ಕನ್ನಡ ಬರಹದ ಸೊಲ್ಲರಿಮೆ — ಸಂಪುಟ ೩
ಲೇಖಕರು: ಡಿ. ಎನ್. ಶಂಕರ ಭಟ್ ಪ್ರಕಟಣೆ: 2012, ಬಾಶಾಪ್ರಕಾಶನ, ಹೆಗ್ಗೋಡು ಮೂಲ: PDF (Google Drive) — Baraha ಫಾಂಟ್ → Unicode ಪರಿವರ್ತನೆ
ಒಳಪಿಡಿ (ಸಂಪುಟ ೩)
- ಅಧ್ಯಾಯ ೭ — ಎಸಕಪದದ ಪಾಂಗುಗಳು
- 7.1 ಮುನ್ನೋಟ
- 7.2 ಇರುಹಪದದ ಪಾಂಗಿಟ್ಟಳಗಳು
- 7.3 ಎಸಕಪದಗಳ ಪಾಂಗಿಟ್ಟಳಗಳು
- 7.4 ಇಟ್ಟಳದ ಪಾಂಗುಗಳ ಬಗೆಗಳು
- 7.4.1 ಇಟ್ಟಳದ ಪಾಂಗುಗಳು ಮತ್ತು ನೆರವು ಪಾಂಗುಗಳು
- 7.4.2 ಆಗುಗ, ಮಾಡುಗ, ಮತ್ತು ಈಡು
- 7.4.3 ಆಗುಗ ಮತ್ತು ಮಾಡುಗ ಪಾಂಗುಗಳು
- 7.4.4 ಈಡು ಪಾಂಗು
- 7.4.5 ಗುರಿ, ಸುರು ಮತ್ತು ಜಾಗ ಪಾಂಗುಗಳು
- 7.4.6 ಸುರು ಮತ್ತು ಗುರಿ ಪಾಂಗುಗಳು
- 7.4.7 ಸುರು ಪಾಂಗಿನ ಬಳಕೆಗಳು
- 7.4.8 ಗುರಿ ಪಾಂಗಿನ ಬಳಕೆಗಳು
- 7.4.9 ಜಾಗ ಪಾಂಗಿನ ಬಳಕೆಗಳು
- 7.4.10 ಆಗುಗ ಇಲ್ಲವೇ ಮಾಡುಗ ಮತ್ತು ಗುರಿ
- 7.4.11 ಕೆಲವು ಹೆಚ್ಚಿನ ಪಾಂಗುಗಳು
- 7.5 ನೆರವು ಪಾಂಗುಗಳು: ಹೊತ್ತು ಮತ್ತು ಇಂಬು
- 7.6 ಬೇರೆ ನೆರವು ಪಾಂಗುಗಳು
- ಅಧ್ಯಾಯ ೮ — ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು
- 8.1 ಮುನ್ನೋಟ
- 8.2 ಎಸಕಪದವನ್ನು ಮಾರ್ಪಡಿಸದೆ ಪಾಂಗಿಟ್ಟಳವನ್ನು
- 8.3 ಇಸುವೆಸಕ ಪದದ ಪಾಂಗಿಟ್ಟಳಗಳು
- 8.4 ಸೇರಿಕೆಯೆಸಕದ ಪಾಂಗಿಟ್ಟಳಗಳು
- 8.5 ಎದುರೆಸಕದ ಪಾಂಗಿಟ್ಟಳಗಳು
- 8.5.1 ಹಂಚಿಕೆಕಂತೆ ಮತ್ತು ಪತ್ತುಗೆಕಂತೆ
- 8.5.2 ಪತ್ತುಗೆಕಂತೆಯನ್ನು ಹೋಲುವ ಬೇರೆ ಬಗೆಯ ಇಟ್ಟಳಗಳು
- 8.5.3 ಹಲವೆಣಿಕೆಯ ಒಟ್ಟು
- 8.5.4 ಒಟ್ಟುಸೇರಿಸುವುದು ಮತ್ತು ಒಂದಾಗುವುದು
- 8.5.5 ಒಂದುಗೂಡುವ ಪಾಂಗುಗಳು
- 8.5.6 ಒಳ ಎಸಕಗಳ ಹೊತ್ತು
- 8.5.7 ಬೇರೆ ಹುರುಳುಗಳು
- 8.5.8 ಎದುರೆಸಕ ಮತ್ತು ಸೇರಿಕೆಯೆಸಕ
- 8.5.9 ಎದುರೆಸಕದ ಎಸಕಪದಗಳು
- 8.5.10 ಎದುರುಹುರುಳಿನ ಹೆಸರುಪದಗಳು
- 8.5.11 ಎದುರೆಸಕಪದಗಳ ರೂಪಗಳು
- 8.6 ಕೂಡುಪದಗಳ ಪಾಂಗಿಟ್ಟಳಗಳು
- 8.7 ಮಾಡುಗವನ್ನು ಮರೆಮಾಚುವುದು
ಅಧ್ಯಾಯ ೭ — ಎಸಕಪದದ ಪಾಂಗುಗಳು
7.1 ಮುನ್ನೋಟ
ಇರುಹಗಳನ್ನು ತಿಳಿಸುವವು ಮತ್ತು ಎಸಕಗಳನ್ನು ತಿಳಿಸುವವು ಎಂಬುದಾಗಿ ತಿಳಿಸುವ ಸೊಲ್ಲುಗಳನ್ನು ಮುಕ್ಯವಾಗಿ ಎರಡು ಗುಂಪುಗಳಲ್ಲಿ ಸೇರಿಸಿ ಹೇಳಲು ಬರುತ್ತದೆ ಎಂಬುದನ್ನು ನಾವು ಮೊದಲನೆಯ ಪಸುಗೆಯಲ್ಲಿ (1.5.1ರಲ್ಲಿ) ನೋಡಿರುವೆವು. ಇವುಗಳಲ್ಲಿ ಇರುಹಗಳನ್ನು ತಿಳಿಸುವ ಸೊಲ್ಲುಗಳ ಕೊನೆಯಲ್ಲಿ ಸಾಮಾನ್ಯವಾಗಿ ಇರು ಎಂಬ ಒಂದೇ ಒಂದು ಇರುಹಪದ ಬರುತ್ತದೆ; ಇಂತಹ ಕೆಲವು ಬಗೆಯ ಸೊಲ್ಲುಗಳಲ್ಲಿ ಈ ಪದವನ್ನು ಬಳಸದಿರುವುದೂ ಇದೆ: (1ಕ) ಶಾಮರಾಯರು ಮನೆಯಲ್ಲಿದ್ದಾರೆ. (1ಚ) ನಂದುವಿನ ಅಣ್ಣ ವಾಸು. (1ಟ) ಆಕೆಯ ತಮ್ಮನಿಗೆ ಮೂವರು ಹುಡುಗಿಯರು (ಇದ್ದಾರೆ). (1ಕ) ಸೊಲ್ಲಿನ ಕೊನೆಯಲ್ಲಿ ಇರು ಪದದ ಪದರೂಪ (ಇದ್ದಾರೆ) ಬಳಕೆ ಯಾಗಿದೆ; ಆದರೆ, (1ಚ)ದಲ್ಲಿ ಆ ಪದ ಬಳಕೆಯಾಗಿಲ್ಲ, ಮತ್ತು (1ಟ)ದಲ್ಲಿ ಅದನ್ನು (ಅದರ ಇದ್ದಾರೆ ಎಂಬ ರೂಪವನ್ನು) ಬಳಸದಿರಲೂ ಬರುತ್ತದೆ. ಇದಕ್ಕೆ ಬದಲು, ಎಸಕಗಳನ್ನು ತಿಳಿಸುವ ಎರಡನೇ ಬಗೆಯ ಸೊಲ್ಲುಗಳಲ್ಲಿ ಹಲವಾರು ಬಗೆಯ ಎಸಕಪದಗಳನ್ನು ಬಳಸಲಾಗುತ್ತದೆ; ಓದು, ಕುಣಿ, ಹಾರು, ತಿನ್ನು, ಬೀಳು, ಒಡೆ, ಚಿಗುರು, ಕಚ್ಚು ಮೊದಲಾದ ಇಂತಹ ಒಂದು ಸಾವಿರ ಕ್ಕಿಂತಲೂ ಹೆಚ್ಚು ಎಸಕಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ: (2ಕ) ಮಾಡಿನಿಂದ ನೀರು ಬೀಳುತ್ತಿದೆ. (2ಚ) ಹಲಸಿನ ಹಣ್ಣು ಕೊಳೆತಿದೆ. (2ಟ) ಹೂವಿನ ಗಿಡ ಚಿಗುರಿತು. (2ತ) ಮನೆಯೆದುರು ಬಾಳೆಗಿಡ ನೆಟ್ಟಿದ್ದಾರೆ. (2ಪ) ಅವನಿಗೆ ಚೇಳು ಕಚ್ಚಿತು. ಇರುಹಪದದ ಹಾಗೆ ಎಸಕಗಳನ್ನು ತಿಳಿಸುವ ಸೊಲ್ಲುಗಳಲ್ಲಿ ಬರುವ ಈ ಎಸಕ ಪದಗಳನ್ನು ಬಳಸದಿರಲು ಬರುವುದಿಲ್ಲ. (3ಕ) ಹುಡುಗರು ಉಪ್ಪರಿಗೆಯಲ್ಲಿ ಕುಣಿಯುತ್ತಿದ್ದಾರೆ. (3ಚ) *ಹುಡುಗರು ಉಪ್ಪರಿಗೆಯಲ್ಲಿ. ಎಸಕಪದವನ್ನು ಬಳಸದಿರುವ (3ಚ) ಸೊಲ್ಲು ಹುಡುಗರು ಉಪ್ಪರಿಗೆಯಲ್ಲಿ ಇದ್ದಾರೆ ಎಂಬ ಇರುಹದ ಹುರುಳನ್ನು ಕೊಡಬಲ್ಲುದಲ್ಲದೆ (3ಕ) ಸೊಲ್ಲಿನ ಹಾಗೆ ಎಸಕದ ಹುರುಳನ್ನು ಕೊಡಲಾರದು. ಈ ಎರಡು ಬಗೆಯ ಸೊಲ್ಲುಗಳಲ್ಲೂ ಇರುಹ ಮತ್ತು ಎಸಕಗಳನ್ನು ತಿಳಿಸುವ ಪದಗಳು ತಿರುಳು ಪದಗಳಾಗಿ ಬರುತ್ತವೆ. ಈ ತಿರುಳು ಪದಗಳೊಂದಿಗೆ ಹಲವು ಬಗೆಯ ನೆರವೆಸಕ ಪದಗಳು ಬರಬಲ್ಲುವು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (4ಕ) ಅವನು ಮನೆಗೆ ಹೋಗುತ್ತಾನೆ. (4ಚ) ಅವನು ಮನೆಗೆ ಹೋಗಿದ್ದಾನೆ.
(4ಟ) ಅವನು ಮನೆಗೆ ಹೋಗಿರಬಹುದು. (4ತ) ಅವನು ಮನೆಗೆ ಹೋಗಲಿಲ್ಲ. ಮೇಲೆ (4ಚ-ತ) ಸೊಲ್ಲುಗಳಲ್ಲಿ ಹೋಗು ಎಸಕಪದದೊಂದಿಗೆ ಇರು (ಇದ್ದಾನೆ), ಬಹುದು, ಮತ್ತು ಇಲ್ಲ ಎಂಬಂತಹ ನೆರವೆಸಕ ಪದಗಳು ಬಂದಿವೆ; ಈ ರೀತಿ ಬಳಕೆಯಾಗಬಲ್ಲ ನೆರವೆಸಕ ಪದಗಳು ಎಂತಹವು, ಅವುಗಳ ಮೂಲಕ ಹೇಗೆ ಎಸಕಪದಗಳು ತಿಳಿಸುವ ಎಸಕಗಳ ಹೊತ್ತಿನ ಪತ್ತುಗೆ, ಹೊತ್ತಿನ ಇಟ್ಟಳ ಮತ್ತು ಆಡುಗನ ನಿಲುವುಗಳನ್ನು ತಿಳಿಸಲಾಗುತ್ತದೆ ಎಂಬುದನ್ನು ಈಗಾಗಲೇ ಅಯ್ದನೇ ಪಸುಗೆಯಲ್ಲಿ ವಿವರಿಸಲಾಗಿದೆ. ಇದಲ್ಲದೆ, ಇರುಹ ಇಲ್ಲವೇ ಎಸಕಗಳಲ್ಲಿ ತೊಡಗಿಕೊಂಡಿರುವ ಹಲವು ಬಗೆಯ ಪಾಂಗುಗಳನ್ನು ಗುರುತಿಸುವುದಕ್ಕಾಗಿ ಕೆಲವು ಹೆಸರುಕಂತೆಗಳೂ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ಗೋಪಾಲರಾಯರು ತಮ್ಮ ಮನೆಯಲ್ಲಿದ್ದಾರೆ. (5ಚ) ಅವನು ಮಲಗುವ ಕೋಣೆಯ ಗೋಡೆಗೆ ನೀಲಿ ಬಣ್ಣ ಹಚ್ಚಿದ. (5ಟ) ಹುಡುಗರು ಹಳ್ಳದಲ್ಲಿ ಕಾಲು ತೊಳೆದರು. (5ಕ-ಟ) ಸೊಲ್ಲುಗಳಲ್ಲಿ ಇರು, ಹಚ್ಚು ಮತ್ತು ತೊಳೆ ಎಂಬ ಪದಗಳು ತಿರುಳು ಪದಗಳಾಗಿ ಬಳಕೆಯಾಗಿವೆ, ಮತ್ತು ಅವುಗಳೊಂದಿಗೆ ಅವು ತಿಳಿಸುವ ಇರುಹ ಇಲ್ಲವೇ ಎಸಕಗಳಲ್ಲಿ ತೊಡಗಿಕೊಂಡಿರುವ ಪಾಂಗುಗಳನ್ನು ತಿಳಿಸುವುದಕ್ಕಾಗಿ ಗೋಪಾಲರಾಯರು, ತಮ್ಮ ಮನೆಯಲ್ಲಿ, ಅವನು, ಮಲಗುವ ಕೋಣೆಯ ಗೋಡೆಗೆ, ನೀಲಿ ಬಣ್ಣ, ಹುಡುಗರು, ಹಳ್ಳದಲ್ಲಿ ಮತ್ತು ಕಾಲು ಎಂಬ ಹೆಸರುಪದಗಳನ್ನು ಇಲ್ಲವೇ ಹೆಸರುಕಂತೆಗಳನ್ನು ಬಳಸಲಾಗಿದೆ. ಈ ರೀತಿ ಸೊಲ್ಲುಗಳಲ್ಲಿ ಬಳಕೆಯಾಗಬಲ್ಲ ಹೆಸರುಪದಗಳ ಇಲ್ಲವೇ ಹೆಸರು ಕಂತೆಗಳ ಇಟ್ಟಳ ಎಂತಹದು, ಅವುಗಳಲ್ಲಿ ಪಾಂಗುಗಳ ಪರಿಚೆ, ಅಳವಿ ಮತ್ತು ನೆಲೆಗಳನ್ನು ತಿಳಿಸುವ ಮೂಲಕ ಹೇಗೆ ಪಾಂಗುಗಳನ್ನು ಗುರುತಿಸಲಾಗುತ್ತದೆ ಎಂಬುದನ್ನೂ ಈಗಾಗಲೇ ಆರನೇ ಪಸುಗೆಯಲ್ಲಿ ವಿವರಿಸಲಾಗಿದೆ. ಹೀಗೆ ಗುರುತಿಸಿರುವ ಪಾಂಗುಗಳನ್ನು ಯಾವ ರೀತಿಯಲ್ಲಿ ಎಸಕಪದಗಳು ತಿಳಿಸುವ ಎಸಕಗಳೊಂದಿಗೆ, ಮತ್ತು ಇರುಹಪದ ತಿಳಿಸುವ ಇರುಹಗಳೊಂದಿಗೆ ಸಂಬಂದಿಸಲಾಗುತ್ತದೆ, ಮತ್ತು ಅವನ್ನು ಸಂಬಂದಿಸುವಲ್ಲಿ ಎಸಕಪದಗಳು ತಿಳಿಸುವ ಎಸಕಗಳ ಪರಿಚೆಗಳು, ಮತ್ತು ಹೆಸರುಪದಗಳು ತಿಳಿಸುವ ಪಾಂಗುಗಳ ಪರಿಚೆಗಳು ಹೇಗೆ ತೊಡಗಿಕೊಳ್ಳುತ್ತವೆ ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗುವುದು.
7.1.1 ಇರುಹಗಳು ಮತ್ತು ಎಸಕಗಳು
ಮೇಲೆ ವಿವರಿಸಿದ ಹಾಗೆ, ಇರುಹಗಳನ್ನು ತಿಳಿಸಲು ಕನ್ನಡದಲ್ಲಿ ಇರು ಎಂಬ ಒಂದು ಪದ ಮಾತ್ರ ಬಳಕೆಯಲ್ಲಿದೆ; ಹಾಗಾಗಿ, ಅದನ್ನು ತಿರುಳುಪದವಾಗಿ ಬಳಸಿ ಉಂಟುಮಾಡಬಲ್ಲ ಸೊಲ್ಲುಗಳಲ್ಲಿ ಹೆಚ್ಚು ಬಗೆಗಳಿಲ್ಲ. ಇರುಹವನ್ನು ತಿಳಿಸುವವು, ಪರಿಚೆಯನ್ನು ತಿಳಿಸುವವು, ಮತ್ತು ಪತ್ತುಗೆಯನ್ನು ತಿಳಿಸುವವು ಎಂಬ ಮೂರು ಮುಕ್ಯ ಬಗೆಗಳನ್ನು ಮಾತ್ರ ಅವುಗಳಲ್ಲಿ ಕಾಣಬಹುದು: (1) ಇರುಹವನ್ನು ತಿಳಿಸುವವು: (1ಕ) ಈ ಕಾಡಿನಲ್ಲಿ ಹುಲಿಗಳಿವೆ. (1ಚ) ಅವರ ಮನೆಯಲ್ಲಿ ನಿನ್ನೆ ಒಂದು ಮದುವೆಯಿತ್ತು. (2) ಪರಿಚೆಯನ್ನು ತಿಳಿಸುವವು: (2ಕ) ಆಕೆಯ ತುಟಿ ಕೆಂಪಗಿದೆ.
(2ಚ) ಹುಡುಗ ಸಪ್ಪಗಿದ್ದ. (3) ಪತ್ತುಗೆಯನ್ನು ತಿಳಿಸುವವು: (3ಕ) ಆ ಮುದುಕನಿಗೆ ನೂರು ಮುಡಿ ಗದ್ದೆಯಿದೆ. (3ಚ) ಈ ಪುಸ್ತಕಕ್ಕೆ ಕೆಂಪು ಬಣ್ಣದ ತಟ್ಟಿಯಿತ್ತು. ಇದಕ್ಕೆ ಬದಲು, ಎಸಕಗಳನ್ನು ತಿಳಿಸಲು, ಮೇಲೆ ಹೇಳಿದ ಹಾಗೆ, ಒಂದು ಸಾವಿರಕ್ಕಿಂತಲೂ ಹೆಚ್ಚು ಎಸಕಪದಗಳು ಬಳಕೆಯಲ್ಲಿವೆ; ಹಾಗಾಗಿ, ಅವನ್ನು ತಿರುಳುಪದವಾಗಿ ಬಳಸಿ ಉಂಟುಮಾಡಬಲ್ಲ ಸೊಲ್ಲುಗಳಲ್ಲೂ ಹಲವಾರು ಬಗೆಗಳಿವೆ. ಇವನ್ನು ಮುಕ್ಯವಾಗಿ ಆಗುಹವನ್ನು ತಿಳಿಸುವವು ಮತ್ತು ಮಾಡುಹವನ್ನು ತಿಳಿಸುವವು ಎಂಬುದಾಗಿ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1) ಆಗುಹವನ್ನು ತಿಳಿಸುವವು: (4ಕ) ಮಡಕೆ ಒಡೆಯಿತು. (4ಚ) ಅವಳಿಗೆ ನನ್ನ ಮೇಲೆ ಕೋಪ ಬಂತು. (2) ಮಾಡುಹವನ್ನು ತಿಳಿಸುವವು: (5ಕ) ಹುಡುಗ ಓಡಿದ. (5ಚ) ಅವನು ಮಗುವಿಗೆ ಒಂದು ಹಣ್ಣು ಕೊಟ್ಟ. ಈ ಎರಡು ಬಗೆಯ ಸೊಲ್ಲುಗಳ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಆಗುಹದಲ್ಲಿ ತೊಡಗಿರುವ ಪಾಂಗುಗಳಲ್ಲಿ ಯಾವುದಕ್ಕೂ ಆ ಎಸಕದ ಮೇಲೆ ಹತೋಟಿಯಿರುವುದಿಲ್ಲ, ಮತ್ತು ಮಾಡುಹದಲ್ಲಿ ತೊಡಗಿಕೊಂಡಿರುವ ಪಾಂಗುಗಳಲ್ಲಿ ಯಾವುದಾದರೂ ಒಂದಕ್ಕೆ ಆ ಎಸಕದ ಮೇಲೆ ಹತೋಟಿಯಿರುತ್ತದೆ. ಎತ್ತುಗೆಗಾಗಿ, ಮೇಲೆ (4ಕ)ದಲ್ಲಿ ಬಂದಿರುವ ಮಡಕೆ ಎಂಬ ಪಾಂಗಿಗಾಗಲಿ, ಇಲ್ಲವೇ (4ಚ)ದಲ್ಲಿ ಬಂದಿರುವ ಅವಳು, ನಾನು ಮತ್ತು ಕೋಪ ಎಂಬ ಮೂರು ಪಾಂಗುಗಳಲ್ಲಿ ಯಾವುದಾದರೂ ಒಂದಕ್ಕಾಗಲಿ ಆ ಸೊಲ್ಲುಗಳು ತಿಳಿಸುವ ಎಸಕಗಳ ಮೇಲೆ ಹತೋಟಿಯಿಲ್ಲ. ಇದಕ್ಕೆ ಬದಲು, (5ಕ)ದಲ್ಲಿ ಬಂದಿರುವ ಮಗು ಪಾಂಗಿಗೆ, ಮತ್ತು (5ಚ)ದಲ್ಲಿ ಬಂದಿರುವ ಮೂರು ಪಾಂಗುಗಳಲ್ಲಿ ಒಂದಾದ ಹುಡುಗ ಪಾಂಗಿಗೆ ಆ ಸೊಲ್ಲುಗಳು ತಿಳಿಸುವ ಎಸಕದ ಮೇಲೆ ಹತೋಟಿಯಿದೆ.
7.1.2 ಪಾಂಗುಗಳ ಬಗೆಗಳು
ಎಸಕಪದಗಳೊಂದಿಗೆ ಎಂತಹ ಪಾಂಗುಗಳು ಮತ್ತು ಎಶ್ಟು ಪಾಂಗುಗಳು ಬರಬಲ್ಲುವು ಎಂಬುದು ಮುಕ್ಯವಾಗಿ ಆ ಎಸಕಪದಗಳ ಹುರುಳನ್ನು ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹುಡುಗ ಮಗುವಿಗೆ ಒಂದು ಗೊಂಬೆ ಕೊಟ್ಟ. (1ಚ) ಹುಡುಗ ಒಂದು ಹಣ್ಣು ತಿಂದ. (1ಟ) ಹುಡುಗ ಅತ್ತ.
ಕೊಡು ಪದವನ್ನು ತಿರುಳುಪದವಾಗಿ ಬಳಸಿರುವ (1ಕ) ಸೊಲ್ಲಿನಲ್ಲಿ ಕೊಟ್ಟುದು ಯಾರು, ಕೊಟ್ಟುದು ಏನನ್ನು, ಮತ್ತು ಕೊಟ್ಟುದು ಯಾರಿಗೆ ಎಂಬ ಮೂರು ಮುಕ್ಯ ವಿಶಯಗಳನ್ನು ತಿಳಿಸಬೇಕಾಗಿದ್ದು, ಅದಕ್ಕಾಗಿ ಮೂರು ಪಾಂಗುಗಳನ್ನು ಬಳಸ ಬೇಕಾಗುತ್ತವೆ. ಇದಕ್ಕೆ ಬದಲು, ತಿನ್ನು ಪದವನ್ನು ತಿರುಳುಪದವಾಗಿ ಬಳಸಿರುವ (1ಚ) ಸೊಲ್ಲಿನಲ್ಲಿ ಮುಕ್ಯವಾಗಿ ತಿಂದುದು ಯಾರು ಮತ್ತು ತಿಂದುದು ಏನನ್ನು ಎಂಬ ಎರಡು ಸಂಗತಿಗಳನ್ನು ಮಾತ್ರ ತಿಳಿಸಬೇಕಾಗಿದ್ದು, ಅದಕ್ಕಾಗಿ ಎರಡು ಪಾಂಗುಗಳನ್ನು ಬಳಸಿದರೆ ಸಾಕಾಗುತ್ತದೆ; ಮತ್ತು ಅಳು ಪದವನ್ನು ಬಳಸಿರುವ (1ಟ) ಸೊಲ್ಲಿನಲ್ಲಿ ಅತ್ತುದು ಯಾರು ಎಂಬುದನ್ನು ಮಾತ್ರ ತಿಳಿಸಬೇಕಾಗಿದ್ದು, ಅದಕ್ಕಾಗಿ ಒಂದು ಪಾಂಗನ್ನಶ್ಟೇ ಬಳಸಿದರೆ ಸಾಕಾಗುತ್ತದೆ. ಎಸಕಪದಗಳೊಂದಿಗೆ ಎಂತಹ ಪಾಂಗುಗಳು ಮತ್ತು ಎಶ್ಟು ಪಾಂಗುಗಳು ಬರಬಲ್ಲುವು ಎಂಬುದನ್ನವಲಂಬಿಸಿ, ಅವನ್ನು ಕೆಲವು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ. ಮೇಲೆ ತಿಳಿಸಿದ ಹಾಗೆ, ಎಲ್ಲಾ ಎಸಕಪದಗಳನ್ನೂ ಮುಕ್ಯವಾಗಿ ಆಗುಹಗಳು ಮತ್ತು ಮಾಡುಹಗಳು ಎಂಬ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತಿದ್ದು, ಇವುಗಳಲ್ಲಿ ಎಲ್ಲಾ ಆಗುಹಗಳೂ ಆಗುಗ ಎಂಬ ಪಾಂಗಿನೊಂದಿಗೆ ಬರುತ್ತವೆ, ಮತ್ತು ಎಲ್ಲಾ ಮಾಡುಹಗಳೂ ಮಾಡುಗ ಎಂಬ ಪಾಂಗಿನೊಂದಿಗೆ ಬರುತ್ತವೆ: (2ಕ) ಹಾಲು ಉಕ್ಕಿತು. (2ಚ) ಹುಡುಗ ಕುಣಿದ. (2ಕ)ದಲ್ಲಿ ಉಕ್ಕು ಎಂಬ ಎಸಕಪದ ಒಂದು ಆಗುಹವನ್ನು ತಿಳಿಸುತ್ತಿದ್ದು, ಅದರೊಂದಿಗೆ ಹಾಲು ಎಂಬ ಆಗುಗ ಪಾಂಗು ಬಂದಿದೆ, ಮತ್ತು (2ಚ)ದಲ್ಲಿ ಕುಣಿ ಎಂಬುದು ಒಂದು ಮಾಡುಹವನ್ನು ತಿಳಿಸುತ್ತಿದ್ದು, ಅದರೊಂದಿಗೆ ಹುಡುಗ ಎಂಬ ಮಾಡುಗ ಪಾಂಗು ಬಂದಿದೆ. ಈ ಎರಡು ಪಾಂಗುಗಳು ಮಾತ್ರವಲ್ಲದೆ, ಗುರಿ, ಸುರು, ಜಾಗ ಮತ್ತು ಈಡು ಎಂಬ ಬೇರೆ ನಾಲ್ಕು ಪಾಂಗುಗಳೂ ಈ ಎರಡು ಬಗೆಯ ಎಸಕಪದಗಳೊಂದಿಗೆ ಬರಬಲ್ಲುವು; ಅವುಗಳಲ್ಲಿ ಯಾವುದು ಯಾವ ಎಸಕಪದದೊಂದಿಗೆ ಬರುತ್ತದೆ ಎಂಬುದು ಹೆಚ್ಚಿನ ಮಟ್ಟಿಗೆ ಎಸಕಪದಗಳ ಹುರುಳನ್ನವಲಂಬಿಸಿರುತ್ತದೆ. (ಕ) ಆಗುಹಗಳು: (3ಕ) ಅವನಿಗೆ ಹಣ ಸಿಕ್ಕಿತು. (3ಚ) ಮರದಿಂದ ಹಣ್ಣು ಉದುರಿತು. (3ಟ) ರಾಜು ಮನೆಯಲ್ಲಿ ಉಳಿದ. (3ತ) ಜಾನಕಿ ಮಗುವನ್ನು ಕಂಡಳು. (ಚ) ಮಾಡುಹಗಳು: (4ಕ) ಅವನು ಮರಕ್ಕೆ ಹತ್ತಿದ. (4ಚ) ಅವನು ಮರದಿಂದ ಇಳಿದ. (4ಟ) ಅವನು ಕೋಣೆಯಲ್ಲಿ ಅಡಗಿದ. (4ತ) ಅವನು ಸೀರೆಯನ್ನು ಹರಿದ. ಮೇಲೆ (3ಕ-ತ) ಸೊಲ್ಲುಗಳಲ್ಲಿ ಆಗುಹವನ್ನು ತಿಳಿಸುವ ಸಿಗು, ಉದುರು, ಉಳಿ ಮತ್ತು ಕಾಣು ಎಂಬ ಎಸಕಪದಗಳು ತಿರುಳು ಪದಗಳಾಗಿ ಬಂದಿದ್ದು, ಅವುಗಳಲ್ಲೆಲ್ಲ ಒಂದು ಆಗುಗ ಪಾಂಗು (ಹಣ, ಹಣ್ಣು, ರಾಜು, ಮತ್ತು ಜಾನಕಿ) ಬಂದಿದೆ; ಇದಲ್ಲದೆ, ಈ ಆಗುಗ ಪಾಂಗಿನೊಂದಿಗೆ (3ಕ)ದಲ್ಲಿ ಗುರಿ ಪಾಂಗು (ಅವನಿಗೆ), (3ಚ)ದಲ್ಲಿ ಸುರು ಪಾಂಗು (ಮರದಿಂದ),
(3ಟ)ದಲ್ಲಿ ಜಾಗ ಪಾಂಗು (ಮನೆಯಲ್ಲಿ), ಮತ್ತು (3ತ)ದಲ್ಲಿ ಈಡು ಪಾಂಗು (ಮಗುವನ್ನು) ಎಂಬುದಾಗಿ ಬೇರೆ ಪಾಂಗುಗಳೂ ಬಂದಿವೆ. ಇದಕ್ಕೆ ಬದಲು, (4ಕ-ತ) ಸೊಲ್ಲುಗಳಲ್ಲಿ ಮಾಡುಹವನ್ನು ತಿಳಿಸುವ ಹತ್ತು, ಇಳಿ, ಅಡಗು, ಮತ್ತು ಹರಿ ಎಂಬ ಎಸಕಪದಗಳು ತಿರುಳು ಪದಗಳಾಗಿ ಬಂದಿದ್ದು, ಅವುಗಳಲ್ಲೆಲ್ಲ ಒಂದು ಮಾಡುಗ ಪಾಂಗು (ಅವನು ಎಂಬುದು) ಬಂದಿದೆ, ಮತ್ತು ಅದರೊಂದಿಗೆ (4ಕ)ದಲ್ಲಿ ಗುರಿ ಪಾಂಗು (ಮರಕ್ಕೆ), (4ಚ)ದಲ್ಲಿ ಸುರು ಪಾಂಗು (ಮರದಿಂದ), (4ಟ)ದಲ್ಲಿ ಜಾಗ ಪಾಂಗು (ಕೋಣೆಯಲ್ಲಿ), ಮತ್ತು (4ತ)ದಲ್ಲಿ ಈಡು ಪಾಂಗು (ಸೀರೆಯನ್ನು) ಎಂಬುದಾಗಿ ಬೇರೆ ಪಾಂಗುಗಳೂ ಬಂದಿವೆ. ಈ ರೀತಿ, ಎಸಕಗಳನ್ನು ತಿಳಿಸುವ ಸೊಲ್ಲುಗಳಲ್ಲಿ ಎಂತಹ ಪಾಂಗುಗಳು ಬರುತ್ತವೆ, ಮತ್ತು ಎಶ್ಟು ಪಾಂಗುಗಳು ಬರುತ್ತವೆ ಎಂಬುದು ಅವುಗಳ ತಿರುಳು ಪದಗಳಾಗಿ ಬಂದಿರುವ ಎಸಕಪದಗಳ ಹುರುಳನ್ನು ಅವಲಂಬಿಸಿರುತ್ತದೆ; ಆದರೆ, ಇರುಹವನ್ನು ತಿಳಿಸುವ ಸೊಲ್ಲುಗಳಲ್ಲೆಲ್ಲ ಇರು ಎಂಬ ಒಂದೇ ಪದ ತಿರುಳುಪದವಾಗಿ ಬರುತ್ತಿದ್ದು, ಅವುಗಳಲ್ಲಿ ಬಳಕೆಯಾಗಬಲ್ಲ ಪಾಂಗುಗಳ ಪರಿಚೆ ಮತ್ತು ಎಣಿಕೆಗಳನ್ನು ತಿರುಳುಪದದ ಹುರುಳಿನಿಂದ ಪಡೆಯಲು ಬರುವುವುದಿಲ್ಲ; ಹಾಗಿದ್ದರೂ, ಮೇಲೆ ತಿಳಿಸಿದ ಹಾಗೆ, ಅವುಗಳಲ್ಲಿ ಮೂರು ಬಗೆಗಳನ್ನು ಕಾಣಲು ಬರುತ್ತದೆ. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ರಾಜು ಮನೆಯಲ್ಲಿದ್ದಾನೆ. (5ಚ) ಅವಳಿಗೆ ಇಬ್ಬರು ಅಣ್ಣಂದಿರಿದ್ದಾರೆ. (5ಟ) ಹುಡುಗ ಸಪ್ಪಗಿದ್ದಾನೆ. (5ಕ) ಸೊಲ್ಲಿನಲ್ಲಿ ಇರು ಪದದೊಂದಿಗೆ ಇರುಗ (ರಾಜು) ಮತ್ತು ಜಾಗ (ಮನೆಯಲ್ಲಿ) ಎಂಬ ಎರಡು ಪಾಂಗುಗಳು ಬಂದಿವೆ; ಇದಕ್ಕೆ ಬದಲು, (5ಚ)ದಲ್ಲಿ ಅದೇ ಪದದೊಂದಿಗೆ ಪತ್ತುಗೆ (ಅವಳಿಗೆ) ಮತ್ತು ಇರುಗ (ಇಬ್ಬರು ಅಣ್ಣಂದಿರು) ಎಂಬ ಎರಡು ಪಾಂಗುಗಳು ಬಂದಿವೆ, ಮತ್ತು (5ಟ)ದಲ್ಲಿ ಇರುಗ (ಹುಡುಗ) ಮತ್ತು ಪರಿಚೆ (ಸಪ್ಪಗೆ) ಎಂಬ ಎರಡು ಪಾಂಗುಗಳು ಬಂದಿವೆ. ಹಾಗಾಗಿ, ಇರು ಪದದೊಂದಿಗೆ ಇರುಗ+ಜಾಗ, ಇರುಗ+ಪತ್ತುಗೆ, ಮತ್ತು ಇರುಗ+ಪರಿಚೆ ಎಂಬ ಮೂರು ಪಾಂಗಿಟ್ಟಳಗಳು ಬರಬಲ್ಲುವೆಂದು, ಮತ್ತು ಈ ಮೂರು ಪಾಂಗಿಟ್ಟಳಗಳಲ್ಲಿ ಯಾವುದನ್ನು ಒಂದು ಸೊಲ್ಲಿನಲ್ಲಿ ಆಯ್ದುಕೊಳ್ಳಲಾಗಿದೆ ಎಂಬುದರ ಮೇಲೆ ಅದರಲ್ಲಿ ಎಂತಹ ಪಾಂಗುಗಳು ಬಳಕೆಯಾಗುತ್ತವೆ ಎಂಬುದು ಅವಲಂಬಿಸಿರುತ್ತದೆ ಎಂದು ಹೇಳಬೇಕಾಗುತ್ತದೆ. ತಿರುಳು ಪದಗಳೊಂದಿಗೆ ಸೊಲ್ಲುಗಳಲ್ಲಿ ಬರಬಲ್ಲ ಪಾಂಗುಗಳನ್ನು ಒಟ್ಟಾಗಿ ಆ ತಿರುಳುಪದದ ಪಾಂಗಿಟ್ಟಳವೆಂದು ಕರೆಯಬಹುದು; ಹೆಚ್ಚಿನ ಎಸಕಪದ ಗಳೊಂದಿಗೂ ಅವುಗಳದೇ ಆದ ಒಂದು ಪಾಂಗಿಟ್ಟಳ ಮಾತ್ರ ಬರುತ್ತದೆ. ಎತ್ತುಗೆ ಗಾಗಿ, ದೊರಕು ಎಸಕಪದದೊಂದಿಗೆ ಆಗುಗ+ಗುರಿ ಎಂಬ ಪಾಂಗಿಟ್ಟಳ ಬರುತ್ತದೆ (ಅವನಿಗೆ ತುಂಬಾ ಹಣ ದೊರಕಿತು); ಓದು ಎಸಕಪದದೊಂದಿಗೆ ಮಾಡುಗ+ಈಡು ಎಂಬ ಪಾಂಗಿಟ್ಟಳ ಬರುತ್ತದೆ (ಅವನು ಕತೆ ಓದಿದ); ಮತ್ತು ಹೋಗು ಎಸಕಪದದೊಂದಿಗೆ ಮಾಡುಗ+ಗುರಿ ಎಂಬ ಪಾಂಗಿಟ್ಟಳ ಬರುತ್ತದೆ (ಹುಡುಗ ಮನೆಗೆ ಹೋದ). ಆದರೆ, ಕೆಲವು ಎಸಕಪದಗಳೊಂದಿಗೆ ಒಂದಕ್ಕಿಂತ ಹೆಚ್ಚು ಪಾಂಗಿಟ್ಟಳಗಳು ಬಳಕೆಯಾಗಬಲ್ಲುವು: (6ಕ) ಅವನು ಪುಸ್ತಕಗಳನ್ನು ಟ್ರಕ್ಕಿನಲ್ಲಿ ತುಂಬಿಸಿದ. (6ಚ) ಅವನು ಟ್ರಕ್ಕನ್ನು ಪುಸ್ತಕಗಳಿಂದ ತುಂಬಿಸಿದ. ತುಂಬಿಸು ಎಸಕಪದ ಸಾಮಾನ್ಯವಾಗಿ ಮಾಡುಗ+ಈಡು+ಜಾಗ (ತುಂಬಿಸಿದ ವ್ಯಕ್ತಿ (ಮಾಡುಗ ಪಾಂಗು), ತುಂಬಿಸಿದ ವಸ್ತು (ಈಡು ಪಾಂಗು), ಮತ್ತು ತುಂಬಿಸಿದ ಜಾಗ (ಜಾಗ ಪಾಂಗು)) ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ; ಇದನ್ನು (6ಕ) ಸೊಲ್ಲಿನಲ್ಲಿ ಕಾಣಬಹುದು.
ಆದರೆ, ಈ ಎಸಕಪದವನ್ನು ಮಾಡುಗ+ಈಡು+ಸುರು ಎಂಬ ಇನ್ನೊಂದು ಬಗೆಯ ಪಾಂಗಿಟ್ಟಳದೊಂದಿಗೂ ಬಳಸಲು ಬರುತ್ತದೆ ಎಂಬುದನ್ನು (6ಚ) ಸೊಲ್ಲು ತಿಳಿಸುತ್ತದೆ; ಅದರಲ್ಲಿ (6ಕ) ಸೊಲ್ಲಿನ ಜಾಗ ಪಾಂಗು ಈಡು ಪಾಂಗಾಗಿ ಬಂದಿದೆ (ಟ್ರಕ್ಕನ್ನು), ಮತ್ತು ಈಡು ಪಾಂಗು (ತುಂಬಿಸಿದ ವಸ್ತು) ಸುರು ಪಾಂಗಾಗಿ ಬಂದಿದೆ (ಪುಸ್ತಕಗಳಿಂದ). ಎಸಕಪದಗಳೊಂದಿಗೆ ಬರಬಲ್ಲ ಪಾಂಗುಗಳ ಎಣಿಕೆ ಮತ್ತು ಬಗೆಗಳನ್ನು ವಿವರಿಸುವಲ್ಲಿಯೂ ಪಾಂಗಿಟ್ಟಳ ಎಂಬುದನ್ನು ಬಳಸಿಕೊಳ್ಳಲು ಬರುತ್ತದೆ. ಕನ್ನಡದ ಎಸಕಪದಗಳನ್ನು ಮುಕ್ಯವಾಗಿ ಕೆಳಗೆ ಕೊಟ್ಟಿರುವ 13 ಪಾಂಗಿಟ್ಟಳಗಳೊಂದಿಗೆ ಬರುವವುಗಳು ಎಂಬುದಾಗಿ ಗುಂಪಿಸಬಹುದು: ಆಗುಹಗಳು: 1. ಆಗುಗ ಮಾತ್ರ: ಗಿಡ ಚಿಗುರಿತು. 2. ಆಗುಗ+ಗುರಿ: ಗಾಳಿಗೆ ಸೊಡರು ಆರಿತು. 3. ಆಗುಗ+ಸುರು: ಮರದಿಂದ ಹಣ್ಣು ಬಿತ್ತು. 4. ಆಗುಗ+ಜಾಗ: ನೀರಿನಲ್ಲಿ ಉಪ್ಪು ಕರಗಿತು. 5. ಆಗುಗ+ಈಡು: ಅವನು ನನ್ನನ್ನು ಕಂಡ. ಮಾಡುಹಗಳು: 6. ಮಾಡುಗ ಮಾತ್ರ: ಹುಡುಗ ಓಡಿದ. 7. ಮಾಡುಗ+ಗುರಿ: ಅವನು ನನಗೆ ಹೊಡೆದ. 8. ಮಾಡುಗ+ಸುರು: ಅವನು ಮರದಿಂದ ಇಳಿದ. 9. ಮಾಡುಗ+ಜಾಗ: ಅವನು ಅಟ್ಟದಲ್ಲಿ ಅಡಗಿದ. 10. ಮಾಡುಗ+ಈಡು: ಆಕೆ ಒಂದು ಎಮ್ಮೆ ಸಾಕಿದಳು. 11. ಮಾಡುಗ+ಈಡು+ಗುರಿ: ಅವನು ಗೋಡೆಗೆ ಬಣ್ಣ ಬಳಿದ. 12. ಮಾಡುಗ+ಈಡು+ಸುರು: ಅವನು ಹಣ್ಣಿನಿಂದ ಸಿಪ್ಪೆ ಸುಲಿದ. 13. ಮಾಡುಗ+ಈಡು+ಜಾಗ: ಅವನು ಹಣವನ್ನು ಪೆಟ್ಟಿಗೆಯಲ್ಲಿ ಇಟ್ಟ. ಮೇಲೆ ಕೊಟ್ಟಿರುವ ಎಸಕಪದಗಳ ಪಾಂಗಿಟ್ಟಳಗಳಲ್ಲಿ ಆಗುಗ, ಮಾಡುಗ, ಈಡು, ಗುರಿ, ಸುರು ಮತ್ತು ಜಾಗ ಎಂಬ ಆರು ಪಾಂಗುಗಳು ಬಳಕೆಯಾಗಿರುವುದನ್ನು ಕಾಣಬಹುದು; ಎಸಕಪದಗಳಿಗೆ ನೇರವಾಗಿ ಸಂಬಂದಿಸಿರುವ ಈ ಪಾಂಗುಗಳನ್ನು ಇಟ್ಟಳದ ಪಾಂಗುಗಳೆಂದು ಕರೆಯಬಹುದು. ಇಂತಹ ಇಟ್ಟಳದ ಪಾಂಗುಗಳನ್ನು ಮಾತ್ರವಲ್ಲದೆ, ಸೊಲ್ಲುಗಳಲ್ಲಿ ಬೇರೆಯೂ ಕೆಲವು ಬಗೆಯ ಪಾಂಗುಗಳನ್ನು ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7ಕ) ಹುಟ್ಟುಹಬ್ಬಕ್ಕೆ ಹುಡುಗ ಮಗುವಿಗೆ ಒಂದು ಗೊಂಬೆ ಕೊಟ್ಟ. (7ಚ) ಸಂಜೆ ನಾಲ್ಕು ಗಂಟೆಗೆ ಹುಡುಗ ಒಂದು ಹಣ್ಣು ತಿಂದ. (7ಟ) ಬೆಳಿಗ್ಗೆ ಬಸ್ಸಿನಲ್ಲಿ ಹುಡುಗ ಅಳುತ್ತಿದ್ದ. (7ಕ) ಸೊಲ್ಲಿನಲ್ಲಿ ಹುಡುಗ, ಮಗು, ಮತ್ತು ಒಂದು ಗೊಂಬೆ ಎಂಬ ಮೂರು ಇಟ್ಟಳದ ಪಾಂಗುಗಳು ಮಾತ್ರವಲ್ಲದೆ, ಎಸಕದ ಅಳಬನ್ನು (ಉದ್ದೇಶವನ್ನು) ತಿಳಿಸುವ ಹುಟ್ಟುಹಬ್ಬಕ್ಕೆ ಎಂಬ ಇನ್ನೊಂದು ಹೆಚ್ಚಿನ ಪಾಂಗು ಬಂದಿದೆ; (7ಚ) ಸೊಲ್ಲಿನಲ್ಲಿ ಹುಡುಗ ಮತ್ತು ಹಣ್ಣು ಎಂಬ ಎರಡು ಇಟ್ಟಳದ ಪಾಂಗುಗಳು ಮಾತ್ರವಲ್ಲದೆ, ಹೊತ್ತನ್ನು ತಿಳಿಸುವ ಸಂಜೆ ನಾಲ್ಕು ಗಂಟೆಗೆ ಎಂಬ ಇನ್ನೊಂದು ಹೆಚ್ಚಿನ ಪಾಂಗು ಬಂದಿದೆ; (7ಟ) ಸೊಲ್ಲಿನಲ್ಲಿ ಹುಡುಗ ಎಂಬ ಇಟ್ಟಳದ ಪಾಂಗು
ಮಾತ್ರವಲ್ಲದೆ ಹೊತ್ತನ್ನು ತಿಳಿಸುವ ಬೆಳಿಗ್ಗೆ ಮತ್ತು ಜಾಗವನ್ನು ತಿಳಿಸುವ ಬಸ್ಸಿನಲ್ಲಿ ಎಂಬ ಎರಡು ಹೆಚ್ಚಿನ ಪಾಂಗುಗಳು ಬಂದಿವೆ. ಎಸಕದ ಹೊತ್ತು, ಇಂಬು, ಅಳಬು (ಉದ್ದೇಶ), ಕತ (ಕಾರಣ), ಅದನ್ನು ನಡೆಸುವಲ್ಲಿ ಬಳಕೆಯಾಗಿರುವ ಮುಟ್ಟು (ಕರಣ) ಮೊದಲಾದ ಹಲವು ಬಗೆಯ ವಿಶಯಗಳನ್ನು ತಿಳಿಸುವುದಕ್ಕಾಗಿ ಇಂತಹ ಹೆಚ್ಚಿನ ಪಾಂಗುಗಳು ಸೊಲ್ಲುಗಳಲ್ಲಿ ಬರಬಲ್ಲುವು; ಅವು ನೇರವಾಗಿ ಎಸಕಪದದ ಹುರುಳಿಗೆ ಸಂಬಂದಿಸಿಲ್ಲವಾದ ಕಾರಣ, ಅವನ್ನು ನೆರವು ಪಾಂಗುಗಳೆಂದು ಕರೆಯಬಹುದು. ಇಂತಹ ನೆರವು ಪಾಂಗುಗಳಿಗೂ ಇಟ್ಟಳದ ಪಾಂಗುಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆಯಾದರೂ, ಪಾಂಗುಗಳನ್ನು ಆ ರೀತಿ ಎರಡು ಗುಂಪುಗಳಲ್ಲಿ ಗುಂಪಿಸುವುದು ಸುಳುವಾದ ಕೆಲಸವಲ್ಲ; ಯಾಕೆಂದರೆ, ಕೆಲವು ಸಂದರ್ಬಗಳಲ್ಲಿ ಒಂದು ಪಾಂಗನ್ನು ಇಟ್ಟಳದ ಪಾಂಗೆಂದು ತಿಳಿಯಬೇಕೋ ಇಲ್ಲವೇ ನೆರವು ಪಾಂಗೆಂದು ತಿಳಿಯಬೇಕೋ ಎಂಬ ವಿಶಯದಲ್ಲಿ ಒಂದು ಕಚಿತವಾದ ತೀರ್ಮಾನಕ್ಕೆ ಬರಲು ಸಾದ್ಯವಾಗುವುದಿಲ್ಲ. ಹೀಗಿದ್ದರೂ, ಸೊಲ್ಲುಗಳಲ್ಲಿ ಬರುವ ಪಾಂಗುಗಳನ್ನು ಈ ಎರಡು ಬಗೆಯವೆಂದು ಗುರುತಿಸುವುದು ಅವನ್ನು ವಿವರಿಸುವಲ್ಲಿ, ಮತ್ತು ಎಸಕಪದಗಳನ್ನು ಗುಂಪಿಸುವಲ್ಲಿ ನೆರವಿಗೆ ಬರುತ್ತದೆ.
7.1.3 ಆಯ್ಕೆಯ ಕಟ್ಟು
ಎಸಕಪದಗಳೊಂದಿಗೆ ಎಂತಹ ವ್ಯಕ್ತಿ, ವಸ್ತು ಇಲ್ಲವೇ ವಿಶಯ ಅದರ ಆಗುಗ, ಮಾಡುಗ, ಈಡು ಮೊದಲಾದ ಪಾಂಗುಗಳಾಗಿ ಬರಬಲ್ಲುವು ಎಂಬ ವಿಶಯದಲ್ಲಿ ಕೆಲವು ಆಯ್ಕೆಯ ಕಟ್ಟುಗಳಿರುತ್ತದೆ; ಎತ್ತುಗೆಗಾಗಿ, ಓಡು ಎಸಕಪದದೊಂದಿಗೆ ಓಡಬಲ್ಲ ಒಂದು ಉಸಿರಿ ಮಾತ್ರ ಮಾಡುಗವಾಗಿ ಬರಬಲ್ಲುದು: (1ಕ) ಹುಡುಗ ಓಡಿದ. (1ಚ) ನಾಯಿ ಓಡಿತು. (1ತ) *ಬಂಡೆಕಲ್ಲು ಓಡುತ್ತಿದೆ. ಈ ವಿಶಯದಲ್ಲಿ ಎಸಕಪದದ ಹರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲು ಬರುತ್ತದೆ; ಎತ್ತುಗೆಗಾಗಿ, ಕಾರು ಓಡಿತು, ಈ ಗಡಿಯಾರ ಓಡುವುದಿಲ್ಲ, ನಿಂತುಹೋಗಿದೆ ಎಂಬಂತಹ ಬಳಕೆಗಳನ್ನು ಗಮನಿಸಬಹುದು. ಆದರೆ, ಇಂತಹ ಹರವಿನ ಹೆಚ್ಚುಗೆಗೂ ಒಂದು ಎಲ್ಲೆ ಮತ್ತು ದಿಕ್ಕುಗಳಿರುತ್ತವೆ. ಎಸಕಪದಗಳಿಗೆ ಮುಕ್ಯವಾಗಿ ಇಂತಹ ಎರಡು ಬಗೆಯ ಆಯ್ಕೆಯ ಕಟ್ಟುಗ ಳಿರುವುದನ್ನು ಕಾಣಬಹುದು: (1) ಎಂತಹ ಪದಗಳು ಅವುಗಳ ಪಾಂಗುಗಳಾಗಿ ಬರಬಲ್ಲುವು ಎಂಬುದೊಂದು, ಮತ್ತು (2) ಯಾವ ಹುರುಳಿನ ಪದಗಳು ಬರಬಲ್ಲುವು ಎಂಬುದಿನ್ನೊಂದು. (1) ಪದಗಳಿಗೆ ಸಂಬಂದಿಸಿದ ಆಯ್ಕೆಯ ಕಟ್ಟುಗಳು: ಹೆಚ್ಚಿನ ಎಸಕಪದಗಳೊಂದಿಗೂ ಹೆಸರುಪದ ಇಲ್ಲವೇ ಪದಕಂತೆಗಳು (ಇಲ್ಲವೇ ಅವುಗಳ ಜಾಗದಲ್ಲಿ ಬರಬಲ್ಲ ತೋರುಪದಗಳು) ಪಾಂಗುಗಳಾಗಿ ಬರುತ್ತವೆ; ಆದರೆ, ಹೇಳು, ಅನಿಸು, ನಂಬು, ಮರೆ, ತಿಳಿ ಮೊದಲಾದ ಕೆಲವು ಎಸಕಪದಗಳ ಪಾಂಗುಗಳಾಗಿ ಒಳಸೊಲ್ಲುಗಳು ಇಲ್ಲವೇ ಎತ್ತಿಹೇಳಿದ ಸೊಲ್ಲುಗಳು ಬರಬಲ್ಲುವು: (2ಕ) ಅವನು `ಎಲ್ಲರೂ ಒಳಗೆ ಬರಲಿ’ ಎಂದು ಹೇಳಿದ. (2ಚ) ಅವನು ಇವತ್ತು ಬರುವುದಿಲ್ಲವೆಂದು ನನಗೆ ಅನಿಸಿತು. (2ಟ) ನೀವು ಹೇಳಿರುವುದನ್ನೆಲ್ಲ ಅವನು ನಂಬಿದ. (2ತ) ಇವತ್ತು ಪೇಟೆಗೆ ಹೋಗಲಿದೆಯೆಂಬುದನ್ನು ಆತ ಮರೆತಿದ್ದ.
(2ಕ)ದಲ್ಲಿ ಹೇಳು ಎಸಕಪದದೊಂದಿಗೆ ಅವನು ಎಂಬುದು ಮಾಡುಗ ಪಾಂಗಾಗಿ ಬಂದಿದೆ, ಮತ್ತು ಎಲ್ಲರೂ ಒಳಗೆ ಬರಲಿ ಎಂದು ಎಂಬುದು ಈಡು ಪಾಂಗಾಗಿ ಬಂದಿದೆ; ಈ ಈಡು ಪಾಂಗಿನಲ್ಲಿ ಎಲ್ಲರೂ ಒಳಗೆ ಬರಲಿ ಎಂಬ ಒಂದು ಇಡೀ ಸೊಲ್ಲು ಒಳಸೊಲ್ಲಾಗಿ ಬಂದಿದೆ; ಇದೇ ರೀತಿಯಲ್ಲಿ, (2ಚ-ಟ) ಗಳಲ್ಲೂ ಒಳಸೊಲ್ಲುಗಳು ಪಾಂಗುಗಳ ಅಂಗಗಳಾಗಿ ಬಂದಿರುವುದನ್ನು ಕಾಣಬಹುದು. ಕೆಲವು ಎಸಕಪದಗಳ ಮಾಡುಗ ಪಾಂಗು ಇಲ್ಲವೇ ಈಡು ಪಾಂಗು ಹಲವೆಣಿಕೆಯ ಪದವಾಗಿರಬೇಕಾಗುತ್ತದೆ; ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ (ಚ) ಸೊಲ್ಲುಗಳು ಈ ಆಯ್ಕೆಯ ಕಟ್ಟನ್ನು ಮುರಿದಿವೆ, ಮತ್ತು ಈ ಕಾರಣಕ್ಕಾಗಿ ಅವು ಸರಿಯಾಗಿಲ್ಲ: (3ಕ) ಹುಡುಗರು ಚದರಿದರು. (3ಚ) *ಹುಡುಗ ಚದರಿದ. (4ಕ) ಅವರು ಹುಡುಗರನ್ನು ಚದರಿಸಿದರು. (4ಚ) *ಅವರು ಹುಡುಗನನ್ನು ಚದರಿಸಿದರು. ಚದರು ಎಸಕಪದಕ್ಕೆ ಒಂದು ಹಲವೆಣಿಕೆಯ ಮಾಡುಗ ಬೇಕಾಗುತ್ತದೆ ಎಂಬುದನ್ನು (3ಕ)ದಲ್ಲಿ ಕಾಣಬಹುದು; ಈ ಕಟ್ಟನ್ನು ಮುರಿದಿರುವ (3ಚ) ಸೊಲ್ಲು ಸರಿಯಾಗಿಲ್ಲ; (4ಕ-ಚ)ಗಳಲ್ಲೂ ಹೀಗೆಯೇ. (2) ಹುರುಳಿಗೆ ಸಂಬಂದಿಸಿದಂತಹ ಆಯ್ಕೆಯ ಕಟ್ಟುಗಳು: ಹುರುಳಿಗೆ ಸಂಬಂದಿಸಿದಂತಹ ಆಯ್ಕೆಯ ಕಟ್ಟುಗಳನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು; ಇಲ್ಲಿಯೂ (ಚ) ಸೊಲ್ಲುಗಳಲ್ಲಿ ಅವನ್ನು ಮುರಿಯಲಾಗಿದ್ದು, ಆ ಸೊಲ್ಲುಗಳು ಅಶ್ಟೊಂದು ಸರಿಯಾಗಿಲ್ಲವೆಂದು ಅನಿಸುತ್ತದೆ: (5ಕ) ಕೊಡದಲ್ಲಿ ನೀರಿದೆ. (5ಚ) ?ಕೊಡದಲ್ಲಿ ಸಿಟ್ಟಿದೆ. (6ಕ) ಹುಡುಗ ನನ್ನನ್ನು ಕಂಡ. (6ಚ) ?ಮರ ನನ್ನನ್ನು ಕಂಡಿತು. ಸಿಟ್ಟು ಎಂಬುದು ಉಸಿರಿಗಳಲ್ಲಿರಬಲ್ಲುದಲ್ಲದೆ, ಉಳಿದ ವಸ್ತುಗಳಲ್ಲಲ್ಲ ಎಂಬುದೇ (5ಚ) ಸೊಲ್ಲು ಸರಿಯಾಗಿಲ್ಲದಿರಲು ಕಾರಣ; ಕಾಣುವ ಎಸಕವನ್ನೂ ಕಾಣಬಲ್ಲ ಉಸಿರಿಗಳು ಮಾತ್ರ ನಡೆಸಬಲ್ಲುವಾದ ಕಾರಣ, (6ಚ) ಸೊಲ್ಲು ಸರಿಯಾಗಿಲ್ಲ. (3) ಆಯ್ಕೆಯ ಕಟ್ಟುಗಳನ್ನು ಮುರಿಯುವುದು: ಈ ಎರಡು ಬಗೆಯ ಆಯ್ಕೆಯ ಕಟ್ಟುಗಳಲ್ಲಿ ಹುರುಳಿಗೆ ಸಂಬಂದಿಸಿದಂತಹ ಕಟ್ಟುಗಳನ್ನು ಬರಹಗಾರರು ಆಗಾಗ ಮುರಿಯುತ್ತಿರುತ್ತಾರೆ, ಮತ್ತು ಹಾಗೆ ಮುರಿಯುವ ಮೂಲಕ ಹಲವು ಹೆಚ್ಚಿನ ಹುರುಳುಗಳನ್ನು ತಿಳಿಸಬಲ್ಲವರಾಗುತ್ತಾರೆ. ಎತ್ತುಗೆಗಾಗಿ, ಕೆಲವು ಬಗೆಯ ಬರಹಗಳಲ್ಲಿ ಮೋಡ ಕಣ್ಣೀರು ಸುರಿಸು ತ್ತಿರಬಹುದು, ಹೊಳೆ ಸಿಟ್ಟು ಮಾಡುತ್ತಿರಬಹುದು, ಇಲ್ಲವೇ ಕತ್ತಲು ಹೆದರಿಸುತ್ತಿರಬಹುದು. ಹೀಗಿದ್ದರೂ, ಎಸಕಪದಗಳಿಗಿರುವ ಆಯ್ಕೆಯ ಕಟ್ಟುಗಳು ಹಲವು ಬಗೆಗಳಲ್ಲಿ ಕೇಳುಗರ ಇಲ್ಲವೇ ಓದುಗರ ನೆರವಿಗೆ ಬರುತ್ತವೆ. ಎತ್ತುಗೆಗಾಗಿ, ಇಪ್ಪುರುಳಿನ ಎಸಕಪದಗಳನ್ನು ಬಳಸಿರುವ ಹಲವು ಕಡೆಗಳಲ್ಲಿ ನಿಜಕ್ಕೂ ಆಡುಗನ ಮನಸ್ಸಿನಲ್ಲಿ ಯಾವ ಹುರುಳು ಇದ್ದಿರಬಹುದು ಎಂಬುದನ್ನು ಆಯ್ಕೆಯ ಕಟ್ಟನ್ನು ಬಳಸಿ ತಿಳಿಯಲು ಬರುತ್ತದೆ: (7ಕ) ನಾನು ಒಂದು ಗಂಟೆಯಿಂದ ನಿಮಗೆ ಕಾಯುತ್ತಿದ್ದೇನೆ.
(7ಚ) ಹಂಡೆಯ ನೀರು ಚನ್ನಾಗಿ ಕಾದಿದೆ. ಕಾಯು ಎಂಬ ಎಸಕಪದಕ್ಕೆ ಎದುರುನೋಡು ಮತ್ತು ಬಿಸಿಯಾಗು ಎಂಬ ಎರಡು ಹುರುಳುಗಳಿವೆ; ಇವುಗಳಲ್ಲಿ ಯಾವುದನ್ನು ಆಡುಗನು ತನ್ನ ಮನಸ್ಸಿನ ಲ್ಲಿರಿಸಿಕೊಂಡು ಅದನ್ನು ಬಳಸಿರಬಹುದು ಎಂಬುದನ್ನು ಅದಕ್ಕಿರುವ ಆಯ್ಕೆಯ ಕಟ್ಟಿನ ನೆರವಿನಿಂದ ತೀರ್ಮಾನಿಸಲು ಬರುತ್ತದೆ: (7ಕ)ದಲ್ಲಿ ಅದರ ಮಾಡುಗ ಪಾಂಗಾಗಿ ನಾನು ಪದ ಬಂದಿರುವುದರಿಂದ, ಅದು ಮೊದಲನೆಯ ಹುರುಳಿನಲ್ಲಿ ಬಳಕೆಯಾಗಿರಬೇಕು ಎಂಬುದಾಗಿ ಕೇಳುಗನಿಗೆ ತೀರ್ಮಾನಿಸಲು ಬರುತ್ತದೆ; ಇದಕ್ಕೆ ಬದಲು, (7ಚ)ದಲ್ಲಿ ಅದರ ಆಗುಗ ಪಾಂಗಾಗಿ ಹಂಡೆಯ ನೀರು ಎಂಬುದು ಬಂದಿರುವುದರಿಂದ, ಅದು ಎರಡನೆಯ ಹುರುಳಿನಲ್ಲಿ ಬಳಕೆಯಾಗಿರಬೇಕು ಎಂಬುದಾಗಿಯೂ ತೀರ್ಮಾನಿಸಲು ಬರುತ್ತದೆ. ಆದರೆ, ಸರಿಯಾದ ಸಂದರ್ಬಗಳನ್ನು ಒದಗಿಸುವ ಮೂಲಕ, ಎಲ್ಲಾ ಬಗೆಯ ಹುರುಳಿಗೆ ಸಂಬಂದಿಸಿದಂತಹ ಆಯ್ಕೆಯ ಕಟ್ಟುಗಳನ್ನೂ ಮುರಿಯಲು ಬರುತ್ತದೆ. ಎತ್ತುಗೆಗಾಗಿ, ಮಕ್ಕಳ ಕತೆಗಳಲ್ಲಿ ಮರಗಳನ್ನೇ ಜಗಿದು ತಿನ್ನುವ ರಕ್ಕಸರು ಬರಬಲ್ಲರು, ಮತ್ತು ಕನಸಿನಲ್ಲಿ ಕಂಡುದನ್ನು ತಿಳಿಸುವಲ್ಲಿ ಬಂಡೆಕಲ್ಲುಗಳು ಹಾರಿ ಬರಬಲ್ಲುವು. ಇದಲ್ಲದೆ, ಕೆಲವು ಬಗೆಯ ಸೊಲ್ಲುಗಳೂ ಇಂತಹ ಬಳಕೆಗಳಿಗೆ ಎಡೆಕೊಡಬಲ್ಲುವು: (8ಕ) ಮರಗಳನ್ನು ಹಾಗೆಯೇ ಯಾರೂ ತಿನ್ನಲಾರರು. (8ಚ) ಅವನು ಒಂದು ಮರವನ್ನು ತಿಂದರೆ, ನಾನು ಒಂದು ಬಂಡೆಕಲ್ಲನ್ನು ತಿನ್ನುತ್ತೇನೆ. ಅಲ್ಲಗಳೆಯುವ ಸೊಲ್ಲು, ಕೇಳ್ವಿ, ಬೇಡಿಕೆ ಮೊದಲಾದವುಗಳಲ್ಲಿ ಈ ರೀತಿ ಹುರುಳಿಗೆ ಸಂಬಂದಿಸಿದಂತಹ ಆಯ್ಕೆಯ ಕಟ್ಟುಗಳನ್ನು ಮುರಿದಿರುವ ಸೊಲ್ಲುಗಳನ್ನು ಸುಳುವಾಗಿ ಬಳಸಲು ಬರುತ್ತದೆ.
7.1.4 ಹೆಸರುಪದಗಳ ಪಾಂಗುಗಳು
ಸಾಮಾನ್ಯವಾಗಿ, ಎಸಕಪದಗಳು ಸೊಲ್ಲುಗಳ ತಿರುಳುಪದಗಳಾಗಿ ಬರುತ್ತವೆ, ಮತ್ತು ಹೆಸರುಪದಗಳು ಅವುಗಳ ಪಾಂಗುಗಳಾಗಿ ಬರುತ್ತವೆ. ಆದರೆ, ಕೆಲವು ಬಗೆಯ ಹೆಸರುಪದಗಳು ತಮ್ಮವೇ ಆದ ಪಾಂಗುಗಳೊಂದಿಗೂ ಬರಬಲ್ಲುವು. ಈ ರೀತಿ ತಮ್ಮವೇ ಆದ ಪಾಂಗುಗಳೊಂದಿಗೆ ಬರಬಲ್ಲ ಹೆಸರುಪದಗಳಲ್ಲಿ ಮುಕ್ಯವಾಗಿ ಎರಡು ಬಗೆಯವನ್ನು ಕಾಣಬಹುದು: (1) ಎಸಕಪದಗಳಿಗೆ ಒಟ್ಟುಗಳನ್ನು ಸೇರಿಸಿ ಉಂಟುಮಾಡಿರುವ ಹೆಸರುಪದಗಳು ಒಂದು ಬಗೆಯವು, ಮತ್ತು (2) ನಂಟಸ್ತನ, ಮಯ್ಯ ಬಿಡಿ(ಅಂಗ), ಮತ್ತು ಕೆಲವು ಬಗೆಯ ಪರಿಚೆಗಳನ್ನು ತಿಳಿಸುವ ಹೆಸರುಪದಗಳು ಇನ್ನೊಂದು ಬಗೆಯವು. (1) ಒಟ್ಟಿಸಿದ ಹೆಸರುಪದಗಳು: ಎಸಕಪದಗಳಿಗೆ ಒಟ್ಟುಗಳನ್ನು ಸೇರಿಸಿ ಹಲವು ಬಗೆಯ ಹೆಸರುಪದಗಳನ್ನು ಉಂಟು ಮಾಡಲು ಬರುತ್ತದೆ (2.4 ನೋಡಿ); ಇಂತಹ ಹೆಸರುಪದಗಳೊಂದಿಗೆ ಪಾಂಗು ಗಳಾಗಿ ಆ ಎಸಕಪದಗಳ ಪಾಂಗುಗಳೇ ಬಳಕೆಯಾಗಬಲ್ಲುವು: (1ಕ) ಅವರು ಊರೂರು ತಿರುಗಾಡುತ್ತಿದ್ದಾರೆ. (1ಚ) ಅವರ ಊರೂರಿನ ತಿರುಗಾಟ ಇನ್ನೂ ಮುಗಿದಿಲ್ಲ. (2ಕ) ಹುಡುಗ ಇವತ್ತು ನೂರು ರುಪಾಯಿ ಗಳಿಸಿದ. (2ಚ) ಹುಡುಗನ ಇವತ್ತಿನ ಗಳಿಕೆ ನೂರು ರುಪಾಯಿ.
(1ಕ) ಸೊಲ್ಲಿನಲ್ಲಿ ಬಂದಿರುವ ತಿರುಗಾಡು ಎಸಕಪದವನ್ನು (1ಚ) ಸೊಲ್ಲಿನಲ್ಲಿ ತಿರುಗಾಟ ಎಂಬ ಹೆಸರುಪದವಾಗಿ ಮಾರ್ಪಡಿಸಲಾಗಿದೆ, ಮತ್ತು ಅದರ ಮಾಡುಗ (ಅವರು) ಮತ್ತು ಈಡು (ಊರೂರು) ಪಾಂಗುಗಳನ್ನು ಅವರ ಮತ್ತು ಊರೂರಿನ ಎಂಬ ಪತ್ತುಗೆ ಪಾಂಗುಗಳಾಗಿ ಮಾರ್ಪಡಿಸಲಾಗಿದೆ. (2ಕ-ಚ)ಗಳಲ್ಲೂ ಹೀಗೆಯೇ. ಆದರೆ, ಎಸಕಪದಗಳೊಂದಿಗೆ ಬರಬಲ್ಲ ಪಾಂಗುಗಳನ್ನು ಅವುಗಳಿಂದ ಪಡೆದ ಇಂತಹ ಹೆಸರುಪದಗಳೊಂದಿಗೆ ಬಳಸುವಾಗ, ಅವನ್ನೆಲ್ಲ ಹೆಸರುಪತ್ತುಗೆಯೆಂಬ ಒಂದೇ ರೂಪಕ್ಕೆ ಇಳಿಸಬೇಕಾಗುತ್ತದೆ; ಎಂದರೆ, ಈ ಪಾಂಗುಗಳ ನಡುವಿರುವ ಮಾಡುಗ, ಈಡು, ಗುರಿ, ಸುರು, ಜಾಗ ಎಂಬಂತಹ ವ್ಯತ್ಯಾಸಗಳೆಲ್ಲ ಇಲ್ಲಿ ಇಲ್ಲವಾಗುತ್ತವೆ. ಹಾಗಾಗಿ, ಇಂತಹ ಒಟ್ಟಿಸಿದ ಹೆಸರುಪದಗಳೊಂದಿಗೆ ಒಂದಕ್ಕಿಂತ ಹೆಚ್ಚು ಪಾಂಗುಗಳನ್ನು ಬಳಸುವುದು ತುಂಬಾ ಕಡಿಮೆ. ಆದರೆ, ಎಲ್ಲಾ ಬಗೆಯ ಪಾಂಗುಗಳೂ ಈ ರೀತಿ ಒಟ್ಟಿಸಿದ ಹೆಸರುಪದಗಳೊಂದಿಗೆ ಹೆಸರುಪತ್ತುಗೆಯ ರೂಪದಲ್ಲಿ ಬರಬಲ್ಲುವು: ಆಗುಗ: ಹಲಗೆ ಸವೆದಿದೆ > ಹಲಗೆಯ ಸವೆತ ಮಾಡುಗ: ಹುಡುಗ ಓಡಿದ > ಹುಡುಗನ ಓಟ ಈಡು: ಅವನು ಕಾಗದವನ್ನು ಓದಿದ > ಕಾಗದದ ಓದು ಗುರಿ: ಅವನು ಕೆಲಸಕ್ಕೆ ತೊಡಗಿದ > ಕೆಲಸದ ತೊಡಗಿಕೆ ಸುರು: ಅವನು ಗುದ್ದಲಿಯಿಂದ ಅಗೆದ > ಗುದ್ದಲಿಯ ಅಗೆತ ಜಾಗ: ಅವನು ಆಟದಲ್ಲಿ ಗೆದ್ದ > ಆಟದ ಗೆಲವು ಹೊತ್ತು: ಇಶ್ಟನ್ನು ಇವತ್ತು ಆಯ್ದರು > ಇವತ್ತಿನ ಆಯ್ಕೆ (2) ಎಸಕಪದಗಳ ಹೆಸರುರೂಪಗಳು ಎಸಕಪದಗಳಿಗೆ ಉದು ಮತ್ತು ಇಕೆ ಎಂಬ ಒಟ್ಟುಗಳನ್ನು ಸೇರಿಸುವ ಮೂಲಕ ಎರಡು ಬಗೆಯ ಹೆಸರುರೂಪಗಳನ್ನೂ ಪಡೆಯಲು ಬರುತ್ತದೆ; ಇವುಗಳಲ್ಲಿ ಉದು ಒಟ್ಟನ್ನು ಬಳಸಿ ಪಡೆದ ಹೆಸರುರೂಪಗಳೊಂದಿಗೆ ಎಲ್ಲಾ ಬಗೆಯ ಪಾಂಗುಗಳೂ ಬದಲಾಗದೆ ಬರಬಲ್ಲುವು. ಇದಕ್ಕೆ ಬದಲು, ಇಕೆ ಒಟ್ಟನ್ನು ಬಳಸಿ ಪಡೆದ ಹೆಸರುರೂಪಗಳೊಂದಿಗೆ ಬರುವಾಗ, ಎಸಕಪದದ ಪಾಂಗುಗಳೆಲ್ಲ ಪತ್ತುಗೆ ರೂಪಕ್ಕೆ ಬದಲಾಗುತ್ತವೆ; ಹಾಗಾಗಿ, ಅವುಗಳಲ್ಲಿ ಒಂದೆರಡಕ್ಕಿಂತ ಹೆಚ್ಚು ಪಾಂಗುಗಳು ಬಳಕೆಯಾಗುವುದಿಲ್ಲ: (3ಕ) ಅವನು ನನಗೆ ಒಂದು ಪುಸ್ತಕ ಕೊಟ್ಟ. (3ಚ) ಅವನು ನನಗೆ ಒಂದು ಪುಸ್ತಕ ಕೊಟ್ಟುದನ್ನು ಯಾರೂ ನೋಡಲಿಲ್ಲ. (3ಟ) ಅವನ ಪುಸ್ತಕದ ಕೊಡುವಿಕೆಯನ್ನು ಯಾರೂ ಗಮನಿಸಲಿಲ್ಲ. (3ಕ) ಸೊಲ್ಲಿನ ಕೊಡು ಎಸಕಪದವನ್ನು (3ಚ)ದಲ್ಲಿ ಕೊಟ್ಟುದು ಎಂಬ ಉದು ಹೆಸರುರೂಪಕ್ಕೆ ಮಾರ್ಪಡಿಸಲಾಗಿದೆ, ಮತ್ತು ಅದರೊಂದಿಗೆ (3ಕ)ದಲ್ಲಿ ಬಂದಿದ್ದ ಎಲ್ಲಾ ಪಾಂಗುಗಳೂ ಬದಲಾಗದೆ ಅದೇ ರೂಪದಲ್ಲಿ (3ಚ)ದಲ್ಲೂ ಬಂದಿವೆ. ಇದಕ್ಕೆ ಬದಲು, (3ಟ)ದಲ್ಲಿ ಕೊಡು ಎಸಕಪದವನ್ನು ಕೊಡುವಿಕೆ ಎಂಬ ಇಕೆ ಹೆಸರುರೂಪಕ್ಕೆ ಮಾರ್ಪಡಿಸಲಾಗಿದೆ, ಮತ್ತು ಅದರ ಪಾಂಗುಗಳಲ್ಲಿ ಎರಡು (ಅವನು ಮತ್ತು ಪುಸ್ತಕ) ಮಾತ್ರ ಉಳಿದಿದ್ದು, ಅವೆರಡೂ ಅವನ ಮತ್ತು ಪುಸ್ತಕದ ಎಂಬ ಹೆಸರುಪತ್ತುಗೆ ರೂಪಕ್ಕೆ ಬದಲಾಗಿವೆ. ಈ ಎರಡು ಬಗೆಯ ಹೆಸರುರೂಪಗಳೊಂದಿಗೆ, ಮತ್ತು ಮೇಲೆ ವಿವರಿಸಿದಂತಹ ಒಟ್ಟಿಸಿದ ಹೆಸರುಪದಗಳೊಂದಿಗೆ ಎಸಕಪದಗಳ ಪಾಂಗುಗಳಲ್ಲಿ ಯಾವುವೆಲ್ಲ ಬರಬಲ್ಲುವು, ಮತ್ತು ಅವುಗಳ ಬಳಕೆಯ ಹಿಂದೆ ಎಂತಹ ಕಟ್ಟಲೆಗಳು ಅಡಗಿಕೊಂಡಿವೆ ಎಂಬುದನ್ನು ಮುಂದಿನ ಪಸುಗೆಯೊಂದರಲ್ಲಿ ವಿವರಿಸಲಾಗುವುದು.
(3) ಬೇರೆ ಬಗೆಯ ಹೆಸರುಪದಗಳು: ಇಂತಹ ಎಸಕಪದಗಳಿಂದ ಪಡೆದ ಒಟ್ಟಿಸಿದ ಹೆಸರುಪದಗಳು ಮತ್ತು ಹೆಸರುರೂಪಗಳು ಮಾತ್ರವಲ್ಲದೆ, ಬೇರೆಯೂ ಕೆಲವು ಬಗೆಯ ಹೆಸರುಪದಗಳು ತಮ್ಮವೇ ಆದ ಪಾಂಗುಗಳನ್ನು ಪಡೆಯಬಲ್ಲುವು; ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು: ಹುಡುಗನ ಅಣ್ಣ ಮನೆಯ ಮಾಡು ಅರಸನ ಮಗಳು ಮರದ ತುದಿ ಹುಡುಗಿಯ ಗೆಳತಿ ಮಂಚದ ಕಾಲು ಊರಿನ ಹಿರಿಯರು ಕೋಣೆಯ ಉದ್ದ ಮೇಲೆ ಕೊಟ್ಟಿರುವ ಪದಕಂತೆಗಳಲ್ಲಿ ಬಂದಿರುವ ಅಣ್ಣ, ಮಗಳು, ಗೆಳತಿ, ತುದಿ, ಕಾಲು ಮೊದಲಾದ ಪದಗಳು ಕುರುಡ, ಮುದುಕ, ಮರ ಮೊದಲಾದ ಪದಗಳ ಹಾಗೆ ನೇರವಾಗಿ ಒಬ್ಬ ವ್ಯಕ್ತಿ ಇಲ್ಲವೇ ವಸ್ತುವಿನ ಪರಿಚೆಯನ್ನು ತಿಳಿಸುವ ಮೂಲಕ ಅದನ್ನು ಗುರುತಿಸುವ ಬದಲು, ಅದಕ್ಕೂ ಇನ್ನೊಂದು ವ್ಯಕ್ತಿ ಇಲ್ಲವೇ ವಸ್ತುವಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವ ಮೂಲಕ ಅದನ್ನು ಗುರುತಿಸುತ್ತವೆ. ಹಾಗಾಗಿ, ಇವನ್ನು ಪತ್ತುಗೆಯ ಪದಗಳೆಂದು ಕರೆಯಬಹುದು. ಎತ್ತುಗೆಗಾಗಿ, ಹುಡುಗನ ಅಣ್ಣ ಎಂಬ ಪದಕಂತೆಯಲ್ಲಿ ಅಣ್ಣ ಪದ ನೇರವಾಗಿ ಒಬ್ಬ ವ್ಯಕ್ತಿಯ ಪರಿಚೆಯನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಈಗಾಗಲೇ ಗುರುತಿಸಿರುವ ಹುಡುಗ ಎಂಬ ವ್ಯಕ್ತಿಗೂ ಆತನಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವ ಮೂಲಕ ಆತನನ್ನು ಗುರುತಿಸುತ್ತದೆ. ಈ ರೀತಿ ಗುರುತಿಸಲು ಬೇಕಾಗುವ ಬೇರೊಂದು ಪದವನ್ನು ಬಳಸದೆ, ಈ ಪದಗಳನ್ನು ಮಾತ್ರವೇ ಬಳಸಿರುವಲ್ಲಿಯೂ ಅವು ಬೇರೊಬ್ಬ ವ್ಯಕ್ತಿ ಇಲ್ಲವೇ ವಸ್ತುವಿನೊಂದಿಗಿರುವ ಪತ್ತುಗೆಯನ್ನು ತಿಳಿಸದೆ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತುವನ್ನು ಗುರುತಿಸಲಾರವು; ಎತ್ತುಗೆಗಾಗಿ, ಅಣ್ಣ ಎಂಬ ಪದವನ್ನು ಮಾತ್ರವೇ ಬಳಸಿರುವಲ್ಲಿ ಅದು ಆ ಪದ ಗುರುತಿಸುವ ವ್ಯಕ್ತಿಗೂ ಆಡುಗನಿಗೂ (ಇಲ್ಲವೇ ಕೇಳುಗನಿಗೂ) ನಡುವಿರುವ ಪತ್ತುಗೆಯನ್ನು ತಿಳಿಸುವ ಮೂಲಕವೇನೇ ಈ ಕೆಲಸವನ್ನು ನಡೆಸುತ್ತದೆ. (1ಕ) ಅಣ್ಣ ಯಾವಾಗ ಬರುತ್ತಾನೆ? (1ಚ) ದೊಡ್ಡಪ್ಪ ಮನೆಯಲ್ಲಿದ್ದಾರೋ? (1ಕ)ದಲ್ಲಿ ಬಂದಿರುವ ಅಣ್ಣ ಪದ ಆ ಸೊಲ್ಲಿನ ಆಡುಗನ ಇಲ್ಲವೇ ಕೇಳುಗನ ಅಣ್ಣನನ್ನು ಗುರುತಿಸುತ್ತದೆ; (1ಚ)ದಲ್ಲಿ ಬಂದಿರುವ ದೊಡ್ಡಪ್ಪ ಪದವೂ ಹೀಗೆಯೇ. ಇಂತಹ ಪತ್ತುಗೆಯ ಪದಗಳೊಂದಿಗೆ ಒಂದು ಪಾಂಗು ಮಾತ್ರ ಬರಬಲ್ಲುದು; ಒಂದಕ್ಕಿಂತ ಹೆಚ್ಚು ಪತ್ತುಗೆ ಪದಗಳು ಬಂದಿರುವಲ್ಲಿ ಅವು ಎರಡೆರಡು ಪದಗಳ ಕೂಡಿಕೆಗಳಾಗಿರುತ್ತವೆ: ಎತ್ತುಗೆಗಾಗಿ, ಅವನ ಹೆಂಡತಿಯ ತಮ್ಮನ ಮಗಳು ಎಂಬುದು ಅವನ ಹೆಂಡತಿ, ಅವಳ ತಮ್ಮ, ಮತ್ತು ಅವನ ಮಗಳು ಎಂಬ ಮೂರು ಬಗೆಯ ಪತ್ತುಗೆಗಳು ಸೇರಿಕೊಂಡಿರುವ ಒಂದೇ ಪಾಂಗನ್ನು ಗುರುತಿಸುತ್ತದೆ. ತಂದೆ, ತಾಯಿ, ಅಕ್ಕ, ಅಣ್ಣ ಎಂಬಂತಹ ನಂಟಸ್ತನದ ಪದಗಳು, ಕಯ್, ಕಾಲು, ಕಣ್ಣು, ಕಿವಿ ಎಂಬಂತಹ ಮಯ್ಯ ಬಿಡಿ(ಅಂಗ)ಗಳು, ಮತ್ತು ಎತ್ತರ, ಬಣ್ಣ, ತೂಕ ಮೊದಲಾದ ಕೆಲವು ಬಗೆಯ ಪರಿಚೆಗಳನ್ನು ತಿಳಿಸುವ ಪದಗಳು ಈ ರೀತಿ ಪತ್ತುಗೆ ಪದಗಳಾಗಿ ಬಳಕೆಯಾಗುತ್ತವೆ. ಹುಡುಗನ ಪೆನ್ನು, ಅವನ ಮನೆ, ನನ್ನ ಕೆಲಸ ಎಂಬಂತಹ ಪದಕಂತೆಗಳಲ್ಲೂ ಪತ್ತುಗೆಯನ್ನು ತಿಳಿಸುವ ಪದಗಳು ಬಳಕೆಯಾಗಿವೆ; ಆದರೆ, ಇಂತಹ ಪದಕಂತೆಗಳಲ್ಲಿ ಬಂದಿರುವ ಪೆನ್ನು, ಮನೆ, ಕೆಲಸ ಎಂಬಂತಹ ಪದಗಳನ್ನು ಪತ್ತುಗೆ ಪದಗಳೆಂದು ಕರೆಯಬೇಕಾಗಿಲ್ಲ. ಯಾಕೆಂದರೆ, ಅವು ಗುರುತಿಸುವ ವಸ್ತು ಇಲ್ಲವೇ ವಿಶಯಗಳು ಯಾವುವೆಂಬುದನ್ನು ತಿಳಿಯಲು
ಅಣ್ಣ, ತಮ್ಮ, ಕಾಲು, ಎತ್ತರ ಮೊದಲಾದ ಪದಗಳ ಹಾಗೆ ಯಾವ ವ್ಯಕ್ತಿ ಇಲ್ಲವೇ ವಸ್ತುಗಳೊಂದಿಗೆ ಅವು ಸಂಬಂದಿಸಿವೆ ಎಂಬುದನ್ನು ತಿಳಿಯಲೇ ಬೇಕೆಂದೇನೂ ಇಲ್ಲ. ಪತ್ತುಗೆ ಪದಗಳಲ್ಲಿ ನಂಟಸ್ತನವನ್ನು ತಿಳಿಸುವ ಅಣ್ಣ, ತಮ್ಮ, ತಾಯಿ, ಮಗಳು ಮೊದಲಾದ ಪದಗಳು, ಮತ್ತು ಬೇರೆ ಕೆಲವು ಬಗೆಯ ಪತ್ತುಗೆಗಳನ್ನು ತಿಳಿಸುವ ಗೆಳೆಯ, ಗೆಳತಿ ಎಂಬಂತಹ ಪದಗಳು ಬಿಡಿ ಮತ್ತು ಪರಿಚೆಗಳನ್ನು ತಿಳಿಸುವ ಪದಗಳಿಂದ ಒಂದು ಮುಕ್ಯ ವಿಶಯದಲ್ಲಿ ಬೇರಾಗಿವೆ: ನಂಟಸ್ತನವನ್ನು ತಿಳಿಸುವ ಪದಗಳು ಅಣ್ಣ-ತಮ್ಮ, ಅಕ್ಕ-ತಂಗಿ, ಮಾವ-ಅಳಿಯ, ಅತ್ತೆ-ಸೊಸೆ ಮೊದಲಾದ ಜೋಡಿಗಳಾಗಿ ಬರುತ್ತಿದ್ದು, ಇವನ್ನು ಬಳಸಿ, ಪತ್ತುಗೆಯಲ್ಲಿ ಬರುವ ಪದಗಳನ್ನು ಅದಲು ಬದಲು ಮಾಡಲು ಬರುತ್ತದೆ: (2ಕ) ರಾಜು ಹರಿಯ ಅಣ್ಣ. (2ಚ) ಹರಿ ರಾಜುವಿನ ತಮ್ಮ. ಇವುಗಳಲ್ಲಿ ಕೆಲವು ಜೋಡಿಗಳು ಗುರ್ತದ ವ್ಯತ್ಯಾಸವನ್ನು ತೋರಿಸುತ್ತಿದ್ದು, ಜೋಡಿಗಳ ನಡುವೆ ಗುರ್ತದ ವ್ಯತ್ಯಾಸವೂ ಕಾಣಿಸುತ್ತದೆ: (ಅಣ್ಣ, ಅಕ್ಕ) - (ತಮ್ಮ, ತಂಗಿ); (ಅತ್ತೆ, ಮಾವ) - (ಅಳಿಯ, ಸೊಸೆ); (ತಂದೆ, ತಾಯಿ) - (ಮಗ, ಮಗಳು), (ಅಜ್ಜ, ಅಜ್ಜಿ) - (ಮೊಮ್ಮಗ, ಮೊಮ್ಮಗಳು). ಇದಲ್ಲದೆ, ಅತ್ತಿಗೆ, ಬಾವ; ಗೆಳೆಯ, ಗೆಳತಿ ಎಂಬಂತಹ ಬೇರೆ ಕೆಲವು ಪದಗಳು ಜೋಡಿಯಿಲ್ಲದೆಯೂ ಅದಲು ಬದಲು ಮಾಡಲು ಬರುವಂತಿವೆ (ಆದರೆ, ಅವುಗಳಲ್ಲೂ ಗುರ್ತದ ವ್ಯತ್ಯಾಸವಿದೆ): (3ಕ) ಅವನು ನನ್ನ ಗೆಳೆಯ. (3ಚ) ನಾನು ಅವನ ಗೆಳೆಯ.
7.2 ಇರುಹಪದದ ಪಾಂಗಿಟ್ಟಳಗಳು
7.2.1 ಇರುಹವನ್ನು ತಿಳಿಸುವ ಸೊಲ್ಲುಗಳು
ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಮುಕ್ಯವಾಗಿ ಇರು ಪದವನ್ನು ತಿರುಳು ಪದವಾಗಿ ಬಳಸಲಾಗುತ್ತದೆ; ಇದಲ್ಲದೆ, ಎಟಕು, ನಂಬು, ಅನಿಸು ಮೊದಲಾದ ಬೇರೆ ಕೆಲವು ಬಗೆಯ ಎಸಕಪದಗಳನ್ನು ತಿರುಳು ಪದಗಳಾಗಿ ಬಳಸಿಯೂ ಇರುಹಗಳನ್ನು ತಿಳಿಸಲು ಬರುತ್ತದೆ; ಆದರೆ, ಬಳಕೆಯ ಹುರುಳನ್ನು ಕೊಡಬಲ್ಲ ಮೂರು ಬಗೆಯ ರೂಪಗಳಲ್ಲಿ ಮಾತ್ರ ಎಸಕಪದಗಳನ್ನು ಈ ರೀತಿ ಇರುಹವನ್ನು ತಿಳಿಸುವುದಕ್ಕಾಗಿ ಬಳಸಲು ಬರುತ್ತದೆ. (1ಕ) ರಾಜು ಮನೆಯಲ್ಲಿದ್ದಾನೆ. (1ಚ) ಆ ಗೆಲ್ಲು ನನಗೆ ಎಟಕುತ್ತದೆ. (1ಟ) ಅವನು ನಿಮ್ಮನ್ನು ನಂಬುತ್ತಿದ್ದ. (1ತ) ಅವನು ನಿಮ್ಮನ್ನು ನಂಬುವುದಿಲ್ಲ. (1ಕ)ದಲ್ಲಿ ಇರು ಪದವನ್ನು ಬಳಸಿ ಇರುಹವೊಂದನ್ನು ತಿಳಿಸಲಾಗಿದೆ, ಮತ್ತು (1ಚ-ತ)ಗಳಲ್ಲಿ ಎಟಕು ಮತ್ತು ನಂಬು ಪದಗಳನ್ನು ಬಳಕೆಯ ಎಸಕವನ್ನು ತಿಳಿಸುವಂತಹ ಮೂರು ಬಗೆಯ ಪದರೂಪಗಳಲ್ಲಿ ಬಳಸಿ ಇರುಹಗಳನ್ನು ತಿಳಿಸಲಾಗಿದೆ.
7.2.2 ಇರು ಪದದ ಪಾಂಗಿಟ್ಟಳಗಳು
ಮೇಲೆ (7.1.1ರಲ್ಲಿ) ತಿಳಿಸಿದ ಹಾಗೆ, ಇರು ಪದ ಮುಕ್ಯವಾಗಿ (1) ಇರುವಿಕೆಯ ಇಟ್ಟಳ, (2) ಪರಿಚೆಯ ಇಟ್ಟಳ, ಮತ್ತು (3) ಪತ್ತುಗೆಯ ಇಟ್ಟಳ ಎಂಬ ಮೂರು ಬಗೆಯ ಪಾಂಗಿಟ್ಟಳಗಳಲ್ಲಿ ಬಳಕೆಯಾಗುತ್ತದೆ: (1) ಇವುಗಳಲ್ಲಿ ಇರುವಿಕೆಯ ಇಟ್ಟಳವು ಯಾವುದಾದರೊಂದು ಜಾಗದಲ್ಲಿ ಒಂದು ಪಾಂಗಿನ ಇರುವಿಕೆಯನ್ನು ತಿಳಿಸುತ್ತದೆ: (1ಕ) ಮೇಶ್ಟ್ರು ಕ್ಲಾಸಿನಲ್ಲಿದ್ದಾರೆ. (1ಚ) ಆಕೆಯ ಹೊಸ ಸೀರೆ ಕಸದ ಬುಟ್ಟಿಯಲ್ಲಿತ್ತು. (1ಟ) ಅವರಲ್ಲಿ ಮೂರು ನಾಯಿಗಳಿವೆ. (1ತ) ಈ ಹಾಲಿನಲ್ಲಿ ನಾಳೆ ಒಂದು ಮದುವೆಯಿದೆ. ಮೇಲೆ (1ಕ)ದಲ್ಲಿ ಕ್ಲಾಸಿನಲ್ಲಿ ಎಂಬ ಜಾಗ ಪಾಂಗಿನಲ್ಲಿ ಮೇಶ್ಟ್ರು ಎಂಬ ಇರುಗ ಪಾಂಗಿನ ಇರವನ್ನು ತಿಳಿಸಲಾಗಿದೆ, ಮತ್ತು (1ಚ)ದಲ್ಲಿ ಕಸದ ಬುಟ್ಟಿಯಲ್ಲಿ ಎಂಬ ಇನ್ನೊಂದು ಜಾಗ ಪಾಂಗಿನಲ್ಲಿ ಆಕೆಯ ಹೊಸ ಸೀರೆ ಎಂಬ ಇರುಗ ಪಾಂಗಿನ ಇರವನ್ನು ತಿಳಿಸುತ್ತದೆ; (1ಟ-ತ)ಗಳಲ್ಲೂ ಹೀಗೆಯೇ. (2) ಪರಿಚೆಯ ಇಟ್ಟಳವು ಯಾವುದಾದರೊಂದು ಪರಿಚೆಯನ್ನು ಒಂದು ಪಾಂಗಿನ ಮೇಲೆ ಹೊರಿಸುತ್ತದೆ: (2ಕ) ಈ ಕಾಗದ ತುಂಬಾ ತೆಳ್ಳಗಿದೆ. (2ಚ) ಆ ಹುಲಿ ಬಿಳಿಯಿದೆ.
(2ಟ) ಹುಡುಗ ದೊಡ್ಡವನಾಗಿದ್ದಾನೆ. ಮೇಲೆ (2ಕ)ದಲ್ಲಿ ತುಂಬಾ ತೆಳ್ಳಗೆ ಎಂಬ ಪರಿಚೆಯನ್ನು ಈ ಕಾಗದ ಎಂಬ ಇರುಗ ಪಾಂಗಿನ ಮೇಲೆ ಹೊರಿಸಲಾಗಿದೆ; (2ಚ)ದಲ್ಲಿ ಬಿಳಿ ಎಂಬ ಪರಿಚೆಯನ್ನು ಆ ಹುಲಿ ಎಂಬ ಇನ್ನೊಂದು ಇರುಗ ಪಾಂಗಿನ ಮೇಲೆ ಹೊರಿಸಲಾಗಿದೆ, ಮತ್ತು (2ಟ)ದಲ್ಲಿ ದೊಡ್ಡವನು ಎಂಬ ಪರಿಚೆಯನ್ನು ಹುಡುಗ ಎಂಬ ಇರುಗ ಪಾಂಗಿನ ಮೇಲೆ ಹೊರಿಸಲಾಗಿದೆ. (3) ಪತ್ತುಗೆಯ ಇಟ್ಟಳವು ಯಾವುದಾದರೂ ಒಂದು ಪಾಂಗಿಗೆ ಇನ್ನೊಂದು ಪಾಂಗಿನೊಂದಿಗಿರುವ ಪತ್ತುಗೆಯನ್ನು ತಿಳಿಸುತ್ತದೆ: (3ಕ) ಆ ಅರಸನಿಗೆ ಮೂವರು ರಾಣಿಯರಿದ್ದರು. (3ಚ) ಸೀತಾಪತಿಗೆ ನಾಲ್ಕು ಎಮ್ಮೆಗಳಿವೆ. (3ಟ) ಆತನ ಮಾತಿಗೆ ಬಹಳ ಬೆಲೆಯಿರುತ್ತದೆ. (3ತ) ಪೆÇೀಲೀಸರಿಗೆ ನಿಮ್ಮ ಮೇಲೆ ಸಂಶಯವಿತ್ತು. (3ಕ)ದಲ್ಲಿ ಮೂವರು ರಾಣಿಯರು ಎಂಬ ಇರುಗ ಪಾಂಗಿಗೆ ಆ ಅರಸ ಎಂಬ ಗುರಿ ಪಾಂಗಿನೊಂದಿಗಿರುವ ಪತ್ತುಗೆಯನ್ನು ತಿಳಿಸಲಾಗಿದೆ, ಮತ್ತು (3ಚ)ದಲ್ಲಿ ನಾಲ್ಕು ಎಮ್ಮೆಗಳು ಎಂಬ ಇರುಗ ಪಾಂಗಿಗೆ ಸೀತಾಪತಿ ಎಂಬ ಗುರಿ ಪಾಂಗಿನೊಂದಿಗಿರುವ ಪತ್ತುಗೆಯನ್ನು ತಿಳಿಸಲಾಗಿದೆ; (3ಟ-ತ)ಗಳಲ್ಲೂ ಹೀಗೆಯೇ. ಈ ರೀತಿ ಇರು ಪದವು ಮೂರು ಬಗೆಯ ಪಾಂಗಿಟ್ಟಳದೊಂದಿಗೆ ಬರಬಲ್ಲುದಾದ ಕಾರಣ, ಅದು ಬರಿಯ ಇರುವಿಕೆಯನ್ನಶ್ಟೇ ತಿಳಿಸುತ್ತದೆ, ಮತ್ತು ಅದರೊಂದಿಗೆ ಬರುವ ಪಾಂಗಿಟ್ಟಳಗಳು ಅದರ ಮೇಲೆ ಬೇರೆ ಬೇರೆ ಬಗೆಯ ಇರುವಿಕೆಗಳ ಹುರುಳುಗಳನ್ನು ಹೊರಿಸುತ್ತವೆ ಎಂದೂ ಹೇಳಬಹುದು. ಇರು ಪದದೊಂದಿಗೆ ಬರಬಲ್ಲ ಈ ಮೂರು ಬಗೆಯ ಪಾಂಗಿಟ್ಟಳಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಕೆಳಗೆ ಕೊಡಲಾಗಿದೆ:
7.2.3 ಇರುವಿಕೆಯ ಇಟ್ಟಳ
ಇರುವಿಕೆಯ ಇಟ್ಟಳದಲ್ಲಿ ಮುಕ್ಯವಾಗಿ ಎರಡು ಪಾಂಗುಗಳು ಬರುತ್ತವೆ: ಅವುಗಳಲ್ಲಿ ಒಂದು ಇರುವಿಕೆಯನ್ನು ಯಾವುದರ ಕುರಿತಾಗಿ ಹೇಳಲಾಗುತ್ತದೆಯೋ ಅದನ್ನು ಗುರುತಿಸುವ ಇರುಗ ಪಾಂಗಾಗಿರುತ್ತದೆ ಮತ್ತು ಇನ್ನೊಂದು ಅದು ಎಲ್ಲಿದೆ ಎಂಬುದನ್ನು ತಿಳಿಸುವ ಜಾಗ ಪಾಂಗಾಗಿರುತ್ತದೆ: (1ಕ) ಕಪ್ಪು ಮಡಿಕೆಯಲ್ಲಿ ಬಿಸಿನೀರಿದೆ. (1ಚ) ಅವರ ಬೆಕ್ಕು ಮರದ ತುದಿಯಲ್ಲಿತ್ತು. (1ಟ) ಆಕೆಯ ಹುಡುಗ ನಮ್ಮಲ್ಲಿರುತ್ತಾನೆ. (1ಕ)ದಲ್ಲಿ ಜಾಗವನ್ನು ತಿಳಿಸಲು ಕಪ್ಪು ಮಡಿಕೆಯಲ್ಲಿ ಎಂಬುದು ಬಂದಿದೆ, ಮತ್ತು ಆ ಜಾಗದಲ್ಲಿ ಏನಿದೆ ಎಂಬುದನ್ನು ತಿಳಿಸಲು ಬಿಸಿನೀರು ಎಂಬ ಇರುಗ ಪಾಂಗು ಬಂದಿದೆ. ಉಳಿದ ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಎರಡೆರಡು ಪಾಂಗುಗಳು ಬಂದಿವೆ. (1) ಜಾಗ ಪಾಂಗಿನ ಬಳಕೆಯಲ್ಲಿ ಕೆಲವು ಕಟ್ಟುಪಾಡುಗಳು ಜಾಗ ಪಾಂಗಿನ ಬಳಕೆಯಲ್ಲಿ ಕಂಡುಬರುವ ಕೆಲವು ಕಟ್ಟುಪಾಡುಗಳನ್ನು ಕೆಳಗೆ ವಿವರಿಸಲಾಗಿದೆ:
(ಕ) ಜಾಗವನ್ನು ತಿಳಿಸುವ ಅಲ್ಲಿ ಒಟ್ಟು ಮಾತ್ರವಲ್ಲದೆ, ಮೇಲೆ, ಕೆಳಗೆ, ನಡುವೆ, ಹತ್ತಿರ, ಒಳಗೆ, ಸುತ್ತಲೂ ಮೊದಲಾದ ಬೇರೆಯೂ ಹಲವು ಬಗೆಯ ಇಂಬುಗಳನ್ನು ತಿಳಿಸುವ ಪದಗಳು ಇರುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಜಾಗ ಪಾಂಗನ್ನು ಗುರುತಿಸುವುದಕ್ಕಾಗಿ ಬಳಕೆಯಾಗಬಲ್ಲುವು: (1ಕ) ಮೇಜಿನ ಮೇಲೆ ಒಂದು ಪುಸ್ತಕ ಇದೆ. (1ಚ) ಪೆಟ್ಟಿಗೆಯ ಒಳಗೆ ಒಂದು ಹಾವಿತ್ತು. (1ಟ) ಮನೆಯ ಸುತ್ತಲೂ ಮುಳ್ಳಿನ ಗಿಡಗಳಿವೆ. (1ತ) ತಂದೆಯ ಹತ್ತಿರ ಮಗನೂ ಇದ್ದ. (ಚ) ಅನಿಸಿಕೆಯನ್ನು ತಿಳಿಸುವ ಪದಗಳನ್ನೂ ಇರುಗ ಪಾಂಗುಗಳಾಗಿ ಇರುವಿಕೆಯ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ: (2ಕ) ಅವನು ತುಂಬಾ ಗಡಿಬಿಡಿಯಲ್ಲಿದ್ದಾನೆ. (2ಚ) ಅವನು ಸಿಟ್ಟಿನಲ್ಲಿದ್ದಾನೆ. (2ಟ) ಅವನು ಹೆದರಿಕೆಯಲ್ಲಿದ್ದ. (2ತ) ಹುಡುಗ ಹಟದಲ್ಲಿದ್ದಾನೆ. ಅಮ್ಮ ಮಡಿಯಲ್ಲಿದ್ದಾಳೆ, ಮಗು ಬಿಸುಪಿನಲ್ಲಿದೆ, ಅವನು ತುಂಬಾ ನೋವಿನಲ್ಲಿದ್ದ ಎಂಬಂತಹ ಬಳಕೆಗಳನ್ನೂ ಇಲ್ಲಿ ಗಮನಿಸಬಹುದು. (ಟ) ಎರಡನೇ ಹಂತದ ಪಾಂಗುಗಳ ಇರುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ನೆರವು ಪಾಂಗಾಗಿ ಒಂದು ಹೊತ್ತಿನ ಪಾಂಗು ಬಂದಿದೆಯಾದರೆ, ಜಾಗ ಪಾಂಗನ್ನು ಬಳಸದಿರಲೂ ಬರುತ್ತದೆ: (3ಕ) ನಾಳೆ ರಾತ್ರಿ ಒಂದು ಬಾರೀ ಮದುವೆಯಿದೆ. (3ಚ) ನಿನ್ನೆ ಸಂಜೆ ಒಂದು ಮೀಟಿಂಗ್ ಇತ್ತು. (3ಟ) ಇವತ್ತು ಮೂರು ಗಂಟೆಗೆ ಈ ಶಾಲೆಯ ತೊಡಗುಹವಿದೆ. (3ತ) ಆಕೆಯ ಹಾಡುವಿಕೆ ಏಳರಿಂದ ಎಂಟರ ವರೆಗೆ ಇದೆ. ಮೇಲಿನ ಸೊಲ್ಲುಗಳಲ್ಲಿ ಒಂದು ಬಾರೀ ಮದುವೆ, ಒಂದು ಮೀಟಿಂಗ್, ಈ ಶಾಲೆಯ ತೊಡಗುಹ, ಮತ್ತು ಆಕೆಯ ಹಾಡುವಿಕೆ ಎಂಬ ಎರಡನೇ ಹಂತದ ಇರುಗ ಪಾಂಗುಗಳು ಬಳಕೆಯಾಗಿವೆ, ಮತ್ತು ಅವುಗಳಲ್ಲಿ ನಾಳೆ ರಾತ್ರಿ, ನಿನ್ನೆ ಸಂಜೆ, ಇವತ್ತು ಮೂರು ಗಂಟೆಗೆ, ಮತ್ತು ಏಳರಿಂದ ಎಂಟರ ವರೆಗೆ ಎಂಬ ಹೊತ್ತಿನ ಪಾಂಗುಗಳನ್ನು ಮಾತ್ರ ಬಳಸಲಾಗಿದೆಯಲ್ಲದೆ ಜಾಗ ಪಾಂಗನ್ನು ಬಳಸಿಲ್ಲ. (ತ) ಇರುವಿಕೆ ಎಂಬುದು ಅದು ಇರುವಶ್ಟು ಸಮಯವೂ ಒಂದೇ ಬಗೆಯಲ್ಲಿ ಇರುತ್ತದೆ; ಆಗುಹ ಇಲ್ಲವೇ ಎಸಕಗಳ ಹಾಗೆ ಅದು ಮಾರ್ಪಡುತ್ತಿರುವುದಿಲ್ಲ. ಹಾಗಾಗಿ, ಅದರೊಂದಿಗೆ ಒಂದು ಜಾಗ ಪಾಂಗು ಬರಬಲ್ಲುದಲ್ಲದೆ, ಸುರು ಇಲ್ಲವೇ ಗುರಿ ಪಾಂಗುಗಳು ಬರಲಾರವು. ಸುರು ಇಲ್ಲವೇ ಗುರಿ ಪಾಂಗುಗಳೊಂದಿಗೆ ಬರುವ ಎಸಕಗಳು ಕೊನೆಗೊಂಡಾಗ, ಜಾಗ ಪಾಂಗಿನೊಂದಿಗೆ ಬರುವ ಇರುವಿಕೆಗಳೇ ಉಂಟಾಗುತ್ತವೆಯಲ್ಲದೆ ಸುರು ಇಲ್ಲವೇ ಗುರಿ ಪಾಂಗುಗಳೊಂದಿಗಿರುವವುಗಳಲ್ಲ; ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (4ಕ) ಬೆಕ್ಕು ಮರದ ತುದಿಗೆ ಹತ್ತಿತು. (4ಚ) ಬೆಕ್ಕು ಮರದ ತುದಿಯಲ್ಲಿದೆ.
(5ಕ) ರಾಯರು ಬೆಂಗಳೂರಿನಿಂದ ಬಂದಿದ್ದಾರೆ. (5ಚ) ರಾಯರು ಬೆಂಗಳೂರಿನಲ್ಲಿ ಇಲ್ಲ. (4ಕ)ದಲ್ಲಿ ಹತ್ತು ಎಸಕಪದ ಮರದ ತುದಿಗೆ ಎಂಬ ಗುರಿ ಪಾಂಗಿನೊಂದಿಗೆ ಬಳಕೆಯಾಗಿದೆ; ಆದರೆ, ಅದು ಕೊನೆಗೊಂಡಾಗ ಉಂಟಾಗಿರುವ ಇರುವಿಕೆಯನ್ನು ತಿಳಿಸುವ (4ಚ)ದಲ್ಲಿ ಮರದ ತುದಿಯಲ್ಲಿ ಎಂಬ ಜಾಗ ಪಾಂಗು ಬಂದಿದೆ. ಇದೇ ರೀತಿಯಲ್ಲಿ ಬರು ಎಸಕಪದ (5ಕ)ದಲ್ಲಿ ಬೆಂಗಳೂರಿನಿಂದ ಎಂಬ ಸುರು ಪಾಂಗಿನೊಂದಿಗೆ ಬಂದಿದೆ, ಮತ್ತು ಅದು ಕೊನೆಗೊಂಡಾಗ ಉಂಟಾಗಿರುವ ಇರುವಿಕೆಯನ್ನು ತಿಳಿಸುವ (5ಚ)ದಲ್ಲಿ ಬೆಂಗಳೂರಿನಲ್ಲಿ ಎಂಬ ಜಾಗ ಪಾಂಗು ಬಂದಿದೆ. ಆದರೆ, ಒಂದು ಇರುವಿಕೆಗಿರುವ ಜಾಗದ ಅಳತೆಯನ್ನು ತಿಳಿಸಬೇಕಿರುವಲ್ಲಿ ಅದರ ಎರಡು ಕೊನೆಗಳನ್ನು ತಿಳಿಸಲು ಸುರು ಮತ್ತು ಜಾಗ ಪಾಂಗುಗಳನ್ನು ಬಳಸಲು ಬರುತ್ತದೆ: (6ಕ) ಇಲ್ಲಿಂದ ಸಾಗರಕ್ಕೆ ಆರು ಕಿ.ಮೀ. ಇದೆ. (6ಚ) ಒಂದು ಮರದಿಂದ ಇನ್ನೊಂದು ಮರಕ್ಕೆ ಏಳಡಿ ಇದೆ. (6ಕ)ದಲ್ಲಿ ಆರು ಕಿ.ಮೀ. ಎಂಬುದು ಇರುಗ ಪಾಂಗಾಗಿ ಬಂದಿದೆ, ಮತ್ತು ಅದರ ಜಾಗವನ್ನು ತಿಳಿಸಲು ಇಲ್ಲಿಂದ ಮತ್ತು ಸಾಗರಕ್ಕೆ ಎಂಬ ಸುರು ಮತ್ತು ಗುರಿ ಪಾಂಗುಗಳನ್ನು ಬಳಸಲಾಗಿದೆ. (6ಚ)ದಲ್ಲಿಯೂ ಏಳಡಿ ಎಂಬ ಇರುಗ ಪಾಂಗಿನ ಜಾಗವನ್ನು ತಿಳಿಸಲು ಒಂದು ಮರದಿಂದ ಮತ್ತು ಇನ್ನೊಂದು ಮರಕ್ಕೆ ಎಂಬ ಸುರು ಮತ್ತು ಗುರಿ ಪಾಂಗುಗಳು ಬಂದಿವೆ. ಗುರಿ ಪಾಂಗು ಇರುಗದ ದಿಕ್ಕನ್ನಾಗಲಿ ಇಲ್ಲವೇ ಮುಂದಿನ ಅಳತೆಯನ್ನಾಗಲಿ ತಿಳಿಸಲು ಬಳಕೆಯಾಗಬಲ್ಲುದು, ಮತ್ತು ಸುರು ಪಾಂಗು ಹಿಂದಿನ ಅಳತೆಯನ್ನು ತಿಳಿಸಲು ಬಳಕೆಯಾಗಬಲ್ಲುದು: (7ಕ) ಅವರ ಮನೆ ಇಲ್ಲಿಂದ ಬಡಗಕ್ಕಿದೆ. (7ಚ) ಅವರ ಜಾಗ ಇಲ್ಲಿಂದ ಆಲದ ಮರದ ವರೆಗಿದೆ. (7ಟ) ಕೆಂಪು ಬಣ್ಣ ನೆಲದಿಂದ ಎರಡಡಿ ಮೇಲೆ ಇದೆ. (ಪ) ಜಾಗವನ್ನು ಒತ್ತಿ ಹೇಳಲು, ಇಲ್ಲವೇ ಜಾಗಗಳಲ್ಲಿರುವ ಇರುಗಗಳ ಹಂಚಿಕೆಯನ್ನು ತಿಳಿಸಲು ಜಾಗ ಪಾಂಗನ್ನು ತಿಳಿಸುವ ಪದಗಳನ್ನು ಇಮ್ಮಡಿ ರೂಪದಲ್ಲಿ ಬಳಸಲಾಗುತ್ತದೆ: (8ಕ) ಬೆಕ್ಕು ಮರದ ತುತ್ತತುದಿಯಲ್ಲಿದೆ. (8ಚ) ತುಲಸಿ ಗಿಡ ಅಂಗಳದ ನಟ್ಟನಡುವೆ ಇದೆ. (9ಕ) ಕುರ್ಚಿಗಳು ತುಂಬಾ ಹತ್ತಿರ ಹತ್ತಿರ ಇವೆ. (9ಚ) ಗೋಡೆಯ ಮೇಲೆ ಅಲ್ಲಲ್ಲಿ ಮೊಳೆಗಳಿವೆ. (8ಕ-ಚ)ಗಳಲ್ಲಿ ಜಾಗವನ್ನು ಒತ್ತಿ ಹೇಳಲು ತುತ್ತತುದಿ ಮತ್ತು ನಟ್ಟನಡುವೆ ಎಂಬ ಇಮ್ಮಡಿ ರೂಪಗಳನ್ನು ಬಳಸಲಾಗಿದೆ, ಮತ್ತು (9ಕ-ಚ)ಗಳಲ್ಲಿ ಇರುಗಗಳ ಹಂಚಿಕೆಯನ್ನು ತಿಳಿಸಲು ಹತ್ತಿರ ಹತ್ತಿರ ಮತ್ತು ಅಲ್ಲಲ್ಲಿ ಎಂಬ ಇಮ್ಮಡಿ ರೂಪಗಳನ್ನು ಬಳಸಲಾಗಿದೆ. (2) ನೆರವು ಪಾಂಗುಗಳ ಬಳಕೆ ಇರುವಿಕೆಯ ಸೊಲ್ಲುಗಳಲ್ಲಿ ಹೊತ್ತಿನ ಪಾಂಗುಗಳನ್ನು ನೆರವು ಪಾಂಗುಗಳಾಗಿ ಬಳಸಲು ಬರುತ್ತದೆ ಎಂಬುದಕ್ಕೆ ಕೆಲವು ಎತ್ತುಗೆಗಳನ್ನು ಮೇಲೆಯೇ ಕೊಡಲಾಗಿದೆ (1(ಟ) ನೋಡಿ); ಇಂತಹ ಪಾಂಗುಗಳನ್ನು ಮಾತ್ರವಲ್ಲದೆ ಬೇರೆಯೂ ಕೆಲವು ಬಗೆಯ ನೆರವು ಪಾಂಗುಗಳನ್ನು ಅವುಗಳಲ್ಲಿ ಬಳಸಲು ಬರುತ್ತದೆ:
(1ಕ) ಇಲ್ಲಿ ನನ್ನೊಡನೆ ಒಬ್ಬ ಹುಡುಗನೂ ಇದ್ದಾನೆ. (1ಚ) ಈ ಕೋಣೆಯಲ್ಲಿ ನನ್ನ ಹಾಗೆ ಬೇರೆಯೂ ಇಬ್ಬರಿದ್ದಾರೆ. (1ಟ) ತಬ್ಬಲಿಯಾದುದರಿಂದ ಹುಡುಗ ಇಲ್ಲಿದ್ದಾನೆ. (1ತ) ಮಗಳ ಮದುವೆಗೆ ಆತನಲ್ಲಿ ಮೂರು ಲಕ್ಶ ಇದೆ. ಮೇಲೆ (1ಕ)ದಲ್ಲಿ ನನ್ನೊಡನೆ ಎಂಬ ಒಡನಾಡಿ ಪಾಂಗು, (1ಚ)ದಲ್ಲಿ ನನ್ನ ಹಾಗೆ ಎಂಬ ಹೋಲುಗ ಪಾಂಗು, (1ಟ)ದಲ್ಲಿ ತಬ್ಬಲಿಯಾದುದರಿಂದ ಎಂಬ ಕತ (ಕಾರಣ) ಪಾಂಗು, ಮತ್ತು (1ತ)ದಲ್ಲಿ ಮಗಳ ಮದುವೆಗೆ ಎಂಬ ಅಳಬು (ಉದ್ದೇಶ) ಪಾಂಗುಗಳು ನೆರವು ಪಾಂಗುಗಳಾಗಿ ಬಳಕೆಯಾಗಿರುವುದನ್ನು ಕಾಣಬಹುದು. ನೆರವು ಪಾಂಗುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು 7.5 ಮತ್ತು 7.6ರಲ್ಲಿ ಕೊಡಲಾಗಿದೆ.
7.2.4 ಪರಿಚೆ ಇಟ್ಟಳ
ಈ ಇಟ್ಟಳದಲ್ಲಿ ಇರುಗ ಪಾಂಗು ಮತ್ತು ಪರಿಚೆ ಪಾಂಗು ಎಂಬುದಾಗಿ ಎರಡು ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಬಳಕೆಯಾಗುತ್ತವೆ. ಇವುಗಳಲ್ಲಿ ಇರುಗ ಪಾಂಗು ಸಾಮಾನ್ಯವಾಗಿ ಕೇಳುಗನಿಗೆ ತಿಳಿದಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುತ್ತಿದ್ದು ಮೊದಲು ಬರುತ್ತದೆ, ಮತ್ತು ಅದರ ಪರಿಚೆಯನ್ನು ತಿಳಿಸುವ ಪರಿಚೆ ಪಾಂಗು ಬಳಿಕ ಬರುತ್ತದೆ. (1ಕ) ಆಚೆ ಮನೆಯ ಹುಡುಗ ಸಪ್ಪಗಿದ್ದಾನೆ. (1ಚ) ಈ ಬುಟ್ಟಿಯ ಹಣ್ಣುಗಳು ಮೆತ್ತಗಿವೆ. (1ಟ) ಈ ನೆಲ ತುಂಬಾ ತಣ್ಣಗಿದೆ. (1ಕ)ದಲ್ಲಿ ಆಚೆ ಮನೆಯ ಹುಡುಗ ಎಂಬ ಇರುಗ ಪಾಂಗು ಮೊದಲು ಬಂದಿದೆ, ಮತ್ತು ಅದರ ಪರಿಚೆಯನ್ನು ತಿಳಿಸುವ ಸಪ್ಪಗೆ ಎಂಬ ಪರಿಚೆ ಪಾಂಗು ಬಳಿಕ ಬಂದಿದೆ. (1ಚ-ಟ) ಸೊಲ್ಲುಗಳಲ್ಲೂ ಹೀಗೆಯೇ. ಮೇಲೆ ಕೊಟ್ಟಿರುವ ಎತ್ತುಗೆಗಳಲ್ಲಿ ಇರುಗ ಪಾಂಗಿನ ಪರಿಚೆಯನ್ನು ತಿಳಿಸುವು ದಕ್ಕಾಗಿ ಸಪ್ಪಗೆ, ಮೆತ್ತಗೆ ಮತ್ತು ತಣ್ಣಗೆ ಎಂಬ ಎಸಕಪರಿಚೆಗಳನ್ನು ಬಳಸಲಾಗಿದೆ. ಇದಕ್ಕೆ ಬದಲು, ಪರಿಚೆಗಳನ್ನು ತಿಳಿಸಬಲ್ಲ ಹೆಸರುಪರಿಚೆಗಳನ್ನು ಇಲ್ಲವೇ ಹೆಸರುಪದಗಳನ್ನೂ ಈ ಕೆಲಸಕ್ಕಾಗಿ ಬಳಸಲು ಬರುತ್ತದೆ. ಆದರೆ, ಅಂತಹ ಕಡೆಗಳಲ್ಲಿ ಅವುಗಳೊಂದಿಗೆ ಹೆಚ್ಚಿನೆಡೆಗಳಲ್ಲೂ ಆಗು ಪದದ ಮೊದಲೆಸಕದ ಜೋಡಿಸುವ ರೂಪವಾದ ಆಗಿ ಎಂಬುದನ್ನೂ ಬಳಸಬೇಕಾಗುತ್ತದೆ: (2ಕ) ಆ ಮನೆಯ ನೆಲ ದೊರಗಾಗಿದೆ. (2ಚ) ಅವನ ಬಟ್ಟೆ ಕೊಳಕಾಗಿದೆ. (3ಕ) ಅವನು ಕುರುಡನಾಗಿದ್ದಾನೆ. (3ಚ) ಅವನು ಗುರಿಕಾರನಾಗಿದ್ದಾನೆ. (2ಕ-ಚ)ಗಳಲ್ಲಿ ದೊರಗು ಮತ್ತು ಕೊಳಕು ಎಂಬ ಹೆಸರುಪರಿಚೆಗಳನ್ನು ಬಳಸಲಾಗಿದೆ, ಮತ್ತು (3ಕ-ಚ)ಗಳಲ್ಲಿ ಕುರುಡ ಮತ್ತು ಗುರಿಕಾರ ಎಂಬ ಹೆಸರುಪದಗಳನ್ನು ಬಳಸಲಾಗಿದೆ; ಈ ಎರಡು ಬಗೆಯ ಬಳಕೆಗಳಲ್ಲೂ ಆಗಿ ಎಂಬುದರ ಬಳಕೆಯಾಗಿರುವುದನ್ನು ಗಮನಿಸಬಹುದು. (1) ಪರಿಚೆಪದಗಳ ಬಳಕೆ
ಎರಡು ಬಗೆಯ ಪರಿಚೆಪದಗಳು ಆಗಿ ಎಂಬುದರ ನೆರವಿಲ್ಲದೆ ನೇರವಾಗಿ ಪರಿಚೆ ಇಟ್ಟಳದಲ್ಲಿ ಬಳಕೆಯಾಗಬಲ್ಲುವು; ಮೊದಲನೆಯದಾಗಿ, ಅಗೆ ಎಂಬ ಒಟ್ಟಿನಲ್ಲಿ ಕೊನೆಗೊಳ್ಳುವ ಕೆಳಗೆ ಕೊಟ್ಟಿರುವ ಪದಗಳು ಇಂತಹವು: ಕಪ್ಪಗೆ ತಣ್ಣಗೆ ನೆಟ್ಟಗೆ ಮಿಣ್ಣಗೆ ಕರ್ರಗೆ ತೆಪ್ಪಗೆ ನೊಚ್ಚಗೆ ಮೆತ್ತಗೆ ಕೆಂಪಗೆ ತೆಳ್ಳಗೆ ಪಚ್ಚಗೆ ಮೆಲ್ಲಗೆ ಕಮ್ಮಗೆ ದಪ್ಪಗೆ ಬಿನ್ನಗೆ ಸಪ್ಪಗೆ ಕೆಂಚಗೆ ದಟ್ಟಗೆ ಬಿಮ್ಮಗೆ ಸುಮ್ಮಗೆ ಕೆಮ್ಮಗೆ ದುಂಡಗೆ ಬೆಚ್ಚಗೆ ಸೊಮ್ಮಗೆ ಗುಂಡಗೆ ನುಣ್ಣಗೆ ಬೆಳ್ಳಗೆ (1ಕ) ಅವನು ತೆಪ್ಪಗಿದ್ದ. (1ಚ) ಈ ಗೋಡೆ ನುಣ್ಣಗಿದೆ. (1ಟ) ಅವನ ಬೆನ್ನು ನೆಟ್ಟಗಿದೆ. (1ತ) ಅವನ ಹಲ್ಲು ಬೆಳ್ಳಗಿದೆ. ಎರಡನೆಯದಾಗಿ, ಕೆಂಪು, ಕಪ್ಪು, ಬಿಳಿ, ಬಿಸಿ, ಹಸುರು, ಹೆಚ್ಚು, ಕಡಿಮೆ, ದಪ್ಪ, ತೆಳು, ನುಣುಪು ಮೊದಲಾದ ಬೇರೆ ಕೆಲವು ಪರಿಚೆಪದಗಳೂ ನೇರವಾಗಿ ಆಗಿ ಪದದ ನೆರವಿಲ್ಲದೆ ಈ ಇಟ್ಟಳದಲ್ಲಿ ಬಳಕೆಯಾಗಬಲ್ಲುವು: (2ಕ) ಅವನ ಕಣ್ಣು ಕೆಂಪಿದೆ. (2ಚ) ಈ ಸೀರೆ ಕಪ್ಪಿದೆ. (2ಟ) ಹಾಲು ತುಂಬಾ ಬಿಸಿಯಿದೆ. (2ತ) ಈ ಬಟ್ಟೆ ತುಸು ದಪ್ಪ ಇದೆ. ಈ ಎರಡು ಬಗೆಯ ಪರಿಚೆಪದಗಳ ಬಳಿಕವೂ ಆಗಿ ಪದವನ್ನು ಬಳಸಲು ಬರುತ್ತದೆ; ಆದರೆ, ಅವನ್ನು ಮಾತ್ರವೇ ಬಳಸಿರುವಲ್ಲಿ ಇರುಹದ ಹುರುಳು ಮಾತ್ರ ಇರುತ್ತದೆ, ಮತ್ತು ಅವುಗಳೊಂದಿಗೆ ಆಗಿ ಎಂಬುದನ್ನು ಬಳಸಿರುವಲ್ಲಿ ಆಗುಹ ಮತ್ತು ಇರುಹಗಳ ನಡುವಿನ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: (3ಕ) ಆ ಕಲ್ಲು ದುಂಡಗಿದೆ. (3ಚ) ಆ ಕಲ್ಲು ದುಂಡಗಾಗಿದೆ. (4ಕ) ಆಕೆ ತೆಳ್ಳಗಿದ್ದಾಳೆ. (4ಚ) ಆಕೆ ತೆಳ್ಳಗಾಗಿದ್ದಾಳೆ. (5ಕ) ಅವನ ಕಣ್ಣು ಕೆಂಪಿದೆ. (5ಚ) ಅವನ ಕಣ್ಣು ಕೆಂಪಾಗಿದೆ. (3ಕ) ಸೊಲ್ಲಿಗೆ ಕಲ್ಲು ಹೇಗಿದೆ ಎಂಬುದನ್ನು ತಿಳಿಸುವ ಇರುಹದ ಹುರುಳು ಮಾತ್ರ ಸಿಗಬಲ್ಲುದು; ಇದಕ್ಕೆ ಬದಲು, (3ಚ) ಸೊಲ್ಲಿಗೆ ಅಂತಹ ಇರುಹದ ಹುರುಳು ಮಾತ್ರವಲ್ಲದೆ, ಮೊದಲು ಓರೆಕೋರೆಯಾಗಿದ್ದ ಕಲ್ಲು ಈಗ ದುಂಡಗಾಗಿದೆ ಎಂಬ ಆಗುಹದ ಹುರುಳೂ ಸಿಗಬಲ್ಲುದು; (4-5)ನೇ ಎತ್ತುಗೆಗಳಲ್ಲೂ ಹೀಗೆಯೇ.
ಇದಲ್ಲದೆ, ಹೋಲಿಕೆಯನ್ನು ತಿಳಿಸುವ ಹಾಗೆ ಇಲ್ಲವೇ ಅಂತೆ ಎಂಬುದನ್ನೂ ಪರಿಚೆ ಪಾಂಗಾಗಿ ಮೇಲಿನ ಪರಿಚೆ ಇಟ್ಟಳದಲ್ಲಿ ಬಳಸಲು ಬರುತ್ತದೆ: (6ಕ) ಈ ಮನೆ ನಿಮ್ಮ ಮನೆಯ ಹಾಗಿದೆ. (6ಚ) ಮಗುವಿನ ಮೂಗು ಅದರ ತಾಯಿಯ ಮೂಗಿನಂತಿದೆ. ಹೋಲಿಕೆಯನ್ನು ತಿಳಿಸುವ ಈ ಎರಡು ಪದಗಳೂ ಆಗಿ ಎಂಬುದರ ನೆರವಿಲ್ಲದೆ ನೇರವಾಗಿ ಬಳಕೆಯಾಗಿವೆಯೆಂಬುದನ್ನು ಗಮನಿಸಬಹುದು. ಪರಿಚೆ ಇಟ್ಟಳದಲ್ಲಿ ಒಂದು ಇರುಗಕ್ಕಿರುವ ಪರಿಚೆಯನ್ನು ತಿಳಿಸಲಾಗುತ್ತದೆ; ಹಾಗಾಗಿ, ನೇರವಾಗಿ ಎಸಕದ ಪರಿಚೆಯನ್ನು ತಿಳಿಸುವ ಪದಗಳು ಇಂತಹ ಸೊಲ್ಲು ಗಳಲ್ಲಿ ಬಳಕೆಯಾಗುವುದಿಲ್ಲ. ಎತ್ತುಗೆಗಾಗಿ, ಎಸಕಗಳ ಪರಿಚೆಯನ್ನು ತಿಳಿಸುವ ಗಿರಗಿರನೆ, ಚಟಚಟನೆ, ಗಡಗಡನೆ ಮೊದಲಾದ ಅಣಕಪರಿಚೆಗಳು ಇಂತಹ ಸೊಲ್ಲುಗಳಲ್ಲಿ ಬರುವುದಿಲ್ಲ. ಅಗೆ ಒಟ್ಟಿನಲ್ಲಿ ಕೊನೆಗೊಳ್ಳುವ ಹಲವು ಪರಿಚೆ ಪದಗಳು ಅನೆ ಒಟ್ಟಿನೊಂದಿಗೂ ಬರಬಲ್ಲುವು; ತಣ್ಣನೆ, ಮೆಲ್ಲನೆ, ನೆಟ್ಟನೆ, ನುಣ್ಣನೆ, ಮೆತ್ತನೆ ಮೊದಲಾದ ಇಂತಹ ಪರಿಚೆಪದಗಳೂ ಎಸಕದ ಪರಿಚೆಯನ್ನು ಮಾತ್ರವೇ ತಿಳಿಸಬಲ್ಲುವಾದ ಕಾರಣ ಪರಿಚೆ ಇಟ್ಟಳದ ಸೊಲ್ಲುಗಳಲ್ಲಿ ಬರುವುದಿಲ್ಲ. (2) ಆಗು ಪದದ ಬಳಕೆ ಮೇಲೆ ವಿವರಿಸಿದ ಹಾಗೆ, ಪರಿಚೆ ಇಟ್ಟಳವಿರುವ ಹೆಚ್ಚಿನ ಸೊಲ್ಲುಗಳಲ್ಲೂ ಪರಿಚೆ ಪದದ ಬಳಿಕ ಆಗು ಪದದ ಮೊದಲೆಸಕದ ಜೋಡಿಸುವ ರೂಪವಾಗಿರುವ ಆಗಿ ಎಂಬುದು ಬರುತ್ತಿದ್ದು, ಇಂತಹ ಸೊಲ್ಲುಗಳಿಗೆಲ್ಲ ಒಂದು ಎಸಕ(ಆಗುಹ)ವನ್ನು ತಿಳಿಸುವ ಹುರುಳು ಮತ್ತು ಒಂದು ಇರುಹವನ್ನು ತಿಳಿಸುವ ಹುರುಳು ಎಂಬುದಾಗಿ ಎರಡು ಹುರುಳುಗಳಿರುತ್ತವೆ: (1ಕ) ಆ ಮನೆಯ ನೆಲ ದೊರಗಾಗಿದೆ. (1ಚ) ಅವರು ಎತ್ತರವಾಗಿದ್ದಾರೆ. (1ಟ) ಆತನ ಚೀಲ ಹಗುರವಾಗಿದೆ. (1ತ) ಹುಡುಗಿ ತುಂಬಾ ಚುರುಕಾಗಿದ್ದಾಳೆ. (1ಕ) ಸೊಲ್ಲು ಆ ಮನೆಯ ನೆಲ ಮೊದಲಿಗೆ ನುಣುಪಾಗಿದ್ದುದು ಈಗ (ಹಳೆಯ ದಾಗಿ) ದೊರಗಾಗಿದೆ ಎಂಬುದನ್ನು ತಿಳಿಸುತ್ತಿರಬಹುದು, ಇಲ್ಲವೇ ಅದು ದೊರಗಾಗಿದೆ ಎಂಬುದನ್ನಶ್ಟೇ ತಿಳಿಸುತ್ತಿರಬಹುದು. (1ಚ-ತ) ಸೊಲ್ಲುಗಳಲ್ಲೂ ಹೀಗೆಯೇ. (ಕ) ಆಗಿ ಎಂಬುದು ಒಂದು ಎಸಕಪದದ ಜೋಡಿಸುವ ರೂಪವಾದ ಕಾರಣ, ಅದನ್ನು ಪರಿಚೆಪದಗಳ ಬಳಿಕ ಮಾತ್ರವಲ್ಲದೆ ಪರಿಚೆಯನ್ನು ತಿಳಿಸಬಲ್ಲ ಹೆಸರುಪದಗಳ ಬಳಿಕವೂ ಈ ಪರಿಚೆ ಇಟ್ಟಳದಲ್ಲಿ ಬಳಸಲು ಬರುತ್ತದೆ; ಆದರೆ, ಹಾಗೆ ಬಳಸಿದಾಗ ಆ ಹೆಸರುಪದಗಳಿಗೆ ಪರಿಚೆಯನ್ನು ತಿಳಿಸುವ ಹುರುಳೇ ಇರುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (2ಕ) ಅವನು ಕುರುಡನಾಗಿದ್ದಾನೆ. (2ಚ) ಅವರು ಮುದುಕರಾಗಿದ್ದಾರೆ. (2ಟ) ಅವಳು ತುಂಬಾ ಚೆಲುವಿಯಾಗಿದ್ದಾಳೆ. (2ತ) ಇದೊಂದು ಹಕ್ಕಿಯಾಗಿದೆ.
(2ಕ)ದಲ್ಲಿ ಕುರುಡ ಎಂಬ ಹೆಸರುಪದವನ್ನು ಒಂದು ಪರಿಚೆ ಇಟ್ಟಳದ ಪರಿಚೆ ಪಾಂಗಾಗಿ ಬಳಸಲಾಗಿದೆ; ಹಾಗಾಗಿ, ಅದಕ್ಕೆ ಇಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸುವ ಕೆಲಸವಿಲ್ಲ; ಇದಕ್ಕೆ ಬದಲು, ಅವನು ಎಂಬ ತೋರುಪದ ಗುರುತಿಸುವ ವ್ಯಕ್ತಿಯ ಪರಿಚೆಯೊಂದನ್ನು ತಿಳಿಸುವ ಕೆಲಸವಿದೆ. (2ಚ-ತ) ಸೊಲ್ಲುಗಳಲ್ಲೂ ಮುದುಕ, ಚೆಲುವಿ ಮತ್ತು ಹಕ್ಕಿ ಪದಗಳನ್ನು ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಸಲಾಗಿದೆ. (ಚ) ಬೇಕು, ಬೇಡ, ಸಾಕು, ಸಾಲದು, ಸರಿ, ಮತ್ತು ತಪ್ಪು ಎಂಬ ಪದಗಳನ್ನೂ ಆಗಿ ಪದದೊಂದಿಗೆ ಸೇರಿಸಿ ಪರಿಚೆ ಇಟ್ಟಳದ ಪರಿಚೆ ಪಾಂಗಾಗಿ ಬಳಸಲು ಬರುತ್ತದೆ: (3ಕ) ಈ ಲೆಕ್ಕ ತಪ್ಪಾಗಿದೆ. (3ಚ) ಒಂದು ಪುಸ್ತಕ ಬೇಕಾಗಿದೆ. (3ಟ) ನೂರು ರುಪಾಯಿ ಸಾಲದಾಗಿದೆ. (ಟ) ದೊಡ್ಡ, ಚಿಕ್ಕ, ಕೆಟ್ಟ, ತಕ್ಕ, ಒಳ್ಳೆ, ಕಿರಿ, ಹಿರಿ, ಎಳೆ ಮೊದಲಾದ ಕೆಲವು ಪರಿಚೆಪದಗಳಿಗೆ ನೇರವಾಗಿ ಆಗಿ ಎಂಬುದನ್ನು ಸೇರಿಸಲು ಬರುವುದಿಲ್ಲ; ಇದಕ್ಕೆ ಕಾರಣವೇನೆಂದರೆ, ಅವು ಹೆಸರುಪದಗಳೊಂದಿಗೆ ಬರಬಲ್ಲ ಪರಿಚೆಪದಗಳಲ್ಲದೆ ಎಸಕಪದಗಳೊಂದಿಗೆ ಬರಬಲ್ಲ ಪರಿಚೆಪದಗಳಲ್ಲ. ಅವನ್ನು ಇಂತಹ ಸೊಲ್ಲುಗಳ ಪರಿಚೆ ಪಾಂಗುಗಳಾಗಿ ಬಳಸಬೇಕಿದ್ದಲ್ಲಿ, ಅವಕ್ಕೆ ಅವನು, ಅವಳು, ಅವರು, ಅದು, ಮತ್ತು ಅವು ಎಂಬ ತೋರುಪದಗಳಲ್ಲಿ ಒಂದನ್ನು ಈ ಸೊಲ್ಲುಗಳಲ್ಲಿ ಬಂದಿರುವ ಇರುಗದ ಗುರ್ತ ಮತ್ತು ಎಣಿಕೆಗಳ ನ್ನವಲಂಬಿಸಿ ಸೇರಿಸಬೇಕಾಗುತ್ತದೆ: (4ಕ) ಹುಡುಗ ದೊಡ್ಡವನಾಗಿದ್ದಾನೆ. (4ಚ) ಮುದುಕಿ ಕೆಟ್ಟವಳಾಗಿದ್ದಳು. (4ಟ) ಅವನ ಮಕ್ಕಳು ದೊಡ್ಡವರಾಗಿದ್ದಾರೆ. (4ತ) ಉಪ್ಪಿನಕಾಯಿ ಹಳೆಯದಾಗಿದೆ. (4ಪ) ಈ ಪುಸ್ತಕಗಳು ತುಂಬಾ ಚಿಕ್ಕವಾಗಿವೆ. (4ಕ)ದಲ್ಲಿ ದೊಡ್ಡ ಪರಿಚೆಪದದ ಬಳಿಕ ಅವನು ಎಂಬುದನ್ನು ಸೇರಿಸಿದ ಮೇಲೆ ಆಗಿ ಎಂಬುದನ್ನು ಸೇರಿಸಲಾಗಿದೆ; ಇದೇ ರೀತಿಯಲ್ಲಿ (4ಚ-ಪ)ಗಳಲ್ಲಿ ಉಳಿದ ತೋರುಪದಗಳ ಬಳಕೆಯನ್ನೂ ಕಾಣಬಹುದು. (3) ಇಮ್ಮಡಿ ರೂಪದ ಬಳಕೆ ಪರಿಚೆ ಇಟ್ಟಳದಲ್ಲಿ ಬರುವ ಕೆಲವು ಪರಿಚೆಪದಗಳನ್ನು ಇಮ್ಮಡಿ ರೂಪದಲ್ಲಿ ಬಳಸಲು ಬರುತ್ತದೆ; ಇಗೆ ಒಟ್ಟಿನೊಂದಿಗೆ ಬರುವ ಪದಗಳನ್ನು ಈ ರೀತಿ ಇಮ್ಮಡಿ ರೂಪದಲ್ಲಿ ಬಳಸಿದಾಗ, ಅವುಗಳ ಎರಡನೆಯ ರೂಪದೊಂದಿಗೆ ಮಾತ್ರ ಇಗೆ ಒಟ್ಟು ಬಂದಿರುತ್ತದೆ (ಕೆಂಪುಕೆಂಪಗೆ, ಮೆಲ್ಲಮೆಲ್ಲಗೆ, ಮೆತ್ತಮೆತ್ತಗೆ, ತೆಳ್ಳತೆಳ್ಳಗೆ). ಪರಿಚೆಪದಗಳಿಗಿರುವ ಇಂತಹ ಇಮ್ಮಡಿ ರೂಪಗಳಿಗೆ ಮುಕ್ಯವಾಗಿ ಮೂರು ಬಗೆಯ ಹುರುಳುಗಳು ಸಿಗಬಲ್ಲುವು: (ಕ) ಅವು ತಿಳಿಸುವ ಪರಿಚೆ ಇನ್ನಶ್ಟು ಮೇಲಿನ (ಇಲ್ಲವೇ ಕೆಳಗಿನ) ಹಂತದ್ದು ಎಂಬುದಾಗಿ ಒತ್ತಿ ಹೇಳುವಂತಹ ಹುರುಳು (6.3.3 ನೋಡಿ) ಒಂದು ಬಗೆಯದು; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ದೋಸೆ ಬಿಸಿಬಿಸಿಯಾಗಿದೆ.
(1ಚ) ಸಾರು ಉಪ್ಪುಪ್ಪಾಗಿದೆ. (1ಟ) ಆತನ ಬಟ್ಟೆ ಹರುಕು ಹರುಕಾಗಿದೆ. (1ತ) ಹುಡುಗ ಸುಟಿಸುಟಿಯಾಗಿದ್ದಾನೆ. ಒಂದು ಪರಿಚೆಯನ್ನು ಮೇಲಿನ ಹಂತದಲ್ಲಿ ಕಾಣಲು ಬರುವಂತಿದ್ದರೆ ಮಾತ್ರ ಅದರ ಇಮ್ಮಡಿ ರೂಪವನ್ನು ಈ ರೀತಿ ಒತ್ತಿಹೇಳುವ ಹುರುಳಿನಲ್ಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಬೆಚ್ಚಗೆ ಇಲ್ಲವೇ ತಣ್ಣಗೆ ಪದಗಳು ತಿಳಿಸುವ ಪರಿಚೆಯನ್ನು ಅದಕ್ಕಿಂತ ಮೇಲಿನ ಹಂತಕ್ಕೆ ಎತ್ತರಿಸಲು ಬರುವುದಿಲ್ಲ; ಯಾಕೆಂದರೆ, ಅಂತಹ ಮೇಲಿನ ಹಂತವನ್ನು ತಿಳಿಸಲು ಬಿಸಿ ಮತ್ತು ತಂಪು ಪದಗಳಿವೆ. ಹಾಗಾಗಿ, ಇವನ್ನು ಬಿಸಿಬಿಸಿಯಾಗಿದೆ, ತಂಪುತಂಪಾಗಿದೆ ಎಂಬವುಗಳ ಹಾಗೆ ಒತ್ತಿಹೇಳುವ ಇಮ್ಮಡಿ ರೂಪದಲ್ಲಿ ಬಳಸಲು ಬರುವುದಿಲ್ಲ (*ಬೆಚ್ಚಬೆಚ್ಚಗಿದೆ, *ತಣ್ಣತಣ್ಣಗಿದೆ). (ಚ) ಈ ಪದಗಳು ತಿಳಿಸುವ ಪರಿಚೆ ಹಲವು ಪಾಂಗುಗಳಲ್ಲಿದೆ ಎಂಬುದನ್ನು ತಿಳಿಸುವ ಹುರುಳು ಇನ್ನೊಂದು ಬಗೆಯದು: (2ಕ) ಮಾವಿನ ಮಿಡಿಗಳು ಎಳತೆಳತಾಗಿವೆ. (2ಚ) ಹಣ್ಣುಗಳೆಲ್ಲ ಇಡಿಯಿಡಿಯಾಗಿವೆ. (2ಟ) ಕಂಬಗಳೆಲ್ಲ ಉದ್ದುದ್ದವಾಗಿವೆ. (2ತ) ಕಲ್ಲುಗಳು ಉರುಟುರುಟಾಗಿವೆ. (2ಕ)ದಲ್ಲಿ ಬಂದಿರುವ ಎಳತೆಳತು ಎಂಬ ಇಮ್ಮಡಿ ರೂಪ ತುಂಬಾ ಎಳತಾಗಿವೆ ಎಂಬ ಹುರುಳನ್ನು ಮಾತ್ರವಲ್ಲದೆ, ಹೆಚ್ಚಿನ ಮಿಡಿಗಳೂ ಎಳತಾಗಿವೆ ಎಂಬ ಹುರುಳನ್ನೂ ಕೊಡಬಲ್ಲುದು; (2ಚ-ತ)ಗಳಲ್ಲೂ ಹೀಗೆಯೇ. ಸಾಮಾನ್ಯವಾಗಿ ಒತ್ತಿ ಹೇಳುವಂತಹ ಮೊದಲನೆಯ ಹುರುಳಿರುವ ಪರಿಚೆ ಪದಗಳನ್ನೆಲ್ಲ ಅವುಗಳ ಇಮ್ಮಡಿ ರೂಪದಲ್ಲಿ ಎರಡನೆಯ ಹುರುಳನ್ನು ತಿಳಿಸುವಲ್ಲೂ ಬಳಸಲು ಬರುತ್ತದೆ. (ಟ) ಪರಿಚೆಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳನ್ನು ಬಳಸಿದೆಯಾದರೆ, ಅವುಗಳ ಇಮ್ಮಡಿ ರೂಪಗಳು ಆ ಪದಗಳು ಗುರುತಿಸುವ ವಸ್ತು ಇಲ್ಲವೇ ವಿಶಯಗಳು ತುಂಬಾ ಇವೆ ಎಂಬ ಹುರುಳನ್ನು ಕೊಡುತ್ತವೆ: (3ಕ) ಈ ಅಕ್ಕಿ ಕಲ್ಲುಕಲ್ಲಾಗಿದೆ. (3ಚ) ಆಕೆ ಕಲಸಿದ ಹಿಟ್ಟು ಗಂಟುಗಂಟಾಗಿದೆ. (3ಟ) ಅವನ ಬರಹ ತಪ್ಪುತಪ್ಪಾಗಿದೆ. (3ಕ) ಸೊಲ್ಲಿಗೆ ಅಕ್ಕಿಯಲ್ಲಿ ತುಂಬಾ ಕಲ್ಲಿದೆ ಎಂಬ ಹುರುಳಿದೆ, (3ಚ) ಸೊಲ್ಲಿಗೆ ಹಿಟ್ಟಿನಲ್ಲಿ ಹಲವು ಗಂಟುಗಳಿವೆ (ಅದು ಸರಿಯಾಗಿ ಕಲೆತಿಲ್ಲ) ಎಂಬ ಹುರುಳಿದೆ, ಮತ್ತು (3ಟ) ಸೊಲ್ಲಿಗೆ ಬರಹದಲ್ಲಿ ಹಲವು ತಪ್ಪುಗಳಿವೆ ಎಂಬ ಹುರುಳಿದೆ ಎಂಬುದನ್ನು ಗಮನಿಸಬಹುದು. (4) ನೆರವು ಪಾಂಗುಗಳ ಬಳಕೆ: ಪರಿಚೆ ಇಟ್ಟಳದಲ್ಲಿ ಇರುಗ ಮತ್ತು ಪರಿಚೆ ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಬರುತ್ತವೆ; ಇವುಗಳೊಂದಿಗೆ, ಜಾಗ ಮತ್ತು ಗುರಿ ಪಾಂಗುಗಳು ನೆರವು ಪಾಂಗುಗಳಾಗಿ ಬರಬಲ್ಲುವು; ಇವೆರಡೂ ಪರಿಚೆ ಒಂದು ಜಾಗದಲ್ಲಿ ಮಾತ್ರ ಇರುತ್ತದೆ, ಇಲ್ಲವೇ ಒಂದು ಗುರಿಗೆ ಮಾತ್ರ ಸಂಬಂದಿಸಿದುದು ಎಂಬುದಾಗಿ ತಿಳಿಸುವ ಮೂಲಕ, ಅದರ ಹರವನ್ನು ಕಡಿಮೆ ಮಾಡುತ್ತವೆ.
(1ಕ) ಹುಡುಗ ಆಟದಲ್ಲಿ ಚುರುಕಿದ್ದಾನೆ. (1ಚ) ಈ ಹಣ್ಣು ಒಳಗೆ ಕೆಂಪಾಗಿದೆ. (1ಟ) ಅವನು ಈ ವಿಶಯದಲ್ಲಿ ಬಲ್ಲವನಾಗಿದ್ದಾನೆ. (2ಕ) ಅವರ ಮನೆಯ ಊಟ ನನಗೆ ಸಪ್ಪೆಯಾಗಿದೆ. (2ಚ) ಈ ಮನೆ ನಿಮಗೆ ತಕ್ಕುದಾಗಿದೆ. (2ಟ) ಮಂಚ ಈ ಕೋಣೆಗೆ ಚಿಕ್ಕದಾಗಿದೆ. (1ಕ-ಟ) ಸೊಲ್ಲುಗಳಲ್ಲಿ ಜಾಗ ಪಾಂಗನ್ನು, ಮತ್ತು (2ಕ-ಟ)ಗಳಲ್ಲಿ ಗುರಿ ಪಾಂಗನ್ನು ನೆರವು ಪಾಂಗಾಗಿ ಬಳಸಿರುವುದನ್ನು ಕಾಣಬಹುದು. ಬೇಕು, ಬೇಡ, ಸಾಕು, ಸಾಲದು ಎಂಬವುಗಳನ್ನು ಪರಿಚೆಯಾಗಿ ಬಳಸಿರುವಲ್ಲಿ, ಮತ್ತು ಕೆಲವು ತಿಂಡಿಗಳ ಪರಿಚೆಯನ್ನು ತಿಳಿಸುವಲ್ಲಿ, ಅವು ಯಾರಿಗೆ ಇಲ್ಲವೇ ಯಾವುದಕ್ಕೆ ಬೇಕು, ಬೇಡ, ಸಾಕು, ಇಲ್ಲವೇ ಸಾಲದು ಎಂಬುದನ್ನು ತಿಳಿಸುವುದಕ್ಕಾಗಿ ಗುರಿ ಪಾಂಗನ್ನು ಒಂದು ಹೆಚ್ಚಿನ ಪಾಂಗಾಗಿ ಬಳಸಲಾಗುತ್ತದೆ; ಇದನ್ನು ನೆರವು ಪಾಂಗೆಂದೂ ತಿಳಿಯಬಹುದು: (3ಕ) ಅವನಿಗೆ ತುಸು ಹಣ ಬೇಕಾಗಿದೆ. (3ಚ) ಅವನಿಗೆ ಈ ಮನೆ ಸಾಲದಾಗಿದೆ. (3ಟ) ಅವನಿಗೆ ಈ ತಿಂಡಿ ಉಪ್ಪಾಗಿದೆ. (3ತ) ಅವನಿಗೆ ಯಾವುದೂ ಬೇಡವಾಗಿದೆ. (3ಪ) ಅವನ ಕೆಲಸಕ್ಕೆ ಈ ಜಾಗ ಸಾಲದಾಗಿದೆ. ಈ ರೀತಿ ಗುರಿ ಮತ್ತು ಜಾಗ ಪಾಂಗುಗಳನ್ನು ಮಾತ್ರವಲ್ಲದೆ, ಹೊತ್ತು, ಕತ (ಕಾರಣ) ಮತ್ತು ಒಡನಾಡಿ ಪಾಂಗುಗಳನ್ನೂ ಪರಿಚೆ ಇಟ್ಟಳದ ಸೊಲ್ಲುಗಳಲ್ಲಿ ನೆರವು ಪಾಂಗುಗಳಾಗಿ ಬಳಸಲು ಬರುತ್ತದೆ: (4ಕ) ಇವತ್ತು ಕೆಲಸದವಳು ಸಿಟ್ಟಾಗಿದ್ದಾಳೆ. (4ಚ) ಮಕ್ಕಳು ಬಂದುದರಿಂದ ಕೆಲಸದವಳು ಸಿಟ್ಟಾಗಿದ್ದಾಳೆ. (4ಟ) ಮಗುವಿನೊಂದಿಗೆ ತಾಯಿಯೂ ಬಡವಾಗಿದ್ದಾಳೆ. (4ಕ)ದಲ್ಲಿ ಇವತ್ತು ಎಂಬ ಹೊತ್ತು ಪಾಂಗು, (4ಚ)ದಲ್ಲಿ ಮಕ್ಕಳು ಬಂದುದರಿಂದ ಎಂಬ ಕತ ಪಾಂಗು, ಮತ್ತು (4ಟ)ದಲ್ಲಿ ಮಗುವಿನೊಂದಿಗೆ ಎಂಬ ಒಡನಾಡಿ ಪಾಂಗು ನೆರವು ಪಾಂಗಾಗಿ ಬಂದಿರುವುದನ್ನು ಗಮನಿಸಬಹುದು. (5) ಇರು ಪದವನ್ನು ಬಳಸದಿರುವುದು: ಪರಿಚೆ ಇಟ್ಟಳವಿರುವ ಸೊಲ್ಲುಗಳಲ್ಲೂ ಇರುವಿಕೆಯ ಇಟ್ಟಳವಿರುವ ಸೊಲ್ಲುಗಳ ಹಾಗೆ ಇರು ಪದದ ಪದರೂಪಗಳನ್ನು ಬಳಸದಿರಲು ಬರುತ್ತದೆ: (1ಕ) ಆಕೆಯ ತುಟಿ ತುಂಬಾ ಕೆಂಪಗಿದೆ. (1ಚ) ಆಕೆಯ ತುಟಿ ತುಂಬಾ ಕೆಂಪಗೆ. (1ಕ) ಆವನ ತಲೆ ದಪ್ಪ ಇದೆ. (1ಚ) ಅವನ ತಲೆ ದಪ್ಪ.
ಆಗು ಪದದೊಂದಿಗೆ ಬರುವ ಪರಿಚೆ ಪದಗಳು ಈ ರೀತಿ ಇರು ಪದದ ಪದರೂಪಗಳಿಲ್ಲದ ಸೊಲ್ಲುಗಳಲ್ಲಿ ಬರುವಾಗ ಆ ಪದದ ಆಗಿ ರೂಪ ಇಲ್ಲದೆ ಬರುತ್ತವೆ: (2ಕ) ಈ ಕಾಯಿ ಟೊಳ್ಳಾಗಿದೆ. (2ಚ) ಈ ಕಾಯಿ ಟೊಳ್ಳು. (3ಕ) ಅವರ ಮನೆ ದೊಡ್ಡದಾಗಿದೆ. (3ಚ) ಅವರ ಮನೆ ದೊಡ್ಡದು. (4ಕ) ನನಗೆ ಈ ಮನೆ ತಕ್ಕುದಾಗಿದೆ. (4ಚ) ನನಗೆ ಈ ಮನೆ ತಕ್ಕುದು. (2ಕ)ದಲ್ಲಿದ್ದ ಇದೆ ಎಂಬುದನ್ನು ಮಾತ್ರವಲ್ಲದೆ ಅದರ ಮೊದಲು ಬಂದಿದ್ದ ಆಗಿ ಎಂಬುದನ್ನೂ ಬಿಟ್ಟುಕೊಡಲಾಗಿದೆ ಎಂಬುದನ್ನು ಗಮನಿಸಬಹುದು. (3-4) ಸೊಲ್ಲುಗಳಲ್ಲೂ ಹೀಗೆಯೇ. (6) ಇರುವಿಕೆ ಮತ್ತು ಸರಿಗಟ್ಟುವಿಕೆ: ಈ ರೀತಿ ಇರು ಪದದ ರೂಪವನ್ನು, ಮತ್ತು ಅದರೊಂದಿಗೆ ಆಗಿ ಎಂಬುದನ್ನೂ ಬಿಟ್ಟುಕೊಟ್ಟಿರುವ ಸೊಲ್ಲುಗಳಿಗೆ ಎರಡು ಬಗೆಯ ಪರಿಚೆಯ ಹುರುಳುಗಳು ಸಿಗಬಲ್ಲುವು: ಮೇಲೆ ವಿವರಿಸಿದ ಹಾಗೆ, ಅವು ಒಂದು ಪಾಂಗಿನಲ್ಲಿ ಪರಿಚೆಯ ಇರುವಿಕೆಯನ್ನು ತಿಳಿಸುವಂತಹ ಇರುಹದ ಹುರುಳನ್ನು ಕೊಡಬಲ್ಲುವು, ಇಲ್ಲವೇ ಆ ಪಾಂಗನ್ನು ಪರಿಚೆಯೊಂದಿಗೆ ಸರಿಗಟ್ಟುವಂತಹ ಇರುಹದ ಹುರುಳನ್ನೂ ಕೊಡಬಲ್ಲುವು. ಇವುಗಳಲ್ಲಿ ಮೊದಲನೆಯ ಹುರುಳು ಬಂದಿರುವಲ್ಲಿ ಅವನ್ನು ಇಲ್ಲ ಎಂಬ ಪದದಿಂದ ಅಲ್ಲಗಳೆಯಲು ಬರುತ್ತದೆ, ಮತ್ತು ಎರಡನೆಯ ಹುರುಳು ಬಂದಿರುವಲ್ಲಿ ಅವನ್ನು ಅಲ್ಲ ಎಂಬ ಪದದಿಂದ ಅಲ್ಲಗಳೆಯಲು ಬರುತ್ತದೆ. ಸಾಮಾನ್ಯವಾಗಿ, ಸರಿಗಟ್ಟುವ ಹುರುಳಿನಲ್ಲಿರುವ ಪರಿಚೆಯನ್ನು ನೇರವಾಗಿ ಅಲ್ಲಗಳೆಯುವ ಬದಲು, ಬೇರೊಂದು ಪರಿಚೆಯ ಹೋಲಿಕೆಯಲ್ಲಿ ಅಲ್ಲಗಳೆಯಲಾಗುತ್ತದೆ: (1) ಆ ಗೋಡೆ ನುಣ್ಣಗೆ > (ಕ) ಆ ಗೋಡೆ ನುಣ್ಣಗಿಲ್ಲ (ಚ) ಆ ಗೋಡೆ ನುಣ್ಣಗಲ್ಲ, ದೊರಗು. (2) ಅವನ ಕಣ್ಣು ಕೆಂಪು > (ಕ) ಅವನ ಕಣ್ಣು ಕೆಂಪಿಲ್ಲ (ಚ) ಅವನ ಕಣ್ಣು ಕೆಂಪಲ್ಲ, ಬಿಳಿ. (3) ಈ ಲೆಕ್ಕ ತಪ್ಪು > (ಕ) ಈ ಲೆಕ್ಕ ತಪ್ಪಿಲ್ಲ (ಚ) ಈ ಲೆಕ್ಕ ತಪ್ಪಲ್ಲ, ಸರಿ. ಮೇಲಿನ ಎತ್ತುಗೆಗಳಲ್ಲಿ ಬಂದಿರುವ (ಕ) ಸೊಲ್ಲುಗಳಲ್ಲಿ ಇರುವಿಕೆಯನ್ನು ಅಲ್ಲಗಳೆಯಲಾಗಿದೆ, ಮತ್ತು (ಚ) ಸೊಲ್ಲುಗಳಲ್ಲಿ ಸರಿಗಟ್ಟುವಿಕೆಯನ್ನು ಅಲ್ಲಗಳೆಯಲಾಗಿದೆ; (ಚ) ಸೊಲ್ಲುಗಳಲ್ಲಿ ಒಂದು ಪರಿಚೆಯನ್ನು ಯಾವ ಪರಿಚೆಯ ಹೋಲಿಕೆಯಲ್ಲಿ ಅಲ್ಲಗಳೆಯಲಾಗಿದೆ ಎಂಬುದನ್ನೂ ತಿಳಿಸಲಾಗಿದೆ; ಆದರೆ, ಇದನ್ನು ತಿಳಿಸಲೇಬೇಕೆಂದೇನೂ ಇಲ್ಲ. ಪರಿಚೆಯನ್ನು ತಿಳಿಸುವುದಕ್ಕಾಗಿ ಹೆಸರುಪದಗಳನ್ನು ಬಳಸಿರುವಲ್ಲಿ ಇರು ಪದದ ರೂಪವನ್ನು ಬಿಟ್ಟುಕೊಟ್ಟಿದೆಯಾದರೆ, ಅಂತಹ ಸೊಲ್ಲುಗಳಿಗೆ ಸರಿಗಟ್ಟುವ ಇರುಹದ ಹುರುಳು ಮಾತ್ರ ಸಿಗುತ್ತದಲ್ಲದೆ ಒಂದು ಪಾಂಗಿನಲ್ಲಿ ಪರಿಚೆ ಇದೆ ಎಂಬ ಇರುವಿಕೆ ಯನ್ನು ತಿಳಿಸುವ ಹುರುಳು ಸಿಗುವುದಿಲ್ಲ. ಹಾಗಾಗಿ, ಅಂತಹ ಸೊಲ್ಲುಗಳನ್ನು ಅಲ್ಲ ಪದದಿಂದ ಮಾತ್ರ ಅಲ್ಲಗಳೆಯಲು ಬರುತ್ತದಲ್ಲದೆ, ಇಲ್ಲ ಪದದಿಂದ ಅಲ್ಲಗಳೆಯಲು ಬರುವುದಿಲ್ಲ: (4) ಅವರು ದೊಡ್ಡವರು > (ಕ) ಅವರು ದೊಡ್ಡವರಲ್ಲ (ಚ) *ಅವರು ದೊಡ್ಡವರಿಲ್ಲ. (5) ಈ ಉಪ್ಪಿನಕಾಯಿ ಹಳೆಯದು > (ಕ) ಈ ಉಪ್ಪಿನಕಾಯಿ ಹಳೆಯದಲ್ಲ (ಚ) *ಈ ಉಪ್ಪಿನಕಾಯಿ ಹಳೆಯದಿಲ್ಲ.
(6) ಬೆಕ್ಕಿನ ಮರಿಗಳು ಚಿಕ್ಕವು > (ಕ) ಬೆಕ್ಕಿನ ಮರಿಗಳು ಚಿಕ್ಕವಲ್ಲ (ಚ) *ಬೆಕ್ಕಿನ ಮರಿಗಳು ಚಿಕ್ಕವಿಲ್ಲ. ಇಂತಹ ಸೊಲ್ಲುಗಳಲ್ಲಿ ಇರು ಪದದ ರೂಪಗಳನ್ನು, ಮತ್ತು ಅವುಗಳ ಮೊದಲು ಬರುವ ಆಗಿ ಎಂಬುದನ್ನು ಉಳಿಸಿಕೊಂಡಲ್ಲಿ ಮಾತ್ರ ಅವಕ್ಕೆ ಪಾಂಗಿನಲ್ಲಿ ಪರಿಚೆಯಿದೆ ಎಂಬ ಇರುವಿಕೆಯ ಹುರುಳು ದೊರಕುತ್ತದೆ; ಆದರೆ ಇಂತಹ ಸೊಲ್ಲುಗಳಿಗೆ ಸರಿಗಟ್ಟುವ ಹುರುಳು ದೊರಕುವುದಿಲ್ಲ. (7) ಅವರು ದೊಡ್ಡವರಾಗಿದ್ದಾರೆ > (ಕ) ಅವರು ದೊಡ್ಡವರಾಗಿಲ್ಲ (ಚ) *ಅವರು ದೊಡ್ದವರಾಗಲ್ಲ. (8) ಈ ಬೆಕ್ಕಿನ ಮರಿ ಚಿಕ್ಕದಾಗಿದೆ > (ಕ) ಈ ಬೆಕ್ಕಿನ ಮರಿ ಚಿಕ್ಕದಾಗಿಲ್ಲ (ಚ) *ಈ ಬೆಕ್ಕಿನ ಮರಿ ಚಿಕ್ಕದಾಗಲ್ಲ. (7) ಮಾರ್ಪಾಡನ್ನು ಪರಿಚೆಯಾಗಿ ಕಾಣುವುದು: ಒಂದು ಎಸಕದಿಂದ ಮಾರ್ಪಟ್ಟಿರುವ ಪಾಂಗನ್ನು ಅದು ಅಂತಹ ಎಸಕದಲ್ಲಿ ತೊಡಗಿ ಕೊಂಡಿದೆಯೆಂಬುದಾಗಿ ತಿಳಿಸುವ ಬದಲು, ಆ ಮಾರ್ಪಾಡು ಅದರ ಪರಿಚೆ ಎಂಬುದಾಗಿಯೂ ತಿಳಿಸಲು ಬರುತ್ತದೆ; ಇಲ್ಲಿ ಎಸಕಕ್ಕಿಂತಲೂ ಅದರಿಂದ ಉಂಟಾಗುವ ಮಾರ್ಪಾಡಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ: (1ಕ) ಅಂಗಡಿಯ ಬಾಗಿಲು ತೆರೆದಿದೆ. (1ಚ) ಕಪಾಟಿನ ಕನ್ನಡಿ ಒಡೆದಿತ್ತು. (1ಟ) ಹುಲಿ ತುಂಬಾ ಹಸಿದಿದೆ. (1ತ) ಕುರ್ಚಿಯ ಕಾಲು ಮುರಿದಿದೆ. ಮೇಲೆ (7.2.1)ರಲ್ಲಿ ತಿಳಿಸಿದ ಹಾಗೆ, (1ಕ-ತ) ಸೊಲ್ಲುಗಳಿಗೆ ಎರಡೆರಡು ಹುರುಳುಗಳಿವೆ; ಅವು ಒಂದು ಎಸಕ ನಡೆದಿರುವುದನ್ನು ತಿಳಿಸುತ್ತಿರಬಹುದು, ಇಲ್ಲವೇ ಆ ಎಸಕದಿಂದ ಉಂಟಾದ ಒಂದು ಹೊಸ ಇರುಹವನ್ನು ತಿಳಿಸುತ್ತಿರಬಹುದು. ಎತ್ತುಗೆಗಾಗಿ, (1ಕ) ಸೊಲ್ಲು ಮೊದಲಿಗೆ ಮುಚ್ಚಿದ್ದ ಬಾಗಿಲು ಈಗ ತೆರೆದಿದೆ ಎಂಬುದಾಗಿ ಒಂದು ಎಸಕ ನಡೆದಿರುವುದನ್ನು ತಿಳಿಸುತ್ತಿರಬಹುದು, ಇಲ್ಲವೇ ಅಂಗಡಿಯ ಬಾಗಿಲು ಈಗ ತೆರೆದುಕೊಂಡಿದೆ ಎಂಬುದಾಗಿ ಅದರ ಪರಿಚೆಯನ್ನಶ್ಟೇ ತಿಳಿಸುತ್ತಿರಬಹುದು. ಇಂತಹ ಸೊಲ್ಲುಗಳಲ್ಲಿ ಅವು ತಿಳಿಸುವ ಪರಿಚೆ ಯಾವ ಪಾಂಗಿನಲ್ಲಿದೆ ಎಂಬುದನ್ನು ಮಾತ್ರವಲ್ಲದೆ, ಆ ಪಾಂಗು ಯಾವ ಜಾಗದಲ್ಲಿದೆ ಎಂಬುದನ್ನೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಅದರಲ್ಲಿ ಒಂದು ಇಂಬಿನ ಪಾಂಗನ್ನು ಇಲ್ಲವೇ ಗುರಿ ಪಾಂಗನ್ನು ನೆರವು ಪಾಂಗಾಗಿ ಬಳಸಲು ಬರುತ್ತದೆ. (2ಕ) ಕುಂಬಳ ಬಳ್ಳಿ ಮಾಡಿನ ಮೇಲೆ ಹಬ್ಬಿದೆ. (2ಚ) ಕೊಡದಲ್ಲಿ ನೀರು ತುಂಬಿದೆ. (2ಟ) ಸಿಟ್ಟು ಆತನ ತಲೆಗೇರಿದೆ. (2ತ) ಬಿಸಿಲಿಗೆ ಗಿಡಗಳು ನಲುಗಿವೆ. ಮೇಲೆ ಕೊಟ್ಟಿರುವ (2ಕ-ತ) ಸೊಲ್ಲುಗಳ ಹಾಗೆ ಈ ಸೊಲ್ಲುಗಳಿಗೂ ಎಸಕವನ್ನು ತಿಳಿಸುವ ಹುರುಳು ಇಲ್ಲವೇ ಇರುಹವನ್ನು ತಿಳಿಸುವ ಹುರುಳು ಎಂಬುದಾಗಿ ಇಪ್ಪುರುಳು ಸಿಗಬಲ್ಲುದು.
7.2.5 ಪತ್ತುಗೆ ಇಟ್ಟಳ
ಈ ಇಟ್ಟಳದಲ್ಲಿ ಎರಡು ಪಾಂಗುಗಳ ನಡುವೆ ಪತ್ತುಗೆ (ಸಂಬಂದ) ಇದೆ ಎಂಬುದನ್ನು ತಿಳಿಸಲಾಗುತ್ತದೆ; ಇವುಗಳಲ್ಲಿ ಪತ್ತುಗೆಯನ್ನು ಪಡೆದಿರುವ ಗುರಿ ಪಾಂಗು ಮೊದಲು ಬರುತ್ತದೆ, ಮತ್ತು ಯಾವುದು ಅದರೊಂದಿಗೆ ಸಂಬಂದಿಸಿದೆ ಎಂಬುದನ್ನು ತಿಳಿಸುವ ಇರುಗ ಪಾಂಗು ಬಳಿಕ ಬರುತ್ತದೆ. (1ಕ) ರಾಜುವಿಗೆ ಇಬ್ಬರು ಮಕ್ಕಳಿದ್ದಾರೆ. (1ಚ) ಈ ಪುಸ್ತಕಕ್ಕೆ ತುಂಬಾ ಬೇಡಿಕೆಯಿದೆ. (1ಟ) ಮಕ್ಕಳಿಗೆ ಇವತ್ತು ರಜೆಯಿದೆ. (1ಕ)ದಲ್ಲಿ ರಾಜು ಮತ್ತು ಇಬ್ಬರು ಮಕ್ಕಳು ಎಂಬ ಎರಡು ಪಾಂಗುಗಳ ನಡುವಿರುವ ಪತ್ತುಗೆಯನ್ನು ತಿಳಿಸಲಾಗಿದೆ; ಹೀಗೆ ತಿಳಿಸುವಾಗ, ಇಬ್ಬರು ಮಕ್ಕಳು ಎಂಬುದನ್ನು ಇರುಗ ಪಾಂಗಾಗಿ, ಮತ್ತು ರಾಜು ಎಂಬುದನ್ನು ಅದಕ್ಕಿರುವ ಪತ್ತುಗೆಯ ಗುರಿಯಾಗಿ ತೋರಿಸಿಕೊಡಲಾಗಿದೆ. (1) ಪತ್ತುಗೆಯ ಬಗೆಗಳು: ಪತ್ತುಗೆ ಇಟ್ಟಳದ ಮೂಲಕ ಮುಕ್ಯವಾಗಿ ಅನಿಸಿಕೆ, ಪರಿಚೆ, ಗೊತ್ತುಪಾಡು, ಮತ್ತು ಎಣಿಕೆ ಎಂಬ ನಾಲ್ಕು ಬಗೆಯ ಪತ್ತುಗೆಗಳನ್ನು ತಿಳಿಸಲು ಬರುತ್ತದೆ. ಇವು ಎಂತಹ ವೆಂಬುದನ್ನು ಕೆಳಗೆ ವಿವರಿಸಲಾಗಿದೆ: ಕ. ಅನಿಸಿಕೆ: ಗುರಿ ಪಾಂಗು ಒಬ್ಬ ವ್ಯಕ್ತಿಯನ್ನು ಗುರುತಿಸುತ್ತಿದ್ದು, ಆತನ ಮನಸ್ಸಿನಲ್ಲಿ ಒಂದು ಅನಿಸಿಕೆ ಇದೆ ಎಂಬುದನ್ನು ಈ ಇಟ್ಟಳದ ಮೂಲಕ ತಿಳಿಸಲಾಗು ತ್ತದೆ; ಇಂತಹ ಸೊಲ್ಲುಗಳಲ್ಲಿ ವ್ಯಕ್ತಿಯ ಅನಿಸಿಕೆ ಇರುಗ ಪಾಂಗಾಗಿ ಬರುತ್ತದೆ: (2ಕ) ಅವನಿಗೆ ತುಂಬಾ ಸಿಟ್ಟಿದೆ. (2ಚ) ಅವಳಿಗೆ ಬೇಸರ ಇದೆ. (2ಟ) ಮಗುವಿಗೆ ತುಂಬಾ ಹೆದರಿಕೆಯಿದೆ. ಚ. ಪರಿಚೆ: ಗುರಿ ಪಾಂಗು ಗುರುತಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಪರಿಚೆಯನ್ನೂ ಇರುಗ ಪಾಂಗಾಗಿ ಇಂತಹ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ; ಆದರೆ, ಒಬ್ಬ ವ್ಯಕ್ತಿಯ ಪರಿಚೆಯನ್ನು ಸಾಮಾನ್ಯವಾಗಿ ಇಂತಹ ಸೊಲ್ಲುಗಳ ಮೂಲಕ ತಿಳಿಸುವುದು ಅಪರೂಪ: (3ಕ) ಈ ಬಾಳೆಹಣ್ಣಿಗೆ ತುಂಬಾ ರುಚಿಯಿದೆ. (3ಚ) ಅವನ ಮಾತಿಗೆ ಬೆಲೆಯಿದೆ. (3ಟ) ?ಅವನಿಗೆ ಜಾಣತನವಿದೆ. (3ತ) ಅವನಿಗೆ ಬುದ್ದಿಯಿಲ್ಲ. 3. ಗೊತ್ತುಪಾಡು: ಗುರಿ ಪಾಂಗು ಎಂತಹ ಗೊತ್ತುಪಾಡಿನಲ್ಲಿ (ಪರಿಸ್ತಿತಿಯಲ್ಲಿ) ಇದೆ ಎಂಬುದನ್ನು ಪತ್ತುಗೆ ಪಾಂಗಿನ ಮೂಲಕ ತಿಳಿಸಬಹುದು: (4ಕ) ಅವನಿಗೆ ಮೂರು ಲಕ್ಶ ಸಾಲ ಇದೆ. (4ಚ) ಮಕ್ಕಳಿಗೆ ಇವತ್ತು ರಜೆಯಿದೆ. (4ಟ) ಅವಳಿಗೆ ಬಿಸುಪಿದೆ.
- ಎಣಿಕೆ: ಗುರಿ ಪಾಂಗಿನೊಂದಿಗೆ ಪತ್ತುಗೆಯಿರುವ ಇರುಗ ಪಾಂಗಿನ ಎಣಿಕೆಯನ್ನು ತಿಳಿಸುವುದಕ್ಕಾಗಿಯೂ ಈ ಇಟ್ಟಳವನ್ನು ಬಳಸಲು ಬರುತ್ತದೆ; ಇಲ್ಲಿ ಬಳಕೆಯಾಗುವ ಪತ್ತುಗೆ ನಂಟಸ್ತನದಾಗಿರಬಹುದು, ಬಿಡಿ(ಅಂಗ)ಗಳದಾಗಿರಬಹುದು, ಇಲ್ಲವೇ ಒಡೆತನದ್ದೂ ಆಗಿರಬಹುದು: (5ಕ) ಆಕೆಗೆ ಇಬ್ಬರು ಮಕ್ಕಳಿದ್ದಾರೆ. (5ಚ) ಆತನಿಗೆ ಇಬ್ಬರು ಗೆಳೆಯರಿದ್ದರು. (6ಕ) ಆ ಹುಳಕ್ಕೆ ಎರಡು ತಲೆಗಳಿವೆ. (6ಚ) ಆಕೆಗೆ ಎರಡು ಕಾರುಗಳಿವೆ. (7ಕ) ಅವನಿಗೆ ಒಬ್ಬ ಜಾಣನಾದ ಮಂತ್ರಿಯಿದ್ದ. (7ಚ) ಅವನಿಗೆ ಒಂದು ದಪ್ಪವಾದ ಮೀಸೆಯಿದೆ. (7ಟ) ಆ ಹುಡುಗನಿಗೆ ಒಂದು ಕೆಂಪು ಟೊಪ್ಪಿಯಿದೆ. (5ಕ-ಚ)ಗಳಲ್ಲಿ ನಂಟಸ್ತನದ ಪತ್ತುಗೆ ಬಳಕೆಯಾಗಿದೆ; ಗೆಳೆತನವನ್ನೂ ಇದರೊಂದಿಗೆ ಸೇರಿಸಲಾಗಿದೆ; (6ಕ-ಚ)ಗಳಲ್ಲಿ ಬಿಡಿಗಳ ಪತ್ತುಗೆ, ಮತ್ತು (7ಕ-ಟ)ಗಳಲ್ಲಿ ಒಡೆತನದ ಪತ್ತುಗೆ ಬಳಕೆಯಾಗಿದೆ. (2) ನೆರವು ಪಾಂಗುಗಳ ಬಳಕೆ: ಪತ್ತುಗೆ ಇಟ್ಟಳವಿರುವ ಸೊಲ್ಲುಗಳಲ್ಲಿ ಇಟ್ಟಳದ ಪಾಂಗುಗಳಾಗಿ ಬರುವ ಗುರಿ ಪಾಂಗು ಮತ್ತು ಇರುಗ ಪಾಂಗುಗಳು ಮಾತ್ರವಲ್ಲದೆ, ಪತ್ತುಗೆಯ ಹರವನ್ನು ಕಡಿಮೆ ಮಾಡಬಲ್ಲ ಹೊತ್ತು ಮತ್ತು ಇಂಬು ಪಾಂಗುಗಳು ನೆರವು ಪಾಂಗುಗಳಾಗಿ ಬರಬಲ್ಲುವು: (8ಕ) ಅವಳಿಗೆ ಇವತ್ತು ಒಂದು ಮೀಟಿಂಗ್ ಇದೆ. (8ಚ) ಮಕ್ಕಳಿಗೆ ಇವತ್ತು ಶಾಲೆ ಇದೆ. (9ಕ) ಆಕೆಗೆ ಈ ಸೀರೆಯ ಮೇಲೆ ಆಸೆಯಿದೆ. (9ಚ) ಅವನಿಗೆ ನನ್ನ ಮೇಲೆ ಕೋಪ ಇದೆ. (8ಕ-ಚ)ಗಳಲ್ಲಿ ಇವತ್ತು ಎಂಬ ಪದ ಹೊತ್ತಿನ ಪಾಂಗನ್ನು ತಿಳಿಸಲು ಬಳಕೆಯಾಗಿದೆ, ಮತ್ತು (9ಕ-ಚ)ಗಳಲ್ಲಿ ಈ ಸೀರೆಯ ಮೇಲೆ ಮತ್ತು ನನ್ನ ಮೇಲೆ ಎಂಬವು ಇಂಬು ಪಾಂಗುಗಳಾಗಿ ಬಳಕೆಯಾಗಿವೆ. ಇದಲ್ಲದೆ, ಕತ (ಕಾರಣ), ಅಳಬು (ಉದ್ದೇಶ), ಒಡನಾಡಿ ಎಂಬಂತಹ ಬೇರೆ ಕೆಲವು ಪಾಂಗುಗಳನ್ನೂ ಈ ಇಟ್ಟಳದೊಂದಿಗೆ ನೆರವು ಪಾಂಗಾಗಿ ಬಳಸಲು ಬರುತ್ತದೆ: (10ಕ) ನೀವು ಕರೆಯದುದರಿಂದ ಅವನಿಗೆ ನಿಮ್ಮ ಮೇಲೆ ಸಿಟ್ಟಿದೆ. (10ಚ) ಕಾಲೇಜಿಗೆ ಹೋಗುವುದಕ್ಕೆ ಅವನಿಗೆ ಒಂದು ಸ್ಕೂಟರ್ ಇದೆ. (10ಟ) ನನ್ನೊಂದಿಗೆ ಇವತ್ತು ಅವನಿಗೂ ಮೀಟಿಂಗ್ ಇದೆ.
7.2.6 ಇರುಹದ ಹೊತ್ತು
ಮೇಲೆ 4.2.5ರಲ್ಲಿ ವಿವರಿಸಿದ ಹಾಗೆ, ಇರುಹವನ್ನು ತಿಳಿಸುವ ಸೊಲ್ಲುಗಳಿಗೂ ಎಸಕವನ್ನು ತಿಳಿಸುವ ಸೊಲ್ಲುಗಳಿಗೂ ನಡುವಿರುವ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಮುಂಬೊತ್ತು (ಇರುತ್ತೇನೆ), ಹಿಂಬೊತ್ತು (ಇದ್ದೆ) ಮತ್ತು ಈಪೆÇತ್ತು (ಇದ್ದೇನೆ) ಎಂಬ ಮೂರು ಬಗೆಯ ಹೊತ್ತಿನ ಪತ್ತುಗೆಗಳನ್ನು ತಿಳಿಸಲು ಬರುತ್ತದೆ: (1ಕ) ನಾನು ನಾಳೆ ಮನೆಯಲ್ಲೇ ಇರುತ್ತೇನೆ. (1ಚ) ನಾನು ನಿನ್ನೆ ಮನೆಯಲ್ಲೇ ಇದ್ದೆ. (1ಟ) ನಾನು ಇವತ್ತು ಮನೆಯಲ್ಲೇ ಇದ್ದೇನೆ. ಇದಕ್ಕೆ ಬದಲು, ಎಸಕವನ್ನು ತಿಳಿಸುವ ಸೊಲ್ಲುಗಳಲ್ಲಿ ಮುಂಬೊತ್ತು (ಬರುತ್ತೇನೆ) ಮತ್ತು ಹಿಂಬೊತ್ತು (ಬಂದೆ) ಎಂಬ ಎರಡು ಬಗೆಯ ಹೊತ್ತಿನ ಪತ್ತುಗೆಗಳನ್ನು ಮಾತ್ರ ತಿಳಿಸಲು ಬರುತ್ತದೆ. (2ಕ) ನಾನು ನಾಳೆ ನಿಮ್ಮಲ್ಲಿಗೆ ಬರುತ್ತೇನೆ. (2ಚ) ನಾನು ಇಲ್ಲಿಗೆ ನಿನ್ನೆ ಬಂದೆ. ಇಂತಹ ಮೂರು ಬಗೆಯ ಹೊತ್ತುಗಳ ನಡುವಿನ ವ್ಯತ್ಯಾಸ ಮೇಲೆ ತಿಳಿಸಿರುವ ಮೂರು ಬಗೆಯ ಇರುಹ ಸೊಲ್ಲುಗಳಲ್ಲೂ ಕಾಣಿಸುತ್ತದೆ; ಮೇಲೆ ಕೊಟ್ಟಿರುವ (1ಕ-ಟ) ಸೊಲ್ಲುಗಳು ಇರುವಿಕೆಯ ಇಟ್ಟಳದಲ್ಲಿ ಈ ಮೂರು ಬಗೆಯ ಹೊತ್ತಿನ ವ್ಯತ್ಯಾಸ ಕಾಣಿಸುವುದಕ್ಕೆ ಎತ್ತುಗೆಗಳಾಗಿವೆ; ಪರಿಚೆ ಇಟ್ಟಳ (3ಕ-ಟ) ಮತ್ತು ಪತ್ತುಗೆ ಇಟ್ಟಳ(4ಕ-ಟ)ದ ಸೊಲ್ಲುಗಳಲ್ಲಿ ಈ ವ್ಯತ್ಯಾಸ ಕಾಣಿಸುವುದಕ್ಕೆ ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (3ಕ) ಅವನ ಲೆಕ್ಕ ತಪ್ಪಾಗಿದೆ. (3ಚ) ಅವನ ಲೆಕ್ಕ ತಪ್ಪಾಗಿತ್ತು. (3ಟ) ಅವನ ಲೆಕ್ಕ ತಪ್ಪಾಗಿರುತ್ತದೆ. (4ಕ) ಅವನಿಗೆ ಇಬ್ಬರು ಮಕ್ಕಳಿದ್ದಾರೆ. (4ಚ) ಅವನಿಗೆ ಇಬ್ಬರು ಮಕ್ಕಳಿದ್ದರು. (4ಟ) ಅವನಿಗೆ (ಮುಂದಿನ ಜನ್ಮದಲ್ಲಿ) ಇಬ್ಬರು ಮಕ್ಕಳಿರುತ್ತಾರೆ. ಇರುಹ ಸೊಲ್ಲುಗಳಿಗೂ ಎಸಕ ಸೊಲ್ಲುಗಳಿಗೂ ನಡುವೆ ಇನ್ನೊಂದು ವ್ಯತ್ಯಾಸವೂ ಇದೆ: ಇರುಹ ಸೊಲ್ಲುಗಳಲ್ಲಿ ಇರುಹವನ್ನು ತಿಳಿಸುವ ಪದರೂಪವನ್ನು ಬಳಸದಿರಲೂ ಬರುತ್ತದೆಯಾದ ಕಾರಣ, ಆ ಪದರೂಪದೊಂದಿಗೆ ಬರುವಂತಹ ಹೊತ್ತಿನ ಪತ್ತುಗೆಯನ್ನು ತಿಳಿಸುವ ಒಟ್ಟನ್ನು ಬಳಸದಿರಲು ಬರುತ್ತದೆ. ಎಂದರೆ, ಆ ರೀತಿ ಇರುಹವನ್ನು ತಿಳಿಸುವ ಪದರೂಪವನ್ನು ಬಳಸದಿರುವಲ್ಲಿ ಇರುಹದ ಹೊತ್ತಿನ ಪತ್ತುಗೆಯನ್ನು ತಿಳಿಸದಿರಲಾಗುತ್ತದೆ; ಆದರೆ, ಸಾಮಾನ್ಯವಾಗಿ ಇಂತಹ ಸೊಲ್ಲುಗಳಲ್ಲಿ ಇರುಹ ಈಪೆÇತ್ತಿನದು ಎಂಬ ಹುರುಳು ದೊರಕುತ್ತದೆ: (5ಕ) ಆಕೆಗೆ ನಿಮ್ಮ ಮೇಲೆ ನಂಬಿಕೆಯಿದೆ. (5ಚ) ಆಕೆಗೆ ನಿಮ್ಮ ಮೇಲೆ ನಂಬಿಕೆ. (6ಕ) ಅವರ ಮನೆಯಲ್ಲಿ ಇವತ್ತು ಒಂದು ಪೂಜೆಯಿದೆ. (6ಚ) ಅವರ ಮನೆಯಲ್ಲಿ ಇವತ್ತು ಒಂದು ಪೂಜೆ. (7ಕ) ಈ ಕಾಗದ ತುಂಬಾ ತೆಳ್ಳಗಿದೆ. (7ಚ) ಈ ಕಾಗದ ತುಂಬಾ ತೆಳ್ಳಗೆ.
ಮೇಲೆ ಕೊಟ್ಟಿರುವ (ಚ) ಸೊಲ್ಲುಗಳಲ್ಲಿ ಇರು ಪದವನ್ನು ಬಳಸಿಲ್ಲ, ಮತ್ತು ಹಾಗಾಗಿ, ಇರುವಿಕೆಯ ಹೊತ್ತಿನ ಪತ್ತುಗೆಯನ್ನು ತಿಳಿಸುವ ದ್ ಒಟ್ಟನ್ನು ಆ ಸೊಲ್ಲುಗಳಲ್ಲಿ ಬಳಸಲು ಸಾದ್ಯವಾಗಿಲ್ಲ; ಹೀಗಿದ್ದರೂ, ಆ ಸೊಲ್ಲುಗಳಿಗೆ ಈಪೆÇತ್ತಿನ ಇರುವಿಕೆಯನ್ನು ತಿಳಿಸುವ ಹುರುಳಿದೆ. ಇರುವಿಕೆಯನ್ನು ತಿಳಿಸುವ ಇಂತಹ ಸೊಲ್ಲುಗಳಲ್ಲಿ ಹಿಂಬೊತ್ತು ಇಲ್ಲವೇ ಮುಂಬೊತ್ತನ್ನು ತಿಳಿಸುವ ಪರಿಚೆಪದವನ್ನು ಬಳಸಿದಲ್ಲಿ, ಇರು ಪದದ ಹೊತ್ತಿನ ರೂಪಗಳನ್ನು ಬಳಸದಿದ್ದರೂ ಅವಕ್ಕೆ ಆ ಹೊತ್ತಿನ ಹುರುಳು ದೊರಕುತ್ತದೆ: (8ಕ) ಅವರ ಮನೆಯಲ್ಲಿ ನಿನ್ನೆ ಒಂದು ಪೂಜೆ ಇತ್ತು. (8ಚ) ಅವರ ಮನೆಯಲ್ಲಿ ನಿನ್ನೆ ಒಂದು ಪೂಜೆ. (9ಕ) ಈ ಹಾಲಿನಲ್ಲಿ ದಿನಾಲೂ ಏಳು ಗಂಟೆಗೆ ನಾಟಕ ಇರುತ್ತದೆ. (9ಚ) ಈ ಹಾಲಿನಲ್ಲಿ ದಿನಾಲೂ ಏಳು ಗಂಟೆಗೆ ನಾಟಕ. (8ಕ) ಸೊಲ್ಲಿನಲ್ಲಿ ಹಿಂಬೊತ್ತನ್ನು ತಿಳಿಸುವ ನಿನ್ನೆ ಎಂಬ ಪರಿಚೆಪದವನ್ನು ಬಳಸಲಾಗಿದೆ; ಹಾಗಾಗಿ, (8ಚ) ಸೊಲ್ಲಿನಲ್ಲಿ ಇತ್ತು ಎಂಬುದನ್ನು ಬಿಟ್ಟುಕೊಡ ಲಾಗಿದೆಯಾದರೂ ಅದಕ್ಕೆ ಹಿಂಬೊತ್ತಿನ ಇರುವಿಕೆಯನ್ನು ತಿಳಿಸುವ ಹುರುಳಿದೆ ಯೆಂಬುದನ್ನು ಗಮನಿಸಬಹುದು. ಆದರೆ, ಎಸಕವನ್ನು ತಿಳಿಸುವ ಸೊಲ್ಲುಗಳಲ್ಲಿ ಈ ರೀತಿ ಹೊತ್ತಿನ ಪತ್ತುಗೆಯನ್ನು ತಿಳಿಸದಿರಲು ಬರುವುದಿಲ್ಲ. ಇರುಹಪದಗಳಿಗೂ ಎಸಕಪದಗಳಿಗೂ ನಡುವೆ ಈ ವ್ಯತ್ಯಾಸ ಕಾಣಿಸಿಕೊಳ್ಳಲು ಒಂದು ಮುಕ್ಯವಾದ ಕಾರಣವೂ ಇದೆ: ಮೇಲಿನ ಮೂರು ಬಗೆಯ ಸೊಲ್ಲುಗಳಲ್ಲೂ ಇರುಹವನ್ನು ಇರು ಎಂಬ ಒಂದೇ ಪದ ತಿಳಿಸುತ್ತದೆ; ಹಾಗಾಗಿ, ಅದನ್ನು ಬಳಸದಿದ್ದರೂ ಇರುಹದ ಹುರುಳು ದೊರಕುತ್ತದೆ. ಆದರೆ, ಎಸಕವನ್ನು ತಿಳಿಸಲು ನೂರಾರು ಎಸಕಪದಗಳಿದ್ದು, ಅವನ್ನು ಬಳಸ ದಿದ್ದಲ್ಲಿ ತಿಳಿಸಬೇಕಾಗಿರುವ ಎಸಕ ಎಂತಹದು ಎಂಬುದು ಗೊತ್ತಾಗುವುದಿಲ್ಲ. ಹಾಗಾಗಿ, ಎಸಕಪದವನ್ನು ಬಳಸಲೇಬೇಕಾಗುತ್ತದೆ, ಮತ್ತು ಅದರೊಂದಿಗೆ ಹೊತ್ತಿನ ಪತ್ತುಗೆಯನ್ನೂ ತಿಳಿಸಲೇಬೇಕಾಗುತ್ತದೆ. ಆದರೆ, ಎಲ್ಲಾ ಬಗೆಯ ಇರುಹದ ಸೊಲ್ಲುಗಳಲ್ಲೂ ಇರು ಪದವನ್ನು ಬಿಟ್ಟು ಕೊಡಲು ಬರುವುದಿಲ್ಲ; ಎಂತಹ ಸೊಲ್ಲುಗಳಲ್ಲಿ ಅದನ್ನು ಬಳಸದಿರಲು ಬರುತ್ತದೆ ಎಂಬ ವಿಶಯದಲ್ಲಿ ಕೆಳಗೆ ವಿವರಿಸಿದಂತಹ ಕೆಲವು ಕಟ್ಟಲೆಗಳಿವೆ: (1) ಇರುಹವನ್ನು ತಿಳಿಸುವ ಸೊಲ್ಲುಗಳು ಮದುವೆ, ಹಬ್ಬ, ಆಟ, ಸಿಟ್ಟು ಮೊದಲಾದ ಎರಡನೇ ಹಂತದ (6.2.4 ನೋಡಿ) ಪಾಂಗುಗಳ ಇರುವಿಕೆಯನ್ನು ತಿಳಿಸುತ್ತಿವೆಯಾದರೆ ಅವುಗಳಲ್ಲಿ ಬರುವ ಇರು ಪದವನ್ನು ಬಳಸದಿರಲು ಬರುತ್ತದೆ; ಮೊದಲನೇ ಹಂತದ ಪಾಂಗುಗಳ ಇರುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಅದನ್ನು ಸಾಮಾನ್ಯವಾಗಿ ಬಳಸದಿರಲು ಬರುವುದಿಲ್ಲ, ಮತ್ತು ಅಂತಹ ಸೊಲ್ಲುಗಳಲ್ಲಿ ಹೊತ್ತಿನ ಪತ್ತುಗೆಯನ್ನೂ ತಿಳಿಸದಿರಲು ಬರುವುದಿಲ್ಲ: (10ಕ) ರಾಜುವಿನ ಮನೆಯಲ್ಲಿ ಒಂದು ನಾಯಿಯಿದೆ. (10ಚ) *ರಾಜುವಿನ ಮನೆಯಲ್ಲಿ ಒಂದು ನಾಯಿ. (11ಕ) ಇವತ್ತು ಬೆಳಿಗ್ಗೆ ಈ ಟಾಂಕಿಯಲ್ಲಿ ಅರೆವಾಶಿ ನೀರಿತ್ತು. (11ಚ) *ಇವತ್ತು ಬೆಳಿಗ್ಗೆ ಈ ಟಾಂಕಿಯಲ್ಲಿ ಅರೆವಾಶಿ ನೀರು. (2) ಆದರೆ, ಮೊದಲನೇ ಹಂತದ ಪಾಂಗುಗಳೂ ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ಜಾಗಗಳಲ್ಲಿವೆಯೆಂಬುದನ್ನು ತಿಳಿಸುವ ಜೋಡಿಸೊಲ್ಲುಗಳಲ್ಲಿ ಬಳಕೆಯಾಗಿವೆಯಾದರೆ, ಅವುಗಳಲ್ಲಿ ಬಂದಿರುವ ಇರು ಪದದ ಪದರೂಪಗಳನ್ನು ಬಳಸದಿರಲು ಬರುತ್ತದೆ: (12ಕ) ಅವನ ಒಂದು ಕಯ್ಯಲ್ಲಿ ಕೊಡೆಯಿದೆ, ಇನ್ನೊಂದು ಕಯ್ಯಲ್ಲಿ ತರಕಾರಿ ಚೀಲ ಇದೆ.
(12ಚ) ಅವನ ಒಂದು ಕಯ್ಯಲ್ಲಿ ಕೊಡೆ, ಇನ್ನೊಂದು ಕಯ್ಯಲ್ಲಿ ತರಕಾರಿ ಚೀಲ. (13ಕ) ಕೋಣೆಯ ನಡುವೆ ಒಂದು ಮೇಜಿದೆ, ಅದರ ಮೇಲೆ ಕೆಲವು ಪುಸ್ತಕಗಳಿವೆ, ಪಕ್ಕದಲ್ಲಿ ಒಂದು ಕವಾಟಿದೆ, ಮತ್ತು ಮೇಜಿನ ಕೆಳಗೆ ಒಂದು ಸ್ಟೂಲಿದೆ. (13ಚ) ಕೋಣೆಯ ನಡುವೆ ಒಂದು ಮೇಜು, ಅದರ ಮೇಲೆ ಕೆಲವು ಪುಸ್ತಕಗಳು, ಪಕ್ಕದಲ್ಲಿ ಒಂದು ಕವಾಟು, ಮತ್ತು ಮೇಜಿನ ಕೆಳಗೆ ಒಂದು ಸ್ಟೂಲು. (3) ಪರಿಚೆಯ ಇರುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಪರಿಚೆಯನ್ನು ಒಂದು ಎಸಕಪದದ ಮಾರೆಸಕದ ಜೋಡಿಸುವ ರೂಪದ ಮೂಲಕ ತಿಳಿಸಲಾಗಿದೆಯಾದರೆ, ಅಂತಹ ಸೊಲ್ಲುಗಳಲ್ಲಿ ಬಂದಿರುವ ಇರು ಪದದ ಪದರೂಪಗಳನ್ನು ಬಳಸದಿರಲು ಬರುವುದಿಲ್ಲ: (14ಕ) ಅಂಗಡಿಯ ಬಾಗಿಲು ತೆರೆದಿದೆ. (14ಚ) *ಅಂಗಡಿಯ ಬಾಗಿಲು ತೆರೆದು. (15ಕ) ಕೊಡದಲ್ಲಿ ನೀರು ತುಂಬಿದೆ. (15ಚ) *ಕೊಡದಲ್ಲಿ ನೀರು ತುಂಬಿ. (4) ಆಗು ಪದದ ಮಾರೆಸಕದ ಜೋಡಿಸುವ ರೂಪವನ್ನು ಬಳಸಿರುವ ಸೊಲ್ಲುಗಳು ಮೇಲಿನ (3)ನೇ ಕಟ್ಟಲೆಗೆ ಹೊರಪಡಿಕೆಗಳಾಗಿವೆ; ಅವುಗಳಲ್ಲಿ ಬರುವ ಇರು ಪದದ ಪದರೂಪಗಳನ್ನು ಬಳಸದಿರಲು ಬರುತ್ತದೆ; ಆದರೆ, ಅವುಗಳೊಂದಿಗೆ ಆಗು ಪದದ ಪದರೂಪವನ್ನೂ ಬಳಸದಿರಬೇಕಾಗುತ್ತದೆ: (16ಕ) ಆ ಹಣ್ಣು ಕೆಂಪಾಗಿದೆ. (16ಚ) ಆ ಹಣ್ಣು ಕೆಂಪು. (16ಟ) *ಆ ಹಣ್ಣು ಕೆಂಪಾಗಿ. (17ಕ) ಆಕೆ ಇಲ್ಲಿ ಟಯ್ಪಿಸ್್ಟ ಆಗಿದ್ದಾಳೆ. (17ಚ) ಆಕೆ ಇಲ್ಲಿ ಟಯ್ಪಿಸ್್ಟ. (16ಕ)ದಲ್ಲಿ ಕೆಂಪು ಪದವನ್ನು ಆಗು ಮತ್ತು ಇದೆ ಎಂಬವುಗಳೊಂದಿಗೆ ಬಳಸಿದ ಕಾರಣ ಆ ಸೊಲ್ಲು ಸರಿಯಾಗಿದೆ; (16ಚ)ದಲ್ಲಿ ಇದೆ ಪದದೊಂದಿಗೆ ಆಗು ಪದವನ್ನೂ ಬಿಟ್ಟಿರುವ ಕಾರಣ, ಆ ಸೊಲ್ಲೂ ಸರಿಯಾಗಿದೆ; ಆದರೆ, (16ಟ)ದಲ್ಲಿ ಅದರಿಂದ ಇದೆ ಎಂಬುದನ್ನು ಮಾತ್ರ ಬಿಟ್ಟಿರುವ ಕಾರಣ ಅದು ಸರಿಯಾಗಿಲ್ಲ.
7.2.7 ಇರುಹ ಮತ್ತು ಎಸಕ
ಇರುಹ ಮತ್ತು ಎಸಕಗಳ ನಡುವಿನ ವ್ಯತ್ಯಾಸವೆಂತಹದು ಎಂಬುದನ್ನು 5.4.1ರಲ್ಲಿ ವಿವರಿಸಲಾಗಿದೆ; ಸಾಮಾನ್ಯವಾಗಿ ಒಂದು ಎಸಕ ಎರಡು ಇರುಹಗಳನ್ನು ಜೋಡಿಸುತ್ತದೆ ಎಂದು ಹೇಳಬಹುದು: (1ಕ) ರಾಜು ಮರದ ಕೆಳಗಿದ್ದಾನೆ. (1ಚ) ರಾಜು ಮರದ ಮೇಲಿದ್ದಾನೆ. (1ಟ) ರಾಜು ಮರಕ್ಕೆ ಹತ್ತಿದ.
(1ಕ) ಮತ್ತು (1ಚ) ಸೊಲ್ಲುಗಳು ಎರಡು ಬಗೆಯ ಇರುಹಗಳನ್ನು ತಿಳಿಸುತ್ತಿದ್ದು, (1ಟ) ಸೊಲ್ಲು ತಿಳಿಸುವ ಎಸಕ ಅವೆರಡನ್ನು ಜೋಡಿಸುತ್ತದೆ: ರಾಜು ಮರಕ್ಕೆ ಹತ್ತಿದುದರಿಂದಾಗಿ ಮೊದಲಿಗೆ ಮರದ ಕೆಳಗಿದ್ದವನು ಈಗ ಮೇಲಿರುವ ಹಾಗಾಗಿದೆ. ಒಂದು ಇರುಹದಿಂದ ಇನ್ನೊಂದು ಇರುಹಕ್ಕೆ ನಡೆಯುವ ಮಾರ್ಪಾಡನ್ನು ತಿಳಿಸಲು ಕನ್ನಡದಲ್ಲಿ ಆಗು ಪದದ ಮಾರೆಸಕದ ಜೋಡಿಸುವ ರೂಪವನ್ನು ಬಳಸಲಾಗುತ್ತದೆ: (2ಕ) ಆಕೆಯ ಕಣ್ಣು ಕೆಂಪಾಗಿದೆ. (2ಚ) ಹುಡುಗ ದೊಡ್ಡವನಾಗಿದ್ದಾನೆ. (2ಟ) ಬಟ್ಟೆ ಒದ್ದೆಯಾಗಿತ್ತು. ಆದರೆ, ಇಂತಹ ಸೊಲ್ಲುಗಳಲ್ಲಿ ಇರುಹ ಮತ್ತು ಆಗುಹಗಳ ನಡುವಿನ ಒಂದು ಇಪ್ಪುರುಳು ಕಾಣಿಸಿಕೊಳ್ಳುತ್ತದೆ: ಅವು ಒಂದು ಪಾಂಗಿನಲ್ಲಿ ಒಂದು ಪರಿಚೆಯಿದೆ ಎಂದಿಶ್ಟೇ ತಿಳಿಸುತ್ತಿದ್ದು, ಒಂದು ಇರುಹವನ್ನು ತಿಳಿಸುತ್ತಿರಬಹುದು, ಇಲ್ಲವೇ ಆ ಪರಿಚೆಯ ಮಟ್ಟಿಗೆ ಅದರಲ್ಲಿ ಒಂದು ಮಾರ್ಪಾಡು ನಡೆದಿದೆ ಎಂಬುದನ್ನೂ ತಿಳಿಸುತ್ತಿದ್ದು, ಒಂದು ಆಗುಹವನ್ನು ತಿಳಿಸುತ್ತಿರಬಹುದು. ಎತ್ತುಗೆಗಾಗಿ, (2ಕ) ಸೊಲ್ಲು ಆಕೆಯ ಕಣ್ಣಿನ ಬಣ್ಣ ಕೆಂಪು’ಎಂದಿಶ್ಟೇ ತಿಳಿಸುತ್ತಿರ ಬಹುದು, ಇಲ್ಲವೇ ಮೊದಲು ಬಿಳಿ ಇದ್ದ ಕಣ್ಣು ಈಗ ಕೆಂಪಾಗಿದೆ ಎಂಬುದಾಗಿ ಕಣ್ಣಿನ ಮಟ್ಟಿಗೆ ನಡೆದಿರುವ ಪರಿಚೆಯ ಒಂದು ಮಾರ್ಪಾಡನ್ನು ತಿಳಿಸುತ್ತಿರಬಹುದು. ಈ ಇಪ್ಪುರುಳನ್ನು ಕೆಳಗಿನ ಸೊಲ್ಲುಗಳಲ್ಲಿ ಇನ್ನಶ್ಟು ಚನ್ನಾಗಿ ಕಾಣಲು ಬರುತ್ತದೆ: (3ಕ) ಹುಡುಗಿ ಬೆಳ್ಳಗಾಗಿದ್ದಾಳೆ. (3ಚ) ಕೋಲು ತುಂಬಾ ಉದ್ದವಾಗಿದೆ. (3ಟ) ಬಟ್ಟೆ ಸಾಕಶ್ಟು ದಪ್ಪವಾಗಿದೆ. (3ಕ) ಸೊಲ್ಲಿಗೆ ಮೊದಲು ಕಪ್ಪಗಿದ್ದ ಹುಡುಗಿ ಈಗ ಬೆಳ್ಳಗಾಗಿದ್ದಾಳೆ’ಎಂಬ ಆಗುಹದ ಹುರುಳಿಗಿಂತಲೂ ಆಕೆಯ ಪರಿಚೆಯೇ ಬೆಳ್ಳಗೆ ಎಂಬ ಇರುಹದ ಹುರುಳೇ ಹೆಚ್ಚು ಸರಿಯಾದುದು ಎಂದು ತೋರುತ್ತದೆ; (3ಚ-ಟ) ಸೊಲ್ಲುಗಳಲ್ಲೂ ಹೀಗೆಯೇ. ಆದರೆ, ಈ ಸೊಲ್ಲುಗಳಿಗೆ ಆಗುಹದ (ಮಾರ್ಪಾಡಿನ) ಹುರುಳೂ ದೊರಕಬಲ್ಲುದು. ಆದರೆ, ಕೆಳಗಿನ ಸೊಲ್ಲುಗಳಲ್ಲಿ ಆಗು ಪದಕ್ಕೆ ಆಗುಹದ ಹುರುಳನ್ನು ಹೊಂದಿಸುವುದು ಇನ್ನಶ್ಟು ಕಶ್ಟವೆಂದು ತೋರುತ್ತದೆ: (4ಕ) ಹಾಲು ಬಿಳಿಯಾಗಿದೆ. (4ಚ) ಆ ಹಕ್ಕಿಯ ರೆಕ್ಕೆ ಹಸುರಾಗಿದೆ. (4ಟ) ಹತ್ತಿ ಹಗುರವಾಗಿದೆ. ಹಾಲು, ಹಕ್ಕಿ ಇಲ್ಲವೇ ಹತ್ತಿಗಳಲ್ಲಿ ಯಾವ ಪರಿಚೆಯಿದೆ ಎಂಬುದನ್ನಶ್ಟೇ ಈ ಸೊಲ್ಲುಗಳು ತಿಳಿಸುತ್ತವಲ್ಲದೆ, ಅವುಗಳಲ್ಲಿ ನಡೆದಿರುವ ಮಾರ್ಪಾಡುಗಳನ್ನು ತಿಳಿಸುವುದಿಲ್ಲ ಎಂಬುದನ್ನು ಗಮನಿಸಬಹುದು. ಹಾಲು, ಹಕ್ಕಿ ಇಲ್ಲವೇ ಹತ್ತಿಗಳ ಈ ಪರಿಚೆಗಳು ಸಾಮಾನ್ಯವಾಗಿ ಮಾರ್ಪಡುವವಲ್ಲದಿರುವುದೇ ಇದಕ್ಕೆ ಕಾರಣ. ಆಗು ಪದದ ಮಾರೆಸಕದ ಜೋಡಿಸುವ ರೂಪವನ್ನು ಮಾತ್ರವಲ್ಲದೆ, ಬೇರೆಯೂ ಕೆಲವು ಎಸಕಪದಗಳ ಮಾರೆಸಕದ ಜೋಡಿಸುವ ರೂಪವನ್ನು ಬಳಸಿರುವಲ್ಲಿ ಇಂತಹದೇ ಆದ ಎಸಕ ಮತ್ತು ಇರುಹಗಳ ನಡುವಿನ ಇಪ್ಪುರುಳನ್ನು ಕಾಣಲು ಬರುತ್ತದೆ:
(5ಕ) ಬಾಗಿಲು ತೆರೆದಿದೆ. (5ಚ) ನೀರಿನ ಕೊಡ ಒಡೆದಿದೆ. (5ಟ) ಕಾಗದ ಹರಿದಿತ್ತು. (5ಕ) ಸೊಲ್ಲಿಗೆ ‘ಮುಚ್ಚಿದ್ದ ಬಾಗಿಲು ಈಗ ತೆರೆದಿದೆ’ ಎಂಬ ಮಾರ್ಪಾಡಿನ (ಎಸಕದ) ಹುರುಳೂ ಬರಬಲ್ಲುದು, ಇಲ್ಲವೇ ‘ಅದು ಈಗ ತೆರೆದುಕೊಂಡಿದೆ’ ಎಂಬುದಾಗಿ ಅದರ ಈಗಿನ ಪರಿಚೆಯನ್ನಶ್ಟೇ ತಿಳಿಸುವ ಇರುಹದ ಹುರುಳೂ ಬರಬಲ್ಲುದು. (5ಚ-ಟ) ಸೊಲ್ಲುಗಳೂ ಹೀಗೆಯೇ. ಈ ಇಪ್ಪುರುಳು ಆಗುವಿಕೆಯನ್ನು ತಿಳಿಸುವ ಎಸಕಪದಗಳ ಬಳಕೆಯಲ್ಲಿ, ಅದರಲ್ಲೂ ಅಂತಹ ಆಗುವಿಕೆಯ ಮೂಲಕ ಒಂದು ಪಾಂಗಿನ ಮೇಲೆ ಎದ್ದುಕಾಣು ವಂತಹ ಪರಿಣಾಮವನ್ನು ಉಂಟುಮಾಡಬಲ್ಲ ಎಸಕಗಳನ್ನು ತಿಳಿಸುವ ಪದಗಳ ಬಳಕೆಯಲ್ಲಿ ಹೆಚ್ಚು ಚನ್ನಾಗಿ ಕಾಣಿಸುತ್ತದೆ. ಮಾಡುವಿಕೆಯನ್ನು ತಿಳಿಸುವ ಕೆಳಗೆ ಕೊಟ್ಟಿರುವಂತಹ ಎಸಕಪದಗಳ ಬಳಕೆಯಲ್ಲಿ ಅದು ಕಾಣಿಸುವ ಹಾಗೆ ತೊರುವುದಿಲ್ಲ: (6ಕ) ಸಾಹೇಬರು ಅಂಗಡಿಯ ಬಾಗಿಲನ್ನು ತೆರೆದಿದ್ದಾರೆ. (6ಚ) ರಾಜು ಹಾಲಿನ ಕೊಡವನ್ನು ಒಡೆದಿದ್ದಾನೆ. (6ಟ) ಮಗು ಕಾಗದವನ್ನು ಹರಿದಿತ್ತು. (6ಕ)ದಲ್ಲಿ ಬಂದಿರುವ ತೆರೆದಿದ್ದಾರೆ ಎಂಬುದನ್ನು ತೆರೆದು ಇದ್ದಾರೆ ಎಂಬುದಾಗಿ ಬೇರ್ಪಡಿಸಿದಲ್ಲಿ, ಅದರ ಎರಡನೆಯ ಪದಕ್ಕೆ ಇರುಹವನ್ನು ತಿಳಿಸುವ ಹುರುಳು ಸಿಗುತ್ತದೆ; ಆದರೆ, ಮೊದಲನೇ ಪದ ತಿಳಿಸುವ ಮಾರ್ಪಾಡಿನ ಹುರುಳನ್ನು ಅದು ಮೇಲಿನ (4ಕ-ಟ) ಸೊಲ್ಲುಗಳಲ್ಲಿ ಕಾಣಿಸುವ ಹಾಗೆ ಇಲ್ಲವಾಗಿಸುವುದಿಲ್ಲ. ಇರು ಪದಕ್ಕೂ ಕೂಡ, ಅದರ ಕೆಲವು ಬಳಕೆಗಳಲ್ಲಿ ಎಸಕದ ಹುರುಳು ಬರಬಲ್ಲುದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7ಕ) ನೀವು ಬರುವಲ್ಲಿ ವರೆಗೆ ನಾನು ಇಲ್ಲೇ ಇರುತ್ತೇನೆ. (7ಚ) ನೀವು ಮೊದಲೇ ಹೇಳಿದ್ದರೆ ಅವನು ಇಲ್ಲೇ ಇರುತ್ತಿದ್ದ. (7ಟ) ನಾನು ಅರ್ದ ಗಂಟೆಗಿಂತ ಹೆಚ್ಚು ಹೊತ್ತು ಇರಲಾರೆ.
7.2.8 ಇರುಹದ ಹುರುಳಿನಲ್ಲಿ ಎಸಕಪದಗಳ ಬಳಕೆ
ಮೇಲೆ ತಿಳಿಸಿದ ಹಾಗೆ, ಎಟಕು, ನಂಬು, ಅನಿಸು ಮೊದಲಾದ ಕೆಲವು ಬಗೆಯ ಎಸಕಪದಗಳನ್ನು ಕೆಳಗೆ ಕೊಟ್ಟಿರುವ ಮೂರು ಬಗೆಯ ರೂಪಗಳಲ್ಲಿ ಬಳಸಿದಾಗ ಅವಕ್ಕೆ ಬಳಕೆಯ ಹುರುಳು ಸಿಗುತ್ತದೆ, ಮತ್ತು ಈ ಹುರುಳಿನಲ್ಲಿ ಅವು ಇರುಹದ ಹುರುಳನ್ನು ಕೊಡಬಲ್ಲುವು: (1) ಮುಂಬೊತ್ತಿನ ಸುಳುರೂಪ, (2) ಒಡನೆಸಕದ ಜೋಡಿಸುವ ರೂಪದೊಂದಿಗೆ ಇರು ಪದವನ್ನು ಬಳಸಿರುವ ಸಿಕ್ಕಲುರೂಪ, ಮತ್ತು (3) ಮುಂಬೊತ್ತಿನ ಅಲ್ಲಗಳೆಯುವ ರೂಪ: (8ಕ) ಆ ಗೆಲ್ಲು ನನಗೆ ಎಟಕುತ್ತದೆ. (8ಚ) ಅವನು ನಿಮ್ಮನ್ನು ನಂಬುತ್ತಾನೆ. (9ಕ) ಅವನು ನಿಮ್ಮನ್ನು ನಂಬುತ್ತಿದ್ದ.
(9ಚ) ಅವನಿಗೆ ಮನೆಗೆ ಹೋಗಬೇಕೆಂದು ಅನಿಸುತ್ತಿದೆ. (10ಕ) ಆ ಗೆಲ್ಲು ನನಗೆ ಎಟಕುವುದಿಲ್ಲ. (10ಚ) ಅವನು ನಿಮ್ಮನ್ನು ನಂಬುವುದಿಲ್ಲ. ಮೇಲೆ ಕೊಟ್ಟಿರುವ ಸೊಲ್ಲುಗಳೆಲ್ಲ ಬಳಕೆಯ ಹುರುಳಿನಲ್ಲಿ ಬರುತ್ತಿದ್ದು, ಅವಕ್ಕೆ ಇರುಹವನ್ನು ತಿಳಿಸುವ ಹುರುಳು ಸಿಗಬಲ್ಲುದು; (8ಕ-ಚ)ಗಳಲ್ಲಿ ಎಟಕು ಮತ್ತು ನಂಬು ಪದಗಳು ಮುಂಬೊತ್ತಿನ ಸುಳುರೂಪದಲ್ಲಿ ಬಂದಿವೆ; (9ಕ-ಚ)ಗಳಲ್ಲಿ ನಂಬು ಮತ್ತು ಅನಿಸು ಪದಗಳು ಒಡನೆಸಕದ ಜೋಡಿಸುವ ರೂಪದೊಂದಿಗೆ ಇರು ಪದವನ್ನು ಬಳಸಿರುವ ಸಿಕ್ಕಲು ರೂಪದಲ್ಲಿ ಬಂದಿವೆ; ಮತ್ತು, (10ಕ-ಚ)ಗಳಲ್ಲಿ ಎಟಕು ಮತ್ತು ನಂಬು ಪದಗಳು ಮುಂಬೊತ್ತಿನ ಅಲ್ಲಗಳೆಯುವ ರೂಪದಲ್ಲಿ ಬಂದಿವೆ. ಈ ಎಲ್ಲಾ ಎಸಕಪದಗಳೊಂದಿಗೂ ಅವುಗಳದೇ ಆದ ಪಾಂಗಿಟ್ಟಳ ಬರುತ್ತದೆ (ವಿವರಗಳಿಗೆ 7.3 ನೋಡಿ). ಎತ್ತುಗೆಗಾಗಿ, ಎಟಕು ಪದ ಒಬ್ಬ ಆಗುಗ ಮತ್ತು ಒಂದು ಗುರಿಯೊಂದಿಗೆ ಬಂದಿದೆ; ನಂಬು ಪದ ಒಬ್ಬ ಮಾಡುಗ ಮತ್ತು ಒಂದು ಈಡಿನೊಂದಿಗೆ ಬಂದಿದೆ; ಮತ್ತು ಅನಿಸು ಪದ ಒಂದು ಸೊಲ್ಲನ್ನೇ ಪಾಂಗಾಗಿ ಪಡೆದುಕೊಂಡಿದೆ. ಆಗುಗದಲ್ಲಿ ಏನಾದರೂ ಬದಲಾವಣೆಯನ್ನು ನಡೆಸುವಂತಹ ಎಸಕಪದಗಳ ಮೊದಲೆಸಕದ ಜೋಡಿಸುವ ರೂಪವನ್ನು ಇದೆ ಎಂಬುದರೊಂದಿಗೆ ಬಳಸಿದಾಗಲೂ ಅವಕ್ಕೆ ಒಂದು ಇರುಹವನ್ನು ತಿಳಿಸುವ ಹುರುಳು ಬರಬಲ್ಲುದು (7.2.4(7) ನೋಡಿ). ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (11ಕ) ಮಾವಿನ ಹಣ್ಣು ಕೊಳೆತಿದೆ. (11ಚ) ಆಕೆಯ ಕಾಲು ಉಳುಕಿದೆ. (11ಟ) ಬಾಗಿಲು ತೆರೆದಿದೆ. ಆದರೆ, ಈ ರೀತಿ ಎಸಕಪದಗಳ ಜೋಡಿಸುವ ರೂಪವನ್ನು ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಸಬೇಕಿದ್ದಲ್ಲಿ, ಸಾಮಾನ್ಯವಾಗಿ ಅವು ಒಂದು ಹತೋಟಿಯ ಲ್ಲಿಲ್ಲದ ಎಸಕವನ್ನು ತಿಳಿಸುವಂತಹವಾಗಿರಬೇಕು. ಹತೋಟಿಯಲ್ಲಿರುವ ಎಸಕಗಳನ್ನು ತಿಳಿಸುವ ಎಸಕಪದಗಳನ್ನು ಜೋಡಿಸುವ ರೂಪದಲ್ಲಿ ಬಳಸಿದಾಗ, ಅವಕ್ಕೆ ಎಸಕದ ಹುರುಳು ಮಾತ್ರ ಸಿಗಬಲ್ಲುದಲ್ಲದೆ ಇರುಹದ ಹುರುಳು ಸಿಗಲಾರದು: (12ಕ) ರಾಜು ಅಂಗಡಿಯ ಬಾಗಿಲನ್ನು ತೆರೆದಿದ್ದಾನೆ. (12ಚ) ಹೊಸ ಕುರ್ಚಿಯ ಕಾಲನ್ನು ನಾಯಿ ಮುರಿದಿದೆ. ಮೇಲಿನ ಸೊಲ್ಲುಗಳಲ್ಲಿ ತೆರೆ ಮತ್ತು ಮುರಿ ಪದಗಳು ಹತೋಟಿಯಲ್ಲಿರುವ ಎಸಕಗಳನ್ನು ತಿಳಿಸುತ್ತಿವೆ; ಹಾಗಾಗಿ, ಅವಕ್ಕೆ ಎಸಕವನ್ನು ತಿಳಿಸುವ ಹುರುಳು ಬರಬಹುದಲ್ಲದೆ ಇರುಹವನ್ನು ತಿಳಿಸುವ ಹುರುಳು ಬರಲಾರದು. ಆದರೆ, ಇದಕ್ಕೆ ಕೆಲವು ಹೊರಪಡಿಕೆಗಳೂ ಇವೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (13ಕ) ಹುಡುಗ ಕುರ್ಚಿಯಲ್ಲಿ ಕುಳಿತಿದ್ದಾನೆ. (13ಚ) ಅವರು ಮಲಗಿದ್ದಾರೆ. (13ಕ)ದಲ್ಲಿ ಬಂದಿರುವ ಕುಳಿತಿರು ಎಂಬುದು ಹತೋಟಿಯಲ್ಲಿರುವ ಎಸಕವನ್ನು ತಿಳಿಸುವುದಾದರೂ ಅದಕ್ಕೆ ಇರುಹದ ಹುರುಳು ಸಿಗಬಲ್ಲುದು. ಕದಲಿಕೆಯನ್ನು ತಿಳಿಸುವ ಎಸಕಪದಗಳು ಒಬ್ಬ ಮಾಡುಗನ ಹತೋಟಿಯ ಲ್ಲಿಲ್ಲವಾದರೂ ಇರುಹದ ಹುರುಳನ್ನು ಕೊಡಲಾರವು:
(14ಕ) ಮಾಡಿನಿಂದ ನೀರು ಸೋರುತ್ತಿತ್ತು. (14ಚ) ಗಾಳಿ ಬೀಸುತ್ತಿತ್ತು. ಸೋರುವುದು ಮತ್ತು ಬೀಸುವುದು ಎಂಬ ಕದಲಿಕೆಗಳನ್ನು ತಿಳಿಸುವ ಮೇಲಿನ ಸೊಲ್ಲುಗಳು ಎಸಕದ ಹುರುಳನ್ನು ಮಾತ್ರ ಕೊಡಬಲ್ಲುವು. ಎಂತಹ ಎಸಕಪದಗಳು ಇರುಹದ ಹುರುಳನ್ನು ಕೊಡಬಲ್ಲುವು ಮತ್ತು ಎಂತಹ ಎಸಕಪದಗಳು ಕೊಡಲಾರವು ಎಂಬುದರ ಕುರಿತಾಗಿ ಹೆಚ್ಚಿನ ಅರಿವನ್ನು ಪಡೆಯಬೇಕಾಗಿದೆ. ಎಂತಹ ಎಸಕಪದಗಳಿಗೆ ಈ ರೀತಿ ಇರುಹದ ಹುರುಳು ಬರಬಲ್ಲುದು ಎಂಬುದರ ಕುರಿತಾಗಿ ಇನ್ನಶ್ಟು ವಿವರಗಳನ್ನು ತಿಳಿಯಬೇಕಾಗಿದೆ.
7.3 ಎಸಕಪದಗಳ ಪಾಂಗಿಟ್ಟಳಗಳು
ಮೇಲೆ 7.1ರಲ್ಲಿ ತಿಳಿಸಿದ ಹಾಗೆ, ಕನ್ನಡದಲ್ಲಿ ಸಾವಿರಕ್ಕಿಂತಲೂ ಹೆಚ್ಚು ಎಸಕ ಪದಗಳಿದ್ದು, ಅವುಗಳೊಂದಿಗೆ ಬರುವ ಪಾಂಗುಗಳ ಬಗೆ ಮತ್ತು ಎಣಿಕೆಗಳು, ಎಂದರೆ ಅವುಗಳ ಪಾಂಗಿಟ್ಟಳಗಳು, ಬಹಳ ಮಟ್ಟಿಗೆ ಆ ಎಸಕಪದಗಳ ಹುರುಳ ನ್ನವಲಂಬಿಸಿವೆ. ಎತ್ತುಗೆಗಾಗಿ, ಕುದಿ, ಮರೆ, ಹೊಳೆ, ತುಂಬು, ಸಿಗು, ತೀರು ಮೊದಲಾದ ಕೆಲವು ಎಸಕಪದಗಳೊಂದಿಗೆ ಆಗುಗ ಪಾಂಗು ಬರುತ್ತದೆ; ಆದರೆ, ಹೋಗು, ಬರು, ಅಳು, ಕೊಡು, ತಿನ್ನು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಆಗುಗ ಪಾಂಗು ಬರುವುದಿಲ್ಲ; ಅದರ ಬದಲು, ಮಾಡುಗ ಪಾಂಗು ಬರುತ್ತದೆ: (1ಕ) ಹಾಲು ಕುದಿಯುತ್ತಿದೆ. (1ಚ) ಮಗು ಅಳುತ್ತಿದೆ. ಕನ್ನಡದ ಎಸಕಪದಗಳನ್ನೆಲ್ಲ ಆಗುವಿಕೆಯನ್ನು ತಿಳಿಸುವ ಆಗುಹಗಳು ಮತ್ತು ಮಾಡುವಿಕೆಯನ್ನು ತಿಳಿಸುವ ಮಾಡುಹಗಳು ಎಂಬುದಾಗಿ ಎರಡು ಮುಕ್ಯ ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ಈ ಎರಡು ಗುಂಪುಗಳಲ್ಲಿ ಆಗುಹಗಳೊಂದಿಗೆ ಒಂದು ಆಗುಗ ಬರುತ್ತದೆ ಮತ್ತು ಮಾಡುಹಗಳೊಂದಿಗೆ ಒಂದು ಮಾಡುಗ ಬರುತ್ತದೆ. ಆಗುಹಗಳಲ್ಲಿಯೂ ಒಂದು ಉಸುರಿ ಆಗುಗ ಪಾಂಗಾಗಿ ಬರುವಂತಹವು ಮತ್ತು ಒಂದು ಉಸುರಿಲ್ಲದುದು ಆಗುಗ ಪಾಂಗಾಗಿ ಬರುವಂತಹವು ಎಂಬುದಾಗಿ ಎರಡು ಬಗೆಯನ್ನು ಕಾಣಬಹುದು: ಆಗುಗವಾಗಿ ಉಸುರಿ ಆಗುಗವಾಗಿ ಉಸುರಿಲ್ಲದುದು ಹುಲಿ ಕೆರಳಿತು ಹೂ ಅರಳಿತು ರಾಜು ದಣಿದ ಕಟ್ಟಿಗೆ ಉರಿಯಿತು ಮುದುಕ ರೇಗಿದ ಹಿಟ್ಟು ಹಳಸಿತು ಕರು ಬದುಕಿತು ಹಾಲು ಉಕ್ಕಿತು ಎಮ್ಮೆ ಸೊರಗಿತು ಹಣ್ಣು ಕೊಳೆಯಿತು ಆತ ಹಿಗ್ಗಿದ ಗಿಡ ಚಿಗುರಿತು ದನ ಹಸಿದಿದೆ ಹಣ ಮಿಕ್ಕಿದೆ ಹುಡುಗ ದಣಿದ ನೀರು ಚೆಲ್ಲಿತು ಇದಕ್ಕೆ ಬದಲು, ಎಲ್ಲಾ ಬಗೆಯ ಮಾಡುಹಗಳೊಂದಿಗೂ ಮಾಡುಗ ಪಾಂಗಾಗಿ ಒಂದು ಉಸುರಿ ಮಾತ್ರ ಬರಬಲ್ಲುದು. ಈ ಕಟ್ಟಲೆಗಿರುವ ಹೊರಪಡಿಕೆಗಳೆಂದರೆ, ಕಾರು ಓಡಿತು, ಮರ ಮುದುಕಿಗೆ ನೆರಳು ನೀಡಿತು, ಗುಡುಗು ಹುಡುಗನನ್ನು ಹೆದರಿಸಿತು ಎಂಬಂತಹ ಉಸುರಿಲ್ಲದ ಪಾಂಗುಗಳ ಮೇಲೆ ಉಸುರಿತನವನ್ನು ಹೊರಿಸಿರುವಂತಹ ಸೊಲ್ಲುಗಳು ಮಾತ್ರ. ಕೆಲವು ಎಸಕಪದಗಳನ್ನು ಆಗುಹಗಳಾಗಿಯೂ ಬಳಸಬಹುದು, ಇಲ್ಲವೇ ಮಾಡುಹಗಳಾಗಿಯೂ ಬಳಸಬಹುದು; ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (2ಕ) ನೆಲ ತಗ್ಗಿತು. (2ಚ) ಅವನು ತಗ್ಗಿದ. (3ಕ) ತಲೆ ತಿರುಗಿತು.
(3ಚ) ಅವನು ತಿರುಗಿದ. (4ಕ) ಸಿಟ್ಟು ಅಡಗಿತು. (4ಚ) ಅವನು ಅಡಗಿದ. ಮೇಲೆ (ಕ) ಸೊಲ್ಲುಗಳಲ್ಲಿ ತಗ್ಗು, ತಿರುಗು ಮತ್ತು ಅಡಗು ಎಸಕಪದಗಳನ್ನು ಆಗುಹಗಳನ್ನಾಗಿ ಬಳಸಲಾಗಿದೆ, ಮತ್ತು ಅವನ್ನೇ (ಚ) ಸೊಲ್ಲುಗಳಲ್ಲಿ ಮಾಡುಹಗಳನ್ನಾಗಿ ಬಳಸಲಾಗಿದೆ. ಆದರೆ, ಎಲ್ಲಾ ಆಗುಹಗಳನ್ನೂ ಈ ರೀತಿ ಮಾಡುಹಗಳನ್ನಾಗಿ ಬಳಸಲು ಬರುವುದಿಲ್ಲ; ಎತ್ತುಗೆಗಾಗಿ, ಉಸುರಿಗಳನ್ನು ಆಗುಗಳಾಗಿ ಪಡೆಯುವ ಸಾಯು, ಸೊಕ್ಕು, ದಣಿ, ಕೊಬ್ಬು ಮೊದಲಾದ ಪದಗಳು, ಮತ್ತು ಉಸುರಿಲ್ಲದವುಗಳನ್ನು ಆಗುಗಗಳಾಗಿ ಪಡೆಯುವ ಕೊಳೆ, ಚಿಗುರು, ಬಿರಿ, ಕುದುರು, ಆರು, ಹರಿ ಮೊದಲಾದ ಪದಗಳು ಆಗುಹಗಳಾಗಿ ಮಾತ್ರ ಬರಬಲ್ಲುವಲ್ಲದೆ ಮಾಡುಹಗಳಾಗಿ ಬರಲಾರವು. 7.3.1. ಮಾಡುಹ ಪದಗಳ ಪಾಂಗಿಟ್ಟಳಗಳು ಮಾಡುಹಗಳಲ್ಲಿ ಮಾಡುಗ ಮಾತ್ರವೇ ಬಂದಿರಬಹುದು, ಇಲ್ಲವೇ ಅದರೊಂದಿಗೆ ಈಡು, ಗುರಿ, ಸುರು, ಮತ್ತು ಜಾಗ ಎಂಬ ನಾಲ್ಕು ಪಾಂಗುಗಳಲ್ಲೊಂದು (ಇಲ್ಲವೇ ಎರಡು) ಬಂದಿರಬಹುದು; ಇವುಗಳಲ್ಲಿ ಮಾಡುಗದೊಂದಿಗೆ ಈಡು ಬಂದಿದೆಯೋ ಇಲ್ಲವೋ ಎಂಬ ವಿಶಯ ಮುಕ್ಯವಾದುದು; ಅದನ್ನವಲಂಬಿಸಿ ಮಾಡುಹಗಳನ್ನು ಈಡಿರುವವು ಮತ್ತು ಈಡಿಲ್ಲದವು ಎಂಬುದಾಗಿ ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ. ಎತ್ತುಗೆಗಾಗಿ, ಕುಡಿ, ಅಗಿ, ತಿನ್ನು, ತೊಳೆ, ಬರೆ, ಹೊಗಳು, ತೊಳೆ, ರುಬ್ಬು, ಮಾಡು, ಕೊಲ್ಲು, ಓದು, ಆಡು ಮೊದಲಾದ ಎಸಕಪದಗಳು ಯಾವುದಾದರೊಂದು ಈಡಿನೊಂದಿಗೆ ಬರುತ್ತಿದ್ದು, ಈಡಿರುವ ಮಾಡುಹಗಳಾಗಿವೆ: (1ಕ) ಅವನು ನೀರು ಕುಡಿದ. (1ಚ) ಆತ ನನ್ನನ್ನು ಹೊಗಳಿದ. (1ಟ) ಆತ ಹಿಟ್ಟು ರುಬ್ಬುತ್ತಿದ್ದಾನೆ. (1ತ) ಅವನು ಬಟ್ಟೆ ಒಗೆದ. ಇದಕ್ಕೆ ಬದಲು, ಕುಣಿ, ಓಡು, ನಲಿ, ಕುಂಟು, ಚೀರು, ಅರಚು, ಬೊಗಳು, ಹಾರು, ಕೊರಗು, ದುಡುಕು, ಹೆಣಗು ಮೊದಲಾದ ಎಸಕಪದಗಳು ಈಡಿಲ್ಲದ ಮಾಡುಹಗಳಾಗಿವೆ: (2ಕ) ಹುಡುಗ ಓಡಿದ. (2ಚ) ಆತ ಕುಂಟುತ್ತಿದ್ದಾನೆ. (2ಟ) ನಾಯಿ ಬೊಗಳುತ್ತಿದೆ. (2ತ) ಅವನು ಕೊರಗುತ್ತಿದ್ದಾನೆ. ಈಡಿಲ್ಲದ ಕೆಲವು ಮಾಡುಹಗಳೊಂದಿಗೆ ಆ ಮಾಡುಹ ಪದಗಳ ರೂಪದಲ್ಲೇ ಇರುವ ಹೆಸರುಪದಗಳನ್ನು ಈಡು ಪಾಂಗುಗಳಾಗಿ ಬಳಸಲು ಬರುತ್ತದೆ; ಹಾಡು ಹಾಡಿದ, ತೇಗು ತೇಗಿದ, ನಗು ನಕ್ಕ, ಗುದ್ದು ಗುದ್ದಿದ ಎಂಬಂತಹ ಬಳಕೆಗಳಲ್ಲಿ ಇದನ್ನು ಕಾಣಬಹುದು. ಆದರೆ ಈ ಈಡು ಪಾಂಗುಗಳು ಹೆಚ್ಚಿನ ಹುರುಳನ್ನೇನೂ ಕೊಡುವುದಿಲ್ಲ. ಬೇರೆ ಹಲವು ಹೆಸರುಪದಗಳು ರೂಪದಲ್ಲಿ ಮಾಡುಹ ಪದಗಳ ಹಾಗೆಯೇ ಇವೆಯಾದರೂ, ಅವನ್ನು ಈ ರೀತಿ ಈಡು ಪಾಂಗುಗಳಾಗಿ ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, *ಕೊರಗು ಕೊರಗಿದ, *ಅಳು ಅತ್ತ, *ಹಿಗ್ಗು ಹಿಗ್ಗಿದ ಮೊದಲಾದ ಇಂತಹವೇ ಬೇರೆ ಇಟ್ಟಳಗಳು ಬಳಕೆಯಲ್ಲಿರುವ ಹಾಗೆ ಕಾಣಿಸುವುದಿಲ್ಲ.
ಈಡಿರುವ ಮತ್ತು ಈಡಿಲ್ಲದ ಮಾಡುಹಗಳೆಂಬ ಈ ಎರಡು ಬಗೆಯ ಎಸಕಪದ ಗಳೊಂದಿಗೂ ಗುರಿ, ಸುರು ಇಲ್ಲವೇ ಜಾಗ ಪಾಂಗುಗಳನ್ನು ಇಟ್ಟಳದ ಪಾಂಗುಗಳಾಗಿ ಬಳಸಲು ಬರುತ್ತದೆ, ಮತ್ತು ಇದನ್ನವಲಂಬಿಸಿ, ಈ ಎರಡು ಬಗೆಯ ಎಸಕಪದಗಳನ್ನು ಮೂರು ಹೆಚ್ಚಿನ ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ. ಎತ್ತುಗೆಗಾಗಿ, ಕೊಡು, ಹಂಚು, ಮಾರು, ಹಚ್ಚು ಮೊದಲಾದ ಎಸಕಪದ ಗಳೊಂದಿಗೆ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರವಲ್ಲದೆ, ಒಂದು ಗುರಿ ಪಾಂಗೂ ಇಟ್ಟಳದ ಪಾಂಗಾಗಿ ಬರುತ್ತದೆ: (3ಕ) ಅವನು ಮಗುವಿಗೆ ಒಂದು ಗೊಂಬೆ ಕೊಟ್ಟ. (3ಚ) ಅವನು ನನಗೆ ಒಂದು ಪುಸ್ತಕ ಮಾರಿದ. (3ಟ) ರಾಜು ಮಕ್ಕಳಿಗೆ ಸಿಹಿ ಹಂಚಿದ. ಕಸಿ, ತೆಗೆ, ಹೆಕ್ಕು, ಬೇಡು, ಸೇದು ಮೊದಲಾದ ಎಸಕಪದಗಳೊಂದಿಗೆ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರವಲ್ಲದೆ ಒಂದು ಸುರು ಪಾಂಗೂ ಇಟ್ಟಳದ ಪಾಂಗಾಗಿ ಬರುತ್ತದೆ: (4ಕ) ಅವನು ನನ್ನಿಂದ ಹಣ ಕಸಿದ. (4ಚ) ಅವನು ತೋಡಿನಿಂದ ನೀರು ಮೊಗೆದ. (4ಟ) ಆಕೆ ಬಾವಿಯಿಂದ ನೀರು ಸೇದಿದಳು. ಇಡು, ನಡು, ಅದ್ದು, ಹಾಕು, ಹೇರು, ತುಂಬು ಮೊದಲಾದ ಎಸಕಪದ ಗಳೊಂದಿಗೆ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರವಲ್ಲದೆ, ಒಂದು ಜಾಗ ಪಾಂಗೂ ಇಟ್ಟಳದ ಪಾಂಗಾಗಿ ಬರುತ್ತದೆ: (5ಕ) ಅವನು ಅಂಗಳದಲ್ಲಿ ಒಂದು ಗಿಡ ನಟ್ಟ. (5ಚ) ಆಕೆ ಹಾರವನ್ನು ಕಪಾಟಿನಲ್ಲಿ ಇಟ್ಟಳು. (5ಟ) ಆತ ಪುಸ್ತಕಗಳನ್ನು ಗಾಡಿಯಲ್ಲಿ ಹೇರಿದ. (5ತ) ಅವನು ಅಡಿಕೆ ಚೀಲಗಳನ್ನು ಗಾಡಿಯಲ್ಲಿ ತುಂಬಿದ. ಇದೇ ರೀತಿಯಲ್ಲಿ, ಈಡಿಲ್ಲದ ಎಸಕಪದಗಳಲ್ಲೂ ಗುರಿ, ಸುರು ಇಲ್ಲವೇ ಜಾಗಗಳಲ್ಲಿ ಒಂದು ಇಟ್ಟಳದ ಪಾಂಗಾಗಿ ಬರಬಲ್ಲುದು. ಎತ್ತುಗೆಗಾಗಿ, ಹೊಡೆ, ಗುದ್ದು, ಒದೆ, ಹೋಗು, ದುಮುಕು, ತೂರು, ಹತ್ತು, ಮೊದಲಾದ ಎಸಕಪದ ಗಳೊಂದಿಗೆ ಮಾಡುಗ ಪಾಂಗು ಮಾತ್ರವಲ್ಲದೆ ಗುರಿ ಪಾಂಗನ್ನು ತಿಳಿಸುವ ಒಂದು ಹೆಸರುಪದ ಇಲ್ಲವೇ ಪದಕಂತೆಯೂ ಇಟ್ಟಳದ ಪಾಂಗಾಗಿ ಬರುತ್ತದೆ: (6ಕ) ಅವನು ನನಗೆ ಹೊಡೆದ. (6ಚ) ಹುಡುಗ ಮರಕ್ಕೆ ಹತ್ತಿದ. (6ಟ) ಮಕ್ಕಳು ಮನೆಗೆ ಹೋದರು. ಬರು, ಸರಿ, ತೊಲೆ, ತೊಲಗು ಮೊದಲಾದ ಬೇರೆ ಕೆಲವು ಎಸಕಪದ ಗಳೊಂದಿಗೆ ಮಾಡುಗ ಪಾಂಗು ಮಾತ್ರವಲ್ಲದೆ ಒಂದು ಸುರು ಪಾಂಗುವೂ ಇಟ್ಟಳದ ಪಾಂಗಾಗಿ ಬರುತ್ತದೆ: (7ಕ) ಅವನು ದಾರಿಯಿಂದ ಸರಿದ. (7ಚ) ಅವನು ಅಲ್ಲಿಂದ ತೊಲಗಿದ.
(7ಟ) ಆತ ಪೇಟೆಯಿಂದ ಬಂದ. ಗೀಚು, ಬರೆ, ಪರಡು, ಮಲಗು, ಉಳಿ, ಈಜು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಮಾಡುಗ ಪಾಂಗು ಮಾತ್ರವಲ್ಲದೆ ಒಂದು ಜಾಗ ಪಾಂಗುವೂ ಇಟ್ಟಳದ ಪಾಂಗಾಗಿ ಬರುತ್ತದೆ: (8ಕ) ಅವನು ಕತ್ತಲಲ್ಲಿ ಪರಡಿದ. (8ಚ) ಆಕೆ ಹೊಳೆಯಲ್ಲಿ ಈಜಿದಳು. (8ಟ) ಅವನು ಮನೆಯಲ್ಲಿ ಉಳಿದ. ಎಸಕಪದಗಳೊಂದಿಗೆ ಬರುವ ಈ ಪಾಂಗುಗಳಲ್ಲಿ ಆಗುಗ ಮತ್ತು ಮಾಡುಗಗಳು ಯಾವ ಪತ್ತುಗೆಯ ಒಟ್ಟೂ ಇಲ್ಲದೆ ಬರುತ್ತವೆ, ಮತ್ತು ಉಳಿದ ಪಾಂಗುಗಳಲ್ಲಿ ಈಡು ಪಾಂಗು ಅನ್ನು ಒಟ್ಟಿನೊಂದಿಗೆ, ಸುರು ಪಾಂಗು ಇಂದ ಒಟ್ಟಿನೊಂದಿಗೆ, ಗುರಿ ಪಾಂಗು ಇಗೆ ಒಟ್ಟಿನೊಂದಿಗೆ, ಮತ್ತು ಜಾಗ ಪಾಂಗು ಅಲ್ಲಿ ಒಟ್ಟಿನೊಂದಿಗೆ ಬರುತ್ತವೆ. ಇವುಗಳಲ್ಲಿ ಈಡು ಪಾಂಗನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳು ಮನುಶ್ಯರನ್ನು ಹೊರತುಪಡಿಸಿ ಇತರ ಪ್ರಾಣಿ, ವಸ್ತು, ವಿಶಯ ಮೊದಲಾದವುಗಳನ್ನು ಗುರುತಿಸುವುದಿದ್ದಲ್ಲಿ, ಅವುಗಳ ಬಳಿಕ ಅನ್ನು ಒಟ್ಟನ್ನು ಬಳಸದಿರಲೂ ಬರುತ್ತದೆ; ಇದನ್ನು ಮೇಲೆ ಕೊಟ್ಟಿರುವ ಗೊಂಬೆ (3ಕ), ಪುಸ್ತಕ (3ಚ), ಸಿಹಿ (3ಟ), ಹಣ (4ಕ), ನೀರು (4ಚ-ಟ) ಮೊದಲಾದ ಉಸಿರಿಲ್ಲದವುಗಳನ್ನು ಗುರುತಿಸುವ ಹೆಸರುಪದಗಳ ಬಳಕೆಯಲ್ಲಿ, ಮತ್ತು ಕೆಳಗೆ ಕೊಟ್ಟಿರುವ ಎಮ್ಮೆ ಮತ್ತು ಎತ್ತು ಪದಗಳ ಬಳಕೆಯಲ್ಲಿ ಕಾಣಬಹುದು. (9ಕ) ಅವನೊಂದು ಎಮ್ಮೆ ಸಾಕಿದ್ದಾನೆ. (9ಚ) ಅವನು ನೇಗಿಲಿಗೆ ಎತ್ತು ಹೂಡಿದ. ಈಡನ್ನು ಗುರುತಿಸುವ ಪದಗಳು ಎಸಕಪದಗಳ ಮೊದಲು ಅವುಗಳ ಪಕ್ಕವೇ ಬರುತ್ತಿವೆಯಾದರೆ, ಮತ್ತು ಉಸುರಿಲ್ಲದವುಗಳನ್ನು ಗುರುತಿಸುತ್ತಿವೆಯಾದರೆ, ಅವನ್ನು ಸಾಮಾನ್ಯವಾಗಿ ಈ ರೀತಿ ಅನ್ನು ಒಟ್ಟನ್ನು ಸೇರಿಸದೆಯೇ ಬಳಸಲಾಗುತ್ತದೆ. ಆದರೆ, ಬೇರೆ ಕಡೆಗಳಲ್ಲಿ ಬಂದಾಗ, ಇಲ್ಲವೇ ಅವುಗಳ ಬಳಿಕ ಬೇರೆ ಒಟ್ಟುಗಳು ಬಂದಾಗ, ಅನ್ನು ಒಟ್ಟನ್ನು ಬಳಸದಿರಲು ಬರುವುದಿಲ್ಲ. ಇದಕ್ಕೆ ಕೆಲವು ಎತ್ತುಗೆ ಗಳನ್ನು ಕೆಳಗೆ ಕೊಡಲಾಗಿದೆ: (ಕ) ಎಸಕಪದದ ಮೊದಲು ಅವುಗಳ ಪಕ್ಕವೇ ಬಂದಿರುವಲ್ಲಿ: (10ಕ) ಅವನು ಒಂದು ಹಣ್ಣು ತಿಂದ. (10ಚ) ಅವನು ಮಗುವಿಗೆ ಒಂದು ಗೊಂಬೆ ಕೊಟ್ಟ. (ಚ) ಬೇರೆ ಕಡೆಗಳಲ್ಲಿ: (11ಕ) ಅವನು ಹಣ್ಣನ್ನು ನೆಲಕ್ಕೆಸೆದ. (11ಚ) ಅವನು ಮನೆಯನ್ನು ನನಗೆ ಹತ್ತು ಸಾವಿರಕ್ಕೆ ಮಾರಿದ. (11ಟ) ಈ ಮನೆಯನ್ನು ಅವನು ಮೂರು ದಿನದಲ್ಲಿ ಕಟ್ಟಿಸಿದ. (ಟ) ಅವುಗಳ ಬಳಿಕ ಬೇರೆ ಒಟ್ಟುಗಳು ಬಂದಿರುವಲ್ಲಿ: (12ಕ) ನಾನು ಅವನಿಗೆ ಒಂದು ಹಣ್ಣನ್ನೂ ಕೊಟ್ಟೆ.
(12ಚ) ಅವನು ತನ್ನ ಮನೆಯನ್ನೇ ಮಾರುತ್ತಿದ್ದಾನೆ. (12ಟ) ಅವನು ಹುಡುಗಿಗೆ ಒಂದು ಪುಸ್ತಕವನ್ನೋ ಗೊಂಬೆಯನ್ನೋ ಕೊಟ್ಟಿದ್ದ. (ತ) ಇದಲ್ಲದೆ, ಇಂತಹ ಪದಗಳ ಬಳಿಕ ಹಲವೆಣಿಕೆಯ ಗಳು ಒಟ್ಟು ಬಂದಿರು ವಲ್ಲಿ ಅನ್ನು ಒಟ್ಟನ್ನು ಬಳಸದಿರಲು ಬರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಗಳು ಒಟ್ಟಿನ ಬಳಿಕ ಅನ್ನು ಒಟ್ಟನ್ನು ಬಳಸದಿರುವ (13ಚ) ಸೊಲ್ಲು ಸರಿಯಾಗಿಲ್ಲ: ಆದರೆ, ಅನ್ನು ಒಟ್ಟಿನೊಂದಿಗೆ ಹಲವೆಣಿಕೆಯ ಗಳು ಒಟ್ಟನ್ನೂ ಬಳಸದಿರುವ (13ಟ) ಸೊಲ್ಲು ಸರಿಯಾಗಿದೆ. (13ಕ) ಅವನು ಮೂರು ಮನೆಗಳನ್ನು ಕಟ್ಟಿಸಿದ್ದಾನೆ. (13ಚ) *ಅವನು ಮೂರು ಮನೆಗಳ ಕಟ್ಟಿಸಿದ್ದಾನೆ. (13ಟ) ಅವನು ಮೂರು ಮನೆ ಕಟ್ಟಿಸಿದ್ದಾನೆ. ಈಡು ಪಾಂಗನ್ನು ತಿಳಿಸುವ ಪದ ಮನುಶ್ಯರನ್ನು ಗುರುತಿಸುವುದಿದ್ದಲ್ಲಿ ಅದರ ಬಳಿಕ ಅನ್ನು ಒಟ್ಟನ್ನು ಬಳಸದಿರಲು ಬರುವುದಿಲ್ಲ. (14ಕ) ಅವನು ಕಳ್ಳನನ್ನು ನಂಬಿದ. (14ಚ) *ಅವನು ಕಳ್ಳ ನಂಬಿದ. (14ಟ) ಅವನು ಕಳ್ಳನನ್ನೂ ನಂಬಿದ. ಮೇಲಿನ (14ಕ-ಟ) ಸೊಲ್ಲುಗಳಲ್ಲಿ ಮನುಶ್ಯರನ್ನು ಗುರುತಿಸುವ ಮಾಡುಗ ಮತ್ತು ಈಡು ಪಾಂಗುಗಳು ಬಂದಿದ್ದು, ಈಡು ಪಾಂಗನ್ನು ಗುರುತಿಸುವ ಪದವನ್ನು ಅನ್ನು ಒಟ್ಟಿಲ್ಲದೆ ಬಳಸಿರುವ (14ಚ) ಸೊಲ್ಲು ಸರಿಯಾಗಿಲ್ಲ. ಈ ರೀತಿ ಎರಡು ಪಾಂಗುಗಳೂ ಮನುಶ್ಯರನ್ನೇ ಗುರುತಿಸುತ್ತಿರುವಲ್ಲಿ, ಅನ್ನು ಒಟ್ಟಿನ ನೆರವಿಲ್ಲದೆ ಮಾಡುಗ ಯಾವುದು, ಮತ್ತು ಈಡು ಯಾವುದು ಎಂಬುದನ್ನು ತೀರ್ಮಾನಿಸಲು ಬರುವುದಿಲ್ಲವೆಂಬುದೇ ಅದನ್ನು ಬಿಟ್ಟುಕೊಡದಿರುವುದಕ್ಕೆ ಕಾರಣ ವಿರಬೇಕು. ಮಾಡುಗ ಮತ್ತು ಈಡು ಪಾಂಗುಗಳೆರಡೂ ಮನುಶ್ಯರಲ್ಲದ ಬೇರೆ ಉಸಿರಿಗಳನ್ನು ಗುರಿತಿಸುತ್ತಿರುವಲ್ಲೂ ಅನ್ನು ಒಟ್ಟನ್ನು ಬಳಸದಿರಲು ಬರುವುದಿಲ್ಲ: (15ಕ) ಬೆಕ್ಕು ನಾಯಿಯನ್ನು ಓಡಿಸಿತು. (15ಚ) *ಬೆಕ್ಕು ನಾಯಿ ಓಡಿಸಿತು. ಗುರಿ ಪಾಂಗನ್ನು ತಿಳಿಸುವ ಪದಗಳ ಬಳಿಕ ಬರುವ ಇಗೆ ಒಟ್ಟಿಗೆ ಗೆ, ಇಗೆ ಮತ್ತು ಕ್ಕೆ ಎಂಬ ಮೂರು ರೂಪಗಳಿವೆ: (ಕ) ಇಕಾರ ಮತ್ತು ಎಕಾರಗಳಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಇದಕ್ಕೆ ಗೆ ರೂಪ ಇದೆ (ಅಜ್ಜಿಗೆ, ಕನ್ನಡಿಗೆ, ಕಾಗೆಗೆ, (ಚ) ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಮತ್ತು ಜನರನ್ನು ಗುರುತಿಸು ತ್ತಿದ್ದು ಅಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಇಗೆ ರೂಪ ಇದೆ (ಹೆಣ್ಣಿಗೆ, ಬೆನ್ನಿಗೆ, ಮಗುವಿಗೆ; ಅಣ್ಣನಿಗೆ, ಅಕ್ಕನಿಗೆ); ಮತ್ತು (ಟ) ಉಳಿದ ಅಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಕ್ಕೆ ರೂಪ ಇದೆ (ಮರಕ್ಕೆ, ಊಟಕ್ಕೆ, ಬೇಸರಕ್ಕೆ); ಇವುಗಳ ಕುರಿತು ಹೆಚ್ಚಿನ ವಿವರಗಳನ್ನು (4.8.2)ರಲ್ಲಿ ಕೊಡಲಾಗಿದೆ.
7.3.2 ಆಗುಹ ಪದಗಳ ಪಾಂಗಿಟ್ಟಳಗಳು
ಮಾಡುಹಗಳಲ್ಲಿರುವಶ್ಟು ಪಾಂಗಿಟ್ಟಳದ ಬಗೆಗಳು ಆಗುಹಗಳಲ್ಲಿಲ್ಲ; ಅವುಗಳಲ್ಲಿ ಸಾಮಾನ್ಯವಾಗಿ ಆಗುಗದೊಂದಿಗೆ ಈಡು, ಸುರು, ಗುರಿ ಮತ್ತು ಜಾಗ ಎಂಬವುಗಳಲ್ಲಿ ಯಾವುದಾದರೂ ಒಂದು ಮಾತ್ರ ಬಂದಿರುತ್ತದೆ: ಎತ್ತುಗೆಗಾಗಿ, ಮರೆ, ತಿಳಿ, ಪಡೆ, ಕಾಣು, ಮೀರು, ಹೋಲು ಮೊದಲಾದ ಎಸಕಪದಗಳೊಂದಿಗೆ ಇಟ್ಟಳದ ಪಾಂಗುಗಳಾಗಿ ಆಗುಗ ಮತ್ತು ಈಡು ಪಾಂಗುಗಳು ಬರುತ್ತವೆ: (1ಕ) ಅವನು ಕತೆ ಮರೆತ. (1ಚ) ಆತ ಇಬ್ಬರು ಮಕ್ಕಳನ್ನು ಪಡೆದ. (1ಟ) ಅವನು ತನ್ನ ತಂದೆಯನ್ನು ಹೋಲುತ್ತಾನೆ. ಸಿಗು, ಹೆದರು, ಚುಚ್ಚು, ಸೋಲು, ಬೆದರು, ಒಗ್ಗು, ನೆನೆ ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಇಟ್ಟಳದ ಪಾಂಗುಗಳಾಗಿ ಆಗುಗ ಮತ್ತು ಗುರಿ ಪಾಂಗುಗಳು ಬರುತ್ತವೆ: (2ಕ) ಅವನಿಗೆ ಹಣ ಸಿಕ್ಕಿತು. (2ಚ) ಅವನು ಹುಲಿಗೆ ಹೆದರಿದ. (2ಟ) ಕಾಲಿಗೆ ಮುಳ್ಳು ಚುಚ್ಚಿತು. ಉದುರು, ಸೋರು, ಸುರಿ, ನರಳು, ಚೆಲ್ಲು, ಪೀಕು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಇಟ್ಟಳದ ಪಾಂಗುಗಳಾಗಿ ಆಗುಗ ಮತ್ತು ಸುರುಗಳು ಬರುತ್ತವೆ: (3ಕ) ಮರದಿಂದ ಹಣ್ಣು ಉದುರಿತು. (3ಚ) ಮಾಡಿನಿಂದ ನೀರು ಸೋರುತ್ತಿದೆ. (3ಟ) ಗೋಣಿಯಿಂದ ಅಕ್ಕಿ ಸುರಿಯಿತು. ಉಳಿ, ಮೂಡು, ಕರಗು, ಪಳಗು, ಜಿನುಗು, ತೇಲು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಇಟ್ಟಳದ ಪಾಂಗುಗಳಾಗಿ ಆಗುಗ ಮತ್ತು ಜಾಗಗಳು ಬರುತ್ತವೆ. (4ಕ) ಮನೆಯಲ್ಲಿ ಇಬ್ಬರು ಉಳಿದರು. (4ಚ) ನೀರಿನಲ್ಲಿ ಉಪ್ಪು ಕರಗಿತು. (4ಟ) ಅವನು ಕೆಲಸದಲ್ಲಿ ಪಳಗಿದ. ಮೇಲೆ ಕೊಟ್ಟಿರುವ ಮುಕ್ಯವಾದ ಸೊಲ್ಲಿಟ್ಟಳಗಳನ್ನು ಒಟ್ಟುಸೇರಿಸಿ, ಕೆಳಗೆ ಅಡಕವಾಗಿ ಕೊಡಲಾಗಿದೆ: ಮಾಡುಹಗಳ ಸೊಲ್ಲಿಟ್ಟಳಗಳು ಆಗುಹಗಳ ಸೊಲ್ಲಿಟ್ಟಳಗಳು 1. ಮಾಡುಗ ಮಾತ್ರ 1. ಆಗುಗ ಮಾತ್ರ 2. ಮಾಡುಗ + ಗುರಿ 2. ಆಗುಗ + ಗುರಿ 3. ಮಾಡುಗ + ಸುರು 3. ಆಗುಗ + ಸುರು 4. ಮಾಡುಗ + ಜಾಗ 4. ಆಗುಗ + ಜಾಗ 5. ಮಾಡುಗ + ಈಡು 5. ಆಗುಗ + ಈಡು
- ಮಾಡುಗ + ಈಡು + ಗುರಿ 7. ಮಾಡುಗ + ಈಡು + ಸುರು 8. ಮಾಡುಗ + ಈಡು + ಜಾಗ
6.3.3 ಬೇರೆ ಬಗೆಯ ಪಾಂಗಿಟ್ಟಳಗಳು
ಹೆಚ್ಚಿನ ಎಸಕಪದಗಳೂ ಮೇಲೆ ವಿವರಿಸಿದಂತಹ ಹದಿಮೂರು ಪಾಂಗಿಟ್ಟಳಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುತ್ತವೆ; ಆದರೆ, ಇದಕ್ಕೆ ಕೆಲವು ಹೊರಪಡಿಕೆ ಗಳೂ ಇವೆ. (1) ಇಟ್ಟಳದ ಪಾಂಗಿಲ್ಲದೆ ಬಳಕೆಯಾಗುವ ಎಸಕಪದಗಳು ಗುಡುಗು ಮತ್ತು ಮಿಂಚು ಎಂಬ ಎರಡು ಎಸಕಪದಗಳು ಇಟ್ಟಳದ ಪಾಂಗಿಲ್ಲದೆ ಬಳಕೆಯಾಗುವ ಹಾಗೆ ತೋರುತ್ತದೆ; ಅವುಗಳೊಂದಿಗೆ ನೆರವು ಪಾಂಗುಗಳು ಬರಬಲ್ಲುವಾದರೂ, ಯಾವುದೇ ಒಂದು ಪಾಂಗು ಬರಲೇಬೇಕೆಂದಿಲ್ಲ: (1ಕ) ನಿನ್ನೆ ಜೋರಾಗಿ ಗುಡುಗುತ್ತಿತ್ತು. (1ಚ) ಜೋರಾಗಿ ಮಿಂಚುತ್ತಿದೆ. (1ಕ)ದಲ್ಲಿ ಗುಡುಗು ಎಸಕಪದದೊಂದಿಗೆ ನಿನ್ನೆ ಎಂಬ ಹೊತ್ತಿನ ನೆರವು ಪಾಂಗು ಮತ್ತು ಜೋರಾಗಿ ಎಂಬ ಪರಿಚೆ ನುಡಿತ ಬಂದಿದ್ದು, ಯಾವ ಇಟ್ಟಳದ ಪಾಂಗೂ ಬಂದಿಲ್ಲ ಎಂಬುದನ್ನು ಗಮನಿಸಬಹುದು; (1ಚ)ದಲ್ಲೂ ಮಿಂಚು ಎಸಕ ಪದದೊಂದಿಗೆ ಜೋರಾಗಿ ಎಂಬ ಪರಿಚೆ ನುಡಿತ ಮಾತ್ರ ಬಂದಿದೆ. ಆದರೆ, ಗುಡುಗು ಮತ್ತು ಮಿಂಚು ಎಂಬ ಹೆಸರುಪದಗಳೂ ಅವುಗಳೊಂದಿಗೆ ಬರಬಲ್ಲುವಾಗಿದ್ದು, ಅವನ್ನು ಈ ಎಸಕಪದಗಳ ಆಗುಗ ಪಾಂಗುಗಳೆಂದೂ ತಿಳಿಯಲು ಬರುತ್ತದೆ; ಆದರೆ ಅವು ಹೆಚ್ಚಿನ ಹುರುಳನ್ನೇನೂ ಕೊಡುವುದಿಲ್ಲವಾದ ಕಾರಣ, ಅವನ್ನು ಬಳಸದಿರಲೂ ಬರುತ್ತದೆ. (2ಕ) ಗುಡುಗು ಗುಡುಗಿತು. (2ಚ) ಮಿಂಚು ಮಿಂಚಿತು. (2) ಹಲವೆಣಿಕೆಯ ಪಾಂಗನ್ನು ಬಯಸುವ ಎಸಕಪದಗಳು ಚದರು, ಸೇರು, ಕಲೆ, ಮುತ್ತು, ಮುಸುಕು, ಕಾದು, ಕೂಡು, ಒಟ್ಟು ಮೊದಲಾದ ಕೆಲವು ಎಸಕಪದಗಳೊಂದಿಗೆ ಒಂದು ಹಲವೆಣಿಕೆಯ ಪಾಂಗು ಬರಬೇಕಾಗುತ್ತದೆ: (1ಕ) ಜನರು ಚದರಿದರು. (1ಚ) ಅವರಿಬ್ಬರು ಕಾದುತ್ತಿದ್ದರು. (1ಟ) ಅವನು ಕಟ್ಟಿಗೆಗಳನ್ನು ಅಂಗಳದ ಮೂಲೆಯಲ್ಲಿ ಒಟ್ಟಿದ್ದ. (1ಕ-ಚ)ಗಳಲ್ಲಿ ಕಾಣಿಸಿದ ಹಾಗೆ, ಚದರು ಮತ್ತು ಕಾದು ಪದಗಳೊಂದಿಗೆ ಹಲವೆಣಿಕೆಯ ಮಾಡುಗ ಪಾಂಗು ಬರಬೇಕಾಗುತ್ತದೆ, ಮತ್ತು (1ಟ)ದಲ್ಲಿ ಕಾಣಿಸಿದ ಹಾಗೆ, ಒಟ್ಟು ಪದದೊಂದಿಗೆ ಹಲವೆಣಿಕೆಯ ಈಡು ಪಾಂಗು ಬರಬೇಕಾಗುತ್ತದೆ. ಇವುಗಳಲ್ಲಿ ಸೇರು, ಕಾದು ಎಂಬಂತಹ ಕೆಲವು ಎಸಕಪದಗಳನ್ನು ಒಂದಿಗೆ ಇಲ್ಲವೇ ಒಡನೆ ಎಂಬ ಪದಗಳು ಗುರುತಿಸುವ ಒಡನಾಡಿ ಪಾಂಗನ್ನು ಬಳಸಿದಲ್ಲಿ, ಆಗುಗ+ಒಡನಾಡಿ ಪಾಂಗಿಟ್ಟಳ ಬರಬಲ್ಲುದಾಗಿದ್ದು, ಅವುಗಳ ಆಗುಗ ಓರೆಣಿಕೆಯದಾಗಬಲ್ಲುದು:
(1ತ) ಅವನು ನನ್ನೊಂದಿಗೆ ಕಾದಿದ. (1ಪ) ಅವನು ನನ್ನೊಡನೆ ಸೇರಿದ. (3) ಮೇಲಿನ ಹಂತದ ಪಾಂಗುಗಳನ್ನು ಬಯಸುವ ಎಸಕಪದಗಳು ಜರಗು, ಎಸಗು, ಈಸು, ಪಳಗು ಮೊದಲಾದ ಕೆಲವು ಎಸಕಪದಗಳೊಂದಿಗೆ ಎರಡನೇ ಹಂತದ ಇಲ್ಲವೇ ಅದಕ್ಕಿಂತ ಮೇಲಿನ ಹಂತದ ಪಾಂಗೊಂದು ಬರಬೇಕಾಗುತ್ತದೆ: (1ಕ) ಅವರಲ್ಲಿ ಇವತ್ತೊಂದು ಮದುವೆ ಜರಗಿತು. (1ಚ) ಅವನೊಂದು ಕೆಲಸವನ್ನು ಎಸಗಿದ. (1ಟ) ಹುಡುಗ ಈ ಕೆಲಸದಲ್ಲಿ ಇನ್ನೂ ಪಳಗಿಲ್ಲ. (1ಕ)ದಲ್ಲಿ ಜರಗು ಎಸಕಪದದೊಂದಿಗೆ ಆಗುಗ ಪಾಂಗಾಗಿ ಮದುವೆ ಎಂಬ ಎರಡನೇ ಹಂತದ ಪಾಂಗು ಬಂದಿದೆ; ಮೊದಲನೇ ಹಂತದ ಮನೆ, ಮರ, ಕಲ್ಲು ಎಂಬಂತಹ ಪದಗಳನ್ನು ಈ ಎಸಕಪದದೊಂದಿಗೆ ಬಳಸಲು ಬರುವುದಿಲ್ಲ. (1ಚ- ಟ)ಗಳಲ್ಲೂ ಹೀಗೆಯೇ. ಇದಲ್ಲದೆ, ಬೇರೆ ಎಸಕಪದಗಳೂ ಎರಡು ಇಲ್ಲವೇ ಮೇಲಿನ ಹಂತದ ಪಾಂಗು ಗಳೊಂದಿಗೆ ಬರುಬಲ್ಲುವು; ಇವು ಎಂತಹ ಪಾಂಗಾಗಿ ಬರಬಲ್ಲುವು ಎಂಬುದು ಎಸಕಪದದ ಹುರುಳನ್ನವಲಂಬಿಸಿದೆ: (2ಕ) ಅವನು ಕೆಲಸ ಮಾಡುವುದನ್ನು ಮುಗಿಸಿದ. (2ಚ) ಅವನು ಕೆಲಸ ಮಾಡುವುದಕ್ಕೆ ಒಪ್ಪಿದ. (2ಟ) ಮಾಡು ಸೋರುವುದು ನಿಂತಿದೆ. (2ತ) ನಾನು ಆತನ ಹೊಗಳುವಿಕೆಯಿಂದ ಹಿಗ್ಗಿದೆ. (2ಪ) ಅವನು ಕೆಲಸ ಮಾಡುವುದರಲ್ಲಿ ಪಳಗಿದ. ಎರಡನೇ ಹಂತದ ಪಾಂಗುಗಳು ಈಡು, ಗುರಿ, ಆಗುಗ, ಸುರು ಮತ್ತು ಜಾಗ ಪಾಂಗುಗಳಾಗಿ ಮೇಲಿನ ಸೊಲ್ಲುಗಳಲ್ಲಿ ಬಳಕೆಯಾಗಿವೆ. (4) ಒಂದಕ್ಕಿಂತ ಹೆಚ್ಚು ಪಾಂಗಿಟ್ಟಳಗಳೊಂದಿಗೆ ಬರುವ ಪದಗಳು ಸಾಮಾನ್ಯವಾಗಿ, ಎಸಕಪದಗಳಿಗೆಲ್ಲ ಅವುಗಳದೇ ಆದ ಒಂದು ಪಾಂಗಿಟ್ಟಳ ಇರು ತ್ತದೆ, ಮತ್ತು ಇದು ಮುಕ್ಯವಾಗಿ ಅವುಗಳ ಹುರುಳುಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ಮೇಲೆ ನೋಡಿರುವೆವು; ಈ ವಿಶಯವನ್ನವಲಂಬಿಸಿ, ಎಸಕಪದಗಳನ್ನು ಬೇರೆ ಬೇರೆ ಪಾಂಗಿಟ್ಟಳಗಳ ಕೆಳಗೆ ಗುಂಪಿಸಲು ಬರುತ್ತದೆ ಎಂಬುದನ್ನೂ ಮೇಲೆ ವಿವರಿಸಲಾಗಿದೆ. ಆದರೆ, ಒಂದಕ್ಕಿಂತ ಹೆಚ್ಚು ಹುರುಳುಗಳನ್ನು ಕೊಡಬಲ್ಲ ಕೆಲವು ಎಸಕಪದಗಳು, ಅವುಗಳ ಹುರುಗಳನ್ನವಲಂಬಿಸಿ, ಒಂದಕ್ಕಿಂತ ಹೆಚ್ಚು ಪಾಂಗಿಟ್ಟಳಗಳೊಂದಿಗೆ ಬರಬಲ್ಲುವು; ನೋಡು, ನಡೆ, ನಿಲ್ಲು ಮೊದಲಾದ ಕೆಲವು ಎಸಕಪದಗಳು ಇಂತಹವು. ಬೇರೆ ಕೆಲವು ಎಸಕಪದಗಳು ಹಲವು ಪಾಂಗಿಟ್ಟಳಗಳಿಗೆ ಹೊಂದಿಕೆಯಾಗ ಬಲ್ಲಂತಹ ಹೆಚ್ಚು ಕಚಿತವಲ್ಲದ ಹುರುಳನ್ನು ಕೊಡುತ್ತಿದ್ದು, ಅವುಗಳೊಂದಿಗೆ ಬರುವ ಪಾಂಗಿಟ್ಟಳಗಳು ಆ ಹುರುಳು ಕಚಿತವಾಗುವಂತೆ ಮಾಡಬಲ್ಲುವು. ಆಗು ಮತ್ತು ಮಾಡು ಎಂಬ ಎಸಕಪದಗಳು ಇಂತಹವು. ಈ ಎರಡು ಬಗೆಯ (ಒಂದಕ್ಕಿಂತ ಹೆಚ್ಚು ಹುರುಳುಗಳಿರುವ ಮತ್ತು ಕಚಿತವಲ್ಲದ ಹುರುಳಿರುವ) ಎಸಕಪದಗಳ ಕುರಿತಾಗಿ ಕೆಲವು ವಿವರಗಳನ್ನು ಕೆಳಗೆ ಕೊಡಲಾಗಿದೆ:
(ಕ) ಒಂದಕ್ಕಿಂತ ಹೆಚ್ಚು ಹುರುಳಿರುವ ಎಸಕಪದಗಳು: (1) ನೋಡು: ಸಾಮಾನ್ಯವಾಗಿ, ನೋಡು ಎಸಕಪದವನ್ನು ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬಳಸಲಾಗುತ್ತದೆ (ಅವನು ಒಂದು ಹಕ್ಕಿಯನ್ನು ನೋಡಿದ); ಆದರೆ, ಅದನ್ನು ಇನ್ನೊಂದು ಹುರುಳಿನಲ್ಲೂ ಬಳಸಲು ಬರುತ್ತದೆ: ಈ ಬಳಕೆಯಲ್ಲಿ ಅದರೊಂದಿಗೆ ಒಂದು ಗುರಿ ಪಾಂಗು ಬರುತ್ತದೆ, ಮತ್ತು ಅದಕ್ಕೆ ಕದಲಿಕೆಯ ಹುರುಳು ದೊರಕುತ್ತದೆ. (1ಕ) ಅವನು ಮರದ ಮೇಲಕ್ಕೆ ನೋಡಿದ. (2ಕ) ಅವನು ಕೋಣೆಯ ಒಳಕ್ಕೆ ನೋಡಿದ. ಆದರೆ, ಈ ಹುರುಳಿನಲ್ಲಿ ಅದರೊಂದಿಗೆ ಮಾಡುಗ ಮತ್ತು ಗುರಿ ಪಾಂಗುಗಳು ಮಾತ್ರ ಬರಬಲ್ಲುವಲ್ಲದೆ, ಈಡು ಪಾಂಗು ಬರಲಾರದು: (1ಚ) *ಅವನು ಮರದ ಮೇಲಕ್ಕೆ ಒಂದು ಹಕ್ಕಿಯನ್ನು ನೋಡಿದ. (2ಚ) *ಅವನು ಕೋಣೆಯ ಒಳಕ್ಕೆ ಒಬ್ಬ ಹುಡುಗನನ್ನು ನೋಡಿದ. ನೋಡು ಪದದೊಂದಿಗೆ ಈಡು ಪಾಂಗನ್ನು ಬಳಸಬೇಕಿದ್ದಲ್ಲಿ, ಅದರೊಂದಿಗೆ ಗುರಿ ಪಾಂಗು ಬರಲಾರದು; ಅದಕ್ಕೆ ಬದಲು, ಒಂದು ಜಾಗ ಪಾಂಗನ್ನು ಈಡು ಪಾಂಗಿನೊಂದಿಗೆ ನೆರವು ಪಾಂಗಾಗಿ ಬಳಸಲು ಬರುತ್ತದೆ; ಆದರೆ, ಈ ಬಳಕೆಯಲ್ಲಿ ಅದಕ್ಕೆ ಕದಲಿಕೆಯ ಹುರುಳು ಸಿಗುವುದಿಲ್ಲ: (1ಟ) ಅವನು ಮರದ ಮೇಲೆ ಒಂದು ಹಕ್ಕಿಯನ್ನು ನೋಡಿದ. (2ಟ) ಅವನು ಕೋಣೆಯ ಒಳಗೆ ಒಬ್ಬ ಹುಡುಗನನ್ನು ನೋಡಿದ. (2) ನಿಲ್ಲು: ಈ ಎಸಕಪದ ಸಾಮಾನ್ಯವಾಗಿ ಮಾಡುಗ ಮತ್ತು ಜಾಗ ಪಾಂಗುಗಳೊಂದಿಗೆ ಬರುತ್ತದೆ (3ಕ); ಆದರೆ, ಆಗುಗ ಪಾಂಗಿನೊಂದಿಗೂ ಅದು ಬರಬಲ್ಲುದು (3ಚ), ಮತ್ತು ಚುನಾವಣೆ ಎಂಬುದನ್ನು ಬಳಸಿರುವಲ್ಲಿ ಮಾಡುಗ ಮತ್ತು ಗುರಿ ಪಾಂಗುಗಳೊಂದಿಗೆ ಬರುತ್ತದೆ (3ಟ): (3ಕ) ಅವನು ಮೇಜಿನ ಮೇಲೆ ನಿಂತ. (3ಚ) ಮಳೆ ನಿಂತಿದೆ. (3ಟ) ಅವನು ಚುನಾವಣೆಗೆ ನಿಂತಿದ್ದಾನೆ. (3) ಬೀಳು: ಈ ಎಸಕಪದವೂ ಸಾಮಾನ್ಯವಾಗಿ ಮಾಡುಗ ಮತ್ತು ಗುರಿ ಪಾಂಗುಗಳೊಂದಿಗೆ ಬರುತ್ತದೆ (4ಕ); ಆದರೆ, ತಗಲು ಎಂಬ ಹುರುಳಿನಲ್ಲಿ ಅದು ಆಗುಗ ಮತ್ತು ಗುರಿ ಪಾಂಗುಗಳೊಂದಿಗೆ ಬರಬಲ್ಲುದು (4ಚ): (4ಕ) ಅವನು ಬಾವಿಗೆ ಬಿದ್ದ. (4ಚ) ಈ ಪುಸ್ತಕಕ್ಕೆ ನೂರು ರುಪಾಯಿ ಬಿತ್ತು.
(4) »r: ಈ ಎಸಕಪದದ ಪಾಂಗಿಟ್ಟಳ ಮಾಡುಗ+ಈಡು ಎಂಬುದನ್ನು ಕೆಳಗೆ ಕೊಟ್ಟಿರುವ (5ಕ) ಸೊಲ್ಲಿನಲ್ಲಿ ಕಾಣಬಹುದು; ಆದರೆ, ಕಳೆ ಎಂಬ ಹುರುಳಿನಲ್ಲಿ ಅದು ಮಾಡುಗ+ಸುರು+ಈಡು ಪಾಂಗಿಟ್ಟಳದೊಂದಿಗೆ ಬರುತ್ತದೆ (5ಚ), ಮತ್ತು ಸುರುವಾಗು ಎಂಬ ಹುರುಳಿನಲ್ಲಿ ಆಗುಗ ಪಾಂಗಿನೊಂದಿಗೆ ಬರುತ್ತದೆ (5ಟ): (5ಕ) ಅವನು ಒಂದು ಹಕ್ಕಿಯನ್ನು ಹಿಡಿದ. (5ಚ) ಅವನು ನನ್ನ ಸಂಬಳದಿಂದ ನೂರು ರುಪಾಯಿ ಹಿಡಿದ. (5ಟ) ಇವತ್ತು ಮಳೆ ಹಿಡಿದಿದೆ. ಬೇರೆಯೂ ಕೆಲವು ಪಾಂಗಿಟ್ಟಳಗಳಲ್ಲಿ ಅದು ಬರಬಲ್ಲುದೆಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (5ತ) ಅವನು ಬಸ್ಸಿನಲ್ಲಿ ಇಬ್ಬರಿಗೂ ಸೀಟು ಹಿಡಿದ. (5ಪ) ಅವನು ನನಗೆ ಕೊಡೆ ಹಿಡಿದ. (5ಗ) ಈ ಪೆಟ್ಟಿಗೆಯಲ್ಲಿ 50 ಪುಸ್ತಕ ಹಿಡಿಯುತ್ತದೆ. (5ಜ) ಈ ಕೆಲಸಕ್ಕೆ ಮೂರು ಗಂಟೆ ಹಿಡಿಯುತ್ತದೆ. (ಚ) ಕಚಿತವಲ್ಲದ ಹುರುಳಿರುವ ಎಸಕಪದಗಳು: ಆಗು ಇರು ಎಸಕಪದದ ಹಾಗೆ ಆಗು ಪದವೂ ಒಂದಕ್ಕಿಂತ ಹೆಚ್ಚು ಬಗೆಯ ಪಾಂಗಿಟ್ಟಳ ಗಳೊಂದಿಗೆ ಬರಬಲ್ಲುದು. ಆದರೆ, ಈ ಪದದೊಂದಿಗೆ ಸೊಲ್ಲುಗಳಲ್ಲಿ ಎಂತಹ ಪಾಂಗಿಟ್ಟಳಗಳು ಬರುತ್ತವೆ ಎಂಬುದನ್ನು ತೀರ್ಮಾನಿಸುವಲ್ಲಿ ಒಂದು ತೊಡಕಿದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (6ಕ) ಅವನ ಗುಟ್ಟು ರಟ್ಟಾಯಿತು. (6ಚ) ಅವರು ಅವನ ಗುಟ್ಟನ್ನು ರಟ್ಟುಮಾಡಿದರು. (7ಕ) ಅಂಗಳದಲ್ಲಿ ಕೆಸರಾಯಿತು. (7ಚ) ಅವರು ಅಂಗಳದಲ್ಲಿ ಕೆಸರು ಮಾಡಿದರು. (8ಕ) ಅವನಿಗೆ ತೊಂದರೆಯಾಯಿತು. (8ಚ) ಅವರು ಅವನಿಗೆ ತೊಂದರೆ ಮಾಡಿದರು. (9ಕ) ಅವನು ತೊಂದರೆಗೆ ಗುರಿಯಾದ. (9ಚ) ಅವರು ಅವನನ್ನು ತೊಂದರೆಗೆ ಗುರಿ ಮಾಡಿದರು. (10ಕ) ಅವನು ಅಲ್ಲಿಗೆ ಹೋಗುವುದು ಕಡ್ಡಾಯವಾಗಿದೆ. (10ಚ) ಅವನು ಅಲ್ಲಿಗೆ ಹೋಗುವುದನ್ನು ಅವರು ಕಡ್ಡಾಯ ಮಾಡಿದರು. (11ಕ) ಅವೆರಡು ಅದಲುಬದಲಾಗಿವೆ. (11ಚ) ಅವರು ಅವೆರಡನ್ನು ಅದಲುಬದಲು ಮಾಡಿದ್ದಾರೆ. ಮೇಲಿನ (6-11) ಸೊಲ್ಲುಗಳಲ್ಲಿ ಆಗು ಪದದೊಂದಿಗೆ ಬಂದಿರುವ ರಟ್ಟು, ಕೆಸರು, ತೊಂದರೆ, ಗುರಿ, ಕಡ್ಡಾಯ ಮತ್ತು ಅದಲುಬದಲು ಎಂಬ ಪದಗಳು ಆ ಪದದೊಂದಿಗೆ ಸೇರಿ ಕೂಡುಪದಗಳಾಗಿ ಬಂದಿವೆಯೆಂದು ತೋರುತ್ತದೆ; ಯಾಕೆಂದರೆ, ಈ
ಸೊಲ್ಲುಗಳಲ್ಲಿ ಆಗು ಪದದ ಬದಲು ಮಾಡು ಪದವನ್ನು ಬಳಸಿದಾಗ, ಮೇಲಿನ ಪದಗಳೆಲ್ಲ ಹಾಗೆಯೇ ಮಾರ್ಪಡದೆ ಉಳಿಯುತ್ತವೆ, ಮತ್ತು (2ಚ)ದಲ್ಲಿ ಗುಟ್ಟು, (7ಚ)ದಲ್ಲಿ ಅವನು, (10ಚ)ದಲ್ಲಿ ಹೋಗುವುದು, ಮತ್ತು (11ಚ)ದಲ್ಲಿ ಅವೆರಡು ಎಂಬ ಬೇರೆಯೇ ಪದಗಳು ಈಡು ಪಾಂಗುಗಳಾಗಿ ಮಾರ್ಪಡುತ್ತವೆ. ಇದಕ್ಕೆ ಬದಲು, ಆಗು ಪದದೊಂದಿಗೆ ಒಂದು ಹೆಸರುಪದ (ಇಲ್ಲವೇ ಹೆಸರು ಕಂತೆ) ಬಳಕೆಯಾಗಿದೆಯಾದಲ್ಲಿ, ಮತ್ತು ಸೊಲ್ಲಿನಲ್ಲಿ ಬಂದಿರುವ ಆಗುಗ ಪಾಂಗಿನ ಒಂದು ಹಂತವನ್ನು ಆ ಹೆಸರುಪದ ತಿಳಿಸುತ್ತಿದೆಯಾದಲ್ಲಿ, ಆ ಹೆಸರುಪದ ಆಗುಗ ವನ್ನು ತಿಳಿಸುವ ಪದದೊಂದಿಗೆ ಸೇರಿ ಒಂದೇ ಪಾಂಗನ್ನು ತಿಳಿಸುತ್ತದೆ ಎಂದು ಹೇಳಬಹುದು: (12ಕ) ರಾಜು ಹಣವಂತನಾದ. (12ಚ) ಅವರು ರಾಜುವನ್ನು ಹಣವಂತನನ್ನಾಗಿ ಮಾಡಿದರು. (12ಚ) ಸೊಲ್ಲಿನಲ್ಲಿ ಅವನು ಮತ್ತು ಹಣವಂತ ಎಂಬ ಎರಡು ಪದಗಳೂ ಒಟ್ಟಾಗಿ ಈಡು ಪಾಂಗನ್ನು ಗುರುತಿಸುವ ಪದಗಳೆಂದು ತೋರುತ್ತದೆ. ಕುರುಡ, ಕಿವುಡ, ಹಣವಂತ, ಮುದುಕ, ಹೆಳವ, ತಬ್ಬಲಿ ಮೊದಲಾದ ಪದಗಳೊಂದಿಗೆ ಬಂದಿರುವ ಆಗು ಪದವೂ ಈ ರೀತಿ ಒಂದು ಪಾಂಗಿನ ಎರಡು ಹಂತಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತದೆ: (13ಕ) ರಾಜಕುಮಾರ ಕಪ್ಪೆಯಾದ. (13ಚ) ಅವನ ತೋಳು ಆಕೆಯ ತಲೆದಿಂಬಾಗಿದೆ. (13ಟ) ಅವನು ಕಿವುಡನಾದ. ಇಂತಹ ಬಳಕೆಗಳಲ್ಲಿ ಆಗು ಪದದೊಂದಿಗೆ ಬಂದಿರುವ ಹೆಸರುಪದ ಇಲ್ಲವೇ ಪದಕಂತೆ ಆ ಪದದೊಂದಿಗೆ ಸೇರಿ ಒಂದು ಕೂಡುಪದವಾಗಿದೆಯೆಂದು ಹೇಳುವು ದಕ್ಕಿಂತಲೂ, ಅದು ಆ ಸೊಲ್ಲಿನಲ್ಲಿರುವ ಬೇರೊಂದು ಪಾಂಗಿನೊಂದಿಗೆ ಸೇರಿ ಒಟ್ಟಿಗೆ ಒಂದು ಪಾಂಗನ್ನು (ಎಸಕದ ಆಗುಗವನ್ನು) ತಿಳಿಸುತ್ತದೆಯೆಂದು ಹೇಳುವುದೇ ಸರಿಯೆಂದು ತೋರುತ್ತದೆ. ಮೇಲೆ ತಿಳಿಸಿದ ಹಾಗೆ, ಇಂತಹ ಸೊಲ್ಲುಗಳನ್ನು ಮಾಡು ಎಸಕಪದದೊಂದಿಗೆ ಒಳಸೊಲ್ಲಾಗಿ ಬಳಸಿದಾಗ, ಈ ಎರಡು ಪಾಂಗುಗಳೂ ಅನ್ನು ಒಟ್ಟಿನೊಂದಿಗೆ ಸೇರಿ ಈಡು ಪಾಂಗಾಗಿ ಬರಬಲ್ಲುವೆಂಬುದು ಅವೆರಡೂ ಒಟ್ಟಾಗಿ ಒಂದೇ ಪಾಂಗನ್ನು ಗುರುತಿಸುತ್ತವೆ ಎಂಬುದನ್ನು ಬೆಂಬಲಿಸುತ್ತದೆ: (14ಕ) ಮಂತ್ರವಾದಿ ರಾಜಕುಮಾರನನ್ನು ಕಪ್ಪೆಯನ್ನಾಗಿ ಮಾಡಿದ. (14ಚ) ಆಕೆ ಅವನ ತೋಳನ್ನು ತಲೆದಿಂಬನ್ನಾಗಿ ಮಾಡಿಕೊಂಡಳು. (14ಟ) ಅವನನ್ನು ಕಿವುಡನನ್ನಾಗಿ ಮಾಡಿದರು. ಆದರೆ, ಇಂತಹ ಸೊಲ್ಲುಗಳಲ್ಲಿ ಎರಡನೆಯ ಹೆಸರುಪದಕ್ಕೆ ಅನ್ನು ಒಟ್ಟನ್ನು ಸೇರಿಸದೆಯೂ ಬಳಸಲು ಬರುತ್ತದೆ: (15ಕ) ಮಂತ್ರವಾದಿ ರಾಜಕುಮಾರನನ್ನು ಕಪ್ಪೆಯಾಗಿ ಮಾಡಿದ. (15ಚ) ಆಕೆ ಅವನ ತೋಳನ್ನು ತಲೆದಿಂಬಾಗಿ ಮಾಡಿಕೊಂಡಳು. (15ಟ) ಅವನನ್ನು ಕಿವುಡನಾಗಿ ಮಾಡಿದರು. (ಚ) ಆಗು ಎಸಕಪದವನ್ನು ಒರಟು, ಚೂಪು, ಜಿಗಟು, ಕೀಳು, ಟೊಳ್ಳು, ಕಪ್ಪು, ದಪ್ಪ ಮೊದಲಾದ ಪರಿಚೆಪದಗಳೊಂದಿಗೆ (ಕೂಡುಪದವಾಗಿ) ಬಳಸಿರುವಲ್ಲಿ ಅದರೊಂದಿಗೆ ಆಗುಗ ಮಾತ್ರ ಎಂಬ ಬೇರೊಂದು ಬಗೆಯ ಪಾಂಗಿಟ್ಟಳ ಬರುತ್ತದೆ: (16ಕ) ಕೋಲಿನ ತುದಿ ಚೂಪಾಯಿತು.
(16ಚ) ಮಾವಿನ ಮರ ಟೊಳ್ಳಾಯಿತು. (16ಕ)ದಲ್ಲಿ ಕೋಲಿನ ತುದಿ ಎಂಬುದು ಆಗುಗ ಪಾಂಗಾಗಿ ಬಳಕೆಯಾಗಿದೆ; (16ಚ)ದಲ್ಲೂ ಹೀಗೆಯೇ. (ಟ) ಆಗು ಪದದೊಂದಿಗೆ ಕೆಸರು, ಕೊಚ್ಚೆ, ಕೀವು, ಹುಣ್ಣು, ಹೂ, ಕಾಯಿ, ಮೊಗ್ಗು, ತೂತು, ಗೆರೆ ಮೊದಲಾದ ಹೆಸರುಪದಗಳು ಬಂದಿವೆಯಾದರೆ, ಅವುಗ ಳೊಂದಿಗೆ ಒಂದು ಜಾಗ ಪಾಂಗು ಮಾತ್ರ ಬರುತ್ತದೆ: (17ಕ) ಅವನ ಕಾಲಿನಲ್ಲಿ ಒಂದು ಹುಣ್ಣಾಗಿದೆ. (17ಚ) ಗಿಡದಲ್ಲಿ ಹೂವಾಯಿತು (ತ) ಇದಕ್ಕೆ ಬದಲು, ಕೇಡು, ತೊಂದರೆ, ದಣಿವು, ಚಳಿ, ಗಾಯ, ದಿಗಿಲು, ಬೇಸರ, ನೋವು, ಮೋಸ, ನೆಮ್ಮದಿ, ಸಾಲ, ನೆಲೆ ಮೊದಲಾದ ಬೇರೆ ಕೆಲವು ಹೆಸರುಪದಗಳು ಆಗು ಪದದೊಂದಿಗೆ ಬರುತ್ತಿವೆಯಾದರೆ, ಅದರೊಂದಿಗೆ ಗುರಿ ಪಾಂಗು ಮಾತ್ರ ಬರುತ್ತದೆ: (18ಕ) ಅವನಿಗೆ ನೋವಾಯಿತು. (18ಚ) ಅವನಿಗೆ ಸಾಲವಾಯಿತು. (18ಟ) ಅವನಿಗೆ ದಿಗಿಲಾಯಿತು. (18ತ) ಅವರಿಗೆ ತೊಂದರೆಯಾಯಿತು. (ಪ) ಮೆಚ್ಚುಗೆ, ಸೇರಿಕೆ, ಸರಿ, ಸದರ, ಬಳಕೆ, ಹೊಣೆ, ತುತ್ತು, ಗುರಿ, ಹೊಂದಿಕೆ ಮೊದಲಾದ ಬೇರೆ ಕೆಲವು ಹೆಸರುಪದಗಳು ಆಗು ಪದದೊಂದಿಗೆ ಬಳಕೆಯಾಗಿರುವಲ್ಲಿ ಅವುಗಳೊಂದಿಗೆ ಒಂದು ಗುರಿ ಪಾಂಗು ಮಾತ್ರವಲ್ಲದೆ ಆಗುಗ ಪಾಂಗೂ ಬರಬಲ್ಲುದು: (19ಕ) ಅವನಿಗೆ ಆ ಕೆಲಸ ಬಳಕೆಯಾಯಿತು. (19ಚ) ಅವನಿಗೆ ನಿಮ್ಮ ಕೆಲಸಗಳು ಮೆಚ್ಚುಗೆಯಾದುವು. (19ಟ) ಅವರು ನನಗೆ ಹೊಣೆಯಾದರು. (ಗ) ಕಡ್ಡಾಯ, ಕಂಡಿತ, ಒಳಿತು, ಕಡಿಮೆ, ಗಟ್ಟಿ, ಸುಳು, ತಪ್ಪು ಮೊದಲಾದ ಬೇರೆ ಕೆಲವು ಪದಗಳು ಬಂದಿರುವಲ್ಲಿ, ಅವುಗಳ ಆಗುಗ ಪಾಂಗಾಗಿ ಒಂದು ಎಸಕವನ್ನು ಗುರುತಿಸುವ ಎಸಕಪದಗಳ ಹೆಸರುರೂಪ ಬರಬಲ್ಲುದು: (20ಕ) ಅವನು ಇಲ್ಲಿಗೆ ಬರುವುದು ಕಡಿಮೆಯಾಗಿದೆ. (20ಚ) ಅವನು ಹೇಳಿರುವುದು ತಪ್ಪಾಗಿದೆ. (20ಟ) ಅವಳು ಹಾಡುವುದು ಕಂಡಿತವಾಗಿದೆ. (20ತ) ಅಲ್ಲಿಗೆ ಹೋಗುವುದು ಕಡ್ಡಾಯವಾಗಿದೆ. (ಜ) ಅದಲುಬದಲು, ಅಡ್ಡಾದಿಡ್ಡಿ, ಒಂದು, ಒಟ್ಟು ಎಂಬಂತಹ ಬೇರೆ ಕೆಲವು ಪದಗಳು ಬಂದಿರುವಲ್ಲಿ ಅದರೊಂದಿಗೆ ಬರುವ ಆಗುಗ ಇಲ್ಲವೇ ಮಾಡುಗ ಪಾಂಗು ಹಲವೆಣಿಕೆಯದಾಗಿರಬೇಕಾಗುತ್ತದೆ: (21ಕ) ಅವರೆಲ್ಲರೂ ಒಟ್ಟಾಗಿದ್ದಾರೆ. (21ಚ) ಕುರ್ಚಿಗಳೆಲ್ಲ ಅಡ್ಡಾದಿಡ್ಡಿಯಾಗಿವೆ. (21ಟ) ಮೂವರೂ ಒಂದಾಗಿದ್ದಾರೆ.
(5) ಇಟ್ಟಳದ ಪಾಂಗಾಗಿ ಒಡನಾಡಿ ಪಾಂಗಿನ ಬಳಕೆ ಸೇರು, ಉರುಡು, ಏಗು, ಕಲೆ, ಕಾದು, ಬೆಸೆ ಮತ್ತು ಕೂಡು ಎಂಬ ಎಸಕಪದ ಗಳೊಂದಿಗೆ ಬೇರೆಡೆಗಳಲ್ಲಿ ಒಂದು ನೆರವು ಪಾಂಗಾಗಿ ಬರುವ ಒಡನಾಡಿ ಪಾಂಗು ಇಟ್ಟಳದ ಪಾಂಗಾಗಿ ಬರುತ್ತದೆ; ಇವುಗಳಲ್ಲಿ ಮೊದಲಿನ ಅಯ್ದು ಪದಗಳೊಂದಿಗೆ ಮಾಡುಗ+ಒಡನಾಡಿ ಎಂಬ ಪಾಂಗಿಟ್ಟಳ ಬರುವುದಾದರೆ, ಬೆಸೆ ಮತ್ತು ಕೂಡು ಪದಗಳೊಂದಿಗೆ ಆಗುಗ+ಒಡನಾಡಿ ಎಂಬ ಪಾಂಗಿಟ್ಟಳ ಬರುತ್ತದೆ; ಈ ಎರಡನೆಯ ಪಾಂಗಿಟ್ಟಳ ಕಲೆ ಎಂಬ ಪದದೊಂದಿಗೂ ಬರಬಲ್ಲುದು. ಒಡನಾಡಿ ಪಾಂಗನ್ನು ಗುರುತಿಸಲು ಒಂದಿಗೆ ಇಲ್ಲವೇ ಒಡನೆ ಎಂಬುದನ್ನು ಬಳಸಲಾಗುತ್ತದೆ; ಅದು ಒಂದು ಎಸಕವನ್ನು ಯಾರೊಡನೆ ನಡೆಸಲಾಯಿತು, ಇಲ್ಲವೇ ಒಂದು ಎಸಕ ಯಾವುದರೊಂದಿಗೆ ನಡೆಯಿತು ಎಂಬುದನ್ನು ತಿಳಿಸುತ್ತದೆ: (1ಕ) ನಾನು ಅವನೊಂದಿಗೆ ಕಾದಿದೆ. (1ಚ) ಸಕ್ಕರೆ ಮಳಲಿನೊಡನೆ ಕಲೆತಿದೆ. (1ಟ) ಆಕೆ ಅಂತಹವನೊಂದಿಗೆ ಏಗಬೇಕಾಗಿದೆ. ಈ ಎಸಕಪದಗಳ ಮಾಡುಗ ಇಲ್ಲವೇ ಆಗುಗ ಪಾಂಗುಗಳನ್ನು ಒಡನಾಡಿ ಪಾಂಗಿನೊಂದಿಗೆ ಸೇರಿಸಿ ಒಂದೇ (ಮಾಡುಗ ಇಲ್ಲವೇ ಆಗುಗ) ಪಾಂಗಾಗಿಯೂ ಬಳಸಲು ಬರುತ್ತದೆ: (2ಕ) ನಾವಿಬ್ಬರೂ (ಒಬ್ಬರೊಡನೊಬ್ಬರು) ಕಾದಿದೆವು. (2ಚ) ಅವೆರಡೂ ಒಟ್ಟಿಗೆ (ಒಂದರೊಡನೊಂದು) ಕಲೆತಿವೆ. ಮಾತನಾಡು, ಹೇಳು ಎಂಬಂತಹ ಕೆಲವು ಪದಗಳೊಂದಿಗೆ ಒಡನೆ ಇಲ್ಲವೇ ಒಂದಿಗೆ ಎಂಬವುಗಳನ್ನು ಮಾತ್ರವಲ್ಲದೆ ಹತ್ತಿರ ಎಂಬ ಪದವನ್ನೂ ಬಳಸಲು ಬರುತ್ತದೆ; ಆದರೆ, ಒಡನಾಡಿ ಪಾಂಗನ್ನು ಪಡೆಯುವ ಬೇರೆ ಎಸಕಪದಗಳೊಂದಿಗೆ ಹತ್ತಿರ ಎಂಬುದನ್ನು ಬಳಸಲು ಬರುವುದಿಲ್ಲ: (3ಕ) ನಾನು ಅವನೊಂದಿಗೆ ಮಾತನಾಡಿದೆ > ನಾನು ಅವನ ಹತ್ತಿರ ಮಾತನಾಡಿದೆ. (3ಚ) ನಾನು ಅವನೊಂದಿಗೆ ಕಾದಿದೆ > ?ನಾನು ಅವನ ಹತ್ತಿರ ಕಾದಿದೆ. ಇದಕ್ಕಿಂತಲೂ ಮುಕ್ಯವಾಗಿ, ನೆರವು ಪಾಂಗಾಗಿ ಬಳಕೆಯಾಗಿರುವಲ್ಲಿ ಒಡನಾಡಿ ಪಾಂಗನ್ನು ತಿಳಿಸಲು ಹತ್ತಿರ ಪದ ಬರುವುದೇ E®è: (3ಟ) ನಾನು ಅವನೊಂದಿಗೆ ನಿಮ್ಮ ಮನೆಗೆ ಬಂದಿದ್ದೆ > *ನಾನು ಅವನ ಹತ್ತಿರ ನಿಮ್ಮ ಮನೆಗೆ ಬಂದಿದ್ದೆ. ನೆರವು ಪಾಂಗಾಗಿ ಒಡನಾಡಿ ಪಾಂಗು ಬಂದಿರುವ (3ಟ) ಎತ್ತುಗೆಯ ಎರಡನೆಯ ಸೊಲ್ಲಿನಲ್ಲಿ ಒಡನಾಡಿಯನ್ನು ಸೂಚಿಸಲು ಹತ್ತಿರ ಎಂಬುದನ್ನು ಬಳಸಿದೆಯಾದ ಕಾರಣ, ಆ ಸೊಲ್ಲು ಸರಿಯಿಲ್ಲ. (6) ಪಾಂಗಿಟ್ಟಳಗಳ ಬಳಕೆಯಲ್ಲಿ ಆಡುಗನ ಆಯ್ಕೆ ಕೆಲವು ಎಸಕಗಳಲ್ಲಿ ಒಂದು ಪಾಂಗು ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ತೊಡಗಿ ಕೊಂಡಿರಬಲ್ಲುದು; ಅಂತಹ ಕಡೆಗಳಲ್ಲಿ ಯಾವ ಬಗೆಯ ತೊಡಗಿಕೆ ತನಗೆ ಮುಕ್ಯ ವಾದುದು ಎಂದು ಆಡುಗನಿಗೆ ಅನಿಸುತ್ತದೆಯೋ ಅದನ್ನು ಆತನಿಗೆ ಆಯ್ದುಕೊಳ್ಳಲು ಬರುತ್ತದೆ, ಮತ್ತು ಇದಕ್ಕಾಗಿ ಆತನಿಗೆ ತಾನು ಬಳಸಬೇಕಾಗಿರುವ ಎಸಕಪದವನ್ನೂ ಆಯ್ದುಕೊಳ್ಳಲು ಬರುತ್ತದೆ.
ಎತ್ತುಗೆಗಾಗಿ, ಸೋಲು ಮತ್ತು ಗೆಲ್ಲು ಎಂಬ ಎರಡು ಪದಗಳು ಒಂದೇ ಬಗೆಯ ಎಸಕವನ್ನು ತಿಳಿಸುತ್ತಿದ್ದು, ಅವುಗಳಲ್ಲಿ ಆಡುಗನು ಯಾವುದನ್ನು ಆಯ್ದು ಕೊಳ್ಳುತ್ತಾನೆ ಎಂಬುದು ಆ ಎಸಕದಲ್ಲಿ ತೊಡಗಿಕೊಂಡಿರುವ ಎರಡು ಪಾಂಗುಗಳ ಯಾವ ಬಗೆಯ ತೊಡಗಿಕೆ ಆತನಿಗೆ ಮುಕ್ಯವೆಂದು ಅನಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ: (1ಕ) ರಾಜು ಹರಿಗೆ ಸೋತ. (1ಚ) ಹರಿ ರಾಜುವನ್ನು ಗೆದ್ದ. ಸೋಲು ಮತ್ತು ಗೆಲ್ಲು ಪದಗಳು ತಿಳಿಸುವ ಎಸಕದಲ್ಲಿ ರಾಜುವಿನ ತೊಡಗಿಕೆ ಮುಕ್ಯವೆಂದು ಆಡುಗನಿಗೆ ಅನಿಸಿದಲ್ಲಿ ಆತನು ಸೋಲು ಪದವನ್ನು ಬಳಸಿರುವ (1ಕ) ಸೊಲ್ಲನ್ನು ಆಯ್ದುಕೊಳ್ಳಬಹುದು. ಇದಕ್ಕೆ ಬದಲು, ಅದರಲ್ಲಿ ಹರಿಯ ತೊಡಗಿಕೆ ಮುಕ್ಯವೆಂದು ಆತನಿಗೆ ಅನಿಸಿದಲ್ಲಿ ಗೆಲ್ಲು ಪದವನ್ನು ಬಳಸಿರುವ (1ಚ) ಸೊಲ್ಲನ್ನು ಆತನು ಆಯ್ದುಕೊಳ್ಳಬಹುದು. ಮಾರು ಮತ್ತು ಕೊಂಡುಕೊಳ್ಳು ಎಂಬ ಪದಗಳೂ ಆಡುಗನಿಗೆ ಇಂತಹದೇ ಆಯ್ಕೆಯನ್ನು ಒದಗಿಸುತ್ತವೆ: (2ಕ) ಹರಿ ರಾಜುವಿನಿಂದ ಮನೆಯನ್ನು ಮೂರು ಲಕ್ಶಕ್ಕೆ ಕೊಂಡುಕೊಂಡ. (2ಚ) ರಾಜು ಹರಿಗೆ ಮನೆಯನ್ನು ಮೂರು ಲಕ್ಶಕ್ಕೆ ಮಾರಿದ. ಸಾಯು ಮತ್ತು ಕೊಲ್ಲು ಪದಗಳ ಬಳಕೆಯಲ್ಲಿಯೂ ಇಂತಹದೇ ಆಯ್ಕೆಯನ್ನು ಕಾಣಬಹುದು: ಅವುಗಳಲ್ಲಿ ಮೊದಲನೆಯದನ್ನು ಬಳಸಿರುವಲ್ಲಿ ಒಬ್ಬ ವ್ಯಕ್ತಿಯ ಸಾವು ಮಾತ್ರ ಮುಕ್ಯವೆಂದು ಆಡುಗನಿಗೆ ತೋರಿರಬಹುದು, ಮತ್ತು ಎರಡನೆಯದನ್ನು ಬಳಸಿರುವಲ್ಲಿ ಆ ಸಾವಿನ ಕತ(ಕಾರಣ)ವನ್ನು ತಿಳಿಸುವುದು ಮುಕ್ಯವೆಂದು ಆತನಿಗೆ ಅನಿಸಿರಬಹುದು. ಕೊನೆಯೆಸಕ ಮತ್ತು ಬಗೆಯೆಸಕಗಳ ಬಳಕೆಯಲ್ಲಿ ಬೇರೊಂದು ಬಗೆಯ ಆಯ್ಕೆಯಿದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (3ಕ) ಅವನು ಮನೆಗೆ ಹೋದ. (3ಚ) ಅವನು ಮನೆಗೆ ಓಡಿದ. (4ಕ) ಅವನು ಹೊಳೆಯನ್ನು ದಾಟಿದ. (4ಚ) ಅವನು ಹೊಳೆಯನ್ನು ಈಜಿದ. (3ಕ)ದಲ್ಲಿ ಹೋಗು ಎಂಬ ಕೊನೆಯಸಕವನ್ನು ಬಳಸಲಾಗಿದ್ದು, ಅದು ಹೋಗುವ ಎಸಕ ನಡೆದಿರುವುದನ್ನಶ್ಟೇ ತಿಳಿಸುತ್ತದೆ; ಇದಕ್ಕೆ ಬದಲು, (3ಚ)ದಲ್ಲಿ ಓಡು ಎಂಬ ಬಗೆಯೆಸಕ ಪದವನ್ನು ಬಳಸಲಾಗಿದ್ದು, ಅದು ಹೋಗುವ ಎಸಕವನ್ನು ಹೇಗೆ ನಡೆಸಲಾಗಿದೆ (ಓಡುತ್ತಾ ಹೋದ) ಎಂಬುದನ್ನೂ ತಿಳಿಸುತ್ತದೆ; (4ಕ-ಚ)ಗಳಲ್ಲೂ ಹೀಗೆಯೇ. ಆದರೆ, ಇಲ್ಲಿ ಪಾಂಗಿಟ್ಟಳ ಮಾರ್ಪಪಡದೆ ಉಳಿದಿದೆ. (7) ಪಾಂಗುಗಳನ್ನು ಗುರುತಿಸಲು ಒಟ್ಟು ಮತ್ತು ಪದಗಳ ಬಳಕೆ ಕೆಲವು ಪಾಂಗುಗಳನ್ನು ಗುರುತಿಸುವುದಕ್ಕಾಗಿ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಬಳಸಲು ಬರುತ್ತದೆ; ಎತ್ತುಗೆಗಾಗಿ, ಜಾಗ ಪಾಂಗನ್ನು ಅಲ್ಲಿ ಒಟ್ಟಿನಿಂದ ಗುರುತಿಸಬಹುದು, ಇಲ್ಲವೇ ಅದರ ಕುರಿತಾಗಿ ಹೆಚ್ಚಿನ ತಿಳಿವನ್ನು ಕೊಡಲು ಮೇಲೆ, ಕೆಳಗೆ, ಒಳಗೆ ಮೊದಲಾದ ಪದಗಳನ್ನು ಬಳಸಿಯೂ ಗುರುತಿಸಬಹುದು (7.4.9 ನೋಡಿ). ಹತೋಟಿಯನ್ನು ಕಳೆದುಕೊಂಡ ಮಾಡುಗನನ್ನು ಗುರುತಿಸಲು ಇಂದ ಒಟ್ಟನ್ನು ಬಳಸಬಹುದು, ಇಲ್ಲವೇ ಕಯ್ಯಲ್ಲಿ ಎಂಬ ಪದವನ್ನು ಬಳಸಬಹುದು (7.6.7 ನೋಡಿ).
ಈ ಎರಡು ಬಗೆಯ ಬಳಕೆಗಳ ನಡುವೆ ಕೆಲವು ವ್ಯತ್ಯಾಸಗಳಿವೆ; ಎತ್ತುಗೆಗಾಗಿ, ಒಂದು ಪಾಂಗನ್ನು ಗುರುತಿಸಲು ಎರಡು ಹೆಸರುಪದಗಳನ್ನು ಇಲ್ಲವೇ ಪದಕಂತೆಗಳನ್ನು ಬಳಸಿದ್ದು, ಅವನ್ನು ಮತ್ತು ಪದದಿಂದ ಬೇರ್ಪಡಿಸಲಾಗಿದೆಯಾದರೆ, ಒಟ್ಟನ್ನು ಅವೆರಡರೊಂದಿಗೂ ಬಳಸಬೇಕಾಗುತ್ತದೆ, ಆದರೆ ಪದವನ್ನು ಅವುಗಳಲ್ಲಿ ಒಂದರೊಡನೆ ಬಳಸಿದರೆ ಸಾಕಾಗುತ್ತದೆ: (1ಕ) ಪುಸ್ತಕಗಳನ್ನು ಮೇಜಿನ ಮೇಲೆ ಮತ್ತು ಕುರ್ಚಿಯ ಮೇಲೆ ಇರಿಸಿದ್ದರು > ಪುಸ್ತಕಗಳನ್ನು ಮೇಜಿನ ಮತ್ತು ಕುರ್ಚಿಯ ಮೇಲೆ ಇರಿಸಿದ್ದರು. (1ಚ) ಅವನು ಪುಣೆಗೆ ಮತ್ತು ಮುಂಬಯಿಗೆ ಹೋದ > *ಅವನು ಪುಣೆ ಮತ್ತು ಮುಂಬಯಿಗೆ ಹೋದ. (1ಕ)ದಲ್ಲಿ ಮೇಲೆ ಪದವನ್ನು ಮೇಜಿನ ಪದದ ಬಳಿಕ ಬಳಸದಿರುವ ಎರಡನೆಯ ಸೊಲ್ಲು ಸರಿಯಾಗಿದೆ; ಆದರೆ, (1ಚ)ದಲ್ಲಿ ಗೆ ಒಟ್ಟನ್ನು ಪುಣೆ ಪದದ ಬಳಿಕ ಬಳಸದಿರುವ ಎರಡನೆಯ ಸೊಲ್ಲು ಸರಿಯಾಗಿಲ್ಲ. ಒಡನೆ ಮತ್ತು ಒಂದಿಗೆ ಪದಗಳು ಈ ವಿಶಯದಲ್ಲಿ ಒಟ್ಟಿಗೂ ಪದಕ್ಕೂ ನಡುವೆ ಇರುವ ಹಾಗೆ ಕಾಣಿಸುತ್ತದೆ; ಯಾಕೆಂದರೆ, ಮತ್ತು ಪದವನ್ನು ಬಳಸಿರುವಲ್ಲಿ ಅವನ್ನು ತೆಗೆದು ಹಾಕುವುದು ಪೂರ್ತಿ ಸರಿಯೆಂದು ತೋರುವುದಿಲ್ಲವಾದರೂ ಒಟ್ಟು ಗಳನ್ನು ತೆಗೆದು ಹಾಕಿದಲ್ಲಿ ಕಾಣಿಸುವಶ್ಟು ಕೆಟ್ಟದಾಗಿ ತೋರುವುದಿಲ್ಲ. (1ಟ) ಹಣ್ಣಿನೊಂದಿಗೆ ಮತ್ತು ಹೂವಿನೊಂದಿಗೆ ಒಂದು ಕಲ್ಲನ್ನೂ ಇರಿಸಿದ್ದಾರೆ > ?ಹಣ್ಣು ಮತ್ತು ಹೂವಿನೊಂದಿಗೆ ಒಂದು ಕಲ್ಲನ್ನೂ ಇರಿಸಿದ್ದಾರೆ. (8) ಸೊಲ್ಲುಗಳಲ್ಲಿ ಹೆಸರುಪದಗಳ ಗಮನ ರೂಪದ ಬಳಕೆ ಸೊಲ್ಲುಗಳಲ್ಲಿ ಮೊದಲಿಗೆ ಕೆಲವೊಮ್ಮೆ ಒಂದು ಹೆಸರುಪದದ ಗಮನ ರೂಪವನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅಪ್ಪಾ! ಇದು ಯಾರ ಮನೆ? (1ಚ) ತಂಗೀ! ಇವನು ನಿನ್ನನ್ನು ಕಾಣಲು ಬಂದಿದ್ದಾನೆ. (1ಟ) ಹುಡುಗರೇ! ಹೆಚ್ಚು ಗಲಾಟೆ ಮಾಡಬೇಡಿ. ಈ ಪದರೂಪವನ್ನು ಪಡೆಯಲು ಓರೆಣಿಕೆಯ ಪದಗಳ ಕೊನೆಯ ತೆರೆಯುಲಿ ಯನ್ನು ಉದ್ದ ಮಾಡಲಾಗುತ್ತದೆ, ಮತ್ತು ಹಲವೆಣಿಕೆಯ ಪದಗಳಿಗೆ ಏ ಒಟ್ಟನ್ನು ಸೇರಿಸಲಾಗುತ್ತದೆ. ಸೊಲ್ಲುಗಳಲ್ಲಿ ಬರುವ ಈ ಗಮನ ರೂಪಗಳಿಗೆ ಕೇಳುಗನ ಗಮನವನ್ನು ಸೆಳೆಯುವ ಕೆಲಸವಿದೆ; ಆದರೆ, ಇವು ಸೊಲ್ಲಿನ ಒಂದು ಅಂಗವಾಗಿರುವುದಿಲ್ಲ; ಅವಕ್ಕೆ ಎಸಕಪದದೊಂದಿಗೆ ಯಾವ ಸಂಬಂದವೂ ಇಲ್ಲ. ಹಾಗಾಗಿ, ಸೊಲ್ಲಿನ ಪಾಂಗಿಟ್ಟಳವನ್ನು ವಿವರಿಸುವಲ್ಲಿ ಅವನ್ನು ಪರಿಗಣಿಸಬೇಕಾಗಿಲ್ಲ. ಸಾಮಾನ್ಯವಾಗಿ, ಗಮನ ರೂಪದಲ್ಲಿ ಬರುವ ಪದ ಸೊಲ್ಲಿನ ಕೇಳುಗನನ್ನು ಗುರುತಿಸುತ್ತಿದ್ದು, ಅದು (ಎಂದರೆ, ಆ ಸೊಲ್ಲಿನ ಕೇಳುಗ) ಅದರ ಒಂದು ಪಾಂಗಾಗಿಯೂ ಬರುತ್ತದೆ; ಎತ್ತುಗೆಗಾಗಿ, (1ಚ)ದಲ್ಲಿ ಗಮನರೂಪದಲ್ಲಿ ತಂಗಿ ಎಂಬ ಪದ ಬಂದಿದ್ದು, ಅದು ಸೊಲ್ಲಿನ ಕೇಳುಗನನ್ನು ಗುರುತಿಸುತ್ತದೆ; ಇದಲ್ಲದೆ, ಅದು ಸೊಲ್ಲಿನ ಈಡು ಪಾಂಗಾಗಿಯೂ (ನಿನ್ನನ್ನು ಎಂಬುದಾಗಿ) ಬಳಕೆಯಾಗಿದೆ. (1ಟ)ದಲ್ಲಿಯೂ ಹುಡುಗರೇ ಎಂಬ ಗಮನರೂಪ ಗುರುತಿಸುವ ವ್ಯಕ್ತಿಗಳು ಆ ಸೊಲ್ಲಿನ ಮಾಡುಗ ಪಾಂಗಾಗಿ ಬಂದಿರುವುದನ್ನು ಕಾಣಬಹುದು; ಆದರೆ, (1ಕ) ಸೊಲ್ಲಿನಲ್ಲಿ ಅಪ್ಪಾ ಎಂಬ ಗಮನ ರೂಪ ಗುರುತಿಸುವ ವ್ಯಕ್ತಿ ಆ ಸೊಲ್ಲಿನ ಒಂದು ಪಾಂಗಾಗಿ ಬಂದಿಲ್ಲ; ಎಂದರೆ, ಗಮನರೂಪಗಳು ಅವು ಬಳಕೆಯಾಗಿರುವ ಸೊಲ್ಲಿನ ಕೇಳುಗನನ್ನು ಗುರುತಿಸುತ್ತಿದ್ದು, ಅವು ಆ ಸೊಲ್ಲಿನ ಪಾಂಗಾಗಿ ಬರಲೇಬೇಕೆಂದೇನೂ ಇಲ್ಲ.
7.3.4 ನನಸಿನ ಹುರುಳು ಮತ್ತು ನೆನಸಿನ ಹುರುಳು
ಹೆಚ್ಚಿನ ಎಸಕಪದಗಳನ್ನೂ ನನಸಿನ ಹುರುಳಿನಲ್ಲಾಗಲಿ ಇಲ್ಲವೇ ನೆನಸಿನ ಹುರುಳಿನಲ್ಲಾಗಲಿ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲು ಗಳನ್ನು ಗಮನಿಸಬಹುದು: (1ಕ) ಕಾಳು ಗಟ್ಟಿಯಾಯಿತು. (1ಚ) ಅವನ ನಂಬಿಕೆ ಗಟ್ಟಿಯಾಯಿತು. (1ಕ) ಅವನು ಬಾಗಿಲನ್ನು ತೆರೆದಿರಿಸಿದ. (1ಚ) ಅವನು ತನ್ನ ಮನಸ್ಸನ್ನು ತೆರೆದಿರಿಸಿದ. (2ಕ) ಅವನು ತನ್ನ ಪೆನ್ನನ್ನು ಅಡಗಿಸಿಟ್ಟಿದ್ದ. (2ಚ) ಅವನು ತನ್ನ ಗುಟ್ಟನ್ನು ಅಡಗಿಸಿಟ್ಟಿದ್ದ. (3ಕ) ಅವಳು ಆತನ ಮನೆಯನ್ನು ಹಾಳುಮಾಡಿದಳು. (3ಚ) ಅವಳು ಆತನ ಬದುಕನ್ನು ಹಾಳುಮಾಡಿದಳು. ಇಂತಹ ಕಡೆಗಳಲ್ಲೆಲ್ಲ ಎಸಕಪದದೊಂದಿಗೆ ಯಾವ ಬಗೆಯ ಈಡು ಬಂದಿದೆ ಎಂಬುದರ ಮೇಲೆ ಅದಕ್ಕೆ ನನಸಿನ ಹುರುಳು ದೊರಕುತ್ತದೆಯೋ ಇಲ್ಲವೇ ನೆನಸಿನ ಹುರುಳು ದೊರಕುತ್ತದೆಯೋ ಎಂಬುದು ಅವಲಂಬಿಸಿರುವ ಹಾಗೆ ಕಾಣಿಸುತ್ತದೆ. ಎತ್ತುಗೆಗಾಗಿ, ಬಾಗಿಲು ಎಂಬುದು ನನಸು, ಮತ್ತು ಮನಸ್ಸು ಎಂಬುದು ನೆನಸು; ಹಾಗಾಗಿ, ಬಾಗಿಲನ್ನು ತೆರೆದಿರಿಸಿದ ಎಂಬುದಕ್ಕೆ ನನಸಿನ ಹುರುಳು ದೊರಕುತ್ತದೆ, ಮತ್ತು ಮನಸ್ಸನ್ನು ತೆರೆದಿರಿಸಿದ ಎಂಬುದಕ್ಕೆ ನೆನಸಿನ ಹುರುಳು ದೊರಕುತ್ತದೆ. ಆದರೆ, ಈಡು ಪಾಂಗು ನೆನಸಾಗಿಲ್ಲದಲ್ಲೂ ನೆನೆಸಿನ ಹುರುಳು ದೊರಕಬಲ್ಲುದು; ಎತ್ತುಗೆಗಾಗಿ ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (4ಕ) ಅವನ ತಲೆ ತಿರುಗಿತು. (4ಚ) ಅವನಿಗೆ ನಿಮ್ಮ ಕೆಲಸ ಹಿಡಿಸಿದೆ. (4ಕ)ದಲ್ಲಿ ಈಡು ಪಾಂಗಾಗಿ ಬಂದಿರುವ ತಲೆ ಎಂಬುದು ನನಸಾಗಿದ್ದರೂ, ತಿರುಗು ಎಂಬುದಕ್ಕೆ ನೆನಸಿನ ಹುರುಳಿದೆ. ಇದಲ್ಲದೆ, ನನಸಿನ ಆಡುಗ ಇರುವಲ್ಲೂ ಎಸಕಪದಕ್ಕೆ ನೆನಸಿನ ಹುರುಳು ಸಿಗಬಲ್ಲುದು: (5ಕ) ರೇಡಿಯೋ ಕೆಟ್ಟಿದೆ. (5ಚ) ಹುಡುಗ ಕೆಟ್ಟಿದ್ದಾನೆ. (6ಕ) ಹಾಲು ತಣ್ಣಗಿದೆ. (6ಚ) ಅವನು ತಣ್ಣಗಿದ್ದಾನೆ.
7.4 ಇಟ್ಟಳದ ಪಾಂಗುಗಳ ಬಗೆಗಳು
ಇರುಹವನ್ನು ತಿಳಿಸುವ ಇರು ಪದದೊಂದಿಗೆ ಇರುಗ, ಜಾಗ, ಗುರಿ, ಮತ್ತು ಪರಿಚೆ ಎಂಬ ನಾಲ್ಕು ಬಗೆಯ ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಬರಬಲ್ಲುವು, ಮತ್ತು ಎಸಕಗಳನ್ನು ತಿಳಿಸುವ ಎಸಕಪದಗಳೊಂದಿಗೆ ಮುಕ್ಯವಾಗಿ ಆಗುಗ, ಮಾಡುಗ, ಗುರಿ, ಸುರು, ಜಾಗ ಮತ್ತು ಈಡು ಎಂಬ ಆರು ಬಗೆಯ ಪಾಂಗುಗಳು ಬಳಕೆಯಾಗಬಲ್ಲುವು ಎಂಬುದನ್ನು ನಾವು ಮೇಲೆ ನೋಡಿರುವೆವು. ಜಾಗ ಮತ್ತು ಗುರಿ ಪಾಂಗುಗಳು ಈ ಎರಡು ಬಗೆಯ ಸೊಲ್ಲುಗಳಲ್ಲೂ ಬರಬಲ್ಲುವು. ಈ ಎಂಟು ಬಗೆಯ ಇಟ್ಟಳದ ಪಾಂಗುಗಳು ಮಾತ್ರವಲ್ಲದೆ, ಮುಟ್ಟು (ಕರಣ), ಹೊತ್ತು, ಅಳಬು (ಉದ್ದೇಶ), ಕತ (ಕಾರಣ), ಒಡನಾಡಿ ಎಂಬಂತಹ ಬೇರೆಯೂ ಕೆಲವು ಬಗೆಯ ಪಾಂಗುಗಳು ನೆರವು ಪಾಂಗುಗಳಾಗಿ ಸೊಲ್ಲುಗಳಲ್ಲಿ ಬರಬಲ್ಲುವು ಎಂಬುದನ್ನೂ ನಾವು ಮೇಲೆ ನೋಡಿರುವೆವು. ಸೊಲ್ಲುಗಳಲ್ಲಿ ಬರಬಲ್ಲ ಈ ಎರಡು ಬಗೆಯ ಪಾಂಗುಗಳ ನಡುವಿರುವ ವ್ಯತ್ಯಾಸಗಳು ಎಂತಹವು ಎಂಬುದನ್ನು ಕೆಳಗೆ ವಿವರಿಸಲಾಗಿದೆ:
7.4.1 ಇಟ್ಟಳದ ಪಾಂಗುಗಳು ಮತ್ತು ನೆರವು ಪಾಂಗುಗಳು
ಇಟ್ಟಳದ ಪಾಂಗುಗಳಿಗೂ ನೆರವು ಪಾಂಗುಗಳಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಇಟ್ಟಳದ ಪಾಂಗುಗಳು ನೇರವಾಗಿ ಎಸಕಪದಗಳ ಹುರುಳುಗಳಿಗೆ ಸಂಬಂದಿಸಿವೆ, ಆದರೆ, ನೆರವು ಪಾಂಗುಗಳು ಆ ರೀತಿ ನೇರವಾಗಿ ಎಸಕಪದಗಳ ಹುರುಳುಗಳಿಗೆ ಸಂಬಂದಿಸಿರುವುದಿಲ್ಲ. ಎತ್ತುಗೆಗಾಗಿ, ಬೆಳೆ ಎಸಕಪದದೊಂದಿಗೆ ಮಾಡುಗ (ಬೆಳೆದುದು ಯಾರು) ಮತ್ತು ಈಡು (ಬೆಳೆದುದು ಏನನ್ನು) ಎಂಬ ಎರಡು ಇಟ್ಟಳದ ಪಾಂಗುಗಳನ್ನು ಮಾತ್ರವಲ್ಲದೆ, ಜಾಗ (ಬೆಳೆದುದು ಎಲ್ಲಿ), ಹೊತ್ತು (ಬೆಳೆದುದು ಯಾವಾಗ), ಅಳಬು (ಉದ್ದೇಶ - ಬೆಳೆದುದು ಯಾಕಾಗಿ) ಮೊದಲಾದ ಬೇರೆಯೂ ಕೆಲವು ಪಾಂಗುಗಳನ್ನು ಬಳಸಲು ಬರುತ್ತದೆ; ಆದರೆ, ಇವುಗಳಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರ ಆ ಎಸಕಪದದ ಹುರುಳಿಗೆ ನೇರವಾಗಿ ಸಂಬಂದಿಸಿದೆ: (1) ಅವನು ಈ ವರ್ಶ ಜೋನಿ ಬೆಲ್ಲಕ್ಕೆ ಮನೆಯ ಹಿಂದಿನ ಗದ್ದೆಯಲ್ಲಿ ಕಬ್ಬು ಬೆಳೆದ. ಬೆಳೆ ಎಸಕಪದಕ್ಕೆ ಬೆಳೆದವನು ಯಾರು ಮತ್ತು ಬೆಳೆದುದು ಏನನ್ನು ಎಂಬ ಎರಡು ವಿಶಯಗಳನ್ನು ತಿಳಿಸುವ ಮಾಡುಗ ಮತ್ತು ಈಡು ಪಾಂಗುಗಳು ನೇರವಾಗಿ ಸಂಬಂದಿಸಿರುತ್ತವೆ; ಅವುಗಳಲ್ಲಿ ಯಾವುದನ್ನು ತಿಳಿಸದಿದ್ದರೂ ಸೊಲ್ಲು ಪೂರ್ತಿ ಯಾಗುವುದಿಲ್ಲ. ಬಾಕಿ ಉಳಿದ ಹೊತ್ತು, ಜಾಗ ಮತ್ತು ಅಳಬುಗಳು ಅಶ್ಟೊಂದು ನೇರವಾಗಿ ಎಸಕಪದದ ಹುರುಳಿನೊಂದಿಗೆ ಸಂಬಂದಿಸಿಲ್ಲ; ಅವುಗಳಲ್ಲಿ ಹೊತ್ತು ಎಂಬುದು ಎಲ್ಲಾ ಎಸಕಗಳಿಗೂ ಬೇಕಾಗುವಂತಹದು; ಹಾಗಾಗಿ ಎಲ್ಲಾ ಎಸಕಪದಗಳ ಕೊನೆರೂಪಗಳಲ್ಲೂ ಅದನ್ನು ಅಡಕವಾಗಿ ತಿಳಿಸಲಾಗುತ್ತದೆ. ಎತ್ತುಗೆಗಾಗಿ, (1)ನೇ ಸೊಲ್ಲಿನಲ್ಲಿ ದ್ ಎಂಬ ಹಿಂಬೊತ್ತಿನ ಒಟ್ಟು ಬೆಳೆದ ಎಂಬ ಎಸಕರೂಪದಲ್ಲಿ ಬಂದಿರುವುದನ್ನು ಕಾಣಬಹುದು. ಉಳಿದ ಜಾಗ ಮತ್ತು ಅಳಬು ಪಾಂಗುಗಳನ್ನು ತಿಳಿಸದಿದ್ದರೂ ಬೆಳೆ ಪದದ ಹುರುಳು ಪೂರ್ತಿಯಾಗಿರುತ್ತದೆ. ಹಾಗಾಗಿ, ಅವನ್ನು ಇಟ್ಟಳದ ಪಾಂಗುಗಳಿಗಿಂತ ಬೇರಾಗಿರುವ ನೆರವು ಪಾಂಗುಗಳೆಂದು ಕರೆಯಲಾಗುತ್ತದೆ. ಇದಲ್ಲದೆ, ಈ ಎರಡು ಬಗೆಯ ಪಾಂಗುಗಳ ನಡುವೆ ಬೇರೆಯೂ ಕೆಲವು ವ್ಯತ್ಯಾಸಗಳನ್ನು ಕಾಣಬಹುದು; ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಲಾಗಿದೆ: (1) ಇಟ್ಟಳದ ಪಾಂಗುಗಳಲ್ಲಿ ಎಲ್ಲಾ ಬಗೆಯವನ್ನೂ ಎಲ್ಲಾ ಎಸಕಪದ ಗಳೊಂದಿಗೂ ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಹೋಗು ಎಸಕಪದದೊಂದಿಗೆ ಜಾಗ ಇಲ್ಲವೇ ಈಡು ಪಾಂಗನ್ನು ಬಳಸಲು ಬರುವುದಿಲ್ಲ. ಹೋಗುವುದು ಯಾರು? ಹೋಗುವುದು ಎಲ್ಲಿಂದ, ಮತ್ತು ಹೋಗುವುದು ಎಲ್ಲಿಗೆ? ಎಂಬ ಮೂರು ಬಗೆಯ ಕೇಳ್ವಿಗಳನ್ನು ಹೋಗು ಎಸಕಪದದ ಕುರಿತಾಗಿ ಕೇಳಬಲ್ಲೆವು, ಆದರೆ, *ಹೋಗುವುದು ಯಾವುದನ್ನು? ಇಲ್ಲವೇ *ಹೋಗುವುದು ಎಲ್ಲಿ? ಎಂಬಂತಹ ಕೇಳ್ವಿಗಳನ್ನು ಕೇಳಲು ಬರುವುದಿಲ್ಲ ಎಂಬುದು ಈ ವಿಶಯವನ್ನೇ ತಿಳಿಸುತ್ತದೆ.
ಆದರೆ ಸಾಮಾನ್ಯವಾಗಿ, ಎಲ್ಲಾ ಬಗೆಯ ನೆರವು ಪಾಂಗುಗಳನ್ನೂ ಎಲ್ಲಾ ಬಗೆಯ ಎಸಕಪದಗಳೊಂದಿಗೂ ಬಳಸಲು ಬರುತ್ತದೆ. ಎತ್ತುಗೆಗಾಗಿ, ಮೂರು ಗಂಟೆಗೆ ಎಂಬುದು ಎಸಕದ ಹೊತ್ತನ್ನು ತಿಳಿಸುವ ನೆರವು ಪಾಂಗು; ಇದನ್ನು ಎಲ್ಲಾ ಬಗೆಯ ಎಸಕಪದಗಳೊಂದಿಗೂ ಬಳಸಲು ಬರುತ್ತದೆ: (2ಕ) ಅವನು ಮೂರು ಗಂಟೆಗೆ ಮನೆಗೆ ಹೋದ. (2ಚ) ಅವನು ಮೂರು ಗಂಟೆಗೆ ಹಣ್ಣು ತಿಂದ. (2ಟ) ಅವನು ಮೂರು ಗಂಟೆಗೆ ಕತೆ ಬರೆದ. (2ತ) ಮೂರು ಗಂಟೆಗೆ ಗೆಲ್ಲು ಮುರಿಯಿತು. ನೆರವು ಪಾಂಗುಗಳಲ್ಲಿಯೂ ಕೆಲವು ಎಲ್ಲಾ ಬಗೆಯ ಎಸಕಪದಗಳೊಂದಿಗೂ ಬರುವುದಿಲ್ಲ; ಎತ್ತುಗೆಗಾಗಿ, ಮುಟ್ಟು (ಕರಣ) ಪಾಂಗು ಮಾಡುಗ ಪಾಂಗಿರುವ ಸೊಲ್ಲುಗಳಲ್ಲಿ ಮಾತ್ರ ಬರಬಲ್ಲುದಲ್ಲದೆ, ಆಗುಗ ಪಾಂಗಿರುವ ಸೊಲ್ಲುಗಳಲ್ಲಿ ಬರಲಾರದು: (3ಕ) ಅವನು ಗರಗಸದಿಂದ ಮರ ಸಿಗಿದ. (3ಚ) *ಗರಗಸದಿಂದ ಮರ ಸಿಗಿಯಿತು. (2) ಒಂದು ಎಸಕಪದದ ಇಟ್ಟಳದ ಪಾಂಗುಗಳು ಯಾವುವು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ ಅದು ತಿಳಿಸುವ ಎಸಕ ಎಂತಹದು ಎಂಬುದನ್ನು ತಿಳಿಯಲು ಬರುವುದಿಲ್ಲ. ಒಂದು ಸೊಲ್ಲಿನಲ್ಲಿ ಅವನ್ನು ಕಚಿತವಾಗಿ ತಿಳಿಸಿಲ್ಲವಾದರೂ ಸಂದರ್ಬದಿಂದ ಊಹಿಸಿಕೊಳ್ಳಲು ಸಾದ್ಯವಿರುವಲ್ಲಿ ಮಾತ್ರ ಸೊಲ್ಲು ತಿಳಿಸುವ ಎಸಕ ಎಂತಹದು ಎಂಬುದನ್ನು ತಿಳಿಯಲು ಬರುತ್ತದೆ: (4ಕ) ಅವನು ಬೆಳಿಗ್ಗೆಯೇ ಹೋಗಿದ್ದಾನೆ. (4ಚ) ಯಾರೋ ನೀರು ಚೆಲ್ಲಿದ್ದಾರೆ. (4ಟ) ಅವಳು ಬೆಳಗ್ಗಿನಿಂದಲೂ ತಿರುವುತ್ತಿದ್ದಾಳೆ. (4ಕ)ದಲ್ಲಿ ಹೋಗಿದ್ದು ಎಲ್ಲಿಗೆ ಎಂಬುದನ್ನು, (4ಚ)ದಲ್ಲಿ ನೀರು ಚೆಲ್ಲಿದ್ದು ಎಲ್ಲಿ ಎಂಬುದನ್ನು, ಮತ್ತು (4ಟ)ದಲ್ಲಿ ತಿರುವುತ್ತಿದ್ದುದು ಏನನ್ನು ಎಂಬುದನ್ನು ತಿಳಿಸಿಲ್ಲ; ಹಾಗಿದ್ದರೂ, ಅವನ್ನು ಆ ಸೊಲ್ಲುಗಳನ್ನು ಬಳಸಿದ ಸಂದರ್ಬದಿಂದ ತಿಳಿಯಲು ಬರುತ್ತದೆಯಾದರೆ ಅವು ಸರಿಯಾದ ಸೊಲ್ಲುಗಳಾಗಬಲ್ಲುವು. ಇಟ್ಟಳದ ಪಾಂಗುಗಳನ್ನು ಎಸಕಪದ ತಾನೇ ಆಯ್ದುಕೊಳ್ಳುತ್ತದೆ ಎಂದು ಹೇಳಬಹುದು; ಅವನ್ನು ಬಳಸಬೇಕೋ ಬೇಡವೋ ಎಂಬ ವಿಶಯದಲ್ಲಿ ಆಡುಗನಿಗೆ ಯಾವ ಆಯ್ಕೆಯೂ ಇರುವುದಿಲ್ಲ. ಮುದುಕ ಕೊಟ್ಟ ಎಂದಶ್ಟೇ ಹೇಳಿದರೆ, ಕೊಟ್ಟುದು ಯಾರಿಗೆ? ಮತ್ತು ಕೊಟ್ಟುದು ಏನನ್ನು ಎಂಬ ಕೇಳ್ವಿಗಳು ಏಳುತ್ತವೆ; ಸೊಲ್ಲಿನ ಸಂದರ್ಬದಿಂದ ಇದು ಗೊತ್ತಾಗುವಲ್ಲಿ ಮಾತ್ರ ಅವನ್ನು ಹೇಳದಿರಲು ಬರುತ್ತದೆ. ಎತ್ತುಗೆಗಾಗಿ, ಮುದುಕ ಕೊಟ್ಟ ಎಂಬ ಸೊಲ್ಲಿಗಿಂತ ಹಿಂದಿನ ಒಂದು ಸೊಲ್ಲಿನಲ್ಲಿ ಮುದುಕನ ಹತ್ತಿರ ಅವನ ಹೆಂಡತಿ ಹಣ ಕೇಳಿದುದನ್ನು ತಿಳಿಸಲಾಗಿದೆ ಯಾದರೆ, ಈ ಸೊಲ್ಲನ್ನು ಬಳಸಿದಾಗ ಯಾರಿಗೆ ಮತ್ತು ಏನನ್ನು ಎಂಬ ಕೇಳ್ವಿಗಳು ಏಳುವುದಿಲ್ಲ. ಎಸಕ ನಡೆದ ಹೊತ್ತನ್ನು ಈ ರೀತಿ ಎಸಕಪದ ತಾನೇ ಆಯ್ದುಕೊಳ್ಳುತ್ತದೆಯೆಂದು ಹೇಳಲು ಬರುವುದಿಲ್ಲ; ಯಾಕೆಂದರೆ, ಅದು ಎಲ್ಲಾ ಬಗೆಯ ಎಸಕಗಳಿಗೂ ಬೇಕಾಗುವಂತಹದು; ಅದಿಲ್ಲದೆ ಯಾವ ಎಸಕವೂ ನಡೆಯಲಾರದು. ಹಾಗಾಗಿ, ಎಸಕದ ಹೊತ್ತನ್ನು ತಿಳಿಸಲು ಎಸಕಪದಗಳಲ್ಲೇನೇ ಹಿಂಬೊತ್ತಿನ ಒಟ್ಟು ಮತ್ತು ಮುಂಬೊತ್ತಿನ ಒಟ್ಟು ಎಂಬುದಾಗಿ ಎರಡು ಬಗೆಯ ಹೊತ್ತಿನ ಒಟ್ಟುಗಳನ್ನು ಕಡ್ಡಾಯ ವಾಗಿ ಬಳಸಲಾಗುತ್ತದೆ. ಈ ಒಟ್ಟುಗಳು ತಿಳಿಸುವ ಸಮಯದ ಕುರಿತಾಗಿ ಹೆಚ್ಚಿನ ತಿಳಿವು ಬೇಕಿರುವಲ್ಲಿ ಮಾತ್ರ ಅವುಗಳೊಂದಿಗೆ ಹೊತ್ತಿನ ನೆರವು ಪಾಂಗುಗಳನ್ನು ಬಳಸಲಾಗುತ್ತದೆ: (5ಕ) ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆಗೆ ಬಂದ.
(5ಚ) ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆಗೆ ಬರುತ್ತಾನೆ. ಮೇಲಿನ ಸೊಲ್ಲುಗಳಲ್ಲಿ ಬಂದಿರುವ ಬೆಳಿಗ್ಗೆ ಎಂಟು ಗಂಟೆಗೆ ಎಂಬ ನೆರವು ಪಾಂಗು ಎಸಕಪದದಲ್ಲಿ ಬಳಕೆಯಾಗಿರುವ ಹಿಂಬೊತ್ತಿನ ದ್ (5ಕ) ಮತ್ತು ಮುಂಬೊತ್ತಿನ ಉತ್್ತ (5ಚ) ಒಟ್ಟುಗಳು ತಿಳಿಸುವ ಸಮಯದ ಕುರಿತು ಹೆಚ್ಚಿನ ತಿಳಿವನ್ನು ಕೊಡುತ್ತವೆ ಎಂಬುದನ್ನು ಗಮನಿಸಬಹುದು. ಎಸಕದ ಜಾಗ ಸಾಮಾನ್ಯವಾಗಿ ಆಡುಗನ ಜಾಗವೇ ಆಗಿರುತ್ತದೆ; ಅದು ಬೇರಾಗಿರುವ ಕಡೆಗಳಲ್ಲಿ ಮತ್ತು ಸಂದರ್ಬದಿಂದ ತಿಳಿಯದಿರುವಲ್ಲಿ ಮಾತ್ರ ಅದನ್ನು ನೆರವು ಪಾಂಗಿನ ಮೂಲಕ ತಿಳಿಸಬೇಕಾಗುತ್ತದೆ. ಮುಟ್ಟು, ಕತ, ಅಳಬು ಮೊದಲಾದ ಬೇರೆ ನೆರವು ಪಾಂಗುಗಳನ್ನೂ, ಇಟ್ಟಳದ ಪಾಂಗುಗಳ ಹಾಗೆ, ಎಸಕಪದಗಳು ಆಯ್ದುಕೊಳ್ಳುತ್ತವೆ ಎಂದು ಹೇಳಲು ಬರುವು ದಿಲ್ಲ. (3) ಇಟ್ಟಳದ ಪಾಂಗುಗಳಿಗೂ ನೆರವು ಪಾಂಗುಗಳಿಗೂ ನಡುವಿರುವ ಇನ್ನೊಂದು ವ್ಯತ್ಯಾಸವೇನೆಂದರೆ, ಇಟ್ಟಳದ ಪಾಂಗುಗಳಲ್ಲಿ ಯಾವುದೂ ಒಂದಕ್ಕಿಂತ ಹೆಚ್ಚು ಎಣಿಕೆಗಳಲ್ಲಿ ಬರಲಾರದು. ಎಲ್ಲವೂ ಸೊಲ್ಲಿಗೊಂದರಂತೆ ಮಾತ್ರ (ಸೊಲ್ಲಿನ ಎಸಕಪದ ಅದನ್ನು ಆಯ್ದುಕೊಳ್ಳುವುದಿದ್ದಲ್ಲಿ) ಬರಬಲ್ಲುವು. ಇದಕ್ಕೆ ಬದಲು, ಒಂದೇ ಸೊಲ್ಲಿನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅದರ ನೆರವು ಪಾಂಗುಗಳು ಬಳಕೆ ಯಾಗಬಲ್ಲುವು. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (6ಕ) ಅವನು ಹುಡುಗನನ್ನು ಮಾತನಾಡಿಸಿದ. (6ಚ) *ಅವನು ಹುಡುಗನನ್ನು ಹುಡುಗಿಯನ್ನು ಮಾತನಾಡಿಸಿದ. (7ಕ) ಅವನು ರಾತ್ರಿ ಎಂಟು ಗಂಟೆಗೆ ಬರುತ್ತಾನೆ. (7ಚ) ನಾನು ಶಾಲೆಯಲ್ಲಿ ಗೇಟಿನ ಹತ್ತಿರ ನಿಮ್ಮನ್ನು ಕಾಣುತ್ತೇನೆ. (6ಚ)ದಲ್ಲಿ ಈಡು ಪಾಂಗನ್ನು ಎರಡು ಬಾರಿ ಬಳಸಿರುವ ಕಾರಣ, ಆ ಸೊಲ್ಲು ಸರಿಯಾಗಿಲ್ಲ; ಅವೆರಡನ್ನೂ ಹುಡುಗನನ್ನು ಮತ್ತು ಹುಡುಗಿಯನ್ನು ಎಂಬುದಾಗಿ, ಇಲ್ಲವೇ ಹುಡುಗ ಹುಡುಗಿಯರನ್ನು ಎಂಬುದಾಗಿ ಒಟ್ಟು ಸೇರಿಸಿ ಒಂದೇ ಪಾಂಗಾಗುವ ಹಾಗೆ ಮಾಡಿದಲ್ಲಿ ಮಾತ್ರ ಆ ಸೊಲ್ಲು ಸರಿಯಾಗುತ್ತದೆ. ಇದಕ್ಕೆ ಬದಲು, (7ಕ)ದಲ್ಲಿ ರಾತ್ರಿ ಮತ್ತು ಎಂಟು ಗಂಟೆಗೆ ಎಂಬ ಎರಡು ಹೊತ್ತನ್ನು ತಿಳಿಸುವ ಗುರಿ ಪಾಂಗುಗಳನ್ನು ಬಳಸಲಾಗಿದೆ, ಮತ್ತು (7ಚ)ದಲ್ಲಿ ಶಾಲೆಯಲ್ಲಿ ಮತ್ತು ಗೇಟಿನ ಹತ್ತಿರ ಎಂಬ ಇಂಬನ್ನು ತಿಳಿಸುವ ಎರಡು ಜಾಗ ಪಾಂಗುಗಳನ್ನು ಬಳಸಲಾಗಿದೆ. ಆದರೆ, ಇಲ್ಲೂ ಕೂಡ ಎರಡು ಇಲ್ಲವೇ ಹೆಚ್ಚು ಎಣಿಕೆಗಳಲ್ಲಿ ಬಂದಿರುವ ನೆರವು ಪಾಂಗುಗಳು ಒಂದಕ್ಕೊಂದು ಸಂಬಂದಿಸಿರುತ್ತವೆ. (4) ನೆರವು ಪಾಂಗುಗಳಾಗಿ ಬರುವ ಗುರಿ, ಸುರು, ಮತ್ತು ಜಾಗ ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಬರುವ ಅಂತಹವೇ ಪಾಂಗುಗಳೊಂದಿಗೂ ಕೆಲವೊಂದು ಸಂದರ್ಬಗಳಲ್ಲಿ ಒಂದೇ ಸೊಲ್ಲಿನಲ್ಲಿ ಬಳಕೆಯಾಗಬಲ್ಲುವು: (8ಕ) ಅವಳು ಕಟ್ಟಿಗೆಗೆ ಗುಡ್ಡಕ್ಕೆ ಹೋಗಿದ್ದಾಳೆ. (8ಚ) ಅವಳು ಬೆಳಗ್ಗಿನಿಂದಲೂ ಬಾವಿಯಿಂದ ನೀರು ಸೇದುತ್ತಿದ್ದಾಳೆ. (8ಟ) ಅವನು ಹೆದರಿಕೆಯಲ್ಲಿ ಹಣವನ್ನು ಅಟ್ಟದಲ್ಲಿ ಬಚ್ಚಿಟ್ಟ. (8ಕ)ದಲ್ಲಿ ಎರಡು ಗುರಿ ಪಾಂಗುಗಳು ಬಂದಿದ್ದು, ಅವುಗಳಲ್ಲಿ ಕಟ್ಟಿಗೆಗೆ ಎಂಬುದು ಎಸಕದ ಅಳಬನ್ನು ತಿಳಿಸುವ ನೆರವು ಪಾಂಗು, ಮತ್ತು ಗುಡ್ಡಕ್ಕೆ ಎಂಬುದು ಇಟ್ಟಳದ ಪಾಂಗು; (8ಚ)ದಲ್ಲಿ ಎರಡು ಸುರು ಪಾಂಗುಗಳು ಬಂದಿದ್ದು, ಅವುಗಳಲ್ಲಿ ಬೆಳಗ್ಗಿನಿಂದಲೂ ಎಂಬುದು ಎಸಕದ ಹೊತ್ತನ್ನು ತಿಳಿಸುವ ನೆರವು ಪಾಂಗು, ಮತ್ತು ಬಾವಿಯಿಂದ ಎಂಬುದು ಇಟ್ಟಳದ
ಪಾಂಗು; (8ಟ)ದಲ್ಲಿ ಎರಡು ಜಾಗ ಪಾಂಗುಗಳು ಬರುತ್ತಿದ್ದು, ಇಲ್ಲೂ ಹೆದರಿಕೆಯಲ್ಲಿ ಎಂಬುದು ಎಸಕದ ಬಗೆಯನ್ನು ತಿಳಿಸುವ ನೆರವು ಪಾಂಗು, ಮತ್ತು ಅಟ್ಟದಲ್ಲಿ ಎಂಬುದು ಇಟ್ಟಳದ ಪಾಂಗು. ಇದಲ್ಲದೆ, ಗುರಿ, ಸುರು, ಇಲ್ಲವೇ ಜಾಗ ಪಾಂಗುಗಳು ಎರಡು ಬಗೆಯ ನೆರವು ಪಾಂಗುಗಳನ್ನು ತಿಳಿಸುವುದಿದ್ದಲ್ಲಿ, ಅವನ್ನು ಒಂದೇ ಸೊಲ್ಲಿನಲ್ಲಿ ಬಳಸಲು ಬರುತ್ತದೆ; ಆದರೆ, ಇಟ್ಟಳದ ಪಾಂಗುಗಳನ್ನು, ಅವು ಆ ರೀತಿ ಎರಡು ಬಗೆಯ ಗುರಿ, ಸುರು ಇಲ್ಲವೇ ಜಾಗ ಪಾಂಗುಗಳನ್ನು ತಿಳಿಸುವುದಿದ್ದರೂ, ಒಟ್ಟಾಗಿ ಒಂದೇ ಸೊಲ್ಲಿನಲ್ಲಿ ಬಳಸಲು ಬರುವುದಿಲ್ಲ. (9ಕ) ರಜೆ ಸಿಕ್ಕಿದುದರಿಂದ ಅವನು ಇವತ್ತು ಬೆಳಗ್ಗಿನಿಂದಲೂ ಮನೆಯಲ್ಲೇ ಉಳಿದಿದ್ದಾನೆ. (9ಚ) ಅವನು ಸಿಟ್ಟಿನಲ್ಲಿ ಆ ಕೆಲಸವನ್ನು ಅರ್ದ ಗಂಟೆಯಲ್ಲೇ ಮುಗಿಸಿದ. (9ಕ)ದಲ್ಲಿ ಕತವನ್ನು ತಿಳಿಸುವ ರಜೆ ಸಿಕ್ಕಿದುದರಿಂದ ಮತ್ತು ಹೊತ್ತನ್ನು ತಿಳಿಸುವ ಇವತ್ತು ಬೆಳಗ್ಗಿನಿಂದ ಎಂಬ ಎರಡು ಬಗೆಯ ಸುರು ಪಾಂಗುಗಳು ನೆರವು ಪಾಂಗುಗಳಾಗಿದ್ದು, ಒಟ್ಟಿಗೆ ಒಂದೇ ಸೊಲ್ಲಿನಲ್ಲಿ ಬಳಕೆಯಾಗಿವೆ; ಇದೇ ರೀತಿಯಲ್ಲಿ, (9ಚ)ದಲ್ಲಿ ಎಸಕದ ಬಗೆಯನ್ನು ತಿಳಿಸುವ ಸಿಟ್ಟಿನಲ್ಲಿ ಮತ್ತು ಹೊತ್ತಿನ ಗಡುವನ್ನು ತಿಳಿಸುವ ಅರ್ದ ಗಂಟೆಯಲ್ಲಿ ಎಂಬ ಎರಡು ಬಗೆಯ ಜಾಗ ಪಾಂಗುಗಳು ನೆರವು ಪಾಂಗುಗಳಾಗಿದ್ದು, ಒಟ್ಟಿಗೆ ಒಂದೇ ಸೊಲ್ಲಿನಲ್ಲಿ ಬಂದಿವೆ. ಆದರೆ, ಹೆಚ್ಚಿನೆಡೆಗಳಲ್ಲೂ ಈ ರೀತಿ ಒಂದೇ ಸೊಲ್ಲಿನಲ್ಲಿ ಎರಡು ಬಗೆಯ ಸುರು, ಗುರಿ ಇಲ್ಲವೇ ಜಾಗ ಪಾಂಗುಗಳನ್ನು ಬಳಸುವ ಬದಲು, ಅವುಗಳಲ್ಲಿ ಒಂದನ್ನು ಬಳಸದಿರಲಾಗುತ್ತದೆ, ಇಲ್ಲವೇ ಬೇರೆ ಪಾಂಗಾಗಿ ಮಾರ್ಪಡಿಸಿ ಬಳಸ ಲಾಗುತ್ತದೆ. (5) ಇಟ್ಟಳದ ಪಾಂಗು ಮತ್ತು ನೆರವುಗಳ ನಡುವಿನ ವ್ಯತ್ಯಾಸ ಹೆಚ್ಚಿನೆಡೆಗಳಲ್ಲೂ ಸ್ಪಶ್ಟವಾಗಿರುತ್ತದೆ; ಆದರೆ, ಕೆಲವು ಕಡೆಗಳಲ್ಲಿ ಒಂದು ಪಾಂಗನ್ನು ಇಟ್ಟಳದ ಪಾಂಗೆಂದು ತಿಳಿಯಬೇಕೋ ಇಲ್ಲವೇ ನೆರವು ಪಾಂಗೆಂದು ತಿಳಿಯಬೇಕೋ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (10ಕ) ಅವರು ದನಗಳನ್ನು ಗುಡ್ಡಕ್ಕೆ ಅಟ್ಟಿದರು. (10ಚ) ಅವನು ಹುಡುಗನನ್ನು ಸಂಬಳಕ್ಕೆ ಇಟ್ಟಿದ್ದಾರೆ. (10ಕ)ದಲ್ಲಿ ಬಂದಿರುವ ಗುಡ್ಡಕ್ಕೆ ಎಂಬ ಗುರಿಯನ್ನು ತಿಳಿಸುವ ಪಾಂಗನ್ನು ಇಟ್ಟಳದ ಪಾಂಗೆಂದೂ ತಿಳಿಯಬಹುದು, ಇಲ್ಲವೇ ನೆರವು ಪಾಂಗೆಂದೂ ತಿಳಿಯಬಹುದು; ಆದರೆ, ಅದನ್ನು ಬಿಟ್ಟಿರುವ ಅವರು ದನಗಳನ್ನು ಅಟ್ಟಿದರು ಎಂಬ ಸೊಲ್ಲಿಗೆ ಹಿತ್ತಿಲಿಗೆ ನುಗ್ಗಿದ ದನಗಳನ್ನು ಅಟ್ಟಿದರು ಎಂಬ ಬೇರೆಯೇ ಹುರುಳು ದೊರಕಬಲ್ಲುದಾದ ಕಾರಣ, ಅದನ್ನು ಇಟ್ಟಳದ ಪಾಂಗೆಂದು ತಿಳಿಯುವುದೇ ಸರಿಯೆಂದು ತೋರುತ್ತದೆ. ಇದೇ ರೀತಿಯಲ್ಲಿ, (10ಚ)ದಲ್ಲಿ ಬಂದಿರುವ ಸಂಬಳಕ್ಕೆ ಎಂಬುದು ಅಳಬನ್ನು ತಿಳಿಸುವ ನೆರವು ಪಾಂಗೆಂದು ಹೇಳಲು ಬರುತ್ತದೆಯಾದರೂ, ಅದರ ಇರವು ಎಸಕಪದದ ಹುರುಳನ್ನು ಕೊಡುವಲ್ಲಿ ಬೇಕಾಗುತ್ತದೆಯಾದ ಕಾರಣ, ಅದನ್ನು ಗುರಿ ಪಾಂಗನ್ನು ತಿಳಿಸುವ ಇಟ್ಟಳದ ಪಾಂಗೆಂದು ತಿಳಿಯುವುದೇ ಸರಿಯೆಂದು ತೋರುತ್ತದೆ.
7.4.2 ಆಗುಗ, ಮಾಡುಗ, ಮತ್ತು ಈಡು
ಎಸಕಪದಗಳೊಂದಿಗೆ ಬರುವ ಆಗುಗ, ಮಾಡುಗ ಮತ್ತು ಈಡು ಪಾಂಗುಗಳನ್ನು ಒಂದು ಗುಂಪಿನಲ್ಲೂ, ಗುರಿ, ಸುರು ಮತ್ತು ಜಾಗ ಪಾಂಗುಗಳನ್ನು ಇನ್ನೊಂದು ಗುಂಪಿನಲ್ಲೂ ಗುಂಪಿಸಲು ಬರುತ್ತದೆ. ಇದಲ್ಲದೆ, ಆಗುಗ ಮತ್ತು ಮಾಡುಗ ಪಾಂಗುಗಳನ್ನು ಮಾತ್ರವೇ ಒಂದು ಗುಂಪಿನಲ್ಲಿ, ಮತ್ತು ಗುರಿ ಹಾಗೂ ಸುರು ಪಾಂಗುಗಳನ್ನು ಮಾತ್ರವೇ ಇನ್ನೊಂದು ಗುಂಪಿನಲ್ಲಿಯೂ ಗುಂಪಿಸಲು ಬರುತ್ತದೆ. ಆಗುಗ, ಮಾಡುಗ, ಮತ್ತು ಈಡು ಪಾಂಗುಗಳು ಎಸಕಪದಕ್ಕೆ ತೀರಾ ಹತ್ತಿರದ ಪಾಂಗುಗಳೆಂದು ಹೇಳಬಹುದು; ಅವು ಮುಕ್ಯವಾಗಿ ಎಸಕದಲ್ಲಿ ನೇರವಾಗಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ಗುರುತಿಸುತ್ತವೆ; ಇದಕ್ಕೆ
ಬದಲು, ಗುರಿ, ಸುರು ಮತ್ತು ಜಾಗ ಪಾಂಗುಗಳು ಮುಕ್ಯವಾಗಿ ಎಸಕದ ಇಂಬನ್ನು (ಮತ್ತು ಹೊತ್ತನ್ನು) ತಿಳಿಸಲು ಬಳಕೆಯಾಗುತ್ತವೆ. ಆದರೆ, ಇವನ್ನೇ ಎಸಕದಲ್ಲಿ ನೇರವಾಗಿ ಬಳಕೆಯಾಗುವ ಕೆಲವು ಪಾಂಗುಗಳನ್ನು ತಿಳಿಸುವುದಕ್ಕಾಗಿಯೂ ಬಳಸಲಾಗುತ್ತದೆ, ಮತ್ತು ಇಂತಹ ಬಳಕೆಯಲ್ಲಿ ಅವು ಎಸಕಪದದ ಹತ್ತಿರಕ್ಕೆ ಬರುತ್ತವೆ; ಅವು ಇಟ್ಟಳದ ಪಾಂಗುಗಳಾಗಿ ಕಾಣಿಸಲು ಇದೇ ಕಾರಣ. ಆಗುಗ, ಮಾಡುಗ ಮತ್ತು ಈಡು ಪಾಂಗುಗಳಿಗೂ ಸುರು, ಗುರಿ ಮತ್ತು ಜಾಗ ಪಾಂಗುಗಳಿಗೂ ನಡುವಿರುವ ಈ ವ್ಯತ್ಯಾಸ ಇನ್ನೊಂದು ಬಗೆಯಲ್ಲಿಯೂ ಕಾಣಿಸಿಕೊಳ್ಳುತ್ತದೆ: ಆಗುಗ ಮತ್ತು ಮಾಡುಗ ಪಾಂಗುಗಳನ್ನು ಗುರುತಿಸುವ ಪದಗಳು ಯಾವ ಒಟ್ಟನ್ನೂ ಪಡೆಯದೆ ಹಾಗೆಯೇ ಬಳಕೆಯಾಗುತ್ತವೆ, ಮತ್ತು ಈಡು ಪಾಂಗನ್ನು ಗುರುತಿಸುವ ಪದಗಳು ಅನ್ನು ಒಟ್ಟಿನೊಂದಿಗೆ ಬರುತ್ತವೆಯಾದರೂ, ಮಂದಿಯನ್ನು ಗುರುತಿಸುವ ಪದಗಳನ್ನು ಹೊರತುಪಡಿಸಿ ಉಳಿದ ಪದಗಳೊಂದಿಗೆ ಆ ಒಟ್ಟನ್ನು ಹಲವೆಡೆಗಳಲ್ಲಿ ಬಳಸದಿರಲೂ ಬರುತ್ತದೆ (7.3.1 ನೋಡಿ). ಇದಲ್ಲದೆ, ಈಡು ಪಾಂಗನ್ನು ಗುರುತಿಸುವ ಪದಗಳಿಗೆ ಅನ್ನು ಒಟ್ಟನ್ನು ನೇರವಾಗಿ ಸೇರಿಸಲಾಗುತ್ತದೆ, ಮತ್ತು ಸುರು ಮತ್ತು ಜಾಗ ಪಾಂಗುಗಳನ್ನು ಗುರುತಿಸುವ ಪದಗಳಿಗೆ ಇಂದ ಮತ್ತು ಅಲ್ಲಿ ಒಟ್ಟುಗಳನ್ನು ಹೆಸರುಪತ್ತುಗೆಯ ಒಟ್ಟಿನ ಬಳಿಕ ಸೇರಿಸಲಾಗುತ್ತದೆ (4.5.2 ನೋಡಿ). ಗುರಿ ಪಾಂಗನ್ನು ಗುರುತಿಸುವ ಇಗೆ ಒಟ್ಟೂ ಹಳೆಗನ್ನಡದ ಕಾಲದಲ್ಲಿ, ಮತ್ತು ಅದಕ್ಕೂ ಹಿಂದಿನ ಮೂಲದ್ರಾವಿಡದ ಕಾಲದಲ್ಲಿ ಹೆಸರುಪತ್ತುಗೆ ಒಟ್ಟಿನ ಬಳಿಕ ಬರುವಂತಹದೇ ಆಗಿತ್ತು. ಇಂಬು ಪಾಂಗನ್ನು ಗುರುತಿಸುವ ಮೇಲೆ, ಕೆಳಗೆ, ಹಿಂದೆ, ಮುಂದೆ ಮೊದಲಾದ ಪದಗಳೂ ಹೆಸರುಪತ್ತುಗೆ ಒಟ್ಟಿನ ಬಳಿಕ ಬರುತ್ತಿದ್ದು, (ಮರದ ಮೇಲೆ, ಮನೆಯ ಮುಂದೆ), ಸುರು, ಗುರಿ, ಮತ್ತು ಜಾಗ ಪಾಂಗುಗಳನ್ನು ಗುರುತಿಸುವ ಒಟ್ಟುಗಳು ಅವಕ್ಕೆ ಹತ್ತಿರ ಇವೆಯೆಂದೂ ಹೇಳಬಹುದು.
7.4.3 ಆಗುಗ ಮತ್ತು ಮಾಡುಗ ಪಾಂಗುಗಳು
ಇವೆರಡಕ್ಕೂ ಸಮಾನವಾಗಿರುವ ಅಂಶವೆಂದರೆ, ಅವು ತಿಳಿಸುವ ಪಾಂಗು ಎಂತಹದು ಎಂಬುದನ್ನು ಅಡಕವಾಗಿ ಎಸಕಪದದ ಕೊನೆಯಲ್ಲಿ ಬರುವ ಗುರುತಿಸುವ ಒಟ್ಟು ತಿಳಿಸುತ್ತದೆ (4.5.7 ನೋಡಿ): (1ಕ) ಬೆಂಕಿಗೆ ಬೆಣ್ಣೆ ಕರಗಿತು. (1ಚ) ಹಣ್ಣುಗಳು ನೀರಿನಲ್ಲಿ ತೇಲುತ್ತಿದ್ದುವು. (1ಟ) ಹುಡುಗಿ ನಾಚಿದಳು. (2ಕ) ಹುಡುಗ ಬೆರಳಿಗೆ ನೂಲು ಸುಂದಿದ. (2ಚ) ಆಕೆ ಒಂದು ಎಮ್ಮೆ ಸಾಕಿದ್ದಳು. (2ಟ) ಮದುವೆಗೆ ತುಂಬಾ ಜನ ಬಂದಿದ್ದರು. (1ಕ-ಟ) ಸೊಲ್ಲುಗಳಲ್ಲಿ, ಅವುಗಳ ಎಸಕಪದದ ಕೊನೆಯಲ್ಲಿ ಬಂದಿರುವ ತು, ವು, ಮತ್ತು ಳು ಎಂಬ ಗುರುತಿಸುವ ಒಟ್ಟುಗಳು ಅವುಗಳ ಆಗುಗ ಪಾಂಗು ಎಂತಹದು ಎಂಬುದನ್ನು (ಅದರ ಗುರ್ತ ಮತ್ತು ಎಣಿಕೆಗಳನ್ನು ಮಾತ್ರ) ಅಡಕವಾಗಿ ತಿಳಿಸುತ್ತವೆ. ಇದೇ ರೀತಿಯಲ್ಲಿ, (2ಕ-ಟ)ಗಳಲ್ಲಿ ಅವುಗಳ ಎಸಕಪದದ ಕೊನೆಯಲ್ಲಿ ಬಂದಿರುವ ಅ, ಳು ಮತ್ತು ರು ಎಂಬ ಗುರುತಿಸುವ ಒಟ್ಟುಗಳು ಅವುಗಳ ಮಾಡುಗ ಪಾಂಗು ಎಂತಹದು ಎಂಬುದನ್ನು ತಿಳಿಸುತ್ತವೆ. ಮಾಡುಗಕ್ಕೆ ಅದು ನಡೆಸುವ ಎಸಕದ ಮೇಲೆ ಹತೋಟಿಯಿದೆ, ಮತ್ತು ಆಗುಗಕ್ಕೆ ಹತೋಟಿಯಿಲ್ಲ ಎಂಬುದೇ ಈ ಎರಡು ಪಾಂಗುಗಳ ನಡುವಿರುವ ಮುಕ್ಯ ವ್ಯತ್ಯಾಸ. ಮಾಡುಗ ಪಾಂಗು ಬರಬಲ್ಲ ಮಾಡುಹವೆಂಬ ಎಸಕಪದಕ್ಕೂ ಆಗುಗ ಪಾಂಗು ಬರಬಲ್ಲ ಆಡುಹವೆಂಬ ಎಸಕಪದಕ್ಕೂ ನಡುವೆಯೂ ಇದೇ ವ್ಯತ್ಯಾಸ ಕಾಣಿಸುತ್ತದೆ: ಒಂದು ಪಾಂಗಿನ (ಮಾಡುಗನ) ಹತೋಟಿಯಲ್ಲಿ ನಡೆಯುವ ಎಸಕ ಮಾಡುಹ, ಮತ್ತು ಯಾವ ಪಾಂಗಿನ ಹತೋಟಿಯಲ್ಲೂ ಇಲ್ಲದಿರುವ ಎಸಕ ಆಗುಹ. ಈ ರೀತಿ, ಆಗುಗ ಮತ್ತು ಮಾಡುಗ ಪಾಂಗುಗಳು ಎರಡು ಬೇರೆ ಬೇರೆ ಬಗೆಯ ಎಸಕಪದಗಳೊಂದಿಗೆ ಸೊಲ್ಲುಗಳಲ್ಲಿ ಬಳಕೆಯಾಗುವ ಕಾರಣ, ಮತ್ತು ಈ ಎಸಕಪದಗಳಲ್ಲೇನೇ ಅವುಗಳ ಕೊನೆಯಲ್ಲಿ ಬರುವ ಒಟ್ಟುಗಳ ಮೂಲಕ ಅವನ್ನು
ಅಡಕವಾಗಿ ಗುರುತಿಸಲಾಗುತ್ತದೆಯಾದ ಕಾರಣ, ಅವನ್ನು ತಿಳಿಸುವ ಹೆಸರುಪದ ಇಲ್ಲವೇ ಹೆಸರುಪದಕಂತೆಗಳೊಂದಿಗೆ ಅವಕ್ಕೂ ಎಸಕಪದಕ್ಕೂ ನಡುವಿರುವ ಸಂಬಂದವೇನೆಂಬುದನ್ನು ತಿಳಿಸಲು ಪತ್ತುಗೆ ಒಟ್ಟುಗಳನ್ನು ಬಳಸ ಬೇಕಾಗುವುದಿಲ್ಲ. ಹಾಗಾಗಿ, ಈ ಪದಗಳು ಯಾವ ಪತ್ತುಗೆ ಒಟ್ಟನ್ನೂ ಸೇರಿಸದಿರುವ ರೂಪದಲ್ಲಿ ಬರುತ್ತವೆ: (3ಕ) ನಿಮ್ಮ ನಾಯಿ ಅಲ್ಲಿ ಬೆಕ್ಕುಗಳನ್ನು ಕೊಲ್ಲುತ್ತಿದೆ. (3ಚ) ಅಲ್ಲಿ ಬೆಕ್ಕುಗಳು ಸಾಯುತ್ತಿವೆ. (3ಕ)ದಲ್ಲಿ ಕೊಲ್ಲು ಎಂಬ ಒಂದು ಮಾಡುಹವನ್ನು ತಿಳಿಸುವ ಎಸಕಪದ ಬಂದಿದೆ, ಮತ್ತು ಅದರ ಮಾಡುಗ ಪಾಂಗನ್ನು ಗುರುತಿಸುವ ನಿಮ್ಮ ನಾಯಿ ಎಂಬುದು ಯಾವ ಪತ್ತುಗೆ ಒಟ್ಟನ್ನೂ ಪಡೆಯದೆ ಬಳಕೆಯಾಗಿದೆ; ಆ ಸೊಲ್ಲಿನ ಕೊಲ್ಲುತ್ತಿದೆ ಎಂಬ ಎಸಕಪದರೂಪದ ಕೊನೆಯಲ್ಲಿ ಬರುವ ಎ ಒಟ್ಟು ಅದರ ಮಾಡುಗ ಪಾಂಗನ್ನೇ ಅಡಕವಾಗಿ ಗುರುತಿಸುತ್ತದೆ. ಇದಕ್ಕೆ ಬದಲು, (3ಚ)ದಲ್ಲಿ ಸಾಯು ಎಂಬ ಒಂದು ಆಗುಹವನ್ನು ತಿಳಿಸುವ ಎಸಕಪದ ಬಂದಿದೆ, ಮತ್ತು ಅದರ ಆಗುಗ ಪಾಂಗನ್ನು ಗುರುತಿಸುವ ಬೆಕ್ಕುಗಳು ಎಂಬುದು ಪತ್ತುಗೆ ಒಟ್ಟನ್ನು ಪಡೆಯದೆ ಬಂದಿದ್ದು, ಆ ಸೊಲ್ಲಿನ ಸಾಯುತ್ತಿವೆ ಎಂಬ ಎಸಕಪದರೂಪದ ಕೊನೆಯಲ್ಲಿ ಬರುವ ವೆ ಒಟ್ಟು ಆ ಆಗುಗವನ್ನೇ ಅಡಕವಾಗಿ ಗುರುತಿಸುತ್ತದೆ. ಕನ್ನಡದ ಸೊಲ್ಲರಿಮೆಯ ಮಟ್ಟಿಗೆ ಈ ಆಗುಗ ಮತ್ತು ಮಾಡುಗಗಳ ನಡುವಿರುವ ವ್ಯತ್ಯಾಸ ತುಂಬಾ ಮುಕ್ಯವಾದುದು. ಈ ವಿಶಯವನ್ನು ಬೆಂಬಲಿಸುವ ಕೆಲವು ಸೊಲ್ಲರಿಮೆಯ ಸಂಗತಿಗಳನ್ನು ಕೆಳಗೆ ಕೊಡಲಾಗಿದೆ: (1) ಎರಡು ಸೊಲ್ಲುಗಳನ್ನು ಎಸಕಪದಗಳ ಜೋಡಿಸುವ ರೂಪದ ಮೂಲಕ ಜೋಡಿಸುವಾಗ ಈ ವ್ಯತ್ಯಾಸವನ್ನು ಗಮನಿಸಬೇಕಾಗುತ್ತದೆ. ಯಾಕೆಂದರೆ, ಹಾಗೆ ಜೋಡಿಸುವ ಎರಡು ಸೊಲ್ಲುಗಳಲ್ಲೂ ಹತೋಟಿಯಲ್ಲಿರುವ ಮಾಡುಹಗಳು ಬಳಕೆಯಾಗಿವೆಯಾದರೆ, ಅವುಗಳ ಮಾಡುಗಗಳು ಒಂದೇ ವ್ಯಕ್ತಿಯನ್ನು ಗುರುತಿಸುತ್ತಿರಬೇಕಾಗುತ್ತದೆ: (4ಕ) ರಾಜು ತರಕಾರಿಯನ್ನು ಬೇಯಿಸಿ ಹುಳಿ ಮಾಡಿದ. (4ಚ) *ರಾಜು ತರಕಾರಿಯನ್ನು ಬೇಯಿಸಿ ಜಾನಕಿ ಹುಳಿ ಮಾಡಿದಳು. (4ಟ) ರಾಜು ಬೇಗನೆ ಬಂದು ಜಾನಕಿಗೆ ತೊಂದರೆಯಾಯಿತು. (4ತ) ಮಡಕೆ ಒಡೆದು ಮೊಸರು ರಾಜುವಿನ ಮೋರೆಗೆ ಚಿಮ್ಮಿತು. (4ಕ) ಮತ್ತು (4ಚ) ಸೊಲ್ಲುಗಳಲ್ಲಿ ಜೋಡಿಸಿರುವ ಎರಡು ಎಸಕಪದಗಳೂ ಹತೋಟಿಯಲ್ಲಿರುವ ಮಾಡುಹಗಳಾಗಿವೆ; ಹಾಗಾಗಿ, ಅವುಗಳ ಮಾಡುಗಗಳು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿರುವ (4ಕ) ಸೊಲ್ಲು ಸರಿಯಾಗಿದೆ, ಮತ್ತು ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸುತ್ತಿರುವ (4ಚ) ಸೊಲ್ಲು ಸರಿಯಾಗಿಲ್ಲ. ಇದಕ್ಕೆ ಬದಲು, (4ಟ) ಸೊಲ್ಲಿನಲ್ಲಿ ಬರು ಎಂಬ ಮಾಡುಹದೊಂದಿಗೆ (ತೊಂದರೆ)ಯಾಗು ಎಂಬ ಆಗುಹವನ್ನು ಜೋಡಿಸಲಾಗಿದೆ, ಮತ್ತು (4ತ)ದಲ್ಲಿ ಒಡೆ ಮತ್ತು ಚಿಮ್ಮು ಎರಡು ಆಗುಹಗಳನ್ನು ಜೋಡಿಸಲಾಗಿದೆ. (4ಟ)ದಲ್ಲಿ ಇಬ್ಬರು ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸಲಾಗಿದೆಯಾದರೂ, ಅವುಗಳಲ್ಲಿ ಒಂದು ಮಾತ್ರ ಮಾಡುಗ ಪಾಂಗಾಗಿದೆ, ಮತ್ತು ಇನ್ನೊಂದು ಗುರಿ ಪಾಂಗಾಗಿದೆ; (4ತ)ದಲ್ಲೂ ಎರಡು ಆಗುಗಗಳು ಮಾತ್ರ ಬಂದಿವೆಯಲ್ಲದೆ ಮಾಡುಗಗಳು ಬಂದಿಲ್ಲ. ಹಾಗಾಗಿ, ಈ ಎರಡು ಸೊಲ್ಲುಗಳೂ ಸರಿಯಾಗಿವೆ. (2) ಮಾಡುಹ ಪದಗಳನ್ನು ಮಾತ್ರ ಅರಿಕೆರೂಪದಲ್ಲಿ ಬಳಸಲು ಬರುತ್ತದೆ ಎಂಬುದು ಈ ವ್ಯತ್ಯಾಸವನ್ನು ಬೆಂಬಲಿಸುವ ಇನ್ನೊಂದು ವಿಶಯ. ಒಂದು ಪಾಂಗು ಗುರುತಿಸುವ ವ್ಯಕ್ತಿಗೆ ಎಸಕದ ಮೇಲೆ ಹತೋಟಿಯಿದೆಯಾದರೆ, ಅದು ಆ ಎಸಕವನ್ನು ಬೇಕೆಂದೇ ನಡೆಸಬಲ್ಲುದು, ಇಲ್ಲವೇ ಅದು ನಡೆಯದಂತೆ ತಡೆಯಬಲ್ಲುದು; ಮಾಡುಗ ಪಾಂಗು ಅಂತಹದಾದ ಕಾರಣ, ಅದು ಬಂದಿರುವ ಮಾಡುಹಪದಗಳನ್ನು ಅರಿಕೆರೂಪಗಳಲ್ಲಿ ಬಳಸಲು ಬರುತ್ತದೆ: (5ಕ) ನೀವು ಮನೆಗೆ ಹೋಗಿ!
(5ಚ) ಅದನ್ನು ನೀನು ಇಲ್ಲಿಗೆ ತರುವುದು ಬೇಡ. ಆದರೆ, ಈ ರೀತಿ ಎಸಕದ ಮೇಲೆ ಹತೋಟಿಯಿಲ್ಲದ ಆಗುಗ ಪಾಂಗು ಬಂದಿರುವ ಆಗುಹಪದಗಳನ್ನು ಹೆಚ್ಚಿನ ಅರಿಕೆರೂಪಗಳಲ್ಲೂ ಬಳಸಲು ಬರುವುದಿಲ್ಲ: (6) *ನೀವು ನನಗೆ ಹೆದರಿ! ಹೆದರಬೇಡಿ ಎಂಬಂತಹ ರೂಪಗಳಲ್ಲಿ ಕೆಲವು ಆಗುಹ ಪದಗಳನ್ನು ಬಳಸಲು ಬರುತ್ತದೆಯಾದರೂ, ಅವು ಆಡುಗನ ಬಯಕೆಯನ್ನು ತಿಳಿಸುತ್ತವೆಯಲ್ಲದೆ ಅಪ್ಪಣೆಯನ್ನಲ್ಲ. ಅವನಿಗೆ ಹಣ ದೊರಕಲಿ ಇಲ್ಲವೇ ಅವನ ಕಾಲಿಗೆ ಮುಳ್ಳು ಚುಚ್ಚಲಿ ಎಂಬಂತಹ ಬಳಕೆಗಳಲ್ಲೂ ಇದೇ ರೀತಿ ಆಡುಗನ ಬಯಕೆಯನ್ನು ಮಾತ್ರವೇ ತಿಳಿಸಲಾಗುತ್ತದೆ. (3) ಬೇಕೆಂದೇ ಎಂಬುದನ್ನೂ ಹತೋಟಿಯಲ್ಲಿರುವ ಮಾಡುಹದೊಂದಿಗೆ ಬಳಸಲು ಬರುತ್ತದಲ್ಲದೆ ಹತೋಟಿಯಲ್ಲಿಲ್ಲದ ಆಗುಹದೊಂದಿಗೆ ಬಳಸಲು ಬರುವು ದಿಲ್ಲ: (7ಕ) ನಾನು ಬೇಕೆಂದೇ ಅವನ ಕಡೆಗೆ ನೋಡಿದೆ. (7ಚ) *ನಾನು ಬೇಕೆಂದೇ ಅವನನ್ನು ಕಂಡೆ. (7ಟ) *ನನಗೆ ಬೇಕೆಂದೇ ಆ ಪುಸ್ತಕ ಸಿಕ್ಕಿತು. ಕಾಣು ಮತ್ತು ಸಿಗು ಪದಗಳು ಯಾರ ಹತೋಟಿಯಲ್ಲೂ ಇಲ್ಲದ ಆಗುಹಗಳನ್ನು ತಿಳಿಸುತ್ತವೆ; ಹಾಗಾಗಿ, ಅವನ್ನು ಬೇಕೆಂದೇ ಎಂಬುದರೊಂದಿಗೆ ಬಳಸಿರುವ (7ಚ) ಮತ್ತು (7ಟ) ಸೊಲ್ಲುಗಳು ಸರಿಯಾಗಿಲ್ಲ. (4) ಪಾಂಗಿಟ್ಟಳದಲ್ಲಿ ಬರುವ ಎರಡು ಪಾಂಗುಗಳನ್ನು ಒಟ್ಟುಸೇರಿಸುವಂತಹ ಸೇರಿಕೆಯೆಸಕದ ಪದವನ್ನು ಮಾಡುಹ ಪದಗಳಿಂದ ಮಾತ್ರ ಪಡೆಯಲು ಬರುತ್ತದೆ; ಆಗುಹ ಪದಗಳಿಂದ ಪಡೆಯಬಲ್ಲ ಸೇರಿಕೆಯೆಸಕದ ಪದಗಳಿಗೆ ಅಂತಹ ಪಾಂಗಿಟ್ಟಳದ ಎರಡು ಪಾಂಗುಗಳನ್ನು ಒಟ್ಟುಸೇರಿಸುವ ಹುರುಳು ದೊರಕುವುದಿಲ್ಲ (8.4(3-4) ನೋಡಿ): (8ಕ) ಬಳ್ಳಿ ಮರಕ್ಕೆ ಹಬ್ಬಿಕೊಂಡಿದೆ. (8ಚ) ಅವನು ಮುದುಕನಿಗೆ ತನ್ನನ್ನೇ ಮಾರಿಕೊಂಡ. (8ಚ)ದಲ್ಲಿ ಮಾಡುಗ ಮತ್ತು ಈಡು ಪಾಂಗುಗಳನ್ನು ಒಟ್ಟುಸೇರಿವೆ; ಇದಕ್ಕೆ ಬದಲು, (8ಕ)ದಲ್ಲಿ ಆಗುಗ ಮತ್ತು ಗುರಿ ಪಾಂಗುಗಳು ಒಟ್ಟುಸೇರದೆ ಬೇರೆ ಯಾಗಿಯೇ ಉಳಿದುಕೊಂಡಿವೆ.
7.4.4 ಈಡು ಪಾಂಗು
ಈಡು ಪಾಂಗು ಮುಕ್ಯವಾಗಿ ಮಾಡುಹವನ್ನು ತಿಳಿಸುವ ಎಸಕಪದಗಳೊಂದಿಗೆ ಬರುತ್ತದೆ; ಆಗುಹವನ್ನು ತಿಳಿಸುವ ಕೆಲವು ಎಸಕಪದಗಳೊಂದಿಗೂ ಅದು ಬರಬಲ್ಲು ದೆಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನು ಕತೆ ಮರೆತ. (1ಚ) ಅವನು ಇಬ್ಬರು ಮಕ್ಕಳನ್ನು ಪಡೆದ. (1ಟ) ಅವನು ನನ್ನನ್ನು ಕಂಡ.
ಮಾಡುಹವನ್ನು ತಿಳಿಸುವ ಎಸಕಪದಗಳೊಂದಿಗೆ ಅದು ಮಾಡುಗ+ಈಡು, ಮಾಡುಗ+ಗುರಿ+ಈಡು, ಮಾಡುಗ+ಸುರು+ಈಡು ಮತ್ತು ಮಾಡುಗ+ಜಾಗ+ಈಡು ಎಂಬ ನಾಲ್ಕು ಬಗೆಯ ಪಾಂಗಿಟ್ಟಳಗಳಲ್ಲಿ ಕಾಣಿಸಿಕೊಳ್ಳುತ್ತದೆ. (1) ಕೆಲವು ಎಸಕಪದಗಳ ಈಡು ಎಂತಹದೆಂಬುದನ್ನು ಎಸಕಪದದ ಹುರುಳೇ ತಿಳಿಸುತ್ತದೆ; ಹಾಗಾಗಿ, ಅಂತಹ ಎಸಕಪದಗಳನ್ನು ಬಳಸುವಲ್ಲಿ ಈಡನ್ನು ಬಳಸ ದಿರಲೂ ಬರುತ್ತದೆ: (2ಕ) ಅವನು ರಾಮುವಿಗೆ ಒಂದು ಗುದ್ದು ಗುದ್ದಿದ > ಅವನು ರಾಮುವಿಗೆ ಗುದ್ದಿದ. (2ಚ) ಅವನು ತಂದೆಗೆ ಕಾಗದ ಬರೆದಿದ್ದಾನೆ > ಅವನು ತಂದೆಗೆ ಬರೆದಿದ್ದಾನೆ. (2ಟ) ಕೆಲಸ ಮಾಡಿ ಅವನಿಗೆ ಮಯ್ ಬೆವತಿತು > ಕೆಲಸ ಮಾಡಿ ಅವನಿಗೆ ಬೆವತಿತು. (2) ಎಸಕದಿಂದ ಉಂಟಾದವು ಮತ್ತು ಮಾರ್ಪಟ್ಟವು ಎಂಬುದಾಗಿ ಈಡು ಪಾಂಗುಗಳನ್ನು ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಬಗೆಯ ಸೊಲ್ಲುಗಳನ್ನು ಗಮನಿಸಬಹುದು: (3ಕ) ಅವನೊಂದು ಬಾವಿ ತೋಡಿದ. (3ಚ) ಅವನೊಂದು ಮನೆ ಕಟ್ಟಿದ. (3ಟ) ಅವನೊಂದು ಬುಟ್ಟಿ ಹೆಣೆದ. (3ತ) ಅವನೊಂದು ಸೀರೆ ನೇದ. (4ಕ) ಅವನೊಂದು ಬಾವಿ ಮುಚ್ಚಿದ. (4ಚ) ಅವನೊಂದು ಮನೆ ಮುರಿದ. (4ಟ) ಅವನೊಂದು ಬುಟ್ಟಿ ಮಾರಿದ. (4ತ) ಅವನೊಂದು ಸೀರೆ ಹರಿದ. ಮೇಲೆ (3ಕ-ತ) ಸೊಲ್ಲುಗಳಲ್ಲಿ ಬಂದಿರುವ ಈಡು ಪಾಂಗುಗಳು ಅವು ತಿಳಿಸುವ ಎಸಕದಿಂದ ಉಂಟಾಗಿವೆ; ಇದಕ್ಕೆ ಬದಲು, (4ಕ-ತ) ಸೊಲ್ಲುಗಳಲ್ಲಿ ಬಂದಿರುವ ಈಡು ಪಾಂಗುಗಳು ಅವು ತಿಳಿಸುವ ಎಸಕಕ್ಕೂ ಮೊದಲೇ ಇದ್ದುವುಗಳು; ಆದರೆ, ಆ ಎಸಕಗಳಿಂದಾಗಿ ಅವು ಮಾರ್ಪಟ್ಟಿವೆ. ಏನು ಮಾಡಿದ? ಎಂಬ ಕೇಳ್ವಿಯನ್ನು ಮಾರ್ಪಡುವ ಈಡಿನ ಕುರಿತಾಗಿ ಕೇಳಲು ಬರುತ್ತದಲ್ಲದೆ ಉಂಟಾಗುವ ಈಡಿನ ಕುರಿತಾಗಿ ಕೇಳಲು ಬರುವುದಿಲ್ಲ: (5ಕ) ಅವನು ಮನೆಯನ್ನೇನು ಮಾಡಿದ? ಮುರಿದ/ಕಟ್ಟಿದ. (5ಚ) ಅವನು ಬಾವಿಯನ್ನೇನು ಮಾಡಿದ? ಮುಚ್ಚಿದ/ತೋಡಿದ. (3) ಈಡು ಪಾಂಗನ್ನು ಪಡೆಯುವ ಎಸಕಪದಗಳ ನಡುವೆ ಇನ್ನೊಂದು ವ್ಯತ್ಯಾಸವೂ ಇದೆ: ಅವುಗಳಲ್ಲಿ ಕೆಲವು ಈಡನ್ನು ಪೂರ್ತಿಯಾಗಿ ತಾಗುತ್ತವೆ, ಮತ್ತು ಬೇರೆ ಕೆಲವು ಅವುಗಳ ಒಂದು ಅಂಶವನ್ನು ಮಾತ್ರ ತಾಗುತ್ತವೆ: (6ಕ) ಅವಳು ತನ್ನ ಸೀರೆಯನ್ನು ತೊಳೆದಳು. (6ಚ) ಅವಳು ತನ್ನ ಸೀರೆಯನ್ನು ಹರಿದಳು. (7ಕ) ಅವನು ಒಂದು ಕತೆ ಬರೆದ. (7ಚ) ಅವನು ತನ್ನ ಬೆರಳನ್ನು ಕತ್ತರಿಸಿಕೊಂಡ. (8ಕ) ಅವನು ನದಿಯನ್ನು ದಾಟಿದ.
(8ಚ) ಅವನು ಮೇಜನ್ನು ಮುಟ್ಟಿದ. (6ಕ) ಸೊಲ್ಲು ಅವಳು ಸೀರೆಯನ್ನು ಪೂರ್ತಿ ತೊಳೆದಿದ್ದಾಳೆಂಬುದನ್ನು ತಿಳಿಸುತ್ತ ದಲ್ಲದೆ, ಅದರ ಒಂದು ತುದಿಯನ್ನು ಮಾತ್ರ ತೊಳೆದಿದ್ದಾಳೆ ಎಂಬುದಾಗಿ ತಿಳಿಸುವುದಿಲ್ಲ; ಇದಕ್ಕೆ ಬದಲು, ಅವಳು ಸೀರೆಯ ಒಂದು ತುದಿಯನ್ನು ಮಾತ್ರವೇ ಹರಿದಿದ್ದರೂ (6ಚ) ಸೊಲ್ಲು ಸರಿಯಾಗಬಹುದು. (7ಕ-ಚ) ಮತ್ತು (8ಕ-ಚ)ಗಳ ನಡುವೆಯೂ ಇಂತಹದೇ ವ್ಯತ್ಯಾಸವಿದೆ. (4) ಬೇರೊಂದು ಪಾಂಗಿನಿಂದ ಉಂಟಾಗುವ ಇಲ್ಲವೇ ಮಾರ್ಪಡುವ ಪಾಂಗು ಗಳನ್ನು ಮಾತ್ರ ಈಡು ಪಾಂಗಾಗಿ ಬಳಸಲು ಬರುತ್ತದೆ; ತಾನಾಗಿಯೇ ಮಾರ್ಪಡುವವು ಗಳನ್ನು ಆಗುಗ ಪಾಂಗಾಗಿ ತಿಳಿಸಲಾಗುತ್ತದಲ್ಲದೆ, ಈಡು ಪಾಂಗಾಗಿ ತಿಳಿಸಲು ಬರುವುದಿಲ್ಲ: (9ಕ) ಅವನು ಹಲಿಗೆಯನ್ನು ಸಿಗಿದ. (9ಚ) ಹಲಿಗೆ ಸಿಗಿಯಿತು. (10ಕ) ಅವನು ಗಂಟನ್ನು ಬಿಚ್ಚಿದ. (10ಚ) ಗಂಟು ಬಿಚ್ಚಿತು. ಹಲಿಗೆ ಎಂಬುದು (9ಕ)ದಲ್ಲಿ ಈಡು ಪಾಂಗಾಗಿ ಬಂದಿದೆ; ಆದರೆ, (9ಚ)ದಲ್ಲಿ ಅದು ಆಗುಗ ಪಾಂಗಾಗಿ ಬಂದಿದೆ; ಸಿಗಿಯುವ ಎಸಕವನ್ನು ಬೇರೊಂದು ಪಾಂಗು ನಡೆಸಿರುವುದಾಗಿ (1ಚ)ದಲ್ಲಿ ತಿಳಿಸಿಲ್ಲದಿರುವುದೇ ಇದಕ್ಕೆ ಕಾರಣ. (10ಕ- ಚ)ದಲ್ಲೂ ಹೀಗೆಯೇ.
7.4.5 ಗುರಿ, ಸುರು ಮತ್ತು ಜಾಗ ಪಾಂಗುಗಳು
ಎಸಕದ ನೆಲೆಯನ್ನು ತಿಳಿಸುವುದಕ್ಕಾಗಿ ಗುರಿ, ಸುರು ಮತ್ತು ಜಾಗ ಎಂಬ ಮೂರು ಬಗೆಯ ಪಾಂಗುಗಳನ್ನು ಬಳಸಲಾಗುತ್ತದೆ; ಇವುಗಳಲ್ಲಿ ಗುರಿ ಮತ್ತು ಸುರು ಎಂಬ ಎರಡು ಪಾಂಗುಗಳು ಒಂದು ಗುಂಪಿಗೆ ಸೇರುತ್ತಿದ್ದು, ಹಲವು ವಿಶಯಗಳಲ್ಲಿ ಜಾಗ ಪಾಂಗಿನಿಂದ ಬೇರಾಗಿವೆ. ಇವುಗಳ ನಡುವೆ ಕಾಣಿಸುವ ಮುಕ್ಯವಾದ ಕೆಲವು ವ್ಯತ್ಯಾಸ ಗಳನ್ನು ಕೆಳಗೆ ಕೊಡಲಾಗಿದೆ: (1) ಜಾಗ ಪಾಂಗು ಇಡೀ ಎಸಕದ ನೆಲೆಯನ್ನು ತಿಳಿಸುತ್ತದೆ, ಮತ್ತು ಗುರಿ ಹಾಗೂ ಸುರು ಪಾಂಗುಗಳು ಎಸಕದ ಒಂದು ಬಿಡಿ(ಅಂಗ)ಯ ನೆಲೆಯನ್ನು ಮಾತ್ರ ತಿಳಿಸುತ್ತವೆ; ಎತ್ತುಗೆಗಾಗಿ, ಕದಲಿಕೆಯ ಎಸಕಗಳು ಒಂದು ಜಾಗದಲ್ಲಿ ನಡೆಯುತ್ತವೆ, ಆದರೆ ಸುರುವಿನಲ್ಲಿ ತೊಡಗಿ ಗುರಿಯಲ್ಲಿ ಕೊನೆಗೊಳ್ಳುತ್ತವೆ. (1ಕ) ಅವನು ಹೊಳೆಯಲ್ಲಿ ಈಜಿದ. (1ಚ) ಅವನು ಹೊಳೆಯ ಈಚೆಬದಿಯಿಂದ ಈಜಿದ. (1ಟ) ಅವನು ಹೊಳೆಯ ಆಚೆಬದಿಗೆ ಈಜಿದ. (1ಕ)ದಲ್ಲಿ ಹೊಳೆಯಲ್ಲಿ ಎಂಬ ಜಾಗ ಪಾಂಗು ಬಂದಿದ್ದು, ಅದು ಇಡೀ ಈಜುವ ಎಸಕ ಎಲ್ಲಿ ನಡೆಯಿತು ಎಂಬುದನ್ನು ತಿಳಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಬಂದಿರುವ ಹೊಳೆಯ ಈಚೆಬದಿಯಿಂದ ಎಂಬ ಸುರು ಪಾಂಗು ಈಜುವ ಎಸಕವನ್ನು ತೊಡಗಿದುದು ಎಲ್ಲಿ ಎಂಬುದಾಗಿ ಅದರ ಒಂದು ಬಿಡಿಯ ನೆಲೆಯನ್ನು ಮಾತ್ರ ತಿಳಿಸುತ್ತದೆ, ಮತ್ತು (1ಟ)ದಲ್ಲಿ ಬಂದಿರುವ ಹೊಳೆಯ ಆಚೆಬದಿಗೆ ಎಂಬ ಗುರಿ ಪಾಂಗು ಈಜುವ ಎಸಕ ಕೊನೆಗೊಂಡುದು ಎಲ್ಲಿ ಎಂಬುದಾಗಿ ಅದರ ಇನ್ನೊಂದು ಬಿಡಿಯ ನೆಲೆಯನ್ನು ಮಾತ್ರ ತಿಳಿಸುತ್ತದೆ.
(2) ಜಾಗ ಪಾಂಗು ಒಂದು ಇರುಹದೊಂದಿಗೂ ಬರಬಲ್ಲುದು, ಎಸಕ(ಆಗುಹ ಇಲ್ಲವೇ ಮಾಡುಹ)ದೊಂದಿಗೂ ಬರಬಲ್ಲುದು; ಆದರೆ, ಸುರು ಮತ್ತು ಗುರಿ ಪಾಂಗುಗಳು ಒಂದು ಎಸಕದೊಂದಿಗೆ ಮಾತ್ರ ಬರಬಲ್ಲುವು. (2ಕ) ಅವನು ಮನೆಯಲ್ಲಿ ಇದ್ದ. (2ಚ) *ಅವನು ಮನೆಯಿಂದ ಇದ್ದ. (2ಟ) *ಅವನು ಮನೆಗೆ ಇದ್ದ. ಆದರೆ ಈ ಕಟ್ಟಲೆಗೆ ಹೊರಪಡಿಕೆಯಾಗಿ, ಗುರಿ ಪಾಂಗು ಅದರ ಒಂದು ಮಾರ್ಪುರುಳಿನಲ್ಲಿ ಇರುಹವನ್ನು ತಿಳಿಸುವ ಸೊಲ್ಲುಗಳಲ್ಲೂ ಬಳಕೆಯಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (3ಕ) ಹುಡುಗನಿಗೆ ತಾಯಿಯ ಮೇಲೆ ಸಿಟ್ಟು. (3ಚ) ಅವನ ಮಾತಿಗೆ ಬೆಲೆಯಿದೆ. (3ಟ) ಮಕ್ಕಳಿಗೆ ಇವತ್ತು ರಜೆಯಿದೆ. (3ಕ)ದಲ್ಲಿ ಹುಡುಗ ಪದವನ್ನು ಗುರಿ ಪಾಂಗಾಗಿ ಬಳಸಲಾಗಿದೆ; ಅದರೆ, ಇಲ್ಲಿ ಅವನು ಸಿಟ್ಟಿಗೆ ಗುರಿಯಾಗಿದ್ದಾನೆ ಎಂಬುದಾಗಿ ಗುರಿ ಪಾಂಗನ್ನು ಅದರ ಮಾರ್ಪುರುಳಿನಲ್ಲಿ ಬಳಸಲಾಗಿದೆ; ಇದಲ್ಲದೆ, ಈ ಸೊಲ್ಲಿನಲ್ಲಿ ಹುಡುಗ ಮತ್ತು ಸಿಟ್ಟು ಎಂಬ ಎರಡು ಪಾಂಗುಗಳ ನಡುವಿನ ಪತ್ತುಗೆಯನ್ನೂ ತಿಳಿಸಲಾಗಿದೆ. (3ಚ-ಟ) ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಎರಡು ಪಾಂಗುಗಳ ನಡುವಿನ ಪತ್ತುಗೆಯನ್ನು ತಿಳಿಸುವುದಕ್ಕಾಗಿ ಅವುಗಳಲ್ಲಿ ಒಂದನ್ನು ಇರುಗ ಪಾಂಗಾಗಿ, ಮತ್ತು ಇನ್ನೊಂದನ್ನು ಗುರಿ ಪಾಂಗಾಗಿ ಬಳಸಲಾಗಿದೆ. (3) ಇದಲ್ಲದೆ, ಗುರಿ ಮತ್ತು ಸುರು ಪಾಂಗುಗಳೆರಡನ್ನೂ ಹೊತ್ತು ಇಲ್ಲವೇ ಇಂಬಿನ ಸುರು ಮತ್ತು ಕೊನೆಗಳನ್ನು ತಿಳಿಸುವುದಕ್ಕಾಗಿಯೂ ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ: (4ಕ) ಅವನು ಸಂಜೆ ಮೂರರಿಂದ ನಾಲ್ಕರವರೆಗೆ ಮನೆಯಲ್ಲಿದ್ದ. (4ಚ) ಅವರ ತೋಟ ಆ ಗುಡ್ಡದಿಂದ ಈ ಗುಡ್ಡದವರೆಗೆ ಇದೆ. (4) ಎಸಕಪದಗಳಲ್ಲಿಯೂ ಮುಕ್ಯವಾಗಿ ಒಂದು ಕದಲಿಕೆಯನ್ನು ತಿಳಿಸುವಂತಹ ಪದಗಳೊಂದಿಗೆ ಮಾತ್ರ ಸುರು ಮತ್ತು ಗುರಿ ಪಾಂಗುಗಳು ಬಳಕೆಯಾಗುತ್ತವೆ. ಕದಲಿಕೆಯನ್ನು ತಿಳಿಸದಂತಹ ಎಸಕಪದಗಳೊಂದಿಗೆ ಅವನ್ನು ಬಳಸಲಾಗುತ್ತದೆ ಯಾದರೂ ಅಲ್ಲಿ ಕದಲಿಕೆಯ ಹುರುಳನ್ನು ನೇರವಲ್ಲದ ರೀತಿಯಲ್ಲಿ ಕಾಣ ಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ಅವನು ನನಗೆ ಹೆದರಿದ. (5ಚ) ಬಿಸಿಲಿಗೆ ಗಿಡ ಬಾಡಿತು. (6ಕ) ಅವನು ನೋವಿನಿಂದ ನರಳಿದ. (6ಚ) ಅವನು ಮರದಿಂದ ಒಂದು ಗೊಂಬೆ ಮಾಡಿದ. ಮೇಲೆ (5ಕ-ಚ) ಸೊಲ್ಲುಗಳಲ್ಲಿ ಒಂದು ಎಸಕಕ್ಕೆ ಯಾವುದು ಕಾರಣವೋ ಅದನ್ನು ಎಸಕದ ಗುರಿಯಾಗಿ ಕಾಣಲಾಗಿದೆ, ಮತ್ತು (6ಕ-ಚ)ಗಳಲ್ಲಿ ಒಂದು ಎಸಕ ಯಾವುದರಿಂದ ಮೂಡಿಬಂದಿದೆಯೋ ಅದನ್ನು ಸುರು ಪಾಂಗಾಗಿ ಕಾಣಲಾಗಿದೆ. ಈ ಎರಡು ಕಡೆಗಳಲ್ಲೂ ಕದಲಿಕೆಯನ್ನು ಮಾರ್ಪುರುಳಿನ ರೂಪದಲ್ಲಿ ಬಳಸಲಾಗಿದೆ.
ಕದಲಿಕೆಯ ಮೇಲೆ ಜಾಗ ಪಾಂಗನ್ನು ಬಳಸಿರುವಲ್ಲಿ ಇಲ್ಲದಂತಹ ಹೆಚ್ಚಿನ ಒತ್ತು ಗುರಿ ಇಲ್ಲವೇ ಸುರು ಪಾಂಗುಗಳನ್ನು ಬಳಸಿರುವಲ್ಲಿ ಬಿದ್ದಿರುತ್ತದೆ ಎಂಬುದೂ ಮೇಲಿನ ವಿಶಯವನ್ನು ಬೆಂಬಲಿಸುತ್ತದೆ. ಈ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (7ಕ) ಬೆರಳನ್ನು ನೀರಿನಲ್ಲಿ ಅದ್ದಿದ. (7ಚ) ಬೆರಳನ್ನು ನೀರಿಗೆ ಅದ್ದಿದ. (8ಕ) ಮಾಡಿನಲ್ಲಿ ನೀರು ಸೋರುತ್ತದೆ. (8ಚ) ಮಾಡಿನಿಂದ ನೀರು ಸೋರುತ್ತದೆ. ಮೇಲೆ (ಕ) ಸೊಲ್ಲುಗಳಲ್ಲಿ ಜಾಗ ಪಾಂಗನ್ನೂ, (ಚ) ಸೊಲ್ಲುಗಳಲ್ಲಿ ಅದಕ್ಕೆ ಬದಲಾಗಿ ಗುರಿ ಇಲ್ಲವೇ ಸುರು ಪಾಂಗನ್ನೂ ಬಳಸಲಾಗಿದೆ, ಮತ್ತು ಇದರಿಂದಾಗಿ (ಕ) ಸೊಲ್ಲುಗಳಲ್ಲಿ ಕಾಣಿಸದಿರುವಂತಹ ಕದಲಿಕೆಯ ಮೇಲಿನ ಒತ್ತು (ಚ) ಸೊಲ್ಲುಗಳಲ್ಲಿ ಕಾಣಿಸುತ್ತದೆ. (5) ಇದಲ್ಲದೆ, ಜಾಗ ಪಾಂಗನ್ನು ತಿಳಿಸುವ ಪದಗಳನ್ನು ಕದಲಿಕೆಯನ್ನು ತಿಳಿಸುವ ಎಸಕಪದಗಳೊಂದಿಗೆ ಬಳಸಿದಲ್ಲಿ, ಅವಕ್ಕೆ ಜಾಗ ಪಾಂಗನ್ನು ತಿಳಿಸುವ ಹುರುಳಿನ ಬದಲು ಗುರಿ ಪಾಂಗನ್ನು ತಿಳಿಸುವ ಹುರುಳು ಸಿಗುತ್ತದೆ: (9ಕ) ಅವನು ಮುಂದೆ ಕುಳಿತಿದ್ದಾನೆ. (9ಚ) ಅವನು ಮುಂದೆ ಹೋದ. (10ಕ) ಅವನು ಮೇಲೆ ಉಳಿದ. (10ಚ) ಅವನು ಮೇಲೆ ಹತ್ತಿದ. (9ಕ)ದಲ್ಲಿ ಮುಂದೆ ಪದ ಕುಳಿತ ಜಾಗವನ್ನಶ್ಟೇ ತಿಳಿಸುತ್ತದೆ; ಆದರೆ, (9ಚ)ದಲ್ಲಿ ಅದೇ ಪದ ಹೋದುದು ಯಾವ ಕಡೆಗಾಗಿ, ಎಂದರೆ, ಹೋಗುವ ಎಸಕದ ಗುರಿ ಯಾವುದು ಎಂಬುದನ್ನೂ ತಿಳಿಸುತ್ತದೆ. ಕೆಳಗೆ, ಹೊರಗೆ, ಮತ್ತು ಒಳಗೆ ಪದಗಳಲ್ಲಿ ಗೆ ಒಟ್ಟು ಬಂದಿರುವ ಹಾಗೆ ಕಾಣಿಸುತ್ತದೆ; ಆದರೆ, ನಿಜಕ್ಕೂ ಈ ಪದಗಳು ಜಾಗ ಪಾಂಗನ್ನು ತಿಳಿಸುವುದಕ್ಕಾಗಿಯೇ ಬಳಕೆಯಾಗುತ್ತವೆ; ಗುರಿ ಪಾಂಗನ್ನು ತಿಳಿಸಬೇಕಿದ್ದಲ್ಲಿ ಅವನ್ನು ಕೆಳಕ್ಕೆ, ಹೊರಕ್ಕೆ, ಮತ್ತು ಒಳಕ್ಕೆ ಎಂಬ ರೂಪದಲ್ಲಿ ಬಳಸಬೇಕಾಗುತ್ತದೆ. (11ಕ) ಅವನು ಗುಂಡಿಯೊಳಗೆ ಜಾರಿದ. (11ಚ) ಅವನು ಗುಂಡಿಯೊಳಕ್ಕೆ ಜಾರಿದ. (11ಕ)ದಲ್ಲಿ ಬಂದಿರುವ ಗುಂಡಿಯೊಳಗೆ ಎಂಬುದು ಜಾರುವ ಎಸಕ ಎಲ್ಲಿ ನಡೆಯಿತು ಎಂಬುದನ್ನಶ್ಟೇ ತಿಳಿಸುತ್ತದೆ; ಆದರೆ, (11ಚ)ದಲ್ಲಿ ಬಂದಿರುವ ಗುಂಡಿಯೊಳಕ್ಕೆ ಎಂಬುದು ಜಾರುವ ಎಸಕದ ಗುರಿ ಯಾವುದು ಎಂಬುದನ್ನು ತಿಳಿಸುತ್ತದೆ; ಅದಕ್ಕೆ ಹೊರಗಿನಿಂದ ಗುಂಡಿಯೊಳಕ್ಕೆ ಜಾರಿದ ಎಂಬ ಹುರುಳಿದೆ. ಕದಲಿಕೆಯನ್ನು ತಿಳಿಸಲಾರದಂತಹ ಪದಗಳೊಂದಿಗೆ ಬಳಸಿದಾಗ ಈ ಎರಡು ಬಗೆಯ ರೂಪಗಳ ನಡುವಿರುವ ವ್ಯತ್ಯಾಸ ಇನ್ನಶ್ಟು ಸರಿಯಾಗಿ ಗೊತ್ತಾಗುತ್ತದೆ: (12ಕ) ಅವನು ಒಳಗೆ ಇದ್ದಾನೆ. (12ಚ) *ಅವನು ಒಳಕ್ಕೆ ಇದ್ದಾನೆ. (13ಕ) ಅವನು ಒಳಗೆ ಕುಳಿತುಕೊಂಡ.
(13ಚ) *ಅವನು ಒಳಕ್ಕೆ ಕುಳಿತುಕೊಂಡ. ಇರು ಇಲ್ಲವೇ ಕುಳಿತುಕೊಳ್ಳು ಪದಗಳು ಕದಲಿಕೆಯನ್ನು ತಿಳಿಸಲಾರವು; ಹಾಗಾಗಿ, ಅವುಗಳೊಂದಿಗೆ ಜಾಗ ಪಾಂಗನ್ನು ತಿಳಿಸುವ ಒಳಗೆ ಎಂಬುದನ್ನು ಬಳಸಲು ಬರುತ್ತದಲ್ಲದೆ, ಗುರಿ ಪಾಂಗನ್ನು ತಿಳಿಸುವ ಒಳಕ್ಕೆ ಎಂಬುದನ್ನು ಬಳಸಲು ಬರುವುದಿಲ್ಲ. (6) ಈ ಮೂರು ಬಗೆಯ ಪಾಂಗುಗಳನ್ನೂ ಮುಕ್ಯವಾಗಿ ನೆಲೆಯನ್ನು ತಿಳಿಸಲು ಬಳಸಲಾಗುತ್ತದೆ; ಆದರೆ, ಬೇರೆ ಕೆಲವು ಸಂದರ್ಬಗಳಲ್ಲಿ ನೆಲೆಯನ್ನೇ ನೇರವಲ್ಲದ ರೀತಿಯಲ್ಲಿ ತಿಳಿಸುವುದಕ್ಕಾಗಿಯೂ ಅವನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಗುರಿ ಪಾಂಗಿನ ಹಲವು ಬಗೆಯ ಬಳಕೆಗಳನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (14ಕ) ಹುಡುಗ ಮನೆಗೆ ಹೋದ. (14ಚ) ರಾಜು ಜಾನಕಿಗೆ ಹತ್ತು ಸಾವಿರ ಕೊಟ್ಟ. (14ಟ) ರಾಜುವಿಗೆ ವಿಶಯ ತಿಳಿದಿದೆ. (14ತ) ಬಿಸಿಲಿಗೆ ಗಿಡ ಬಾಡಿತು. (14ಪ) ಅವನು ಎರಡು ಗಂಟೆಗೆ ಬಂದ. (14ಕ)ದಲ್ಲಿ ಬಂದಿರುವ ಮನೆಗೆ ಎಂಬ ಪಾಂಗಿನಲ್ಲಿ ನೆಲೆಯ ಹುರುಳು ಸ್ಪಶ್ಟವಾಗಿದೆ: ಹೋಗುವ ಎಸಕ ತೊಡಗುವ ಮೊದಲು ಹುಡುಗ ಮನೆಯಲ್ಲಿರಲಿಲ್ಲ, ಮತ್ತು ಅದು ಕೊನೆಗೊಂಡಾಗ ಆತ ಮನೆಯಲ್ಲಿದ್ದ; ಎಂದರೆ, ಆತನ ನೆಲೆಯಲ್ಲಿ ಮಾರ್ಪಾಡಾಗಿದೆ ಎಂಬುದನ್ನು ಅದು ತಿಳಿಸುತ್ತದೆ. ಆದರೆ, (14ಚ-ಪ) ಸೊಲ್ಲುಗಳಲ್ಲಿ ಇದು ಅಸ್ಪಶ್ಟವಾಗುತ್ತಾ ಹೋಗುತ್ತದೆ: (14ಚ)ದಲ್ಲಿ ರಾಜುವಿನ ಒಡೆತನದಲ್ಲಿದ್ದ ಹತ್ತು ಸಾವಿರ ಜಾನಕಿಯ ಒಡೆತನಕ್ಕೆ ಬಂದಿದೆಯಾದರೂ ಈ ಮಾರ್ಪಾಡು ಅವರಿಬ್ಬರ ಬೇಂಕಿನ ಲೆಕ್ಕದಲ್ಲಿ ಮಾತ್ರ ಕಾಣಿಸಿಕೊಂಡಿರಬಲ್ಲುದು. (14ಟ)ದಲ್ಲಿ ತಿಳಿವು ರಾಜುವಿನ ಮಿದುಳಿನಲ್ಲಿ ನೆಲೆಗೊಂಡಿರುವುದು ಇನ್ನಶ್ಟು ಅಮೂರ್ತವಾದ ಸಂಗತಿ; (14ತ)ದಲ್ಲಿ ಗಿಡ ಬಾಡುವುದಕ್ಕೆ ಬಿಸಿಲನ್ನು ಗುರಿ ಯಾಗಿಸಿರುವಲ್ಲಿ ನೆಲೆಯ ಹುರುಳಿಗೆ ಇನ್ನಶ್ಟು ಹರವು ದೊರೆತಿದೆ, ಮತ್ತು (14ಪ) ದಲ್ಲಿ ಗುರಿಯನ್ನು ಹೊತ್ತಿನಲ್ಲಿರುವ ನೆಲೆಯನ್ನು ತಿಳಿಸಲು ಬಳಸಲಾಗಿದೆ. ನೆಲೆಯನ್ನು ತಿಳಿಸುವ ಪಾಂಗುಗಳನ್ನು ಈ ರೀತಿ ಬೇರೆ ಹಲವು ಬಗೆಯ ಹುರುಳುಗಳನ್ನು ತಿಳಿಸುವುದಕ್ಕಾಗಿ ಬಳಸಿರುವುದು ನಾವು ಆಲೋಚಿಸುವ ಬಗೆಯಲ್ಲೇ ನಡೆದಿರುವ ಮಾರ್ಪಾಡುಗಳಾಗಿವೆ. (7) ಜಾಗ ಪಾಂಗು ಬೇರೊಂದು ಪಾಂಗಿನ ನೆಲೆಯನ್ನು ಮಾತ್ರ ತಿಳಿಸುತ್ತದೆ, ಮತ್ತು ಸುರು ಮತ್ತು ಗುರಿ ಪಾಂಗುಗಳು ನೇರವಾದ ಇಲ್ಲವೇ ನೇರವಲ್ಲದ ಬಗೆಯಲ್ಲಿ ಬೇರೊಂದು ಪಾಂಗಿನ ನೆಲೆಯಲ್ಲಿ ನಡೆದ ಮಾರ್ಪಾಡನ್ನು ತಿಳಿಸುತ್ತವೆ. ಜಾಗ ಪಾಂಗಿಗೂ ಸುರು ಮತ್ತು ಗುರಿ ಪಾಂಗುಗಳಿಗೂ ನಡುವೆ ಇಂತಹ ಸಂಬಂದವಿರುವ ಕಾರಣ, ಹಲವೆಡೆಗಳಲ್ಲಿ ಜಾಗ ಪಾಂಗನ್ನು ತಿಳಿಸುವ ಪದಗಳಿಗೆ ಒಟ್ಟುಗಳನ್ನು ಸೇರಿಸುವ ಮೂಲಕ ಸುರು ಮತ್ತು ಗುರಿ ಪಾಂಗುಗಳನ್ನು ತಿಳಿಸುವ ಪದಗಳನ್ನು ಪಡೆಯಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಈ ರೀತಿ ಜಾಗ ಪಾಂಗನ್ನು ತಿಳಿಸುವ ಪದಗಳಿಗೆ ಕ್ಕೆ ಒಟ್ಟನ್ನು ಸೇರಿಸಿ ಗುರಿ ಪಾಂಗನ್ನು ತಿಳಿಸುವ ಪದಗಳನ್ನು, ಮತ್ತು ಇಂದ ಒಟ್ಟನ್ನು ಸೇರಿಸಿ ಸುರು ಪಾಂಗನ್ನು ತಿಳಿಸುವ ಪದಗಳನ್ನು ಪಡೆಯಲಾಗಿದೆ: ಜಾಗ ಪಾಂಗು ಗುರಿ ಪಾಂಗು ಸುರು ಪಾಂಗು ಮೇಲೆ ಮೇಲಕ್ಕೆ ಮೇಲಿನಿಂದ ಕೆಳಗೆ ಕೆಳಕ್ಕೆ ಕೆಳಗಿನಿಂದ ಒಳಗೆ ಒಳಕ್ಕೆ ಒಳಗಿನಿಂದ ಹೊರಗೆ ಹೊರಕ್ಕೆ ಹೊರಗಿನಿಂದ
ನಡುವೆ ನಡುವಿಗೆ ನಡುವಿನಿಂದ ಅಲ್ಲಿ ಅಲ್ಲಿಗೆ ಅಲ್ಲಿಂದ ಇಲ್ಲಿ ಇಲ್ಲಿಗೆ ಇಲ್ಲಿಂದ ಎಲ್ಲಿ ಎಲ್ಲಿಗೆ ಎಲ್ಲಿಂದ ಬಲಗಡೆ ಬಲಗಡೆಗೆ ಬಲಗಡೆಯಿಂದ ಎಡಗಡೆ ಎಡಗಡೆಗೆ ಎಡಗಡೆಯಿಂದ ಹಿಂದೆ ಹಿಂದಕ್ಕೆ ಹಿಂದಿನಿಂದ ಮುಂದೆ ಮುಂದಕ್ಕೆ ಮುಂದಿನಿಂದ ದೂರ ದೂರಕ್ಕೆ ದೂರದಿಂದ ಹತ್ತಿರ ಹತ್ತಿರಕ್ಕೆ ಹತ್ತಿರದಿಂದ ಬಳಿ ಬಳಿಗೆ ಬಳಿಯಿಂದ ಅವರಲ್ಲಿ, ಅವರಲ್ಲಿಗೆ, ಅವರಲ್ಲಿಂದ ಎಂಬಲ್ಲೂ ಇಂತಹ ಸಂಬಂದವನ್ನು ಕಾಣಲು ಬರುತ್ತದೆ; ಆದರೆ, ಬೇರೆ ಹಲವು ಕಡೆಗಳಲ್ಲಿ ಈ ಮೂರು ಪಾಂಗುಗಳನ್ನು ಬೇರೆ ಬೇರಾಗಿಯೂ ಇರಿಸಲಾಗಿದೆ; ಎತ್ತುಗೆಗಾಗಿ, ಮರದಲ್ಲಿ-ಮರಕ್ಕೆ-ಮರದಿಂದ, ತಲೆಯಲ್ಲಿ-ತಲೆಗೆ-ತಲೆಯಿಂದ, ಮಗನಲ್ಲಿ-ಮಗನಿಗೆ-ಮಗನಿಂದ ಎಂಬಂತಹ ಹೆಸರುಪದಗಳ ಪದರೂಪಗಳಲ್ಲಿ ಅವು ಬೇರೆ ಬೇರಾಗಿಯೇ ಉಳಿದಿವೆ. ದೂರದಿಂದ ಎಂಬುದಕ್ಕೆ ದೂರದಿಂದಾಗಿ ಎಂಬ ಹುರುಳೂ ಇದೆ: (15) Œಅವನು ದೂರದಿಂದಲೇ ಹೊರಟು ಹೋದ.
7.4.6 ಸುರು ಮತ್ತು ಗುರಿ ಪಾಂಗುಗಳು
ಸುರು ಮತ್ತು ಗುರಿ ಪಾಂಗುಗಳ ನಡುವೆಯೂ ಹಲವು ವ್ಯತಾಸಗಳಿವೆ; ಇವುಗಳಲ್ಲಿ ಸುರು ಪಾಂಗು ಎಸಕದ ತೊಡಗುವಿಕೆಯನ್ನು ತಿಳಿಸುತ್ತದೆ, ಮತ್ತು ಗುರಿ ಪಾಂಗು ಅದರ ಕೊನೆಯನ್ನು ತಿಳಿಸುತ್ತದೆ ಎಂಬುದು ಮುಕ್ಯವಾದುದು; ಅವುಗಳ ನಡುವಿರುವ ಬೇರೆ ಹಲವು ವ್ಯತ್ಯಾಸಗಳನ್ನು ಕೆಳಗೆ ವಿವರಿಸಲಾಗಿದೆ: (1) ಎಸಕದ ಸಾಗುವಿಕೆ ಮತ್ತು ಕೊನೆ: ಸುರು ಮತ್ತು ಗುರಿ ಪಾಂಗುಗಳು ಎಸಕದ ತೊಡಗುವಿಕೆ ಮತ್ತು ಕೊನೆಗಳನ್ನು ತಿಳಿಸುತ್ತವೆಯಾದ ಕಾರಣ, ಅವುಗಳಲ್ಲಿ ಮೊದಲನೆಯದನ್ನು ಎಸಕಗಳ ಸಾಗುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಮಾತ್ರ ಬಳಸಲು ಬರುತ್ತದೆಯಲ್ಲದೆ ಕೊನೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ, ಮತ್ತು ಎರಡನೆಯದನ್ನು ಎಸಕದ ಕೊನೆಯನ್ನು ತಿಳಿಸುವ ಸೊಲ್ಲು ಗಳಲ್ಲಿ ಮಾತ್ರ ಬಳಸಲು ಬರುತ್ತದೆಯಲ್ಲದೆ, ಸಾಗುವಿಕೆಯನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ. ಎತ್ತುಗೆಗಾಗಿ, ಒಂದು ಸಾಗುವೆಸಕದ ಪದದೊಂದಿಗೆ ಒಂದು ಗಂಟೆ ಎಂಬ ಪರಿಚೆ ನುಡಿತವನ್ನು ಬಳಸಿದಲ್ಲಿ ಅದು ಎಸಕದ ಸಾಗುವಿಕೆಯನ್ನು ಮಾತ್ರ ತಿಳಿಸುತ್ತದೆ, ಮತ್ತು ಒಂದು ಗಂಟೆಯಲ್ಲಿ ಎಂಬುದನ್ನು ಬಳಸಿದಲ್ಲಿ ಅದು ಎಸಕದ ಕೊನೆಯನ್ನು ಮಾತ್ರ ತಿಳಿಸುತ್ತದೆ; ಹಾಗಾಗಿ, ಇವುಗಳಲ್ಲಿ ಮೊದಲನೆಯದರೊಂದಿಗೆ ಸುರು ಪಾಂಗು ಮಾತ್ರ ಬರಬಲ್ಲುದು, ಮತ್ತು ಎರಡನೆಯದರೊಂದಿಗೆ ಗುರಿ ಪಾಂಗು ಮಾತ್ರ ಬರಬಲ್ಲುದು: (1ಕ) ಅವನು ಅಲ್ಲಿಂದ ಒಂದು ಗಂಟೆ ಓಡಿದ. (1ಚ) *ಅವನು ಅಲ್ಲಿಗೆ ಒಂದು ಗಂಟೆ ಓಡಿದ. (2ಕ) *ಅವನು ಅಲ್ಲಿಂದ ಒಂದು ಗಂಟೆಯಲ್ಲಿ ಓಡಿದ. (2ಚ) ಅವನು ಅಲ್ಲಿಗೆ ಒಂದು ಗಂಟೆಯಲ್ಲಿ ಓಡಿದ.
(1ಚ) ಮತ್ತು (2ಕ) ಸೊಲ್ಲುಗಳು ಎಸಕದ ಸಾಗುವಿಕೆ ಮತ್ತು ಕೊನೆಗಳನ್ನು ತಿಳಿಸುವ ಹುರುಳಿನಲ್ಲಿ ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು. ಆದರೆ, ಬೇರೆ ಹುರುಳುಗಳಲ್ಲಿ ಅವು ಸರಿಯೆಂದೂ ತೋರಬಹುದು; ಎತ್ತುಗೆಗಾಗಿ, (1ಚ) ಸೊಲ್ಲಿಗೆ ಅವನು ಅಲ್ಲಿಗೆ ಹೋಗುವ ಕೆಲಸವನ್ನು (ಎಂದರೆ ಓಡುವಿಕೆಯನ್ನು) ಒಂದು ಗಂಟೆ ನಡೆಸಿದ ಎಂಬ ಹುರುಳನ್ನು ಕೊಟ್ಟಲ್ಲಿ ಅದು ಸರಿಯೆಂದು ತೋರಬಹುದು; ಆದರೆ, ಈ ಹುರುಳು ಬಂದಿರುವಲ್ಲಿ ಅಲ್ಲಿಗೆ ಎಂಬ ಗುರಿ ಪಾಂಗನ್ನು ನೇರವಾಗಿ ಓಡು ಎಸಕಪದ ತಿಳಿಸುವ ಸಾಗುವಿಕೆಯೊಂದಿಗೆ ಸಂಬಂದಿಸಿಲ್ಲ. ಇದೇ ರೀತಿಯಲ್ಲಿ (2ಕ) ಸೊಲ್ಲಿಗೆ ಅವನು ಓಡುವಿಕೆಯನ್ನು ಒಂದು ಗಂಟೆ ಕಳೆದ ಮೇಲೆ ತೊಡಗಿದ ಎಂಬ ಹುರುಳನ್ನು ಕೊಡಬಹುದು; ಆದರೆ, ಇಂತಹ ಬಳಕೆಯಲ್ಲಿ ಸುರು ಪಾಂಗನ್ನು ಎಸಕದ ಕೊನೆಯೊಂದಿಗೆ ಸಂಬಂದಿಸಿಲ್ಲ. ಸುರು ಪಾಂಗನ್ನು ಎಸಕದ ಸಾಗುವಿಕೆಯ ತೊಡಗುವಿಕೆಯೊಂದಿಗೂ, ಗುರಿ ಪಾಂಗನ್ನು ಅದರ ಕೊನೆಯೊಂದಿಗೂ ಸಂಬಂದಿಸಲಾಗುತ್ತದೆ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲೂ ಕಾಣಬಹುದು: (3ಕ) ನಾನು ಮನೆಯಿಂದ ಬರುತ್ತಾ ಇದ್ದೇನೆ. (3ಚ) ನಾನು ಮನೆಗೆ ಹೋಗುತ್ತಾ ಇದ್ದೇನೆ. (3ಕ) ಸೊಲ್ಲಿಗೆ ಮನೆಯಿಂದ ಹೊರಟಾಗಿದೆ ಎಂಬ ಹುರುಳಿದೆ, ಮತ್ತು (3ಚ) ಸೊಲ್ಲಿಗೆ ಮನೆಗೆ ಇನ್ನೂ ತಲಪಿಲ್ಲ ಎಂಬ ಹುರುಳಿದೆ ಎಂಬುದನ್ನು ಗಮನಿಸಬಹುದು. ಈ ಎರಡು ಪಾಂಗುಗಳೊಂದಿಗೆ ಸುರುವಾಗು ಎಂಬುದನ್ನು ಬಳಸಿರುವಲ್ಲೂ ಈ ವ್ಯತ್ಯಾಸವನ್ನು ಕಾಣಬಹುದು: (4ಕ) ಇವತ್ತಿನ ಕೂಟ ಎರಡು ಗಂಟೆಗೆ ಸುರುವಾಗುತ್ತದೆ. (4ಚ) ಇವತ್ತಿನ ಕೂಟ ಎರಡು ಗಂಟೆಯಿಂದ ಸುರುವಾಗುತ್ತದೆ. (4ಕ)ದಲ್ಲಿ ಎರಡು ಗಂಟೆಗೆ ಎಂಬುದಾಗಿ ಗುರಿ ಪಾಂಗನ್ನು ಬಳಸಲಾಗಿದ್ದು, ಅದು ಕೂಟದ ತೊಡಗಿಕೆಯನ್ನೇ ಕೊನೆಯಾಗಿ ಕಾಣುತ್ತದೆ; ಇದಕ್ಕೆ ಬದಲು, (4ಚ)ದಲ್ಲಿ ಎರಡು ಗಂಟೆಯಿಂದ ಎಂಬುದಾಗಿ ಸುರು ಪಾಂಗನ್ನು ಬಳಸಲಾಗಿದ್ದು, ಅದು ಎರಡು ಗಂಟೆಗೆ ತೊಡಗಿ ಆಮೇಲೆ ಮುಂದುವರಿಯುವ ಕೂಟದ ಸಾಗುವಿಕೆಯ ಮೇಲೆ ಒತ್ತು ಕೊಡುತ್ತದೆ. (2) ಗುರಿ-ಸುರು ಪದಜೋಡಿಗಳು: ಕೆಲವು ಎಸಕಪದಗಳನ್ನು ಹತ್ತು-ಇಳಿ, ಹೋಗು-ಬರು, ತಲಪು-ಹೊರಡು, ಕೂಡಿಸು-ಕಳೆ, ಬೀಳು-ಏಳು, ಇಡು-ತೆಗೆ, ತುಂಬು-ಚೆಲ್ಲು, ಸೇರು-ಬೇರ್ಪಡು, ಮಾರು-ಬಿಲಿ (ಕೊಂಡುಕೊಳ್ಳು), ಹಾಕು-ಹೆಕ್ಕು ಎಂಬಂತಹ ಪದಜೋಡಿಗಳಲ್ಲಿ ಸೇರಿಸಿ ಹೇಳಲು ಬರುತ್ತದೆ; ಈ ಜೋಡಿಗಳಲ್ಲಿ ಮೊದಲನೆಯ ಎಸಕಪದ ಸಾಮಾನ್ಯವಾಗಿ ಗುರಿ ಪಾಂಗಿನೊಂದಿಗೆ ಬರುತ್ತದೆ, ಮತ್ತು ಎರಡನೆಯದು ಸುರು ಪಾಂಗಿನೊಂದಿಗೆ ಬರುತ್ತದೆ: ಮರಕ್ಕೆ ಹತ್ತು ಮರದಿಂದ ಇಳಿ ಮನೆಗೆ ಹೋಗು ಮನೆಯಿಂದ ಬರು ಹತ್ತಕ್ಕೆ ಕೂಡಿಸು ಹತ್ತರಿಂದ ಕಳೆ ಅದಕ್ಕೆ ಹಾಕು ಅದರಿಂದ ತೆಗೆ ಅದಕ್ಕೆ ತುಂಬು ಅದರಿಂದ ಚೆಲ್ಲು (3) ಸುರುವಿಗಿಂತ ಗುರಿಯ ಮೇಲೆ ಹೆಚ್ಚಿನ ಒಲವು: ಕದಲಿಕೆಯನ್ನು ತಿಳಿಸುವ ಸೊಲ್ಲುಗಳನ್ನು ಬಳಸುವಾಗ, ಸಾಮಾನ್ಯವಾಗಿ ಒಂದು ಕದಲಿಕೆಯ ಸುರುವನ್ನು ತಿಳಿಸುವುದಕ್ಕಿಂತಲೂ ಅದರ ಗುರಿಯನ್ನು ತಿಳಿಸುವುದರಲ್ಲೇ ಆಡುಗರ ಒಲವಿರುತ್ತದೆ. ಎತ್ತುಗೆಗಾಗಿ, ಈ ಎರಡು ಬಗೆಯ ಪಾಂಗುಗಳೊಂದಿಗೂ ಬರಬಲ್ಲ ಹೋಗು, ಬರು, ಓಡು, ನಡೆ, ಹಾರು ಮೊದಲಾದ ಎಸಕಪದಗಳನ್ನು ಸಾಮಾನ್ಯವಾಗಿ ಅವುಗಳ ಗುರಿಯೊಂದಿಗೆ ಬಳಸುವುದೇ ಹೆಚ್ಚು.
(5ಕ) ಮಕ್ಕಳು ಸಂತೆಗೆ ಹೋಗಿದ್ದಾರೆ. (5ಚ) ನೀವು ಇಲ್ಲಿಗೆ ಯಾವಾಗ ಬಂದಿರಿ? (5ಟ) ಅವನು ಪುಸ್ತಕವನ್ನು ಬೊಂಬಾಯಿಗೆ ಕಳುಹಿಸಿದ. ಬರಹಗಳಲ್ಲಿ ಸುರು ಪಾಂಗಿಗಿಂತ ಗುರಿ ಪಾಂಗು ಹೆಚ್ಚು ಕಡೆಗಳಲ್ಲಿ ಬಳಕೆ ಯಾಗಿರುವುದನ್ನು ಕಾಣಬಹುದು. ಮಾತನಾಡುವಾಗ ಇಲ್ಲವೇ ಬರೆಯುವಾಗ ಮುಂದೆ ಏನು ನಡೆಯಿತು ಎಂಬುದನ್ನು ತಿಳಿಸುವುದರಲ್ಲೇ ಆಡುಗರಿಗೆ ಇಲ್ಲವೆ ಬರಹಗಾರರಿಗೆ ಹೆಚ್ಚಿನ ಒಲವಿರುವುದು ಗುರಿ ಮತ್ತು ಸುರು ಪಾಂಗುಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸಕ್ಕೆ ಕಾರಣವಿರಬಹುದು. ಗುರಿ ಪಾಂಗಿನ ಬಳಕೆಯಲ್ಲಿ ಕಾಣಿಸುವ ಈ ಒಲವು ಬೇರೆ ಕದಲಿಕೆಯ ಹುರುಳಿಲ್ಲದ ಎಸಕಪದಗಳ ಬಳಕೆಯಲ್ಲೂ ಕಾಣಬಹುದು. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (6ಕ) ನಾನು ಪುಸ್ತಕವನ್ನು ನೂರು ರುಪಾಯಿಗೆ ಕೊಂಡುಕೊಂಡೆ. (6ಚ) ನಾನು ಪುಸ್ತಕವನ್ನು ನೂರು ರುಪಾಯಿಗೆ ಮಾರಿದೆ. (6ಕ)ದಲ್ಲಿ ನೂರು ರುಪಾಯಿ ನನ್ನಿಂದ ಇನ್ನೊಬ್ಬನ ಒಡೆತನಕ್ಕೆ ಹೋಗಿದೆ, ಮತ್ತು (6ಚ)ದಲ್ಲಿ ಅದು ಇನ್ನೊಬ್ಬನಿಂದ ನನ್ನ ಒಡೆತನಕ್ಕೆ ಬಂದಿದೆ; ಹಾಗಿದ್ದರೂ ಈ ಎರಡು ಕಡೆಗಳಲ್ಲೂ ನೂರು ರುಪಾಯಿ ಎಂಬುದನ್ನು ಗುರಿ ಪಾಂಗಾಗಿ ಬಳಸಲಾಗಿದೆ. ಸುರು ಮತ್ತು ಗುರಿ ಪಾಂಗುಗಳ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸವನ್ನು ಬೆಂಬಲಿಸುವ ಬೇರೆ ಕೆಲವು ಸಂಗತಿಗಳನ್ನು ಕೆಳಗೆ ಕೊಡಲಾಗಿದೆ: (ಕ) ಆಗು ಪದವನ್ನು ಬಳಸಿರುವಲ್ಲಿ ಗುರಿಯನ್ನು, ಎಂದರೆ ಮಾರ್ಪಾಡಿನ ಕೊನೆಯನ್ನು ನೇರವಾಗಿ ಪಾಂಗಿನ ಮೂಲಕ ತಿಳಿಸಲಾಗುತ್ತದೆ; ಆದರೆ, ಸುರುವನ್ನು, ಎಂದರೆ ಮಾರ್ಪಾಡಿನ ತೊಡಗಿಕೆಯನ್ನು ಆ ರೀತಿ ನೇರವಾಗಿ ತಿಳಿಸಲು ಬರುವುದಿಲ್ಲ. (7ಕ) ಆತನ ಕಣ್ಣು ಕೆಂಪಾಗಿದೆ. (7ಚ) ಅವನು ಹಣವಂತನಾಗಿದ್ದಾನೆ. (7ಕ)ದಲ್ಲಿ ಕಣ್ಣು ಯಾವ ರೂಪಕ್ಕೆ ಬದಲಾಗಿದೆ ಎಂಬುದನ್ನು ಮಾತ್ರ ತಿಳಿಸಲಾಗಿದೆ; ಮೊದಲಿಗೆ ಕಣ್ಣು ಯಾವ ರೂಪದಲ್ಲಿತ್ತು ಎಂಬುದನ್ನು ಈ ರೀತಿ ನೇರವಾಗಿ ಒಂದು ಪಾಂಗಿನ ಮೂಲಕ ಅಂತಹ ಸೊಲ್ಲಿನಲ್ಲಿ ತಿಳಿಸಲು ಬರುವುದಿಲ್ಲ. ಅದು ಬಿಳಿಯಿದ್ದುದು ಕೆಂಪಾಗಿದೆ ಎಂಬುದಾಗಿ ಅದನ್ನು ಬಿಳಿಯಿದ್ದುದು ಎಂಬ ಒಂದು ಒಳಸೊಲ್ಲಿನ ಮೂಲಕ ತಿಳಿಸಬೇಕಾಗುತ್ತದೆ. (ಚ) ಅನಿಸಿಕೆಗಳನ್ನು ತಿಳಿಸುವಲ್ಲಿ ಅವನ್ನು ಪಡೆದಿರುವ ವ್ಯಕ್ತಿಯನ್ನು ಗುರಿ ಪಾಂಗಾಗಿ ಬಳಸುವುದೇ ಹೆಚ್ಚು; ಅವನ್ನು ಕಳಕೊಂಡಿರುವ ವ್ಯಕ್ತಿಯನ್ನು ಸುರು ಪಾಂಗಾಗಿ ಬಳಸುವುದು ತುಂಬಾ ಕಡಿಮೆ: (8ಕ) ಅವನಿಗೆ ಸಿಟ್ಟು ಬಂತು. (8ಚ) ಅವನಿಂದ ಸಿಟ್ಟು ಹೋಯಿತು. ಹೆಚ್ಚಿನೆಡೆಗಳಲ್ಲೂ ಗುರಿ ಪಾಂಗನ್ನು ಬಳಸಿರುವ (8ಕ)ದಂತಹ ಸೊಲ್ಲುಗಳ ಬಳಕೆಯಾಗುತ್ತದಲ್ಲದೆ, ಸುರು ಪಾಂಗನ್ನು ಬಳಸಿರುವ (8ಚ)ದಂತಹ ಸೊಲ್ಲುಗಳ ಬಳಕೆಯಲ್ಲ; (8ಚ)ದಂತಹ ಸೊಲ್ಲುಗಳ ಬಳಕೆ ತುಂಬಾ ಕಡಿಮೆ. (ಟ) ವ್ಯಕ್ತಿ ಇಲ್ಲವೇ ವಸ್ತುಗಳು ಮೊದಲಿಗೆ ಯಾವ ರೂಪದಲ್ಲಿದ್ದುವು ಎಂಬುದು ಸಾಮಾನ್ಯವಾಗಿ ಕೇಳುಗನಿಗೆ ತಿಳಿದಿರುತ್ತದೆ; ಹಾಗಾಗಿ, ಅದನ್ನು ಆತನಿಗೆ ತಿಳಿಸ ಬೇಕಾಗುವುದಿಲ್ಲ; ಹೆಚ್ಚಿನೆಡೆಗಳಲ್ಲೂ ಬದಲಾವಣೆಯ ಬಳಿಕ ಅವು ಯಾವ
ರೂಪವನ್ನು ಪಡೆದಿವೆ ಎಂಬುದೇ ಆತನಿಗೆ ತಿಳಿಸಬೇಕಾಗಿರುವ ವಿಶಯವಾಗಿರುತ್ತದೆ. ಸುರು ಪಾಂಗಿನ ಮೇಲಿಲ್ಲದ ಒತ್ತು ಗುರಿ ಪಾಂಗಿನ ಮೇಲೆ ಬೀಳಲು ಇದು ಮುಕ್ಯ ಕಾರಣವಾಗಿರಬಹುದು. (ತ) ತೆಗೆ, ಕಳಚು, ಉದುರು, ಒಸರು, ಪೀಕು ಮೊದಲಾದ ಕೆಲವು ಎಸಕಪದಗಳ ಹುರುಳಿನಲ್ಲೇನೇ ಕದಲಿಕೆಯ ಸುರು ಸೇರಿಸಿಕೊಂಡಿದ್ದು, ಇಂತಹ ಪದಗಳ ಬಳಕೆಯಲ್ಲಿ ಮಾತ್ರ ಗುರಿ ಪಾಂಗಿನ ಮೇಲಿರುವ ಈ ಒಲವು ಕಾಣಿಸಿಕೊಳ್ಳುವುದಿಲ್ಲ: (9ಕ) ತೊಟ್ಟಿನಿಂದ ಹಣ್ಣು ಕಳಚಿತು. (9ಚ) ಬುಟ್ಟಿಯಿಂದ ಹಣ್ಣು ತೆಗೆದ. (9ಟ) ಗೋಡೆಯಿಂದ ನೀರು ಒಸರುತ್ತಿತ್ತು. ಆದರೆ, ಇಲ್ಲೂ ಕೂಡ ಗುರಿ ಪಾಂಗನ್ನು ಕೆಳಕ್ಕೆ, ಹೊರಕ್ಕೆ ಮೊದಲಾದ ಪದಗಳ ಮೂಲಕ ತಿಳಿಸಲು ಬರುತ್ತದೆ: (10ಕ) ಹಣ್ಣು ತೊಟ್ಟಿನಿಂದ ಕೆಳಕ್ಕೆ ಕಳಚಿ ಬಿತ್ತು. (10ಚ) ಅವನು ಹಣ್ಣನ್ನು ಬುಟ್ಟಿಯಿಂದ ಹೊರಕ್ಕೆ ತೆಗೆದ. (10ಟ) ನೀರು ಗೋಡೆಯಿಂದ ಹೊರಕ್ಕೆ ಒಸರುತ್ತಿತ್ತು. ಮೇಲಿನ ಸೊಲ್ಲುಗಳಲ್ಲಿ ಗುರಿ ಪಾಂಗಿನ ಮೇಲೆ ಒತ್ತು ಕೊಡಲಾಗಿದೆಯಾದ ಕಾರಣ, ಅದನ್ನು ತಿಳಿಸುವ ಪದಗಳನ್ನು ಎಸಕಪದದ ಹತ್ತಿರಕ್ಕೆ ತರಲಾಗಿದೆ. ಇದಕ್ಕೆ ಬದಲು, ಎಸಕಪದಗಳ ಹುರುಳಿನಲ್ಲೇನೇ ಕದಲಿಕೆಯ ಗುರಿ ಸೇರಿರುವ ತುರುಕು, ಕೊಡು, ಮಾರು, ಹದಿ ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಗುರಿ ಪಾಂಗನ್ನು ಮಾತ್ರ ಬಳಸಲು ಬರುತ್ತದೆಯಲ್ಲದೆ ಸುರು ಪಾಂಗನ್ನು ಬಳಸಲು ಬರುವುದಿಲ್ಲ. (11ಕ) ಅವನು ಮಗುವಿಗೆ ಗೊಂಬೆ ಕೊಟ್ಟ. (11ಚ) ಅವನು ಸೆಟ್ಟಿಗೆ ಮನೆ ಮಾರಿದ. (11ಟ) ಅವನು ಗೋಡೆಗೆ ಮಣ್ಣು ಮೆತ್ತಿದ. ಮೇಲಿನ ಸೊಲ್ಲುಗಳಲ್ಲಿ ಸುರು ಪಾಂಗನ್ನು ನೇರವಾಗಿ ಸೇರಿಸಲು ಬರುವುದಿಲ್ಲ ಎಂಬುದನ್ನು ಗಮನಿಸಬಹುದು. ಇಂತಹ ಕೆಲವು ಎಸಕಪದಗಳನ್ನು ಬಳಸಿರುವಲ್ಲಿ ಸುರು ಪಾಂಗನ್ನು ತಿಳಿಸಬೇಕಿದ್ದರೆ, ಅದಕ್ಕಾಗಿ ಬೇರೆ ಎಸಕಪದಗಳಿರುವ ಒಳಸೊಲ್ಲನ್ನು ಬಳಸಬೇಕಾಗುತ್ತದೆ: (12ಕ) *ಅವನು ಮಗುವಿಗೆ ಗೊಂಬೆಯನ್ನು ಬುಟ್ಟಿಯಿಂದ ಕೊಟ್ಟ. (12ಚ) ಅವನು ಮಗುವಿಗೆ ಗೊಂಬೆಯನ್ನು ಬುಟ್ಟಿಯಿಂದ ತೆಗೆದು ಕೊಟ್ಟ. (13ಕ) *ಅವನು ಮಣ್ಣನ್ನು ಬುಟ್ಟಿಯಿಂದ ಗೋಡೆಗೆ ಮೆತ್ತಿದ. (13ಚ) ಅವನು ಮಣ್ಣನ್ನು ಬುಟ್ಟಿಯಿಂದ ತೆಗೆದು ಗೋಡೆಗೆ ಮೆತ್ತಿದ. (ಪ) ಮೇಲೆ 7.2.2ರಲ್ಲಿ ವಿವರಿಸಿದ ಹಾಗೆ, ಜಾಗ ಪಾಂಗನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳನ್ನು ಕದಲಿಕೆಯನ್ನು ತಿಳಿಸುವ ಎಸಕಪದಗಳೊಂದಿಗೆ ಬಳಸಿದಲ್ಲಿ, ಅವಕ್ಕೆ ಜಾಗ ಪಾಂಗನ್ನು ತಿಳಿಸುವ ಹುರುಳಿನ ಬದಲು ಗುರಿ ಪಾಂಗನ್ನು ತಿಳಿಸುವ ಹುರುಳು ಬರುತ್ತದೆ; ಆದರೆ, ಸುರು ಪಾಂಗನ್ನು ತಿಳಿಸುವ ಹುರುಳು ಬರುವುದಿಲ್ಲ: (14ಕ) ಅವನು ಮುಂದೆ ಇದ್ದಾನೆ. (14ಚ) ಅವನು ಮುಂದೆ ಹೋದ.
(15ಕ) ಅವನು ಮೇಜಿನ ಕೆಳಗೆ ಕುಳಿತಿದ್ದಾನೆ. (15ಚ) ಅವನು ಗುಡ್ಡದ ಕೆಳಗೆ ಇಳಿದ. ಕದಲಿಕೆಯನ್ನು ತಿಳಿಸುವ ಹೋಗು ಮತ್ತು ಇಳಿ ಪದಗಳನ್ನು ಬಳಸಿರುವ (ಚ) ಸೊಲ್ಲುಗಳಲ್ಲಿ ಮುಂದೆ ಮತ್ತು ಕೆಳಗೆ ಎಂಬ ಜಾಗ ಪಾಂಗನ್ನು ತಿಳಿಸುವ ಪದಗಳಿಗೆ ಗುರಿ ಪಾಂಗನ್ನು ತಿಳಿಸುವ (ಹಿಂದಿನಿಂದ) ಮುಂದಕ್ಕೆ (ಹೋದ) ಮತ್ತು (ಮೇಲಿನಿಂದ) ಕೆಳಕ್ಕೆ (ಇಳಿದ) ಎಂಬ ಹುರುಳು ಬಂದಿದೆ ಎಂಬುದನ್ನು ಗಮನಿಸ ಬಹುದು. ಆದರೆ, ಇವಕ್ಕೆ ಮುಂದಿನಿಂದ (ಹಿಂದಕ್ಕೆ ಹೋದ) ಎಂಬ ಹುರುಳಾಗಲಿ, ಕೆಳಗಿನಿಂದ (ಇನ್ನೂ ಕೆಳಕ್ಕೆ ಇಳಿದ) ಎಂಬ ಹುರುಳಾಗಲಿ ಬರುವುದಿಲ್ಲ. ಇದಲ್ಲದೆ, ಸುರು ಪಾಂಗನ್ನು ಬಳಸಬೇಕಿರುವಲ್ಲಿ ಜಾಗ ಪಾಂಗನ್ನು ತಿಳಿಸುವ ಪದ ಇಲ್ಲವೇ ಪದಕಂತೆಗಳನ್ನು ಬಳಸಿದಲ್ಲಿ, ಅಂತಹ ಸೊಲ್ಲು ಸರಿಯಾಗಿಲ್ಲ ಎಂಬ ಅನಿಸಿಕೆ ಮೂಡುತ್ತದೆ: (16ಕ) ಅವನು ಮನೆಯೊಳಗೆ ಕುಳಿತಿದ್ದ. (16ಚ) ಅವನು ಮನೆಯೊಳಗೆ ಹೋದ. (16ಟ) ಅವನು ಮನೆಯೊಳಕ್ಕೆ ಹೋದ. (17ಕ) *ಅವನು ಮನೆಯೊಳಗೆ ಹೊರಟ. (17ಚ) ಅವನು ಮನೆಯೊಳಗಿನಿಂದ ಹೊರಟ. ಜಾಗ ಪಾಂಗನ್ನು ತಿಳಿಸುವ ಮನೆಯೊಳಗೆ ಎಂಬುದನ್ನು (16ಕ)ದಲ್ಲಿ ಜಾಗ ಪಾಂಗನ್ನು ಬಳಸಬೇಕಾಗಿರುವ ಕುಳಿತಿರು ಎಂಬುದರೊಂದಿಗೆ ಬಳಸಲಾಗಿದೆ, ಮತ್ತು ಅದು ಅಲ್ಲಿ ಜಾಗ ಪಾಂಗನ್ನು ತಿಳಿಸುತ್ತದೆ; (16ಚ)ದಲ್ಲಿ ಅದನ್ನೇ ಗುರಿ ಪಾಂಗನ್ನು ಬಳಸಬೇಕಾಗಿರುವ ಹೋಗು ಪದದೊಂದಿಗೆ ಬಳಸಲಾಗಿದೆ, ಮತ್ತು ಅದಕ್ಕೆ ಗುರಿ ಪಾಂಗನ್ನು ತಿಳಿಸುವ ಹುರುಳು ದೊರಕಿದೆ; (16ಟ)ದಲ್ಲಿ ಮನೆಯೊಳಕ್ಕೆ ಎಂಬ ಗುರಿ ಪಾಂಗನ್ನು ತಿಳಿಸುವ ರೂಪವನ್ನೇ ಹೋಗು ಪದದೊಂದಿಗೆ ಬಳಸಲಾಗಿದೆ. ಆದರೆ, (17ಕ) ಸೊಲ್ಲಿನಲ್ಲಿ ಸುರು ಪಾಂಗನ್ನು ಬಳಸಬೇಕಾಗಿರುವ ಹೊರಡು ಪದದೊಂದಿಗೆ ಜಾಗ ಪಾಂಗನ್ನು ತಿಳಿಸುವ ಮನೆಯೊಳಗೆ ಎಂಬುದನ್ನು ಬಳಸಲಾಗಿದ್ದು, ಆ ಸೊಲ್ಲು ಸರಿಯಾಗಿಲ್ಲ; ಅದಕ್ಕೆ ಸುರು ಪಾಂಗನ್ನು ತಿಳಿಸುವ ಹುರುಳು ಬರಲಾರದೆಂಬುದೇ ಇದಕ್ಕೆ ಕಾರಣ. ಅಂತಹ ಸೊಲ್ಲಿನಲ್ಲಿ ಅದಕ್ಕೆ ಇಂದ ಒಟ್ಟನ್ನು ಸೇರಿಸಿದಲ್ಲಿ ಮಾತ್ರ ಅದು ಸುರು ಪಾಂಗನ್ನು ತಿಳಿಸಬಲ್ಲುದು ಎಂಬುದನ್ನು (17ಚ) ಸೊಲ್ಲು ತಿಳಿಸುತ್ತದೆ.
7.4.7 ಸುರು ಪಾಂಗಿನ ಬಳಕೆಗಳು
ಸುರು ಪಾಂಗನ್ನು ಮುಕ್ಯವಾಗಿ ಒಂದು ಕದಲಿಕೆ ಎಲ್ಲಿಂದ ಸುರುವಾಗುತ್ತದೆ ಎಂಬು ದನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ: (1ಕ) ಕಣ್ಣಿನಿಂದ ನೀರು ಒಸರಿತು. (1ಚ) ಮರದಿಂದ ಹಣ್ಣು ಬಿತ್ತು. (1ಟ) ಅವನು ಮರದಿಂದ ಇಳಿದ. (1ತ) ಅವನು ಬಾವಿಯಿಂದ ನೀರು ಸೇದಿದ. ಸುರು ಪಾಂಗಿನ ಈ ಮೂಲ ಹುರುಳಿನ ಕೆಲವು ಹರವುಗಳನ್ನು ಕೆಳಗೆ ವಿವರಿಸಲಾಗಿದೆ: (1) ಒಂದು ಪಾಂಗನ್ನು ಉಂಟುಮಾಡುವಲ್ಲಿ ಬಳಕೆಯಾಗಿರುವ ವಸ್ತುವನ್ನೂ ಆ ಎಸಕದ ಸುರು ಪಾಂಗಾಗಿ ಬಳಸಲು ಬರುತ್ತದೆ; ಉಂಟುಮಾಡುವ ಕೆಲಸ ಸುರುವಾದುದು ಆ ವಸ್ತುವಿನಿಂದ ಎಂಬ ಹುರುಳಿನಲ್ಲಿ ಈ ಬಳಕೆ ಬೆಳೆದುಬಂದಿರುವ ಹಾಗೆ ತೋರುತ್ತದೆ:
(2ಕ) ಈ ಮನೆಯ ಗೋಡೆಯನ್ನು ಕಲ್ಲಿನಿಂದ ಕಟ್ಟಿದ್ದಾರೆ. (2ಚ) ಅವನು ಹಳೇ ಕಾಗದಗಳಿಂದ ಒಂದು ಗೊಂಬೆ ಮಾಡಿದ. (2ಟ) ಈ ತಿಂಡಿಯನ್ನು ಹಸೀ ತರಕಾರಿಗಳಿಂದ ಮಾಡಿದ್ದಾರೆ. (2) ಮಾಡುಹಗಳನ್ನು ತಿಳಿಸುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಎಸಕದ ಮೇಲಿರುವ ಹತೋಟಿ ಈ ಪಾಂಗಿಗೆ ದೊರೆಯುತ್ತದೆ; ಇದರಿಂದಾಗಿ, ಎಸಕಪದಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಮಾಡುಗ ಪಾಂಗಿಗೆ ಎಸಕದ ಮೇಲೆ ಹತೋಟಿ ಇಲ್ಲವಾಗುತ್ತದೆ. ಈ ರೀತಿ ಹತೋಟಿ ಕಳೆದುಕೊಂಡ ಪಾಂಗನ್ನು ಹೆಚ್ಚಿನೆಡೆಗಳಲ್ಲೂ ಸುರು ಪಾಂಗಾಗಿ ಮಾರ್ಪಡಿಸಲಾಗುತ್ತದೆ; ಇಲ್ಲಿ ಆ ಪಾಂಗಿನಿಂದ ಎಸಕ ಸುರುವಾಗುತ್ತದೆ ಎಂಬ ಹುರುಳಿನಲ್ಲಿ ಅದನ್ನು ಸುರು ಪಾಂಗಾಗಿ ಬಳಸಲಾಗಿದೆ ಎಂದು ಹೇಳಬಹುದು: (3) ಅವನು ಬತ್ತ ಅಳೆದ > ನಾನು ಅವನಿಂದ ಬತ್ತ ಅಳೆಸಿದೆ. (4) ಅವನು ಹುಡುಗನಿಗೆ ಹೊಡೆದ > ನಾನು ಅವನಿಂದ ಹುಡುಗನಿಗೆ ಹೊಡೆಸಿದೆ. (5) ಅವನು ಮುದುಕನಿಗೆ ಹಣ ಕೊಟ್ಟ > ನಾನು ಅವನಿಂದ ಮುದುಕ ನಿಗೆ ಹಣ ಕೊಡಿಸಿದೆ. (3) ಆಗುಹಗಳಲ್ಲಿ ಎಸಕದ ಮಾಡುಗನನ್ನು ತಿಳಿಸಬೇಕಿದ್ದಲ್ಲಿ, ಅದನ್ನು ಎಸಕದ ಮೇಲೆ ಹತೋಟಿಯಿಲ್ಲದ ರೂಪದಲ್ಲಿ ತೋರಿಸಬೇಕಾಗುತ್ತದೆ; ಹಾಗಾಗಿ, ಅಂತಹ ಮಾಡುಗವನ್ನೂ ಎಸಕಪದದ ಸುರು ಪಾಂಗಾಗಿ ಬಳಸಲಾಗುತ್ತದೆ: (6ಕ) ಅವನು ಈ ಕೆಲಸವನ್ನು ಮಾಡಿದ್ದ; ಆದರೆ, ಅದು ನನ್ನಿಂದಾಗದು. (6ಚ) ಈ ಊರಿಗೆ ಅವನು ತುಂಬಾ ನೆರವು ನೀಡಿದ್ದಾನೆ > ಈ ಊರಿಗೆ ಅವನಿಂದ ತುಂಬಾ ನೆರವು ದೊರೆತಿದೆ. (6ಟ) ಅವರು ಮದುವೆಯನ್ನು ಚನ್ನಾಗಿ ನಡೆಸಿಕೊಟ್ಟರು > ಅವರಿಂದ ಮದುವೆ ಚನ್ನಾಗಿ ನಡೆಯಿತು. ಆದರೆ, ಇಂತಹ ಕಡೆಗಳಲ್ಲಿ ಸುರು ಪಾಂಗಿನೊಂದಿಗೆ ಆಗಿ ಎಂಬುದನ್ನು ಬಳಸಿ, ಅದನ್ನೊಂದು ಒಳಸೊಲ್ಲಿನ ಅಂಗವಾಗಿ ಮಾಡಿ ಬಳಸುವುದೇ ಹೆಚ್ಚು: (7ಕ) ಅವರಿಂದಾಗಿ ಈ ಮದುವೆ ಚನ್ನಾಗಿ ನಡೆಯಿತು. (7ಚ) ಅವನಿಂದಾಗಿ ನನ್ನ ಕೆಲಸವೆಲ್ಲ ಹಾಳಾಯಿತು. (4) ಬಿಸಿಲು, ಮಳೆ, ಗಾಳಿ, ಬೆಂಕಿ ಮೊದಲಾದ ಎಸಕಗಳ ಒತ್ತರಗಳನ್ನೂ ಅವುಗಳ ಸುರು ಪಾಂಗುಗಳಾಗಿ ಬಳಸಲು ಬರುತ್ತದೆ; ಇಲ್ಲಿಯೂ ಕೂಡ ಅವು ಎಸಕ ನಡೆಯಲು ಕಾರಣವಾಗಿದ್ದು, ಎಸಕ ಅವುಗಳಿಂದ ಮೂಡಿಬಂದಿದೆ ಎಂಬ ಹುರುಳಿನಲ್ಲಿ ಅವನ್ನು ಸುರು ಪಾಂಗಾಗಿ ಬಳಸಲಾಗಿದೆ: (8ಕ) ಬಿಸಿಲಿನಿಂದ ಗಿಡ ಬಾಡಿದೆ. (8ಚ) ಮಳೆಯಿಂದ ಗೋಡೆ ಕುಸಿಯಿತು. (8ಟ) ಗಾಳಿಯಿಂದ ಮರ ಉರುಳಿತು. (8ತ) ಬೆಂಕಿಯಿಂದ ಮನೆ ಸುಟ್ಟಿತು. (5) ಎಸಕಗಳಲ್ಲಿ ಬಳಕೆಯಾಗುವ ಮುಟ್ಟು(ಕರಣ)ಗಳನ್ನು ಅವುಗಳ ಸುರು ಪಾಂಗು ಎಂಬುದಾಗಿ ತಿಳಿಸಲಾಗುತ್ತದೆ; ಇಲ್ಲಿಯೂ ಎಸಕಗಳು ಅವುಗಳಿಂದ ಸುರುವಾಗುತ್ತವೆ ಎಂಬ ಹುರುಳೇ ಕಾಣಿಸಿಕೊಳ್ಳುತ್ತದೆ:
(9ಕ) ಅವನು ಗುದ್ದಲಿಯಿಂದ ಗಡ್ಡೆಗಳನ್ನು ಅಗೆದ. (9ಚ) ಅವನು ಕಲ್ಲಿನಿಂದ ಕಾಯಿಯನ್ನು ಜಜ್ಜಿದ. (9ಟ) ಅವನು ಚೂರಿಯಿಂದ ಆತನನ್ನು ತಿವಿದ. (6) ಎಸಕ ನಡೆಯಲು ಕಾರಣವೇನೆಂಬುದನ್ನು ತಿಳಿಸುವಲ್ಲೂ ಸುರು ಪಾಂಗನ್ನು ಬಳಸಲಾಗುತ್ತದೆ: (10ಕ) ಕಾಯಿಗಳಿಂದ ಕೊಂಬೆ ಜಗ್ಗಿದೆ. (10ಚ) ಹೊಗೆಯಿಂದ ಆತನ ಕಣ್ಣು ಕೆಂಪಾಗಿದೆ. (10ಟ) ಸಿಟ್ಟಿನಿಂದ ಆತ ಹಾರಾಡುತ್ತಿದ್ದಾನೆ. (7) ಕೆಲವು ಕಡೆಗಳಲ್ಲಿ ಸುರು ಪಾಂಗು ಕದಲಿಕೆಯ ದಾರಿಯನ್ನು ತಿಳಿಸುವು ದಕ್ಕಾಗಿಯೂ ಬಳಕೆಯಾಗಬಲ್ಲುದು: (11ಕ) ಕಿಟಿಕಿಯಿಂದ ಗಾಳಿ ಬರುತ್ತಿದೆ. ನಿಜಕ್ಕೂ ಕಿಟಿಕಿ ಇಲ್ಲಿ ಗಾಳಿಯ ದಾರಿಯಾಗಿದೆ; ಆದರೆ, ಅದನ್ನು ಅದರ ಸುರುವೆಂದೂ ತಿಳಿಯಲು ಬರುತ್ತದೆ. ಅದು ಗಾಳಿಯ ದಾರಿ ಎಂಬುದನ್ನು ಕಚಿತವಾಗಿ ತಿಳಿಸಬೇಕಿದ್ದಲ್ಲಿ ಅದರೊಂದಿಗೆ ಆಗಿ ಪದವನ್ನು ಬಳಸಲಾಗುತ್ತದೆ: (11ಚ) ಕಿಟಿಕಿಯಿಂದಾಗಿ ಗಾಳಿ ಬರುತ್ತಿದೆ.
7.4.8 ಗುರಿ ಪಾಂಗಿನ ಬಳಕೆಗಳು
ಗುರಿ ಪಾಂಗನ್ನು ಮುಕ್ಯವಾಗಿ ಒಂದು ಕದಲಿಕೆಯ ಕೊನೆಯನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ: (1ಕ) ಹಣ್ಣು ಹೊಳೆಗೆ ಬಿತ್ತು. (1ಚ) ಹುಡುಗ ಮನೆಗೆ ಹೋದ. (1ಟ) ಅವನು ತಲೆಗೆ ನೀರು ಸುರಿದ. (1ಕ)ದಲ್ಲಿ ಒಂದು ಆಗುಗದ (ಹಣ್ಣಿನ) ಕದಲಿಕೆಯನ್ನು, (1ಚ)ದಲ್ಲಿ ಒಂದು ಮಾಡುಗದ (ಹುಡುಗನ) ಕದಲಿಕೆಯನ್ನು, ಮತ್ತು (1ಟ)ದಲ್ಲಿ ಒಂದು ಈಡಿನ (ನೀರಿನ) ಕದಲಿಕೆಯನ್ನು ತಿಳಿಸಲಾಗಿದೆ ಎಂಬುದನ್ನು ಗಮನಿಸಬಹುದು. ಆದರೆ, ಈ ರೀತಿ ಗುರಿ ಪಾಂಗನ್ನು ಬಳಸಿರುವಲ್ಲಿ ಆಗುಗ, ಮಾಡುಗ, ಇಲ್ಲವೇ ಈಡು ಪಾಂಗು ಸೊಲ್ಲು ತಿಳಿಸುವ ಗುರಿಯನ್ನು ತಲಪಿರಲೇಬೇಕೆಂದೇನೂ ಇಲ್ಲ; ಯಾಕೆಂದರೆ, ಗುರಿ ಪಾಂಗನ್ನು ಕಳಿಸು, ಅಟ್ಟು, ಎಬ್ಬು ಎಂಬಂತಹ ಕೆಲವು ಎಸಕಪದಗಳೊಂದಿಗೆ ಬಳಸಿರುವಲ್ಲಿ ಅವು ಗುರಿಯನ್ನು ತಲಪಿಲ್ಲವೆಂಬುದಾಗಿಯೂ ತಿಳಿಸಲು ಬರುತ್ತದೆ: (2ಕ) ನಾನು ಅವನಿಗೆ ಒಂದು ಪುಸ್ತಕ ಕಳಿಸಿದ್ದೆ; ಆದರೆ, ಅದು ಅವನಿಗೆ ಇನ್ನೂ ತಲಪಿಲ್ಲ. (2ಚ) ಅವನು ದನಗಳನ್ನು ಗುಡ್ದಕ್ಕೆ ಅಟ್ಟಿದ್ದ; ಆದರೆ ಅವು ಗದ್ದೆಗೆ ಇಳಿದಿದ್ದುವು. ಇಂತಹ ಕದಲಿಕೆಯ ಕೊನೆಯನ್ನು ತಿಳಿಸುವ ಹುರುಳು ಮಾತ್ರವಲ್ಲದೆ ಬೇರೆಯೂ ಹಲವು ಬಗೆಯ ಹುರುಳುಗಳನ್ನು ತಿಳಿಸುವುದಕ್ಕಾಗಿ ಗುರಿ ಪಾಂಗನ್ನು ಬಳಸಲಾಗುತ್ತದೆ; ಆದರೆ, ಈ ಎಲ್ಲಾ ಬಳಕೆಗಳೂ ಕದಲಿಕೆಯ ಕೊನೆಯನ್ನು ತಿಳಿಸುವ ಅದರ ಮೂಲ ಹುರುಳನ್ನೇ ಬೇರೆ ಬೇರೆ ದಿಕ್ಕುಗಳಲ್ಲಿ ಹರವಿದುದರಿಂದಾಗಿ ಮೂಡಿಬಂದಿವೆ.
(1) ಕೊಡು, ಮಾರು ಎಂಬಂತಹ ಕೆಲವು ಎಸಕಪದಗಳ ಬಳಕೆಯಲ್ಲಿ, ಅವುಗಳೊಂದಿಗೆ ಬರುವ ಗುರಿ ಪಾಂಗು ಕದಲಿಕೆಗಿಂತಲೂ ಮಾರೆಡೆಗೊಳಿಸುವಿಕೆಯ ಮೇಲೆ ಹೆಚ್ಚಿನ ಒತ್ತನ್ನು ಕೊಡುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (3ಕ) ಅವನು ತನ್ನ ಮನೆಯನ್ನು ಮಗಳಿಗೆ ಕೊಟ್ಟ. (3ಚ) ಅವನು ತೋಟವನ್ನು ಯಾರಿಗೋ ಮಾರಿದ. ಮೇಲಿನ ಸೊಲ್ಲುಗಳಲ್ಲಿ ಮನೆ ಮತ್ತು ತೋಟ ಎಂಬ ಈಡು ಪಾಂಗುಗಳು ಯಾವ ಬಗೆಯ ಕದಲಿಕೆಗೂ ಒಳಗಾಗಿಲ್ಲ; ಆದರೆ, ಅವುಗಳ ಒಡೆತನ ಮಾಡುಗ ಪಾಂಗಿನಿಂದ ಗುರಿ ಪಾಂಗಿಗೆ ಮಾರೆಡೆಗೊಂಡಿದೆ. (2) ಸಿಟ್ಟು, ಮೆಚ್ಚುಗೆ, ಹೆದರಿಕೆ, ನೋವು, ತೊಂದರೆ, ಕಳಕಳಿ ಮೊದಲಾದ ಅನಿಸಿಕೆಗಳನ್ನು ಪಡೆದ ವ್ಯಕ್ತಿಯನ್ನು ಆ ಅನಿಸಿಕೆಗಳು ಬಂದು ಸೇರಿವೆ ಎಂಬುದಾಗಿ ತಿಳಿಯಲು ಬರುತ್ತದೆ, ಮತ್ತು ಈ ಕಾರಣಕ್ಕಾಗಿ, ಇಂತಹ ಅನಿಸಿಕೆಗಳನ್ನು ಪಡೆದ ವ್ಯಕ್ತಿಯನ್ನು ಗುರಿ ಪಾಂಗಿನಿಂದ ಗುರುತಿಸಲು ಬರುತ್ತದೆ: (4ಕ) ಅವನಿಗೆ ಸಿಟ್ಟು ಬಂತು. (4ಚ) ಅವನಿಗೆ ಹೆದರಿಕೆಯಾಯಿತು. (4ಟ) ಅವನಿಗೆ ನಿಮ್ಮ ಕೆಲಸ ಮೆಚ್ಚುಗೆಯಾಯಿತು. (4ತ) ಅವನಿಗೆ ನೀವು ಹೇಳಿದುದು ಗೊತ್ತಾಯಿತು. (3) ಕುಡಿ, ತಿನ್ನು, ಉಣ್ಣು, ನೆಕ್ಕು, ಮುಡಿ, ಸೂಡು, ಉಡು, ತೊಡು, ಹೊದೆ ಎಂಬಂತಹ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಮಾಡುಗ ಪಾಂಗು ಗುರಿ ಪಾಂಗಾಗಿ ಮಾರ್ಪಡುತ್ತದೆ, ಮತ್ತು ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ (8.3.2(10) ನೋಡಿ). (5) (ಕ) ಅವನು ಹಣ್ಣು ತಿಂದ > (ಚ) ನಾನು ಅವನಿಗೆ ಹಣ್ಣು ತಿನ್ನಿಸಿದೆ. (6) (ಕ) ಅವಳು ಹೂ ಮುಡಿದಳು > (ಚ)ನಾನು ಅವಳಿಗೆ ಹೂ ಮುಡಿಸಿದೆ. (7) (ಕ) ಅವನು ಕಂಬಳಿ ಹೊದೆದ > (ಚ) ನಾನು ಅವನಿಗೆ ಕಂಬಳಿ ಹೊದೆಸಿದೆ. ಈ ಎಸಕಪದಗಳ ಮಾಡುಗ ಪಾಂಗು ಎಸಕವನ್ನು ನಡೆಸುವುದು ಮಾತ್ರವಲ್ಲದೆ, ಅದರ ದೊರೆತವನ್ನೂ ತಾನೇ ಪಡೆಯುತ್ತದೆ; ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದನ್ನು ನಡೆಸುವ ಕೆಲಸವನ್ನು ಬೇರೊಂದು ಪಾಂಗು ಪಡೆಯುತ್ತದೆ, ಮತ್ತು ಅದರ ದೊರೆತವನ್ನು ಪಡೆಯುವ ಕೆಲಸ ಮಾತ್ರ ಅದರ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಮಾಡುಗಕ್ಕೆ ಉಳಿಯುತ್ತದೆ; ಹಾಗಾಗಿ, ಅದು ಗುರಿ ಪಾಂಗಾಗಿ ಬರುತ್ತದೆ. ಎತ್ತುಗೆಗಾಗಿ, (5ಕ) ಸೊಲ್ಲಿನಲ್ಲಿ ಹಣ್ಣನ್ನು ಬಾಯಿಗೆ ಹಾಕುವ ಕೆಲಸವನ್ನು ಮತ್ತು ಅದರ ದೊರೆತವನ್ನು ಪಡೆಯುವ (ತಿನ್ನುವ) ಕೆಲಸವನ್ನು ಒಬ್ಬನೇ (ಅವನು)ನಡೆಸುತ್ತಾನೆ; ಇದಕ್ಕೆ ಬದಲು, (5ಚ) ಸೊಲ್ಲಿನಲ್ಲಿ ಬಾಯಿಗೆ ಹಾಕುವ ಕೆಲಸವನ್ನು ಸೊಲ್ಲಿನ ಆಡುಗ (ನಾನು) ಮಾಡುತ್ತಾನೆ, ಮತ್ತು ಅದರ ದೊರೆತವನ್ನು ಇನ್ನೊಬ್ಬ ವ್ಯಕ್ತಿ (ಅವನಿಗೆ) ಪಡೆಯುತ್ತಾನೆ. (4) ಒಂದು ಎಸಕದ ಅಳಬನ್ನು (ಉದ್ದೇಶವನ್ನು) ತಿಳಿಸುವುದಕ್ಕಾಗಿಯೂ ಗುರಿ ಪಾಂಗನ್ನು (ಇಟ್ಟಳ ಪಾಂಗಾಗಿ ಇಲ್ಲವೇ ನೆರವು ಪಾಂಗಾಗಿ) ಬಳಸಲಾಗುತ್ತದೆ; ಎಸಕದ ಅಳಬು ಎಸಕದ ಕೊನೆ ಎಂಬ ಹುರುಳಿನಲ್ಲಿ ಈ ಹರವು ನಡೆದಿದೆಯೆಂದು ಹೇಳಬಹುದು: (8ಕ) ನಾನು ಮದ್ಯಾನ್ನದ ಊಟಕ್ಕೆ ಮನೆಗೆ ಹೋಗುತ್ತೇನೆ. (8ಚ) ಅವನು ಕೆಲಸಕ್ಕೆ ಹೋಗಿದ್ದಾನೆ.
(8ಟ) ಮದುವೆಗೆ ಸಾವಿರ ಜನ ಸೇರಿದ್ದರು. (5) ಪಾಂಗುಗಳಲ್ಲಿ ಮಾರ್ಪಾಡುಗಳನ್ನು ಉಂಟುಮಾಡುವ ಬಿಸಿಲು, ಮಳೆ, ಗಾಳಿ, ಬೆಂಕಿ ಮೊದಲಾದ ಒತ್ತರಗಳನ್ನು ಅಂತಹ ಮಾರ್ಪಾಡುಗಳ ಗುರಿಯೆಂಬುದಾಗಿ ತಿಳಿಯಲು ಬರುತ್ತದೆ: (9ಕ) ಮಳೆಗೆ ಗೋಡೆ ಕುಸಿಯಿತು. (9ಚ) ಬಿಸಿಲಿಗೆ ಕೆರೆ ಬತ್ತಿತು. (9ಟ) ಬೆಂಕಿಯ ಬಿಸಿಗೆ ಬೆಣ್ಣೆ ಕರಗಿತು. (9ತ) ಗಾಳಿಗೆ ಮರ ಉರುಳಿತು. (6) ಹೆದರು, ಬೆದರು, ಅಂಜು, ಮುಳಿ, ಒಲಿ ಎಂಬಂತಹ ಅನಿಸಿಕೆಯನ್ನು ಉಂಟುಮಾಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನೂ ಅವುಗಳ ಗುರಿಯೆಂಬುದಾಗಿ ತಿಳಿಯಲು ಬರುತ್ತದೆ: (10ಕ) ಅವನು ಹುಲಿಗೆ ಹೆದರಿದ. (10ಚ) ದೇವನು ಮುದುಕನಿಗೆ ಒಲಿದ. (10ಟ) ಅವನು ಹುಡುಗನಿಗೆ ಮುನಿದ. ಆಗುಗನಲ್ಲಿ ಅನಿಸಿಕೆಗಳನ್ನು ಉಂಟುಮಾಡಿರುವ ಹುಲಿ, ಮುದುಕ ಮತ್ತು ಹುಡುಗ ಎಂಬವುಗಳು ಮೇಲಿನ ಸೊಲ್ಲುಗಳಲ್ಲಿ ಗುರಿ ಪಾಂಗುಗಳಾಗಿ ಬಂದಿವೆ; ಈ ಅನಿಸಿಕೆಗಳು ಅವುಗಳಲ್ಲಿ ಕೊನೆಗೊಂಡಿವೆ ಎಂಬ ಹುರುಳಿನಲ್ಲಿ ಈ ಬಳಕೆ ಬೆಳೆದುಬಂದಿರಬೇಕು. (7) ಮೇಲೆ (7.4.5)ರಲ್ಲಿ ತಿಳಿಸಿದ ಹಾಗೆ, ಗುರಿ ಪಾಂಗನ್ನು ಇರುಹವನ್ನು ತಿಳಿಸುವ ಸೊಲ್ಲುಗಳಲ್ಲೂ ಬಳಸಲು ಬರುತ್ತದೆ; ಆದರೆ, ಇಂತಹ ಕಡೆಗಳಲ್ಲಿ ಅದನ್ನು ನೇರವಾಗಿ ಒಂದು ಕದಲಿಕೆಯ ಕೊನೆಯನ್ನು ತಿಳಿಸುವುದಕ್ಕಾಗಿ ಬಳಸುವುದಿಲ್ಲ; ಇದಕ್ಕೆ ಬದಲು, ಎರಡು ಪಾಂಗುಗಳ ನಡುವಿನ ಸಂಬಂದವನ್ನು ತಿಳಿಸುವಲ್ಲಿ ಆ ಸಂಬಂದ ಒಂದು ಪಾಂಗಿನಿಂದ ಇನ್ನೊಂದು ಪಾಂಗಿನೆಡೆಗೆ ಹರಿಯುತ್ತದೆ ಎಂಬಂತಹ ಅನಿಸಿಕೆ ಬರುವ ಹಾಗೆ ಮಾಡಲು ಬಳಸಲಾಗುತ್ತದೆ: (11ಕ) ಅವನಿಗೆ ನಿಮ್ಮ ಮೇಲೆ ಸಿಟ್ಟಿದೆ. (11ಚ) ಅವನಿಗೆ ಇವತ್ತು ರಜೆಯಿದೆ. (11ಟ) ಅವನ ಮಾತಿಗೆ ಬೆಲೆಯಿದೆ. (11ತ) ಅವನಿಗೆ ಇಬ್ಬರು ಮಕ್ಕಳಿದ್ದಾರೆ. ಇರುಹವನ್ನು ತಿಳಿಸುವ ಮೇಲಿನ ಎಲ್ಲಾ ಸೊಲ್ಲುಗಳಲ್ಲೂ ಗುರಿ ಪಾಂಗನ್ನು ಬಳಸಲಾಗಿದೆ, ಮತ್ತು ಅವು ಆ ಪಾಂಗಿನ ಅನಿಸಿಕೆ, ಪರಿಚೆ ಇಲ್ಲವೇ ಗೊತ್ತುಪಾಡನ್ನು (ಪರಿಸ್ತಿತಿಯನ್ನು) ತಿಳಿಸುತ್ತಿವೆ. ಇವಕ್ಕೆ ಪಾಂಗಿನೊಡನಿರುವ ಸಂಬಂದವನ್ನು ಅದರೆಡೆಗೆ ಹರಿಯುತ್ತಿರುವಂತೆ ತೋರಿಸುವುದಕ್ಕಾಗಿ ಇಲ್ಲಿ ಗುರಿ ಪಾಂಗಿನ ಬಳಕೆಯಾಗಿದೆ ಎಂದು ಹೇಳಬಹುದು. (ಕ) ಗೊತ್ತುಪಾಡು ಮತ್ತು ಅನಿಸಿಕೆಗಳನ್ನು ತಿಳಿಸುವಲ್ಲಿ, ಪತ್ತುಗೆ ಇಟ್ಟಳವನ್ನು ಇರುವಿಕೆಯ ಇಟ್ಟಳವಾಗಿ ಮಾರ್ಪಡಿಸಲು ಬರುತ್ತದೆ (8.2.2 (2) ನೋಡಿ); ಈ ಮಾರ್ಪಾಡಿನಲ್ಲಿ ಮೊದಲಿಗಿದ್ದ ಗುರಿ ಪಾಂಗು ಇರುಗ ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಇರುಗ ಪಾಂಗು ಜಾಗ ಪಾಂಗಾಗುತ್ತದೆ: (12) ಅವನಿಗೆ ಸಿಟ್ಟಿದೆ > ಅವನು ಸಿಟ್ಟಿನಲ್ಲಿದ್ದಾನೆ. (13) ಅವನಿಗೆ ಸಾಲ ಇದೆ > ಅವನು ಸಾಲದಲ್ಲಿದ್ದಾನೆ.
(12)ನೇ ಎತ್ತುಗೆಯ ಮೊದಲನೇ ಸೊಲ್ಲಿನಲ್ಲಿರುವ ಅವನಿಗೆ ಎಂಬ ಗುರಿ ಪಾಂಗು ಎರಡನೇ ಸೊಲ್ಲಿನಲ್ಲಿ ಅವನು ಎಂಬ ಇರುಗವಾಗಿದೆ, ಮತ್ತು ಮೊದಲನೇ ಸೊಲ್ಲಿನಲ್ಲಿರುವ ಸಿಟ್ಟು ಎಂಬ ಇರುಗ ಪಾಂಗು ಎರಡನೇ ಸೊಲ್ಲಿನಲ್ಲಿ ಸಿಟ್ಟಿನಲ್ಲಿ ಎಂಬ ಜಾಗ ಪಾಂಗಾಗಿದೆ. ಇವುಗಳಲ್ಲಿ ಮೊದಲನೆಯ ಸೊಲ್ಲು ಸಿಟ್ಟು ಎಂಬ ಅನಿಸಿಕೆ ಇರುಗದೆಡೆಗೆ ಹರಿಯುವ ಸಂಬಂದವನ್ನು ತಿಳಿಸುತ್ತದೆ, ಮತ್ತು ಎರಡನೆಯದು ಅದೇ ಇರುಗ ಪಾಂಗು ಸಿಟ್ಟು ಎಂಬ ಜಾಗದಲ್ಲಿ ನೆಲೆಸಿರುವುದನ್ನು ತಿಳಿಸುತ್ತದೆ. (ಚ) ಪರಿಚೆ ಇಟ್ಟಳದಲ್ಲೂ ಗುರಿ ಪಾಂಗು ನೆರವಿನ ಪಾಂಗಾಗಿ ಬರಬಲ್ಲು ದಾಗಿದ್ದು, ಅದು ತಿಳಿಸುವ ಪರಿಚೆ ಆ ಪಾಂಗಿಗೆ ಮಾತ್ರ ಸಂಬಂದಿಸಿದುದು (ಅದರೆಡೆಗೆ ಮಾತ್ರ ಹರಿಯುವಂತಹದು) ಎಂಬುದನ್ನು ತಿಳಿಸಬಲ್ಲುದು: (14ಕ) ಅವರ ಮನೆಯ ಊಟ ನನಗೆ ಸಪ್ಪೆ. (14ಚ) ಈ ಮನೆ ನಿಮಗೆ ತಕ್ಕುದು. (14ಟ) ನಿಮ್ಮ ಮಂಚ ಈ ಕೋಣೆಗೆ ಚಿಕ್ಕದು. (ಟ) ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಹೊತ್ತು ಮತ್ತು ಜಾಗಗಳನ್ನು ತಿಳಿಸಬೇಕಾಗಿರುವಲ್ಲೂ ಗುರಿ ಪಾಂಗನ್ನು ಬಳಸಲು ಬರುತ್ತದೆ: (15ಕ) ಅಲ್ಲಿ ಏಳು ಗಂಟೆಗೆ ಒಂದು ನಾಟಕ ಇದೆ. (15ಚ) ಅವರ ಮನೆ ಈ ಗುಡ್ಡದ ಕೆಳಗೆ ಇದೆ. (8) ಒಂದು ಉಸುರಿಯನ್ನು ಗುರುತಿಸುವ ಗುರಿ, ಮತ್ತು ಒಂದು ಉಸುರಿಲ್ಲ ದುದನ್ನು ಗುರುತಿಸುವ ಗುರಿ ಎಂಬುದಾಗಿ ಗುರಿ ಪಾಂಗನ್ನು ಎರಡು ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ. ಎತ್ತುಗೆಗಾಗಿ, ಆಗುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿರುವ ಎಟಕು, ಒಗ್ಗು, ಸಲ್ಲು, ಒಪ್ಪು, ತಿಳಿ, ನಾಟು, ನೋಯು ಮೊದಲಾದುವಕ್ಕೆ ಒಂದು ಉಸಿರಿ ಗುರಿಯಾಗಿರುತ್ತದೆ, ಮತ್ತು ಚುಚ್ಚು, ತಗಲು, ತೊಡರು, ಸುತ್ತು, ಹಬ್ಬು, ನೆನೆ ಮೊದಲಾದುವಕ್ಕೆ ಒಂದು ಉಸಿರಿಲ್ಲದುದು ಗುರಿಯಾಗಿರುತ್ತದೆ: (16ಕ) ಅವನಿಗೆ ವಿಶಯ ತಿಳಿಯಿತು. (16ಚ) ಬಳ್ಳಿ ಮರಕ್ಕೆ ಹಬ್ಬಿತು. ಕೆಲವು ಎಸಕಪದಗಳೊಂದಿಗೆ ಈ ಎರಡು ಬಗೆಯ ಗುರಿಗಳೂ ಬರಬಲ್ಲುವು: (17ಕ) ಅವನಿಗೆ ಒಂದು ಹಣ್ಣು ಸಿಕ್ಕಿತು. (17ಚ) ಹಕ್ಕಿ ಬಲೆಗೆ ಸಿಕ್ಕಿತು. ಉಸುರಿಯನ್ನು ಗುರುತಿಸುವ ಗುರಿ ಬಂದಿರುವಲ್ಲಿ ಎರಡು ಬಗೆಯ ಎಸಕಪದಗಳು ಬಳಕೆಯಾಗುವುದನ್ನು ಕಾಣಬಹುದು; ಅವು ಉಸುರಿಯ ಮನಸ್ಸಿಗೆ ಸಂಬಂದಿ ಸಿರಬಹುದು, ಇಲ್ಲವೇ ಮಯ್ಗೆ ಸಂಬಂದಿಸಿರಬಹುದು: (18ಕ) ಅವನಿಗೆ ವಿಶಯ ತಿಳಿಯಿತು. (18ಚ) ಅವನಿಗೆ ಹಣ ಸಿಕ್ಕಿತು.
7.4.9 ಜಾಗ ಪಾಂಗಿನ ಬಳಕೆಗಳು
ಜಾಗ ಪಾಂಗನ್ನು ಮುಕ್ಯವಾಗಿ ಒಂದು ಎಸಕ ಎಲ್ಲಿ ನಡೆಯುತ್ತದೆ ಎಂಬುದಾಗಿ ಅದು ನಡೆಯುವ ಜಾಗವನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ; ಕೆಲವು ಬಗೆಂiÀi ಎಸಕಗಳ ಪಾಂಗಿಟ್ಟಳದಲ್ಲೇನೇ ಜಾಗ ಪಾಂಗು ಬರುತ್ತದೆ, ಮತ್ತು ಉಳಿದ ಎಲ್ಲಾ ಬಗೆಯ ಎಸಕಗಳೊಂದಿಗೂ ಅದು ನೆರವು ಪಾಂಗಾಗಿ ಬರುತ್ತದೆ: (1ಕ) ನೀರು ನೆಲದಲ್ಲಿ ಇಂಗಿತು. (1ಚ) ಕೆರೆಯಲ್ಲಿ ದೋಣಿ ಮುಳುಗಿತು. (1ಟ) ಅವನು ಹೊಳೆಯಲ್ಲಿ ಈಜಿದ. (2ಕ) ಅವನು ಕಾಡಿನಲ್ಲಿ ಮರ ಕಡಿದ. (2ಚ) ಅವನು ಶಾಲೆಯಲ್ಲಿ ನನಗೆ ಹೊಡೆದ. (1ಕ-ಟ) ಸೊಲ್ಲುಗಳಲ್ಲಿ ಜಾಗ ಪಾಂಗು ಇಟ್ಟಳದ ಪಾಂಗಾಗಿ ಬಳಕೆಯಾಗಿದೆ, ಮತ್ತು ಅದು ಇಂಗು, ಮುಳುಗು ಮತ್ತು ಈಜು ಎಂಬ ಪದಗಳು ತಿಳಿಸುವ ಎಸಕಗಳು ಎಲ್ಲಿ ನಡೆದುವು ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಬದಲು, (2ಕ-ಚ) ಸೊಲ್ಲುಗಳಲ್ಲಿ ಅದೊಂದು ನೆರವು ಪಾಂಗಾಗಿ ಬಳಕೆಯಾಗಿದೆ. (1) ಜಾಗ ಪಾಂಗು ಮನುಶ್ಯರನ್ನು ಗುರುತಿಸುತ್ತಿದೆಯಾದರೆ, ಅದು ನೇರವಾಗಿ ಜಾಗವನ್ನು ತಿಳಿಸುವ ಬದಲು ಜಾಗವುಳ್ಳವನನ್ನು ಇಲ್ಲವೇ ಒಡೆಯನನ್ನು ತಿಳಿಸುತ್ತದೆ: (3ಕ) ಅವನು ನಮ್ಮಲ್ಲಿ ಮೂರು ದಿನ ತಂಗಿದ. (3ಚ) ಅವರಲ್ಲಿ ಎರಡು ದನಗಳಿವೆ. (3ಟ) ಅವರಲ್ಲಿ ತುಂಬಾ ಹಣವಿದೆ. (3ಕ)ದಲ್ಲಿ ಬಂದಿರುವ ನಮ್ಮಲ್ಲಿ ಎಂಬುದಕ್ಕೆ ನಮ್ಮ ಮನೆಯಲ್ಲಿ ಎಂಬ ಹುರುಳಿದೆ, ಮತ್ತು (3ಚ-ಟ)ಗಳಲ್ಲಿ ಬಂದಿರುವ ಅವರಲ್ಲಿ ಎಂಬುದಕ್ಕೆ ಅವರ ಒಡೆತನದಲ್ಲಿ ಎಂಬ ಹುರುಳಿದೆ. (2) ಜಾಗಗಳಲ್ಲಿ ಹಲವು ಬಗೆಗಳಿದ್ದು, ಅವನ್ನು ಬೇರ್ಪಡಿಸಿ ತಿಳಿಸಬೇಕಾಗಿರುವಲ್ಲಿ ಒಳಗೆ, ಹೊರಗೆ, ಮೇಲೆ, ಕೆಳಗೆ, ಹಿಂದೆ, ಮುಂದೆ, ನಡುವೆ, ಸುತ್ತ, ದೂರ, ಹತ್ತಿರ, ಬಳಿ ಮೊದಲಾದ ಪದಗಳನ್ನು ಬಳಸಬೇಕಾಗುತ್ತದೆ. ಅಲ್ಲಿ ಎಂಬ ಒಟ್ಟು ಇಂತಹ ವ್ಯತ್ಯಾಸಗಳನ್ನು ತಿಳಿಸಬೇಕಾಗಿಲ್ಲದಲ್ಲಿ ಮಾತ್ರ ಬಳಕೆ ಯಾಗುತ್ತದೆ: (4ಕ) ಮರದ ಗೆಲ್ಲಿನಲ್ಲಿ ಒಂದು ಹಕ್ಕಿ ಕುಳಿತಿದೆ. (4ಚ) ಮರದ ಗೆಲ್ಲಿನ ಮೇಲೆ ಒಂದು ಹಕ್ಕಿ ಕುಳಿತಿದೆ. (5ಕ) ಅವಳು ಕೋಣೆಯಲ್ಲಿ ಮಲಗಿದ್ದಾಳೆ. (5ಚ) ಅವಳು ಕೋಣೆಯೊಳಗೆ ಮಲಗಿದ್ದಾಳೆ. (6ಕ) ಅವರು ಮನೆಯ ಸುತ್ತ ಮುಳ್ಳಿನ ಗಿಡ ನಟ್ಟಿದ್ದಾರೆ. (6ಚ) *ಅವರು ಮನೆಯಲ್ಲಿ ಮುಳ್ಳಿನ ಗಿಡ ನಟ್ಟಿದ್ದಾರೆ. (4-5)ನೇ ಎತ್ತುಗೆಗಳಲ್ಲಿ ಜಾಗ ಪಾಂಗನ್ನು ಅಲ್ಲಿ ಒಟ್ಟಿನಿಂದಾಗಲಿ, ಇಲ್ಲವೇ ಮೇಲೆ, ಒಳಗೆ ಎಂಬ ಪದಗಳಿಂದಾಗಲಿ ತಿಳಿಸಲು ಬರುತ್ತದೆ; ಆದರೆ, (6)ನೇ ಎತ್ತುಗೆಯಲ್ಲಿ ಅದನ್ನು ಸುತ್ತ ಎಂಬ ಪದದ ಮೂಲಕವೇ ತಿಳಿಸಬೇಕಾಗಿದೆಯಲ್ಲದೆ ಅಲ್ಲಿ ಒಟ್ಟಿನಿಂದ ತಿಳಿಸಲು ಬರುವುದಿಲ್ಲ. ಕಯ್ಯೆತ್ತು, ಎರಗು, ತೂಳು ಮತ್ತು ತೆಂಗು ಪದಗಳೊಂದಿಗೆ ಜಾಗ ಪಾಂಗನ್ನು ಬಳಸಬೇಕೆಂದಿರುವಲ್ಲಿ ಮೇಲೆ ಪದವನ್ನು ಬಳಸಬೇಕಾಗುತ್ತದೆ, ಮತ್ತು ಸಾರು ಪದದೊಂದಿಗೆ ಬಳಿ ಪದವನ್ನು ಬಳಸಬೇಕಾಗುತ್ತದೆ:
(7ಕ) ಅವನು ನನ್ನ ಮೇಲೆ ಕಯ್ಯೆತ್ತಿದ. (7ಚ) ಹುಡುಗ ಅವನ ಬಳಿ ಸಾರಿದ. (3) ಜಾಗ ಪಾಂಗಿನ ಕೆಲವು ಬಳಕೆಗಳಲ್ಲಿ ಅದಕ್ಕೆ ಒಳಗೆ ಎಂಬ ಹುರುಳು ಸಿಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (8ಕ) ಅವನು ಹಣವನ್ನು ಪೆಟ್ಟಿಗೆಯಲ್ಲಿರಿಸಿದ. (8ಚ) ಅವನು ಹಣವನ್ನು ಪೆಟ್ಟಿಗೆಯ ಮೇಲಿರಿಸಿದ. (8ಕ)ದಲ್ಲಿ ಬಂದಿರುವ ಜಾಗ ಪಾಂಗಿಗೆ ಒಳಗೆ ಎಂಬ ಹುರುಳಿದೆ; ಆದರೆ, (8ಚ)ದಲ್ಲಿ ಮೇಲೆ ಎಂಬುದು ಹೆಚ್ಚು ಕಚಿತವಾದ ಜಾಗವನ್ನು ತಿಳಿಸುತ್ತದೆ. (4) ಜಾಗವನ್ನು ತಿಳಿಸುವ ಹುರುಳನ್ನು ಮಾತ್ರವಲ್ಲದೆ, ಎಸಕವನ್ನು ನಡೆಸುವಲ್ಲಿ ಬಳಕೆಯಾಗಿರುವ ಮುಟ್ಟನ್ನು ತಿಳಿಸುವಲ್ಲೂ ಅದನ್ನು ಬಳಸಲು ಬರುತ್ತದೆ: (9ಕ) ಅವನು ಚೂರಿಯಲ್ಲಿ ಹಗ್ಗವನ್ನು ಕತ್ತರಿಸಿದ. (9ಚ) ಅವನು ತಂಬಿಗೆಯಲ್ಲಿ ಗಿಡಕ್ಕೆ ನೀರು ಹಾಕಿದ. (9ಟ) ಅವಳು ಅವನ ಕಯ್ಯನ್ನು ಹಲ್ಲಿನಲ್ಲಿ ಕಚ್ಚಿದಳು. ಇಂತಹ ಎಸಕಗಳಲ್ಲಿ ಬಳಕೆಯಾಗಿರುವ ಮುಟ್ಟನ್ನು ಎಸಕದ ಜಾಗವೆಂದು ತಿಳಿಯಲಾಗಿದೆ ಎಂದು ಹೇಳಬಹುದು. ಆ ರೀತಿ ತಿಳಿಯಲು ಬಾರದಿರುವಂತಹ ಮುಟ್ಟನ್ನು ಜಾಗ ಪಾಂಗಾಗಿ ಬಳಸಲು ಬರುವುದಿಲ್ಲ.
7.4.10 ಆಗುಗ ಇಲ್ಲವೇ ಮಾಡುಗ ಮತ್ತು ಗುರಿ
ಆಗುಗ ಇಲ್ಲವೇ ಮಾಡುಗಕ್ಕೂ ಗುರಿ ಪಾಂಗಿಗೂ ನಡುವೆ ಕೆಲವು ಸೊಲ್ಲುಗಳ ಬಳಕೆಯಲ್ಲಿ ಸಂಬಂದವನ್ನು ಕಾಣಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1) ಅವನು ಸೀರೆ ತರಲು ಮರೆತ > ಅವನಿಗೆ ಸೀರೆ ತರಲು ಮರೆತಿತು. (2) ಅವನು ದಾರಿ ತಪ್ಪಿದ > ಅವನಿಗೆ ದಾರಿ ತಪ್ಪಿತು. (3) ಅವನು ಸೋತ > ಅವನಿಗೆ ಸೋಲಾಯಿತು. (4) ಅವನು ನೊಂದ > ಅವನಿಗೆ ನೋವಾಯಿತು. (5) ಅವನು ಸಿಟ್ಟಾದ > ಅವನಿಗೆ ಸಿಟ್ಟು ಬಂತು. (1)ನೇ ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಅವನು ಎಂಬುದು ಆಗುಗ ಪಾಂಗಾಗಿ ಬಂದಿದೆ, ಮತ್ತು ಎರಡನೇ ಸೊಲ್ಲಿನಲ್ಲಿ ಅದೇ ಪದ ಅವನಿಗೆ ಎಂಬ ರೂಪದಲ್ಲಿ ಗುರಿ ಪಾಂಗಾಗಿ ಮಾರ್ಪಟ್ಟಿದೆ; ಇವುಗಳ ನಡುವಿನ ವ್ಯತ್ಯಾಸವೇನೆಂದರೆ, ಆಗುಗ ಪಾಂಗಾಗಿ ಬಂದಿರುವಲ್ಲಿ ಮರೆತಿರುವುದಕ್ಕೆ ಆತ ಹೊಣೆ ಎಂಬ ಹುರುಳು ದೊರಕುತ್ತದೆ, ಮತ್ತು ಗುರಿ ಪಾಂಗಾಗಿ ಬಂದಿರುವಲ್ಲಿ ಆತ ಅದಕ್ಕೆ ಹೊಣೆಯಲ್ಲ ಎಂಬ ಹುರುಳು ದೊರಕುತ್ತದೆ. (2-5) ಎತ್ತುಗೆಗಳಲ್ಲೂ ಇಂತಹದೇ ವ್ಯತ್ಯಾಸ ಕಾಣಿಸುತ್ತದೆ. ಮಾಡುಗ ಮತ್ತು ಗುರಿ ಪಾಂಗುಗಳ ನಡುವೆಯೂ ಇಂತಹದೇ ಸಂಬಂದ ಕಾಣಿಸುತ್ತದೆ; ಸಾಮಾನ್ಯವಾಗಿ, ಮಾಡುಗವಾಗಿ ಬಳಕೆಯಾಗಿರುವ ಪಾಂಗು ಎಸಕಕ್ಕೆ ಹೊಣೆಯಾಗಿರುತ್ತದೆ ಮಾತ್ರವಲ್ಲ, ಎಸಕ ಅದರ ಹತೋಟಿಯಲ್ಲೂ ಇರುತ್ತದೆ; ಇದಕ್ಕೆ
ಬದಲು, ಗುರಿಯಾಗಿ ಬಂದಿರುವ ಪಾಂಗು ಎಸಕಕ್ಕೆ ಹೊಣೆಯಾಗಿರುವುದಿಲ್ಲ, ಮತ್ತು ಎಸಕ ಅದರ ಹತೋಟಿಯಲ್ಲೂ ಇರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (6) ಅವನು ಸುದ್ದಿ ತಿಳಿದ > ಅವನಿಗೆ ಸುದ್ದಿ ತಿಳಿಯಿತು. (7) ಅವನು ಒಪ್ಪಿದ > ಅವನಿಗೆ ಒಪ್ಪಿಗೆಯಾಯಿತು. (8) ಅವನು ಮೆಚ್ಚಿದ > ಅವನಿಗೆ ಮೆಚ್ಚುಗೆಯಾಯಿತು. (9) ಅವನು ಹಣ ಪಡೆದ > ಅವನಿಗೆ ಹಣ ಸಿಕ್ಕಿತು. (10) ಅವನು ನನ್ನನ್ನು ಸೋಲಿಸಿದ > ನಾನು ಅವನಿಗೆ ಸೋತೆ.
7.4.11 ಕೆಲವು ಹೆಚ್ಚಿನ ಪಾಂಗುಗಳು
ಎಸಕಪದಗಳೊಂದಿಗೆ ಬರಬಲ್ಲ ಇಟ್ಟಳದ ಪಾಂಗುಗಳು ಎಂತಹವು ಎಂಬುದನ್ನು ಮೇಲೆ ವಿವರಿಸಲಾಗಿದೆ; ಇವು ಮಾತ್ರವಲ್ಲದೆ, ಬೇರೆಯೂ ಕೆಲವು ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಸೊಲ್ಲುಗಳಲ್ಲಿ ಬಳಕೆಯಾಗಬಲ್ಲುವು. ಅಂತಹ ಕೆಲವು ಪಾಂಗುಗಳ ಬಳಕೆಯನ್ನು ಕೆಳಗೆ ವಿವರಿಸಲಾಗಿದೆ: (1) ಇರು ಪದದೊಂದಿಗೆ ಬರುವ ಇರುಗ ಮತ್ತು ಪರಿಚೆ ಪಾಂಗುಗಳು: ಇರು ಪದದೊಂದಿಗೆ ಇರುಗ+ಜಾಗ, ಇರುಗ+ಪರಿಚೆ ಮತ್ತು ಇರುಗ+ಗುರಿ ಎಂಬ ಮೂರು ಬಗೆಯ ಪಾಂಗಿಟ್ಟಳಗಳು ಬರಬಲ್ಲುವು (7.3 ನೋಡಿ); ಈ ಪಾಂಗಿಟ್ಟಳಗಳಲ್ಲಿ ಎಸಕಪದಗಳ ಪಾಂಗಿಟ್ಟಳಗಳಲ್ಲಿ ಬರುವ ಜಾಗ ಮತ್ತು ಗುರಿ ಪಾಂಗುಗಳು ಮಾತ್ರವಲ್ಲದೆ, ಇರುಗ ಮತ್ತು ಪರಿಚೆ ಎಂಬ ಎರಡು ಹೆಚ್ಚಿನ ಪಾಂಗುಗಳು ಬಳಕೆಯಾಗುತ್ತವೆ. ಇವುಗಳಲ್ಲಿ ಇರುಗ ಪಾಂಗು, ಆಗುಗ ಮತ್ತು ಮಾಡುಗ ಪಾಂಗುಗಳ ಹಾಗೆ, ಯಾವ ಪತ್ತುಗೆ ಒಟ್ಟನ್ನೂ ಪಡೆಯದೆ ಬಳಕೆಯಾಗುತ್ತದೆ, ಮತ್ತು ಸೊಲ್ಲಿನ ಎಸಕಪದದ (ಇರು ಪದದ) ಗುರುತಿಸುವ ಒಟ್ಟುಗಳು ಅದರ ಗುರ್ತ ಮತ್ತು ಎಣಿಕೆಗಳನ್ನು ಅಡಕವಾಗಿ ತಿಳಿಸುತ್ತವೆ: (1ಕ) ಬೆಕ್ಕು ಮರದ ತುದಿಯಲ್ಲಿದೆ. (1ಚ) ಆ ಎಮ್ಮೆಯ ಕೊಂಬು ನೆಟ್ಟಗಿದೆ. (1ಟ) ಆ ಹುಳಕ್ಕೆ ಎರಡು ತಲೆಗಳಿವೆ. (1ಕ)ದಲ್ಲಿ ಬೆಕ್ಕು ಎಂಬುದು ಇರುಗ ಪಾಂಗಾಗಿದ್ದು, ಇದೆ ಎಂಬ ಎಸಕರೂಪದ ಕೊನೆಯಲ್ಲಿ ಬಂದಿರುವ ಗುರುತಿಸುವ ಎ ಒಟ್ಟು ಅದನ್ನೇ ಅಡಕವಾಗಿ ಗುರುತಿಸುತ್ತದೆ; (1ಟ)ದಲ್ಲಿ ಎರಡು ತಲೆ ಎಂಬುದು ಇರುಗ ಪಾಂಗಾಗಿದ್ದು, ಅದರ ಎಸಕರೂಪದ ಕೊನೆಯಲ್ಲಿ ಇವೆ ಎಂಬ ಹಲವೆಣಿಕೆಯ ಎಸಕರೂಪ ಬಳಕೆಯಾಗಿದೆ. ಇರುಗ+ಪರಿಚೆ ಎಂಬ ಪಾಂಗಿಟ್ಟಳದಲ್ಲಿ ಬರುವ ಪರಿಚೆ ಪಾಂಗು ಉಳಿದೆಲ್ಲಾ ಪಾಂಗುಗಳಿಂದಲೂ ಒಂದು ವಿಶಯದಲ್ಲಿ ಬೇರಾಗಿದೆ: ಅದನ್ನು ತಿಳಿಸಲು ಹೆಸರುಪದ ಇಲ್ಲವೇ ಹೆಸರುಪದಕಂತೆಗಳು ಬಳಕೆಯಾಗುವುದಕ್ಕಿಂತಲೂ ಎಸಕಪರಿಚೆಗಳು ಬಳಕೆಯಾಗುವುದೇ ಹೆಚ್ಚು: (2ಕ) ಈ ಮರದ ಗೆಲ್ಲು ತೆಳ್ಳಗಿದೆ. (2ಚ) ಅವಳ ತುಟಿ ಕೆಂಪಿದೆ. (2ಟ) ಮನೆಯ ಹಿಂದಿನ ಮರ ತುಂಬಾ ಎತ್ತರ ಇದೆ. (2ತ) ಅವನ ಹಲ್ಲು ಬೆಳ್ಳಗಿದೆ.
ಎಸಕಪದಗಳ ಮೊದಲೆಸಕದ ಜೋಡಿಸುವ ರೂಪಗಳನ್ನೂ ಎಸಕಪರಿಚೆಗಳಾಗಿ ಬಳಸಲು ಸಾದ್ಯವಿದ್ದು, ಅವನ್ನೂ ಇಂತಹ ಪಾಂಗಿಟ್ಟಳಗಳಲ್ಲಿ ಪರಿಚೆ ಪಾಂಗಾಗಿ ಬಳಸಲು ಬರುತ್ತದೆ (7.3.5 ನೋಡಿ): (3ಕ) ಅಂಗಡಿಯ ಬಾಗಿಲು ತೆರೆದಿದೆ. (3ಚ) ಹುಡುಗರು ಹಸಿದಿದ್ದಾರೆ. (3ಕ)ದಲ್ಲಿ ತೆರೆದು ಎಂಬ ಜೋಡಿಸುವ ರೂಪ, ಮತ್ತು (3ಚ)ದಲ್ಲಿ ಹಸಿದು ಎಂಬ ಇನ್ನೊಂದು ಜೋಡಿಸುವ ರೂಪ ಪರಿಚೆ ಪಾಂಗಾಗಿ ಬಳಕೆಯಾಗಿದೆ. ಹೆಸರುಪದ ಇಲ್ಲವೇ ಪದಕಂತೆಗಳನ್ನು ಪರಿಚೆ ಪಾಂಗಾಗಿ ಬಳಸಬೇಕಿದ್ದಲ್ಲಿ, ಅವುಗಳೊಂದಿಗೆ ಆಗು ಪದದ ಮೊದಲೆಸಕದ ಜೋಡಿಸುವ ರೂಪವನ್ನು ಬಳಸಬೇಕಾಗುತ್ತದೆ: (4ಕ) ಅವನು ಕಿವುಡನಾಗಿದ್ದಾನೆ. (4ಚ) ಅವಳು ಚೆಲುವಿಯಾಗಿದ್ದಾಳೆ. ಇದೇ ರೀತಿಯಲ್ಲಿ, ಹೆಸರುಪರಿಚೆಗಳನ್ನು ಪರಿಚೆ ಪಾಂಗಾಗಿ ಬಳಸಬೇಕಿದ್ದಲ್ಲಿ ಅವಕ್ಕೆ ಅವನು, ಅವಳು ಮೊದಲಾದ ತೋರುಪದಗಳನ್ನು ಮತ್ತು ಆಗು ಪದದ ಮೊದಲೆಸಕದ ಜೋಡಿಸುವ ರೂಪವನ್ನು ಸೇರಿಸಬೇಕಾಗುತ್ತದೆ: (5ಕ) ಅವನು ದೊಡ್ಡವನಾಗಿದ್ದಾನೆ. (5ಚ) ಅವರು ಒಳ್ಳೆಯವರಾಗಿದ್ದಾರೆ. (5ಟ) ಅದು ತುಂಬಾ ಹಳೆಯದಾಗಿದೆ. ಪರಿಚೆ ಪಾಂಗನ್ನು ತಿಳಿಸಲು ಬಳಕೆಯಾಗುವ ಈ ಪರಿಚೆಪದಗಳು ಪತ್ತುಗೆ ಒಟ್ಟನ್ನು ಪಡೆಯದೇನೇ ಸೊಲ್ಲುಗಳಲ್ಲಿ ಬರುತ್ತವೆ; ಯಾಕೆಂದರೆ, ಹೆಸರುಪದಗಳು ಮತ್ತು ಪದಕಂತೆಗಳು ಮಾತ್ರ ಪತ್ತುಗೆ ಒಟ್ಟನ್ನು ಪಡೆಯಬಲ್ಲುವಲ್ಲದೆ ಪರಿಚೆಪದಗಳು ಅವನ್ನು ಪಡೆಯಲಾರವು. ಹಾಗಾಗಿ, ಇರುಗ+ಪರಿಚೆ ಪಾಂಗಿಟ್ಟಳದಲ್ಲಿ ಬರುವ ಎರಡು ಪಾಂಗುಗಳೂ ಪತ್ತುಗೆ ಒಟ್ಟಿಲ್ಲದೆ ಬರುತ್ತವೆ. (2) ಆಗು ಪದದೊಂದಿಗೆ ಬರುವ ಪರಿಚೆ ಪಾಂಗು: ಮೇಲೆ 7.3.3(4)ರಲ್ಲಿ ವಿವರಿಸಿದ ಹಾಗೆ, ಆಗು ಪದವನ್ನು ಹಲವು ಬಗೆಯ ಪರಿಚೆ ಪದಗಳೊಂದಿಗೆ ಬಳಸಲು ಬರುತ್ತಿದ್ದು, ಅಂತಹ ಸೊಲ್ಲುಗಳಲ್ಲಿ ಆಗುಗ+ ಪರಿಚೆ ಎಂಬ ಪಾಂಗಿಟ್ಟಳವಿದೆ: (6ಕ) ಅವನ ಗುಟ್ಟು ರಟ್ಟಾಯಿತು. (6ಚ) ಕೋಲಿನ ತುದಿ ಚೂಪಾಯಿತು. (6ಟ) ಅವನ ಮೋರೆ ಕಪ್ಪಾಯಿತು. (6ತ) ಹುಡುಗ ದೊಡ್ಡವನಾದ. ಈ ಒಂದು ಬಳಕೆಯನ್ನು ಬಿಟ್ಟರೆ, ಪರಿಚೆ ಪಾಂಗು ಇರುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ಇಂತಹ ಬಳಕೆಯಲ್ಲೂ ಕೆಲವೆಡೆಗಳಲ್ಲಿ ಆಗು ಪದ ಅದರ ಮೊದಲೆಸಕದ ಜೋಡಿಸುವ ರೂಪದಲ್ಲಿ ಬರುತ್ತದೆ ಎಂಬುದನ್ನು ಮೇಲೆ (1)ರಲ್ಲಿ ನೋಡಿರುವೆವು.
(3) ಒಡನಾಡಿ ಪಾಂಗಿನ ಬಳಕೆ: ಸೇರು, ಉರುಡು, ಏಗು, ಕಾದು ಎಂಬಂತಹ ಕೆಲವು ಎಸಕಪದಗಳು ಮಾಡುಗ ಪಾಂಗಿನೊಂದಿಗೆ ಒಂದು ಒಡನಾಡಿ ಪಾಂಗನ್ನು (7.6.5 ನೋಡಿ) ಇಟ್ಟಳದ ಪಾಂಗಾಗಿ ಪಡೆಯುತ್ತವೆ: (7ಕ) ನಾನು ಅವನೊಂದಿಗೆ ಉರುಡಿದೆ. (7ಚ) ಅವನು ಇವನೊಡನೆ ಕಾದಿದ. (7ಟ) ಆಕೆ ಆ ಹುಡುಗನೊಂದಿಗೆ ಏಗುತ್ತಿದ್ದಾಳೆ. ಜಗಳಾಡು, ಮಾತನಾಡು, ಹೋರಾಡು, ಕಾದಾಡು ಮೊದಲಾದ ಕೆಲವು ಕೂಡುಪದಗಳೊಂದಿಗೂ ಮಾಡುಗ+ಒಡನಾಡಿ ಪಾಂಗಿಟ್ಟಳ ಬರುತ್ತದೆ: (8ಕ) ಅವನು ಕರಡಿಯೊಂದಿಗೆ ಹೋರಾಡಿದ್ದ. (8ಚ) ಅವರು ಮಕ್ಕಳೊಂದಿಗೆ ಮಾತನಾಡುತ್ತಿದ್ದಾರೆ. ಕಲೆ, ಕೂಡು ಮತ್ತು ಬೆಸೆ ಪದಗಳೊಂದಿಗೆ ಒಂದು ಆಗುಗ ಪಾಂಗು ಮತ್ತು ಒಡನಾಡಿ ಪಾಂಗು ಬರಬಲ್ಲುವು: (9ಕ) ಸಕ್ಕರೆಯೊಂದಿಗೆ ಉಪ್ಪು ಕಲೆತಿದೆ. (9ಚ) ಚಿಕ್ಕ ಹೊಳೆ ದೊಡ್ಡ ಹೊಳೆಯೊಂದಿಗೆ ಕೂಡಿದೆ.
7.5 ನೆರವು ಪಾಂಗುಗಳು: ಹೊತ್ತು ಮತ್ತು ಇಂಬು
ಮೇಲೆ (7.4)ರಲ್ಲಿ ಇರುಹ ಇಲ್ಲವೇ ಎಸಕಗಳಲ್ಲಿ ನೇರವಾಗಿ ತೊಡಗಿಕೊಂಡಿರು ವಂತಹ ಇಟ್ಟಳದ ಪಾಂಗುಗಳ ಬಳಕೆಯನ್ನು ವಿವರಿಸಲಾಗಿದೆ. ಸೊಲ್ಲುಗಳಲ್ಲಿ ಈ ಬಗೆಯ ಪಾಂಗುಗಳು ಮಾತ್ರವಲ್ಲದೆ, ಇರುಹ ಇಲ್ಲವೇ ಎಸಕಗಳ ಹೊತ್ತು ಮತ್ತು ಇಂಬುಗಳನ್ನು ತಿಳಿಸುವ ಬೇರೆ ಎರಡು ಬಗೆಯ ಪಾಂಗುಗಳೂ ಬಳಕೆಯಾಗುತ್ತವೆ; ಇವನ್ನು ನೆರವು ಪಾಂಗುಗಳೆಂದು ಕರೆಯಬಹುದು. ಇರುಹ ಇಲ್ಲವೇ ಎಸಕಗಳ ಕುರಿತಾಗಿ ಅವುಗಳ ಹೊತ್ತು ಮತ್ತು ಇಂಬುಗಳನ್ನು ತಿಳಿಸುವಲ್ಲಿ ಹಲವಾರು ಬಗೆಗಳು ಕಾಣಿಸಿಕೊಳ್ಳುತ್ತವೆ, ಮತ್ತು ಇವನ್ನೆಲ್ಲ ವಿವರವಾಗಿ ತಿಳಿಸಲು ಹೊತ್ತು ಮತ್ತು ಇಂಬುಗಳೆಂಬ ಬರೇ ಎರಡು ಪಾಂಗುಗಳು ಸಾಕಾಗುವು ದಿಲ್ಲ. ಹಲವು ಬಗೆಯ ಹೊತ್ತಿನ ಮತ್ತು ಇಂಬಿನ ಪದಗಳನ್ನು ಬಳಸಬೇಕಾಗುತ್ತದೆ, ಮತ್ತು ಅವುಗಳೊಂದಿಗೆ ಗುರಿ, ಸುರು ಮತ್ತು ಜಾಗಗಳೆಂಬ ಮೂರು ಬಗೆಯ ಇಟ್ಟಳದ ಪಾಂಗುಗಳನ್ನೂ ಅವುಗಳ ಮಾರ್ಪುರುಳಿನಲ್ಲಿ ನೆರವು ಪಾಂಗುಗಳಾಗಿ ಬಳಸಬೇಕಾಗುತ್ತದೆ. ಎತ್ತುಗೆಗಾಗಿ, ನಿನ್ನೆ ಮೊನ್ನೆ, ಇವತ್ತು ಮೊದಲಾದ ಪದಗಳು ಹೊತ್ತಿನ ನೆಲೆಯನ್ನು ತಿಳಿಸುತ್ತವೆ; ಗಂಟೆ, ಮಿನಿಟು, ದಿನ, ತಿಂಗಳು ಮೊದಲಾದ ಪದಗಳು ಹೊತ್ತಿನ ಅಳತೆಯನ್ನು ತಿಳಿಸುತ್ತವೆ; ಮತ್ತು ಬಾರಿ, ಸಲ ಮೊದಲಾದುವು ಎಣಿಕೆಯನ್ನು ತಿಳಿಸುತ್ತವೆ.
ಇದೇ ರೀತಿಯಲ್ಲಿ, ಎಸಕಗಳ ಇಂಬನ್ನು ತಿಳಿಸುವಲ್ಲೂ ಹಲವು ಬಗೆಯ ಪದಗಳು ಬಳಕೆಯಾಗುತ್ತವೆ. ಎತ್ತುಗೆಗಾಗಿ, ಮೇಲೆ, ಕೆಳಗೆ, ಮುಂದೆ, ಹಿಂದೆ, ಒಳಗೆ, ಹೊರಗೆ ಮೊದಲಾದುವು ಇಂಬಿನ ನೆಲೆಯನ್ನು ತಿಳಿಸುತ್ತವೆ; ಮತ್ತು ಅಂಗುಲ, ಗೇಣು, ಚೋಟು, ಮೀಟರ್ ಮೊದಲಾದುವು ಇಂಬಿನ ಅಳತೆಯನ್ನು ತಿಳಿಸುತ್ತವೆ. ಗುರಿ ಮತ್ತು ಸುರು ಪಾಂಗುಗಳ ಬಳಕೆಯನ್ನು ಇರುಹ ಇಲ್ಲವೇ ಎಸಕಗಳ ಹೊತ್ತು ಇಲ್ಲವೇ ಇಂಬಿನ ಅಳತೆಯನ್ನು ತಿಳಿಸುವಲ್ಲಿ ಕಾಣಬಹುದು: ಅಳತೆಯ ಒಂದು ತುದಿಯನ್ನು ಸುರುವಾಗಿ, ಮತ್ತು ಇನ್ನೊಂದು ತುದಿಯನ್ನು ಗುರಿಯಾಗಿ ತಿಳಿಸಲಾಗುತ್ತದೆ: (1ಕ) ಅವನು ಹತ್ತು ಗಂಟೆಯಿಂದ ಹನ್ನೊಂದು ಗಂಟೆವರೆಗೆ ಇಲ್ಲಿದ್ದ. (1ಚ) ಅವನು ಹತ್ತು ಗಂಟೆಯಿಂದ ಹನ್ನೊಂದು ಗಂಟೆವರೆಗೆ ಓಡಿದ. (2ಕ) ಅವನ ತೋಟ ಹತ್ತನೇ ಕಿಲೋಮೀಟರ್ನಿಂದ ಹನ್ನೆರಡನೇ ಕಿಲೋಮೀಟರ್ ವರೆಗೆ ಇದೆ. (2ಚ) ಅವನು ಹತ್ತನೇ ಕಿಲೋಮೀಟರ್ನಿಂದ ಹನ್ನೆರಡನೇ ಕಿಲೋಮೀಟರ್ ವರೆಗೆ ಓಡಿದ. ಇರುಹ ಮತ್ತು ಎಸಕಗಳ ಹೊತ್ತು ಮತ್ತು ಇಂಬುಗಳನ್ನು ತಿಳಿಸುವಲ್ಲಿ ಎಂತಹ ಪಾಂಗುಗಳು ಬಳಕೆಯಾಗುತ್ತವೆ, ಮತ್ತು ಅವುಗಳ ಬಳಕೆಯ ಮೇಲೆ ಇರುಹ ಮತ್ತು ಎಸಕಗಳ ಹುರುಳುಗಳು ಎಂತಹ ಕಟ್ಟುಪಾಡುಗಳನ್ನು ಹೊರಿಸುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
7.5.1 ಹೊತ್ತಿನ ತಿಳಿವು
ಎಸಕಪದಗಳಲ್ಲೇನೇ ಅವುಗಳ ಹೊತ್ತನ್ನು ತಿಳಿಸುವುದಕ್ಕಾಗಿ ದ್ (ಹಿಂಬೊತ್ತು) ಮತ್ತು ಉತ್್ತ (ಮುಂಬೊತ್ತು) ಎಂಬ ಎರಡು ಹೊತ್ತಿನ ಒಟ್ಟುಗಳು ಬರುತ್ತವೆ ಎಂಬುದನ್ನು ಮೇಲೆ 4.5ರಲ್ಲಿ ನೋಡಿರುವೆವು; ಇವು ಎಸಕದ ಹೊತ್ತನ್ನು ತುಂಬಾ ಅಡಕವಾಗಿ ತಿಳಿಸುತ್ತವೆ; ಅದನ್ನೇ ಹೆಚ್ಚು ವಿವರವಾಗಿ ಮತ್ತು ಹೆಚ್ಚು ಕಚಿತವಾಗಿ ತಿಳಿಸಲು ಹೊತ್ತಿನ ಪಾಂಗುಗಳನ್ನು ಬಳಸಲಾಗುತ್ತದೆಯೆಂದು ಹೇಳಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹುಡುಗ ಮನೆಗೆ ಹೋದ. (1ಚ) ಹುಡುಗ ಸಂಜೆ ಆರೂವರೆಗೆ ಮನೆಗೆ ಹೋದ. (2ಕ) ಹುಡುಗ ಮನೆಗೆ ಹೋಗುತ್ತಾನೆ. (2ಚ) ಹುಡುಗ ಸಂಜೆ ಆರೂವರೆಗೆ ಮನೆಗೆ ಹೋಗುತ್ತಾನೆ. (1ಕ-ಚ)ಗಳ ಹೋದ ಎಂಬ ಎಸಕಪದದಲ್ಲಿ ಬಂದಿರುವ ದ್ ಒಟ್ಟು ಹೋಗುವ ಎಸಕ ಸೊಲ್ಲುಹೊತ್ತಿಗಿಂತ ಮೊದಲು ನಡೆದಿದೆ ಎಂದಿಶ್ಟೇ ತಿಳಿಸುತ್ತದೆ; ಆದರೆ, (1ಚ)ದಲ್ಲಿ ಅದರೊಂದಿಗೆ ಸಂಜೆ ಆರೂವರೆಗೆ ಎಂಬ ಹೊತ್ತಿನ ಪಾಂಗು ಬಂದಿದ್ದು, ಅದು ದ್ ಒಟ್ಟು ತಿಳಿಸುವ ಹೊತ್ತಿನ ಕುರಿತಾಗಿ ಹೆಚ್ಚಿನ ತಿಳಿವನ್ನು ಮತ್ತು ಹೆಚ್ಚು ಕಚಿತವಾದ ತಿಳಿವನ್ನು ಒದಗಿಸುತ್ತದೆ. ಇದೇ ರೀತಿಯಲ್ಲಿ, (2ಕ-ಚ)ಗಳಲ್ಲೂ ಹೋಗುತ್ತಾನೆ ಎಂಬ ಎಸಕಪದದಲ್ಲಿ ಬಂದಿರುವ ಉತ್್ತ ಒಟ್ಟು ಎಸಕದ ಹೊತ್ತನ್ನು ಅಡಕವಾಗಿ ತಿಳಿಸುತ್ತಿದ್ದು, (2ಚ)ದಲ್ಲಿ ಸಂಜೆ ಆರೂವರೆಗೆ ಎಂಬ ಹೊತ್ತಿನ ಪಾಂಗು ಅದನ್ನೇ ಹೆಚ್ಚು ವಿವರವಾಗಿ ಮತ್ತು ಕಚಿತವಾಗಿ ತಿಳಿಸುತ್ತದೆ. ಇರುಹವನ್ನು ತಿಳಿಸುವ ಇರು ಪದದ ಪದರೂಪಗಳಲ್ಲೂ ಅದರ ಹೊತ್ತನ್ನು ಅಡಕವಾಗಿ ತಿಳಿಸಲು ಮೂರು ಬಗೆಯ ಹೊತ್ತಿನ ಒಟ್ಟುಗಳು ಬರುತ್ತಿದ್ದು, ಇವು ಮುಂಬೊತ್ತು, ಹಿಂಬೊತ್ತು ಮತ್ತು ಈಪೊತ್ತು ಎಂಬ ಮೂರು ಬಗೆಯ ಹೊತ್ತುಗಳನ್ನು ತಿಳಿಸುತ್ತವೆ (6.2.5 ನೋಡಿ); ಇಂತಹ ಸೊಲ್ಲುಗಳಲ್ಲೂ ಹೊತ್ತನ್ನು ಹೆಚ್ಚು ವಿವರವಾಗಿ ಮತ್ತು ಕಚಿತವಾಗಿ ತಿಳಿಸಲು ಹೊತ್ತಿನ ಪಾಂಗನ್ನು ಬಳಸ ಲಾಗುತ್ತದೆ.
ಇದಲ್ಲದೆ, ಹೊತ್ತಿನ ಅಳತೆ, ಗಡುವು ಮೊದಲಾದ ಬೇರೆಯೂ ಕೆಲವು ಬಗೆಯ ತಿಳಿವುಗಳನ್ನು ಸೊಲ್ಲುಗಳಲ್ಲಿ ಒದಗಿಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಕೆಲವು ಹೆಚ್ಚಿನ ಪದಗಳನ್ನು ಬಳಸಬೇಕಾಗುತ್ತದೆ; ಈ ಪದಗಳು ಗುರಿ, ಸುರು ಮತ್ತು ಜಾಗ ಎಂಬ ಪಾಂಗುಗಳ ರೂಪದಲ್ಲೂ ಬರಬಲ್ಲುವು: (3ಕ) ಅವನು ಮೂರು ಗಂಟೆಗೆ ಬಂದಿದ್ದ. (3ಚ) ಅವನು ಮೂರು ಗಂಟೆಯಿಂದ ಹಾಡುತ್ತಿದ್ದಾನೆ. (3ಟ) ಅವನು ಮೂರು ಗಂಟೆಯಲ್ಲಿ ನಾಲ್ಕು ಹಾಡು ಹಾಡಿದ. (3ಕ) ಸೊಲ್ಲಿನಲ್ಲಿ ಬರುವ ಎಸಕ ಯಾವಾಗ ನಡೆಯಿತು ಎಂಬುದನ್ನು ಹೆಚ್ಚು ಕಚಿತವಾಗಿ ತಿಳಿಸಲು ಮೂರು ಗಂಟೆಗೆ ಎಂಬ ಗುರಿ ಪಾಂಗನ್ನು ಬಳಸಲಾಗಿದೆ; (3ಚ) ಸೊಲ್ಲಿನಲ್ಲಿ ಹಾಡುವ ಎಸಕ ಹೊತ್ತಿನ ಅಳತೆಯನ್ನು ಒಂದು ಕಚಿತವಾದ ನೆಲೆಗೆ ಸಂಬಂದಿಸಿದಂತೆ ತಿಳಿಸುವುದಕ್ಕಾಗಿ ಮೂರು ಗಂಟೆಯಿಂದ ಎಂಬ ಸುರು ಪಾಂಗನ್ನು ಬಳಸಲಾಗಿದೆ; ಮತ್ತು (3ಟ)ದಲ್ಲಿ ನಾಲ್ಕು ಹಾಡನ್ನು ಹಾಡಲು ಆತ ಬಳಸಿದ್ದ ಹೊತ್ತಿನ ಗಡುವನ್ನು ತಿಳಿಸಲು ಮೂರು ಗಂಟೆಯಲ್ಲಿ ಎಂಬ ಜಾಗ ಪಾಂಗನ್ನು ಬಳಸಲಾಗಿದೆ. ಹೊತ್ತಿನ ಪಾಂಗನ್ನು ತಿಳಿಸುವಲ್ಲಿ ಕಾಣಿಸುವಂತಹ ಬಗೆಗಳು ಬೇರೆ ಯಾವ ಪಾಂಗಿನ ತಿಳಿಸುವಿಕೆಯಲ್ಲೂ ಕಾಣಿಸುವುದಿಲ್ಲ; ಈ ಎಲ್ಲಾ ಬಗೆಗಳನ್ನೂ ತಿಳಿಸುವುದಕ್ಕಾಗಿ ಹಲವು ಬಗೆಯ ಹೊತ್ತಿನ ಪದಗಳು ಬಳಕೆಯಾಗುತ್ತವೆ: (1) ದಿನಗಳನ್ನು ಆಡುಗನ ಹೊತ್ತಿನೊಂದಿಗೆ ಸಂಬಂದಿಸುವ ಪತ್ತುಗೆ ಪದಗಳು: ನಿನ್ನೆ, ಮೊನ್ನೆ, ಇವತ್ತು, ನಾಳೆ, ನಾಡಿದು. (2) ಎಸಕದ ಹೊತ್ತನ್ನು ಬೇರೆ ಎಸಕಗಳ ಹೊತ್ತಿನೊಂದಿಗೆ ಇಲ್ಲವೇ ಬೇರೆ ಬಗೆಯ ಹೊತ್ತುಗಳೊಂದಿಗೆ ಸಂಬಂದಿಸಿ ತಿಳಿಸಬಲ್ಲ ಪತ್ತುಗೆ ಪದಗಳು: ಹಿಂದೆ, ಮುಂದೆ, ಮೇಲೆ, ಮೊದಲು, ಒಡನೆ, ಕೂಡಲೇ, ತನಕ, ಆಗ, ಅಂತೆ, ಹಾಗೆ, ಒಳಗೆ, ಮುಂಚೆ, (3) ಹೊತ್ತಿನ ಅಳತೆಯನ್ನು ತಿಳಿಸುವ ಪದಗಳು: ಮಿನಿಟು, ಗಂಟೆ, ದಿವಸ, ತಿಂಗಳು, ಮತ್ತು (4) ಮಾರೆಸಕಗಳ ಎಣಿಕೆಯನ್ನು ತಿಳಿಸುವ ಪದಗಳು: ಸರ್ತಿ, ಸಲ, ಬಾರಿ. ಇದಲ್ಲದೆ, ಮೇಲೆ ತಿಳಿಸಿದ ಹಾಗೆ, ಇಂತಹ ಪದಗಳಲ್ಲಿ ಕೆಲವನ್ನು ಗುರಿ, ಸುರು ಮತ್ತು ಜಾಗ ಪಾಂಗುಗಳಾಗಿಯೂ ಕಾಣಿಸಲು ಬರುತ್ತದೆ, ಮತ್ತು ಹಾಗೆ ಕಾಣಿಸುವ ಮೂಲಕವೂ ಕೆಲವು ಹೆಚ್ಚಿನ ಹುರುಳುಗಳನ್ನು ತಿಳಿಸಲು ಬರುತ್ತದೆ. (1) ಪದಗಳ ಹೊಂದಿಕೆ ಹೊತ್ತಿನ ಪಾಂಗನ್ನು ತಿಳಿಸುವುದಕ್ಕಾಗಿ ಬಳಕೆಯಾಗುವ ಪತ್ತುಗೆ ಪದಗಳಲ್ಲಿ ಮುಕ್ಯವಾಗಿ ಎರಡು ಬಗೆಯವನ್ನು ಕಾಣಲು ಬರುತ್ತದೆ: ಮೊನ್ನೆ, ನಿನ್ನೆ, ನಾಳೆ, ನಾಡಿದು, (ಎರಡು ತಿಂಗಳ) ಹಿಂದೆ ಮೊದಲಾದುವು ಎಸಕಪದದಲ್ಲಿ ಬರುವ ಹೊತ್ತಿನ ಒಟ್ಟಿನೊಂದಿಗೆ ಹೊಂದಿಕೊಂಡಿರಬೇಕಾಗುತ್ತದೆ: (1ಕ) ಅವನು ಎರಡು ತಿಂಗಳ ಹಿಂದೆ ಬಂದಿದ್ದ. (1ಚ) *ಅವನು ಎರಡು ತಿಂಗಳ ಹಿಂದೆ ಬರುತ್ತಾನೆ. (2ಕ) *ಅವನು ನಾಳೆ ಬಂದಿದ್ದ. (2ಚ) ಅವನು ನಾಳೆ ಬರುತ್ತಾನೆ.
ಎರಡು ತಿಂಗಳ ಹಿಂದೆ ಎಂಬುದು ಎಸಕಪದದ ಹಿಂಬೊತ್ತಿನ ರೂಪದೊಂದಿಗೆ ಬರಬಲ್ಲುದಲ್ಲದೆ, ಮುಂಬೊತ್ತಿನ ರೂಪದೊಂದಿಗೆ ಬರಲಾರದು; ಹಾಗಾಗಿ, (1ಚ) ಸೊಲ್ಲು ಸರಿಯಿಲ್ಲ; ನಾಳೆ ಎಂಬುದು ಮುಂಬೊತ್ತಿನ ರೂಪದೊಂದಿಗೆ ಬರಬಲ್ಲು ದಲ್ಲದೆ, ಹಿಂಬೊತ್ತಿನ ರೂಪದೊಂದಿಗೆ ಬರಲಾರದು; ಹಾಗಾಗಿ, (2ಕ) ರೂಪ ಸರಿಯಿಲ್ಲ. ಇದಕ್ಕೆ ಬದಲು, ಇವತ್ತು, ಮೊದಲು, ಒಡನೆ, ಕೂಡಲೇ ಮೊದಲಾದುವು ಆ ರೀತಿ ಎಸಕಪದದಲ್ಲಿ ಬರುವ ಹೊತ್ತಿನ ಒಟ್ಟಿನೊಂದಿಗೆ ಹೊಂದಿಕೊಂಡಿರ ಬೇಕಾಗಿಲ್ಲ; ಅವು ಹಿಂಬೊತ್ತಿನ ಎಸಕಪದಗಳೊಂದಿಗೂ ಬರಬಲ್ಲುವು, ಮುಂಬೊತ್ತಿನ ಎಸಕಪದಗಳೊಂದಿಗೂ ಬರಬಲ್ಲುವು: (3ಕ) ಅವನು ಮನೆಗೆ ಇವತ್ತು ಬಂದ. (3ಚ) ಅವನು ಮನೆಗೆ ಇವತ್ತು ಬರುತ್ತಾನೆ. (4ಕ) ಅವನು ಕೂಡಲೇ ಪುಸ್ತಕ ತಂದುಕೊಟ್ಟ. (4ಚ) ಅವನು ಕೂಡಲೇ ಪುಸ್ತಕ ತಂದುಕೊಡುತ್ತಾನೆ. ಎಸಕಪದದಲ್ಲಿ ಬರುವ ಹೊತ್ತಿನ ಒಟ್ಟಿನೊಂದಿಗೆ ಹೊಂದಿಕೊಳ್ಳಬೇಕಾಗಿಲ್ಲ ದಿರುವ ಈ ಎರಡನೇ ಬಗೆಯ ಪದಗಳೂ ಇನ್ನೊಂದು ರೀತಿಯಲ್ಲಿ ಹೊತ್ತಿನ ಕಟ್ಟನ್ನು ತೋರಿಸುತ್ತವೆ: ಅವುಗಳಲ್ಲಿ ಮೇಲೆ, ಒಡನೆ, ಕೂಡಲೇ, ಬಳಿಕ ಎಂಬಂತಹ ಕೆಲವು ಪದಗಳು ಎಸಕಪದಗಳ ಹಿಂಬೊತ್ತಿನ ಪರಿಚೆರೂಪಗಳೊಂದಿಗೆ ಮಾತ್ರ ಬರುತ್ತವಲ್ಲದೆ ಮುಂಬೊತ್ತಿನ ಪರಿಚೆರೂಪಗಳೊಂದಿಗೆ ಬರುವುದಿಲ್ಲ: (5ಕ) ಕೆಲಸ ಮುಗಿದ ಮೇಲೆ ಅವನು ಮನೆಗೆ ಬಂದ. (5ಚ) *ಕೆಲಸ ಮುಗಿಯುವ ಮೇಲೆ ಅವನು ಮನೆಗೆ ಬಂದ. (6ಕ) ಮಳೆ ಬಂದೊಡನೆ ಮಾಡು ಸೋರಲು ತೊಡಗುತ್ತದೆ. (6ಚ) *ಮಳೆ ಬರುವೊಡನೆ ಮಾಡು ಸೋರಲು ತೊಡಗುತ್ತದೆ. ಮೇಲೆ ಎಂಬುದನ್ನು ಮುಗಿಯುವ ಎಂಬ ಮುಂಬೊತ್ತಿನ ಪರಿಚೆರೂಪ ದೊಂದಿಗೆ ಬಳಸಿರುವ (5ಚ) ಸೊಲ್ಲು, ಮತ್ತು ಒಡನೆ ಎಂಬುದನ್ನು ಬರುವ ಎಂಬ ಅಂತಹದೇ ಇನ್ನೊಂದು ಪರಿಚೆರೂಪದೊಂದಿಗೆ ಬಳಸಿರುವ (6ಚ) ಸೊಲ್ಲು ಸರಿಯಿಲ್ಲ ಎಂಬುದನ್ನು ಗಮನಿಸಬಹುದು. ಇದಕ್ಕೆ ಬದಲು, ಮೊದಲು, ವರೆಗೆ, ತನಕ, ಮುನ್ನ, ಅಶ್ಟರಲ್ಲಿ ಎಂಬಂತಹ ಬೇರೆ ಕೆಲವು ಪದಗಳು ಎಸಕಪದಗಳ ಮುಂಬೊತ್ತಿನ ಪರಿಚೆರೂಪಗಳೊಂದಿಗೆ ಬರುತ್ತವಲ್ಲದೆ, ಹಿಂಬೊತ್ತಿನ ಪರಿಚೆರೂಪಗಳೊಂದಿಗೆ ಬರುವುದಿಲ್ಲ: (7ಕ) ಮಳೆ ಬರುವ ಮೊದಲು ಮನೆಗೆ ತಲಪಬೇಕು. (7ಚ) *ಮಳೆ ಬಂದ ಮೊದಲು ಅವನು ಮನೆಗೆ ತಲಪಿದ್ದ. (8ಕ) ಅವಳು ಬರುವ ವರೆಗೆ ಇಲ್ಲಿ ಯಾರೂ ಇರುವುದಿಲ್ಲ. (8ಚ) *ಅವಳು ಬಂದ ವರೆಗೆ ಇಲ್ಲಿ ಯಾರೂ ಇರಲಿಲ್ಲ. ಈ ವ್ಯತ್ಯಾಸಕ್ಕೆ ಕಾರಣವೇನೆಂದರೆ, ಮೇಲೆ, ಬಳಿಕ, ಕೂಡಲೇ, ಮುನ್ನ, ಮತ್ತು ಒಡನೆ ಎಂಬವು ಪರಿಚೆರೂಪ ತಿಳಿಸುವ ಎಸಕ ನಡೆದ ಬಳಿಕ ನಡೆಯುವ ಎಸಕದ ಹೊತ್ತನ್ನು ತಿಳಿಸುತ್ತವೆ, ಮತ್ತು ಮೊದಲು, ವರೆಗೆ, ತನಕ, ಮತ್ತು ಅಶ್ಟರಲ್ಲಿ ಎಂಬವು ಪರಿಚೆರೂಪ ತಿಳಿಸುವ ಎಸಕ ಕೊನೆಗೊಳ್ಳುವ ಮೊದಲು ನಡೆಯುವ ಎಸಕದ ಹೊತ್ತನ್ನು ತಿಳಿಸುತ್ತವೆ. ಆಗ ಎಂಬ ಪದ ಮಾತ್ರ ಈ ಎರಡು ಬಗೆಯ ಪರಿಚೆರೂಪಗಳೊಂದಿಗೂ ಬರಬಲ್ಲುದು; ಅದು ತಿಳಿಸುವ ಹೊತ್ತು ಪರಿಚೆರೂಪ ತಿಳಿಸುವ ಹೊತ್ತೇ ಆಗಿರುವುದು ಇದಕ್ಕೆ ಕಾರಣವಿರಬಹುದು:
(9ಕ) ಆಕೆ ಬರುವಾಗ ಅವನೂ ಬರುತ್ತಾನೆ. (9ಚ) ಆಕೆ ಬಂದಾಗ ಅವನೂ ಬಂದಿದ್ದ. ಆದರೆ, ಈ ಪದ ಮುಂಬೊತ್ತಿನ ಪರಿಚೆರೂಪದೊಂದಿಗೆ ಬಂದಾಗ ಮಾತ್ರ ಎಸಕಪದದ ಹೊತ್ತಿನ ಒಟ್ಟಿನೊಂದಿಗೆ ಹೊಂದಿಕೊಳ್ಳದೆ ಇರಬಲ್ಲುದು; ಹಿಂಬೊತ್ತಿನ ಪರಿಚೆರೂಪದೊಂದಿಗೆ ಬಂದಾಗ ಅದು ಹಿಂಬೊತ್ತಿನ ಎಸಕವನ್ನು ಮಾತ್ರ ತಿಳಿಸ ಬಲ್ಲುದು: (9ಟ) ಆಕೆ ಬರುವಾಗ ಅವನೂ ಬಂದಿದ್ದ. (9ತ) *ಆಕೆ ಬಂದಾಗ ಅವನೂ ಬರುತ್ತಾನೆ. (9ತ)ದಲ್ಲಿ ಹಿಂಬೊತ್ತಿನ ಪರಿಚೆರೂಪದೊಂದಿಗೆ (ಬಂದ ಎಂಬುದರೊಂದಿಗೆ) ಬಳಸಿರುವ ಆಗ ಪದವನ್ನು ಬರುತ್ತಾನೆ ಎಂಬ ಮುಂಬೊತ್ತಿನ ಎಸಕಪದ ರೂಪ ದೊಂದಿಗೆ ಬಳಸಲಾಗಿದೆ, ಮತ್ತು ಇದರಿಂದಾಗಿ ಆ ಸೊಲ್ಲು ಸರಿಯಾಗಿಲ್ಲ. ಎಸಕಪದಗಳು ಬಳಕೆಯ ಹುರುಳಿನಲ್ಲಿ ಬಂದಿವೆಯಾದರೆ, ಅವು ಹಿಂಬೊತ್ತಿನ ಲ್ಲಿದ್ದರೂ ಮುಂಬೊತ್ತಿನಲ್ಲಿದ್ದರೂ ಅವುಗಳೊಂದಿಗೆ ಹಿಂಬೊತ್ತಿನ ಪರಿಚೆರೂಪ ದೊಂದಿಗಿರುವ ಆಗ ಪದವನ್ನು ಬಳಸಲು ಬರುತ್ತದೆ: (10ಕ) ಬಾಗಿಲು ತೆರೆದಾಗಲೆಲ್ಲ ಆ ಬೆಕ್ಕು ಮಿಯಾಂ ಎನ್ನುತ್ತದೆ. (10ಚ) ಬಾಗಿಲು ತೆರೆದಾಗಲೆಲ್ಲ ಆ ಬೆಕ್ಕು ಮಿಯಾಂ ಎನ್ನುತ್ತಿತ್ತು. (11ಕ) ಮಯ್ಸೂರಿನಿಂದ ಬರುವಾಗಲೆಲ್ಲ ಆತ ಒಂದು ಸೀರೆ ತರುತ್ತಾನೆ. (11ಚ) ಮಯ್ಸೂರಿನಿಂದ ಬರುವಾಗಲೆಲ್ಲ ಆತ ಒಂದು ಸೀರೆ ತರುತ್ತಿದ್ದ. ಒಳಗೆ ಮತ್ತು ಮುಂಚೆ ಎಂಬ ಎರಡು ಪದಗಳು ಎಸಕಪದಗಳ ಹೆಸರುರೂಪ ದೊಂದಿಗೆ ಮಾತ್ರ ಬರುತ್ತವೆ; ಇವುಗಳಲ್ಲಿ ಒಳಗೆ ಎಂಬುದು ಹೆಸರುಪದಗಳ ಪತ್ತುಗೆರೂಪದೊಂದಿಗೆ ಬರುತ್ತದೆ, ಮತ್ತು ಮುಂಚೆ ಎಂಬುದು ಅವುಗಳ ಇಗೆ ರೂಪದೊಂದಿಗೆ ಬರುತ್ತದೆ: (12ಕ) ಬಾಗಿಲು ಮುಚ್ಚುವುದರೊಳಗೆ ಆತ ಒಳಗೆ ಬಂದಿದ್ದ. (12ಚ) ಬಾಗಿಲು ಮುಚ್ಚುವುದಕ್ಕೆ ಮುಂಚೆ ಆತ ಒಳಗೆ ಬರುತ್ತಾನೆ. ಮೊದಲು ಮತ್ತು ಮುನ್ನ ಎಂಬ ಪದಗಳು ಎಸಕಪದಗಳ ಮುಂಬೊತ್ತಿನ ಪತ್ತುಗೆ ರೂಪದೊಂದಿಗೆ ಬರಬಲ್ಲುವು ಎಂಬುದನ್ನು ಮೇಲೆ ನೋಡಿರುವೆವು; ಅವು ಹೆಸರುರೂಪಗಳ ಇಗೆ ರೂಪದೊಂದಿಗೂ ಬರಬಲ್ಲುವು: (13ಕ) ಬಾಗಿಲು ಮುಚ್ಚುವ ಮೊದಲು ಆತ ಒಳಗೆ ಬಂದಿದ್ದ. (13ಚ) ಬಾಗಿಲು ಮುಚ್ಚುವುದಕ್ಕೆ ಮೊದಲು ಆತ ಒಳಗೆ ಬಂದಿದ್ದ. (13ಟ) ಊಟ ಮಾಡುವುದಕ್ಕೆ ಮುನ್ನ ಅವನು ನೀರು ಕುಡಿದ. ಎಸಕಪದದ ಹೊತ್ತಿನ ಒಟ್ಟಿನೊಂದಿಗೆ ಹೊಂದಿಕೊಳ್ಳಬೇಕಾಗಿಲ್ಲದ ಅಂತೆ ಎಂಬ ಒಟ್ಟು, ಮತ್ತು ಹಾಗೆ ಎಂಬ ಪದ ಇವೆರಡೂ ಒಡನೆಸಕದ ಜೋಡಿಸುವ ರೂಪಕ್ಕೆ ಇರು ಪದದ ಹಿಂಬೊತ್ತಿನ ಇಲ್ಲವೇ ಮುಂಬೊತ್ತಿನ ಪರಿಚೆರೂಪವನ್ನು ಸೇರಿಸಿರುವ ಪದರೂಪದೊಂದಿಗೆ ಮಾತ್ರ ಬಳಕೆಯಾಗುತ್ತವೆ: (14ಕ) ಮದ್ದು ಕುಡಿಯುತ್ತಿದ್ದಂತೆ ಆತ ಸತ್ತುಹೋದ.
(14ಚ) ಮದ್ದು ಕುಡಿಯುತ್ತಿರುವಂತೆ ಆತ ಸತ್ತುಹೋಗುತ್ತಾನೆ. (15ಕ) ಮದ್ದು ಕುಡಿಯುತ್ತಿದ್ದ ಹಾಗೆ ಅವನು ಸತ್ತುಹೋದ. (15ಚ) ಮದ್ದು ಕುಡಿಯುತ್ತಿರುವ ಹಾಗೆ ಅವನು ಸತ್ತುಹೋಗುತ್ತಾನೆ. ಇಲ್ಲಿ ಇರು ಪದದ ಹೊತ್ತಿನ ರೂಪಗಳು ಎಸಕಪದದ ಹೊತ್ತಿನ ರೂಪ ಗಳೊಂದಿಗೆ ಹೊಂದಿಕೆಯಾಗುತ್ತವೆಯೆಂದು ಹೇಳಬಹುದು; ಆದರೆ, ಇರು ಪದದ ಮುಂಬೊತ್ತಿನ ಪರಿಚೆರೂಪದೊಂದಿಗೆ ಎಸಕಪದದ ಹಿಂಬೊತ್ತಿನ ರೂಪವೂ ಬರಬಲ್ಲುದೆಂದು ತೋರುತ್ತದೆ: (14ಟ) ಮದ್ದು ಕುಡಿಯುತ್ತಿರುವಂತೆ ಆತ ಸತ್ತುಹೋದ. (15ಟ) ಮದ್ದು ಕುಡಿಯುತ್ತಿರುವ ಹಾಗೆ ಆತ ಸತ್ತುಹೋದ. ಮೇಲೆ ಕೊಟ್ಟಿರುವ ಹೊತ್ತಿನ ಪದಗಳಲ್ಲಿ ಯಾವುದೂ ಎಸಕಪದಗಳ ಅಲ್ಲಗಳೆಯುವ ಪರಿಚೆರೂಪದೊಂದಿಗೆ ಬರುವುದಿಲ್ಲ; ಎತ್ತುಗೆಗಾಗಿ, *ಮಳೆ ಬಾರದೊಡನೆ, *ಕೆಲಸ ಮುಗಿಯದ ಮೇಲೆ, *ಮಳೆ ಬಿಡದಶ್ಟರಲ್ಲಿ, *ಆತ ಬಾರದವರೆಗೆ ಎಂಬಂತಹ ಬಳಕೆಗಳು ಕನ್ನಡದಲ್ಲಿಲ್ಲ ಎಂಬುದನ್ನು ಗಮನಿಸ ಬಹುದು. (2) ನೆಲೆಯ ಹರವು ಹೊತ್ತಿನ ನೆಲೆಯನ್ನು ತಿಳಿಸುವ ಪದಕಂತೆಗಳು ಹೆಚ್ಚು ಇಲ್ಲವೇ ಕಡಿಮೆ ಹರವಿನ ದಾಗಿರಬಲ್ಲುವು: (1ಕ) ಅವನು ಕಳೆದ ವರ್ಶ ಜೂನ್ ಮೂರರಂದು ಬಾರತಕ್ಕೆ ಬಂದಿದ್ದ. (1ಚ) ಅವನು ಹನ್ನೆರಡನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ. (2ಕ) ಅವಳು ನಿನ್ನೆ ಸಂಜೆ ಆರೂಕಾಲಕ್ಕೆ ಬಂದಿದ್ದಳು. (2ಚ) ಅವಳು ನಿನ್ನೆ ಬಂದಿದ್ದಳು. ಮೇಲೆ (ಕ) ಸೊಲ್ಲುಗಳಲ್ಲಿ ಬಂದಿರುವ ಪದಕಂತೆಗಳು (ಚ) ಸೊಲ್ಲುಗಳಲ್ಲಿ ಬಂದಿರುವವುಗಳಿಂದ ಕಡಿಮೆ ಹರವಿನದಾಗಿವೆ ಎಂಬುದನ್ನು ಗಮನಿಸಬಹುದು. ಆ ಹರವಿನೊಳಗೆ ಯಾವುದಾದರೂ ಒಂದು ಬಿಂದುವಿನಲ್ಲಿ ಎಸಕದ ನೆಲೆಯಿದೆ ಎಂಬುದಾಗಿ ಈ ಸೊಲ್ಲುಗಳು ತಿಳಿಸುತ್ತವೆ; ಆದರೆ, ಆ ಬಿಂದು ಯಾವುದೆಂಬುದನ್ನು ಅವು ಕಚಿತವಾಗಿ ತಿಳಿಸುವುದಿಲ್ಲ. ನೆಲೆಯನ್ನು ತಿಳಿಸುವುದಕ್ಕಾಗಿ ಒಂದಕ್ಕಿಂತ ಹೆಚ್ಚು ಪದಕಂತೆಗಳನ್ನು ಬಳಸಲು ಬರುತ್ತದೆ; ಸಾಮಾನ್ಯವಾಗಿ, ಅವುಗಳಲ್ಲಿ ಹೆಚ್ಚು ಹರವಿನ ಪದಕಂತೆ ಮೊದಲು ಬರುತ್ತದೆ, ಮತ್ತು ಅದರ ಬಳಿಕ ಬರುವ ಪದಕಂತೆಗಳು ಹರವನ್ನು ಕಡಿಮೆ ಮಾಡುತ್ತಾ ಹೋಗಿ, ಹೊತ್ತಿನ ನೆಲೆ ಹೆಚ್ಚು ಹೆಚ್ಚು ಕಚಿತವಾಗುತ್ತಾ ಹೋಗುವಂತೆ ಮಾಡುತ್ತವೆ: (3ಕ) ಅವನು ಕಳೆದ ವರ್ಶ ಜನವರಿ ಎರಡರಂದು ಬೆಳಿಗ್ಗೆ ಎಂಟು ಗಂಟೆಗೆ ನಮ್ಮ ಮನೆಗೆ ಬಂದಿದ್ದ. (3ಚ) ಎರಡು ಸಾವಿರದ ಹನ್ನೊಂದನೇ ಜನವರಿ ಇಪ್ಪತ್ತನಾಲ್ಕರಂದು ನಾವು ಊಟಿಗೆ ಹೋಗಿದ್ದೆವು. (3ಕ)ದಲ್ಲಿ ಹೆಚ್ಚು ಹರವಿನ ಕಳೆದ ವರ್ಶ ಎಂಬುದು ಮೊದಲು ಬಂದಿದೆ, ಮತ್ತು ಅದಕ್ಕಿಂತ ಕಡಿಮೆ ಹರವಿರುವ ಜನವರಿ ಎರಡು ಮತ್ತು ಬೆಳಿಗ್ಗೆ ಎಂಟು ಗಂಟೆ ಎಂಬವು ಅದರ ಬಳಿಕ ಬಂದಿವೆ. ಕೆಲವೊಮ್ಮೆ ಕಡಿಮೆ ಹರವಿರುವ ಪದಗಳನ್ನು ಮೊದಲು ಬಳಸುವುದೂ ಇದೆ; ಆದರೆ, ಇದು ಇಂಗ್ಲಿಶ್ ನುಡಿಯ ಬಗೆಯನ್ನು ಕನ್ನಡಕ್ಕೆ ಎರವಲು ಪಡೆದುದರಿಂದಾಗಿ ಉಂಟಾಗಿದೆ:
(3ಟ) ಇಪ್ಪತ್ತನಾಲ್ಕನೇ ಜನವರಿ ಎರಡು ಸಾವಿರದ ಹನ್ನೊಂದರಂದು ನಾವು ಊಟಿಗೆ ಹೋಗಿದ್ದೆವು. (3ಟ)ದಲ್ಲಿ ಕಡಿಮೆ ಹರವಿರುವ ಇಪ್ಪತ್ತನಾಲ್ಕನೇ ಜನವರಿ ಎಂಬುದು ಹೆಚ್ಚು ಹರವಿರುವ ಎರಡು ಸಾವಿರದ ಹನ್ನೊಂದು ಎಂಬುದರ ಮೊದಲು ಬಂದಿದೆ. ಮೇಲೆ ವಿವರಿಸಿದ ಹಾಗೆ, ಸಾಮಾನ್ಯವಾಗಿ ಹೊತ್ತಿನ ನೆಲೆಯನ್ನು ತಿಳಿಸುವ ಪದಕಂತೆಗಳು ಹೆಚ್ಚು ಹರವಿನ ಹೊತ್ತನ್ನು ತಿಳಿಸುತ್ತಿದ್ದು, ಅದರ ಯಾವುದಾದರೂ ಒಂದು ಬಿಂದುವಿನಲ್ಲಿ ಎಸಕ ನಡೆದಿರುತ್ತದೆ; ಎತ್ತುಗೆಗಾಗಿ, ನಿನ್ನೆ ಬಂದ ಎಂಬ ಸೊಲ್ಲಿನಲ್ಲಿ ನಿನ್ನೆ ಎಂಬುದು ಒಂದು ಇಡೀ ದಿವಸದಶ್ಟು ಹರವಿರುವ ಹೊತ್ತನ್ನು ತಿಳಿಸುತ್ತಿದ್ದು, ಅದರ ಯಾವುದಾದರೂ ಒಂದು ಬಿಂದುವಿನಲ್ಲಿ ಬಂದ ಎಂಬುದು ತಿಳಿಸುವ ಎಸಕ ನಡೆದಿರುತ್ತದೆ. ಆದರೆ, ಎಸಕಕ್ಕೂ ಹೊತ್ತಿನ ಪಾಂಗಿಗೂ ನಡುವೆ ಬೇರೆ ಬಗೆಯ ಸಂಬಂದಗಳೂ ಇರಬಲ್ಲುವು; ಎತ್ತುಗೆಗಾಗಿ, ಮೇಲೆ, ಬಳಿಕ, ಒಡನೆ, ಮತ್ತು ಕೂಡಲೇ ಎಂಬ ಪದಗಳು ಹೊತ್ತಿನ ಪಾಂಗು ತಿಳಿಸುವ ಹೊತ್ತು ಮುಗಿದ ಮೇಲೆ ಎಸಕ ನಡೆಯುವುದೆಂದೂ, ಮೊದಲು, ಅಶ್ಟರಲ್ಲಿ, ಮುನ್ನ, ಮುಂಚೆ ಮತ್ತು ಒಳಗೆ ಎಂಬ ಪದಗಳು ಹೊತ್ತಿನ ಪಾಂಗು ತಿಳಿಸುವ ಹೊತ್ತು ಮುಗಿಯುವ ಮೊದಲೇ ಎಸಕ ನಡೆಯುವುದು (ಇಲ್ಲವೇ ನಡೆದಿದೆ) ಎಂದೂ ತಿಳಿಸುತ್ತವೆ. (4ಕ) ಅವನು ಮೂರು ಗಂಟೆಯ ಮೇಲೆ ಬರುತ್ತಾನೆ. (4ಚ) ಹುಡುಗರು ಶಾಲೆ ಬಿಟ್ಟ ಕೂಡಲೇ ಮನೆಗೆ ಓಡಿದರು. (5ಕ) ಅವನು ಮೂರು ಗಂಟೆಯ ಮೊದಲು ಬಂದಿದ್ದ. (5ಚ) ಅವರು ಮಾತನಾಡುವ ಮೊದಲು ಆಲೋಚಿಸುತ್ತಾರೆ. ಆಗ, ಹಾಗೆ ಮತ್ತು ಅಂತೆ ಎಂಬವು ಅವೆರಡೂ ಒಂದೇ ಹೊತ್ತಿನಲ್ಲಿ ನಡೆಯುತ್ತವೆಯೆಂದು ತಿಳಿಸುತ್ತವೆ. (6ಕ) ನಾನು ಒಳಗೆ ಬರುವಾಗ ಅವರು ಎದ್ದು ನಿಲ್ಲುತ್ತಾರೆ. (6ಚ) ಮಳೆ ಬರುತ್ತಿದ್ದಂತೆ ಈ ಮಾಡು ಸೋರತೊಡಗುತ್ತದೆ. (3) ಹೊತ್ತಿನ ಅಳತೆ ಮೇಲೆ ವಿವರಿಸಿದಂತಹ ಪತ್ತುಗೆಯ ಪದಗಳಲ್ಲಿ ಹೆಚ್ಚಿನವನ್ನೂ ಎಸಕದ ಹೊತ್ತನ್ನು ನೆಲೆಗೊಳಿಸುವುದಕ್ಕಾಗಿ ಬಳಸಲಾಗುತ್ತದೆ; ಅವು ಒಂದು ಇರುಹ ಯಾವಾಗ ಇತ್ತು (ಇದೆ, ಇಲ್ಲವೇ ಇರುತ್ತದೆ) ಎಂಬುದನ್ನು, ಇಲ್ಲವೇ ಒಂದು ಎಸಕ ಯಾವಾಗ ನಡೆಯಿತು (ಇಲ್ಲವೇ ನಡೆಯುತ್ತದೆ) ಎಂಬುದನ್ನಶ್ಟೇ ತಿಳಿಸುತ್ತವೆ. ಇದಕ್ಕೆ ಬದಲು, ಒಂದು ಇರುಹ ಎಶ್ಟು ಹೊತ್ತು ಇತ್ತು, ಇಲ್ಲವೇ ಒಂದು ಎಸಕ ಎಶ್ಟು ಹೊತ್ತು ನಡೆಯಿತು ಎಂಬುದಾಗಿ ಅವುಗಳ ಹೊತ್ತಿನ ಅಳತೆಯನ್ನೂ ಹೊತ್ತಿನ ಪಾಂಗುಗಳು ತಿಳಿಸಬಲ್ಲುವು. ಈ ಕೆಲಸವನ್ನು ನಡೆಸುವುದಕ್ಕಾಗಿ, ಮೂರು ಗಂಟೆ, ಅಯ್ದು ಮಿನಿಟು, ಎರಡು ವರ್ಶ ಎಂಬಂತಹ ಹೊತ್ತಿನ ಪದಕಂತೆಗಳನ್ನು ಬಳಸಲಾಗುತ್ತದೆ: (1ಕ) ಅವನು ಮೂರು ಗಂಟೆ ಮನೆಯಲ್ಲಿದ್ದ. (1ಚ) ಅವನು ಮೂರು ಗಂಟೆ ಓಡಿದ. ಈ ಪದಕಂತೆಗಳು ಎಂತಹ ಸೊಲ್ಲುಗಳಲ್ಲಿ ಬಳಕೆಯಾಗಬಲ್ಲುವು ಎಂಬುದು ಎಸಕಪದಗಳ ಹುರುಳನ್ನೂ ಅವಲಂಬಿಸಿರುತ್ತದೆ: ಎತ್ತುಗೆಗಾಗಿ, ಸಾಗುವೆಸಕವನ್ನು ತಿಳಿಸುವ ಓದು, ಹಾಡು, ಕುಣಿ, ತಿನ್ನು, ಅಳು ಎಂಬಂತಹ ಪದಗಳೊಂದಿಗೆ, ಇಲ್ಲವೇ ಚಣದೆಸಕವನ್ನು ತಿಳಿಸುವ ತಟ್ಟು, ಒದೆ, ಕುಟ್ಟು, ನೆಗೆ, ಕುತ್ತು ಎಂಬಂತಹ ಪದಗಳೊಂದಿಗೆ (5.4.2 ನೋಡಿ) ಈ ಅಳತೆಯ ಪದಗಳನ್ನು ಬಳಸಲು ಬರುತ್ತದೆ; ಆದರೆ, ಕೊನೆಯೆಸಕವನ್ನು ತಿಳಿಸುವ ತಲಪು, ಬರು, ಕೊಡು, ಎಂಬಂತಹ ಪದಗಳೊಂದಿಗೆ ಅವನ್ನು ಬಳಸಲು ಬರುವುದಿಲ್ಲ:
(2ಕ) ಅವಳು ಎರಡು ಗಂಟೆ ಕುಣಿದಳು. (2ಚ) ಅವನು ಮರ ಸಿಗಿಯುವ ಕೆಲಸವನ್ನು ಎರಡು ಗಂಟೆ ಮಾಡಿದ. (2ಟ) ಅವನು ಇಡೀ ದಿವಸ ಅಲೆಯುತ್ತಿದ್ದ. (3ಕ) *ಅವನು ಮನೆಗೆ ಮೂರು ಗಂಟೆ ತಲಪಿದ. (3ಚ) *ಅವನು ಶಾಲೆಯಿಂದ ಆರು ಗಂಟೆ ಬಂದ. (3ಟ) *ಅವನು ಆಕೆಗೆ ಅಯ್ದು ಮಿನಿಟು ಪುಸ್ತಕ ಕೊಟ್ಟ. ಕೊನೆಯೆಸಕವನ್ನು ತಿಳಿಸುವ ಕೆಲವು ಎಸಕಪದಗಳನ್ನು ಹೊತ್ತಿನ ಅಳತೆಯನ್ನು ತಿಳಿಸುವ ಇಂತಹ ಪದಗಳೊಂದಿಗೆ ಬಳಸಿದಾಗ, ಅವು ಕೊನೆಯೆಸಕವನ್ನು ತಿಳಿಸುವ ಬದಲು ಸಾಗುವೆಸಕವನ್ನು ತಿಳಿಸುತ್ತವೆ: (4ಕ) ?ಅವನು ಹೊಳೆಯನ್ನು ಮೂರು ಗಂಟೆ ದಾಟಿದ. (4ಚ) ನಾಲ್ಕು ಗಂಟೆ ಹೊತ್ತು ಅವನು ಒಂದು ಚಪ್ಪಲಿ ಹೊಲಿಯುತ್ತಿದ್ದ. (4ಟ) ಅವಳು ಹಾಲನ್ನು ಹತ್ತು ಮಿನಿಟು ಕುದಿಸಿದಳು. (4ಕ)ದಲ್ಲಿ ದಾಟು ಎಸಕಪದ ಒಂದು ಕೊನೆಯೆಸಕವನ್ನು ತಿಳಿಸುವ ಬದಲು, ಆ ಎಸಕದ ಒಂದು ಅಂಗವನ್ನು ಮಾತ್ರ ತಿಳಿಸುತ್ತದೆ; ಮತ್ತು ಆ ಅಂಗವನ್ನು ಎಶ್ಟು ಹೊತ್ತು ನಡೆಸಿದ ಎಂಬುದನ್ನು ತಿಳಿಸುತ್ತದೆ; ಎಂದರೆ, ಅದನ್ನೊಂದು ಸಾಗುವೆಸಕವಾಗಿ ಮಾರ್ಪಡಿಸಿ, ಅದರೊಂದಿಗೆ ಅಳತೆಯ ಪದವನ್ನು ಸಂಬಂದಿಸುತ್ತದೆ. (4ಚ-ಟ) ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಕೊನೆಯೆಸಕಗಳನ್ನು ಸಾಗುವೆಸಕಗಳಾಗಿ ಕಾಣ ಲಾಗಿದೆ. ಹೊತ್ತಿನ ಅಳತೆಯನ್ನು ತಿಳಿಸುವ ಈ ಪದಕಂತೆಗಳನ್ನು ಸಾಗುವೆಸಕದೊಂದಿಗೆ ಬಳಸಿದಾಗ, ಅವು ಆ ಎಸಕ ಎಶ್ಟು ಹೊತ್ತು ನಡೆಯಿತು ಎಂಬುದನ್ನು ತಿಳಿಸುತ್ತವೆ, ಮತ್ತು ಚಣದೆಸಕದೊಂದಿಗೆ ಬಂದಾಗ, ಎಶ್ಟು ಹೊತ್ತು ಆ ಎಸಕ ಮತ್ತೆ ಮತ್ತೆ ನಡೆಯುತ್ತಿತ್ತು ಎಂಬುದನ್ನು ತಿಳಿಸುತ್ತವೆ: (5ಕ) ಅವನು ಅಯ್ದು ಮಿನಿಟು ಓದುತ್ತಿದ್ದ. (5ಚ) ಅವನು ಅಯ್ದು ಮಿನಿಟು ಕದ ತಟ್ಟುತ್ತಿದ್ದ. (5ಕ) ಸೊಲ್ಲಿನ ಓದು ಎಸಕಪದ ಒಂದು ಸಾಗುವೆಸಕವನ್ನು ತಿಳಿಸುತ್ತಿದ್ದು, ಅದರೊಂದಿಗೆ ಬಂದಿರುವ ಅಯ್ದು ಮಿನಿಟು ಎಂಬ ಪದಕಂತೆ ಓದುವ ಎಸಕ ಎಶ್ಟು ಹೊತ್ತು ನಡೆಯಿತು ಎಂಬುದನ್ನು ತಿಳಿಸುತ್ತದೆ; ಇದಕ್ಕೆ ಬದಲು, (5ಚ)ದಲ್ಲಿ ತಟ್ಟು ಎಸಕಪದ ಒಂದು ಚಣದೆಸಕವನ್ನು ತಿಳಿಸುತ್ತಿದ್ದು, ಅದರಲ್ಲಿ ಬಂದಿರುವ ಅದೇ ಅಯ್ದು ಮಿನಿಟು ಎಂಬ ಪದಕಂತೆ ಹಲವಾರು (ಕದ) ತಟ್ಟುವ ಎಸಕಗಳು ಎಶ್ಟು ಹೊತ್ತು ನಡೆದುವು ಎಂಬುದನ್ನು ತಿಳಿಸುತ್ತದೆ. (4) ಹೊತ್ತಿನ ಗಡುವನ್ನು ತಿಳಿಸಲು ಜಾಗ ಪಾಂಗಿನ ಬಳಕೆ ಕೊನೆಯೆಸಕವನ್ನು ತಿಳಿಸುವ ಎಸಕಪದಗಳೊಂದಿಗೆ ಹೊತ್ತಿನ ಅಳತೆಯನ್ನು ತಿಳಿಸುವ ಪದಕಂತೆಗಳ ಬದಲು ಗಡುವನ್ನು ತಿಳಿಸುವ ಪದಕಂತೆಗಳನ್ನು ಬಳಸಬೇಕಾಗುತ್ತದೆ, ಮತ್ತು ಇದಕ್ಕಾಗಿ ಮೇಲೆ ವಿವರಿಸಿದಂತಹ ಹೊತ್ತಿನ ಅಳತೆಯನ್ನು ತಿಳಿಸುವ ಪದಕಂತೆಗಳಿಗೆ ಅಲ್ಲಿ ಒಟ್ಟನ್ನು ಸೇರಿಸಿ, ಅವನ್ನು ಜಾಗ ಪಾಂಗುಗಳಾಗಿ ಮಾರ್ಪಡಿಸಬೇಕಾಗುತ್ತದೆ: (1ಕ) ಅವನು ಮನೆಗೆ ಮೂರು ಗಂಟೆಯಲ್ಲಿ ತಲಪಿದ. (1ಚ) ಅವನು ಹೊಳೆಯನ್ನು ಕಾಲು ಗಂಟೆಯಲ್ಲಿ ದಾಟಿದ.
(1ಟ) ಅವನು ಈ ಕಾದಂಬರಿಯನ್ನು ಎರಡು ವಾರದಲ್ಲಿ ಬರೆದ. (1ತ) ಆತ ಮೂರು ಗಂಟೆಯಲ್ಲಿ ಎರಡು ಚಪ್ಪಲಿ ಹೊಲಿದ. (1ಪ) ಈ ಕೊಡದಲ್ಲಿ ನೀರು ಅಯ್ದು ಮಿನಿಟಿನಲ್ಲಿ ತುಂಬುತ್ತದೆ. ಹೊತ್ತಿನ ಅಳತೆ ಮತ್ತು ಗಡುವುಗಳ ನಡುವಿರುವ ಮುಕ್ಯ ವ್ಯತ್ಯಾಸವೇನೆಂದರೆ, ಅವುಗಳಲ್ಲಿ ಮೊದಲನೆಯದು ಒಂದು ಎಸಕ ಎಶ್ಟು ಹೊತ್ತು ನಡೆಯಿತು ಇಲ್ಲವೇ ನಡೆಯುತ್ತದೆ ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಒಂದು ಎಸಕಕ್ಕೆ ಎಶ್ಟು ಹೊತ್ತು ಹಿಡಿಯುತ್ತದೆ ಇಲ್ಲವೇ ಹಿಡಿಯಿತು ಎಂಬುದನ್ನು ತಿಳಿಸುತ್ತದೆ. ಹಾಗಾಗಿ, ಹೊತ್ತಿನ ಅಳತೆಯನ್ನು ತಿಳಿಸುವಲ್ಲಿ ಎಸಕ ಯಾವುದೆಂದಶ್ಟೇ ತಿಳಿಸಿದರೆ ಸಾಕಾಗುತ್ತದೆ; ಆದರೆ, ಗಡುವನ್ನು ತಿಳಿಸುವಲ್ಲಿ ಎಸಕದ ಅಳವಿ(ಪರಿಮಾಣ) ಎಶ್ಟೆಂಬುದನ್ನೂ ತಿಳಿಸಬೇಕಾಗುತ್ತದೆ: (2ಕ) ನಿನ್ನೆ ನಾಲ್ಕು ಗಂಟೆ ಹೊತ್ತು ಆತ ಚಪ್ಪಲಿ ಹೊಲಿದ. (2ಚ) ನಿನ್ನೆ ನಾಲ್ಕು ಗಂಟೆ ಹೊತ್ತಿನಲ್ಲಿ ಆತ ಎರಡು ಚಪ್ಪಲಿ ಹೊಲಿದ. (3ಕ) ಅವನು ಕಾಲು ಗಂಟೆ ಓದಿದ. (3ಚ) ಅವನು ಕಾಲು ಗಂಟೆಯಲ್ಲಿ ಹತ್ತು ಪುಟ ಓದಿದ. (4ಕ) ನಾನು ನಿಮ್ಮ ಕತೆಯನ್ನು ಒಂದು ಗಂಟೆ ಓದಿದೆ. (4ಚ) ನಾನು ನಿಮ್ಮ ಕತೆಯನ್ನು ಒಂದು ಗಂಟೆಯಲ್ಲಿ ಓದಿದೆ. ಮೇಲೆ (2ಚ) ಮತ್ತು (3ಚ) ಸೊಲ್ಲುಗಳಲ್ಲಿ ಎಸಕದ ಅಳವಿಯನ್ನು ತಿಳಿಸುವುದಕ್ಕಾಗಿ ಎರಡು ಚಪ್ಪಲಿ ಮತ್ತು ಹತ್ತು ಪುಟ ಎಂಬ ಈಡು ಪಾಂಗುಗಳನ್ನು ಬಳಸಬೇಕಾಗಿದೆ. ಇದಲ್ಲದೆ, (4ಚ)ದಲ್ಲಿ ಗಡುವನ್ನು ತಿಳಿಸುವ ಒಂದು ಗಂಟೆಯಲ್ಲಿ ಎಂಬ ಜಾಗ ಪಾಂಗು ಬಂದಿರುವ ಕಾರಣ, ಅದಕ್ಕೆ ಇಡೀ ಕತೆಯನ್ನು ಓದಿದೆ ಎಂಬ ಅಳವಿಯ ಹುರುಳಿದೆ; ಆದರೆ, (4ಕ)ದಲ್ಲಿ ಒಂದು ಗಂಟೆ ಎಂಬ ಹೊತ್ತಿನ ಅಳತೆಯನ್ನು ತಿಳಿಸುವ ಪದಕಂತೆ ಬಂದಿರುವ ಕಾರಣ ಅಂತಹ ಹುರುಳಿಲ್ಲ. ಕೊನೆಯೆಸಕವನ್ನು ತಿಳಿಸುವ ಎಸಕಪದಗಳ ಅಳವಿಯನ್ನು ತಿಳಿಸದೆ ಅವುಗ ಳೊಂದಿಗೆ ಜಾಗ ಪಾಂಗನ್ನು ಬಳಸಿದಲ್ಲಿ, ಅವನ್ನು ನಡೆಸಲು ಎಶ್ಟು ಹೊತ್ತು ಹಿಡಿಯಿತು ಎಂಬುದಾಗಿ ಗಡುವನ್ನು ತಿಳಿಸುವ ಹುರುಳು ಅದಕ್ಕೆ ಸಿಗುವುದಿಲ್ಲ. ಇದಕ್ಕೆ ಬದಲು, ಬೇರೊಂದು ಎಸಕ ನಡೆದು ಎಶ್ಟು ಹೊತ್ತು ಕಳೆದ ಮೇಲೆ ಆ ಎಸಕ ನಡೆಯಿತು ಎಂಬುದಾಗಿ ಅದರ ಹೊತ್ತಿನ ನೆಲೆಯನ್ನು ತಿಳಿಸುವಂತಹ ಹುರುಳು ಮಾತ್ರ ಅದಕ್ಕೆ ಸಿಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು: (5ಕ) ಗಂಟೆಯಾದ ಬಳಿಕ ಅಯ್ದು ಮಿನಿಟಿನಲ್ಲಿ ಎಲ್ಲರೂ ಹೊರಗೆ ಬಂದರು. (5ಚ) ಹತ್ತು ಮಿನಿಟಿನಲ್ಲಿ ಆತ ಮನೆಗೆ ತಲಪಿದ. (5ಕ)ದಲ್ಲಿ ಬಂದಿರುವ ಅಯ್ದು ಮಿನಿಟಿನಲ್ಲಿ ಎಂಬ ಜಾಗ ಪಾಂಗಿಗೆ ಎಲ್ಲರೂ ಹೊರಗೆ ಬರಲು ಎಶ್ಟು ಹೊತ್ತು ಹಿಡಿಯಿತು ಎಂಬ ಗಡುವಿನ ಹುರುಳಿಲ್ಲ; ಇದಕ್ಕೆ ಬದಲು, ಗಂಟೆಯಾದ ಮೇಲೆ ಎಶ್ಟು ಹೊತ್ತಿನ ಬಳಿಕ ಅವರು ಹೊರಗೆ ಬರುವ ಎಸಕವನ್ನು ನಡೆಸಿದರು ಎಂಬುದನ್ನು ಅದು ತಿಳಿಸುತ್ತದೆ; (5ಚ)ದಲ್ಲೂ ಇಂತಹದೇ ಹುರುಳಿದೆ. ಚಣದೆಸಕಗಳೊಂದಿಗೆ ಗಡುವನ್ನು ತಿಳಿಸುವ ಪದಗಳನ್ನು ಬಳಸಿರುವಲ್ಲೂ ಇಂತಹದೇ ಹುರುಳು ಸಿಗುವುದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (5ಟ) ಹತ್ತು ಮಿನಿಟಿನಲ್ಲಿ ಆತ ಕದ ತಟ್ಟಿದ.
(5ಟ) ಸೊಲ್ಲಿನಲ್ಲಿ ಬಂದಿರುವ ಹತ್ತು ಮಿನಿಟಿನಲ್ಲಿ ಎಂಬ ಜಾಗ ಪಾಂಗಿಗೆ ಕದ ತಟ್ಟುವ ಎಸಕವನ್ನು ನಡೆಸಲು ಎಶ್ಟು ಹೊತ್ತು ಹಿಡಿಯಿತು ಎಂಬ ಗಡುವಿನ ಹುರುಳಿಲ್ಲ; ಇದಕ್ಕೆ ಬದಲು, ಬಾಗಿಲಿನ ಹತ್ತಿರ ಬಂದ ಮೇಲೆ ಎಶ್ಟು ಹೊತ್ತಿನ ಬಳಿಕ ಆತ ಕದ ತಟ್ಟುವ ಎಸಕವನ್ನು ನಡೆಸಿದ ಎಂಬುದಾಗಿ ಅದರ ಹೊತ್ತಿನ ನೆಲೆಯನ್ನು ತಿಳಿಸುವ ಹುರುಳೇ ಇದೆ. ಇರುಹವನ್ನು ತಿಳಿಸುವ ಸೊಲ್ಲಿನಲ್ಲಿ ಗಡುವನ್ನು ತಿಳಿಸುವ ಜಾಗ ಪಾಂಗನ್ನು ಬಳಸಿದಾಗಲೂ ಅದು ಇರುಹಕ್ಕೆ ಹಿಡಿಯುವ ಗಡುವನ್ನು ತಿಳಿಸುವ ಬದಲು ಬೇರೊಂದು ಎಸಕದ ಬಳಿಕ ಎಶ್ಟು ಹೊತ್ತಿನಲ್ಲಿ ಇರುಹ ಮೊದಲಾಗುತ್ತದೆ ಎಂಬುದನ್ನು ತಿಳಿಸುತ್ತದೆ: (6ಕ) ಅವರು ಅರ್ದ ಗಂಟೆಯಲ್ಲಿ ಇಲ್ಲಿರುತ್ತಾರೆ. (6ಚ) ಆಪೀಸು ಬಿm್ಟ ಬಳಿಕ ಹತ್ತು ಮಿನಿಟಿನಲ್ಲಿ ಅವನು ಮನೆಯಲ್ಲಿರುತ್ತಾನೆ. (5) ಹೊತ್ತಿನ ನೆಲೆಯನ್ನು ತಿಳಿಸಲು ಗುರಿ ಪಾಂಗಿನ ಬಳಕೆ ಹೊತ್ತಿನ ಅಳತೆಯನ್ನು ತಿಳಿಸುವ ಪದಕಂತೆಗಳಲ್ಲಿ ಕೆಲವಕ್ಕೆ ಇಗೆ ಒಟ್ಟನ್ನು ಸೇರಿಸಿಯೂ ಅವನ್ನು ಸಾಗುವೆಸಕ ಇಲ್ಲವೇ ಚಣದೆಸಕಗಳನ್ನು ತಿಳಿಸುವ ಎಸಕಪದಗಳೊಂದಿಗೆ ಬಳಸಲು ಬರುತ್ತದೆ; ಆದರೆ, ಅಂತಹ ಬಳಕೆಯಲ್ಲಿ ಅವು ಹೊತ್ತಿನ ನೆಲೆಯನ್ನು ತಿಳಿಸುತ್ತವಲ್ಲದೆ ಅಳತೆ ಇಲ್ಲವೇ ಗಡುವನ್ನಲ್ಲ ಎಂಬುದನ್ನು ಗಮನಿಸಬಹುದು: (1ಕ) ಅವನು ಸರಿಯಾಗಿ ಮೂರು ಗಂಟೆಗೆ ಬಂದ. (1ಚ) ಅವನು ಏಳು ಗಂಟೆಗೆ ಮನೆಗೆ ತಲಪಿದ. (1ಕ)ದಲ್ಲಿ ಅವನು ಮನೆಗೆ ಬರುವ ಎಸಕ ಯಾವಾಗ ನಡೆಯಿತು ಎಂಬುದಾಗಿ ಅದರ ಹೊತ್ತಿನ ನೆಲೆಯನ್ನು ತಿಳಿಸಲಾಗಿದೆಯಲ್ಲದೆ, ಅದು ಎಶ್ಟು ಹೊತ್ತು ನಡೆಯಿತು ಎಂಬುದಾಗಿ ಅದರ ಹೊತ್ತಿನ ಅಳತೆಯನ್ನಾಗಲಿ, ಇಲ್ಲವೇ ಅದಕ್ಕೆ ಎಶ್ಟು ಹೊತ್ತು ಹಿಡಿಯಿತು ಎಂಬುದಾಗಿ ಅದರ ಹೊತ್ತಿನ ಗಡುವನ್ನಾಗಲಿ ತಿಳಿಸಿಲ್ಲ. ಈ ವ್ಯತ್ಯಾಸ ವನ್ನು ಕೆಳಗಿನ ಸೊಲ್ಲುಗಳಲ್ಲಿ ಇನ್ನಶ್ಟು ಸರಿಯಾಗಿ ಕಾಣಬಹುದು: (2ಕ) ನಿನ್ನೆ ಮೂರು ಗಂಟೆಗೆ ಅವನೊಂದು ಕತೆ ಹೇಳಿದ. (2ಚ) ನಿನ್ನೆ ಅವನು ಮೂರು ಗಂಟೆ ಕತೆ ಹೇಳಿದ. (2ಟ) ನಿನ್ನೆ ಮೂರು ಗಂಟೆಯಲ್ಲಿ ಅವನೊಂದು ಕತೆ ಹೇಳಿದ. (2ಕ) ಸೊಲ್ಲಿನಲ್ಲಿ ಬಂದಿರುವ ಮೂರು ಗಂಟೆಗೆ ಎಂಬ ಗುರಿ ಪಾಂಗು ಕತೆ ಹೇಳಿದ್ದು ಯಾವಾಗ ಎಂಬುದಾಗಿ ಆ ಎಸಕಕ್ಕಿರುವ ಹೊತ್ತಿನ ನೆಲೆಯನ್ನು ತಿಳಿಸುತ್ತದೆ; ಇದಕ್ಕೆ ಬದಲು, (2ಚ) ಸೊಲ್ಲಿನಲ್ಲಿ ಬಂದಿರುವ ಮೂರು ಗಂಟೆ ಎಂಬ ಹೊತ್ತಿನ ಪಾಂಗು ಎಶ್ಟು ಹೊತ್ತು ಕತೆ ಹೇಳಿದ ಎಂಬುದಾಗಿ ಆ ಎಸಕ ನಡೆದ ಹೊತ್ತಿನ ಅಳತೆಯನ್ನು ತಿಳಿಸುತ್ತದೆ, ಮತ್ತು (2ಟ) ಸೊಲ್ಲಿನಲ್ಲಿ ಬಂದಿರುವ ಮೂರು ಗಂಟೆಯಲ್ಲಿ ಎಂಬ ಜಾಗ ಪಾಂಗು ಆ ಎಸಕಕ್ಕೆ ಎಶ್ಟು ಹೊತ್ತು ಹಿಡಿಯಿತು ಎಂಬುದಾಗಿ ಅದರ ಹೊತ್ತಿನ ಗಡುವನ್ನು ತಿಳಿಸುತ್ತದೆ. ಗಂಟೆ ಎಂಬ ಪದ (2ಕ)ದಲ್ಲಿ ಗಡಿಯಾರದ ಮುಳ್ಳು ಎಲ್ಲಿದೆ ಎಂಬುದನ್ನು ತಿಳಿಸುತ್ತದೆ, ಮತ್ತು (2ಚ-ಟ)ಗಳಲ್ಲಿ ಅದು ಎಶ್ಟು ದೂರ ಚಲಿಸಿತು ಎಂಬುದನ್ನು ತಿಳಿಸುತ್ತದೆ. ಸಾಮಾನ್ಯವಾಗಿ, ಗುರಿ ಪಾಂಗನ್ನು ಸಾಗುವೆಸಕವನ್ನು ತಿಳಿಸುವ ಎಸಕಪದ ಗಳೊಂದಿಗೆ ಬಳಸಿದಾಗ, ಎಸಕ ಯಾವಾಗ ಸುರುವಾಯಿತು ಎಂಬುದಾಗಿ ಅದರ ತೊಡಗಿಕೆಯ ನೆಲೆಯನ್ನು ತಿಳಿಸುತ್ತದೆ, ಮತ್ತು ಕೊನೆಯೆಸಕವನ್ನು ತಿಳಿಸುವ
ಎಸಕಪದಗಳೊಂದಿಗೆ ಬಳಸಿದಾಗ, ಎಸಕ ಯಾವಾಗ ಕೊನೆಗೊಂಡಿತು ಎಂಬುದಾಗಿ ಅದರ ಕೊನೆಗೊಳ್ಳುವಿಕೆಯ ನೆಲೆಯನ್ನು ತಿಳಿಸುತ್ತದೆ: (3ಕ) ಈ ನಲ್ಲಿಯಲ್ಲಿ ನೀರು ಸರಿಯಾಗಿ ಬೆಳಿಗ್ಗೆ ಎಂಟಕ್ಕೆ ಬರುತ್ತದೆ. (3ಚ) ನಾಳೆ ರಾತ್ರಿ ಹತ್ತು ಗಂಟೆಗೆ ಆಕೆ ಹಾಡುತ್ತಾಳೆ. (3ಟ) ನಾವು ದಿನಾಲೂ ಹನ್ನೆರಡು ಗಂಟೆಗೆ ಊಟ ಮಾಡುತ್ತಿದ್ದೆವು. (4ಕ) ಸರಿಯಾಗಿ ಮೂರು ಗಂಟೆಗೆ ನಾನು ಎರಡು ಕತೆ ಬರೆದೆ. (4ಚ) ಸಂಜೆ ಏಳು ಗಂಟೆ ಹೊತ್ತಿಗೆ ಆಕೆ ಎರಡು ಸ್ವೆಟರ್ ಹೊಲಿದಿದ್ದಳು. (4ಟ) ರಾತ್ರಿ ಮೂರೂವರೆಗೆ ಕಳ್ಳರು ಎರಡು ಗೋಡೆಗೆ ಕನ್ನ ಕೊರೆದಿದ್ದರು. (3ಕ) ಸೊಲ್ಲಿಗೆ ನಲ್ಲಿಯಲ್ಲಿ ನೀರು ಬರಲು ಯಾವಾಗ ಸುರುವಾಗುತ್ತದೆ ಎಂಬುದನ್ನು ತಿಳಿಸುವ ಹುರುಳಿದೆ; ಇದಕ್ಕೆ ಬದಲು, (4ಕ) ಸೊಲ್ಲಿಗೆ ಎರಡು ಕತೆಗಳನ್ನು ಬರೆಯುವ ಎಸಕ ಕೊನೆಗೊಂಡುದು ಯಾವಾಗ ಎಂಬುದನ್ನು ತಿಳಿಸುವ ಹುರುಳಿದೆ. (3ಚ- 4ಚ) ಮತ್ತು (3ಟ-4ಟ)ಗಳ ನಡುವೆಯೂ ಇಂತಹದೇ ವ್ಯತ್ಯಾಸ ಇರುವುದನ್ನು ಗಮನಿಸಬಹುದು. ಈ ವಿಶಯದಲ್ಲಿ ಬರು ಮತ್ತು ಹೋಗು ಪದಗಳ ನಡುವೆ ವ್ಯತ್ಯಾಸವಿರುವುದನ್ನು ಗಮನಿಸಬಹುದು: ಬರು ಪದದೊಂದಿಗೆ ಬಂದ ಗುರಿ ಪಾಂಗು ಬಂದು ತಲಪಿದ ಹೊತ್ತನ್ನು ತಿಳಿಸುತ್ತದೆ, ಮತ್ತು ಹೋಗು ಪದದೊಂದಿಗೆ ಬಂದ ಗುರಿ ಪಾಂಗು ಹೋಗಲು ಹೊರಟ ಹೊತ್ತನ್ನಶ್ಟೇ ತಿಳಿಸುತ್ತದೆ: (5ಕ) ಅವನು ಮನೆಗೆ ಮೂರು ಗಂಟೆಗೆ ಬಂದ. (5ಚ) ಅವನು ಮನೆಗೆ ಮೂರು ಗಂಟೆಗೆ ಹೋದ. (5ಚ) ಸೊಲ್ಲಿನಲ್ಲಿ ಬಂದಿರುವ ಮೂರು ಗಂಟೆಗೆ ಎಂಬ ಗುರಿ ಪಾಂಗು ಮನೆಗೆ ಹೋಗಲು ಹೊರಟ ಹೊತ್ತನ್ನಶ್ಟೇ ತಿಳಿಸುತ್ತದೆ; ಇದಕ್ಕೆ ಬದಲು (5ಕ)ದಲ್ಲಿ ಬಂದಿರುವ ಅದೇ ಪಾಂಗು ಮನೆಗೆ ಬಂದು ತಲಪಿದ ಹೊತ್ತನ್ನು ತಿಳಿಸುತ್ತದೆ; ಹಾಗಾಗಿ, ಆದರೆ ಆತ ಮನೆಗೆ ಇನ್ನೂ ತಲಪಿಲ್ಲ ಎಂಬ ಸೊಲ್ಲನ್ನು (5ಚ) ಸೊಲ್ಲಿಗೆ ಸೇರಿಸಲು ಬರುತ್ತದೆ, ಆದರೆ (5ಕ) ಸೊಲ್ಲಿಗೆ ಸೇರಿಸಲು ಬರುವುದಿಲ್ಲ. ಹೀಗಿದ್ದರೂ, (5ಚ) ಸೊಲ್ಲಿಗೆ ಆತ ಮನೆಯನ್ನು ತಲಪಿದ ಹೊತ್ತನ್ನೂ ತಿಳಿಸುವ ಹುರುಳು ಸಿಗಬಲ್ಲುದು. ಇರುಹವನ್ನು ತಿಳಿಸುವ ಸೊಲ್ಲುಗಳಲ್ಲೂ ಗುರಿ ಪಾಂಗನ್ನು ಬಳಸಲು ಬರುತ್ತದೆ; ಇಂತಹ ಸೊಲ್ಲುಗಳಲ್ಲಿ ಅದು ಇರುಹದ ತೊಡಗಿಕೆಯ ನೆಲೆಯನ್ನು ತಿಳಿಸುತ್ತದೆ: (6ಕ) ಅವರು ಎರಡು ಗಂಟೆಗೆ ಇಲ್ಲಿರುತ್ತಾರೆ. (6ಚ) ಸಂಜೆ ಆರು ಗಂಟೆಗೆ ಅವರು ಮನೆಯಲ್ಲಿರುತ್ತಾರೆ. ಈ ಸೊಲ್ಲುಗಳಲ್ಲಿ ಗುರಿ ಪಾಂಗು ಇರುಹದ ತೊಡಗಿಕೆಯ ನೆಲೆಯನ್ನೂ ತಿಳಿಸಬಲ್ಲುದು, ಇಲ್ಲವೇ ಅದರ ಬೇರೆ ಯಾವುದಾದರೊಂದು ತುಂಡಿನ ನೆಲೆಯನ್ನೂ ತಿಳಿಸಬಲ್ಲುದು; ಎತ್ತುಗೆಗಾಗಿ, (6ಚ) ಸೊಲ್ಲು ಸಂಜೆ ಆರು ಗಂಟೆಗಿಂತ ಮೊದಲು ಅವರು ಮನೆಯಲ್ಲಿರುವುದಿಲ್ಲ ಎಂದೇನೂ ತಿಳಿಸುವುದಿಲ್ಲ. ಗುರಿ ಪಾಂಗನ್ನು ಎಸಕದ ಗಡುವನ್ನು ತಿಳಿಸುವುದಕ್ಕಾಗಿಯೂ ಬಳಸಲು ಬರುತ್ತದೆ; ಆದರೆ, ಈ ಗಡುವು ಎಸಕದ ದೊರೆತಕ್ಕೆ ಸಂಬಂದಿಸಿರುತ್ತದಲ್ಲದೆ, ನೇರವಾಗಿ ಎಸಕಕ್ಕೆ ಸಂಬಂದಿಸಿರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7ಕ) ಅವನು ಪುಸ್ತಕವನ್ನು ಅವಳಿಗೆ ಒಂದು ವಾರಕ್ಕೆ ಕೊಟ್ಟ.
(7ಚ) ಅವನು ಮೂರು ವಾರಕ್ಕೆ ಊರಿಗೆ ಹೋಗಿದ್ದಾನೆ. (7ಟ) *ಅವನು ಮೂರು ವಾರಕ್ಕೆ ಸತ್ತ. (7ಕ)ದಲ್ಲಿ ಬಂದಿರುವ ಒಂದು ವಾರಕ್ಕೆ ಎಂಬುದು ಕೊಡುವ ಎಸಕದ ಗಡುವನ್ನು ತಿಳಿಸುವ ಬದಲು ಎಶ್ಟು ದಿವಸ ಪುಸ್ತಕವನ್ನು ಇರಿಸಿಕೊಳ್ಳಬಹುದು ಎಂಬುದನ್ನು ತಿಳಿಸುತ್ತದೆ; ಹೀಗೆ ಇರಿಸಿಕೊಳ್ಳುವುದು ಕೊಡು ಎಸಕದ ದೊರೆತವಾಗಿದೆ. ಇದೇ ರೀತಿಯಲ್ಲಿ (7ಚ)ದಲ್ಲಿ ಬಂದಿರುವ ಮೂರು ವಾರಕ್ಕೆ ಎಂಬುದು ಊರಿಗೆ ಹೋಗುವ ಎಸಕದ ಗಡುವನ್ನು ತಿಳಿಸುವ ಬದಲು, ಹೋದ ಮೇಲೆ ಅಲ್ಲಿ ಎಶ್ಟು ಸಮಯ ಉಳಿಯುತ್ತಾನೆ ಎಂಬುದಾಗಿ ಹೋಗು ಎಸಕದ ದೊರೆತದ ಗಡುವನ್ನು ತಿಳಿಸುತ್ತದೆ. ಸಾಯು ಎಂಬ ಎಸಕದ ದೊರೆತಕ್ಕೆ ಈ ರೀತಿ ಗಡುವನ್ನು ಹಾಕಲು ಬರುವುದಿಲ್ಲವಾದ ಕಾರಣ (7ಟ) ಸೊಲ್ಲು ಸರಿಯಾಗಿಲ್ಲ. (6) ಮುಂದಿನ ಅಳತೆ ಮತ್ತು ಹಿಂದಿನ ಅಳತೆ ಮೇಲೆ (3)ನೇ ವಿಬಾಗದಲ್ಲಿ ವಿವರಿಸಿದಂತಹ ಹೊತ್ತಿನ ಅಳತೆಯನ್ನು ತಿಳಿಸುವ ಮೂರು ಗಂಟೆ, ಅಯ್ದು ಮಿನಿಟು, ಎರಡು ದಿವಸ ಮೊದಲಾದ ಪದಕಂತೆಗಳನ್ನು ತೇಲುವ ಹೊತ್ತಳತೆಗಳೆಂದು ಕರೆಯಬಹುದು; ಅವು ಯಾವ ಒಂದು ಕಚಿತವಾದ ಹೊತ್ತಿಗೂ ಸಂಬಂದಿಸಿಲ್ಲ. ಇದಕ್ಕೆ ಬದಲು, ಒಂದು ಎಸಕ ನಡೆದ ಹೊತ್ತಿನ ಅಳತೆಯನ್ನು ಒಂದು ಕಚಿತವಾದ ಹೊತ್ತಿಗೆ ಸಂಬಂದಿಸಿದಂತೆಯೂ ತಿಳಿಸಲು ಬರುತ್ತದೆ; ಇಂತಹ ನೆಲೆಗೊಂಡ ಹೊತ್ತಳತೆಗಳು ಮುಂದಿನ ಅಳತೆ ಮತ್ತು ಹಿಂದಿನ ಅಳತೆ ಎಂಬುದಾಗಿ ಎರಡು ಬಗೆಯವಾಗಿರಬಲ್ಲುವು. ತನಕ ಮತ್ತು ವರೆಗೆ ಎಂಬವುಗಳನ್ನು ಬಳಸಿರುವ ಪದಕಂತೆಗಳು ಮುಂದಿರುವ ಅಳತೆಯನ್ನು ತಿಳಿಸುತ್ತವೆ, ಮತ್ತು ಇಂದ ಎಂಬುದನ್ನು ಬಳಸಿರುವ ಪದಕಂತೆಗಳು (ಸುರು ಪಾಂಗು) ಹಿಂದಿರುವ ಅಳತೆಯನ್ನು ತಿಳಿಸುತ್ತವೆ: (1ಕ) ಈ ಕೆಲಸ ಮುಗಿಯುವ ವರೆಗೆ ನಾವಿಲ್ಲಿ ಇರುತ್ತೇವೆ. (1ಚ) ಅವನು ಒಂಬತ್ತು ಗಂಟೆಯ ತನಕ ಕೆಲಸ ಮಾಡುತ್ತಾನೆ. (1ಟ) ನಾನು ಸಾಕೆಂದು ಹೇಳುವಲ್ಲಿ ವರೆಗೂ ಅವನು ಓದುತ್ತಿದ್ದ. (2ಕ) ಎರಡು ವರ್ಶದಿಂದ ಅವನು ಇಲ್ಲೇ ಇದ್ದಾನೆ. (2ಚ) ಬೆಳಗ್ಗಿನಿಂದಲೂ ಅವನು ಏನೂ ತಿಂದಿಲ್ಲ. (2ಟ) ಎರಡು ತಿಂಗಳಿನಿಂದ ಅವನು ಒಂದು ಕಾದಂಬರಿ ಬರೆಯುತ್ತಿದ್ದಾನೆ. ಮತ್ತೂ ಇಲ್ಲವೇ ಇನ್ನೂ ಎಂಬ ಪದಗಳನ್ನು ಬಳಸಿಯೂ ಮುಂದಿರುವ ಹೊತ್ತಿನ ಅಳತೆಯನ್ನು ತಿಳಿಸಲು ಬರುತ್ತದೆ; ಆದರೆ, ಇವು ತಿಳಿಸುವ ಹೊತ್ತಿನ ಅಳತೆ ಹಿಂದಿದ್ದ ಅಳತೆಗೆ ಸೇರಿಸಿದುದಾಗಿರುತ್ತದೆ: (3ಕ) ಅವನು ಇನ್ನೂ ಮೂರು ಗಂಟೆ ಕೆಲಸ ಮಾಡುತ್ತಾನೆ. (3ಚ) ನಾವು ಇನ್ನೂ ಎರಡು ಗಂಟೆ ಹೊತ್ತು ಇಲ್ಲಿರುತ್ತೇವೆ. (3ಟ) ಅವರು ಮತ್ತೂ ಅರ್ದ ಗಂಟೆ ಕತೆ ಹೇಳಿದರು. ಮೇಲೆ ತಿಳಿಸಿದ ಹಾಗೆ, ಹೊತ್ತಿನ ಅಳತೆಯನ್ನು ತಿಳಿಸುವಲ್ಲಿ ಅದರ ಸುರು ಮತ್ತು ಕೊನೆಗಳನ್ನು ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿಯೂ ಇಂದ (ಸುರು ಪಾಂಗು) ಮತ್ತು ತನಕ ಇಲ್ಲವೇ ವರೆಗೆ ಪದಗಳನ್ನು ಬಳಸಲಾಗುತ್ತದೆ:
(4ಕ) ಅವನು ಮೂರರಿಂದ ಆರರ ವರೆಗೆ ಮನೆಯಲ್ಲಿದ್ದ. (4ಚ) ಅವನು ಮೂರರಿಂದ ಆರರ ತನಕ ಕಾದಿದ್ದ. ಈ ರೀತಿ ಹೊತ್ತಿನ ಅಳತೆಯ ಸುರು ಮತ್ತು ಕೊನೆಗಳನ್ನು ತಿಳಿಸುವುದರೊಂದಿಗೆ ಅದರ ಕಚಿತವಾದ ಅಳತೆಯನ್ನೂ ತಿಳಿಸಲು ಬರುತ್ತದೆ: (5ಕ) ಅವನು ಮೂರರಿಂದ ಆರರ ವರೆಗೆ ಮೂರು ಗಂಟೆ ಮನೆಯಲ್ಲಿದ್ದ. (5ಚ) ಅವನು ಮೂರರಿಂದ ಆರರ ವರೆಗೆ ಮೂರು ಗಂಟೆ ಕಾದಿದ್ದ. ಒಂದು ಕೊನೆಯೆಸಕಕ್ಕೆ ಬೇಕಾಗುವ ಗಡುವನ್ನು ತಿಳಿಸುವಲ್ಲೂ ಅದರ ಸುರು ಮತ್ತು ಕೊನೆಗಳನ್ನು ಮಾತ್ರವೇ ತಿಳಿಸಲು ಬರುತ್ತದೆ; ಆದರೆ, ಇಂತಹ ಕಡೆಗಳಲ್ಲಿ ಗಡುವಿನ ಕೊನೆಯನ್ನು ತಿಳಿಸಲು ವರೆಗೆ ಎಂಬ ಪದದ ಬದಲು ಒಳಗೆ ಎಂಬುದನ್ನು ಬಳಸಲಾಗುತ್ತದೆ. ಇವುಗಳೊಂದಿಗೆ ಗಡುವನ್ನು ತಿಳಿಸುವ ಪದಕಂತೆಯನ್ನೂ ಬಳಸಲು ಬರುತ್ತದೆ: (6ಕ) ಅವನು ಮೂರರಿಂದ ಆರರ ಒಳಗೆ ಎರಡು ಅಂಗಿ ಹೊಲಿದ. (6ಚ) ಅವನು ಇಲ್ಲಿಗೆ ಬಂದಂದಿನಿಂದ ಎರಡು ವರ್ಶದೊಳಗೆ ಮೂರು ಮನೆ ಕಟ್ಟಿಸಿದ. (6ಟ) ಅವನು ಮೂರರಿಂದ ಆರರ ಒಳಗೆ ಮೂರು ಗಂಟೆಯಲ್ಲಿ ಎರಡು ಅಂಗಿ ಹೊಲಿದ. ಹೊತ್ತಿನ ಗಡುವನ್ನು ತಿಳಿಸುವ ಪದಕಂತೆಯೊಂದಿಗೆ ಹೊತ್ತಿನ ಅಳತೆಯನ್ನು ತಿಳಿಸುವ ಪದಕಂತೆಯನ್ನೂ ಬಳಸಲು ಸಾದ್ಯವಿದ್ದು, ಅವುಗಳಲ್ಲಿ ಮೊದಲನೆಯದು ಕೊನೆಯೆಸಕವನ್ನು ನಡೆಸಲು ಬಳಸಿದ ಒಟ್ಟು ಹೊತ್ತನ್ನು ತಿಳಿಸುತ್ತದೆ, ಮತ್ತು ಎರಡನೆಯದು ಆ ಹೊತ್ತಿನಲ್ಲಿ ನಿಜಕ್ಕೂ ಕೆಲಸ ನಡೆಸಿದ ಹೊತ್ತನ್ನು ತಿಳಿಸುತ್ತದೆ: (7ಕ) ಅವರು ಮೂರು ದಿವಸಗಳಲ್ಲಿ ಒಟ್ಟು ನಾಲ್ಕು ಗಂಟೆ ಕೆಲಸ ಮಾಡಿದರು. (7ಚ) ಕಳೆದ ಆರು ತಿಂಗಳುಗಳಲ್ಲಿ ಒಟ್ಟು ಮೂರು ದಿವಸ ಮಾತ್ರ ಮಳೆ ಬಂದಿತ್ತು. (7ಟ) ನೀವು ಹೋದಂದಿನಿಂದ ಇವತ್ತಿನ ವರೆಗೆ ಹದಿನಯ್ದು ದಿವಸಗಳಲ್ಲಿ ಅಕೆ ಒಟ್ಟು ಮೂರು ಗಂಟೆ ಹಾಡಿದ್ದಾಳೆ. (7ಟ)ದಲ್ಲಿ ಹೊತ್ತಿನ ಗಡುವನ್ನು ಮಾತ್ರವಲ್ಲದೆ, ಅದರ ಸುರು ಮತ್ತು ಕೊನೆಗಳನ್ನೂ ಬೇರಾಗಿ ತಿಳಿಸಲಾಗಿದೆ ಎಂಬುದನ್ನು ಗಮನಿಸಬಹುದು. ಒಂದು ಕೊನೆಯೆಸಕದ ಗಡುವನ್ನು ಅದರ ಸುರು ಮತ್ತು ಕೊನೆಗಳನ್ನು ತಿಳಿಸುವ ಮೂಲಕ, ಇಲ್ಲವೇ ಇಡೀ ಗಡುವಿನ ಅಳತೆಯನ್ನು ತಿಳಿಸುವ ಮೂಲಕ ಹೇಳುವ ಬದಲು, ನಡುವಿನ ಯಾವುದಾದರೊಂದು ಹೊತ್ತಿನ ನೆಲೆಗೆ ಸಂಬಂದಿಸಿದಂತೆಯೂ ಹೇಳಲು ಬರುತ್ತದೆ, ಮತ್ತು ಈ ನೆಲೆಯನ್ನು ಗುರಿ ಪಾಂಗಿನ ಮೂಲಕ ತಿಳಿಸ ಲಾಗುತ್ತದೆ: (8ಕ) ಇವತ್ತಿಗೆ ಆರು ತಿಂಗಳಲ್ಲಿ ಅವನ ಕೆಲಸ ಮುಗಿಯುತ್ತದೆ. (8ಚ) ನಾಡಿದ್ದು ಬುದವಾರಕ್ಕೆ ಸರಿಯಾಗಿ ಎರಡು ತಿಂಗಳಲ್ಲಿ ಮೂರು ಸೀರೆ ನೇಯುತ್ತೇವೆ. (8ಟ) ಇವತ್ತಿಗೆ ಹತ್ತು ದಿವಸಗಳಲ್ಲಿ ಆತ ಮೂರು ಬಾರಿ ನಿಮ್ಮನ್ನು ಕಾಣಲು ಬಂದಿದ್ದ. ಉದ್ದಕ್ಕೂ ಎಂಬುದನ್ನು ಬಳಸಿಯೂ ಎಸಕದ ಗಡುವನ್ನು ತಿಳಿಸಲು ಬರುತ್ತದೆ: (9) ಅವನು ತನ್ನ ಜೀವನದುದ್ದಕ್ಕೂ ತುಂಬಾ ಕಶ್ಟಪಟ್ಟಿದ್ದಾನೆ.
(7) ಎಡೆಬಿಡದೆ ಮತ್ತು ಬಿಟ್ಟು ಬಿಟ್ಟು ಬರುವ ಅಳತೆಗಳು ಗಂಟೆ, ಮಿನಿಟು, ದಿನ, ವಾರ, ತಿಂಗಳು, ವರ್ಶ ಮೊದಲಾದುವು ಎಡೆಬಿಡದೆ ಬರುವ ಹೊತ್ತಿನ ಅಳತೆಗಳನ್ನು ತಿಳಿಸುತ್ತವೆ; ಇದಕ್ಕೆ ಬದಲು, ಇರುಳು, ಸಂಜೆ, ರವಿವಾರ ಮೊದಲಾದುವು ಬಿಟ್ಟು ಬಿಟ್ಟು ಬರುವ ಹೊತ್ತಿನ ಅಳತೆಗಳನ್ನು ತಿಳಿಸುತ್ತವೆ. ಎತ್ತುಗೆಗಾಗಿ, ಗಂಟೆಗಳು ಎಡೆಬಿಡದೆ ಒಂದರ ಬಳಿಕ ಒಂದರಂತೆ ಬರುತ್ತಿರುತ್ತವೆ; ಆದರೆ, ಒಂದು ಇರುಳು ಕಳೆದ ಮೇಲೆ ಹಗಲು ಬರುತ್ತದೆ, ಮತ್ತು ಬಳಿಕ ಇನ್ನೊಂದು ಇರುಳು ಬರುತ್ತದೆ. ಇವುಗಳಲ್ಲಿ ಎಡೆಬಿಡದೆ ಬರುವ ಅಳತೆಯ ಪದಗಳ ಬಳಿಕ -ಗಟ್ಟಲೆ ಎಂಬುದನ್ನು ಬಳಸಲು ಬರುತ್ತದೆ: (1ಕ) ಅವನು ತಿಂಗಳುಗಟ್ಟಲೆ ಮನೆಯಿಂದ ಹೊರಗೇನೇ ಇರುತ್ತಿದ್ದ. (1ಚ) ಅವನ ಮಾತು ಗಂಟೆಗಟ್ಟಲೆ ಸಾಗುತ್ತಿತ್ತು. ಆದರೆ, ಬಿಟ್ಟು ಬಿಟ್ಟು ಬರುವ ಪದಗಳ ಬಳಿಕ ಅದನ್ನು ಬಳಸಲು ಬರುವುದಿಲ್ಲ (*ಇರುಳುಗಟ್ಟಲೆ, *ಹಗಲುಗಟ್ಟಲೆ). ಇದೇ ರೀತಿಯಲ್ಲಿ, ತಿಂಗಳುತಿಂಗಳು, ವಾರವಾರ, ಗಂಟೆಗಂಟೆಗೆ ಎಂಬಂತಹ ಇಮ್ಮಡಿ ರೂಪಗಳೂ ಎಡೆಬಿಡದೆ ಬರುವ ಹೊತ್ತಿನ ಅಳತೆಯನ್ನು ತಿಳಿಸುವ ಪದಗಳಲ್ಲಿ ಮಾತ್ರ ಕಾಣಿಸುತ್ತವೆ: (2ಕ) ಅವರು ತಿಂಗಳುತಿಂಗಳು ಸರಿಯಾಗಿ ಹಣ ಕಟ್ಟುತ್ತಿದ್ದಾರೆ. (2ಚ) ಅವಳು ವಾರವಾರ ಬಂದು ಕಸ ಗುಡಿಸಿ ಹೋಗುತ್ತಿದ್ದಾಳೆ. (2ಟ) ಗಂಟೆಗಂಟೆಗೆ ಅವರ ನೆತ್ತರಿನೊತ್ತಡವನ್ನು ಬರೆದಿಟ್ಟುಕೊಂಡ. ಇದೇ ಹುರುಳಿನಲ್ಲಿ ದಿನಾಲೂ ಪದರೂಪವೂ ಬರುತ್ತಿದ್ದು, ಅದೂ ಎಡೆಬಿಡದೆ ನಡೆಯುವ ಅಳತೆಯನ್ನು ತಿಳಿಸುತ್ತದೆ: (2ತ) ಅವನು ದಿನಾಲೂ ಎರಡು ಗಂಟೆಗೆ ಮನೆ ಬಿಡುತ್ತಾನೆ. (8) ಮಾರೆಸಕಗಳ ಎಣಿಕೆಯನ್ನು ತಿಳಿಸುವುದು ಒಂದು ಎಸಕವನ್ನು ಎಶ್ಟು ಬಾರಿ ಮಾರೆಸಗಲಾಗಿದೆ ಎಂಬುದಾಗಿ ಅದರ ಎಣಿಕೆಯನ್ನು ತಿಳಿಸುವುದಕ್ಕಾಗಿ ಬಾರಿ, ಸರ್ತಿ ಇಲ್ಲವೇ ಸಲ ಎಂಬ ಪದವನ್ನು ಎಣಿಕೆ ಪದದೊಂದಿಗೆ ಬಳಸಲಾಗುತ್ತದೆ: (1ಕ) ಆಕೆ ಮೂರು ಬಾರಿ ಅವರ ಮನೆಗೆ ಬಂದಿದ್ದಳು. (1ಚ) ಅವನು ನಾಲ್ಕು ಸರ್ತಿ ಅನ್ನ ಬಡಿಸಿಕೊಂಡ. (1ಟ) ನಾನಾತನನ್ನು ಮೂರು ಸಲ ಕರೆದೆ. ಇವನ್ನೇ ಗಡುವನ್ನು ತಿಳಿಸುವ ಪದಕಂತೆಗಳೊಂದಿಗೆ ಬಳಸಿ, ಆ ಗಡುವಿನಲ್ಲಿ ನಡೆದ ಮಾರೆಸಕಗಳ ಎಣಿಕೆಯನ್ನು ಕೊಡಲು ಬರುತ್ತದೆ: (2ಕ) ಅವನು ವಾರದಲ್ಲಿ ಮೂರು ಸಲ ಊರಿಗೆ ಹೋಗುತ್ತಾನೆ. (2ಚ) ಇದು ಒಂದು ಮಿನಿಟಿನಲ್ಲಿ ನೂರಯ್ವತ್ತು ಬಾರಿ ತಿರುಗುತ್ತದೆ. (2ಟ) ಅವನು ಹತ್ತು ಮಿನಿಟಿನಲ್ಲಿ ನಾಲ್ಕು ಸರ್ತಿ ಅನ್ನ ಬಡಿಸಿಕೊಂಡ. (2ತ) ಅವರು ಎರಡು ವರ್ಶಗಳಲ್ಲಿ ಹತ್ತು ಬಾರಿ ಅಮೇರಿಕಕ್ಕೆ ಹೋಗಿದ್ದರು.
ಮಾರೆಸಕಗಳ ಎಣಿಕೆಯ ಗಡುವನ್ನು ಈ ರೀತಿ ಜಾಗ ಪಾಂಗಿನ ಮೂಲಕ ತಿಳಿಸುವ ಬದಲು, ಗುರಿ ಪಾಂಗಿನ ಮೂಲಕವೂ ತಿಳಿಸಲು ಬರುತ್ತದೆ: (3ಕ) ಅವನು ವಾರಕ್ಕೆ ಮೂರು ಸಲ ಊರಿಗೆ ಹೋಗುತ್ತಾನೆ. (3ಚ) ಇದು ಮಿನಿಟಿಗೆ ನೂರಯ್ವತ್ತು ಬಾರಿ ತಿರುಗುತ್ತದೆ. (3ಟ) ಈ ಮಾತ್ರೆಯನ್ನು ದಿವಸಕ್ಕೆ ಮೂರು ಬಾರಿ ತಿನ್ನಬೇಕು. ಒಂದು ಬಾರಿ ಇಲ್ಲವೇ ಒಂದು ಸಲ ಎಂಬ ಪದಕಂತೆಯ ಹುರುಳಿನಲ್ಲೇ ಒಮ್ಮೆ ಎಂಬ ಪದದ ಬಳಕೆಯಾಗುತ್ತದೆ: (4ಕ) ಅವನು ಒಂದು ಬಾರಿ ಬಂದಿದ್ದ > ಅವನು ಒಮ್ಮೆ ಬಂದಿದ್ದ. (4ಚ) ಅವನು ವಾರಕ್ಕೆ ಒಂದು ಬಾರಿ ಬರುತ್ತಾನೆ > ಅವನು ವಾರಕ್ಕೊಮ್ಮೆ ಬರುತ್ತಾನೆ. ಇದೇ ಹುರುಳಿನಲ್ಲಿ ಎಡೆಬಿಡದೆ ಬರುವ ಹೊತ್ತಿನ ಅಳತೆಗಳನ್ನು ತಿಳಿಸುವ ಗಂಟೆ, ವಾರ, ತಿಂಗಳು ಮೊದಲಾದ ಪದಗಳನ್ನು ಅವುಗಳ ಇಮ್ಮಡಿ ರೂಪದಲ್ಲೂ ಬಳಸಲು ಬರುತ್ತದೆ; ದಿನ ಪದಕ್ಕೆ ಈ ಹುರುಳಿನಲ್ಲಿ ದಿನಾಲೂ ಎಂಬ ರೂಪವಿದೆ: (5ಕ) ಅವರು ತಿಂಗಳು ತಿಂಗಳು ಪುಣೆಗೆ ಹೋಗುತ್ತಾರೆ. (5ಚ) ಅವರು ಇಲ್ಲಿಗೆ ದಿನಾಲೂ ಬರುತ್ತಾರೆ. ಎಣಿಕೆಯನ್ನು ಅಶ್ಟೊಂದು ಕಟ್ಟುನಿಟ್ಟಾಗಿ ತಿಳಿಸಬೇಕಾಗಿಲ್ಲವಾದಲ್ಲಿ, ಬಾರಿ, ಸರ್ತಿ, ಇಲ್ಲವೇ ಸಲ ಎಂಬವುಗಳೊಂದಿಗೆ ಹಲವು, ಕೆಲವು ಎಂಬಂತಹ ಪದಗಳನ್ನು ಬಳಸಬಹುದು, ಇಲ್ಲವೇ ಒಮ್ಮೊಮ್ಮೆ, ಆಗಾಗ, ತಿರುತಿರುಗಿ, ಮೊದಮೊದಲು, ಮೇಲೆಮೇಲೆ ಮೊದಲಾದ ಪದಕಂತೆಗಳನ್ನು ಬಳಸಬಹುದು: (6ಕ) ಅವರು ಇಲ್ಲಿಗೆ ಹಲವು ಬಾರಿ ಬಂದಿದ್ದರು. (6ಚ) ಅವರು ಒಮ್ಮೊಮ್ಮೆ ನಮ್ಮಲ್ಲಿಗೂ ಬರುವುದಿದೆ. (6ಟ) ಅವನು ತಿರುತಿರುಗಿ ಹಿಂದೆ ನೋಡುತ್ತಿದ್ದ.
7.5.2 ಇಂಬಿನ ತಿಳಿವು
ಒಂದು ಇರುಹ ಇದ್ದುದು ಇಲ್ಲವೇ ಒಂದು ಎಸಕ ನಡೆದುದು ಎಲ್ಲಿ ಎಂಬುದನ್ನು ತಿಳಿಸಲು ಇಂಬು ಪಾಂಗನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಅದು ಆಡುಗನ ಇಲ್ಲವೇ ಕೇಳುಗನ ಇಂಬೇ ಆಗಿರುತ್ತದೆ; ಇವೆರಡಕ್ಕಿಂತ ಅದು ಬೇರಾಗಿರುವಾಗ, ಇಲ್ಲವೇ ಅದರ ಕುರಿತಾಗಿ ಹೆಚ್ಚಿನ ಸಂಗತಿಗಳನ್ನು ತಿಳಿಸಬೇಕಾಗಿರುವಾಗ, ಇಂಬಿನ ಪದಕಂತೆಗಳನ್ನು ಬಳಸಲಾಗುತ್ತದೆ. (1ಕ) ಅವನಿಗೆ ಎರಡು ಮನೆಗಳಿವೆ. (1ಚ) ಅವನಿಗೆ ಹೊಳೆಯ ಹತ್ತಿರ ಎರಡು ಮನೆಗಳಿವೆ. (2ಕ) ರಾಯರು ಮಲಗಿದ್ದಾರೆ. (2ಚ) ರಾಯರು ಮಂಚದ ಕೆಳಗೆ ಮಲಗಿದ್ದಾರೆ. (3ಕ) ಅವನು ಮೂರು ಗಂಟೆಗೆ ಬರುತ್ತಾನೆ. (3ಚ) ಅವನು ಮೂರು ಗಂಟೆಗೆ ನಿಮ್ಮಲ್ಲಿಗೆ ಬರುತ್ತಾನೆ.
(1ಕ) ಸೊಲ್ಲಿನಲ್ಲಿ ಎರಡು ಮನೆಗಳಿರುವುದು ಎಲ್ಲಿ ಎಂಬುದನ್ನು ತಿಳಿಸಿಲ್ಲ; ಆದರೆ, ಆದು ಆಡುಗನ ಊರಲ್ಲೇ ಇರಬಹುದೆಂದು ಕೇಳುಗನು ಊಹಿಸಿಕೊಳ್ಳ ಬಹುದು; ಇದನ್ನೇ (1ಚ)ದಲ್ಲಿ ಹೊಳೆಯ ಹತ್ತಿರ ಎಂಬ ಇಂಬಿನ ಪಾಂಗನ್ನು ಬಳಸುವ ಮೂಲಕ ಹೆಚ್ಚು ಕಚಿತವಾಗಿ ತಿಳಿಸಲಾಗಿದೆ. (2ಕ-ಚ)ಗಳಲ್ಲೂ ಹೀಗೆಯೇ. (3ಕ)ದಲ್ಲಿ ಎಸಕದ ಇಂಬು ಕೇಳುಗನ ಇಂಬು ಎಂಬುದನ್ನು ಕೇಳುಗನು ತಿಳಿದಿರುವ ಕಾರಣ, ಅದನ್ನು ತಿಳಿಸಿಲ್ಲ; ಆದರೆ (3ಚ)ದಲ್ಲಿ ಅದನ್ನು ನಿಮ್ಮಲ್ಲಿಗೆ ಎಂಬ ಪದದ ಮೂಲಕ ತಿಳಿಸಲಾಗಿದೆ. ಇಂಬಿನ ಪದಕಂತೆಗಳು ಹಲವು ವಿಶಯಗಳಲ್ಲಿ ಹೊತ್ತಿನ ಪದಕಂತೆಗಳನ್ನು ಹೋಲುತ್ತವೆ; ಹಿಂದೆ, ಮುಂದೆ, ಮೇಲೆ, ಒಳಗೆ, ವರೆಗೆ, ತನಕ ಮೊದಲಾದ ಹಲವು ಪದಗಳು ಹೊತ್ತಿನ ಪಾಂಗುಗಳಾಗಿಯೂ ಬರಬಲ್ಲುವು, ಮತ್ತು ಇಂಬಿನ ಪಾಂಗುಗಳಾಗಿಯೂ ಬರಬಲ್ಲುವು: (4ಕ) ಅಲ್ಲಿಗೆ ಹೋದ ಮೇಲೆ ಅವನು ಏನು ಮಾಡಿದ? (4ಚ) ಮೇಜಿನ ಮೇಲೆ ಅವನು ಏನು ಇರಿಸಿದ? (5ಕ) ಮೂರು ಗಂಟೆಯೊಳಗೆ ನೀವು ಇಲ್ಲಿರಬೇಕು. (5ಚ) ಬುಟ್ಟಿಗಳನ್ನು ಈ ಕೋಣೆಯೊಳಗೆ ಇರಿಸಿ. ಮೇಲೆ (ಕ) ಸೊಲ್ಲುಗಳಲ್ಲಿ ಮೇಲೆ ಮತ್ತು ಒಳಗೆ ಎಂಬ ಹೊತ್ತಿನ ಪದಗಳು ಬಂದಿದ್ದು, (ಚ) ಸೊಲ್ಲುಗಳಲ್ಲಿ ಅವನ್ನೇ ಇಂಬಿನ ಪದಗಳಾಗಿ ಬಳಸಿರುವುದನ್ನು ಕಾಣಬಹುದು. ಇದಲ್ಲದೆ, ಸುರು, ಗುರಿ, ಮತ್ತು ಜಾಗ ಪಾಂಗುಗಳು ನೆರವು ಪಾಂಗುಗಳಾಗಿ ಹೊತ್ತನ್ನು ತಿಳಿಸುವಲ್ಲೂ ಬಳಕೆಯಾಗುತ್ತವೆ, ಮತ್ತು ಇಂಬನ್ನು ತಿಳಿಸುವಲ್ಲೂ ಬಳಕೆಯಾಗುತ್ತವೆ: (6ಕ) ಅವರು ಮೂರು ಗಂಟೆಗೆ ಹಾಡಲಿದ್ದಾರೆ. (6ಚ) ಅವರು ಮೂರು ಕಡೆಗೂ ಚದರಿದರು. (7ಕ) ಅವರು ಇವತ್ತಿನಿಂದ ಬರುವುದಿಲ್ಲ. (7ಚ) ಅವರು ಇಲ್ಲಿಂದ ಹೊರಡುವುದಿಲ್ಲ. (8ಕ) ಎರಡು ದಿನದಲ್ಲಿ ಮೂರು ಬಾರಿ ಗೆದ್ದ. (8ಚ) ಎರಡು ಕಡೆಗಳಲ್ಲಿ ಮೂರು ಹಣ್ಣುಗಳಿವೆ. ಆದರೆ, ಹೊತ್ತು ಮತ್ತು ಇಂಬುಗಳ ನಡುವೆ ಹಲವು ವ್ಯತ್ಯಾಸಗಳೂ ಇವೆ; ಎತ್ತುಗೆಗಾಗಿ, ಹೊತ್ತಿನ ಪಾಂಗು ಹಿಂದೆ- ಮುಂದೆ ಎಂಬ ಒಂದು ಬಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುವಂತಹದು, ಮತ್ತು ಇಂಬಿನ ಪಾಂಗು ಮೇಲೆ-ಕೆಳಗೆ, ಹಿಂದೆ- ಮುಂದೆ, ಒಳಗೆ-ಹೊರಗೆ, ಎಡಕ್ಕೆ-ಬಲಕ್ಕೆ ಎಂಬಂತಹ ಹಲವು ಬಗೆಗಳಲ್ಲಿ ಕಾಣಿಸಿಕೊಳ್ಳುವಂತಹದು; ಹಾಗಾಗಿ, ಇಂಬನ್ನು ತಿಳಿಸುವಲ್ಲಿ ಹಲವು ಹೆಚ್ಚಿನ ಪದಗಳು ಬಳಕೆಯಾಗುತ್ತವೆ. (1) ಪದಗಳ ಹೊಂದಿಕೆ ಹೊತ್ತನ್ನು ತಿಳಿಸುವ ಪದಗಳ ಹಾಗೆ (7.1.1 (1) ನೋಡಿ), ಇಂಬನ್ನು ತಿಳಿಸುವ ಪದಗಳಲ್ಲಿಯೂ ಕೆಲವು ಪದಗಳು ಆಡುಗನ ಇಂಬಿಗೆ ಹೊಂದಿಕೊಂಡಿರಬೇಕಾಗು ತ್ತದೆ; ಆದರೆ, ಬೇರೆ ಕೆಲವು ಪದಗಳು ಆ ರೀತಿ ಹೊಂದಿಕೊಳ್ಳಬೇಕಾಗಿಲ್ಲ. ಎತ್ತುಗೆಗಾಗಿ, ಅಲ್ಲಿ-ಇಲ್ಲಿ, ಆಚೆ-ಈಚೆ, ಅತ್ತ-ಇತ್ತ, ಆ ಕಡೆ-ಈ ಕಡೆ, ಹಿಂದೆ-ಮುಂದೆ, ಎಡಗಡೆ-ಬಲಗಡೆ, ಅಡ್ಡ ಎಂಬಂತಹ ಕೆಲವು ಪದಗಳು ಸಾಮಾನ್ಯವಾಗಿ ಆಡುಗನ ಇಂಬಿಗೆ ಹೊಂದಿಕೊಂಡಿರುವಂತೆ ಬಳಕೆಯಾಗುತ್ತವೆ: (1ಕ) ನಿಮ್ಮ ಹುಡುಗ ಇಲ್ಲಿದ್ದಾನೆ.
(1ಚ) ಗುಡ್ಡದಿಂದ ಆಚೆ ಹೊಳೆ ದಾಟಬಹುದು. (1ಟ) ಅವನು ಇವತ್ತು ಆ ಕಡೆ ಕುಳಿತುಕೊಳ್ಳಲಿ. (1ಕ) ಸೊಲ್ಲಿನಲ್ಲಿ ಹುಡುಗ ಎಲ್ಲಿದ್ದಾನೆ ಎಂಬುದನ್ನು ತಿಳಿಯಬೇಕಾದರೆ, ಆ ಸೊಲ್ಲನ್ನಾಡಿದ ಆಡುಗನ ಇಂಬು ಎಲ್ಲಿ ಎಂಬುದನ್ನೂ ತಿಳಿಯಬೇಕಾಗುತ್ತದೆ; ಇದೇ ರೀತಿಯಲ್ಲಿ, (1ಚ)ದ ಆಚೆ ಮತ್ತು (1ಟ)ದ ಆ ಕಡೆ ಎಂಬವುಗಳ ಹುರುಳೂ ಆಡುಗನ ಇಂಬನ್ನವಲಂಬಿಸಿದೆ. ಇದಕ್ಕೆ ಬದಲು, ಸುತ್ತಲೂ, ನಡುವೆ, ಒಳಗೆ-ಹೊರಗೆ, ಹತ್ತಿರ-ದೂರ, ಬಳಿ ಮೊದಲಾದ ಬೇರೆ ಕೆಲವು ಪದಗಳು ಆಡುಗನ ಇಂಬಿಗೆ ಹೊಂದಿಕೊಂಡಿರುವು ದಿಲ್ಲ; ಅವು ತಿಳಿಸುವ ಇಂಬು ಯಾವುದೆಂದು ತಿಳಿಯಲು ಆಡುಗನ ಇಂಬು ಯಾವುದು ಎಂಬುದನ್ನು ತಿಳಿಯಬೇಕಾಗಿಲ್ಲ: (2ಕ) ಅವರು ಮನೆಯ ಸುತ್ತಲೂ ಮುಳ್ಳಿನ ಗಿಡ ನಟ್ಟಿದ್ದಾರೆ. (2ಚ) ಅಜ್ಜಮ್ಮನವರು ಕೋಣೆಯೊಳಗೆ ಮಲಗಿದ್ದರು. (2ಟ) ಕೆರೆಯ ನಡುವೆ ಒಂದು ತಾವರೆ ಹೂ ಅರಳಿದೆ. (2ತ) ತಂದೆಯ ಹತ್ತಿರವೇ ಮಗನೂ ನಿಂತಿದ್ದ. ಆಡುಗನ ಇಂಬಿಗೆ ಹೊಂದಿಕೊಂಡಿರಬೇಕಾದ ಕೆಲವು ಪದಗಳನ್ನು ಉಸಿರಿ ಪಾಂಗುಗಳಿಗೆ ಇಲ್ಲವೇ ಅವಕ್ಕೆ ಸಂಬಂದಿಸಿದ ವಸ್ತುಗಳಿಗೆ ಸಂಬಂದಿಸಿದಂತೆ ಬಳಸಿದಲ್ಲಿ ಅವು ಆಡುಗನ ಇಂಬಿಗೆ ಹೊಂದಿಕೊಂಡಿಲ್ಲದೆಯೂ ಹುರುಳನ್ನು ಕೊಡಬಲ್ಲುವು: (3ಕ) ರಾಜುವಿನ ಬಲಗಡೆ ಹರೀಶ ನಿಂತಿದ್ದಾನೆ. (3ಚ) ಅವನು ಗಾಡಿಯ ಹಿಂದುಗಡೆ ಬರುತ್ತಿದ್ದಾನೆ. (3ಟ) ಏಡಿ ಅಡ್ಡಡ್ಡ ಹೋಗುತ್ತದೆ. (3ಕ)ದಲ್ಲಿ ಬಂದಿರುವ ರಾಜುವಿನ ಬಲಗಡೆ ಎಂಬುದು ರಾಜುವನ್ನವಲಂಬಿಸಿದೆ ಯಲ್ಲದೆ ಆಡುಗನನ್ನವಲಂಬಿಸಿಲ್ಲ; ಇದಕ್ಕೆ ಬದಲು, ಮರದ ಬಲಗಡೆ ಇಲ್ಲವೇ ಗುಡ್ಡದ ಬಲಗಡೆ ಎಂದು ಹೇಳಿದಲ್ಲಿ, ಅದು ಆಡುಗನು ಎಲ್ಲಿ ನಿಂತಿದ್ದಾನೆ ಎಂಬುದನ್ನವಲಂಬಿಸಿರುತ್ತದೆ. ಬೇರೆ ಕೆಲವು ವಸ್ತುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಮೇಲೆ ಅವುಗಳೊಂದಿಗೆ ಬಳಕೆಯಾಗುವ ಹಿಂದೆ-ಮುಂದೆ ಮತ್ತು ಎಡ-ಬಲ ಪದಗಳ ಹುರುಳು ಅವಲಂಬಿಸಿರುತ್ತದೆ; ಎತ್ತುಗೆಗಾಗಿ, ಒಂದು ಕಟ್ಟಡದಲ್ಲಿ ಮುಕ್ಯ ಬಾಗಿಲಿರುವ ಜಾಗವೇ ಅದರ ಮುಂದುಗಡೆಯಾಗಿರುತ್ತದೆ; ಆದರೆ, ಅದರ ಎಡಗಡೆ ಮತ್ತು ಬಲಗಡೆಗಳು ಅದರ ಎದುರು ನಿಂತಿರುವ ವ್ಯಕ್ತಿಯ ಎಡಗಡೆ ಮತ್ತು ಬಲಗಡೆಗಳಿಗೆ ಸಮನಾಗಿರುತ್ತವೆ. ಹೀಗೆಯೇ, ಒಂದು ಕಪಾಟಿನ ಎಡ-ಬಲಗಳು, ಒಂದು ಪಾತ್ರೆಯ ಎಡ(ಕಯ್)-ಬಲ(ಕಯ್)ಗಳು, ಒಂದು ಪುಸ್ತಕದ ಎಡ- ಬಲಗಳು ಅದನ್ನು ಬಳಸುವ ವ್ಯಕ್ತಿಯ ಎಡ-ಬಲಕ್ಕೆ ಸಮನಾಗಿರುತ್ತವೆ. ಇದಲ್ಲದೆ, ಒಂದು ಚಿತ್ರದಲ್ಲಿ ಬರುವ ವ್ಯಕ್ತಿಗಳಲ್ಲಿ ಯಾರು ಯಾರ ಎಡಕ್ಕೆ ಇಲ್ಲವೇ ಬಲಕ್ಕೆ ನಿಂತಿದ್ದಾರೆ ಎಂಬುದನ್ನು ತಿಳಿಸುವಲ್ಲಿ ಆ ವ್ಯಕ್ತಿಗಳ ಎಡ-ಬಲವನ್ನು ಬಳಸುವ ಬದಲು ಚಿತ್ರವನ್ನು ನೋಡುತ್ತಿರುವ ವ್ಯಕ್ತಿಯ ಎಡ-ಬಲಗಳನ್ನು ಬಳಸಲಾಗುತ್ತದೆ. ಮೇಲೆ-ಕೆಳಗೆ ಮತ್ತು ಒಳಗೆ-ಹೊರಗೆ ಎಂಬ ಪದಗಳು ಸಾಮಾನ್ಯವಾಗಿ ಆಡುಗನ ಇಂಬಿಗೆ ಹೊಂದಿಕೊಳ್ಳಬೇಕಾಗಿಲ್ಲ; ಆದರೆ, ಕೆಲವು ಸಂದರ್ಬಗಳಲ್ಲಿ ಅವು ಹೊಂದಿರುವಂತೆಯೂ ಬರಬಲ್ಲುವು; ಎತ್ತುಗೆಗಾಗಿ, ಮೂರನೇ ಮಹಡಿಯಲ್ಲಿ ನಿಂತಿರುವ ಆಡುಗನಿಗೆ ಎರಡನೇ ಮಹಡಿ ಕೆಳಗಿನ ಮಹಡಿಯಾಗಿರುತ್ತದೆ, ಮತ್ತು ಮೊದಲನೇ ಮಹಡಿಯಲ್ಲಿ ನಿಂತವನಿಗೆ ಅದು ಮೇಲಿನ ಮಹಡಿಯಾಗಿರುತ್ತದೆ; ಒಳಕೋಣೆಯಲ್ಲಿರುವವನಿಗೆ ಹೊರಕೋಣೆ ಹೊರಗೆ, ಮತ್ತು ಅಂಗಳದಲ್ಲಿರು ವವನಿಗೆ ಹೊರಕೋಣೆಯೂ ಒಳಗೆಯೇ.
(2) ಸರಿಬದಿಯ ಪದಗಳು ಇಂಬಿನ ಪದಗಳಲ್ಲಿ ಕೆಲವನ್ನು ಸರಿಬದಿಯ ಪದಗಳು ಎಂಬುದಾಗಿ ಕರೆಯಲು ಬರುತ್ತದೆ; ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಪೆನ್ನನ್ನು ಪುಸ್ತಕದ ಹತ್ತಿರ ಇರಿಸಿದ್ದೇನೆ. (1ಚ) ಪುಸ್ತಕ ಪೆನ್ನಿನ ಹತ್ತಿರ ಇದೆ. (1ಟ) *ಪುಸ್ತಕ ಪೆನ್ನಿನಿಂದ ದೂರ ಇದೆ. (2ಕ) ಪೆನ್ನನ್ನು ಪುಸ್ತಕದ ಮೇಲೆ ಇರಿಸಿದ್ದೇನೆ. (2ಚ) *ಪುಸ್ತಕ ಪೆನ್ನಿನ ಮೇಲೆ ಇದೆ. (2ಟ) ಪುಸ್ತಕ ಪೆನ್ನಿನ ಕೆಳಗೆ ಇದೆ. ಪೆನ್ನನ್ನು ಪುಸ್ತಕದ ಹತ್ತಿರ ಇರಿಸಿದೆಯಾದರೆ, ಪೆನ್ನು ಪುಸ್ತಕದ ಹತ್ತಿರ ಇರುತ್ತದೆ ಮಾತ್ರವಲ್ಲ, ಪುಸ್ತಕವೂ ಪೆನ್ನಿನ ಹತ್ತಿರ ಇರುತ್ತದೆ; ಹಾಗಾಗಿ, ಹತ್ತಿರ ಎಂಬುದು ಸರಿಬದಿಯ ಪದ. ಇದಕ್ಕೆ ಬದಲು, ಪೆನ್ನನ್ನು ಪುಸ್ತಕದ ಮೇಲೆ ಇರಿಸಿದೆಯಾದರೆ, ಪೆನ್ನು ಪುಸ್ತಕದ ಮೇಲೆ ಇರುತ್ತದೆ, ಆದರೆ ಪುಸ್ತಕ ಪೆನ್ನಿನ ಕೆಳಗೆ ಇರುತ್ತದಲ್ಲದೆ ಮೇಲೆ ಇರುವುದಿಲ್ಲ; ಹಾಗಾಗಿ, ಮೇಲೆ ಎಂಬುದು ಸರಿಬದಿಯ ಪದವಲ್ಲ. ಹತ್ತಿರ ಮತ್ತು ದೂರ ಪದಗಳು, ಮತ್ತು ಅವು ಕೊಡುವಂತಹದೇ ಹುರುಳನ್ನು ಕೊಡುವ ಬಳಿ, ಗುಂಟ, ಒಡನೆ, ಒಟ್ಟಿಗೆ ಮೊದಲಾದ ಪದಗಳು ಸರಿಬದಿಯ ಪದಗಳಾಗಿ ಬಳಕೆಯಾಗಬಲ್ಲುವು; ಇದಕ್ಕೆ ಬದಲು, ಮೇಲೆ-ಕೆಳಗೆ, ಆಚೆ-ಈಚೆ, ಒಳಗೆ-ಹೊರಗೆ, ಅಡ್ಡ, ಮೂಡ-ಪಡು, ನಡುವೆ-ಸುತ್ತ, ಎಡಕ್ಕೆ-ಬಲಕ್ಕೆ ಮೊದಲಾದ ಪದಗಳು ಸರಿಬದಿಯಲ್ಲದ ಪದಗಳಾಗಿ ಬಳಕೆಯಾಗುತ್ತವೆ. (3ಕ) ರಾಜು ಹರಿಯೊಂದಿಗಿದ್ದಾನೆ. (3ಚ) ಹರಿ ರಾಜುವಿನೊಂದಿಗಿದ್ದಾನೆ. (4ಕ) ಹೊಳೆ ಗುಡ್ಡದ ಆಚೆ ಹರಿಯುತ್ತದೆ. (4ಚ) ಗುಡ್ಡ ಹೊಳೆಯ ಈಚೆ ಇದೆ. (5ಕ) ಮನೆಯ ಸುತ್ತ ಕೋಟೆಯಿದೆ. (5ಚ) ಕೋಟೆಯ ನಡುವೆ ಮನೆಯಿದೆ. (3ಕ-ಚ)ದಲ್ಲಿ ಸರಿಬದಿಯ ಒಂದಿಗೆ ಪದ ಬಂದಿದ್ದು, ಎರಡು ಸೊಲ್ಲುಗಳಲ್ಲೂ ಅದನ್ನೇ ಬಳಸಲಾಗಿದೆ; ಇದಕ್ಕೆ ಬದಲು, (4ಕ-ಚ) ಮತ್ತು (5ಕ-ಚ)ಗಳಲ್ಲಿ ಸರಿಬದಿಯಲ್ಲದ ಆಚೆ-ಈಚೆ, ಸುತ್ತ-ನಡುವೆ ಪದಗಳು ಬಂದಿದ್ದು, (ಕ) ಸೊಲ್ಲುಗಳಲ್ಲಿ ಬಂದಿರುವ ಪದವನ್ನೇ (ಚ) ಸೊಲ್ಲುಗಳಲ್ಲೂ ಹುರುಳು ಮಾರ್ಪಡದ ಹಾಗೆ ಬಳಸಲು ಬರುವುದಿಲ್ಲ. (3) ಇಂಬಿನಲ್ಲಿ ಮಾರ್ಪಾಡು ಇಂಬನ್ನು ತಿಳಿಸುವ ಪದಗಳು ಒಂದು ಇರುಹ ಎಲ್ಲಿದೆ, ಇಲ್ಲವೇ ಒಂದು ಎಸಕ ಎಲ್ಲಿ ನಡೆಯಿತು ಎಂಬುದನ್ನಶ್ಟೇ ತಿಳಿಸುತ್ತದೆ; ಅವುಗಳಿಗೆ ಇಗೆ ಇಲ್ಲವೇ ಇಂದ ಒಟ್ಟನ್ನು ಸೇರಿಸುವ ಮೂಲಕ, ಒಂದು ಎಸಕದಲ್ಲಿ ಇಂಬಿಗೆ ಸಂಬಂದಿಸಿದ ಹಾಗೆ ನಡೆಯುವ ಮಾರ್ಪಾಡುಗಳನ್ನು ತಿಳಿಸಲು ಬರುತ್ತದೆ: (1ಕ) ಬೆಕ್ಕು ಮನೆಯೊಳಗೆ ಆಡುತ್ತಿದೆ. (1ಚ) ಬೆಕ್ಕು ಮನೆಯೊಳಕ್ಕೆ ನುಗ್ಗಿತು.
(1ಟ) ಬೆಕ್ಕು ಮನೆಯೊಳಗಿನಿಂದ ಓಡಿತು. (1ಕ)ದಲ್ಲಿ ಒಳಗೆ ಎಂಬುದನ್ನು ಹಾಗೆಯೇ ಬಳಸಲಾಗಿದ್ದು, ಅದು ಆಡುವ ಎಸಕ ಎಲ್ಲಿ ನಡೆಯುತ್ತದೆ ಎಂಬುದನ್ನಶ್ಟೇ ತಿಳಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಅದನ್ನು ಒಳಕ್ಕೆ ಎಂಬುದಾಗಿ ಇಗೆ ಒಟ್ಟನ್ನು ಸೇರಿಸಿ ಬಳಸಲಾಗಿದ್ದು, ಅದು ನುಗ್ಗುವ ಎಸಕದ ಗುರಿ ಯಾವುದು ಎಂಬುದನ್ನು ತಿಳಿಸುತ್ತದೆ, ಮತ್ತು (1ಟ)ದಲ್ಲಿ ಅದನ್ನೇ ಇಂದ ಒಟ್ಟನ್ನು ಸೇರಿಸಿ ಬಳಸಲಾಗಿದ್ದು, ಅದು ನುಗ್ಗುವ ಎಸಕದ ಸುರು ಯಾವುದು ಎಂಬುದನ್ನು ತಿಳಿಸುತ್ತದೆ. ಕೆಲವು ಎಸಕಪದಗಳೊಂದಿಗೆ ಇಂಬನ್ನು ತಿಳಿಸುವ ಪದಗಳನ್ನು ಹಾಗೆಯೇ ಬಳಸಬಹುದು, ಇಲ್ಲವೇ ಸುರು ಇಲ್ಲವೇ ಗುರಿಗಳಾಗಿ ಮಾರ್ಪಡಿಸಿಯೂ ಬಳಸ ಬಹುದು; ಹೀಗೆ ಮಾಡುವ ಮೂಲಕ ಅವುಗಳ ಹುರುಳುಗಳಲ್ಲಿ ಮಾರ್ಪಾಡನ್ನೂ ಮಾಡಲು ಬರುತ್ತದೆ: (2ಕ) ಬಾವಿಯೊಳಗೆ ನೀರು ಚಿಮ್ಮುತ್ತಿದೆ. (2ಚ) ಬಾವಿಯೊಳಗಿನಿಂದ ನೀರು ಚಿಮ್ಮುತ್ತಿದೆ. (2ಟ) ಬಾವಿಯೊಳಕ್ಕೆ ನೀರು ಚಿಮ್ಮುತ್ತಿದೆ. (3ಕ) ಹಕ್ಕಿ ಮರದ ಮೇಲೆ ಹಾರಿತು. (3ಚ) ಹಕ್ಕಿ ಮರದ ಮೇಲಿನಿಂದ ಹಾರಿತು. (3ಟ) ಹಕ್ಕಿ ಮರದ ಮೇಲಕ್ಕೆ ಹಾರಿತು. (2ಕ)ದಲ್ಲಿ ನೀರು ಚಿಮ್ಮುತ್ತಿರುವುದಕ್ಕೆ ಬಾವಿ ಇಂಬು ಎಂದಿಶ್ಟೇ ತಿಳಿಸಲಾಗಿದೆ; ಇದಕ್ಕೆ ಬದಲು, (2ಚ)ದಲ್ಲಿ ನೀರು ಬಾವಿಯಿಂದ ಹೊರಕ್ಕೆ ಚಿಮ್ಮುತ್ತಿದೆ ಎಂಬುದಾಗಿ, ಎಂದರೆ ಚಿಮ್ಮುವ ಎಸಕದ ಸುರು ಬಾವಿ ಎಂಬುದಾಗಿ ತಿಳಿಸಲಾಗಿದೆ; ಇದೇ ರೀತಿಯಲ್ಲಿ, (2ಟ)ದಲ್ಲಿ ನೀರು ಹೊರಗಿನಿಂದ ಬಾವಿಯೊಳಕ್ಕೆ ಚಿಮ್ಮುತ್ತಿದೆ ಎಂಬುದಾಗಿ, ಎಂದರೆ, ಚಿಮ್ಮುವ ಎಸಕದ ಗುರಿ ಬಾವಿ ಎಂಬುದಾಗಿ ತಿಳಿಸಲಾಗಿದೆ. ಇಂತಹದೇ ವ್ಯತ್ಯಾಸ (3ಕ-ಟ) ಸೊಲ್ಲುಗಳಲ್ಲೂ ಇದೆ. (4) ಹೆಚ್ಚು ಪದಕಂತೆಗಳ ಬಳಕೆ ಇರುಹದ ಇಲ್ಲವೇ ಎಸಕದ ಇಂಬನ್ನು ತಿಳಿಸಲು ಒಂದಕ್ಕಿಂತ ಹೆಚ್ಚು ಪದಕಂತೆಗಳನ್ನು ಬಳಸಲು ಬರುತ್ತದೆ; ಇವುಗಳಲ್ಲಿ ಹೆಚ್ಚು ಹರವಿನ ಪದಕಂತೆ ಮೊದಲು ಬರುತ್ತದೆ, ಮತ್ತು ಕಡಿಮೆ ಹರವಿನ ಪದಕಂತೆ ಬಳಿಕ ಬರುತ್ತದೆ. ಹೊತ್ತನ್ನು ತಿಳಿಸುವಲ್ಲೂ ಇಂತಹದೇ ಓರಣವಿರುವುದನ್ನು (7.5.1(2))ರಲ್ಲಿ ನೋಡಿರುವೆವು. (1ಕ) ಅವನು ಬೆಂಗಳೂರಿನಲ್ಲಿ ಒಂದು ಹೋಟೆಲಿನ ಕೋಣೆಯಲ್ಲಿ ವಾಸವಾಗಿದ್ದಾನೆ. (1ಚ) ಪೋಲೀಸರು ಬಂದಾಗ ನಾವು ಪೂನಾದಲ್ಲಿ ನಮ್ಮ ಮನೆಯೊಳಗೆ ದೇವರ ಕೋಣೆಯಲ್ಲಿ ಅಡಗಿ ಕುಳಿತಿದ್ದೆವು. (1ಟ) ಅವರು ಆಪೀಸಿನಲ್ಲಿ ಮೇಜಿನ ಸುತ್ತ ಕುಳಿತು ಹರಟೆ ಹೊಡೆಯು ತ್ತಿದ್ದರು. (1ಕ)ದಲ್ಲಿ ಹೆಚ್ಚು ಹರವಿನ ಬೆಂಗಳೂರಿನಲ್ಲಿ ಎಂಬುದು ಮೊದಲು ಬಂದಿದೆ, ಮತ್ತು ಕಡಿಮೆ ಹರವಿನ ಒಂದು ಹೋಟೆಲಿನ ಕೋಣೆಯಲ್ಲಿ ಎಂಬುದು ಬಳಿಕ ಬಂದಿದೆ; (1ಚ-ಟ)ಗಳಲ್ಲೂ ಹೀಗೆಯೇ. ಮೇಲಿನ ಎತ್ತುಗೆಗಳಲ್ಲಿ ಎರಡು ಇಲ್ಲವೇ ಹೆಚ್ಚು ಪದಕಂತೆಗಳು ಬಳಕೆ ಯಾಗಿದ್ದರೂ ಅವು ಒಂದೇ ಇಂಬನ್ನು ತಿಳಿಸುತ್ತವೆ; ಇದಕ್ಕೆ ಬದಲು, ಅಂತಹ ಪದಕಂತೆಗಳನ್ನು ಮತ್ತು ಇಲ್ಲವೇ ಹಾಗೂ ಪದದಿಂದ ಬೇರ್ಪಡಿಸಿ ಬಳಸಿದರೆ, ಅವು ಎರಡು ಇಲ್ಲವೇ ಹೆಚ್ಚು ಬೇರೆ ಬೇರೆ ಇಂಬುಗಳನ್ನು ತಿಳಿಸುತ್ತವೆ.
(2ಕ) ಅವರು ಬೆಂಗಳೂರಿನಲ್ಲಿ ಮತ್ತು ಮಯ್ಸೂರಿನಲ್ಲಿ ಹೋಟೆಲುಗಳನ್ನು ನಡೆಸುತ್ತಿದ್ದಾರೆ. (2ಚ) ಅವರು ಕಳ್ಳರನ್ನು ಕಾಡುಗಳಲ್ಲಿ ಹಾಗೂ ನಾಡುಗಳಲ್ಲಿ ಹುಡುಕುತ್ತಿದ್ದಾರೆ. (5) ಇಂಬಿನ ಅಳತೆ ಎಣಿಕೆಪದಗಳೊಂದಿಗೆ ಅಂಗುಲ, ಚೋಟು, ಗೇಣು, ಮೊಳ, ಮೀಟರ್, ಕಿಲೋಮೀಟರ್ ಮೊದಲಾದ ಪದಗಳನ್ನು ಬಳಸಿ, ಇರುಹಗಳ ಇಲ್ಲವೇ ಎಸಕಗಳ ಇಂಬಿನ ಅಳತೆಯನ್ನು ತಿಳಿಸಲಾಗುತ್ತದೆ: (1ಕ) ಅವನು ಮೂರು ಕಿ.ಮೀ. ಓಡಿದ. (1ಚ) ಈ ಬಟ್ಟೆ ಮೂರು ಮೀಟರ್ ಇದೆ. ಅಳತೆಯನ್ನು ಈ ರೀತಿ ಕಚಿತವಾಗಿ ತಿಳಿಸುವುದು ಬೇಡದಿದ್ದಲ್ಲಿ, ಎಣಿಕೆ ಪದಗಳ ಬದಲು ಕೆಲವು, ಹಲವು ಮೊದಲಾದ ಪದಗಳನ್ನು ಬಳಸಲಾಗುತ್ತದೆ, ಮತ್ತು ಬೇರೆಯೂ ಕೆಲವು ಪದಗಳನ್ನು ಬಳಸಲಾಗುತ್ತದೆ: (2ಕ) ಅವನು ಕೆಲವು ಕಿ.ಮೀ. ಓಡಿದ. (2ಚ) ಅವನು ಊರೂರು ಅಲೆದ. ಇಂಬಿನ ಅಳತೆಯನ್ನು ತಿಳಿಸುವುದರೊಂದಿಗೆ ಅದರ ಸುರು ಮತ್ತು ಕೊನೆಗಳನ್ನೂ ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಹೊತ್ತಿನ ತಿಳಿವನ್ನು ಕೊಡುವಲ್ಲಿ ಕಾಣಿಸಿದ ಹಾಗೆ, ಇಂದ ಮತ್ತು ವರೆಗೆ ಇಲ್ಲವೇ ತನಕ ಎಂಬವುಗಳನ್ನು ಬಳಸಲಾಗುತ್ತದೆ: (3ಕ) ಅವನು ಇಲ್ಲಿಂದ ಗುಡ್ಡದ ವರೆಗೆ ಮೂರು ಕಿ.ಮೀ. ಓಡಿದ. (3ಚ) ಅವನು ಬೆಂಗಳೂರಿನಿಂದ ಮಯ್ಸೂರಿನ ತನಕ ಹಲವು ಕಿ.ಮೀ. ಓಡಿದ. ಹೊತ್ತಿನ ಅಳತೆಯನ್ನು ತಿಳಿಸುವ ಪದಗಳ ಹಾಗೆ, ಇಂಬಿನ ಅಳತೆಯನ್ನು ತಿಳಿಸುವ ಪದಗಳನ್ನೂ -ಗಟ್ಟಲೆ ಎಂಬುದರೊಂದಿಗೆ ಬಳಸಿ, ಅಳತೆ ಕಚಿತವಲ್ಲ, ಆದರೆ, ತುಂಬಾ ಹೆಚ್ಚಿನದು ಎಂಬ ಹುರುಳನ್ನು ಕೊಡಲು ಬರುತ್ತದೆ: (4ಕ) ಅವನು ಮಯ್ಲುಗಟ್ಟಲೆ ಓಡಿದ. (4ಚ) ಅವರು ಕಿ.ಮೀ.ಗಟ್ಟಲೆ ಕಾಡು ಕಡಿಸಿದ್ದಾರೆ. (6) ಗುರಿ ಪಾಂಗಿನ ಬಳಕೆ ಗುರಿ ಪಾಂಗಿನ ಮೂಲಕ ಅಳತೆಯ ದಿಕ್ಕನ್ನು ತಿಳಿಸಲು ಬರುತ್ತದೆ: (1ಕ) ಅವರ ಮನೆ ಇಲ್ಲಿಂದ ಉತ್ತರಕ್ಕೆ ಮೂರು ಕಿ.ಮೀ. ದೂರದಲ್ಲಿದೆ. (1ಚ) ಅವನು ಗುಡ್ಡದಿಂದ ಕೆಳಕ್ಕೆ ಅರ್ದ ಕಿ.ಮೀ. ಓಡಿದ. ಇದಲ್ಲದೆ, ಮಾರೆಸಕಗಳ ಇಂಬನ್ನು ಇಲ್ಲವೇ ಇರುಹಗಳ ಹಂಚಿಕೆಯನ್ನು ಗುರಿ ಪಾಂಗಿನ ಮೂಲಕ ತಿಳಿಸಲು ಬರುತ್ತದೆ: (2ಕ) ಅವನು ಕಿ.ಮೀ.ಗೊಮ್ಮೆ ಕಾರನ್ನು ನಿಲ್ಲಿಸಲು ಹೇಳುತ್ತಿದ್ದ. (2ಚ) ಮೀಟರ್ಗೆ ಎರಡರ ಹಾಗೆ ಪಿನ್ನುಗಳನ್ನು ಊರಿದ್ದಾರೆ.
(2ಟ) ಅವರ ತೋಟದಲ್ಲಿ ಅಡಿಕೆ ಮರಗಳು ಏಳಡಿಗೆ ಒಂದರ ಹಾಗೆ ಇವೆ. (2ತ) ಸಾಲಿನಲ್ಲಿ ಗಿಡಗಳು ಮೀಟರ್ಗೆ ಎರಡರ ಹಾಗೆ ಇವೆ. ಉದ್ದಕ್ಕೆ ಎಂಬುದನ್ನು ಗುರಿ ಪಾಂಗಾಗಿ ಬಳಸಿ, ಇಂಬಿನ ಅಳತೆಯನ್ನು ತಿಳಿಸಲಾಗುತ್ತದೆ: (3ಕ) ಅವನು ದಾರಿಯುದ್ದಕ್ಕೂ ನನ್ನೊಂದಿಗೆ ಮಾತನಾಡುತ್ತಿದ್ದ. (3ಚ) ದಾರಿಯುದ್ದಕ್ಕೂ ಹೂ ಚೆಲ್ಲಿದ್ದರು. (7) ಇಂಬಿನ ಹರವು ಹೊತ್ತಿನ ತಿಳಿವನ್ನು ಕೊಡುವಲ್ಲಿ ಎಸಕದ ಗಡುವನ್ನು ತಿಳಿಸಲು ಜಾಗ ಪಾಂಗನ್ನು ಬಳಸಲಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು; ಇಂಬನ್ನು ತಿಳಿಸುವಲ್ಲೂ ಜಾಗ ಪಾಂಗಿಗೆ ಇಂತಹದೇ ಬಳಕೆಯಿದ್ದು, ಅದು ಇಂಬಿನ ಹರವನ್ನು ತಿಳಿಸುತ್ತದೆ ಯೆಂದು ಹೇಳಬಹುದು: (1ಕ) ಅವನು ಆ ಚಿಕ್ಕ ಜಾಗದಲ್ಲಿ ಮೂರು ಮನೆ ಕಟ್ಟಿಸಿದ. (1ಚ) ನಾಲ್ಕು ಮೀಟರ್ ಬಟ್ಟೆಯಲ್ಲಿ ಅವನು ಮೂರು ಅಂಗಿ ಹೊಲಿದ. ಇಂಬಿನ ಅಳತೆ ಮತ್ತು ಹರವುಗಳ ನಡುವಿನ ವ್ಯತ್ಯಾಸವನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (2ಕ) ಅವನು ಮೂರು ಕಿ.ಮೀ. ಓಡಿದ. (2ಚ) ಅವನು ಮೂರು ಕಿ.ಮೀ.ನಲ್ಲಿ ಎರಡು ಕಿ.ಮೀ. ಓಡಿದ, ಮತ್ತು ಒಂದು ಕಿ.ಮೀ. ಸಯ್ಕಲ್ ತುಳಿದ. (2ಟ) ಎರಡು ಎಕ್ರೆಯಲ್ಲಿ ಒಂದು ಎಕ್ರೆ ತೋಟಕ್ಕೆ ಹೋಯಿತು. (2ಚ)ದಲ್ಲಿ ಮೂರು ಕಿ.ಮೀ.ನಲ್ಲಿ ಎಂಬುದು ಆತನು ನಡೆಸಿದ ಇಡೀ ಎಸಕದ ಹರವನ್ನು ತಿಳಿಸುತ್ತದೆ, ಮತ್ತು ಎರಡು ಕಿ.ಮೀ. ಮತ್ತು ಒಂದು ಕಿ.ಮೀ. ಎಂಬವುಗಳು ಅದರ ಅಂಗವಾಗಿ ಆತನು ನಡೆಸಿದ ಎರಡು ಎಸಕಗಳ ಇಂಬಿನ ಅಳತೆಯನ್ನು ಕೊಡುತ್ತವೆ. (8) ಹಿಂದಿನ ಮತ್ತು ಮುಂದಿನ ಅಳತೆ ಹೊತ್ತಿನ ಅಳತೆಯನ್ನು ತಿಳಿಸುವಲ್ಲಿ ಕಾಣಿಸಿದ ಹಾಗೆ, ಇಂಬಿನ ಅಳತೆಯನ್ನು ತಿಳಿಸುವಲ್ಲೂ ಹಿಂದಿನ ಮತ್ತು ಮುಂದಿನ ಅಳತೆಗಳೆಂಬುದಾಗಿ ಎರಡು ಬಗೆಗಳನ್ನು ಕಾಣಲು ಬರುತ್ತದೆ: ಇಲ್ಲಿಯೂ ಇಂದ ಎಂಬುದನ್ನು ಮುಂದಿನ ಅಳತೆಯನ್ನು ತಿಳಿಸಲು, ಮತ್ತು ವರೆಗೆ ಇಲ್ಲವೇ ತನಕ ಎಂಬುದನ್ನು ಹಿಂದಿನ ಅಳತೆಯನ್ನು ತಿಳಿಸಲು ಬಳಸಲಾಗುತ್ತದೆ: (1ಕ) ಇಲ್ಲಿಂದ ಮಾಡಿನ ತುದಿಗೆ ಹತ್ತು ಅಡಿ ಇದೆ. (1ಚ) ಕಿಟಿಕಿಯ ವರೆಗೆ ಮಳೆ ನೀರು ನಿಂತಿದೆ. (1ಟ) ಎರಡಡಿ ತನಕ ಕೊಳಕಾಗಿದೆ. (1ತ) ಇಲ್ಲಿಂದ ಆ ಮರದ ವರೆಗೆ ಅವರ ಜಾಗ ಇದೆ. ಇಂದ ಎಂಬುದರ ಬದಲು ಮೇಲೆ ಎಂಬುದನ್ನು ಬಳಸಿಯೂ ಹಿಂದಿನ ಅಳತೆಯನ್ನು ತಿಳಿಸಲು ಬರುತ್ತದೆ: (2ಕ) ಎರಡಡಿ ಮೇಲೆ ಕೊಳಕಾಗಿದೆ.
(2ಚ) ಕಿಟಿಕಿಯಲ್ಲಿ ಎರಡಡಿ ಮೇಲೆ ಕೆಂಪು ಬಳಿದಿದ್ದಾರೆ. ಇಂತಹ ಬಳಕೆಗಳಲ್ಲಿ ಸಾಮಾನ್ಯವಾಗಿ ಅಳತೆಯ ಮುಂದಿನ ಜಾಗವನ್ನು ತಿಳಿಸುವ ಪದಗಳನ್ನು ಅಳತೆಯಲ್ಲಿ ಸೇರಿಸಲಾಗುವುದಿಲ್ಲ ಎಂಬುದನ್ನು ಗಮನಿಸಬಹುದು: (3ಕ) ಅವನು ನಿಮ್ಮ ಮನೆಯ ವರೆಗೆ ಬಂದಿದ್ದ. (3ಚ) ಕಿಟಿಕಿಯ ತನಕ ನೀರು ಬಂದಿತ್ತು. (3ಟ) ನಾಯಿ ಬಾಗಿಲಿನ ವರೆಗೆ ಬರುತ್ತದೆ. (3ಕ) ಸೊಲ್ಲಿಗೆ ಅವನು ನಿಮ್ಮ ಮನೆಗೆ ಬಂದಿರಲಿಲ್ಲ ಎಂಬ ಹುರುಳು ಸಿಗುತ್ತದೆ, ಮತ್ತು (3ಚ) ಸೊಲ್ಲಿಗೆ ನೀರು ಕಿಟಿಕಿಯ ಒಳಗೆ ಹೋಗಲಿಲ್ಲ ಎಂಬ ಹುರುಳು ಸಿಗುತ್ತದೆ. ಆದರೆ, ಅಳತೆಯ ಹಿಂದಿನ ಜಾಗವನ್ನು ತಿಳಿಸುವ ಪದಗಳನ್ನು ಸಾಮಾನ್ಯವಾಗಿ ಅಳತೆಯಲ್ಲಿ ಸೇರಿಸಲಾಗುತ್ತದೆ: (4ಕ) ಇವತ್ತಿನಿಂದ ನಮ್ಮೂರ ಜಾತ್ರೆ ಸುರುವಾಗುತ್ತದೆ. (4ಚ) ಇಲ್ಲಿಂದ ಆ ದೊಡ್ಡ ಮರದ ವರೆಗೆ ಅವರ ತೋಟ ಇದೆ. (4ಟ) ಸೋಮವಾರದಿಂದ ಶನಿವಾರದ ವರೆಗೆ ಜಾತ್ರೆ ಇದೆ. (4ಕ) ಸೊಲ್ಲಿಗೆ ಇವತ್ತೂ ಜಾತ್ರೆ ಇದೆ ಎಂಬ ಹುರುಳು ಸಿಗುತ್ತದೆ. ಆದರೆ, (4ಚ)ದಲ್ಲಿ ಆ ದೊಡ್ಡ ಮರ ಅವರ ತೋಟಕ್ಕೆ ಸೇರಿದೆಯೋ ಇಲ್ಲವೋ ಎಂಬ ವಿಶಯದಲ್ಲಿ ಸಂಶಯವುಂಟಾಗಬಲ್ಲುದು, ಮತ್ತು (4ಟ)ದಲ್ಲಿ ಶನಿವಾರವೂ ಜಾತ್ರೆ ಇದೆ ಎಂಬ ಹುರುಳು ಸಿಗುವ ಹಾಗೆ ಕಾಣಿಸುತ್ತದೆ. (9) ಇಮ್ಮಡಿ ರೂಪಗಳ ಬಳಕೆ ಇಂಬನ್ನು ತಿಳಿಸುವ ಪದಗಳ ಇಮ್ಮಡಿ ರೂಪಗಳನ್ನು ಎರಡು ಹುರುಳುಗಳಲ್ಲಿ ಬಳಸಲು ಬರುತ್ತದೆ: ಮೊದಲನೆಯದಾಗಿ, ಕಟ್ಟಕಡೆಗೆ, ನಟ್ಟನಡುವೆ, ತುತ್ತತುದಿಯಲ್ಲಿ, ಮೊತ್ತ ಮೊದಲು, ಕೊಟ್ಟಕೊನೆಯಲ್ಲಿ, ಕೆಳಕೆಳಗೆ, ಮೇಲೆಮೇಲೆ ಎಂಬಂತಹ ಇಮ್ಮಡಿ ರೂಪಗಳನ್ನು ಬಳಸಿ, ಇಂಬಿನ ಪಾಂಗಿಗೆ ತುಂಬಾ ಹೆಚ್ಚಿನ ಎಂಬ ಹುರುಳನ್ನು ಕೊಡಲು ಬರುತ್ತದೆ. (1ಕ) ಬೆಕ್ಕು ಮರದ ತುತ್ತತುದಿಯಲ್ಲಿ ಕುಳಿತಿದೆ. (1ಚ) ಅಂಗಳದ ನಟ್ಟನಡುವೆ ಒಂದು ತುಲಸಿ ಗಿಡ ನಟ್ಟಿದ್ದಾರೆ. (1ಟ) ತೊಟ್ಟಿಲು ಕೆಳಕೆಳಗೆ ಇಳಿಯುತ್ತಿದೆ. ಎರಡನೆಯದಾಗಿ, ಅಡಿಗಡಿಗೆ, ಅಲ್ಲಲ್ಲಿ, ನಡುನಡುವೆ, ಹತ್ತಿರ ಹತ್ತಿರ ಎಂಬಂತಹ ಇಮ್ಮಡಿ ರೂಪಗಳನ್ನು ಬಳಸಿ ಇಂಬುಗಳಲ್ಲಿ ಎಸಕಗಳ ಹಂಚಿಕೆಯನ್ನು ತಿಳಿಸಲಾಗುತ್ತದೆ: (2ಕ) ಅವನು ಅಡಿಗಡಿಗೆ ಕಯ್ಜೋಡಿಸಿಕೊಳ್ಳುತ್ತಿದ್ದ. (2ಚ) ಅವರು ಅಲ್ಲಲ್ಲಿ ನಿಂತು ನಿಂತು ಬರುತ್ತಿದ್ದರು. (2ಟ) ಎಲ್ಲಾ ಕುರ್ಚಿಗಳನ್ನೂ ಹತ್ತಿರ ಹತ್ತಿರ ಇರಿಸಿದ್ದರು. (10) ಮಂದಿಗಳನ್ನು ಇಂಬಾಗಿ ಬಳಸುವುದು
ಒಂದು ಎಸಕದ ಇಲ್ಲವೇ ಇರುಹದ ಇಂಬಾಗಿ ಉಸಿರಿಗಳನ್ನು, ಅದರಲ್ಲೂ ಮಂದಿ ಯನ್ನು ಬಳಸುವಲ್ಲಿ ಕೆಲವು ಕಟ್ಟುಪಾಡುಗಳಿವೆ. ಇಂಬಿನ ಪದಕಂತೆಗಳಲ್ಲಿ ಮಂದಿ ಯನ್ನು ತಿಳಿಸುವ ಪದಗಳನ್ನು ಬಳಸಿರುವ ಕೆಳಗಿನ ಸೊಲ್ಲುಗಳು ಸರಿಯಾಗಿವೆ: (1ಕ) ಅವನು ನನ್ನ ಹತ್ತಿರ ಕುಳಿತ. (1ಚ) ಅವನು ಮಗುವಿನ ಮೇಲೆ ಬಟ್ಟೆ ಹೊದೆಸಿದ. (1ಟ) ನಾನು ಅವನ ಬಲಗಡೆ ಕುಳಿತಿದ್ದೆ. ಆದರೆ, ಸುರು ಇಲ್ಲವೇ ಗುರಿ ಪಾಂಗಾಗಿ ಇಂಬನ್ನು ತಿಳಿಸಬೇಕಾಗಿರುವಲ್ಲಿ ಮಂದಿಯನ್ನು ಬಳಸಲು ಬರುವುದಿಲ್ಲ: (2ಕ) ನಾನು ಅವನ ಕಡೆಗೆ/ಅವನಿಗೆ ಹೋದೆ. (2ಚ) ನಾನು ಅವನ ಬಳಿಯಿಂದ/ಅವನಿಂದ ಬಂದೆ. (2ಕ)ದಲ್ಲಿ ಅವನ ಕಡೆಗೆ ಎಂಬುದರ ಹುರುಳಿನಲ್ಲಿ ಅವನಿಗೆ ಎಂಬುದನ್ನು ಬಳಸಲು ಬರುವುದಿಲ್ಲ, ಮತ್ತು (2ಚ)ದಲ್ಲಿ ಅವನ ಬಳಿಯಿಂದ ಎಂಬುದರ ಹುರುಳಿನಲ್ಲಿ ಅವನಿಂದ ಎಂಬುದನ್ನು ಬಳಸಲು ಬರುವುದಿಲ್ಲ. ಇದಲ್ಲದೆ, ಮಂದಿಯನ್ನು ಜಾಗ ಪಾಂಗಾಗಿ ಬಳಸಿದಾಗ, ಅದು ಮಂದಿಯ ಮನೆಯನ್ನು ಇಲ್ಲವೇ ಒಡೆತನವನ್ನು ತಿಳಿಸುತ್ತದಲ್ಲದೆ ನೇರವಾಗಿ ಮಂದಿಯನ್ನಲ್ಲ. (3ಕ) ಅವನಲ್ಲಿ ಎರಡು ಪುಸ್ತಕಗಳಿವೆ. (3ಚ) ನಮ್ಮಲ್ಲಿ ಇವತ್ತು ಒಂದು ಪೂಜೆಯಿದೆ. (3ಕ)ದಲ್ಲಿ ಬಂದಿರುವ ಅವನಲ್ಲಿ ಎಂಬುದಕ್ಕೆ ಅವನ ಮಯ್ಯಲ್ಲಿ ಎಂಬ ಹುರುಳಿಲ್ಲ, ಅವನ ಒಡೆತನದಲ್ಲಿ ಎಂಬ ಹುರುಳಿದೆ; ಇದೇ ರೀತಿಯಲ್ಲಿ, (3ಚ)ದಲ್ಲಿ ಬಂದಿರುವ ನಮ್ಮಲ್ಲಿ ಎಂಬುದಕ್ಕೆ ನಮ್ಮ ಮನೆಯಲ್ಲಿ ಎಂಬ ಹುರುಳಿದೆ. ಈ ಹುರುಳಿನಲ್ಲಿ ಬಳಕೆಯಾಗುವ ಪದರೂಪಗಳ ಬಳಿಕ ಸುರು ಪಾಂಗನ್ನು ತಿಳಿಸುವ ಇಂದ ಮತ್ತು ಗುರಿ ಪಾಂಗನ್ನು ತಿಳಿಸುವ ಇಗೆ ಎಂಬ ಎರಡು ಒಟ್ಟುಗಳನ್ನು ಬಳಸಲು ಬರುತ್ತದೆ. (4ಕ) ಅವನು ನಮ್ಮಲ್ಲಿಂದ ಬರುತ್ತಿದ್ದಾನೆ. (4ಚ) ಅವನು ನಮ್ಮಲ್ಲಿಗೆ ಹೋಗುತ್ತಿದ್ದಾನೆ. ಸುರು ಮತ್ತು ಗುರಿಗಳನ್ನು ತಿಳಿಸುವ ನಮ್ಮಲ್ಲಿಂದ ಮತ್ತು ನಮ್ಮಲ್ಲಿಗೆ ಎಂಬ ಪದರೂಪಗಳಿಗೆ ಇಲ್ಲಿ ನಮ್ಮ ಮನೆಯಿಂದ ಮತ್ತು ನಮ್ಮ ಮನೆಗೆ ಎಂಬ ಹುರುಳಿದೆ ಎಂಬುದನ್ನು ಗಮನಿಸಬಹುದು. ಆದರೆ, ಈ ರೀತಿ ನೇರವಾಗಿ ಇಂಬಿನ ಹುರುಳನ್ನು ತಿಳಿಸುವ ಬದಲು, ಬೇರೆ ಬಗೆಯ ಮಾರ್ಪುರುಳುಗಳನ್ನು ತಿಳಿಸಬೇಕಾಗಿರುವಲ್ಲಿ ಮಂದಿಯನ್ನು ಸುರು, ಗುರಿ ಇಲ್ಲವೆ ಜಾಗ ಪಾಂಗುಗಳಾಗಿ ಬಳಸಲು ಬರುತ್ತದೆ: (5ಕ) ಅವನಿಂದ ನನಗೆ ತುಂಬಾ ನೆರವು ದೊರೆತಿದೆ. (5ಚ) ಆ ವಿಶಯವನ್ನು ನಾನು ಅವರಿಗೆ ತಿಳಿಸಿದ್ದೆ. (5ಟ) ಅವನಲ್ಲಿ ನನಗೆ ನಂಬಿಕೆಯಿದೆ.
7.5.3 ಹೊತ್ತು ಮತ್ತು ಇಂಬು
ಮೇಲೆ ತಿಳಿಸಿದ ಹಾಗೆ, ಹೊತ್ತು ಮತ್ತು ಇಂಬುಗಳ ನಡುವೆ ಹಲವು ಬಗೆಯ ಹೋಲಿಕೆಗಳಿವೆ. ಹಲವು ಪದಗಳನ್ನು ಎರಡು ಕಡೆಗಳಲ್ಲೂ ಬಳಸಲು ಬರುತ್ತದೆ. ಆದರೆ, ಇವೆರಡರ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳೂ ಇವೆ. (1) ಇಂಬು ಕಣ್ಣಿಗೆ ಕಾಣಿಸುವಂತಹದು ಮತ್ತು ಹೊತ್ತು ಕಣ್ಣಿಗೆ ಕಾಣಿಸದಂತಹದು: (1ಕ) ಅವರು ಗಾಡಿಯನ್ನು ಹತ್ತಡಿ ಮುಂದಕ್ಕೆ ತಳ್ಳಿದರು. (1ಚ) ಅವರು ಮದುವೆಯನ್ನು ಒಂದು ವಾರಕ್ಕೆ ಮುಂದೂಡಿದರು. ಗಾಡಿಯನ್ನು ಮುಂದಕ್ಕೆ ತಳ್ಳಿದರೆ, ಅದು ಮುಂದೆ ಹೋಗುವುದನ್ನು ಕಾಣಬಹುದು; ಆದರೆ, ಮದುವೆಯನ್ನು ಮುಂದಕ್ಕೆ ಮುಂದೂಡಿದರೆ, ಕಾಣಲು ಅಲ್ಲಿ ಏನೂ ಇರುವುದಿಲ್ಲ; ಗಾಡಿಯ ತಳ್ಳುವಿಕೆ ನನಸಿನ ತಳ್ಳುವಿಕೆ, ಆದರೆ ಮದುವೆಯ ಮುಂದೂಡುವಿಕೆ ನೆನಸಿನ ಮುಂದೂಡುವಿಕೆ. (2) ಸಾಮಾನ್ಯವಾಗಿ, ನನಸಿನ ಪದಗಳನ್ನೇ ನೆನಸಿನ ಪದಗಳಾಗಿ ಮಾರ್ಪುರುಳಿನಲ್ಲಿ ಬಳಸಲಾಗುತ್ತದೆ; ಇದನ್ನೇ ಹೊತ್ತು ಮತ್ತು ಇಂಬಿನ ಬಗೆಗಳನ್ನು ತಿಳಿಸಲು ಬಳಕೆ ಯಾಗುವ ಪದಗಳಲ್ಲಿ ಕಾಣಬಹುದು: ಹೊತ್ತಿನ ಬಗೆಗಳನ್ನು ತಿಳಿಸುವ ಹಲವು ಪದಗಳು ಮೂಲದಲ್ಲಿ ಇಂಬಿನ ಪದಗಳಾಗಿರುತ್ತವೆ; ಆದರೆ, ಹೊತ್ತಿನ ಬಗೆಗಳನ್ನು ತಿಳಿಸುವುದಕ್ಕಾಗಿಯೇ ಬಳಕೆಯಾಗುವಂತಹ ಪದಗಳಲ್ಲಿ ಯಾವುವೂ ಮಾರ್ಪುರುಳಿನಲ್ಲಿ ಇಂಬಿನ ಬಗೆಗಳನ್ನು ತಿಳಿಸುವುದಕ್ಕಾಗಿ ಬಳಕೆಯಾಗುವಂತ ಕಾಣುವುದಿಲ್ಲ. (3) ಹೊತ್ತನ್ನು ತಿಳಿಸುವಲ್ಲಿ ಸಾಮಾನ್ಯವಾಗಿ ಹಿಂದೆ-ಮುಂದೆ ಎಂಬ ಒಂದು ಆಯವನ್ನು ಮಾತ್ರ ಕಾಣಲು ಬರುತ್ತದೆ; ಆದರೆ, ಇಂಬನ್ನು ತಿಳಿಸುವಲ್ಲಿ ಹಲವು ಆಯಗಳನ್ನು ಕಾಣಲು ಸಾದ್ಯವಿದ್ದು, ಹಿಂದೆ-ಮುಂದೆ, ಮೇಲೆ-ಕೆಳಗೆ, ಎಡಕ್ಕೆ- ಬಲಕ್ಕೆ, ನಡುವೆ-ಸುತ್ತ, ಒಳಗೆ-ಹೊರಗೆ, ಮೂಡ-ಪಡು, ತೆಂಕ-ಬಡಗ ಮೊದಲಾದ ಹಲವು ಪದಜೋಡಿಗಳನ್ನು ಇದಕ್ಕಾಗಿ ಬಳಸಲು ಬರುತ್ತದೆ. (4) ಇಂಬನ್ನು ತಿಳಿಸುವಲ್ಲಿ ಬಳಕೆಯಾಗುವ ಈ ಪದಜೋಡಿಗಳಲ್ಲಿ ಹಿಂದೆ-ಮುಂದೆ ಎಂಬುದನ್ನು ಹೊತ್ತನ್ನು ತಿಳಿಸುವಲ್ಲೂ ಅದರ ಮಾರ್ಪುರುಳಿನಲ್ಲಿ ಬಳಸಲಾಗುತ್ತದೆ: (1ಕ) ಅವನು ಮೇಜನ್ನು ಮುಂದಕ್ಕೆ ತಳ್ಳಿದ. (1ಚ) ಆ ಕೆಲಸ ಮುಂದೆ ನಡೆಯಲಿದೆ. ಇಂಗ್ಲಿಶ್ನಂತಹ ಕೆಲವು ನುಡಿಗಳು ಇಂಬನ್ನು ತಿಳಿಸುವ ಹಿಂದೆ-ಮುಂದೆ ಎಂಬ ಹುರುಳಿನ ಪದಜೋಡಿಯನ್ನೇ ಹೊತ್ತನ್ನು ತಿಳಿಸುವಲ್ಲೂ ಬಳಸುತ್ತವೆ; ಇದಕ್ಕೆ ಬದಲು, ಚಯ್ನೀಸ್ನಂತಹ ಬೇರೆ ಕೆಲವು ನುಡಿಗಳು ಮೇಲೆ-ಕೆಳಗೆ ಎಂಬ ಹುರುಳಿನ ಪದಜೋಡಿಯನ್ನು ಇದಕ್ಕಾಗಿ ಬಳಸುತ್ತವೆ. ಕನ್ನಡದಲ್ಲೂ ಹೊತ್ತನ್ನು ತಿಳಿಸುವಲ್ಲಿ ಹಿಂದೆ-ಮುಂದೆ ಎಂಬುದೇ ಹೆಚ್ಚಿನೆಡೆಗಳಲ್ಲೂ ಬಳಕೆಯಾಗುತ್ತದೆ; ಆದರೆ, ಮೇಲೆ ಎಂಬುದರ ಬಳಕೆಯೂ ಮುಂದೆ ಎಂಬುದರ ಹುರುಳಿನಲ್ಲಿ ಇದೆ ಎಂಬುದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (2ಕ) ಅವನು ಊಟ ಮಾಡಿದ ಮೇಲೆ ನಾನು ಮಾಡುತ್ತೇನೆ. (2ಚ) ಆಮೇಲೆ ಬಂದವರಿಗೆ ಸಿಹಿ ತಿಂಡಿಯಿರಲಿಲ್ಲ. (2ಟ) ಮೂರು ವರ್ಶದ ಮೇಲೆ ಅವರು ಈ ಊರಿಗೆ ಬರಲಿದ್ದಾರೆ. ಕೆಳಗೆ ಎಂಬುದರ ಬಳಕೆಯೂ ಮೂರು ವರ್ಶದ ಕೆಳಗೆ ಎಂಬಂತಹ ಕಡೆಗಳಲ್ಲಿ ಹಿಂದೆ ಎಂಬುದರ ಹುರುಳಿನಲ್ಲಿ ಕಾಣಿಸುತ್ತದೆ.
7.6 ಬೇರೆ ನೆರವು ಪಾಂಗುಗಳು
ಹೊತ್ತು ಮತ್ತು ಇಂಬುಗಳು ಮಾತ್ರವಲ್ಲದೆ, ಎಸಕದ ಮುಟ್ಟು (ಕರಣ), ಕತ (ಕಾರಣ), ಅಳಬು (ಉದ್ದೇಶ) ಮೊದಲಾದ ಬೇರೆಯೂ ಕೆಲವು ವಿಶಯಗಳನ್ನು ತಿಳಿಸುವುದಕ್ಕಾಗಿ ಸುರು, ಗುರಿ, ಮತ್ತು ಜಾಗ ಪಾಂಗುಗಳನ್ನು ನೆರವು ಪಾಂಗುಗಳಾಗಿ ಸೊಲ್ಲುಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಒಡನಾಡಿ, ಹೋಲುಗ, ಮತ್ತು ಹತೋಟಿ ತಪ್ಪಿದ ಮಾಡುಗ ಎಂಬಂತಹ ಕೆಲವು ಹೆಚ್ಚಿನ ಪಾಂಗುಗಳನ್ನೂ ನೆರವು ಪಾಂಗುಗಳಾಗಿ ಬಳಸಲಾಗುತ್ತದೆ. ಅವುಗಳ ಬಳಕೆಯೆಂತಹದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:
7.6.1 ಎಸಕದ ಮುಟ್ಟು
ಒಂದು ಎಸಕವನ್ನು ನಡೆಸುವಲ್ಲಿ ಬಳಕೆಯಾಗಿರುವ ಮುಟ್ಟನ್ನು (ಕರಣವನ್ನು) ಎಸಕದ ಸುರು ಪಾಂಗಾಗಿ ಇಲ್ಲವೇ ಜಾಗ ಪಾಂಗಾಗಿ ತಿಳಿಸಲಾಗುತ್ತದೆ: (1ಕ) ಅವನು ನಾಯಿಯನ್ನು ಕೋಲಿನಿಂದ ಹೊಡೆದ. (1ಚ) ಅವನು ನಾಯಿಯನ್ನು ಕೋಲಿನಲ್ಲಿ ಹೊಡೆದ. (2ಕ) ಅವನು ಕತೆಯನ್ನು ಪಚ್ಚೆ ಶಾಯಿಯಲ್ಲಿ ಬರೆದ. (2ಚ) ಅವನು ಕತೆಯನ್ನು ಪಚ್ಚೆ ಶಾಯಿಯಿಂದ ಬರೆದ. ಹೆಚ್ಚಿನೆಡೆಗಳಲ್ಲೂ ಎಸಕದ ಮುಟ್ಟನ್ನು ಈ ರೀತಿ ಸುರು ಪಾಂಗಾಗಿಯೂ ತಿಳಿಸ ಬಹುದು, ಇಲ್ಲವೇ ಜಾಗ ಪಾಂಗಾಗಿಯೂ ತಿಳಿಸಬಹುದು; ಆದರೆ, ಇದಕ್ಕೆ ಕೆಲವು ಹೊರಪಡಿಕೆಗಳೂ ಇವೆ: (1) ಎಸಕಪದದ ಪಾಂಗಿಟ್ಟಳದಲ್ಲೇನೇ ಸುರು ಇಲ್ಲವೇ ಜಾಗ ಪಾಂಗು ಬಂದಿದೆ ಯಾದರೆ, ಮುಟ್ಟನ್ನು ತಿಳಿಸಲು ಅವನ್ನೇ ಬಳಸುವ ಬದಲು ಸೊಲ್ಲಿನಲ್ಲಿ ಬಳಕೆ ಯಾಗದ ಪಾಂಗನ್ನು (ಸುರು ಪಾಂಗು ಬಂದಿದೆಯಾದರೆ ಜಾಗ ಪಾಂಗನ್ನು, ಮತ್ತು ಜಾಗ ಪಾಂಗು ಬಂದಿದೆಯಾದರೆ ಸುರು ಪಾಂಗನ್ನು) ಬಳಸಲಾಗುತ್ತದೆ: (3ಕ) ಅವನು ಅಂಗಳದಲ್ಲಿ ಬಿಸಿನೀರಿನಿಂದ ಕಾಲು ತೊಳೆದ > *ಅವನು ಅಂಗಳದಲ್ಲಿ ಬಿಸಿನೀರಿನಲ್ಲಿ ಕಾಲು ತೊಳೆದ. (3ಚ) ಅವನು ಬಾವಿಯಿಂದ ರಾಟೆಯಲ್ಲಿ ನೀರು ಸೇದಿದ > *ಅವನು ಬಾವಿಯಿಂದ ರಾಟೆಯಿಂದ ನೀರು ಸೇದಿದ. ಆದರೆ, ಈ ಎರಡು ಬಗೆಯ ಪಾಂಗುಗಳನ್ನು ಬೇರೆ ಪದ ಇಲ್ಲವೇ ಪದಕಂತೆಗಳು ಬೇರ್ಪಡಿಸುತ್ತಿವೆಯಾದರೆ, ಸುರು ಇಲ್ಲವೇ ಜಾಗ ಪಾಂಗುಗಳನ್ನು ಒಂದೇ ಸೊಲ್ಲಿನಲ್ಲಿ ಇಟ್ಟಳದ ಪಾಂಗು ಮತ್ತು ನೆರವು ಪಾಂಗುಗಳೆರಡನ್ನೂ ತಿಳಿಸುವ ಹಾಗೆ ಬಳಸಲು ಬರುತ್ತದೆ: (3ಟ) ಅವನು ಅಂಗಳದಲ್ಲಿ ನಾನು ತಂದುಕೊಟ್ಟ ಬಿಸಿನೀರಿನಲ್ಲಿ ಕಾಲು ತೊಳೆದ. (3ತ) ?ಅವನು ಬಾವಿಯಿಂದ ನಿನ್ನೆ ತಾನೇ ತಂದ ಹೊಸ ಹಗ್ಗದಿಂದ ನೀರು ಸೇದಿದ.
(2) ಎಸಕದಲ್ಲಿ ಬಳಕೆಯಾಗುವ ವಸ್ತುಗಳನ್ನೂ ಅದರ ಸುರು ಇಲ್ಲವೇ ಜಾಗ ಪಾಂಗಾಗಿ ತಿಳಿಸಲು ಬರುತ್ತದೆ; ಈ ರೀತಿ ತಿಳಿಸಿರುವಲ್ಲಿ ಅದರೊಂದಿಗೆ ಎಸಕದ ಮುಟ್ಟನ್ನೂ ತಿಳಿಸಬೇಕಾದಾಗ, ಅವುಗಳಲ್ಲಿ ಒಂದನ್ನು ಸುರು ಪಾಂಗಾಗಿ ತಿಳಿಸಲಾಗಿದೆ ಯಾದರೆ ಇನ್ನೊಂದನ್ನು ಜಾಗ ಪಾಂಗಾಗಿ ತಿಳಿಸಲಾಗುತ್ತದೆ: (4ಕ) ಅವನು ಮಣ್ಣಿನಿಂದ ಕಯ್ಯಲ್ಲಿ ಒಂದು ಗೊಂಬೆ ಮಾಡಿದ. (4ಚ) ಅವನು ಮಣ್ಣಿನಲ್ಲಿ ಕಯ್ಯಿಂದ ಒಂದು ಗೊಂಬೆ ಮಾಡಿದ. (4ಟ) *ಅವನು ಮಣ್ಣಿನಿಂದ ಕಯ್ಯಿಂದ ಒಂದು ಗೊಂಬೆ ಮಾಡಿದ. (4ತ) *ಅವನು ಮಣ್ಣಿನಲ್ಲಿ ಕಯ್ಯಲ್ಲಿ ಒಂದು ಗೊಂಬೆ ಮಾಡಿದ. ಎಸಕದಲ್ಲಿ ಬಳಕೆಯಾದ ಮುಟ್ಟು ಮತ್ತು ವಸ್ತುಗಳೆರಡನ್ನೂ (4ಟ)ದಲ್ಲಿ ಸುರು ಪಾಂಗಾಗಿ ತಿಳಿಸಲಾಗಿದೆ, ಮತ್ತು (4ತ)ದಲ್ಲಿ ಜಾಗ ಪಾಂಗಾಗಿ ತಿಳಿಸಲಾಗಿದೆ; ಹಾಗಾಗಿ ಅವೆರಡು ಸೊಲ್ಲುಗಳೂ ಸರಿಯಿಲ್ಲ. (3) ಮಾಡುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಮಾತ್ರ ಮುಟ್ಟನ್ನು ತಿಳಿಸುವ ಸುರು ಇಲ್ಲವೇ ಜಾಗ ಪಾಂಗು ನೆರವು ಪಾಂಗಾಗಿ ಬರಬಲ್ಲುದಲ್ಲದೆ, ಆಗುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಬರಲಾರದು: (5ಕ) *ಚೂರಿಯಿಂದ ಹಣ್ಣು ಚುಚ್ಚಿತು. (5ಚ) *ಹಲ್ಲಿನಲ್ಲಿ ಹಗ್ಗ ಕಡಿಯಿತು. (4) ನೇರವಾಗಿ ಒಂದು ಎಸಕವನ್ನು ನಡೆಸುವಂತಹದು, ಮತ್ತು ಒಂದು ಎಸಕ ವನ್ನು ನಡೆಸುವಲ್ಲಿ ನೆರವನ್ನು ನೀಡುವಂತಹದು ಎಂಬುದಾಗಿ ಮುಟ್ಟುಗಳಲ್ಲಿ ಎರಡು ಬಗೆಯವನ್ನು ಕಾಣಬಹುದು: (6ಕ) ಅವನು ಕಲ್ಲನ್ನು ಒಂದು ಸುತ್ತಿಗೆಯಿಂದ ಒಡೆದ. (6ಚ) ಅವನು ಪಾಯಸವನ್ನು ಒಂದು ಚಮಚದಿಂದ ತಿಂದ. (6ಕ) ಸೊಲ್ಲು ಒಡೆಯುವ ಎಸಕವನ್ನು ತಿಳಿಸುತ್ತಿದ್ದು, ಅದನ್ನು ಸುತ್ತಿಗೆ ನೇರವಾಗಿ ನಡೆಸುತ್ತದೆ, ಹಾಗಾಗಿ, ಸುತ್ತಿಗೆಯನ್ನು (6ಕ) ಸೊಲ್ಲಿನ ಮಾಡುಗ ಪಾಂಗಾಗಿಯೂ ಬಳಸಲು ಬರುತ್ತದೆ ((6ಟ) ನೋಡಿ); ಆದರೆ, ಚಮಚವನ್ನು ಆ ರೀತಿ (6ಚ) ಸೊಲ್ಲಿನ ಮಾಡುಗ ಪಾಂಗಾಗಿ ಮಾಡಲು ಬರುವುದಿಲ್ಲ; ಯಾಕೆಂದರೆ, (6ಚ) ಸೊಲ್ಲು ತಿನ್ನುವ ಎಸಕವನ್ನು ತಿಳಿಸುತ್ತಿದ್ದು, ಅದನ್ನು ನಡೆಸುವಲ್ಲಿ ಚಮಚ ನೆರವನ್ನು ಮಾತ್ರ ಕೊಡುತ್ತದೆ ((6ತ) ನೋಡಿ): (6ಟ) ಸುತ್ತಿಗೆ ಕಲ್ಲನ್ನು ಒಡೆಯಿತು. (6ತ) *ಚಮಚ ಪಾಯಸವನ್ನು ತಿಂದಿತು. (5) ಹಲವು ಎಸಕಪದಗಳಿಗೆ ಅವುಗಳದೇ ಆದ ಮುಟ್ಟುಗಳಿರುತ್ತವೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎಸಕಪದಗಳಿಗಿರುವ ಅವುಗಳದೇ ಆದ ಮುಟ್ಟು ಗಳನ್ನು ಅವುಗಳ ಎದುರು ಕೊಡಲಾಗಿದೆ: ಕಚ್ಚು ಹಲ್ಲು ನೋಡು ಕಣ್ಣು ಕೇಳು ಕಿವಿ ತುಳಿ ಕಾಲು ನೆಕ್ಕು ನಾಲಿಗೆ ಮೂಸು ಮೂಗು ಕೇರು ಗೆರಸೆ ತೊಳೆ ನೀರು ತುರುವು ತುರಿಮಣೆ ಪರಚು ಉಗುರು
ಬಾಚು ಬಾಚಣಿಗೆ ಮೆಟ್ಟು ಕಾಲು ಉಳು ನೇಗಿಲು ಅಗೆ ಗುದ್ದಲಿ ಸಾಮಾನ್ಯವಾಗಿ, ಇಂತಹ ಪದಗಳನ್ನು ಬಳಸುವಾಗ ಅವುಗಳ ಮುಟ್ಟನ್ನು ತಿಳಿಸ ಬೇಕಾಗುವುದಿಲ್ಲ; ಆದರೆ, ಈ ಮುಟ್ಟುಗಳ ಕುರಿತಾಗಿ ಹೆಚ್ಚಿನದೇನಾದರೂ ತಿಳಿಸಬೇಕಾಗಿರುವಲ್ಲಿ ಅವನ್ನು ಬಳಸಬೇಕಾಗುತ್ತದೆ: (8ಕ) ಅವನು ಮಣ್ಣು ಕಾಲಿನಿಂದಲೇ ಹುಡುಗನನ್ನು ತುಳಿದ. (8ಚ) ಅವನು ಬಿಸಿನೀರಿನಲ್ಲಿ ಕಾಲು ತೊಳೆದ. (8ಟ) ಬೆಕ್ಕು ತನ್ನ ಹರಿತವಾದ ಉಗುರಿನಿಂದ ಮಗುವನ್ನು ಪರಚಿತು. (6) ಎಸಕದ ಮುಟ್ಟನ್ನು ತಿಳಿಸುವುದಕ್ಕಾಗಿ ಸುರು ಪಾಂಗನ್ನು ಬಳಸುವಲ್ಲಿ ಎಸಕ ಆ ಮುಟ್ಟಿನಿಂದ ತೊಡಗಿದೆ ಎಂಬ ಹುರುಳು ದೊರಕುತ್ತದೆ, ಮತ್ತು ಅದಕ್ಕಾಗಿ ಜಾಗ ಪಾಂಗನ್ನು ಬಳಸುವಲ್ಲಿ ಎಸಕಕ್ಕೆ ಅದು ಜಾಗವಾಗಿದೆ ಎಂಬ ಹುರುಳು ದೊರಕುತ್ತದೆ; ಹಾಗಾಗಿ, ಅಂತಹ ಹುರುಳನ್ನು ಪಡೆಯಲು ಸಾದ್ಯವಿಲ್ಲದಂತಹ ಕಡೆಗಳಲ್ಲಿ ಮುಟ್ಟನ್ನು ಸುರು ಇಲ್ಲವೇ ಜಾಗ ಪಾಂಗಾಗಿ ಬಳಸಲು ಬರುವುದಿಲ್ಲ.
7.6.2 ಎಸಕದ ಕತ
ಒಂದು ಎಸಕ ನಡೆಯಲು ಇನ್ನೊಂದು ಎಸಕ ಕತ(ಕಾರಣ)ವಾಗಿರಬಲ್ಲುದು; ಇಂತಹ ಸಂದರ್ಬದಲ್ಲಿ ಮೊದಲು ನಡೆದ ಎಸಕವನ್ನು ಎರಡನೆಯದರ ಸುರು ಪಾಂಗಾಗಿ ತಿಳಿಸಲಾಗುತ್ತದೆ: (1ಕ) ರಜೆ ಸಿಕ್ಕಿದುದರಿಂದ ಅವನು ಮನೆಯಲ್ಲೇ ಇದ್ದ. (1ಚ) ಜೋರಾಗಿ ಮಳೆ ಬಂದುದರಿಂದ ಇವತ್ತು ರಜೆ ಕೊಟ್ಟಿದ್ದಾರೆ. (1ಟ) ಮದ್ದು ಕುಡಿದುದರಿಂದ ಅವನಿಗೆ ಚನ್ನಾಗಿ ನಿದ್ದೆ ಬಂತು. ಮೇಲಿನ ಸೊಲ್ಲುಗಳಲ್ಲಿ ಕತವಾಗಿ ಬಂದಿರುವ ಎಸಕ ಮುಕ್ಯ ಎಸಕದ ಮೊದಲೇ ನಡೆದಿರುತ್ತದೆ; ಹಾಗಾಗಿ, ಅದನ್ನು ಹಿಂಬೊತ್ತಿನ ಹೆಸರುರೂಪದಲ್ಲಿ ತಿಳಿಸಲಾಗಿದೆ. ಮುಕ್ಯ ಎಸಕದ ಬಳಿಕ ನಡೆಯಲಿರುವ ಎಸಕವನ್ನೂ ಅದರ ಕತವೆಂಬುದಾಗಿ ತಿಳಿಸಲು ಬರುತ್ತದೆ; ಆದರೆ, ಇಂತಹ ಸಂದರ್ಬಗಳಲ್ಲಿ ಆ ಎಸಕ ಮುಂದೆ ನಡೆಯುವು ದೆಂಬುದು ಕಚಿತವಾಗಿರುತ್ತದೆ: (2ಕ) ಸಿನಿಮಾಕ್ಕೆ ಹೋಗಲಿರುವುದರಿಂದ ಅವನು ಆಪೀಸಿನಿಂದ ಬೇಗನೆ ಬಂದ. (2ಚ) ಇವತ್ತು ಶಾಲೆ ಮದ್ಯಾನ್ನಕ್ಕೇ ಮುಗಿಯುವುದರಿಂದ ಲೆಕ್ಕದ ಪಾಟ ಇಲ್ಲ. (2ಟ) ಊಟಕ್ಕೆ ತುಂಬಾ ಮಂದಿ ಇರುವುದರಿಂದ ಆಕೆ ಅಡಿಗೆಯವನನ್ನು ಕರೆಸಿದ್ದಳು. ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಎಸಕಗಳನ್ನು ಕತವಾಗಿ ಬಳಸುವ ಬದಲು, ಬೇರೆ ಬಗೆಯ ಕತಗಳನ್ನು ಬಳಸಲಾಗಿದೆ, ಮತ್ತು ಇದಕ್ಕಾಗಿಯೂ ಸುರು ಪಾಂಗನ್ನು ಬಳಸಲಾಗಿದೆ: (3ಕ) ಅವನು ನೋವಿನಿಂದ ನರಳಿದ. (3ಚ) ಗೆಲ್ಲು ಕಾಯಿಗಳಿಂದ ಜಗ್ಗಿದೆ. (3ಟ) ಅವನು ಮಲೇರಿಯಾದಿಂದ ಸತ್ತ.
(3ತ) ನೆರೆಯಿಂದ ಅವನಿಗೆ ತುಂಬಾ ತೊಂದರೆಯಾಯಿತು. ಇಂತಹದೇ ಹುರುಳನ್ನು ಕೆಲವೆಡೆಗಳಲ್ಲಿ ಜಾಗ ಪಾಂಗನ್ನು ಬಳಸಿಯೂ ತಿಳಿಸಲು ಬರುತ್ತದೆ: (4ಕ) ಅವನು ಸಿಟ್ಟಿನಿಂದ ಕೂಗಾಡಿದ > ಸಿಟ್ಟಿನಲ್ಲಿ ಕೂಗಾಡಿದ. (4ಚ) ನೆರೆಯಲ್ಲಿ ಅವನಿಗೆ ತುಂಬಾ ತೊಂದರೆಯಾಯಿತು. ಆದರೆ, ಇಲ್ಲಿಯೂ ಕೂಡ, ಎಸಕಕ್ಕೆ ಕತ ಜಾಗವಾಗಿದೆ ಎಂಬ ಹುರುಳು ಸಿಗಲಾರದಾದರೆ, ಅದನ್ನು ಜಾಗವಾಗಿ ಬಳಸಲು ಬರುವುದಿಲ್ಲ: (4ಟ) *ಗೆಲ್ಲು ಕಾಯಿಗಳಲ್ಲಿ ಜಗ್ಗಿದೆ. ಇದಲ್ಲದೆ, ಬೇರೊಂದು ಎಸಕ ಕತವಾಗಿ ಬಂದಿರುವಲ್ಲೂ ಅದನ್ನು ಜಾಗವಾಗಿ ಬಳಸಲು ಬರುವುದಿಲ್ಲವೆಂದು ತೋರುತ್ತದೆ: (4ತ) *ರಜೆ ಸಿಕ್ಕಿರುವುದರಲ್ಲಿ ಅವನು ಮನೆಯಲ್ಲೇ ಇದ್ದ. (4ಪ) *ಜೋರಾಗಿ ಮಳೆ ಬಂದುದರಲ್ಲಿ ಇವತ್ತು ರಜೆ ಕೊಟ್ಟಿದ್ದಾರೆ.
7.6.3 ಎಸಕದ ಅಳಬು
ಒಂದು ಎಸಕವನ್ನು ನಡೆಸಲು ಮಾಡುಗನಿಗಿರುವ ಅಳಬನ್ನು (ಉದ್ದೇಶವನ್ನು) ಅದರ ಗುರಿ ಪಾಂಗಾಗಿ ತಿಳಿಸಲಾಗುತ್ತದೆ: (1ಕ) ಮಗಳ ಮದುವೆಗೆ ಆತ ಅರುವತ್ತು ಸಾವಿರ ಸಾಲ ಮಾಡಿದ. (1ಚ) ಆಕೆ ರಾತ್ರಿಯ ಪೂಜೆಗೆ ಹೂ ಕೊಯ್ಯುತ್ತಿದ್ದಾಳೆ. (1ಟ) ನೆಂಟರ ಊಟಕ್ಕೆ ಅವಳು ಪಾಯಸ ಮಾಡಿದ್ದಳು. (1ತ) ಆಕೆ ದೋಸೆಗೆ ಹಿಟ್ಟು ಕಲಸುತ್ತಿದ್ದಾಳೆ. (1) ಎಸಕಪದಗಳ ಹೆಸರುರೂಪಗಳನ್ನೂ ಈ ರೀತಿ ಬೇರೊಂದು ಎಸಕದ ಅಳಬನ್ನು ತಿಳಿಸುವಲ್ಲಿ ಬಳಸಲಾಗುತ್ತದೆ: (1ಕ) ಅವನು ನಿಮ್ಮನ್ನು ಕಾಣುವುದಕ್ಕೆ ಬಂದಿದ್ದಾನೆ. (1ಚ) ಸೀರೆ ಕೊಳ್ಳುವುದಕ್ಕೆ ಅವನು ಮುಂಬಯಿಗೆ ಹೋದ. ಎಸಕದ ಅಳಬು ಎಸಕದ ಬಳಿಕ ನಡೆಯುವ ಕಾರಣ, ಅದನ್ನು ತಿಳಿಸುವ ಎಸಕಪದದ ಹೆಸರುರೂಪಗಳು ಮುಂಬೊತ್ತಿನಲ್ಲಿ ಬರುತ್ತದೆ ಎಂಬುದನ್ನು ಮೇಲೆ (1ಕ-ಚ)ದಲ್ಲಿ ಕಾಣಬಹುದು. (2) ಈ ನೆರವು ಪಾಂಗನ್ನು ಮಾಡುಗ ಪಾಂಗಿರುವ ಸೊಲ್ಲುಗಳಲ್ಲಿ ಮಾತ್ರ ಬಳಸಲು ಬರುತ್ತದೆ; ಯಾಕೆಂದರೆ, ಒಂದು ಅಳಬನ್ನು ಮುಂದಿಟ್ಟುಕೊಂಡು ಎಸಕವನ್ನು ನಡೆಸಬೇಕಿದ್ದಲ್ಲಿ, ಹಾಗೆ ನಡೆಸುವವನಿಗೆ ಅದರ ಮೇಲೆ ಹತೋಟಿಯಿರ ಬೇಕಾಗುತ್ತದೆ. (3) ಒಂದು ಸೊಲ್ಲಿನಲ್ಲಿ ಅಳಬನ್ನು ತಿಳಿಸುವ ಗುರಿ ಪಾಂಗಿನೊಂದಿಗೆ ಬೇರೊಂದು ಬಗೆಯ ಗುರಿ ಪಾಂಗು ಬಂದಿದೆಯಾದರೆ, ಅವೆರಡನ್ನು ಬೇರ್ಪಡಿಸುವುದಕ್ಕಾಗಿ ಅಳಬನ್ನು ತಿಳಿಸುವ ಗುರಿ ಪಾಂಗಿಗೆ ಓಸ್ಕರ ಎಂಬುದನ್ನು ಸೇರಿಸಲಾಗುತ್ತದೆ:
(2ಕ) ಪೂಜೆಗೋಸ್ಕರ ಅವನು ಮನೆಗೆ ಬೇಗ ಬಂದಿದ್ದಾನೆ. (2ಚ) ಆಕೆ ಸೀರೆಗೋಸ್ಕರ ಗಂಡನಿಗೆ ಸುಳ್ಳು ಹೇಳುತ್ತಿದ್ದಾಳೆ. (2ಟ) *ಆಕೆ ಸೀರೆಗೆ ಗಂಡನಿಗೆ ಸುಳ್ಳು ಹೇಳುತ್ತಿದ್ದಾಳೆ. ಓಸ್ಕರ ಎಂಬುದನ್ನು ಬಳಸದಿರುವ (2ಟ) ಸೊಲ್ಲು ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು.
7.6.4 ಎಸಕದ ಒಡನಾಡಿ
ಎಸಕದಲ್ಲಿ ತೊಡಗಿಕೊಳ್ಳುವ ಒಂದು ಪಾಂಗಿನೊಂದಿಗೆ ಇನ್ನೊಂದು ಪಾಂಗೂ ಸೇರಿಕೊಂಡಿದೆ ಎಂಬುದನ್ನು ತಿಳಿಸಲು ಒಡನಾಡಿ ಎಂಬ ಬೇರೆಯೇ ಒಂದು ಪಾಂಗನ್ನು ಬಳಸಲಾಗುತ್ತದೆ, ಮತ್ತು ಇದನ್ನು ಗುರುತಿಸುವುದಕ್ಕಾಗಿ ಹೆಸರುಪದಕ್ಕೆ ಇಲ್ಲವೇ ಹೆಸರುಕಂತೆಗೆ ಒಂದಿಗೆ ಇಲ್ಲವೇ ಒಡನೆ ಎಂಬುದನ್ನು ಸೇರಿಸಲಾಗುತ್ತದೆ: (1ಕ) ಆಕೆ ತನ್ನ ಗೆಳತಿಯೊಡನೆ ಮದುವೆಗೆ ಹೋಗಿದ್ದಾಳೆ. (1ಚ) ಆತ ಹಾಸಿಗೆಯೊಂದಿಗೆ ಒದ್ದೆ ಬಟ್ಟೆಯನ್ನೂ ಮಡಚುತ್ತಿದ್ದಾನೆ. (1ಟ) ಆಕೆ ಕೊಡದೊಂದಿಗೆ ತಂಬಿಗೆಯಲ್ಲೂ ನೀರು ತುಂಬಿದ್ದಾಳೆ. (1ತ) ಅವರು ನನ್ನೊಂದಿಗೆ ಆಕೆಗೂ ಏಟು ಕೊಟ್ಟರು. (1ಪ) ಅವರು ನನ್ನೊಂದಿಗೆ ಆಕೆಯಿಂದಲೂ ಹಣ ಪಡೆದರು. (1ಗ) ಕೆನ್ನೆಯೊಂದಿಗೆ ತುಟಿಯೂ ಬಾತಿದೆ. (1) ಉಳಿದ ಪಾಂಗುಗಳ ಹಾಗೆ ಒಡನಾಡಿ ಪಾಂಗನ್ನು ನೇರವಾಗಿ ಎಸಕಪದ ದೊಂದಿಗೆ ಸಂಬಂದಿಸುವುದಿಲ್ಲ; ಇದಕ್ಕೆ ಬದಲು, ಸೊಲ್ಲಿನ ಯಾವುದಾದರೂ ಒಂದು ಪಾಂಗಿನ ಮೂಲಕ ಸಂಬಂದಿಸಲಾಗುತ್ತದೆ. ಎತ್ತುಗೆಗಾಗಿ, ಮೇಲೆ (1ಕ-ಗ) ಸೊಲ್ಲುಗಳಲ್ಲಿ ಒಡನಾಡಿ ಪಾಂಗನ್ನು ಮಾಡುಗ, ಈಡು, ಜಾಗ, ಗುರಿ, ಸುರು, ಮತ್ತು ಆಗುಗಗಳ ಮೂಲಕ ಎಸಕಪದದೊಂದಿಗೆ ಸಂಬಂದಿಸಲಾಗಿದೆ. (2) ಒಡನಾಡಿ ಪಾಂಗು ಮತ್ತು ಅದನ್ನು ಎಸಕಪದದೊಂದಿಗೆ ಸಂಬಂದಿಸುವ ಪಾಂಗು ಇವೆರಡನ್ನು ಅದಲು ಬದಲು ಮಾಡಲು ಬರುತ್ತದೆ: (2ಕ) ಅವರು ನನ್ನೊಂದಿಗೆ ಆಕೆಗೂ ಏಟು ಕೊಟ್ಟರು > ಅವರು ಆಕೆ ಯೊಂದಿಗೆ ನನಗೂ ಏಟು ಕೊಟ್ಟರು. (2ಚ) ಆಕೆ ಬೆಣ್ಣೆಯನ್ನು ಬೆಲ್ಲದೊಂದಿಗೆ ಬೆರೆಸುತ್ತಿದ್ದಾಳೆ > ಆಕೆ ಬೆಲ್ಲದೊಂದಿಗೆ ಬೆಣ್ಣೆಯನ್ನು ಬೆರೆಸುತ್ತಿದ್ದಾಳೆ. (2ಟ) ಅವರು ನನ್ನೊಂದಿಗೆ ಆಕೆಯಿಂದಲೂ ಹಣ ಪಡೆದರು > ಅವರು ಆಕೆಯೊಂದಿಗೆ ನನ್ನಿಂದಲೂ ಹಣ ಪಡೆದರು. ಮೇಲೆ ಕೊಟ್ಟಿರುವ ಎರಡೆರಡು ಸೊಲ್ಲುಗಳ ನಡುವೆ ಕಾಣಿಸುವ ಹುರುಳಿನ ವ್ಯತ್ಯಾಸಕ್ಕೆ ಅವುಗಳಲ್ಲಿ ಬಳಕೆಯಾದ ಪಾಂಗುಗಳ ಬಳಕೆಪತ್ತುಗೆಯೇ ಕಾರಣ ಎಂದು ಹೇಳಬಹುದು. (3) ಇಟ್ಟಳದ ಪಾಂಗುಗಳ ಮೂಲಕ ಮಾತ್ರವಲ್ಲದೆ ಕೆಲವು ನೆರವು ಪಾಂಗುಗಳ ಮೂಲಕವೂ ಒಡನಾಡಿ ಪಾಂಗನ್ನು ಎಸಕಪದದೊಂದಿಗೆ ಸಂಬಂದಿಸಲು ಬರುತ್ತದೆ: (3ಕ) ಅವನು ನೋವಿನೊಂದಿಗೆ ಬೇಸರದಿಂದಲೂ ನರಳುತ್ತಿದ್ದ. (3ಚ) ಮಗಳ ಮದುವೆಯೊಂದಿಗೆ ತಾಯಿಯ ಸಾವಿಗೂ ಆತ ಸಾಲ ಮಾಡಬೇಕಾಯಿತು. (3ಕ)ದಲ್ಲಿ ಒಡನಾಡಿ ಪಾಂಗನ್ನು ಕತ ಪಾಂಗಿನೊಂದಿಗೆ, ಮತ್ತು (3ಚ)ದಲ್ಲಿ ಅಳಬು ಪಾಂಗಿನೊಂದಿಗೆ ಬಳಸಲಾಗಿದೆ.
(4) ಎಸಕಗಳನ್ನು ತಿಳಿಸುವ ಸೊಲ್ಲುಗಳಲ್ಲಿ ಮಾತ್ರವಲ್ಲದೆ ಇರುಹವನ್ನು ತಿಳಿಸುವ ಸೊಲ್ಲುಗಳಲ್ಲೂ ಒಡನಾಡಿ ಪಾಂಗನ್ನು ನೆರವು ಪಾಂಗಾಗಿ ಬಳಸಲು ಬರುತ್ತದೆ; ಇರುವಿಕೆಯ ಇಟ್ಟಳದಲ್ಲಿ ಇದು ಇರುಗ ಮತ್ತು ಜಾಗಗಳೆರಡರೊಂದಿಗೂ ಬರ ಬಲ್ಲುದು; ಆದರೆ, ಜಾಗ ಪಾಂಗಿನೊಂದಿಗಿನ ಬಳಕೆ ಅಶ್ಟು ಚನ್ನಾಗಿಲ್ಲ: (4ಕ) ರಾಜುವಿನೊಂದಿಗೆ ಹರಿಯೂ ಮನೆಯಲ್ಲಿದ್ದ. (4ಚ) ?ಕೊಡದೊಂದಿಗೆ ತಂಬಿಗೆಯಲ್ಲೂ ನೀರಿತ್ತು. ಪರಿಚೆ ಇಟ್ಟಳದ ಸೊಲ್ಲುಗಳಲ್ಲಿ ಇರುಗ ಪಾಂಗಿನೊಂದಿಗೆ ಮಾತ್ರ ಅದು ಬಳಕೆ ಯಾಗಬಲ್ಲುದಲ್ಲದೆ, ಪರಿಚೆ ಪಾಂಗಿನೊಂದಿಗೆ ಬರಲಾರದು: (5ಕ) ಹುಡುಗರೊಂದಿಗೆ ದೊಡ್ಡವರೂ ಸಪ್ಪಗಿದ್ದಾರೆ. (5ಚ) *ಈ ಬುಟ್ಟಿಯ ಹಣ್ಣುಗಳು ಮೆತ್ತಗಿನೊಂದಿಗೆ ಸಿಹಿಯಿವೆ. ಪತ್ತುಗೆ ಇಟ್ಟಳದ ಸೊಲ್ಲುಗಳಲ್ಲಿ ಇರುಗ ಮತ್ತು ಪತ್ತುಗೆ ಪಾಂಗುಗಳೆರಡ ರೊಂದಿಗೂ ಅದು ಬರಬಲ್ಲುದು: (6ಕ) ಇವತ್ತು ಹುಡುಗರೊಂದಿಗೆ ದೊಡ್ಡವರಿಗೂ ರಜೆಯಿದೆ. (6ಚ) ಅವನಿಗೆ ನನ್ನ ಮೇಲೆ ಕೋಪದೊಂದಿಗೆ ಬೇಸರವೂ ಇದೆ.
7.6.5 ಎಸಕದ ಹೋಲುಗ
ಹೋಲುಗ ಎಂಬ ಇನ್ನೊಂದು ನೆರವು ಪಾಂಗನ್ನೂ ಸೊಲ್ಲುಗಳಲ್ಲಿ ಬಳಸಲು ಬರುತ್ತದೆ, ಮತ್ತು ಇದಕ್ಕಾಗಿ ಅಂತೆ ಎಂಬ ಒಟ್ಟನ್ನು ಇಲ್ಲವೇ ಹಾಗೆ ಎಂಬ ಪದವನ್ನು ಬಳಸಲಾಗುತ್ತದೆ. ಒಡನಾಡಿ ಪಾಂಗಿನ ಹಾಗೆ ಈ ಪಾಂಗನ್ನೂ ಸೊಲ್ಲಿನಲ್ಲಿ ಬಂದಿರುವ ಬೇರೊಂದು ಪಾಂಗಿನ ಮೂಲಕ ಎಸಕಪದದೊಂದಿಗೆ ಸಂಬಂದಿಸ ಲಾಗುತ್ತದೆ, ಮತ್ತು ಸೊಲ್ಲಿನ ಎಲ್ಲಾ ಬಗೆಯ ಪಾಂಗುಗಳೊಂದಿಗೂ ಅದನ್ನು ಈ ರೀತಿ ಬಳಸಲು ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ರಾಜುವಿನ ಹಾಗೆ ಹರಿಗೂ ಕಾಲಿಗೆ ಪೆಟ್ಟಾಗಿದೆ. (1ಚ) ದನಗಳಂತೆ ಎಮ್ಮೆಗಳೂ ನಮಗೆ ಹಾಲು ಕೊಡುತ್ತವೆ. (1ಟ) ದನಗಳ ಹಾಗೆ ಎಮ್ಮೆಗಳನ್ನು ಕಾಡಿಗೆ ಬಿಡುವುದಿಲ್ಲ. (1ತ) ಗಿಡಗಳ ಹಾಗೆ ಮರಗಳೂ ಬಿಸಿಲಿಗೆ ಬಾಡಿವೆ. (1ಪ) ಮಂಗಳೂರಿನ ಹಾಗೆ ಮುಂಬಯಿಯಲ್ಲೂ ಮಳೆ ಸುರಿಯುತ್ತಿದೆ. (1ಗ) ಅವನಂತೆ ಇವನಿಂದಲೂ ಹಣ ಪಡೆದಿದ್ದಾರೆ. ಮೇಲಿನ (1ಕ-ಗ) ಸೊಲ್ಲುಗಳಲ್ಲಿ ಗುರಿ, ಮಾಡುಗ, ಈಡು, ಆಗುಗ, ಜಾಗ, ಮತ್ತು ಸುರು ಪಾಂಗುಗಳ ಮೂಲಕ ಹೋಲುಗವನ್ನು ಎಸಕಪದದೊಂದಿಗೆ ಸಂಬಂದಿಸಲಾಗಿದೆ ಎಂಬುದನ್ನು ಗಮನಿಸಬಹುದು. ಬೇರೆ ಕೆಲವು ವಿಶಯಗಳಲ್ಲೂ ಹೋಲುಗ ಪಾಂಗು ಒಡನಾಡಿ ಪಾಂಗನ್ನು ಹೋಲುತ್ತದೆ; ಇಂತಹ ಮೂರು ಹೋಲಿಕೆಗಳನ್ನು ಕೆಳಗೆ ಕೊಡಲಾಗಿದೆ: (1) ಒಡನಾಡಿ ಪಾಂಗಿನ ಹಾಗೆ ಹೋಲುಗ ಪಾಂಗನ್ನೂ ಅದನ್ನು ಎಸಕಪದ ದೊಂದಿಗೆ ಸಂಬಂದಿಸುವ ಪಾಂಗಿನೊಂದಿಗೆ ಅದಲು ಬದಲು ಮಾಡಲು ಬರುತ್ತದೆ:
(2ಕ) ದನಗಳ ಹಾಗೆ ಎಮ್ಮೆಗಳೂ ನಮಗೆ ಹಾಲು ಕೊಡುತ್ತವೆ > ಎಮ್ಮೆಗಳ ಹಾಗೆ ದನಗಳೂ ನಮಗೆ ಹಾಲು ಕೊಡುತ್ತವೆ. (2ಚ) ರಾಜುವಿನಂತೆ ಹರಿಗೂ ಕಾಲಿಗೆ ಪೆಟ್ಟಾಗಿದೆ > ಹರಿಯಂತೆ ರಾಜುವಿಗೂ ಕಾಲಿಗೆ ಪೆಟ್ಟಾಗಿದೆ. (2) ಒಡನಾಡಿ ಪಾಂಗಿನ ಹಾಗೆ ಅದನ್ನು ಕೆಲವು ನೆರವು ಪಾಂಗುಗಳ ಮೂಲಕವೂ ಸಂಬಂದಿಸಲು ಬರುತ್ತದೆ: (3ಕ) ಅವನು ನೋವಿನ ಹಾಗೆ ಬೇಸರದಿಂದಲೂ ನರಳುತ್ತಿದ್ದ. (3ಚ) ಮಗಳ ಮದುವೆಯಂತೆ ತಾಯಿಯ ಸಾವಿಗೂ ಅವನು ಸಾಲ ಮಾಡಬೇಕಾಯಿತು. (3ಟ) ಅಕ್ಕಿ ಹಿಟ್ಟಿನ ಹಾಗೆ ಗೋದಿ ಹಿಟ್ಟಿನಿಂದಲೂ ಈ ತಿಂಡಿಯನ್ನು ಮಾಡಬಹುದು. (3) ಒಡನಾಡಿ ಪಾಂಗಿನ ಹಾಗೆ ಅದನ್ನು ಇರುಹ ಸೊಲ್ಲುಗಳಲ್ಲಿ ಬರುವ ಕೆಲವು ಬಗೆಯ ಇಟ್ಟಳದ ಪಾಂಗುಗಳ ಮೂಲಕವೂ ಇರು ಪದದೊಂದಿಗೆ ಸಂಬಂದಿಸಲು ಬರುತ್ತದೆ: (4ಕ) ಹುಡುಗರ ಹಾಗೆ ಇವತ್ತು ದೊಡ್ಡವರಿಗೂ ರಜೆಯಿದೆ. (4ಚ) ಅವನಿಗೆ ನನ್ನ ಮೇಲೆ ಸಿಟ್ಟಿನ ಹಾಗೆ ಬೇಸರವೂ ಇದೆ. (4ಟ) ಹುಡುಗರ ಹಾಗೆ ದೊಡ್ದವರೂ ಸಪ್ಪಗಿದ್ದಾರೆ.
7.6.6 ಹತೋಟಿ ತಪ್ಪಿದ ಮಾಡುಗ
ಒಂದು ಮಾಡುಗ ಪಾಂಗಿರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ; ಇದರಿಂದಾಗಿ ಅದರಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಎಸಕದ ಮೇಲಿನ ಹತೋಟಿಯನ್ನು ಬಹಳ ಮಟ್ಟಿಗೆ ಕಳೆದುಕೊಳ್ಳುತ್ತದೆ. ಎಶ್ಟರ ಮಟ್ಟಿಗೆ ಅದು ತನ್ನ ಹತೋಟಿಯನ್ನು ಈ ರೀತಿ ಕಳೆದುಕೊಳ್ಳುತ್ತದೆ, ಮತ್ತು ಎಸಕದಲ್ಲಿ ಅದು ಬೇರೆ ಯಾವ ರೀತಿಯಲ್ಲಿ ತೊಡಗಿಕೊಂಡಿರುತ್ತದೆ ಎಂಬುದನ್ನವಲಂಬಿಸಿ, ಅದನ್ನು ಬೇರೊಂದು ಪಾಂಗಾಗಿ ಮಾರ್ಪಡಿಸಲಾಗುತ್ತದೆ. ಹತೋಟಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡರೂ ಎಸಕದ ಮಾಡುಗವಾಗಿಯೇ ಉಳಿದಿರುವಲ್ಲಿ ಅದನ್ನು ಇಟ್ಟಳದ ಪಾಂಗಾಗಿ ಉಳಿಸಿಕೊಳ್ಳುವ ಬದಲು ನೆರವು ಪಾಂಗಾಗಿ ಬಳಸಲು ಬರುತ್ತದೆ, ಮತ್ತು ಇದಕ್ಕಾಗಿ ಅದನ್ನು ಗುರುತಿಸುವ ಪದ ಇಲ್ಲವೇ ಪದಕಂತೆಗೆ ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬ ಪದವನ್ನು ಸೇರಿಸಿ ಹೇಳಲು ಬರುತ್ತದೆ: (1ಕ) ಅವನು ಒಂದು ಮರ ಕಡಿದ > ನಾನು ಅವನ ಕಯ್ಯಲ್ಲಿ ಒಂದು ಮರ ಕಡಿಸಿದೆ. (1ಚ) ಅವನು ಬಾವಿಯಿಂದ ನೀರು ಸೇದಿದ > ನಾನು ಅವನ ಹತ್ತಿರ ಬಾವಿಯಿಂದ ನೀರು ಸೇದಿಸಿದೆ. (1ಟ) ಅವನು ಗೋಡೆಗೆ ಮಣ್ಣು ಮೆತ್ತಿದ > ನಾನು ಅವನ ಕಯ್ಯಲ್ಲಿ ಗೋಡೆಗೆ ಮಣ್ಣು ಮೆತ್ತಿಸಿದೆ. (1ತ) ಅವನು ಅಂಗಳದಲ್ಲಿ ನೀರು ಚೆಲ್ಲಿದ > ನಾನು ಅವನ ಹತ್ತಿರ ಅಂಗಳದಲ್ಲಿ ನೀರು ಚೆಲ್ಲಿಸಿದೆ. (1ಪ) ಅವನು ಮಗುವಿಗೆ ಹಣ್ಣು ತಿನ್ನಿಸಿದ > ನಾನು ಅವನ ಕಯ್ಯಲ್ಲಿ ಮಗುವಿಗೆ ಹಣ್ಣು ತಿನ್ನಿಸಿದೆ. ಮೇಲಿನ ಸೊಲ್ಲುಗಳಲ್ಲಿ ಕಡಿಸುವ, ಸೇದಿಸುವ, ಮೆತ್ತಿಸುವ ಇಲ್ಲವೇ ಚೆಲ್ಲಿಸುವ ಎಸಕಗಳ ಮಾಡುಗನನ್ನು ಮಾತ್ರವೇ ತಿಳಿಸಿದರೂ ಸಾಕಾಗುತ್ತದೆ; ಯಾರ ಕಯ್ಯಲ್ಲಿ ಇಲ್ಲವೇ ಹತ್ತಿರ ಅದನ್ನು ಮಾಡಿಸಲಾಯಿತು ಎಂಬುದನ್ನು ತಿಳಿಸದಿದ್ದರೂ ನಡೆಯುತ್ತದೆ; ಹಾಗಾಗಿ, ಅಂತಹ ಪಾಂಗನ್ನು ಇಟ್ಟಳದ ಪಾಂಗಾಗಿ ತಿಳಿಸುವ ಬದಲು ನೆರವು ಪಾಂಗಾಗಿ ತಿಳಿಸಲಾಗಿದೆ.
ಹೀಗೆ ಮಾಡುವ ಬದಲು, ಅದನ್ನು ಇಟ್ಟಳದ ಪಾಂಗಾಗಿಯೂ ತಿಳಿಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ನಾನು ಅವನಿಂದ ಮರ ಕಡಿಸಿದೆ. (2ಚ) ನಾನು ಅವನಿಂದ ನೀರು ಸೇದಿಸಿದೆ. (2ಟ) ನಾನು ಅವನಿಂದ ಗೋಡೆಗೆ ಮಣ್ಣು ಮೆತ್ತಿಸಿದೆ. (2ತ) ನಾನು ಅವನಿಂದ ಅಂಗಳದಲ್ಲಿ ನೀರು ಚೆಲ್ಲಿಸಿದೆ. (2ಕ-ತ) ಸೊಲ್ಲುಗಳಲ್ಲಿ ಹತೋಟಿ ತಪ್ಪಿದ ಮಾಡುಗ ಪಾಂಗನ್ನು ಸುರು ಪಾಂಗಾಗಿ ತಿಳಿಸಲಾಗಿದೆ; ಆದರೆ, ಹೀಗೆ ಮಾಡಬೇಕಿದ್ದಲ್ಲಿ, ಸೊಲ್ಲಿನಲ್ಲಿ ಮೊದಲಿಗಿದ್ದ ಸುರು ಪಾಂಗನ್ನು ಬಳಸದಿರಬೇಕಾಗುತ್ತದೆ ಎಂಬುದನ್ನು (2ಚ)ದಲ್ಲಿ ಕಾಣಬಹುದು. ಹತೋಟಿ ತಪ್ಪಿದ ಮಾಡುಗವನ್ನು ಸುರು ಪಾಂಗಾಗಿ ಬಳಸಿರುವಲ್ಲಿ, ಎಸಕದ ಸುರು ಆ ಪಾಂಗಿನಿಂದಾಗಿದೆ ಎಂಬುದಕ್ಕೆ ಒತ್ತು ಕೊಡಲಾಗುತ್ತದೆ, ಮತ್ತು ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬುದನ್ನು ಬಳಸಿರುವಲ್ಲಿ ಎಸಕವನ್ನು ಆತನ ಮೂಲಕ ನಡೆಸಲಾಗಿದೆ ಎಂಬುದರ ಮೇಲಶ್ಟೇ ಒತ್ತು ಕೊಡಲಾಗುತ್ತದೆ.
ಅಧ್ಯಾಯ ೮ — ಪಾಂಗಿಟ್ಟಳದಲ್ಲಿ ಮಾರ್ಪಾಡುಗಳು
8.1 ಮುನ್ನೋಟ
ಎಸಕಪದಗಳೊಂದಿಗೆ ಬರುವ ಪಾಂಗಿಟ್ಟಳಗಳಲ್ಲಿ ಎರಡು ಬಗೆಯ ಮಾರ್ಪಾಡುಗಳನ್ನು ನಡೆಸಲು ಬರುತ್ತದೆ: (1) ಕೆಲವು ಎಸಕಪದಗಳನ್ನು ಹಾಗೆಯೇ ಉಳಿಸಿ, ಅವುಗಳೊಂದಿಗೆ ಬರುವ ಪಾಂಗಿಟ್ಟಳಗಳಲ್ಲಿ ಮಾರ್ಪಾಡುಗಳನ್ನು ನಡೆಸಬಹುದು, ಮತ್ತು (2) ಎಸಕಪದಗಳಲ್ಲೇನೇ ಮಾರ್ಪಾಡುಗಳನ್ನು ನಡೆಸಿ, ಅವಕ್ಕೆ ಹೊಂದಿಕೆಯಾಗು ವಂತೆ ಪಾಂಗಿಟ್ಟಳಗಳಲ್ಲೂ ಮಾರ್ಪಾಡುಗಳನ್ನು ನಡೆಸಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಕೊಡ ಒಡೆಯಿತು. (1ಚ) ಜಾನಕಿ ಕೊಡವನ್ನು ಒಡೆದಳು. (1ಕ)ದಲ್ಲಿ ಬಂದಿರುವ ಒಡೆ ಎಸಕಪದ (1ಚ)ದಲ್ಲಿ ಹಾಗೆಯೇ ಉಳಿದಿದೆ; ಹಾಗಿದ್ದರೂ, ಅದರೊಂದಿಗೆ ಈ ಎರಡು ಸೊಲ್ಲುಗಳಲ್ಲಿ ಆಗುಗ ಮಾತ್ರ ಮತ್ತು ಮಾಡುಗ+ಈಡು ಎಂಬ ಎರಡು ಬೇರೆ ಬೇರೆ ಪಾಂಗಿಟ್ಟಳಗಳನ್ನು ಬಳಸಲಾಗಿದೆ: (1ಕ)ದಲ್ಲಿ ಕೊಡ ಎಂಬ ಆಗುಗ ಪಾಂಗು ಮಾತ್ರ ಬಂದಿದೆ; ಆದರೆ, (1ಚ)ದಲ್ಲಿ ಜಾನಕಿ ಎಂಬ ಮಾಡುಗ ಪಾಂಗು, ಮತ್ತು ಕೊಡ ಎಂಬ ಈಡು ಪಾಂಗು ಎಂಬುದಾಗಿ ಎರಡು ಪಾಂಗುಗಳು ಬಂದಿವೆ; ಇದಲ್ಲದೆ, (1ಕ)ದಲ್ಲಿ ಬಂದಿರುವ ಆಗುಗ ಪಾಂಗು ಮತ್ತು (1ಚ)ದಲ್ಲಿ ಬಂದಿರುವ ಈಡು ಪಾಂಗು - ಇವೆರಡೂ ಕೊಡ ಎಂಬ ಒಂದೇ ವಸ್ತುವನ್ನು ತಿಳಿಸುತ್ತವೆ. ಒಡೆ ಎಂಬ ಒಂದೇ ಎಸಕಪದಕ್ಕೆ ಎರಡು ಬಗೆಯ ಹುರುಳುಗಳನ್ನು ಕೊಡಲು ಬರುತ್ತದೆಯೆಂಬುದೇ ಅದನ್ನು ಹೀಗೆ ಎರಡು ಬಗೆಯ ಪಾಂಗಿಟ್ಟಳಗಳೊಂದಿಗೆ ಬಳಸಲು ಬರುತ್ತಿರುವುದಕ್ಕೆ ಕಾರಣ. ಈ ರೀತಿ ಎರಡು ಇಲ್ಲವೇ ಹೆಚ್ಚು ಬಗೆಯ ಹುರುಳುಗಳನ್ನು ಕೊಡಬಲ್ಲ ಎಸಕಪದಗಳು ಮತ್ತು ಅವುಗಳೊಂದಿಗೆ ಬಳಕೆ ಯಾಗಬಲ್ಲ ಪಾಂಗಿಟ್ಟಳಗಳ ಬಗೆಗಳು ಎಂತಹವು ಎಂಬುದನ್ನು 8.2ರಲ್ಲಿ ವಿವರಿಸ ಲಾಗಿದೆ. ಎರಡನೇ ಬಗೆಯ ಮಾರ್ಪಾಡಿಗೆ ಎತ್ತುಗೆಯಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಹಾಲು ಕುದಿಯಿತು. (2ಚ) ಜಾನಕಿ ಹಾಲನ್ನು ಕುದಿಸಿದಳು. (2ಕ)ದಲ್ಲಿ ಬಂದಿರುವ ಕುದಿ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸುವ ಮೂಲಕ (2ಚ)ದಲ್ಲಿ ಅದನ್ನು ಮಾರ್ಪಡಿಸಲಾಗಿದೆ; ಮತ್ತು ಅದರೊಂದಿಗೆ ಬಂದಿರುವ ಪಾಂಗಿಟ್ಟಳವನ್ನೂ ಆಗುಗ ಮಾತ್ರ ಎಂಬುದರಿಂದ ಮಾಡುಗ+ಈಡು ಎಂಬುದಾಗಿ ಮಾರ್ಪಡಿಸಲಾಗಿದೆ. ಇವುಗಳಲ್ಲಿ (2ಕ)ದಲ್ಲಿದ್ದ ಆಗುಗ ಪಾಂಗು (2ಚ)ದಲ್ಲಿ ಈಡು ಪಾಂಗಾಗಿದೆ, ಮತ್ತು (2ಚ)ದಲ್ಲಿ ಮಾಡುಗ ಎಂಬ ಇನ್ನೊಂದು ಪಾಂಗು ಹೊಸದಾಗಿ ಸೇರಿಕೊಂಡಿದೆ. ಇಲ್ಲಿ ಎಸಕಪದದ ಹುರುಳನ್ನು ಮಾರ್ಪಡಿಸುವುದಕ್ಕಾಗಿ ಅದಕ್ಕೆ ಒಂದು ಒಟ್ಟನ್ನು ಸೇರಿಸಲಾಗಿದೆ, ಮತ್ತು ಅದರಿಂದಾಗಿ ಮಾರ್ಪಟ್ಟಿರುವ ಹುರುಳಿಗೆ ಹೊಂದಿಕೆಯಾಗು ವಂತೆ ಅದರ ಪಾಂಗಿಟ್ಟಳದಲ್ಲೂ ಮಾರ್ಪಾಡುಗಳನ್ನು ನಡೆಸಲಾಗಿದೆ.
ಎಸಕಪದಗಳಲ್ಲಿ ಎಂತಹ ಮಾರ್ಪಾಡುಗಳನ್ನು ನಡೆಸಬಲ್ಲೆವು, ಮತ್ತು ಅವಕ್ಕೆ ಹೊಂದಿಕೆಯಾಗುವಂತೆ ಪಾಂಗಿಟ್ಟಳಗಳಲ್ಲಿ ಎಂತಹ ಮಾರ್ಪಾಡುಗಳನ್ನು ನಡೆಸ ಬೇಕಾಗುತ್ತದೆ ಎಂಬುದನ್ನು 8.3-7ರಲ್ಲಿ ವಿವರಿಸಲಾಗಿದೆ.
8.1.1 ಎಸಕಪದವನ್ನು ಮಾರ್ಪಡಿಸದೆ ಬಳಸುವುದು
ಕೆಲವು ಎಸಕಪದಗಳೊಂದಿಗೆ, ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ, ಎರಡು ಇಲ್ಲವೇ ಹೆಚ್ಚು ಪಾಂಗಿಟ್ಟಳಗಳನ್ನು ಬಳಸಲು ಬರುತ್ತದೆ; ಇಂತಹ ಹತ್ತು ಬಗೆಯ ಎಸಕಪದಗಳ ಬಳಕೆಯನ್ನು (8.2)ರಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಮುಕ್ಯವಾಗಿ ಸುರು, ಗುರಿ ಇಲ್ಲವೇ ಜಾಗ ಪಾಂಗು ಈಡು ಪಾಂಗಾಗಿ ಮಾರ್ಪಡುವುದನ್ನು ಕಾಣಬಹುದು: (1) ಸುರು ಪಾಂಗು ಈಡು ಪಾಂಗಾಗುವುದು: (1ಕ) ಅವಳು ಹಾಲಿನಿಂದ ಕಸ ಸೋಸಿದಳು > ಅವಳು ಹಾಲು ಸೋಸಿದಳು. (1ಚ) ಅವಳು ಸೆಗಣಿಯಿಂದ ನೆಲ ಬಳಿದಳು > ಅವಳು ನೆಲಕ್ಕೆ ಸೆಗಣಿ ಬಳಿದಳು (2) ಗುರಿ ಪಾಂಗು ಈಡು ಪಾಂಗಾಗುವುದು: (2ಕ) ಅವನು ಗುಡ್ಡಕ್ಕೆ ಏರಿದ > ಅವನು ಗುಡ್ಡವನ್ನು ಏರಿದ. (2ಚ) ಅವನು ಕೋಲನ್ನು ಹಣ್ಣಿಗೆ ಚುಚ್ಚಿದ > ಅವನು ಕೋಲಿಗೆ ಹಣ್ಣನ್ನು ಚುಚ್ಚಿದ. (3) ಜಾಗ ಪಾಂಗು ಈಡು ಪಾಂಗಾಗುವುದು: (3ಕ) ಅವನು ಹೊಳೆಯಲ್ಲಿ ಈಜಿದ > ಅವನು ಹೊಳೆಯನ್ನು ಈಜಿದ. (3ಚ) ಅವನು ಆಟದಲ್ಲಿ ಗೆದ್ದ > ಅವನು ಆಟವನ್ನು ಗೆದ್ದ. (4) ಮಾಡುಗ ಪಾಂಗು ಆಗುಗ ಪಾಂಗಾಗುವುದು (4ಕ) ಅವನು ನಡೆಯುತ್ತಿದ್ದಾನೆ > ಅವನ ಕೆಲಸ ನಡೆಯುತ್ತಿದೆ. (4ಚ) ಅವನು ಕೋಣೆಯಲ್ಲಿ ಅಡಗಿದ > ಈ ಕಾಯಿಯಲ್ಲಿ ಎಣ್ಣೆ ಅಡಗಿದೆ. ಇದಲ್ಲದೆ, ಕೆಲವು ಎಸಕಪದಗಳನ್ನು, ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ, ಆಗುಗ ಮಾತ್ರ ಮತ್ತು ಮಾಡುಗ+ಈಡು ಎಂಬ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಬಳಸಲು ಬರುತ್ತದೆ. ಇಂತಹ ಮಾರ್ಪಾಡಿಗೆ ಎತ್ತುಗೆಯನ್ನು ಮೇಲೆಯೇ ಕೊಡಲಾಗಿದೆ (ಕೊಡ ಒಡೆಯಿತು > ಅವನು ಕೊಡ ಒಡೆದ). ಇರು ಪದವನ್ನೂ ಕೂಡ, ಅದರಲ್ಲಿ ಯಾವ ಮಾರ್ಪಾಡನ್ನೂ ಮಾಡದೆ, ಇರುಗ+ಜಾಗ, ಇರುಗ+ಪರಿಚೆ, ಮತ್ತು ಇರುಗ+ಗುರಿ ಎಂಬ ಮೂರು ಬಗೆಯ ಪಾಂಗಿಟ್ಟಳಗಳಲ್ಲಿ ಬಳಸಲು ಬರುತ್ತದೆ ಎಂಬುದನ್ನು ಮೇಲೆ (7.2)ರಲ್ಲಿ ನೋಡಿರುವೆವು; ಈ ಮೂರು ಬಗೆಯ ಪಾಂಗಿಟ್ಟಳಗಳ ನಡುವೆ ಎಂತಹ ಸಂಬಂದ ವಿದೆ, ಅವುಗಳಲ್ಲಿ ಒಂದನ್ನು ಇನ್ನೊಂದಾಗಿ ಮಾರ್ಪಡಿಸುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನೂ 8.2ರಲ್ಲಿ ವಿವರಿಸಲಾಗಿದೆ. ಎಸಕಪದಗಳನ್ನು ಮಾರ್ಪಡಿಸದಿದ್ದರೂ, ಅವುಗಳ ಪಾಂಗುಗಳಲ್ಲಿ ಎರಡನ್ನು ಒಟ್ಟುಸೇರಿಸಿ ಎದುರೆಸಕದ ಹುರುಳನ್ನು (ಎಂದರೆ, ಎರಡು ಪಾಂಗುಗಳು ಎಸಕಗಳಲ್ಲಿ ಒಂದೇ ಬಗೆಯಲ್ಲಿ ಒಂದನ್ನೊಂದು ಎದುರಿಸುವಂತೆ ತೊಡಗಿಕೊಂಡಿರುವುದನ್ನು) ತಿಳಿಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು: (5ಕ) ಅವರು ಒಬ್ಬರಿಂದೊಬ್ಬರು ಹಣ ಪಡೆಯುತ್ತಿದ್ದರು. (5ಚ) ಅವರು ಒಬ್ಬರನ್ನೊಬ್ಬರು ನಂಬಿದ್ದರು. (5ಟ) ಈ ಹೂಗಳು ಒಂದಕ್ಕಿಂತ ಒಂದು ಚನ್ನಾಗಿವೆ.
(5ತ) ನಾಯಿಗಳು ಒಂದರ ಕಾಲನ್ನೊಂದು ಕಚ್ಚಿ ಹಿಡಿದಿದ್ದುವು. (5ಪ) ಅವರು ಒಬ್ಬರಿಗೊಬ್ಬರು ತಮ್ಮ ಮಕ್ಕಳನ್ನು ಗುರುತುಮಾಡಿ ಕೊಂಡರು. (5ಕ)ದಲ್ಲಿ ಎರಡು (ಇಲ್ಲವೇ ಹೆಚ್ಚು) ಮಂದಿ ಹಣ ಪಡೆಯುವ ಎಸಕದಲ್ಲಿ ತೊಡಗಿಕೊಂಡಿದ್ದು, ಅದರಲ್ಲಿ ಇಬ್ಬರೂ ಮಾಡುಗ ಮತ್ತು ಸುರು ಪಾಂಗುಗಳಾಗಿ ಎದುರೆದುರಿಗಿದ್ದರು ಎಂಬುದನ್ನು ತಿಳಿಸಲಾಗಿದೆ. ಇಂತಹದೇ ಹುರುಳನ್ನು (5ಚ-ಪ) ಸೊಲ್ಲುಗಳೂ ತಿಳಿಸುತ್ತವೆ. ಈ ರೀತಿ ಎದುರೆಸಕದ ಹುರುಳನ್ನು ತಿಳಿಸುವಲ್ಲಿ ಎಂತಹ ಮಾರ್ಪಾಡುಗಳನ್ನು ಪಾಂಗಿಟ್ಟಳದಲ್ಲಿ ನಡೆಸಲಾಗುತ್ತದೆ, ಮತ್ತು ಅವುಗಳ ಹಿಂದಿರುವ ಕಟ್ಟಲೆಗಳು ಎಂತಹವು ಎಂಬುದನ್ನು ಮುಂದೆ (8.5)ರಲ್ಲಿ ವಿವರಿಸಲಾಗುತ್ತದೆ.
8.1.2 ಎಸಕಪದವನ್ನು ಮಾರ್ಪಡಿಸಿ ಬಳಸುವುದು
ಕೆಲವು ಹೆಚ್ಚಿನ ಹುರುಳುಗಳನ್ನು ತಿಳಿಸುವುದಕ್ಕಾಗಿ ಎಸಕಪದಗಳಿಗೆ ಒಟ್ಟುಗಳನ್ನು ಇಲ್ಲವೇ ಪದಗಳನ್ನು ಸೇರಿಸಿ ಅವನ್ನು ಮಾರ್ಪಡಿಸಲು ಬರುತ್ತದೆ, ಮತ್ತು ಇಂತಹ ಎಸಕಪದಗಳ ಮಾರ್ಪಾಡುಗಳಿಗೆ ಅನುಗುಣವಾಗಿ ಅವುಗಳ ಪಾಂಗಿಟ್ಟಳಗಳಲ್ಲೂ ಮಾರ್ಪಾಡುಗಳನ್ನು ಉಂಟುಮಾಡಬೇಕಾಗುತ್ತದೆ. ಎಸಕ ಪದಗಳನ್ನು ಈ ರೀತಿ ಮಾರ್ಪಡಿಸುವುದಕ್ಕಾಗಿ, ಕೆಳಗೆ ಕೊಟ್ಟಿರುವ ನಾಲ್ಕು ಬಗೆಯ ಹೊಲಬುಗಳನ್ನು ಬಳಸಲಾಗುತ್ತದೆ: (1) ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಇಸುವೆಸಕಪದಗಳನ್ನು ಉಂಟುಮಾಡುವುದು, (2) ಕೊಳ್ಳು ಎಂಬುದನ್ನು ಸೇರಿಸಿ ಸೇರಿಕೆಯೆಸಕಪದಗಳನ್ನು ಉಂಟು ಮಾಡುವುದು, (3) ಹೆಸರುಪದ, ಪರಿಚೆಪದ, ಇಲ್ಲವೇ ಬೇರೊಂದು ಎಸಕಪದದ ಜೋಡಿಸುವ ರೂಪವನ್ನು ಸೇರಿಸಿ ಕೂಡುಪದಗಳನ್ನು ಉಂಟು ಮಾಡುವುದು, ಮತ್ತು (4) ಅವುಗಳ ಮಾರೆಸಕದ ಜೋಡಿಸುವ ರೂಪಕ್ಕೆ ಆಗು ಇಲ್ಲವೇ ಪಡು ಎಂಬುದನ್ನು ಸೇರಿಸಿ ಅವುಗಳ ಮಾಡುಗವನ್ನು ಮರೆಮಾಚು ವುದು ಇಲ್ಲವೇ ಮಾರ್ಪಡಿಸುವುದು. (1) ಇಸುವೆಸಕಪದಗಳ ಬಳಕೆ: ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಮಾಡುಗ ಪಾಂಗು ಹೊಸದಾಗಿ ಸೇರಿಕೊಳ್ಳುತ್ತದೆ; ಹಾಗಾಗಿ, ಅದರಲ್ಲಿ ಮೊದಲಿಗಿದ್ದ ಮಾಡುಗ ಇಲ್ಲವೇ ಆಗುಗ ಪಾಂಗು ಮಾರ್ಪಡಬೇಕಾಗುತ್ತದೆ. ಹೆಚ್ಚಿನೆಡೆಗಳಲ್ಲೂ ಅದು ಈಡು ಪಾಂಗಾಗಿ ಮಾರ್ಪಡುತ್ತದೆ: (1) (ಕ) ಅವನು ಓಡಿದ > (ಚ) ನಾನು ಅವನನ್ನು ಓಡಿಸಿದೆ. (2) (ಕ) ನೀರು ಕುದಿಯಿತು > (ಚ) ಅವನು ನೀರನ್ನು ಕುದಿಸಿದ. ಪಾಂಗಿಟ್ಟಳದಲ್ಲಿ ಮೊದಲಿಗೇನೇ ಒಂದು ಈಡು ಪಾಂಗು ಬಂದಿದೆಯಾದರೆ, ಮಾಡುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸುವ ಬದಲು, ಸುರು ಪಾಂಗಾಗಿ ಮಾರ್ಪಡಿಸಲಾಗುತ್ತದೆ: (3) (ಕ) ಅವನು ಬಾಗಿಲು ತೆರೆದ > (ಚ) ನಾನು ಅವನಿಂದ ಬಾಗಿಲು ತೆರೆಸಿದೆ. (4) (ಕ) ಅವನು ಗೋಡೆಗೆ ಮಣ್ಣು ಮೆತ್ತಿದ > (ಚ) ನಾನು ಅವನಿಂದ ಗೋಡೆಗೆ ಮಣ್ಣು ಮೆತ್ತಿಸಿದೆ.
ಈ ಕಟ್ಟಲೆಗಳಿಗೆ ಹಲವು ಹೊರಪಡಿಕೆಗಳಿದ್ದು, ಅವು ಎಸಕಪದಗಳ ಹುರುಳು ಗಳನ್ನು ಮತ್ತು ಅವುಗಳೊಂದಿಗೆ ಬರುವ ಪಾಂಗುಗಳು ಹುರುಳುಗಳನ್ನು ಅವಲಂಬಿಸಿರುತ್ತವೆ; ಇವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ಮುಂದೆ 8.3ರಲ್ಲಿ ಕೊಡಲಾಗುತ್ತದೆ. (2) ಸೇರಿಕೆಯೆಸಕಪದಗಳ ಬಳಕೆ: ಎಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಬರುವ ಪಾಂಗುಗಳಲ್ಲಿ ಎರಡು ಒಬ್ಬನೇ ವ್ಯಕ್ತಿಯನ್ನು ಇಲ್ಲವೇ ಒಂದೇ ವಸ್ತುವನ್ನು ಗುರುತಿಸುವ ಹಾಗಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5) (ಕ) ಹುಡುಗಿ ತಾಯಿಯಿಂದ ಹಾಡು ಕಲಿತಳು > (ಚ) ಹುಡುಗಿ ಹಾಡು ಕಲಿತುಕೊಂಡಳು. (6) (ಕ) ಅವನು ಆಕೆಯಿಂದ ನನ್ನನ್ನು ಹೊಡೆಸಿದ > (ಚ) ಅವನು ಆಕೆಯಿಂದ ಹೊಡೆಸಿಕೊಂಡ. (5ಕ) ಸೊಲ್ಲಿನಲ್ಲಿ ಮಾಡುಗ (ಹುಡುಗಿ) ಮತ್ತು ಸುರು (ತಾಯಿ) ಪಾಂಗುಗಳು ಬೇರೆ ಬೇರಾಗಿವೆ; ಆದರೆ, (5ಚ)ದಲ್ಲಿ ಅವೆರಡೂ ಒಂದೇ ವ್ಯಕ್ತಿಯನ್ನು (ಹುಡುಗಿಯನ್ನು) ಗುರುತಿಸುತ್ತವೆ. ಇದೇ ರೀತಿಯಲ್ಲಿ, (6ಕ) ಸೊಲ್ಲಿನಲ್ಲಿ ಮಾಡುಗ (ಅವನು) ಮತ್ತು ಈಡು (ನಾನು) ಬೇರೆ ಬೇರಾಗಿವೆ, ಮತ್ತು (6ಚ) ಸೊಲ್ಲಿನಲ್ಲಿ ಅವೆರಡೂ ಒಬ್ಬನೇ ವ್ಯಕ್ತಿಯನ್ನು (ಅವನನ್ನು) ಗುರುತಿಸುತ್ತವೆ. ಪಾಂಗಿಟ್ಟಳದಲ್ಲಿ ನಡೆದ ಈ ಎರಡು ಬಗೆಯ ಮಾರ್ಪಾಡುಗಳಿಗೂ ಆ ಸೊಲ್ಲುಗಳಲ್ಲಿ ಬಂದಿರುವ ಎಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿ ಅವನ್ನು ಸೇರಿಕೆಯೆಸಕಪದಗಳಾಗಿ ಮಾರ್ಪಡಿಸಿರುವುದೇ ಕಾರಣವಾಗಿದೆ. ಸೇರಿಕೆಯೆಸಕಪದಗಳ ಬಳಕೆಯಲ್ಲಿ ನಡೆಯುವ ಇಂತಹ ಪಾಂಗಿಟ್ಟಳದ ಮಾರ್ಪಾಡುಗಳನ್ನು ಹೆಚ್ಚು ವಿವರವಾಗಿ ಮುಂದೆ (8.4)ರಲ್ಲಿ ಕೊಡಲಾಗುತ್ತದೆ. (3) ಕೂಡುಪದಗಳ ಬಳಕೆ: ಎಸಕಪದಗಳಿಗೆ ಹೆಸರುಪದ, ಪರಿಚೆಪದ, ಇಲ್ಲವೇ ಬೇರೆ ಎಸಕಪದಗಳ ಜೋಡಿಸುವ ರೂಪಗಳನ್ನು ಸೇರಿಸಿ ಯಾವ ರೀತಿಯಲ್ಲಿ ಕೂಡುಪದಗಳನ್ನು ಉಂಟು ಮಾಡಲಾಗುತ್ತದೆ ಎಂಬುದನ್ನು ಮೇಲೆ (3.3)ರಲ್ಲಿ ವಿವರಿಸಲಾಗಿದೆ. ಇಂತಹ ಕೂಡುಪದಗಳನ್ನು ಬಳಸಿದಾಗ, ಅವುಗಳೊಂದಿಗೆ ಎಂತಹ ಪಾಂಗಿಟ್ಟಳಗಳು ಬರುತ್ತವೆ ಎಂಬುದು ಎಸಕಪದಗಳ ಪಾಂಗಿಟ್ಟಳಗಳನ್ನು ಮಾತ್ರವಲ್ಲದೆ, ಅವುಗಳೊಂದಿಗೆ ಬರುವ ಹೆಸರು, ಪರಿಚೆ, ಮತ್ತು ಎಸಕಪದಗಳ ಹುರುಳುಗಳನ್ನೂ ಅವಲಂಬಿ ಸಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7) (ಕ) ಅವನು ಕೆಲಸ ಮಾಡಿದ > (ಚ) ಅವನು ನನಗೆ ಮೋಸ ಮಾಡಿದ. (8) (ಕ) ಹಣ್ಣು ನೀರಿಗೆ ಬಿದ್ದಿದೆ > (ಚ) ಕತ್ತಿ ಮೊಂಡುಬಿದ್ದಿದೆ. (9) (ಕ) ಅವನು ಮನೆಗೆ ಹೋದ > (ಚ) ಅವನು ಆಟದಲ್ಲಿ ಸೋತು ಹೋದ. (7ಕ) ಸೊಲ್ಲಿನಲ್ಲಿ ಮಾಡು ಎಸಕಪದ ಮಾಡುಗ+ಈಡು ಪಾಂಗಿಟ್ಟಳದೊಂದಿಗೆ ಬಂದಿದೆ; (7ಚ) ಸೊಲ್ಲಿನಲ್ಲಿ ಅದನ್ನು ಮೋಸ ಎಂಬ ಹೆಸರುಪದದೊಂದಿಗೆ ಸೇರಿಸಿ ಕೂಡುಪದವಾಗಿ ಬಳಸಲಾಗಿದ್ದು, ಅದರೊಂದಿಗೆ ಮಾಡುಗ+ಗುರಿ ಎಂಬ ಬೇರೆಯೇ ಒಂದು ಪಾಂಗಿಟ್ಟಳ ಬಂದಿದೆ. (8ಕ) ಸೊಲ್ಲಿನಲ್ಲಿ ಬೀಳು ಎಸಕಪದ ಆಗುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿದೆ; ಆದರೆ, (8ಚ) ಸೊಲ್ಲಿನಲ್ಲಿ ಮೊಂಡುಬೀಳು ಎಂಬ ಕೂಡುಪದ ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬಂದಿದೆ.
(9ಕ) ಸೊಲ್ಲಿನಲ್ಲಿ ಹೋಗು ಎಸಕಪದ ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿದೆ; ಆದರೆ, (9ಚ) ಸೊಲ್ಲಿನಲ್ಲಿ ಸೋತುಹೋಗು ಎಂಬ ಕೂಡುಪದ ಆಗುಗ+ಜಾಗ ಎಂಬ ಪಾಂಗಿಟ್ಟಳದೊಂದಿಗೆ ಬಂದಿದೆ. ಕೂಡುಪದಗಳ ಬಳಕೆಯಲ್ಲಿ ಕಾಣಿಸುವ ಇಂತಹ ಪಾಂಗಿಟ್ಟಳಗಳ ಮಾರ್ಪಾಡು ಗಳನ್ನು (8.6)ರಲ್ಲಿ ವಿವರಿಸಲಾಗುತ್ತದೆ. (4) ಮಾಡುಗ ಪಾಂಗನ್ನು ಮರೆಮಾಚುವುದು: ಎಸಕಪದದ ಪಾಂಗಿಟ್ಟಳದಲ್ಲಿ ಬರುವ ಮಾಡುಗ ಪಾಂಗನ್ನು ಮರೆಮಾಚುವು ದಕ್ಕಾಗಿ ಎಸಕಪದಕ್ಕೆ ಆಗು ಪದವನ್ನು ಸೇರಿಸಲಾಗುತ್ತದೆ: (10) (ಕ) ಅವರು ಸಾವಿರ ಜನರನ್ನು ಊಟಕ್ಕೆ ಕರೆದಿದ್ದಾರೆ > (ಚ) ಸಾವಿರ ಜನರನ್ನು ಊಟಕ್ಕೆ ಕರೆಯಲಾಗಿದೆ. (11) (ಕ) ಅರಸ ತೆರಿಗೆಗಳನ್ನು ಹೆಚ್ಚುಮಾಡಿಸಿದ (ಚ) ತೆರಿಗೆಗಳನ್ನು ಹೆಚ್ಚುಮಾಡಿಸಲಾಯಿತು. (10ಕ)ದಲ್ಲಿ ಊಟಕ್ಕೆ ಕರೆದವರು ಯಾರು ಎಂಬುದನ್ನು (ಎಂದರೆ ಎಸಕದ ಮಾಡುಗನನ್ನು) ಅವರು ಎಂಬ ಪದದಿಂದ ತಿಳಿಸಲಾಗಿದೆ; ಕರೆದಿದ್ದಾರೆ ಎಂಬ ಎಸಕಪದರೂಪದ ಕೊನೆಯ ರೆ ಒಟ್ಟೂ ಇದನ್ನೇ ಅಡಕವಾಗಿ ತಿಳಿಸುತ್ತದೆ. ಆದರೆ, (10ಚ)ದಲ್ಲಿ ಎಸಕದ ಮಾಡುಗ ಪಾಂಗನ್ನು ತಿಳಿಸಿಲ್ಲ; ಅದರ ಎಸಕ ಪದದ ಮಾರೆಸಕದ ಜೋಡಿಸುವ ರೂಪಕ್ಕೆ (ಕರೆಯಲು ಎಂಬುದಕ್ಕೆ) ಆಗು ಪದದ ಆಗಿದೆ ಎಂಬ ರೂಪವನ್ನು ಸೇರಿಸಿ ಬಳಸಿರುವ ಕಾರಣ, ಅದರಲ್ಲಿ ಮಾಡುಗ ಯಾರೆಂಬುದನ್ನು ಮರೆಮಾಚಲು ಸಾದ್ಯವಾಗಿದೆ. ಈ ರೀತಿ ಆಡುಗವನ್ನು ಮರೆಮಾಚುವಲ್ಲಿ ಎಂತಹ ಕಟ್ಟಲೆಗಳು ಬಳಕೆಯಾಗುತ್ತವೆ ಎಂಬುದನ್ನು (8.7)ರಲ್ಲಿ ವಿವರಿಸಲಾಗಿದೆ. ಇದಲ್ಲದೆ, ಮೇಲಿನ ಸೊಲ್ಲುಗಳನ್ನು ಹೋಲುವ ಇನ್ನೊಂದು ಬಗೆಯ ಸೊಲ್ಲೂ ಬಳಕೆಯಲ್ಲಿದೆ; ಇದರಲ್ಲಿ ಎಸಕಪದದ ಮಾರೆಸಕದ ಜೋಡಿಸುವ ರೂಪಕ್ಕೆ ಪಡು ಪದದ ರೂಪಗಳನ್ನು ಸೇರಿಸಲಾಗುತ್ತದೆ: (12) (ಕ) ಅವನು ಪುಸ್ತಕಗಳನ್ನು ಬೆಂಗಳೂರಿಗೆ ಕಳುಹಿಸಿದ > (ಚ) ಪುಸ್ತಕಗಳು ಬೆಂಗಳೂರಿಗೆ ಕಳುಹಿಸಲ್ಪಟ್ಟುವು. (13) (ಕ) ಅವರು ಹಲವು ಮಂದಿ ಕಳ್ಳರನ್ನು ಹಿಡಿದಿದ್ದರು > (ಚ) ಅವರಿಂದ ಕಳ್ಳರು ಹಿಡಿಯಲ್ಪಟ್ಟಿದ್ದರು. ಆದರೆ, ಈ ಬಗೆಯ ಸೊಲ್ಲುಗಳಲ್ಲಿ ಮಾಡುಗವನ್ನು ಬಳಸಬಾರದೆಂಬ ಕಟ್ಟಲೆ ಯಿಲ್ಲ; ಮೇಲೆ (12ಚ)ದಲ್ಲಿ ಮಾಡುಗವನ್ನು ಬಳಸಿಲ್ಲವಾದರೂ, (13ಚ)ದಲ್ಲಿ ಅದನ್ನು ಸುರು ಪಾಂಗಾಗಿ ಮಾರ್ಪಡಿಸಿ ಬಳಸಲಾಗಿದೆ. ಇದಲ್ಲದೆ, ಈ ಇಟ್ಟಳ ಮೇಲಿನದರಶ್ಟು ಬಳಕೆಯಲ್ಲಿಲ್ಲ. ಇಂತಹ ಇಟ್ಟಳದ ಬಳಕೆಯನ್ನು, ಮತ್ತು ಅದಕ್ಕೂ ಮೇಲಿನ (ಆಗು ಎಂಬುದನ್ನು ಬಳಸಿರುವ) ಇಟ್ಟಳಕ್ಕೂ ನಡುವೆ ಎಂತಹ ವ್ಯತ್ಯಾಸಗಳಿವೆ ಎಂಬುದನ್ನು (8.7.2)ರಲ್ಲಿ ವಿವರಿಸಲಾಗುತ್ತದೆ.
8.1.3 ಎಸಕಪದಗಳನ್ನು ಹೆಸರುಪದಗಳಾಗಿ ಮಾರ್ಪಡಿಸಿ ಬಳಸು ವುದು
ಕೆಲವು ಎಸಕಪದಗಳಿಂದ ಅವಕ್ಕೆ ಒಟ್ಟುಗಳನ್ನು ಸೇರಿಸಿ, ಇಲ್ಲವೇ ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ, ಹೆಸರುಪದಗಳನ್ನು ಪಡೆಯಲು ಬರುತ್ತದೆ (2.4.1 ನೋಡಿ); ಇಂತಹ ಎಸಕಪದಗಳಿರುವ ಕೆಲವು ಸೊಲ್ಲುಗಳಲ್ಲಿ ಅವುಗಳ ಬದಲು ಅವುಗಳಿಂದ ಪಡೆದ ಹೆಸರುಪದಗಳನ್ನು ಆಗುಗ ಪಾಂಗಾಗಿ ಬಳಸಿ, ಅವುಗಳೊಂದಿಗೆ ಸೊಲ್ಲಿನ ಎಸಕಪದವಾಗಿ ಆಗು ಪದವನ್ನು ಬಳಸಲು ಬರುತ್ತದೆ; ಹೀಗೆ ಮಾಡಿದಾಗ, ಸೊಲ್ಲಿನಲ್ಲಿ ಮೊದಲಿಗಿದ್ದ ಆಗುಗ ಪಾಂಗು ಗುರಿ ಪಾಂಗಾಗಿ ಮಾರ್ಪಡುತ್ತದೆ: (1ಕ) ಅವನು ಬಳಲಿದ > ಅವನಿಗೆ ಬಳಲಿಕೆಯಾಯಿತು.
(1ಚ) ಅವನು ಒಪ್ಪಿದ > ಅವನಿಗೆ ಒಪ್ಪಿಗೆಯಾಯಿತು. (1ಟ) ಅವನು ನೊಂದ > ಅವನಿಗೆ ನೋವಾಯಿತು. (1ತ) ಅವನು ನಂಬಿದ > ಅವನಿಗೆ ನಂಬಿಕೆಯಾಯಿತು. (1ಪ) ಅವನು ನಾಚಿದ > ಅವನಿಗೆ ನಾಚುಗೆಯಾಯಿತು. (1ಕ)ದ ಮೊದಲನೆಯ ಸೊಲ್ಲಿನಲ್ಲಿ ಬಳಲು ಎಂಬ ಎಸಕಪದವನ್ನು ಬಳಸಿದ್ದು, ಅದರೊಂದಿಗೆ ಒಂದು ಆಗುಗ ಪಾಂಗು (ಅವನು) ಬಂದಿದೆ; ಅದರ ಎರಡನೆಯ ಸೊಲ್ಲಿನಲ್ಲಿ ಬಳಲಿಕೆ ಎಂಬ ಒಟ್ಟಿಸಿದ ಹೆಸರು ಪದವನ್ನು ಬಳಸಿದ್ದು, ಮೊದಲಿಗಿದ್ದ ಆಗುಗ ಪಾಂಗು ಗುರಿ ಪಾಂಗಾಗಿ ಮಾರ್ಪಟ್ಟಿದೆ. ಈ ಬಗೆಯ ಮಾರ್ಪಾಡನ್ನು ತೋರಿಸುವ ಕೆಲವು ಎಸಕಪದಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ: ಅಂಜು ತೇರು ನೆನೆ ಮರುಗು ಹೆದರು ಅಲಸು ದಣಿ ನೋಯು ಮರೆ ಹೆರು ಒಪ್ಪು ನಂಬು ಬಳಲು ಮೆಚ್ಚು ಹೇಸು ಕೊರಗು ನರಳು ಬೆದರು ಸೋಲು ಗೆಲ್ಲು ನಾಚು ಬೇಸರು ಹಿಗ್ಗು ಇಂತಹ ಬೇರೆ ಕೆಲವು ಸೊಲ್ಲುಗಳಲ್ಲಿ ತಿರುಳು ಪದವಾಗಿ ಆಗು ಪದದ ಬದಲು ಬರು ಪದವನ್ನು ಎಸಕಪದವಾಗಿ ಬಳಸಲಾಗುತ್ತದೆ: (2ಕ) ಅವನು ನಕ್ಕ > ಅವನಿಗೆ ನಗು ಬಂತು. (2ಚ) ಅವನು ಅತ್ತ > ಅವನಿಗೆ ಅಳು ಬಂತು. (2ಟ) ಅವನು ತೇಗಿದ > ಅವನಿಗೆ ತೇಗು ಬಂತು. ಅಳು, ತಿಳಿ, ತೇಗು, ನಗು, ನಂಬು, ಮತ್ತು ಬಿಕ್ಕು ಪದಗಳು ಇಂತಹ ಮಾರ್ಪಾಡನ್ನು ತೋರಿಸುತ್ತವೆ. ಈ ರೀತಿ ಮೊದಲಿಗಿದ್ದ ಆಗುಗ ಪಾಂಗನ್ನು ಗುರಿ ಪಾಂಗಾಗಿ ಮಾರ್ಪಡಿಸಿದಾಗ, ಸೊಲ್ಲಿನ ಹುರುಳಿನಲ್ಲೂ ಮಾರ್ಪಾಡು ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬಹುದು.
8.2 ಎಸಕಪದವನ್ನು ಮಾರ್ಪಡಿಸದೆ ಪಾಂಗಿಟ್ಟಳವನ್ನು
ಮಾರ್ಪಡಿಸುವುದು ಸೊಲ್ಲುಗಳಲ್ಲಿ ತುಂಬು, ಚೆಲ್ಲು, ಸುಲಿ ಮೊದಲಾದ ಹಲವು ಎಸಕಪದಗಳನ್ನು, ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ ಅವುಗಳ ಪಾಂಗಿಟ್ಟಳದಲ್ಲಿ ಮಾರ್ಪಾಡುಗಳನ್ನು ಮಾಡಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು.
(1ಕ) ಅವನು ಕೊಡದಲ್ಲಿ ನೀರು ತುಂಬಿದ. (1ಚ) ಅವನು ಕೊಡವನ್ನು ನೀರಿನಿಂದ ತುಂಬಿದ. (2ಕ) ನೀರು ಚೆಲ್ಲಿತು. (2ಚ) ಅವನು ನೀರು ಚೆಲ್ಲಿದ. (3ಕ) ಅವಳು ಕಿತ್ತಳೆ ಹಣ್ಣಿನಿಂದ ಸಿಪ್ಪೆ ಸುಲಿದಳು. (3ಚ) ಅವಳು ಕಿತ್ತಳೆ ಹಣ್ಣು ಸುಲಿದಳು. (1ಕ)ದಲ್ಲಿ ತುಂಬು ಎಸಕಪದವನ್ನು ಮಾಡುಗ+ಜಾಗ+ಈಡು ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು (1ಚ)ದಲ್ಲಿ ಅದನ್ನೇ ಮಾಡುಗ+ಈಡು+ಸುರು ಪಾಂಗಿಟ್ಟಳ ದಲ್ಲಿ ಬಳಸಲಾಗಿದೆ; (2ಕ)ದಲ್ಲಿ ಚೆಲ್ಲು ಎಸಕಪದವನ್ನು ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು (2ಚ)ದಲ್ಲಿ ಅದನ್ನೇ ಮಾಡುಗ+ಈಡು ಎಂಬ ಬೇರೊಂದು ಪಾಂಗಿಟ್ಟಳದಲ್ಲಿ ಬಳಸಲಾಗಿದೆ; (3ಕ)ದಲ್ಲಿ ಸುಲಿ ಎಸಕಪದವನ್ನು ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು (3ಚ)ದಲ್ಲಿ ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬಳಸಲಾಗಿದೆ. ಈ ರೀತಿ ಎಸಕಪದಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಪಾಂಗಿಟ್ಟಳದಲ್ಲಿ ಮಾತ್ರ ಮಾರ್ಪಾಡುಗಳನ್ನು ಮಾಡಲು ಬರುವಂತಹ ಎಸಕಪದಗಳಲ್ಲಿ ಕೆಲವು ಎರಡು ಬಗೆಯ ಎಸಕಗಳನ್ನು ತಿಳಿಸುತ್ತವೆಯೆಂದು, ಮತ್ತು ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸುವ ಆಯ್ಕೆ ಆಡುಗನಿಗಿರುತ್ತದೆಯೆಂದು ಹೇಳಲು ಬರುತ್ತದೆ. ಎತ್ತುಗೆಗಾಗಿ, ತುಂಬು ಎಸಕಪದ ಒಂದನ್ನು ಇನ್ನೊಂದರೊಳಕ್ಕೆ ಹಾಕು ಎಂಬ ಒಂದು ಬಗೆಯ (ಕದಲಿಕೆಯ) ಎಸಕವನ್ನೂ ತಿಳಿಸಬಲ್ಲುದು, ಮತ್ತು ತುಂಬಿಲ್ಲದು ದನ್ನು ತುಂಬಿರುವುದನ್ನಾಗಿ ಮಾಡು ಎಂಬ ಇನ್ನೊಂದು ಬಗೆಯ (ಮಾರ್ಪಾಡಿನ) ಎಸಕವನ್ನೂ ತಿಳಿಸಬಲ್ಲುದು. ಮೇಲೆ ಈ ಎರಡು ಬಗೆಯ ಎಸಕಗಳಲ್ಲಿ ಮೊದಲನೆಯದನ್ನು (1ಕ) ಸೊಲ್ಲಿ ನಲ್ಲಿ, ಮತ್ತು ಎರಡನೆಯದನ್ನು (1ಚ) ಸೊಲ್ಲಿನಲ್ಲಿ ಆಯ್ದುಕೊಳ್ಳಲಾಗಿದೆ. ಈ ಕಾರಣಕ್ಕಾಗಿ, (1ಕ) ಸೊಲ್ಲಿನಲ್ಲಿ ಕದಲಿಕೆಗೆ ಒಳಗಾದ ನೀರು ಸೊಲ್ಲಿನ ಈಡಾಗಿ ಬಂದಿದೆ, ಮತ್ತು (1ಚ) ಸೊಲ್ಲಿನಲ್ಲಿ ಮಾರ್ಪಾಡಿಗೆ ಒಳಗಾದ ಕೊಡ ಸೊಲ್ಲಿನ ಈಡಾಗಿ ಬಂದಿದೆ. ಆದರೆ, ಎಲ್ಲಾ ಎಸಕಪದಗಳೂ ಈ ರೀತಿ ಒಂದಕ್ಕಿಂತ ಹೆಚ್ಚು ಬಗೆಯ ಎಸಕ ಗಳನ್ನು ತಿಳಿಸುವುದಿಲ್ಲ; ಎತ್ತುಗೆಗಾಗಿ, ಸುರಿ ಇಲ್ಲವೇ ಹೊಯ್ಯು ಎಂಬ ಎಸಕಪದ ನೀರಿನ ಹಾಗಿರುವ ಒಂದು ವಸ್ತು ಕೆಳಗೆ ಬೀಳುವಂತಹ ಕದಲಿಕೆಯ ಎಸಕವನ್ನು ತಿಳಿಸಬಲ್ಲುದಲ್ಲದೆ, ಅದರಿಂದಾಗಿ ಇನ್ನೊಂದು ವಸ್ತುವಿನಲ್ಲಿ ನಡೆಯುವ ಮಾರ್ಪಾಡು ಎಂತಹದು ಎಂಬುದನ್ನು ತಿಳಿಸಲಾರದು; ಹಾಗಾಗಿ, ಅದನ್ನು ತುಂಬು ಪದದ ಬಳಕೆಯಲ್ಲಿ ಕಾಣಿಸುವಂತಹ ಎರಡು ಬಗೆಯ ಸೊಲ್ಲುಗಳಲ್ಲಿ ಬಳಸಲು ಬರುವು ದಿಲ್ಲ. ಮೇಲೆ (2ಕ-ಚ) ಸೊಲ್ಲುಗಳಲ್ಲಿ ಚೆಲ್ಲು ಎಸಕಪದಕ್ಕೆ ಮಾಡುಹ ಮತ್ತು ಆಡುಹಗಳೆಂಬ ಎರಡು ಬಗೆಯ ಎಸಕಗಳನ್ನು ತಿಳಿಸುವ ಹುರುಳುಗಳಿವೆಯೆಂದೂ ಹೇಳಬಲ್ಲೆವು, ಇಲ್ಲವೇ ಅವುಗಳೊಂದಿಗೆ ಬರುವ ಪಾಂಗಿಟ್ಟಳವನ್ನವಲಂಬಿಸಿ ಅವನ್ನು ಬಳಸಿರುವ ಸೊಲ್ಲಿಗೆ ಈ ಎರಡು ಹುರುಳುಗಳಲ್ಲಿ ಒಂದು ಸಿಗುತ್ತದೆ ಎಂದೂ ಹೇಳಬಲ್ಲೆವು. (3ಕ-ಚ)ದಲ್ಲಿ ಸುಲಿ ಎಸಕಪದಕ್ಕೆ ಹಣ್ಣಿನಿಂದ ಸಿಪ್ಪೆ ತೆಗೆ ಎಂಬ ಹುರುಳಾಗಲಿ, ಇಲ್ಲವೇ ಹಣ್ಣನ್ನು ಸಿಪ್ಪೆಯಿಲ್ಲದಂತೆ ಮಾಡು ಎಂಬ ಹುರುಳಾಗಲಿ ಬರುತ್ತದೆಯೆಂದು ಹೇಳಬಹುದು. ಸೊಲ್ಲುಗಳಲ್ಲಿ ತಿರುಳು ಪದವಾಗಿ ಬಳಕೆಯಾಗಬಲ್ಲ ಇರು ಪದವನ್ನೂ ಈ ಎಸಕಪದಗಳ ಹಾಗೆಯೇ, ಅದರಲ್ಲಿ ಯಾವ ಮಾರ್ಪಾಡನ್ನೂ ಮಾಡದೆ, ಇರುಗ+ ಜಾಗ, ಇರುಗ+ಪರಿಚೆ, ಮತ್ತು ಇರುಗ+ಗುರಿ ಎಂಬ ಮೂರು ಬಗೆಯ ಪಾಂಗಿಟ್ಟಳ ಗಳಲ್ಲಿ ಬಳಸಲು ಬರುತ್ತದೆ ಎಂಬುದನ್ನು ಮೇಲೆ 7.3ರಲ್ಲಿ ನೋಡಿರುವೆವು; ಇಲ್ಲಿಯೂ ಕೂಡ, ಇರು ಪದಕ್ಕೇನೇ ಮೂರು ಬಗೆಯ ಹುರುಳುಗಳಿವೆಯೆಂದು ಹೇಳಬಲ್ಲೆವು, ಇಲ್ಲವೇ ಅದರೊಂದಿಗೆ ಬರುವ ಪಾಂಗಿಟ್ಟಳಗಳು ಈ ಮೂರು ಬಗೆಯ ಹುರುಳುಗಳನ್ನು ಕೊಡುತ್ತವೆಯೆಂದೂ ಹೇಳಬಲ್ಲೆವು.
8.2.1 ಎಸಕಪದಗಳ ಪಾಂಗಿಟ್ಟಳಗಳಲ್ಲಿ ಮಾರ್ಪಾಡುಗಳು
ಮೇಲೆ ತಿಳಿಸಿದ ಹಾಗೆ, ಕೆಲವು ಎಸಕಪದಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ ಅವನ್ನು ಒಂದಕ್ಕಿಂತ ಹೆಚ್ಚು ಪಾಂಗಿಟ್ಟಳಗಳೊಂದಿಗೆ ಬಳಸಲು ಬರುತ್ತದೆ; ಅಂತಹ ಕಡೆಗಳಲ್ಲಿ ಎಸಕಪದಕ್ಕಿರುವ ಒಂದು ಪಾಂಗಿಟ್ಟಳವನ್ನು ಇನ್ನೊಂದು ಪಾಂಗಿಟ್ಟಳವಾಗಿ ಮಾರ್ಪಡಿಸಲಾಗಿದೆ ಎಂದೂ ಹೇಳಲು ಬರುತ್ತದೆ. ಈ ಹೊಲಬನ್ನೇ ಬಳಸಿ, ಕೆಳಗೆ ಹನ್ನೊಂದು ಬಗೆಯ ಪಾಂಗಿಟ್ಟಳಗಳ ಮಾರ್ಪಾಡು ಗಳನ್ನು ಪಟ್ಟಿಮಾಡಲಾಗಿದೆ, ಮತ್ತು ಅವುಗಳಲ್ಲಿ ಬಳಕೆಯಾಗಬಲ್ಲ ಎಸಕಪದಗಳನ್ನೂ ಪಟ್ಟಿಮಾಡಿ ಕೊಡಲಾಗಿದೆ. (1) ಆಗುಗ ಮಾತ್ರ > ಮಾಡುಗ+ಈಡು: ಹಲವು ಎಸಕಪದಗಳನ್ನು ಈ ಎರಡು ಬಗೆಯ ಪಾಂಗಿಟ್ಟಳಗಳಲ್ಲೂ ಬಳಸಲು ಬರುತ್ತದೆ; ಅವುಗಳ ಪಟ್ಟಿಯೊಂದನ್ನು ಕೆಳಗೆ ಕೊಡಲಾಗಿದೆ: ಅಡಸು ಚಿಮ್ಮು ತಿಳಿ ಬಿಚ್ಚು ಗಿಡಿ ಹರಿ ಅರಿ ಚುಚ್ಚು ತುಂಬು ಬೀಸು ಸಿಗಿ ಹಿಸಿ ಊದು ಚೆಲ್ಲು ತುರಿಸು ಬೆಳೆ ಸೀಳು ಒಪ್ಪು ಒಡೆ ಜಗ್ಗು ತೂಗು ಮಗುಚು ಸುಡು ಅದ್ದು ಕದಡು ಜಜ್ಜು ತೆರೆ ಮಡಚು ಸುತ್ತು ಬಾರಿಸು ಕಳಚು ಜಾರು ತೇಯು ಮುಚ್ಚು ಸುಂದು ಕರೆ ತಡೆ ನಾಟು ಮುದುಡು ಸುರಿ ಕುತ್ತು ತಪ್ಪು ನುರಿ ಮುರಿ ಸುಲಿ ಚಾಚು ತಿರುಚು ಬಿಗಿ ಮೆತ್ತು ಹರಡು ಇಂತಹ ಎಸಕಪದಗಳ ಬಳಕೆಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1) ಮಡಕೆ ಒಡೆಯಿತು > ಅವನು ಮಡಕೆ ಒಡೆದ. (2) ನೀರು ಕದಡಿತು > ಅವನು ನೀರು ಕದಡಿದ. (3) ಕದ ತೆರೆಯಿತು > ಅವನು ಕದ ತೆರೆದ. (4) ಗಡ್ಡ ತುರಿಸಿತು > ಅವನು ಗಡ್ಡ ತುರಿಸಿದ. (5) ಹಗ್ಗ ಬಿಚ್ಚಿತು > ಅವನು ಹಗ್ಗ ಬಿಚ್ಚಿದ. (6) ಕಾಗದ ಮಡಚಿತು > ಅವನು ಕಾಗದ ಮಡಚಿದ. (1)ನೇ ಎತ್ತುಗೆಯ ಮೊದಲನೇ ಸೊಲ್ಲಿನಲ್ಲಿ ಒಡೆ ಎಸಕಪದದೊಂದಿಗೆ ಮಡಕೆ ಎಂಬ ಒಂದು ಆಗುಗ ಪಾಂಗು ಮಾತ್ರ ಬಂದಿದೆ; ಆದರೆ, ಎರಡನೇ ಸೊಲ್ಲಿನಲ್ಲಿ ಅದೇ ಎಸಕಪದದೊಂದಿಗೆ ಅವನು ಎಂಬ ಒಂದು ಮಾಡುಗ ಪಾಂಗು ಮತ್ತು ಮಡಕೆ ಎಂಬ ಒಂದು ಈಡು ಪಾಂಗು ಎಂಬುದಾಗಿ ಎರಡು ಪಾಂಗುಗಳು ಬಂದಿವೆ. ಇವುಗಳಲ್ಲಿ ಮಾಡುಗ ಪಾಂಗು ಹೊಸದಾಗಿ ಸೇರಿದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಟ್ಟಿದೆ. ಉಳಿದ (2-6) ಎತ್ತುಗೆಗಳಲ್ಲೂ ಇಂತಹದೇ ಮಾರ್ಪಾಡನ್ನು ಕಾಣಬಹುದು. ಮೇಲೆ ಕೊಟ್ಟಿರುವ ಎಸಕಪದಗಳಲ್ಲಿ ಸುಂದು, ಸುತ್ತು, ಮೆತ್ತು, ತುಂಬು, ಕಳಚು ಮೊದಲಾದ ಕೆಲವು ಎಸಕಪದಗಳೊಂದಿಗೆ ಆಗುಗ ಪಾಂಗು ಮಾತ್ರವಲ್ಲದೆ ಗುರಿ, ಸುರು ಇಲ್ಲವೇ ಜಾಗ ಪಾಂಗುಗಳಲ್ಲಿ ಒಂದು ಬರುತ್ತದೆ; ಅವಕ್ಕೆ ಹೊಸ ಮಾಡುಗ ಪಾಂಗು ಸೇರಿದಾಗ ಅವುಗಳ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಡು ತ್ತದೆಯಾದರೂ ಉಳಿದ ಗುರಿ, ಸುರು ಇಲ್ಲವೇ ಜಾಗ ಪಾಂಗು ಹಾಗೆಯೇ ಉಳಿಯು ತ್ತದೆ:
(7) ನೂಲು ಬೆರಳಿಗೆ ಸುಂದಿತು > ಅವನು ನೂಲನ್ನು ಬೆರಳಿಗೆ ಸುಂದಿದ. (8) ಗೋಡೆಗೆ ಮಣ್ಣು ಮೆತ್ತಿತು > ಅವನು ಮಣ್ಣನ್ನು ಗೋಡೆಗೆ ಮೆತ್ತಿದ. (9) ಕೊಡದಲ್ಲಿ ನೀರು ತುಂಬಿತು > ಅವನು ನೀರನ್ನು ಕೊಡದಲ್ಲಿ ತುಂಬಿದ. (10) ಹಣ್ಣು ತೊಟ್ಟಿನಿಂದ ಕಳಚಿತು > ಅವನು ಹಣ್ಣನ್ನು ತೊಟ್ಟಿನಿಂದ ಕಳಚಿದ. (7)ನೇ ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಆಗುಗ+ಗುರಿ ಪಾಂಗಿಟ್ಟಳ ಬಂದಿದೆ, ಮತ್ತು ಎರಡನೆಂiÀi ಸೊಲ್ಲಿನಲ್ಲಿ ಅದರ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಟ್ಟಿದೆ, ಆದರೆ ಗುರಿ ಪಾಂಗು ಹಾಗೆಯೇ ಉಳಿದಿದೆ; ಉಳಿದ ಸೊಲ್ಲುಗಳಲ್ಲೂ ಇದೇ ರೀತಿಯಲ್ಲಿ ಆಗುಗ ಪಾಂಗು ಮಾತ್ರ ಬದಲಾಗಿದೆ, ಗುರಿ, ಸುರು ಇಲ್ಲವೇ ಜಾಗ ಪಾಂಗುಗಳು ಹಾಗೆಯೇ ಉಳಿದಿವೆ. ಈ ರೀತಿ ಆಗುಗ ಮಾತ್ರ (ಇಲ್ಲವೇ ಆಗುಗ+ಸುರು, ಆಗುಗ+ಗುರಿ ಮತ್ತು ಆಗುಗ+ಜಾಗ) ಎಂಬ ಪಾಂಗಿಟ್ಟಳದ ಬದಲು ಮಾಡುಗ+ಈಡು (ಇಲ್ಲವೇ ಮಾಡುಗ +ಈಡು+ಗುರಿ, ಮಾಡುಗ+ಈಡು+ಸುರು, ಮತ್ತು ಮಾಡುಗ+ಈಡು+ಜಾಗ) ಎಂಬ ಪಾಂಗಿಟ್ಟಳದೊಂದಿಗೆ ಬರಲು ಮೇಲೆ ಕೊಟ್ಟಿರುವಂತಹ ಎಸಕಪದಗಳನ್ನು ಹೊರತುಪಡಿಸಿ ಬೇರೆ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (11) ನೀರು ಕುದಿಯಿತು > ಅವನು ನೀರನ್ನು ಕುದಿಸಿದ. (12) ಕಟ್ಟಿಗೆ ಉರಿಯಿತು > ಅವನು ಕಟ್ಟಿಗೆಯನ್ನು ಉರಿಸಿದ. (13) ಹಕ್ಕಿ ಬಲೆಗೆ ಸಿಲುಕಿತು > ಅವನು ಹಕ್ಕಿಯನ್ನು ಬಲೆಗೆ ಸಿಲುಕಿಸಿದ. (14) ಮರದಿಂದ ಹಣ್ಣು ಉದುರಿತು > ಅವನು ಮರದಿಂದ ಹಣ್ಣನ್ನು ಉದುರಿಸಿದ. (15) ಹಲಿಗೆ ನೀರಿನಲ್ಲಿ ತೇಲಿತು >ಅವನು ನೀರಿನಲ್ಲಿ ಹಲಿಗೆಯನ್ನು ತೇಲಿಸಿದ. ಮೇಲಿನ ಸೊಲ್ಲುಗಳಲ್ಲಿ ಬಂದಿರುವ ಕುದಿ, ಉರಿ, ಸಿಲುಕು, ಉದುರು ಮತ್ತು ತೇಲು ಎಸಕಪದಗಳ ಪಾಂಗಿಟ್ಟಳದಲ್ಲಿ ಬರುವ ಆಗುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಿ, ಅದಕ್ಕೊಂದು ಮಾಡುಗ ಪಾಂಗನ್ನು ಸೇರಿಸಬೇಕಿದ್ದಲ್ಲಿ, ಅವುಗಳಿಗೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ ಎಂಬುದನ್ನು ಗಮನಿಸಬಹುದು. ಯಾವ ಮಾರ್ಪಾಡನ್ನೂ ಮಾಡದೆ ಮೇಲೆ ವಿವರಿಸಿದಂತಹ ಎರಡು ಬಗೆಯ ಪಾಂಗಿಟ್ಟಳಗಳೊಂದಿಗೆ ಬಳಸಲು ಬರುವ ಒಡೆ, ಸಿಗಿ, ಮುರಿ, ಕದಡು, ಕಳಚು ಮೊದಲಾದ ಎಸಕಪದಗಳನ್ನು ಎರಡು ಬಗೆಗಳಲ್ಲಿ ಕಾಣಲು ಬರುತ್ತದೆ: ಮೊದಲನೆಯದಾಗಿ, ಅವುಗಳ ಬಳಕೆಯಲ್ಲಿ ಆಗುಹವನ್ನು ತಿಳಿಸುವ ಪದಗಳು ಮಾಡುಹವನ್ನು ತಿಳಿಸುವ ಪದಗಳಾಗಿ ಮಾರ್ಪಟ್ಟಿವೆ ಎಂದು ಹೇಳಬಹುದು; ಹಾಗಿದ್ದಲ್ಲಿ, ಅವನ್ನು ಹಾಗೆ ಮಾರ್ಪಡಿಸಲು ಇಸು ಒಟ್ಟನ್ನು ಸೇರಿಸಬೇಕಾಗುವ ಮೇಲೆ ಕೊಟ್ಟಿರುವಂತಹ ಕುದಿ, ಸಿಲುಕು, ಉದುರು, ತೇಲು, ನಂದು, ಬೇಯು, ಸವೆ ಮೊದಲಾದ ಎಸಕಪದಗಳೊಂದಿಗೆ ಹೋಲಿಸಬಹುದು. ಎರಡನೆಯದಾಗಿ, ಅವುಗಳ ಬಳಕೆಯಲ್ಲಿ ಮಾಡುಹವನ್ನು ತಿಳಿಸುವ ಪದಗಳು ಆಗುಹವನ್ನು ತಿಳಿಸುವ ಪದಗಳಾಗಿ ಮಾರ್ಪಟ್ಟಿವೆಯೆಂದೂ ಹೇಳಬಹುದು; ಎಂದರೆ, ಅವುಗಳ ಮೂಲ ಪಾಂಗಿಟ್ಟಳ ಮಾಡುಗ+ಈಡು (+ಗುರಿ, ಸುರು ಇಲ್ಲವೇ ಜಾಗ) ಎಂಬುದು, ಮತ್ತು ಆ ಪಾಂಗಿಟ್ಟಳದಲ್ಲಿದ್ದ ಮಾಡುಗ ಪಾಂಗನ್ನು ತೆಗೆದುಹಾಕಿ, ಈಡು ಪಾಂಗನ್ನು ಆಗುಗ ಪಾಂಗಾಗಿ ಮಾರ್ಪಡಿಸಲಾಗುತ್ತದೆ ಎಂದೂ ಹೇಳಬಹುದು. ಈ ಎರಡನೆಯ ಬಗೆಯನ್ನು ಆರಿಸಿಕೊಂಡಲ್ಲಿ, ಅವನ್ನು ಹಾಗೆ ಮಾರ್ಪಡಿಸಲು ಬಾರದಿರುವ ಕುಡಿ, ತಿನ್ನು, ತಳ್ಳು, ದೂಡು, ಉಡು, ತೊಳೆ, ನೋಡು ಮೊದಲಾದ ಎಸಕಪದಗಳೊಂದಿಗೆ ಹೋಲಿಸಬಹುದು; ಇಂತಹ ಎಸಕಪದಗಳನ್ನು ಒಡೆ, ಸಿಗಿ, ಮುರಿ ಮೊದಲಾದ ಎಸಕಪದಗಳ ಹಾಗೆ ಆಗುಹಗಳನ್ನು ತಿಳಿಸುವು ದಕ್ಕಾಗಿ ಬಳಸಲು ಬರುವುದಿಲ್ಲ: (16) ಅವನು ಒಂದು ಹಣ್ಣು ತಿಂದ > *ಒಂದು ಹಣ್ಣು ತಿಂದಿತು. (17) ಅವನು ಮೇಜನ್ನು ತಳ್ಳಿದ > *ಮೇಜು ತಳ್ಳಿತು.
(18) ಅವಳು ಸೀರೆ ಉಟ್ಟಳು > *ಸೀರೆ ಉಟ್ಟಿತು. ಇಂತಹ ಎಸಕಪದಗಳ ಮಾಡುಹವನ್ನು ತಿಳಿಸದಿರಬೇಕಿದ್ದಲ್ಲಿ, ಅವುಗಳ ಮಾರೆಸಕದ ಜೋಡಿಸುವ ರೂಪದೊಂದಿಗೆ ಆಗು ಎಸಕಪದವನ್ನು ಬಳಸ ಬೇಕಾಗುತ್ತದೆ: (16ಕ) ಒಂದು ಹಣ್ಣನ್ನು ತಿನ್ನಲಾಯಿತು. (17ಕ) ಮೇಜನ್ನು ತಳ್ಳಲಾಯಿತು. (18ಕ) ಸೀರೆಯನ್ನು ಉಡಲಾಯಿತು. ಆದರೆ, ಇಂತಹ ಬಳಕೆಯಲ್ಲಿ ಮಾಡುಗವನ್ನು ತಿಳಿಸದಿದ್ದರೂ, ಅದು ಬಾರದಿರುವ ಹುರುಳು ಸಿಗುವುದಿಲ್ಲ; ಎತ್ತುಗೆಗಾಗಿ, (16ಕ)ದಲ್ಲಿ ಹಣ್ಣನ್ನು ತಿಂದವರು ಯಾರು ಎಂಬುದನ್ನು ತಿಳಿಸದಿದ್ದರೂ, ಅದನ್ನು ಯಾರೋ ಒಬ್ಬರು ತಿಂದಿರಬೇಕು ಎಂಬ ಹುರುಳು ಇದ್ದೇ ಇರುತ್ತದೆ. ಇದಕ್ಕೆ ಬದಲು, ಕದ ತೆರೆಯಿತು ಎಂಬುದಕ್ಕೆ ಅದು ತಾನಾಗಿಯೇ ತೆರೆದುಕೊಂಡಿತು ಎಂಬ ಮಾಡುಗ ಬಾರದಿರುವ ಹುರುಳೂ ಸಿಗಬಲ್ಲುದು. ಒಡೆ, ಸಿಗಿ, ಮುರಿ, ಕದಡು, ಕಳಚು ಮೊದಲಾದ ಎಸಕಪದಗಳಿಗೆ ಮೇಲೆ ವಿವರಿಸಿದಂತಹ ಎರಡು ಬಗೆಯ ಬಳಕೆಗಳಿರುವುದು ಅವು ಮೊದಲಿಗೆ ಆಗುಹ ಗಳಾಗಿದ್ದು ಆಮೇಲೆ ಮಾಡುಹಗಳಾದುದರಿಂದಾಗಿ ಉಂಟಾಗಿವೆಯೇ, ಇಲ್ಲವೇ ಮೊದಲು ಮಾಡುಹಗಳಾಗಿದ್ದು ಆಮೇಲೆ ಆಗುಹಗಳಾದುದರಿಂದಾಗಿ ಉಂಟಾ ಗಿವೆಯೇ ಎಂಬುದನ್ನು ತೀರ್ಮಾನಿಸುವುದು ಕಶ್ಟ. ಹಾಗಾಗಿ, ಈ ಎಸಕಪದಗಳಿಗೆ ಎರಡು ಬಗೆಯ ಎಸಕಗಳನ್ನೂ ತಿಳಿಸಬಲ್ಲ ಹುರುಳಿದ್ದು, ಅವುಗಳಲ್ಲಿ ಸಂದರ್ಬಕ್ಕೆ ತಕ್ಕ ಹಾಗೆ ಒಂದನ್ನು ಬಳಸುವ ಆಯ್ಕೆ ಆಡುಗನಿಗಿದೆ ಎಂದು ಹೇಳಬೇಕಾಗುತ್ತದೆ. ಜಾರು ಎಸಕಪದದ ಪಾಂಗಿಟ್ಟಳಕ್ಕೆ ಒಂದು ಹೊಸ ಆಗುಗ ಇಲ್ಲವೇ ಮಾಡುಗ ಪಾಂಗು ಸೇರಬಲ್ಲುದು; ಮತ್ತು ಹಾಗೆ ಸೇರಿದಾಗ, ಮೊದಲಿಗಿದ್ದ ಅದರ ಆಗುಗ ಪಾಂಗು ಜಾಗ ಪಾಂಗಾಗಿ ಮಾರ್ಪಡುತ್ತದೆ: (19) ನೆಲ ಜಾರುತ್ತದೆ > ಅವನು ನೆಲದಲ್ಲಿ ಜಾರಿದ. (19)ನೇ ಎತ್ತುಗೆಯ ಎರಡನೇ ಸೊಲ್ಲಿನಲ್ಲಿ ಬಂದಿರುವ ಅವನು ಎಂಬುದು ಮಾಡುಗ ಪಾಂಗಾಗಿರಬಹುದು, ಇಲ್ಲವೇ ಆಗುಗ ಪಾಂಗಾಗಿರಬಹುದು; ಯಾಕೆಂದರೆ, ಜಾರುವ ಎಸಕದ ಮೇಲೆ ಆತನಿಗೆ ಹತೋಟಿಯಿರಬಹುದು ಇಲ್ಲವೇ ಹತೋಟಿ ಯಿಲ್ಲದಿರಬಹುದು. (2) ಮಾಡುಗ ಪಾಂಗು ಆಗುಗ ಪಾಂಗಾಗುವುದು ಮೇಲೆ (1)ರಲ್ಲಿ ಕೊಟ್ಟಿರುವ ಪಾಂಗಿಟ್ಟಳಗಳ ಮಾರ್ಪಾಡುಗಳಲ್ಲೆಲ್ಲ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಬಂದು ಸೇರುತ್ತದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ (ಜಾರು ಎಂಬುದರಲ್ಲಿ ಮಾತ್ರ ಅದು ಜಾಗ ಪಾಂಗಾಗಿದೆ). ಇದಕ್ಕೆ ಬದಲಾಗಿ, ಬೇರೆ ಕೆಲವು ಎಸಕಪದಗಳ ಬಳಕೆಯಲ್ಲಿ ಪಾಂಗಿಟ್ಟಳಕ್ಕೆ ಹೊಸ ಮಾಡುಗ ಪಾಂಗು ಸೇರುವ ಬದಲು, ಆಗುಗ ಪಾಂಗಿನ ಜಾಗದಲ್ಲೇನೇ ಮಾಡುಗ ಪಾಂಗು ಬರುತ್ತದೆ; ಆದರೆ, ಇಂತಹ ಮಾರ್ಪಾಡನ್ನು ತೋರಿಸುವ ಹೆಚ್ಚಿನೆಡೆಗಳಲ್ಲೂ ಮಾಡುಗದ ಜಾಗದಲ್ಲಿ ಆಗುಗ ಬರುತ್ತದೆ ಎಂಬುದಾಗಿ ಹೇಳುವುದೇ ಸರಿಯೆಂದು ತೋರುತ್ತದೆ. ಇದಲ್ಲದೆ, ಈ ರೀತಿ ಆಗುಗವಾಗಿ ಬಳಕೆಯಾಗುವ ಪದ ಮಾಡುಗವಾಗಿ ಬಳಕೆಯಾಗುವ ಪದಕ್ಕಿಂತ ಬೇರಾಗಿರುತ್ತದೆ. ಇಂತಹ ಮಾರ್ಪಾಡನ್ನು ತೋರಿಸುವ ಎಸಕಪದಗಳನ್ನು, ಅವುಗಳಲ್ಲಿ ಮಾಡುಗ ಇಲ್ಲವೇ ಆಗುಗದೊಂದಿಗೆ ಬರುವ ಬೇರೆ ಪಾಂಗುಗಳನ್ನವಲಂಬಿಸಿ, ಕೆಳಗೆ ಅಯ್ದು ಗುಂಪುಗಳಲ್ಲಿ ಗುಂಪಿಸಲಾಗಿದೆ: (ಕ) ಮಾಡುಗ ಮಾತ್ರ > ಆಗುಗ ಮಾತ್ರ
ನಡೆ, ನಿಲ್ಲು, ಬರು, ತಿರುಗು, ಉಲಿ, ತಪ್ಪು, ನೇಲು, ಹಾರು, ಉರುಳು ಮತ್ತು ಹೊರಳು ಎಂಬ ಎಸಕಪದಗಳು ಈ ಎರಡು ಬಗೆಯ ಪಾಂಗಿಟ್ಟಳಗಳಲ್ಲೂ ಕಾಣಿಸಿಕೊಳ್ಳುತ್ತವೆ: (1ಕ) ಅವನು ನಡೆಯುತ್ತಿದ್ದಾನೆ. (1ಚ) ಕೆಲಸ ನಡೆಯುತ್ತಿದೆ. (2ಕ) ಅವನು ನಿಂತಿದ್ದಾನೆ. (2ಚ) ಮಳೆ ನಿಂತಿದೆ. (3ಕ) ಅವನು ನೇಲುತ್ತಿದ್ದಾನೆ. (3ಚ) ಜೇಡನ ಬಲೆ ನೇಲುತ್ತಿದೆ. ಮೇಲೆ (ಚ) ಸೊಲ್ಲುಗಳಲ್ಲಿ ಬಂದಿರುವ ಎಸಕಪದಗಳೆಲ್ಲ ಆಗುಹಗಳನ್ನು ತಿಳಿಸುತ್ತವೆ ಮತ್ತು ಅವುಗಳಲ್ಲಿ ಆಗುಗ ಮಾತ್ರ ಎಂಬ ಪಾಂಗಿಟ್ಟಳ ಬಂದಿರುತ್ತದೆ; ಇದಲ್ಲದೆ, ಎಲ್ಲಾ (ಕ) ಸೊಲ್ಲುಗಳೂ ಮಾಡುಹವನ್ನು ತಿಳಿಸಬಲ್ಲುವಾಗಿದ್ದು, ಅವುಗಳಲ್ಲಿ ಮಾಡುಗ ಮಾತ್ರ ಎಂಬ ಪಾಂಗಿಟ್ಟಳ ಬಂದಿದೆಯೆಂದು ಹೇಳಬಹುದು. ಆದರೆ, (3ಕ)ದಲ್ಲಿ ಬಂದಿರುವ ನೇಲು ಎಸಕಪದಕ್ಕೆ ಆಗುಹದ ಹುರುಳೂ ಸಿಗಬಲ್ಲುದು. (ಚ) ಮಾಡುಗ+ಗುರಿ > ಆಗುಗ+ಗುರಿ ಬರು, ಬೀಳು, ಇಳಿ, ತಲಪು, ಅಂಟು ಮತ್ತು ತಗಲು ಎಂಬ ಎಸಕಪದಗಳು ಈ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಬರುತ್ತವೆ: (4ಕ) ಅವನು ಮನೆಗೆ ಬಂದ. (4ಚ) ಅವನಿಗೆ ಸಿಟ್ಟು ಬಂತು. (5ಕ) ಅವನು ಕೆಳಗೆ ಇಳಿದ. (5ಚ) ನೀರು ಕೆಳಗೆ ಇಳಿಯಿತು. (6ಕ) ಅವನು ನನಗೆ ಅಂಟಿದ. (6ಚ) ಕಾಗದ ಗೋಡೆಗೆ ಅಂಟಿತು. (6)ನೇ ಸೊಲ್ಲಿನಲ್ಲಿ (6ಚ)ದಲ್ಲಿರುವ ಆಗುಗದ ಜಾಗಕ್ಕೆ (6ಕ)ದಲ್ಲಿರುವ ಮಾಡುಗ ಬಂದಿದೆಯೆಂದು ಹೇಳುವುದೇ ಸರಿಯೆಂದು ತೋರುತ್ತದೆ. (ಟ) ಮಾಡುಗ+ಜಾಗ > ಆಗುಗ+ಜಾಗ ಈ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಅಡಗು, ಉಳಿ, ಮುಳುಗು ಮತ್ತು ಜಾರು ಎಂಬ ಎಸಕಪದಗಳು ಬಳಕೆಯಾಗುತ್ತವೆ: (7ಕ) ಅವನು ಮನೆಯಲ್ಲಿ ಉಳಿದ. (7ಚ) ಗಿಡದಲ್ಲಿ ಮೂರು ಹಣ್ಣು ಉಳಿದಿದೆ. (8ಕ) ಅವನು ನೆಲದಲ್ಲಿ ಜಾರಿದ. (8ಚ) ಕಾಲು ನೆಲದಲ್ಲಿ ಜಾರಿತು. (9ಕ) ಅವನು ಕೋಣೆಯಲ್ಲಿ ಅಡಗಿದ.
(9ಚ) ಈ ಕಾಯಿಯಲ್ಲಿ ಎಣ್ಣೆ ಅಡಗಿದೆ. ಉಳಿ ಮತ್ತು ಜಾರು ಎಂಬ ಎರಡು ಎಸಕಪದಗಳು ಮೇಲೆ ಕೊಟ್ಟಿರುವ (ಕ) ಸೊಲ್ಲುಗಳಲ್ಲೂ ಆಗುಹಗಳನ್ನು ತಿಳಿಸಬಲ್ಲುವು. ಎತ್ತುಗೆಗಾಗಿ, (ಕ)ದಲ್ಲಿ ಅವನು ಬೇಕೆಂದೇ ನೆಲದಲ್ಲಿ ಜಾರಿರಬಹುದು, ಇಲ್ಲವೇ ನೆಲ ತುಂಬಾ ನುಣುಪಾಗಿದ್ದು, ಅದರ ಮೇಲೆ ಎಣ್ಣೆ ಬಿದ್ದುದರಿಂದ ಅವನು ಜಾರಿರಬಹುದು. (ತ) ಮಾಡುಗ+ಈಡು > ಆಗುಗ+ಈಡು ಬಿಡು ಮತ್ತು ಹೀರು ಎಂಬ ಎರಡು ಎಸಕಪದಗಳು ಈ ಎರಡು ಬಗೆಯ ಪಾಂಗಿಟ್ಟಳಗಳೊಂದಿಗೆ ಬರುತ್ತವೆ: (10ಕ) ಅವನು ಮನೆ ಬಿಟ್ಟಿದ್ದಾನೆ. (10ಚ) ಗಿಡ ಬೇರು ಬಿಟ್ಟಿದೆ. (11ಕ) ಸೊಳ್ಳೆ ನೆತ್ತರು ಹೀರುತ್ತಿದೆ. (11ಚ) ಈ ಬಟ್ಟೆ ನೀರು ಹೀರುತ್ತದೆ. (ಪ) ಮಾಡುಗ+ಈಡು > ಆಗುಗ+ಗುರಿ ಮುಟ್ಟು, ಊರು, ಏರು, ಮತ್ತು ತುರಿಸು ಎಂಬ ಎಸಕಪದಗಳು ಈ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಬರಬಲ್ಲುವು. ಆದರೆ, ಇಲ್ಲಿ ಮಾಡುಗ ಪಾಂಗು ಆಗುಗ ಪಾಂಗಾಗಿ ಮಾರ್ಪಡುವುದರೊಂದಿಗೆ ಈಡು ಪಾಂಗು ಗುರಿ ಪಾಂಗಾಗಿಯೂ ಮಾರ್ಪಡುತ್ತದೆ ಎಂಬುದನ್ನು ಗಮನಿಸಬಹುದು; ಮೇಲೆ (ಕ-ತ)ಗಳಲ್ಲಿ ಮಾಡುಗ ಪಾಂಗು ಆಗುಗ ಪಾಂಗಾಗುವ ಒಂದು ಮಾರ್ಪಾಡು ಮಾತ್ರ ನಡೆದಿದೆ.: (12ಕ) ಅವನು ನನ್ನನ್ನು ಮುಟ್ಟಿದ. (12ಚ) ಕಾಗದ ಅವನಿಗೆ ಮುಟ್ಟಿತು. (13ಕ) ಅವನು ಗುಡ್ಡ ಏರಿದ. (13ಚ) ಸಿಟ್ಟು ಅವನ ತಲೆಗೆ ಏರಿತು. (14ಕ) ಅವನು ಬೆನ್ನು ತುರಿಸಿದ. (14ಚ) ಅವನಿಗೆ ಬೆನ್ನು ತುರಿಸಿತು. (3) ಮಾಡುಗ+ಈಡು+ಸುರು > ಮಾಡುಗ+ಈಡು ಮಾಡುಗ+ಈಡು+ಸುರು ಪಾಂಗಿಟ್ಟಳವಿರುವ ಕೆಲವು ಎಸಕಪದಗಳ ಸುರು ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲು ಬರುತ್ತದೆ; ಹೀಗೆ ಮಾಡಿದಾಗ ಮೊದಲಿಗಿದ್ದ ಈಡು ಪಾಂಗನ್ನು ಬಳಸದಿರಲಾಗುತ್ತದೆ: (1ಕ) ಆತ ಹಣ್ಣಿನಿಂದ ಸಿಪ್ಪೆ ಸುಲಿದ > ಆತ ಹಣ್ಣು ಸುಲಿದ. (1ಚ) ಆತ ಹಾಲಿನಿಂದ ಕಸ ಸೋಸಿದ > ಆತ ಹಾಲು ಸೋಸಿದ. (1ಟ) ಅವರು ಜನರಿಂದ ಹಣ ದೋಚಿದರು > ಅವರು ಜನರನ್ನು ದೋಚಿದರು. (1ತ) ಆಕೆ ಅನ್ನದಿಂದ ತಿಳಿ ಬಸಿದಳು > ಆಕೆ ಅನ್ನ ಬಸಿದಳು. (1ಪ) ಆತ ಬಟ್ಟೆಯಿಂದ ದೂಳು ಕೊಡವಿದ > ಆತ ಬಟ್ಟೆ ಕೊಡವಿದ.
ಮೇಲೆ (1ಕ)ದ ಎರಡನೇ ಸೊಲ್ಲಿನಲ್ಲಿ ಹಣ್ಣಿನಿಂದ ಎಂಬ ಸುರು ಪಾಂಗನ್ನು ಹಣ್ಣು ಎಂಬ ಈಡು ಪಾಂಗಾಗಿ ಮಾರ್ಪಡಿಸಲಾಗಿದೆ, ಮತ್ತು ಮೊದಲಿಗಿದ್ದ ಸಿಪ್ಪೆ ಎಂಬ ಈಡು ಪಾಂಗನ್ನು ಬಳಸದಿರಲಾಗಿದೆ. ಉಳಿದ (1ಚ-ಪ) ಸೊಲ್ಲುಗಳಲ್ಲೂ ಇಂತಹದೇ ಮಾರ್ಪಾಡುಗಳನ್ನು ನಡೆಸಲಾಗಿದೆ. ಮೇಲಿನ ಎತ್ತುಗೆಗಳಲ್ಲಿ ಬರುವ ಎರಡು ಸೊಲ್ಲುಗಳ ನಡುವೆ ಹುರುಳಿನಲ್ಲಿಯೂ ವ್ಯತ್ಯಾಸವಿರುವುದನ್ನು ಗಮನಿಸಬಹುದು: ಮೊದಲನೆಯದು ಒಂದು ಎಸಕವನ್ನು ತಿಳಿಸುವುದು ಮಾತ್ರವಲ್ಲದೆ, ಅದನ್ನು ಯಾಕಾಗಿ ನಡೆಸಲಾಗುತ್ತದೆ ಎಂಬುದನ್ನೂ ತಿಳಿಸುತ್ತದೆ. ಎತ್ತುಗೆಗಾಗಿ, (1ಚ)ದಲ್ಲಿ ಮೊದಲನೆಯ ಸೊಲ್ಲು ಹಾಲನ್ನು ಸೋಸಲಾಗಿದೆ ಎಂಬುದನ್ನು ಮಾತ್ರವಲ್ಲದೆ, ಆ ಎಸಕವನ್ನು ಹಾಲಿನಲ್ಲಿದ್ದ ಕಸವನ್ನು ತೆಗೆಯುವು ದಕ್ಕಾಗಿ ನಡೆಸಲಾಗಿದೆ ಎಂಬುದನ್ನೂ ತಿಳಿಸುತ್ತದೆ. ಇದಕ್ಕೆ ಬದಲು, ಎರಡನೆಯ ಸೊಲ್ಲು ನಡೆದಿರುವ ಎಸಕವನ್ನು ಮಾತ್ರ ತಿಳಿಸುತ್ತದೆ. ಇಂತಹ ಮಾರ್ಪಾಡನ್ನು ತೋರಿಸುವ ಕೆಲವು ಎಸಕಪದಗಳನ್ನು ಕೆಳಗೆ ಕೊಡಲಾಗಿದೆ: ಒರೆಸು ದೋಚು ಸುಲಿ ಕರೆ ನೆಕ್ಕು ಸೋಸು ಕೊಡವು ಬಸಿ ಹಿಂಜು ಗುಡಿಸು ಬೀಸು ಹಿಂಡು ಮಾಡುಗ+ಈಡು+ಸುರು ಪಾಂಗಿಟ್ಟಳವಿರುವ ಬೇರೆ ಎಸಕಪದಗಳ ಬಳಕೆಯಲ್ಲಿ ಈ ರೀತಿ ಸುರು ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲು ಬರುವುದಿಲ್ಲ ಎಂಬುದನ್ನು ಗಮನಿಸಬಹುದು: (2ಕ) ಆತ ಬಾವಿಯಿಂದ ನೀರು ಸೇದಿದ >*ಆತ ಬಾವಿ ಸೇದಿದ. (2ಚ) ಆತ ಮರದಿಂದ ಕಾಯಿ ಕೊಯ್ದ > *ಆತ ಮರ ಕೊಯ್ದ. (2ಟ) ನಾನು ಆತನನ್ನು ಕೆಲಸದಿಂದ ತೆಗೆದೆ > *ನಾನು ಕೆಲಸ ತೆಗೆದೆ. (2ತ) ಅವನು ಅಕ್ಕಿಯಿಂದ ಕಸ ಹೆಕ್ಕಿದ > *ಅವನು ಅಕ್ಕಿ ಹೆಕ್ಕಿದ. ಮರ ಕೊಯ್ದ ಎಂಬುದು ಸರಿಯಾದ ಸೊಲ್ಲಾದರೂ ಅದಕ್ಕೆ ಮರದಿಂದ ಕಾಯಿ ಕೊಯ್ದ ಎಂಬ ಹುರುಳಿಲ್ಲ.ಇದೇ ರೀತಿಯಲ್ಲಿ, ಅವನು ಅಕ್ಕಿ ಹೆಕ್ಕಿದ ಎಂಬುದು ಸರಿಯಾದ ಸೊಲ್ಲಾದರೂ ಅದಕ್ಕೆ ಅಕ್ಕಿಯಿಂದ ಕಸ ಹೆಕ್ಕಿದ ಎಂಬ ಹುರುಳಿಲ್ಲ. ಮೇಲಿನ ಮಾರ್ಪಾಡನ್ನು ತೋರಿಸುವ ಕಡೆಗಳಲ್ಲೆಲ್ಲ ಎರಡು ಸೊಲ್ಲುಗಳು ಹೆಚ್ಚು ಕಡಿಮೆ ಒಂದೇ ಹುರುಳನ್ನು ಕೊಡುತ್ತವೆ; ಆದರೆ, ಹೆಚ್ಚಿನೆಡೆಗಳಲ್ಲೂ ಅವುಗಳ ನಡುವೆ ಒಂದು ವ್ಯತ್ಯಾಸವಿದೆ; ಈ ವ್ಯತ್ಯಾಸ ಯಾವ ಪಾಂಗು ಸೊಲ್ಲಿನ ಈಡಾಗಿ ಬರುತ್ತದೆಯೋ ಅದನ್ನು ಎಸಕ ಪೂರ್ತಿಯಾಗಿ ತಾಗಿದೆ ಎಂಬ ಹುರುಳು ಸಿಗುವುದರಿಂದಾಗಿ ಮೂಡಿಬಂದಿದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಸ್ಪಶ್ಟವಾಗಿ ಕಾಣಬಹುದು: (3ಕ) ಅವನು ಮೇಜಿನಿಂದ ದೂಳು ಒರೆಸಿದ > ಅವನು ಮೇಜು ಒರೆಸಿದ. (3ಚ) ಅವನು ಬಟ್ಟೆಯಿಂದ ನೀರು ಹಿಂಡಿದ > ಅವನು ಬಟ್ಟೆ ಹಿಂಡಿದ. (3ಕ)ದ ಮೊದಲನೇ ಸೊಲ್ಲಿನಿಂದ ಮೇಜಿನ ಮೇಲಿರುವ ದೂಳನ್ನು ಪೂರ್ತಿ ಒರೆಸಿದ’ಎಂಬ ಹುರುಳು ಸಿಗಬಲ್ಲುದಲ್ಲದೆ ಮೇಜನ್ನು ಪೂರ್ತಿ ಒರೆಸಿದ’ಎಂಬ ಹುರುಳು ಸಿಗಲಾರದು; ಆದರೆ, ಅದರ ಎರಡನೇ ಸೊಲ್ಲಿನಿಂದ ಈ ಎರಡನೆಯ ಹುರುಳು ಸಿಗಬಲ್ಲುದು.
ಇದೇ ರೀತಿಯಲ್ಲಿ, ಬಟ್ಟೆಯಿಂದ ನೀರನ್ನು ಪೂರ್ತಿ ಹಿಂಡಿದ ಎಂಬ ಹುರುಳು (3ಚ) ಎತ್ತುಗೆಯ ಎರಡನೇ ಸೊಲ್ಲಿಗೆ ಇದೆಯಲ್ಲದೆ ಮೊದಲನೆಯ ಸೊಲ್ಲಿಗೆ ಇಲ್ಲ. ನಿಜಕ್ಕೂ ಇದು ಸುರು ಪಾಂಗಿಗೂ ಈಡು ಪಾಂಗಿಗೂ ನಡುವಿರುವ ವ್ಯತ್ಯಾಸವಾಗಿದೆ. ಅಗಲು ಎಂಬ ಎಸಕಪದದ ಬಳಕೆಯಲ್ಲಿ ಮಾಡುಗ+ಸುರು ಪಾಂಗಿಟ್ಟಳ ಮಾಡುಗ+ಈಡು ಪಾಂಗಿಟ್ಟಳವಾಗಿ ಮಾರ್ಪಡುತ್ತದೆ: (4) ಅವನು ಮಕ್ಕಳಿಂದ ಅಗಲಿದ > ಅವನು ಮಕ್ಕಳನ್ನು ಅಗಲಿದ. ಮೇಲಿನ ಮಾರ್ಪಾಡಿನಲ್ಲಿ ನಡೆದಿರುವ ಸುರು ಪಾಂಗು ಈಡು ಪಾಂಗಾಗುವ ಬದಲಾವಣೆಯೇ ಇಲ್ಲೂ ನಡೆದಿದೆಯೆಂದು ಹೇಳಬಹುದು. (4) ಮಾಡುಗ+ಈಡು+ಗುರಿ > ಮಾಡುಗ+ಸುರು+ಈಡು ಕೆಲವು ಎಸಕಗಳನ್ನು ನಡೆಸುವಲ್ಲಿ ಬಳಕೆಯಾಗುವ ವಸ್ತು ಅವನ್ನು ತಿಳಿಸುವ ಎಸಕಪದದ ಈಡು ಪಾಂಗಾಗಿಯೂ ಬರಬಲ್ಲುದು, ಇಲ್ಲವೇ ಅವುಗಳ ಸುರು ಪಾಂಗಾಗಿಯೂ ಬರಬಲ್ಲುದು; ಅದು ಈಡು ಪಾಂಗಾಗಿ ಬಳಕೆಯಾದಾಗ, ಆ ಎಸಕಕ್ಕೆ ಬಲಿಯಾದ ವಸ್ತು ಅದರ ಗುರಿ ಪಾಂಗಾಗಿ ಬರುತ್ತದೆ, ಮತ್ತು ಅದು ಸುರು ಪಾಂಗಾಗಿ ಬಳಕೆಯಾದಾಗ, ಈಡು ಪಾಂಗಾಗಿ ಬರುತ್ತದೆ: (1) ಅವನು ಹಗ್ಗವನ್ನು ಕಾಲಿಗೆ ಕಟ್ಟಿದ > ಅವನು ಹಗ್ಗದಿಂದ ಕಾಲನ್ನು ಕಟ್ಟಿದ. (2) ಅವನು ಕಲ್ಲನ್ನು ನೆಲಕ್ಕೆ ಹದಿದ > ಅವನು ಕಲ್ಲಿನಿಂದ ನೆಲವನ್ನು ಹದಿದ. (3) ಅವಳು ಸೆಗಣಿಯನ್ನು ನೆಲಕ್ಕೆ ಬಳಿದಳು > ಅವಳು ನೆಲವನ್ನು ಸೆಗಣಿಯಿಂದ ಬಳಿದಳು. ಈ ಮಾರ್ಪಾಡನ್ನು ಕೆಳಗೆ ಕೊಟ್ಟಿರುವ ಎಸಕಪದಗಳ ಬಳಕೆಯಲ್ಲಿ ಕಾಣಬಹುದು: (ಕ) ಕಟ್ಟು, ಬಿಗಿ (ಚ) ಹದಿ, ಹೊಚ್ಚು (ಟ) ಮೆತ್ತು, ಹಚ್ಚು, ತಿಗುರು, ಸವರು, ಬಳಿ, ತೊಡೆ. ತುಂಬು ಎಸಕಪದದ ಬಳಕೆಯಲ್ಲಿ ಕಾಣಿಸಿದ ಹಾಗೆ, ಈ ಎಸಕಪದಗಳ ಬಳಕೆಯಲ್ಲೂ ಎರಡು ಬಗೆಯ ಎಸಕಗಳನ್ನು ಕಾಣಲು ಬರುತ್ತದೆ. ಎತ್ತುಗೆಗಾಗಿ, ಮೇಲೆ (3)ನೇ ಎತ್ತುಗೆಯಲ್ಲಿ ಕಾಣಿಸಿದ ಮೆತ್ತು ಎಂಬ ಎಸಕಪದವು ಸೆಗಣಿಯ ಕದಲಿಕೆಯನ್ನು (ಅದು ಕಯ್ಯಿಂದ ನೆಲಕ್ಕೆ ಕದಲಿದುದನ್ನು) ಮೊದಲನೆಯ ಸೊಲ್ಲಿನಲ್ಲಿ ತಿಳಿಸುತ್ತದೆ, ಮತ್ತು ಅದರಿಂದಾಗಿ ನೆಲದಲ್ಲಾಗಿರುವ ಮಾರ್ಪಾಡನ್ನು ಎರಡನೆಯ ಸೊಲ್ಲಿನಲ್ಲಿ ತಿಳಿಸುತ್ತದೆ. ಆದರೆ, ಹಿಂಡು, ಕೊಡು, ಗುದ್ದು, ಸುಂದು, ತುರುಕು, ಹೊಯ್ಯು, ಇಡು, ಬಿಡು, ಬಗೆ, ಹೇಳು ಮೊದಲಾದ ಈ ಬಗೆಯ ಬೇರೆ ಎಸಕಪದಗಳು ಇಂತಹ ಮಾರ್ಪಾಡನ್ನು ತೋರಿಸುವುದಿಲ್ಲ; ಯಾಕೆಂದರೆ, ಇವುಗಳ ಗುರಿಯಾಗಿ ಬರುವ ವಸ್ತುವನ್ನು ಎಸಕದಲ್ಲಿ ಬಳಕೆಯಾಗಿರುವ ವಸ್ತುವೆಂದು ತಿಳಿಯಲು ಬರುವುದಿಲ್ಲ; ಇವಕ್ಕೆ ಮಾರ್ಪಾಡನ್ನು ತಿಳಿಸುವ ಹುರುಳಿಲ್ಲದುದೇ ಇದಕ್ಕೆ ಕಾರಣವಿರಬಹುದು: (4) ಅವನು ನೂಲನ್ನು ಬೆರಳಿಗೆ ಸುಂದಿದ > *ಅವನು ನೂಲಿನಿಂದ ಬೆರಳನ್ನು ಸುಂದಿದ. (5) ಅವನು ಹತ್ತಿಯನ್ನು ತೂತಿಗೆ ತುರುಕಿದ > *ಅವನು ಹತ್ತಿಯಿಂದ ತೂತನ್ನು ತುರುಕಿದ. ಕಟ್ಟು ಎಸಕಪದದ ಈಡು ಪಾಂಗಾಗಿ ಎಂತಹ ಹೆಸರುಪದ ಬರುತ್ತದೆ ಎಂಬುದರ ಮೇಲೆ ಅದನ್ನು ಮೇಲಿನ ಮಾರ್ಪಾಡಿನಲ್ಲಿ ಬಳಸಲು ಬರುತ್ತದೆಯೋ ಇಲ್ಲವೋ ಎಂಬುದು ಅವಲಂಬಿಸಿರುತ್ತದೆ:
ಹಗ್ಗ ಎಂಬುದನ್ನು ಅದರ ಈಡು ಪಾಂಗಾಗಿ ಬಳಸಿದಲ್ಲಿ, ಮೇಲೆ (1)ನೇ ಎತ್ತುಗೆಯಲ್ಲಿ ತೋರಿಸಿದ ಹಾಗೆ ಅದನ್ನು ಎರಡು ಬಗೆಯ ಪಾಂಗಿಟ್ಟಳಗಳೊಂದಿಗೂ ಬಳಸಲು ಬರುತ್ತದೆ; ಇದಕ್ಕೆ ಬದಲು, ನಾಯಿ ಎಂಬುದನ್ನು ಈಡು ಪಾಂಗಾಗಿ ಬಳಸಿದಲ್ಲಿ, ಅದನ್ನು ಒಂದು ಬಗೆಯ ಪಾಂಗಿಟ್ಟಳದೊಂದಿಗೆ ಮಾತ್ರ ಬಳಸಲು ಬರುತ್ತದೆ: (6) ಅವನು ನಾಯಿಯನ್ನು ಮರಕ್ಕೆ ಕಟ್ಟಿದ > *ಅವನು ನಾಯಿಯಿಂದ ಮರವನ್ನು ಕಟ್ಟಿದ. ತುಂಬು ಎಸಕಪದದ ಬಳಕೆಯಲ್ಲೂ ಮೇಲೆ ವಿವರಿಸಿದಂತದೇ ಮಾರ್ಪಾಡು ನಡೆಯುತ್ತದೆ; ಆದರೆ, ಇಲ್ಲಿ ಗುರಿ ಪಾಂಗಿನ ಬದಲು ಜಾಗ ಪಾಂಗು ಕಾಣಿಸಿಕೊಳ್ಳುತ್ತದೆ: (7) ಅವನು ಪುಸ್ತಕಗಳನ್ನು ಕವಾಟಿನಲ್ಲಿ ತುಂಬಿದ > ಅವನು ಕವಾಟನ್ನು ಪುಸ್ತಕಗಳಿಂದ ತುಂಬಿದ. (8) ನೀರು ಕೊಡದಲ್ಲಿ ತುಂಬಿತು > ಕೊಡ ನೀರಿನಿಂದ ತುಂಬಿತು. ಸುರು, ಗುರಿ, ಇಲ್ಲವೇ ಜಾಗ ಪಾಂಗುಗಳು ಈಡು ಪಾಂಗುಗಳಾಗಿ ಮಾರ್ಪಟ್ಟಿರು ವಲ್ಲಿ ಇನ್ನೊಂದು ಬಗೆಯ ಹುರುಳಿನ ಮಾರ್ಪಾಡೂ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬಹುದು: ಒಂದು ಪಾಂಗನ್ನು ಎಸಕ ಪೂರ್ತಿಯಾಗಿ ತಾಗುತ್ತದೆ ಎಂಬ ಹುರುಳು ಅದು ಈಡು ಪಾಂಗಾಗಿ ಬಂದಿರುವಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದಲ್ಲದೆ ಸುರು, ಗುರಿ ಇಲ್ಲವೇ ಜಾಗ ಪಾಂಗಾಗಿ ಬಂದಿರುವಲ್ಲಿ ಕಾಣಿಸಿಕೊಳ್ಳುವುದಿಲ್ಲ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (9) (ಕ) ಅವಳು ಸೆಗಣಿಯನ್ನು ನೆಲಕ್ಕೆ ಬಳಿದಳು > (ಚ) ಅವಳು ಸೆಗಣಿಯಿಂದ ನೆಲವನ್ನು ಬಳಿದಳು. (9)ನೇ ಎತ್ತುಗೆಯ (ಕ) ಸೊಲ್ಲಿಗೆ ತನ್ನಲ್ಲಿದ್ದ ಎಲ್ಲಾ ಸೆಗಣಿಯನ್ನೂ ನೆಲಕ್ಕೆ ಬಳಿದಳು ಎಂಬ ಹುರುಳು ಸಿಗಬಲ್ಲುದಲ್ಲದೆ, ಇಡೀ ನೆಲಕ್ಕೆ ಸೆಗಣಿ ಬಳಿದಳು ಎಂಬ ಹುರುಳು ಸಿಗಲಾರದು; ಇದಕ್ಕೆ ಬದಲು, (ಚ) ಸೊಲ್ಲಿಗೆ ಇಡೀ ನೆಲಕ್ಕೆ ಸೆಗಣಿ ಬಳಿದಳು ಎಂಬ ಹುರುಳು ಸಿಗಬಲ್ಲುದು; ಆದರೆ, ಎಲ್ಲಾ ಸೆಗಣಿಯನ್ನೂ ಬಳಿದು ಮುಗಿಸಿದಳು ಎಂಬ ಹುರುಳು ಸಿಗಲಾರದು. ಮೇಲೆ ಕೊಟ್ಟಿರುವ (7)ನೇ ಎತ್ತುಗೆಯಲ್ಲೂ ಇಂತಹದೇ ವ್ಯತ್ಯಾಸವನ್ನು ಕಾಣಬಹುದು: ಅದರ ಮೊದಲನೇ ಸೊಲ್ಲಿಗೆ ಎಲ್ಲಾ ಪುಸ್ತಕಗಳನ್ನೂ ತುಂಬಿದ ಎಂಬ ಹುರುಳು ಸಿಗಬಲ್ಲುದು, ಮತ್ತು ಎರಡನೇ ಸೊಲ್ಲಿಗೆ ಕಪಾಟನ್ನು ಪೂರ್ತಿ ತುಂಬಿದ ಎಂಬ ಹುರುಳು ಸಿಗಬಲ್ಲುದು. (5) ಮಾಡುಗ+ಜಾಗ > ಮಾಡುಗ+ಈಡು ಈಜು, ಓದು, ಉಳು, ತಿರಿ, ಗೆಲ್ಲು, ಸೋಲು, ತೊಡಗು, ಬರೆ ಎಂಬಂತಹ ಕೆಲವು ಪದಗಳ ಜಾಗ ಪಾಗನ್ನು ಈಡು ಪಾಂಗಾಗಿ ಮಾರ್ಪಡಿಸಲು ಬರುತ್ತದೆ: (1) ಅವನು ಹೊಳೆಯಲ್ಲಿ ಈಜಿದ > ಅವನು ಹೊಳೆಯನ್ನು ಈಜಿದ. (2) ಅವನು ಗದ್ದೆಯಲ್ಲಿ ಉತ್ತ > ಅವನು ಗದ್ದೆಯನ್ನು ಉತ್ತ. (3) ಅವನು ಆಟದಲ್ಲಿ ಗೆದ್ದ > ಅವನು ಆಟವನ್ನು ಗೆದ್ದ. ಹೊಳೆಯಲ್ಲಿ ಈಜಿದ ಎಂಬುದಕ್ಕೆ ಹೊಳೆಯ ಒಂದು ಜಾಗದಲ್ಲಿ ಈಜಿದ ಎಂಬ ಹುರುಳಿದೆ; ಇದಕ್ಕೆ ಬದಲು, ಹೊಳೆಯನ್ನು ಈಜಿದ ಎಂಬುದಕ್ಕೆ ಹೊಳೆಂiÀi ಒಂದು ದಡದಿಂದ ಇನ್ನೊಂದು ದಡಕ್ಕೆ ಈಜಿದ ಎಂಬ ಹುರುಳಿದೆ; ಎರಡನೇ ಸೊಲ್ಲಿನಲ್ಲಿ ಹೊಳೆ ಎಂಬುದು ಈಡು ಪಾಂಗಾಗಿ ಬಂದಿರುವುದೇ ಈ ಹುರುಳಿನ ವ್ಯತ್ಯಾಸಕ್ಕೆ ಕಾರಣ. ಉಳಿದ ಸೊಲ್ಲುಗಳ ನಡುವೆಯೂ ಇಂತಹದೇ ವ್ಯತ್ಯಾಸ ಇದೆ.
ಮಾಡುಗ+ಜಾಗ ಎಂಬ ಪಾಂಗಿಟ್ಟಳವಿರುವ ಎಲ್ಲಾ ಎಸಕಪದಗಳ ಜಾಗ ಪಾಂಗನ್ನೂ ಈ ರೀತಿ ಮಾರ್ಪಡಿಸಲು ಬರುವುದಿಲ್ಲ; ಎತ್ತುಗೆಗಾಗಿ, ಗೀಚು, ತಂಗು, ಪಳಗು, ಉರುಳು, ಮಲಗು, ಅಡಗು ಮೊದಲಾದ ಎಸಕಪದಗಳ ಪಾಂಗಿಟ್ಟಳದಲ್ಲಿ ಬರುವ ಜಾಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲು ಬರುವುದಿಲ್ಲ: (4) ಅವನು ಪುಸ್ತಕದಲ್ಲಿ ಗೀಚಿದ > *ಅವನು ಪುಸ್ತಕವನ್ನು ಗೀಚಿದ. (5) ಅವನು ಕೆಲಸದಲ್ಲಿ ಪಳಗಿದ > *ಅವನು ಕೆಲಸವನ್ನು ಪಳಗಿದ. ಇದೇ ರೀತಿಯಲ್ಲಿ, ಮಾಡುಗ+ಈಡು ಪಾಂಗಿಟ್ಟಳವಿರುವ ಬೇರೆ ಎಸಕಪದಗಳ ಈಡು ಪಾಂಗನ್ನು ಜಾಗ ಪಾಂಗಾಗಿಯೂ ಮಾರ್ಪಡಿಸಲು ಬರುವುದಿಲ್ಲ: (6) ಅವನು ಬರಹವನ್ನು ತಿದ್ದಿದ > *ಅವನು ಬರಹದಲ್ಲಿ ತಿದ್ದಿದ. (7) ಅವನು ಗೆಲ್ಲನ್ನು ಮುರಿದ > *ಅವನು ಗೆಲ್ಲಿನಲ್ಲಿ ಮುರಿದ. ಗೆಲ್ಲು ಇಲ್ಲವೇ ಸೋಲು ಎಸಕಪದವನ್ನು ಬಳಸಿರುವಲ್ಲಿ, ಕೆಳಗಿನ ಸೊಲ್ಲಿನಲ್ಲಿ ಕಾಣಿಸಿದ ಹಾಗೆ, ಜಾಗ ಪಾಂಗು ಈಡು ಪಾಂಗಾದಾಗ, ಮೊದಲಿಗಿದ್ದ ಈಡು ಪಾಂಗು ಗುರಿ ಪಾಂಗಾಗುತ್ತದೆ: (8) ಅವನು ಆಟದಲ್ಲಿ ಮೂರು ರುಪಾಯಿ ಗೆದ್ದ > ಅವನು ಆಟವನ್ನು ಮೂರು ರುಪಾಯಿಗೆ ಗೆದ್ದ. ಕೊಂಡುಕೊಳ್ಳು ಪದವನ್ನು ಬಳಸಿರುವಲ್ಲಿ ಗುರಿ ಪಾಂಗು ಸುರು ಇಲ್ಲವೇ ಜಾಗ ಪಾಂಗಾಗಬಲ್ಲುದು, ಆದರೆ, ಮಾರು ಪದವನ್ನು ಬಳಸಿರುವಲ್ಲಿ ಆಗಲಾರದು: (9) ಅವನು ಹತ್ತು ಸಾವಿರಕ್ಕೆ ಮನೆ ಕೊಂಡುಕೊಂಡ > ಅವನು ಹತ್ತು ಸಾವಿರದಿಂದ ಮನೆ ಕೊಂಡುಕೊಂಡ > ಅವನು ಹತ್ತು ಸಾವಿರದಲ್ಲಿ ಮನೆ ಕೊಂಡುಕೊಂಡ. (10) ಅವನು ಹತ್ತುಸಾವಿರಕ್ಕೆ ಮನೆ ಮಾರಿದ > *ಅವನು ಹತ್ತು ಸಾವಿರ ದಿಂದ ಮನೆ ಮಾರಿದ > *ಅವನು ಹತ್ತು ಸಾವಿರದಲ್ಲಿ ಮನೆ ಮಾರಿದ. (6) ಮಾಡುಗ+ಗುರಿ > ಮಾಡುಗ+ಈಡು ಹತ್ತು, ಏರು, ಒಪ್ಪು, ತೊಡಗು, ತಲಪು, ಹೊಗು, ಕಚ್ಚು, ಕಡಿ, ಕುತ್ತು, ಇರಿ, ತಿವಿ, ಚುಚ್ಚು, ಪರಚು ಎಂಬಂತಹ ಕೆಲವು ಎಸಕಪದಗಳ ಪಾಂಗಿಟ್ಟಳ ದಲ್ಲಿರುವ ಗುರಿ ಪಾಂಗು ಈಡು ಪಾಂಗಾಗಿ ಮಾರ್ಪಡಬಲ್ಲುದು: (1) ಅವನು ಗುಡ್ಡಕ್ಕೆ ಹತ್ತಿದ > ಅವನು ಗುಡ್ಡವನ್ನು ಹತ್ತಿದ. (2) ಅವನು ಕೆಲಸಕ್ಕೆ ತೊಡಗಿದ > ಅವನು ಕೆಲಸವನ್ನು ತೊಡಗಿದ. (3) ಬೆಕ್ಕು ಕಯ್ಗೆ ಪರಚಿತು > ಬೆಕ್ಕು ಕಯ್ಯನ್ನು ಪರಚಿತು. (4) ಅವನು ಬೆನ್ನಿಗೆ ತಿವಿದ > ಅವನು ಬೆನ್ನನ್ನು ತಿವಿದ. (5) ಅವನು ಮನೆಗೆ ತಲಪಿದ > ಅವನು ಮನೆಯನ್ನು ತಲಪಿದ. ಆದರೆ, ಮಾಡುಗ+ಗುರಿ ಪಾಂಗಿಟ್ಟಳವಿರುವ ಇಳಿ, ಎರಗು, ಗುದ್ದು, ಬಗ್ಗು, ಹಂಚು ಮೊದಲಾದ ಬೇರೆ ಎಸಕಪದಗಳ ಗುರಿ ಪಾಂಗು ಈ ರೀತಿ ಈಡು ಪಾಂಗಾಗಿ ಮಾರ್ಪಡುವುದಿಲ್ಲ: (6) ಅವನು ಕೆರೆಗೆ ಇಳಿದ > *ಅವನು ಕೆರೆಯನ್ನು ಇಳಿದ.
(7) ಅವನು ಹುಡುಗನ ಬೆನ್ನಿಗೆ ಗುದ್ದಿದ > *ಅವನು ಹುಡುಗನ ಬೆನ್ನನ್ನು ಗುದ್ದಿದ. (8) ಅವನು ಬಾವಿಗೆ ಬಗ್ಗಿದ > *ಅವನು ಬಾವಿಯನ್ನು ಬಗ್ಗಿದ. ಇಲ್ಲೂ ಕೂಡ, ಗುರಿ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಿದುದರಿಂದಾಗಿ ಸೊಲ್ಲಿನ ಹುರುಳಿನಲ್ಲಿ ಕೆಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ; ಎತ್ತುಗೆಗಾಗಿ, ಅವನು ಮಾಳಿಗೆಯಿಂದ ಮರಕ್ಕೆ ಹತ್ತಿದ ಎನ್ನಲು ಬರುತ್ತದೆ; ಆದರೆ, ಅವನು ಮಾಳಿಗೆಯಿಂದ ಮರವನ್ನು ಹತ್ತಿದ ಎನ್ನಲು ಬರುವುದಿಲ್ಲ. ಮರ ಎಂಬುದನ್ನು ಹತ್ತು ಎಸಕದ ಈಡಾಗಿ ಬಳಸಿದಲ್ಲಿ, ಬುಡದಿಂದಲೇ ಹತ್ತಿದ ಎಂಬ ಹುರುಳು ಸಿಗುವುದೇ ಇದಕ್ಕೆ (7) ಆಗುಗ+ಸುರು > ಆಗುಗ+ಜಾಗ ಆಗುಗ+ಸುರು ಪಾಂಗಿಟ್ಟಳವಿರುವ ಒಸರು, ಸೂಸು, ಸೋರು, ನರಳು, ಜೋತಾಡು, ತೂಗು, ತೊಟ್ಟಿಕ್ಕು ಎಂಬಂತಹ ಕೆಲವು ಎಸಕಪದಗಳ ಸುರು ಪಾಂಗು ಜಾಗ ಪಾಂಗಾಗಿ ಮಾರ್ಪಡಬಲ್ಲುದು: (1) ಕಣ್ಣಿನಿಂದ ನೀರು ಒಸರಿತು > ಕಣ್ಣಿನಲ್ಲಿ ನೀರು ಒಸರಿತು. (2) ಮಾಡಿನಿಂದ ನೀರು ಸೋರುತ್ತಿತ್ತು > ಮಾಡಿನಲ್ಲಿ ನೀರು ಸೋರುತ್ತಿತ್ತು. (3) ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದೆ > ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದೆ. (4) ಅವನು ನೋವಿನಿಂದ ನರಳಿದ > ಅವನು ನೋವಿನಲ್ಲಿ ನರಳಿದ. ಆದರೆ, ಆಗುಗ+ಸುರು ಪಾಂಗಿಟ್ಟಳವಿರುವ ಬೀಳು, ಹರಿ, ಸುರಿ, ಉರುಳು, ಕಳಚು ಮೊದಲಾದ ಬೇರೆ ಎಸಕಪದಗಳ ಬಳಕೆಯಲ್ಲಿ ಇಂತಹ ಮಾರ್ಪಾಡು ಕಾಣಿಸುವುದಿಲ್ಲ: (5) ಕೊಡದಿಂದ ಹಾಲು ಚೆಲ್ಲಿತು > *ಕೊಡದಲ್ಲಿ ಹಾಲು ಚೆಲ್ಲಿತು. (6) ಮರದಿಂದ ಹಣ್ಣು ಬಿತ್ತು > *ಮರದಲ್ಲಿ ಹಣ್ಣು ಬಿತ್ತು. ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳ ಸುರು ಪಾಂಗು ಎಸಕದ ಮುಟ್ಟನ್ನು (ಕರಣವನ್ನು) ತಿಳಿಸುತ್ತಿದೆಯಾದರೆ, ಅದನ್ನೂ ಜಾಗ ಪಾಂಗಾಗಿ ಮಾರ್ಪಡಿಸಲು ಬರುತ್ತದೆ: (7) ಅವನು ಚೂರಿಯಿಂದ ಹಣ್ಣನ್ನು ಕುತ್ತಿದ > ಅವನು ಚೂರಿಯಲ್ಲಿ ಹಣ್ಣನ್ನು ಕುತ್ತಿದ. (8) ಅವನು ಬೆರಳಿನಿಂದ ಕಾಯನ್ನು ಚಿಮ್ಮಿದ > ಅವನು ಬೆರಳಿನಲ್ಲಿ ಕಾಯನ್ನು ಚಿಮ್ಮಿದ. (9) ಅವನು ಗುದ್ದಲಿಯಿಂದ ಗಡ್ಡೆಗಳನ್ನು ಅಗೆದ > ಅವನು ಗುದ್ದಲಿಯಲ್ಲಿ ಗಡ್ಡೆಗಳನ್ನು ಅಗೆದ. ಮುಟ್ಟನ್ನು ತಿಳಿಸುವ ಸುರು ಪಾಂಗು ಬೇರೆ ಬಗೆಯ ಮಾಡುಹಗಳನ್ನು ತಿಳಿಸುವ ಎಸಕಪದಗಳೊಂದಿಗೂ ನೆರವು ಪಾಂಗಾಗಿ ಬಳಕೆಯಾಗಬಲ್ಲುದು; ಅಂತಹ ಕಡೆಗಳಲ್ಲೂ ಅದು ಜಾಗ ಪಾಂಗಾಗಿ ಮಾರ್ಪಡಬಲ್ಲುದು: (10) ಅವನು ಕತ್ತಿಯಿಂದ ಕೊಂಬೆಯನ್ನು ತರಿದ > ಅವನು ಕತ್ತಿಯಲ್ಲಿ ಕೊಂಬೆಯನ್ನು ತರಿದ. (11) ಅವನು ದೋಣಿಯಿಂದ ಹೊಳೆ ದಾಟಿದ > ಅವನು ದೋಣಿಯಲ್ಲಿ ಹೊಳೆ ದಾಟಿದ. (12) ಅವನು ಸರಪಳಿಯಿಂದ ನಾಯಿಯನ್ನು ಮರಕ್ಕೆ ಕಟ್ಟಿದ > ಅವನು ಸರಪಳಿಯಲ್ಲಿ ನಾಯಿಯನ್ನು ಮರಕ್ಕೆ
ಆದರೆ, ಎಸಕಪದಗಳ ಪಾಂಗಿಟ್ಟಳದಲ್ಲಿ ಇಟ್ಟಳದ ಜಾಗ ಪಾಂಗು ಬಂದಿದೆ ಯಾದರೆ, ಅದರೊಂದಿಗೆ ನೆರವು ಪಾಂಗಾಗಿ ಬರುವ ಸುರು ಪಾಂಗು ಜಾಗ ಪಾಂಗಾಗಿ ಮಾರ್ಪಡುವುದಿಲ್ಲ: (13ಕ) ಅವನು ಬಿಸಿನೀರಿನಿಂದ ಅಂಗಳದಲ್ಲಿ ಕಾಲು ತೊಳೆದ > *ಅವನು ಬಿಸಿನೀರಿನಲ್ಲಿ ಅಂಗಳದಲ್ಲಿ ಕಾಲು ತೊಳೆದ. ಇಂತಹ ಸೊಲ್ಲುಗಳಲ್ಲಿ ಜಾಗ ಪಾಂಗನ್ನು ತಿಳಿಸದಿದ್ದಲ್ಲಿ ಸುರು ಪಾಂಗನ್ನು ಜಾಗ ಪಾಂಗಾಗಿ ಮಾರ್ಪಡಿಸಲು ಬರುತ್ತದೆ: (13ಚ) ಅವನು ಬಿಸಿನೀರಿನಿಂದ ಕಾಲು ತೊಳೆದ > ಅವನು ಬಿಸಿನೀರಿನಲ್ಲಿ ಕಾಲು ತೊಳೆದ. ಇದೇ ರೀತಿಯಲ್ಲಿ, ಎಸಕಪದಗಳ ಪಾಂಗಿಟ್ಟಳದಲ್ಲಿ ಇಟ್ಟಳದ ಸುರು ಪಾಂಗು ಬಂದಿದೆಯಾದರೆ, ಮುಟ್ಟನ್ನು ತಿಳಿಸುವ ನೆರವು ಪಾಂಗು ಜಾಗ ಪಾಂಗಾಗಿ ಬಳಕೆ ಯಾಗುತ್ತದಲ್ಲದೆ ಇನ್ನೊಂದು ಸುರು ಪಾಂಗಾಗಿ ಬಳಕೆಯಾಗುವುದಿಲ್ಲ: (14) ಅವನು ಬಾವಿಯಿಂದ ರಾಟೆಯಲ್ಲಿ ನೀರು ಸೇದಿದ > *ಅವನು ಬಾವಿಯಿಂದ ರಾಟೆಯಿಂದ ನೀರು ಸೇದಿದ. (15) ಅವನು ಹಣ್ಣಿನಿಂದ ಉಗುರಿನಲ್ಲಿ ಸಿಪ್ಪೆ ಸುಲಿದ > *ಅವನು ಹಣ್ಣಿನಿಂದ ಉಗುರಿನಿಂದ ಸಿಪ್ಪೆ ಸುಲಿದ. (16) ಅವಳು ಹಾಲಿನಿಂದ ಬಟ್ಟೆಯಲ್ಲಿ ಕಸ ಸೋಸಿದಳು > *ಅವಳು ಹಾಲಿನಿಂದ ಬಟ್ಟೆಯಿಂದ ಕಸ ಸೋಸಿದಳು. (8) ಆಗುಗ+ಗುರಿ > ಆಗುಗ+ಜಾಗ ಆಗುಗ+ಗುರಿ ಪಾಂಗಿಟ್ಟಳವಿರುವ ಕರಗು, ಕಂದು, ನಲುಗು, ಬಾಡು, ಬತ್ತು, ತುರಿಸು, ಸೆಡೆ, ಒಡೆ, ಕುಸಿ, ನೆನೆ, ನಂದು ಎಂಬಂತಹ ಕೆಲವು ಎಸಕಪದಗಳ ಗುರಿ ಪಾಂಗು ಎಸಕ ನಡೆಯುವುದಕ್ಕೆ ಕಾರಣವಾಗಿರುವ ಒತ್ತರವನ್ನು ತಿಳಿಸುತ್ತಿದೆ ಯಾದರೆ, ಅದನ್ನು ಜಾಗ ಪಾಂಗಾಗಿ ಮಾರ್ಪಡಿಸಲು ಬರುತ್ತದೆ: (1) ಬೆಂಕಿಗೆ ಬೆಣ್ಣೆ ಕರಗಿತು > ಬೆಂಕಿಯಲ್ಲಿ ಬೆಣ್ಣೆ ಕರಗಿತು. (2) ಬಿಸಿಲಿಗೆ ಗಿಡ ಬಾಡಿತು > ಬಿಸಿಲಿನಲ್ಲಿ ಗಿಡ ಬಾಡಿತು. (3) ಮಳೆಗೆ ಬಟ್ಟೆ ನೆನೆಯಿತು > ಮಳೆಯಲ್ಲಿ ಬಟ್ಟೆ ನೆನೆಯಿತು. (4) ಗಾಳಿಗೆ ಸೊಡರು ಆರಿತು > ಗಾಳಿಯಲ್ಲಿ ಸೊಡರು ಆರಿತು. ಗುರಿ ಪಾಂಗು ಬೇರೆ ಬಗೆಯ ಗುರಿಗಳನ್ನು ತಿಳಿಸುತ್ತಿರುವಂತಹ ಅಡರು, ಹೆದರು, ತಗಲು, ತಾಗು, ಸುಂದು ಮೊದಲಾದ ಬೇರೆ ಆಗುಗ+ಗುರಿ ಪಾಂಗಿಟ್ಟಳವಿರುವ ಎಸಕಪದಗಳ ಗುರಿ ಪಾಂಗು ಇಂತಹ ಮಾರ್ಪಾಡಿಗೆ ಒಳಪಡುವುದಿಲ್ಲ: (5) ಮೇಜು ಕಾಲಿಗೆ ತಗಲಿತು > *ಮೇಜು ಕಾಲಿನಲ್ಲಿ ತಗಲಿತು. (6) ಅವನು ಹುಲಿಗೆ ಹೆದರಿದ > *ಅವನು ಹುಲಿಯಲ್ಲಿ ಹೆದರಿದ. ಇದಲ್ಲದೆ, (ಕ) ಮಾಡುಗ+ಗುರಿ ಪಾಂಗಿಟ್ಟಳವಿರುವ ಇಳಿ, ಜಾರು, ತಪ್ಪು, ಸಿಕ್ಕು, ಸಿಲುಕು ಎಂಬಂತಹ ಕೆಲವು ಎಸಕಪದಗಳ, (ಚ) ಮಾಡುಗ+ಈಡು+ಗುರಿ ಪಾಂಗಿಟ್ಟಳವಿರುವ ಹಾಕು ಎಸಕಪದದ, ಮತ್ತು (ಟ) ಆಗುಗ+ಗುರಿ ಪಾಂಗಿಟ್ಟಳ ವಿರುವ ಬೀಳು ಎಸಕಪದದ ಗುರಿ ಪಾಂಗೂ ಜಾಗ ಪಾಂಗಾಗಿ ಮಾರ್ಪಡಬಲ್ಲುದು: (7) ಅವನು ನೀರಿಗೆ ಇಳಿದ > ಅವನು ನೀರಿನಲ್ಲಿ ಇಳಿದ. (8) ಅವನು ಬಟ್ಟೆಯನ್ನು ನೀರಿಗೆ ಹಾಕಿದ > ಅವನು ಬಟ್ಟೆಯನ್ನು ನೀರಿನಲ್ಲಿ ಹಾಕಿದ.
(9) ಹಣ್ಣು ನೀರಿಗೆ ಬಿತ್ತು > ಹಣ್ಣು ನೀರಿನಲ್ಲಿ ಬಿತ್ತು. (9) ಈಡುಳ್ಳುದನ್ನು ಈಡಾಗಿ ಮಾಡುವುದು: ಕೆಲವು ಎಸಕಪದಗಳ ಈಡು ಪಾಂಗನ್ನು ಬಿಟ್ಟುಕೊಟ್ಟು, ಈಡುಳ್ಳುದನ್ನು ಈಡು ಪಾಂಗಾಗಿ ಬಳಸಲು ಬರುತ್ತದೆ: (1ಕ) ತಲೆಯ ಕೂದಲು ನರೆತಿದೆ > ತಲೆ ನರೆತಿದೆ. (1ಚ) ನಾಯಿ ಅವನ ಕಾಲನ್ನು ಕಚ್ಚಿತು > ನಾಯಿ ಅವನನ್ನು ಕಚ್ಚಿತು. (1ಟ) ಆತ ಮರದ ಗೆಲ್ಲನ್ನು ಸವರಿದ > ಆತ ಮರವನ್ನು ಸವರಿದ. (1ಕ)ದಲ್ಲಿ ನರೆತಿರುವುದು ಕೂದಲು; ಹಾಗಾಗಿ ಅದು ಮೊದಲನೆಯ ಸೊಲ್ಲಿ ನಲ್ಲಿ ಈಡು ಪಾಂಗಾಗಿ ಬಂದಿದೆ; ಆದರೆ, ಎರಡನೆಯ ಸೊಲ್ಲಿನಲ್ಲಿ ಕೂದಲುಳ್ಳ ತಲೆ ಎಂಬುದನ್ನೇ ಈಡು ಪಾಂಗಾಗಿ ಬಳಸಲಾಗಿದೆ. ಕಚ್ಚು, ಕಡಿ, ನರೆ, ಬತ್ತು, ಬಾಚು, ಬಿಚ್ಚು, ಮುಟ್ಟು, ಮೆಟ್ಟು, ರುಬ್ಬು, ರೋಸು, ಸವರು, ಸಿಕ್ಕು, ಸೊರಗು, ಕರೆ ಮೊದಲಾದ ಕೆಲವು ಎಸಕಪದಗಳ ಬಳಕೆಯಲ್ಲಿ ಈ ರೀತಿ ಈಡುಳ್ಳವನ್ನು ಈಡು ಪಾಂಗಾಗಿ ಮಾರ್ಪಡಿಸಲು ಬರುತ್ತದೆ. ಆದರೆ, ಬೇರೆ ಎಸಕಪದಗಳ ಬಳಕೆಯಲ್ಲಿ ಈ ರೀತಿ ಈಡುಳ್ಳುದನ್ನು ಈಡು ಪಾಂಗಾಗಿ ಬಳಸಲು ಬರುವುದಿಲ್ಲ: (2ಕ) ತರಕಾರಿಯ ಬೆಲೆ ಏರಿತು >*ತರಕಾರಿ ಏರಿತು. (2ಚ) ಕೊಡದ ನೀರು ತಣಿಯಿತು > *ಕೊಡ ತಣಿಯಿತು. (2ಟ) ಮರದ ಕೊಂಬೆ ಬಾಗಿದೆ > *ಮರ ಬಾಗಿದೆ. ಮರ ಬಾಗಿದೆ ಎಂಬುದಕ್ಕೆ ಮರದ ಕೊಂಬೆ ಬಾಗಿದೆ ಎಂಬ ಹುರುಳಿಲ್ಲ. (10) ಪಾಂಗುಗಳನ್ನು ಅದಲುಬದಲು ಮಾಡುವುದು: ತಬ್ಬು, ಅಪ್ಪು, ಮುಟ್ಟು, ತಗಲು, ಅಪ್ಪಳಿಸು, ಹೋಲು, ಡಿಕ್ಕಿಹೊಡೆ, ಕಲೆ, ಕೂಡು, ಸೇರು, ಬೆಸೆ, ಕಾದು, ಮೊದಲಾದ ಕೆಲವು ಎಸಕಪದಗಳ ಪಾಂಗುಗಳನ್ನು ಅದಲು ಬದಲು ಮಾಡಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲು ಗಳನ್ನು ಗಮನಿಸಬಹುದು: (1ಕ) ರಾಜು ಹುಡುಗನನ್ನು ತಬ್ಬಿದ > ಹುಡುಗ ರಾಜುವನ್ನು ತಬ್ಬಿದ. (1ಚ) ಕಾರು ಬಸ್ಸಿಗೆ ಅಪ್ಪಳಿಸಿತು > ಬಸ್ಸು ಕಾರಿಗೆ ಅಪ್ಪಳಿಸಿತು. (1ಟ) ಈ ಮನೆ ನಮ್ಮ ಮನೆಯನ್ನು ಹೋಲುತ್ತದೆ > ನಮ್ಮ ಮನೆ ಈ ಮನೆಯನ್ನು ಹೋಲುತ್ತದೆ. ಆದರೆ, ಇವುಗಳೊಳಗೆ ಹುರುಳಿನಲ್ಲಿ ವ್ಯತ್ಯಾಸವೂ ಇದೆ; (1ಕ) ಮತ್ತು (1ಚ) ಸೊಲ್ಲುಗಳಲ್ಲಿ ಈ ವ್ಯತ್ಯಾಸ ಮಾಡುಗ ಪಾಂಗು ಯಾವುದು (ಎಂದರೆ ಎಸಕ ಯಾವುದರ ಹತೋಟಿಯಲ್ಲಿತ್ತು) ಎಂಬುದರ ಮೇಲೆ ಅವಲಂಬಿಸಿದೆ; (1ತ) ಸೊಲ್ಲಿನಲ್ಲಿ ಹತೋಟಿಯನ್ನು ಪಡೆಯಲಾಗದ ಮರವನ್ನು ಇಲ್ಲವೇ ಗೋಡೆಗೆ ಎಂಬುದನ್ನು ಎರಡನೆಯ ಪಾಂಗಾಗಿ ಬಳಸಿದಲ್ಲಿ ಅದನ್ನು ಮಾಡುಗ ಪಾಂಗಾಗಿ ಮಾರ್ಪಡಿಸಲು ಬರುವುದಿಲ್ಲ: (1ತ) ರಾಜು ಮರವನ್ನು ತಬ್ಬಿದ > *ಮರ ರಾಜುವನ್ನು ತಬ್ಬಿತು. (1ಪ) ಕಾರು ಗೋಡೆಗೆ ಅಪ್ಪಳಿಸಿತು > *ಗೋಡೆ ಕಾರಿಗೆ ಅಪ್ಪಳಿಸಿತು. ಇದಲ್ಲದೆ (1ಟ)ದಲ್ಲಿ, ಮತ್ತು (1ಕ-ಚ) ಸೊಲ್ಲುಗಳಲ್ಲೂ ಮಾಡುಗ ಇಲ್ಲವೇ ಆಗುಗವಾಗಿ ಬರುವ ಪಾಂಗು ಸೊಲ್ಲಿನ ನೆಲೆಯಾಗಿರುತ್ತದೆ ಮತ್ತು ಇದನ್ನವ ಲಂಬಿಸಿಯೂ ಅವುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ.
ಮುಂದೆ 8.5ರಲ್ಲಿ ವಿವರಿಸಿರುವ ಹಾಗೆ, ಇಂತಹ ಸೊಲ್ಲುಗಳನ್ನು ಎದುರೆಸಕದ ಸೊಲ್ಲುಗಳಾಗಿಯೂ ತಿಳಿಸಲು ಬರುತ್ತದೆ, ಮತ್ತು ಇವುಗಳ ಎರಡು ಪಾಂಗುಗಳನ್ನು ಒಟ್ಟುಸೇರಿಸಿ ಹಲವೆಣಿಕೆಯ ಒಂದೇ ಪಾಂಗಾಗಿ ಮಾಡಿಯೂ ಬಳಸಲು ಬರುತ್ತದೆ: (2ಕ) ರಾಜು ಮತ್ತು ಹರಿ ಒಬ್ಬರನ್ನೊಬ್ಬರು ತಬ್ಬಿಕೊಂಡರು. (2ಚ) ಕಾರುಗಳು ಒಂದಕ್ಕೊಂದು ಅಪ್ಪಳಿಸಿದುವು. ಕುತ್ತು, ಚುಚ್ಚು, ಹಿಡಿ, ಒಟ್ಟು ಎಂಬಂತಹ ಬೇರೆ ಕೆಲವು ಎಸಕಪದಗಳ ಪಾಂಗುಗಳನ್ನೂ, ಅವುಗಳ ಪಾಂಗುಗಳಾಗಿ ಬರುವ ವಸ್ತುಗಳನ್ನವಲಂಬಿಸಿ, ಇದೇ ರೀತಿಯಲ್ಲಿ ಅದಲು ಬದಲು ಮಾಡಲು ಬರುತ್ತದೆ: (3) ಅವನು ಹಣ್ಣನ್ನು ಕೋಲಿಗೆ ಚುಚ್ಚಿದ > ಅವನು ಕೋಲನ್ನು ಹಣ್ಣಿಗೆ ಚುಚ್ಚಿದ. (4) ಅವನು ಕೋಲನ್ನು ಬೆಂಕಿಗೆ ಹಿಡಿದ > ಅವನು ಬೆಂಕಿಯನ್ನು ಕೋಲಿಗೆ ಹಿಡಿದ. (11) ಆಗುಗ+ಗುರಿ > ಆಗುಗ+ಈಡು ಮರೆ ಮತ್ತು ತಪ್ಪು ಎಸಕಪದಗಳ ಪಾಂಗಿಟ್ಟಳದಲ್ಲಿ ಬರುವ ಗುರಿ ಪಾಂಗು ಆಗುಗ ಪಾಂಗಾಗಬಲ್ಲುದು, ಮತ್ತು ಹಾಗಾದಾಗ, ಅದರ ಆಗುಗ ಪಾಂಗು ಈಡು ಪಾಂಗಾಗುತ್ತದೆ: (1) ಅವನಿಗೆ ಕತೆ ಮರೆತಿತು > ಅವನು ಕತೆ ಮರೆತ. (2) ಅವನಿಗೆ ದಾರಿ ತಪ್ಪಿತು > ಅವನು ದಾರಿ ತಪ್ಪಿದ.
8.2.2 ಇರು ಪದದ ಪಾಂಗಿಟ್ಟಳಗಳಲ್ಲಿ ಮಾರ್ಪಾಡುಗಳು
ಇರುಹವನ್ನು ತಿಳಿಸಲು ಇರು ಎಂಬ ಒಂದೇ ಪದ ಬಳಕೆಯಾಗುತ್ತದೆ, ಮತ್ತು ಅದರಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ ಇರುಗ+ಜಾಗ, ಇರುಗ+ಪರಿಚೆ, ಮತ್ತು ಇರುಗ+ಪತ್ತುಗೆ ಎಂಬ ಮೂರು ಬಗೆಯ ಪಾಂಗಿಟ್ಟಳಗಳನ್ನು ಬಳಸಲು ಬರುತ್ತದೆ ಎಂಬುದನ್ನು ಮೇಲೆ 7.3ರಲ್ಲಿ ನೋಡಿರುವೆವು. ಈ ಮೂರು ಬಗೆಯ ಪಾಂಗಿಟ್ಟಳಗಳ ನಡುವೆ ಎಂತಹ ಸಂಬಂದವಿದೆ, ಅವು ಗಳಲ್ಲಿ ಒಂದನ್ನು ಇನ್ನೊಂದಾಗಿ ಮಾರ್ಪಡಿಸಲು ಬರುತ್ತದೆಯೇ ಎಂಬುದನ್ನು ಕೆಳಗೆ ವಿವರಿಸಲಾಗಿದೆ. ಇಲ್ಲಿಯೂ ಇರು ಪದದಲ್ಲಿ ಯಾವ ಮಾರ್ಪಾಡನ್ನೂ ಮಾಡದೇನೇ ಅದರ ಪಾಂಗಿಟ್ಟಳದಲ್ಲಿ ಮಾರ್ಪಾಡನ್ನು ನಡೆಸಲಾಗುತ್ತದೆ ಎಂಬುದನ್ನು ಗಮನಿಸ ಬಹುದು. (1) ಇರುವಿಕೆಯ ಇಟ್ಟಳ ಮತ್ತು ಪರಿಚೆ ಇಟ್ಟಳ ಒಂದು ಜಾಗ ಇಲ್ಲವೇ ಹೊತ್ತಿನಲ್ಲಿ ಇರುಗ ಪಾಂಗಿನ ಇರುವಿಕೆಯನ್ನು ತಿಳಿಸುವುದು ಇರುವಿಕೆಯ ಇಟ್ಟಳದ ಮುಕ್ಯ ಹುರುಳಾಗಿದೆ, ಮತ್ತು ಇರುಗ ಪಾಂಗಿನಲ್ಲಿ ಒಂದು ಪರಿಚೆಯ ಇರುವಿಕೆಯನ್ನು ತಿಳಿಸುವುದು ಪರಿಚೆ ಇಟ್ಟಳದ ಮುಕ್ಯ ಹುರುಳಾಗಿದೆ. ಇರುಗ ಎಲ್ಲಿದೆ ಎಂಬುದನ್ನು ಇರುವಿಕೆಯ ಇಟ್ಟಳ ತಿಳಿಸುವುದಾದರೆ, ಇರುಗದಲ್ಲಿ ಏನಿದೆ (ಎಂತಹ ಪರಿಚೆ ಇದೆ) ಎಂಬುದನ್ನು ಪರಿಚೆ ಇಟ್ಟಳ ತಿಳಿಸುತ್ತದೆ. ಹಾಗಾಗಿ, ಪರಿಚೆ ಇಟ್ಟಳದಲ್ಲಿ ಬಂದಿರುವ ಪರಿಚೆ ಪಾಂಗನ್ನು ಒಂದು ಇರುಗ ಪಾಂಗಾಗಿ, ಮತ್ತು ಇರುಗ ಪಾಂಗನ್ನು ಒಂದು ಜಾಗ ಪಾಂಗಾಗಿ ಮಾರ್ಪಡಿಸಲು ಬರುತ್ತದೆಯಾದರೆ, ಆ ಪರಿಚೆ ಇಟ್ಟಳವನ್ನು ಒಂದು ಇರುವಿಕೆಯ ಇಟ್ಟಳವಾಗಿ ಮಾರ್ಪಡಿಸಿ ಹೇಳಬಹುದು. ಇಂತಹ ಮಾರ್ಪಾಡನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನು ಜಾಣನಾಗಿದ್ದಾನೆ. (1ಚ) ಅವನಲ್ಲಿ ಜಾಣ್ಮೆಯಿದೆ.
(2ಕ) ಹುಡುಗ ತುಂಟನಾಗಿದ್ದಾನೆ. (2ಚ) ಹುಡುಗನಲ್ಲಿ ತುಂಟತನವಿದೆ. ಇಲ್ಲಿ ನಾವು ಮುಕ್ಯವಾಗಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಪರಿಚೆ ಪಾಂಗನ್ನು ಇರುಗ ಪಾಂಗಾಗಿ ಮಾರ್ಪಡಿಸಬೇಕಿದ್ದಲ್ಲಿ, ಪರಿಚೆಯನ್ನು ತಿಳಿಸುವ ಪರಿಚೆ ಪದವನ್ನು ಪರಿಚೆಯನ್ನು ಗುರುತಿಸಬಲ್ಲ ಹೆಸರುಪದವಾಗಿ ಮಾರ್ಪಡಿಸಬೇಕಾಗುತ್ತದೆ, ಮತ್ತು ಹೀಗೆ ಮಾರ್ಪಡಿಸಿದಾಗಲೂ ಅದು ಒಂದು ಪರಿಚೆಯನ್ನೇ ಗುರುತಿಸುವಂತಿರ ಬೇಕಾಗುತ್ತದೆ. ಕನ್ನಡದಲ್ಲಿ ಪರಿಚೆಪದಗಳನ್ನು ಹೆಸರುಪದಗಳಾಗಿ ಮಾರ್ಪಡಿಸಿದಾಗ, ಕೆಲವು ಕಡೆಗಳಲ್ಲಿ ಅದು ಆ ಪರಿಚೆಯನ್ನೇ ಗುರುತಿಸುತ್ತದೆ; ಆದರೆ, ಬೇರೆ ಕಡೆಗಳಲ್ಲಿ ಅದು ಆ ಪರಿಚೆಯನ್ನು ಪಡೆದಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಗುರುತಿಸುತ್ತದೆ. ಎತ್ತುಗೆಗಾಗಿ, ಜಾಣ-ಜಾಣ್ಮೆ, ತುಂಟ-ತುಂಟತನ, ಮುದಿ-ಮುಪ್ಪು, ನಲ್-ನಲ್ಮೆ ಮೊದಲಾದ ಕಡೆಗಳಲ್ಲಿ ಪರಿಚೆಪದದಿಂದ ಪಡೆದಿರುವ ಹೆಸರುಪದ ಆ ಪರಿಚೆಪದ ತಿಳಿಸುವ ಪರಿಚೆಯನ್ನೇ ಗುರುತಿಸುತ್ತದೆ. ಇದಕ್ಕೆ ಬದಲು, ಕುರುಡು-ಕುರುಡ, ಕುಂಟು-ಕುಂಟಿ ಮೊದಲಾದ ಕಡೆಗಳಲ್ಲಿ ಅದು ಆ ಪರಿಚೆಯನ್ನು ಪಡೆದಿರುವ ವ್ಯಕ್ತಿಯನ್ನು ಗುರುತಿಸುತ್ತದೆ. ಇವುಗಳಲ್ಲಿ ಮೊದಲನೇ ಬಗೆಯ ಪರಿಚೆಪದಗಳನ್ನು ಮಾತ್ರ ಮೇಲೆ ವಿವರಿಸಿದಂತಹ ಪಾಂಗಿಟ್ಟಳದ ಮಾರ್ಪಾಡಿನಲ್ಲಿ ಬಳಸಲು ಬರುತ್ತದೆ. ಈ ರೀತಿ ಪರಿಚೆಪದವನ್ನು ಹೆಸರುಪದವಾಗಿ ಮಾರ್ಪಡಿಸುವ ಮೂಲಕ ಪರಿಚೆ ಇಟ್ಟಳವನ್ನು ಇರುವಿಕೆಯ ಇಟ್ಟಳವಾಗಿ ಮಾರ್ಪಡಿಸುವಲ್ಲಿ ಮುಕ್ಯವಾಗಿ ಕೆಳಗಿನ ಒಟ್ಟುಗಳನ್ನು ಬಳಸಲಾಗುತ್ತದೆ: ಮೆ ಒಟ್ಟು: ಅವನು ಜಾಣನಾಗಿದ್ದಾನೆ > ಅವನಲ್ಲಿ ಜಾಣ್ಮೆಯಿದೆ ಅವನು ಕೀಳಾಗಿದ್ದಾನೆ > ಅವನಲ್ಲಿ ಕೀಳ್ಮೆಯಿದೆ ಪು ಒಟ್ಟು: ಅದು ಬಿಳಿಯಾಗಿದೆ > ಅದರಲ್ಲಿ ಬಿಳುಪಿದೆ ಅದು ಮುದಿಯಾಗಿದೆ > ಅದರಲ್ಲಿ ಮುಪ್ಪಿದೆ ತನ ಒಟ್ಟು: ಅವನು ಬಡವನಾಗಿದ್ದಾನೆ > ಅವನಲ್ಲಿ ಬಡತನವಿದೆ ಅದು ಹೊಸದಾಗಿದೆ > ಅದರಲ್ಲಿ ಹೊಸತನವಿದೆ ಅವನು ಚುರುಕಾಗಿದ್ದಾನೆ > ಅವನಲ್ಲಿ ಚುರುಕುತನವಿದೆ ಇರುವಿಕೆಯ ಇಟ್ಟಳವನ್ನು ಪರಿಚೆ ಇಟ್ಟಳವಾಗಿಯೂ ಮಾರ್ಪಡಿಸಲು ಬರುತ್ತದೆ; ಆದರೆ, ಇದಕ್ಕಾಗಿ ಇರುವಿಕೆಯ ಇಟ್ಟಳದ ಜಾಗ ಪಾಂಗನ್ನು ಇರುಗ ಪಾಂಗಾಗಿ ಮತ್ತು ಇರುಗ ಪಾಂಗನ್ನು ಪರಿಚೆ ಪಾಂಗಾಗಿ ಮಾರ್ಪಡಿಸಬೇಕಾಗುತ್ತದೆ. ಇವುಗಳಲ್ಲಿ ಎರಡನೆಯ ಮಾರ್ಪಾಡನ್ನು ನಡೆಸುವುದಕ್ಕಾಗಿ, ಪರಿಚೆಯನ್ನು ಗುರುತಿಸುವ ಹೆಸರುಪದವನ್ನು ಆ ಪರಿಚೆಯಿರುವ ವ್ಯಕ್ತಿಯನ್ನು ಗುರುತಿಸುವ ಹೆಸರು ಪದವಾಗಿ ಮಾರ್ಪಡಿಸಬೇಕಾಗುತ್ತದೆ. ಈ ಮಾರ್ಪಾಡನ್ನು ನಡೆಸುವಲ್ಲಿ ಬಳಕೆಯಾಗುವ ಮುಕ್ಯವಾದ ಒಟ್ಟುಗಳನ್ನು ಕೆಳಗೆ ಕೊಡಲಾಗಿದೆ. ಅ/ಇ ಒಟ್ಟು: ಅವಳಲ್ಲಿ ಚೆಲುವಿದೆ > ಅವಳು ಚೆಲುವಿಯಾಗಿದ್ದಾಳೆ ಅವನಲ್ಲಿ ಕುರುಡಿದೆ > ಅವನು ಕುರುಡನಾಗಿದ್ದಾನೆ ಇಗ ಒಟ್ಟು: ಅವನಲ್ಲಿ ತಿಳಿವಿದೆ > ಅವನು ತಿಳಿವಿಗನಾಗಿದ್ದಾನೆ ಅವನಲ್ಲಿ ತೋಟವಿದೆ > ಅವನು ತೋಟಿಗನಾಗಿದ್ದಾನೆ ಗಾರ ಒಟ್ಟು: ಅವನಲ್ಲಿ ಬಿಂಕವಿದೆ> ಅವನು ಬಿಂಕಗಾರನಾಗಿದ್ದಾನೆ ಅವನಲ್ಲಿ ಮೋಸ ಇದೆ>ಅವನು ಮೋಸಗಾರನಾಗಿದ್ದಾನೆ
ಮೇಲೆ ಕೊಟ್ಟಿರುವ ಎತ್ತುಗೆಗಳಲ್ಲೆಲ್ಲ ಒಂದು ಪರಿಚೆಪದ ಇಲ್ಲವೇ ಹೆಸರುಪದ ದಿಂದ ಬೇರೊಂದು ಹೆಸರುಪದವನ್ನು ಪಡೆಯಲಾಗಿದೆ. ಈ ರೀತಿ ಪದಗಳಲ್ಲಿ ಮಾರ್ಪಾಡನ್ನು ಮಾಡದೆಯೂ ಇರುವಿಕೆಯ ಇಟ್ಟಳವನ್ನು ಪರಿಚೆ ಇಟ್ಟಳವಾಗಿ ಮಾರ್ಪಡಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸ ಬಹುದು: (3ಕ) ಈ ಹಣ್ಣಿನಲ್ಲಿ ಜಿಗುಟಿದೆ. (3ಚ) ಈ ಹಣ್ಣು ಜಿಗುಟಾಗಿದೆ. (4ಕ) ಈ ಮರದಲ್ಲಿ ಟೊಳ್ಳಿದೆ. (4ಚ) ಈ ಮರ ಟೊಳ್ಳಾಗಿದೆ. (2) ಇರುವಿಕೆಯ ಇಟ್ಟಳ ಮತ್ತು ಪತ್ತುಗೆ ಇಟ್ಟಳ ಇರುವಿಕೆಯ ಇಟ್ಟಳವು ಒಂದು ಜಾಗದಲ್ಲಿರುವ ಇರುಗ ಪಾಂಗಿನ ಇರುವಿಕೆಯನ್ನು ತಿಳಿಸುವುದಾದರೆ, ಪತ್ತುಗೆ ಇಟ್ಟಳವು ಒಂದು ಗುರಿ ಪಾಂಗಿಗೆ ಇರುಗ ಪಾಂಗು ತಲಪಿರುವುದನ್ನು ತಿಳಿಸುತ್ತದೆ. ಆದರೆ, ಇರುವಿಕೆಯ ಇಟ್ಟಳದಿಂದ ಪತ್ತುಗೆ ಇಟ್ಟಳಕ್ಕೆ ಮಾರ್ಪಾಡು ನಡೆಯುವಾಗ, ಮೊದಲಿಗಿದ್ದ ಜಾಗ ಪಾಂಗು ಇರುಗ ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಇರುಗ ಪಾಂಗು ಗುರಿ ಪಾಂಗಾಗುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಆಕೆ ತುಂಬಾ ಸಾಲದಲ್ಲಿದ್ದಾಳೆ. (1ಚ) ಆಕೆಗೆ ತುಂಬಾ ಸಾಲ ಇದೆ. (2ಕ) ಅವನು ಇವತ್ತು ರಜದಲ್ಲಿದ್ದಾನೆ. (2ಚ) ಅವನಿಗೆ ಇವತ್ತು ರಜ ಇದೆ. (3ಕ) ಅವನು ನಿನ್ನೆ ಗಡಿಬಿಡಿಯಲ್ಲಿದ್ದ. (3ಚ) ಅವನಿಗೆ ನಿನ್ನೆ ಗಡಿಬಿಡಿಯಿತ್ತು. (1ಕ)ದಲ್ಲಿ ಆಕೆ ಎಂಬುದು ಇರುಗ ಪಾಂಗು, ಮತ್ತು ಸಾಲದಲ್ಲಿ ಎಂಬುದು ಆ ಪಾಂಗಿನ ಜಾಗ; (1ಚ)ದಲ್ಲಿ ಆಕೆ ಎಂಬುದನ್ನು ಆಕೆಗೆ ಎಂಬುದಾಗಿ ಮಾರ್ಪಡಿಸಲಾಗಿದೆ, ಮತ್ತು ಹಾಗೆ ಮಾಡುವ ಮೂಲಕ ಮೊದಲಿಗಿದ್ದ ಇರುಗ ಪಾಂಗನ್ನು ಗುರಿ ಪಾಂಗಾಗಿ ಮಾರ್ಪಡಿಸಲಾಗಿದೆ; ಇದಲ್ಲದೆ, ಸಾಲದಲ್ಲಿ ಎಂಬುದನ್ನು ಸಾಲ ಎಂಬುದಾಗಿ ಮಾರ್ಪಡಿಸಿ, ಮೊದಲಿಗಿದ್ದ ಜಾಗವನ್ನು ಇರುಗ ಪಾಂಗಾಗಿ ಮಾಡಲಾಗಿದೆ. ಇಂತಹದೇ ಮಾರ್ಪಾಡುಗಳು (2ಕ-ಚ) ಮತ್ತು (3ಕ-ಚ) ಸೊಲ್ಲುಗಳಲ್ಲೂ ನಡೆದಿವೆ. ಮೇಲೆ (1)ನೇ ವಿಬಾಗದಲ್ಲಿ ವಿವರಿಸಿದ ಮಾರ್ಪಾಡಿನ ಹಾಗೆ, ಈ (2)ನೇ ವಿಬಾಗದಲ್ಲಿ ನಡೆದಿರುವ ಮಾರ್ಪಾಡಿನ ಮೇಲೆಯೂ ಒಂದು ಕಚಿತವಾದ ದಿಕ್ಕನ್ನು ಹೊರಿಸಲು ಬರುವುದಿಲ್ಲ; ಯಾಕೆಂದರೆ, ಇಲ್ಲಿನ ಮಾರ್ಪಾಡು ಮೇಲೆ ವಿವರಿಸಿದ ಹಾಗೆ, (ಕ) ಸೊಲ್ಲಿನಿಂದ (ಚ) ಸೊಲ್ಲಿಗೆ ನಡೆದಿದೆಯೆಂದೂ ಹೇಳಬಹುದು, ಇಲ್ಲವೇ (ಚ) ಸೊಲ್ಲಿನಿಂದ (ಕ) ಸೊಲ್ಲಿಗೆ ನಡೆದಿದೆಯೆಂದೂ ಹೇಳಬಹುದು. (ಕ) ಸೊಲ್ಲುಗಳಲ್ಲಿ ಇರುಹವನ್ನು ಅದರದೇ ಆದ ನೆಲೆಯಿಂದ ನೋಡಲಾಗು ತ್ತದೆ, ಮತ್ತು (ಚ) ಸೊಲ್ಲುಗಳಲ್ಲಿ ಅದಕ್ಕೆ ಹಿಂದೆ ನಡೆದಿದ್ದ ಮಾರ್ಪಾಡಿನ ನೆಲೆಯಿಂದ ನೋಡಲಾಗುತ್ತದೆ ಎಂಬುದೇ ಇವುಗಳ ನಡುವಿನ ವ್ಯತ್ಯಾಸ. ಎತ್ತುಗೆಗಾಗಿ, (1ಕ) ಸೊಲ್ಲಿನಲ್ಲಿ ಆಕೆ ತುಂಬಾ ಸಾಲದಲ್ಲಿದ್ದಾಳೆ ಎಂಬುದಾಗಿ ಹಾಗೆ ಇರುವುದನ್ನು ಆ ಇರುವಿಕೆಯದೇ ಆದ ನೆಲೆಯಿಂದ ನೋಡಲಾಗಿದೆ; ಇದಕ್ಕೆ ಬದಲು, (1ಚ) ಸೊಲ್ಲಿನಲ್ಲಿ ಆಕೆಗೆ ತುಂಬಾ ಸಾಲ ಇದೆ ಎಂಬುದಾಗಿ ಹಾಗೆ ಇರುವುದನ್ನು ಅದಕ್ಕೆ ಹಿಂದೆ ನಡೆದಿದ್ದ ಆಕೆಗೆ ತುಂಬಾ ಸಾಲ ಆಯಿತು ಎಂಬ ಆಗುಹದ ನೆಲೆಯಿಂದ ನೋಡಲಾಗಿದೆ, ಮತ್ತು ಹಾಗೆ ಆದುದರಿಂದಾಗಿ ಇವತ್ತು ಆಕೆಗೆ ಸಾಲ ಇದೆ ಎಂದು ತಿಳಿಸಲಾಗಿದೆ. ಗುರಿ ಪಾಂಗಿನ ಬಳಕೆಯ ಹಿಂದೆ ಒಂದು ಕದಲಿಕೆಯಿರುತ್ತದೆ, ಮತ್ತು ಜಾಗ ಪಾಂಗಿನ ಬಳಕೆಯ ಹಿಂದೆ ಅಂತಹ ಕದಲಿಕೆ ಇರುವುದಿಲ್ಲ ಎಂಬುದೇ ಅವೆರಡು ಪಾಂಗುಗಳ ನಡುವಿರುವ ಮುಕ್ಯ ವ್ಯತ್ಯಾಸ. ಮೇಲೆ ಕೊಟ್ಟಿರುವ (ಚ) ಸೊಲ್ಲುಗಳಲ್ಲಿ
ನೇರವಾಗಿ ಒಂದು ಕದಲಿಕೆ ಇಲ್ಲವಾದರೂ, ಅವು ತಿಳಿಸುವ ಇರುಹಕ್ಕೆ ಕದಲಿಕೆ ಯೊಂದರೊಡನೆ ಸಂಬಂದವಿದೆ ಎಂಬುದನ್ನು ಅವುಗಳಲ್ಲಿ ಬಂದಿರುವ ಗುರಿ ಪಾಂಗು ನೇರವಲ್ಲದ ಬಗೆಯಲ್ಲಿ ತಿಳಿಸುತ್ತದೆ ಎಂದು ಹೇಳಬಹುದು. ಮೇಲೆ (7.2.5)ರಲ್ಲಿ ವಿವರಿಸಿದ ನಾಲ್ಕು ಬಗೆಯ ಪತ್ತುಗೆ ಇಟ್ಟಳಗಳಲ್ಲಿ ಅನಿಸಿಕೆ ಮತ್ತು ಗೊತ್ತುಪಾಡು(ಪರಿಸ್ತಿತಿ)ಗಳನ್ನು ತಿಳಿಸುವ ಇಟ್ಟಳಗಳನ್ನು ಮಾತ್ರ ಈ ರೀತಿ ಇರುವಿಕೆಯ ಇಟ್ಟಳಗಳನ್ನಾಗಿ ಮಾರ್ಪಡಿಸಲು ಬರುತ್ತದೆ; ಪರಿಚೆ ಮತ್ತು ಎಣಿಕೆಗಳನ್ನು ತಿಳಿಸುವ ಇಟ್ಟಳಗಳನ್ನು ಆ ರೀತಿ ಮಾರ್ಪಡಿಸಲು ಬರುವುದಿಲ್ಲ: (4) ಅವಳಿಗೆ ಇಬ್ಬರು ಮಕ್ಕಳಿದ್ದಾರೆ > *ಅವಳು ಇಬ್ಬರು ಮಕ್ಕಳ ಲ್ಲಿದ್ದಾಳೆ. (5) ಅವನಿಗೆ ಒಂದು ಮನೆಯಿದೆ > *ಅವನು ಒಂದು ಮನೆಯ ಲ್ಲಿದ್ದಾನೆ. (6) ಈ ಪುಸ್ತಕಕ್ಕೆ ತುಂಬಾ ಬೆಲೆಯಿದೆ > *ಈ ಪುಸ್ತಕ ತುಂಬಾ ಬೆಲೆಯಲ್ಲಿದೆ. (5)ನೇ ಎತ್ತುಗೆಯ ಎರಡನೇ ಸೊಲ್ಲು ಸರಿಯಾಗಿದೆಯಾದರೂ ಅದಕ್ಕೆ ಮೊದಲನೇ ಸೊಲ್ಲಿನ ಹುರುಳು ಸಿಗಲಾಗದು; ಹಾಗಾಗಿ, ಆ ಹುರುಳಿನಲ್ಲಿ ಅದು ಸರಿಯಲ್ಲ ಎಂಬುದನ್ನು ಮೇಲೆ ತಿಳಿಸಲಾಗಿದೆ. (3) ಪರಿಚೆ ಇಟ್ಟಳ ಮತ್ತು ಪತ್ತುಗೆ ಇಟ್ಟಳ ಪರಿಚೆ ಇಟ್ಟಳವನ್ನು ಪತ್ತುಗೆ ಇಟ್ಟಳವಾಗಿ ಮಾರ್ಪಡಿಸಬೇಕಿದ್ದಲ್ಲಿ, ಪರಿಚೆ ಇಟ್ಟಳದ ಇರುಗ ಪಾಂಗನ್ನು ಗುರಿ ಪಾಂಗಾಗಿ, ಮತ್ತು ಪರಿಚೆ ಪಾಂಗನ್ನು ಇರುಗ ಪಾಂಗಾಗಿ ಮಾರ್ಪಡಿಸಬೇಕಾಗುತ್ತದೆ; ಇಂತಹ ಮಾರ್ಪಾಡಿಗೆ ಎರಡು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ಅವನು ಎದೆಗಾರನಾಗಿದ್ದಾನೆ. (1ಚ) ಅವನಿಗೆ ಎದೆಗಾರಿಕೆಯಿದೆ. (2ಕ) ಅವನು ಗುರಿಕಾರನಾಗಿದ್ದಾನೆ. (2ಚ) ಅವನಿಗೆ ಗುರಿಕಾರಿಕೆಯಿದೆ. (1ಕ)ದಲ್ಲಿ ಬಂದಿರುವ ಅವನು ಎಂಬುದು ಪರಿಚೆ ಇಟ್ಟಳದ ಇರುಗ ಪಾಂಗನ್ನು ತಿಳಿಸುತ್ತದೆ, ಮತ್ತು (1ಚ)ದಲ್ಲಿ ಅದು ಅವನಿಗೆ ಎಂಬ ರೂಪಕ್ಕೆ ಮಾರ್ಪಟ್ಟಿದ್ದು, ಗುರಿ ಪಾಂಗನ್ನು ತಿಳಿಸುತ್ತದೆ; ಇದೇ ರೀತಿಯಲ್ಲಿ, (1ಕ)ದಲ್ಲಿ ಬಂದಿರುವ ಎದೆಗಾರ ಎಂಬುದು ಪರಿಚೆ ಪಾಂಗನ್ನು ತಿಳಿಸುತ್ತದೆ, ಮತ್ತು (1ಚ)ದಲ್ಲಿ ಅದು ಎದೆಗಾರಿಕೆ ಎಂಬ ರೂಪಕ್ಕೆ ಮಾರ್ಪಟ್ಟಿದ್ದು, ಇರುಗ ಪಾಂಗನ್ನು ತಿಳಿಸುತ್ತದೆ. (2ಕ-ಚ) ಸೊಲ್ಲು ಗಳಲ್ಲೂ ಹೀಗೆಯೇ. ಆದರೆ, ಪರಿಚೆ ಇಟ್ಟಳವನ್ನು ಈ ರೀತಿ ಪತ್ತುಗೆ ಇಟ್ಟಳವಾಗಿ ಮಾರ್ಪಡಿಸ ಬೇಕಿದ್ದಲ್ಲಿ, ಪರಿಚೆಯನ್ನು ತಿಳಿಸುವ ಪದ ಒಂದು ಹೆಸರುಪದವಾಗಿರಬೇಕು, ಮತ್ತು ಅದು ಒಂದು ಪರಿಚೆಯನ್ನು ಗುರುತಿಸುತ್ತಿರಬೇಕು. ಹಾಗಾಗಿ, ಪರಿಚೆಯಿರುವ ಒಬ್ಬ ವ್ಯಕ್ತಿಯನ್ನು ಇಲ್ಲವೇ ವಸ್ತುವನ್ನು ಗುರುತಿಸುವ ಹೆಸರುಪದಗಳನ್ನು ನೇರವಾಗಿ ಆತನ ಪರಿಚೆಯನ್ನು ಗುರುತಿಸುವ ಹೆಸರುಪದವನ್ನಾಗಿ ಮಾರ್ಪಡಿಸಬೇಕಾಗುತ್ತದೆ, ಮತ್ತು ಪರಿಚೆಪದವನ್ನು ಹೆಸರುಪದವಾಗಿ ಮಾರ್ಪಡಿಸಬೇಕಾಗುತ್ತದೆ. ಮೇಲೆ ಕೊಟ್ಟಿರುವ (1-2) ಸೊಲ್ಲುಗಳಲ್ಲಿ ಪರಿಚೆಯಿರುವ ವ್ಯಕ್ತಿಯನ್ನು ಗುರುತಿಸುವ ಎದೆಗಾರ ಮತ್ತು ಗುರಿಕಾರ ಹೆಸರುಪದಗಳನ್ನು ನೇರವಾಗಿ ಪರಿಚೆಯನ್ನು ಗುರುತಿಸುವ ಎದೆಗಾರಿಕೆ ಮತ್ತು ಗುರಿಕಾರಿಕೆ ಎಂಬ ಹೆಸರುಪದಗಳಾಗಿ ಮಾರ್ಪಡಿಸ ಪತ್ತುಗೆ ಇಟ್ಟಳವನ್ನು ಪರಿಚೆ ಇಟ್ಟಳವಾಗಿಯೂ ಮಾರ್ಪಡಿಸಲು ಬರುತ್ತದೆ; ಆದರೆ, ಇದಕ್ಕೆ ಪತ್ತುಗೆ ಇಟ್ಟಳದ ಗುರಿ ಪಾಂಗನ್ನು ಇರುಗ ಪಾಂಗಾಗಿ, ಮತ್ತು ಇರುಗ ಪಾಂಗನ್ನು ಪರಿಚೆ ಪಾಂಗಾಗಿ ಮಾರ್ಪಡಿಸಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(3ಕ) ಅವನಿಗೆ ಸಾಲ ಇದೆ. (3ಚ) ಅವನು ಸಾಲಗಾರನಾಗಿದ್ದಾನೆ. (4ಕ) ಅವನಿಗೆ ತೋಟ ಇದೆ. (4ಚ) ಅವನು ತೋಟಗಾರನಾಗಿದ್ದಾನೆ. (5ಕ) ಅವನಿಗೆ ತಿಳಿವಿದೆ. (5ಚ) ಅವನು ತಿಳಿವಿಗನಾಗಿದ್ದಾನೆ. (3ಕ) ಸೊಲ್ಲಿನಲ್ಲಿ ಬಂದಿರುವ ಅವನಿಗೆ ಎಂಬ ಗುರಿ ಪಾಂಗನ್ನು (3ಚ) ಸೊಲ್ಲಿನಲ್ಲಿ ಅವನು ಎಂಬ ಇರುಗ ಪಾಂಗಾಗಿ ಮಾರ್ಪಡಿಸಲಾಗಿದೆ, ಮತ್ತು (3ಕ) ದಲ್ಲಿ ಬಂದಿರುವ ಸಾಲ ಎಂಬ ಇರುಗ ಪಾಂಗನ್ನು (3ಚ)ದಲ್ಲಿ ಸಾಲಗಾರ ಎಂಬ ಪರಿಚೆ ಪಾಂಗಾಗಿ ಮಾರ್ಪಡಿಸಲಾಗಿದೆ. ಆದರೆ, ಈ ರೀತಿ ಮಾರ್ಪಡಿಸಬೇಕಿದ್ದಲ್ಲಿ, ಪತ್ತುಗೆ ಇಟ್ಟಳದಲ್ಲಿ ಬರುವ ಹೆಸರುಪದವನ್ನು ಪರಿಚೆಯಿರುವ ವ್ಯಕ್ತಿ ಇಲ್ಲವೇ ವಸ್ತುವಿನ ಹೆಸರುಪದವನ್ನಾಗಿ ಮಾರ್ಪಡಿಸಬೇಕಾಗುತ್ತದೆ; ಮೇಲಿನ ಸೊಲ್ಲುಗಳಲ್ಲಿ ಪತ್ತುಗೆ ಸೊಲ್ಲುಗಳಲ್ಲಿರುವ ಸಾಲ, ತೋಟ ಮತ್ತು ತಿಳಿವು ಎಂಬ ಹೆಸರುಪದಗಳನ್ನು ಅವು ತಿಳಿಸುವ ವಸ್ತು ಇಲ್ಲವೇ ವಿಶಯವನ್ನು ಪಡೆದಿರುವಂತಹ ಪರಿಚೆಯಿರುವ ವ್ಯಕ್ತಿಯ ಹೆಸರುಪದವಾಗಿ (ಸಾಲಗಾರ, ತೋಟಗಾರ ಮತ್ತು ತಿಳಿವಿಗ ಎಂಬುದಾಗಿ ಮಾರ್ಪಡಿಸಬೇಕಾಗಿದೆ. ಪತ್ತುಗೆ ಇಟ್ಟಳವನ್ನು ಪರಿಚೆ ಇಟ್ಟಳವಾಗಿ ಇನ್ನೊಂದು ಬಗೆಯಲ್ಲೂ ಮಾರ್ಪಡಿಸಲು ಬರುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (6ಕ) ಆತನಿಗೆ ಇಬ್ಬರು ಮಕ್ಕಳಿದ್ದಾರೆ. (6ಚ) ಆತನ ಮಕ್ಕಳು ಇಬ್ಬರಿದ್ದಾರೆ. (7ಕ) ಆ ಮರಕ್ಕೆ ಎರಡು ರೆಂಬೆಗಳಿವೆ. (7ಚ) ಆ ಮರದ ರೆಂಬೆಗಳು ಎರಡಿವೆ. (8ಕ) ಅವನ ಪುಸ್ತಕಕ್ಕೆ ನೀಲಿ ಬಣ್ಣದ ರಟ್ಟಿದೆ. (8ಚ) ಅವನ ಪುಸ್ತಕದ ರಟ್ಟು ನೀಲಿಬಣ್ಣದ್ದಾಗಿದೆ. (6ಕ)ದಲ್ಲಿ ಆತನಿಗೆ ಎಂಬುದು ಗುರಿ ಪಾಂಗಾಗಿ ಮತ್ತು ಇಬ್ಬರು ಮಕ್ಕಳು ಎಂಬುದು ಇರುಗ ಪಾಂಗಾಗಿ ಬಂದಿವೆ; ಇದಕ್ಕೆ ಬದಲು (6ಚ)ದಲ್ಲಿ ಆತನ ಮಕ್ಕಳು ಎಂಬುದು ಇರುಗ ಪಾಂಗಾಗಿ ಮತ್ತು ಇಬ್ಬರು ಎಂಬುದು ಪರಿಚೆ ಪಾಂಗಾಗಿ ಬಂದಿವೆ. ಹೀಗೆ ಮಾರ್ಪಡಿಸುವ ಮೂಲಕ (6ಕ)ದಲ್ಲಿರುವ ಪತ್ತುಗೆ ಇಟ್ಟಳವನ್ನು (6ಚ)ದಲ್ಲಿ ಪರಿಚೆ ಇಟ್ಟಳವಾಗಿ ಮಾಡಲಾಗಿದೆ. ಇಲ್ಲಿ ಪತ್ತುಗೆ ಇಟ್ಟಳದ ಇರುಗ ಪಾಂಗಿನಲ್ಲಿದ್ದ ಎಣಿಕೆ ಪದವನ್ನು ಮಾತ್ರ ಪರಿಚೆ ಇಟ್ಟಳದ ಪರಿಚೆಯನ್ನಾಗಿ ಉಳಿಸಿಕೊಳ್ಳಲಾಗಿದೆ, ಮತ್ತು ಅದರ ಉಳಿದ ಅಂಶವನ್ನು ಆ ಇಟ್ಟಳದ ಇರುಗಕ್ಕೆ ಸೇರಿಸಲಾಗಿದೆ ಎಂಬುದನ್ನು ಗಮನಿಸಬಹುದು. ಇದೇ ರೀತಿಯಲ್ಲಿ (7ಕ-ಚ)ದಲ್ಲಿ ಪತ್ತುಗೆ ಇಟ್ಟಳದ ಇರುಗ ಪಾಂಗಿನಲ್ಲಿದ್ದ ಪರಿಚೆ ಪದವನ್ನು (ನೀಲಿ ಬಣ್ಣ ಎಂಬುದನ್ನು) ಮಾತ್ರ ಉಳಿಸಿಕೊಂಡು, ಅದನ್ನು ಪರಿಚೆ ಇಟ್ಟಳದ ಪರಿಚೆಯನ್ನಾಗಿ ಬಳಸಲಾಗಿದೆ, ಮತ್ತು ಉಳಿದ ಅಂಶವನ್ನು (ರಟ್ಟು ಎಂಬುದನ್ನು) ಅದರ ಇರುಗ ಪಾಂಗಿಗೆ ಸೇರಿಸಲಾಗಿದೆ. ಪರಿಚೆ ಇಟ್ಟಳಕ್ಕೂ ಪತ್ತುಗೆ ಇಟ್ಟಳಕ್ಕೂ ನಡುವಿರುವ ಮುಕ್ಯವಾದ ವ್ಯತ್ಯಾಸ ವೇನೆಂದರೆ, ಪರಿಚೆ ಇಟ್ಟಳ ಒಂದು ಪಾಂಗಿನ ಪರಿಚೆಯನ್ನಶ್ಟೇ ತಿಳಿಸುತ್ತದೆ; ಆದರೆ, ಪತ್ತುಗೆ ಇಟ್ಟಳ ಅದಕ್ಕೂ ಪರಿಚೆಗೂ ನಡುವೆ ನಂಟಸ್ತಿಕೆ, ಒಡೆತನ, ಬಿಡಿ(ಅಂಗ), ಅನಿಸಿಕೆ, ಎಣಿಕೆ, ಗೊತ್ತುಪಾಡು ಎಂಬಂತಹ ಒಂದು ಬಗೆಯ ಪತ್ತುಗೆಯೂ ಇದೆ ಯೆಂಬುದನ್ನು ತಿಳಿಸುತ್ತದೆ. ಈ ವ್ಯತ್ಯಾಸವೇ ಮೇಲೆ ವಿವರಿಸಿರುವ ಮಾರ್ಪಾಡು ಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ.
ಒಬ್ಬ ವ್ಯಕ್ತಿಯ ಬಿಡಿ(ಅಂಗ)ಯಲ್ಲಿರುವ ಪರಿಚೆಯನ್ನು ತಿಳಿಸುವಲ್ಲಿ, ವ್ಯಕ್ತಿಯನ್ನು ಪತ್ತುಗೆ ರೂಪದಲ್ಲೂ ಬಳಸಬಹುದು, ಇಲ್ಲವೇ ಗುರಿ ಪಾಂಗಿನ ರೂಪದಲ್ಲೂ ಬಳಸಬಹುದು: (9) (ಕ) ಅವನ ಕಣ್ಣು ಕುರುಡಾಗಿದೆ > (ಚ) ಅವನಿಗೆ ಕಣ್ಣು ಕುರುಡಾಗಿದೆ. (10) (ಕ) ಅವನ ಕೂದಲು ಬಿಳಿಯಾಗಿದೆ > (ಚ) ಅವನಿಗೆ ಕೂದಲು ಬಿಳಿಯಾಗಿದೆ. (11) (ಕ) ಅವನ ಕಣ್ಣು ಕೆಂಪಾಗಿದೆ > (ಚ) ಅವನಿಗೆ ಕಣ್ಣು ಕೆಂಪಾಗಿದೆ. (10)ನೇ ಎತ್ತುಗೆಯ ಮೊದಲನೇ ಸೊಲ್ಲಿನಲ್ಲಿ ಅವನ ಎಂಬುದು ಪತ್ತುಗೆ ರೂಪದಲ್ಲಿದೆ, ಮತ್ತು ಎರಡನೇ ಸೊಲ್ಲಿನಲ್ಲಿ ಅವನಿಗೆ ಎಂಬ ಗುರಿ ಪಾಂಗಿನ ರೂಪದಲ್ಲಿದೆ; (11-12)ಎತ್ತುಗೆಗಳಲ್ಲೂ ಹೀಗೆಯೇ. ಮೇಲೆ ಕೊಟ್ಟಿರುವ (ಚ) ಸೊಲ್ಲುಗಳಲ್ಲಿ ಗುರಿ, ಇರುಗ ಮತ್ತು ಪರಿಚೆ ಎಂಬುದಾಗಿ ಮೂರು ಪಾಂಗುಗಳು ಬಂದಿರುವುದನ್ನು ಕಾಣಬಹುದು; ಪರಿಚೆ ಇಟ್ಟಳದಲ್ಲಿ ಸಾಮಾನ್ಯವಾಗಿ ಇರುಗ ಮತ್ತು ಪರಿಚೆ ಎಂಬ ಎರಡು ಪಾಂಗುಗಳು ಮಾತ್ರ ಬಂದಿರುತ್ತವೆ. ಇಲ್ಲಿ ಬಂದಿರುವ ಮೂರನೆಯ ಗುರಿ ಪಾಂಗು (ಕ) ಸೊಲ್ಲುಗಳಲ್ಲಿ ಇರುಗ ಪಾಂಗಿನಲ್ಲೇ ಸೇರಿಕೊಂಡಿರುತ್ತದೆ. ಬಿಡಿಗಳ ಪರಿಚೆಯನ್ನು ತಿಳಿಸುವಲ್ಲಿ ಮಾತ್ರವಲ್ಲದೆ, ಬೇರೆ ಬಳಕೆಯ ವಸ್ತುಗಳ ಪರಿಚೆಯನ್ನು ತಿಳಿಸುವಲ್ಲೂ ಈ ರೀತಿ ಪತ್ತುಗೆ ರೂಪ ಮತ್ತು ಬೇರಾಗಿರುವ ಗುರಿ ಪಾಂಗು ಎಂಬ ಇಬ್ಬಗೆಯಿರುವುದನ್ನು ಕಾಣಬಹುದು: (13) ಅವನ ಈ ಅಂಗಿ ಬಿಗಿಯಾಗಿದೆ > ಅವನಿಗೆ ಈ ಅಂಗಿ ಬಿಗಿಯಾಗಿದೆ. (14) ಅವನ ಈ ಚಪ್ಪಲಿ ಅಳ್ಳಕವಾಗಿದೆ > ಅವನಿಗೆ ಈ ಚಪ್ಪಲಿ ಅಳ್ಳಕ ವಾಗಿದೆ. (4) ಬೇರೆ ಬಗೆಯ ಮಾರ್ಪಾಡುಗಳು ಇರುಹವನ್ನು ತಿಳಿಸುವ ಸೊಲ್ಲುಗಳ ಪಾಂಗುಗಳಲ್ಲಿ ಬೇರೆಯೂ ಕೆಲವು ಬಗೆಯ ಮಾರ್ಪಾಡುಗಳನ್ನು ನಡೆಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲು ಗಳನ್ನು ಗಮನಿಸಬಹುದು: (1) ಮನೆ ಗುಡ್ಡದ ಹತ್ತಿರ ಇದೆ > ಗುಡ್ಡ ಮನೆಯ ಹತ್ತಿರ ಇದೆ. (2) ಮನೆ ಗುಡ್ಡದ ಮೇಲೆ ಇದೆ > *ಗುಡ್ಡ ಮನೆಯ ಮೇಲೆ ಇದೆ. ಹತ್ತಿರ ಎಂಬುದನ್ನು ಬಳಸಿರುವ (1)ನೇ ಸೊಲ್ಲಿನ ಇರುಗವನ್ನು ಜಾಗ ಪಾಂಗನ್ನಾಗಿ ಮಾಡಿ, ಜಾಗ ಪಾಂಗಾಗಿದ್ದ ಪದವನ್ನು ಇರುಗವಾಗಿ ಮಾರ್ಪಡಿಸಲು ಬರುತ್ತದೆ; ಆದರೆ, ಮೇಲೆ ಎಂಬುದನ್ನು ಬಳಸಿರುವ (2)ನೇ ಸೊಲ್ಲಿನಲ್ಲಿ ಅಂತಹ ಮಾರ್ಪಾಡನ್ನು ನಡೆಸಲು ಬರುವುದಿಲ್ಲ. ಈ ರೀತಿ ಮಾರ್ಪಡಿಸಲು ಬರುವ ಹತ್ತಿರ ಎಂಬಂತಹ ಪದಗಳನ್ನು ಸರಿಬದಿಯ ಪದಗಳೆಂದು ಕರೆಯಬಹುದು (7.5.1 ನೋಡಿ); ಸರಿಬದಿಯಲ್ಲದ ಪದಗಳಲ್ಲಿ ಹಲವು ಮೇಲೆ-ಕೆಳಗೆ, ಸುತ್ತ-ನಡುವೆ ಎಂಬಂತಹ ಪದಜೋಡಿಗಳಾಗಿ ಬರುತ್ತಿದ್ದು, ಅವುಗಳಲ್ಲಿ ಮೇಲಿನ ಮಾರ್ಪಾಡನ್ನು ನಡೆಸಿದಾಗ ಆ ಜೋಡಿಗಳಲ್ಲಿ ಒಂದರ ಬದಲು ಇನ್ನೊಂದನ್ನು ಬಳಸಬೇಕಾಗುತ್ತದೆ: (3) ದಿಂಬು ಚಾಪೆಯ ಮೇಲಿದೆ > ಚಾಪೆ ದಿಂಬಿನ ಕೆಳಗಿದೆ. (4) ಗುಡ್ಡ ಮನೆಯ ಬಡಗಕ್ಕಿದೆ > ಮನೆ ಗುಡ್ಡದ ತೆಂಕಕ್ಕಿದೆ. (5) ಇರುವೆಗಳು ಹುಳದ ಸುತ್ತ ಇವೆ > ಹುಳ ಇರುವೆಗಳ ನಡುವೆ ಇದೆ.
8.3 ಇಸುವೆಸಕ ಪದದ ಪಾಂಗಿಟ್ಟಳಗಳು
ಸೊಲ್ಲುಗಳಲ್ಲಿ ಬರುವ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಹುರುಳಿನಲ್ಲಿ ಮಾರ್ಪಾಡಾಗುತ್ತದೆ, ಮತ್ತು ಅದಕ್ಕೆ ಹೊಂದಿಕೆಯಾಗುವಂತೆ ಅವುಗಳ ಪಾಂಗಿಟ್ಟಳದಲ್ಲಿಯೂ ಕೆಲವು ಬಗೆಯ ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹಾಲು ಕುದಿಯಿತು. (1ಚ) ಅವಳು ಹಾಲನ್ನು ಕುದಿಸಿದಳು. (2ಕ) ರಾಜು ಒಂದು ಗೊಂಬೆ ಮಾಡಿದ. (2ಚ) ಹರಿ ರಾಜುವಿನಿಂದ ಒಂದು ಗೊಂಬೆ ಮಾಡಿಸಿದ. (3ಕ) ರಾಜು ಜಾನಕಿಗೆ ಸೋತ. (3ಚ) ಜಾನಕಿ ರಾಜುವನ್ನು ಸೋಲಿಸಿದಳು. (4ಕ) ಅವನಿಗೆ ನಗು ಬಂತು. (4ಚ) ಅವನು ನಗು ಬರಿಸಿದ. (1ಕ) ಸೊಲ್ಲಿನಲ್ಲಿ ಬಂದಿದ್ದ ಕುದಿ ಎಸಕಪದಕ್ಕೆ (2ಚ) ಸೊಲ್ಲಿನಲ್ಲಿ ಇಸು ಒಟ್ಟನ್ನು ಸೇರಿಸಲಾಗಿದೆ, ಮತ್ತು ಇದರಿಂದಾಗಿ ಅದು ತಿಳಿಸುವ ಎಸಕ ಒಂದು ಪಾಂಗಿನ ಹತೋಟಿಯಲ್ಲಿ ನಡೆಯುವಂತಹದು ಎಂಬ ಹೆಚ್ಚಿನ ಹುರುಳು ಅದಕ್ಕೆ ಬಂದಿದೆ; ಹಾಗಾಗಿ, ಅದರ ಪಾಂಗಿಟ್ಟಳಕ್ಕೆ ಹೊಸದಾಗಿ ಅವಳು ಎಂಬ ಒಂದು ಮಾಡುಗ ಪಾಂಗನ್ನು ಸೇರಿಸಬೇಕಾಗಿದೆ, ಮತ್ತು ಅದರಲ್ಲಿ ಮೊದಲಿಗಿದ್ದ ಹಾಲು ಎಂಬ ಆಗುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಬೇಕಾಗಿದೆ. (2ಕ)ದಲ್ಲಿದ್ದ ಮಾಡು ಎಸಕಪದಕ್ಕೆ (1ಚ)ದಲ್ಲಿ ಇಸು ಒಟ್ಟನ್ನು ಸೇರಿಸಿ ದುದರಿಂದಾಗಿ, ಅದು ತಿಳಿಸುವ ಎಸಕದ ಮೇಲಿನ ಹತೋಟಿ ರಾಜು ಎಂಬ ಅದರ ಮಾಡುಗ ಪಾಂಗಿನಿಂದ ಹರಿ ಎಂಬ ಹೊಸದೊಂದು ಮಾಡುಗ ಪಾಂಗಿಗೆ ಹೋಗಿದೆ; ಹಾಗಾಗಿ, ಎಸಕದ ಮೇಲಿದ್ದ ತನ್ನ ಹತೋಟಿಯನ್ನು ಕಳೆದುಕೊಂಡಿರುವ ರಾಜು ಎಂಬ ಮಾಡುಗ ಪಾಂಗನ್ನು ರಾಜುವಿನಿಂದ ಎಂಬ ಸುರು ಪಾಂಗಾಗಿ ಮಾರ್ಪಡಿಸ ಬೇಕಾಗಿದೆ. (3ಕ) ಮತ್ತು (4ಕ) ಸೊಲ್ಲುಗಳಲ್ಲಿ ಬಂದಿರುವ ಸೋಲು ಮತ್ತು ಬರು ಎಸಕಪದಗಳಿಗೆ (3ಚ) ಮತ್ತು (4ಚ)ಗಳಲ್ಲಿ ಇಸು ಒಟ್ಟನ್ನು ಸೇರಿಸಿದುದರಿಂದಾಗಿ, ಅವು ಯಾರ ಹತೋಟಿಯೂ ಇಲ್ಲದ ಆಗುಹಗಳ ಬದಲು ಮಾಡುಗನೊಬ್ಬನ ಹತೋಟಿಯಿರುವ ಮಾಡುಹಗಳಾಗಿ ಮಾರ್ಪಟ್ಟಿವೆ; ಆದರೆ, ಅವುಗಳ ಪಾಂಗಿಟ್ಟಳಕ್ಕೆ ಹೊಸದೊಂದು ಮಾಡುಗ ಪಾಂಗನ್ನು ಸೇರಿಸುವ ಬದಲು, ಅವುಗಳಲ್ಲಿ ಬಂದಿರುವ ಗುರಿ ಪಾಂಗನ್ನು ಮಾಡುಗ ಪಾಂಗಾಗಿ ಮಾರ್ಪಡಿಸಲಾಗಿದೆ, ಮತ್ತು ಅವುಗಳ ಆಗುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲಾಗಿದೆ. ಈ ರೀತಿ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ಎಸಕಪದರೂಪಗಳನ್ನು ಉಂಟುಮಾಡುವ ಹಾಗೆ, ಕೆಲವು ಹೆಸರುಪದಗಳಿಗೂ ಇಸು ಒಟ್ಟನ್ನು ಸೇರಿಸಿ ಅವುಗಳಿಂದ ಬೇರೆ ಎಸಕಪದಗಳನ್ನು ಉಂಟುಮಾಡಲು ಬರುತ್ತದೆ; ಹೆಸರು < ಹೆಸರಿಸು, ಸಡಗರ > ಸಡಗರಿಸು, ಬೆಂಬಲ > ಬೆಂಬಲಿಸು, ಒತ್ತಾಯ > ಒತ್ತಾಯಿಸು, ಗಮನ > ಗಮನಿಸು ಮೊದಲಾದುವನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು (3.2.3(1) ನೋಡಿ). ಆದರೆ, ಇಂತಹ ಇಸು ಒಟ್ಟನ್ನು ಪಡೆದಿರುವ ಎಸಕಪದಗಳನ್ನು ಇಸುವೆಸಕಪದ ಗಳೆಂದು ಕರೆಯಲು ಬರುವುದಿಲ್ಲ; ಯಾಕೆಂದರೆ, ಈ ಪಸುಗೆಯಲ್ಲಿ ವಿವರಿಸಿರುವ ಪಾಂಗಿಟ್ಟಳಗಳ ಮಾರ್ಪಾಡುಗಳಲ್ಲಿ ಯಾವುದೂ ಅಂತಹ ಪದಗಳ ಬಳಕೆಯಲ್ಲಿ
ಕಾಣಿಸುವುದಿಲ್ಲ. ಆದರೆ, ಅವುಗಳ ಬಳಕೆಯಲ್ಲಿ ಬೇರೆಯೇ ಬಗೆಯ ಮಾರ್ಪಾಡುಗಳು ಸೊಲ್ಲುಗಳ ಪಾಂಗಿಟ್ಟಳಗಳಲ್ಲಿ ನಡೆಯುವುದನ್ನು ಕಾಣಬಹುದು. ಹೆಚ್ಚಿನೆಡೆಗಳಲ್ಲೂ ಮೊದಲಿಗಿದ್ದ ಈಡು ಪಾಂಗು ಇಂತಹ ಸೊಲ್ಲುಗಳಲ್ಲಿ ಇಸು ಒಟ್ಟಿನೊಂದಿಗೆ ಸೇರಿ ಸೊಲ್ಲಿನ ಎಸಕಪದವಾಗುತ್ತದೆ, ಮತ್ತು ಬೇರೊಂದು ಪಾಂಗು ಸೊಲ್ಲಿನ ಈಡು ಪಾಂಗಾಗುತ್ತದೆ: (5) ಅವನು ನನಗೆ ಬೆಂಬಲ ಕೊಟ್ಟ > ಅವನು ನನ್ನನ್ನು ಬೆಂಬಲಿಸಿದ. (6) ಅವನು ನನಗೆ ಒತ್ತಾಯ ಮಾಡಿದ > ಅವನು ನನ್ನನ್ನು ಒತ್ತಾಯಿಸಿದ. (7) ಅವನು ಕೆಲಸಕ್ಕೆ ಗಮನ ಕೊಟ್ಟ > ಅವನು ಕೆಲಸವನ್ನು ಗಮನಿಸಿದ. (8) ಅವನು ಗಿಡಕ್ಕೆ ಹೆಸರು ಕೊಟ್ಟ > ಅವನು ಗಿಡವನ್ನು ಹೆಸರಿಸಿದ. (5)ನೇ ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಬೆಂಬಲ ಎಂಬುದು ಈಡು ಪಾಂಗಾಗಿ ಬಂದಿದೆ; ಎರಡನೆಯ ಸೊಲ್ಲಿನಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಿ, ಅದನ್ನು ಎಸಕಪದವಾಗಿ ಮಾಡಲಾಗಿದೆ, ಮತ್ತು ಮೊದಲನೆಯ ಸೊಲ್ಲಿನಲ್ಲಿ ಗುರಿ ಪಾಂಗಾಗಿ ಬಂದಿದ್ದ ನನಗೆ ಎಂಬುದು ಈಡು ಪಾಂಗಾಗಿ (ನನ್ನನ್ನು ಎಂಬುದಾಗಿ) ಮಾರ್ಪಟ್ಟಿದೆ. (6-8) ಸೊಲ್ಲುಗಳಲ್ಲೂ ಹೀಗೆಯೇ. ಸಡಗರ, ಗೊಂದಲ, ತೀರ್ಮಾನ ಮತ್ತು ಬೇಸರ ಪದಗಳ ಬಳಕೆಯಲ್ಲಿ ಈಡು ಪಾಂಗಾಗಿ ಬಂದಿದ್ದ ಪದ ಎಸಕಪದವಾಗಿ ಬರುವುದನ್ನು ಬಿಟ್ಟರೆ ಬೇರೆ ಯಾವ ಮಾರ್ಪಾಡೂ ನಡೆಯುವುದಿಲ್ಲ: (9) ಅವನು ಸಡಗರ ಪಟ್ಟ > ಅವನು ಸಡಗರಿಸಿದ. (10) ಅವನು ಬೇಸರ ಪಟ್ಟ > ಅವನು ಬೇಸರಿಸಿದ. (11) ಅವರು ಹಾಗೆ ತೀರ್ಮಾನ ಮಾಡಿದರು > ಅವರು ಹಾಗೆ ತೀರ್ಮಾ ನಿಸಿದರು. (12) ಅವನು ಗೊಂದಲಗೊಂಡ > ಅವನು ಗೊಂದಲಿಸಿದ.
8.3.1 ಪಾಂಗಿಟ್ಟಳದ ಮಾರ್ಪಾಡುಗಳು
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಸೊಲ್ಲುಗಳಲ್ಲಿ ಎಂತಹ ಮಾರ್ಪಾಡು ಗಳನ್ನು ಮಾಡಬೇಕಾಗುತ್ತದೆ ಎಂಬುದು ಸೊಲ್ಲುಗಳ ಪಾಂಗಿಟ್ಟಳವನ್ನು ಮತ್ತು ಅವುಗಳಲ್ಲಿ ಬಳಕೆಯಾಗಿರುವ ಎಸಕಪದಗಳ ಹುರುಳನ್ನು ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹಾಲು ಕುದಿಯಿತು (1ಚ) ನಾನು ಹಾಲನ್ನು ಕುದಿಸಿದೆ. (2ಕ) ಹುಡುಗ ಓಡಿದ. (2ಚ) ನಾನು ಹುಡುಗನನ್ನು ಓಡಿಸಿದೆ. (1ಕ)ದಲ್ಲಿ ಬಂದಿರುವ ಕುದಿ ಎಸಕಪದಕ್ಕೆ (1ಚ)ದಲ್ಲಿ ಇಸು ಒಟ್ಟನ್ನು ಸೇರಿಸಲಾಗಿದೆ, ಮತ್ತು ಇದರಿಂದಾಗಿ, (1ಚ) ಸೊಲ್ಲಿನಲ್ಲಿ ನಾನು ಎಂಬ ಒಂದು ಹೊಸ ಮಾಡುಗ ಸೇರಿಕೊಂಡಿದೆ, ಮತ್ತು (1ಕ)ದಲ್ಲಿದ್ದ ಹಾಲು ಎಂಬ ಆಗುಗ ಪಾಂಗು (1ಚ)ದಲ್ಲಿ ಹಾಲನ್ನು ಎಂಬ ಈಡು ಪಾಂಗಾಗಿ ಮಾರ್ಪಟ್ಟಿದೆ. (2ಕ-ಚ)ಗಳಲ್ಲೂ ಇಂತಹದೇ ಮಾರ್ಪಾಡು ನಡೆದಿದೆ: (2ಚ)ದಲ್ಲಿ ನಾನು ಎಂಬ ಹೊಸ ಮಾಡುಗ ಸೇರಿದೆ, ಮತ್ತು ಮೊದಲಿಗಿದ್ದ ಹುಡುಗ ಎಂಬ ಮಾಡುಗ ಪಾಂಗು ಈಡು ಪಾಂಗಾಗಿ ಮಾರ್ಪಟ್ಟಿದೆ. ಹೆಚ್ಚಿನೆಡೆಗಳಲ್ಲೂ ಈ ರೀತಿ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಒಂದು ಹೊಸ ಮಾಡುಗ ಪಾಂಗು ಸೊಲ್ಲಿನಲ್ಲಿ ಸೇರಿಕೊಳ್ಳುತ್ತದೆ, ಮತ್ತು ಮೊದಲಿ ಗಿದ್ದ ಆಗುಗ ಇಲ್ಲವೇ ಮಾಡುಗ ಪಾಂಗು ಈಡು ಪಾಂಗಾಗಿ ಬದಲಾಗುತ್ತದೆ.
ಒಟ್ಟು ಎಂಟು ಬಗೆಯ ಪಾಂಗಿಟ್ಟಳಗಳು ಬಂದಿರುವಲ್ಲಿ ಈ ಮಾರ್ಪಾಡು ನಡೆದಿರುವುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (3) ಆಗುಗ ಮಾತ್ರ: ಕಂಬ ಅಲುಗಿತು > ಅವನು ಕಂಬವನ್ನು ಅಲುಗಿಸಿದ. (4) ಮಾಡುಗ ಮಾತ್ರ: ಹಕ್ಕಿ ಹಾರಿತು > ಅವನು ಹಕ್ಕಿಯನ್ನು ಹಾರಿಸಿದ. (5) ಆಗುಗ + ಗುರಿ: ಕಾಲು ಗೋಡೆಗೆ ತಗಲಿತು > ಅವನು ಕಾಲನ್ನು ಗೋಡೆಗೆ ತಗಲಿಸಿದ. (6) ಮಾಡುಗ + ಗುರಿ: ಅವನು ನೀರಿಗೆ ಇಳಿದ > ನಾನು ಅವನನ್ನು ನೀರಿಗೆ ಇಳಿಸಿದೆ. (7) ಆಗುಗ + ಸುರು: ಹಣ್ಣು ಮರದಿಂದ ಉದುರಿತು > ನಾನು ಹಣ್ಣನ್ನು ಮರದಿಂದ ಉದುರಿಸಿದೆ. (8) ಮಾಡುಗ + ಸುರು: ಅವನು ಮರದಿಂದ ಇಳಿದ > ನಾನು ಅವನನ್ನು ಮರದಿಂದ ಇಳಿಸಿದೆ. (9) ಆಗುಗ + ಜಾಗ: ಹಲಿಗೆ ನೀರಿನಲ್ಲಿ ತೇಲಿತು > ನಾನು ಹಲಿಗೆಯನ್ನು ನೀರಿನಲ್ಲಿ ತೇಲಿಸಿದೆ. (10) ಮಾಡುಗ + ಜಾಗ: ಅವನು ಹೊಳೆಯಲ್ಲಿ ಈಜಿದ > ನಾನು ಅವನನ್ನು ಹೊಳೆಯಲ್ಲಿ ಈಜಿಸಿದೆ. ಉಳಿದ ಅಯ್ದು ಬಗೆಯ ಪಾಂಗಿಟ್ಟಳಗಳು ಮೇಲಿನವುಗಳಿಂದ ಒಂದು ಮುಕ್ಯ ವಿಶಯದಲ್ಲಿ ಬೇರಾಗಿವೆ: ಅವುಗಳಲ್ಲೆಲ್ಲ ಒಂದು ಈಡು ಪಾಂಗು ಬಂದಿರುತ್ತದೆ. ಇಂತಹ ಸೊಲ್ಲುಗಳ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಮೇಲಿನ ಪಾಂಗಿಟ್ಟಳಗಳಲ್ಲಿ ನಡೆದ ಹಾಗೆ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ. ಆದರೆ, ಅವುಗಳಲ್ಲಿ ಮೊದಲಿಗೇನೇ ಒಂದು ಈಡು ಪಾಂಗು ಬಂದಿದೆಯಾದ ಕಾರಣ, ಅವುಗಳ ಆಗುಗ ಇಲ್ಲವೇ ಮಾಡುಗ ಪಾಂಗು ಈಡು ಪಾಂಗಾಗುತ್ತದೆಯೋ, ಇಲ್ಲವೇ ಬೇರೆ ಯಾವುದಾದರೂ ಪಾಂಗಾಗಿ ಮಾರ್ಪಡು ತ್ತದೆಯೋ ಎಂಬ ಕೇಳ್ವಿ ಏಳುತ್ತದೆ. (1) ಆಗುಗ+ಈಡು ಪಾಂಗಿಟ್ಟಳವಿರುವ ಸೊಲ್ಲುಗಳಲ್ಲಿ ಆಗುಗ ಪಾಂಗನ್ನು ಈಡು ಪಾಂಗಾಗಿ ಮಾಡಲಾಗುತ್ತದೆ, ಮತ್ತು ಮೊದಲಿಗಿದ್ದ ಈಡು ಪಾಂಗನ್ನು ಸೊಲ್ಲಿನಲ್ಲಿ ಬಳಸದಿರಲಾಗುತ್ತದೆ: (11) ಆಗುಗ+ಈಡು: ಜಾನಕಿ ಹೆಣ್ಣು ಮಗುವನ್ನು ಹಡೆದಳು > ಸೂಲಗಿತ್ತಿ ಜಾನಕಿಯನ್ನು ಹಡೆಸಿದಳು. (2) ಉಳಿದ ಪಾಂಗಿಟ್ಟಳಗಳಲ್ಲಿ ಮಾಡುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸುವ ಬದಲು, ಸುರು ಪಾಂಗಾಗಿ ಮಾರ್ಪಡಿಸಲಾಗುತ್ತದೆ; ಅವುಗಳಲ್ಲಿ ಮೊದಲಿಗೇನೇ ಸುರು ಪಾಂಗು ಬಂದಿದೆಯಾದರೆ, ಅದನ್ನು ಬಳಸದಿರಲಾಗುತ್ತದೆ: (12) ಮಾಡುಗ+ಈಡು: ಅವನು ಬತ್ತ ಅಳೆದ > ನಾನು ಅವನಿಂದ ಬತ್ತ ಅಳೆಸಿದೆ. (13) ಮಾಡುಗ+ಈಡು+ಗುರಿ: ಅವನು ರಾಜುವಿಗೆ ಹಣ ಕೊಟ್ಟ > ನಾನು ಅವನಿಂದ ರಾಜುವಿಗೆ ಹಣ ಕೊಡಿಸಿದೆ. (14) ಮಾಡುಗ+ಈಡು+ಸುರು: ಅವನು ಬಾವಿಯಿಂದ ನೀರು ಸೇದಿದ > ನಾನು ಅವನಿಂದ ನೀರು ಸೇದಿಸಿದೆ. (15) ಮಾಡುಗ+ಈಡು+ಜಾಗ: ಅವನು ತೋಟದಲ್ಲಿ ಬಾವಿ ತೋಡಿದ > ನಾನು ಅವನಿಂದ ತೋಟದಲ್ಲಿ ಬಾವಿ ತೋಡಿಸಿದೆ. ಮೇಲೆ ಕೊಟ್ಟಿರುವ ಎಲ್ಲಾ (12-15) ಸೊಲ್ಲುಗಳಲ್ಲೂ ಮಾಡುಗ ಪಾಂಗನ್ನು ಸುರು ಪಾಂಗಾಗಿ ಮಾರ್ಪಡಿಸಲಾಗಿದೆ; ಮತ್ತು (14)ರಲ್ಲಿ ಮೊದಲಿಗಿದ್ದ ಬಾವಿ ಯಿಂದ ಎಂಬ ಸುರು ಪಾಂಗನ್ನು ಬಳಸದಿರಲಾಗಿದೆ. (3) ಮಾಡುಗ ಪಾಂಗನ್ನು ಇಂದ ಒಟ್ಟನ್ನು ಬಳಸಿ ಸುರು ಪಾಂಗಾಗಿ ಮಾರ್ಪಡಿಸುವ ಬದಲು, ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬ ಪದಗಳನ್ನು ಬಳಸಿ ನೆರವು ಪಾಂಗಾಗಿ ಮಾರ್ಪಡಿಸಲು ಬರುತ್ತದೆ (7.6.6 ನೋಡಿ), ಮತ್ತು ಹೀಗೆ ಮಾಡಿದಲ್ಲಿ ಮೊದಲಿಗಿದ್ದ ಸುರು ಪಾಂಗನ್ನು ಸೊಲ್ಲಿನಲ್ಲಿ ಉಳಿಸಿಕೊಳ್ಳಲೂ ಬರುತ್ತದೆ: (16ಕ) ಅವನು ಬಾವಿಯಿಂದ ನೀರು ಸೇದಿದ > ನಾನು ಅವನ ಕಯ್ಯಲ್ಲಿ ಬಾವಿಯಿಂದ ನೀರು ಸೇದಿಸಿದೆ. (16ಚ) ಅವನು ಕಬ್ಬಿನಿಂದ ರಸ ಹಿಂಡಿದ > ನಾನು ಅವನ ಹತ್ತಿರ ಕಬ್ಬಿನಿಂದ ರಸ ಹಿಂಡಿಸಿದೆ.
ಇಲ್ಲಿ ಕಯ್ಯಲ್ಲಿ ಇಲ್ಲವೇ ಹತ್ತಿರ ಪದಗಳಿಗೆ ಒಂದು ನೆರವು ಪಾಂಗನ್ನು ತಿಳಿಸುವ ಕೆಲಸವಿದೆಯಲ್ಲದೆ ಅವುಗಳದೇ ಆದ ಹುರುಳಿಲ್ಲ ಎಂಬುದನ್ನು ಗಮನಿಸಬಹುದು. ಎತ್ತುಗೆಗಾಗಿ, ಅವನನ್ನು ರಾಜು ಆಳಿನ ಕಯ್ಯಲ್ಲಿ ತುಳಿಸಿದ ಎಂಬ ಸೊಲ್ಲಿನಲ್ಲಿ ಕಯ್ಯಲ್ಲಿ ಎಂಬ ಪದ ಬಂದಿದೆಯಾದರೂ ತುಳಿಸಿದುದು ಕಾಲಿನಲ್ಲಲ್ಲದೆ ಕಯ್ಯಲ್ಲಲ್ಲ.
8.3.2 ಮಾರ್ಪಾಡುಗಳ ಹೊರಪಡಿಕೆಗಳು
ಮೇಲೆ ವಿವರಿಸಿರುವ ಮಾರ್ಪಾಡುಗಳಿಗೆ ಹಲವು ಹೊರಪಡಿಕೆಗಳಿದ್ದು, ಇವು ಮುಕ್ಯವಾಗಿ ಸೊಲ್ಲುಗಳಲ್ಲಿ ಬರುವ ಎಸಕಪದಗಳ ಹುರುಳನ್ನು ಅವಲಂಬಿಸಿರುತ್ತವೆ; ಈ ಹೊರಪಡಿಕೆಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ವಿವರಿಸಲಾಗಿದೆ: (1) ಆಗುಗ ಮಾತ್ರ ಮೇಲೆ (8.3.1(1)ರಲ್ಲಿ) ತೋರಿಸಿದ ಹಾಗೆ, ಆಗುಗ ಮಾತ್ರ ಎಂಬ ಪಾಂಗಿಟ್ಟಳ ದೊಂದಿಗೆ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಹೆಚ್ಚಿನೆಡೆಗಳಲ್ಲೂ ಆ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗುತ್ತದೆ. ಇದನ್ನು ಉಕ್ಕು, ಅಲುಗು, ಆರು, ಉಡುಗು, ಉರಿ, ಕಾಯು, ಕದಡು, ಕಿಲುಬು, ಕೆರಳು, ಕೊಬ್ಬು, ಕೊರಗು, ಚಿಗುರು, ರೇಗು, ಸಿಡುಕು, ಸೀಯು ಮೊದಲಾದ ಎಸಕಪದಗಳ ಬಳಕೆಯಲ್ಲಿ ಕಾಣಬಹುದು: (1ಕ) ಕಟ್ಟಿಗೆ ಉರಿಯಿತು > ನಾನು ಕಟ್ಟಿಗೆ ಉರಿಸಿದೆ. (1ಚ) ಅವನು ರೇಗಿದ > ನಾನು ಅವನನ್ನು ರೇಗಿಸಿದೆ. (1ಟ) ಹಾಲು ಉಕ್ಕಿತು > ನಾನು ಹಾಲನ್ನು ಉಕ್ಕಿಸಿದೆ. ಈ ಕಟ್ಟಲೆಗೆ ಕೆಳಗೆ ಕೊಟ್ಟಿರುವ ಎರಡು ಹೊರಪಡಿಕೆಗಳಿವೆ: (1) ಈ ಪಾಂಗಿಟ್ಟಳದೊಂದಿಗೆ ಬರುವ ಎಸಕಪದಗಳಲ್ಲಿ ಒಡೆ, ಸುಲಿ, ಹರಡು, ತೆರೆ, ಮುಚ್ಚು, ಸೀಳು, ಬಿಚ್ಚು ಮೊದಲಾದ ಕೆಲವನ್ನು ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಮಾಡುಗ+ಈಡು ಎಂಬ ಪಾಂಗಿಟ್ಟಳದಲ್ಲೂ ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಹಲಗೆ ಸಿಗಿಯಿತು. (2ಚ) ನಾನು ಹಲಗೆಯನ್ನು ಸಿಗಿದೆ. (3ಕ) ಬಾಗಿಲು ತೆರೆಯಿತು. (3ಚ) ನಾನು ಬಾಗಿಲು ತೆರೆದೆ. (2ಕ)ದಲ್ಲಿ ಸಿಗಿ ಎಸಕಪದವನ್ನು ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬಳಸಲಾಗಿದೆ; ಇದಕ್ಕೆ ಬದಲು, (2ಚ)ದಲ್ಲಿ ಇದೇ ಎಸಕಪದವನ್ನು ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬಳಸಲಾಗಿದೆ. ತೆರೆ ಎಸಕಪದಕ್ಕೂ ಇಂತಹವೇ ಎರಡು ಬಳಕೆ ಗಳಿವೆಯೆಂಬುದನ್ನು (3ಕ-ಚ) ಸೊಲ್ಲುಗಳಲ್ಲಿ ಕಾಣಬಹುದು. ಈ ಎಸಕಪದಗಳು ಎರಡನೇ ಪಾಂಗಿಟ್ಟಳದಲ್ಲಿ (ಮಾಡುಗ+ಈಡು ಎಂಬುದ ರಲ್ಲಿ) ಬಂದಿರುವಾಗ ಮಾತ್ರ ಅವಕ್ಕೆ ಇಸು ಒಟ್ಟನ್ನು ಸೇರಿಸಲು ಬರುತ್ತದಲ್ಲದೆ, ಮೊದಲನೇ ಪಾಂಗಿಟ್ಟಳದಲ್ಲಿ (ಆಗುಗ ಮಾತ್ರ ಎಂಬುದರಲ್ಲಿ) ಬಂದಿರುವಾಗ ಅದನ್ನು ಸೇರಿಸಲು ಬರುವುದಿಲ್ಲ. ಇದಲ್ಲದೆ, ಇಸು ಒಟ್ಟನ್ನು ಸೇರಿಸಿದಾಗ, ಈ ಎಸಕಪದಗಳ ಎರಡನೇ ಪಾಂಗಿಟ್ಟಳಕ್ಕೆ ಹೊಸದೊಂದು ಮಾಡುಗ ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ:
(4ಕ) ಅವನು ಬಾಗಿಲು ತೆರೆದ. (4ಚ) ನಾನು ಅವನಿಂದ ಬಾಗಿಲು ತೆರೆಸಿದೆ. (5ಕ) ಅವನು ಬಟ್ಟೆ ಹರಿದ. (5ಚ) ನಾನು ಅವನಿಂದ ಬಟ್ಟೆ ಹರಿಸಿದೆ. (4ಕ) ಸೊಲ್ಲಿನ ತೆರೆ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿ (4ಚ) ಸೊಲ್ಲನ್ನು ಪಡೆಯಲಾಗಿದೆ, ಮತ್ತು ಹೀಗೆ ಪಡೆಯುವಾಗ (4ಕ)ದಲ್ಲಿದ್ದ ಅವನು ಎಂಬ ಮಾಡುಗವನ್ನು ಅವನಿಂದ ಎಂಬ ಸುರು ಪಾಂಗಾಗಿ ಮಾರ್ಪಡಿಸಲಾಗಿದೆ ಮತ್ತು ನಾನು ಎಂಬ ಒಂದು ಹೆಚ್ಚಿನ ಮಾಡುಗ ಪಾಂಗನ್ನು ಅದಕ್ಕೆ ಸೇರಿಸಲಾಗಿದೆ. (5ಕ-ಚ)ದಲ್ಲೂ ಹೀಗೆಯೇ. ಒಂದು ಆಗುಹವನ್ನು ತಿಳಿಸುವ ಬಾಗಿಲು ತೆರೆಯಿತು ಇಲ್ಲವೇ ಬಟ್ಟೆ ಹರಿಯಿತು ಎಂಬಂತಹ ಸೊಲ್ಲಿನಿಂದ ನೇರವಾಗಿ ಇಸು ಒಟ್ಟನ್ನು ಬಳಸಿರುವ ಬೇರೊಂದು ಸೊಲ್ಲನ್ನು ಪಡೆಯಲು ಬರುವುದಿಲ್ಲ ಎಂಬುದನ್ನು ಗಮನಿಸಬಹುದು. ಆದರೆ, ಇದಕ್ಕೆ ಕೆಲವು ಹೊರಪಡಿಕೆಗಳೂ ಇವೆ: ಎತ್ತುಗೆಗಾಗಿ, ಕದಡು, ಬೆಳೆ, ಜಗ್ಗು ಎಂಬಂತಹ ಕೆಲವು ಎಸಕಪದಗಳಿಗೆ ಆಗುಹವನ್ನು ತಿಳಿಸುವ ಬಳಕೆಯಲ್ಲೂ ಇಸು ಒಟ್ಟನ್ನು ಸೇರಿಸಲು ಬರುತ್ತಿದ್ದು, ಅಂತಹ ಇಸುವೆಸಕಪದಗಳಿಗೆ ಎರಡು ಹುರುಳುಗಳು ಸಿಗಬಲ್ಲುವು. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (6) ನೀರು ಕದಡಿತು > (ಕ) ಅವನು ನೀರನ್ನು ಕದಡಿದ (ಚ) ಅವನು ನೀರನ್ನು ಕದಡಿಸಿದ > ನಾನು ಅವನಿಂದ ನೀರನ್ನು ಕದಡಿಸಿದೆ. (7) ಕಬ್ಬು ಬೆಳೆಯಿತು > (ಕ) ಅವನು ಕಬ್ಬನ್ನು ಬೆಳೆದ (ಚ) ಅವನು ಕಬ್ಬನ್ನು ಬೆಳೆಸಿದ > ನಾನು ಅವನಿಂದ ಕಬ್ಬನ್ನು ಬೆಳೆಸಿದೆ. (6)ನೇ ಎತ್ತುಗೆಯಲ್ಲಿ ಇಸು ಒಟ್ಟನ್ನು ಬಳಸದಿರುವ (ಕ) ಸೊಲ್ಲಿಗೂ, ಇಸು ಒಟ್ಟನ್ನು ಬಳಸಿರುವ (ಚ) ಸೊಲ್ಲಿಗೂ ಒಂದೇ ಹುರುಳಿದೆ ಎಂಬುದನ್ನು ಗಮನಿಸ ಬಹುದು; (7)ನೇ ಎತ್ತುಗೆಯಲ್ಲೂ ಹೀಗೆಯೇ. (2) ಆಗುಗ ಮಾತ್ರ ಎಂಬ ಈ ಪಾಂಗಿಟ್ಟಳದಲ್ಲಿ ಬರುವ ಗುಡುಗು, ಮಿಂಚು, ಕೊಡೆ, ಕೊಮೆ, ಹನಿಕು, ಹಸಿ, ಹುಳಿ, ಹೊಗೆ, ಹೂ ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಇಸು ಒಟ್ಟನ್ನು ಸೇರಿಸಿ ಬಳಸುವುದು ತುಂಬಾ ಅಪರೂಪ. (2) ಮಾಡುಗ ಮಾತ್ರ ಮಾಡುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬರುವ ಹೆಚ್ಚಿನ ಎಸಕಪದಗಳಿಗೂ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ (8.3.1(1) ನೋಡಿ). ಇದನ್ನು ಅಳು, ಕದಲು, ಕುಣಿ, ಕೂಗು, ಚದುರು, ದುಡುಕು, ನಡುಗು, ನಡೆ, ನರಳು, ಬಾಗು, ಬಿಕ್ಕು, ಬೊಗಳು, ಹಲುಬು ಮೊದಲಾದ ಹಲವು ಎಸಕಪದಗಳ ಬಳಕೆಯಲ್ಲಿ ಕಾಣಬಹುದು: (1ಕ) ಮಗು ಅತ್ತಿತು > ಅವಳು ಮಗುವನ್ನು ಅಳಿಸಿದಳು. (1ಚ) ಅವರು ಉರುಡಿದರು > ನಾನು ಅವರನ್ನು ಉರುಡಿಸಿದೆ. (1ಟ) ನಾಯಿ ಬೊಗಳಿತು > ನಾನು ನಾಯಿಯನ್ನು ಬೊಗಳಿಸಿದೆ. ಈ ಕಟ್ಟಲೆಗೆ ಒಂದು ಹೊರಪಡಿಕೆಯಿದೆ: ಕೆಲವು ಎಸಕಪದಗಳು ಅವುಗಳದೇ ರೂಪದಲ್ಲಿರುವ ಒಂದು ಹೆಸರುಪದವನ್ನು ಈಡು ಪಾಂಗಾಗಿ ಪಡೆಯಬಲ್ಲುವು, ಮತ್ತು ಇಂತಹ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಡುತ್ತದೆ:
(2ಕ) ಅವಳು ಹಾಡಿದಳು > ನಾನು ಅವಳನ್ನು ಹಾಡಿಸಿದೆ. (2ಚ) ಅವಳೊಂದು ಹಾಡು ಹಾಡಿದಳು > ನಾನು ಅವಳಿಂದ ಒಂದು ಹಾಡನ್ನು ಹಾಡಿಸಿದೆ. (3ಕ) ಅವನು ಓಡಿದ > ನಾನು ಅವನನ್ನು ಓಡಿಸಿದೆ. (3ಚ) ಅವನೊಂದು ಓಟ ಓಡಿದ > ನಾನು ಅವನಿಂದ ಒಂದು ಓಟ ಓಡಿಸಿದೆ. (1ಕ)ದಲ್ಲಿ ಹಾಡು ಎಸಕಪದವನ್ನು ಮಾಡುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬಳಸಲಾಗಿದೆ; ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಅದರ ಮಾಡುಗ ಪಾಂಗು ಈಡು ಪಾಂಗಾಗುತ್ತದೆ, ಮತ್ತು ಅದಕ್ಕೆ ಹೊಸದೊಂದು ಮಾಡುಗ ಪಾಂಗು ಸೇರುತ್ತದೆ. ಇದಕ್ಕೆ ಬದಲು, (2ಚ)ದಲ್ಲಿ ಅದೇ ಎಸಕಪದವನ್ನು ಅದರದೇ ಹಾಡು ಎಂಬ ರೂಪದಲ್ಲಿರುವ ಈಡು ಪಾಂಗಿನೊಂದಿಗೆ ಬಳಸಲಾಗಿದೆ; ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದರ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಡುತ್ತದೆ. (3) ಆಗುಗ+ಗುರಿ ಮೇಲೆ (8.3.1)ರಲ್ಲಿ ತೋರಿಸಿದ ಹಾಗೆ, ಆಗುಗ+ಗುರಿ ಪಾಂಗಿಟ್ಟಳದಲ್ಲಿ ಬರುವ ತಗಲು, ತಾಗು, ತೊಡರು, ಮುಟ್ಟು, ಸಿಲುಕು, ಬೀಳು, ಸಿಕ್ಕು, ದೊರಕು, ಸಲ್ಲು ಮೊದಲಾದ ಹಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ: (1ಕ) ಅವನಿಗೆ ಹಣ ದೊರಕಿತು > ನಾನು ಅವನಿಗೆ ಹಣ ದೊರಕಿಸಿದೆ. (1ಚ) ಅವನಿಗೆ ಹಣ ಸಂದಿತು > ನಾನು ಅವನಿಗೆ ಹಣ ಸಲ್ಲಿಸಿದೆ. (1ಟ) ಕಾಲಿಗೆ ಹಗ್ಗ ತೊಡರಿತು > ನಾನು ಕಾಲಿಗೆ ಹಗ್ಗ ತೊಡರಿಸಿದೆ. ಇದಕ್ಕೆ ಕೆಳಗೆ ಕೊಟ್ಟಿರುವ ಅಯ್ದು ಬಗೆಯ ಹೊರಪಡಿಕೆಗಳಿವೆ: (1) ಚುಚ್ಚು, ಕುತ್ತು, ಮೆತ್ತು, ಸುಂದು, ಮತ್ತು ಸುತ್ತು ಎಂಬ ಎಸಕಪದ ಗಳನ್ನು ಅವುಗಳಿಗೆ ಇಸು ಒಟ್ಟನ್ನು ಸೇರಿಸದೆಯೇ ಮಾಡುಗ+ಈಡು+ಗುರಿ ಎಂಬ ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದೆ: (2ಕ) ಗೋಡೆಗೆ ಮಣ್ಣು ಮೆತ್ತಿತು > ಅವನು ಗೋಡೆಗೆ ಮಣ್ಣು ಮೆತ್ತಿದ. (2ಚ) ಕಾಲಿಗೆ ಮುಳ್ಳು ಚುಚ್ಚಿತು > ಅವನು ಕಾಲಿಗೆ ಮುಳ್ಳನ್ನು ಚುಚ್ಚಿದ. (2ಟ) ಕೋಲಿಗೆ ನೂಲು ಸುಂದಿತು > ಅವನು ಕೋಲಿಗೆ ಮುಳ್ಳು ಸುಂದಿದ. (2ಕ)ದಲ್ಲಿ ಮೆತ್ತು ಎಸಕಪದವನ್ನು ಆಗುಗ+ಗುರಿ ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು ಅದರಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಮಾಡುಗ+ ಈಡು+ಗುರಿ ಪಾಂಗಿಟ್ಟಳದಲ್ಲೂ ಬಳಸಲಾಗಿದೆ. ಇಂತಹ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅವುಗಳಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಡುತ್ತದೆ; ಎಂದರೆ, ಈ ಎಸಕಪದಗಳಿಗೆ ಇಸು ಒಟ್ಟನ್ನು ಅವುಗಳ ಆಗುಗ+ಗುರಿ ಪಾಂಗಿಟ್ಟಳದ ಬಳಕೆಯಲ್ಲಿ ಸೇರಿಸಲು ಬರುವುದಿಲ್ಲ: (3) ಗೋಡೆಗೆ ಮಣ್ಣು ಮೆತ್ತಿತು > (ಕ) ಅವನು ಗೋಡೆಗೆ ಮಣ್ಣು ಮೆತ್ತಿದ > (ಚ) ನಾನು ಅವನಿಂದ ಗೋಡೆಗೆ ಮಣ್ಣು ಮೆತ್ತಿಸಿದೆ. (4) ಬೆರಳಿಗೆ ನೂಲು ಸುತ್ತಿತು > (ಕ) ಅವನು ಬೆರಳಿಗೆ ನೂಲು ಸುತ್ತಿದ > (ಚ) ನಾನು ಅವನಿಂದ ಬೆರಳಿಗೆ ನೂಲು ಸುತ್ತಿಸಿದೆ.
(3ಕ)ದಲ್ಲಿ ಮೆತ್ತು ಪದಕ್ಕೆ ಇಸು ಒಟ್ಟನ್ನು ಸೇರಿಸದೆಯೇ ಅದನ್ನು ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು (3ಚ)ದಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಲಾಗಿದ್ದು, ಅದರ ಪಾಂಗಿಟ್ಟಳಕ್ಕೆ ನಾನು ಎಂಬ ಹೊಸದೊಂದು ಮಾಡುಗ ಪಾಂಗು ಸೇರಿದೆ, ಮತ್ತು ಅದರಲ್ಲಿ ಮೊದಲಿಗಿದ್ದ ಅವನು ಎಂಬ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಟ್ಟಿದೆ; ಹಾಗಾಗಿ, ಅದು ಮಾಡುಗ+ ಸುರು+ಗುರಿ+ಈಡು ಎಂಬ ಪಾಂಗಿಟ್ಟಳದಲ್ಲಿ ಬಂದಿದೆ. (2) ನೆನೆ, ನಲುಗು, ಬತ್ತು, ಕಂದು, ಕುಸಿ, ಆರು, ಬಾಡು, ಕರಗು ಎಂಬ ಎಸಕಪದಗಳು ಬಿಸಿಲು, ಮಳೆ, ಗಾಳಿ, ಸಿಡಿಲು, ಬೆಂಕಿ ಮೊದಲಾದ ಒತ್ತರಗಳನ್ನು ಗುರಿ ಪಾಂಗಾಗಿ ಪಡೆದಿರಬಲ್ಲುವು; ಇಂತಹ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಸೇರುತ್ತದೆ ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ; ಇದಲ್ಲದೆ, ಅವುಗಳ ಗುರಿ ಪಾಂಗು ಒಂದು ಜಾಗ ಪಾಂಗಾಗಿ ಮಾರ್ಪಡುತ್ತದೆ. ಈ ಮಾರ್ಪಾಡು ಮಾತ್ರವಲ್ಲದೆ, ಇವಕ್ಕೆ ಹೊಸ ಮಾಡುಗ ಪಾಂಗನ್ನು ಸೇರಿಸುವ ಬದಲು ಮೊದಲಿಗಿದ್ದ ಗುರಿ ಪಾಂಗನ್ನೇ ಮಾಡುಗ ಪಾಂಗಾಗಿಯೂ ಮಾರ್ಪಡಿಸಲು ಬರುತ್ತದೆ; ಆದರೆ, ಹಾಗೆ ಮಾರ್ಪಡಿಸಿರುವ ಗುರಿ ಪಾಂಗಿನ ಮೇಲೆ ಮಂದಿತನವನ್ನು ಹೊರಿಸಲಾಗುತ್ತದೆ: (5) ಬೆಂಕಿಗೆ ಬೆಣ್ಣೆ ಕರಗಿತು > (ಕ) ನಾನು ಬೆಂಕಿಯಲ್ಲಿ ಬೆಣ್ಣೆಯನ್ನು ಕರಗಿಸಿದೆ. (ಚ) ಬೆಂಕಿ ಬೆಣ್ಣೆಯನ್ನು ಕರಗಿಸಿತು. (6) ಬಿಸಿಲಿಗೆ ಗಿಡ ಬಾಡಿತು > (ಕ) ನಾನು ಬಿಸಿಲಿನಲ್ಲಿ ಗಿಡವನ್ನು ಬಾಡಿಸಿದೆ. (ಚ) ಬಿಸಿಲು ಗಿಡವನ್ನು ಬಾಡಿಸಿತು. ಮೇಲೆ (5)ನೇ ಎತ್ತುಗೆಯಲ್ಲಿ ಒತ್ತರವನ್ನು ತಿಳಿಸುವ ಬೆಂಕಿ ಎಂಬುದನ್ನು ಗುರಿ ಪಾಂಗಾಗಿ ಬಳಸಲಾಗಿದೆ; ಇದರ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿರುವ (ಕ) ಸೊಲ್ಲಿನಲ್ಲಿ ಆ ಪಾಂಗನ್ನು ಜಾಗ ಪಾಂಗಾಗಿ ಮಾರ್ಪಡಿಸಲಾಗಿದೆ, ಮತ್ತು (5ಚ)ದಲ್ಲಿ ಹೊಸ ಮಾಡುಗವನ್ನು ಸೇರಿಸುವ ಬದಲು ಗುರಿ ಪಾಂಗನ್ನೇ ಮಾಡುಗ ಪಾಂಗಾಗಿ ಮಾರ್ಪಡಿಸಲಾಗಿದೆ; ಹೀಗೆ ಮಾಡಿರುವ ಈ (5ಚ) ಸೊಲ್ಲಿನಲ್ಲಿ ಬೆಂಕಿ ಎಂಬುದರ ಮೇಲೆ ಮಂದಿತನವನ್ನು ಹೊರಿಸಲಾಗಿದೆ ಎಂಬುದನ್ನು ಗಮನಿಸಬಹುದು. (6)ನೇ ಎತ್ತುಗೆಯಲ್ಲೂ ಹೀಗೆಯೇ. ಇಂತಹ ಸೊಲ್ಲುಗಳಲ್ಲಿ ಬರುವ ಗುರಿ ಪಾಂಗನ್ನು ಇಸು ಒಟ್ಟನ್ನು ಸೇರಿಸದಿರು ವಲ್ಲೂ ಜಾಗ ಪಾಂಗಾಗಿ ಮಾರ್ಪಡಿಸಲು ಬರುತ್ತದೆ ಎಂಬುದನ್ನು ಮೇಲೆ (8.2.1 (7))ರಲ್ಲಿ ನೋಡಿರುವೆವು: (7) ಬಿಸಿಲಿಗೆ ಗಿಡ ಬಾಡಿತು > ಬಿಸಿಲಿನಲ್ಲಿ ಗಿಡ ಬಾಡಿತು. (8) ಮಳೆಗೆ ಬಟ್ಟೆ ನೆನೆಯಿತು > ಮಳೆಯಲ್ಲಿ ಬಟ್ಟೆ ನೆನೆಯಿತು. (3) ಈ ಪಾಂಗಿಟ್ಟಳದೊಂದಿಗೆ ಬರುವ ಒಲಿ, ಒಪ್ಪು, ಹೆದರು, ಬೆದರು, ಅಂಜು, ಮುಳಿ, ಸೋಲು, ನಿಲುಕು, ಮಣಿ, (ಕಯ್)ಮುಗಿ, ಎಟಕು, ಅರಗು, ಹುಟ್ಟು ಎಂಬ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಬೇರೆ ಮಾಡುಗ ಪಾಂಗು ಸೇರಿಕೊಳ್ಳುವ ಬದಲು, ಸೊಲ್ಲಿನಲ್ಲಿ ಮೊದಲಿಗೇನೇ ಇದ್ದ ಗುರಿ ಪಾಂಗು ಮಾಡುಗ ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಆಡುಗ ಪಾಂಗು ಈಡು ಪಾಂಗಾಗುತ್ತದೆ: (9ಕ) ಅವನು ನನಗೆ ಹೆದರಿದ > ನಾನು ಅವನನ್ನು ಹೆದರಿಸಿದೆ. (9ಚ) ಅವನು ನನಗೆ ಸೋತ > ನಾನು ಅವನನ್ನು ಸೋಲಿಸಿದೆ. (9ಟ) ಗೆಲ್ಲು ನನಗೆ ಎಟಕಿತು > ನಾನು ಗೆಲ್ಲನ್ನು ಎಟಕಿಸಿದೆ.
(9ಕ)ದ ಮೊದಲನೇ ಸೊಲ್ಲಿನಲ್ಲಿ ನನಗೆ ಎಂಬುದು ಗುರಿ ಪಾಂಗಾಗಿ ಬಂದಿದೆ, ಮತ್ತು ಅವನು ಎಂಬುದು ಆಗುಗ ಪಾಂಗಾಗಿ ಬಂದಿದೆ. ಅದರ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿರುವ ಎರಡನೇ ಸೊಲ್ಲಿನಲ್ಲಿ ನನಗೆ ಎಂಬುದನ್ನು ನಾನು ಎಂಬುದಾಗಿ ಮಾರ್ಪಡಿಸಲಾಗಿದ್ದು ಅದು ಮಾಡುಗ ಪಾಂಗಾಗಿದೆ, ಮತ್ತು ಅವನು ಎಂಬುದನ್ನು ಅವನನ್ನು ಎಂಬುದಾಗಿ ಮಾರ್ಪಡಿಸಲಾಗಿದ್ದು ಅದು ಈಡು ಪಾಂಗಾಗಿದೆ ಎಂಬುದನ್ನು ಗಮನಿಸಬಹುದು. (9ಚ) ಮತ್ತು (9ಟ) ಸೊಲ್ಲುಗಳಲ್ಲೂ ಇಂತಹವೇ ಮಾರ್ಪಾಡುಗಳು ನಡೆದಿವೆ. (4) ಅಡೆ, ತುರಿಸು, ತಿಳಿ, ಅರಿ, ಮತ್ತು ಒಪ್ಪು ಎಂಬ ಎಸಕಪದಗಳನ್ನು ಅವಕ್ಕೆ ಇಸು ಒಟ್ಟನ್ನು ಸೇರಿಸದೇನೇ ಮಾಡುಗ+ಈಡು ಎಂಬ ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದೆ; ಮತ್ತು ಹೀಗೆ ಬಳಸುವಾಗ, ಅವುಗಳ ಪಾಂಗಿಟ್ಟಳದಲ್ಲಿ ಮೇಲೆ ವಿವರಿಸಿದಂತಹ ಮಾರ್ಪಾಡೇ ನಡೆಯುತ್ತದೆ; ಎಂದರೆ, ಅವುಗಳಲ್ಲಿ ಮೊದಲಿಗಿದ್ದ ಗುರಿ ಪಾಂಗು ಮಾಡುಗ ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗುತ್ತದೆ: (10ಕ) ಅವನಿಗೆ ವಿಶಯ ತಿಳಿಯಿತು > ಅವನು ವಿಶಯ ತಿಳಿದ. (10ಚ) ಅವನಿಗೆ ಗಡ್ಡ ತುರಿಸಿತು > ಅವನು ಗಡ್ಡ ತುರಿಸಿದ. (10ಟ) ನನಗೆ ಅವನ ಮಾತು ಒಪ್ಪಿತು > ನಾನು ಅವನ ಮಾತನ್ನು ಒಪ್ಪಿದೆ. ಇಂತಹ ಎಸಕಪದಗಳಲ್ಲಿ ಕೆಲವಕ್ಕೆ ಇಸು ಒಟ್ಟನ್ನು ಸೇರಿಸಲು ಬರುತ್ತದೆ, ಮತ್ತು ಹೀಗೆ ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗುತ್ತದೆ: (10ತ) ಅವನಿಗೆ ವಿಶಯ ತಿಳಿಯಿತು > ನಾನು ಅವನಿಗೆ ವಿಶಯ ತಿಳಿಸಿದೆ. (10ತ) ಎತ್ತುಗೆಯಲ್ಲಿ ಬಂದಿರುವ ಎರಡನೇ ಸೊಲ್ಲನ್ನು ಈ ರೀತಿ ಆಗುಗ+ಗುರಿ ಪಾಂಗಿಟ್ಟಳದಿಂದಲೂ ಪಡೆಯಬಹುದು, ಇಲ್ಲವೇ ಮಾಡುಗ+ಈಡು ಪಾಂಗಿಟ್ಟಳದಿಂದಲೂ ಪಡೆಯಬಹುದು: (10ಪ) ಅವನು ವಿಶಯ ತಿಳಿದ > ನಾನು ಅವನಿಗೆ ವಿಶಯ ತಿಳಿಸಿದೆ. (10ಪ)ದಲ್ಲಿ ಹೊಸ ಮಾಡುಗ ಬಂದು ಸೇರಿದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಗುರಿ ಪಾಂಗಾಗಿ ಮಾರ್ಪಟ್ಟಿದೆ. (4) ಮಾಡುಗ + ಗುರಿ ಮಾಡುಗ+ಗುರಿ ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಸಾಮಾನ್ಯವಾಗಿ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ. ಇಳಿ, ಎರಗು, ತಲಪು, ನುಸುಳು, ತೊಡಗು, ಬಗ್ಗು, ಸರಿ, ಹೊಗು ಮೊದಲಾದ ಎಸಕಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು: (1ಕ) ಅವನು ನೀರಿಗೆ ಇಳಿದ > ನಾನು ಅವನನ್ನು ನೀರಿಗೆ ಇಳಿಸಿದೆ. (1ಚ) ಅವನು ಬಾವಿಗೆ ಬಗ್ಗಿದ > ನಾನು ಅವನನ್ನು ಬಾವಿಗೆ ಬಗ್ಗಿಸಿದೆ. (1ಟ) ಅವನು ಮನೆಗೆ ತಲಪಿದ > ನಾನು ಅವನನ್ನು ಮನೆಗೆ ತಲಪಿಸಿದೆ.
ಈ ಕಟ್ಟಲೆಗೆ ಗುದ್ದು, ಹೊಡೆ, ಬಡಿ, ತದಕು ಮೊದಲಾದ ಕೆಲವು ಎಸಕ ಪದಗಳು ಹೊರಪಡಿಕೆಗಳಾಗಿವೆ; ಇವಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಮಾಡುಗ ಪಾಂಗು ಈಡು ಪಾಂಗಾಗುವ ಬದಲು ಸುರು ಪಾಂಗಾಗುತ್ತದೆ: (2ಕ) ಅವನು ಹುಡುಗನಿಗೆ ಹೊಡೆದ > ನಾನು ಅವನಿಂದ ಹುಡುಗನಿಗೆ ಹೊಡೆಸಿದೆ. (2ಚ) ಅವನು ರಾಜುವಿಗೆ ಗುದ್ದಿದ > ನಾನು ಅವನಿಂದ ರಾಜುವಿಗೆ ಗುದ್ದಿಸಿದೆ. (5) ಆಗುಗ + ಸುರು ಆಗುಗ+ಸುರು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅವುಗಳಲ್ಲಿ ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ. ಆಗು, ಉದುರು, ಉರುಳು, ಚಿಮ್ಮು, ನೇಲು, ಬೀಳು, ಹನಿ, ಹರಿ, ತುಳುಕು, ಪೀಕು ಮೊದಲಾದ ಎಸಕಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು: (1ಕ) ಕಲ್ಲು ಗುಡ್ಡದಿಂದ ಉರುಳಿತು > ನಾನು ಕಲ್ಲನ್ನು ಗುಡ್ಡದಿಂದ ಉರುಳಿಸಿದೆ. (1ಚ) ಕತ್ತಿಯಿಂದ ಹಿಡಿ ಪೀಕಿತು > ನಾನು ಕತ್ತಿಯಿಂದ ಹಿಡಿಯನ್ನು ಪೀಕಿಸಿದೆ. (1ಟ) ಹಣ್ಣು ಮರದಿಂದ ಉದುರಿತು > ನಾನು ಹಣ್ಣನ್ನು ಮರದಿಂದ ಉದುರಿಸಿದೆ. ಈ ಕಟ್ಟಲೆಗೆ ಕೆಳಗೆ ಕೊಟ್ಟಿರುವ ಮೂರು ಹೊರಪಡಿಕೆಗಳಿವೆ: (1) ಕಳಚು, ಚೆಲ್ಲು, ತುಂಬು, ಮತ್ತು ಸುರಿ ಎಂಬ ಎಸಕಪದಗಳನ್ನು ಇಸು ಒಟ್ಟನ್ನು ಸೇರಿಸದೆಯೂ ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದೆ; ಇವಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಬೇರೊಂದು ಮಾಡುಗ ಪಾಂಗು ಅದಕ್ಕೆ ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಮತ್ತು ಸುರು ಪಾಂಗುಗಳಲ್ಲಿ ಒಂದು ಮಾತ್ರ ಸುರು ಪಾಂಗಾಗಿ ಬಳಕೆಯಾಗುತ್ತದೆ. ಎಂದರೆ, ಆಗುಗ+ಸುರು ಪಾಂಗಿಟ್ಟಳದಲ್ಲಿ ಬರುತ್ತಿರುವಾಗ ಈ ಪದಗಳಿಗೆ ಇಸು ಒಟ್ಟನ್ನು ಸೇರಿಸಲು ಬರುವುದಿಲ್ಲ. (2) ಗೋಣಿಯಿಂದ ಅಕ್ಕಿ ಸುರಿಯಿತು > (ಕ) ಅವನು ಗೋಣಿಯಿಂದ ಅಕ್ಕಿಯನ್ನು ಸುರಿದ; (ಚ) ನಾನು ಅವನಿಂದ ಅಕ್ಕಿಯನ್ನು ಸುರಿಸಿದೆ; (ಟ) ನಾನು ಗೋಣಿಯಿಂದ ಅಕ್ಕಿ ಸುರಿಸಿದೆ. (3) ಕೊಡದಿಂದ ಹಾಲು ಚೆಲ್ಲಿತು > (ಕ) ಅವನು ಕೊಡದಿಂದ ಹಾಲು ಚೆಲ್ಲಿದ; (ಚ) ನಾನು ಅವನಿಂದ ಹಾಲು ಚೆಲ್ಲಿಸಿದೆ; (ಟ) ನಾನು ಕೊಡದಿಂದ ಹಾಲು ಚೆಲ್ಲಿಸಿದೆ. (2ಕ)ದಲ್ಲಿ ಸುರಿ ಎಸಕಪದವನ್ನು ಅದಕ್ಕೆ ಇಸು ಒಟ್ಟನ್ನು ಸೇರಿಸದೆಯೇ ಮಾಡುಗ+ಸುರು+ಈಡು ಪಾಂಗಿಟ್ಟಳದಲ್ಲಿ ಬಳಸಲಾಗಿದೆ; ಇಲ್ಲಿ ಒಂದು ಹೊಸ ಮಾಡುಗ ಬಂದಿದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡಾಗಿದೆ. (2ಚ) ಸೊಲ್ಲಿನಲ್ಲಿ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಲಾಗಿದೆ, ಮತ್ತು ಅದರ ಪಾಂಗಿಟ್ಟಳಕ್ಕೆ ನಾನು ಎಂಬ ಒಂದು ಹೊಸ ಮಾಡುಗ ಪಾಂಗನ್ನೂ ಸೇರಿಸ ಲಾಗಿದೆ; ಹಾಗಾಗಿ, ಮೊದಲಿಗಿದ್ದ ಮಾಡುಗ ಪಾಂಗು ಸುರುವಾಗಿದೆ, ಮತ್ತು ಮೊದಲಿ ಗಿದ್ದ ಸುರು ಪಾಂಗನ್ನು ಬಳಸಿಲ್ಲ. ಇದಕ್ಕೆ ಬದಲು, (2ಟ)ದಲ್ಲಿ ಮೊದಲಿಗಿದ್ದ ಸುರು ಪಾಂಗನ್ನು ಉಳಿಸಿಕೊಳ್ಳ ಲಾಗಿದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗನ್ನು ಬಳಸಿಲ್ಲ. ಆದರೆ ಇಲ್ಲಿಯೂ ಕೂಡ, ಮಾಡುಗ ಪಾಂಗಿಗೆ ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬುದನ್ನು ಸೇರಿಸಿ, ಅದನ್ನೊಂದು ನೆರವು ಪಾಂಗಾಗಿ ಬಳಸಿದಲ್ಲಿ, ಮೊದಲಿಗಿದ್ದ ಸುರು ಪಾಂಗನ್ನು ಉಳಿಸಲು ಬರುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ (4-5) ಸೊಲ್ಲುಗಳಲ್ಲಿ ಕಾಣಬಹುದು:
(4) ಗೋಣಿಯಿಂದ ಅಕ್ಕಿ ಸುರಿಯಿತು > ಅವನು ಗೋಣಿಯಿಂದ ಅಕ್ಕಿಯನ್ನು ಸುರಿದ > ನಾನು ಅವನ ಕಯ್ಯಲ್ಲಿ ಗೋಣಿಯಿಂದ ಅಕ್ಕಿಯನ್ನು ಸುರಿಸಿದೆ. (5) ಕೊಡದಿಂದ ಹಾಲು ಚೆಲ್ಲಿತು > ಅವನು ಕೊಡದಿಂದ ಹಾಲು ಚೆಲ್ಲಿದ > ನಾನು ಅವನ ಹತ್ತಿರ ಕೊಡದಿಂದ ಹಾಲನ್ನು ಚೆಲ್ಲಿಸಿದೆ. (2) ಆಗು ಎಸಕಪದವನ್ನೂ ಈ ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದೆ; ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದರ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಸುರು ಪಾಂಗು ಮಾಡುಗ ಪಾಂಗಾಗುತ್ತದೆ, ಮತ್ತು ಆಗುಗ ಪಾಂಗು ಈಡು ಪಾಂಗಾಗುತ್ತದೆ: (6) ಆ ಕೆಲಸ ನನ್ನಿಂದ ಆಯಿತು > ನಾನು ಆ ಕೆಲಸವನ್ನು ಆಗಿಸಿದೆ. (3) ಈ ಪಾಂಗಿಟ್ಟಳದಲ್ಲಿ ಬರುವ ಒಸರು, ಸೂಸು, ಸೋರು, ತೊಂಗು, ಜೋಲು ಮೊದಲಾದ ಬೇರೆ ಕೆಲವು ಎಸಕಪದಗಳೊಂದಿಗೆ ಇಸು ಒಟ್ಟನ್ನು ಬಳಸುವುದು ಅಪರೂಪ. (6) ಮಾಡುಗ+ಸುರು ಮಾಡುಗ+ಸುರು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅದರ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗುತ್ತದೆ. ಇದಕ್ಕೆ ಅಗಲು, ಇಳಿ, ತೊಲಗು, ತೆರಳು, ದುಮುಕು, ನೇಲು, ಬೀಳು ಮೊದಲಾದ ಕೆಲವು ಎಸಕಪದಗಳನ್ನು ಎತ್ತುಗೆಯಾಗಿ ಕೊಡಬಹುದು: (1ಕ) ಅವನು ಮರದಿಂದ ಇಳಿದ > ನಾನು ಅವನನ್ನು ಮರದಿಂದ ಇಳಿಸಿದೆ. (1ಚ) ಅವನು ಆ ಊರಿನಿಂದ ತೊಲಗಿದ > ಅವರು ಅವನನ್ನು ಆ ಊರಿನಿಂದ ತೊಲಗಿಸಿದರು. (1ಟ) ಅವನು ಮರದಿಂದ ಬಿದ್ದ > ನಾನು ಅವನನ್ನು ಮರದಿಂದ ಬೀಳಿಸಿದೆ. ಈ ಕಟ್ಟಲೆಗೆ ಒಂದು ಹೊರಪಡಿಕೆಯಿರುವ ಹಾಗೆ ಕಾಣಿÂಸುತ್ತದೆ: ಮಾಡುಗ+ಸುರು ಪಾಂಗಿಟ್ಟಳದಲ್ಲಿ ಬರುವ ಅಗಲು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದರ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಆಗುಗ ಪಾಂಗು ಸುರು ಪಾಂಗಾಗಿ, ಮತ್ತು ಸುರು ಪಾಂಗು ಈಡು ಪಾಂಗಾಗಿಯೂ ಮಾರ್ಪಡುತ್ತದೆಯೆಂದು ತೋರುತ್ತದೆ: (1ತ) ಅವನು ಮಕ್ಕಳಿಂದ ಅಗಲಿದ > (ಕ) ನಾನು ಅವನನ್ನು ಮಕ್ಕಳಿಂದ ಅಗಲಿಸಿದೆ (ಚ) ನಾನು ಅವನಿಂದ ಮಕ್ಕಳನ್ನು ಅಗಲಿಸಿದೆ. ಆದರೆ, ಇಲ್ಲಿ ನಿಜಕ್ಕೂ (ಚ) ಸೊಲ್ಲಿಗೆ ಮಕ್ಕಳು ಅವನಿಂದ ಅಗಲಿದರು ಎಂಬ ಮಾಡುಗ+ಸುರು ಪಾಂಗಿಟ್ಟಳದಲ್ಲೇ ಬರುವ ಬೇರೊಂದು ಸೊಲ್ಲು ಮೂಲವಾಗಿದೆ. (7) ಆಗುಗ+ಜಾಗ ಆಗುಗ+ಜಾಗ ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಅದರ ಆಗುಗ ಪಾಂಗು ಈಡು ಪಾಂಗಾಗುತ್ತದೆ. ಇಂಗು, ಉಳಿ, ಗೆಲ್ಲು, ಸೋಲು, ತೇಲು, ನೇಲು, ನೋಯು, ಮುಳುಗು, ಸಿಲುಕು, ಹೆಚ್ಚು, ಕರಗು, ಜಿನುಗು ಮೊದಲಾದ ಎಸಕಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು:
(1ಕ) ನೆಲದಲ್ಲಿ ನೀರು ಇಂಗಿತು > ನಾನು ನೀರನ್ನು ನೆಲದಲ್ಲಿ ಇಂಗಿಸಿದೆ. (1ಚ) ಅವನು ಆಟದಲ್ಲಿ ಗೆದ್ದ > ನಾನು ಅವನನ್ನು ಆಟದಲ್ಲಿ ಗೆಲ್ಲಿಸಿದೆ. (1ಟ) ನೀರಿನಲ್ಲಿ ಉಪ್ಪು ಕರಗಿತು > ನಾನು ನೀರಿನಲ್ಲಿ ಉಪ್ಪನ್ನು ಕರಗಿಸಿದೆ. (1ತ) ಅವನು ನೀರಿನಲ್ಲಿ ಮುಳುಗಿದ > ನಾನು ಅವನನ್ನು ನೀರಿನಲ್ಲಿ ಮುಳುಗಿಸಿದೆ. ಈ ಕಟ್ಟಲೆಗೆ ಅಡಸು, ಅದ್ದು, ಊರು, ನುರಿ, ಗಿಡಿ ಎಂಬಂತಹ ಕೆಲವು ಎಸಕಪದಗಳು ಹೊರಪಡಿಕೆಗಳು; ಯಾಕೆಂದರೆ, ಅವನ್ನು ಇಸು ಒಟ್ಟನ್ನು ಸೇರಿಸದೆಯೂ ಮಾಡುಗ+ಈಡು+ಜಾಗ ಎಂಬ ಪಾಂಗಿಟ್ಟಳದಲ್ಲಿ ಬಳಕೆಯಾಗ ಬಲ್ಲುವು. ಅವಕ್ಕೆ ಇಸು ಒಟ್ಟನ್ನು ಅವುಗಳ ಈ ಎರಡನೇ ಪಾಂಗಿಟ್ಟಳದಲ್ಲಿ ಮಾತ್ರ ಸೇರಿಸಲು ಬರುತ್ತದೆ; ಹಾಗೆ ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಹೊಸದೊಂದು ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಡುತ್ತದೆ: (2ಕ) ಸೆರಗು ನೀರಿನಲ್ಲಿ ಅದ್ದಿತು > ಅವಳು ಸೆರಗನ್ನು ನೀರಿನಲ್ಲಿ ಅದ್ದಿದಳು > ರಾಜು ಅವಳಿಂದ ಸೆರಗನ್ನು ನೀರಿನಲ್ಲಿ ಅದ್ದಿಸಿದ. (2ಚ) ಕೋಲು ಕೆಸರಿನಲ್ಲಿ ಊರಿತು > ರಾಜು ಕೋಲನ್ನು ಕೆಸರಿನಲ್ಲಿ ಊರಿದ > ಅವನು ರಾಜುವಿನಿಂದ ಕೋಲನ್ನು ಕೆಸರಿನಲ್ಲಿ ಊರಿಸಿದ. (8) ಮಾಡುಗ+ಜಾಗ ಮಾಡುಗ+ಜಾಗ ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿ ದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗುತ್ತದೆ. ಅಡಗು, ತೂಳು, ನಿಲ್ಲು, ಪರಡು, ಮಲಗು, ಮೆರೆ, ಹೊಗು, ಹೊರಳು, ತೊಡಗು ಮೊದಲಾದ ಕೆಲವು ಎಸಕಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು: (1ಕ) ಅವನು ಕೋಣೆಯಲ್ಲಿ ಅಡಗಿದ > ನಾನು ಅವನನ್ನು ಕೋಣೆಯಲ್ಲಿ ಅಡಗಿಸಿದೆ. (1ಚ) ಅವನು ಕೆಲಸದಲ್ಲಿ ತೊಡಗಿದ > ನಾನು ಅವನನ್ನು ಕೆಲಸದಲ್ಲಿ ತೊಡಗಿಸಿದೆ. (1ಟ) ಅವನು ನೆಲದಲ್ಲಿ ಹೊರಳಿದ > ನಾನು ಅವನನ್ನು ನೆಲದಲ್ಲಿ ಹೊರಳಿಸಿದೆ. ಅಗೆ, ಎರಗು, ಗೀಚು ಮೊದಲಾದ ಬೇರೆ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗುವ ಬದಲು ಸುರು ಪಾಂಗಾಗುತ್ತದೆ: (2ಕ) ಅವನು ತೋಟದಲ್ಲಿ ಅಗೆದ > ನಾನು ಅವನಿಂದ ತೋಟದಲ್ಲಿ ಅಗೆಸಿದೆ. (2ಚ) ಹುಡುಗ ಪುಸ್ತಕದಲ್ಲಿ ಗೀಚಿದ > ಅವಳು ಹುಡುಗನಿಂದ ಪುಸ್ತಕದಲ್ಲಿ ಗೀಚಿಸಿದಳು. ಇದಲ್ಲದೆ, ಈ ಪಾಂಗಿಟ್ಟಳದಲ್ಲಿ ಬರುವ ಊರು (ನೆಲಸು), ತಂಗು, ತೆಂಗು, ಹಣಿಕು ಮೊದಲಾದ ಬೇರೆ ಕೆಲವು ಎಸಕಪದಗಳು ಇಸು ಒಟ್ಟಿನೊಂದಿಗೆ ಬಳಕೆಯಾಗುವುದು ಅಪರೂಪ. (9) ಆಗುಗ+ಈಡು
ಆಗುಗ+ಈಡು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಆಗುಗ ಪಾಂಗು ಮತ್ತು ಈಡು ಪಾಂಗುಗಳಲ್ಲಿ ಯಾವುದಾದರೂ ಒಂದು ಮಾತ್ರ ಈಡು ಪಾಂಗಾಗಿ ಸೊಲ್ಲಿನಲ್ಲಿ ಬಳಕೆಯಾಗುತ್ತದೆ. ಇದಕ್ಕೆ ಈಯು (ಹಸು), ಹಡೆ, ಹೆರು, ಹೀರು, ಕಕ್ಕು, ಕಾರು ಎಂಬಂತಹ ಎಸಕಪದಗಳನ್ನು ಎತ್ತುಗೆಯಾಗಿ ಕೊಡಬಹುದು: (1) ಅವನು ತಿಂದುದನ್ನು ಕಕ್ಕಿದ > (ಕ) ನಾನು ಅವನನ್ನು ಕಕ್ಕಿಸಿದೆ; (ಚ) ನಾನು ತಿಂದುದನ್ನು ಕಕ್ಕಿಸಿದೆ. (2) ಆಕಳು ಕರು ಈಯಿತು > (ಕ) ಅವನು ಆಕಳನ್ನು ಈಯಿಸಿದ; (ಚ) ಅವನು ಕರುವನ್ನು ಈಯಿಸಿದ. (3) ಅವನು ಹಣ್ಣಿನ ರಸವನ್ನು ಹೀರಿದ > (ಕ) ನಾನು ಅವನನ್ನು ಹೀರಿಸಿದೆ; (ಚ) ನಾನು ಹಣ್ಣಿನ ರಸವನ್ನು ಹೀರಿಸಿದೆ. (1ಕ-ಚ) ಸೊಲ್ಲುಗಳಲ್ಲಿ ಹೊಸ ಮಾಡುಗ (ನಾನು) ಸೇರಿದೆ; ಆದರೆ, (1ಕ)ದಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗಿದೆ ಮತ್ತು ಈಡು ಪಾಂಗು ಬಳಕೆಯಾಗಿಲ್ಲ; ಇದಕ್ಕೆ ಬದಲು, (1ಚ)ದಲ್ಲಿ ಮೊದಲಿಗಿದ್ದ ಈಡು ಪಾಂಗು ಉಳಿದಿದೆ, ಮತ್ತು ಮಾಡುಗ ಪಾಂಗು ಬಳಕೆಯಾಗಿಲ್ಲ. ಅವನು ತಿಂದುದನ್ನು ನಾನು ಕಕ್ಕಿಸಿದೆ ಎಂಬಂತಹ ಸೊಲ್ಲನ್ನೂ ಬಳಸಲು ಬರುತ್ತದೆ; ಆದರೆ, ಇಲ್ಲಿ ಅವನು ತಿಂದುದನ್ನು ಎಂಬುದು ಒಟ್ಟಿಗೆ ಒಂದು ಪಾಂಗಾಗಿ ಬಂದಿದೆಯಲ್ಲದೆ, ಅವನು ಮತ್ತು ತಿಂದುದನ್ನು ಎಂಬ ಎರಡು ಪಾಂಗುಗಳಾಗಿ ಬಳಕೆಯಾಗಿಲ್ಲ. ಮೇಲಿನ ಕಟ್ಟಲೆಗೆ ಕೆಳಗೆ ಕೊಟ್ಟಿರುವ ಮೂರು ಹೊರಪಡಿಕೆಗಳಿವೆ: (1) ಈ ಪಾಂಗಿಟ್ಟಳದೊಂದಿಗೆ ಬರುವ ಅಡರು, ಅಡಸು, ಪಡೆ, ಮುಸುಕು, ಅಳುರು, ತಾಳು ಮೊದಲಾದ ಕೆಲವು ಎಸಕಪದಗಳನ್ನು ಇಸು ಒಟ್ಟಿನೊಂದಿಗೆ ಬಳಸುವುದು ಅಪರೂಪ. (4) ಅವನು ತೊಂದರೆಗಳನ್ನು ತಾಳಿದ > ? ನಾನು ಅವನಿಂದ ತೊಂದರೆಗಳನ್ನು ತಾಳಿಸಿದೆ. (2) ಕಾಣು ಮತ್ತು ಕೇಳು ಎಂಬ ಎರಡು ಎಸಕಪದಗಳೂ ಇದೇ ಪಾಂಗಿಟ್ಟಳದಲ್ಲಿ ಬಳಕೆಯಾಗುತ್ತವೆ; ಅವಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅವು ಗಳಲ್ಲಿ ಮೊದಲಿಗಿದ್ದ ಈಡು ಪಾಂಗು ಆಗುಗ ಪಾಂಗಾಗುತ್ತದೆ, ಮತ್ತು ಆಗುಗ ಪಾಂಗು ಗುರಿ ಪಾಂಗಾಗುತ್ತದೆ. ಆದರೆ, ಇಲ್ಲಿ ಹೊಸ ಮಾಡುಗ ಪಾಂಗು ಸೇರುವುದಿಲ್ಲ, ಎಂದರೆ, ಇಸು ಒಟ್ಟನ್ನು ಸೇರಿಸಿದಾಗ ಆಗುವಿಕೆ ಮಾಡುವಿಕೆಯಾಗುವುದಿಲ್ಲ: (5ಕ) ಅವನು ನನ್ನನ್ನು ಕಂಡ > ಅವನಿಗೆ ನಾನು ಕಾಣಿಸಿದೆ. (5ಚ) ಅವನು ನನ್ನ ಮಾತನ್ನು ಕೇಳಿದ > ಅವನಿಗೆ ನನ್ನ ಮಾತು ಕೇಳಿಸಿತು. ಅನಿಸು ಎಂಬ ಎಸಕರೂಪವೂ ಅನ್ನು ಎಂಬ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿ ಪಡೆದುದಾಗಿರಬಲ್ಲುದು; ಆದರೆ, ಅನ್ನು ಪದದೊಂದಿಗೆ ಮಾಡುಗ+ಈಡು ಪಾಂಗಿಟ್ಟಳ ಬರುತ್ತಿದ್ದು, ಇಸು ಒಟ್ಟನ್ನು ಸೇರಿಸಿದಾಗ ಅದರ ಈಡು ಪಾಂಗು ಆಗುಗವಾಗುತ್ತದೆ, ಮತ್ತು ಅದರ ಮಾಡುಗ ಪಾಂಗು ಗುರಿ ಪಾಂಗಾಗುತ್ತದೆ: (5ಟ) ಅವನು ಹಾಗೆ ಅಂದ > ಅವನಿಗೆ ಹಾಗೆ ಅನಿಸಿತು. (5ತ) ಅವನು ಮನೆಗೆ ಹೋಗಬೇಕೆಂದು ಅಂದ > ಅವನಿಗೆ ಮನೆಗೆ ಹೋಗಬೇಕೆಂದು ಅನಿಸಿತು. (3) ಇದೇ ಪಾಂಗಿಟ್ಟಳದ ಹೋಲು ಎಂಬ ಇನ್ನೊಂದು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದರ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗುತ್ತದೆ.
ಇದಲ್ಲದೆ, ಅದರಲ್ಲಿ ಮೊದಲಿಗಿದ್ದ ಈಡು ಪಾಂಗು ಒಂದಿಗೆ ಇಲ್ಲವೇ ಒಡನೆ ಎಂಬುದರೊಂದಿಗೆ ಬಳಕೆಯಾಗುವ ನೆರವು ಪಾಂಗಾಗಿ ಬರುತ್ತದೆ. ಇದನ್ನು ಕೆಳಗಿನ ಎತ್ತುಗೆಯಲ್ಲಿ ಕಾಣಬಹುದು: (6) ಹುಡುಗ ತಂದೆಯನ್ನು ಹೋಲುತ್ತಾನೆ > ನಾನು ಹುಡುಗನನ್ನು ಅವನ ತಂದೆಯೊಂದಿಗೆ ಹೋಲಿಸಿದೆ. (10) ಮಾಡುಗ+ಈಡು ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ. ಇದಕ್ಕೆ ಅಗಿ, ಅಳೆ, ಊದು, ಎತ್ತು, ಒಗೆ, ಓದು, ಕಚ್ಚು, ಕರೆ, ಕೊಲ್ಲು, ತಳ್ಳು, ತೊಳೆ, ಮಾಡು, ಹೊಗಳು ಮೊದಲಾದ ಎಸಕಪದಗಳನ್ನು ಎತ್ತುಗೆಯಾಗಿ ಕೊಡಬಹುದು: (1ಕ) ಅವನು ಪೆಟ್ಟಿಗೆಯನ್ನು ಎತ್ತಿದ > ನಾನು ಅವನಿಂದ ಪೆಟ್ಟಿಗೆಯನ್ನು ಎತ್ತಿಸಿದೆ. (1ಚ) ಅವನು ಕಾಗದ ಓದಿದ > ನಾನು ಅವನಿಂದ ಕಾಗದ ಓದಿಸಿದೆ. (1ಟ) ಅವನು ಬಾಗಿಲು ತಳ್ಳಿದ > ನಾನು ಅವನಿಂದ ಬಾಗಿಲು ತಳ್ಳಿಸಿದೆ. ಈ ಕಟ್ಟಲೆಗೆ ಕೆಳಗೆ ಕೊಟ್ಟಿರುವ ಅಯ್ದು ಹೊರಪಡಿಕೆಗಳಿವೆ: (1) ಉಡು, ತೊಡು, ಹೊದೆ, ಉಣ್ಣು, ಕುಡಿ, ತಿನ್ನು, ನೆಕ್ಕು, ಮುಡಿ, ಸೂಡು, ಕಲಿ ಎಂಬ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಮಾಡುಗ ಪಾಂಗು ಸುರು ಪಾಂಗಾಗುವ ಬದಲು ಗುರಿ ಪಾಂಗಾಗುತ್ತದೆ: (2ಕ) ಅವನು ನೀರು ಕುಡಿದ > ನಾನು ಅವನಿಗೆ ನೀರು ಕುಡಿಸಿದೆ. (2ಚ) ಅವಳು ಸೀರೆ ಉಟ್ಟಳು > ನಾನು ಅವಳಿಗೆ ಸೀರೆ ಉಡಿಸಿದೆ. (2ಟ) ಅವಳು ಹೂ ಮುಡಿದಳು > ನಾನು ಅವಳಿಗೆ ಹೂ ಮುಡಿಸಿದೆ. ಇವುಗಳಲ್ಲಿ ಕಲಿ ಎಂಬ ಎಸಕಪದ ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲೂ ಬರಬಲ್ಲುದಾಗಿದ್ದು, ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಅದರ ಪಾಂಗಿಟ್ಟಳಕ್ಕೆ ಹೊಸ ಮಾಡುಗ ಪಾಂಗು ಸೇರುವ ಬದಲು, ಅದರ ಸುರು ಪಾಂಗು ಮಾಡುಗ ಪಾಂಗಾಗಬಲ್ಲುದು: (2ತ) ಅವಳು ತನ್ನ ತಾಯಿಯಿಂದ ಒಂದು ಹಾಡು ಕಲಿತಳು > ಅವಳ ತಾಯಿ ಅವಳಿಗೆ ಒಂದು ಹಾಡು ಕಲಿಸಿದಳು. (2) ದಾಟು, ಮೇಯು, ಆಡು, ಓದು, ಬರೆ ಮೊದಲಾದ ಬೇರೆ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುವ ಬದಲು ಈಡು ಪಾಂಗಾಗಿಯೂ ಮಾರ್ಪಡಬಲ್ಲುದು; ಇಂತಹ ಕಡೆಗಳಲ್ಲಿ ಮೊದಲಿಗಿದ್ದ ಈಡು ಪಾಂಗನ್ನು ಬಳಸದಿರಲಾಗುತ್ತದೆ: (3ಕ) ಅವನು ನದಿ ದಾಟಿದ > ನಾನು ಅವನನ್ನು ದಾಟಿಸಿದೆ. (3ಚ) ದನಗಳು ಹುಲ್ಲು ಮೇಯುತ್ತಿವೆ > ಅವನು ದನಗಳನ್ನು ಮೇಯಿಸುತ್ತಿದ್ದಾನೆ. (3ಟ) ಅವನು ಕತೆ ಓದುತ್ತಿದ್ದಾನೆ > ನಾನು ಅವನನ್ನು ಓದಿಸಿದೆ.
(3) ಇದಲ್ಲದೆ, ಇದೇ ಮಾಡುಗ+ಈಡು ಪಾಂಗಿಟ್ಟಳದ ನಂಬು, ನಚ್ಚು ಮತ್ತು ಮೆಚ್ಚು ಎಂಬ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಹೊಸ ಮಾಡುಗ ಪಾಂಗನ್ನು ಸೇರಿಸುವ ಬದಲು, ಮೊದಲಿಗಿದ್ದ ಈಡು ಪಾಂಗನ್ನು ಮಾಡುಗ ಪಾಂಗಾಗಿ, ಮತ್ತು ಮೊದಲಿಗಿದ್ದ ಮಾಡುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲಾಗುತ್ತದೆ. (4ಕ) ಅವನು ರಾಜುವನ್ನು ನಂಬಿದ > ರಾಜು ಅವನನ್ನು ನಂಬಿಸಿದ. (4ಚ) ಅವನು ನನ್ನನ್ನು ಮೆಚ್ಚಿದ > ನಾನು ಅವನನ್ನು ಮೆಚ್ಚಿಸಿದೆ. (4) ತಿಳಿ ಮತ್ತು ಒಪ್ಪು ಎಂಬ ಎಸಕಪದಗಳನ್ನು ಅವಕ್ಕೆ ಇಸು ಒಟ್ಟನ್ನು ಸೇರಿಸದೆಯೇ ಆಗುಗ+ಗುರಿ ಇಲ್ಲವೇ ಮಾಡುಗ+ಈಡು ಎಂಬ ಎರಡು ಪಾಂಗಿಟ್ಟಳ ಗಳಲ್ಲಿ ಬಳಸಲು ಬರುತ್ತದೆ ಎಂಬುದನ್ನು ಮೇಲೆ (3)ರಲ್ಲಿ ನೋಡಿರುವೆವು. ಇವುಗಳಲ್ಲಿ ತಿಳಿ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿ, ಅದನ್ನು ಅದೇ ಮಾಡುಗ+ಈಡು ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದೆ; ಆದರೆ, ಹೀಗೆ ಮಾಡಿದಾಗ ಅದಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಆಗುಗ ಪಾಂಗು ಈಡು ಪಾಂಗಾಗುತ್ತದೆ (ಇದನ್ನು ಆಗುಗ+ಗುರಿ ಪಾಂಗಿಟ್ಟಳ ದಿಂದಲೂ ಪಡೆಯಲು ಬರುತ್ತದೆ ಎಂಬುದನ್ನು ಮೇಲೆ (3)ರಲ್ಲಿ ನೋಡಿರುವೆವು). (5) ಅವನು ವಿಶಯ ತಿಳಿದ > ನಾನು ಅವನಿಗೆ ವಿಶಯ ತಿಳಿಸಿದೆ. ಇದಕ್ಕೆ ಬದಲು, ಒಪ್ಪು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಒಂದು ಹೊಸ ಮಾಡುಗ ಸೇರುತ್ತದೆ ಮತ್ತು ಮೊದಲಿಗಿದ್ದ ಗುರಿ ಪಾಂಗು ಈಡು ಪಾಂಗಾಗು ತ್ತದೆ; ಇದಲ್ಲದೆ, ಮೊದಲಿಗಿದ್ದ ಆಗುಗ ಪಾಂಗನ್ನು ಬಳಸದಿರಲಾಗುತ್ತದೆ: (6) ಅವನು ನನ್ನ ಮಾತನ್ನು ಒಪ್ಪಿದ > ನಾನು ಅವನನ್ನು ಒಪ್ಪಿಸಿದೆ. (5) ಕುಲುಕು ಮತ್ತು ಕೆಣಕು ಪದಗಳಿಗೆ ಇಸು ಒಟ್ಟನ್ನು ಸೇರಿಸಿದೆಯಾದರೂ ಅವನ್ನು ಮೊದಲಿನ ಪಾಂಗಿಟ್ಟಳದಲ್ಲಿಯೇ ಬಳಸಲು ಬರುತ್ತದೆ. (7ಕ) ಅವನು ಗೆಲ್ಲನ್ನು ಕುಲುಕಿದ > ಅವನು ಗೆಲ್ಲನ್ನು ಕುಲುಕಿಸಿದ. (7ಚ) ಅವನು ಹುಲಿಯನ್ನು ಕೆಣಕಿದ > ಅವನು ಹುಲಿಯನ್ನು ಕೆಣಕಿಸಿದ. ಇದಲ್ಲದೆ, ಇವುಗಳ ಇಸುವೆಸಕರೂಪಕ್ಕೆ ಹೊಸ ಮಾಡುಗ ಪಾಂಗನ್ನು ಸೇರಿಸಿ, ಮತ್ತು ಮೊದಲಿಗಿದ್ದ ಮಾಡುಗ ಪಾಂಗನ್ನು ಸುರು ಪಾಂಗಾಗಿ ಮಾರ್ಪಡಿಸಿಯೂ ಅವನ್ನು ಬಳಸಲು ಬರುತ್ತದೆ: (8ಕ) ನಾನು ಅವನಿಂದ ಗೆಲ್ಲನ್ನು ಕುಲುಕಿಸಿದೆ. (8ಚ) ನಾನು ಅವನಿಂದ ಹುಲಿಯನ್ನು ಕೆಣಕಿಸಿದೆ. (11) ಮಾಡುಗ+ಈಡು+ಗುರಿ ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಸಾಮಾನ್ಯವಾಗಿ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ. ಇದನ್ನು ಅಟ್ಟು, ಅಮುಕು, ಇಡು, ಕೊಡು, ಬಳಿ, ಮಾರು, ಮೊಗೆ, ಹಚ್ಚು, (ಕಯ್) ಮುಗಿ, ತೊಡೆ, ಹಾಕು, ಹೊಚ್ಚು, ಹೂಡು ಮೊದಲಾದ ಎಸಕಪದಗಳ ಬಳಕೆಯಲ್ಲಿ ಕಾಣಬಹುದು: (1ಕ) ಅವಳು ಮುದುಕನಿಗೆ ಹಣ ಕೊಟ್ಟಳು > ನಾನು ಅವಳಿಂದ ಮುದುಕನಿಗೆ ಹಣ ಕೊಡಿಸಿದೆ.
(1ಚ) ನಾನು ಗೋಡೆಗೆ ಸುಣ್ಣ ಹಚ್ಚಿದೆ > ಅವನು ನನ್ನಿಂದ ಗೋಡೆಗೆ ಸುಣ್ಣ ಹಚ್ಚಿಸಿದ. (1ಟ) ಅವಳು ಮಕ್ಕಳಿಗೆ ಕತೆ ಹೇಳಿದಳು > ನಾನು ಅವಳಿಂದ ಮಕ್ಕಳಿಗೆ ಕತೆ ಹೇಳಿಸಿದೆ. ಈ ಕಟ್ಟಲೆಗೆ ಕೆಳಗೆ ಕೊಟ್ಟಿರುವ ಎರಡು ಹೊರಪಡಿಕೆಗಳಿವೆ: (1) ಚುಚ್ಚು, ಕುತ್ತು, ಮೆತ್ತು, ಸುತ್ತು, ಸುಂದು ಮೊದಲಾದ ಬೇರೆ ಕೆಲವು ಎಸಕಪದಗಳು ಆಗುಗ+ಗುರಿ ಪಾಂಗಿಟ್ಟಳದಲ್ಲಿಯೂ ಬರಬಲ್ಲುವು ಮತ್ತು ಇಸು ಒಟ್ಟನ್ನು ಸೇರಿಸದೆಯೇ ಮೇಲಿನ ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲೂ ಬರಬಲ್ಲುವು ಎಂಬುದನ್ನು ಮೇಲೆ (3)ರಲ್ಲಿ ನೋಡಿರುವೆವು. ಇಂತಹ ಎಸಕಪದಗಳಿಗೆ ಅವುಗಳ ಮಾಡುಗ+ಈಡು+ಗುರಿ ಪಾಂಗಿಟ್ಟಳದ ಬಳಕೆಯಲ್ಲಿ ಇಸು ಒಟ್ಟನ್ನು ಸೇರಿಸಲು ಬರುತ್ತದೆ, ಮತ್ತು ಹಾಗೆ ಸೇರಿಸಿದಾಗ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ; ಇದಲ್ಲದೆ, ಅದರಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ: (2ಕ) ಅವನು ಸುಣ್ಣವನ್ನು ಗೋಡೆಗೆ ಮೆತ್ತಿದ > ನಾನು ಅವನಿಂದ ಸುಣ್ಣವನ್ನು ಗೋಡೆಗೆ ಮೆತ್ತಿಸಿದೆ. (2ಚ) ಅವನು ನೂಲನ್ನು ಬೆರಳಿಗೆ ಸುಂದಿದ > ನಾನು ಅವನಿಂದ ನೂಲನ್ನು ಬೆರಳಿಗೆ ಸುಂದಿಸಿದೆ. (2) ಮಾಡುಗ+ಈಡು ಪಾಂಗಿಟ್ಟಳವಿರುವ ಉಡು, ತೊಡು, ಉಣ್ಣು, ಕುಡಿ, ತಿನ್ನು, ಮುಡಿ, ಸೂಡು, ಕಲಿ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳ ಮಾಡುಗ+ಈಡು+ಗುರಿ ಆಗುವುದೆಂಬುದನ್ನು ಮೇಲೆ (10) ರಲ್ಲಿ ನೋಡಿರುವೆವು. ಇಸು ಒಟ್ಟನ್ನು ಸೇರಿಸಿರುವ ಈ ಎಸಕಪದಗಳಲ್ಲಿ ಬೇರೆ ಯಾವ ಮಾರ್ಪಾಡನ್ನೂ ಮಾಡದೆ ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗವನ್ನು ಸೇರಿಸಲು ಬರುತ್ತದೆ; ಹೀಗೆ ಮಾಡಿದಾಗ ಮೊದಲಿಗಿದ್ದ ಅವುಗಳ ಮಾಡುಗ ಪಾಂಗು ಸುರು ಪಾಂಗಾಗುತ್ತದೆ: (3) ಮಗು ಹಾಲು ಕುಡಿಯಿತು > (ಕ) ಅವಳು ಮಗುವಿಗೆ ಹಾಲು ಕುಡಿಸಿದಳು (ಚ) ನಾನು ಅವಳಿಂದ ಮಗುವಿಗೆ ಹಾಲು ಕುಡಿಸಿದೆ. (4) ಹುಡುಗಿ ಹಾಡು ಕಲಿತಳು > (ಕ) ಅವನು ಹುಡುಗಿಗೆ ಹಾಡು ಕಲಿಸಿದ (ಚ) ನಾನು ಅವನಿಂದ ಹುಡುಗಿಗೆ ಹಾಡು ಕಲಿಸಿದೆ. (5) ಆಕೆ ಹೂ ಮುಡಿದಳು > (ಕ) ಅವನು ಆಕೆಗೆ ಹೂ ಮುಡಿಸಿದ (ಚ) ನಾನು ಅವನಿಂದ ಆಕೆಗೆ ಹೂ ಮುಡಿಸಿದೆ. (3ಕ)ದಲ್ಲಿ ಕುಡಿ ಎಸಕಪದ ಇಸು ಒಟ್ಟಿನೊಂದಿಗೆ ಬಂದಿದೆ, ಮತ್ತು ಅದ ರೊಂದಿಗೆ ಮಾಡುಗ, ಗುರಿ ಮತ್ತು ಈಡು ಪಾಂಗುಗಳು ಬಂದಿವೆ; (3ಚ)ದಲ್ಲಿ ಆ ಎಸಕಪದವನ್ನು ಅದರಲ್ಲಿ ಬೇರೆ ಯಾವ ಮಾರ್ಪಾಡುಗಳನ್ನೂ ಮಾಡದೆ ಬಳಸಲಾಗಿದೆ, ಮತ್ತು ಹಾಗಿದ್ದರೂ ಅದರಲ್ಲಿ ಒಂದು ಹೊಸ ಮಾಡುಗವನ್ನು (ನಾನು) ಸೇರಿಸಲಾಗಿದೆ, ಮತ್ತು ಮೊದಲಿಗಿದ್ದ ಮಾಡುಗವನ್ನು (ಅವನು) ಸುರು ಪಾಂಗಾಗಿ (ಅವನಿಂದ) ಮಾರ್ಪಡಿಸಲಾಗಿದೆ. (4-5) ಸೊಲ್ಲುಗಳಲ್ಲೂ ಹೀಗೆಯೇ. (12) ಮಾಡುಗ+ಈಡು+ಸುರು ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಎತ್ತು, ಜಗ್ಗು, ಸೇದು, ತೆಗೆ, ಬಸಿ, ಸುಲಿ, ಹೆಕ್ಕು, ಕೊಯ್ ಮೊದಲಾದ ಕೆಲವು ಎಸಕಪದಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ.
ಇದಲ್ಲದೆ, ಅದರಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಸುರು ಪಾಂಗನ್ನು ಬಳಸದಿರಲಾಗುತ್ತದೆ: (1ಕ) ಅವನು ಅಕ್ಕಿಯಿಂದ ಕಸ ಹೆಕ್ಕಿದ > ನಾನು ಅವನಿಂದ ಕಸ ಹೆಕ್ಕಿಸಿದೆ. (1ಚ) ಅವನು ಬಾವಿಯಿಂದ ನೀರು ಸೇದಿದ > ನಾನು ಅವನಿಂದ ನೀರು ಸೇದಿಸಿದೆ. ಇವುಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಮಾಡುಗ ಪಾಂಗನ್ನು ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬ ಪದಗಳೊಂದಿಗೆ ನೆರವು ಪಾಂಗಾಗಿ ಬಳಸಲು ಬರುತ್ತಿದ್ದು, ಅಂತಹ ಕಡೆಗಳಲ್ಲಿ ಮೊದಲಿಗಿದ್ದ ಸುರು ಪಾಂಗನ್ನು ಉಳಿಸಲು ಬರುತ್ತದೆ: (2ಕ) ಅವನು ಬಾವಿಯಿಂದ ನೀರು ಸೇದಿದ > ನಾನು ಅವನ ಕಯ್ಯಲ್ಲಿ ಬಾವಿಯಿಂದ ನೀರು ಸೇದಿಸಿದೆ. (2ಚ) ಅವನು ಅಕ್ಕಿಯಿಂದ ಕಸ ಹೆಕ್ಕಿದ > ನಾನು ಅವನ ಹತ್ತಿರ ಅಕ್ಕಿಯಿಂದ ಕಸ ಹೆಕ್ಕಿಸಿದೆ. (2ಟ) ಅವನು ಹಣ್ಣಿನಿಂದ ಸಿಪ್ಪೆ ಸುಲಿದ > ನಾನು ಅವನ ಕಯ್ಯಲ್ಲಿ ಹಣ್ಣಿನಿಂದ ಸಿಪ್ಪೆ ಸುಲಿಸಿದೆ. ಸುರು ಪಾಂಗು ಒಂದು ಮುಟ್ಟನ್ನು (ಕರಣವನ್ನು) ಸೂಚಿಸುವುದಿದ್ದಲ್ಲಿ ಅದನ್ನು ಜಾಗ ಪಾಂಗಾಗಿ ಮಾರ್ಪಡಿಸಿಯೂ ಮೇಲಿನ ಸೊಲ್ಲುಗಳಲ್ಲಿ ಉಳಿಸಿಕೊಳ್ಳಲು ಬರುತ್ತದೆ: (3ಕ) ಅವನು ಗುದ್ದಲಿಯಿಂದ ಗಡ್ಡೆ ಅಗೆದ > ನಾನು ಅವನಿಂದ ಗುದ್ದಲಿಯಲ್ಲಿ ಗಡ್ಡೆ ಅಗೆಸಿದೆ. (3ಚ) ಅವನು ಬೆರಳಿನಿಂದ ಹಣ್ಣು ನುರಿದ > ನಾನು ಅವನಿಂದ ಬೆರಳಿನಲ್ಲಿ ಹಣ್ಣು ನುರಿಸಿದೆ. (13) ಮಾಡುಗ+ಈಡು+ಜಾಗ ಮಾಡುಗ+ಈಡು+ಜಾಗ ಪಾಂಗಿಟ್ಟಳದಲ್ಲಿ ಬರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗಿ ಮಾರ್ಪಡುತ್ತದೆ. ಈ ಮಾರ್ಪಾಡನ್ನು ಅದ್ದು, ಅರೆ, ಅಲುಬು, ಇಡು, ಕರಿ, ಚೆಲ್ಲು, ತೊಳೆ, ದಾಟು, ಹಾಕು, ಹುಡುಕು, ಹೂಳು, ಹೊರು ಮೊದಲಾದ ಎಸಕಪದಗಳ ಬಳಕೆಯಲ್ಲಿ ಕಾಣಬಹುದು: (1ಕ) ಅವನು ಹೆಣವನ್ನು ತೋಟದಲ್ಲಿ ಹೂತ > ನಾನು ಅವನಿಂದ ಹೆಣವನ್ನು ತೋಟದಲ್ಲಿ ಹೂಳಿಸಿದೆ. (1ಚ) ಅವನು ಹಣವನ್ನು ಪೆಟ್ಟಿಗೆಯಲ್ಲಿ ಇಟ್ಟ > ನಾನು ಅವನಿಂದ ಹಣವನ್ನು ಪೆಟ್ಟಿಗೆಯಲ್ಲಿ ಇಡಿಸಿದೆ. (1ಟ) ಅವನು ಕಬ್ಬನ್ನು ಗಾಣದಲ್ಲಿ ಅರೆದ > ನಾನು ಅವನಿಂದ ಕಬ್ಬನ್ನು ಗಾಣದಲ್ಲಿ ಅರೆಸಿದೆ. (14) ಕೆಲವು ಮುಕ್ಯ ಅಂಶಗಳು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಹುರುಳಿನಲ್ಲಿ ಮಾರ್ಪಾಡುಗ ಳಾಗುತ್ತವೆ, ಮತ್ತು ಈ ಮಾರ್ಪಾಡುಗಳಿಗೆ ಹೊಂದಿಕೆಯಾಗುವಂತೆ ಎಸಕಪದಗಳ ಪಾಂಗಿಟ್ಟಳದಲ್ಲಿಯೂ ಹಲವು ಬಗೆಯ ಮಾರ್ಪಾಡುಗಳನ್ನು ನಡೆಸಬೇಕಾಗುತ್ತದೆ ಎಂಬುದನ್ನು ಮೇಲೆ ನೋಡಿರುವೆವು. ಇವುಗಳಲ್ಲಿ ಮುಕ್ಯವಾಗಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಒಂದು ಸುಳು ಸೊಲ್ಲಿನಲ್ಲಿ ಆಗುಗ ಮತ್ತು ಮಾಡುಗ ಪಾಂಗುಗಳು ಒಟ್ಟಾಗಿ ಬರಲಾರವು, ಮತ್ತು ಎರಡು ಮಾಡುಗ ಪಾಂಗುಗಳೂ ಒಟ್ಟಾಗಿ ಬರಲಾರವು (ನಿಜಕ್ಕೂ ಒಂದು ಸುಳು ಸೊಲ್ಲಿನಲ್ಲಿ ಯಾವ ಇಟ್ಟಳದ ಪಾಂಗೂ ಎರಡು ಬಾರಿ ಬರಲಾರದು). ಹಾಗಾಗಿ, ಒಂದು ಸುಳುಸೊಲ್ಲಿನ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗನ್ನು ಸೇರಿಸಿದಾಗ, ಅದರಲ್ಲಿ ಮೊದಲಿಗಿದ್ದ ಆಗುಗ ಇಲ್ಲವೇ ಮಾಡುಗ ಪಾಂಗನ್ನು ಯಾವುದಾದರೂ ಒಂದು ಬಗೆಯಲ್ಲಿ ಮಾರ್ಪಡಿಸಬೇಕಾಗುತ್ತದೆ.
ಹೆಚ್ಚಿನೆಡೆಗಳಲ್ಲೂ, ಇಂತಹ ಸಂದರ್ಬಗಳಲ್ಲಿ ಮೊದಲಿಗಿದ್ದ ಆಗುಗ ಇಲ್ಲವೇ ಮಾಡುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸಲಾಗುತ್ತದೆ; ಸೊಲ್ಲಿನಲ್ಲಿ ಮೊದಲಿಗೇನೇ ಈಡು ಪಾಂಗು ಇಲ್ಲದಿರುವಲ್ಲಿ ಇದು ತೊಂದರೆ ಕೊಡುವುದಿಲ್ಲ. ಆದರೆ, ಮೊದಲಿಗೇನೇ ಸೊಲ್ಲಿನಲ್ಲಿ ಈಡು ಪಾಂಗು ಬಂದಿದೆಯಾದರೆ, ಅದನ್ನು ಹಾಗೆಯೇ ಉಳಿಸಲು ಬರುವುದಿಲ್ಲ. ಹಾಗಾಗಿ, ಹೊಸ ಸೊಲ್ಲಿನಲ್ಲಿ ಅದನ್ನು ಬಳಸ ದಿರಲಾಗುತ್ತದೆ, ಇಲ್ಲವೇ ಮೊದಲಿಗಿದ್ದ ಮಾಡುಗ ಪಾಂಗನ್ನು ಈಡು ಪಾಂಗಾಗಿ ಮಾರ್ಪಡಿಸುವ ಬದಲು ಸುರು ಪಾಂಗಾಗಿ ಮಾರ್ಪಡಿಸಲಾಗುತ್ತದೆ. ಆದರೆ ಹೀಗೆ ಮಾರ್ಪಡಿಸಿದಾಗ, ಸೊಲ್ಲಿನ ಪಾಂಗಿಟ್ಟಳದಲ್ಲಿ ಮೊದಲಿಗೇನೇ ಒಂದು ಸುರು ಪಾಂಗು ಬಂದಿದೆಯಾದರೆ ಅದನ್ನು ಹಾಗೆಯೇ ಉಳಿಸಲು ಬರುವುದಿಲ್ಲ; ಹಾಗಾಗಿ, ಅದನ್ನು ಬಳಸದಿರಲಾಗುತ್ತದೆ (ಇಲ್ಲವೇ ಮಾಡುಗ ಪಾಂಗನ್ನು ಹತ್ತಿರ ಇಲ್ಲವೇ ಕಯ್ಯಲ್ಲಿ ಎಂಬ ಪದದೊಂದಿಗೆ ನೆರವು ಪಾಂಗಾಗಿ ಮಾರ್ಪಡಿಸಿ ಬಳಸ ಲಾಗುತ್ತದೆ). ಇವು ಮೇಲೆ ವಿವರಿಸಿದ ಮಾರ್ಪಾಡುಗಳಲ್ಲಿ ಕಾಣಿಸುವ ಮುಕ್ಯ ಅಂಶಗಳು; ಇವಲ್ಲದೆ ಬೇರೆಯೂ ಹಲವು ಬಗೆಗಳಲ್ಲಿ ಹೊಸ ಮಾಡುಗವನ್ನು ಸೇರಿಸುವಾಗ ಸೊಲ್ಲುಗಳ ಪಾಂಗಿಟ್ಟಳದಲ್ಲಿ ತಲೆದೋರುವ ತೊಂದರೆಗಳನ್ನು ಇಲ್ಲವಾಗಿಸ ಲಾಗುತ್ತದೆ ಎಂಬುದನ್ನು ಮೇಲೆ ವಿವರಿಸಲಾಗಿದೆ.
8.3.3 ಬೇರೆ ಪದಗಳ ಇಲ್ಲವೇ ಒಟ್ಟುಗಳ ಬಳಕೆ
ಇಸು ಒಟ್ಟಿನ ಬದಲು ಬೇರೆ ಒಟ್ಟು ಇಲ್ಲವೇ ಪದಗಳನ್ನು ಬಳಸಿಯೂ ಅದು ಕೊಡುವಂತಹ ಆಗಿಸುವ ಇಲ್ಲವೇ ಮಾಡಿಸುವ ಹುರುಳನ್ನು ಪಡೆಯಲು ಬರುತ್ತದೆ; ಆದರೆ, ಅವು ಕೊಡಬಲ್ಲ ಹುರುಳಿಗೂ ಇಸು ಒಟ್ಟು ಕೊಡುವ ಹುರುಳಿಗೂ ನಡುವೆ ಕೆಲವು ವ್ಯತ್ಯಾಸಗಳೂ ಇವೆ. ಅವುಗಳ ನಡುವೆ ಇಂತಹ ವ್ಯತ್ಯಾಸಗಳು ಇರುವುದರಿಂದಲೇ ಈ ಹೆಚ್ಚಿನ ಹೊಲಬುಗಳು ನುಡಿಯಲ್ಲಿ ಉಳಿದುಕೊಂಡು ಬಂದಿವೆ. (1) ಬೇರೆ ಪದಗಳ ಬಳಕೆ ಸಾಯು-ಕೊಲ್ಲು, ಅಡಗು-ಬಚ್ಚು, ಏರು-ಎತ್ತು, ಸವೆ-ತೇಯು, ಓಡು-ಅಟ್ಟು/ಎಬ್ಬು, ಆಗು-ಮಾಡು, ಸವೆ-ತೇಯು ಮೊದಲಾದ ಕೆಲವು ಎಸಕ ಪದಜೋಡಿಗಳು ಬಳಕೆಯಲ್ಲಿದ್ದು, ಅವುಗಳ ನಡುವೆ ಕಾಣಿಸುವ ಹುರುಳಿನ ವ್ಯತ್ಯಾಸ ಇಸು ಒಟ್ಟು ಸೇರಿದಾಗ ಕಾಣಿಸುವಂತಹ ಹುರುಳಿನ ವ್ಯತ್ಯಾಸದ ಹಾಗೆಯೇ ಇದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1) ನಾಯಿ ಸತ್ತಿತು > (ಕ) ಆತ ನಾಯಿಯನ್ನು ಸಾಯಿಸಿದ > (ಚ) ಆತ ನಾಯಿಯನ್ನು ಕೊಂದ. (2) ಕೊರಡು ಸವೆಯಿತು > (ಕ) ನಾನು ಕೊರಡನ್ನು ಸವೆಸಿದೆ (ಚ) ನಾನು ಕೊರಡನ್ನು ತೇದೆ. (3) ನಾಯಿ ಓಡಿತು > (ಕ) ನಾನು ನಾಯಿಯನ್ನು ಓಡಿಸಿದೆ > (ಚ) ನಾನು ನಾಯಿಯನ್ನು ಅಟ್ಟಿದೆ. ಮೇಲೆ (1)ನೇ ಎತ್ತುಗೆಯಲ್ಲಿ ಕೊಟ್ಟಿರುವ (ಕ) ಸೊಲ್ಲನ್ನು ಸಾಯು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸುವ ಮೂಲಕ ಪಡೆಯಲಾಗಿದೆ, ಮತ್ತು (ಚ) ಸೊಲ್ಲನ್ನು ಆ ಎಸಕಪದದ ಬದಲು ಕೊಲ್ಲು ಎಸಕಪದವನ್ನು ಬಳಸುವ ಮೂಲಕ ಪಡೆಯಲಾಗಿದೆ; ಹುರುಳಿನಲ್ಲಿ ಈ ಎರಡು ಸೊಲ್ಲುಗಳ ನಡುವೆ ತುಂಬಾ ಹೋಲಿಕೆಯಿದೆ ಎಂಬುದನ್ನು ಗಮನಿಸಬಹುದು. (2- 3) ಎತ್ತುಗೆಗಳಲ್ಲೂ ಹೀಗೆಯೇ. ಆದರೆ, ಕೆಲವು ವಿಶಯಗಳಲ್ಲಿ ಇಂತಹ ಪದಜೋಡಿಗಳಲ್ಲಿ ಬರುವ ಎರಡನೆಯ ಎಸಕಪದ ಅಂತಹದೇ ಹುರುಳನ್ನು ಕೊಡುವ ಇಸುವೆಸಕಪದದಿಂದ ಬೇರಾಗಿರುತ್ತದೆ: (1) ಇಸುವೆಸಕಪದವನ್ನು ಬಳಸಿ ಇನ್ನೊಬ್ಬನ ಮೂಲಕ ನಡೆಸಿದ ಕೆಲಸವನ್ನು ತಿಳಿಸಲು ಬರುತ್ತದೆ; ಆದರೆ, ಬೇರೆಯೇ ಪದವನ್ನು ಬಳಸಿರುವಲ್ಲಿ ಇದು ಸಾದ್ಯವಾಗದು. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು:
(4) (ಕ) ರಾಜು ನಾಯಿಯನ್ನು ಸಾಯಿಸಿದ > (ಚ) ಅವನು ರಾಜುವಿನಿಂದ ನಾಯಿಯನ್ನು ಸಾಯಿಸಿದ. (5) (ಕ) ರಾಜು ನಾಯಿಯನ್ನು ಕೊಂದ > (ಚ) ಅವನು ರಾಜುವಿನಿಂದ ನಾಯಿಯನ್ನು ಕೊಲ್ಲಿಸಿದ. ಸಾಯಿಸು ಎಂಬ ಇಸುವೆಸಕಪದವನ್ನು ನೇರವಾಗಿ ಒಬ್ಬ ಮಾಡುಗ ನಡೆಸಿದ ಕೆಲಸವನ್ನು ತಿಳಿಸಲೂ ಬಳಸಬಹುದು (4ಕ), ಇಲ್ಲವೇ ಇನ್ನೊಬ್ಬನ ಮೂಲಕ ನೇರವಲ್ಲದ ರೀತಿಯಲ್ಲಿ ನಡೆಸಿದ ಕೆಲಸವನ್ನು ತಿಳಿಸಲೂ ಬಳಸಬಹುದು (4ಚ); ಆದರೆ, ಕೊಲ್ಲು ಪದವನ್ನು ಈ ಎರಡನೇ ಬಗೆಯ ಕೆಲಸವನ್ನು ತಿಳಿಸುವುದಕ್ಕಾಗಿ ಬಳಸಲು ಬರುವುದಿಲ್ಲ; ಹಾಗೆ ಮಾಡಬೇಕಿದ್ದಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಿರುವ ಕೊಲ್ಲಿಸು ಎಂಬುದನ್ನು ಬಳಸಬೇಕಾಗುತ್ತದೆ (5ಚ ನೋಡಿ). (2) ಇಸುವೆಸಕಪದಗಳು ತಿಳಿಸುವ (ಕ) ಒಂದು ಎಸಕವನ್ನು ಎಸಗುವುದು ಮತ್ತು (ಚ) ಹಾಗೆ ಎಸಗುವಂತೆ ಮಾಡುವುದು ಎಂಬ ಎರಡು ಎಸಕಗಳಲ್ಲಿ ಎರಡನೆಯದನ್ನು ಮಾತ್ರವೇ ನೇರವಾಗಿ ಅಲ್ಲಗಳೆಯಲು ಬರುತ್ತದೆ; ಇದಲ್ಲದೆ, ಮೊದಲನೆಯ ಎಸಕವನ್ನೂ ನೇರವಲ್ಲದ ರೀತಿಯಲ್ಲಿ ಅಲ್ಲಗಳೆಯಲು ಬರುತ್ತದೆ. ಆದರೆ, ಅಂತಹದೇ ಹುರುಳನ್ನು ಕೊಡುವ ಕೊಲ್ಲು ಎಂಬಂತಹ ಬೇರೆಯೇ ಎಸಕಪದವನ್ನು ಬಳಸಿರುವಲ್ಲಿ ಆ ರೀತಿ ಒಂದನ್ನು ಮಾತ್ರ ಅಲ್ಲಗಳೆಯಲು ಬರುವುದಿಲ್ಲ; ಎರಡನ್ನೂ ಒಟ್ಟಾಗಿ ಅಲ್ಲಗಳೆಯಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (6ಕ) ನಾನು ಆ ನಾಯಿಯನ್ನು ಓಡಿಸಿದರೂ ಅದು ಓಡಲಿಲ್ಲ. (6ಚ) ನಾನು ಆ ನಾಯಿಯನ್ನು ಓಡಿಸಲಿಲ್ಲ; ಆದರೂ ಅದು ಓಡಿತು. (7ಕ) ಅವಳು ಕಸ ಗುಡಿಸಿದರೂ ಕೋಣೆಯಲ್ಲಿ ಕಸ ಹಾಗೆಯೇ ಇದೆ. (7ಚ) *ಅವನು ನಾಯಿಯನ್ನು ಕೊಂದರೂ ಅದು ಸಾಯಲಿಲ್ಲ. (6ಕ) ಮತ್ತು (7ಕ)ಗಳಲ್ಲಿ ಎಸಕ ನಡೆದಿರುವುದನ್ನು ಅಲ್ಲಗಳೆಯಲಾಗಿದೆ, ಮತ್ತು (6ಚ)ದಲ್ಲಿ ಎಸಕ ನಡೆಸಿರುವುದನ್ನು ಅಲ್ಲಗಳೆಯಲಾಗಿದೆ; (7ಚ)ದಲ್ಲಿ ಇವೆರಡನ್ನೂ ಒಟ್ಟಾಗಿ ಅಲ್ಲಗಳೆಯಲಾಗಿದೆ. ಆದರೆ, (6ಕ) ಸೊಲ್ಲಿನ ಹಾಗೆ ಎಸಕ ನಡೆದಿರುವುದನ್ನು ಮಾತ್ರವೇ ಅಲ್ಲಗಳೆಯಲು ಹೊರಟಿರುವ (7ಚ) ಸೊಲ್ಲು, ಅದರಲ್ಲಿ ಕೊಲ್ಲು ಎಂಬುದನ್ನು ಬಳಸಿರುವ ಕಾರಣ, ಸರಿಯಾಗಿಲ್ಲ. ಇಸುವೆಸಕಪದದ ಬಳಕೆಯಲ್ಲಿ ಕಾಣಿಸುವ ಮೊದಲನೆಯ ಎಸಕವನ್ನು ಅಲ್ಲ ಗಳೆಯಲು ಬೇಕಾಗುವ *ಓಡದಿಸಿದ ಎಂಬಂತಹ ರೂಪ ಇಲ್ಲ; ಹಾಗಾಗಿ, ಅಂತಹ ಹುರುಳನ್ನು ತಿಳಿಸಲು ಅವನು ನಾಯಿ ಓಡದ ಹಾಗೆ ಮಾಡಿದ ಎಂಬಂತಹ, ಇಲ್ಲವೇ ಮೇಲೆ (6ಕ)ದಲ್ಲಿ ಕಾಣಿಸಿದ ಹಾಗೆ, ಓಡಿಸಿದರೂ ಓಡಲಿಲ್ಲ ಎಂಬಂತಹ ಬೇರೆ ಬಗೆಯ ನೇರವಲ್ಲದ ದಾರಿಯನ್ನು ಹಿಡಿಯಬೇಕಾಗುತ್ತದೆ. (2) ಬೇರೆ ಒಟ್ಟುಗಳ ಬಳಕೆ ಕೆಲವೇ ಕೆಲವು ಎಸಕಪದಗಳಲ್ಲಿ ಮಾತ್ರ ಕಾಣಿಸುವ ಪು(ಹು), ಚು, ಕು ಎಂಬ ಒಟ್ಟುಗಳ ಬಳಕೆಯಲ್ಲೂ ಇಸು ಒಟ್ಟಿನ ಬಳಕೆಯಲ್ಲಿ ಕಾಣಿಸುವಂತಹವೇ ಪಾಂಗಿಟ್ಟಳದ ಮಾರ್ಪಾಡುಗಳನ್ನು ಕಾಣಬಹುದು: (1) ರಾಜು ಕೋಣೆಯಲ್ಲಿ ಅಡಗಿದ > (ಕ) ಅವನು ರಾಜುವನ್ನು ಕೋಣೆಯಲ್ಲಿ ಅಡಗಿಸಿದ (ಚ) ಅವನು ರಾಜುವನ್ನು ಕೋಣೆಯಲ್ಲಿ ಅಡಕಿದ. (2) ಅರಸ ಮಡಿದ > (ಕ) ?ಮಂತ್ರಿ ಅರಸನನ್ನು ಮಡಿಸಿದ (ಚ) ಮಂತ್ರಿ ಅರಸನನ್ನು ಮಡುಹಿದ. (3) ಬೆಕ್ಕಿನ ಕುತ್ತಿಗೆ ತಿರುಗಿತು > (ಕ) ಅವನು ಬೆಕ್ಕಿನ ತಲೆಯನ್ನು ತಿರುಗಿಸಿದ (ಚ) ಅವನು ಬೆಕ್ಕಿನ ತಲೆಯನ್ನು
ತಿಳಿ-ತಿಳುಹು, ನೆರೆ-ನೆರಹು, ಕೆಡೆ-ಕೆಡಹು ಎಂಬವುಗಳಲ್ಲೂ ಹು ಒಟ್ಟು ಇದೇ ಹುರುಳಿನಲ್ಲಿ ಬಂದಿದೆ (3.2.3 ನೋಡಿ). ಇಸುವೆಸಕಪದಗಳಿಗೂ ಮೇಲಿನ ಒಟ್ಟುಗಳಿಂದ ಪಡೆದ ಎಸಕಪದಗಳಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ; ಇಸು ಒಟ್ಟಿನ ಬಳಕೆಯಲ್ಲಿ ಒಂದು ಆಗಿಸುಹದ ಹುರುಳಿದೆ; ಆದರೆ, ಬೇರೆ ಒಟ್ಟುಗಳ ಬಳಕೆಯಲ್ಲಿ ಮಾಡುಹದ ಹುರುಳೇ ಇದೆ. ಎತ್ತುಗೆಗಾಗಿ, ಮೇಲೆ ಕೊಟ್ಟಿರುವ (3ಕ) ಸೊಲ್ಲನ್ನು ಬೇರೊಬ್ಬನ ನೆರವಿನಿಂದ ನಡೆಸಿದ ಎಸಕವನ್ನು ತಿಳಿಸುವುದಕ್ಕಾಗಿ ಬಳಸಬಹುದು; ಆದರೆ, (3ಚ) ಸೊಲ್ಲನ್ನು ಆ ರೀತಿ ಬೇರೊಬ್ಬನ ನೆರವಿನಿಂದ ನಡೆಸಿದ ಎಸಕವನ್ನು ತಿಳಿಸುವುದಕ್ಕಾಗಿ ಬಳಸಲು ಬರುವುದಿಲ್ಲ. (3) ಆಗು ಮತ್ತು ಮಾಡು ಪದಗಳ ಬಳಕೆ ಆಗು ಎಸಕಪದವನ್ನು ಹಲವು ಬಗೆಯ ಪರಿಚೆ ಮತ್ತು ಹೆಸರುಪದಗಳೊಂದಿಗೆ ಬಳಸಿ, ಹಲವು ಬಗೆಯ ಆಗುಹಗಳನ್ನು ತಿಳಿಸಲು ಬರುತ್ತದೆ; ಈ ಬಳಕೆಗಳಲ್ಲಿ ಎಂತಹ ಪಾಂಗಿಟ್ಟಳಗಳು ಬರುತ್ತವೆ ಎಂಬುದು ಆಗು ಪದದೊಂದಿಗೆ ಬರುವ ಪರಿಚೆ ಮತ್ತು ಹೆಸರುಪದಗಳನ್ನು ಅವಲಂಬಿಸಿದೆ. ಎತ್ತುಗೆಗಾಗಿ, ಆಗು ಪದದೊಂದಿಗೆ ಚೂಪು, ಜಿಗಟು, ಮಣ್ಣು, ಹುಸಿ, ಕಪ್ಪು ಎಂಬಂತಹ ಪದಗಳನ್ನು ಬಳಸಿದಲ್ಲಿ ಒಂದು ಆಗುಗ ಮಾತ್ರ ಬರುತ್ತದೆ; ಇದಕ್ಕೆ ಬದಲು, ಅದರೊಂದಿಗೆ ಕೊಚ್ಚೆ, ಕೆಸರು, ತೂತು, ಹೂ, ಕಾಯಿ ಎಂಬಂತಹವನ್ನು ಬಳಸಿದಲ್ಲಿ ಒಂದು ಜಾಗ ಮಾತ್ರ ಬರುತ್ತದೆ, ಮತ್ತು ಕೊರತೆ, ಬೇಸರ, ಮೋಸ, ತೊಂದರೆ ಎಂಬಂತಹವನ್ನು ಬಳಸಿದಲ್ಲಿ ಒಂದು ಗುರಿ ಮಾತ್ರ ಬರುತ್ತದೆ (7.4.7 ನೋಡಿ): (1ಕ) ಗೋಡೆ ಕಪ್ಪಾಯಿತು. (1ಚ) ಅವನ ಮಾತು ಹುಸಿಯಾಯಿತು. (2ಕ) ಗೋಡೆಯಲ್ಲಿ ತೂತಾಯಿತು. (2ಚ) ಅಂಗಳದಲ್ಲಿ ಕೆಸರಾಯಿತು. (3ಕ) ಅವನಿಗೆ ಬೇಸರವಾಯಿತು. (3ಚ) ಅವನಿಗೆ ತೊಂದರೆಯಾಯಿತು. ಇಂತಹ ಸೊಲ್ಲುಗಳಲ್ಲಿ ಬರುವ ಆಗು ಪದಕ್ಕೆ ಇಸು ಒಟ್ಟನ್ನು ಸೇರಿಸಿ ಅವುಗಳ ಆಗಿಸುವಿಕೆಯ ರೂಪವನ್ನು ಪಡೆಯಲು ಬರುತ್ತದೆ; ಇದಲ್ಲದೆ, ಆಗು ಪದದ ಬದಲು ಮಾಡು ಪದವನ್ನು ಬಳಸಿಯೂ ಅಂತಹದೇ ಹುರುಳನ್ನು ಪಡೆಯಲು ಬರುತ್ತದೆ: (4) ಗೋಡೆ ಕಪ್ಪಾಯಿತು > (ಕ) ಅವನು ಗೋಡೆಯನ್ನು ಕಪ್ಪಾಗಿಸಿದ (ಚ) ಅವನು ಗೋಡೆಯನ್ನು ಕಪ್ಪುಮಾಡಿದ. (5) ಗೋಡೆಯಲ್ಲಿ ತೂತಾಯಿತು > (ಕ) ಅವನು ಗೋಡೆಯಲ್ಲಿ ತೂತಾಗಿಸಿದ (ಚ) ಅವನು ಗೋಡೆಯಲ್ಲಿ ತೂತುಮಾಡಿದ. (6) ಅವನಿಗೆ ಬೇಸರವಾಯಿತು (ಕ) ನಾನು ಅವನಿಗೆ ಬೇಸರವಾಗಿಸಿದೆ (ಚ) ನಾನು ಅವನಿಗೆ ಬೇಸರ ಮಾಡಿದೆ. ಆದರೆ, ಈ ಎರಡು ಬಳಕೆಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ: ಮಾಡು ಪದವನ್ನು ಬಳಸಿರುವಲ್ಲಿ ಎಸಕನ್ನು ನೇರವಾಗಿ ನಡೆಸಲಾಗಿದೆ ಎಂಬ ಹುರುಳು ಬರುತ್ತದೆ; ಎಂದರೆ, ಅದೊಂದು ಮಾಡುಹವನ್ನು ತಿಳಿಸುತ್ತದೆ. ಇದಕ್ಕೆ ಬದಲು, ಇಸು ಒಟ್ಟನ್ನು ಬಳಸಿರುವಲ್ಲಿ ಅದನ್ನು ನೇರವಲ್ಲದ ರೀತಿಯಲ್ಲೂ ನಡೆಸಿರಬಹುದು ಎಂಬ ಹುರುಳು ಸಿಗುತ್ತದೆ.
ಎತ್ತುಗೆಗಾಗಿ, ಪುಡಿಮಾಡಿದೆ ಎಂಬುದಕ್ಕೆ ಮಾಡುಗನು ನೇರವಾಗಿ ಆ ಕೆಲಸದಲ್ಲಿ ತೊಡಗಿದ್ದ ಎಂಬ ಹುರುಳಿದೆ, ಆದರೆ ಪುಡಿಯಾಗಿಸಿದೆ ಎಂಬುದಕ್ಕೆ ಅಂತಹ ಹುರುಳು ಬರಲೇಬೇಕೆಂದಿಲ್ಲ; ಯಾಕೆಂದರೆ, ಇನ್ನೊಬ್ಬ ವ್ಯಕ್ತಿಯ ನೆರವಿನಿಂದ ಅದು ಪುಡಿಯಾಗುವ ಹಾಗೆ ಆತ ಮಾಡಿರಬಹುದು. ಆಗು ಎಸಕಪದವನ್ನು ಹೆಸರು ಇಲ್ಲವೇ ಪರಿಚೆ ಪದಗಳೊಂದಿಗೆ ಸೇರಿಸಿ ಬಳಸಿ ದಾಗ, ಅವುಗಳೊಂದಿಗೆ ಹಲವು ಬಗೆಯ ಪಾಂಗಿಟ್ಟಳಗಳು ಬರುತ್ತವೆ ಎಂಬುದನ್ನು ಮೇಲೆ (7.4.7)ರಲ್ಲಿ ನೋಡಿರುವೆವು; ಇಂತಹ ಸೊಲ್ಲುಗಳಲ್ಲಿ ಆಗು ಪದದ ಬದಲು ಮಾಡು ಪದವನ್ನು ಬಳಸಿದಲ್ಲಿ, ಕೆಳಗೆ ವಿವರಿಸಿದಂತಹ ಮಾರ್ಪಾಡುಗಳು ಅದರ ಪಾಂಗಿಟ್ಟಳದಲ್ಲಿ ನಡೆಯುತ್ತವೆ: (1) ಆಗು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಇಲ್ಲವೇ ಅದರ ಬದಲು ಮಾಡು ಪದವನ್ನು ಬಳಸಿದಾಗ, ಆಗುಗ ಮಾತ್ರವೇ ಬರುವ ಸೊಲ್ಲುಗಳಲ್ಲಿ ಅದರ ಆಗುಗ ಪಾಂಗು ಈಡು ಪಾಂಗಾಗುತ್ತದೆ, ಮತ್ತು ಒಂದು ಹೊಸ ಮಾಡುಗ ಪಾಂಗು ಸೊಲ್ಲಿಗೆ ಸೇರುತ್ತದೆ: (7) ಅವನ ಗುಟ್ಟು ಬಯಲಾಯಿತು > (ಕ) ನಾನು ಅವನ ಗುಟ್ಟನ್ನು ಬಯಲಾಗಿಸಿದೆ (ಚ) ನಾನು ಅವನ ಗುಟ್ಟನ್ನು ಬಯಲು ಮಾಡಿದೆ. (8) ಗೋಡೆ ಕಪ್ಪಾಯಿತು > (ಕ) ನಾನು ಗೋಡೆಯನ್ನು ಕಪ್ಪಾಗಿಸಿದೆ (ಚ) ನಾನು ಗೋಡೆಯನ್ನು ಕಪ್ಪು ಮಾಡಿದೆ. (2) ಆಗು ಪದದೊಂದಿಗೆ ಬರುವ ಹೆಸರುಪದ ಆಗುಗದ ಹಂತವೊಂದನ್ನು ತಿಳಿಸುತ್ತಿದೆಯಾದರೆ, ಅದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಇಲ್ಲವೇ ಅದರ ಜೋಡಿಸುವ ರೂಪದ ಬಳಿಕ ಮಾಡು ಪದವನ್ನು ಬಳಸಿದಾಗ, ಆಗುಗ ಪಾಂಗು ಈಡು ಪಾಂಗಾಗುತ್ತದೆ: (9) ಅವನು ಕುರುಡನಾದ > (ಕ) ನಾನು ಅವನನ್ನು ಕುರುಡನಾಗಿಸಿದೆ (ಚ) ನಾನು ಅವನನ್ನು ಕುರುಡನಾಗಿ ಮಾಡಿದೆ. (10) ಹುಡುಗ ತಬ್ಬಲಿಯಾದ > (ಕ) ನಾನು ಹುಡುಗನನ್ನು ತಬ್ಬಲಿ ಯಾಗಿಸಿದೆ (ಚ) ನಾನು ಹುಡುಗನನ್ನು ತಬ್ಬಲಿಯಾಗಿ ಮಾಡಿದೆ. ಇಲ್ಲಿ ಮಾಡು ಪದವನ್ನು ಹೆಸರುಪದಕ್ಕೆ ನೇರವಾಗಿ ಸೇರಿಸುವ ಬದಲು, ಆಗು ಪದದ ಮೊದಲೆಸಕದ ಜೋಡಿಸುವ ರೂಪಕ್ಕೆ ಸೇರಿಸಲಾಗುತ್ತದೆ ಎಂಬುದನ್ನು ಗಮನಿಸಬಹುದು. ಮಾಡು ಪದವನ್ನು ಬಳಸಿರುವಲ್ಲಿ ಆಗುಗಪದ ಮತ್ತು ಹಂತಪದಗಳೆರಡನ್ನೂ ಒಂದೇ ಈಡು ಪಾಂಗಿನ ಅಂಗಗಳನ್ನಾಗಿಯೂ ಮಾಡಲು ಬರುತ್ತದೆ; ಎಂದರೆ, ಅವೆರಡೂ ಅನ್ನು ಒಟ್ಟಿನೊಂದಿಗೆ ಬರುತ್ತವೆ: (11) ಅವನು ಕುರುಡನಾದ > ನಾನು ಅವನನ್ನು ಕುರುಡನನ್ನಾಗಿ ಮಾಡಿದೆ. (12) ಹುಡುಗ ತಬ್ಬಲಿಯಾದ > ನಾನು ಹುಡುಗನನ್ನು ತಬ್ಬಲಿಯನ್ನಾಗಿ ಮಾಡಿದೆ. (3) ಆಗು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಇಲ್ಲವೇ ಅದರ ಬದಲು ಮಾಡು ಪದವನ್ನು ಬಳಸಿದಾಗ, ಜಾಗ ಇಲ್ಲವೇ ಗುರಿ ಮಾತ್ರ ಬರುವ ಸೊಲ್ಲುಗಳಲ್ಲಿ ಒಂದು ಹೊಸ ಮಾಡುಗ ಸೇರುತ್ತದೆ; ಆದರೆ, ಜಾಗ ಇಲ್ಲವೇ ಗುರಿ ಪಾಂಗುಗಳು ಹಾಗೆಯೇ ಉಳಿಯುತ್ತವೆ: (13) ಅಂಗಳದಲ್ಲಿ ಕೆಸರಾಯಿತು > (ಕ) ನಾನು ಅಂಗಳದಲ್ಲಿ ಕೆಸರಾ ಗಿಸಿದೆ (ಚ) ನಾನು ಅಂಗಳದಲ್ಲಿ ಕೆಸರುಮಾಡಿದೆ. (14) ಅವನಿಗೆ ನೋವಾಯಿತು > (ಕ) ನಾನು ಅವನಿಗೆ ನೋವಾಗಿಸಿದೆ (ಚ) ನಾನು ಅವನಿಗೆ ನೋವುಮಾಡಿದೆ.
ಆದರೆ, ತಡ, ಮನೆ, ನಾಚಿಕೆ, ಬಿಡುವು, ಸಾಲ ಮೊದಲಾದ ಬೇರೆ ಕೆಲವು ಪದಗಳನ್ನು ಆಗು ಪದದೊಂದಿಗೆ ಬಳಸಿರುವಲ್ಲಿ ಆಗು ಪದದ ಬದಲು ಮಾಡು ಪದವನ್ನು ಬಳಸಿದಾಗ, ಮೊದಲಿಗಿದ್ದ ಸೊಲ್ಲಿಗೆ ಹೊಸ ಮಾಡುಗ ಪಾಂಗನ್ನು ಸೇರಿಸುವ ಬದಲು, ಅವುಗಳ ಆಗುಗ ಪಾಂಗನ್ನೇ ಮಾಡುಗ ಪಾಂಗಾಗಿ ಮಾರ್ಪಡಿಸಲಾಗುತ್ತದೆ: (15ಕ) ಅವನಿಗೆ ತಡವಾಯಿತು > ಅವನು ತಡ ಮಾಡಿದ. (15ಚ) ಅವನಿಗೆ ಸಾಲವಾಯಿತು > ಅವನು ಸಾಲ ಮಾಡಿದ. (4) ಆಗುಗ ಪಾಂಗಿನೊಂದಿಗೆ ಗುರಿ ಪಾಂಗು ಬಂದಿರುವಲ್ಲಿ ಆಗು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಇಲ್ಲವೇ ಅದರ ಬದಲು ಮಾಡು ಪದವನ್ನು ಬಳಸಿದಾಗ, ಗುರಿ ಪಾಂಗು ಹಾಗೆಯೇ ಉಳಿಯುತ್ತದೆ, ಆದರೆ ಆಗುಗ ಪಾಂಗು ಈಡು ಪಾಂಗಾಗುತ್ತದೆ: (16) ಅವನು ತೊಂದರೆಗೆ ಗುರಿಯಾದ > ನಾನು ಅವನನ್ನು ತೊಂದರೆಗೆ ಗುರಿಮಾಡಿದೆ. (17) ಅವನು ನನಗೆ ಹೊಣೆಯಾದ > ನಾನು ಅವನನ್ನು ನನಗೆ ಹೊಣೆಮಾಡಿದೆ. (4) ಕೂಡುಪದಗಳ ಬಳಕೆ ಎಸಕಪದಗಳನ್ನು ಕೆಲವು ಬಗೆಯ ಕೂಡುಪದಗಳಲ್ಲಿ ಬಳಸಿಯೂ ಅವುಗಳಿಗೆ ಇಸು ಒಟ್ಟು ಕೊಡುವಂತಹ ಮಾಡಿಸುವ ಇಲ್ಲವೇ ಆಗಿಸುವ ಹುರುಳನ್ನು ಪಡೆಯಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ನಮ್ಮ ಮನೆಗೆ ಬಂದ. (1ಚ) ನಾನು ಅವನನ್ನು ನಮ್ಮ ಮನೆಗೆ ಬರಿಸಿದೆ. (1ಟ) ನಾನು ಅವನನ್ನು ನಮ್ಮ ಮನೆಗೆ ಬರಹೇಳಿದೆ. (1ತ) ನಾನು ಅವನನ್ನು ನಮ್ಮ ಮನೆಗೆ ಬರಗೊಟ್ಟೆ. (1ಪ) ನಾನು ಅವನನ್ನು ನಮ್ಮ ಮನೆಗೆ ಬರಮಾಡಿದೆ. (2ಕ) ಹಣ್ಣಿನ ಸಿಪ್ಪೆ ಕೊಳೆತಿದೆ. (2ಚ) ನಾನು ಹಣ್ಣಿನ ಸಿಪ್ಪೆಯನ್ನು ಕೊಳೆಸಿದೆ. (2ಟ) ನಾನು ಹಣ್ಣಿನ ಸಿಪ್ಪೆಯನ್ನು ಕೊಳೆಹಾಕಿದೆ. ಮೇಲೆ (1ಟ, ತ, ಪ), ಮತ್ತು (2ಟ) ಸೊಲ್ಲುಗಳಲ್ಲಿ ಇಸುವೆಸಕಪದಗಳನ್ನು ಬಳಸುವ ಬದಲು, ಅವುಗಳಲ್ಲಿ ಬರುವ ಎಸಕಪದದ ಜೋಡಿಸುವ ರೂಪಕ್ಕೆ ಮಾಡು, ಹೇಳು, ಕೊಡು, ಮತ್ತು ಹಾಕು ಎಂಬ ಬೇರೆ ಎಸಕಪದಗಳನ್ನು ಸೇರಿಸಿ ಮಾಡಿರುವ ಕೂಡುಪದಗಳನ್ನು ಬಳಸಲಾಗಿದೆ. ಹಾಗಿದ್ದರೂ, ಈ ಕೂಡುಪದಗಳು ಇಸುವೆಸಕಪದವನ್ನು ಬಳಸಿರುವ (1ಚ) ಮತ್ತು (2ಚ)ಗಳಲ್ಲಿ ಕಾಣಿಸುವಂತಹ ಪಾಂಗಿಟ್ಟಳದ ಮಾರ್ಪಾಡುಗಳನ್ನೇ ತೋರಿಸು ತ್ತವೆ ಎಂಬುದನ್ನು ಗಮನಿಸಬಹುದು. (5) ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬವುಗಳ ಬಳಕೆ ಎಸಕಪದಗಳ ಮುಂಬೊತ್ತಿನ ಪರಿಚೆರೂಪಕ್ಕೆ ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬ ನುಡಿತಗಳನ್ನು ಸೇರಿಸಿಯೂ ಇಸುವೆಸಕಪದಗಳ ಬಳಕೆಯಲ್ಲಿ ಕಾಣಿಸುವಂತಹ ಪಾಂಗಿಟ್ಟಳದ ಮಾರ್ಪಾಡುಗಳನ್ನು ನಡೆಸಲು ಬರುತ್ತದೆ:
(1) ಕೊಡ ಕೆಳಗೆ ಬಿತ್ತು > (ಕ) ಅವಳು ಕೊಡವನ್ನು ಕೆಳಗೆ ಬೀಳಿಸಿದಳು (ಚ) ಅವಳು ಕೊಡವನ್ನು ಕೆಳಗೆ ಬೀಳುವ ಹಾಗೆ ಮಾಡಿದಳು. (2) ಅವನು ಹೊರಗೆ ಓಡಿದ > (ಕ) ಆಕೆ ಅವನನ್ನು ಹೊರಗೆ ಓಡಿಸಿದಳು (ಚ) ಆಕೆ ಅವನನ್ನು ಹೊರಗೆ ಓಡುವಂತೆ ಮಾಡಿದಳು. (3) ಅವಳು ನನಗೆ ಒಂದು ಪುಸ್ತಕ ಕೊಟ್ಟಳು > (ಕ) ಅವನು ಅವಳಿಂದ ನನಗೆ ಒಂದು ಪುಸ್ತಕ ಕೊಡಿಸಿದ (ಚ) ಅವಳು ನನಗೆ ಒಂದು ಪುಸ್ತಕ ಕೊಡುವಂತೆ (ಅವನು) ಮಾಡಿದ. ಆದರೆ, ಇವೆರಡರ ನಡುವೆ ಬಳಕೆಯಲ್ಲಿ ಹಲವು ವ್ಯತ್ಯಾಸಗಳೂ ಇವೆ. ಇಂತಹ ವ್ಯತ್ಯಾಸಗಳಲ್ಲಿ ಕೆಲವನ್ನು ಕೆಳಗೆ ಕೊಡಲಾಗಿದೆ: (1) ಇಸುವೆಸಕಪದಗಳು ತಿಳಿಸುವ ಎರಡು ಎಸಕಗಳು ಒಂದೇ ಜಾಗ ಮತ್ತು ಹೊತ್ತುಗಳಲ್ಲಿ ನಡೆಯಬೇಕೆಂಬ ಗೊತ್ತುಪಾಡಿದೆ. ಆದರೆ, ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬವುಗಳ ಬಳಕೆಯಲ್ಲಿ ಅಂತಹ ಕಟ್ಟುಪಾಡಿಲ್ಲ. ಎತ್ತುಗೆಗಾಗಿ, ಓಡಿಸಿದ ಎಂಬುದರಲ್ಲಿ ಓಡುವ ಎಸಕ ಮತ್ತು ಓಡುವ ಹಾಗೆ ಮಾಡುವ ಎಸಕ ಎಂಬ ಎರಡು ಎಸಕಗಳೂ ಒಂದೇ ಜಾಗ ಮತ್ತು ಹೊತ್ತುಗಳಲ್ಲಿ ನಡೆದಿರುತ್ತವೆ; ಆದರೆ, ಓಡುವ ಹಾಗೆ ಮಾಡಿದ ಎಂಬುದರಲ್ಲಿ ಅವು ಬೇರೆ ಬೇರೆ ಜಾಗ ಮತ್ತು ಹೊತ್ತುಗಳಲ್ಲಿ ನಡೆದಿರಬಲ್ಲುವು: (4ಕ) ಅವನು ಬೊಬ್ಬೆ ಹಾಕಿ ಬೆಕ್ಕನ್ನು ಓಡಿಸಿದ. (4ಚ) ಅವನು ಹೊಗೆ ಹಾಕಿ ಬೆಕ್ಕು ಓಡುವ ಹಾಗೆ ಮಾಡಿದ. (5ಕ) ಆಕೆ ಹುಡುಗನನ್ನು ವಿಶ ಕೊಟ್ಟು ಸಾಯಿಸಿದಳು. (5ಚ) ಆಕೆ ಹುಡುಗನಿಗೆ ವಿಶ ಕೊಟ್ಟು ಅವನು ಎರಡು ದಿನ ಬಿಟ್ಟು ಸಾಯುವ ಹಾಗೆ ಮಾಡಿದಳು. (4ಕ)ದಲ್ಲಿ ಇಸು ಒಟ್ಟನ್ನು ಸೇರಿಸಿರುವ ಓಡಿಸು ಎಸಕಪದ ಬಂದಿದ್ದು, ಅದು ತಿಳಿಸುವ ಓಡುವುದು ಮತ್ತು ಓಡುವ ಹಾಗೆ ಮಾಡುವುದು ಎಂಬ ಎರಡು ಎಸಕಗಳು ಒಂದೇ ಸಮಯದಲ್ಲಿ ನಡೆದಿರುತ್ತವೆ. ಆದರೆ, (4ಚ)ದಲ್ಲಿ ಓಡಿ ಹೋಗುವ ಹಾಗೆ ಮಾಡು ಎಂಬ ನುಡಿತವನ್ನು ಬಳಸಲಾಗಿದ್ದು, ಅದು ತಿಳಿಸುವ ಮೇಲಿನವೇ ಎರಡು ಎಸಕಗಳು (ಓಡುವುದು ಮತ್ತು ಓಡುವ ಹಾಗೆ ಮಾಡುವುದು) ಬೇರೆ ಬೇರೆ ಸಮಯಗಳಲ್ಲಿ ನಡೆದಿರಬಲ್ಲುವು. (5ಚ)ದಲ್ಲಿ ಇದನ್ನು ಹೆಚ್ಚು ಸ್ಪಶ್ಟವಾಗಿ ತಿಳಿಸಲಾಗಿದೆ. (2) ಇಸುವೆಸಕಪದಗಳ ಬಳಕೆಯಲ್ಲಿ ಕಾಣಿಸುವ ಎರಡು ಎಸಕಗಳಲ್ಲಿ ಎರಡನೆಯದನ್ನು ಮಾತ್ರ ಅಲ್ಲಗಳೆಯಲು ಬರುತ್ತದಲ್ಲದೆ, ಮೊದಲನೆಯದನ್ನು ನೇರವಾಗಿ ಅಲ್ಲಗಳೆಯಲು ಬರುವುದಿಲ್ಲ. ಆದರೆ, ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬವುಗಳ ಬಳಕೆಯಲ್ಲಿ ಈ ಕಟ್ಟುಪಾಡಿಲ್ಲ. ಅವನ್ನು ಬಳಸಿರುವ ಸೊಲ್ಲುಗಳಲ್ಲಿ ಒಂದು ಎಸಕ ಒಳಸೊಲ್ಲಿ ನಲ್ಲಿಬಂದಿರುವುದು, ಮತ್ತು ಇನ್ನೊಂದು ಎಸಕ ಹೊರಸೊಲ್ಲಿನಲ್ಲಿ ಬಂದಿರುವುದು ಇದಕ್ಕೆ ಕಾರಣ: (6ಕ) ಆತ ಮರದಿಂದ ಹಣ್ಣು ಉದುರದ ಹಾಗೆ ಮಾಡಿದ. (6ಚ) ಆತ ಮರದಿಂದ ಹಣ್ಣು ಉದುರುವ ಹಾಗೆ ಮಾಡಲಿಲ್ಲ. ಇದೇ ಕಾರಣಕ್ಕಾಗಿ, ಇಸುವೆಸಕಪದಗಳಿರುವ ಸೊಲ್ಲುಗಳಲ್ಲಿ ಎಸಕದ ಬಗೆಯನ್ನು ತಿಳಿಸುವ ನೆರವು ಪಾಂಗು ಎರಡನೆಯ (ಎಸಕವನ್ನು ಮಾಡಿಸುವ) ಎಸಕಕ್ಕೆ ಮಾತ್ರ ಸಂಬಂದಿಸಿರಬಲ್ಲುದು; ಆದರೆ, ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬವು ಬಂದಿರುವಲ್ಲಿ ಅದು ಮೊದಲನೆಯ (ಎಸಕವನ್ನು ಮಾಡುವ) ಎಸಕಕ್ಕೂ ಸಂಬಂದಿಸಿರಬಲ್ಲುದಾಗಿದ್ದು, ಇಪ್ಪುರುಳು ಕಾಣಿಸಿಕೊಳ್ಳುತ್ತದೆ:
(7ಕ) ಅವನು ಆ ಕೆಲಸವನ್ನು ಬೇಸರದಿಂದ ರಾಜುವಿನ ಕಯ್ಯಲ್ಲಿ ಮಾಡಿಸಿದ. (7ಚ) ಅವನು ಆ ಕೆಲಸವನ್ನು ಬೇಸರದಿಂದ ರಾಜು ಮಾಡುವ ಹಾಗೆ ಮಾಡಿದ. (7ಚ)ದಲ್ಲಿ ಬೇಸರದಿಂದ ಎಂಬುದು ರಾಜುವಿಗೆ ಸಂಬಂದಿಸಿಯೂ ಇರಬಲ್ಲುದು ಇಲ್ಲವೇ ಅವನಿಗೆ ಸಂಬಂದಿಸಿಯೂ ಇರಬಲ್ಲುದು; ಆದರೆ, (1ಕ)ದಲ್ಲಿ ಅದು ಅವನಿಗೆ ಮಾತ್ರವೇ ಸಂಬಂದಿಸಿರಬಲ್ಲುದು. (3) ಹೆಚ್ಚಿನ ಎಸಕಪದಗಳನ್ನೂ ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬುದರ ಇಟ್ಟಳದಲ್ಲಿ ಬಳಸಲು ಬರುತ್ತದೆ; ಎಸಕ ನಡೆಯುವುದನ್ನು ಜೋಡಿಸುವ ರೂಪದಲ್ಲಿರುವ ಎಸಕಪದ ತಿಳಿಸುತ್ತದೆ, ಮತ್ತು ಎಸಕ ನಡೆಸುವುದನ್ನು ಅದರ ಬಳಿಕ ಬಂದಿರುವ ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬುದು ತಿಳಿಸುತ್ತದೆ. ಇವುಗಳಲ್ಲಿ ಮೊದಲನೆಯದು ಒಂದು ಒಳಸೊಲ್ಲಾಗಿದೆ, ಮತ್ತು ಎರಡನೆಯದು ಒಂದು ಹೊರಸೊಲ್ಲಾಗಿದೆ; ಎಂದರೆ, ಇಸುವೆಸಕಪದ ಬಂದಿರುವ ಸೊಲ್ಲಿನ ಹಾಗೆ ಅದೊಂದು ಸುಳು ಸೊಲ್ಲಾಗಿರದೆ ಸಿಕ್ಕಲು ಸೊಲ್ಲಾಗಿದೆ. ಹಾಗಾಗಿ, ಒಂದು ಸೊಲ್ಲಿಗೆ ಹಾಗೆ ಮಾಡು ಇಲ್ಲವೇ ಅಂತೆ ಮಾಡು ಎಂಬುದನ್ನು ಸೇರಿಸಿದಾಗ, ಅದರ ಪಾಂಗಿಟ್ಟಳದಲ್ಲಿ ಯಾವ ಮಾರ್ಪಾಡೂ ಆಗದಿರ ಬಲ್ಲುದು: (8ಕ) ಅವನಿಗೆ ಗೆಲ್ಲು ಎಟಕಿತು > ನಾನು ಅವನಿಗೆ ಗೆಲ್ಲು ಎಟಕುವ ಹಾಗೆ ಮಾಡಿದೆ. (8ಚ) ಗೋಣಿಯಿಂದ ಅಕ್ಕಿ ಸುರಿಯಿತು > ನಾನು ಗೋಣಿಯಿಂದ ಅಕ್ಕಿ ಸುರಿಯುವ ಹಾಗೆ ಮಾಡಿದೆ. (8ಟ) ಹುಡುಗ ನಡುಗಿದ > ಅವನು ಹುಡುಗ ನಡುಗುವ ಹಾಗೆ ಮಾಡಿದ. (4) ಆದರೆ, ಒಳಸೊಲ್ಲಿನಲ್ಲಿ ಮಾಡುಗ ಪಾಂಗು ಬಂದಿದೆಯಾದರೆ, ಅದಕ್ಕೂ ಹೊರಸೊಲ್ಲಿನ ಮಾಡುಗಕ್ಕೂ ನಡುವೆ ಗೊಂದಲವುಂಟಾಗಬಲ್ಲುದು; ಹಾಗಾಗಿ, ಕೆಲವು ಸೊಲ್ಲುಗಳಲ್ಲಿ ಅದನ್ನು ಈಡು ಪಾಂಗಾಗಿ ಮಾರ್ಪಡಿಸಲಾಗುತ್ತದೆ: (9ಕ) ಅವನು ನನ್ನ ಬೆನ್ನಿಗೆ ಎಣ್ಣೆ ಸವರಿದ > ನಾನು ಅವನನ್ನು ನನ್ನ ಬೆನ್ನಿಗೆ ಎಣ್ಣೆ ಸವರುವ ಹಾಗೆ ಮಾಡಿದೆ. (9ಚ) ಅವನು ಒಂದು ಹಾಡನ್ನು ಹಾಡಿದ > ನಾನು ಅವನನ್ನು ಒಂದು ಹಾಡನ್ನು ಹಾಡುವ ಹಾಗೆ ಮಾಡಿದ. (9ಟ) ಅವನು ಮಳೆಯಲ್ಲಿ ನೆನೆದ > ನಾನು ಅವನನ್ನು ಮಳೆಯಲ್ಲಿ ನೆನೆಯುವ ಹಾಗೆ ಮಾಡಿದ. (5) ಆಗುಗ ಪಾಂಗು ಒಬ್ಬ ವ್ಯಕ್ತಿಯನ್ನು ಗುರುತಿಸುವಂತಹ ಕಡೆಗಳಲ್ಲಿಯೂ, ಅದಕ್ಕೂ ಮಾಡುಗಕ್ಕೂ ನಡುವೆ ಗೊಂದಲವುಂಟಾಗಬಲ್ಲುದು; ಹಾಗಾಗಿ, ಅಂತಹ ಕಡೆಗಳಲ್ಲೂ ಆಗುಗವನ್ನು ಈಡಾಗಿ ಮಾರ್ಪಡಿಸಲಾಗುತ್ತದೆ: (10ಕ) ಅವನು ನನಗೆ ಹೆದರಿದ > ನಾನು ಅವನನ್ನು ನನಗೆ ಹೆದರುವ ಹಾಗೆ ಮಾಡಿದೆ. (10ಚ) ಅವನು ಕೆಳಗೆ ಬಿದ್ದ > ನಾನು ಅವನನ್ನು ಕೆಳಗೆ ಬೀಳುವ ಹಾಗೆ ಮಾಡಿದೆ. (6) ಈ ಗೊಂದಲವನ್ನು ಇನ್ನೊಂದು ಬಗೆಯಲ್ಲೂ ತಪ್ಪಿಸಲು ಬರುತ್ತದೆ: ಹೊರಸೊಲ್ಲಿನ ಮಾಡುಗವನ್ನು ಮೊದಲಿಗೆ ಕೊಡುವ ಬದಲು ಕೊನೆಯಲ್ಲಿ, ಎಂದರೆ, ಹೊರಸೊಲ್ಲಿನ ಎಸಕಪದದ ಮೊದಲು ಕೊಡಬಹುದು: (11ಕ) ರಾಜು ಆಟದಲ್ಲಿ ಗೆದ್ದ > ರಾಜು ಆಟದಲ್ಲಿ ಗೆಲ್ಲುವ ಹಾಗೆ ನಾನು ಮಾಡಿದೆ. (11ಚ) ಅವನು ಮರದಿಂದ ಒಂದು ಹಣ್ಣು ಉದುರಿಸಿದ > ಅವನು ಮರ ದಿಂದ ಒಂದು ಹಣ್ಣು ಉದುರಿಸುವ ಹಾಗೆ ನಾನು ಮಾಡಿದೆ. (7) ಹಾಗೆ ಮಾಡು ಮತ್ತು ಅಂತೆ ಮಾಡು ಎಂಬವುಗಳ ಹಾಗೆಯೇ ಹಾಗಾಗು ಮತ್ತು ಅಂತಾಗು ಎಂಬವುಗಳ ಬಳಕೆಯೂ ಇದೆ; ಆದರೆ, ಇವು ಇಸುವೆಸಕದ ಹುರುಳನ್ನು ಕೊಡುವುದಿಲ್ಲ; ಒಂದು ಎಸಕ ನಡೆದುದರಿಂದಾಗಿ, ಇಲ್ಲವೇ
ಬೇರಾವುದೋ ಕಾರಣದಿಂದಾಗಿ ಇನ್ನೊಂದು ಎಸಕ (ಆಗುಹ) ನಡೆಯಿತು (ಇಲ್ಲವೇ ನಡೆಯಲಿಲ್ಲ) ಎಂಬುದನ್ನಶ್ಟೇ ಅವು ತಿಳಿಸುತ್ತವೆ: (12ಕ) ನೀವು ಬಂದುದರಿಂದ ಆಕೆ ಮದುವೆಗೆ ಹೋಗುವ ಹಾಗಾಯಿತು. (12ಚ) ಮಳೆ ಬಂದುದರಿಂದ ಗಿಡಕ್ಕೆ ನೀರು ಹಾಕಿದಂತಾಯಿತು. (12ಟ) ನೀವು ಬಂದುದರಿಂದ ಆಕೆ ಮದುವೆಗೆ ಹೋಗದ ಹಾಗಾಯಿತು.
8.3.4 ಇಸುವೆಸಕಪದಗಳ ಹುರುಳುಗಳು
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನೇ ಮುಕ್ಯವಾಗಿ ಮೇಲೆ (8.2.1)ರಲ್ಲಿ ವಿವರಿಸಲಾಗಿತ್ತು; ಇದಕ್ಕೆ ಬದಲು, ಈ ಸೇರಿಕೆಯಿಂದ ಸೊಲ್ಲುಗಳ ಹುರುಳಿನಲ್ಲಿ ಎಂತಹ ಮಾರ್ಪಾಡುಗಳು ಉಂಟಾಗುತ್ತವೆ ಎಂಬುದರ ಮೇಲೂ ಅವುಗಳ ಬಳಕೆಯನ್ನು ಪರಿಶೀಲಿಸಲು ಬರುತ್ತದೆ. ಕನ್ನಡದ ಸೊಲ್ಲರಿಮೆಯಲ್ಲಿ ಆಗುಹ ಮತ್ತು ಮಾಡುಹಗಳ ನಡುವಿನ ವ್ಯತ್ಯಾಸ ತುಂಬಾ ಮುಕ್ಯವಾದುದು ಎಂಬುದನ್ನು ನಾವು ಮೇಲೆ (7.4.3ರಲ್ಲಿ) ನೋಡಿರುವೆವು; ಮಾಡುಹಗಳ ಪಾಂಗಿಟ್ಟಳದಲ್ಲಿ ಬರುವ ಪಾಂಗುಗಳಲ್ಲಿ ಒಂದಕ್ಕೆ (ಮಾಡುಗಕ್ಕೆ) ಅವುಗಳ ಮೇಲೆ ಹತೋಟಿಯಿರುತ್ತದೆ, ಮತ್ತು ಆಗುಹಗಳ ಪಾಂಗಿಟ್ಟಳದಲ್ಲಿ ಬರುವ ಯಾವ ಪಾಂಗಿಗೂ ಅವುಗಳ ಮೇಲೆ ಹತೋಟಿಯಿರುವುದಿಲ್ಲ ಎಂಬುದೇ ಈ ಎರಡು ಬಗೆಯ ಎಸಕಗಳ ನಡುವಿನ ಮುಕ್ಯ ವ್ಯತ್ಯಾಸ. ಆಗುಹಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಹೆಚ್ಚಿನೆಡೆಗಳಲ್ಲೂ ಅವುಗಳ ಮೇಲೆ ಹತೋಟಿಯನ್ನು ಪಡೆದಿರುವ ಒಂದು ಹೊಸ ಮಾಡುಗ ಪಾಂಗು ಅವುಗಳ ಪಾಂಗಿಟ್ಟಳಕ್ಕೆ ಸೇರುತ್ತದೆ; ಆದರೆ, ಈ ಸೊಲ್ಲುಗಳ ಹುರುಳು ಅಂತಹದೇ ಹುರುಳನ್ನು ಕೊಡಬಲ್ಲ ಮಾಡುಹಗಳಿಗಿಂತ ಬೇರಾಗಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಹುಡುಗ ಓಡಿದ. (1ಚ) ರಾಜು ಹುಡುಗನನ್ನು ಓಡಿಸಿದ. (1ಟ) ರಾಜು ಹುಡುಗನನ್ನು ಅಟ್ಟಿದ. (1ಕ) ಸೊಲ್ಲಿನ ಓಡು ಎಂಬ ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿ, ಮತ್ತು ಅದರಲ್ಲಿ ಮಾಡಬೇಕಾಗಿರುವ ಮಾರ್ಪಾಡುಗಳನ್ನು ನಡೆಸಿ, (1ಚ) ಸೊಲ್ಲನ್ನು ಪಡೆಯಲಾಗಿದೆ; ಇದಕ್ಕೆ ಬದಲು, (1ಟ) ಸೊಲ್ಲಿನಲ್ಲಿ ಅಟ್ಟು ಎಂಬ ಬೇರೆಯೇ ಒಂದು ಎಸಕಪದವನ್ನು ಬಳಸಲಾಗಿದೆ. (1ಚ) ಮತ್ತು (1ಟ) ಸೊಲ್ಲುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆಯೆಂಬು ದನ್ನು ಗಮನಿಸಬಹುದು: ಅಟ್ಟು ಎಂಬುದು ನೇರವಾಗಿ ರಾಜು ನಡೆಸಿದ ಒಂದು ಮಾಡುಹವನ್ನು ತಿಳಿಸುತ್ತದೆ; ಆದರೆ, ಓಡಿಸು ಎಂಬುದು ಓಡು ಎಂಬ ಎಸಕಪದ ತಿಳಿಸುವ ಒಂದು ಆಗುಹವನ್ನು ಆತ ತನ್ನ ಹತೋಟಿಗೆ ತಂದು, ಅದು ಆಗುವ ಹಾಗೆ ಮಾಡಿದ ಎಂಬುದಾಗಿ ತಿಳಿಸುತ್ತದೆ. ಈ ಕೆಲಸವನ್ನು ಆತನೇ ನೇರವಾಗಿ ಮಾಡಿರಬಹುದು, ಇಲ್ಲವೇ ಇನ್ನೊಬ್ಬರಿಂದ ಮಾಡಿಸಿರಬಹುದು: (2ಕ) ರಾಜು ಹುಡುಗನನ್ನು ಬೆದರಿಸಿ ಓಡಿಸಿದ. (2ಚ) ರಾಜು ಕೆಂಪನಿಂದ ಹುಡುಗನನ್ನು ಓಡಿಸಿದ. (3ಕ) ರಾಜು ಹುಡುಗನನ್ನು ಬೆದರಿಸಿ ಅಟ್ಟಿದ. (3ಕ) ರಾಜು ಕೆಂಪನಿಂದ ಹುಡುಗನನ್ನು ಅಟ್ಟಿಸಿದ. (2ಕ)ದಲ್ಲಿ ಓಡಿಸುವ ಎಸಕವನ್ನು ರಾಜು ತಾನೇ ನೇರವಾಗಿ ನಡೆಸಿರುವನೆಂದು ತಿಳಿಸಲಾಗಿದೆ, ಮತ್ತು (2ಚ)ದಲ್ಲಿ ಅದನ್ನೇ ಆತನು ಕೆಂಪನ ನೆರವಿನಿಂದ ನಡೆಸಿರುವ ನೆಂದು ತಿಳಿಸಲಾಗಿದೆ; ಈ ಎರಡು ಸೊಲ್ಲುಗಳಲ್ಲೂ ಓಡಿಸು ಎಂಬುದನ್ನೇ ಬಳಸ
ಲಾಗಿದೆ. ಆದರೆ, (3ಕ)ದಲ್ಲಿ ಮೊದಲನೇ ಹುರುಳನ್ನು ಅಟ್ಟು ಎಂಬುದೇ ತಿಳಿಸುವು ದಾದರೂ, ಎರಡನೆಯ ಹುರುಳನ್ನು ಕೊಡಬೇಕಾಗಿರುವ (3ಚ) ಸೊಲ್ಲಿನಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಬೇಕಾಗಿದೆ. ಎಂದರೆ, ಓಡಿಸು ಎಂಬುದಕ್ಕೆ ಅಟ್ಟು ಎಸಕಪದ ತಿಳಿಸುವ ಹುರುಳು ಮಾತ್ರ ವಲ್ಲದೆ ಅಟ್ಟಿಸು ಎಂಬ ಎಸಕಪದ ತಿಳಿಸುವ ಹುರುಳೂ ಸಿಗುತ್ತದೆ. ಅದರ ಹುರುಳಿನ ಹರವು ಅಟ್ಟು ಪದದ ಹುರುಳಿನ ಹರವಿಗಿಂತ ಹೆಚ್ಚಿದೆ. ಈ ವ್ಯತ್ಯಾಸವನ್ನು ವಿವರಿಸುವುದಕ್ಕಾಗಿ, ಒಂದು ಆಗುಹಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಮಾಡುಹ ಸಿಗುತ್ತದೆ ಎನ್ನುವ ಬದಲು ಒಂದು ಆಗಿಸುಹ ಸಿಗುತ್ತದೆ ಎಂದೂ ಹೇಳಬಹುದು. ಇದೇ ರೀತಿಯಲ್ಲಿ ಒಂದು ಮಾಡುಹಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಬೇರೊಂದು ಮಾಡುಹ ಸಿಗುತ್ತದೆ ಎನ್ನುವ ಬದಲು ಒಂದು ಮಾಡಿಸುಹ ಸಿಗುತ್ತದೆ ಎಂಬು ದಾಗಿಯೂ ಹೇಳಬಹುದು; ಯಾಕೆಂದರೆ, ಅಂತಹದೇ ಪಾಂಗಿಟ್ಟಳವಿರುವ ಮಾಡುಹ ಪದದಿಂದ ಈ ಮಾಡಿಸುಹ ಪದ ಬೇರಾಗಿರುತ್ತದೆ; ಅದಕ್ಕೆ ಮಾಡುಹ ಪದಕ್ಕಿಂತ ಹೆಚ್ಚಿನ ಹರವಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (4ಕ) ನಾನು ಅವನಿಗೆ ಹಣ್ಣು ತಿನ್ನಿಸಿದೆ. (4ಚ) ನಾನು ಅವನಿಂದ (ಅವನ ಕಯ್ಯಲ್ಲಿ) ಹಣ್ಣು ತಿನ್ನಿಸಿದೆ. (5ಕ) ನಾನು ಅವನಿಗೆ ಹಣ ಕೊಟ್ಟೆ. (5ಚ) ನಾನು ಅವನಿಂದ (ಅವನ ಕಯ್ಯಲ್ಲಿ) ಹಣ ಕೊಡಿಸಿದೆ. (4ಕ)ದಲ್ಲಿ ಒಂದು ಮಾಡಿಸುಹವನ್ನು ತಿಳಿಸುವ ತಿನ್ನಿಸು ಇಸುವೆಸಕಪದವನ್ನು ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲಿ ಬಳಸಲಾಗಿದೆ, ಮತ್ತು ಅದನ್ನೇ (4ಚ)ದಲ್ಲಿ ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲೂ ಬಳಸಲಾಗಿದೆ. ಆದರೆ, ಒಂದು ಮಾಡುಹವನ್ನು ತಿಳಿಸುವ ಕೊಡು ಎಸಕಪದವನ್ನು (5ಕ)ದಲ್ಲಿ ಕಾಣಿಸಿದ ಹಾಗೆ ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲಿ ಬಳಸಲು ಬರುತ್ತದಲ್ಲದೆ, ಅದರಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಹಾಗೆಯೇ ಮಾಡುಗ+ಈಡು+ಸುರು ಪಾಂಗಿಟ್ಟಳದಲ್ಲಿ ಬಳಸಲು ಬರುವುದಿಲ್ಲ. ಹಾಗೆ ಬಳಸಬೇಕಿದ್ದಲ್ಲಿ ಅದಕ್ಕೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ, ಮತ್ತು ಹಾಗೆ ಮಾಡಿದಾಗ ಅದರ ಹುರುಳೂ ಬೇರಾಗುತ್ತದೆ. (5ಚ) ಸೊಲ್ಲಿಗೆ ಅವನಿಂದ ಬೇರೊಬ್ಬನಿಗೆ ಹಣ ಕೊಡಿಸಿದೆ ಎಂಬ ಹುರುಳಿದೆಯಲ್ಲದೆ ಅವನಿಗೆ ಹಣ ಕೊಡಿಸಿದೆ ಎಂಬ ಹುರುಳಿಲ್ಲ.
8.3.5 ಮೂರು ಬಗೆಯ ನೆಲೆಗಳು
ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿರುವಲ್ಲಿ ಕಾಣಿಸಿಕೊಳ್ಳುವ ಹುರುಳುಗಳ ನಡುವಿನ ವ್ಯತ್ಯಾಸಗಳಿಗೆ ಮೂರು ಬಗೆಯ ನೆಲೆಗಳಿವೆ: (1) ಎಂತಹ ಎಸಕಪದಗಳಿಗೆ ಅದನ್ನು ಸೇರಿಸಲಾಗಿದೆ ಎಂಬುದೊಂದು; (2) ಅದರ ಪಾಂಗುಗಳಾಗಿ ಎಂತಹ ವ್ಯಕ್ತಿ, ವಸ್ತು ಇಲ್ಲವೇ ವಿಶಯ ಬಂದಿದೆ ಎಂಬುದು ಇನ್ನೊಂದು; ಮತ್ತು (3) ಅದರ ಪಾಂಗಿಟ್ಟಳ ಎಂತಹದು ಎಂಬುದು ಮತ್ತೊಂದು. ಇವುಗಳಲ್ಲಿ ಮೂರನೇ ಬಗೆಯ ನೆಲೆಯ ಮೇಲೆ ಹೇಗೆ ಇಸುವೆಸಕಪದಗಳ ಹುರುಳು ಅವಲಂಬಿಸಿರುತ್ತದೆ ಎಂಬುದನ್ನು ಮೇಲೆ ವಿವರವಾಗಿ ತಿಳಿಸಲಾಗಿದೆ. ಮೊದಲನೆಯ ಎರಡು ನೆಲೆಗಳ ಕುರಿತಾಗಿ ಕೆಲವು ಎತ್ತುಗೆಗಳನ್ನಶ್ಟೇ ಕೆಳಗೆ ಕೊಡಲಾಗಿದೆ: (1) ಎಸಕಪದಗಳ ಹುರುಳು ನೆಲೆಯಾಗಿರುವುದು
ಎಸಕಪದಗಳ ಹುರುಳುಗಳನ್ನು ಬಳಸಿ, ಅವುಗಳಿಗೆ ಇಸು ಒಟ್ಟನ್ನು ಸೇರಿಸಲು ಬರುತ್ತದೆಯೇ ಎಂಬುದನ್ನು, ಮತ್ತು ಹಾಗೆ ಸೇರಿಸಿದಾಗ ಅವುಗಳ ಹುರುಳಿನಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ವಿವರಿಸಲು ಬರುತ್ತದೆ; ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1) ತಿನ್ನು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಲ್ಲಿ ಮೊದಲಿಗೆ ಅದರ ಪಾಂಗಿಟ್ಟಳದಲ್ಲಿದ್ದ ಮಾಡುಗ ಪಾಂಗು ಗುರಿ ಪಾಂಗಾಗಿ ಇಲ್ಲವೇ ಸುರು ಪಾಂಗಾಗಿ ಬರಬಲ್ಲುದು; ಆದರೆ, ಕಚ್ಚು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಲ್ಲಿ ಅದರ ಪಾಂಗಿಟ್ಟಳದಲ್ಲಿದ್ದ ಮಾಡುಗ ಪಾಂಗು ಸುರು ಪಾಂಗಾಗಿ ಬರಬಲ್ಲುದಲ್ಲದೆ ಗುರಿ ಪಾಂಗಾಗಿ ಬರಲಾರದು: (1ಕ) ಅವನು ಹಣ್ಣು ತಿಂದ. (1ಚ) ನಾನು ಅವನಿಗೆ ಹಣ್ಣು ತಿನ್ನಿಸಿದೆ. (1ಟ) ನಾನು ಅವನಿಂದ (ಅವನ ಕಯ್ಯಲ್ಲಿ) ಹಣ್ಣು ತಿನ್ನಿಸಿದೆ. (2ಕ) ಅವನು ಹಣ್ಣು ಕಚ್ಚಿದ. (2ಚ) *ನಾನು ಅವನಿಗೆ ಹಣ್ಣು ಕಚ್ಚಿಸಿದೆ. (2ಟ) ನಾನು ಅವನಿಂದ (ಅವನ ಕಯ್ಯಲ್ಲಿ) ಹಣ್ಣು ಕಚ್ಚಿಸಿದೆ. ಈ ವ್ಯತ್ಯಾಸಕ್ಕೆ ತಿನ್ನು ಮತ್ತು ಕಚ್ಚು ಎಂಬ ಎಸಕಪದಗಳ ಹುರುಳಿನಲ್ಲಿರುವ ವ್ಯತ್ಯಾಸವೇ ಕಾರಣ: ತಿನ್ನು ಎಸಕಪದದ ಹುರುಳನ್ನು (1) ತಿನ್ನುವ ಹಾಗೆ ಮಾಡುವುದು, (2) ಹಣ್ಣನ್ನು ಕತ್ತರಿಸಿ ಬಾಯಿಗೆ ಹಾಕುವುದು, ಮತ್ತು (3) ಅದನ್ನು ತಿನ್ನುವುದು ಎಂಬ ಮೂರು ಕೆಲಸಗಳಾಗಿ ಒಡೆಯಲು ಬರುತ್ತದೆ. ಇವುಗಳಲ್ಲಿ ಮೊದಲ ಎರಡು ಕೆಲಸಗಳನ್ನು ತಿನ್ನಿಸು ಎಂಬುದರ ಪಾಂಗಿಟ್ಟಳಕ್ಕೆ ಹೊಸದಾಗಿ ಸೇರುವ ಮಾಡುಗ ಪಾಂಗಿನ ಮೇಲೆ ಹೊರಿಸಿದಲ್ಲಿ (1ಚ)ದ ಹುರುಳು ಸಿಗುತ್ತದೆ, ಮತ್ತು ಮೊದಲನೆಯದನ್ನು ಮಾತ್ರ ಹೊರಿಸಿದಲ್ಲಿ (1ಟ)ದ ಹುರುಳು ಸಿಗುತ್ತದೆ. ಕುಡಿ, ಉಣ್ಣು, ಉಡು, ತೊಡು, ಮುಡಿ ಮೊದಲಾದ ಬೇರೆ ಕೆಲವು ಎಸಕಪದಗಳ ಹುರುಳನ್ನೂ ಈ ರೀತಿ ಮೂರು ಕೆಲಸಗಳಾಗಿ ಒಡೆಯಲು ಬರುತ್ತದೆ; ಹಾಗಾಗಿ, ಅವುಗಳ ಇಸುವೆಸಕ ರೂಪಗಳನ್ನೂ ತಿನ್ನು ಪದದ ಇಸುವೆಸಕ ರೂಪಗಳ ಹಾಗೆ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಬಳಸಲು ಬರುತ್ತದೆ. ಆದರೆ, ಕಚ್ಚು ಎಸಕಪದದ ಹುರುಳನ್ನು (1) ಕಚ್ಚುವಂತೆ ಮಾಡುವುದು ಮತ್ತು (2) ಕಚ್ಚುವುದು ಎಂಬ ಎರಡು ಕೆಲಸಗಳಾಗಿ ಮಾತ್ರ ಒಡೆಯಲು ಬರುತ್ತದೆ; ಹಾಗಾಗಿ, ಅದನ್ನು ಮೇಲೆ ತೋರಿಸಿದ ಹಾಗೆ (2ಟ) ಸೊಲ್ಲಿನಲ್ಲಿ ಬಳಸಲು ಬರುತ್ತದಲ್ಲದೆ, (2ಚ) ಸೊಲ್ಲಿನಲ್ಲಿ ಬಳಸಲು ಬರುವುದಿಲ್ಲ. ಊದು, ಮುಕ್ಕು, ಮುಚ್ಚು, ಹಿಡಿ, ಎತ್ತು, ಕರೆ, ಕೊಲ್ಲು ಮೊದಲಾದ ಬೇರೆ ಹಲವು ಎಸಕಪದಗಳು ಹೀಗೆಯೇ. (2) ಒಡೆ, ಚೆಲ್ಲು, ತೆರೆ, ಮುಚ್ಚು, ಮುರಿ, ಸುಲಿ, ಸೀಳು ಮೊದಲಾದ ಕೆಲವು ಎಸಕಪದಗಳನ್ನು ಹಾಗೆಯೇ ಇಸು ಒಟ್ಟನ್ನು ಸೇರಿಸದೇನೇ ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಾಗಲಿ, ಇಲ್ಲವೇ ಮಾಡುಗ+ಈಡು ಎಂಬ ಪಾಂಗಿಟ್ಟಳ ದಲ್ಲಾಗಲಿ ಬಳಸಲು ಬರುತ್ತದೆ. ಇದಕ್ಕೆ ಬದಲು, ಕುದಿ, ತಿರುಗು, ಉರಿ, ನಂದು, ಬೇಯು, ಸಿಡಿ, ಕೊಳೆ, ಸವೆ, ಕೆಡು ಮೊದಲಾದ ಬೇರೆ ಕೆಲವು ಎಸಕಪದಗಳನ್ನು ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಮಾತ್ರ ಬಳಸಲು ಬರುತ್ತದೆ; ಅವನ್ನು ಮಾಡುಗ+ಈಡು ಎಂಬ ಪಾಂಗಿಟ್ಟಳದಲ್ಲಿ ಬಳಸಬೇಕಿದ್ದರೆ, ಅವಕ್ಕೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ: (3ಕ) ಗೆಲ್ಲು ಮುರಿಯಿತು. (3ಚ) ಹುಡುಗ ಗೆಲ್ಲನ್ನು ಮುರಿದ.
(4ಕ) ಹಾಲು ಕುದಿಯಿತು. (4ಚ) ಅವನು ಹಾಲನ್ನು ಕುದಿಸಿದ. ಇಸು ಒಟ್ಟಿನ ಬಳಕೆಯಲ್ಲಿ ಕಾಣಿಸುವ ಈ ವ್ಯತ್ಯಾಸಕ್ಕೆ ಮೇಲಿನ ಎರಡು ಬಗೆಯ ಎಸಕಪದಗಳ ಹುರುಳಿನಲ್ಲಿರುವ ವ್ಯತ್ಯಾಸವೇ ಕಾರಣವಿರಬೇಕು; ಆದರೆ, ಇದು ಎಂತಹ ವ್ಯತ್ಯಾಸ ಎಂಬುದನ್ನು ಕಂಡುಹಿಡಿಯುವುದು ಅಶ್ಟೊಂದು ಸುಲಬ ವೆಂದು ಕಾಣಿಸುವುದಿಲ್ಲ. ಕನ್ನಡದಲ್ಲಿ ಮಾತ್ರವಲ್ಲದೆ ಬೇರೆಯೂ ಹಲವು ನುಡಿಗಳಲ್ಲಿ ಇಂತಹ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ, ಮತ್ತು ಇದಕ್ಕೆ ಹಲವು ಬಗೆಯ ವಿವರಣೆಗಳನ್ನೂ ಕೊಡಲಾಗಿದೆ; ಆದರೆ, ಅವುಗಳಲ್ಲಿ ಯಾವುದನ್ನೂ ನೇರವಾಗಿ ಕನ್ನಡಕ್ಕೆ ಅಳವಡಿಸಿಕೊಳ್ಳಲು ಬರುವ ಹಾಗೆ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಆಗುಗ ಮಾತ್ರ ಮತ್ತು ಮಾಡುಗ+ಈಡು ಎಂಬ ಎರಡು ಬಗೆಯ ಪಾಂಗಿಟ್ಟಳಗಳಲ್ಲೂ ಬಳಕೆಯಾಗಬಲ್ಲ ಎಸಕಪದಗಳನ್ನು ಹೊರ ಒತ್ತಡದ ಪದ ಗಳೆಂದು, ಮತ್ತು ಹಾಗೆ ಬಳಕೆಯಾಗಲಾರದ ಎಸಕಪದಗಳನ್ನು ಒಳ ಒತ್ತಡದ ಪದಗಳೆಂದು ತಿಳಿಯಬಹುದು ಎಂಬುದು ಒಂದು ಬಗೆಯ ವಿವರಣೆ. ಹೊರ ಒತ್ತಡದಿಂದ ನಡೆಯಬಲ್ಲ ಎಸಕಗಳನ್ನು ಹಾಗೆಯೇ, ಆ ಒತ್ತಡ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿಸದೆ, ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬಳಸಬಹುದು, ಇಲ್ಲವೇ ಆ ಒತ್ತಡವನ್ನು ಹೇರುವ ಪಾಂಗನ್ನು ಮಾಡುಗವಾಗಿ ಮಾಡಿ, ಮಾಡುಗ+ಈಡು ಎಂಬ ಪಾಂಗಿಟ್ಟಳದೊಂದಿಗೂ ಬಳಸಬಹುದು; ಆದರೆ, ಒಳ ಒತ್ತಡದಿಂದ ನಡೆಯುವ ಎಸಕಗಳಿಂದ ಆ ರೀತಿ ಒತ್ತಡವನ್ನು ಹೇರುವ ಪಾಂಗನ್ನು ಬೇರ್ಪಡಿಸಲು ಬರುವುದಿಲ್ಲ ಎಂಬುದೇ ಈ ವಿವರಣೆಯ ತಿರುಳು. ಕನ್ನಡದ ಕೆಲವು ಎಸಕಪದಗಳನ್ನು ಗಮನಿಸಿದಾಗ, ಇಂತಹ ವಿವರಣೆ ಸಾದ್ಯ ಎಂದು ತೋರುತ್ತದೆ. ಎತ್ತುಗೆಗಾಗಿ, ಸಿಡಿ, ಕೊಳೆ, ಆಡು (ಅಲ್ಲಾಡು), ತಗ್ಗು, ಕುಗ್ಗು, ಬಳುಕು ಮೊದಲಾದುವು ಒಳ ಒತ್ತಡದಿಂದ ನಡೆಯುವ ಎಸಕಗಳೆಂದು ಹೇಳಬಹುದು; ಇದಕ್ಕೆ ಬದಲು, ತೆರೆ, ಮುಚ್ಚು, ಮಡಚು, ಜಜ್ಜು, ಒಡೆ, ಸೀಳು ಮೊದಲಾದುವು ಹೊರ ಒತ್ತಡದಿಂದ ನಡೆಯುವ ಎಸಕಗಳೆಂದು ಹೇಳ ಬಹುದು. ಇವುಗಳಲ್ಲಿ ಎರಡನೆಯವನ್ನು ಮಾತ್ರ ಆಗುಗ ಮಾತ್ರ ಮತ್ತು ಮಾಡುಗ +ಈಡು ಎಂಬ ಎರಡು ಬಗೆಯ ಪಾಂಗಿಟ್ಟಳಗಳಲ್ಲಿ ಬಳಸಲು ಬರುತ್ತದೆ. ಇದಲ್ಲದೆ, ಎರಡು ಬಗೆಯ ಹುರುಳುಗಳಲ್ಲಿ ಬಳಕೆಯಾಗುವ ಕಡಿ ಎಂಬಂತಹ ಪದಗಳ ಬಳಕೆಯಲ್ಲಿ ಇನ್ನೊಂದು ಬಗೆಯ ವ್ಯತ್ಯಾಸವನ್ನೂ ಕಾಣಲು ಬರುತ್ತದೆ: ಈ ಪದವನ್ನು ಹಗ್ಗವನ್ನು ಕಡಿ ಮತ್ತು ಮರವನ್ನು ಕಡಿ ಎಂಬುದಾಗಿ ಎರಡು ಬಗೆಯ ಈಡು ಪಾಂಗುಗಳೊಂದಿಗೆ ಬಳಸಲು ಬರುತ್ತದೆ. ಇವುಗಳಲ್ಲಿ ಮೊದಲನೆಯದನ್ನು ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿ ಗಾಗಲಿ (ಹಗ್ಗ ಕಡಿಯಿತು), ಇಲ್ಲವೇ ಮಾಡುಗ+ಈಡು ಎಂಬ ಪಾಂಗಿಟ್ಟಳ ದೊಂದಿಗಾಗಲಿ (ಅವನು ಹಗ್ಗವನ್ನು ಕಡಿದ) ಬಳಸಲು ಬರುತ್ತದೆ. ಆದರೆ, ಎರಡನೆಯದನ್ನು ಮಾಡುಗ+ಈಡು ಪಾಂಗಿಟ್ಟಳದೊಂದಿಗೆ ಬಳಸಲು ಬರುತ್ತದಲ್ಲದೆ (ಅವನು ಮರವನ್ನು ಕಡಿದ), ಆಗುಗ ಮಾತ್ರ ಎಂಬ ಪಾಂಗಿಟ್ಟಳ ದೊಂದಿಗೆ ಬಳಸಲು ಬರುವುದಿಲ್ಲ (*ಮರ ಕಡಿಯಿತು). ಈ ಎರಡನೆಯ ಹುರುಳಿ ನಲ್ಲಿ ಅದಕ್ಕೆ ಬೇಕಾಗುವ ಹೊರ ಒತ್ತಡವನ್ನು ತಿಳಿಸದಿರಲು ಬರುವುದಿಲ್ಲ ಎಂಬುದು ಈ ವ್ಯತ್ಯಾಸಕ್ಕೆ ಕಾರಣವಿರಬಹುದು. ಹೀಗಿದ್ದರೂ, ಬಿಡು-ಬಿಚ್ಚು, ತಿರುಗು-ಸುತ್ತು, ಸವೆ-ತೇಯು ಎಂಬಂತಹ ಪದಜೋಡಿಗಳಲ್ಲಿ ಮೊದಲಿನದು ಒಳ ಒತ್ತಡದ ಪದವಾಗಿ, ಮತ್ತು ಎರಡನೆಯದು ಹೊರ ಒತ್ತಡದ ಪದವಾಗಿ ಬಳಕೆಯಾಗಲು ಕಾರಣವೇನೆಂಬುದು ತಿಳಿಯುವುದಿಲ್ಲ. ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬರುವ ಮೇಲಿನ ಎಸಕಪದಗಳು ಮಾತ್ರವಲ್ಲದೆ, ಆಗುಗ+ಗುರಿ ಪಾಂಗಿಟ್ಟಳದೊಂದಿಗೆ ಬರುವ ಎಸಕಪದಗಳಲ್ಲೂ ಇಂತಹದೇ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ: ಚುಚ್ಚು, ಕುತ್ತು, ಮೆತ್ತು, ಸುತ್ತು, ಸುಂದು ಎಂಬಂತಹ ಪದಗಳು ಇಸು ಒಟ್ಟನ್ನು ಸೇರಿಸದೆಯೇ ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲಿ ಬರಬಲ್ಲುವು; ಇದಕ್ಕೆ ಬದಲು, ತಗಲು, ತಾಗು, ತೊಡರು, ದೊರಕು, ಸಲ್ಲು, ಸಿಕ್ಕು ಮೊದಲಾದ ಬೇರೆ ಕೆಲವು ಎಸಕಪದಗಳನ್ನು ಮಾಡುಗ+ಈಡು+ಗುರಿ ಪಾಂಗಿಟ್ಟಳದಲ್ಲಿ ಬಳಸಲು ಅವಕ್ಕೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ:
(5ಕ) ಕಾಲಿಗೆ ಹಗ್ಗ ಸುತ್ತಿತು. (5ಚ) ಅವನು ಕಾಲಿಗೆ ಹಗ್ಗ ಸುತ್ತಿದ. (6ಕ) ಕಾಲಿಗೆ ಮೇಜು ತಗಲಿತು. (6ಚ) ಅವನು ಕಾಲಿಗೆ ಮೇಜು ತಗಲಿಸಿದ. (3) ಮೇಲೆ ಕೊಟ್ಟಿರುವ ತಗಲು, ತಾಗು, ದೊರಕು, ಸಲ್ಲು, ಸಿಲುಕು ಮೊದಲಾದ ಎಸಕಪದಗಳಿಗೂ, ಒಲಿ, ಒಪ್ಪು, ಹೆದರು, ಬೆದರು, ಅಂಜು, ಸೋಲು ಮೊದಲಾದ ಎಸಕಪದಗಳಿಗೂ ನಡುವೆ ಇನ್ನೊಂದು ವ್ಯತ್ಯಾಸವಿದೆ: ಇವುಗಳಲ್ಲಿ ಮೊದಲನೇ ಬಗೆಯ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಆಗುಗ ಪಾಂಗು ಈಡು ಪಾಂಗಾಗುತ್ತದೆ, ಮತ್ತು ಗುರಿ ಪಾಂಗು ಹಾಗೆಯೇ ಉಳಿಯುತ್ತದೆ; ಇದಲ್ಲದೆ, ಅವುಗಳ ಪಾಂಗಿಟ್ಟಳಕ್ಕೆ ಹೊಸದೊಂದು ಮಾಡುಗ ಪಾಂಗು ಸೇರುತ್ತದೆ. ಇದಕ್ಕೆ ಬದಲು, ಎರಡನೇ ಬಗೆಯ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಆಗುಗ ಪಾಂಗು ಈಡು ಪಾಂಗಾಗುತ್ತದೆ, ಮತ್ತು ಗುರಿ ಪಾಂಗು ಮಾಡುಗ ಪಾಂಗಾಗುತ್ತದೆ: (7ಕ) ಅವನಿಗೆ ಹಣ ದೊರಕಿತು. (7ಚ) ನಾನು ಅವನಿಗೆ ಹಣ ದೊರಕಿಸಿದೆ. (8ಕ) ನನಗೆ ಅವನು ಹೆದರಿದ. (8ಚ) ನಾನು ಅವನನ್ನು ಹೆದರಿಸಿದೆ. ಆಗುಗ+ಗುರಿ ಎಂಬ ಒಂದೇ ಬಗೆಯ ಪಾಂಗಿಟ್ಟಳವಿರುವ ಈ ಎರಡು ಬಗೆಯ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಎರಡು ಬಗೆಯ ಮಾರ್ಪಾಡುಗಳು ನಡೆಯುವುದಕ್ಕೂ ಅವುಗಳ ನಡುವೆ ಹುರುಳಿನಲ್ಲಿರುವ ವ್ಯತ್ಯಾಸವೇ ಕಾರಣವೆಂದು ಹೇಳಲು ಬರುತ್ತದೆ. (2) ಪಾಂಗುಗಳ ಬಗೆ ನೆಲೆಯಾಗಿರುವುದು ಎಂತಹ ವ್ಯಕ್ತಿ, ವಸ್ತು ಇಲ್ಲವೇ ವಿಶಯಗಳು ಎಸಕಪದದ ಪಾಂಗುಗಳಾಗಿ ಬಂದಿವೆ ಎಂಬುದರ ಮೇಲೂ ಅದರ ಇಸುವೆಸಕರೂಪದ ಹುರುಳು ಅವಲಂಬಿಸಿರಬಲ್ಲುದು. ಇದಕ್ಕೆ ಎರಡು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1) ಮಾಡುಗ+ಗುರಿ ಪಾಂಗಿಟ್ಟಳವಿರುವ ಇಳಿ, ತಲಪು, ನುಸುಳು, ಹೊಗು, ಬಗ್ಗು, ಸರಿ ಮೊದಲಾದ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಸೇರುತ್ತದೆ, ಮತ್ತು ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗುತ್ತದೆ. ಇದಕ್ಕೆ ಬದಲು, ಅದೇ ಪಾಂಗಿಟ್ಟಳವಿರುವ ಗುದ್ದು, ಹೊಡೆ, ಬಡಿ, ತದಕು ಮೊದಲಾದ ಬೇರೆ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುವುದಾದರೂ, ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗದೆ ಸುರು ಪಾಂಗಾಗಿ ಮಾರ್ಪಡುತ್ತದೆ: (1ಕ) ಅವನು ಮನೆಗೆ ತಲಪಿದ. (1ಚ) ನಾನು ಅವನನ್ನು ಮನೆಗೆ ತಲಪಿಸಿದೆ. (2ಕ) ಅವನು ಹುಡುಗನಿಗೆ ಹೊಡೆದ. (2ಚ) ನಾನು ಅವನಿಂದ ಹುಡುಗನಿಗೆ ಹೊಡೆಸಿದೆ.
ಈ ಎರಡು ಬಗೆಯ ಎಸಕಪದಗಳಲ್ಲಿ ಮೊದಲಿನವುಗಳ ಗುರಿ ಪಾಂಗು ಒಂದು ಇಂಬಾಗಿರುವುದು, ಮತ್ತು ಎರಡನೆಯವುಗಳ ಗುರಿ ಪಾಂಗು ಒಂದು ಉಸಿರಿ ಯಾಗಿರುವುದು ಮೇಲಿನ ವ್ಯತ್ಯಾಸಕ್ಕೆ ಕಾರಣವಾಗಿರಬೇಕು. (2) ಮಾಡುಗ+ಸುರು+ಈಡು ಪಾಂಗಿಟ್ಟಳವಿರುವ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ; ಇದಲ್ಲದೆ, ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗುತ್ತದೆ, ಮತ್ತು ಮೊದಲಿಗಿದ್ದ ಸುರು ಪಾಂಗನ್ನು ಬಳಸದಿರಲಾಗುತ್ತದೆ: (3ಕ) ಅವನು ಅಕ್ಕಿಯಿಂದ ಕಸ ಹೆಕ್ಕಿದ. (3ಚ) ನಾನು ಅವನಿಂದ ಕಸ ಹೆಕ್ಕಿಸಿದೆ. ಇಂತಹ ಎಸಕಪದಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಸುರು ಪಾಂಗನ್ನು ಉಳಿಸಿಕೊಳ್ಳಲು ಎರಡು ಹೊಲಬುಗಳನ್ನು ಬಳಸಲಾಗುತ್ತದೆ: ಮೊದಲಿಗಿದ್ದ ಸುರು ಪಾಂಗು ಎಸಕದ ಮುಟ್ಟನ್ನು (ಕರಣವನ್ನು) ತಿಳಿಸುವುದಿದ್ದಲ್ಲಿ, ಅದನ್ನು ಜಾಗ ಪಾಂಗಾಗಿ ಮಾರ್ಪಡಿಸಿ ಬಳಸಲು ಬರುತ್ತದೆ: (4ಕ) ಅವನು ಗುದ್ದಲಿಯಿಂದ ಗಡ್ಡೆ ಅಗೆದ. (4ಚ) ನಾನು ಅವನಿಂದ ಗುದ್ದಲಿಯಲ್ಲಿ ಗಡ್ಡೆ ಅಗೆಸಿದೆ. ಆದರೆ, ಸುರು ಪಾಂಗು ಎಸಕದ ಇಂಬನ್ನು ತಿಳಿಸುತ್ತಿದೆಯಾದರೆ, ಈ ಹೊಲಬನ್ನು ಬಳಸಲು ಬರುವುದಿಲ್ಲ; ಇದಕ್ಕೆ ಬದಲು, ಮೊದಲಿಗಿದ್ದ ಎಸಕದ ಮಾಡುಗ ಪಾಂಗನ್ನು ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬುದನ್ನು ಸೇರಿಸಿ ನೆರವು ಪಾಂಗಾಗಿ ಬಳಸಬೇಕಾಗು ತ್ತದೆ; ಸುರು ಪಾಂಗು ಎಸಕದ ಮುಟ್ಟನ್ನು ತಿಳಿಸುತ್ತಿರುವಲ್ಲೂ ಈ ಹೊಲಬನ್ನು ಬಳಸಲು ಬರುತ್ತದೆ: (5ಕ) ಅವನು ಬಾವಿಯಿಂದ ನೀರು ಸೇದಿದ. (5ಚ) ನಾನು ಅವನ ಕಯ್ಯಲ್ಲಿ ಬಾವಿಯಿಂದ ನೀರು ಸೇದಿಸಿದೆ. (6ಕ) ಅವನು ಗುದ್ದಲಿಯಿಂದ ಗಡ್ಡೆ ಅಗೆದ. (6ಚ) ನಾನು ಅವನ ಕಯ್ಯಲ್ಲಿ ಗುದ್ದಲಿಯಿಂದ ಗಡ್ಡೆ ಅಗೆಸಿದೆ. ಇಲ್ಲಿಯೂ ಕೂಡ, ಇಸು ಒಟ್ಟನ್ನು ಸೇರಿಸಿದಾಗ ಈ ಎರಡು ಬಗೆಯ ಎಸಕ ಪದಗಳ ಪಾಂಗಿಟ್ಟಳದಲ್ಲಿ ಕಾಣಿಸುವ ವ್ಯತ್ಯಾಸಕ್ಕೆ ಅವುಗಳೊಂದಿಗೆ ಬರುವ ಸುರು ಪಾಂಗಿನ ಬಗೆ ಕಾರಣವಾಗಿರುತ್ತದೆ ಎಂಬುದನ್ನು ಗಮನಿಸಬಹುದು.
8.3.6 ಇರು ಪದಕ್ಕೆ ಇಸು ಒಟ್ಟನ್ನು ಸೇರಿಸುವುದು
ಇರು ಪದಕ್ಕೆ ಇಸು ಒಟ್ಟನ್ನು ಸೇರಿಸಿ ಇರಿಸು ಎಂಬ ರೂಪವನ್ನು ಪಡೆಯಲು ಬರುತ್ತದೆ; ಈ ರೂಪವನ್ನು ಬಳಸಿದಾಗ ಇರು ಪದದೊಂದಿಗೆ ಬರುವ ಪಾಂಗಿಟ್ಟಳ ಗಳಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: ಇರು ಪದದೊಂದಿಗೆ ಮುಕ್ಯವಾಗಿ ಇರುವಿಕೆ, ಪರಿಚೆ ಮತ್ತು ಪತ್ತುಗೆ ಎಂಬ ಮೂರು ಬಗೆಯ ಪಾಂಗಿಟ್ಟಳಗಳು ಬರುತ್ತವೆ ಎಂಬುದನ್ನು ಮೇಲೆ 7.3ರಲ್ಲಿ ವಿವರಿಸಲಾಗಿದೆ. (1) ಇರುವಿಕೆ: ಇರುಗ+ಜಾಗ: ಹುಡುಗ ಮನೆಯಲ್ಲಿದ್ದಾನೆ. (2) ಪರಿಚೆ: ಇರುಗ+ಪರಿಚೆ: ಹುಡುಗ ಸಪ್ಪಗಿದ್ದಾನೆ. (3) ಪತ್ತುಗೆ: ಗುರಿ+ಪತ್ತುಗೆ: ಅವನಿಗೆ ಇಬ್ಬರು ಮಕ್ಕಳಿದ್ದಾರೆ.
(1) ಇರುವಿಕೆಯ ಪಾಂಗಿಟ್ಟಳದೊಂದಿಗೆ ಬರುವ ಇರು ಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಅದರ ಪಾಂಗಿಟ್ಟಳಕ್ಕೊಂದು ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರ ಇರುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ; ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (4ಕ) ಪುಸ್ತಕ ಕಪಾಟಿನಲ್ಲಿದೆ > ಅವನು ಪುಸ್ತಕವನ್ನು ಕಪಾಟಿನಲ್ಲಿರಿಸಿದ. (4ಚ) ಬಿಸಿನೀರು ಕೊಡದಲ್ಲಿದೆ > ಅವನು ಬಿಸಿನೀರನ್ನು ಕೊಡದಲ್ಲಿ ಇರಿಸಿದ. (4ಟ) ಆ ಕೋಣೆಯಲ್ಲೊಂದು ಗೊಂಬೆಯಿದೆ > ಅವನು ಆ ಕೋಣೆ ಯಲ್ಲಿ ಒಂದು ಗೊಂಬೆಯನ್ನಿರಿಸಿದ್ದಾನೆ. ಆದರೆ, ಸಾಮಾನ್ಯವಾಗಿ ತುಸು ಹೊತ್ತಿನ ಇರುವಿಕೆಗಳನ್ನು ಮಾತ್ರ ಈ ರೀತಿ ಇಸು ಒಟ್ಟಿನ ಬಳಕೆಯ ಮೂಲಕ ಇರಿಸುವಿಕೆಗಳನ್ನಾಗಿ ಮಾರ್ಪಡಿಸಲು ಬರುತ್ತದೆ; ಹೆಚ್ಚು ಬಾಳಿಕೆಯ ಇರುವಿಕೆಗಳನ್ನು ಆ ರೀತಿ ಮಾರ್ಪಡಿಸಲು ಬರುವುದಿಲ್ಲ: (5ಕ) ಶಾಲೆಯ ಇದಿರು ಒಂದು ಚಾದಂಗಡಿಯಿದೆ > ?ಅವನು ಶಾಲೆಯ ಇದಿರು ಒಂದು ಚಾದಂಗಡಿಯನ್ನು Ej¹zÀ. (5ಚ) ಮನೆಯ ಸುತ್ತಲೂ ಮುಳ್ಳಿನ ಬೇಲಿಯಿದೆ >?ಅವನು ಮನೆಯ ಸುತ್ತಲೂ ಮುಳ್ಳಿನ ಬೇಲಿಯನ್ನಿರಿಸಿದ್ದಾನೆ. ಇದಲ್ಲದೆ, ಇರುಗಗಳಾಗಿ ಉಸಿರಿಗಳು, ಗಿಡ-ಮರಗಳು, ಇಲ್ಲವೇ ಎಸಕಗಳು ಬಂದಿರುವಲ್ಲಿ ಇರು ಪದಕ್ಕೆ ಇಸು ಒಟ್ಟನ್ನು ಸೇರಿಸಲು ಬರುವುದಿಲ್ಲ: (6ಕ) ಬೆಕ್ಕು ಮರದ ತುದಿಯಲ್ಲಿದೆ > *ಅವನು ಬೆಕ್ಕನ್ನು ಮರದ ತುದಿಯಲ್ಲಿರಿಸಿದ. (6ಚ) ಅವರ ಮನೆಯಲ್ಲಿ ಒಂದು ಮದುವೆಯಿತ್ತು > *ಅವರ ಮನೆಯಲ್ಲಿ ಒಂದು ಮದುವೆಯನ್ನು ಇರಿಸಿದ್ದರು. ಇಂತಹ ಕೆಲವು ಕಡೆಗಳಲ್ಲಿ ಇರು ಪದಕ್ಕೆ ಕೊಳ್ಳು ಎಂಬುದನ್ನು ಸೇರಿಸಿದಲ್ಲಿ ಇಸು ಒಟ್ಟನ್ನು ಸೇರಿಸಲು ಬರುತ್ತದೆ: (7ಕ) ಅವನು ಬೆಕ್ಕನ್ನು ಮಡಿಲ ಮೇಲೆ ಇರಿಸಿಕೊಂಡಿದ್ದಾನೆ. (7ಚ) ಅವರು ಆ ಹುಡುಗನನ್ನು ನಮ್ಮ ಮನೆಯಲ್ಲಿಯೇ ಇರಿಸಿ ಕೊಂಡಿದ್ದಾರೆ. (7ಟ) ಇವತ್ತು ಅವರು ಒಂದು ಮೀಟಿಂಗ್ ಇರಿಸಿಕೊಂಡಿದ್ದಾರೆ. ಆದರೆ, ಕೆಳಗಿನ ಸೊಲ್ಲುಗಳಲ್ಲಿ ಇರುಗ ಪಾಂಗಾಗಿ ಒಂದು ಉಸಿರಿ ಬಂದಿರು ವಲ್ಲೂ ಇಸು ಒಟ್ಟಿನ ಬಳಕೆಯಾಗಿದೆ: (8ಕ) ಹುಡುಗನನ್ನು ಆ ಕೋಣೆಯಲ್ಲಿ ಇರಿಸಿದ್ದಾರೆ. (8ಚ) ಸೆರೆಯಾಳುಗಳನ್ನು ಆ ಕೋಣೆಯೊಳಗೆ ಇರಿಸಿದ್ದಾರೆ. (2) ಪರಿಚೆಯ ಪಾಂಗಿಟ್ಟಳದಲ್ಲಿ ಬರುವ ಇರು ಪದಕ್ಕೆ ಇಸು ಒಟ್ಟನ್ನು ಸೇರಿಸಲು ಬರುವುದಿಲ್ಲ; ಆದರೆ, ಇರು ಪದದ ಮೊದಲಿಗೆ ಹೆಚ್ಚಿನ ಪರಿಚೆ ಸೊಲ್ಲುಗಳಲ್ಲೂ ಬರುವ ಆಗು ಪದಕ್ಕೆ ಇಸು ಒಟ್ಟನ್ನು ಸೇರಿಸಲು ಬರುತ್ತದೆ. ಹಾಗೆ ಸೇರಿಸಿದಾಗಲೂ ಅದರ ಪಾಂಗಿಟ್ಟಳಕ್ಕೆ ಒಂದು ಹೊಸ ಮಾಡುಗ ಪಾಂಗು ಸೇರುತ್ತದೆ, ಮತ್ತು ಅದರಲ್ಲಿ ಮೊದಲಿಗಿದ್ದ ಇರುಗ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ: (9ಕ) ಅದು ಸಪ್ಪಗಾಗಿದೆ > ಅವನು ಅದನ್ನು ಸಪ್ಪಗಾಗಿಸಿದ್ದಾನೆ. (9ಚ) ಅದು ಸಿಹಿಯಾಗಿದೆ > ಅವನು ಅದನ್ನು ಸಿಹಿಯಾಗಿಸಿದ್ದಾನೆ.
(9ಟ) ಚೀಲ ಹಗುರವಾಗಿದೆ > ಅವನು ಚೀಲವನ್ನು ಹಗುರವಾಗಿಸಿದ. ಆಗು ಪದವನ್ನು ಬಳಸಿರುವ ಇಂತಹ ಸೊಲ್ಲುಗಳಿಗೆಲ್ಲ ಇರುಹವನ್ನು ತಿಳಿಸುವ ಹುರುಳು ಮತ್ತು ಆಗುವಿಕೆಯನ್ನು ತಿಳಿಸುವ ಹುರುಳು ಎಂಬುದಾಗಿ ಎರಡೆರಡು ಹುರುಳುಗಳಿವೆಯೆಂಬುದನ್ನು ಮೇಲೆ (7.2.5)ರಲ್ಲಿ ನೋಡಿರುವೆವು. ಹಾಗಾಗಿ, ಈ ಎಲ್ಲಾ ಕಡೆಗಳಲ್ಲೂ ಪರಿಚೆ ಇಟ್ಟಳದ ಸೊಲ್ಲಿಗೆ ಇಸು ಒಟ್ಟನ್ನು ಸೇರಿಸಲಾಗುತ್ತದೆ ಯೆಂದು ಹೇಳುವ ಬದಲು, ಆಗುವಿಕೆಯನ್ನು ತಿಳಿಸುವ ಸೊಲ್ಲಿಗೆ ಆಗಿಸುವಿಕೆಯನ್ನು ತಿಳಿಸುವ ಇಸು ಒಟ್ಟನ್ನು ಸೇರಿಸಲಾಗುತ್ತದೆಯೆಂದು ಹೇಳುವುದೇ ಸರಿಯಾದ ದಾರಿ. (3) ಪತ್ತುಗೆಯ ಪಾಂಗಿಟ್ಟಳದಲ್ಲಿಯೂ ಇರು ಪದಕ್ಕೆ ಇಸು ಒಟ್ಟನ್ನು ಸೇರಿಸಲು ಬರುವುದಿಲ್ಲ. (10) ಮಕ್ಕಳಿಗೆ ಇವತ್ತು ಶಾಲೆಯಿದೆ > *ಮಕ್ಕಳಿಗೆ ಇವತ್ತು ಶಾಲೆ ಯಿರಿಸಿದೆ. (11) ಇದಕ್ಕೆ ಎರಡು ತಲೆಯಿದೆ > *ಇದಕ್ಕೆ ಎರಡು ತಲೆಯಿರಿಸಿದೆ.
8.3.7 ಕೂಡುಪದಗಳಿಗೆ ಇಸು ಒಟ್ಟನ್ನು ಸೇರಿಸುವುದು
ಕೂಡುಪದಗಳಿಗೆ ಇಸು ಒಟ್ಟನ್ನು ಸೇರಿಸುವಲ್ಲಿ ನಮಗೆದುರಾಗುವ ಒಂದು ತೊಡಕೇನೆಂದರೆ, ಹೆಸರುಪದ ಮತ್ತು ಎಸಕಪದಗಳು ಒಟ್ಟುಸೇರಿರುವ ನುಡಿತಗಳಲ್ಲಿ ಯಾವುವನ್ನು ಕೂಡುಪದಗಳೆಂದು ತಿಳಿಯಬೇಕು, ಮತ್ತು ಯಾವುವನ್ನು ಸೊಲ್ಲಿನ ಈಡು ಪಾಂಗಿನೊಂದಿಗೆ ಬಂದಿರುವ ಎಸಕಪದಗಳು ಮಾತ್ರ, ಕೂಡುಪದಗಳಲ್ಲ ಎಂಬುದಾಗಿ ತಿಳಿಯಬೇಕು ಎಂಬ ವಿಶಯದಲ್ಲಿ ಒಂದು ಕಚಿತವಾದ ತೀರ್ಮಾನಕ್ಕೆ ಕೆಲವೆಡೆಗಳಲ್ಲಿ ಬರಲು ಸಾದ್ಯವಾಗುವುದಿಲ್ಲ. ಎತ್ತುಗೆಗಾಗಿ, ಬೊಬ್ಬೆಹಾಕು ಎಂಬ ಕೂಡುಪದವನ್ನು ಗಮನಿಸಬಹುದು: ಅವನು ಬೊಬ್ಬೆಹಾಕಿದ ಎಂಬ ಸೊಲ್ಲಿನಲ್ಲಿ ಮಾಡುಗ ಮಾತ್ರ ಎಂಬ ಸೊಲ್ಲಿಟ್ಟಳ ಬಂದಿದೆಯೆಂದು ಹೇಳಬಹುದು, ಇಲ್ಲವೇ ಮಾಡುಗ+ಈಡು ಎಂಬ ಪಾಂಗಿಟ್ಟಳ ಬಂದಿದೆಯೆಂದೂ ಹೇಳಬಹುದು. ಇಲ್ಲಿ ಬಂದಿರುವ ಹಾಕು ಎಸಕಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ, ಈ ಎರಡು ಬಗೆಯ ಪಾಂಗಿಟ್ಟಳಗಳು ಎರಡು ಬಗೆಯ ಮಾರ್ಪಾಡುಗಳಿಗೆ ಕಾರಣ ವಾಗುತ್ತವೆ: (1) ಅವನು ಬೊಬ್ಬೆಹಾಕಿದ > ನಾನು ಅವನನ್ನು ಬೊಬ್ಬೆಹಾಕಿಸಿದೆ. (2) ಅವನು ಬೊಬ್ಬೆ ಹಾಕಿದ > ನಾನು ಅವನಿಂದ ಬೊಬ್ಬೆ ಹಾಕಿಸಿದೆ. (1)ನೇ ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಬೊಬ್ಬೆಹಾಕು ಎಂಬುದು ಒಂದು ಕೂಡುಪದವಾಗಿ ಬಂದಿದೆ, ಮತ್ತು ಅದರೊಂದಿಗೆ ಮಾಡುಗ ಮಾತ್ರ ಎಂಬ ಪಾಂಗಿಟ್ಟಳ ಬಂದಿದೆ; ಹಾಗಾಗಿ, ಅದಕ್ಕೆ ಇಸು ಒಟ್ಟನ್ನು ಸೇರಿಸಿರುವ ಎರಡನೆಯ ಸೊಲ್ಲಿನಲ್ಲಿ ಮಾಡುಗ ಈಡಾಗಿದೆ (ಅವನನ್ನು), ಮತ್ತು ಒಂದು ಹೊಸ ಮಾಡುಗ ಪಾಂಗು (ನಾನು) ಬಂದು ಸೇರಿದೆ. ಇದಕ್ಕೆ ಬದಲು, (2)ನೇ ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಬೊಬ್ಬೆ ಎಂಬುದು ಈಡು ಪಾಂಗಾಗಿ ಬಂದಿದೆ, ಮತ್ತು ಅದು ಎರಡನೆಯ ಸೊಲ್ಲಿನಲ್ಲಿ ಹಾಗೆಯೇ ಉಳಿದಿದೆ; ಹಾಗಾಗಿ, ಅದಕ್ಕೆ ಒಂದು ಹೊಸ ಮಾಡುಗ ಪಾಂಗನ್ನು (ನಾನು) ಸೇರಿಸಿದಾಗ, ಮೊದಲಿಗಿದ್ದ ಮಾಡುಗ ಪಾಂಗು ಈಡು ಪಾಂಗಾಗದೆ ಸುರು (ಅವನಿಂದ) ಪಾಂಗಾಗಿದೆ. ಇನ್ನು ಕೆಲವೆಡೆಗಳಲ್ಲಿ ಕೂಡುಪದಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಅದು ಈಡು ಪಾಂಗು ಮತ್ತು ಎಸಕಪದ ಎಂಬುದಾಗಿ ಒಡೆದುಕೊಳ್ಳುವ ಹಾಗೆ ಕಾಣಿಸುತ್ತದೆ. ಎತ್ತುಗೆಗಾಗಿ, ಲೆಕ್ಕಹಾಕು ಎಂಬ ಕೂಡುಪದವನ್ನು ಗಮನಿಸಬಹುದು; ಇದಕ್ಕೆ ಇಸು ಒಟ್ಟನ್ನು ಸೇರಿಸಿರುವಲ್ಲಿ ಲೆಕ್ಕ ಎಂಬ ಪದ ಈಡು ಪಾಂಗಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ, ಮತ್ತು ಇದರಿಂದಾಗಿ, ಈ ನುಡಿತದ ಬಳಕೆಯಲ್ಲಿ ಒಂದು ಬಗೆಯ ಮಾರ್ಪಾಡು ಮಾತ್ರ ಕಾಣಿಸಿಕೊಳ್ಳುತ್ತದೆ: (2) ಅವನು ವೆಚ್ಚದ ಲೆಕ್ಕ ಹಾಕಿದ > (ಕ) ನಾನು ಅವನಿಂದ ವೆಚ್ಚದ ಲೆಕ್ಕ ಹಾಕಿಸಿದೆ; (ಚ) *ನಾನು ಅವನನ್ನು ವೆಚ್ಚದ ಲೆಕ್ಕಹಾಕಿಸಿದೆ.
ಮೋಸಮಾಡು, ಕಿಚ್ಚಿಡು, ಬೆಲೆಕಟ್ಟು, ಮಾತುಕೊಡು, ಕನ್ನಹಾಕು, ಕಯ್ಮಾಡು, ಕಣ್ಣಿಡು ಮೊದಲಾದ ಬೇರೆಯೂ ಕೆಲವು ಕೂಡುಪದಗಳು ಈ ರೀತಿ ಇಸು ಒಟ್ಟು ಸೇರಿದಾಗ ಈಡು ಪಾಂಗು ಮತ್ತು ಎಸಕಪದಗಳಾಗಿ ಒಡೆದು ಕೊಳ್ಳುತ್ತವೆ: (3) ಅವನು ವಾಸುವಿಗೆ ಮೋಸಮಾಡಿದ > ನಾನು ಅವನಿಂದ ವಾಸುವಿಗೆ ಮೋಸ ಮಾಡಿಸಿದೆ; *ನಾನು ಅವನನ್ನು ವಾಸುವಿಗೆ ಮೋಸಮಾಡಿಸಿದೆ. (4) ಅವನು ಅವರ ಮನೆಗೆ ಕಿಚ್ಚಿಟ್ಟ > ನಾನು ಅವನಿಂದ ಅವರ ಮನೆಗೆ ಕಿಚ್ಚಿಡಿಸಿದೆ; *ನಾನು ಅವನನ್ನು ಅವರ ಮನೆಗೆ ಕಿಚ್ಚಿಡಿಸಿದೆ. (5) ಅವನು ನಿಮ್ಮ ಮೇಲೆ ಕಣ್ಣಿಟ್ಟಿದ್ದಾನೆ > ನಾನು ಅವನಿಂದ ನಿಮ್ಮ ಮೇಲೆ ಕಣ್ಣಿಡಿಸಿದ್ದೇನೆ; *ನಾನು ಅವನನ್ನು ನಿಮ್ಮ ಮೇಲೆ ಕಣ್ಣಿಡಿಸಿದ್ದೇನೆ. ಉಳಿದೆಡೆಗಳಲ್ಲೆಲ್ಲ ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆಯೋ ಅಂತಹವೇ ಮಾರ್ಪಾಡುಗಳು ಕೂಡುಪದಗಳಿಗೆ ಇಸು ಒಟ್ಟನ್ನು ಸೇರಿಸಿದಾಗಲೂ ಅವುಗಳ ಪಾಂಗಿಟ್ಟಳಗಳಲ್ಲಿ ನಡೆಯುತ್ತವೆ. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ನಾಲ್ಕು ಬಗೆಗಳನ್ನು ಗಮನಿಸಬಹುದು: (ಕ) ಕೂಡುಪದಗಳ ಪಾಂಗಿಟ್ಟಳದಲ್ಲಿ ಒಂದು ಆಗುಗ ಪಾಂಗು ಬಂದಿದೆಯಾದರೆ, ಅವಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಆ ಪಾಂಗು ಈಡು ಪಾಂಗಾಗಿ ಮಾರ್ಪಡುತ್ತದೆ, ಮತ್ತು ಹೊಸದೊಂದು ಮಾಡುಗ ಪಾಂಗು ಸೇರುತ್ತದೆ: (6) ಬಟ್ಟೆ ಸುಕ್ಕುಗಟ್ಟಿತು > ಅವನು ಬಟ್ಟೆಯನ್ನು ಸುಕ್ಕುಗಟ್ಟಿಸಿದ. (7) ಅವನ ಬಯಕೆ ಈಡೇರಿತು > ನಾನು ಅವನ ಬಯಕೆಯನ್ನು ಈಡೇರಿಸಿದೆ. (8) ಅವನಿಗೆ ಸುದ್ದಿ ಗೊತ್ತಾಯಿತು > ನಾನು ಅವನಿಗೆ ಸುದ್ದಿಯನ್ನು ಗೊತ್ತಾಗಿಸಿದೆ. (9) ಹಲಸಿನ ಕಾಯಿ ಹಣ್ಣಾಯಿತು > ನಾನು ಹಲಸಿನ ಕಾಯಿಯನ್ನು ಹಣ್ಣಾಗಿಸಿದೆ. (ಚ) ಕೂಡುಪದಗಳ ಪಾಂಗಿಟ್ಟಳದಲ್ಲಿ ಈಗಾಗಲೇ ಒಂದು ಈಡು ಪಾಂಗು ಬಂದಿದೆಯಾದರೆ, ಅವಕ್ಕೆ ಇಸು ಒಟ್ಟನ್ನು ಸೇರಿಸಿದಾಗ ಅವುಗಳ ಮಾಡುಗ ಪಾಂಗು ಸುರು ಪಾಂಗಾಗುತ್ತದೆ: (10) ಅವನು ಕೋಣೆಯನ್ನು ತೆರವುಮಾಡಿದ > ನಾನು ಅವನಿಂದ ಕೋಣೆಯನ್ನು ತೆರವುಮಾಡಿಸಿದೆ. (11) ಅವನು ಚಿನ್ನವನ್ನು ಸೆಟ್ಟಿಯಲ್ಲಿ ಅಡವಿಟ್ಟ > ನಾನು ಅವನಿಂದ ಚಿನ್ನವನ್ನು ಸೆಟ್ಟಿಯಲ್ಲಿ ಅಡವಿಡಿಸಿದೆ. (12) ಅವಳು ಹಾಡನ್ನು ಉರುಹಾಕಿದಳು > ನಾನು ಅವಳಿಂದ ಹಾಡನ್ನು ಉರುಹಾಕಿಸಿದೆ. (ಟ) ಕೂಡುಪದದ ಪಾಂಗಿಟ್ಟಳದಲ್ಲಿ ಈಡು ಪಾಂಗಿಲ್ಲದಿದ್ದು, ಮಾಡುಗ ಪಾಂಗು ಬಂದಿದೆಯಾದರೆ, ಅದು ಈಡು ಪಾಂಗಾಗಿ ಮಾರ್ಪಡುತ್ತದೆ: (13) ಅವನು ಗಂಟುಕಟ್ಟಿದ > ನಾನು ಅವನನ್ನು ಗಂಟುಕಟ್ಟಿಸಿದೆ. (14) ಅವನು ದೂರದ ಊರಿಗೆ ಗುಳೆಹೋದ > ನಾನು ಅವನನ್ನು ದೂರದ ಊರಿಗೆ ಗುಳೆಹೋಗಿಸಿದೆ. (ತ) ಕೂಡುಪದದ ಪಾಂಗಿಟ್ಟಳದಲ್ಲಿ ಒಂದು ಗುರಿ ಪಾಂಗು ಮಾತ್ರ ಇದೆಯಾದರೆ, ಅದಕ್ಕೆ ಒಂದು ಮಾಡುಗ ಪಾಂಗು ಸೇರುತ್ತದಲ್ಲದೆ ಬೇರೆ ಯಾವ ಮಾರ್ಪಾಡೂ ನಡೆಯುವುದಿಲ್ಲ: (15) ಅವನಿಗೆ ಉಸಿರುಗಟ್ಟಿತು > ನಾನು ಅವನಿಗೆ ಉಸಿರುಗಟ್ಟಿಸಿದೆ.
8.4 ಸೇರಿಕೆಯೆಸಕದ ಪಾಂಗಿಟ್ಟಳಗಳು
ಸೇರಿಕೆಯೆಸಕದಲ್ಲಿ ಎರಡು ಪಾಂಗುಗಳ ನಡುವೆ ಒಗ್ಗುರುತಿಸುವಿಕೆಯಿದೆ; ಎಂದರೆ, ಅದರ ಎರಡು ಪಾಂಗುಗಳು ಒಬ್ಬನೇ ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ಗುರುತಿಸುತ್ತವೆ. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವಳು ಗಂಡನಿಗೆ ದೋಸೆ ಎರೆದಳು. (1ಚ) ಅವಳು ದೋಸೆ ಎರೆದುಕೊಂಡಳು. (2ಕ) ಅವಳು ತಾಯಿಯಿಂದ ಹಾಡು ಕಲಿತಳು. (2ಚ) ಅವಳು ಹಾಡು ಕಲಿತುಕೊಂಡಳು. (3ಕ) ಅವರು ತಿಂಡಿಯನ್ನು ಮಕ್ಕಳಿಗೆ ಹಂಚಿದರು. (3ಚ) ಅವರು ತಿಂಡಿಯನ್ನು ಹಂಚಿಕೊಂಡರು. (4ಕ) ಅವನು ಆಕೆಯಿಂದ ನನ್ನನ್ನು ಹೊಗಳಿಸಿದ. (4ಚ) ಅವನು ಆಕೆಯಿಂದ ಹೊಗಳಿಸಿಕೊಂಡ. ಮೇಲೆ ಕೊಟ್ಟಿರುವ (ಕ) ಸೊಲ್ಲುಗಳನ್ನು (ಚ) ಸೊಲ್ಲುಗಳೊಡನೆ ಹೋಲಿಸಿ ನೋಡಿದಲ್ಲಿ, (ಕ) ಸೊಲ್ಲುಗಳಲ್ಲಿರುವುದಕ್ಕಿಂತ (ಚ) ಸೊಲ್ಲುಗಳಲ್ಲಿ ಒಂದು ಪಾಂಗು ಕಡಿಮೆಯಿರುವುದನ್ನು ಕಾಣಬಹುದು. ಎತ್ತುಗೆಗಾಗಿ, (1ಕ) ಸೊಲ್ಲಿನ ಎರೆ ಎಸಕಪದಕ್ಕೆ ಮಾಡುಗ (ಅವಳು), ಗುರಿ (ಗಂಡನಿಗೆ) ಮತ್ತು ಈಡು (ದೋಸೆ) ಎಂಬ ಮೂರು ಪಾಂಗುಗಳಿವೆ; ಆದರೆ, (1ಚ) ಸೊಲ್ಲಿನ ಎರೆದುಕೊಳ್ಳು ಎಸಕಪದಕ್ಕೆ ಮಾಡುಗ (ಅವಳು) ಮತ್ತು ಈಡು (ದೋಸೆ) ಎಂಬ ಎರಡು ಪಾಂಗುಗಳು ಮಾತ್ರ ಇವೆ; ಅದರ ಮಾಡುಗ ಮತ್ತು ಗುರಿಗಳು ಒಂದೇ ವ್ಯಕ್ತಿಯನ್ನು ತಿಳಿಸುತ್ತಿರುವುದೇ ಇದಕ್ಕೆ ಕಾರಣ. ಉಳಿದ ಸೊಲ್ಲುಗಳಲ್ಲೂ ಹೀಗೆಯೇ. ಕೆಲವು ಕಡೆಗಳಲ್ಲಿ ಈ ರೀತಿ ಒಬ್ಬನೇ ವ್ಯಕ್ತಿ, ವಸ್ತು, ಇಲ್ಲವೇ ವಿಶಯವನ್ನು ತಿಳಿಸುವ ಎರಡು ಪಾಂಗುಗಳಲ್ಲಿ ಒಂದನ್ನು ಮಾತ್ರವೇ ಗುರುತಿಸುತ್ತಿರಬಹುದು; ಆದರೆ, ಬೇರೆ ಕೆಲವು ಕಡೆಗಳಲ್ಲಿ ಎರಡನ್ನೂ ಗುರುತಿಸುತ್ತಿದ್ದು, ಅವೆರಡೂ ಒಂದೇ ಎಂಬುದನ್ನು ಅವುಗಳಲ್ಲಿ ಒಂದನ್ನು ತಾನು ಪದದಿಂದ ಗುರುತಿಸುವ ಮೂಲಕ ತಿಳಿಸುತ್ತಿರಬಹುದು: (5ಕ) ಅವನು ಹುಡುಗನನ್ನು ಹೊಗಳಿದ. (5ಚ) ಅವನು ತನ್ನನ್ನೇ ಹೊಗಳಿಕೊಂಡ. (6ಕ) ಅವಳು ಹಾಡನ್ನು ತಾಯಿಯಿಂದ ಕಲಿತಳು. (6ಚ) ಅವಳು ಹಾಡನ್ನು ತಾನೇ ಕಲಿತುಕೊಂಡಳು. (5ಕ)ದಲ್ಲಿ ಬಂದಿರುವ ಅವನು ಮತ್ತು ಹುಡುಗನನ್ನು ಎಂಬ ಎರಡು ಪಾಂಗುಗಳು ಬೇರೆ ಬೇರೆ ವ್ಯಕ್ತಿಗಳನ್ನು ತಿಳಿಸುತ್ತವೆ, ಮತ್ತು (5ಚ)ದಲ್ಲಿ ಬಂದಿರುವ ಅವನು ಮತ್ತು ತನ್ನನ್ನೇ ಎಂಬ ಎರಡು ಪಾಂಗುಗಳು ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತಿವೆ; (6ಕ-ಚ)ದಲ್ಲೂ ಹೀಗೆಯೇ. ತಾನು ಪದ ಅದು ಬಂದಿರುವ ಸೊಲ್ಲಿನ ಆಡುಗ ಮತ್ತು ಕೇಳುಗರನ್ನು ಹೊರತು ಪಡಿಸಿ ಉಳಿದ ವ್ಯಕ್ತಿಗಳನ್ನು ಮಾತ್ರ ಗುರುತಿಸಬಲ್ಲುದು; ಹಾಗಾಗಿ, ಒಟ್ಟುಸೇರಿರುವ ಪಾಂಗುಗಳು ಆ ಸೊಲ್ಲಿನ ಆಡುಗ ಇಲ್ಲವೇ ಕೇಳುಗರಾಗಿರುವಲ್ಲಿ ತಾನು ಪದದ ಬದಲು ನಾನು ಇಲ್ಲವೇ ನೀನು ಪದವನ್ನು ಬಳಸಲಾಗುತ್ತದೆ:
(7ಕ) ನಾನು ನನ್ನನ್ನೇ ಹೊಗಳಿಕೊಂಡೆ. (7ಚ) ನೀವು ಹಾಡನ್ನು ನೀವೇ ಕಲಿತುಕೊಂಡಿದ್ದೀರಿ. ಈ ರೀತಿ ಎರಡು ಪಾಂಗುಗಳು ಗುರುತಿಸುವ ವ್ಯಕ್ತಿ, ವಸ್ತು ಇಲ್ಲವೇ ವಿಶಯ ಒಂದೇ ಆಗಿರುವ (ಮತ್ತು ಈ ಕಾರಣಕ್ಕಾಗಿ ಕೆಲವೊಮ್ಮೆ ಅವುಗಳಲ್ಲಿ ಒಂದನ್ನು ಮಾತ್ರವೇ ತಿಳಿಸುವ) ಸೊಲ್ಲುಗಳನ್ನು ಸೇರಿಕೆಯೆಸಕದ ಸೊಲ್ಲುಗಳೆಂದು ಇಲ್ಲಿ ಕರೆಯಲಾಗಿದೆ. ಇವುಗಳ ಬಳಕೆಯ ಕುರಿತಾಗಿ ಕೆಲವು ಕಟ್ಟಲೆಗಳನ್ನು, ಮತ್ತು ಬೇರೆ ಕೆಲವು ವಿಶಯಗಳನ್ನು, ಕೆಳಗೆ ಕೊಡಲಾಗಿದೆ: (1) ಸೇರಿಕೆಯೆಸಕವನ್ನು ತಿಳಿಸುವುದಕ್ಕಾಗಿ ಎಸಕಪದದ ಮೊದಲೆಸಕದ ಜೋಡಿಸುವ ರೂಪಕ್ಕೆ ಕೊಳ್ಳು ಎಂಬುದನ್ನು ಸೇರಿಸಲಾಗುತ್ತದೆ (4.3.2 ನೋಡಿ); ಇದಕ್ಕೆ ಹಿಂಬೊತ್ತಿನಲ್ಲಿ ಕೊಣ್ ಎಂಬ ಬೇರೊಂದು ರೂಪ ಇದೆ (ಮಾಡಿಕೊಂಡ). (2) ಇತ್ತೀಚೆಗೆ, ಎಂದರೆ ನಡುಗನ್ನಡದ ಹೊತ್ತಿನವರೆಗೂ, ಕೊಳ್ಳು ಎಂಬುದನ್ನು ತೆಗೆದುಕೊಳ್ಳು ಎಂಬ ಹುರುಳಿನಲ್ಲಿ ಒಂದು ಎಸಕಪದವಾಗಿ ಬಳಸಲಾಗುತ್ತಿತ್ತು; ಆದರೆ, ಇವತ್ತು ಅದು ಒಂದು ಎಸಕಪದವಾಗಿ ಬಳಕೆಯಲ್ಲಿಲ್ಲ. ಕೊಂಡುಕೊಳ್ಳು ಎಂಬ ಕೂಡುಪದದಲ್ಲಿ ಅದು ಮೊದಲೆಸಕದ ಜೋಡಿಸುವ ರೂಪವಾಗಿ ಬಳಕೆಯಲ್ಲಿದೆ; ಆದರೆ, ಇಲ್ಲಿಯೂ ಅದು ಸೇರಿಕೆಯೆಸಕದ ಕೊಳ್ಳು ಎಂಬುದ ರೊಂದಿಗೆ ಬಂದಿರುವುದನ್ನು ಗಮನಿಸಬಹುದು. (3) ಸೇರಿಕೆಯೆಸಕದ ಸೊಲ್ಲುಗಳಲ್ಲಿ ಒಟ್ಟುಸೇರುವ ಎರಡು ಪಾಂಗುಗಳಲ್ಲಿ ಒಂದು ಸೊಲ್ಲಿನ ಮಾಡುಗವಾಗಿರಬೇಕೆಂಬ ಕಟ್ಟಲೆಯಿದೆ: (8ಕ) ಅವನು ಮುದುಕನಿಗೆ ಹುಡುಗನನ್ನು ಮಾರಿದ. (8ಚ) ಅವನು ಮುದುಕನಿಗೆ ತನ್ನನ್ನೇ ಮಾರಿಕೊಂಡ. (8ಟ) ಅವನು ಮುದುಕಿಯ ಮನೆಯನ್ನು ತನಗೇನೇ ಮಾರಿಕೊಂಡ. (8ತ) *ಅವನು ಮುದುಕನಿಗೆ ಆತನನ್ನೇ (ಮುದುಕನನ್ನೇ) ಮಾರಿಕೊಂಡ. (8ಕ) ಸೊಲ್ಲಿನಲ್ಲಿ ಮಾಡುಗ, ಈಡು ಮತ್ತು ಗುರಿ ಎಂಬ ಮೂರು ಪಾಂಗು ಗಳನ್ನು ಬಳಸಲಾಗಿದೆ; ಇವುಗಳಲ್ಲಿ ಮಾಡುಗ ಮತ್ತು ಈಡು ಪಾಂಗುಗಳನ್ನು (8ಚ)ದಲ್ಲಿ ಒಟ್ಟು ಸೇರಿಸಲಾಗಿದೆ, ಮತ್ತು ಮಾಡುಗ ಮತ್ತು ಗುರಿ ಪಾಂಗುಗಳನ್ನು (8ಟ)ದಲ್ಲಿ ಒಟ್ಟು ಸೇರಿಸಲಾಗಿದೆ; ಈ ಎರಡು ಕಡೆಗಳಲ್ಲೂ ಒಟ್ಟುಸೇರಿಸಿರುವ ಎರಡು ಪಾಂಗುಗಳಲ್ಲಿ ಒಂದು ಮಾಡುಗ ಪಾಂಗಾಗಿರುವ ಕಾರಣ, ಅವೆರಡು ಸೊಲ್ಲುಗಳೂ ಸರಿಯಾಗಿವೆ. ಆದರೆ, ಗುರಿ ಮತ್ತು ಈಡು ಪಾಂಗುಗಳನ್ನು ಒಟ್ಟುಸೇರಿಸುವಂತಹ ಹುರುಳಿನಲ್ಲಿ (8ತ) ಸೊಲ್ಲು ಸರಿಯಾಗಿಲ್ಲ ಎಂಬುದನ್ನು ಗಮನಿಸಬಹುದು. (4) ಸೇರಿಕೆಯೆಸಕದ ಸೊಲ್ಲಿನಲ್ಲಿ ಒಟ್ಟುಸೇರುವ ಎರಡು ಪಾಂಗುಗಳಲ್ಲಿ ಒಂದನ್ನು (ಮಾಡುಗವನ್ನು) ಮಾತ್ರವೇ ತಿಳಿಸಿದರೂ ಸಾಕಾಗುತ್ತದೆ; ಎರಡನ್ನೂ ತಿಳಿಸಿರುವಲ್ಲಿ ಸಾಮಾನ್ಯವಾಗಿ ಅದು ಎಂತಹದು ಎಂಬುದನ್ನು ಒತ್ತಿ ಹೇಳುವ ಹುರುಳಿರುತ್ತದೆ; ಈ ಕಾರಣಕ್ಕಾಗಿ, ಅದರೊಂದಿಗೆ ಒತ್ತಿ ಹೇಳುವ ಏ ಒಟ್ಟನ್ನೂ ಬಳಸಲಾಗುತ್ತದೆ: (9ಕ) ಅವಳು ಹಲವು ಹಾಡುಗಳನ್ನು ಕಲಿತುಕೊಂಡಿದ್ದಾಳೆ. (9ಚ) ಅವಳು ಹಲವು ಹಾಡುಗಳನ್ನು ತಾನೇ ಕಲಿತುಕೊಂಡಿದ್ದಾಳೆ.
ಆದರೆ, ಮಾಡುಗದೊಂದಿಗೆ ಒಟ್ಟುಸೇರಿರುವ ಪಾಂಗು ಯಾವುದು ಎಂಬುದರ ಕುರಿತಾಗಿ ಸಂಶಯವೇಳಬಲ್ಲುದಾದರೆ, ಅದನ್ನು ಒತ್ತಿ ಹೇಳಬೇಕೆಂದಿಲ್ಲದಲ್ಲೂ ಅದು ಯಾವುದೆಂಬುದನ್ನು ತಿಳಿಸಬೇಕಾಗುತ್ತದೆ: (10ಕ) ಅವನು ಮನೆಯನ್ನು ಮಾರಿಕೊಂಡ. (10ಚ) ಅವನು ಮನೆಯನ್ನು ತನಗೇನೇ ಮಾರಿಕೊಂಡ. (10ಕ)ದಲ್ಲಿ ಮಾರಿದ್ದು ಯಾರಿಗೆ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು; ಯಾಕೆಂದರೆ, ಈ ಸೊಲ್ಲನ್ನು ಬಳಸಿರುವಲ್ಲಿ ಮಾಡುಗದೊಂದಿಗೆ ಒಟ್ಟು ಸೇರಿರುವ ಪಾಂಗು ಮಾರಾಟದಿಂದ ಬೇರೆ ಬಗೆಯ ಪ್ರಯೋಜನ ಪಡೆಯುವಂತಹ ಒಂದು ನೆರವು ಪಾಂಗಾಗಿರಬಲ್ಲುದು (8.4.1 ನೋಡಿ). ಹಾಗಾಗಿ, ಮನೆಯ ಒಡೆತನವನ್ನು ಪಡೆದ ವ್ಯಕ್ತಿ ಮಾಡುಗನೇ ಎಂಬುದಾಗಿ ತಿಳಿಸಿಹೇಳಲು ತನಗೇನೇ ಎಂಬುದನ್ನು ಬಳಸಬೇಕಾಗಿದೆ. (5) ಆಗುಗ ಪಾಂಗೂ ಸೇರಿಕೆಯೆಸಕದ ಸೊಲ್ಲುಗಳಲ್ಲಿ ಬರಬಲ್ಲುದು; ಆದರೆ, ಅಂತಹ ಸೊಲ್ಲುಗಳಲ್ಲಿ ಅದು ಸೊಲ್ಲಿನ ಪಾಂಗಿಟ್ಟಳದಲ್ಲಿರುವ ಬೇರೊಂದು ಪಾಂಗಿ ನೊಂದಿಗೆ ಒಟ್ಟುಸೇರುವುದಿಲ್ಲ; ಇದಕ್ಕೆ ಬದಲು, ಬೇರೊಬ್ಬನ ನೆರವಿಲ್ಲದೆ ಎಸಕ ನಡೆಯಿತು ಎಂಬ ಸೇರಿಕೆಯೆಸಕದಂತಹದೇ ಬೇರೊಂದು ಬಗೆಯ ಹುರುಳು ಅಲ್ಲಿ ಬರುತ್ತದೆ: (11ಕ) ಬಾನಿನಲ್ಲಿ ಮೋಡ ಕವಿದುಕೊಂಡಿದೆ. (11ಚ) ಬಳ್ಳಿ ಮರಕ್ಕೆ ಹಬ್ಬಿಕೊಂಡಿದೆ. (11ಟ) ಅವನ ಕೆನ್ನೆ ಉಬ್ಬಿಕೊಂಡಿದೆ. (11ತ) ಹುಲಿ ಗೂಡಿನಲ್ಲಿ ಸಿಲುಕಿಕೊಂಡಿದೆ. (11ಕ)ದಲ್ಲಿ ಕವಿ ಎಂಬ ಎಸಕಪದಕ್ಕೆ ಬೇಕಾಗುವ ಆಗುಗ ಮತ್ತು ಜಾಗ ಎಂಬ ಎರಡು ಪಾಂಗುಗಳೂ ಬೇರಾಗಿಯೇ ಉಳಿದಿವೆ; ಹಾಗಿದ್ದರೂ ಅದರಲ್ಲಿ ಕವಿದುಕೊಳ್ಳು ಎಂಬ ಸೇರಿಕೆಯೆಸಕದ ಪದರೂಪವನ್ನು ಬಳಸಲಾಗಿದೆ. (11ಚ)ದಲ್ಲಿ ಹಬ್ಬು ಎಸಕಪದಕ್ಕೆ ಬೇಕಾಗುವ ಆಗುಗ ಮತ್ತು ಗುರಿ ಪಾಂಗುಗಳು ಬೇರಾಗಿ ಉಳಿದಿದ್ದರೂ ಹಬ್ಬಿಕೊಳ್ಳು ಎಂಬ ಸೇರಿಕೆಯೆಸಕದ ರೂಪ ಬಂದಿದ್ದು, ಬಳ್ಳಿ ತಾನಾಗಿಯೇ ಮರಕ್ಕೆ ಹಬ್ಬಿದೆ ಎಂಬ ಹುರುಳನ್ನು ಕೊಡುತ್ತದೆ. (11ಟ- ತ)ಗಳಲ್ಲೂ ಹೀಗೆಯೇ. (6) ಸೇರಿಕೆಯೆಸಕದ ಸೊಲ್ಲಿನಲ್ಲಿ ಒಂದೇ ಎಸಕಪದದ ಪಾಂಗುಗಳೆರಡು ಒಟ್ಟುಸೇರಿರಬೇಕು; ಎರಡು ಬೇರೆ ಬೇರೆ ಎಸಕಪದಗಳ ಪಾಂಗುಗಳು ಒಂದೇ ಸೊಲ್ಲಿನಲ್ಲಿ ಒಟ್ಟುಸೇರಿ ಬಂದಿವೆಯಾದರೂ, ಅಂತಹ ಸೊಲ್ಲನ್ನು ಸೇರಿಕೆಯೆಸಕದ ಸೊಲ್ಲೆಂದು ಹೇಳಲು ಬರುವುದಿಲ್ಲ. ಯಾಕೆಂದರೆ, ಅದರಲ್ಲಿ ಒಟ್ಟುಸೇರಿರುವ ಪಾಂಗುಗಳು ಬೇರೆ ಬೇರೆ ಒಳಸೊಲ್ಲುಗಳಲ್ಲಿ ಬಂದಿರುತ್ತವೆ. ಹಾಗಾಗಿ, ಅಂತಹ ಸೊಲ್ಲುಗಳಲ್ಲಿ ತಾನು ಎಂಬುದರ ಬಳಕೆಯಾಗುವುದಾದರೂ, ಕೊಳ್ಳು ಎಂಬುದರ ಬಳಕೆಯಾಗುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲು ಗಳನ್ನು ಗಮನಿಸಬಹುದು: (12ಕ) ತನ್ನನ್ನು ಹೊರಡಿಸಲು ಅವಳು ತಾಯಿಯನ್ನು ಬರಹೇಳಿದ್ದಳು. (12ಚ) ಮನೆಗೆ ಹೋದ ಹುಡುಗನನ್ನು ಯಾರೂ ಮಾತನಾಡಿಸಲಿಲ್ಲ. (12ಕ)ದಲ್ಲಿ ತನ್ನನ್ನು ಮತ್ತು ಅವಳು ಎಂಬ ಎರಡು ಪದಗಳು ತಿಳಿಸುವ ಪಾಂಗುಗಳು ಒಂದೇ ವ್ಯಕ್ತಿಯನ್ನು ಗುರುತಿಸುತ್ತವೆ; ಆದರೆ, ಇವುಗಳಲ್ಲಿ ಮೊದಲನೆ ಯದು ಹೊರಡಿಸು ಎಂಬ ಎಸಕಪದದ ಪಾಂಗು, ಮತ್ತು ಎರಡನೆಯದು
ಬರಹೇಳು ಎಂಬ ಎಸಕಪದದ ಪಾಂಗು. ಹಾಗಾಗಿ, ಇಲ್ಲಿ ಸೇರಿಕೆಯೆಸಕ ಬಂದಿಲ್ಲ, ಮತ್ತು ಕೊಳ್ಳು ಎಂಬುದನ್ನು ಬಳಸಿಲ್ಲ; (12ಚ)ದಲ್ಲೂ ಹೀಗೆಯೇ. (7) ಹೆಚ್ಚಿನ ಎಸಕಪದಗಳಿಗೂ ಕೊಳ್ಳು ಎಂಬುದನ್ನು ಸೇರಿಸಿ ಸೇರಿಕೆಯೆಸಕದ ರೂಪಗಳನ್ನು ಪಡೆಯಲು ಬರುತ್ತದೆ; ಆದರೆ, ಕೆಲವು ಪದಗಳು ತಿಳಿಸುವ ಎಸಕಗಳಲ್ಲಿ ಸೇರಿಕೆಯ ಹುರುಳನ್ನು ಕಾಣಲು ಬಾರದಿದ್ದು, ಅಂತಹ ಎಸಕಪದಗಳು ಮಾತ್ರ ಇದಕ್ಕೆ ಹೊರಪಡಿಕೆಗಳಾಗಿ ಉಳಿಯುತ್ತವೆ. ಎತ್ತುಗೆಗಾಗಿ, ಗುಡುಗು ಎಂಬುದು ತಿಳಿಸುವ ಎಸಕದಲ್ಲಿ ಸೇರಿಕೆಯ ಹುರುಳನ್ನು ಕಾಣುವುದು ತುಂಬಾ ಕಶ್ಟ; ಹಾಗಾಗಿ, ಗುಡುಗಿಕೊಂಡಿತು ಎಂಬುದು ಬಳಕೆಯ ಲ್ಲಿಲ್ಲವೆಂದೇ ಹೇಳಲು ಬರುತ್ತದೆ.
8.4.1 ಸೇರಿಕೆಯೆಸಕದ ಹುರುಳುಗಳು
ಎಸಕಪದಗಳ ಹುರುಳುಗಳನ್ನವಲಂಬಿಸಿ, ಅವುಗಳ ಸೇರಿಕೆಯೆಸಕದ ರೂಪಗಳಿಗೆ ಸಿಗಬಲ್ಲ ಹುರುಳುಗಳಲ್ಲಿ ಕೆಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ; ಹೆಚ್ಚಿನೆಡೆ ಗಳಲ್ಲೂ ಅವುಗಳ ಎರಡು ಪಾಂಗುಗಳು ಒಬ್ಬನೇ ವ್ಯಕ್ತಿ, ವಸ್ತು ಇಲ್ಲವೇ ವಿಶಯವನ್ನು ಗುರುತಿಸುತ್ತವೆಯೆಂಬ ಸೇರಿಕೆಯ ಹುರುಳಿರುತ್ತದೆ; ಈ ರೀತಿ ಸೇರಿಕೆಯಾಗುವ ಪಾಂಗುಗಳಲ್ಲಿ ಒಂದು ಪಾಂಗು ಸೊಲ್ಲಿನ ಮಾಡುಗವಾಗಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ತನ್ನನ್ನೇ ಮರಕ್ಕೆ ಕಟ್ಟಿಕೊಂಡ. (1ಚ) ಅವನು ತನಗೇನೇ ಹೊಡೆದುಕೊಂಡ. (1ಟ) ಅವನು ತನ್ನಲ್ಲೂ ನಂಬಿಕೆಯಿರಿಸಿಕೊಳ್ಳಲಿಲ್ಲ. (1ಕ)ದಲ್ಲಿ ಮಾಡುಗ ಮತ್ತು ಈಡು ಪಾಂಗುಗಳು, (1ಚ)ದಲ್ಲಿ ಮಾಡುಗ ಮತ್ತು ಗುರಿ ಪಾಂಗುಗಳು, ಮತ್ತು (1ಟ)ದಲ್ಲಿ ಮಾಡುಗ ಮತ್ತು ಜಾಗ ಪಾಂಗುಗಳು ಒಂದೇ ವ್ಯಕ್ತಿಯನ್ನು ಗುರುತಿಸುತ್ತಿವೆ. ಈ ರೀತಿ ಎಸಕಪದದ ಪಾಂಗಿಟ್ಟಳದಲ್ಲಿರುವ ಎರಡು ಪಾಂಗುಗಳಲ್ಲಿ ಒಂದೇ ವ್ಯಕ್ತಿ ತೊಡಗಿಕೊಂಡಿದೆ ಎಂಬ ಹುರುಳು ಮಾತ್ರವಲ್ಲದೆ, ಬೇರೆಯೂ ಕೆಲವು ಹುರುಳುಗಳು ಸೇರಿಕೆಯೆಸಕದ ಪದಗಳಿಗೆ ದೊರಕಬಲ್ಲುವು; ಅವನ್ನು ಕೆಳಗೆ ವಿವರಿಸಲಾಗಿದೆ: (1) ಮೇಲೆ (8.4ರ ಮೊದಲಿಗೆ) ವಿವರಿಸಿದ ಹಾಗೆ, ಸೇರಿಕೆಯೆಸಕದ ಪದ ದೊಂದಿಗೆ ಒಂದು ಆಗುಗ ಪಾಂಗಿರುವ ಪಾಂಗಿಟ್ಟಳವೂ ಬರಬಲ್ಲುದು; ಆದರೆ, ಅಂತಹ ಕಡೆಗಳಲ್ಲಿ ಆಗುಗ ಪಾಂಗು ಆ ಪಾಂಗಿಟ್ಟಳದಲ್ಲೇನೇ ಬರುವ ಬೇರೊಂದು ಪಾಂಗಿನೊಂದಿಗೆ ಒಟ್ಟುಸೇರುವುದಿಲ್ಲ; ಇದಕ್ಕೆ ಬದಲು, ಪಾಂಗಿಟ್ಟಳದಲ್ಲಿ ಬಾರದಿರುವ ಬೇರೊಬ್ಬ ವ್ಯಕ್ತಿ ಇಲ್ಲವೇ ಒಂದು ಒತ್ತರ ಆ ಎಸಕಕ್ಕೆ ಹೊಣೆಯಲ್ಲ ಎಂಬುದನ್ನು ತಿಳಿಸುತ್ತದೆ: (2ಕ) ಬಿಸಿಲಿಗೆ ಗಿಡ ಬಾಡಿತು > ಗಿಡ ಬಾಡಿಕೊಂಡಿದೆ. (2ಚ) ಗಾಳಿಗೆ ಬಾಗಿಲು ತೆರೆಯಿತು > ಬಾಗಿಲು ತೆರೆದುಕೊಂಡಿತು. (2ಟ) ಅವನು ಮನಸ್ಸಿನಲ್ಲೇ ನೊಂದ > ಅವನು ಮನಸ್ಸಿನಲ್ಲೇ ನೊಂದುಕೊಂಡ. ಮೇಲಿನ ಸೊಲ್ಲುಗಳಲ್ಲಿ ಬಂದಿರುವ ಆಗುಗ ಪಾಂಗುಗಳು ಪಾಂಗಿಟ್ಟಳಗಳಲ್ಲಿ ಅವುಗಳೊಂದಿಗೆ ಬರುವ ಬೇರೆ ಪಾಂಗುಗಳೊಂದಿಗೆ ಒಟ್ಟುಸೇರಿಲ್ಲ; (2ಕ) ಮತ್ತು (2ಚ)ಗಳಲ್ಲಿ ಎಸಕಕ್ಕೆ ಕಾರಣವಾಗಿದ್ದ ಒತ್ತರವನ್ನು ತಿಳಿಸುವ ಗುರಿ ಪಾಂಗನ್ನು (ಬಿಸಿಲಿಗೆ ಮತ್ತು ಗಾಳಿಗೆ ಎಂಬವನ್ನು) ಬಿಡಲಾಗಿದೆ, ಮತ್ತು (2ಟ)ದಲ್ಲಿ ಅದರ ಎರಡು ಪಾಂಗುಗಳನ್ನೂ ಉಳಿಸಿಕೊಳ್ಳಲಾಗಿದೆ.
ಹಾಗಿದ್ದರೂ, ಅವುಗಳಲ್ಲಿ ಬಾಡಿಕೊಳ್ಳು, ತೆರೆದುಕೊಳ್ಳು, ಮತ್ತು ನೊಂದು ಕೊಳ್ಳು ಎಂಬ ಸೇರಿಕೆಯೆಸಕದ ಪದರೂಪಗಳು ಬಂದಿವೆ. ಈ ಎಸಕಗಳು ನಡೆಯುವು ದಕ್ಕೆ ಬೇರೆ ಯಾವ ವ್ಯಕ್ತಿ ಇಲ್ಲವೇ ಒತ್ತರವೂ ಹೊಣೆಯಲ್ಲ ಎಂಬ ಹುರುಳು ಇಲ್ಲಿ ಸಿಗುತ್ತದೆ. ಕೆಲವೊಮ್ಮೆ, ಒಂದು ಎಸಕಕ್ಕೆ ಒತ್ತರ ಕಾರಣವಾಗಿದ್ದರೂ ಸೇರಿಕೆಯೆಸಕದ ಪದವನ್ನು ಬಳಸಲು ಬರುತ್ತದೆ; ಇಂತಹ ಕಡೆಗಳಲ್ಲಿ ಆ ಎಸಕಕ್ಕೆ ಒಬ್ಬ ವ್ಯಕ್ತಿ ಕಾರಣವಲ್ಲ ಎಂಬ ಹುರುಳು ದೊರಕುತ್ತದೆ; ಎಂದರೆ, ಎಸಕಕ್ಕೆ ಒಬ್ಬ ವ್ಯಕ್ತಿ ಕಾರಣವಾಗುವುದಕ್ಕೂ ಒಂದು ಒತ್ತರ ಕಾರಣವಾಗುವುದಕ್ಕೂ ನಡುವಿನ ವ್ಯತ್ಯಾಸವನ್ನು ತಿಳಿಸಲು ಸೇರಿಕೆಯೆಸಕದ ಪದವನ್ನು ಇಲ್ಲಿ ಬಳಸಲಾಗಿದೆ: (2ತ) ಗಾಳಿಗೆ ಬಾಗಿಲು ತೆರೆದುಕೊಂಡಿತು. ಮಾಡುಗ ಪಾಂಗುಗಳನ್ನು ಬಳಸಿರುವ ಸೊಲ್ಲುಗಳಲ್ಲೂ ಈ ರೀತಿ ಪಾಂಗಿಟ್ಟಳದ ಬೇರೊಂದು ಪಾಂಗಿನೊಂದಿಗೆ ಮಾಡುಗ ಪಾಂಗು ಒಟ್ಟುಗೂಡದಿರುವಲ್ಲಿ ಸೇರಿಕೆಯೆಸಕದ ಪದವನ್ನು ಬಳಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (3ಕ) ಅವಳು ಬಾವಿಯಿಂದ ನೀರನ್ನು ಸೇದಿದಳು > ಅವಳು ಬಾವಿಯಿಂದ ನೀರನ್ನು ಸೇದಿಕೊಂಡಳು. (3ಚ) ಅವನು ಕೆರೆಯಲ್ಲಿ ಕಾಲು ತೊಳೆದ > ಅವನು ಕೆರೆಯಲ್ಲಿ ಕಾಲು ತೊಳೆದುಕೊಂಡ. (3ಟ) ಅವಳು ಒಂದು ಲೋಟೆ ನೀರು ಕುಡಿದಳು > ಅವಳು ಒಂದು ಲೋಟೆ ನೀರು ಕುಡಿದುಕೊಂಡಳು. (3ಕ) ಎತ್ತುಗೆಯ ಮೊದಲನೇ ಸೊಲ್ಲಿನಲ್ಲಿ ಸೇದು ಪದದೊಂದಿಗೆ ಮಾಡುಗ ಪಾಂಗು ಮಾತ್ರವಲ್ಲದೆ ಈಡು ಮತ್ತು ಸುರು ಪಾಂಗುಗಳೂ ಬಂದಿವೆ; ಅದರ ಎರಡನೇ ಸೊಲ್ಲಿನಲ್ಲಿ ಈ ಮೂರು ಪಾಂಗುಗಳೂ ಬೇರೆ ಬೇರಾಗಿಯೇ ಉಳಿದು ಕೊಂಡಿವೆಯಾದರೂ, ಸೇದಿಕೊಂಡು ಎಂಬ ಸೇರಿಕೆಯೆಸಕದ ಪದವನ್ನು ಬಳಸ ಲಾಗಿದೆ. ಮೇಲಿನ ಸೊಲ್ಲುಗಳ ಹಾಗೆ, ಇಲ್ಲಿಯೂ ಬೇರೊಬ್ಬನ ನೆರವಿಲ್ಲದೆ ಅವಳು ಬಾವಿಯಿಂದ ನೀರು ಸೇದಿದಳು ಎಂಬ ಹುರುಳು ಸಿಗುತ್ತದೆ. ಉಳಿದ (3ಚ-ಟ) ಎತ್ತುಗೆಗಳಲ್ಲೂ ಹೀಗೆಯೇ. (2) ಮಾಡುಗ ಪಾಂಗನ್ನು ಸೊಲ್ಲಿನಲ್ಲಿ ಬಂದಿರುವ ಬೇರೊಂದು ಪಾಂಗಿನೊಂದಿಗೆ ಸೇರಿಸುವ ಬದಲು, ಆ ಪಾಂಗು ಮಾಡುಗನ ಒಡೆತನದ್ದು, ಇಲ್ಲವೇ ಅದಕ್ಕೆ ಸಂಬಂದಿಸಿದುದು ಎಂಬ ಹುರುಳಿನಲ್ಲೂ ಸೇರಿಕೆಯೆಸಕದ ರೂಪವನ್ನು ಬಳಸಲು ಬರುತ್ತದೆ: (4ಕ) ಅವನು ಪುಸ್ತಕಗಳನ್ನು ತನ್ನ ಪೆಟ್ಟಿಗೆಯಲ್ಲಿ ತುಂಬಿಸಿಕೊಂಡ. (4ಚ) ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡ. (4ಟ) ಅವನು ಹಣ್ಣುಗಳನ್ನು ತನ್ನ ಚೀಲಕ್ಕೆ ಹಾಕಿಕೊಂಡ. (4ಕ-ಟ) ಸೊಲ್ಲುಗಳಲ್ಲಿ ಬಂದಿರುವ ಎಸಕಪದಗಳ ಪಾಂಗಿಟ್ಟಳಗಳಲ್ಲಿ ಎರಡು ಪಾಂಗುಗಳು ಒಟ್ಟುಸೇರಿಲ್ಲವಾದರೂ ಕೊಳ್ಳು ಪದದ ಬಳಕೆಯಾಗಿದೆ; ಯಾಕೆಂದರೆ, ಇಲ್ಲಿ ಎರಡು ಪಾಂಗುಗಳ ನಡುವೆ ಬೇರೊಂದು ಬಗೆಯ ಒಟ್ಟುಸೇರಿಕೆಯಿದೆ: (4ಕ)ದ ಜಾಗ (ಪೆಟ್ಟಿಗೆ), (4ಚ)ದ ಈಡು (ಬಟ್ಟೆ) ಮತ್ತು (4ಟ)ದ ಗುರಿ (ಚೀಲ) ಮಾಡುಗನದು ಎಂಬುದಾಗಿ ಅವುಗಳ ಒಡೆಯನಿಗೂ ಮಾಡುಗನಿಗೂ ನಡುವೆ ಒಟ್ಟುಸೇರುವಿಕೆಯಿದೆ, ಮತ್ತು ಇದನ್ನು ಅವುಗಳ ಮೊದಲು ಬಂದಿರುವ ತನ್ನ ಪದ ತಿಳಿಸುತ್ತದೆ; ಇದನ್ನೇ ಸೇರಿಕೆಯೆಸಕದ ಪದಗಳೂ ತಿಳಿಸುತ್ತವೆ. (3) ಇಂತಹ ಸೊಲ್ಲುಗಳಲ್ಲಿ ಕೊಳ್ಳು ಎಂಬುದನ್ನಾಗಲಿ, ಇಲ್ಲವೇ ತನ್ನ ಎಂಬುದನ್ನಾಗಲಿ ಬಳಸದಿರಲು ಬರುತ್ತದೆ:
(5ಚ) ಅವನು ಪುಸ್ತಕಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿಕೊಂಡ. (5ಟ) ಅವನು ಪುಸ್ತಕಗಳನ್ನು ತನ್ನ ಪೆಟ್ಟಿಗೆಯಲ್ಲಿ ತುಂಬಿಸಿದ. (6ಚ) ಅವನು ಬಟ್ಟೆಗಳನ್ನು ಒಗೆದುಕೊಂಡ. (6ಟ) ಅವನು ತನ್ನ ಬಟ್ಟೆಗಳನ್ನು ಒಗೆದ. ಆದರೆ, ಇಂತಹ ಸೊಲ್ಲುಗಳಲ್ಲಿ ಮಾಡುಗದೊಂದಿಗೆ ಬೇರೆ ಎರಡು ಪಾಂಗುಗಳು ಬಂದಿವೆಯಾದರೆ, ಅವುಗಳಲ್ಲಿ ಯಾವುದು ಮಾಡುಗನ ಒಡೆತನದ್ದು ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು: (5ತ) ಅವನು ತನ್ನ ಪುಸ್ತಕಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿದ. ಮೇಲೆ ಕೊಟ್ಟಿರುವ (5ಚ) ಸೊಲ್ಲಿಗೆ (5ಟ) ಸೊಲ್ಲಿನ ಹುರುಳು ಮಾತ್ರವಲ್ಲದೆ (5ತ) ಸೊಲ್ಲಿನ ಹುರುಳೂ ಬರಬಲ್ಲುದು; ಇದಲ್ಲದೆ, ಅದಕ್ಕೆ ಅವನು ಪುಸ್ತಕಗಳನ್ನು ಪೆಟ್ಟಿಗೆಯಲ್ಲಿ ಯಾರ ನೆರವೂ ಇಲ್ಲದೆ ತುಂಬಿಸಿದ ಎಂಬ ಮೂರನೆಯದೊಂದು ಹುರುಳೂ ಬರಬಲ್ಲುದು. (4) ಸಂದರ್ಬಕ್ಕೆ ತಕ್ಕಂತೆ, ಕೊಳ್ಳು ಪದ ತಿಳಿಸುವ ಸಂಬಂದ ಬದಲಾಗಬಲ್ಲುದು; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7ಕ) ಅವಳು ತನ್ನ ಬಟ್ಟೆಗಳನ್ನು ಒಗೆದುಕೊಂಡಳು. (7ಚ) ಅವಳು ತನ್ನ ಮಗಳ ಬಟ್ಟೆಗಳನ್ನು ಒಗೆದಳು. (8ಕ) ಅವಳು ತನ್ನ ಮಗಳ ಬಟ್ಟೆಗಳನ್ನು ಒಗೆದುಕೊಂಡಳು. (8ಚ) ಅವಳು ಪಕ್ಕದವಳ ಬಟ್ಟೆಯನ್ನು ಒಗೆದಳು. ತನ್ನ ಬಟ್ಟೆ ಎಂಬುದು ತನ್ನ ಮಗಳ ಬಟ್ಟೆ ಎಂಬುದಕ್ಕಿಂತ ಹತ್ತಿರದ ಸಂಬಂದವೆಂಬುದನ್ನು (7ಕ) ಮತ್ತು (7ಚ)ಗಳ ನಡುವಿನ ವ್ಯತ್ಯಾಸ ತಿಳಿಸುವುದಾದರೆ, ತನ್ನ ಮಗಳ ಬಟ್ಟೆ ಎಂಬುದು ಪಕ್ಕದವಳ ಬಟ್ಟೆ ಎಂಬುದಕ್ಕಿಂತ ಹತ್ತಿರದ ಸಂಬಂದವೆಂಬುದನ್ನು (8ಕ) ಮತ್ತು (8ಚ)ಗಳ ನಡುವಿನ ವ್ಯತ್ಯಾಸ ತಿಳಿಸುತ್ತದೆ. ಹಾಗಾಗಿ, ಸೇರಿಕೆಯೆಸಕದ ಪದವನ್ನು ಎಲ್ಲಿ ಬಳಸಬೇಕು ಎಂಬುದು ಸ್ವಲ್ಪ ಮಟ್ಟಿಗೆ ಬಳಕೆಯ ಸಂದರ್ಬವನ್ನೂ ಅವಲಂಬಿಸಿರುತ್ತದೆ. ಆದರೆ, ಎಲ್ಲಾ ಬಗೆಯ ಸೇರಿಕೆಯೆಸಕ ಪದಗಳ ಬಳಕೆಯಲ್ಲೂ ಈ ಎರಡು ಬಗೆಯ ಹುರುಳುಗಳನ್ನು ಕಾಣಲು ಬರುವುದಿಲ್ಲ; ಎತ್ತುಗೆಗಾಗಿ, ಕುಳಿತುಕೊಳ್ಳು, (ಕಯ್)ತೊಳೆದುಕೊಳ್ಳು, ಮಲಗಿಕೊಳ್ಳು, ತೊಟ್ಟುಕೊಳ್ಳು ಮೊದಲಾದ ಸೇರಿಕೆಯೆಸಕದ ಪದರೂಪಗಳನ್ನು ಬಳಸಿರುವಲ್ಲಿ ಆ ಎಸಕಗಳನ್ನು ಮಾಡುಗನು ತಾನೇ ನಡೆಸಿದ್ದಾನೆ ಇಲ್ಲವೇ ತನ್ನ ಅಂಗ ಇಲ್ಲವೇ ವಸ್ತುಗಳನ್ನೇ ಬಳಸಿ ನಡೆಸಿದ್ದಾನೆ ಎಂಬ ಹುರುಳು ಮಾತ್ರ ಸಿಗುತ್ತದೆ: (9ಕ) ಅವನು ಕಯ್ ತೊಳೆದುಕೊಂಡ. (9ಚ) ಅವನು ಕುರ್ಚಿಯಲ್ಲಿ ಕುಳಿತುಕೊಂಡ. (9ಟ) ಅವಳು ಸೀರೆ ಉಟ್ಟುಕೊಂಡಳು. (5) ಸೇರಿಕೆಯೆಸಕದ ಪದರೂಪಕ್ಕೆ ಬರಬಲ್ಲ ಇನ್ನೊಂದು ಬಗೆಯ ಹುರುಳನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು;
(10ಕ) (ಹುಲಿ ಹತ್ತಿರಕ್ಕೆ ಬಂದು ತಲಪುವ ಮೊದಲೇ) ಅವನು ಮರಕ್ಕೆ ಹತ್ತಿಕೊಂಡ. (10ಚ) (ಮಳೆ ಬರುವ ಮೊದಲೇ) ಅವನು ಮನೆಯನ್ನು ತಲಪಿಕೊಂಡ. ಮೊದಲು ತಿಳಿಸಿದ ಎಸಕ ನಡೆಯುವ ಮೊದಲೇ ಮಾಡುಗನಿಗೆ ಎರಡನೆಯ ಎಸಕವನ್ನು ನಡೆಸಲು ಸಾದ್ಯವಾಯಿತು ಎಂಬ ಹುರುಳನ್ನು ಇಲ್ಲಿ ಕೊಳ್ಳು ಪದ ಕೊಡುವ ಹಾಗೆ ಕಾಣಿಸುತ್ತದೆ. (6) ಉರುಡು, ಕಲೆ, ಬೆಸೆ, ತಳ್ಳು, ತಬ್ಬು, ದೂಡು, ಅಪ್ಪು, ಜಗಳಾಡು, ಗುದ್ದಾಡು, ಮಾತನಾಡು ಎಂಬಂತಹ ಕೆಲವು ಎಸಕಪದಗಳೊಂದಿಗೆ ಇಲ್ಲವೇ ಕೂಡುಪದಗಳೊಂದಿಗೆ ಬಂದಾಗ, ಸೇರಿಕೆಯೆಸಕದ ಪದಕ್ಕೆ ಒಬ್ಬನೊಡನೊಬ್ಬ ಇಲ್ಲವೇ ಒಂದರೊಡನೊಂದು ಎಂಬ ಎದುರೆಸಕದ ಹುರುಳು (8.5 ನೋಡಿ) ಬರುತ್ತದೆ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (11ಕ) ಹುಡುಗರು ಉರುಡಿಕೊಂಡರು. (11ಚ) ಹಾವುಗಳೆರಡು ಬೆಸೆದುಕೊಂಡುವು. (11ಟ) ಅವರಿಬ್ಬರು ಮಾತನಾಡಿಕೊಂಡರು. (11ಕ) ಸೊಲ್ಲಿಗೆ ಹುಡುಗರು ಒಬ್ಬರೊಡನೊಬ್ಬರು ಉರುಡಿದರು ಎಂಬ ಹುರುಳಿದೆ; (11ಚ-ಟ) ಸೊಲ್ಲುಗಳಲ್ಲೂ ಹೀಗೆಯೇ. ಇದಲ್ಲದೆ, ಇವುಗಳಿಗೆ ಬೇರೊಬ್ಬರ ನೆರವಿಲ್ಲದೆ ಎಂಬ ಹೆಚ್ಚಿನ ಸೇರಿಕೆಯೆಸಕದ ಹುರುಳೂ ಬರಬಲ್ಲುದು. (7) ಸೇರಿಕೆಯೆಸಕದ ಹುರುಳಿನಲ್ಲಿ ಒಂದೊಂದಾಗಿ ನಡೆಸುವ ಕೆಲಸ, ಮತ್ತು ಒಟ್ಟುಗೂಡಿದ ಕೆಲಸ ಎಂಬುದಾಗಿ ಇನ್ನೊಂದು ಬಗೆಯ ವ್ಯತ್ಯಾಸವನ್ನೂ ಕಾಣಲು ಬರುತ್ತದೆ: (12ಕ) ಕೂಟದಲ್ಲಿ ಸೇರಿರುವವರೆಲ್ಲ ತಮ್ಮನ್ನು ಹೊಗಳಿಕೊಳ್ಳುತ್ತಿದ್ದಾರೆ. (12ಚ) ಎಲ್ಲಾ ಮಕ್ಕಳೂ ಈಜಲು ಕಲಿತುಕೊಂಡರು. (12ಕ) ಸೊಲ್ಲಿಗೆ ಎರಡು ಬಗೆಯ ಹುರುಳುಗಳು ಸಿಗಬಲ್ಲುವು; ಅವರು ಒಬ್ಬರನ್ನೊಬ್ಬರು ಹೊಗಳಿಕೊಳ್ಳುತ್ತಿರಬಹುದು, ಇಲ್ಲವೇ ಎಲ್ಲರೂ ತಮ್ಮನ್ನೇ ಹೊಗಳಿಕೊಳ್ಳುತ್ತಿರಬಹುದು. ಮೊದಲನೆಯ ಹುರುಳಿನಲ್ಲಿ ನಿಜಕ್ಕೂ ಸೇರಿಕೆಯೆಸಕ ವಿಲ್ಲ; ಹಲವು ಎದುರೆಸಕದ ಹುರುಳುಗಳು ಒಟ್ಟುಸೇರಿವೆ, ಅಶ್ಟೆ; ಇದಕ್ಕೆ ಬದಲು, ಎರಡನೆಯ ಹುರುಳಿನಲ್ಲಿ ನಿಜವಾದ ಸೇರಿಕೆಯೆಸಕವಿದೆ; ಯಾಕೆಂದರೆ, ಅದರಲ್ಲಿ ಒಟ್ಟುಸೇರಿರುವ ಎಲ್ಲಾ ಎಸಕಗಳೂ ಸೇರಿಕೆಯೆಸಕಗಳಾಗಿವೆ. ಆದರೆ, (12ಚ)ದಲ್ಲಿ ಇಂತಹ ಇಪ್ಪುರುಳಿಲ್ಲ; ಯಾಕೆಂದರೆ, ಅದರಲ್ಲಿ ಒಟ್ಟು ಸೇರಿರುವ ಎಲ್ಲಾ ಎಸಕಗಳೂ ಸೇರಿಕೆಯೆಸಕಗಳಾಗಿವೆ; ಅಲ್ಲಿ (12ಕ) ಸೊಲ್ಲಿನ ಹಾಗೆ ಎದುರೆಸಕದ ಹುರುಳುಗಳು ಬರುವುದಿಲ್ಲ. (8) ಕೊಳ್ಳು-, ಕುಳ್-, ಅವಚು- ಎಂಬಂತಹ ಕೆಲವು ಎಸಕಪದಗಳು ಅವುಗಳ ಎಲ್ಲಾ ಬಳಕೆಗಳಲ್ಲೂ ಕೊಳ್ಳು ಎಂಬುದರೊಂದಿಗೆ ಸೇರಿ ಕೊಂಡುಕೊಳ್ಳು, ಕುಳಿತುಕೊಳ್ಳು, ಅವಚಿಕೊಳ್ಳು ಎಂಬಂತಹ ರೂಪದಲ್ಲಿ ಬರುತ್ತವೆ. ಇಂತಹ ಬಳಕೆಗಳಲ್ಲಿ ಕಾಣಿಸುವ ಸೇರಿಕೆಯೆಸಕದ ರೂಪಕ್ಕೆ ಹೆಚ್ಚಿನ ಹುರುಳೇನೂ ಇಲ್ಲ.
8.4.2 ಸೇರಿಕೆಯೆಸಕದ ಬಳಕೆಯಲ್ಲಿ ಪಾಂಗಿಟ್ಟಳದ ಮಾರ್ಪಾಡು
ಎಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿ ಅವನ್ನು ಸೇರಿಕೆಯೆಸಕದ ಪದಗಳನ್ನಾಗಿ ಮಾರ್ಪಡಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳಾಗುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ಆಗುಗವಿರುವ ಪಾಂಗಿಟ್ಟಳಗಳು
ಆಗುಗ ಮಾತ್ರ, ಆಗುಗ+ಗುರಿ, ಆಗುಗ+ಸುರು, ಆಗುಗ+ಜಾಗ, ಮತ್ತು ಆಗುಗ+ಈಡು ಎಂಬ ಅಯ್ದು ಬಗೆಯ ಪಾಂಗಿಟ್ಟಳಗಳಲ್ಲಿ ಆಗುಗ ಪಾಂಗು ಬರುತ್ತದೆ; ಈ ಪಾಂಗಿಟ್ಟಳಗಳನ್ನು ಪಡೆದಿರುವ ಎಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿ ಸೇರಿಕೆಯೆಸಕದ ಪದಗಳನ್ನು ಪಡೆದಾಗ, ಅವುಗಳ ಪಾಂಗುಗಳೆಲ್ಲ ಮಾರ್ಪಡದೆ ಉಳಿಯುತ್ತವೆ: (1ಕ) ಬಾಗಿಲು ತೆರೆಯಿತು > ಬಾಗಿಲು ತೆರೆದುಕೊಂಡಿತು. (1ಚ) ಹಗ್ಗ ಕಾಲಿಗೆ ತೊಡರಿತು > ಹಗ್ಗ ಕಾಲಿಗೆ ತೊಡರಿಕೊಂಡಿತು. (1ಟ) ತೊಟ್ಟಿನಿಂದ ಹಣ್ಣು ಕಳಚಿತು > ತೊಟ್ಟಿನಿಂದ ಹಣ್ಣು ಕಳಚಿ ಕೊಂಡಿತು. (1ತ) ಬಾನಿನಲ್ಲಿ ಮೋಡ ಕವಿದಿದೆ > ಬಾನಿನಲ್ಲಿ ಮೋಡ ಕವಿದು ಕೊಂಡಿದೆ. (1ಪ) ಮೋಡಗಳು ಬಾನನ್ನು ಮುಸುಕಿವೆ > ಮೋಡಗಳು ಬಾನನ್ನು ಮುಸುಕಿಕೊಂಡಿವೆ. ಒತ್ತರವನ್ನು ತಿಳಿಸುವ ಬಿಸಿಲಿಗೆ, ಗಾಳಿಗೆ, ಮಳೆಗೆ, ಬೆಂಕಿಗೆ ಮೊದಲಾದ ಗುರಿ ಪಾಂಗುಗಳು ಮಾತ್ರ ಇದಕ್ಕೆ ಹೊರಪಡಿಕೆಗಳು; ಸೇರಿಕೆಯೆಸಕದ ಪದ ಬಂದಿರುವಲ್ಲಿ ಈ ಗುರಿ ಪಾಂಗುಗಳು ಸಾಮಾನ್ಯವಾಗಿ ಬರುವುದಿಲ್ಲ: (2ಕ) ಬಿಸಿಲಿಗೆ ಗಿಡ ನಲುಗಿದೆ > ಗಿಡ ನಲುಗಿಕೊಂಡಿದೆ. (2ಚ) ಗಾಳಿಗೆ ಸೊಡರು ನಂದಿತು > ಸೊಡರು ನಂದಿಕೊಂಡಿತು. (2ಟ) ಮಳೆಗೆ ಗಿಡಗಳು ಚಿಗುರಿದುವು > ಮಳೆಗೆ ಗಿಡಗಳು ಚಿಗುರಿ ಕೊಂಡುವು. ಆಗುಗದೊಂದಿಗೆ ಬರುವ ಹೋಲು, ಕಿಲುಬು, ಸೋಕು, ಗುಡುಗು, ಮಿಂಚು, ಆಗು, ತೋಚು ಮೊದಲಾದ ಹಲವು ಎಸಕಪದಗಳು ಸೇರಿಕೆಯೆಸಕದ ರೂಪದಲ್ಲಿ ಬಳಕೆಯಾಗುವುದು ತುಂಬಾ ಅಪರೂಪ. ಅವುಗಳಲ್ಲಿ ಕೆಲವಕ್ಕೆ ಅಂತಹ ರೂಪಗಳು ಇಲ್ಲವೆಂದೂ ಹೇಳಬಹುದು. ಒಡೆ, ತೆರೆ, ತುರಿಸು, ಚುಚ್ಚು, ಮುರಿ, ಬಿಚ್ಚು, ಹರಿ, ಕದಡು, ಮಗುಚು, ಮಡಚು ಮೊದಲಾದ ಬೇರೆ ಕೆಲವು ಎಸಕಪದಗಳನ್ನು ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೂ ಬಳಸಲು ಬರುತ್ತದೆ, ಮತ್ತು ಅವುಗಳಲ್ಲಿ ಯಾವ ಮಾರ್ಪಾಡನ್ನೂ ಮಾಡದೆ ಮಾಡುಗ+ಈಡು ಎಂಬ ಪಾಂಗಿಟ್ಟಳದೊಂದಿಗೂ ಬಳಸಲು ಬರುತ್ತದೆ (8.2.1 (1) ನೋಡಿ). ಇಂತಹ ಪದಗಳೊಂದಿಗೆ ಕೊಳ್ಳು ಎಂಬುದನ್ನು ಈ ಎರಡು ಬಗೆಯ ಪಾಂಗಿಟ್ಟಳ ಗಳು ಬಂದಿರುವಲ್ಲೂ ಬಳಸಲು ಬರುತ್ತದೆ: (3ಕ) ಬಾಗಿಲು ತೆರೆಯಿತು > ಬಾಗಿಲು ತೆರೆದುಕೊಂಡಿತು. (3ಚ) ಅವನು ಬಾಗಿಲು ತೆರೆದ > ಅವನು (ತಾನೇ) ಬಾಗಿಲು ತೆರೆದು ಕೊಂಡ. (4ಕ) ಕಾಲಿಗೆ ಮುಳ್ಳು ಚುಚ್ಚಿತು > ಕಾಲಿಗೆ ಮುಳ್ಳು ಚುಚ್ಚಿಕೊಂಡಿತು. (4ಚ) ಅವನು ಕಾಲಿಗೆ ಮುಳ್ಳನ್ನು ಚುಚ್ಚಿದ > ಅವನು ಕಾಲಿಗೆ ಮುಳ್ಳನ್ನು ಚುಚ್ಚಿಕೊಂಡ. (5ಕ) ಗೆಲ್ಲು ಮುರಿಯಿತು > ಗೆಲ್ಲು ಮುರಿದುಕೊಂಡಿತು. (5ಚ) ಅವನು ಗೆಲ್ಲು ಮುರಿದ > ಅವನು ಗೆಲ್ಲು ಮುರಿದುಕೊಂಡ. (2) ಮಾಡುಗವಿರುವ ಪಾಂಗಿಟ್ಟಳಗಳು: ಮಾಡುಗ ಪಾಂಗು ಒಟ್ಟು ಎಂಟು ಬಗೆಯ ಪಾಂಗಿಟ್ಟಳಗಳಲ್ಲಿ ಬರುತ್ತದೆ; ಇವುಗಳಲ್ಲಿ ಈಡಿರುವ ಪಾಂಗಿಟ್ಟಳಗಳು ನಾಲ್ಕು, ಮತ್ತು ಈಡಿಲ್ಲದ ಪಾಂಗಿಟ್ಟಳಗಳು ನಾಲ್ಕು. ಇವುಗಳಲ್ಲಿ ಹೆಚ್ಚಿನ ಎಸಕಪದಗಳಿಗೂ ಕೊಳ್ಳು ಎಂಬುದನ್ನು ಸೇರಿಸಿ ಸೇರಿಕೆಯೆಸಕದ ಪದಗಳನ್ನು ಉಂಟುಮಾಡಲು ಬರುತ್ತದೆ.
ಈಡು ಪಾಂಗಿರುವ ಎಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿದಾಗ, ಅದರ ಹುರುಳಿನಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು ಬಗೆಯ ಮಾರ್ಪಾಡುಗಳು ಕಾಣಿಸಿಕೊಳ್ಳುತ್ತವೆ: (ಕ) ಮಾಡುಗ ಪಾಂಗು ಇನ್ನೊಂದರೊಂದಿಗೆ ಒಟ್ಟುಸೇರುವುದು; (ಚ) ಮಾಡುಗ ಪಾಂಗು ಇನ್ನೊಂದರ ಒಡೆಯನೊಂದಿಗೆ ಒಟ್ಟುಸೇರುವುದು; (ಟ) ಮಾಡುಗ ತನಗಾಗಿ ಎಸಕ ನಡೆಸುವುದು; ಮತ್ತು (ತ) ಮಾಡುಗ ಬೇರೆಯವರ ನೆರವಿಲ್ಲದೆ ಎಸಕ ನಡೆಸುವುದು. ಮಾಡುಗ ಮತ್ತು ಈಡು ಪಾಂಗುಗಳೊಂದಿಗೆ ಗುರಿ, ಸುರು, ಇಲ್ಲವೇ ಜಾಗ ಪಾಂಗುಗಳು ಬಂದಿರುವಲ್ಲಿಯೂ ಸೊಲ್ಲಿನ ಹುರುಳಿನಲ್ಲಿ ಈ ನಾಲ್ಕು ಬಗೆಯ ಮಾರ್ಪಾಡುಗಳು ನಡೆಯುತ್ತಿದ್ದು, ಅವಕ್ಕಾಗಿ ಪಾಂಗಿಟ್ಟಳದಲ್ಲಿಯೂ ಕೆಲವು ಮಾರ್ಪಾಡುಗಳನ್ನು ನಡೆಸಬೇಕಾಗುತ್ತದೆ. (1) ಮಾಡುಗ+ಈಡು ಪಾಂಗಿಟ್ಟಳವಿರುವಲ್ಲಿ ಈ ನಾಲ್ಕು ಬಗೆಯ ಮಾರ್ಪಾಡುಗಳು ನಡೆಯಬಲ್ಲುವೆಂಬುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1ಕ) ಅವನು ತನ್ನನ್ನೇ ದೂರಿಕೊಂಡ. (ಮಾಡುಗ, ಈಡು ಒಟ್ಟುಸೇರಿವೆ) (1ಚ) ಅವಳು (ತನ್ನ) ರೊಟ್ಟಿಯನ್ನು ಸುಟ್ಟುಕೊಂಡಳು. (ಮಾಡುಗನ ಒಡೆತನದ ಈಡು ಪಾಂಗು) (1ಟ) ಅವನು ಬತ್ತ ಅಳೆದುಕೊಂಡ. (ತನಗಾಗಿ, ನೆರವಿಲ್ಲದೆ) (1ತ) ಮಗು ತಿಂಡಿ ತಿಂದುಕೊಂಡಿತು. (ಬೇರೊಬ್ಬರ ನೆರವಿಲ್ಲದೆ) (2) ಮಾಡುಗ+ಈಡು+ಗುರಿ ಪಾಂಗಿಟ್ಟಳವಿರುವಲ್ಲೂ ಸೇರಿಕೆಯೆಸಕ ಪದಕ್ಕೆ ಈ ನಾಲ್ಕು ಬಗೆಯ ಹುರುಳುಗಳು ಸಿಗಬಲ್ಲುವು; ಮೊದಲನೆಯ ಹುರುಳು ಬಂದಿರುವಲ್ಲಿ ಮಾಡುಗ ಪಾಂಗು ಈಡು ಪಾಂಗಿನೊಂದಿಗಾಗಲಿ, ಇಲ್ಲವೇ ಗುರಿ ಪಾಂಗಿನೊಂದಿಗಾಗಲಿ ಒಟ್ಟುಸೇರಬಲ್ಲುದು; ಇದೇ ರೀತಿಯಲ್ಲಿ, ಎರಡನೆಯ ಹುರುಳು ಬಂದಿರುವಲ್ಲಿ ಅದು ಈಡು ಪಾಂಗಿನ ಒಡೆಯನೊಂದಿಗಾಗಲಿ ಇಲ್ಲವೇ ಗುರಿ ಪಾಂಗಿನ ಒಡೆಯನೊಂದಿಗಾಗಲಿ ಒಟ್ಟುಸೇರಬಲ್ಲುದು: (2ಕ) ಅವನು ತನ್ನನ್ನೇ ಮಂತ್ರವಾದಿಗೆ ಮಾರಿಕೊಂಡ. (ಮಾಡುಗ ಈಡಿನೊಂದಿಗೆ ಸೇರಿದೆ) (2ಚ) ಅವನು ಮನೆಯನ್ನು ತನಗೇನೇ ಮಾರಿಕೊಂಡ. (ಮಾಡುಗ ಗುರಿಯೊಂದಿಗೆ ಸೇರಿದೆ) (2ಟ) ಅವನು ತನ್ನ ಬಣ್ಣವನ್ನೇ ಗೋಡೆಗೆ ಹಚ್ಚಿಕೊಂಡ. (ಮಾಡುಗ ಈಡು ಪಾಂಗಿನ ಒಡೆಯನೊಂದಿಗೆ ಸೇರಿದೆ) (2ತ) ಅವನು ತನ್ನ ಗದ್ದೆಗೆ ನೀರು ಮೊಗೆದುಕೊಂಡ. (ಮಾಡುಗ ಗುರಿ ಪಾಂಗಿನ ಒಡೆಯನೊಂದಿಗೆ ಸೇರಿದೆ) (2ಪ) ಅವನು ಹರಿಯನ್ನು ಸಂಬಳಕ್ಕೆ ಇಟ್ಟುಕೊಂಡಿದ್ದಾನೆ. (ತನಗಾಗಿ) (2ಗ) ಅವನು ಬೆನ್ನಿಗೆ ಎಣ್ಣೆ ಬಳಿದುಕೊಂಡ. (ಬೇರೆಯವರ ನೆರವಿಲ್ಲದೆ) (3) ಮಾಡುಗ+ಈಡು+ಸುರು ಪಾಂಗಿಟ್ಟಳವಿರುವಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಒಟ್ಟುಸೇರಬಲ್ಲುವು; ಆದರೆ, ಮಾಡುಗ ಮತ್ತು ಸುರು ಪಾಂಗುಗಳು ಒಟ್ಟುಸೇರುವ ಹಾಗೆ ಕಾಣಿಸುವುದಿಲ್ಲ; ಆದರೆ, ಈಡು ಇಲ್ಲವೇ ಸುರು ಪಾಂಗುಗಳ ಒಡೆಯನೊಂದಿಗೆ ಮಾಡುಗ ಪಾಂಗು ಒಟ್ಟುಸೇರಬಲ್ಲುದು: (3ಕ) ಅವನು ತನ್ನನ್ನು ಸೂಜಿಯಿಂದ ಚುಚ್ಚಿಕೊಂಡ. (ಮಾಡುಗ ಪಾಂಗು ಈಡು ಪಾಂಗಿನೊಂದಿಗೆ ಸೇರಿದೆ) (3ಚ) ಅವನು ಚೂರಿಯಿಂದ ತನ್ನ ಕಾಲನ್ನು ಚುಚ್ಚಿಕೊಂಡ. (ಮಾಡುಗ ಈಡು ಪಾಂಗಿನ ಒಡೆಯನೊಂದಿಗೆ ಸೇರಿದೆ) (3ಟ) ಅವನು ತನ್ನ ತೋಟದಿಂದ ಹಲಸಿನ ಹಣ್ಣು ಕೊಯ್ದುಕೊಂಡ. (ಮಾಡುಗ ಪಾಂಗು ಸುರು ಪಾಂಗಿನ ಒಡೆಯನೊಂದಿಗೆ ಸೇರಿದೆ)
(3ತ) ಅವನು ನನ್ನಿಂದ ಪುಸ್ತಕವನ್ನು ಕಸಿದುಕೊಂಡ. (ತನಗಾಗಿ) (3ಪ) ಅವನು ಬಾವಿಯಿಂದ ನೀರನ್ನು ಸೇದಿಕೊಂಡ. (ನೆರವಿಲ್ಲದೆ, ತನಗಾಗಿ) (4) ಮಾಡುಗ+ಈಡು+ಜಾಗ ಪಾಂಗಿಟ್ಟಳವಿರುವಲ್ಲಿ ಮೇಲಿನ ಎಲ್ಲಾ ನಾಲ್ಕು ಬಗೆಯ ಹುರುಳುಗಳೂ ಕಾಣಿಸಿಕೊಳ್ಳಬಲ್ಲುವು; ಇದಲ್ಲದೆ, ಮಾಡುಗ ಪಾಂಗು ಈಡು ಇಲ್ಲವೇ ಜಾಗ ಪಾಂಗಿನೊಂದಿಗೆ ಇಲ್ಲವೇ ಅವುಗಳ ಒಡೆಯನೊಂದಿಗೆ ಒಟ್ಟುಸೇರಬಲ್ಲುದು: (4ಕ) ಅವನು ತನ್ನನ್ನೇ ಸೂಜಿಯಲ್ಲಿ ಕುತ್ತಿಕೊಂಡ. (ಮಾಡುಗ ಪಾಂಗು ಈಡು ಪಾಂಗಿನೊಂದಿಗೆ ಸೇರಿದೆ) (4ಚ) ಅವನು ಕೇಳ್ವಿಗಳನ್ನು ತನ್ನಲ್ಲೇ ಎತ್ತಿಕೊಂಡ. (ಮಾಡುಗ ಪಾಂಗು ಜಾಗ ಪಾಂಗಿನೊಂದಿಗೆ ಸೇರಿದೆ) (4ಟ) ಅವನು ತನ್ನ ಬಟ್ಟೆಗಳನ್ನು ಕೆರೆಯಲ್ಲಿ ತೊಳೆದುಕೊಂಡ. (ಮಾಡುಗ ಪಾಂಗು ಈಡು ಪಾಂಗಿನ ಒಡೆಯನೊಂದಿಗೆ ಸೇರಿದೆ) (4ತ) ಅವನು ಹಣ್ಣುಗಳನ್ನು ತನ್ನ ಚೀಲದಲ್ಲಿ ತುಂಬಿಸಿಕೊಂಡ. (ಮಾಡುಗ ಪಾಂಗು ಜಾಗ ಪಾಂಗಿನ ಒಡೆಯನೊಂದಿಗೆ ಸೇರಿದೆ) (4ಪ) ಅವಳು ಹಪ್ಪಳಗಳನ್ನು ಎಣ್ಣೆಯಲ್ಲಿ ಕರಿದುಕೊಂಡಳು. (ಬೇರೆಯವರ ನೆರವಿಲ್ಲದೆ, ತನಗಾಗಿ) (5) ಮಾಡುಗ+ಗುರಿ ಪಾಂಗಿಟ್ಟಳ ಬಂದಿರುವ ಕೆಲವೆಡೆಗಳಲ್ಲಿ ಮಾಡುಗ ಪಾಂಗು ಗುರಿ ಪಾಂಗಿನೊಂದಿಗೆ ಸೇರಬಲ್ಲುದು, ಮತ್ತು ಬೇರೊಬ್ಬರ ನೆರವಿಲ್ಲದೆ ನಡೆಸಿದುದು ಎಂಬ ಹುರುಳೂ ಬರಬಲ್ಲುದು: (5ಕ) ಅವನು ತನಗೇನೇ ಹೊಡೆದುಕೊಂಡ. (ಮಾಡುಗ ಪಾಂಗು ಗುರಿ ಪಾಂಗಿನೊಂದಿಗೆ ಸೇರಿದೆ) (5ಚ) ಅವನು ಒಳಕ್ಕೆ ನುಸುಳಿಕೊಂಡ. (ಬೇರೊಬ್ಬರ ನೆರವಿಲ್ಲದೆ) (5ಚ) ಅವನು ಆ ಊರಿಗೆ ಹೊಂದಿಕೊಂಡ. (6) ಮಾಡುಗ+ಸುರು ಮತ್ತು ಮಾಡುಗ+ಜಾಗ ಎಂಬ ಪಾಂಗಿಟ್ಟಳಗಳು ಬಂದಿರುವಲ್ಲಿ ಎರಡು ಪಾಂಗುಗಳು ಒಟ್ಟುಸೇರುವಂತಹ ಬಳಕೆಗಳು ಕಾಣಿಸುವುದಿಲ್ಲ; ಆದರೆ, ಬೇರೊಬ್ಬರ ನೆರವಿಲ್ಲದೆ ಎಂಬ ಹುರುಳು ಈ ಎರಡು ಕಡೆಗಳಲ್ಲೂ ದೊರಕುತ್ತದೆ: (6ಕ) ಅವನು ಗುಡ್ಡದಿಂದ ಹಾರಿಕೊಂಡ. (6ಚ) ಹುಡುಗ ಮರದಿಂದ ಇಳಿದುಕೊಂಡ. (7ಕ) ಅವರು ಅಟ್ಟದಲ್ಲಿ ಅಡಗಿಕೊಂಡರು. (7ಚ) ಅವನು ಮಂಚದಲ್ಲಿ ಮಲಗಿಕೊಂಡ. (7) ಮಾಡುಗ ಮಾತ್ರ ಎಂಬ ಪಾಂಗಿಟ್ಟಳ ಬಂದಿರುವಲ್ಲಿಯೂ ಮುಕ್ಯವಾಗಿ ಬೇರೆಯವರ ನೆರವಿಲ್ಲದೆ ಎಂಬ ಹುರುಳು ದೊರಕುತ್ತದೆ: (8ಕ) ಮಗು ನಿಂತುಕೊಂಡಿದೆ. (8ಚ) ಅವಳು (ತನ್ನಶ್ಟಕ್ಕೇ) ಹಾಡಿಕೊಂಡಳು.
ಇದಲ್ಲದೆ, ಮೇಲೆ 8.4.1(6)ರಲ್ಲಿ ತಿಳಿಸಿದ ಹಾಗೆ, ಉರುಡು, ಕೂಡು, ಕಲೆ, ತಬ್ಬು ಎಂಬಂತಹ ಕೆಲವು ಎಸಕಪದಗಳೊಂದಿಗೆ ಕೊಳ್ಳು ಎಂಬುದು ಸೇರಿದಾಗ, ಒಬ್ಬನಿಗೊಬ್ಬ ಇಲ್ಲವೇ ಒಂದಕ್ಕೊಂದು ಎಂಬ ಎದುರೆಸಕದ ಹುರುಳೂ ದೊರಕುತ್ತದೆ. (9ಕ) ಹುಡುಗರು ಉರುಡಿಕೊಂಡರು. (9ಚ) ಅವೆರಡು ಕಲೆತುಕೊಂಡುವು.
8.4.3 ಇಸುವೆಸಕ ಪದಗಳೊಂದಿಗೆ ಬಳಕೆ
ಕೊಳ್ಳು ಎಂಬುದನ್ನು ಇಸುವೆಸಕ ಪದಗಳಿಗೂ ಸೇರಿಸಲು ಬರುತ್ತದೆ, ಮತ್ತು ಹೀಗೆ ಸೇರಿಸಿದಾಗಲೂ, ಮೇಲೆ ವಿವರಿಸಿದಂತಹ ನಾಲ್ಕು ಬಗೆಯ ಹುರುಳುಗಳು ದೊರಕಬಲ್ಲುವು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಹಕ್ಕಿಯನ್ನು ಬಲೆಗೆ ಸಿಲುಕಿಸಿದ > ಅವನು ತನ್ನನ್ನೇ ಬಲೆಗೆ ಸಿಲುಕಿಸಿಕೊಂಡ. (1ಚ) ಅವನು ತನ್ನ ಬೆಕ್ಕನ್ನೇ ಬಲೆಗೆ ಸಿಲುಕಿಸಿಕೊಂಡ. (1ಟ) ಅವಳು ಎರಡು ರೊಟ್ಟಿ ಸುಟ್ಟುಕೊಂಡಳು. (1ತ) ಅವಳು ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಕೊಂಡಳು. (1ಕ)ದಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಒಟ್ಟುಸೇರಿವೆ ಎಂಬ ಹುರುಳು, (1ಚ)ದಲ್ಲಿ ಮಾಡುಗದೊಂದಿಗೆ ಈಡಿನ ಒಡೆಯ ಒಂದಾಗಿದೆ ಎಂಬ ಹುರುಳು, ಮತ್ತು (1ಟ-ತ)ಗಳಲ್ಲಿ ಎಸಕವನ್ನು ಬೇರೆಯವರ ನೆರವಿಲ್ಲದೆ ನಡೆಸಲಾಗಿದೆ ಇಲ್ಲವೇ ತನಗಾಗಿ ನಡೆಸಲಾಗಿದೆ ಎಂಬ ಹುರುಳು ಸಿಗಬಲ್ಲುದು. ಇದಲ್ಲದೆ, ಇಸುವೆಸಕಪದಗಳಿಗೆ ಕೊಳ್ಳು ಎಂಬುದನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಕೆಳಗೆ ವಿವರಿಸಿದಂತಹ ಬೇರೆ ಕೆಲವು ಮಾರ್ಪಾಡುಗಳೂ ನಡೆಯುತ್ತವೆ: (1) ಒಲಿ, ಒಪ್ಪು, ಹೆದರು, ಬೆದರು, ಅಂಜು, ಮುಳಿ, ಸೋಲು, ಮಣಿ, (ಕಯ್) ಮುಗಿ, ಹುಟ್ಟು ಎಂಬಂತಹ ಕೆಲವು ಎಸಕಪದಗಳ ಇಸುವೆಸಕ ರೂಪಕ್ಕೆ ಮಾಡುಗ+ಈಡು ಎಂಬ ಪಾಂಗಿಟ್ಟಳವಿದೆ; ಅವಕ್ಕೆ ಕೊಳ್ಳು ಎಂಬುದನ್ನು ಸೇರಿಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಬರುವ ಈಡು ಪಾಂಗು ಮಾಡುಗ ಪಾಂಗಾಗಿಯೂ, ಮಾಡುಗ ಪಾಂಗು ಸುರು ಪಾಂಗಾಗಿಯೂ ಮಾರ್ಪಡಬಲ್ಲುವು: (2ಕ) ನಾನು ಅವನನ್ನು ಸೋಲಿಸಿದೆ > ಅವನು ನನ್ನಿಂದ ಸೋಲಿಸಿ ಕೊಂಡ. (2ಚ) ನಾನು ಅವನನ್ನು ಹೆದರಿಸಿದೆ > ಅವನು ನನ್ನಿಂದ ಹೆದರಿಸಿಕೊಂಡ. (2ಟ) ನಾನು ಅವನನ್ನು ಕಯ್ಮುಗಿಸಿದೆ > ಅವನು ನನ್ನಿಂದ ಕಯ್ಮುಗಿಸಿ ಕೊಂಡ. (2) ಇಳಿ, ಹತ್ತು, ತಲಪು, ತೊಡಗು, ಹೊಗು ಮೊದಲಾದ ಪದಗಳ ಇಸುವೆಸಕ ರೂಪಕ್ಕೆ ಮಾಡುಗ+ಈಡು+ಗುರಿ ಎಂಬ ಪಾಂಗಿಟ್ಟಳವಿದೆ; ಇವಕ್ಕೆ ಕೊಳ್ಳು ಎಂಬುದನ್ನು ಸೇರಿಸಿದಾಗ, ಅವುಗಳ ಮಾಡುಗ ಪಾಂಗು ಸುರು ಪಾಂಗಾಗ ಬಲ್ಲುದು, ಮತ್ತು ಈಡು ಪಾಂಗು ಮಾಡುಗ ಪಾಂಗಾಗಬಲ್ಲುದು: (3ಕ) ನಾನು ಅವನನ್ನು ಮರಕ್ಕೆ ಹತ್ತಿಸಿದೆ > ಅವನು ನನ್ನಿಂದ ಮರಕ್ಕೆ ಹತ್ತಿಸಿಕೊಂಡ. (3ಚ) ನಾನು ಅವನನ್ನು ಮನೆಗೆ ತಲಪಿಸಿದೆ > ಅವನು ನನ್ನಿಂದ ಮನೆಗೆ ತಲಪಿಸಿಕೊಂಡ.
(3) ಇದೇ ರೀತಿಯಲ್ಲಿ, ಮಾಡುಗ+ಈಡು+ಜಾಗ ಪಾಂಗಿಟ್ಟಳವಿರುವ ಗೆಲ್ಲು, ಈಜು, ಅಡಗು, ಪಳಗು ಮೊದಲಾದ ಕೆಲವು ಎಸಕಪದಗಳ ಇಸುವೆಸಕ ರೂಪ ಗಳಿಗೂ ಕೊಳ್ಳು ಎಂಬುದನ್ನು ಸೇರಿಸಲು ಬರುತ್ತದೆ, ಮತ್ತು ಹಾಗೆ ಸೇರಿಸಿದಾಗ ಮೇಲೆ ತಿಳಿಸಿದಂತಹ ಮಾರ್ಪಾಡೂ ಅವುಗಳ ಪಾಂಗಿಟ್ಟಳದಲ್ಲಿ ನಡೆಯಬಲ್ಲುದು: (4ಕ) ನಾನು ಅವನನ್ನು ಕೆಲಸದಲ್ಲಿ ಪಳಗಿಸಿದೆ > ಅವನು ನನ್ನಿಂದ ಕೆಲಸದಲ್ಲಿ ಪಳಗಿಸಿಕೊಂಡ. (4ಚ) ನಾನು ಅವನನ್ನು ಅಟ್ಟದಲ್ಲಿ ಅಡಗಿಸಿದೆ > ಅವನು ನನ್ನಿಂದ ಅಟ್ಟದಲ್ಲಿ ಅಡಗಿಸಿಕೊಂಡ. (4) ಮಾಡುಗ+ಈಡು+ಸುರು ಪಾಂಗಿಟ್ಟಳವಿರುವ ಎಸಕಪದಗಳ ಇಸುವೆಸಕ ರೂಪಕ್ಕೆ ಕೊಳ್ಳು ಎಂಬುದನ್ನು ಸೇರಿಸಿರುವಲ್ಲಿ ಮೊದಲಿಗಿದ್ದ ಮಾಡುಗ ಪಾಂಗನ್ನು ಸುರು ಪಾಂಗಾಗಿ ಮಾರ್ಪಡಿಸಿ ಬಳಸಬೇಕಿದ್ದಲ್ಲಿ, ಮೊದಲಿಗಿದ್ದ ಸುರು ಪಾಂಗನ್ನು ಬಳಸದಿರಬೇಕಾಗುತ್ತದೆ: (5) ನಾನು ಅವನನ್ನು ಗುಡ್ದದಿಂದ ದುಮುಕಿಸಿದೆ > (ಕ) ಅವನು ನನ್ನಿಂದ ದುಮುಕಿಸಿಕೊಂಡ (ಚ) ಅವನು ಗುಡ್ಡದಿಂದ ದುಮುಕಿಸಿ ಕೊಂಡ. (6) ಅವನನ್ನು ನಾನು ಗೆಲ್ಲಿನಿಂದ ನೇತಾಡಿಸಿದೆ > (ಕ) ಅವನು ನನ್ನಿಂದ ನೇತಾಡಿಸಿಕೊಂಡ (ಚ) ಅವನು ಗೆಲ್ಲಿನಿಂದ ನೇತಾಡಿಸಿ ಕೊಂಡ. (5) ಮಾಡುಗ ಮಾತ್ರ ಎಂಬ ಪಾಂಗಿಟ್ಟಳವಿರುವ ಹಾಡು, ನಿಲ್ಲು, ಕುಣಿ, ದುಡಿ, ಬದುಕು, ಬಳಲು ಎಂಬಂತಹ ಕೆಲವು ಎಸಕಪದಗಳ ಇಸುವೆಸಕ ರೂಪಗಳಿಗೂ ಮಾಡುಗ+ಈಡು ಎಂಬ ಪಾಂಗಿಟ್ಟಳ ದೊರೆಯುತ್ತದೆ; ಅವಕ್ಕೆ ಕೊಳ್ಳು ಎಂಬುದನ್ನು ಸೇರಿಸಿರುವಲ್ಲಿ ಮೊದಲಿಗಿದ್ದ ಮಾಡುಗ ಪಾಂಗು ಸುರು ಪಾಂಗಾಗಿ, ಮತ್ತು ಮೊದಲಿಗಿದ್ದ ಈಡು ಪಾಂಗು ಮಾಡುಗ ಪಾಂಗಾಗಿ ಮಾರ್ಪಡಬಲ್ಲುವು: (7ಕ) ನಾನು ಅವನನ್ನು ದುಡಿಸಿದೆ > ಅವನು ನನ್ನಿಂದ ದುಡಿಸಿಕೊಂಡ. (7ಚ) ನಾನು ಅವನನ್ನು ಹಾಡಿಸಿದೆ > ಅವನು ನನ್ನಿಂದ ಹಾಡಿಸಿಕೊಂಡ. ಆದರೆ, ಇಂತಹ ಕಡೆಗಳಲ್ಲಿ ಕೊಳ್ಳು ಎಂಬುದನ್ನು ತನಗಾಗಿ ಎಂಬ ಹುರುಳಿನಲ್ಲಿ ಬಳಸುವುದೇ ಹೆಚ್ಚು, ಮತ್ತು ಅಂತಹ ಬಳಕೆಗಳಲ್ಲಿ ಅವುಗಳ ಪಾಂಗಿಟ್ಟಳದಲ್ಲಿ ಯಾವ ಮಾರ್ಪಾಡೂ ನಡೆಯುವುದಿಲ್ಲ. (8ಕ) ನಾನು ಅವನನ್ನು ದುಡಿಸಿದೆ > ನಾನು ಅವನನ್ನು ದುಡಿಸಿಕೊಂಡೆ. (8ಚ) ನಾನು ಅವನನ್ನು ನಿಲ್ಲಿಸಿದೆ > ನಾನು ಅವನನ್ನು ನಿಲ್ಲಿಸಿಕೊಂಡೆ.
8.4.4 ಕೂಡುಪದಗಳ ಸೇರಿಕೆಯೆಸಕ ರೂಪಗಳು
ಎಲ್ಲಾ ಬಗೆಯ ಕೂಡುಪದಗಳಿಗೂ ಕೊಳ್ಳು ಎಂಬುದನ್ನು ಸೇರಿಸಿ ಸೇರಿಕೆಯೆಸಕದ ರೂಪಗಳನ್ನು ಪಡೆಯಲು ಬರುವುದಿಲ್ಲ. ಎತ್ತುಗೆಗಾಗಿ, ಹೋಗು, ಬಿಡು, ಇಲ್ಲವೇ ಕೆಡು ಪದಗಳಲ್ಲಿ ಕೊನೆಗೊಳ್ಳುವ ಕೂಡುಪದಗಳಿಗೆ ಸೇರಿಕೆಯೆಸಕದ ರೂಪಗಳಿಲ್ಲ; ಆದರೆ, ಕಟ್ಟು, ಆಡು, ಇಡು, ಹಾಕು ಎಂಬಂತಹ ಬೇರೆ ಕೆಲವು ಪದಗಳಲ್ಲಿ ಕೊನೆಗೊಳ್ಳುವ ಕೂಡುಪದಗಳಿಂದ ಸೇರಿಕೆಯೆಸಕ ಪದಗಳನ್ನು ಪಡೆಯಲು ಬರುತ್ತದೆ: (1ಕ) ಎಲ್ಲರೂ ಗುಂಪುಕಟ್ಟಿದ್ದಾರೆ > ಎಲ್ಲರೂ ಗುಂಪುಕಟ್ಟಿಕೊಂಡಿದ್ದಾರೆ. (1ಚ) ಜನರು ಕಚ್ಚಾಡಿದರು > ಜನರು ಕಚ್ಚಾಡಿಕೊಂಡರು. (1ಟ) ಅವನು ಎಲ್ಲವನ್ನೂ ನೆನಪಿಟ್ಟಿದ್ದಾನೆ > ಅವನು ಎಲ್ಲವನ್ನೂ ನೆನಪಿಟ್ಟುಕೊಂಡಿದ್ದಾನೆ.
(1ತ) ಅವನು ಕಲ್ಲನ್ನು ಕಾಲಿನ ಮೇಲೆ ಹಾಕಿದ > ಅವನು ಕಲ್ಲನ್ನು ತನ್ನ ಕಾಲಿನ ಮೇಲೆ ಹಾಕಿಕೊಂಡ. ಹೆಚ್ಚಿನೆಡೆಗಳಲ್ಲೂ ಇಂತಹ ಸೇರಿಕೆಯೆಸಕ ಪದಗಳಿಗೆ ತನಗಾಗಿ ಇಲ್ಲವೇ ಬೇರೆಯವರ ನೆರವಿಲ್ಲದೆ ಎಂಬ ಹುರುಳು ದೊರಕುತ್ತದೆ; (1ತ)ದಂತಹ ಕೆಲವೆಡೆ ಗಳಲ್ಲಿ ಮಾಡುಗ ಪಾಂಗಿನೊಂದಿಗೆ ಈಡು ಪಾಂಗಿನ ಒಡೆಯ ಒಂದುಗೂಡಿದೆ. ಇದಲ್ಲದೆ, ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಎರಡು ಪಾಂಗುಗಳು ಒಟ್ಟು ಸೇರಿರುವು ದನ್ನೂ ಕಾಣಬಹುದು: (2ಕ) ಆಕೆ ಅವನನ್ನು ಮರುಳುಮಾಡಿದಳು > ಆಕೆ ತನ್ನನ್ನೇ ಮರುಳು ಮಾಡಿಕೊಂಡಳು. (2ಚ) ಅವರು ಮಕ್ಕಳೊಳಗೆ ಹಣವನ್ನು ಪಾಲುಮಾಡಿದರು > ಅವರು ತಮ್ಮೊಳಗೇನೇ ಹಣವನ್ನು ಪಾಲುಮಾಡಿಕೊಂಡರು. ಕೂಡುಪದಗಳಿಗೆ ಇಸು ಒಟ್ಟನ್ನು ಸೇರಿಸಲು ಬರುತ್ತದೆ ಎಂಬುದನ್ನು ಮೇಲೆ (8.3.7)ರಲ್ಲಿ ವಿವರಿಸಲಾಗಿದೆ; ಅಂತಹ ಇಸುವೆಸಕ ಪದಗಳ ಬಳಿಕವೂ ಕೊಳ್ಳು ಎಂಬುದನ್ನು ಬಳಸಲು ಬರುತ್ತದೆ: (3ಕ) ನಾನು ಅವನನ್ನು ಒಳಸೇರಿಸಿದೆ > ನಾನು ಅವನನ್ನು ಒಳಸೇರಿಸಿ ಕೊಂಡೆ. (3ಚ) ನಾನು ಹುಡುಗನಿಂದ ಅವನನ್ನು ಬಗ್ಗುಬಡಿಸಿದೆ > ನಾನು ಹುಡುಗನಿಂದ ನನ್ನನ್ನೇ ಬಗ್ಗುಬಡಿಸಿಕೊಂಡೆ. (3ಟ) ನಾನು ಅವಳಿಂದ ಹುಡುಗನನ್ನು ಎಚ್ಚರಗೊಳಿಸಿದೆ > ನಾನು ಅವಳಿಂದ ನನ್ನನ್ನೇ ಎಚ್ಚರಗೊಳಿಸಿಕೊಂಡೆ.
8.5 ಎದುರೆಸಕದ ಪಾಂಗಿಟ್ಟಳಗಳು
ಎದುರೆಸಕವನ್ನು ತಿಳಿಸುವ ಸೊಲ್ಲುಗಳಲ್ಲಿ ಸಾಮಾನ್ಯವಾಗಿ ಎರಡು ಎಸಕಗಳನ್ನು ಒಟ್ಟು ಸೇರಿಸಿ ಹೇಳಲಾಗುತ್ತದೆ; ಮತ್ತು ಇವುಗಳಲ್ಲಿ ಒಂದು ಇನ್ನೊಂದರ ಎದುರೆಸಕವಾಗಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಹರಿಗೆ ಹೊಡೆದ. (1ಚ) ಹರಿ ರಾಜುವಿಗೆ ಹೊಡೆದ. (1ಟ) ರಾಜು ಮತ್ತು ಹರಿ ಒಬ್ಬರಿಗೊಬ್ಬರು ಹೊಡೆದರು. (1ಕ) ಸೊಲ್ಲಿನಲ್ಲಿ ರಾಜು ಹರಿಗೆ ಏನು ಮಾಡಿದ್ದಾನೆಂದು ತಿಳಿಸಲಾಗಿದೆಯೋ ಅದನ್ನೇ (1ಚ) ಸೊಲ್ಲಿನಲ್ಲಿ ಹರಿ ರಾಜುವಿಗೆ ಮಾಡಿದ್ದಾನೆಂದು ತಿಳಿಸಲಾಗಿದೆ; ಎಂದರೆ, ಈ ಎರಡು ಸೊಲ್ಲುಗಳು ತಿಳಿಸುವ ಎಸಕಗಳು ಎದುರುಹುರುಳಿನ ಎಸಕಗಳು. (1ಟ) ಸೊಲ್ಲಿನಲ್ಲಿ ಈ ಎರಡು ಎದುರುಹುರುಳಿನ ಎಸಕಗಳನ್ನು ಒಟ್ಟುಸೇರಿಸಿ ಒಂದೇ ಸೊಲ್ಲಾಗುವಂತೆ ಮಾಡಿ ತಿಳಿಸಲಾಗಿದೆ, ಮತ್ತು ಈ ಕಾರಣಕ್ಕಾಗಿ ಅದನ್ನು ಇಲ್ಲಿ ಎದುರೆಸಕದ ಸೊಲ್ಲೆಂದು ಕರೆಯಲಾಗಿದೆ. ಹೀಗೆ ಒಟ್ಟುಸೇರಿಸಿರುವ ಸೊಲ್ಲಿನಲ್ಲಿ ರಾಜು ಹರಿಗೆ ಏನು ಮಾಡಿದ ಎಂಬುದ ನ್ನಾಗಲಿ, ಇಲ್ಲವೇ ಹರಿ ರಾಜುವಿಗೆ ಏನು ಮಾಡಿದ ಎಂಬುದನ್ನಾಗಲಿ ರಾಜುವಿನ ಇಲ್ಲವೇ ಹರಿಯ ಕಡೆಯಿಂದ ತೋರಿಸುವ ಬದಲು, ಇಬ್ಬರ ಕಡೆಯಿಂದ ಒಟ್ಟಾಗಿ ತೋರಿಸಲಾಗಿದೆ, ಮತ್ತು ಅದಕ್ಕಾಗಿ ಅವರಿಬ್ಬರನ್ನು ಒಂದೇ ಪಾಂಗಿನ ಅಂಗಗಳನ್ನಾಗಿ ಮಾಡಲಾಗಿದೆ. ಹೀಗೆ ಒಟ್ಟುಸೇರಿಸಿರುವ ಪಾಂಗುಗಳನ್ನು ಮತ್ತು ಎಂಬ ಪದದಿಂದ ಬೇರ್ಪಡಿಸಿ ಹೇಳಬಹುದು, ಇಲ್ಲವೇ ಅವರು ಎಂಬುದಾಗಿ ಹಲವೆಣಿಕೆಯ ರೂಪದ ಮೂಲಕ ಒಂದು ಮಾಡಿಯೂ ತಿಳಿಸಬಹುದು:
(2ಕ) ರಮೆ ಮತ್ತು ಜಾನಕಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. (2ಚ) ಅವರು ಒಬ್ಬರನ್ನೊಬ್ಬರು ದೂರುತ್ತಿದ್ದರು. ಒಟ್ಟುಮಾಡಿರುವ ಪಾಂಗುಗಳು ಮನುಶ್ಯರನ್ನು ಗುರುತಿಸುವುವಾದರೆ ಒಬ್ಬರು ಪದವನ್ನು ಬಳಸಲಾಗುತ್ತದೆ, ಮತ್ತು ಉಳಿದುವನ್ನು ಗುರುತಿಸುವುವಾದರೆ ಒಂದು ಪದವನ್ನು ಬಳಸಲಾಗುತ್ತದೆ: (3ಕ) ರಾಜು ಮತ್ತು ಹರಿ ಒಬ್ಬರಿಗೊಬ್ಬರು ಡಿಕ್ಕಿಹೊಡೆದರು. (3ಚ) ಕಾರು ಮತ್ತು ಬಸ್ಸುಗಳು ಒಂದಕ್ಕೊಂದು ಡಿಕ್ಕಿಹೊಡೆದುವು. ಒಬ್ಬರು ಮತ್ತು ಒಂದು ಎಂಬ ಈ ಎರಡು ಪದಗಳು ಮಾತ್ರ (ಅವು ಗುರುತಿಸುವ ಪಾಂಗುಗಳ ಗುರ್ತವನ್ನವಲಂಬಿಸಿ) ಇಂತಹ ಎದುರೆಸಕದ ಸೊಲ್ಲುಗಳಲ್ಲಿ ಬಳಕೆಯಾಗುತ್ತವೆ; ಇಬ್ಬರು, ಮೂವರು, ಇಲ್ಲವೇ ಎರಡು, ಮೂರು ಮೊದಲಾದ ಬೇರೆ ಎಣಿಕೆಪದಗಳು ಅವುಗಳಲ್ಲಿ ಬಳಕೆಯಾಗುವುದಿಲ್ಲ. (4) *ಅವರು ಇಬ್ಬರಿಗಿಬ್ಬರು ಹೊಡೆದಾಡಿದರು.
8.5.1 ಹಂಚಿಕೆಕಂತೆ ಮತ್ತು ಪತ್ತುಗೆಕಂತೆ
ಇಂತಹ ಎದುರೆಸಕದ ಸೊಲ್ಲುಗಳಲ್ಲಿ ಎರಡು ಪಾಂಗುಗಳನ್ನು ಒಟ್ಟುಸೇರಿಸಲಾಗಿದೆ ಎಂಬುದನ್ನು ಮಾತ್ರವಲ್ಲದೆ, ಆ ಎರಡು ಪಾಂಗುಗಳ ನಡುವೆ ಎಂತಹ ಸಂಬಂದವಿದೆ ಎಂಬುದನ್ನೂ (ಎಂದರೆ, ಎದುರೆಸಕದ ಅಂಗಗಳಾಗಿರುವ ಎರಡು ಎಸಕಗಳಲ್ಲಿ ಈ ಪಾಂಗುಗಳು ಎಂತಹ ಪತ್ತುಗೆಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನೂ) ತಿಳಿಸ ಬೇಕಾಗುತ್ತದೆ; ಇದಕ್ಕಾಗಿ ಇಂತಹ ಸೊಲ್ಲುಗಳಲ್ಲಿ ಒಟ್ಟುಸೇರಿಸಿದ ಎರಡು ಹೆಸರು ಕಂತೆಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಮತ್ತು ಹರಿ ಒಬ್ಬರಿಗೊಬ್ಬರು ಹೊಡೆಯುತ್ತಿದ್ದರು. (1ಚ) ಅವರು ಒಬ್ಬರನ್ನೊಬ್ಬರು ದೂರುತ್ತಿದ್ದರು. (1ಕ)ದಲ್ಲಿ ರಾಜು ಮತ್ತು ಹರಿ ಮತ್ತು ಒಬ್ಬರಿಗೊಬ್ಬರು ಎಂಬ ಎರಡು ಒಟ್ಟುಸೇರಿಸಿದ ಹೆಸರುಕಂತೆಗಳು ಬಂದಿದ್ದು, ಅವೆರಡೂ ಒಂದೇ ಒಟ್ಟುಸೇರಿಕೆಯನ್ನು ತಿಳಿಸುತ್ತವೆ; ಆದರೆ, ಇವುಗಳಲ್ಲಿ ಮೊದಲನೆಯದು ಯಾವ ಎರಡು ಪಾಂಗುಗಳನ್ನು ಒಟ್ಟುಸೇರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ, ಮತ್ತು ಎರಡನೆಯದು ಆ ರೀತಿ ಒಟ್ಟುಸೇರಿಸಲಾಗಿರುವ ಪಾಂಗುಗಳ ನಡುವೆ ಗುರಿ-ಮಾಡುಗ ಸಂಬಂದವಿದೆ ಎಂಬುದನ್ನು ತಿಳಿಸುತ್ತದೆ. ಇವುಗಳಲ್ಲಿ ರಾಜು ಮತ್ತು ಹರಿ ಎಂಬ ಮೊದಲನೆಯ ಹೆಸರುಕಂತೆಯನ್ನು ಹಂಚಿಕೆಕಂತೆಯೆಂದು ಕರೆಯಬಹುದು, ಮತ್ತು ಒಬ್ಬರಿಗೊಬ್ಬರು ಎಂಬ ಎರಡನೆಯ ಹೆಸರುಕಂತೆಯನ್ನು ಪತ್ತುಗೆಕಂತೆಯೆಂದು ಕರೆಯಬಹುದು. ಎರಡು ಪಾಂಗುಗಳನ್ನು ಒಟ್ಟುಸೇರಿಸಲಾಗಿದೆ ಎಂಬುದನ್ನು ಮೇಲೆ (1ಕ) ದಲ್ಲಿರುವ ರಾಜು ಮತ್ತು ಹರಿ ಎಂಬ ಹಂಚಿಕೆಕಂತೆಯಲ್ಲಿ ಮತ್ತು ಎಂಬ ಪದದ ಮೂಲಕ ತಿಳಿಸಲಾಗಿದೆ, ಮತ್ತು (1ಚ)ದಲ್ಲಿರುವ ಅವರು ಎಂಬ ಇನ್ನೊಂದು ಹಂಚಿಕೆಕಂತೆಯಲ್ಲಿ ಹಲವೆಣಿಕೆಯ ರು ಒಟ್ಟಿನ ಮೂಲಕ ತಿಳಿಸಲಾಗಿದೆ. ಮೇಲೆ (1ಕ)ದಲ್ಲಿರುವ ಒಬ್ಬರಿಗೊಬ್ಬರು ಎಂಬ ಪತ್ತುಗೆಕಂತೆ ಒಟ್ಟುಸೇರಿರುವ ಪಾಂಗುಗಳ ನಡುವೆ ಗುರಿ- ಮಾಡುಗ’ಸಂಬಂದವಿದೆ ಎಂಬುದನ್ನು ಗೆ ಒಟ್ಟಿನ ಮೂಲಕ ತಿಳಿಸುತ್ತದೆ, ಮತ್ತು (1ಚ)ದಲ್ಲಿರುವ ಒಬ್ಬರನ್ನೊಬ್ಬರು ಎಂಬ
ಇನ್ನೊಂದು ಪತ್ತುಗೆಕಂತೆ ಒಟ್ಟುಸೇರಿರುವ ಪಾಂಗುಗಳ ನಡುವೆ ಈಡು-ಮಾಡುಗ’ಸಂಬಂದವಿದೆ ಎಂಬುದನ್ನು ಅನ್ನು ಒಟ್ಟಿನ ಮೂಲಕ ತಿಳಿಸುತ್ತದೆ. ಇಂತಹ ಪತ್ತುಗೆಕಂತೆಗಳಲ್ಲಿ ಎರಡು ಪದಗಳಿದ್ದು, ಅವುಗಳಲ್ಲಿ ಮೊದಲನೆಯದು ಮಾತ್ರ ಒಂದು ಪತ್ತುಗೆಯೊಟ್ಟಿನೊಂದಿಗೆ ಬರುತ್ತದೆ; ಎರಡನೆಯದರೊಂದಿಗೆ ಪತ್ತುಗೆ ಒಟ್ಟು ಬರುವುದಿಲ್ಲ. ಯಾಕೆಂದರೆ, ಮೊದಲನೆಯದು ಗುರಿ, ಈಡು, ಸುರು ಇಲ್ಲವೇ ಜಾಗ ಪಾಂಗುಗಳನ್ನು ತಿಳಿಸಬಲ್ಲುದು, ಮತ್ತು ಇದಕ್ಕಾಗಿ ಅದರೊಂದಿಗೆ ಗೆ, ಅನ್ನು, ಇಂದ ಮತ್ತು ಅಲ್ಲಿ ಎಂಬ ಪತ್ತುಗೆ ಒಟ್ಟುಗಳಲ್ಲೊಂದು ಬರಬೇಕಾಗುತ್ತದೆ. ಎರಡನೆಯದು ಮಾಡುಗ ಇಲ್ಲವೇ ಆಗುಗ ಪಾಂಗುಗಳನ್ನು ಮಾತ್ರ ತಿಳಿಸಬಲ್ಲುದು, ಮತ್ತು ಇದಕ್ಕಾಗಿ ಅದು ಪತ್ತುಗೆ ಒಟ್ಟನ್ನು ಪಡೆಯಬೇಕಾಗಿಲ್ಲ (ಮಾಡುಗ ಮತ್ತು ಆಗುಗಗಳನ್ನು ತಿಳಿಸಲು ಕನ್ನಡದಲ್ಲಿ ಪತ್ತುಗೆ ಒಟ್ಟುಗಳೂ ಇಲ್ಲ). ಒಟ್ಟುಸೇರಿರುವ ಪಾಂಗುಗಳ ನಡುವೆ ಮಾಡುಗ-ಈಡು, ಮಾಡುಗ-ಸುರು, ಮಾಡುಗ-ಗುರಿ ಇಲ್ಲವೇ ಮಾಡುಗ-ಜಾಗ ಎಂಬ ಸಂಬಂದಗಳಿರಬಲ್ಲುವು ಎಂಬುದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು: (1ಕ) ಅವರು ಒಬ್ಬರನ್ನೊಬ್ಬರು ಹೊಗಳುತ್ತಿದ್ದರು. (1ಚ) ಅವರು ಒಬ್ಬರಿಂದೊಬ್ಬರು ಹಣ ಪಡೆಯುತ್ತಿದ್ದರು. (1ಟ) ಅವರು ಒಬ್ಬರಿಗೊಬ್ಬರು ಹೊಡೆಯುತ್ತಿದ್ದರು. (1ತ) ಅವರು ಒಬ್ಬರಲ್ಲೊಬ್ಬರು ನಂಬಿಕೆಯನ್ನಿರಿಸಿದ್ದರು. ಎಂದರೆ, ಮೇಲಿನ ಸೊಲ್ಲುಗಳನ್ನು ಕೆಳಗೆ ಕೊಟ್ಟಿರುವಂತಹ ಸೊಲ್ಲುಗಳ ಒಟ್ಟುಸೇರಿಕೆಯಿಂದ ಪಡೆಯಲು ಬರುತ್ತದೆ: (2ಕ) ಅವನು ಇವನನ್ನು ಹೊಗಳುತ್ತಿದ್ದ, ಮತ್ತು ಇವನು ಅವನನ್ನು ಹೊಗಳುತ್ತಿದ್ದ. (2ಚ) ಅವನು ಇವನಿಂದ ಹಣ ಪಡೆಯುತ್ತಿದ್ದ, ಮತ್ತು ಇವನು ಅವನಿಂದ ಹಣ ಪಡೆಯುತ್ತಿದ್ದ. (2ಟ) ಅವನು ಇವನಿಗೆ ಹೊಡೆದ, ಮತ್ತು ಇವನು ಅವನಿಗೆ ಹೊಡೆದ. (2ತ) ಅವನು ಇವನಲ್ಲಿ ನಂಬಿಕೆಯನ್ನಿರಿಸಿದ್ದ, ಮತ್ತು ಇವನು ಅವನಲ್ಲಿ ನಂಬಿಕೆಯನ್ನಿರಿಸಿದ್ದ. (1) ಎದುರೆಸಕದ ಸೊಲ್ಲುಗಳಲ್ಲಿ ಆಗುಗ ಪಾಂಗಿನ ಬಳಕೆ ಕಡಿಮೆ; ಹಾಗಿದ್ದರೂ, ಆಗುಗ+ಈಡು ಮತ್ತು ಆಗುಗ+ಗುರಿ ಎಂಬ ಎರಡು ಬಗೆಯ ಒಟ್ಟುಸೇರಿಕೆಗಳು ಅವುಗಳಲ್ಲಿ ಬರಬಲ್ಲುವೆಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (3ಕ) ಅವರು ಒಬ್ಬರನ್ನೊಬ್ಬರು ಮರೆತರು. (3ಚ) ಪೆಟ್ಟಿಗೆಗಳು ಒಂದಕ್ಕೊಂದು ತಗಲಿವೆ. (2) ಅನ್ನು, ಇಂದ, ಗೆ ಮತ್ತು ಅಲ್ಲಿ ಎಂಬ ಪತ್ತುಗೆಯೊಟ್ಟುಗಳ ಮೂಲಕ ಮಾತ್ರವಲ್ಲದೆ, ಬೇರೆ ಪದಗಳ ಮೂಲಕವೂ ಒಟ್ಟುಸೇರಿರುವ ಎರಡು ಪಾಂಗುಗಳ ನಡುವಿನ ಸಂಬಂದವನ್ನು ಇಂತಹ ಸೊಲ್ಲುಗಳಲ್ಲಿ ತಿಳಿಸಲು ಬರುತ್ತದೆ: (4ಕ) ಅವರು ಒಬ್ಬರ ಮೇಲೊಬ್ಬರು ನೀರು ಚೆಲ್ಲಿದರು. (4ಚ) ಅವರು ಒಬ್ಬರೊಡನೊಬ್ಬರು ಜಗಳಾಡಿದರು. (4ಟ) ರಾಜು ಮತ್ತು ಹರಿ ಒಬ್ಬರ ಹತ್ತಿರ ಒಬ್ಬರು ಕುಳಿತಿದ್ದರು. (4ತ) ಅವರು ಒಬ್ಬರ ಮುಂದೊಬ್ಬರು ನಿಂತಿದ್ದರು. ಮೇಲಿನ ಸೊಲ್ಲುಗಳಲ್ಲಿ ಒಟ್ಟುಸೇರಿರುವ ಪಾಂಗುಗಳ ನಡುವಿರುವ ಬೇರೆ ಕೆಲವು ಸಂಬಂದಗಳನ್ನು ತಿಳಿಸುವುದಕ್ಕಾಗಿ ಮೇಲೆ, ಒಡನೆ, ಹತ್ತಿರ, ಮತ್ತು ಮುಂದೆ ಎಂಬ ಜಾಗವನ್ನು ತಿಳಿಸುವ ಪದಗಳನ್ನು ಪತ್ತುಗೆಕಂತೆಯಲ್ಲಿ ಬಳಸಲಾಗಿದೆ.
(3) ಜಾಗವನ್ನು ಮಾತ್ರವಲ್ಲದೆ, ಹೋಲಿಕೆಯನ್ನು ತಿಳಿಸುವ ಒಟ್ಟು ಇಲ್ಲವೇ ಪದಗಳೂ ಪತ್ತುಗೆಕಂತೆಯಲ್ಲಿ ಬರಬಲ್ಲುವು: (5ಕ) ಈ ಹೂಗಳು ಒಂದಕ್ಕಿಂತ ಒಂದು ಚನ್ನಾಗಿವೆ. (5ಚ) ಹುಡುಗರು ಒಬ್ಬರ ಹಾಗೊಬ್ಬರು ಕುಣಿಯುತ್ತಿದ್ದಾರೆ. (4) ಈ ರೀತಿ ಒಟ್ಟುಸೇರಿರುವ ಪಾಂಗುಗಳ ನಡುವಿನ ಸಂಬಂದ ಹೆಸರು ಪತ್ತುಗೆಯ ಮೂಲಕವೂ ಉಂಟಾದುದಿರಬಲ್ಲುದು: (6ಕ) ರಾಜು ಮತ್ತು ಹರಿ ಒಬ್ಬರ ಕಾರನ್ನೊಬ್ಬರು ತೊಳೆಯುತ್ತಿದ್ದರು. (6ಚ) ಅವರು ಒಬ್ಬರ ಗುಟ್ಟನ್ನೊಬ್ಬರು ಬೇರೆಯವರಿಗೆ ತಿಳಿಸಿದ್ದರು. (6ಟ) ನಾಯಿಗಳು ಒಂದರ ಕಾಲನ್ನೊಂದು ಕಚ್ಚಿಹಿಡಿದಿದ್ದುವು. (6ಕ)ದಲ್ಲಿ ರಾಜು ಮತ್ತು ಹರಿ ಎಂಬ ಇಬ್ಬರು ವ್ಯಕ್ತಿಗಳನ್ನು ಒಟ್ಟುಸೇರಿಸ ಲಾಗಿದ್ದು, ಅವರ ನಡುವಿನ ಸಂಬಂದ, ಒಬ್ಬರ ಕಾರನ್ನೊಬ್ಬರು ಎಂಬ ಪತ್ತುಗೆ ಕಂತೆಯಲ್ಲಿ ತಿಳಿಸಿದ ಹಾಗೆ, ಒಬ್ಬರ ಎಂಬ ಹೆಸರುಪತ್ತುಗೆ ರೂಪದ ಮೂಲಕ ಉಂಟಾಗಿದೆ. (5) ಇಸುವೆಸಕಪದಗಳನ್ನು ಬಳಸಿರುವಲ್ಲಿ ಕಯ್ಯಲ್ಲಿ ಇಲ್ಲವೇ ಹತ್ತಿರ ಎಂಬ ಪದಗಳ ಮೂಲಕವೂ ಒಟ್ಟುಸೇರಿರುವ ಪಾಂಗುಗಳ ನಡುವಿನ ಸಂಬಂದವನ್ನು ತಿಳಿಸಲು ಬರುತ್ತದೆ: (7ಕ) ಅವರು ಒಬ್ಬರ ಕಯ್ಯಲ್ಲೊಬ್ಬರು ಬಾವಿಯಿಂದ ನೀರು ಸೇದಿಸಿದರು. (7ಚ) ಅವರು ಒಬ್ಬರ ಹತ್ತಿರ ಒಬ್ಬರು ಕಬ್ಬಿನಿಂದ ರಸ ಹಿಂಡಿಸಿದರು. (7ಟ) ಅವರು ಒಬ್ಬರ ಕಯ್ಯಲ್ಲೊಬ್ಬರು ಗೋಡೆಗೆ ಸುಣ್ಣ ಮೆತ್ತಿಸಿದರು. (6) ಪತ್ತುಗೆಕಂತೆಯಲ್ಲಿ ಬರುವ ಎರಡು ಪದಗಳ ನಡುವೆ ಅವು ತಿಳಿಸುವ ಪಾಂಗುಗಳ ನಡುವಿನ ಸಂಬಂದವನ್ನು ತಿಳಿಸುವ ಒಟ್ಟು ಇಲ್ಲವೇ ಪದಗಳು ಮಾತ್ರ ಬರಬಲ್ಲುವಲ್ಲದೆ, ಬೇರೆ ಪದಗಳು ಬರಲಾರವು. ಹೀಗಿದ್ದರೂ, ಈ ಸಂಬಂದ ಸಾಕಶ್ಟು ಸಿಕ್ಕಲಾಗಿರಬಲ್ಲುದು: (8ಕ) ಒಬ್ಬರ ಪುಸ್ತಕದ ತಟ್ಟಿಯನ್ನೊಬ್ಬರು ಹರಿದುಹಾಕಿದರು. (8ಚ) ಒಬ್ಬರ ಗೊಂಬೆಯ ಕಾಲನ್ನೊಬ್ಬರು ತುಂಡುಮಾಡಿದರು. (8ಟ) ಒಬ್ಬರ ಮನೆಯ ಮೇಲಿನ ಮಾಡನ್ನೊಬ್ಬರು ಒಡೆಯುತ್ತಿದ್ದರು. (8ತ) ಒಂದರ ಬಾಲದ ತುದಿಯನ್ನೊಂದು ಕಚ್ಚಿಕೊಂಡಿದ್ದುವು. ಈ ರೀತಿ ಸಿಕ್ಕಲಾಗಿರುವ ಪತ್ತುಗೆಕಂತೆ ಬಂದಿರುವಲ್ಲಿ ಹಂಚಿಕೆಕಂತೆಯನ್ನು ಬಳಸದಿರಲೂ ಬರುತ್ತದೆ ಎಂಬುದನ್ನು ಮೇಲಿನ (8ಕ-ತ) ಸೊಲ್ಲುಗಳಲ್ಲಿ ಕಾಣಬಹುದು. (7) ಹಂಚಿಕೆಕಂತೆ ಮತ್ತು ಪತ್ತುಗೆಕಂತೆಗಳ ನಡುವೆ ಬೇರೆ ಪದಗಳು ಇಲ್ಲವೇ ಪದಕಂತೆಗಳು ಬರಬಲ್ಲುವು; ಆದರೆ, ಹಂಚಿಕೆಕಂತೆ ಯಾವಾಗಲೂ ಪತ್ತುಗೆಕಂತೆಯ ಮೊದಲು ಬಂದಿರುತ್ತದೆ: (9ಕ) ಅವರು ನೆನಪಾದಾಗಲೆಲ್ಲ ಒಬ್ಬರನ್ನೊಬ್ಬರು ಹೊಗಳುತ್ತಿದ್ದರು. (9ಚ) ಅವರು ತೋಟದಲ್ಲಿ ಸಿಕ್ಕಿದ ಕಾಯಿಗಳನ್ನು ಒಬ್ಬರಿಗೊಬ್ಬರು ಮಾರಿದರು. (9ಟ) *ಒಬ್ಬರನ್ನೊಬ್ಬರು ಅವರು ಹೊಗಳಿದರು. ಹಂಚಿಕೆಕಂತೆಯನ್ನು ಪತ್ತುಗೆಕಂತೆಯ ಬಳಿಕ ಬಳಸಿರುವ (9ಟ) ಸೊಲ್ಲು ಸರಿಯಾ ಗಿಲ್ಲ ಎಂಬುದನ್ನು ಗಮನಿಸಬಹುದು.
(8) ಹಂಚಿಕೆಕಂತೆಯಲ್ಲಿ ಕಾಣಿಸುವ ಮನುಶ್ಯರು ಮತ್ತು ಉಳಿದವರು ಎಂಬ ವ್ಯತ್ಯಾಸವನ್ನು ಮಾತ್ರ ಪತ್ತುಗೆಕಂತೆಯಲ್ಲಿ ಬರುವ ಒಬ್ಬರು-ಒಂದು ವ್ಯತ್ಯಾಸ ತಿಳಿಸುತ್ತದೆ; ಬೇರೆ ಯಾವ ವ್ಯತ್ಯಾಸವನ್ನೂ ಅದು ತಿಳಿಸುವುದಿಲ್ಲ. ಎತ್ತುಗೆಗಾಗಿ, ಹಂಚಿಕೆಕಂತೆಯಲ್ಲಿ ಕಾಣಿಸುವ ಆಡುಗ, ಕೇಳುಗ ಮತ್ತು ಉಳಿದವರು ಎಂಬ ವ್ಯತ್ಯಾಸವನ್ನು ಪತ್ತುಗೆಕಂತೆ ತೋರಿಸುವುದಿಲ್ಲ: (10ಕ) ನಾವು ಒಬ್ಬರನ್ನೊಬ್ಬರು ಮಾತನಾಡಿಸಿದೆವು. (10ಚ) ನೀವು ಒಬ್ಬರನ್ನೊಬ್ಬರು ಮಾತನಾಡಿಸಿದಿರಿ. (10ಟ) ಅವರು ಒಬ್ಬರನ್ನೊಬ್ಬರು ಮಾತನಾಡಿಸಿದರು.
8.5.2 ಪತ್ತುಗೆಕಂತೆಯನ್ನು ಹೋಲುವ ಬೇರೆ ಬಗೆಯ ಇಟ್ಟಳಗಳು
ಪತ್ತುಗೆಕಂತೆಗಳಲ್ಲಿ ಮೊದಲನೆಯ ಪದದೊಂದಿಗೆ ಯಾವುದಾದರೊಂದು ಪತ್ತುಗೆಯ ಒಟ್ಟು ಇಲ್ಲವೇ ಪದ ಬಂದಿರುತ್ತದೆ (ಒಬ್ಬರನ್ನೊಬ್ಬ, ಒಂದಕ್ಕೊಂದು, ಒಂದರ ಮೇಲೊಂದು); ಈ ರೀತಿ ಮೊದಲನೆಯ ಪದದೊಂದಿಗೆ ಪತ್ತುಗೆಯ ಒಟ್ಟು ಬಾರದಿರುವ ಒಬ್ಬೊಬ್ಬರು, ಒಬ್ಬೊಬ್ಬರನ್ನು, ಒಂದೊಂದಕ್ಕೆ ಮೊದಲಾದ ಎಣಿಕೆಪದಗಳ ಸೇರಿಕೆಗೆ ಎದುರೆಸಕದ ಹುರುಳು ಬರುವುದಿಲ್ಲ: (1ಕ) ಒಬ್ಬೊಬ್ಬರಿಗೆ ಒಂದೊಂದು ಪುಸ್ತಕ ಸಿಕ್ಕಿದೆ. (1ಚ) ಅವರಲ್ಲಿ ಇಬ್ಬಿಬ್ಬರನ್ನು ಒಳಗೆ ಬಿಡಿ. (1ಕ) ಸೊಲ್ಲನ್ನು ಒಬ್ಬರಿಗೆ ಒಂದು ಪುಸ್ತಕ ಸಿಕ್ಕಿದೆ’ಎಂಬಂತಹ ಹಲವು ಸೊಲ್ಲುಗಳ ಸೇರಿಕೆಯಿಂದ ಉಂಟುಮಾಡಲು ಬರುತ್ತದೆಯೇನೋ ನಿಜ; ಆದರೆ, ಈ ಒಳಸೊಲ್ಲುಗಳ ನಡುವೆ ಎದುರೆಸಕದ ಸೊಲ್ಲುಗಳ ನಡುವಿರುವಂತಹ ಸಂಬಂದ ವಿಲ್ಲ. ಪತ್ತುಗೆಕಂತೆಯ ಎರಡು ಪದಗಳೊಂದಿಗೂ ಪತ್ತುಗೆಯ ಒಟ್ಟನ್ನು ಇಲ್ಲವೇ ಪದಗಳನ್ನು ಸೇರಿಸಿರುವ ರೂಪಗಳಿಗೆ ಎದುರೆಸಕದ ಹುರುಳಿಲ್ಲ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (2ಕ) ಒಂದರ ಮೇಲೊಂದನ್ನು ಇರಿಸಿ ಕಟ್ಟಿದರು. (2ಚ) ಇವುಗಳಲ್ಲಿ ಒಂದರಿಂದೊಂದನ್ನು ಕಳೆಯಬೇಕು. ಪತ್ತುಗೆಕಂತೆಯಾಗಿ ಬಳಕೆಯಾಗುವ ಒಬ್ಬರ(ನ್ನೊ)ಬ್ಬರು ಇಲ್ಲವೇ ಒಂದ (ನ್ನೊ)ಂದು ಎಂಬ ರೂಪಗಳು ಒಬ್ಬೊಬ್ಬರ(ನ್ನು) ಒಬ್ಬೊಬ್ಬರು ಇಲ್ಲವೇ ಒಂದೊಂದ(ನ್ನು) ಒಂದೊಂದು ಎಂಬ ಇಮ್ಮಡಿ ರೂಪಗಳಿಗೆ ಸಂಬಂದಿಸಿವೆ. ಇದು ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಹೋಲಿಸಿ ನೋಡಿದಾಗ ತಿಳಿಯುತ್ತದೆ: (3ಕ) ಅವರಲ್ಲಿ ಒಬ್ಬೊಬ್ಬರು ಒಬ್ಬೊಬ್ಬರಿಗೆ ಹೊಡೆದರು. (3ಚ) ಅವರು ಒಬ್ಬರಿಗೊಬ್ಬರು ಹೊಡೆದರು. (4ಕ) ಅವುಗಳಲ್ಲಿ ಒಂದೊಂದು ಒಂದೊಂದನ್ನು ಕಚ್ಚಿದುವು. (4ಚ) ಅವು ಒಂದನ್ನೊಂದು ಕಚ್ಚಿದುವು. ಆದರೆ, ಅವೆರಡರ ನಡುವೆ ಕೆಲವು ಮುಕ್ಯವಾದ ವ್ಯತ್ಯಾಸಗಳೂ ಇವೆ: ಮೊದಲನೆಯದಾಗಿ, ಅವುಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ: ಎತ್ತುಗೆಗಾಗಿ, (3ಕ) ಸೊಲ್ಲಿನಂತೆ ಒಬ್ಬ ಒಬ್ಬನಿಗೆ ಮಾತ್ರ ಹೊಡೆದಿರಬಲ್ಲ; ಆದರೆ, (3ಚ) ಸೊಲ್ಲಿನಂತೆ ಒಬ್ಬ ಹಲವರಿಗೆ ಹೊಡೆದಿರಬಲ್ಲ. ಇದಲ್ಲದೆ, (ಚ) ಸೊಲ್ಲುಗಳಲ್ಲಿರುವ ಎದುರೆಸಕದ ಹುರುಳು (ಕ) ಸೊಲ್ಲುಗಳಲ್ಲಿಲ್ಲ: (3ಕ)ದಲ್ಲಿ ಹೊಡೆದವರು ಮತ್ತು ಹೊಡೆತ ತಿಂದವರು ಬೇರೆ ಬೇರೆ.
ಎರಡನೆಯದಾಗಿ, (ಚ) ಸೊಲ್ಲುಗಳಲ್ಲಿ ಅವುಗಳ ನೆಲೆ ಬದಲಾಗಿದೆ; ಸಾಮಾನ್ಯವಾಗಿ ಸೊಲ್ಲಿನ ನೆಲೆಯಾಗಿ ಆಗುಗ ಇಲ್ಲವೇ ಮಾಡುಗ ಬಂದಿರುತ್ತದೆ; ಆದರೆ, ಎದುರೆಸಕದ ಸೊಲ್ಲುಗಳಲ್ಲಿ ಹಂಚಿಕೆಕಂತೆಯ ನೆಲೆಯಾಗಿ ಗುರಿ, ಈಡು, ಜಾಗ ಮೊದಲಾದವುಗಳು ಬಂದಿರುತ್ತವೆ. ಇಮ್ಮಡಿ ರೂಪವಿರುವ ಸೊಲ್ಲುಗಳಲ್ಲೂ ನೆಲೆಯನ್ನು ಬದಲಿಸಲು ಬರುತ್ತದೆ; ಇದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (3ಟ) ಅವರಲ್ಲಿ ಒಬ್ಬೊಬ್ಬರಿಗೆ ಒಬ್ಬೊಬ್ಬರು ಹೊಡೆದರು. (4ಟ) ಅವುಗಳಲ್ಲಿ ಒಂದೊಂದನ್ನು ಒಂದೊಂದು ಕಚ್ಚಿದುವು. ಆದರೆ, ಎದುರೆಸಕದ ಹಂಚಿಕೆಕಂತೆಯಲ್ಲಿ ಆ ರೀತಿ ನೆಲೆಯನ್ನು ಬದಲಿಸಲೇ ಬೇಕಾಗುತ್ತದೆ (ಒಬ್ಬರನ್ನೊಬ್ಬರು ಇಲ್ಲವೇ ಒಬ್ಬರಿಗೊಬ್ಬರು ಎಂಬವುಗಳಿಗೆ ಬದಲಾಗಿ ಒಬ್ಬೊಬ್ಬರನ್ನು ಇಲ್ಲವೇ ಒಬ್ಬೊಬ್ಬರಿಗೆ ಎಂಬುದನ್ನು ಎದುರೆಸಕದ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ). ಮೂರನೆಯದಾಗಿ, ಪತ್ತುಗೆಕಂತೆಯಲ್ಲಿ ಪದಗಳ ಇಮ್ಮಡಿ ರೂಪವನ್ನು ಒತ್ತೆರೂಪವಾಗಿ ಬದಲಾಯಿಸಲಾಗಿದೆ, ಮತ್ತು ಹಾಗೆ ಬದಲಾಯಿಸಿದ್ದರೂ ಅವುಗಳ ಹಲವೆಣಿಕೆಯ ಹುರುಳು ಬದಲಾಗದೆ ಉಳಿದಿದೆ. ಎತ್ತುಗೆಗಾಗಿ, ಕೆಳಗಿನ ಸೊಲ್ಲುಗಳನ್ನು ಗಮನಿಸಬಹುದು: (5ಕ) ಅವರಲ್ಲಿ ಒಬ್ಬೊಬ್ಬರು ಒಬ್ಬೊಬ್ಬರನ್ನು ದೂಡಿದರು. (5ಚ) ಅವರಲ್ಲಿ ಒಬ್ಬ (ಇನ್ನೊ)ಬ್ಬನನ್ನು ದೂಡಿದ. (5ಟ) ಅವರು ಒಬ್ಬರನ್ನೊಬ್ಬರು ದೂಡಿದರು. (5ತ) ಅವರಿಬ್ಬರು ಒಬ್ಬರನ್ನೊಬ್ಬರು ದೂಡಿದರು. (5ಕ)ದಲ್ಲಿದ್ದ ಇಮ್ಮಡಿ ರೂಪಗಳನ್ನು (ಒಬ್ಬೊಬ್ಬರು ಮತ್ತು ಒಬ್ಬೊಬ್ಬರನ್ನು) (5ಚ)ದಲ್ಲಿ ಒತ್ತೆರೂಪವಾಗಿ ಬದಲಾಯಿಸಲಾಗಿದೆ; ಆದರೆ, ಇದರೊಂದಿಗೆ ಅವುಗಳಿಗಿದ್ದ ಹಲವೆಣಿಕೆಯ ಹುರುಳೂ ಇಲ್ಲವಾಗಿದೆ; ಹಲವೆಣಿಕೆಯ ಒಟ್ಟನ್ನೂ ಇಲ್ಲಿ (ದೂಡಿದ ಎಂಬುದರಲ್ಲಿ) ಬಿಟ್ಟುಕೊಡಲಾಗಿದೆ ಎಂಬುದನ್ನು ಗಮನಿಸ ಬಹುದು. ಆದರೆ, (5ಟ)ದಲ್ಲಿ ಬಂದಿರುವ ಒಬ್ಬರನ್ನೊಬ್ಬರು ಎಂಬ ಪತ್ತುಗೆಕಂತೆಯಲ್ಲಿ ಇಮ್ಮಡಿ ರೂಪವನ್ನು ಒತ್ತೆರೂಪವಾಗಿ ಬದಲಾಯಿಸಲಾಗಿದೆಯಾದರೂ, ಹಲವೆಣಿಕೆಯ ಒಟ್ಟು ಉಳಿದಿದೆ. ಇದಲ್ಲದೆ, (5ಟ) ಸೊಲ್ಲಿಗೆ ಹಲವೆಣಿಕೆಯ ಹುರುಳೂ ದೊರಕಬಲ್ಲುದು, ಮತ್ತು ಓರೆಣಿಕೆಯ ಹುರುಳೂ ದೊರಕಬಲ್ಲುದು. ಇದನ್ನು ಮೇಲೆ (5ತ) ಸೊಲ್ಲಿನಲ್ಲಿ ಕಾಣಬಹುದು. ನಾಲ್ಕನೆಯದಾಗಿ, (5ಕ)ದಲ್ಲಿದ್ದ ಅವರಲ್ಲಿ ಎಂಬ ರೂಪದ ಬದಲು (5ಟ)ದಲ್ಲಿ ಅವರು ಎಂಬ ಪತ್ತುಗೆ ಒಟ್ಟಿಲ್ಲದ ರೂಪ ಬಂದಿದೆ. ಇದಕ್ಕೆ ಕಾರಣವೇನೆಂದರೆ, ಎದುರೆಸಕದ ಸೊಲ್ಲಿನ ಹಂಚಿಕೆಕಂತೆಯಲ್ಲಿ ಪತ್ತುಗೆ ಒಟ್ಟುಗಳು ಬರುವುದಿಲ್ಲ.
8.5.3 ಹಲವೆಣಿಕೆಯ ಒಟ್ಟು
ಎದುರೆಸಕದ ಸೊಲ್ಲುಗಳಲ್ಲಿ ಎರಡು ಎಸಕಗಳನ್ನು ಒಟ್ಟುಸೇರಿಸಲಾಗುತ್ತದೆಯಾದ ಕಾರಣ, ಅವುಗಳ ಹಂಚಿಕೆಕಂತೆ ಮತ್ತು ಪತ್ತುಗೆಕಂತೆಗಳೆರಡೂ ಹಲವೆಣಿಕೆಯ ವಾಗಿರಬೇಕಾಗುತ್ತದೆ. ಒಬ್ಬರನ್ನೊಬ್ಬರು, ಒಬ್ಬರಿಗೊಬ್ಬರು ಎಂಬಂತಹ ಪತ್ತುಗೆಕಂತೆ ಗಳಲ್ಲಿ ಕಾಣಿಸುವ ಹಲವೆಣಿಕೆಯ ರು ಒಟ್ಟು ಈ ಕಟ್ಟಲೆಯಿಂದಾಗಿ ಬಂದಿದೆ. (1ಕ) ಅವರು ಒಬ್ಬರನ್ನೊಬ್ಬರು ನಂಬಿದರು. (1ಚ) *ಅವನು ಒಬ್ಬನನ್ನೊಬ್ಬನು ನಂಬಿದ.
ಮನುಶ್ಯರನ್ನು ಹೊರತುಪಡಿಸಿ ಬೇರೆ ಪಾಂಗುಗಳನ್ನು ಗುರುತಿಸುವಲ್ಲಿ ಹಲವೆಣಿಕೆಯ ಒಟ್ಟನ್ನು ಬಳಸಲೇಬೇಕೆಂಬ ಕಟ್ಟಲೆಯಿಲ್ಲವಾದ ಕಾರಣ, ಮತ್ತು ಒಂದು ಎಂಬುದಕ್ಕೆ *ಒಂದುಗಳು ಎಂಬಂತಹ ಹಲವೆಣಿಕೆಯ ರೂಪವಿಲ್ಲವಾದ ಕಾರಣ, ಒಂದನ್ನೊಂದು, ಒಂದಕ್ಕೊಂದು ಎಂಬಂತಹ ಓರೆಣಿಕೆಯ ಪತ್ತುಗೆ ಕಂತೆಗಳೇ ಅಂತಹ ಸೊಲ್ಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಿದ್ದರೂ ಅವುಗಳ ಹಂಚಿಕೆಕಂತೆಗಳು ಹಲವೆಣಿಕೆಯ ರೂಪದಲ್ಲೇ ಕಾಣಿಸಿಕೊಳ್ಳುತ್ತವೆ: (2ಕ) ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುವು. (2ಚ) *ಕಾರು ಒಂದಕ್ಕೊಂದು ಡಿಕ್ಕಿ ಹೊಡೆಯಿತು. (2ಕ)ದಲ್ಲಿ ಪತ್ತುಗೆಕಂತೆ (ಒಂದಕ್ಕೊಂದು) ಓರೆಣಿಕೆಯಲ್ಲಿ ಬಂದಿದೆಯಾದರೂ ಹಂಚಿಕೆಕಂತೆ (ಕಾರುಗಳು) ಹಲವೆಣಿಕೆಯಲ್ಲಿ ಬಂದಿದೆ; ಅದನ್ನು ಓರೆಣಿಕೆಯಲ್ಲಿ ಬಳಸಿರುವ (2ಚ) ಸೊಲ್ಲು ಸರಿಯಾಗಿಲ್ಲ. ಮನುಶ್ಯರನ್ನು ಗುರುತಿಸುವ ಒಬ್ಬನಿಗೊಬ್ಬ, ಒಬ್ಬನಿಂದೊಬ್ಬ, ಒಬ್ಬನನ್ನೊಬ್ಬ ಎಂಬಂತಹ ಓರೆಣಿಕೆಯ ರೂಪಗಳೂ ಕೆಲವೆಡೆಗಳಲ್ಲಿ ಬಳಕೆಯಾಗುತ್ತವೆ. ಇವನ್ನು ಬಳಸಬೇಕಿದ್ದಲ್ಲಿ ಎಸಕಪದವೂ ಓರೆಣಿಕೆಯಲ್ಲೇ ಇರಬೇಕಾಗುತ್ತದೆ: (3ಕ) ?ಅವರಲ್ಲಿ ಒಬ್ಬನಿಂದೊಬ್ಬ ಮೇಲಿದ್ದ. (3ಚ) ?ಅವರೊಳಗೆ ಒಬ್ಬನನ್ನೊಬ್ಬ ವಿಚಾರಿಸುತ್ತಿದ್ದ. ಎದುರೆಸಕದ ಸೊಲ್ಲುಗಳಲ್ಲಿ ಬರುವ ಹಂಚಿಕೆಕಂತೆ ಹಲವೆಣಿಕೆಯಲ್ಲಿರಬಲ್ಲುದು ಇಲ್ಲವೇ ಮತ್ತು ಪದವನ್ನೊಳಗೊಂಡಿರಬಲ್ಲುದು ಎಂಬುದನ್ನು ಮೇಲೆ ನೋಡಿರು ವೆವು. ಅದರ ಈ ಎರಡು ರೂಪಗಳು ಕೆಲವು ಇಪ್ಪುರುಳುಗಳಿಗೆ ಎಡೆಕೊಡುತ್ತವೆ. ಎತ್ತುಗೆಗಾಗಿ, ಹಲವೆಣಿಕೆಯ ಹೆಸರುಕಂತೆಯನ್ನು ಇಲ್ಲವೇ ಮತ್ತು ಎಂಬುದ ನ್ನೊಳಗೊಂಡಿರುವ ಹೆಸರುಕಂತೆಯನ್ನು ಬಳಸಿರುವ ಸೊಲ್ಲುಗಳಿಗೆ ಕೂಡೆಸಕ ಮತ್ತು ಹಂಚಿಕೆಯೆಸಕ ಎಂಬ ಎರಡು ಬಗೆಯ ಹುರುಳುಗಳು ದೊರೆಯಬಲ್ಲುವು. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು: (4ಕ) ರಾಜು ಮತ್ತು ಹರಿ ಏಣಿಯನ್ನು ಎರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ. (4ಕ) ಸೊಲ್ಲಿಗೆ ಎರಡು ಹುರುಳುಗಳು ಸಿಗಬಲ್ಲುವು: ರಾಜು ಮತ್ತು ಹರಿ ಏಣಿಯನ್ನು ಒಟ್ಟಿಗೆ ಎರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ’ಎಂಬುದು ಒಂದು ಹುರುಳು (ಕೂಡೆಸಕ), ಮತ್ತು ಅವರು ಒಟ್ಟಿಗೆ ನಾಲ್ಕು ಬಾರಿ (ರಾಜು ಎರಡು ಬಾರಿ ಮತ್ತು ಹರಿ ಎರಡು ಬಾರಿ) ಏಣಿಯನ್ನು ತೆಗೆದುಕೊಂಡುಹೋಗಿದ್ದಾರೆ ಎಂಬುದು ಇನ್ನೊಂದು ಹುರುಳು (ಹಂಚಿಕೆಯೆಸಕ). ಇವುಗಳಲ್ಲಿ ಎರಡನೇ ಹುರುಳು ಮಾತ್ರವೇ ಬರುವಂತೆ ಮಾಡಲು ಎರಡೆರಡು ಎಂಬ ಇಮ್ಮಡಿ ರೂಪವನ್ನು ಬಳಸಲು ಬರುತ್ತದೆ: (4ಚ) ರಾಜು ಮತ್ತು ಹರಿ ಏಣಿಯನ್ನು ಎರಡೆರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ. (4ಚ) ಸೊಲ್ಲಿಗೆ ರಾಜು ಎರಡು ಬಾರಿ ಮತ್ತು ಹರಿ ಎರಡು ಬಾರಿ (ಎಂದರೆ ಒಟ್ಟಿಗೆ ನಾಲ್ಕು ಬಾರಿ) ಏಣಿಯನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಎರಡನೆಯ ಹುರುಳು ಮಾತ್ರ ಸಿಗುತ್ತದೆ. ಎದುರೆಸಕದ ಸೊಲ್ಲುಗಳಲ್ಲಿ ಕೆಲವು ಕೂಡೆಸಕಗಳನ್ನು ಮಾತ್ರವೇ ತಿಳಿಸುತ್ತವೆ; ಆದರೆ, ಇನ್ನು ಕೆಲವು ಈ ಎರಡು ಬಗೆಯ ಎಸಕಗಳನ್ನೂ ತಿಳಿಸಬಲ್ಲುವು. ಎತ್ತುಗೆ ಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ತಾವು ಒಬ್ಬರನ್ನೊಬ್ಬರು ನೋಡಿದ್ದೇವೆಂದು ರಾಜು ಮತ್ತು ಹರಿ ಹೇಳಿದರು.
(5ಚ) ತಾವು ಒಬ್ಬರಿಗೊಬ್ಬರು ಡಿಕ್ಕಿಹೊಡೆದಿದ್ದೇವೆಂದು ರಾಜು ಮತ್ತು ಹರಿ ಹೇಳಿದರು. (5ಕ) ಸೊಲ್ಲಿಗೆ ಕೂಡೆಸಕವನ್ನು ತಿಳಿಸುವ ಹುರುಳೂ ಇರಬಲ್ಲುದು, ಇಲ್ಲವೇ ಹಂಚಿಕೆಯೆಸಕವನ್ನು ತಿಳಿಸುವ ಹುರುಳೂ ಇರಬಲ್ಲುದು; ಅದರ ಹುರುಳು ಕೂಡೆಸಕವಾಗಿದ್ದಲ್ಲಿ, ರಾಜು ಇಲ್ಲವೇ ಹರಿ ಹೇಳಿದ್ದು, ನಾವು ಒಬ್ಬರನ್ನೊಬ್ಬರು ನೋಡಿದ್ದೇವೆ’ಎಂಬುದಾಗಿ. ಇದಕ್ಕೆ ಬದಲು, ಹಂಚಿಕೆಯೆಸಕವಾಗಿದ್ದಲ್ಲಿ, ರಾಜು ಹೇಳಿದ್ದು, ನಾನು ಹರಿಯನ್ನು ನೋಡಿದ್ದೇನೆ’ಎಂಬುದಾಗಿ, ಮತ್ತು ಹರಿ ಹೇಳಿದ್ದು, ನಾನು ರಾಜುವನ್ನು ನೋಡಿದ್ದೇನೆ ಎಂಬುದಾಗಿ. ಈ ಎರಡನೇ ಹುರುಳಿರುವಲ್ಲಿ ನನ್ನನ್ನು ಹರಿ ನೋಡಿದ್ದಾನೆ’ಎಂದು ರಾಜುವಾಗಲಿ, ಇಲ್ಲವೇ ನನ್ನನ್ನು ರಾಜು ನೋಡಿದ್ದಾನೆ’ಎಂದು ಹರಿಯಾಗಲಿ ಹೇಳಿಲ್ಲ. (5ಚ) ಸೊಲ್ಲಿಗೆ ಕೂಡೆಸಕದ ಹುರುಳು ಮಾತ್ರ ಸಿಗಬಲ್ಲುದಲ್ಲದೆ ಹಂಚಿಕೆ ಯೆಸಕದ ಹುರುಳು ಸಿಗಲಾರದು. ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಈ ವ್ಯತ್ಯಾಸ ದಿಂದಾಗಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: (6) ತಾವು ಬೇಗನೆ ಹೋಗಬೇಕೆಂದು ರಾಜು ಮತ್ತು ಹರಿ ಒಬ್ಬರಿ ಗೊಬ್ಬರು ಹೇಳಿಕೊಂಡರು. (6)ನೇ ಸೊಲ್ಲಿನಲ್ಲಿ ತಾವು ಎಂಬುದು ರಾಜು ಮತ್ತು ಬೇರೊಬ್ಬ ವ್ಯಕ್ತಿಯನ್ನು ಗುರುತಿಸುತ್ತಿರಬಹುದು, ಇಲ್ಲವೇ ರಾಜು ಮತ್ತು ಹರಿ ಇಬ್ಬರನ್ನು ಒಟ್ಟಾಗಿಯೂ ಗುರುತಿಸುತ್ತಿರಬಹುದು. ಎದುರೆಸಕದ ಸೊಲ್ಲುಗಳಲ್ಲಿ ಎಸಕಪದದೊಂದಿಗೆ ಕೊಳ್ಳು ಪದವನ್ನು ಬಳಸಿರು ವಲ್ಲಿ ಕೂಡೆಸಕದ ಮತ್ತು ಹಂಚಿಕೆಯೆಸಕದ ಹುರುಳುಗಳೆರಡೂ ದೊರಕಬಲ್ಲು ವಾದರೂ ಅವುಗಳ ಹುರುಳಿನ ಮೇಲೆ ಬೇರೊಂದು ಬಗೆಯ ಕಟ್ಟುಪಾಡಿರುವುದು ಕಾಣಿಸುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು: (7) ತಾವು ಒಬ್ಬರಿಗೊಬ್ಬರು ಹೊಡೆದುಕೊಂಡಿದ್ದೇವೆಂದು ರಾಜು ಮತ್ತು ಹರಿ ಹೇಳಿದರು. (7)ನೇ ಸೊಲ್ಲಿಗೆ ಕೂಡೆಸಕದ ಹುರುಳಿರಬಹುದು (ರಾಜು ಮತ್ತು ಹರಿ ಒಂದೇ ಸಮಯದಲ್ಲಿ ಒಬ್ಬರಿಗೊಬ್ಬರು ಹೊಡೆದುಕೊಂಡಿರಬಹುದು) ಇಲ್ಲವೇ ಹಂಚಿಕೆ ಯೆಸಕದ ಹುರುಳಿರಬಹುದು (ರಾಜು ಹರಿಗೆ ಹೊಡೆದ ಸಮಯ ಮತ್ತು ಹರಿ ರಾಜುವಿಗೆ ಹೊಡೆದ ಸಮಯ ಬೇರೆ ಬೇರಾಗಿರಬಹುದು). ಹೀಗಿದ್ದರೂ, ರಾಜು ಇಲ್ಲವೇ ಹರಿ ನಾನು ಅವನಿಗೆ ಹೊಡೆದೆ ಮತ್ತು ಅವನು ನನಗೆ ಹೊಡೆದ’ಎಂಬ ಎದುರೆಸಕದ ಸೊಲ್ಲನ್ನೇ ಹೇಳಿದ್ದಾರೆಂಬ ಹುರುಳು ಈ (7)ನೇ ಸೊಲ್ಲಿಗೆ ಸಿಗುತ್ತದೆ. ಹಲವೆಣಿಕೆಯ ಹಂಚಿಕೆಕಂತೆಯಿರುವ ಎದುರೆಸಕದ ಸೊಲ್ಲುಗಳ ಇನ್ನೊಂದು ಪರಿಚೆಯೇನೆಂದರೆ, ಅವು ಗುರುತಿಸುವ ಎಲ್ಲಾ ವ್ಯಕ್ತಿಗಳೂ ಒಟ್ಟು ಸೇರಿರುವ ಎರಡು ಪಾಂಗುಗಳಲ್ಲಿ ತೊಡಗಿಕೊಳ್ಳಬೇಕೆಂದೇನಿಲ್ಲ. ಕೆಲವರು ಎರಡರಲ್ಲೂ ತೊಡಗಿಕೊಂಡಿರಬಹುದು, ಮತ್ತು ಬೇರೆ ಕೆಲವರು ಅವುಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರವೇ ತೊಡಗಿಕೊಂಡಿರಬಲ್ಲರು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (8ಕ) ಹುಡುಗರು ಒಬ್ಬರಿಗೊಬ್ಬರು ಹೊಡೆಯುತ್ತಿದ್ದರು. (8ಚ) ಮೊನೆಯಾಳುಗಳು ಒಬ್ಬರನ್ನೊಬ್ಬರು ಕೊಂದುಹಾಕಿದರು.
(8ಕ) ಸೊಲ್ಲಿನಂತೆ, ಹುಡುಗರಲ್ಲಿ ಕೆಲವರು ಹೊಡೆಯುವುದನ್ನೂ ಹೊಡೆತ ತಿನ್ನುವುದನ್ನೂ ನಡೆಸಿರಬಹುದು; ಆದರೆ, ಬೇರೆ ಕೆಲವರು ಬೇರೆಯವರಿಗೆ ಹೊಡೆದರೂ ಹೊಡೆತದಿಂದ ತಪ್ಪಿಸಿಕೊಂಡಿರಬಹುದು, ಮತ್ತು ಇನ್ನು ಕೆಲವರು ಹೊಡೆಯಲು ಹೋಗದಿದ್ದರೂ ಹೊಡೆತ ತಿಂದಿರಬಹುದು. ಹಲವೆಣಿಕೆಯ ಹಂಚಿಕೆಕಂತೆಗಳು ಹಲವಾರು ಮಂದಿಯನ್ನು ಗುರುತಿಸುತ್ತಿರುವಲ್ಲೆಲ್ಲ ಈ ರೀತಿ ಕಟ್ಟುನಿಟ್ಟಾದ ಎದುರೆಸಕಗಳನ್ನು ಕಾಣದಿರಬಲ್ಲೆವು.
8.5.4 ಒಟ್ಟುಸೇರಿಸುವುದು ಮತ್ತು ಒಂದಾಗುವುದು
ಎದುರೆಸಕದ ಸೊಲ್ಲುಗಳಲ್ಲಿ ಎರಡು ವಿಶಯಗಳನ್ನು ತಿಳಿಸಲಾಗುತ್ತದೆ: ಎದುರು ಹುರುಳಿನ ಎರಡು ಎಸಕಗಳನ್ನು ಇಲ್ಲಿ ಒಟ್ಟುಸೇರಿಸಲಾಗಿದೆ ಎಂಬುದೊಂದು ವಿಶಯ, ಮತ್ತು ಹೀಗೆ ಒಟ್ಟುಸೇರಿಸಿದಾಗ ಎರಡು ಪಾಂಗುಗಳು ಒಂದುಗೂಡಿವೆ’ಎಂಬುದು ಇನ್ನೊಂದು ವಿಶಯ. ಎತ್ತುಗೆಗಾಗಿ, ರಾಜು ಮತ್ತು ಹರಿ ಒಬ್ಬರಿಗೊಬ್ಬರು ಹೊಡೆದರು ಎಂಬ ಸೊಲ್ಲಿನಲ್ಲಿ ರಾಜು ಹರಿಗೆ ಹೊಡೆದ’ಮತ್ತು ಹರಿ ರಾಜುವಿಗೆ ಹೊಡೆದ ಎಂಬ ಎರಡು ಎದುರುಹುರುಳಿನ ಎಸಕಗಳನ್ನು ಒಟ್ಟುಸೇರಿಸಲಾಗಿದೆ; ಈ ವಿಶಯವನ್ನು ರಾಜು ಮತ್ತು ಹರಿ ಮತ್ತು ಒಬ್ಬರಿಗೊಬ್ಬರು ಎಂಬ ಎರಡು ಹೆಸರುಕಂತೆಗಳು (ಹಂಚಿಕೆಕಂತೆ ಮತ್ತು ಪತ್ತುಗೆಕಂತೆ) ತಿಳಿಸುತ್ತವೆ. ಇದಲ್ಲದೆ, ಹೀಗೆ ಒಟ್ಟುಸೇರಿಸಿದಾಗ ಸೊಲ್ಲಿನಲ್ಲಿ ಮೊದಲಿಗಿದ್ದ ಎರಡು ಪಾಂಗುಗಳು ಒಂದಾಗಿವೆ ಎಂಬುದನ್ನು ಈ ಎರಡು ಹೆಸರುಕಂತೆಗಳು ಒಂದೇ ಪತ್ತುಗೆರೂಪದಲ್ಲಿ ಬರುತ್ತವೆ ಎಂಬುದು ತಿಳಿಸುತ್ತದೆ: ರಾಜು ಮತ್ತು ಹರಿ ಮತ್ತು ಒಬ್ಬರಿಗೊಬ್ಬರು ಎಂಬ ಈ ಎರಡು ಹೆಸರುಕಂತೆಗಳೂ ಮಾಡುಗನನ್ನು ತಿಳಿಸುವ ರೂಪದಲ್ಲೇ ಇವೆ ಎಂಬುದನ್ನು ಗಮನಿಸಬಹುದು; ಒಬ್ಬರಿಗೊಬ್ಬರು ಎಂಬುದರಲ್ಲಿ ಗುರಿಯನ್ನು ತಿಳಿಸುವ ಇಗೆ ಒಟ್ಟು ಬಂದಿದೆಯಾದರೂ ಅದು ಹೆಸರುಕಂತೆಯ ಕೊನೆಯಲ್ಲಿ ಬಾರದೆ ನಡುವೆ ಬಂದಿದೆ. ಅನ್ನು, ಇಂದ, ಮತ್ತು ಅಲ್ಲಿ ಎಂಬ ಬೇರೆ ಪತ್ತುಗೆಯ ಒಟ್ಟುಗಳು, ಮೇಲೆ, ಕೆಳಗೆ ಒಡನೆ ಮೊದಲಾದ ಬೇರೆ ಪತ್ತುಗೆಯ ಪದಗಳು, ಮತ್ತು ಹೆಸರು ಪತ್ತುಗೆಯನ್ನು ತಿಳಿಸುವ ಒಟ್ಟು ಮತ್ತು ಪದಗಳು ಈ ರೀತಿ ಪತ್ತುಗೆಕಂತೆಯ ನಡುವೆ ಬರುತ್ತವಲ್ಲದೆ ಕೊನೆಯಲ್ಲಿ ಬರುವುದಿಲ್ಲ (ಒಬ್ಬರಿಂದೊಬ್ಬರು, ಒಂದರ ಮೇಲೊಂದು, ಒಬ್ಬನ ಹಣವನ್ನೊಬ್ಬನು) ಎಂಬುದನ್ನು ಗಮನಿಸಬಹುದು. ಎರಡು ಪಾಂಗುಗಳು ಒಂದಾಗಿವೆಯೆಂಬ ಈ ಎರಡನೆಯ ವಿಶಯವನ್ನು ಒತ್ತಿ ಹೇಳುವುದಕ್ಕಾಗಿ, ಇಂತಹ ಸೊಲ್ಲುಗಳ ಎಸಕಪದದೊಂದಿಗೆ ಸೇರಿಕೆಯ ಹುರುಳನ್ನು (8.4 ನೋಡಿ) ಕೊಡುವ ಕೊಳ್ಳು ಎಂಬುದನ್ನು ಬಳಸಲು ಬರುತ್ತದೆ, ಮತ್ತು ಹೀಗೆ ಬಳಸಿದಾಗ, ಅದರೊಂದಿಗೆ ಪತ್ತುಗೆಕಂತೆಯನ್ನು ಬಳಸದಿರಲೂ ಬರುತ್ತದೆ. (1ಕ) ರಾಜು ಮತ್ತು ಹರಿ ಒಬ್ಬರಿಗೊಬ್ಬರು ಹೊಡೆದರು. (1ಚ) ರಾಜು ಮತ್ತು ಹರಿ ಒಬ್ಬರಿಗೊಬ್ಬರು ಹೊಡೆದುಕೊಂಡರು. (1ಟ) ರಾಜು ಮತ್ತು ಹರಿ ಹೊಡೆದುಕೊಂಡರು. (1ಚ)ದಲ್ಲಿ ಎಸಕಪದಕ್ಕೆ ಕೊಳ್ಳು ಎಂಬುದನ್ನು ಸೇರಿಸಿರುವ ಹೊಡೆದು ಕೊಂಡರು ಎಂಬ ಎಸಕರೂಪವನ್ನು ಬಳಸಲಾಗಿದೆ, ಮತ್ತು ಇದರಿಂದಾಗಿ ಈ ಸೊಲ್ಲಿನಲ್ಲಿ ಮೇಲಿನ ಎರಡನೇ ವಿಶಯಕ್ಕೆ (1ಕ) ಸೊಲ್ಲಿನಲ್ಲಿರುವುದಕ್ಕಿಂತ ಹೆಚ್ಚಿನ ಒತ್ತು ಬಿದ್ದಿದೆ; (1ಟ) ಸೊಲ್ಲಿನಲ್ಲಿ ಒಬ್ಬರಿಗೊಬ್ಬರು ಎಂಬ ಪತ್ತುಗೆಕಂತೆಯನ್ನು ಬಿಟ್ಟುಕೊಡಲಾಗಿದೆ, ಮತ್ತು ಇದರಿಂದಾಗಿ ಆ ಸೊಲ್ಲಿನಲ್ಲಿ ಎರಡನೆಯ ವಿಶಯದ ಮೇಲೆ ಇನ್ನಶ್ಟು ಒತ್ತು ಬಿದ್ದಿದೆ. ಇದಲ್ಲದೆ, (1ಟ) ಸೊಲ್ಲಿನಲ್ಲಿ ಎರಡು ಎದುರುಹುರುಳಿನ ಎಸಕಗಳು ಒಟ್ಟುಸೇರಿವೆಯೆಂಬ’ಮೊದಲನೆಯ ವಿಶಯಕ್ಕೆ ತುಂಬಾ ಕಡಿಮೆ ಒತ್ತು ಬಿದ್ದಿದ್ದು, ಅದರಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ: ಅದಕ್ಕೆ ರಾಜು ಮತ್ತು ಹರಿ ಒಬ್ಬರಿ ಗೊಬ್ಬರು ಹೊಡೆದರು’ಎಂಬ ಎದುರೆಸಕದ ಹುರುಳಾಗಲಿ, ಇಲ್ಲವೇ ರಾಜು ಮತ್ತು ಹರಿ ತಮಗೆ ಹೊಡೆದುಕೊಂಡರು’ಎಂಬ ಸೇರಿಕೆಯೆಸಕದ ಹುರುಳಾಗಲಿ ಬರಬಲ್ಲುದು.
ಈ ಎರಡನೆಯ ಹುರುಳಿನಲ್ಲಿ ಎರಡು ಪಾಂಗುಗಳು ಒಟ್ಟುಸೇರಿವೆಯೆಂಬ ಒಂದು ವಿಶಯ ಮಾತ್ರ ಉಳಿದುಕೊಳ್ಳುತ್ತದೆ ಎಂಬುದನ್ನು ಗಮನಿಸಬಹುದು. ಎದುರೆಸಕದ ಸೊಲ್ಲುಗಳಲ್ಲಿ ಕೊಳ್ಳು ಎಂಬುದನ್ನು ಬಳಸದಿದ್ದಲ್ಲಿ, ಅವುಗಳಲ್ಲಿ ಬರುವ ಪತ್ತುಗೆಕಂತೆಯನ್ನು ಬಿಟ್ಟುಕೊಡಲು ಬರುವುದಿಲ್ಲ. ಯಾಕೆಂದರೆ, ಅದನ್ನು ಬಿಟ್ಟುಕೊಟ್ಟಲ್ಲಿ ಸೊಲ್ಲಿಗೆ ಎದುರೆಸಕದ ಹುರುಳು ಸಿಗುವುದಿಲ್ಲ. ಎತ್ತುಗೆಗಾಗಿ, ರಾಜು ಮತ್ತು ಹರಿ ಹೊಡೆದರು ಇಲ್ಲವೇ ಅವರು ಹೊಡೆದರು ಎಂಬ ಸೊಲ್ಲಿಗೆ ಮೇಲೆ (1ಟ) ಸೊಲ್ಲಿಗೆ ಸಿಕ್ಕಿರುವಂತಹ ಅವರು ಒಬ್ಬರಿಗೊಬ್ಬರು ಹೊಡೆದರು ಎಂಬ ಎದುರೆಸಕದ ಹುರುಳು ಸಿಗುವುದಿಲ್ಲ. ಆದರೆ, ಎಲ್ಲಾ ಎಸಕಪದಗಳೊಂದಿಗೂ ಕೊಳ್ಳು ಎಂಬುದನ್ನು ಮಾತ್ರವೇ ಬಳಸಿ (ಎಂದರೆ, ಅದರೊಂದಿಗೆ ಪತ್ತುಗೆಕಂತೆಯನ್ನು ಬಳಸದೆ) ಎದುರೆಸಕದ ಹುರುಳನ್ನು ಪಡೆಯಲು ಬರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ರಾಜು ಹರಿಯನ್ನು ಹೊಗಳಿದ. (2ಚ) ಅವರು ಒಬ್ಬರನ್ನೊಬ್ಬರು ಹೊಗಳಿದರು. (2ಟ) ?ಅವರು ಹೊಗಳಿಕೊಂಡರು. (2ಟ) ಸೊಲ್ಲಿನಲ್ಲಿ ಒಬ್ಬರನ್ನೊಬ್ಬರು ಎಂಬ ಪತ್ತುಗೆಕಂತೆಯನ್ನು ಬಿಟ್ಟುಕೊಡ ಲಾಗಿದ್ದು, ಅದಕ್ಕೆ ಎದುರೆಸಕದ ಹುರುಳು ಸಿಗುವ ಹಾಗೆ ಕಾಣಿಸುವುದಿಲ್ಲ; ತಮ್ಮನ್ನೇ ಹೊಗಳಿಕೊಂಡರು’ಎಂಬ ಸೇರಿಕೆಯೆಸಕದ ಹುರುಳು ಮಾತ್ರ ಸಿಗುವ ಹಾಗೆ ಕಾಣಿಸುತ್ತದೆ. ಅಂಟು, ತಾಟು, ತಗಲು, ಸಿಲುಕು, ಹೆಣೆ, ಹೊಸೆ, ನಂಬು, ಹಂಚು, ಅಪ್ಪು, ತಬ್ಬು ಮೊದಲಾದ ಕೆಲವು ಎಸಕಪದಗಳು ಮಾತ್ರ ಈ ರೀತಿ ಕೊಳ್ಳು ಪದದೊಂದಿಗೆ ಬಳಕೆಯಾದಾಗ ಪತ್ತುಗೆಕಂತೆಯ ನೆರವಿಲ್ಲದೆ ಎದುರೆಸಕದ ಹುರುಳನ್ನು ಕೊಡಬಲ್ಲುವು. ಕೊಳ್ಳು ಪದಕ್ಕೆ ಮೊದಲಿಗೆ ತೆಗೆದುಕೊಳ್ಳು ಎಂಬ ಹುರುಳಿತ್ತು; ಈಗ ಅದು ಆ ಹುರುಳಿನಲ್ಲಿ ಬಳಕೆಯಾಗುವುದಿಲ್ಲ; ಅದನ್ನು ಮುಕ್ಯವಾಗಿ ಒಂದು ಎಸಕದ ಎರಡು ಪಾಂಗುಗಳು ಒಟ್ಟುಸೇರಿ ಒಂದಾಗಿವೆ’ಎಂಬ ‘ಸೇರಿಕೆಯ’ ಹುರುಳನ್ನು ತಿಳಿಸುವ ನೆರವೆಸಕಪದವಾಗಿ ಬಳಸಲಾಗುತ್ತದೆ. ಆದರೆ, ಅದಕ್ಕೆ ಎಸಕವನ್ನು ತನಗಾಗಿ ನಡೆಸು, ತನ್ನವರಿಗಾಗಿ ನಡೆಸು’ಮೊದಲಾದ ಬೇರೆಯೂ ಕೆಲವು ಹುರುಳುಗಳಿವೆ (8.4.1 ನೋಡಿ). ಎದುರೆಸಕದ ಹುರುಳು ಅದಕ್ಕಿರುವ ಇಂತಹದೇ ಒಂದು ಹೆಚ್ಚಿನ ಹುರುಳಾಗಿದೆ. ಎದುರೆಸಕದ ಸೊಲ್ಲಿನಲ್ಲಿ ಎರಡು ಪಾಂಗುಗಳನ್ನು ನೇರವಾಗಿ ಒಟ್ಟುಸೇರಿಸುವ ಬದಲು, ಅವುಗಳ ಹೆಸರುಪತ್ತುಗೆರೂಪಗಳನ್ನು ಒಟ್ಟುಸೇರಿಸಲಾಗಿದೆಯಾದರೆ, ಅಂತಹ ಸೊಲ್ಲಿನ ಎಸಕಪದಗಳೊಂದಿಗೆ ಕೊಳ್ಳು ಎಂಬುದನ್ನು ಬಳಸಲು ಬರುವು ದಿಲ್ಲ: (3ಕ) ಅವರು ಒಬ್ಬರ ತಲೆಯನ್ನೊಬ್ಬರು ಬಾಚಿದರು. (3ಚ) *ಅವರು ಒಬ್ಬರ ತಲೆಯನ್ನೊಬ್ಬರು ಬಾಚಿಕೊಂಡರು. (4ಕ) ಅವರು ಒಬ್ಬರ ಮನೆಯ ಮೇಲಿನ ಮಾಡನ್ನೊಬ್ಬರು ಮುರಿಯು ತ್ತಿದ್ದರು. (4ಚ) ?ಅವರು ಒಬ್ಬರ ಮನೆಯ ಮೇಲಿನ ಮಾಡನ್ನೊಬ್ಬರು ಮುರಿದು ಕೊಂಡಿದ್ದರು.
8.5.5 ಒಂದುಗೂಡುವ ಪಾಂಗುಗಳು
ಎದುರೆಸಕದ ಸೊಲ್ಲುಗಳಲ್ಲಿ ಒಂದುಗೂಡಿರುವ ಎರಡು ಪಾಂಗುಗಳಲ್ಲಿ ಒಂದು ಸೊಲ್ಲಿನ ಆಗುಗ ಇಲ್ಲವೇ ಮಾಡುಗವಾಗಿರಬೇಕಾಗುತ್ತದೆ. ಮಾಡುಗವನ್ನು ಹಾಗೆಯೇ ಬಿಟ್ಟು ಸೊಲ್ಲಿನ ಗುರಿ ಮತ್ತು ಈಡುಗಳನ್ನು, ಇಲ್ಲವೇ ಜಾಗ ಮತ್ತು ಈಡುಗಳನ್ನು ಒಂದುಗೂಡಿಸಲು ಬರುವುದಿಲ್ಲ: (1ಕ) ರಾಜು ಮತ್ತು ಹರಿ ನಾಯಿಗಳನ್ನು ಒಬ್ಬರ ಮೇಲೊಬ್ಬರು ಬಿಟ್ಟರು. (1ಚ) ಅವರು ಒಬ್ಬರನ್ನೊಬ್ಬರು ಹೋಲುತ್ತಿದ್ದರು. (1ಟ) ಅವರು ಒಬ್ಬರಿಂದೊಬ್ಬರು ಕೆಲಸ ಮಾಡಿಸಿಕೊಂಡರು. (1ತ) *ರಾಜು ನಾಯಿಗಳನ್ನು ಒಂದರ ಮೇಲೊಂದನ್ನು ಬಿಟ್ಟ. (1ಪ) *ರಾಜು ಹುಡುಗರಿಗೆ ಒಬ್ಬರ ಪುಸ್ತಕವನ್ನೊಬ್ಬರಿಗೆ ಕೊಟ್ಟ. (1ಗ) *ಅವನು ಆ ಹುಡುಗರಿಂದ ಒಬ್ಬರನ್ನೊಬ್ಬರನ್ನು ಹೊಡೆಸಿದ. ಮೂರು ಪಾಂಗುಗಳಿರುವ ಸೊಲ್ಲುಗಳಲ್ಲಿ ಮಾಡುಗದೊಂದಿಗೆ ಉಳಿದ ಪಾಂಗುಗಳಲ್ಲಿ ಯಾವುದನ್ನು ಬೇಕಿದ್ದರೂ ಒಟ್ಟುಸೇರಿಸಿ ಎದುರೆಸಕದ ಸೊಲ್ಲನ್ನು ಪಡೆಯಬಹುದು: (2ಕ) ಅವರು ಆ ಮುದುಕನಿಗೆ ಒಬ್ಬ ಹುಡುಗನನ್ನು ಮಾರಿದರು. (2ಚ) ಅವರು ಆ ಮುದುಕನಿಗೆ ಒಬ್ಬರನ್ನೊಬ್ಬರು ಮಾರಿದರು. (2ಟ) ಅವರು ಆ ಮುದುಕನನ್ನು ಒಬ್ಬರಿಗೊಬ್ಬರು ಮಾರಿದರು. (3ಕ) ಅವರು ರಾಜನಿಂದ ನನ್ನನ್ನು ಹೊಗಳಿಸಿದರು. (3ಚ) ಅವರು ಒಬ್ಬರಿಂದೊಬ್ಬರು ನನ್ನನ್ನು ಹೊಗಳಿಸಿದರು. (3ಟ) ಅವರು ಒಬ್ಬರನ್ನೊಬ್ಬರು ನನ್ನಿಂದ ಹೊಗಳಿಸಿದರು. ಇದಲ್ಲದೆ, ಮೂರು ಪಾಂಗುಗಳಿರುವ ಎದುರೆಸಕದ ಸೊಲ್ಲುಗಳಲ್ಲಿ ಮಾಡುಗ ದೊಂದಿಗೆ ಉಳಿದ ಎರಡು ಪಾಂಗುಗಳನ್ನೂ ಒಟ್ಟುಸೇರಿಸಲು ಬರುತ್ತದೆ. ಇದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (4ಕ) ಅವರು ಒಬ್ಬರಿಗೊಬ್ಬರು ತಮ್ಮ ಪುಸ್ತಕಗಳನ್ನು ಮಾರಿಕೊಂಡರು. (4ಚ) ಅವರು ಒಬ್ಬರಿಗೊಬ್ಬರು ತಮ್ಮ ಮಕ್ಕಳನ್ನು ಗುರುತು ಮಾಡಿಸಿ ಕೊಂಡರು. (5ಕ) ಅವರು ಒಬ್ಬರಿಗೊಬ್ಬರು ತಮ್ಮನ್ನು ಮಾರಿಕೊಂಡರು. (5ಚ) ಅವರು ಒಬ್ಬರಿಗೊಬ್ಬರು ತಮ್ಮನ್ನು ಗುರುತು ಮಾಡಿಸಿಕೊಂಡರು. (4ಕ) ಮತ್ತು (4ಚ) ಸೊಲ್ಲುಗಳಲ್ಲಿ ಎರಡು ಪಾಂಗುಗಳನ್ನು ಮಾತ್ರ ಒಟ್ಟು ಸೇರಿಸಲಾಗಿದೆ; ಆದರೆ, (5ಕ) ಮತ್ತು (5ಚ) ಸೊಲ್ಲುಗಳಲ್ಲಿ ಮೂರು ಪಾಂಗು ಗಳನ್ನೂ ಒಟ್ಟುಸೇರಿಸಲಾಗಿದೆ ಎಂಬುದನ್ನು ಗಮನಿಸಬಹುದು. ಆದರೆ, ಈ ಎರಡು ಬಗೆಯ ಸೊಲ್ಲುಗಳಲ್ಲೂ ಎರಡೆರಡು ಪಾಂಗುಗಳನ್ನು ಮಾತ್ರ ಎದುರೆಸಕಗಳಾಗಿ ಒಟ್ಟುಸೇರಿಸಲಾಗಿದೆ; ಅವುಗಳೊಂದಿಗೆ ಮೂರನೆಯದನ್ನು ಸೇರಿಸಿರುವುದು ಒಂದು ಸೇರಿಕೆಯೆಸಕದ ಪಾಂಗಾಗಿ ಮಾತ್ರ. ಎತ್ತುಗೆಗಾಗಿ, (5ಕ)ದಲ್ಲಿ ಮಾಡುಗ ಮತ್ತು ಗುರಿಗಳು ಎದುರೆಸಕದ ಪಾಂಗುಗಳಾಗಿ ಒಟ್ಟುಸೇರಿವೆ; ಮಾಡುಗದೊಂದಿಗೆ ಈಡು ಒಟ್ಟುಸೇರಿರುವುದು ಸೇರಿಕೆಯೆಸಕದ ಪಾಂಗಾಗಿ ಮಾತ್ರ, ಎದುರೆಸಕದ ಪಾಂಗಾಗಿ ಅಲ್ಲ.
8.5.6 ಒಳ ಎಸಕಗಳ ಹೊತ್ತು
ಎದುರೆಸಕದ ಸೊಲ್ಲುಗಳು ತಿಳಿಸುವ ಎರಡು ಎಸಕಗಳು ಒಂದರ ಬಳಿಕ ಒಂದು ನಡೆದಿರಬಲ್ಲುವು, ಇಲ್ಲವೇ ಅವೆರಡೂ ಒಟ್ಟಿಗೆ ಒಂದೇ ಎಸಕವಾಗಿ ನಡೆದಿರ ಬಲ್ಲುವು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(1ಕ) ಅವರು ಒಬ್ಬರಿಗೊಬ್ಬರು ಕತೆ ಹೇಳಿದರು. (1ಚ) ಅವರು ಒಬ್ಬರೊಡನೊಬ್ಬರು ಕಾದಿದರು. (1ಕ) ಸೊಲ್ಲು ತಿಳಿಸುವ ಎರಡು ಎದುರೆಸಕಗಳು ಒಂದರ ಬಳಿಕ ಒಂದಾಗಿ ನಡೆದಿರುತ್ತವೆ: ಮೊದಲು ಅವನು ಇವನಿಗೆ ಕತೆ ಹೇಳಿದ, ಮತ್ತು ಬಳಿಕ ಇವನು ಅವನಿಗೆ ಕತೆ ಹೇಳಿದ. ಆದರೆ, (1ಚ) ಸೊಲ್ಲು ತಿಳಿಸುವ ಎರಡು ಎದುರೆಸಕಗಳು ಒಟ್ಟಿಗೆ ಒಂದೇ ಎಸಕವಾಗಿ ನಡೆದಿರುತ್ತವೆ. ಹಾಗಾಗಿ, (1ಕ) ಸೊಲ್ಲನ್ನು ಕೆಳಗೆ ತೋರಿಸಿದ ಹಾಗೆ ಒಡೆದು ಹೇಳಲು ಬರುತ್ತದೆ, ಆದರೆ (1ಚ) ಸೊಲ್ಲನ್ನು ಆ ರೀತಿ ಒಡೆದು ಹೇಳಲು ಬರುವುದಿಲ್ಲ. (1ಟ) ಅವರು ಒಬ್ಬರಿಗೊಬ್ಬರು ಒಬ್ಬನಾದ ಮೇಲೆ ಒಬ್ಬನಂತೆ ಕತೆ ಹೇಳಿದರು. (1ತ) *ಅವರು ಒಬ್ಬರೊಡನೊಬ್ಬರು ಒಬ್ಬನಾದ ಮೇಲೆ ಒಬ್ಬನಂತೆ ಕಾದಿದರು. ಒಂದರ ಬಳಿಕ ಇನ್ನೊಂದು ಎಸಕ ನಡೆಯುವಂತಹ ಕಡೆಗಳಲ್ಲಿ ಎರಡನೆಯ ಎಸಕ ನಡೆದಾಗ ಮಾತ್ರ ಎದುರೆಸಕ ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಒಬ್ಬ ಕತೆ ಹೇಳಿದಾಗ ಎದುರೆಸಕವಿಲ್ಲ; ಅವನು ಕತೆ ಹೇಳಿದ ಮೇಲೆ ಇನ್ನೊಬ್ಬ ಕತೆ ಹೇಳಿದಾಗ ಮಾತ್ರ ಎದುರೆಸಕ ಕಾಣಿಸಿಕೊಳ್ಳುತ್ತದೆ. ಆದರೆ, ಕಾದುವ ಕೆಲಸವನ್ನು ಇಬ್ಬರೂ ಒಟ್ಟಾಗಿ ಒಂದೇ ಎಸಕದ ಅಂಗಗಳಾಗಿ ನಡೆಸುವ ಕಾರಣ, ಅದು ನೇರವಾಗಿ ಎದುರೆಸಕಕ್ಕೆ ಎಡೆಕೊಡುತ್ತದೆ ಎದುರೆಸಕಗಳ ನಡುವೆ ಕಾಣಿಸುವ ಇನ್ನೊಂದು ವ್ಯತ್ಯಾಸವೇನೆಂದರೆ, ಅವುಗಳಲ್ಲಿ ಒಟ್ಟಿಗೆ ಸೇರಿಕೊಳ್ಳುವ ಎಸಕಗಳು ಒಂದಕ್ಕೊಂದು ಸಂಬಂದಿಸಿರಬಹುದು, ಇಲ್ಲವೇ ಸಂಬಂದಿಸಿಲ್ಲದೇ ಇರಬಹುದು. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಎದುರೆಸಕದ ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವರು ಒಬ್ಬರನ್ನೊಬ್ಬರು ದೂಡಿದರು. (2ಚ) ಅವರು ಒಬ್ಬರ ಹತ್ತಿರ ಒಬ್ಬರು ಕುಳಿತುಕೊಂಡರು. (2ಟ) ಹಣ್ಣುಗಳು ಒಂದರ ಹತ್ತಿರ ಒಂದು ಬಿದ್ದುವು. (2ತ) ಅವರು ಊಟಕ್ಕೆ ಒಬ್ಬರ ಬಳಿಕ ಒಬ್ಬರು ಬಂದರು. (2ಕ) ಸೊಲ್ಲು ತಿಳಿಸುವ ಎರಡು (ಇಲ್ಲವೇ ಹೆಚ್ಚು) ಎಸಕಗಳು ಒಂದಕ್ಕೊಂದು ಸಂಬಂದಿಸಿರಬಹುದು; (2ಚ) ಸೊಲ್ಲಿನಲ್ಲಿ ಬಂದಿರುವವೂ ಸಂಬಂದಿಸಿರಬಹುದು; ಆದರೆ, ಅವು ಸಂಬಂದಿಸದೆಯೂ ನಡೆದಿರಬಲ್ಲುವು. (1ಟ-ತ)ದಲ್ಲಿ ಈ ವ್ಯತ್ಯಾಸ ಇನ್ನಶ್ಟು ಸರಿಯಾಗಿ ಕಾಣಿಸುತ್ತದೆ.
8.5.7 ಬೇರೆ ಹುರುಳುಗಳು
ಎದುರೆಸಕದ ಸೊಲ್ಲುಗಳಲ್ಲಿ ಎರಡು ಒಳ ಎಸಕಗಳಿದ್ದು, ಸಾಮಾನ್ಯವಾಗಿ ಅವುಗಳಲ್ಲಿ ತೊಡಗಿಕೊಂಡಿರುವ ಎರಡು ಇಲ್ಲವೇ ಹೆಚ್ಚು ವ್ಯಕ್ತಿ, ವಸ್ತು ಮೊದಲಾದುವು ಒಟ್ಟುಗೂಡಿರುವ ಎರಡು ಪಾಂಗುಗಳಲ್ಲೂ ತೊಡಗಿಕೊಂಡಿರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ರಾಜು ಮತ್ತು ಹರಿ ಒಬ್ಬರನ್ನೊಬ್ಬರು ತಳ್ಳಿದರು. (1ಚ) ಕಾರು ಮತ್ತು ಲಾರಿ ಒಂದಕ್ಕೊಂದು ಡಿಕ್ಕಿ ಹೊಡೆದುವು
(1ಕ) ಎದುರೆಸಕದ ಸೊಲ್ಲಿನಲ್ಲಿ ರಾಜು ಮತ್ತು ಹರಿ ಎಂಬ ಇಬ್ಬರು ವ್ಯಕ್ತಿಗಳು ತಳ್ಳುವವರಾಗಿರುತ್ತಾರೆ ಮತ್ತು ತಳ್ಳಿಸಿಕೊಂಡವರೂ ಆಗಿರುತ್ತಾರೆ; ಇದೇ ರೀತಿಯಲ್ಲಿ (1ಚ) ಸೊಲ್ಲಿನಲ್ಲಿ ಕಾರು ಮತ್ತು ಲಾರಿಗಳೆರಡೂ ಡಿಕ್ಕಿ ಹೊಡೆದವುಗಳಾಗಿವೆ ಮತ್ತು ಡಿಕ್ಕಿ ಹೊಡೆಸಿಕೊಂಡವುಗಳೂ ಆಗಿವೆ. ಎದುರೆಸಕಗಳನ್ನು ತಿಳಿಸುವ ಈ ಇಟ್ಟಳವನ್ನೇ ಬಳಸಿ, ಬೇರೆ ಬಗೆಯ ಹುರುಳು ಗಳನ್ನೂ ತಿಳಿಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ರಾಜು ಮತ್ತು ಹರಿ ಒಬ್ಬರ ಕೆಳಗೊಬ್ಬರು ನಿಂತಿದ್ದರು. (2ಚ) ಅವರು ಒಬ್ಬರ ಹಿಂದೊಬ್ಬರು ಬರುತ್ತಿದ್ದರು. (2ಟ) ಕಾರುಗಳು ಒಂದರ ಹಿಂದೊಂದು ಬರುತ್ತಿದ್ದುವು. ಈ ಸೊಲ್ಲುಗಳು ನಿಜಕ್ಕೂ ಎದುರೆಸಕಗಳನ್ನು ತಿಳಿಸುವುದಿಲ್ಲ; ಎತ್ತುಗೆಗಾಗಿ, (2ಕ) ಸೊಲ್ಲಿನಲ್ಲಿ ಹರಿ ರಾಜುವಿನ ಕೆಳಗೆ ನಿಂತಿದ್ದಾನಾದರೂ, ರಾಜು ಹರಿಯ ಕೆಳಗೆ ನಿಂತಿಲ್ಲ; ಅವನು ಹರಿಯ ಮೇಲ್ಗಡೆ ನಿಂತಿದ್ದಾನೆ. (2ಚ) ಮತ್ತು (2ಟ)ಗಳೂ, (2ಕ) ಸೊಲ್ಲಿನ ಹಾಗೆ, ಎದುರೆಸಕಗಳನ್ನು ತಿಳಿಸುವುದಿಲ್ಲ; ಎತ್ತುಗೆಗಾಗಿ, ಹತ್ತಿಪ್ಪತ್ತು ಕಾರುಗಳು ಒಂದರ ಹಿಂದೊಂದು ಬರುತ್ತಿದ್ದಲ್ಲಿ, ಅವುಗಳ ನಡುವಿನ ಸಂಬಂದ ಸಂಕಲೆಯ ಕೊಂಡಿಗಳ ನಡುವಿನ ಸಂಬಂದದ ಹಾಗಿರುತ್ತದೆ. ಕೆಂಪು ಕಾರು ಬಿಳಿ ಕಾರಿನ ಹಿಂದೆ ಬರುತ್ತಿದೆಯಾದರೆ, ಬಿಳಿ ಕಾರು ಕೆಂಪು ಕಾರಿನ ಮುಂದೆ ಹೋಗುತ್ತಿರುತ್ತದೆ. ಇಂತಹ ಸಂಕಲೆಯ ಸಂಬಂದ ಮಾತ್ರವಲ್ಲದೆ ಬೇರೆ ಬಗೆಯ ಸಂಬಂದಗಳೂ ಎದುರೆಸಕದ ಸೊಲ್ಲುಗಳಲ್ಲಿ ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಕೆಳಗಿನ ಮೂರು ಸೊಲ್ಲುಗಳನ್ನು ಗಮನಿಸಬಹುದು: (3ಕ) ಅಲ್ಲಿಗೆ ಬಂದವರಲ್ಲಿ ಹೆಚ್ಚಿನವರೂ ಒಬ್ಬರನ್ನೊಬ್ಬರು ಮದುವೆ ಯಾಗಿದ್ದರು. (3ಚ) ಅವರು ನಾಲ್ವರು ಒಬ್ಬರ ಹತ್ತಿರ ಒಬ್ಬರು ಕುಳಿತಿದ್ದರು. (3ಟ) ನಾಯಿಗಳು ಒಂದನ್ನೊಂದು ಕಚ್ಚಿಹಾಕಿದುವು. (3ಕ)ದಲ್ಲಿ ಎದುರೆಸಕ ಕಾಣಿಸುವುದು ಒಂದೊಂದು ಜೋಡಿಗಳ ನಡುವೆ ಮಾತ್ರ (ರಾಜು ಜಾನಕಿಯನ್ನು, ಹರಿ ರಮೆಯನ್ನು, ಸೀತಾಪತಿ ವಿಲಾಸಿನಿಯನ್ನು…. ಮದುವೆಯಾಗಿರಬಹುದು); ಇದಕ್ಕೆ ಬದಲು, (3ಚ)ದಲ್ಲಿ ಬೇರೊಂದು ಬಗೆಯ ಎದುರೆಸಕ ಕಾಣಿಸುತ್ತದೆ: ರಾಜು ಹರಿಯ ಹತ್ತಿರ (ಮತ್ತು ಹರಿ ರಾಜುವಿನ ಹತ್ತಿರ), ಹರಿ ಜಾನಕಿಯ ಹತ್ತಿರ (ಮತ್ತು ಜಾನಕಿ ಹರಿಯ ಹತ್ತಿರ), ಜಾನಕಿ ಸೀತಾಪತಿಯ ಹತ್ತಿರ (ಮತ್ತು ಸೀತಾಪತಿ ಜಾನಕಿಯ ಹತ್ತಿರ) ಕುಳಿತಿರಬಹುದು. (3ಟ)ದಲ್ಲಿ ಇನ್ನೊಂದು ಬಗೆಯ ಎದುರೆಸಕ ಕಾಣಿಸಿಕೊಳ್ಳುತ್ತದೆ; ಇದರಲ್ಲಿ ಬೇರೆ ಬೇರೆ ಮಂದಿ ಬೇರೆ ಬೇರೆ ಬಗೆಗಳಲ್ಲಿ ಈ ಎದುರೆಸಕದಲ್ಲಿ ತೊಡಗಿ ಕೊಂಡಿರಬಹುದು: ನಾಯಿಗಳಲ್ಲಿ ಕೆಲವು ಕಚ್ಚುವ ಕೆಲಸವನ್ನು ನಡೆಸಿದ್ದರೂ ಬೇರೊಂದರಿಂದ ಕಚ್ಚಿಸಿಕೊಳ್ಳದಿರಬಹುದು, ಮತ್ತು ಬೇರೆ ಕೆಲವು ಕಚ್ಚಿಸಿ ಕೊಂಡಿದ್ದರೂ ಬೇರೊಂದನ್ನು ಕಚ್ಚದಿರಬಹುದು. ಎದುರೆಸಕದ ಹುರುಳನ್ನು ಕೊಡದಿರುವ ಇಂತಹ ಸೊಲ್ಲುಗಳಲ್ಲಿ ಮಾಡುಗವನ್ನು ಹಾಗೆಯೇ ಉಳಿಸಿ, ಈಡು ಪಾಂಗಿನೊಂದಿಗೆ ಗುರಿ, ಸುರು, ಇಲ್ಲವೇ ಜಾಗ ಪಾಂಗನ್ನು ಸೇರಿಸಿ ಹೇಳಲು ಬರುತ್ತದೆ; ಆದರೆ ಇಂತಹ ಸೊಲ್ಲುಗಳಲ್ಲಿ, ಕೆಳಗೆ (4ತ)ದಲ್ಲಿ ತೋರಿಸಿದ ಹಾಗೆ, ಪತ್ತುಗೆಕಂತೆ ಮಾತ್ರ ಬರುತ್ತದಲ್ಲದೆ ಅದರೊಂದಿಗೆ ಹಂಚಿಕೆಕಂತೆ ಬರುವುದಿಲ್ಲ. ಅವೆರಡನ್ನೂ ಒಟ್ಟಿಗೆ ತಿಳಿಸಬೇಕಿದ್ದಲ್ಲಿ (4ಪ)ದಲ್ಲಿ ಕಾಣಿಸಿದ ಹಾಗೆ ಬೇರೆ ಬಗೆಯ ಸೊಲ್ಲನ್ನು ಬಳಸಬೇಕಾಗುತ್ತದೆ: (4ಕ) ಅವನು ಒಂದಕ್ಕೊಂದನ್ನು ಅಂಟಿಸಿದ. (4ಚ) ಅವನು ಒಂದರಿಂದೊಂದನ್ನು ಕಳೆದ. (4ಟ) ಅವನು ಒಂದರ ಮೇಲೊಂದನ್ನು ಇರಿಸಿದ. (4ತ) *ಅವನು ಕೊಡಗಳನ್ನು ಒಂದರ ಮೇಲೊಂದನ್ನು ಇರಿಸಿದ.
(4ಪ) ಅವನು ಕೊಡಗಳನ್ನು ಒಂದರ ಮೇಲೊಂದರಂತೆ ಇರಿಸಿದ. ಕೊಡಗಳನ್ನು ಎಂಬ ಹಂಚಿಕೆಕಂತೆಯನ್ನು ಬಳಸಿರುವ (4ತ) ಸೊಲ್ಲು ಸರಿಯಾಗಿಲ್ಲ, ಮತ್ತು ಅದೇ ಹಂಚಿಕೆಕಂತೆಯೊಂದಿಗೆ ಪತ್ತುಗೆಕಂತೆಯನ್ನು ಬಳಸುವ ಬದಲು, ಒಂದರ ಮೇಲೊಂದರಂತೆ ಎಂಬ ಒಳಸೊಲ್ಲಿನಲ್ಲಿರಿಸಿರುವ ಬೇರೊಂದು ಬಗೆಯ ಪದಕಂತೆಯನ್ನು ಬಳಸಿರುವ (4ಪ) ಸೊಲ್ಲು ಸರಿಯಾಗಿದೆ ಎಂಬುದನ್ನು ಗಮನಿಸಬಹುದು. ಇಂತಹದೇ (ಹಂಚಿಕೆಕಂತೆಯನ್ನು ಬಳಸದಿರುವ) ಸೊಲ್ಲಿನಲ್ಲಿ ಸುರು ಮತ್ತು ಗುರಿ ಪಾಂಗುಗಳನ್ನೂ ಒಟ್ಟುಸೇರಿಸಲು ಬರುತ್ತದೆ ಎಂಬುದನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು: (4ಗ) ಈ ರೋಗ ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದೆ. ಹಂಚಿಕೆಕಂತೆ ಮತ್ತು ಪತ್ತುಗೆಕಂತೆಗಳೆರಡನ್ನೂ ಇಂತಹ ಸೊಲ್ಲುಗಳಲ್ಲಿ ಬಳಸಬೇಕಿದ್ದಲ್ಲಿ ಬೇರೆ ಬಗೆಯ ಸೊಲ್ಲುಗಳನ್ನು ಬಳಸಬೇಕಾಗುತ್ತದೆ: (5ಕ) ನಾನು ಆ ಪಾತ್ರೆಗಳನ್ನೆಲ್ಲ ತಂದು, ಒಂದರಮೇಲೊಂದನ್ನು ಇರಿಸಿದೆ. (5ಚ) ಒಂದರ ಮೇಲೊಂದನ್ನು ಇರಿಸಹೋಗಿ, ಮಡಕೆಗಳನ್ನೆಲ್ಲ ಒಡೆದು ಹಾಕಿದ. ಎರಡು ಎಸಕಗಳನ್ನು ಬೇರೆ ಬೇರಾಗಿ ತಿಳಿಸುವುದಕ್ಕೂ, ಒಟ್ಟುಸೇರಿಸಿ ಎದುರೆಸಕ ವಾಗಿ ತಿಳಿಸುವುದಕ್ಕೂ ನಡುವೆ ವ್ಯತ್ಯಾಸವಿದೆ: ಬೇರೆ ಬೇರಾಗಿ ತಿಳಿಸಿರುವ ಎಸಕಗಳಲ್ಲಿ ಒಂದನ್ನು ಮಾತ್ರವೇ ಅಲ್ಲಗಳೆಯಲು ಬರುತ್ತದೆ; ಆದರೆ, ಎದುರೆಸಕವಾಗಿ ತಿಳಿಸಿರುವ ಎಸಕಗಳಲ್ಲಿ ಆ ರೀತಿ ಒಂದನ್ನು ಮಾತ್ರವೇ ಅಲ್ಲಗಳೆಯಲು ಬರುವುದಿಲ್ಲ, ಎರಡನ್ನೂ ಒಟ್ಟಿಗೆ ಅಲ್ಲಗಳೆಯ ಬೇಕಾಗುತ್ತದೆ: (6ಕ) ಅವನು ಇವನನ್ನು ನೋಡಿದ; ಆದರೆ, ಇವನು ಅವನನ್ನು ನೋಡ ಲಿಲ್ಲ. (6ಚ) ಅವರು ಒಬ್ಬರನ್ನೊಬ್ಬರು ನೋಡಿದರು/ಅವರು ಒಬ್ಬರನ್ನೊಬ್ಬರು ನೋಡಲಿಲ್ಲ. (6ಕ)ದಲ್ಲಿ ಮೊದಲನೆಯ ಎಸಕವನ್ನು ಹಾಗೆಯೇ ಬಿಟ್ಟು, ಎರಡನೆಯದನ್ನು ಅಲ್ಲಗಳೆಯಲಾಗಿದೆ; ಆದರೆ, (6ಚ)ದಲ್ಲಿ ಎರಡನ್ನೂ ಒಟ್ಟಿಗೆ ಹಾಗೆಯೇ ಬಿಡಬೇಕಾಗಿದೆ, ಇಲ್ಲವೇ ಎರಡನ್ನೂ ಒಟ್ಟಿಗೆ ಅಲ್ಲಗಳೆಯಬೇಕಾಗಿದೆ.
8.5.8 ಎದುರೆಸಕ ಮತ್ತು ಸೇರಿಕೆಯೆಸಕ
ಸೇರಿಕೆಯೆಸಕದಲ್ಲಿರುವ ಹಾಗೆ ಎದರೆಸಕದಲ್ಲೂ ಸೊಲ್ಲಿನ ಎರಡು ಪಾಂಗುಗಳನ್ನು ಒಟ್ಟುಸೇರಿಸಲಾಗುತ್ತದೆ; ಆದರೆ, ಸೇರಿಕೆಯೆಸಕದಲ್ಲಿ ಅವೆರಡೂ ಒಬ್ಬನೇ ವ್ಯಕ್ತಿ ಇಲ್ಲವೇ ಒಂದೇ ವಸ್ತುವನ್ನು ಗುರುತಿಸುತ್ತವೆ. ಇದಕ್ಕೆ ಬದಲು, ಎದುರೆಸಕದಲ್ಲಿ ಅವು ಬೇರೆ ಬೇರೆ ವ್ಯಕ್ತಿ ಇಲ್ಲವೇ ವಸ್ತುಗಳನ್ನು ಗುರುತಿಸುತ್ತವೆ. ಸೇರಿಕೆಯೆಸಕದಲ್ಲಿ ಎರಡು ಪಾಂಗುಗಳ ನಡುವೆ ಒಗ್ಗುರುತಿಸುವಿಕೆಯಿದೆ ಎನ್ನಬಹುದು; ಆದರೆ, ಎದುರೆಸಕದಲ್ಲಿ ಆ ರೀತಿ ಒಗ್ಗುರುತಿಸುವಿಕೆಯಿರುವ ಬದಲು ಅಡ್ಡಗುರುತಿಸುವಿಕೆಯಿದೆ ಎನ್ನಬೇಕಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಹೋಲಿಸಿ ನೋಡಬಹುದು: (1ಕ) ರಾಜು ಹರಿಯನ್ನು ದೂರಿದ. (1ಚ) ರಾಜು (ತನ್ನನ್ನು) ದೂರಿಕೊಂಡ.
(1ಟ) ರಾಜು ಮತ್ತು ಹರಿ ಒಬ್ಬರನ್ನೊಬ್ಬರು ದೂರಿದರು. (1ಚ)ದಲ್ಲಿ ಸೇರಿಕೆಯೆಸಕ ಬಂದಿದ್ದು, ಅದರ ಎರಡು ಪಾಂಗುಗಳು (ಮಾಡುಗ ಮತ್ತು ಈಡು) ಒಬ್ಬನೇ ವ್ಯಕ್ತಿಯನ್ನು ಗುರುತಿಸುತ್ತವೆ: ದೂರಿದವನೂ ದೂರಲಾಗಿರು ವವನೂ ರಾಜು ಎಂಬ ಒಬ್ಬನೇ ವ್ಯಕ್ತಿ. ಹಾಗಾಗಿ, ಇಲ್ಲಿ ಈ ಎರಡು ಪಾಂಗುಗಳ ನಡುವೆ ಒಗ್ಗುರುತಿಸುವಿಕೆಯಿದೆ. ಇದಕ್ಕೆ ಬದಲು, ಎದುರೆಸಕ ಬಂದಿರುವ (1ಟ) ಸೊಲ್ಲಿನಲ್ಲಿ ಎರಡು ಪಾಂಗುಗಳು ಒಟ್ಟುಸೇರಿವೆಯಾದರೂ, ಅವು ರಾಜು ಮತ್ತು ಹರಿ ಎಂಬ ಎರಡು ಬೇರೆ ಬೇರೆ ವ್ಯಕ್ತಿಗಳನ್ನು ಗುರುತಿಸುತ್ತವೆ; ಈ ವ್ಯಕ್ತಿಗಳ ನಡುವೆ ಪಾಂಗುಗಳ ಮಟ್ಟಿಗೆ ಅಡ್ಡಗುರುತಿಸುವಿಕೆಯಿದೆಯಲ್ಲದೆ ಒಗ್ಗುರುತಿಸುವಿಕೆಯಿಲ್ಲ. ಇದುವೇ ಎದುರೆಸಕ ವಾಗಿರುವ (1ಟ) ಸೊಲ್ಲಿಗೂ ಎದುರೆಸಕವಲ್ಲದ (1ಕ) ಇಲ್ಲವೇ (1ಚ) ಸೊಲ್ಲಿಗೂ ನಡುವಿರುವ ವ್ಯತ್ಯಾಸ. ಸೇರಿಕೆಯೆಸಕದಲ್ಲಿ ಒಂದು ಎಸಕ ಮಾತ್ರ ನಡೆದಿರುತ್ತದೆ; ಆದರೆ ಎದುರೆಸಕದಲ್ಲಿ ಎರಡು ಒಳ ಎಸಕಗಳು ನಡೆದಿರುತ್ತವೆ; ಎತ್ತುಗೆಗಾಗಿ, (1ಚ) ಸೊಲ್ಲಿನಲ್ಲಿ ರಾಜು ದೂರುವವನಾಗಿರುವ’ಒಂದು ಒಳ ಎಸಕ ಮಾತ್ರ ಇದೆ. ಆದರೆ, (1ಟ) ಸೊಲ್ಲಿನಲ್ಲಿ ರಾಜು ದೂರುವವನಾಗಿರುವ ಎಸಕ’ಮತ್ತು ಹರಿ ದೂರುವವನಾಗಿರುವ ಎಸಕ ಎಂಬುದಾಗಿ ಎರಡು ಬೇರೆ ಬೇರೆ ಒಳ ಎಸಕಗಳಿವೆ. ಸೇರಿಕೆಯೆಸಕ ಮತ್ತು ಎದುರೆಸಕಗಳ ನಡುವಿರುವ ಈ ವ್ಯತ್ಯಾಸಗಳನ್ನು, ಕೆಳಗೆ ತೋರಿಸಿದ ಹಾಗೆ ಕಾಣಿಸಲು ಬರುತ್ತದೆ: ಸೇರಿಕೆಯೆಸಕ ಎದುರೆಸಕ ಮಾಡುಗ ಈಡು ಮಾಡುಗ ಈಡು ರಾಜು——ರಾಜು ರಾಜು———ಹರಿ ಹರಿ———–ರಾಜು ಎದುರೆಸಕದ ಸೊಲ್ಲಿನಲ್ಲಿ ಒಗ್ಗುರುತಿಸುವಿಕೆಯಿಲ್ಲವಾದರೂ, ಸೇರಿಕೆಯೆಸಕದ ಹಾಗೆ ಎರಡು ಪಾಂಗುಗಳನ್ನು ಒಟ್ಟುಸೇರಿಸಲಾಗುತ್ತದೆ. ಹಾಗಾಗಿ, ಸೇರಿಕೆಯೆಸಕದ ಹಾಗೆ, ಎರಡು ಪಾಂಗುಗಳನ್ನು ಒಟ್ಟುಸೇರಿಸಲು ಬರುವಂತಹ ಸೊಲ್ಲುಗಳನ್ನು ಮಾತ್ರ ಎದುರೆಸಕದ ಸೊಲ್ಲುಗಳನ್ನಾಗಿ ಮಾರ್ಪಡಿಸಲು ಬರುತ್ತದೆ. ಆ ರೀತಿ ಒಟ್ಟುಸೇರಿಸಲು ಬಾರದಿರುವ ಸೊಲ್ಲುಗಳನ್ನು ಎದುರೆಸಕದ ಸೊಲ್ಲುಗಳಾಗಿ ಮಾರ್ಪಡಿಸಲು ಬರುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವರು ಮರಗಳನ್ನು ಕಡಿದರು. (2ಚ) *ಅವರು ಮತ್ತು ಮರಗಳು ಒಬ್ಬರನ್ನೊಬ್ಬರು/ಒಂದನ್ನೊಂದು ಕಡಿದರು. (2ಕ) ಸೊಲ್ಲಿನಲ್ಲಿ ಬಂದಿರುವ ಅವರು ಮತ್ತು ಮರಗಳು ಎಂಬ ಎರಡು ಪಾಂಗುಗಳನ್ನು ಒಟ್ಟುಸೇರಿಸಲು ಬರುವುದಿಲ್ಲವಾದ ಕಾರಣ, ಅದನ್ನು ಎದುರೆಸಕದ ಸೊಲ್ಲಾಗಿ ಮಾರ್ಪಡಿಸಲು ಬರುವುದಿಲ್ಲ (ಆದರೆ, ತನಗಾಗಿ ಎಂಬ ಬೇರೆ ಹುರುಳಿನಲ್ಲಿ ಅವರು ಮರವನ್ನು ಕಡಿದುಕೊಂಡರು ಎಂಬ ಸೇರಿಕೆಯೆಸಕವನ್ನು ಇಂತಹ ಸೊಲ್ಲು ಗಳಲ್ಲೂ ಬಳಸಲು ಬರುತ್ತದೆ). ಎದುರೆಸಕ ಮತ್ತು ಸೇರಿಕೆಯೆಸಕಗಳ ನಡುವಿನ ಇನ್ನೊಂದು ವ್ಯತ್ಯಾಸವೇನೆಂದರೆ, ಸಾಮಾನ್ಯವಾಗಿ ಎದುರೆಸಕದ ಸೊಲ್ಲನ್ನು ಎರಡು ಸೊಲ್ಲುಗಳ ಜೋಡಿಸುವಿಕೆಯಿಂದ ಪಡೆಯಲು ಬರುತ್ತದೆ; ಆದರೆ, ಸೇರಿಕೆಯೆಸಕದ ಸೊಲ್ಲನ್ನು ಆ ರೀತಿ ಎರಡು ಸೊಲ್ಲುಗಳ ಜೋಡಿಸುವಿಕೆಯಿಂದ ಪಡೆಯಲು ಬರುವುದಿಲ್ಲ. ಮೇಲೆ ವಿವರಿಸಿದ ಹಾಗೆ, ಅದರಲ್ಲಿ ಒಂದೇ ಒಳ ಎಸಕವಿರುವುದೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಅವರು ಒಬ್ಬರಿಗೊಬ್ಬರು ಹೊಡೆದರು ಎಂಬ ಎದುರೆಸಕದ ಸೊಲ್ಲನ್ನು ಅವನು ಇವನಿಗೆ ಹೊಡೆದ ಮತ್ತು ಇವನು ಅವನಿಗೆ ಹೊಡೆದ ಎಂಬ ಎರಡು ಸೊಲ್ಲುಗಳ ಜೋಡಿಸುವಿಕೆಯಿಂದ ಪಡೆಯಲು ಬರುತ್ತದೆ; ಆದರೆ, ಅವರು ತಮಗೇನೇ ಹೊಡೆದುಕೊಂಡರು ಎಂಬ ಸೇರಿಕೆಯೆಸಕದ ಸೊಲ್ಲನ್ನು ಆ ರೀತಿ ಎರಡು ಸೊಲ್ಲುಗಳ ಜೋಡಿಸುವಿಕೆಯಿಂದ ಪಡೆಯಲು ಬರುವುದಿಲ್ಲ. ಹಲವೆಣಿಕೆಯ ಪಾಂಗುಗಳಿರುವ ಸೇರಿಕೆಯೆಸಕದ ಸೊಲ್ಲನ್ನು ಒಡೆಯಲು ಬರುತ್ತದೆಯೇನೋ ನಿಜ; ಆದರೆ, ಈ ಒಡೆತ ಎದುರೆಸಕದ ಸೊಲ್ಲಿನ ಒಡೆತಕ್ಕಿಂತ ಬೇರಾಗಿದೆ: ಎದುರೆಸಕದ ಸೊಲ್ಲನ್ನು ಒಡೆದಾಗ ಅದರ ಎರಡು ಒಳಎಸಕಗಳ ನಡುವಿದ್ದ ಅಡ್ಡ ಗುರುತಿಸುವಿಕೆ ಎರಡು ಸೊಲ್ಲುಗಳ ನಡುವಿನ ಒಂದೇ ಅಡ್ಡಗುರುತಿಸುವಿಕೆಯಾಗಿ ಕಾಣಿಸುತ್ತದೆ; ಆದರೆ, ಸೇರಿಕೆಯೆಸಕದ ಸೊಲ್ಲನ್ನು ಒಡೆದಾಗ, ಅದರಲ್ಲಿದ್ದ ಒಗ್ಗುರುತಿಸುವಿಕೆ ಎರಡು ಸೊಲ್ಲುಗಳಲ್ಲೂ ಬೇರೆ ಬೇರೆ ಒಗ್ಗುರುತಿಸುವಿಕೆಗಳಾಗಿ ಕಾಣಿಸುತ್ತದೆ: (3ಕ) ಅವರು ಒಬ್ಬರನ್ನೊಬ್ಬರು ದೂರಿದರು. (3ಚ) ಅವನು ಇವನನ್ನು ದೂರಿದ ಮತ್ತು ಇವನು ಅವನನ್ನು ದೂರಿದ. (4ಕ) ಅವರು (ತಮ್ಮನ್ನು) ದೂರಿಕೊಂಡರು. (4ಚ) ಅವನು (ತನ್ನನ್ನು) ದೂರಿಕೊಂಡ ಮತ್ತು ಇವನು (ತನ್ನನ್ನು) ದೂರಿಕೊಂಡ. (3ಕ)ದಲ್ಲಿದ್ದ ಅಡ್ಡಗುರುತಿಸುವಿಕೆ (3ಚ)ದ ಎರಡು ಸೊಲ್ಲುಗಳ ನಡುವೆ ಕಾಣಿಸುತ್ತದೆ; ಆದರೆ, (4ಕ)ದಲ್ಲಿದ್ದ ಒಗ್ಗುರುತಿಸುವಿಕೆ (4ಚ)ದ ಸೊಲ್ಲುಗಳಲ್ಲಿ ಎರಡು ಬೇರೆ ಬೇರೆ ಒಗ್ಗುರುತಿಸುವಿಕೆಗಳಾಗಿ ಕಾಣಿಸುತ್ತದೆ. ಎದುರೆಸಕಗಳನ್ನು ಹಲವು ಬಗೆಯ ಸೊಲ್ಲುಗಳ ಮೂಲಕ ತಿಳಿಸಲು ಬರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ಅವರು ಒಬ್ಬರನ್ನೊಬ್ಬರು ಹೊಗಳಿದರು. (5ಚ) ಎಲ್ಲರೂ ಉಳಿದವರನ್ನು ಹೊಗಳಿದರು. (5ಟ) ಅವರು ಕಾದಾಡಿದರು. (5ತ) ನೀವು ನಮ್ಮಲ್ಲಿಗೆ ಬನ್ನಿ, ನಾವು ನಿಮ್ಮಲ್ಲಿಗೆ ಬರುತ್ತೇವೆ. (5ಪ) ಅವರ ಸೀರೆ ಅದಲು ಬದಲಾಗಿತ್ತು (ಇವಳ ಸೀರೆ ಅವಳಿಗೆ, ಅವಳ ಸೀರೆ ಇವಳಿಗೆ). (5ಗ) ನಾಯಿ ನಾಯಿಯನ್ನು ಕಂಡರೆ ಬೊಗಳುತ್ತದೆ. (5ಜ) ಅವರು ಎದುರೆದುರಾಗಿ/ಎದುರುಬದುರಾಗಿ ಕುಳಿತುಕೊಂಡಿದ್ದರು. (5ಡ) ನೀವು ನಮ್ಮಲ್ಲಿಗೆ ಬಂದರೆ, ನಾವು ನಿಮ್ಮಲ್ಲಿಗೆ ಬರುತ್ತೇವೆ. ಇದಲ್ಲದೆ, ಅವರೊಳಗೆ ಒಮ್ಮತ ಮೂಡಿದೆ ಎಂಬ ಸೊಲ್ಲಿಗೆ ಅವರೆಂದುದನ್ನು ಇವರು ಒಪ್ಪಿದರು, ಇವರೆಂದುದನ್ನು ಅವರು ಒಪ್ಪಿದರು ಎಂಬುದಾಗಿ ಎದುರೆಸಕದ ಹುರುಳು ಸಿಗಬಲ್ಲುದು. ಆದರೆ, ಸೇರಿಕೆಯೆಸಕವನ್ನು ತಿಳಿಸಲು ಕೊಳ್ಳು ಎಂಬುದನ್ನು ಬಳಸುವ ಒಂದು ಹೊಲಬು ಮಾತ್ರ ಬಳಕೆಯಲ್ಲಿರುವ ಹಾಗೆ ಕಾಣಿಸುತ್ತದೆ.
8.5.9 ಎದುರೆಸಕದ ಎಸಕಪದಗಳು
ಕೆಲವು ಎಸಕಪದಗಳ ಹುರುಳಿನಲ್ಲೇನೇ ಎದುರೆಸಕದ ಹುರುಳು ಅಡಗಿರುತ್ತದೆ. ಎತ್ತುಗೆಗಾಗಿ, ಹೋಲು ಎಂಬ ಎಸಕಪದವನ್ನು ಗಮನಿಸಬಹುದು:
(1ಕ) ರಾಜು ಹರಿಯನ್ನು ಹೋಲುತ್ತಾನೆ. (1ಚ) ಹರಿ ರಾಜುವನ್ನು ಹೋಲುತ್ತಾನೆ. (1ಕ) ಸೊಲ್ಲಿಗೆ ಹೆಚ್ಚುಕಡಿಮೆ (1ಚ) ಸೊಲ್ಲಿನ ಹುರುಳೇ ಇದೆಯೆಂದು ಹೇಳಬಹುದು. ಹಾಗಿದ್ದರೂ, ಅವುಗಳ ನಡುವೆ ವ್ಯತ್ಯಾಸವೂ ಇದೆ: (1ಕ) ಸೊಲ್ಲು ರಾಜುವಿನ ಕುರಿತಾಗಿ ಒಂದು ಹೇಳಿಕೆಯನ್ನು ಕೊಡುತ್ತದೆ, ಮತ್ತು (1ಚ) ಸೊಲ್ಲು ಹರಿಯ ಕುರಿತಾಗಿ ಒಂದು ಹೇಳಿಕೆಯನ್ನು ಕೊಡುತ್ತದೆ. ಈ ಎರಡು ಸೊಲ್ಲುಗಳನ್ನು ಒಟ್ಟುಸೇರಿಸಿ, ಎದುರೆಸಕದ ಸೊಲ್ಲನ್ನಾಗಿ ಮಾಡಿದಲ್ಲಿ ಈ ವ್ಯತ್ಯಾಸ ಇಲ್ಲವಾಗುತ್ತದೆ: (1ಟ) ರಾಜು ಮತ್ತು ಹರಿ ಒಬ್ಬರನ್ನೊಬ್ಬರು ಹೋಲುತ್ತಾರೆ. (1ಟ) ಸೊಲ್ಲು ರಾಜು ಮತ್ತು ಹರಿ ಎಂಬ ಇಬ್ಬರ ಕುರಿತಾಗಿಯೂ ಒಟ್ಟಿಗೆ ಒಂದು ಹೇಳಿಕೆಯನ್ನು ಕೊಡುತ್ತಿರುವ ಕಾರಣ, (1ಕ) ಮತ್ತು (1ಚ) ಸೊಲ್ಲುಗಳ ನಡುವಿದ್ದಂತಹ ವ್ಯತ್ಯಾಸ ಇಲ್ಲಿ ಕಾಣಿಸುವುದಿಲ್ಲ. ಇಂತಹ ಎದುರೆಸಕದ ಹುರುಳನ್ನು ಕೊಡುವ ಎಸಕಪದಗಳನ್ನು ಕೆಳಗೆ ಕೊಟ್ಟಿರುವ ಗುಂಪುಗಳಲ್ಲಿ ಸೇರಿಸಿ ಹೇಳಬಹುದು: (1) ಒಟ್ಟಾಗಿ ಇಲ್ಲವೇ ಎದುರೆದುರಾಗಿ ಕೆಲಸ ನಡೆಸು: ಕಾದು, ಹೋರು, ಡಿಕ್ಕಿ ಹೊಡೆ, ಜಗಳಾಡು, ಆರಯ್ಯು, ಮಾತನಾಡು, ಒಡನುಲಿ, ಸೂಳು ನುಡಿಯಾಡು; (2) ಜೋಡಿಸು ಇಲ್ಲವೇ ಬೇರ್ಪಡಿಸು: ಜೋಡಿಸು, ಸೇರಿಸು, ಬೇರ್ಪಡಿಸು, ಬೇರಾಗು, ಒಂದಾಗು; (3) ಸಂಬಂದಿಸು: ನಂಟುಬೆಳೆಸು, ಮದುವೆಯಾಗು. ಕೆಲವು ಎಸಕಪದಗಳಿಗೆ ಆಡು ಪದವನ್ನು ಸೇರಿಸಿ ಉಂಟುಮಾಡಿರುವ ಕೂಡುಪದಗಳಿಗೆ ಎಸಕವನ್ನು ಹಲವು ಬಾರಿ ಮಾಡು ಎಂಬ ಹುರುಳು ಮಾತ್ರವಲ್ಲದೆ ಎದುರೆಸಕದ ಹುರುಳೂ ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವನು ನನಗೆ ಗುದ್ದಿದ. (2ಚ) ಅವರು ಗುದ್ದಾಡಿದರು. (3ಕ) ಅವನು ನನ್ನನ್ನು ಎಳೆದ. (3ಚ) ಅವರಿಬ್ಬರು ಎಳೆದಾಡಿದರು. ಗುದ್ದು ಮತ್ತು ಎಳೆ ಎಂಬವು ಮಾತ್ರವಲ್ಲದೆ, ಕಡಿ, ಕಚ್ಚು, ಜಗ್ಗು, ಹೊಡೆ, ಕೀಳು, ನೂಕು, ಬಡಿ ಎಂಬ ಬೇರೆ ಕೆಲವು ಎಸಕಪದಗಳೊಂದಿಗೂ ಆಡು ಪದವನ್ನು ಬಳಸಿ ಎದುರೆಸಕದ ಕೂಡುಪದಗಳನ್ನು ಉಂಟುಮಾಡಲು ಬರುತ್ತದೆ. ಈ ಕೂಡುಪದಗಳೊಂದಿಗೆ ಒಬ್ಬರನ್ನೊಬ್ಬರು ಎಂಬುದನ್ನು ಬಳಸದಿದ್ದರೂ ಎದುರೆಸಕದ ಹುರುಳು ಸಿಗುತ್ತದೆ ಎಂಬುದನ್ನು ಗಮನಿಸಬಹುದು. ಈ ಕೂಡುಪದಗಳೊಂದಿಗೆ ಒಬ್ಬರನ್ನೊಬ್ಬರು ಇಲ್ಲವೇ ಒಬ್ಬರಿಗೊಬ್ಬರು ಎಂಬುದನ್ನು ಬಳಸಿಯೂ ಎದುರೆಸಕದ ಸೊಲ್ಲುಗಳನ್ನು ಉಂಟುಮಾಡಬಹುದು; ಹೀಗೆ ಮಾಡುವುದರಿಂದ ಎದುರೆಸಕದ ಹುರುಳಿನ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ: (4ಕ) ಅವರು ಒಬ್ಬರನ್ನೊಬ್ಬರು ಎಳೆದಾಡಿದರು. (4ಚ) ಅವರು ಒಬ್ಬರಿಗೊಬ್ಬರು ಹೊಡೆದಾಡಿದರು.
(2ಚ) ಸೊಲ್ಲಿಗಿಂತ (4ಚ) ಸೊಲ್ಲು ಎದುರೆಸಕದ ಹುರುಳಿನ ಮೇಲೆ ಹೆಚ್ಚಿನ ಒತ್ತನ್ನು ಇರಿಸಿದೆ ಎಂಬುದನ್ನು ಗಮನಿಸಬಹುದು. ಹೋರು ಮತ್ತು ಕಾದು ಪದಗಳು ತಾವಾಗಿಯೇ ಎದುರೆಸಕದ ಹುರುಳನ್ನು ಕೊಡುತ್ತಿದ್ದು, ಅವುಗಳ ಈ ಹುರುಳನ್ನು ಒತ್ತಿಹೇಳಲು ಅವುಗಳೊಂದಿಗೆ ಆಡು ಪದವನ್ನು ಬಳಸಲಾಗುತ್ತದೆ; ಆದರೆ, ಇವುಗಳ ಬಳಕೆಯಲ್ಲಿ ಎರಡು ಪಾಂಗುಗಳನ್ನು ಒಟ್ಟುಸೇರಿಸದೆಯೂ ಇರಬಹುದು: (5ಕ) ಅವನು ನನ್ನೊಡನೆ ಕಾದಿದ. (5ಚ) ಅವನು ನನ್ನೊಡನೆ ಕಾದಾಡಿದ. (5ಟ) ಅವರು ಕಾದಿದರು/ಕಾದಾಡಿದರು. (5ತ) ಅವರು ಒಬ್ಬರೊಡನೊಬ್ಬರು ಕಾದಿದರು/ಕಾದಾಡಿದರು. ಎದುರೆಸಕದ ಎಸಕಪದಗಳನ್ನು ಹಾಗೆಯೇ ಬಳಸುವುದಕ್ಕೂ ಎದುರೆಸಕದ ಸೊಲ್ಲುಗಳಲ್ಲಿ ಬಳಸುವುದಕ್ಕೂ ನಡುವೆ ಕೆಲವು ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು: (6ಕ) ಕಾರುಗಳು ಲಾರಿಗಳಿಗೆ ಡಿಕ್ಕಿಹೊಡೆದುವು. (6ಚ) ಕಾರುಗಳು ಮತ್ತು ಲಾರಿಗಳು ಒಂದಕ್ಕೊಂದು ಡಿಕ್ಕಿಹೊಡೆದುವು. (6ಕ) ಸೊಲ್ಲಿಗೆ ಕಾರು-ಲಾರಿ ಡಿಕ್ಕಿಯನ್ನು ತಿಳಿಸುವ ಹುರುಳಿದೆಯಲ್ಲದೆ, ಕಾರು-ಕಾರು ಇಲ್ಲವೇ ಲಾರಿ-ಲಾರಿ ಡಿಕ್ಕಿಯನ್ನು ತಿಳಿಸುವ ಹುರುಳಿಲ್ಲ; ಇದಕ್ಕೆ ಬದಲು (6ಚ) ಸೊಲ್ಲಿಗೆ ಈ ಎರಡು ಬಗೆಯ ಡಿಕ್ಕಿಗಳನ್ನು ತಿಳಿಸುವ ಹುರುಳೂ ಸಿಗಬಲ್ಲುದು. ಇದಲ್ಲದೆ, ಎದುರೆಸಕದ ಎಸಕಪದಗಳನ್ನು ಎದುರೆಸಕದ ಹುರುಳು ಬಾರದಿರು ವಲ್ಲೂ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (7ಕ) ಕಾರು ಗೋಡೆಗೆ ಡಿಕ್ಕಿಹೊಡೆಯಿತು. (7ಚ) *ಗೋಡೆ ಕಾರಿಗೆ ಡಿಕ್ಕಿಹೊಡೆಯಿತು. (7ಟ) * ಕಾರು ಮತ್ತು ಗೋಡೆಗಳು ಒಂದಕ್ಕೊಂದು ಡಿಕ್ಕಿಹೊಡೆದುವು. (7ಕ) ಸೊಲ್ಲಿಗೆ ಎದುರೆಸಕದ ಹುರುಳಿಲ್ಲ. ಈ ಕಾರಣಕ್ಕಾಗಿ, ಅದು ತಿಳಿಸುವ ಎಸಕಕ್ಕೆ ಎದುರಾಗಬಲ್ಲ ಎಸಕದ ಹುರುಳನ್ನು ಕೊಡುವ (7ಚ) ಸೊಲ್ಲು ಸರಿಯಾಗಿಲ್ಲ. ಇದಲ್ಲದೆ, (7ಕ) ಸೊಲ್ಲನ್ನು ಎದುರೆಸಕದ ಸೊಲ್ಲಾಗಿ ಮಾರ್ಪಡಿಸಲು ಬರುವುದಿಲ್ಲ ಎಂಬುದನ್ನು ಸರಿಯಿಲ್ಲದ (7ಟ) ಸೊಲ್ಲು ತೋರಿಸುತ್ತದೆ.
8.5.10 ಎದುರುಹುರುಳಿನ ಹೆಸರುಪದಗಳು
ಅತ್ತೆ-ಸೊಸೆಯರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಮಾವ-ಅಳಿಯಂದಿರು, ಗಂಡ-ಹೆಂಡತಿಯರು, ಅಪ್ಪ- ಮಗ, ಅತ್ತಿಗೆ-ಅತ್ತಿಗೆಯರು, ಬಾವ-ಬಾವಂದಿರು ಮೊದಲಾದ ಕೆಲವು ನಂಟಸ್ತನದ ಪದಜೋಡಿಗಳು ಎದುರುಹುರುಳಿನಲ್ಲಿ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಅತ್ತೆಸೊಸೆಯರ ಕುರಿತು ಒಂದು ಪುಸ್ತಕ ಬರೆದಿದ್ದಾನೆ. (1ಚ) ಅಣ್ಣತಮ್ಮಂದಿರು ಜಗಳಾಡುತ್ತಿದ್ದಾರೆ. (1ತ) ಮಾವ-ಅಳಿಯಂದಿರು ಮಾರ್ಕೆಟ್ಟಿಗೆ ಹೊರಟಿದ್ದಾರೆ.
(1ಕ)ದಲ್ಲಿ ಅವನು ಪುಸ್ತಕ ಬರೆದಿರುವುದು ಅತ್ತೆಯ ಮತ್ತು ಅವಳ ಸೊಸೆಯ ಕುರಿತಾಗಿಯಲ್ಲದೆ, ತನ್ನ (ಇಲ್ಲವೇ ಬೇರೊಬ್ಬ ವ್ಯಕ್ತಿಯ) ಅತ್ತೆ ಮತ್ತು ಸೊಸೆಯರ ಕುರಿತಾಗಿ ಅಲ್ಲ. ಇಲ್ಲಿ ಅತ್ತೆ-ಸೊಸೆಯರು ಎಂಬುದಕ್ಕೆ ಅವಳು ಇವಳ ಅತ್ತೆ ಮತ್ತು ಇವಳು ಅವಳ ಸೊಸೆ’ಎಂಬುದಾಗಿ ಎದುರುಹುರುಳಿದೆ ಎಂದು ಹೇಳಬಹುದು. ಇದೇ ರೀತಿಯಲ್ಲಿ, ಅಣ್ಣತಮ್ಮಂದಿರು ಎಂಬುದಕ್ಕೆ ಅವನು ಇವನ ಅಣ್ಣ ಮತ್ತು‘ಇವನು ಅವನ ತಮ್ಮ’ಎಂಬುದಾಗಿ ಎದುರುಹುರುಳನ್ನು ಕೊಡಲು ಬರುತ್ತದೆ. ಇದಕ್ಕೆ ಬದಲು, ಅಜ್ಜ-ಅಜ್ಜಿಯರು ಇಲ್ಲವೇ ತಾಯಿ-ತಂದೆಯರು ಎಂಬ ಪದಜೋಡಿಗಳಿಗೆ ಅಂತಹ ಎದುರುಹುರುಳಿಲ್ಲ. ಇವೆರಡೂ ಒಬ್ಬ ವ್ಯಕ್ತಿಯ ಅಜ್ಜ ಮತ್ತು ಅಜ್ಜಿಯರನ್ನು ಇಲ್ಲವೇ ತಾಯಿ ಮತ್ತು ತಂದೆಯರನ್ನು ಗುರುತಿಸುತ್ತವೆ. ಅತ್ತೆ-ಸೊಸೆ, ಅಕ್ಕ-ತಂಗಿ ಮೊದಲಾದ ಈ ನಂಟಸ್ತನದ ಪದಗಳನ್ನು ಮತ್ತು ಪದದ ಮೂಲಕ ಇಲ್ಲವೇ ಊ ಒಟ್ಟಿನ ಮೂಲಕ ಜೋಡಿಸಿ ಹೇಳಿದಲ್ಲಿ, ಅವಕ್ಕೆ ಇಂತಹ ಎದುರುಹುರುಳು ಸಿಗುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವನು ಅತ್ತೆಯನ್ನೂ ಸೊಸೆಯನ್ನೂ ಊಟಕ್ಕೆ ಕರೆದಿದ್ದ. (2ಚ) ಅವನು ಅತ್ತೆಯನ್ನು ಮತ್ತು ಸೊಸೆಯನ್ನು ಊಟಕ್ಕೆ ಕರೆದಿದ್ದ. (2ಟ) ಅವನು ಅತ್ತೆಸೊಸೆಯರನ್ನು ಊಟಕ್ಕೆ ಕರೆದಿದ್ದ. (2ಕ) ಮತ್ತು (2ಚ) ಸೊಲ್ಲುಗಳಿಗೆ ಅವನು ತನ್ನ ಅತ್ತೆಯನ್ನೂ ತನ್ನ ಸೊಸೆಯನ್ನೂ ಊಟಕ್ಕೆ ಕರೆದಿದ್ದ’ಎಂಬ ಹುರುಳು ಸಿಗಬಲ್ಲುದು; ಆದರೆ, (2ಟ) ಸೊಲ್ಲಿಗೆ ಆ ಹುರುಳು ಸಿಗಲಾರದು; ಅದಕ್ಕೆ ಅತ್ತೆಯನ್ನೂ ಆಕೆಯ ಸೊಸೆಯನ್ನೂ ಊಟಕ್ಕೆ ಕರೆದಿದ್ದಾನೆ’ಎಂಬ ಎದುರುಹುರುಳು ಮಾತ್ರ ಸಿಗಬಲ್ಲುದು. ಇಂತಹ ನಂಟಸ್ತಿಕೆಯನ್ನು ತಿಳಿಸುವ ಪದಜೋಡಿಗಳು ಮಾತ್ರವಲ್ಲದೆ, ವ್ಯಕ್ತಿಗಳ ನಡುವಿನ ಸಂಬಂದವನ್ನು ತಿಳಿಸುವ ಬೇರೆ ಕೆಲವು ಪದಜೋಡಿಗಳೂ ಎದುರುಹುರುಳಿ ನಲ್ಲಿ ಬಳಕೆಯಾಗುತ್ತವೆ. ಎತ್ತುಗೆಗಾಗಿ, ಗೆಳೆಯ-ಗೆಳತಿಯರು, ಗುರು-ಶಿಶ್ಯರು, ಮೊದಲಾದ ಪದಜೋಡಿಗಳ ಬಳಕೆಯಲ್ಲೂ ಎದುರುಹುರುಳು ಕಾಣಿಸಿಕೊಳ್ಳುತ್ತದೆ.
8.5.11 ಎದುರೆಸಕಪದಗಳ ರೂಪಗಳು
ಎದುರೆಸಕದ ಸೊಲ್ಲುಗಳಲ್ಲಿ ಬರುವ ಎಸಕಪದಗಳನ್ನು ಪತ್ತುಗೆ ರೂಪದಲ್ಲಿ ಮತ್ತು ಜೋಡಿಸುವ ರೂಪದಲ್ಲಿ ಬಳಸಲು ಬರುತ್ತದೆ: (1ಕ) ಇಲ್ಲಿ ಒಂದನ್ನೊಂದು ಹೋಲುವ ಬೊಂಬೆಗಳು ಹಲವಿವೆ. (1ಚ) ಒಂದರಲ್ಲೊಂದು ಅಡಗಿಕೊಳ್ಳುವ ಬುಟ್ಟಿಗಳು ಹಲವಿವೆ. (2ಕ) ಒಂದಕ್ಕೊಂದು ಡಿಕ್ಕಿಹೊಡೆದು ಒಡೆದುಹೋದುವು. (2ಚ) ಒಬ್ಬರನ್ನೊಬ್ಬರು ಹೊಗಳಲು ಸುರುಮಾಡಿದರು. ಆದರೆ, ಎದುರೆಸಕದ ಸೊಲ್ಲುಗಳಲ್ಲಿ ಬರುವ ಪತ್ತುಗೆಕಂತೆಗೆ ಹೆಸರುಪತ್ತುಗೆಯ ಒಟ್ಟನ್ನು ಸೇರಿಸಲು ಬರುವುದಿಲ್ಲ: (3ಕ) *ಅವರು ಒಂದಕ್ಕೊಂದರ ಕಾಲನ್ನು ಕಟ್ಟಿದರು. (3ಚ) *ಅವರು ಒಬ್ಬರನ್ನೊಬ್ಬರ ಮನೆಗೆ ಬರಹೇಳಿದರು.
ಇದಲ್ಲದೆ, ಈ ಎಸಕಪದಗಳಿಗೆ ಉದು ಒಟ್ಟನ್ನು ಸೇರಿಸಿ ಹೆಸರುರೂಪಗಳನ್ನು ಪಡೆಯಲು ಬರುತ್ತದೆ (ಒಬ್ಬರನ್ನೊಬ್ಬರು ದೂರುತ್ತಿದ್ದುದು, ಒಬ್ಬರಿಗೊಬ್ಬರು ಹೊಡೆಯುತ್ತಿರುವುದು); ಆದರೆ, ಅವಕ್ಕೆ ಇಕೆ ಒಟ್ಟನ್ನು ಸೇರಿಸಲು ಬರುವುದಿಲ್ಲ (*ಒಬ್ಬರನ್ನೊಬ್ಬರ ದೂಡುವಿಕೆ; *ಒಬ್ಬರಿಗೊಬ್ಬರ ಹೊಡೆಯುವಿಕೆ); ಇಕೆ ಒಟ್ಟನ್ನು ಬಳಸಿರುವಲ್ಲಿ ಎಸಕಪತ್ತುಗೆಯ ಒಟ್ಟುಗಳು ಉಳಿಯದಿರುವುದೇ ಇದಕ್ಕೆ ಕಾರಣವಿರಬೇಕು. ಎದುರೆಸಕದ ಸೊಲ್ಲುಗಳ ಪತ್ತುಗೆಕಂತೆಯನ್ನು ಇನ್ನೊಂದು ಹೆಸರುಕಂತೆಯೊಂದಿಗೆ ಮತ್ತು ಪದದ ಮೂಲಕ ಜೋಡಿಸಲು ಬರುವುದಿಲ್ಲ: (4ಕ) *ಅವರು ಒಬ್ಬರಿಗೊಬ್ಬರು ಮತ್ತು ಬೇರೆ ಜನರಿಗೂ ಹಣ ಕೊಟ್ಟರು. (4ಚ) *ಅವರು ಒಬ್ಬರನ್ನೊಬ್ಬರು ಮತ್ತು ಬೇರೊಬ್ಬರನ್ನು ದೂಡಿದರು. ಹಾಗಾಗಿ, ಇಂತಹ ಸೊಲ್ಲುಗಳಲ್ಲಿ ಬರುವ ಹಂಚಿಕೆಕಂತೆ ಮತ್ತು ಪತ್ತುಗೆಕಂತೆಗಳು ಒಟ್ಟಿಗೆ ಒಂದು ಪದಕಂತೆಯಾಗಿ ಬರುತ್ತವೆಯೆಂದು ಹೇಳಬೇಕಾಗುತ್ತದೆ. ಆದರೆ, ಮೇಲೆ ತಿಳಿಸಿದ ಹಾಗೆ, ಅವೆರಡರ ನಡುವೆ ಬೇರೆ ಪದಕಂತೆಗಳನ್ನು ಬಳಸಲು ಬರುತ್ತದೆ: (5ಕ) ಅವರು ಕಾಡಿನಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು. (5ಚ) ಅವರು ದಿನಾಲೂ ಒಬ್ಬರನ್ನೊಬ್ಬರು ಕಾಣುತ್ತಿದ್ದರು. (5ಟ) ಅವರು ಸಂಜೆ ಎಂಟು ಗಂಟೆ ವರೆಗೆ ಒಬ್ಬರ ಮನೆಯನ್ನೊಬ್ಬರು ಕಾಯುತ್ತಿದ್ದರು. (5ಕ)ದಲ್ಲಿ ಕಾಡಿನಲ್ಲಿ ಎಂಬ ಜಾಗ ಪಾಂಗು ಹಂಚಿಕೆಕಂತೆ (ಅವರು) ಮತ್ತು ಪತ್ತುಗೆಕಂತೆ(ಒಬ್ಬರನ್ನೊಬ್ಬರು)ಗಳ ನಡುವೆ ಬಂದಿದೆ; (5ಚ)ದಲ್ಲಿ ದಿನಾಲೂ ಮತ್ತು (5ಟ)ದಲ್ಲಿ ಸಂಜೆ ಎಂಟು ಗಂಟೆ ವರೆಗೆ ಎಂಬ ಹೊತ್ತಿನ ನೆರವು ಪಾಂಗುಗಳೂ ಇದೇ ರೀತಿಯಲ್ಲಿ ಬಳಕೆಯಾಗಿವೆ.
8.6 ಕೂಡುಪದಗಳ ಪಾಂಗಿಟ್ಟಳಗಳು
ಹೆಸರುಪದಕ್ಕೆ, ಪರಿಚೆಪದಕ್ಕೆ, ಇಲ್ಲವೇ ಎಸಕಪದದ ಜೋಡಿಸುವ ರೂಪಕ್ಕೆ ಬೇರೊಂದು ಎಸಕಪದವನ್ನು ಸೇರಿಸಿ ಕೂಡುಪದವೆಂಬ ಎಸಕಪದಗಳನ್ನು ಉಂಟುಮಾಡಲಾಗುತ್ತದೆ. ಎತ್ತುಗೆಗಾಗಿ, ತೀರಿಹೋಗು ಎಂಬುದು ಒಂದು ಕೂಡುಪದ; ಇದರಲ್ಲಿ ಹೋಗು ಎಂಬ ಎಸಕಪದವನ್ನು ತೀರು ಎಂಬ ಎಸಕಪದದ ತೀರಿ ಎಂಬ ಜೋಡಿಸುವ ರೂಪದೊಂದಿಗೆ ಸೇರಿಸಲಾಗಿದೆ; ಇದಕ್ಕೆ ಬದಲು, ಮರೆಹೋಗು ಎಂಬ ಇನ್ನೊಂದು ಕೂಡುಪದದಲ್ಲಿ ಅದೇ ಎಸಕಪದವನ್ನು ಮರೆ ಎಂಬ ಹೆಸರು ಪದದೊಂದಿಗೆ ಸೇರಿಸಲಾಗಿದೆ (ಇವುಗಳ ಇಟ್ಟಳದ ಕುರಿತು ಹೆಚ್ಚಿನ ವಿವರಗಳಿಗೆ 3.3 ನೋಡಿ). ಇಂತಹ ಕೂಡುಪದಗಳ ಪಾಂಗಿಟ್ಟಳಗಳು ಅವುಗಳಲ್ಲಿ ಬರುವ ಎಸಕಪದಗಳ ಪಾಂಗಿಟ್ಟಳಗಳಿಗಿಂತ ಹಲವು ಬಗೆಗಳಲ್ಲಿ ಬೇರಾಗಿರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ಹಣ್ಣನ್ನು ಚೀಲದಲ್ಲಿಟ್ಟ. (1ಚ) ಅವನು ಅವರಲ್ಲಿ ಮೊರೆಯಿಟ್ಟ. (1ಟ) ಅವನು ಚಿನ್ನವನ್ನು ಸೆಟ್ಟಿಯಲ್ಲಿ ಅಡವಿಟ್ಟ.
(1ತ) ಅವನು ಎಲ್ಲವನ್ನೂ ಬರೆದಿಟ್ಟ. ಇಡು ಎಸಕಪದದೊಂದಿಗೆ ಮಾಡುಗ+ಈಡು+ಜಾಗ ಎಂಬ ಪಾಂಗಿಟ್ಟಳ ಬರುತ್ತದೆ ಎಂಬುದನ್ನು (1ಕ)ದಲ್ಲಿ ಕಾಣಬಹುದು; ಆದರೆ, ಈ ಎಸಕಪದವನ್ನು ಕೂಡುಪದಗಳ ಎರಡನೆಯ ಎಸಕಪದವಾಗಿ ಬಳಸಿದಾಗ, ಅವುಗಳ ಮೊದಲನೆಯ ಪದವನ್ನವಲಂಬಿಸಿ, ಅದರ ಈ ಪಾಂಗಿಟ್ಟಳದಲ್ಲಿ ಹಲವು ಬಗೆಯ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು (1ಚ-ತ) ಸೊಲ್ಲುಗಳಲ್ಲಿ ಕಾಣಬಹುದು. ಇಡು ಪದದ ಪಾಂಗಿಟ್ಟಳದಲ್ಲಿದ್ದ ಮಾಡುಗ, ಈಡು, ಮತ್ತು ಜಾಗಗಳೆಂಬ ಮೂರು ಪಾಂಗುಗಳಲ್ಲಿ ಮಾಡುಗ ಮತ್ತು ಜಾಗಗಳು ಮಾತ್ರ (1ಚ)ದಲ್ಲಿ ಬಂದಿವೆ, ಮತ್ತು (1ತ)ದಲ್ಲಿ ಮಾಡುಗ ಮತ್ತು ಈಡುಗಳು ಮಾತ್ರ ಬಂದಿವೆ; ಇದಕ್ಕೆ ಬದಲು, (1ಟ)ದಲ್ಲಿ ಮಾಡುಗ, ಈಡು ಮತ್ತು ಜಾಗಗಳೆಂಬ ಮೂರು ಪಾಂಗುಗಳೂ ಬಂದಿವೆ. ಈ ವ್ಯತ್ಯಾಸಕ್ಕೆ (1ಚ-ತ)ಗಳಲ್ಲಿ ಬಂದಿರುವ ಕೂಡುಪದಗಳ ಮೊದಲನೆಯ ಪದ (ಮೊರೆ, ಅಡವು, ಮತ್ತು ಬರೆದು ಎಂಬವು) ಕಾರಣ ಎಂದು ಹೇಳಬಹುದು. ಕೂಡುಪದಗಳಲ್ಲಿ ಒಂದು ಹೆಸರು ಇಲ್ಲವೇ ಪರಿಚೆ ಪದದೊಂದಿಗೆ ಎಸಕಪದ ವನ್ನು ಬಳಸಿದಾಗ, ಆ ಎಸಕಪದದ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ಕೆಳಗೆ (8.6.1-2)ರಲ್ಲಿ ವಿವರಿಸಲಾಗಿದೆ; ಆಮೇಲೆ, ಒಂದು ಎಸಕಪದದ ಜೋಡಿಸುವ ರೂಪಕ್ಕೆ ಇನ್ನೊಂದು ಎಸಕಪದವನ್ನು ಸೇರಿಸಿದಾಗ, ಆ ಎರಡು ಎಸಕಪದಗಳ ಪಾಂಗಿಟ್ಟಳಗಳನ್ನು ಹೇಗೆ ಒಂದುಗೂಡಿಸಲಾಗುತ್ತದೆ ಎಂಬುದನ್ನು (8.6.3)ರಲ್ಲಿ ವಿವರಿಸಲಾಗಿದೆ.
8.6.1 ಹೆಸರುಪದಗಳಿರುವ ಕೂಡುಪದಗಳು
ಕೂಡುಪದಗಳಿಗೆ ಹೆಸರುಪದಗಳನ್ನು ಸೇರಿಸಿ ಹಲವು ಬಗೆಯ ಕೂಡುಪದಗಳನ್ನು ಪಡೆಯಲು ಬರುತ್ತದೆ; ಇಂತಹ ಕೂಡುಪದಗಳ ಪಾಂಗಿಟ್ಟಳಗಳು ಅವುಗಳ ಅಂಗಗಳಾಗಿ ಬಂದಿರುವ ಹೆಸರುಪದ ಮತ್ತು ಎಸಕಪದಗಳೆರಡನ್ನೂ ಅವಲಂಬಿ ಸಿರುತ್ತವೆ. ಕೆಲವೆಡೆಗಳಲ್ಲಿ ಎಸಕಪದದ ಪಾಂಗಿಟ್ಟಳವೇ ಕೂಡುಪದದ ಪಾಂಗಿಟ್ಟಳವೂ ಆಗಿರುತ್ತದೆ. ಎತ್ತುಗೆಗಾಗಿ ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವರು ಮನೆಗೆ ಹೋದರು > ಅವರು ಊಟಿಗೆ ಗುಳೆಹೋದರು. (1ಚ) ಅವನು ಹಾಸಿಗೆ ಕಟ್ಟಿದ > ಅವನು ನನ್ನನ್ನು ಸರಿಗಟ್ಟಿದ. (1ಟ) ಅವನು ಕೆಳಗೆ ಬಿದ್ದ > ಅವನು ಮೋಸಕ್ಕೆ ಬಲಿಬಿದ್ದ. ಮೇಲಿನ ಸೊಲ್ಲುಗಳಲ್ಲಿ ಬಂದಿರುವ ಹೋಗು, ಕಟ್ಟು ಮತ್ತು ಬೀಳು ಎಸಕಪದಗಳು ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿವೆ, ಮತ್ತು ಗುಳೆಹೋಗು, ಸರಿಗಟ್ಟು ಮತ್ತು ಬಲಿಬೀಳು ಕೂಡುಪದಗಳೂ ಅದೇ ಪಾಂಗಿಟ್ಟಳದಲ್ಲೇ ಬಂದಿವೆ ಎಂಬುದನ್ನು ಗಮನಿಸಬಹುದು. ಆದರೆ, ಬೇರೆ ಹಲವು ಕಡೆಗಳಲ್ಲಿ ಕೂಡುಪದದ ಪಾಂಗಿಟ್ಟಳ ಅದರ ಎರಡನೇ ಪದವಾಗಿ ಬಂದಿರುವ ಎಸಕಪದದ ಪಾಂಗಿಟ್ಟಳಕ್ಕಿಂತ ಬೇರಾಗಿರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವನು ಚೆಂಡನ್ನು ಬಾವಿಗೆ ಹಾಕಿದ > ಎತ್ತು ಗುಟುರುಹಾಕಿತು. (2ಚ) ಅವನು ಹಣವನ್ನು ಚೀಲದಲ್ಲಿ ಇಟ್ಟ > ಅವನು ಮನೆಗೆ ಕಿಚ್ಚಿಟ್ಟ. (2ಟ) ಅವನು ಕೆಲಸ ಮಾಡಿದ > ಅವನು ನನಗೆ ಮೋಸಮಾಡಿದ. (2ಕ)ದಲ್ಲಿ ಹಾಕು ಎಸಕಪದ ಮಾಡುಗ+ಈಡು+ಗುರಿ ಪಾಂಗಿಟ್ಟಳದೊಂದಿಗೆ ಬಂದಿದೆ, ಆದರೆ, ಅದರೊಂದಿಗೆ ಗುಟುರು ಹೆಸರುಪದವನ್ನು ಸೇರಿಸಿರುವ ಗುಟುರುಹಾಕು ಕೂಡುಪದ ಮಾಡುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬಂದಿದೆ.
ಇದೇ ರೀತಿಯಲ್ಲಿ, (2ಚ)ದಲ್ಲಿ ಇಡು ಎಸಕಪದ ಮಾಡುಗ+ಈಡು+ಜಾಗ ಪಾಂಗಿಟ್ಟಳದೊಂದಿಗೆ ಬಂದಿದೆ, ಮತ್ತು ಕಿಚ್ಚಿಡು ಕೂಡುಪದ ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿದೆ; (2ಟ)ದಲ್ಲಿ ಮಾಡು ಎಸಕಪದ ಮಾಡುಗ+ಈಡು ಪಾಂಗಿಟ್ಟಳದೊಂದಿಗೆ ಬಂದಿದೆ, ಮತ್ತು ಮೋಸಮಾಡು ಕೂಡುಪದ ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಬಂದಿದೆ. ಎಸಕಪದಗಳಿಗೆ ಹೆಸರುಪದಗಳನ್ನು ಸೇರಿಸಿ ಕೂಡುಪದಗಳನ್ನು ಉಂಟುಮಾಡಿ ದಾಗ, ಅವುಗಳ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ, ಮತ್ತು ಈ ಮಾರ್ಪಾಡುಗಳ ಮೇಲೆ ಎಸಕಪದ ಮತ್ತು ಹೆಸರುಪದಗಳ ಪ್ರಬಾವ ಎಂತಹದು ಎಂಬುದನ್ನು ತಿಳಿಯಲು ಎರಡು ಬಗೆಯ ಪರಿಶೀಲನೆಗಳನ್ನು ನಡೆಸಬಹುದು: (ಕ) ಮೊದಲನೆಯದಾಗಿ, ಒಂದೇ ಎಸಕಪದದೊಂದಿಗೆ ಎರಡು ಇಲ್ಲವೇ ಹೆಚ್ಚು ಹೆಸರುಪದಗಳನ್ನು ಬಳಸಿ ಉಂಟುಮಾಡಿರುವ ಕೂಡುಪದಗಳನ್ನು ಗಮನಿಸಿದಲ್ಲಿ, ಎಸಕಪದದ ಪಾಂಗಿಟ್ಟಳದ ಮೇಲೆ ಆ ಹೆಸರುಪದಗಳು ಹೇಗೆ ಮಾರ್ಪಾಡುಗಳನ್ನು ತರುತ್ತವೆ ಎಂಬುದನ್ನು ತಿಳಿಯಬಹುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (3ಕ) ಅವನು ದೇವರಲ್ಲಿ ಮೊರೆಯಿಟ್ಟ. (3ಚ) ಅವನು ಬಣವೆಗೆ ಕಿಚ್ಚಿಟ್ಟ. (3ಕ)ದಲ್ಲಿ ಮಾಡುಗ+ಜಾಗ ಪಾಂಗಿಟ್ಟಳ ಬಂದಿದೆ, ಮತ್ತು (3ಚ)ದಲ್ಲಿ ಮಾಡುಗ+ಗುರಿ ಪಾಂಗಿಟ್ಟಳ ಬಂದಿದೆ. ಇಡು ಎಸಕಪದಕ್ಕಿರುವ ಮಾಡುಗ+ಈಡು+ ಜಾಗ ಎಂಬ ಪಾಂಗಿಟ್ಟಳ ಇಲ್ಲಿ ಎರಡು ಬಗೆಗಳಲ್ಲಿ ಮಾರ್ಪಟ್ಟಿದ್ದು, ಇದಕ್ಕೆ ಅದರೊಂದಿಗೆ ಬಂದಿರುವ ಮೊರೆ ಮತ್ತು ಕಿಚ್ಚು ಹೆಸರುಪದಗಳೇ ಕಾರಣ ಎಂದು ಹೇಳಬೇಕಾಗುತ್ತದೆ. (ಚ) ಎರಡನೆಯದಾಗಿ, ಒಂದೇ ಹೆಸರುಪದದೊಂದಿಗೆ ಎರಡು ಇಲ್ಲವೇ ಹೆಚ್ಚು ಎಸಕಪದಗಳನ್ನು ಬಳಸಿ ಉಂಟುಮಾಡಿರುವ ಕೂಡುಪದಗಳನ್ನು ಗಮನಿಸಿದಲ್ಲಿ, ಆ ಹೆಸರುಪದ ಹೇಗೆ ಬೇರೆ ಬೇರೆ ಎಸಕಪದಗಳ ಪಾಂಗಿಟ್ಟಳಗಳನ್ನು ಮಾರ್ಪಡಿಸುತ್ತದೆ ಎಂಬುದನ್ನು ತಿಳಿಯಬಹುದು: (4ಕ) ಅವನಿಗೆ ತಲೆತಿರುಗಿತು. (4ಚ) ಅವನಿಗೆ ತಿಂದುದು ತಲೆಗೇರಿತು. (4ಟ) ಅವನು ಅವರ ಮಾತಿಗೆ ತಲೆದೂಗಿದ. ತಿರುಗು ಪದದೊಂದಿಗೆ ಒಂದು ಮಾಡುಗ ಪಾಂಗು ಮಾತ್ರ ಬರುತ್ತದೆ (ಅವನು ತಿರುಗಿದ); ಆದರೆ, ಅದಕ್ಕೆ ತಲೆ ಹೆಸರುಪದವನ್ನು ಸೇರಿದಾಗ, ಅದರೊಂದಿಗೆ ಆಗುಗ ಮತ್ತು ಗುರಿ ಪಾಂಗುಗಳು ಬರುತ್ತವೆ, ಮತ್ತು ಅದೊಂದು ಆಗುಹವನ್ನು ತಿಳಿಸುತ್ತದೆ ಎಂಬುದನ್ನು (4ಕ)ದಲ್ಲಿ ಕಾಣಬಹುದು. ಇದಕ್ಕೆ ಬದಲು, ಏರು ಎಸಕಪದ ಒಂದು ಆಗುಹವನ್ನೇ ತಿಳಿಸುತ್ತದೆ, ಮತ್ತು ಅದರೊಂದಿಗೆ ಆಗುಹ ಮತ್ತು ಗುರಿ ಪಾಂಗುಗಳು ಬರುತ್ತವೆ; ಅದಕ್ಕೆ ತಲೆ ಹೆಸರುಪದವನ್ನು ಸೇರಿಸಿರುವಲ್ಲೂ ಈ ಪಾಂಗಿಟ್ಟಳ ಹಾಗೆಯೇ ಉಳಿಯುತ್ತದೆ ಎಂಬುದನ್ನು (4ಚ)ದಲ್ಲಿ ಕಾಣಬಹುದು. ಆದರೆ, (4ಟ)ದಲ್ಲಿ ಕಾಣಿಸಿದ ಹಾಗೆ, ಮಾಡುಗ ಮತ್ತು ಈಡು ಪಾಂಗುಗ ಳೊಂದಿಗೆ ಬರುವ ತೂಗು ಎಸಕಪದಕ್ಕೆ ತಲೆ ಹೆಸರುಪದವನ್ನು ಸೇರಿಸಿದಾಗ, ಈಡು ಪಾಂಗು ಗುರಿ ಪಾಂಗಾಗುತ್ತದೆ ಮತ್ತು ಮಾಡುಗ ಪಾಂಗು ಮಾರ್ಪಡದೆ ಉಳಿಯುತ್ತದೆ. ಇಂತಹ ಕೂಡುಪದಗಳನ್ನು ಗಮನಿಸಿದಾಗ, ಹೆಚ್ಚಿನೆಡೆಗಳಲ್ಲೂ ಅವುಗಳ ಎಸಕಪದಗಳೇ ಅವಕ್ಕೆ ಪಾಂಗಿಟ್ಟಳಗಳನ್ನು ಒದಗಿಸುತ್ತವೆ, ಮತ್ತು ಅವುಗಳೊಂದಿಗೆ ಬಂದಿರುವ ಹೆಸರುಪದಗಳು ಈ ಪಾಂಗಿಟ್ಟಳಗಳಲ್ಲಿ ಕೆಲವು ಮಾರ್ಪಾಡುಗಳನ್ನಶ್ಟೇ ತರುತ್ತವೆ ಎಂಬುದಾಗಿ ಹೇಳಲು ಬರುತ್ತದೆ. ಹೆಸರುಪದಗಳೊಂದಿಗೆ ಎಸಕಪದಗಳು ಸೇರಿರುವ ಕಡೆಗಳಲ್ಲಿ ಒಂದು ಕೂಡುಪದವಿದೆಯೇ, ಇಲ್ಲವೇ ಒಂದು ಪಾಂಗು ಮತ್ತು ಎಸಕಪದಗಳ ಸೇರಿಕೆ ಯಿದೆಯೇ ಎಂಬುದನ್ನು ಅಶ್ಟೊಂದು ಸುಳುವಾಗಿ ತೀರ್ಮಾನಿಸಲು ಬರುವುದಿಲ್ಲ. ಅವೆರಡು
ಒಟ್ಟುಸೇರಿ ಹೆಚ್ಚಿನದೊಂದು ಹುರುಳಿಗೆ ಎಡೆಕೊಟ್ಟಿವೆಯಾದರೆ, ಮತ್ತು ಅವುಗಳ ಎರಡು ಅಂಗಗಳ ನಡುವೆ ಬೇರೆ ಪದಗಳನ್ನು ಬಳಸಲು ಬರುವುದಿಲ್ಲ ವಾದರೆ, ಅವನ್ನು ಕೂಡುಪದಗಳೆಂದೇ ತಿಳಿಯುವುದೊಳ್ಳೆಯದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (5ಕ) ಅವನು ಪುಸ್ತಕದ ಮೇಲೆ ಕಣ್ಣಾಡಿಸಿದ. (5ಚ) ಅವನು ನನ್ನ ಮಾತಿಗೆ ತಲೆದೂಗಿದ. (5ಟ) ಅವರು ಹುಡುಗನ ಕಾಲೆಳೆಯುತ್ತಿದ್ದಾರೆ. ಮೇಲಿನ ಸೊಲ್ಲುಗಳಲ್ಲಿ ಕಣ್ಣಾಡಿಸು, ತಲೆದೂಗು, ಮತ್ತು ಕಾಲೆಳೆ ಪದಗಳ ಹುರುಳನ್ನು ನೇರವಾಗಿ ಅವುಗಳ ಅಂಗಗಳಾಗಿರುವ ಪದಗಳಿಂದ ಪಡೆಯಲು ಬರುವುದಿಲ್ಲ. ಹಾಗಾಗಿ, ಅವುಗಳಲ್ಲಿ ಬಳಕೆಯಾಗಿರುವ ಕಣ್ಣು, ತಲೆ ಮತ್ತು ಕಾಲು ಎಂಬ ಹೆಸರುಪದಗಳನ್ನು ಸೊಲ್ಲುಗಳ ಪಾಂಗುಗಳೆಂದು ತಿಳಿಯುವ ಬದಲು ಕೂಡುಪದದ ಅಂಗಗಳೆಂದು ತಿಳಿಯುವುದೇ ಒಳ್ಳೆಯದು. ಇದಲ್ಲದೆ, ಬೇರೆ ಎಸಕಪದಗಳ ಈಡು ಪಾಂಗುಗಳ ಹಾಗೆ ಅವಕ್ಕೂ ಎಸಕ ಪದಕ್ಕೂ ನಡುವೆ ಬೇರೆ ಪದಗಳನ್ನು ತಂದುಹಾಕಲು ಬರುವುದಿಲ್ಲ: (5ತ) *ಅವನು ಕಣ್ಣನ್ನು ಪುಸ್ತಕದ ಮೇಲೆ ಆಡಿಸಿದ. (5ಪ) *ಅವನು ತಲೆಯನ್ನು ನನ್ನ ಮಾತಿಗೆ ತೂಗಿದ. (5ತ)ವನ್ನು (5ಕ)ದ ಬದಲು, ಇಲ್ಲವೇ (5ಪ)ವನ್ನು (5ಚ)ದ ಬದಲು ಬಳಸಲು ಬರುವುದಿಲ್ಲ ಎಂಬುದನ್ನು ಗಮನಿಸಬಹುದು. (1) ಹಲವು ಹೆಸರುಪದಗಳೊಡನೆ ಒಂದೇ ಎಸಕಪದದ ಬಳಕೆ: ಹಲವು ಹೆಸರುಪದಗಳೊಂದಿಗೆ ಒಂದೇ ಎಸಕಪದವನ್ನು ಸೇರಿಸಿ ಉಂಟುಮಾಡಿರುವ ಕೂಡುಪದಗಳನ್ನು ಪರಿಶೀಲಿಸಿದಾಗ, ಹೆಸರುಪದಗಳು ಯಾವ ರೀತಿಯಲ್ಲೆಲ್ಲ ಎಸಕ ಪದಗಳ ಪಾಂಗಿಟ್ಟಳವನ್ನು ಮಾರ್ಪಡಿಸಬಲ್ಲುವು ಎಂಬುದು ಗೊತ್ತಾಗುತ್ತದೆ. ಎತ್ತುಗೆಗಾಗಿ, ಒಂದು ಕೂಡುಪದವು ಆಗುಹವೇ ಇಲ್ಲವೇ ಮಾಡುಹವೇ ಎಂಬುದನ್ನು ಹೆಚ್ಚಿನ ಎಸಕಪದಗಳೂ ತಮ್ಮ ಹತೋಟಿಯಲ್ಲಿರಿಸಿಕೊಂಡಿರುತ್ತವೆ; ಆದರೆ, ಹೋಗು, ಇಕ್ಕು ಎಂಬಂತಹ ಬೇರೆ ಕೆಲವು ಎಸಕಪದಗಳು ಇದನ್ನೂ ಅವುಗಳೊಂದಿಗೆ ಬರುವ ಹೆಸರುಪದದ ಹತೋಟಿಗೆ ಬಿಟ್ಟುಕೊಡುತ್ತವೆ. ಆಗು, ಮಾಡು, ಕಟ್ಟು, ಇಡು ಮೊದಲಾದ ಹತ್ತು ಎಸಕಪದಗಳೊಂದಿಗೆ ಬೇರೆ ಬೇರೆ ಹೆಸರುಪದಗಳನ್ನು ಬಳಸಿದಾಗ ಅವುಗಳ ಪಾಂಗಿಟ್ಟಳಗಳಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ಆಗು ಎಸಕಪದದ ಬಳಕೆ: ಆಗು ಪದದೊಂದಿಗೆ ಎರಡು ಬಗೆಯ ಹೆಸರುಪದಗಳನ್ನು ಬಳಸಲು ಬರುತ್ತದೆ: (ಕ) ಅದನ್ನು ಗೊತ್ತು, ಅಡ್ಡಿ, ವೆಚ್ಚ, ಅಣಿ ಎಂಬಂತಹ ಕೆಲವು ಪದಗಳೊಂದಿಗೆ ಸೇರಿಸಿ ಉಂಟುಮಾಡಿರುವ ಕೂಡುಪದಗಳ ಪಾಂಗಿಟ್ಟಳದಲ್ಲಿ ಗುರಿ ಮತ್ತು ಆಗುಗ ಪಾಂಗುಗಳು ಬರುತ್ತವೆ, ಮತ್ತು ಪಾಲು, ಮೋಸ, ತೊಂದರೆ ಎಂಬಂತಹ ಪದಗಳೊಂದಿಗೆ ಸೇರಿಸಿರುವಲ್ಲಿ ಗುರಿ ಪಾಂಗು ಮಾತ್ರ ಬರುತ್ತದೆ: (1ಕ) ಅವನಿಗೆ ವಿಶಯ ಗೊತ್ತಾಯಿತು. (1ಚ) ಅವರು ಕೆಲಸಕ್ಕೆ ಅಣಿಯಾದರು. (2ಕ) ಅವನಿಗೆ ಮೋಸವಾಯಿತು.
(2ಚ) ಅವನಿಗೆ ತೊಂದರೆಯಾಯಿತು. (ಚ) ಇದಕ್ಕೆ ಬದಲು, ಅದನ್ನು ಸರಿ, ಹಣ್ಣು, ಚಟ್ಟು ಎಂಬಂತಹ ಹೆಸರುಪದ ಗಳೊಂದಿಗೆ ಸೇರಿಸಿರುವಲ್ಲಿ ಆಗುಗ ಪಾಂಗು ಮಾತ್ರ ಬರುತ್ತದೆ. (3ಕ) ಹಲಸಿನ ಕಾಯಿ ಹಣ್ಣಾಯಿತು. (3ಚ) ಅವರ ಹಣ ಚಟ್ಟಾಯಿತು. (3ಟ) ಕೋಣೆ ತೆರವಾಯಿತು. ಹಾಗಾಗಿ, ಆಗು ಪದವನ್ನು ಬಳಸಿರುವ ಕೂಡುಪದದ ಪಾಂಗಿಟ್ಟಳದಲ್ಲಿ ಗುರಿ ಪಾಂಗು ಬರುತ್ತದೆಯೋ ಇಲ್ಲವೋ ಎಂಬುದು ಅದರೊಂದಿಗೆ ಬರುವ ಹೆಸರುಪದ ವನ್ನವಲಂಬಿಸಿದೆ. ಆಗು ಪದದೊಂದಿಗೆ ಗುರಿ ಪಾಂಗು ಮಾತ್ರ ಬಂದಿರುವಲ್ಲಿ ಗುರಿ, ಒಳಗೆ ಎಂಬಂತಹ ಬೇರೊಂದು ಪದವನ್ನು ಅದರೊಂದಿಗೆ ಬಳಸಿ, ಮೊದಲಿಗಿದ್ದ ಹೆಸರುಪದವನ್ನು ಗುರಿ ಪಾಂಗಾಗಿಯೂ, ಮೊದಲಿಗಿದ್ದ ಗುರಿ ಪಾಂಗನ್ನು ಆಗುಗ ಪಾಂಗಾಗಿಯೂ ಮಾರ್ಪಡಿಸಲು ಬರುತ್ತದೆ: (4) ಅವನಿಗೆ ತೊಂದರೆಯಾಯಿತು > ಅವನು ತೊಂದರೆಗೆ ಗುರಿಯಾದ. (5) ಅವನಿಗೆ ಮೋಸವಾಯಿತು > ಅವನು ಮೋಸಕ್ಕೆ ಒಳಗಾದ. (2) ಮಾಡು ಎಸಕಪದದ ಬಳಕೆ: ಮಾಡು ಪದದೊಂದಿಗೆ ಹೆಸರುಪದಗಳನ್ನು ಬಳಸಿರುವಲ್ಲಿಯೂ ಎರಡು ಬಗೆಗಳನ್ನು ಕಾಣಬಹುದು: (ಕ) ಅದನ್ನು ಮೋಸ, ಅಡ್ಡಿ, ತಡ ಎಂಬಂತಹ ಹೆಸರುಪದಗಳೊಂದಿಗೆ ಸೇರಿಸಿ ಉಂಟುಮಾಡಿದ ಕೂಡುಪದಗಳ ಪಾಂಗಿಟ್ಟಳದಲ್ಲಿ ಮಾಡುಗ ಮತ್ತು ಗುರಿ ಪಾಂಗುಗಳು ಬರುತ್ತವೆ: (6ಕ) ಅವನು ನನಗೆ ಮೋಸಮಾಡಿದ. (6ಚ) ಅವನು ನಮಗೆ ಅಡ್ಡಿಮಾಡಿದ. (ಚ) ಇದಕ್ಕೆ ಬದಲು, ಅದನ್ನು ಸರಿ, ಅಚ್ಚು, ಗೊತ್ತು, ಚಿಂದಿ, ಸೂರೆ, ವೆಚ್ಚ, ಹಣ್ಣು, ಚಟ್ಟು, ತೆರವು, ಕಿರಿದು ಎಂಬಂತಹ ಹೆಸರುಪದಗಳೊಂದಿಗೆ ಸೇರಿಸಿ ಉಂಟುಮಾಡಿದ ಕೂಡುಪದಗಳ ಪಾಂಗಿಟ್ಟಳದಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಬರುತ್ತವೆ: (7ಕ) ಅವನು ತುಂಬಾ ಹಣ ವೆಚ್ಚಮಾಡಿದ. (7ಚ) ಅವನು ಕೋಣೆಯನ್ನು ತೆರವುಮಾಡಿದ. (3) ಕಟ್ಟು ಎಸಕಪದದ ಬಳಕೆ: ಕಟ್ಟು ಪದ ಒಂದು ಆಗುಹವನ್ನೂ ತಿಳಿಸಬಲ್ಲುದು (ಅವನ ಗಂಟಲು ಕಟ್ಟಿದೆ), ಇಲ್ಲವೇ ಒಂದು ಮಾಡುಹವನ್ನೂ ತಿಳಿಸಬಲ್ಲುದು (ಅವನು ದನ ಕಟ್ಟಿದ). ಈ ವ್ಯತ್ಯಾಸ ಅದನ್ನು ಹೆಸರುಪದಗಳೊಂದಿಗೆ ಸೇರಿಸಿ ಉಂಟುಮಾಡಿರುವ ಕೂಡುಪದಗಳಲ್ಲೂ ಕಾಣಿಸಿಕೊಳ್ಳುತ್ತದೆ; ಅಂತಹ ಕೂಡುಪದಗಳು ಆಗುಹವನ್ನಾಗಲಿ ಇಲ್ಲವೇ ಮಾಡುಹವನ್ನಾಗಲಿ ತಿಳಿಸಬಲ್ಲುವು:
(ಕ) ಮರ, ಕೊಕ್ಕೆ, ಹೆಪ್ಪು, ಕೆನೆ, ಕೀವು, ಸಿಪ್ಪೆ, ಕಾಳು, ನಿರಿ, ಸುಕ್ಕು, ನೊರೆ, ಬೂಜು, ಬಡ್ಡು ಮೊದಲಾದ ಪದಗಳೊಂದಿಗೆ ಸೇರಿಸಿ ಕೂಡುಪದವನ್ನು ಉಂಟುಮಾಡಿರುವಲ್ಲಿ ಅದು ಆಗುಹವನ್ನು ತಿಳಿಸುತ್ತದೆ, ಮತ್ತು ಅದರೊಂದಿಗೆ ಒಂದು ಆಗುಗ ಪಾಂಗು ಮಾತ್ರ ಬರುತ್ತದೆ: (8ಕ) ಹಾಲು ಕೆನೆಗಟ್ಟಿದೆ. (8ಚ) ಗಾಯ ಕೀವುಗಟ್ಟಿದೆ. (8ಟ) ಬಟ್ಟೆ ಸುಕ್ಕುಗಟ್ಟಿದೆ. ಇಂತಹ ಕೂಡುಪದಗಳಲ್ಲಿ ಉಸಿರು, ಗಂಟಲು ಇಲ್ಲವೇ ಬಾಯಿ ಪದ ಬಂದಿದೆಯಾದರೆ, ಅದರೊಂದಿಗೆ ಆಗುಗದ ಬದಲು ಗುರಿ ಪಾಂಗು ಬರುತ್ತದೆ: (9ಕ) ಅವನಿಗೆ ಉಸಿರುಗಟ್ಟಿತು. (9ಚ) ಅವನಿಗೆ ಬಾಯಿಕಟ್ಟಿತು. (ಚ) ಇದಕ್ಕೆ ಬದಲು, ಗಂಟು, ಕತೆ, ಗುಂಪು, ಪಂತ, ಹೊಟ್ಟೆ, ಸಾಲು, ದಾರಿ ಮೊದಲಾದ ಬೇರೆ ಕೆಲವು ಹೆಸರುಪದಗಳೊಂದಿಗೆ ಸೇರಿಸಿರುವಲ್ಲಿ ಕೂಡುಪದ ಮಾಡುಹವನ್ನು ತಿಳಿಸುತ್ತದೆ, ಮತ್ತು ಅದರೊಂದಿಗೆ ಒಂದು ಮಾಡುಗ ಪಾಂಗು ಮಾತ್ರ ಬರುತ್ತದೆ: (10ಕ) ಅವನು ಗಂಟುಕಟ್ಟಿದ. (10ಚ) ಎಲ್ಲರೂ ಗುಂಪುಕಟ್ಟಿದ್ದಾರೆ. (10ಟ) ಅವನು ಹೊಟ್ಟೆಕಟ್ಟಿ (ತುಂಬಾ ಹಣ ಉಳಿಸಿದ). (10ಚ)ದಲ್ಲಿ ಕಾಣಿಸುವಂತೆ, ಗುಂಪು ಮತ್ತು ಸಾಲು ಪದಗಳು ಬಂದಿರುವಲ್ಲಿ ಮಾಡುಗ ಪಾಂಗು ಹಲವೆಣಿಕೆಯ ಹೆಸರುಪದವಾಗಿರಬೇಕಾಗುತ್ತದೆ. ಇಂತಹ ಕೂಡುಪದಗಳಲ್ಲಿ ಸರಿ, ಹೆಡೆಮುರಿಗೆ ಎಂಬಂತಹ ಪದಗಳು ಬಂದಿರುವಲ್ಲಿ ಮಾಡುಗ ಪಾಂಗಿನೊಂದಿಗೆ ಈಡು ಪಾಂಗು ಬರಬಲ್ಲುದು, ಮತ್ತು ಬೆಲೆ ಪದ ಬಂದಿರುವಲ್ಲಿ ಗುರಿ ಪಾಂಗು ಬರಬಲ್ಲುದು: (11ಕ) ಅವರು ಆತನನ್ನು ಹೆಡೆಮುರಿಗೆಕಟ್ಟಿ (ಕೋಣೆಯಲ್ಲಿ ಹಾಕಿದರು). (11ಚ) ಅವನು ಈ ಮನೆಗೆ ಬೆಲೆಕಟ್ಟುತ್ತಿದ್ದಾನೆ. (4) ಇಡು ಎಸಕಪದದ ಬಳಕೆ: ಇಡು ಎಸಕಪದ ಮಾಡುಗ, ಈಡು, ಮತ್ತು ಜಾಗ ಪಾಂಗುಗಳೊಂದಿಗೆ ಬರುತ್ತದೆ (ಅವನು ಪುಸ್ತಕವನ್ನು ಕಪಾಟಿನಲ್ಲಿ ಇಟ್ಟ). ಅದಕ್ಕೆ ಹೆಸರುಪದಗಳನ್ನು ಸೇರಿಸಿದಾಗ, ಅದರ ಪಾಂಗಿಟ್ಟಳದಲ್ಲಿ ಕೆಳಗೆ ವಿವರಿಸಿದಂತಹ ಮೂರು ಬಗೆಯ ಮಾರ್ಪಾಡುಗಳು ನಡೆಯುತ್ತವೆ: (ಕ) ಅಡವು, ಒತ್ತೆ ಎಂಬಂತಹ ಪದಗಳೊಂದಿಗೆ ಸೇರಿದಾಗ, ಅದರ ಈ ಪಾಂಗಿಟ್ಟಳ ಮಾರ್ಪಡದೆ ಉಳಿಯುತ್ತದೆ; ಆದರೆ, ಮೀಸಲು ಪದದೊಂದಿಗೆ ಬಂದಾಗ, ಜಾಗ ಪಾಂಗು ಗುರಿ ಪಾಂಗಾಗುತ್ತದೆ: (12ಕ) ಅವನು ಚಿನ್ನವನ್ನು ಸೆಟ್ಟಿಯಲ್ಲಿ ಅಡವಿಟ್ಟ. (12ಚ) ಅವನು ಈ ಜಾಗವನ್ನು ನಿಮಗೆ ಮೀಸಲಿಟ್ಟಿದ್ದಾನೆ.
(ಚ) ಮೊರೆ ಇಲ್ಲವೇ ಕಣ್ಣು ಪದ ಬಂದಿರುವಲ್ಲಿ ಮಾಡುಗ ಮತ್ತು ಜಾಗ ಪಾಂಗುಗಳು ಮಾತ್ರ ಉಳಿಯುತ್ತವೆ, ಮತ್ತು ಬೊಬ್ಬೆ, ಗೋಳು, ಸುಯಿಲು, ಹುಯ್ಯಲು, ಉಸುರು ಎಂಬಂತಹ ಪದಗಳು ಬಂದಿರುವಲ್ಲಿ ಮಾಡುಗ ಪಾಂಗು ಮಾತ್ರ ಉಳಿಯುತ್ತದೆ: (13ಕ) ಆತ ಅವರಲ್ಲಿ ಮೊರೆಯಿಟ್ಟ. (13ಚ) ಅವನು ಗೋಳಿಡುತ್ತಿದ್ದಾನೆ. (ಟ) ಮುದ್ದು ಮತ್ತು ನೆನಪು ಪದಗಳು ಬಂದಿರುವಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರ ಉಳಿಯುತ್ತವೆ, ಮತ್ತು ಗುರಿ, ಹೆಸರು, ಮತ್ತು ಕಿಚ್ಚು ಪದಗಳು ಬಂದಿರುವಲ್ಲಿ ಮಾಡುಗ ಪಾಂಗಿನೊಂದಿಗೆ ಗುರಿ ಪಾಂಗು ಬರುತ್ತದೆ. (14ಕ) ಅವನು ಹಾಡನ್ನು ನೆನಪಿಟ್ಟಿದ್ದಾನೆ. (14ಚ) ಅವನು ಅವರ ಮನೆಗೆ ಕಿಚ್ಚಿಟ್ಟ. (5) ಕೊಡು ಎಸಕಪದದ ಬಳಕೆ: ಕೊಡು ಎಸಕಪದದೊಂದಿಗೆ ಮಾಡುಗ+ಈಡು+ಗುರಿ ಪಾಂಗಿಟ್ಟಳ ಬರುತ್ತದೆ; ಇದರೊಂದಿಗೆ ಬೆಲೆ, ಕಿವಿ, ಮಾತು, ಎಡೆ ಎಂಬಂತಹ ಪದಗಳನ್ನು ಬಳಸಿ ಕೂಡುಪದಗಳನ್ನು ಉಂಟುಮಾಡಿರುವಲ್ಲಿ ಆ ಪಾಂಗಿಟ್ಟಳದ ಈಡು ಪಾಂಗು ಇಲ್ಲವಾಗುತ್ತದೆ: (15ಕ) ಅವನು ಆಕೆಯ ಮಾತಿಗೆ ಬೆಲೆಕೊಟ್ಟ. (15ಚ) ಅವನು ಆಕೆಗೆ ಮಾತುಕೊಟ್ಟ. (6) ಹೋಗು ಎಸಕಪದದ ಬಳಕೆ: ಹೋಗು ಎಸಕಪದ ಒಂದು ಮಾಡುಹವನ್ನು ತಿಳಿಸುತ್ತಿದ್ದು, ಅದರೊಂದಿಗೆ ಮಾಡುಗ+ಗುರಿ ಪಾಂಗಿಟ್ಟಳ ಬರುತ್ತದೆ; ಆದರೆ, ಅದನ್ನು ಹೆಸರುಪದಗಳೊಂದಿಗೆ ಸೇರಿಸಿರುವಲ್ಲಿ ಕೆಲವು ಕಡೆ ಆಗುಹದ ಹುರುಳು ಬರುತ್ತದೆ, ಮತ್ತು ಬೇರೆ ಕೆಲವು ಕಡೆ ಮಾಡುಹದ ಹುರುಳು ಬರುತ್ತದೆ: (16ಕ) ಬಿದಿರು ಕಟ್ಟೆಹೋಗಿದೆ. (16ಚ) ಅವರು ಊಟಿಗೆ ಗುಳೆಹೋದರು. (16ಕ)ದಲ್ಲಿ ಗುರಿ ಪಾಂಗು ಬಿದ್ದುಹೋಗಿದೆ, ಮತ್ತು ಹುರುಳು ಆಗುಹವಾಗಿದೆ; (16ಚ)ದಲ್ಲಿ ಗುರಿ ಉಳಿದಿದೆ, ಮತ್ತು ಹುರುಳು ಮಾಡುಹವಾಗಿ ಉಳಿದಿದೆ. (7) ಕೆಡು ಎಸಕಪದದ ಬಳಕೆ: ಕೆಡು ಎಸಕಪದ ಆಗುಗ ಪಾಂಗಿನೊಂದಿಗೆ ಮಾತ್ರ ಬರಬಲ್ಲುದು; ಅದಕ್ಕೆ ಹೆಸರುಪದಗಳನ್ನು ಸೇರಿಸಿದಾಗಲೂ ಅದು ಅಂತಹದೇ ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ: (17ಕ) ಅವನು ಎದೆಗೆಟ್ಟ. (17ಚ) ಅವನು ಅರಿವುಗೆಟ್ಟ. (17ಟ) ಅದು ಹದಗೆಟ್ಟಿದೆ. (8) ಬಿಡು ಎಸಕಪದದ ಬಳಕೆ:
ಬಿಡು ಎಸಕಪದ ಆಗುಗ ಪಾಂಗಿನೊಂದಿಗೆ ಸೇರಿ ಒಂದು ಆಗುಹವನ್ನು ತಿಳಿಸಬಲ್ಲುದು (ಶಾಲೆ ಬಿಟ್ಟಿತು), ಮತ್ತು ಮಾಡುಗ ಮತ್ತು ಈಡು ಪಾಂಗುಗ ಳೊಂದಿಗೆ ಸೇರಿ ಒಂದು ಮಾಡುಹವನ್ನೂ ತಿಳಿಸಬಲ್ಲುದು (ಅವನು ಕೆಲಸ ಬಿಟ್ಟ). ಆದರೆ, ಅದರೊಂದಿಗೆ ಹೆಸರುಪದವನ್ನು ಸೇರಿಸಿ ಉಂಟುಮಾಡಿರುವ ಕೂಡುಪದಗಳು ಈ ಎರಡು ಬಗೆಯ ಹುರುಳುಗಳಲ್ಲಿ ಒಂದನ್ನು ಮಾತ್ರ (ಆಗುಗ ವನ್ನಾಗಲಿ ಇಲ್ಲವೇ ಮಾಡುಹವನ್ನಾಗಲಿ) ತಿಳಿಸಬಲ್ಲುವು: (ಕ) ಬೇರು, ಕಾಯಿ, ತೆನೆ, ಹೂ, ಅಗೆ ಎಂಬಂತಹ ಹೆಸರುಪದಗಳೊಂದಿಗೆ ಬಂದಿರುವಲ್ಲಿ ಅದು ಒಂದು ಆಗುಗ ಪಾಂಗನ್ನು ಮಾತ್ರ ಪಡೆಯುತ್ತದೆ, ಮತ್ತು ಒಂದು ಆಗುಹವನ್ನು ತಿಳಿಸುತ್ತದೆ: (18ಕ) ಗಿಡ ಹೂಬಿಟ್ಟಿದೆ. (18ಚ) ಮರ ಕಾಯಿಬಿಟ್ಟಿದೆ. (ಚ) ಕಣ್ಣು, ಬಾಯಿ, ಕಯ್ ಎಂಬಂತಹ ಹೆಸರುಪದಗಳೊಂದಿಗೆ ಬಂದಿರುವಲ್ಲಿ ಅದು ಒಂದು ಮಾಡುಗ ಪಾಂಗನ್ನು ಮಾತ್ರ ಪಡೆಯುತ್ತದೆ, ಮತ್ತು ಒಂದು ಮಾಡುಹ ವನ್ನು ತಿಳಿಸುತ್ತದೆ: (19ಕ) ಹುಡುಗ ಕಣ್ಣುಬಿಟ್ಟ. (19ಚ) ಅವನು ಬಾಯಿಬಿಟ್ಟ. (9) ಹಾಕು ಎಸಕಪದದ ಬಳಕೆ: ಹಾಕು ಎಸಕಪದ ಮಾಡುಗ+ಈಡು+ಗುರಿ ಪಾಂಗಿಟ್ಟಳದೊಂದಿಗೆ ಬರುತ್ತದೆ; ಅದರೊಂದಿಗೆ ಹೆಸರುಪದಗಳನ್ನು ಸೇರಿಸಿದಾಗ, ಆ ಹೆಸರುಪದಗಳನ್ನವಲಂಬಿಸಿ, (ಕ) ಮಾಡುಗ+ಈಡು, (ಚ) ಮಾಡುಗ+ಗುರಿ, ಇಲ್ಲವೇ (ಟ) ಮಾಡುಗ ಮಾತ್ರ ಎಂಬ ಪಾಂಗಿಟ್ಟಳಗಳು ಬರಬಲ್ಲುವು: (ಕ) ಉರು, ಹುಟ್ಟು, ತೆಕ್ಕೆ, ಉಬ್ಬೆ ಎಂಬಂತಹ ಪದಗಳು ಸೇರಿದಾಗ, ಅದು ಮಾಡುಗ+ಈಡು ಪಾಂಗಿಟ್ಟಳದೊಂದಿಗೆ ಬರುತ್ತದೆ: (20ಕ) ಅವಳು ಹಾಡನ್ನು ಉರುಹಾಕಿದಳು. (20ಚ) ಅವನು ಬಾಳೆಕೊನೆಯನ್ನು ಉಬ್ಬೆಹಾಕಿದ. (ಚ) ಕನ್ನ, ತಲೆ, ಬರೆ, ಮೊಳ, ಕಟ್ಟು, ಗೋಣು, ಕಯ್, ತಡೆ, ಮುತ್ತಿಗೆ, ಹೊಗೆ, ಎಲೆ, ಮಣೆ, ನೇಣು ಎಂಬಂತಹ ಪದಗಳು ಸೇರಿದಾಗ, ಅದು ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಬರುತ್ತದೆ: (21ಕ) ಕಳ್ಳರು ಮನೆಗೆ ಕನ್ನಹಾಕಿದರು. (21ಚ) ಅವನು ಎಲ್ಲದಕ್ಕೂ ತಲೆಹಾಕುತ್ತಾನೆ. (21ಟ) ಅವರು ಕೋಟೆಗೆ ಮುತ್ತಿಗೆಹಾಕಿದರು. (ಟ) ಮರಿ, ಗುಟುರು, ಬೊಬ್ಬೆ, ಕೂಗು, ಮೆಲುಕು, ಲೆಕ್ಕ ಎಂಬಂತಹ ಪದಗಳು ಸೇರಿದಾಗ, ಅದು ಮಾಡುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ: (22ಕ) ಬೆಕ್ಕು ಮರಿಹಾಕಿದೆ. (22ಚ) ಅವನು ಬೊಬ್ಬೆಹಾಕಿದ. (10) ಇಕ್ಕು ಪದದ ಬಳಕೆ:
ಇಕ್ಕು ಎಸಕಪದ ಮಾಡುಗ+ಈಡು+ಗುರಿ ಪಾಂಗಿಟ್ಟಳದೊಂದಿಗೆ ಬರುತ್ತದೆ; ಅದರೊಂದಿಗೆ ಹೆಸರುಪದಗಳನ್ನು ಸೇರಿಸಿ ಬಳಸಿದಾಗ, ಆ ಹೆಸರುಪದಗಳನ್ನವ ಲಂಬಿಸಿ, (ಕ) ಮಾಡುಗ+ಗುರಿ, (ಚ) ಮಾಡುಗ+ಈಡು, (ಟ) ಮಾಡುಗ ಮಾತ್ರ, ಇಲ್ಲವೇ (ತ) ಆಗುಗ ಮಾತ್ರ ಎಂಬ ಪಾಂಗಿಟ್ಟಳಗಳು ಬರಬಲ್ಲುವು: (ಕ) ಕಿಚ್ಚು, ಒಪ್ಪ, ಗಂಜಿ, ಚೆನ್ನು, ಕೂಳು, ತುತ್ತು ಎಂಬಂತಹ ಪದಗಳನ್ನು ಬಳಸಿರುವಲ್ಲಿ ಮಾಡುಗ+ಗುರಿ ಪಾಂಗಿಟ್ಟಳ ಬರುತ್ತದೆ: (23ಕ) ಅವರು ಬೇಡುಗರಿಗೆ ಕೂಳಿಕ್ಕಿದರು. (23ಚ) ಅವನು ಮನೆಗೆ ಕಿಚ್ಚಿಕ್ಕಿದ (ಚ) ಮುದ್ದು ಹೆಸರುಪದವನ್ನು ಬಳಸಿರುವಲ್ಲಿ ಮಾಡುಗ+ಈಡು ಪಾಂಗಿಟ್ಟಳ ಬರುತ್ತದೆ: (24) ಅವನು ಮಗುವನ್ನು ಮುದ್ದಿಕ್ಕಿದ. (ಟ) ಚಪ್ಪಳೆ, ಎವೆ, ಉಸಿರು ಎಂಬಂತಹ ಪದಗಳನ್ನು ಬಳಸಿರುವಲ್ಲಿ ಮಾಡುಗ ಮಾತ್ರ ಎಂಬ ಪಾಂಗಿಟ್ಟಳ ಬರುತ್ತದೆ: (25ಕ) ಜನರು ಚಪ್ಪಳಿಕ್ಕಿದರು. (25ಚ) ಅವನು ಎವೆಯಿಕ್ಕದೆ (ನೋಡುತ್ತಿದ್ದ). (ತ) ತೊಟ್ಟು ಪದದೊಂದಿಗೆ ಬಂದಿರುವಲ್ಲಿ ಆಗುಗ ಮಾತ್ರ ಎಂಬ ಪಾಂಗಿಟ್ಟಳ ಬರುತ್ತದೆ: (26) ನೀರು ತೊಟ್ಟಿಕ್ಕುತ್ತಿದೆ. (2) ಹಲವು ಎಸಕಪದಗಳೊಡನೆ ಒಂದೇ ಹೆಸರುಪದದ ಬಳಕೆ ಹಲವು ಎಸಕಪದಗಳೊಂದಿಗೆ ಒಂದೇ ಹೆಸರುಪದ ಬರುವುದನ್ನು ಮುಕ್ಯವಾಗಿ ಕಯ್, ತಲೆ, ಕಾಲು, ಎದೆ, ಕಣ್ಣು, ಬೆನ್ನು ಮೊದಲಾದ ಅಂಗಗಳನ್ನು ಗುರುತಿಸುವ ಪದಗಳ ಬಳಕೆಯಲ್ಲಿ ಕಾಣಬಹುದು. ಹೆಚ್ಚಿನೆಡೆಗಳಲ್ಲೂ ಇವುಗಳನ್ನು ಎಸಕಪದದ ಈಡು ಪಾಂಗುಗಳೆಂದು ತಿಳಿಯಲು ಬರುತ್ತದೆ; ಆದರೆ, ಬೇರೆ ಕೆಲವೆಡೆಗಳಲ್ಲಿ ಅವನ್ನು ಈ ರೀತಿ ಒಂದು ಪಾಂಗೆಂಬುದಾಗಿ ತಿಳಿಯಲು ಬರುವುದಿಲ್ಲ. ಈ ಎರಡು ಕಡೆಗಳಲ್ಲೂ ಅವು ಪಾಂಗಿಟ್ಟಳದಲ್ಲಿ ಸೇರಿಕೊಳ್ಳದೆ ಕೂಡುಪದದ ಅಂಗವಾಗಿಯೇ ಉಳಿಯುತ್ತವೆ. (1) ಕಯ್ ಹೆಸರುಪದದ ಬಳಕೆ: ಕಯ್ ಪದವನ್ನು ಇಕ್ಕು, ಎತ್ತು, ಒಡ್ಡು, ಚಾಚು, ನೀಡು, ಬಿಡು, ಆಡಿಸು, ಸೇರು, ಹಚ್ಚು, ಹಾಕು ಎಂಬಂತಹ ಎಸಕಪದಗಳೊಂದಿಗೆ ಸೇರಿಸಿರುವ ಕೂಡುಪದಗಳ ಬಳಕೆಯಲ್ಲಿ ಅದಕ್ಕೆ ಆ ಎಸಕಪದಗಳ ಈಡು ಪಾಂಗಿನ ಹುರುಳೇ ಇರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1ಕ) ಅವನು ಒಂದು ದೊಡ್ಡ ಕೆಲಸಕ್ಕೆ ಕಯ್ಯಿಕ್ಕಿದ. (1ಚ) ನಾಲ್ಕು ಹುಡುಗರು ಕಯ್ಯೆತ್ತಿದರು. (1ಟ) ಅವನು ಕೆಟ್ಟ ಹಣಕ್ಕೆ ಕಯ್ಯೊಡ್ಡಿದ.
(1ಕ)ದಲ್ಲಿ ಬಂದಿರುವ ಕಯ್ಯಿಕ್ಕು ಎಂಬುದನ್ನು ಕಯ್ಯನ್ನು ಇಕ್ಕಿದ ಎಂಬುದರಿಂದ ಪಡೆಯಲು ಬರುತ್ತದೆ, ಮತ್ತು ಇದೇ ರೀತಿಯಲ್ಲಿ (1ಚ-ಟ)ಗಳಲ್ಲಿ ಬಂದಿರುವ ಕಯ್ಯೆತ್ತು ಮತ್ತು ಕಯ್ಯೊಡ್ಡು ಎಂಬವುಗಳನ್ನೂ ಕಯ್ಯನ್ನು ಎಂಬುದಕ್ಕೆ ಎತ್ತು ಮತ್ತು ಒಡ್ಡು ಎಸಕಪದಗಳನ್ನು ಸೇರಿಸಿದ ನುಡಿತಗಳಿಂದ ಪಡೆಯಲು ಬರುತ್ತದೆ. ಆದರೆ, ಕಯ್ಬಿಡು ಎಂಬ ಕೂಡುಪದದೊಂದಿಗೆ ಬೇರೊಂದು ಪದ ಈಡು ಪಾಂಗಾಗಿ ಬರಬಲ್ಲುದು; ಹಾಗಾಗಿ, ಕಯ್ ಎಂಬುದಕ್ಕೆ ಇಲ್ಲಿ ಈಡು ಪಾಂಗಿನ ಹುರುಳು ಸಿಗುವುದಿಲ್ಲ: (2ಕ) ಅವನು ಹುಡುಗನ ಕಯ್ಬಿಟ್ಟ. (2ಚ) ಅವನು ಹುಡುಗನನ್ನು ಕಯ್ಬಿಟ್ಟ. ಇದಲ್ಲದೆ, (ಕ) ಕಯ್ಮಾಡು ಎಂಬುದರ ಬಳಕೆಯಲ್ಲಿ ಮಾಡು ಪದದ ಪಾಂಗಿಟ್ಟಳದಲ್ಲಿಲ್ಲದ ಒಂದು ಜಾಗ ಪಾಂಗು ಇಟ್ಟಳದ ಪಾಂಗಾಗಿ ಸೇರಿಕೊಳ್ಳುತ್ತದೆ; (ಚ) ಕಯ್ಗೂಡು ಎಂಬುದರ ಬಳಕೆಯಲ್ಲಿ ಕೂಡು ಪದದ ಮಾಡುಗ+ಈಡು ಪಾಂಗಿಟ್ಟಳ ಆಗುಗ ಮಾತ್ರ ಎಂಬುದಾಗಿ ಮಾರ್ಪಡುತ್ತದೆ; ಮತ್ತು (ಟ) ಕಯ್ತಟ್ಟು ಎಂಬುದರ ಬಳಕೆಯಲ್ಲಿ ತಟ್ಟು ಪದದ ಮಾಡುಗ+ಗುರಿ ಪಾಂಗಿಟ್ಟಳ ಮಾಡುಗ ಮಾತ್ರ ಎಂದಾಗುತ್ತದೆ: (3ಕ) ಅವನು ಕೆಲಸ ಮಾಡಿದ > ಅವನು ನನ್ನ ಮೇಲೆ ಕಯ್ಮಾಡಿದ. (3ಚ) ಅವನು ನನ್ನನ್ನು ಕೂಡಿದ > ಅವನ ಕೆಲಸ ಕಯ್ಗೂಡಿತು. (3ಟ) ಅವನು ಬೆನ್ನಿಗೆ ತಟ್ಟಿದ > ಅವನು ಕಯ್ತಟ್ಟಿ (ನನ್ನನ್ನು ಕರೆದ). (2) ತಲೆ ಹೆಸರುಪದದ ಬಳಕೆ: ಎಸಕಪದಗಳ ಮೊದಲು ಬರುವ ತಲೆ ಪದ ಮುಕ್ಯವಾಗಿ ಎರಡು ಪಾಂಗುಗಳ ಹುರುಳನ್ನು ಕೊಡಬಲ್ಲುದು; ಕೆಲವೆಡೆಗಳಲ್ಲಿ ಅದಕ್ಕೆ ಆಗುಗ ಪಾಂಗಿನ ಹುರುಳು ದೊರಕುತ್ತದೆ, ಮತ್ತು ಬೇರೆ ಕೆಲವೆಡೆಗಳಲ್ಲಿ ಅದಕ್ಕೆ ಈಡು ಪಾಂಗಿನ ಹುರುಳು ದೊರಕುತ್ತದೆ: (4ಕ) ಅದು ಕೆಟ್ಟಿದೆ > ಅವನಿಗೆ ತಲೆ ಕೆಟ್ಟಿದೆ. (4ಚ) ಅದು ತಿರುಗಿತು > ಅವನಿಗೆ ತಲೆ ತಿರುಗಿತು. (5ಕ) ಅವನು ತೊಟ್ಟಿಲು ತೂಗಿದ > ಅವನು ತಲೆದೂಗಿದ. (5ಚ) ಅವನು ಹಣವನ್ನು ಮರೆಸಿದ > ಅವನು ತಲೆಮರೆಸಿದ. ತಲೆ ಪದಕ್ಕೆ (4ಕ-ಚ) ಸೊಲ್ಲುಗಳಲ್ಲಿ ಆಗುಗ ಪಾಂಗಿನ ಹುರುಳಿದೆ, ಮತ್ತು (5ಕ-ಚ) ಸೊಲ್ಲುಗಳಲ್ಲಿ ಈಡು ಪಾಂಗಿನ ಹುರುಳಿದೆ. ಈ ಎರಡು ಕಡೆಗಳಲ್ಲೂ ಆಗುಹ-ಮಾಡುಹ ವ್ಯತ್ಯಾಸ ಅದರ ಬಳಿಕ ಬರುವ ಎಸಕಪದದ ಹುರುಳನ್ನವ ಲಂಬಿಸಿದೆ. ಆದರೆ, ತಲೆಗೇರು ಎಂಬ ಕೂಡುಪದದಲ್ಲಿ ಅದು ತಲೆಗೆ ಎಂಬ ಗುರಿ ಪಾಂಗಿನ ರೂಪದಲ್ಲಿ ಬಂದಿದೆಯಾದರೂ ಅದು ಬರುವ ಸೊಲ್ಲಿನಲ್ಲಿ ಬೇರೆಯೇ ಒಂದು ಗುರಿ ಪಾಂಗು ಬರುತ್ತದೆ: (6ಕ) ಅದು ಮೇಲಕ್ಕೆ ಏರಿತು > ಅವನಿಗೆ ತಿಂದುದು ತಲೆಗೇರಿತು. (6ಕ) ಸೊಲ್ಲಿನಲ್ಲಿ ಅವನಿಗೆ ಎಂಬ ಬೇರೊಂದು ಗುರಿ ಪಾಂಗು ಬಳಕೆ ಯಾಗಿರುವುದನ್ನು ಕಾಣಬಹುದು; ಆದರೆ, ಅದನ್ನು ತಲೆ ಪದದ ಪರಿಚೆಯನ್ನಾಗಿಯೂ ಮಾಡಲು ಬರುತ್ತದೆ: (6ಚ) ತಿಂದುದು ಅವನ ತಲೆಗೇರಿದೆ.
ತಿನ್ನು ಪದದೊಂದಿಗೆ ಬಂದಿರುವಲ್ಲಿಯೂ ಅದು ಪರಿಚೆರೂಪದಲ್ಲಿರುವ ಹೆಸರುಪದವನ್ನು ಪಡೆಯಬಲ್ಲುದು: (7) ಆ ವಿಶಯ ನನ್ನ ತಲೆತಿನ್ನುತ್ತಿದೆ. (3) ಎದೆ ಹೆಸರುಪದದ ಬಳಕೆ: ಎದೆ ಪದದೊಂದಿಗೆ ಕೊಡು ಎಸಕಪದವನ್ನು ಬಳಸಿರುವಲ್ಲಿ ಒಂದು ಮಾಡುಹ ವನ್ನು ತಿಳಿಸಲಾಗುತ್ತದೆ, ಮತ್ತು ಮಾಡುಗ+ಗುರಿ ಪಾಂಗಿಟ್ಟಳ ಬರುತ್ತದೆ; ಈ ಕೂಡುಪದದ ಈಡು ಪಾಂಗಿನ ಹುರುಳನ್ನು ಎದೆ ಪದ ಕೊಡುತ್ತದೆಯೆಂದು ಹೇಳಬಹುದು: (8ಕ) ಅವನೊಂದು ದೊಡ್ಡ ಕೆಲಸಕ್ಕೆ ಎದೆಕೊಟ್ಟ. ಇದಕ್ಕೆ ಬದಲು, ಕುಂದು, ಕೆಡು, ಸೋಲು, ಕರಗು ಎಂಬಂತಹ ಬೇರೆ ಕೆಲವು ಎಸಕಪದಗಳೊಂದಿಗಿನ ಬಳಕೆಯಲ್ಲಿ ಕೂಡುಪದ ಒಂದು ಆಗುಹವನ್ನು ತಿಳಿಸುತ್ತದೆ, ಮತ್ತು ಅದರೊಂದಿಗೆ ಬೇರೆಯೇ ಒಂದು ಆಗುಗ ಬರುತ್ತದೆ; ಹಾಗಾಗಿ, ಈ ಬಳಕೆಯಲ್ಲಿ ಎದೆ ಪದಕ್ಕೆ ಪಾಂಗಿನ (ಆಗುಗದ) ಹುರುಳನ್ನು ಕೊಡಲು ಬರುವುದಿಲ್ಲ: (9ಚ) ಅವನು ಎದೆಗುಂದಿದ. (4) ಮಯ್ ಹೆಸರುಪದದ ಬಳಕೆ: (ಕ) ತುಂಬು, ಕುಂದು, ನರೆ, ಮರೆ ಎಂಬಂತಹ ಕೆಲವು ಎಸಕಪದಗಳೊಂದಿಗೆ ಮಯ್ ಪದ ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬರುತ್ತದೆ, ಮತ್ತು ಕೊಡಹು, ಮುರಿ ಎಂಬಂತಹ ಬೇರೆ ಕೆಲವು ಎಸಕಪದಗಳೊಂದಿಗೆ ಮಾಡುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬರುತ್ತದೆ: (10ಕ) ಹುಡುಗಿ ಮಯ್ನೆರೆದಿದ್ದಾಳೆ. (10ಚ) ಅವನು ಮಯ್ಮರೆತ. (10ಟ) ಅವನು ಮಯ್ಗೊಡಹಿದ. (ಚ) ಹತ್ತು ಮತ್ತು ಬರು ಎಸಕಪದಗಳು ಅದಕ್ಕೆ ಗುರಿ ಪಾಂಗನ್ನು ಒದಗಿಸುತ್ತವೆ; ಆದರೆ, ಅವು ಮಾಡುಹನ್ನು ತಿಳಿಸುವುದಿದ್ದರೂ ಮಯ್ ಪದದೊಂದಿಗೆ ಸೇರಿರುವಲ್ಲಿ ಆಗುಹವನ್ನು ತಿಳಿಸುತ್ತವೆ; ಇದಲ್ಲದೆ, ಮಯ್ ಪದದೊಂದಿಗೆ ಸೇರಿರುವ ಬರು ಎಸಕಪದ ಗುರಿ ಮಾತ್ರ ಎಂಬ ಹೊಸದೊಂದು ಪಾಂಗಿಟ್ಟಳದಲ್ಲಿ ಕಾಣಿಸಿಕೊಳ್ಳುತ್ತದೆ; ಇಲ್ಲಿ ಆಗುಗ ಪಾಂಗಿನ ಹುರುಳನ್ನು ಮಯ್ ಪದ ಕೊಡುತ್ತದೆ: (11ಕ) ಅವನಿಗೆ ಊಟ ಮಯ್ಹತ್ತುವುದಿಲ್ಲ. (11ಚ) ಅವನಿಗೆ ಮಯ್ಬಂದಿದೆ. (ಟ) ಒಡ್ಡು, ಇಕ್ಕು, ತೆಗೆ ಎಂಬಂತಹ ಪದಗಳೊಂದಿಗೆ ಬಂದಿರುವಲ್ಲಿ ಅದು ಮಾಡುಗ+ಗುರಿ ಪಾಂಗಿಟ್ಟಳದಲ್ಲಿ ಬರುತ್ತದೆ: (12ಕ) ಅವನು ಕೆಲಸಕ್ಕೆ ಮಯ್ಯೊಡ್ಡಿದ. (12ಚ) ಅವನು ಅರಸನಿಗೆ ಮಯ್ಯಿಕ್ಕಿದ.
ಆದರೆ, ತೆಗೆ ಪದ ಮಾಡುಗ+ಗುರಿ ಪಾಂಗಿಟ್ಟಳದೊಂದಿಗೆ ಮಾತ್ರವಲ್ಲದೆ ಮಾಡುಗ+ಸುರು ಪಾಂಗಿಟ್ಟಳದೊಂದಿಗೂ ಬರಬಲ್ಲುದು; ಇವುಗಳಲ್ಲಿ ಮೊದಲನೆಯ ಬಳಕೆಯಲ್ಲಿ ಆ ಕೂಡುಪದಕ್ಕೆ ಅಲಸು ಎಂಬ ಹುರುಳಿರುವುದು, ಮತ್ತು ಎರಡನೆಯ ಬಳಕೆಯಲ್ಲಿ ತೊಲಗು ಎಂಬ ಹುರುಳಿರುವುದು ಈ ವ್ಯತ್ಯಾಸಕ್ಕೆ ಕಾರಣವಾಗಿದೆ. (13ಕ) ಅವನು ಕೆಲಸಕ್ಕೆ ಮಯ್ದೆಗೆದ (ಅಲಸಿದ). (13ಚ) ಅವನು ಅಲ್ಲಿಂದ ಮಯ್ದೆಗೆದ (ತೊಲಗಿದ). (ತ) ಚಾಚು, ತೋರು ಎಂಬಂತಹ ಎಸಕಪದಗಳೊಂದಿಗೆ ಬಂದಿರುವಲ್ಲಿ ಮಾಡುಗ+ಜಾಗ ಪಾಂಗಿಟ್ಟಳ ಬರುತ್ತದೆ: (14ಕ) ಅವನು ಕುರ್ಚಿಯಲ್ಲಿ ಮಯ್ಚಾಚಿದ. (14ಚ) ಅವನು ಕಾಳಗದಲ್ಲಿ ಮಯ್ದೋರಿದ. (ಪ) ತಡವು ಪದದೊಂದಿಗೆ ಬಂದಿರುವಲ್ಲಿ, ಮಯ್ ಪದ ಒಂದು ಪರಿಚೆರೂಪದಲ್ಲಿರುವ ಹೆಸರುಪದವನ್ನು ಪಡೆಯುತ್ತದೆ: (15) ಅವನು ಮಗುವಿನ ಮಯ್ದಡವಿದ. (5) ಕಣ್ಣು ಹೆಸರುಪದದ ಬಳಕೆ: (ಕ) ಕಣ್ಣು ಹೆಸರುಪದ ಕೆಡು, ಆರು, ದಣಿ, ಸೋಲು ಎಂಬಂತಹ ಎಸಕಪದಗಳೊಂದಿಗೆ ಸೇರಿ ಕೂಡುಪದಗಳಾಗಿ ಬಳಕೆಯಾಗಬಲ್ಲುದು, ಮತ್ತು ಇಂತಹ ಕೂಡುಪದಗಳು ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಒಂದು ಆಗುಹವನ್ನು ತಿಳಿಸುತ್ತವೆ. ಇದಲ್ಲದೆ, ಕೆತ್ತು, ತೆರೆ, ಬಿಡು, ಮುಚ್ಚು ಎಂಬಂತಹ ಎಸಕಪದಗಳೊಂದಿಗೆ ಸೇರಿಯೂ ಅದು ಕೂಡುಪದವಾಗಿ ಬರಬಲ್ಲುದು, ಮತ್ತು ಇಂತಹ ಕೂಡುಪದಗಳು ಮಾಡುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಒಂದು ಮಾಡುಹವನ್ನು ತಿಳಿಸುತ್ತವೆ. ಇಲ್ಲಿ ಆಗುಹ-ಮಾಡುಹ ವ್ಯತ್ಯಾಸ ಎಸಕಪದಗಳನ್ನವಲಂಬಿಸಿದೆ: (16ಕ) ಅವನು ಕಂಗೆಟ್ಟ. (ಆಗುಹ) (16ಚ) ಅವನು ಕಣ್ದೆರೆದ. (ಮಾಡುಹ) (ಚ) ಕಾಣು ಮತ್ತು ಅರಸು ಪದಗಳೊಂದಿಗೆ ಸೇರಿರುವಲ್ಲಿ ಒಂದು ಈಡು ಪಾಂಗು ಬರುತ್ತದೆ; ಆದರೆ, ಕಾಣು ಪದ ಬಂದಿರುವಲ್ಲಿ ಅದು ಆಗುಗ ಪಾಂಗನ್ನು ಪಡೆಯುತ್ತದೆ, ಮತ್ತು ಅರಸು ಪದ ಬಂದಿರುವಲ್ಲಿ ಮಾಡುಗ ಪಾಂಗನ್ನು ಪಡೆಯುತ್ತದೆ: (17ಕ) ಅವನು ಒಂದು ಕೊಲೆಯನ್ನು ಕಂಗಂಡ (ಕಣ್ಣಾರೆ ಕಂಡ). (17ಚ) ಅವಳು ಮಕ್ಕಳನ್ನು ಕಣ್ಣರಸುತ್ತಿದ್ದಳು. (ಟ) ಇಡು ಪದದೊಂದಿಗೆ ಬಂದಿರುವಲ್ಲಿ ಮಾಡುಗ+ಜಾಗ ಪಾಂಗಿಟ್ಟಳ ಬರುತ್ತದೆ: (18) ಅವನುನಿಮ್ಮ ಮೇಲೆ ಕಣ್ಣಿಟ್ಟಿದ್ದಾನೆ.
(6) ಬೆಲೆ ಹೆಸರುಪದದ ಬಳಕೆ: ಬೆಲೆ ಹೆಸರುಪದವನ್ನು ಬರು ಎಸಕಪದದೊಂದಿಗೆ ಸೇರಿಸಿದಾಗ, ಅದರ ಗುರಿ ಪಾಗು ಉಳಿಯುತ್ತದೆ, ಮತ್ತು ಮಾಡುಗ ಪಾಂಗು ಬಿದ್ದುಹೋಗುತ್ತದೆ; ಈ ಕೂಡುಪದ ಒಂದು ಆಗುಹವನ್ನು ತಿಳಿಸುತ್ತಿದ್ದು, ಅದರ ಆಗುಗ ಪಾಂಗಿನ ಹುರುಳನ್ನು ಬೆಲೆ ಪದ ತಿಳಿಸುತ್ತದೆ: (19ಕ) ಅಡಿಕೆಗೆ ಒಳ್ಳೆ ಬೆಲೆಬಂದಿದೆ. (19ಚ) ಅವನ ಮಾತಿಗೆ ಈಗ ಬೆಲೆಬಂದಿದೆ. ಬೀಳು ಪದದೊಂದಿಗೆ ಬಳಸಿರುವಲ್ಲಿ ಅದು ಆಗುಹವನ್ನು ಮಾತ್ರ ತಿಳಿಸ ಬಲ್ಲುದು; ಈ ಕೂಡುಪದ ಎರಡು ಹುರುಳುಗಳಲ್ಲಿ ಬಳಕೆಯಾಗುತ್ತದೆ: (20ಕ) ಈ ಸೀರೆಗೆ ಸಾವಿರ ರುಪಾಯಿ ಬೆಲೆಬಿದ್ದಿದೆ. (20ಚ) ಬತ್ತದ ಬೆಲೆಬಿದ್ದಿದೆ. (20ಕ)ದಲ್ಲಿ ಬೆಲೆಬೀಳು ಎಂಬುದು ಬೆಲೆ ಎಶ್ಟು ಎಂಬುದನ್ನು ತಿಳಿಸುವುದಾದರೆ, (20ಚ)ದಲ್ಲಿ ಬೆಲೆ ಕಡಿಮೆಯಾಗಿದೆ ಎಂಬುದನ್ನು ತಿಳಿಸುತ್ತದೆ.
8.6.2 ಪರಿಚೆಪದಗಳಿರುವ ಕೂಡುಪದಗಳು
ಕೂಡುಪದದ ಮೊದಲನೆಯ ಪದವಾಗಿ ಎಸಕಪರಿಚೆ ಮತ್ತು ಹೆಸರುಪರಿಚೆಗಳೆಂಬ ಎರಡು ಬಗೆಯ ಪರಿಚೆಪದಗಳೂ ಬರಬಲ್ಲುವು ಎಂಬುದನ್ನು 3.3.1ರಲ್ಲಿ ವಿವರಿಸಲಾಗಿದೆ; ಎಸಕಪರಿಚೆಗಳು ಕೂಡುಪದ ತಿಳಿಸುವ ಎಸಕದ ಪರಿಚೆಯನ್ನು ತಿಳಿಸುತ್ತವೆ, ಮತ್ತು ಹೆಸರುಪರಿಚೆಗಳು ಅದರ ಒಂದು ಪಾಂಗಿನ ಪರಿಚೆಯನ್ನು ತಿಳಿಸುತ್ತವೆ: (1ಕ) ಇಬ್ಬರು ಹುಡುಗರು ಹಿಂದುಳಿದಿದ್ದಾರೆ. (1ಚ) ಕತ್ತಿ ಮೊಂಡುಬಿದ್ದಿದೆ. (1ಕ)ದಲ್ಲಿ ಹಿಂದುಳಿ ಎಂಬ ಕೂಡುಪದ ಬಂದಿದ್ದು, ಅದರಲ್ಲಿ ಹಿಂದೆ ಎಂಬ ಎಸಕಪರಿಚೆ ಪದ ಮೊದಲನೆಯ ಪದವಾಗಿ ಬಂದಿದೆ; ಅದು ಉಳಿದುದು ಎಲ್ಲಿ ಎಂಬುದಾಗಿ ಆ ಎಸಕಪದ ಪರಿಚೆಯನ್ನು ತಿಳಿಸುತ್ತದೆ; ಇದಕ್ಕೆ ಬದಲು, (1ಚ)ದಲ್ಲಿ ಮೊಂಡುಬೀಳು ಎಂಬ ಕೂಡುಪದ ಬಂದಿದ್ದು, ಅದರ ಮೊದಲನೆಯ ಪದವಾದ ಮೊಂಡು ಎಂಬ ಹೆಸರುಪರಿಚೆ ಪದ ಆ ಕೂಡುಪದದ ಆಗುಗ ಪಾಂಗಾಗಿ ಬಂದಿರುವ ಕತ್ತಿ ಎಂಬುದರ ಪರಿಚೆಯನ್ನು ತಿಳಿಸುತ್ತದೆ. (ಕ) ಇಂತಹ ಕೂಡುಪದಗಳಲ್ಲಿ ಎಸಕಪರಿಚೆ ಪದಗಳು ಬರುವುದೇ ಹೆಚ್ಚು; ಸಾಮಾನ್ಯವಾಗಿ ಇವು ಎಸಕಪದ ತಿಳಿಸುವ ಎಸಕದ ಜಾಗ, ಸುರು, ಇಲ್ಲವೇ ಗುರಿಯನ್ನು ತಿಳಿಸುತ್ತವೆ; ಹಾಗಾಗಿ, ಇವು ಬಂದಿರುವ ಕೂಡುಪದಗಳ ಪಾಂಗಿಟ್ಟಳದಲ್ಲಿ ಅವೇ ಇಂಬುಗಳನ್ನು (ಜಾಗ, ಸುರು, ಇಲ್ಲವೇ ಗುರಿಗಳನ್ನು) ತಿಳಿಸುವ ಪಾಂಗುಗಳು ಬರುವುದಿಲ್ಲ; ಆದರೆ, ಈ ಪರಿಚೆಪದಗಳು ತಿಳಿಸುವ ಜಾಗ, ಸುರು ಇಲ್ಲವೇ ಗುರಿಗಳ ಕುರಿತಾಗಿ ಹೆಚ್ಚಿನ ವಿಶಯಗಳನ್ನು ತಿಳಿಸಬೇಕಿದ್ದಲ್ಲಿ ಅವನ್ನು ಬಳಸಲು ಬರುತ್ತದೆ: (2ಕ) ಅವರು ಮೂರು ಪುಸ್ತಕಗಳನ್ನು ಹೊರತಂದಿದ್ದಾರೆ. (2ಚ) ಅವನು ತನ್ನ ಮನವಿಯನ್ನು ಅವರ ಮುಂದಿಟ್ಟ. (2ಟ) ಅವನು ಓದಿನಲ್ಲಿ ತುಂಬಾ ಹಿಂದುಳಿದಿದ್ದಾನೆ.
ತರು ಎಸಕಪದಕ್ಕಿರುವ ಮಾಡುಗ+ಗುರಿ+ಈಡು ಪಾಂಗುಗಳಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಮಾತ್ರ (2ಕ)ದಲ್ಲಿ ಉಳಿದಿವೆ; ಅದಕ್ಕೆ ಬೇಕಾಗುವ ಗುರಿ ಪಾಂಗಿನ ಹುರುಳನ್ನು ಕೂಡುಪದದ ಹೊರ ಎಂಬುದೇ ತಿಳಿಸುತ್ತದೆ. ಇದಕ್ಕೆ ಬದಲು, (2ಚ)ದಲ್ಲಿ ಇಡು ಪದದ ಜಾಗ ಪಾಂಗನ್ನು ಕೂಡುಪದದ ಮುಂದೆ ಪದ ತಿಳಿಸುವುದಾದರೂ, ಅದರ ಕುರಿತು ಹೆಚ್ಚಿನ ವಿಶಯ ತಿಳಿಸುವ ಅವರ ಎಂಬುದು ಸೊಲ್ಲಿನಲ್ಲಿ ಬಂದಿದೆ, ಮತ್ತು (2ಟ)ದಲ್ಲಿ ಕೂಡುಪದದ ಹಿಂದೆ ಪದ ತಿಳಿಸುವ ಜಾಗದ ಕುರಿತು ಹೆಚ್ಚಿನ ವಿಶಯ ತಿಳಿಸಲು ಸೊಲ್ಲಿನಲ್ಲಿ ಓದಿನಲ್ಲಿ ಪದ ಬಂದಿದೆ. (ಚ) ಜಾಗವನ್ನು ತಿಳಿಸುವ ಒಳಗೆ-ಹೊರಗೆ, ಮುಂದೆ-ಹಿಂದೆ, ಮೇಲೆ-ಕೆಳಗೆ ಎಂಬವು, ಮತ್ತು ಹೊತ್ತನ್ನು ತಿಳಿಸುವ ಮಾರ್ ಎಂಬುದು ಇಂತಹ ಕೂಡುಪದಗಳಲ್ಲಿ ಮುಕ್ಯವಾಗಿ ಕಾಣಿಸಿಕೊಳ್ಳುವ ಎಸಕಪರಿಚೆಪದಗಳು. ಇವುಗಳಲ್ಲಿ ಜಾಗವನ್ನು ತಿಳಿಸುವ ಪರಿಚೆಪದಗಳು ಎದುರುಹುರುಳನ್ನು ತಿಳಿಸುವ ಜೋಡಿಗಳಾಗಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಗಮನಿಸಬಹುದು; ಇವು ಎಂತಹ ಎಸಕಪದಗಳೊಂದಿಗೆ ಸೇರಬಲ್ಲುವು ಎಂಬುದು ಎಸಕಪದಗಳ ಹುರುಳ ನ್ನವಲಂಬಿಸಿದೆ. ಎತ್ತುಗೆಗಾಗಿ, ತುಂಬು, ನುಗ್ಗು, ಹೊಗು, ಸೇರು, ಹೀರು ಎಂಬಂತಹ ಎಸಕ ಪದಗಳು ಒಳ ಪದದೊಂದಿಗೂ, ನೂಕು, ದಬ್ಬು, ಚೆಲ್ಲು, ತೆಗೆ, ಅಟ್ಟು, ಎಸೆ, ಚಿಮ್ಮು, ಸೂಸು, ಹೊಮ್ಮು, ಹೊರಡು ಎಂಬಂತಹ ಎಸಕಪದಗಳು ಹೊರ ಪದದೊಂದಿಗೂ ಬರುತ್ತವೆ. ಇದಕ್ಕೆ ಬದಲು, ಇಡು, ಬಾಗು, ಮಾಡು, ಹೋಗು, ಹಾಕು, ಪಡು ಎಂಬಂತಹ ಎಸಕಪದಗಳು ಈ ಎರಡು ಪರಿಚೆಪದಗಳೊಂದಿಗೂ ಬರಬಲ್ಲುವು. ಇದೇ ರೀತಿಯಲ್ಲಿ ನುಗ್ಗು, ಹುಗು, ಎಚ್ಚರಿಸು, ಎಣಿಸು ಮೊದಲಾದುವು ಮುಂದೆ ಪರಿಚೆಪದದೊಂದಿಗೂ, ತಿರುಗು, ಉಳಿ, ಸರಿ, ನೆಗೆ ಮೊದಲಾದುವು ಹಿಂದೆ ಪರಿಚೆಪದದೊಂದಿಗೂ ಬರುತ್ತವೆ; ಆಗು, ಇಡು, ಮೆಟ್ಟು, ದೂಡು ಮೊದಲಾದುವು ಇವೆರಡರೊಂದಿಗೂ ಬರುತ್ತವೆ. ಮೇಲೆ ಪದದೊಂದಿಗೆ ಬರುವ ಎಸಕಪದಗಳು ಮುಕ್ಯವಾಗಿ ಎತ್ತು, ಏಳು, ಉಕ್ಕು, ಉಗು ಮೊದಲಾದುವು; ಕೆಳಗೆ ಎಂಬುದರೊಂದಿಗೆ ಇಳಿ ಮತ್ತು ತಳ್ಳು ಎಂಬವು ಬರುತ್ತವೆ. (ಟ) ಕಿಣಿ, ಕಿಸಿ, ಕುಸು, ಲೊಚ, ಕಿರು, ಗುರು ಮೊದಲಾದ ಕೆಲವು ಅಣಕಿಸುವ ಪದಗಳಿಗೆ ಕುಟ್ಟು (ಗುಟ್ಟು) ಎಂಬ ಎಸಕಪದವನ್ನು ಸೇರಿಸಿ ಕೆಲವು ಕೂಡುಪದಗಳನ್ನು ಉಂಟುಮಾಡಲಾಗಿದೆ; ಇವುಗಳಲ್ಲಿ ಈ ಎಸಕಪದ ಹೇಳು ಎಂಬ ಹುರುಳಿನಲ್ಲಿ ಮಾಡುಗ ಪಾಂಗಿನೊಂದಿಗೆ, ಮತ್ತು ಸದ್ದುಮಾಡು ಎಂಬ ಹುರುಳಿನಲ್ಲಿ ಆಗುಗ ಪಾಂಗಿನೊಂದಿಗೆ ಬರಬಲ್ಲುದು: (3ಕ) ನಾಯಿ ಗುರುಗುಟ್ಟಿತು. (3ಚ) ಹಾವು ಬುಸುಗುಟ್ಟುತ್ತಿದೆ. (3ಟ) ಮುದುಕಿ ಗುಣುಗುಟ್ಟುತ್ತಿದ್ದಾಳೆ. (4ತ) ಗೆಜ್ಜೆ ಕಿಣಿಗುಟ್ಟುತ್ತಿದೆ. (4ಪ) ಬಾಗಿಲು ಕಿರುಗುಟ್ಟುತ್ತದೆ. ಚಿಲಿಪಿಲಿ, ಕಿಲಕಿಲ, ಚುರುಚುರು, ಪಿಟಿಪಿಟಿ ಎಂಬಂತಹ ಇಮ್ಮಡಿ ರೂಪದಲ್ಲಿರುವ ಅಣಕುಪದಗಳೂ ಇಂತಹ ಕೂಡುಪದಗಳಲ್ಲಿ ಬಳಕೆಯಾಗಬಲ್ಲುವು (ಚಿಲಿಪಿಲಿಗುಟ್ಟು, ಪಿಟಿಪಿಟಿಗುಟ್ಟು). ಕುಟ್ಟು ಎಸಕಪದ ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೂ ಬರಬಲ್ಲುದು, ಮತ್ತು ಮಾಡುಗ+ಈಡು ಎಂಬ ಪಾಂಗಿಟ್ಟಳದೊಂದಿಗೂ ಬರಬಲ್ಲುದು; ಆದರೆ, ಮೇಲಿನ ಬಳಕೆಯಲ್ಲಿ ಅದರ ಈಡು ಬರುವುದಿಲ್ಲ. (ತ) ಎಸಕಪದಗಳಿಗೆ ಪರಿಚೆಪದಗಳನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳದಲ್ಲಿ ಎಂತಹ ಮಾರ್ಪಾಡುಗಳು ನಡೆಯುತ್ತವೆ ಎಂಬುದನ್ನು ತಿಳಿಯಲು, ಮೇಲೆ ಹೆಸರುಪದಗಳಿರುವ ಕೂಡುಪದಗಳ ಒರೆತದಲ್ಲಿ ನಡೆಸಿದ ಹಾಗೆ, ಇಲ್ಲಿಯೂ (ಕ) ಹಲವು ಪರಿಚೆಪದಗಳೊಂದಿಗೆ ಒಂದೇ ಎಸಕಪದವನ್ನು ಬಳಸಿದ ಕೂಡುಪದಗಳು, ಮತ್ತು (ಚ) ಹಲವು ಎಸಕಪದಗಳೊಂದಿಗೆ ಒಂದೇ ಪರಿಚೆ ಪದವನ್ನು ಬಳಸಿದ ಕೂಡುಪದಗಳು ಎಂಬುದಾಗಿ ಎರಡು ಬಗೆಯ ಕೂಡುಪದಗಳನ್ನು ಒರೆದು ನೋಡಬಹುದು.
(1) ಹಲವು ಪರಿಚೆಪದಗಳೊಡನೆ ಒಂದೇ ಎಸಕಪದದ ಬಳಕೆ ಎರಡು ಇಲ್ಲವೇ ಹೆಚ್ಚು ಪರಿಚೆಪದಗಳೊಂದಿಗೆ ಒಂದೇ ಎಸಕಪದವನ್ನು ಬಳಸಿರು ವಂತಹ ಕೂಡುಪದಗಳನ್ನು ಪರಿಶೀಲಿಸಿದಲ್ಲಿ, ಆ ಎಸಕಪದದ ಪಾಂಗಿಟ್ಟಳವನ್ನು ಹೇಗೆ ಬೇರೆ ಬೇರೆ ಪರಿಚೆಪದಗಳು ಮಾರ್ಪಡಿಸುತ್ತವೆ ಎಂಬುದನ್ನು ತಿಳಿಯಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (1) ಬೀಳು ಎಸಕಪದದ ಬಳಕೆ: ಸಾಮಾನ್ಯವಾಗಿ ಬೀಳು ಎಸಕಪದಕ್ಕೆ ಆಗುಗ ಮತ್ತು ಗುರಿ ಪಾಂಗುಗಳು ಬೇಕಾಗುತ್ತವೆ (ಹಣ್ಣು ನೀರಿಗೆ ಬಿತ್ತು); ಆದರೆ, ಅದರೊಂದಿಗೆ ಮಾಡುಗ ಮತ್ತು ಜಾಗ ಪಾಂಗುಗಳೂ ಬರಬಲ್ಲುವು (ಮಗು ಹಾಸಿಗೆಯ ಮೇಲೆ ಬಿದ್ದು ಹೊರಳಾಡಿತು). ಅದನ್ನು ಅಡ್ಡ, ಕಟ್ಟು, ಎದುರು ಎಂಬಂತಹ ಪರಿಚೆಪದಗಳೊಂದಿಗೆ ಬಳಸಿರು ವಲ್ಲಿ ಅದರೊಂದಿಗೆ ಮಾಡುಗ+ಗುರಿ ಇಲ್ಲವೇ ಆಗುಗ+ಗುರಿ ಪಾಂಗಿಟ್ಟಳ ಬರುತ್ತದೆ, ಮತ್ತು ಹಿಂದೆ, ಮೇಲೆ ಎಂಬಂತಹ ಪರಿಚೆಪದಗಳೊಂದಿಗೆ ಬಳಸಿರುವಲ್ಲಿ ಮಾಡುಗ+ಜಾಗ ಇಲ್ಲವೇ ಆಗುಗ+ಜಾಗ ಪಾಂಗಿಟ್ಟಳ ಬರುತ್ತದೆ: (1ಕ) ಅವನು ದೇವರಿಗೆ ಅಡ್ಡಬಿದ್ದ. (1ಚ) ಅವನು ಮಾತಿಗೆ ಕಟ್ಟುಬಿದ್ದ. (2ಕ) ಅವನು ಓದಿನಲ್ಲಿ ಹಿಂದೆಬಿದ್ದಿದ್ದಾನೆ. (2ಚ) ಅವನು ನಮಗೆ ಎದುರುಬಿದ್ದಿದ್ದಾನೆ. ಇದಲ್ಲದೆ, ಹೊರ ಪದದೊಂದಿಗೆ ಬಳಸಿರುವಲ್ಲಿ ಅದು ಮಾಡುಗ+ಸುರು ಇಲ್ಲವೇ ಆಗುಗ ಮಾತ್ರ ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ: (3ಕ) ಅವನು ಮನೆಯಿಂದ ಹೊರಬಿದ್ದ. (3ಚ) ಅವನ ಗುಟ್ಟು ಹೊರಬಿತ್ತು. ಮೇಲಿನ ಎಲ್ಲಾ ಬಳಕೆಗಳಲ್ಲೂ ಕೂಡುಪದದಲ್ಲಿ ಬರುವ ಪರಿಚೆಪದದ ಕುರಿತಾಗಿ ಹೆಚ್ಚಿನ ವಿಶಯಗಳನ್ನು ತಿಳಿಸುವುದಕ್ಕಾಗಿ ಗುರಿ, ಜಾಗ ಇಲ್ಲವೇ ಸುರು ಪಾಂಗುಗಳನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು. (3ಚ)ದಲ್ಲಿ ಮಾತ್ರ ಅದು ಆಗುಗ ಮಾತ್ರ ಎಂಬ ಪಾಂಗಿಟ್ಟಳದಲ್ಲಿ ಬಂದಿದೆ. ಈ ಎಸಕಪದದೊಂದಿಗೆ ಮೊಂಡು ಪರಿಚೆಪದವನ್ನು ಬಳಸಿರುವಲ್ಲೂ, ಅದರೊಂದಿಗೆ ಒಂದು ಆಗುಗ ಪಾಂಗು ಮಾತ್ರ ಬರುತ್ತದಲ್ಲದೆ, ಸುರು, ಗುರಿ ಇಲ್ಲವೇ ಜಾಗ ಪಾಂಗುಗಳು ಇಟ್ಟಳದ ಪಾಂಗುಗಳಾಗಿ ಬರುವುದಿಲ್ಲ: (4ಕ) ಕತ್ತಿ ಮೊಂಡುಬಿದ್ದಿದೆ. (4ಚ) ಹುಡುಗ ಮೊಂಡುಬಿದ್ದಿದ್ದಾನೆ. (2) ಕಟ್ಟು ಎಸಕಪದದ ಬಳಕೆ: ಕಟ್ಟು ಎಸಕಪದ ಸಾಮಾನ್ಯವಾಗಿ ಮಾಡುಗ+ಈಡು ಪಾಂಗಿಟ್ಟಳದೊಂದಿಗೆ ಬರುತ್ತದೆ (ಅವನು ಪುಸ್ತಕಗಳನ್ನು ಕಟ್ಟಿದ). ಇದರೊಂದಿಗೆ ಅಡ್ಡ ಇಲ್ಲವೇ ಹೊರ ಎಂಬ ಪರಿಚೆಪದವನ್ನು ಸೇರಿಸಿ ಪಡೆದ ಕೂಡುಪದದೊಂದಿಗೆ ಅದೇ ಮಾಡುಗ+ಈಡು ಪಾಂಗಿಟ್ಟಳ ಬರುತ್ತದೆ: (5ಕ) ಅವನು ನನ್ನನ್ನು ಅಡ್ಡಗಟ್ಟಿದ.
(5ಚ) ಅವರು ಎಲ್ಲರನ್ನೂ ಹೊರಗಟ್ಟಿದರು. ಆದರೆ, ದಡ್ಡು, ಪಟ್ಟು, ಬೆಪ್ಪು, ಕೆಂಪು, ಬಿರುಸು, ಮಡು, ಮೊಂಡು ಎಂಬಂತಹ ಪರಿಚೆಪದಗಳನ್ನು ಸೇರಿಸಿರುವಲ್ಲಿ ಅದರೊಂದಿಗೆ ಆಗುಗ ಮಾತ್ರ ಎಂಬ ಪಾಂಗಿಟ್ಟಳ ಬರುತ್ತದೆ: (6ಕ) ಕತ್ತಿ ಮೊಂಡುಗಟ್ಟಿದೆ. (6ಚ) ಬೇವಸ ಮಡುಗಟ್ಟಿದೆ. (6ಟ) ಅವನ ಕಯ್ ದಡ್ಡುಗಟ್ಟಿದೆ. (2) ಹಲವು ಎಸಕಪದಗಳೊಡನೆ ಒಂದೇ ಪರಿಚೆಪದದ ಬಳಕೆ ಒಂದಕ್ಕಿಂತ ಹೆಚ್ಚು ಎಸಕಪದಗಳೊಡನೆ ಬರಬಲ್ಲ ಪರಿಚೆಪದಗಳಲ್ಲಿ ಮುಂದೆ-ಹಿಂದೆ, ಒಳಗೆ-ಹೊರಗೆ, ಮೇಲೆ-ಕೆಳಗೆ, ಮತ್ತು ಮರು-ಮಾರ್ ಎಂಬವು ಮುಕ್ಯವಾದವು; ಅವು ಹೇಗೆ ಎಸಕಪದಗಳ ಪಾಂಗಿಟ್ಟಳದಲ್ಲಿ ಮಾರ್ಪಾಡುಗಳನ್ನು ತರುತ್ತವೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ: (1) ಮರು-ಮಾರ್ ಪರಿಚೆಪದದ ಬಳಕೆ: ಈ ಪರಿಚೆಪದವನ್ನು ಹಲವು ಬಗೆಯ ಎಸಕಪದಗಳೊಂದಿಗೆ ಬಳಸಿ ಕೂಡು ಪದಗಳನ್ನು ಉಂಟುಮಾಡಲು ಬರುತ್ತದೆ; ಸಾಮಾನ್ಯವಾಗಿ, ತೆರೆಯುಲಿಯಲ್ಲಿ ಮೊದಲಾಗುವ ಎಸಕಪದಗಳ ಮೊದಲು ಮಾರ್ ಎಂಬ ರೂಪ ಬರುತ್ತದೆ (ಮಾರಾನು, ಮಾರುಲಿ, ಮಾರೆಣಿಸು), ಮತ್ತು ಮುಚ್ಚುಲಿಯಲ್ಲಿ ಮೊದಲಾಗುವ ಎಸಕಪದಗಳ ಮೊದಲು ಮರು ಎಂಬ ರೂಪ ಬರುತ್ತದೆ (ಮರುಕಳಿಸು, ಮರುತೆರು, ಮರುಹಂಚು). ಆದರೆ, ಇದೊಂದು ಸೇರಿಕೆಯ ಒಲವಾಗಿದ್ದು, ಇದಕ್ಕೆ ಹಲವು ಹೊರಪಡಿಕೆಗಳೂ ಇವೆ (ಮಾರ್ನುಡಿ, ಮಾರ್ಪಡು, ಮಾರ್ನಡೆ). ಮರು-ಮಾರ್ ಪರಿಚೆಪದವನ್ನು ಎಸಕಪದಗಳಿಗೆ ಸೇರಿಸಿದಾಗ, ಸಾಮಾನ್ಯವಾಗಿ ಅವುಗಳ ಪಾಂಗಿಟ್ಟಳದಲ್ಲಿ ಯಾವ ಮಾರ್ಪಾಡೂ ನಡೆಯುವುದಿಲ್ಲ; ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣಬಹುದು: (1) ನಾನು ಹಣವನ್ನು ಅವರೊಳಗೆ ಹಂಚಿದೆ > ನಾನು ಹಣವನ್ನು ಅವರೊಳಗೆ ಮರುಹಂಚಿದೆ. (2) ಅವನು ಗಿಡವನ್ನು ಅಂಗಳದಲ್ಲಿ ನಟ್ಟ > ಅವನು ಗಿಡವನ್ನು ಅಂಗಳದಲ್ಲಿ ಮರುನಟ್ಟ. (3) ಅವನು ಆತನಿಗೆ ಹಣ ತೆತ್ತ > ಅವನು ಆತ£ಗೆ ಹಣ ಮರುತೆತ್ತ. (2) ಮುಂದೆ ಪರಿಚೆಪದದ ಬಳಕೆ: ಮುಂದೆ ಪದದ ಬಳಕೆಯಲ್ಲೂ ಎಸಕಪದದ ಪಾಂಗಿಟ್ಟಳವೇ ಹೆಚ್ಚಿನೆಡೆಯಲ್ಲೂ ಉಳಿಯುತ್ತದೆ; ಮುಂದೆ ಎಂಬುದು ಎಸಕದ ಕುರಿತಾಗಿ ಹೆಚ್ಚಿನ ಹುರುಳನ್ನು ಕೊಡುತ್ತದೆಯಲ್ಲದೆ ಅದರ ಪಾಂಗಿಟ್ಟಳದಲ್ಲಿ ಸಾಮಾನ್ಯವಾಗಿ ಯಾವ ಮಾರ್ಪಾಡೂ ನಡೆಯುವುದಿಲ್ಲ: (4ಕ) ಅವನ ಕೆಲಸ ಕೆಟ್ಟಿತು > ಅವನ ಕೆಲಸ ಮುಂಗೆಟ್ಟಿತು. (4ಚ) ಅವನು ಎಲ್ಲವನ್ನೂ ಬಗೆದಿದ್ದ > ಅವನು ಎಲ್ಲವನ್ನೂ ಮುಂಬಗೆದಿದ್ದ. (4ಟ) ಅವನು ನಾಲ್ವರನ್ನು ಮೂಳೂರಿಗೆ ಅಟ್ಟಿದ > ಅವನು ನಾಲ್ವರನ್ನು ಮೂಳೂರಿಗೆ ಮುಂದಟ್ಟಿದ.
ಆದರೆ, ಇಡು ಪದದೊಂದಿಗೆ ಮುಂದೆ ಪದವನ್ನು ಬಳಸಿದಾಗ, ಅದರ ಪಾಂಗಿಟ್ಟಳದಲ್ಲಿ ಬರುವ ಜಾಗ ಪಾಂಗಿನ ಹುರುಳನ್ನು ಮುಂದೆ ಪದವೇ ತಿಳಿಸುತ್ತದೆ; ಹಾಗಾಗಿ, ಬೇರೆ ಜಾಗ ಪಾಂಗು ಬರುವುದಿಲ್ಲ: (4ತ) ಅವನು ಹಣವನ್ನು ಪೆಟ್ಟಿಗೆಯಲ್ಲಿ ಇಟ್ಟ > ಅವನು ಹಣವನ್ನು ಅವರ ಮುಂದಿಟ್ಟ. ಮುಂದೆ ಪದ ತಿಳಿಸುವ ಜಾಗ ಪಾಂಗಿನ ಕುರಿತಾಗಿ ಹೆಚ್ಚಿನ ವಿಶಯವನ್ನು ತಿಳಿಸುವ ಅವರ ಎಂಬುದು ಮಾತ್ರ (4ತ) ಸೊಲ್ಲಿನಲ್ಲಿ ಬಂದಿದೆ. (3) ಅಡ್ಡ ಪರಿಚೆಪದದ ಬಳಕೆ: (ಕ) ಬೀಳು, ಬರು, ತೊಡರು ಎಂಬಂತಹ ಎಸಕಪದಗಳೊಂದಿಗೆ ಅಡ್ಡ ಪದವನ್ನು ಬಳಸಿರುವಲ್ಲಿ ಅವುಗಳ ಮಾಡುಗ+ಗುರಿ ಪಾಂಗಿಟ್ಟಳ ಹಾಗೆಯೇ ಉಳಿಯುತ್ತದೆ; ಆದರೆ, ಬರು ಎಂಬುದು ಆಗುಗ+ಜಾಗ ಪಾಂಗಿಟ್ಟಳದೊಂದಿಗೂ ಬರಬಲ್ಲುದು: (5) ಅವನು ಕೆಳಗೆ ಬಿದ್ದ > ಅವನು ಅವರಿಗೆ ಅಡ್ಡಬಿದ್ದ. (6) ಅವನು ಮನೆಗೆ ಬಂದ > (ಕ) ಅವನು ನನಗೆ ಅಡ್ಡಬಂದ > (ಚ) ದಾರಿಯಲ್ಲಿ ಒಂದು ಹೊಳೆ ಅಡ್ಡಬರುತ್ತದೆ. (ಚ) ತೋರು ಎಂಬ ಪದಕ್ಕಿರುವ ಆಗುಗ+ಗುರಿ ಪಾಂಗಿಟ್ಟಳ ಅದರೊಂದಿಗೆ ಅಡ್ಡ ಪದವನ್ನು ಬಳಸಿದಾಗ ಆಗುಗ ಮಾತ್ರ ಎಂದಾಗುತ್ತದೆ: (7) ನನಗೆ ಒಂದು ಹಕ್ಕಿ ತೋರುತ್ತದೆ > ಎರಡು ಗೆರೆಗಳು ಅಡ್ಡ ದೋರುತ್ತಿವೆ. (ಟ) ಅಡ್ಡ ಪದವನ್ನು ಆಗು ಎಸಕಪದಕ್ಕೆ ಸೇರಿಸಿರುವಲ್ಲಿ ಆಗುಗ+ಜಾಗ ಪಾಂಗಿಟ್ಟಳ ಬರುತ್ತದೆ, ಮತ್ತು ಇಡು ಎಸಕಪದಕ್ಕೆ ಸೇರಿಸಿರುವಲ್ಲಿ ಅದರ ಮಾಡುಗ+ಈಡು+ಜಾಗ ಪಾಂಗಿಟ್ಟಳ ಮಾಡುಗ+ಈಡು+ಗುರಿ ಪಾಂಗಿಟ್ಟಳವಾಗಿ ಮಾರ್ಪಡುತ್ತದೆ: (8ಕ) ಅವನು ದೊಡ್ಡವನಾದ > ಅವನು ಮಂಚದಲ್ಲಿ ಅಡ್ಡಾದ. (8ಚ) ಅವನು ಪುಸ್ತಕವನ್ನು ಚೀಲದಲ್ಲಿಟ್ಟ > ಅವನು ಕೊಂಬೆಯನ್ನು ಹರಿವಿಗೆ ಅಡ್ಡವಿಟ್ಟ. (ತ) ಅದನ್ನು ಹಚ್ಚು ಎಸಕಪದಕ್ಕೆ ಸೇರಿಸಿರುವಲ್ಲಿ ಅದರ ಮಾಡುಗ+ಈಡು+ಗುರಿ ಪಾಂಗಿಟ್ಟಳ ಮಾರ್ಪಡದೆ ಉಳಿಯುತ್ತದೆ: (9) ಅವನು ಬಣ್ಣವನ್ನು ಮೋರೆಗೆ ಹಚ್ಚಿದ > ಅವನು ನಾಮವನ್ನು ಮೋರೆಗೆ ಅಡ್ಡಹಚ್ಚಿದ.
8.6.3 ಜೋಡಿಸುವ ರೂಪಗಳಿರುವ ಕೂಡುಪದಗಳು
ಎಸಕಪದಗಳಿಗೆ ಮೊದಲೆಸಕದ ರೂಪ (ಓಡಿ, ತಿಂದು, ಕಡಿದು, ಗುದ್ದಿ), ಮಾರೆಸಕದ ರೂಪ (ಓಡಲು, ತಿನ್ನಲು, ಕಡಿಯಲು, ಗುದ್ದಲು), ಒಡನೆಸಕದ ರೂಪ (ಓಡುತ್ತಾ, ತಿನ್ನುತ್ತಾ, ಕಡಿಯುತ್ತಾ, ಗುದ್ದುತ್ತಾ), ಮತ್ತು ಅಲ್ಲಗಳೆತದ ರೂಪ (ಓಡದೆ, ತಿನ್ನದೆ, ಕಡಿಯದೆ, ಗುದ್ದದೆ) ಎಂಬುದಾಗಿ ನಾಲ್ಕು ಬಗೆಯ ಜೋಡಿಸುವ ರೂಪಗಳಿರುತ್ತವೆ. ಇವುಗಳಲ್ಲಿ ಮೊದಲಿನ ಎರಡು ಬಗೆಯ ರೂಪಗಳು ಮಾತ್ರ ಕೂಡುಪದಗಳಲ್ಲಿ ಬಳಕೆಯಾಗುತ್ತವೆ. ಅದರಲ್ಲೂ ಮೊದಲೆಸಕದ ರೂಪಗಳೇ ಹೆಚ್ಚಿನ ಕೂಡುಪದ ಗಳಲ್ಲೂ ಕಾಣಿಸಿಕೊಳ್ಳುತ್ತವೆ.
ಸಾಮಾನ್ಯವಾಗಿ, ಎರಡು ಸೊಲ್ಲುಗಳನ್ನು ಜೋಡಿಸಿ ಬಳಸಬೇಕಾದಾಗ, ಅವುಗಳಲ್ಲಿ ಮೊದಲನೆಯ ಸೊಲ್ಲಿನ ಎಸಕಪದವನ್ನು ಜೋಡಿಸುವ ರೂಪದಲ್ಲಿ ಬಳಸಲಾಗುತ್ತದೆ, ಮತ್ತು ಆ ರೀತಿ ಬಳಸಿದಾಗ, ಅವುಗಳ ಹುರುಳು ಎರಡು ಸೊಲ್ಲುಗಳನ್ನು ಜೋಡಿಸಿರುವಂತಹ ಹುರುಳೇ ಆಗಿರುತ್ತದೆ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ಅವನು ತಿಂಡಿ ತಿಂದು ಮನೆಗೆ ಬಂದ. (1ಚ) ಅವನು ತಿಂಡಿ ತಿನ್ನಲು ಮನೆಗೆ ಬಂದ. (1ಟ) ಅವನು ತಿಂಡಿ ತಿನ್ನುತ್ತಾ ಮನೆಗೆ ಬಂದ. (1ತ) ಅವನು ತಿಂಡಿ ತಿನ್ನದೆ ಮನೆಗೆ ಬಂದ. ಮೇಲಿನ ಸೊಲ್ಲುಗಳಲ್ಲಿ ತಿನ್ನು ಮತ್ತು ಬರು ಎಂಬ ಎರಡು ಎಸಕಪದಗಳನ್ನು ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ತಿನ್ನು ಪದದ ತಿನ್ನು, ತಿನ್ನಲು, ತಿನ್ನುತ್ತಾ ಮತ್ತು ತಿನ್ನದೆ ಎಂಬ ನಾಲ್ಕು ಬಗೆಯ ಜೋಡಿಸುವ ರೂಪಗಳನ್ನು ಬಳಸಲಾಗಿದೆ. ಹೀಗೆ ಜೋಡಿಸುವಾಗ, ಅವುಗಳ ಎರಡು ಪಾಂಗಿಟ್ಟಳಗಳನ್ನೂ ಒಟ್ಟುಸೇರಿಸಲಾಗಿದೆ ಎಂಬುದನ್ನು ಗಮನಿಸಬಹುದು: ತಿನ್ನು ಎಸಕಪದ ಮಾಡುಗ+ಈಡು ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ, ಮತ್ತು ಬರು ಎಸಕಪದ ಮಾಡುಗ+ಗುರಿ ಎಂಬ ಪಾಂಗಿಟ್ಟಳದೊಂದಿಗೆ ಬರುತ್ತದೆ. ಆ ಎರಡು ಎಸಕಗಳಿರುವ ಸೊಲ್ಲುಗಳನ್ನು ಜೋಡಿಸಿರುವ ಮೇಲಿನ ಎಲ್ಲಾ (1ಕ-ತ) ಸೊಲ್ಲುಗಳಲ್ಲೂ ಮಾಡುಗ+ಈಡು+ಗುರಿ ಎಂಬ ಪಾಂಗಿಟ್ಟಳ ಬಂದಿದೆ; ಇದರಲ್ಲಿ ತಿನ್ನು ಮತ್ತು ಬರು ಎಸಕಪದಗಳ ಪಾಂಗಿಟ್ಟಳಗಳಿಗೆ ಸಮಾನವಾಗಿರುವ ಮಾಡುಗ ಮತ್ತು ಈಡು ಪಾಂಗುಗಳು ಒಂದಾಗಿವೆ, ಮತ್ತು ಬರು ಎಸಕಪದದ ಪಾಂಗಿಟ್ಟಳದಲ್ಲಿ ಹೆಚ್ಚಿನದಾಗಿರುವ ಗುರಿ ಪಾಂಗು ಅವುಗಳೊಂದಿಗೆ ಹೆಚ್ಚಿನದಾಗಿ ಸೇರಿಕೊಂಡಿದೆ. ಇದಕ್ಕೆ ಬದಲು, ಎರಡು ಎಸಕಪದಗಳನ್ನು ಒಂದು ಕೂಡುಪದವಾಗಿ ಮಾರ್ಪಡಿಸಿ ದಾಗ, ಅವುಗಳ ಪಾಂಗಿಟ್ಟಳದಲ್ಲಿದ್ದ ಎಲ್ಲಾ ಪಾಂಗುಗಳೂ ಆ ರೀತಿ ಯಾವಾಗಲೂ ಉಳಿದುಕೊಳ್ಳುವುದಿಲ್ಲ; ಅವುಗಳ ಎಣಿಕೆಯಲ್ಲಿ ಇಲ್ಲವೇ ಬಗೆಯಲ್ಲಿ ಮಾರ್ಪಾಡುಗ ಳುಂಟಾಗುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಅವನು ಮನೆಗೆ ಹೋದ. (2ಚ) ಅವನು ಆಟದಲ್ಲಿ ಸೋತ. (2ಟ) ಅವನು ಆಟದಲ್ಲಿ ಸೋತುಹೋದ. ಹೋಗು ಪದದ ಪಾಂಗಿಟ್ಟಳದಲ್ಲಿ ಮಾಡುಗ ಮತ್ತು ಗುರಿ ಪಾಂಗುಗಳು ಬರುವುದನ್ನು (2ಕ)ದಲ್ಲಿ, ಮತ್ತು ಸೋಲು ಪದದ ಪಾಂಗಿಟ್ಟಳದಲ್ಲಿ ಮಾಡುಗ ಮತ್ತು ಜಾಗ ಪಾಂಗುಗಳು ಬರುವುದನ್ನು (2ಚ)ದಲ್ಲಿ ಕಾಣಬಹುದು; ಆದರೆ, ಇವೆರಡನ್ನು ಜೋಡಿಸಿ ಒಂದು ಕೂಡುಪದವಾಗಿ ಮಾಡಿರುವ ಸೋತುಹೋದ ಎಂಬುದರ ಪಾಂಗಿಟ್ಟಳದಲ್ಲಿ ಸೋಲು ಪದದ ಜಾಗ ಪಾಂಗು ಉಳಿದಿದೆಯಲ್ಲದೆ ಹೋಗು ಪದದ ಗುರಿ ಪಾಂಗು ಉಳಿದಿಲ್ಲ. (2ಕ-ಚ) ಸೊಲ್ಲುಗಳನ್ನು ಕೂಡುಪದವಾಗಿ ಮಾಡಲು ಹೋಗದೆ ಸುಮ್ಮಗೇ ಜೋಡಿಸಿದಲ್ಲಿ, ಅದರಲ್ಲಿ ಬರುವ ಎರಡು ಎಸಕಪದಗಳ ಎಲ್ಲಾ ಪಾಂಗುಗಳನ್ನೂ ಉಳಿಸಿಕೊಳ್ಳಲು ಬರುತ್ತದೆ ಎಂಬುದನ್ನು ಕೆಳಗೆ ಕೊಟ್ಟಿರುವ ಸೊಲ್ಲುಗಳಲ್ಲಿ ಕಾಣ ಬಹುದು: (2ತ) ಅವನು ಮನೆಗೆ ಆಟದಲ್ಲಿ ಸೋತು ಹೋದ. (2ಪ) ಅವನು ಆಟದಲ್ಲಿ ಸೋತು ಮನೆಗೆ ಹೋದ. (2ತ)ದಲ್ಲಿ ಎರಡು ಪಾಂಗಿಟ್ಟಳಗಳನ್ನು ಒಟ್ಟುಸೇರಿಸಿ ಒಂದೇ ಪಾಂಗಿಟ್ಟಳವಾಗಿ ಮಾಡಲಾಗಿದೆ, ಮತ್ತು (2ಪ)ದಲ್ಲಿ ಅವನ್ನು ಬೇರೆ ಬೇರಾಗಿ ಇರಿಸಲಾಗಿದೆ. ಆದರೆ, ಈ ಎರಡು ಸೊಲ್ಲುಗಳಲ್ಲೂ ಅವುಗಳಲ್ಲಿ ಬಂದಿರುವ ಎರಡು ಎಸಕಪದಗಳ ಎಲ್ಲಾ ಪಾಂಗುಗಳೂ ಉಳಿಸುಕೊಂಡಿವೆ.
(ಕ) ಕೂಡುಪದಗಳಲ್ಲಿ ಮೊದಲೆಸಕ ಮತ್ತು ಮಾರೆಸಕ ಎಂಬ ಎರಡು ಬಗೆಯ ಜೋಡಿಸುವ ರೂಪಗಳನ್ನು ಬಳಸಲು ಬರುತ್ತದೆ ಎಂಬುದನ್ನು ಮೇಲೆ ನೋಡಿರು ವೆವು; ಇವುಗಳ ನಡುವಿನ ಮುಕ್ಯ ವ್ಯತ್ಯಾಸವೇನೆಂದರೆ, ಮೊದಲೆಸಕದ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳಲ್ಲಿ ಎಸಕದ ಬಗೆಯನ್ನು (ನಡೆಯುವ ಎಸಕ ಎಂತಹದು ಎಂಬುದನ್ನು) ಮೊದಲನೆಯ ಎಸಕಪದ ತಿಳಿಸುತ್ತದೆ, ಮತ್ತು ಎಸಕದ ಕೊನೆ ಇಲ್ಲವೇ ದೊರೆತ (ಪರಿಣಾಮ) ಎಂತಹದು ಎಂಬುದನ್ನು ಎರಡನೆಯ ಎಸಕಪದ ತಿಳಿಸುತ್ತದೆ ಎತ್ತುಗೆಗಾಗಿ, ಒತ್ತಿತುಂಬು, ಕರಗಿಬೆಸೆ, ಕಿರುಕಿತೆಗೆ, ತಿರಿದುಣ್ಣು, ಬಗ್ಗಿನಿಲ್ಲು ಮೊದಲಾದ ಕೂಡುಪದಗಳನ್ನು ಗಮನಿಸಬಹುದು; ಇವುಗಳಲ್ಲಿ ಮೊದಲನೆಯ ಎಸಕಪದವಾದ ಒತ್ತಿ, ಕರಗಿ, ಕಿರುಕಿ, ತಿರಿದು, ಬಗ್ಗಿ ಎಂಬವು ಎಸಕದ ಬಗೆಯನ್ನು ತಿಳಿಸುತ್ತವೆ, ಮತ್ತು ಎರಡನೆಯ ಎಸಕಪದವಾದ ತುಂಬು, ಬೆಸೆ, ಉಣ್ಣು, ನಿಲ್ಲು ಎಂಬವು ಎಸಕದ ಕೊನೆ ಇಲ್ಲವೇ ದೊರೆತವನ್ನು ತಿಳಿಸುತ್ತವೆ. ಇದಕ್ಕೆ ಬದಲು, ಮಾರೆಸಕದ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳಲ್ಲಿ ಎಸಕದ ಕೊನೆ ಇಲ್ಲವೇ ದೊರೆತವನ್ನು ಮೊದಲನೆಯ ಎಸಕಪದ ತಿಳಿಸುತ್ತದೆ, ಮತ್ತು ಎಸಕದ ಬಗೆಯನ್ನು ಎರಡನೆಯ ಎಸಕಪದ ತಿಳಿಸುತ್ತದೆ, ಇದನ್ನು ಸಾಯಬಡಿ, ತಿಳಿಹೇಳು, ಬರಸೆಳೆ, ಬೀಳಹೊಡೆ, ತರಹೋಗು, ಉಣಬಡಿಸು ಮೊದಲಾದ ಕೂಡುಪದಗಳಲ್ಲಿ ಕಾಣಬಹುದು. ಎತ್ತುಗೆಗಾಗಿ, ಸಾಯಬಡಿ ಎಂಬ ಕೂಡುಪದದಲ್ಲಿ ಅದು ತಿಳಿಸುವ ಎಸಕದ ದೊರೆತ (ಪರಿಣಾಮ) ಎಂತಹದು ಎಂಬುದನ್ನು ಸಾಯ(ಲು) ಎಂಬ ಮೊದಲನೆಯ ಎಸಕಪದ ತಿಳಿಸುತ್ತದೆ, ಮತ್ತು ಅದರ ಬಗೆಯನ್ನು (ಆ ಎಸಕವನ್ನು ಹೇಗೆ ನಡೆಸ ಲಾಗಿದೆ ಎಂಬುದನ್ನು) ಬಡಿ ಎಂಬ ಎರಡನೆಯ ಎಸಕಪದ ತಿಳಿಸುತ್ತದೆ. ಎಸಕದ ಬಗೆಯನ್ನು ತಿಳಿಸುವ ಮೊದಲೆಸಕದ ಜೋಡಿಸುವ ರೂಪಗಳನ್ನು ಒತ್ತಿ ಹೇಳುವುದಕ್ಕಾಗಿ ಅವನ್ನು ಎರಡೆರಡು ಬಾರಿ ಬಳಸಲು ಬರುತ್ತದೆ: (3ಕ) ಅವನು ಹತ್ತಿಯನ್ನು ಚೀಲದೊಳಗೆ ಒತ್ತಿ ಒತ್ತಿ ತುಂಬಿಸಿದ. (3ಚ) ಅವನು ಹಣವನ್ನು ಎಲ್ಲರಿಗೂ ತೆಗೆದು ತೆಗೆದು ಕೊಟ್ಟ. (3ಟ) ಅವಳು ಪಾತ್ರೆಯನ್ನು ತಿಕ್ಕಿ ತಿಕ್ಕಿ ತೊಳೆದಳು. (3ತ) ಅವನು ನಡೆದುದೆಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿದ. (ಚ) ಮೇಲೆ ತಿಳಿಸಿದ ಹಾಗೆ, ಜೋಡಿಸುವ ಎಸಕರೂಪದ ಮೂಲಕ ಎರಡು ಸೊಲ್ಲುಗಳನ್ನು ಜೋಡಿಸಿರುವಲ್ಲಿ, ಅವುಗಳ ಅಂಗಗಳಾಗಿರುವ ಎಸಕಪದಗಳ ಪಾಂಗಿಟ್ಟಳಗಳು ಬೇರೆ ಬೇರಾಗಿಯೂ ಬರಬಲ್ಲುವು, ಇಲ್ಲವೇ ಒಟ್ಟುಸೇರಿ ಒಂದೇ ಪಾಂಗಿಟ್ಟಳವಾಗಿಯೂ ಬರಬಲ್ಲುವು: (4ಕ) ಅವರು ಪೇಟೆಗೆ ಹೋಗಿ ಒಂದು ಅಂಗಿಯನ್ನು ಹೊಲಿಸಿದರು. (4ಚ) ಅವರು ಒಂದು ಅಂಗಿಯನ್ನು ಪೇಟೆಗೆ ಹೋಗಿ ಹೊಲಿಸಿದರು. (4ಕ)ದಲ್ಲಿ ಹೋಗು ಮತ್ತು ಹೊಲಿಸು ಎಸಕಪದಗಳ ಪಾಂಗಿಟ್ಟಳಗಳನ್ನು ಬೇರೆ ಬೇರಾಗಿ ಕೊಡಲಾಗಿದೆ, ಮತ್ತು (4ಚ)ದಲ್ಲಿ ಅವನ್ನು ಒಟ್ಟುಸೇರಿಸಿ ಒಂದೇ ಪಾಂಗಿಟ್ಟಳವಾಗಿ ಮಾಡಲಾಗಿದೆ ಎಂಬುದನ್ನು ಗಮನಿಸಬಹುದು. ಆದರೆ, ಕೂಡುಪದಗಳ ಬಳಕೆಯಲ್ಲಿ ಆ ರೀತಿ ಎರಡು ಪಾಂಗಿಟ್ಟಳಗಳನ್ನು ಬೇರ್ಪಡಿಸಿ ಹೇಳಲು ಬರುವುದಿಲ್ಲ; ಅವು ಎಲ್ಲಾ ಕಡೆಗಳಲ್ಲೂ ಒಟ್ಟುಸೇರಿ ಒಂದೇ ಪಾಂಗಿಟ್ಟಳವಾಗಬೇಕಾಗುತ್ತದೆ; ಇದಲ್ಲದೆ, ಆ ರೀತಿ ಒಂದಾಗುವಾಗ ಕೆಲವು ಕಡೆ ಗಳಲ್ಲಿ ಎಲ್ಲಾ ಪಾಂಗುಗಳೂ ಉಳಿದುಕೊಳ್ಳುತ್ತವೆ; ಮತ್ತು ಬೇರೆ ಕೆಲವು ಕಡೆಗಳಲ್ಲಿ ಅವುಗಳ ಎಣಿಕೆ ಮತ್ತು ಬಗೆಗಳಲ್ಲಿ ಮಾರ್ಪಾಡುಗಳುಂಟಾಗುತ್ತವೆ.
ಅವುಗಳಲ್ಲಿ ಕೆಲವು ಪಾಂಗುಗಳು ಬಿದ್ದುಹೋಗಬಲ್ಲುವು, ಮತ್ತು ಕೆಲವು ಮಾರ್ಪಡಬಲ್ಲುವು; ಕೆಲವು ಕಡೆಗಳಲ್ಲಿ ಎಸಕಪದಗಳ ಪಾಂಗಿಟ್ಟಳಗಳಲ್ಲಿ ಇಲ್ಲದಿರುವ ಒಂದು ಹೆಚ್ಚಿನ ಪಾಂಗೂ ಕೂಡುಪದದ ಪಾಂಗಿಟ್ಟಳಕ್ಕೆ ಬಂದು ಸೇರಿಕೊಳ್ಳಬಲ್ಲುದು. ಎರಡು ಪಾಂಗಿಟ್ಟಳಗಳನ್ನು ಒಂದು ಮಾಡಿ ಕೂಡುಪದದ ಪಾಂಗಿಟ್ಟಳದಲ್ಲಿ ಬಳಸುವಾಗ ನಡೆಯುವ ಈ ಬಗೆಗಳಿಗೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ; ಇವೆಲ್ಲವನ್ನೂ ಮೊದಲೆಸಕದ ಜೋಡಿಸುವ ರೂಪಗಳ ಬಳಕೆಯಿಂದ ಪಡೆಯಲಾಗಿದೆ: (1) ಎಲ್ಲಾ ಪಾಂಗುಗಳೂ ಉಳಿದುಕೊಂಡಿರುವುದು: ಒಂದು ಕೂಡುಪದದ ಅಂಗಗಳಾಗಿರುವ ಎಸಕಪದಗಳ ಎಲ್ಲಾ ಪಾಂಗುಗಳೂ ಕೂಡುಪದದ ಪಾಂಗಿಟ್ಟಳದಲ್ಲಿ ಉಳಿದುಕೊಂಡಿರುವುದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (ಕ) ಕೊಡು ಎಸಕಪದವನ್ನು ಬೇರೊಂದು ಎಸಕಪದದ ಜೋಡಿಸುವ ರೂಪದೊಂದಿಗೆ ಬಳಸಿದಾಗ, ಆ ಎರಡು ಎಸಕಪದಗಳ ಪಾಂಗಿಟ್ಟಳದಲ್ಲಿರುವ ಎಲ್ಲಾ ಪಾಂಗುಗಳೂ ಉಳಿದುಕೊಳ್ಳುತ್ತವೆ; ಆದರೆ, ಕೊಡು ಪದದ ಗುರಿ ಪಾಂಗು ಬೇರಾಗಿ ಉಳಿಯುತ್ತದೆ, ಮತ್ತು ಉಳಿದ ಮಾಡುಗ ಮತ್ತು ಈಡು ಪಾಂಗುಗಳು ಜೋಡಿಸುವ ರೂಪದಲ್ಲಿ ಬಂದಿರುವ ಎಸಕಪದದ ಪಾಂಗುಗಳೊಂದಿಗೆ ಒಂದು ಗೂಡುತ್ತವೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು: (5ಕ) ಅವನು ಒಂದು ಕತೆ ಬರೆದ > ಅವನು ಆಕೆಗೆ ಒಂದು ಕತೆ ಬರೆದುಕೊಟ್ಟ. (5ಚ) ಅವನು ತನ್ನ ಕೆಲಸವನ್ನು ಬಿಟ್ಟ > ಅವನು ಆಕೆಗೆ ತನ್ನ ಕೆಲಸವನ್ನು ಬಿಟ್ಟುಕೊಟ್ಟ. (5ಟ) ಅವನು ಒಂದು ದನವನ್ನು ಹುಡುಕುತ್ತಿದ್ದ > ಅವನು ಆಕೆಗೆ ಒಂದು ದನವನ್ನು ಹುಡುಕಿಕೊಟ್ಟ. ಕೊಡು ಎಸಕಪದಕ್ಕೆ ಮಾಡುಗ+ಗುರಿ+ಈಡು ಎಂಬ ಪಾಂಗಿಟ್ಟಳವಿದೆ; ಇದಕ್ಕೆ ಬದಲು, ಅದರ ಮೊದಲು ಬಂದಿರುವ ಬರೆದು, ಬಿಟ್ಟು, ಮತ್ತು ಹುಡುಕಿ ಎಂಬ ಜೋಡಿಸುವ ರೂಪಗಳಿಗೆ ಮಾಡುಗ+ಈಡು ಎಂಬ ಪಾಂಗಿಟ್ಟಳವಿದೆ. ಇವೆರಡನ್ನು ಒಟ್ಟು ಸೇರಿಸಿರುವ ಕೂಡುಪದಗಳ ಪಾಂಗಿಟ್ಟಳದಲ್ಲಿ ಈ ಎರಡು ಪಾಂಗಿಟ್ಟಳಗಳ ನಡುವೆ ಸಮಾನವಾಗಿರುವ ಮಾಡುಗ ಮತ್ತು ಈಡು ಪಾಂಗುಗಳು ಒಂದಾಗಿ ಬಂದಿವೆ, ಮತ್ತು ಎರಡನೆಯ ಪಾಂಗಿಟ್ಟಳದಲ್ಲಿ ಮಾತ್ರ ಕಾಣಿಸುವ ಗುರಿ ಪಾಂಗು ಅವುಗಳೊಂದಿಗೆ ಮೂರನೆಯ ಪಾಂಗಾಗಿ ಸೇರಿಕೊಂಡಿದೆ. ಇಲ್ಲಿ ಒಟ್ಟಿಗೆ ಸೇರಿರುವ ಎರಡು ಪಾಂಗಿಟ್ಟಳಗಳ ಎಲ್ಲಾ ಪಾಂಗುಗಳೂ ಉಳಿದು ಕೊಂಡಿವೆಯೆಂದು ಹೇಳಬಹುದು. (ಚ) ಎಸಕಪದಗಳ ಮೊದಲೆಸಕದ ಜೋಡಿಸುವ ರೂಪದೊಂದಿಗೆ ಆಡು ಇಲ್ಲವೇ ನೋಡು ಎಸಕಪದಗಳನ್ನು ಬಳಸಿದಾಗ ಜೋಡಿಸುವ ರೂಪದಲ್ಲಿರುವ ಮೊದಲನೆಯ ಎಸಕಪದದ ಪಾಂಗಿಟ್ಟಳವೇ ಕೂಡುಪದದ ಪಾಂಗಿಟ್ಟಳವಾಗುತ್ತದೆ; ಅದರ ಬಳಿಕ ಬರುವ ಆಡು ಮತ್ತು ನೋಡು ಎಸಕಪದಗಳಿಗೆ ಕೆಲವು ಹೆಚ್ಚಿನ ಹುರುಳುಗಳನ್ನು ಕೊಡುವ ಕೆಲಸ ಮಾತ್ರ ಇದೆ. (6ಕ) ಅವನು ಕಾಡಿನಲ್ಲಿ ಅಲೆದ > ಅವನು ಕಾಡಿನಲ್ಲಿ ಅಲೆದಾಡಿದ. (6ಚ) ಮರದ ಗೆಲ್ಲು ತೊನೆಯಿತು > ಮರದ ಗೆಲ್ಲು ತೊನೆದಾಡಿತು. (7ಕ) ಅವನು ಹಣ್ಣನ್ನು ತಿಂದ > ಅವನು ಹಣ್ಣನ್ನು ತಿಂದುನೋಡಿದ. (7ಚ) ಅವನು ಹಣ್ಣನ್ನು ಮೂಸಿದ > ಅವನು ಹಣ್ಣನ್ನು ಮೂಸಿನೋಡಿದ. (6-7) ಸೊಲ್ಲುಗಳಲ್ಲಿ ಮೊದಲನೆಯ ಎಸಕಪದದ ಪಾಂಗಿಟ್ಟಳವೇ ಕೂಡು ಪದಗಳ ಪಾಂಗಿಟ್ಟಳವಾಗಿ ಬಂದಿರುವುದನ್ನು ಗಮನಿಸಬಹುದು; ಎರಡನೆಯ ಎಸಕಪದ ಅದರಲ್ಲಿ ಯಾವ ಮಾರ್ಪಾಡನ್ನೂ ತರುವ ಹಾಗೆ ಕಾಣಿಸುವುದಿಲ್ಲ. ಆದರೆ, ಆಡು ಎಸಕಪದ ಅದರ ಮೊದಲು ಬಂದಿರುವ ಎಸಕಪದ ತಿಳಿಸುವ ಎಸಕವನ್ನು ಹಲವು ಬಾರಿ ಇಲ್ಲವೇ ತುಂಬಾ ಹೊತ್ತು ನಡೆಸಲಾಗಿದೆ ಎಂಬ ಹುರುಳನ್ನು ಕೊಡುತ್ತದೆ (6ಕ-ಚ ನೋಡಿ), ಮತ್ತು ನೋಡು ಎಂಬುದು ಎಸಕವನ್ನು ಒರೆದುನೋಡುವುದಕ್ಕಾಗಿ ನಡೆಸಲಾಗಿದೆ ಎಂಬ ಹುರುಳನ್ನು ಕೊಡುತ್ತದೆ (7ಕ-ಚ ನೋಡಿ). (2) ಕೆಲವು ಪಾಂಗುಗಳು ಬಿದ್ದುಹೋಗುವುದು:
ಕೂಡುಪದದಲ್ಲಿ ಸೇರಿರುವ ಎಸಕಪದಗಳಲ್ಲಿ ಮೊದಲನೆಯದರ ಪಾಂಗೂ ಬಿದ್ದುಹೋಗಬಲ್ಲುದು, ಇಲ್ಲವೇ ಎರಡನೆಯದರದ್ದೂ ಬಿದ್ದುಹೋಗಬಲ್ಲುದು. ಕೆಳಗೆ ಕೊಟ್ಟಿರುವ ಎತ್ತುಗೆಯಲ್ಲಿ ಎರಡನೇ ಎಸಕಪದದ ಒಂದು ಪಾಂಗು ಬಿದ್ದುಹೋಗಿದೆ: ಹಾಕು ಎಸಕಪದದ ಪಾಂಗಿಟ್ಟಳದಲ್ಲಿ ಮಾಡುಗ, ಗುರಿ ಮತ್ತು ಈಡು ಎಂಬ ಮೂರು ಪಾಂಗುಗಳು ಬರುತ್ತವೆ (ಅವನು ಹಣ್ಣನ್ನು ಚೀಲದಲ್ಲಿ ಹಾಕಿದ); ಅವುಗಳಲ್ಲಿ ಮಾಡುಗ ಮತ್ತು ಈಡು ಪಾಂಗುಗಳು ಅದರ ಮೊದಲು ಬಂದಿರುವ ಎಸಕಪದದ ಮಾಡುಗ ಮತ್ತು ಈಡು ಪಾಂಗುಗಳೊಂದಿಗೆ ಒಂದಾಗುತ್ತವೆ; ಆದರೆ, ಅದರ ಗುರಿ ಪಾಂಗು ಬಿದ್ದುಹೋಗುತ್ತದೆ. ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (8ಕ) ಅವನು ಕೊಡವನ್ನು ಒಡೆದ > ಅವನು ಕೊಡವನ್ನು ಒಡೆದು ಹಾಕಿದ. (8ಚ) ಅವನು ಬರಹವನ್ನು ಅಳಿಸಿದ > ಅವನು ಬರಹವನ್ನು ಅಳಿಸಿ ಹಾಕಿದ. (8ಟ) ಅವರು ಹಣ್ಣನ್ನು ತಿಂದರು > ಅವರು ಹಣ್ಣನ್ನು ತಿಂದುಹಾಕಿದರು. (8ಕ)ದಲ್ಲಿ ಒಡೆ ಎಸಕಪದದ ಮಾಡುಗ ಮತ್ತು ಈಡು ಪಾಂಗುಗಳು ಕೂಡುಪದದ ಪಾಂಗಿಟ್ಟಳದಲ್ಲಿ ಉಳಿದುಕೊಂಡಿವೆ, ಮತ್ತು ಹಾಕು ಎಸಕಪದದ ಮಾಡುಗ ಮತ್ತು ಈಡು ಪಾಂಗುಗಳು ಅವುಗಳೊಂದಿಗೆ ಒಂದುಗೂಡಿವೆ; ಆದರೆ, ಹಾಕು ಎಸಕಪದದ ಗುರಿ ಪಾಂಗು ಬಿದ್ದುಹೋಗಿದೆ. ಈ ರೀತಿ ಕೂಡುಪದದಲ್ಲಿ ಸೇರಿರುವ ಎಸಕಪದಗಳಲ್ಲಿ ಎರಡನೆಯದಕ್ಕಿರುವ ಹೆಚ್ಚಿನ ಪಾಂಗು ಬಿದ್ದು ಹೋಗುವುದನ್ನು ಕೆಳಗೆ ಕೊಟ್ಟಿರುವ ಹೋಗು ಪದದ ಬಳಕೆಯಲ್ಲೂ ಕಾಣಬಹುದು: ಹೋಗು ಎಸಕಪದವನ್ನು ಎರಡನೆಯ ಎಸಕಪದವಾಗಿ ಬಳಸಿರುವ ಕೂಡು ಪದಗಳಲ್ಲಿ ಸಾಮಾನ್ಯವಾಗಿ ಅವುಗಳ ಮೊದಲನೇ ಎಸಕಪದದ ಪಾಂಗಿಟ್ಟಳವೇ ಉಳಿಯುತ್ತದೆ; ಹೋಗು ಪದದ ಪಾಂಗಿಟ್ಟಳದಲ್ಲಿ ಬರುವ ಮಾಡುಗ ಇಲ್ಲವೇ ಗುರಿ ಪಾಂಗು (ಅವನು ಮನೆಗೆ ಹೋದ) ಇಲ್ಲಿ ಉಳಿಯುವುದಿಲ್ಲ: (9ಕ) ಅನ್ನ ಕರಟಿತು > ಅನ್ನ ಕರಟಿಹೋಯಿತು. (9ಚ) ಅವನು ಆಟದಲ್ಲಿ ಸೋತ > ಅವನು ಆಟದಲ್ಲಿ ಸೋತುಹೋದ. (9ಟ) ಬೆಕ್ಕು ಸತ್ತಿತು > ಬೆಕ್ಕು ಸತ್ತುಹೋಯಿತು. (9ಕ)ದಲ್ಲಿ ಕರಟು ಪದದ ಆಗುಗ ಪಾಂಗು ಮಾತ್ರ ಕರಟಿಹೋಗು ಎಂಬ ಕೂಡುಪದದ ಪಾಂಗಿಟ್ಟಳದಲ್ಲಿ ಉಳಿದುಕೊಂಡಿದೆ; ಹೋಗು ಪದದ ಮಾಡುಗ ಪಾಂಗಾಗಲಿ, ಗುರಿ ಪಾಂಗಾಗಲಿ ಉಳಿದುಕೊಂಡಿಲ್ಲ; (9ಚ-ಟ)ಗಳಲ್ಲೂ ಇಂತಹದೇ ಮಾರ್ಪಾಡು ನಡೆದಿದೆ. (3) ಕೆಲವು ಪಾಂಗುಗಳು ಮಾರ್ಪಡುವುದು: ಕೂಡುಪದದಲ್ಲಿ ಬಳಕೆಯಾಗಿರುವ ಎಸಕಪದಗಳಲ್ಲಿ ಮೊದಲನೆಯದರ ಪಾಂಗು ಗಳಲ್ಲಿ ಒಂದು ಮಾರ್ಪಟ್ಟಿರುವುದನ್ನು ಕೆಳಗಿನ ಎತ್ತುಗೆಯಲ್ಲಿ ಕಾಣಬಹುದು: (10ಕ) ಹೂವು ನೀರಿನಲ್ಲಿ ತೇಲಿತು. (10ಚ) ಅವನು ಹೂವನ್ನು ಕೆಳಗೆ ಬಿಟ್ಟ. (10ಟ) ಅವನು ಹೂವನ್ನು ನೀರಿನಲ್ಲಿ ತೇಲಿಬಿಟ್ಟ.
ತೇಲು ಪದದ ಪಾಂಗಿಟ್ಟಳದಲ್ಲಿದ್ದ ಆಗುಗ ಪಾಂಗು ತೇಲಿಬಿಟ್ಟ ಎಂಬ ಕೂಡುಪದದಲ್ಲಿ ಈಡು ಪಾಂಗಾಗಿ ಮಾರ್ಪಟ್ಟುದನ್ನು (10ಟ)ದಲ್ಲಿ ಕಾಣಬಹುದು. (4) ಒಂದಕ್ಕಿಂತ ಹೆಚ್ಚು ಮಾರ್ಪಾಡುಗಳು ನಡೆಯುವುದು: ಮೇಲೆ ವಿವರಿಸಿದಂತಹ ಮೂರು ಎರಡು ಬಗೆಯ ಮಾರ್ಪಾಡುಗಳು ಒಂದೇ ಕೂಡುಪದದ ಪಾಂಗಿಟ್ಟಳದಲ್ಲಿಯೂ ಕಾಣಿಸಿಕೊಳ್ಳಬಲ್ಲುವು; ಇಂತಹ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ: (ಕ) ನೆನೆ, ಕೊಳೆ, ಕಲೆ, ಸಾಗು ಎಂಬಂತಹ ಕೆಲವು ಎಸಕಪದಗಳ ಜೋಡಿಸುವ ರೂಪದೊಂದಿಗೆ ಹಾಕು ಪದವನ್ನು ಬಳಸಿದಾಗ, ಅವುಗಳ ಪಾಂಗಿಟ್ಟಳದಲ್ಲಿ ಮೊದಲಿಗಿದ್ದ ಆಗುಗ ಪಾಂಗು ಕೂಡುಪದದ ಪಾಂಗಿಟ್ಟಳದಲ್ಲಿ ಈಡು ಪಾಂಗಾಗಿ ಮಾರ್ಪಟ್ಟು ಬರುತ್ತದೆ, ಮತ್ತು ಹಾಕು ಪದದ ಈಡು ಪಾಂಗು ಅದರೊಂದಿಗೆ ಒಂದುಗೂಡುತ್ತದೆ; ಇದಲ್ಲದೆ, ಹಾಕು ಪದದ ಮಾಡುಗ ಪಾಂಗು ಕೂಡುಪದದ ಮಾಡುಗ ಪಾಂಗಾಗಿ ಸೇರುತ್ತದೆ; ಆದರೆ, ಹಾಕು ಪದದ ಗುರಿ ಪಾಂಗು ಬಿದ್ದುಹೋಗುತ್ತದೆ: (11ಕ) ಹಣ್ಣು ಕೊಳೆತಿತು > ಅವನು ಹಣ್ಣನ್ನು ಕೊಳೆಹಾಕಿದ. (11ಚ) ಬಟ್ಟೆ ನೆನೆಯಿತು > ಅವನು ಬಟ್ಟೆಯನ್ನು ನೆನೆಹಾಕಿದ. ಇಲ್ಲಿ ಒಂದು ಪಾಂಗು (ಆಗುಗ) ಮಾರ್ಪಟ್ಟಿದೆ, ಮತ್ತು ಇನ್ನೊಂದು ಪಾಂಗು (ಗುರಿ) ಬಿದ್ದುಹೋಗಿದೆ ಎಂಬುದನ್ನು ಗಮನಿಸಬಹುದು. (ಚ) ಕಳೆ ಎಸಕಪದ ಮಾಡುಗದೊಂದಿಗೂ ಬರಬಲ್ಲುದು, ಮತ್ತು ಆಗುಗ ದೊಂದಿಗೂ ಬರಬಲ್ಲುದು; ಆದರೆ, ಅದರ ಜೋಡಿಸುವ ರೂಪದೊಂದಿಗೆ ಹೋಗು ಪದ ಸೇರಿ ಉಂಟಾಗುವ ಕೂಡುಪದದ ಪಾಂಗಿಟ್ಟಳದಲ್ಲಿ ಆಗುಗ ಪಾಂಗು ಮಾತ್ರ ಬರುತ್ತದಲ್ಲದೆ ಮಾಡುಗ ಪಾಂಗು ಬರುವುದಿಲ್ಲ; ಇದಲ್ಲದೆ, ಹೋಗು ಪದದ ಮಾಡುಗ ಮತ್ತು ಗುರಿ ಎಂಬ ಎರಡು ಪಾಂಗುಗಳೂ ಬಿದ್ದುಹೋಗುತ್ತವೆ: (12ಕ) ಅವನು ಹಣ ಕಳೆದ. (12ಚ) ಮೂರು ದಿವಸ ಕಳೆಯಿತು. (12ಟ) ಹಣ ಕಳೆದುಹೋಯಿತು. (5) ಎರಡು ಪಾಂಗುಗಳು ಒಟ್ಟು ಸೇರಿ ಒಂದೇ ಪಾಂಗಾಗುವುದು: ಆಡು ಎಸಕಪದದೊಂದಿಗೆ ಬಡಿ, ಹೊಡೆ, ಕಚ್ಚು, ಕೀಳು, ಹೋರು, ಗುದ್ದು ಎಂಬಂತಹ ಬೇರೆ ಕೆಲವು ಎಸಕಪದಗಳ ಜೋಡಿಸುವ ರೂಪವನ್ನು ಸೇರಿಸಿ ಉಂಟುಮಾಡಿದ ಕೂಡುಪದಕ್ಕೆ ಒಬ್ಬರನ್ನೊಬ್ಬರು ಇಲ್ಲವೇ ಒಬ್ಬರೊಡನೊಬ್ಬರು ಎಂಬ ಎದುರೆಸಕದ ಹುರುಳು ಸಿಗಬಲ್ಲುದು, ಮತ್ತು ಅದರ ಪಾಂಗಿಟ್ಟಳದಲ್ಲಿ ಎರಡು ಪಾಂಗುಗಳು (ಮಾಡುಗ+ಗುರಿ ಇಲ್ಲವೇ ಮಾಡುಗ+ಈಡು) ಒಟ್ಟುಸೇರಿ ಹಲವೆಣಿಕೆಯ ಒಂದೇ ಮಾಡುಗ ಪಾಂಗಾಗಿ ಬರಬಲ್ಲುವು: (13ಕ) ಅವನು ನನಗೆ ಹೊಡೆದ > ನಾವು ಹೊಡೆದಾಡಿದೆವು. (13ಚ) ಅವನು ಇವನಿಗೆ ಗುದ್ದಿದ > ಅವರಿಬ್ಬರು ಗುದ್ದಾಡಿದರು. (13ಟ) ಅವರು ಇವರಿಗೆ ಕಚ್ಚಿದರು > ಅವರು ಒಬ್ಬರಿಗೊಬ್ಬರು ಕಚ್ಚಾಡಿದರು. (13ಕ) ಎತ್ತುಗೆಯ ಮೊದಲನೆಯ ಸೊಲ್ಲಿನಲ್ಲಿ ಮಾಡುಗ (ಅವನು) ಮತ್ತು ಗುರಿ (ನನಗೆ) ಎಂಬ ಎರಡು ಪಾಂಗುಗಳು ಬಂದಿವೆ; ಅದರ ಎಸಕಪದಕ್ಕೆ ಆಡು ಪದವನ್ನು ಸೇರಿಸಿ ಮಾಡಿರುವ ಹೊಡೆದಾಡು ಎಂಬ ಕೂಡುಪದವನ್ನು ಎರಡನೆಯ
ಸೊಲ್ಲಿನಲ್ಲಿ ಬಳಸಲಾಗಿದೆ; ಇದರಲ್ಲಿ ಮೊದಲನೇ ಸೊಲ್ಲಿನ ಎರಡು ಪಾಂಗುಗಳು ಒಟ್ಟು ಸೇರಿ ಮಾಡುಗ (ನಾವು) ಎಂಬ ಒಂದೇ ಪಾಂಗಾಗಿ ಬಂದಿವೆ. (13ಚ-ಟ)ಗಳಲ್ಲೂ ಹೀಗೆಯೇ. (6) ಎರಡು ಪಾಂಗಿಟ್ಟಳಗಳಿರುವ ಎಸಕಪದಗಳು: ಆಗುಗದೊಂದಿಗೆ ಮಾತ್ರವಲ್ಲದೆ ಮಾಡುಗದೊಂದಿಗೂ ಬರಬಲ್ಲ ಜಾರು, ಒಡೆ, ನಿಲ್ಲು ಎಂಬಂತಹ ಕೆಲವು ಎಸಕಪದಗಳ ಜೋಡಿಸುವ ರೂಪಗಳು ಹೋಗು ಪದದೊಂದಿಗೆ ಕೂಡುಪದದಲ್ಲಿ ಬಂದಾಗ, ಅವುಗಳ ಪಾಂಗಿಟ್ಟಳದಲ್ಲಿ ಆಗುಗ ಪಾಂಗು ಮಾತ್ರ ಬರುತ್ತದಲ್ಲದೆ ಮಾಡುಗ ಪಾಂಗು ಬರುವುದಿಲ್ಲ: (14ಕ) ಕೊಡ ಒಡೆಯಿತು > ಅವನು ಕೊಡ ಒಡೆದ > ಕೊಡ ಒಡೆದು ಹೋಯಿತು. (14ಚ) ಕೆಲಸ ನಿಂತಿತು > ಅವನು ನಿಂತ > ಕೆಲಸ ನಿಂತುಹೋಯಿತು. (14ಟ) ನೀರು ಚೆಲ್ಲಿತು > ಅವನು ನೀರು ಚೆಲ್ಲಿದ > ನೀರು ಚೆಲ್ಲಿ ಹೋಯಿತು. ಒಡೆ ಎಸಕಪದದೊಂದಿಗೆ ಆಗುಗ ಮಾತ್ರ ಮತ್ತು ಮಾಡುಗ+ಈಡು ಎಂಬ ಎರಡು ಪಾಂಗಿಟ್ಟಳಗಳು ಬರಬಲ್ಲುವು ಎಂಬುದನ್ನು ಮೇಲೆ (1ಕ)ದ ಮೊದಲ ಎರಡು ಸೊಲ್ಲುಗಳು ತಿಳಿಸುತ್ತವೆ; ಆದರೆ, ಆ ಎಸಕಪದವನ್ನು ಹೋಗು ಎಸಕಪದದೊಂದಿಗೆ ಒಂದು ಕೂಡುಪದದಲ್ಲಿ ಬಳಸಿದಾಗ, ಅದಕ್ಕೆ ಒಂದು ಪಾಂಗಿಟ್ಟಳ ಮಾತ್ರ ಸಿಗುತ್ತದೆ, ಮತ್ತು ಆ ಪಾಂಗಿಟ್ಟಳದಲ್ಲಿ ಆಗುಗ ಪಾಂಗು ಮಾತ್ರ ಬರುತ್ತದೆ; (14ಚ-ಟ)ಗಳಲ್ಲೂ ಹೀಗೆಯೇ.
8.6.4 ಎರಡು ಎಸಕಪದಗಳ ನಡುವಿನ ಪತ್ತುಗೆ
ಕೂಡುಪದಗಳಲ್ಲಿ ಕಾಣಿಸುವ ಪಾಂಗಿಟ್ಟಳಗಳನ್ನು ಅವುಗಳ ಅಂಗಗಳಾಗಿ ಬಂದ ಎಸಕಪದಗಳ ಪಾಂಗಿಟ್ಟಳಗಳಿಂದ ಪಡೆಯುವ ಕೆಲಸ ತುಂಬಾ ಸಿಕ್ಕಲು ಸಿಕ್ಕಲಾದುದು; ಯಾಕೆಂದರೆ, ಇವು ಪದಗಳ ಒಳ ಇಟ್ಟಳಕ್ಕೆ ಸಂಬಂದಿಸಿದುವಾದ ಕಾರಣ, ಅವುಗಳ ಕುರಿತಾಗಿ ಒಲವುಗಳನ್ನು ಕಾಣಲು ಬರುತ್ತದಲ್ಲದೆ, ಕಟ್ಟಲೆಗಳನ್ನು ಕಾಣಲು ಬರುವುದಿಲ್ಲ (2.2 ನೋಡಿ). ಹಾಗಾಗಿ, ಮೇಲೆ ವಿವರಿಸಿದ ಒಲವುಗಳಿಗೆ ಹಲವಾರು ಹೊರಪಡಿಕೆಗಳೂ ಇವೆ. (ಕ) ಎತ್ತುಗೆಗಾಗಿ, ಬೀಳ್ಕೊಡು ಪದದಲ್ಲಿ ಬೀಳು ಪದವನ್ನು ಬಿಡು ಎಂಬ ಹುರುಳಿನಲ್ಲಿ ಬಳಸಲಾಗಿದೆ, ಮತ್ತು ಅದರೊಂದಿಗೆ ಕೊಡು ಪದವನ್ನು ಎರಡನೆಯ ಎಸಕಪದವಾಗಿ ಬಳಸಲಾಗಿದೆ; ಈ ಎರಡನೆಯ ಎಸಕಪದ ಬೇರೆಡೆಯಲ್ಲಿ ಒಂದು ಗುರಿ ಪಾಂಗನ್ನು ಕೂಡುಪದದ ಪಾಂಗಿಟ್ಟಳಕ್ಕೆ ಸೇರಿಸುತ್ತದೆ (8.6.4(1) ನೋಡಿ); ಆದರೆ, ಬೀಳ್ಕೊಡು ಕೂಡುಪದದಲ್ಲಿ ಬಳಕೆಯಾದಾಗ ಅದು ಆ ರೀತಿ ಗುರಿ ಪಾಂಗನ್ನು ಸೇರಿಸುವುದಿಲ್ಲ. (1) ನಾನು ಅವರನ್ನು ಬೀಳ್ಕೊಟ್ಟೆ. (ಚ) ಬರು ಎಸಕಪದದ ಪಾಂಗಿಟ್ಟಳದಲ್ಲಿ ಮಾಡುಗ ಪಾಂಗು ಮಾತ್ರ ಇಟ್ಟಳದ ಪಾಂಗಾಗಿ ಬರುತ್ತದೆ; ಅದರೊಂದಿಗೆ ಗುರಿ ಮತ್ತು ಸುರು ಪಾಂಗುಗಳೂ ಬರಬಲ್ಲುವಾದರೂ ಅವನ್ನು ನೆರವು ಪಾಂಗುಗಳೆಂದು ಕರೆಯುವುದು ಒಳ್ಳೆಯದು; ಇವುಗಳಲ್ಲೂ ಗುರಿ ಪಾಂಗು ಸುರು ಪಾಂಗಿಗಿಂತ ಎಸಕಪದಕ್ಕೆ ಹೆಚ್ಚು ಹತ್ತಿರ ಇದೆಯೆಂದು ಹೇಳಬಹುದು. ಈ ಪದವನ್ನು ಎರಡನೆಯ ಎಸಕಪದವಾಗಿ ಮೂಡಿಬರು, ಕೇಳಿಬರು, ಕೂಡಿಬರು ಎಂಬಂತಹ ಕೆಲವು ಕೂಡುಪದಗಳಲ್ಲಿ ಬಳಸಲು ಬರುತ್ತದೆ; ಇವುಗಳಲ್ಲಿ ಮೊದಲನೆಯ ಎರಡು ಕೂಡುಪದಗಳು ಆಗುಗ ಪಾಂಗಿನೊಂದಿಗೆ ಜಾಗ ಪಾಂಗನ್ನು ಪಡೆಯುತ್ತವೆ; ಆದರೆ, ಮೂರನೆಯದು ಒಂದು ಹಲವೆಣಿಕೆಯ ಗುರಿಯನ್ನು ಮಾತ್ರ ಪಡೆಯುತ್ತದೆ (ಅವರಿಬ್ಬರಿಗೆ ಕೂಡಿಬರುವುದಿಲ್ಲ), ಇಲ್ಲವೇ ಒಂದು ಗುರಿ ಪಾಂಗಿನೊಂದಿಗೆ ಕೂಡು ಪದದಿಂದ ದೊರಕುವ ಪತ್ತುಗೆ ಪಾಂಗನ್ನು (7.2.7 ನೋಡಿ) ಪಡೆಯುತ್ತದೆ (ಅವನಿಗೆ ಇವನೊಂದಿಗೆ ಕೂಡಿಬರುವುದಿಲ್ಲ).
(ಟ) ಕೊಡು ಪದವನ್ನು ಎರಡನೆಯ ಎಸಕಪದವಾಗಿ ಒಂದು ಮಾಡುಹವನ್ನು ತಿಳಿಸುವ ಎಸಕಪದಗಳೊಂದಿಗೆ ಮಾತ್ರ ಬಳಸಲು ಬರುತ್ತದೆ; ಎತ್ತಿಕೊಡು, ಬರೆದುಕೊಡು, ಕಟ್ಟಿಕೊಡು, ತಂದುಕೊಡು, ಬಿಟ್ಟುಕೊಡು, ಮಾಡಿಕೊಡು ಮೊದಲಾದ ಕೂಡುಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಮಾಡುಹ ಮತ್ತು ಆಗುಹಗಳೆರಡನ್ನೂ ತಿಳಿಸಬಲ್ಲ ಎಸಕಪದಗಳೊಂದಿಗೆ ಇದನ್ನು ಅವುಗಳ ಮಾಡುಹದ ಹುರುಳಿನಲ್ಲಿ ಮಾತ್ರ ಬಳಸಲು ಬರುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (2ಕ) ಬಟ್ಟೆ ಹರಿಯಿತು > ಅವನು ಬಟ್ಟೆ ಹರಿದ > ಅವನು ಬಟ್ಟೆಯನ್ನು ಹರಿದುಕೊಟ್ಟ. (2ಚ) ನೂಲು ಕೋಲಿಗೆ ಸುತ್ತಿತು > ಅವನು ನೂಲನ್ನು ಕೋಲಿಗೆ ಸುತ್ತಿದ > ಅವನು ನೂಲನ್ನು ಕೋಲಿಗೆ ಸುತ್ತಿಕೊಟ್ಟ. ಮಾಡುಹದ ಹುರುಳಿನಲ್ಲಿ ಬಳಸುವುದಕ್ಕಾಗಿ ಕೆಲವು ಎಸಕಪದಗಳಿಗೆ ಇಸು ಒಟ್ಟನ್ನು ಸೇರಿಸಬೇಕಾಗುತ್ತದೆ; ಅಂತಹ ಕಡೆಗಳಲ್ಲಿ ಕೊಡು ಪದವನ್ನು ಇಸು ಒಟ್ಟು ಸೇರಿರುವ ಎಸಕರೂಪದೊಂದಿಗೆ ಮಾತ್ರ ಬಳಸಲು ಬರುತ್ತದೆ: (2ಟ) ಅವನಿಗೆ ಹಣ ದೊರಕಿತು > ನಾನು ಅವನಿಗೆ ಹಣ ದೊರಕಿಸಿದೆ > ನಾನು ಅವನಿಗೆ ಹಣ ದೊರಕಿಸಿಕೊಟ್ಟೆ. (ತ) ಆದರೆ, ಇಕ್ಕು, ಹಾಕು, ಮತ್ತು ಇಡು ಪದಗಳನ್ನು ಕೂಡುಪದದ ಎರಡನೆಯ ಎಸಕಪದವಾಗಿ ಬಳಸಿದಾಗ, ಅವುಗಳ ಮೊದಲು ಬಂದಿರುವ ಎಸಕಪದದ ಜೋಡಿಸುವ ರೂಪ ಆಗುಹವನ್ನು ತಿಳಿಸುವುದಿದ್ದಲ್ಲಿ ಅದಕ್ಕೆ ಮಾಡುಹದ ಹುರುಳು ದೊರಕುತ್ತದೆ; ಅದರ ಆಗುಗ ಪಾಂಗು ಕೂಡುಪದದ ಈಡು ಪಾಂಗಾಗುತ್ತದೆ, ಮತ್ತು ಈ ಎರಡನೇ ಹಾಕು, ಇಡು, ಇಲ್ಲವೇ ಇಕ್ಕು ಎಸಕಪದಗಳ ಮಾಡುಗ ಪಾಂಗು ಕೂಡುಪದದ ಮಾಡುಗ ಪಾಂಗಾಗುತ್ತದೆ. (3ಕ) ಅವನು ಬಿದ್ದ > ನಾನು ಅವನನ್ನು ಬೀಳಿಕ್ಕಿದೆ. (3ಚ) ಅದು ಗೆಲ್ಲಿನಿಂದ ಜೋತಿತು > ನಾನು ಅದನ್ನು ಗೆಲ್ಲಿನಿಂದ ಜೋತುಹಾಕಿದೆ. (3ಟ) ಅದು ಎಳಲಿತು > ನಾನು ಅದನ್ನು ಎಳಲಿಟ್ಟೆ. ಆದರೆ, ತೊಟ್ಟಿಕ್ಕು ಎಂಬ ಕೂಡುಪದದಲ್ಲಿ ಇಕ್ಕು ಪದ ಅದರ ಮೊದಲಿಗೆ ಬಂದಿರುವ ಆಗುಹ ಪದವನ್ನು ಆ ರೀತಿ ಮಾರ್ಪಡಿಸಿಲ್ಲ; ಅದು ಆಗುಹವಾಗಿಯೇ ಉಳಿದಿದೆ. (3ತ) ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದೆ. (ಪ) ಬಿಡು ಮತ್ತು ಬೀಳು ಪದಗಳನ್ನು ಮಾಡುಹಗಳಾಗಿಯೂ ಬಳಸಲು ಬರುತ್ತದೆ, ಮತ್ತು ಆಗುಹಗಳಾಗಿಯೂ ಬಳಸಲು ಬರುತ್ತದೆ; ಅವನ್ನು ಆಗುಹ ಪದಗಳ ಜೋಡಿಸುವ ರೂಪದೊಂದಿಗೆ ಬಳಸಿದಾಗ, ಅಂತಹ ಕೂಡುಪದಗಳು ಆಗುಹಗಳನ್ನು ತಿಳಿಸುತ್ತವೆ, ಮತ್ತು ಮಾಡುಹ ಪದಗಳೊಂದಿಗೆ ಬಳಸಿದಾಗ ಮಾಡುಹಗಳನ್ನು ತಿಳಿಸುತ್ತವೆ: (4ಕ) ಅನ್ನ ಸೀದಿದೆ > ಅನ್ನ ಸೀದುಬಿಟ್ಟಿದೆ. (4ಚ) ಅವನು ಬಂದ > ಅವನು ಬಂದುಬಿಟ್ಟ. (5ಕ) ಗೋಡೆ ಕುಸಿಯಿತು > ಗೋಡೆ ಕುಸಿದುಬಿತ್ತು. (5ಚ) ಅವನು ತಿರುಗಿದ > ಅವನು ತಿರುಗಿಬಿದ್ದ.
(ಗ) ಕೊಳ್ಳು ಪದವನ್ನೂ ಕೂಡುಪದಗಳ ಎರಡನೆಯ ಎಸಕಪದವಾಗಿ ಬಳಸಲು ಬರುತ್ತದೆ; ಈ ಕೂಡುಪದಗಳಲ್ಲಿ ಅವುಗಳ ಮೊದಲನೇ ಎಸಕಪದಗಳ ಪಾಂಗಿಟ್ಟಳಗಳು ಯಾವ ರೀತಿಯಲ್ಲಿ ಮಾರ್ಪಟ್ಟು ಕಾಣಿಸಿಕೊಳ್ಳುತ್ತವೆ ಎಂಬುದನ್ನು (8.4)ರಲ್ಲಿ ವಿವರಿಸಲಾಗಿದೆ.
8.6.5 ಮಾರೆಸಕದ ಜೋಡಿಸುವ ರೂಪಗಳ ಬಳಕೆ
ಮಾರೆಸಕದ ಜೋಡಿಸುವ ರೂಪಗಳನ್ನು ಬಳಸಿರುವ ಕೂಡುಪದಗಳಲ್ಲಿ ಎರಡನೆಯ ಎಸಕಪದದ ಮೊದಲಿಗೆ ಒಂದು ಮುಚ್ಚುಲಿಯಿದೆಯಾದರೆ, ಆ ಜೋಡಿಸುವ ರೂಪಗಳ ಕೊನೆಯ ಲು ಬಿದ್ದುಹೋಗುತ್ತದೆ (3.3.1(3) ನೋಡಿ). ಎತ್ತುಗೆಗಾಗಿ, ತೂಗಹಾಕು, ತರಹೋಗು, ಬರಸೆಳೆ ಮೊದಲಾದ ಕೂಡುಪದಗಳನ್ನು ತಾಗಲಿಕ್ಕು, ತಾಗಲಾಡು, ಹೋಗಲಾಡಿಸು ಮೊದಲಾದ ಕೂಡುಪದಗಳೊಂದಿಗೆ ಹೋಲಿಸಿ ನೋಡಬಹುದು. ಮೇಲೆ ವಿವರಿಸಿದ ಹಾಗೆ, ಈ ಕೂಡುಪದಗಳಲ್ಲಿ ಬರುವ ಎರಡನೆಯ ಎಸಕಪದ ನಡೆದಿರುವ (ಇಲ್ಲವೇ ನಡೆಯಲಿರುವ) ಎಸಕವನ್ನು ತಿಳಿಸುತ್ತದೆ, ಮತ್ತು ಅದಕ್ಕಿಂತ ಮೊದಲು ಬಂದಿರುವ ಎಸಕಪದ (ಅದರ ಮಾರೆಸಕದ ಜೋಡಿಸುವ ರೂಪ) ಆ ಎಸಕದಿಂದ ಪಡೆಯಬೇಕಾಗಿರುವ ದೊರೆತವನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (1ಕ) ನಾನು ಅವನ ಹತ್ತಿರ ಒಂದು ಪುಸ್ತಕವನ್ನು ತರಹೇಳಿದೆ. (1ಚ) ನಾನು ಅವನನ್ನು ಬರಹೇಳಿದೆ. (1ಕ)ದಲ್ಲಿ ಎರಡನೆಯ ಹೇಳು ಎಸಕಪದ ನಡೆದಿರುವ ಎಸಕವನ್ನು ತಿಳಿಸುತ್ತದೆ, ಮತ್ತು ಅದಕ್ಕಿಂತ ಮೊದಲು ಬಂದಿರುವ ತರ(ಲು) ಜೋಡಿಸುವ ರೂಪ ಆ ಎಸಕದಿಂದ ಪಡೆಯಬೇಕಾಗಿರುವ ದೊರೆತವನ್ನು (ಪುಸ್ತಕವನ್ನು ತರುವ ಕೆಲಸ) ತಿಳಿಸುತ್ತದೆ. (1ಚ)ದಲ್ಲೂ ಹೀಗೆಯೇ. ಇಂತಹ ಮಾರೆಸಕದ ಜೋಡಿಸುವ ರೂಪಗಳನ್ನು ಬಳಸಿರುವ ಕೂಡುಪದಗಳು ಹೆಚ್ಚು ಬಳಕೆಯಲ್ಲಿಲ್ಲ. ಸಾಮಾನ್ಯವಾಗಿ ಅವುಗಳಲ್ಲಿ ಮೊದಲನೇ ಎಸಕಪದದ ಪಾಂಗಿಟ್ಟಳ ಉಳಿಯುತ್ತದೆ; ಆದರೆ, ಎರಡನೆಯದರ ಮಾಡುಗ ಪಾಂಗು ಅದಕ್ಕೆ ಸೇರುತ್ತದೆ, ಮತ್ತು ಹಾಗೆ ಸೇರಿದಾಗ ಮೊದಲಿಗೆ ಅದರಲ್ಲಿದ್ದ ಮಾಡುಗ ಪಾಂಗು ಈಡು ಪಾಂಗಾಗುತ್ತದೆ: (2ಕ) ಹುಡುಗ ಬಿದ್ದ; ಆತ ಹುಡುಗನಿಗೆ ಹೊಡೆದ > ಆತ ಹುಡುಗನನ್ನು ಬೀಳಹೊಡೆದ. (2ಚ) ನಾಯಿ ಸತ್ತಿತು; ಆತ ನಾಯಿಗೆ ಬಡಿದ > ಆತ ನಾಯಿಯನ್ನು ಸಾಯಬಡಿದ. (2ಟ) ಅವನು ಬಂದ; ನಾನು ಅವನಿಗೆ ಹೇಳಿದೆ > ನಾನು ಅವನನ್ನು ಬರಹೇಳಿದೆ. ಬೇರೆ ಕೆಲವು ಬಗೆಯ ಕೂಡುಪದಗಳಲ್ಲಿ ಎರಡನೆಯ ಎಸಕಪದದ ಪಾಂಗಿಟ್ಟಳ ಉಳಿಯುತ್ತದೆ ಎಂದೂ ಹೇಳಲು ಬರುತ್ತದೆ: (3ಕ) (ಕಾಳು ನೆನೆಯಿತು); ನಾನು ಕಾಳನ್ನು ಪಾತ್ರೆಯಲ್ಲಿ ಹಾಕಿದೆ > ನಾನು ಕಾಳನ್ನು ಪಾತ್ರೆಯಲ್ಲಿ ನೆನೆಹಾಕಿದೆ. (3ಚ) (ಮಗು ಉಂಡಿತು); ತಾಯಿ ಮಗುವಿಗೆ ಬಡಿಸಿದಳು > ತಾಯಿ ಮಗುವಿಗೆ ಉಣಬಡಿಸಿದಳು. (3ಟ) (ಅವನು ಬಂದ); ನಾನು ಅವನನ್ನು ಸೆಳೆದೆ > ನಾನು ಅವನನ್ನು ಬರಸೆಳೆದೆ.
8.6.6 ನೆರವೆಸಕಪದಗಳ ಬಳಕೆ
ಸಾಮಾನ್ಯವಾಗಿ ಎಸಕಪದಗಳ ಜೋಡಿಸುವ ರೂಪಕ್ಕೆ ನೆರವೆಸಕಪದಗಳನ್ನು ಸೇರಿಸಿದಾಗ ಅವುಗಳ ಪಾಂಗಿಟ್ಟಳದಲ್ಲಿ ಯಾವ ಮಾರ್ಪಾಡೂ ನಡೆಯುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
(1ಕ) ರಾಜು ಮನೆಗೆ ಹೋದ. (1ಚ) ರಾಜು ಮನೆಗೆ ಹೋಗಿದ್ದಾನೆ. (1ಟ) ರಾಜು ಮನೆಗೆ ಹೋಗಲಿದ್ದಾನೆ. (2ಕ) ಮಳೆಗೆ ಹೊಳೆಯಲ್ಲಿ ನೆರೆ ಬಂದಿದೆ. (2ಚ) ಮಳೆಗೆ ಹೊಳೆಯಲ್ಲಿ ನೆರೆ ಬಂದಿರಬಹುದು. (3ಕ) ಅವರಲ್ಲಿ ಒಂದು ಪುಸ್ತಕ ಸಿಕ್ಕಿತು. (3ಚ) ಅವರಲ್ಲಿ ಒಂದು ಪುಸ್ತಕವೂ ಸಿಗಲೊಲ್ಲದು. ಹೋಗು ಎಸಕಪದದೊಂದಿಗೆ (1ಚ-ಟ) ಸೊಲ್ಲುಗಳಲ್ಲಿ ಇರು ನೆರವೆಸಕ ಬಂದಿದೆ; ಆದರೆ, (1ಕ) ಸೊಲ್ಲಿನಲ್ಲಿರುವ ಪಾಂಗಿಟ್ಟಳವೇ ಈ ಸೊಲ್ಲುಗಳಲ್ಲೂ ಬಂದಿದೆ. ಇದೇ ರೀತಿಯಲ್ಲಿ (2ಚ) ಮತ್ತು (3ಚ) ಸೊಲ್ಲುಗಳಲ್ಲಿ ಬಹುದು ಮತ್ತು ಒಲ್ಲದು ಎಂಬ ನೆರವೆಸಕ ಪದರೂಪಗಳು ಬಂದಿವೆಯಾದರೂ (2ಕ) ಮತ್ತು (3ಕ) ಸೊಲ್ಲುಗಳಲ್ಲಿರುವ ಪಾಂಗಿಟ್ಟಳ ಮಾರ್ಪಡದೆ ಉಳಿದಿದೆ. ಆದರೆ, ಮಾಡುಗನ ಹಂಬಲವನ್ನು ತಿಳಿಸುವುದಕ್ಕಾಗಿ ಬೇಕು ಪದವನ್ನು ನೆರವೆಸಕಪದವಾಗಿ ಬಳಸಿದಾಗ, ಎಸಕಪದಗಳ ಪಾಂಗಿಟ್ಟಳಗಳಲ್ಲಿರುವ ಮಾಡುಗ ಪಾಂಗು ಗುರಿ ಪಾಂಗಾಗಿ ಮಾರ್ಪಡುತ್ತದೆ: (4) ಅವನು ಕಬ್ಬು ಜಗಿದ > ಅವನಿಗೆ ಕಬ್ಬು ಜಗಿಯಬೇಕಾಗಿದೆ. (5) ಅವನು ಬಾಗಿಲು ತೆರೆದ > ಅವನಿಗೆ ಬಾಗಿಲು ತೆರೆಯಬೇಕಾಗಿದೆ. (6) ಅವನು ಒಂದು ಎಮ್ಮೆ ಸಾಕಿದ > ಅವನಿಗೆ ಒಂದು ಎಮ್ಮೆ ಸಾಕಬೇಕಾಗಿದೆ. ಸೊಲ್ಲಿನಲ್ಲಿ ಮೊದಲಿಗೇನೇ ಗುರಿ ಪಾಂಗು ಬಂದಿತ್ತಾದರೆ, ಬೇಕು ಪದವನ್ನು ಸೇರಿಸಿದಾಗ ಅದನ್ನು ಬಳಸದಿರಲಾಗುತ್ತದೆ: (7) ಅವನು ನಿಮಗೆ ನೂರು ರುಪಾಯಿ ಕೊಟ್ಟ > ಅವನಿಗೆ (ನಿಮಗೆ) ನೂರು ರುಪಾಯಿ ಕೊಡಬೇಕಾಗಿದೆ. (8) ಅವನು ದೇವರಿಗೆ ಕಯ್ಮುಗಿದ > ಅವನಿಗೆ (ದೇವರಿಗೆ) ಕಯ್ಮುಗಿಯಬೇಕಾಗಿದೆ. (9) ಅವನು ನನಗೊಂದು ಕುದುರೆಯನ್ನು ಮಾರಿದ > ಅವನಿಗೆ (*ನನಗೆ) ಒಂದು ಕುದುರೆಯನ್ನು ಮಾರಬೇಕಾಗಿದೆ. ಬೇಕು ಪದವನ್ನು ಬಳಸಿರುವಲ್ಲಿ ಮೊದಲಿಗಿದ್ದ ಗುರಿ ಪಾಂಗನ್ನು ಬಳಸಲು ಬರುವುದಿಲ್ಲ ಎಂಬುದನ್ನು ಮೇಲಿನ ಸೊಲ್ಲುಗಳು ತಿಳಿಸುತ್ತವೆ. ಆದರೆ, ಮೊದಲಿಗಿದ್ದ ಗುರಿ ಪಾಂಗು ಒಬ್ಬ ವ್ಯಕ್ತಿಯನ್ನು ಗುರುತಿಸುತ್ತಿರುವಲ್ಲಿ ಮಾತ್ರ ಅದನ್ನು ಬಳಸದಿರಲಾಗುತ್ತದೆ. ಬೇರೆ ಕಡೆಗಳಲ್ಲಿ ಅದನ್ನು ಉಳಿಸಲು ಬರುತ್ತದೆ: (10) ಅವನು ಮನೆಗೆ ಹೋದ > ಅವನಿಗೆ ಮನೆಗೆ ಹೋಗಬೇಕಾಗಿದೆ. (11) ಹುಡುಗ ಮರಕ್ಕೆ ಹತ್ತಿದ > ಹುಡುಗನಿಗೆ ಮರಕ್ಕೆ ಹತ್ತಬೇಕಾಗಿದೆ. (12) ಅವನು ದನಗಳನ್ನು ಕಾಡಿಗೆ ಅಟ್ಟಿದ > ಅವನಿಗೆ ದನಗಳನ್ನು ಕಾಡಿಗೆ ಅಟ್ಟಬೇಕಾಗಿದೆ. ಬೇಕು ಪದವನ್ನು ಎಸಕಪದದ ಜಾಗದಲ್ಲಿ ಬಳಸಿದಾಗಲೂ ಅದು ಒಂದು ಗುರಿ ಪಾಂಗಿನೊಂದಿಗೆ ಬರುತ್ತದೆ; ಆ ಗುರಿ ಪಾಂಗೇ ಮೇಲಿನ ಸೊಲ್ಲುಗಳಲ್ಲೂ ಬರುತ್ತದೆಯೆಂದು ಹೇಳಬಹುದು:
(13ಕ) ನನಗೆ ಎರಡು ಹಣ್ಣು ಬೇಕು. (13ಚ) ಆತನಿಗೆ ತುಂಬಾ ಹಣ ಬೇಕಾಗುತ್ತದೆ.
8.7 ಮಾಡುಗವನ್ನು ಮರೆಮಾಚುವುದು
ಪಾಂಗಿಟ್ಟಳದಲ್ಲಿ ಬರುವ ಮಾಡುಗ ಪಾಂಗನ್ನು ಮರೆಮಾಚುವುದಕ್ಕಾಗಿ, ಸೊಲ್ಲಿನ ಎಸಕಪದವನ್ನು ಮಾರೆಸಕದ ಜೋಡಿಸುವ ರೂಪದಲ್ಲಿ ಬಳಸಲಾಗುತ್ತದೆ, ಮತ್ತು ಅದಕ್ಕೆ ಆಗು ಎಸಕಪದವನ್ನು ನೆರವೆಸಕಪದವಾಗಿ ಸೇರಿಸಲಾಗುತ್ತದೆ: (1) ಕಳ್ಳ ಕಾರನ್ನು ಕದ್ದ > ಕಾರನ್ನು ಕದಿಯಲಾಯಿತು. (2) ನಾನು ಆಕೆಗೆ ಒಂದು ಹಣ್ಣನ್ನು ಕೊಟ್ಟೆ > ಆಕೆಗೆ ಒಂದು ಹಣ್ಣನ್ನು ಕೊಡಲಾಯಿತು. (3) ಅವನು ಹಲವಾರು ಕೆಲಸಗಳನ್ನು ಮಾಡಿದ > ಹಲವಾರು ಕೆಲಸ ಗಳನ್ನು ಮಾಡಲಾಯಿತು. (1)ನೇ ಎತ್ತುಗೆಯ ಮೊದಲನೇ ಸೊಲ್ಲಿನಲ್ಲಿ ಕಳ್ಳ ಎಂಬ ಪದ ಸೊಲ್ಲಿನ ಮಾಡುಗವನ್ನು ತಿಳಿಸುತ್ತದೆ; ಇದಲ್ಲದೆ, ಅದರ ಕದ್ದ ಎಂಬ ಎಸಕಪದರೂಪದ ಕೊನೆಯಲ್ಲಿ ಬರುವ ಅ ಒಟ್ಟು ಮಾಡುಗನ ಗುರ್ತ (ಗಂಡಸು) ಮತ್ತು ಎಣಿಕೆ (ಓರೆಣಿಕೆ)ಗಳನ್ನು ತಿಳಿಸುತ್ತದೆ. ಇದಕ್ಕೆ ಬದಲು, ಅದರ ಎರಡನೆಯ ಸೊಲ್ಲಿನಲ್ಲಿ ಮಾಡುಗವನ್ನು ಬಿಟ್ಟುಕೊಡಲಾಗಿದೆ. (2) ಮತ್ತು (3)ನೇ ಎತ್ತುಗೆಗಳಲ್ಲೂ ಇಂತಹದೇ ಮಾರ್ಪಾಡು ನಡೆದಿದೆ. ಮಾಡುಗ ಪಾಂಗನ್ನು ಗುರುತಿಸುವ ಪದವನ್ನು ಸೊಲ್ಲಿನಲ್ಲಿ ಬಳಸದಿದ್ದರೂ ಎಸಕರೂಪದ ಕೊನೆಯಲ್ಲಿ ಬರುವ ಗುರುತಿಸುವ ಒಟ್ಟು ಅದರ ಕುರಿತಾಗಿ ಕೆಲವು ವಿಶಯಗಳನ್ನು (ಅದು ಸೊಲ್ಲಿನ ಆಡುಗನೇ, ಕೇಳುಗನೇ ಇಲ್ಲವೇ ಬೇರೆಯೇ ಎಂಬುದನ್ನು, ಮತ್ತು ಬೇರೆಯಾಗಿದ್ದಲ್ಲಿ ಅದರ ಗುರ್ತ ಮತ್ತು ಎಣಿಕೆಗಳು ಎಂತಹವು ಎಂಬುದನ್ನು) ತಿಳಿಸುತ್ತದೆ; ಹಾಗಾಗಿ, ಮಾಡುಗ ಪಾಂಗನ್ನು ಪೂರ್ತಿ ಮರೆಮಾಚುವುದಕ್ಕಾಗಿ ಇಂತಹ ಎಲ್ಲಾ ಸೊಲ್ಲುಗಳಲ್ಲೂ ಎಸಕಪದದ ಕೊನೆಯಲ್ಲಿ ಬರುವ ಗುರುತಿಸುವ ಒಟ್ಟನ್ನು ತು ಎಂಬ ಒಂದೇ ರೂಪದಲ್ಲಿ ಇರಿಸಲಾಗುತ್ತದೆ; ಮಾಡುಗದ ಗುರ್ತ ಇಲ್ಲವೇ ಎಣಿಕೆ ಬದಲಾದಾಗಲೂ ಅದು ಬದಲಾಗದಿರುತ್ತದೆ; ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು: (4) ಕಳ್ಳರು ಕಾರುಗಳನ್ನು ಕದ್ದರು > ಕಾರುಗಳನ್ನು ಕದಿಯಲಾಯಿತು. (5) ನೀವು ಕಾರನ್ನು ಕದ್ದಿರಿ > ಕಾರನ್ನು ಕದಿಯಲಾಯಿತು. (6) ಅವಳು ಅಡಿಗೆ ಮಾಡಿದಳು > ಅಡಿಗೆ ಮಾಡಲಾಯಿತು. (7) ಒಂದು ರೋಬೋಟ್ ಆತನನ್ನು ಸೆರೆಹಿಡಿಯಿತು > ಆತನನ್ನು ಸೆರೆಹಿಡಿಯಲಾಯಿತು. ಮೇಲಿನ (4-7) ಸೊಲ್ಲುಗಳಲ್ಲಿ ಕಳ್ಳರು, ನೀವು, ಅವಳು ಮತ್ತು ರೋಬೋಟ್ ಎಂಬ ಮಾಡುಗ ಪದಗಳು ಬೇರೆ ಬೇರೆ ಗುರ್ತ ಮತ್ತು ಎಣಿಕೆಗಳಲ್ಲಿ ಬಂದಿವೆ; ಆದರೆ, ಈ ಮಾಡುಗಗಳನ್ನು ಮರೆಮಾಚಿರುವ ಎಲ್ಲಾ ಸೊಲ್ಲುಗಳಲ್ಲೂ ಎಸಕಪದಗಳು ತು ಎಂಬ ಒಂದೇ ಒಟ್ಟಿನಲ್ಲಿ ಕೊನೆಗೊಂಡಿರುವುದನ್ನು ಕಾಣ ಬಹುದು. (1) ಮಾಡುಗ ಪಾಂಗೊಂದನ್ನು ಬಿಟ್ಟು ಉಳಿದೆಲ್ಲಾ ಪಾಂಗುಗಳೂ ಸೊಲ್ಲಿನಲ್ಲಿ ಮಾರ್ಪಡದೆ ಉಳಿಯುತ್ತವೆ: (8) ರಾಜು ಕುರುಡನೆಂದು ಆತ ತಿಳಿದಿದ್ದಾನೆ > ರಾಜು ಕುರುಡನೆಂದು ತಿಳಿಯಲಾಗಿದೆ.
(9) ಹೆಂಗಸರು ಗುಡ್ಡ ಹತ್ತುವುದು ತಪ್ಪೆಂದು ಅವರು ತಿಳಿದಿದ್ದರು > ಹೆಂಗಸರು ಗುಡ್ಡ ಹತ್ತುವುದು ತಪ್ಪೆಂದು ತಿಳಿಯಲಾಗಿತ್ತು. (10) ಇನ್ಶೂರೆನ್್ಸ ಹಣ ಪಡೆಯುವುದಕ್ಕಾಗಿ ನಾವು ಕಾರಿಗೆ ಬೆಂಕಿ ಹಚ್ಚಿದೆವು > ಇನ್ಶೂರೆನ್್ಸ ಹಣ ಪಡೆಯುವುದಕ್ಕಾಗಿ ಕಾರಿಗೆ ಬೆಂಕಿ ಹಚ್ಚಲಾಯಿತು. (8-10) ಎತ್ತುಗೆಗಳ ಎರಡನೆಯ ಸೊಲ್ಲಿನಲ್ಲಿ ಮಾಡುಗವನ್ನು ತಿಳಿಸುವ ಆತ, ಅವರು, ಮತ್ತು ನಾವು ಎಂಬ ಪದಗಳನ್ನು ಮಾತ್ರ ತೆಗೆದುಹಾಕಲಾಗಿದೆ; ಉಳಿದ ಪದಗಳೆಲ್ಲ ಹಾಗೆಯೇ ಉಳಿದಿವೆ. (2) ಮಾಡುಗವನ್ನು ಮರೆಮಾಚುವುದಕ್ಕಾಗಿ ಬಳಕೆಯಾಗುವ ಈ ಇಟ್ಟಳದಲ್ಲಿ ಮಾಡುಗವಿರುವ ಎಸಕಪದಗಳನ್ನು ಮಾತ್ರ ಬಳಸಲು ಬರುತ್ತದೆ; ಇದಲ್ಲದೆ, ಆಗುಹ ಮತ್ತು ಮಾಡುಹಗಳೆಂಬ ಎರಡು ಬಗೆಯ ಹುರುಳುಗಳನ್ನೂ ತಿಳಿಸಬಲ್ಲ ಬೀಳು, ಬಗ್ಗು, ಸಾಗು, ಬೆಳೆ, ಒಡೆ, ಬಿಚ್ಚು ಮೊದಲಾದ ಎಸಕಪದಗಳನ್ನು ಅವುಗಳ ಮಾಡುಹದ ಹುರುಳಿನಲ್ಲಿ ಮಾತ್ರ (ಎಂದರೆ, ಪಾಂಗಿಟ್ಟಳದಲ್ಲಿ ಮಾಡುಗವಿರುವ ಹುರುಳಿನಲ್ಲಿ ಮಾತ್ರ) ಮೇಲಿನ ಇಟ್ಟಳದಲ್ಲಿ ಆಯಿತು ಎಂಬುದರೊಂದಿಗೆ ಬಳಸಲು ಬರುತ್ತದೆ: (11) (ಕ) ಅವನು ಕೆಳಗೆ ಬಿದ್ದ (ಚ) ಅವನು ಬೇಕೆಂದೇ ಕೆಳಗೆ ಬಿದ್ದ > ಬೇಕೆಂದೇ ಕೆಳಗೆ ಬೀಳಲಾಯಿತು. (12) (ಕ) ಮಡಿಕೆ ಒಡೆಯಿತು (ಚ) ಅವಳು ಮಡಿಕೆಯನ್ನು ಒಡೆದಳು > ಮಡಿಕೆಯನ್ನು ಒಡೆಯಲಾಯಿತು. (11)ನೇ ಎತ್ತುಗೆಯಲ್ಲಿ ಬಂದಿರುವ ಕೆಳಗೆ ಬೀಳಲಾಯುತು ಎಂಬ ಸೊಲ್ಲಿಗೆ (ಚ) ಸೊಲ್ಲಿನ ಹುರುಳು ಬರಬಲ್ಲುದಲ್ಲದೆ (ಕ) ಸೊಲ್ಲಿನ ಹುರುಳು ಬರಲಾರದು. (12)ನೇ ಎತ್ತುಗೆಯಲ್ಲೂ ಹೀಗೆಯೇ. (3) ಆಗುಹಗಳನ್ನು ಮಾಡುಹಗಳನ್ನಾಗಿ ಮಾಡಲು ಇಸು ಒಟ್ಟನ್ನು ಸೇರಿಸಬೇಕಾಗಿರುವ ಎಸಕಪದಗಳನ್ನು ಅವುಗಳ ಇಸುವೆಸಕರೂಪದಲ್ಲಿ ಮಾತ್ರ ಮೇಲಿನ ಇಟ್ಟಳದಲ್ಲಿ ಬಳಸಲು ಬರುತ್ತದೆ: (13ಕ) ಹಾಲು ಕುದಿಯಿತು > *ಹಾಲು ಕುದಿಯಲಾಯಿತು. (13ಚ) ಅವನು ಹಾಲನ್ನು ಕುದಿಸಿದ > ಹಾಲನ್ನು ಕುದಿಸಲಾಯಿತು. (14ಕ) ಬೆಲೆ ಏರಿತು > *ಬೆಲೆ ಏರಲಾಯಿತು. (14ಚ) ಅವರು ಬೆಲೆಯನ್ನು ಏರಿಸಿದರು > ಬೆಲೆಯನ್ನು ಏರಿಸಲಾಯಿತು. (4) ಪಾಂಗಿಟ್ಟಳದಲ್ಲಿ ಮಾಡುಗವಿರುವ ಎಸಕಪದಗಳಲ್ಲೂ, ಮಾಡುಗವಾಗಿ ಮಂದಿಯನ್ನು ಪಡೆಯುವವು ಮಾತ್ರ ಈ ಇಟ್ಟಳದಲ್ಲಿ ಬರುವ ಹಾಗೆ ಕಾಣಿಸುತ್ತದೆ; ಮಾಡುಗವಾಗಿ ಬೇರೆ ಉಸಿರಿಗಳು ಬರುವ ಎಸಕಪದಗಳನ್ನು ಇದರಲ್ಲಿ ಬಳಸುವ ಹಾಗೆ ಕಾಣಿಸುವುದಿಲ್ಲ: (15) ಹುಲಿ ಹಸುವನ್ನು ಕೊಂದಿತು > *ಹಸುವನ್ನು ಕೊಲ್ಲಲಾಯಿತು. (16) ಎಮ್ಮೆ ಹಾಲು ಕೊಟ್ಟಿತು > *ಹಾಲು ಕೊಡಲಾಯಿತು. (15-16) ಎತ್ತುಗೆಗಳಲ್ಲಿ ಬಂದಿರುವ ಎರಡನೇ ಸೊಲ್ಲನ್ನು ಅವುಗಳ ಮೊದಲನೇ ಸೊಲ್ಲಿನ ಹುರುಳಿನಲ್ಲಿ ಬಳಸಿದಾಗ ಮಾತ್ರ ಅವು ಸರಿಯಲ್ಲವೆಂದು ತೋರುತ್ತದೆ; ಇದಕ್ಕೆ ಬದಲು, ಅವನ್ನು ಅವನು ಹಸುವನ್ನು ಕೊಂದ, ಮತ್ತು ಅವನು (ಸೊಸಯ್ಟಿಗೆ) ಹಾಲು ಕೊಟ್ಟ ಎಂಬಂತಹ ಸೊಲ್ಲುಗಳಿಂದ ಪಡೆದಲ್ಲಿ, ಅವು ಸರಿಯೆಂದೇ ತೋರುತ್ತವೆ. (5) ಒಂದು ಸೊಲ್ಲಿನಲ್ಲಿ ಮಾಡುಗ ಪಾಂಗು ಮಾತ್ರ ಇದೆಯಾದರೆ ಅದನ್ನು ಮರೆಮಾಚಲು ಬರುವುದಿಲ್ಲವೆಂದು ತೋರುತ್ತದೆ; ಅದರೊಂದಿಗೆ ಇನ್ನೊಂದು ಪಾಂಗು ಇರುವಲ್ಲಿ ಮಾತ್ರ ಆ ಎರಡನೆಯ ಪಾಂಗನ್ನು ಉಳಿಸಿ, ಮಾಡುಗವನ್ನು ಮರೆಮಾಚಲು ಬರುತ್ತದೆ:
(17ಕ) ಅವನು ಕುಣಿದ > ?ಕುಣಿಯಲಾಯಿತು. (17ಚ) ಅವನು ನಾಟಕದಲ್ಲಿ ಕುಣಿದ > ನಾಟಕದಲ್ಲಿ ಕುಣಿಯಲಾಯಿತು. (18ಕ) ಅವಳು ಅತ್ತಳು > ?ಅಳಲಾಯಿತು. (18ಚ) ಅವಳು ದಾರಿಯಲ್ಲಿ ಅತ್ತಳು > ದಾರಿಯಲ್ಲಿ ಅಳಲಾಯಿತು. (6) ಆಗು ಪದ ಇಂತಹ ಸೊಲ್ಲುಗಳಲ್ಲಿ ಆಯಿತು, ಆಗಿದೆ, ಅಗಿತ್ತು, ಆಗುತ್ತದೆ ಮತ್ತು ಆಗುತ್ತಿತ್ತು ಎಂಬ ರೂಪಗಳಲ್ಲಿ ಬಳಕೆಯಾಗುತ್ತದೆ: (19ಕ) ಕಾರಿಗೆ ಬಣ್ಣ ಹಚ್ಚಲಾಯಿತು. (19ಚ) ಕಾರಿಗೆ ಬಣ್ಣ ಹಚ್ಚಲಾಗಿದೆ. (19ಟ) ಕಾರಿಗೆ ಬಣ್ಣ ಹಚ್ಚಲಾಗಿತ್ತು. (19ತ) ಕಾರಿಗೆ ಬಣ್ಣ ಹಚ್ಚಲಾಗುತ್ತದೆ. (19ಪ) ಕಾರಿಗೆ ಬಣ್ಣ ಹಚ್ಚಲಾಗುತ್ತಿತ್ತು. (7) ಈ ಇಟ್ಟಳ ತಿಳಿಸುವ ಎಸಕವನ್ನು ಅಲ್ಲಗಳೆಯುವುದಕ್ಕಾಗಿ, ಎಸಕಪದದ ಅಲ್ಲಗಳೆಯುವ ಜೋಡಿಸುವ ರೂಪವನ್ನು ಬಳಸಬಹುದು; ಆದರೆ, ಅದರ ಬಳಿಕ ಆಗು ಪದದ ರೂಪಗಳಿಗೆ ಮೊದಲು ಇರು ಪದದ ಮಾರೆಸಕದ ಜೋಡಿಸುವ ರೂಪವನ್ನು ಬಳಸಬೇಕಾಗುತ್ತದೆ: (20) ಅವನು ಕೆಲಸವನ್ನು ಮಾಡಲಿಲ್ಲ > ಕೆಲಸವನ್ನು ಮಾಡದಿರ ಲಾಯಿತು. (21) ಅವನು ಕೆಲಸವನ್ನು ಮಾಡುವುದಿಲ್ಲ > ಕೆಲಸವನ್ನು ಮಾಡದಿರ ಲಾಗುತ್ತದೆ. (22) ಅವರು ಯಾರನ್ನೂ ಕರೆಯಲಿಲ್ಲ > ಯಾರನ್ನೂ ಕರೆಯದಿರ ಲಾಯಿತು. ಆಗು ಎಂಬುದನ್ನು ಎಸಕಪದವಾಗಿ ಬಳಸಿದಾಗ ಅದಕ್ಕೆ ಸಾಮಾನ್ಯವಾಗಿ ಒಂದು ಆಗುಹವನ್ನು ತಿಳಿಸುವ ಹುರುಳು ಸಿಗುತ್ತದೆ; ಆದರೆ, ಮೇಲಿನ ಸೊಲ್ಲುಗಳಲ್ಲಿ ಅದನ್ನು ಒಂದು ನೆರವೆಸಕಪದವಾಗಿ ಬಳಸಲಾಗಿದ್ದು, ಅದಕ್ಕೆ ಎಸಕಪದವಾಗಿ ಬರುವಾಗ ದೊರಕುವ ಈ ಆಗುಹದ ಹುರುಳು ಇಲ್ಲಿ ದೊರಕುವುದಿಲ್ಲ. ಇದಲ್ಲದೆ, ಎಸಕಪದದ ಮಾರೆಸಕದ ಜೋಡಿಸುವ ರೂಪಕ್ಕೆ ಇಲ್ಲಿ ಮಾರೆಸಕದ ಹುರುಳಿಲ್ಲ; ಎತ್ತುಗೆಗಾಗಿ, ಮಾಡಲಿದ್ದೇನೆ ಎಂಬುದರ ಬಳಕೆಯಲ್ಲಿ ಮಾಡಲು ಎಂಬ ಮಾರೆಸಕದ ಜೋಡಿಸುವ ರೂಪ ಬಂದಿದ್ದು, ಅದಕ್ಕೆ ಅದರ ಬಳಿಕ ಬಂದಿರುವ ಇರು ಪದ ತಿಳಿಸುವ ಇರುಹದ ಬಳಿಕ ನಡೆಯುವಂತಹ ಮುಂಬೊತ್ತಿನ ಎಸಕವನ್ನು ತಿಳಿಸುವ ಹುರುಳಿದೆ. ಆದರೆ, ಮಾಡಲಾಯಿತು ಎಂಬುದರ ಬಳಕೆಯಲ್ಲಿ ಆ ರೀತಿ ಆಗು ಪದ ತಿಳಿಸುವ ಎಸಕದ ಬಳಿಕ ಮಾಡು ಪದ ತಿಳಿಸುವ ಎಸಕ ನಡೆಯುತ್ತದೆ ಎಂಬುದಾಗಿ ಹೇಳಲು ಬರುವುದಿಲ್ಲ.
8.7.1 ಮಾಡುಗವಿಲ್ಲದಿದ್ದರೂ ಮಾಡುಹದ ಹುರುಳು
ಮಾಡುಗವನ್ನು ಮರೆಮಾಚಿರುವ ಮೇಲಿನ ಇಟ್ಟಳದಲ್ಲಿ ಮಾಡುಗ ಬಾರದಿದ್ದರೂ ಮಾಡುಹದ ಹುರುಳೇ ದೊರಕುತ್ತದೆ; ಹಾಗಾಗಿ, ಹಲವು ವಿಶಯಗಳಲ್ಲಿ ಈ ಇಟ್ಟಳ ಆಗುಹವನ್ನು ತಿಳಿಸುವ ಬೇರೆ ಇಟ್ಟಳಗಳಿಗಿಂತ ಬೇರಾಗಿದೆ. ಈ ಇಟ್ಟಳಕ್ಕೂ ಆಗುಹವನ್ನು ತಿಳಿಸುವ ಇಟ್ಟಳಕ್ಕೂ ನಡುವಿರುವ ಕೆಲವು ವ್ಯತ್ಯಾಸಗಳನ್ನು ಕೆಳಗೆ ಕೊಡಲಾಗಿದೆ: (1) ಬೇಕೆಂದೇ ಎಂಬ ಪದವನ್ನು ಮಾಡುಗ ಪಾಂಗಿರುವ ಸೊಲ್ಲಿನಲ್ಲಿ ಮಾತ್ರ ಬಳಸಲು ಬರುತ್ತದಲ್ಲದೆ, ಮಾಡುಗ ಪಾಂಗಿಲ್ಲದ ಸೊಲ್ಲಿನಲ್ಲಿ ಬಳಸಲು ಬರುವುದಿಲ್ಲ:
(1ಕ) ಅವನು ಬೇಕೆಂದೇ ನನ್ನ ಗ್ಲಾಸನ್ನು ಒಡೆದ. (1ಚ) *ಅವನು ಬೇಕೆಂದೇ ನನ್ನನ್ನು ಕಂಡ. ಕಾಣು ಪದದೊಂದಿಗೆ ಆಗುಗ ಪಾಂಗು ಬರಬಹುದಲ್ಲದೆ ಮಾಡುಗ ಪಾಂಗು ಬರಲಾರದು; ಹಾಗಾಗಿ, ಬೇಕೆಂದೇ ಎಂಬುದನ್ನು ಬಳಸಿರುವ (1ಚ) ಸೊಲ್ಲು ಸರಿಯಾಗಿಲ್ಲ. ಆದರೆ, ಮಾಡುಗವನ್ನು ಮರೆಮಾಚಿರುವ ಸೊಲ್ಲಿನಲ್ಲಿ ಬೇಕೆಂದೇ ಎಂಬುದನ್ನು ಬಳಸಲು ಬರುತ್ತದೆ: (1ಟ) ಬೇಕೆಂದೇ ನನ್ನ ಗ್ಲಾಸನ್ನು ಒಡೆಯಲಾಯಿತು. (1ಪ) ಬೇಕೆಂದೇ ಅವನನ್ನು ಮನೆಗೆ ಕಳುಹಿಸಲಾಯಿತು. (2) ಆಗುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಮಾಡುಗವನ್ನು ಒಳಸೊಲ್ಲಿನಲ್ಲಿ ತಿಳಿಸಲು ಬರುತ್ತದೆ; ಆದರೆ, ಮಾಡುಗವನ್ನು ಮರೆಮಾಚಿರುವ ಸೊಲ್ಲಿನಲ್ಲಿ ಹಾಗೆ ಮಾಡಲು ಬರುವುದಿಲ್ಲ: (2ಕ) ಅವನಿಂದಾಗಿ ಕೊಡ ಒಡೆಯಿತು. (2ಚ) *ಅವನಿಂದಾಗಿ ಕೊಡವನ್ನು ಒಡೆಯಲಾಯಿತು. (2ಚ)ದಲ್ಲಿ ಅವನಿಂದಾಗಿ ಎಂಬುದು ಬಾರದಿರಲು ಅದರಲ್ಲಿ ಮಾಡುಗವನ್ನು ಮರೆಮಾಚಬೇಕಾಗಿದೆ ಎಂಬುದೂ ಕಾರಣವಿರಬಹುದು. (3) ಆಗುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಅಳಬನ್ನು (ಉದ್ದೇಶವನ್ನು) ತಿಳಿಸುವ ಒಳಸೊಲ್ಲು ಬರಲಾರದು; ಆದರೆ, ಮಾಡುಗವನ್ನು ಮರೆಮಾಚಿರುವ ಸೊಲ್ಲಿನಲ್ಲಿ ಅದು ಬರಬಲ್ಲುದು: (3ಕ) *ಇನ್ಶೂರೆನ್್ಸಗೆ ಹಡಗು ಒಡೆಯಿತು. (3ಚ) ಇನ್ಶೂರೆನ್್ಸಗೆ ಹಡಗನ್ನು ಒಡೆಯಲಾಯಿತು. (4) ಎಸಕದ ಮುಟ್ಟನ್ನು (ಕರಣವನ್ನು) ಆಗುಹವನ್ನು ತಿಳಿಸುವ ಸೊಲ್ಲುಗಳಲ್ಲಿ ಬಳಸಲು ಬರುವುದಿಲ್ಲ, ಆದರೆ, ಮಾಡುಗವನ್ನು ಮರೆಮಾಚಿರುವ ಸೊಲ್ಲುಗಳಲ್ಲಿ ಅದನ್ನೂ ಬಳಸಲು ಬರುತ್ತದೆ: (4ಕ) *ಕೊಡ ಕಲ್ಲಿನಲ್ಲಿ/ಕಲ್ಲಿನಿಂದ ಒಡೆಯಿತು. (4ಚ) ಕೊಡವನ್ನು ಕಲ್ಲಿನಲ್ಲಿ/ಕಲ್ಲಿನಿಂದ ಒಡೆಯಲಾಯಿತು. (5) ಮಾಡುಗವನ್ನು ಮರೆಮಾಚಿರುವ ಸೊಲ್ಲಿನೊಂದಿಗೆ ಅದು ತಿಳಿಸುವ ಎಸಕದ ಬಗೆಯನ್ನು ತಿಳಿಸುವ ಬೇರೆ ಮಾಡುಹಗಳನ್ನು ಜೋಡಿಸಿ ಹೇಳಲು ಬರುತ್ತದೆ; ಆದರೆ, ಆಗುಹವನ್ನು ತಿಳಿಸುವ ಸೊಲ್ಲಿನೊಂದಿಗೆ ಎಸಕದ ಬಗೆಯನ್ನು ತಿಳಿಸುವ ಆಗುಹಗಳನ್ನು ಮಾತ್ರ ಜೋಡಿಸಲು ಬರುತ್ತದೆ: (5ಕ) ಕೊಡವನ್ನು ಗುದ್ದಿ ಒಡೆಯಲಾಯಿತು. (5ಚ) *ಕೊಡ ಗುದ್ದಿ ಒಡೆಯಿತು. (6ಕ) *ಕೊಡವನ್ನು ಬಿದ್ದು ಒಡೆಯಲಾಯಿತು. (6ಚ) ಕೊಡ ಬಿದ್ದು ಒಡೆಯಿತು.
(6ಕ) ಸೊಲ್ಲನ್ನು (6ಚ) ಸೊಲ್ಲಿನ ಹುರುಳಿನಲ್ಲಿ ಬಳಸಿದೆವಾದರೆ ಅದು ಸರಿಯಲ್ಲ ಎಂಬುದನ್ನು ಗಮನಿಸಬಹುದು.
8.7.2 ಪಡು ಪದದ ಬಳಕೆ
ಎಸಕಪದಗಳ ಮಾರೆಸಕ ರೂಪಕ್ಕೆ ಪಡು ಪದವನ್ನು ಬಳಸಿಯೂ ಮೇಲಿನಂತಹವೇ ರೂಪಗಳನ್ನು ಪಡೆಯಲು ಬರುತ್ತದೆ: (1) ಅವನು ಒಂದು ಪುಸ್ತಕ ಬರೆದ > ಅವನಿಂದ ಒಂದು ಪುಸ್ತಕ ಬರೆಯಲ್ಪಟ್ಟಿತು. (2) ಅವನು ನಾಯಿಯನ್ನು ಮರಕ್ಕೆ ಕಟ್ಟಿದ > ಅವನಿಂದ ನಾಯಿ ಮರಕ್ಕೆ ಕಟ್ಟಲ್ಪಟ್ಟಿತು. (3) ಅವನು ದೋಣಿಯಲ್ಲಿ ಹೊಳೆ ದಾಟಿದ > ಅವನಿಂದ ದೋಣಿ ಯಲ್ಲಿ ಹೊಳೆ ದಾಟಲ್ಪಟ್ಟಿತು. ಆದರೆ, ಇಂತಹ ಇಟ್ಟಳದ ಬಳಕೆ ಮೇಲಿನ ಇಟ್ಟಳದ ಬಳಕೆಗಿಂತ ಕೆಲವು ವಿಶಯಗಳಲ್ಲಿ ಬೇರಾಗಿದೆ: (1) ಆಗು ಪದವನ್ನು ಬಳಸಿರುವ ಇಟ್ಟಳದಲ್ಲಿ ಮಾಡುಗವಿರುವ ಎಲ್ಲಾ ಎಸಕಪದಗಳನ್ನೂ ಬಳಸಲು ಬರುತ್ತದೆ; ಆದರೆ, ಪಡು ಪದವನ್ನು ಬಳಸಿರುವ ಇಟ್ಟಳದಲ್ಲಿ ಮಾಡುಗ ಮತ್ತು ಈಡುಗಳೆರಡೂ ಬರುವ ಎಸಕಪದಗಳನ್ನು ಮಾತ್ರ ಬಳಸಲು ಬರುತ್ತದೆ: (4) ಅವನು ಗುರುಗಳ ಕಾಲಿಗೆ ಎರಗಿದ > (ಕ) ಗುರುಗಳ ಕಾಲಿಗೆ ಎರಗಲಾಯಿತು (ಚ) *ಅವನಿಂದ ಗುರುಗಳ ಕಾಲಿಗೆ ಎರಗಲ್ಪಟ್ಟಿತು. (5) ಅವನು ಜೂಜಿನಲ್ಲಿ ಗೆದ್ದ > (ಕ) ಜೂಜಿನಲ್ಲಿ ಗೆಲ್ಲಲಾಯಿತು (ಚ) *ಅವನಿಂದ ಜೂಜಿನಲ್ಲಿ ಗೆಲ್ಲಲ್ಪಟ್ಟಿತು. (6) ಅವನು ಮರದಿಂದ ಇಳಿದ > (ಕ) ಮರದಿಂದ ಇಳಿಯಲಾಯಿತು (ಚ) *ಅವನಿಂದ ಮರದಿಂದ ಇಳಿಯಲ್ಪಟ್ಟಿತು. (2) ಆಗು ಪದವನ್ನು ಬಳಸಿರುವಲ್ಲಿ ಮಾಡುಗ ಪಾಂಗು ಬಿದ್ದು ಹೋಗುತ್ತದೆ, ಮತ್ತು ಎಸಕಪದರೂಪದ ಕೊನೆಯಲ್ಲಿ ಬರುವ ಗುರುತಿನ ಒಟ್ಟು ಎಲ್ಲಾ ಬಳಕೆಗಳಲ್ಲೂ ತು ಎಂಬ ಒಂದೇ ರೂಪದಲ್ಲಿ ಬರುತ್ತದೆ ಎಂಬುದನ್ನು ಮೇಲೆ ನೋಡಿರುವೆವು. ಇದಕ್ಕೆ ಬದಲು, ಪಡು ಪದವನ್ನು ಬಳಸಿರುವಲ್ಲಿ ಮಾಡುಗ ಪಾಂಗು ಸುರು ಪಾಂಗಾಗಿ, ಮತ್ತು ಈಡು ಪಾಂಗು ಆಗುಗ ಪಾಂಗಾಗಿ ಮಾರ್ಪಡುತ್ತವೆ; ಹಾಗಾಗಿ, ಎಸಕಪದರೂಪದ ಕೊನೆಯಲ್ಲಿ ಬರುವ ಗುರುತಿನ ಒಟ್ಟು ಈ ಆಗುಗ ಪಾಂಗನ್ನು (ಎಂದರೆ ಮೊದಲಿಗಿದ್ದ ಈಡು ಪಾಂಗನ್ನು) ಅವಲಂಬಿಸಿ ಬೇರೆ ಬೇರೆ ರೂಪಗಳನ್ನು ಪಡೆಯುತ್ತದೆ: (7) ಅವನು ಅಡಿಕೆಯನ್ನು ಮುಂಬಯ್ಗೆ ಕಳುಹಿಸಿದ > ಅವನಿಂದ ಅಡಿಕೆ ಮುಂಬಯ್ಗೆ ಕಳುಹಿಸಲ್ಪಟ್ಟಿತು. (8) ಅವನು ಪುಸ್ತಕಗಳನ್ನು ಮುಂಬಯ್ಗೆ ಕಳುಹಿಸಿದ > ಅವನಿಂದ ಪುಸ್ತಕಗಳು ಮುಂಬಯ್ಗೆ ಕಳುಹಿಸಲ್ಪಟ್ಟುವು. (9) ಅವರು ಅವಳನ್ನು ಮುಂಬಯ್ಗೆ ಕಳುಹಿಸಿದರು > ಅವರಿಂದ ಅವಳು ಮುಂಬಯ್ಗೆ ಕಳುಹಿಸಲ್ಪಟ್ಟಳು. ಮೇಲಿನ (7-9) ಎತ್ತುಗೆಗಳ ಮೊದಲನೆಯ ಸೊಲ್ಲುಗಳಲ್ಲಿ ಎಸಕಪದರೂಪಗಳ ಕೊನೆಯ ಒಟ್ಟು ಮಾಡುಗ ಪಾಂಗಿನ ಗುರ್ತ ಮತ್ತು ಎಣಿಕೆಗಳನ್ನವಲಂಬಿಸಿದೆ, ಮತ್ತು ಎರಡನೆಯ ಸೊಲ್ಲುಗಳಲ್ಲಿ ಅದು ಆಗುಗ ಪಾಂಗಿನ (ಮೊದಲನೆಯ ಸೊಲ್ಲಿನಲ್ಲಿ ಬಂದಿದ್ದ ಈಡು ಪಾಂಗಿನ) ಗುರ್ತ ಮತ್ತು ಎಣಿಕೆಗಳನ್ನು ಅವಲಂಬಿಸಿದೆ ಎಂಬುದನ್ನು ಗಮನಿಸಬಹುದು. (3) ಹಾಗಾಗಿ, ಆಗು ಪದವನ್ನು ಬಳಸಿರುವ ಇಟ್ಟಳದ ಹಾಗೆ ಮುಕ್ಯವಾಗಿ ಮಾಡುಗವನ್ನು ಅಡಗಿಸುವ ಇಲ್ಲವೇ ಮರೆಮಾಚುವ ಕೆಲಸವನ್ನೇ ಪಡು ಪದವನ್ನು ಬಳಸಿರುವ ಇಟ್ಟಳವೂ ನಡೆಸುತ್ತದೆಯೆಂದು ಹೇಳಲು ಬರುವುದಿಲ್ಲ.
ಸೊಲ್ಲಿನಲ್ಲಿ ಸುರು ಪಾಂಗಾಗಿ ಬಂದಿರುವ ಮಾಡುಗವನ್ನು ಬಳಸದಿರುವಲ್ಲಿ ಮಾತ್ರ ಅದು ಮಾಡುಗವನ್ನು ಮರೆಮಾಚಬಲ್ಲುದು; ಅದರ ಎಸಕಪದರೂಪದ ಗುರುತಿಸುವ ಒಟ್ಟು ಆಗುಗವನ್ನವಲಂಬಿಸಿರುವ ಕಾರಣ, ಅದಕ್ಕೆ ಈ ರೀತಿ ಸುರು ಪಾಂಗಾಗಿ ಬಂದಿರುವ ಮಾಡುಗ ವನ್ನು ಮರೆಮಾಚಲು ಬರುತ್ತದೆ. (4) ಪಡು ಪದವನ್ನು ಬಳಸಿರುವ ಇಟ್ಟಳವನ್ನು ಪರಿಚೆರೂಪದಲ್ಲಿ ಮತ್ತು ಜೋಡಿಸುವ ರೂಪದಲ್ಲಿ ಬಳಸಲು ಬರುತ್ತದೆ; ಆದರೆ, ಆಗು ಪದವನ್ನು ಬಳಸಿರುವ ಇಟ್ಟಳವನ್ನು ಆ ರೀತಿ ಬಳಸಲು ಬರುವುದಿಲ್ಲ; ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು: (10ಕ) ಮುಂಬಯ್ಗೆ ಕಳುಹಿಸಲ್ಪಟ್ಟ ಪುಸ್ತಕಗಳು ಒದ್ದೆಯಾಗಿವೆ. (10ಚ) ಮುಂಬಯ್ಗೆ ಕಳುಹಿಸಲ್ಪಟ್ಟ ಹುಡುಗಿ ಈಗ ಎಲ್ಲಿದ್ದಾಳೆ? (10ಟ) *ಮುಂಬಯ್ಗೆ ಕಳುಹಿಸಲಾದ ಹುಡುಗಿ ಈಗ ಎಲ್ಲಿದ್ದಾಳೆ? (11ಕ) ಪುಸ್ತಕಗಳು ಮುಂಬಯ್ಗೆ ಕಳುಹಿಸಲ್ಪಟ್ಟು ಕಳೆದುಹೋಗಿವೆ. (11ಚ) ಮರಕ್ಕೆ ಕಟ್ಟಲ್ಪಟ್ಟು ನಾಯಿ ಸತ್ತುಹೋಯಿತು. (11ಟ) *ಮರಕ್ಕೆ ಕಟ್ಟಲಾಗಿ ನಾಯಿ ಸತ್ತುಹೋಯಿತು. ಪಡು ಪದವನ್ನು ಬಳಸಿರುವ ಸೊಲ್ಲುಗಳನ್ನು ಮೇಲೆ (10ಕ-ಚ) ಸೊಲ್ಲುಗಳಲ್ಲಿ ಕಳುಹಿಸಲ್ಪಟ್ಟ ಎಂಬ ಹೆಸರುಪರಿಚೆ ರೂಪದಲ್ಲಿ ಬಳಸಲಾಗಿದೆ, ಮತ್ತು (11ಕ-ಚ) ಸೊಲ್ಲುಗಳಲ್ಲಿ ಕಳುಹಿಸಲ್ಪಟ್ಟು ಮತ್ತು ಕಟ್ಟಲ್ಪಟ್ಟು ಎಂಬ ಎಸಕಪರಿಚೆ ರೂಪದಲ್ಲಿ ಬಳಸಲಾಗಿದೆ, ಮತ್ತು ಆ ಎಲ್ಲಾ ಸೊಲ್ಲುಗಳೂ ಸರಿಯಾಗಿವೆ. ಆದರೆ, ಆಗು ಪದವನ್ನು ಬಳಸಿರುವ ಸೊಲ್ಲುಗಳನ್ನು ಕಳುಹಿಸಲಾದ ಎಂಬ ಹೆಸರುಪರಿಚೆ ರೂಪದಲ್ಲಿ ಬಳಸಿರುವ (10ಟ) ಸೊಲ್ಲು, ಮತ್ತು ಕಟ್ಟಲಾಗಿ ಎಂಬ ಎಸಕಪರಿಚೆ ರೂಪದಲ್ಲಿ ಬಳಸಿರುವ (11ಟ) ಸೊಲ್ಲು - ಇವೆರಡೂ ಸರಿಯಾಗಿಲ್ಲ.
ಬಾಶಾಪ್ರಕಾಶನದ ಬೇರೆ ಪುಸ್ತಕಗಳು ಡಿ. ಎನ್. ಶಂಕರ ಬಟ್ ಬರೆದ ಬೇರೆ ಪುಸ್ತಕಗಳು: 1. ಕನ್ನಡ ವ್ಯಾಕರಣ ಯಾಕೆ ಬೇಕು? 2009, ಪು. 260, ರೂ. 150. 2. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, 2008, 2011, ಪು. 336, ರೂ. 200. 3. ಮಾತಿನ ಒಳಗುಟ್ಟು, 2008, ಪು. 208, ರೂ 120. 4. ಕನ್ನಡ ನುಡಿ ನಡೆದು ಬಂದ ದಾರಿ, 2007, 2009, ಪು. 348, ರೂ 190. 5. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, 2000, 2001, 2006, 2009, 2011; ಪು. 248, ರೂ. 150. 6. *ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? 2005, ಪು. 265, ರೂ. 65. 7. *ಕನ್ನಡದ ಸರ್ವನಾಮಗಳು, 2003, ಪು 192, ರೂ. 46. 8. ಕನ್ನಡ ಪದಗಳ ಒಳರಚನೆ, 1999, 2002, 2010, ಪು. 240, ರೂ. 160. 9. ಕನ್ನಡ ವಾಕ್ಯಗಳ ಒಳರಚನೆ, 2004, 2006, 2012, ಪು. 280, ರೂ. 180. 10. ಕನ್ನಡ ಬರಹವನ್ನು ಸರಿಪಡಿಸೋಣ, 2006, 2009, ಪು. 304, ರೂ. 160. 11. ಬಾಶೆಯ ಬಗೆಗೆ ನೀವೇನು ಬಲ್ಲಿರಿ? 1970, 1998, 2002, 2010 ಪು. 206, ರೂ. 140. 12. ಕನ್ನಡ ಬರಹದ ಸೊಲ್ಲರಿಮೆ-1, 2010, ಪು. 328, ರೂ. 220. 13. ಕನ್ನಡ ಬರಹದ ಸೊಲ್ಲರಿಮೆ-2, 2011, ಪು. 312, ರೂ. 200. 14. ಮಾತು ಮತ್ತು ಬರಹದ ನಡುವಿನ ಗೊಂದಲ, 2012, ಪು.216, ರೂ. 150. ಬಾರತಿ ಬಟ್ ಬರೆದ ಪುಸ್ತಕಗಳು: 1. ನನ್ನ ಬೆಲ್ಜಿಯಂ ಪ್ರವಾಸ, 2000, ಪುಟ 160, ರೂ. 50. 2. *ತಾಯಂದಿರಿಗೆ ಕಿವಿಮಾತು, 2007, ಪುಟ 224, ರೂ. 120. *ಈ ಪುಸ್ತಕಗಳ ಪ್ರತಿಗಳು ಮುಗಿದಿವೆ. ಪ್ರತಿಗಳಿಗೆ ಬರೆಯಿರಿ: ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್, 11, ಕ್ರೆಸೆಂಟ್ ರಸ್ತೆ, ಕೆ.ಪಿ. ಈಸ್್ಟ, ಬೆಂಗಳೂರು 560 001