೇರೆ ಬೇರೆ ಭಾಷೆಗಳೆಂದು ಕರೆಯಲು ಅವು ಎಷ್ಟರ ಮಟ್ಟಿಗೆ ಭಿನ್ನ ವಾಗಿರಬೇಕು ಎಂಬುದು ಇನ್ನೊಂದು ಪ್ರಶ್ನೆ. ಇದಕ್ಕೂ ಕೂಡ, ರಾಜಕೀಯ ಇಲ್ಲವೇ ಸಾಮಾಜಿಕ ಆಧಾರಗಳ ಮೇಲೆ ಉತ್ತರ ಕೊಡಲು ಸಾಧ್ಯವಿದೆಯಲ್ಲದೆ, ಭಾಷಾವಿಷಯಕ ಆಧಾರಗಳ ಮೇಲೆ ಉತ್ತರ ಕೊಡಲು ಸಾಧ್ಯವಾಗದು.

ಉದಾಹರಣೆಗಾಗಿ, ಹಿಂದಿ ಮತ್ತು ಉರ್ದುಗಳೊಳಗಿನ ವ್ಯತ್ಯಾಸವನ್ನು ಗಮನಿಸಬಹುದು. ಕೆಲವು ವಿಶಿಷ್ಟವಾದ ಪದಗಳನ್ನು ಬಿಟ್ಟರೆ, ಇವೆರಡರೊಳಗೆ

ಭಾಷಾವಿಷಯಕವಾದ ವ್ಯತ್ಯಾಸಗಳೇನೂ ಇಲ್ಲ. ಆದರೂ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಮತ್ತು ಈ ಎರಡು ಭಾಷೆಗಳಿಗೆ ಭಿನ್ನ ಭಿನ್ನವಾದ ಲಿಪಿಗಳಿವೆಯೆಂಬುದಕ್ಕಾಗಿ, ಅವನ್ನು ಬೇರೆ ಬೇರೆ ಭಾಷೆಗಳೆಂದು ಪರಿಗಣಿಸ ಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಚೈನೀಸ್ ಭಾಷೆಯ ಪ್ರಭೇದಗಳಾದ ಮಂದಾರಿನ್, ಕಂಟೊನೀಸ್ ಮೊದಲಾದವುಗಳ ನಡುವೆ ಬಹಳಷ್ಟು ಅಂತರವಿದೆ. ಅವುಗಳಲ್ಲಿ ಒಂದನ್ನು ಮಾತನಾಡುವವರಿಗೆ ಇನ್ನೊಂದನ್ನು ಕೇಳಿದಾಗ ಸ್ವಲ್ಪವೂ ಅರ್ಥ ವಾಗದು. ಆದರೂ ಅವನ್ನೆಲ್ಲ ಒಂದೇ ಭಾಷೆಯ ಪ್ರಭೇದಗಳೆಂದು ಪರಿಗಣಿಸ ಲಾಗುತ್ತಿದೆ. ಇದಕ್ಕೆ ರಾಜಕೀಯ ಮತ್ತು ಲಿಪಿ ವಿಷಯಕ ಆಧಾರಗಳು ಮಾತ್ರ ಕಾರಣವಲ್ಲದೆ, ಭಾಷಾ ವಿಷಯಕ ಆಧಾರಗಳಲ್ಲ.

Eke →

ಚಾರಿತ್ರಿಕ ಸಂಬಂಧ

ಕೊಂಕಣಿ ಮತ್ತು ಮರಾಠಿಗಳೊಳಗೆ ಅತ್ಯಂತ ನಿಕಟವಾದ ಚಾರಿತ್ರಿಕ ಸಂಬಂಧ ವಿದೆ. ಅವೆರಡೂ ಒಂದೇ ಮೂಲದಿಂದ ಎರಡು ಕವಲುಗಳಾಗಿ ಒಡೆದು ಬಂದವುಗಳು. ಆದರೆ, ಇಂತಹ ಚಾರಿತ್ರಿಕ ಸಂಬಂಧದ ಆಧಾರದ ಮೇಲೆ ಅವು ಭಿನ್ನ ಭಿನ್ನ ಭಾಷೆಗಳಲ್ಲವೆಂದು ವಾದಿಸಲು ಬರುವುದಿಲ್ಲ.

ಯಾಕೆಂದರೆ, ಇಂತಹದೇ ನಿಕಟ ಸಂಬಂಧ ಬಂಗಾಲಿ ಮತ್ತು ಒಡಿಯಾಗಳ ನಡುವೆ ಇದೆ, ತಮಿಳು ಮತ್ತು ಮಲಯಾಳಗಳ ನಡುವೆಯೂ ಇದೆ. ಆದರೆ, ಇವನ್ನು ಒಂದೇ ಭಾಷೆಯ ಪ್ರಭೇದಗಳೆಂದು ಯಾರೂ ವಾದಿಸುವುದಿಲ್ಲ. ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಎರಡು ಸಮಾಜಗಳಲ್ಲಿ ಬಳಕೆಯಲ್ಲಿರುವ ಮಾತುಗಳು ಒಂದೇ ನುಡಿಯ ಪ್ರಭೇದಗಳೆಂದು ಹೇಳಲು ಅವುಗಳ ನಡುವೆ ಚಾರಿತ್ರಿಕ ಸಂಬಂಧವಿರಲೇಬೇಕು, ಎಂದರೆ ಅವೆರಡೂ ಒಂದೇ ನುಡಿಯಿಂದ ಬೆಳೆದುಬಂದಿರಬೇಕು. ಇದಲ್ಲದೆ, ಅವು ತುಂಬಾ ಹತ್ತಿರವೂ ಇರಬೇಕು; ಆದರೆ, ಮೇಲೆ ಸೂಚಿಸಿದ ಹಾಗೆ, ಎಷ್ಟು ಹತ್ತಿರ ಇರಬೇಕು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕೊಡುವುದು ಕಷ್ಟ.

Eke →

ಪ್ರಭೇದಗಳ ಯೋಗ್ಯತೆ

ನಿಜಕ್ಕೂ ಕೊಂಕಣಿ ಸ್ವತಂತ್ರ ಭಾಷೆಯೇ ಅಥವಾ ಮರಾಠಿಯ ಪ್ರಭೇದವೇ ಎಂಬ ಪ್ರಶ್ನೆಯ ಉತ್ತರ ಕೊಂಕಣಿಯನ್ನಾಡುವ ಕೊಂಕಣಿಗರ ಕೈಯಲ್ಲಿದೆ. ತಾವು ಮನೆಯಲ್ಲಾಡುವ ಮಾತು ಸಾಹಿತ್ಯಕ ಭಾಷೆಯಾಗಿ ವಿರಾಜಿಸಬೇಕೆಂಬ ಆಕಾಂಕ್ಷೆ ಅವರಲ್ಲಿದೆಯಾದರೆ, ಅವರೇ ಅದನ್ನು ಆ ಸ್ಥಾನಕ್ಕೆ ಏರಿಸಬಲ್ಲರು.

ಇದಕ್ಕೆ ಸಾಧಕವಾಗಬಲ್ಲಂತಹ ಶಕ್ತಿ ಇಲ್ಲವೇ ಯೋಗ್ಯತೆ ಕೊಂಕಣಿಗಿಲ್ಲ ವೆಂದು ಯಾರಾದರೂ ಹೇಳುವುದಿದ್ದರೆ ಮಾತ್ರ, ಅಂತಹ ವಾದವನ್ನು ವೈಜ್ಞಾನಿಕ

ವಾಗಿಯೇ ಖಂಡಿಸಬಹುದು. ಯಾಕೆಂದರೆ, ಸಾಹಜವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ಎಲ್ಲಾ ಭಾಷೆ ಮತ್ತು ಭಾಷಾಪ್ರಭೇದಗಳಿಗೂ ಇಂತಹ ಆಂತರಿಕ ಶಕ್ತಿ ಇದ್ದೇ ಇರುತ್ತದೆ. ಈ ವಿಷಯದಲ್ಲಿ ಭಾಷೆಗಳೊಳಗೆ ಕೀಳುಮೇಲಿಲ್ಲ. ಆ ಶಕ್ತಿಯನ್ನು ಬಳಸಿ, ಉತ್ತಮವಾದ ಸಾಹಿತ್ಯಕ ಕೃತಿಗಳನ್ನು ಆ ಭಾಷೆಯಲ್ಲಿ ರಚಿಸುವವರು ಅದನ್ನಾಡುವ ಸಮಾಜದಲ್ಲಿ ಹುಟ್ಟಿ ಬಂದರೆ ಸಾಕು.

ಭಾಷೆಗಳ ಚರಿತ್ರೆಯಲ್ಲಿ ಈ ಅಭಿಪ್ರಾಯಕ್ಕೆ ಸಾಕಷ್ಟು ನಿದರ್ಶನಗಳೂ ದೊರೆಯುತ್ತವೆ. ಒಂದು ಕಾಲದಲ್ಲಿ ಬರಿಯ ಹೆಂಗಸರ ಮತ್ತು ಕೆಳಗಿನ ಸ್ತರದ ಜನರ ಭಾಷೆಯೆಂದು ಪರಿಗಣಿತವಾಗಿದ್ದ ಪಾಲಿ ಮತ್ತು ಪ್ರಾಕೃತಗಳು ಬೌದ್ಧರ ಮತ್ತು ಜೈನರ ಕೈಯಲ್ಲಿ ಕಾವ್ಯಗಳ ರಚನೆಗೂ ಶಾಸ್ತ್ರಗಳ ಚರ್ಚೆಗೂ ಯೋಗ್ಯ ವೆನಿಸುವ ನುಡಿಗಳಾದುವು.

ಅವುಗಳಿಂದಲೇ ಬೆಳೆದು ಬಂದಿರುವ ಬಂಗಾಲಿ, ಮರಾಠಿ, ಹಿಂದಿ ಮೊದಲಾ ದವುಗಳು ರವೀಂದ್ರನಾಥ, ತುಳಸೀದಾಸ ಮೊದಲಾದವರಿಂದಾಗಿ ಇಂದಿನ ಸಾಹಿತ್ಯಕ ಭಾಷೆಗಳಾಗಿವೆ. ಒಂದು ಕಾಲದಲ್ಲಿ ಲ್ಯಾಟಿನ್, ಫ್ರೆಂಚ್‌ಗಳಿಂದ ತುಳಿಸಿ ಕೊಂಡು, ಬಹಳ ಹೀನಾಯ ಸ್ಥಿತಿಯಲ್ಲಿದ್ದ ಇಂಗ್ಲಿಷ್ ಭಾಷೆ ಇಂದು ಅಂತರಾಷ್ಟ್ರೀಯ ಭಾಷೆಯೆನಿಸಿದೆ. ಇವೆಲ್ಲಾ ನಿದರ್ಶನಗಳೂ ಭಾಷೆಗಳನ್ನು ಕೀಳು -ಮೇಲೆಂದು, ಸ್ವತಂತ್ರ-ಅಸ್ವತಂತ್ರಗಳೆಂದು ವಿಭಜಿಸಲು ಅವುಗಳಲ್ಲಿ ಆಂತರಿಕ ವಾದ ಆಧಾರಗಳೇನೂ ದೊರಕಲಾರವು ಎಂಬುದನ್ನು ಸ್ಪಷ್ಟಮಾಡಿಕೊಡುತ್ತವೆ.

Eke →

೧.೫ ಭಾಷೆಯು ತರ್ಕಬದ್ಧವೇನು?

ಕನ್ನಡದಲ್ಲಿ ಮೂರು ಕಾಲಗಳು, ಮೂರು ವಚನಗಳು, ಎಂಟು ವಿಭಕ್ತಿಗಳು ಎಂದೆಲ್ಲ ಇವೆಯೆಂದು ವರ್ಣಿಸುತ್ತಿರುವ ನಮ್ಮ ವೈಯಾಕರಣಿಗಳು ಭಾಷೆಗಳೆಲ್ಲ ತರ್ಕಬದ್ಧವಾಗಿ ಇರುತ್ತವೆ, ಇಲ್ಲವೇ ಇರಬೇಕು ಎಂಬ ಭಾವನೆಯನ್ನಿಟ್ಟು ಕೊಂಡಂತಿದೆ. ಅವರು ಮಾಡಿದ ಈ ತಪ್ಪಿನಿಂದಾಗಿ, ವ್ಯಾಕರಣವೆಂಬುದು ಕನ್ನಡ ದಲ್ಲಿ ಕಬ್ಬಿಣದ ಕಡಲೆಯಾಗಿದೆ. ಕನ್ನಡದಲ್ಲಿಲ್ಲದ ಎಂಟು ವಿಭಕ್ತಿಗಳನ್ನು ಇವೆ ಯೆಂದು ಯಾರೇ ಹೇಳಲಿ, ಕಲಿಯುವುದು ಅಸಾಧ್ಯ ತಾನೇ?

ಕರ್ಣಾಟಕದಲ್ಲಿ ಮಾತ್ರವಲ್ಲ, ಜಗತ್ತಿನ ಇತರ ಭಾಗಗಳಲ್ಲೂ ವೈಯಾಕರಣಿ ಗಳು ಈ ರೀತಿಯ ತಪ್ಪನ್ನು ಪದೇ ಪದೇ ಮಾಡುತ್ತ ಬಂದಿದ್ದಾರೆ.

Eke →

ಕಾಲಭೇದ

ಕಾಲವೆಂಬುದು ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ವಿಧವೆಂದು ವಾದಿಸಬಹುದು. ಆದರೆ, ಕಾಲದ ಈ ವಿಭಜನೆ ನಮ್ಮ ಮಾತಿಗೆ ಸಂಬಂಧಿಸಿದುದು: ಒಂದು ಘಟನೆಯು ಅದನ್ನು ಮಾತಿನ ಮೂಲಕ ತಿಳಿಸಿ

ಹೇಳುವ ಸಮಯದಲ್ಲಿ ನಡೆಯುತ್ತಿದೆಯಾದರೆ ಅದರ ಕಾಲ ವರ್ತಮಾನ; ಆ ಸಮಯಕ್ಕಿಂತ ಹಿಂದೆಯೇ ಅದು ನಡೆದು ಹೋಗಿದೆಯಾದರೆ ಅದರ ಕಾಲ ಭೂತ; ಮತ್ತು ಅದು ಆ ಸಮಯದ ಅನಂತರ ನಡೆಯುವಂತಹದಾದರೆ ಅದರ ಕಾಲ ಭವಿಷ್ಯತ್. ಕಾಲವನ್ನು ಯಾವ ರೀತಿಯಲ್ಲೇ ಆಗಲಿ ವಿಭಜಿಸಬೇಕಿದ್ದಲ್ಲಿ, ಅದಕ್ಕೆ ಈ ರೀತಿ ಘಟನೆಯೊಂದರ ಆಧಾರ ಬೇಕಾಗುತ್ತದೆ.

ಆದರೆ ಈ ರೀತಿ ಮಾತಿಗೆ ಸಂಬಂಧಿಸಿದಂತೆ ವಿಂಗಡಿಸಿ ಹೇಳಬಹುದಾದ ಕಾಲಭೇದವನ್ನು ಎಲ್ಲಾ ಭಾಷೆಗಳೂ ಒಂದೇ ರೀತಿಯಾಗಿ ಅವುಗಳ ಕ್ರಿಯಾ ರೂಪಗಳಲ್ಲಿ ಕಾಣಿಸಬೇಕೆಂಬ ನಿಯಮವೇನಿಲ್ಲ. ಕೆಲವು ಭಾಷೆಗಳು ಅವುಗಳ ಕ್ರಿಯಾರೂಪಗಳಲ್ಲಿ ಕಾಲಭೇದವನ್ನೇ ತೋರಿಸುವುದಿಲ್ಲ. ನಮ್ಮ ದೇಶದ ಉತ್ತರ ಕ್ಕಿರುವ ಮೈನ್ಮಾರ್‌ನ ಬರ್ಮೀಸ್ ಭಾಷೆ ಇಂತಹದು. ನಮ್ಮ ದೇಶದಲ್ಲೇನೇ ನಾಗಾಲೇಂಡಿನ ಕೆಲವು ಭಾಷೆಗಳಲ್ಲೂ (ಉದಾ: ಖೇಜೋ ಭಾಷೆ) ಕಾಲಭೇದ ವನ್ನು ತೋರಿಸುವ ಕ್ರಿಯಾರೂಪಗಳಿಲ್ಲ.

ಬರ್ಮೀಸ್ ಭಾಷೆಯ ಕ್ರಿಯಾಪದಗಳಲ್ಲಿ ಅವು ತಿಳಿಸುವ ಘಟನೆಯ ಕಾಲ ಭೇದವನ್ನು ಸೂಚಿಸುವ ಬದಲು, ಅವುಗಳ ನೈಜತೆಯ ಕುರಿತು ಮಾತನಾಡು ವವನ ಅನಿಸಿಕೆಯನ್ನು ಸೂಚಿಸುತ್ತದೆ. ಒಂದು ಘಟನೆ ನಡೆಯುವುದು ಇಲ್ಲವೇ ನಡೆದಿರುವುದು ನಿಜವೆಂಬುದು ಆತನ ಅನಿಸಿಕೆಯಾದರೆ ಕ್ರಿಯಾಪದದ ಒಂದು ರೂಪವನ್ನು ಬಳಸಲಾಗುತ್ತದೆ, ಮತ್ತು ನಿಜವಲ್ಲವೆಂಬುದು ಆತನ ಅನಿಸಿಕೆಯಾದರೆ ಇಲ್ಲವೇ ಆ ವಿಷಯದಲ್ಲಿ ಆತನಿಗೆ ಸಂಶಯವಿದೆಯಾದರೆ ಇನ್ನೊಂದು ರೂಪವನ್ನು ಬಳಸಲಾಗುತ್ತದೆ.

ಕ್ರಿಯಾಪದಗಳಲ್ಲಿ ಕಾಲಭೇದವನ್ನು ತೋರಿಸುವ ಭಾಷೆಗಳೂ ಬೇರೆ ಬೇರೆ ಬಗೆಯಲ್ಲಿ ಅದನ್ನು ತೋರಿಸಬಲ್ಲುವು. ಉದಾಹರಣೆಗಾಗಿ, ಅಂತಹ ಕೆಲವು ಭಾಷೆಗಳಲ್ಲಿ ಕ್ಷಣಿಕ ಘಟನೆಗಳನ್ನು ತಿಳಿಸುವ ಕ್ರಿಯಾಪದಗಳಿಗೆ ವರ್ತಮಾನ ರೂಪಗಳಿರುವುದಿಲ್ಲ.

ಕನ್ನಡದಲ್ಲಿ ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಮೂರು ಕಾಲರೂಪಗಳಿವೆ (ಇದ್ದಾನೆ, ಇರುತ್ತಾನೆ ಮತ್ತು ಇದ್ದ); ಆದರೆ, ಕುಡಿ, ತಿನ್ನು, ಬೀಳು, ಓಡು ಮೊದಲಾದ ಉಳಿದ ಎಲ್ಲಾ ಕ್ರಿಯಾಪದಗಳಿಗೂ ಎರಡು ಕಾಲರೂಪಗಳು ಮಾತ್ರ ಇವೆ (ಕುಡಿಯುತ್ತಾನೆ, ಕುಡಿದ; ಬೀಳುತ್ತಾನೆ, ಬಿದ್ದ). ಬೀಳುವನು ಎಂಬಂತಹ ಮೂರನೆಯ ರೂಪವೂ ಇದೆಯೆಂದು ವ್ಯಾಕರಣ ಪುಸ್ತಕಗಳಲ್ಲಿ ಬರೆದಿರಬಹುದು (ಇದಕ್ಕನುಗುಣವಾಗಿ ಇರು ಎಂಬ ಕ್ರಿಯಾಪದಕ್ಕೆ ಇರುವನು ಎಂಬ ನಾಲ್ಕನೆಯ ರೂಪವನ್ನೂ ಕೊಡಬಹುದು); ಆದರೆ, ಈ ಹೆಚ್ಚಿನ ರೂಪ ಕನ್ನಡದಲ್ಲಿ ಒಂದು ಹೆಚ್ಚಿನ ಕಾಲರೂಪವಾಗಿ ಬಳಕೆಯಾಗುತ್ತಿಲ್ಲ.

Eke →

ಲಿಂಗಭೇದ

ಪ್ರಕೃತಿಯಲ್ಲಿ ಲಿಂಗವು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗವೆಂಬುದಾಗಿ ಮೂರು ವಿಧವಾಗಿದೆಯೆಂದು ವಾದಿಸಬಹುದು. ಆದರೆ ಇದು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತದೆ. ಅವುಗಳಲ್ಲಿ ಕಾಣಿಸುವ ಲಿಂಗಭೇದಕ್ಕೂ ಪ್ರಕೃತಿಯಲ್ಲಿರುವ ಲಿಂಗಭೇದಕ್ಕೂ ಯಾವ ಸಂಬಂಧವೂ ಇಲ್ಲದಿರಲು ಸಾಧ್ಯವೆಂಬುದಕ್ಕೆ ಹಿಂದಿ, ಸಂಸ್ಕೃತ ಮೊದಲಾದ ಭಾಷೆಗಳು ಉತ್ತಮ ಉದಾಹರಣೆಗಳು.

ಭಾಷೆಗಳಲ್ಲಿ ಕಾಣಿಸುವ ಲಿಂಗಭೇದಗಳು ಸಾಮಾನ್ಯವಾಗಿ ನಾಮಪದಗಳ ವಿಭಜನೆಗೆ ಸಂಬಂಧಿಸಿದವುಗಳು. ಇವುಗಳ ಸಂಖ್ಯೆ ಮೂರಕ್ಕಿಂತ ಕಡಿಮೆಯೂ ಇರಬಹುದು, ಇಲ್ಲವೇ ಜಾಸ್ತಿಯೂ ಇರಬಹುದು. ಬಂಟೂ ಕುಟುಂಬಕ್ಕೆ ಸೇರಿದ ಆಫ್ರಿಕದ ಕೆಲವು ಭಾಷೆಗಳಲ್ಲಿ ನಾಮಪದಗಳು ಇಪ್ಪತ್ತಕ್ಕಿಂತಲೂ ಹೆಚ್ಚು ‘ಲಿಂಗ ಭೇದ’ಗಳನ್ನು ತೋರಿಸುತ್ತವೆ.

Eke →

ಸರ್ವನಾಮದಲ್ಲಿ ವೈಶಿಷ್ಟ್ಯ

ನಮಗೆ ಪರಿಚಿತವಾಗಿರುವ ಭಾಷೆಗಳಲ್ಲೆಲ್ಲ ಉತ್ತಮ, ಮಧ್ಯಮ, ಮತ್ತು ಪ್ರಥಮ ಎಂಬುದಾಗಿ ಮೂರು ಪುರುಷಭೇದಗಳಿವೆ. ಮಾತನಾಡುವವನು, ಮಾತನ್ನು ಕೇಳುವವನು, ಮತ್ತು ಇತರರು ಎಂಬುದಾಗಿ ಮಾತಿಗೆ ಸಂಬಂಧಿಸಿ ದಂತೆ ಮೂವರು ವ್ಯಕ್ತಿಗಳನ್ನು ಸೂಚಿಸುವ ಈ ಪುರುಷ ಭೇದ ತರ್ಕಬದ್ಧವಾದು ದೆಂದು ನಮಗೇನೋ ಅನಿಸಬಹುದು. ಆದರೆ ಇದಕ್ಕಿಂತ ಹೆಚ್ಚಿನ ವೈವಿಧ್ಯತೆ ಯನ್ನು ತೋರಿಸುವ ಭಾಷೆಗಳೂ ಕೆಲವಿವೆ.

ಅಲ್ಗೊಂಕಿಯನ್ ಕುಟುಂಬಕ್ಕೆ ಸೇರಿದ ಅಮೆರಿಕಾದ ಕೆಲವು ಭಾಷೆಗಳಲ್ಲಿ ನಾಲ್ಕನೆಯದೊಂದು ಪುರುಷವಿದೆ. ‘ಅವನು ಅವನ (ಇನ್ನೊಬ್ಬನ) ತಂದೆಯನ್ನು ಕರೆದ’ ಎಂಬಂತಹ ವಾಕ್ಯಗಳಲ್ಲಿ ಬರುವ ಎರಡು ‘ಅವನು’ಗಳನ್ನು ಈ ಭಾಷೆ ಗಳಲ್ಲಿ ಬರುವ ಎರಡು ಪ್ರಥಮ ಪುರುಷಗಳು ಪ್ರತ್ಯೇಕಿಸುತ್ತವೆ.

ಕನ್ನಡದಲ್ಲಿ ನಾವು ಎಂಬ ಪದವನ್ನು ‘ನಾವು ಮಾತ್ರ’, ‘ನಾವು ಮತ್ತು ಅವರು’, ‘ನಾವು ಮತ್ತು ನೀವು’, ‘ನಾವು, ನೀವು, ಅವರು, ಎಲ್ಲರೂ’ ಮೊದಲಾದ ಹಲವು ಬಗೆಯ ಅರ್ಥಗಳಲ್ಲಿ ಬಳಸಬಹುದು.

ದಕ್ಷಿಣ ಕನ್ನಡದ ಹವ್ಯಕರ ಮಾತಿನಲ್ಲಿ ನಾವು ಎಂಬ ಪದವನ್ನು ಇವು ಗಳಲ್ಲಿ ಕೊನೆಯ ಎರಡು ಅರ್ಥಗಳಲ್ಲಿ ಮಾತ್ರ ಬಳಸಲಾಗುತ್ತದೆ; ‘ನಾವು ಮಾತ್ರ’ ಇಲ್ಲವೇ ‘ನಾವು ಮತ್ತು ಅವರು ಮಾತ್ರ’ ಎಂಬರ್ಥದಲ್ಲಿ ಎಂಗೊ ಎಂಬ ಬೇರೊಂದು ಸರ್ವನಾಮವನ್ನು ಬಳಸಲಾಗುತ್ತದೆ. ಇಂತಹದೇ ವ್ಯತ್ಯಾಸ ಹಳೆಗನ್ನಡದಲ್ಲೂ ಇತ್ತು.

ಮುಂಡ ಕುಟುಂಬಕ್ಕೆ ಸೇರಿದ ಬಿಹಾರಿನ ಸಂತಾಲಿ ಎಂಬ ಭಾಷೆಯಲ್ಲಿ ಪುರುಷ ಮತ್ತು ವಚನಗಳ ವ್ಯವಸ್ಥೆ ಇನ್ನಷ್ಟು ಕ್ಲಿಷ್ಟವಾಗಿದೆ. ಅದರಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನಗಳೆಂಬುದಾಗಿ ಮೂರು ವಚನಗಳಿದ್ದು, ದ್ವಿವಚನ ದಲ್ಲಿ ನಾವಿಬ್ಬರು, ಎಂದರೆ ‘ನಾನು ಮತ್ತು ಅವನು’, ‘ನಾನು ಮತ್ತು ನೀನು’, ‘ನೀವಿಬ್ಬರು’, ‘ಅವರಿಬ್ಬರು’ ಎಂಬವನ್ನೆಲ್ಲ ಬೇರೆ ಬೇರೆ ಸರ್ವನಾಮಗಳ ನ್ನುಪಯೋಗಿಸಿ ತಿಳಿಸಬಹುದು. ಬಹುವಚನದಲ್ಲೂ ‘ನಿನ್ನನ್ನುಳಿದು ನಾವು ಮಾತ್ರ’, ‘ನಾವೆಲ್ಲ’, ‘ನೀವೆಲ್ಲ’, ‘ಅವರೆಲ್ಲ’ ಎಂದೆಲ್ಲ ಪ್ರತ್ಯೇಕ ಪ್ರತ್ಯೇಕವಾಗಿ ತಿಳಿಸಬಹುದು.

Eke →

ನಾಲ್ಕು ವಚನಗಳು

ವಚನಗಳ ಸಂಖ್ಯೆಯಾದರೂ ಹೀಗೆಯೇ. ಮೂರು ವಚನಗಳಿರುವುದರಿಂದ ಸಂಸ್ಕೃತಕ್ಕೊಂದು ವೈಶಿಷ್ಟ್ಯ ಬರುವುದಿಲ್ಲ; ಎರಡೇ ಇರುವುದರಿಂದ ಕನ್ನಡಕ್ಕೆ ಕುಂದೂ ಬರುವುದಿಲ್ಲ.

ಲಿನ್ನಾಟೋನ್ ದ್ವೀಪದಲ್ಲಿ ವಾಸಿಸುವ ಕಾಡುಜನರ ಭಾಷೆಯಲ್ಲಿ ಏಕವಚನ, ದ್ವಿವಚನ, ತ್ರಿವಚನ ಮತ್ತು ಬಹುವಚನ ಎಂಬುದಾಗಿ ನಾಲ್ಕು ವಚನಗಳಿವೆ. ಫಿಜಿಯನ್ ಭಾಷೆಯಲ್ಲಿ ಹಲವರು ಎಂಬುದನ್ನು ಸೂಚಿಸುವ ಬಹುವಚನ ವಲ್ಲದೆ, ಕೆಲವರು ಎಂಬುದನ್ನು ಸೂಚಿಸುವ ಇನ್ನೊಂದು ವಚನವೂ ಇದೆ.

ಇದಕ್ಕೆ ವಿರುದ್ಧವಾಗಿ, ಮೇಕ್ಸಿಕೋದ ತರಹುಮರ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬ ಭೇದವೂ ಕಾಣಿಸುವುದಿಲ್ಲ. ಅದರಲ್ಲಿ ಇರುವುದು ಒಂದೇ ವಚನ. ಬಹುತ್ವವನ್ನು ಸೂಚಿಸಬೇಕಾದಾಗಲೆಲ್ಲ ಈ ಭಾಷೆಯನ್ನಾಡುವ ಜನರು ಸಂಖ್ಯೆಯನ್ನುಪಯೋಗಿಸುತ್ತಾರೆ.

Eke →

ಗಣನಾ ಪದ್ಧತಿ

ನಮ್ಮಲ್ಲಿ ಬಳಕೆಯಲ್ಲಿರುವ ದಶಮಾಂಶ ಪದ್ಧತಿಯು ಅತ್ಯಂತ ತರ್ಕಬದ್ಧವಾದ ಗಣನಾಪದ್ಧತಿಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ. ಆದರೆ ಇದಕ್ಕೆ ನಮ್ಮ ಭಾಷೆಗಳು ಸಂಖ್ಯೆಗಳಲ್ಲಿ ದಶಮಾಂಶ ಪದ್ಧತಿಯನ್ನು ಬಳಸುತ್ತಿರುವುದೇ ಕಾರಣವೆಂಬುದನ್ನು ಮರೆಯಬಾರದು.

ಒಂದು, ಎರಡು, ಮೂರು ಎಂಬುದಾಗಿ ಲೆಕ್ಕ ಹಾಕುವಾಗ, ನಾವು ನಮ್ಮ ಭಾಷೆಗಳಲ್ಲಿ ಈ ಎಣಿಕೆಯನ್ನು ಹತ್ತಕ್ಕೆ ನಿಲ್ಲಿಸಿ, ಅನಂತರ ಹನ್ನೊಂದು, ಹನ್ನೆರಡು ಎಂಬುದಾಗಿ ಮುಂದಕ್ಕೆ ಹೋಗುತ್ತೇವೆ, ಎಂಟಕ್ಕೆ ನಿಲ್ಲಿಸಿ ಎಂಟೊಂದು, ಎಂಟೆರಡು ಎಂದಾಗಲೀ ಇಲ್ಲವೇ ಐದಕ್ಕೆ ನಿಲ್ಲಿಸಿ ಐದೊಂದು, ಐದೆರಡು ಎಂದಾಗಲೀ ಮುಂದಕ್ಕೆ ಹೋಗುವ ಅಷ್ಟಮಾಂಶ ಇಲ್ಲವೇ

ಪಂಚಮಾಂಶ ಪದ್ಧತಿಯನ್ನು ನಾವು ಅನುಸರಿಸುವುದಿಲ್ಲ. ಹಾಗಾಗಿ, ದಶಮಾಂಶ ಪದ್ಧತಿ ನಮ್ಮ ಭಾಷೆಗಳ ಮಟ್ಟಿಗೆ ಮಾತ್ರ ತರ್ಕಬದ್ಧವಾದುದು.

ಆದರೆ, ಭಾಷೆಗಳೆಲ್ಲವೂ ಎಣಿಕೆಯಲ್ಲಿ ಈ ರೀತಿ ದಶಮಾಂಶ ಪದ್ಧತಿಯನ್ನೇ ಅನುಸರಿಸಬೇಕೆಂದೇನಿಲ್ಲ. ಅಷ್ಟಮಾಂಶ ಪದ್ಧತಿಯನ್ನೋ ಪಂಚಮಾಂಶ ಪದ್ಧತಿ ಯನ್ನೂ ಅನುಸರಿಸಲೂ ಸಾಧ್ಯವಿದೆ, ಮತ್ತು ಇಂತಹ ಭಾಷೆಗಳನ್ನಾಡುವವರಿಗೆ ದಶಮಾಂಶ ಗಣನಾಪದ್ಧತಿ ತರ್ಕಬದ್ದವಾಗಲಾರದು.

ಉದಾಹರಣೆಗಾಗಿ, ಅಸ್ಸಾಮಿನ ಬೋಡೋ ಜನಾಂಗದವರು ತಮ್ಮ ಭಾಷೆ ಯಲ್ಲಿ ಸಂಖ್ಯೆಗಳನ್ನು ನಾಲ್ಕಕ್ಕೆ ನಿಲ್ಲಿಸಿ ಅನಂತರ ನಾಲ್ಕೊಂದು, ನಾಲೈರಡು ಎಂಬುದಾಗಿ ಮುಂದುವರಿಯುತ್ತಾರೆ. ಇವರ ಭಾಷೆಯಲ್ಲಿ ಹತ್ತು ಎನ್ನಬೇಕಿದ್ದರೆ ‘ಎರಡು ನಾಲ್ಕುಗಳು ಮತ್ತು ಎರಡು’ ಎಂದು ಹೇಳಬೇಕು.

Eke →

ಎರಡು ನಿಷೇಧಗಳಿದ್ದರೂ ನಿಷೇಧವೇ

ಎರಡು ನಿಷೇಧ ಪದಗಳನ್ನು ಒಂದು ವಾಕ್ಯದಲ್ಲಿ ಪ್ರಯೋಗಿಸಿದೆವಾದರೆ, ಅದಕ್ಕಿರುವ ನಿಷೇಧಾರ್ಥ ಮಾಯವಾಗಿ ಇದೆ ಎಂಬ ಅರ್ಥ ಬರುತ್ತದೆ ಎಂಬ ವಾದ (ಉದಾಹರಣೆಗಾಗಿ, ಕನ್ನಡದಲ್ಲಿ ಇಲ್ಲವೆಂದಿಲ್ಲ ಎಂದರೆ ಇದೆ ಎಂಬ ಅರ್ಥ ಬರುತ್ತದೆ ಎಂಬುದು) ನಮಗೇನೋ ತರ್ಕಬದ್ಧವಾಗಿ ತೋರಬಹುದು. ಆದರೆ ಫ್ರೆಂಚ್ ಮಾತನಾಡುವವನೊಬ್ಬನ ಹತ್ತಿರ ಹೋಗಿ ಕೇಳಿ ನೋಡಿದರೆ, ಇದಕ್ಕೆ ವಿರುದ್ಧವಾದ ಅಭಿಪ್ರಾಯ ದೊರಕೀತು. ಎರಡು ನಿಷೇಧಾರ್ಥಕ ಪದ ಗಳಿದ್ದರೂ ವಾಕ್ಯದ ಅರ್ಥ ನಿಷೇಧವಾಗಿಯೇ ಉಳಿಯಬಲ್ಲುದೆಂದು ಆತ ವಾದಿಸಬಹುದು. ಯಾಕೆಂದರೆ, ಫ್ರೆಂಚ್ ಭಾಷೆಯಲ್ಲಿ ಇಂತಹ ಪ್ರಯೋಗಗಳು ಕಾಣಸಿಗುತ್ತವೆ. ತರ್ಕಬದ್ಧತೆಯೆಂಬುದು ಭಾಷೆಯನ್ನವಲಂಬಿದೆಯಲ್ಲದೆ ಭಾಷೆ ಅದನ್ನವಲಂಬಿಸಿಲ್ಲ.

Eke →

ಭಾಷೆಯ ಸ್ವಚ್ಛಂದತೆ

ಜರ್ಮನಿಯವನೊಬ್ಬ ಹೇಳಿದನಂತೆ, ‘ಈ ಫ್ರೆಂಚರು ನಿಜಕ್ಕೂ ತೀರ ವಿಚಿತ್ರ ಮನುಷ್ಯರು. ಯಾಕೆಂದರೆ, ಅವರು ರೊಟ್ಟಿಯನ್ನು ಡುವೇ ಎಂದು ಕರೆಯು ತ್ತಾರೆ. ಇದು ಹುಚ್ಚುತನವಲ್ಲದೆ ಮತ್ತೇನು? ಯಾರೇನೇ ಕರೆಯಲಿ, ನಿಜ ವಾಗಿಯೂ ಅದು ಬ್ರೋಟ್ ಎಂದು ಎಂತಹ ಹುಂಬನಿಗೂ ಗೊತ್ತಿದೆ’ (ಜರ್ಮನ್ ಭಾಷೆಯಲ್ಲಿ ರೊಟ್ಟಿಗೆ ಬ್ರೋಟ್ ಎಂದು ಹೆಸರು).

ಭಾಷೆಯ ಸ್ವಚ್ಛಂದತೆಯನ್ನು ಮೇಲಿನ ಕತೆ ಬಹಳ ಸುಂದರವಾಗಿ ವಿವರಿಸು ತ್ತದೆ. ಒಂದು ವಸ್ತುವನ್ನು ನಾವು ಅಂಗಿ ಎಂದು ಕರೆಯುತ್ತೇವೆ. ಇಲ್ಲಿ ಆ ವಸ್ತು ವಿಗೂ ಮತ್ತು ಅಂಗಿ ಎಂಬ ಪದದಲ್ಲಿ ಬರುವ ಅಕಾರ, ಅನುಸ್ವಾರ, ಗಕಾರ ಇಲ್ಲವೇ ಇಕಾರಗಳಿಗೂ ನಡುವೆ ನೇರವಾಗಿ ಯಾವ ತರದ ಸಂಬಂಧವೂ ಇಲ್ಲ.

ನಮ್ಮ ಹಿರಿಯರು ಆ ವಸ್ತುವನ್ನು ಅಂಗಿ ಎಂದು ಕರೆದರು, ಅದನ್ನು ಕೇಳಿ ನಾವೂ ಹಾಗೆಯೇ ಕರೆಯುತ್ತಿದ್ದೇವೆ.

ವಸ್ತುವಿಗೂ ಅದನ್ನು ಹೆಸರಿಸುವ ಪದಕ್ಕೂ ನಡುವೆ ಸಹಜವಾದ ಸಂಬಂಧ ವಿದೆಯಾದರೆ, ಕನ್ನಡದ ಅಂಗಿ ಎಂಬುದು ಇಂಗ್ಲಿಷ್‌ನಲ್ಲಿ ಶರ್ಟ್ ಆಗಲಾರದು, ಇಲ್ಲವೇ ಹಿಂದಿಯಲ್ಲಿ ಕಮೀಜ್ ಆಗಲಾರದು. ಪದ ಮತ್ತು ಅರ್ಥಗಳ ನಡುವಿರುವ ಸಂಬಂಧ ಈ ರೀತಿ ರೂಢಿಮೂಲವಾದುದು. ಈ ರೂಢಿ ಇಲ್ಲವೇ ಪರಂಪರೆ ಭಾಷೆಯಿಂದ ಭಾಷೆಗೆ ಬೇರೆ ಬೇರಾಗಿರುತ್ತದೆ.

ಪದಗಳನ್ನು ಸೇರಿಸಿ ವಾಕ್ಯಗಳನ್ನು ಮಾಡುವ ಕ್ರಮವೂ ಇದೇ ರೀತಿ ಭಾಷೆ ಯಿಂದ ಭಾಷೆಗೆ ಬೇರೆ ಬೇರಾಗಿರುತ್ತದೆ. ಇಲ್ಲೂ ಕೂಡ ಸಾಕಷ್ಟು ವೈವಿಧ್ಯತೆಗೆ ಎಡೆಯಿದ್ದು, ಒಂದು ಭಾಷೆಯ ವ್ಯಾಕರಣ (ಎಂದರೆ ವಾಕ್ಯ ರಚನೆಯ ವಿಧಾನ) ಇನ್ನೊಂದು ಭಾಷೆಯ ವ್ಯಾಕರಣಕ್ಕಿಂತ ತೀರ ಭಿನ್ನವಾಗಿರಲು ಸಾಧ್ಯವಿದೆ. ಇದರಲ್ಲಿ ಒಂದು ಸರಿ, ಇನ್ನೊಂದು ತಪ್ಪು ಇಲ್ಲವೇ ಒಂದು ಇನ್ನೊಂದಕ್ಕಿಂತ ಉತ್ತಮ ಎಂದು ವಾದಿಸುವುದೆಂದರೆ, ಮೇಲೆ ಜರ್ಮನಿಯವನು ಫ್ರಾನ್ಸಿನವನ ಮಾತನ್ನು ಹೀಗಳೆದಂತಲ್ಲದೆ ಬೇರೇನಲ್ಲ.

Eke →

೧.೬ ವರ್ತಮಾನ ಕಾಲ

ಕಾಲವೆಂಬುದು ಅನವರತವಾಗಿ ಸಾಗುತ್ತಲೇ ಇರುತ್ತದೆ. ಅದನ್ನು ಬೇರೆ ಬೇರೆ ತುಣುಕುಗಳಾಗಿ ಒಡೆಯಲು, ಮತ್ತು ಆ ತುಣುಕುಗಳನ್ನು ಬೇರೆ ಬೇರೆಯೆಂದು ಗುರುತಿಸಲು ಕಾಲದಲ್ಲಿ ಜರಗುವ ಘಟನೆಗಳನ್ನು ನಾವು ಬಳಸಿಕೊಳ್ಳಬೇಕಾಗು ತ್ತದೆ. ಗಡಿಯಾರದ ಮುಳ್ಳುಗಳ ಚಲನೆಯನ್ನಾಧರಿಸಿ ಕಾಲವನ್ನು ನಾವು ಸೆಕೆಂಡು, ಮಿನಿಟು ಮತ್ತು ಗಂಟೆಗಳಾಗಿ ಒಡೆಯುತ್ತೇವೆ, ಮತ್ತು ಗಡಿಯಾರದಲ್ಲಿರುವ ದೊಡ್ಡ ಮುಳ್ಳು ಮತ್ತು ಸಣ್ಣ ಮುಳ್ಳುಗಳು ಯಾವ ಅಂಕೆಯ ಮುಂದೆ ನಿಂತಿವೆ ಎಂಬುದನ್ನಾಧರಿಸಿ, ಇಂತಿಷ್ಟನೇ ಗಂಟೆಯ ಇಂತಿಷ್ಟನೇ ಮಿನಿಟು ಎಂಬುದಾಗಿ ಆ ತುಣುಕುಗಳಲ್ಲೊಂದನ್ನು ಗುರುತಿಸುತ್ತೇವೆ.

ಇದೇ ರೀತಿಯಲ್ಲಿ ಸೂರ್ಯನ ಚಲನೆಯನ್ನಾಧರಿಸಿ ಕಾಲವನ್ನು ದಿನಗಳಾಗಿ ಮತ್ತು ದಿನದ ಭಾಗಗಳಾಗಿ ಒಡೆಯುತ್ತೇವೆ ಮತ್ತು ಆ ಭಾಗಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಇತ್ಯಾದಿಯಾಗಿ ಗುರುತಿಸುತ್ತೇವೆ. ಇದಲ್ಲದೆ, ದಿನ ಗಳನ್ನು ವಾರ, ತಿಂಗಳು ಮತ್ತು ವರ್ಷಗಳಲ್ಲಿ ಜೋಡಿಸುತ್ತೇವೆ ಮತ್ತು ಅವಕ್ಕೆ ತಾರೀಕು, ವಾರ, ತಿಂಗಳು ಮತ್ತು ಇಸವಿಗಳ ಹೆಸರು ಕೊಟ್ಟು ಗುರುತಿಸುತ್ತೇವೆ.

ಕಾಲವನ್ನು ಈ ರೀತಿ ಒಡೆದು ಹೆಸರಿಸುವ ವಿಧಾನ ಹಿಂದಿನ ಕಾಲದಲ್ಲಿ ಊರಿಂದೂರಿಗೆ ಬೇರೆ ಬೇರಾಗಿತ್ತು. ಆದರೆ ಈವತ್ತು ನಾವೆಲ್ಲ ಕೈಗೆ ವಾಚು

ಕಟ್ಟಿ, ಗೋಡೆಗೆ ಕೆಲೆಂಡರ್ ತೂಗ ಹಾಕಿ, ಪ್ರಪಂಚದಲ್ಲಿರುವವರೆಲ್ಲರೂ ಒಂದೇ ವಿಧಾನವನ್ನನುಸರಿಸುವ ಹಾಗಾಗಿದೆ.

Eke →

ವ್ಯಾಕರಣದಲ್ಲಿ ಕಾಲ

ಆದರೆ, ವ್ಯಾಕರಣದಲ್ಲಿ ಕಾಣಿಸುವ ಕಾಲದ ವಿಭಜನೆ ಇದಕ್ಕಿಂತ ತೀರಾ ಭಿನ್ನ ವಾದುದು, ಮತ್ತು ಭಾಷೆಯಿಂದ ಭಾಷೆಗೂ ಭಿನ್ನವಾಗಿರುವಂತಹದು. ಎಲ್ಲಾ ಭಾಷೆಗಳೂ ಒಂದೇ ರೀತಿಯ ಕಾಲವಿಭಜನೆಯನ್ನು ಬಳಸಿದರೆ ಉತ್ತಮ ಎಂದು ನಾವು ಭಾವಿಸಬಹುದು, ಆದರೆ, ಹಾಗೆ ಬಳಸುವಂತೆ ಮಾಡಲು ಯಾರಿಗೂ ಸಾಧ್ಯವಾಗದು.

ಇದಕ್ಕೆ ಕಾರಣವೇನೆಂದರೆ, ಭಾಷೆಯನ್ನು ಬಳಸುವವರಿಗೆ ತಾವು ತಮ್ಮ ಭಾಷೆಯಲ್ಲಿ ಕಾಲದ ವಿಭಜನೆಗಾಗಿ ಎಂತಹ ವಿಧಾನವನ್ನು ಬಳಸುತ್ತಿರುತ್ತೇವೆ ಎಂಬುದೇ ತಿಳಿದಿರುವುದಿಲ್ಲ. ಅದರ ಬಳಕೆ ಅವರ ಅರಿವಿಗೆ ಎಟಕದ ರೂಪದಲ್ಲಿ ನಡೆಯುತ್ತಿರುತ್ತದೆ. ವೈಯಾಕರಣಿಗಳು ತಾವು ವರ್ಣಿಸುವ ಭಾಷೆಯಲ್ಲಿ ಕಾಲದ ಬಳಕೆ ಹೇಗಿದೆ ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬಲ್ಲರಾದರೂ, ಅವರೂ ಅದನ್ನು ತಮ್ಮ ಅರಿವಿಗೆ ಎಟಕದ ರೂಪದಲ್ಲೇನೇ ಬಳಸಬೇಕಾಗುತ್ತದೆ.

Eke →

ಕನ್ನಡದ ಎರಡು ವಿಧಾನಗಳು

ಕನ್ನಡದ ಮಟ್ಟಿಗೆ ಹೇಳುವುದಾದರೆ, ನಾವು ಕಾಲದ ವಿಭಜನೆಗಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತೇವೆ. ಇವುಗಳಲ್ಲಿ ಮೊದಲನೆಯ ವಿಧಾನದ ಮೂಲಕ ನಾವು ಒಂದು ಘಟನೆಯ ಕಾಲ ಯಾವುದೆಂಬುದನ್ನು ಸೂಚಿಸುತ್ತೇವೆ, ಮತ್ತು ಇನ್ನೊಂದು ವಿಧಾನದ ಮೂಲಕ ಎರಡು ಘಟನೆಗಳ ನಡುವೆ ಕಾಲದ ಮಟ್ಟಿಗೆ ಎಂತಹ ಸಂಬಂಧವಿದೆಯೆಂಬುದನ್ನು ತಿಳಿಸುತ್ತೇವೆ.

ಒಂದು ಘಟನೆ ಅದನ್ನು ವರದಿ ಮಾಡುವ ಸಮಯಕ್ಕಿಂತ ಮೊದಲು ನಡೆ ದಿರಬಹುದು ಇಲ್ಲವೇ ಅದರ ಅನಂತರ ನಡೆಯಲಿರಬಹುದು. ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಕನ್ನಡದ ಕ್ರಿಯಾಪದಗಳಿಗೆಲ್ಲ ಎರಡೆರಡು ಕಾಲರೂಪಗಳಿವೆ. ಉದಾಹರಣೆಗಾಗಿ, ‘ರಾಜು ಪೇಟೆಗೆ ಹೋಗು’ವ ಘಟನೆ ಅದನ್ನು ವರದಿ ಮಾಡುವ ಸಮಯಕ್ಕಿಂತ ಮೊದಲೇ ನಡೆದಿದೆಯಾದರೆ, ಅದನ್ನು ಸೂಚಿಸಲು ಹೋದ ಎಂಬ ರೂಪವಿದೆ ಮತ್ತು ಅನಂತರ ನಡೆಯಲಿರುವುದಾದರೆ ಹೋಗು ತ್ತಾನೆ ಎಂಬ ರೂಪವಿದೆ.

ಎರಡು ಘಟನೆಗಳ ನಡುವೆ ಮೂರು ರೀತಿಯ ಸಂಬಂಧಗಳಿರಬಲ್ಲುವು: ಒಂದು ಘಟನೆ ಇನ್ನೊಂದು ಘಟನೆಯ ಮೊದಲು ನಡೆದಿರಬಹುದು, ಅನಂತರ ನಡೆದಿರಬಹುದು, ಇಲ್ಲವೇ ಅವೆರಡೂ ಒಟ್ಟಿಗೆ ಒಂದೇ ಕಾಲದಲ್ಲಿ ನಡೆದಿರಬ ಹುದು (ಅಥವಾ ನಡೆಯಲಿರಬಹುದು). ಇದನ್ನು ಸೂಚಿಸುವುದಕ್ಕಾಗಿ ಎರಡು

ಘಟನೆಗಳಲ್ಲಿ ಮೊದಲನೆಯದನ್ನು ಸೂಚಿಸುವ ಕ್ರಿಯಾಪದಕ್ಕೆ ಕನ್ನಡದಲ್ಲಿ ಮೂರು ರೂಪಗಳಿವೆ.

ಉದಾಹರಣೆಗಾಗಿ, ‘ತಿಂಡಿ ತಿನ್ನುವ’ ಘಟನೆ ಮತ್ತು ‘ಮನೆಗೆ ಹೋಗುವ’ ಘಟನೆಗಳ ನಡುವಿರುವ ಈ ಮೂರು ರೀತಿಯ ಸಂಬಂಧಗಳನ್ನು ಸೂಚಿಸುವು ದಕ್ಕಾಗಿ ಅವುಗಳಲ್ಲಿ ಮೊದಲಿನದನ್ನು ಸೂಚಿಸುವ ಕ್ರಿಯಾಪದವನ್ನು ಮೂರು ಬೇರೆ ಬೇರೆ ರೂಪಗಳಲ್ಲಿ ಬಳಸಬಲ್ಲೆವು:

  1. (೧) ಜಾನಕಿ ತಿಂಡಿ ತಿಂದು ಮನೆಗೆ ಹೋಗುತ್ತಾಳೆ.
  2. (೨) ಜಾನಕಿ ತಿಂಡಿ ತಿನ್ನುತ್ತಾ ಮನೆಗೆ ಹೋಗುತ್ತಾಳೆ.
  3. (೩) ಜಾನಕಿ ತಿಂಡಿ ತಿನ್ನಲು ಮನೆಗೆ ಹೋಗುತ್ತಾಳೆ.

ಮೇಲಿನ ವಾಕ್ಯಗಳಲ್ಲಿ ‘ತಿಂಡಿ ತಿನ್ನುವ’ ಘಟನೆಯನ್ನು ತಿಂದು, ತಿನ್ನುತ್ತಾ ಮತ್ತು ತಿನ್ನಲು ಎಂಬ ಮೂರು ಕ್ರಿಯಾರೂಪಗಳ ಮೂಲಕ ಸೂಚಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಕನ್ನಡದಲ್ಲಿ ಈ ರೀತಿ ಘಟನೆಗಳನ್ನು ಸೂಚಿಸುವ ಎಲ್ಲಾ ಕ್ರಿಯಾಪದಗಳಿಗೂ ಕಾಲವನ್ನು ಸೂಚಿಸುವುದಕ್ಕಾಗಿ ಎರಡು ಪೂರ್ಣ ರೂಪಗಳಿವೆ ಮತ್ತು ಮೂರು ಅಪೂರ್ಣ ರೂಪಗಳಿವೆ. ಪೂರ್ಣರೂಪಗಳ ಮೂಲಕ ಒಂದು ಘಟನೆಯ ಸಮಯವನ್ನು ಅದನ್ನು ವರದಿ ಮಾಡುವ ಸಮಯಕ್ಕೆ ಸಂಬಂಧಿಸಿದಂತೆ ಸೂಚಿಸು ತೇವೆ, ಮತ್ತು ಅಪೂರ್ಣ ರೂಪಗಳ ಮೂಲಕ ಸಮಯದ ಮಟ್ಟಿಗೆ ಎರಡು ಘಟನೆಗಳ ನಡುವಿರುವ ಸಂಬಂಧವೆಂಹದು ಎಂಬುದನ್ನು ಸೂಚಿಸುತ್ತೇವೆ. ಇವು ಸಮಯವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಬಳಕೆಯಾಗುವ ಎರಡು ವಿಧಾನಗಳು.

Eke →

ಇರು ಕ್ರಿಯಾಪದದ ವೈಶಿಷ್ಟ್ಯ

ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಕನ್ನಡದಲ್ಲಿ (ಇದ್ದ, ಇರುತ್ತಾನೆ ಮತ್ತು ಇದ್ದಾನೆ ಎಂಬುದಾಗಿ) ಮೂರು ಬೇರೆ ಬೇರೆ ಕಾಲಗಳನ್ನು ಸೂಚಿಸುವ ಪೂರ್ಣರೂಪಗಳಿವೆ. ಇವು ವರದಿ ಮಾಡುವ ಸಮಯಕ್ಕಿಂತ ಮೊದಲು, ಅದರ ಅನಂತರ, ಮತ್ತು ಅದೇ ಸಮಯಗಳಲ್ಲಿ ಕಾಣಿಸುವ ಇರುವಿಕೆಗಳನ್ನು ಸೂಚಿಸು ತ್ತವೆ.

ಇರು ಎಂಬುದು ಒಂದು ಘಟನೆಯನ್ನು ಸೂಚಿಸುವ ಬದಲು ‘ಇರುವಿಕೆ’ ಎಂಬ ಒಂದು ಸ್ಥಿತಿಯನ್ನು ಸೂಚಿಸುತ್ತಿರುವುದೇ ಅದಕ್ಕೆ ಈ ರೀತಿ ಮೂರು ಪೂರ್ಣರೂಪಗಳಿರುವುದಕ್ಕೆ ಕಾರಣವಿರಬೇಕು. (ಇದಲ್ಲದೆ, ಇತರ ಕ್ರಿಯಾಪದ ಗಳ ಹಾಗೆ ಇರು ಎಂಬುದಕ್ಕೂ ಇದ್ದು, ಇರುತ್ತಾ ಮತ್ತು ಇರಲು ಎಂಬುದಾಗಿ ಮೂರು ಅಪೂರ್ಣ ರೂಪಗಳಿವೆ).

Eke →

ವರ್ತಮಾನ ಕಾಲ

ಒಂದು ಘಟನೆ ಅದನ್ನು ವರದಿ ಮಾಡುವ ಸಮಯದಲ್ಲೇನೇ ನಡೆಯುತ್ತಿದೆ ಎಂಬುದನ್ನು ಸೂಚಿಸಲು ಕನ್ನಡದಲ್ಲಿ ವಿಶಿಷ್ಟವಾದ ‘ವರ್ತಮಾನ’ ಕಾಲದ ಕ್ರಿಯಾ ರೂಪವಿಲ್ಲ. ಹಾಗಾಗಿ, ಈ ಅರ್ಥವನ್ನು ಸೂಚಿಸಬೇಕಾದಾಗ ನಾವು ಒಂದು ಘಟನೆಗೂ ಅದರ ಇರುವಿಕೆಗೂ ನಡುವಿರುವ ಸಂಬಂಧವನ್ನು ಸೂಚಿಸುವಂತಹ ಬಳಸುದಾರಿಯನ್ನು ಹಿಡಿಯಬೇಕಾಗುತ್ತದೆ.

ಉದಾಹರಣೆಗಾಗಿ, ‘ರಾಜು ಹೋಗುವ’ ಘಟನೆ ಅದನ್ನು ವರದಿ ಮಾಡುವ ಸಮಯದಲ್ಲೇನೇ ನಡೆಯುತ್ತಿದೆ ಎಂಬುದನ್ನು ಸೂಚಿಸಬೇಕಿದ್ದಲ್ಲಿ ರಾಜು ಹೋಗುತ್ತಾ ಇದ್ದಾನೆ (ಇಲ್ಲವೇ ಹೋಗುತ್ತಿದ್ದಾನೆ) ಎಂಬುದಾಗಿ ಹೋಗು ವಿಕೆಗೂ ಇರುವಿಕೆಗೂ ನಡುವಿರುವ ಸಂಬಂಧ ಒಂದೇ ಕಾಲದ್ದು (ಮತ್ತು ಆ ಇರುವಿಕೆ ಈಗಿನದು) ಎಂಬುದಾಗಿ ಅಪೂರ್ಣರೂಪ ಮತ್ತು ಪೂರ್ಣರೂಪಗಳ ಜೋಡಿಯನ್ನು ಬಳಸಬೇಕಾಗಿದೆ.

Eke →

ಕಾಲಭೇದ ತೋರಿಸದ ಪದಗಳು

ಬಲ್ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳಿಗೆ ಕನ್ನಡದಲ್ಲಿ ಕಾಲವನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು (ಮಾಡಬಲ್ಲೆ, ಹೋಗ ಲಾರೆ, ಮೊದಲಾದ ಪ್ರಯೋಗಗಳಲ್ಲಿ ಅವುಗಳ ಮುಂದೆ ಕಾಲಪ್ರತ್ಯಯ ಬಂದಿಲ್ಲ ಎಂಬುದನ್ನು ಗಮನಿಸಬಹುದು). ಇವು ಘಟನೆಯನ್ನು ಸೂಚಿಸುವ ಬದಲು, ಘಟನೆಯಲ್ಲಿ ತೊಡಗಲು ವ್ಯಕ್ತಿಯೊಬ್ಬನಿಗಿರುವ (ಅಥವಾ ಇಲ್ಲದಿರುವ) ‘ಸಾಮರ್ಥ್ಯ’ವನ್ನು ಸೂಚಿಸುತ್ತವೆ. ಇವಕ್ಕೆ ನೇರವಾಗಿ ಕಾಲಭೇದವನ್ನು ಸೂಚಿಸುವ ಶಕ್ತಿಯಿಲ್ಲ. ಹಾಗೆ ಸೂಚಿಸಬೇಕಾದಲ್ಲಿ, ಮಾಡಬಲ್ಲವನಾಗಿದ್ದೆ, ಮಾಡಬಲ್ಲವನಾಗುತ್ತೇನೆ ಎಂಬಂತಹ ಪ್ರಯೋಗಗಳಲ್ಲಿ ಕಾಣಿಸುವ ಹಾಗೆ, ಬಳಸುದಾರಿಯನ್ನು ಹಿಡಿಯಬೇಕಾಗುತ್ತದೆ.

Eke →

ಮೂರು ಕಾಲಗಳು

ಕನ್ನಡದ ವ್ಯಾಕರಣಗಳಲ್ಲೆಲ್ಲ ಸಾಮಾನ್ಯವಾಗಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ಕಾಲಗಳಿವೆಯೆಂದು, ಮತ್ತು ಇವನ್ನು ಸೂಚಿ ಸುವುದಕ್ಕಾಗಿ ಕನ್ನಡದಲ್ಲಿ ಬಂದ, ಬರುತ್ತಾನೆ ಮತ್ತು ಬರುವನು ಎಂಬಂತಹ ಮೂರು ಕ್ರಿಯಾರೂಪಗಳಿವೆಯೆಂದು ಹೇಳುವುದು ರೂಢಿ.

ಆದರೆ ಈ ಮೂರು ಕ್ರಿಯಾರೂಪಗಳಲ್ಲಿ ಬರುವನು ಎಂಬಂತಹ ರೂಪ ಗಳನ್ನು ಕನ್ನಡದ ಕೆಲವು ಬರಹಗಾರರು ಮಾತ್ರ ಬಳಸುತ್ತಿದ್ದಾರೆ; ಮತ್ತು ಹಾಗೆ ಬಳಸಿರುವಲ್ಲೂ ಅವಕ್ಕೆ ಬರುತ್ತಾನೆ ಎಂಬಂತಹ ರೂಪಗಳ ಅರ್ಥವೇ ಇರುವ ಹಾಗೆ ಕಾಣಿಸುತ್ತದೆ.

ಹಳೆಗನ್ನಡದಲ್ಲೂ ‘ವರ್ತಮಾನ’ ರೂಪವೆಂಬುದಾಗಿ ವೈಯಾಕರಣಿಗಳು ಹೇಳುವ ಮಾಡಿದಪಂ, ಎತ್ತಿದಪಂ ಎಂಬಂತಹ ರೂಪಗಳು ಹೊಸಗನ್ನಡದ ಮಾಡುತ್ತಾ ಇದ್ದಾನೆ (ಮಾಡುತ್ತಿದ್ದಾನೆ), ಎತ್ತುತ್ತಾ ಇದ್ದಾನೆ ಎಂಬ ರೂಪಗಳ ಹಾಗೆ, ಮೇಲೆ ವಿವರಿಸಿದ ಎರಡು ವಿಧಾನಗಳ ಸೇರಿಕೆಯಿಂದ (ಎಂದರೆ ಅಪೂರ್ಣ ಮತ್ತು ಪೂರ್ಣ ಕ್ರಿಯಾರೂಪಗಳ ಸೇರಿಕೆಯಿಂದ) ತಯಾರಾದ ರೂಪಗಳಲ್ಲದೆ, ಒಂದೇ ವಿಧಾನದಲ್ಲಿ ತಯಾರಾದ (ಒಂದೇ ಕ್ರಿಯಾ ಪದದ) ರೂಪಗಳಲ್ಲ.

ಉದಾಹರಣೆಗಾಗಿ, ಮಾಡಿದಪಂ ಎಂಬುದರಲ್ಲಿ ಮಾಡಿದ ಎಂಬ ಅಪೂರ್ಣ ಕ್ರಿಯಾರೂಪದ ಮೂಲಕ ಮಾಡುವ ಘಟನೆಗೂ ಆಗುವ ಘಟನೆಗೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಮತ್ತು ಅಪಂ (ಅಪ್ಪಂ) ಎಂಬ ಬೇರೊಂದು ಕ್ರಿಯಾಪದದ ಪೂರ್ಣ ಕ್ರಿಯಾರೂಪದದ ಮೂಲಕ ಆಗುವ ಘಟನೆ ನಡೆಯುವುದು (ಎಂದರೆ ಮಾಡುವ ಘಟನೆ ಕೊನೆಗೊಳ್ಳುವುದು) ವರದಿ ಮಾಡುವ ಸಮಯದ ಅನಂತರ ಎಂಬುದನ್ನು ಸೂಚಿಸಲಾಗಿದೆ.

ಇದಲ್ಲದೆ, ಹಳೆಗನ್ನಡದಲ್ಲಿ ಈ ಕ್ರಿಯಾರೂಪವನ್ನು ವರ್ತಮಾನಾರ್ಥ ಮತ್ತು ಭವಿಷ್ಯದರ್ಥಗಳೆಂಬ ಎರಡು ಅರ್ಥಗಳಲ್ಲೂ ಬಳಸಲಾಗುತ್ತಿತ್ತು; ಉದಾಹರಣೆ ಗಾಗಿ, ಪಂಪನ ಕಾವ್ಯಗಳಲ್ಲಿ ಈ ಕ್ರಿಯಾರೂಪಗಳ ಬಳಕೆಯನ್ನು ಗಮನಿಸಿದಾಗ ಈ ವಿಷಯ ಸ್ಪಷ್ಟವಾಗುತ್ತದೆ (ನನ್ನ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಪುಸ್ತಕವನ್ನು ನೋಡಿ); ಹಳೆಗನ್ನಡದ ವ ರೂಪಕ್ಕೂ ಇಂತಹದೇ ಬಳಕೆಯಿದೆ; ಅದನ್ನೂ ವರ್ತಮಾನಾರ್ಥ ಮತ್ತು ಭವಿಷ್ಯದರ್ಥಗಳೆಂಬ ಎರಡು ಅರ್ಥಗಳಲ್ಲೂ ಬಳಸಲಾಗುತ್ತಿತ್ತು. ಹಾಗಾಗಿ, ಹಳೆಗನ್ನಡದ ದಪ ಮತ್ತು ವ ರೂಪಗಳ ನಡುವಿನ ವ್ಯತ್ಯಾಸ ಕಾಲದ ವ್ಯತ್ಯಾಸವೇ ಅಲ್ಲ ಎಂದು ಹೇಳಬೇಕಾಗು ತ್ತದೆ.

Eke →

ಮಣಿಪುರಿಯಲ್ಲಿ ಕಾಲಭೇದ

ಕಾಲವನ್ನು ವಿಭಜಿಸುವ ವಿಧಾನ, ಮತ್ತು ಅದನ್ನು ಕ್ರಿಯಾಪದಗಳ ಮೂಲಕ ಸೂಚಿಸುವ ವಿಧಾನ, ಮೇಲೆ ತಿಳಿಸಿದ ಹಾಗೆ, ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರಾಗಿರುತ್ತದೆ. ಉದಾಹರಣೆಗಾಗಿ, ಮಣಿಪುರಿ ಭಾಷೆಯಲ್ಲಿ ಕಾಲವನ್ನು ಸೂಚಿ ಸುವುದಕ್ಕಾಗಿ ಕನ್ನಡದಲ್ಲಿರುವ ಹಾಗೆ ಎರಡು ಪೂರ್ಣ ಕ್ರಿಯಾರೂಪಗಳಿವೆ ಯಾದರೂ ಅವುಗಳ ಬಳಕೆ ಕನ್ನಡದ ಕ್ರಿಯಾರೂಪಗಳ ಬಳಕೆಗಿಂತ ಭಿನ್ನವಾಗಿದೆ:

ಕನ್ನಡದಲ್ಲಿ ಈಗ ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಘಟನೆ ಗಳನ್ನು ಒಟ್ಟು ಸೇರಿಸಿ ಒಂದು ಕ್ರಿಯಾರೂಪದ ಮೂಲಕವೂ, ಹಿಂದೆ ನಡೆದಿದ್ದ ಘಟನೆಗಳನ್ನು ಇನ್ನೊಂದು ಕ್ರಿಯಾರೂಪದ ಮೂಲಕವೂ ಸೂಚಿಸಲಾಗುತ್ತದೆ; ಆದರೆ, ಮಣಿಪುರಿ ಭಾಷೆಯಲ್ಲಿ ಹಿಂದೆ ನಡೆದಿದ್ದ ಮತ್ತು ಈಗ ನಡೆಯು ತಿರುವ ಘಟನೆಗಳನ್ನು ಒಟ್ಟು ಸೇರಿಸಿ ಒಂದು ಕ್ರಿಯಾರೂಪದ ಮೂಲಕವೂ,

ಮುಂದೆ ನಡೆಯಲಿರುವ ಘಟನೆಯನ್ನು ಬೇರೊಂದು ಕ್ರಿಯಾರೂಪದ ಮೂಲಕವೂ ಸೂಚಿಸಲಾಗುತ್ತದೆ.

Eke →

ಮೂರು ದೃಷ್ಟಿಕೋನಗಳು

ಸಮಯವನ್ನು ಸೂಚಿಸುವ ವಿಧಾನಗಳ ಬಳಕೆಯಲ್ಲಿ ಭಾಷೆಗಳ ನಡುವೆ ಕಾಣಿಸುವ ಒಂದು ಪ್ರಾಮುಖ್ಯವಾದ ವ್ಯತ್ಯಾಸವೇನೆಂದರೆ, ಅವು ಘಟನೆಗಳ ಸಮಯವನ್ನು ಒಂದೇ ದೃಷ್ಟಿಕೋನದಿಂದ ಪರಿಶೀಲಿಸುವುದಿಲ್ಲ.

ಕನ್ನಡ, ಮಣಿಪುರಿ, ಇಂಗ್ಲಿಷ್ ಮೊದಲಾದ ಭಾಷೆಗಳು ವರದಿ ಮಾಡುವ ಸಮಯಕ್ಕೂ ಘಟನೆ ನಡೆಯುವ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಪ್ರಾಶಸ್ತ್ರ ಕೊಡುವುವಾದರೆ, ಸಂಸ್ಕೃತ, ಹಿಂದಿ, ಮರಾಠಿ, ಮಾಲ್ಟೀಸ್, ಹೋಪಿ ಮೊದಲಾದ ಭಾಷೆಗಳು ಘಟನೆಗಳ ಆಂತರಿಕ ಕಾಲವ್ಯವಸ್ಥೆಗೆ, ಎಂದರೆ ಅವು ಸಂಪೂರ್ಣವೋ, ಅಸಂಪೂರ್ಣವೋ, ಕ್ಷಣಿಕವೋ, ನಿರಂತರವೋ, ಒಮ್ಮೆ ನಡೆದವುಗಳೋ, ಹಲವು ಬಾರಿ ನಡೆದವುಗಳೋ ಎಂಬಂತಹ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ರ ಕೊಡುತ್ತವೆ.

ಇದಲ್ಲದೆ, ಘಟನೆಯ ಯಥಾರ್ಥತೆಗೆ (ಅದು ನಿಜಕ್ಕೂ ನಡೆದಿದೆಯೇ ಅಥವಾ ಇಲ್ಲವೇ, ನಡೆದಿದೆಯೆನ್ನಲು ಎಂತಹ ಪುರಾವೆಗಳಿವೆ ಮತ್ತು ಅದು ನಡೆಯುವಂತೆ ಮಾಡುವ ಶಕ್ತಿಗಳು ಎಂತಹವು ಎಂಬಂತಹ ವಿಷಯಗಳಿಗೆ) ಪ್ರಾಶಸ್ತ್ರ ಕೊಡುವ ಭಾಷೆಗಳೂ ಹಲವಿವೆ.

ಉದಾಹರಣೆಗಾಗಿ ಬರ್ಮಿಸ್‌ ಭಾಷೆಯ ಕ್ರಿಯಾಪದಗಳಿಗೆ ಎರಡು ರೂಪ ಗಳಿದ್ದು, ಇವು ಘಟನೆ ಯಥಾರ್ಥವೇ ಅಥವಾ ಅಲ್ಲವೇ ಎಂಬುದನ್ನು ಸೂಚಿಸು ತ್ತವೆ. ನಡೆದಿರುವ ಘಟನೆ ಮತ್ತು ನಡೆಯುತ್ತಿರುವ ಘಟನೆ ಇವೆರಡನ್ನೂ ಒಂದು ಕ್ರಿಯಾರೂಪ ಸೂಚಿಸುತ್ತದೆ, ಮತ್ತು ನಡೆಯಲಿರುವ ಘಟನೆ ಮತ್ತು ನಡೆದಿರ ಬಹುದಾದ (ಆದರೆ ಈ ವಿಷಯದಲ್ಲಿ ಸಂಶಯವಿರುವ) ಘಟನೆ ಇವೆರಡನ್ನು ಎರಡನೆಯ ರೂಪ ಸೂಚಿಸುತ್ತದೆ.

ಈ ರೀತಿ ಕ್ರಿಯಾರೂಪಗಳ ಮೂಲಕ ಕಾಲಸಂಬಂಧ ಇಲ್ಲವೇ ಕಾಲವ್ಯವಸ್ಥೆ ಯನ್ನು ಸೂಚಿಸುವ ಬದಲು, ಘಟನೆಯ ಯಥಾರ್ಥತೆಯನ್ನು ಸೂಚಿಸುವ ಭಾಷೆ ಗಳೂ ಹಲವಿವೆ. ‘ಸೆನೆಕಾ’ದಂತಹ ಅಮೆರಿಕಾದ ಉತ್ತರ ಇರೊಕ್ವಿಯನ್ ಭಾಷೆ ಗಳು, ‘ಮುನಾ’ದಂತಹ ಪೋಲಿನೇಶಿಯನ್ ಭಾಷೆಗಳು, ‘ಕಯಾರದಿಲ್’ನಂತಹ ಆಸ್ಟ್ರೇಲಿಯಾದ ಭಾಷೆಗಳು, ‘ಮನಾಮ್’ನಂತಹ ಓಶಿಯಾನಿಕ್ ಭಾಷೆಗಳು ಇಂತಹವು. (ಜಾಸ್ತಿ ವಿವರಗಳಿಗೆ ೧೯೯೯ರಲ್ಲಿ ಅಮ್‌ಸ್ಟರ್‌ಡಾಮಿನ ಜಾನ್ ಬೆಂಜಮಿನ್ಸ್ ಕಂಪೆನಿ ಪ್ರಕಟಿಸಿದ ನನ್ನ ಪುಸ್ತಕ The Prominence of Tense, Aspect and Mood ಎಂಬ ಪುಸ್ತಕವನ್ನು ನೋಡಬಹುದು).

ಇಲ್ಲಿ ಒಂದು ವಿಷಯವನ್ನು ನಾವು ನೆನಪಿನಲ್ಲಿರಿಸಿಕೊಳ್ಳುವುದು ಅವಶ್ಯ. ತಾರ್ಕಿಕರು ನಮ್ಮ ಮುಂದಿರಿಸುವ ನಿಯಮಗಳು ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ

ಪ್ರದೇಶಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸುವಂತಹ ನಿಯಮಗಳು. ಅವು ಎಲ್ಲಾ ಭಾಷೆಗಳಿಗೂ ಸಮಾನವಾಗಿ ಅನ್ವಯಿಸುತ್ತವೆ.

ಆದರೆ, ವ್ಯಾಕರಣದ ನಿಯಮಗಳು ಇವಕ್ಕಿಂತ ತೀರ ಭಿನ್ನವಾಗಿದ್ದು, ಒಂದು ಭಾಷೆಯ ಒಂದು ಪ್ರಭೇದಕ್ಕೆ ಮಾತ್ರ ಅನ್ವಯಿಸುವಂತಹವುಗಳು. ಹಳೆಗನ್ನಡದ ವ್ಯಾಕರಣ ನಿಯಮಗಳಲ್ಲಿ ಹಲವು ಹೊಸಗನ್ನಡಕ್ಕೆ ಅನ್ವಯಿಸಲಾರವು, ಮತ್ತು ಹೊಸಗನ್ನಡದ ಹಲವು ನಿಯಮಗಳು ಹಿಂದಿಗಾಗಲಿ, ಮರಾಠಿಗಾಗಲಿ, ಸಂಸ್ಕೃತ ಕ್ಕಾಗಲಿ ಅನ್ವಯಿಸಲಾರವು.

ಎಲ್ಲಾ ಭಾಷೆಗಳಿಗೂ ಮೂರು ಕಾಲಗಳನ್ನು ಸೂಚಿಸುವ ಅವಶ್ಯಕತೆಯಿದೆ, ಹಾಗಾಗಿ, ಎಲ್ಲಾ ಭಾಷೆಗಳಲ್ಲೂ ಕ್ರಿಯಾಪದಗಳಿಗೆ ಮೂರು ಕಾಲರೂಪಗಳಿರ ಬೇಕು ಎಂದು ವಾದಿಸುವವರು ತಾರ್ಕಿಕ ನಿಯಮಗಳಿಗೂ ವ್ಯಾಕರಣ ನಿಯಮ ಗಳಿಗೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸಿಲ್ಲ ಎಂಬುದು ಸ್ಪಷ್ಟ.

ವ್ಯಾಕರಣಗಳ ಮಟ್ಟಿಗಂತೂ ಇಂತಹ ನಿಯಮಗಳನ್ನು ಹಾಕಲು ಸಾಧ್ಯವೇ ಇಲ್ಲ. ಯಾಕೆಂದರೆ, ಘಟನೆಗಳ ಸಮಯಕ್ಕೂ ಅವನ್ನು ವರದಿ ಮಾಡುವ ಸಮಯಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಕ್ರಿಯಾಪದಗಳ ಮೂಲಕ ನೇರವಾಗಿ ಸೂಚಿಸದೇ ಇರುವಂತಹ (tenseless) ಹಲವು ಭಾಷೆ ಗಳಿವೆ. ಇವು ಕ್ರಿಯಾರೂಪಗಳ ಮೂಲಕ ಘಟನೆಗಳ ಕಾಲವ್ಯವಸ್ಥೆ ಇಲ್ಲವೇ ಯಥಾರ್ಥತೆಯನ್ನು ಮಾತ್ರವೇ ಸೂಚಿಸುತ್ತವೆ.

Eke →

೧.೭ ಎಣಿಕೆಯಲ್ಲೂ ವೈವಿಧ್ಯವಿದೆ

ಲೆಕ್ಕ ಹಾಕುವಾಗ ನಾವು ಒಂದು, ಎರಡು, ಮೂರು, ನಾಲ್ಕು ಇತ್ಯಾದಿಯಾಗಿ ಹತ್ತರವರೆಗೆ ಎಣಿಸಿ, ಅನಂತರ ಹನ್ನೊಂದು ‘ಹತ್ತರ ಒಂದು’, ಹನ್ನೆರಡು ‘ಹತ್ತರ ಎರಡು’, ಹದಿಮೂರು ‘ಹತ್ತರ ಮೂರು’ ಎಂಬುದಾಗಿ ಪುನಃ ಒಂದ ರಿಂದ ಸುರುಮಾಡುತ್ತೇವೆ. ಈ ರೀತಿ ನಮ್ಮ ಎಣಿಕೆ ಹತ್ತು ಹತ್ತರ ಗುಂಪುಗಳಲ್ಲಿ ಸಾಗುತ್ತದೆ.

ಇಂತಹ ಹತ್ತು ಗುಂಪುಗಳ ದೊಡ್ಡ ಗುಂಪಿಗೆ ನೂರು ಎಂಬ ಹೆಸರು ಕೊಡುತ್ತೇವೆ. ಹೀಗೆ ಸಾಗುವ ನಮ್ಮ ಎಣಿಕೆ ಹತ್ತರ ಪದ್ಧತಿಯದು. (ನಮ್ಮ ಒಂಬತ್ತು ಎಂಬ ಪದಕ್ಕೆ ಮಾತ್ರ ‘ಹತ್ತರಿಂದ ಒಂದು ಕಡಿಮೆ’ ಎಂಬ ಮೂಲಾರ್ಥವಿದೆ.)

ಇಂಗ್ಲಿಷ್, ಹಿಂದಿ, ಮರಾಠಿ ಮೊದಲಾದ ಹಲವಾರು ಭಾಷೆಗಳಲ್ಲಿ ಇದೇ ಹತ್ತರ ಪದ್ಧತಿ ಜಾರಿಯಲ್ಲಿದೆ. ಆದರೆ ಎಣಿಕೆಗಳೆಲ್ಲವೂ ಇಂತಹದೇ ಹತ್ತರ ಪದ್ಧತಿಯಲ್ಲಿ ಸಾಗಬೇಕೆಂಬ ನಿಯಮವೇನಿಲ್ಲ. ಎಣಿಕೆಯ ಗುಂಪುಗಳನ್ನು

ಹತ್ತರಲ್ಲಿ ಮಾಡುವ ಬದಲು ಇದರಲ್ಲಿ ಮಾಡಬಹುದು, ಇಲ್ಲವೇ ಇಪ್ಪತ್ತ ರಲ್ಲೂ ಮಾಡಬಹುದು.

Eke →

ನಾಲ್ಕರ ಪದ್ಧತಿ

ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೊಡೊ (ಇಲ್ಲವೇ ಬೊರೊ) ಭಾಷೆಯಲ್ಲಿ ನಾಲ್ಕರ ಪದ್ಧತಿ ಕಾಣಸಿಗುತ್ತದೆ. ಈ ಭಾಷೆಯಲ್ಲಿ ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ನಾಲ್ಕರ ವರೆಗೆ ಲೆಕ್ಕ ಹಾಕಿ, ಮುಂದಕ್ಕೆ ಒಂದ್ನಾಲ್ಕರ ಒಂದು (ಎಂದರೆ ಐದು), ಒಂದ್ನಾಲ್ಕರ ಎರಡು (ಎಂದರೆ ಆರು), ಒಂದ್ನಾಲ್ಕರ ಮೂರು (ಎಂದರೆ ಏಳು) ಮತ್ತು ಎರಡಾಲ್ಕು (ಎಂದರೆ ಎಂಟು) ಇತ್ಯಾದಿಯಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ಭಾಷೆಯಲ್ಲಿ ಎರಡಾಲ್ಕರ ಮೂರು ಎನ್ನಬೇಕು, ಹದಿನಾಲ್ಕು ಎನ್ನಲು ಮೂರ್ನಾಲ್ಕರ ಎರಡು ಎನ್ನಬೇಕು, ಇತ್ಯಾದಿ.

ಬೊಡೋ ಭಾಷೆಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಪದ್ಧತಿಯಲ್ಲಿ ಇಪ್ಪತ್ತರ ವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಪದ್ಧತಿ ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಪದ್ಧತಿಯಿರುವಂತೆ, ಬೋಡೋ ಭಾಷೆಯಲ್ಲಿ ಇಪ್ಪತ್ತರ ಪದ್ಧತಿಯಿದೆ.

ಈ ಪದ್ಧತಿಯಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕರ ಎರಡು’ ಎನ್ನಬೇಕು. ‘ಮೂರಿಪ್ಪತ್ತು ಮೂರ್ನಾಲ್ಕರ ಒಂದು’ ಎಂದರೆ ಎಪ್ಪತ್ತಮೂರು (೩ x ೨೦) + (೩ x ೪) + ೧ ಎಂದಾಗುತ್ತದೆ. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೋ ಭಾಷೆಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಪದ್ಧತಿಗಿಂತ ಅವರ ನಾಲ್ಕರ ಪದ್ಧತಿಯೇ ಲೇಸೆಂದು ಅನಿಸದಿರದು.

Eke →

ಎಣಿಸುವ ವಸ್ತುಗಳ ಸೂಚನೆ

ಬೋಡೋ ಜನರ ಎಣಿಕೆಯಲ್ಲಿ ಈ ವೈಶಿಷ್ಟ್ಯ ಮಾತ್ರವಲ್ಲದೆ ಬೇರೆಯೂ ಕೆಲವು ವೈಶಿಷ್ಟ್ಯಗಳಿವೆ. ಉದಾಹರಣೆಗಾಗಿ, ಅವರಿಗೆ ನಮ್ಮ ಹಾಗೆ ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ಬರಿಯ ಅಂಕೆಗಳನ್ನು ಎಣಿಸುವುದೇ ತಿಳಿಯದು. ಹಾಗೆ ಅಂಕೆಗಳನ್ನು ಬಳಸಬೇಕಾಗಿ ಬಂದಾಗಲೆಲ್ಲ, ಅವರು ಯಾವ ರೀತಿಯ ವಸ್ತುಗಳನ್ನೆಣಿಸುತ್ತಿದ್ದೇವೆ ಎಂಬುದನ್ನೂ ಕಡ್ಡಾಯವಾಗಿ ತಿಳಿಸಬೇಕು ಎಂಬುದಾಗಿ ಅವರ ಭಾಷೆಯಲ್ಲಿ ಒಂದು ವ್ಯಾಕರಣ ನಿಯಮವಿದೆ. ಇದು ಅವರ ಭಾಷೆಯ ಎಣಿಕೆಯಲ್ಲಿ ತೋರುವ ಇನ್ನೊಂದು ವೈಶಿಷ್ಟ್ಯ.

ಉದಾಹರಣೆಗಾಗಿ, ಅವರು ಎಣಿಸುತ್ತಿರುವುದು ಹಣ್ಣು, ಚೆಂಡು, ಕಣ್ಣು ಮೊದಲಾದ ಉರುಟಾಗಿರುವ ಪದಾರ್ಥಗಳನ್ನಾದರೆ, ಆ ಎಣಿಕೆಯಲ್ಲಿ ಪ್ರತಿ ಸಲವೂ ತಾಯ್ ಎಂಬ ಪದವನ್ನು ಸೇರಿಸಿಕೊಳ್ಳಬೇಕು; ಇದರ ಬದಲು ಪುಸ್ತಕ, ಕಾಗದ, ಎಲೆ, ರೆಕ್ಕೆ ಮುಂತಾದ ಚಪ್ಪಟೆಯಾದ ಪದಾರ್ಥಗಳನ್ನು ಎಣಿಸಬೇಕಾಗಿ ಬಂದಾಗ, ಗಾಜ್ ಎಂಬ ಪದವನ್ನು ಸೇರಿಸಿಕೊಳ್ಳಬೇಕು; ಜನರನ್ನು ಲೆಕ್ಕ ಹಾಕುವಾಗ ಕಾ ಎಂಬ ಪದವನ್ನು ಸೇರಿಸಬೇಕು, ಪ್ರಾಣಿಗಳನ್ನು ಲೆಕ್ಕ ಹಾಕುವಾಗ ಮಾ ಎಂಬ ಪದವನ್ನು ಸೇರಿಸಬೇಕು, ಇತ್ಯಾದಿ.

ಇದರಂತೆ, ಒಂದ್ನಾಲ್ಕರ ಒಂದು ಎಂದು ಹೇಳಿದರೆ ಈ ಭಾಷೆಯಲ್ಲಿ ಅದಕ್ಕೆ ಯಾವ ಅರ್ಥವೂ ಇಲ್ಲ; ಹಾಗೆ ಅವರು ಹೇಳುವುದೂ ಇಲ್ಲ. ಒಂದ್ನಾಲ್ಕರ ಮಾ ಒಂದು ಎಂದರೆ ಐದು ಪ್ರಾಣಿಗಳು ಎಂದಾಗುತ್ತದೆ; ಒಂದ್ನಾಲ್ಕರ ತಾಯ್ ಒಂದು ಎಂದರೆ ಐದು ಹಣ್ಣುಗಳಂತಹ ಉರುಟಾದ ವಸ್ತುಗಳು ಎಂಬ ಅರ್ಥ ಬರುತ್ತದೆ; ಒಂದ್ನಾಲ್ಕರ ಗಾಜ್ ಒಂದು ಎಂದರೆ ಐದು ಪುಸ್ತಕಗಳಂತಹ ಚಪ್ಪಟೆಯಾದ ವಸ್ತುಗಳು ಎಂದಾಗುತ್ತದೆ. ಒಂದು, ಎರಡು, ಮೂರು, ನಾಲ್ಕು ಮೊದಲಾದ ಅಂಕೆಗಳಿಗೂ ಬೋಡೋ ಭಾಷೆಯಲ್ಲಿ ಕನ್ನಡದ ಅಂಕೆಗಳಿಗಿಂತ ಭಿನ್ನವಾದ ಸೇ, ನಯ್, ತಾಮ್, ಬ ಮೊದಲಾದ ಪದಗಳಿವೆ ಎಂದು ಬೇರೆ ಹೇಳಬೇಕಾಗಿಲ್ಲವಷ್ಟೆ

ಲೆಕ್ಕ ಹಾಕುವಾಗ ಈ ರೀತಿ ವಸ್ತುಗಳ ಸ್ವರೂಪವನ್ನು ಸೂಕ್ಷ್ಮವಾಗಿ ತಿಳಿಸಿ ಹೇಳುವ ಕ್ರಮ ಬೋಡೋ ಭಾಷೆಯಲ್ಲಿ ಮಾತ್ರವಲ್ಲದೆ, ನಮ್ಮ ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಬೇರೆಯೂ ಹಲವಾರು ಗಿರಿಜನರ ಭಾಷೆಗಳಲ್ಲಿ ಬಳಕೆಯಲ್ಲಿದೆ. ಈ ಜನರ ಸಂಪರ್ಕದಿಂದಾಗಿ ಇಂತಹ ಕ್ರಮ ಇಂಡೋ-ಆರ್ಯನ್ ಭಾಷೆಗಳಾದ ಅಸ್ಸಾಮಿ, ಬಿಹಾರಿ ಮೊದಲಾದವು ಗಳಲ್ಲೂ ಬಳಕೆಗೆ ಬಂದಿವೆ. ಬಿಹಾರಿನ ರಾಜಮಹಾಲ್ ಪರ್ವತ ಶ್ರೇಣಿಗಳಲ್ಲಿ ವಾಸಿಸುವ ನಮ್ಮ ‘ದಾಯಾದಿ’ಗಳಾದ ಮಾಲ್ಟೋ ಜನರ ಮಾತಿನಲ್ಲೂ ಈ ವೈಶಿಷ್ಟ್ಯ ಕಂಡುಬರುತ್ತಿದೆಯೆಂದು ವಿದ್ವಾಂಸರು ವರದಿಮಾಡಿದ್ದಾರೆ.

Eke →

ಕ್ರಿಯಾಪದಗಳ ವೈಶಿಷ್ಟ್ಯ

ಬೋಡೋ ಭಾಷೆಯನ್ನಾಡುವ ಕಸಾರಿ ಜನಾಂಗದವರು ತಮ್ಮ ಭಾಷೆಯ ಇತರ ವಿಭಾಗಗಳಲ್ಲೂ ಇದೇ ರೀತಿಯ ಹಲವಾರು ವೈಶಿಷ್ಟ್ಯಗಳನ್ನು ಪಡೆದಿದ್ದಾರೆ. ವಸ್ತುಗಳನ್ನು ಚಪ್ಪಟೆಯಾದವುಗಳು, ಉರುಟಾದವುಗಳು, ಕೋಲಿನಂತಿರುವವು ಗಳು, ಹಗ್ಗದಂತಿರುವವುಗಳು ಇತ್ಯಾದಿಯಾಗಿ ಸೂಚಿಸದೆ ಅವರಿಗೆ ಆ ವಸ್ತು ಗಳನ್ನು ಲೆಕ್ಕಹಾಕಲು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ಕ್ರಿಯಾಪದ ಗಳನ್ನು ಬಳಸುವಾಗಲೂ ಕ್ರಿಯೆಗಳಲ್ಲಿ ಕಾಣಿಸುವ ಸೂಕ್ಷ್ಮವಾದ ವ್ಯತ್ಯಾಸಗಳನ್ನು ಗಮನಿಸದೆ ಅವರಿಗೆ ಅವರ ಭಾಷೆಯಲ್ಲಿ ಮಾತನಾಡಲು ಬಾರದು.

ನಮ್ಮಲ್ಲಿ ತಿನ್ನು, ಎಂದಿರುವ ಒಂದೇ ಒಂದು ಕ್ರಿಯಾಪದಕ್ಕೆ ಸಮನಾಗಿ ಈ ಭಾಷೆಯಲ್ಲಿ ಇನ್ನೂರೈವತ್ತು ಕ್ರಿಯಾರೂಪಗಳಿವೆ: ಎಂತಹ ವಸ್ತುವನ್ನು ತಿನ್ನು ತೇವೆ, ಹೇಗೆ ತಿನ್ನುತ್ತೇವೆ, ಎಷ್ಟು ತಿನ್ನುತ್ತೇವೆ, ಯಾರೊಡನೆ ತಿನ್ನುತ್ತೇವೆ, ಮೊದಲಾದ ವಿವಿಧ ವಿಷಯಗಳಿಗನುಸಾರವಾಗಿ, ಅವರು ಆರಿಸಿಕೊಳ್ಳಬೇಕಾದ ಕ್ರಿಯಾರೂಪ ವ್ಯತ್ಯಾಸಗೊಳ್ಳುತ್ತದೆ. ಕತ್ತಲೆಯಲ್ಲಿ ತಿನ್ನುವುದು ಎನ್ನುವುದಕ್ಕೆ ಒಂದು ರೂಪವಿದೆ, ಕದ್ದು ತಿನ್ನುವುದು ಎನ್ನುವುದಕ್ಕೆ ಇನ್ನೊಂದು ರೂಪವಿದೆ, ಮಡಚಿ ತಿನ್ನುವುದು ಎನ್ನುವುದಕ್ಕೆ ಮತ್ತೊಂದು ರೂಪವಿದೆ, ತೂತು ಮಾಡಿ ತಿನ್ನುವುದು ಎನ್ನುವುದಕ್ಕೆ ಇನ್ನೊಂದು ರೂಪವಿದೆ.

ಭಾಷೆಯು ಮನುಷ್ಯನ ಆಲೋಚನಾಕ್ರಮವನ್ನೇ ತನ್ನ ಕೈಹಿಡಿತದಲ್ಲಿ ಇಟ್ಟು ಕೊಳ್ಳುವುದೆಂದು ಕೆಲವರು ವಾದಿಸುತ್ತಾರೆ. ಸುತ್ತಲೂ ಕಣ್ಣಿಗೆ ಕಾಣಿಸುವ ಜಗತ್ತೇ ಈ ಭಾಷೆಗನುಗುಣವಾಗಿ ಭಿನ್ನ ಭಿನ್ನವಾಗಿ ತೋರುವುದೆಂದೂ ಇವರ ವಾದವಿದೆ. ಈ ವಾದ ನಿಜವಾದರೆ, ಬೋಡೋ ಜನರ ಜಗತ್ತಿಗೂ ಕನ್ನಡಿಗರ ಜಗತ್ತಿಗೂ ನಡುವೆ ಬಹಳಷ್ಟು ವ್ಯತ್ಯಾಸವಿದೆಯೆಂದ ಹಾಗಾಯಿತು. ಇದು ನಿಜವಾದರೆ, ಭಿನ್ನ ಭಿನ್ನವಾದ ಹಲವಾರು ಭಾಷೆಗಳನ್ನು ಅಭ್ಯಸಿಸುವುದರ ಮೂಲಕ ನಮ್ಮ ಜಗತ್ತನ್ನು ಇನ್ನಷ್ಟು ವ್ಯಾಪಕ ಮತ್ತು ವೈವಿಧ್ಯಯುಕ್ತವನ್ನಾಗಿ ಮಾಡಲು ಸಾಧ್ಯ ವಾದೀತಲ್ಲವೇ?