ಕನ್ನಡ ವ್ಯಾಕರಣ ಯಾಕೆ ಬೇಕು?
ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Google Drive) — OCR ಶುದ್ಧೀಕೃತ ಪ್ರತಿ
ಪರಿವಿಡಿ
- ಅಧ್ಯಾಯ 1 — ಮುನ್ನೋಟ
- ಅಧ್ಯಾಯ 2 — ಓದು-ಬರಹದ ಕಲಿಕೆ
- ಅಧ್ಯಾಯ 3 — ಬರೆಯುವುದರಲ್ಲಿ ಹೆಚ್ಚಿನ ಕಲಿಕೆ
- ಅಧ್ಯಾಯ 4 — ಅರಿಮೆಯ ಬರಹಗಳು
- ಅಧ್ಯಾಯ 5 — ನಲ್ಬರಹಗಳು ಮತ್ತು ಸೊಲ್ಲರಿಮೆ
- ಅಧ್ಯಾಯ 6 — ಇಪ್ಪುರುಳಿನ ತೊಡಕುಗಳು
- ಅಧ್ಯಾಯ 7 — ಎರಡನೇ ನುಡಿಯ ಕಲಿಕೆ
- ಅಧ್ಯಾಯ 8 — ನುಡಿಮಾರಿಕೆ - 8.1.2 ಮೊದಲನೇ ಮತ್ತು ಎರಡನೇ ನುಡಿಗಳ ಕಲಿಕೆ
- ಅಧ್ಯಾಯ 9 — ನುಡಿಹಮ್ಮುಗೆ
- ಅಧ್ಯಾಯ 10 — ಮಾತಿನ ತೊಂದರೆಗಳು
- ಅಧ್ಯಾಯ 11 — ಮುಕ್ತಾಯ
ಕನ್ನಡ ವ್ಯಾಕರಣ ಯಾಕೆ ಬೇಕು?
ಹೊಸಬರಹ ಹೊಸಬರಹ (ಈ ಪುಸ್ತಕ ಹೊಸಬರಹ ಹೊಸಬರಹದಲ್ಲಿದೆ) ಹೊಸಬರಹ
ಡಿ. ಎನ್. ಶಂಕರ ಬಟ್
ಬಾಶಾಪ್ರಕಾಶನ, ಹೆಗ್ಗೋಡು, ಸಾಗರ
KANNADA VYAKARANA YAKE BEKU (Why do we need Kannada grammar?) by D. N. Shankara Bhat, Ninasam, Heggodu, Sagara 577 417. Phone:
ಮೊದಲನೆಯ ಅಚ್ಚು: 2009
ಬಿ : ಬರಹಗಾರ
ಈ ಪುಸ್ತಕವನ್ನು ಅಚ್ಚು ಹಾಕಿಸುವಲ್ಲಿ ಬೆಂಗಳೂರಿನ ಸಿಸ್ಕೋ ಸಂಬ್ರಮದ ಗೆಳೆಯರು ಹಣದ ನೆರವು ನೀಡಿದ್ದಾರೆ.
ಹೊರತರಿಕೆ ಬಾಶಾಪ್ರಕಾಶನ, ಹೆಗ್ಗೋಡು, ಸಾಗರ 577 417
ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001
ಶ್ರೀಶಕ್ತಿ ಎಲೆಕ್ಟ್ರಿಕ್ ಪ್ರೆಸ್, 13ನೇ ಅಡ್ಡರಸ್ತೆ, ಜಯನಗರ ಮಯ್ಸೂರು 570 014
1 ಮುನ್ನೋಟ 1.1 ವ್ಯಾಕರಣ ಯಾರಿಗೆ ಬೇಕು? 1.1.1 ಸೊಲ್ಲು ಮತ್ತು ಸೊಲ್ಲರಿಮೆ 1.1.2 ಅರಿವಿಗೆ ಎಟಕದ ಕಟ್ಟಲೆಗಳು 1.2 ಈ ಕಟ್ಟಲೆಗಳನ್ನು ಯಾಕೆ ತಿಳಿಯಬೇಕು? 1.2.1 ಮಾತು ಮತ್ತು ಬರಹ : ವ್ಯತ್ಯಾಸಗಳು 1.2.2 ವ್ಯತ್ಯಾಸಗಳಿಗೆ ಕಾರಣಗಳು 1.3 ಪುಸ್ತಕದ ಇಟ್ಟಳ
2 ಓದು-ಬರಹದ ಕಲಿಕೆ 2.1 ಶಾಲೆಯಲ್ಲಿ ಕನ್ನಡದ ಕಲಿಕೆ 2.2 ಓದು-ಬರಹದ ಕಲಿಕೆಗೆ ಸೊಲ್ಲರಿಮೆಯ ನೆರವು 2.2.1 ಎಲ್ಲರ ಕನ್ನಡ ಮತ್ತು ಆಡುಗನ್ನಡ 2.2.2 ಆಡುಗನ್ನಡದ ನೆರವು 2.2.3 ಹೆಚ್ಚಿನ ಉಲಿಗಳ ಕಲಿಕೆ 2.3 ಓದಲು ಕಲಿಯುವುದು 2.3.1 ಉಲಿಗಳಿಂದ ಪದಗಳು 2.3.2 ಉಲಿ ಮತ್ತು ಬರಿಗೆಗಳ ನಡುವಿನ ಪತ್ತುಗೆ 2.3.3 ಬರಿಗೆಗಳ ಕಲಿಕೆ 2.3.4 ಮಿದುಳಿನಲ್ಲಿ ಓದುವ ಕೆಲಸ 2.3.5 ಕನ್ನಡ ಬರಹದ ಬರಿಗೆಗಳ ಸಮಸ್ಯೆ 2.3.6 ಸಲೀಸಾದ ಓದು 2.3.7 ಪದಗಳ ಕಲಿಕೆ 2.3.8 ಓದಿನಿಂದ ತಿಳುವಳಿಕೆಯನ್ನು ಪಡೆಯುವುದು 2.4 ಬರೆಯಲು ಕಲಿಯುವುದು
2.4.1 ಬರವಣಿಗೆಯ ಚಳಕಗಳು 2.4.2 ಗಟ್ಟಿಯಾಗಿ ಬರೆಯುವುದು 2.4.3 ಬರೆಯುವುದು ಮತ್ತು ಸರಿಪಡಿಸುವುದು 2.4.4 ಬರಹದಲ್ಲಿ ಆಸಕ್ತಿ 2.5 ದೊಡ್ಡವರಿಗೆ ಓದಲು-ಬರೆಯಲು ಕಲಿಸುವುದು 2.6 ತಿರುಳು
3 ಬರೆಯುವುದರಲ್ಲಿ ಹೆಚ್ಚಿನ ಕಲಿಕೆ 3.1 ಮುನ್ನೋಟ 3.1.1 ಬರಹಗಾರರಲ್ಲಿ ಎರಡು ಬಗೆ 3.1.2 ಬರಹದ ಒಳಗುಟ್ಟು 3.2 ಬರಹಗಾರರು ಮತ್ತು ಓದುಗರು 3.2.1 ಸೊಲ್ಲುಗಳ ನೆಲೆ ಮತ್ತು ತಿಳಿವು 3.2.2 ಇಟ್ಟಳಗಳ ಆಯ್ಕೆ 3.2.3 ಸರಿತೆರಪಿನ ಇಟ್ಟಳಗಳು 3.2.4 ತೋರುಗ ಪದಗಳ ಬಳಕೆ 3.2.5 ಹೊದ್ದಿಕೆಯ ಗುರುತುಗಳು 3.3 ಬರಹದ ಗುರಿ 3.4 ಬರಹದ ಮರುನೋಟ 3.5 ತಿದ್ದಿ ಸರಿಪಡಿಸುವುದು 3.5.1 ಬರಹದ ಗುರುತುಗಳ ಬಳಕೆ 3.5.2 ಕುರಳುಗಳ ಇಟ್ಟಳ 3.5.3 ಸೊಲ್ಲುಗಳ ಕೊನೆಯ ಗುರುತುಗಳು 3.5.4 ಸೊಲ್ಲುಗಳ ನಡುವಿನ ಗುರುತುಗಳು 3.6 ತಿರುಳು
4 ಅರಿಮೆಯ ಬರಹಗಳು 4.1 ಮುನ್ನೋಟ 4.2 ಸರಿಯಾಗಿ ತಿಳಿಸಿ ಹೇಳುವ ಬಗೆ 4.3 ಅರಿಮೆಯ ಪದಗಳ ಬಳಕೆ 4.3.1 ಕನ್ನಡದ ಅರಿಮೆಯ ಪದಗಳು
4.3.2 ಸೊಲ್ಲರಿಮೆಯ ತಿಳಿವು 4.3.3 ಕನ್ನಡ ಪದಗಳ ಬಳಕೆ 4.4 ಸೊಲ್ಲರಿಮೆಯ ಮಾರ್ಪುರುಳು 4.4.1 ಎರಡು ಬಗೆಯ ಮಾರ್ಪುರುಳುಗಳು 4.4.2 ಕೆಲವು ಪ್ರಯೋಜನಗಳು 4.4.3 ತೊಡಕೆನಿಸಲು ಕಾರಣ 4.4.4 ಕನ್ನಡದಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು 4.4.5 ಕನ್ನಡದ ಕಸುವು 4.5 ಸಿಕ್ಕಲು ಸೊಲ್ಲುಗಳು 4.6 ಬರಹದ ಇಟ್ಟಳ 4.7 ಮಂದಿ ಮೆಚ್ಚುವಂತೆ ಬರೆಯುವುದು 4.8 ತಿರುಳು
5 ನಲ್ಬರಹಗಳು ಮತ್ತು ಸೊಲ್ಲರಿಮೆ 5.1 ಮುನ್ನೋಟ 5.2 ನಲ್ಬರಹಗಳಲ್ಲಿ ಸೊಲ್ಲುಗಳ ಬಳಕೆ 5.2.1 ನಲ್ಬರಹಗಳು ಮತ್ತು ಉಳಿದ ಬರಹಗಳು 5.2.2 ಮುಂಜರಿಸುವುದು 5.2.3 ಸೊಲ್ಲರಿಮೆ ಮತ್ತು ನುಡಿಯೊಡ್ಡವ 5.3 ನಾಟಕದ ಮಾತು 5.3.1 ಸೂಳುನುಡಿ ಮತ್ತು ನಡುನುಡಿ 5.3.2 ನಡುನುಡಿಯಲ್ಲಿ ಸೂಳುನುಡಿಯ ಕಟ್ಟಲೆಗಳ ಬಳಕೆ 5.3.3 ಆಡುನುಡಿ ಮತ್ತು ಒಳನುಡಿಗಳ ಬಳಕೆ 5.4 ನಾಟಕಗಳಲ್ಲಿ ನುಡಿಯೊಡ್ಡವ 5.4.1 ಸೊಲ್ಲುಗಳ ನಡುವಿನ ಪತ್ತುಗೆ 5.4.2 ಸೊಲ್ಲುಗಳ ಹುರುಳುಗಳು 5.5 ತಿರುಳು
6 ಇಪ್ಪುರುಳಿನ ತೊಡಕುಗಳು 6.1 ಮುನ್ನೋಟ 6.2 ಇಪ್ಪುರುಳಿನ ಸೊಲ್ಲುಗಳ ಬಗೆಗಳು
6.2.1 ಪದದ ಇಪ್ಪುರುಳು 6.2.2 ಪದರೂಪದ ಇಪ್ಪುರುಳು 6.2.3 ಇಟ್ಟಳದ ಇಪ್ಪುರುಳು 6.3 ಇಪ್ಪುರುಳು ತೊಡಕಾಗಿರುವುದು 6.3.1 ಕಾನೂನುಗಳನ್ನು ಬರೆಯುವುದು 6.3.2 ಅರಿಮೆಯ ಬರಹಗಳು 6.3.3 ಎಣ್ಣುಕಗಳಲ್ಲಿ ಇಪ್ಪುರುಳು 6.4 ಇಪ್ಪುರುಳು ಒತ್ತಾಸೆಯಾಗಿರುವುದು 6.5 ತಿರುಳು
7 ಎರಡನೇ ನುಡಿಯ ಕಲಿಕೆ 7.1 ಮುನ್ನೋಟ 7.1.1 ಎರಡು ನುಡಿಯುವುದನ್ನು ಕಲಿಯುವುದರ ಹೆಚ್ಚುಗಾರಿಕೆ 158 7.1.2 ಮೊದಲನೇ ಮತ್ತು ಎರಡನೇ ನುಡಿಗಳ ಕಲಿಕೆ 7.1.3 ಮಕ್ಕಳ ಕಲಿಕೆ ಮತ್ತು ದೊಡ್ದವರ ಕಲಿಕೆ 7.2 ಎರಡನೇ ನುಡಿಯಾಗಿ ಇಂಗ್ಲಿಶ್ನ ಕಲಿಕೆ 7.2.1 ತಾಯ್ನುಡಿಯನ್ನು ಕಲಿಕೆಯಿಂದ ಹೊರಗಿಡುವುದು 7.2.2 ಕಟ್ಟಲೆಯ ಮೂಲ 7.2.3 ತಾಯ್ನುಡಿಯ ಸೊಲ್ಲರಿಮೆಯ ಬಳಕೆ 7.2.4 ಕಲಿಕೆಯ ತಪ್ಪುಗಳು 7.2.5 ಓದಲು-ಬರೆಯಲು ಕಲಿಯುವುದು 7.2.6 ದೊಡ್ಡವರ ಕಲಿಕೆ 7.3 ಎರಡನೇ ನುಡಿಯಾಗಿ ಕನ್ನಡದ ಕಲಿಕೆ 7.4 ತಿರುಳು
8 ನುಡಿಮಾರಿಕೆ 8.1 ಮುನ್ನೋಟ 8.1.1 ಎರಡು ಬಗೆತಗಳು 8.1.2 ನುಡಿಮಾರುವ ಬಗೆ 8.2 ಮೂಲ ಬರಹದ ತಿಳಿವು 8.2.1 ಆಡುನುಡಿಯ ಬಳಕೆ
8.2.2 ಬರಹದ ಒಡ್ಡವ 8.2.3 ಬೇರೆ ಕೆಲವು ತೊಡಕುಗಳು 8.3 ಈಡುನುಡಿಯ ಓದುಗ 8.3.1 ತಿಳಿದುದು ಮತ್ತು ತಿಳಿಯದುದು 8.3.2 ಹೊದ್ದಿಕೆಯ ಗುರುತುಗಳು 8.4 ನಲ್ಬರಹಗಳ ನುಡಿಮಾರಿಕೆ 8.5 ಎಣ್ಣುಕದ ನುಡಿಮಾರಿಕೆ 8.5.1 ಎಣ್ಣುಕದ ಹಮ್ಮುಗೆಗಳು 8.5.2 ಮಾರೆಡೆ ಹಮ್ಮುಗೆ 8.5.3 ಎಡೆನುಡಿ ಹಮ್ಮುಗೆ 8.5.4 ಎಣಿಕೆಯ ಹಮ್ಮುಗೆ 8.5.5 ಎಣ್ಣುಕಗಳ ತೊಡಕುಗಳು 8.5.6 ಒಳನುಡಿಗಳ ನುಡಿಮಾರಿಕೆ 8.5.7 ಎಣ್ಣುಕಗಳಿಗಾಗಿ ಬರೆಯುವುದು 8.6 ತಿರುಳು
9 ನುಡಿಹಮ್ಮುಗೆ 9.1 ಮುನ್ನೋಟ 9.1.1 ಮಾರ್ಪಾಡುಗಳು ಯಾಕೆ ನಡೆಯುತ್ತವೆ? 9.1.2 ಹಮ್ಮುಗೆಗಳ ಬಗೆಗಳು 9.1.3 ಹಮ್ಮುಗೆಯ ಹಂತಗಳು 9.2 ಪರಿಚೆ ಹಮ್ಮುಗೆ 9.2.1 ಬರಿಗೆ ಹಮ್ಮುಗೆ 9.2.2 ಸರಿಯಾಗಿ ಮಾಡಿದ ಬರಿಗೆ ಹಮ್ಮುಗೆಗಳು 9.2.3 ತಪ್ಪಾಗಿ ಮಾಡಿದ ಬರಿಗೆ ಹಮ್ಮುಗೆಗಳು 9.2.4 ಕನ್ನಡ ಬರಹದ ಪದಬರಿಗೆಯ ತೊಡಕು 9.2.5 ಸೊಲ್ಲರಿಮೆಯ ಹಮ್ಮುಗೆ 9.2.6 ಪದನೆರಕೆಯ ಹಮ್ಮುಗೆ 9.3 ಬೆಳವಣಿಗೆಯ ಹಮ್ಮುಗೆ 9.4 ತಿರುಳು
10 ಮಾತಿನ ತೊಂದರೆಗಳು 10.1 ಮುನ್ನೋಟ 10.2 ಬೆಳವಣಿಗೆಯ ತೊಂದರೆಗಳು 10.2.1 ಕಿವಿ ಕೇಳಿಸದ ಮಕ್ಕಳು 10.2.2 ಉಲಿಯ ತೊಂದರೆಗಳು 10.2.3 ಸೊಲ್ಲರಿಮೆಯ ತೊಂದರೆಗಳು 10.2.4 ಓದಿನ ತೊಂದರೆಗಳು 10.2.5 ಉಗ್ಗುಮಾತು 10.3 ಬಳಕೆಯ ತೊಂದರೆಗಳು 10.3.1 ಸಲೀಸಾದ ಮಾತು 10.3.2 ಹುರುಳಿಲ್ಲದ ಮಾತು 10.4 ತಿರುಳು
11 ಮುಕ್ತಾಯ 11.1 ಹಲವು ಬಗೆಯ ಸೊಲ್ಲರಿಮೆಗಳು 11.2 ಎರಡು ಬಗೆಯ ಸೊಲ್ಲರಿಮೆಯ ತಿಳಿವು 11.3 ಸೊಲ್ಲರಿಮೆಯ ಹೆಚ್ಚುಗಾರಿಕೆ
ಕೆಲವು ಪದಗಳ ಹುರುಳುಗಳು ಸುಟ್ಟುಗೆ
ಮುನ್ನುಡಿ
ಕನ್ನಡ ಸೊಲ್ಲರಿಮೆ (ವ್ಯಾಕರಣ) ಕನ್ನಡದ ಕುರಿತಾಗಿ ನಾವು ನಡೆಸುವ ಯಾವ ಕೆಲಸಗಳಲ್ಲೆಲ್ಲ ನೆರವನ್ನು ನೀಡಬಲ್ಲುದು, ಮತ್ತು ಈ ನೆರವನ್ನು ಪಡೆಯಬೇಕಿ ದ್ದಲ್ಲಿ ನಮಗೆ ಎಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.
ಕನ್ನಡ ಬರಹಗಳಲ್ಲಿ ಇವತ್ತು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದ ಗಳನ್ನು ತುಂಬಾ ಹೆಚ್ಚು ಬಳಸಲಾಗುತ್ತಿದೆ. ಹೊಸ ಪದಗಳನ್ನು ಉಂಟುಮಾಡ ಬೇಕಾದಾಗಲೆಲ್ಲ ಹೆಚ್ಚಿನವರೂ ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ) ಗಳನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ, ಕನ್ನಡ ಬರಹ ಇವತ್ತು ಹೆಚ್ಚಿನ ಕನ್ನಡಿಗರಿಂದಲೂ ದೂರ ಉಳಿದಿದೆ.
ಕನ್ನಡದ ಬರಹವೊಂದರಲ್ಲಿ ತುಂಬಾ ಸಂಸ್ಕ್ರುತ ಎರವಲುಗಳನ್ನು ಬಳಸಿ ದುದರಿಂದಾಗಿ ಅದನ್ನು ಓದಲು ತೊಡಕಾಗುತ್ತಿದ್ದಲ್ಲಿ, ಅಂತಹ ಪದಗಳನ್ನು ತಿಳಿಯದಿರುವುದು ತಮ್ಮ ಕೊರತೆ ಎಂಬುದಾಗಿ ಹೆಚ್ಚಿನ ಓದುಗರಿಗೂ ಅನಿಸು ತ್ತದೆ; ಬರಹ ತುಂಬಾ ಚನ್ನಾಗಿದೆ, ಅದರೆ ಅದು ನನ್ನ ಕಯ್ಗೆ ಎಟಕುವುದಿಲ್ಲ ಎಂಬುದಾಗಿ ಅವರು ತೀರ್ಮಾನಿಸುತ್ತಾರೆ.
ಆದರೆ ಇದಕ್ಕೆ ಬದಲು, ಬರಹವೊಂದರಲ್ಲಿ ತುಂಬಾ ಕನ್ನಡ ಪದಗಳನ್ನು ಬಳಸಿದುದರಿಂದಾಗಿ ಅದನ್ನು ಓದಲು ತೊಡಕಾಗುತ್ತಿದ್ದಲ್ಲಿ, ಅದು ಬರಹದ ಕೊರತೆ ಎಂಬ ಅನಿಸಿಕೆ ಓದುಗರಲ್ಲಿ ಮೂಡುತ್ತದೆ. ಆ ಬರಹವೇ ಚನ್ನಾಗಿಲ್ಲ ಎಂಬುದಾಗಿ ಓದುಗರು ತೀರ್ಮಾನಿಸಿಬಿಡುತ್ತಾರೆ. ನಮ್ಮಲ್ಲಿ ಹಿಂದಿನಿಂದಲೂ ಬೆಳೆದು ಬಂದಿರುವ ಸಂಸ್ಕ್ರುತದ ಕುರಿತಾಗಿರುವ ಮೇಲರಿಮೆ ಮತ್ತು ಕನ್ನಡದ ಕುರಿತಾಗಿರುವ ಕೀಳರಿಮೆ ಇದಕ್ಕೆ ಕಾರಣ. ನನ್ನ ಈ ಬರಹ ಹಲವು ಮಂದಿ ಕನ್ನಡಿಗರಲ್ಲಿ ಈ ಎರಡನೇ ಬಗೆಯ ಅನಿಸಿಕೆಗೆ ಎಡೆಮಾಡಿಕೊಡಬಲ್ಲುದು. ಆದರೆ, ಕನ್ನಡ ಬರಹದಲ್ಲಿ ಸಂಸ್ಕ್ರುತ ಎರವಲುಗಳನ್ನು ಮತ್ತು ಬೇರೆ ಎರವಲುಗಳನ್ನು ಆದಶ್ಟು ಕಡಿಮೆ ಮಾಡಬೇಕು ಎಂಬುದು ಈ ಪುಸ್ತಕದ ಗುರಿನುಡಿಯಾಗಿದೆ. ಇದಕ್ಕಾಗಿ ಬಳಕೆಯಿಂದ ಬಿದ್ದುಹೋಗಿರುವ ಹಲವು ಕನ್ನಡ
ಪದಗಳನ್ನು ಇಲ್ಲಿ ಬಳಸಲಾಗಿದೆ, ಮತ್ತು ಹಲವೆಡೆಗಳಲ್ಲಿ ಕನ್ನಡದವೇ ಆದ ಪದಗಳನ್ನು ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಉಂಟು ಮಾಡಿಯೂ ಬಳಸಲಾಗಿದೆ. ಇದು ಸಂಸ್ಕ್ರುತ ಪದಗಳನ್ನು ಬಳಸಿ ಬಳಕೆ ಯಾದವರಿಗೆ ಒಂದು ತೊಡಕಾಗಿ ಕಾಣಬಹುದು.
ಇದಲ್ಲದೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಅವು ಎರಡು ಸಾವಿರ ವರ್ಶಗಳಶ್ಟು ಹಿಂದೆ ಸಂಸ್ಕ್ರುತದಲ್ಲಿ ಹೇಗಿದ್ದುವೋ ಹಾಗೆಯೇ ಇವತ್ತೂ ಕನ್ನಡದಲ್ಲಿ ಬರೆಯಬೇಕಾಗಿಲ್ಲ, ಅವನ್ನು ನಾವು ಹೇಗೆ ಓದುತ್ತೇವೆಯೋ ಹಾಗೆ ಬರೆದರೆ ಸಾಕು ಎಂಬ ತೀರ್ಮಾನದ ಮೇಲೆ ನಿಂತಿರುವ ಹೊಸ ಬರಹ ವನ್ನು ಈ ಪುಸ್ತಕದಲ್ಲಿ ಬಳಸಲಾಗಿದೆ. ಕೆಲವು ಮಂದಿ ಓದುಗರಿಗೆ ಇದೂ ಒಂದು ತೊಡಕೆಂದು ಅನಿಸಬಹುದು.
ಆದರೆ, ಈ ಎರಡು ಬಗೆಯ ಬಳಕೆಗಳೂ ಕನ್ನಡ ಬರಹದಲ್ಲಿ ಕನ್ನಡದ ಸೊಗಡನ್ನು ಉಳಿಸಿಕೊಳ್ಳುವ ಮೂಲಕ ಅದು ಎಲ್ಲಾ ಕನ್ನಡಿಗರನ್ನೂ ತಲಪುವ ಹಾಗೆ ಮಾಡುವಲ್ಲಿ ನೆರವಾಗಬಲ್ಲುವು. ಹಾಗಾಗಿ, ಇದನ್ನು ನಡೆಸಬೇಕೆಂಬ ಕಳಕಳಿಯಿರುವ ಓದುಗರು ಈ ತೊಡಕುಗಳನ್ನು ತಾಳಿಕೊಳ್ಳದಿರರೆಂದು ನನ್ನ ನಂಬಿಕೆ.
ಈ ಪುಸ್ತಕದ ಕರಡುಬರಹವನ್ನೊಮ್ಮೆ ಓದಿ ನೋಡಿ, ಅದರ ಕುರಿತಾಗಿ ತಮ್ಮ ಅನಿಸಿಕೆಗಳನ್ನು ತಿಳಿಸಿರುವ ಕೆ.ವಿ.ನಾರಾಯಣ, ಸಿ.ಪಿ.ನಾಗರಾಜ್, ಬಿ.ಆರ್.ಕಿರಣ್, ಕೆ.ವಿ.ಅಕ್ಶರ, ಬಿ.ಆರ್.ವೆಂಕಟರಮಣ ಅಯ್ತಾಳ, ಮತ್ತು ಬಾರತಿ ಬಟ್ ಅವರನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ.
ಇದಲ್ಲದೆ, ಇದನ್ನು ಅಂದವಾಗಿ ಅಚ್ಚುಹಾಕಿದ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್ನ ರಾ.ಶ್ರೀ.ಮೋಹನ ಮೂರ್ತಿ ಅವರನ್ನು, ಅಚ್ಚುಹಾಕಿಸುವಲ್ಲಿ ಹಣದ ಬೆಂಬಲವಿತ್ತ ಸಿಸ್ಕೋ ಸಂಬ್ರಮದ ಗೆಳೆಯರನ್ನು, ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಜಿ.ಎನ್.ಅಶೋಕವರ್ದನ ಅವರನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ.
ಹೆಗ್ಗೋಡು, ಸಾಗರ ಒಕ್ಟೋಬರ್ 15, 2009
ಡಿ.ಎನ್.ಶಂಕರ ಬಟ್
ಮೊದಲನೇ ಪಸುಗೆ — ಮುನ್ನೋಟ
1.1 ವ್ಯಾಕರಣ ಯಾರಿಗೆ ಬೇಕು?
ನಿಜಕ್ಕೂ ವ್ಯಾಕರಣವೆಂಬುದು ನುಡಿಯನ್ನು ಬಳಸುವ ನಮಗೆಲ್ಲರಿಗೂ ಬೇಕಾಗು ತ್ತದೆ. ಯಾಕೆಂದರೆ, ಅದು ನುಡಿಯ ಜೀವಾಳ. ಅದಿಲ್ಲದೆ ನುಡಿಯೇ ಇಲ್ಲ. ಒಂದು ನುಡಿಯಲ್ಲಿ ಮಾತನಾಡುವಾಗ ನಾವು ಬಳಸುವ ಪ್ರತಿಯೊಂದು ವಾಕ್ಯದ ಹಿಂದೆಯೂ ವ್ಯಾಕರಣದ ನಿಯಮಗಳು ಇಲ್ಲವೇ ಕಟ್ಟಲೆಗಳು ಅಡಗಿವೆ.
ಆದರೆ, ವ್ಯಾಕರಣದ ಈ ಕಟ್ಟಲೆಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ಹುದುಗಿರುತ್ತವೆ. ಅವನ್ನು ನಾವು ಮಾತನಾಡುವಾಗ ಮತ್ತು ಇನ್ನೊಬ್ಬರ ಮಾತನ್ನು ಕೇಳುವಾಗ ಬಳಸಬಲ್ಲೆವಲ್ಲದೆ, ಅವು ಎಂತಹವು ಎಂಬುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳಲಾರೆವು.
ಇದಲ್ಲದೆ, ನಾವು ಸಾಮಾನ್ಯವಾಗಿ ವ್ಯಾಕರಣ ಎಂಬ ಹೆಸರಿನಿಂದ ಕರೆಯು ವುದು ಅದರ ಅರಿವಿಗೆ ಎಟಕುವಂತಹ ರೂಪವನ್ನು. ಇದನ್ನು ನುಡಿಯರಿಗರು ವ್ಯಾಕರಣ ಪುಸ್ತಕಗಳಲ್ಲಿ ಬರೆದಿರಿಸಿರುತ್ತಾರೆ. ನುಡಿಯಲ್ಲಿ ಬಳಕೆಯಾಗುವ ಸೊಲ್ಲುಗಳ ಹಿಂದೆ ಯಾವ ಬಗೆಯ ಕಟ್ಟಲೆಗಳೆಲ್ಲ ಅಡಗಿವೆ ಎಂಬುದನ್ನು ಕಂಡುಹಿಡಿಯುವ ಮೂಲಕ, ಅವರು ಇಂತಹ ಅರಿವಿಗೆ ಎಟಕುವ ವ್ಯಾಕರಣಗಳನ್ನು ಬರೆಯುತ್ತಾರೆ. ನುಡಿಯನ್ನು ತಮ್ಮ ಕಸುಬಾಗಿ ಮಾಡಿ ಕೊಂಡವರಿಗೆ ಮತ್ತು ತಮ್ಮ ಕಸುಬಿನಲ್ಲಿ ಬರಹವನ್ನು ಬಳಸ ಬೇಕಾದವರಿಗೆ ಇಂತಹ ಅರಿವಿಗೆ ಎಟಕುವ ವ್ಯಾಕರಣ ತುಂಬಾ ನೆರವನ್ನು ನೀಡಬಲ್ಲುದು. ಆದರೆ, ಇವತ್ತು ಕನ್ನಡದ ವ್ಯಾಕರಣವನ್ನು ಯಾರೂ ತಮ್ಮ ಕಸುಬುಗಳಲ್ಲಿ ಬಳಸಿಕೊಳ್ಳುವ ಹಾಗೆ ಕಾಣಿಸುವುದಿಲ್ಲ. ಇದಕ್ಕೆ ಎರಡು ಕಾರಣಗಳಿವೆ: ಮೊದಲ ನೆಯದಾಗಿ, ಶಾಲೆಗಳಲ್ಲಿ ಇವತ್ತು ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜಕ್ಕೂ ಕನ್ನಡದ್ದೇ ಅಲ್ಲ. ಅದು ಸಂಸ್ಕ್ರುತದ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಹೊಂದಿಸಲು ನಡೆಸಿರುವ ಪ್ರಯತ್ನ ಮಾತ್ರ. ಕೇಶಿರಾಜನ ಕಾಲದಿಂದಲೂ
ಕನ್ನಡ ವ್ಯಾಕರಣವೆಂಬುದು, ಈ ಕಾರಣಕ್ಕಾಗಿ, ಯಾವ ಕೆಲಸಕ್ಕೂ ಬಳಸ ಲಾಗದಂತಹ ಒಂದು ತೊಡಕು ತೊಡಕಾದ ವಿಶಯವಾಗಿಯೇ ಉಳಿದು
ಎರಡನೆಯದಾಗಿ, ನಿಜಕ್ಕೂ ಕನ್ನಡದ ವ್ಯಾಕರಣ ಎಂತಹದು, ಅದನ್ನು ತಿಳಿದುಕೊಳ್ಳುವುದರಿಂದ ಕನ್ನಡದ ಬರಹವನ್ನು ಕಲಿಯುವವರು ಮತ್ತು ಕಲಿಸು ವವರು, ಬರಹಗಾರರು, ನುಡಿಮಾರುಗರು (ಅನುವಾದಕರು), ನುಡಿಹಮ್ಮುಗರು ಮತ್ತು ಬೇರೆ ಹಲವು ಬಗೆಗಳಲ್ಲಿ ನುಡಿಗೆ ಸಂಬಂದಿಸಿದಂತೆ ಕೆಲಸಗಳನ್ನು ನಡೆಸುವವರು ಎಂತಹ ನೆರವನ್ನು ಪಡೆಯಬಲ್ಲರು ಎಂಬುದನ್ನು ತಿಳಿದು ಕೊಳ್ಳಲು ಹೆಚ್ಚಿನ ಪ್ರಯತ್ನಗಳಾವುವೂ ಕನ್ನಡದಲ್ಲಿ ನಡೆದಿಲ್ಲ. ಇದಲ್ಲದೆ, ಹಾಗೆ ಬಳಸಲು ಬರುವಂತಹ ವ್ಯಾಕರಣಗಳನ್ನು ಯಾರೂ ಬರೆದಿಲ್ಲ.
ಇವತ್ತು ಬಳಕೆಯಲ್ಲಿರುವ ಕನ್ನಡ ವ್ಯಾಕರಣಗಳು ಕನ್ನಡ ನುಡಿಯ ವ್ಯಾಕರಣ ಗಳಲ್ಲವೆಂದು ನಾವು ಹೇಗೆ ತೀರ್ಮಾನಿಸಬಲ್ಲೆವು, ಕನ್ನಡದ್ದೇ ಆದ ವ್ಯಾಕರಣ ಹೇಗೆ ಅವಕ್ಕಿಂತ ತೀರಾ ಬೇರಾಗಿರಬಲ್ಲುದು ಎಂಬುದನ್ನು ನಾನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೆ.
ಇದಲ್ಲದೆ, 1978ರಲ್ಲಿ ಹೊರತಂದ ಕನ್ನಡ ವಾಕ್ಯಗಳು: ಆಂತರಿಕ ರಚನೆ ಮತ್ತು ಅರ್ತವ್ಯವಸ್ತೆ ಎಂಬ ಪುಸ್ತಕದ ಮೂಲಕ, ಮತ್ತು ಆಮೇಲೆ ಇತ್ತೀಚೆಗೆ ಹೊರತಂದ ಕನ್ನಡ ಪದಗಳ ಒಳರಚನೆ, ಕನ್ನಡ ವಾಕ್ಯಗಳ ಒಳರಚನೆ, ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಮತ್ತು ಕನ್ನಡದ ಸರ್ವನಾಮಗಳು ಎಂಬ ಪುಸ್ತಕಗಳ ಮೂಲಕ, ಈ ಕನ್ನಡದ್ದೇ ಆದ ವ್ಯಾಕರಣದ ಕೆಲವು ಅಂಶಗಳ ಕುರಿತಾಗಿ ಹೆಚ್ಚು ಆಳವಾದ ಚಿಂತನೆಗಳನ್ನೂ ನಡೆಸಿದ್ದೇನೆ. ಹಲವಾರು ಮಂದಿ ನುಡಿಯರಿಗರು ಇಂತಹ ಚಿಂತನೆಗಳನ್ನು ನಡೆಸಿದಲ್ಲಿ, ಅವುಗಳ ಮೂಲಕ ನಾವು ಕನ್ನಡದ್ದೇ ಆದ ವ್ಯಾಕರಣ ಎಂತಹದು ಎಂಬುದನ್ನು ಕಂಡುಹಿಡಿಯಬಲ್ಲೆವು. ಆ ರೀತಿ ಕಂಡುಹಿಡಿದ ವ್ಯಾಕರಣ ಯಾವ ಬಗೆಯಲ್ಲೆಲ್ಲ ನಮ್ಮ ಕೆಲಸಗಳಲ್ಲಿ ನೆರವಾಗಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿ ಕೊಡಲಿದ್ದೇನೆ.
1.1.1 ಸೊಲ್ಲು ಮತ್ತು ಸೊಲ್ಲರಿಮೆ
ವ್ಯಾಕರಣ’ಎಂಬ ಪದ ಇವತ್ತು ಕನ್ನಡಿಗರಲ್ಲಿ ಹಲವು ಕಹಿ ಅನಿಸಿಕೆಗಳಿಗೆ ಎಡೆಮಾಡಿಕೊಡುತ್ತದೆ. ಮೇಲೆ ಸೂಚಿಸಿದ ಹಾಗೆ, ಶಾಲೆಗಳಲ್ಲಿ ಕಲಿಸುವ
ಮುನ್ನೋಟ ಕನ್ನಡ ವ್ಯಾಕರಣವೆಂಬುದು ಅವರ ಮಟ್ಟಿಗೆ ತೀರಾ ಅನವಶ್ಯಕವಾಗಿರುವುದು, ತೊಡಕು ತೊಡಕಾಗಿರುವುದು ಮತ್ತು ಹೆಚ್ಚಿನ ಮಟ್ಟಿಗೆ ಕನ್ನಡದ್ದೇ ಅಲ್ಲ ವಾಗಿರುವುದು ಇದಕ್ಕೆ ಕಾರಣ.
ವ್ಯಾಕರಣದ ಅವಶ್ಯಕತೆಯನ್ನು ತೋರಿಸಹೊರಟಿರುವ ಈ ಪುಸ್ತಕದಲ್ಲಿ ಇಂತಹ ಕಹಿ ಅನಿಸಿಕೆಗಳಿಗೆ ಎಡೆಮಾಡಿಕೊಡುವ ವ್ಯಾಕರಣ ಎಂಬ ಪದವನ್ನು ಬಳಸುವ ಬದಲು, ಕನ್ನಡದ್ದೇ ಆದ ಸೊಲ್ಲರಿಮೆ ಎಂಬ ಪದವನ್ನು ಬಳಸಿ ದ್ದೇನೆ. ಸೊಲ್ಲು ಪದ ಕನ್ನಡದಲ್ಲಿ ವಾಕ್ಯವನ್ನು ಹೆಸರಿಸಬಲ್ಲುದು ಮತ್ತು ಸೊಲ್ಲುಗಳ ಒಳರಚನೆಯೆಂತಹದು ಎಂಬುದನ್ನು ತಿಳಿಸುವ ಸೊಲ್ಲರಿಮೆ ಪದ ವ್ಯಾಕರಣವನ್ನು ಹೆಸರಿಸಬಲ್ಲುದು.
ಯಾವುದೇ ಒಂದು ಸೊಲ್ಲಿನಲ್ಲಿ ಒಂದು ಇಲ್ಲವೇ ಅದಕ್ಕಿಂತ ಹೆಚ್ಚು ಪದಗಳಿರುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ (1)ನೇ ಸೊಲ್ಲನ್ನು ಗಮನಿಸಬಹುದು:
(1)
ನಾಳೆ ಒಂಬತ್ತಕ್ಕೆ ನಮ್ಮ ಹುಡುಗನೊಂದಿಗೆ ಶಾಲೆಯಲ್ಲಿರು ತ್ತೇನೆ
ಈ ಸೊಲ್ಲಿನಲ್ಲಿ ನಾಳೆ, ಒಂಬತ್ತು, ನಾವು (ನಮ್ಮ), ಹುಡುಗ, ಶಾಲೆ, ಇರು ಎಂಬ ಆರು ಪದಗಳಿವೆ. ಈ ಆರು ಪದಗಳನ್ನಶ್ಟೇ ಹೇಳಿದರೆ ಅದೊಂದು ಸೊಲ್ಲಾಗುವುದಿಲ್ಲ ಮತ್ತು ನಾವು ಹೇಳಬೇಕಾಗಿರುವುದು ಏನು ಎಂಬುದು ನಮ್ಮ ಕೇಳುಗರಿಗೆ ಗೊತ್ತಾಗುವುದೂ ಇಲ್ಲ. ಹಾಗಾಗಬೇಕಿದ್ದಲ್ಲಿ, ಆ ಪದಗಳಿಗೆ ಕ್ಕೆ, ಅ, ಒಂದಿಗೆ, ಅಲ್ಲಿ, ಉತ್ತ ಮತ್ತು ಏನೆ ಎಂಬಂತಹ ಒಟ್ಟು (ಪ್ರತ್ಯಯ)ಗಳನ್ನು ಸೇರಿಸಿರುವ ಪದರೂಪಗಳನ್ನು ಬಳಸಬೇಕಾಗುತ್ತದೆ, ಮತ್ತು ಅವನ್ನು ಮೇಲೆ ಕೊಟ್ಟಿರುವ (1)ನೇ ಸೊಲ್ಲಿನಲ್ಲಿ ಕಾಣಿಸುವ ಹಾಗೆ, ಒಂದು ನಿಶ್ಚಿತವಾದ ಓರಣ(ಕ್ರಮ)ದಲ್ಲಿ ಜೋಡಿಸಿ ಹೇಳಬೇಕಾಗುತ್ತದೆ.
ಇವೇ ಪದಗಳನ್ನು ಬೇರೆ ಒಟ್ಟುಗಳೊಂದಿಗೆ ಸೇರಿಸಿ, ಮತ್ತು ಬೇರೆ ಬಗೆ ಯಲ್ಲಿ ಜೋಡಿಸಿ ಹೇಳಿದಲ್ಲಿ ಬೇರೆಯೇ ಹುರುಳುಗಳು ಸಿಗುತ್ತವೆ ಎಂಬುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು.
ನಾಳೆ ಒಂಬತ್ತಕ್ಕೆ ನಮ್ಮ ಹುಡುಗ ಶಾಲೆಯಲ್ಲಿರುತ್ತಾನೆ.
(1ಚ) ನಾಳೆಯಿಂದ ಒಂಬತ್ತು ಶಾಲೆಗಳಲ್ಲಿ ನಮ್ಮ ಹುಡುಗರಿರುತ್ತಾರೆ.
(1l)
ನಾಳೆಯಿಂದ ಒಂಬತ್ತು ಹುಡುಗರು ನಮ್ಮ ಶಾಲೆಯಲ್ಲಿರು ನಮ್ಮ ಹುಡುಗ ನಾಳೆವರೆಗೆ ಒಂಬತ್ತಕ್ಕೆ ಶಾಲೆಯಲ್ಲಿರುತ್ತಾನೆ. ನಾಳೆ ಒಂಬತ್ತಕ್ಕೆ ಹುಡುಗರು ನಮ್ಮ ಶಾಲೆಯಲ್ಲಿರುತ್ತಾರೆ. ನಾಳೆ ಒಂಬತ್ತಕ್ಕೆ ನಾವು ಹುಡುಗರ ಶಾಲೆಯಲ್ಲಿರುತ್ತೇವೆ.
ಈ ರೀತಿ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಬಗೆಬಗೆಯ ಪದರೂಪಗಳನ್ನು ಉಂಟುಮಾಡುವ ಬಗೆ ಹೇಗೆ ಮತ್ತು ಅಂತಹ ಪದರೂಪಗಳನ್ನು ಜೋಡಿಸಿ ಸೊಲ್ಲುಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಸೊಲ್ಲರಿಮೆ ತಿಳಿಸುತ್ತದೆ.
ಪದಗಳು ಸೊಲ್ಲಿನ ಎಲುಬುಗೂಡು ಮಾತ್ರ. ಅವುಗಳಿಗೊಂದು ರೂಪ ಕೊಟ್ಟು ಉಸಿರನ್ನು ತುಂಬಬೇಕಿದ್ದಲ್ಲಿ ಸೊಲ್ಲರಿಮೆಯ ಕಟ್ಟಲೆಗಳು ಬೇಕಾಗು ತ್ತವೆ. ಹಾಗಾಗಿ, ಪದಗಳು ಎಶ್ಟು ಮುಕ್ಯವೋ ಸೊಲ್ಲರಿಮೆಯ ಕಟ್ಟಲೆಗಳೂ ಅಶ್ಟೇ ಮುಕ್ಯ. ಅವೆರಡೂ ಒಟ್ಟಿಗೆ ಸೇರಿದಾಗ ಮಾತ್ರ ನಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳು ಇನ್ನೊಬ್ಬರನ್ನು ತಲುಪಬಲ್ಲುವು.
1.1.2 ಅರಿವಿಗೆ ಎಟಕದ ಕಟ್ಟಲೆಗಳು
ನಾವು ತುಂಬಾ ಚಿಕ್ಕವರಾಗಿದ್ದಾಗಲೇ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಬಗೆ ಬಗೆಯ ಸೊಲ್ಲುಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ಅರಿತು ಕೊಂಡಿದ್ದೇವೆ. ಈ ಅರಿವನ್ನು ನಾವು ನಮ್ಮ ಬೆಳವಣಿಗೆಯ ಅಂಗವಾಗಿ ಎರಡೂವರೆ ಮೂರು ವರ್ಶದವರಾಗಿದ್ದಾಗಲೇ ಪಡೆದುಕೊಂಡಿದ್ದೇವೆ.
ಆದರೆ ಮೇಲೆ ಸೂಚಿಸಿದ ಹಾಗೆ, ಈ ಸೊಲ್ಲರಿಮೆಯ ಕಟ್ಟಲೆಗಳೆಲ್ಲ ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ತುಂಬಿಕೊಂಡಿರುತ್ತವೆ. ಅವನ್ನು ಬಳಸಿ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಮತ್ತು ಬೇರೆ ಯವರು ಉಂಟುಮಾಡಿದ ಸೊಲ್ಲುಗಳನ್ನು ಕೇಳಿ, ಅವುಗಳಿಂದ ತಿಳಿವನ್ನು ಪಡೆಯುವುದು ಹೇಗೆ ಎಂಬುದನ್ನು ನಾವು ಅರಿತುಕೊಂಡಿದ್ದೇವಲ್ಲದೆ ನಿಜಕ್ಕೂ ಆ ಕಟ್ಟಲೆಗಳು ಎಂತಹವು ಎಂಬುದನ್ನು ನಾವು ತಿಳಿದಿಲ್ಲ.
ಕನ್ನಡಕ್ಕೆ ಒಂದು ಸೊಲ್ಲರಿಮೆಯನ್ನು ಬರೆಯಬೇಕೆಂದಿರುವವರು ಇಂತಹ ಹಲವಾರು ಕಟ್ಟಲೆಗಳನ್ನು ಅರಿವಿಗೆ ಎಟಕುವ ರೂಪಕ್ಕೆ ತರಬೇಕಾಗುತ್ತದೆ.
ಮುನ್ನೋಟ ಎತ್ತುಗೆಗಾಗಿ, ಹೋಗುವುದು ಎಲ್ಲಿಗೆ ಎಂಬುದನ್ನು ಒಂದು ಸೊಲ್ಲು ತಿಳಿಸಬೇಕಿದ್ದಲ್ಲಿ, ಅದರಲ್ಲಿ ಹೋಗಲಿರುವ ಜಾಗವನ್ನು ಸೂಚಿಸುವ ಪದಕ್ಕೆ ಗೆ ಎಂಬ ಒಟ್ಟನ್ನು ಸೇರಿಸಬೇಕಾಗುತ್ತದೆ. ಮನೆಗೆ ಹೋಗುತ್ತಿದ್ದೇನೆ ಎಂಬ ಇಂತಹದೊಂದು ಸೊಲ್ಲಿನಲ್ಲಿ ಈ ಗೆ ಒಟ್ಟನ್ನು ಹೋಗುವ ಜಾಗವನ್ನು ಸೂಚಿಸುವ ಮನೆ ಪದಕ್ಕೆ ಸೇರಿಸಲಾಗಿದೆ.
ಈ ಗೆ ಒಟ್ಟಿನ ಬಳಕೆಯ ಹಿಂದೆ ನಮ್ಮಲ್ಲಿ ಹೆಚ್ಚಿನವರೂ ತಿಳಿಯದಿರುವ (ಎಂದರೆ ಗೊತ್ತಿದ್ದರೂ ಅರಿವಿಗೆ ಎಟಕದಿರುವ) ಒಂದು ಕಟ್ಟಲೆಯಿದೆ: (1) ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಮೇಲಿನ ಪದದಲ್ಲಿ ಕಾಣಿಸಿದ ಹಾಗೆ, ಅದನ್ನು ಗೆ ರೂಪದಲ್ಲಿ ಬಳಸಬೇಕು (ಶಾಲೆಗೆ, ಹೊಳೆಗೆ, ಹಳ್ಳಿಗೆ, ದಾರಿಗೆ); ಆದರೆ, (2) ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಅದನ್ನು ಇಗೆ ರೂಪದಲ್ಲಿ ಬಳಸಬೇಕು (ಕಾಡಿಗೆ, ಬಚ್ಚಲಿಗೆ, ಮಣ್ಣಿಗೆ), ಮತ್ತು (3) ಅಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ, ಅವು ಮಾನವರನ್ನು ಹೆಸರಿಸುವುದಾದರೆ ಇಗೆ ರೂಪದಲ್ಲಿ ಬಳಸಬೇಕು (ಅಕ್ಕನಿಗೆ, ಅಣ್ಣನಿಗೆ, ಕುರುಡನಿಗೆ), ಮತ್ತು ಉಳಿದೆಡೆಗಳಲ್ಲಿ ಕ್ಕೆ ರೂಪದಲ್ಲಿ ಬಳಸಬೇಕು (ಬೆಟ್ಟಕ್ಕೆ, ಆಟಕ್ಕೆ, ಕಾಳಗಕ್ಕೆ).
ಕನ್ನಡದಲ್ಲಿ ಇಂತಹ ಬೇರೆಯೂ ನೂರಾರು ಕಟ್ಟಲೆಗಳು ಬಳಕೆಯಾಗುತ್ತವೆ; ಇವನ್ನು ನಿಯಮ ಎಂಬುದಾಗಿ ಕರೆಯುವುದಕ್ಕಿಂತಲೂ ಕಟ್ಟಲೆ ಎಂಬುದಾಗಿ ಕರೆಯುವುದೇ ಸರಿಯೆಂದು ತೋರುತ್ತದೆ. ಯಾಕೆಂದರೆ, ಇವು ಮುರಿಯ ಬಾರದಂತಹ ಇಲ್ಲವೇ ಮುರಿಯಲಾಗದಂತಹ ನಿಯಮಗಳೇನಲ್ಲ. ನಮ್ಮ ಸಮಾಜದಲ್ಲಿ ಬೆಳೆದುಬಂದಿರುವ ಒಂದು ಬಗೆಯ ಒಡಂಬಡಿಕೆಗಳನ್ನು ಮಾತ್ರ ಇವು ಸೂಚಿಸುತ್ತವೆ. ಸಮಯದಿಂದ ಸಮಯಕ್ಕೆ ಇವುಗಳಲ್ಲಿ ಹಲವಾರು ಮಾರ್ಪಾಡುಗಳೂ ನಡೆಯುತ್ತಾ ಇರುತ್ತವೆ, ಮತ್ತು ಈ ಕಾರಣಕ್ಕಾಗಿ, ಈ ಕಟ್ಟಲೆಗಳು ಇವತ್ತು ಆಡುನುಡಿಯಿಂದ ಆಡುನುಡಿಗೆ, ಒಳನುಡಿಯಿಂದ ಒಳನುಡಿಗೆ ಬೇರೆ ಬೇರಾಗಿಯೂ ಕಾಣಿಸಿಕೊಳ್ಳುತ್ತವೆ.
ಮಾತನಾಡುವಾಗ ಇಲ್ಲವೇ ಬರೆಯುವಾಗ ನಾವು ಈ ಕಟ್ಟಲೆಗಳನ್ನು ಮತ್ತು ಇಂತಹವೇ ಬೇರೆಯೂ ನೂರಾರು ಕಟ್ಟಲೆಗಳನ್ನು ಸರಿಯಾಗಿಯೇ ಬಳಸುತ್ತಿರುತ್ತೇವೆ. ಆದರೆ ನಿಜಕ್ಕೂ ಅವು ಎಂತಹವು ಎಂಬುದನ್ನು ನಾವು ಯಾರಿಗೂ ವಿವರಿಸಿ ಹೇಳಲಾರೆವು. ಅವು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವುದೇ ಇದಕ್ಕೆ ಕಾರಣ. ಕನ್ನಡದ ಸೊಲ್ಲರಿಮೆಯನ್ನು ಬರೆಯುವವರು ಅವನ್ನೆಲ್ಲ ಕಂಡುಹಿಡಿದು ಪಟ್ಟಿಮಾಡಿ ವಿವರಿಸಬೇಕಾಗುತ್ತದೆ.
1.2 ಈ ಕಟ್ಟಲೆಗಳನ್ನು ಯಾಕೆ ತಿಳಿಯಬೇಕು?
ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿರುವ ಈ ಸೊಲ್ಲರಿಮೆಯ ಕಟ್ಟಲೆಗಳನ್ನು ಅರಿವಿಗೆ ಎಟಕುವ ಹಾಗೆ ಮಾಡುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂಬ ಕೇಳ್ವಿ ಇಲ್ಲಿ ಏಳುತ್ತದೆ.
ಇದಕ್ಕೆ ಒಂದು ಮರುನುಡಿ(ಉತ್ತರ) ಏನೆಂದರೆ, ಹೊಸ ಹೊಸ ವಿಶಯ ಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಮ್ಮಲ್ಲಿ ಯಾವಾಗಲೂ ಇದ್ದೇ ಇರುತ್ತದೆ. ನಿಜಕ್ಕೂ ನಮ್ಮ ಮನಸ್ಸಿನಲ್ಲಿ ಇಲ್ಲವೇ ಮಿದುಳಿನಲ್ಲಿ ಮಾತನಾಡು ತ್ತಿರುವಾಗ ಏನು ನಡೆಯುತ್ತಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಮ್ಮೊಳಗೆ ಕೆಲವರಲ್ಲಾದರೂ ಇದ್ದೇ ಇರುತ್ತದೆ. ಅಂತಹ ಕುತೂಹಲವನ್ನು ತಣಿಸುವುದಕ್ಕಾಗಿಯಾದರೂ ನಾವು ನಮ್ಮ ಮಾತಿನ (ಕನ್ನಡದ) ಸೊಲ್ಲರಿಮೆಯೆಂತಹದು, ಎಂದರೆ, ನಾವು ಬಳಸುವ ಸೊಲ್ಲುಗಳ ಒಳರಚನೆ ಯೆಂತಹದು ಎಂಬುದನ್ನು ತಿಳಿದುಕೊಳ್ಳಲು ಹೊರಡಬೇಕಾಗುತ್ತದೆ. ಇಂತಹ ತಿಳಿವು ಮಾತನಾಡುವಾಗ ನಮ್ಮ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ಒಂದು ಕಿಟಿಕಿಯನ್ನೊದಗಿಸುತ್ತದೆ.
ಆದರೆ, ಇದಕ್ಕಿಂತ ಮುಕ್ಯವಾದ ಬೇರೆಯೂ ಹಲವು ಪ್ರಯೋಜನಗಳನ್ನು ನಾವು ಸೊಲ್ಲರಿಮೆಯ ತಿಳಿವಿನಿಂದ ಪಡೆಯಬಲ್ಲೆವು. ಇವುಗಳಲ್ಲಿ ಓದಲು ಬರೆಯಲು ಕಲಿಯುವುದು ಮತ್ತು ಬರಹವನ್ನು ಜಾಣ್ಮೆಯಿಂದ ಬಳಸಲು ಕಲಿಯುವುದು ಮುಕ್ಯವಾದವುಗಳು.
ಸಾಮಾನ್ಯವಾಗಿ, ಮಾತನಾಡುವುದಕ್ಕೆ, ಮತ್ತು ಇನ್ನೊಬ್ಬರು ಹೇಳಿದುದನ್ನು ಕೇಳಿ ತಿಳಿಯುವುದಕ್ಕೆ ನಮಗೆ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವು ಬೇಕಾಗುವುದಿಲ್ಲ. ಅರಿವಿಗೆ ಎಟಕದಂತಹ ತಿಳಿವೇ ಅದಕ್ಕೆ ಸಾಕಾಗುತ್ತದೆ. ಆದರೆ, ಚನ್ನಾಗಿ ಬರೆಯಲು ಕಲಿಯಬೇಕಿದ್ದಲ್ಲಿ, ಮತ್ತು ಇನ್ನೊಬ್ಬರು ಬರೆದುದನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕಿದ್ದಲ್ಲಿ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವೂ ಬೇಕಾಗುತ್ತದೆ. ಇದಕ್ಕೆ ಕಾರಣವೇನೆಂದರೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಮಾತನ್ನು ಕಲಿತುಕೊಳ್ಳುವ ಹಾಗೆ ನಾವು ಬರಹವನ್ನು ಕಲಿತುಕೊಳ್ಳುವುದಿಲ್ಲ.
ಮಾತಿಗೂ ಬರಹಕ್ಕೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಮತ್ತು ಈ ವ್ಯತ್ಯಾಸಗಳು ಕಂಡುಬರಲು ಕಾರಣವೇನು ಎಂಬುದನ್ನು ಕೆಳಗೆ ತುಸು ವಿವರವಾಗಿ ಪರಿಶೀಲಿಸಲಾಗಿದೆ:1.2.1 ಮಾತು ಮತ್ತು ಬರಹ : ವ್ಯತ್ಯಾಸಗಳು ಮಾತಿನಲ್ಲಿ ಬಳಕೆಯಾಗುವ ನುಡಿಗಿಂತ ಬರಹದಲ್ಲಿ ಬಳಕೆಯಾಗುವ ನುಡಿ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(1) ಮಾತಿನಲ್ಲಿ ಪದಗಳನ್ನೆಲ್ಲ ಒಟ್ಟೊಟ್ಟಿಗೆ ಬಳಸುತ್ತೇವೆ. ಆದರೆ ಬರೆಯು ವಾಗ ಅವನ್ನು ನಡುವೆ ಜಾಗ ಬಿಟ್ಟು ಬೇರೆ ಬೇರಾಗಿ ಬರೆಯಬೇಕಾಗುತ್ತದೆ. ಇಲ್ಲವಾದರೆ ಬರೆದುದನ್ನು ಓದಲು ತುಂಬಾ ಕಶ್ಟವಾಗಬಲ್ಲುದು. ಮಾತಿನಲ್ಲಿ ಕೆಲವೊಮ್ಮೆ ಸೊಲ್ಲುಗಳೂ ಒಟ್ಟೊಟ್ಟಿಗೆ ಬರುತ್ತವೆ. ಆದರೆ ಬರೆಯುವಾಗ ಅವನ್ನು ಬೇರ್ಪಡಿಸಿ, ಅವುಗಳ ಕೊನೆ ಎಲ್ಲಿದೆ ಎಂಬುದನ್ನು ಕೊನೆ(.), ಕೇಳ್ವಿ (?) ಇಲ್ಲವೇ ಬೆರಗು (!) ಸನ್ನೆಗಳ ಮೂಲಕ ಸೂಚಿಸುತ್ತಿರಬೇಕಾಗುತ್ತದೆ. (2) ಮಾತನಾಡುವಾಗ ಬಳಕೆಯಾಗುವ ಸೊಲ್ಲುಗಳು ತುಂಡು ತುಂಡಾ ಗಿರುವುದೇ ಹೆಚ್ಚು. ಆದರೆ ಬರೆಯುವಾಗ ಅವೆಲ್ಲ ಇಡಿ ಇಡಿಯಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಾತಿನಲ್ಲಿ ಚಿಕ್ಕ ಚಿಕ್ಕ ಸೊಲ್ಲುಗಳಿರುವುದೇ ಹೆಚ್ಚು. ಉದ್ದದ ಸೊಲ್ಲುಗಳಿದ್ದರೂ ಅವು ಮತ್ತು, ಆದರೆ ಮೊದಲಾದ ಕೆಲವೇ ಕೆಲವು ಪದಗಳಿಂದ ಜೋಡಿಸಿದವುಗಳಾಗಿರುತ್ತವೆ.
ಇದಕ್ಕೆ ಬದಲು, ಬರಹದಲ್ಲಿ ಹೆಚ್ಚು ಉದ್ದದ ಮತ್ತು ಹೆಚ್ಚು ತೊಡಕಿನ ಸೊಲ್ಲುಗಳು ಕಾಣಿಸಿಕೊಳ್ಳುತ್ತವೆ. ಜೋಡಿಸಿದ ಸೊಲ್ಲುಗಳಿಗಿಂತಲೂ ಸೊಲ್ಲು ಗಳನ್ನು ಒಳಸೊಲ್ಲುಗಳಾಗಿ ಬಳಸಿರುವಂತಹ ಸಿಕ್ಕಲು ಸೊಲ್ಲುಗಳು ಬರಹದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಬರೆದುದನ್ನು ಓದುಗರು ತಿರುತಿರುಗಿ ಓದಬಲ್ಲರಾದ ಕಾರಣ, ಅಂತಹ ಸಿಕ್ಕಲು ಸೊಲ್ಲುಗಳಿದ್ದರೂ ಅವರಿಗೆ ತೊಂದರೆಯಾಗುವುದಿಲ್ಲ. (3) ಮಾತನಾಡುವಾಗ ಆಲೋಚಿಸುವುದನ್ನೂ ಆಡುವುದನ್ನೂ ಒಟ್ಟೊಟ್ಟಿಗೆ ಮಾಡುತ್ತಿರುತ್ತೇವೆ. ಹಾಗಾಗಿ, ಮಾತಿನಲ್ಲಿ ವಿಶಯಗಳು ಒಂದು ಕ್ರಮದಲ್ಲಿ ಬರುವುದಿಲ್ಲ. ಒಂದನ್ನು ತಿಳಿಸುತ್ತಿರುವಾಗ ನಡುನಡುವೆ ಬೇರೆ ವಿಶಯಗಳೂ ಸೇರಿಕೊಳ್ಳಬಹುದು. ಈ ಕಾರಣಕ್ಕಾಗಿ, ಕೆಲವೊಮ್ಮೆ ಹೇಳಿದುದನ್ನೇ ಮತ್ತೆ ಮತ್ತೆ ಹೇಳುತ್ತಿರಬೇಕಾಗುತ್ತದೆ.
ಆದರೆ, ಬರೆಯುವಾಗ ಎಲ್ಲಾ ವಿಶಯಗಳನ್ನೂ ಮೊದಲಿಗೆ ಆಲೋಚಿಸಿ ಮತ್ತು ವಿಮರ್ಶಿಸಿ, ಅನಂತರ ಬರೆಯುತ್ತೇವೆ. ತಿಳಿಸಬೇಕಾಗಿರುವ ವಿಶಯಗಳನ್ನು ಒಂದು ಕ್ರಮದಲ್ಲಿ ಜೋಡಿಸಿ ಇರಿಸುತ್ತೇವೆ, ಮತ್ತು ಆದಶ್ಟು ಮಟ್ಟಿಗೆ ಒಮ್ಮೆ ಬರೆದ ವಿಶಯ ಮತ್ತೊಮ್ಮೆ ಅನವಶ್ಯಕವಾಗಿ ಬಾರದ ಹಾಗೆ ನೋಡಿಕೊಳ್ಳು ತ್ತೇವೆ.
(4) ಮಾತನಾಡುವಾಗ ಪದಗಳನ್ನು ಮಾತ್ರವಲ್ಲದೆ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ, ಮಯ್ಯ ನಿಲುವು ಮೊದಲಾದುವನ್ನೂ ಬಳಸುತ್ತೇವೆ. ಹಲವು ಕಡೆಗಳಲ್ಲಿ ತಿಳಿಸಬೇಕಾಗಿರುವ ವಿಶಯಗಳಲ್ಲಿ ಹೆಚ್ಚಿನವನ್ನೂ ಈ ಕಯ್ಸನ್ನೆ-ಕಣ್ಣುಸನ್ನೆಗಳ ಮೂಲಕವೇನೇ ತಿಳಿಸುತ್ತಿರುತ್ತೇವೆ.
ಇದಕ್ಕೆ ಬದಲು, ಬರಹದಲ್ಲಿ ಸೊಲ್ಲುಗಳ ಇಟ್ಟಳ, ಬರಹದ ಗುರುತುಗಳು, ಕುರಳು(ಪಾರಾ)ಗಳು, ಕೋಶ್ಟಕಗಳು, ಗೆರೆತಿಟ್ಟಗಳು ಮೊದಲಾದವುಗಳನ್ನು ಬಳಸುತ್ತೇವೆ. ಸೊಲ್ಲುಗಳ ಮೂಲಕ ತಿಳಿಸಲಾಗದ ಹಲವು ಹುರುಳುಗಳನ್ನು ಇಂತಹ ಇಟ್ಟಳ ಮತ್ತು ಗುರುತುಗಳ ಮೂಲಕ ಸೂಚಿಸುತ್ತೇವೆ.
1.2.2 ವ್ಯತ್ಯಾಸಗಳಿಗೆ ಕಾರಣಗಳು
ಮಾತು ಮತ್ತು ಬರಹಗಳ ನಡುವೆ ಕಾಣಿಸಿಕೊಳ್ಳುವ ಈ ವ್ಯತ್ಯಾಸಗಳಿಗೆ ನಾಲ್ಕು ಮುಕ್ಯ ಕಾರಣಗಳಿವೆ:
(1) (2) (3)
(4)
ಅವೆರಡಕ್ಕೆ ತೀರಾ ಬೇರಾಗಿರುವ ಗುರಿಗಳಿರುತ್ತವೆ; ಅವೆರಡು ಬಳಸುವ ಒಯ್ಯುಗೆ(ಮಾದ್ಯಮ)ಗಳು ಬೇರಾಗಿರುತ್ತವೆ; ಮಾತನಾಡುವವರ ಎದುರಿಗೇನೇ ಕೇಳುಗರು ಇರುವ ಹಾಗೆ ಬರಹಗಾರರ ಎದುರಿಗೆ ಓದುಗರು ಇರುವುದಿಲ್ಲ; ಮಾತು ಕಲಿಯಲು ಹುಟ್ಟಿನಿಂದಲೇ ಸಿಗುವ ಅಳವು ಇರುವ ಹಾಗೆ ಓದು-ಬರಹಗಳನ್ನು ಕಲಿಯಲು ಇರುವುದಿಲ್ಲ.
(1) ಗುರಿ ಬೇರೆ: ನುಡಿಯ ಮೂಲಕ ತಲಪಬೇಕಾಗಿರುವ ವ್ಯಕ್ತಿ ನಮ್ಮ ಎದುರಿಗೇನೇ ಇರುವಾಗ ನಾವು ಮಾತನ್ನು ಬಳಸುತ್ತೇವಲ್ಲದೆ ಬರಹವನ್ನು ಬಳಸಲು ಹೋಗುವುದಿಲ್ಲ. ಆತ ಎದುರಿನಲ್ಲಿ ಇಲ್ಲದಿರುವಾಗ ಮಾತ್ರ ಬರಹ ವನ್ನು ಬಳಸುತ್ತೇವೆ.
ಹರಟೆ ಹೊಡೆಯುವುದು, ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ತಿಳಿಸುವುದು ಮೊದಲಾದುವಕ್ಕೆ ಮಾತನ್ನು ಬಳಸುತ್ತೇವೆ. ಇದಕ್ಕೆ ಬದಲು, ವಿಶಯಗಳನ್ನು ತಿಳಿಸುವುದು, ನಡವಳಿಕೆಗಳನ್ನು ಬರೆದಿಡುವುದು, ಮರೆತುಹೋಗದಂತೆ ಸಂಗತಿ ಗಳನ್ನು ಗುರುತಿಸಿಡುವುದು ಇಲ್ಲವೇ ಪಟ್ಟಿಮಾಡುವುದು, ಮೊದಲಾದುವಕ್ಕೆ ಬರಹವನ್ನು ಬಳಸುತ್ತೇವೆ.ಇತ್ತೀಚೆಗೆ ದೂರವಾಣಿ, ಉಲಿಯಚ್ಚು, ಮಿಂಚಂಚೆ ಮೊದಲಾದವುಗಳ ಬಳಕೆಯಿಂದಾಗಿ, ಮಾತು ಮತ್ತು ಬರಹಗಳು ಹತ್ತಿರ ಬರುತ್ತಿವೆ: ಇವು ಮಾತಿನ ಕೆಲಸವನ್ನು ಬರಹದ ಮೂಲಕ ಮತ್ತು ಬರಹದ ಕೆಲಸವನ್ನು ಮಾತಿನ ಮೂಲಕ ನಡೆಸಲು ಬರುವಂತೆ ಮಾಡಿವೆ, ಮತ್ತು ಇದರಿಂದಾಗಿ ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸವೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗ ತೊಡಗಿದೆ. ಹೀಗಿದ್ದರೂ, ಮಾತು ಮತ್ತು ಬರಹಗಳ ಮುಕ್ಯ ಗುರಿಗಳು ಬೇರಾಗಿಯೇ ಇದ್ದು, ಅವುಗಳಿಂದಾಗಿ ಮೂಡಿಬರುವ ವ್ಯತ್ಯಾಸಗಳು ಹಾಗೆಯೇ ಉಳಿದುಕೊಂಡಿವೆ.
(2) ಒಯ್ಯುಗೆ ಬೇರೆ: ಮಾತಿನಲ್ಲಿ ನಾವು ಉಲಿಗಳನ್ನು ಬಳಸುತ್ತೇವೆ;
ಆದರೆ ಬರಹದಲ್ಲಿ ಬರಿಗೆ(ಅಕ್ಶರ)ಗಳನ್ನು ಬಳಸುತ್ತೇವೆ.
ಉಲಿಗಳು ಅವನ್ನು ಆಡಿದ ಕೂಡಲೇ ಮಾಯವಾಗಿಬಿಡುತ್ತವೆ. ಹಾಗಾಗಿ, ಮಾತನ್ನೊಮ್ಮೆ ಆಡಿದೆವೆಂದರೆ ಅದನ್ನು ಮತ್ತೆ ಹಿಂದಕ್ಕೆ ಪಡೆದುಕೊಳ್ಳಲಾರೆವು. ಹೇಳುವುದು ಸರಿಯಾಗುತ್ತಿಲ್ಲವೆಂದು ನಮ್ಮ ಮನಸ್ಸಿಗೆ ಅನಿಸಿದರೆ, ಅದನ್ನು ನಡುವೆಯೇ ನಿಲ್ಲಿಸಿಬಿಡುತ್ತೇವೆ, ಮತ್ತು ಇನ್ನೊಮ್ಮೆ ಹೇಳಲು ಸುರುಮಾಡು ತ್ತೇವೆ. ಈ ಕಾರಣಕ್ಕಾಗಿ, ಮಾತಿನಲ್ಲಿ ಬರುವ ಸೊಲ್ಲುಗಳು ಸಾಮಾನ್ಯವಾಗಿ ತುಂಡು ತುಂಡಾಗಿರುತ್ತವೆ.
ಆದರೆ, ಕಾಗದದ ಮೇಲೆ ಮೂಡಿಸಿದ ಬರಿಗೆಗಳು ಮತ್ತು ಬೇರೆ ಗುರುತು ಗಳು ಉಲಿಗಳ ಹಾಗೆ ಕೂಡಲೇ ಅಳಿಸಿಹೋಗುವುದಿಲ್ಲ. ಹಾಗಾಗಿ, ಬರೆದುದನ್ನು ಸರಿಪಡಿಸಿಕೊಳ್ಳಲು ನಮಗೆ ಸಾಕಶ್ಟು ಸಮಯವಿರುತ್ತದೆ. ಅದನ್ನು ಓದುಗ ರೆದುರು ಇರಿಸುವ ಮೊದಲು ಹಲವು ಬಾರಿ ಓದಿ ನೋಡಿ, ಅದರಲ್ಲಿ ನಮಗೆ ಬೇಕಾಗಿರುವ ಎಲ್ಲಾ ರೀತಿಯ ಬದಲಾವಣೆಗಳನ್ನೂ ಮಾಡಿಕೊಳ್ಳಬಲ್ಲೆವು. ಉತ್ತಮ ಬರಹವೊಂದನ್ನು ರಚಿಸುವುದಕ್ಕಾಗಿ ವರ್ಶಗಟ್ಟಲೆ ಬೇಕಿದ್ದರೂ ದುಡಿಯ ಬಲ್ಲೆವು.
ಮಾತಿನಲ್ಲಿ ಬರುವ ಉಲಿಗಳು ಒಂದರ ಹಿಂದೊಂದು ಮಾತ್ರ ಬರಬಲ್ಲು ವಲ್ಲದೆ ಒಮ್ಮೆಗೇ ಬರಲಾರವು. ಆದರೆ, ಬರಹದ ಬರಿಗೆಗಳನ್ನು ಒಂದರ ಮುಂದೆ ಒಂದರಂತೆ ಮಾತ್ರವಲ್ಲದೆ, ಮೇಲೆ-ಕೆಳಗೂ ಜೋಡಿಸಬಲ್ಲೆವು. ಅವನ್ನು ಓದುವವರೂ ಹಲವು ಗುರುತುಗಳನ್ನು ಒಮ್ಮೆಗೇನೇ ಗಮನಿಸಬಲ್ಲರು. (3) ಓದುಗರು ಬರೆಯುವವರ ಎದುರಿಗಿರುವುದಿಲ್ಲ: ಸಾಮಾನ್ಯವಾಗಿ, ಮಾತನಾಡುವವರ ಎದುರಿಗೇನೇ ಅವರ ಕೇಳುಗರಿರುತ್ತಾರೆ; ಆದರೆ, ಬರೆಯುವವರ ಎದುರಿಗೆ ಅವರ ಓದುಗರಿರುವುದು ತುಂಬಾ ಅಪರೂಪ.
ಕೇಳುಗರು ಎದುರಿಗೇನೇ ಇರುವ ಕಾರಣ, ತಮ್ಮ ಮಾತನ್ನು ಅವರು ಮೆಚ್ಚು ತ್ತಿದ್ದಾರೋ, ಇಲ್ಲವೇ ಅದು ಅವರಿಗೆ ಬೇಸರ ತರುತ್ತಿದೆಯೋ ಎಂಬುದು ಆಡುಗರಿಗೆ ಮಾತನಾಡುತ್ತಿರುವ ಹಾಗೆಯೇ ಗೊತ್ತಾಗುತ್ತಿರುತ್ತದೆ. ಕೇಳುಗರೂ ತಮ್ಮ ಅನಿಸಿಕೆಗಳನ್ನು ನಡುನಡುವೆ ತಿಳಿಸುತ್ತಿರುತ್ತಾರೆ. ಹಾಗಾಗಿ, ಸನ್ನಿವೇಶಕ್ಕೆ ತಕ್ಕ ಹಾಗೆ ಆಡುಗರು ತಮ್ಮ ಮಾತನ್ನು ಬದಲಾಯಿಸುತ್ತಾ ಹೋಗಬಲ್ಲರು. ತಾವು ಹೇಳಿದ್ದು ತಮ್ಮ ಕೇಳುಗರಿಗೆ ಸರಿಯಾಗಿ ಗೊತ್ತಾಗುತ್ತಿಲ್ಲವೆಂದು ಅನಿಸಿದರೆ, ಅದನ್ನು ಬೇರೆ ಬಗೆಯಲ್ಲಿ ಹೇಳುವ ಮೂಲಕ ಗೊತ್ತಾಗುವ ಹಾಗೆಯೂ ಅವರು ಮಾಡಬಲ್ಲರು.
ಆದರೆ, ಬರೆಯುವವರಿಗೆ ಓದುಗರ ಅನಿಸಿಕೆ ಏನಿರಬಹುದೆಂಬುದು ಕೂಡಲೇ ಗೊತ್ತಾಗುವುದಿಲ್ಲ. ಅದನ್ನವರು ಊಹಿಸಿಕೊಂಡು, ತಮ್ಮ ಬರಹ ವನ್ನು ಮುಂದುವರಿಸಬೇಕಾಗುತ್ತದೆ. ಯಾವ ರೀತಿಯಲ್ಲಿ ಬರೆದರೆ ಓದುಗರ ಕುತೂಹಲ ಉಳಿದೀತು ಎಂಬುದನ್ನೂ ಅವರು ತಾವೇ ಕಲ್ಪಿಸಿಕೊಳ್ಳ ಬೇಕಾಗುತ್ತದೆ. ಈ ಕಾರಣಕ್ಕಾಗಿ, ಬರಹದಲ್ಲಿ ಬರುವ ಸೊಲ್ಲುಗಳು ಮಾತಿನಲ್ಲಿ ಬರುವ ಸೊಲ್ಲುಗಳಿಗಿಂತ ಹಲವು ಬಗೆಯಲ್ಲಿ ಬೇರಾಗಿರಬೇಕಾಗುತ್ತದೆ.
ಕೇಳುಗರು ಎದುರಿಗೇನೇ ಇರುವ ಕಾರಣ, ಮಾತಿನೊಂದಿಗೆ ಕಣ್ಣುಸನ್ನೆ, ಕಯ್ಸನ್ನೆ ಮೊದಲಾದುವನ್ನೂ ಬಳಸಬಹುದು. ಎದುರಿಗೇನೇ ಇರುವ ವ್ಯಕ್ತಿ, ವಸ್ತು ಮೊದಲಾದುವನ್ನೂ ಮಾತಿನಲ್ಲಿ ಬಳಸಿಕೊಳ್ಳಬಹುದು. ಆದರೆ, ಬರಹಕ್ಕೆ ಇಂತಹದು ಯಾವುದೂ ನೆರವಿಗೆ ಬರುವುದಿಲ್ಲ. ತಿಳಿಸಬೇಕಾದುದನ್ನೆಲ್ಲ ಕಾಗದದ ಮೇಲೆ ಮೂಡುವ ಸೊಲ್ಲುಗಳ ಮೂಲಕವೇನೇ ತಿಳಿಸಬೇಕಾಗುತ್ತದೆ. (4) ಹುಟ್ಟಿನಿಂದಲೇ ಸಿಗುವ ಅಳವಿಲ್ಲ: ಮಾತು ಕಲಿಯಲು ಬೇಕಾಗುವ ಅಳವನ್ನು ನಾವು ಹುಟ್ಟಿನಿಂದಲೇ ಪಡೆದುಕೊಂಡು ಬಂದಿದ್ದೇವೆ. ಆದರೆ, ಬರಹ ಕಲಿಯಲು ಬೇಕಾಗುವ ಅಳವನ್ನು ನಾವು ಆ ರೀತಿ ಹುಟ್ಟಿನಿಂದಲೇ ಪಡೆದುಕೊಂಡು ಬಂದಿಲ್ಲ.
ಎಲ್ಲಾ ಮಕ್ಕಳೂ ಮಾತನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆದು ಕೊಳ್ಳುತ್ತಾರೆ. ಆರೋಗ್ಯ ಸರಿಯಿರುವ ಯಾವ ಮಗುವೂ ಮಾತು ಕಲಿಯ ದಿರುವುದಿಲ್ಲ. ಆದರೆ, ಓದುವ ಮತ್ತು ಬರೆಯುವ ಕೆಲಸವನ್ನು ಮಕ್ಕಳಿಗೆ ಯಾರಾದರೂ ಕಲಿಸಿಕೊಡಬೇಕಾಗುತ್ತದೆ. ಈಜುವುದು, ಸಯ್ಕಲ್ ತುಳಿ ಯುವುದು, ಕಾರು ಬಿಡುವುದು ಮೊದಲಾದ ಬೇರೆ ಹಲವಾರು ಚಳಕ (ಕವ್ಶಲ್ಯ)ಗಳ ಹಾಗೆ, ಓದುವುದು ಮತ್ತು ಬರೆಯುವುದೂ ಒಂದು ಚಳಕ ವಾಗಿದ್ದು, ಪ್ರಯತ್ನಪಟ್ಟು ಕಲಿತಲ್ಲಿ ಮಾತ್ರ ಅದು ದಕ್ಕುತ್ತದೆ.ಹೀಗೆ ಪ್ರಯತ್ನಪಟ್ಟು ಕಲಿಯಬೇಕಾಗಿರುವ ಎಲ್ಲಾ ಚಳಕಗಳ ಕಲಿಕೆಗಳಿಗೂ ಅವುಗಳ ಒಳಗುಟ್ಟಿನ ಅರಿವು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಈಜಿನ ಒಳಗುಟ್ಟನ್ನರಿತಿರುವವರು ಉಳಿದವರಿಗಿಂತ ಹೆಚ್ಚು ಚನ್ನಾಗಿ ಮತ್ತು ಹೆಚ್ಚು ಬೇಗನೆ ಈಜಲು ಕಲಿಯಬಲ್ಲರು. ಬರಹದ ಕಲಿಕೆಯೂ ಅಂತಹದೇ. ಅದರ ಒಳಗುಟ್ಟನ್ನು, ಎಂದರೆ ಅರಿವಿಗೆ ಎಟಕುವ ಸೊಲ್ಲರಿಮೆಯನ್ನು, ತಿಳಿದವರಿಗೆ ಅದನ್ನು ಹೆಚ್ಚು ಸುಳುವಾಗಿ, ಹೆಚ್ಚು ಚನ್ನಾಗಿ, ಮತ್ತು ಹೆಚ್ಚು ಬೇಗನೆ ಕಲಿಯಲು ಬರುತ್ತದೆ, ಮತ್ತು ಹೆಚ್ಚು ಚನ್ನಾಗಿ ಬಳಸಲು ಬರುತ್ತದೆ.
1.3 ಈ ಪುಸ್ತಕದ ಇಟ್ಟಳ
ಕನ್ನಡದ ಸೊಲ್ಲರಿಮೆ (ವ್ಯಾಕರಣ) ಯಾಕೆ ಬೇಕು ಎಂಬುದನ್ನು ಈ ಪುಸ್ತಕದ ಮುಂದಿನ ಹತ್ತು ಪಸುಗೆ(ಅದ್ಯಾಯ)ಗಳಲ್ಲಿ ವಿವರಿಸಲಾಗಿದೆ. ಮೇಲೆ ಸೂಚಿಸಿದ ಹಾಗೆ, ಅದರ ಪ್ರಯೋಜನ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಗಳಲ್ಲಿ ತುಂಬಾ ಹೆಚ್ಚಿನದಾಗಿರುವ ಕಾರಣ, ಈ ಪಸುಗೆಗಳಲ್ಲಿ ಹೆಚ್ಚಿನವೂ ಆ ಎರಡು ವಿಶಯಗಳ ಕುರಿತಾಗೆಯೇ ಇವೆ.
ಓದು-ಬರಹದ ಕಲಿಕೆಯಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದಿನ ನಾಲ್ಕು ಪಸುಗೆಗಳಲ್ಲಿ ವಿವರಿಸಲಾಗಿದೆ. ಚಿಕ್ಕ ಮಕ್ಕಳಿಗೆ ಓದಲು-ಬರೆಯಲು ಕಲಿಸುವುದಕ್ಕೂ ದೊಡ್ಡವರಿಗೆ ಕಲಿಸುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಎಂತಹವು, ಅವರ ಕಲಿಕೆಯಲ್ಲಿ ಸೊಲ್ಲರಿಮೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಎರಡನೇ ಪಸುಗೆ ಯಲ್ಲಿ ವಿವರಿಸಲಾಗಿದೆ.
ಬರೆಯುವುದರಲ್ಲಿ ಹೆಚ್ಚಿನ ಜಾಣ್ಮೆಯನ್ನು ಪಡೆಯುವುದರಲ್ಲೂ ಸೊಲ್ಲರಿಮೆಯ ತಿಳಿವು ನೆರವಾಗುತ್ತದೆ. ಸಾಮಾನ್ಯವಾಗಿ ಮಾತನಾಡು ತ್ತಿರುವಾಗ ಮಾತಿನ ಹಿಂದಿರುವ ಕಟ್ಟಲೆಗಳ ಕುರಿತು ಆಲೋಚಿಸಲು ನಮಗೆ ಸಮಯವೇ ಸಿಗುವುದಿಲ್ಲ. ಮಾತು ಬೇಗನೆ ನಡೆಯುತ್ತಿರುವುದು ಮತ್ತು ಆಡಿದೊಡನೆಯೇ ಅದು ಇಲ್ಲವಾಗುತ್ತಿರುವುದು ಇದಕ್ಕೆ ಕಾರಣ.
ಆದರೆ, ಬರೆಯುವ ಕೆಲಸವನ್ನು ನಡೆಸುತ್ತಿರುವಾಗ ಅದಕ್ಕಾಗಿ ನಾವು ಎಶ್ಟು ಹೊತ್ತನ್ನು ಬೇಕಿದ್ದರೂ ಬಳಸಿಕೊಳ್ಳಬಲ್ಲೆವು. ಪದಗಳನ್ನು ಮತ್ತು ಸೊಲ್ಲಿನ ಇಟ್ಟಳಗಳನ್ನು ಬರೆಯುವ ಸಮಯದಲ್ಲೇನೇ ಆರಿಸಿಕೊಂಡು ಮುಂದುವರಿಯ ಬಲ್ಲೆವು, ಮತ್ತು ಬರೆದ ಬರಹ ಮಾತಿನ ಹಾಗೆ ಅಳಿದು ಹೋಗದೆ ನಮ್ಮ ಎದುರಿಗೇನೇ ಉಳಿಯುವ ಕಾರಣ, ಅದನ್ನು ತಿರುತಿರುಗಿ ಓದಿನೋಡಿ, ಅದರಲ್ಲಿ
ಮಾರ್ಪಾಡುಗಳನ್ನೂ ಮಾಡಿಕೊಳ್ಳಬಲ್ಲೆವು. ಹಾಗಾಗಿ, ಮಾತನಾಡುವಾಗ ನಮಗೆ ಬೇಕಾಗದಿರುವ ಅರಿವಿಗೆ ಎಟಕುವಂತಹ ಸೊಲ್ಲರಿಮೆಯ ತಿಳಿವು ಬರಹದ ಕೆಲಸವನ್ನು ಬಳಸುವಲ್ಲಿ ನಮ್ಮ ನೆರವಿಗೆ ಬರುತ್ತದೆ.
ಬರಹಗಳಲ್ಲಿ ತಡೆ (,), ಅರೆಕೊನೆ (;), ಓರೆಗೆರೆ (/), ಕೊಗೆತ (:) ಮೊದಲಾದ ಹಲವು ಬಗೆಯ ಗುರುತುಗಳನ್ನು ಬಳಸಬೇಕಾಗುತ್ತದೆ. ಬರೆದು ದನ್ನು ಸೊಲ್ಲುಗಳಾಗಿ, ಕುರಳು(ಪಾರಾ)ಗಳಾಗಿ ಮತ್ತು ಪಸುಗೆ(ಅದ್ಯಾಯ)ಗಳಾಗಿ ವಿಂಗಡಿಸಿಕೊಳ್ಳಬೇಕಾಗುತ್ತದೆ. ಇವುಗಳನ್ನು ಸರಿಯಾಗಿ ಬಳಸಿದಲ್ಲಿ ಬರಹ ಕ್ಕಿರುವ ಹಲವು ಕೊರತೆಗಳು ಇಲ್ಲವಾಗುತ್ತವೆ. ಆದರೆ, ಈ ಗುರುತುಗಳನ್ನು ಸರಿಯಾಗಿ, ಎಂದರೆ ಓದುಗರಿಗೆ ನೆರವಾಗುವಂತೆ, ಬಳಸಬೇಕಿದ್ದಲ್ಲಿ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಈ ಎಲ್ಲಾ ವಿಶಯಗಳನ್ನೂ ಮೂರನೇ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
ಸಾಮಾನ್ಯ ಬರಹಗಳಿಗೂ ಅರಿಮೆಯ (ವಿಜ್ನಾನದ) ಬರಹಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಅರಿಮೆಯ ಬರಹಗಳಲ್ಲಿ ವಿಶಯವನ್ನು ಹೆಚ್ಚು ಅಡಕ ವಾಗಿ ಮತ್ತು ಕಟ್ಟುನಿಟ್ಟಾಗಿ ತಿಳಿಸಬೇಕಾಗುತ್ತದೆ. ಹಾಗಾಗಿ, ಅದರಲ್ಲಿ ಬರುವ ಸೊಲ್ಲುಗಳ ಇಟ್ಟಳಗಳು ಸಾಮಾನ್ಯ ಬರಹಗಳಲ್ಲಿ ಬರುವವುಗಳಿಂದ ಬೇರಾ ಗಿರುತ್ತವೆ. ಇಂತಹ ಬರಹಗಳು ಓದುಗರಿಗೆ ತೊಡಕಿನವಾಗಿ ಕಾಣಿಸಲು ಇದು ಒಂದು ಕಾರಣ.
ಅರಿಮೆಯ ಬರಹಗಳನ್ನು ಬರೆಯುವವರಿಗೆ ಮತ್ತು ಅರಿಮೆಯ (ಪಾರಿಬಾಶಿಕ) ಪದಗಳನ್ನು ಹೊಸದಾಗಿ ಉಂಟುಮಾಡಿಕೊಡುವವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ; ಇಲ್ಲವಾದರೆ ಅವರು ಬರೆದ ಅರಿಮೆಯ ಬರಹಗಳು ಇನ್ನಶ್ಟು ತೊಡಕಿನವಾಗಬಲ್ಲುವು, ಮತ್ತು ಅವರು ಉಂಟು ಮಾಡುವ ಅರಿಮೆಯ ಪದಗಳು ಅವನ್ನು ಬಳಸುವವರಲ್ಲಿ ಗೊಂದಲವನ್ನೂ ಉಂಟುಮಾಡಬಲ್ಲುವು. ಕನ್ನಡದ ಅರಿಮೆಯ ಬರಹಗಳು ಈ ಎರಡು ಕಾರಣ ಗಳಿಂದಾಗಿ ಹೇಗೆ ತುಂಬಾ ತೊಡಕಿನವಾಗಿವೆ ಎಂಬುದನ್ನು ನಾಲ್ಕನೇ ಪಸುಗೆ ಯಲ್ಲಿ ವಿವರಿಸಲಾಗಿದೆ.
ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳು ಬೇರೆಯೇ ಒಂದು ಕಾರಣಕ್ಕಾಗಿ ಇತರ ಬರಹಗಳಿಂದ ಬೇರಾಗಿವೆ: ಸಾಮಾನ್ಯ ಬರಹಗಳಲ್ಲಿ ಬಳಕೆಯಾಗುವ ಕಟ್ಟಳೆಗಳಲ್ಲಿ ಕೆಲವನ್ನು ಮುರಿಯುವ ಮೂಲಕ, ಮತ್ತು ಬೇರೆ ಕೆಲವನ್ನು ಹೊಸ ಬಳಕೆಗಳಲ್ಲಿ ತೊಡಗಿಸುವ ಮೂಲಕ, ಈ ನಲ್ಬರಹಗಳು ಓದುಗನ ಗಮನವನ್ನು ಬರಹದ ಹುರುಳಿನಿಂದ ಬರಹದ ಕಡೆಗೆ ಸೆಳೆಯಬೇಕಾಗಿದೆ. ಈ ಕೆಲಸವನ್ನು ಜಾಣ್ಮೆಯಿಂದ ನಡೆಸುವಲ್ಲಿ ಹೇಗೆ ಸೊಲ್ಲರಿಮೆಯ ತಿಳಿವು ನೆರವಿಗೆ ಬರಬಲ್ಲುದು ಎಂಬುದನ್ನು ಅಯ್ದನೆಯ ಪಸುಗೆಯಲ್ಲಿ ವಿವರಿಸಲಾಗಿದೆ.
ಬರಹಗಳಲ್ಲಿ ಬಂದಿರುವ ಸೊಲ್ಲುಗಳು ಇಪ್ಪುರುಳಿನವಾಗಿ (ಎಂದರೆ ಎರಡು ಇಲ್ಲವೇ ಹೆಚ್ಚು ಹುರುಳಿನವಾಗಿ) ಕಾಣಿಸಿಕೊಳ್ಳಲು ಎರಡು ಕಾರಣಗಳಿವೆ: ಅವುಗಳಲ್ಲಿ ಬರುವ ಪದವೊಂದಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದು ಒಂದು ಕಾರಣ, ಮತ್ತು ಅವಕ್ಕೆ ಒಂದಕ್ಕಿಂತ ಹೆಚ್ಚು ಇಟ್ಟಳಗಳಿರುವುದು ಇನ್ನೊಂದು ಕಾರಣ. ಇಂತಹ ಸೊಲ್ಲುಗಳು ಕೆಲವರಿಗೆ ತೊಡಕಾಗಿರುತ್ತವೆ, ಮತ್ತು ಇನ್ನು ಕೆಲವರಿಗೆ ಒತ್ತಾಸೆಯಾಗಿರುತ್ತವೆ. ತೊಡಕಾಗಿದ್ದಲ್ಲಿ ಅವನ್ನು ಇಲ್ಲವಾಗಿಸುವುದು ಇಲ್ಲವೇ ಹತೋಟಿಯಲ್ಲಿರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಬೇಕಾಗುತ್ತದೆ, ಮತ್ತು ಒತ್ತಾಸೆಯಾಗಿದ್ದಲ್ಲಿ ಅವನ್ನು ತಮ್ಮ ಬರಹಗಳಲ್ಲಿ ಜಾಣ್ಮೆಯಿಂದ ಬಳಸುವುದು ಹೇಗೆ ಎಂಬುದನ್ನು ತಿಳಿಯ ಬೇಕಾಗುತ್ತದೆ. ಈ ಎರಡು ಬಗೆಯ ಕೆಲಸಗಳಿಗೂ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗಬಲ್ಲುದು ಎಂಬುದನ್ನು ಆರನೇ ಪಸುಗೆಯಲ್ಲಿ ವಿವರಿಸಲಾಗಿದೆ. ಇವತ್ತು ಬೇರೆ ಬೇರೆ ದೇಶಗಳ ನಡುವೆ ಪತ್ತುಗೆ(ಸಂಬಂದ)ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ, ಮತ್ತು ಬೇರೆ ಬೇರೆ ನುಡಿಗಳನ್ನಾಡುವ ಜನರ ನಡುವೆಯೂ ಪತ್ತುಗೆಗಳು ಹೆಚ್ಚುತ್ತಿವೆ. ಈ ಕಾರಣಕ್ಕಾಗಿ, ಇವತ್ತು ಹಲವು ಮಂದಿ ತಮ್ಮ ತಾಯ್ನುಡಿಯನ್ನು ಮಾತ್ರವಲ್ಲದೆ ಬೇರೆ ನುಡಿಗಳನ್ನೂ ಕಲಿಯಬೇಕಾಗುತ್ತಿದೆ. ಇಂತಹ ಕಲಿಕೆಯನ್ನು ಬೇಗನೆ ಮತ್ತು ಚನ್ನಾಗಿ ನಡೆಸುವಲ್ಲಿ ಈ ನುಡಿಗಳ ಸೊಲ್ಲರಿಮೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಏಳನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಇದಲ್ಲದೆ, ಇವತ್ತು ಇಂಗ್ಲಿಶ್ನಂತಹ ನುಡಿಗಳಿಂದ ಬೇರೆ ಹಲವಾರು ನುಡಿಗಳಿಗೆ ಬರಹಗಳನ್ನು ನುಡಿಮಾರುವ (ಅನುವಾದಿಸುವ) ಕೆಲಸವೂ ಎಡೆಬಿಡದೆ ನಡೆಯುತ್ತಿರಬೇಕಾಗಿದೆ. ಯಾಕೆಂದರೆ, ಇವತ್ತು ಹೆಚ್ಚು ಹೆಚ್ಚು ಮಾಹಿತಿಗಳನ್ನು ಈ ಕೆಲವು ನುಡಿಗಳಲ್ಲಿ ಮಾತ್ರವೇ ಕಲೆಹಾಕಲಾಗುತ್ತಿದೆ. ನುಡಿಮಾರುವ ಕೆಲಸವನ್ನು ಎಣ್ಣುಕ(ಕಂಪ್ಯೂಟರ್)ಗಳ ಮೂಲಕ ನಡೆಸುವ ಹಾಗಾದಲ್ಲಿ, ಈ ನುಡಿಗಳಲ್ಲಿರುವ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರು ಸುಳುವಾಗಿ ಪಡೆಯುವಂತಾಗಬಲ್ಲುದು. ಆದರೆ ಎಣ್ಣುಕಗಳಿಗೆ ಈ ಕಸುವು ಸಿಗುವ ಹಾಗೆ ಮಾಡಬೇಕಿದ್ದಲ್ಲಿ, ಅದಕ್ಕೆ ಹಲವಾರು ನುಡಿಗಳ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಇದನ್ನು ಎಂಟನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಒಂದು ನುಡಿಯನ್ನು ಹೊಸ ಹೊಸ ಸನ್ನಿವೇಶಗಳಲ್ಲಿ ಬಳಸ ಬೇಕೆಂದಿರುವವರು ಆ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಹಾಗೆ ಅದರಲ್ಲಿ ಹಲವಾರು ಮಾರ್ಪಾಡುಗಳನ್ನು ನಡೆಸಬೇಕಾಗುತ್ತದೆ. ಎತ್ತುಗೆಗಾಗಿ, ಅದನ್ನು ಬರಹಕ್ಕೆ ಇಳಿಸಿಲ್ಲವಾದಲ್ಲಿ ಅದಕ್ಕೊಂದು ಹೊಸ ಲಿಪಿಯನ್ನು ಒದಗಿಸಿ ಕೊಡ ಬೇಕಾಗುತ್ತದೆ, ಮತ್ತು ಅದರಲ್ಲಿ ಸಾಕಶ್ಟು ಪದಗಳು ಇಲ್ಲವಾದಲ್ಲಿ ಹಲವು ಹೊಸ ಪದಗಳನ್ನು ಅದರಲ್ಲಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ಇಂತಹ ಮಾರ್ಪಾಡುಗಳನ್ನು ನುಡಿಹಮ್ಮುಗೆಗಳ ಮೂಲಕ ಹೆಚ್ಚು ವೇಗವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಆದರೆ, ಈ ರೀತಿ ನುಡಿಹಮ್ಮುಗೆಗಳನ್ನು ಹಮ್ಮಿಕೊಳ್ಳುವವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗು ತ್ತದೆ. ಇಲ್ಲವಾದರೆ, ಅವರು ಹಮ್ಮಿಕೊಂಡ ಮಾರ್ಪಾಡುಗಳು ನುಡಿಯನ್ನು ಬಳಸುವವರಿಗೆ ತುಂಬಾ ತೊಂದರೆ ಕೊಡಬಲ್ಲುವು. ಈ ವಿಶಯವನ್ನು ಒಂಬತ್ತನೇ ಪಸುಗೆಯಲ್ಲಿ ವಿವರಿಸಲಾಗಿದೆ.
ಕೆಲವು ಮಕ್ಕಳಿಗೆ ಹುಟ್ಟಿನ ತೊಂದರೆಯಿಂದಾಗಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ದೊಡ್ಡವರಲ್ಲೂ ಕೆಲವರು ಮಿದುಳಿಗೆ ಪೆಟ್ಟಾದುದರಿಂದಾಗಿ ತಮ್ಮ ಮಾತನ್ನು ತುಸುವೋ ಹೆಚ್ಚೋ ಕಳೆದುಕೊಂಡಿರುತ್ತಾರೆ. ಇಂತಹ ಮಾತಿನ ತೊಂದರೆಗಳನ್ನು ಬಗೆಹರಿಸುವಲ್ಲಿ ಇಲ್ಲವೇ ಹತೋಟಿಗೆ ತಂದು ಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗಬಲ್ಲುದು ಎಂಬುದನ್ನು ಹತ್ತನೇ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
ಇಲ್ಲಿ ಮುಕ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ, ಸೊಲ್ಲರಿಮೆ ಎಂಬುದು ಒಂದು ವಿಚಿತ್ರವಾದ ವಿಶಯವೇನಲ್ಲ. ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಎಗ್ಗಿಲ್ಲದೆ ಬಳಸುವ ಮಾತಿನ ಹಿಂದಿರುವ ಕಟ್ಟಲೆಗಳೆಂತಹವು ಎಂಬುದನ್ನಶ್ಟೇ ಅದು ತಿಳಿಸುತ್ತದೆ. ಈ ಕಟ್ಟಲೆಗಳು ನಮ್ಮ ನುಡಿಯ ಬೇರೆ ಬೇರೆ ಬಳಕೆಗಳಲ್ಲಿ ಸ್ವಲ್ಪ ಮಟ್ಟಿಗೆ ಬೇರೆ ಬೇರಾಗಿಯೂ ಇರುತ್ತದೆ. ಹಾಗಾಗಿ, ಅಂತಹ ಬಳಕೆಗಳನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಈ ಕಟ್ಟಲೆಗಳ ಅರಿವು ನೆರವನ್ನೀಯಬಲ್ಲುದು. ಇದು ಹೇಗೆ ಎಂಬುದನ್ನು ತಿಳಿಸುವುದೇ ಈ ಪುಸ್ತಕದ ಮುಕ್ಯ ಗುರಿಯಾಗಿದೆ.
ಎರಡನೇ ಪಸುಗೆ — ಓದು-ಬರಹದ ಕಲಿಕೆ
2.1 ಶಾಲೆಯಲ್ಲಿ ಕನ್ನಡದ ಕಲಿಕೆ
ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ತಮ್ಮ ಆಡುನುಡಿಯಲ್ಲಿ (ಕನ್ನಡದಲ್ಲಿ) ಮಾತನಾಡಲು ತುಂಬಾ ಚನ್ನಾಗಿ ತಿಳಿದಿರುತ್ತದೆ. ಶಾಲೆಯಲ್ಲಿ ಅವರು ಮೊದಲಿಗೆ ಮಾಡಬೇಕಾಗಿರುವ ಕೆಲಸವೇನೆಂದರೆ, ತಮ್ಮ ಆಡುನುಡಿಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ (ಎಂದರೆ ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಹೆಚ್ಚು ಕಡಿಮೆ ಒಂದೇ ರೂಪದಲ್ಲಿರುವ ಕನ್ನಡದಲ್ಲಿ) ಮಾತನಾಡಲು ಕಲಿಯುವುದು ಮತ್ತು ಅದರಲ್ಲೇನೇ ಓದಲು ಮತ್ತು ಬರೆಯಲು ಕಲಿಯುವುದು.
ಗಣಿತ, ವಿಜ್ನಾನ, ಚರಿತ್ರೆ ಮೊದಲಾದ ಬೇರೆಯೂ ಹಲವು ವಿಶಯಗಳನ್ನು ಅವರು ಶಾಲೆಯಲ್ಲಿ ಕಲಿಯಬೇಕಾಗುತ್ತದೆ. ಆದರೆ, ಈ ಎಲ್ಲಾ ಕಲಿಕೆಗಳನ್ನೂ ಅವರು ಎಲ್ಲರ ಕನ್ನಡದ ಮೂಲಕವೇನೇ ನಡೆಸಬೇಕಾಗುತ್ತದೆ. ಅದು ಅವರ ಬೇರೆಲ್ಲಾ ಕಲಿಕೆಗಳಿಗೂ ಒಂದು ಅಡಿಗಟ್ಟನ್ನು ಒದಗಿಸುತ್ತದೆ. ಹಾಗಾಗಿ, ಬೇರೆಲ್ಲಾ ಕಲಿಕೆಗಳಿಗಿಂತಲೂ ಎಲ್ಲರ ಕನ್ನಡದ ಕಲಿಕೆಗೆ ನಾವು ಹೆಚ್ಚಿನ ಗಮನ ಕೊಡಬೇಕಾಗಿದೆ.
ಇಲ್ಲಿ ಎರಡು ಮುಕ್ಯ ಕೆಲಸಗಳು ಕಲಿಸುಗರ ಮುಂದಿವೆ: ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಸುವುದು ಮತ್ತು ಅದರಲ್ಲೇನೇ ಓದಲು ಮತ್ತು ಬರೆಯಲು ಕಲಿಸುವುದು. ಮಾತನಾಡುವುದು ಹೇಗೆ ಎಂಬುದು ಮಕ್ಕಳಿಗೆ ಗೊತ್ತಿದೆ. ಹಾಗಾಗಿ, ಎಲ್ಲರ ಕನ್ನಡದಲ್ಲಿ ಮಾತನಾಡುವುದೆಂದರೆ, ಕನ್ನಡದ ಒಂದು ರೂಪದ ಬದಲು ಇನ್ನೊಂದು ರೂಪವನ್ನು ಮಾತಿನಲ್ಲಿ ಬಳಸಲು ಕಲಿಯುವುದು. ಇದನ್ನು ಅವರು ಹೆಚ್ಚು ತೊಂದರೆಯಿಲ್ಲದೆ ನಡೆಸಬಲ್ಲರು.
ಆದರೆ, ಓದಲು ಮತ್ತು ಬರೆಯಲು ಕಲಿಯುವುದು ಶಾಲೆಮಕ್ಕಳ ಮಟ್ಟಿಗೆ ಒಂದು ತೀರ ಹೊಸ ಬಗೆಯ ಕೆಲಸವಾಗಿದೆ. ಯಾಕೆಂದರೆ, ಅದು ಅವರು
ಹುಟ್ಟಿನಿಂದಲೇ ಪಡೆಯಬಲ್ಲ ಕೆಲಸಗಳಲ್ಲಿ ಸೇರಿಲ್ಲ. ಅವರಶ್ಟಕ್ಕೇ ಬಿಟ್ಟರೆ ಮಕ್ಕಳು ಮಾತನಾಡಲು ಕಲಿಯುತ್ತಾರೆ, ಆದರೆ ಓದಲು ಬರೆಯಲು ಕಲಿಯುವುದಿಲ್ಲ.
ಇದಲ್ಲದೆ, ಮೇಲೆ (1.2.1)ರಲ್ಲಿ ತಿಳಿಸಿದ ಹಾಗೆ, ಮಾತು ಮತ್ತು ಬರಹ ಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ. ಮಾತಿನಲ್ಲಿ ಬಳಸುವ ಎಲ್ಲರ ಕನ್ನಡ ಮತ್ತು ಬರಹಗಳಲ್ಲಿ ಬಳಸುವ ಎಲ್ಲರ ಕನ್ನಡಗಳ ನಡುವೆಯೂ ಇವೇ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಶಾಲೆಯಲ್ಲಿ ಮಕ್ಕಳು ಎಲ್ಲರ ಕನ್ನಡ ದಲ್ಲಿ ಮಾತನಾಡುವುದರೊಂದಿಗೆ ಓದಲು ಮತ್ತು ಬರೆಯಲು ಕಲಿಯ ಬೇಕಿದ್ದಲ್ಲಿ, ಅವರು ಈ ಹೊಸ ಬಗೆಯ ಬರಹದ ಕನ್ನಡವನ್ನೂ ಕಲಿಯ ಬೇಕಾಗುತ್ತದೆ.
ಈ ಕೆಲಸವನ್ನು ನಡೆಸುವಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಸಾಕಶ್ಟು ನೆರವು ನೀಡಬಲ್ಲುದು. ಇದು ಹೇಗೆ ಎಂಬುದನ್ನು, ಮತ್ತು ಯಾವ ರೀತಿಯಲ್ಲಿ ಅದನ್ನು ಮಕ್ಕಳ ಕಲಿಕೆಯಲ್ಲಿ ಬಳಸಬಲ್ಲೆವು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
2.2 ಓದು-ಬರಹದ ಕಲಿಕೆಗೆ ಸೊಲ್ಲರಿಮೆಯ ನೆರವು
ಮಕ್ಕಳಿಗೆ ಅವರ ತಾಯ್ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸುವ ಸಮಯದಲ್ಲಿ ಆ ನುಡಿಯ ಸೊಲ್ಲರಿಮೆಯನ್ನೂ ಕಲಿಸಬೇಕೇ, ಹಾಗೆ ಕಲಿಸುವುದರಿಂದ ಅವರಿಗೆ ಓದು-ಬರಹಗಳನ್ನು ಕಲಿಯುವುದರಲ್ಲಿ ನೆರವೇನಾದರೂ ದೊರಕಬಲ್ಲುದೇ ಮತ್ತು ಕಲಿಸುವುದಿದ್ದಲ್ಲಿ ಅದನ್ನು ಯಾವ ರೀತಿಯಲ್ಲಿ ಕಲಿಸಬೇಕು ಎಂಬ ವಿಶಯದಲ್ಲಿ ತುಂಬಾ ಚರ್ಚೆಗಳು ನಡೆದಿವೆ, ಮತ್ತು ಈಗಲೂ ನಡೆಯುತ್ತಿವೆ.
ಮಕ್ಕಳಿಗೆ ನುಡಿಯ ಸೊಲ್ಲರಿಮೆಯನ್ನು ಕಲಿಸುವುದು ನಿಜಕ್ಕೂ ತುಂಬಾ ತೊಡಕಿನ ಕೆಲಸ. ಇದಕ್ಕೆ ಎರಡು ಕಾರಣಗಳಿವೆ: ಮೊದಲನೆಯದಾಗಿ, ಸೊಲ್ಲರಿಮೆಯಲ್ಲಿ ಬರುವ ಕಟ್ಟಲೆಗಳೆಲ್ಲ ತುಂಬಾ ತೊಡಕು ತೊಡಕಾದವುಗಳು. ಅವುಗಳಲ್ಲಿ ಯಾವ ಕಟ್ಟಲೆಯೂ ಬೇರಾಗಿ ನಿಲ್ಲುವುದಿಲ್ಲ; ಎಲ್ಲವೂ ಉಳಿದ ಹಲವಾರು ಕಟ್ಟಲೆಗಳೊಂದಿಗೆ ಹೆಣೆದಿರುತ್ತವೆ. ಹಾಗಾಗಿ, ಯಾವ ಸೊಲ್ಲರಿಮೆಯ ಕಟ್ಟಲೆಯನ್ನು ಕಲಿಸಬೇಕಿದ್ದರೂ, ಅದಕ್ಕೆ ಬೇರೆ ಕಟ್ಟಲೆ ಗಳೊಂದಿಗಿರುವ ಕೊಂಡಿಗಳನ್ನೂ ಕಲಿಸಿಕೊಡಬೇಕಾಗುತ್ತದೆ.
ಓದು-ಬರಹದ ಕಲಿಕೆ
ಎರಡನೆಯದಾಗಿ, ಸೊಲ್ಲರಿಮೆಯ ಕಟ್ಟಲೆಗಳು ತಮ್ಮ ಓದಿಗೆ ಇಲ್ಲವೇ ಬರವಣಿಗೆಗೆ ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುವು ಎಂಬುದು ಅದನ್ನು ಕಲಿಯುವವರಿಗೆ ಸುಳುವಾಗಿ ಗೊತ್ತಾಗುವುದಿಲ್ಲ. ಅವು ಯಾಕೆ ಬೇಕಾಗುತ್ತವೆ ಎಂಬುದನ್ನು ತಿಳಿಯದವರಿಗೆ ಅವನ್ನು ಕಲಿಯುವುದರಲ್ಲಿ ಯಾವ ಹುರುಪೂ ಇರುವುದಿಲ್ಲ. ಅವುಗಳ ಕಲಿಕೆ ಬರೇ ಒಂದು ಯಾಂತ್ರಿಕ ಕೆಲಸವಾಗಿಬಿಡುತ್ತದೆ. ಈ ಎರಡನೇ ಸಮಸ್ಯೆಯನ್ನು ಹೋಗಲಾಡಿಸುವುದಕ್ಕಾಗಿ, ಸೊಲ್ಲರಿಮೆಯ ಕಟ್ಟಲೆಗಳನ್ನು ಕಲಿಸುವವರು ಅವನ್ನೊಂದು ವಿಶಯವಾಗಿ ಕಲಿಸಲು ಹೋಗ ಬಾರದು. ನೇರವಾಗಿ ಓದು ಮತ್ತು ಬರವಣಿಗೆಗಳಲ್ಲಿ ಅವು ಹೇಗೆ ನೆರವಿಗೆ ಬರುತ್ತವೆ ಎಂಬುದನ್ನು ತಿಳಿಸಿಕೊಡುವ ಮೂಲಕ ಅವನ್ನು ಕಲಿಸಬೇಕು. ಹೀಗೆ ಮಾಡಿದಲ್ಲಿ, ಮಕ್ಕಳಿಗೆ ಅವನ್ನು ತಿಳಿದುಕೊಳ್ಳಬೇಕೆಂಬ ಹುರುಪು ಹುಟ್ಟುತ್ತದೆ, ಮತ್ತು ಅವನ್ನು ಕಲಿಸುವ ಕೆಲಸ ಹೆಚ್ಚು ಸುಳುವಾಗುತ್ತದೆ.
ಹಿಂದಿನ ಕಾಲದ ಶಾಲೆಗಳಲ್ಲಿ ಸೊಲ್ಲರಿಮೆಯನ್ನು ಬೇರೆಯೇ ಒಂದು ವಿಶಯವಾಗಿ ಕಲಿಸಲಾಗುತ್ತಿತ್ತು. ಇದರಿಂದಾಗಿ, ಅದೊಂದು ತುಂಬಾ ತೊಡಕು ತೊಡಕಾದ ಮತ್ತು ತೀರಾ ಅನವಶ್ಯಕವಾದ ವಿಶಯವೆಂಬುದಾಗಿ ಅದನ್ನು ಕಲಿಯುವವರಿಗೆ ಮಾತ್ರವಲ್ಲ, ಕಲಿಸುವವರಿಗೂ ಅನಿಸುತ್ತಿತ್ತು. ಇದನ್ನು ಗಮನಿಸಿದ ಕೆಲವರು ತಿಳಿವಿಗರು ನುಡಿಯ ಕಲಿಕೆಗೆ ಸೊಲ್ಲರಿಮೆಯ ತಿಳುವಳಿಕೆ ಬೇಕಾಗಿಲ್ಲ; ಅದರಿಂದ ಕಲಿಕೆಗೆ ಯಾವ ನೆರವೂ ಸಿಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು.
ಆದರೆ, ನಿಜಕ್ಕೂ ಇದೊಂದು ಗಡಿಬಿಡಿಯ ತೀರ್ಮಾನವಾಗಿತ್ತು. ಯಾಕೆಂದರೆ, ಯಾವ ಕೆಲಸವೇ ಆಗಲಿ, ಅದನ್ನು ಜಾಣ್ಮೆಯಿಂದ ನಡೆಸಬೇಕೆಂದಿರುವವರಿಗೆ ಅದರ ಒಳಗುಟ್ಟಿನ ತಿಳಿವು ನೆರವಿಗೆ ಬರದೆ ಇರಲಾರದು. ಎತ್ತುಗೆಗಾಗಿ, ಕಾರನ್ನು ಓಡಿಸುವವರು ಕಾರಿನ ಬೇರೆ ಬೇರೆ ಅಂಗಗಳ ಗುರಿ, ಅವುಗಳ ಅಳವು-ನಲುವುಗಳು, ಅವುಗಳ ಕೆಲಸದ ಮೇಲೆ ಗಾಳಿ, ಮಳೆ, ಬಿಸಿಲು ಇಲ್ಲವೇ ದಾರಿಯ ಗೊತ್ತುಪಾಡುಗಳಿಂದ ಉಂಟಾಗಬಹುದಾದ ಅಡಚಣೆಗಳು ಮೊದಲಾದುವನ್ನು ಸರಿಯಾಗಿ ತಿಳಿದುಕೊಂಡಿರುವರಾದರೆ, ಆ ಕೆಲಸವನ್ನವರು ಹೆಚ್ಚು ಜಾಣ್ಮೆಯಿಂದ ನಡೆಸಬಲ್ಲರು.
ಓದುವ ಮತ್ತು ಬರೆಯುವ ಕೆಲಸಗಳೂ ಹೀಗೆಯೇ. ಅವುಗಳ ಒಳಗುಟ್ಟನ್ನು ತಿಳಿದುಕೊಂಡವರಿಗೆ ಅವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಚನ್ನಾಗಿ ನಡೆಸಲು ಬರುತ್ತದೆ. ಈ ಎರಡು ಕೆಲಸಗಳಲ್ಲೂ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಬೇಕಾಗುವುದಾದ ಕಾರಣ, ಅವುಗಳ ತಿಳಿವೂ ಅವರಿಗೆ ಬೇಕಾಗುತ್ತದೆ.
ಆದರೆ ಮೇಲೆ ಸೂಚಿಸಿದ ಹಾಗೆ, ಈ ಕಟ್ಟಲೆಗಳನ್ನು ಮಕ್ಕಳಿಗೆ ಅವರ ಓದುವ ಇಲ್ಲವೇ ಬರೆಯುವ ಕೆಲಸದಲ್ಲಿ ನೇರವಾಗಿ ಬಳಸಿಕೊಳ್ಳಲು ಬರುವ ಹಾಗೆ ಕಲಿಸಬೇಕಲ್ಲದೆ, ಬೇರೆಯೇ ಒಂದು ವಿಶಯವಾಗಿ ಕಲಿಸಿದರೆ ಅದರಿಂದ ಅವರಿಗೆ ಯಾವ ನೆರವೂ ಸಿಗುವುದಿಲ್ಲ.
ಎತ್ತುಗೆಗಾಗಿ, ಕೆಲವು ಸೊಲ್ಲುಗಳ ಹುರುಳೇನೆಂಬುದನ್ನು ತಿಳಿದುಕೊಳ್ಳಲು ಮಕ್ಕಳಿಗೆ ತೊಂದರೆಯಾಗುತ್ತಿರಬಹುದು. ಆದರೆ, ಅಂತಹ ಸೊಲ್ಲುಗಳಲ್ಲಿ ಮುಕ್ಯ ಅಂಶಗಳಿಂದ ಮುಕ್ಯವಲ್ಲದ ಅಂಶಗಳನ್ನು ಬೇರ್ಪಡಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಲ್ಲಿ, ಅವರು ಅದರ ಹುರುಳನ್ನು ಸುಳುವಾಗಿ ತಿಳಿದುಕೊಳ್ಳಬಲ್ಲರು. ತುಂಬಾ ತೊಡಕು ತೊಡಕಾಗಿರುವ ಸೊಲ್ಲಿನಲ್ಲೂ ಮುಕ್ಯ ಅಂಶಗಳನ್ನು ಉಳಿದ ಅಂಶಗಳಿಂದ ಬೇರ್ಪಡಿಸಿದಾಗ, ಅದು ಏನು ಹೇಳುತ್ತದೆ ಎಂಬುದು ಕೂಡಲೇ ಗೊತ್ತಾಗುತ್ತದೆ. ಆದರೆ, ಒಂದು ಸೊಲ್ಲಿನಲ್ಲಿ ಮುಕ್ಯ ಅಂಶ ಯಾವುದು ಎಂಬುದನ್ನು ಕಂಡುಹಿಡಿಯಬೇಕಿದ್ದಲ್ಲಿ, ಅದನ್ನು ಹೇಗೆ ಕಟ್ಟಲಾಗಿದೆ, ಅದರ ಇಟ್ಟಳ (ಒಳರಚನೆ) ಎಂತಹದು ಎಂಬಂತಹ ಸೊಲ್ಲರಿಮೆಯ ವಿಶಯಗಳನ್ನೂ ಮಕ್ಕಳು ತಿಳಿದುಕೊಳ್ಳಬೇಕಾಗುತ್ತದೆ. ಇದನ್ನವರಿಗೆ ಕುತೂಹಲ ಮೂಡುವ ಹಾಗೆ ಕಲಿಸಬಹುದು (2.3.8 ನೋಡಿ). ಇತ್ತೀಚೆಗೆ ಹೆಚ್ಚು ಹೆಚ್ಚು ಮಂದಿ ತಿಳಿವಿಗರು ಓದು-ಬರಹದ ಕಲಿಕೆಯಲ್ಲಿ ಸೊಲ್ಲರಿಮೆಯ ಕೊಡುಗೆ ನಿಜಕ್ಕೂ ತುಂಬಾ ದೊಡ್ಡದು ಎಂಬುದನ್ನು ಕಂಡು ಕೊಳ್ಳುತ್ತಿದ್ದಾರೆ. ಮಕ್ಕಳು ತಾವು ಓದಿ ತಿಳಿದುಕೊಳ್ಳಬೇಕಾಗಿರುವ ಇಲ್ಲವೇ ಬರೆಯಬೇಕಾಗಿರುವ ಸೊಲ್ಲುಗಳ ಇಟ್ಟಳವೆಂತಹದು ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ ಅವರಿಗೆ ಆ ಕೆಲಸವನ್ನು ನಡೆಸಲು ಹೆಚ್ಚು ಸುಳುವಾಗುತ್ತದೆ ಎಂಬುದನ್ನೂ ಅವರು ಕಂಡುಕೊಳ್ಳುತ್ತಿದ್ದಾರೆ.
ಸೊಲ್ಲರಿಮೆಯ ಕಟ್ಟಲೆಗಳ ಈ ತಿಳುವಳಿಕೆ ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗಿಂತಲೂ ಹಿಂದೆ ಬೀಳುವ ಮಕ್ಕಳಿಗೆ ಹೆಚ್ಚು ನೆರವಿಗೆ ಬರುತ್ತದೆ. ಎತ್ತುಗೆಗಾಗಿ, ಬರಹದಲ್ಲಿ ಬಳಸುವ ಸೊಲ್ಲುಗಳೆಲ್ಲ ಇಡಿಯಾಗಿರಬೇಕು, ತುಂಡು ಸೊಲ್ಲುಗಳನ್ನು ಅವುಗಳ ಅಂಗಗಳಾಗಿ ಮಾತ್ರ ಬಳಸಬೇಕು ಎಂದು ಹೇಳಿಕೊಟ್ಟಾಗ, ತರಗತಿಯಲ್ಲಿ ಮುಂದೆ ಇರುವ ಮಕ್ಕಳಿಗೆ ತಾವೇನು ಮಾಡ ಬೇಕು ಎಂಬುದು ಒಡನೆಯೇ ಗೊತ್ತಾಗುತ್ತದೆ; ಆದರೆ, ತರಗತಿಯಲ್ಲಿ ಹಿಂದೆ ಇರುವ ಮಕ್ಕಳಿಗೆ ಅದು ಗೊತ್ತಾಗುವುದಿಲ್ಲ. ಅವರಿಗದು ಗೊತ್ತಾಗುವ ಹಾಗೆ ಮಾಡಲು, ತುಂಡು ಸೊಲ್ಲುಗಳಿಗೂ ಇಡೀ ಸೊಲ್ಲುಗಳಿಗೂ ನಡುವಿರುವ ವ್ಯತ್ಯಾಸವೇನೆಂಬುದನ್ನು ತೋರಿಸಿಕೊಡಬೇಕಾಗುತ್ತದೆ ಮತ್ತು ತುಂಡು
ಸೊಲ್ಲುಗಳನ್ನು ಇಡೀ ಸೊಲ್ಲುಗಳ ಅಂಗಗಳನ್ನಾಗಿ ಮಾಡಿ ಬಳಸುವುದು ಹೇಗೆ ಎಂಬುದನ್ನು ಎತ್ತುಗೆಗಳನ್ನು ಕೊಟ್ಟು ವಿವರಿಸಬೇಕಾಗುತ್ತದೆ. ಎಂದರೆ, ಇಡಿಯಾಗಿರುವ ಸೊಲ್ಲುಗಳ ಇಟ್ಟಳದ ಮತ್ತು ಬಳಕೆಯ ಹಿಂದಿರುವ ಸೊಲ್ಲರಿಮೆಯ ಕಟ್ಟಲೆಗಳನ್ನು ಅವರಿಗೆ ತಿಳಿಸಿಹೇಳಬೇಕಾಗುತ್ತದೆ.
2.2.1 ಎಲ್ಲರ ಕನ್ನಡ ಮತ್ತು ಆಡುಗನ್ನಡ
ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಶಾಲೆಗೆ ಸೇರುವ ಮಕ್ಕಳು ತಾವು ಮನೆಯಲ್ಲಿ ಬಳಸುತ್ತಿರುವ ಆಡುನುಡಿಗಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ಕಲಿಯ ಬೇಕಾಗುತ್ತದೆ. ಅದು ಅವರು ಈಗಾಗಲೇ ಕಲಿತಿರುವ ಕನ್ನಡದಿಂದ (ಅವರ ಆಡುನುಡಿಯಿಂದ) ಹಲವು ವಿಶಯಗಳಲ್ಲಿ ಬೇರಾಗಿದೆ ಎಂಬುದನ್ನು ಕಲಿಸು ವವರು ಮನಸ್ಸಿನಲ್ಲಿರಿಸಿಕೊಳ್ಳುವುದು ಅವಶ್ಯ.
ಮಕ್ಕಳು ಮನೆಯಲ್ಲಿ ಬಳಸುವ ಆಡುನುಡಿ ತಪ್ಪು ತಪ್ಪಾದ ಕನ್ನಡ, ಮತ್ತು ಪುಸ್ತಕದಲ್ಲಿ ಬಳಸಿರುವ ಕನ್ನಡವೇ ಸರಿಯಾದ ಕನ್ನಡ ಎಂಬುದಾಗಿ ಮಕ್ಕಳಿಗೆ ಹೇಳಿಕೊಡುವುದು ಸರಿಯಲ್ಲ. ಯಾಕೆಂದರೆ, ನಿಜಕ್ಕೂ ಅವು ಎರಡು ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಬೇಕಾಗಿರುವ ಕನ್ನಡದ ರೂಪಗಳಾಗಿದ್ದು, ಅವುಗಳಲ್ಲಿ ಒಂದು ಸರಿ ಮತ್ತು ಇನ್ನೊಂದು ತಪ್ಪು ಎಂದು ಹೇಳುವುದಕ್ಕೆ ಯಾವ ಆದಾರವೂ ಇಲ್ಲ. ಆಡುನುಡಿಯನ್ನು ಶಾಲೆಯಲ್ಲಿ ಬಳಸುವುದು ಹೇಗೆ ಸರಿಯೆಂದು ತೋರುವುದಿಲ್ಲವೋ ಹಾಗೆಯೇ ಶಾಲೆಯಲ್ಲಿ ಬಳಸುವ ಎಲ್ಲರ ಕನ್ನಡವನ್ನು ಮನೆಯಲ್ಲಿ ಬಳಸುವುದೂ ಸರಿಯೆಂದು ತೋರುವುದಿಲ್ಲ.
ಮಕ್ಕಳಿಗೆ ಎಲ್ಲರ ಕನ್ನಡವನ್ನು ಕಲಿಸುವವರು ಮನೆಯಲ್ಲಿ ಬಳಸುವ ಆಡು ಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅವರ ಗಮನಕ್ಕೆ ತರಬೇಕು. ಕನ್ನಡಕ್ಕೆ ಬೇರೆ ಬೇರೆ ರೂಪಗಳಿವೆ ಮತ್ತು ಈ ರೂಪಗಳನ್ನು ಅವರು ಬೇರೆ ಬೇರೆ ಸಂದರ್ಬಗಳಲ್ಲಿ ಬಳಸಬೇಕಾಗು ತ್ತದೆ ಎಂಬ ವಿಶಯವನ್ನು ಅವರು ಗಮನಿಸುವ ಹಾಗೆ ಮಾಡಬೇಕು.
ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ, ಅದರಲ್ಲೂ ಕೆಳವರ್ಗದ ಮಕ್ಕಳಲ್ಲಿ, ತಾವು ಮನೆಯಲ್ಲಿ ಬಳಸುವ ಆಡುನುಡಿ ತಪ್ಪು ತಪ್ಪಾದುದು, ಕೀಳು ದರ್ಜೆಯದು, ಹೇಸುವಂತಹದು ಎಂಬ ಅನಿಸಿಕೆಯಿರುತ್ತದೆ. ಅವರಲ್ಲಿ ಇಂತಹ ಅನಿಸಿಕೆ ಉಂಟಾಗುವಂತೆ ಮೇಲ್ವರ್ಗದವರು ಮಾಡಿರುತ್ತಾರೆ. ಆದರೆ, ಇದು ಸರಿಯಾದ ಅನಿಸಿಕೆಯಲ್ಲ; ಆಡುನುಡಿಗಳು ಎಲ್ಲರ ಕನ್ನಡಕ್ಕಿಂತ ಬೇರಾಗಿ ಮಾತ್ರ ಇವೆ
ಯಲ್ಲದೆ ಅವುಗಳಲ್ಲಿ ಹೇಸುವಂತಹದು ಏನೂ ಇಲ್ಲ ಎಂಬುದನ್ನು ಶಾಲೆಯಲ್ಲಿ ಅವರಿಗೆ ತಿಳಿಸಿಕೊಡಬೇಕು.
ಜಾತಿಗಳ ನಡುವಿರುವ ವ್ಯತ್ಯಾಸವನ್ನು ಕೀಳು-ಮೇಲೆಂದು ಬಗೆಯುವುದು ಹೇಗೆ ತಪ್ಪೀ ಅದೇ ರೀತಿಯಲ್ಲಿ ಜಾತಿಗಳು ಬಳಸುವ ಆಡುನುಡಿಗಳ ನಡುವಿರುವ ವ್ಯತ್ಯಾಸವನ್ನು ಕೀಳು-ಮೇಲೆಂದು ಬಗೆಯುವುದೂ ತಪ್ಪೇ. ಪ್ರತಿಯೊಬ್ಬನಿಗೂ ತನ್ನ ಆಡುನುಡಿಯನ್ನು ಬಳಸುವ ಮತ್ತು ಉಳಿಸಿಕೊಳ್ಳುವ ಹಕ್ಕಿದೆ. ಅದು ಆತನ ಸಂಸ್ಕ್ರುತಿಯ ಅಂಗವಾಗಿದೆ. ಅದನ್ನು ಬಳಸುವುದು ಆತನಿಗೆ ಹೆಮ್ಮೆಯ ವಿಶಯವಾಗಿರಬೇಕು.
ಎಲ್ಲರ ಕನ್ನಡವನ್ನು ಕಲಿಸುವವರು ಅದಕ್ಕೂ ಮನೆಯಲ್ಲಿ ಬಳಸುವ ಆಡುನುಡಿಗೂ ನಡುವಿರುವ ವ್ಯತ್ಯಾಸಗಳನ್ನು ಮಕ್ಕಳು ಕುತೂಹಲದಿಂದ ಕಾಣುವ ಹಾಗೆ ಮಾಡಬೇಕು. ಎಲ್ಲರ ಕನ್ನಡದ ಹಾಗೆ ಆಡುಗನ್ನಡದಲ್ಲೂ ತೊಡಕು ತೊಡಕಾದ ನೂರಾರು ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ. ಮೇಲ್ವರ್ಗದವರ ಆಡುನುಡಿಗಳಲ್ಲಿ ಮಾತ್ರವಲ್ಲ, ಕೆಳವರ್ಗದವರ ಆಡುನುಡಿ ಗಳಲ್ಲೂ ಇಂತಹ ನೂರಾರು ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ. ಇವುಗಳಲ್ಲಿ ಒಂದು ಆಡುನುಡಿ ಇನ್ನೊಂದು ಆಡುನುಡಿಯಿಂದ ಬೇರಾಗಿರು ತ್ತದಶ್ಟೇ ಅಲ್ಲದೆ, ಯಾವುದರಲ್ಲೂ ತಪ್ಪಾಗಿರುವ ಕಟ್ಟಲೆಗಳು ಬಳಕೆ ಯಾಗುವುದಿಲ್ಲ. ಇದಲ್ಲದೆ, ಒಂದರಲ್ಲಿ ಕಟ್ಟಲೆಗಳು ಬಳಕೆಯಾಗುತ್ತವೆ ಮತ್ತು ಇನ್ನೊಂದರಲ್ಲಿ ಕಟ್ಟಲೆಗಳೇ ಇಲ್ಲ ಎಂದು ಹೇಳುವುದಕ್ಕೂ ಯಾವ ಆದಾರವೂ ಈ ವಿಶಯವನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಮಕ್ಕಳ ಗಮನಕ್ಕೆ ತಂದಲ್ಲಿ, ಅವರಿಗೆ ತಮ್ಮ ಆಡುನುಡಿಯ ವಿಶಯದಲ್ಲಿದ್ದ ಕೀಳರಿಮೆ ಇಲ್ಲವಾಗು
2.2.2 ಆಡುಗನ್ನಡದ ನೆರವು
ಮೇಲೆ ಸೂಚಿಸಿದ ಹಾಗೆ, ಶಾಲೆಗೆ ಸೇರಿರುವ ಮಕ್ಕಳಿಗೆ ತಮ್ಮ ಆಡುಗನ್ನಡದಲ್ಲಿ ಸಲೀಸಾಗಿ ಮಾತನಾಡಲು ಗೊತ್ತಿರುತ್ತದೆ. ಎಲ್ಲರ ಕನ್ನಡದಲ್ಲಿ ಮಾತನಾಡು ವುದನ್ನು ಅವರು ತಮ್ಮಲ್ಲಿರುವ ಈ ತಿಳುವಳಿಕೆಯ ನೆಲೆಯ ಮೇಲೆ ನಡೆಸ ಬೇಕಾಗುತ್ತದೆ. ಹಾಗಾಗಿ, ಮನೆಯಲ್ಲಿ ಬಳಸುವ ಆಡುಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವಿರುವ ವ್ಯತ್ಯಾಸಗಳನ್ನು ಅವರು
ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಹೆಚ್ಚು ಚನ್ನಾಗಿ ಮುಂದು ವರಿಯಬಲ್ಲುದು.
ಆದರೆ ಇದನ್ನು ನಡೆಸಿಕೊಡಬೇಕಿದ್ದಲ್ಲಿ, ಕಲಿಸುಗರಿಗೆ ಈ ಎರಡು ಒಳನುಡಿಗಳ ಸೊಲ್ಲರಿಮೆ ಎಂತಹದು, ಯಾವ ರೀತಿಯಲ್ಲೆಲ್ಲ ಅವು ಒಂದರಿಂದೊಂದು ಬೇರಾಗಿವೆ ಎಂಬುದರ ತಿಳಿವು ಬೇಕಾಗುತ್ತದೆ. ಎತ್ತುಗೆಗಾಗಿ, ಎಲ್ಲರ ಕನ್ನಡದಲ್ಲಿ ಬರುವ ಉಲಿಗಳಲ್ಲಿ ಯಾವುವು ಮಕ್ಕಳ ಆಡುಗನ್ನಡದಲ್ಲಿ ಬರುವುದಿಲ್ಲ ಎಂಬುದನ್ನು, ಮತ್ತು ಅಂತಹ ಉಲಿಗಳನ್ನು ಹೊರಡಿಸುವ ಬಗೆ ಹೇಗೆ ಎಂಬುದನ್ನು ಕಲಿಸುಗರು ತಿಳಿದುಕೊಂಡಿದ್ದಲ್ಲಿ, ಅವನ್ನು ಮಕ್ಕಳಿಗೆ ಕಲಿಸುವ ಕೆಲಸ ಸುಳುವಾಗುತ್ತದೆ.
ಇದೇ ರೀತಿಯಲ್ಲಿ, ಮಕ್ಕಳ ಆಡುಗನ್ನಡಕ್ಕೂ ಎಲ್ಲರ ಕನ್ನಡಕ್ಕೂ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಅವರು ತಿಳಿದುಕೊಂಡಿದ್ದಲ್ಲಿ, ಎಲ್ಲರ ಕನ್ನಡವನ್ನು ಮಕ್ಕಳಿಗೆ ಹೆಚ್ಚು ಚನ್ನಾಗಿ ಕಲಿಸಬಲ್ಲರು. ಯಾಕೆಂದರೆ, ಹಾಗೆ ಮಾಡಿದಲ್ಲಿ ಮಕ್ಕಳು ತಮ್ಮಲ್ಲಿರುವ ಆಡುಗನ್ನಡದ ತಿಳಿವನ್ನು ಎಲ್ಲರ ಕನ್ನಡದ ಕಲಿಕೆಗೆ ಒಂದು ಮೆಟ್ಟಲಾಗಿ ಬಳಸ ಬಲ್ಲರು. ನೇರವಾಗಿ ಎಲ್ಲರ ಕನ್ನಡವನ್ನು ಕಲಿಯುವುದಕ್ಕಿಂತ ಅವರಿಗೆ ಇದು ಹೆಚ್ಚು ಸುಳುವಾಗಬಲ್ಲುದು.
ಮಕ್ಕಳ ಆಡುಗನ್ನಡವನ್ನು ಎಲ್ಲರ ಕನ್ನಡದ ಕಲಿಕೆಯಲ್ಲಿ ಒಂದು ಮೆಟ್ಟಲಾಗಿ ಬಳಸುವುದರಿಂದ ಇನ್ನೊಂದು ನೆರವೂ ಸಿಗುತ್ತದೆ: ಹಾಗೆ ಮಾಡುವುದರಿಂದ ಮಕ್ಕಳಿಗೆ ತಮ್ಮ ಆಡುಗನ್ನಡದ ಮೇಲಿರುವ ಕೀಳರಿಮೆ ಹೋಗುತ್ತದೆ, ಮತ್ತು ಕನ್ನಡಕ್ಕೆ ಹಲವು ರೂಪಗಳಿದ್ದು, ಸಂದರ್ಬಕ್ಕೆ ತಕ್ಕ ಹಾಗೆ ಅವುಗಳಲ್ಲಿ ಒಂದನ್ನು ಆರಿಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗೆ ಚಿಕ್ಕಂದಿನಲ್ಲೇನೇ ಬರುತ್ತದೆ. ಕನ್ನಡದ ಈ ಹಲವು ರೂಪಗಳನ್ನು ಕಲಿತುಕೊಂಡು, ಸಂದರ್ಬಕ್ಕೆ ತಕ್ಕ ಹಾಗೆ ಅವನ್ನು ಜಾಣ್ಮೆಯಿಂದ ಬಳಸುವುದು ಹೇಗೆ ಎಂಬುದೂ ಅವರಿಗೆ ಗೊತ್ತಾಗುತ್ತದೆ.
ಆದರೆ, ಇಂತಹ ಕೆಲಸಗಳನ್ನು ನಡೆಸಬೇಕಿದ್ದಲ್ಲಿ, ಅದಕ್ಕಾಗಿ ಶಾಲೆಗೆ ಸೇರುವ ಮಕ್ಕಳ ಆಡುನುಡಿಗಳಿಗೂ ಎಲ್ಲರ ಕನ್ನಡಕ್ಕೂ ನಡುವೆ ಉಲಿಯರಿಮೆ ಮತ್ತು ಸೊಲ್ಲರಿಮೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಅವರಿಗೆ ತಿಳಿಸಿಕೊಡುವಂತಹ ಅರಕೆಗಳು ನಡೆದಿರಬೇಕಾಗುತ್ತದೆ. ಇದು ಇವತ್ತು ನುಡಿಯರಿಗರು ನಡೆಸಬೇಕಾಗಿರುವ ಕೆಲಸವಾಗಿದೆ.
2.2.3 ಹೆಚ್ಚಿನ ಉಲಿಗಳ ಕಲಿಕೆ
ಮೇಲೆ ಸೂಚಿಸಿದ ಹಾಗೆ, ಮಕ್ಕಳು ಮನೆಯಲ್ಲಿ ಬಳಸುವ ಆಡುಗನ್ನಡಕ್ಕೂ ಶಾಲೆಯಲ್ಲಿ ಬಳಸಬೇಕಾಗಿರುವ ಎಲ್ಲರ ಕನ್ನಡಕ್ಕೂ ನಡುವೆ ಅವುಗಳಲ್ಲಿ ಬರುವ ಉಲಿಗಳಲ್ಲಿ ವ್ಯತ್ಯಾಸವಿರಬಹುದು. ಎತ್ತುಗೆಗಾಗಿ, ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಸಕಾರ ಮತ್ತು ಶಕಾರಗಳ ನಡುವಿನ ವ್ಯತ್ಯಾಸ ಕೆಲವು ಮಕ್ಕಳ ಆಡುಗನ್ನಡದಲ್ಲಿ ಇಲ್ಲದಿರಬಹುದು. ಹೀಗಿದ್ದಲ್ಲಿ, ಆ ಮಕ್ಕಳಿಗೆ ಎಲ್ಲರ ಕನ್ನಡ ದಲ್ಲಿ ಮಾತನಾಡಬೇಕಾದಾಗ ಇಲ್ಲವೇ ಓದಬೇಕಾದಾಗ, ಸಕಾರಕ್ಕಿಂತ ಬೇರಾ ಗಿರುವಂತೆ ಶಕಾರವನ್ನು ಸರಿಯಾಗಿ ಹೊರಡಿಸಲು ಬರುವುದಿಲ್ಲ.
ಸಾಮಾನ್ಯವಾಗಿ ಶಾಲೆಗಳಲ್ಲಿ (ಮತ್ತು ಸಮಾಜದಲ್ಲಿ) ಇಂತಹ ಮಕ್ಕಳನ್ನು ಹೀನಾಯವಾಗಿ ಕಾಣಲಾಗುತ್ತದೆ. ಶಕಾರವನ್ನು ಸರಿಯಾಗಿ ಆಡಲು ಬರದಿರುವು ದಕ್ಕೆ ಅವರ ಹುಟ್ಟು ಕಾರಣ, ಇಲ್ಲವೇ ಅವರ ನಾಲಿಗೆ ಸರಿಯಾಗಿ ಮಗುಚ ದಿರುವುದು ಇಲ್ಲವೇ ನಾಲಿಗೆ ದಪ್ಪವಾಗಿರುವುದು ಕಾರಣ ಎಂದೆಲ್ಲ ಹೇಳ ಲಾಗುತ್ತಿದೆ. ಆದರೆ, ನಿಜಕ್ಕೂ ಇದಕ್ಕೆ ಮಕ್ಕಳಲ್ಲಿರುವ ಯಾವ ಕೊರತೆಯೂ ಕಾರಣವಲ್ಲ. ತಾಯ್ನುಡಿಯಾಗಿ ಕಲಿತ ತಮ್ಮ ಆಡುನುಡಿಯಲ್ಲಿ ಇಲ್ಲದೇ ಇರುವಂತಹ ಉಲಿಗಳನ್ನು ಆಡಲು ಎಲ್ಲಾ ಮಕ್ಕಳಿಗೂ ಮೊದಲಿಗೆ ತೊಂದರೆ ಯೆನಿಸುತ್ತದೆ.
ಈ ವಿಶಯವನ್ನು ಕಲಿಸುವವರು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಮತ್ತು ಮಕ್ಕಳಲ್ಲಿ ಕೀಳರಿಮೆಯುಂಟಾಗದ ಹಾಗೆ, ಅವರಿಗೆ ಈ ಹೆಚ್ಚಿನ ಉಲಿಗಳನ್ನು ಆಡಲು ಹೇಳಿಕೊಡಬೇಕು. ಸಕಾರವನ್ನು ಆಡುವಾಗ ನಾಲಿಗೆಯ ತುದಿ ಹಲ್ಲಿನ ಹಿಂದುಗಡೆ ನಿಲ್ಲುತ್ತದೆ, ಮತ್ತು ಶಕಾರವನ್ನು ಆಡುವಾಗ ನಾಲಿಗೆಯ ಅಲಗು (ತುದಿಯಿಂದ ತುಸು ಹಿಂದಿರುವ ಬಾಗ) ಇನ್ನೂ ತುಸು ಹಿಂದೆ, ಎಂದರೆ ಅಂಗುಳಿನ ಹತ್ತಿರ ನಿಲ್ಲುತ್ತದೆ. ಇವನ್ನು ಜೋರಾಗಿ ಉಜ್ಜಿಕೊಂಡು ಉಸಿರು ಹೊರಹೋಗುವ ಹಾಗೆ ಮಾಡಿದಲ್ಲಿ, ಸ್ ಮತ್ತು ಶ್ ಎಂಬ ಉಜ್ಜುಲಿಗಳು ಕೇಳಿಸುತ್ತವೆ.
ಮಕ್ಕಳಿಗೆ ಇದನ್ನು ಹೇಳಿಕೊಟ್ಟು, ಸಾಲು-ಶಾಲು, ಸಾಯಿ-ಶಾಯಿ, ಸಾಕು-ಶಾಲೆ ಮೊದಲಾದ ಎಲ್ಲರ ಕನ್ನಡದ ಪದಗಳಲ್ಲಿ ಈ ಎರಡು ಉಲಿಗಳು ಹೇಗೆ ಬೇರೆ ಬೇರಾಗಿ ಕೇಳಿಸುತ್ತವೆ ಎಂಬುದನ್ನು ತೋರಿಸಿಕೊಡ ಬೇಕು, ಮತ್ತು ಅವನ್ನು ಸರಿಯಾಗಿ ಆಡಲು ಕಲಿಸಬೇಕು. ಹೀಗೆ ಮಾಡಿದಲ್ಲಿ, ತರಗತಿಯಲ್ಲಿರುವ ಎಲ್ಲಾ ಮಕ್ಕಳೂ ಸಕಾರ ಮತ್ತು ಶಕಾರಗಳನ್ನು ಸರಿಯಾಗಿ ಆಡುವ ಹಾಗಾಗಬಲ್ಲರು.
ಮಯ್ಸೂರಿನ ಹಲವು ಮಕ್ಕಳಿಗೆ ಹಕಾರವನ್ನು ಹೊರಡಿಸಲು ಗೊತ್ತಿದೆ ಯಾದರೂ ಅದನ್ನು ಹಾಲು, ಹಲ್ಲಿ, ಹಕ್ಕಿ, ಹುಳಿ ಮೊದಲಾದ ಯಾವ ಪದಗಳಲ್ಲಿ ಬಳಸಬೇಕು, ಮತ್ತು ಆಳು, ಅಲ್ಲಿ, ಅಕ್ಕಿ, ಉಳಿ ಮೊದಲಾದ ಯಾವ ಪದಗಳಲ್ಲಿ ಬಳಸದಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಅವನ್ನು ಸರಿಯಾಗಿ ಬಳಸುವಲ್ಲಿ ತೊಂದರೆ ಕಾಣಿಸುತ್ತದೆ. ಇಲ್ಲೂ ಕೂಡ, ಮಕ್ಕಳಲ್ಲಿ ಕೀಳರಿಮೆಯುಂಟಾಗದ ಹಾಗೆ ಪದಗಳ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡಬೇಕು, ಮತ್ತು ಅವನ್ನು ಸರಿಯಾಗಿ ಆಡಲು ಕಲಿಸಬೇಕು. ಹೀಗೆ ಮಾಡಿದಲ್ಲಿ, ಯಾವ ಮಗುವಿಗೂ ಹಕಾರವಿರುವ ಮತ್ತು ಹಕಾರವಿಲ್ಲದ ಪದಗಳನ್ನು ಸರಿಯಾಗಿ ಆಡಲು ತೊಂದರೆಯುಂಟಾಗಲಾರದು.
ಈ ಮಕ್ಕಳು ಎಲ್ಲರ ಕನ್ನಡದಲ್ಲಿ ಕಾಣಿಸುವ ಹಕಾರವನ್ನು ಸರಿಯಾಗಿ ಹೊರಡಿಸದಿರುವುದಕ್ಕೆ ಅವರ ಆಡುಗನ್ನಡದಲ್ಲಿ ಆ ಉಲಿ ಬಳಕೆಯಾಗ ದಿರುವುದು ಕಾರಣವಲ್ಲದೆ, ಅವರಲ್ಲಿರುವ ಯಾವ ಕೊರತೆಯೂ ಕಾರಣವಲ್ಲ. ಸರಿಯಾಗಿ ಕಲಿಸಿದಲ್ಲಿ, ಅವರದನ್ನು ಯಾವ ತೊಂದರೆಯೂ ಇಲ್ಲದೆ ಕಲಿಯ ಬಲ್ಲರು. ಮೊದಲಿನಿಂದಲೂ ಅದು ಅವರಲ್ಲಿ ಹುಟ್ಟಿನಿಂದಲೇ ಬಂದಿರುವ ಕೊರತೆ ಎಂಬುದಾಗಿ ಕೀಳರಿಮೆಯನ್ನು ಹುಟ್ಟಿಸಿದಲ್ಲಿ, ಆಮೇಲೆ ಅವರಿಗೆ ಅದನ್ನು ಕಲಿಯಲು ಆಗುವುದೇ ಇಲ್ಲ.
ಮಕ್ಕಳ ಆಡುಗನ್ನಡದಲ್ಲಿಲ್ಲದ ಉಲಿಗಳು ಎಲ್ಲರ ಕನ್ನಡದಲ್ಲಿ ಬರುತ್ತಿವೆ ಯಾದರೆ, ಅವನ್ನು ಕಲಿಸುವುದಕ್ಕಾಗಿ ಕಲಿಸುಗರು ಹೆಚ್ಚಿನ ತೊಂದರೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಉಲಿಗಳನ್ನು ಹೊರಡಿಸುವುದು ಹೇಗೆ ಎಂಬುದನ್ನು ಅವರು ತಾವೇ ಮೊದಲು ತಿಳಿದುಕೊಳ್ಳಬೇಕು, ಮತ್ತು ಅವನ್ನು ಕಲಿಸುವಾಗ ಮಕ್ಕಳಿಗೂ ಇದನ್ನು ತಿಳಿಸಿ, ಬಾಯಿಯೊಳಗೆ ನಾಲಿಗೆ ಹೇಗೆ ಚಲಿಸುತ್ತದೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡಬೇಕು.
ಕೆಲವು ಮಕ್ಕಳಿಗೆ ನ-ಣಗಳ ನಡುವಿನ ವ್ಯತ್ಯಾಸವನ್ನು ಮಾತಿನಲ್ಲಿ ಕಾಣಿಸಲು ಬರುವುದಿಲ್ಲ. ಅವರ ಆಡುಗನ್ನಡದಲ್ಲಿ ಈ ವ್ಯತ್ಯಾಸ ಇಲ್ಲದಿರುವುದೇ ಇದಕ್ಕೆ ಕಾರಣ. ಣಕಾರವನ್ನು ಹೊರಡಿಸಬೇಕಿದ್ದಲ್ಲಿ, ನಾಲಿಗೆಯ ತುದಿ ಒಳಕ್ಕೆ ಮಡಚಿಕೊಳ್ಳಬೇಕು. ನಕಾರಕ್ಕೂ ಣಕಾರಕ್ಕೂ ನಡುವಿರುವ ಈ ವ್ಯತ್ಯಾಸ, ದಕಾರಕ್ಕೂ ಡಕಾರಕ್ಕೂ ನಡುವಿರುವ ವ್ಯತ್ಯಾಸದ ಹಾಗೆಯೇ ಇದೆ. ಇದನ್ನು ಮಕ್ಕಳಿಗೆ ತೋರಿಸಿಕೊಟ್ಟಲ್ಲಿ, ಅವರು ಸುಳುವಾಗಿ ಣಕಾರವನ್ನು ಹೊರಡಿಸಲು ಕಲಿತುಬಿಡುತ್ತಾರೆ.
ಇಲ್ಲಿ ಎರಡು ಮುಕ್ಯ ವಿಶಯಗಳನ್ನು ನಾವು ಗಮನಿಸಬೇಕು: ಮೊದಲನೆಯದಾಗಿ, ಎಲ್ಲರ ಕನ್ನಡದಲ್ಲಿ ಬಳಕೆಯಾಗುವ ಉಲಿಗಳನ್ನು ಹೊರಡಿಸುವ ಬಗೆ ಹೇಗೆ ಎಂಬುದನ್ನು ಕಲಿಸುಗರು ತಿಳಿದಿರಬೇಕು, ಮತ್ತು ಬೇಕಿದ್ದಲ್ಲಿ ಅದನ್ನು ಮಕ್ಕಳಿಗೆ ತಿಳಿಸಿಹೇಳಲು ಅವರಿಗೆ ಗೊತ್ತಿರಬೇಕು. ಎರಡನೆಯದಾಗಿ, ಮಕ್ಕಳಿಗೆ ಎಲ್ಲರ ಕನ್ನಡದಲ್ಲಿ ಬರುವ ಉಲಿಗಳಲ್ಲಿ ಕೆಲವನ್ನು ಹೊರಡಿಸಲು ಬಾರದಿರುವುದಕ್ಕೆ ಅವು ಅವರ ಆಡುನುಡಿಯಲ್ಲಿ ಇಲ್ಲದಿರುವುದು ಕಾರಣವಲ್ಲದೆ, ಅವರ ಇಲ್ಲವೇ ಅವರ ನಾಲಿಗೆಯ ಕೊರತೆಯಲ್ಲ ಎಂಬುದನ್ನು ಕಲಿಸುಗರು ತಿಳಿದಿರಬೇಕು. ಯಾವುದಾದರೂ ಒಂದು ತರಗತಿಯಲ್ಲಿ ಕಲಿತಿರುವ ಮಕ್ಕಳಿಗೆ ಅಂತಹ ಉಲಿಗಳನ್ನು ಆಡಲು ತಿಳಿದಿಲ್ಲವಾದರೆ, ಅದಕ್ಕೆ ಆ ತರಗತಿಯ ಕಲಿಸುಗರ ಕೊರತೆಯೇ ಕಾರಣವಲ್ಲದೆ ಮಕ್ಕಳ ಕೊರತೆಯಲ್ಲ.
2.3 ಓದಲು ಕಲಿಯುವುದು
ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಯುವುದಕ್ಕಿಂತಲೂ, ಅದರಲ್ಲಿ ಓದಲು ಕಲಿಯುವುದು ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಓದುವ ಕೆಲಸದಲ್ಲಿ ಮಕ್ಕಳು ಹಲವು ಬಗೆಯ ಚಳಕ(ಕವ್ಶಲ್ಯ)ಗಳನ್ನು ಬಳಸಬೇಕಾಗು ತ್ತದೆ: ಮಾತಿನಲ್ಲಿ ಬರುವ ಪದಗಳೆಲ್ಲ ಉಲಿಗಳ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಅವರು ತಿಳಿದುಕೊಳ್ಳ ಬೇಕಾಗುತ್ತದೆ, ಮತ್ತು ಕಾಗದದಲ್ಲಿ ಕಾಣಿಸುವ ಗುರುತು ಇಲ್ಲವೇ ಬರಿಗೆ (ಅಕ್ಶರ)ಗಳ ನಡುವಿರುವ ವ್ಯತ್ಯಾಸಗಳನ್ನು ಗಮನಿಸಿ, ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಬೇರ್ಪಡಿಸಲು, ಮತ್ತು ಉಲಿ ಇಲ್ಲವೇ ಉಲಿಕಂತೆಗಳಿಗೂ ಅವಕ್ಕೂ ನಡುವಿರುವ ಪತ್ತುಗೆಯನ್ನು ತಿಳಿದುಕೊಳ್ಳಲು ಕಲಿಯಬೇಕಾಗುತ್ತದೆ. ಇದಲ್ಲದೆ, ಈ ಬರಿಗೆಗಳ ಜೋಡಣೆಗಳಲ್ಲಿ ಪದಗಳನ್ನು ಮಾತ್ರವಲ್ಲದೆ ಪದ ಕಂತೆಗಳನ್ನು ಮತ್ತು ಸೊಲ್ಲುಗಳನ್ನು ಕಾಣಲು, ಮತ್ತು ಅವುಗಳಿಂದ ಬರಹದ ಹುರುಳನ್ನು ಪಡೆಯಲು ಅವರು ಕಲಿಯಬೇಕಾಗುತ್ತದೆ.
ಈ ಕೆಲಸವನ್ನು ಮಕ್ಕಳು ತಾವಾಗಿಯೇ ನಡೆಸಲಾರರು. ಅದನ್ನವರಿಗೆ ಶಾಲೆಯಲ್ಲಿ ಹೇಳಿಕೊಡಬೇಕಾಗುತ್ತದೆ. ಹಾಗೆ ಹೇಳಿಕೊಡುವವರಿಗೆ ಓದು ಕಲಿಯುವುದಕ್ಕಾಗಿ ಮಕ್ಕಳು ಎಂತಹ ಚಳಕಗಳನ್ನೆಲ್ಲ ಗಳಿಸಬೇಕಾಗುತ್ತದೆ ಎಂಬುದು ತಿಳಿದಿದೆಯಾದಲ್ಲಿ, ಅವನ್ನು ಮಕ್ಕಳು ಒಂದೊಂದಾಗಿ ಪಡೆಯುವ ಹಾಗೆ ಅವರು ಮಾಡಬಲ್ಲರು ಮತ್ತು ಆ ಮೂಲಕ ಮಕ್ಕಳು ಒಳ್ಳೇ ಓದುಗ ರಾಗುವ ಹಾಗೆ ಮಾಡಬಲ್ಲರು.
ಓದು ಕಲಿಯುವ ಮಕ್ಕಳು ಗಳಿಸಬೇಕಾಗಿರುವ ಈ ಚಳಕಗಳಲ್ಲಿ ಮುಕ್ಯ ವಾದವುಗಳನ್ನು ಕೆಳಗೆ ವಿವರಿಸಲಾಗಿದೆ. ಇವುಗಳಲ್ಲಿ ಮೊದಲ ಎರಡು ಚಳಕ ಗಳನ್ನು ಗಳಿಸುವಲ್ಲಿ ಉಲಿಯರಿಮೆಯ ತಿಳಿವು ನೆರವಿಗೆ ಬರುತ್ತದೆ, ಮತ್ತು ಉಳಿದ ಮೂರು ಚಳಕಗಳನ್ನು ಗಳಿಸುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ ಎಂಬುದನ್ನು ಗಮನಿಸಬಹುದು. ಈ ಚಳಕಗಳನ್ನು ಕಲಿಯುವವರಿ ಗಿಂತಲೂ, ಅವನ್ನು ಶಾಲೆಯಲ್ಲಿ ಕಲಿಸುವವರಿಗೆ ಹೆಚ್ಚು ಆಳವಾದ ಉಲಿಯರಿಮೆ ಮತ್ತು ಸೊಲ್ಲರಿಮೆಗಳ ತಿಳಿವು ಬೇಕಾಗುತ್ತದೆ.
2.3.1 ಉಲಿಗಳಿಂದ ಪದಗಳು
ಮಾತಿನಲ್ಲಿ ಬಳಕೆಯಾಗುವ ಪದಗಳು ಉಲಿಗಳ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟಾಗುತ್ತವೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳಬೇಕು. ಇದರಿಂದ ಅವರಿಗೆ ಬರಹಗಳನ್ನು ಓದಲು ಹೆಚ್ಚು ಸುಳುವಾಗುತ್ತದೆ. ಮಕ್ಕಳಲ್ಲಿ ಈ ತಿಳುವಳಿಕೆಯನ್ನು ಉಂಟುಮಾಡುವುದಕ್ಕಾಗಿ, ಆ ತಿಳುವಳಿಕೆಯನ್ನು ಕೊಡಬಲ್ಲ ಕೆಲವು ಕೆಲಸಗಳನ್ನು ಅವರಿಂದ ಮಾಡಿಸಬಹುದು.
ಎತ್ತುಗೆಗಾಗಿ, ಕೆಲವು ಪದಗಳನ್ನು ಆಡಿ ತೋರಿಸಿ, ಅವುಗಳಲ್ಲಿ ಮೊದಲಿಗೆ ಯಾವ ಉಲಿ ಬರುತ್ತದೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡ ಬಹುದು (ಎತ್ತುಗೆಗಾಗಿ, ಮನೆ, ಮಾತು, ಮುಗಿಲು, ಮೇಲೆ ಮೊದಲಾದ ಪದಗಳಲ್ಲಿ ಮಕಾರ ಮೊದಲಿಗೆ ಬರುತ್ತದೆ);
ಒಂದು ಪದದ ಮೊದಲ ಉಲಿಯನ್ನು ತೆಗೆದು ಹಾಕಿದರೆ, ಬೇರೊಂದು ಪದ ಸಿಗುತ್ತದೆ (ಮಾಡು ಪದದ ಮೊದಲ ಉಲಿಯಾದ ಮಕಾರವನ್ನು ತೆಗೆದು ಹಾಕಿದರೆ ಆಡು ಪದ ಸಿಗುತ್ತದೆ), ಮತ್ತು ಅದರ ಬದಲು ಬೇರೊಂದು ಉಲಿಯನ್ನು ಬಳಸಿದರೆ ಇನ್ನೊಂದು ಪದ ಸಿಗುತ್ತದೆ (ಮಾಡು ಪದದ ಮೊದಲ ಉಲಿಯಾದ ಮಕಾರದ ಬದಲು ಕಕಾರವನ್ನು ಬಳಸಿದಲ್ಲಿ ಕಾಡು ಪದ ಸಿಗುತ್ತದೆ) ಎಂಬಂತಹ ವಿಶಯಗಳನ್ನು ಅವರು ಗಮನಿಸುವಂತೆ ಮಾಡ ಬಹುದು; ಮತ್ತು
ಒಂದು ಪದದಲ್ಲಿ ಎಶ್ಟು ಉಲಿಕಂತೆಗಳು ಇಲ್ಲವೇ ಉಲಿಗಳು ಸೇರಿ ಕೊಂಡಿವೆ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡಬಹುದು (ಮನೆ ಪದದಲ್ಲಿ ಮ ಮತ್ತು ನೆ ಎಂಬ ಎರಡು ಉಲಿಕಂತೆಗಳು ಸೇರಿವೆ ಮತ್ತು ಮ್, ಅ, ನ್, ಎ ಎಂಬ ನಾಲ್ಕು ಉಲಿಗಳು ಸೇರಿವೆ).
ಇದಲ್ಲದೆ, ಪದಗಳಿಗೆ ಅವುಗಳದೇ ಆದ ಹುರುಳುಗಳಿವೆಯಾದರೂ ಅವುಗಳಲ್ಲಿ ಬರುವ ಉಲಿಗಳಿಗೆ ಇಲ್ಲವೇ ಉಲಿಕಂತೆಗಳಿಗೆ ಅವುಗಳದೇ ಆದ ಹುರುಳಿಲ್ಲ ಎಂಬುದನ್ನೂ ಮಕ್ಕಳು ಗಮನಿಸುವ ಹಾಗೆ ಮಾಡಬಹುದು. ಎತ್ತುಗೆಗಾಗಿ, ಮನೆ ಪದಕ್ಕೆ ಅದರದೇ ಆದ ಒಂದು ಹುರುಳಿದೆ; ಆದರೆ, ಅದರಲ್ಲಿ ಬರುವ ಮಕಾರಕ್ಕಾಗಲಿ, ನಕಾರಕ್ಕಾಗಲಿ ಇಲ್ಲವೇ ಅಕಾರ-ಎಕಾರ ಗಳಿಗಾಗಲಿ ಅವುಗಳದೇ ಆದ ಹುರುಳಿಲ್ಲ. ಮನೆ, ಮಗು, ಮಗುಚು, ಮಗ್ಗುಲು, ಮಂಕುತನ, ಮಚ್ಚೆ, ಮಜ್ಜಿಗೆ, ಮಂಜು, ಮಟ್ಟ, ಮಣ್ಣು, ಮತ್ತು, ಮರ, ಮರುಳು, ಮಳೆ ಮೊದಲಾದ ಹಲವಾರು ಪದಗಳಲ್ಲಿ ಮಕಾರ ಮೊದಲಿಗೆ ಬರುತ್ತದೆ. ಆದರೆ, ಈ ಎಲ್ಲಾ ಪದಗಳಿಗೂ ಸಮಾನ ವಾಗಿರುವಂತಹ ಹುರುಳು ಯಾವುದೂ ಇಲ್ಲ.
ಇಂತಹ ಬೇರೆ ಬೇರೆ ಹಲವು ಬಗೆಯ ಕೆಲಸಗಳ ಮೂಲಕ, ಉಲಿಗಳಿಗೂ ಪದಗಳಿಗೂ ನಡುವಿರುವ ನಂಟನ್ನು ಅವರು ತಿಳಿದುಕೊಳ್ಳುವ ಹಾಗೆ ಮಾಡ ಬಹುದು.
2.3.2 ಉಲಿ ಮತ್ತು ಬರಿಗೆಗಳ ನಡುವಿನ ಪತ್ತುಗೆ
ಕನ್ನಡದ ಬರಹದಲ್ಲಿ ಬರುವ ಬರಿಗೆ(ಅಕ್ಶರ)ಗಳಿಗೂ ಮಾತಿನಲ್ಲಿ ಬರುವ ಉಲಿಗಳಿಗೂ ನಡುವೆ ನೇರವಾದ ಪತ್ತುಗೆ (ಸಂಬಂದ) ಇದೆ. ಈ ಪತ್ತುಗೆಯನ್ನು ಮಕ್ಕಳು ಗಮನಿಸುವ ಹಾಗೆ ಮಾಡಬೇಕು. ಇದನ್ನು ಗಮನಿಸಿರುವ ಮಕ್ಕಳಿಗೆ ಆಮೇಲೆ ಓದನ್ನು ಕಲಿಯಲು ಹೆಚ್ಚು ಸುಳುವಾಗುತ್ತದೆ. ಕೆಲವು ಮಕ್ಕಳು ಇದನ್ನು ಅವರಾಗಿಯೇ ಕಂಡುಕೊಳ್ಳಬಲ್ಲರು. ಆದರೆ, ಎಲ್ಲಾ ಮಕ್ಕಳಿಗೂ ಇದು ತಿಳಿಯುವುದಿಲ್ಲ. ಅಂತಹವರಿಗೆ ಇದನ್ನು ಕಲಿಸಿಕೊಡಬೇಕಾಗುತ್ತದೆ. ಬರಹಗಳಲ್ಲಿ ಬರುವ ಬರಿಗೆಗಳು, ಇಂಗ್ಲಿಶ್ ಬಳಸುವ ರೋಮನ್ ಲಿಪಿಯಲ್ಲಿ ಕಾಣಿಸುವ ಹಾಗೆ, ಉಲಿಗಳನ್ನು ಬೇರೆ ಬೇರಾಗಿ ಸೂಚಿಸುತ್ತಿರ ಬಹುದು, ಇಲ್ಲವೇ ಜಪಾನೀಸ್ ಬಳಸುವ ಕತಕನ ಲಿಪಿಯಲ್ಲಿ ಕಾಣಿಸುವ ಹಾಗೆ, ಅವನ್ನು ಒಟ್ಟೊಟ್ಟಾಗಿ, ಎಂದರೆ ಉಲಿಕಂತೆಗಳಾಗಿ ಸೂಚಿಸುತ್ತಿರ ಬಹುದು. ಜಪಾನೀಸ್ನ ಕತಕನ ಲಿಪಿಯಲ್ಲಿ ಕ, ಕಿ, ಕು, ಕೆ, ಕೊ, ಸ, ಸು ಮೊದಲಾದ ಉಲಿಕಂತೆಗಳನ್ನು ಸೂಚಿಸಲು ಬೇರೆ ಬೇರೆ ಬರಿಗೆಗಳಿವೆ.
ಕನ್ನಡದಲ್ಲಿ ಬಳಕೆಯಾಗುವ ಲಿಪಿಯಲ್ಲೂ ಇಂತಹ ಉಲಿಕಂತೆಗಳನ್ನು ಸೂಚಿಸುವ ಗುರುತುಗಳಿವೆ; ಆದರೆ, ಈ ಗುರುತುಗಳಲ್ಲಿ ಕಕಾರ, ಸಕಾರ ಮೊದಲಾದುವನ್ನು ಗುರುತಿಸುವ ಅಂಶದಿಂದ ಅಕಾರ, ಇಕಾರ, ಉಕಾರ
ಮೊದಲಾದುವನ್ನು ಗುರುತಿಸುವ ಅಂಶವನ್ನು ಬೇರ್ಪಡಿಸಲು ಬರುತ್ತದೆ. ಜಪಾನೀಸ್ ಲಿಪಿಯಲ್ಲಿ ಆ ರೀತಿ ಬೇರ್ಪಡಿಸಲು ಬರುವುದಿಲ್ಲ. ಈ ಕಾರಣಕ್ಕಾಗಿ, ಇಂಗ್ಲಿಶ್ ಬಳಸುವ ರೋಮನ್ ಲಿಪಿಯ ಹಾಗೆ, ಕನ್ನಡದ ಲಿಪಿಯನ್ನೂ ಉಲಿಲಿಪಿಯೆಂದು ಕರೆಯಲಾಗುತ್ತದೆ, ಮತ್ತು ಜಪಾನೀಸ್ ಲಿಪಿಯನ್ನು ಉಲಿಕಂತೆಯ ಲಿಪಿಯೆಂದು ಕರೆಯಲಾಗುತ್ತದೆ.
ಮಕ್ಕಳು ಉಲಿಲಿಪಿಯಲ್ಲಿರುವ ಬರಹಗಳಿಗಿಂತಲೂ ಉಲಿಕಂತೆಯ ಲಿಪಿಯಲ್ಲಿರುವ ಬರಹಗಳನ್ನು ಹೆಚ್ಚು ಸುಳುವಾಗಿ ಓದಲು ಕಲಿಯಬಲ್ಲರು. ಇದಕ್ಕೆ ಕಾರಣವೇನೆಂದರೆ, ಬರಹದ ಗುರುತುಗಳನ್ನು ಉಲಿಗಳೊಂದಿಗೆ ಹೊಂದಿಸುವುದಕ್ಕಿಂತಲೂ ಉಲಿಕಂತೆಗಳೊಂದಿಗೆ ಹೊಂದಿಸುವುದು ಹೆಚ್ಚು ಸುಳುವಾದ ಕೆಲಸ. ಎತ್ತುಗೆಗಾಗಿ, ಮನೆ ಪದದಲ್ಲಿ ಮ್, ಅ, ನ್, ಎ ಎಂಬ ನಾಲ್ಕು ಉಲಿಗಳಿವೆ ಎಂಬುದನ್ನು ಮಕ್ಕಳಿಗೆ ತಿಳಿಸಿಹೇಳುವುದಕ್ಕಿಂತಲೂ ಮ ಮತ್ತು ನೆ ಎಂಬ ಎರಡು ಉಲಿಕಂತೆಗಳಿವೆ ಎಂಬುದನ್ನು ತಿಳಿಸಿ ಹೇಳುವುದು ಹೆಚ್ಚು ಸುಳುವಾದ ಕೆಲಸ.
ಆದರೆ, ಉಲಿಲಿಪಿಯಲ್ಲಿ ಬರೆಯುವುದಕ್ಕಿಂತ ಉಲಿಕಂತೆಯ ಲಿಪಿಯಲ್ಲಿ ಬರೆಯಲು ಹೆಚ್ಚು ಬರಿಗೆಗಳು ಬೇಕಾಗುತ್ತವೆ. ಹಾಗಾಗಿ, ಉಲಿಲಿಪಿಯನ್ನು ಕಲಿಯುವ ಮಕ್ಕಳಿಗಿಂತ ಉಲಿಕಂತೆಯ ಲಿಪಿಯನ್ನು ಕಲಿಯುವ ಮಕ್ಕಳು ಹೆಚ್ಚು ಬರಿಗೆಗಳನ್ನು ಕಲಿಯಬೇಕಾಗುತ್ತದೆ.
ಕನ್ನಡದ ಲಿಪಿ ಈ ಎರಡು ಲಿಪಿಗಳ ಅಂಶಗಳನ್ನೂ ಪಡೆದಿದ್ದು, ಕಲಿಯಲು ಅವೆರಡಕ್ಕಿಂತ ಹೆಚ್ಚು ಸುಳುವಾದುದೆಂದು ಹೇಳಬಹುದು: ಅದರ ಉಲಿಗಳು ಸಾಮಾನ್ಯವಾಗಿ ಉಲಿಕಂತೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಮುಚ್ಚುಲಿಯ (ವ್ಯಂಜನದ) ಅನಂತರ ಬರುವ ತೆರೆಯುಲಿ (ಸ್ವರ) ಮುಚ್ಚುಲಿಯೊಂದಿಗೆ ಸೇರಿಕೊಂಡಿರುವುದು (ಮ್+ಅ=ಮ, ನ್+ಎ=ನೆ) ಇದಕ್ಕೆ ಕಾರಣ. ಹಾಗಾಗಿ, ಮಕ್ಕಳಿಗೆ ಓದಲು ಕಲಿಸುವಾಗ, ಮೊದಲಿಗೆ ಮುಚ್ಚುಲಿ ಮತ್ತು ತೆರೆಯುಲಿಗಳನ್ನು ಒಟ್ಟಾಗಿ ಓದಲು ಕಲಿಸಬಹುದು, ಮತ್ತು ಈ ಓದಿನಲ್ಲಿ ಅವರು ಪಳಗುತ್ತಿರುವ ಹಾಗೆ, ತೆರೆಯುಲಿಗಳನ್ನು ಮುಚ್ಚುಲಿಗಳಿಂದ ಬೇರ್ಪಡಿಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತಿಳಿಸಬಹುದು.
ಬರಹದಲ್ಲಿ ಬರುವ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ನಂಟನ್ನು ತಿಳಿಯುವುದು ಓದಲು ಕಲಿಯುವುದರಲ್ಲಿ ತುಂಬಾ ಮುಕ್ಯವಾದ ಕೆಲಸ. ಯಾಕೆಂದರೆ, ಈ ನಂಟನ್ನು ತಿಳಿದುಕೊಂಡವರಿಗೆ ತಮಗೆ ಗೊತ್ತಿರುವ ಪದಗಳನ್ನು ಮಾತ್ರವಲ್ಲದೆ ಗೊತ್ತಿಲ್ಲದ ಪದಗಳನ್ನೂ ಓದಲು ಬರುತ್ತದೆ.
ಯಾವ ಹುರುಳೂ ಇಲ್ಲದ ಪದಗಳನ್ನು ಬರಹದಲ್ಲಿ ಬಳಸಿದರೂ, ಅವನ್ನು ಅವರು ಓದಬಲ್ಲರು. ಓದಿನಲ್ಲಿ ಹಿಂದೆ ಬೀಳುವ ಮಕ್ಕಳಲ್ಲಿ ಹೆಚ್ಚಿನವರಿಗೂ ಈ ವಿಶಯ ತಿಳಿದಿರುವುದಿಲ್ಲ.
2.3.3 ಬರಿಗೆಗಳ ಕಲಿಕೆ
ಮಕ್ಕಳಿಗೆ ಬರಹವನ್ನು ಓದಲು ಕಲಿಸುವುದರೊಂದಿಗೇನೇ ಅದರಲ್ಲಿ ಬಳಕೆ ಯಾಗುವ ಬರಿಗೆ(ಅಕ್ಶರ)ಗಳನ್ನು ಬರೆಯುವುದು ಹೇಗೆ ಎಂಬುದನ್ನೂ ಕಲಿಸಬಹುದು. ಯಾಕೆಂದರೆ, ಈ ಕಲಿಕೆಯೂ ಅವರ ಓದಿನಲ್ಲಿ ನೆರವಾಗುತ್ತದೆ. ಬರೆಯಲು ಕಲಿಯುವುದರಿಂದ ಬರಿಗೆಗಳ ರೂಪವನ್ನು ನೆನಪಿನಲ್ಲಿರಿಸಿಕೊಳ್ಳುವ ಕೆಲಸ ಸುಳುವಾಗುತ್ತದೆ.
ಕೆಲವು ಮಕ್ಕಳು ಎರಡು-ಮೂರು ವರ್ಶಗಳಾಗುವಾಗಲೇ ಮನೆಯಲ್ಲಿ ದೊಡ್ಡವರು ಬರೆಯುವುದನ್ನು ನೋಡಿ ತಾವೂ ಬರೆಯಲು ತೊಡಗುತ್ತಾರೆ. ಅಂತಹ ಮಕ್ಕಳಿಗೆ ಚಿಕ್ಕಂದಿನಲ್ಲೇನೇ ಓದಲು ಮತ್ತು ಬರೆಯಲು ಕಲಿಸಬಹುದು. ಆದರೆ, ಇನ್ನು ಕೆಲವು ಮಕ್ಕಳಿಗೆ ನಾಲ್ಕಯ್ದು ವರ್ಶಗಳಾದಾಗಲೂ ಬರೆಯ ಬೇಕೆಂದು ಅನಿಸುವುದಿಲ್ಲ. ಇಂತಹ ಮಕ್ಕಳನ್ನು ಒತ್ತಾಯದಿಂದ ಬರೆಯಲು ತೊಡಗಿಸಬಾರದು. ಯಾಕೆಂದರೆ, ತಡವಾಗಿ ಬರೆಯತೊಡಗಿದ ಮಕ್ಕಳೂ ಮುಂದೆ ತಮ್ಮ ಓದು-ಬರಹದಲ್ಲಿ ಹಿಂದೆ ಬೀಳುವುದಿಲ್ಲ.
ಓದಲು ಮತ್ತು ಬರೆಯಲು ಕಲಿಸುವ ಮೊದಲು, ಮಕ್ಕಳಿಗೆ ಬರಹದಲ್ಲಿ ಆಸಕ್ತಿ ಹುಟ್ಟುವ ಹಾಗೆ, ಮನೆಯಲ್ಲಿ ಕತೆ ಪುಸ್ತಕಗಳನ್ನು ಓದಿಹೇಳಬೇಕು. ಓದುತ್ತಿರುವಾಗ ಅವರು ಬರೆದುದನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅದರಲ್ಲಿ ಬರುವ ಗುರುತುಗಳು ಉಲಿಗಳನ್ನು ಮತ್ತು ಪದಗಳನ್ನು ಸೂಚಿಸುತ್ತವೆ ಎಂಬ ವಿಶಯ ಅವರ ಗಮನಕ್ಕೆ ಬರುತ್ತದೆ. ದಿನಾಲೂ ಓದುವ ಮತ್ತು ಬರೆಯುವ ಕೆಲಸವನ್ನು ನಡೆಸುವ ದೊಡ್ಡವರು ಮನೆಯಲ್ಲಿದ್ದರೆ, ಮಕ್ಕಳಿಗೆ ಓದಿನಲ್ಲಿ ಬೇಗನೆ ಆಸಕ್ತಿ ಹುಟ್ಟುತ್ತದೆ.
ಕನ್ನಡದ ಬರಿಗೆಪಟ್ಟಿ(ವರ್ಣಮಾಲೆ)ಯನ್ನು ಮಕ್ಕಳಿಗೆ ಹಾಗೆಯೇ ಅ, ಆ, ಇ, ಈ, ಉ, ಊ ಎಂಬಂತಹ ಓರಣದಲ್ಲಿ ಕಲಿಸುವುದು ಸರಿಯಾದ ದಾರಿಯಲ್ಲ. ಮೊದಲಿಗೆ ಬರೆಯಲು ಸುಳುವಾಗಿರುವ ದ, ರ, ವ, ಲ, ಗ ಮೊದಲಾದವುಗಳನ್ನು ಕಲಿಸಬೇಕು. ಈ ಬರಿಗೆಗಳೊಂದಿಗೆ ಅವನ್ನು ಬಳಸಿ ಉಂಟುಮಾಡಿದ ಪದಗಳನ್ನೂ ಬರೆಯಲು ಕಲಿಸಿದಲ್ಲಿ, ಅವರಿಗೆ ಬರೆಯುವ ಕೆಲಸದಲ್ಲಿ ಆಸಕ್ತಿ ಹುಟ್ಟುತ್ತದೆ. ಮೊದಲಿಗೆ ಅಕಾರದೊದಿಗೆ ಬರುವ ಇಂತಹ
ಮುಚ್ಚುಲಿ(ವ್ಯಂಜನ)ಗಳನ್ನು ಕಲಿಸಿ, ಆಮೇಲೆ ಬೇರೆ ತೆರೆಯುಲಿ (ಸ್ವರ)ಗಳೊಂದಿಗೆ ಬರುವ ಮುಚ್ಚುಲಿಗಳನ್ನು ಕಲಿಸಬಹುದು. ಅ, ಆ, ಇ, ಈ ಮೊದಲಾದ ತೆರೆಯುಲಿ ಬರಿಗೆಗಳು ಪದಗಳ ಮೊದಲಿಗೆ ಮಾತ್ರ ಬರುವ ಕಾರಣ, ಅವನ್ನು ಆಮೇಲೆ ಕಲಿಸಬಹುದು.
ಕನ್ನಡದ ಕೆಲವು ಬರಿಗೆಗಳ ನಡುವೆ ವ್ಯತ್ಯಾಸ ತುಂಬಾ ಕಡಿಮೆ ಇರುತ್ತದೆ. ಅಂತಹ ಬರಿಗೆಗಳನ್ನು ಕಲಿಯಲು ಮಕ್ಕಳಿಗೆ ತೊಡಕಾಗಬಹುದು. ಈ ಬರಿಗೆಗಳನ್ನು ಒಂದೇ ಸಮಯದಲ್ಲಿ ಕಲಿಸಲು ಹೋಗಬಾರದು. ಅವುಗಳಲ್ಲಿ ಒಂದನ್ನು ಸರಿಯಾಗಿ ಕಲಿತ ಮೇಲೆ ಇನ್ನೊಂದನ್ನು ಕಲಿಸಲು ತೊಡಗಬೇಕು.
2.3.4 ಮಿದುಳಿನಲ್ಲಿ ಓದುವ ಕೆಲಸ
ಮಕ್ಕಳು ಓದುವುದಕ್ಕಾಗಿ ಮಿದುಳಿನ ಯಾವ ಜಾಗಗಳನ್ನು ಬಳಸುತ್ತಾರೆ? ಇತ್ತೀಚೆಗೆ, ಎಂದರೆ ಕಳೆದ ಇಪ್ಪತ್ತು ವರ್ಶಗಳಲ್ಲಿ ನಡೆಸಿರುವಂತಹ ಮಿದುಳಿಗೆ ಸಂಬಂದಿಸಿದ ಸಂಶೋದನೆಗಳಿಂದ ಈ ವಿಶಯದ ಕುರಿತು ನಮಗೆ ಹೆಚ್ಚಿನ ತಿಳಿವು ದೊರೆತಿದೆ. ಓದುವ ಕೆಲಸವನ್ನು ನಡೆಸುತ್ತಿರುವಾಗ ಮಕ್ಕಳ ಮಿದುಳಿನಲ್ಲಿ ಯಾವ ಜಾಗಗಳು ಮಿಂಚುತ್ತಿರುತ್ತವೆ ಎಂಬುದನ್ನು ಇವತ್ತು ನೇರವಾಗಿ ಗಮನಿಸಲು ಬರುತ್ತದೆಯೆಂಬುದೇ ಇದಕ್ಕೆ ಕಾರಣ.
ಮಕ್ಕಳು ಮಾತನ್ನು ಕೇಳುತ್ತಿರುವಾಗ ಅವರ ಮಿದುಳಿನಲ್ಲಿ ಎರಡು ಜಾಗಗಳು ಮಿಂಚುತ್ತಿರುತ್ತವೆ: ಅವುಗಳಲ್ಲಿ ಬರುವ ಉಲಿಗಳನ್ನು ಗುರುತಿಸುವುದಕ್ಕಾಗಿ ಕಿವಿಯ ಹತ್ತಿರ ಇರುವ ಮಿದುಳಿನ ಜಾಗ ಮಿಂಚುತ್ತಿರುತ್ತದೆ ಮತ್ತು ಮಾತಿನ ಹುರುಳನ್ನು ತಿಳಿದುಕೊಳ್ಳುವುದಕ್ಕಾಗಿ ಮಿದುಳಿನ ಹಿಂಬಾಗ ಮಿಂಚುತ್ತಿರುತ್ತದೆ. ಹೆಚ್ಚಿನ ಮಕ್ಕಳಲ್ಲೂ ಈ ಕೆಲಸ ಮಿದುಳಿನ ಎಡಬಾಗದಲ್ಲಿ (ಎಡಮಿದುಳಿನಲ್ಲಿ) ನಡೆಯುತ್ತದೆ.
ಓದುವ ಮಕ್ಕಳಲ್ಲಿ ಈ ಎರಡು ಜಾಗಗಳು ಮಾತ್ರವಲ್ಲದೆ, ಮಿದುಳಿನ ಮೇಲ್ಬಾಗದಲ್ಲಿರುವ ಮೂರನೆಯದೊಂದು ಜಾಗವೂ ಮಿಂಚುತ್ತಿರುತ್ತದೆ. ಈ ಜಾಗದಲ್ಲಿ ಓದಿದ ಬರಿಗೆಗಳನ್ನು ಗುರುತಿಸುವ ಕೆಲಸ ನಡೆಯುತ್ತದೆ. ಉಲಿಗಳನ್ನು ಹೊರಡಿಸದೆ ಮಿಣ್ಣಗೆ ಓದುವಾಗಲೂ ಮಕ್ಕಳ ಮಿದುಳಿನಲ್ಲಿರುವ ಈ ಮೂರು ಜಾಗಗಳು ಮಿಂಚುತ್ತಿರುತ್ತವೆ; ಎಂದರೆ, ಮಿಣ್ಣಗಿನ ಓದಿನಲ್ಲೂ ಮಕ್ಕಳು ಬರಹದಲ್ಲಿ ಬರುವ ಬರಿಗೆಗಳನ್ನು ಉಲಿಗಳಾಗಿ ಮಾರ್ಪಡಿಸಿಕೊಳ್ಳುವ ಮೂಲಕವೇನೇ ಅದರ ಹುರುಳನ್ನು ತಿಳಿದುಕೊಳ್ಳುತ್ತಾರೆ.
ಕೆಲವು ಮಕ್ಕಳಿಗೆ ಓದಿನಲ್ಲಿ ತುಸುವೂ ಆಸಕ್ತಿ ಹುಟ್ಟುವುದಿಲ್ಲ. ಇದಕ್ಕೆ ಅವರು ಸರಿಯಾದ ಕ್ರಮದಲ್ಲಿ ಓದಲು ಕಲಿಯದಿರುವುದೇ ಕಾರಣ ಎಂಬುದನ್ನು ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಅಂತಹ ಮಕ್ಕಳು ಓದುವಾಗ, ಅವರ ಬಲಮಿದುಳು ಮಾತ್ರವೇ ಮಿಂಚುತ್ತಿರುತ್ತದೆ. ಎಂದರೆ, ಅವರು ಬರಹದಲ್ಲಿ ಬರುವ ಪದಗಳನ್ನು ಬರಿಗೆ(ಅಕ್ಶರ)ಗಳಾಗಿ ಒಡೆದು ಅವನ್ನು ಉಲಿಗಳಾಗಿ ಮಾರ್ಪಡಿಸಿಕೊಳ್ಳುವ ಬದಲು, ನೇರವಾಗಿ ಅವುಗಳಿಂದ ಹುರುಳನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾರೆ. ಇದಲ್ಲದೆ, ಈ ಕೆಲಸವನ್ನು ಅವರು ಮಾತನ್ನು ಹಿಡಿತದಲ್ಲಿರಿಸಿಕೊಂಡಿರುವ ಎಡಮಿದುಳಿನಲ್ಲಿ ನಡೆಸುವ ಬದಲು, ಮಾತಿಲ್ಲದ ಬಲಮಿದುಳಿನಲ್ಲಿ ನಡೆಸುತ್ತಾರೆ; ಎಂದರೆ, ಚಿತ್ರಗಳನ್ನು ನೋಡಿ ಗುರುತಿಸುವ ಹಾಗೆ, ಬರಹವನ್ನೂ ಓದಿ ತಿಳಿಯಲು ಅವರು ಪ್ರಯತ್ನಿಸುತ್ತಾರೆ.
ಈ ಕಾರಣಕ್ಕಾಗಿ, ಅವರಿಗೆ ಓದು ತುಂಬಾ ತೊಂದರೆಯ ಕೆಲಸವೆಂದೆನಿಸು ತ್ತದೆ, ಮತ್ತು ಆದಶ್ಟು ಮಟ್ಟಿಗೆ ಅವರು ಅದರಿಂದ ದೂರ ಉಳಿಯ ತೊಡಗುತ್ತಾರೆ. ಇದಲ್ಲದೆ, ಅಶ್ಟೊಂದು ತೊಂದರೆಯಿಂದ ನಡೆಸುವ ಓದಿನಿಂದ ಅವರಿಗೆ ಆನಂದವನ್ನು ಪಡೆಯಲು ಬರುವುದೇ ಇಲ್ಲ.
ಇಂತಹ ಮಕ್ಕಳಿಗೆ, ಮೇಲೆ ಸೂಚಿಸಿದ ಹಾಗೆ, ಪದಗಳನ್ನು ಉಲಿಗಳಾಗಿ ಬೇರ್ಪಡಿಸುವ ಬಗೆ ಹೇಗೆ ಮತ್ತು ಬರಹದಲ್ಲಿ ಬರುವ ಬರಿಗೆಗಳನ್ನು ಗುರುತಿಸಿ, ಉಲಿಗಳಾಗಿ ಮಾರ್ಪಡಿಸಿ, ಓದುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಟ್ಟಲ್ಲಿ, ಅವರಿಗೆ ಓದಿನಲ್ಲಿ ಆಸಕ್ತಿ ಮೂಡುತ್ತದೆ, ಮತ್ತು ಅವರು ಓದುತ್ತಿರುವಾಗ ಮಿದುಳನ್ನು ಬಳಸುವ ಬಗೆಯೂ ಬದಲಾಗುತ್ತದೆ (ಬಲಮಿದುಳಿನೊಂದಿಗೆ ಎಡಮಿದುಳಿನ ಎರಡು ಜಾಗಗಳನ್ನೂ ಬಳಸಲು ಅವರಿಗೆ ಗೊತ್ತಾಗುತ್ತದೆ) ಎಂಬುದನ್ನು ಕಂಡುಕೊಳ್ಳಲಾಗಿದೆ.
ಇಲ್ಲಿ ನಾವು ಗಮನಿಸಬೇಕಾಗಿರುವ ಇನ್ನೊಂದು ವಿಶಯವೇನೆಂದರೆ, ಮಕ್ಕಳನ್ನು ಎಶ್ಟು ಬೇಗನೆ ಓದಿನಲ್ಲಿ ತೊಡಗಿಸಬಹುದು ಎಂಬುದು; ಈ ವಿಶಯದಲ್ಲಿ ಮಿದುಳರಿಗರು ಒಂದು ಎಚ್ಚರಿಕೆಯ ಮಾತನ್ನು ಹೇಳುತ್ತಾರೆ: ಓದಲು ಮತ್ತು ಬರೆಯಲು ಅಣಿಯಾಗುವ ಮೊದಲೇ ಅದನ್ನು ಅವರ ಮೇಲೆ ಒತ್ತಾಯದಿಂದ ಹೇರಿದೆವಾದರೆ, ಅದನ್ನು ನಡೆಸಲು ಅವರು ಸರಿಯಾಗಿ ಕಲಿಯದೆ, ಆಮೇಲೆ ಜೀವನವಿಡೀ ತೊಂದರೆಗೊಳಗಾಗಬಲ್ಲರು.
ಮಕ್ಕಳಲ್ಲಿ ಎಡಮಿದುಳಿಗಿಂತ ಬಲಮಿದುಳು ಮೊದಲು ಬೆಳೆದಿರುತ್ತದೆ. ಹಾಗಾಗಿ, ಕೆ.ಜಿ. ಕ್ಲಾಸಿನಲ್ಲಿರುವ ನಾಲ್ಕಯ್ದು ವರ್ಶದ ಮಕ್ಕಳನ್ನು ಓದಲು ಮತ್ತು ಬರೆಯಲು ಒತ್ತಾಯಿಸಿದಲ್ಲಿ, ಅವರು ಇದನ್ನು ತಮ್ಮ ಬಲಮಿದುಳಿನ
ಮೂಲಕವೇನೇ ನಡೆಸಬೇಕಾಗುತ್ತದೆ. ಈ ಮಿದುಳು ಅವರಿಗೆ ಪದಗಳ ಒಟ್ಟಾರೆ ಆಕಾರವೆಂತಹದು ಎಂಬುದನ್ನು ಮಾತ್ರ ತಿಳಿಸಬಲ್ಲುದು. ಈ ಆಕಾರವನ್ನು ಗಮನಿಸಿ, ಅವರು ಪದಗಳ ಓದನ್ನು ಊಹಿಸಿಕೊಳ್ಳಬೇಕಾಗುತ್ತದೆ.
ಎಡಮಿದುಳಿನಲ್ಲಿರುವ ಓದಿನ ಬಾಗಗಳು ಆರೇಳು ವರ್ಶದ ಮಕ್ಕಳಲ್ಲಿ ಮಾತ್ರ ಬಳಕೆಗೆ ಬರುವಶ್ಟು ಬೆಳೆದಿರುತ್ತವೆ. ಇವು ಹುಡುಗರಿಗಿಂತ ಹುಡುಗಿಯರಲ್ಲಿ ತುಸು ಬೇಗನೆ ಬೆಳೆದಿರುತ್ತವೆ. ಕೆಲವರು ಹುಡುಗರಲ್ಲಿ ಇವು ಎಂಟೊಂಬತ್ತು ವರ್ಶಗಳ ವರೆಗೂ ಬೆಳೆದಿರುವುದಿಲ್ಲ. ಬಲಮಿದುಳನ್ನು ಎಡಮಿದುಳಿನೊಂದಿಗೆ ಜೋಡಿಸುವ ನರಗಳ ಪಟ್ಟಿಯೂ ಕೆ.ಜಿ. ಕ್ಲಾಸಿನ ಮಕ್ಕಳಲ್ಲಿ ಸರಿಯಾಗಿ ಬೆಳೆದಿರುವುದಿಲ್ಲ.
ಹಾಗಾಗಿ, ಎಡಮಿದುಳು ಸರಿಯಾಗಿ ಬೆಳೆಯುವ ಮೊದಲೇ ಮಕ್ಕಳನ್ನು ಒತ್ತಾಯದಿಂದ ಓದಿನಲ್ಲಿ ತೊಡಗಿಸಿದೆವಾದರೆ, ಅವರಲ್ಲಿ ಕೆಲವರಿಗೆ ಆಮೇಲೆ ಸರಿಯಾಗಿ ಓದುವ ಬಗೆಯೇ ತಿಳಿಯದ ಹಾಗೆ ಆಗಬಲ್ಲುದು. ಯಾಕೆಂದರೆ, ಬಲಮಿದುಳನ್ನು ಮಾತ್ರವೇ ಬಳಸಿ ನಡೆಸುವ ಓದು ಅವರಿಗೊಮ್ಮೆ ಬಳಕೆಯಾಗಿ ಬಿಟ್ಟಿತೆಂದರೆ, ಆಮೇಲೆ ತಾವಾಗಿಯೇ ಅದನ್ನು ಬದಲಾಯಿಸಿ, ಎಡಮಿದುಳನ್ನೂ ಬಳಸಿ ಓದಲು ಆ ಮಕ್ಕಳು ಕಲಿಯದಿರಬಹುದು ಎಂಬುದಾಗಿ ಈ ತಿಳಿವಿಗರು ಹೇಳುತ್ತಾರೆ.
2.3.5 ಕನ್ನಡ ಬರಹದ ಬರಿಗೆಗಳ ಸಮಸ್ಯೆ
ಮಕ್ಕಳಿಗೆ ಈ ರೀತಿ ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ಪತ್ತುಗೆಯನ್ನು ತಿಳಿಸುವಲ್ಲಿ ಇವತ್ತಿನ ಕನ್ನಡದ ಬರಹ ಒಂದು ಸಮಸ್ಯೆಯನ್ನು ತಂದೊಡ್ಡುತ್ತದೆ. ಕನ್ನಡಕ್ಕೊಂದು ಲಿಪಿಯನ್ನು ಅಳವಡಿಸುವ ಸಮಯದಲ್ಲಿ, ಎಂದರೆ ಸುಮಾರು ಎರಡು ಸಾವಿರ ವರ್ಶಗಳಶ್ಟು ಹಿಂದೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನೆಲ್ಲ ಹೆಚ್ಚು ಕಡಿಮೆ ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾದ ಕಟ್ಟಲೆಯೊಂದನ್ನು ನಮ್ಮ ಹಿರಿಯರು ಮಾಡಿದ್ದುದೇ ಈ ಸಮಸ್ಯೆಗೆ ಕಾರಣ.
ಈ ಕಟ್ಟಲೆಯಿಂದಾಗಿ, ಇವತ್ತು ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ನಾವು ಹೇಗೆ ಓದುತ್ತೇವೆಯೋ ಹಾಗೆ ಬರೆಯುವುದಿಲ್ಲ. ಅವು ಸಂಸ್ಕ್ರುತದಲ್ಲಿ ಹೇಗಿವೆಯೋ ಹಾಗೆ ಬರೆಯುತ್ತೇವೆ. ವಿಶೇಷ ಎಂಬುದಾಗಿ ಬರೆಯುತ್ತೇವೆ; ಆದರೆ ವಿಶೇಶ ಎಂಬುದಾಗಿ ಓದುತ್ತೇವೆ; ಕೃತಿ ಎಂಬುದಾಗಿ ಬರೆಯುತ್ತೇವೆ, ಕ್ರುತಿ ಎಂಬುದಾಗಿ ಓದುತ್ತೇವೆ; ಅಧಿಕಾರ ಎಂಬುದಾಗಿ
ಬರೆಯುತ್ತೇವೆ, ಅದಿಕಾರ ಎಂಬುದಾಗಿ ಓದುತ್ತೇವೆ; ದುಃಖ ಎಂಬುದಾಗಿ ಬರೆಯುತ್ತೇವೆ, ದುಕ್ಕ ಎಂಬುದಾಗಿ ಓದುತ್ತೇವೆ.
ಶಾಲೆಯಲ್ಲಿ ಮಕ್ಕಳು ಇಂತಹ ಪದಗಳನ್ನು ಓದಲು ಕಲಿಯುವಾಗ ಷ, ಋ, ಧ, ಖ, ವಿಸರ್ಗ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನು ಅನವಶ್ಯಕವಾಗಿ ಕಲಿಯಬೇಕಾಗುತ್ತದೆ ಎಂಬುದು ಇಲ್ಲಿ ಒಂದು ಸಮಸ್ಯೆ; ಅವನ್ನು ಕಲಿಸುವ ಕ್ರಮವೂ ಸರಿಯಾಗಿಲ್ಲ ಎಂಬುದು ಇನ್ನೊಂದು ಸಮಸ್ಯೆ. ಅವುಗಳಲ್ಲಿ ಷ, ಋ, ವಿಸರ್ಗ ಮೊದಲಾದ ಕೆಲವನ್ನು ಓದಿ ತೋರಿಸುವುದು ಹೇಗೆ ಎಂಬುದೇ ಹೆಚ್ಚಿನ ಕಲಿಸುಗರಿಗೂ ತಿಳಿದಿರುವುದಿಲ್ಲ. ಆದರೆ, ಅವರ ಈ ಅರಿಯಮೆಯನ್ನು (ಅಜ್ನಾನವನ್ನು) ಮಕ್ಕಳಿಂದ ಅಡಗಿಸಿಡಲಾಗುತ್ತದೆ.
ದ-ಧ, ಪ-ಫ, ಕ-ಖ ಮೊದಲಾದ ಬೇರೆ ಕೆಲವು ಬರಿಗೆಗಳ ನಡುವಿರುವ ವ್ಯತ್ಯಾಸವನ್ನು ಹೆಚ್ಚಿನ ಕಲಿಸುಗರೂ ಓದಿ ತೋರಿಸಬಲ್ಲರು; ಆದರೆ, ಕಲಿಸುವ ಸಮಯದಲ್ಲಿ ಮಾತ್ರ ಅವರು ಆ ರೀತಿ ಅವನ್ನು ಸರಿಯಾಗಿ ಓದಿ ತೋರಿಸುತ್ತಾರೆ. ಉಳಿದ ಸಮಯಗಳಲ್ಲೆಲ್ಲ ಅವು ಕಲಿಸುಗರ ಓದಿನಲ್ಲೂ ಒಂದಕ್ಕಿಂತ ಒಂದು ಬೇರಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಎತ್ತುಗೆಗಾಗಿ, ಭಾರತ ಪದಕ್ಕೂ ಬಾಗಿಲು ಪದಕ್ಕೂ ನಡುವೆ ಮೊದಲನೇ ಬರಿಗೆಯಲ್ಲಿರುವ ವ್ಯತ್ಯಾಸ ಆ ಪದಗಳನ್ನು ಅವರು ಕಲಿಸುವಾಗ ಮಕ್ಕಳ ಕಿವಿಗೆ ಕೇಳಿಸುತ್ತಿರ ಬಹುದು; ಆದರೆ ಆಮೇಲೆ ಓದುತ್ತಿರುವಾಗ ಇಲ್ಲವೇ ಬೇರೆ ವಿಶಯಗಳನ್ನು ತಿಳಿಸುತ್ತಿರುವಾಗ, ಈ ವ್ಯತ್ಯಾಸ ಇಲ್ಲವಾಗುತ್ತದೆ. ಇದು ಮಕ್ಕಳಲ್ಲಿ ಗೊಂದಲ ವನ್ನುಂಟುಮಾಡಬಲ್ಲುದು.
ಈ ಹೆಚ್ಚಿನ ಬರಿಗೆಗಳಿಗೆ ಸಮನಾಗಿರುವ ಉಲಿಗಳು ಎಲ್ಲರ ಕನ್ನಡದ ಓದಿನಲ್ಲಿ ಕಾಣಿಸಿಕೊಳ್ಳದಿರುವುದೇ ಇದಕ್ಕೆ ಕಾರಣ. ಈ ವಿಶಯವನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ, ಎಂದರೆ ಈ ಹೆಚ್ಚಿನ ಬರಿಗೆಗಳು ಬರಹದಲ್ಲಿ ಮಾತ್ರ ಬರುತ್ತವೆ, ಓದಿನಲ್ಲಿ ಬರುವುದಿಲ್ಲ ಎಂಬುದನ್ನು ಅವರು ಗಮನಿಸುವ ಹಾಗೆ ಮಾಡುವ ಮೂಲಕ, ಅವರಲ್ಲಿ ಗೊಂದಲವುಂಟಾಗದ ಹಾಗೆ ಮಾಡ ಬಹುದು.
ಬರಿಗೆಗಳಿಗೂ ಉಲಿಗಳಿಗೂ ನಡುವಿರುವ ನಂಟನ್ನು ತಿಳಿದುಕೊಳ್ಳಬೇಕಾ ಗಿರುವ ಸಮಯದಲ್ಲಿ ಗೊಂದಲಕ್ಕೊಳಗಾದಾಗ, ಹೆಚ್ಚಿನ ಮಕ್ಕಳೂ ಪದಗಳನ್ನು ಉಲಿಗಳೊಂದಿಗೆ ಜೋಡಿಸಲು ಹೋಗದೆ, ನೇರವಾಗಿ ಓದಲು ತೊಡಗುತ್ತಾರೆ. ಮೊದಲಿಗೆ ಆ ರೀತಿ ಓದುವ ಕೆಲಸ ಅವರಿಗೆ ಹೆಚ್ಚು ತೊಡಕಿನದಾಗಿ ಕಾಣಿಸುವು ದಿಲ್ಲ. ಆದರೆ, ಅವರ ಓದು ಮುಂದುವರಿದ ಹಾಗೆಲ್ಲ, ಹೆಚ್ಚು ಹೆಚ್ಚು
ಪದಗಳನ್ನು ಅವರು ಉಲಿಗಳಾಗಿ ಒಡೆಯದೆ ಆ ರೀತಿ ಇಡಿ ಇಡಿಯಾಗಿ ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ, ಮತ್ತು ಇದನ್ನು ನಡೆಸಲು ಬಾರದೆ, ಅಂತಹ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ.
ಪದಗಳನ್ನು ಉಲಿಗಳಾಗಿ ಒಡೆದು ಓದುವುದೇ ಕನ್ನಡದಂತಹ ಉಲಿಲಿಪಿಗಳ ಮಟ್ಟಿಗೆ ಸರಿಯಾದ ದಾರಿ. ಈ ಓದಿನಲ್ಲಿ ಬಲಮಿದುಳಿನೊಂದಿಗೆ ಎಡ ಮಿದುಳೂ ಕೆಲಸಮಾಡುತ್ತಿರಬೇಕು. ಇದಕ್ಕೆ ಬದಲು, ಪದಗಳನ್ನು ಇಡಿ ಇಡಿಯಾಗಿ ಓದುವವರಲ್ಲಿ ಬಲಮಿದುಳು ಮಾತ್ರ ಕೆಲಸಮಾಡುತ್ತಿರುತ್ತದೆ. ಇದು ತುಂಬಾ ತೊಡಕು ತೊಡಕಾದ ಓದು. ಪದಗಳನ್ನು ಉಲಿಗಳಾಗಿ ಒಡೆದು ಓದುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ಸರಿಯಾಗಿ ಕಲಿಸದಿದ್ದಲ್ಲಿ, ಮುಂದೆ ಅವರಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲವಾಗುತ್ತದೆ.
ಮಕ್ಕಳಲ್ಲಿ ಗೊಂದಲವನ್ನುಂಟುಮಾಡಿ, ಅವರು ಓದಿನಲ್ಲಿ ದಾರಿತಪ್ಪುವಂತೆ ಮಾಡಬಲ್ಲ ಋ, ಷ, ಮಹಾಪ್ರಾಣ ಮೊದಲಾದ ಈ ಹೆಚ್ಚಿನ ಬರಿಗೆಗಳನ್ನು ಅವರಿಗೆ ಮೊದಲನೇ ತರಗತಿಯಲ್ಲಿ ಕಲಿಸಹೋಗದೆ, ಆಮೇಲೆ ಕಲಿಸುವುದೇ ಒಳ್ಳೆಯದು. ಕನ್ನಡದವೇ ಆದ ಪದಗಳಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಹೀಗೆ ಮಾಡುವುದು ತೊಡಕಿನ ಕೆಲಸವೇನಲ್ಲ. ಆದರೆ, ಅದಕ್ಕಾಗಿ ಈ ಹೆಚ್ಚಿನ ಬರಿಗೆಗಳು ಬರುವ ಸಂಸ್ಕ್ರುತ ಪದಗಳನ್ನು ಬಳಸದಿರುವಂತಹ ಬರಹಗಳನ್ನು ಮಾತ್ರ ಮೊದಲನೇ ತರಗತಿಯ ಮಕ್ಕಳು ಓದುವ ಹಾಗೆ ಮಾಡಬೇಕಾಗುತ್ತದೆ.
ಇವೆರಡಕ್ಕಿಂತಲೂ ಒಳ್ಳೆಯ ಉಪಾಯವೆಂದರೆ, ನನ್ನ ಈ ಬರಹದಲ್ಲಿ ಮಾಡಿರುವ ಹಾಗೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕು ಎಂಬ ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾಗಿರುವ ಕಟ್ಟಲೆಯನ್ನು ತೆಗೆದು ಹಾಕಬೇಕು. ಹೀಗೆ ಮಾಡಿರುವ ಬರಹವನ್ನು ನಾನು ಹೊಸ ಬರಹ ಎಂದು ಕರೆದಿದ್ದೇನೆ. ಇದರಲ್ಲಿ ಸಂಸ್ಕ್ರುತ ದಿಂದ ಎರವಲಾಗಿ ಪಡೆದ ಪದಗಳನ್ನೆಲ್ಲ ನಾವು ಎಲ್ಲರ ಕನ್ನಡದಲ್ಲಿ ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇವೆ (ಈ ಹೊಸ ಬರಹದ ಕುರಿತು ಹೆಚ್ಚಿನ ವಿವರಗಳನ್ನು ನನ್ನ ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ ನೋಡಬಹುದು).
ಚಿಕ್ಕ ಮಕ್ಕಳಿಗೆ ಓದನ್ನು ಮೊದಲಿಗೆ ಹೊಸಬರಹದಲ್ಲಿ ಕಲಿಸಿ, ಮುಂದೆ ಅವರಿಗೆ ಸರಿಯಾಗಿ ಓದಲು ಬಂದಮೇಲೆ ಬೇಕಿದ್ದರೆ ಹಳೆಬರಹದಲ್ಲೂ ಕಲಿಸುವುದು ಇನ್ನೊಂದು ದಾರಿ. ಹೀಗೆ ಮಾಡುವುದರಿಂದ ಅವರಿಗೆ ಓದು
ಕಲಿಯುವಲ್ಲಿ ಗೊಂದಲವುಂಟಾಗದ ಹಾಗೆ, ಮತ್ತು ಸರಿಯಾಗಿ ಓದುವ ಬಗೆ ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳುವ ಹಾಗೆ ಮಾಡಲು ಸುಳುವಾಗುತ್ತದೆ.
2.3.6 ಸಲೀಸಾದ ಓದು
ಬರಹಗಳನ್ನು ಸಲೀಸಾಗಿ (ಸರಾಗವಾಗಿ) ಓದಲು ಬರಬೇಕಿದ್ದಲ್ಲಿ, ಅವುಗಳಲ್ಲಿ ಬರುವ ಪದಗಳಲ್ಲಿ ಹೆಚ್ಚಿನವನ್ನೂ ಇಡಿಯಿಡಿಯಾಗಿ, ತಟ್ಟನೆ, ಮತ್ತು ತಪ್ಪಿಲ್ಲದೆ ಗುರುತಿಸಲು ಕಲಿತಿರಬೇಕು. ಇದಲ್ಲದೆ, ಓದುತ್ತಾ ಹೋಗುತ್ತಿರುವಂತೆ, ಅವನ್ನು ಪದಕಂತೆಗಳಾಗಿ ಮತ್ತು ಸೊಲ್ಲುಗಳಾಗಿ ಜೋಡಿಸಿಕೊಳ್ಳಲು, ಮತ್ತು ಅವುಗಳಿಂದ ಹುರುಳನ್ನು ಪಡೆಯಲು ತಿಳಿದಿರಬೇಕು. ಈ ಎಲ್ಲಾ ಕೆಲಸಗಳನ್ನೂ ಅವರು ಒಟ್ಟೊಟ್ಟಿಗೆ ನಡೆಸಲು ಕಲಿತಿರಬೇಕು.
ಓದಲು ಕಲಿಯುವುದು ಶಾಲೆಯಲ್ಲಿ ನಡೆಸುವ ಬೇರೆಲ್ಲಾ ಕಲಿಕೆಗಳಿಗೂ ಅಡಿಗಟ್ಟನ್ನು ಒದಗಿಸುತ್ತದೆ. ಅದಿಲ್ಲದೆ ವಿಜ್ನಾನ, ಚರಿತ್ರೆ, ಸಾಹಿತ್ಯ ಮೊದಲಾದ ಬೇರೆ ಯಾವ ಕಲಿಕೆಯೂ ಮುಂದೆ ಹೋಗಲಾರದು. ಈ ಕಾರಣಕ್ಕಾಗಿ, ಸಲೀಸಾಗಿ ಓದಲು ಬಾರದ ಮಕ್ಕಳು ತಮ್ಮ ಓದಿನಲ್ಲಿ ಮಾತ್ರವಲ್ಲ, ಬೇರೆಲ್ಲಾ ಕಲಿಕೆಗಳಲ್ಲೂ ಹಿಂದೆ ಬೀಳುತ್ತಾರೆ. ಯಾಕೆಂದರೆ, ಸಲೀಸಾಗಿ ಓದಲು ಬಾರದ ಮಕ್ಕಳಿಗೆ ತಾವು ಓದುವ ಬರಹ ಏನು ತಿಳಿಸುತ್ತದೆ ಎಂಬುದು ಸರಿಯಾಗಿ ಗೊತ್ತಾಗುವುದೇ ಇಲ್ಲ.
ಕತೆಗಳನ್ನು ಓದಿ ಆನಂದಿಸಬೇಕಿದ್ದಲ್ಲಿ, ನಗೆಹನಿಗಳನ್ನು ಓದಿ ನಗಬೇಕಿದ್ದಲ್ಲಿ, ಇಲ್ಲವೇ ಸುದ್ದಿಹಾಳೆ(ದಿನಪತ್ರಿಕೆ)ಗಳನ್ನು ಓದಿ ವಿಶಯಗಳನ್ನು ತಿಳಿದುಕೊಳ್ಳ ಬೇಕಿದ್ದಲ್ಲಿ ಸಲೀಸಾದ ಓದು ಅತ್ಯವಶ್ಯ. ಈ ರೀತಿ ಓದಲು ಬಾರದ ಮಕ್ಕಳು ಮೇಲಿನ ಕೆಲಸಗಳಲ್ಲಿ ಯಾವುದನ್ನೂ ಮಾಡಲು ಹೋಗುವುದಿಲ್ಲ. ಒತ್ತಾಯ ಕ್ಕಾಗಿ ನಡೆಸಬೇಕಾಗಿರುವ ತರಗತಿಯ ಓದನ್ನು ಬಿಟ್ಟು ಬೇರೆಲ್ಲಾ ಓದು ಗಳಿಂದಲೂ ಅವರು ದೂರವೇ ಉಳಿಯುತ್ತಾರೆ.
ಚುರುಕಾಗಿರುವ ಮತ್ತು ಬುದ್ದಿವಂತರಾಗಿರುವ ಮಕ್ಕಳೂ ತಮ್ಮ ಓದಿನಲ್ಲಿ ಹಿಂದೆ ಬೀಳಬಲ್ಲರು. ಅವರಿಗೆ ಸಲೀಸಾಗಿ ಓದುವುದು ಹೇಗೆ ಎಂಬುದನ್ನು ಯಾರೂ ಕಲಿಸದಿರುವುದು, ಮತ್ತು ತಾವಾಗಿ ಅದನ್ನು ಕಲಿತುಕೊಳ್ಳಲು ಬಾರದಿರುವುದು ಇದಕ್ಕೆ ಕಾರಣ. ಸಯ್ಕಲ್ ತುಳಿಯುವುದು, ಈಜುವುದು ಮೊದಲಾದವುಗಳ ಹಾಗೆ, ಸಲೀಸಾಗಿ ಓದುವುದೂ ಒಂದು ಚಳಕವಾಗಿದ್ದು, ಹೆಚ್ಚಿನ ಮಕ್ಕಳೂ ಅದನ್ನು ಹೇಳಿಕೊಟ್ಟಲ್ಲಿ ಮಾತ್ರ ಕಲಿತುಕೊಳ್ಳಬಲ್ಲರು.
ಮಕ್ಕಳಿಗೆ ಸಲೀಸಾಗಿ ಓದಲು ಬರುತ್ತದೆಯೇ ಇಲ್ಲವೇ ಎಂಬುದನ್ನು ಅವರು ಓದುವ ಕ್ರಮದಿಂದಲೇನೇ ಕಂಡುಹಿಡಿಯಬಹುದು. ಪದಗಳನ್ನು ಬಿಡಿಸಿ ಬಿಡಿಸಿ ಓದುತ್ತಿರುವರಾದರೆ, ಅವನ್ನು ಪದಕಂತೆಗಳಾಗಿ ಜೋಡಿಸಿ ಓದಲು ಅವರಿಗೆ ಬರುವುದಿಲ್ಲವಾರೆ, ಮತ್ತು ಓದುವಾಗ ಅನಿಸಿಕೆಗಳು ಅವರ ಮೋರೆಯಲ್ಲಿ ಮೂಡುವುದಿಲ್ಲವಾದರೆ, ಅವರಿಗೆ ಸಲೀಸಾಗಿ ಓದಲು ಬರುವುದಿಲ್ಲವೆಂದೇ ಹೇಳಬಹುದು. ಒಳ್ಳೇ ಓದುಗರ ಓದು ಮಾತನಾಡುವ ಹಾಗೆಯೇ ಸಲೀಸಾಗಿ ಸಾಗುತ್ತದೆ. ಅವರು ತಮ್ಮ ಓದಿನಿಂದ ಕೇಳುಗರನ್ನು ಸೆರೆಹಿಡಿಯಬಲ್ಲರು. ಸಲೀಸಾಗಿ ಓದಲು ಬಾರದ ಮಕ್ಕಳಿಗೆ ಅದನ್ನು ಕಲಿಸುವುದಕ್ಕಾಗಿ ಕಲಿಸುಗರು ಕೆಲವು ಕೆಲಸಗಳನ್ನು ನಡೆಸಬೇಕಾಗುತ್ತದೆ. ಮೊದಲನೆಯದಾಗಿ, ಓದನ್ನು ಸಲೀಸಾಗಿ ನಡೆಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತೋರಿಸಿಕೊಡಬೇಕು. ಇದಕ್ಕಾಗಿ ಮಕ್ಕಳ ಮನಸ್ಸನ್ನು ಸೆಳೆಯಬಲ್ಲ ಬರಹಗಳನ್ನು ಆರಿಸಿಕೊಂಡು, ಅವನ್ನು ಗಟ್ಟಿಯಾಗಿ ಓದಿ ತೋರಿಸಬೇಕು, ಮತ್ತು ಪದಗಳನ್ನು ಪದಕಂತೆಗಳಾಗಿ ಜೋಡಿಸಿ ಓದುವ ಬಗೆ ಹೇಗೆ, ಬರಹದ ಹುರುಳು ಗೊತ್ತಾಗುವ ಹಾಗೆ ಅಲ್ಲಲ್ಲಿ ನಿಲ್ಲಿಸಿ ಓದುವ ಬಗೆ ಹೇಗೆ, ಮತ್ತು ಓದುಗರನ್ನು ಸೆಳೆಯುವ ಹಾಗೆ ಉಲಿಯ ಏರಿಳಿತಗಳನ್ನು ಓದಿನಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ಅವರಿಗೆ ತಮ್ಮ ಓದಿನ ಮೂಲಕ ತೋರಿಸಿಕೊಡಬೇಕು.
ಎರಡನೆಯದಾಗಿ, ಕೆಲವು ಬರಹಗಳನ್ನು ಮಕ್ಕಳೇ ಹಲವು ಬಾರಿ ಗಟ್ಟಿಯಾಗಿ ಓದುವಂತೆ ಮಾಡಬೇಕು. ಆ ರೀತಿ ಒಂದೇ ಬರಹವನ್ನು ಹಲವು ಬಾರಿ ಓದುವುದರಿಂದ ಮಕ್ಕಳಿಗೆ ತಮ್ಮ ಓದಿನ ಮೇಲೆ ಹೆಚ್ಚಿನ ಹಿಡಿತವನ್ನು ಪಡೆಯಲು ಬರುತ್ತದೆ. ಕತೆ, ಕವಿತೆ ಮೊದಲಾದುವನ್ನು ಹಲವು ಬಾರಿ ಓದಿದಾಗ, ಅಂತಹ ಬರಹಗಳಲ್ಲಿ ಆಗಾಗ ಬರುವ ಪದಗಳನ್ನು ಗುರುತಿಸುವ ಕೆಲಸ ಅವರಿಗೆ ಸುಳುವಾಗುತ್ತಾ ಹೋಗುತ್ತದೆ. ಇದರಿಂದಾಗಿ, ಅವರಿಗೆ ತಾವು ಓದುತ್ತಿರುವುದೇನೆಂಬುದನ್ನು (ಎಂದರೆ ಓದಿನ ಹುರುಳನ್ನು) ತಿಳಿದುಕೊಳ್ಳುವು ದಕ್ಕೆ ಸಾಕಶ್ಟು ಸಮಯ ದೊರೆಯುತ್ತದೆ.
2.3.7 ಪದಗಳ ಕಲಿಕೆ
ಮಕ್ಕಳಿಗೆ ತಾವು ಓದುತ್ತಿರುವುದೇನೆಂಬುದು ಗೊತ್ತಾಗಬೇಕಿದ್ದಲ್ಲಿ, ಅವರ ಓದಿನಲ್ಲಿ ಬರುವ ಪದಗಳಲ್ಲಿ ಹೆಚ್ಚಿನವನ್ನೂ ಅವರು ತಿಳಿದಿರಬೇಕಾಗುತ್ತದೆ. ಸಾಮಾನ್ಯವಾಗಿ ಮಾತಿನಲ್ಲಿ ಬಳಕೆಯಾಗುವ ಪದಗಳೇ ಓದಿನಲ್ಲೂ ಬರುವ ಕಾರಣ, ತಮ್ಮ ನೆನಪಿನಲ್ಲಿರುವ ಮಾತಿನ ಪದನೆರಕೆ(ಪದಕೋಶ)ಯನ್ನೇ
ಅವರು ತಮ್ಮ ಓದಿನಲ್ಲೂ ಬಳಸಿಕೊಳ್ಳಬಲ್ಲರು. ಮಾತಿನಲ್ಲಿ ಬಾರದಿರುವ ಪದಗಳು ಓದಿನಲ್ಲಿ ಬಂದಾಗ ಮಾತ್ರ ಅವರು ತೊಂದರೆಗೀಡಾಗುತ್ತಾರೆ.
ಓದಲು ಕಲಿಯುತ್ತಿರುವ ಮಕ್ಕಳ ಮಿದುಳಿನಲ್ಲಿ ಮಾತಿನ ಪದನೆರಕೆ ಮತ್ತು ಓದಿನ ಪದನೆರಕೆ ಎಂಬುದಾಗಿ ಎರಡು ಬಗೆಯ ಪದನೆರಕೆಗಳು ನೆಲೆಗೊಳ್ಳು ತ್ತವೆ. ಇದಲ್ಲದೆ, ಈ ಎರಡು ಬಗೆಯ ಪದನೆರಕೆಗಳಲ್ಲೂ ಮಾತನ್ನು ಕೇಳಿ ತಿಳಿಯುವುದರಲ್ಲಿ, ಇಲ್ಲವೇ ಬರಹವನ್ನು ಓದಿ ತಿಳಿಯುವುದರಲ್ಲಿ ಬಳಕೆ ಯಾಗುವ ಪದನೆರಕೆಗಳಿಗಿಂತ ಮಾತನಾಡುವುದರಲ್ಲಿ, ಇಲ್ಲವೇ ಬರೆಯು ವುದರಲ್ಲಿ ಬಳಕೆಯಾಗುವ ಪದನೆರಕೆಗಳು ಬೇರಾಗಿರುತ್ತವೆ. ಇವುಗಳಲ್ಲಿ ಓದಿನ ಪದನೆರಕೆಯನ್ನು ಹಿಗ್ಗಿಸುವ ಮೂಲಕ ಮಕ್ಕಳು ಓದಿನಲ್ಲಿ ಮುಂದೆ ಬರುವಂತೆ ಮಾಡಬಹುದು.
ಬಗೆ ಬಗೆಯ ಬರಹಗಳನ್ನು ಓದುತ್ತಾ ಹೋದಂತೆ, ಮಕ್ಕಳಲ್ಲಿರುವ ಓದಿನ ಪದನೆರಕೆ ಹಿಗ್ಗುತ್ತಾ ಹೋಗುತ್ತದೆ. ತಾವು ಕಲಿಯುವ ಹೆಚ್ಚಿನ ಪದಗಳನ್ನೂ ಅವರು ಈ ರೀತಿ ಬರಹಗಳಲ್ಲಿ ಅವುಗಳ ಬಳಕೆಯನ್ನು ಗಮನಿಸುವುದರ ಮೂಲಕ ಪಡೆಯುತ್ತಾರೆ. ಹಾಗಾಗಿ, ಮಕ್ಕಳಲ್ಲಿರುವ ಓದಿನ ಪದನೆರಕೆಯನ್ನು ಹಿಗ್ಗಿಸಬೇಕಿದ್ದಲ್ಲಿ, ಅವರು ಹೆಚ್ಚು ಹೆಚ್ಚು ಬರಹಗಳನ್ನು, ಮತ್ತು ಬಗೆ ಬಗೆಯ ಬರಹಗಳನ್ನು ಓದುವ ಹಾಗೆ ಮಾಡಬೇಕು.
ಹಲವು ಮಂದಿ ತಾಯ್ತಂದೆಯರು ಪಟ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಮಕ್ಕಳು ಓದಬಾರದೆಂದು ಕಟ್ಟಲೆ ಮಾಡುತ್ತಾರೆ. ಕತೆ ಕಾದಂಬರಿಗಳನ್ನು ಓದಿ ಸಮಯ ಹಾಳುಮಾಡಬಾರದೆಂದು ಆಗಾಗ ಹೇಳು ತ್ತಿರುತ್ತಾರೆ. ಆದರೆ ಬರೇ ಪಟ್ಯಪುಸ್ತಕಗಳನ್ನು ಮಾತ್ರವೇ ಓದುತ್ತಿದ್ದರೆ ಮಕ್ಕಳ ಪದನೆರಕೆ ತುಂಬಾ ಚಿಕ್ಕದಾಗಿಯೇ ಉಳಿಯುತ್ತದೆ. ಅದನ್ನು ಹಿಗ್ಗಿಸಬೇಕಿದ್ದಲ್ಲಿ ಅವರು ಎಲ್ಲಾ ಬಗೆಯ ಪುಸ್ತಕಗಳನ್ನೂ ಓದುತ್ತಿರಬೇಕು.
ಪದಗಳನ್ನು ನೇರವಾಗಿ ಕಲಿಯುವ ಮೂಲಕವೂ ಮಕ್ಕಳು ತಮ್ಮ ಪದನೆರಕೆ ಯನ್ನು ಸ್ವಲ್ಪ ಮಟ್ಟಿಗೆ ಹಿಗ್ಗಿಸಿಕೊಳ್ಳಬಲ್ಲರು. ಎತ್ತುಗೆಗಾಗಿ, ತಾವು ಓದುವ ಬರಹದಲ್ಲಿ ಕಂಡುಬರುವ ಹೊಸ ಪದವೊಂದರ ಹುರುಳೇನು ಎಂಬುದನ್ನು ಕಂಡುಹಿಡಿಯಲು ಅವರು ಪದನೆರಕೆ(ಪದಕೋಶ)ಗಳ ನೆರವನ್ನು ಪಡೆಯ ಬಹುದು. ಕನ್ನಡದ ಪದನೆರಕೆಗಳಲ್ಲಿ ಸಾವಿರಾರು ಕನ್ನಡ ಪದಗಳ ಹುರುಳು ಗಳನ್ನು ಕೊಡಲಾಗಿದೆ. ಇದಲ್ಲದೆ, ಈ ಪದಗಳನ್ನು ಪದಕಂತೆಗಳಲ್ಲಿ ಮತ್ತು ಸೊಲ್ಲುಗಳಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನೂ ಅವುಗಳಲ್ಲಿ ತೋರಿಸಿ ಕೊಡಲಾಗಿದೆ.
ಆದರೆ, ಇಂತಹ ಪದನೆರಕೆಗಳನ್ನು ಬಳಸುವ ಬಗೆ ಹೇಗೆ ಎಂಬುದು ಮಕ್ಕಳಿಗೆ ಗೊತ್ತಿರುವುದಿಲ್ಲ; ಹಾಗಾಗಿ, ಅದನ್ನು ಅವರಿಗೆ ತಿಳಿಸಿಕೊಡ ಬೇಕಾಗುತ್ತದೆ. ಅವುಗಳಲ್ಲಿ ಬರುವ ಹೆಚ್ಚಿನ ಕನ್ನಡ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳನ್ನು ಕೊಟ್ಟಿರುತ್ತದೆ; ಅಂತಹ ಹುರುಳುಗಳಲ್ಲಿ ತಮ್ಮ ಓದಿಗೆ ಹೊಂದಿಕೆಯಾಗುವಂತಹ ಹುರುಳನ್ನು ಆರಿಸುವುದು ಹೇಗೆ ಎಂಬುದನ್ನು ಮಕ್ಕಳು ತಿಳಿದಿರಬೇಕು. ಹೀಗೆ ಹುರುಳನ್ನು ಆರಿಸಬೇಕಿದ್ದಲ್ಲಿ, ತಾವು ಓದುವ ಬರಹದಲ್ಲಿ ಬಂದ ಪದ ಹೆಸರು(ನಾಮ)ಪದವೇ, ಎಸಕ(ಕ್ರಿಯಾ)ಪದವೇ ಇಲ್ಲವೇ ಪರಿಚೆ(ಗುಣ)ಪದವೇ ಎಂಬುದನ್ನೂ ಮಕ್ಕಳು ತಿಳಿದುಕೊಂಡಿರ ಬೇಕಾಗುತ್ತದೆ. ಪದನೆರಕೆಗಳನ್ನು ಬಳಸಲು ಕಲಿತಿರುವ ಮಕ್ಕಳಿಗೆ ಇಂತಹ ಸೊಲ್ಲರಿಮೆಗೆ ಸಂಬಂದಿಸಿದ ವಿಶಯಗಳೂ ಗೊತ್ತಿರುತ್ತವೆ.
ಪದಗಳಲ್ಲಿ ಬರುವ ಒಟ್ಟು(ಪ್ರತ್ಯಯ)ಗಳನ್ನು ಮತ್ತು ತುಂಡುಪದಗಳನ್ನು ಗಮನಿಸುವ ಮೂಲಕವೂ ಮಕ್ಕಳು ಹೊಸ ಪದಗಳನ್ನು ಕಲಿತುಕೊಳ್ಳಬಲ್ಲರು. ಎತ್ತುಗೆಗಾಗಿ, ಕನ್ನಡದಲ್ಲಿ ಸಾಮಾನ್ಯವಾಗಿ ಇಗ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳು ಒಬ್ಬ ಮನುಶ್ಯನನ್ನು ಸೂಚಿಸುತ್ತವೆ (ಕೇಳುಗ, ನುಡಿಗ, ಗಾಣಿಗ, ಸಾಲಿಗ, ನಾಡಿಗ, ಒಕ್ಕಲಿಗ); ಗಾರ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳೂ ಇದೇ ಹುರುಳನ್ನು ಕೊಡುತ್ತವೆ (ಬರಹಗಾರ, ಹೊಣೆಗಾರ, ಓಟಗಾರ, ಕಾವಲುಗಾರ).
ಇದಕ್ಕೆ ಬದಲು, ಇಗೆ ಇಲ್ಲವೇ ಗೆ ಒಟ್ಟಿನಲ್ಲಿ ಕೊನೆಗೊಳ್ಳುವ ಪದಗಳು ಸಾಮಾನ್ಯವಾಗಿ ಒಂದು ವಸ್ತುವನ್ನು ಸೂಚಿಸುತ್ತವೆ (ಹಾಸಿಗೆ, ಆಟಿಗೆ, ಬಡಿಗೆ, ಉಡುಗೆ, ಕೊಡುಗೆ). ಕನ್ನಡ ಪದಗಳಲ್ಲಿ ಬರುವ ಒಟ್ಟುಗಳ ಕುರಿತಾಗಿ ಇಂತಹ ವಿಶಯಗಳನ್ನು ಎತ್ತುಗೆಗಳ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ, ಅವರು ಓದುವ ಬರಹದಲ್ಲಿ ಹೊಸ ಪದಗಳು ಕಾಣಿಸಿಕೊಂಡಾಗ ಅವುಗಳ ಲ್ಲಿರುವ ಒಟ್ಟುಗಳನ್ನು ಗಮನಿಸಿ ಹುರುಳನ್ನು ಊಹಿಸಿಕೊಳ್ಳಲು ಅವರಿಗೆ ಗೊತ್ತಾಗುತ್ತದೆ.
ಕನ್ನಡ ಪದಗಳಲ್ಲಿ ಹಲವು ಬಗೆಯ ತುಂಡುಪದಗಳು ಬಳಕೆಯಾಗುತ್ತವೆ; ಇವಕ್ಕೂ ಅವುಗಳದೇ ಆದ ಹುರುಳುಗಳು ಹೆಚ್ಚಿನ ಬಳಕೆಗಳಲ್ಲೂ ಇರುತ್ತವೆ. ಎತ್ತುಗೆಗಾಗಿ, ಕಿರು-ಕಿತ್ ಎಂಬ ತುಂಡುಪದಕ್ಕೆ ಚಿಕ್ಕ ಎಂಬ ಹುರುಳಿದೆ. ಈ ತುಂಡುಪದದ ಅನಂತರ ಒಂದು ಮುಚ್ಚುಲಿ (ವ್ಯಂಜನ) ಬಂದಿದೆಯಾದರೆ ಅದಕ್ಕೆ ಕಿರು ಎಂಬ ರೂಪ ಇರುತ್ತದೆ (ಕಿರುನಾಲಿಗೆ, ಕಿರುಗತ್ತಿ, ಕಿರುನಾಯಿ, ಕಿರುಗುಡ್ಡ), ಮತ್ತು ಒಂದು ತೆರೆಯುಲಿ (ಸ್ವರ) ಬಂದಿದೆಯಾದರೆ ಅದಕ್ಕೆ
ಕಿತ್ ಎಂಬ ರೂಪ ಇರುತ್ತದೆ (ಕಿತ್ತುಸಿರು, ಕಿತ್ತೆಸಳು, ಕಿತ್ತೋಟ, ಕಿತ್ತುಲಿ, ಕಿತ್ತೋಲೆ).
ಕನ್ನಡದ ಪದಗಳಲ್ಲಿ ಇಂತಹ ತುಂಡುಪದಗಳು ಹೇಗೆ ಬಳಕೆಯಾಗುತ್ತವೆ ಮತ್ತು ಅವುಗಳ ನೆರವಿನಿಂದ ಹೊಸ ಪದಗಳ ಹುರುಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ಮಕ್ಕಳಿಗೆ ಎತ್ತುಗೆಗಳ ಮೂಲಕ ತಿಳಿಸಿಕೊಡಬೇಕು. ತಮ್ಮ ಪದನೆರಕೆಯನ್ನು ಹಿಗ್ಗಿಸಿಕೊಳ್ಳಲು ಅವರಿಗೆ ಇದರಿಂದಲೂ ನೆರವಾಗುತ್ತದೆ. ಹೊಸ ಪದಗಳ ಹುರುಳನ್ನು ಅವು ಬಳಕೆಯಾಗಿರುವ ಕುಳ್ಳಿಹ(ಸಂದರ್ಬ) ದಿಂದಲೂ ಊಹಿಸಿಕೊಳ್ಳಲು ಬರುತ್ತದೆ. ಹಾಗಾಗಿ, ಈ ಕೆಲಸದಲ್ಲಿ ಕುಳ್ಳಿಹದ ನೆರವನ್ನು ಪಡೆಯುವುದು ಹೇಗೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಎತ್ತುಗೆಗಾಗಿ, ಹಾಲು ಚಿಮ್ಮಿ ಆತನ ಕಣ್ಣು ಕುರುಡಾಯಿತು ಎಂಬ ಸೊಲ್ಲಿನಲ್ಲಿ ಬಂದಿರುವ ಹಾಲು ಪದಕ್ಕೆ ದನದ ಹಾಲು ಎಂಬ ಹುರುಳಿಗಿಂತಲೂ ಒಂದು ಗಿಡದ ಸೊನೆ ಎಂಬ ಹುರುಳೇ ಸರಿಯಾದುದು ಎಂಬುದು ಅದರ ಕುಳ್ಳಿಹದಿಂದ ಗೊತ್ತಾಗುತ್ತದೆ. ದನದ ಹಾಲು ಚಿಮ್ಮಿದರೆ ಕಣ್ಣು ಕುರುಡಾಗಲಾರದಲ್ಲವೇ?
ಸಾಮಾನ್ಯವಾಗಿ, ಕತೆ ಕಾದಂಬರಿಗಳಂತಹ ಬರಹಗಳನ್ನು ಓದುವವರು ಅವುಗಳಲ್ಲಿ ಬರುವ ಹೊಸ ಪದಗಳಿಗೆ ಸರಿಯಾದ ಹುರುಳು ಏನೆಂಬುದನ್ನು ಪದನೆರಕೆಗಳಲ್ಲಿ ಹುಡುಕಲು ಹೋಗುವ ಬದಲು, ಪದಗಳ ಕುಳ್ಳಿಹದ ನೆರವಿ ನಿಂದ ಊಹಿಸಿಕೊಂಡು ಮುಂದೆ ಹೋಗುವುದೇ ಒಳ್ಳೆಯದು. ಯಾಕೆಂದರೆ, ಅಂತಹ ಬರಹಗಳನ್ನು ಓದಿ ಆನಂದಿಸಲು ಅವುಗಳಲ್ಲಿ ಬರುವ ಎಲ್ಲಾ ಪದ ಗಳ ಹುರುಳನ್ನೂ ತಿಳಿಯಲೇಬೇಕೆಂದೇನಿಲ್ಲ. ಕುಳ್ಳಿಹದ ಮೂಲಕ ಹೊಸ ಪದಗಳ ಹುರುಳನ್ನು ಊಹಿಸಿಕೊಳ್ಳಲು ಕಲಿತ ಮಕ್ಕಳಿಗೆ ಕತೆ, ಕಾದಂಬರಿ ಮೊದಲಾದುವನ್ನು ಓದಿ ಆನಂದಿಸುವ ಕೆಲಸ ಹೆಚ್ಚು ಸುಳುವಿನದಾಗುತ್ತದೆ. ಅರಿಮೆಯ (ವಿಜ್ನಾನದ) ಬರಹಗಳಲ್ಲಿ ತುಂಬಾ ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳು (ರೂಪಕ ಇಲ್ಲವೇ ಮೆಟಾಫರ್ಗಳು) ಬಳಕೆಯಾಗುತ್ತವೆ (4.4 ನೋಡಿ). ಇವುಗಳಲ್ಲಿ ಸೊಲ್ಲುಗಳನ್ನು ಹೆಸರುಪದಗಳಾಗಿ ಇಲ್ಲವೇ ಹೆಸರುಪದಕಂತೆಗಳಾಗಿ ಮಾರ್ಪಡಿಸಿ ಬಳಸಲಾಗುತ್ತದೆ (ನೀರು ಇಂಗಿತು ಎಂಬುದನ್ನು ನೀರಿನ ಇಂಗುವಿಕೆ ಎಂಬುದಾಗಿ ಮಾರ್ಪಡಿಸಲಾಗುತ್ತದೆ) ಮತ್ತು ಅವನ್ನು ಇನ್ನಶ್ಟು ಅಡಕವಾಗಿರುವ ಅರಿಮೆಯ (ಪಾರಿಬಾಶಿಕ) ಪದಗಳನ್ನಾಗಿ ಮಾಡಿಯೂ ಬಳಸಲಾಗುತ್ತದೆ. ಇವು ಓದುಗರಿಗೆ ತುಂಬಾ ತೊಡಕನ್ನುಂಟು ಮಾಡುತ್ತವೆ. ಸೊಲ್ಲರಿಮೆಯ ಮಾರ್ಪುರುಳುಗಳನ್ನು ಅವುಗಳ ಹಿಂದಿರುವ
ಸೊಲ್ಲುಗಳಾಗಿ ಮಾರ್ಪಡಿಸಿಕೊಳ್ಳುವುದು ಹೇಗೆ ಮತ್ತು ಹಾಗೆ ಮಾಡುವ ಮೂಲಕ ಅವುಗಳ ಹುರುಳುಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಮಕ್ಕಳಿಗೆ ಬೇರೆಯಾಗಿ ಕಲಿಸಿಕೊಡಬೇಕಾಗುತ್ತದೆ.
2.3.8 ಓದಿನಿಂದ ತಿಳುವಳಿಕೆಯನ್ನು ಪಡೆಯುವುದು
ತಾವು ಓದುವ ಬರಹದಿಂದ ತಿಳುವಳಿಕೆಯನ್ನು ಪಡೆಯುವುದು ಹೇಗೆ ಎಂಬು ದನ್ನೂ ಮಕ್ಕಳಿಗೆ ತಿಳಿಸಿಕೊಡಬೇಕಾಗುತ್ತದೆ. ಎಲ್ಲಾ ಬರಹಗಳನ್ನೂ ಒಂದೇ ರೀತಿಯಲ್ಲಿ ಓದುವ ಮಕ್ಕಳಿಗೆ ಅವುಗಳಲ್ಲಿ ಹೆಚ್ಚಿನವುಗಳಿಂದಲೂ ತಮಗೆ ಬೇಕಾಗಿರುವ ತಿಳುವಳಿಕೆಯನ್ನು ಪಡೆಯಲು ಬರುವುದಿಲ್ಲ. ಓದುತ್ತಿರುವ ಬರಹವನ್ನವಲಂಬಿಸಿ, ತಮ್ಮ ಓದಿನ ವೇಗವನ್ನು ಹೆಚ್ಚುಕಡಿಮೆ ಮಾಡಲು ಮತ್ತು ಓದಿನ ಮೇಲೆ ಹತೋಟಿಯನ್ನಿಟ್ಟುಕೊಳ್ಳಲು ಅವರು ಕಲಿಯ ಬೇಕಾಗು
ಯಾವುದೇ ಬರಹವನ್ನಾಗಲಿ, ಓದುವುದಕ್ಕೆ ಒಂದು ಗುರಿಯಿರುತ್ತದೆ. ಇದು ಬೇರೆ ಬೇರೆ ಬಗೆಯ ಬರಹಗಳಿಗೆ ಬೇರೆ ಬೇರಾಗಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿಗಳನ್ನು ಓದುವವರಿಗೆ ಸಾಮಾನ್ಯವಾಗಿ ತಮ್ಮ ಓದಿನಿಂದ ಸಂತೋಶಪಡಬೇಕೆಂದಿರುತ್ತದೆ; ಅರಿಮೆಯ (ವಿಜ್ನಾನದ) ಬರಹಗಳನ್ನು ಓದುವವರಿಗೆ ಅವುಗಳ ನೆರವಿನಿಂದ ಯಾವುದಾದರೊಂದು ವಿಶಯವನ್ನು ತಿಳಿದುಕೊಳ್ಳಬೇಕೆಂದಿರುತ್ತದೆ; ಪದನೆರಕೆಯನ್ನು ಓದುವವರಿಗೆ ತಮಗೆ ಗೊತ್ತಾಗದ ಯಾವುದಾದರೊಂದು ಪದದ ಹುರುಳೇನೆಂಬುದನ್ನು ತಿಳಿಯ ಬೇಕೆಂದಿರುತ್ತದೆ. ಈ ರೀತಿ, ಬೇರೆ ಬೇರೆ ಓದುಗಳಿಗೆ ಬೇರೆ ಬೇರೆ ಗುರಿಗಳಿದ್ದು, ತಾನು ಒಂದು ಬರಹವನ್ನು ಯಾಕೆ ಓದುತ್ತಿದ್ದೇನೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು, ಅದಕ್ಕನುಸಾರವಾಗಿ ತನ್ನ ಓದನ್ನು ಹೊಂದಿಸಿಕೊಳ್ಳಲು ಒಳ್ಳೇ ಓದುಗರಿಗೆ ತಿಳಿದಿರುತ್ತದೆ. ಮಕ್ಕಳಿಗೆ ಇದನ್ನು ಕಲಿಸಿಕೊಟ್ಟು, ಅವರು ಒಳ್ಳೇ ಓದುಗರಾಗುವ ಹಾಗೆ ಮಾಡಬೇಕು.
ಬರಹಗಳನ್ನು ಓದುತ್ತಿರುವಾಗ, ಮೂರು ಬಗೆಯ ಚಟುವಟಿಕೆಗಳನ್ನು ನಡೆಸುವ ಮೂಲಕ ಓದುಗನು ತನ್ನ ಓದಿನ ಮಟ್ಟವನ್ನು ಮೇಲಕ್ಕೇರಿಸಬಹುದು: ಅದನ್ನು ಬರೆದವನು ಅದರ ಮೂಲಕ ಏನನ್ನು ತಿಳಿಸುತ್ತಿದ್ದಾನೆ, ಆತನ ಗುರಿಯೇನು ಎಂಬುದನ್ನು ತಿಳಿದುಕೊಳ್ಳುವುದು ಇದರಲ್ಲಿ ಮೊದಲನೆಯದು; ಅದರಿಂದ ದೊರೆತ ತಿಳುವಳಿಕೆಯನ್ನು ತನ್ನಲ್ಲಿರುವ ತಿಳುವಳಿಕೆಯೊಂದಿಗೆ ಸೇರಿಸಿಕೊಂಡು, ಆ ವಿಶಯದ ಕುರಿತು ಹೆಚ್ಚಿನ ಅರಿವನ್ನು ಪಡೆಯುವುದು
ಎರಡನೆಯದು; ಮತ್ತು ಆ ರೀತಿ ಓದನ್ನು ನಡೆಸುತ್ತಿರುವಾಗ, ನಿಜಕ್ಕೂ ತಾನು ಯಾವ ರೀತಿಯಲ್ಲಿ ತಿಳುವಳಿಕೆಯನ್ನು ಪಡೆಯುತ್ತಿದ್ದೇನೆ ಎಂಬುದನ್ನು ಗಮನಿಸಿ, ತನ್ನ ಓದನ್ನು ಹಿಡಿತದಲ್ಲಿರಿಸಿಕೊಳ್ಳುವುದು ಮೂರನೆಯದು.
ಇವುಗಳಲ್ಲಿ ಮೊದಲನೆಯ ಕೆಲಸವನ್ನು ನಡೆಸಬೇಕಿದ್ದಲ್ಲಿ, ಓದುಗನಿಗೆ ಬರಹದ ಹಿಂದಿರುವ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಓದುತ್ತಿರುವ ಬರಹದಲ್ಲಿ ಯಾವ ಅಂಶ ತನಗೆ ಗೊತ್ತಾಗುತ್ತದೆ ಮತ್ತು ಯಾವುದು ಗೊತ್ತಾಗುವುದಿಲ್ಲ ಎಂಬುದನ್ನು ಆತ ತಿಳಿದುಕೊಳ್ಳಬಲ್ಲನಾದರೆ, ಗೊತ್ತಾಗ ದಿರುವ ಅಂಶವನ್ನು ಸೊಲ್ಲರಿಮೆಯ ತಿಳಿವಿನ ಮೂಲಕ ಗೊತ್ತಾಗುವ ಹಾಗೆ ಮಾಡಲು ಪ್ರಯತ್ನಿಸಬಹುದು.
ಎತ್ತುಗೆಗಾಗಿ, ಒಂದು ತುಂಬಾ ತೊಡಕು ತೊಡಕಾಗಿರುವ ಸೊಲ್ಲು ನಿಜಕ್ಕೂ ಏನು ಹೇಳುತ್ತಿದೆ ಎಂಬುದನ್ನು ತಿಳಿಯಲು ಅದರಲ್ಲಿ ಬಂದಿರುವ ಎಸಕ(ಕ್ರಿಯಾ) ಪದಗಳಲ್ಲಿ ಮುಕ್ಯವಾದುದು ಯಾವುದು ಎಂಬುದನ್ನು, ಮತ್ತು ಅದು ತಿಳಿಸುವ ಎಸಕದಲ್ಲಿ ಯಾವ ವ್ಯಕ್ತಿ, ವಸ್ತು ಮತ್ತು ವಿಶಯಗಳು ತೊಡಗಿಕೊಂಡಿವೆ ಎಂಬುದನ್ನು ಕಂಡುಹಿಡಿಯಲು ಗೊತ್ತಿರಬೇಕು. ಹಾಗೆ ಮಾಡಬೇಕಿದ್ದಲ್ಲಿ, ಅವುಗಳೊಂದಿಗೆ ಬಂದಿರುವ ತುಂಡು ಸೊಲ್ಲುಗಳನ್ನು ಮತ್ತು ಪರಿಚೆ(ಗುಣ) ಪದಗಳನ್ನು ಮುಕ್ಯ ಪದಗಳಿಂದ ಬೇರ್ಪಡಿಸಲು ಗೊತ್ತಿರಬೇಕು. ಈ ಕೆಲಸವನ್ನು ನಡೆಸುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸಿಕೊಡ ಬೇಕಾಗುತ್ತದೆ.
2.4 ಬರೆಯಲು ಕಲಿಯುವುದು
ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಮಕ್ಕಳ ಮಟ್ಟಿಗೆ ಹೆಚ್ಚು ತೊಡಕಿನ ಕೆಲಸ. ಇದಕ್ಕೆ ಕಾರಣವೇನೆಂದರೆ, ಬರೆಯಬೇಕಿದ್ದಲ್ಲಿ ಅವರು ಒಂದೇ ಬಾರಿಗೆ ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ: ಯಾವ ವಿಶಯಗಳ ಕುರಿತು ಬರೆಯಬೇಕು, ಆ ವಿಶಯಗಳನ್ನು ಯಾವ ರೀತಿಯಲ್ಲಿ ಜೋಡಿಸಿಕೊಳ್ಳಬೇಕು, ಎಂತಹ ಪದಗಳನ್ನು ಬಳಸಬೇಕು, ಅವನ್ನು ಒಟ್ಟುಗೂಡಿಸಿ ಸೊಲ್ಲುಗಳನ್ನು ಹೇಗೆ ಕಟ್ಟಬೇಕು, ಅವನ್ನು ಬರೆಯುವಲ್ಲಿ ಯಾವ ಬರಿಗೆಗಳನ್ನು ಬಳಸಬೇಕು ಎಂಬುದನ್ನೆಲ್ಲ ಅವರು ಒಂದೇ ಬಾರಿಗೆ ತೀರ್ಮಾನಿಸಿಕೊಳ್ಳಬೇಕಾಗುತ್ತದೆ. ಹೀಗೆ ಮಾಡಲು ಬರುವುದಿಲ್ಲವಾದಲ್ಲಿ, ಬರೆಯುವ ಕೆಲಸ ಮುಂದಕ್ಕೆ ಹೋಗುವುದೇ ಇಲ್ಲ. ಹೆಚ್ಚಿನ ಮಕ್ಕಳಿಗೂ ಈ ತೊಡಕು ತೊಡಕಾದ ಕೆಲಸವನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಅದಕ್ಕೆ ಬೇಕಾಗುವ ಚಳಕಗಳನ್ನು ಒಂದೊಂದಾಗಿ
ಕಲಿಯುವಂತೆ ಯಾರಾದರೂ ಅವರಿಗೆ ನೆರವನ್ನಿತ್ತರೆ ಮಾತ್ರ, ಅವರು ಅದನ್ನು ಕಲಿಯಬಲ್ಲರು. ಇಲ್ಲವಾದರೆ, ಬರೆಯುವ ಕೆಲಸ ತಮಗೆ ಹೇಳಿದ್ದಲ್ಲ ಎಂಬುದಾಗಿ ಅವರು ಅದರಿಂದ ದೂರವೇ ಉಳಿಯುತ್ತಾರೆ. ಪರೀಕ್ಶೆಗಳಲ್ಲಿ ಬರೆಯಬೇಕಾದುದನ್ನೆಲ್ಲ ಉರುಹೊಡೆದು ಬರೆಯುವುದನ್ನಶ್ಟೇ ಅವರು ಮಾಡಬಲ್ಲರು.
2.4.1 ಬರವಣಿಗೆಯ ಚಳಕಗಳು
ಮೇಲೆ ಸೂಚಿಸಿದ ಹಾಗೆ, ಬರವಣಿಗೆಯನ್ನು ನಡೆಸಲು ಹಲವು ಚಳಕಗಳನ್ನು ಕಲಿತಿರಬೇಕಾಗುತ್ತದೆ, ಮತ್ತು ಅವನ್ನೆಲ್ಲ ತಮ್ಮ ಹತೋಟಿಯಲ್ಲಿರಿಸಿಕೊಂಡು ಒಟ್ಟಿಗೆ ನಡೆಸುತ್ತಿರಬೇಕಾಗುತ್ತದೆ. ಇದಲ್ಲದೆ, ಬೆರಳಚ್ಚು ಮಾಡುವುದು, ಕಾರು ಬಿಡುವುದು, ಹೆಣಿಗೆ ಕೆಲಸ ಮಾಡುವುದು ಮೊದಲಾದ ಬೇರೆ ತೊಡಕಿನ ಕೆಲಸಗಳ ಹಾಗೆ, ಬರೆಯುವ ಕೆಲಸವನ್ನು ನಡೆಸುವಾಗ ಕಯ್ಕೆಲಸದೊಂದಿಗೆ ಮನಸ್ಸಿನ ಕೆಲಸವನ್ನೂ ಸೇರಿಸಿಕೊಳ್ಳಬೇಕಾಗುತ್ತದೆ.
ಹಾಗಾಗಿ, ಮಕ್ಕಳಿಗೆ ಬರೆಯಲು ಕಲಿಸುವವರು ಅದಕ್ಕೆ ಬೇಕಾಗುವ ಚಳಕ ಗಳನ್ನು ಒಂದೊಂದಾಗಿ ಹತೋಟಿಗೆ ತಂದುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಬರಿಗೆ(ಅಕ್ಶರ)ಗಳನ್ನು ಬರೆಯಲು ಕಲಿಯುವ ಸಮಯ ದಲ್ಲಿ ಅವರು ಈ ಕಲಿಕೆಯನ್ನು ಸರಿಯಾದ ಓರಣ(ಕ್ರಮ)ದಲ್ಲಿ ನಡೆಸುವ ಹಾಗೆ ನೋಡಿಕೊಳ್ಳಬೇಕು.
ಮಕ್ಕಳ ಕಯ್ಬರಹ ಓದಬಲ್ಲುದಾಗಿರಬೇಕು, ಮತ್ತು ಬರವಣಿಗೆ ಸಲೀಸಾ ಗಿರಬೇಕು. ಸಲೀಸಾಗಿ ಬರೆಯಲು ಬಾರದವರಿಗೆ ಬೇರೆ ವಿಶಯಗಳ ಕುರಿತು ಆಲೋಚಿಸಲು ಸಮಯವೇ ಸಿಗುವುದಿಲ್ಲ. ಸಲೀಸಾಗಿ ಬರೆಯಬೇಕಿದ್ದಲ್ಲಿ, ಮಕ್ಕಳು ಬರಿಗೆಗಳನ್ನು ಬರೆಯುವ ಬಗೆ, ಬಳಪವನ್ನು ಹಿಡಿಯುವ ಬಗೆ, ಮತ್ತು ಕಾಗದವನ್ನು ಎದುರು ಇರಿಸಿಕೊಳ್ಳುವ ಬಗೆ ಸರಿಯಾಗಿರಬೇಕು.
ಕೆಲವು ಮಕ್ಕಳು ಬರವಣಿಗೆಗೆ ಬಲಗಯ್ಯನ್ನು ಬಳಸುವ ಬದಲು ಎಡ ಗಯ್ಯನ್ನು ಬಳಸುತ್ತಾರೆ. ಆದರೆ, ಇಂತಹ ಮಕ್ಕಳು ಬಲಗಯ್ಯಲ್ಲಿ ಬರೆಯು ವವರನ್ನು ನೋಡಿ, ಅವರು ಬರೆಯುವ ಹಾಗೆಯೇ ಬರೆಯತೊಡಗುತ್ತಾರೆ. ಇದರಿಂದಾಗಿ ಅವರು ತೊಂದರೆಗೊಳಗಾಗುತ್ತಾರೆ. ಯಾಕೆಂದರೆ, ಹಾಗೆ ಬರೆಯುವಾಗ ಅವರಿಗೆ ತಮ್ಮ ಕಯ್ಬೆರಳು ಅಡ್ಡ ಬರುವ ಕಾರಣ, ತಾವು ಬರೆದುದೇನೆಂಬುದು ಕಾಣಿಸುವುದಿಲ್ಲ, ಮತ್ತು ಅದು ಕಾಣಿಸುವಂತೆ ಮಾಡಲು,
ಅವರು ತಮ್ಮ ಮಣಿಗಂಟನ್ನು ಬಗ್ಗಿಸಿ ಬರೆಯಹೊರಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅವರಿಗೆ ಬರವಣಿಗೆ ತುಂಬಾ ತೊಡಕಿನದಾಗಿಬಿಡುತ್ತದೆ. ಎಡಗಯ್ಯಲ್ಲಿ ಬರೆಯುವ ಮಕ್ಕಳಿಗೆ ಅವರು ಬರೆಯಬೇಕಾಗಿರುವ ಬಗೆ ಹೇಗೆ ಎಂಬುದನ್ನು ಕಲಿಸಿಕೊಡಬೇಕು. ಬರೆಯುವ ಕಾಗದವನ್ನು ಇಲ್ಲವೇ ಪುಸ್ತಕವನ್ನು ಅವರು ಬಲಗಯ್ಯವರ ಹಾಗೆ ಎಡಕ್ಕೆ ತಿರುಗಿಸಿ ಇರಿಸಿಕೊಳ್ಳುವ ಬದಲು, ಬಲಕ್ಕೆ ತಿರುಗಿಸಿ ಇರಿಸಿಕೊಳ್ಳುವ ಹಾಗೆ ಮಾಡಬೇಕು, ಮತ್ತು ಪೆನ್ನನ್ನು ತುದಿಯಿಂದ ತುಸು ಮೇಲೆ ಹಿಡಿದುಕೊಳ್ಳಲು ಹೇಳಬೇಕು. ಬರೆಯುವಾಗ ಅವರು ಮಣಿಗಂಟನ್ನು ಬಗ್ಗಿಸಬಾರದು. ಎಡಗಯ್ಯವರಿಗೆ ತಕ್ಕುದಾಗಿರುವಂತಹ ಈ ಬರೆಯುವ ಬಗೆಯನ್ನು ಕಲಿತುಕೊಂಡಲ್ಲಿ ಮಾತ್ರ, ಅವರಿಗೆ ಸಲೀಸಾಗಿ ಬರೆಯಲು ಬರುತ್ತದೆ.
ಮಾತಿಗೂ ಬರಹಕ್ಕೂ ನಡುವೆ ಸೊಲ್ಲುಗಳ ರಚನೆಯಲ್ಲಿ ವ್ಯತ್ಯಾಸಗ ಳಿವೆಯಾದ ಕಾರಣ, ಬರೆಯಲು ಕಲಿಯುವ ಮಕ್ಕಳಿಗೆ ಬರಹಗಳಲ್ಲಿ ಎಂತಹ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನೂ ಕಲಿಸಬೇಕಾಗುತ್ತದೆ. ಇಡೀ ಸೊಲ್ಲುಗಳನ್ನು ಬರೆಯುವುದು ಹೇಗೆ, ಚಿಕ್ಕ ಚಿಕ್ಕ ಸೊಲ್ಲುಗಳನ್ನು ಜೋಡಿಸಿ ಉದ್ದ ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ಸೊಲ್ಲಿನೊಳಗೆ ಬೇರೆ ಚಿಕ್ಕ ಸೊಲ್ಲುಗಳನ್ನು ಇರಿಸಿ ಸಿಕ್ಕಲು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕಾಗುತ್ತದೆ. ಎಲ್ಲಾ ಮಕ್ಕಳಿಗೂ ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಸೊಲ್ಲುಗಳನ್ನು ಸೇರಿಸಿ ಕುರಳು(ಪಾರಾ)ಗಳನ್ನು ರಚಿಸುವ ಬಗೆಯನ್ನೂ ಅವರಿಗೆ ಕಲಿಸಿಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಕುರಳುಗಳಲ್ಲಿ ಮೊದಲಿಗೆ ಮುಕ್ಯ ವಿಶಯವನ್ನು ಮುಂದಿಡುವ ಚಿಕ್ಕ ಸೊಲ್ಲಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಶಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ಸೊಲ್ಲು ಬರುತ್ತದೆ. ಸೊಲ್ಲುಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು.
ಬರಹದಲ್ಲಿ ಬರುವ ಕುರಳುಗಳನ್ನು ಹೇಗೆ ಅಣಿಗೊಳಿಸುವುದು ಎಂಬು ದನ್ನೂ ಅವರು ಕಲಿಯಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ನೆಗಳ್ತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಶಯದ ಮಟ್ಟಿಗೆ ಇನ್ನೊಬ್ಬರ
ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಶಯವನ್ನು ಓದುಗರ ಮುಂದಿರಿಸುವ ಮತ್ತು ಅದನ್ನು ಬೆಂಬಲಿಸುವ ವಿಚಾರಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.
2.4.2 ಗಟ್ಟಿಯಾಗಿ ಬರೆಯುವುದು
ಬರೆಯುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸುವುದಕ್ಕಾಗಿ ಕಲಿಸುವವರು ಬಳಸಬಲ್ಲ ಹೊಲಬುಗಳಲ್ಲಿ ಒಂದನ್ನು ಗಟ್ಟಿಯಾಗಿ ಬರೆಯುವುದು ಎಂಬುದಾಗಿ ಹೆಸರಿಸಲಾಗಿದೆ. ಬರೆಯುತ್ತಿರುವಾಗ ತಮ್ಮ ಮನಸ್ಸಿನಲ್ಲಿ ಎಂತಹ ಆಲೋಚನೆಗಳೆಲ್ಲ ಮೂಡುತ್ತವೆಯೋ ಅವನ್ನು ಗಟ್ಟಿಯಾಗಿ ಹೇಳುತ್ತಾ ಹೋಗುವುದೇ ಈ ಹೊಲಬಾಗಿದೆ. ಕಲಿಸುವವರು ಮಕ್ಕಳ ಎದುರಿಗೆ ಒಂದು ಕತೆಯನ್ನು ಇಲ್ಲವೇ ಒಂದು ವಿಶಯದ ವಿವರಣೆಯನ್ನು ಬರೆದು ತೋರಿಸಬೇಕು, ಮತ್ತು ಹಾಗೆ ಬರೆಯುತ್ತಿರುವಾಗ ತಮ್ಮ ಮನಸ್ಸಿನಲ್ಲಿ ಎಂತಹ ಆಲೋಚನೆ ಗಳೆಲ್ಲ ಮೂಡುತ್ತವೆ ಎಂಬುದನ್ನು ಅವರು ಗಟ್ಟಿಯಾಗಿ ಮಕ್ಕಳಿಗೆ ಗೊತ್ತಾಗುವ ಹಾಗೆ ಹೇಳುತ್ತಾ ಹೋಗಬೇಕು. ಇದರಿಂದ ಬರೆಯುವ ಬಗೆ ಹೇಗೆ ಎಂಬುದು ಮಕ್ಕಳಿಗೆ ಗೊತ್ತಾಗುತ್ತದೆ.
ಕತೆ ಬರೆಯುವುದಿದ್ದಲ್ಲಿ ಅದಕ್ಕೊಂದು ಹಮ್ಮುಗೆಯನ್ನು ತಾವು ಹೇಗೆ ಹಮ್ಮಿಕೊಳ್ಳುತ್ತೇವೆ ಎಂಬುದನ್ನು, ಮತ್ತು ವಿಶಯವೊಂದರ ವಿವರಣೆಯನ್ನು ಬರೆಯುವುದಿದ್ದಲ್ಲಿ ಮೊದಲಿಗೆ ಅದಕ್ಕೆ ಸಂಬಂದಿಸಿದ ಹಲವಾರು ಸಂಗತಿಗಳನ್ನು ತಾವು ಹೇಗೆ ಕಲೆಹಾಕುತ್ತೇವೆ ಎಂಬುದನ್ನು ಆ ಕೆಲಸವನ್ನು ಮಾಡುತ್ತಿರುವಂತೆ ಮಕ್ಕಳಿಗೆ ಗಟ್ಟಿಯಾಗಿ ವಿವರಿಸುತ್ತಾ ಹೋಗಬೇಕು. ಇವನ್ನು ಬಳಸಿ ಬರಹವನ್ನು ಮುಂದುವರಿಸುವಾಗ, ಪದಗಳನ್ನು ಆರಿಸುವಲ್ಲಿ, ಸೊಲ್ಲುಗಳನ್ನು ಮತ್ತು ಕುರಳುಗಳನ್ನು ಕಟ್ಟುವಲ್ಲಿ ತಮಗೆ ಎದುರಾಗುವ ತೊಡಕುಗಳು ಎಂತಹವು, ಅವನ್ನು ತಾವು ಹೇಗೆ ಬಗೆಹರಿಸುತ್ತೇವೆ, ಇದಕ್ಕಾಗಿ ಸೊಲ್ಲುಗಳ ಇಟ್ಟಳಗಳನ್ನು ಹೇಗೆ ಬದಲಾಯಿಸಿಕೊಳ್ಳುತ್ತೇವೆ ಎಂಬುದನ್ನೆಲ್ಲ ಗಟ್ಟಿಯಾಗಿ ವಿವರಿಸುತ್ತಾ ಈ ಕೆಲಸಗಳನ್ನು ನಡೆಸಬೇಕು.
ಬರೆಯುವ ಕೆಲಸವನ್ನು ಕಲಿಸುವವರು ಈ ರೀತಿ ಅದನ್ನು ತಾವೇ ಮಾಡಿ ತೋರಿಸಿದಲ್ಲಿ, ಅದನ್ನು ಹೇಗೆ ನಡೆಸಬೇಕಾಗುತ್ತದೆ ಎಂಬುದು ಮಕ್ಕಳಿಗೆ ಹೆಚ್ಚು ಸುಳುವಾಗಿ ಗೊತ್ತಾಗುತ್ತದೆ, ಮತ್ತು ತಾವು ಬರೆಯುತ್ತಿರುವಾಗ ಎದುರಾಗುವ ತೊಡರುಗಳನ್ನು ಹೇಗೆ ಬಗೆಹರಿಸಬೇಕು ಎಂಬುದು ಅವರಿಗೆ ಗೊತ್ತಾಗುತ್ತದೆ.
2.4.3 ಬರೆಯುವುದು ಮತ್ತು ಸರಿಪಡಿಸುವುದು
ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ಸೊಲ್ಲನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ್ಪಡಿಸುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ಸೊಲ್ಲಿನ ಇಟ್ಟಳ (ಒಳರಚನೆ) ಎಂತಹದು, ಆ ಸೊಲ್ಲನ್ನು ಬೇರೆ ಯಾವ ಇಟ್ಟಳಗಳಿಗೆ ಮಾರ್ಪಡಿಸಬಹುದು ಎಂಬಂತಹ ಸೊಲ್ಲರಿಮೆಯ ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.
ಬರವಣಿಗೆಯಲ್ಲಿ ಮಾಡಿರುವ ತಪ್ಪನ್ನು ಬರೆದವರೇ ಓದಿ ನೋಡಿ ಕಂಡು ಕೊಳ್ಳುವಂತೆ ಮಾಡಿದಲ್ಲಿ, ಮತ್ತು ಅವು ಯಾಕೆ ತಪ್ಪಾಗಿವೆ ಎಂಬುದನ್ನೂ ತಿಳಿಯುವಂತೆ ಮಾಡಿದಲ್ಲಿ ಅವರ ಬರವಣಿಗೆ ಬೇಗನೆ ಮುಂದೆ ಸಾಗುತ್ತದೆ. ಬರೆದಶ್ಟೂ ಬರವಣಿಗೆ ಚನ್ನಾಗುತ್ತಾ ಹೋಗುತ್ತದೆ. ಹಾಗಾಗಿ, ಬರೆಯುವ ಸಂದರ್ಬಗಳು ಮಕ್ಕಳಿಗೆ ಹೆಚ್ಚು ಹೆಚ್ಚು ದೊರಕುವಂತೆ ಮಾಡಬೇಕು.
2.4.4 ಬರಹದಲ್ಲಿ ಆಸಕ್ತಿ
ಮಕ್ಕಳಿಗೆ ಬರೆಯುವಿಕೆಯಲ್ಲಿ ಆಸಕ್ತಿ ಹುಟ್ಟಬೇಕೆಂಬುದು ಎಲ್ಲಕ್ಕಿಂತಲೂ ಮುಕ್ಯವಾದ ವಿಶಯ. ಏನನ್ನೇ ಬರೆಯಲಿ, ಅದು ಅವರಿಗೆ ನಲಿವನ್ನು ಮತ್ತು ಮೆಚ್ಚುಗೆಯನ್ನು ಕೊಡುವಂತಿರಬೇಕು. ಬೇರೆಯವರ ಒತ್ತಾಯಕ್ಕೆ ಬರೆಯುವ ಬರಹದಿಂದ ಅವರ ಬರವಣಿಗೆ ಒಳ್ಳೆಯದಾಗಲಾರದು.
ಏನಾದರೂ ಒಂದು ವಿಶಯವನ್ನು ಇನ್ನೊಬ್ಬರಿಗೆ ತಿಳಿಸಬೇಕೆಂಬ ತುಡಿತ ಮಕ್ಕಳಲ್ಲಿರುತ್ತದೆ. ಎತ್ತುಗೆಗಾಗಿ, ಶಾಲೆಯಿಂದ ಮನೆಗೆ ಬಂದೊಡನೆ ಶಾಲೆಯಲ್ಲಿ ಇಲ್ಲವೇ ಅಲ್ಲಿಂದ ಬರುವಾಗ ದಾರಿಯಲ್ಲಿ ಏನಾಯಿತು ಎಂಬುದನ್ನು ತಾಯಿಗೆ ಆದಶ್ಟು ಬೇಗನೆ ತಿಳಿಸಿಬಿಡಬೇಕೆಂಬ ಆತುರದಲ್ಲಿ ಮಕ್ಕಳಿರುತ್ತಾರೆ. ಗೆಳೆಯರನ್ನು ಕಂಡೊಡನೆ ತಮಗೆ ತಿಳಿದಿರುವ ಹೊಸ ವಿಶಯವೊಂದನ್ನು ಅವರಿಗೆ ತಿಳಿಸುವ ಆತುರವೂ ಅವರಿಗಿರುತ್ತದೆ.
ತಮ್ಮ ಮನಸ್ಸಿನಲ್ಲಿರುವ ಇಂತಹ ವಿಶಯಗಳನ್ನು ಮಾತಿನ ಮೂಲಕ ಇನ್ನೊಬ್ಬರಿಗೆ ತಿಳಿಸುವ ಹಾಗೆ ಬರಹದ ಮೂಲಕವೂ ತಿಳಿಸಲು ಬರುತ್ತದೆ ಎಂಬುದನ್ನು ಅವರಿಗೆ ತೋರಿಸಿಕೊಟ್ಟಲ್ಲಿ, ಅವರು ಬಹಳ ಬೇಗನೆ ಬರವಣಿಗೆ
ಯಲ್ಲಿ ಮುಂದೆ ಹೋಗುತ್ತಾರೆ. ಮೊದಲಿಗೆ ಅವರ ಹತ್ತಿರ ಮಾತಿನ ಮೂಲಕ ಒಂದು ವಿಶಯವನ್ನು ತಿಳಿಸಲು ಹೇಳಿ, ಅದನ್ನು ಕಲಿಸುವವರೇ ಬರೆದು ತೋರಿಸಬಹುದು, ಮತ್ತು ಹಾಗೆ ಬರೆದುದನ್ನು ಅವರಿಗೆ ಓದಲು ಕೊಡ ಬಹುದು. ಹೀಗೆ ಮಾಡುವುದರಿಂದ ಅವರಿಗೆ ಬರೆಯುವುದರಲ್ಲಿ ಆಸಕ್ತಿ ಹುಟ್ಟುತ್ತದೆ.
ಬರೆಯಲು ಕಲಿಯಬೇಕೆಂದಿರುವವರಿಗೆ ಎರಡು ಬಗೆಯ ಕಲಿಕೆಗಳು ನೆರವು ನೀಡಬಲ್ಲುವು: ಮೊದಲನೆಯದಾಗಿ, ಬರೆಯಲಿರುವ ವಿಶಯದ ಕುರಿತು ಅವರು ಏನೆಲ್ಲಾ ಹೇಳಬಲ್ಲರೋ ಅದನ್ನೆಲ್ಲ ಹೇಳಲು ಬಿಡಬೇಕು. ಇದರಿಂದ ಅವರಲ್ಲಿ ಆಲೋಚಿಸುವ ಕಸುವು ಬೆಳೆಯುತ್ತದೆ. ಎರಡನೆಯದಾಗಿ, ಅವರಿಗೆ ಬೇರೆ ಯಾವುದಾದರೂ ಬರಹವನ್ನು ಎತ್ತಿಬರೆಯಲು ಕಲಿಸಬೇಕು. ಹೀಗೆ ಬರೆಯುವಾಗ, ಅಂತಹ ಬರಹಗಳಲ್ಲಿ ಸೊಲ್ಲುಗಳನ್ನು ಮತ್ತು ಕುರಲುಗಳನ್ನು ಯಾವ ರೀತಿಯಲ್ಲಿ ಅಳವಡಿಸಲಾಗಿದೆ ಎಂಬುದನ್ನು ಅವರು ಗಮನಿಸುವ ಹಾಗೆಯೂ ಮಾಡಬೇಕು.
ಓದುವ ಮತ್ತು ಬರೆಯುವ ಕೆಲಸಗಳೆರಡೂ ಬಹಳ ಮಟ್ಟಿಗೆ ಒಂದನ್ನೊಂದು ಅವಲಂಬಿಸಿವೆ. ಹಾಗಾಗಿ, ಅವೆರಡನ್ನೂ ಮಕ್ಕಳು ಒಟ್ಟೊಟ್ಟಾಗಿ ಕಲಿತು ಕೊಳ್ಳುವಂತೆ ಮಾಡಬೇಕು.
2.5 ದೊಡ್ಡವರಿಗೆ ಓದಲು-ಬರೆಯಲು ಕಲಿಸುವುದು
ಚಿಕ್ಕವರಿಗೆ ಓದಲು-ಬರೆಯಲು ಕಲಿಸುವುದಕ್ಕಿಂತಲೂ ದೊಡ್ಡವರಿಗೆ ಕಲಿಸುವ ಸಮಯದಲ್ಲಿ ಸೊಲ್ಲರಿಮೆಯ ತಿಳಿವನ್ನು ಹೆಚ್ಚು ನೇರವಾಗಿ ಮತ್ತು ಹೆಚ್ಚು ವಿವರವಾಗಿ ಕೊಡಿಸಲು ಬರುತ್ತದೆ. ಯಾಕೆಂದರೆ, ದೊಡ್ಡವರಿಗೆ ಅದನ್ನು ನೇರವಾಗಿ ತಮ್ಮ ಓದು ಮತ್ತು ಬರವಣಿಗೆಗಳಲ್ಲಿ ಬಳಸಲು ಬರುತ್ತದೆ.
ನಮ್ಮಲ್ಲಿ ಬಹಳ ಮಂದಿ ಜನರು ಚಿಕ್ಕಂದಿನಲ್ಲಿ ಓದಲು-ಬರೆಯಲು ಕಲಿತಿರುವುದಿಲ್ಲ, ಇಲ್ಲವೇ ಒಂದೆರಡು ಬರಿಗೆ(ಅಕ್ಶರ)ಗಳನ್ನಶ್ಟೇ ಕಲಿತು ಅಲ್ಲಿಗೆ ತಮ್ಮ ಕಲಿಕೆಯನ್ನು ಮುಗಿಸಿರುತ್ತಾರೆ. ಅವರಿಗೆಲ್ಲ ಓದಲು-ಬರೆಯಲು ಕಲಿಸುವ ಕೆಲಸ ಇವತ್ತು ನಮ್ಮ ಮುಂದಿದೆ. ಇದನ್ನು ನಾವು ಇವತ್ತು ನಡೆಸಲೇಬೇಕಾಗಿದೆ. ಯಾಕೆಂದರೆ, ಓದು-ಬರಹ ತಿಳಿದಿರುವುದರಿಂದ ಸಿಗುವ ಪ್ರಯೋಜನಗಳು ಮತ್ತು ಓದು-ಬರಹ ಬಾರದಿರುವುದರಿಂದ ಉಂಟಾಗುವ ತೊಂದರೆಗಳು ಹಿಂದಿಗಿಂತ ಇವತ್ತು ತುಂಬಾ ಹೆಚ್ಚಾಗಿವೆ.
ಹಿಂದೆ ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಓದಲು-ಬರೆಯಲು ತಿಳಿದಿದ್ದರೆ ಸಾಕಾಗುತ್ತಿತ್ತು. ಜನರ ಜೀವನದಲ್ಲಿ ಬರಹವನ್ನು ತುಂಬಾ ಕಡಿಮೆ ಬಳಸುತ್ತಿದ್ದುದೇ ಇದಕ್ಕೆ ಕಾರಣ. ಆದರೆ ಈವತ್ತು ಜೀವನದ ಎಲ್ಲಾ ಸನ್ನಿವೇಶ ಗಳನ್ನೂ ಬರಹ ಆಕ್ರಮಿಸಿದೆ, ಮತ್ತು ಇದರಿಂದಾಗಿ ಓದಲು-ಬರೆಯಲು ತಿಳಿಯದವರು ಜೀವನದಲ್ಲಿ ಮುಂದೆ ಬರಲು ಸಾದ್ಯವೇ ಇಲ್ಲ ಎಂಬ ನೆಲೆಗೆ ಇವತ್ತು ನಾವು ಬಂದು ಮುಟ್ಟಿದ್ದೇವೆ. ಹಾಗಾಗಿ, ಒಂದು ಸಮಾಜ ಮುಂದೆ ಬರಬೇಕಿದ್ದಲ್ಲಿ ಅದರಲ್ಲಿರುವ ಎಲ್ಲಾ ಮಂದಿಯೂ ಓದು-ಬರಹವನ್ನು ತಿಳಿದಿರಲೇಬೇಕಾಗುತ್ತದೆ.
ಮೊನ್ನೆ ಮೊನ್ನೆಯ ವರೆಗೆ ಬರವಣಿಗೆಯನ್ನು ಮುಕ್ಯವಾಗಿ ನಲ್ಬರಹ (ಸಾಹಿತ್ಯ)ಗಳನ್ನು ಉಂಟುಮಾಡುವುದಕ್ಕಾಗಿ, ಮತ್ತು ಅವನ್ನು ಓದಿ ಆನಂದಿಸು ವುದಕ್ಕಾಗಿ ಬಳಸಲಾಗುತ್ತಿತ್ತು. ಬರವಣಿಗೆ ಸಮಾಜದ ಕೆಲವೇ ಕೆಲವು ಮಂದಿ ಯಲ್ಲಿ ಮಾತ್ರ ಉಳಿದುಕೊಂಡಿದ್ದುದಕ್ಕೆ ಇದೂ ಒಂದು ಕಾರಣ. ಆದರೆ ಇವತ್ತು ಇಂತಹ ನಲ್ಬರಹ(ಸಾಹಿತ್ಯ)ಕ್ಕೆ ಸಂಬಂದಿಸಿದಂತಹ ಕೆಲಸಗಳಿಗಿಂತಲೂ ನೇರವಾಗಿ ಜನರಿಗೆ ತಿಳುವಳಿಕೆಯನ್ನು ಕೊಡುವಂತಹ ಬೇರೆ ಬಗೆಯ ಕೆಲಸ ಗಳಿಗೇನೇ ಬರಹ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ.
ನಮ್ಮ ದೇಶದ ಆಡಳಿತಕ್ಕಾಗಿ ಮಂದಿಯಾಳ್ವಿಕೆಯನ್ನು (ಪ್ರಜಾಪ್ರಬುತ್ವವನ್ನು) ಆರಿಸಿಕೊಂಡಿದ್ದೇವಾದ ಕಾರಣ, ಇವತ್ತು ಆಡಳಿತಕ್ಕೆ ಸಂಬಂದಿಸಿದ ಹಲವಾರು ವಿಶಯಗಳನ್ನು ಎಲ್ಲರೂ ತಿಳಿದುಕೊಂಡಿರಲೇಬೇಕಾಗಿದೆ. ಇವನ್ನೆಲ್ಲ ಸುದ್ದಿಹಾಳೆಗಳು ಕೊಡುತ್ತಿವೆ; ಆಡಳಿತದ ಹೊರಪಡಿಕೆಗಳೂ ಇವನ್ನು ಜನರಿಗೆ ತಿಳಿಸುತ್ತವೆ. ರೇಡಿಯೋ, ಟಿವಿ ಮೊದಲಾದ ಹಲವು ಬಗೆಯ ಉಪಕರಣಗಳನ್ನು ಇವತ್ತು ಹೆಚ್ಚಿನ ಜನರೂ ಬಳಸುತ್ತಿದ್ದಾರೆ; ಇವಕ್ಕೆ ಬೇಕಾಗುವ ಹಲವು ಬಗೆಯ ತಿಳುವಳಿಕೆಗಳನ್ನು ಅವರು ಬರಹಗಳ ಮೂಲಕವೇನೇ ಪಡೆಯ ಬೇಕಾಗಿದೆ. ಇದಲ್ಲದೆ, ಅಡಿಗೆ, ಮಯ್ಯೊಳಿತು (ಆರೋಗ್ಯ), ಮಕ್ಕಳ ಸಾಕುವಿಕೆ, ಕಟ್ಟಲೆ-ಕಾನೂನುಗಳು, ಮೊದಲಾದ ಇನ್ನೂ ಹಲವಾರು ಬಗೆಯ ವಿಶಯಗಳ ಕುರಿತು ತಿಳುವಳಿಕೆಯನ್ನು ಇವತ್ತು ಬರಹಗಳ ಮೂಲಕ ಪಡೆಯಬಹುದಾಗಿದೆ. ಈ ಕಾರಣಕ್ಕಾಗಿಯೂ ಇವತ್ತು ಬರಹದ ಕಲಿಕೆ ಎಲ್ಲರಿಗೂ ಬೇಕಾಗಿದೆ.
ಓದಲು-ಬರೆಯಲು ತಿಳಿಯದಿರುವವರಿಗೆ ಸಾಮಾನ್ಯವಾಗಿ ಅದರ ಮಹತ್ವ ಗೊತ್ತಿರುವುದಿಲ್ಲ. ಹಾಗಾಗಿ, ಅಂತಹವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರಲ್ಲಿಯೂ ಹಿಂದೆ ಬೀಳುತ್ತಾರೆ. ಇದಲ್ಲದೆ, ಓದು-ಬರಹಗಳನ್ನು ಬಳಸುವವರಿಲ್ಲದ ಮನೆಗಳಲ್ಲಿ ಬೆಳೆಯುವ ಮಕ್ಕಳಿಗೂ ಅವುಗಳಲ್ಲಿ ಆಸಕ್ತಿ
ಹುಟ್ಟುವುದಿಲ್ಲ. ಈ ಎಲ್ಲಾ ಕಾರಣಗಳಿಗಾಗಿ, ಇವತ್ತು ಓದು-ಬರಹ ಬಾರದ ಚಿಕ್ಕವರಿಗೆ ಮಾತ್ರವಲ್ಲದೆ ದೊಡ್ಡವರಿಗೂ ಅದನ್ನು ಕಲಿಸಬೇಕಾಗಿದೆ.
ಓದಲು ಕಲಿಯುವಲ್ಲಿ ಮಕ್ಕಳು ಪಡೆಯಬೇಕಾಗಿರುವಂತಹ ಚಳಕಗಳನ್ನೇ ದೊಡ್ಡವರೂ ಪಡೆಯಬೇಕಾಗುತ್ತದೆ. ಆದರೆ, ಈ ಚಳಕಗಳು ಎಂತಹವು, ಅವನ್ನು ಪಡೆಯುವ ಬಗೆ ಹೇಗೆ, ಮತ್ತು ಅವನ್ನು ಯಾಕೆ ಪಡೆಯಬೇಕು ಎಂಬುದನ್ನು ದೊಡ್ಡವರಿಗೆ ನೇರವಾಗಿಯೇ ತಿಳಿಸಲು ಬರುತ್ತದೆ ಎಂಬುದು ಮಕ್ಕಳ ಕಲಿಕೆಗೂ ದೊಡ್ಡವರ ಕಲಿಕೆಗೂ ನಡುವಿರುವ ವ್ಯತ್ಯಾಸ.
ಚಿಕ್ಕವರ ಹಾಗೆ, ಓದಲು ಕಲಿಯದಿರುವ ದೊಡ್ಡವರಿಗೂ ಉಲಿ, ಪದ ಮತ್ತು ಬರಿಗೆಗಳ ನಡುವಿನ ಪತ್ತುಗೆಯೆಂತಹದು ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ, ಮಾತಿನಲ್ಲಿ ಬರುವ ಪದಗಳನ್ನು ಉಲಿ ಮತ್ತು ಉಲಿಕಂತೆಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬುದನ್ನು, ಮತ್ತು ಈ ಉಲಿಗಳಿಗೆ ತಮ್ಮವೇ ಆದ ಹುರುಳಿಲ್ಲದಿದ್ದರೂ, ಅವುಗಳ ಸೇರಿಕೆಯಿಂದ ಉಂಟಾಗಿರುವ ಪದಗಳಿಗೆ ಹುರುಳಿದೆ ಎಂಬುದನ್ನು ಓದಲು ಕಲಿಸುವ ಸಮಯದಲ್ಲಿ ಅವರು ಗಮನಿಸುವ ಹಾಗೆ ಮಾಡಬೇಕಾಗುತ್ತದೆ.
ಈ ವಿಶಯವನ್ನು ಅವರ ಗಮನಕ್ಕೆ ತಂದಲ್ಲಿ, ಬರಹದಲ್ಲಿ ಬಳಕೆಯಾಗಿರುವ ಬರಿಗೆಗಳನ್ನು ಉಲಿ ಇಲ್ಲವೇ ಉಲಿಕಂತೆಗಳೊಂದಿಗೆ ಸಂಬಂದಿಸಬೇಕಾಗುತ್ತದೆ, ಮತ್ತು ಆ ರೀತಿ ಸಂಬಂದಿಸುವ ಮೂಲಕ ಬರಹದಲ್ಲಿ ಬರುವ ಪದಗಳನ್ನು ಗುರುತಿಸಬೇಕಾಗುತ್ತದೆ ಎಂಬುದನ್ನು ಅವರಿಗೆ ಕಲಿಸಲು ಸುಳುವಾಗುತ್ತದೆ. ಬರೆಯಲು ಕಲಿಸುವಲ್ಲೂ ಇದೇ ರೀತಿಯಲ್ಲಿ ದೊಡ್ದವರಿಗೆ ನೇರವಾಗಿ ಕಲಿಕೆಯ ಗುಟ್ಟನ್ನು ತಿಳಿಸಿಹೇಳಬಹುದು. ಅದನ್ನವರು ತಮ್ಮ ಕಲಿಕೆಯಲ್ಲಿ ಬಳಸಿ ಹೆಚ್ಚು ಬೇಗನೆ ಮುಂದೆ ಹೋಗಬಲ್ಲರು.
2.6 ತಿರುಳು
ಶಾಲೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬಳಸುವ ಆಡುಗನ್ನಡಕ್ಕಿಂತ ಸ್ವಲ್ಪ ಮಟ್ಟಿಗೆ ಬೇರಾಗಿರುವ ಎಲ್ಲರ ಕನ್ನಡದಲ್ಲಿ ಮಾತನಾಡಲು ಕಲಿಯ ಬೇಕಾಗುತ್ತದೆ, ಮತ್ತು ಅದಕ್ಕಿಂತ ಇನ್ನೂ ಸ್ವಲ್ಪ ಬೇರಾಗಿರುವ ಬರಹದ ರೂಪದಲ್ಲಿರುವ ಎಲ್ಲರ ಕನ್ನಡದಲ್ಲಿ ಓದಲು ಮತ್ತು ಬರೆಯಲು ಕಲಿಯ ಬೇಕಾಗುತ್ತದೆ. ಈ ಮೂರು ಬಗೆಯ ಕನ್ನಡಗಳ ನಡುವೆ ಸೊಲ್ಲರಿಮೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಕಲಿಸುವವರು ತಿಳಿದುಕೊಂಡಿದ್ದಲ್ಲಿ,
ಅವನ್ನು ಅವರು ತಮ್ಮ ಕಲಿಸುವಿಕೆಯಲ್ಲಿ ಬಳಸಿಕೊಳ್ಳಬಲ್ಲರು. ಈ ವ್ಯತ್ಯಾಸದ ತಿಳಿವು ಮಕ್ಕಳಿಗೂ ಅವರ ಕಲಿಕೆಯಲ್ಲಿ ನೆರವಾಗಬಲ್ಲುದು.
ಓದಲು ಕಲಿಯುವ ಮಕ್ಕಳಿಗೆ ಕನ್ನಡದಲ್ಲಿ ಉಲಿಗಳ ಸೇರಿಕೆಯಿಂದ ಪದಗಳನ್ನು ಉಂಟುಮಾಡಲಾಗುತ್ತದೆ, ಮತ್ತು ಕನ್ನಡ ಬರಹದಲ್ಲಿ ಈ ಉಲಿಗಳನ್ನು ಮತ್ತು ಉಲಿಕಂತೆಗಳನ್ನು ಬರಿಗೆಗಳ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟಲ್ಲಿ, ಅವರಿಗೆ ಬರಹವನ್ನು ಹೆಚ್ಚು ಸುಳುವಾಗಿ ಮತ್ತು ಹೆಚ್ಚು ಬೇಗನೆ ಓದಲು ಬರುತ್ತದೆ.
ಬರಹದ ಓದಿನಿಂದ ತಿಳುವಳಿಕೆಯನ್ನು ಪಡೆಯಬೇಕಿದ್ದಲ್ಲಿ, ಅದರಲ್ಲಿ ಬರುವ ಬರಿಗೆಗಳನ್ನು ಪದಗಳಾಗಿ, ಪದಕಂತೆಗಳಾಗಿ, ತುಂಡುಸೊಲ್ಲುಗಳಾಗಿ, ಮತ್ತು ಸೊಲ್ಲುಗಳಾಗಿ ಜೋಡಿಸಿ ಓದಲು ತಿಳಿದಿರಬೇಕು. ಈ ಕೆಲಸವನ್ನು ನಡೆಸುವಲ್ಲಿಯೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಬರೆಯಲು ಕಲಿಯುವಲ್ಲಿ ಮತ್ತು ಬರೆದುದನ್ನು ಸರಿಪಡಿಸುವಲ್ಲಿಯೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ. ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬರೆಯಬಲ್ಲವರು ಅವನ್ನು ಸೇರಿಸಿ ಉದ್ದ ಸೊಲ್ಲುಗಳನ್ನು ಮಾಡಬೇಕಿದ್ದಲ್ಲಿ, ಮತ್ತು ಸೊಲ್ಲುಗಳೊಳಗೆ ಬೇರೆ ಸೊಲ್ಲುಗಳನ್ನು ಸೇರಿಸಿ ಬರಹ ಹೆಚ್ಚು ಚನ್ನಾಗಿ ಕಾಣಿಸುವಂತೆ ಮಾಡಬೇಕಿದ್ದಲ್ಲಿ, ಸೊಲ್ಲುಗಳ ಇಟ್ಟಳಗಳನ್ನು ಅವರು ತಿಳಿದಿರಬೇಕಾಗುತ್ತದೆ.
ದೊಡ್ಡವರಿಗೆ ಓದಲು-ಬರೆಯಲು ಕಲಿಸುವವರು ಮೇಲಿನ ಚಳಕಗಳನ್ನೇ ಅವರಿಗೂ ಕಲಿಸಿಕೊಡಬೇಕಾಗುತ್ತದೆ. ಆದರೆ, ದೊಡ್ಡವರಿಗೆ ಇವನ್ನು ನೇರವಾಗಿ ತಿಳಿಸಿಹೇಳಬಹುದೆಂಬುದೇ ಅವರ ಕಲಿಕೆಗೂ ಚಿಕ್ಕವರ ಕಲಿಕೆಗೂ ನಡುವಿರುವ ಮುಕ್ಯ ವ್ಯತ್ಯಾಸ.
ಮೂರನೇ ಪಸುಗೆ — ಬರೆಯುವುದರಲ್ಲಿ ಹೆಚ್ಚಿನ ಕಲಿಕೆ
3.1 ಮುನ್ನೋಟ
ಹಯ್ಸ್ಕೂಲು ಇಲ್ಲವೇ ಕಾಲೇಜಿನ ವರೆಗೆ ಬಂದು ಮುಟ್ಟಿದರೂ ಇವತ್ತು ಹಲವು ಮಂದಿ ಹುಡುಗ-ಹುಡುಗಿಯರಿಗೆ ಕನ್ನಡದಲ್ಲಿ ಸರಿಯಾಗಿ ಬರೆಯಲು ತಿಳಿದಿರುವುದಿಲ್ಲ. ಇವರು ತಮ್ಮ ಬರವಣಿಗೆಯನ್ನು ಹೇಗೆ ಸರಿಪಡಿಸಿಕೊಳ್ಳ ಬಲ್ಲರು ಮತ್ತು ಅದಕ್ಕೆ ಹೇಗೆ ಕನ್ನಡದ ಸೊಲ್ಲರಿಮೆಯ ತಿಳಿವು ನೆರವಾಗ ಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗಿದೆ.
ಇವತ್ತಿನ ಸಮಾಜದಲ್ಲಿ ಬರೆಯಲು ಬಾರದವರು ಹಲವು ಬಗೆಯಲ್ಲಿ ಹಿಂದೆ ಬೀಳಬೇಕಾಗುತ್ತದೆ. ಯಾಕೆಂದರೆ, ಎಲ್ಲಾ ಬಗೆಯ ಕೆಲಸಗಳಲ್ಲೂ ಇವತ್ತು ಮುಂದೆ ಹೋಗಬೇಕೆಂದಿದ್ದರೆ ಚನ್ನಾಗಿ ಬರೆಯಲು ತಿಳಿದಿರ ಬೇಕಾಗುತ್ತದೆ. ತಮ್ಮ ಕೆಲಸದ ವರದಿ ಬರೆಯುವುದು, ಮೇಲಿನ ಕೆಲಸಕ್ಕೆ ಅರ್ಜಿ ಹಾಕುವುದು, ರಜೆ ಅರ್ಜಿ ಬರೆಯುವುದು, ತಮ್ಮ ಹೊಸ ಯೋಜನೆಗಳನ್ನು ಇಲ್ಲವೇ ಕೆಲಸದಲ್ಲಿ ಮೂಡಿಬರುವ ತೊಡರುಗಳನ್ನು ವಿವರವಾಗಿ ಬರೆದು ತಿಳಿಸುವುದು - ಹೀಗೆ ಹಲವಾರು ಕಡೆಗಳಲ್ಲಿ ಚನ್ನಾಗಿ ಬರೆಯಲು ಗೊತ್ತಿರು ವವರು ಮಾತ್ರ ತಮ್ಮ ಕುರಿತಾಗಿ ಮೇಲಾಳುಗಳಲ್ಲಿ ಒಳ್ಳೆಯ ಅನಿಸಿಕೆ ಯುಂಟಾಗುವ ಹಾಗೆ ಮಾಡಬಲ್ಲರು.
ತಿಳಿಸಬೇಕೆಂದಿರುವುದನ್ನು ತಪ್ಪಿಲ್ಲದೆ, ತಿಳಿಯಾಗಿ ಮತ್ತು ಬೇಗನೆ ಬರೆದು ತಿಳಿಸಲು ಬಾರದವರಿಗೆ ಇವತ್ತು ಕಾಸಗಿ ಕಂಪೆನಿಗಳಲ್ಲಿ ಕೆಲಸ ಸಿಗುವುದು ತುಂಬಾ ಕಶ್ಟ. ಅಂತಹ ಕಂಪೆನಿಗಳು ತಮ್ಮಲ್ಲಿ ಈಗಾಗಲೇ ಕೆಲಸಕ್ಕಿರುವ ಜನರ ಬರವಣಿಗೆಯನ್ನು ಒಳ್ಳೆಯದಾಗಿಸಲು ಮಿಲಿಯಗಟ್ಟಲೆ ಹಣ ಕರ್ಚುಮಾಡುತ್ತಿರುತ್ತವೆ. ಅವುಗಳಲ್ಲಿ ಕೆಲಸ ಮಾಡುವ ಜನರಲ್ಲಿ ಹೆಚ್ಚಿನವರಿಗೂ ಬರೆಯುವ ಕೆಲಸಗಳಿರುತ್ತವೆ, ಮತ್ತು ತಮ್ಮ ಕೆಲಸದಲ್ಲಿ ಮೇಲಕ್ಕೆ ಏರಿದಂತೆಲ್ಲ
ಅವರ ಬರೆಯುವ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಇವರೆಲ್ಲ ಚನ್ನಾಗಿ ಬರೆಯಬಲ್ಲವರಾದರೆ ಮಾತ್ರ ಕಂಪೆನಿಯ ಏಳಿಗೆಯಾಗಬಲ್ಲುದು.
ಇವತ್ತಿನ ಎಣ್ಣುಕ(ಕಂಪ್ಯೂಟರ್)ಯುಗದಲ್ಲಂತೂ ಬರವಣಿಗೆಗೆ ಇನ್ನಶ್ಟು ಮಹತ್ವ ಬಂದಿದೆ. ಇವತ್ತು ದೂರವಾಣಿಯನ್ನು ಬಳಸುವುದಕ್ಕಿಂತಲೂ ಮಿಂಚಂಚೆಯನ್ನು ಬಳಸುವುದು ಹೆಚ್ಚಾಗಿದೆ. ಆದರೆ, ಅದನ್ನು ಬಳಸಬೇಕಿದ್ದಲ್ಲಿ ಸರಿಯಾಗಿ, ತಿಳಿಯಾಗಿ, ಮತ್ತು ಚುಟುಕಾಗಿ ಬರೆಯಲು ತಿಳಿದಿರಬೇಕು. ಮಿಂಚಂಚೆಗಳನ್ನು ತಪ್ಪು ತಪ್ಪಾಗಿ ಇಲ್ಲವೇ ಗೊಂದಲವುಂಟಾಗುವ ಹಾಗೆ ಬರೆಯುವವರಿಂದಾಗಿ ಅವರ ಮತ್ತು ಅದನ್ನು ಓದಬೇಕಾಗಿರುವವರ ಸಮಯ ಹಾಳಾಗುತ್ತದೆ ಮಾತ್ರವಲ್ಲ, ಅವರೊಳಗೆ ತಪ್ಪು ತಿಳುವಳಿಕೆಗಳೂ ಮೂಡುತ್ತವೆ. ಚನ್ನಾಗಿ ಬರೆಯಲು ಕಲಿಯುವುದರಿಂದ ಬೇರೆಯೂ ಹಲವು ಪ್ರಯೋಜನ ಗಳಿವೆ. ಎತ್ತುಗೆಗಾಗಿ, ಒಳ್ಳೇ ಬರಹಗಾರರಲ್ಲಿ ಆಲೋಚನೆಯ ಕಸುವು ಹೆಚ್ಚಿರುತ್ತದೆ. ಒಳ್ಳೇ ಬರಹಗಾರರು ಬರೆದುದನ್ನು ತಿರುತಿರುಗಿ ಓದಿ, ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಕಲಿತಿರುತ್ತಾರೆ; ಹಾಗಾಗಿ, ಮನಸ್ಸಿನಲ್ಲಿ ಮೂಡುವ ಅನಿಸಿಕೆಗಳನ್ನು ಬಿಡಿಸಿನೋಡುವ ಮತ್ತು ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅಳವೂ ಅವರಿಗೆ ಬಂದಿರುತ್ತದೆ. ಹಾಗಾಗಿ, ಬರಹದ ಕಲಿಕೆ ಉತ್ತಮ ಬರಹಗಾರರನ್ನು ಮಾತ್ರವಲ್ಲದೆ ಉತ್ತಮ ಆರಯ್ಯುಗರನ್ನೂ ಉಂಟು ಮಾಡುತ್ತದೆ.
ತಮ್ಮ ತಾಯ್ನುಡಿಯಲ್ಲಿ ಚನ್ನಾಗಿ ಬರೆಯಲು ಕಲಿತವರು ಆ ಚಳಕವನ್ನು ಇಂಗ್ಲಿಶ್ನಂತಹ ಬೇರೆ ನುಡಿಗಳಿಗೂ ಸುಳುವಾಗಿ ಮಾರೆಡೆಗೊಳಿಸಬಲ್ಲರು ಎಂಬುದನ್ನು ನಾವು ಮುಂದೆ ಆರನೇ ಪಸುಗೆಯಲ್ಲಿ ನೋಡಲಿರುವೆವು. ಹಾಗಾಗಿ, ಇಂಗ್ಲಿಶ್ನಲ್ಲಿ ಚನ್ನಾಗಿ ಬರೆಯಲು ಕಲಿಯಬೇಕೆಂದಿರುವವರಿಗೂ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಚನ್ನಾಗಿ ಬರೆಯಲು ಕಲಿಯುವುದು ಒಂದು ಒಳ್ಳೇ ಅಡಿಗಲ್ಲಾಗಬಲ್ಲುದು.
3.1.1 ಬರಹಗಾರರಲ್ಲಿ ಎರಡು ಬಗೆ
ಕೆಲವರು ಬರಹಗಾರರು ಏನು ಬರೆಯಬೇಕು, ಹೇಗೆ ಬರೆಯಬೇಕು ಎಂಬುದನ್ನೆಲ್ಲ ಮೊದಲಿಗೆ ಮನಸ್ಸಿನಲ್ಲೇ ತೀರ್ಮಾನಿಸಿ, ಆಮೇಲೆ ಬರೆಯಲು ತೊಡಗುತ್ತಾರೆ. ಇವರು ಒಮ್ಮೆ ಬರೆಯಲು ತೊಡಗಿದರೆಂದರೆ, ಇಡೀ ಬರಹವನ್ನು ಉದ್ದಕ್ಕೂ ನಿಲ್ಲಿಸದೆ ಬರೆದು ಮುಗಿಸುತ್ತಾರೆ.
ಬರೆಯುವುದರಲ್ಲಿ ಹೆಚ್ಚಿನ ಕಲಿಕೆ
ಆದರೆ, ಬೇರೆ ಕೆಲವರು ಮೊದಲು ಬರೆಯಲು ತೊಡಗುತ್ತಾರೆ, ಮತ್ತು ಹೀಗೆ ಬರೆಯುತ್ತಿದ್ದಂತೆ ಹೊಸ ಹೊಸ ವಿಶಯಗಳು ಅವರ ಮನಸ್ಸಿನಲ್ಲಿ ಮೂಡುತ್ತಿರುತ್ತವೆ. ಹಾಗಾಗಿ, ಇವರಿಗೆ ತಾವು ಬರೆದುದನ್ನು ಹಲವು ಬಾರಿ ಬದಲಾಯಿಸುತ್ತಿರಬೇಕಾಗುತ್ತದೆ; ಎಂಟು-ಹತ್ತು ಬಾರಿ ತಿದ್ದಿ, ತಿರುತಿರುಗಿ ಬರೆಯಬೇಕಾಗುತ್ತದೆ. ಕೆಲವೊಮ್ಮೆ ಇವರು ಮೊದಲಿಗೆ ಬರೆದುದನ್ನು ಹರಿದುಹಾಕಿ, ಆಮೇಲೆ ಹೊಸದಾಗಿ ಬರೆಯಹೊರಡುತ್ತಾರೆ.
ಸಾಮಾನ್ಯವಾಗಿ, ಈ ಎರಡು ಬಗೆಯ ಬರಹಗಾರರಲ್ಲಿ ಮೊದಲಿನವರೇ ಒಳ್ಳೆಯ ಬರಹಗಾರರೆಂದು ಅನ್ನಿಸಿಕೊಳ್ಳುತ್ತಾರೆ. ಬರೆದುದನ್ನು ಹಲವು ಬಾರಿ ತಿದ್ದಬೇಕಾದವರು ಮತ್ತು ತುಂಬಾ ಕಶ್ಟದಿಂದ ಅದನ್ನು ಮುಗಿಸಬೇಕಾದವರು ಅಶ್ಟೊಂದು ಒಳ್ಳೆಯ ಬರಹಗಾರರೆಂದು ಅನ್ನಿಸಿಕೊಳ್ಳುವುದಿಲ್ಲ.
ಆದರೆ, ನಿಜಕ್ಕೂ ಇವು ಬರಹಗಾರರು ಬಳಸುವ ಎರಡು ಬಗೆಯ ಹೊಲಬು(ವಿದಾನ)ಗಳು ಮಾತ್ರ. ಅವುಗಳಲ್ಲಿ ಒಂದು ಇನ್ನೊಂದರಿಂದ ಒಳ್ಳೆಯದು ಎಂದು ಹೇಳಲು ಯಾವ ಆದಾರವೂ ಇಲ್ಲ. ಕೆಲವರು ಏನು ಬರೆಯಬೇಕು ಮತ್ತು ಹೇಗೆ ಬರೆಯಬೇಕು ಎಂಬುದನ್ನು ತೀರ್ಮಾನಿಸುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ, ಮತ್ತು ಬೇರೆ ಕೆಲವರು ಅದೇ ಸಮಯದಲ್ಲಿ ಬರೆಯುವುದನ್ನೇ ನಡೆಸುತ್ತಾರೆ ಎಂಬುದೇ ಇಲ್ಲಿರುವ ವ್ಯತ್ಯಾಸ. ಇದಲ್ಲದೆ, ಎಲ್ಲರೂ ಒಂದೇ ಹೊಲಬನ್ನು ಬಳಸಲು ಸಾದ್ಯವೂ ಇಲ್ಲ. ಒಬ್ಬೊಬ್ಬರೂ ತಮಗೆ ಅನುಕೂಲವಾಗಿರುವ ಹೊಲಬು ಯಾವುದು ಎಂಬುದನ್ನು ಕಂಡುಕೊಂಡು, ಅದಕ್ಕನುಗುಣವಾಗಿ ತಮ್ಮ ಬರಹವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಬರಹದ ಬಗೆಯನ್ನೂ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿಗಳನ್ನು ಬರೆಯುವವರಲ್ಲಿ ಹೆಚ್ಚು ಮಂದಿ ಮೊದಲಿನ ಹೊಲಬನ್ನು ಬಳಸುತ್ತಾರೆ ಮತ್ತು ಬೇರೆ ಬಗೆಯ ಬರಹಗಳನ್ನು ಬರೆಯುವವರಲ್ಲಿ ಹೆಚ್ಚು ಮಂದಿ ಎರಡನೆಯ ಹೊಲಬನ್ನು ಬಳಸುತ್ತಾರೆ.
ಹಮ್ಮುಗೆ, ಬರವಣಿಗೆ ಮತ್ತು ಮರುನೋಟ ಎಂಬುದಾಗಿ ಬರಹವೊಂದನ್ನು ಉಂಟುಮಾಡುವಲ್ಲಿ ಮೂರು ಹಂತಗಳಿರುತ್ತವೆ. ಮೇಲೆ ಸೂಚಿಸಿದ ಹಾಗೆ, ಕೆಲವರು ಹಮ್ಮುಗೆಯನ್ನು ಮೊದಲು ಮುಗಿಸಿ, ಆಮೇಲೆ ಬರವಣಿಗೆಗೆ ತೊಡಗುತ್ತಾರೆ, ಮತ್ತು ಕೆಲವರು ಅವು ಮೂರನ್ನೂ ಒಟ್ಟೊಟ್ಟಿಗೆ ನಡೆಸಹೋಗುತ್ತಾರೆ.
ಕೆಲವರು ತಾವು ಬರೆದುದನ್ನು ಮರುನೋಟಕ್ಕೆ ಒಳಪಡಿಸಬೇಕಾಗುವುದೇ ಇಲ್ಲ; ಅದುವೇ ತಮ್ಮ ಕೊನೆಯ ಬರವಣಿಗೆಯಾಗಿರುತ್ತದೆ ಎಂಬುದಾಗಿ ಹೇಳಿಕೊಳ್ಳಬಹುದು; ಆದರೆ ಇದು ಪೂರ್ತಿ ನಿಜವಿರಲಾರದು. ಯಾಕೆಂದರೆ, ಬರೆದುದನ್ನೊಮ್ಮೆ ಓದಿ ನೋಡಿದಾಗ, ಅದರಲ್ಲಿ ಕೆಲವಾದರೂ ಬದಲಾವಣೆ ಗಳನ್ನು ಮಾಡಬೇಕೆಂದು ಅನಿಸದಿರದು. ಇದಲ್ಲದೆ, ತಡೆ(,), ಅರೆಕೊನೆ(;), ಕೊಗೆತ(:) ಮೊದಲಾದ ಬರಹದ ಗುರುತುಗಳನ್ನು ಸಾಮಾನ್ಯವಾಗಿ ಬರೆಯು ವಾಗಲೇ ಹಾಕುತ್ತಿರಲು ಬರುವುದಿಲ್ಲ; ಬರೆದುದನ್ನು ಓದಿ ನೋಡುವಾಗ ಅವನ್ನು ಸೇರಿಸಿಕೊಳ್ಳಬೇಕಾಗುತ್ತದೆ.
3.1.2 ಬರಹದ ಒಳಗುಟ್ಟು
ಹೆಚ್ಚಿನವರಿಗೂ ಬರೆಯುವ ಕೆಲಸ ತಮ್ಮ ತಾಯ್ನುಡಿಯಲ್ಲೂ ತುಂಬಾ ತೊಡಕಿನದೆಂದು ಅನಿಸುತ್ತದೆ. ಇದಕ್ಕೆ ಕಾರಣವೇನೆಂದರೆ, ಮಾತನ್ನು ಹಾಗೆಯೇ ಬರೆದುಬಿಟ್ಟರೆ ಅದು ಬರಹವಾಗುವುದಿಲ್ಲ. ಮನಸ್ಸಿನಲ್ಲಿ ಮೂಡಿದ ಅನಿಸಿಕೆ ಇಲ್ಲವೇ ತಿಳುವಳಿಕೆಯನ್ನು ಒಂದು ನಿಶ್ಚಿತವಾದ ಇಟ್ಟಳವಿರುವ ಬರಹವಾಗಿ ಮಾರ್ಪಡಿಸಬೇಕಾಗುತ್ತದೆ. ಇದಕ್ಕಾಗಿ ಬರಹಗಾರರು ಹಲವು ಬಗೆಯ ಚಳಕ(ಕವ್ಶಲ್ಯ)ಗಳನ್ನು ಕಲಿತುಕೊಳ್ಳಬೇಕಾಗುತ್ತದೆ.
(1) ತಾವು ಮನಸ್ಸಿನಲ್ಲೊಬ್ಬ ಓದುಗನನ್ನು ಕಲ್ಪಿಸಿಕೊಂಡು, ಆತನಿಗೆ ತಿಳಿದಿರುವ ಸಂಗತಿ ಯಾವುದು, ಮತ್ತು ತಿಳಿಯದುದು ಯಾವುದು ಎಂಬುದನ್ನು ಊಹಿಸಿಕೊಂಡು, ಅದಕ್ಕನುಸಾರವಾಗಿ ತಮ್ಮ ಬರಹವನ್ನು ಹೊಂದಿಸಿಕೊಳ್ಳಲು ತಿಳಿದಿರಬೇಕು;
(2) ಗುರಿಗೆ ತಕ್ಕುದಾದ ಒಡ್ಡವವನ್ನು (ಶಯ್ಲಿಯನ್ನು) ಬಳಸಲು
ತಿಳಿದಿರಬೇಕು;
(3) ಮುಕ್ಯ ವಿಶಯವನ್ನು ಮುಕ್ಯವಲ್ಲದ ವಿಶಯದಿಂದ ಬೇರ್ಪಡಿಸಲು, ಮತ್ತು ಮುಕ್ಯ ವಿಶಯದ ಮೇಲೆ ಹೆಚ್ಚಿನ ಒತ್ತು ಬೀಳುವಂತೆ ನೋಡಿಕೊಳ್ಳಲು ತಿಳಿದಿರಬೇಕು;
(4) ಬರಿಗೆ(ಅಕ್ಶರ)ಗಳನ್ನು ಮತ್ತು ಬರಹದ ಗುರುತುಗಳನ್ನು ಬಳಸುವಲ್ಲಿ
ತಪ್ಪುಗಳನ್ನು ಮಾಡದೆ ಬರೆಯಲು ತಿಳಿದಿರಬೇಕು.
ಈ ಚಳಕಗಳಲ್ಲಿ ಮುಕ್ಯವಾದ ಕೆಲವನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ
ಎಂಬುದನ್ನು ಕೆಳಗೆ ವಿವರಿಸಲಾಗಿದೆ.
32 ಬರಹಗಾರರು ಮತ್ತು ಓದುಗರು ಬರಹಗಾರರಿಗೆ ಸಾಮಾನ್ಯವಾಗಿ ತಮ್ಮ ಓದುಗರು ಯಾರು ಎಂಬುದು ಗೊತ್ತಿರುವುದಿಲ್ಲ. ಅವರ ಅನುಬವ ಎಂತಹದು, ಅವರಿಗೆ ಎಶ್ಟು ತಿಳಿದಿದೆ, ತಾವು ಬರೆದುದನ್ನು ಓದುವಾಗ ಅವರಲ್ಲಿ ಎಂತಹ ಸಂಶಯಗಳು ಏಳಬಹುದು, ತಮ್ಮ ಬರಹವನ್ನು ಅವರು ಯಾಕಾಗಿ ಓದಬಹುದು ಎಂಬಂತಹ ವಿಶಯಗಳೂ ಅವರಿಗೆ ಗೊತ್ತಿರುವುದಿಲ್ಲ. ಹೀಗಿದ್ದರೂ, ಓದುಗರೊಬ್ಬರನ್ನು ಅವರು ತಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕಾಗುತ್ತದೆ, ಮತ್ತು ಅವರಿಗೆ ಅನುಕೂಲವಾಗುವ ಹಾಗೆ ತಮ್ಮ ಬರಹವನ್ನು ಉಂಟುಮಾಡಬೇಕಾಗುತ್ತದೆ.
ಹೀಗೆ ಕಲ್ಪಿಸಿಕೊಂಡಿರುವ ಓದುಗರಿಗೆ ತಾವು ಬರೆಯುತ್ತಿರುವ ವಿಶಯದಲ್ಲಿ ತಮಗಿಂತ ಸ್ವಲ್ಪ ಕಡಿಮೆ ಗೊತ್ತಿರುತ್ತದೆಯೆಂದು ಬರಹಗಾರರು ತಿಳಿದುಕೊಳ್ಳ ಬೇಕಾಗುತ್ತದೆ. ಯಾಕೆಂದರೆ, ಅಂತಹ ವ್ಯತ್ಯಾಸ ಇಲ್ಲವಾದರೆ, ಓದುಗರಿಗೆ ಅವರ ಬರಹದಲ್ಲಿ ಯಾವ ಆಸಕ್ತಿಯೂ ಮೂಡಲಾರದು. ಬರಹಗಾರರ ಈ ಕಲ್ಪನೆ ಅವರ ಬರಹದಲ್ಲೂ ಸ್ಪಶ್ಟವಾಗಿ ಕಾಣಿಸುತ್ತಿರಬೇಕು.
ಬರಹಗಾರರು ಮೊದಲಿಗೆ ತಾವು ಬರೆಯುತ್ತಿರುವ ವಿಶಯದ ಕುರಿತು ತಮ್ಮ ಕಲ್ಪಿತ ಓದುಗರಿಗೆ ಗೊತ್ತಿರಬಹುದೆಂದು ಎಣಿಸಿರುವ ಸಂಗತಿಗಳನ್ನು ಅಡಕವಾಗಿ ಸೂಚಿಸಬೇಕು. ಇದು ಅವರ ಬರಹಕ್ಕೆ ಅಡಿಗಲ್ಲಾಗುತ್ತದೆ. ಆಮೇಲೆ, ಹೊಸದಾಗಿ ಹೇಳಬೇಕೆಂದಿರುವುದನ್ನು ಹೆಚ್ಚು ವಿವರವಾಗಿ ತಿಳಿಸಿಕೊಡಬೇಕು.
ತಿಳಿದಿರುವುದನ್ನು ಮೊದಲು ತಿಳಿಸಿ, ಅದರ ನೆಲೆಯ ಮೇಲೆ ತಿಳಿಯದುದನ್ನು ತಿಳಿಸಿಹೇಳುವ ಈ ಹೊಲಬು ಒಳ್ಳೇ ಬರಹಗಳಲ್ಲಿ ಹಲವೆಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವುಗಳ ಹೆಚ್ಚಿನ ಸೊಲ್ಲುಗಳಲ್ಲೂ ಮೊದಲಿಗೆ ಓದುಗರಿಗೆ ತಿಳಿದಿರುವ ಸಂಗತಿ ಬರುತ್ತದೆ, ಮತ್ತು ಆಮೇಲೆ ತಿಳಿಯದಿರುವ ಹೊಸ ಸಂಗತಿ ಬರುತ್ತದೆ. ಒಂದು ಸೊಲ್ಲಿಗೂ ಅದರ ಮುಂದಿರುವ ಸೊಲ್ಲಿಗೂ ನಡುವಿರುವ ಪತ್ತುಗೆ(ಸಂಬಂದ)ಯೂ ಈ ತಿಳಿದುದು-ತಿಳಿಯದುದು ಎಂಬ ವ್ಯತ್ಯಾಸವನ್ನು ಕೊಂಡಿಯಾಗಿ ಬಳಸಿಕೊಂಡಿರುತ್ತದೆ.
ಈ ವಿಶಯದಲ್ಲಿ ಮಾತಿಗೂ ಬರಹಕ್ಕೂ ನಡುವೆ ಮುಕ್ಯವಾದ ವ್ಯತ್ಯಾಸವಿದೆ. ಮಾತನಾಡುವವರು ತಾವು ಹೇಳಬೇಕೆಂದಿರುವುದನ್ನು ಮೊದಲಿಗೆ ಅಡಕವಾಗಿ ಹೇಳಿಬಿಡುತ್ತಾರೆ. ಆಮೇಲೆ ಅವರ ಕೇಳುಗರು ಆ ವಿಶಯದ ಕುರಿತಾಗಿ ತಮಗೆ ತಿಳಿಯಬೇಕೆಂದಿರುವ ಹೆಚ್ಚಿನ ಸಂಗತಿಗಳನ್ನು ಹಲವು ಬಗೆಯ ಕೇಳ್ವಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ, ಬರಹದಲ್ಲಿ ಓದುಗರಿಗೆ
ಬರಹಗಾರರನ್ನು ಹಾಗೆ ಕೇಳಿ ತಿಳಿದುಕೊಳ್ಳಲು ಬರುವುದಿಲ್ಲ. ಯಾಕೆಂದರೆ, ಬರಹಗಾರರು ಅವರ ಎದುರಿಗೆ ಇರುವುದಿಲ್ಲವಲ್ಲ! ಹಾಗಾಗಿ, ಓದುಗರಲ್ಲಿ ಮೂಡಬಹುದಾದ ಕೇಳ್ವಿಗಳನ್ನು ಬರಹಗಾರರು ತಾವೇ ಮೊದಲಿಗೆ ಊಹಿಸಿಕೊಂಡು ಅವನ್ನೆಲ್ಲ ಬಗೆಹರಿಸುವ ಹಾಗೆ, ಇಲ್ಲವೇ ಅಂತಹ ಕೇಳ್ವಿಗಳು ಬಾರದೇ ಇರುವ ಹಾಗೆ ತಮ್ಮ ಬರಹವನ್ನು ಸಾವಗಿಸಿಕೊಳ್ಳಬೇಕಾಗುತ್ತದೆ.
3.2.1 ಸೊಲ್ಲುಗಳ ನೆಲೆ ಮತ್ತು ತಿಳಿವು
ಸೊಲ್ಲುಗಳನ್ನು ಸಾಮಾನ್ಯವಾಗಿ ನೆಲೆ ಮತ್ತು ತಿಳಿವು ಎಂಬುದಾಗಿ ವಿಂಗಡಿಸಲು ಬರುತ್ತದೆ. ಇವುಗಳಲ್ಲಿ ನೆಲೆ ಎಂಬುದು ಒಂದು ವಿಶಯವನ್ನು ಓದುಗರ ಮುಂದಿರಿಸುತ್ತದೆ ಮತ್ತು ತಿಳಿವು ಎಂಬುದು ಆ ವಿಶಯದ ಕುರಿತಾಗಿ ಅವರಿಗೆ ಸಂಗತಿಯೊಂದನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಆಡುನುಡಿಗಳು ಊರಿಂದೂರಿಗೆ ಬೇರಾಗಿರುತ್ತವೆ ಎಂಬ ಸೊಲ್ಲಿನಲ್ಲಿ ಆಡುನುಡಿಗಳು ಎಂಬುದು ನೆಲೆ ಮತ್ತು ಊರಿಂದೂರಿಗೆ ಬೇರಾಗಿರುತ್ತವೆ ಎಂಬುದು ಆ ನೆಲೆಯ ಕುರಿತಾಗಿ ಓದುಗರಿಗೆ ಸಂಗತಿಯೊಂದನ್ನು ತಿಳಿಸುವ ತಿಳಿವು.
ಕನ್ನಡದಲ್ಲಿ ಸಾಮಾನ್ಯವಾಗಿ ಸೊಲ್ಲಿನಲ್ಲಿ ಮೊದಲಿಗೆ ಬರುವ ಪದ ಇಲ್ಲವೇ ಪದಕಂತೆ ಅದರ ನೆಲೆಯಾಗಿರುತ್ತದೆ. ಇದು ಸೊಲ್ಲಿನಲ್ಲಿ ಬರುವ ಆಗುಗ, ಮಾಡುಗ, ಈಡು(ಅನ್ನು), ಸುರು(ಇಂದ), ಗುರಿ(ಇಗೆ), ಮತ್ತು ಜಾಗ(ಅಲ್ಲಿ) ಎಂಬ ಆರು ಪಾಂಗುಗಳಲ್ಲಿ ಯಾವುದೂ ಆಗಿರಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟ ಕುರಳಿನಲ್ಲಿ ಬೇರೆ ಬೇರೆ ಪಾಂಗುಗಳಲ್ಲಿರುವ ವ್ಯಕ್ತಿ ಸೊಲ್ಲುಗಳ ನೆಲೆಯಾಗಿ ಬಂದಿರುವುದನ್ನು ಗಮನಿಸಬಹುದು:
ರಮೇಶ ಸಂಜೆ ಆರು ಗಂಟೆಗೆ ಊರಿಗೆ ಬಂದು ತಲಪಿದ್ದ. ಅವನನ್ನು ಎದುರುಗೊಳ್ಳಲು ಸ್ಟೇಶನಿಗೆ ಯಾರೂ ಬಂದಿರಲಿಲ್ಲ. ಅವನೇ ತನ್ನ ಹೋಲ್ಡಾಲನ್ನು ಎತ್ತಿಕೊಂಡು ಹೊರಗೆ ಬಂದ. ಅಲ್ಲಿ ಹಳೇ ಕಾಲದ ಜಟಕಾವೊಂದು ಅವನಿಗಾಗಿ ಕಾಯುತ್ತಿತ್ತು.
ಮೇಲಿನ ಕುರಳಿನಲ್ಲಿ ಮಾಡುಗ ಪಾಂಗಿನಲ್ಲಿರುವ ರಮೇಶ ಎಂಬ ಪದ ಮೊದಲನೇ ಸೊಲ್ಲಿನ ನೆಲೆಯಾಗಿ ಬಂದಿದೆ; ಅದೇ ವ್ಯಕ್ತಿಯನ್ನು ಗುರುತಿಸುವ ಅವನು ಎಂಬ ಪದ ಮುಂದಿನ ಎರಡು ಸೊಲ್ಲುಗಳಲ್ಲೂ ನೆಲೆಯಾಗಿ ಬಂದಿದೆ. ಆದರೆ, ಇದು ಎರಡನೇ ಸೊಲ್ಲಿನಲ್ಲಿ ಈಡು ಪಾಂಗಾಗಿದೆ ಮತ್ತು ಮೂರನೆಯ
ಸೊಲ್ಲಿನಲ್ಲಿ ಮಾಡುಗ ಪಾಂಗಾಗಿದೆ. ಕೊನೆಯ ಸೊಲ್ಲಿನಲ್ಲಿ ಮಾತ್ರ ಜಾಗವನ್ನು ಗುರುತಿಸುವ ಅಲ್ಲಿ ಎಂಬ ಬೇರೊಂದು ಪದ ನೆಲೆಯಾಗಿ ಬಂದಿದೆ.
ಒಳ್ಳೇ ಬರಹಗಳ ಸೊಲ್ಲುಗಳಲ್ಲಿ ಬರುವ ನೆಲೆಗಳು ಯಾರನ್ನು ಇಲ್ಲವೇ ಯಾವುದನ್ನು ಸೂಚಿಸುತ್ತವೆ ಎಂಬುದನ್ನು ಓದುಗರು ಸುಳುವಾಗಿ ಹಿಂದಿನ ಸೊಲ್ಲಿನಿಂದ, ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದಿಂದ, ಇಲ್ಲವೇ ತಮ್ಮ ಅನುಬವದಿಂದ ಪಡೆಯಲು ಸಾದ್ಯವಿರುವಂತಿರುತ್ತದೆ.
ಒಂದು ಸೊಲ್ಲಿನಲ್ಲಿ ನೆಲೆಯಾಗಿ ಬಂದಿರುವ ಪದ ಇಲ್ಲವೇ ಪದಕಂತೆ ಆ ಸೊಲ್ಲನ್ನು ಹಿಂದಿನ ಸೊಲ್ಲಿನೊಂದಿಗೆ ಸಂಬಂದಿಸುವ ಕೊಂಡಿಯಾಗಿರುತ್ತದೆ. ಇಂತಹ ಕೊಂಡಿಗಳನ್ನು ಓದುಗರು ಎದುರುನೋಡುತ್ತಿರುತ್ತಾರೆ. ಹಾಗಾಗಿ, ಒಂದು ಸೊಲ್ಲಿನಲ್ಲಿ ಬರುವ ನೆಲೆ ನಿಜಕ್ಕೂ ಯರನ್ನು ಇಲ್ಲವೇ ಏನನ್ನು ಗುರುತಿಸುತ್ತಿದೆ ಎಂಬುದನ್ನು ಹಿಂದಿನ ಸೊಲ್ಲಿನಿಂದ ಇಲ್ಲವೇ ಅದರ ಕುಳ್ಳಿಹ ದಿಂದ ತಿಳಿಯಲು ಬರುವುದಿಲ್ಲವಾದಲ್ಲಿ, ಅಂತಹ ಬರಹಗಳು ಓದುಗರಿಗೆ ತೊಡಕಿನವಾಗಿ ಕಾಣಿಸುತ್ತವೆ.
ಕುರಳುಗಳಲ್ಲಿ ಬರುವ ಸೊಲ್ಲುಗಳಲ್ಲಿ ನೆಲೆಯ ಮುನ್ನಡೆತ ಯಾವ ರೀತಿಯಲ್ಲಿ ಸಾಗಬೇಕು ಎಂಬುದನ್ನು ಬರಹಗಾರರು ತಮ್ಮ ಹತೋಟಿಯ ಲ್ಲಿರಿಸಿಕೊಳ್ಳಬೇಕು. ಸೊಲ್ಲುಗಳ ನೆಲೆಯನ್ನು ಹಲವು ಬಗೆಗಳಲ್ಲಿ ಮುನ್ನಡೆಸಲು ಬರುತ್ತದೆ: ಕುರಳಿನಲ್ಲಿರುವ ಎಲ್ಲಾ ಸೊಲ್ಲುಗಳಿಗೂ ಒಂದೇ ನೆಲೆ ಇರಬಹುದು, ಇಲ್ಲವೇ ಒಂದೊಂದು ಸೊಲ್ಲಿನ ನೆಲೆಯನ್ನೂ ಅದರ ಹಿಂದಿರುವ ಸೊಲ್ಲಿನ ತಿಳಿವಿನಿಂದ ಹೊಸದಾಗಿ ಆರಿಸಿಕೊಂಡಿರಬಹುದು.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಕುರಳಿನಲ್ಲಿ ಎಲ್ಲಾ ಸೊಲ್ಲುಗಳಿಗೂ ಹೆಗಡೆಯವರು ಎಂಬುದೇ ನೆಲೆಯಾಗಿರುವುದನ್ನು ಕಾಣಬಹುದು. ಕನ್ನಡದಲ್ಲಿ ಈ ರೀತಿ ಹಲವು ಸೊಲ್ಲುಗಳಲ್ಲಿ ಒಂದೇ ಪದ ನೆಲೆಯಾಗಿ ಬಂದಾಗ, ಅದನ್ನು ಮೊದಲನೆಯ ಸೊಲ್ಲಿನಲ್ಲಿ ಮಾತ್ರ ಬಳಸಿ, ಆಮೇಲೆ ಬಳಸದಿರಲು ಬರುತ್ತದೆ.
ಹೆಗಡೆಯವರು ಹೊರಗೆ ಹೋಗಿ, ಮನೆಯ ಕಟ್ಟೆಯ ಮೇಲೆ ಕುಳಿತರು. ಕುಳಿತಲ್ಲಿಂದಲೇ ಹೆಂಡತಿಯನ್ನು ಕರೆದು ಒಂದು ಲೋಟೆ ಕಾಪಿ ತರಲು ಹೇಳಿದರು. ಕಾಪಿ ಕುಡಿಯುತ್ತ, ಆವತ್ತು ಮಾಡಬೇಕಿದ್ದ ಕೆಲಸಗಳ ಕುರಿತು ಆಲೋಚಿಸತೊಡಗಿದರು.
ಸೊಲ್ಲುಗಳಲ್ಲಿ ಬೇರೆ ಬೇರೆ ನೆಲೆಗಳು ಬಂದಿರುವುದನ್ನು ಕೆಳಗೆ ಕೊಟ್ಟಿರುವ ಕುರಳಿನಲ್ಲಿ ಕಾಣಬಹುದು. ಇದರ ಮೊದಲನೇ ಸೊಲ್ಲಿನಲ್ಲಿ ಕಿವುಡರು ಎಂಬುದು ನೆಲೆ; ಎರಡನೆಯದರಲ್ಲಿ ಮೊದಲನೇ ಸೊಲ್ಲಿನ ತಿಳಿವಿನಿಂದ ಪಡೆದಿರುವ ಸನ್ನೆನುಡಿ ಎಂಬುದು ನೆಲೆ; ಮತ್ತು ಮೂರನೆಯದರಲ್ಲಿ ಎರಡನೇ ಸೊಲ್ಲಿನ ತಿಳಿವಿನಿಂದ ಪಡೆದಿರುವ ವ್ಯತ್ಯಾಸಗಳು ಎಂಬುದು ನೆಲೆ.
ಕಿವುಡರು ಮಾತಿನ ಬದಲು ಸನ್ನೆನುಡಿಯನ್ನು ಬಳಸುತ್ತಾರೆ. ಇದಕ್ಕೂ ಮಾತಿನ ನುಡಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.
ಮೊದಲನೇ ಸೊಲ್ಲಿನ ತಿಳಿವಿನಲ್ಲಿ ಹಲವು ನೆಲೆಗಳಿಗೆ ಮೂಲವಿದ್ದು, ಅವುಗಳಲ್ಲಿ ಒಂದೊಂದನ್ನು ಆರಿಸಿಕೊಂಡು ಮುಂದಿನ ಸೊಲ್ಲುಗಳನ್ನು ಕಟ್ಟಲೂ ಬರುತ್ತದೆ. ಇದನ್ನು ಕೆಳಗಿನ ಕುರಳಿನಲ್ಲಿ ಕಾಣಬಹುದು:
ರಾಜುವಿಗೆ ಇಬ್ಬರು ಮಕ್ಕಳು. ಅವರಲ್ಲಿ ದೊಡ್ಡವನು ಮದುವೆಯಾಗಿ ತನ್ನನ್ನು ಬೇಸಾಯದಲ್ಲೇ ತೊಡಗಿಸಿಕೊಂಡಿದ್ದಾನೆ. ಚಿಕ್ಕವನಿಗಿನ್ನೂ ಮದುವೆಯಾಗಿಲ್ಲ. ಅವನು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ.
ಸೊಲ್ಲುಗಳಲ್ಲಿ ನೆಲೆಯ ಮುನ್ನಡೆತ ಹೇಗೆ ಸಾಗುತ್ತದೆ ಎಂಬುದು ಸ್ವಲ್ಪ ಮಟ್ಟಿಗೆ ಬರಹದ ಬಗೆಯನ್ನೂ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕತೆಗಳಲ್ಲಿ ಬರುವ ಕುರಳುಗಳಲ್ಲಿ ಸಾಮಾನ್ಯವಾಗಿ ಒಂದೇ ನೆಲೆ ತಿರುತಿರುಗಿ ಆಯ್ಕೆಯಾಗು ತ್ತಿದ್ದು, ಅದರ ಎಲ್ಲಾ ಸೊಲ್ಲುಗಳೂ ಆ ನೆಲೆಯ ಕುರಿತಾಗಿಯೇ ತಿಳಿವನ್ನು ಕೊಡುತ್ತಿರುತ್ತವೆ. ಇದರಿಂದಾಗಿ ಕತೆ ಬೇಗನೆ ಮುಂದೆ ಸಾಗುತ್ತದೆ. ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಸೊಲ್ಲಿನ ತಿಳಿವಿನಿಂದ ಇನ್ನೊಂದು ಸೊಲ್ಲಿಗೆ ನೆಲೆಯನ್ನು ಪಡೆಯುವಂತಹ ಮುನ್ನಡೆತವನ್ನೇ ಹೆಚ್ಚಾಗಿ ಕಾಣ ಬಹುದು.
ಆದರೆ, ಯಾವುದೇ ಬಗೆಯ ಬರಹದಲ್ಲೂ ನೆಲೆಯ ಮುನ್ನಡೆತ ಒಂದೇ ಬಗೆಯದಾಗಿದ್ದರೆ ಬರಹ ತೀರಾ ಸಪ್ಪೆಯಾಗಿಬಿಡುತ್ತದೆ. ಒಳ್ಳೆಯ ಬರಹಗಾರರು ಹಲವು ಬಗೆಯ ಮುನ್ನಡೆತಗಳನ್ನು ತಮ್ಮ ಬರಹದಲ್ಲಿ ಅಳವಡಿಸ ಬಲ್ಲವರಾಗಿರುತ್ತಾರೆ.
ಎತ್ತುಗೆಗಾಗಿ, ಒಂದು ಕತೆಯನ್ನು ಬರೆಯುವಲ್ಲಿ ನೆಲೆಯನ್ನು ಬದಲಿಸುವ ಮೂಲಕ, ಒಂದೇ ವ್ಯಕ್ತಿ ನಡೆಸುವ ಎಸಕವನ್ನೂ ಹಲವು ಕೋನಗಳಿಂದ ತೋರಿಸಲು ಬರುತ್ತದೆ. ಇದಲ್ಲದೆ, ಒಂದು ಸೊಲ್ಲಿಗೆ ಅದರ ಹಿಂದಿರುವ ಸೊಲ್ಲಿನ ತಿಳಿವಿನಿಂದ ಹೊಸದೊಂದು ನೆಲೆಯನ್ನು ಆರಿಸಿಕೊಂಡಲ್ಲಿ, ಹಿಂದಿನ ಸೊಲ್ಲಿನಲ್ಲಿ ತಿಳಿಸಿರುವ ಎಸಕದ ಕುರಿತು ಹೆಚ್ಚಿನ ವಿವರಗಳನ್ನು ಕೊಡಲು ಬರುತ್ತದೆ. ಹೀಗೆ ಮಾಡುವ ಮೂಲಕ ಕತೆಯ ವೇಗವನ್ನೂ ಕಡಿಮೆ ಮಾಡಲು ಬರುತ್ತದೆ.
ಹೆಚ್ಚಿನೆಡೆಗಳಲ್ಲೂ ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹ(ಸಂದರ್ಬ)ದಿಂದ ಸುಳುವಾಗಿ ಪಡೆಯಬಲ್ಲ ವಿಶಯವನ್ನೇ ಸೊಲ್ಲಿನ ನೆಲೆಯಾಗಿ ಆರಿಸಿಕೊಳ್ಳ ಲಾಗುತ್ತದೆ. ಆದರೆ, ಕೆಲವೊಮ್ಮೆ ಆ ರೀತಿ ಪಡೆಯಲು ಬಾರದಂತಹ ವಿಶಯ ವನ್ನೂ ನೆಲೆಯಾಗಿ ಬಳಸಿಕೊಳ್ಳಲು ಬರುತ್ತದೆ. ಎತ್ತುಗೆಗಾಗಿ, ರಾಜುವಿನ ಮಗ ಈ ಕೆಲಸವನ್ನು ಮಾಡಿದ್ದು ಎಂಬ ಸೊಲ್ಲಿನಲ್ಲಿ ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹದಿಂದ ಪಡೆಯಬಲ್ಲ ವಿಶಯ ಈ ಕೆಲಸವನ್ನು ಯಾರೋ ಮಾಡಿದ್ದಾರೆ ಎಂಬುದಲ್ಲದೆ ರಾಜುವಿನ ಮಗ ಎಂಬುದಲ್ಲ.
ಒಂದು ವಿಶಯವನ್ನು ಓದುಗರ ಮುಂದಿಟ್ಟು ಅದರ ಕುರಿತಾಗಿ ವಿವರಗಳನ್ನು ಕೊಡುವ ಇಟ್ಟಳ ಚೆನ್ನಾಗಿ ಬರೆದ ಸೊಲ್ಲುಗಳಲ್ಲಿ ಮಾತ್ರವಲ್ಲದೆ, ಕುರಳು ಗಳಲ್ಲೂ ಇರುತ್ತದೆ. ಅವುಗಳಲ್ಲಿ ಮೊದಲು ಬರುವ ಸೊಲ್ಲು ಓದುಗರ ಮುಂದೆ ಒಂದು ವಿಶಯವನ್ನು ಇರಿಸುತ್ತದೆ; ಇದನ್ನು ಕುರಳಿನ ಗುರಿ ಎಂದು ಕರೆಯಬಹುದು. ಇಡೀ ಕುರಳಿನಲ್ಲಿ ಹೇಳುವುದೇನು ಎಂಬುದನ್ನು ಈ ಸೊಲ್ಲು ಚುಟುಕಾಗಿ ತಿಳಿಸುತ್ತದೆ. ಆಮೇಲೆ ಬರುವ ಸೊಲ್ಲುಗಳೆಲ್ಲ ಅದನ್ನೇ ಕೊಂಡಿಯಾಗಿರಿಸಿಕೊಂಡು, ಅದರ ಕುರಿತು ಹೆಚ್ಚಿನ ವಿವರಗಳನ್ನು ಕೊಡುತ್ತವೆ. ಇದಕ್ಕೆ ಬದಲು, ಅಶ್ಟೊಂದು ಚೆನ್ನಾಗಿ ಬರೆಯದಿರುವ ಕುರಳುಗಳಲ್ಲಿ ಈ ರೀತಿ ಗುರಿಯನ್ನು ಗುರುತಿಸಲು ಬರುವುದಿಲ್ಲ; ಓದುಗರು ಮೊದಲನೇ ಸೊಲ್ಲನ್ನು ಗುರಿಯೆಂದು ತಿಳಿದು ಮುಂದೆ ಓದಲು ಹೊರಟಾಗ, ಅದಕ್ಕೂ ಆಮೇಲಿನ ಸೊಲ್ಲುಗಳಿಗೂ ನಡುವೆ ಎಂತಹ ಪತ್ತುಗೆಯಿದೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ. ಇದರಿಂದಾಗಿ ಅವರು ಗೊಂದಲಕ್ಕೊಳಗಾಗುತ್ತಾರೆ.
ಚನ್ನಾಗಿ ಬರೆಯಲು ಕಲಿಯುವವರು ಸೊಲ್ಲುಗಳಿಗೆ ಬೇಕಾಗುವ ನೆಲೆಗಳನ್ನು ಮತ್ತು ಕುರಳುಗಳಿಗೆ ಬೇಕಾಗುವ ಗುರಿಗಳನ್ನು ಸರಿಯಾಗಿ ಆರಿಸಿಕೊಳ್ಳಲು ಕಲಿಯಬೇಕು, ಮತ್ತು ಅವುಗಳ ನಡುವಿನ ಕೊಂಡಿ ತಪ್ಪಿಹೋಗದಂತೆ ನೋಡಿ ಕೊಳ್ಳಲು ಕಲಿಯಬೇಕು. ತಾವು ಬರೆದಿರುವ ಬರಹದಲ್ಲಿ ಇಂತಹ ಹೊಂದಾಣಿಕೆ
ಕಾಣಿಸಿಕೊಳ್ಳುವುದಿಲ್ಲವಾದರೆ, ಸೊಲ್ಲುಗಳನ್ನು ಬದಲಾಯಿಸಿ, ಹೊಂದಾಣಿಕೆ ಬರುವ ಹಾಗೆ ಮಾಡಲು ಕಲಿಯಬೇಕು. ಹೀಗೆ ಮಾಡುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
3.2.2 ಇಟ್ಟಳಗಳ ಆಯ್ಕೆ
ಯಾವುದೇ ಒಂದು ಸಂಗತಿಯನ್ನು ಹಲವು ಬಗೆಗಳಲ್ಲಿ ತಿಳಿಸಲು ಬರುತ್ತದೆ. ಎತ್ತುಗೆಗಾಗಿ, ಒಂದು ಸೊಲ್ಲಿನಲ್ಲಿ ಬರುವ ಪದಗಳ ಇಲ್ಲವೇ ಪದಕಂತೆಗಳ ಜಾಗವನ್ನು ಬದಲಾಯಿಸಿ, ಅದನ್ನು ಹಲವು ಬಗೆಗಳಲ್ಲಿ ಬರೆಯಲು ಬರುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ರಾಜು ಜಾನಕಿಗೊಂದು ಪುಸ್ತಕ ಕೊಟ್ಟ (1) ಜಾನಕಿಗೆ ಒಂದು ಪುಸ್ತಕವನ್ನು ರಾಜು ಕೊಟ್ಟ (1ಚ) ಒಂದು ಪುಸ್ತಕವನ್ನು ರಾಜು ಜಾನಕಿಗೆ ಕೊಟ್ಟ (1ಟ) ಒಂದು ಪುಸ್ತಕವನ್ನು ಜಾನಕಿಗೆ ರಾಜು ಕೊಟ್ಟ
ಈ ಎಲ್ಲಾ ಸೊಲ್ಲುಗಳೂ ಒಂದೇ ಎಸಕವನ್ನು (ಎಂದರೆ, ರಾಜು ಕೊಡುವವ ನಾಗಿ, ಪುಸ್ತಕ ಕೊಡುವ ವಸ್ತುವಾಗಿ, ಮತ್ತು ಜಾನಕಿ ಅದನ್ನು ಪಡೆಯುವ ವ್ಯಕ್ತಿಯಾಗಿ ಇರುವಂತಹ ಎಸಕವನ್ನು) ತಿಳಿಸುತ್ತವೆ. ಆದರೆ, ಅವುಗಳ ನಡುವೆ ಕೆಲವು ನವಿರಾದ ಹುರುಳಿನ ವ್ಯತ್ಯಾಸಗಳಿರುವ ಕಾರಣ, ಬರೆಯುತ್ತಿರುವಾಗ ಕುಳ್ಳಿಹ(ಸಂದರ್ಬ)ಕ್ಕೆ ತಕ್ಕ ಹಾಗೆ ಅವುಗಳಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಜಾನಕಿಗೆ ಸಿಕ್ಕಿದ ಹಲವು ಪುಸ್ತಕಗಳಲ್ಲಿ ಒಂದನ್ನು ರಾಜು ಕೊಟ್ಟ ಎಂಬ ಹೆಚ್ಚಿನ ಹುರುಳು (1ಕ) ಸೊಲ್ಲಿಗಿದೆ; ಅಲ್ಲಿದ್ದ ಹಲವು ಪುಸ್ತಕ ಗಳಲ್ಲಿ ಒಂದನ್ನು ರಾಜು ಜಾನಕಿಗೆ ಕೊಟ್ಟ (ಮತ್ತು ಇನ್ನೊಂದನ್ನು ಬೇರಾರಿಗೋ ಕೊಟ್ಟ) ಎಂಬ ಹುರುಳು (1ಚ) ಸೊಲ್ಲಿಗಿದೆ; ಮತ್ತು ಅಲ್ಲಿದ್ದ ಪುಸ್ತಕಗಳಲ್ಲಿ ಒಂದನ್ನು ಜಾನಕಿಗೆ ಕೊಟ್ಟುದು ರಾಜು (ಮತ್ತು ಇನ್ನೊಂದನ್ನು ಆಕೆಗೆ ಬೇರಾರೋ ಕೊಟ್ಟುದು) ಎಂಬ ಹುರುಳು (1ಟ) ಸೊಲ್ಲಿಗಿದೆ. ಇವುಗಳಲ್ಲಿ ಯಾವ ಹುರುಳು ತನ್ನ ಬರಹಕ್ಕೆ ತಕ್ಕುದಾದುದು ಎಂಬುದನ್ನು ತಿಳಿದುಕೊಂಡು, ಅದನ್ನು ಕೊಡಬಲ್ಲ ಸೊಲ್ಲನ್ನು ಬರಹಗಾರನು ಆರಿಸಿಕೊಳ್ಳಬೇಕಾಗುತ್ತದೆ. (1)ನೇ ಸೊಲ್ಲಿನಲ್ಲಿ ಬರುವ ಎಸಕ ಪದವನ್ನು ಹೆಸರು ಪದವಾಗಿ ಬದಲಾಯಿಸಿದಲ್ಲಿ, ಅದರ ಪದ ಮತ್ತು ಪದಕಂತೆಗಳ ಜಾಗವನ್ನು ಬೇರೆಯೂ
ಹಲವು ಬಗೆಗಳಲ್ಲಿ ಬದಲಾಯಿಸಲು ಬರುತ್ತದೆ, ಮತ್ತು ಈ ಬದಲಾವಣೆಗಳ ಮೂಲಕವೂ ಹಲವು ನವಿರಾದ ಹುರುಳಿನ ವ್ಯತ್ಯಾಸಗಳನ್ನು ಸೂಚಿಸಲು ಬರುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ಜಾನಕಿಗೆ ಒಂದು ಪುಸ್ತಕ ಕೊಟ್ಟುದು ರಾಜು (1ಪ) ಒಂದು ಪುಸ್ತಕವನ್ನು ಜಾನಕಿಗೆ ಕೊಟ್ಟುದು ರಾಜು ರಾಜು ಒಂದು ಪುಸ್ತಕ ಕೊಟ್ಟುದು ಜಾನಕಿಗೆ (1ಜ) ಒಂದು ಪುಸ್ತಕವನ್ನು ರಾಜು ಕೊಟ್ಟುದು ಜಾನಕಿಗೆ ರಾಜು ಜಾನಕಿಗೆ ಕೊಟ್ಟುದು ಒಂದು ಪುಸ್ತಕ (1ದ) ಜಾನಕಿಗೆ ರಾಜು ಕೊಟ್ಟುದು ಒಂದು ಪುಸ್ತಕ
ಎಸಕಪದವನ್ನು ಹೆಸರುಪದವಾಗಿ ಬದಲಾಯಿಸಿದ ಮೇಲೆ, ಅಂತಹ ಸೊಲ್ಲನ್ನು ಬೇರೆ ಸೊಲ್ಲಿನ ಅಂಗವಾಗಿಯೂ ಬಳಸಲು ಬರುತ್ತದೆ (ರಾಜು ಜಾನಕಿಗೆ ಒಂದು ಪುಸ್ತಕ ಕೊಟ್ಟುದನ್ನು ಯಾರೂ ಗಮನಿಸಲಿಲ್ಲ). ಇದಲ್ಲದೆ, ಎಸಕಪದವನ್ನು ಇನ್ನೊಂದು ಹೆಸರು ಪದದ ಇಲ್ಲವೇ ಎಸಕ ಪದದ ಪರಿಚೆ ಪದವಾಗಿ ಬದಲಾಯಿಸಿಯೂ ಆ ಸೊಲ್ಲನ್ನು ಇನ್ನೊಂದು ಸೊಲ್ಲಿನ ಅಂಗವಾಗಿ ಬಳಸಲು ಬರುತ್ತದೆ. ಇದನ್ನು ಕೆಳಗಿನ ಎರಡು ಸೊಲ್ಲುಗಳಲ್ಲಿ ಕಾಣಬಹುದು:
(1ಬ) ಜಾನಕಿಗೆ ಒಂದು ಪುಸ್ತಕ ಕೊಟ್ಟ ಹುಡುಗ (ರಾಜು)
ರಾಜು ಜಾನಕಿಗೆ ಕೊಟ್ಟ ಪುಸ್ತಕ
ಹೆಸರು ಪದಗಳೊಂದಿಗೆ ಸೊಲ್ಲಿನ ಪರಿಚೆ ಪದಕಂತೆಯನ್ನು ಬಳಸುವುದಕ್ಕೂ ಅದರ ಹೆಸರು ಪದಕಂತೆಯನ್ನು ಬಳಸುವುದಕ್ಕೂ ನಡುವೆ ವ್ಯತ್ಯಾಸವಿದೆ. ಎತ್ತುಗೆಗಾಗಿ, ಹುಡುಗ ಬೊಂಬಾಯಿಗೆ ಹೋಗಿದ್ದಾನೆ ಎಂಬ ಸೊಲ್ಲಿನಿಂದ ಇಂತಹ ಎರಡು ಬಗೆಯ ಪದಕಂತೆಗಳನ್ನು ಉಂಟುಮಾಡಿ ಬಳಸಿರುವುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ಬೊಂಬಾಯಿಗೆ ಹೋದ ಹುಡುಗ ನಾಳೆ ಬರುತ್ತಾನಂತೆ
(2ಚ) ಹುಡುಗ, ಬೊಂಬಾಯಿಗೆ ಹೋದವನು, ನಾಳೆ ಬರುತ್ತಾನಂತೆ
(2ಕ)ದಲ್ಲಿ ಯಾವ ಹುಡುಗನ ಕುರಿತು ಸುದ್ದಿಯನ್ನು ತಿಳಿಸಲಾಗಿದೆ ಎಂಬುದನ್ನು ಅದರಲ್ಲಿ ಬಂದಿರುವ ಬೊಂಬಾಯಿಗೆ ಹೋದ ಎನ್ನುವ ಪರಿಚೆ ಪದಕಂತೆ ಗೊತ್ತುಮಾಡುತ್ತದೆ; ಆದರೆ (2ಚ)ದಲ್ಲಿ ಬರುವ ಬೊಂಬಾಯಿಗೆ ಹೋದವನು ಎಂಬ ಪದಕಂತೆ ಹುಡುಗನ ಕುರಿತು ಹೆಚ್ಚಿನ ಸಂಗತಿಯೊಂದನ್ನು ತಿಳಿಸುತ್ತದಲ್ಲದೆ ಆ ಹುಡುಗ ಯಾರು ಎಂಬುದನ್ನು ಗೊತ್ತುಮಾಡಲು ಹೋಗುವುದಿಲ್ಲ. ಅದನ್ನು ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹದಿಂದ ತಿಳಿದುಕೊಳ್ಳಬೇಕಾಗುತ್ತದೆ.
ಈ ರೀತಿ, ಒಂದೇ ಸಂಗತಿಯನ್ನು ಹಲವು ಬಗೆಯಲ್ಲಿ ಬರೆಯಲು ಬರುತ್ತದೆ ಎಂಬುದನ್ನು, ಮತ್ತು ಅವುಗಳ ಮೂಲಕ ಹಲವು ನವಿರಾದ ಹುರುಳುಗಳನ್ನು ಸೂಚಿಸಲು ಬರುತ್ತದೆ ಎಂಬುದನ್ನು ತಿಳಿದುಕೊಂಡಲ್ಲಿ, ಬರೆಯುವಾಗ ಅವುಗಳಲ್ಲಿ ಒಂದು ಬಗೆಯ ಸೊಲ್ಲಿನ ಬದಲು ಇನ್ನೊಂದು ಬಗೆಯ ಸೊಲ್ಲನ್ನು ಆಯ್ದುಕೊಳ್ಳುವ ಮೂಲಕ ಬರಹಗಾರರಿಗೆ ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಯನ್ನು ಹೆಚ್ಚು ಚನ್ನಾಗಿ ತಿಳಿಸಲು ಬರುತ್ತದೆ.
ಇದಲ್ಲದೆ, ಉದ್ದಕ್ಕೂ ಒಂದೇ ಬಗೆಯ ಸೊಲ್ಲುಗಳನ್ನು ಬರೆದಲ್ಲಿ, ಅಂತಹ ಬರಹವನ್ನು ಓದುವವರಿಗೆ ಬೇಸರವಾಗುತ್ತದೆ. ಸೊಲ್ಲುಗಳು ಬಗೆಬಗೆಯವು ಗಳಾಗಿರಬೇಕು. ಮೇಲೆ ವಿವರಿಸಿದಂತಹ ಮಾರ್ಪಾಡುಗಳನ್ನು ಮಾಡುವ ಮೂಲಕ ಬರಹದಲ್ಲಿ ಬರುವ ಸೊಲ್ಲುಗಳು ಹಲವು ಬಗೆಯವುಗಳಾಗುವ ಹಾಗೆ ಮಾಡಿ, ಓದುಗರಿಗೆ ಅದರಲ್ಲಿ ಕುತೂಹಲವುಂಟಾಗುವಂತೆ ಮಾಡಬಹುದು.
ಬರೆಯಲು ಕಲಿಯುವವರು ಒಳ್ಳೇ ಬರಹಗಳನ್ನು ಎರಡನೇ ಇಲ್ಲವೇ ಮೂರನೇ ಬಾರಿ ಓದುವಾಗ, ಅವುಗಳಲ್ಲಿ ಸೊಲ್ಲುಗಳ ಆಯ್ಕೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಗಮನಿಸಬೇಕು, ಮತ್ತು ಈ ಆಯ್ಕೆಯ ಮೂಲಕ, ಹೇಗೆ ಸೊಲ್ಲುಗಳು ಒಂದಕ್ಕೊಂದು ಹೊಂದಿಕೊಳ್ಳುವಂತೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇಂತಹ ತಿಳಿವು ಬರೆಯುವ ಕೆಲಸವನ್ನು ನಡೆಸುವಲ್ಲಿ, ಮತ್ತು ಬರೆದುದನ್ನು ತಿದ್ದಿ ಸರಿಪಡಿಸುವಲ್ಲಿ ನೆರವಿಗೆ ಬರ ಬಲ್ಲುದು.
3.2.3 ಸರಿತೆರಪಿನ ಇಟ್ಟಳಗಳು
ಒಂದೇ ಬಗೆಯ ಎರಡು ಇಲ್ಲವೇ ಹೆಚ್ಚು ವಿಶಯಗಳನ್ನು ಸೂಚಿಸಬೇಕಾದಾಗ, ಸರಿತೆರಪಿನ ಇಟ್ಟಳಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಅವನು ಆಪೀಸಿಗೂ ಹೋಗಲಿಲ್ಲ, ಮದುವೆಗೂ ಬರಲಿಲ್ಲ ಎಂಬ ಸೊಲ್ಲಿನಲ್ಲಿ
ಎರಡು ವಿಶಯಗಳನ್ನು ಎದುರೆದುರಾಗಿ ನಿಲ್ಲಿಸಿ ಹೇಳಲಾಗಿದೆ, ಮತ್ತು ಇದಕ್ಕಾಗಿ ಸರಿತೆರಪಿನ ಇಟ್ಟಳವನ್ನು ಬಳಸಲಾಗಿದೆ. ಇಂತಹ ಇಟ್ಟಳಗಳಲ್ಲಿ ವಿಶಯಗಳನ್ನು ಜೋಡಿಸುವುದಕ್ಕಾಗಿ ಕನ್ನಡದಲ್ಲಿ ಮತ್ತು, ಇಲ್ಲವೇ, ಆಗಲಿ, ಊ, ಇಂತ ಮೊದಲಾದ ಪದ ಇಲ್ಲವೇ ಒಟ್ಟುಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಸೂಚಿಸಬೇಕಾಗಿರುವ ವಿಶಯಗಳು ಎರಡಕ್ಕಿಂತ ಹೆಚ್ಚು ಇದ್ದಲ್ಲಿ, ಅವನ್ನು ಒಂದು ಪಟ್ಟಿಯಾಗಿಯೂ ಕೊಡಲಾಗುತ್ತದೆ.
ಸರಿತೆರಪಿನ ಇಟ್ಟಳಗಳಲ್ಲಿ ಬರುವ ವಿಶಯಗಳನ್ನು ಪದ, ಪದಕಂತೆ ತುಂಡು ಸೊಲ್ಲು, ಇಲ್ಲವೇ ಸೊಲ್ಲುಗಳ ಮೂಲಕ ಸೂಚಿಸಲಾಗುತ್ತದೆ. ಇಲ್ಲಿ ಬರಹ ಗಾರರು ಮುಕ್ಯವಾಗಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಇವುಗಳಲ್ಲಿ ಬರುವ ನುಡಿತಗಳು ಒಂದೇ ಬಗೆಯವಾಗಿರಬೇಕು. ಯಾಕೆಂದರೆ, ಅವು ಬೇರೆ ಬೇರೆ ಬಗೆಯವಾಗಿದ್ದರೆ ಓದುಗರಿಗೆ ತೊಂದರೆಯಾಗುತ್ತದೆ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಎಲ್ಲಾ ನುಡಿತಗಳೂ ಒಂದೇ
ಬಗೆಯವಾಗಿಲ್ಲ:
ಇವತ್ತು ನಾವು ಮಾಡಿರುವ ಕೆಲಸಗಳು:
- ವಿಳಾಸಗಳನ್ನೆಲ್ಲ ಎಣ್ಣುಕದಲ್ಲಿ ಸೇರಿಸಿ ಅಚ್ಚು ಹಾಕಿದೆವು
- ಹೊದಿಕೆಗಳಿಗೆ ವಿಳಾಸಗಳನ್ನು ಅಂಟಿಸಿ ಸುತ್ತೋಲೆಗಳನ್ನು
ಅವುಗಳೊಳಗೆ ಹಾಕಿದೆವು
- ಅಂಚೆಯಲ್ಲಿ ಕಳಿಸಬೇಕಾದುವನ್ನು ಬೇರೆ ಇರಿಸಲಾಯಿತು
- ಇಪ್ಪತ್ತಯ್ದು ಕಡೆಗಳಿಗೆ ಸುತ್ತೋಲೆ ಮುಟ್ಟಿಸಿದ್ದು
ಈ ಎತ್ತುಗೆಯಲ್ಲಿ ಮೊದಲ ಮೂರು ನುಡಿತಗಳು ಸೊಲ್ಲುಗಳು; ಆದರೆ, ನಾಲ್ಕನೆಯದು ಒಂದು ಪದಕಂತೆ. ಇದಲ್ಲದೆ, ಮೂರನೇ ಸೊಲ್ಲಿನ ಇಟ್ಟಳ ಮೊದಲ ಎರಡು ಸೊಲ್ಲುಗಳ ಇಟ್ಟಳಕ್ಕಿಂತ ಬೇರಾಗಿದೆ. ಈ ವ್ಯತ್ಯಾಸಗಳಿಂದಾಗಿ ಮೇಲಿನ ಸರಿತೆರಪಿನ ಬರಹ ಓದುಗರಿಗೆ ತೊಂದರೆ ಕೊಡುತ್ತದೆ ಎಂಬುದನ್ನು ಗಮನಿಸಬಹುದು.
ವಿ.ಎಸ್. ಸಂಪತ್ಕುಮಾರಾಚಾರ್ ಅವರು ಬರೆದ ತ್ಯಾಗರಾಜ ಕ್ರುತಿ ಮಂಜರಿಯಲ್ಲಿ ಬಂದಿರುವ ಕೆಳಗಿನ ಸೊಲ್ಲಿನಲ್ಲಿಯೂ ಸರಿತೆರಪಿನ ಇಟ್ಟಳ ಸರಿಯಾಗಿಲ್ಲ ಮತ್ತು ಇದರಿಂದಾಗಿ ಅದು ಚನ್ನಾಗಿ ಓದಿಸಿಕೊಂಡು ಹೋಗುವು
…..ಕೆಲವರು ಆನಂದದಿಂದ ಮುದ್ದುಮಾಡುತ್ತಾ, ಕೆಲವರು ಯಮುನಾದೇವಿಯನ್ನು ಪ್ರಾರ್ಥಿಸುತ್ತಾ, ಮತ್ತೆ ಕೆಲವರ ಮುತ್ತಿನ ಸರಗಳು ಹೊಳೆಯುತ್ತಲೂ, ಕೆಲವರ ಸ್ತನಗಳು ಅಲ್ಲಾಡುತ್ತಲೂ …. ದೋಣಿಯನ್ನು ನಡೆಸುವ ದೃಶ್ಯವನ್ನು ನೋಡಿರಿ.
ಈ ಸೊಲ್ಲಿನಲ್ಲಿ ಮೊದಲ ಎರಡು ತುಂಡುಸೊಲ್ಲುಗಳು ಗೋಪಿಯರು ಏನು ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತವೆ, ಮತ್ತು ಮುಂದಿನ ಎರಡು ತುಂಡುಸೊಲ್ಲುಗಳು ಅವರ ಒಡವೆಗಳು ಇಲ್ಲವೇ ಅಂಗಗಳು ಹೇಗಿವೆ ಎಂಬು ದನ್ನು, ಇಲ್ಲವೇ ಅವಕ್ಕೆ ಏನಾಗುತ್ತಿದೆ ಎಂಬುದನ್ನು ಸೂಚಿಸುತ್ತವೆ. ಮೊದಲ ಎರಡು ತುಂಡುಸೊಲ್ಲುಗಳು ಉತ್ತಾ ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ, ಮತ್ತು ಮುಂದಿನ ಎರಡು ಸೊಲ್ಲುಗಳು ಉತ್ತಲೂ ಎಂಬುದರಲ್ಲಿ ಕೊನೆಗೊಳ್ಳುತ್ತವೆ. ಸರಿತೆರಪಿನ ಇಟ್ಟಳಗಳಲ್ಲಿ ಇಂತಹ ವ್ಯತ್ಯಾಸಗಳಿರಬಾರದು. ಅವುಗಳಿಂದಾಗಿ ಓದು ಎಡವುತ್ತದೆ.
ಇಲ್ಲಿ ತೊಂದರೆಯೇನೆಂದರೆ, ಇಂತಹ ವ್ಯತ್ಯಾಸಗಳು ತಮ್ಮ ಬರಹದಲ್ಲಿ ಸೇರಿಕೊಂಡಿವೆಯೆಂಬುದು ಬರೆಯುವವರಿಗೆ ಸಾಮಾನ್ಯವಾಗಿ ಗೊತ್ತೇ ಆಗುವುದಿಲ್ಲ. ಅವು ಗಮನಕ್ಕೆ ಬರಬೇಕಿದ್ದಲ್ಲಿ ಬರಹವನ್ನು ಗಟ್ಟಿಯಾಗಿ ಓದಿ ನೋಡಬೇಕು, ಇಲ್ಲವೇ ಬೇರೊಬ್ಬರ ಹತ್ತಿರ ಓದಲು ಹೇಳಬೇಕು. ಬರಹ ಗಳಲ್ಲಿ ಬರುವ ಇಟ್ಟಳಗಳ ತಿಳಿವೂ ಇಂತಹ ತಪ್ಪುಗಳನ್ನು ಗುರುತಿಸುವಲ್ಲಿ, ಮತ್ತು ಅವನ್ನು ಸರಿಪಡಿಸುವಲ್ಲಿ ಬರಹಗಾರರ ನೆರವಿಗೆ ಬರುತ್ತದೆ.
32.4 ತೋರುಪದಗಳ ಬಳಕೆ
ಸೊಲ್ಲುಗಳಲ್ಲಿ ಒಂದೇ ಹೆಸರುಪದವನ್ನು ಹಲವು ಬಾರಿ ಬಳಸಿದಲ್ಲಿ ಅದು ಅಶ್ಟೊಂದು ಚನ್ನಾಗಿ ಕಾಣಿಸುವುದಿಲ್ಲ. ಕೆಲವು ಸಂದರ್ಬಗಳಲ್ಲಿ ಅವನ್ನು ಬಳಸದಿದ್ದರೂ ಹುರುಳು ಗೊತ್ತಾಗುತ್ತದೆ, ಮತ್ತು ಬೇರೆ ಕೆಲವು ಸಂದರ್ಬಗಳಲ್ಲಿ ಅವುಗಳ ಬದಲು ಅವನು, ಅವಳು, ಅದು, ಇವನು, ಅಲ್ಲಿ, ಆಗ ಮೊದಲಾದ ತೋರುಪದಗಳನ್ನು ಬಳಸಲು ಬರುತ್ತದೆ.
ಆದರೆ, ಈ ಎರಡು ಬಗೆಯ ಬಳಕೆಗಳನ್ನು ನಡೆಸುವಲ್ಲೂ ಕೆಲವು ವಿಶಯಗಳ ಮಟ್ಟಿಗೆ ಎಚ್ಚರದಿಂದಿರಬೇಕಾಗುತ್ತದೆ. ಎತ್ತುಗೆಗಾಗಿ, ಕೆಲವೊಮ್ಮೆ ಇವು ಯಾವ ಹೆಸರುಪದವನ್ನು ಸೂಚಿಸುತ್ತವೆ ಎಂಬ ವಿಶಯದಲ್ಲಿ ಸಂಶಯ ವುಂಟಾಗಬಲ್ಲುದು, ಮತ್ತು ಅದರಿಂದಾಗಿ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು.
ಒಂದು ಸೊಲ್ಲಿನಲ್ಲಿ ಬಂದಿರುವ ನೆಲೆಯೇ ಅದರ ಮುಂದೆ ಬಂದಿರುವ ಸೊಲ್ಲಿನಲ್ಲಿಯೂ ನೆಲೆಯಾಗಿ ಬಂದಿದೆಯಾದರೆ, ಅದನ್ನು ಗುರುತಿಸದಿರ ಬಹುದು, ಇಲ್ಲವೇ ಒಂದು ತೋರುಪದದ ಮೂಲಕ ಗುರುತಿಸಬಹುದು. ಆದರೆ, ನೆಲೆ ಬದಲಾವಣೆಯಾಗಿರುವಲ್ಲೂ ಅದನ್ನು ಗುರುತಿಸದೆ ಬಿಟ್ಟರೆ, ಇಲ್ಲವೇ ತೋರುಪದದಿಂದ ಗುರುತಿಸಹೋದರೆ, ಸೊಲ್ಲುಗಳ ನಡುವಿನ ಹೊದ್ದಿಕೆ ತಪ್ಪಿಹೋಗುತ್ತದೆ, ಮತ್ತು ಓದುಗರಿಗೆ ತೊಂದರೆಯಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ರಾಜು ಹರಿಗೆ ಮನೆ ಕಟ್ಟುವಲ್ಲಿ ನೆರವು ನೀಡಿದ (3ಚ) ಆತ ಗಾರೆ ಕೆಲಸ ಮಾಡಿದ, ಮತ್ತು ಹರಿ ಮರದ ಕೆಲಸ ಮಾಡಿದ
(3ಟ) ಆತ ಮೊದಲಿಗೆ ಗಾರೆ ಕಲಿಸತೊಡಗಿದ (3ತ) ಆತ ಮೊದಲಿಗೆ ಹಲಿಗೆಗಳನ್ನು ತುಂಡಿಸತೊಡಗಿದ.
(3ಚ) ಸೊಲ್ಲಿನ ಬಳಿಕ (3ಟ) ಸೊಲ್ಲನ್ನು ಬಳಸಿದಲ್ಲಿ ಹೊದ್ದಿಕೆ ತಪ್ಪುವು ದಿಲ್ಲ. ಇದಕ್ಕೆ ಬದಲು, (3ಚ) ಸೊಲ್ಲಿನ ಬಳಿಕ (3ತ) ಸೊಲ್ಲನ್ನು ಬಳಸಿದಲ್ಲಿ ಹೊದ್ದಿಕೆ ತಪ್ಪುತ್ತದೆ. (3ತ)ದಲ್ಲಿ ನೆಲೆ ಬದಲಾಗಿರುವುದೇ ಇದಕ್ಕೆ ಕಾರಣ. (3ಕ) ಮತ್ತು (3ಚ) ಸೊಲ್ಲುಗಳಲ್ಲಿ ರಾಜು ಪದ ನೆಲೆಯಾಗಿ ಬಂದಿದೆ; (3ಟ) ಸೊಲ್ಲಿನಲ್ಲಿ ಇದೇ ಪದ ನೆಲೆಯಾಗಿ ಬಂದಿದ್ದು, ಅದನ್ನು ಗುರುತಿಸಲು ಆತ ಪದವನ್ನು ಬಳಸಿರುವ ಕಾರಣ ತೊಂದರೆಯಿಲ್ಲ.
ಆದರೆ, (3ತ) ಸೊಲ್ಲಿನಲ್ಲಿ ನೆಲೆಯಾಗಿ ಹರಿ ಪದ ಬರಬೇಕಾಗಿದೆ; ಯಾಕೆಂದರೆ, ಹಲಿಗೆಯನ್ನು ತುಂಡಿಸುತ್ತಿರುವುದು ಹರಿಯಲ್ಲದೆ ರಾಜುವಲ್ಲ; ಈ ಬದಲಾಗಿರುವ ನೆಲೆಯನ್ನು ಆತ ಪದದ ಮೂಲಕ ಗುರುತಿಸಲು ಹೊರಟಕಾರಣ, ಇಲ್ಲಿ ಹೊದ್ದಿಕೆ ತಪ್ಪುತ್ತದೆ.
3.2.5 ಹೊದ್ದಿಕೆಯ ಗುರುತುಗಳು
ಬರಹಗಳಲ್ಲಿ ಆದರೆ, ಅಲ್ಲದೆ, ಹಾಗಾಗಿ, ಯಾಕೆಂದರೆ ಮೊದಲಾದ ಕೆಲವು ಬಗೆಯ ಹೊದ್ದಿಕೆಯ ಗುರುತುಗಳನ್ನು ಬಳಸಲಾಗುತ್ತದೆ. ಈ ಗುರುತು ಗಳು ಒಂದು ಸೊಲ್ಲು ತಿಳಿಸುವ ವಿಶಯ ಅದರ ಬಳಿಕ ಬರುವ ಇನ್ನೊಂದು ಸೊಲ್ಲು ತಿಳಿಸುವ ವಿಶಯದೊಂದಿಗೆ ಹೊಂದಿಕೊಳ್ಳುವ ಹಾಗೆ ಮಾಡುತ್ತವೆ
ಮತ್ತು ಅವುಗಳ ನಡುವಿನ ಪತ್ತುಗೆ (ಸಂಬಂದ) ಎಂತಹದು ಎಂಬುದನ್ನು ಓದುಗರು ಸುಳುವಾಗಿ ಕಂಡುಕೊಳ್ಳುವ ಹಾಗೆ ಮಾಡುತ್ತವೆ.
ವಿಶಯಗಳ ನಡುವಿನ ಪತ್ತುಗೆಗಳು ಮತ್ತು ಅವನ್ನು ಸೂಚಿಸುವ ಗುರುತು ಗಳು ಹಲವು ಬಗೆಯವಾಗಿರಬಲ್ಲುವು. ಅವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(1) ಎರಡು ವಿಶಯಗಳನ್ನು ಜೋಡಿಸುವವು: ಅಲ್ಲದೆ, ಇದಲ್ಲದೆ,
ಮೊದಲನೆಯದಾಗಿ …. ಕೊನೆಯದಾಗಿ
(2) ಎರಡರ ನಡುವಿನ ವ್ಯತ್ಯಾಸವನ್ನು ತೋರಿಸುವವು: ಆದರೆ,
ಆದರೂ, ಹೀಗಿದ್ದರೂ, ಇಲ್ಲವಾದರೆ (3) ಕಾರಣ ತಿಳಿಸುವವು: ಯಾಕೆಂದರೆ (4) ಒತ್ತಿಹೇಳುವವು: ನಿಜಕ್ಕೂ, ಕಂಡಿತವಾಗಿಯೂ
ಬರಹಗಳಲ್ಲಿ ಇವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದನ್ನು ಬರಹಗಾರರು ತಿಳಿದಿರಬೇಕು. ಬರಹ ಒಂದೇ ಬಗೆಯದಾಗದ ಹಾಗೆ, ಕೆಲವೊಮ್ಮೆ ಇಂತಹ ಹೊದ್ದಿಕೆಯ ಗುರುತುಗಳ ಬದಲು, ಎರಡು ಸೊಲ್ಲು ಗಳನ್ನು ಒಟ್ಟುಸೇರಿಸಿಯೂ ಬರೆಯಬಹುದು.
ಎತ್ತುಗೆಗಾಗಿ, ರಾಜು ಮದುವೆಗೆ ಬಂದಿದ್ದ. ಆದರೆ, ನಾನು ಅವನನ್ನು ಮಾತನಾಡಿಸಲಿಲ್ಲ ಎಂಬುದಾಗಿ ಬರೆಯುವ ಬದಲು, ರಾಜು ಮದುವೆಗೆ ಬಂದಿದ್ದರೂ ನಾನು ಅವನನ್ನು ಮಾತನಾಡಿಸಲಿಲ್ಲ ಎಂಬುದಾಗಿ ಬರೆಯಬಹುದು.
ಸೊಲ್ಲುಗಳು ತಿಳಿಸುವ ವಿಶಯಗಳ ನಡುವಿನ ಪತ್ತುಗೆಯ ಹಾಗೆ, ಕುರಳು ಗಳು ತಿಳಿಸುವ ವಿಶಯಗಳ ನಡುವಿನ ಪತ್ತುಗೆಯನ್ನೂ ಹೊದ್ದಿಕೆಯ ಗುರುತುಗಳ ಮೂಲಕ ಸೂಚಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಕುರಳಿನಲ್ಲಿ ಬರುವ ಮೊದಲನೆಯ ಸೊಲ್ಲನ್ನು ಇದಕ್ಕಾಗಿ ಬಳಸಲಾಗುತ್ತದೆ.
ಎತ್ತುಗೆಗಾಗಿ, ಒಂದು ಕುರಳು ಅದಕ್ಕಿಂತ ಹಿಂದಿನ ಕುರಳು ಹೇಳಿದ್ದಕ್ಕಿಂತ ತೀರ ಬೇರಾಗಿರುವ ವಿಶಯವನ್ನು ತಿಳಿಸುವುದಿದ್ದಲ್ಲಿ, ಆ ಕುರಳನ್ನು ಆದರೆ, ಎಲ್ಲರೂ ಈ ಮಾತನ್ನು ಒಪ್ಪುವುದಿಲ್ಲ ಎಂಬಂತಹ ಸೊಲ್ಲಿನಿಂದ ಸುರುಮಾಡಬಹುದು. ಇಂತಹ ಹೊದ್ದಿಕೆಯ ಗುರುತುಗಳ ಮೂಲಕ ಓದುಗರು ಕುರಳಿನಿಂದ ಕುರಳಿಗೆ ಸುಳುವಾಗಿ ಸಾಗುವ ಹಾಗೆ ಮಾಡಬಹುದು.
3.3 ಬರಹದ ಗುರಿ
ಬರಹದ ಗುರಿಯೇನು ಎಂಬುದರ ಮೇಲೆಯೂ ಅದರಲ್ಲಿ ಬರುವ ಪದಗಳ ಬಗೆ, ಸೊಲ್ಲುಗಳ ಇಟ್ಟಳ, ಕುರಳುಗಳ ಬಗೆ, ನೆಲೆಗಳ ಮುನ್ನಡೆತ, ಸೊಲ್ಲುಗಳ ತಿಣ್ಮೆ(ನಿಬಿಡತೆ) ಮೊದಲಾದುವು ಅವಲಂಬಿಸಿರುತ್ತವೆ. ಹಾಗಾಗಿ, ಬರಹ ಗಾರರು ತಮ್ಮ ಬರಹದ ಗುರಿಯೇನು ಎಂಬುದನ್ನು ಮನಸ್ಸಿನಲ್ಲಿರಿಸಿಕೊಂಡು, ಅದನ್ನು ಈಡೇರಿಸುವ ಹಾಗೆ ತಮ್ಮ ಬರಹವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ. ಬರಹಗಳನ್ನು ಮುಕ್ಯವಾಗಿ ನಾಲ್ಕು ಬಗೆಗಳಲ್ಲಿ ಹಂಚಬಹುದು: ಕಯ್ಪಿಡಿ, ಒರೆತ(ವಿಮರ್ಶೆ), ಕಿರುಬರಹ ಮೊದಲಾದ ತಿಳಿವಿನ ಬರಹಗಳು, ಹೇಳಿವೆ (ವರದಿ), ಸುದ್ದಿ ಮೊದಲಾದ ಕೊಗೆತ(ನಿರೂಪಣೆ)ಗಳು, ಬಯಲರಿಕೆ (ಜಾಹೀ ರಾತು), ಕೋರಿಕೆ, ಕಿತ್ತರಿಕೆ(ಕರಪತ್ರ) ಮೊದಲಾದ ಒಲಿಕೆಗಳು (ಒಲಿಸಿಕೊಳ್ಳುವ ಬರಹಗಳು), ಮತ್ತು ಕತೆ, ಕವಿತೆ ಮೊದಲಾದ ನಲ್ಬರಹಗಳು. ಇವುಗಳಲ್ಲಿ ಒಂದೊಂದು ಬಗೆಯಲ್ಲೂ ಹಲವು ಒಳಬಗೆಗಳನ್ನು ಕಾಣಬಹುದು.
ಎತ್ತುಗೆಗಾಗಿ, ಜನಸಾಮಾನ್ಯರಿಗಾಗಿ ಬರೆದ ತಿಳಿವಿನ ಬರಹಗಳಿಗೂ ಅರಿವಿಗರಿಗಾಗಿ ಬರೆದ ತಿಳಿವಿನ ಬರಹಗಳಿಗೂ ನಡುವೆ ಬರಹದ ಇಟ್ಟಳದಲ್ಲಿ ಮತ್ತು ಪದಗಳ ಆಯ್ಕೆಯಲ್ಲಿ ಹಲವು ವ್ಯತ್ಯಾಸಗಳಿರುತ್ತವೆ. ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಪದಗಳ ತಿಣ್ಮೆ ಹೆಚ್ಚು. ಅವುಗಳಲ್ಲಿ ಹಲವಾರು ಅರಿಮೆಯ (ಪಾರಿಬಾಶಿಕ) ಪದಗಳೂ ಬಳಕೆಯಾಗುತ್ತಿರುತ್ತವೆ. ಇವುಗಳ ಮೂಲಕ ವಿಶಯ ವನ್ನು ಅಡಕವಾಗಿ ಮತ್ತು ಇಪ್ಪುರುಳಿನ ತೊಡಕಿಲ್ಲದಂತೆ ತಿಳಿಸಲು ಬರುತ್ತದೆ. ಜನಸಾಮಾನ್ಯರಿಗೆ ಬರೆದ ತಿಳಿವಿನ ಬರಹಗಳಲ್ಲಿ ಇಂತಹ ಪದಗಳು ಬರುವುದು ಅಪರೂಪ.
ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿ ಸಿರುವ ಸೊಲ್ಲರಿಮೆಯ ಮಾರ್ಪುರುಳುಗಳನ್ನು ಆಗಾಗ ಬಳಸುತ್ತಿರಬೇಕಾಗುತ್ತದೆ. ಎಸಕ(ಕ್ರಿಯೆ)ಗಳನ್ನು ತುಂಬಾ ಅಡಕವಾಗಿ ಬರೆಯಲು, ವಿಶಯಗಳಾಗಿ ಕಾಣಲು, ಮತ್ತು ಅವುಗಳ ಕುರಿತು ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸಲು ಈ ಮಾರ್ಪಾಡು ನೆರವಿಗೆ ಬರುತ್ತದೆ. ಆದರೆ, ಜನಸಾಮಾನ್ಯರಿಗಾಗಿ ಬರೆದ ಬರಹ ಗಳಲ್ಲಿ ಎಸಕಗಳನ್ನು ಎಸಕಗಳಾಗಿಯೇ ಬರೆಯಬೇಕಾಗುತ್ತದೆ. ಇಲ್ಲವಾದರೆ ಅವರಿಗೆ ಬರಹಗಳಿಂದ ತಿಳಿವನ್ನು ಪಡೆಯಲು ತೊಂದರೆಯಾಗುತ್ತದೆ.
ನಲ್ಬರಹ ಮತ್ತು ಇತರ ಬರಹಗಳ ನಡುವೆಯೂ ಪದಗಳ ಮತ್ತು ಸೊಲ್ಲಿಟ್ಟಳಗಳ ಆಯ್ಕೆಯಲ್ಲಿ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೂ ಈ ಎರಡು ಬಗೆಯ ಬರಹಗಳಿಗೆ ಬೇರೆ ಬೇರೆ ಗುರಿಗಳಿರುವುದೇ
ಮುಕ್ಯ ಕಾರಣ. ಬೇರೆ ಬಗೆಯ ಬರಹಗಳಲ್ಲಿ ಕಾಣಿಸದಿರುವಂತಹ ಸೂಳುನುಡಿ (ಸಂಬಾಶಣೆ)ಗಳ ಬಳಕೆಯನ್ನು ಕತೆ-ಕಾದಂಬರಿಗಳಲ್ಲಿ ಮತ್ತು ನಾಟಕಗಳಲ್ಲಿ ಕಾಣಬಹುದು. ಸೊಲ್ಲುಗಳಿಗೆ ಜೀವ ತುಂಬಿಸುವಂತಹ ಪರಿಚೆ ಪದಗಳು, ಮಾರ್ಪುರುಳುಗಳು, ಹೋಲಿಕೆಯ ಪದಗಳು, ಅಣಕುಪದಗಳು ಮೊದಲಾದು ವನ್ನು ಬೇರೆ ಬರಹಗಳಿಗಿಂತಲೂ ನಲ್ಬರಹಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಬರೆಯಲು ಕಲಿಯುವವರು ತಮ್ಮ ಮುಂದಿರುವ ಗುರಿಗೆ ಬರವಣಿಗೆಯನ್ನು ಹೊಂದಿಸಿಕೊಳ್ಳಲು ಕಲಿಯಬೇಕಾಗುತ್ತದೆ. ಬೇರೆ ಬೇರೆ ಗುರಿಗಳಿಗಾಗಿ ಬರೆಯ ಲಾಗಿರುವ ಬರಹಗಳನ್ನು ಓದಿ ನೋಡಿ, ಅವು ಹೇಗೆ ಆ ಗುರಿಗಳನ್ನು ತಲಪುವು ದಕ್ಕಾಗಿ ನುಡಿಯನ್ನು ಬಳಸಿಕೊಂಡಿವೆ ಎಂಬುದನ್ನು ಅವರು ತಿಳಿದುಕೊಳ್ಳ ಬೇಕಾಗುತ್ತದೆ. ಹೀಗೆ ತಿಳಿದುಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
3.4 ಬರಹದ ಮರುನೋಟ
ಬರಹವನ್ನೊಮ್ಮೆ ಬರೆದು ಮುಗಿಸಿದ ಮೇಲೆ, ಅದನ್ನು ಮರುನೋಟಕ್ಕೆ ಎತ್ತಿ ಕೊಳ್ಳಬೇಕು. ಈ ಸಮಯದಲ್ಲಿ ಬರಹಗಾರರು ತಮ್ಮ ಬರಹವನ್ನು ಓದುಗರು ಯಾವ ಬಗೆಯಲ್ಲಿ ಕಾಣಬಹುದೋ ಅದೇ ಬಗೆಯಲ್ಲಿ ಕಾಣಲು ಪ್ರಯತ್ನಿಸು ತ್ತಾರೆ. ಬರೆಯುತ್ತಿರುವ ಸಮಯದಲ್ಲಿ ಅವರಿಗೆ ಈ ಓದುಗರ ನೋಟ ದೊರೆಯುವುದಿಲ್ಲ.
ತಮ್ಮ ಬರಹವನ್ನು ಬರೆದು ಮುಗಿಸಿದ ಕೂಡಲೇ ಅದನ್ನು ಮರುನೋಟಕ್ಕೆ ಎತ್ತಿಕೊಳ್ಳುವ ಬದಲು, ಕೆಲವು ದಿನಗಳ ಮಟ್ಟಿಗಾದರೂ ಅದನ್ನು ಬದಿಗಿರಿಸಿ, ಆಮೇಲೆ ತೊಡಗಬೇಕು. ಇದರಿಂದ ಬರೆದವರಿಗೆ ಓದುಗರ ನೋಟ ದೊರಕಲು ಹೆಚ್ಚು ಸುಳುವಾಗುತ್ತದೆ. ಇದಲ್ಲದೆ, ತಾವು ಬರೆದುದನ್ನು ಗಟ್ಟಿಯಾಗಿ ಓದುವ ಮೂಲಕವೂ ಅವರು ಓದುಗರ ನೋಟ ಎಂತಹದಿರಬಹುದು ಎಂಬುದನ್ನು ಕಂಡುಕೊಳ್ಳಬಹುದು.
ಮರುನೋಟದ ಸಮಯದಲ್ಲಿ ಬರಹ ಯಾವ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ, ಅದರಲ್ಲಿ ವಿಶಯಗಳನ್ನು ಕೊಟ್ಟಿರುವ ಓರಣ ಸರಿಯಾಗಿದೆಯೇ, ಬರಹ ಎಲ್ಲಾದರೂ ಮುಕ್ಯ ವಿಶಯವನ್ನು ಮುಂದುವರಿಸುವಲ್ಲಿ ದಾರಿ ತಪ್ಪಿದೆಯೇ, ಒಮ್ಮೆ ಹೇಳಿದ್ದನ್ನೇ ಇನ್ನೊಮ್ಮೆ ಹೇಳಲಾಗಿದೆಯೇ, ಮುಕ್ಯ ವಿಶಯಕ್ಕೆ ಯಾವ ರೀತಿಯಲ್ಲೂ ಸಂಬಂದಿಸದಂತಹ ವಿಶಯಗಳು ಅದರಲ್ಲಿ ಸೇರಿಕೊಂಡಿವೆಯೇ ಎಂಬಂತಹ ಸಂಗತಿಗಳ ಕಡೆಗೆ ಗಮನಹರಿಸಬೇಕಾಗುತ್ತದೆ.
ಬರಹದ ಮುನ್ನೋಟ ಮತ್ತು ಮುಕ್ತಾಯಗಳನ್ನು ಒಟ್ಟಿಗೆ ಓದಿನೋಡಿ, ಅವು ಒಂದಕ್ಕೊಂದು ಪೂರಕವಾಗಿವೆಯೇ ಎಂಬುದನ್ನು ಗಮನಿಸಬೇಕು. ಮುನ್ನೋಟದಲ್ಲಿ ಬರಹದ ಗುರಿಯೇನು ಎಂಬುದನ್ನು ಸ್ಪಶ್ಟವಾಗಿ ತಿಳಿಸಿರಬೇಕು, ಮತ್ತು ಮುಕ್ತಾಯದಲ್ಲಿ ಬರಹ ಯಾವ ರೀತಿಯಲ್ಲಿ ಈ ಗುರಿಯನ್ನು ಈಡೇರಿಸಿದೆ ಎಂಬುದನ್ನು ತಿಳಿಸಿರಬೇಕು.
ಇದಲ್ಲದೆ ಬರಹವನ್ನು ಓದಿನೋಡುತ್ತಿರುವಾಗ, ನಿಜಕ್ಕೂ ಅದು ತನ್ನ ಗುರಿಯನ್ನು ಸರಿಯಾಗಿ ಗಮನದಲ್ಲಿರಿಸಿಕೊಂಡು ಮುಂದುವರಿಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವಿಶಯದಿಂದ ಇನ್ನೊಂದು ವಿಶಯಕ್ಕೆ ಅದು ಸಲೀಸಾಗಿ ನೆಗೆಯುತ್ತಿರಬೇಕು, ಮತ್ತು ಒಂದೊಂದು ವಿಶಯಕ್ಕೂ ಅದನ್ನು ಬೆಂಬಲಿಸುವಂತಹ ಎತ್ತುಗೆಗಳನ್ನು ಮತ್ತು ಪುರಾವೆಗಳನ್ನು ಸಾಕಶ್ಟು ಕೊಡುತ್ತಿರಬೇಕು. ಹೀಗೆ ಕೊಟ್ಟಿಲ್ಲವಾದಲ್ಲಿ, ಅವನ್ನು ಸೇರಿಸಿಕೊಳ್ಳುವ ಕೆಲಸವನ್ನು ಮರುನೋಟದ ಸಮಯದಲ್ಲಿ ನಡೆಸಬಹುದು.
ಅಶ್ಟೊಂದು ಮುಕ್ಯವಲ್ಲದ ವಿಶಯದ ಕುರಿತು ತುಂಬಾ ಬರೆದಿದೆಯಾದರೆ, ಅದನ್ನು ಬರಹದಿಂದ ತೆಗೆದುಹಾಕಬೇಕು. ಈ ಬಾಗವನ್ನು ಬರಹಗಾರರು ತುಂಬಾ ಚನ್ನಾಗಿ ಬರೆದಿರಬಹುದು. ಹಾಗಿದ್ದರೂ, ಅದು ಮುಕ್ಯ ವಿಶಯವನ್ನು ಬೆಳೆಸುವುದಿಲ್ಲವಾದರೆ, ಅದನ್ನು ಹೊಡೆದು ಹಾಕಲು ಹಿಂಜರಿಯಬಾರದು. ಬರಹದಲ್ಲಿ ಹಲವಾರು ವಿಶಯಗಳು ತುಂಬಿಕೊಂಡಿವೆಯಾದರೆ, ಮತ್ತು ಬರಹದ ಇಟ್ಟಳ ತುಂಬಾ ತೊಡಕಿನದಾಗಿದೆಯಾದರೆ, ಅದರ ಅಡಕಬರಹ ವೊಂದನ್ನು ತಯಾರಿಸಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅದರಲ್ಲಿ ಬರುವ ವಿಶಯಗಳನ್ನೆಲ್ಲ ಒಂದೊಂದಾಗಿ, ಚಿಕ್ಕ ಚಿಕ್ಕ ಸೊಲ್ಲುಗಳ ಮೂಲಕ, ಬೇರೊಂದು ಕಾಗದದಲ್ಲಿ ಗುರುತಿಸುತ್ತಾ ಹೋಗಬೇಕು.
ಇಂತಹ ಅಡಕಬರಹದಿಂದ ಬರಹದಲ್ಲಿ ಬರುವ ವಿಶಯಗಳ ಓರಣ ಸರಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಲು, ಮತ್ತು ಓರಣ ಸರಿಯಾಗಿಲ್ಲ ವಾದರೆ ವಿಶಯಗಳ ಜಾಗವನ್ನು ಬದಲಾಯಿಸುವ ಮೂಲಕ ಅದನ್ನು ಸರಿಪಡಿಸಲು ಬರುತ್ತದೆ. ಇದಲ್ಲದೆ, ಮುಕ್ಯ ವಿಶಯಕ್ಕೆ ಸಂಬಂದಿಸದಂತಹ ವಿಶಯಗಳು ಬರಹದಲ್ಲಿ ಬಂದಿವೆಯಾದರೆ, ಅವನ್ನು ಗುರುತಿಸಿ ಬರಹದಿಂದ ತೆಗೆದುಹಾಕುವುದರಲ್ಲೂ ಇಂತಹ ಅಡಕಬರಹ ನೆರವಾಗುತ್ತದೆ.
ಬರಹಕ್ಕೆ ಒಳಒಕ್ಕಣೆ(ಒಳ ತಲೆಬರಹ)ಗಳನ್ನು ಕೊಟ್ಟಲ್ಲಿ, ಮತ್ತು ಈ ಒಳಒಕ್ಕಣೆಗಳಿಗೆ, ಈ ಪುಸ್ತಕದಲ್ಲಿ ಮಾಡಿದ ಹಾಗೆ, ಅಂಕೆಗಳನ್ನು ಕೊಟ್ಟಲ್ಲಿ, ಅದರಲ್ಲಿ ವಿಶಯಗಳನ್ನು ಕೊಟ್ಟಿರುವ ಬಗೆ ಸರಿಯಾಗಿದೆಯೇ ಎಂಬುದನ್ನು
ಕಂಡುಕೊಳ್ಳಲು ಸುಳುವಾಗುತ್ತದೆ. ಒಂದು ಪಸುಗೆಯ (ಅದ್ಯಾಯದ) ಎಲ್ಲಾ ಒಳಒಕ್ಕಣೆಗಳನ್ನೂ ಒಟ್ಟುಸೇರಿಸಿ ಪರಿಶೀಲಿಸಿದಾಗ ಈ ವಿಶಯ ಗೊತ್ತಾಗುತ್ತದೆ. ಮರುನೋಟವನ್ನು ಎಣ್ಣುಕ(ಕಂಪ್ಯೂಟರ್)ದಲ್ಲೇನೇ ನಡೆಸಹೋದರೆ, ಅದು ಅಶ್ಟೊಂದು ಸರಿಯಾಗಿ ನಡೆಯಲಾರದು. ಯಾಕೆಂದರೆ, ಎಣ್ಣುಕದಲ್ಲಿ ಒಮ್ಮೆಗೆ ಒಂದೆರಡು ಕುರಳುಗಳನ್ನು ಮಾತ್ರ ನೋಡಲು ಬರುತ್ತದೆ. ಇಡೀ ಬರಹ ಕಣ್ಣೆದುರು ನಿಲ್ಲಬೇಕಿದ್ದಲ್ಲಿ, ಅದನ್ನು ಕಾಗದದ ಮೇಲೆ ಅಚ್ಚುಮಾಡಿಸಿಕೊಳ್ಳ ಬೇಕಾಗುತ್ತದೆ. ಹೀಗೆ ಅಚ್ಚುಮಾಡಿಸಿಕೊಂಡ ಬರಹವನ್ನು ಒಂದು ಪುಸ್ತಕದ ಹಾಗೆ ಜೋಡಿಸಿಕೊಂಡರೆ ಇನ್ನೂ ಒಳ್ಳೆಯದು.
ಮರುನೋಟದ ಸಮಯದಲ್ಲಿ ಬರಹವನ್ನು ಮಾರ್ಪಡಿಸಿದಶ್ಟೂ ಅದು ಒಳ್ಳೆಯದಾಗುತ್ತಾ ಹೋಗುತ್ತದೆ. ಹಾಗಾಗಿ, ಅದರಲ್ಲಿ ಮಾರ್ಪಾಡುಗಳನ್ನು ಮಾಡಲು ಹಿಂಜರಿಯಬಾರದು. ಕೆಲವೊಮ್ಮೆ ಇಡೀ ಬರಹವನ್ನು ಇಲ್ಲವೇ ಬರಹದ ಒಂದು ಇಡೀ ಪಸುಗೆಯನ್ನು ಹೊಸದಾಗಿ ಬರೆಯಬೇಕೆಂದೂ ಬರಹ ಗಾರರಿಗೆ ಅನಿಸಬಹುದು.
ಕೆಲವರು ಬರಹಗಾರರು ತಮ್ಮ ಬರವಣಿಗೆ ಮುಂದುವರಿಯುತ್ತಿರು ವಂತೆಯೇ ಆಗಾಗ ಬರೆದುದನ್ನು ಓದಿ ನೋಡಿ, ಅದರಲ್ಲಿ ಮಾರ್ಪಾಡುಗಳನ್ನು ಮಾಡುತ್ತಾ ಹೋಗುತ್ತಿರಬಹುದು. ಹೀಗೆ ಮಾಡುವವರೂ ಕೂಡ, ಬರಹವನ್ನು ಮುಗಿಸಿದ ಮೇಲೆ ಅದನ್ನೊಮ್ಮೆ ಕಾಗದದ ಮೇಲೆ ಪೂರ್ತಿ ಅಚ್ಚುಹಾಕಿಸಿಕೊಂಡು, ಮೇಲೆ ವಿವರಿಸಿದಂತಹ ಮರುನೋಟಕ್ಕೆ ಒಳಪಡಿಸುವುದು ಒಳ್ಳೆಯದು.
3.5 ತಿದ್ದಿ ಸರಿಪಡಿಸುವುದು
ಕೊನೆಯದಾಗಿ, ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ನಡೆಸಬೇಕಾಗು ತ್ತದೆ. ಬರಹದಲ್ಲಿ ಬಳಕೆಯಾಗಿರುವ ತಡೆ (,), ಅರೆಕೊನೆ (;), ಕೊಗೆತ (:) ಎತ್ತುಗೆ (“ ”) ಮೊದಲಾದ ಬರಹದ ಗುರುತುಗಳು ಸರಿಯಾಗಿ ಬಳಕೆ ಯಾಗಿವೆಯೇ ಎಂಬುದನ್ನು ಈ ಸಮಯದಲ್ಲಿ ಗಮನಿಸಬಹುದು.
ಇದಲ್ಲದೆ, ಎತ್ತುಗೆಗಳು, ಇಸವಿಗಳು, ಅಡಿಬರಹಗಳು ಮೊದಲಾದುವನ್ನು ಸರಿಯಾಗಿ ಕೊಡಲಾಗಿದೆಯೇ ಎಂಬುದನ್ನೂ ಈ ಸಮಯಲ್ಲಿ ಗಮನಿಸಬಹುದು. ಬರಹದಲ್ಲಿ ಒಳಒಕ್ಕಣೆಗಳಿದ್ದು, ಅವಕ್ಕೆ ಅಂಕೆಗಳನ್ನು ಕೊಟ್ಟಿದ್ದಲ್ಲಿ, ಅವು ಸರಿಯಾಗಿ ಬಂದಿವೆಯೇ ಎಂಬುದನ್ನು ಗಮನಿಸಬಹುದು. ದಪ್ಪಬರಿಗೆ, ತೆಳು ಬರಿಗೆ ಮೊದಲಾದುವನ್ನು ಬಳಸಿದ್ದಲ್ಲಿ, ಅವುಗಳ ಬಳಕೆ ಬರಹದುದ್ದಕ್ಕೂ
ಒಂದೇ ಬಗೆಯದಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು. ಬರಹದ ಅಂಚುಗಳು, ಪುಟ ಎಣಿಕೆ ಮೊದಲಾದವುಗಳನ್ನೂ ಈ ಸಮಯದಲ್ಲಿ ಸರಿಪಡಿಸ ಬಹುದು.
3.5.1 ಬರಹದ ಗುರುತುಗಳ ಬಳಕೆ
ಮೇಲೆ ಎರಡನೇ ಪಸುಗೆಯಲ್ಲಿ (2.2.3ರಲ್ಲಿ) ವಿವರಿಸಿದ ಹಾಗೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಮಾತಿನಲ್ಲಿ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ ಮೊದಲಾದವುಗಳನ್ನು ಬಳಸಬಲ್ಲೆವು, ಮತ್ತು ಅವುಗಳ ಮೂಲಕ ಹಲವು ಬಗೆಯ ಹುರುಳುಗಳನ್ನು ತಿಳಿಸಬಲ್ಲೆವು. ಆದರೆ, ಬರಹದಲ್ಲಿ ಇವೊಂದೂ ಬರಲಾರವು. ಅವು ಕೊಡುವ ಹುರುಳುಗಳಲ್ಲಿ ಕೆಲವನ್ನಾದರೂ ಬರಹಗಳಲ್ಲಿ ತಿಳಿಸಬೇಕಾಗುವುದಾದ ಕಾರಣ, ಅದಕ್ಕಾಗಿ ಹಲವು ಬಗೆಯ ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ.
ಎತ್ತುಗೆಗಾಗಿ, ಒಂದು ಸೊಲ್ಲು ಮುಗಿಯಿತೆಂಬುದನ್ನು ಮಾತಿನಲ್ಲಿ ಉಲಿಯ ಇಳಿತದ ಮೂಲಕ ತಿಳಿಸುತ್ತೇವೆ. ಆದರೆ, ಬರಹದಲ್ಲಿ ಇದಕ್ಕಾಗಿ ಕೊನೆ ಗುರುತನ್ನು (.) ಬಳಸಬೇಕಾಗುತ್ತದೆ. ಸೊಲ್ಲು ಒಂದು ಕೇಳ್ವಿಯಾಗಿದ್ದರೆ, ಅದರ ಕೊನೆಯಲ್ಲಿ ಉಲಿ ತುಸು ಮೇಲೇರುತ್ತದೆ ಇಲ್ಲವೇ ಕೆಳಗಿಳಿಯ ದಿರುತ್ತದೆ. ಇದನ್ನು ತಿಳಿಸುವುದಕ್ಕಾಗಿ ಬರಹದಲ್ಲಿ ಕೇಳ್ವಿಯ (?) ಗುರುತನ್ನು ಬಳಸಬೇಕಾಗುತ್ತದೆ.
ಸೊಲ್ಲನ್ನು ಆಡುವ ಬಗೆಯಲ್ಲೇ ಅದನ್ನು ಆಡುಗರು ಬೆರಗಿನಿಂದ ಹೇಳು ತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ; ಆದರೆ, ಬರಹದಲ್ಲಿ ಇದು ಗೊತ್ತಾಗ ಬೇಕಿದ್ದಲ್ಲಿ ಸೊಲ್ಲಿನ ಕೊನೆಯಲ್ಲಿ ಬೆರಗಿನ (!) ಗುರುತನ್ನು ಬಳಸಬೇಕಾಗುತ್ತದೆ. ಬೇರೊಬ್ಬರ ಮಾತನ್ನು ಎತ್ತಿ ಹೇಳುವುದಕ್ಕಾಗಿ ಒಂದು ಸೊಲ್ಲನ್ನು ಬಳಸಿದೆಯಾದರೆ, ಬರಹದಲ್ಲಿ ಅದರ ಮೊದಲಿಗೆ ಮತ್ತು ಕೊನೆಗೆ ಎತ್ತುಗೆಯ (“ ”) ಗುರುತುಗಳನ್ನು ಬಳಸಬೇಕಾಗುತ್ತದೆ.
ಇದಲ್ಲದೆ, ಸೊಲ್ಲಿನ ಒಳಗೂ ತಡೆ (,), ಅರೆಕೊನೆ (;), ಅಡ್ಡಗೆರೆ (-), ಕಳೆತ (…..) ಮೊದಲಾದ ಬೇರೆ ಹಲವು ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ. ಇವೆಲ್ಲವೂ ಬರಹವನ್ನು ಯಾವ ರೀತಿ ಓದಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಗುರುತುಗಳನ್ನು ಸರಿಯಾಗಿ ಬಳಸದಿದ್ದಲ್ಲಿ, ಓದುಗರಿಗೆ ಬರಹವನ್ನು ಹೇಗೆ ಓದಬೇಕು ಎಂಬುದು
ಗೊತ್ತಾಗುವುದಿಲ್ಲ, ಮತ್ತು ಬರಹಗಾರರು ತಿಳಿಸಿರುವುದೊಂದು ಮತ್ತು ಓದುಗರು ತಿಳಿದುಕೊಳ್ಳುವುದಿನ್ನೊಂದು ಎಂದಾಗುತ್ತದೆ.
ಎತ್ತುಗೆಗಾಗಿ, ಅಲ್ಲಿಗೆ ಹೋಗಿ ಬಂದವರನ್ನು ಮಾತನಾಡಿಸಿದ ಎಂಬ ಸೊಲ್ಲಿಗೆ ಎರಡು ಹುರುಳುಗಳಿರಬಲ್ಲುದು. ಅಲ್ಲಿಗೆ ಹೋಗಿ ಬಂದ ಜನರನ್ನು ಆತ ಮಾತನಾಡಿಸಿದ ಎಂಬುದು ಒಂದು ಹುರುಳು ಮತ್ತು ಆತ ಅಲ್ಲಿಗೆ ಹೋಗಿ, (ಬೇರೆಲ್ಲಿಂದಲೋ) ಬಂದ ಜನರನ್ನು ಮಾತನಾಡಿಸಿದ ಎಂಬುದು ಇನ್ನೊಂದು ಹುರುಳು. ಈ ವ್ಯತ್ಯಾಸ ಮಾತಿನಲ್ಲಿ ಸುಳುವಾಗಿ ಗೊತ್ತಾಗುತ್ತದೆ. ಬರಹದಲ್ಲೂ ಇದನ್ನು ಗೊತ್ತುಮಾಡಬೇಕಿದ್ದರೆ, ಎರಡನೇ ಹುರುಳಿರುವಲ್ಲಿ ಹೋಗಿ ಪದದ ಬಳಿಕ ಒಂದು ತಡೆ ಗುರುತನ್ನು ಬಳಸ ಬೇಕಾಗುತ್ತದೆ (ಅಲ್ಲಿಗೆ ಹೋಗಿ, ಬಂದವರನ್ನು ಮಾತನಾಡಿಸಿದ). ಸೊಲ್ಲನ್ನು ಎಲ್ಲಿ ಒಡೆಯಬೇಕು ಎಂಬುದನ್ನು ಈ ಗುರುತು ತಿಳಿಸುತ್ತದೆ.
ಆದರೆ, ಕವಿತೆ, ಹಾಡು ಮೊದಲಾದವುಗಳಲ್ಲಿ ಇಂತಹ ಬರಹದ ಗುರುತುಗಳಲ್ಲಿ ಹೆಚ್ಚಿನವನ್ನೂ ಬಳಸಲು ಬರುವುದಿಲ್ಲ. ಇದಕ್ಕೆ ಕಾರಣ ವೇನೆಂದರೆ, ಅವಕ್ಕೆ ಅವುಗಳದೇ ಆದ ತಾಳದ ಕಟ್ಟು ಇರುತ್ತದೆ. ತಡೆ (,), ಕೊನೆ (.) ಮೊದಲಾದ ಗುರುತುಗಳನ್ನು ಅವುಗಳ ಸಾಲುಗಳಲ್ಲಿ ಸೇರಿಸಿ ಕೊಂಡಲ್ಲಿ, ಅವನ್ನು ಓದುವಾಗ ಇಲ್ಲವೇ ಹಾಡುವಾಗ ಬಳಸಬೇಕಾಗಿರುವ ತಾಳದ ಕಟ್ಟು ಕೆಟ್ಟುಹೋಗಬಲ್ಲುದು. ಹಾಗಾಗಿ, ತಮ್ಮದೇ ಆದ ತಾಳದ ಕಟ್ಟಿಲ್ಲದ ಬರಹಗಳಲ್ಲಿ ಮಾತ್ರ ಮೇಲೆ ವಿವರಿಸಿದ ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ.
ಶಾಲೆಗಳಲ್ಲಿ ಓದುಬರಹ ಕಲಿಸುವವರು ಈ ಗುರುತುಗಳನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಯಾಕೆಂದರೆ ಮುಂದೆ ದೊಡ್ಡವರಾದ ಮೇಲೆ, ಒಪ್ಪಂದಗಳು, ಕಾನೂನುಗಳು, ತೀರ್ಪುಗಳು ಮೊದಲಾದುವನ್ನು ಬರೆಯಬೇಕಾದಾಗ, ಈ ಗುರುತುಗಳನ್ನು ಸರಿಯಾಗಿ ಬಳಸಲು ಗೊತ್ತಿಲ್ಲದಿದ್ದರೆ ತುಂಬಾ ತೊಂದರೆಗಳುಂಟಾಗಬಲ್ಲುವು. ಎತ್ತುಗೆಗಾಗಿ, ತನ್ನ ಒಪ್ಪಂದವೊಂದರಲ್ಲಿ ಒಂದು ತಡೆ ಗುರುತನ್ನು ತಪ್ಪಾಗಿ ಬಳಸಿದುದರಿಂದಾಗಿ, ಕೆನಡಾದ ಒಂದು ಸಂಸ್ತೆ ಎರಡು ಮಿಲಿಯಕ್ಕಿಂತಲೂ ಹೆಚ್ಚು ಡಾಲರುಗಳನ್ನು ಕಳೆದುಕೊಳ್ಳುವಂತಹ ಸಂದರ್ಬ ಒದಗಿಬಂದಿತ್ತು!
ಬರಹದ ಗುರುತುಗಳನ್ನು ಸರಿಯಾಗಿ ಬಳಸಬೇಕಿದ್ದಲ್ಲಿ, ಬರಹಗಾರರಿಗೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದು ಕೆಳಗೆ ಕೊಟ್ಟಿರುವ ಪರಿಶೀಲನೆಯಿಂದ ಗೊತ್ತಾಗುತ್ತದೆ.
3.5.2 ಕುರಳುಗಳ ಇಟ್ಟಳ
ಕನ್ನಡದ ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಕುರಳು(ಪಾರಾ) ಗಳಾಗಿ ಒಡೆಯುವುದು ಹೇಗೆ ಎಂಬುದೇ ತಿಳಿದಿರುವುದಿಲ್ಲ. ಅವರ ಬರಹದಲ್ಲಿ ಕೆಲವು ಕುರಳುಗಳು ಒಂದೆರಡು ಪುಟಗಳಶ್ಟು ಉದ್ದ ಇರುತ್ತವೆ. ಒಳ್ಳೇ ಬರಹಗಾರರೂ ಕೂಡ ಈ ತಪ್ಪನ್ನು ಮಾಡುತ್ತಿರುತ್ತಾರೆ; ಇದರಿಂದಾಗಿ ತಮ್ಮ ಓದುಗರಿಗೆ ಎಶ್ಟು ತೊಂದರೆಯಾಗುತ್ತದೆ ಎಂಬುದನ್ನು ಅವರು ಗಮನಿಸುವುದೇ
ಎತ್ತುಗೆಗಾಗಿ, ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿಯಲ್ಲಿ ಒಂಬತ್ತು ಪುಟಗಳ ಕೊನೆಯ ಪಸುಗೆಯನ್ನು ಒಂದೇ ಕುರಳಾಗಿ ಅಚ್ಚುಹಾಕ ಲಾಗಿದೆ! ಈ ಒಂಬತ್ತು ಪುಟಗಳಲ್ಲಿ ಒಂದೇ ವಿಶಯ ಬಂದಿದೆಯೆಂದೇನೂ ಹೇಳಲು ಬರುವುದಿಲ್ಲ. ಯಾಕೆಂದರೆ, ಅದರಲ್ಲಿ ಒಂದು ಕಡೆ ನಡೆದ ಸಂಗತಿಯನ್ನು ವಿವರಿಸಿ, ಆಮೇಲೆ ಕತೆ ಇದ್ದಕ್ಕಿದ್ದಂತೆ ಇನ್ನೊಂದು ಕಡೆ ನಡೆಯುವ ಸಂಗತಿಗೆ ನೆಗೆಯುತ್ತದೆ; ಹಾಗಿದ್ದರೂ, ಕುರಳು ಬದಲಾಗುವುದಿಲ್ಲ ವಾದ ಕಾರಣ, ಓದುಗರು ಗೊಂದಲದಲ್ಲಿ ಬೀಳುತ್ತಾರೆ. ಇದಲ್ಲದೆ, ಕೆಲವು ನಡುನುಡಿ(ಸಂಬಾಶಣೆ)ಗಳೂ ಈ ಒಂದು ಕುರುಳಿನೊಳಗೇನೇ ಸೇರಿಕೊಂಡಿವೆ! ಪುಟಗಳ ಎಣಿಕೆಯನ್ನು ಕಡಿಮೆ ಮಾಡುವುದಕ್ಕಾಗಿ ಹೀಗೆ ಮಾಡಿದ್ದಾರೋ, ಇಲ್ಲವೇ ಹೇಗೆ ಅಚ್ಚು ಹಾಕಿದರೂ ಓದುಗರು ಓದದೆ ಇರುವುದಿಲ್ಲ ಎಂಬ ಅನಿಸಿಕೆಯಲ್ಲಿ ಹೀಗೆ ಮಾಡಿದ್ದಾರೋ ತಿಳಿಯುವುದಿಲ್ಲ.
ಕುರಳುಗಳು ಓದುಗರಿಗೆ ನಡುನಡುವೆ ಬಿಡುವು ಕೊಡುತ್ತವೆ, ಮತ್ತು ಒಂದರಲ್ಲಿ ಹೇಳಿದುದನ್ನು ಅರಗಿಸಿಕೊಂಡು ಇನ್ನೊಂದರಲ್ಲಿ ಹೇಳುವುದನ್ನು ತಿಳಿಯತೊಡಗಲು ಅವರಿಗೆ ಸಮಯ ಸಿಗುವಂತೆ ಮಾಡುತ್ತವೆ. ಇದಲ್ಲದೆ, ಬರಹವನ್ನು ಕುರಳುಗಳಾಗಿ ಒಡೆಯುವ ಕೆಲಸವನ್ನು ಸರಿಯಾಗಿ ನಡೆಸಿದಲ್ಲಿ ಬರಹಗಾರರು ತಿಳಿಸುತ್ತಿರುವುದೇನು ಎಂಬುದೂ ಓದುಗರಿಗೆ ಹೆಚ್ಚು ಚನ್ನಾಗಿ ಗೊತ್ತಾಗುತ್ತದೆ.
ಕುರಳುಗಳನ್ನು ಉಂಟುಮಾಡುವಾಗ, ಒಂದು ಮುಕ್ಯ ವಿಶಯವನ್ನು ನೆನಪಿನಲ್ಲಿರಿಸಿಕೊಳ್ಳಬೇಕು: ಒಂದು ಕುರಳಿನಲ್ಲಿ ಒಂದು ವಿಶಯ ಮಾತ್ರ ಇರಬೇಕು. ಆ ವಿಶಯವನ್ನು ಬೆಂಬಲಿಸುವಂತಹ ಬೇರೆ ಒಂದೆರಡು ವಿಶಯಗಳನ್ನು ತಿಳಿಸಬೇಕೆಂದಿದ್ದಲ್ಲಿ, ಅವನ್ನೂ ಅದೇ ಕುರಳಿನಲ್ಲಿ ಸೇರಿಸಬಹುದು. ಆದರೆ, ಇದರಿಂದಾಗಿ ಕುರಳಿನ ಉದ್ದ ಹೆಚ್ಚುತ್ತಿದೆಯಾದರೆ, ಅವನ್ನು ಬೇರೊಂದು ಕುರಳಿನಲ್ಲಿ ಇರಿಸುವುದೇ ಒಳ್ಳೆಯದು.
ಕುರಳಿನಲ್ಲಿ ಹೊದ್ದಿಕೆ(ಸಂಬದ್ದತೆ)ಯಿರಬೇಕು. ಅದು ಮೊದಲಿಗೆ ಯಾವ ವಿಶಯಕ್ಕೆ ಒತ್ತು ಕೊಡಲು ತೊಡಗುತ್ತದೆಯೋ, ಅದಕ್ಕೇನೇ ಕೊನೆಯವರೆಗೂ ಒತ್ತು ಕೊಡುತ್ತಿರಬೇಕು. ಒಂದು ವಿಶಯದಿಂದ ಇನ್ನೊಂದು ವಿಶಯಕ್ಕೆ ನೆಗೆಯುತ್ತಿರಬಾರದು. ಇದಲ್ಲದೆ, ಕುರಳಿನಲ್ಲಿ ಬರುವ ಸೊಲ್ಲುಗಳೆಲ್ಲ ಒಂದಕ್ಕೊಂದು ಸಂಬಂದಿಸಿವೆಯೆಂಬುದನ್ನು ಸೂಚಿಸುವಂತಹ ಆದರೆ, ಆದುದರಿಂದ, ಆಮೇಲೆ, ಇದಲ್ಲದೆ, ಹಾಗಾಗಿ ಮೊದಲಾದ ಕೊಂಡಿಪದಗಳನ್ನು ಬಳಸಿದಲ್ಲಿ, ಕುರಳಿನ ಹೊದ್ದಿಕೆ ಓದುಗರಿಗೆ ಹೆಚ್ಚು ಸುಳುವಾಗಿ ಗೊತ್ತಾಗುತ್ತದೆ.
ಬರಹದಲ್ಲಿ ಬರುವ ಎಲ್ಲಾ ಕುರಳುಗಳಿಗೂ ಅವುಗಳದೇ ಆದ ಗುರಿ ಯಿರಬೇಕು. ಹಿಂದಿನ ಕುರಳಿನಲ್ಲಿ ಹೇಳಿದ ವಿಶಯವನ್ನು ಬಿಡಿಸಿ ಹೇಳುವುದು ಇಲ್ಲವೇ ಬೇರೊಂದು ರೀತಿಯಲ್ಲಿ ಹೇಳುವುದು, ಅದನ್ನು ಬೆಂಬಲಿಸುವ ಇಲ್ಲವೇ ಬೆಂಬಲಿಸದ ಬೇರೆ ಸಂಗತಿಗಳನ್ನು ಕೊಡುವುದು, ಅದಕ್ಕೆ ಎತ್ತುಗೆ ಗಳನ್ನು ಕೊಡುವುದು ಮೊದಲಾದ ಗುರಿಗಳು ಅವಕ್ಕಿರಬಹುದು. ಇಂತಹ ಯಾವ ಗುರಿಯೂ ಇಲ್ಲದ ಕುರಳುಗಳು ಬರಹದಲ್ಲಿವೆಯಾದರೆ, ಅವನ್ನು ತೆಗೆದುಹಾಕುವುದೇ ಒಳ್ಳೆಯದು.
ಕುರಳುಗಳ ಇಟ್ಟಳ (ಒಳರಚನೆ) ಸ್ವಲ್ಪ ಮಟ್ಟಿಗೆ ಅವು ಯಾವ ಬಗೆಯ ಬರಹದಲ್ಲಿ ಬರುತ್ತಿವೆ ಎಂಬುದನ್ನು ಅವಲಂಬಿಸಿದೆ. ಸಾಮಾನ್ಯವಾಗಿ, ಒಂದು ವಿಶಯವನ್ನು ತಿಳಿಸುವ ಬರಹಗಳಲ್ಲಿ ಮೊದಲಿಗೆ ಕುರಳಿನ ಗುರಿಯನ್ನು ತಿಳಿಸುವ ಸೊಲ್ಲು ಬರುತ್ತದೆ; ಮತ್ತು ಆಮೇಲೆ, ಗುರಿಸೊಲ್ಲಿನ ಮೂಲಕ ಓದುಗರ ಮುಂದಿರಿಸಿರುವ ವಿಶಯವನ್ನು ಬೆಳೆಸುವಂತಹ ಸೊಲ್ಲುಗಳು, ಮತ್ತು ಎತ್ತುಗೆ, ಕಾರಣ, ಪರಿಣಾಮ ಮೊದಲಾದವುಗಳನ್ನು ತಿಳಿಸುವ ಸೊಲ್ಲುಗಳು ಬರುತ್ತವೆ. ಕುರಳಿನ ಮೊದಲಿಗೆ ಬರುವ ಗುರಿಸೊಲ್ಲು ಅದು ಸೂಚಿಸುವ ವಿಶಯದ ಕುರಿತು ಹೆಚ್ಚಿನ ಸಂಗತಿಗಳನ್ನು ತಿಳಿಯಬೇಕೆಂಬ ಕುತೂಹಲವನ್ನು ಓದುಗರಲ್ಲಿ ಮೂಡಿಸುವಂತಿರಬೇಕು, ಮತ್ತು ಆಮೇಲೆ ಬರುವ ಸೊಲ್ಲುಗಳು ಈ ಕುತೂಹಲವನ್ನು ತಣಿಸುವಂತಿರಬೇಕು.
ಒಂದು ಬರಹದ ಕುರಳುಗಳಲ್ಲಿ ಬರುವ ಗುರಿಸೊಲ್ಲುಗಳನ್ನೆಲ್ಲ ಒಟ್ಟುಸೇರಿಸಿ ಪರಿಶೀಲಿಸಿದಲ್ಲಿ, ಅದರ ಹಮ್ಮುಗೆ ಸರಿಯಿದೆಯೋ ಎಂಬುದು ಗೊತ್ತಾಗುತ್ತದೆ. ಹಮ್ಮುಗೆ ಸರಿಯಿಲ್ಲದಿದ್ದಲ್ಲಿ ಅದನ್ನು ಮಾರ್ಪಡಿಸಲು, ಮತ್ತು ಕುರಳುಗಳು ಒಂದರೊಡನೊಂದು ಹೊಂದಿಕೊಳ್ಳುವಂತೆ ಮಾಡಲು ಈ ರೀತಿ ಬರಹದ ಗುರಿಸೊಲ್ಲುಗಳನ್ನೆಲ್ಲ ಒಟ್ಟುಸೇರಿಸುವುದು ನೆರವಾಗುತ್ತದೆ.
ಕತೆ, ಕಾದಂಬರಿ ಮೊದಲಾದ ನಲ್ಬರಹಗಳಲ್ಲಿ ಬರುವ ಕುರಳುಗಳು ಬೇರೆ ಬಗೆಯವಾಗಿರುತ್ತವೆ. ಅವು ಸ್ವಲ್ಪ ಮಟ್ಟಿಗೆ ಬರಹಗಾರರ ಒಡ್ಡವ(ಶಯ್ಲಿ)ವ ನ್ನವಲಂಬಿಸಿರುತ್ತವೆ. ಇದಲ್ಲದೆ ಓದುಗರ ಗಮನವನ್ನು ತಮ್ಮ ಬರಹದ ಕಡೆಗೆ ಸೆಳೆಯುವುದಕ್ಕಾಗಿ, ಅವರು ಅದರಲ್ಲಿ ಹಲವು ಬಗೆಯ ಮಾರ್ಪಾಡು ಗಳನ್ನೂ ಮಾಡಿಕೊಳ್ಳಬಹುದು. ಆದರೆ, ಇಂತಹ ಮಾರ್ಪಾಡುಗಳು ಕುರಳುಗಳ ಮೂಲ ಗುರಿಗೆ ತಡೆಯಾದಲ್ಲಿ, ಅವು ಓದುಗರನ್ನು ದೂರಮಾಡಬಲ್ಲುವು.
3.5.3 ಸೊಲ್ಲುಗಳ ಕೊನೆಯ ಗುರುತುಗಳು
ಕೊನೆ(.), ಕೇಳ್ವಿ(?) ಮತ್ತು ಬೆರಗು(!) ಎಂಬುದಾಗಿ ಮೂರು ಬಗೆಯ ಗುರುತುಗಳು ಸೊಲ್ಲುಗಳ ಕೊನೆಯಲ್ಲಿ ಬರುತ್ತವೆ. ಇವುಗಳಲ್ಲಿ ಕೊನೆ ಗುರುತು ಹೇಳಿಕೆಗಳನ್ನು ಸೂಚಿಸುವ ಮತ್ತು ಅಪ್ಪಣೆ ಕೊಡುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ; ಕೇಳ್ವಿ ಗುರುತು ನೇರವಾಗಿ ಕೇಳ್ವಿಗಳನ್ನು ಕೇಳುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ; ಮತ್ತು ಬೆರಗು ಗುರುತು ಮನಸ್ಸಿನಲ್ಲಿ ಎದ್ದಿರುವ ಕಡು ಅನಿಸಿಕೆಗಳನ್ನು ಸೂಚಿಸುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ.
ಬೆರಗು ಗುರುತುಗಳನ್ನು ಆದಶ್ಟು ಕಡಿಮೆ ಬಳಸುವುದು ಒಳ್ಳೆಯದು; ಇಲ್ಲವಾದರೆ ಅವುಗಳ ಕಸುವು ಕಡಿಮೆಯಾಗುತ್ತದೆ. ಬೆರಗು ಮತ್ತು ಕೇಳ್ವಿ ಗುರುತುಗಳ ಬಳಿಕ ಕೊನೆ ಗುರುತನ್ನು ಬಳಸಬೇಕಾಗುವುದಿಲ್ಲ; ಆದರೆ, ಈ ಗುರುತುಗಳು ಎತ್ತುಗೆಯ ಗುರುತುಗಳ ಇಲ್ಲವೇ ಕಂಸ ಗುರುತುಗಳ ಒಳಗೆ ಬಂದಿವೆಯಾದಲ್ಲಿ, ಸೊಲ್ಲಿನ ಕೊನೆಯನ್ನು ಸೂಚಿಸಲು ಕೊನೆ ಗುರುತನ್ನು ಬಳಸಬೇಕಾಗುತ್ತದೆ. ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:
ಅವರು ಕೇಳಿದರು: ‘‘ಯಾವಾಗ ಬಂದೆ?’. ಅವರು ಎಲ್ಲಿಗೂ ಹೋಗಲಿಲ್ಲ (ಯಾಕೆ ಹೀಗಾಯಿತು?).
3.5.4 ಸೊಲ್ಲುಗಳ ನಡುವಿನ ಗುರುತುಗಳು
ಸೊಲ್ಲುಗಳ ನಡುವೆ ಬರುವ ಗುರುತುಗಳಲ್ಲಿ ತಡೆ(,), ಅಡ್ಡಗೆರೆ (-), ಅರೆಕೊನೆ(;) ಎತ್ತುಗೆ (“ ”) ಮತ್ತು ಕಂಸ()ಗಳು ಮುಕ್ಯವಾದುವು.
ಕನ್ನಡದ ಬರಹಗಳಲ್ಲಿ ತಡೆ ಗುರುತಿನ ಬಳಕೆಯ ಮಟ್ಟಿಗೆ ತುಂಬಾ ಗೊಂದ ಲವಿದೆ. ತುಂಬಾ ಒಳ್ಳೆಯ ಬರಹಗಹಳಲ್ಲೂ ಇದನ್ನು ಎಲ್ಲಿ ಬಳಸಲಾಗಿದೆ ಮತ್ತು ಎಲ್ಲಿ ಬಳಸಿಲ್ಲ ಎಂಬುದರ ಕುರಿತಾಗಿ ಒಂದು ಕಟ್ಟಲೆಯನ್ನು ಕಾಣಲು
ಬರುವುದಿಲ್ಲ. ಆದರೆ, ನಿಜಕ್ಕೂ ಇದು ಒಂದು ತುಂಬಾ ಮುಕ್ಯವಾದ ಗುರುತು. ಇದನ್ನು ಸರಿಯಾಗಿ ಬಳಸಿದಲ್ಲಿ ಬರಹವನ್ನು ಓದುವ ಕೆಲಸ ಹೆಚ್ಚು ಸುಳುವಾಗ ಬಲ್ಲುದು ಮಾತ್ರವಲ್ಲ, ಹಲವು ಇಪ್ಪುರುಳುಗಳೂ ಇಲ್ಲವಾಗಬಲ್ಲುವು.
ಸಾಮಾನ್ಯವಾಗಿ, ಓದುತ್ತಿರುವಾಗ ಎಲ್ಲಿ ಸ್ವಲ್ಪ ಹೊತ್ತು ನಿಲ್ಲಿಸ ಬೇಕಾಗು ತ್ತದೆಯೋ ಅಲ್ಲಿ ತಡೆ ಗುರುತನ್ನು ಬಳಸಬಹುದು. ಹೆಚ್ಚಿನೆಡೆಗಳಲ್ಲೂ ಈ ಕಟ್ಟಲೆ ನಡೆಯುತ್ತದೆ; ಆದರೆ ಕೆಲವೆಡೆಗಳಲ್ಲಿ ನಡೆಯುವುದಿಲ್ಲ. ಬರೆದುದನ್ನು ಸಲೀಸಾಗಿ ಓದುವುದರಲ್ಲಿ, ಮತ್ತು ಓದಿದುದನ್ನು ಸರಿಯಾಗಿ ಮತ್ತು ಬೇಗನೆ ತಿಳಿದುಕೊಳ್ಳುವುದರಲ್ಲಿ ತಡೆ ಗುರುತಿನ ಬಳಕೆ ನೆರವಾಗುತ್ತದೆ. ಬರೆದ ಸೊಲ್ಲುಗಳು ಉದ್ದ ಇದ್ದಶ್ಟೂ, ಮತ್ತು ಸಿಕ್ಕಲು ಸಿಕ್ಕಲಾಗಿದ್ದಶ್ಟೂ ಅವುಗಳಲ್ಲಿ ಹೆಚ್ಚು ಹೆಚ್ಚು ತಡೆ ಗುರುತುಗಳು ಬೇಕಾಗುತ್ತವೆ.
ಒಂದು ವಿಶಯದ ಕುರಿತು ಹೆಚ್ಚಿನ ವಿಶಯಗಳನ್ನು ತಿಳಿಸಬೇಕೆಂದಿರುವಲ್ಲಿ, ಮತ್ತು ಒಂದು ಪಟ್ಟಿಯನ್ನು ಕೊಡಬೇಕೆಂದಿರುವಲ್ಲಿ ಕೊಗೆತ (:) ಗುರುತನ್ನು ಬಳಸಲಾಗುತ್ತದೆ. ಈ ಗುರುತಿನೊಂದಿಗೆ ಅಡ್ಡಗೆರೆ(-)ಯನ್ನು ಬಳಸಬೇಕಾಗಿಲ್ಲ, ಮತ್ತು ಇದರ ಹಿಂದೆ ಎಡೆಯನ್ನೂ ಬಿಡಬೇಕಾಗಿಲ್ಲ.
ಸೊಲ್ಲಿನ ಒಳಗೆ ಅದು ತಿಳಿಸುವ ವಿಶಯಕ್ಕೆ ನೇರವಾಗಿ ಸಂಬಂದಿಸಿಲ್ಲ ದಂತಹ ಬೇರೊಂದು ವಿಶಯವನ್ನು ತಿಳಿಸಬೇಕಾದಾಗ, ಅದನ್ನು ಎರಡು ಅಡ್ಡಗೆರೆಗಳ ಮೂಲಕ, ಇಲ್ಲವೇ ಕಂಸಗಳ ಮೂಲಕ ಬೇರ್ಪಡಿಸಲಾಗುತ್ತದೆ. ಎತ್ತುಗೆಗಾಗಿ, ಅವರಲ್ಲಿ ಮೂವರು - ರಾಜು, ಜಾನಕಿ, ಮತ್ತು ಸವಿತಾ
- ತರಗತಿಯಲ್ಲೇ ಕುಳಿತಿದ್ದರು ಎಂಬ ಸೊಲ್ಲಿನಲ್ಲಿ ಮೂವರು ಎಂಬುದರ ಕುರಿತಾಗಿ ಹೆಚ್ಚಿನ ವಿವರಣೆಯನ್ನು ಕೊಡುವ ಅಂಶವನ್ನು ಎರಡು ಅಡ್ಡಗೆರೆಗಳನ್ನು ಬಳಸಿ ಬೇರ್ಪಡಿಸಲಾಗಿದೆ.
ಎತ್ತುಗೆಯ ಗುರುತನ್ನು ಒಬ್ಬ ವ್ಯಕ್ತಿಯ ಮಾತನ್ನು ನೇರವಾಗಿ ಎತ್ತಿ ಹೇಳುವಲ್ಲಿ ಬಳಸಲಾಗುತ್ತದೆ. ಒಂದು ಎತ್ತುಗೆಯ ಒಳಗೆ ಇನ್ನೊಂದು ಎತ್ತುಗೆ ಬಂದಿದೆಯಾದರೆ ಅದನ್ನು ಓರೆತ್ತುಗೆಯ (‘ ’) ಗುರುತಿನಿಂದ ಬೇರ್ಪಡಿಸ ಬಹುದು. ಒಂದೇ ಎತ್ತುಗೆ ಎರಡು ಮೂರು ಕುರಳುಗಳಲ್ಲಿ ಕಾಣಿಸಿಕೊಳ್ಳುತ್ತದೆ ಯಾದರೆ, ಅದನ್ನು ಕೊನೆಗೊಳಿಸುವ ಗುರುತನ್ನು ಕೊನೆಯ ಕುರಳಿನಲ್ಲಿ ಮಾತ್ರ ಬಳಸಬೇಕು. ಕೆಲವರು ಇದನ್ನು ಎಲ್ಲಾ ಕುರಳುಗಳ ಕೊನೆಯಲ್ಲೂ ಬಳಸಿ, ಗೊಂದಲವುಂಟಾಗುವಂತೆ ಮಾಡುತ್ತಾರೆ.
ನೇರವಾದ ಎತ್ತುಗೆಗೂ ನೇರವಲ್ಲದ ಎತ್ತುಗೆಗೂ ನಡುವಿರುವ ವ್ಯತ್ಯಾಸ ವನ್ನು ಎತ್ತುಗೆಯ ಗುರುತುಗಳ ಮೂಲಕ ತೋರಿಸಿಕೊಡದಿದ್ದಲ್ಲಿ ಇಪ್ಪುರುಳು
ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ನೀನು ಇವತ್ತೇ ಪುಣೆಗೆ ಹೋಗ ಬೇಕೆಂದು ರಾಜು ಹೇಳಿದ್ದಾನೆ ಎಂಬ ಸೊಲ್ಲಿಗೆ ಆ ಸೊಲ್ಲಿನ ಆಡುಗನು ಪುಣೆಗೆ ಹೋಗಬೇಕು ಎಂಬ ಹುರುಳಿರಬಹುದು, ಇಲ್ಲವೇ ಅದರ ಕೇಳುಗನು ಪುಣೆಗೆ ಹೋಗಬೇಕು ಎಂಬ ಹುರುಳೂ ಇರಬಹುದು. ಅದರಲ್ಲಿ ಬಂದಿರುವ ನೀನು ಇವತ್ತೇ ಪುಣೆಗೆ ಹೋಗಬೇಕು ಎಂಬ ಸೊಲ್ಲು ನೇರವಾದ ಎತ್ತುಗೆಯಾದರೆ ಮೊದಲಿನ ಹುರುಳು ಸಿಗುತ್ತದೆ, ಮತ್ತು ನೇರವಲ್ಲದ ಎತ್ತುಗೆಯಾದರೆ ಎರಡನೆಯ ಹುರುಳು ಸಿಗುತ್ತದೆ.
ಈ ಇಪ್ಪುರುಳನ್ನು ಹೋಗಲಾಡಿಸಬೇಕೆಂದಿದ್ದಲ್ಲಿ, ನೇರವಾದ ಎತ್ತುಗೆ ಯಿರುವ ಮೊದಲನೆಯ ಹುರುಳು ಬಂದಿರುವಲ್ಲಿ “ನೀನು ಇವತ್ತೇ ಪುಣೆಗೆ ಹೋಗಬೇಕೆ”ಂದು ರಾಜು ಹೇಳಿದ್ದಾನೆ ಎಂಬುದಾಗಿ ಎತ್ತುಗೆಯ ಗುರುತನ್ನು ಬಳಸಬೇಕಾಗುತ್ತದೆ.
3.6 ತಿರುಳು
ಬರಹದಲ್ಲಿ ಬಳಕೆಯಾಗುವ ಸೊಲ್ಲುಗಳ ಇಟ್ಟಳ ಓದುಗರ ಮೇಲೆ ಎಂತಹ ಪರಿಣಾಮವನ್ನು ಬೀರಬಲ್ಲುದು ಎಂಬುದನ್ನು ಊಹಿಸಿಕೊಂಡು ಅದಕ್ಕೆ ಅನುಸಾರವಾಗಿ ಇಟ್ಟಳಗಳನ್ನು ಬದಲಾಯಿಸಿಕೊಳ್ಳಲು ಬರಹಗಾರರು ತಿಳಿದಿರಬೇಕಾಗುತ್ತದೆ.
ಬರಹದ ಗುರಿ ಮತ್ತು ವಿಶಯಗಳನ್ನು ಅನುಸರಿಸಿಯೂ ಪದ ಮತ್ತು ಇಟ್ಟಳಗಳ ಆಯ್ಕೆಯನ್ನು ನಡೆಸಬೇಕಾಗುತ್ತದೆ. ಇವು ಹೇಗೆ ಒಂದನ್ನೊಂದು ಅವಲಂಬಿಸಿರುತ್ತವೆ ಎಂಬುದನ್ನು ಸೊಲ್ಲರಿಮೆ ತಿಳಿಸುತ್ತದೆ.
ಬರಹವನ್ನು ತಿದ್ದಿ ಸರಿಪಡಿಸುವುದಕ್ಕೆ ಮತ್ತು ಬರಹದ ಗುರುತುಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೂ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
ನಾಲ್ಕನೇ ಪಸುಗೆ — ಅರಿಮೆಯ ಬರಹಗಳು
4.1 ಮುನ್ನೋಟ
ಸಾಮಾನ್ಯವಾಗಿ ಅರಿಮೆಯ (ವಿಜ್ನಾನದ) ಬರಹಗಳು ತುಂಬಾ ತೊಡಕು ತೊಡಕಾಗಿರುತ್ತವೆ. ಅವು ತಿಳಿಸಬೇಕಾಗಿರುವ ಅರಿಮೆಯ ವಿಶಯಗಳು ತುಂಬಾ ತೊಡಕಿನವಾಗಿರುವುದೇ ಇದಕ್ಕೆ ಕಾರಣ ಎಂಬ ಅನಿಸಿಕೆ ಹೆಚ್ಚಿನವರಲ್ಲೂ ಇದೆ. ಸ್ವಲ್ಪ ಮಟ್ಟಿಗೆ ಇದು ನಿಜವೆಂದೂ ಹೇಳಬಹುದು; ಆದರೆ, ಇಂತಹ ಬರಹಗಳನ್ನು ಬರೆಯುವವರಿಗೆ ತಿಳಿಸಬೇಕೆಂದಿರುವುದನ್ನು ತಿಳಿಯಾಗಿ ಮತ್ತು ಸರಳವಾಗಿ ತಿಳಿಸುವುದು ಹೇಗೆ ಎಂಬುದು ಗೊತ್ತಿಲ್ಲದಿರುವುದೂ ಅವರು ಬರೆದ ಬರಹಗಳು ತೊಡಕಿನವಾಗಲು ಕಾರಣವಾಗಬಲ್ಲುದು.
ಅರಿಮೆಯ ಬರಹಗಳಲ್ಲಿ ಹಲವು ಬಗೆಯ ಅರಿಮೆಯ (ಪಾರಿಬಾಶಿಕ) ಪದಗಳನ್ನು ಬಳಸಲೇಬೇಕಾಗುತ್ತದೆ. ಇವು ಬರಹದ ನುಡಿಯಲ್ಲಿಲ್ಲವಾದರೆ, ಬೇರೆ ನುಡಿಗಳಿಂದ ಅವನ್ನು ಎರವಲಾಗಿ ಪಡೆಯಬೇಕಾಗುತ್ತದೆ ಇಲ್ಲವೇ ನುಡಿಯಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಎರವಲು ಪಡೆದ ಇಲ್ಲವೇ ಹೊಸದಾಗಿ ಉಂಟುಮಾಡಿದ ಪದಗಳು ನುಡಿಗೆ ತಕ್ಕುವಾಗಿಲ್ಲದಿರಬಹುದು; ಅವು ಬರಹದಲ್ಲಿ ಸರಿಯಾಗಿ ಹೊಂದಿಕೊಳ್ಳದಿರ ಬಹುದು; ಅವನ್ನು ನೆನಪಿನಲ್ಲಿರಿಸಿಕೊಳ್ಳಲು ಓದುಗರಿಗೆ ತೊಂದರೆಯಾಗುತ್ತಿರ ಬಹುದು; ಮತ್ತು ಅವು ಅರಿಮೆಯ ಬರಹಗಳಿಗೆ ಬೇಕಾಗುವಂತಹ ಕಟ್ಟುನಿಟ್ಟಿನ ಹುರುಳನ್ನು ಕೊಡದಿರಬಹುದು. ಈ ಕಾರಣಗಳಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳು ಓದುಗರಿಗೆ ಇನ್ನಶ್ಟು ತೊಡಕಿನವಾಗಿ ಕಾಣಿಸಿಕೊಳ್ಳ ಬಲ್ಲುವು.
ಮತ್ತೊಂದು ವಿಶಯದಲ್ಲೂ ಅರಿಮೆಯ ಬರಹಗಳು ಬೇರೆ ಬರಹಗಳಿಗಿಂತ ಹೆಚ್ಚು ತೊಡಕಿನವಾಗಿ ಕಾಣಿಸಿಕೊಳ್ಳಬಲ್ಲುವು: ತಿಳಿಸಬೇಕೆಂದಿರುವ ವಿಶಯ ವನ್ನು ಅವುಗಳಲ್ಲಿ ಹೆಚ್ಚು ಅಡಕವಾಗಿ ಮತ್ತು ಕಟ್ಟುನಿಟ್ಟಾಗಿ ಹೇಳಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವುಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ
ಅರಿಮೆಯ ಬರಹಗಳು ಮಾರ್ಪುರುಳು(ರೂಪಕ)ಗಳನ್ನು ಬಳಸಬೇಕಾಗುತ್ತದೆ. ಇವನ್ನು ಬಳಸುವಲ್ಲಿ ಬರಹಗಾರರು ಓದುಗರ ಅಳವನ್ನು ಗಮನಿಸದಿದ್ದಲ್ಲಿ, ಅವುಗಳ ಬಳಕೆ ಯಿಂದಾಗಿಯೂ ಅರಿಮೆಯ ಬರಹಗಳು ಹೆಚ್ಚು ತೊಡಕಿನವಾಗಬಲ್ಲುವು.
4.2 ಸರಿಯಾಗಿ ತಿಳಿಸಿ ಹೇಳುವ ಬಗೆ
ಹಿಂದಿನ ಪಸುಗೆಯಲ್ಲಿ ವಿವರಿಸಿದ ಹಾಗೆ, ಬರಹಗಳಲ್ಲಿ ಬರುವ ಸೊಲ್ಲುಗಳ ನಡುವಿನ ಕೊಂಡಿ ಸರಿಯಾಗಿಲ್ಲದಿದ್ದರೆ, ಅವನ್ನು ಓದಿ ತಿಳಿಯುವ ಕೆಲಸ ತುಂಬಾ ತೊಡಕಿನದಾಗಬಲ್ಲುದು (4.2.1 ನೋಡಿ). ಈ ಕೊಂಡಿ ತಪ್ಪದ ಹಾಗೆ ನೋಡಿಕೊಳ್ಳುವುದು ಹೇಗೆ ಎಂಬುದು ಅರಿಮೆಯ ಬರಹಗಳನ್ನು ಬರೆಯುವ ಹೆಚ್ಚಿನ ತಿಳಿವಿಗರಿಗೂ ಗೊತ್ತಿರುವುದಿಲ್ಲ. ಅವರ ಬರಹಗಳು ಬೇರೆ ಬರಹಗಳಿಗಿಂತ ಹೆಚ್ಚು ತೊಡಕಿನವಾಗಿ ಕಾಣಿಸಲು ಇದು ಒಂದು
ಬರಹಗಳಲ್ಲಿ ಬರುವ ಕುರಳುಗಳ ಇಟ್ಟಳ ಮತ್ತು ಇಡೀ ಬರಹದ ಇಟ್ಟಳ
- ಇವೂ ಕೂಡ ಬರಹದ ಗುರಿಯನ್ನು ಸರಿಯಾಗಿ ಬೆಳೆಸುತ್ತಿಲ್ಲವಾದರೆ, ಅಂತಹ ಬರಹ ಓದುಗರಿಗೆ ತುಂಬಾ ತೊಡಕಿನದೆಂದು ಅನಿಸಬಲ್ಲುದು. ಚನ್ನಾಗಿ ಬರೆದಿರುವ ಕುರಳುಗಳಲ್ಲಿ ಮೊದಲನೆಯ ಸೊಲ್ಲು ಚುಟುಕಾಗಿ ಕುರಳಿನ ಗುರಿ ಎಂತಹದು ಎಂಬುದನ್ನು ಸೂಚಿಸಬೇಕು, ಮತ್ತು ಆಮೇಲೆ ಬರುವ ಸೊಲ್ಲುಗಳೆಲ್ಲ ಆ ಗುರಿಯನ್ನು ಬೆಳೆಸುವ ಕೆಲಸವನ್ನು ನಡೆಸಬೇಕು. ಕೊನೆಯ ಸೊಲ್ಲು ಈ ವಿವರಣೆಯನ್ನು ಮುಕ್ತಾಯಗೊಳಿಸಬೇಕು.
ಇಡೀ ಬರಹದ ಇಟ್ಟಳವೂ ಬರಹದ ಗುರಿಯನ್ನು ಸರಿಯಾಗಿ ಬೆಳೆಸು ವಂತಿರಬೇಕು. ಮೊದಲನೇ ಕುರಳಿನಲ್ಲಿ ಅದನ್ನು ಓದುಗರ ಮುಂದಿರಿಸಿ, ಆಮೇಲಿನ ಕುರಳುಗಳಲ್ಲಿ ಅದನ್ನು ಬೆಂಬಲಿಸುವಂತಹ ವಿಶಯಗಳನ್ನು ಕೊಡುತ್ತಾ ಹೋಗಬೇಕು. ಅದನ್ನು ಬೆಂಬಲಿಸದಿರುವಂತಹ ವಿಶಯಗಳಿದ್ದಲ್ಲಿ ಅವಕ್ಕೂ ಬೆಂಬಲಿಸುವ ವಿಶಯಗಳಿಗೂ ನಡುವಿರುವ ವ್ಯತ್ಯಾಸವನ್ನು ತಿಳಿಯ ಪಡಿಸಿ, ಬರಹದ ಕೊನೆಯಲ್ಲಿ ಒಂದು ತೀರ್ಮಾನಕ್ಕೆ ಬರಬೇಕು. ಇಂತಹ ಇಟ್ಟಳವಿರುವ ಬರಹ ಸುಳುವಾಗಿ ಓದಿಸಿಕೊಂಡು ಹೋಗುತ್ತದೆ.
ಅರಿಮೆಯ ಬರಹಗಳನ್ನು ಬರೆಯುವವರಿಗೆ ಈ ರೀತಿ ತಮ್ಮ ಬರಹವನ್ನು ಓದುಗರಿಗೆ ಅನುಕೂಲವಾಗುವ ಹಾಗೆ ಮಾರ್ಪಡಿಸುವುದು ಹೇಗೆ ಎಂಬುದು ಗೊತ್ತಿರಬೇಕು, ಮತ್ತು ಇದಕ್ಕಾಗಿ ಅವರು ತಮ್ಮ ಬರಹಗಳಲ್ಲಿ ಬರುವ
ಸೊಲ್ಲುಗಳ ಇಟ್ಟಳ ಮತ್ತು ಕುರಳುಗಳ ಇಟ್ಟಳಗಳನ್ನು ಗಮನಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತಿರಬೇಕು.
4.3 ಅರಿಮೆಯ ಪದಗಳ ಬಳಕೆ
ಅರಿಮೆಯ ಬರಹಗಳಲ್ಲಿ ನೂರಾರು ಅರಿಮೆಯ (ಪಾರಿಬಾಶಿಕ) ಪದ ಇಲ್ಲವೇ ಪದಕಂತೆಗಳನ್ನು ಬಳಸಲೇಬೇಕಾಗುತ್ತದೆ. ಇವು ಎರಡು-ಮೂರು ಸೊಲ್ಲು ಗಳಲ್ಲಿ ಇಲ್ಲವೇ ಇನ್ನೂ ಹೆಚ್ಚು ಸೊಲ್ಲುಗಳಲ್ಲಿ ಹೇಳಬೇಕಾಗುವ ವಿಶಯಗಳನ್ನು ತುಂಬಾ ಅಡಕವಾಗಿ ಒಂದೆರಡು ಪದಗಳ ಮೂಲಕ ಸೂಚಿಸಬಲ್ಲುವು, ಮತ್ತು ಎಲ್ಲಾ ಬಳಕೆಗಳಲ್ಲೂ ಒಂದು ನಿಶ್ಚಿತವಾದ ಹುರುಳನ್ನು ಮಾತ್ರವೇ ಕೊಡುತ್ತಿರಬಲ್ಲುವು. ಈ ಎರಡು ಕಾರಣಗಳಿಗಾಗಿ, ಅವು ಅರಿಮೆಯ ಬರಹಗಳಿಗೆ ತುಂಬಾ ಅವಶ್ಯವೆಂದೆನಿಸುತ್ತವೆ.
ಎತ್ತುಗೆಗಾಗಿ, ಆಗುಗ ಎಂಬ ಪದ ಸೊಲ್ಲರಿಮೆಯಲ್ಲಿ ಒಂದು ಅರಿಮೆಯ ಪದವಾಗಿದ್ದು, ಅದು ತನ್ನ ಹತೋಟಿಯಲ್ಲಿಲ್ಲದಿರುವಂತಹ ಎಸಕ ವೊಂದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಅಡಕವಾಗಿ ಸೂಚಿಸುತ್ತದೆ. ಈ ರೀತಿ ಹುರುಳುಗಳನ್ನು ತುಂಬಾ ಅಡಕವಾಗಿ ತಿಳಿಸುತ್ತವೆಯೆಂಬುದೇ ಅರಿಮೆಯ ಪದಗಳು ಓದುಗರಿಗೆ ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣ. ಅವು ಬರಹದಲ್ಲಿ ಬಂದಾಗಲೆಲ್ಲ ಅವುಗಳ ಹಿಂದೆ ಅಡಗಿರುವ ತೊಡಕಿನ ಹುರುಳನ್ನು ಅವರು ನೆನಪಿಗೆ ತಂದುಕೊಳ್ಳ ಬೇಕಾಗುತ್ತದೆ.
ಇದಲ್ಲದೆ, ಅರಿಮೆಯ ಪದಗಳ ಹುರುಳುಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುವುದೂ ಅವು ಹೆಚ್ಚು ತೊಡಕಿನವಾಗಿ ಕಾಣಿಸಲು ಕಾರಣ ವಾಗುತ್ತದೆ. ಎತ್ತುಗೆಗಾಗಿ, ಕನ್ನಡದ ಸೊಲ್ಲರಿಮೆಯಲ್ಲಿ ಬರುವ ಪರಿಚೆ ಎಂಬ ಪದದ ಹುರುಳನ್ನು ತಿಳಿಯಬೇಕಿದ್ದಲ್ಲಿ ಹೆಸರು ಮತ್ತು ಎಸಕ ಎಂಬ ಬೇರೆ ಎರಡು ಪದಗಳ ಹುರುಳನ್ನೂ ತಿಳಿದಿರಬೇಕಾಗುತ್ತದೆ.
ಅರಿಮೆಯ ಪದಗಳನ್ನು ಉಂಟುಮಾಡುವವರು ಅವು ಇನ್ನಶ್ಟು ತೊಡಕಿನ ವಾಗುವಂತೆ ಮಾಡಬಲ್ಲರು. ಅವುಗಳ ಪರಿಚೆ (ಗುಣ) ನುಡಿಯಲ್ಲಿ ಬಳಕೆಯಾಗುವ ಬೇರೆ ಪದಗಳ ಪರಿಚೆಗೆ ಹೊಂದಿಕೆಯಾಗದಿದ್ದಲ್ಲಿ, ಮತ್ತು ಅವುಗಳಿಗೆ ಬೇಕಾಗುವ ಹಲವು ಬಗೆಯ ಪದರೂಪಗಳನ್ನು ನುಡಿಯಲ್ಲಿ ಬಳಕೆಯಲ್ಲಿರುವ ಸೊಲ್ಲರಿಮೆಯ ಕಟ್ಟಲೆಗಳ ಮೂಲಕವೇನೇ ಉಂಟು
ಮಾಡಲು ಬರುವುದಿಲ್ಲವಾದಲ್ಲಿ ಅವು ಓದುಗರಿಗೆ ಇನ್ನಶ್ಟು ತೊಡಕಿನವಾಗಿ ಕಾಣಿಸಬಲ್ಲುವು.
4.3.1 ಕನ್ನಡದ ಅರಿಮೆಯ ಪದಗಳು
ಅರಿಮೆಯ (ಪಾರಿಬಾಶಿಕ) ಪದಗಳನ್ನು ಬಳಸುವಲ್ಲಿ ಕನ್ನಡದ ತಿಳಿವಿಗರು ಒಂದು ದೊಡ್ಡ ತಪ್ಪನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ. ಇದರಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಅನವಶ್ಯಕವಾಗಿ ಓದುಗರಿಗೆ ತುಂಬಾ ತೊಡಕಿನ ಬರಹಗಳಾಗಿ ಕಾಣಿಸುತ್ತವೆ. ಇದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ.
ಇಂಗ್ಲಿಶ್ನಂತಹ ಬೇರೆ ನುಡಿಗಳಲ್ಲಿರುವ ಅರಿಮೆಯ ಪದಗಳಿಗೆ ಸಮನಾ ಗಿರುವ ಪದಗಳು ಕನ್ನಡದಲ್ಲಿಲ್ಲವಾದಾಗ, ನಮ್ಮೆದುರು ಎರಡು ದಾರಿಗಳಿವೆ: ಅಂತಹ ಪದಗಳನ್ನು ಎರವಲಾಗಿ ಪಡೆದು ಬಳಸುವುದು ಮತ್ತು ಕನ್ನಡದಲ್ಲೇನೇ ಹೊಸದಾಗಿ ಪದಗಳನ್ನು ಉಂಟುಮಾಡಿಕೊಳ್ಳುವುದು.
ಪದಗಳನ್ನು ಎರವಲಾಗಿ ಪಡೆಯುವುದಿದ್ದಲ್ಲಿ, ಅವುಗಳಲ್ಲಿ ಹಲಕೆಲವು ಮಾರ್ಪಾಡುಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಅವು ನಮ್ಮ ನುಡಿಗೆ ಹೊಂದಿಕೊಳ್ಳುವಂತೆ ಮಾಡಲು, ಮತ್ತು ಅವುಗಳಿಂದ ಸೊಲ್ಲುಗಳಲ್ಲಿ ಬಳಸಲು ಬೇಕಾಗುವ ಹಲವಾರು ರೂಪಗಳನ್ನು ನಮ್ಮ ನುಡಿಯವೇ ಆದ ಸೊಲ್ಲರಿಮೆಯ ಕಟ್ಟಲೆಗಳ ಮೂಲಕ ಪಡೆಯಲು ಈ ಮಾರ್ಪಾಡುಗಳು ನೆರವಾಗುತ್ತವೆ.
ನಮ್ಮ ನುಡಿಯಲ್ಲೇನೇ ಅವಕ್ಕೆ ಸಮನಾಗಿರುವ ಹೊಸ ಪದಗಳನ್ನು ಉಂಟು ಮಾಡಿಕೊಳ್ಳುವಂತಹ ಎರಡನೆಯ ದಾರಿಯನ್ನು ಆರಿಸಿಕೊಂಡಲ್ಲಿ, ಅವನ್ನು ಈ ರೀತಿ ನಮ್ಮ ನುಡಿಗೆ ಹೊಂದಿಕೊಳ್ಳುವಂತೆ ಮಾಡುವ ಕೆಲಸ ಇಲ್ಲವಾಗು ತ್ತದೆ. ಆ ಪದಗಳು ನಮ್ಮ ನುಡಿಯವೇ ಆದ ಕಾರಣ, ನಮಗೆ ಬೇಕಾಗುವ ಪದರೂಪಗಳನ್ನೆಲ್ಲ ನಮ್ಮ ನುಡಿಯ ಸೊಲ್ಲರಿಮೆಯ ಕಟ್ಟಲೆಗಳನ್ನೇ ಬಳಸಿ ಸುಳುವಾಗಿ ಉಂಟುಮಾಡಿಕೊಳ್ಳಬಹುದು.
ಆದರೆ, ಕನ್ನಡದ ತಿಳಿವಿಗರು ಈ ಎರಡನೆಯ ದಾರಿಯನ್ನು ಆರಿಸಿ ಕೊಳ್ಳುವಲ್ಲಿ ತಪ್ಪುಮಾಡಿದ್ದಾರೆ. ಕನ್ನಡದಲ್ಲಿ ಅರಿಮೆಯ ಪದಗಳನ್ನು ಎರವಲು ಪಡೆಯುವ ಬದಲು ಹೊಸದಾಗಿ ಉಂಟುಮಾಡುತ್ತೇವೆಂದು ಹೊರಟ ಈ ತಿಳಿವಿಗರು ಅದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು
ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಬಳಸುತ್ತಿದ್ದಾರೆ! ಇದಲ್ಲದೆ, ಈ ಪದಗಳು ಸಂಸ್ಕ್ರುತದಲ್ಲಿ ಹೇಗಿವೆಯೋ (ಇಲ್ಲವೇ ಇರಬಲ್ಲುವೋ) ಹಾಗೆಯೇ ಕನ್ನಡದಲ್ಲೂ ಇರಬೇಕೆಂಬ ಕಟ್ಟಲೆಯನ್ನೂ ಮಾಡಿಕೊಂಡಿದ್ದಾರೆ! ಇದರಿಂದಾಗಿ, ಈ ಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆಯಾದರೂ ಅವು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವಕ್ಕಾಗಿ ಕನ್ನಡದ ಸೊಲ್ಲರಿಮೆಯ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಸಂಸ್ಕ್ರುತದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ!
ಅರಿಮೆಯ ಪದಗಳನ್ನು ಎರವಲಾಗಿ ಪಡೆಯುವ ಬದಲು ನಮ್ಮ ನುಡಿ ಯಲ್ಲೇನೇ ಹೊಸ ಪದಗಳನ್ನು ಉಂಟುಮಾಡಲು ನಾವು ಯಾಕೆ ಬಯಸುತ್ತೇವೆ, ಅದರ ಮೂಲ ಗುರಿಯೇನು ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಮೇಲೆ ತಿಳಿಸಿದ ಹಾಗೆ, ನಾವು ನಮ್ಮ ನುಡಿಯಲ್ಲಿ ಉಂಟುಮಾಡಿದ ಪದಗಳು ಎರವಲು ಪದಗಳಿಗಿಂತ ಹೆಚ್ಚು ಚನ್ನಾಗಿ ನಮ್ಮ ನುಡಿಯಲ್ಲಿ ಹೊಂದಿಕೊಳ್ಳ ಬಲ್ಲುವು ಎಂಬುದು ಹಾಗೆ ಮಾಡಲು ಒಂದು ಕಾರಣ, ಮತ್ತು ಅವನ್ನು ಸೊಲ್ಲುಗಳಲ್ಲಿ ಬಳಸಲು ಬೇಕಾಗುವ ಪದರೂಪಗಳನ್ನು ನಮ್ಮ ನುಡಿಯ ಒಟ್ಟುಗಳ ಮತ್ತು ಕಟ್ಟಲೆಗಳ ಮೂಲಕವೇನೇ ಉಂಟುಮಾಡಲು ಬರುತ್ತದೆ ಎಂಬುದು ಇನ್ನೊಂದು ಕಾರಣ.
ಆದರೆ, ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಉಂಟುಮಾಡಿರುವ ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ; ಈ ವಿಶಯದಲ್ಲಿ ಅವು ಇಂಗ್ಲಿಶ್ ಪದಗಳಿಗಿಂತ ಬೇರಾಗಿಲ್ಲ; ಕೆಲವಂತೂ ಮೂಲ ಇಂಗ್ಲಿಶ್ ಪದಗಳಿಗಿಂತಲೂ ಹೆಚ್ಚು ತೊಡಕಿನವಾಗಿವೆ. ಇದಲ್ಲದೆ, ಅವುಗಳಿಂದ ಪದರೂಪಗಳನ್ನು ಪಡೆಯುವುದಕ್ಕಾಗಿ ಸಂಸ್ಕ್ರುತದ ಒಟ್ಟುಗಳನ್ನು ಮತ್ತು ಕಟ್ಟಲೆಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ, ಈ ಪದಗಳನ್ನು ಬಳಸುವುದರ ಮೂಲಕ ಮೇಲೆ ಸೂಚಿಸಿದ ಎರಡು ಗುರಿಗಳನ್ನೂ ನಾವು ತಲಪುವುದೇ
4.3.2 ಸೊಲ್ಲರಿಮೆಯ ತಿಳಿವು
ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡುವವರಿಗೆ ಆ ಪದಗಳಿಗೆ ಸಂಬಂದಿಸಿದ ಅರಿಮೆಯ ತಿಳಿವು ಮಾತ್ರವಲ್ಲದೆ, ಕನ್ನಡದ ಸೊಲ್ಲರಿಮೆಯ ತಿಳಿವೂ ಬೇಕಾಗುತ್ತದೆ. ಕನ್ನಡದಲ್ಲಿ ಅರಿಮೆಯ ಪದಗಳನ್ನು ಉಂಟುಮಾಡಿ ದವರಿಗೆ ಈ ಎರಡನೇ ಬಗೆಯ ತಿಳಿವು ಇರಲಿಲ್ಲವಾದ ಕಾರಣ, ಅವರು
ಉಂಟುಮಾಡಿರುವ ಪದಗಳಲ್ಲಿ ಹಲವು ಬಗೆಯ ಗೊಂದಲಗಳು ಮೂಡಿ ಬಂದಿವೆ. ಇದರಿಂದಾಗಿ, ಅರಿಮೆಯ ಪದಗಳಿಗೆ ಅವಶ್ಯವಾಗಿಯೂ ಬೇಕಾಗಿರುವ ಕಟ್ಟುನಿಟ್ಟು ಈ ಪದಗಳಲ್ಲಿ ಇಲ್ಲವಾಗಿದೆ. ಇದನ್ನೂ ನಾನು ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ.
ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಹೆಸರು (ಟಿouಟಿ) ಪದ ಮತ್ತು ಪರಿಚೆ (ಚಿಜರಿeಛಿಣive) ಪದಗಳ ನಡುವೆ ವ್ಯತ್ಯಾಸವಿದೆ. ಕನ್ನಡದಲ್ಲೂ ಇಂತಹದೇ ವ್ಯತ್ಯಾಸವಿದೆ. ಆದರೆ, ಸಂಸ್ಕ್ರುತದಲ್ಲಿ ಈ ವ್ಯತ್ಯಾಸವಿಲ್ಲ. ಅದರಲ್ಲಿ ಹೆಸರು ಪದವಾಗಿ ಮತ್ತು ಹೆಸರು ಪದದ ಪರಿಚೆಯನ್ನು ತಿಳಿಸುವ ಪದವಾಗಿ ಒಂದೇ ಪದ ಇಲ್ಲವೇ ಪದರೂಪವನ್ನು ಬಳಸಬೇಕಾಗುತ್ತದೆ. ನಿಜಕ್ಕೂ ಸಂಸ್ಕ್ರುತದಲ್ಲಿ ಬರುವ ಪದಕಂತೆಗಳಲ್ಲಿ ಯಾವುದು ಹೆಸರು ಪದ (ವಿಶೇಶ್ಯ) ಮತ್ತು ಯಾವುದು ಅದರ ಪರಿಚೆಯನ್ನು ತಿಳಿಸುವ ಪದ (ವಿಶೇಶಣ) ಎಂಬುದಾಗಿ ವ್ಯತ್ಯಾಸವನ್ನು ತೋರಿಸಿಕೊಡಲು ಬರುವುದೇ ಇಲ್ಲ. ಇದಲ್ಲದೆ, ಅದು ಸಂಸ್ಕ್ರುತದ ಸೊಲ್ಲು ಗಳನ್ನು ಉಂಟುಮಾಡುವಲ್ಲಿ ಬೇಕಾಗುವುದೂ ಇಲ್ಲ.
ಇಂಗ್ಲಿಶ್ ನುಡಿಯಲ್ಲಿ ಬಳಕೆಯಲ್ಲಿರುವ ಹೆಸರು ಪದಗಳಿಗೆ ಮತ್ತು ಪರಿಚೆ ಪದಗಳಿಗೆ ಬದಲಾಗಿ ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಬಳಸಿ ಕನ್ನಡಕ್ಕಾಗಿ ಅರಿಮೆಯ ಪದಗಳನ್ನು ಉಂಟುಮಾಡಲು ಹೊರಟಾಗ, ಈ ವ್ಯತ್ಯಾಸ ತುಂಬಾ ತೊಂದರೆ ಕೊಡುತ್ತದೆ. ಕನ್ನಡದ ತಿಳಿವಿಗರು ಉಂಟು ಮಾಡಿರುವ ಅರಿಮೆಯ ಪದಗಳಲ್ಲಿ ಇದರಿಂದಾಗಿ ಹಲವು ಬಗೆಯ ಗೊಂದಲಗಳು ಕಾಣಿಸಿಕೊಂಡಿವೆ.
ಎತ್ತುಗೆಗಾಗಿ, ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ ತಯಾರಿಸಿದ ಇಂಗ್ಲಿಶ್- ಕನ್ನಡ ವಿಜ್ನಾನ ಶಬ್ದಕೋಶದಲ್ಲಿ ಕೊಟ್ಟಿರುವ ಅರಿಮೆಯ ಪದಗಳನ್ನು ಗಮನಿಸಬಹುದು. ಇವುಗಳಲ್ಲಿ ಕೆಲವು ಪದಗಳು ಇಂಗ್ಲಿಶ್ನಲ್ಲಿರುವ ಮೇಲಿನ ವ್ಯತ್ಯಾಸಕ್ಕೆ ಬದಲಾಗಿ ಕನ್ನಡದಲ್ಲಿ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ; ಅವುಗಳ ತಯಾರಿಕೆಯಲ್ಲಿ ಒಂದೇ ಒಟ್ಟನ್ನು ಬಳಸಲಾಗಿದೆ.
ಹೆಸರುಪದದಲ್ಲಿ ನ/ಣ ಒಟ್ಟು ಕನ್ವರ್ಜೆನ್್ಸ ಅಭಿಸರಣ ಡಿಫರೆನ್ಶಿಯೇಶನ್ ಅವಕಲನ ಡಯ್ಜೆಶನ್ ಡಯಸ್ಟೋಲ್
ಪಚನ ವ್ಯಾಕುಂಚನ
ಪರಿಚೆಪದದಲ್ಲೂ ನ/ಣ ಒಟ್ಟು ಕನ್ವರ್ಜೆಂಟ್ ಅಭಿಸರಣ ಡಿಫರೆನ್ಶಿಯಲ್ ಅವಕಲನ ಡಯ್ಜೆಸ್ಟಿವ್ ಡಯಸ್ಟೋಲಿಕ್ ವ್ಯಾಕುಂಚನ
ಪಚನ
ಹೆಸರುಪದದಲ್ಲಿ ಕ ಒಟ್ಟು ಕ್ರಯೋಜೆನ್ ಸಪ್ಲಿಮೆಂಟ್ ರಿಫ್ಲಕ್ಟರ್ ರೆಸಿಸ್ಟರ್ ಪ್ರಜೆಕ್ಟರ್ ರೆಸೊನೇಟರ್
ಶೈತ್ಯಜನಕ ಪರಿಪೂರಕ ಪ್ರತಿಫಲಕ ರೋಧಕ ಪ್ರಕ್ಷೇಪಕ ಅನುರಣಕ
ಪರಿಚೆಪದದಲ್ಲೂ ಕ ಒಟ್ಟು ಕ್ರಯೋಜನಿಕ್ ಶೈತ್ಯಜನಕ ಸಪ್ಲಿಮೆಂಟರಿ ಪರಿಪೂರಕ ರಿಫ್ಲಕ್ಟಿವ್ ಪ್ರತಿಫಲಕ ರೆಸಿಸ್ಟೆಂಟ್ ರೋಧಕ ಪ್ರಜೆಕ್ಟಿವ್ ಪ್ರಕ್ಷೇಪಕ ರೆಸೊನೆಂಟ್ ಅನುರಣಕ
ಇನ್ನು ಕೆಲವು ಕಡೆಗಳಲ್ಲಿ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ತೋರಿಸಲಾಗಿದೆಯಾದರೂ ಅದಕ್ಕಾಗಿ ಬಳಕೆಯಾಗಿರುವ ಒಟ್ಟು(ಪ್ರತ್ಯಯ)ಗಳ ವಿಶಯದಲ್ಲಿ ಯಾವ ಬಗೆಯ ಕಟ್ಟುನಿಟ್ಟೂ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪದಗಳಲ್ಲಿ ನ/ಣ ಒಟ್ಟನ್ನು ಹೆಸರುಪದಗಳಲ್ಲೂ ಕ ಒಟ್ಟನ್ನು ಪರಿಚೆಪದಗಳಲ್ಲೂ ಬಳಸಲಾಗಿದೆ. ಆದರೆ, ಮೇಲೆ ಕೊಟ್ಟಿರುವ ಪದಗಳಲ್ಲಿ ಇವೆರಡೂ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ತೋರಿಸ ದಿರುವಲ್ಲಿ ಬಂದಿವೆ.
ಹೆಸರುಪದದಲ್ಲಿ ನ/ಣ ಒಟ್ಟು ವಿರೇಚನ ಕೆತೇರ್ಸಿಸ್ ಘಷ್ರಣ ಎಬ್ರೇಶನ್ ಸ್ತಬ್ಧನ ಎಬೋರ್ಶನ್ ಚಾಲನ ಮೋಶನ್ ಪಚನ ಡಯ್ಜೆಶನ್ ಸಂಶ್ಲೇಷಣ ಸಿಂತೆಸಿಸ್
ಪರಿಚೆಪದದಲ್ಲಿ ಕ ಒಟ್ಟು ಕತೇರ್ಟಿಕ್ ಎಬ್ರೇಸಿವ್ ಅಬೊರ್ಟಿವ್ ಮೋಟಿವ್ ಡಯ್ಜೆಸ್ಟಿವ್
ವಿರೇಚಕ ಘಷ್ರಕ ಸ್ತಬ್ಧಕ ಪಾಚಕ ಸಂಶ್ಲೇಷಕ
ಇದಕ್ಕೆ ಬದಲು, ಕೆಳಗೆ ಕೊಟ್ಟಿರುವ ಪದಗಳಲ್ಲಿ ಇದೇ ನ/ಣ ಮತ್ತು ಕ ಒಟ್ಟುಗಳೆರಡನ್ನೂ ಹೆಸರು ಪದಗಳಲ್ಲೇನೇ ಬಳಸಿದ್ದು, ಅವುಗಳ ನಡುವಿನ ವ್ಯತ್ಯಾಸವನ್ನು ಎರಡು ಬಗೆಯ ಹೆಸರು ಪದಗಳ ನಡುವಿರುವ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ:
ಕೆಲಸವನ್ನು ಹೆಸರಿಸಲು ನ/ಣ ಒಟ್ಟು ಕಂಡಕ್ಶನ್ ಇನ್ಸುಲೇಶನ್ ಓಸಿಲೇಶನ್
ವಹನ ನಿರೋಧನ ದೋಲನ
ವ್ಯಕ್ತಿ/ವಸ್ತುವನ್ನು ಹೆಸರಿಸಲು ಕ ಒಟ್ಟು ಕಂಡಕ್ಟರ್ ಇನ್ಸುಲೇಟರ್ ಓಸಿಲೇಟರ್
ವಾಹಕ ನಿರೋಧಕ ದೋಲಕ
ಪೋಲರಯ್ಸೇಶನ್ ಧ್ರುವೀಕರಣ ಪ್ರಪಲ್ಶನ್ ಆಲ್ಟರ್ನೇಶನ್ ಟ್ರಾನ್್ಸಮಿಶನ್
ನೋದನ ಪರ್ಯಯನ ಪ್ರೇಷಣೆ
ಪೋಲರಂii್ಸರ್ ಪ್ರಪೆಲರ್ ಆಲ್ಟರ್ನೇಟರ್ ಟ್ರಾನ್್ಸಮಿಟರ್
ಧ್ರುವೀಕಾರಕ ನೋದಕ ಪರ್ಯಯಕ ಪ್ರೇಷಕ
ಇಂಗ್ಲಿಶ್ನಲ್ಲಿರುವ ಮತ್ತು ಸಂಸ್ಕ್ರುತದಲ್ಲಿಲ್ಲದ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ಕನ್ನಡಕ್ಕಾಗಿ ಈ ಅರಿಮೆಯ ಪದಗಳಲ್ಲಿ ತೋರಿಸಬೇಕಾಗಿದೆ. ಇದು ಸುಲಬದ ಕೆಲಸವಲ್ಲ ಎಂಬುದನ್ನು ಮೇಲಿನ ಪದಗಳ ರಚನೆಯಲ್ಲಿ ಕನ್ನಡದ ತಿಳಿವಿಗರು ಎಶ್ಟೆಲ್ಲಾ ಗೊಂದಲಗಳಿಗೆಡೆಯಾಗಿದ್ದಾರೆ ಎಂಬುದು ಸ್ಪಶ್ಟವಾಗಿ ತೋರಿಸಿಕೊಡುತ್ತದೆ. ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ರಚಿಸಿರುವ ಅರಿಮೆಯ ಪದಗಳಲ್ಲಿ ಇಂತಹವೇ ಬೇರೆಯೂ ಕೆಲವು ಗೊಂದಲಗಳು ಕಾಣಿಸುತ್ತಿದ್ದು, ಅರಿಮೆಯ ಪದಗಳಲ್ಲಿರಬೇಕಾದ ಕಟ್ಟುನಿಟ್ಟು ಇವುಗಳಲ್ಲಿ ಕಾಣಿಸುವುದಿಲ್ಲ ಎಂಬುದನ್ನು ಇಲ್ಲಿ ನಾವು ಗಮನಿಸಬೇಕಾಗಿರುವ ಮುಕ್ಯ ವಿಶಯ.
4.3.3 ಕನ್ನಡ ಪದಗಳ ಬಳಕೆ
ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಇಂತಹ ಅರಿಮೆಯ ಪದಗಳನ್ನು ಉಂಟುಮಾಡಿದ್ದಲ್ಲಿ, ಈ ಸಮಸ್ಯೆಗಳಾವುವೂ ಬರುತ್ತಿರಲಿಲ್ಲ. ಯಾಕೆಂದರೆ, ಕನ್ನಡಕ್ಕೆ ಬೇಕಾಗುವ ಎಲ್ಲಾ ಬಗೆಯ ವ್ಯತ್ಯಾಸಗಳನ್ನೂ ಅದರಲ್ಲಿ ಬಳಕೆಯಲ್ಲಿರುವ ಒಟ್ಟುಗಳ ಮೂಲಕ ಸೂಚಿಸಲು ಬರುತ್ತದೆ. ಸಂಸ್ಕ್ರುತದಲ್ಲಿ ಸಂಸ್ಕ್ರುತ ನುಡಿಗೆ ಬೇಕಾಗುವ ವ್ಯತ್ಯಾಸಗಳನ್ನು ಸೂಚಿಸಲು ಬರುತ್ತದೆಯಲ್ಲದೆ ಕನ್ನಡದಂತಹ ಬೇರೆ ನುಡಿಗಳಿಗೆ ಬೇಕಾಗುವ ವ್ಯತ್ಯಾಸಗಳಲ್ಲಿ ಎಲ್ಲವನ್ನೂ ಸೂಚಿಸಲು ಬರುವುದಿಲ್ಲ.
ಕನ್ನಡದವೇ ಆದ ಪದಗಳನ್ನು ಬಳಸಿ ಅರಿಮೆಯ ಪದಗಳನ್ನು ಉಂಟು ಮಾಡಿದಲ್ಲಿ ಅವು ದಿನಬಳಕೆಯಲ್ಲಿ ಕೊಡುವ ಹುರುಳಿಗೂ ಅರಿಮೆಯ ಬರಹ ಗಳಲ್ಲಿ ಕೊಡಬೇಕಾಗಿರುವ ಹುರುಳಿಗೂ ನಡುವೆ ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ. ಈ ಕಾರಣಕ್ಕಾಗಿ, ಇಂಗ್ಲಿಶ್ನಲ್ಲಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸಿದ ಹಾಗೆ, ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವುದೇ ಸರಿಯಾದ ದಾರಿ ಎಂಬುದಾಗಿ ಇವರು ಹೇಳುತ್ತಾರೆ. ಆದರೆ, ನಿಜಕ್ಕೂ ಇಂಗ್ಲಿಶ್, ಜರ್ಮನ್ ಮೊದಲಾದ ಯುರೋಪಿನ ನುಡಿಗಳಲ್ಲಿ
ಅರಿಮೆಯ ಪದಗಳು ಹೇಗೆ ಬೆಳೆದು ಬಂದಿವೆ ಎಂಬುದರ ಸರಿಯಾದ ಅರಿವಿಲ್ಲದೆ ಅವರು ಈ ವಾದವನ್ನು ಮುಂದಿಟ್ಟಿದ್ದಾರೆ.
ಯುರೋಪಿನಲ್ಲಿ ಹದಿನೇಳನೇ ಶತಮಾನದ ಕೊನೆಯ ವರೆಗೂ ಲ್ಯಾಟಿನ್ ನಲ್ಲಿ ಬರೆದ ಪಟ್ಯಪುಸ್ತಕಗಳನ್ನೇ ಅರಿಮೆಯ (ವಿಜ್ನಾನದ) ಕಲಿಕೆಗೆ ಬಳಸ ಲಾಗುತ್ತಿತ್ತು. ಇವುಗಳಲ್ಲಿ ಬರುತ್ತಿದ್ದ ವಿಶಯಗಳಲ್ಲಿ ಹೆಚ್ಚಿನವನ್ನೂ ಗ್ರೀಕ್ ತಿಳಿವಿಗರು ಕಂಡುಹಿಡಿದಿದ್ದರು. ಈ ಎರಡು ಕಾರಣಗಳಿಗಾಗಿ, ಯುರೋಪಿನ ನುಡಿಗಳಲ್ಲಿ ಬಳಕೆಗೆ ಬಂದ ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಗ್ರೀಕ್ ಇಲ್ಲವೇ ಲ್ಯಾಟಿನ್ ಮೂಲದವಾಗಿದ್ದುವು.
ನಮ್ಮ ದೇಶದಲ್ಲೂ ಕೂಡ, ಹಿಂದಿನ ಕಾಲದಲ್ಲಿ ಅರಿಮೆಯ ತಿಳಿವನ್ನು ಪಡೆಯಲು ಸಂಸ್ಕ್ರುತದ ಪುಸ್ತಕಗಳನ್ನೇ ಬಳಸಬೇಕಾಗುತ್ತಿತ್ತು, ಮತ್ತು ಈ ಕಾರಣಕ್ಕಾಗಿ, ನಮ್ಮ ನುಡಿಗಳಲ್ಲೂ ಇಂತಹ ತಿಳಿವಿಗೆ ಬೇಕಾಗುವ ಅರಿಮೆಯ ಪದಗಳೆಲ್ಲ ಸಂಸ್ಕ್ರುತ ಮೂಲದವಾಗಿವೆ.
ಆದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಬೆಳವಣಿಗೆಯನ್ನು ಪಡೆಯ ದಿದ್ದಂತಹ ಅರಿಮೆಗಳಿಗೆ ಬೇಕಾಗುವ ಪದಗಳನ್ನು ಯುರೋಪಿನ ತಿಳಿವಿಗರು ಲ್ಯಾಟಿನ್ ಇಲ್ಲವೇ ಗ್ರೀಕ್ನಲ್ಲಿ ಉಂಟುಮಾಡಲು ಹೋಗಿಲ್ಲ. ಎತ್ತುಗೆಗಾಗಿ, ಲೆಕ್ಕದರಿಮೆಗೆ (ಗಣಿತಶಾಸ್ತ್ರಕ್ಕೆ) ಬೇಕಾಗುವ ಹಲವಾರು ಅರಿಮೆಯ ಪದಗಳನ್ನು ಉಂಟುಮಾಡಲು ಇಂಗ್ಲಿಶ್ನವೇ ಆದ ಪದಗಳನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ, ಎಣ್ಣುಕದ (ಕಂಪ್ಯೂಟರ್ನ) ಅರಿಮೆಗೆ ಬೇಕಾಗುವ ನೂರಾರು ಅರಿಮೆಯ ಪದಗಳನ್ನೂ ಇಂಗ್ಲಿಶ್ನಲ್ಲಿಯೇ ಉಂಟುಮಾಡಲಾಗಿದೆ. ಇದಲ್ಲದೆ, ಹೀಗೆ ಮಾಡಿದುದರಿದಾಗಿ ಈ ಅರಿಮೆಗಳ ಕಲಿಕೆಯಲ್ಲಿ ಯಾವ ಗೊಂದಲವೂ ಉಂಟಾದ ಹಾಗೆ ಕಾಣಿಸುವುದಿಲ್ಲ.
ಇನ್ನೊಂದು ವಿಶಯವೇನೆಂದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಅರಿಮೆಯ ಪದಗಳಾಗಿ ಬಳಕೆಗೆ ಬಂದಿರುವ ಪದಗಳೆಲ್ಲವೂ ಆ ನುಡಿಗಳ ಪದಗಳೇ ಆಗಿದ್ದುವಲ್ಲದೆ ಬೇರೆ ನುಡಿಯ ಪದಗಳಾಗಿರಲಿಲ್ಲ! ಇಂಗ್ಲಿಶ್, ಫ್ರಂಚ್ ಇಲ್ಲವೇ ಜರ್ಮನ್ ನುಡಿಯನ್ನು ಬಳಸುವವರಿಗೆ ಮಾತ್ರ ಅವು ತಮ್ಮ ನುಡಿಯ ಪದಗಳಲ್ಲ. ಸಂಸ್ಕ್ರುತದಲ್ಲೂ ಹೀಗೆಯೇ. ಅದರ ಪದಗಳನ್ನೇ ಯಾವ ಗೊಂದಲವೂ ಉಂಟಾಗದ ಹಾಗೆ ಅದಕ್ಕೆ ಬೇಕಾಗುವ ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಬಳಸಲಾಗಿತ್ತು. ಹಾಗಿರುವಾಗ, ಕನ್ನಡಕ್ಕೆ ಬೇಕಾಗುವ ಅರಿಮೆಯ ಪದಗಳನ್ನು ಉಂಟುಮಾಡುವುದಕ್ಕಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿದಲ್ಲಿ ಯಾಕೆ ಗೊಂದಲವುಂಟಾಗಬೇಕು?
4.4 ಸೊಲ್ಲರಿಮೆಯ ಮಾರ್ಪುರುಳು
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಹೆಚ್ಚು ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಬೇಕಾಗುತ್ತದೆ ಎಂಬುದು ಇನ್ನೊಂದು ಕಾರಣ. ಇವುಗಳ ಮೂಲಕ ಹುರುಳನ್ನು ತುಂಬಾ ಅಡಕವಾಗಿ ಸೂಚಿಸಲು ಬರುತ್ತದೆ; ಆದರೆ, ಓದುವವರು ಈ ಪದಕಂತೆಗಳಲ್ಲಿ ಹೇಳದಿರುವ ಕೆಲವು ಹುರುಳುಗಳನ್ನೂ ಕುಳ್ಳಿಹ(ಸಂದರ್ಬ)ದಿಂದ ಊಹಿಸಿಕೊಳ್ಳ ಬೇಕಾಗುತ್ತದೆ. ಹಾಗಾಗಿ, ಅವು ಓದಿಗೆ ತೊಡಕಾಗುತ್ತವೆ.
ಸೊಲ್ಲುಗಳನ್ನು ಅವುಗಳ ಯಾವಾಗಿನ ಇಟ್ಟಳದಲ್ಲಿ ಬಳಸುವ ಬದಲು, ಬೇರೊಂದು ಬಗೆಯ ಇಟ್ಟಳದಲ್ಲಿ ಬಳಸುವುದನ್ನು ಸೊಲ್ಲರಿಮೆಯ ಮಾರ್ಪುರುಳು ಎಂಬುದಾಗಿ ಕರೆಯಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(1ಕ) ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ. (1ಚ) ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ತಿಂಗಳಿಗೊಮ್ಮೆ
ನಡೆಯುತ್ತದೆ.
ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ ಎಂಬ ಸಂಗತಿಯನ್ನು (1ಕ)ದಲ್ಲಿ ಯಾವಾಗಿನ ಇಟ್ಟಳದಲ್ಲಿ (ಎಂದರೆ ಒಂದು ಸೊಲ್ಲಿನ ರೂಪದಲ್ಲಿ) ಹೇಳ ಲಾಗಿದೆ. ಅದನ್ನೇ (1ಚ)ದಲ್ಲಿ ಒಂದು ಹೆಸರು ಪದಕಂತೆಯಾಗಿ (ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಎಂಬುದಾಗಿ) ಬದಲಾಯಿಸಿ ಹೇಳಲಾಗಿದೆ; ಹೀಗೆ ಅದನ್ನು ಬೇರೊಂದು ಇಟ್ಟಳದಲ್ಲಿ ಬಳಸಿರುವ ಕಾರಣ, (1ಚ) ಸೊಲ್ಲಿನಲ್ಲಿ ಆ ಸಂಗತಿಯನ್ನು ಮಾತ್ರವಲ್ಲದೆ ಅದರ ಕುರಿತು ಬೇರೊಂದು ಸಂಗತಿಯನ್ನೂ (ತಿಂಗಳಿಗೊಮ್ಮೆ ನಡೆಯುತ್ತದೆ ಎಂಬುದನ್ನೂ) ತಿಳಿಸಲು ಸಾದ್ಯವಾಗಿದೆ.
ಕನ್ನಡದ ಅರಿಮೆಯ ಬರಹಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಇಟ್ಟಳಗಳನ್ನು ಇಂತಹ ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಬಳಸಬಹುದು: ಮೇಲೆ ವಿವರಿಸಿದಂತಹ ಎಸಕಗಳನ್ನು (ಸೊಲ್ಲುಗಳನ್ನು) ಹೆಸರುಗಳಾಗಿ ಬದಲಾಯಿಸುವ ಇಟ್ಟಳಗಳು ಒಂದು ಬಗೆಯವು ಮತ್ತು ಎಸಕಗಳನ್ನು ಪರಿಚೆಗಳಾಗಿ ಬದಲಾಯಿಸುವ ಕೆಳಗೆ ಕೊಟ್ಟಿರುವಂತಹ ಇಟ್ಟಳಗಳು ಇನ್ನೊಂದು ಬಗೆಯವು.
ಸೂರ್ಯನು ಅರೆನೇರಳೆ ಕಿರಣಗಳನ್ನು ಬಿಡುತ್ತಾನೆ. ಸೂರ್ಯನು ಬಿಡುವ ಅರೆನೇರಳೆ ಕಿರಣಗಳು ನಮಗೆ ಕೆಡುಕ ನ್ನುಂಟುಮಾಡಬಲ್ಲುವು.
(2ಕ) ಸೊಲ್ಲು ತಿಳಿಸುವ ಸಂಗತಿಯನ್ನು (2ಚ) ಸೊಲ್ಲಿನಲ್ಲಿ ಅರೆನೇರಳೆ ಕಿರಣಗಳು ಎಂಬ ಪದಕಂತೆಯ ಪರಿಚೆಯಾಗಿ (ಸೂರ್ಯನು ಬಿಡುವ (ಅತಿನೇರಳೆ ಕಿರಣಗಳು) ಎಂಬುದಾಗಿ) ಬದಲಾಯಿಸಲಾಗಿದೆ.
4.4.1 ಎರಡು ಬಗೆಯ ಮಾರ್ಪುರುಳುಗಳು
ಹಿಂದಿನ ಕಾಲದಲ್ಲಿ ಮಾರ್ಪುರುಳು (ಸಂಸ್ಕ್ರುತದ ರೂಪಕ ಇಲ್ಲವೇ ಇಂಗ್ಲಿಶ್ನ ಮೆಟಾಫರ್) ಎಂಬ ಪರಿಕಲ್ಪನೆಯನ್ನು ಪದಗಳ ಬಳಕೆಗೆ ಮಾತ್ರವೇ ಅನ್ವಯಿಸಲಾಗುತ್ತಿತ್ತು. ಮುಕ್ಯವಾಗಿ ಕತೆ, ಕವಿತೆ ಮೊದಲಾದ ನಲ್ಬರಹಗಳಲ್ಲಿ ಪದಗಳನ್ನು ಅವುಗಳ ಯಾವಾಗಿನ ಹುರುಳಿನಲ್ಲಿ ಬಳಸುವ ಬದಲು ಹೊಸ ದೊಂದು ಹುರುಳಿನಲ್ಲಿ ಬಳಸುವುದನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಎತ್ತುಗೆಗಾಗಿ, ರಾಜು ಕೋಪದಿಂದ ಕುದಿಯುತ್ತಿದ್ದ ಎಂಬ ಸೊಲ್ಲಿನಲ್ಲಿ ಕುದಿ ಪದವನ್ನು ಅದರ ಯಾವಾಗಿನ ಹುರುಳಿನಲ್ಲಿ (ನೀರು ಕುದಿಯುವುದು ಎಂಬ ಸೊಲ್ಲಿನಲ್ಲಿ ಕಾಣಿಸುವ ಹಾಗೆ) ಬಳಸದೆ, ಬೇರೆಯೇ ಒಂದು ಹುರುಳಿ ನಲ್ಲಿ ಬಳಸಲಾಗಿದ್ದು, ಅದೊಂದು ಮಾರ್ಪುರುಳಾಗಿ ಬಂದಿದೆ.
ಆದರೆ ಇತ್ತೀಚೆಗೆ, ಎಂದರೆ ಕಳೆದ ಇಪ್ಪತ್ತು ವರ್ಶಗಳಲ್ಲಿ, ಇಂತಹ ಪದಗಳ ಮಾರ್ಪುರುಳುಗಳಿಗಿಂತಲೂ ಮೇಲೆ ವಿವರಿಸಿದಂತಹ ಸೊಲ್ಲರಿಮೆಯ ಮಾರ್ಪುರುಳುಗಳು ತಿಳಿವಿಗರ ಗಮನವನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆ. ಇದಕ್ಕೆ ಒಂದು ಕಾರಣವೇನೆಂದರೆ, ಇವತ್ತು ಕತೆ, ಕವಿತೆ, ಕಾದಂಬರಿ ಮೊದಲಾದ ನಲ್ಬರಹಗಳಿಗಿಂತಲೂ ಬೇರೆ ಬಗೆಯ ಬರಹಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ, ಮತ್ತು ಇಂತಹ ಬರಹಗಳಲ್ಲಿ, ಅದರಲ್ಲೂ ಅರಿಮೆಯ ಬರಹಗಳಲ್ಲಿ, ಸೊಲ್ಲರಿಮೆಯ ಮಾರ್ಪುರುಳುಗಳು ತುಂಬಾ ಹೆಚ್ಚು ಬಳಕೆಯಾಗುತ್ತಿವೆ.
ಪದಗಳ ಮಾರ್ಪುರುಳುಗಳಲ್ಲಿ ಹುರುಳನ್ನು ಹೋಲಿಕೆಯಿರುವ ಎರಡು ಪದಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಮಾರೆಡೆಗೊಳಿಸಲಾಗುತ್ತದೆ; ಎಂದರೆ, ಮನಸ್ಸಿನಲ್ಲಿರುವ ಹುರುಳನ್ನು ಸೂಚಿಸುವುದಕ್ಕಾಗಿ ಯಾವಾಗಿನ ಪದವನ್ನು ಬಳಸುವ ಬದಲು, ಬೇರೊಂದು ಪದವನ್ನು ಬಳಸಲಾಗುತ್ತದೆ. ಅವನಿಗೆ
ಜಾಣ್ಮೆಯಿಲ್ಲ ಎಂದು ಹೇಳುವ ಬದಲು ಅವನಿಗೆ ತಲೆಯಿಲ್ಲ ಎಂಬುದಾಗಿ ಹೇಳುವಲ್ಲಿ ಈ ರೀತಿ ಹುರುಳನ್ನು ಜಾಣ್ಮೆ ಎಂಬ ಪದದಿಂದ ತಲೆ ಎಂಬ ಪದಕ್ಕೆ ಮಾರೆಡೆಗೊಳಿಸಿರುವುದನ್ನು ಕಾಣಬಹುದು.
ಈ ರೀತಿ ಒಂದು ಹುರುಳನ್ನು ಸೂಚಿಸಲು ಯಾವಾಗಿನ ಪದದ ಬದಲು ಬೇರೊಂದು ಪದವನ್ನು ಬಳಸುವ ಬದಲು, ಮೇಲೆ ವಿವರಿಸಿದಂತಹ ಸೊಲ್ಲರಿಮೆಯ ಮಾರ್ಪುರುಳಿನಲ್ಲಿ ಯಾವಾಗಿನ ಇಟ್ಟಳದ ಬದಲು ಬೇರೊಂದು ಇಟ್ಟಳವನ್ನು ಬಳಸಲಾಗುತ್ತದೆ. ಈ ಎರಡು ಬಗೆಯ ಬಳಕೆ ಗಳಲ್ಲೂ ಹುರುಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾರೆಡೆ ಗೊಳಿಸಲಾಗಿದೆಯಾದ ಕಾರಣ, ಅವೆರಡನ್ನೂ ಮಾರ್ಪುರುಳು ಎಂಬುದಾಗಿ ಕರೆಯಬಲ್ಲೆವು.
ನಮ್ಮ ಆಡುಮಾತಿನಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು ಕಾಣಿಸಿ ಕೊಳ್ಳುವುದು ತುಂಬಾ ಅಪರೂಪ. ಹೇಳಬೇಕೆಂದಿರುವುದನ್ನು ಸಾಮಾನ್ಯವಾಗಿ ನಾವು ನೇರವಾಗಿ ಮತ್ತು ಹೆಚ್ಚು ತೊಡಕಿಲ್ಲದ ಸೊಲ್ಲುಗಳ ಮೂಲಕ ಹೇಳಲು ಬಯಸುತ್ತೇವೆ; ಮತ್ತು ಅಂತಹ ಕೆಲಸಕ್ಕೆ ಸೊಲ್ಲರಿಮೆಯ ಮಾರ್ಪುರುಳುಗಳು ಬೇಕಾಗುವುದಿಲ್ಲ.
ಆದರೆ ಬರಹಗಳಲ್ಲಿ, ಅದರಲ್ಲೂ ಅರಿಮೆಯ ಬರಹಗಳಲ್ಲಿ, ಅವು ಯಾವಾಗಲೂ ಬೇಕಾಗುತ್ತಿರುತ್ತವೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ, ಮತ್ತು ಒಂದೇ ಸೊಲ್ಲಿನೊಳಗೆ ಹಲವು ಸಂಗತಿಗಳನ್ನು ತುಂಬಿಸಿ ಹೇಳಲು ಬರುತ್ತದೆ.
4.4.2 ಕೆಲವು ಪ್ರಯೋಜನಗಳು
ಮೇಲೆ ಸೂಚಿಸಿದ ಹಾಗೆ, ಸೊಲ್ಲರಿಮೆಯ ಮಾರ್ಪುರುಳುಗಳ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುವುದೇ ಅವನ್ನು ಅರಿಮೆಯ ಬರಹಗಳಲ್ಲಿ ಹೆಚ್ಚು ಹೆಚ್ಚು ಬಳಸುತ್ತಿರುವುದಕ್ಕೆ ಮುಕ್ಯ ಕಾರಣ. ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ, ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬ ಸೊಲ್ಲರಿಮೆಯ ಮಾರ್ಪುರುಳಿನ ಮೂಲಕ ಸೂಚಿಸಲು ಬರುತ್ತದೆ.
ಇದಲ್ಲದೆ, ಎಸಕವನ್ನು ಸೂಚಿಸುವ ಒಂದು ಸೊಲ್ಲನ್ನು ಹೆಸರು ಪದಕಂತೆ ಯಾಗಿ ಬದಲಾಯಿಸಿದಾಗ, ಎಸಕದ ಮಾಡುಗರು ಯಾರು ಎಂಬುದನ್ನು ತಿಳಿಸದಿರಲು ಬರುತ್ತದೆ. ಎತ್ತುಗೆಗಾಗಿ, ಸಾಕುತ್ತಾರೆ ಎಂದು ಹೇಳಿದಲ್ಲಿ ಸಾಕುವವರು ಯಾರು ಎಂಬುದನ್ನು ಸೂಚಿಸಲೇಬೇಕಾಗುತ್ತದೆ; ಎಸಕಪದದ ಕೊನೆಯಲ್ಲಿ ಬಳಸಬೇಕಾಗಿರುವ ರೆ ಒಟ್ಟು ಇದನ್ನು ತುಂಬಾ ಅಡಕವಾಗಿ ತಿಳಿಸುತ್ತದೆ. ಆದರೆ, ಸಾಕುವಿಕೆ ಎಂದು ಹೇಳಿದಲ್ಲಿ ಅದರ ಮಾಡುಗರನ್ನು ಸೂಚಿಸದಿರಲು ಬರುತ್ತದೆ.
ಅರಿಮೆಯ ಬರಹಗಳಲ್ಲಿ ಸಾಮಾನ್ಯವಾಗಿ ಮಾಡುಗರನ್ನು ಸೂಚಿಸ ಬೇಕಾಗುವುದಿಲ್ಲ. ವಿಶಯಗಳಿಗೇನೇ ಅದರಲ್ಲಿ ಹೆಚ್ಚಿನ ಮಹತ್ವ ಕೊಡಲಾಗು ತ್ತದೆ. ಬರಹಗಾರರ ಅನಿಸಿಕೆಗಳಿಗೂ ಅವುಗಳಲ್ಲಿ ಜಾಗವಿಲ್ಲ. ಹಾಗಾಗಿ, ಮಾಡುಗರನ್ನು ಸೂಚಿಸಬೇಕಾಗುವ ಎಸಕ ಪದಗಳಿಗಿಂತಲೂ ಮಾಡುಗರನ್ನು ಸೂಚಿಸದಿರುವ ಹೆಸರು ಪದಕಂತೆಗಳನ್ನೇ ಅಂತಹ ಬರಹಗಳಲ್ಲಿ ಹೆಚ್ಚು ಹೆಚ್ಚು ಬಳಸಲಾಗುತ್ತದೆ. ಇಂತಹ ಪದಕಂತೆಗಳಲ್ಲಿ ಬರಹಗಾರರ ಅನಿಸಿಕೆ ಗಳನ್ನೂ ಸೂಚಿಸದಿರಲು ಬರುತ್ತದೆ.
ಹೆಸರು ಪದ ಇಲ್ಲವೇ ಪದಕಂತೆಗಳನ್ನು ಸೊಲ್ಲಿನ ಹಲವು ಕಡೆಗಳಲ್ಲಿ ಬಳಸಲು ಬರುತ್ತದೆ. ಅವುಗಳ ಮೂಲಕ ಎಸಕಗಳನ್ನು ಎಸಕಗಳಾಗಿ ಸೂಚಿಸುವ ಬದಲು ಹೆಸರುಗಳಾಗಿ ಸೂಚಿಸುವ ಕಾರಣ, ಅವುಗಳ ಕುರಿತು ಹಲವು ಹೆಚ್ಚಿನ ಸಂಗತಿಗಳನ್ನು ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಸಾಕುವಿಕೆಯನ್ನು, ಸಾಕುವಿಕೆಗೆ, ಸಾಕುವಿಕೆಯಿಂದ, ಸಾಕುವಿಕೆಯಲ್ಲಿ ಮೊದಲಾದ ಹಲವು ಪದರೂಪಗಳನ್ನೂ ಅವಕ್ಕೆ ಕೊಡಲು ಬರುತ್ತದೆ. ಅರಿಮೆಯ ಬರಹಗಳಲ್ಲಿ ಹೆಸರುಪದಗಳ ಇಲ್ಲವೇ ಪದಕಂತೆಗಳ ಬಳಕೆ ಹೆಚ್ಚಾಗಲು ಇದೂ ಒಂದು
ಇನ್ನೊಂದು ಮುಕ್ಯವಾದ ಪ್ರಯೋಜನವೇನೆಂದರೆ, ಎಸಕವನ್ನು ನೆಲೆಯಾಗಿ ಬಳಸುವಲ್ಲಿ ಸೊಲ್ಲರಿಮೆಯ ಮಾರ್ಪುರುಳು ನೆರವಾಗುತ್ತದೆ. ಹಿಂದಿನ ಪಸುಗೆಯಲ್ಲಿ ವಿವರಿಸಿದ ಹಾಗೆ, ಸೊಲ್ಲುಗಳನ್ನು ನೆಲೆ ಮತ್ತು ತಿಳಿವು ಎಂಬುದಾಗಿ ವಿಂಗಡಿಸಲು ಬರುತ್ತದೆ: ಸೊಲ್ಲಿನಲ್ಲಿ ಮೊದಲಿಗೆ ಬರುವ ಅಂಶ ಅದರ ನೆಲೆಯಾಗಿರುತ್ತದೆ ಮತ್ತು ಆಮೇಲೆ ಬರುವ ಅಂಶ ಆ ನೆಲೆಯ ಕುರಿತಾಗಿ ಏನಾದರೊಂದು ವಿಶಯವನ್ನು ತಿಳಿಸುವ ತಿಳಿವಾಗಿರುತ್ತದೆ.
ಅರಿಮೆಯ ಬರಹಗಳಲ್ಲಿ ಸಾಮಾನ್ಯವಾಗಿ ಒಂದು ಸೊಲ್ಲಿನ ತಿಳಿವನ್ನು (ಇಲ್ಲವೇ ತಿಳಿವಿನ ಒಂದು ಅಂಶವನ್ನು) ಅದರ ಮುಂದಿರುವ ಸೊಲ್ಲಿನಲ್ಲಿ
ನೆಲೆಯಾಗಿ ಬಳಸಬೇಕಾಗುತ್ತದೆ. ಅವುಗಳಲ್ಲಿ ವಿಶಯಗಳನ್ನು ಓದುಗರ ಮುಂದಿರಿಸುವ ಬಗೆಯೇ ಅಂತಹದು. ಆದರೆ, ಎಸಕಪದಗಳು ತಿಳಿವುಗಳಾಗಿ ಮಾತ್ರವೇ ಬರಬಲ್ಲುವಲ್ಲದೆ ನೆಲೆಗಳಾಗಿ ಬರಲಾರವು. ಹಾಗಾಗಿ, ಎಸಕವೊಂದನ್ನು ಸೊಲ್ಲಿನ ನೆಲೆಯಾಗಿ ಬಳಸಬೇಕಾದಾಗ, ಅದನ್ನು ಸೂಚಿಸುವ ಎಸಕಪದವನ್ನು ಹೆಸರುಪದವಾಗಿ ಇಲ್ಲವೇ ಪದಕಂತೆಯಾಗಿ ಮಾರ್ಪಡಿಸ ಬೇಕಾಗುತ್ತದೆ.
ಎತ್ತುಗೆಗಾಗಿ, ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ ಎಂಬ ಸೊಲ್ಲಿನಲ್ಲಿ ಚಂದ್ರ ಎಂಬುದು ನೆಲೆಯಾಗಿ ಬಂದಿದೆ ಮತ್ತು ಬೂಮಿಯ ಸುತ್ತ ಸುತ್ತುತ್ತದೆ ಎಂಬುದು ಅದರ ಕುರಿತು ಸಂಗತಿಯೊಂದನ್ನು ತಿಳಿಸುವ ತಿಳಿವಾಗಿ ಬಂದಿದೆ. ಈ ತಿಳಿವನ್ನು ಮುಂದಿನ ಸೊಲ್ಲಿನಲ್ಲಿ ನೆಲೆಯಾಗಿ ಬಳಸಬೇಕಿದ್ದಲ್ಲಿ ಅದನ್ನು ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಎಂಬುದಾಗಿ ಮಾರ್ಪಡಿಸಬೇಕಾಗುತ್ತದೆ. ಇಂತಹ ಬಳಕೆಯನ್ನು ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಹೆಚ್ಚು ಕಡಿಮೆ ತಿಂಗಳಿಗೊಮ್ಮೆ ನಡೆಯುತ್ತದೆ ಎಂಬ ಸೊಲ್ಲಿನಲ್ಲಿ ಕಾಣಬಹುದು.
4.4.3 ತೊಡಕೆನಿಸಲು ಕಾರಣ
ಅರಿಮೆಯ ಬರಹಗಳಲ್ಲಿ ಬರುವ ಸೊಲ್ಲರಿಮೆಯ ಮಾರ್ಪುರುಳುಗಳು ತೊಡಕಿನ ವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕ(ಕ್ರಿಯಾ)ಪದಗಳು ಎಸಕಗಳನ್ನು ಸೂಚಿಸುತ್ತವೆ; ಹೆಸರು(ನಾಮ)ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಮತ್ತು ಪರಿಚೆ(ಗುಣ)ಪದಗಳು ವ್ಯಕ್ತಿ ಇಲ್ಲವೇ ವಸ್ತುಗಳ ಪರಿಚೆಗಳನ್ನು ಸೂಚಿಸುತ್ತವೆ. ಆದರೆ, ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಈ ಮೂರನ್ನೂ ಹೆಸರು ಪದಗಳ (ಇಲ್ಲವೇ ಪದಕಂತೆಗಳ) ಮೂಲಕವೇನೇ ಸೂಚಿಸಲಾಗುತ್ತದೆ.
ಎಂದರೆ, ಈ ಮಾರ್ಪುರುಳುಗಳು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಲ್ಲವನ್ನೂ ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.
ಅರಿಮೆಯ ಬರಹಗಳಲ್ಲಿ ಮಾತ್ರವಲ್ಲದೆ ಬೇರೆ ಬಗೆಯ ಬರಹಗಳಲ್ಲೂ ಸೊಲ್ಲರಿಮೆಯ ಮಾರ್ಪುರುಳುಗಳು ಬಳಕೆಯಾಗುತ್ತವೆ. ಎತ್ತುಗೆಗಾಗಿ, ಅವನು
ಒಪ್ಪಿದ ಎನ್ನುವ ಬದಲು ಅವನ ಒಪ್ಪಿಗೆ ಸಿಕ್ಕಿತು ಎಂಬಲ್ಲಿ ಒಪ್ಪು ಎಂಬ ಎಸಕ ಪದದ ಬದಲು ಒಪ್ಪಿಗೆ ಎಂಬ ಹೆಸರು ಪದವನ್ನು ಬಳಸಲಾಗಿದೆ. ಆದರೆ, ಇಂತಹ ಮಾರ್ಪುರುಳುಗಳ ಬಳಕೆ ಬೇರೆ ಬರಹಗಳಿಗಿಂತ ಅರಿಮೆಯ ಬರಹಗಳಲ್ಲಿ ತುಂಬಾ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಎಸಕವನ್ನು ಸೂಚಿಸುವ ಒಂದು ಸೊಲ್ಲನ್ನು ಹೆಸರುಪದಕಂತೆಯಾಗಿ ಮಾರ್ಪಡಿಸಿದಾಗ, ಅದರ ಕೆಲವು ಅಂಶಗಳು ಬಿದ್ದುಹೋಗುತ್ತವೆ. ಇದರಿಂದಾಗಿ ಅ ಪದಕಂತೆಯಲ್ಲಿ ಇಪ್ಪುರುಳಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಂತಹ ಕಡೆಗಳಲ್ಲಿ ಓದುಗರು ಅದರ ನಿಜವಾದ ಹುರುಳೇನು ಎಂಬುದನ್ನು ತಾವೇ ಹಿಂದಿನ ಸೊಲ್ಲುಗಳಿಂದ ಇಲ್ಲವೇ ಬರಹದ ಕುಳ್ಳಿಹ(ಸಂದರ್ಬ)ದಿಂದ ಕಂಡು ಹಿಡಿಯ ಬೇಕಾಗುತ್ತದೆ. ಸೊಲ್ಲರಿಮೆಯ ಮಾರ್ಪುರುಳುಗಳು ತೊಡಕಿನವಾಗಿ ಕಾಣಿಸಲು ಇದೂ ಒಂದು ಕಾರಣ.
ಎತ್ತುಗೆಗಾಗಿ, ಬೂಮಿಯ ಸುತ್ತುವಿಕೆ ಎಂಬ ಪದಕಂತೆ ಬೂಮಿ ತನ್ನ ಅಕ್ಶದಲ್ಲಿ ಸುತ್ತುವುದನ್ನು ಸೂಚಿಸಬಹುದು, ಸೂರ್ಯನ ಸುತ್ತ ಸುತ್ತುವುದನ್ನು ಸೂಚಿಸಬಹುದು ಇಲ್ಲವೇ ಬೂಮಿಯ ಸುತ್ತ ಚಂದ್ರ ಸುತ್ತುವುದನ್ನು ಸೂಚಿಸಬಹುದು. ಇವುಗಳಲ್ಲಿ ಯಾವ ಹುರುಳು ಇಲ್ಲಿ ಸರಿಯಾದುದು ಎಂಬುದನ್ನು ಹಿಂದಿನ ಸೊಲ್ಲುಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ನೆನಪಿನ ಲ್ಲಿರಿಸಿಕೊಂಡು ಓದುಗರೇ ತೀರ್ಮಾನಿಸಿಕೊಳ್ಳಬೇಕಾಗುತ್ತದೆ. ಇದನ್ನು ಸರಿಯಾಗಿ ನಡೆಸಲಾರದ ಓದುಗರು ಗೊಂದಲಕ್ಕೊಳಗಾಗುತ್ತಾರೆ.
ಅರಿಮೆಯ ಬರಹಗಳಲ್ಲಿ ಈ ರೀತಿ ಒಮ್ಮೆ ಹೇಳಿರುವ ಸಂಗತಿಯನ್ನು ಆಮೇಲೆ ಹಲವು ಬಾರಿ ಸೂಚಿಸುತ್ತಿರಬೇಕಾಗುತ್ತದೆ, ಮತ್ತು ಹೀಗೆ ಸೂಚಿಸುವು ದಕ್ಕೆ ತುಂಬಾ ಅಡಕವಾಗಿ ಅದನ್ನು ತಿಳಿಸಬಲ್ಲ ಹೆಸರು ಪದಕಂತೆ ತಕ್ಕುದಾಗಿದೆ. ಹಾಗಾಗಿ, ಒಮ್ಮೆ ಹೇಳಿರುವ ವಿಶಯವನ್ನು ತಮ್ಮ ನೆನಪಿನಲ್ಲಿರಿಸಿಕೊಳ್ಳಬಲ್ಲ ಓದುಗರಿಗೆ ಮಾತ್ರ ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಕಾಣಿಸಿಕೊಳ್ಳುವ ಈ ಇಪ್ಪುರುಳುಗಳು ಒಂದು ತೊಡಕೆಂದು ಅನಿಸುವುದಿಲ್ಲ.
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಇನ್ನೊಂದು ಕಾರಣ ವೇನೆಂದರೆ, ಇಂತಹ ಬರಹಗಳಲ್ಲಿ ಬೇರೆ ಬಗೆಯ ಬರಹಗಳಲ್ಲಿ ಕಾಣಿಸುವು ದಕ್ಕಿಂತ ಪದಗಳ ತಿಣ್ಮೆ (ಸಾಂದ್ರತೆ) ಹೆಚ್ಚಿರುತ್ತದೆ. ಸೊಲ್ಲುಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಪದಗಳು ಬಳಕೆಯಾಗುತ್ತವೆ: ಸೊಲ್ಲರಿಮೆಗೆ ಸಂಬಂದಿಸಿರುವ ಮತ್ತು, ಆದರೆ, ಇಲ್ಲವೇ, ಹಾಗೂ, ಕೆಲವು ಮೊದಲಾದ ಪದಗಳು, ಮತ್ತು ತಿಳಿವನ್ನು ಕೊಡುವ ಪದಗಳು. ಇವುಗಳಲ್ಲಿ ತಿಳಿವನ್ನು ಕೊಡುವ
ಪದಗಳು ಎಶ್ಟಿವೆ ಎಂಬುದರ ಮೇಲೆ ಪದಗಳ ತಿಣ್ಮೆ ಅವಲಂಬಿಸಿದೆ. ಇದು ಹೆಚ್ಚಿದ್ದಶ್ಟೂ ಒಂದು ಬರಹವನ್ನು ಓದಿ ತಿಳಿದುಕೊಳ್ಳುವ ಕೆಲಸ ಹೆಚ್ಚು ತೊಡಕಿನದಾಗುತ್ತದೆ. ಹೆಚ್ಚು ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಿರುವ ಬರಹಗಳಲ್ಲಿ ಪದಗಳ ತಿಣ್ಮೆಯೂ ಹೆಚ್ಚಿರುತ್ತದೆ.
ಒಂದು ಅರಿಮೆಯ ಬರಹವನ್ನು ಮಂದಿಮೆಚ್ಚುವ (ಜನಪ್ರಿಯ) ಬರಹವಾಗಿ ಇಲ್ಲವೇ ಚಿಕ್ಕ ಮಕ್ಕಳ ಬರಹವಾಗಿ ಬದಲಾಯಿಸಬೇಕಿದ್ದಲ್ಲಿ, ಅದರಲ್ಲಿ ಕಾಣಿಸುವ ಮೇಲಿನ ತೊಡಕುಗಳನ್ನೆಲ್ಲ ಆದಶ್ಟು ಕಡಿಮೆ ಮಾಡಬೇಕಾಗುತ್ತದೆ: ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿಸಿರುವಲ್ಲೆಲ್ಲ ಅವನ್ನು ತಿರುಗಿ ಎಸಕಗಳಾಗಿ ಬದಲಾಯಿಸಬೇಕಾಗುತ್ತದೆ; ಆದಶ್ಟು ಮಟ್ಟಿಗೆ ಅರಿಮೆಯ ಪದಗಳನ್ನು ತೆಗೆದುಹಾಕಿ, ಅವುಗಳ ಬದಲು ವಿವರಣೆಗಳನ್ನು ಕೊಡಬೇಕಾಗುತ್ತದೆ; ಮತ್ತು ಸೊಲ್ಲುಗಳಲ್ಲಿರುವ ಪದಗಳ ತಿಣ್ಮೆಯನ್ನು ಕಡಿಮೆ ಮಾಡಬೇಕಾಗುತ್ತದೆ.
ಇದಲ್ಲದೆ, ಮಂದಿಮೆಚ್ಚುವ ಬರಹಗಳಲ್ಲಿ ಸೊಲ್ಲುಗಳ ನಡುವಿನ ಕೊಂಡಿ ಗಳು ಹೆಚ್ಚು ಸ್ಪಶ್ಟವಾಗಿರಬೇಕು, ಮತ್ತು ಬರಹ ಸುಳುವಾಗಿ ಓದಿಸಿಕೊಂಡು ಹೋಗುವಂತಿರಬೇಕು. ಇದಕ್ಕಾಗಿ, ಹೆಚ್ಚು ತೊಡಕಾಗಿರುವ ಸೊಲ್ಲುಗಳನ್ನೆಲ್ಲ ಬಿಡಿಸಿ ಬರೆಯಬೇಕಾಗುತ್ತದೆ. ಬರಹ ಏನು ಹೇಳುತ್ತದೆ ಎಂಬುದು ಅವುಗಳಲ್ಲಿ ಒಂದೇ ಓದಿನಿಂದ ಗೊತ್ತಾಗುವ ಹಾಗಿರಬೇಕು. ಓದಿದ್ದನ್ನೇ ತಿರುತಿರುಗಿ ಓದಬೇಕಾಗುವಂತಿರಬಾರದು.
4.4.4 ಕನ್ನಡದಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು
ಇವತ್ತು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಉಂಟುಮಾಡುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಮಾರ್ಪುರುಳುಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳು ಓದುಗರಿಗೆ ಇನ್ನಶ್ಟು ತೊಡಕಾಗುವ ಹಾಗೆ ಮಾಡುತ್ತಾರೆ.
ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು
ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ.
ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.
ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕ(ಕ್ರಿಯಾ)ಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರು(ನಾಮ)ಪದದ ಮೂಲಕ ಒಂದು ವಿಶಯವಾಗಿ ಸೂಚಿಸ ಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬು ದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ. ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸ ಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.
ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.
4.4.5 ಕನ್ನಡದ ಕಸುವು
ಸೊಲ್ಲರಿಮೆಯ ಮಾರ್ಪುರುಳುಗಳನ್ನು ಉಂಟುಮಾಡುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಲ್ಲಿ, ಅವನ್ನೇ ಅರಿಮೆಯ ಬರಹಗಳಲ್ಲಿ ಬಳಸಬಹುದು, ಮತ್ತು ಹೀಗೆ ಮಾಡುವ ಮೂಲಕ, ಕನ್ನಡದ ಅರಿಮೆಯ ಬರಹಗಳು ಓದುಗರಿಗೆ ಇವತ್ತಿನ ಬರಹಗಳಶ್ಟು ತೊಡಕಿನವಾಗಿ ಕಾಣಿಸದ ಹಾಗೆ ಮಾಡಬಹುದು.
ಮೇಲೆ 4.4ರಲ್ಲಿ ತಿಳಿಸಿದ ಹಾಗೆ, ಕನ್ನಡದ ಅರಿಮೆಯ ಬರಹಗಳಿಗೆ ಮುಕ್ಯವಾಗಿ ಎರಡು ಬಗೆಯ ಸೊಲ್ಲರಿಮೆಯ ಮಾರ್ಪುರುಳುಗಳು ಬೇಕಾಗುತ್ತವೆ: ಎಸಕಗಳನ್ನು ಮತ್ತು ಪರಿಚೆಗಳನ್ನು ಹೆಸರುಗಳಾಗಿ ಮಾರ್ಪಡಿಸಿರುವವು ಇವುಗಳಲ್ಲಿ ಒಂದು ಬಗೆಯವು ಮತ್ತು ಎಸಕಗಳನ್ನು ಪರಿಚೆಗಳಾಗಿ ಮಾರ್ಪಡಿಸಿರುವವು ಇನ್ನೊಂದು ಬಗೆಯವು.
ಎಸಕ ಪದಗಳನ್ನು ಹೆಸರು ಪದಗಳಾಗಿ ಮಾರ್ಪಡಿಸಲು ಕನ್ನಡದಲ್ಲಿ ಮುಕ್ಯವಾಗಿ ಎರಡು ಹೊಲಬು(ವಿದಾನ)ಗಳು ಬಳಕೆಯಾಗುತ್ತವೆ: ಉದು ಒಟ್ಟನ್ನು ಎಸಕ ಪದಗಳ ಪತ್ತುಗೆ(ಸಂಬಂದ)ರೂಪಕ್ಕೆ ಸೇರಿಸಿ ಹೇಳುವುದು (ಮಾಡುವುದು, ತಿಂದುದು, ಹೇಳದುದು), ಮತ್ತು ಎಸಕ ಪದಕ್ಕೆ ನೇರವಾಗಿ ಇಕೆ ಒಟ್ಟನ್ನು ಸೇರಿಸಿ ಹೇಳುವುದು (ಮಾಡುವಿಕೆ, ತಿನ್ನುವಿಕೆ).
ಕನ್ನಡದ ಎಸಕ ಪದಗಳಿಗೆ ಹಿಂಬೊತ್ತಿನ ರೂಪ (ಮಾಡಿದ, ಸಾಕಿದ, ಸುತ್ತಿದ, ಹುಟ್ಟಿದ), ಮುಂಬೊತ್ತಿನ ರೂಪ (ಮಾಡುವ, ಸಾಕುವ, ಸುತ್ತುವ, ಹುಟ್ಟುವ) ಮತ್ತು ಅಲ್ಲಗಳೆಯುವ ರೂಪ (ಮಾಡದ, ಸಾಕದ, ಸುತ್ತದ, ಹುಟ್ಟದ) ಎಂಬುದಾಗಿ ಮೂರು ಬಗೆಯ ಪತ್ತುಗೆ ರೂಪಗಳಿವೆ. ಈ ಮೂರು ಬಗೆಯ ರೂಪಗಳಿಗೂ ಉದು ಒಟ್ಟನ್ನು ಸೇರಿಸಿ ಹೆಸರು ಪದಗಳನ್ನು ಉಂಟುಮಾಡಬಹುದು.
(3l)
ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆದುದನ್ನು ಗಮನಿಸಲಾಯಿತು. ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯುವುದನ್ನು ಗಮನಿಸಲಾಯಿತು. ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯದುದನ್ನು ಗಮನಿಸಲಾಯಿತು.
ಅಲ್ಲಗಳೆಯುವ ಪತ್ತುಗೆ ರೂಪಕ್ಕೆ ಹಿಂಬೊತ್ತಿನ ಹುರುಳು ಮಾತ್ರ ಇದೆ. ಮುಂಬೊತ್ತಿನ ಹುರುಳನ್ನು ಪಡೆಯಬೇಕಿದ್ದಲ್ಲಿ, ಅದಕ್ಕೆ ಇರುವ ಎಂಬ ಇರು ಎಸಕಪದದ ಮುಂಬೊತ್ತಿನ ಪತ್ತುಗೆ ರೂಪವನ್ನು ಸೇರಿಸಿಕೊಳ್ಳಬೇಕಾಗುತ್ತದೆ.
ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯದಿರುವುದನ್ನು ಗಮನಿಸಬೇಕು.
ಉದು ಒಟ್ಟನ್ನು ಬಳಸಿ ರಚಿಸಿರುವ ಇಂತಹ ಹೆಸರು ಪದಗಳಲ್ಲಿ ಕೆಲವು ಎರಡು ಹುರುಳುಗಳಲ್ಲಿ ಬಳಕೆಯಾಗಬಲ್ಲುವು. ಅವು ನೇರವಾಗಿ ಎಸಕ ವೊಂದನ್ನು ಹೆಸರಿಸಬಲ್ಲುವು, ಇಲ್ಲವೇ ಎಸಕವೊಂದು ನಡೆಯುವುದನ್ನು ತಿಳಿಸಬಲ್ಲುವು. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು.
(4)
ನಿಮ್ಮ ಕೂಟದಲ್ಲಿ ಜಾನಕಿ ಹಾಡಿದುದನ್ನು ನಾನು ಕೇಳಿದ್ದೇನೆ.
(4)ನೇ ಸೊಲ್ಲಿನಲ್ಲಿ ನಾನು ಕೇಳಿರುವುದು ಜಾನಕಿಯ ಹಾಡುವಿಕೆಯನ್ನಾಗಿರ ಬಹುದು ಇಲ್ಲವೇ ಹಾಡಿದ್ದಾಳೆಂಬ ಸಂಗತಿಯನ್ನು ಮಾತ್ರವೇ ಆಗಿರಬಹುದು. ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿಸುವಾಗ ಇಪ್ಪುರುಳು ಕಾಣಿಸಿಕೊಳ್ಳದ ಹಾಗೆ ಮಾಡಬೇಕಿದ್ದಲ್ಲಿ, ಅದಕ್ಕಾಗಿ ಎರಡನೇ ಹೊಲಬನ್ನು ಬಳಸಬಹುದು. ಈ ಹೊಲಬಿನಲ್ಲಿ ಎಸಕ ಪದಕ್ಕೆ ನೇರವಾಗಿ ಇಕೆ ಒಟ್ಟನ್ನು ಸೇರಿಸಲಾಗುತ್ತದೆ.
(5)
ಜಾನಕಿಯ ಹಾಡುವಿಕೆಯನ್ನು ನಾನು ಕೇಳಿದ್ದೇನೆ.
(5)ನೇ ಸೊಲ್ಲಿನಲ್ಲಿ ಬಂದಿರುವ ಹಾಡುವಿಕೆ ಎಂಬ ಹೆಸರುಪದಕಂತೆಗೆ ಎಸಕವನ್ನು ತಿಳಿಸುವ ಹುರುಳಿದೆಯಲ್ಲದೆ, ಆ ಎಸಕ ನಡೆದಿದೆ ಎಂಬ ಸಂಗತಿ ಯನ್ನು ತಿಳಿಸುವ ಹುರುಳಿಲ್ಲ.
ಉದು ಮತ್ತು ಇಕೆ ಒಟ್ಟುಗಳನ್ನು ಬಳಸಿ ಪಡೆದ ಹೆಸರುಗಳ ನಡುವೆ ಬೇರೆಯೂ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಉದು ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಸೊಲ್ಲುಗಳ ಹೆಚ್ಚಿನ ಪರಿಚೆಗಳೂ ಹಾಗೆಯೇ ಉಳಿದಿರುತ್ತವೆ. ಇದಕ್ಕೆ ಬದಲು, ಇಕೆ ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಅವು ಹೆಚ್ಚಿನ ಮಟ್ಟಿಗೆ ಇಲ್ಲವಾಗುತ್ತವೆ.
ಎತ್ತುಗೆಗಾಗಿ, ಉದು ಒಟ್ಟನ್ನು ಬಳಸಿದಾಗ ಸೊಲ್ಲುಗಳಲ್ಲಿರುವ ಎಸಕ ಪರಿಚೆಗಳು ಬದಲಾಗದೆ ಹಾಗೆಯೇ ಉಳಿಯುತ್ತವೆ; ಆದರೆ, ಇಕೆ ಒಟ್ಟನ್ನು ಬಳಸಿದಾಗ ಅವು ಹೆಸರು ಪರಿಚೆಗಳಾಗಿ ಬದಲಾಗುತ್ತವೆ.
ಜಾನಕಿ ನಿನ್ನೆ ಹಾಡಿದ್ದಳು.
(6ಚ) ಜಾನಕಿ ನಿನ್ನೆ ಹಾಡಿದುದನ್ನು ನಾನು ಕೇಳಿದ್ದೆ. (6ಟ) ಜಾನಕಿಯ ನಿನ್ನಿನ ಹಾಡುವಿಕೆಯನ್ನು ನಾನು ಕೇಳಿದ್ದೆ.
(6ಕ) ಸೊಲ್ಲಿನಲ್ಲಿ ಬಂದಿದ್ದ ಜಾನಕಿ ಮತ್ತು ನಿನ್ನೆ ಪದಗಳು (6ಚ)ದಲ್ಲಿ ಬದಲಾಗದೆ ಹಾಗೆಯೇ ಉಳಿದಿವೆ, ಆದರೆ (6ಟ)ದಲ್ಲಿ ಅವು ಜಾನಕಿಯ ಮತ್ತು ನಿನ್ನಿನ ಎಂಬುದಾಗಿ ಬದಲಾಗಿವೆ.
ಇದಲ್ಲದೆ, ಉದು ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಮುಂಬೊತ್ತು ಮತ್ತು ಹಿಂಬೊತ್ತುಗಳ ನಡುವಿನ ವ್ಯತ್ಯಾಸ ಉಳಿದಿರುತ್ತದೆ (ಹಾಡುವುದು- ಹಾಡಿದುದು); ಆದರೆ, ಇಕೆ ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಈ ವ್ಯತ್ಯಾಸ ಇಲ್ಲವಾಗುತ್ತದೆ (ನಿನ್ನಿನ ಹಾಡುವಿಕೆ-ನಾಳೆಯ ಹಾಡುವಿಕೆ).
ಸೊಲ್ಲುಗಳಲ್ಲಿ ಕಾಣಿಸುವ ಅಲ್ಲಗಳೆಯುವ ಹುರುಳನ್ನು ಮಾತ್ರ ಇಕೆ ಒಟ್ಟಿರುವ ಹೆಸರುಗಳಲ್ಲೂ ಉಳಿಸಲು ಬರುತ್ತದೆ (ಹಾಡುವಿಕೆ-ಹಾಡದಿಕೆ; ಮಾಡುವಿಕೆ-ಮಾಡದಿಕೆ). ಆದರೆ, ಇಕೆ ಒಟ್ಟನ್ನು ಬಳಸಿ ಅಲ್ಲಗಳೆಯುವ ಹೆಸರನ್ನು ಉಂಟುಮಾಡುವ ಈ ಹೊಲಬು ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಅರಿಮೆಯ ಬರಹಗಳಲ್ಲಿ ಇವನ್ನು ಇನ್ನಶ್ಟು ಹೆಚ್ಚು ಬಳಕೆಗೆ ತರುವುದರಲ್ಲಿ ಯಾವ ತೊಂದರೆಯೂ ಇಲ್ಲ.
ಎಸಕ ಪದಗಳಿಗೆ ಮುಂಬೊತ್ತನ್ನು ಸೂಚಿಸುವ ದ್ ಒಟ್ಟನ್ನು, ಹಿಂಬೊತ್ತನ್ನು ಸೂಚಿಸುವ ವ್ ಒಟ್ಟನ್ನು, ಇಲ್ಲವೇ ಅಲ್ಲಗಳೆಯುವ ಅದ್ ಒಟ್ಟನ್ನು, ಮತ್ತು ಅದರೊಂದಿಗೆ ಪತ್ತುಗೆಯನ್ನು ಸೂಚಿಸುವ ಅ ಒಟ್ಟನ್ನು ಸೇರಿಸಿ ಪರಿಚೆಯನ್ನು ತಿಳಿಸುವ ಪದಗಳನ್ನಾಗಿ ಮಾರ್ಪಡಿಸಲಾಗುತ್ತದೆ (ಮಾಡುವ, ಮಾಡಿದ, ಮಾಡದ; ಬರೆವ, ಬರೆದ, ಬರೆಯದ; ಕುಡಿವ, ಕುಡಿದ, ಕುಡಿಯದ, ತಿನ್ನುವ, ತಿಂದ, ತಿನ್ನದ).
ಈ ರೀತಿ ಮಾರ್ಪಡಿಸಿರುವ ಎಸಕ ಪದವನ್ನು ಯಾವುದಾದರೊಂದು ಹೆಸರು ಪದದ ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ (ಓಡುವ ಹುಡುಗ, ಬರೆದ ಹುಡುಗ, ಕುಡಿಯದ ಹುಡುಗ).
ಇದೇ ಹೊಲಬನ್ನು (ವಿದಾನವನ್ನು ಬಳಸಿ ಎಸಕವನ್ನು ತಿಳಿಸುವ ಸೊಲ್ಲನ್ನೂ ಬೇರೊಂದು ಹೆಸರು ಪದದ ಪರಿಚೆಯನ್ನಾಗಿ ಮಾಡಬಲ್ಲೆವು; ಇಂತಹ ಬಳಕೆ ಯನ್ನೂ ಸೊಲ್ಲರಿಮೆಯ ಮಾರ್ಪುರುಳೆಂದು ಕರೆಯಬಹುದು.
(7ಕ) ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ. (7ಚ) ಈ ಹುಟ್ಟಿಸುವ ಕೆಲಸ ಹಲವು ಬಗೆಯಲ್ಲಿ ನಡೆಯುತ್ತದೆ. (7ಟ) ಈ ರೋಗ ಬಾರದ ಮಕ್ಕಳಲ್ಲಿ ಅದನ್ನು ಎದುರಿಸುವ ಶಕ್ತಿ
ಇರುವುದಿಲ್ಲ.
(7ತ) ಇದು ಕಬ್ಬಿಣದ ಚೂರುಗಳನ್ನು ಸೆಳೆಯದ ಉಕ್ಕು.
ಈ ಸೊಲ್ಲರಿಮೆಯ ಮಾರ್ಪುರುಳುಗಳು ಇನ್ನಶ್ಟು ಅಡಕವಾಗಬೇಕಿದ್ದಲ್ಲಿ, ಅದಕ್ಕಾಗಿ ಮೇಲೆ ವಿವರಿಸಿರುವಂತಹ ಎಸಕಪದರೂಪಗಳನ್ನು ಬಳಸುವ ಬದಲು ಹೆಸರುಪದಗಳನ್ನು ಬಳಸಬಹುದು. ಎತ್ತುಗೆಗಾಗಿ, ಬೇಡು ಎಂಬ ಎಸಕ ಪದಕ್ಕೆ ಬದಲಾಗಿ ಬೇಡುವಿಕೆ ಎಂಬ ಎಸಕಪದರೂಪವನ್ನು ಬಳಸುವ ಬದಲು ಬೇಡಿಕೆ ಎಂಬುದನ್ನು ಬಳಸಬಹುದು. ಇದಕ್ಕೆ ಬೇಕಾಗುವ ಒಟ್ಟುಗಳು ಕನ್ನಡದಲ್ಲಿ ಸಾಕಶ್ಟು ಇವೆ.
4.5 ಸಿಕ್ಕಲು ಸೊಲ್ಲುಗಳು
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಬರುವ ಸೊಲ್ಲುಗಳಲ್ಲಿ ಹೆಚ್ಚಿನವೂ ಸಿಕ್ಕಲು ಸೊಲ್ಲುಗಳಾಗಿರುವುದು ಇನ್ನೊಂದು ಕಾರಣ. ಸುಳು ಸೊಲ್ಲುಗಳಲ್ಲಿ ಒಂದು ವಿಶಯವನ್ನು ಮಾತ್ರ ತಿಳಿಸಲಾಗುತ್ತದೆಯಾದರೆ, ಸಿಕ್ಕಲು ಸೊಲ್ಲುಗಳಲ್ಲಿ ಒಂದಕ್ಕಿಂತ ಹೆಚ್ಚು ವಿಶಯಗಳನ್ನು ತಿಳಿಸಲಾಗುತ್ತದೆ. ಈ ಹೆಚ್ಚಿನ ವಿಶಯಗಳನ್ನು ಒಳಸೊಲ್ಲುಗಳ ಮೂಲಕ ತಿಳಿಸಿರುವ ಕಾರಣ, ಅವು ಸಿಕ್ಕಲು ಸೊಲ್ಲುಗಳಾಗುತ್ತವೆ. ಇಂತಹ ಸೊಲ್ಲುಗಳಿರುವ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಹೆಚ್ಚು ತೊಡಕಿನ ಕೆಲಸವೆಂದು ಓದುಗರಿಗೆ ಅನಿಸು
ಎತ್ತುಗೆಗಾಗಿ, ಎನ್.ಎಸ್. ಲೀಲಾ ಅವರು ಮಕ್ಕಳಿಗಾಗಿ ಬರೆದಿರುವ ಜೀವಜಗತ್ತಿನ ಕವ್ತುಕಗಳು ಪುಸ್ತಕದಲ್ಲಿ ಬಂದಿರುವ ಕೆಳಗಿನ ಸೊಲ್ಲನ್ನು ಗಮನಿಸಬಹುದು:
ಕೀಟಗಳು, ಕಾಳುಗಳು ಅತಿ ಹೆಚ್ಚಿನ ಪ್ರೀಟೀನ್ ಹೊಂದಿರುವುದರಿಂದ ಶೀಘ್ರವಾಗಿ ಬೆಳೆಯುವ ಕಂದಮ್ಮಗಳಿಗೆ ಸುಲಭದಲ್ಲಿ ಜೀರ್ಣಿಸಿಕೊಳ್ಳ ಬಹುದಾದ ಮೃದುವಾದ ಹುಳು-ಹುಪ್ಪಟೆಗಳನ್ನೇ ತಾಯಿ ಗುಬ್ಬಚ್ಚಿ ಮರಿಗಳಿಗೆ ನೀಡುವುದು.
ಇದೊಂದು ಸಿಕ್ಕಲು ಸೊಲ್ಲು. ಇದರಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು
ಸುಳುಸೊಲ್ಲುಗಳು ಬಳಕೆಯಾಗಿವೆ:
(l)
ಕೀಟಗಳು (ಮತ್ತು) ಕಾಳುಗಳು ಅತಿ ಹೆಚ್ಚಿನ ಪ್ರೀಟೀನ್ ಹೊಂದಿವೆ. ಕಂದಮ್ಮಗಳು ಶೀಘ್ರವಾಗಿ ಬೆಳೆಯುತ್ತವೆ. ಮೃದುವಾದ ಹುಳು-ಹುಪ್ಪಟೆಗಳನ್ನು ಸುಲಭದಲ್ಲಿ ಜೀರ್ಣಿಸಿ ಕೊಳ್ಳಬಹುದು. (ಅವನ್ನೇ) ತಾಯಿ ಗುಬ್ಬಚ್ಚಿ ಮರಿಗಳಿಗೆ ನೀಡುವುದು.
ಇವುಗಳಲ್ಲಿ ನಾಲ್ಕನೆಯದು ಮುಕ್ಯ ಸೊಲ್ಲಾಗಿ, ಮತ್ತು ಉಳಿದ ಮೂರು ಒಳಸೊಲ್ಲುಗಳಾಗಿ ಮೇಲಿನ ಎತ್ತುಗೆಯಲ್ಲಿ ಬಳಕೆಯಾಗಿವೆ. ಈ ಸಿಕ್ಕಲು ಸೊಲ್ಲನ್ನು ಓದಿ ತಿಳಿಯಬೇಕೆಂದಿರುವವರಿಗೆ ಅದರಲ್ಲಿ ಬರುವ ಈ ನಾಲ್ಕು ಸುಳುಸೊಲ್ಲುಗಳನ್ನು ಬೇರ್ಪಡಿಸುವುದು ಹೇಗೆ ಎಂಬುದು ತಿಳಿದಿರಬೇಕು, ಮತ್ತು ಅವುಗಳಲ್ಲಿ ಮುಕ್ಯ ಸೊಲ್ಲು ಯಾವುದು (ನಾಲ್ಕನೆಯದು), ಒಳಸೊಲ್ಲುಗಳು ಯಾವುವು, ಅವುಗಳ ನಡುವಿನ ಪತ್ತುಗೆ(ಸಂಬಂದ) ಎಂತಹದು ಎಂಬುದನ್ನು ತಿಳಿದುಕೊಳ್ಳಲು ಗೊತ್ತಿರಬೇಕು. ಇದಲ್ಲದೆ, ಈ ಸಿಕ್ಕಲು ಸೊಲ್ಲಿನಲ್ಲಿ ಒಳ ಸೊಲ್ಲುಗಳು ತಿಳಿಸುವ ವಿಶಯಗಳು ಮುಕ್ಯವಾದುವಲ್ಲ, ಮುಕ್ಯ ಸೊಲ್ಲು ತಿಳಿಸುವ ವಿಶಯವೇ ಮುಕ್ಯವಾದುದು ಎಂಬುದನ್ನು ಓದುತ್ತಿರುವಂತೆ ಊಹಿಸಿ ಕೊಳ್ಳಲು ತಿಳಿದಿರಬೇಕು.
ಒಳಸೊಲ್ಲುಗಳಲ್ಲಿ ಇಪ್ಪುರುಳಿನ ಸಮಸ್ಯೆಯೂ ಹೆಚ್ಚು ಕಾಣಿಸಿಕೊಳ್ಳುತ್ತದೆ. ಓದುತ್ತಿರುವ ಹಾಗೆ, ಈ ಸಮಸ್ಯೆಯನ್ನೂ ಓದುಗರು ಬಗೆಹರಿಸಿಕೊಳ್ಳ ಬೇಕಾಗುತ್ತದೆ. ಇದಕ್ಕಾಗಿ ಕೆಲವೊಮ್ಮೆ ಸೊಲ್ಲುಗಳನ್ನು ಎರಡೆರಡು ಬಾರಿ ಓದಿನೋಡಬೇಕಾಗುತ್ತದೆ. ಹಾಗಾಗಿ, ಅರಿಮೆಯ ಬರಹಗಳು ಬೇರೆ ಬರಹಗಳ ಹಾಗೆ ಸುಳುವಾಗಿ ಓದಿಸಿಕೊಂಡು ಹೋಗುವುದಿಲ್ಲ.
ಆದರೆ, ಸಿಕ್ಕಲು ಸೊಲ್ಲುಗಳ ಮೂಲಕ ತಿಳಿಸಬೇಕೆಂದಿರುವ ವಿಶಯಗಳನ್ನು ಹೆಚ್ಚು ಅಡಕವಾಗಿ ತಿಳಿಸಲು ಬರುತ್ತದೆ, ಮತ್ತು ಅವುಗಳಲ್ಲಿ ಸೇರಿಕೊಂಡಿರುವ ಸುಳುಸೊಲ್ಲುಗಳ ನಡುವಿನ ಪತ್ತುಗೆಯನ್ನೂ ಹೆಚ್ಚು ಚನ್ನಾಗಿ ತೋರಿಸಿಕೊಡಲು ಬರುತ್ತದೆ. ಹಾಗಾಗಿ, ಅರಿಮೆಯ ಬರಹಗಳಲ್ಲಿ ಸುಳುಸೊಲ್ಲುಗಳಿಗಿಂತಲೂ ಸಿಕ್ಕಲು ಸೊಲ್ಲುಗಳೇ ಹೆಚ್ಚು ಬಳಕೆಯಾಗುತ್ತವೆ.
ಆದರೆ, ಅರಿಮೆಯ ಸಂಗತಿಗಳನ್ನು ಮಂದಿಮೆಚ್ಚುವ ಹಾಗೆ, ಇಲ್ಲವೇ ಚಿಕ್ಕ ಮಕ್ಕಳಿಗೆ ತಿಳಿಯುವ ಹಾಗೆ ಬರೆಯಬೇಕೆಂದಿರುವವರು ಆದಶ್ಟು ಮಟ್ಟಿಗೆ ತಮ್ಮ ಬರವಣಿಗೆಯಲ್ಲಿ ಸಿಕ್ಕಲು ಸೊಲ್ಲುಗಳನ್ನು ಬಳಸದಿರಬೇಕು.
4.6 ಬರಹದ ಇಟ್ಟಳ
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಹಲವು ಬಗೆಯ ಬರಹದ ಇಟ್ಟಳಗಳು ಬಳಕೆಯಾಗುತ್ತಿರುವುದೂ ಒಂದು ಕಾರಣ. ಕತೆಗಳಲ್ಲಿ ಸಾಮಾನ್ಯವಾಗಿ ಒಂದು ಬಗೆಯ ಬರಹದ ಇಟ್ಟಳ ಮಾತ್ರ ಬಳಕೆ ಯಾಗುತ್ತದೆ. ಇದು ಹೆಚ್ಚು ಕಡಿಮೆ ಕತೆಯ ಇಟ್ಟಳವನ್ನೇ ಅನುಸರಿಸುತ್ತಿರುತ್ತದೆ. ಆದರೆ, ಅರಿಮೆಯ ಬರಹಗಳಲ್ಲಿ ವರ್ಣನೆ, ಪಟ್ಟಿ, ವರಸೆ(ಅನುಕ್ರಮ), ಹೋಲಿಕೆ ಮತ್ತು ಗೆಂಟು(ವ್ಯತ್ಯಾಸ), ಕಾರಣ ಮತ್ತು ಪರಿಣಾಮ, ತೊಡಕು ಮತ್ತು ಬಗೆಹರಿತ ಮೊದಲಾದ ಹಲವು ಬಗೆಯ ಬರಹದ ಇಟ್ಟಳಗಳು ಬಳಕೆಯಾಗುತ್ತವೆ. ತಾವು ಓದುತ್ತಿರುವ ಅರಿಮೆಯ ಬರಹದಲ್ಲಿ ಎಂತಹ ಬರಹದ ಇಟ್ಟಳ ಬಳಕೆಯಾಗಿದೆ ಎಂಬುದನ್ನು ಕಂಡುಹಿಡಿಯಲು ಕಲಿಸಿ ಕೊಡದಿದ್ದರೆ ಹೆಚ್ಚಿನ ಮಕ್ಕಳಿಗೂ ಅದನ್ನು ಕಂಡುಕೊಳ್ಳಲು ಬರುವುದಿಲ್ಲ, ಮತ್ತು ಇದರಿಂದಾಗಿ ಅವರು ಓದಿನಲ್ಲಿ ಹಿಂದೆ ಬೀಳುತ್ತಾರೆ.
4.7 ಮಂದಿ ಮೆಚ್ಚುವಂತೆ ಬರೆಯುವುದು
ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯುವುದು ಹೇಗೆ ಎಂಬುದು ಮೇಲಿನ ಪರಿಶೀಲನೆಯಿಂದ ಗೊತ್ತಾಗಿರಬಹುದು. ಬರಹಗಾರರು ಇದಕ್ಕಾಗಿ ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ:
(1) ಆದಶ್ಟು ಮಟ್ಟಿಗೆ ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು
ಕಡಿಮೆ ಮಾಡಬೇಕು.
(2) ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸದಿರಬೇಕು; ಹೆಸರು
ಪದಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು.
(3) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು. (4) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟುಮಟ್ಟಿಗೆ ಕನ್ನಡದವೇ
ಆದ ಪದಗಳನ್ನು ಬಳಸಬೇಕು.
ಶಿವರಾಮ ಕಾರಂತರ ಬಾಲಪ್ರಪಂಚವನ್ನು ಓದಿನೋಡಿ, ಅದರಲ್ಲಿ ಹೇಗೆ ಚಿಕ್ಕಮಕ್ಕಳಿಗೂ ಗೊತ್ತಾಗುವ ಹಾಗೆ ಅರಿಮೆಯ ವಿಶಯಗಳನ್ನು ತಿಳಿಸಲಾಗಿದೆ ಎಂಬುದನ್ನು ಗಮನಿಸಬೇಕು. ಆದರೆ, ಇವೆಲ್ಲವನ್ನೂ ನಡೆಸಲು ಬರಹಗಾರರಿಗೆ ಸ್ವಲ್ಪ ಮಟ್ಟಿಗಾದರೂ ಕನ್ನಡ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
4.8 ತಿರುಳು
ಅರಿಮೆಯ ಬರಹಗಳು ಓದಲು ತೊಡಕಿನವಾಗಿ ಕಾಣಿಸಲು ಹಲವು ಕಾರಣ ಗಳಿವೆ: ಎತ್ತುಗೆಗಾಗಿ, ಅವುಗಳಲ್ಲಿ ಹಲವಾರು ಅರಿಮೆಯ ಪದಗಳನ್ನು ಬಳಸ ಬೇಕಾಗುತ್ತದೆ; ಎಸಕಗಳನ್ನು ತಿಳಿಸುವ ಸೊಲ್ಲುಗಳನ್ನು ಆಗಾಗ ಹೆಸರುಗಳಾಗಿ ಮಾರ್ಪಡಿಸಿಕೊಳ್ಳಬೇಕಾಗುತ್ತದೆ; ಹೆಚ್ಚು ಹೆಚ್ಚು ಸಿಕ್ಕಲು ಸೊಲ್ಲುಗಳನ್ನು ಬಳಸ ಬೇಕಾಗುತ್ತದೆ; ಮತ್ತು ಹಲವು ಬಗೆಯ ಬರಹದ ಇಟ್ಟಳಗಳನ್ನು ಬಳಸ ಬೇಕಾಗುತ್ತದೆ. ಇವನ್ನು ನಾವು ತಪ್ಪಿಸಲಾರೆವು.
ಅರಿಮೆಯ ಬರಹಗಳನ್ನು ಓದಿ ತಿಳಿಯಬೇಕೆಂದಿರುವವರು ಅವುಗಳಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು, ಸೊಲ್ಲರಿಮೆಯ ಮಾರ್ಪುರುಳುಗಳನ್ನು, ಸಿಕ್ಕಲು ಸೊಲ್ಲುಗಳನ್ನು, ಮತ್ತು ಬರಹದ ಇಟ್ಟಳಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಕಲಿಯಬೇಕಾಗುತ್ತದೆ. ಈ ಕಲಿಕೆಯನ್ನು ನಡೆಸುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಕನ್ನಡದ ಅರಿಮೆಯ ಬರಹಗಳು ಬೇರೆ ಕೆಲವು ಕಾರಣಗಳಿಂದಾಗಿ ಇನ್ನಶ್ಟು ತೊಡಕಿನವಾಗಿವೆ: ಇಂಗ್ಲಿಶ್ ಅರಿಮೆಯ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡುವ ಬದಲು ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುವುದು, ಮತ್ತು ಕನ್ನಡದ ಮಾರ್ಪುರುಳುಗಳನ್ನು ಬಳಸುವ ಬದಲು ಸಂಸ್ಕ್ರುತದಿಂದ ಪದರೂಪಗಳನ್ನು ಎರವಲಾಗಿ ಪಡೆದು ಬಳಸುವುದು ಇವುಗಳಲ್ಲಿ ಮುಕ್ಯವಾದವುಗಳು. ಕನ್ನಡದ ಸೊಲ್ಲರಿಮೆಯ ತಿಳಿವಿಲ್ಲದೆ ಈ ತಪ್ಪುಗಳನ್ನು ಮಾಡಲಾಗುತ್ತಿದೆ.
ಅಯ್ದನೇ ಪಸುಗೆ — ನಲ್ಬರಹಗಳು ಮತ್ತು ಸೊಲ್ಲರಿಮೆ
5.1 ಮುನ್ನೋಟ
ಕತೆ, ಕವಿತೆ, ನಾಟಕ, ಕಾದಂಬರಿ ಮೊದಲಾದ ನಲ್ಬರಹಗಳನ್ನು ಬರೆಯು ವವರಿಗೆ, ಮತ್ತು ಅವನ್ನು ಓದಿ ವಿಮರ್ಶಿಸುವವರಿಗೆ ಕನ್ನಡ ನುಡಿಯ ಸೊಲ್ಲರಿಮೆ ಯನ್ನು ತಿಳಿಯುವುದರಿಂದ ಯಾವ ರೀತಿಯಲ್ಲಿ ನೆರವು ಸಿಗಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ. ತಮ್ಮ ಕೆಲಸಕ್ಕೆ ಅದರಿಂದ ಯಾವ ನೆರವೂ ಸಿಗಲಾರದೆಂಬ ಅನಿಸಿಕೆ ಅಂತಹ ಹಲವು ಮಂದಿ ಬರಹಗಾರ ರಲ್ಲಿ ಮತ್ತು ವಿಮರ್ಶಕರಲ್ಲಿದೆ.
ಇದಲ್ಲದೆ, ಇನ್ನೂ ಒಂದು ಅನಿಸಿಕೆಯೂ ಕೆಲವರು ನಲ್ಬರಹಗಾರರಲ್ಲಿದೆ: ಸೊಲ್ಲರಿಮೆ ಒಂದು ಒಣ ವಿಶಯ; ನಲ್ಬರಹ (ಸಾಹಿತ್ಯ) ಅದಕ್ಕೆ ತೀರ ಬೇರಾಗಿರುವಂತಹದು. ನಗು, ಅಳಲು, ಹೆದರಿಕೆ, ಬೆರಗು ಮೊದಲಾದ ಹಲವು ಬಗೆಯ ಅನಿಸಿಕೆಗಳನ್ನು ಬಳಸಿಕೊಂಡು, ಅದು ಓದುಗರಿಗೆ ಮನೋರಂಜನೆ ಯನ್ನು ಒದಗಿಸಬೇಕು, ಮತ್ತು ಆ ಮೂಲಕ ತಿಳಿವನ್ನೂ ಕೊಡಬೇಕು. ಹಾಗಾಗಿ, ನಲ್ಬರಹಗಳನ್ನು ಬರೆಯಬೇಕೆಂದಿರುವವರ ಮೇಲೆ ಸೊಲ್ಲರಿಮೆಯಂತಹ ಒಣವಿಶಯವನ್ನು ಹೊರಿಸಿದೆವಾದಲ್ಲಿ, ಅವರಲ್ಲಿರುವ ನೆನಸಿಕೆ(ಕಲ್ಪನೆ)ಯ ಇಲ್ಲವೇ ಉಂಟುಮಾಡುವಿಕೆಯ ಅಳವೇ ಇಲ್ಲವಾಗಬಹುದೆಂಬ ವಾದವನ್ನೂ ಕೆಲವರು ನಮ್ಮ ಮುಂದಿಡುತ್ತಾರೆ.
ಸೊಲ್ಲರಿಮೆಯ ಕಟ್ಟಲೆಗಳು ಹೆಚ್ಚಿನವರಲ್ಲೂ ಎಡಮಿದುಳಿನಲ್ಲಿ (ಮಿದುಳಿನ ಎಡಬಾಗದಲ್ಲಿ) ಒಂದುಗೂಡಿರುತ್ತವೆ ಮತ್ತು ಅಲ್ಲಿಂದಲೇ ಅವುಗಳ ಬಳಕೆ ಯಾಗುತ್ತಿರುತ್ತದೆ. ಬೆಳಕಿನರಿಮೆ, ತಳಿಯರಿಮೆ, ಎಣಿಕೆಯರಿಮೆ ಮೊದಲಾದ ಇತರ ಒಣವಿಶಯಗಳ ತಿಳಿವೂ ಎಡಮಿದುಳಿನಲ್ಲೇನೇ ಕಲೆತಿರುತ್ತದೆ. ಇದಕ್ಕೆ ಬದಲು, ನಲ್ಬರಹಗಳನ್ನು ಹುಟ್ಟಿಸುವ ಕೆಲಸ ಹೆಚ್ಚಿನ ಮಟ್ಟಿಗೆ ಬಲಮಿದುಳಿನಲ್ಲಿ ನಡೆಯುತ್ತದೆ. ಸಂಗೀತ, ಚಿತ್ರಕಲೆ ಮೊದಲಾದ ಬೇರೆ ಹುಟ್ಟಿಸುವ ಕೆಲಸಗಳೂ ಬಲಮಿದುಳಿನಲ್ಲೇನೇ ನಡೆಯುತ್ತವೆ. ನಲ್ಬರಹಗಳ ಬರವಣಿಗೆಗೆ
ನಲ್ಬರಹಗಳು ಮತ್ತು ಸೊಲ್ಲರಿಮೆ
ಸೊಲ್ಲರಿಮೆಯ ತಿಳಿವು ಬೇಡ ಎನ್ನುವುದಕ್ಕೆ ಇದನ್ನೂ ಒಂದು ಕಾರಣವಾಗಿ ಕೊಡಲಾಗುತ್ತದೆ.
ಆದರೆ, ಒಂದು ಮುಕ್ಯ ವಿಶಯದಲ್ಲಿ ಸಂಗೀತ, ಚಿತ್ರಕಲೆ, ಕೆತ್ತನೆ ಮೊದಲಾದ ಬಲಮಿದುಳಿನ ಕೆಲಸಗಳಿಂದ ನಲ್ಬರಹಗಳ ಬರವಣಿಗೆ ಬೇರಾಗಿದೆ. ಎತ್ತುಗೆಗಾಗಿ, ಚಿತ್ರಕಲೆ ಬಲಮಿದುಳಿನಲ್ಲಿ ಮೂಡಿಬಂದು, ಅಲ್ಲಿಂದಲೇ ನೇರವಾಗಿ ಕಾಗದದ ಮೇಲೆ ಹುಟ್ಟಿಸಿಕೊಳ್ಳಬಲ್ಲುದು. ಆದರೆ, ಕತೆ, ಕವಿತೆ ಮೊದಲಾದ ನಲ್ಬರಹಗಳು ಬಲಮಿದುಳಿನಲ್ಲಿ ಮೂಡಿಬಂದರೂ ಎಡಮಿದುಳಿನ ನೆರವಿಲ್ಲದೆ ಅವಕ್ಕೊಂದು ರೂಪ ಸಿಗಲಾರದು. ಯಾಕೆಂದರೆ, ನಲ್ಬರಹಗಳನ್ನು ಯಾವುದಾದರೊಂದು ನುಡಿಯಲ್ಲಿ ಬರೆಯಬೇಕಾಗುತ್ತದೆ, ಮತ್ತು ಇದಕ್ಕಾಗಿ ಎಡಮಿದುಳಿನಲ್ಲಿರುವ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ. ಕೆಲವರು ಹುಟ್ಟುಕವಿಗಳು ಇಲ್ಲವೇ ಕತೆಗಾರರು ಇದನ್ನು ಸುಳುವಾಗಿ, ಯಾವ ಹೆಚ್ಚಿನ ಕಲಿಕೆಯೂ ಇಲ್ಲದೆ ನಡೆಸಬಲ್ಲರೇನೋ ನಿಜ; ಆದರೆ, ಅಂತಹ ಅಳವು ಎಲ್ಲರಲ್ಲೂ ಇರುವುದಿಲ್ಲ. ಮನಸ್ಸಿನಲ್ಲಿ ಒಂದು ಚಂದವಾದ ಕತೆ ಮೂಡಿಬಂದಿದೆಯಾದರೂ, ಅದನ್ನು ಬರಹಕ್ಕಿಳಿಸುವುದಕ್ಕಾಗಿ ಹೆಚ್ಚಿನವರೂ ತುಂಬಾ ಕಶ್ಟಪಡಬೇಕಾಗುತ್ತದೆ.
ಹಲವು ಜನರಿಗೆ ತುಂಬಾ ಸ್ವಾರಸ್ಯವಾದ ವಿಶಯಗಳು ಹೊಳೆಯುತ್ತಿರುತ್ತವೆ; ಆದರೆ, ಅವನ್ನು ಇತರರಿಗೆ ತಿಳಿಯುವ ಹಾಗೆ ಬರೆಯುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಒಳ್ಳೊಳ್ಳೆಯ ಕತೆಗಳು ಅವರ ಮನಸ್ಸಿನಲ್ಲಿ ಮೂಡುತ್ತಿರು ತ್ತವೆ; ಆದರೆ ಓದುಗರನ್ನು ಸೆಳೆಯುವ ಹಾಗೆ ಅವನ್ನು ಬರೆಯಲಾರರು. ಕತೆ, ಕವಿತೆ ಮೊದಲಾದುವನ್ನು ಕಲ್ಪಿಸಿಕೊಳ್ಳುವಶ್ಟೇ ಓದುಗರಿಗೆ ತಲಪುವ ಹಾಗೆ ಅವನ್ನು ಬರೆಯುವುದೂ ಮುಕ್ಯವಾದ ಕೆಲಸವಾಗಿದೆ.
ಈ ಎರಡನೇ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯ ಬೇಕೆಂದಿರುವವರಿಗೆ ಸೊಲ್ಲರಿಮೆಯ ಅರಿವು ಹಲವು ರೀತಿಯಲ್ಲಿ ನೆರವಿಗೆ ಬರಬಲ್ಲುದು. ಎತ್ತುಗೆಗಾಗಿ, ಹಲವು ಮಂದಿ ಬರಹ ಕಲಿಯುವವರು ತಮಗೆ ಮೆಚ್ಚುಗೆಯಾಗಿರುವ ಒಬ್ಬ ಕವಿ ಇಲ್ಲವೇ ಕತೆಗಾರನ ಬರಹವನ್ನು ಅನುಕರಣೆ ಮಾಡಲು ಹೊರಡುತ್ತಾರೆ. ಆದರೆ, ಹಾಗೆ ಮಾಡುವ ಮೂಲಕ, ಅವರಿಗೆ ಉತ್ತಮ ಬರಹಗಾರರಾಗಲು ಬರುವುದಿಲ್ಲ.
ಇದಕ್ಕೆ ಬದಲು, ತಮ್ಮ ಮೆಚ್ಚಿನ ಕತೆಗಳಲ್ಲಿ ಇಲ್ಲವೇ ಕವಿತೆಗಳಲ್ಲಿ ಸೊಲ್ಲರಿಮೆಯ ಕಸುವನ್ನು ಅವುಗಳ ಬರಹಗಾರರು ಯಾವ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂಬುದನ್ನು ಕಂಡುಕೊಂಡು, ಅದನ್ನು ತಮ್ಮ ಬರವಣಿಗೆ
ಯಲ್ಲಿ ಬಳಸಿಕೊಳ್ಳಲು ತೊಡಗಿದಲ್ಲಿ, ಅದು ಬರಿಯ ಅನುಕರಣೆಯಾಗಲಾರದು. ಆದರೆ, ಹೀಗೆ ಮಾಡಬೇಕಿದ್ದಲ್ಲಿ ಅವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗು
ಎರಡನೆಯದಾಗಿ, ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಸಾವಗಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಅವುಗಳಲ್ಲಿ ಬರುವ ಕೆಲವು ಕುರಳು(ಪಾರಾ)ಗಳನ್ನು ಅವರು ಒಂದೆರಡು ಪುಟಗಳಶ್ಟು ಉದ್ದಕ್ಕೂ ಎಳೆಯುತ್ತಿರುತ್ತಾರೆ. ಇದರಿಂದ ಅವನ್ನು ಓದುವವರಿಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದಲ್ಲದೆ, ತಡೆ(,), ಅರೆಕೊನೆ(;), ಅಡ್ಡಗೆರೆ(-) ಮೊದಲಾದ ಬರಹದ ಗುರುತುಗಳನ್ನೂ ಅವರು ಸರಿಯಾಗಿ ಬಳಸುವುದಿಲ್ಲ. ಹಾಗಾಗಿ, ಅವರ ಬರಹಗಳು ಚನ್ನಾಗಿದ್ದರೂ ಹೆಚ್ಚಿನ ಓದುಗರಿಗೂ ತೊಡಕಿನವಾಗಿ ಕಾಣಿಸುತ್ತವೆ.
ಬರಹದ ಗುರುತುಗಳನ್ನು ಸರಿಯಾಗಿ, ಓದುಗರಿಗೆ ನೆರವಾಗುವ ಹಾಗೆ ಬಳಸಬೇಕಿದ್ದಲ್ಲಿ, ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ಹಿಂದೆ ಮೂರನೇ ಪಸುಗೆಯಲ್ಲಿ ತೋರಿಸಿಕೊಡಲಾಗಿದೆ.
ಕಲೆಗಾರರು ಹಲವು ಬಗೆಯ ಬಣ್ಣಗಳನ್ನು ಬಳಸಿ ತಮ್ಮ ಚಿತ್ರಗಳನ್ನು ಬಿಡಿಸುವ ಹಾಗೆ, ನಲ್ಬರಹಗಳನ್ನು ಬರೆಯುವವರು ಸೊಲ್ಲರಿಮೆಯ ಕಟ್ಟಲೆ ಗಳನ್ನು ಬಳಸಿ ತಮ್ಮ ಕತೆ, ಕವಿತೆ, ನಾಟಕ ಮೊದಲಾದುವನ್ನು ಬರೆಯುತ್ತಾರೆ. ಬಣ್ಣಗಳ ಅರಿವು ಕಲೆಗಾರರಿಗೆ ಹೇಗೆ ನೆರವು ನೀಡಬಲ್ಲುದೋ ಹಾಗೆಯೇ ಸೊಲ್ಲುಗಳ ಅರಿವು ನಲ್ಬರಹಗಾರರಿಗೂ ನೆರವು ನೀಡಬಲ್ಲುದು.
5.2 ನಲ್ಬರಹಗಳಲ್ಲಿ ಸೊಲ್ಲುಗಳ ಬಳಕೆ
ಕನ್ನಡದಲ್ಲಿ ಎಂತಹ ಸೊಲ್ಲುಗಳೆಲ್ಲ ಬಳಕೆಯಲ್ಲಿವೆ, ಅವುಗಳ ನಡುವಿನ ವ್ಯತ್ಯಾಸಗಳು ಎಂತಹವು, ಎಂತಹ ಸೊಲ್ಲನ್ನು ಬಳಸಿದಲ್ಲಿ ಎಂತಹ ಹುರುಳು ದೊರಕುತ್ತದೆ ಮತ್ತು ಓದುಗರ ಮೇಲೆ ಅವು ಎಂತಹ ಪರಿಣಾಮವನ್ನು ಬೀರುತ್ತವೆ, ಬಗೆ ಬಗೆಯ ನುಡಿಯೊಡ್ಡವ(ಶಯ್ಲಿ)ಗಳನ್ನು ಹೇಗೆ ಸೊಲ್ಲುಗಳ ಆಯ್ಕೆಯ ಮೂಲಕ ನಮ್ಮ ಹಿಡಿತದಲ್ಲಿರಿಸಿಕೊಳ್ಳಬಹುದು ಮೊದಲಾದ ಹಲವಾರು ಬರಹಗಾರರಿಗೆ ಬೇಕಾಗುವ ವಿಶಯಗಳನ್ನು ಕಲಿತುಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಇಂತಹ ವಿಶಯಗಳನ್ನು ತಿಳಿಯಲು ಒಂದು ಸುಳುವಾದ ಹೊಲಬು (ವಿದಾನ) ಇದೆ: ಒಳ್ಳೇ ಬರಹಗಾರರ ಬರಹಗಳನ್ನು ಹೆಚ್ಚು ಹೆಚ್ಚು ಓದಬೇಕು, ಮತ್ತು ಅವುಗಳಲ್ಲಿ ತುಂಬಾ ಚನ್ನಾಗಿದೆಯೆಂದು ಅನಿಸಿದವುಗಳನ್ನು ಹಲವು ಬಾರಿ ಓದಬೇಕು. ಈ ರೀತಿ ಓದಿದಶ್ಟೂ ಅವುಗಳಲ್ಲಿ ಬಳಕೆಯಾಗುವ ಪದಗಳು, ಪದಕಂತೆಗಳು, ತುಂಡುಸೊಲ್ಲುಗಳು, ಮತ್ತು ನುಡಿಗಟ್ಟುಗಳು ತಾವಾಗಿಯೇ ನಮ್ಮ ನೆನಪಿನಲ್ಲಿ ಸೇರಿಕೊಳ್ಳುತ್ತವೆ, ಮತ್ತು ಬರೆಯುತ್ತಿರುವಾಗ ಅವು ಸುಳು ವಾಗಿ ನಮ್ಮ ಗಮನಕ್ಕೆ ಬರುತ್ತಿರುತ್ತವೆ.
ತಮಗೆ ಮೆಚ್ಚುಗೆಯಾಗಿರುವ ಬರಹಗಳನ್ನು ಮೂರು-ನಾಲ್ಕು ಬಾರಿ ಓದುವವರು ಅವುಗಳಿಂದ ಬೇರೆ ರೀತಿಯಲ್ಲೂ ನೆರವನ್ನು ಪಡೆಯಬಲ್ಲರು. ಮೊದಲನೆಯ ಬಾರಿ ಓದುವಾಗ, ಅವರ ಗಮನವೆಲ್ಲ ಅವು ತಿಳಿಸುವ ವಿಶಯದ ಮೇಲೆ ಇಲ್ಲವೇ ಅವು ಹೇಳುವ ಕತೆಯ ಮೇಲೆ ಇರುತ್ತದೆ. ಆದರೆ ಎರಡನೆಯ ಇಲ್ಲವೇ ಮೂರನೆಯ ಬಾರಿ ಓದುವಾಗ, ಅವುಗಳಲ್ಲಿ ವಿಶಯವನ್ನು ತಿಳಿಸಲು ಇಲ್ಲವೇ ಕತೆಯನ್ನು ಹೇಳಲು ಬರಹಗಾರನು ಎಂತಹ ಹೊಲಬುಗಳನ್ನು ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು. ಈ ರೀತಿ ಗಮನಿಸುತ್ತಾ ಹೋದಲ್ಲಿ, ಕತೆ ಬರೆಯುವಲ್ಲಿ ಬಳಸಬಹುದಾದ ಹಲವು ಬಗೆಯ ಜಾಣ್ಮೆಗಳು ಓದುವವರ ಕಯ್ಸೇರುತ್ತವೆ.
5.2.1 ನಲ್ಬರಹಗಳು ಮತ್ತು ಉಳಿದ ಬರಹಗಳು
ನಲ್ಬರಹಗಳಿಗೂ ಬೇರೆ ಬಗೆಯ ಬರಹಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ. ನಲ್ಬರಹಗಳನ್ನು ಬರೆಯಬೇಕೆಂದಿರುವವರಿಗೆ, ಮತ್ತು ಅವನ್ನು ಓದಿ ಆನಂದಿಸಬೇಕೆಂದಿರು ವವರಿಗೆ ಈ ವ್ಯತ್ಯಾಸಗಳ ತಿಳಿವು ನೆರವಿಗೆ ಬರಬಲ್ಲುದು:
(1) ವಿಶಯವನ್ನು ತಿಳಿಸುವಲ್ಲಿ ವ್ಯತ್ಯಾಸ: ಕಯ್ಪಿಡಿಗಳು, ಅಡಿಗೆಯ ಪುಸ್ತಕಗಳು, ಅರಿಮೆಯ ಬರಹಗಳು ಮೊದಲಾದ ಬೇರೆ ಬಗೆಯ ಬರಹಗಳು ಓದುಗರಿಗೆ ನೇರವಾಗಿ ಯಾವುದಾದರೊಂದು ವಿಶಯವನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಆದರೆ, ನಲ್ಬರಹಗಳು ನೇರವಾಗಿ ಅಂತಹ ಯಾವ ಕೆಲಸಕ್ಕೂ ಬಳಕೆಯಾಗುವುದಿಲ್ಲ. ಓದುಗನನ್ನು ಕಲ್ಪಿತವಾಗಿರುವ ಬೇರೆಯೇ ಒಂದು ನೆಲೆಗೆ ಕರೆದುಕೊಂಡು ಹೋಗಲು, ಮತ್ತು ಆ ಮೂಲಕ ತನ್ನ ನೆಲೆಯ ತೊಂದರೆಗಳನ್ನು ಮತ್ತು ನೋವುಗಳನ್ನು ಆತನು ಮರೆಯುವ ಹಾಗೆ ಮಾಡಲು ಅವನ್ನು ಬಳಸಲಾಗುತ್ತದೆ.
ನಲ್ಬರಹಗಳಲ್ಲಿ ಬರುವುದೆಲ್ಲ ಕಟ್ಟುಕತೆ. ನಿಜಜೀವನದ ಸಂಗತಿಗಳನ್ನು ಅವು ಸೂಚಿಸಬಲ್ಲುವಾದರೂ, ಅವುಗಳಲ್ಲಿ ಬರುವ ಪಾಂಗು(ಪಾತ್ರ)ಗಳು, ಎಸಕಗಳು, ವಿಶಯಗಳು, ಮತ್ತು ಮಾತುಗಳು ಬರಹಗಾರನ ನೆನಸಿಕೆಯಲ್ಲಿ ಹುಟ್ಟಿಕೊಂಡಿರುತ್ತವೆ.
ಈ ಕಲ್ಪಿತವಾದ ನೆಲೆಯನ್ನು ಓದುಗನ ನೆಲೆಯಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಲು ಬಳಸಬಹುದು; ಇಲ್ಲವೇ ಓದುಗನ ನೆಲೆ ನಿಜಕ್ಕೂ ಹೇಗಿರಬೇಕು, ಹೇಗಿರಬಲ್ಲುದು, ಅದನ್ನು ಹೇಗೆ ಬದಲಾಯಿಸಬಲ್ಲೆವು ಎಂಬಂತಹ ಸಂಗತಿಗಳನ್ನು ಸೂಚಿಸುವುದಕ್ಕಾಗಿಯೂ ಬಳಸಬಹುದು. ಈ ನೇರವಲ್ಲದ ಹೊಲಬಿನ (ವಿದಾನದ) ಮೂಲಕ, ಜನರಿಗೆ ದಾರಿಯನ್ನು ತೋರಿಸುವ, ಅವರನ್ನು ಹುರಿದುಂಬಿಸುವ, ಮತ್ತು ಅವರ ಮೇಲೆ ಒತ್ತಡ ಹೇರುವ ಕೆಲಸವನ್ನು ನಡೆಸಲೂ ಅವುಗಳನ್ನು ಬಳಸಬಹುದು.
(2) ಸೊಲ್ಲರಿಮೆಯಲ್ಲಿ ವ್ಯತ್ಯಾಸ: ನಲ್ಬರಹಗಳ ಮೂಲಕ ನೇರವಾಗಿ ಜನರಿಗೆ ನೆರವಾಗುವಂತಹ ಯಾವ ವಿಶಯವನ್ನೂ ತಿಳಿಸುವುದಿಲ್ಲವಾದ ಕಾರಣ, ಓದುಗರನ್ನು ತಮ್ಮೆಡೆಗೆ ಸೆಳೆಯಲು ಅವುಗಳಲ್ಲಿ ಬೇರೆ ಕೆಲವು ಸಂಚುಗಳನ್ನು ಹೂಡಬೇಕಾಗುತ್ತದೆ. ಬರಹದ ಓದೇ ಓದುಗರ ಕುತೂಹಲವನ್ನು ಕೆರಳಿಸುವಂತೆ ಮಾಡುವುದು ಅವುಗಳಲ್ಲಿ ಬಳಕೆಯಾಗುವ ಇಂತಹ ಒಂದು ಸಂಚಾಗಿದೆ.
ಮಾರ್ಪುರುಳಿನ ಪದ, ಹೋಲಿಕೆಯ ಪದ, ಕಟಕಿ ನುಡಿ (ವ್ಯಂಗ್ಯ) ಮೊದಲಾ ದವುಗಳನ್ನು ಇತರ ಬರಹಗಳಿಗಿಂತ ನಲ್ಬರಹಗಳಲ್ಲಿ ಹೆಚ್ಚು ಬಳಸಲಾಗುತ್ತದೆ; ಪದಗಳ ಓರಣವನ್ನು ಬದಲಾಯಿಸುವುದು, ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯುವುದು ಮೊದಲಾದುವನ್ನೂ ಅವುಗಳಲ್ಲಿ ಹೆಚ್ಚು ನಡೆಸಲಾಗುತ್ತದೆ. ಇವು ಓದುಗರಿಗೆ ಬರಹದಲ್ಲಿ ಹೆಚ್ಚಿನ ಕುತೂಹಲವುಂಟಾಗುವಂತೆ ಮಾಡುತ್ತವೆ. ಎತ್ತುಗೆಗಾಗಿ, ಕವಿತೆಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯಲಾಗುತ್ತದೆ. ಬೇರೆ ಬಗೆಯ ಬರಹಗಳಲ್ಲಿ ಬಾರದಿರುವಂತಹ ತುಂಡುಸೊಲ್ಲುಗಳು ಕವಿತೆಗಳಲ್ಲಿ ಬರಬಲ್ಲುವು. ಸೊಲ್ಲುಗಳಲ್ಲಿ ಬರುವ ಪದ ಇಲ್ಲವೇ ಪದಕಂತೆಗಳ ಓರಣವನ್ನೂ ಅವುಗಳಲ್ಲಿ ಬದಲಾಯಿಸಿಕೊಳ್ಳ ಲಾಗುತ್ತದೆ. ಬೇರೆ ಬರಹಗಳಲ್ಲಿ ಸೊಲ್ಲುಗಳ ಒಳಗೆ ಇಲ್ಲವೇ ಕೊನೆಯಲ್ಲಿ ಬಳಸಬೇಕಾಗಿರುವ ಬರಹದ ಗುರುತುಗಳನ್ನು ಕವಿತೆಗಳಲ್ಲಿ ಬಳಸುವುದಿಲ್ಲ. ಆದರೆ, ಎಲ್ಲಾ ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನೂ ಮುರಿಯಲು ಬರುವುದಿಲ್ಲ. ಈ ವಿಶಯದಲ್ಲಿ ಬರಹಗಾರರು ಎಶ್ಟರ ಮಟ್ಟಿಗೆ ಮುಂದುವರಿಯ
ಬಲ್ಲರು ಎಂಬುದನ್ನು ಕಂಡುಕೊಳ್ಳಬೇಕಿದ್ದಲ್ಲಿ, ಮೊದಲಿಗೆ ಒಳ್ಳೇ ನಲ್ಬರಹ ಗಳಲ್ಲಿ ಎಂತಹ ಕಟ್ಟಲೆಗಳನ್ನು ಮುರಿಯಲಾಗಿದೆ, ಮತ್ತು ಹಾಗೆ ಮುರಿಯುವ ಮೂಲಕ ಓದುಗರ ಮೇಲೆ ಎಂತಹ ಪರಿಣಾಮಗಳನ್ನು ಬೀರಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಈ ಕೆಲಸವನ್ನು ನಡೆಸ ಬೇಕಿದ್ದಲ್ಲಿ, ಸೊಲ್ಲರಿಮೆಯ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿದಿರ ಬೇಕಾಗುತ್ತದೆ.
ನಲ್ಬರಹಗಳಲ್ಲಿ ಆಗಾಗ ಬಳಕೆಯಾಗುತ್ತಿರುವ ಮಾರ್ಪುರುಳು (ರೂಪಕ) ಮತ್ತು ಹೋಲಿಕೆ(ಉಪಮಾನ)ಗಳ ನಡುವಿನ ವ್ಯತ್ಯಾಸವೂ ಸೊಲ್ಲರಿಮೆಯ ವ್ಯತ್ಯಾಸವನ್ನವಲಂಬಿಸಿದೆ ಎಂಬುದನ್ನು ಇಲ್ಲಿ ಗಮನಿಸಬಹುದು: ಮಾರ್ಪುರುಳಿ ನಲ್ಲಿ ಒಂದು ಪದದ ಬದಲು ಇನ್ನೊಂದನ್ನು ಬಳಸಲಾಗುತ್ತದೆ (ಅವನೊಂದು ಕೋತಿ); ಇದಕ್ಕೆ ಬದಲು, ಹೋಲಿಕೆಯಲ್ಲಿ ಎರಡು ಪದಗಳನ್ನು ಅಂತಹ, ಹಾಗೆ, ಅಂತೆ ಮೊದಲಾದವುಗಳ ಮೂಲಕ ಜೋಡಿಸಲಾಗುತ್ತದೆ (ಅವನೊಂದು ಕೋತಿಯ ಹಾಗೆ).
(3) ಹುರುಳು ಪಡೆಯುವ ಬಗೆಯಲ್ಲಿ ವ್ಯತ್ಯಾಸ: ನಲ್ಬರಹಗಳಿಗೂ ಬೇರೆ ಬಗೆಯ ಬರಹಗಳಿಗೂ ನಡುವಿರುವ ವ್ಯತ್ಯಾಸ ಅವುಗಳಿಂದ ಓದುಗರು ಹುರುಳುಗಳನ್ನು ಯಾವ ರೀತಿಯಲ್ಲಿ ಪಡೆಯಬಲ್ಲರು ಎಂಬುದರಲ್ಲೂ ಕಾಣಿಸಿ ಕೊಳ್ಳುತ್ತದೆ. ಬೇರೆ ಬಗೆಯ ಬರಹಗಳಲ್ಲಿ ಬರುವ ಸೊಲ್ಲುಗಳಿಗೆ ಒಂದು ನಿಶ್ಚಿತವಾದ ಹುರುಳಿರುತ್ತದೆ. ಬರಹಗಾರರು ಎಂತಹ ತಿಳಿವನ್ನು ತಿಳಿಸುವು ದಕ್ಕಾಗಿ ಅವನ್ನು ಬರೆದಿರುತ್ತಾರೋ ಅದನ್ನೇ ಓದುಗರೂ ಪಡೆಯಬೇಕಾಗುತ್ತದೆ; ಇಲ್ಲವಾದರೆ, ಅವರಿಗೆ ಆ ಬರಹ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಎತ್ತುಗೆಗಾಗಿ, ಎಣ್ಣುಕ(ಕಂಪ್ಯೂಟರ್)ವನ್ನು ಬಳಸುವ ಬಗೆ ಹೇಗೆ ಎಂಬುದನ್ನು ವಿವರಿಸುವ ಒಂದು ಕಯ್ಪಿಡಿಯಲ್ಲಿ ಬರಹಗಾರನು ಏನು ಹೇಳಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದುಕೊಂಡಲ್ಲಿ ಮಾತ್ರ ಓದುಗನಿಗೆ ತಾನು ಕೊಂಡುಕೊಂಡಿರುವ ಎಣ್ಣುಕವನ್ನು ಸರಿಯಾಗಿ ಬಳಸಲು ಗೊತ್ತಾಗ ಬಲ್ಲುದು. ಕಯ್ಪಿಡಿ ಹೇಳುವುದನ್ನು ತಪ್ಪುತಪ್ಪಾಗಿ ತಿಳಿದುಕೊಂಡಲ್ಲಿ, ಇಲ್ಲವೇ ಅದರಲ್ಲಿ ತನ್ನದೇ ಆದ ಹುರುಳನ್ನು ಕಂಡುಕೊಳ್ಳಲು ಹೋದಲ್ಲಿ, ಆತ ತನ್ನ ಎಣ್ಣುಕವನ್ನೇ ಕೆಡಿಸಿಬಿಟ್ಟಾನು.
ಇದಕ್ಕೆ ಬದಲು, ನಲ್ಬರಹಗಳಲ್ಲಿ ಬರುವ ಸೊಲ್ಲುಗಳಿಗೆ ಆ ರೀತಿ ಒಂದು ನಿಶ್ಚಿತವಾದ ಹುರುಳಿರುವುದಿಲ್ಲ. ಒಬ್ಬೊಬ್ಬ ಓದುಗನು ಅವುಗಳಿಂದ ಒಂದೊಂದು ಬಗೆಯ ತಿಳಿವನ್ನು ಪಡೆಯಬಹುದು. ಬರಹಗಾರನ
ಮನಸ್ಸಿನಲ್ಲಿಲ್ಲದಿದ್ದಂತಹ ಹುರುಳನ್ನೂ ಕೆಲವರು ಓದುಗರು ಅದರಲ್ಲಿ ಕಾಣಬಹುದು. ಅವುಗಳ ನೇರ ಹುರುಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಈ ರೀತಿ ನೇರವಲ್ಲದ ಹುರುಳುಗಳನ್ನು ಕಂಡುಕೊಳ್ಳುವುದೇ ಹೆಚ್ಚು ಮುಕ್ಯ ವಾದುದು.
5.2.2 ಮುಂಜರಿಸುವುದು
ಸಾಮಾನ್ಯವಾಗಿ ಒಂದು ಬರಹವನ್ನು ಓದುವಾಗ, ಓದುಗರ ಗಮನವೆಲ್ಲ ಅದು ತಿಳಿಸುವ ವಿಶಯದ ಮೇಲಿರುತ್ತದೆ. ಆ ವಿಶಯ ಅವರಿಗೆ ಎಶ್ಟರ ಮಟ್ಟಿಗೆ ನೆರವಾಗಬಲ್ಲುದೋ, ಅಶ್ಟರ ಮಟ್ಟಿಗೆ ಅವರ ಗಮನ ಅದರಲ್ಲಿ ನೆಲೆನಿಂತಿರುತ್ತದೆ. ಆದರೆ ಮೇಲೆ ಸೂಚಿಸಿದ ಹಾಗೆ, ನಲ್ಬರಹಗಳು ಜನರಿಗೆ ನೇರವಾಗಿ ನೆರವಾಗಬಲ್ಲಂತಹ ಯಾವ ವಿಶಯವನ್ನೂ ತಿಳಿಸುವುದಿಲ್ಲ. ಹಾಗಾಗಿ, ಅವುಗಳೆಡೆಗೆ ಓದುಗರ ಗಮನವನ್ನು ಸೆಳೆಯಲು, ಮತ್ತು ಆಮೇಲೆ ಅದನ್ನು ಉಳಿಸಿಕೊಳ್ಳಲು, ಬರಹಗಾರರು ತಮ್ಮ ಬರಹದ ಬೇರೆ ಅಂಶಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಅಂಶಗಳು ಎದ್ದುಕಾಣುವ ಹಾಗೆ ಮಾಡುವ ಮೂಲಕ ಓದುಗರ ಗಮನವನ್ನು ಸೆಳೆಯಬೇಕಾಗುತ್ತದೆ. ಇದನ್ನು ಮುಂಜರಿಸುವುದು (ಎಂದರೆ, ಬರಹದ ಬೇರೊಂದು ಅಂಶವನ್ನು ಓದುಗರ ಮುಂದಕ್ಕೆ ಸರಿಸುವುದು) ಎಂಬುದಾಗಿ ಕರೆಯಬಹುದು.
ಈ ಕೆಲಸವನ್ನು ನಡೆಸುವುದಕ್ಕಾಗಿ, ಬರಹದ ಒಂದು ಅಂಶವನ್ನು ಎರಡೆರಡು ಬಾರಿ ಬರೆಯುವುದು, ಮತ್ತು ಅದರ ಯಾವಾಗಿನ ರೂಪವನ್ನು ಬದಲಾಯಿಸು ವುದು ಎಂಬುದಾಗಿ ಎರಡು ಹೊಲಬು(ವಿದಾನ)ಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಮೊದಲನೇ ಬಗೆಯ ಹೊಲಬಿಗೆ ನೀವಲ್ಲಿಗೆ ಹೋಗಬೇಕು, ಹೋಗಬೇಕು; ಬನ್ನಿ, ಬನ್ನಿ; ದೊಡ್ಡ ದೊಡ್ಡ ಮರಗಳು ಮೊದಲಾದ ಬಳಕೆಗಳನ್ನು ಎತ್ತುಗೆಯಾಗಿ ಕೊಡಬಹುದು.
ಎರಡನೇ ಬಗೆಯ ಹೊಲಬಿನ ಬಳಕೆಯೆಂತಹದು ಎಂಬುದನ್ನು ತಿಳಿದು ಕೊಳ್ಳುವಲ್ಲಿ ಯಾವಾಗಿನ ರೂಪ ಎಂಬುದು ತುಸು ತೊಂದರೆ ಕೊಡಬಲ್ಲುದು. ಯಾಕೆಂದರೆ, ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯಲ್ಲಿ ಹಲವಾರು ಬಗೆ ಗಳಿದ್ದು, ಒಂದೊಂದು ಕಡೆ ಒಂದೊಂದು ರೂಪ ಬಳಕೆಯಾಗುತ್ತಿರುತ್ತದೆ; ಇವುಗಳಲ್ಲಿ ಯಾವುದು ಯಾವಾಗಿನ ರೂಪ ಎಂಬುದನ್ನು ತೀರ್ಮಾನಿಸುವುದು ಸುಲಬದ ಕೆಲಸವಲ್ಲ. ಆದರೆ, ಒಂದೊಂದು ಬಗೆಯ ಬರಹದಲ್ಲೂ ಒಂದು ಬಗೆಯ ಪದ ಇಲ್ಲವೇ ಸೊಲ್ಲು ಯಾವಾಗಿನದು ಎಂಬ ಅನಿಸಿಕೆ ನಮ್ಮಲ್ಲಿರು
ತ್ತದೆ. ನಲ್ಬರಹಗಳು ಈ ಅನಿಸಿಕೆಗೆ ಹೊಂದಿಕೊಳ್ಳದಂತಹ ಪದ ಇಲ್ಲವೇ ಸೊಲ್ಲುಗಳನ್ನು ಬಳಸುವ ಮೂಲಕ ಮುಂಜರಿಸುವುದನ್ನು ನಡೆಸುತ್ತವೆ.
ಎತ್ತುಗೆಗಾಗಿ, ಕತೆ-ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಹೆಸರು ಪದಗಳೊಂದಿಗೆ ಒಂದಲ್ಲ ಒಂದು ಪರಿಚೆ ಪದ ಬಂದಿರುತ್ತದೆ (ಚಿಕ್ಕ ಹುಡುಗಿ, ತುಂಬಾ ಜನರು, ಹೊಸಾ ಬಟ್ಟೆ, ಕಪ್ಪು ಕೂದಲು). ಹೀಗಿರುವಾಗ, ಬರಹವೊಂದರಲ್ಲಿ ಹೆಸರು ಪದಗಳೊಂದಿಗೆ ಒಂದು ಕಡೆಯೂ ಪರಿಚೆ ಪದಗಳನ್ನು ಬಳಸದೇ ಇದ್ದಲ್ಲಿ, ಅದೊಂದು ಎದ್ದುಕಾಣುವ ಬರಹವೆಂದು ಅನಿಸದಿರದು.
ಹೋಲಿಕೆಯ ಸೊಲ್ಲುಗಳನ್ನು ಬರೆಯುವಾಗ, ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳನ್ನು ಇಲ್ಲವೇ ಎರಡು ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ (ಅವನು ನನ್ನಶ್ಟು ದೊಡ್ಡವನು; ಈ ಪುಸ್ತಕ ಆ ಪುಸ್ತಕದಶ್ಟೇ ದಪ್ಪ). ಈ ಯಾವಾಗಿನ ಬಳಕೆಯನ್ನು ಬದಲಿಸಿ, ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿಯೊಂದಿಗೇನೇ ಹೋಲಿಸಹೊರಟಲ್ಲಿ, ಅದು ಓದುಗರ ಗಮನವನ್ನು ಸೆಳೆಯಬಲ್ಲುದು (ಅವನಶ್ಟು ಕೆಟ್ಟವನು ಅವನೇ).
ಈ ರೀತಿ, ಹಲವಾರು ಬಗೆಗಳಲ್ಲಿ ಯಾವಾಗಿನ ರೂಪವನ್ನು ಬದಲಾ ಯಿಸುವ ಮೂಲಕ, ಮತ್ತು ಮಾತಿನ ಕಟ್ಟಲೆಗಳನ್ನು ಮುರಿಯುವ ಮೂಲಕ, ಬರಹವನ್ನು ಮುಂಜರಿಸಲಾಗುತ್ತದೆ. ಕವಿತೆಗಳಲ್ಲಿ ಇದನ್ನು ಬೇರೆಲ್ಲಾ ಬರಹ ಗಳಿಗಿಂತಲೂ ಹೆಚ್ಚು ನಡೆಸಲಾಗುತ್ತದೆ. ಎಶ್ಟು ಹೆಚ್ಚೆಂದರೆ, ಕೆಲವೊಮ್ಮೆ ಅವು ಏನು ಹೇಳುತ್ತಿವೆಯೆಂಬುದು ಸಾಮಾನ್ಯ ಓದುಗರಿಗೆ ಗೊತ್ತೇ ಆಗುವು
ಮುಂಜರಿಸುವ ಕೆಲಸವನ್ನು ನಗೆಬರಹಗಳು ಮತ್ತು ನಗೆಹನಿಗಳು ಬೇರೆಯೇ ಒಂದು ರೀತಿಯಲ್ಲಿ ನಡೆಸುತ್ತವೆ. ಬಳಕೆಯಲ್ಲಿರುವ ಪದ, ಪದಕಂತೆ, ಸೊಲ್ಲಿನ ಇಟ್ಟಳ ಮೊದಲಾದವುಗಳಲ್ಲಿ ಒಂದನ್ನು ಮೊದಲಿಗೆ ಯಾವಾಗಿನ ಬಳಕೆ ಯಲ್ಲಿರುವ ಹಾಗೆ ಕಾಣಿಸಿ, ಆಮೇಲೆ ಇದ್ದಕ್ಕಿದ್ದಂತೆ ಬಳಕೆ ತಪ್ಪಿಸುವ ಮೂಲಕ ಓದುಗರು ಬೆರಗಾಗುವಂತೆ ಅವು ಮಾಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(1) ಅವನು ಹೊಗೆಸೊಪ್ಪಿನಿಂದಾಗುವ ಕೆಟ್ಟ ಪರಿಣಾಮಗಳ ಕುರಿತು ಎಶ್ಟು ಓದಿದ್ದನೆಂದರೆ, ಇನ್ನು ಮುಂದೆ ತಾನು ಓದಲೇ ಬಾರದೆಂಬ ತೀರ್ಮಾನಕ್ಕೆ ಬಂದಿದ್ದ.
ಈ ಸೊಲ್ಲನ್ನು ಓದುತ್ತಿರುವಂತೆ, ಓದುಗನು ಎದುರುನೋಡುವುದು ಹೊಗೆಸೊಪ್ಪಿನ ಕುರಿತಾಗಿ ಆತ ಏನಾದರೂ ಒಂದು ತೀರ್ಮಾನಕ್ಕೆ ಬರಬಹು ದೆಂಬುದನ್ನಲ್ಲದೆ, ಓದಿನ ಕುರಿತಲ್ಲ. ಓದುಗನ ಈ ಎದುರು ನೋಡುವಿಕೆಗೆ ಅಡ್ಡಿಯುಂಟಾಗಿರುವುದೇ ಇಲ್ಲಿ ಬೆರಗಿಗೆ ಮತ್ತು ನಗುವಿಗೆ ಕಾರಣವಾಗುತ್ತದೆ (7.4 ನೋಡಿ).
5.2.3 ಸೊಲ್ಲರಿಮೆ ಮತ್ತು ನುಡಿಯೊಡ್ಡವ
ಓದುಗರಲ್ಲಿ ಹಲವು ಬಗೆಯ ಪರಿಣಾಮಗಳನ್ನುಂಟುಮಾಡಲು ಯಾವ ಬಗೆಯ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನು ನುಡಿಯೊಡ್ಡವ (ಶಯ್ಲಿ) ತಿಳಿಸುತ್ತದೆ. ಎತ್ತುಗೆಗಾಗಿ, ಓದುಗರಿಗೆ ಒಬ್ಬ ವ್ಯಕ್ತಿಯ ಪರಿಚೆ ಎಂತಹದು ಎಂಬುದನ್ನು ತಿಳಿಸಬೇಕಿದ್ದಲ್ಲಿ, ಎಸಕ(ಕ್ರಿಯಾ)ಪದಗಳಿಲ್ಲದ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬಹುದು ಎಂಬುದನ್ನು ಕೆಳಗೆ ಕೊಟ್ಟಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹಾವಿನ ಅಯ್ಯ ಕತೆಯ ಕುರಳಿನಲ್ಲಿ ಕಾಣಬಹುದು:
ಆಗ ಆತನಿಗೆ ವಯಸ್ಸು ಮೂವತ್ತು ಆಗಿತ್ತು. ಅರೋಗ ದೃಢಕಾಯವಾದ ದೇಹ. ಕಂಬಿಯ ಪಂಚೆಯನ್ನು ಪಂಚೆಕಚ್ಚೆಯಾಗಿ ಉಟ್ಟ ಠೀವಿ. ಲಕ್ಷಣವಾಗಿ ಏರಿಸಿದ ಹನ್ನೆರಡು ನಾಮ. ಮುಖದಲ್ಲಿ ತೋರುತ್ತಿದ್ದ ವೈದಿಕತೆಯ ತೇಜಸ್ಸು. ಎಲೆ ಅಡಿಕೆ ಅಗಿದು ಕೆಂಪಾದ ತುಟಿಗಳು. ತಲೆ ಜುಟ್ಟಿನಲ್ಲಿ ಘಮಘಮಿಸುತ್ತಿದ್ದ ಹೂವು. ದೇವರ ಪೂಜೆ ಮಾಡುವಾಗ ತೊಡೆದುಕೊಂಡ, ಎದೆಯ ಮೇಲೆ ತೋರುತ್ತಿದ್ದ
ಇದಕ್ಕೆ ಬದಲು, ಎಸಕ ಪದಗಳಿರುವಂತಹ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಿದಲ್ಲಿ ಕತೆ ಬಹಳ ಬೇಗನೆ ಮುಂದೆ ಹೋಗುತ್ತದೆ. ಇದನ್ನು ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯ ಕೆಳಗಿನ ಎತ್ತುಗೆಯಲ್ಲಿ ಕಾಣ ಬಹುದು:
ಎರಡೇ ಎರಡು ದಿನಗಳಲ್ಲಿ … ಭಗವಂತಯ್ಯನ ಹಳೆ ಮನೆಯ ಅಡಿ ಚೊಕ್ಕವಾಯಿತು. ಬಿದಿರು ಬಲ್ಲೆಗಳನ್ನು ಸವರಿ, ದೂರ ಒಟ್ಟಿ, ರಾಶಿ ಹಾಕಿದ್ದಾಯಿತು. ಹಳೆ ಮನೆಯ ಪಂಚಾಂಗದ ಮಗ್ಗುಲನ್ನು ಸವರಿ, ಚೊಕ್ಕ ಮಾಡಿ, ಅಲ್ಲಿ ಕಂಬಗಳನ್ನು ನಟ್ಟು, ತಟ್ಟಿಗಳನ್ನು ಬಿಗಿದು, ಎರಡೇ ಎರಡು ದಿನಗಳಲ್ಲಿ ಒಂದು ಜೋಪಡಿಯ ನಿರ್ಮಾಣವಾಯಿತು.
ಇಲ್ಲಿ ಬಂದಿರುವ ಚಿಕ್ಕ ಚಿಕ್ಕ ಸೊಲ್ಲುಗಳಲ್ಲಿ ಕೆಲವನ್ನು ಅವುಗಳ ಬಳಿಕ ಬರುವ ಇನ್ನೊಂದು ಚಿಕ್ಕ ಸೊಲ್ಲಿನೊಂದಿಗೆ ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಅವುಗಳ ಕೊನೆಯಲ್ಲಿ ಬರುವ ಎಸಕಪದವನ್ನು ಅದರ ಜೋಡಿಸುವ ರೂಪಕ್ಕೆ (ಸವರಿದರು> ಸವರಿ, ಒಟ್ಟಿದರು> ಒಟ್ಟಿ, ಚೊಕ್ಕಮಾಡಿದರು> ಚೊಕ್ಕಮಾಡಿ, ನಟ್ಟರು> ನಟ್ಟು, ಬಿಗಿದರು> ಬಿಗಿದು) ಬದಲಾಯಿಸಲಾಗಿದೆ. ಇದರಿಂದಾಗಿ ಕತೆಯ ವೇಗ ಇನ್ನಶ್ಟು ಹೆಚ್ಚಿದೆ.
ಚಿಕ್ಕ ಸೊಲ್ಲುಗಳ ಬದಲು, ಹಲವಾರು ಒಳಸೊಲ್ಲುಗಳಿರುವ ಉದ್ದುದ್ದವಾದ ಸಿಕ್ಕಲು ಸೊಲ್ಲುಗಳನ್ನು ಬಳಸಿದಲ್ಲಿ, ಕತೆಯ ವೇಗ ಕಡಿಮೆಯಾಗಿ, ಅದು ತುಂಬಾ ಮೆಲ್ಲನೆ ಸಾಗುವಂತಾಗುತ್ತದೆ.
ಎಸಕ ಪದಗಳಲ್ಲಿ ಕೆಲವು ತೀರಾ ಬಡವಾಗಿರುತ್ತವೆ; ಆದರೆ ಇನ್ನು ಕೆಲವು ತುಂಬಾ ಹುಲುಸಾಗಿದ್ದು, ಎಸಕಗಳನ್ನು ಎದ್ದುಕಾಣುವಂತೆ ಓದುಗರ ಮುಂದಿರಿಸ ಬಲ್ಲುವು. ಎತ್ತುಗೆಗಾಗಿ, ಇರು, ಮಾಡು, ಆಗು, ಹೇಳು, ತಿನ್ನು, ಕುದಿ, ಬೀಳು, ನಡೆ, ಬರು ಮೊದಲಾದುವು ತೀರಾ ಬಡವಾಗಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲಿ ಎಸಕಗಳು ಎದ್ದುಕಾಣಿಸಬೇಕಿದ್ದಲ್ಲಿ, ಅವಕ್ಕೆ ಯಾವುದಾದರೊಂದು ಪರಿಚೆ ಪದವನ್ನು ಸೇರಿಸಬೇಕಾಗುತ್ತದೆ (ಕತಕತನೆ ಕುದಿಯಿತು, ದೊಪ್ಪನೆ ಬಿತ್ತು, ತಟಕ್ಕನೆ ಹೇಳಿದಳು).
ಆದರೆ ಈ ರೀತಿ ಪರಿಚೆ ಪದಗಳನ್ನು ಸೇರಿಸಿ ಹೇಳುವುದಕ್ಕಿಂತಲೂ, ಅಂತಹ ಪರಿಚೆಗಳನ್ನು ಒಳಗೊಂಡಿರುವಂತಹ ಎಸಕ ಪದಗಳನ್ನು ಬಳಸುವುದು ಇನ್ನಶ್ಟು ಒಳ್ಳೆಯದು. ನುಗ್ಗು, ಮುತ್ತು, ಚಿವುಟು, ದುಮುಕು, ನುಸುಳು, ರೇಗು, ಜಾರು ಮೊದಲಾದುವು ಇಂತಹ ಪರಿಚೆಗಳನ್ನು ಒಳಗೊಂಡಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿಯೂ ಇರುತ್ತವೆ. ಎತ್ತುಗೆಗಾಗಿ, ಜನರು ಒಳಗೆ ಹೋದರು ಎಂಬ ಸೊಲ್ಲು ತಿಳಿಸುವ ಎಸಕವನ್ನೇ ಜನರು ಒಳಗೆ ನುಗ್ಗಿದರು ಎಂಬುದು ಹೆಚ್ಚು ಚನ್ನಾಗಿ, ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಇಂತಹದೇ ವ್ಯತ್ಯಾಸವನ್ನು ಅವನು ಕೆಳಗೆ ಹಾರಿದ ಎನ್ನುವುದಕ್ಕೂ ಅವನು ಕೆಳಗೆ ದುಮುಕಿದ ಎನ್ನುವುದಕ್ಕೂ ನಡುವೆ ಕಾಣಬಹುದು. ಸನ್ನಿವೇಶಕ್ಕೆ ತಕ್ಕ ಹಾಗೆ ಇಂತಹ ಹೆಚ್ಚು ಹೆಚ್ಚು ಹುಲುಸಾಗಿರುವ ಪದಗಳನ್ನು ಆರಿಸಿಕೊಳ್ಳುವ ಜಾಣ್ಮೆ ಬರಹಗಾರರಿಗಿರಬೇಕು.
ಸನ್ನಿವೇಶಕ್ಕೆ ಪೂರ್ತಿ ತಕ್ಕುದಾದ ಪದವನ್ನು ಬಳಸುವುದಕ್ಕೂ, ಹೆಚ್ಚುಕಡಿಮೆ ಸರಿಹೊಂದುವ ಪದವನ್ನು ಬಳಸುವುದಕ್ಕೂ ನಡುವಿನ ವ್ಯತ್ಯಾಸವೆಂದರೆ, ಮಿಂಚಿಗೂ ಮಿಂಚುಹುಳಕ್ಕೂ ನಡುವಿನ ವ್ಯತ್ಯಾಸದ ಹಾಗೆ ಎಂಬುದಾಗಿ ಮಾರ್್ಕ
ಟ್ವಯ್್ನ ಹೇಳಿರುವುದನ್ನು ಇಲ್ಲಿ ನೆನಪಿಸಬಹುದು. ಈ ಅಳವನ್ನು ಪಡೆಯುವಲ್ಲಿ ಬರಹಗಾರರಿಗೆ ಹುರುಳರಿಮೆ ನೆರವು ನೀಡಬಲ್ಲುದು.
ತನ್ನೊಳಗೆ ಪರಿಚೆಯನ್ನು ಒಳಗೊಂಡಿರುವಂತಹ ಎಸಕ ಪದ ಸಿಗದಿದ್ದಲ್ಲಿ ಅಣಕು ಪದಗಳನ್ನು ಬಳಸಬೇಕಾಗುತ್ತದೆ. ಕನ್ನಡದಲ್ಲಿ ಇಂತಹ ಎರಡು ಬಗೆಯ ಅಣಕು ಪದಗಳು ಬಳಕೆಯಲ್ಲಿವೆ: ಚಿಲ್ಲನೆ, ತಟ್ಟನೆ, ದೊಪ್ಪನೆ, ದುಡು ಮ್ಮನೆ, ಗಬಕ್ಕನೆ ಮೊದಲಾದ ಒತ್ತುಬರಿಗೆ (ಒತ್ತಕ್ಶರ) ಇರುವ (ಇಲ್ಲವೇ ತಟಾರನೆ, ದಿಡೀರನೆ ಮೊದಲಾದ ಉದ್ದ ತೆರೆಯುಲಿ (ದೀರ್ಗಸ್ವರ) ಇರುವ) ಪದಗಳು ಮತ್ತು ಚಟಚಟನೆ, ದಡದಡನೆ, ಪಳಪಳನೆ, ಗಳಗಳನೆ ಮೊದಲಾದ ಒತ್ತುಬರಿಗೆಯಿಲ್ಲದ (ಇಲ್ಲವೇ ಉದ್ದ ತೆರೆಯುಲಿಯಿಲ್ಲದ) ಪದಗಳು.
ಈ ಎರಡು ಬಗೆಯ ಅಣಕು ಪದಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ. ಮೊದಲನೇ ಬಗೆಯ ಪದಗಳು ಒಮ್ಮೆಗೇನೇ ನಡೆದು ಹೋಗುವ ಎಸಕಗಳ ಪರಿಚೆಯನ್ನು ಸೂಚಿಸಲು ಬಳಕೆಯಾಗುತ್ತವೆ; ಇದನ್ನು ದೊಪ್ಪನೆ ಕೆಳಗೆ ಬಿತ್ತು, ಗಬಕ್ಕನೆ ಬಾಯಿ ಹಾಕಿತು, ಬುರ್ರನೆ ಹಾರಿಹೋಯಿತು ಮೊದಲಾದ ಎತ್ತುಗೆಗಳಲ್ಲಿ ಕಾಣಬಹುದು. ಇದಕ್ಕೆ ಬದಲು, ಎರಡನೇ ಬಗೆಯ ಪದಗಳು ತುಸು ಹೊತ್ತು ನಡೆಯುತ್ತಿರುವ ಎಸಕಗಳ ಪರಿಚೆಯನ್ನು ಸೂಚಿಸಲು ಬಳಕೆಯಾಗುತ್ತವೆ. ಎಲ್ಲರೂ ದಡದಡನೆ ಇಳಿದು ಬಂದರು, ಪಳಪಳನೆ ಹೊಳೆಯುತ್ತಿತ್ತು, ಗಬಗಬನೆ ತಿಂದುಮುಗಿಸಿದ ಮೊದಲಾದ ಎತ್ತುಗೆಗಳಲ್ಲಿ ಇದನ್ನು ಕಾಣಬಹುದು.
ಈ ವ್ಯತ್ಯಾಸವನ್ನು ಗಮನಿಸದಿದ್ದಲ್ಲಿ ಹೇಗೆ ತೊಂದರೆಯಾಗುತ್ತದೆ ಎಂಬುದಕ್ಕೆ ನಾ. ಡಿಸೋಜ ಅವರ ಒಂದು ಜಲಪಾತದ ಸುತ್ತ ಎಂಬ ಕಾದಂಬರಿಯ ಪುಟ (63)ರಲ್ಲಿ ಬಂದಿರುವ ದಡಕ್ಕೆಂದು ಗಾಡಿ ಕೊರಕಲಲ್ಲಿ ಬಿದ್ದು ಎದ್ದು ಕುಲುಕಾಡುತ್ತ ಸಾಗಿತ್ತು ಎಂಬ ಸೊಲ್ಲನ್ನು ಗಮನಿಸಬಹುದು. ಬಿದ್ದು ಎದ್ದು ಕುಲುಕಾಡುತ್ತ ಸಾಗು ಎಂಬುದು ತುಸು ಹೊತ್ತು ನಡೆಯುತ್ತಿರುವ ಎಸಕವನ್ನು ಸೂಚಿಸುತ್ತದೆ; ಅದರೊಂದಿಗೆ ಇಲ್ಲಿ ಒಮ್ಮೆಗೇನೇ ನಡೆದು ಹೋಗುವಂತಹ ಎಸಕದ ಪರಿಚೆಯನ್ನು ಸೂಚಿಸಬಲ್ಲ ದಡಕ್ಕನೆ ಎಂಬ ಅಣಕು ಪದವನ್ನು ಬಳಸಲಾಗಿದೆ. ಆದರೆ, ಇವೆರಡು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಅದಕ್ಕಿಂತ ತುಸು ಹೊತ್ತು ನಡೆಯುವಂತಹ ಎಸಕದ ಪರಿಚೆಯನ್ನು ತಿಳಿಸುವ ದಡದಡನೆ ಎಂಬಂತಹ ಅಣಕು ಪದವನ್ನು ಬಳಸಿದಲ್ಲಿ ಅದು ಹೆಚ್ಚು ಚನ್ನಾಗಿ ಮೇಲಿನ ಸೊಲ್ಲಿನಲ್ಲಿ ಹೊಂದಿಕೊಳ್ಳಬಲ್ಲುದು.
ಬರಹದಲ್ಲಿ ಬರುವ ಕೆಲವು ಸೊಲ್ಲುಗಳು ಯಾಕೆ ಅಶ್ಟು ಚನ್ನಾಗಿ ಓದಿಸಿ ಕೊಂಡು ಹೋಗುತ್ತವೆ, ಮತ್ತು ಬೇರೆ ಕೆಲವು ಸೊಲ್ಲುಗಳು ಯಾಕೆ ಆ ರೀತಿ ಓದಿಸಿಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಯಲು, ಮತ್ತು ಚನ್ನಾಗಿ ಓದಿಸಿಕೊಂಡು ಹೋಗದಿರುವ ಸೊಲ್ಲೊಂದು ತಮ್ಮ ಬರಹದಲ್ಲಿ ಬಂದಿದೆ ಯಾದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಈ ರೀತಿ ಬರಹಗಾರರ ನೆರವಿಗೆ ಬರಬಲ್ಲುದು.
5.3 ನಾಟಕದ ಮಾತು
ನಾಟಕಗಳಿಗೂ ಕತೆ, ಕವಿತೆ ಮೊದಲಾದ ಬೇರೆ ನಲ್ಬರಹಗಳಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ: ಕತೆ, ಕವಿತೆ ಮೊದಲಾದವುಗಳಲ್ಲಿ ವ್ಯಕ್ತಿ, ವಸ್ತು, ಜಾಗ, ಅನಿಸಿಕೆ ಮೊದಲಾದುವನ್ನು ನೇರವಾಗಿ ವಿವರಿಸಲು ಬರುತ್ತದೆ; ನಿಜಕ್ಕೂ ಅಂತಹ ವಿವರಣೆಗಳೇ ಅವುಗಳಲ್ಲಿ ಮುಕ್ಯ ಪಾತ್ರ ವಹಿಸುತ್ತವೆ. ಕೆಲವೊಮ್ಮೆ ಜನರ ನಡುವಿನ ಮಾತುಗಳನ್ನೂ ಅವುಗಳಲ್ಲಿ ಎತ್ತಿ ಕೊಡಲಾಗು ತ್ತದೆಯಾದರೂ, ಓದುಗರಿಗೆ ತಿಳಿಸಬೇಕೆಂದಿರುವ ಹೆಚ್ಚಿನ ಸಂಗತಿಗಳನ್ನೂ ವಿವರಣೆಗಳ ಮೂಲಕವೇನೇ ತಿಳಿಸಲಾಗುತ್ತದೆ. ಈ ವಿವರಣೆಗಳು ಬರಹ ಗಾರರಿಗೆ ಓದುಗರೊಂದಿಗೆ ನೇರವಾದ ಸಂಪರ್ಕವನ್ನು ಒದಗಿಸುತ್ತವೆ.
ಆದರೆ, ನಾಟಕಗಳಲ್ಲಿ ನೋಡುಗರಿಗೆ ಇಲ್ಲವೇ ಓದುಗರಿಗೆ ತಿಳಿಸಬೇಕಾದು ದೆಲ್ಲವನ್ನೂ ಪಾಂಗು(ಪಾತ್ರ)ಗಳ ಮಾತಿನ ಮೂಲಕವೇನೇ ತಿಳಿಸಬೇಕಾಗುತ್ತದೆ. ಹಾಗಾಗಿ, ನಾಟಕಗಳ ನೋಡುಗ ಇಲ್ಲವೆ ಓದುಗರಿಗೂ ಬರಹಗಾರರಿಗೂ ನಡುವೆ ನೇರವಾಗಿ ಯಾವ ರೀತಿಯ ಸಂಪರ್ಕವೂ ಸಿಗುವುದಿಲ್ಲ. ಇದು ನಾಟಕ ವನ್ನು ಬರೆಯುವವರ ಮೇಲೆ ಒಂದು ಬಲವಾದ ಕಟ್ಟುಪಾಡನ್ನು ಹೊರಿಸುತ್ತದೆ. ನಾಟಕವನ್ನು ನೋಡುವವರಿಗೆ ಪಾಂಗುಗಳ ಉಡುಗೆತೊಡುಗೆಗಳು ಮತ್ತು ಅಟ್ಟಲಿನ (ರಂಗಸ್ತಳದ) ನೋಟಗಳು ಸ್ವಲ್ಪಮಟ್ಟಿಗೆ ಈ ತೊಡಕನ್ನು ಕಡಿಮೆಮಾಡಬಲ್ಲುವು; ಆದರೆ, ಓದುಗರಿಗೆ ಇವು ಯಾವುವೂ ಸಿಗುವುದಿಲ್ಲ. ಅವರು ಎಲ್ಲವನ್ನೂ ಪಾಂಗುಗಳ ಮಾತಿನಿಂದಲೇ ಪಡೆಯಬೇಕಾಗುತ್ತದೆ. ನಾಟಕದ ಬರಹಗಾರರು ನಟರಿಗಾಗಿ ಮತ್ತು ನಾಟಕವನ್ನು ನೆಗಳ್ಚುವವರಿಗಾಗಿ ಕೊಡುವ ಸುಳಿವುಗಳು ಮಾತ್ರ ಓದುಗರಿಗೆ ಕೆಲವು ಹೆಚ್ಚಿನ ವಿಶಯಗಳನ್ನು ತಿಳಿಸಬಲ್ಲುವು.
ಪಾಂಗುಗಳ ಮಾತಿನ ಮೂಲಕ ನಾಟಕದ ನೋಡುಗರಿಗೆ ಇಲ್ಲವೇ ಓದುಗರಿಗೆ ಮೇಲೆ ವಿವರಿಸಿದಂತಹ ವಿಶಯಗಳನ್ನು ತಿಳಿಸಲು ಹಲವು ಬಗೆಯ
ಸಂಚುಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಆತ್ಮಗತ ಇಲ್ಲವೇ ಸ್ವಗತ ಎಂದು ಕೊಟ್ಟಿರುವ ಮಾತುಗಳನ್ನು ನಾಟಕದ ನೋಡುಗರು ಮಾತ್ರವೇ ಗಮನಿಸುತ್ತಿರುವಂತೆ ಮಾಡಲಾಗುತ್ತದೆ. ಅವನ್ನು ಪಕ್ಕದಲ್ಲಿರುವ ಪಾಂಗುಗಳು ಗಮನಿಸುವ ಹಾಗಿಲ್ಲ. ನಾಟಕಗಳಲ್ಲಿ ಬರುವ ಸೂತ್ರದಾರರ ಮೂಲಕವೂ ಬರಹಗಾರರು ನೋಡುಗರೊಂದಿಗೆ ನೇರವಾದ ಸಂಪರ್ಕವನ್ನು ಪಡೆಯಲು ಹೋಗುತ್ತಾರೆ. ಆದರೆ ಇವೆಲ್ಲ ನಾಟಕದ ಮೂಲ ಉದ್ದೇಶವನ್ನು ಕೆಡಿಸಿ ಬಿಡುತ್ತವೆ. ಹಾಗಾಗಿ, ನೋಡುಗರಿಗೆ ತಿಳಿಸಬೇಕೆಂದಿರುವುದನ್ನೆಲ್ಲ ಬರಹಗಾರರು ಪಾಂಗುಗಳ ನಡುವೆ ನಡೆಯುವ ಮಾತುಗಳ ಮೂಲಕ ನೇರವಲ್ಲದ ರೀತಿಯಲ್ಲಿ ತಿಳಿಸುವುದೇ ಸರಿಯಾದ ದಾರಿ.
ಕತೆ-ಕಾದಂಬರಿಗಳ ಮತ್ತು ಸಿನಿಮಾಗಳ ಬರಹಗಾರರು ಹಿನ್ನೋಟಗಳನ್ನು ತುಂಬಾ ಜಾಣ್ಮೆಯಿಂದ ಬಳಸಿಕೊಳ್ಳಬಲ್ಲರು. ನಾಟಕಗಳ ಬರಹಗಾರರಿಗೆ ಇವೂ ದೊರಕುವುದಿಲ್ಲ. ಜಾಗ ಮತ್ತು ಸಮಯಗಳೆರಡರ ವಿಶಯದಲ್ಲೂ ಅವರ ಮೇಲೆ ಹೆಚ್ಚು ಅಡೆತಡೆಗಳಿವೆ.
ಒಂದು ರೀತಿಯಲ್ಲಿ ಈ ಅಡೆತಡೆಗಳು ನಾಟಕದ ಬರಹಗಾರರಿಗೆ ನೆರವನ್ನೂ ಒದಗಿಸುತ್ತವೆ. ಯಾಕೆಂದರೆ, ನೋಡುಗರೆದುರು ನಿಲ್ಲಿಸಬಲ್ಲ ಕೆಲವೇ ಕೆಲವು ನೋಟಗಳಿಗೆ ಅವರ ಬರಹ ಸೀಮಿತವಾಗಿರಬೇಕಾಗಿದೆಯಾದ ಕಾರಣ, ಅದರಲ್ಲಿ ಬಿಗಿತವನ್ನು ಉಳಿಸಿಕೊಳ್ಳಲು ಹೆಚ್ಚು ಸುಳುವಾಗುತ್ತದೆ.
5.3.1 ಸೂಳುನುಡಿ ಮತ್ತು ನಡುನುಡಿ
ಜನರ ಮಾತಿಗೂ ನಾಟಕದ ಮಾತಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವಿವರಿಸುವುದಕ್ಕಾಗಿ, ಜನರ ನಡುವಿನ ಮಾತನ್ನು ಸೂಳುನುಡಿ (ಸಂಬಾಶಣೆ) ಎಂಬುದಾಗಿ, ಮತ್ತು ಅದಕ್ಕಿಂತ ಬೇರಾಗಿರುವ ನಾಟಕದ ಪಾಂಗು (ಪಾತ್ರ)ಗಳ ನಡುವಿನ ಮಾತನ್ನು ನಡುನುಡಿ ಎಂಬುದಾಗಿ ಇಲ್ಲಿ ಹೆಸರಿಸ
(1) ನಿಜವಾದ ಮಾತುಗಳಲ್ಲ: ನಡುನುಡಿಯಲ್ಲಿ ಬರುವ ಮಾತುಗಳು ನಿಜವಾದ ಮಾತುಗಳಲ್ಲ; ನಾಟಕವನ್ನು ನೋಡುವವರಿಗೆ ಅವು ನಿಜವಾದು ವೆಂದು ಅನಿಸುವುದಾದರೂ, ಬೇರೆ ಕಡೆಗಳಲ್ಲಿ ಅವನ್ನು ಬಳಸಿದೆವಾದರೆ ಅವು ತೀರಾ ವಿಚಿತ್ರವಾಗಿ ಕೇಳಿಸಬಲ್ಲುವು. ಇದೇ ರೀತಿಯಲ್ಲಿ, ಜನರ ನಡುವೆ ನಡೆಯುವ ಸೂಳುನುಡಿಯನ್ನು ಹಾಗೆಯೇ ಯಾರಾದರೂ ಬರೆದಿರಿಸಿದಲ್ಲಿ,
ಅದನ್ನು ಓದಿನೋಡಿ, ಅದರಲ್ಲಿ ಏನು ಹೇಳಲಾಗಿದೆಯೆಂಬುದನ್ನು ತಿಳಿದುಕೊಳ್ಳುವುದೂ ತುಂಬಾ ತೊಡಕಿನ ಕೆಲಸವೆಂದು ಅನಿಸದಿರದು.
ನಡುನುಡಿಯ ಮಾತುಗಳನ್ನು ಕೇಳಿದಾಗ, ಅವನ್ನಾಡುವ ನಟರು ನಟರಲ್ಲ, ನಟರು ನಿಂತಿರುವ ಅಟ್ಟಲು (ರಂಗಸ್ತಳ) ಅಟ್ಟಲಲ್ಲ, ಅಟ್ಟಲ ಮೇಲೆ ನಿಂತು ಕೊಂಡು ಅವರು ನುಡಿಯುವ ಮಾತುಗಳು ಬರಹಗಾರರು ಬರೆದ ಮಾತು ಗಳಲ್ಲ, ನೇರವಾಗಿ ಪಾಂಗುಗಳೇ ಆಡುತ್ತಿರುವ ಮಾತುಗಳು ಎಂಬ ಅನಿಸಿಕೆ ನೋಡುಗರಲ್ಲಿ ಉಂಟಾಗುವ ಹಾಗೆ ಈ ಮಾತುಗಳನ್ನು ಬರೆಯಲಾಗುತ್ತದೆ. ನೋಡುಗರೂ ಇಂತಹದೊಂದು ನಂಬುಗೆಯನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ತಯಾರಾಗಿಯೇ ನಾಟಕಕ್ಕೆ ಬಂದಿರುವುದು ಬರಹಗಾರರಿಗೆ ಅವರಲ್ಲಿ ಈ ಅನಿಸಿಕೆಯನ್ನು ಮೂಡಿಸಲು ನೆರವನ್ನೀಯುತ್ತದೆ. ಆದರೆ, ಇವೆಲ್ಲ ಬರೀ ನಟನೆ, ನಿಜವಾಗಿಯೂ ನಡೆಯುತ್ತಿರುವ ಸಂಗತಿಗಳಲ್ಲ ಎಂಬ ತಿಳಿವನ್ನು ನೋಡುಗರು ಪೂರ್ತಿ ಬಿಟ್ಟುಕೊಟ್ಟಿರುವುದಿಲ್ಲ. ಹಾಗಾಗಿ, ಅವರಿಗೆ ನಾಟಕವೊಂದು ಅಳುವಿನಲ್ಲಿ ಕೊನೆಗೊಳ್ಳುತ್ತದೆಯಾದರೂ ಅದನ್ನು ನೋಡಿ ಆನಂದಿಸಲು ಬರುತ್ತದೆ.
(2) ನುಡಿಯ ಹತೋಟಿ ಒಬ್ಬನ ಕಯ್ಯಲ್ಲಿದೆ: ಸೂಳುನುಡಿಯ ಮಾತುಗಳೆಲ್ಲ ಅವನ್ನು ಆಡುವ ಜನರ ಹಿಡಿತದಲ್ಲಿರುತ್ತವೆಯಾದರೆ, ನಡುನುಡಿಯ ಮಾತುಗಳೆಲ್ಲ ಒಬ್ಬನೇ ಒಬ್ಬ ಬರಹಗಾರನ ಹಿಡಿತದಲ್ಲಿರುತ್ತವೆ. ಇದೇ ರೀತಿಯಲ್ಲಿ, ಸೂಳುನುಡಿಯ ಮಾತುಗಳು ಹಲವಾರು ಜನರ ಮನಸ್ಸುಗಳಲ್ಲಿ ಮೂಡಿ ಬರುವಂತಹವಾದರೆ, ನಾಟಕದಲ್ಲಿ ಬರುವ ಎಲ್ಲಾ ಮಾತುಗಳೂ ಒಬ್ಬನೇ ಒಬ್ಬ ಬರಹಗಾರನ ಮನಸ್ಸಿನಲ್ಲಿ ಮೂಡಿಬರು ವಂತಹವು. ಇದರಿಂದಾಗಿಯೂ, ಸೂಳುನುಡಿ ಮತ್ತು ನಡುನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳು ಮೂಡಿಬರುತ್ತವೆ.
ನಡುನುಡಿಯ ಮಾತುಗಳನ್ನು ಬರಹಗಾರರು ಮೊದಲಿಗೇನೇ ಬರೆದು ಇರಿಸಿರುತ್ತಾರೆ, ಮತ್ತು ಹಲವು ಬಾರಿ ತಿದ್ದಿ ಸರಿಪಡಿಸಿರುತ್ತಾರೆ. ಹಾಗಾಗಿ, ಸೂಳುನುಡಿಯಲ್ಲಿ ಕಾಣಿಸುವಂತಹ ತಪ್ಪುತೊಡಗುವಿಕೆಗಳು, ದಾರಿತಪ್ಪು ವಿಕೆಗಳು, ಇರ್ನುಡಿಹ(ಪುನರುಕ್ತಿ)ಗಳು ಮೊದಲಾದುವು ಯಾವುವೂ ಅದರಲ್ಲಿ ಇರುವುದಿಲ್ಲ. ಹಾಗೇನಾದರೂ ಅಂತಹವು ಇದ್ದರೂ ಅವನ್ನು ಬಳಸಿರುವುದಕ್ಕೆ ಯಾವುದಾದರೊಂದು ಕಾರಣವಿರುತ್ತದೆ. ಅದರಲ್ಲಿ ಬರುವ ಒಂದೊಂದು ಮಾತಿಗೂ ಬೆಲೆಯಿರುತ್ತದೆ. ಒಳ್ಳೆಯ ನಾಟಕಗಳಲ್ಲಿ ಬೇಡದಿರುವ ಮಾತು ಒಂದೂ ಇರುವುದಿಲ್ಲ.
ನಾಟಕದ ಮಾತುಗಳನ್ನು ಬರೆದ ಮೇಲೆ, ಅವನ್ನು ಹಲವು ಬಾರಿ ಓದಿ ನೋಡಲು, ಮತ್ತು ತಿದ್ದಿ ಸರಿಪಡಿಸಲು ಬರುತ್ತದೆ. ಬರಹಗಾರರು ಈ ವಿಶಯ ದಲ್ಲಿ ಬೇರೆ ಜನರ, ಅದರಲ್ಲೂ ನಾಟಕವನ್ನು ನಡೆಸಲಿರುವವರ, ನೆರವನ್ನೂ ಪಡೆಯಬಲ್ಲರು. ಹಾಗಾಗಿ, ಅದರಲ್ಲಿ ಬರುವ ಸೊಲ್ಲುಗಳ ಇಟ್ಟಳ ತುಂಬಾ ಚನ್ನಾಗಿರುವಂತೆ, ಮತ್ತು ಸೊಲ್ಲುಗಳೆಲ್ಲ ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡಿರುವಂತೆ ಅವರು ನೋಡಿಕೊಳ್ಳಬಲ್ಲರು.
ಯಾರು ಯಾವಾಗ ಮಾತನಾಡಬೇಕು, ಎಶ್ಟು ಮಾತನಾಡಬೇಕು, ಏನು ಮಾತನಾಡಬೇಕು ಎಂಬುದನ್ನೆಲ್ಲ ನಡುನುಡಿಯಲ್ಲಿ ಬರಹಗಾರರೇ ತೀರ್ಮಾನಿಸು ತ್ತಾರೆ. ಹಾಗಾಗಿ, ಅವೆಲ್ಲವೂ ತುಂಬಾ ಚೊಕ್ಕಟವಾಗಿ ನಡೆಯುತ್ತವೆ. ಸೂಳು ನುಡಿಯಲ್ಲಿ ಕಾಣಿಸುವಂತಹ ಗೊಂದಲಗಳು (ಒಟ್ಟಿಗೆ ಮಾತನಾಡುವುದು, ನಡುವೆ ಮಾತು ಸೇರಿಸುವುದು ಮೊದಲಾದುವು) ನಡುನುಡಿಯಲ್ಲಿ ಕಾಣಿಸುವು
(3) ಮಾತುಗಳಿಗೆ ಬಾಳಿಕೆಯಿದೆ: ಸೂಳುನುಡಿಯ ಮಾತುಗಳು ಆಡುತ್ತಿರುವ ಹಾಗೆಯೇ ಕಾಣೆಯಾಗುತ್ತಿರುತ್ತವೆ. ಹಾಗಾಗಿ, ಹಿಂದೆ ಹೇಳಿದು ದನ್ನು ನೆನಪಿನಲ್ಲಿರಿಸಿಕೊಂಡಲ್ಲಿ ಮಾತ್ರ, ಅದನ್ನು ಮುಂದೆ ಹೇಳುವುದ ರೊಂದಿಗೆ ಹೋಲಿಸಿನೋಡಬಲ್ಲೆವು. ಆದರೆ, ನಡುನುಡಿಯ ಮಾತುಗಳು ಬರಹರೂಪದಲ್ಲಿದ್ದು, ಅವಕ್ಕೆ ಬಾಳಿಕೆಯಿರುತ್ತದೆ. ಓದುಗರು ಅವನ್ನು ತಿರುತಿರುಗಿ ಓದಿನೋಡಬಲ್ಲರು, ಮತ್ತು ಬರಹಗಾರರು ಹಿಂದೆ ಬರೆದುದನ್ನು ಈಗ ಬರೆಯುತ್ತಿರುವುದರೊಂದಿಗೆ ಹೋಲಿಸಿನೋಡಬಲ್ಲರು. ನಾಟಕವನ್ನು ನಡೆಸುತ್ತಿರುವ ಸಮಯದಲ್ಲಿಯೂ ಕೂಡ, ನೋಡುಗರ ಮಟ್ಟಿಗೆ ಅವು ಸೂಳುನುಡಿಯ ಮಾತಿನ ಹಾಗೆ ಆಡಿದೊಡನೆ ಕಾಣೆಯಾಗುವಂತಹವಾದರೂ, ಅವನ್ನಾಡುವ ನಟರ ಬಳಿ ಅವು ಅಳಿಯದ ರೂಪದಲ್ಲಿರುತ್ತವೆ.
(4) ನೋಡುಗರ ಇರವು ಹೆಚ್ಚಿನದು: ಸೂಳುನುಡಿಗೂ ನಡುನುಡಿಗೂ ನಡುವಿರುವ ಇನ್ನೊಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಸೂಳುನುಡಿ ಯೊಂದು ನಡೆಯುತ್ತಿರುವಾಗ, ಅದರಲ್ಲಿ ಪಾಲ್ಗೊಳ್ಳುವ ಆಡುಗರು ಮತ್ತು ಕೇಳುಗರು ಮಾತ್ರ ಇರುತ್ತಾರೆ. ಅದರಲ್ಲಿ ಬರುವ ಮಾತುಗಳನ್ನೆಲ್ಲ ನೇರವಾಗಿ ಆಡುಗರು ತಮ್ಮ ಕೇಳುಗರಿಗಾಗಿ ಆಡುತ್ತಿರುತ್ತಾರೆ. ಆದರೆ ನಡುನುಡಿಯೊಂದು ನಡೆಯುತ್ತಿರುವಾಗ, ಅದರಲ್ಲಿ ಪಾಲ್ಗೊಳ್ಳುವ ಪಾಂಗುಗಳು (ಆಡುಗರು ಮತ್ತು ಕೇಳುಗರು) ಮಾತ್ರವಲ್ಲದೆ ನೋಡುಗರೂ ಇರುತ್ತಾರೆ. ನಿಜಕ್ಕೂ ನಡುನುಡಿ ಯಲ್ಲಿ ಬರುವ ಎಲ್ಲಾ ಮಾತುಗಳನ್ನೂ ಅದರ ನೋಡುಗರಿಗಾಗಿ ಆಡಲಾಗು
ತ್ತದೆ. ಅವುಗಳಲ್ಲಿ ಕೆಲವು ಮಾತುಗಳನ್ನಂತೂ ನೋಡುಗರಿಗಾಗಿ ಮಾತ್ರವೇ ಆಡಲಾಗುತ್ತದೆ.
ಈ ಕಾರಣಕ್ಕಾಗಿ, ನಡುನುಡಿಯಲ್ಲಿ ಬರುವ ಮಾತುಗಳು ಎರಡು ಮುಕ್ಯ ಕೆಲಸಗಳನ್ನು ನಡೆಸಬೇಕಾಗುತ್ತದೆ: ನಾಟಕದ ಕಲ್ಪಿತ ಜಗತ್ತಿನಲ್ಲಿ ಕತೆ ಮುಂದುವರಿಯುವಂತೆ ಮಾಡುವುದು ಒಂದು ಕೆಲಸ, ಮತ್ತು ನಾಟಕವನ್ನು ನೋಡುತ್ತಿರುವವರಿಗೆ ಈ ಕಲ್ಪಿತ ಜಗತ್ತಿನ ಕುರಿತು ಮತ್ತು ಅದರ ಪಾಂಗುಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತಿರುವುದು ಇನ್ನೊಂದು ಕೆಲಸ. ಈ ಎರಡು ಬಗೆಯ ಕೆಲಸಗಳನ್ನು ನಡೆಸುವುದಕ್ಕಾಗಿ, ನಾಟಕದ ಮಾತುಗಳಿಗೆ ಎರಡು ಮಟ್ಟಗಳಲ್ಲಿ ಹುರುಳುಗಳಿರಬೇಕಾಗುತ್ತದೆ.
ಸಾಮಾನ್ಯವಾಗಿ, ನಾಟಕದ ಪಾಂಗುಗಳಿಗೆ ತಿಳಿದಿರುವ ವಿಶಯಗಳಿಗಿಂತ ನೋಡುಗರಿಗೆ ಹೆಚ್ಚು ವಿಶಯ ತಿಳಿದಿರುತ್ತದೆ. ಎತ್ತುಗೆಗಾಗಿ, ಸಂಸ ಅವರ ವಿಗಡ ವಿಕ್ರಮರಾಯ ನಾಟಕದಲ್ಲಿ ನಿರೀಶನು ಮಹಿಶೂರಪುರದ ಪಟ್ಟಣಿಗ ರೊಂದಿಗೆ ರಣದೀರನ ಕುರಿತಾಗಿ ಹೇಳುವ ಮಾತುಗಳು ಅವರನ್ನು ರೊಚ್ಚಿಗೆಬ್ಬಿಸುತ್ತದೆ; ಆದರೆ, ನೋಡುಗರಿಗೆ ಅದು ತಮಾಶೆಯಾಗಿ ಕಾಣಿಸುತ್ತದೆ. ಯಾಕೆಂದರೆ, ನಿಜಕ್ಕೂ ಆತನು ಬೇಕೆಂದೇ ಜನರನ್ನು ಬಡಿದೆಬ್ಬಿಸಲು ಆ ಮಾತುಗಳನ್ನು ಹೇಳುತ್ತಿದ್ದಾನಲ್ಲದೆ, ರಣದೀರನ ಕುರಿತಾಗಿ ಅಂತಹ ಅನಿಸಿಕೆ ಗಳಾವುವೂ ಆತನ ಮನಸ್ಸಿನಲ್ಲಿಲ್ಲ ಎಂಬುದನ್ನು ನಾಟಕದ ನೋಡುಗರು ಮೊದಲೇ ತಿಳಿದುಕೊಂಡಿರುತ್ತಾರೆ.
ನಾಟಕದ ಪಾಂಗುಗಳು ತಮ್ಮಶ್ಟಕ್ಕೇ ನುಡಿಯುವ (ಸ್ವಗತ) ಮಾತುಗ ಳಿಂದಲೂ ನೋಡುಗರಿಗೆ ಅವರ ಅನಿಸಿಕೆ, ಉದ್ದೇಶ, ನಿಲುವು ಮೊದಲಾದುವು ಗೊತ್ತಾಗುತ್ತವೆ. ಅವರೆದುರು ನೋಡುಗರಿದ್ದಾರೆಂಬುದೇ ಇಂತಹ ಮಾತು ಗಳನ್ನು ನಾಟಕದಲ್ಲಿ ಸೇರಿಸಿರುವುದಕ್ಕೆ ಮೂಲ ಕಾರಣ. ಸೂಳುನುಡಿಗಳಲ್ಲಿ ಇಂತಹ ಒರ್ಸೂಳುಗಳು ಬರುವುದಿಲ್ಲ.
(5) ನಾಟಕವೂ ಒಂದು ನಲ್ಬರಹ: ನಾಟಕವೊಂದು ನಲ್ಬರಹ (ಸಾಹಿತ್ಯ ಬರಹ) ಎಂಬುದೂ ಅದನ್ನು ಸಾಮಾನ್ಯ ಮಾತಿನಿಂದ ಬೇರಾಗಿರುವಂತೆ ಮಾಡುತ್ತದೆ. ನಲ್ಬರಹಗಳಲ್ಲಿ ಕಂಡುಬರುವ ಪರಿಚೆಗಳೆಲ್ಲವೂ ನಾಟಕದ ನಡುನುಡಿಗಳಲ್ಲೂ ಬರುತ್ತವೆ. ಎತ್ತುಗೆಗಾಗಿ, ಅದರಲ್ಲಿ ಬರುವ ಪಾಂಗುಗಳೆಲ್ಲ ಕಲ್ಪಿತವಾದುವು, ಮತ್ತು ಈ ಪಾಂಗುಗಳ ಮಾತುಕತೆ, ಅನಿಸಿಕೆ, ನಡವಳಿಕೆ ಮೊದಲಾದವೂ ಕಲ್ಪಿತವಾದುವು.
ನಲ್ಬರಹಗಳಲ್ಲಿ ಸೊಲ್ಲುಗಳನ್ನು ಓದುಗರು ಗಮನಿಸುವ ಹಾಗೆ ಬರೆಯ ಲಾಗುತ್ತದೆ ಮತ್ತು ಇದಕ್ಕಾಗಿ ಅವನ್ನು ಯಾವಾಗಿನ ಬಳಕೆಯಲ್ಲಿರುವ ಹಾಗೆ ಬಳಸದೆ, ಬೇರೆ ಬಗೆಗಳಲ್ಲಿ ಬಳಸಲಾಗುತ್ತದೆ. ಒಳಹುರುಳು, ಕಟಕಿ(ವ್ಯಂಗ್ಯ) ನುಡಿ, ಇಪ್ಪುರುಳು, ಮಾರ್ಪುರುಳು ಮೊದಲಾದವು ಅವುಗಳಲ್ಲಿ ಹೆಚ್ಚು ಬಳಕೆಯಾಗುತ್ತವೆ. ನಾಟಕಗಳಲ್ಲಿಯೂ ಹೀಗೆಯೇ. ಮೇಲೆ ಸೂಚಿಸಿದ ಹಾಗೆ, ಅವುಗಳಲ್ಲಿ ಬರುವ ಮಾತುಗಳನ್ನು ಬೇರೆ ಕಡೆಗಳಲ್ಲಿ ಬಳಸಿದೆವಾದರೆ ಅದು ತೀರಾ ಅಸಹಜವೆಂದಿನಿಸದಿರದು.
5.3.2 ನಡುನುಡಿಯಲ್ಲಿ ಸೂಳುನುಡಿಯ ಕಟ್ಟಲೆಗಳ ಬಳಕೆ
ಪಾಂಗುಗಳ ನಡುವೆ ಬಳಕೆಯಾಗುವ ನಡುನುಡಿಗೂ ಜನರ ನಡುವೆ ಬಳಕೆ ಯಾಗುವ ಸೂಳುನುಡಿಗೂ ನಡುವೆ ಮೇಲೆ ವಿವರಿಸಿದಂತಹ ಹಲವಾರು ವ್ಯತ್ಯಾಸಗಳಿವೆಯಾದರೂ, ನಲ್ಬರಹಗಳಲ್ಲೆಲ್ಲ ಸೂಳುನುಡಿಗೆ ತುಂಬಾ ಹತ್ತಿರದವಾಗಿರುವವುಗಳು ನಾಟಕಗಳೇ. ಯಾಕೆಂದರೆ, ದೂರುವುದು, ಬಯ್ಯುವುದು, ಹೊಗಳುವುದು, ಒಪ್ಪುವುದು, ಅಲ್ಲಗಳೆಯುವುದು, ಸುಳ್ಳು ಹೇಳುವುದು ಮೊದಲಾದ ಸೂಳುನುಡಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ಬಗೆಯ ಮಾತಿನ ಕೆಲಸಗಳು ಬೇರೆ ಬಗೆಯ ನಲ್ಬರಹಗಳಿಗಿಂತ ನಾಟಕಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುತ್ತವೆ. ಈ ಕಾರಣಕ್ಕಾಗಿ, ಸೂಳುನುಡಿಗಳ ಒಳಗುಟ್ಟನ್ನರಿಯಲು ಸೊಲ್ಲರಿಗರು ಬಳಸುವ ಹಲವು ಹೊಲಬು(ವಿದಾನ) ಗಳನ್ನು ನಾಟಕದ ಒಳಗುಟ್ಟನ್ನರಿಯುವಲ್ಲೂ ಬಳಸಲು ಬರುತ್ತದೆ.
ಎತ್ತುಗೆಗಾಗಿ, ಜನರು ಮಾತನಾಡುವಾಗ ಸಾಮಾನ್ಯವಾಗಿ ಕೆಲವು ಕಟ್ಟಲೆ ಗಳನ್ನು ಮುರಿಯದಿರುತ್ತಾರೆ, ಮತ್ತು ತಮ್ಮ ಕೇಳುಗರೂ ಅವನ್ನು ಮುರಿಯದಿರಬಹುದೆಂದು ಎದುರುನೋಡುತ್ತಿರುತ್ತಾರೆ. ಪಾಲ್ ಗ್ರಯ್್ಸ ಎಂಬ ಅರಿಮೆಯರಿಗರು ಇಂತಹ ನಾಲ್ಕು ಮುಕ್ಯ ಕಟ್ಟಲೆಗಳನ್ನು ಹೆಸರಿಸಿದ್ದಾರೆ: ನಿಜವನ್ನೇ ಹೇಳುವುದು; ಬೇಕಾದಶ್ಟೇ ಹೇಳುವುದು; ತಕ್ಕುದಾದುದನ್ನೇ ಹೇಳುವುದು; ಮತ್ತು ತಿಳಿಯುವಂತೆ ಹೇಳುವುದು. ಈ ಕಟ್ಟಲೆಗಳನ್ನು ಸೂಳುನುಡಿಗಳಲ್ಲಿ ಮುರಿಯಬಾರದೆಂದೇನಿಲ್ಲ; ಜನರು ಆಗಾಗ ಇವನ್ನು ಮುರಿಯುತ್ತಿರುತ್ತಾರೆ; ಆದರೆ ಹಾಗೆ ಮುರಿದಾಗ, ಹಲವಾರು ತೊಡಕುಗಳು ಕಾಣಿಸಿಕೊಳ್ಳುತ್ತವೆ.
ಈ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿಯಲು ಕೆಲವು ಎತ್ತುಗೆಗಳನ್ನು ಗಮನಿಸಬಹುದು: ಗಣಪತಿ ದೇವಾಲಯಕ್ಕೆ ಇಲ್ಲಿಂದ ಎಶ್ಟು ದೂರ?
ಎಂದು ಯಾರಾದರೂ ಕೇಳಿದರೆ, ನೀವು ನಿಮಗೆ ಗೊತ್ತಿದ್ದಂತೆ ಸರಿಯಾದ ದೂರವನ್ನೇ ತಿಳಿಸುತ್ತೀರಿ, ಮತ್ತು ಆ ಮೂಲಕ ಮೊದಲನೆಯ ಕಟ್ಟಲೆಯನ್ನು ಮುರಿಯದಿರುತ್ತೀರಿ. ಇದಲ್ಲದೆ, ಕೇಳಿದ ಕೇಳ್ವಿಗೆ ಹೊಂದಿಕೆಯಾಗುವಂತಹ ವಿಶಯಗಳನ್ನು ಮಾತ್ರವೇ ಸಾಮಾನ್ಯವಾಗಿ ತಿಳಿಸುತ್ತೀರಲ್ಲದೆ, ಬೇರೆ ಹೊಂದಿಕೆ ಯಾಗದ ವಿಶಯಗಳನ್ನು ತಿಳಿಸಲು ಹೋಗುವುದಿಲ್ಲ. ಆದರೆ, ಬೇಕೆಂದೇ ಈ ಕಟ್ಟಲೆಗಳನ್ನು ಮುರಿಯುವವರೂ ಕೆಲವರಿರುತ್ತಾರೆ.
ಕೆಲವರು ಒಂದು ಕೇಳ್ವಿಗೆ ಉತ್ತರ ಕೊಡಲು ಮನಸ್ಸಿಲ್ಲದಿರುವಾಗ, ಬೇರೇನ ನ್ನಾದರೂ ಹೇಳುತ್ತಾರೆ; ಹೀಗೆ ಮಾಡುವ ಮೂಲಕ, ಅವರು ಮೂರನೇ ಕಟ್ಟಲೆಯನ್ನು ಮುರಿಯುತ್ತಾರೆ. ಇನ್ನು ಕೆಲವರು ಹೇಳುವುದನ್ನು ತಿಳಿಯಾಗಿ, ಇಪ್ಪುರುಳುಗಳು ತಲೆಹಾಕದ ಹಾಗೆ ಹೇಳುವ ಬದಲು, ಬೇಕೆಂದೇ ಕೇಳುಗರಿಗೆ ಗೊಂದಲವುಂಟಾಗುವ ಹಾಗೆ ಮಾತನಾಡುತ್ತಾರೆ; ಇವರು ನಾಲ್ಕನೆಯ ಕಟ್ಟಲೆ ಯನ್ನು ಮುರಿಯುತ್ತಾರೆ.
ಸಾಮಾನ್ಯವಾಗಿ, ಕೇಳುಗರು ನಮ್ಮನ್ನು ತಪ್ಪಾಗಿ ತಿಳಿಯಬಾರದೆಂಬ ಬಯಕೆ ನಮ್ಮಲ್ಲಿರುತ್ತದೆ. ಹಾಗಾಗಿ, ಮಾತನಾಡುವಾಗ ನಾವು ಮೇಲಿನ ಕಟ್ಟಲೆಗಳನ್ನು ಮುರಿಯಲು ಹೋಗುವುದಿಲ್ಲ. ಆದರೆ, ಹಲವು ಕಡೆಗಳಲ್ಲಿ ಇವನ್ನು ಬೇರೆ ಕಾರಣಕ್ಕಾಗಿ ಮುರಿಯಬೇಕಾಗುತ್ತದೆ: ಕೆಲವೊಮ್ಮೆ ಕೇಳುಗರಿಗೆ ಬೇಸರವಾಗುವ ಹಾಗಿದ್ದಲ್ಲಿ ಸುಳ್ಳು ಹೇಳಬೇಕಾಗುತ್ತದೆ; ಮನಸ್ಸಿನ ದುಗುಡವನ್ನು ಅಡಗಿಸಲು ಏನೇನೋ ಹರಟಬೇಕಾಗುತ್ತದೆ; ಮತ್ತು ಕೆಲವೊಮ್ಮೆ ಹೇಳಬೇಕೆಂದಿರುವುದನ್ನು ಓರೆಯಾಗಿ ಇಲ್ಲವೇ ಇಪ್ಪುರುಳುಗಳು ಕಾಣಿಸಿಕೊಳ್ಳುವಂತೆ ಹೇಳಬೇಕಾಗುತ್ತದೆ. ನಾಟಕಗಳ ನಡುನುಡಿಯನ್ನು ಬರೆಯುವ ಬರಹಗಾರರು ಬೇಕೆಂದೇ ಈ ಕಟ್ಟಲೆಗಳನ್ನು ತಮ್ಮ ಪಾಂಗುಗಳು ಆಗಾಗ ಮುರಿಯುತ್ತಿರುವಂತೆ ಮಾಡುತ್ತಾರೆ. ಇದಕ್ಕೆ ಕಾರಣವೇನೆಂದರೆ, ನಾಟಕಗಳಲ್ಲಿ ಪಾಂಗುಗಳ ನಡುವೆ ಆಗಾಗ ತಿಕ್ಕಾಟ ವುಂಟಾಗುವ ಹಾಗೆ ಮಾಡಬೇಕಾಗುತ್ತದೆ, ಮತ್ತು ಅದರಿಂದಾಗಿ ಸನ್ನಿವೇಶದಲ್ಲಿ ಬಿಗಿತ ಕಾಣಿಸಿಕೊಳ್ಳುವ ಹಾಗೆ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ, ನಾಟಕಗಳು ಓದುಗರ ಇಲ್ಲವೇ ನೋಡುಗರ ಆಸಕ್ತಿಯನ್ನು ಉಳಿಸಿಕೊಳ್ಳ ಲಾರವು. ಮೇಲೆ ವಿವರಿಸಿದಂತಹ ಮಾತಿನ ಕಟ್ಟಲೆಗಳನ್ನು ಮುರಿಯುವ ಮೂಲಕ, ಅವು ನೋಡುಗರ ಇಲ್ಲವೇ ಓದುಗರ ಕುತೂಹಲವನ್ನು ಕೆರಳಿಸು ತ್ತವೆ.
ಎತ್ತುಗೆಗಾಗಿ, ಜಡಬರತ ಅವರ ಮೂಕಬಲಿ ನಾಟಕದಲ್ಲಿ ಸೀತಕ್ಕ ತನ್ನ ಮಗಳನ್ನು ಗಂಡನ ಮನೆಯವರು ಕಳಿಸುತ್ತಾರೋ ಇಲ್ಲವೋ ಎಂದು ಕೇಳಿದಾಗ
ಶೀನಪ್ಪನು ನೇರವಾದ ಮರುನುಡಿಯನ್ನು ಕೊಡುವ ಬದಲು, ಸೀತಕ್ಕನ ಮಗಳ ಗಂಡನ ಮನೆಯನ್ನು ವರ್ಣಿಸಲು ತೊಡಗುತ್ತಾನೆ. ಇದು ಮೂರನೆಯ ಕಟ್ಟಲೆ ಯನ್ನು ಮುರಿಯುವುದಾದರೂ, ನೋಡುಗರಿಗೆ ಆ ಮನೆಯ ಪರಿಚಯವನ್ನು ಒದಗಿಸಿ, ಮುಂದೆ ನಡೆಯಲಿರುವ ಎಸಕಕ್ಕೆ ಮುನ್ನುಡಿಯಾಗುತ್ತದೆ.
ಟಿ.ಪಿ. ಕಯ್ಲಾಸಂ ಅವರ ಪೋಲಿಕಿಟ್ಟಿ ನಾಟಕದಲ್ಲಿ ಬರುವ ಕೆಳಗಿನ ನಡುನುಡಿಯಲ್ಲಿ ಸೂಳುನುಡಿಯ ಎರಡನೇ ಕಟ್ಟಲೆಯನ್ನು ಮುರಿಯಲಾಗಿದೆ:
ಮುದುಕ: … ಒಂದು ವಾರ್ದಲ್ಲಿ ನಾಕ್ ಜನಾನ್ನ ಕಳ್ಕೊಂಡೇ ಬುದ್ದಿ! … ದೊಡ್ಮಾರಿ ಬಾಯಿಗೆ ತುತ್ತಿಟ್ಟು … ಕಿಟ್ಟಿ: (ಅಣಕಿಸುವುದನ್ನು ಬಿಟ್ಟು) ನಾಕು ಜನಾನು! ಒಂದೇ ವಾರ್ದಲ್ಲೇ! … ಮಾರಿ ಬಾಯಿಗೆ ತುತ್ತಿಟ್ಟು! ಯಾವ ಮಾರಿಗಯ್ಯ?
ಈ ನಡುನುಡಿಯಲ್ಲಿ ಕಿಟ್ಟಿ ಮುದುಕ ಹೇಳಿದುದನ್ನೇ ಹೇಳುವ ಹಾಗೆ, ಮತ್ತು ಸೂಳುನುಡಿಯ ಎರಡನೇ ಕಟ್ಟಲೆಯನ್ನು ಮುರಿಯುವ ಹಾಗೆ ಮಾಡ ಲಾಗಿದೆ. ಆದರೆ, ಆ ಮೂಲಕ ಅವನಿಗೆ ತನ್ನ ಬೆರಗನ್ನು ತುಂಬಾ ಚನ್ನಾಗಿ ಸೂಚಿಸಲು ಸಾದ್ಯವಾಗಿದೆ.
ನಾಟಕಗಳಲ್ಲಿ ಬರುವ ಪಾಂಗುಗಳು ಒಂದಕ್ಕಿಂತ ಒಂದು ಬೇರಾಗಿ ಕಾಣಿಸುವ ಹಾಗೆ ಮಾಡುವಲ್ಲಿಯೂ ಮಾತಿನ ಕಟ್ಟಲೆಗಳನ್ನು ಬಳಸಿಕೊಳ್ಳಲು ಬರುತ್ತದೆ. ಎತ್ತುಗೆಗಾಗಿ, ಒಬ್ಬ ವ್ಯಕ್ತಿ ಯಾವಾಗಲೂ ಬೇರೆಯವರು ಮಾತನಾಡುತ್ತಿರುವಾಗ ನಡುವೆ ಏನಾದರೂ ಹೇಳುತ್ತಿರುವಂತೆ, ಮತ್ತು ಬೇರೆಯವರ ಮಾತನ್ನು ತುಂಡಿಸುತ್ತಿರುವಂತೆ ತೋರಿಸಬಹುದು. ಹೀಗೆ ಮಾಡುವ ಮೂಲಕ, ಆತನೊಬ್ಬ ತುಂಬಾ ಒರಟನಾದ ವ್ಯಕ್ತಿಯೆಂಬುದಾಗಿ ಕಾಣಿಸಬಹುದು. ಇನ್ನೊಬ್ಬ ವ್ಯಕ್ತಿ ಯಾವಾಗಲೂ ಬೇರೆಯವರು ಹೇಳಿದುದನ್ನು ಹಾಗೆಯೇ ಹೇಳುತ್ತಿರಬಹುದು, ಮತ್ತು ಹಾಗೆ ಹೇಳುವುದೇ ಆತನ ಪರಿಚೆಯಾಗ ಬಲ್ಲುದು. ಈ ಎರಡು ಕಡೆಗಳಲ್ಲೂ ಮಾತಿನ ಕಟ್ಟಲೆಗಳನ್ನು ಮುರಿಯಲಾಗಿದೆ ಎಂಬುದನ್ನು ಗಮನಿಸಬಹುದು.
5.3.2 ಆಡುನುಡಿ ಮತ್ತು ಒಳನುಡಿಗಳ ಬಳಕೆ
ನಾಟಕದಲ್ಲಿ ಒಂದು ಪಾಂಗಿನ (ಪಾತ್ರದ) ಮಾತುಗಳನ್ನು ಬರೆಯುವಾಗ, ಅದು ಎಂತಹವರನ್ನು ಸೂಚಿಸುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು
ಅವಶ್ಯ. ಆತ ಎಶ್ಟು ಕಲಿತಿದ್ದಾನೆ, ಯಾವ ಊರು ಮತ್ತು ಪಂಗಡಕ್ಕೆ ಸೇರಿದ್ದಾನೆ, ಆತನ ವಯಸ್ಸೆಶ್ಟು, ಎಂತಹ ಕೆಲಸದಲ್ಲಿದ್ದಾನೆ ಮೊದಲಾದ ಹಲವು ಬಗೆಯ ವಿಶಯಗಳನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ತಕ್ಕುದಾಗುವ ಹಾಗೆ ಆ ಪಾಂಗಿನ ಮಾತುಗಳನ್ನು ಬರೆಯಬೇಕಾಗುತ್ತದೆ.
ಎಲ್ಲರಿಗೂ ಅವರದೇ ಆದ ಅನುಬವ, ತಿಳುವಳಿಕೆ, ಅನಿಸಿಕೆ, ಮತ್ತು ನಡವಳಿಕೆಗಳಿರುತ್ತವೆ. ಇವನ್ನೆಲ್ಲ ಒಟ್ಟಿಗೆ ಅವರ ಪರಿಚೆ ಎಂದು ಕರೆಯ ಬಹುದು. ಅವರು ಆಡುವ ಮಾತುಗಳಲ್ಲಿ ಈ ಪರಿಚೆ ಹಲವು ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಾಟಕವನ್ನು ಬರೆಯುವವರು ಅದರಲ್ಲಿ ಬರುವ ಪಾಂಗುಗಳ ಪರಿಚೆಯನ್ನು ಅವರ ಮಾತುಗಳು ಸರಿಯಾಗಿ ತೋರಿಸಿಕೊಡುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ನೋಡುಗರಿಗೆ ಆ ಪಾಂಗುಗಳು ನಂಬಬಲ್ಲ ವೆಂದು ಅನಿಸಲಾರವು.
ಇದಲ್ಲದೆ, ಒಂದು ಪಾಂಗಿಗೆ ಒಂದು ಬಗೆಯ ಮಾತನ್ನು ಒಮ್ಮೆ ಕೊಟ್ಟ ಮೇಲೆ ನಾಟಕದುದ್ದಕ್ಕೂ ಅಂತಹದೇ ಮಾತನ್ನು ಅದಕ್ಕೆ ಕೊಡುತ್ತಿರಬೇಕಾಗು ತ್ತದೆ. ಎತ್ತುಗೆಗಾಗಿ, ಶ್ರೀರಂಗರ ಹರಿಜನ್ವಾರ ನಾಟಕದಲ್ಲಿ ವೇದಕ್ಕನ ಮಾತು ಗಳನ್ನು ಗಮನಿಸಬಹುದು. ಇವುಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಉದ್ದಕ್ಕೂ ಇಕಾರ ಇಲ್ಲವೇ ಎಕಾರದ ಮೊದಲು ಬರುವ ವಕಾರ ಬಿದ್ದುಹೋಗುವುದನ್ನು, ಮತ್ತು ಅದರ ಬದಲು ಯಕಾರ ಬರುವುದನ್ನು ಕಾಣಬಹುದು (ವಿಚಾರ> ಯಿಚಾರ, ವಿಶ್ವಾಸ>ಯಿಶ್ವಾಸ, ವೇಣಕ್ಕ>ಯೇಣಕ್ಕ). ಬೇರೆ ಯಾವ ಪಾಂಗುಗಳ ಮಾತಿನಲ್ಲೂ ಈ ಬದಲಾವಣೆ ಕಾಣಿಸುವುದಿಲ್ಲ. ಹಾಗಾಗಿ, ನಾಟಕದ ಓದುಗರಿಗೆ ಇಲ್ಲವೇ ನೋಡುಗರಿಗೆ ಇದು ಆ ಪಾಂಗಿನ ಒಂದು ಪರಿಚೆಯಾಗಿ ಕಾಣಿಸುತ್ತದೆ.
ಊರಿನಿಂದ ಊರಿಗೆ ಮತ್ತು ಪಂಗಡದಿಂದ ಪಂಗಡಕ್ಕೆ (ಇಲ್ಲವೇ ಜಾತಿ ಯಿಂದ ಜಾತಿಗೆ) ಆಡುಮಾತು ಬೇರೆ ಬೇರಾಗಿರುತ್ತದೆ. ನಾಟಕದಲ್ಲಿ ಪಾಂಗಿನ ಊರು ಮತ್ತು ಪಂಗಡಗಳನ್ನು ಸೂಚಿಸುವುದಕ್ಕಾಗಿ ಆಡುಮಾತನ್ನು ಬಳಸ ಲೇನೋ ಸಾದ್ಯವಿದೆ; ಆದರೆ, ಇದರಿಂದಾಗಿ ಹೆಚ್ಚಿನ ಓದುಗ ಇಲ್ಲವೇ ನೋಡುಗರಿಗೂ ಆ ಪಾಂಗು ಏನು ಹೇಳುತ್ತಿದೆಯೆಂಬುದೇ ಗೊತ್ತಾಗದ ಹಾಗೆ ಆಗಬಲ್ಲುದು. ಹಾಗಾಗಿ, ಆಡುಮಾತನ್ನು ಪೂರ್ತಿಯಾಗಿ ಬಳಸುವ ಬದಲು, ಆಡುಮಾತೆಂಬ ಅನಿಸಿಕೆಯನ್ನು ಕೊಡಬಲ್ಲ ಕೆಲವು ಪದ ಮತ್ತು ಪದರೂಪಗಳನ್ನು ಇಲ್ಲವೇ ಸೊಲ್ಲುಗಳ ಇಟ್ಟಳಗಳನ್ನು ಮಾತ್ರವೇ ನಾಟಕದ ನಡುನುಡಿಗಳಲ್ಲಿ ಬಳಸಹೋಗುವುದು ಒಳ್ಳೆಯದು.
ನುಡಿಗಳಿಗಿರುವ ಒಳನುಡಿಗಳನ್ನೂ ಇದೇ ಬಗೆಯಲ್ಲಿ ಬಳಸಬಹುದು: ಬೇರೆ ಬೇರೆ ಕೆಲಸಗಳಲ್ಲಿರುವ ಜನರು ಬೇರೆ ಬೇರೆ ಬಗೆಯ ಒಳನುಡಿಗಳನ್ನು ಬಳಸುತ್ತಾರೆ. ಎತ್ತುಗೆಗಾಗಿ, ವಕೀಲರು, ಡಾಕ್ಟರುಗಳು ಇಲ್ಲವೇ ಇಂಜಿನಿಯರು ಗಳು ತಮ್ಮ ತಮ್ಮೊಳಗೆ ಮಾತನಾಡುವಾಗ, ತಮ್ಮದೇ ಆದ ಒಳನುಡಿಗಳನ್ನು ಬಳಸುತ್ತಿರುತ್ತಾರೆ. ನಾಟಕದಲ್ಲೂ ಕೂಡ, ಇಂತಹ ಪಾಂಗುಗಳು ತಮ್ಮೊಳಗೆ ಮಾತನಾಡುವ ಸಮಯದಲ್ಲಿ ಈ ತಮ್ಮದೇ ಆದ ಒಳನುಡಿಗಳನ್ನು ಬಳಸುವ ಹಾಗೆ ಮಾಡಬಹುದು. ಆದರೆ ಈ ಬಳಕೆಯನ್ನೂ, ಆಡುನುಡಿಯ ಬಳಕೆಯ ಹಾಗೆ, ಹದ್ದಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಈ ಪಾಂಗುಗಳು ಏನು ಹೇಳುತ್ತಿದ್ದಾರೆಂಬುದು ನಾಟಕದ ನೋಡುಗರಿಗೆ ಗೊತ್ತಾಗದು.
5.4 ನಾಟಕದಲ್ಲಿ ನುಡಿಯೊಡ್ಡವ
ನಾಟಕಗಳನ್ನು ಬರೆಯುವವರಿಗೆ ಮತ್ತು ಬರೆದ ನಾಟಕಗಳನ್ನು ಒರೆದು ನೋಡು ವವರಿಗೆ (ವಿಮರ್ಶಕರಿಗೆ) ಎರಡು ಬಗೆಯ ಸೊಲ್ಲರಿಮೆಯ ತಿಳಿವುಗಳು ನೆರವಿಗೆ ಬರಬಲ್ಲುವು: ಸೊಲ್ಲುಗಳ ನಡುವಿನ ಪತ್ತುಗೆ(ಸಂಬಂದ)ಯೆಂತಹದು, ಎಂತಹ ಪತ್ತುಗೆಯಿದ್ದರೆ ಬರಹ ಚನ್ನಾಗಿರಬಲ್ಲುದು ಎಂಬುದರ ಕುರಿತಾದ ತಿಳಿವು ಒಂದು ಬಗೆಯದು, ಮತ್ತು ಸೊಲ್ಲುಗಳಿಗೆ ಯಾವ ಬಗೆಯ ಹುರುಳುಗಳೆಲ್ಲ ಇರಬಲ್ಲುವು, ಮತ್ತು ಈ ಹುರುಳುಗಳನ್ನು ಬಳಸಿಕೊಂಡು ನೋಡುಗರ ಆಸಕ್ತಿ ಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಕುರಿತಾದ ತಿಳಿವು ಇನ್ನೊಂದು ಬಗೆಯದು. ಈ ಎರಡು ಬಗೆಯ ತಿಳಿವುಗಳೂ ನಾಟಕದ ನುಡಿಯೊಡ್ಡವ(ಶಯ್ಲಿ) ವನ್ನು ಕಲ್ಪಿಸಿಕೊಳ್ಳುವಲ್ಲಿ ನೆರವಿಗೆ ಬರುತ್ತವೆ.
5.4.1 ಸೊಲ್ಲುಗಳ ನಡುವಿನ ಪತ್ತುಗೆ
ಎರಡು ಇಲ್ಲವೇ ಹೆಚ್ಚು ಮಂದಿ ಒಟ್ಟಿಗೆ ಸೇರಿ ಮಾತನಾಡುತ್ತಿರುವಾಗ, ಯಾರು, ಯಾವಾಗ, ಮತ್ತು ಹೇಗೆ ಮಾತಿನಲ್ಲಿ ತೊಡಗುತ್ತಾರೆ ಎಂಬ ವಿಶಯದಲ್ಲಿ ಹಲವು ಬಗೆಯ ಅರಕೆ(ಸಂಶೋದನೆ)ಗಳು ನಡೆದಿವೆ. ಇವನ್ನು ಒಟ್ಟಾಗಿ ಪಾಳಿಹಿಡಿಯುವುದು ಇಲ್ಲವೇ ಪಾಳಿಯೆತ್ತುವುದು ಎಂಬುದಾಗಿ ಕರೆಯಬಹುದು. ಈ ಅರಕೆಗಳ ಮೂಲಕ ಈಗಾಗಲೇ ಕಂಡು ಹಿಡಿದಿರುವ ಸಂಗತಿಗಳು ನಾಟಕಗಳ ನಡುನುಡಿಗಳಲ್ಲಿ ಬರುವ ಸೊಲ್ಲುಗಳ ನಡುವಿನ ಪತ್ತುಗೆಯನ್ನು ವಿವರಿಸುವಲ್ಲಿ ನೆರವಿಗೆ ಬರಬಲ್ಲುವು.
ಒಬ್ಬನ ಮಾತು ಮುಗಿದ ಮೇಲೆ ಉಳಿದವರಲ್ಲಿ ಮಾತನಾಡುವ ಪಾಳಿ ಯಾರದು ಎಂಬುದನ್ನು ಕಣ್ಣುಸನ್ನೆಯ ಮೂಲಕ ಇಲ್ಲವೇ ಹೆಸರನ್ನೆತ್ತುವ ಮೂಲಕ ಅವನೇ ಸೂಚಿಸಬಹುದು, ಇಲ್ಲವೇ ಮಾತನಾಡುವವನು ತಾನೇ ಪಾಳಿಯನ್ನೆತ್ತಿಕೊಳ್ಳಬಹುದು. ಸಾಮಾನ್ಯವಾಗಿ, ಈ ಪಾಳಿಹಿಡಿಯುವ ಕೆಲಸ ಸಲೀಸಾಗಿ, ಹೆಚ್ಚಿನ ಅಡೆತಡೆಗಳಿಲ್ಲದೆ, ನಡೆಯುತ್ತಿರುತ್ತದೆ. ಆದರೆ ಕೆಲವೊಮ್ಮೆ ತೊಡಕುಗಳೂ ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಕೆಲವೊಮ್ಮೆ ಇಬ್ಬರು ಒಟ್ಟೊಟ್ಟಿಗೆ ಮಾತನಾಡಲು ತೊಡಗು ತ್ತಾರೆ; ಆದರೆ ಸಾಮಾನ್ಯವಾಗಿ, ಅವರಲ್ಲೊಬ್ಬನು ತನ್ನ ಪಾಳಿಯನ್ನು ಬಿಟ್ಟುಕೊಡುವ ಮೂಲಕ, ಈ ತೊಡಕನ್ನು ಬಗೆಹರಿಸುತ್ತಾನೆ. ಒಬ್ಬನ ಮಾತು ಮುಗಿಯುವ ಮೊದಲೇ ಇನ್ನೊಬ್ಬನು ಮಾತಿನಲ್ಲಿ ತೊಡಗುವುದೂ ಇದೆ. ಆತನ ಮಾತು ತನಗೆ ಒಪ್ಪಿಗೆಯಾಗುವುದಿಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ಈ ರೀತಿ ಮಾಡಬಹುದು, ಇಲ್ಲವೇ ಆತನು ಹೇಳುತ್ತಿರುವುದಕ್ಕೆ ತನ್ನ ಒಪ್ಪಿಗೆ ಯನ್ನು ಸೂಚಿಸುವುದಕ್ಕಾಗಿಯೂ ಹೀಗೆ ಮಾಡಬಹುದು. ಈ ಎರಡು ಬಗೆ ಯಲ್ಲೂ ಒಬ್ಬನು ಮಾತನಾಡುತ್ತಿರುವಾಗ ನಡುವೆ ಇನ್ನೊಬ್ಬ ತನ್ನ ಮಾತನ್ನು ಸೇರಿಸಲು ಹೋಗಬಹುದು.
ಸಾಮಾನ್ಯವಾಗಿ, ಪಾಳಿಗಳು ನುಡಿ ಮತ್ತು ಮರುನುಡಿ ಎಂಬ ಜೋಡಿಗಳಾಗಿ ಬರುತ್ತಿರುತ್ತವೆ. ಕೇಳ್ವಿ-ಮರುನುಡಿ, ದೂರು-ತಪ್ಪಪ್ಪಿಗೆ, ತೆಗಳಿಕೆ-ಅಲ್ಲಗಳೆತ, ಹದುಳೊರೆ(ಶುಬಾಶಯ)-ಹದುಳೊರೆ ಮೊದಲಾದುವು ಇಂತಹ ಜೋಡುಪಾಳಿಗಳು. ಇವುಗಳಲ್ಲಿ ಕೆಲವು ಬಗೆಯ ಮರುನುಡಿಗಳನ್ನು ಆಡುಗರು ಎದುರುನೋಡುತ್ತಿರುತ್ತಾರೆ. ಹಾಗೆ ಎದುರುನೋಡುತ್ತಿರುವ ಮಾತಿಗಿಂತ ಬೇರಾಗಿರುವ ಮಾತಿನ ಬಳಕೆಯಾದಾಗ ತಿಕ್ಕಾಟವುಂಟಾಗುತ್ತದೆ.
ನಾಟಕದ ನಡುನುಡಿಯಲ್ಲಿ ಪಾಂಗುಗಳ ನಡುವೆ ಪಾಳಿಹಿಡಿಯುವ ಕೆಲಸ ಹೇಗೆ ನಡೆಯಬೇಕು ಎಂಬುದನ್ನು ಬರಹಗಾರರೇ ತೀರ್ಮಾನಿಸುತ್ತಾರೆ. ಪಾಂಗು ಗಳ ಪರಿಚೆಯನ್ನು ಸೂಚಿಸುವುದಕ್ಕಾಗಿ, ಮತ್ತು ಸನ್ನಿವೇಶದಲ್ಲಿ ಬಿಗಿತವ ನ್ನುಂಟುಮಾಡುವುದಕ್ಕಾಗಿ ಅವರು ಅದನ್ನು ತಮಗೆ ಬೇಕಾದ ಹಾಗೆ ಹಲವು ಬಗೆಗಳಲ್ಲಿ ಬದಲಾಯಿಸಿಕೊಳ್ಳಬಲ್ಲರು. ಈ ಕೆಲಸವನ್ನು ನಡೆಸುವಲ್ಲಿಯೂ ಪಾಳಿಹಿಡಿಯುವ ಕುರಿತಾಗಿ ತಿಳಿವಿಗರು ನಡೆಸಿರುವ ಅರಕೆಗಳು ನೆರವಿಗೆ ಬರಬಲ್ಲುವು.
ಎತ್ತುಗೆಗಾಗಿ, ಟಿ.ಪಿ. ಕಯ್ಲಾಸಂ ಅವರ ತಾಳೀಕಟ್ಟೋಕ್ಕೂಲೀನೇ ಎಂಬ
ನಾಟಕದಲ್ಲಿ ಬರುವ ಕೆಳಗಿನ ನಡುನುಡಿಯನ್ನು ಗಮನಿಸಬಹುದು:
ಲಕ್ಷ್ಮಿ: ಬಂದ್ರಾ…? ನಾಗತ್ತೆ: ಇಲ್ಲ! ಇನ್ನೂ ಊರಲ್ಲೇ ಇಧೇನೆ! …. ಇದೇನು ಜಾಣತನದ ಪ್ರಶ್ನೆಯೋ? … ಊರು ಬಿಟ್ಟು ಊರಿಗೆ ಬಂದು ಎದುರಿಗೆ ನಿಂತಿರೋವ್ರನ್ನ ನೋಡಿ ಬಂದ್ರಾ ಅಂದ್ರೆ, ಏನು ಬುದ್ಧಿಮಂದಾನೋ, ಇಲ್ಲ ದೃಷ್ಟಿ ಮಧ್ಯಸ್ಥಾನೋ, ನನಗೇನ್ಗೊತ್ತು!…?
ಹದುಳೊರೆಯಾಗಿ ಹೇಳಿದ ಮಾತನ್ನು ಹದುಳೊರೆಯೆಂದು ತಿಳಿಯದೆ, ಅದಕ್ಕೆ ನೇರ ಹುರುಳನ್ನು ಕೊಡುವ ಮೂಲಕ ಇಲ್ಲಿ ನೋಡುಗರು ನಗುವಂತೆ ಮಾಡಲಾಗಿದೆ.
ಕೇಳುಗನಿಗೆ ಮದಿಪನ್ನು (ಗವ್ರವವನ್ನು) ಕೊಡುವುದಕ್ಕಾಗಿ ನೀನು ಪದದ ಬದಲು ನೀವು ಪದವನ್ನು ಬಳಸಲಾಗುತ್ತದೆ. ಈ ಯಾವಾಗಿನ ಬಳಕೆಯನ್ನು ಮುರಿಯುವ ಮೂಲಕವೂ ನಡುನುಡಿಯಲ್ಲಿ ತಿಕ್ಕಾಟವನ್ನುಂಟುಮಾಡಲು ಬರುತ್ತದೆ. ಹೀಗೆ ಮಾಡಿರುವುದನ್ನು ಟಿ.ಪಿ.ಕಯ್ಲಾಸಂರವರ ತಾಳೀಕಟ್ಟೋ ಕ್ಕೂಲಿನೇ ನಾಟಕದಲ್ಲಿ ಕಾಣಬಹುದು. ಅದರಲ್ಲಿ ಉದ್ದಕ್ಕೂ ನರಸಿಂಹಯ್ಯನು ರಾಮಣ್ಣನೊಡನೆ ಮಾತನಾಡುವಾಗ ನೀವು ಪದವನ್ನು ಬಳಸುತ್ತಿದ್ದು, ನಾಟಕದ ಕೊನೆಯಲ್ಲಿ, ಇದ್ದಕ್ಕಿದ್ದ ಹಾಗೆ, ಮದಿಪು ಕೆಡಿಸುವ ನೀನು ಪದವನ್ನು ಬಳಸುತ್ತಾನೆ. ವರದಕ್ಶಿಣೆಯ ವಿಶಯದಲ್ಲಿ ಆತನಲ್ಲುಂಟಾದ ಕೋಪ, ನಿರಾಶೆ, ತಿರಸ್ಕಾರ ಮೊದಲಾದ ಅನಿಸಿಕೆಗಳನ್ನು ಈ ಮೂಲಕ ತುಂಬಾ ಚನ್ನಾಗಿ ಸೂಚಿಸಲಾಗಿದೆ.
5.4.2 ಸೊಲ್ಲುಗಳ ಹುರುಳುಗಳು
ಸೊಲ್ಲುಗಳಿಗೆ ಅವುಗಳ ಎಲ್ಲಾ ಬಳಕೆಗಳಲ್ಲೂ ಕಾಣಿಸುವಂತಹ ಅವುಗಳದೇ ಆದ ಹುರುಳು (ಅರ್ತ) ಮಾತ್ರವಲ್ಲದೆ, ಒಂದೊಂದು ಬಳಕೆಗೂ ತಕ್ಕುದಾದ ಹುರುಳುಗಳೂ ಇರುತ್ತವೆ. ಎತ್ತುಗೆಗಾಗಿ, ಇವತ್ತು ತುಂಬಾ ತಡವಾಯಿತು ಎಂಬ ಸೊಲ್ಲನ್ನು ರಾತ್ರಿ ಬಹಳ ಹೊತ್ತು ಹರಟೆ ಹೊಡೆಯುತ್ತಾ ಕುಳಿತವರಲ್ಲೊಬ್ಬನು ಹೇಳಿದನಾದರೆ, ಮಾತು ಮುಗಿಸಿ ಮಲಗಲು ಹೋಗೋಣ ಎಂಬ ಹುರುಳು ಸಿಗುತ್ತದೆ. ಇದಕ್ಕೆ ಬದಲು, ಅದೇ ಸೊಲ್ಲನ್ನು ಮನೆಯಲ್ಲಿ ಸಿನಿಮಾಕ್ಕೆ ಹೋಗಲು ಅಣಿಯಾಗಿ ಕಾದು ಕುಳಿತಿರುವ ಹೆಂಡತಿಗೆ ಕೆಲಸದಿಂದ ಹಿಂದಿರುಗಿದ ಗಂಡ ಹೇಳಿದನಾದರೆ, ಸಿನಿಮಾಕ್ಕೆ ಹೋಗಲು ಇವತ್ತು ಸಾದ್ಯವಾಗದು ಎಂಬ ಹುರುಳು ಸಿಗುತ್ತದೆ.
ಈ ರೀತಿ ಒಂದು ಸೊಲ್ಲಿಗೆ ನೇರವಾಗಿ ಅದರದೇ ಆದ ಹುರುಳಿದ್ದರೂ, ಬಳಕೆಯ ಕುಳ್ಳಿಹ(ಸಂದರ್ಬ)ವನ್ನವಲಂಬಿಸಿ ಬೇರೆಯೇ ಹುರುಳು ಸಿಗಬಲ್ಲುದು. ಇದು ಬಳಕೆಯೊಂದರಲ್ಲಿ ಸೊಲ್ಲಿಗೆ ಆಡುಗನು ಕೊಡುವ ಹುರುಳಾದ ಕಾರಣ, ಇದನ್ನು ಆಡುಗನ ಹುರುಳು ಎಂಬುದಾಗಿ ಕರೆಯಬಹುದು.
ಒಳ್ಳೇ ನಾಟಕಗಳಲ್ಲಿ ಸೊಲ್ಲುಗಳನ್ನು ನೇರವಾಗಿ ಅವುಗಳದೇ ಆದ ಹುರುಳಿ ನಲ್ಲಿ ಬಳಸುವುದಕ್ಕಿಂತಲೂ, ಮೇಲೆ ಸೂಚಿಸಿದಂತಹ ಆಡುಗನ ಹುರುಳಿನಲ್ಲಿ ಬಳಸುವುದೇ ಹೆಚ್ಚು. ಎತ್ತುಗೆಗಾಗಿ, ಟಿ.ಪಿ. ಕಯ್ಲಾಸಂ ಅವರ ಪೋಲಿಕಿಟ್ಟಿ ನಾಟಕದಲ್ಲಿ, ಕಿಟ್ಟಿ ಹೇಳುವ ಮಾತನ್ನು ಗಮನಿಸಬಹುದು:
ಅಮ್ಮಾ, ಮಗೂನ್ ಸಾಯಿಸ್ಬೇಕೂ ಅಂದ್ರೆ, ಮನೇಲಿ ಭಾವಿಯಿಲ್ವೇ? … ಬೀದೀಲಿ ಹೋಗೋ ಬಂಡಿಗಳ ಮುಂದೆ ಹಾಕಿ … ಇಷ್ಟು ಜನಕ್ಕೆ ತೊಂದರೆ … ಬದ್ಲಾಗಿ ಮನೇ ಭಾವೀಲೇ ದಬ್ಬಿಟ್ರೆ ಎಲ್ರಿಗೂ ಸಲೀಸು.
ಈ ಮಾತುಗಳಿಗಿರುವ ನೇರವಾದ ಹುರುಳು ಇಲ್ಲಿ ಮುಕ್ಯವಲ್ಲ, ಅವಕ್ಕೆ ಆಡುಗನು ಕೊಟ್ಟಿರುವ ಹುರುಳೇ ಮುಕ್ಯ. ಮಾತುಗಳ ಕುಳ್ಳಿಹದಿಂದ ಇದು ಗೊತ್ತಾಗುತ್ತದೆ.
ನಾಟಕಗಳಲ್ಲಿ ಕೆಲವು ನೋಡುಗರನ್ನು ನಗುವಿನಲ್ಲಿ ಮುಳುಗಿಸಬಹುದು, ಮತ್ತು ಇನ್ನು ಕೆಲವು ಅವರು ಕಣ್ಣೀರು ಸುರಿಸುವಂತೆ ಮಾಡಬಹುದು. ಈ ಎರಡು ಬಗೆಯ ನಾಟಕಗಳಲ್ಲೂ ಹೆಚ್ಚುಕಡಿಮೆ ಒಂದೇ ಬಗೆಯ ಕತೆಗಳನ್ನು ಬಳಸಲಾಗುತ್ತದೆ. ಎರಡರಲ್ಲೂ ಪಾಂಗುಗಳ ನಡುವಿನ ತಿಕ್ಕಾಟ ಮತ್ತು ಅದರಿಂದ ಮೂಡಿಬರುವ ಬಿಗಿತಗಳು ಬಳಕೆಯಾಗುತ್ತಿರುತ್ತವೆ. ಹಾಗಿದ್ದರೂ, ಅವುಗಳಲ್ಲಿ ಒಂದು ಬಗೆಯ ಬರಹ ನೋಡುಗರಲ್ಲಿ ಅಳುವನ್ನುಂಟು ಮಾಡು ತ್ತದೆ, ಮತ್ತು ಇನ್ನೊಂದು ಬಗೆಯ ಬರಹ ನಗುವನ್ನುಂಟುಮಾಡುತ್ತದೆ. ಅವುಗಳ ನಡುವಿನ ಈ ವ್ಯತ್ಯಾಸ ಮುಕ್ಯವಾಗಿ ಅವುಗಳಲ್ಲಿ ಬರಹಗಾರರು ನಡುನುಡಿ ಯನ್ನು ಬರೆದಿರುವ ಬಗೆಯನ್ನು ಅವಲಂಬಿಸಿದೆ.
ಎತ್ತುಗೆಗಾಗಿ, ಮುಂದೆ ಆರನೇ ಪಸುಗೆಯಲ್ಲಿ (6.4ರಲ್ಲಿ) ವಿವರಿಸಿರುವ ಹಾಗೆ, ನಗುಬರಹಗಳಲ್ಲಿ ಇಪ್ಪುರುಳಿನ ಸೊಲ್ಲುಗಳನ್ನು ತುಂಬಾ ಜಾಣ್ಮೆಯಿಂದ ಬಳಸಲಾಗುತ್ತದೆ. ಮೊದಲಿಗೆ ಓದುಗರು ಅವುಗಳಿಗಿರುವ ಎರಡು ಹುರುಳು ಗಳಲ್ಲಿ ಒಂದನ್ನು ಪಡೆಯುವ ಹಾಗೆ ಮಾಡಲಾಗುತ್ತದೆ; ಆಮೇಲೆ, ನಿಜಕ್ಕೂ ಸೊಲ್ಲಿಗಿರುವುದು ಆ ಹುರುಳೋ ಇಲ್ಲವೇ ಬೇರೆ ಹುರುಳೋ ಎಂಬ
ವಿಶಯದಲ್ಲಿ ಸಂಶಯ ಹುಟ್ಟುವ ಹಾಗೆ ಮಾಡಲಾಗುತ್ತದೆ, ಮತ್ತು ಕೊನೆಯದಾಗಿ, ಒಮ್ಮೆಗೇನೇ ಅದರ ಎದುರು ನಿಲ್ಲುವ ಇನ್ನೊಂದು ಹುರುಳಿಗೆ ಓದುಗರು ನೆಗೆಯುವಂತೆ ಮಾಡಲಾಗುತ್ತದೆ. ಈ ನೆಗೆತ ಅವರನ್ನು ಬೆರಗು ಗೊಳಿಸುತ್ತದೆ, ಮತ್ತು ನಗೆಯಲ್ಲಿ ಮುಳುಗಿಸುತ್ತದೆ.
ಬಳಕೆಯಲ್ಲಿರುವ ನಾಣ್ಣುಡಿಯೊಂದನ್ನು ತಿರುಚುವ ಮೂಲಕವೂ ಓದುಗ ರನ್ನು ಇಲ್ಲವೇ ನೋಡುಗರನ್ನು ಬೆರಗುಗೊಳಿಸಿ, ಅವರು ನಗುವಂತೆ ಮಾಡ ಬಹುದು. ಎತ್ತುಗೆಗಾಗಿ, ಶ್ರೀರಂಗ ಅವರು ಬರೆದ ಶೋಕಚಕ್ರ ನಾಟಕದಲ್ಲಿ ಹೆಂಗಸರ ಬುದ್ದಿ ಮೊಳಕಾಲ ಕೆಳಗೆ ಎಂಬ ನಾಣ್ಣುಡಿಯನ್ನು ತಿರುಚಿ ಕೆಳಗಿನ ಸೊಲ್ಲನ್ನು ಉಂಟುಮಾಡಲಾಗಿದೆ:
ರಂಗಮ್ಮ: … “ಈ ಹೊತ್ತಾದ್ರೂ ಮೊಳಕಾಲ ಮ್ಯಾಲಿನ ಧೋತರ ಬಿಟ್ಟು ಈ ಅಗಲ ಧೋತರ ಉಟ್ಟುಗೋರಿ” ಅಂತ ಹೇಳಿದ್ರೆ, “ಗಂಡಸಿನ ಬುದ್ದಿ ಮೊಳಕಾಲ ಕೆಳಗೆ ಇಲ್ಲ, ಮುಚ್ಚಿಗೋಳಿಕ್ಕೆ” ಅಂದ್ರು.
ಅಳು, ನಗು ಮೊದಲಾದ ಹಲವು ಬಗೆಯ ಅನಿಸಿಕೆಗಳನ್ನು ಮಾತಿನ ಮೂಲಕ ನೋಡುಗರಲ್ಲಿ ಮೂಡಿಸಬೇಕೆಂದಿರುವ ಬರಹಗಾರರಿಗೆ ಮಾತಿನ ಒಳಗುಟ್ಟನ್ನು ತಿಳಿಸುವ ಸೊಲ್ಲರಿಮೆ ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು.
5.7 ತಿರುಳು
ನಲ್ಬರಹಗಳನ್ನು ಬರೆಯುವಲ್ಲಿ ಮತ್ತು ಅವನ್ನು ಒರೆಹಚ್ಚುವಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
(1) ಒಳ್ಳೇ ನಲ್ಬರಹಗಾರರು ತಮ್ಮ ಬರಹಗಳಲ್ಲಿ ಪದ, ಪದಕಂತೆ, ಸೊಲ್ಲಿನ ಇಟ್ಟಳ ಮೊದಲಾದವುಗಳ ಆಯ್ಕೆಯನ್ನು ಹೇಗೆ ಮಾಡಿದ್ದಾರೆ, ಮತ್ತು ಅವುಗಳ ಮೂಲಕ ತಮ್ಮ ಬರಹಗಳನ್ನು ಮೇಲೆತ್ತಲು ಅವರಿಗೆ ಹೇಗೆ ಸಾದ್ಯವಾಗಿದೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
(2) ನಲ್ಬರಹಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯುವ ಮೂಲಕ ಓದುಗರ ಗಮನವನ್ನು ಬರಹದ ಹುರುಳಿನಿಂದ ಬರಹದೆಡೆಗೆ ಹರಿಯುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಎಂತಹ
ಕಟ್ಟಲೆಗಳನ್ನು ಮುರಿಯಬಲ್ಲೆವು ಎಂಬುದನ್ನು ತಿಳಿಯುವಲ್ಲಿ ಈ ಕಟ್ಟಲೆಗಳ ತಿಳಿವು ನೆರವಿಗೆ ಬರುತ್ತದೆ.
(3) ನಾಟಕಗಳಲ್ಲಿ ಬರುವ ನಡುನುಡಿಗಳನ್ನು ಬರೆಯುವಲ್ಲಿ ಸೂಳುನುಡಿಯ ಹಲವು ಕಟ್ಟಲೆಗಳನ್ನು ಮುರಿಯಬೇಕಾಗುತ್ತದೆ. ಇದನ್ನು ನಡೆಸುವಲ್ಲಿ ಸೂಳುನುಡಿಯ ಕಟ್ಟಲೆಗಳ ತಿಳಿವು ನೆರವಿಗೆ ಬರಬಲ್ಲುದು.
(4) ಇದಲ್ಲದೆ, ನಾಟಕಗಳಲ್ಲಿ ಆಡುನುಡಿ ಇಲ್ಲವೇ ಒಳನುಡಿಗಳನ್ನು ಪೂರ್ತಿಯಾಗಿ ಬಳಸುವ ಬದಲು, ಪಾಂಗುಗಳ ಮಾತಿನಲ್ಲಿ ಅವುಗಳ ಬಳಕೆ ಯಾಗಿದೆ ಎಂಬ ಅನಿಸಿಕೆಯನ್ನು ನೋಡುಗರಲ್ಲಿ ಮೂಡಿಸುವಶ್ಟರ ಮಟ್ಟಿಗೆ ಮಾತ್ರ ಅವನ್ನು ಬಳಸಬೇಕಾಗುತ್ತದೆ. ಇದಕ್ಕೂ ಈ ಆಡುನುಡಿ ಮತ್ತು ಒಳನುಡಿಗಳ ಸೊಲ್ಲರಿಮೆಯ ತಿಳಿವಿದ್ದರೆ ಒಳ್ಳೆಯದು.
ಆರನೇ ಪಸುಗೆ — ಇಪ್ಪುರುಳಿನ ತೊಡಕುಗಳು
6.1 ಮುನ್ನೋಟ
ಎರಡು ಇಲ್ಲವೇ ಹೆಚ್ಚು ಹುರುಳು(ಅರ್ತ)ಗಳನ್ನು ಕೊಡಬಲ್ಲ ಸೊಲ್ಲುಗಳನ್ನು ಇಪ್ಪುರುಳಿನ ಸೊಲ್ಲುಗಳೆಂದು ಕರೆಯಬಹುದು. ಎತ್ತುಗೆಗಾಗಿ, ಹುಲಿಯ ಬಾಯಿಗೆ ಬಿದ್ದ ದನದ ಕರು ಕೂಗಾಡುತ್ತಿದೆ ಎಂಬುದು ಒಂದು ಇಪ್ಪುರುಳಿನ ಸೊಲ್ಲು. ಅದಕ್ಕೆ ಕೆಳಗೆ ಕೊಟ್ಟಿರುವ ಎರಡು ಹುರುಳುಗಳಿದ್ದು, ಓದುಗರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹುರುಳನ್ನು ಅದು ಕೊಡಬಲ್ಲುದು:
(1ಕ) ದನ ಹುಲಿಯ ಬಾಯಿಗೆ ಬಿದ್ದಿದೆ; ಹಾಗಾಗಿ, ಅದರ ಕರು
ಕೂಗಾಡುತ್ತಿದೆ.
(1ಗ) ದನದ ಕರು ಹುಲಿಯ ಬಾಯಿಗೆ ಬಿದ್ದಿದೆ; ಹಾಗಾಗಿ, ಅದು
ಕೂಗಾಡುತ್ತಿದೆ.
ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಕಾಣಿಸಿಕೊಳ್ಳುವ ಇಂತಹ ಇಪ್ಪುರುಳಿನ ಸೊಲ್ಲುಗಳು ಕೆಲವರ ಬರಹಗಳಿಗೆ ತೊಡಕಾಗಿರುತ್ತವೆಯಾದರೆ, ಬೇರೆ ಕೆಲವರ ಬರಹಗಳಿಗೆ ಒತ್ತಾಸೆಯಾಗಿಯೂ ಇರುತ್ತವೆ. ಎತ್ತುಗೆಗಾಗಿ, ಕಾನೂನುಗಳಲ್ಲಿ ಇಲ್ಲವೇ ಒಪ್ಪಂದಗಳಲ್ಲಿ ಇಪ್ಪುರುಳಿನ ಸೊಲ್ಲುಗಳು ಸೇರಿಕೊಂಡಲ್ಲಿ ಅವು ಹಲವು ಬಗೆಯ ಜಗಳಗಳಿಗೆ ದಾರಿಮಾಡಿಕೊಡಬಲ್ಲುವು (6.3.1 ನೋಡಿ). ಆದರೆ, ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳಲ್ಲಿ ಬೇಕೆಂದೇ ಅವುಗಳನ್ನು ಬಳಸಿ, ಓದುಗರಿಗೆ ಹೆಚ್ಚು ಹೆಚ್ಚು ಹುರುಳುಗಳು ದೊರಕುವಂತೆ ಮಾಡಲು ಬರುತ್ತದೆ, ಮತ್ತು ಆ ಮೂಲಕ ಓದುಗರು ಆ ಬರಹಗಳನ್ನು ಹೆಚ್ಚು ಹೆಚ್ಚು ಮೆಚ್ಚುವಂತೆಯೂ ಮಾಡಲು ಬರುತ್ತದೆ.
ಮೊದಲಿಗೆ ಸೊಲ್ಲುಗಳ ಒಂದು ಹುರುಳನ್ನು ಓದುಗರ ಮನಸ್ಸಿನಲ್ಲಿ ಮೂಡಿಸಿ, ಆಮೇಲೆ ಅವುಗಳ ಇನ್ನೊಂದು ಸೊಲ್ಲಿಗೆ ನೆಗೆಯುವ ಮೂಲಕ
ಇಪ್ಪುರುಳಿನ ತೊಡಕುಗಳು
ಅವರನ್ನು ನಗಿಸುವುದು ನಲ್ಬರಹಗಳಲ್ಲಿ ಕಾಣಿಸುವ ಇಂತಹ ಒಂದು ಇಪ್ಪುರುಳಿನ ಬಳಕೆ. ಕೆಳಗೆ ಕೊಟ್ಟಿರುವ ನಗೆಹನಿಯಲ್ಲಿ ಇದನ್ನು ಗಮನಿಸ ಬಹುದು:
ಆತ: ನಿನ್ನ ಹತ್ತಿರ ಮಾತನಾಡಲು ನನ್ನ ಕಯ್ಯಲ್ಲಾಗದು. ಈತ: ಕಯ್ಯಲ್ಲಿ ಮಾತನಾಡಬೇಡ; ಬಾಯಲ್ಲಿ ಮಾತನಾಡು.
ಇಪ್ಪುರುಳಿನ ಸೊಲ್ಲುಗಳನ್ನು ಬಳಸಿದಾಗ, ಓದುಗರಿಗೆ ಅವು ಹೆಚ್ಚಿನೆಡೆ ಗಳಲ್ಲೂ ಇಪ್ಪುರುಳಿನ ಸೊಲ್ಲುಗಳೆಂದು ಅನಿಸುವುದೇ ಇಲ್ಲ. ಅವನ್ನು ಬಳಸಿರುವ ಜಾಗ, ತಮ್ಮ ಅನುಬವ ಮೊದಲಾದವುಗಳನ್ನವಲಂಬಿಸಿ, ಅವಕ್ಕಿರುವ ಹುರುಳುಗಳಲ್ಲಿ ಒಂದನ್ನು ಅವರು ತಾವಾಗಿಯೇ ಕಂಡುಕೊಳ್ಳುತ್ತಾರೆ.
ಆದರೆ, ಜನರ ಅನುಬವಗಳು ಎಲ್ಲರಲ್ಲೂ ಒಂದೇ ಹಾಗೆ ಇರುವುದಿಲ್ಲ. ಹಾಗಾಗಿ, ಬೇರೆ ಬೇರೆ ಜನರಿಗೆ ಅಂತಹ ಸೊಲ್ಲುಗಳು ಬೇರೆ ಬೇರೆ ಹುರುಳನ್ನು ಕೊಡಬಲ್ಲುವು. ಓದುಗರು ಕಂಡುಕೊಳ್ಳುವ ಹುರುಳು ಬರೆದವರ ಮನಸ್ಸಿನಲ್ಲಿದ್ದ ಹುರುಳಿಗಿಂತ ಬೇರಾಗಿರಬಲ್ಲುದೆಂಬುದೇ ಇಲ್ಲಿ ತೊಡಕನ್ನುಂಟುಮಾಡಬಲ್ಲ ಸಂಗತಿಯಾಗಿದೆ.
ಎತ್ತುಗೆಗಾಗಿ, ಒಬ್ಬ ಹುಡುಗ ತನ್ನ ಮೇಶ್ಟ್ರಿಗೆ ಬರೆದ ಕಾಗದದಲ್ಲಿ ವಾಸುದೇವರಾಯರಿಗೆ ತಮ್ಮ ಅಂಗಡಿಯಲ್ಲಿ ಮೋಸವಾಗಿದೆಯಂತೆ ಎಂಬ ಸೊಲ್ಲೊಂದನ್ನು ಬಳಸಿರಬಹುದು. ಇದು ಇಪ್ಪುರುಳಿನ ಸೊಲ್ಲಾಗಿದೆ. ಹಾಗಾಗಿ, ಹುಡುಗನ ಮನಸ್ಸಿನಲ್ಲಿರುವ ಹುರುಳಿಗಿಂತ ತೀರ ಬೇರಾಗಿರುವ ಹುರುಳನ್ನು ಅದು ಆತನ ಮೇಶ್ಟ್ರ ಮನಸ್ಸಿನಲ್ಲಿ ಮೂಡಿಸಬಲ್ಲುದು, ಮತ್ತು ಇದರಿಂದಾಗಿ ಅವರಿಬ್ಬರಲ್ಲಿ ಮನಸ್ತಾಪವುಂಟಾಗಬಲ್ಲುದು.
ಈ ಸೊಲ್ಲಿನಲ್ಲಿ ಬಂದಿರುವ ತಮ್ಮ ಅಂಗಡಿಯಲ್ಲಿ ಎಂಬ ಪದಕಂತೆಗೆ ಮೇಶ್ಟ್ರ ಅಂಗಡಿಯಲ್ಲಿ ಎಂಬ ಹುರುಳೂ ಇರಬಲ್ಲುದು ಮತ್ತು ವಾಸುದೇವರಾಯರ ಅಂಗಡಿಯಲ್ಲಿ ಎಂಬ ಹುರುಳೂ ಇರಬಲ್ಲುದು. ಯಾಕೆಂದರೆ, ಕನ್ನಡದಲ್ಲಿ ತಾವು ಎಂಬ ಪದ ಕೇಳುಗನನ್ನು ಇಲ್ಲವೇ ಓದುಗನನ್ನು (ಮೇಲಿನ ಎತ್ತುಗೆಯಲ್ಲಿ ಮೇಶ್ಟ್ರನ್ನು) ಸೂಚಿಸುತ್ತಿರಬಹುದು, ಇಲ್ಲವೇ ಅದು ಬಳಕೆಯಾಗಿರುವ ಸೊಲ್ಲಿನಲ್ಲೇನೇ ಹೆಸರಿಸಿರುವಂತಹ
ವ್ಯಕ್ತಿಯೊಬ್ಬನನ್ನು (ವಾಸುದೇವರಾಯರನ್ನು) ಸೂಚಿಸುತ್ತಿರಬಹುದು. ಇದು ಮೇಲಿನ ಸೊಲ್ಲು ಇಪ್ಪುರುಳಿನ ಸೊಲ್ಲಾಗಿ ಕಾಣಿಸಲು ಕಾರಣ.
ಇಲ್ಲಿ ಇನ್ನೊಂದು ವಿಶಯವೂ ಬರೆಯುವವರನ್ನು ಮತ್ತು ಅವರ ಓದುಗರನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. ಇಪ್ಪುರುಳಿನ ಸೊಲ್ಲುಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಕೆಲಸ ಓದುಗರ ಮಿದುಳಿನಲ್ಲಿ ಅವರ ಅರಿವಿಗೆ ಬಾರದ ಹಾಗೆ ನಡೆಯುತ್ತದೆ. ಅವರ ಮಿದುಳು ಯಾವ ಹುರುಳನ್ನು ಆರಿಸಿ ಕೊಂಡಿದೆಯೋ ಅದು ಮಾತ್ರ ಅವರ ಅರಿವಿಗೆ ಬರುತ್ತದೆ.
ಹಾಗಾಗಿ, ತಮ್ಮ ಅರಿವಿಗೆ ಬಂದಿರುವ (ಎಂದರೆ ತಮ್ಮ ಮಿದುಳು ಆರಿಸಿ ಕೊಂಡಿರುವ) ಹುರುಳಿಗಿಂತ ತೀರ ಬೇರಾಗಿರುವ ಇನ್ನೊಂದು ಹುರುಳು ಆ ಸೊಲ್ಲಿಗಿರಬಹುದು ಎಂಬ ವಿಶಯ ಅವರ ಮನಸ್ಸಿಗೆ ಹೊಳೆಯುವುದೇ ಇಲ್ಲ. ಕೆಲವೊಮ್ಮೆ ಅದನ್ನು ಎತ್ತಿ ತೋರಿಸಿದಾಗಲೂ ಅವರು ಅದನ್ನು ಒಪ್ಪದಿರ ಬಹುದು; ತಮ್ಮ ಮನಸ್ಸಿಗೆ ಮೊದಲು ಹೊಳೆದಿದ್ದ ಹುರುಳು ಮಾತ್ರವೇ ಆ ಸೊಲ್ಲಿನ ಹುರುಳು ಎಂಬುದಾಗಿ ಅವರು ವಾದಿಸಬಹುದು.
ಇಂತಹ ಕಡೆಗಳಲ್ಲಿ, ಆ ಸೊಲ್ಲಿನಲ್ಲಿ ಬಳಕೆಯಾಗಿರುವ ಪದವೊಂದಕ್ಕೆ ಹೇಗೆ ಎರಡು ಬೇರೆ ಬೇರೆ ಹುರುಳುಗಳಿರಬಲ್ಲುವು ಎಂಬುದನ್ನು ತೋರಿಸಿಕೊಡ ಬೇಕಾಗುತ್ತದೆ, ಇಲ್ಲವೇ ಆ ಸೊಲ್ಲಿನ ತಯಾರಿಕೆಯಲ್ಲಿ ಹೇಗೆ ಎರಡು ಇಟ್ಟಳ (ಒಳರಚನೆ)ಗಳು ಬಳಕೆಯಾಗಿರಬಲ್ಲುವು, ಮತ್ತು ಅವುಗಳಿಂದಾಗಿ ಆ ಸೊಲ್ಲಿಗೆ ಹೇಗೆ ಎರಡು ಹುರುಳುಗಳು ಬರಬಲ್ಲುವು ಎಂಬುದನ್ನು ತೋರಿಸಿಕೊಡ ಬೇಕಾಗುತ್ತದೆ. ಆಗ ಮಾತ್ರ ಅವರಿಗೆ ತಾವು ತಿಳಿದುಕೊಂಡಿರುವ ಹುರುಳಿಗಿಂತ ಬೇರಾಗಿರುವ ಹುರುಳು ಅದನ್ನು ಹೇಳಿದವರ ಇಲ್ಲವೇ ಬರೆದವರ ಮನಸ್ಸಿನಲ್ಲಿ ಇರಬಲ್ಲುದು ಎಂಬುದರ ಅರಿವು ಉಂಟಾಗುತ್ತದೆ.
6.2 ಇಪ್ಪುರುಳಿನ ಸೊಲ್ಲುಗಳ ಬಗೆಗಳು
ಒಂದು ಸೊಲ್ಲು ಇಪ್ಪುರುಳಿನ ಸೊಲ್ಲಾಗಿ ಕಾಣಿಸಲು ಎರಡು ಮುಕ್ಯ ಕಾರಣ ಗಳಿವೆ: ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳುಗಳಿರುವ ಪದದ ಬಳಕೆ ಯಾಗಿರುವುದು ಒಂದು ಕಾರಣ; ಮತ್ತು ಅದಕ್ಕೆ ಒಂದಕ್ಕಿಂತ ಹೆಚ್ಚು ಇಟ್ಟಳ (ಒಳರಚನೆ)ಗಳಿರುವುದು ಇನ್ನೊಂದು ಕಾರಣ.
ಎತ್ತುಗೆಗಾಗಿ, ಅವನ ಕಣ್ಣಿಗೆ ಹಾಲು ಚಿಮ್ಮಿತು ಎಂಬ ಸೊಲ್ಲಿನಲ್ಲಿ ದನದ ಹಾಲು ಮತ್ತು ಗಿಡದ ಹಾಲು (ಇಲ್ಲವೇ ಸೊನೆ) ಎಂಬ ಎರಡು
ಹುರುಳುಗಳಿರುವ ಹಾಲು ಪದ ಬಳಕೆಯಾಗಿದೆ. ಹಾಗಾಗಿ, ಈ ಸೊಲ್ಲಿಗೆ ಕಣ್ಣಿಗೆ ದನದ ಹಾಲು ಚಿಮ್ಮಿತು ಎಂಬ ಹುರುಳಾಗಲಿ, ಇಲ್ಲವೇ ಕಣ್ಣಿಗೆ ಗಿಡದ ಸೊನೆ ಚಿಮ್ಮಿತು ಎಂಬ ಹುರುಳಾಗಲಿ ಬರಬಲ್ಲುದು, ಮತ್ತು ಈ ಕಾರಣಕ್ಕಾಗಿ ಅದನ್ನು ಒಂದು ಇಪ್ಪುರುಳಿನ ಸೊಲ್ಲೆಂದು ಕರೆಯಬಹುದು. ಇಪ್ಪುರುಳಿನ ಎರಡನೆಯ ಬಗೆಗೆ ನಾನು ಮತ್ತು ನೀನು ಇಲ್ಲವೇ ರಾಮು ಇವತ್ತು ಬೆಂಗಳೂರಿಗೆ ಹೋಗಬೇಕು ಎಂಬ ಸೊಲ್ಲನ್ನು ಎತ್ತುಗೆಯಾಗಿ ಕೊಡಬಹುದು. ಇದನ್ನು ಉಂಟುಮಾಡುವಲ್ಲಿ ಎರಡು ಹಂತಗಳನ್ನು ಬಳಸಬೇಕಾಗುತ್ತಿದ್ದು, ಅವುಗಳ ಓರಣವನ್ನವಲಂಬಿಸಿ ಅದಕ್ಕೆ ಕೆಳಗಿನ ಎರಡು ಇಟ್ಟಳಗಳನ್ನು ಕೊಡಬಲ್ಲೆವು:
(ಕ) ಮತ್ತು ಎಂಬ ಪದ ಮೊದಲನೆಯ ಹಂತದಲ್ಲಿಯೂ, ಇಲ್ಲವೇ
ಎಂಬ ಪದ ಎರಡನೆಯ ಹಂತದಲ್ಲಿಯೂ ಬಳಕೆಯಾಗಿರಬಹುದು;
(ಚ) ಇಲ್ಲವೇ ಎಂಬ ಪದ ಮೊದಲನೆಯ ಹಂತದಲ್ಲಿಯೂ, ಮತ್ತು
ಎಂಬ ಪದ ಎರಡನೆಯ ಹಂತದಲ್ಲಿಯೂ ಬಳಕೆಯಾಗಿರಬಹುದು.
ಈ ವ್ಯತ್ಯಾಸವನ್ನು, ಕೆಳಗೆ ಕೊಟ್ಟಿರುವ ಹಾಗೆ, ಕಂಸಗಳ ಮೂಲಕವೂ
ಸೂಚಿಸಬಲ್ಲೆವು:
(ಕ) (ನಾನು ಮತ್ತು ನೀನು) ಇಲ್ಲವೇ ರಾಜು (ಚ) ನಾನು ಮತ್ತು (ನೀನು ಇಲ್ಲವೇ ರಾಜು)
ಮೇಲೆ ಕೊಟ್ಟಿರುವ ಸೊಲ್ಲಿಗಿರುವ ಈ ಎರಡು ಇಟ್ಟಳಗಳಿಂದಾಗಿ, ಅದು ಇಪ್ಪುರುಳಿನ ಸೊಲ್ಲಾಗಿ ಕಾಣಿಸಿಕೊಳ್ಳುತ್ತದೆ: ಕೆಲವರಿಗೆ ಅದು ಬೆಂಗಳೂರಿಗೆ ಆಡುಗನೊಂದಿಗೆ ಕೇಳುಗ ಹೋಗಬೇಕು ಇಲ್ಲವೇ ರಾಜು ಮಾತ್ರ ಹೋಗಬೇಕು ಎಂಬ (ಕ) ಹುರುಳನ್ನು ಕೊಡಬಲ್ಲುದು, ಮತ್ತು ಬೇರೆ ಕೆಲವರಿಗೆ ಬೆಂಗಳೂರಿಗೆ ಆಡುಗನೊಂದಿಗೆ ಕೇಳುಗ ಹೋಗಬೇಕು ಇಲ್ಲವೇ ಆಡುಗನೊಂದಿಗೆ ರಾಜು ಹೋಗಬೇಕು ಎಂಬ (ಚ) ಹುರುಳನ್ನು ಕೊಡಬಲ್ಲುದು.
ಇದರ ಮೊದಲಿಗೆ (6.1)ರಲ್ಲಿ ಕೊಟ್ಟಿದ್ದ ಹುಲಿಯ ಬಾಯಿಗೆ ಬಿದ್ದ ದನದ ಕರು ಕೂಗಾಡುತ್ತಿದೆ ಎಂಬ ಸೊಲ್ಲಿನಲ್ಲೂ ಇಪ್ಪುರುಳು
ಕಾಣಿಸಿಕೊಳ್ಳಲು ಅದಕ್ಕೆ ಎರಡು ಇಟ್ಟಳಗಳಿರಬಲ್ಲುವು ಎಂಬುದೇ ಕಾರಣ: ಅದರಲ್ಲಿ ಬಂದಿರುವ ಹುಲಿಯ ಬಾಯಿಗೆ ಬಿದ್ದ ಎಂಬ ತುಂಡುಸೊಲ್ಲು ದನ ಎಂಬ ಪದದ ಪರಿಚೆ(ವಿಶೇಶಣ)ಯಾಗಿರುವುದು ಒಂದು ಇಟ್ಟಳ, ಮತ್ತು ದನದ ಕರು ಎಂಬ ಪದಕಂತೆಯ ಪರಿಚೆಯಾಗಿರುವುದು ಇನ್ನೊಂದು ಇಟ್ಟಳ.
6.2.1 ಪದದ ಇಪ್ಪುರುಳು
ಸೊಲ್ಲುಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುತ್ತವೆ. ಒಂದು ಪದನೆರಕೆ(ಪದಕೋಶ)ಯನ್ನು ಬಿಡಿಸಿನೋಡಿದಲ್ಲಿ ಈ ವಿಶಯ ಗೊತ್ತಾಗಬಲ್ಲುದು. ಅದರಲ್ಲಿ ಕೊಟ್ಟಿರುವ ಹೆಚ್ಚಿನ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದನ್ನು ಕಾಣಬಹುದು. ಆದರೆ, ಸಾಮಾನ್ಯವಾಗಿ ಈ ಪದಗಳನ್ನು ಬಳಸಿರುವ ಸೊಲ್ಲುಗಳಲ್ಲಿ ಹೆಚ್ಚಿನವಕ್ಕೂ ಯಾವುದಾದರೂ ಒಂದು ಹುರುಳನ್ನು ಮಾತ್ರ ಆರಿಸಿಕೊಳ್ಳಲು ಬರುತ್ತದೆ. ಆ ರೀತಿ ಆರಿಸಿಕೊಳ್ಳಲು ನೇರವಾಗಿ ನೆರವು ನೀಡದಿರುವ ಸೊಲ್ಲುಗಳು ಮಾತ್ರ ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಹಾಲು ಪದಕ್ಕಿರುವ ಎರಡು ಹುರುಳುಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ಮೇಲೆ ಕೊಟ್ಟಿರುವ ಆತನ ಕಣ್ಣಿಗೆ ಹಾಲು ಚಿಮ್ಮಿತು ಎಂಬ ಸೊಲ್ಲು ನೇರವಾಗಿ ಸೂಚಿಸುವುದಿಲ್ಲವಾದ ಕಾರಣ, ಅದು ಇಪ್ಪುರುಳಿನ ಸೊಲ್ಲಾಗಿದೆ. ಇದಕ್ಕೆ ಬದಲು, ಅವನು ಒಂದು ಗ್ಲಾಸು ಹಾಲು ಕುಡಿದ ಎಂಬ ಸೊಲ್ಲಿನಲ್ಲಿ ಹಾಲು ಪದ ಬಂದಿದೆಯಾದರೂ ಅದು ಇಪ್ಪುರುಳಿನ ಸೊಲ್ಲಾಗಿ ಕಾಣಿಸುವುದಿಲ್ಲ. ಯಾಕೆಂದರೆ, ಸಾಮಾನ್ಯವಾಗಿ ಜನರು ಗಿಡದ ಸೊನೆಯನ್ನು ಗ್ಲಾಸಿನಲ್ಲಿ ಹಾಕಿ ಕುಡಿಯುವುದಿಲ್ಲ.
6.2.2 ಪದರೂಪದ ಇಪ್ಪುರುಳು
ಪದಗಳಲ್ಲಿಲ್ಲದ ಕೆಲವು ಬಗೆಯ ಇಪ್ಪುರುಳುಗಳು ಅವುಗಳ ಪದರೂಪಗಳಲ್ಲಿ ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಎಸಕ(ಕ್ರಿಯಾ)ಪದಗಳಿಗೆ ಬಹುದು ಎಂಬುದನ್ನು ಸೇರಿಸಿ ರಚಿಸಿದ ಪದರೂಪಗಳಿಗೆ ಆಡುಗನ ಊಹೆಯನ್ನು ತಿಳಿಸುವ ಹುರುಳು ಇಲ್ಲವೇ ಆತನ ಒಪ್ಪಿಗೆಯನ್ನು ಸೂಚಿಸುವ ಹುರುಳು ಎಂಬುದಾಗಿ ಎರಡು ಹುರುಳುಗಳಿರಬಲ್ಲುವು. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು:
(2) ಈ ಕೋಣೆಯಲ್ಲಿ ಮೂವರು ಇರಬಹುದು.
ಈ (2)ನೇ ಸೊಲ್ಲಿನ ಮೂಲಕ ಆ ಕೋಣೆಯಲ್ಲಿ ಎಶ್ಟು ಮಂದಿ ಇರ ಬಲ್ಲರು ಇಲ್ಲವೇ ಇದ್ದಾರೆ ಎಂಬ ವಿಶಯದಲ್ಲಿ ಆಡುಗನು ತನ್ನ ಊಹೆಯನ್ನು ತಿಳಿಸುತ್ತಿರಬಹುದು ಇಲ್ಲವೇ ಅದರಲ್ಲಿ ಮೂರು ಮಂದಿ ಇರಲು ಮಾತ್ರ ತನ್ನ ಒಪ್ಪಿಗೆಯಿದೆ ಎಂಬುದಾಗಿ ಆತನು ತನ್ನ ಒಪ್ಪಿಗೆಯನ್ನು ತಿಳಿಸುತ್ತಿರ ಬಹುದು.
ಎಸಕಪದದೊಂದಿಗೆ ಬಹುದು ಎಂಬುದನ್ನು ಸೇರಿಸಿ ರಚಿಸಿರುವ ಪದರೂಪಗಳು ಕೆಲವು ಸೊಲ್ಲುಗಳಲ್ಲಿ ಮಾತ್ರ ಈ ರೀತಿ ಊಹೆ ಮತ್ತು ಒಪ್ಪಿಗೆ ಎಂಬುದಾಗಿ ಎರಡೆರಡು ಹುರುಳುಗಳನ್ನು ಕೊಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲಿಗೆ ಒಪ್ಪಿಗೆಯ ಹುರುಳು ಮಾತ್ರ ಇದೆಯಲ್ಲದೆ ಊಹೆಯ ಹುರುಳಿಲ್ಲ.
(3)
ನೀವು ಈಗ ಮನೆಗೆ ಹೋಗಬಹುದು.
ಈ (3)ನೇ ಸೊಲ್ಲಿನಲ್ಲಿ ಬಳಕೆಯಾಗಿರುವ ನೀವು ಪದ ಅದಕ್ಕೆ ಊಹೆಯ ಹುರುಳು ಬಾರದಂತೆ ನೋಡಿಕೊಳ್ಳುತ್ತದೆ. ತಾನು ಏನು ಮಾಡಲಿದ್ದೇನೆ ಎಂಬುದನ್ನು ಕೇಳುಗನು ತಿಳಿದಿರಬಲ್ಲನಾದ ಕಾರಣ, ಅದರ ಕುರಿತು ಆಡುಗನು ತನ್ನ ಊಹೆಯನ್ನು ಆತನಿಗೆ ತಿಳಿಸಬೇಕಾಗಿಲ್ಲವಲ್ಲ!
ಎಸಕಪದದೊಂದಿಗೆ ಬಹುದು ಎಂಬುದನ್ನು ಬಳಸಿದಲ್ಲಿ ಇಪ್ಪುರುಳು ಕಾಣಿಸಿಕೊಳ್ಳಬಹುದೆಂಬ ಸಂಶಯವಿದೆಯಾದರೆ, ಕೆಳಗೆ ಸೂಚಿಸಿದ ಹಾಗೆ ಅದನ್ನು ಬದಲಾಯಿಸಬಹುದು, ಇಲ್ಲವೇ ಅದಕ್ಕೆ ಬದಲು ಬೇರೆ ಬಗೆಯ ಸೊಲ್ಲನ್ನು ಬಳಸಬಹುದು.
(2ಕ) ಈ ಕೋಣೆಯಲ್ಲಿ ಮೂವರು ಇರಬಹುದೆಂದು ತೋರುತ್ತದೆ. (2ಚ) ಈ ಕೋಣೆಯಲ್ಲಿ ಮೂವರು ಇರುವುದಕ್ಕೆ ಒಪ್ಪಿಗೆಯಿದೆ.
(2ಕ) ಸೊಲ್ಲಿಗೆ ಊಹೆಯ ಹುರುಳು ಮಾತ್ರ ಇರಬಲ್ಲುದು ಮತ್ತು
(2ಚ) ಸೊಲ್ಲಿಗೆ ಒಪ್ಪಿಗೆಯ ಹುರುಳು ಮಾತ್ರ ಇರಬಲ್ಲುದು.
ಎಸಕಪದದೊಂದಿಗೆ ಬೇಕು ಎಂಬುದನ್ನು ಸೇರಿಸಿದಾಗಲೂ ಇಂತಹದೇ
ಇನ್ನೊಂದು ರೀತಿಯ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
(4)
ಹುಡುಗ ಕೋಣೆಯೊಳಗೆ ಹೋಗಿರಬೇಕು.
(4)ನೇ ಸೊಲ್ಲು ಆಡುಗನ ಊಹೆಯನ್ನಾಗಲಿ, ಇಲ್ಲವೇ ಅಪ್ಪಣೆಯನ್ನಾಗಲಿ ಸೂಚಿಸುತ್ತಿರಬಲ್ಲುದು. ಅದಕ್ಕಿರುವ ಈ ಎರಡು ಹುರುಳುಗಳನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು.
ಹುಡುಗ ಕೋಣೆಯೊಳಗೆ ಹೋಗಿರಬೇಕು; ಹೊರಗೆಲ್ಲೂ ಕಾಣಿಸುವುದಿಲ್ಲ.
(4ಚ) ಹುಡುಗ ಕೋಣೆಯೊಳಗೆ ಹೋಗಿರಬೇಕು; ಹೊರಗೆಲ್ಲೂ
ನಿಂತಿರಬಾರದು.
ಎಸಕಪದಗಳ ಪರಿಚೆರೂಪಕ್ಕೆ ಅಲ್ಲಗಳೆಯುವ ಹುರುಳಿದೆಯಾದಲ್ಲಿ, ಅವಕ್ಕೆ ಮುಂಬೊತ್ತಿನ (ಬವಿಶ್ಯತ್ಕಾಲದ) ಇಲ್ಲವೇ ಹಿಂಬೊತ್ತಿನ (ಬೂತಕಾಲದ) ಹುರುಳು ಬರಬಲ್ಲುದಾಗಿದ್ದು, ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(5)
ಶಾಲೆಗೆ ಹೋಗದ ಹುಡುಗನಿಗೆ ಚಾಕಲೇಟ್ ಇಲ್ಲ.
(5)ನೇ ಸೊಲ್ಲು ಎರಡು ಹುರುಳುಗಳಲ್ಲಿ ಬಳಕೆಯಾಗಿರಬಲ್ಲುದು. ಅದರ ಮೂಲಕ ಆಡುಗನು ಶಾಲೆಗೆ ಹೋಗದೆ ಕುಳಿತಿರುವ ಹುಡುಗನಿಗೆ ಚಾಕಲೇಟ್ ಕೊಡುವುದಿಲ್ಲ ಎಂಬುದಾಗಿ ತಿಳಿಸುತ್ತಿರಬಹುದು ಇಲ್ಲವೇ ಹುಡುಗ ಶಾಲೆಗೆ ಹೋಗದಿದ್ದರೆ ಆತನಿಗೆ ಚಾಕಲೇಟ್ ಕೊಡುವುದಿಲ್ಲ ಎಂಬುದಾಗಿ ಎಚ್ಚರಿಸುತ್ತಿರಬಹುದು.
ಹೋಗದ, ಮಾಡದ, ಇಲ್ಲದ, ಆಗದ ಮೊದಲಾದ ಅಲ್ಲಗಳೆಯುವ ಪದರೂಪಗಳಿಗೆ (ಕ) ಹಿಂಬೊತ್ತಿನ ಎಸಕ (ಹೋಗದಿದ್ದ, ಮಾಡದಿದ್ದ, ಇಲ್ಲದಿದ್ದ, ಆಗದಿದ್ದ), ಮತ್ತು (ಚ) ಮುಂಬೊತ್ತಿನ ಎಸಕ (ಹೋಗದಿರುವ, ಮಾಡದಿರುವ, ಇಲ್ಲದಿರುವ, ಆಗದಿರುವ) ಎಂಬುದಾಗಿ ಎರಡು ಬಗೆಯ ಎಸಕಗಳನ್ನು ಸೂಚಿಸುವ ಹುರುಳುಗಳಿರುವುದೇ ಈ (5)ನೇ ಸೊಲ್ಲಿನ
ಇಪ್ಪುರುಳಿಗೆ ಕಾರಣ. ಇದೇ ಇಪ್ಪುರುಳನ್ನು ಕೊಡುವ ಬೇರೆ ಕೆಲವು ಸೊಲ್ಲುಗಳನ್ನು ಕೆಳಗೆ ಕೊಡಲಾಗಿದೆ.
(6ಕ) ಊಟ ಮಾಡದವರು ಉಪ್ಪರಿಗೆಯಲ್ಲಿ ಕುಳಿತಿದ್ದಾರೆ. (6ಚ) ಬೊಂಬಾಯಿಗೆ ಹೋಗದವರು ಮಯ್ಸೂರಿಗೆ ಹೋಗಲಿ. (6ಟ) ಪುಸ್ತಕ ಇಲ್ಲದವರು ತರಗತಿಗೆ ಬರುವುದು ಬೇಡ. ಮದುವೆಯಾಗದವರು ಇಲ್ಲಿಗೆ ಬರಕೂಡದು.
ಈ ಇಪ್ಪುರುಳು ಬಾರದ ಹಾಗೆ ಮಾಡಲು, ಪರಿಚೆ ರೂಪದ ಬದಲು
ಪರಿಚೆ ಸೊಲ್ಲನ್ನು ಬಳಸಬಹುದು.
ಯಾವ ಹುಡುಗ ಶಾಲೆಗೆ ಹೋಗಲಿಲ್ಲವೋ ಅವನಿಗೆ ಚಾಕಲೇಟ್ ಇಲ್ಲ.
(5ಚ) ಯಾವ ಹುಡುಗ ಶಾಲೆಗೆ ಹೋಗುವುದಿಲ್ಲವೋ ಅವನಿಗೆ
ಚಾಕಲೇಟ್ ಇಲ್ಲ.
ಕನ್ನಡದಲ್ಲಿ ಬೇರೆಯೂ ಹಲವು ಬಗೆಯ ಪದರೂಪಗಳು ಇಪ್ಪುರುಳಿಗೆ ಎಡೆಮಾಡಿಕೊಡುತ್ತವೆ. ಎತ್ತುಗೆಗಾಗಿ, ಎಸಕ ಪದಗಳ ಪರಿಚೆ ರೂಪದಲ್ಲಿ ಬರುವ ವ ಒಟ್ಟು(ಪ್ರತ್ಯಯ) ಮುಂಬೊತ್ತಿನ ಎಸಕಗಳನ್ನು ಮಾತ್ರವಲ್ಲದೆ ಈಪೊತ್ತಿನ (ವರ್ತಮಾನ ಕಾಲದ) ಎಸಕಗಳನ್ನೂ ಸೂಚಿಸಬಲ್ಲುದು; ಇದರಿಂದಾಗಿಯೂ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
ಇದನ್ನು ಈ ಮನೆಯಲ್ಲಿರುವುದು ರಾಮಮೂರ್ತಿ ಎಂಬ ಸೊಲ್ಲಿನಲ್ಲಿ ಕಾಣಬಹುದು. ಅದಕ್ಕೆ ಈ ಮನೆಯನ್ನು ಕಟ್ಟಿ ಮುಗಿಸಿದ ಮೇಲೆ ಅದರಲ್ಲಿರುವುದು ರಾಮಮೂರ್ತಿ ಎಂಬ ಮುಂಬೊತ್ತಿನ ಹುರುಳಾಗಲಿ, ಇಲ್ಲವೇ ಈಗ ಈ ಮನೆಯಲ್ಲಿರುವುದು ರಾಮಮೂರ್ತಿ ಎಂಬ ಈಪೊತ್ತಿನ ಹುರುಳಾಗಲಿ ಬರಬಲ್ಲುದು.
ಎಸಕಪದಗಳನ್ನು ಹೆಸರುಪದಗಳಾಗಿ ಮಾರ್ಪಡಿಸುವಲ್ಲಿ ಬಳಕೆಯಾಗುವ ಉದು ಒಟ್ಟು ಒಂದು ಎಸಕವನ್ನಾಗಲಿ, ಇಲ್ಲವೇ ಅದರಿಂದ ಉಂಟಾದ ವಿಶಯವನ್ನಾಗಲಿ ಸೂಚಿಸಬಲ್ಲುದಾದ ಕಾರಣ, ಇಪ್ಪುರುಳು ಕಾಣಿಸಿಕೊಳ್ಳು ತ್ತದೆ. ಎತ್ತುಗೆಗಾಗಿ, ಅವನು ಹೇಳಿರುವುದು ಸುಳ್ಳು ಎಂಬ ಸೊಲ್ಲಿನಲ್ಲಿ ಸುಳ್ಳು ಎಂಬ ಪದ ಹೇಳುವ ಎಸಕವನ್ನು ಅಲ್ಲಗಳೆಯಬಹುದು (ಅವನು
ಏನೂ ಹೇಳಲಿಲ್ಲ) ಇಲ್ಲವೇ ಹೇಳಿರುವ ವಿಶಯವನ್ನು ಅಲ್ಲಗಳೆಯಬಹುದು (ಅವನು ಸುಳ್ಳು ಹೇಳಿದ್ದಾನೆ).
ಯಾವಾಗಲೂ ಎಂಬ ಪದರೂಪ ಎಡೆಬಿಡದೆ ನಡೆಯುವ ಒಂದು ಎಸಕ ವನ್ನಾಗಲಿ, ಇಲ್ಲವೇ ಒಂದು ಗಡುವಿನಲ್ಲಿ ಯಾವಾಗ ಬೇಕಿದ್ದರೂ ನಡೆಯಬಲ್ಲ ಒಂದು ಎಸಕವನ್ನಾಗಲಿ ಸೂಚಿಸಬಲ್ಲುದಾದ ಕಾರಣ, ಇಪ್ಪುರುಳು ಕಾಣಿಸಿ ಕೊಳ್ಳುತ್ತದೆ. ಎತ್ತುಗೆಗಾಗಿ, ಈ ನಳದಲ್ಲಿ ಯಾವಾಗಲೂ ನೀರು ಬರುತ್ತಿರು ತ್ತದೆ ಎಂಬ ಸೊಲ್ಲಿಗೆ ನಳ ಕೆಟ್ಟುಹೋದುದರಿಂದಾಗಿ ನೀರು ಸೋರುತ್ತಿದೆ ಎಂಬ ಹುರುಳಾಗಲಿ, ಇಲ್ಲವೇ ನಳವನ್ನು ಯಾವಾಗ ತೆರೆದರೂ ಅದರಲ್ಲಿ ನೀರು ಬರುತ್ತದೆ ಎಂಬ ಹುರುಳಾಗಲಿ ಸಿಗಬಲ್ಲುದು.
6.2.3 ಇಟ್ಟಳಗಳ ಇಪ್ಪುರುಳು
ಸೊಲ್ಲುಗಳಲ್ಲಿ ಬರುವ ಪದಗಳ ನಡುವೆ ಎರಡು ಇಲ್ಲವೇ ಹೆಚ್ಚು ಬಗೆಯ ಪತ್ತುಗೆ(ಸಂಬಂದ)ಗಳಿರಲು ಸಾದ್ಯವಿರುವಲ್ಲೆಲ್ಲ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಈ ಪತ್ತುಗೆಗಳು ಸೊಲ್ಲಿನ ಇಟ್ಟಳವನ್ನು ಅವಲಂಬಿಸಿವೆಯಾದ ಕಾರಣ, ಅದನ್ನು ಇಲ್ಲಿ ಇಟ್ಟಳದ ಇಪ್ಪುರುಳು ಎಂಬುದಾಗಿ ಹೆಸರಿಸಲಾಗಿದೆ. ಇಟ್ಟಳದ ಇಪ್ಪುರುಳು ಒಂದು ಪದಕಂತೆಯೊಳಗೆ ಕಾಣಿಸಿಕೊಳ್ಳಬಹುದು ಇಲ್ಲವೇ ಪದಕಂತೆಯ ಹೊರಗೆ (ಆದರೆ ಸೊಲ್ಲಿನ ಒಳಗೆ) ಕಾಣಿಸಿಕೊಳ್ಳ ಬಹುದು; ಇದಲ್ಲದೆ, ಅದು ಸೊಲ್ಲಿನ ಹೊರಗೂ ಕಾಣಸಿಕೊಳ್ಳಬಹುದು. ಈ ವ್ಯತ್ಯಾಸದ ಮೇಲೆ, ಇಟ್ಟಳದ ಇಪ್ಪುರುಳುಗಳನ್ನು ಪದಕಂತೆಯ ಇಪ್ಪುರುಳು, ಸೊಲ್ಲಿನ ಇಪ್ಪುರುಳು ಮತ್ತು ಹೊರಗಿನ ಇಪ್ಪುರುಳು ಎಂಬುದಾಗಿ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು.
ಪದಕಂತೆಗಳಲ್ಲಿ ಒಂದು ಹೆಸರು(ನಾಮ)ಪದದೊಂದಿಗೆ ಒಂದಕ್ಕಿಂತ ಹೆಚ್ಚು ಪರಿಚೆಗಳನ್ನು ಬಳಸಿದಲ್ಲಿ ಅವನ್ನು ಹೆಸರು ಪದದ ಮೇಲೆ ಒಂದೊಂದಾಗಿ ಹೊರಿಸಲಾಗಿದೆಯೋ ಇಲ್ಲವೇ ಒಟ್ಟಾಗಿ ಹೊರಿಸಲಾಗಿದೆಯೋ ಎಂಬ ವಿಶಯ ದಲ್ಲಿ ಸಂಶಯವೇಳಬಲ್ಲುದು ಮತ್ತು ಇದರಿಂದಾಗಿ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ (7)ನೇ ಸೊಲ್ಲನ್ನು ಗಮನಿಸ ಬಹುದು:
(7)
ಹಣಕಟ್ಟಿದ ಮತ್ತು ತೇರ್ಗಡೆಯಾದ ಹುಡುಗರು ಹಣಕಟ್ಟಿ ತೇರ್ಗಡೆಯಾದ ಹುಡುಗರು
(7ಚ) ಹಣಕಟ್ಟಿದ ಹುಡುಗರು ಮತ್ತು ತೇರ್ಗಡೆಯಾದ ಹುಡುಗರು
(7)ನೇ ಪದಕಂತೆಗೆ ಎರಡು ಹುರುಳುಗಳಿರಬಲ್ಲುವು; ಇವನ್ನು (7ಕ) ಮತ್ತು (7ಚ)ಗಳಲ್ಲಿ ಸೂಚಿಸಲಾಗಿದೆ. (7)ನೇ ಸೊಲ್ಲಿನಲ್ಲಿ ಬಂದಿರುವ ಹಣಕಟ್ಟಿದ ಮತ್ತು ತೇರ್ಗಡೆಯಾದ ಎಂಬ ಎರಡು ಪರಿಚೆಗಳನ್ನು ಹುಡುಗರ ಮೇಲೆ ಒಟ್ಟಿಗೆ ಹೊರಿಸಲಾಗಿದೆಯಾದರೆ ಅದಕ್ಕೆ (7ಕ) ಹುರುಳು ಬರುತ್ತದೆ, ಮತ್ತು ಬೇರೆ ಬೇರಾಗಿ ಹೊರಿಸಲಾಗಿದೆಯಾದರೆ (7ಚ) ಹುರುಳು ಬರುತ್ತದೆ. ಈ ಇಪ್ಪುರುಳು ಕಾಣಿಸದ ಹಾಗೆ ಮಾಡಲು ಎರಡು ಹೊಲಬು(ವಿದಾನ) ಗಳಿವೆ: (7ಕ)ದಲ್ಲಿ ಕಾಣಿಸುವ ಹಾಗೆ, ಪರಿಚೆಯಾಗಿ ಪದರೂಪವನ್ನು ಬಳಸುವ ಬದಲು ತುಂಡು ಸೊಲ್ಲನ್ನು ಬಳಸಬಹುದು; ಹಾಗೆ ಮಾಡಿದಲ್ಲಿ, ಎರಡು ಪರಿಚೆಗಳನ್ನೂ ಒಟ್ಟಾಗಿ ಹೆಸರಿನೊಂದಿಗೆ ಸಂಬಂದಿಸಿರುವ ಹುರುಳು ಸಿಗುತ್ತದೆ. ಇದಕ್ಕೆ ಬದಲು, (7ಚ)ದಲ್ಲಿ ಕಾಣಿಸುವ ಹಾಗೆ, ಹೆಸರು ಪದವನ್ನು ಎರಡು ಪರಿಚೆ ಪದಗಳೊಂದಿಗೂ ಬೇರೆ ಬೇರಾಗಿ (ಎಂದರೆ ಎರಡು ಬಾರಿ) ಬಳಸಬಹುದು; ಹಾಗೆ ಮಾಡಿದಲ್ಲಿ, ಆ ಪರಿಚೆಗಳನ್ನು ಹೆಸರುಗಳೊಂದಿಗೆ ಬೇರೆ ಬೇರಾಗಿ ಸಂಬಂದಿಸಿರುವಂತಹ ಎರಡನೆಯ ಹುರುಳು ದೊರಕುತ್ತದೆ. ಈ ಎರಡು ಹೊಲಬುಗಳ ಮೂಲಕವೂ ಮೇಲಿನ ಇಪ್ಪುರುಳನ್ನು ಹೋಗ ಲಾಡಿಸಬಲ್ಲೆವು.
ಒಂದು ಪರಿಚೆಯನ್ನು ಎರಡು ಹೆಸರುಗಳೊಂದಿಗೆ ಬಳಸಿದಾಗ, ಯಾವ ಹೆಸರಿನೊಂದಿಗೆ ಅದನ್ನು ಸಂಬಂದಿಸಬೇಕು ಎಂಬ ವಿಶಯದಲ್ಲಿ ಸಂಶಯ ವೇಳಬಲ್ಲುದು ಮತ್ತು ಇದರಿಂದಾಗಿಯೂ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು. ಇಂತಹ ಪದಕಂತೆಗಳಲ್ಲಿ ಬಳಕೆಯಾಗುವ ಹೆಸರುಗಳು ಎರಡು ರೀತಿಯ ಪತ್ತುಗೆಗಳಲ್ಲಿ ಬರಬಲ್ಲುವು:
(ಕ) ಪದಕಂತೆಯಲ್ಲಿ ಬರುವ ಹೆಸರುಗಳನ್ನು ಮತ್ತು ಪದದ ಮೂಲಕ ಜೋಡಿಸಿದೆಯಾದಲ್ಲಿ, ಅವುಗಳ ಮೊದಲು ಬರುವ ಪರಿಚೆಯನ್ನು ಮೊದಲನೆಯ ಹೆಸರಿನ ಮೇಲೆ ಮಾತ್ರವೇ ಹೊರಿಸಿರಬಹುದು, ಇಲ್ಲವೇ ಎರಡರ ಮೇಲೂ ಹೊರಿಸಿರಬಹುದು.
ಎತ್ತುಗೆಗಾಗಿ, ದೊಡ್ಡ ಹುಡುಗರು ಮತ್ತು ಹುಡುಗಿಯರು ಎಂಬ ಪದಕಂತೆಗೆ ಹುಡುಗಿಯರು ಮತ್ತು ದೊಡ್ಡ ಹುಡುಗರು ಎಂಬ ಹುರುಳಾಗಲಿ, ಇಲ್ಲವೇ ದೊಡ್ಡ ಹುಡುಗರು ಮತ್ತು ದೊಡ್ಡ ಹುಡುಗಿಯರು ಎಂಬ ಹುರುಳಾಗಲಿ ಬರಬಲ್ಲುದು.
(ಚ) ಪದಕಂತೆಯಲ್ಲಿರುವ ಎರಡು ಹೆಸರುಪದಗಳಲ್ಲಿ ಒಂದು ಇನ್ನೊಂದರ ಪರಿಚೆಯಾಗಿರಬಹುದು. ಇಂತಹ ಕಡೆಗಳಲ್ಲೂ ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಮೇಲೆ (7.1)ರಲ್ಲಿ ಕೊಟ್ಟಿದ್ದ ಹುಲಿಯ ಬಾಯಿಗೆ ಬಿದ್ದ ದನದ ಕರು ಎಂಬ ಪದಕಂತೆಯಲ್ಲಿ ದನ ಎಂಬ ಹೆಸರುಪದ ಕರು ಎಂಬ ಇನ್ನೊಂದು ಹೆಸರುಪದದ ಪರಿಚೆಯಾಗಿ ಬಳಕೆಯಾಗಿದೆ, ಮತ್ತು ಅವೆರಡಕ್ಕೂ ಒಟ್ಟಿಗೆ ಹುಲಿಯ ಬಾಯಿಗೆ ಬಿದ್ದ ಎಂಬ ತುಂಡುಸೊಲ್ಲು ಪರಿಚೆಯಾಗಿ ಬಂದಿದೆ. ಈ ಪರಿಚೆಯನ್ನು ಆ ಎರಡು ಹೆಸರುಪದಗಳಲ್ಲಿ ಯಾವುದರ ಮೇಲೆ ಹೊರಿಸಲಾಗಿದೆ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದಾದ ಕಾರಣ, ಅಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
ಪದಕಂತೆಯಲ್ಲಿ ಎರಡು ಕೂಡುಗೆ(ಸಮುಚ್ಚಯಪದ)ಗಳನ್ನು ಬಳಸಿದಲ್ಲಿ, ಅವುಗಳೊಳಗೆ ಯಾವುದು ಯಾವ ಹಂತದಲ್ಲಿ ಬರುತ್ತದೆ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು. ಇದನ್ನು ಮೇಲೆ (6.2)ರಲ್ಲಿ ಕೊಟ್ಟಿರುವ ನಾನು ಮತ್ತು ನೀನು ಇಲ್ಲವೇ ರಾಮು ಎಂಬ ಪದಕಂತೆಯಲ್ಲಿ ಕಾಣಬಹುದು. ಈ ಪದಕಂತೆಯ ಮೊದಲನೇ ಹಂತದಲ್ಲಿ ಮತ್ತು ಎಂಬ ಕೂಡುಗೆ ಬಂದಿದೆಯಾದರೆ ಒಂದು ಹುರುಳು ದೊರಕುತ್ತದೆ; ಇಲ್ಲವೇ ಎಂಬ ಕೂಡುಗೆ ಬಂದಿದೆಯಾದರೆ ಇನ್ನೊಂದು ಹುರುಳು ದೊರಕುತ್ತದೆ.
ಪದಕಂತೆಯ ಹೊರಗೆ (ಸೊಲ್ಲಿನೊಳಗೆ) ಕಾಣಿಸಿಕೊಳ್ಳಬಲ್ಲ ಇಟ್ಟಳದ ಇಪ್ಪುರುಳಿಗೆ ಕೆಳಗೆ ಕೊಟ್ಟಿರುವ (8)ನೇ ಸೊಲ್ಲನ್ನು ಎತ್ತುಗೆಯಾಗಿ ಕೊಡ ಬಹುದು:
ಅವನು ಪುಣೆಗೆ ಹೋಗಿ ಮೇಶ್ಟ್ರನ್ನು ಕಾಣಲಿಲ್ಲ. (8) (8ಕ) ಅವನು ಪುಣೆಗೆ ಹೋಗಿದ್ದ; ಆದರೆ ಮೇಶ್ಟ್ರನ್ನು ಕಾಣಲಿಲ್ಲ. (8ಚ) ಅವನು ಪುಣೆಗೆ ಹೋಗದೆ ಮೇಶ್ಟ್ರನ್ನು ಕಂಡ (ಅವರು
ಊರಲ್ಲೇ ಸಿಕ್ಕಿದ್ದರು).
(8ಟ) ಅವನು ಪುಣೆಗೂ ಹೋಗಲಿಲ್ಲ, ಮೇಶ್ಟ್ರನ್ನೂ ಕಾಣಲಿಲ್ಲ.
(8)ನೇ ಸೊಲ್ಲಿನಲ್ಲಿ ಬಂದಿರುವ ಇಲ್ಲ ಪದ ಪದಕಂತೆಯ ಒಳಗಿರುವ ಕಾಣು ಪದವನ್ನು ಮಾತ್ರವೇ ಅಲ್ಲಗಳೆಯುತ್ತಿದೆಯಾದರೆ (8ಕ) ಹುರುಳು ದೊರಕುತ್ತದೆ; ಆ ಪದಕಂತೆಯ ಹೊರಗಿರುವ ಹೋಗು ಪದವನ್ನು ಮಾತ್ರವೇ ಅದು ಅಲ್ಲಗಳೆಯುತ್ತಿದೆಯಾದರೆ (8ಚ) ಹುರುಳು ದೊರಕುತ್ತದೆ; ಮತ್ತು
ಅವೆರಡನ್ನೂ ಅಲ್ಲಗಳೆಯುತ್ತಿದೆಯಾದರೆ (8ಟ) ಹುರುಳು ದೊರಕುತ್ತದೆ. ಇಲ್ಲ ಪದವನ್ನು ಬಳಸಿರುವ ಇಂತಹ ಸೊಲ್ಲುಗಳಲ್ಲಿ ಅದಕ್ಕೆ ಮೂರು ಬಗೆಯ ಹರವುಗಳಿರಬಲ್ಲುದು ಎಂಬುದೇ ಇಲ್ಲಿ ಮೂರು ಬಗೆಯ ಇಟ್ಟಳದ ಇಪ್ಪುರುಳು ಗಳು ಕಾಣಿಸಲು ಕಾರಣ.
ಈ ಇಪ್ಪುರುಳು ಬಾರದ ಹಾಗೆ ಮಾಡಲು, ಮೇಲೆ (8)ನೇ ಸೊಲ್ಲಿನ ಮೂರು ಹುರುಳುಗಳನ್ನು ಸೂಚಿಸುವುದಕ್ಕಾಗಿ (8ಕ, ಚ, ಮತ್ತು ಟ)ಗಳಲ್ಲಿ ಬಳಸಿರುವಂತಹ ಇಟ್ಟಳಗಳನ್ನು ಆಯ್ದುಕೊಳ್ಳಬಹುದು.
ಇಟ್ಟಳದ ಇಪ್ಪುರುಳು ಸೊಲ್ಲಿನ ಹೊರಗೂ ಸಾಗಬಲ್ಲುದೆಂಬುದಕ್ಕೆ ಕೆಳಗಿನ
ಸೊಲ್ಲನ್ನು ಎತ್ತುಗೆಯಾಗಿ ಕೊಡಬಹುದು:
(9)
ನೀನು ಇವತ್ತೇ ಬೊಂಬಾಯಿಗೆ ಹೋಗಬೇಕೆಂದು ರಾಜು ಹೇಳಿದ್ದಾನೆ.
(9)ನೇ ಸೊಲ್ಲಿನಲ್ಲಿ ಬಂದಿರುವ ನೀನು ಪದ ಆ ಸೊಲ್ಲಿನ ಆಡುಗನನ್ನು (ಎಂದರೆ ರಾಜುವಿನ ಕೇಳುಗನನ್ನು) ಸೂಚಿಸಬಲ್ಲುದು, ಇಲ್ಲವೇ ಆ ಸೊಲ್ಲಿನ ಕೇಳುಗನನ್ನೂ ಸೂಚಿಸಬಲ್ಲುದು. ಇವುಗಳಲ್ಲಿ ಎರಡನೆಯ ಹುರುಳು ಆ ಪದಕ್ಕೆ ಸೊಲ್ಲಿನ ಹೊರಗಿರುವ ವ್ಯಕ್ತಿಯೊಂದಿಗೂ ಪತ್ತುಗೆಯಿರಬಲ್ಲುದು ಎಂಬುದನ್ನು ಸೂಚಿಸುತ್ತದೆ.
ಈ ಇಪ್ಪುರುಳಿನ ತೊಡಕನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ ಅನುವಾದಿಸಿದ ಹೆನ್ರಿ ಚಾರೇರ್ ಅವರ ಪ್ಯಾಪಿಲಾನ್ (1) ಪುಸ್ತಕದ ಪುಟ (75)ರಲ್ಲಿ ಬರುವ ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು:
(10)
ಕುಬ್ಜ … ಹಿಂದಿರುಗುವ ಮೊದಲು, ನಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ ಎಂದು ಕೇಳಿಕೊಂಡ.
ಕನ್ನಡದಲ್ಲಿ ನೇರ ಎತ್ತುಗೆಗೂ ನೇರವಲ್ಲದ ಎತ್ತುಗೆಗೂ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಮೇಲಿನ ಸೊಲ್ಲಿನಲ್ಲಿ ಕುಬ್ಜ ಕೇಳಿದ್ದು, ನಿಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ ಎಂದಿರಬೇಕು. ಬರಹದ ಕುಳ್ಳಿಹ(ಸಂದರ್ಬ) ದಿಂದ ಇದು ಗೊತ್ತಾಗುತ್ತದೆ. ಕುಬ್ಜನ ಈ ಕೋರಿಕೆಯ ಮೊದಲ ಬಾಗವನ್ನು (ನಿಮ್ಮ ಹಳೆಯ ದೋಣಿಯನ್ನು ಎಂಬುದನ್ನು) ಹೊರಗೆ ಹಾಕಿ, ಉಳಿದ
ಬಾಗವನ್ನು (ನನಗೆ ಕೊಡಿ ಎಂಬುದನ್ನು) ಮಾತ್ರ ನೇರ ಎತ್ತುಗೆಯಾಗಿ ಕೊಟ್ಟಿರುವುದು, ಮತ್ತು ಎತ್ತುಗೆಯ ಗುರುತುಗಳನ್ನು ಬಳಸದಿರುವುದು ಇಲ್ಲಿ ಗೊಂದಲಕ್ಕೆಡೆಮಾಡಿದೆ.
ಈ ಗೊಂದಲವನ್ನು ಇಲ್ಲವಾಗಿಸಬೇಕಿದ್ದಲ್ಲಿ, (10ಕ) ಮತ್ತು (10ಚ)ಗಳಲ್ಲಿ ತೋರಿಸಿದ ಹಾಗೆ, ನೇರ ಎತ್ತುಗೆ ಯಾವುದು ಎಂಬುದನ್ನು ಸೂಚಿಸುವುದಕ್ಕಾಗಿ ಎತ್ತುಗೆಯ ಗುರುತುಗಳನ್ನು ಬಳಸಬೇಕಾಗುತ್ತದೆ.
(10ಕ) ಕುಬ್ಜ … ಹಿಂದಿರುಗುವ ಮೊದಲು, “ನಿಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ” ಎಂದು ಕೇಳಿಕೊಂಡ. (10ಚ) ಕುಬ್ಜ … ಹಿಂದಿರುಗುವ ಮೊದಲು ನಮ್ಮ ಹಳೆಯ ದೋಣಿಯನ್ನು, “ನನಗೆ ಕೊಡಿ” ಎಂದು ಕೇಳಿಕೊಂಡ.
ನನಗೆ ಎಂಬುದನ್ನು ತನಗೆ ಎಂಬುದಾಗಿ ಬದಲಾಯಿಸುವ (ಎಂದರೆ, ಸೊಲ್ಲಿನ ಯಾವ ಅಂಶವನ್ನೂ ನೇರ ಎತ್ತುಗೆಯಾಗಿ ಬಳಸದಿರುವ) ಮೂರನೆಯ ಹೊಲಬನ್ನೂ ಇಲ್ಲಿ ಬಳಸಲು ಬರುತ್ತದೆ; ಇದನ್ನು (10ಟ)ದಲ್ಲಿ ಕಾಣಬಹುದು.
(10ಟ) ಕುಬ್ಜ … ಹಿಂದಿರುಗುವ ಮೊದಲು ನಮ್ಮ ಹಳೆಯ ದೋಣಿಯನ್ನು ತನಗೆ ಕೊಡಿ ಎಂದು ಕೇಳಿಕೊಂಡ.
ಹಾಗೆ ಮಾಡದಿದ್ದರೆ, ಕೊಡಬೇಕಾಗಿರುವ ದೋಣಿ ಸೊಲ್ಲಿನ ಆಡುಗನದೋ ಇಲ್ಲವೇ ಕುಬ್ಜನದೋ ಎಂಬ ವಿಶಯದಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
6.3 ಇಪ್ಪುರುಳು ತೊಡಕಾಗಿರುವುದು
ಮೇಲೆ ಸೂಚಿಸಿದ ಹಾಗೆ, ಇಪ್ಪುರುಳೆಂಬುದು ಕೆಲವರಿಗೆ ಒಂದು ತೊಡಕಾಗಿ ಕಾಣಿಸುತ್ತದೆ; ಆದರೆ ಬೇರೆ ಕೆಲವರಿಗೆ ಅದೊಂದು ಒತ್ತಾಸೆಯಾಗಿಯೂ ಕಾಣಿಸುತ್ತದೆ.
ಸಾಮಾನ್ಯವಾಗಿ, ಹೆಚ್ಚಿನವರಿಗೂ ತಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ಚೊಕ್ಕಟವಾಗಿ ತಿಳಿಸಬೇಕೆಂದಿರುತ್ತದೆ. ಅಂತಹವರಿಗೆಲ್ಲ ಅವರು ಬಳಸುವ ಸೊಲ್ಲುಗಳಲ್ಲಿ ಅವರ ಅರಿವಿಗೆ ಬಾರದ ಹಾಗೆ ಸೇರಿಕೊಳ್ಳುವ ಇಪ್ಪುರುಳು ಒಂದು ತೊಡಕಾಗುತ್ತದೆ.
ಆದರೆ, ತಮ್ಮ ಮಾತಿನ ಇಲ್ಲವೇ ಬರಹದ ಮೂಲಕ ಜನರನ್ನು ಬೆರಗಾಗಿಸ ಬೇಕೆಂದಿರುವವರಿಗೆ, ನಗೆಯಲ್ಲಿ ಮುಳುಗಿಸ ಬೇಕೆಂದಿರುವವರಿಗೆ, ಇಲ್ಲವೇ ಮೋಸಮಾಡಬೇಕೆಂದಿರುವವರಿಗೆ ಅದು ಒತ್ತಾಸೆಯಾಗುತ್ತದೆ. ಯಾಕೆಂದರೆ, ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿ ಅವರು ಇಪ್ಪುರುಳಿನ ಸೊಲ್ಲುಗಳನ್ನು ತಮ್ಮ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬೇಕೆಂದೇ ಬಳಸಿಕೊಳ್ಳಬಲ್ಲರು.
6.2.1 ಕಾನೂನುಗಳನ್ನು ಬರೆಯುವುದು
ಕಟ್ಟುವಳಿ ಇಲ್ಲವೇ ಕಾನೂನುಗಳನ್ನು ಬರೆಯುವವರಿಗೆ ಇಪ್ಪುರುಳಿನ ಸೊಲ್ಲುಗಳು ತುಂಬಾ ತೊಂದರೆ ಕೊಡುತ್ತವೆ. ಯಾಕೆಂದರೆ, ಅವರು ಬರೆಯುವ ಕಾನೂನುಗಳಲ್ಲಿ ಅವು ಅವರಿಗೆ ತಿಳಿಯದ ಹಾಗೆಯೇ ಸೇರಿಕೊಳ್ಳಬಲ್ಲುವು. ಆ ರೀತಿ ಸೇರಿಕೊಂಡಾಗ, ಅಂತಹ ಕಟ್ಟುವಳಿ ಇಲ್ಲವೇ ಕಾನೂನುಗಳು ಕೊಡುವ ಎರಡು ಹುರುಳುಗಳಲ್ಲಿ ಯಾವುದನ್ನು ಒಪ್ಪಬೇಕು ಮತ್ತು ಯಾವುದನ್ನು ಬಿಡಬೇಕು ಎಂಬ ವಿಶಯದಲ್ಲಿ ಜಗಳಗಳುಂಟಾಗುತ್ತವೆ ಮತ್ತು ಅವನ್ನು ಬಗೆಹರಿಸುವುದಕ್ಕಾಗಿ ನ್ಯಾಯಾಲಯಗಳೂ ಸಾಕಶ್ಟು ಸಮಯವನ್ನು ಹಾಳುಮಾಡಬೇಕಾಗುತ್ತದೆ.
ಎತ್ತುಗೆಗಾಗಿ, ಕ್ಲಬ್ಬೊಂದಕ್ಕೆ ಸಂಬಂದಿಸಿದ ಹಾಗೆ, ಕೆಳಗೆ ಕೊಟ್ಟಿರುವ
ಕಟ್ಟುವಳಿಯೊಂದನ್ನು ಬರೆದಿರಬಹುದು:
(11) ಮದುವೆಯಾದವರು ಮತ್ತು ಇಪ್ಪತ್ತು ವರ್ಶ ದಾಟಿದವರು
ಮಾತ್ರ ಈ ಕ್ಲಬ್ಬಿಗೆ ಸೇರಬಹುದು.
ಈ ಕಟ್ಟುವಳಿಗೆ ಕೆಳಗೆ ಸೂಚಿಸಿದ ಹಾಗೆ ಎರಡು ಹುರುಳುಗಳಿರಬಲ್ಲು ದಾಗಿದ್ದು, ಅವುಗಳಲ್ಲಿ ಮೊದಲನೆಯದನ್ನು ಕ್ಲಬ್ಬಿನ ಅದಿಕಾರಿಗಳು ಮತ್ತು ಎರಡನೆಯದನ್ನು ಕ್ಲಬ್ಬಿಗೆ ಸೇರಬೇಕೆಂದಿರುವವರು ಆರಿಸಿಕೊಳ್ಳಬಲ್ಲರಾದ ಕಾರಣ, ಜಗಳವುಂಟಾಗಬಲ್ಲುದು.
(11ಕ) ಈ ಕ್ಲಬ್ಬಿಗೆ ಸೇರಬೇಕಾದರೆ ಮದುವೆಯಾಗಿರಬೇಕು
ಮಾತ್ರವಲ್ಲ, ಇಪ್ಪತ್ತು ವರ್ಶವೂ ದಾಟಿರಬೇಕು.
(11ಚ) ಈ ಕ್ಲಬ್ಬಿಗೆ ಸೇರಬೇಕಾದರೆ ಮದುವೆಯಾಗಿರಬೇಕು ಇಲ್ಲವೇ
ಇಪ್ಪತ್ತು ವರ್ಶ ದಾಟಿರಬೇಕು.
ಕಾನೂನುಗಳು ಇಪ್ಪುರುಳಿನವಾಗಿದ್ದಲ್ಲಿ, ಅವನ್ನು ಯಾರ ನೆರವಿಗಾಗಿ ಮಾಡಲಾಗಿದೆಯೋ ಅವರಲ್ಲಿ ಹೆಚ್ಚಿನವರ ನೆರವಿಗೂ ಅವು ಬಾರದೆ ಹೋಗು ತ್ತವೆ. ಯಾಕೆಂದರೆ, ಅವಕ್ಕೆ ಒಳಪಡಬೇಕಾದವರು ಅವುಗಳಿಗಿರುವ ಹುರುಳು ಗಳಲ್ಲಿ ತಮಗೆ ಅನುಕೂಲವಾದುದನ್ನು ಮಾತ್ರವೇ ಆರಿಸಿಕೊಂಡು ಕಾನೂನಿನ ಹರಹು ತೀರಾ ಕಡಿಮೆಯಾಗುವ ಹಾಗೆ ಮಾಡಿಬಿಡುತ್ತಾರೆ. ಹಾಗಾಗಿ, ಕಾನೂನು ಗಳನ್ನು ಬರೆಯುವವರು ಇಪ್ಪುರುಳುಗಳನ್ನು ದೂರ ಇರಿಸಬೇಕು.
ಒಪ್ಪಂದಗಳಲ್ಲಿ ಇಪ್ಪುರುಳಿನ ಸೊಲ್ಲುಗಳು ಸೇರಿಕೊಂಡಿವೆಯಾದರೆ, ಅವು ಮುಂದೆ ತೊಂದರೆಯನ್ನು ಕೊಡದಿರವು. ಎತ್ತುಗೆಗಾಗಿ, ಮನೆಯೊಂದರ ತೊಟ್ಟಿಯಲ್ಲಿ ಬಲ್ಬುಗಳನ್ನು ಹಾಕಿಸುವುದಕ್ಕಾಗಿ ಮಾಡಿದ ಒಪ್ಪಂದದಲ್ಲಿ ಕೆಳಗೆ (12)ರಲ್ಲಿ ಕೊಟ್ಟಿರುವ ಸೊಲ್ಲು ಬಂದಿರಬಹುದು. ಅದಕ್ಕೆ, (12ಕ) ಮತ್ತು (12ಚ)ಗಳಲ್ಲಿ ಕಾಣಿಸಿದ ಹಾಗೆ, ಎರಡು ಹುರುಳುಗಳಿರಬಲ್ಲುವಾದ ಕಾರಣ, ಅದೊಂದು ಇಪ್ಪುರುಳಿನ ಸೊಲ್ಲು.
(12) ಎಲ್ಲಾ ಬಲ್ಬುಗಳಿಗೂ ಒಂದು ಸ್ವಿಚ್ ಇರಬೇಕು. (12ಕ) ಎಲ್ಲಾ ಬಲ್ಬುಗಳಿಗೂ ಒಂದೊಂದು ಸ್ವಿಚ್ ಇರಬೇಕು. (12ಚ) ಎಲ್ಲಾ ಬಲ್ಬುಗಳಿಗೂ ಒಟ್ಟಿಗೆ ಒಂದು ಸ್ವಿಚ್ ಇರಬೇಕು.
ತೊಟ್ಟಿಗೆ ಬಲ್ಬುಗಳನ್ನು ಹಾಕಿಸುವವನ ಮನಸ್ಸಿನಲ್ಲಿ (12ಕ) ಹುರುಳು ಇದ್ದಿರಬಹುದು; ಆದರೆ, ಅವನ್ನು ಹಾಕುವ ವ್ಯಕ್ತಿ ತನಗೆ ವೆಚ್ಚ ಕಡಿಮೆ ಮಾಡುವ (12ಚ) ಹುರುಳನ್ನು ಆರಿಸಿಕೊಳ್ಳಬಹುದು, ಮತ್ತು ಇದರಿಂದಾಗಿ, ಅವರೊಳಗೆ ಜಗಳವುಂಟಾಗಬಲ್ಲುದು. ಆದರೆ, ಇಲ್ಲಿ ಬಳಕೆಯಾಗಿರುವ ಸೊಲ್ಲೇ ಇಪ್ಪುರುಳಿನದಾದ ಕಾರಣ, ಬಲ್ಬು ಹಾಕಿದವನು ತಪ್ಪು ಮಾಡಿದ್ದಾ ನೆಂದು ತೋರಿಸಲು ಬರುವುದಿಲ್ಲ.
6.3.2 ಅರಿಮೆಯ ಬರಹಗಳು
ಅರಿಮೆಯ (ವಿಜ್ನಾನದ) ಬರಹಗಳಲ್ಲಿಯೂ ಇಪ್ಪುರುಳಿನ ಸೊಲ್ಲುಗಳು ಬರಲೇ ಬಾರದು. ಅವನ್ನು ದೂರ ಇರಿಸುವುದಕ್ಕಾಗಿ ಅರಿವಿಗರು ತಮ್ಮವೇ ಆದ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಿಕೊಳ್ಳುತ್ತಾರೆ, ಮತ್ತು ಅವಕ್ಕೆ ಕಟ್ಟುನಿಟ್ಟಾದ ಹುರುಳುಗಳನ್ನೂ ಕೊಡುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಪದಗಳ ಇಪ್ಪುರುಳು ಕಾಣಿಸದ ಹಾಗೆ ಮಾಡಲು ಬರುತ್ತದೆ.
ಇದಲ್ಲದೆ, ಇಟ್ಟಳದ ಇಪ್ಪುರುಳುಗಳನ್ನು ಹೋಗಲಾಡಿಸುವುದಕ್ಕಾಗಿ, ಅವರು ಹೆಚ್ಚಿನೆಡೆಗಳಲ್ಲೂ ಒಂದೇ ಬಗೆಯ ಸೊಲ್ಲುಗಳನ್ನು ಬಳಸಹೋಗುತ್ತಾರೆ. ಅವುಗಳಲ್ಲಿ ಇನ್ನುಡಿಹ(ಪುನರುಕ್ತಿ)ಗಳು ಹೆಚ್ಚಿರುವಂತೆ ನೋಡಿಕೊಳ್ಳುವು ದರಿಂದಲೂ ಕೆಲವು ಬಗೆಯ ಇಪ್ಪುರುಳುಗಳನ್ನು ಕಡಿಮೆ ಮಾಡಲು ಬರುತ್ತದೆ. ಎತ್ತುಗೆಗಾಗಿ, ಪದಕಂತೆಯೊಂದನ್ನು ಇನ್ನೊಮ್ಮೆ ಬಳಸಬೇಕಾದಾಗ, ಅದಕ್ಕೆ ಬದಲು ಅದು ಎಂಬ ತೋರುಪದವನ್ನು ಬಳಸಿದಲ್ಲಿ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಹಾಗಾಗಿ, ಅರಿಮೆಯ ಬರಹಗಳಲ್ಲಿ ಪದಕಂತೆಗಳನ್ನೇ ತಿರುತಿರುಗಿ ಬಳಸಲಾಗುತ್ತದೆ.
ಆದರೆ, ಅರಿಮೆಯ ಬರಹಗಳು ತಿಳಿಸಬೇಕೆಂದಿರುವ ವಿಶಯವನ್ನು ತುಂಬಾ ಅಡಕವಾಗಿ ತಿಳಿಸಬೇಕಾಗುವುದರಿಂದಾಗಿ, ಬೇರೆ ಹಲವು ಬಗೆಯ ಇಪ್ಪುರುಳು ಗಳು ಅವುಗಳಲ್ಲಿ ಸೇರಿಕೊಳ್ಳುತ್ತವೆ. ಎತ್ತುಗೆಗಾಗಿ, ಅಂತಹ ಬರಹಗಳಲ್ಲಿ ತುಂಬಾ ಹೆಚ್ಚು ಬಳಕೆಯಾಗುವ ಸೊಲ್ಲರಿಮೆಯ ಮಾರ್ಪುರುಳುಗಳು ಇಪ್ಪುರುಳು ಗಳನ್ನೂ ತಂದುಹಾಕುತ್ತವೆ (4.4 ನೋಡಿ). ಈ ಕಾರಣಕ್ಕಾಗಿ, ಎಲ್ಲರಿಗೂ ಅರಿಮೆಯ ಬರಹಗಳನ್ನು ಓದಿ ಅದರಲಿ ಏನು ಹೇಳಿದೆಯೆಂಬುದನ್ನು ಸುಳು ವಾಗಿ ತಿಳಿದುಕೊಳ್ಳಲು ಬರುವುದಿಲ್ಲ.
ಸೊಲ್ಲುಗಳ ಮೂಲಕ ವಿಶಯವೊಂದನ್ನು ಗೊಂದಲವುಂಟಾಗದ ಹಾಗೆ ತಿಳಿಸಬೇಕೆಂದಿರುವವರಿಗೆಲ್ಲ ಈ ರೀತಿ ಅವನ್ನು ಕಾಡುವ ಇಪ್ಪುರುಳುಗಳು ತೊಡಕಾಗಿರುತ್ತವೆ.
6.3.3 ಎಣ್ಣುಕಗಳಲ್ಲಿ ಇಪ್ಪುರುಳು
ನಾವು ಕೊಡುವ ತಿಳುವಳಿಕೆಗಳು ಸೊಲ್ಲಿನ ರೂಪದಲ್ಲಿರುವಲ್ಲೆಲ್ಲ ಎಣ್ಣುಕ (ಕಂಪ್ಯೂಟರ್)ಗಳು ಹಲವು ಬಗೆಯ ತೊಂದರೆಗಳಿಗೆ ಒಳಗಾಗುತ್ತಿರುತ್ತವೆ. ಇದಕ್ಕೆ ಕಾರಣವೇನೆಂದರೆ, ನಮ್ಮ ಹಾಗೆ ಅವು ಸೊಲ್ಲುಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಒಂದನ್ನು ಅವುಗಳ ಕುಳ್ಳಿಹ(ಸಂದರ್ಬ) ವನ್ನಾಗಲಿ, ಇಲ್ಲವೇ ಹಿಂದಿನ ಅನುಬವವನ್ನಾಗಲಿ ಬಳಸಿ ತಾವಾಗಿಯೇ ಆರಿಸಿಕೊಳ್ಳಲಾರವು.
ಎತ್ತುಗೆಗಾಗಿ, ಮಳೆಯಲ್ಲಿ ನೆನೆದ ಹುಡುಗನ ಚೀಲ ಎಂಬ ಪದಕಂತೆ ಮೂರು ಹುರುಳುಗಳನ್ನು ಕೊಡಬಲ್ಲುದು: ಅದು ಹೆಸರಿಸುವ ಚೀಲ ಮಾತ್ರ ಮಳೆಯಲ್ಲಿ ನೆನೆದಿರಬಹುದು; ಹುಡುಗ ಮಾತ್ರ ನೆನೆದಿರಬಹುದು; ಇಲ್ಲವೇ ಹುಡುಗನೊಂದಿಗೆ ಚೀಲವೂ ನೆನೆದಿರಬಹುದು.
ಆದರೆ, ಊಟ ಮಾಡಿದ ಹುಡುಗನ ಚೀಲ ಎಂಬ ಅಂತಹದೇ ಇನ್ನೊಂದು ಪದಕಂತೆಗೆ ಆ ರೀತಿ ಮೂರು ಹುರುಳುಗಳಿರಬಲ್ಲುವೆಂದು ನಮಗೆ ಅನಿಸುವುದಿಲ್ಲ. ಯಾಕೆಂದರೆ, ಊಟವನ್ನು ಮಾಡಿರುವುದು ಹುಡುಗನಲ್ಲದೆ ಚೀಲವಾಗಿರಲು ಬರುವುದಿಲ್ಲ. ಆದರೆ, ನಾವು ಮಾಡುವ ಈ ತೀರ್ಮಾನ ನಮ್ಮ ಅನುಬವದ ಮೇಲೆ ಇಲ್ಲವೇ ಪ್ರಪಂಚದ ಕುರಿತಾಗಿ ನಮಗಿರುವ ತಿಳಿವಿನ ಮೇಲೆ ಅವಲಂಬಿಸಿದೆ. ಎಣ್ಣುಕಗಳಿಗೆ ನಮ್ಮ ಹಾಗೆ ಅನುಬವ ಇಲ್ಲವೇ ಪ್ರಪಂಚದ ತಿಳಿವು ಇರುವುದಿಲ್ಲವಾದ ಕಾರಣ, ಅದು ಹಿಂದಿನ ಪದಕಂತೆಯ ಹಾಗೆ ಈ ಪದಕಂತೆಗೂ ಮೂರು ಹುರುಳುಗಳಿರಬಹುದೆಂಬ ತೀರ್ಮಾನಕ್ಕೆ ಬರುತ್ತದೆ.
ಇಂಟರ್ನೆಟ್ನ ಸರ್ವರ್ಗಳಿಗೆ ಇಪ್ಪುರುಳಿರುವ ಒಂದು ಪದ ಇಲ್ಲವೇ ಪದಕಂತೆಯನ್ನು ಕೊಟ್ಟು, ಅದಕ್ಕೆ ಸಂಬಂದಿಸಿದ ಬರಹಗಳನ್ನು ತೋರಿಸಲು ಸೂಚಿಸಿದಾಗ, ಅವುಗಳ ಎಣ್ಣುಕಗಳು ಎದುರಿಸುವ ಈ ತೊಡಕು ನಮ್ಮ ಕಣ್ಣಿಗೆ ಬೀಳುತ್ತದೆ: ಅವು ನಮಗೆ ಬೇಕಾಗಿರುವ ಹುರುಳಿಗೆ ಸಂಬಂದಿಸಿದಂತಹ ಬರಹಗಳನ್ನು ಮಾತ್ರವಲ್ಲದೆ, ಬೇಡದಿರುವ ಹುರುಳುಗಳಿಗೆ ಸಂಬಂದಿಸಿದಂತಹ ಬರಹಗಳನ್ನೂ ನಮ್ಮೆದುರು ತಂದಿರಿಸುತ್ತವೆ. ಅವು ಹಾಗೆ ಮಾಡದಿರಬೇಕಾದರೆ, ನಮಗೆ ಬೇಕಾಗಿರುವ ಹುರುಳು ಯಾವುದು ಎಂಬುದನ್ನು ಇನ್ನಶ್ಟು ಸ್ಪಶ್ಟವಾಗಿ, ಎಂದರೆ ಇಪ್ಪುರುಳು ಕಾಣಿಸಿಕೊಳ್ಳದ ಹಾಗೆ, ಬರೆದು ತಿಳಿಸಬೇಕಾಗುತ್ತದೆ. ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನುಡಿಮಾರು(ಅನುವಾ ದಿಸು)ವುದಕ್ಕಾಗಿ ಎಣ್ಣುಕಗಳನ್ನು ಬಳಸಬೇಕೆಂದಿರುವವರಿಗೂ ಅವುಗಳ ಈ ಇಪ್ಪುರುಳಿನ ಕೊರತೆ ಒಂದು ತೊಡಕಾಗಿ ಕಾಣಿಸುತ್ತದೆ. ಯಾಕೆಂದರೆ, ಇಪ್ಪುರುಳಿನ ಪದಗಳು ಇಲ್ಲವೇ ಸೊಲ್ಲುಗಳು ಕಾಣಿಸಿಕೊಳ್ಳುವಲ್ಲೆಲ್ಲ, ಅವು ಕೊಡುವ ಹುರುಳುಗಳಲ್ಲಿ ಯಾವುದನ್ನು ಆರಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದನ್ನು ಎಣ್ಣುಕಗಳು ತೀರ್ಮಾನಿಸಲಾರವು.
ಎಣ್ಣುಕಗಳ ಮಟ್ಟಿಗೆ ಇದು ನಿಜಕ್ಕೂ ಒಂದು ದೊಡ್ಡ ತೊಡಕು. ಸೊಲ್ಲುಗಳ ಹುರುಳನ್ನು ಹೆಚ್ಚಿನೆಡೆಗಳಲ್ಲೂ ನಾವು ಸುಳುವಾಗಿ ಕಂಡುಕೊಳ್ಳಬಲ್ಲೆವು. ಅವಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರಬಹುದೆಂದು ಹೆಚ್ಚಿನೆಡೆಗಳಲ್ಲೂ ನಮಗೆ ಅನಿಸುವುದೇ ಇಲ್ಲ. ಅದರೆ ಎಣ್ಣುಕಗಳಿಗೆ ಎಲ್ಲಾ ಸೊಲ್ಲುಗಳೂ ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸುತ್ತವೆ. ನಮಗೆ ಬಹಳ ಸರಳವಾಗಿ ಕಾಣಿಸುವ ಒಂದು ಸೊಲ್ಲಿನಲ್ಲಿ ನೂರಾರು ಇಟ್ಟಳಗಳು ಮತ್ತು ಅವಕ್ಕನುಗುಣವಾಗಿ ನೂರಾರು ಹುರುಳುಗಳು ಅವಕ್ಕೆ ಕಾಣಿಸುತ್ತವೆ.
ಎಣ್ಣುಕಗಳು ಎದುರಿಸುವ ಈ ತೊಡಕನ್ನು ಬಗೆಹರಿಸುವುದಕ್ಕಾಗಿ ಹಲವು ಬಗೆಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವನ್ನು ಕೆಳಗೆ ಸೂಚಿಸಲಾಗಿದೆ:
ಕೆಲವು ಮಂದಿ, ನಮಗೆ ಅನುಬವಗಳ ಮೂಲಕ ದೊರೆಯುವಂತಹ ಪ್ರಪಂಚದ ತಿಳುವಳಿಕೆ ಎಣ್ಣುಕಗಳಿಗೂ ಸಿಗುವ ಹಾಗೆ ಮಾಡಲು ಪ್ರಯತ್ನಿಸು ತ್ತಿದ್ದಾರೆ. ಈ ತಿಳುವಳಿಕೆಯನ್ನು ಬಳಸಿ, ಎಣ್ಣುಕಗಳೂ ನಮ್ಮ ಹಾಗೆ ಪದಗಳ ಹಲವು ಹುರುಳುಗಳಲ್ಲಿ ಒಂದನ್ನು ಆರಿಸಿಕೊಳ್ಳುವಂತಾಗಬಹುದೆಂಬುದು ಅವರ
ಇನ್ನು ಕೆಲವರು, ಪದಗಳ ಇಪ್ಪುರುಳನ್ನು ಬಗೆಹರಿಸುವುದಕ್ಕಾಗಿ ಅಂಕಿ ಅಂಶಗಳನ್ನು ಬಳಸುವ ಪ್ರಯತ್ನ ನಡೆಸಿದ್ದಾರೆ: ಪದಗಳಿಗಿರುವ ಎರಡು ಇಲ್ಲವೇ ಹೆಚ್ಚು ಹುರುಳುಗಳಲ್ಲಿ ಯಾವುದು ಹೆಚ್ಚು ಬಳಕೆಯಲ್ಲಿದೆಯೋ ಅದನ್ನೇ ಎಣ್ಣುಕಗಳು ಆರಿಸಿಕೊಳ್ಳುವ ಹಾಗೆ ಮಾಡುವುದೇ ಈ ಪ್ರಯತ್ನ. ಎತ್ತುಗೆಗಾಗಿ, ಹಾಲು ಎಂಬ ಪದ ಬಂದಾಗ, ಬೇರೆ ಕಾರಣಗಳಿಲ್ಲದಿದ್ದರೆ, ಹಸುವಿನ ಹಾಲು ಎಂಬುದನ್ನೇ ಎಣ್ಣುಕಗಳು ಈ ತಿಳಿವಿನ ಮೂಲಕ ಆರಿಸಿಕೊಳ್ಳಬಲ್ಲುವು. ಬೇರೆ ಕೆಲವರು, ಇಟ್ಟಳದ ಇಪ್ಪುರುಳುಗಳಿರುವ ಸೊಲ್ಲುಗಳನ್ನು ಬೇರೊಂದು ನುಡಿಗೆ ನುಡಿಮಾರ(ಅನುವಾದಿಸ)ಬೇಕಾದಾಗ, ಎಣ್ಣುಕಗಳು ಮೂಲ ನುಡಿಯ ಹಾಗೆ ಈಡು ನುಡಿಯಲ್ಲೂ ಇಟ್ಟಳದ ಇಪ್ಪುರುಳುಗಳಿರುವ ಸೊಲ್ಲುಗಳನ್ನೇ ಕೊಡುವ ಹಾಗೆ ಮಾಡುವ ಪ್ರಯತ್ನವನ್ನು ನಡೆಸಿದ್ದಾರೆ. ಇಲ್ಲಿ ಸರಿಯಾದ ಹುರುಳನ್ನು ಆರಿಸಿಕೊಳ್ಳುವ ಕೆಲಸವನ್ನು ಎಣ್ಣುಕಗಳು ನಡೆಸುವ ಬದಲು ಓದುಗನಿಗೇನೇ ಬಿಟ್ಟುಕೊಡಲಾಗುತ್ತದೆ.
ಆದರೆ, ಈ ಯಾವ ಪ್ರಯತ್ನದಲ್ಲೂ ತಮ್ಮ ಗುರಿಯನ್ನು ತಲುಪಲು ಎಣ್ಣುಕದ ತಿಳಿವಿಗರಿಗೆ ಇನ್ನೂ ಸಾದ್ಯವಾಗಿಲ್ಲ. ಅವು ನೆರವಾಗಬಲ್ಲುವೆಂದಶ್ಟೇ ಅವರಿಗೆ ಗೊತ್ತಾಗಿದೆ. ಇಪ್ಪುರುಳಿನ ತೊಡಕನ್ನು ಬಗೆಹರಿಸುವುದು ಎಣ್ಣುಕಗಳ ಮಟ್ಟಿಗೆ ಒಂದು ತುಂಬಾ ಮುಕ್ಯವಾದ ಸಂಗತಿಯಾದ ಕಾರಣ, ಪ್ರಯತ್ನ ವನ್ನಂತೂ ನಡೆಸುತ್ತಲೇ ಇರಬೇಕಾಗಿದೆ.
6.4 ಇಪ್ಪುರುಳು ಒತ್ತಾಸೆಯಾಗಿರುವುದು
ಸೊಲ್ಲುಗಳನ್ನು ತಮ್ಮ ಓದುಗರ ಮನೋರಂಜನೆಗಾಗಿ ಬಳಸಬೇಕೆಂದಿರುವ ಬರಹಗಾರರಿಗೆ ಇಪ್ಪುರುಳಿನ ಸೊಲ್ಲುಗಳು ಹಲವಾರು ಬಗೆಗಳಲ್ಲಿ ನೆರವಿಗೆ
ಬರುತ್ತವೆ. ಒಳ್ಳೇ ನಲ್ಬರಹಗಳಲ್ಲಿ, ಅದರಲ್ಲೂ ಕವಿತೆಗಳಲ್ಲಿ, ಇಪ್ಪುರುಳಿಗೇನೇ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಹುರುಳುಗಳನ್ನು ಓದುಗರು ಪಡೆಯುವಂತೆ ಮಾಡುವುದರಲ್ಲೇ ಕವಿತೆಗಳ ಕಸುವಿದೆ. ಹಾಗಾಗಿ, ಅಂತಹ ಬರಹಗಳಿಗೆಲ್ಲ ಬಗೆಬಗೆಯ ಇಪ್ಪುರುಳುಗಳಿರುವ ಸೊಲ್ಲುಗಳು ತುಂಬಾ ನೆರವನ್ನು ನೀಡಬಲ್ಲುವು.
ತಿಳಿವಿನ ಬರಹಗಳಲ್ಲಿ ಇಪ್ಪುರುಳು ಕಾಣಿಸಿಕೊಂಡಾಗ, ಅದು ಕೊಡುವ ಹಲವು ಹುರುಳುಗಳಲ್ಲಿ ಒಂದನ್ನು (ಎಂದರೆ, ಬರಹಗಾರರು ಯಾವ ಹುರುಳನ್ನು ತಿಳಿಸಬೇಕೆಂದಿರುವರೋ ಅದನ್ನು) ಓದುಗರು ಆರಿಸಿಕೊಳ್ಳಬೇಕಾಗಿದೆ; ಆದರೆ, ನಲ್ಬರಹಗಳಲ್ಲಿ ಆ ರೀತಿ ಮಾಡುವ ಬದಲು, ಓದುಗರು ಎಲ್ಲಾ ಹುರುಳು ಗಳನ್ನೂ ಕಂಡುಕೊಳ್ಳಬೇಕಾಗಿದೆ, ಮತ್ತು ಅವುಗಳ ನಡುವಿರುವ ಪತ್ತುಗೆ (ಸಂಬಂದ)ಯನ್ನು ತಿಳಿದುಕೊಳ್ಳಬೇಕಾಗಿದೆ. ಒಂದು ನಲ್ಬರಹದಲ್ಲಿ ಓದುಗರು ಕಾಣಬಲ್ಲ ಹುರುಳುಗಳು ಹೆಚ್ಚಿದಾಗ, ಅವರಿಗೆ ಅದರ ಆಳದ ಅರಿವಾಗುತ್ತದೆ. ನಗೆಹನಿ ಇಲ್ಲವೇ ನಗೆಬರಹಗಳಿಗೂ ಬೇರೆ ಬಗೆಯ ನಲ್ಬರಹಗಳಿಗೂ ನಡುವೆ ಇಪ್ಪುರುಳನ್ನು ಬಳಸಿಕೊಳ್ಳುವ ಬಗೆಯಲ್ಲಿ ವ್ಯತ್ಯಾಸವಿದೆ: ಎತ್ತುಗೆಗಾಗಿ, ಕವಿತೆಗಳು ಅವುಗಳಿಗಿರುವ ಎಲ್ಲಾ ಹುರುಳುಗಳನ್ನೂ ಓದುಗರು ಒಟ್ಟಾಗಿ ಗಮನಿಸುವಂತೆ ಮಾಡಬಲ್ಲುವು; ಯಾಕೆಂದರೆ, ಅವೆಲ್ಲವೂ ಅದರ ಹುರುಳು ಗಳೇ ಆಗಿರುತ್ತವೆ. ಆದರೆ, ನಗೆಹನಿ ಇಲ್ಲವೇ ನಗೆಬರಹಗಳು ಮೊದಲಿಗೆ ಓದುಗರು ಒಂದು ಹುರುಳನ್ನು ಗಮನಿಸುವಂತೆ ಮಾಡಿ, ಆಮೇಲೆ ಇನ್ನೊಂದನ್ನು ಗಮನಿಸುವ ಹಾಗೆ ಮಾಡುತ್ತವೆ; ಇದಲ್ಲದೆ, ಅವು ಬಳಸುವ ಹುರುಳುಗಳು ಒಂದಕ್ಕೊಂದು ಎದುರಾಗಿರುತ್ತವೆ, ಮತ್ತು ಅವುಗಳಲ್ಲಿ ಎರಡನೆಯ ಹುರುಳೇ ಸರಿಯಾದುದಾಗಿರುತ್ತದೆ.
ಮೊದಲಿಗೆ ಸೊಲ್ಲಿನ ಒಂದು ಹುರುಳು ಓದುಗರ ಮನಸ್ಸಿನಲ್ಲಿ ಚನ್ನಾಗಿ ಮೂಡುವ ಹಾಗೆ ಅವು ಮಾಡುತ್ತವೆ; ಆಮೇಲೆ, ಆ ಹುರುಳಿನ ಕುರಿತು ಅವರಲ್ಲಿ ಸಂಶಯವುಂಟಾಗುವ ಹಾಗೆ ಮಾಡುತ್ತವೆ, ಮತ್ತು ಒಡನೆಯೇ ಎರಡನೆಯ ಹುರುಳನ್ನು ಅವರೆದುರು ತಂದು ನಿಲ್ಲಿಸಿ, ಅವರು ನಗುವಿನಲ್ಲಿ ಇಲ್ಲವೇ ಬೆರಗಿನಲ್ಲಿ ಮುಳುಗಿಬಿಡುವಂತೆ ಮಾಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ನಗೆಹನಿಯನ್ನು ಗಮನಿಸಬಹುದು.
ರಾಜು: ನಿಮ್ಮೂರು ಬಂತೋ? ಹರಿ: ಅದು ನಾವಿದ್ದಲ್ಲಿಗೆ ಬರುವುದಿಲ್ಲ; ನಾವೇ ಅಲ್ಲಿಗೆ ಹೋಗಬೇಕು.
ಕನ್ನಡದಲ್ಲಿ ಬರು ಪದಕ್ಕೆ ಹತ್ತಿರವಾಗು ಎಂಬ ಹುರುಳಾಗಲಿ ಇಲ್ಲವೇ ಹತ್ತಿರ ಹೋಗು ಎಂಬ ಹುರುಳಾಗಲಿ ಇರಬಲ್ಲುದು. ಮೇಲೆ ಕೊಟ್ಟಿರುವ ರಾಜುವಿನ ಮಾತನ್ನು ಓದುತ್ತಿದ್ದಂತೆ, ಓದುಗನ ಮನಸ್ಸಿನಲ್ಲಿ ಬರು ಪದಕ್ಕಿರುವ ಈ ಎರಡು ಹುರುಳುಗಳಲ್ಲಿ ಕುಳ್ಳಿಹಕ್ಕೆ ತಕ್ಕುದಾದ (ನಿಮ್ಮ ಊರು ಹತ್ತಿರ ವಾಗುತ್ತಿದೆಯೇ ಎಂಬ) ಮೊದಲನೆಯ ಹುರುಳು ಮೂಡುತ್ತದೆ; ಆದರೆ ಹರಿಯ ಮಾತನ್ನು ಓದುತ್ತಿದ್ದಂತೆ, ಓದುಗರಲ್ಲಿ ಅದು ಸರಿಯಾದ ಹುರುಳಲ್ಲ ಎಂಬ ಅನಿಸಿಕೆಯುಂಟಾಗುತ್ತದೆ, ಮತ್ತು ಅದು ನಾವಿದ್ದಲ್ಲಿಗೆ ಬರುವುದಿಲ್ಲ ಎಂಬ ಸೊಲ್ಲಿನಿಂದಾಗಿ, ಬರು ಪದದ ಎರಡನೆಯ ಹುರುಳಿಗೆ ಅವರು ನೆಗೆಯಬೇಕಾಗುತ್ತದೆ. ಈ ನೆಗೆತವೇ ಅವರಲ್ಲಿ ನಗುವನ್ನು ಹುಟ್ಟಿಸುತ್ತದೆ. ಓದುಗರು ತನ್ನ ಅನುಬವ, ಪ್ರಪಂಚದ ತಿಳಿವು, ನುಡಿಗಟ್ಟು ಮತ್ತು ಗಾದೆಮಾತುಗಳ ತಿಳಿವು, ನಂಬಿಕೆಗಳು, ನಿಲುವುಗಳು, ನಡವಳಿಕೆಗಳು, ಮುನ್ನೊಲವುಗಳು, ಮೊದಲಾದವುಗಳನ್ನವಲಂಬಿಸಿ, ನಗೆಬರಹಗಳಲ್ಲಿ ಬರುವ ಸೊಲ್ಲಿನ ಮೊದಲನೇ ಹುರುಳನ್ನು ಪಡೆಯುತ್ತಾರೆ. ಆಮೇಲೆ, ಆ ಹುರುಳಿಗಿಂತ ತೀರ ಬೇರಾಗಿರುವ ಹುರುಳಿಗೆ ಅವರು ನೆಗೆಯುವ ಹಾಗೆ ಮಾಡುವುದರಲ್ಲೇ ನಗೆಬರಹಗಳನ್ನು ಬರೆಯುವ ಬರಹಗಾರರ ಜಾಣ್ಮೆಯಿರುತ್ತದೆ.
6.5 ತಿರುಳು
ಎರಡು ಇಲ್ಲವೇ ಹೆಚ್ಚು ಹುರುಳುಗಳಿರುವ ಪದ ಇಲ್ಲವೇ ಪದರೂಪಗಳನ್ನು ಬಳಸಿರುವ ಸೊಲ್ಲುಗಳು, ಮತ್ತು ಎರಡು ಇಲ್ಲವೇ ಹೆಚ್ಚು ಇಟ್ಟಳ(ಒಳರಚನೆ) ಗಳಿರುವ ಸೊಲ್ಲುಗಳು ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸಿಕೊಳ್ಳುತ್ತವೆ. ಒಬ್ಬೊಬ್ಬ ಓದುಗನಿಗೆ ಒಂದೊಂದು ಬಗೆಯ ಹುರುಳನ್ನು ಕೊಡಬಲ್ಲು ವಾದುದರಿಂದ, ಈ ಸೊಲ್ಲುಗಳು ಕೆಲವು ಬಗೆಯ ಬರಹಗಳಲ್ಲಿ ತೊಡಕನ್ನು ತಂದೊಡ್ಡುತ್ತವೆ, ಮತ್ತು ಬೇರೆ ಕೆಲವು ಬಗೆಯ ಬರಹಗಳಲ್ಲಿ ನೆರವನ್ನೂ ಒದಗಿಸುತ್ತವೆ.
ಕಾನೂನುಗಳನ್ನು ಇಲ್ಲವೇ ಒಪ್ಪಂದಗಳನ್ನು ಬರೆಯುವಲ್ಲಿ, ಅರಿಮೆಯ ಬರಹಗಳನ್ನು ಬರೆಯುವಲ್ಲಿ, ಮತ್ತು ಎಣ್ಣುಕ(ಕಂಪ್ಯೂಟರ್)ಗಳಿಗೆ ತಿಳಿವನ್ನು ಒದಗಿಸುವಲ್ಲಿ ಇವು ತೊಡಕಿನವಾಗಿ ಕಾಣಿಸುತ್ತವೆ. ಇದಕ್ಕೆ ಬದಲು, ನಲ್ಬರಹಗಳ ಬರವಣಿಗೆಯಲ್ಲಿ ಇವುಗಳಿಂದ ನೆರವನ್ನೂ ಪಡೆಯಬಹುದು. ಈ ಎರಡು ಬಗೆಯ ಕೆಲಸಗಳನ್ನು ನಡೆಸುವಲ್ಲೂ ಸೊಲ್ಲುಗಳಲ್ಲಿ ಬರಬಲ್ಲ ಇಪ್ಪುರುಳುಗಳು ಎಂತಹವು, ಯಾವ ರೀತಿಯಲ್ಲಿ ಅವು ಬಾರದಂತೆ ನೋಡಿ
ಕೊಳ್ಳಬಲ್ಲೆವು, ಇಲ್ಲವೇ ಯಾವ ರೀತಿಯಲ್ಲಿ ಅವುಗಳಿಂದ ನೆರವನ್ನು ಪಡೆಯಬಲ್ಲೆವು ಎಂಬ ತಿಳುವಳಿಕೆಯಿದ್ದರೆ ಒಳ್ಳೆಯದು. ಇಂತಹ ತಿಳುವಳಿಕೆಯನ್ನು ಪಡೆಯುವಲ್ಲಿ ನುಡಿಯ ಸೊಲ್ಲರಿಮೆ ನೆರವಿಗೆ ಬರುತ್ತದೆ.
ಏಳನೇ ಪಸುಗೆ — ಎರಡನೇ ನುಡಿಯ ಕಲಿಕೆ
7.1 ಮುನ್ನೋಟ
ತಮ್ಮ ತಾಯ್ನುಡಿಯಿಂದ ಬೇರಾಗಿರುವ ಎರಡನೇ ನುಡಿಯನ್ನು ಕಲಿಯ ಬೇಕೆಂದಿರುವವರಿಗೆ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಒರೆದು ನೋಡಲಾಗಿದೆ. ಇಲ್ಲಿ ಮುಕ್ಯವಾಗಿ ಎರಡು ಕೇಳ್ವಿಗಳು ನಮ್ಮ ಮುಂದಿವೆ:
(1) ಕನ್ನಡವನ್ನು ತಾಯ್ನುಡಿಯಾಗಿ ಪಡೆದವರಿಗೆ ಬೇರೊಂದು ನುಡಿಯನ್ನು ಎರಡನೆಯ ನುಡಿಯಾಗಿ ಕಲಿಸಬೇಕಿದ್ದಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು?
(2) ಕನ್ನಡಕ್ಕಿಂತ ಬೇರಾಗಿರುವ ನುಡಿಯೊಂದನ್ನು ತಾಯ್ನುಡಿಯಾಗಿ ಪಡೆದವರಿಗೆ ಕನ್ನಡ ನುಡಿಯನ್ನು ಎರಡನೆಯ ನುಡಿಯಾಗಿ ಕಲಿಸಬೇಕಿದ್ದಲ್ಲಿ ಕನ್ನಡದ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು?
ಇವುಗಳಲ್ಲಿ ಮೊದಲನೇ ಕೇಳ್ವಿಯನ್ನು ಈ ಪಸುಗೆಯ (7.2.1-6)ರಲ್ಲಿ ವಿವರವಾಗಿ ಪರಿಶೀಲಿಸಲಾಗಿದೆ. ಎರಡನೆಯದರ ಕುರಿತು ಹೆಚ್ಚು ಬರೆದಿಲ್ಲ; ಯಾಕೆಂದರೆ, ಮೇಲೆ ಎರಡು ಮತ್ತು ಮೂರನೇ ಪಸುಗೆಗಳಲ್ಲಿ ಒಂದು ನುಡಿಯ ಮತ್ತು ಅದರ ಓದು-ಬರಹಗಳ ಕಲಿಕೆಗೆ ಅದರ ಸೊಲ್ಲರಿಮೆಯ ತಿಳಿವು ಹೇಗೆ ನೆರವಾಗುತ್ತದೆ ಎಂಬುದನ್ನು ಹೆಚ್ಚು ವಿವರವಾಗಿ ಈಗಾಗಲೇ ವಿವರಿಸಲಾಗಿದೆ. ಅದನ್ನೇ ಇಲ್ಲಿಗೂ ಅಳವಡಿಸಿಕೊಳ್ಳಬಹುದು.
ಇದಕ್ಕೂ ಮೊದಲು, ಎರಡನೇ ನುಡಿಯನ್ನು ಕಲಿಯುವುದರ ಹೆಚ್ಚುಗಾರಿಕೆ ಮತ್ತು ಹೊಲಬುಗಳ ಕುರಿತು ಕೆಲವು ಮುಕ್ಯ ವಿಶಯಗಳನ್ನು ಕೆಳಗೆ ವಿವರಿಸಲಾಗಿದೆ.
7.1.1 ಎರಡನೇ ನುಡಿಯನ್ನು ಕಲಿಯುವುದರ ಹೆಚ್ಚುಗಾರಿಕೆ
ಒಂದಕ್ಕಿಂತ ಹೆಚ್ಚು ನುಡಿಗಳು ತಿಳಿದಿರುವ ಮಕ್ಕಳು (ಇರ್ನುಡಿಗರು ಇಲ್ಲವೇ ಹಲನುಡಿಗರು) ಒಂದೇ ನುಡಿಯನ್ನು ತಿಳಿದಿರುವ ಮಕ್ಕಳಿಗಿಂತ ಹಲವು ವಿಶಯ ಗಳಲ್ಲಿ ಮುಂದಿರುತ್ತಾರೆ. ಒಂದು ನುಡಿಯನ್ನು ಕಲಿಯುವುದೇ ತುಂಬಾ ತೊಡಕಿನ ಕೆಲಸ. ಹಾಗಿರುವಾಗ, ಎರಡು ಇಲ್ಲವೇ ಅದಕ್ಕಿಂತ ಹೆಚ್ಚು ನುಡಿಗಳನ್ನು ಈ ಮಕ್ಕಳು ಕಲಿತಿದ್ದಾರೆಂದರೆ, ಮತ್ತು ಅವನ್ನು ಒಂದರೊಡನೊಂದು ಬೆರಸದೆ ಬಳಸಲು ಕಲಿತಿದ್ದಾರೆಂದರೆ, ನಿಜಕ್ಕೂ ಅವರು ಒಂದು ತುಂಬಾ ತೊಡಕಿನ ಕೆಲಸವನ್ನೇ ನಡೆಸಲು ತಿಳಿದಿದ್ದಾರೆಂದು ಹೇಳಿದ ಹಾಗಾಯಿತು. ಈ ತಿಳಿವು ಅವರಿಗೆ ಬೇರೆ ಕೆಲಸಗಳನ್ನು ನಡೆಸುವಲ್ಲೂ ನೆರವಿಗೆ ಬರುತ್ತದೆ:
(1) ಇರ್ನುಡಿಗರು ಒಂದು ನುಡಿಯನ್ನು ಬಳಸುವಾಗ ಆ ನುಡಿಯ ಪದ ಮತ್ತು ಕಟ್ಟಲೆಗಳನ್ನು ಮಾತ್ರವೇ ಬಳಸುತ್ತಿರಬೇಕು. ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳು ತಮ್ಮ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಸ್ವಲ್ಪವೂ ತಲೆಹಾಕದಂತೆ ನೋಡಿಕೊಳ್ಳಬೇಕು. ಹಾಗಾಗಿ, ತಮಗೆ ತಿಳಿದಿರುವ ಯಾವುದೇ ಒಂದು ನುಡಿಯನ್ನು ಬಳಸುತ್ತಿರುವಾಗಲೂ, ಅವರು ತಮ್ಮ ಮಿದುಳಿನಲ್ಲಿ ನೆಲೆನಿಂತಿರುವ ಆ ನುಡಿಯ ಪದಗಳು, ಸೊಲ್ಲರಿಮೆಯ ಕಟ್ಟಲೆಗಳು ಮೊದಲಾದುವನ್ನು ಮಾತ್ರವಲ್ಲದೆ, ಇನ್ನೊಂದು ನುಡಿಯ ಪದಗಳು, ಸೊಲ್ಲರಿಮೆಯ ಕಟ್ಟಲೆಗಳು ಮೊದಲಾದುವನ್ನೂ ಗಮನಿಸುತ್ತಿರಬೇಕಾಗುತ್ತದೆ. ಎರಡು ಇಲ್ಲವೇ ಹೆಚ್ಚು ನುಡಿಗಳನ್ನು ಬಳಸುವುದಕ್ಕಾಗಿ ತಾವು ಪಡೆದು ಕೊಂಡಿರುವ ಈ ಅಳವನ್ನು ಅವರು ತಾವು ಮಾಡಬೇಕಾಗಿರುವ ಬೇರೆ ಕೆಲಸ ಗಳಲ್ಲೂ ಬಳಸಿಕೊಳ್ಳಬಲ್ಲರು. ಎತ್ತುಗೆಗಾಗಿ, ಯಾವುದಾದರೊಂದು ತೊಡಕನ್ನು ಬಗೆಹರಿಸಬೇಕಾದಾಗ, ಅದಕ್ಕೆ ಸಂಬಂದಿಸದಿರುವ ವಿಶಯಗಳನ್ನು ಬದಿಗಿರಿಸಿ, ಸಂಬಂದಿಸಿದವುಗಳನ್ನು ಮಾತ್ರವೇ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಈ ಕೆಲಸವನ್ನು ಅವರು ಒಂದೇ ನುಡಿಯನ್ನು ಕಲಿತಿರುವ ಒರ್ನುಡಿಗರಿಗಿಂತ ಹೆಚ್ಚು ಸುಳುವಾಗಿ ನಡೆಸಬಲ್ಲರೆಂಬುದು ಅರಕೆ(ಸಂಶೋದನೆ)ಗಳಿಂದ ತಿಳಿದು
(2) ಇರ್ನುಡಿಗರು ಇನ್ನೊಂದು ಕೆಲಸದಲ್ಲೂ ಒರ್ನುಡಿಗರಿಗಿಂತ ಮುಂದಿರು ತ್ತಾರೆ. ಮಾತನಾಡುವಾಗ ಅವರು ಆಗಾಗ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯುತ್ತಿರಬೇಕಾಗುತ್ತದೆ. ಹಲವು ಕಡೆಗಳಲ್ಲಿ ಅವರು ಒಂದು ಸೊಲ್ಲನ್ನು ಒಂದು ನುಡಿಯಲ್ಲಿ ಹೇಳಿ, ಒಡನೆಯೇ ಇನ್ನೊಂದು ಸೊಲ್ಲನ್ನು ತಮಗೆ ಗೊತ್ತಿರುವ ಇನ್ನೊಂದು ನುಡಿಯಲ್ಲಿ ಹೇಳಬೇಕಾಗುತ್ತದೆ.
ಎರಡನೇ ನುಡಿಯ ಕಲಿಕೆ
ಹೀಗೆ ಮಾಡುವುದು ಸುಲಬದ ಕೆಲಸವೇನಲ್ಲ. ಇದಕ್ಕಾಗಿ ಅವರು ಬಹಳ ಬೇಗನೆ ಒಂದು ನುಡಿಯ ಪದ ಮತ್ತು ಕಟ್ಟಲೆಗಳ ಬದಲು ಇನ್ನೊಂದು ನುಡಿಯ ಪದ ಮತ್ತು ಕಟ್ಟಲೆಗಳನ್ನು ಬಳಸಲು ತೊಡಗಬೇಕಾಗುತ್ತದೆ. ಈ ರೀತಿ ಒಂದು ನುಡಿಯಿಂದ ಇನ್ನೊಂದು ನುಡಿಗೆ ನೆಗೆಯಲು ಕಲಿತುದರಿಂದಾಗಿ, ಅವರಿಗೆ ಬೇರೆ ಬಗೆಯ ಕೆಲಸಗಳನ್ನು ನಡೆಸುವಲ್ಲೂ ಒಂದು ಬಗೆಯ ಕೆಲಸದಿಂದ ಇನ್ನೊಂದು ಬಗೆಯ ಕೆಲಸಕ್ಕೆ ನೆಗೆಯಲು ಸುಳುವಾಗುತ್ತದೆ.
ಹಾಗಾಗಿ, ತೊಡಕುಗಳನ್ನು ಬಗೆಹರಿಸುವುದರಲ್ಲಿ, ಮತ್ತು ತಿಳಿದಿರುವ ಸಂಗತಿಗಳನ್ನು ಸರಿಯಾಗಿ ಜೋಡಿಸಿಕೊಂಡು ಅವುಗಳಿಂದ ಯಾವುದಾದ ರೊಂದು ತೀರ್ಮಾನಕ್ಕೆ ಬರುವುದರಲ್ಲಿ ಇರ್ನುಡಿ ಮಕ್ಕಳು ಒರ್ನುಡಿ ಮಕ್ಕಳಿಗಿಂತ ಮುಂದಿರುತ್ತಾರೆ.
(3) ತಮ್ಮ ಅನಿಸಿಕೆಗಳನ್ನು ಮತ್ತು ತಿಳಿವನ್ನು ಇನ್ನೊಬ್ಬರಿಗೆ ತಿಳಿಸುವಲ್ಲಿ ನುಡಿಗಳು ಹೇಗೆ ನೆರವಾಗುತ್ತವೆ ಎಂಬುದು ಒರ್ನುಡಿಗರಿಗಿಂತ ಇರ್ನುಡಿಗರಿಗೆ ಹೆಚ್ಚು ಚನ್ನಾಗಿ ತಿಳಿದಿರುತ್ತದೆ. ಉಲಿಗಳ ಜೋಡಣೆಯಿಂದ ಪದಗಳನ್ನು ಉಂಟುಮಾಡಲಾಗುತ್ತದೆ, ಮತ್ತು ಹೀಗೆ ಜೋಡಿಸಿರುವ ಪದಗಳಿಗೆ ಹುರುಳಿದೆಯಲ್ಲದೆ ಉಲಿಗಳಿಗೆ ಅವುಗಳದೇ ಆದ ಹುರುಳಿಲ್ಲ ಎಂಬ ವಿಶಯ, ಮತ್ತು ಪದಗಳಿಗಿರುವ ಹುರುಳುಗಳು ರೂಡಿಯಿಂದ ಬಂದುವಲ್ಲದೆ ಸಹಜವಾದುವಲ್ಲ (ಒಂದೇ ಹುರುಳಿಗೆ ಬೇರೆ ಬೇರೆ ನುಡಿಗಳಲ್ಲಿ ಬೇರೆ ಬೇರೆ ಬಗೆಯ ಪದಗಳಿವೆ) ಎಂಬ ವಿಶಯ ಅವರ ಮನಸ್ಸಿನಲ್ಲಿ ಹೆಚ್ಚು ಚನ್ನಾಗಿ ಮೂಡಿರುತ್ತದೆ.
ಈ ತಿಳಿವು ಬರಹಗಳನ್ನು ಓದಲು ಕಲಿಯುವಲ್ಲಿ ನೆರವಿಗೆ ಬರುತ್ತದೆ, ಮತ್ತು ಇದರಿಂದಾಗಿ ಓದಿನ ಕಲಿಕೆಯಲ್ಲಿ ಅವರು ಒರ್ನುಡಿಗರಿಂದ ಮುಂದಿರು ತ್ತಾರೆ. ಇದಲ್ಲದೆ, ಸೊಲ್ಲುಗಳಲ್ಲಿ ಬಳಕೆಯಾಗಿರುವ ಪದಗಳನ್ನು ಬೇರ್ಪಡಿಸು ವಲ್ಲಿ, ಮತ್ತು ಅವುಗಳ ಇಟ್ಟಳಗಳನ್ನು ತಿಳಿದುಕೊಳ್ಳುವಲ್ಲಿ ಅವರು ಒರ್ನುಡಿಗ ರಿಂದ ಮುಂದಿರುತ್ತಾರೆ. ಹಾಗಾಗಿ, ಬರಹಗಳಲ್ಲಿರುವ ತಪ್ಪುಗಳನ್ನು ಕಂಡುಹಿಡಿ ಯುವುದರಲ್ಲಿ, ಮತ್ತು ಅವನ್ನು ತಿದ್ದುವುದರಲ್ಲಿಯೂ ಅವರು ಒರ್ನುಡಿಗರಿಂದ ಮುಂದಿರುತ್ತಾರೆ.
(4) ಇನ್ನೊಂದು ಹೆಚ್ಚಿನ ನುಡಿಯನ್ನು ಕಲಿಯುವುದರಲ್ಲಿಯೂ ಇರ್ನುಡಿಗರು ಒರ್ನುಡಿಗರಿಗಿಂತ ಮುಂದಿರುತ್ತಾರೆ. ನುಡಿಗಳ ಒಳಗುಟ್ಟನ್ನು ಅವರು ಹೆಚ್ಚು ಚನ್ನಾಗಿ ತಿಳಿದುಕೊಂಡಿರುವುದೇ ಇದಕ್ಕೆ ಕಾರಣ. ಎರಡು ನುಡಿಗಳ ನಡುವೆ ಅವು ಬಳಸುವ ಉಲಿಗಳಲ್ಲಿ, ಪದಗಳಲ್ಲಿ, ಮತ್ತು ಸೊಲ್ಲರಿಮೆಯ ಕಟ್ಟಲೆಗಳಲ್ಲಿ
ಯಾವ ರೀತಿ ವ್ಯತ್ಯಾಸಗಳೆಲ್ಲ ಇರಬಲ್ಲುವು ಎಂಬುದು ಒರ್ನುಡಿಗರಿಂದ ಇರ್ನುಡಿಗರು ಹೆಚ್ಚು ಚನ್ನಾಗಿ ತಿಳಿದುಕೊಳ್ಳಬಲ್ಲರು.
ದಕ್ಶಿಣ ಕನ್ನಡ ಜಿಲ್ಲೆಯ ಮಕ್ಕಳು ಸಾಮಾನ್ಯವಾಗಿ ಕರ್ನಾಟಕದ ಬೇರೆ ಜಿಲ್ಲೆಯ ಮಕ್ಕಳಿಗಿಂತ ಕಲಿಕೆಯಲ್ಲಿ ಮುಂದಿರುತ್ತಾರೆಂದು ಹೇಳಲಾಗುತ್ತದೆ. ಇದಕ್ಕೆ ಅಲ್ಲಿನ ಮಕ್ಕಳಲ್ಲಿ ಹೆಚ್ಚಿನವರೂ ಇರ್ನುಡಿಗರಾಗಿರುವುದು ಇಲ್ಲವೇ ಹಲನುಡಿಗರಾಗಿರುವುದು ಕಾರಣವಿರಬಹುದು.
ಹಾಗಾಗಿ, ಒಂದೋ ಎರಡೋ ಹೆಚ್ಚಿನ ನುಡಿಗಳನ್ನು ಕಲಿಯುವ ತೆರಹು ಮಕ್ಕಳಿಗಿದೆಯಾದರೆ, ಅದನ್ನು ಬಳಸಿಕೊಳ್ಳುವಂತೆ ಅವರನ್ನು ಹುರಿದುಂಬಿಸು ವುದು ಒಳ್ಳೆಯದು. ಯಾಕೆಂದರೆ, ಆ ರೀತಿ ಹೆಚ್ಚಿನ ನುಡಿಗಳನ್ನು ಕಲಿಯುವ ಮೂಲಕ ಅವರು ತಮ್ಮ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬಲ್ಲರು, ಮತ್ತು ಗಣಿತ, ವಿಜ್ನಾನ ಮೊದಲಾದ ಬೇರೆ ವಿಶಯಗಳ ಕಲಿಕೆಯಲ್ಲೂ ಉಳಿದವರಿಗಿಂತ ಮುಂದೆ ಹೋಗಬಲ್ಲರು.
ಇಂಗ್ಲಿಶ್ ಕಲಿಕೆನುಡಿಯ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿರುವ ಕೆಲವರು ತಾಯ್ತಂದೆಯರು ಆ ಮಕ್ಕಳು ತಮ್ಮ ತಾಯ್ನುಡಿಯನ್ನು ಪೂರ್ತಿ ಮರೆಯುವ ಹಾಗೆ ಅವರನ್ನು ಬೆಳೆಸುತ್ತಾರೆ. ಶಾಲೆಗಳಲ್ಲಂತೂ ಅವರು ತಮ್ಮ ತಾಯ್ನುಡಿಯನ್ನು ಬಳಸಲೇ ಬಾರದೆಂಬ ಕಟ್ಟಲೆಯಿರುತ್ತದೆ; ಮನೆಯಲ್ಲೂ ಇಂಗ್ಲಿಶ್ ನುಡಿಯನ್ನೇ ಬಳಸುತ್ತಿರುವ ಹಾಗೆ ಅವರನ್ನು ಹುರಿದುಂಬಿಸಿದಲ್ಲಿ, ಅವರು ತಮ್ಮ ತಾಯ್ನುಡಿಯನ್ನು ಪೂರ್ತಿ ಮರೆತುಬಿಡುತ್ತಾರೆ. ಆದರೆ, ಆ ರೀತಿ ತಮ್ಮಲ್ಲಿರುವ ಒಂದು ಹೆಚ್ಚಿನ ನುಡಿಯನ್ನು ಕಳೆದುಕೊಳ್ಳುವ ಮಕ್ಕಳು ಸ್ವಲ್ಪ ಮಟ್ಟಿಗೆ ತಮ್ಮ ಜಾಣ್ಮೆಯನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಈ ತಾಯಿತಂದೆಯರು ಗಮನಿಸಿದ ಹಾಗೆ ಕಾಣುವುದಿಲ್ಲ.
8.1.2 ಮೊದಲನೇ ಮತ್ತು ಎರಡನೇ ನುಡಿಗಳ ಕಲಿಕೆ
ಮಕ್ಕಳು ತಮ್ಮ ಮೊದಲನೇ ನುಡಿಯನ್ನು ಕಲಿಯುವುದಕ್ಕೂ, ಆಮೇಲೆ ಎರಡನೇ ನುಡಿಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಇದಲ್ಲದೆ, ಎರಡನೇ ನುಡಿಯನ್ನು ಚಿಕ್ಕಂದಿನಲ್ಲೇನೇ ಕಲಿಯುವುದಕ್ಕೂ, ಆಮೇಲೆ ದೊಡ್ಡವ ರಾದ ಮೇಲೆ ಕಲಿಯುವುದಕ್ಕೂ ನಡುವೆಯೂ ಹಲವು ವ್ಯತ್ಯಾಸಗಳಿವೆ. ಎರಡನೇ ನುಡಿಯ ಕಲಿಕೆಯಲ್ಲಿ ಸೊಲ್ಲರಿಮೆಯ ಕಲಿಕೆ ಯಾಕೆ ಮತ್ತು ಹೇಗೆ ಬೇಕಾಗುತ್ತದೆ ಎಂಬುದನ್ನು ಒರೆದು ನೋಡುವವರು ಈ ವ್ಯತ್ಯಾಸಗಳನ್ನು ಗಮನಕ್ಕೆ ತೆಗೆದು ಕೊಳ್ಳಬೇಕಾಗುತ್ತದೆ.
ಮೊದಲನೇ ನುಡಿಯ (ತಾಯ್ನುಡಿಯ) ಕಲಿಕೆ ಮಕ್ಕಳ ಬೆಳವಣಿಗೆಯ ಒಂದು ಹಂತವಾಗಿ ನಡೆಯುತ್ತದೆ. ಆರೋಗ್ಯದಲ್ಲಿರುವ ಯಾವ ಮಗುವೂ ತನ್ನ ಮೊದಲನೇ ನುಡಿಯನ್ನು ಕಲಿಯದಿರುವುದಿಲ್ಲ. ಮಲಗಿದಲ್ಲಿಂದ ಕವುಚಿ ಕೊಳ್ಳುವುದು, ಆಮೇಲೆ ಕುಳಿತುಕೊಳ್ಳುವುದು, ಅಂಬೆಗಾಲಿಡುವುದು, ಎದ್ದು ನಿಲ್ಲುವುದು, ನಡೆಯುವುದು ಮೊದಲಾದುವನ್ನು ಕಲಿತುಕೊಳ್ಳುವ ಹಾಗೆಯೇ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಮಾತನಾಡುವುದನ್ನೂ ಹಂತ ಹಂತವಾಗಿ ತಾವಾಗಿಯೇ ಕಲಿತುಕೊಳ್ಳುತ್ತಾರೆ.
ಮನೆಯಲ್ಲಿ ಮಗುವನ್ನು ನಲ್ಮೆಯಿಂದ ನೋಡಿಕೊಳ್ಳುವ ಮತ್ತು ಅದರೊಂದಿಗೆ ಯಾವಾಗಲೂ ಮಾತನಾಡಿಕೊಂಡಿರುವ ತಾಯಿತಂದೆಯರು, ಅಣ್ಣತಮ್ಮಂದಿರು ಮತ್ತು ಅಕ್ಕತಂಗಿಯರಿರಬಹುದು; ಇಲ್ಲವೇ ತುಸುವೂ ನಲ್ಮೆಯನ್ನು ತೋರಿಸದ ಮಲತಾಯಿ ಮಾತ್ರವೇ ಮಗುವಿನೊಡನೆ ಮನೆಯಲ್ಲಿರ ಬಹುದು. ಈ ವ್ಯತ್ಯಾಸ ಮಕ್ಕಳು ತಮ್ಮ ತಾಯ್ನುಡಿಯನ್ನು ಕಲಿಯುವುದರ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ.
ಇದಲ್ಲದೆ, ಅವರ ಬುದ್ದಿಶಕ್ತಿ, ಚುರುಕುತನ, ಜಾಣ್ಮೆ ಮೊದಲಾದವುಗಳು ಯಾವುವೂ ಈ ಕಲಿಕೆಯ ಮೇಲೆ ಯಾವ ಪರಿಣಾಮವನ್ನೂ ಮಾಡುವುದಿಲ್ಲ. ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯನ್ನು ಯಾರ ನೆರವೂ ಇಲ್ಲದೆ ತಾವಾಗಿಯೇ ಕಲಿತುಕೊಳ್ಳಬಲ್ಲರು. ದೊಡ್ಡವರ ಮಾತನ್ನು ಅವರು ಕೇಳುತ್ತಾ ಇದ್ದರೆ ಸಾಕು, ಅವರಿಗೆ ಮಾತನಾಡಲು ಬಂದುಬಿಡುತ್ತದೆ. ಈ ಕಾರಣಕ್ಕಾಗಿ, ಮಕ್ಕಳು ತಮ್ಮ ಮೊದಲನೇ ನುಡಿಯನ್ನು ಕಲಿಯುತ್ತಾರೆ ಎಂದು ಹೇಳುವುದಕ್ಕಿಂತಲೂ ಅದನ್ನು ಅವರು ತಮ್ಮ ಬೆಳವಣಿಗೆಯ ಅಂಗವಾಗಿ ಪಡೆಯುತ್ತಾರೆ ಎಂದು ಹೇಳು ವುದೇ ಸರಿ ಎಂಬ ಅನಿಸಿಕೆ ಹಲವು ತಿಳಿವಿಗರಲ್ಲಿದೆ.
ಇದಕ್ಕೆ ಬದಲು, ಎರಡನೇ ನುಡಿಯ ಕಲಿಕೆ ಎರಡು ಬಗೆಯ ತೆರಹುಗಳಲ್ಲಿ ನಡೆಯಬಲ್ಲುದು. ಮೊದಲನೆಯದಾಗಿ, ಮಕ್ಕಳು ಎರಡು ಇಲ್ಲವೇ ಹೆಚ್ಚು ನುಡಿಗಳು ಬಳಕೆಯಲ್ಲಿರುವಲ್ಲಿ ಬೆಳೆಯುತ್ತಿರುವರಾದರೆ, ಅವರು ತಮ್ಮ ತಾಯ್ನುಡಿಯೊಂದಿಗೆ ಆ ಹೆಚ್ಚಿನ ನುಡಿಗಳನ್ನೂ ಕಲಿತುಕೊಳ್ಳುತ್ತಾರೆ. ಆದರೆ ಇಂತಹ ಕಡೆಗಳಲ್ಲೆಲ್ಲ, ತಾಯ್ನುಡಿಯೇ ಅವರ ಮುಕ್ಯ ನುಡಿಯಾಗಿರುತ್ತದೆ, ಮತ್ತು ಅದರ ತಳಹದಿಯ ಮೇಲೆ ಬೇರೆ ನುಡಿಗಳ ಕಲಿಕೆ ನಡೆಯುತ್ತದೆ. ಬೇರೊಂದು ನುಡಿ ಬಳಕೆಯಲ್ಲಿರುವ ಊರಲ್ಲಿ ನೆಲೆಸಲು ಬಂದ ದೊಡ್ಡವ ರಲ್ಲೂ ಕೆಲವರು ತಾವಾಗಿಯೇ ಆ ಊರಿನ ನುಡಿಯನ್ನು ತಮ್ಮ ಎರಡನೆಯ ನುಡಿಯಾಗಿ ಕಲಿತುಕೊಳ್ಳಬಹುದು. ಅವರ ಈ ಕಲಿಕೆ ಸ್ವಲ್ಪ ಮಟ್ಟಿಗೆ ಚಿಕ್ಕ
ಮಕ್ಕಳ ಕಲಿಕೆಯನ್ನು ಹೋಲುತ್ತದೆ. ಆದರೆ, ಎಲ್ಲಾ ದೊಡ್ಡವರಿಗೂ ಆ ರೀತಿ ಎರಡನೇ ನುಡಿಯನ್ನು ತಾವಾಗಿಯೇ ಕಲಿಯಲು ಬರುವುದಿಲ್ಲ. ಕೆಲವರಿಗೆ ಅದಕ್ಕಾಗಿ ಯಾರಾದರೂ ಕಲಿಸುಗರ ನೆರವನ್ನು ಪಡೆಯಬೇಕಾಗುತ್ತದೆ.
ಕಲಿಸುಗರ ಇಲ್ಲವೇ ಪುಸ್ತಕಗಳ ನೆರವಿನಿಂದ ನಡೆಸುವ ಈ ಎರಡನೇ ನುಡಿಯ ಕಲಿಕೆ ಎರಡನೇ ಬಗೆಯದು. ಇದು ಹಲವು ವಿಶಯಗಳಲ್ಲಿ ಮೊದಲನೇ ನುಡಿಯ ಕಲಿಕೆಗಿಂತ ಬೇರಾಗಿದೆ.
ಶಾಲೆಯಲ್ಲಿ ಮಕ್ಕಳು ತಮ್ಮ ಎರಡನೇ ನುಡಿಯನ್ನು ಈ ಎರಡನೇ ಬಗೆಯಲ್ಲಿ ಕಲಿಯುತ್ತಾರೆ. ಅವರಿಗೆ ಈ ನುಡಿಯನ್ನು ಯಾರಾದರೂ ದೊಡ್ಡವರು ಕಲಿಸ ಬೇಕಾಗುತ್ತದೆ. ಚುರುಕಾಗಿರುವ ಕೆಲವು ಮಕ್ಕಳು ಅದನ್ನು ಬೇಗನೆ ಮತ್ತು ತುಂಬಾ ಚೆನ್ನಾಗಿ ಕಲಿಯಬಲ್ಲರು; ಆದರೆ, ಅಶ್ಟೊಂದು ಚುರುಕಿಲ್ಲದ ಬೇರೆ ಕೆಲವು ಮಕ್ಕಳು ಎಶ್ಟು ಹೇಳಿಕೊಟ್ಟರೂ ತಮ್ಮ ಎರಡನೇ ನುಡಿಯನ್ನು ಸರಿಯಾಗಿ ಕಲಿಯುವುದೇ ಇಲ್ಲ.
ಇದಲ್ಲದೆ, ಎರಡನೇ ನುಡಿಯನ್ನು ಕಲಿಸುವವರು ಎಂತಹವರು, ಕಲಿಸುವು ದಕ್ಕಾಗಿ ಅವರು ಎಂತಹ ಪುಸ್ತಕಗಳನ್ನು ಮತ್ತು ಉಪಕರಣಗಳನ್ನು ಬಳಸುತ್ತಾರೆ, ಕಲಿಯುವವರಿಗೆ ತಮ್ಮ ಕಲಿಕೆಯಲ್ಲಿ ಎಶ್ಟು ಆಸಕ್ತಿಯಿದೆ ಎಂಬಂತಹ ಬೇರೆ ಹಲವು ವಿಶಯಗಳೂ ಈ ಎರಡನೇ ಬಗೆಯ ಕಲಿಕೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಸರಿಯಾಗಿ ಕಲಿಸುವವರ ನೆರವಿಲ್ಲದಿದ್ದಲ್ಲಿ, ಹೆಚ್ಚಿನ ಮಕ್ಕಳೂ ತಮ್ಮ ಎರಡನೇ ನುಡಿಯನ್ನು ಚನ್ನಾಗಿ ಕಲಿತುಕೊಳ್ಳುವುದಿಲ್ಲ.
ಮೊದಲನೇ ನುಡಿಯನ್ನು ಮಕ್ಕಳು ಹಲವು ಹಂತಗಳ ಮೂಲಕ ಕಲಿಯಬೇಕಾಗುತ್ತದೆ. ಈ ಎಲ್ಲಾ ಹಂತಗಳನ್ನೂ ಅವರು ತಾವಾಗಿಯೇ ದಾಟುತ್ತಾ ಮುಂದುವರಿಯುತ್ತಾರೆ. ಯಾವ ಮಗುವೂ ಈ ಹಂತಗಳನ್ನು ದಾಟದಿರುವುದಿಲ್ಲ.
ಇದೇ ರೀತಿಯಲ್ಲಿ, ಎರಡನೇ ನುಡಿಯ ಕಲಿಕೆಯಲ್ಲೂ ಹಲವು ಹಂತ ಗಳಿರುತ್ತವೆ, ಮತ್ತು ಕೆಲವು ಮಕ್ಕಳು, ಕಲಿಸುವಿಕೆ ಅಶ್ಟು ಚನ್ನಾಗಿಲ್ಲದಿದ್ದರೂ, ಅವೆಲ್ಲವನ್ನೂ ದಾಟಿ ಮುಂದೆ ಹೋಗುತ್ತಾರೆ. ಆದರೆ, ಬೇರೆ ಕೆಲವು ಮಕ್ಕಳು ಯಾವುದಾದರೂ ಒಂದು ಹಂತದಲ್ಲಿ ಸಿಲುಕಿಕೊಂಡಿರುತ್ತಾರೆ, ಮತ್ತು ಅಲ್ಲಿಂದ ಮುಂದೆ ಹೋಗುವುದು ಹೇಗೆಂದು ತಿಳಿಯದೆ, ಅಲ್ಲೇ ಉಳಿಯುತ್ತಾರೆ. ಇದು ಮೊದಲನೇ ನುಡಿಯ ಕಲಿಕೆಗೂ ಎರಡನೇ ನುಡಿಯ ಕಲಿಕೆಗೂ ನಡುವಿರುವ ಇನ್ನೊಂದು ವ್ಯತ್ಯಾಸ.
7.1.3 ಮಕ್ಕಳ ಕಲಿಕೆ ಮತ್ತು ದೊಡ್ಡವರ ಕಲಿಕೆ
ಎರಡನೇ ನುಡಿಯನ್ನು ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕೂ, ಬಳಿಕ ದೊಡ್ಡವರಾದ ಮೇಲೆ ಕಾಲೇಜಿನಲ್ಲಿ, ಇಲ್ಲವೇ ಅದಕ್ಕೂ ಮುಂದೆ ಒಂದು ಕೆಲಸದಲ್ಲಿರುವಾಗ ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ:
ಮಕ್ಕಳಿಗಿಂತ ದೊಡ್ಡವರಿಗೆ ಹೆಚ್ಚು ತಿಳುವಳಿಕೆಯಿರುತ್ತದೆ. ತಮ್ಮ ಮುಂದಿರುವ ಸಂಗತಿಗಳನ್ನು ಬಿಡಿಸಿನೋಡಿ, ಅವುಗಳ ಒಳಗುಟ್ಟನ್ನು ತಿಳಿದು ಕೊಳ್ಳಬಲ್ಲಂತಹ ಅಳವು ಅವರಲ್ಲಿ ಚಿಕ್ಕವರಿಗಿಂತ ಹೆಚ್ಚಿರುತ್ತದೆ. ಈ ಅಳವನ್ನು ಅವರು ತಮ್ಮ ಎರಡನೇ ನುಡಿಯ ಕಲಿಕೆಯಲ್ಲೂ ಬಳಸಿಕೊಳ್ಳಬಲ್ಲರು.
ತಾವು ಈಗಾಗಲೇ ಕಲಿತಿರುವ ಮೊದಲನೇ ನುಡಿಗೂ ಈಗ ಕಲಿಯುತ್ತಿರುವ ಎರಡನೇ ನುಡಿಗೂ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದರ ತಿಳಿವನ್ನು ಚಿಕ್ಕವರಿಗಿಂತ ದೊಡ್ಡವರು ಹೆಚ್ಚು ಚನ್ನಾಗಿ ತಮ್ಮ ಕಲಿಕೆಯಲ್ಲಿ ಬಳಸಿಕೊಳ್ಳಬಲ್ಲರು. ಹಾಗಾಗಿ, ಎರಡನೇ ನುಡಿಯನ್ನು ಕಲಿಸುವವರು ಚಿಕ್ಕವರಿಗಿಂತಲೂ ದೊಡ್ಡವರಿಗೆ ಸೊಲ್ಲರಿಮೆಯ ಕಟ್ಟಲೆಗಳನ್ನು ನೇರವಾಗಿ ತಿಳಿಸಬಹುದು.
ಇದಲ್ಲದೆ, ನುಡಿಯ ಕಲಿಕೆಯಲ್ಲಿ ಎರಡು ಮುಕ್ಯ ಹಂತಗಳಿರುತ್ತವೆ: ದಿನಬಳಕೆಗೆ ಬೇಕಾಗುವ ಮಾತುಗಳನ್ನು ಸಲೀಸಾಗಿ ನುಡಿಯಲು ಕಲಿಯುವುದು ಒಂದು ಹಂತ, ಮತ್ತು ಗಣಿತ, ವಿಜ್ನಾನ ಮೊದಲಾದ ವಿಶಯಗಳನ್ನು ತಿಳಿದುಕೊಳ್ಳುವುದಕ್ಕಾಗಿ, ಮತ್ತು ಹಾಗೆ ತಿಳಿದುಕೊಂಡುದನ್ನು ಇನ್ನೊಬ್ಬರಿಗೆ ವಿವರಿಸಿ ಹೇಳುವುದಕ್ಕಾಗಿ, ನುಡಿಯನ್ನು ಬಳಸಲು ಕಲಿಯುವುದು ಇನ್ನೊಂದು
ಈ ಎರಡು ಹಂತಗಳ ನಡುವಿನ ಮುಕ್ಯ ವ್ಯತ್ಯಾಸವೇನೆಂದರೆ, ಮೊದಲನೇ ಹಂತದಲ್ಲಿ ನುಡಿಯ ಬಳಕೆಗೆ ಕಯ್ಸನ್ನೆ, ಕಣ್ಣುಸನ್ನೆ, ಮಾತಿನ ಏರಿಳಿತ ಮೊದಲಾ ದವುಗಳ ನೆರವು ಸಿಗುತ್ತದೆ. ಆದರೆ, ಎರಡನೇ ಹಂತದ ಕಲಿಕೆಯಲ್ಲಿ ನಾವು ಪಡೆಯಬೇಕಾಗಿರುವ ಹುರುಳುಗಳನ್ನೆಲ್ಲ ಪದ ಮತ್ತು ಸೊಲ್ಲುಗಳನ್ನು ಮಾತ್ರವೇ ಗಮನಿಸಿ ಪಡೆಯಬೇಕಾಗುತ್ತದೆ.
ಎರಡನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳಿಗೆ ಅದರಲ್ಲಿ ಮೊದಲನೇ ಹಂತವನ್ನು ತಲಪಲು ಎರಡು ವರ್ಶಗಳು ಸಾಕಾಗಬಹುದು; ಆದರೆ, ಎರಡನೇ ಹಂತವನ್ನು ತಲಪಬೇಕಿದ್ದಲ್ಲಿ ಅವರಿಗೆ ಆರೇಳು ವರ್ಶಗಳೇ ಬೇಕಾಗಬಹುದು. ಮಕ್ಕಳ ಮನಸ್ಸು ಸಾಕಶ್ಟು ಬೆಳವಣಿಗೆಯನ್ನು ಪಡೆಯುವಲ್ಲಿವರೆಗೆ ಅವರಿಗೆ ಈ ಎರಡನೇ ಹಂತವನ್ನು ತಲಪಲು ಬರುವುದಿಲ್ಲ. ಹಾಗಾಗಿ, ಈ ಎರಡನೇ
ಹಂತದ ಕಲಿಕೆಯನ್ನು ಚಿಕ್ಕವರಿಗಿಂತಲೂ ದೊಡ್ಡವರು ಹೆಚ್ಚು ಚನ್ನಾಗಿ ಮತ್ತು ಹೆಚ್ಚು ಬೇಗನೆ ನಡೆಸಬಲ್ಲರು.
ಆದರೆ, ಬೇರೆ ಹಲವು ವಿಶಯಗಳಲ್ಲಿ ದೊಡ್ಡವರು ತಮ್ಮ ಎರಡನೇ ನುಡಿಯ ಕಲಿಕೆಯಲ್ಲಿ ಚಿಕ್ಕವರಿಗಿಂತ ತುಂಬಾ ಹಿಂದೆ ಬೀಳುತ್ತಾರೆ. ಎತ್ತುಗೆಗಾಗಿ, ತಮ್ಮ ಮೊದಲನೇ ನುಡಿಯಲ್ಲಿ ಬಳಕೆಯಾಗಿಲ್ಲದಂತಹ ಹೊಸ ಉಲಿಗಳು ಎರಡನೇ ನುಡಿಯಲ್ಲಿ ಬಳಕೆಯಾಗುತ್ತಿವೆಯಾದರೆ, ಅಂತಹ ಉಲಿಗಳ ಉಲಿಪನ್ನು (ಉಚ್ಚಾರಣೆಯನ್ನು) ಚಿಕ್ಕವರಶ್ಟು ಸುಲಬವಾಗಿ ಮತ್ತು ಚೆನ್ನಾಗಿ ದೊಡ್ಡವರು ಕಲಿತುಕೊಳ್ಳಲಾರರು.
ಯಾಕೆಂದರೆ, ಉಲಿಗಳ ನಡುವಿನ ವ್ಯತ್ಯಾಸವನ್ನು ಮಾತಿನಲ್ಲಿ ಬಳಸಿಕೊಳ್ಳುವ ಕಸುವು ಮಕ್ಕಳಲ್ಲಿರುವ ಹಾಗೆ ದೊಡ್ಡವರಲ್ಲಿರುವುದಿಲ್ಲ. ಹೊಸ ಉಲಿಗಳನ್ನು ಹೊರಡಿಸುವ ಕಸುವೂ ಅವರ ನಾಲಿಗೆಯಲ್ಲಿ ಉಳಿದಿರುವುದಿಲ್ಲ. ತಾವು ಕಲಿಯುತ್ತಿರುವ ಎರಡನೇ ನುಡಿಯನ್ನು ತಾಯ್ನುಡಿಯಾಗಿ ಆಡುವವರ ಹಾಗೆ ಆಡಲು ದೊಡ್ಡವರಿಗಿಂತಲೂ ಚಿಕ್ಕ ಮಕ್ಕಳು ಹೆಚ್ಚು ಸುಳುವಾಗಿ ಕಲಿತುಕೊಳ್ಳ ಬಲ್ಲರು.
ಇದಲ್ಲದೆ, ಬೇರೆಯೂ ಹಲವು ವಿಶಯಗಳಲ್ಲಿ ದೊಡ್ಡವರ ನಿಲುವು ಗಟ್ಟಿ ಗೊಂಡಿದ್ದು, ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವರಿಗೆ ಕಶ್ಟವಾಗುತ್ತದೆ. ಎರಡನೇ ನುಡಿಯನ್ನು ಕಲಿತುಕೊಳ್ಳುವವರು ತಮ್ಮ ನಿಲುವಿನಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದರಿಂದ, ಈ ಕೆಲಸವನ್ನು ದೊಡ್ಡವರಿಗಿಂತ ಚಿಕ್ಕವರು ಹೆಚ್ಚು ಸುಳುವಾಗಿ ಮಾಡಬಲ್ಲರು.
ಚಿಕ್ಕ ಮಕ್ಕಳು ಎರಡನೇ ನುಡಿಯನ್ನು ಕಲಿಯುತ್ತಿರುವಾಗ ತಪ್ಪು ಮಾಡಲು ಹೆದರುವುದಿಲ್ಲ. ಹಾಗಾಗಿ, ಅವರಿಗೆ ಕಲಿಕೆಯಲ್ಲಿ ಬೇಗನೆ ಮುಂದೆ ಹೋಗಲು ಬರುತ್ತದೆ. ಆದರೆ, ದೊಡ್ಡವರು ತಪ್ಪು ಮಾಡಿದರೆ ಯಾರಾದರೂ ನಗಬಹುದು ಎಂಬುದಾಗಿ ಹೆದರುತ್ತಿರುತ್ತಾರೆ. ಅವರಿಗೆ ಕಲಿಸುವವರು ಅವರಿಗಿಂತ ಚಿಕ್ಕವರಾಗಿದ್ದರೆ, ಅವರು ತಪ್ಪು ಮಾಡಲು ಇನ್ನಶ್ಟು ಹೆದರುತ್ತಾರೆ. ಈ ಹೆದರಿಕೆಯೇ ಅವರನ್ನು ಕಲಿಕೆಯಲ್ಲಿ ಹಿಂದೆ ಬೀಳುವ ಹಾಗೆ ಮಾಡುತ್ತದೆ.
7.2 ಎರಡನೇ ನುಡಿಯಾಗಿ ಇಂಗ್ಲಿಶ್ನ ಕಲಿಕೆ
ಇಂಗ್ಲಿಶ್ ನುಡಿಯನ್ನು (ಇಲ್ಲವೇ ಹಿಂದಿ, ಫ್ರೆಂಚ್, ಜರ್ಮನ್ನಂತಹ ಬೇರೊಂದು ನುಡಿಯನ್ನು) ಕಲಿಯುತ್ತಿರುವ ಕನ್ನಡದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಕನ್ನಡದ
ಸೊಲ್ಲರಿಮೆಯಿಂದ ನೆರವೇನಾದರೂ ದೊರಕಬಲ್ಲುದೇ ಎಂಬುದನ್ನು ಕೆಳಗೆ (7.2-5)ರಲ್ಲಿ ಒರೆದು ನೋಡಲಾಗಿದೆ.
7.2.1 ತಾಯ್ನುಡಿಯನ್ನು ಕಲಿಕೆಯಿಂದ ಹೊರಗಿಡುವುದು
ಶಾಲೆಯಲ್ಲಿ ಇಂಗ್ಲಿಶ್ ನುಡಿಯನ್ನು ಎರಡನೇ ನುಡಿಯಾಗಿ ಕಲಿಸುತ್ತಿರುವಾಗ ಮಕ್ಕಳ ತಾಯ್ನುಡಿಯನ್ನು ಬಳಸಬಹುದೇ ಇಲ್ಲವೇ ಬಳಸಬೇಕೇ ಎಂಬ ವಿಶಯ ದಲ್ಲಿ ಇತ್ತೀಚೆಗೆ ತುಂಬಾ ಚರ್ಚೆಗಳು ನಡೆಯುತ್ತಿವೆ; ಆದರೆ, ಇವತ್ತು ಹೆಚ್ಚಿನ ಅರಿವಿಗರೂ ಇಂಗ್ಲಿಶ್ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬಳಕೆ ಹಲವು ಬಗೆಯಲ್ಲಿ ನೆರವಾಗಬಲ್ಲುದು ಎಂಬುದನ್ನು ಒಪ್ಪುವ ಹಂತಕ್ಕೆ ಬಂದಿದ್ದಾರೆ. ಇದಕ್ಕೆ ಮೊದಲು, ಇಂಗ್ಲಿಶ್ ತರಗತಿಗಳಲ್ಲಿ ತಾಯ್ನುಡಿಯನ್ನು ಬಳಸಲೇ ಕೂಡದು ಎಂಬ ಕಟ್ಟಲೆಯೊಂದು ಕಳೆದ ಶತಮಾನದಲ್ಲಿ ಬೆಳೆದುಬಂದಿತ್ತು. ತಾಯ್ನುಡಿಯನ್ನು ಬಳಸಿದಲ್ಲಿ ಅದು ಇಂಗ್ಲಿಶ್ ಕಲಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆಯೆಂಬ ತಪ್ಪು ತಿಳಿವಳಿಕೆ ಇದಕ್ಕೆ ಮುಕ್ಯವಾದ ಕಾರಣವಾಗಿತ್ತು. ಇದಲ್ಲದೆ, ಮಕ್ಕಳು ಯಾವಾಗಲೂ ಇಂಗ್ಲಿಶ್ ನುಡಿಯನ್ನೇ ಕೇಳುತ್ತಿದ್ದಲ್ಲಿ, ಮತ್ತು ಬೇರೆ ಯಾವ ನುಡಿಯನ್ನೂ ಕೇಳದಿದ್ದಲ್ಲಿ, ಅವರಿಗೆ ಇಂಗ್ಲಿಶ್ನಲ್ಲಿ ತುಂಬಾ ಚನ್ನಾಗಿ ಮತ್ತು ಬಹಳ ಬೇಗನೆ ಮಾತನಾಡಲು ಬಂದೀತೆಂಬ ಅನಿಸಿಕೆಯೂ ಇದಕ್ಕೆ ಕಾರಣವಾಗಿತ್ತು.
ಇಂಗ್ಲಿಶ್ ನುಡಿಯನ್ನು ಕಲಿಕೆಯ ನುಡಿಯಾಗಿ ಬಳಸುವ ಕೆಲವು ಶಾಲೆಗಳ ಲ್ಲಂತೂ ಮಕ್ಕಳು ಶಾಲೆಯೊಳಗೆ ತಮ್ಮ ತಾಯ್ನುಡಿಯನ್ನು ಬಳಸುವುದೇ ಅಪರಾದವೆಂಬುದಾಗಿ ಇವತ್ತಿಗೂ ಪರಿಗಣಿಸಲಾಗುತ್ತಿದೆ.
ನಿಜಕ್ಕೂ ಇದು ಮಕ್ಕಳ ಇಲ್ಲವೇ ದೊಡ್ಡವರ ಕಲಿಕೆ ಹೇಗೆ ಸಾಗುತ್ತದೆ ಎಂಬುದನ್ನು ಅರಿಯದೆ ಮಾಡಿರುವಂತಹ ಕಟ್ಟಲೆ. ಯಾರೇ ಆಗಲಿ, ತಮ್ಮಲ್ಲಿರುವ ತಿಳುವಳಿಕೆಯ ತಳಹದಿಯ ಮೇಲೆ ಹೊಸ ತಿಳುವಳಿಕೆಯನ್ನು ಪಡೆಯಬೇಕಾಗುತ್ತದೆ. ಶಾಲೆಗೆ ಬರುವ ಮೊದಲೇ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಚನ್ನಾಗಿ ಮಾತನಾಡಲು ಕಲಿತಿರುತ್ತಾರೆ. ತಮ್ಮ ಅನಿಸಿಕೆಗಳನ್ನು ಆ ನುಡಿಯಲ್ಲಿ ತಿಳಿಸುವುದು ಹೇಗೆ, ಮತ್ತು ಅದರಲ್ಲಿ ಬೇರೆಯವರು ಹೇಳಿದುದನ್ನು ಕೇಳಿ ತಿಳಿಯುವುದು ಹೇಗೆ ಎಂಬುದನ್ನು ಅವರು ಚನ್ನಾಗಿ ತಿಳಿದಿರುತ್ತಾರೆ. ಅವರ ಆಲೋಚನೆಗಳೆಲ್ಲವೂ ಆ ನುಡಿಯಲ್ಲಿಯೇ ನಡೆಯುತ್ತಿರುತ್ತವೆ.
ಹಾಗಿರುವಾಗ, ಮಕ್ಕಳು ಶಾಲೆಯಲ್ಲಿ ಹೊಸ ನುಡಿಯೊಂದನ್ನು ಕಲಿಯ ಬೇಕಿದ್ದಲ್ಲಿ, ಅದನ್ನು ಅವರು ಅದಕ್ಕೆ ಮೊದಲೇ ಕಲಿತುಕೊಂಡಿದ್ದ ತಾಯ್ನುಡಿಯ ಮೂಲಕವೇನೇ ಕಲಿಯಬೇಕು. ಇದಲ್ಲದೆ, ನುಡಿಯ ಸ್ವರೂಪವೆಂತಹದು ಎಂಬುದನ್ನು ಶಾಲೆಗೆ ಸೇರುವ ಮೊದಲೇನೇ ಅವರಿಗೆ ತಾಯ್ನುಡಿಯ ಕಲಿಕೆ ತಿಳಿಸಿಕೊಟ್ಟಿದೆ. ಉಲಿಗಳನ್ನು ಬಳಸಿ ಪದಗಳನ್ನು ಉಂಟುಮಾಡುವುದು ಹೇಗೆ, ಅವನ್ನು ಬಳಸಿ ಪದಕಂತೆಗಳನ್ನು ಮತ್ತು ಸೊಲ್ಲುಗಳನ್ನು ಉಂಟುಮಾಡುವುದು ಹೇಗೆ, ಅವು ಹುರುಳುಗಳನ್ನು ಹೇಗೆ ಸೂಚಿಸಬಲ್ಲುವು ಎಂಬುದನ್ನೆಲ್ಲ ಅವರು ಅದಕ್ಕೆ ಮೊದಲೇ ತಮ್ಮ ತಾಯ್ನುಡಿಯ ಕಲಿಕೆಯ ಮೂಲಕ ತಿಳಿದಿರುತ್ತಾರೆ. ಅವರು ಕಲಿಯಬೇಕಾಗಿರುವ ಹೊಸ ನುಡಿಯಲ್ಲಿ (ಇಂಗ್ಲಿಶ್ನಲ್ಲಿ) ಇದನ್ನೇ ಬೇರೊಂದು ಬಗೆಯಲ್ಲಿ ನಡೆಸಲಾಗುತ್ತದೆ. ಈ ಬಗೆ ಎಂತಹದು ಎಂಬುದನ್ನು ಅವರು ಗಮನಿಸುವ ಹಾಗೆ ಮಾಡುವ ಮೂಲಕ, ಅದನ್ನು ಕಲಿಯಲು ತೊಡಗಿಸು ವುದೇ ಸರಿಯಾದ ಮತ್ತು ಸುಳುವಾದ ದಾರಿ. ಈ ರೀತಿ ತಾಯ್ನುಡಿಯ ಮೂಲಕ ಹೊಸ ನುಡಿಯನ್ನು ಕಲಿಸಹೊರಟಲ್ಲಿ, ಮಕ್ಕಳಿಗೆ ನೆಮ್ಮದಿಯ ಕಲಿಕೆ ದೊರಕುತ್ತದೆ, ಮತ್ತು ಹೊಸ ನುಡಿಯಲ್ಲಿ ಅಂಜದೆ ಮಾತು ಕಲಿಯಲು ಬರುತ್ತದೆ.
ಇದಕ್ಕೆ ಬದಲು, ತಾಯ್ನುಡಿಯನ್ನು ಶಾಲೆಯಲ್ಲಿ ಬಳಸಲೇ ಕೂಡದೆಂಬ ಕಟ್ಟಲೆಯನ್ನು ಮಾಡಿದಲ್ಲಿ, ಕಲಿಕೆಯಲ್ಲಿ ಅವರು ಬಳಸಬಲ್ಲ ಒಂದು ಅಮೂಲ್ಯ ವಾದ ಸಾದನವನ್ನು ಅವರಿಂದ ಕಿತ್ತುಕೊಂಡಹಾಗಾಗುತ್ತದೆ, ಮತ್ತು ತಾಯ್ನುಡಿಯ ಕುರಿತಾಗಿ ಅವರಲ್ಲಿ ಕೀಳರಿಮೆಯನ್ನು ಉಂಟುಮಾಡಿದ ಹಾಗಾಗುತ್ತದೆ. ಇದರಿಂದಾಗಿ, ಹಲವು ಮಕ್ಕಳಿಗೆ ತಮ್ಮ ತನ್ನತನವನ್ನೇ ಕಳೆದುಕೊಂಡ ಹಾಗೆಯೂ ಆಗುತ್ತದೆ.
ನಿಜಕ್ಕೂ ಮಕ್ಕಳು ತಮ್ಮ ಎರಡನೇ ನುಡಿಯನ್ನು ಮೊದಲನೇ ನುಡಿಯ ತಳಹದಿಯ ಮೇಲೇನೇ ಕಲಿಯುತ್ತಾರೆ. ತರಗತಿಯಲ್ಲಿ ತಾಯ್ನುಡಿಯನ್ನು ಬಳಸಬಾರದೆಂಬ ಕಟ್ಟಲೆಯನ್ನು ಮಾಡಿದರೂ ಅವರು ಕಲಿಯುತ್ತಿರುವಾಗ ಮನಸ್ಸಿನಲ್ಲಿ ಇಲ್ಲವೇ ಮಿದುಳಿನಲ್ಲಿ ತಾಯ್ನುಡಿಯನ್ನು ಬಳಸದಿರುವುದಿಲ್ಲ. ಯಾಕೆಂದರೆ, ಹಾಗೆ ಬಳಸದಿರಲು ಅವರಿಗೆ ಸಾದ್ಯವೇ ಇಲ್ಲ! ಹಾಗಾಗಿ, ಅವರ ತಾಯ್ನುಡಿಯನ್ನು ಮನಸ್ಸಿನಲ್ಲಿ ಮಾತ್ರವೇ ಬಳಸಲಾಗುತ್ತಿದೆಯೋ ಇಲ್ಲವೇ ಹೊರಗೂ ಬಳಸಲಾಗುತ್ತಿದೆಯೋ ಎಂಬುದೇ ಇಲ್ಲಿರುವ ವ್ಯತ್ಯಾಸ. ಪದ ಮತ್ತು ಸೊಲ್ಲುಗಳಿಗೂ ಅವುಗಳ ಹುರುಳಿಗೂ ನಡುವಿರುವ ಪತ್ತುಗೆ(ಸಂಬಂದ)ಯನ್ನು ತಿಳಿದುಕೊಂಡು, ಅದನ್ನು ನೆನಪಿನಲ್ಲಿ
ಉಳಿಸಿಕೊಳ್ಳುವ ಕೆಲಸ ಮಕ್ಕಳ ಮಿದುಳಿನ ಒಂದು ಕಡೆಯಲ್ಲಿ ಮಾತ್ರ ನಡೆಯುತ್ತದೆ. ಹೊಸದೊಂದು ನುಡಿಯನ್ನು ಕಲಿಯುವ ಮಕ್ಕಳಲ್ಲೂ ಈ ಕೆಲಸ ಅದೇ ಜಾಗದಲ್ಲಿ, ಎಂದರೆ ಅವರು ತಮ್ಮ ತಾಯ್ನುಡಿಯನ್ನು ಕಲಿಯು ತ್ತಿರುವಾಗ ಬಳಸಿದ ಜಾಗದಲ್ಲೇ ನಡೆಯುತ್ತದೆ. ಎರಡನೇ ನುಡಿಯನ್ನು ಎಂಟು-ಹತ್ತು ವರ್ಶ ದಾಟಿದ ಮಕ್ಕಳು ಕಲಿಯುತ್ತಿರುವಾಗಲೂ ಅವರ ಮಿದುಳಿನಲ್ಲಿ ಈ ಕೆಲಸವನ್ನು ನಡೆಸಲು ಬೇರೆ ಹೊಸ ಜಾಗ ಬಳಕೆಗೆ ಬರುವುದಿಲ್ಲ. ಎಂದರೆ, ತಾಯ್ನುಡಿಯ ತಿಳಿವಿಗೆ ಸಂಬಂದಿಸಿದ ಹಾಗೇನೇ ಅವರ ಎರಡನೇ ನುಡಿಯ ತಿಳಿವು ಮಿದುಳಿನಲ್ಲಿ ನೆಲೆಗೊಳ್ಳುತ್ತದೆ.
7.2.2 ಕಟ್ಟಳೆಯ ಮೂಲ
ಸುಮಾರು ಎರಡು ಸಾವಿರ ವರ್ಶಗಳಿಂದಲೂ ಮಕ್ಕಳಿಗೆ (ಇಲ್ಲವೆ ದೊಡ್ದವರಿಗೆ) ಎರಡನೇ ನುಡಿಯನ್ನು ತಾಯ್ನುಡಿಯ ತಳಹದಿಯ ಮೇಲೇನೇ ಕಲಿಸಲಾಗು ತ್ತಿತ್ತು. ಎತ್ತುಗೆಗಾಗಿ, ಲ್ಯಾಟಿನ್, ಗ್ರೀಕ್ ಮೊದಲಾದ ನುಡಿಗಳನ್ನು ಕಲಿಸುವವರು ಅವುಗಳ ಸೊಲ್ಲರಿಮೆಯ (ವ್ಯಾಕರಣದ) ಕಟ್ಟಲೆಗಳನ್ನು ಮತ್ತು ಅವುಗಳ ಪದ, ಪದಕಂತೆ, ಸೊಲ್ಲು ಮೊದಲಾದವುಗಳ ಹುರುಳುಗಳನ್ನು ತಾಯ್ನುಡಿ ಯಲ್ಲೇನೇ ಕಲಿಸುತ್ತಿದ್ದರು. ನಮ್ಮ ದೇಶದಲ್ಲಿ ಸಂಸ್ಕ್ರುತದ ಕಲಿಕೆಯೂ ಹೆಚ್ಚು ಕಡಿಮೆ ಇದೇ ರೀತಿಯಲ್ಲೇ ನಡೆಯುತ್ತಿತ್ತು.
ಈ ಹೊಲಬನ್ನು (ಪದ್ದತಿಯನ್ನು) ಬಿಟ್ಟುಕೊಟ್ಟು, ಹಲವು ಬಗೆಯ ಹೊಸ ಹೊಲಬುಗಳನ್ನು ಮುಕ್ಯವಾಗಿ ಇಪ್ಪತ್ತನೇ ಶತಮಾನದಲ್ಲಿ ಬಳಕೆಗೆ ತರಲಾಯಿತು. ಇವುಗಳಲ್ಲಿ ಹೆಚ್ಚಿನವನ್ನೂ ಇಂಗ್ಲಿಶ್, ಜರ್ಮನ್, ಫ್ರಂಚ್ ಮೊದಲಾದ ನುಡಿಗಳನ್ನು ಯುರೋಪಿನಲ್ಲಿ ಬೇರೆ ನುಡಿಗಳನ್ನಾಡುವವರಿಗೆ ಅವರ ಎರಡನೇ ನುಡಿಯಾಗಿ ಕಲಿಸುವಲ್ಲಿ ಬಳಕೆಗೆ ತರಲಾಯಿತು. ಈ ಎರಡನೇ ನುಡಿಯ ತರಗತಿಗಳಲ್ಲಿ ಹಲವು ನುಡಿಗಳನ್ನು ತಾಯ್ನುಡಿಯಾಗಿ ಬಳಸುವ ಕಲಿಗರಿದ್ದರಾದ ಕಾರಣ, ಮತ್ತು ಅವರಿಗೆ ಎರಡನೇ ನುಡಿಯನ್ನು ಕಲಿಸುವವರು ಅವುಗಳಲ್ಲಿ ಹೆಚ್ಚೆಂದರೆ ಒಂದೆರಡನ್ನು ಮಾತ್ರವೇ ತಿಳಿದಿದ್ದರಾದ ಕಾರಣ, ಕಲಿಕೆಯಿಂದ ತಾಯ್ನುಡಿಯನ್ನು ಹೊರಗಿರಿಸುವುದೇ ಅವರಿಗೆ (ಕಲಿಸುವವರಿಗೆ, ಕಲಿಯುವವರಿಗಲ್ಲ!) ಅನುಕೂಲವಾದ ಹೊಲಬಾಗಿತ್ತು. ಹಾಗಾಗಿ, ಇಪ್ಪತ್ತನೇ ಶತಮಾನದಲ್ಲಿ ಬಳಕೆಗೆ ಬಂದಿದ್ದ ಹೆಚ್ಚಿನ ಹೊಲಬು ಗಳಲ್ಲೂ ತಾಯ್ನುಡಿಯ ಬಳಕೆಯನ್ನು ಎರಡನೇ ನುಡಿಯ ಕಲಿಕೆಯಿಂದ ದೂರ ಇರಿಸಲಾಯಿತು. ಆದರೆ, ತರಗತಿಯ ಮಕ್ಕಳೆಲ್ಲರೂ ಒಂದೇ ತಾಯ್ನುಡಿಯನ್ನು
ಪಡೆದಿರುವ ಇಲ್ಲವೇ ಒಂದೇ ನುಡಿಯನ್ನು ತಿಳಿದಿರುವ ನಮ್ಮಲ್ಲಿನ ಇಂಗ್ಲಿಶ್ ತರಗತಿಗಳಲ್ಲೂ ಇದೇ ಹೊಲಬನ್ನು ಅನುಸರಿಸುತ್ತಿರುವುದು ಮಾತ್ರ ತೀರ ವಿಚಿತ್ರವಾಗಿದೆ. ಅದು ಮೇಲಿನ ಹೊಲಬುಗಳ ಕುರುಡು ಅನುಕರಣೆಯಾಗಿದೆ. ಮೊದಲನೇ ನುಡಿಯನ್ನು ಬಳಸದೆ ಎರಡನೇ ನುಡಿಯನ್ನು ನೇರವಾಗಿ ಕಲಿಸತೊಡಗಿದಾಗ, ಕೆಲವು ಮಕ್ಕಳಿಗೆ ಹೆಚ್ಚು ತೊಂದರೆಯಾಗುವುದಿಲ್ಲ. ಅವರು ಸುಳುವಾಗಿ ಕಲಿಕೆಯಲ್ಲಿ ಮುಂದೆ ಹೋಗುತ್ತಾರೆ. ಆದರೆ ಬೇರೆ ಕೆಲವು ಮಕ್ಕಳಿಗೆ ಇದು ತುಂಬಾ ತೊಡಕಿನ ಕೆಲಸವೆಂದೆನಿಸುತ್ತದೆ. ಹಾಗಾಗಿ, ಅವರು ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆ.
ಅಂತಹ ಮಕ್ಕಳಿಗೆ ಕಲಿಕೆಯ ಮೊದಲ ಹಂತಗಳಲ್ಲಿ ತಾಯ್ನುಡಿಯ ನೆರವನ್ನು ಕೊಟ್ಟಲ್ಲಿ, ಅವರು ಬೇಗನೆ ಕಲಿಕೆಯಲ್ಲಿ ಮುಂದೆ ಹೋಗಬಲ್ಲರು. ಆಮೇಲೆ, ಹಾಗೆ ಮುಂದೆ ಹೋಗುತ್ತಿದ್ದಂತೆ, ತಾಯ್ನುಡಿಯ ನೆರವನ್ನು ಕಡಿಮೆ ಮಾಡುತ್ತಾ ಹೋಗಬಹುದು.
ಇಂಗ್ಲಿಶ್ ಪದಗಳ ಹುರುಳನ್ನು ತಿಳಿಸುವಲ್ಲಿ, ಅದರ ಸೊಲ್ಲರಿಮೆಯ ಕಟ್ಟಲೆಗಳನ್ನು ವಿವರಿಸಿ ಹೇಳುವಲ್ಲಿ, ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ತೊಡಕು ಗಳೇನಾದರೂ ಇದ್ದಲ್ಲಿ ಅವು ಎಂತಹವು ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವರ ತಾಯ್ನುಡಿ ನೆರವಿಗೆ ಬರಬಲ್ಲುದು. ನಿಜಕ್ಕೂ ಇಂತಹ ಕಡೆಗಳಲ್ಲಿ ಹಲವು ಮಂದಿ ಕಲಿಸುಗರು ಇವತ್ತೂ ತರಗತಿಗಳಲ್ಲಿ ಮಕ್ಕಳ ತಾಯ್ನುಡಿಯನ್ನು ಬಳಸುತ್ತಿರುತ್ತಾರೆ; ಆದರೆ, ಹಾಗೆ ಬಳಸುತ್ತಿರುವಾಗ ತಾವೇನೋ ಒಂದು ದೊಡ್ಡ ತಪ್ಪನ್ನು ಮಾಡುತ್ತಿದ್ದೇವೆ ಎಂಬ ಅನಿಸಿಕೆ ಅವರಲ್ಲಿರುತ್ತದೆ.
ಇಂಗ್ಲಿಶ್ ತರಗತಿಗಳಲ್ಲಿ ತಾಯ್ನುಡಿಯನ್ನು ಬಳಸಲೇಬಾರದೆಂಬ ಕಟ್ಟಲೆ ಯನ್ನು ತೆಗೆದು ಹಾಕಿದಲ್ಲಿ, ಇಂತಹ ತಪ್ಪನಿಸಿಕೆ ಕಲಿಸುವವರಲ್ಲಿ ಇಲ್ಲವಾಗು ತ್ತದೆ, ಮತ್ತು ಕಲಿಯುವ ಮಕ್ಕಳಿಗೂ ತಮ್ಮ ಮನಸ್ಸಿನೊಳಗೇನೇ ನಡೆಸುತ್ತಿದ್ದ ಕೆಲಸವನ್ನು ಹೊರಗೆ ತರಗತಿಯಲ್ಲೂ ಹೆದರಿಕೆಯಿಲ್ಲದೆ ನಡೆಸಲು ಬರುತ್ತದೆ. ಇದರಿಂದಾಗಿ ಅವರಿಗೆ ತಮ್ಮ ತಾಯ್ನುಡಿಯ ಮೇಲೆ ಕೀಳರಿಮೆಯೂ ಬೆಳೆಯುವುದಿಲ್ಲ.
7.2.3 ತಾಯ್ನುಡಿಯ ಸೊಲ್ಲರಿಮೆಯ ಬಳಕೆ
ಎರಡನೇ ಮಹಾಯುದ್ದದ ಸಮಯದಲ್ಲಿ ಅಮೆರಿಕಾದ ಪಡೆಯಾಳುಗಳಿಗೆ ರಶ್ಯನ್, ಜಪಾನೀಸ್, ಜರ್ಮನ್ ಮೊದಲಾದ ಹೊರನಾಡಿನ ನುಡಿಗಳನ್ನು
ಬಹಳ ಬೇಗನೆ, ಎಂದರೆ ಕೆಲವೇ ಕೆಲವು ವಾರಗಳಲ್ಲಿ ಕಲಿಸುವುದಕ್ಕಾಗಿ ನುಡಿಯರಿಗರ (ಬಾಶಾವಿಜ್ನಾನಿಗಳ) ಮೊರೆಹೊಗಲಾಯಿತು. ಈ ಕೆಲಸವನ್ನು ನಡೆಸುವುದಕ್ಕಾಗಿ ಅವರು ಆ ನುಡಿಗಳಲ್ಲಿ ಬಳಕೆಯಾಗುವ ಹಲವಾರು ಸೊಲ್ಲರಿಮೆಯ ಕಟ್ಟಲೆಗಳನ್ನು ಕಂಡುಹಿಡಿದರು, ಮತ್ತು ಅವನ್ನು ನುಡಿಗಳ ಕಲಿಸುವಿಕೆಯಲ್ಲಿ ತುಂಬಾ ಚೆನ್ನಾಗಿ ಬಳಸಲು ಕಲಿತರು.
ಇಂತಹ ಕಲಿಸುವಿಕೆಯಲ್ಲಿ ಇಂಗ್ಲಿಶ್ ನುಡಿಯ (ತಾಯ್ನುಡಿಯ) ಸೊಲ್ಲರಿಮೆಗೂ ಕಲಿಸಬೇಕಾಗಿರುವ ಎರಡನೇ ನುಡಿಯ ಸೊಲ್ಲರಿಮೆಗೂ ನಡುವಿರುವ ವ್ಯತ್ಯಾಸಗಳನ್ನು ಬಳಸಿಕೊಂಡಲ್ಲಿ ಕಲಿಕೆ ಇನ್ನಶ್ಟು ವೇಗವಾಗಿ ಸಾಗುತ್ತದೆ ಎಂಬುದನ್ನು ಅವರು ಕಂಡುಕೊಂಡರು, ಮತ್ತು ಅದಕ್ಕಾಗಿ ಎರಡೆರಡು ನುಡಿಗಳ ಸೊಲ್ಲರಿಮೆಗಳನ್ನು ಹೋಲಿಸಿ ತೋರಿಸುವಂತಹ ಹೋಲಿಕೆಯ ಸೊಲ್ಲರಿಮೆಗಳನ್ನು ತಯಾರಿಸತೊಡಗಿದರು. ಆಮೇಲೆ, ಇಂತಹ ಸೊಲ್ಲರಿಮೆಗಳನ್ನು ಹಲವಾರು ನುಡಿಜೋಡಿಗಳಿಗಾಗಿ ತಯಾರಿಸ ಲಾಯಿತು, ಮತ್ತು ಅವುಗಳ ಮೇಲೆ ಹಲವು ಪುಸ್ತಕಗಳನ್ನೂ ಹೊರತರ ಲಾಯಿತು.
ಆದರೆ ಆಮೇಲೆ, ನುಡಿಗಳ ಸೊಲ್ಲರಿಮೆಯ ಕುರಿತಾಗಿ ಚೊಮ್ಸ್ಕೀ ಅವರ ಸಿದ್ದಾಂತಗಳು ಮಂದಿಮೆಚ್ಚುಗೆ ಪಡೆದಾಗ, ಅದಕ್ಕೆ ಹಿಂದೆ ನಡೆದಿದ್ದ ಹಲವಾರು ಅರಕೆಗಳು ಮೂಲೆಗುಂಪಾದುವು. ಇದಕ್ಕೆ ಕಾರಣವೇನೆಂದರೆ, ಆ ಅರಕೆಗಳೆಲ್ಲ ಮುಕ್ಯವಾಗಿ ಮನುಶ್ಯನ ನಡವಳಿಕೆಯ ಮೇಲೆ (ಅವನು ಎಂತಹ ಸೊಲ್ಲುಗಳನ್ನು ನುಡಿಯುತ್ತಾನೆ ಎಂಬುದರ ಮೇಲೆ) ಅವಲಂಬಿಸಿದ್ದುವು. ನುಡಿಯ ಮೇಲಿನ ಅರಕೆಗೆ ಮನುಶ್ಯನ ನಡವಳಿಕೆಗಿಂತಲೂ ಆತನ ಒಳಗಿನ (ಮನಸ್ಸಿನ) ಅರಿಮೆಯೇ ಆದಾರವಾಗಿರಬೇಕೆಂಬುದಾಗಿ ಚೊಮ್ಸ್ಕೀ ತೋರಿಸಿಕೊಟ್ಟಿದ್ದರು. ಇದರಿಂದಾಗಿ, ಮನುಶ್ಯರ ನಡವಳಿಕೆಯ ಮೇಲೆ ಅವಲಂಬಿಸಿದ್ದ ನುಡಿ ಯರಿಮೆಯ (ಮತ್ತು ಸೊಲ್ಲರಿಮೆಯ) ಸಿದ್ದಾಂತಗಳೆಲ್ಲವೂ ಮಂದಿಮೆಚ್ಚುಗೆ ಯನ್ನು ಕಳೆದುಕೊಂಡುವು.
ಈ ರೀತಿ ಮೂಲೆಗುಂಪಾದವುಗಳಲ್ಲಿ ಎರಡನೇ ನುಡಿಯ ಕಲಿಸುವಿಕೆಯಲ್ಲಿ ಸಾಕಶ್ಟು ಪರಿಣಾಮಕಾರಿಯಾಗಿದ್ದ ಮೇಲೆ ವಿವರಿಸಿದಂತಹ ಹೋಲಿಕೆಯ ಸೊಲ್ಲರಿಮೆಗಳೂ ಸೇರಿದ್ದುವು.
ಇದೇ ಸಮಯದಲ್ಲಿ, ಮಕ್ಕಳು ಮೊದಲನೇ ನುಡಿಯನ್ನು (ತಾಯ್ನುಡಿಯನ್ನು) ಕಲಿಯುವ ಹಾಗೆಯೇ ಎರಡನೇ ನುಡಿಯನ್ನೂ ತಾವಾಗಿಯೇ ಕಲಿಯಬಲ್ಲರು; ಹಾಗಾಗಿ, ಮೊದಲನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳ ಹಾಗೆ ಎರಡನೇ
ನುಡಿಯನ್ನು ಕಲಿಯುವವರೂ ಆ ಒಂದು ನುಡಿಯನ್ನು ಮಾತ್ರವೇ ಯಾವಾಗಲೂ ಕೇಳುತ್ತಿರುವ ಹಾಗೆ ಮತ್ತು ಓದುತ್ತಿರುವ ಹಾಗೆ ಮಾಡಿದಲ್ಲಿ, ಮೊದಲನೇ ನುಡಿಯನ್ನು ಕಲಿತಶ್ಟೇ ವೇಗದಲ್ಲಿ ಅವರು ಎರಡನೆಯದನ್ನೂ ತಾವಾಗಿಯೇ ಕಲಿತಾರು; ಅವರಿಗೆ ಸೊಲ್ಲರಿಮೆಯನ್ನು ಕಲಿಸಬೇಕಾಗಿಯೇ ಇಲ್ಲ ಎಂಬುದಾಗಿ ವಾದಿಸಲಾಯಿತು.
ಆದರೆ ಮೇಲೆ ಸೂಚಿಸಿದ ಹಾಗೆ, ಇತ್ತೀಚೆಗೆ ನಡೆಸಿದ ಅರಕೆಗಳು ಈ ವಾದ ತಪ್ಪಾದುದು ಎಂಬುದನ್ನು ತೋರಿಸಿಕೊಟ್ಟಿವೆ. ನಿಜಕ್ಕೂ ಎರಡನೇ ನುಡಿಯ ಕಲಿಕೆ ಮೊದಲನೇ ನುಡಿಯ ಕಲಿಕೆಯ ಹಾಗೆ ನಡೆಯಲು ಸಾದ್ಯವೇ ಇಲ್ಲ. ಯಾಕೆಂದರೆ, ಮೊದಲನೇ ನುಡಿಯನ್ನು ಕಲಿಯುವ ಸಮಯದಲ್ಲಿ ಮಕ್ಕಳ ಮಿದುಳು ನುಡಿಯ ಮಟ್ಟಿಗೆ ಬರಿದಾಗಿರುತ್ತದೆ. ಅಂತಹ ಬರಿದಾಗಿರುವ ಮಿದುಳಿನಲ್ಲಿ ಅವರು ಒಂದು ನುಡಿಯನ್ನು ಹೊಸದಾಗಿ ಮೂಡಿಸಿಕೊಳ್ಳ ಬೇಕಾಗಿದೆ.
ಇದಕ್ಕೆ ಬದಲು, ಎರಡನೇ ನುಡಿಯನ್ನು ಕಲಿಯುವ ಸಮಯದಲ್ಲಿ ಅವರ ಮಿದುಳು ಆ ರೀತಿ ಬರಿದಾಗಿರುವುದಿಲ್ಲ. ಅದರಲ್ಲಿ ಮೊದಲನೇ ನುಡಿ ನೆಲೆನಿಂತಿರುತ್ತದೆ. ಹಾಗಾಗಿ, ಎರಡನೇ ನುಡಿಯನ್ನು ಕಲಿಯಹೊರಡುವ ಮಕ್ಕಳಲ್ಲಿರುವ ಈ ಅಮೂಲ್ಯವಾದ ಸಾದನವನ್ನು ಬಳಸದೆ ಎರಡನೆಯ ನುಡಿಯನ್ನು ಕಲಿಯುವ ಹಾಗೆ ಅವರನ್ನು ಒತ್ತಾಯಿಸುವುದು ನಿಜಕ್ಕೂ ಪೆದ್ದುತನವಲ್ಲದೆ ಬೇರೇನಲ್ಲ.
ಇದಲ್ಲದೆ, ಮಕ್ಕಳ ತಾಯ್ನುಡಿಯ ಸೊಲ್ಲರಿಮೆಗೂ ಅವರು ಕಲಿಯುತ್ತಿರುವ ಎರಡನೇ ನುಡಿಯ ಸೊಲ್ಲರಿಮೆಗೂ ನಡುವೆ ಇರುವ ಮುಕ್ಯ ವ್ಯತ್ಯಾಸಗಳನ್ನು ಅವರ ಗಮನಕ್ಕೆ ತಂದಲ್ಲಿ, ಅವರ ಕಲಿಕೆ ಬೇಗನೆ ಮುಂದೆ ಸಾಗುತ್ತದೆ ಎಂಬುದನ್ನು ಇತ್ತೀಚೆಗಿನ ಕೆಲವು ಅರಕೆಗಳು ತೋರಿಸಿಕೊಟ್ಟಿವೆ. ಕೆಲವು ಮಕ್ಕಳು ಇಂತಹ ಸೊಲ್ಲರಿಮೆಯ ತಿಳುವಳಿಕೆಯನ್ನು ಕೊಡಿಸದಿದ್ದರೂ ಕಲಿಕೆಯಲ್ಲಿ ಮುಂದೆ ಹೋಗಬಲ್ಲರು. ಆದರೆ, ಕಲಿಕೆಯಲ್ಲಿ ಹಿಂದೆ ಬೀಳುವ ಬೇರೆ ಕೆಲವು ಮಕ್ಕಳಿಗೆ ಸೊಲ್ಲರಿಮೆಯ ತಿಳಿವನ್ನು ಕೊಡಿಸಿದಲ್ಲಿ ಅವರೂ ಮುಂದೆ ಹೋಗಬಲ್ಲರು.
7.2.4 ಕಲಿಕೆಯ ತಪ್ಪುಗಳು
ಎರಡನೇ ನುಡಿಯ ಕಲಿಕೆಯಿಂದ ಮೊದಲನೇ ನುಡಿಯನ್ನು ದೂರ ಇರಿಸಬೇಕೆಂದು ಹೇಳುವುದಕ್ಕೆ ಇನ್ನೊಂದು ಕಾರಣವನ್ನೂ ಕೊಡಲಾಗುತ್ತದೆ.
ಅದೇನೆಂದರೆ, ಎರಡನೇ ನುಡಿಯ ಕಲಿಕೆಯಲ್ಲಿ ಮಕ್ಕಳ ಮೊದಲನೇ ನುಡಿ ತಲೆಹಾಕುತ್ತದೆ; ಎರಡನೇ ನುಡಿಯಲ್ಲಿ ಸೊಲ್ಲುಗಳನ್ನು ಕಟ್ಟುವಾಗ, ಅದರ ಕಟ್ಟಲೆಗಳನ್ನು ಬಳಸುವ ಬದಲು, ಮಕ್ಕಳು ತಮ್ಮ ಮೊದಲನೇ ನುಡಿಯ ಕಟ್ಟಲೆಗಳನ್ನು ಬಳಸಹೋಗುತ್ತಾರೆ. ಇದರಿಂದಾಗಿ ಅವರ ಕಲಿಕೆಯಲ್ಲಿ ತಪ್ಪುಗಳು ತಲೆಹಾಕುತ್ತವೆ. ಇಂತಹ ತಪ್ಪುಗಳು ಬಾರದ ಹಾಗೆ ನೋಡಿ ಕೊಳ್ಳಲು, ಎರಡನೇ ನುಡಿಯನ್ನು ಕಲಿಯುವ ಸಮಯದಲ್ಲಿ ಮಕ್ಕಳ ತಾಯ್ನುಡಿಯನ್ನು ಕಲಿಕೆಯಿಂದ ದೂರ ಇರಿಸುವುದೇ ಸರಿಯಾದ ದಾರಿ ಎಂಬುದಾಗಿ ಅವರು ವಾದಿಸುತ್ತಾರೆ.
ಆದರೆ, ಎರಡನೇ ನುಡಿಯನ್ನು ಕಲಿಯುತ್ತಿರುವಾಗ ಮಕ್ಕಳು ಮಾಡುವ ತಪ್ಪುಗಳಲ್ಲಿ ಹೆಚ್ಚಿನವೂ ತಪ್ಪುಗಳೇ ಅಲ್ಲ ಎಂಬುದಾಗಿ ಇತ್ತೀಚೆಗಿನ ಅರಕೆಗಳು ತೋರಿಸಿಕೊಟ್ಟಿವೆ. ಮಕ್ಕಳು ತಮ್ಮ ಎರಡನೇ ನುಡಿಯ ಕಲಿಕೆಯನ್ನು ಹಲವು ಹಂತಗಳಲ್ಲಿ ನಡೆಸುತ್ತಾರೆ, ಮತ್ತು ಒಂದೊಂದು ಹಂತದಲ್ಲೂ ಅವರು ಅದರದೇ ಆದ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸುತ್ತಿರುತ್ತಾರೆ.
ಎರಡನೇ ನುಡಿಯನ್ನು ಕಲಿಯುತ್ತಿರುವ ಮಕ್ಕಳ ಮಾತಿನಲ್ಲಿ ಕಾಣಿಸುವ ತಪ್ಪುಗಳಲ್ಲಿ ಹೆಚ್ಚಿನವೂ ಈ ರೀತಿ ಕಲಿಯಬೇಕಾಗಿರುವ ನುಡಿಗೂ ಅವರಿರುವ ಕಲಿಕೆಯ ಹಂತದ ನುಡಿಗೂ ನಡುವಿರುವ ವ್ಯತ್ಯಾಸಗಳನ್ನು ಸೂಚಿಸುತ್ತವಲ್ಲದೆ ನಿಜಕ್ಕೂ ಅವು ತಪ್ಪುಗಳಲ್ಲ. ಮಕ್ಕಳು ಕಲಿಕೆಯ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ದಾಟುತ್ತಿರುವಂತೆ ಈ ವ್ಯತ್ಯಾಸಗಳು ತಾವಾಗಿಯೇ ಇಲ್ಲವಾಗುತ್ತವೆ. ಇದಲ್ಲದೆ, ಅವರು ಈ ಹಂತಗಳನ್ನು ದಾಟುವ ಮೊದಲೇ ಅವಕ್ಕೆ ಸಂಬಂದಿಸಿದ ತಪ್ಪು(ವ್ಯತ್ಯಾಸ)ಗಳನ್ನು ಇಲ್ಲವಾಗಿಸಲೂ ಬರುವುದಿಲ್ಲ.
ತಾಯ್ನುಡಿಯ ಕಯ್ವಾಡದಿಂದಾಗಿಯೂ ಎರಡನೇ ನುಡಿಯ ಕಲಿಕೆಯಲ್ಲಿ ಕೆಲವು ತಪ್ಪುಗಳು ಕಾಣಿಸಿಕೊಳ್ಳಬಲ್ಲುವೇನೋ ನಿಜ. ಆದರೆ, ಇವನ್ನು ಹೋಗಲಾಡಿಸುವುದಕ್ಕಾಗಿ ತಾಯ್ನುಡಿಯನ್ನು ಕಲಿಕೆಯಿಂದ ದೂರ ಇರಿಸುವುದು ಸರಿಯಾದ ದಾರಿಯಲ್ಲ. ಸಾಮಾನ್ಯವಾಗಿ ಎರಡನೇ ನುಡಿಯನ್ನು ಕಲಿಯುವವರು ಮೊದಲಿಗೆ ತಮ್ಮ ಮೊದಲನೇ ನುಡಿಯ ಕಟ್ಟಲೆಗಳನ್ನೇ ಅದರಲ್ಲೂ ಬಳಸಲು ಹೋಗುತ್ತಾರೆ. ಆದರೆ ಆಮೇಲೆ, ಎರಡನೇ ನುಡಿಯಲ್ಲಿ ಸರಿಯಾದ ಸೊಲ್ಲುಗಳನ್ನು ಉಂಟುಮಾಡುವಲ್ಲಿ ಆ ಕಟ್ಟಲೆಗಳು ಸೋತುಹೋಗುವುದನ್ನು ಕಂಡುಕೊಂಡು, ಅದರವೇ ಆದ ಕಟ್ಟಲೆಗಳನ್ನು ಬಳಸಲು ಕಲಿಯುತ್ತಾರೆ. ಈ ಎಲ್ಲಾ ಕೆಲಸಗಳೂ ಅವರ ಮಿದುಳಿನಲ್ಲಿ ತಿಳಿವಿಗೆ ಎಟಕದ ರೂಪದಲ್ಲಿ ನಡೆಯುತ್ತಿರುತ್ತವೆ.
ಕೆಲವರಿಗೆ ಈ ಕೆಲಸವನ್ನು ತಾವಾಗಿಯೇ ಸುಳುವಾಗಿ ನಡೆಸಲು ಬರುತ್ತದೆ, ಆದರೆ ಬೇರೆ ಕೆಲವರಿಗೆ ಇದನ್ನು ತಾವಾಗಿಯೇ ನಡೆಸಲು ಬರುವುದಿಲ್ಲ. ಅಂತಹ ಮಕ್ಕಳಿಗೆ ಮೊದಲನೇ ನುಡಿಯ ಕಟ್ಟಲೆಗಳು ಎಂತಹವು, ಮತ್ತು ಎರಡನೇ ನುಡಿಯ ಕಟ್ಟಲೆಗಳು ಅವುಗಳಿಂದ ಯಾವ ರೀತಿಯಲ್ಲಿ ಬೇರಾಗಿವೆ ಎಂಬುದನ್ನು ತೋರಿಸಿಕೊಟ್ಟಲ್ಲಿ, ಈ ಕೆಲಸವನ್ನು ನಡೆಸಲು ಅವರಿಗೆ ಹೆಚ್ಚು ಸುಳುವಾಗುತ್ತದೆ ಎಂಬುದನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ.
ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯಿಂದ ತೊಂದರೆ ಮಾತ್ರವಲ್ಲದೆ ನೆರವೂ ದೊರಕುತ್ತದೆ ಎಂಬುದನ್ನೂ ಇಲ್ಲಿ ಗಮನಿಸುವುದು ಅವಶ್ಯ. ತಾಯ್ನುಡಿಯನ್ನು ಎರಡನೇ ನುಡಿಯ ಕಲಿಕೆಯಿಂದ ದೂರ ಇರಿಸಬೇಕೆಂದು ಹೇಳುವವರು ಅದರಿಂದ ಉಂಟಾಗುವ ತೊಂದರೆಯ ಕಡೆಗೆ ಮಾತ್ರವೇ ಗಮನ ಹರಿಸಿದ್ದಾರಲ್ಲದೆ, ಅದರಿಂದ ಸಿಗಬಲ್ಲ ನೆರವಿನ ಕಡೆಗೆ ಗಮನ ಹರಿಸಿಲ್ಲ. ನಿಜಕ್ಕೂ ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯನ್ನು ಬಳಸುವುದರಿಂದಾಗುವ ತೊಂದರೆಗಿಂತಲೂ ಅದನ್ನು ಕಡೆಗಣಿಸು ವುದರಿಂದಾಗುವ ತೊಂದರೆಯೇ ಹೆಚ್ಚು ಕೆಡುಕನ್ನುಂಟುಮಾಡಬಲ್ಲುದು.
7.2.5 ಓದಲು-ಬರೆಯಲು ಕಲಿಯುವುದು
ಮಕ್ಕಳಿಗೆ ಎರಡನೇ ನುಡಿಯಲ್ಲಿ ಓದಲು ಮತ್ತು ಬರೆಯಲು ಹೇಗೆ ಕಲಿಸಬೇಕು ಎಂಬುದರ ಕುರಿತು ಇತ್ತೀಚೆಗೆ ಹಲವು ಅರಕೆಗಳನ್ನು ನಡೆಸಲಾಗಿದೆ. ಓದಲು ಮತ್ತು ಬರೆಯಲು ಮೊದಲಿಗೆ ಅವರ ತಾಯ್ನುಡಿಯಲ್ಲಿ ಕಲಿಸಿ, ಆಮೇಲೆ ಎರಡನೇ ನುಡಿಯಲ್ಲಿ ಕಲಿಸುವುದು ಒಳ್ಳೆಯದೇ, ಇಲ್ಲವೇ ಮೊದಲಿಗೇನೇ ನೇರವಾಗಿ ಎರಡನೆಯ ನುಡಿಯಲ್ಲಿ ಕಲಿಸುವುದು ಒಳ್ಳೆಯದೇ ಎಂಬುದು ಇಂತಹ ಅರಕೆಗಳ ಮುಂದಿದ್ದ ಒಂದು ಕೇಳ್ವಿ.
ಮಕ್ಕಳು ಎರಡನೇ ನುಡಿಗಿಂತ ತಮ್ಮ ತಾಯ್ನುಡಿಯಲ್ಲಿ ಹೆಚ್ಚು ಸುಳುವಾಗಿ ಓದಲು ಮತ್ತು ಬರೆಯಲು ಕಲಿಯಬಲ್ಲರು, ಮತ್ತು ಹಾಗೆ ಕಲಿತ ಮೇಲೆ ಆ ಕೆಲಸಗಳನ್ನು ನಡೆಸುವುದಕ್ಕಾಗಿ ತಮ್ಮ ತಾಯ್ನುಡಿಯಲ್ಲಿ ಕಲಿತಿರುವ ಚಳಕಗಳಲ್ಲಿ ಹೆಚ್ಚಿನವನ್ನೂ ಅವರು ಎರಡನೇ ನುಡಿಗೂ ಸುಳುವಾಗಿ ಮಾರೆಡೆಗೊಳಿಸಬಲ್ಲರು ಎಂಬುದನ್ನು ಈ ಅರಕೆಗಳು ಕಂಡುಕೊಂಡಿವೆ. ಹಾಗಾಗಿ, ಮಕ್ಕಳಿಗೆ ಓದು- ಬರಹವನ್ನು ಮೊದಲಿಗೆ ಅವರ ತಾಯ್ನುಡಿಯಲ್ಲೇನೇ ಕಲಿಸಿ, ಆಮೇಲೆ ಅವರ ಎರಡನೇ ನುಡಿಯಲ್ಲಿ ಓದು-ಬರಹವನ್ನು ಕಲಿಸುವುದು ಒಳ್ಳೆಯದೆಂಬ ತೀರ್ಮಾನಕ್ಕೆ ಬರಲಾಗಿದೆ.
ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಮಕ್ಕಳು ಓದಲು ಕಲಿಯುವ ಕೆಲಸ ವನ್ನು ಎರಡನೇ ನುಡಿಯಾದ ಇಂಗ್ಲಿಶ್ನಲ್ಲಿ ನಡೆಸುವುದಕ್ಕಿಂತ ಮೊದಲು ಕನ್ನಡದಲ್ಲಿ ನಡೆಸುವುದು ಒಳ್ಳೆಯದು ಎಂಬುದಕ್ಕೆ ಬೇರೊಂದು ಮುಕ್ಯವಾದ ಕಾರಣವಿದೆ. ಕನ್ನಡದಲ್ಲಿ ಬರಿಗೆ(ಅಕ್ಶರ)ಗಳಿಗೂ ಉಲಿಕಂತೆಗಳಿಗೂ (ಮತ್ತು ಉಲಿಗಳಿಗೂ) ನಡುವೆ ನೇರವಾದ ಹೊಂದಾಣಿಕೆಯಿದೆ. (ಇದಕ್ಕೆ ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳು ಮಾತ್ರ - ಅವನ್ನು ಸಂಸ್ಕ್ರುತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಅನವಶ್ಯಕವಾದ ಕಟ್ಟಳೆಯಿರುವ ಕಾರಣ - ಹೊರಪಡಿಕೆ (ಅಪವಾದ)ಗಳಾಗಿವೆ.) ಹಾಗಾಗಿ, ಕನ್ನಡ ಪದಗಳನ್ನು ಮಾತ್ರವೇ ಬಳಸಿರುವ ಬರಹಗಳ ಮೂಲಕ (ಇಲ್ಲವೇ ಹೊಸ ಬರಹವನ್ನು ಬಳಸಿರುವ ಬರಹಗಳ ಮೂಲಕ) ಮಕ್ಕಳಿಗೆ ಕನ್ನಡದಲ್ಲಿ ತುಂಬಾ ಸುಳುವಾಗಿ ಓದಲು ಕಲಿಸಬಹುದು. ಇಂಗ್ಲಿಶ್ನಲ್ಲಿ ತುಂಬಾ ತೊಡಕು ತೊಡಕಾದ ಸ್ಪೆಲ್ಲಿಂಗ್ ಸಮಸ್ಯೆಯಿದೆ. ಹಾಗಾಗಿ, ಅದರ ಬರಹಗಳಲ್ಲಿ ಬರಿಗೆಗಳಿಗೂ ಉಲಿಗಳಿಗೂ ನಡುವೆ ಹೊಂದಾಣಿಕೆ ಇದೆ ಎಂಬುದನ್ನು ಮಕ್ಕಳು ಗಮನಿಸುವ ಹಾಗೆ ಮಾಡುವುದು ತುಂಬಾ ತೊಡಕಿನ ಕೆಲಸ. ಹಲವು ಮಂದಿ ಮಕ್ಕಳ ಗಮನಕ್ಕೆ ಇದು ಬರುವುದೇ ಇಲ್ಲ. ಹಾಗಾಗಿ, ಅಂತಹ ಮಕ್ಕಳು ಪದಗಳನ್ನು ಬರಿಗೆಗಳಾಗಿ ಒಡೆದು ಉಲಿಗಳೊಂದಿಗೆ ಹೊಂದಿಸಲು ಹೋಗದೆ ನೇರವಾಗಿ ಓದಲು ತೊಡಗುತ್ತಾರೆ. ಈ ರೀತಿ ಓದಲು ಮೊದಲಿಗೆ ಅಶ್ಟೊಂದು ತೊಂದರೆಯಾಗುವುದಿಲ್ಲವಾದರೂ, ಓದಿನಲ್ಲಿ ಮುಂದೆ ಹೋದಂತೆ ಹೆಚ್ಚು ಹೆಚ್ಚು ಬರಹಗಳನ್ನು ಓದಬೇಕಾಗುವು ದಾದ ಕಾರಣ, ಅವರು ಓದಿನಲ್ಲಿ ಹಿಂದೆ ಬೀಳತೊಡಗುತ್ತಾರೆ (2.3 ನೋಡಿ). ಹಾಗಾಗಿ, ಮೊದಲಿಗೆ ಕನ್ನಡದಲ್ಲಿ ಓದಲು ಕಲಿಯುವ ಮೂಲಕ ಸರಿಯಾಗಿ ಓದುವ ಬಗೆ ಹೇಗೆ ಎಂಬುದನ್ನು ತಿಳಿದುಕೊಂಡಿರುವ ಮಕ್ಕಳು ಇಂಗ್ಲಿಶ್ನಲ್ಲೂ ಸರಿಯಾಗಿ ಓದಲು ಸುಳುವಾಗಿ ಕಲಿತುಕೊಳ್ಳಬಲ್ಲರು. ಯಾಕೆಂದರೆ, ಓದುವ ಕೆಲಸಕ್ಕಾಗಿ ಕನ್ನಡದಲ್ಲಿ ಪಡೆದಿರುವ ಚಳಕವನ್ನು ಅವರು ಸುಳುವಾಗಿ ತಮ್ಮ ಇಂಗ್ಲಿಶ್ ಓದಿಗೂ ಮಾರೆಡೆಗೊಳಿಸಬಲ್ಲರು.
ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿಯುವುದು ಹೆಚ್ಚು ತೊಡಕಿನ ಕೆಲಸ. ಇದನ್ನು ಎರಡನೇ ನುಡಿಯಲ್ಲಿ ನಡೆಸಲು ಕಲಿಯುವುದು ಮತ್ತಶ್ಟು ತೊಡಕಿನ ಕೆಲಸ. ಈ ಎರಡನೇ ಕೆಲಸವನ್ನು ತಮ್ಮ ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ಹೆಚ್ಚು ಸುಳುವಾಗಿ ನಡೆಸಬಲ್ಲರು. ಯಾಕೆಂದರೆ, ಅವರು ಇದಕ್ಕಾಗಿ ತಮ್ಮ ತಾಯ್ನುಡಿಯಲ್ಲಿ ಕಲಿತುಕೊಂಡಿದ್ದ ಚಳಕಗಳಲ್ಲಿ ಹೆಚ್ಚಿನವನ್ನೂ ಎರಡನೇ ನುಡಿಯ ಬರವಣಿಗೆಗೂ ಮಾರೆಡೆಗೊಳಿಸಬಲ್ಲರು.
ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಆಲೋಚಿಸಲು ಏನೂ ತೊಂದರೆ ಯಾಗುವುದಿಲ್ಲ. ಆದರೆ, ಎರಡನೇ ನುಡಿಯಲ್ಲಿ ಸಾಕಶ್ಟು ಪಳಗುವಲ್ಲಿವರೆಗೆ ಅವರಿಗೆ ಅದರಲ್ಲಿ ಆಲೋಚಿಸಲು ಬರುವುದಿಲ್ಲ. ಹಾಗಾಗಿ, ಬರೆಯಬೇಕಾ ಗಿರುವ ವಿಶಯಗಳನ್ನು ಮೊದಲಿಗೆ ತಾಯ್ನುಡಿಯಲ್ಲಿ ಆಲೋಚಿಸಿ, ಮತ್ತು ಅವನ್ನು ಬೇಕಾದ ಕ್ರಮದಲ್ಲಿ ಸಾವಗಿಸಿ(ಜೋಡಿಸಿ)ಕೊಂಡು, ಆಮೇಲೆ ಎರಡನೇ ನುಡಿಯಲ್ಲಿ ಬರೆಯುವುದು ಅವರಿಗೆ ಹೆಚ್ಚು ಸುಳುವಾದ ಕೆಲಸವಾಗಬಲ್ಲುದು. ಇದಲ್ಲದೆ, ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ತಾವು ಒಟ್ಟು ಗೂಡಿಸಿರುವ ವಿಶಯಗಳನ್ನು ಮೊದಲಿಗೆ ತಮ್ಮ ತಾಯ್ನುಡಿಯಲ್ಲಿ ಬರೆದು, ಆಮೇಲೆ ಅದನ್ನು ಎರಡನೇ ನುಡಿಗೆ ನುಡಿಮಾರ(ಬಾಶಾಂತರಿಸ)ಬಹುದು. ಎರಡನೇ ನುಡಿಯನ್ನು ಕಲಿಯುವ ಮೊದಲ ಹಂತಗಳಲ್ಲಿ ಇಂತಹ ನುಡಿ ಮಾರಿಕೆಯ ಬಳಕೆಯೂ ನೆರವಿಗೆ ಬರುತ್ತದೆಯೆಂದು ಇತ್ತೀಚೆಗಿನ ಕೆಲವು ಅರಕೆಗಳು ತೋರಿಸಿಕೊಟ್ಟಿವೆ.
ಎರಡನೇ ನುಡಿಯನ್ನು ಕಲಿಯುತ್ತಿರುವಾಗ ಒಟ್ಟೊಟ್ಟಿಗೆ ತಮ್ಮ ತಾಯ್ನುಡಿ ಯಲ್ಲೂ ಓದು-ಬರಹದ ತಿಳಿವನ್ನು ಹೆಚ್ಚಿಸಿಕೊಳ್ಳುವ ಮಕ್ಕಳು ಎರಡನೇ ನುಡಿಯ ಕಲಿಕೆಯಲ್ಲಿ ಬೇರೆ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ. ತಾಯ್ನುಡಿ ಯನ್ನು ಪೂರ್ತಿ ಕಡೆಗಣಿಸಿರುವ ಮಕ್ಕಳು ಮೊದಮೊದಲಿಗೆ ತುಂಬಾ ವೇಗವಾಗಿ ಮುಂದೆ ಹೋಗುತ್ತಿರುವಂತೆ ಕಾಣಿಸುತ್ತಾರೆ; ಆದರೆ, ಆಮೇಲೆ ಹಲವು ಮಕ್ಕಳು ತಮ್ಮ ಎರಡನೇ ನುಡಿಯ ಕಲಿಕೆಯಲ್ಲಿ ಹಿಂದೆ ಬೀಳತೊಡಗುತ್ತಾರೆ. ಇದರಿಂದ ಗೊತ್ತಾಗುವುದೇನೆಂದರೆ, ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬೆಂಬಲ ಹೆಚ್ಚಿನ ಮಕ್ಕಳಿಗೂ ಬೇಕಾಗುತ್ತದೆ.
ಇಲ್ಲಿ ಇನ್ನೊಂದು ವಿಶಯವನ್ನೂ ಗಮನಿಸಬೇಕಾಗಿದೆ. ಮೇಲೆ ಸೂಚಿಸಿದ ಹಾಗೆ, ನುಡಿಯ ಕಲಿಕೆಯಲ್ಲಿ ಎರಡು ಹಂತಗಳಿರುತ್ತವೆ. ಅದರಲ್ಲಿ ಸಲೀಸಾಗಿ ಮಾತನಾಡಲು ಕಲಿಯುವುದು ಒಂದು ಹಂತ ಮತ್ತು ಗಣಿತ, ವಿಜ್ನಾನ ಮೊದ ಲಾದ ವಿಶಯಗಳನ್ನು ತಿಳಿಯಲು ಮತ್ತು ಇನ್ನೊಬ್ಬರಿಗೆ ತಿಳಿಸಲು ಕಲಿಯುವುದು ಇನ್ನೊಂದು ಹಂತ.
ಶಾಲೆಯಲ್ಲಿ ಮೊದಲಿನಿಂದಲೂ ಇಂಗ್ಲಿಶ್ ನುಡಿಯನ್ನೇ ಕಲಿಕೆನುಡಿಯಾಗಿ ಬಳಸಿರುವ ಮಕ್ಕಳು ಆ ನುಡಿಯಲ್ಲಿ ಸಲೀಸಾಗಿ ಮಾತನಾಡುವುದನ್ನು ಗಮನಿ ಸಿರುವ ಹಲವರಿಗೆ, ಅವರು ಅದನ್ನು ಬಹಳ ಚನ್ನಾಗಿ ಕಲಿತುಕೊಂಡಿದ್ದಾರೆಂದು ಅನಿಸುತ್ತದೆ. ಹಾಗಾಗಿ, ತಮ್ಮ ಮಕ್ಕಳೂ ಇಂಗ್ಲಿಶ್ ನುಡಿಯನ್ನೇ ಕಲಿಕೆನುಡಿ ಯಾಗಿ ಬಳಸಿ, ಆದಶ್ಟು ಬೇಗನೆ ಆ ನುಡಿಯಲ್ಲಿ ಪರಿಣತರಾಗಬೇಕೆಂದು
ಅವರು ಬಯಸುತ್ತಾರೆ. ಆದರೆ, ನಿಜಕ್ಕೂ ಅಂತಹ ಮಕ್ಕಳು ತಮ್ಮ ಇಂಗ್ಲಿಶ್ ಕಲಿಕೆಯಲ್ಲಿ ಮೊದಲನೆಯ ಹಂತವನ್ನಶ್ಟೇ ತಲಪಿರುತ್ತಾರೆ.
ಮುಂದೆ ಎರಡನೇ ಹಂತವನ್ನು ತಲಪುವ ಕೆಲಸದಲ್ಲಿ ಅವರು ಹಿಂದೆ ಬೀಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಈ ಕೆಲಸವನ್ನು ಹೆಚ್ಚು ಸುಳುವಾಗಿ ನಡೆಸಬಲ್ಲರು, ಮತ್ತು ಆಮೇಲೆ ಅದನ್ನು ತಮ್ಮ ಎರಡನೆಯ ನುಡಿಗೂ ಸುಳುವಾಗಿ ಮಾರೆಡೆಗೊಳಿಸ(ವರ್ಗಾಯಿಸ)ಬಲ್ಲರು. ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುತ್ತಿರುವ ಮಕ್ಕಳಿಗೆ ಇಂತಹ ತಾಯ್ನುಡಿಯ ನೆರವು ದೊರಕುವುದಿಲ್ಲವಾದ ಕಾರಣ, ಅವರಿಗೆ ತಮ್ಮ ಕಲಿಕೆಯ ಎರಡನೇ ಹಂತವನ್ನು ತಲಪುವಲ್ಲಿ ತೊಂದರೆಯಾಗುತ್ತದೆ.
ಹಾಗಾಗಿ, ಮೊದಲಿಗೆ ಕನ್ನಡವನ್ನೇ ಕಲಿಕೆನುಡಿಯಾಗಿ ಬಳಸಿ, ಆಮೇಲೆ ಹಯ್ಸ್ಕೂಲ್ನಲ್ಲಿ, ಇಲ್ಲವೇ ಮುಂದೆ ಕಾಲೇಜಿನಲ್ಲಿ ಇಂಗ್ಲಿಶ್ ನುಡಿಯನ್ನು ಕಲಿಕೆನುಡಿಯಾಗಿ ಬಳಸುವ ಮಕ್ಕಳು ಆ ನುಡಿಯಲ್ಲಿ ಎರಡನೇ ಹಂತವನ್ನು ತಲಪುವಲ್ಲಿ ಸುರುವಿನಿಂದಲೂ ಅದಕ್ಕಾಗಿ ಇಂಗ್ಲಿಶ್ ನುಡಿಯನ್ನೇ ಬಳಸುವ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ.
7.2.6 ದೊಡ್ಡವರ ಕಲಿಕೆ
ಎರಡನೇ ನುಡಿಯೊಂದನ್ನು ಮಕ್ಕಳು ಶಾಲೆಗಳಲ್ಲಿ ಕಲಿಯುವುದಕ್ಕೂ ದೊಡ್ಡವ ರಾದ ಮೇಲೆ ಕಾಲೇಜಿನಲ್ಲಿ, ಇಲ್ಲವೇ ಮುಂದೆ ಕೆಲಸದಲ್ಲಿರುವಾಗ ಕಲಿಯುವು ದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆಯೆಂಬುದನ್ನು ನಾವು ಮೇಲೆ (7.1.3)ರಲ್ಲಿ ನೋಡಿರುವೆವು. ದೊಡ್ಡವರ ಕಲಿಕೆಗೆ ಒಂದು ಗುರಿಯಿರುತ್ತದೆ. ಹೊಸ ಊರಲ್ಲಿ ನೆಲೆಸುವುದಕ್ಕಾಗಿ, ಹೊಸ ಕೆಲಸಕ್ಕೆ ಸೇರುವುದಕ್ಕಾಗಿ, ಇಲ್ಲವೇ ಈಗಿನ ಕೆಲಸದಲ್ಲೇನೇ ಮುಂದೆ ಹೋಗುವುದಕ್ಕಾಗಿ ದೊಡ್ಡವರು ಹೊಸ ದೊಂದು ನುಡಿಯನ್ನು ಕಲಿಯತೊಡಗುತ್ತಾರೆ. ಆದರೆ ಚಿಕ್ಕವರೆದುರು ಅಂತಹ ಗುರಿಯಿರುವುದಿಲ್ಲ.
ಹಾಗಾಗಿ, ಗುರಿಗೆ ತಕ್ಕುದಾದ ಕಲಿಕೆಯನ್ನು ದೊಡ್ಡವರಿಗೆ ಒದಗಿಸಿಕೊಟ್ಟಲ್ಲಿ, ಅವರು ಅದರಲ್ಲಿ ಬೇಗನೆ ಮುಂದೆ ಹೋಗಬಲ್ಲರು. ಎತ್ತುಗೆಗಾಗಿ, ಅವರ ಗುರಿಗೆ ಓದುವುದು ಮತ್ತು ಬರೆಯುವುದು ಮಾತ್ರವೇ ಮುಕ್ಯವಾಗಿರ ಬಹುದು; ಹಾಗಿದ್ದಲ್ಲಿ, ಮಾತನಾಡುವುದಕ್ಕಿಂತಲೂ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಅವರ ಕಲಿಕೆಯಲ್ಲಿ ಹೆಚ್ಚಿನ ಒತ್ತು ಕೊಡಬೇಕು.
ದೊಡ್ಡವರಿಗೆ ಯಾವುದೇ ಒಂದು ವಿಶಯವನ್ನು ತಿಳಿಸಬೇಕಿದ್ದರೂ, ಅದರ ಹಿಂದಿರುವ ಕಟ್ಟಲೆಗಳನ್ನು ತಿಳಿಸುವುದೊಳ್ಳೆಯದು. ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಜಿಚಿಣheಡಿ’s booಞ ಎನ್ನುತ್ತೇವೆ ಆದರೆ bಡಿಚಿಟಿಛಿh oಜಿ ಣhe ಣಡಿee ಎನ್ನುತ್ತೇವೆ. ಒಂದು ಕಡೆಯಲ್ಲಿ s ಎಂಬ ಒಟ್ಟನ್ನು ಬಳಸಲಾಗುತ್ತದೆ ಮತ್ತು ಇನ್ನೊಂದು ಕಡೆಯಲ್ಲಿ oಜಿ ಎಂಬ ತುಂಡುಪದವನ್ನು ಬಳಸಲಾಗುತ್ತದೆ. ಆದರೆ, ಕನ್ನಡದಲ್ಲಿ ಇಂತಹ ವ್ಯತ್ಯಾಸವಿಲ್ಲ; ಎರಡು ಕಡೆಗಳಲ್ಲೂ ಅದರಲ್ಲಿ ಅ ಎಂಬ ಒಂದೇ ಒಟ್ಟನ್ನು ಬಳಸಲಾಗುತ್ತದೆ (ತಂದೆಯ ಪುಸ್ತಕ, ಮರದ ಗೆಲ್ಲು).
ಇಂಗ್ಲಿಶ್ಗೂ ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸವನ್ನು ವಿವರಿಸುವವರು ಅದರ ಹಿಂದಿರುವ ಕಟ್ಟಲೆಯನ್ನೂ ತಿಳಿಸಬಹುದು: ಇಂಗ್ಲಿಶ್ನಲ್ಲಿ ಎರಡು ಹೆಸರು(ನಾಮ)ಪದಗಳ ನಡುವಿನ ಪತ್ತುಗೆ(ಸಂಬಂದ)ಯನ್ನು ಸೂಚಿಸ ಬೇಕಾದಾಗ, ಅವು ಉಸಿರುಗರ (ಜೀವಿಗಳ) ಪತ್ತುಗೆಯನ್ನು ತಿಳಿಸುವುದಾದರೆ ಸಾಮಾನ್ಯವಾಗಿ s ಒಟ್ಟನ್ನು ಬಳಸಲಾಗುತ್ತದೆ, ಮತ್ತು ಬೇರೆ ಬಗೆಯ ಪತ್ತುಗೆ ಯನ್ನು ತಿಳಿಸುವುದಾದರೆ oಜಿ ತುಂಡುಪದವನ್ನು ಬಳಸಲಾಗುತ್ತದೆ. ಈ ವ್ಯತ್ಯಾಸದ ತಿಳಿವು ಇಂಗ್ಲಿಶ್ ಕಲಿಯುವ ದೊಡ್ಡವರಿಗೆ ನೆರವಾಗಬಲ್ಲುದು. ಕನ್ನಡದಲ್ಲಿ ಎಸಕ(ಕ್ರಿಯಾ)ಪದಗಳು ಸೊಲ್ಲಿನಲ್ಲಿ ಕೊನೆಗೆ ಬರುತ್ತವೆ; ಆದರೆ, ಇಂಗ್ಲಿಶ್ನಲ್ಲಿ ಅವು ನಡುವೆ ಬರುತ್ತವೆ. ಎತ್ತುಗೆಗಾಗಿ, ಕೆಳಗಿನ ಎರಡು ಸೊಲ್ಲುಗಳನ್ನು ಹೋಲಿಸಿ ನೋಡಬಹುದು:
ರಾಜು ಮನೆಗೆ ಹೋದ.
ಮೇಲೆ ಕೊಟ್ಟಿರುವ ಕನ್ನಡದ (1ಕ) ಸೊಲ್ಲಿನಲ್ಲಿ ಹೋದ ಎಂಬ ಎಸಕ ಪದ ಸೊಲ್ಲಿನ ಕೊನೆಗೆ ಬಂದಿದೆ; ಆದರೆ ಇಂಗ್ಲಿಶ್ನ (1ಚ) ಸೊಲ್ಲಿನಲ್ಲಿ ತಿeಟಿಣ ಎಂಬ ಎಸಕ ಪದ ನಡುವೆ ಬಂದಿದೆ.
ಕನ್ನಡದಲ್ಲಿ ಒಂದು ಹೇಳಿಕೆಯನ್ನು ಕೇಳ್ವಿಯಾಗಿ ಮಾರ್ಪಡಿಸಬೇಕಿದ್ದಲ್ಲಿ, ಅದರ ಕೊನೆಯಲ್ಲಿ ಬರುವ ಪದಕ್ಕೆ ಓ ಎಂಬ ಒಟ್ಟನ್ನು ಸೇರಿಸಿದರೆ ಸಾಕಾಗು ತ್ತದೆ; ಆದರೆ, ಇಂಗ್ಲಿಶ್ನಲ್ಲಿ ಇದಕ್ಕಾಗಿ ಎಸಕ ಪದಕ್ಕೆ ಒಂದು ಒತ್ತಾಸೆಯ ಪದವನ್ನು ಸೇರಿಸಿ, ಅದನ್ನು ಸೊಲ್ಲಿನ ಮೊದಲ ಪದವಾಗಿ ಬಳಸಬೇಕಾಗುತ್ತದೆ, ಮತ್ತು ಆ ಸೊಲ್ಲಿನಲ್ಲಿ ಬೇರೆಯೂ ಕೆಲವು ಮಾರ್ಪಾಡುಗಳನ್ನು ಮಾಡ ಬೇಕಾಗುತ್ತದೆ.
ನಾಯಿ ಬೊಗಳಿತು. ನಾಯಿ ಬೊಗಳಿತೋ?
ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ನಡುವೆ ಇಂತಹ ಹಲವಾರು ಸೊಲ್ಲರಿಮೆಯ ವ್ಯತ್ಯಾಸಗಳಿವೆ. ಇಂಗ್ಲಿಶ್ ಸೊಲ್ಲುಗಳನ್ನು ಕಲಿಯುತ್ತಿರುವ ದೊಡ್ಡವರಿಗೆ ಇವನ್ನು ಎತ್ತುಗೆಗಳ ಮೂಲಕ ಅವರ ಕಲಿಕೆಯ ಅಂಗವಾಗಿ ತೋರಿಸಿಕೊಡುತ್ತಾ ಹೋದಲ್ಲಿ, ಅವರಿಗೆ ಇಂಗ್ಲಿಶ್ ಸೊಲ್ಲುಗಳನ್ನು ಓದುವ ಮತ್ತು ಬರೆಯುವ ಕೆಲಸಗಳನ್ನು ನಡೆಸಲು ಹೆಚ್ಚು ಸುಳುವಾಗುತ್ತದೆ. ಯಾಕೆಂದರೆ, ಅವರಿಗೆ ಇಂತಹ ತಿಳಿವನ್ನು ತಮ್ಮ ಕಲಿಕೆಯಲ್ಲಿ ಬಳಸಿಕೊಳ್ಳು ವಂತಹ ಕಸುವಿದೆ.
7.3 ಎರಡನೇ ನುಡಿಯಾಗಿ ಕನ್ನಡದ ಕಲಿಕೆ
ಎರಡನೇ ನುಡಿಯಾಗಿ ಕನ್ನಡವನ್ನು ಕಲಿಯಬೇಕೆಂದಿರುವವರಿಗೆ, ಅದರಲ್ಲೂ ಮುಕ್ಯವಾಗಿ ಕನ್ನಡದಲ್ಲಿ ಓದಲು ಮತ್ತು ಬರೆಯಲು ತಿಳಿಯಬೇಕೆಂದಿರುವವರಿಗೆ ಕನ್ನಡದ ಸೊಲ್ಲರಿಮೆಯ ತಿಳಿವು ನೆರವಿಗೆ ಬರಬಲ್ಲುದು. ಪದಗಳು ನೂಲಿನ ಹಾಗೆ, ಮತ್ತು ಸೊಲ್ಲರಿಮೆಯ ಕಟ್ಟಲೆಗಳು ಬಟ್ಟೆಯಲ್ಲಿ ಕಾಣಿಸುವ ನೆಯ್ಗೆಯ ಹಾಗೆ. ನೂಲನ್ನು ತರತರದ ಬಟ್ಟೆಗಳನ್ನಾಗಿ ಮಾರ್ಪಡಿಸಬೇಕಿದ್ದರೆ, ಮತ್ತು ಅದರಲ್ಲಿ ಹೊಸ ಹೊಸ ಚಿತ್ತಾರಗಳನ್ನು ಮೂಡಿಸಬೇಕಿದ್ದರೆ ಹೇಗೆ ತರತರದ ನೇಯ್ಗೆಗಳ ಪರಿಚಯ ಬೇಕಾಗುತ್ತದೆಯೋ ಹಾಗೆಯೇ ಪದಗಳನ್ನು ತರತರದ ಸೊಲ್ಲುಗಳಾಗಿ ಜೋಡಿಸಿಕೊಳ್ಳಬೇಕಿದ್ದರೂ ಸೊಲ್ಲರಿಮೆಯ ಕಟ್ಟಲೆಗಳ ತಿಳಿವು ಬೇಕಾಗುತ್ತದೆ.
ಸೊಲ್ಲುಗಳ ಇಟ್ಟಳ ಎಂತಹದು ಎಂಬುದನ್ನು ತಿಳಿಯದವರಿಗೆ ಅವು ಹೇಗೆ ಒಂದರೊಡನೊಂದು ಸಂಬಂದಿಸಿವೆ ಎಂಬುದನ್ನು ಕಂಡುಕೊಳ್ಳಲು ಬರುವುದಿಲ್ಲ. ಹೆಚ್ಚಿನ ಸೊಲ್ಲುಗಳಲ್ಲೂ ಎಸಕ(ಕ್ರಿಯಾ)ಪದವೊಂದಿರುತ್ತದೆ, ಮತ್ತು ಅದು ತಿಳಿಸುವ ಎಸಕದಲ್ಲಿ ಪಾಲ್ಗೊಳ್ಳುವ ವ್ಯಕ್ತಿ, ವಸ್ತು, ವಿಶಯ ಮೊದಲಾದುವನ್ನು ತಿಳಿಸುವ ಹೆಸರು(ನಾಮ)ಪದ ಇಲ್ಲವೇ ಪದಕಂತೆ ಗಳಿರುತ್ತವೆ. ಇವನ್ನು ಗುರುತಿಸಬಲ್ಲವರು, ಮತ್ತು ಸೊಲ್ಲಿನಲ್ಲಿ ಬರುವ ಬೇರೆ
ಪದಗಳಿಂದ ಇವನ್ನು ಬೇರ್ಪಡಿಸಬಲ್ಲವರು ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ಯಾವಾಗಲೂ ಮುಂದಿರುತ್ತಾರೆ.
ಸೊಲ್ಲುಗಳನ್ನು ಜೋಡಿಸುವುದು ಹೇಗೆ, ಒಂದು ಸೊಲ್ಲಿನೊಳಗೆ ಇನ್ನೊಂದು ಸೊಲ್ಲನ್ನು ಇರಿಸಿ ಹೇಳುವುದು ಹೇಗೆ, ತುಂಡುಸೊಲ್ಲುಗಳನ್ನು ಪದಕಂತೆಯೊಳಗೆ ಇರಿಸುವುದು ಹೇಗೆ ಎಂಬಂತಹ ವಿಶಯಗಳನ್ನು ತಿಳಿದುಕೊಂಡವರಿಗೆ ತಮ್ಮ ಬರಹವನ್ನು ತಿದ್ದಿ ಸರಿಪಡಿಸಲು ಹೆಚ್ಚು ತೊಂದರೆಯಾಗುವುದಿಲ್ಲ.
ಕನ್ನಡವನ್ನು ಕಲಿಯುವವರು ಅವರ ತಾಯ್ನುಡಿಯ ಸೊಲ್ಲರಿಮೆಗೂ ಕನ್ನಡದ ಸೊಲ್ಲರಿಮೆಗೂ ನಡುವಿರುವ ಮುಕ್ಯವಾದ ವ್ಯತ್ಯಾಸಗಳನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಇನ್ನಶ್ಟು ಬೇಗನೆ ಮುಂದುವರಿಯಬಲ್ಲುದು. ಆದರೆ, ಇದಕ್ಕಾಗಿ ಕನ್ನಡದ್ದೇ ಆದ ಸೊಲ್ಲರಿಮೆ ಎಂತಹದು ಎಂಬುದನ್ನು ಕಲಿಸುವವರು ತಿಳಿದುಕೊಂಡಿರಬೇಕಾಗುತ್ತದೆ.
ಕನ್ನಡದಲ್ಲಿ ಇವತ್ತು ಬಳಕೆಯಲ್ಲಿರುವ ಸೊಲ್ಲರಿಮೆಯ (ವ್ಯಾಕರಣದ) ಪುಸ್ತಕಗಳು ನಿಜಕ್ಕೂ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದನ್ನು ತಿಳಿಸುವುದಿಲ್ಲ. ಹಾಗಾಗಿ, ಅವುಗಳಿಂದ ಕನ್ನಡವನ್ನು ಎರಡನೆಯ ನುಡಿಯಾಗಿ ಕಲಿಯಬೇಕೆಂದಿರುವವರಿಗೆ ಹೆಚ್ಚಿನ ನೆರವು ಸಿಗಲಾರದು. ತಮಿಳು, ತೆಲುಗು, ಹಿಂದಿ, ಮರಾಟಿ ಮೊದಲಾದ ಬೇರೆ ನುಡಿಗಳನ್ನಾಡುವವರಿಗೆ ಕನ್ನಡವನ್ನು ಕಲಿಸುವವರು ಅವರ ತಾಯ್ನುಡಿಯ ಸೊಲ್ಲುಗಳಿಗೂ ಕನ್ನಡದ ಸೊಲ್ಲುಗಳಿಗೂ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಗಮನಿಸಬೇಕು, ಮತ್ತು ಅವನ್ನು ಬೇಕಾದಾಗಲೆಲ್ಲ ಕಲಿಯುವವರ ಗಮನಕ್ಕೆ ತರುತ್ತಿರಬೇಕು.
ಈ ವಿಶಯದಲ್ಲಿ ಅವರಿಗೆ ನೆರವಾಗುವಂತಹ ಹೊತ್ತಗೆಗಳನ್ನು ಸೊಲ್ಲರಿಗರು ಹೊರತಂದಲ್ಲಿ ಇನ್ನೂ ಒಳ್ಳೆಯದು. ನಿಜಕ್ಕೂ ತಮಿಳು, ತೆಲುಗು, ಮಲಯಾಳ ಮೊದಲಾದ ಕನ್ನಡಕ್ಕೆ ತೀರ ಹತ್ತಿರವಿರುವ (ಎಂದರೆ, ಒಂದೇ ನುಡಿಕುಟುಂಬಕ್ಕೆ ಸೇರಿರುವ) ನುಡಿಗಳನ್ನಾಡುವವರಿಗೆ ಕನ್ನಡವನ್ನು ಕಲಿಸುವಲ್ಲಿ ಇಂತಹ ಹೋಲಿಕೆಯ ಸೊಲ್ಲರಿಮೆಗಳು ಬೇರೆ ಬಗೆಯಲ್ಲೂ ನೆರವು ನೀಡಬಲ್ಲುವು. ಎತ್ತುಗೆಗಾಗಿ, ತಮಿಳು ಕನ್ನಡಕ್ಕೆ ತೀರ ಹತ್ತಿರದ ನುಡಿ. ಅವೆರಡರ ನಡುವೆ ಹೆಚ್ಚು ಕಡಿಮೆ ಒಂದೇ ಬಗೆಯವಾಗಿರುವಂತಹ ಹಲವಾರು ಪದಗಳು, ಪದಕಂತೆಗಳು ಮತ್ತು ಸೊಲ್ಲುಗಳಿವೆ. ತಮಿಳರಿಗೆ ಕನ್ನಡವನ್ನು ಕಲಿಸ ಬೇಕೆಂದಿರುವವರು ಇಂತಹ ಪದಗಳನ್ನು ಮತ್ತು ಸೊಲ್ಲುಗಳನ್ನು ಬಳಸಿ ಬರಹಗಳನ್ನು ಬರೆದಲ್ಲಿ, ಅವನ್ನು ಕಲಿಯುವವರು ತುಂಬಾ ಬೇಗನೆ ಓದಲು- ಬರೆಯಲು ಕಲಿತುಕೊಳ್ಳಬಲ್ಲರು. ಇದು ಅವರಿಗೆ ತಮ್ಮ ಕಲಿಕೆಯ ಅಳವಿನ
ಮೇಲೆ ನಂಬಿಕೆ ಹುಟ್ಟುವಂತೆ ಮಾಡಬಲ್ಲುದು, ಮತ್ತು ಇದರಿಂದಾಗಿ ಅವರ ಕಲಿಕೆಯೂ ಬೇಗನೆ ಮುಂದೆ ಹೋಗಬಲ್ಲುದು.
7.4 ತಿರುಳು
ಎರಡನೇ ನುಡಿಯ ಕಲಿಕೆಯಲ್ಲಿ ಸೊಲ್ಲರಿಮೆಯ ತಿಳಿವು ಯಾವ ರೀತಿಯಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ. ಈ ಕಲಿಕೆಯನ್ನು ಮೊದಲನೇ ನುಡಿಯ (ತಾಯ್ನುಡಿಯ) ತಳಹದಿಯ ಮೇಲೆ ನಡೆಸಬೇಕಾಗುವುದಾದ ಕಾರಣ, ಮೊದಲನೇ ಮತ್ತು ಎರಡನೇ ನುಡಿಗಳ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬು ದನ್ನು ತಿಳಿದುಕೊಂಡಲ್ಲಿ, ಅದು ಅವರಿಗೆ ಇನ್ನಶ್ಟು ಹೆಚ್ಚಿನ ನೆರವನ್ನು ನೀಡಬಲ್ಲುದು.
ಎರಡನೇ ನುಡಿಯನ್ನು ಕಲಿಸುವ ಸಮಯದಲ್ಲಿ ತಾಯ್ನುಡಿಯನ್ನು ಪೂರ್ತಿ ಹೊರಗಿಡಬೇಕೆಂಬ ಹೇಳಿಕೆಗೆ ಯಾವ ಆದಾರವೂ ಇಲ್ಲ. ನಿಜಕ್ಕೂ ಇಂಗ್ಲಿಶ್ ತರಗತಿಗಳಲ್ಲಿ ಮಕ್ಕಳ ತಾಯ್ನುಡಿಯನ್ನು ಬಳಸದಿರುವವರು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಯಾಕೆಂದರೆ, ಆ ರೀತಿ ತರಗತಿಯಲ್ಲಿ ತಾಯ್ನುಡಿಯನ್ನು ಹೊರಗಿಟ್ಟರೂ ಮಕ್ಕಳ ಮಿದುಳಿನಲ್ಲಿ ಎರಡನೇ ನುಡಿಯ ಕಲಿಕೆ ಆ ನುಡಿಯ ತಳಹದಿಯ ಮೇಲೇನೇ ನಡೆಯುತ್ತದೆ. ಹಾಗಾಗಿ, ತರಗತಿಯಲ್ಲೂ ತಾಯ್ನುಡಿಯ ತಳಹದಿಯ ಮೇಲೇನೇ ಎರಡನೇ ನುಡಿಯನ್ನು ಕಲಿಸುವುದು ಸರಿಯಾದ ದಾರಿ.
ಎರಡನೇ ನುಡಿಯ ಕಲಿಕೆಯಲ್ಲಿ ತಾಯ್ನುಡಿಯ ಬಳಕೆಯಿಂದ ತಪ್ಪುಗಳು ಕಾಣಿಸುತ್ತವೆ ಎಂಬ ವಾದವೂ ಸರಿಯಲ್ಲ. ಯಾಕೆಂದರೆ, ಅವು ನಿಜಕ್ಕೂ ಕಲಿಕೆಯ ಹಂತಗಳಲ್ಲದೆ ತಪ್ಪುಗಳಲ್ಲ. ಕಲಿಕೆ ಮುಂದುವರಿದಂತೆ ಅವು ತಾವಾಗಿಯೇ ಇಲ್ಲವಾಗುತ್ತವೆ.
ಎರಡನೇ ನುಡಿಯನ್ನು ದೊಡ್ಡವರಿಗೆ ಕಲಿಸುವವರು ಅವರ ತಾಯ್ನುಡಿಗೂ ಎರಡನೇ ನುಡಿಗೂ ನಡುವೆ ಸೊಲ್ಲರಿಮೆಯಲ್ಲಿ ಎಂತಹ ಹೋಲಿಕೆ ಮತ್ತು ವ್ಯತ್ಯಾಸಗಳಿವೆ ಎಂಬುದನ್ನು ಗಮನಿಸುವ ಹಾಗೆ ಮಾಡಿದಲ್ಲಿ, ಅವರ ಕಲಿಕೆ ಹೆಚ್ಚು ಬೇಗನೆ ಮುಂದುವರಿಯಬಲ್ಲುದು.
ಎಂಟನೇ ಪಸುಗೆ — ನುಡಿಮಾರಿಕೆ
8.1 ಮುನ್ನೋಟ
ಒಂದು ನುಡಿಯಲ್ಲಿರುವ ಬರಹವನ್ನು ಇನ್ನೊಂದು ನುಡಿಯ ಬರಹವನ್ನಾಗಿ ಮಾರ್ಪಡಿಸುವುದಕ್ಕೆ ಕನ್ನಡದ್ದೇ ಆದ ನುಡಿಮಾರಿಕೆ ಎಂಬ ಪದವನ್ನು ಇಲ್ಲಿ ಬಳಸಲಾಗಿದೆ. ಈ ಕೆಲಸವನ್ನು ಹೆಸರಿಸುವುದಕ್ಕಾಗಿ ಸಂಸ್ಕ್ರುತ ಮೂಲದ ಬಾಶಾಂತರ ಇಲ್ಲವೇ ಅನುವಾದ ಎಂಬ ಪದವನ್ನು, ಮತ್ತು ಅರೇಬಿಕ್ ಮೂಲದ ತರ್ಜುಮೆ ಎಂಬ ಪದವನ್ನೂ ಕನ್ನಡದಲ್ಲಿ ಬಳಸಲಾಗುತ್ತದೆ.
ಒಂದು ನುಡಿಯಲ್ಲಿರುವ ಬರಹವನ್ನು ಮಾತ್ರವಲ್ಲದೆ, ಕೆಲವೊಮ್ಮೆ ನೇರವಾಗಿ ಮಾತನ್ನೂ ಬೇರೆ ನುಡಿಗೆ ಮಾರ್ಪಡಿಸಬೇಕಾಗುತ್ತದೆ. ಈ ಕೆಲಸವನ್ನು ಹೆಸರಿಸುವುದಕ್ಕಾಗಿಯೂ ನುಡಿಮಾರು ಪದವನ್ನೇ ಬಳಸಬಹುದು. ಆದರೆ, ಈ ಎರಡು ಕೆಲಸಗಳ ನಡುವೆ ಕೆಲವು ವ್ಯತ್ಯಾಸಗಳೂ ಇವೆ. ಇಂಗ್ಲಿಶ್ನಲ್ಲಿ ಇದಕ್ಕಾಗಿ ಕೆಲವೊಮ್ಮೆ ಟ್ರಾನ್್ಸಲೇಟ್ ಮತ್ತು ಇಂಟರ್ಪ್ರೆಟ್ ಎಂಬ ಎರಡು ಬೇರೆ ಬೇರೆ ಪದಗಳನ್ನು ಬಳಸುವುದೂ ಇದೆ.
ಬರಹಗಳನ್ನು ನುಡಿಮಾರುವ ಸಮಯದಲ್ಲಿ ನುಡಿಮಾರುಗರು ಹಲವು ಬಗೆಯ ಚಳಕಗಳನ್ನು ಬಳಸುತ್ತಿರುತ್ತಾರೆ. ಆದರೆ, ಸಾಮಾನ್ಯವಾಗಿ ಇವು ಅವರ ಅರಿವಿಗೆ ಎಟಕದ ರೂಪದಲ್ಲಿರುತ್ತವೆ. ಇವನ್ನು ಅರಿವಿಗೆ ಎಟಕುವ ಹಾಗೆ ಮಾಡಿದಲ್ಲಿ, ಅವರು ಈ ಕೆಲಸವನ್ನು ಹೆಚ್ಚು ಚನ್ನಾಗಿ ನಡೆಸಿಕೊಡ ಬಲ್ಲರು.
ಇದಲ್ಲದೆ, ಎಲ್ಲರಿಗೂ ಇಂತಹ ಚಳಕಗಳನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ. ಯಾರಾದರೂ ತಿಳಿವಿಗರು ಅವನ್ನು ಕಲಿಸಿಕೊಡಬೇಕಾಗುತ್ತದೆ. ಹಾಗಾಗಿ, ಒಳ್ಳೆಯ ನುಡಿಮಾರುಗರು ಎಂತಹ ಚಳಕಗಳನ್ನು ಬಳಸುತ್ತಾರೆ ಎಂಬುದನ್ನು ತಿಳಿದುಕೊಂಡು ಅವನ್ನು ಉಳಿದವರಿಗೂ ಕಲಿಸಿಕೊಟ್ಟಲ್ಲಿ, ಅವರೂ ಒಳ್ಳೆಯ ನುಡಿಮಾರುಗರಾಗಬಲ್ಲರು.
ನುಡಿಮಾರಿಕೆ
ನುಡಿಮಾರಿಕೆಯಲ್ಲಿ ಬಳಸಬೇಕಾಗಿರುವ ಚಳಕಗಳಲ್ಲಿ ಹಲವು ನುಡಿಯರಿಮೆ ಇಲ್ಲವೇ ಸೊಲ್ಲರಿಮೆಯ ತಿಳಿವನ್ನವಲಂಬಿಸಿವೆ. ಹಾಗಾಗಿ, ಅವನ್ನು ಪಡೆಯುವು ದಕ್ಕಾಗಿ ನುಡಿಮಾರುಗರು ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆ ಗಳನ್ನು ಮಾತ್ರವಲ್ಲದೆ, ಅವುಗಳ ನಡುವಿರುವ ವ್ಯತ್ಯಾಸಗಳನ್ನೂ ತಿಳಿದಿರ ಬೇಕಾಗುತ್ತದೆ. ಈ ತಿಳಿವು ಎಂತಹ ಕಡೆಗಳಲ್ಲೆಲ್ಲ ನೆರವಿಗೆ ಬರುತ್ತದೆ ಎಂಬುದನ್ನು ಕೆಳಗೆ (8.2-4)ರಲ್ಲಿ ವಿವರಿಸಲಾಗಿದೆ.
ನುಡಿಮಾರಿಕೆಗಾಗಿ ಎಣ್ಣುಕ(ಕಂಪ್ಯೂಟರ್)ಗಳ ನೆರವನ್ನು ಪಡೆಯುವ ಪ್ರಯತ್ನವನ್ನೂ ಕಳೆದ ಅಯ್ವತ್ತು ವರ್ಶಗಳಿಂದ ನಡೆಸಲಾಗುತ್ತಿದೆ. ನಿಜಕ್ಕೂ ನುಡಿಗಳ ಸೊಲ್ಲರಿಮೆ ಎಂಬುದು ಎಶ್ಟು ತೊಡಕಿನ ವಿಶಯ ಎಂಬ ಸಂಗತಿ ಇಂತಹ ಪ್ರಯತ್ನದಲ್ಲಿ ತೊಡಗಿರುವವರಿಗೆ ತುಂಬಾ ಚನ್ನಾಗಿ ಮನವರಿಕೆ ಯಾಗಿದೆ. ಯಾಕೆಂದರೆ, ಎಣ್ಣುಕಗಳಿಗೆ ಸೊಲ್ಲರಿಮೆಯ ಒಂದೊಂದು ಕಟ್ಟಲೆ ಯನ್ನೂ ತಿಳಿಸಿಕೊಡಬೇಕಾಗುತ್ತದೆ. ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಗಳನ್ನು ಮಾತ್ರವಲ್ಲದೆ ಅವುಗಳ ನಡುವಿನ ವ್ಯತ್ಯಾಸಗಳನ್ನೂ ಅದಕ್ಕೆ ತಿಳಿಸಬೇಕಾಗುತ್ತದೆ. ಈ ಕೆಲಸದಲ್ಲಿ ತಿಳಿವಿಗರು ಎಂತಹ ಸೊಲ್ಲರಿಮೆಯ ತೊಂದರೆಗಳನ್ನೆಲ್ಲ ಎದುರಿಸಬೇಕಾಗುತ್ತದೆ ಎಂಬುದನ್ನು ಕೆಳಗೆ (8.5)ರಲ್ಲಿ ವಿವರಿಸಲಾಗಿದೆ.
8.1.1 ಎರಡು ಬಗೆತಗಳು
ನುಡಿಮಾರಿಕೆಯ ಕುರಿತಾಗಿ ಇವತ್ತು ತಿಳಿವಿಗರಲ್ಲಿ ಎರಡು ಬಗೆತಗಳಿವೆ: ಕೆಲವರ ಅನಿಸಿಕೆಯಂತೆ, ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ಪೂರ್ತಿಯಾಗಿ ನುಡಿಮಾರುವುದು ಯಾವತ್ತಿಗೂ ಕಯ್ಗೆಟುಕದ ಕೆಲಸವೇ. ಇದಕ್ಕೆ ಅವರು ಕೊಡುವ ಕಾರಣವೇನೆಂದರೆ, ಒಂದು ನುಡಿ ಅದನ್ನಾಡುವವರ ಮನಸ್ಸಿನಲ್ಲಿ ಏಳುವ ಅನಿಸಿಕೆಗಳನ್ನು ಇನ್ನೊಬ್ಬರಿಗೆ ತಿಳಿಸಲು ನೆರವಾಗುತ್ತದೆ ಮಾತ್ರವಲ್ಲ, ಅವರ ಮನಸ್ಸಿನಲ್ಲಿ ಎಂತಹ ಅನಿಸಿಕೆ ಮೂಡಬಲ್ಲುದು ಎಂಬುದನ್ನೂ ಆ ನುಡಿಯೇ ತೀರ್ಮಾನಿಸುತ್ತದೆ.
ನಾವು ಪಡೆಯುವ ತಿಳುವಳಿಕೆಗಳು ಇಲ್ಲವೇ ಪಾಡು(ಅನುಬವ)ಗಳು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ನಮ್ಮ ಮನಸ್ಸಿನಲ್ಲಿ ಮೂಡುವ ಅನಿಸಿಕೆಗಳು - ಇವೆಲ್ಲವೂ ನಮ್ಮ ನುಡಿಯಲ್ಲೇ ಉಂಟಾಗಬೇಕಾಗಿದೆ. ಹಾಗಾಗಿ, ನುಡಿಗಳ ನಡುವಿರುವ ವ್ಯತ್ಯಾಸಗಳು ಅವನ್ನು ಆಡುವವರು ಪಡೆಯಬಹುದಾದ ಪಾಡು, ಅನಿಸಿಕೆ, ತಿಳಿವು - ಈ ಮೂರರ ಮೇಲೂ
ಪರಿಣಾಮಗಳನ್ನು ಬೀರದಿರುವುದಿಲ್ಲ. ಇದರಿಂದಾಗಿ, ಒಂದು ನುಡಿಯ ನ್ನಾಡುವವರು ಕಾಣುವ ಮತ್ತು ಪಡುವ ಪ್ರಪಂಚ ಇನ್ನೊಂದು ನುಡಿಯನ್ನಾಡು ವವರು ಕಾಣುವ ಮತ್ತು ಪಡುವ ಪ್ರಪಂಚಕ್ಕಿಂತ ಹಲವು ವಿಶಯಗಳಲ್ಲಿ ಬೇರಾಗಿರುತ್ತದೆ. ಹಾಗಾಗಿ, ಒಂದು ನುಡಿಯ ಮೇಲೆ ಅವಲಂಬಿಸಿರುವ ಅನಿಸಿಕೆ ಮತ್ತು ತಿಳಿವುಗಳನ್ನು ಪೂರ್ತಿಯಾಗಿ ಇನ್ನೊಂದು ನುಡಿಯಲ್ಲಿ ನುಡಿಮಾರಿ ಹೇಳಲು ಬರುವುದೇ ಇಲ್ಲ ಎಂಬುದಾಗಿ ಈ ತಿಳಿವಿಗರು ವಾದಿಸುತ್ತಾರೆ.
ಆದರೆ ಬೇರೆ ಕೆಲವು ತಿಳಿವಿಗರು ಇದನ್ನು ಒಪ್ಪುವುದಿಲ್ಲ. ಅವರ ಅನಿಸಿಕೆಯಂತೆ, ನಾವು ಏನನ್ನು ಬೇಕಿದ್ದರೂ ನಮ್ಮ ನುಡಿಯಲ್ಲಿ ತಿಳಿಸಬಲ್ಲೆವು, ಮತ್ತು ಅವೆಲ್ಲವನ್ನೂ ಇನ್ನೊಂದು ನುಡಿಯಲ್ಲೂ ತಿಳಿಸಬಲ್ಲೆವು. ನುಡಿಗಳ ನಡುವಿನ ವ್ಯತ್ಯಾಸಗಳೆಲ್ಲ ಮೇಲ್ಮಯ್ಯ ವ್ಯತ್ಯಾಸಗಳಲ್ಲದೆ ಆಳವಾದ ವ್ಯತ್ಯಾಸ ಗಳಲ್ಲ ಎಂಬುದಾಗಿ ಅವರು ವಾದಿಸುತ್ತಾರೆ.
ತಿಳಿವಿಗರ ನಡುವೆ ಮೂಡಿರುವ ಈ ತಿಕ್ಕಾಟಕ್ಕೆ ಅವರು ಹುರುಳು (meಚಿಟಿiಟಿg) ಎಂಬ ಪರಿಕಲ್ಪನೆಯನ್ನು ಬಳಸುವಲ್ಲಿ ಮಾಡಿರುವ ತಪ್ಪು ಮೂಲ ಕಾರಣವೆಂದು ನನಗೆ ಅನಿಸುತ್ತದೆ. ನಿಜಕ್ಕೂ ಇಲ್ಲಿ ತಿಳಿವು ಮತ್ತು ಹುರುಳು ಎಂಬ ಎರಡು ತೀರಾ ಬೇರಾಗಿರುವ ಪರಿಕಲ್ಪನೆಗಳು ಬೇಕಾಗುತ್ತವೆ. ಆದರೆ, ಅವನ್ನು ಹೆಸರಿಸುವುದಕ್ಕಾಗಿ ಈ ತಿಳಿವಿಗರು meಚಿಟಿiಟಿg ಎಂಬ ಒಂದೇ ಪದವನ್ನು ಬಳಸುವ ಕಾರಣ, ನುಡಿಮಾರಿಕೆಯ ಅಳವಿನ ಕುರಿತು ಅವರಲ್ಲಿ ಮೇಲಿನ ಗೊಂದಲ ಉಂಟಾಗಿದೆ.
ಒಂದು ಪದವನ್ನು ಕೇಳಿದಾಗ ಇಲ್ಲವೇ ಓದಿದಾಗ ಮಿದುಳಿನಲ್ಲಿ ನರಗಳ ಒಂದು ಇಟ್ಟಳ ಮಿಂಚುತ್ತದೆ; ಹಾಗೆ ಮಿಂಚುವುದೇ ಆ ಪದದ ತಿಳಿವು. ಹೊಸ ಪದವೊಂದನ್ನು ತಿಳಿದುಕೊಳ್ಳುವ ಸಮಯದಲ್ಲಿ ಅದನ್ನು ಕೇಳಿದಾಗ ಇಲ್ಲವೇ ಓದಿದಾಗ ಮಿಂಚಬಲ್ಲಂತಹ ನರಗಳ ಇಟ್ಟಳವೊಂದನ್ನು ನಮ್ಮ ಮಿದುಳಲ್ಲಿ ಹೊಸದಾಗಿ ಉಂಟಾಗುತ್ತದೆ. ಆದರೆ, ಇದು ನಮ್ಮ ಮಿದುಳಿನಲ್ಲಿ ನಡೆಯುವಂತಹ ಒಂದು ಆಗುಹ ಮಾತ್ರ. ಅದನ್ನು ನಾವು ನಮ್ಮ ಮಾತಿನಲ್ಲಿ ಇಲ್ಲವೇ ಓದಿನಲ್ಲಿ ಬಳಸಿಕೊಳ್ಳಬಲ್ಲೆವಲ್ಲದೆ, ಅದು ನೇರವಾಗಿ ನಮ್ಮ ಅರಿವಿಗೆ ಎಟಕುವಂತಹದಲ್ಲ. ಅದು ಮಿಂಚುವುದನ್ನು ನೋಡಬೇಕಿದ್ದರೆ, ನಮಗೆ ಉಪಕರಣಗಳ ನೆರವು ಬೇಕಾಗುತ್ತದೆ.
ಎಲ್ಲಾ ಪದಗಳಿಗೂ ಇಂತಹ ಅವುಗಳದೇ ಆದ ತಿಳಿವುಗಳು ಇರುತ್ತವೆ; ಯಾಕೆಂದರೆ, ಯಾವ ಎರಡು ಪದಗಳೂ ನಮ್ಮ ಮಿದುಳಿನಲ್ಲಿ ನರಗಳ ಒಂದೇ ಇಟ್ಟಳ ಮಿಂಚುವ ಹಾಗೆ ಮಾಡುವುದಿಲ್ಲ. ಕೆಲವೊಮ್ಮೆ ನಮ್ಮ ನುಡಿಯ
ಕುರಿತು ಮಾತನಾಡುವಾಗ, ಯಾವುದಾದರೊಂದು ಪದದ ತಿಳಿವು ಎಂತಹದು ಎಂಬುದನ್ನು ಇನ್ನೊಬ್ಬರಿಗೆ ತಿಳಿಸಬೇಕಾಗುತ್ತದೆ. ಇದನ್ನು ಹೇಗೆ ನಡೆಸುವುದು? ಇದಕ್ಕಾಗಿ ನಾವು ಒಂದು ನೇರವಲ್ಲದ ದಾರಿಯನ್ನು ಕಂಡುಕೊಂಡಿದ್ದೇವೆ: ಒಂದು ಪದದ ತಿಳಿವು ಎಂತಹದು ಎಂಬುದನ್ನು ಇನ್ನೊಬ್ಬರಿಗೆ ತಿಳಿಸ ಬೇಕಾದಾಗ, ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ಪದವನ್ನು ಬಳಸುತ್ತೇವೆ. ಎತ್ತುಗೆಗಾಗಿ, ಕನಿಕರ ಎಂಬ ಪದದ ತಿಳಿವೇನು ಎಂಬುದನ್ನು ಇನ್ನೊಬ್ಬರಿಗೆ ತಿಳಿಸಬೇಕಾದಾಗ, ಅಂತಹದೇ ತಿಳಿವನ್ನು ಕೊಡುವ ಮರುಕ ಎಂಬ ಪದವನ್ನು ಕೊಡುತ್ತೇವೆ. ನಿಜಕ್ಕೂ ಇವೆರಡಕ್ಕೆ ಬೇರೆ ಬೇರೆ ತಿಳಿವುಗಳು ಇರುತ್ತವೆ. ಹಾಗಾಗಿ, ಮರುಕ ಎಂಬುದನ್ನು ಕನಿಕರ ಪದದ ಹುರುಳು ಎಂಬುದಾಗಿ ಕರೆಯಬಹುದಲ್ಲದೆ ತಿಳಿವು ಎಂಬುದಾಗಿ ಕರೆಯಲಾರೆವು. ಇದಲ್ಲದೆ, ಬೇರೊಂದು ಕಡೆಯಲ್ಲಿ ಕನಿಕರ ಎಂಬ ಪದವನ್ನು ಮರುಕ ಪದದ ಹುರುಳಾಗಿಯೂ ನಾವು ಬಳಸಬಲ್ಲೆವು.
ಮರುಕ ಮತ್ತು ಕನಿಕರಗಳಂತಹ ಎರಡು ಪದಗಳಿಗೆ ಕನ್ನಡದಲ್ಲಿ ಒಂದೇ ಹುರುಳಿದೆಯೆನ್ನುವುದು ಅವುಗಳಲ್ಲಿ ಒಂದನ್ನು ಇನ್ನೊಂದರ ತಿಳಿವೆಂತಹದು ಎಂಬುದನ್ನು ಸೂಚಿಸುವುದಕ್ಕಾಗಿ ಬಳಸಬಲ್ಲೆವು ಎಂಬ ಕಾರಣಕ್ಕಾಗಿಯಲ್ಲದೆ, ಅವೆರಡೂ ಒಂದೇ ತಿಳಿವನ್ನು ಕೊಡುತ್ತವೆ ಎಂಬ ಕಾರಣಕ್ಕಾಗಿ ಅಲ್ಲ. ಹಾಗಾಗಿ, ನುಡಿಯೊಂದರಲ್ಲಿ ಒಂದೇ ಹುರುಳಿನ (meಚಿಟಿiಟಿgನ) ಎರಡು ಪದಗಳು ಇರಬಲ್ಲುವೇ ಎಂಬ ವಿಶಯದ ಕುರಿತಾಗಿ ತಿಳಿವಿಗರೊಳಗೆ ಮೂಡಿಬಂದಿರುವ ತಿಕ್ಕಾಟಕ್ಕೆ ಇದೇ ತಿಳಿವು-ಹುರುಳುಗಳ ನಡುವಿನ ವ್ಯತ್ಯಾಸವನ್ನು ಅವರು ಗಮನಿಸದಿರುವುದೇ ಕಾರಣ.
ಎರಡು ನುಡಿಗಳ ಪದಗಳನ್ನು ಹೋಲಿಸಿ ನೋಡುವಲ್ಲೂ ಇದೇ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ: ಒಂದು ನುಡಿಯ ಪದಕ್ಕೆ ಇನ್ನೊಂದು ನುಡಿಯ ಪದವನ್ನು ಹುರುಳಾಗಿ ಕೊಡಬಲ್ಲೆವು. ಎತ್ತುಗೆಗಾಗಿ, ಕನ್ನಡದ ಮರುಕ ಪದಕ್ಕೆ ಇಂಗ್ಲಿಶ್ನ ಛಿomಠಿಚಿssioಟಿ ಪದವನ್ನು ಹುರುಳಾಗಿ ಕೊಡಬಲ್ಲೆವು. ಆದರೆ, ಮರುಕ ಪದದ ತಿಳಿವು ಇಂಗ್ಲಿಶ್ನ ಛಿomಠಿಚಿssioಟಿ ಪದದ ತಿಳಿವಿಗೆ ಹತ್ತಿರ ಇದೆಯಲ್ಲದೆ ಅವೆರಡೂ ಒಂದೇ ಅಲ್ಲ. ಕೆಲವು ವಿಶಯಗಳಲ್ಲಿ ಈ ಎರಡು ಪದಗಳ ತಿಳಿವುಗಳು ಬೇರಾಗಿವೆ.
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಯ ಬರಹವಾಗಿ ಮಾರ್ಪಡಿಸ (ನುಡಿಮಾರ) ಬಲ್ಲೆವೇ ಎಂಬ ಕೇಳ್ವಿ ಹುರುಳು ಮತ್ತು ತಿಳಿವುಗಳ ನಡುವಿನ ಈ ವ್ಯತ್ಯಾಸವನ್ನವಲಂಬಿಸಿದೆ. ಯಾಕೆಂದರೆ, ಒಂದು ನುಡಿಯ ಸೊಲ್ಲಿಗೆ
ಹೆಚ್ಚುಕಡಿಮೆ ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ನುಡಿಯ ಸೊಲ್ಲನ್ನು ಹುರುಳಾಗಿ ಕೊಡಬಲ್ಲೆವಲ್ಲದೆ ಪೂರ್ತಿಯಾಗಿ ಅದು ಕೊಡುವ ತಿಳಿವನ್ನೇ ಕೊಡುವ ಸೊಲ್ಲನ್ನು ಇನ್ನೊಂದು ನುಡಿಯಲ್ಲಿ ಕೊಡಲಾರೆವು. ಅಂತಹ ಸೊಲ್ಲನ್ನು ಅದೇ ನುಡಿಯಲ್ಲೂ ಕೊಡಲಾರೆವು!
8.1.2 ನುಡಿಮಾರುವ ಬಗೆ
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಯ ಬರಹವಾಗಿ ಮಾರ್ಪಡಿಸು ವುದು ಸುಳುವಾದ ಕೆಲಸವೇನಲ್ಲ. ಅದನ್ನು ಮೆಚ್ಚುಗೆಯಾಗುವ ಹಾಗೆ ನಡೆಸಲು, ಆ ಎರಡು ನುಡಿಗಳಲ್ಲಿ ಮಾತನಾಡಲು ಮತ್ತು ಓದಲು-ಬರೆಯಲು ತಿಳಿದಿದ್ದ ರಶ್ಟೇ ಸಾಲದು. ಅವುಗಳ ನಡುವೆ ಪದಗಳಲ್ಲಿ, ಪದರೂಪಗಳಲ್ಲಿ, ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಮತ್ತು ಹುರುಳುಗಳ ನುಡಿತದಲ್ಲಿ ಎಂತಹ ವ್ಯತ್ಯಾಸಗಳಿವೆ, ಈ ವ್ಯತ್ಯಾಸಗಳು ನುಡಿಮಾರಿಕೆಯಲ್ಲಿ ಎಂತಹ ತೊಂದರೆಗಳ ನ್ನೊಡ್ಡಬಲ್ಲುವು ಮತ್ತು ಅವನ್ನು ಬಗೆಹರಿಸುವುದು ಹೇಗೆ ಎಂಬುದನ್ನೂ ನುಡಿಮಾರುಗನು ತಿಳಿದಿರಬೇಕಾಗುತ್ತದೆ.
ನುಡಿಮಾರುಗನಿಗೆ ಬೇಕಾಗುವ ಈ ತಿಳಿವು ಮುಕ್ಯವಾಗಿ ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಗಳಿಂದ, ಮತ್ತು ಅವೆರಡು ಸೊಲ್ಲರಿಮೆ ಗಳನ್ನು ಹೋಲಿಸಿ ನೋಡುವುದರಿಂದ ದೊರಕುತ್ತದೆ. ಎಲ್ಲಾ ನುಡಿಗಳಿಗೂ ಅವುಗಳದೇ ಆದ ಪರಿಚೆಗಳಿರುತ್ತವೆ. ಪದಗಳನ್ನು ಮತ್ತು ಪದಕಂತೆಗಳನ್ನು ಕಟ್ಟುವ ಬಗೆ, ಅವನ್ನು ಸೊಲ್ಲುಗಳಲ್ಲಿ ಬಳಸುವ ಬಗೆ, ತುಂಡು ಸೊಲ್ಲುಗಳನ್ನು ಸೊಲ್ಲುಗಳೊಳಗೆ ಇರಿಸುವ ಬಗೆ, ಸೊಲ್ಲುಗಳನ್ನು ಜೋಡಿಸಿ ಕುರಳು(ಪಾರಾ) ಗಳನ್ನು ಕಟ್ಟುವ ಬಗೆ, ಸೂಳುನುಡಿ(ಸಂಬಾಶಣೆ)ಗಳನ್ನು ಬರೆಯುವ ಬಗೆ ಮೊದಲಾದವುಗಳಲ್ಲೆಲ್ಲ ಒಂದು ನುಡಿಯ ಹಾಗೆ ಇನ್ನೊಂದು ನುಡಿ ಇರುವು
ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿಕೊಂಡು, ನುಡಿಮಾರುವ ಸಮಯದಲ್ಲಿ ಮೂಲನುಡಿಯ ಪರಿಚೆಗಳು ಈಡುನುಡಿಯ ಬರಹದೊಳಗೆ ಸೇರಿಕೊಳ್ಳದ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ನುಡಿಯ ಪರಿಚೆಯನ್ನು ಬದಲಾಯಿಸದೆ ಉಳಿಸಿಕೊಳ್ಳುವ ಬರಹ ಮಾತ್ರ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ, ಮತ್ತು ಸುಳುವಾಗಿ ತಿಳಿವನ್ನೂ ಕೊಡುತ್ತದೆ.
ಇದಲ್ಲದೆ, ಬರಹಗಳ ಗುರಿಯನ್ನವಲಂಬಿಸಿ ಅವುಗಳಲ್ಲಿ ಬೇರೆ ಬೇರೆ ಬಗೆಯ ಪದಗಳನ್ನು, ಸೊಲ್ಲಿನ ಇಟ್ಟಳಗಳನ್ನು, ಮತ್ತು ನುಡಿಗಟ್ಟುಗಳನ್ನು
ಬಳಸಬೇಕಾಗುತ್ತದೆ. ಪ್ರಬಂದಗಳಲ್ಲಿ ಬಳಕೆಯಾಗುವ ಪದ ಮತ್ತು ಇಟ್ಟಳಗಳನ್ನೇ ಜಾಹೀರಾತುಗಳಲ್ಲೂ ಬಳಸಿದೆವಾದರೆ, ಅವು ತೀರಾ ವಿಚಿತ್ರವಾಗಿ ಕಾಣಿಸಬಲ್ಲುವು. ಹಾಗಾಗಿ, ಬರಹದ ಗುರಿಗೆ ಹೊಂದಿಕೊಳ್ಳುವಂತೆ ತನ್ನ ನುಡಿಮಾರಿಕೆಯನ್ನು ಬದಲಾಯಿಸಿಕೊಳ್ಳುವ ಚಳಕವೂ ನುಡಿಮಾರುಗನಿಗಿರ ಬೇಕಾಗುತ್ತದೆ.
ಇಂತಹ ತಿಳಿವು ಮತ್ತು ಚಳಕಗಳು ನುಡಿಮಾರುಗನಿಗೆ ಯಾಕೆ ಬೇಕಾಗುತ್ತದೆ ಎಂಬುದನ್ನು ಇವತ್ತು ಕೆಲವು ಕಂಪೆನಿಗಳ ಜಾಹೀರಾತುಗಳಲ್ಲಿ ಇಲ್ಲವೇ ಕಯ್ಪಿಡಿಗಳಲ್ಲಿ ಬರುವ ಕನ್ನಡ ಬರಹವನ್ನು ನೋಡಿದರೆ ಗೊತ್ತಾಗುತ್ತದೆ. ಈ ಬರಹಗಳನ್ನು ನುಡಿಮಾರುಗರಿಂದ ಬರೆಸುವ ಬದಲು ಯಾರು ಯಾರಿಂದಲೋ ಬರೆಸಲಾಗಿದೆ. ಅವರಿಗೆ ಕನ್ನಡ ಗೊತ್ತಿರುತ್ತದೆ; ಆದರೆ, ನುಡಿಮಾರುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ.
ನುಡಿಮಾರುಗರು ಎರಡು ಬಗೆಯ ತಿಳಿವುಗಳನ್ನು ತಮ್ಮ ಕೆಲಸದಲ್ಲಿ ಬಳಸಿ ಕೊಳ್ಳಬೇಕಾಗುತ್ತದೆ: ಮೂಲ ಬರಹದ ಗುರಿಯೇನು, ಅದರ ಬರಹಗಾರನ ಅನಿಸಿಕೆಗಳೇನು, ಮೂಲನುಡಿಯನ್ನು ಅವನು ಯಾವ ರೀತಿಯಲ್ಲಿ ಬಳಸಿಕೊಂಡಿ ದ್ದಾನೆ ಎಂಬುದರ ತಿಳಿವು ಒಂದು ಬಗೆಯದು, ಮತ್ತು ತಾನು ನುಡಿಮಾರುವ ಬರಹಕ್ಕೆ ಎಂತಹ ಓದುಗನಿದ್ದಾನೆ, ಆತನ ತಿಳಿವು ಎಶ್ಟರ ಮಟ್ಟಿಗಿನದು, ಆತ ಏನನ್ನು ಎದುರುನೋಡುತ್ತಿರಬಹುದು ಎಂಬುದರ ತಿಳಿವು ಇನ್ನೊಂದು ಬಗೆಯದು. ಈ ಎರಡು ಬಗೆಯ ತಿಳಿವುಗಳನ್ನು ನುಡಿಮಾರುಗರು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:
8.2 ಮೂಲ ಬರಹದ ತಿಳಿವು
ಮೇಲೆ ಸೂಚಿಸಿದ ಹಾಗೆ, ಬರಹದ ಗುರಿ ಏನು ಎಂಬುದನ್ನು ತಿಳಿದುಕೊಂಡು, ಅದಕ್ಕೆ ಅನುಸಾರವಾಗಿ ತನ್ನ ನುಡಿಮಾರಿಕೆಯನ್ನು ಹೊಂದಿಸಿಕೊಳ್ಳಲು ನುಡಿ ಮಾರುಗನಿಗೆ ಗೊತ್ತಿರಬೇಕು. ಎತ್ತುಗೆಗಾಗಿ, ಕತೆ, ಕವಿತೆ ಮೊದಲಾದವುಗಳಲ್ಲಿ ಬರಹಗಾರರ ಅನಿಸಿಕೆಗಳಿಗೆ ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ; ಆದರೆ, ವರದಿಗಳು, ಪ್ರಬಂದಗಳು, ಕಲಿಕೆಯ ಪುಸ್ತಕಗಳು ಮೊದಲಾದವುಗಳಲ್ಲಿ ಬರಹಗಾರರ ಅನಿಸಿಕೆಗಳಿಗಿಂತಲೂ ತಿಳಿವಿಗೆ ಹೆಚ್ಚಿನ ಒತ್ತು ಕೊಡಬೇಕಾಗು ತ್ತದೆ. ಜಾಹೀರಾತು, ರಾಜಕೀಯ ಬರಹ, ಮನವಿ, ಅಡಿಗೆ ಪುಸ್ತಕ ಮೊದಲಾದವುಗಳಲ್ಲಿ ಒಂದು ಕೆಲಸವನ್ನು ಮಾಡುವ ಇಲ್ಲವೇ ಇನ್ನೊಬ್ಬರಿಂದ ಮಾಡಿಸಿಕೊಳ್ಳುವ ಬಗೆ ಹೇಗೆ ಎಂಬುದಕ್ಕೆ ಒತ್ತು ಕೊಡಬೇಕಾಗುತ್ತದೆ.
ಇದಲ್ಲದೆ, ಬರಹಗಳಲ್ಲಿ ಯಾವ ರೀತಿಯ ಪದಗಳನ್ನು, ಪದರೂಪಗಳನ್ನು ಮತ್ತು ಸೊಲ್ಲಿಟ್ಟಳಗಳನ್ನು ಬಳಸಬಹುದು ಎಂಬುದು, ಎಂದರೆ, ಬರಹದ ಒಡ್ಡವ ಎಂತಹದಿರಬೇಕು ಎಂಬುದು ಅದರ ಗುರಿಯನ್ನವಲಂಬಿಸಿರುತ್ತದೆ. ಸುದ್ದಿಹಾಳೆಗಳಿಗಾಗಿ ಬರೆದ ಬರಹಕ್ಕೂ ಅರಿವಿಗರಿಗಾಗಿ ಬರೆದ ಬರಹಕ್ಕೂ ನಡುವೆ ಇಂತಹ ವಿಶಯಗಳಲ್ಲಿ ಹಲವಾರು ವ್ಯತ್ಯಾಸಗಳಿರುವುದನ್ನು ಗಮನಿಸ ಬಹುದು.
ಬರಹದ ಗುರಿಗಳ ನಡುವಿರುವ ಈ ಎರಡು ಬಗೆಯ ವ್ಯತ್ಯಾಸಗಳನ್ನು ಗಮನಿಸಿ, ಅವಕ್ಕೆ ಅನುಸಾರವಾಗಿ ತಮ್ಮ ನುಡಿಮಾರಿಕೆಗಳನ್ನು ಹೊಂದಿಸಿ ಕೊಳ್ಳುವ ಅಳವು ನುಡಿಮಾರುಗರಲ್ಲಿರಬೇಕಾಗುತ್ತದೆ. ಈ ಎರಡು ಕೆಲಸಗಳನ್ನು ನಡೆಸುವಲ್ಲೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
8.2.1 ಆಡುನುಡಿಯ ಬಳಕೆ
ಕೆಲವು ಬರಹಗಳಲ್ಲಿ ಮಾತುಗಳನ್ನು ಬರೆಯುವುದಕ್ಕಾಗಿ ಆಡುನುಡಿಯ ಬಳಕೆ ಯಾಗಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿ, ನಾಟಕ ಮೊದಲಾದವುಗಳಲ್ಲಿ ಇಂತಹ ಬಳಕೆಯನ್ನು ಕಾಣಬಹುದು. ಕೆಲವೊಮ್ಮೆ ಸಮಾಜದಲ್ಲಿ ಬಳಕೆ ಯಲ್ಲಿರುವ ಬೇರೆ ನುಡಿಗಳನ್ನೂ ಬಳಸಿರಬಹುದು. ಇಂತಹ ಬರಹವನ್ನು ನುಡಿಮಾರುವಾಗ, ಈಡುನುಡಿಯ ಬರಹದಲ್ಲೂ ಆಡುನುಡಿಯನ್ನು (ಮತ್ತು ಬೇರೆ ನುಡಿಗಳನ್ನು) ಬಳಸಬೇಕೇ ಎಂಬ ಕೇಳ್ವಿ ನುಡಿಮಾರುಗರ ಎದುರು ನಿಲ್ಲುತ್ತದೆ.
ಕೆಲವೊಂದು ಕಡೆಗಳಲ್ಲಿ ಆಡುನುಡಿಯ ಬಳಕೆಯನ್ನು ನುಡಿಮಾರುಗರು ಕಡೆಗಣಿಸಬಹುದು. ಆದರೆ, ಅದರ ಬಳಕೆಗೆ ಮೂಲ ಬರಹದಲ್ಲಿ ಒಂದು ನಿಶ್ಚಿತವಾದ ಗುರಿಯಿದೆಯಾದರೆ, ಅದನ್ನು ಆ ರೀತಿ ಕಡೆಗಣಿಸುವುದು ಸರಿಯಾಗ ಲಾರದು. ಹಾಗೆಂದು ಈಡುನುಡಿಯ ಬರಹದಲ್ಲೂ ಅದನ್ನು ಕಾಣಿಸ ಬೇಕೆಂದಿದ್ದಲ್ಲಿ, ನುಡಿಮಾರುಗರು ಹಲವು ಬಗೆಯ ತೊಡಕುಗಳನ್ನು ಎದುರಿಸ ಬೇಕಾಗುತ್ತದೆ.
ಬರಹಗಳಲ್ಲಿ ಆಡುನುಡಿಗಳನ್ನು ಬಳಸುವ ಬಗೆ ಮೂಲನುಡಿಯಲ್ಲಿ ಬಳಕೆ ಯಲ್ಲಿರಬಹುದು; ಆದರೆ, ಈಡುನುಡಿಯಲ್ಲಿ ಇಲ್ಲದಿರಬಹುದು. ಹಾಗಿದ್ದಲ್ಲಿ, ತಾನು ಹೊಸದಾಗಿ ಅಂತಹ ಬಳಕೆಯನ್ನು ಈಡುನುಡಿಯಲ್ಲಿ ಜಾರಿಗೆ ತರಬೇಕೇ ಬೇಡವೇ ಎಂಬುದನ್ನು ನುಡಿಮಾರುಗರು ತೀರ್ಮಾನಿಸಬೇಕಾಗುತ್ತದೆ.
ಮೂಲ ಬರಹದಲ್ಲಿ ಆಡುನುಡಿಯನ್ನು ಯಾವ ಗುರಿಯನ್ನಿರಿಸಿಕೊಂಡು ಬಳಸಲಾಗಿದೆಯೋ ಅದೇ ಗುರಿಯನ್ನು ಈಡೇರಿಸಬಲ್ಲ ಆಡುನುಡಿ ಈಡು ನುಡಿಯಲ್ಲಿ ಇಲ್ಲದಿರಬಹುದು. ಎತ್ತುಗೆಗಾಗಿ, ಕೆಳವರ್ಗದ ಜನರ ಆಡುನುಡಿ ಮೂಲ ಬರಹದ ಓದುಗರಲ್ಲಿ ಎಂತಹ ಅನಿಸಿಕೆಗಳನ್ನು ಹುಟ್ಟಿಸುತ್ತದೆಯೋ ಅಂತಹವೇ ಅನಿಸಿಕೆಗಳನ್ನು ಅದು ಈಡುಬರಹದಲ್ಲಿ ಹುಟ್ಟಿಸದಿರಬಹುದು. ಹಾಗಿದ್ದಲ್ಲಿ, ಈಡುನುಡಿಯ ಬರಹದಲ್ಲಿ ಕೆಳವರ್ಗದ ಜನರ ಆಡುನುಡಿಯನ್ನು ಬಳಸುವುದರಿಂದ ಮೂಲನುಡಿಯ ಬರಹದಲ್ಲಿ ಅದಕ್ಕಿದ್ದ ಗುರಿ ಈಡೇರ ಲಾರದು.
ಇಂತಹ ಕಡೆಗಳಲ್ಲಿ ನುಡಿಮಾರುಗರು ಆಡುನುಡಿಯನ್ನು ಬಳಸುವ ಬದಲು ಬೇರೆ ಯಾವುದಾದರೂ ಹಮ್ಮುಗೆಯ ಮೂಲಕ ಮೂಲ ಬರಹಗಾರನ ಗುರಿಯನ್ನು ಈಡೇರಿಸಲು ಪ್ರಯತ್ನಿಸಬೇಕಾದೀತು. ಕೆಲವರು ಬರಹಗಾರರು ಇಂತಹ ಕಡೆಗಳಲ್ಲಿ ಈಡುನುಡಿಗೆ ತಾವೇ ಒಂದು ಹೊಸದಾದ ಆಡುನುಡಿ ಯನ್ನು ಕಲ್ಪಿಸಿಕೊಳ್ಳುತ್ತಾರೆ.
ತಮ್ಮ ಬರಹಗಳಲ್ಲಿ ಆಡುನುಡಿಗಳನ್ನು ಬಳಸುವವರು ಸಾಮಾನ್ಯವಾಗಿ ಅವನ್ನು ಪೂರ್ತಿಯಾಗಿ ಬಳಸುವುದಿಲ್ಲ. ಯಾಕೆಂದರೆ, ಹಾಗೆ ಬಳಸಿದಲ್ಲಿ ಅವರ ಬರಹ ಓದುಗರಿಗೆ ಗೊತ್ತೇ ಆಗದ ಹಾಗೆ ಆಗಬಲ್ಲುದು. ಹಾಗಾಗಿ, ಆಡು ಬರಹದ ಸವಿಯನ್ನಶ್ಟೇ ಓದುಗರಿಗೆ ಒದಗಿಸುವ ಹಾಗೆ, ಕೆಲವು ಪದಗಳನ್ನು ಮತ್ತು ಪದರೂಪಗಳನ್ನು ಮಾತ್ರ ಅದರಿಂದ ಆರಿಸಿಕೊಂಡು, ಅವನ್ನು ಅವರು ತಮ್ಮ ಬರಹಗಳಲ್ಲಿ ಬಳಸುತ್ತಾರೆ. ನುಡಿಮಾರುಗರು ಇದನ್ನು ಗಮನಿಸಿಕೊಂಡು, ಅದಕ್ಕನುಸಾರವಾಗಿ ತಮ್ಮ ನುಡಿಮಾರಿಕೆಯಲ್ಲೂ ಆಡುನುಡಿಯ ಸವಿಯನ್ನಶ್ಟೇ ಒದಗಿಸಲು ಪ್ರಯತ್ನಿಸಬೇಕು.
8.2.2 ಬರಹದ ಒಡ್ಡವ
ಒಂದು ಬರಹವನ್ನು ಬರೆಯುತ್ತಿರುವ ಸಮಯದಲ್ಲಿ ಬರಹಗಾರರು ಹಲವು ಬಗೆಯ ಆಯ್ಕೆಗಳನ್ನು ನಡೆಸಬೇಕಾಗುತ್ತದೆ: ತಮ್ಮೆದುರಿಗಿರುವ ಹುರುಳನ್ನು ಸೂಚಿಸಲು ಎರಡು ಇಲ್ಲವೆ ಹೆಚ್ಚು ಪದಗಳಿದ್ದಲ್ಲಿ, ಅವುಗಳಲ್ಲೊಂದನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ; ಇದೇ ರೀತಿಯಲ್ಲಿ, ತಾವು ತಿಳಿಸಬೇಕಾ ಗಿರುವ ಸಂಗತಿಯನ್ನು ತಿಳಿಸಬಲ್ಲ ಸೊಲ್ಲಿಟ್ಟಳಗಳು ಹಲವಿದ್ದಲ್ಲಿ, ಅವುಗಳ ಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಬರಹಗಾರರು ನಡೆಸಬಲ್ಲ ಇಂತಹ ಆಯ್ಕೆಗಳು ಬರಹದ ಒಡ್ಡವವನ್ನು (ಶಯ್ಲಿಯನ್ನು) ನಿರ್ದರಿಸುತ್ತವೆ.
ಒಂದು ಬರಹದಲ್ಲಿ ಕಾಣಿಸುವ ಒಡ್ಡವ ಬರಹಗಾರನ ಆಳ್ತನ(ವ್ಯಕ್ತಿತ್ವ)ವನ್ನು ಸೂಚಿಸಬಹುದು, ಇಲ್ಲವೇ ಬರಹದ ಬಗೆಯನ್ನೂ ಸೂಚಿಸಬಲ್ಲುದು. ಇವನ್ನು ಈಡುನುಡಿಯಲ್ಲೂ ಕಾಣಿಸಬೇಕೇ, ಮತ್ತು ಕಾಣಿಸುವುದಿದ್ದರೆ ಅದನ್ನು ಯಾವ ಬಗೆಯಲ್ಲಿ ಕಾಣಿಸಬಹುದು ಎಂಬ ಕೇಳ್ವಿಯನ್ನು ನುಡಿಮಾರುಗರು ಎದುರಿಸ ಬೇಕಾಗುತ್ತದೆ.
ಬರಹಗಾರನ ಆಳ್ತನವನ್ನು ಸೂಚಿಸುವಂತಹ ಒಡ್ಡವದ ಅಂಶಗಳು ಸಾಮಾನ್ಯವಾಗಿ ಕತೆ-ಕಾದಂಬರಿಗಳಂತಹ ನಲ್ಬರಹಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಬೇರೆ ಬಗೆಯ ಬರಹಗಳಲ್ಲಿ ಅವು ಕಾಣಿಸಿಕೊಳ್ಳುವುದು ಅಪರೂಪ. ಎತ್ತುಗೆಗಾಗಿ, ಅರಿಮೆಯ ಬರಹಗಳಲ್ಲಿ ಎಲ್ಲರೂ ಬಳಸುವ ಒಡ್ಡವವನ್ನೇ ಬರಹಗಾರರು ಆರಿಸಿಕೊಳ್ಳುತ್ತಾರಲ್ಲದೆ ತಮ್ಮದೇ ಆದ ಒಡ್ಡವವನ್ನು ಬಳಸಹೋಗುವುದಿಲ್ಲ. ಅವುಗಳಲ್ಲಿ ತಿಳಿವನ್ನು ಕೊಡುವುದರ ಮೇಲೆ ಹೆಚ್ಚಿನ ಒತ್ತು ಬೀಳುವುದು ಇದಕ್ಕೆ ಕಾರಣವಿರಬಹುದು.
ಮೇಲೆ ಸೂಚಿಸಿದ ಹಾಗೆ, ಬರಹದ ಒಡ್ಡವದಲ್ಲಿ ಹೆಚ್ಚಿನ ಅಂಶವೂ ಅದರ ಗುರಿಯನ್ನು ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಮಕ್ಕಳಿಗಾಗಿ ಬರೆದ ಬರಹಕ್ಕೂ ಅರಿವಿಗರಿಗಾಗಿ ಬರೆದ ಬರಹಕ್ಕೂ ನಡುವೆ ಒಡ್ಡವದಲ್ಲಿ ಹಲವು ವ್ಯತ್ಯಾಸಗಳಿರುತ್ತವೆ. ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿರುತ್ತವೆ, ಮತ್ತು ಅವನ್ನು ಹಲವೆಡೆಗಳಲ್ಲಿ ಹೆಸರು ಪದಕಂತೆಗಳಾಗಿ ಬದಲಾಯಿಸಿ, ಬೇರೆ ಸೊಲ್ಲುಗಳ ಅಂಗಗಳಾಗಿ ಮಾಡಿ ಬಳಸಲಾಗಿರುತ್ತದೆ. ಆದರೆ, ಮಕ್ಕಳಿಗಾಗಿ ಬರೆದ ಬರಹಗಳಲ್ಲಿ ಇವೊಂದೂ ಇರುವುದಿಲ್ಲ. ಇಂತಹ ವ್ಯತ್ಯಾಸಗಳನ್ನು ನುಡಿಮಾರುಗರು ಗಮನಿಸಿಕೊಂಡು, ಈಡು ಬರಹದಲ್ಲಿ ಅವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು.
ಇದಲ್ಲದೆ, ಒಂದೇ ಬಗೆಯ ಸೊಲ್ಲಿಟ್ಟಳ ಎರಡು ನುಡಿಗಳಲ್ಲಿ ಕಾಣಿಸಿ ಕೊಂಡಾಗಲೂ, ಅದನ್ನು ಯಾಕೆ ಬಳಸಲಾಗುತ್ತದೆ ಎಂಬುದು ನುಡಿಯಿಂದ ನುಡಿಗೆ ಬೇರಾಗಿರಬಲ್ಲುದು. ಎತ್ತುಗೆಗಾಗಿ, ಇಂಗ್ಲಿಶ್ ನುಡಿಯ ಪೇಸಿವ್ (ಠಿಚಿssive) ಇಟ್ಟಳ ಇಲ್ಲವೇ ಸಂಸ್ಕ್ರುತದ ಕರ್ಮಣಿ ಇಟ್ಟಳಕ್ಕೆ ಸಮನಾಗಿ ಕನ್ನಡದಲ್ಲಿ ಪಡು ಎಂಬ ಎಸಕಪದವನ್ನು ಬಳಸಿರುವ ಕೆಲಸ ಮಾಡಲ್ಪಟ್ಟಿತು, ಹಣ ಕೊಡಲ್ಪಟ್ಟಿತು ಎಂಬಂತಹ ಸೊಲ್ಲುಗಳನ್ನು ಕೆಲವರು ಬಳಸುತ್ತಾರೆ. ಆದರೆ, ಈ ಇಟ್ಟಳದ ಬಳಕೆ ಕನ್ನಡದಲ್ಲಿ ಕೆಲವೇ ಕೆಲವು ಬಗೆಯ ಬರಹಗಳಿಗೆ ಮಾತ್ರ ತಕ್ಕುದಾಗಿದೆ. ಹಾಗಾಗಿ, ಇಂಗ್ಲಿಶ್ನ ಪೇಸಿವ್ ಇಲ್ಲವೇ ಸಂಸ್ಕ್ರುತದ ಕರ್ಮಣಿ ಬಂದಲ್ಲೆಲ್ಲ ಅದನ್ನು ಕನ್ನಡದಲ್ಲಿ ಬಳಸಲು ಬರುವುದಿಲ್ಲ.
8.2.3 ಬೇರೆ ಕೆಲವು ತೊಡಕುಗಳು
ಪದ, ಪದಕಂತೆ, ಸೊಲ್ಲುಗಳ ಇಟ್ಟಳ ಮೊದಲಾದವುಗಳ ಮೂಲಕ ತಿಳಿವನ್ನು ಸೂಚಿಸುವ ಹೊಲಬು(ವಿದಾನ)ಗಳೂ ನುಡಿಯಿಂದ ನುಡಿಗೆ ಬೇರಾಗಿರುತ್ತವೆ. ನುಡಿಗಳ ನಡುವೆ ಕಾಣಿಸುವ ಈ ವ್ಯತ್ಯಾಸಗಳೂ ನುಡಿಮಾರುಗರಿಗೆ ತೊಂದರೆ ಕೊಡುತ್ತವೆ. ಒಳ್ಳೇ ನುಡಿಮಾರುಗರು ಈ ತೊಂದರೆಗಳನ್ನು ಬಗೆಹರಿಸುವು ದಕ್ಕಾಗಿ ತಮ್ಮವೇ ಆದ ಉಪಾಯಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೂ, ಮೂಲನುಡಿ ಮತ್ತು ಈಡುನುಡಿಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದನ್ನು ಪಟ್ಟಿಮಾಡಿದಲ್ಲಿ, ಅದು ನುಡಿಮಾರುಗರ ಕೆಲಸದಲ್ಲಿ ಹೆಚ್ಚಿನ ನೆರವನ್ನು ಕೊಡಬಲ್ಲುದು.
ಮೂಲನುಡಿಯ ಪದಗಳಿಗೆ ತಕ್ಕುದಾದ ಪದಗಳು ಈಡುನುಡಿಯಲ್ಲಿ ಇಲ್ಲ ವಾದಲ್ಲಿ, ಅವಕ್ಕೆ ಬದಲು ಪದಕಂತೆಗಳನ್ನು ಬಳಸುವ ಇಲ್ಲವೇ ಹೊಸ ಪದ ಗಳನ್ನು ಉಂಟುಮಾಡಿಕೊಳ್ಳುವ ಅಳವು ಒಳ್ಳೇ ನುಡಿಮಾರುಗರಿಗಿರುತ್ತದೆ. ಮುಕ್ಯವಾಗಿ, ಒಮ್ಮೆ ಬರೆದ ಸೊಲ್ಲನ್ನು ಬಗೆ ಬಗೆಯಾಗಿ ಬದಲಿಸಿಕೊಳ್ಳುವ ಮೂಲಕ ಅದು ಓದುಗರಿಗೆ ಮೆಚ್ಚುಗೆಯಾಗುವ ಹಾಗೆ ಮಾಡುವ ಅಳವು ಅವರಿಗಿರುತ್ತದೆ. ಇಂತಹ ಕೆಲಸಗಳಲ್ಲಿ ಸೊಲ್ಲರಿಮೆಯ ಅರಿವು ಅವರ ನೆರವಿಗೆ ಬರಬಲ್ಲುದು.
ಇಪ್ಪುರುಳುಗಳಿರುವ (ಒಂದಕ್ಕಿಂತ ಹೆಚ್ಚು ಹುರುಳುಗಳಿರುವ) ಪದಗಳು ಇಲ್ಲವೇ ಸೊಲ್ಲುಗಳು ಮೂಲನುಡಿಯ ಬರಹದಲ್ಲಿ ಇವೆಯಾದಲ್ಲಿ, ಮೂಲ ಬರಹಗಾರರ ಮನಸ್ಸಿನಲ್ಲಿ ಯಾವ ಹುರುಳು ಇದ್ದಿರಬಹುದು ಎಂಬುದನ್ನು ಊಹಿಸಿಕೊಂಡು, ಅದನ್ನು ಈಡು ಬರಹದಲ್ಲಿ ಕಾಣಿಸಬೇಕಾಗುತ್ತದೆ.
ಇದಲ್ಲದೆ, ಮೂಲ ಬರಹದಲ್ಲಿಲ್ಲದ ಇಪ್ಪುರುಳು ಈಡು ಬರಹದಲ್ಲಿ ಬಳಸಬೇಕಾಗುವ ಪದ ಇಲ್ಲವೇ ಸೊಲ್ಲಿನಲ್ಲಿ ಕಾಣಿಸಿಕೊಳ್ಳುವುದಾದರೆ, ಅದರಿಂದಾಗಿ ಓದುಗರಲ್ಲಿ ಗೊಂದಲ ಇಲ್ಲವೇ ತಪ್ಪರಿಮೆಯುಂಟಾಗದ ಹಾಗೆಯೂ ನೋಡಿಕೊಳ್ಳಬೇಕಾಗುತ್ತದೆ. ಇಂತಹ ಇಪ್ಪುರುಳುಗಳು ಕಾಣಿಸದಂತೆ ನೋಡಿಕೊಳ್ಳಲು ಬರುವುದಿದ್ದರೆ ಹಾಗೆ ಮಾಡುವುದೇ ಒಳ್ಳೆಯದು (6.2 ನೋಡಿ).
ಇಪ್ಪುರುಳಿನ ಪದ ಇಲ್ಲವೇ ಸೊಲ್ಲಿನ ಇಟ್ಟಳಗಳ ಹಾಗೆ, ಮೂಲ ಬರಹ ದಲ್ಲಿ ಕಾಣಿಸಿಕೊಳ್ಳುವ ಮಾರ್ಪುರುಳು(ರೂಪಕ)ಗಳ ಬಳಕೆಯೂ ನುಡಿ ಮಾರುಗರಿಗೆ ತೊಂದರೆ ಕೊಡುತ್ತದೆ. ಎತ್ತುಗೆಗಾಗಿ, ಅವನಿಗೆ ತಲೆಯಿಲ್ಲ ಎಂಬ ಸೊಲ್ಲಿನಲ್ಲಿ ಜಾಣ್ಮೆ ಇಲ್ಲವೇ ಬುದ್ದಿ ಪದದ ಬದಲು ತಲೆ ಪದವನ್ನು
ಒಂದು ಮಾರ್ಪುರುಳಾಗಿ ಬಳಸಲಾಗಿದೆ. ಈ ಸೊಲ್ಲನ್ನು ನುಡಿಮಾರುವಾಗ, ಈಡುನುಡಿಯಲ್ಲಿ ಅಂತಹದೇ ಹುರುಳನ್ನು ಕೊಡಬಲ್ಲ ಬೇರೆ ಪದವನ್ನು ಇಲ್ಲವೇ ಮಾರ್ಪುರುಳನ್ನು ಬಳಸಬೇಕಾಗುತ್ತದೆ. ತಲೆ ಪದವನ್ನು ಹಾಗೆಯೇ ನುಡಿಮಾರಿದಲ್ಲಿ, ತಕ್ಕುದಾದ ಹುರುಳನ್ನು ಅದು ಈಡುನುಡಿಯ ಬರಹದಲ್ಲಿ ಕೊಡದೇ ಇರಬಹುದು.
ಮೂಲ ಬರಹದಲ್ಲಿ ಬರುವ ನುಡಿಗಟ್ಟುಗಳೂ ನುಡಿಮಾರುಗರಿಗೆ ತೊಂದರೆ ಕೊಡುತ್ತವೆ. ಅವನ್ನು ಹಾಗೆಯೇ ನುಡಿಮಾರಲು ಬರುವುದಿಲ್ಲ. ಅವು ಕೊಡುವ ಹುರುಳುಗಳನ್ನು ಅರಿತುಕೊಂಡು, ಅವನ್ನು ಈಡು ನುಡಿಯ ಓದುಗರಿಗೆ ತಲಪಿಸುವ ಕೆಲಸವನ್ನು ನುಡಿಮಾರುಗರು ನಡೆಸಬೇಕಾಗುತ್ತದೆ. ಅಂತಹದೇ ತಿಳಿವನ್ನು ಕೊಡುವ ಬೇರೊಂದು ನುಡಿಗಟ್ಟು ಈಡು ನುಡಿಯಲ್ಲಿ ಇದೆಯಾದರೆ, ಅದನ್ನೂ ಇಂತಹ ಕಡೆಗಳಲ್ಲಿ ಬಳಸಬಹುದು.
ನುಡಿಮಾರುಗರಿಗೆ ತೊಂದರೆ ಕೊಡುವ ಇನ್ನೊಂದು ಬಗೆಯ ಪದಗಳೆಂದರೆ, ಮೂಲನುಡಿಯಲ್ಲಿ ಕಟ್ಟುನಿಟ್ಟಾದ ಹುರುಳಿಲ್ಲದ ಪದಗಳು. ಎತ್ತುಗೆಗಾಗಿ, ಚಿಕ್ಕದು-ದೊಡ್ಡದು, ಒಳ್ಳೆಯದು-ಕೆಟ್ಟದು ಮೊದಲಾದ ಹಲವು ಪದಗಳಿಗೆ ಕಟ್ಟುನಿಟ್ಟಾದ ಹುರುಳಿಲ್ಲ. ಈಡುನುಡಿಯಲ್ಲೂ ಅಂತಹದೇ ಪದ ಇದೆಯಾದರೆ, ಅದನ್ನು ಬಳಸುವ ಮೂಲಕ ತೊಂದರೆಯನ್ನು ಬಗೆಹರಿಸಬಹುದು.
ಆದರೆ ಎಲ್ಲಾ ಕಡೆಗಳಲ್ಲೂ ಹೀಗೆ ಮಾಡಲು ಬಾರದಿರಬಹುದು. ಎತ್ತುಗೆ ಗಾಗಿ, ನಂಟಸ್ತಿಕೆಯನ್ನು ಸೂಚಿಸುವ ಪದಗಳಿಗೆ ಒಂದೊಂದು ನುಡಿಯಲ್ಲಿ ಒಂದೊಂದು ಬಗೆಯ ಹರವು ಇರುತ್ತದೆ. ಅಂತಹ ಪದಗಳನ್ನು ನುಡಿಮಾರುವಾಗ, ಮೂಲನುಡಿಯಲ್ಲಿ ನಿಜಕ್ಕೂ ಎಂತಹ ನಂಟಸ್ತಿಕೆಯನ್ನು ಸೂಚಿಸಲಾಗಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕೆ ಸಮನಾದಂತಹ ಈಡುನುಡಿಯ ಪದವನ್ನು ಬಳಸಬೇಕಾಗುತ್ತದೆ. ಕನ್ನಡದ ದೊಡ್ಡಮ್ಮ ಎಂಬ ಪದಕ್ಕೆ ಬದಲಾಗಿ eಟಜeಡಿ moಣheಡಿ ಎಂಬುದನ್ನು ಬಳಸಿದಲ್ಲಿ ಅದು ಇಂಗ್ಲಿಶ್ ಬರಹದಲ್ಲಿ ಹೊಂದಿಕೊಳ್ಳಲಾರದು.
8.3 ಈಡುನುಡಿಯ ಓದುಗ
ಒಂದು ನುಡಿಮಾರಿದ ಬರಹ ಚನ್ನಾಗಿದೆಯೆಂದು ಹೇಳಬೇಕಾದರೆ, ಮೂಲ ಬರಹ ಅದರ ಓದುಗರಲ್ಲಿ ಎಂತಹ ತಿಳಿವನ್ನು ಉಂಟುಮಾಡುತ್ತದೆಯೋ ಅಂತಹದೇ ತಿಳಿವನ್ನು ನುಡಿಮಾರಿದ ಬರಹ ಅದರ ಓದುಗರಲ್ಲೂ ಉಂಟು ಮಾಡುವಂತಿರಬೇಕು. ಈ ಇಬ್ಬರು ಓದುಗರ ನಡುವೆ ಹಲವು ಬಗೆಯ
ವ್ಯತ್ಯಾಸಗಳಿರಬಹುದು. ಎತ್ತುಗೆಗಾಗಿ, ಮೂಲನುಡಿಯ ಓದುಗರಿಗಿರುವ ಅನುಬವ ಇಲ್ಲವೇ ತಿಳಿವು ಈಡುನುಡಿಯ ಓದುಗರಿಗಿರುವ ಅನುಬವ ಇಲ್ಲವೇ ತಿಳಿವಿಗಿಂತ ತೀರ ಬೇರಾಗಿರಬಹುದು. ಹೀಗಿದ್ದಲ್ಲಿ, ಮೂಲ ಬರಹವನ್ನು ನುಡಿಮಾರುವಾಗ, ಅದರಲ್ಲಿ ಹಲವು ಬಗೆಯ ಬದಲಾವಣೆಗಳನ್ನೂ ನುಡಿಮಾರುಗರು ಮಾಡಿಕೊಳ್ಳಬೇಕಾಗುತ್ತದೆ.
ಒಳ್ಳೆಯ ನುಡಿಮಾರುಗರು ಆದಶ್ಟು ಮಟ್ಟಿಗೆ ತಮ್ಮ ಬರಹ ಓದುಗರಿಗೆ ಸುಳುವಾಗಿ ಗೊತ್ತಾಗುವ ಹಾಗೆ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಇದಕ್ಕಾಗಿ ಮೂಲ ಬರಹದಲ್ಲಿಲ್ಲದಿರುವ ವಿಶಯಗಳನ್ನೂ ಈಡು ಬರಹದಲ್ಲಿ ಹೊಸದಾಗಿ ಸೇರಿಸಿಕೊಳ್ಳುತ್ತಾರೆ. ನುಡಿಮಾರಿದ ಬರಹ ಓದುಗರನ್ನು ದಾರಿತಪ್ಪಿಸುವಂತಿರಬಾರದು, ಮತ್ತು ತೊಡಕು ತೊಡಕಾದ ಪದ ಮತ್ತು ಸೊಲ್ಲಿನ ಇಟ್ಟಳಗಳ ಬಳಕೆಯಿಂದ ಓದುಗರು ದೂರ ಹೋಗುವಂತೆಯೂ ಮಾಡಬಾರದು.
8.3.1 ತಿಳಿದುದು ಮತ್ತು ತಿಳಿಯದುದು
ಸೊಲ್ಲುಗಳಿಗೆ ಇಟ್ಟಳವಿರುವ ಹಾಗೆ, ಇಡೀ ಬರಹಕ್ಕೂ ಒಂದು ಇಟ್ಟಳ ವಿರುತ್ತದೆ. ಇದು ನುಡಿಯಿಂದ ನುಡಿಗೆ ಬೇರಾಗಿಯೂ ಇರುತ್ತದೆ. ಹಾಗಾಗಿ, ಮೂಲ ಬರಹದ ಇಟ್ಟಳ ಎಂತಹದು ಎಂಬುದನ್ನು ತಿಳಿದುಕೊಂಡು, ಅದಕ್ಕೆ ಬದಲಾಗಿ ಅಂತಹದೇ ಹುರುಳನ್ನು ಕೊಡುವ ಈಡುನುಡಿಯ ಇಟ್ಟಳವನ್ನು ಬಳಸಬಲ್ಲವರು ಮಾತ್ರ ಸಲೀಸಾಗಿ ಓದಲು ಬರುವಂತಹ ಬರಹವನ್ನು ಬರೆಯ ಬಲ್ಲರು.
ಒಂದು ವಿಶಯದ ಕುರಿತು ಬರಹಗಾರರಿಗೆ ಅವರ ಓದುಗರಿಗಿಂತ ತುಸು ಹೆಚ್ಚು ಗೊತ್ತಿರುತ್ತದೆ. ಹಾಗಾಗಿ, ಬರಹಗಾರರು ತಮ್ಮ ಓದುಗರಿಗೆ ಗೊತ್ತಿರುವು ದನ್ನು ಮೊದಲಿಗೆ ಅವರ ಮುಂದಿರಿಸುತ್ತಾರೆ, ಮತ್ತು ಆಮೇಲೆ, ಅವರಿಗೆ ಗೊತ್ತಿಲ್ಲದುದನ್ನು ಅದಕ್ಕೆ ಸಂಬಂದಿಸಿರುವ ಹಾಗೆ ತಿಳಿಸುತ್ತಾರೆ. ವಿಶಯಗಳನ್ನು ಪರಿಚಯಿಸುವ ಈ ಬಗೆಯನ್ನು ಹೆಚ್ಚಿನ ಬರಹಗಳಲ್ಲೂ ಕಾಣಬಹುದು.
ಬರಹಗಳಲ್ಲಿ ಮಾತ್ರವಲ್ಲ, ಸೊಲ್ಲುಗಳಲ್ಲೂ ಈ ತಿಳಿದುದು-ತಿಳಿಯದುದು ವ್ಯತ್ಯಾಸವನ್ನು ಕಾಣಬಹುದು. ಎತ್ತುಗೆಗಾಗಿ, ನಿಮ್ಮ ಹುಡುಗ ನಾಳೆ ಬರುತ್ತಾನೆ ಎಂಬ ಸೊಲ್ಲಿನಲ್ಲಿ ನಿಮ್ಮ ಹುಡುಗ ಎಂಬ ಮೊದಲಿನ ಅಂಶ ತಿಳಿದುದನ್ನು ಹೇಳುತ್ತದೆ ಮತ್ತು ಅದರ ಬಳಿಕ ಬರುವ ನಾಳೆ ಬರುತ್ತಾನೆ ಎಂಬ ಅಂಶ ತಿಳಿಯದುದನ್ನು ಹೇಳುತ್ತದೆ. ಇದಕ್ಕೆ ಬದಲು, ನಾಳೆ ಬರುವುದು
ನಿಮ್ಮ ಹುಡುಗ ಎಂಬ ಸೊಲ್ಲಿನಲ್ಲಿ ನಾಳೆ ಬರುವುದು ಎಂಬುದೇ ತಿಳಿದಿರುವ ಸಂಗತಿ. ಈ ಕಾರಣಕ್ಕಾಗಿ ಅದನ್ನು ಸೊಲ್ಲಿನಲ್ಲಿ ಮೊದಲಿಗೆ ಬಳಸಲಾಗಿದೆ. ಇದನ್ನೇ ನೆಲೆ-ತಿಳಿವು ವ್ಯತ್ಯಾಸ (3.2.1) ಸೂಚಿಸುತ್ತದೆ.
ಬರಹದ ಮೂಲಕ ತಿಳಿಸಬೇಕಾಗಿರುವ ಹೊಸ (ತಿಳಿಯದ) ವಿಶಯಕ್ಕೆ ಒಂದು ತಳಹದಿಯನ್ನೊದಗಿಸುವುದಕ್ಕಾಗಿ ಈ ರೀತಿ ಅದರಲ್ಲಿ ಓದುಗರಿಗೆ ತಿಳಿದಿರುವಂತಹ ಸಂಗತಿಯನ್ನು ಮೊದಲಿಗೆ ಹೇಳಲಾಗುತ್ತದೆ. ಆಮೇಲೆಯೂ ಓದುಗರ ಆಸಕ್ತಿಯನ್ನು ಬರಹದಲ್ಲಿ ಉಳಿಸಿಕೊಳ್ಳುವುದಕ್ಕಾಗಿ, ಈ ಹೊಲಬನ್ನು ಮುಂದುವರಿಸಲಾಗುತ್ತದೆ. ಇದು ಹೇಗೆಂದರೆ, ಮೊದಲಿಗೆ ತಿಳಿಯದುದಾಗಿದ್ದ ಸಂಗತಿ, ಅದನ್ನು ತಿಳಿಸಿದೊಡನೆ, ತಿಳಿದುದಾಗುತ್ತದೆ ಮತ್ತು ಈ ತಿಳಿದ ಸಂಗತಿಯನ್ನು ತಳಹದಿಯಾಗಿರಿಸಿ, ಬೇರೊಂದು ತಿಳಿಯದ ಸಂಗತಿಯನ್ನು ಓದುಗರ ಮುಂದಿಡಲಾಗುತ್ತದೆ. ತಿಳಿದುದು ಮತ್ತು ತಿಳಿಯದುದು ಎಂಬವುಗಳ ನಡುವಿನ ಕೊಂಡಿ ಈ ರೀತಿ ಬರಹದುದ್ದಕ್ಕೂ ತಪ್ಪದೆ ಉಳಿಯುವ ಹಾಗೆ ಒಳ್ಳೇ ಬರಹಗಾರರು ನೋಡಿಕೊಳ್ಳುತ್ತಾರೆ. ಅಂತಹವರ ಬರಹದ ಒಂದೊಂದು ಸೊಲ್ಲಿನಲ್ಲಿ, ಕುರಳಿನಲ್ಲಿ ಮತ್ತು ಪಸುಗೆಯಲ್ಲೂ ಈ ಕೊಂಡಿ ತಪ್ಪದಿರುತ್ತದೆ. ಒಳ್ಳೇ ಓದುಗರು ತಾವು ಓದುತ್ತಿರುವ ಬರಹದಲ್ಲಿ ಈ ರೀತಿ ತಿಳಿದುದು- ತಿಳಿಯದುದು ಎಂಬ ಇಟ್ಟಳವನ್ನು ಎದುರುನೋಡುತ್ತಿರುತ್ತಾರೆ. ಹಾಗಾಗಿ, ಅದನ್ನು ಬಳಸದಿರುವ ಬರಹವನ್ನು ಅವರಿಗೆ ಸಲೀಸಾಗಿ ಓದಲು ಬರುವುದಿಲ್ಲ. ಕೆಲವೊಮ್ಮೆ ತಿಳಿಯದುದನ್ನು ಒತ್ತಿ ಹೇಳುವುದಕ್ಕಾಗಿ ಅದನ್ನು ಮೊದಲಿಗೆ ಹೇಳುವುದೂ ಇದೆ. ಆದರೆ ಇದು ತುಂಬಾ ಅಪರೂಪವಾಗಿ ಮಾತ್ರ ಬಳಸಬೇಕಾಗಿರುವ ಇಟ್ಟಳ.
ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನುಡಿಮಾರುವಾಗ, ಅದರಲ್ಲಿ ತಿಳಿದುದು-ತಿಳಿಯದುದು ವ್ಯತ್ಯಾಸ ಹೇಗೆ ಮೂಡಿಬಂದಿದೆ ಎಂಬುದನ್ನು ಗಮನಿಸಿ, ಈಡು ಬರಹದಲ್ಲೂ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ವಿಶಯದಲ್ಲಿ ಮೂಲನುಡಿ ಬಳಸುವ ಹೊಲಬಿಗಿಂತ ಈಡುನುಡಿ ಬಳಸುವ ಹೊಲಬು ಬೇರೆಯದಾಗಿರಬಲ್ಲುದಾದ ಕಾರಣ, ನುಡಿಮಾರುಗರು ಈ ವ್ಯತ್ಯಾಸವನ್ನು ಗಮನಿಸುತ್ತಿರಬೇಕು.
8.3.2 ಹೊದ್ದಿಕೆಯ ಗುರುತುಗಳು
ಹಿಂದೆ ಬರೆದುದಕ್ಕೂ ಈಗ ಬರೆಯುತ್ತಿರುವುದಕ್ಕೂ ನಡುವೆ ಯಾವ ರೀತಿಯ ಹೊದ್ದಿಕೆಯಿದೆ ಎಂಬುದನ್ನು ಬರಹಗಾರರು ಹಲವು ಬಗೆಯ ಗುರುತುಗಳ
ಮೂಲಕ ಸೂಚಿಸುತ್ತಿರುತ್ತಾರೆ. ಇಂತಹ ಗುರುತುಗಳು ನುಡಿಯಿಂದ ನುಡಿಗೆ ಬೇರಾಗಿರುವುದರಿಂದ, ಮೂಲ ಬರಹದಲ್ಲಿ ಬರುವ ಹೊದ್ದಿಕೆಯ ಗುರುತು ಗಳನ್ನು ಗಮನಿಸಿ, ಅವಕ್ಕೆ ಬದಲಾಗಿ ಈಡು ನುಡಿಯವೇ ಆದ ಗುರುತುಗಳನ್ನು ಬಳಸಲು ಒಳ್ಳೆಯ ನುಡಿಮಾರುಗರಿಗೆ ಗೊತ್ತಿರುತ್ತದೆ.
ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಹಿಂದೆ ಹೆಸರಿಸಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ಇನ್ನೊಮ್ಮೆ ಸೂಚಿಸಬೇಕಾದಾಗ he, she, iಣ ಮೊದಲಾದ ತೋರು ಪದಗಳನ್ನು ಬಳಸಲಾಗುತ್ತದೆ. ಕನ್ನಡದಲ್ಲಿ ಈ ಕೆಲಸಕ್ಕಾಗಿ ಕೆಲವು ಕಡೆಗಳಲ್ಲಿ ಅವನು, ಅವಳು, ಅದು ಮೊದಲಾದ ತೋರುಪದಗಳನ್ನು ಬಳಸಬಹು ದಾದರೂ ಬೇರೆ ಕೆಲವು ಕಡೆಗಳಲ್ಲಿ ತಾನು ಪದವನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಕೆಲವೊಮ್ಮೆ ಈ ಪದಗಳು ಮೂಲ ಬರಹದಲ್ಲಿಲ್ಲದಿದ್ದರೂ ಕನ್ನಡ ಬರಹದಲ್ಲಿ ಅವನ್ನು ಬಳಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಮೂಲ ಬರಹದಲ್ಲಿದ್ದರೂ ಕನ್ನಡದಲ್ಲಿ ಅವನ್ನು ಬಳಸದಿರಬೇಕಾಗುತ್ತದೆ. ನುಡಿಮಾರು ಗರು ಇಂಗ್ಲಿಶ್ ಮತ್ತು ಕನ್ನಡ ನುಡಿಗಳ ನಡುವಿರುವ ಈ ವ್ಯತ್ಯಾಸಗಳನ್ನು ಸರಿಯಾಗಿ ತಿಳಿದುಕೊಂಡು, ಬೇಕಾಗಿರುವ ಮಾರ್ಪಾಡುಗಳನ್ನು ತಮ್ಮ ಬರಹಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವರ ಬರಹದೊಳಗೆ ಇಂಗ್ಲಿಶ್ ನುಡಿಯ ಪರಿಚೆ ನುಸುಳಿಬಿಡುತ್ತದೆ.
8.4 ನಲ್ಬರಹಗಳ ನುಡಿಮಾರಿಕೆ
ಕತೆ, ಕವಿತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳು ನುಡಿಮಾರುಗರಿಗೆ ತಮ್ಮವೇ ಆದ ಬೇರೆ ಕೆಲವು ತೊಡಕುಗಳನ್ನು ತಂದೊಡ್ಡುತ್ತವೆ. ಅವಕ್ಕೆ ಹುರುಳುಗಳು ಹಲವು ಮಟ್ಟಗಳಲ್ಲಿರುವುದರಿಂದ, ಅವನ್ನೆಲ್ಲ ತಿಳಿದುಕೊಂಡು ನುಡಿಮಾರಿದ ಬರಹದಲ್ಲೂ ಅವು ಕಾಣಿಸಿಕೊಳ್ಳುವಂತೆ ಮಾಡುವುದು ಸುಳು ವಾದ ಕೆಲಸವೇನಲ್ಲ.
ಕೆಲವರ ಅನಿಸಿಕೆಯಂತೆ, ಕವನಗಳನ್ನು ನುಡಿಮಾರಲು ಬರುವುದೇ ಇಲ್ಲ. ಅವುಗಳಲ್ಲಿ ಹುರುಳುಗಳು ಮತ್ತು ಉಲಿಗಳು ಒಂದಾಗಿ ಹೋಗುವ ಕಾರಣ, ಅಂತಹದೇ ಒಂದುಗೂಡುವಿಕೆಯನ್ನು ಇನ್ನೊಂದು ನುಡಿಯಲ್ಲಿ ಕಲ್ಪಿಸಿಕೊಳ್ಳಲೂ ಬರುವುದಿಲ್ಲವೆಂಬುದಾಗಿ ಅವರು ಹೇಳುತ್ತಾರೆ. ಹಾಗೆ ಕಲ್ಪಿಸಿಕೊಂಡರೂ ಅದು ಬೇರೊಂದು ಕವನವಾಗಬಲ್ಲುದಲ್ಲದೆ ಬೇರೊಂದು ನುಡಿಯಲ್ಲಿ ಬರುವ ಅದೇ ಕವನವಾಗಲಾರದೆಂದು ಅವರು ವಾದಿಸುತ್ತಾರೆ.
ಬೇರೆ ಕೆಲವರ ಅನಿಸಿಕೆಯಂತೆ, ಒಂದು ಕವನ ಓದುಗರಲ್ಲಿ ಎಂತಹ ಪರಿಣಾಮವನ್ನು ಉಂಟುಮಾಡುತ್ತದೆಯೋ ಅಂತಹದೇ ಪರಿಣಾಮವನ್ನು ಉಂಟುಮಾಡಬಲ್ಲ ಕವನವನ್ನು ಇನ್ನೊಂದು ನುಡಿಯಲ್ಲೂ ಬರೆಯಬಲ್ಲೆವು. ಆದರೆ, ಇದಕ್ಕೆ ಮೂಲ ನುಡಿಯ ಕವನವನ್ನು ಓದಿನೋಡಿ, ಅದರ ಆಳವಾದ ತಿಳಿವನ್ನು ಪಡೆಯುವ ಅಳವು ಮಾತ್ರವಲ್ಲ, ಅಂತಹದೇ ತಿಳಿವನ್ನು ಕೊಡುವ ಕವನವನ್ನು ಈಡುನುಡಿಯಲ್ಲಿ ಬರೆಯುವ ಅಳವೂ ನುಡಿಮಾರುಗನಿಗೆ ಇರ ಬೇಕಾಗುತ್ತದೆ. ಎಂದರೆ, ನುಡಿಮಾರುಗನು ಒರೆಗ(ವಿಮರ್ಶಕ)ನೂ ಆಗಿರ ಬೇಕಾಗುತ್ತದೆ, ಕವಿಯೂ ಆಗಿರಬೇಕಾಗುತ್ತದೆ.
ಇದಲ್ಲದೆ, ಒಂದು ನುಡಿಯ ಮತ್ತು ಅದನ್ನು ಬಳಸುವ ಜನರ ಏಳಿಗೆಗೆ ಆ ರೀತಿ ಬೇರೆ ನುಡಿಗಳ ಕವನಗಳನ್ನು ಮತ್ತು ಬೇರೆ ಬಗೆಯ ನಲ್ಬರಹಗಳನ್ನು ನುಡಿಮಾರುವುದು ಅವಶ್ಯ ಎಂಬುದಾಗಿ ಅವರು ವಾದಿಸುತ್ತಾರೆ. ಯಾಕೆಂದರೆ, ಬೇರೆ ನುಡಿಗಳಲ್ಲಿ ನಲ್ಬರಹಗಾರರು ಯಾವ ರೀತಿಯಲ್ಲಿ ತಮ್ಮ ನುಡಿಯ ಕಸುವನ್ನು ಬಳಸಿಕೊಳ್ಳುತ್ತಾರೆ ಮತ್ತು ಹೆಚ್ಚಿಸಿಕೊಳ್ಳುತ್ತಾರೆ ಎಂಬುದನ್ನು ಇಂತಹ ನುಡಿಮಾರಿಕೆಗಳು ತೋರಿಸಿಕೊಡಬಲ್ಲುವು.
8.5 ಎಣ್ಣುಕದ ನುಡಿಮಾರಿಕೆ
ಬರಹವೊಂದನ್ನು ಒಂದು ನುಡಿಯಿಂದ ಇನ್ನೊಂದು ನುಡಿಗೆ ನುಡಿಮಾರಲು ತುಂಬಾ ಸಮಯ ತಗಲುತ್ತದೆ. ಒಬ್ಬ ನುಡಿಮಾರುಗ ಗಂಟೆಗೆ ಅಯ್ದಾರು ಪುಟಗಳನ್ನಶ್ಟೇ ನುಡಿಮಾರಬಹುದು. ಕೆಲವು ಬಗೆಯ ಬರಹಗಳನ್ನು ಆತ ಸ್ವಲ್ಪ ಬೇಗನೆ ಮುಗಿಸಬಹುದು, ಆದರೆ ಬೇರೆ ಕೆಲವು ಬಗೆಯ ಬರಹಗಳನ್ನು ಮುಗಿಸಲು ಆತನಿಗೆ ಇನ್ನಶ್ಟು ಹೊತ್ತು ತಗಲಬಹುದು.
ನುಡಿಮಾರಬೇಕಾಗಿರುವ ಬರಹಗಳ ಎಣಿಕೆ ಇವತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಇಂಗ್ಲಿಶ್ನಂತಹ ನುಡಿಗಳಿಂದ ಸಾವಿರಾರು ಬರಹಗಳನ್ನು ಬೇರೆ ನುಡಿಗಳಿಗೆ ನುಡಿಮಾರುತ್ತಲೇ ಇರಬೇಕಾಗುತ್ತದೆ. ಕೊನೆಯಿಲ್ಲದ ಈ ಕೆಲಸಕ್ಕೆ ಎಶ್ಟು ಮಂದಿ ನುಡಿಮಾರುಗರಿದ್ದರೂ ಸಾಕಾಗುವು
ಹಾಗಾಗಿ, ಎಣ್ಣುಕ(ಕಂಪ್ಯೂಟರ್)ಗಳನ್ನು ಬಳಸುವ ಮೂಲಕ ಈ ಕೆಲಸವನ್ನು ಹೆಚ್ಚು ಬೇಗನೆ ಮತ್ತು ಕಡಿಮೆ ವೆಚ್ಚದಲ್ಲಿ ನಡೆಸಬಹುದಲ್ಲವೇ ಎಂಬುದಾಗಿ ಹಲವರಲ್ಲಿ ಆಸಕ್ತಿ ಮೂಡಿದ್ದು, ಕಳೆದ ಅಯ್ವತ್ತು ವರ್ಶಗಳಿಂದ ಈ ವಿಶಯದಲ್ಲಿ ಅರಕೆ(ಸಂಶೋದನೆ)ಗಳು ನಡೆಯುತ್ತಿವೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ಗೆಲುವೂ
ಅವರಿಗೆ ದೊರೆತಿದೆಯೆಂದು ಹೇಳಬಹುದು. ಗಂಟೆಗೆ ನೂರಿನ್ನೂರು ಪುಟಗಳಶ್ಟು ಬರಹಗಳನ್ನು ಇವತ್ತಿನ ಎಣ್ಣುಕಗಳು ನುಡಿಮಾರಿಕೊಡಬಲ್ಲುವು.
ಆದರೆ, ಎಣ್ಣುಕಗಳು ನುಡಿಮಾರಿ ಕೊಡುವ ಈ ಬರಹಗಳಲ್ಲಿ ಹಲವು ತಪ್ಪುಗಳು ಉಳಿದಿರುತ್ತವೆ. ಅವನ್ನೆಲ್ಲ ನುಡಿಮಾರುಗರು ಕಯ್ಯಿಂದಲೇ ತಿದ್ದಿ ಸರಿಪಡಿಸಬೇಕಾಗುತ್ತದೆ. ಇದಕ್ಕೆ ಮುಕ್ಯ ಕಾರಣವೇನೆಂದರೆ, ನುಡಿಮಾರುವ ಸಮಯದಲ್ಲಿ ನಾವು ನಡೆಸಬೇಕಾಗಿರುವ ಹಲವು ಕೆಲಸಗಳಲ್ಲಿ ಕೆಲವನ್ನು ನಡೆಸಲು ಎಣ್ಣುಕಗಳಿಗೆ ಸಾದ್ಯವೇ ಆಗುವುದಿಲ್ಲ. ಕೆಲವು ಬಗೆಯ ಬರಹಗಳ ಮಟ್ಟಿಗಂತೂ ಈ ರೀತಿ ಎಣ್ಣುಕಳು ಕೊಡುವ ನುಡಿಮಾರಿಕೆಯನ್ನು ತಿದ್ದಲು ಹೋಗುವುದಕ್ಕಿಂತಲೂ ನೇರವಾಗಿ ಮೂಲ ಬರಹವನ್ನು ನುಡಿಮಾರುವುದೇ ಸುಳುವಾದ ಕೆಲಸವೆಂದು ಕೆಲವರಿಗೆ ಅನಿಸುತ್ತದೆ.
ಹೀಗಿದ್ದರೂ, ಎಣ್ಣುಕಗಳ ಮೂಲಕ ನುಡಿಮಾರುವ ಕೆಲಸವನ್ನು ನಾವು ಇವತ್ತು ನಡೆಸಲೇಬೇಕಾಗಿದೆ. ಇದುವರೆಗೆ ಇಂಟರ್ನೆಟ್ನಲ್ಲಿ ಹೆಚ್ಚಿನ ವಿಶಯ ಗಳೂ ಇಂಗ್ಲಿಶ್ನಲ್ಲೇ ಕಾಣಿಸಿಕೊಳ್ಳುತ್ತಿದ್ದುವು. ಹಾಗಾಗಿ, ಇಂಗ್ಲಿಶ್ ನುಡಿ ಗೊತ್ತಿದ್ದರೆ, ನಮಗೆ ಬೇಕಾದುದನ್ನೆಲ್ಲ ಇಂಟರ್ನೆಟ್ನಲ್ಲಿ ಪಡೆಯಬಹುದೆಂಬ ಅನಿಸಿಕೆಯಿತ್ತು.
ಆದರೆ, ಇತ್ತೀಚೆಗೆ ಅದರಲ್ಲಿ ಬೇರೆ ನುಡಿಗಳ ಬಳಕೆ ಹೆಚ್ಚುತ್ತಾ ಹೋಗುತ್ತಿದೆ. ಎತ್ತುಗೆಗಾಗಿ, ಜಪಾನಿನ ಇಂಟರ್ನೆಟ್ ನೆಲೆಗಳಲ್ಲಿ ಹೆಚ್ಚಿನವೂ ಜಪಾನೀಸ್ ನುಡಿಯಲ್ಲೇ ಇವೆ. ಹಾಗಾಗಿ, ಇಂಟರ್ನೆಟ್ ಮೂಲಕ ಹೆಚ್ಚು ಹೆಚ್ಚು ವಿಶಯಗಳನ್ನು ತಿಳಿಯಬೇಕೆಂದಿರುವವರು ಇಲ್ಲವೇ ಹೆಚ್ಚು ಹೆಚ್ಚು ಜನರನ್ನು ಅವುಗಳ ಮೂಲಕ ತಲುಪಬೇಕೆಂದಿರುವವರು ಇಂಗ್ಲಿಶ್ ನುಡಿ ಯೊಂದನ್ನೇ ನಂಬಿಕೊಂಡಿದ್ದರೆ ಸಾಲದು.
ಇಂಟರ್ನೆಟ್ನಲ್ಲಿ ಒಂದಕ್ಕಿಂತ ಹೆಚ್ಚು ನುಡಿಗಳಲ್ಲಿ ಬಂದಿರುವ ವಿಶಯ ಗಳನ್ನು ತಿಳಿಯಬೇಕೆಂದಿರುವವರಿಗೆ ಎಣ್ಣುಕದ ನುಡಿಮಾರಿಕೆ ನೆರವಿಗೆ ಬರ ಬಲ್ಲುದು. ಎತ್ತುಗೆಗಾಗಿ, ಇಂಗ್ಲಿಶ್ನಿಂದ ಕನ್ನಡಕ್ಕೆ ನುಡಿಮಾರುವ ಏರ್ಪಾಡು ಇಂಟರ್ನೆಟ್ನಲ್ಲೇ ಇದೆಯಾದರೆ, ಅದನ್ನು ಬಳಸಿ ಇಂಗ್ಲಿಶ್ನಲ್ಲಿರುವ ಯಾವ ಬರಹವನ್ನು ಬೇಕಿದ್ದರೂ ನೇರವಾಗಿ ಆ ಏರ್ಪಾಡಿನ ಮೂಲಕ ಕನ್ನಡಕ್ಕೆ ಮಾರ್ಪಡಿಸಿ ಓದಲು ಇಂಗ್ಲಿಶ್ ತಿಳಿಯದ ಕನ್ನಡಿಗರಿಗೂ ಸಾದ್ಯವಾಗಬಹುದು. ಇದಲ್ಲದೆ, ಇಂತಹ ಬೇರೆ ಹಲವು ನುಡಿಗಳಲ್ಲಿರುವ ಬರಹಗಳನ್ನು ಕನ್ನಡಕ್ಕೆ ನುಡಿಮಾರುವಂತಹ ಏರ್ಪಾಡುಗಳನ್ನು ಇಂಟರ್ನೆಟ್ನಲ್ಲಿ ಅಳವಡಿಸಿ ಕೊಂಡೆವಾದರೆ, ಅವುಗಳಲ್ಲಿ ಯಾವ ನುಡಿಯಲ್ಲಿರುವ ಬರಹವನ್ನು ಬೇಕಿದ್ದರೂ
ಎಲ್ಲಾ ಕನ್ನಡಿಗರೂ ಕನ್ನಡದಲ್ಲೇನೇ ಇಂಟರ್ನೆಟ್ನಲ್ಲಿ ಓದಿ ತಿಳಿದುಕೊಳ್ಳಲು ಬರುವವಂತೆ ಮಾಡಬಲ್ಲೆವು.
ಮೊದಮೊದಲಿಗೆ ಇಂತಹ ಎಣ್ಣುಕಗಳ ಮೂಲಕ ನಾವು ಪಡೆಯಬಲ್ಲ ನುಡಿಮಾರಿಕೆಗಳು ತುಂಬಾ ತಪ್ಪುಗಳಿಂದ ಕೂಡಿದ್ದು, ಒರಟೊರಟಾಗಿರ ಬಹುದು. ಆದರೆ, ಇಂತಹ ಒರಟೊರಟಾದ ನುಡಿಮಾರಿಕೆಗಳಿಂದಲೂ ನಮಗೆ ನೆರವನ್ನು ಪಡೆಯಲು ಬರುತ್ತದೆ. ಯಾಕೆಂದರೆ, ಇವತ್ತು ಇಂಟರ್ನೆಟ್ನಲ್ಲಿ ನಾವು ಹುಡುಕುವ ಬರಹಗಳಲ್ಲಿ ಹೆಚ್ಚಿನವೂ ತಿಳಿವಿಗೆ ಸಂಬಂದಿಸಿದವು. ಒರಟು ನುಡಿಮಾರಿಕೆಗಳು ಇಂತಹದೊಂದು ಬರಹದಲ್ಲಿ ಎಂತಹ ತಿಳಿವು ಸಿಗಬಲ್ಲುದು, ಅದು ನಮಗೆ ಬೇಕಾಗಿರುವಂತಹದೇ ಅಲ್ಲವೇ ಎಂಬಶ್ಟನ್ನಾದರೂ ತಿಳಿಸ ಬಲ್ಲುವು. ಅದು ಬೇಕಾಗಿರುವಂತಹದೆಂದು ಗೊತ್ತಾದ ಮೇಲೆ ಬೇಕಿದ್ದರೆ, ನುಡಿಮಾರುಗರ ನೆರವಿನಿಂದ ಅದರ ಒಳ್ಳೆಯ ನುಡಿಮಾರಿಕೆಯನ್ನು ಪಡೆಯಲು ಹೋಗಬಹುದು.
8.5.1 ಎಣ್ಣುಕದ ಹಮ್ಮುಗೆಗಳು
ನುಡಿಮಾರಿಕೆಗೆ ಎಣ್ಣುಕವನ್ನು ಬಳಸತೊಡಗಿದ ಸಮಯದಲ್ಲಿ, ಅದರ ಮೂಲಕ ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನೇರವಾಗಿ ನುಡಿಮಾರ ಬಹುದೆಂಬ ಅನಿಸಿಕೆ ತಿಳಿವಿಗರಲ್ಲಿತ್ತು. ಬರಹದಲ್ಲಿ ಬರುವ ಪದಗಳನ್ನು ಒಂದೊಂದಾಗಿ ಇನ್ನೊಂದು ನುಡಿಗೆ ಬದಲಾಯಿಸಿದಲ್ಲಿ, ಮತ್ತು ಅವನ್ನು ಸೊಲ್ಲುಗಳಾಗಿ ಜೋಡಿಸುವ ಕ್ರಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಕೊಂಡಲ್ಲಿ, ಅದು ಆ ಇನ್ನೊಂದು ನುಡಿಯ ಬರಹವಾಗಬಲ್ಲುದು ಎಂಬುದಾಗಿ ಅವರು ಬಾವಿಸಿದ್ದರು. ಇಂಗ್ಲಿಶ್ ಮತ್ತು ರಶ್ಯನ್ ನುಡಿಗಳ ನಡುವೆ ಇಂತಹ ಎಣ್ಣುಕದ ನುಡಿಮಾರಿಕೆಯನ್ನು ನಡೆಸಲು ಕೆಲವು ಪ್ರಯತ್ನಗಳನ್ನೂ ನಡೆಸ ಲಾಯಿತು.
ಆದರೆ, ಇಂತಹ ಪ್ರಯತ್ನಗಳನ್ನು ಕಯ್ಗೆತ್ತಿಕೊಂಡಾಗ ಹಲವಾರು ತೊಡಕುಗಳು ಕಾಣಿಸಿಕೊಂಡುವು. ಮುಕ್ಯವಾಗಿ, ಸೊಲ್ಲುಗಳ ಇಟ್ಟಳವೆಂತಹದು ಎಂಬುದನ್ನು ತಿಳಿದುಕೊಳ್ಳದೆ ಒಂದು ನುಡಿಯ ಸೊಲ್ಲುಗಳನ್ನು ಇನ್ನೊಂದು ನುಡಿಯ ಸೊಲ್ಲುಗಳಾಗಿ ನುಡಿಮಾರಲು ಬರುವುದಿಲ್ಲವೆಂಬ ವಿಶಯ ಈ ಪ್ರಯತ್ನಗಳಿಂದ ಗೊತ್ತಾಯಿತು. ಹಾಗಾಗಿ, ಆಮೇಲಿನ ಪ್ರಯತ್ನಗಳಲ್ಲೆಲ್ಲ ಮೂಲ ನುಡಿಯ ಬರಹದಲ್ಲಿರುವ ಪದಗಳನ್ನು ಈಡುನುಡಿಯ ಪದಗಳೊಂದಿಗೆ
ಹೊಂದಿಸುವುದರೊಂದಿಗೆ ಮೂಲ ಬರಹದಲ್ಲಿರುವ ಸೊಲ್ಲಿನ ಇಟ್ಟಳಗಳನ್ನೂ ಈಡುನುಡಿಯ ಇಟ್ಟಳಗಳೊಂದಿಗೆ ಹೊಂದಿಸಲಾಗುತ್ತಿದೆ.
ಎಣ್ಣುಕಗಳು ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಹಲವು ಬಗೆಯ ಅರಿವು ಬೇಕಾಗುತ್ತದೆ. ಬರಹದಲ್ಲಿ ಬಳಕೆಯಾಗುವ ಪದಗಳಿಗೆ ಎಂತಹ ಹುರುಳುಗಳೆಲ್ಲ ಇವೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದಕ್ಕಾಗಿ ಅವುಗಳಲ್ಲಿ ಪದನೆರಕೆಗಳಿರಬೇಕು. ಪದಗಳು ಸೊಲ್ಲುಗಳಲ್ಲಿ ಹೇಗೆ ಬಳಕೆ ಯಾಗುತ್ತವೆ, ಮತ್ತು ಹಾಗೆ ಬಳಕೆಯಾಗುವಾಗ ಅವುಗಳ ಹಲವು ಹುರುಳು ಗಳಲ್ಲಿ ಒಂದು ಹೇಗೆ ಆಯ್ಕೆಗೊಳ್ಳುತ್ತದೆ ಎಂಬುದನ್ನು ಅವು ಅರಿತಿರಬೇಕು, ಮತ್ತು ಇದನ್ನು ಅವಕ್ಕೆ ತಿಳಿಸಬಲ್ಲ ಸೊಲ್ಲರಿಮೆಯ ಕಟ್ಟಲೆಗಳು ಅವುಗಳಲ್ಲಿ ಇರಬೇಕು.
ಬರಹಗಳಲ್ಲಿ ಬರುವ ಪದಗಳ ಹುರುಳು ಅವನ್ನು ಬಳಸಿರುವ ಕುಳ್ಳಿಹ (ಸಂದರ್ಬ)ದ ಮೇಲೂ ಅವಲಂಬಿಸಿರುತ್ತದೆ. ಮಾನವನ ಮಿದುಳು ಈ ವ್ಯತ್ಯಾಸ ವನ್ನು ಸುಳುವಾಗಿ ಅರಿತುಕೊಂಡು, ಕುಳ್ಳಿಹಕ್ಕೆ ಹೊಂದಿಕೆಯಾಗುವಂತಹ ಹುರುಳನ್ನು ಸುಳುವಾಗಿ ಆಯ್ದುಕೊಳ್ಳಬಲ್ಲುದು. ಆದರೆ, ಈ ಕೆಲಸವನ್ನು ನಡೆಸಲು ಬೇಕಾಗುವ ಅರಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಹಾಗಾಗಿ, ಈ ವಿಶಯದಲ್ಲಿ ಎಣ್ಣುಕ ಗಳು ತುಂಬಾ ತಪ್ಪು ಮಾಡುತ್ತಿವೆ.
8.5.2 ಮಾರೆಡೆ ಹಮ್ಮುಗೆ
ಇವತ್ತು ನುಡಿಮಾರುವ ಕೆಲಸಕ್ಕಾಗಿ ಎಣ್ಣುಕಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲಾಗುತ್ತದೆ. ಇವನ್ನು ಮಾರೆಡೆ ಹಮ್ಮುಗೆ ಮತ್ತು ಎಡೆನುಡಿ ಹಮ್ಮುಗೆ ಎಂಬುದಾಗಿ ಕರೆಯಬಹುದು. ಇವುಗಳಲ್ಲಿ ಮೊದಲನೆಯದನ್ನು ಬಳಸುವವರು ತಿಳಿವನ್ನು ನೇರವಾಗಿ ಮೂಲನುಡಿಯಿಂದ ಈಡುನುಡಿಗೆ ಮಾರೆಡೆಗೊಳಿಸು(ವರ್ಗಾಯಿಸು)ತ್ತಾರೆ, ಮತ್ತು ಎರಡನೆಯದನ್ನು ಬಳಸುವವರು ತಿಳಿವನ್ನು ಮೊದಲಿಗೆ ಒಂದು ಕಲ್ಪಿತವಾಗಿರುವ ಎಡೆನುಡಿಗೆ ಮಾರೆಡೆಗೊಳಿಸಿ, ಅಲ್ಲಿಂದ ಈಡುನುಡಿಗೆ ಮಾರೆಡೆಗೊಳಿಸುತ್ತಾರೆ.
ಮಾರೆಡೆ ಹಮ್ಮುಗೆಯಲ್ಲಿ ಮೂರು ಹಂತಗಳಿರುತ್ತವೆ: ಮೊದಲನೆಯ ಹಂತದಲ್ಲಿ ಮೂಲ ಬರಹದ ಹುರುಳೇನು ಎಂಬುದನ್ನು ಕಂಡುಹಿಡಿದು, ಅದನ್ನು ಮೂಲನುಡಿಯದೇ ಆದ ಒಂದು ಕಲ್ಪಿತ ರೂಪಕ್ಕೆ ಬದಲಾಯಿಸ ಲಾಗುತ್ತದೆ; ಎರಡನೆಯ ಹಂತದಲ್ಲಿ ಅದನ್ನು ಅಂತಹದೇ ಆದ ಒಂದು
ಈಡುನುಡಿಯ ಕಲ್ಪಿತ ರೂಪಕ್ಕೆ ಮಾರೆಡೆಗೊಳಿಸಲಾಗುತ್ತದೆ; ಮತ್ತು ಮೂರನೆಯ ಹಂತದಲ್ಲಿ ಈಡುನುಡಿಯ ಈ ಕಲ್ಪಿತ ರೂಪವನ್ನು ಅದರ ಬರಹರೂಪಕ್ಕೆ ಮಾರ್ಪಡಿಸಲಾಗುತ್ತದೆ.
ಮೂಲ ಬರಹದ ಹುರುಳನ್ನು ಕಂಡುಹಿಡಿಯಲು ಮೊದಲನೆಯ ಹಂತದಲ್ಲಿ ಅದರ ಸೊಲ್ಲುಗಳನ್ನು ಬಿಡಿಸಿನೋಡಲಾಗುತ್ತದೆ. ಅದರಲ್ಲಿ ಬಳಕೆಯಾಗಿರುವ ಪದಗಳು ಎಂತಹವು (ಹೆಸರುಪದಗಳೇ, ಎಸಕಪದಗಳೇ ಇಲ್ಲವೇ ಸೊಲ್ಲರಿಮೆಗೆ ಸಂಬಂದಿಸಿದ ಪದಗಳೇ), ಅವನ್ನು ಯಾವ ಹುರುಳಿನಲ್ಲಿ ಬಳಸಲಾಗಿದೆ, ಬರಹದಲ್ಲಿ ಬರುವ ಸೊಲ್ಲುಗಳ ಇಟ್ಟಳ ಎಂತಹದು, ಇಪ್ಪುರುಳಿನ ಇಟ್ಟಳವಿರುವ ಸೊಲ್ಲುಗಳನ್ನು, ನುಡಿಗಟ್ಟುಗಳನ್ನು ಇಲ್ಲವೇ ಮಾರ್ಪುರುಳು(ರೂಪಕ)ಗಳನ್ನು ಬಳಸಲಾಗಿದೆಯಾದರೆ ಅವು ಎಂತಹ ಹುರುಳುಗಳಲ್ಲಿ ಬಳಕೆಯಾಗಿವೆ ಎಂಬಂತಹ ಹಲವಾರು ವಿಶಯಗಳನ್ನು ತೀರ್ಮಾನಿಸಿಕೊಳ್ಳುವ ಕೆಲಸವನ್ನು ಈ ಹಂತದಲ್ಲಿ ನಡೆಸಬೇಕಾಗುತ್ತದೆ.
ಈ ರೀತಿ ಮೂಲ ಬರಹದ ಪದಗಳು, ಸೊಲ್ಲರಿಮೆಯ ಇಟ್ಟಳಗಳು, ಮತ್ತು ಅವೆರಡರ ಮೂಲಕ ಹುರುಳುಗಳನ್ನು ಗುರುತಿಸಿರುವ ಬಗೆ - ಇವನ್ನೆಲ್ಲ ಬಿಡಿಸಿಟ್ಟಾಗ, ಆ ಬರಹದ ಕಲ್ಪಿತ ರೂಪವೊಂದು ದೊರೆಯುತ್ತದೆ.
ಎರಡನೆಯ ಹಂತದಲ್ಲಿ ಮೂಲ ಬರಹದ ಈ ಕಲ್ಪಿತ ರೂಪವನ್ನು ಈಡು ಬರಹದ ಕಲ್ಪಿತ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಇದಕ್ಕಾಗಿ, ಮೂಲನುಡಿಗೂ ಈಡುನುಡಿಗೂ ನಡುವೆ ಪದಗಳಲ್ಲಿ, ಸೊಲ್ಲಿನ ಇಟ್ಟಳಗಳಲ್ಲಿ, ಮತ್ತು ಅವುಗಳ ಮೂಲಕ ಹುರುಳುಗಳನ್ನು ಗುರುತಿಸುವ ಬಗೆಯಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆಯೋ ಅವನ್ನೆಲ್ಲ ಬಳಸಿಕೊಳ್ಳಬೇಕಾಗುತ್ತದೆ.
ಮೂರನೆಯ ಹಂತದಲ್ಲಿ ಈಡು ಬರಹದ ಈ ಕಲ್ಪಿತ ರೂಪವನ್ನು ಅದರ ನಿಜವಾದ ಬರಹ ರೂಪಕ್ಕೆ ಮಾರ್ಪಡಿಸಲಾಗುತ್ತದೆ. ಎಸಕ ಪದಗಳಿಗೆ ಹಿಂಬೊತ್ತನ್ನು (ಬೂತಕಾಲವನ್ನು) ಇಲ್ಲವೇ ಮುಂಬೊತ್ತನ್ನು (ಬವಿಶ್ಯತ್ಕಾಲ ವನ್ನು) ತಿಳಿಸುವ ಪದರೂಪಗಳನ್ನು ಕೊಡುವುದು, ಹೆಸರುಪದಗಳಿಗೆ ಅವುಗಳ ಪಾಂಗುಗಳನ್ನು ಗುರುತಿಸುವ ಅನ್ನು, ಇಂದ, ಗೆ, ಮತ್ತು ಅಲ್ಲಿ ಎಂಬ ಒಟ್ಟುಗಳಲ್ಲಿ ಒಂದನ್ನು ಸೇರಿಸುವುದು, ಹೆಸರುಪದಗಳಿಗೂ ಎಸಕಪದಗಳಿಗೂ ನಡುವೆ ಹೊಂದಾಣಿಕೆಯನ್ನು ಉಂಟುಮಾಡುವುದು ಮೊದಲಾದ ಕೆಲಸಗಳನ್ನು ಈ ಹಂತದಲ್ಲಿ ನಡೆಸಲಾಗುತ್ತದೆ.
ಈ ಮೂರು ಹಂತಗಳಿಗೆ ಬೇಕಾಗುವ ಕೆಲಸಗಳನ್ನು ನಡೆಸುವುದಕ್ಕಾಗಿ ಎಣ್ಣುಕಕ್ಕೆ ಮೂರು ಬಗೆಯ ಪದನೆರಕೆಗಳನ್ನು ಒದಗಿಸಬೇಕಾಗುತ್ತದೆ:
ಮೂಲನುಡಿಯ ಪದರೂಪಗಳ, ಸೊಲ್ಲರಿಮೆಯ ಮತ್ತು ಹುರುಳುಗಳ ತಿಳಿವನ್ನು ಕೊಡುವ ಪದನೆರಕೆ; ಈಡುನುಡಿಯ ಕುರಿತಾಗಿ ಅಂತಹದೇ ತಿಳಿವನ್ನು ಕೊಡುವ ಇನ್ನೊಂದು ಪದನೆರಕೆ; ಮತ್ತು ಈ ಎರಡರ ನಡುವಿನ ಪತ್ತುಗೆ(ಸಂಬಂದ) ಯನ್ನು ತಿಳಿಸುವ ಮೂರನೆಯದೊಂದು ಇನ್ನುಡಿಯ ಪದನೆರಕೆ.
ಎಣ್ಣುಕಗಳಿಗೆ ಒದಗಿಸಬೇಕಾಗಿರುವ ಈ ವಿಶಯಗಳನ್ನು ಮೂರು ಬೇರೆ ಬೇರೆ ಅಂಗಗಳಲ್ಲಿ ಒದಗಿಸಲಾಗುತ್ತದೆ. ಎತ್ತುಗೆಗಾಗಿ, ಮೊದಲನೆಯ ಹಂತಕ್ಕೆ ಬೇಕಾಗುವ ವಿಶಯಗಳನ್ನು ಪದ ಮತ್ತು ಪದರೂಪಕ್ಕೆ ಸಂಬಂದಿಸಿದವು, ಸೊಲ್ಲರಿಮೆಗೆ ಸಂಬಂದಿಸಿದವು, ಮತ್ತು ಹುರುಳುಗಳಿಗೆ ಸಂಬಂದಿಸಿದವು ಎಂಬುದಾಗಿ ಮೂರು ಅಂಗಗಳಲ್ಲಿ ಬೇರ್ಪಡಿಸಿ ಕೊಡಲಾಗುತ್ತದೆ.
ಇದೇ ರೀತಿಯಲ್ಲಿ, ಎರಡನೇ ಮತ್ತು ಮೂರನೇ ಹಂತಗಳಿಗೆ ಬೇಕಾಗುವ ವಿಶಯಗಳನ್ನೂ ಮೂರು ಬೇರೆ ಬೇರೆ ಅಂಗಗಳಲ್ಲಿ ಬೇರ್ಪಡಿಸಿ ಕೊಡಲಾಗು ತ್ತದೆ. ಹೀಗೆ ಮಾಡುವುದರಿಂದಾಗಿ, ಮುಂದೆ ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಕೆಲಸ ಹೆಚ್ಚು ಸುಳುವಿನದಾಗುತ್ತದೆ.
8.5.3 ಎಡೆನುಡಿ ಹಮ್ಮುಗೆ
ಮಾರೆಡೆ ಹಮ್ಮುಗೆಗಿಂತ ಎಡೆನುಡಿ ಹಮ್ಮುಗೆ ಸೊಲ್ಲುಗಳಿಗೆ ಕಲ್ಪಿತ ರೂಪವನ್ನು ಕೊಡುವಲ್ಲಿ ಮಾತ್ರ ಬೇರಾಗಿರುತ್ತದೆ. ಮೂಲನುಡಿಯ ಬರಹವನ್ನು ಅದರದೇ ಆದ ಕಲ್ಪಿತ ರೂಪಕ್ಕೆ ಮಾರ್ಪಡಿಸುವ ಬದಲು, ಈ ಹಮ್ಮುಗೆಯಲ್ಲಿ ಅದನ್ನು ಒಂದು ಎಡೆನುಡಿಗೆ (ಕಲ್ಪಿತವಾಗಿರುವ ನುಡಿಗೆ) ಮಾರ್ಪಡಿಸಲಾಗುತ್ತದೆ.
ಹೀಗೆ ಮಾಡುವುದರಿಂದ ಸಿಗುವ ಪ್ರಯೋಜನವೇನೆಂದರೆ, ಆಮೇಲೆ ಈ ಎಡೆನುಡಿಯಿಂದ ಬೇರೆ ಯಾವ ನುಡಿಗೆ ಬೇಕಿದ್ದರೂ ಬರಹವನ್ನು ನುಡಿಮಾರ ಬಹುದು. ಎತ್ತುಗೆಗಾಗಿ, ಕನ್ನಡದ ಒಂದು ಬರಹವನ್ನು ಎಡೆನುಡಿಯ ಬರಹ ವಾಗಿ ಮಾರ್ಪಡಿಸಿದಲ್ಲಿ, ಆಮೇಲೆ ಅದನ್ನು ನೇರವಾಗಿ ತಮಿಳು, ತೆಲುಗು, ಮಲಯಾಳ, ಹಿಂದಿ ಮೊದಲಾದ ಬೇರೆ ಹಲವು ನುಡಿಗಳಲ್ಲಿ ಯಾವುದರ ಬರಹವಾಗಿ ಬೇಕಿದ್ದರೂ ಮಾರ್ಪಡಿಸಿಕೊಳ್ಳಬಹುದು. ಇದಕ್ಕೆ ಬದಲು, ಮಾರೆಡೆ ಹಮ್ಮುಗೆಯಲ್ಲಿ ಒಂದೊಂದು ನುಡಿಜೋಡಿಗೂ ನುಡಿಮಾರಲು ಬೇಕಾಗುವ ಕೆಲಸಗಳನ್ನೆಲ್ಲ ಬೇರೆ ಬೇರಾಗಿ ಮಾಡಿಕೊಳ್ಳಬೇಕಾಗುತ್ತದೆ.
ಜಗತ್ತಿನ ಎಲ್ಲಾ ನುಡಿಗಳಿಗೂ ಸಮಾನವಾಗಬಹುದಾದಂತಹ, ಎಂದರೆ ಯಾವುದೇ ಒಂದು ನುಡಿಯ ಪರಿಚೆಯನ್ನೂ ಬಳಸದಿರುವಂತಹ ಎಡೆನುಡಿ
ಯೊಂದನ್ನು ಉಂಟುಮಾಡಬಲ್ಲೆವು ಎಂಬ ಹುಚ್ಚು ಉತ್ಸಾಹ ಈ ಎಡೆನುಡಿ ಹಮ್ಮುಗೆಯನ್ನು ಹವ್ಮಿಕೊಳ್ಳಲು ಹೊರಟಿದ್ದ ತಿಳಿವಿಗರಲ್ಲಿತ್ತು. ಆದರೆ ಸಮಯ ಕಳೆದಂತೆಲ್ಲ, ಇದು ತಲಪಲಾಗದ ಗುರಿ ಎಂಬುದು ಸ್ಪಶ್ಟವಾಗುತ್ತಿದೆ.
ಎತ್ತುಗೆಗಾಗಿ, ಮೂಲ ಬರಹದಲ್ಲಿ ಕಾಣಿಸುವ ಎಲ್ಲಾ ಬಗೆಯ ಇಪ್ಪುರುಳು ಗಳನ್ನೂ ಇಂತಹ ಎಡೆನುಡಿಯಲ್ಲಿ ಬಗೆಹರಿಸಿಕೊಳ್ಳಬೇಕಾಗುತ್ತದೆ. ಆದರೆ, ಇದನ್ನು ನಡೆಸುವುದು ಅಶ್ಟೊಂದು ಸುಳುವಿನ ಕೆಲಸವೇನಲ್ಲ. ಯಾಕೆಂದರೆ, ಬೇರೆ ಬೇರೆ ನುಡಿಗಳ ನಡುವೆ ಬೇರೆ ಬೇರೆ ಬಗೆಯ ಪದ ಮತ್ತು ಇಟ್ಟಳಗಳ ಇಪ್ಪುರುಳುಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ನಾವು ಕಲ್ಪಿಸಬೇಕಾಗಿರುವ ಎಡೆನುಡಿಯನ್ನು ಜಗತ್ತಿನ ಎಲ್ಲಾ ನುಡಿಗಳೊಂದಿಗೂ ಹೋಲಿಸಿ ನೋಡದೆ ಅದರಲ್ಲಿ ಕಾಣಿಸಬಲ್ಲ ಇಪ್ಪುರುಳುಗಳನ್ನೆಲ್ಲ ಮೇಲೆ ಸೂಚಿಸಿದ ಹಾಗೆ ಬಗೆ ಹರಿಸಲು ಬರುವುದಿಲ್ಲ.
ಇಂತಹ ಹಲವು ತೊಡಕುಗಳು ಮಾರೆಡೆ ಹಮ್ಮುಗೆಯಲ್ಲಿ ಇಲ್ಲವಾಗುತ್ತವೆ. ಎತ್ತುಗೆಗಾಗಿ, ಅದರ ಮೊದಲನೇ ಹಂತದಲ್ಲಿ ಮೂಲನುಡಿಗೆ ಸಂಬಂದಿಸಿ ದಂತಹ ಇಪ್ಪುರುಳುಗಳನ್ನು ಮಾತ್ರ ಬಗೆಹರಿಸಿದರೆ ಸಾಕು; ಈಡುನುಡಿಗೆ ಸಂಬಂದಿಸಿದಂತಹ ಇಪ್ಪುರುಳುಗಳೇನಾದರೂ ಉಳಿದಿದ್ದರೆ, ಅವನ್ನು ಮಾರೆಡೆಗೊಳಿಸುವ ಎರಡನೇ ಹಂತದಲ್ಲಿ ಬಗೆಹರಿಸಬಹುದು.
ಇದಲ್ಲದೆ, ಮೂಲನುಡಿಗೂ ಈಡುನುಡಿಗೂ ನಡುವೆ ಕಾಣಿಸುವ ಹಲವು ಬಗೆಯ ಹೋಲಿಕೆಗಳನ್ನು ಮಾರೆಡೆ ಹಮ್ಮುಗೆಯಲ್ಲಿ ನಾವು ಬಳಸಿಕೊಳ್ಳ ಬಲ್ಲೆವು; ಅವೆರಡರ ನಡುವಿರುವ ವ್ಯತ್ಯಾಸಗಳನ್ನು ಮಾತ್ರ ನಾವು ಬಗೆಹರಿಸಿ ಕೊಳ್ಳಬೇಕಾಗುತ್ತದೆ. ಆದರೆ, ಎಡೆನುಡಿ ಹಮ್ಮುಗೆಯಲ್ಲಿ ನುಡಿಗಳ ನಡುವೆ ಕಾಣಿಸಿಕೊಳ್ಳಬಲ್ಲ ಎಲ್ಲಾ ಬಗೆಯ ವ್ಯತ್ಯಾಸಗಳನ್ನೂ ಬಗೆಹರಿಸಿಕೊಳ್ಳಬೇಕಾಗು ತ್ತದೆ. ಯಾಕೆಂದರೆ, ಅದು ಎಲ್ಲಾ ನುಡಿಗಳಿಗೂ ಸಮಾನವಾಗಿರುವಂತಹ ಅಂಶಗಳನ್ನಶ್ಟೇ ಒಳಗೊಳ್ಳಬೇಕಾಗಿರುತ್ತದೆ. ಈ ಕಾರಣಕ್ಕಾಗಿ, ಎಡೆನುಡಿ ಹಮ್ಮುಗೆಯಲ್ಲಿ ತುಂಬಾ ತೊಡಕು ತೊಡಕಾದ ಸೊಲ್ಲರಿಮೆಯ ಕಟ್ಟಲೆಗಳನ್ನು ಉಂಟುಮಾಡಿಕೊಳ್ಳಬೇಕಾಗುತ್ತದೆ.
ಇವತ್ತು ಎಡೆನುಡಿ ಹಮ್ಮುಗೆಗಳನ್ನು ಬಳಸುವವರಲ್ಲಿ ಹೆಚ್ಚಿನವರೂ ಕೆಲವೇ ಕೆಲವು ನುಡಿಗಳಿಗೆ ಸಮಾನವಾಗಿರುವಂತಹ ಎಡೆನುಡಿಗಳನ್ನು ಮಾತ್ರವೇ ಕಲ್ಪಿಸಿಕೊಳ್ಳುತ್ತಾರೆ. ಎತ್ತುಗೆಗಾಗಿ, ಯುರೋಪಿನ ನುಡಿಗಳ ನಡುವೆ ನುಡಿ ಮಾರುವುದಕ್ಕಾಗಿ ಉಂಟುಮಾಡಿರುವಂತಹ ಎಡೆನುಡಿ ಅಲ್ಲಿನ ನುಡಿಗಳಿಗೆ ಮಾತ್ರ ಸಮಾನವಾಗಿದೆಯಲ್ಲದೆ ಬೇರೆ ನುಡಿಗಳಿಗೆ ಸಮಾನವಾದುದಲ್ಲ.
ಹೀಗೆ ಮಾಡುವುದರಿಂದ ಅವರು ಕಲ್ಪಿಸಿಕೊಳ್ಳಬೇಕಾಗಿರುವ ಎಡೆನುಡಿ ಹೆಚ್ಚು ತೊಡಕಿನದಾಗುವುದಿಲ್ಲ.
8.5.4 ಎಣಿಕೆಯ ಹಮ್ಮುಗೆ
ಮೇಲಿನ ಎರಡು ಬಗೆಯ ಹಮ್ಮುಗೆಗಳಿಗೂ ನೆರವಾಗುವ ಹಾಗೆ, ಇನ್ನೊಂದು ಬಗೆಯ ಹಮ್ಮುಗೆಯನ್ನೂ ಕೆಲವರು ತಿಳಿವಿಗರು ಹಮ್ಮಿಕೊಂಡಿದ್ದಾರೆ. ಇದರಲ್ಲಿ ಈಗಾಗಲೇ ಉಂಟುಮಾಡಿರುವ ನುಡಿಮಾರಿಕೆಗಳನ್ನು ಬಳಸಿಕೊಳ್ಳುವಂತಹ ಅಳವನ್ನು ಎಣ್ಣುಕಗಳಿಗೆ ಕೊಡಿಸಲಾಗುತ್ತದೆ.
ಈ ಅಳವಿನ ನೆರವಿನಿಂದ, ಎಣ್ಣುಕಗಳು ಎರಡು ನುಡಿಗಳ ನಡುವೆ ಈಗಾಗಲೇ ನಡೆಸಿರುವ ನುಡಿಮಾರಿಕೆಗಳಲ್ಲಿ ಒಂದು ನುಡಿಯ ಪದ, ಪದ ರೂಪ, ಸೊಲ್ಲಿನ ಇಟ್ಟಳ ಮೊದಲಾದವುಗಳಿಗೆ ಬದಲಾಗಿ ಇನ್ನೊಂದು ನುಡಿಯಲ್ಲಿ ಯಾವ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವು ಹೆಚ್ಚಿನೆಡೆಗಳಲ್ಲೂ ಬಳಕೆಯಾಗುತ್ತವೆ ಎಂಬುದನ್ನು ಕಂಡುಕೊಳ್ಳುತ್ತವೆ, ಮತ್ತು ಈ ವಿಶಯವನ್ನು ನೆನಪಿನಲ್ಲಿರಿಸಿಕೊಂಡು, ಅಂತಹವೇ ಆದ ಪದ, ಪದರೂಪ, ಸೊಲ್ಲಿನ ಇಟ್ಟಳ ಮೊದಲಾದುವನ್ನು ಬೇಕಾದಾಗ ಬಳಸುವ ಅಳವನ್ನು ತಾವೇ ಉಂಟುಮಾಡಿಕೊಳ್ಳುತ್ತವೆ.
ಎತ್ತುಗೆಗಾಗಿ, ಇಂಗ್ಲಿಶ್ ಮತ್ತು ಫ್ರಂಚ್ ನುಡಿಗಳ ನಡುವೆ ಹಲವಾರು ಬರಹಗಳನ್ನು ಈಗಾಗಲೇ ನುಡಿಮಾರಲಾಗಿದೆ. ಈ ಬರಹಗಳಲ್ಲಿ ಯಾವ ಮೂಲನುಡಿಯ ಪದಗಳಿಗೆ ಬದಲಾಗಿ ಯಾವ ಈಡುನುಡಿಯ ಪದಗಳು ಅತಿ ಹೆಚ್ಚು ಕಡೆಗಳಲ್ಲಿ ಬಳಕೆಯಾಗುತ್ತವೆ ಎಂಬುದನ್ನು ಎಣ್ಣುಕಗಳು ಗಮನಿಸಿಕೊಳ್ಳುತ್ತವೆ. ಹೊಸದಾಗಿ ಬರಹವೊಂದನ್ನು ಇಂಗ್ಲಿಶ್ನಿಂದ ಫ್ರಂಚ್ ನುಡಿಗೆ ಇಲ್ಲವೇ ಫ್ರಂಚ್ನಿಂದ ಇಂಗ್ಲಿಶ್ ನುಡಿಗೆ ನುಡಿಮಾರಬೇಕಾದಾಗ, ಈ ಎಣ್ಣುಕಗಳು ಒಂದೊಂದು ಪದಕ್ಕೂ ಸಮನಾಗಿರುವ ಪದಗಳಲ್ಲಿ ಆ ರೀತಿ ತುಂಬಾ ಹೆಚ್ಚು ಬಾರಿ ಬಳಕೆಯಾಗಿರುವ ಪದವನ್ನೇ ಆರಿಸಿಕೊಳ್ಳುತ್ತವೆ, ಮತ್ತು ಇದರಿಂದಾಗಿ, ಅವು ನಡೆಸುವ ನುಡಿಮಾರಿಕೆ ಓದುಗರಿಗೆ ಹೆಚ್ಚು ಮೆಚ್ಚುಗೆಯಾಗುವ ಹಾಗಾಗುತ್ತದೆ.
ಆದರೆ, ಈ ಹಮ್ಮುಗೆಯನ್ನು ಬಳಸಬೇಕಿದ್ದಲ್ಲಿ ಸಾವಿರಾರು ಇರ್ನುಡಿಯ ಬರಹಗಳು ಎಣ್ಣುಕಗಳಿಗೆ ಸಿಗಬಲ್ಲ ರೂಪದಲ್ಲಿ ಇರಬೇಕಾಗುತ್ತದೆ. ಹಾಗಾಗಿ, ಸದ್ಯಕ್ಕಂತೂ ಈ ಹಮ್ಮುಗೆಯನ್ನು ಇಂಗ್ಲಿಶ್, ಫ್ರಂಚ್, ಜರ್ಮನ್ ಮೊದಲಾದ ಕೆಲವೇ ಕೆಲವು ನುಡಿಗಳಲ್ಲಿ ಮಾತ್ರ ಬಳಸಬಲ್ಲೆವು.
8.5.5 ಎಣ್ಣುಕಗಳ ತೊಡಕುಗಳು
ನುಡಿಮಾರುವಲ್ಲಿ ಎಣ್ಣುಕಗಳು ಹಲವು ಬಗೆಯ ತೊಡಕುಗಳನ್ನು ಎದುರಿಸ ಬೇಕಾಗುತ್ತದೆ. ಅವುಗಳಲ್ಲಿ ಕೆಲವನ್ನು ಹಮ್ಮುಗೆಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಬಗೆಹರಿಸಬಹುದು; ಆದರೆ ಬೇರೆ ಕೆಲವನ್ನು ಸದ್ಯಕ್ಕಂತೂ ಬಗೆಹರಿಸಲಾರೆವೆಂದೇ ಹೇಳಬೇಕಾಗುತ್ತದೆ. ಎಣ್ಣುಕಗಳು ಕೊಡುವ ಬರಹ ವನ್ನು ನುಡಿಮಾರುಗರಿಂದ ತಿದ್ದಿಸುವ ಮೂಲಕವೇನೇ ಇಂತಹ ತೊಡಕು ಗಳಿಂದಾಗಿ ಮೂಡಿಬರುವ ತಪ್ಪುಗಳನ್ನು ಸರಿಪಡಿಸಬೇಕಾಗುತ್ತದೆ.
ಬರಹಗಳಲ್ಲಿ ಕಾಣಿಸಿಕೊಳ್ಳುವ ಇಪ್ಪುರುಳುಗಳು ಸಾಮಾನ್ಯವಾಗಿ ಓದುಗರಿಗೆ ಯಾವ ತೊಂದರೆಯನ್ನೂ ಕೊಡುವುದಿಲ್ಲ. ಯಾಕೆಂದರೆ, ಅವರಿಗೆ ಸೊಲ್ಲು ಗಳನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದಿಂದ, ಇಲ್ಲವೇ ತಮ್ಮ ಅನುಬವದಿಂದ ಸರಿಯಾದ ಹುರುಳನ್ನು ಆರಿಸಿಕೊಳ್ಳಲು ಬರುತ್ತದೆ. ಆದರೆ, ಎಣ್ಣುಕಗಳಿಗೆ ಅವು ತುಂಬಾ ತೊಂದರೆ ಕೊಡುತ್ತವೆ. ಯಾಕೆಂದರೆ, ಕುಳ್ಳಿಹದ ತಿಳಿವನ್ನು ಎಣ್ಣುಕಗಳಿಗೆ ಕೊಡಿಸುವುದು ಹೇಗೆ ಎಂಬುದಿನ್ನೂ ತಿಳಿವಿಗರಿಗೆ ಗೊತ್ತಾಗಿಲ್ಲ. ಇದಲ್ಲದೆ, ಎಣ್ಣುಕಗಳಿಗೆ ಪದಗಳ ಹುರುಳನ್ನು ಗಮನಿಸಲು ಬರುತ್ತದಲ್ಲದೆ ಅವುಗಳ ತಿಳಿವನ್ನು ಗಮನಿಸಲು ಬರುವುದಿಲ್ಲ (8.1.1 ನೋಡಿ). ಹಾಗಾಗಿ, ಮೂಲನುಡಿಯ ಬರಹದಲ್ಲಿ ಕಾಣಿಸುವ ಪದ ಮತ್ತು ಸೊಲ್ಲುಗಳ ಹುರುಳು ಎಂತಹದು ಎಂಬುದನ್ನು ಮಾತ್ರವೇ ಅವು ಬಳಸಿಕೊಳ್ಳಬಲ್ಲುವಲ್ಲದೆ, ನೇರವಾಗಿ ಪದ ಮತ್ತು ಸೊಲ್ಲುಗಳು ಓದುಗರಲ್ಲಿ ಮೂಡಿಸುವಂತಹ ತಿಳಿವು ಎಂತಹದು ಎಂಬುದನ್ನು ಅವು ಬಳಸಿಕೊಳ್ಳಲಾರವು.
ಮೇಲೆ ಸೂಚಿಸಿದ ಹಾಗೆ, ಪದಗಳ ತಿಳಿವನ್ನು ಅವುಗಳ ಹುರುಳುಗಳು ಪೂರ್ತಿಯಾಗಿ ಕೊಡಲಾರವು. ಯಾಕೆಂದರೆ, ಎರಡು ಪದಗಳ ನಡುವೆ ತಿಳಿವಿನಲ್ಲಿ ತುಸುವಾದರೂ ವ್ಯತ್ಯಾಸ ಇದ್ದೇ ಇರುತ್ತದೆ. ಹಾಗಾಗಿ, ಒಂದು ಪದವನ್ನು ಇನ್ನೊಂದು ಪದದ ಹುರುಳಾಗಿ ಕೊಡುವಾಗಲೆಲ್ಲ ಇಂತಹ ತಿಳಿವಿನ ವ್ಯತ್ಯಾಸ ಗಳನ್ನು ಕಡೆಗಣಿಸುತ್ತಲೇ ಇರಬೇಕಾಗುತ್ತದೆ. ಎಲ್ಲಾ ನುಡಿಗಳಿಗೂ ಸಮಾನವಾಗ ಬಲ್ಲ ಎಡೆನುಡಿಯೊಂದನ್ನು ಉಂಟುಮಾಡುವಲ್ಲಿ ಇದೂ ಒಂದು ತೊಡಕಾಗಿದೆ.
8.5.6 ಒಳನುಡಿಗಳ ನುಡಿಮಾರಿಕೆ
ಕೆಲವು ಅರಿಮೆ(ವಿಜ್ನಾನ)ಗಳಿಗೆ ಮತ್ತು ಪಳಗಿಕೆಗಳಿಗೆ ಸಂಬಂದಿಸಿದಂತೆ ಅವುಗಳವೇ ಆದ ಒಳನುಡಿಗಳು ಬೆಳೆದು ಬಂದಿರುತ್ತವೆ. ಎತ್ತುಗೆಗಾಗಿ,
ಕೋರ್ಟುಗಳಿಗೆ ಸಂಬಂದಿಸಿದಂತೆ ಒಳನುಡಿಯೊಂದು ಬಳಕೆಗೆ ಬಂದಿದ್ದು, ಕೋರ್ಟಿನ ಬರಹಗಳಲ್ಲೆಲ್ಲ ಅದರ ಬಳಕೆಯಾಗುವುದನ್ನು ಕಾಣಬಹುದು. ಇದೇ ರೀತಿಯಲ್ಲಿ ಹಲವು ಬಗೆಯ ಅರಿಮೆಯ (ವಿಜ್ನಾನದ) ಬರಹಗಳಲ್ಲೂ ಅವುಗಳದೇ ಆದ ಒಳನುಡಿಗಳು ಬಳಕೆಯಾಗುತ್ತಿರುತ್ತವೆ. ಈ ರೀತಿ ತಮ್ಮದೇ ಆದ ಒಂದು ಒಳನುಡಿಯನ್ನು ಬಳಸುವ ಬರಹಗಳನ್ನು ಎಣ್ಣುಕಗಳ ಮೂಲಕ ನುಡಿಮಾರುವುದು ಹೆಚ್ಚು ಸುಳುವಾದ ಕೆಲಸ.
ಯಾಕೆಂದರೆ, ಇಂತಹ ಬರಹಗಳಲ್ಲೆಲ್ಲ ಒಂದು ಬಗೆಯ ವಿಶಯ ಮಾತ್ರ ಬರುತ್ತದೆಯಾದ ಕಾರಣ, ಅವುಗಳಲ್ಲಿ ಬಳಕೆಯಾಗುವ ಪದಗಳ ಎಣಿಕೆ ದಿನಬಳಕೆಯ ನುಡಿಯಲ್ಲಿ ಬಳಕೆಯಾಗುವ ಪದಗಳ ಎಣಿಕೆಗಿಂತ ತುಂಬಾ ಕಡಿಮೆ ಇರುತ್ತದೆ. ಇದಲ್ಲದೆ, ಈ ಪದಗಳಿಗೆ ಕಟ್ಟುನಿಟ್ಟಾದ ಹುರುಳೂ ಇರುತ್ತದೆ. ಹಾಗಾಗಿ, ಎಣ್ಣುಕಗಳಿಗೆ ಈ ಬರಹಗಳಲ್ಲಿ ಬರುವ ಪದಗಳ ಹುರುಳುಗಳನ್ನು ಕಂಡುಹಿಡಿಯಲು ಹೆಚ್ಚು ತೊಂದರೆಯಾಗುವುದಿಲ್ಲ.
ಇಂತಹ ಬರಹಗಳಲ್ಲಿ ಕೆಲವೇ ಕೆಲವು ಸೊಲ್ಲಿನ ಇಟ್ಟಳಗಳು ಮಾತ್ರ ಬರುತ್ತಿರುತ್ತವೆ. ಹಾಗಾಗಿ, ಅವುಗಳನ್ನು ನುಡಿಮಾರಲು ಬೇಕಾಗುವ ಸೊಲ್ಲರಿಮೆಯ ತಿಳಿವನ್ನು ಎಣ್ಣುಕಗಳಿಗೆ ಕೊಡಿಸಲು ಹೆಚ್ಚು ತೊಂದರೆಯಾಗುವು ದಿಲ್ಲ. ದಿನಬಳಕೆಯ ನುಡಿಯಲ್ಲಿ ಬಾರದಿರುವಂತಹ ಕೆಲವು ಇಟ್ಟಳಗಳೂ ಇವುಗಳಲ್ಲಿ ಬಳಕೆಯಾಗುತ್ತಿರಬಹುದು. ಆದರೆ, ಇವು ಆ ಒಳನುಡಿಯ ಎಲ್ಲಾ ಬರಹಗಳಲ್ಲೂ ಬರುವ ಕಾರಣ, ಅವುಗಳಿಂದಲೂ ಹೆಚ್ಚು ತೊಂದರೆಯಾಗುವು
ಇದಲ್ಲದೆ, ನುಡಿಗಟ್ಟುಗಳು ಮತ್ತು ಮಾರ್ಪುರುಳಿನ ಪದಗಳು ಇಲ್ಲವೇ ಪದಕಂತೆಗಳು ಇಂತಹ ಬರಹಗಳಲ್ಲಿ ಬಳಕೆಯಾಗುವುದು ತುಂಬಾ ಕಡಿಮೆ. ಆದರೆ, ಸೊಲ್ಲರಿಮೆಯ ಮಾರ್ಪುರುಳುಗಳು ಹೆಚ್ಚು ಬಳಕೆಯಾಗುತ್ತವೆ. ಹಾಗಾಗಿ, ಅವನ್ನು ಸೊಲ್ಲುಗಳೊಂದಿಗೆ ಸಂಬಂದಿಸುವ ಬಗೆಯನ್ನು ಎಣ್ಣುಕಗಳಿಗೆ ತಿಳಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಗಾಗಿ, ಒಳನುಡಿಯಲ್ಲಿ ಬರೆದಿರುವ ಬರಹಗಳನ್ನು ನುಡಿಮಾರುವುದಕ್ಕಾಗಿ ಎಣ್ಣುಕಗಳನ್ನು ಬಳಸಿಕೊಳ್ಳುವುದು ದಿನಬಳಕೆಯ ನುಡಿಯಲ್ಲಿ ಬರೆದಿರುವ ಬರಹಗಳನ್ನು ನುಡಿಮಾರುವುದಕ್ಕಾಗಿ ಬಳಸಿಕೊಳ್ಳುವು ದಕ್ಕಿಂತ ಹೆಚ್ಚು ಸುಳುವಾದ ಕೆಲಸವಾಗಿದೆ. ಇದಲ್ಲದೆ, ಎಣ್ಣುಕಗಳು ಕೊಡಬಲ್ಲ ನುಡಿಮಾರಿಕೆಗಳು ಒಳನುಡಿಯವಾಗಿದ್ದಲ್ಲಿ, ಅವು ಹೆಚ್ಚು ಮಂದಿ ಓದುಗರಿಗೆ ಮೆಚ್ಚುಗೆಯಾಗಬಲ್ಲುವು.
8.5.7 ಎಣ್ಣುಕಗಳಿಗಾಗಿ ಬರೆಯುವುದು
ಎಣ್ಣುಕಗಳ ತೊಡಕನ್ನು ಕಡಿಮೆ ಮಾಡಲು ನಮ್ಮೆದುರಿಗಿರುವ ಇನ್ನೊಂದು ಉಪಾಯವೆಂದರೆ, ಅವುಗಳಿಗೆ ನುಡಿಮಾರಲು ಸುಳುವಾಗುವ ಹಾಗೆ ಬರಹವನ್ನು ತಿದ್ದಿ ಬರೆಯುವುದು, ಇಲ್ಲವೇ ಬರೆಯುವಾಗಲೇನೇ ಅವಕ್ಕೆ ಅನುಕೂಲವಾಗುವ ಹಾಗೆ ಬರೆಯುವುದು. ಎತ್ತುಗೆಗಾಗಿ, ಎಲ್ಲಾ ರಾಜ್ಯಗಳಿಗೂ ಕಳಿಸಿಕೊಡಬೇಕಾಗಿರುವ ಒಂದು ವರದಿಯನ್ನು ಬರೆಯುವಾಗಲೇನೇ ಎಣ್ಣುಕ ಗಳಿಗೆ ಅನುಕೂಲವಾಗುವ ಹಾಗೆ ಬರೆದಲ್ಲಿ, ಅದನ್ನು ನೇರವಾಗಿ, ಮತ್ತು ಹೆಚ್ಚುನ ಓದುಗರಿಗೂ ಮೆಚ್ಚುಗೆಯಾಗುವ ಹಾಗೆ ಎಣ್ಣುಕಗಳ ಮೂಲಕ ನುಡಿಮಾರಿ ಆಯಾ ರಾಜ್ಯಗಳಿಗೆ ಕಳಿಸಿಕೊಡಬಹುದು.
ಒಂದು ಬರಹ ಎಣ್ಣುಕಗಳಿಗೆ ಅನುಕೂಲವಾಗಬೇಕಿದ್ದಲ್ಲಿ, ಅದರಲ್ಲಿ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಿರಬೇಕು; ಹೆಚ್ಚು ಉದ್ದವಾಗಿರುವ ಮತ್ತು ಸಿಕ್ಕಲು ಸಿಕ್ಕಲಾಗಿರುವ ಸೊಲ್ಲುಗಳನ್ನು ಬಳಸಿರಬಾರದು; ಅದರಲ್ಲಿ ಬರುವ ಸೊಲ್ಲುಗಳೆಲ್ಲ ಸೊಲ್ಲರಿಮೆಯ ಕಟ್ಟಲೆಗಳಿಗೆ ಅನುಸಾರವಾಗಿರಬೇಕು; ಹೇಳಬೇಕಾಗಿರುವುದನ್ನು ಅಡಕವಾಗಿ ಹೇಳಿರಬೇಕು; ಅವಶ್ಯವಿಲ್ಲದ ಪದಗಳನ್ನು ಮತ್ತು ಎಣ್ಣುಕಕ್ಕೆ ತಿಳಿದಿಲ್ಲದ ಪದಗಳನ್ನು ಬಳಸಿರಬಾರದು; ಮತ್ತು ಆದಶ್ಟು ಮಟ್ಟಿಗೆ ಇಪ್ಪುರುಳಿನ ಪದಗಳು ಮತ್ತು ಇಟ್ಟಳಗಳು ಅದರಲ್ಲಿ ಬಾರದ ಹಾಗೆ ನೋಡಿಕೊಳ್ಳಬೇಕು.
ಇಂತಹ ಬರಹಗಳನ್ನು ಎಣ್ಣುಕಗಳು ಓದುಗರಿಗೆ ಮೆಚ್ಚುಗೆಯಾಗುವ ಹಾಗೆ
ನುಡಿಮಾರಬಲ್ಲುವು.
8.6 ತಿರುಳು
ಬರಹಗಳನ್ನು ಒಂದು ನುಡಿಯಿಂದ ಇನ್ನೊಂದು ನುಡಿಗೆ ನುಡಿಮಾರ ಬೇಕೆಂದಿರು ವವರಿಗೆ ಸೊಲ್ಲರಿಮೆಯ ತಿಳಿವು ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಮೂಲ ನುಡಿಯ ಸೊಲ್ಲರಿಮೆಯನ್ನು ಮಾತ್ರವಲ್ಲದೆ ಈಡುನುಡಿಯ ಸೊಲ್ಲರಿಮೆಯನ್ನೂ ಅವರು ಇದಕ್ಕಾಗಿ ತಿಳಿದಿರಬೇಕಾಗುತ್ತದೆ. ಆಡುನುಡಿ ಇಲ್ಲವೇ ಒಳನುಡಿಗಳನ್ನು ಬಳಸಿರುವ ಬರಹಗಳನ್ನು ನುಡಿಮಾರಬೇಕಿದ್ದಲ್ಲಿ, ಈಡುನುಡಿಯಲ್ಲಿ ಬಳಕೆಯಾಗುತ್ತಿರುವ, ಮತ್ತು ಅವಕ್ಕೆ ಸಮನಾಗಿರುವ ಆಡುನುಡಿ ಇಲ್ಲವೇ ಒಳನುಡಿಗಳ ಸೊಲ್ಲರಿಮೆಯನ್ನೂ ಅವರು ತಿಳಿದಿರ ಬೇಕಾಗುತ್ತದೆ.
ಎಣ್ಣುಕಗಳ ಮೂಲಕ ಬರಹಗಳನ್ನು ನುಡಿಮಾರಬೇಕಿದ್ದಲ್ಲಿ ಅವಕ್ಕೆ ಮೂಲನುಡಿ ಮತ್ತು ಈಡುನುಡಿಗಳ ಸೊಲ್ಲರಿಮೆಯನ್ನು ತಿಳಿಸಿಕೊಡ ಬೇಕಾಗುತ್ತದೆ; ಹಾಗಾಗಿ, ಅಂತಹ ಕೆಲಸಗಳನ್ನು ನಡೆಸುವವರೂ ಈ ಎರಡು ನುಡಿಗಳ ಸೊಲ್ಲರಿಮೆಗಳನ್ನು ಇನ್ನಶ್ಟು ಹೆಚ್ಚು ವಿವರವಾಗಿ ತಿಳಿದಿರ ಬೇಕಾಗುತ್ತದೆ.
ಒಂಬತ್ತನೇ ಪಸುಗೆ — ನುಡಿಹಮ್ಮುಗೆ
9.1 ಮುನ್ನೋಟ
ನುಡಿಗಳು ಕಾಲದಿಂದ ಕಾಲಕ್ಕೆ ಮಾರ್ಪಡುತ್ತಾ ಇರುತ್ತವೆ. ಹಳೆಗನ್ನಡವಿದ್ದದ್ದು ನಡುಗನ್ನಡವಾಗಿ, ಇವತ್ತು ಹೊಸಗನ್ನಡವಾಗಿ ಮಾರ್ಪಟ್ಟಿದೆ; ಒಂದು ಕಾಲದಲ್ಲಿ ಕನ್ನಡವೆಂಬ ಒಂದೇ ನುಡಿಯಿದ್ದುದು ಇವತ್ತು ಸೊಲಿಗರ ಕನ್ನಡ, ಹವ್ಯಕ ಕನ್ನಡ, ಮಯ್ಸೂರು ಕನ್ನಡ, ಹುಬ್ಬಳ್ಳಿ ಕನ್ನಡ ಮೊದಲಾದ ಆಡುನುಡಿಗಳಾಗಿ, ಇಲ್ಲವೇ ಕನ್ನಡ ಮತ್ತು ಬಡಗ ಎಂಬ ಎರಡು ನುಡಿಗಳಾಗಿ ಬೇರ್ಪಟ್ಟಿದೆ.
ಈ ರೀತಿ ಕನ್ನಡ ನುಡಿ ಮಾರ್ಪಡಲು, ಮತ್ತು ಹಲವು ಆಡುನುಡಿಗಳಾಗಿ ಇಲ್ಲವೇ ನುಡಿಗಳಾಗಿ ಬೇರ್ಪಡಲು ಅದರಲ್ಲಿ ಬಳಕೆಯಾಗುತ್ತಿರುವ ಉಲಿಗಳಲ್ಲಿ, ಪದಗಳಲ್ಲಿ ಮತ್ತು ಸೊಲ್ಲರಿಮೆಯ ಇಟ್ಟಳಗಳಲ್ಲಿ ಕಾಲದಿಂದ ಕಾಲಕ್ಕೆ ಮಾರ್ಪಾಡುಗಳು ನಡೆಯುತ್ತಿರುವುದು, ಮತ್ತು ಈ ಮಾರ್ಪಾಡುಗಳು ಬೇರೆ ಬೇರೆ ಊರುಗಳಲ್ಲಿ ಮತ್ತು ಜಾತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯು ತ್ತಿರುವುದು ಮುಕ್ಯ ಕಾರಣ.
ಇಂತಹ ಮಾರ್ಪಾಡುಗಳು ನುಡಿಯ ಒಳಗನ್ನು ತಾಗುವ ಬದಲು ಅದರ ಇರುವಿಕೆಯನ್ನೂ ತಾಗಬಲ್ಲುದು. ಒಂದು ನುಡಿ ಇಲ್ಲದಾಗಬಹುದು, ಇಲ್ಲವೇ ಹೊಸದೊಂದು ನುಡಿ ಮೂಡಿಬರಬಹುದು. ಎತ್ತುಗೆಗಾಗಿ, ಒಂದು ನುಡಿಯನ್ನಾಡುವ ಜನರಲ್ಲಿ ಎಲ್ಲರೂ ಸಾವನ್ನಪ್ಪಿದಲ್ಲಿ, ಇಲ್ಲವೇ ಎಲ್ಲರೂ ಅದನ್ನು ಬಿಟ್ಟುಕೊಟ್ಟು ಬೇರೊಂದು ನುಡಿಯನ್ನು ಬಳಸತೊಡಗಿದಲ್ಲಿ, ಆ ನುಡಿಯೇ ಇಲ್ಲದಾಗಬಹುದು.
ಹಲವು ನುಡಿಗಳು ಬೆರಕೆಗೊಂಡು ಅವುಗಳಿಂದ ಹೊಸ ನುಡಿಯೊಂದು ಮೂಡಿಬರಬಹುದು. ಎತ್ತುಗೆಗಾಗಿ, ಹಲವು ನುಡಿಗಳನ್ನಾಡುವ ಜನರು ಒಟ್ಟಿಗೆ ವಾಸಮಾಡಬೇಕಾದಾಗ, ಆ ಎಲ್ಲಾ ನುಡಿಗಳ ಅಂಶಗಳನ್ನೂ ಒಳಗೊಂಡಿರುವ ಬೆರಕೆನುಡಿಯೊಂದು ಅವರ ನಡುವೆ ಬಳಕೆಗೆ ಬರುತ್ತದೆ, ಮತ್ತು ಚಿಕ್ಕಂದಿನಲ್ಲಿ
ನುಡಿಹಮ್ಮುಗೆ
ಅಂತಹ ನುಡಿಯನ್ನು ಕೇಳುತ್ತಾ ಬೆಳೆಯುವ ಮಕ್ಕಳ ಬಾಯಿಯಲ್ಲಿ ಅದೊಂದು ಹೊಸ ನುಡಿಯಾಗಿ ಮಾರ್ಪಡುತ್ತದೆ.
9.1.1 ಮಾರ್ಪಾಡುಗಳು ಯಾಕೆ ನಡೆಯುತ್ತವೆ?
ನುಡಿಗಳಲ್ಲಿ ಕಾಣಿಸಿಕೊಳ್ಳುವ ಮಾರ್ಪಾಡುಗಳಲ್ಲಿ ಹೆಚ್ಚಿನವೂ ಯಾಕೆ ನಡೆಯುತ್ತವೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಎತ್ತುಗೆಗಾಗಿ, ಹಳೆಗನ್ನಡ ದಲ್ಲಿದ್ದ ಪಕಾರ ಹಕಾರವಾಗಿದೆ, ರ-ಱ ಮತ್ತು ಳ-ೞಗಳ ನಡುವಿನ ವ್ಯತ್ಯಾಸ ಇಲ್ಲವಾಗಿದೆ, ಅಲ್ಲಗಳೆಯುವ ರೂಪ ಬದಲಾಗಿದೆ (ಹಳೆಗನ್ನಡದಲ್ಲಿ ಮಾಡನ್ ಎಂದಿದ್ದುದು ಇವತ್ತು ಹೊಸಗನ್ನಡದಲ್ಲಿ ಮಾಡಲಿಕ್ಕಿಲ್ಲ ಎಂದಾಗಿದೆ); ಇಂತಹ ಮಾರ್ಪಾಡುಗಳೆಲ್ಲ ಕನ್ನಡದಲ್ಲಿ ಯಾಕೆ ನಡೆದಿವೆ ಎಂಬುದನ್ನು ನಾವು ವಿವರಿಸ ಲಾರೆವು.
ಆದರೆ, ನುಡಿಗಳಲ್ಲಿ ಕಾಣಿಸಿಕೊಳ್ಳುವ ಬೇರೆ ಕೆಲವು ಮಾರ್ಪಾಡುಗಳು ಅವನ್ನಾಡುವ ಜನರ ಹೊಸ ಹೊಸ ಬೇಡಿಕೆಗಳನ್ನು ನೆರವೇರಿಸುವುದಕ್ಕಾಗಿ ನಡೆಯುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತ, ಇಂಗ್ಲಿಶ್ ಮೊದಲಾದ ಬೇರೆ ನುಡಿ ಗಳಿಂದ ಕನ್ನಡಕ್ಕೆ ಹಲವಾರು ಪದಗಳು ಎರವಲಾಗಿ ಬಂದಿವೆ; ಇವುಗಳಲ್ಲಿ ಹಲವು ಕನ್ನಡಿಗರ ಬಾಳ್ವೆಯಲ್ಲಿ ಹೊಸದಾಗಿ ಸೇರಿಕೊಂಡಿರುವ ವಸ್ತುಗಳನ್ನು ಇಲ್ಲವೇ ವಿಶಯಗಳನ್ನು ಹೆಸರಿಸುವುದಕ್ಕಾಗಿ ಬಂದಿವೆ.
ಹೊಸಗನ್ನಡದ ಹಲವು ಆಡುನುಡಿಗಳಲ್ಲಿ ಒಂದು ಆಡುನುಡಿ ಬರಹದ ನುಡಿಯಾಗಿ ಮತ್ತು ಎಲ್ಲರ ನುಡಿಯಾಗಿ ಇವತ್ತು ಬಳಕೆಗೆ ಬಂದಿರುವುದೂ ಹೀಗೆಯೇ ಕನ್ನಡಿಗರ ಬೇಡಿಕೆಯೊಂದನ್ನು ನೆರವೇರಿಸುವುದಕ್ಕಾಗಿ ನಡೆದಿರುವ ಮಾರ್ಪಾಡು. ಬರಹದ ನುಡಿಯಾದುದರಿಂದಾಗಿ ಅದರಲ್ಲಿ ಆಮೇಲೆ ಬೇರೆಯೂ ಹಲವು ಮಾರ್ಪಾಡುಗಳು ನಡೆಯಬೇಕಾಯಿತು, ಮತ್ತು ಈ ಮಾರ್ಪಾಡು ಗಳಿಂದಾಗಿ ಅದು ಇವತ್ತು ಮೂಲ ಆಡುನುಡಿಗಿಂತ ಹಲವು ವಿಶಯಗಳಲ್ಲಿ ಬೇರಾಗಿದೆ.
ಸಾಮಾನ್ಯವಾಗಿ, ಇಂತಹ ಮಾರ್ಪಾಡುಗಳು ಆಡುಗರ ಬೇಡಿಕೆಗಳನ್ನನುಸರಿಸಿ ನುಡಿಗಳಲ್ಲಿ ನಡೆಯುತ್ತಲೇ ಇರುತ್ತವೆ. ಅವನ್ನು ಯಾರೂ ನುಡಿಯ ಮೇಲೆ ಹೇರುವುದಿಲ್ಲ. ಇದಕ್ಕೆ ಬದಲು, ಒಂದು ನುಡಿಯಲ್ಲಿ ಎಂತಹ ಮಾರ್ಪಾಡುಗಳು ನಡೆಯಬೇಕು ಎಂಬುದನ್ನು ಒಂದು ಕೂಟ, ಒಂದು ಆಡಳಿತ ಇಲ್ಲವೇ ಒಬ್ಬ ವ್ಯಕ್ತಿ ತೀರ್ಮಾನಿಸಿ, ಅದರಂತೆ ಅವನ್ನು ನಡೆಸಲು ತೊಡಗಬಹುದು, ಮತ್ತು
ಅದಕ್ಕಾಗಿ ಕಟ್ಟಳೆ ಇಲ್ಲವೇ ಕಾನೂನುಗಳನ್ನು ಮಾಡಬಹುದು. ಇದನ್ನು ಇಲ್ಲಿ ನುಡಿಹಮ್ಮುಗೆ ಎಂದು ಕರೆಯಲಾಗಿದೆ.
ನುಡಿಯ ಬಳಕೆಯಲ್ಲಿ ಸಮಾಜವು ಎದುರಿಸುವ ತೊಡಕುಗಳನ್ನು ಬಗೆಹರಿಸುವುದಕ್ಕಾಗಿ ನುಡಿಹಮ್ಮುಗೆಗಳನ್ನು ಕಯ್ಗೆತ್ತಿಕೊಳ್ಳಲಾಗುತ್ತದೆ. ಎತ್ತುಗೆ ಗಾಗಿ, ಹಲವು ನುಡಿಗಳಿರುವ ಒಂದು ನಾಡಿನಲ್ಲಿ ಎಲ್ಲರಿಗೂ ಒಂದೇ ಆಗಿರು ವಂತಹ ನುಡಿಯೊಂದು ಇಲ್ಲದಿರಬಹುದು. ಈ ಕೊರತೆಯನ್ನು ಹೋಗಲಾಡಿಸು ವುದಕ್ಕಾಗಿ, ಆಡಳಿತ ಒಂದು ಕಾನೂನನ್ನು ಮಾಡಬಹುದು, ಮತ್ತು ಅಂತಹ ಕಾನೂನಿನ ಮೂಲಕ, ಬಳಕೆಯಲ್ಲಿರುವ ಹಲವು ನುಡಿಗಳಲ್ಲಿ ಒಂದು ನುಡಿ ಎಲ್ಲರ ನುಡಿಯಾಗಿ, ಎಂದರೆ ಶಾಲೆಯ, ಆಡಳಿತದ ಮತ್ತು ಬರಹದ ನುಡಿಯಾಗಿ ಬಳಕೆಗೆ ಬರುವಂತೆ ಮಾಡಬಹುದು.
ಒಂದು ನುಡಿಯಲ್ಲಿ ಹೊಸದಾಗಿ ಬರಹವನ್ನು ಬೆಳೆಸಬೇಕೆಂದಿರುವ ಜನರು, ಅದಕ್ಕಿರುವ ಹಲವು ಆಡುನುಡಿಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ ಕೊಂಡು, ಅದರಲ್ಲಿ ಬರಹಗಳನ್ನು ಉಂಟುಮಾಡಲು ತೊಡಗಬಹುದು. ಸಮಯ ಕಳೆದಂತೆ, ಆ ಆಡುನುಡಿ ಬರಹದ ನುಡಿಯಾಗಿ ನೆಲೆಗೊಳ್ಳಬಹುದು. ಒಂದು ನುಡಿಯ ಬರಹದಲ್ಲಿ ಬರಿಗೆ(ಅಕ್ಶರ)ಗಳ ತೊಡಕುಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಹಲವಿರಬಹುದು; ಎತ್ತುಗೆಗಾಗಿ, ಅದರಲ್ಲಿ ಬಳಕೆಯಾಗುವ ಬರಿಗೆಗಳಿಗೂ ಬರಹವನ್ನು ಓದುವ ಬಗೆಗೂ ನಡುವೆ ಸರಿಯಾದ ಹೊಂದಾಣಿಕೆ ಯಿಲ್ಲದಿರಬಹುದು. ಇದರಿಂದಾಗಿ, ಆ ನುಡಿಯ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗಿರಬಹುದು. ಈ ತೊಡಕನ್ನು ಇಲ್ಲವಾಗಿಸುವುದಕ್ಕಾಗಿ, ಅಂತಹ ಬರಿಗೆಗಳನ್ನು ಬಿಟ್ಟುಕೊಡಬೇಕೆಂಬ ತೀರ್ಮಾನ ವನ್ನು ವ್ಯಕ್ತಿಯೊಬ್ಬನು ಬಳಕೆಗೆ ತರಬಹುದು, ಮತ್ತು ಆತನ ತೀರ್ಮಾನವನ್ನು ಬೇರೆ ಬರಹಗಾರರು ಒಪ್ಪಿಕೊಳ್ಳಬಹುದು.
ಈ ರೀತಿ ಆಡಳಿತ, ಕೂಟ, ಇಲ್ಲವೇ ವ್ಯಕ್ತಿಗಳು ನಡೆಸುವ ನುಡಿಹಮ್ಮುಗೆಗಳ ಮೂಲಕವೂ ಒಂದು ನುಡಿಯ ಇಲ್ಲವೇ ಆಡುನುಡಿಯ ಪರಿಚೆ(ರೂಪ) ಮತ್ತು ಬಳಕೆಗಳಲ್ಲಿ ನಡೆಯಬೇಕಾಗಿರುವ ಮಾರ್ಪಾಡುಗಳು ನಡೆದುಹೋಗಬಲ್ಲುವು.
9.1.2 ಹಮ್ಮುಗೆಗಳ ಬಗೆಗಳು
ಮೇಲೆ ಸೂಚಿಸಿದ ಹಾಗೆ, ಮಾರ್ಪಾಡುಗಳು ನುಡಿಯ ಒಳಗನ್ನು ತಾಗಬಹುದು, ಇಲ್ಲವೇ ಅದರ ಇರುವಿಕೆಯನ್ನೂ ತಾಗಬಹುದು. ಇದಕ್ಕನುಸಾರವಾಗಿ,
ನುಡಿಹಮ್ಮುಗೆಗಳೂ ಎರಡು ಬಗೆಯವಾಗಿರಬಲ್ಲುವು. ಅವುಗಳ ಗುರಿ ನುಡಿಯ ಒಳಗನ್ನು ಮಾರ್ಪಡಿಸುವುದಾಗಿರಬಹುದು, ಇಲ್ಲವೇ ಅದರ ಇರುವಿಕೆಯಲ್ಲಿ ಮಾರ್ಪಾಡುಗಳನ್ನು ತರುವುದಾಗಿರಬಹುದು.
ನುಡಿಯ ಒಳಗನ್ನು ತಾಗುವ ಹಮ್ಮುಗೆಗಳ ಮೂಲಕ ಹೊಸ ಹೊಸ ಕೆಲಸಗಳನ್ನು ನಡೆಸುವಲ್ಲಿ ಅದನ್ನು ಬಳಸಲು ಬರುವ ಹಾಗೆ ನಾವು ಮಾಡಬಲ್ಲೆವು. ಎತ್ತುಗೆಗಾಗಿ, ಒಂದು ನುಡಿಯನ್ನು ಕೋರ್ಟು ಕಚೇರಿಗಳಲ್ಲಿ ಇಲ್ಲವೇ ಶಾಲೆ-ಕಾಲೇಜುಗಳಲ್ಲಿ ಬಳಸಬೇಕಿದ್ದಲ್ಲಿ, ಅದಕ್ಕೆ ಬೇಕಾಗುವ ಸಾವಿರಾರು ಹೆಚ್ಚಿನ ಪದಗಳು ಆ ನುಡಿಯಲ್ಲಿರಬೇಕಾಗುತ್ತದೆ. ನುಡಿಹಮ್ಮುಗೆಯ ಮೂಲಕ ಇವನ್ನೆಲ್ಲ ಉಂಟುಮಾಡಿಕೊಟ್ಟಲ್ಲಿ ಅಂತಹ ಬಳಕೆ ಸುಳುವಾಗುತ್ತದೆ. ನುಡಿಯ ಇರುವಿಕೆಯನ್ನು ತಾಗುವ ಹಮ್ಮುಗೆಯ ಮೂಲಕ ಸಮಾಜದಲ್ಲಿ ಬಳಕೆಯಲ್ಲಿರುವ ಹಲವು ನುಡಿಗಳಲ್ಲಿ ಒಂದರ ಬೆಲೆ ಉಳಿದವುಗಳ ಬೆಲೆಗಿಂತ ಹೆಚ್ಚಾಗುವ ಹಾಗೆ ಮಾಡಬಹುದು. ಎತ್ತುಗೆಗಾಗಿ, ಹಲವು ನುಡಿಗಳಲ್ಲಿ ಒಂದನ್ನು ಕಲಿಕೆಯ ಇಲ್ಲವೇ ಆಡಳಿತದ ನುಡಿಯಾಗಿ ಆರಿಸಿಕೊಂಡಲ್ಲಿ, ಅದರ ಬೆಲೆ ಹೆಚ್ಚುತ್ತದೆ; ಸಮಾಜದಲ್ಲಿ ಅದರ ಬಳಕೆಯೂ ಹೆಚ್ಚು ಹರವನ್ನು ಪಡೆಯುತ್ತದೆ: ಹೆಚ್ಚು ಹೆಚ್ಚು ಮಂದಿ ಅದನ್ನು ಬಳಸುವಂತಾಗುತ್ತದೆ.
ಈ ಎರಡು ಬಗೆಯ ಹಮ್ಮುಗೆಗಳು ಒಂದಕ್ಕೊಂದು ಸಂಬಂದಿಸಿವೆ ಎಂಬುದನ್ನು ಗಮನಿಸುವುದು ಅವಶ್ಯ. ಎತ್ತುಗೆಗಾಗಿ, ಒಂದು ನುಡಿಯಲ್ಲಿ ಅರಿಮೆಯ (ವಿಜ್ನಾನದ) ಕಲಿಕೆಗೆ ಬೇಕಾಗುವ ಸಾವಿರಾರು ಹೊಸ ಪದಗಳನ್ನು ಉಂಟುಮಾಡಿಕೊಟ್ಟಿದ್ದರೂ, ಆ ನುಡಿಯನ್ನು ಅಂತಹ ಕಲಿಕೆಗಾಗಿ ಬಳಸಲು ತೊಡಗದಿದ್ದಲ್ಲಿ, ಅವು ಪದನೆರಕೆ(ಕೋಶ)ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಪದಗಳಾಗಿ ಉಳಿಯಬಲ್ಲುವಲ್ಲದೆ ಆ ನುಡಿಯ ಪದಗಳೆಂದೆನಿಸಲಾರವು.
9.1.3 ಹಮ್ಮುಗೆಯ ಹಂತಗಳು
ಈ ಎರಡು ರೀತಿಯ ನುಡಿಹಮ್ಮುಗೆಗಳನ್ನೂ ನಾಲ್ಕು ಮುಕ್ಯ ಹಂತಗಳ ಮೂಲಕ ಬಳಕೆಗೆ ತರಬೇಕಾಗುತ್ತದೆ. ಇವನ್ನು ಆಯ್ಕೆ, ಪರಿಚೆ, ಬಳಕೆ ಮತ್ತು ಬೆಳವಣಿಗೆ ಎಂಬುದಾಗಿ ಹೆಸರಿಸಬಹುದು.
ಎತ್ತುಗೆಗಾಗಿ, ಬರಹವನ್ನು ಬಳಸದಿರುವ ನುಡಿಯೊಂದನ್ನು ಬರಹಕ್ಕಿಳಿಸ ಬೇಕೆಂಬ ನುಡಿಹಮ್ಮುಗೆ ನಮ್ಮ ಮುಂದಿರಬಹುದು. ಇದಕ್ಕಾಗಿ, ಮೊದಲಿಗೆ ಯಾವುದಾದರೊಂದು ಲಿಪಿಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಇದು ರೋಮನ್
ಲಿಪಿಯಿರಬಹುದು, ನಾಗರಿ ಲಿಪಿಯಿರಬಹುದು, ಇಲ್ಲವೇ ಪರ್ಸೋ-ಅರೇಬಿಕ್ ಲಿಪಿಯಿರಬಹುದು.
ಎರಡನೆಯದಾಗಿ, ಆ ಲಿಪಿಯಲ್ಲಿರುವ ಬರಿಗೆ(ಅಕ್ಶರ)ಗಳಲ್ಲಿ ಯಾವುವನ್ನು ಬಳಸಬೇಕು ಮತ್ತು ಯಾವುವನ್ನು ಬಿಡಬೇಕು, ಅವುಗಳ ಮೂಲಕ ನುಡಿಯ ಉಲಿಗಳನ್ನು ಇಲ್ಲವೇ ಪದಗಳನ್ನು ಹೇಗೆ ಸೂಚಿಸಬೇಕು, ನುಡಿಯಲ್ಲಿರುವ ಹೆಚ್ಚಿನ ಉಲಿಗಳನ್ನು ಸೂಚಿಸಲು ಎಂತಹ ಹೆಚ್ಚಿನ ಬರಿಗೆಗಳು ಬೇಕಾಗುತ್ತವೆ, ಅವನ್ನು ಹೇಗೆ ಉಂಟುಮಾಡಿಕೊಳ್ಳಬೇಕು ಎಂಬಂತಹ ಹಲವಾರು ತೀರ್ಮಾನ ಗಳನ್ನು ಕಯ್ಗೊಳ್ಳಬೇಕಾಗುತ್ತದೆ. ಈ ತೀರ್ಮಾನಗಳು ಆ ನುಡಿಯಲ್ಲಿ ಬಳಸಬೇಕಾಗಿರುವ ಲಿಪಿಗೆ ಅದರದೇ ಆದ ಒಂದು ಪರಿಚೆಯನ್ನು ಕೊಡುತ್ತವೆ. ಮೂರನೆಯದಾಗಿ, ಈ ಲಿಪಿಯನ್ನು ಬಳಕೆಗೆ ತರುವ ಕೆಲಸ ನಡೆಯಬೇಕು. ಇದನ್ನು ಒಬ್ಬ ವ್ಯಕ್ತಿ ನಡೆಸಬಹುದು, ಕೆಲವರು ಬರಹಗಾರರು ಒಟ್ಟು ಸೇರಿ ನಡೆಸಬಹುದು ಇಲ್ಲವೇ ಕಾನೂನುಗಳ ಮೂಲಕ ಆಡಳಿತವೂ ಅದನ್ನು ನಡೆಸಬಲ್ಲುದು. ಶಾಲೆಗಳ ಕಲಿಕೆಯಲ್ಲಿ ಅದನ್ನು ಸೇರಿಸುವ ಮೂಲಕ, ಮತ್ತು ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಅದನ್ನು ಬಳಸುವ ಮೂಲಕ, ಹೆಚ್ಚು ಹೆಚ್ಚು ಜನರಲ್ಲಿ ಅದು ಬಳಕೆಗ ಬರುವ ಹಾಗೆ ಮಾಡ ಬಹುದು.
ನಾಲ್ಕನೆಯದಾಗಿ, ಬಳಕೆಗೆ ತಂದಿರುವ ಈ ಲಿಪಿಯಲ್ಲಿ ಹಲವು ರೀತಿಯ ಬೆಳವಣಿಗೆಗಳು ನಡೆಯಬೇಕಾಗುತ್ತದೆ: ಬೇರೆ ಬೇರೆ ಕಡೆಗಳಲ್ಲಿ ಬಳಸುವು ದಕ್ಕಾಗಿ ಅದರ ಬರಿಗೆಗಳನ್ನು ದಪ್ಪಬರಿಗೆ, ತೆಳುಬರಿಗೆ, ಮಾಲುಬರಿಗೆ ಮೊದಲಾದ ಹಲವು ಒಡ್ಡವಗಳಲ್ಲಿ ಉಂಟುಮಾಡಬೇಕಾಗುತ್ತದೆ; ಅದನ್ನು ಬೆರಳಚ್ಚು ಮಾಡಲು ಅದರ ಬರಿಗೆಗಳನ್ನು ಕೀಲಿಮಣೆಯಲ್ಲಿ ಅಳವಡಿಸ ಬೇಕಾಗುತ್ತದೆ; ಎಣ್ಣುಕ(ಕಂಪ್ಯೂಟರ್)ಗಳಲ್ಲಿ ಬಳಸಲು ತಂತ್ರಾಂಶಗಳನ್ನು ಉಂಟುಮಾಡಬೇಕಾಗುತ್ತದೆ.
ನುಡಿಹಮ್ಮುಗೆಯ ಈ ನಾಲ್ಕು ಹಂತಗಳಲ್ಲಿ ಎರಡು ಮತ್ತು ನಾಲ್ಕನೇ ಹಂತಗಳನ್ನು ನಡೆಸಬೇಕಿದ್ದಲ್ಲಿ, ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಅಂತಹ ತಿಳಿವಿಲ್ಲದವರು ಅವನ್ನು ನಡೆಸಹೋಗಿ, ಹೇಗೆ ಸಮಾಜವನ್ನು ಹಲವಾರು ಬಗೆಯ ತೊಂದರೆಗಳಲ್ಲಿ ಸಿಲುಕಿಸಿದ್ದಾರೆ ಎಂಬುದನ್ನು ಗಮನಿಸಿದೆ ವಾದರೆ, ಇದು ಯಾಕೆ ಬೇಕು ಎಂಬುದು ಗೊತ್ತಾಗುತ್ತದೆ.
ನುಡಿಯ ಹಮ್ಮುಗೆಗೆ ಸೊಲ್ಲರಿಮೆಯ ತಿಳಿವು ಯಾಕೆ ಬೇಕು ಎಂಬುದನ್ನು ತೋರಿಸಿಕೊಡುವುದೇ ಈ ಪಸುಗೆಯ ಗುರಿಯಾದ ಕಾರಣ, ಪರಿಚೆ ಮತ್ತು
ಬೆಳವಣಿಗೆ ಎಂಬ ಅದರ ಎರಡು ಮತ್ತು ನಾಲ್ಕನೆಯ ಹಂತಗಳನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ.
9.2 ಪರಿಚೆ ಹಮ್ಮುಗೆ
ಒಂದು ನಾಡಿನಲ್ಲಿ ಇಲ್ಲವೇ ಸಮಾಜದಲ್ಲಿ ನುಡಿಹಮ್ಮುಗೆಯ ಮೂಲಕ ಎಂತಹ ಮಾರ್ಪಾಡುಗಳನ್ನು ನಡೆಸಬೇಕು ಎಂಬುದನ್ನು ಮುಕ್ಯವಾಗಿ ಸಾಮಾಜಿಕ ನೆಲೆಯಲ್ಲಿ ನಡೆಸಲಾಗುತ್ತದೆ. ಎತ್ತುಗೆಗಾಗಿ, ಇಸ್ರೇಲ್ನಲ್ಲಿ ಬಳಕೆಯಲ್ಲಿದ್ದ ಹಲವು ನುಡಿಗಳಲ್ಲಿ ಹೀಬ್ರೂ ನುಡಿಯನ್ನು ಎಲ್ಲರ ನುಡಿಯಾಗಿ ಆರಿಸಿಕೊಳ್ಳ ಲಾಯಿತು ಮತ್ತು ಅದನ್ನೇ ಆಡಳಿತ, ಕಾನೂನು, ಕಲಿಕೆ ಮೊದಲಾದವುಗಳಲ್ಲಿ ಬಳಸುವ ತೀರ್ಮಾನವನ್ನು ಮಾಡಲಾಯಿತು. ಇಸ್ರೇಲ್ನಲ್ಲಿ ನೆಲೆಸಿದ ಜನರಲ್ಲಿ ಹೆಚ್ಚಿನವರೂ ಯೆಹೂದಿಗಳಾಗಿದ್ದುದೇ ಈ ರೀತಿ ಹೀಬ್ರೂ ನುಡಿಯನ್ನು ಆರಿಸಿಕೊಳ್ಳಲು ಮುಕ್ಯ ಕಾರಣ.
ಒಂದು ನುಡಿ ಇಲ್ಲವೇ ಆಡುನುಡಿಯನ್ನು ಎಲ್ಲರ ನುಡಿಯಾಗಿ ಮಾರ್ಪಡಿಸ ಬೇಕಿದ್ದಲ್ಲಿ, ಅದರ ಪರಿಚೆಯಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ; ಅದನ್ನು ಬರಹದಲ್ಲಿ ಬಳಸುತ್ತಿಲ್ಲವಾದಲ್ಲಿ, ಅದಕ್ಕೊಂದು ಲಿಪಿಯನ್ನು ಕೊಟ್ಟು ಬರಹಕ್ಕೆ ಇಳಿಸಬೇಕಾಗುತ್ತದೆ; ಅದನ್ನು ಹಲವು ಮಂದಿಗೆ ಹೊಸದಾಗಿ ಕಲಿಸಬೇಕಾಗುತ್ತದೆಯಾದ ಕಾರಣ, ಹಾಗೆ ಕಲಿಸಲು ಬೇಕಾಗುವ ಸೊಲ್ಲರಿಮೆಯೊಂದನ್ನು ತಯಾರಿಸಬೇಕಾಗುತ್ತದೆ; ಮತ್ತು, ಅದನ್ನು ಹಲವು ಬಗೆಯ ಹೊಸ ಹೊಸ ಕೆಲಸಗಳಲ್ಲಿ ಬಳಸಬೇಕಾಗುತ್ತದೆ ಯಾದ ಕಾರಣ, ಆ ಕೆಲಸಗಳಿಗೆ ಬೇಕಾಗುವ ಹಲವಾರು ಹೊಸ ಪದಗಳನ್ನು ಅದರಲ್ಲಿ ಉಂಟುಮಾಡಬೇಕಾಗುತ್ತದೆ.
ಇಂತಹ ನುಡಿಪರಿಚೆಯ ಮಾರ್ಪಾಡುಗಳನ್ನು ಸರಿಯಾಗಿ, ಮುಂದೆ ಜನರಿಗೆ ತೊಂದರೆಯಾಗದ ಹಾಗೆ, ನಡೆಸಬೇಕಿದ್ದಲ್ಲಿ, ಅದನ್ನು ನಡೆಸಿಕೊಡುವವರು ನುಡಿಯರಿಮೆಯನ್ನು ಮತ್ತು ಆ ನುಡಿಯ ಸೊಲ್ಲರಿಮೆಯನ್ನು ಚನ್ನಾಗಿ ತಿಳಿದಿರಬೇಕಾಗುತ್ತದೆ.
9.2.1 ಬರಿಗೆಹಮ್ಮುಗೆ
ಬರಹವಿಲ್ಲದ ನುಡಿಗೆ ಒಂದು ಹೊಸ ಲಿಪಿಯನ್ನು ಅಳವಡಿಸುವುದು, ಮತ್ತು ಬರಹವಿರುವ ನುಡಿಯಲ್ಲಿ ಹಲವು ಪದಬರಿಗೆಯ (ಸ್ಪೆಲ್ಲಿಂಗ್) ತೊಡಕು
ಗಳಿದ್ದಲ್ಲಿ ಅವನ್ನೆಲ್ಲ ಬಗೆಹರಿಸುವುದು ಎಂಬುದಾಗಿ ಎರಡು ಬಗೆಯ ಬರಿಗೆ ಹಮ್ಮುಗೆಗಳನ್ನು ನಡೆಸಬೇಕಾಗಿ ಬರಬಹುದು. ಬರಹವಿರುವ ನುಡಿಯಲ್ಲೂ ಪದಬರಿಗೆಯ ತೊಡಕುಗಳು ತುಂಬಾ ಹೆಚ್ಚಿದ್ದಲ್ಲಿ, ಅದನ್ನು ಸರಿಪಡಿಸುವ ಬದಲು ಹೊಸ ಲಿಪಿಯೊಂದನ್ನು ಅಳವಡಿಸಿಕೊಳ್ಳುವುದೇ ಒಳ್ಳೆಯದೆಂದೂ ಕೆಲವೊಮ್ಮೆ ಅನಿಸಬಹುದು.
ಈ ಎರಡು ಬಗೆಯ ಕೆಲಸಗಳನ್ನು ನಡೆಸುವವರೂ ನುಡಿಯ ಮತ್ತು ಬರಿಗೆಯ ಒಳಗುಟ್ಟನ್ನು ತಿಳಿದಿರುವಂತಹ ಬರಿಗೆಯರಿಗರಾಗಿರಬೇಕು. ಇಲ್ಲವಾದರೆ, ಅವರು ಹೊಸ ಲಿಪಿಯನ್ನು ತಮ್ಮ ನುಡಿಗೆ ತಪ್ಪು ತಪ್ಪಾಗಿ ಅಳವಡಿಸಬಹುದು, ಇಲ್ಲವೇ ಈಗಿನ ಲಿಪಿಯಲ್ಲಿರುವ ತೊಡಕುಗಳನ್ನು ತಪ್ಪು ತಪ್ಪಾಗಿ ಬಗೆಹರಿಸಲು ಹೋಗಬಹುದು, ಮತ್ತು ಅದರಿಂದಾಗಿ, ಆ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ತೊಡಕಿನದಾಗುವ ಹಾಗೆ ಮಾಡ ಬಹುದು.
ಒಂದು ನುಡಿಯನ್ನು ಸಮಾಜದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಬಳಸು ತ್ತಿರುವರಾದರೆ, ಅದರ ಬರಹ ತೊಡಕಿನದಾಗಿದೆಯಾದರೂ ಹೆಚ್ಚು ತೊಂದರೆ ಯಾಗುವುದಿಲ್ಲ. ಆದರೆ, ಎಲ್ಲಾ ಜನರೂ ಕಲಿಯಬೇಕಾಗಿರುವ ಮತ್ತು ಬಳಸಬೇಕಾಗಿರುವ ಬರಹ ತೊಡಕಿನದಾಗಿದೆಯಾದರೆ, ನುಡಿಯ ಕುರಿತು ನಮಗಿರುವ ಬೇರೆ ಹಮ್ಮುಗೆಗಳಲ್ಲಿ ಒಂದನ್ನೂ ಸರಿಯಾಗಿ ನಡೆಸಲು ಬರುವುದಿಲ್ಲ. ಎಲ್ಲರೂ ಅದನ್ನು ಕಲಿಯಬೇಕೆಂಬ ಮೊದಲನೆಯ ಗುರಿಯನ್ನೇ ತಲುಪಲು ಬರುವುದಿಲ್ಲ.
ಲಿಪಿಯ ಮಟ್ಟಿಗೆ ಒಂದು ಬರಹ ಚನ್ನಾಗಿರಬೇಕಾದರೆ, ಎಂದರೆ ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ಸುಳುವಾಗಿರಬೇಕಾದರೆ, ಅದು ಬಳಸುವ ಬರಿಗೆಗಳು ಉಲಿ ಇಲ್ಲವೇ ಉಲಿಕಂತೆಗಳೊಂದಿಗೆ ನೇರವಾಗಿ ಸಂಬಂದಿಸಿರ ಬೇಕು. ಓದಿಗೂ ಬರಹಕ್ಕೂ ನಡುವೆ ಅಂತರ ಹೆಚ್ಚಿದಂತೆಲ್ಲ ಓದುವ ಮತ್ತು ಬರೆಯುವ ಕೆಲಸ ತೊಡಕಿನದಾಗುತ್ತಾ ಹೋಗುತ್ತದೆ. ಬರಹದ ಪರಿಚೆಯನ್ನು ಮಾರ್ಪಡಿಸಿದವರಲ್ಲಿ ಕೆಲವರು ತಮ್ಮ ಜಾಣ್ಮೆಯ ಮೂಲಕ ಅದು ತುಂಬಾ ಸುಳುವಾಗುವ ಹಾಗೆ ಮಾಡಿದ್ದಾರೆ; ಮತ್ತು ಅದರ ಮೂಲಕ ಅವರ ಸಮಾಜದಲ್ಲಿ ಬರಹವನ್ನು ಎಲ್ಲರ ಸೊತ್ತಾಗಿ ಮಾಡುವ ಕೆಲಸವೂ ತುಂಬಾ ಸುಳುವಾಗುವ ಹಾಗೆ ಮಾಡಿದ್ದಾರೆ. ಆದರೆ, ಬೇರೆ ಕೆಲವರು ತಮ್ಮ ಅರಿಯಮೆ(ಅಜ್ನಾನ)ಯಿಂದಾಗಿ, ಅದು ತುಂಬಾ ತೊಡಕಿನ ಕೆಲಸವಾಗುವ ಹಾಗೆಯೂ ಮಾಡಿದ್ದಾರೆ.
9.2.2 ಸರಿಯಾಗಿ ಮಾಡಿದ ಬರಿಗೆಹಮ್ಮುಗೆಗಳು
ಬರಿಗೆಹಮ್ಮುಗೆಗಳ ಮೂಲಕ ನುಡಿಗಳಿಗೆ ಒಳ್ಳೆಯ ಲಿಪಿಯನ್ನು ಕೊಡಿಸಿರುವ, ಮತ್ತು ಲಿಪಿಯ ಬಳಕೆಯಲ್ಲಿರುವ ತೊಡಕುಗಳನ್ನು ಬಗೆಹರಿಸಿ ಅವು ತುಂಬಾ ಸುಳುವಾಗುವ ಹಾಗೆ ಮಾಡಿರುವ ಎತ್ತುಗೆಗಳು ಹಲವಿವೆ. ಕೊರಿಯನ್ ನುಡಿಗೆ ಹೊಸ ಲಿಪಿಯೊಂದನ್ನು ಅಳವಡಿಸಿರುವ ಬಗೆ, ಮತ್ತು ಫಿನ್ನಿಶ್ ನುಡಿಯ ಬರಹದಲ್ಲಿದ್ದ ಬರಿಗೆಯ ತೊಡಕುಗಳನ್ನು ಬಗೆಹರಿಸಿರುವ ಬಗೆಗಳು ಇಂತಹವು. ಕೊರಿಯನ್ ಬರಹದಲ್ಲಿ ಬಳಕೆಯಾಗುತ್ತಿದ್ದ ಚಯ್ನೀಸ್ ಮೂಲದ ಹಾಜಾ ಲಿಪಿ ತುಂಬಾ ತೊಡಕು ತೊಡಕಿನದಾಗಿತ್ತು. ಅದನ್ನು ಕಲಿಯಲು ಹಲವು ವರ್ಶಗಳೇ ಬೇಕಾಗುತ್ತಿದ್ದುವು, ಮತ್ತು ಮುಂದೆ ಅದನ್ನು ಬಳಸುವುದೂ ತುಂಬಾ ತೊಡಕಿನ ಕೆಲಸವಾಗಿತ್ತು. 1945ರಲ್ಲಿ, ಎಂದರೆ ಜಪಾನೀಸ್ ಆಕ್ರಮಣ ಕೊನೆಗೊಂಡ ಸಮಯದಲ್ಲಿ, ಕೊರಿಯಾದ ರಾಜ ಈ ಹಾಜಾ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲು ಹಂಗುಲ್ ಎಂಬ ಹೊಸದಾಗಿ ಉಂಟುಮಾಡಿದ ಲಿಪಿಯನ್ನು ಬಳಸತಕ್ಕದ್ದೆಂಬ ತೀರ್ಮಾನವನ್ನು ಮಾಡಿದ.
ಆತನ ಈ ತೀರ್ಮಾನಕ್ಕೆ ತನ್ನ ರಾಜ್ಯದ ಎಲ್ಲಾ ಜನರೂ, ಹೆಂಗಸರು ಮತ್ತು ಹುಡುಗಿಯರು ಕೂಡ, ಓದಲು ಬರೆಯಲು ಕಲಿಯಬೇಕೆಂಬುದೇ ಮೂಲ ಗುರಿಯಾಗಿತ್ತು. ಆ ಸಮಯದಲ್ಲಿ ಬಳಕೆಯಲ್ಲಿದ್ದ ಹಾಜಾ ಲಿಪಿಯನ್ನು ಕಲಿಯಲು ಹಲವು ಮಂದಿಗೆ ಸಾದ್ಯವೇ ಆಗುತ್ತಿರಲಿಲ್ಲ. ಹಾಗಾಗಿ, ಎಲ್ಲರೂ ಸುಳುವಾಗಿ ಕಲಿಯಬಲ್ಲಂತಹ ಲಿಪಿಯನ್ನು ತಮ್ಮ ನುಡಿಗೆ ಅಳವಡಿಸ ಬೇಕೆಂಬುದಾಗಿ ಕೊರಿಯಾದ ರಾಜ ತೀರ್ಮಾನಿಸಿದ್ದ.
ಹೊಸದಾಗಿ ಉಂಟುಮಾಡಿದ್ದ ಹಂಗುಲ್ ಲಿಪಿಯಲ್ಲಿ ಕೊರಿಯನ್ ನುಡಿಯಲ್ಲಿರುವ 24 ಉಲಿಗಳಿಗೆ 24 ಬರಿಗೆಗಳಿವೆ ಮತ್ತು ಅವಕ್ಕೂ ನುಡಿಯ ಉಲಿಗಳಿಗೂ ನಡುವೆ ನೇರವಾದ ಪತ್ತುಗೆ(ಸಂಬಂದ) ಇದೆ. ಇದಲ್ಲದೆ, ಈ ಬರಿಗೆಗಳನ್ನು ಬರಿಗೆಕಂತೆಗಳಾಗಿ ಜೋಡಿಸಿ ಬರೆಯಲಾಗುತ್ತದೆ ಮತ್ತು ಅವು ಪದಗಳಲ್ಲಿ ಬರುವ ಉಲಿಕಂತೆ(ಸಿಲೆಬ್್ಲ)ಗಳನ್ನು ಸರಿಯಾಗಿಯೇ ಸೂಚಿಸುತ್ತವೆ. ಬರಿಗೆಕಂತೆಗಳನ್ನು ಸೇರಿಸಿ ಮಾಡಿದ ಪದಗಳನ್ನು ಅವಕ್ಕಿಂತ ಮೊದಲು, ಮತ್ತು ಬಳಿಕ ಬರುವ ಪದಗಳಿಂದ ಬೇರ್ಪಡಿಸುವ ಬಗೆಯೂ ಹಂಗುಲ್ ಬರಹದಲ್ಲಿದೆ. ಉಲಿಗಳಿಗೂ ಬರಿಗೆಗಳಿಗೂ ನಡುವೆ ನೇರವಾದ ಪತ್ತುಗೆಯಿರುವ ಕಾರಣ, ಕೊರಿಯನ್ ಬರಹವನ್ನು ಒಂದೆರಡು ದಿನಗಳಲ್ಲಿ ಕಲಿತುಬಿಡಬಹುದು. ಮಕ್ಕಳಿಗೆ ಇದನ್ನು ಕಲಿಸುವಾಗ, ಮೊದಲಿಗೆ ಬರಿಗೆಕಂತೆಗಳನ್ನು ಕಲಿಸಲಾಗುತ್ತದೆ ಮತ್ತು ಆಮೇಲೆ ಅವುಗಳಲ್ಲಿ ಬರುವ ಬರಿಗೆಗಳನ್ನು ಬೇರೆ ಬೇರಾಗಿ ಪರಿಚಯಿಸ
ಲಾಗುತ್ತದೆ. ಕೊರಿಯನ್ ಲಿಪಿಯಲ್ಲಿ ಹೀಗೆ ಮಾಡಲು ಬರುತ್ತದೆಯಾದ ಕಾರಣ, ಅದನ್ನು ಮಕ್ಕಳಿಗೆ ಕಲಿಸುವುದು ಸುಲಬ.
ಈ ಹೊಸ ಲಿಪಿಯನ್ನು ಬಳಸತೊಡಗಿದುದರಿಂದಾಗಿ ಕೊರಿಯಾದಲ್ಲಿ ಓದು-ಬರಹ ಬಲ್ಲವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ. ಮೊದಲಿಗಿದ್ದ ತೊಡಕು ತೊಡಕಾದ ಲಿಪಿಗಳನ್ನು ಬಿಟ್ಟುಕೊಟ್ಟು ಸುಳುವಾಗಿರುವ ಹೊಸದೊಂದು ಲಿಪಿಯನ್ನು ಬಳಸುವ ತೀರ್ಮಾನವನ್ನು ಮಲಯೇಶಿಯಾ ಮತ್ತು ಇಂಡೊನೇಶಿಯಾಗಳಲ್ಲೂ ತೆಗೆದುಕೊಳ್ಳಲಾಗಿತ್ತು. ಎತ್ತುಗೆಗಾಗಿ, ಮಲಯೇಶಿಯಾದಲ್ಲಿ ತೊಡಕು ತೊಡಕಾದ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟುಕೊಟ್ಟು, ಅದಕ್ಕಿಂತ ಸುಳುವಾದ ರೋಮನ್ ಲಿಪಿಯನ್ನು, ಅದರಲ್ಲಿ ಬರುವ ಬರಿಗೆಗಳಿಗೂ ನುಡಿಯ ಉಲಿಗಳಿಗೂ ನಡುವೆ ನೇರವಾದ ಪತ್ತುಗೆಯಿರುವ ಹಾಗೆ, ಅಳವಡಿಸಿಕೊಳ್ಳಲಾಗಿತ್ತು. ಇವತ್ತು ಆ ದೇಶದಲ್ಲಿ ಓದು-ಬರಹ ಬಲ್ಲವರ ಎಣಿಕೆ ನೂರಕ್ಕೆ ಎಪ್ಪತ್ತರಶ್ಟಾಗಲು ಈ ರೀತಿ ಲಿಪಿ ಯನ್ನು ಬದಲಾಯಿಸಿದುದೇ ಮುಕ್ಯ ಕಾರಣವೆಂದು ಹೇಳಲಾಗುತ್ತದೆ.
ಇವೆಲ್ಲವೂ ಹೊಸ ಲಿಪಿಯೊಂದನ್ನು ಜಾಣ್ಮೆಯಿಂದ ನುಡಿಗೆ ಅಳವಡಿಸಿ ಕೊಂಡಿರುವುದಕ್ಕೆ ಎತ್ತುಗೆಗಳಾಗಿವೆ. ಲಿಪಿಯೊಂದನ್ನು ನುಡಿಗೆ ತಪ್ಪು ತಪ್ಪಾಗಿ ಅಳವಡಿಸಿದುದರಿಂದಾಗಿ ಮೂಡಿಬಂದಿದ್ದ ಪದಬರಿಗೆಯ ತೊಡಕುಗಳನ್ನು ಬರಿಗೆಹಮ್ಮುಗೆಯ ಮೂಲಕ ಬಗೆಹರಿಸಿರುವುದಕ್ಕೂ ಹಲವು ಎತ್ತುಗೆಗಳಿವೆ. ಫಿನ್ನಿಶ್ ನುಡಿಯ ಬರಹ, ಲಿಪಿಯ ಮಟ್ಟಿಗೆ ತುಂಬಾ ತೊಡಕು ತೊಡಕಾ ಗಿತ್ತು. ಅದರ ಬಳಕೆಯಲ್ಲಿ ಹಲವಾರು ಪದಬರಿಗೆಯ (ಸ್ಪೆಲ್ಲಿಂಗ್ನ) ತೊಡಕುಗಳಿದ್ದುವು. ಈ ತೊಡಕುಗಳನ್ನು ಬಗೆಹರಿಸುವ ಕುರಿತು 18 ಮತ್ತು 19ನೇ ಶತಮಾನಗಳಲ್ಲಿ ಹಲವು ಚರ್ಚೆಗಳು ನಡೆದಿದ್ದುವು. ಕೊನೆಗೆ ಫಿನ್ಲೆಂಡಿನ ಅರಿಮೆಯ ಕೂಟ ಈ ಕೆಲಸವನ್ನು ಬಹಳ ಚನ್ನಾಗಿ ನಡೆಸಿಕೊಟ್ಟಿತು. ಇದನ್ನು ಎಶ್ಟು ಚನ್ನಾಗಿ ನಡೆಸಲಾಗಿತ್ತೆಂದರೆ, ಇವತ್ತು ಯುರೋಪಿನ ನುಡಿಗಳಲ್ಲೆಲ್ಲ ಫಿನ್ನಿಶ್ ನುಡಿಯ ಬರಹವೇ ಅತಿ ಹೆಚ್ಚು ಚನ್ನಾಗಿರುವ ಬರಹವೆಂದೆನಿಸಿದೆ. ಈ ಬರಹದಲ್ಲಿ ಪದಬರಿಗೆಯ ತೊಡಕುಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಯಾವುವೂ ಇಲ್ಲ. ಇವತ್ತು ಜಗತ್ತಿನಲ್ಲಿ ಓದು-ಬರಹದ ತಿಳಿವಿನ ಮಟ್ಟಿಗೆ ಫಿನ್ಲೆಂಡ್ ಮೊದಲನೆಯ ಜಾಗದಲ್ಲಿರಲು ಅದರ ಈ ತೊಡಕುಗಳಿಲ್ಲದ ಬರಹವೇ ಕಾರಣವೆಂದು ಹೇಳಲಾಗುತ್ತದೆ. ಅಮೆರಿಕಾದಲ್ಲಿ ಓದಿನ ತೊಂದರೆಯಿರುವ ಮಕ್ಕಳ ಅರ್ದದಶ್ಟು ಮಕ್ಕಳೂ ಫಿನ್ಲೆಂಡಿನಲ್ಲಿ ಓದಿನ ತೊಂದರೆಗೊಳಗಾಗುವುದಿಲ್ಲ. ಅಮೆರಿಕಾದಲ್ಲಿ ಮಕ್ಕಳಿಗೆ ತುಂಬಾ ಪದಬರಿಗೆಯ
ತೊಡಕುಗಳಿರುವ ಇಂಗ್ಲಿಶ್ ಬರಹವನ್ನು ಕಲಿಸಬೇಕಾಗುತ್ತದೆ ಮತ್ತು ಫಿನ್ಲೆಂಡಿ ನಲ್ಲಿ ಯಾವ ತೊಡಕೂ ಇಲ್ಲದ ಫಿನ್ನಿಶ್ ಬರಹವನ್ನು ಕಲಿಸಬೇಕಾಗುತ್ತದೆ ಎಂಬುದೇ ಈ ವ್ಯತ್ಯಾಸಕ್ಕೆ ಕಾರಣವೆಂದು ಹೇಳಲಾಗುತ್ತದೆ.
9.2.3 ತಪ್ಪಾಗಿ ಮಾಡಿದ ಬರಿಗೆ ಹಮ್ಮುಗೆಗಳು
ಬರಿಗೆಹಮ್ಮುಗೆಗಳನ್ನು ನಡೆಸಲು ಬರಿಗೆಯರಿಮೆಯ ತಿಳಿವು ಯಾಕೆ ಬೇಕಾಗು ತ್ತದೆ ಎಂಬುದನ್ನು ವಿವರಿಸಲು ತಪ್ಪುತಪ್ಪಾಗಿ ನಡೆಸಿರುವ ಹಲವು ಬರಿಗೆ ಹಮ್ಮುಗೆಗಳನ್ನೂ ಎತ್ತುಗೆಗಳಾಗಿ ಕೊಡಬಹುದು. ಮಣಿಪುರಿ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸುವ ಸಮಯಲ್ಲಿ ಬರಹಗಾರರು ಮಾಡಿದ ತಪ್ಪುಗಳು, ಮತ್ತು ಇಂಗ್ಲಿಶ್ ನುಡಿಯ ಪದಗಳಲ್ಲಿ ಎಂತಹ ಬರಿಗೆಗಳನ್ನು ಬಳಸಬೇಕು ಎಂಬುದನ್ನು ತೀರ್ಮಾನಿಸುವ ಸಮಯಲ್ಲಿ ಸಾಮ್ಯುವೆಲ್ ಜಾನ್ಸನ್ ಎಂಬ ಒಬ್ಬ ವ್ಯಕ್ತಿ ಮಾಡಿರುವ ತಪ್ಪುಗಳು ಇಂತಹವು. ಇವುಗಳಿಂದಾಗಿ, ಇವತ್ತು ಮಣಿಪುರಿ ಮತ್ತು ಇಂಗ್ಲಿಶ್ ಬರಹಗಳನ್ನು ಕಲಿಯುವ ಮಕ್ಕಳು, ಮತ್ತು ಆಮೇಲೆ ಅವನ್ನು ತಮ್ಮ ಜೀವನದಲ್ಲಿ ಬಳಸಿಕೊಳ್ಳುವ ದೊಡ್ಡವರು ತುಂಬಾ ತೊಂದರೆ ಗೊಳಗಾಗಬೇಕಾಗಿದೆ.
ಮಣಿಪುರದ ಜನರು ವಯ್ಶ್ಣವ ದರ್ಮವನ್ನು ತಮ್ಮದಾಗಿಸಿಕೊಂಡಾಗ, ತಮ್ಮ ನುಡಿಯನ್ನು ಬರೆಯಲು ಬಂಗಾಲಿ ಲಿಪಿಯನ್ನು ಬಳಸಬೇಕೆಂಬ ತೀರ್ಮಾನ ವನ್ನು (ಬರಿಗೆಹಮ್ಮುಗೆಯನ್ನು) ಮಾಡಿಕೊಂಡರು. ಆದರೆ, ಅವರು ಬಳಸುತ್ತಿದ್ದ ಮಣಿಪುರಿ ನುಡಿಗೂ ಬಂಗಾಲಿ ನುಡಿಗೂ ನಡುವೆ ತುಂಬಾ ವ್ಯತ್ಯಾಸಗಳಿವೆ. ಹಾಗಾಗಿ, ಮಣಿಪುರಿ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸುವುದು ಸುಳುವಿನ ಕೆಲಸವಾಗಿರಲಿಲ್ಲ. ಅದನ್ನು ಹೇಗೆ ನಡೆಸುವುದು ಎಂಬುದನ್ನು ಮಣಿಪುರಿಯ ತಿಳಿವಿಗರು ತಿಳಿದಿರಲಿಲ್ಲ, ಮತ್ತು ಅದನ್ನು ಅವರಿಗೆ ತಿಳಿಸಬಲ್ಲ ಬರಿಗೆ ಯರಿಗರೂ ಇರಲಿಲ್ಲ.
ಈ ಕೆಲಸವನ್ನು ನಡೆಸುವಲ್ಲಿ ಮಣಿಪುರಿ ಬರಹಗಾರರು ತುಸುವೂ ಜಾಣ್ಮೆಯನ್ನು ತೋರಿಸಲಿಲ್ಲವಾದ ಕಾರಣ, ಇವತ್ತು ಆ ನುಡಿಯ ಬರಹದಲ್ಲಿ ಹಲವಾರು ಪದಬರಿಗೆಯ ತೊಡಕುಗಳು ತುಂಬಿಕೊಂಡಿವೆ. ಶಾಲೆಗಳಲ್ಲಿ ಮಕ್ಕಳಿಗೆ ಮಣಿಪುರಿ ಬರಹವನ್ನು ಕಲಿಸುವುದು, ಮತ್ತು ಆಮೇಲೆ ಅದನ್ನು ತಮ್ಮ ಬರಹಗಳಲ್ಲಿ ಬಳಸುವುದು ತುಂಬಾ ತೊಡಕಿನ ಕೆಲಸವಾಗಿದೆ.
ಮಣಿಪುರಿ ನುಡಿಯಲ್ಲಿ ಬರೆಯಲು ಒಟ್ಟು 24 ಮುಚ್ಚುಲಿ(ವ್ಯಂಜನ) ಗಳಿದ್ದರೆ ಸಾಕು; ಆದರೆ, ಬಂಗಾಲಿ ಲಿಪಿಯಲ್ಲಿ ಒಟ್ಟು 35 ಮುಚ್ಚುಲಿಗಳಿವೆ.
ಮಣಿಪುರಿ ಬರಹಗಾರರು ತಮ್ಮ ನುಡಿಗೆ ಬಂಗಾಲಿ ಲಿಪಿಯನ್ನು ಅಳವಡಿಸಿ ಕೊಳ್ಳುವಾಗ, ಅದಕ್ಕೆ ಬೇಕಾಗಿರುವ 24 ಮುಚ್ಚುಲಿಗಳನ್ನು ಮಾತ್ರವೇ ಆರಿಸಿಕೊಳ್ಳುವ ಬದಲು, ಈ ಎಲ್ಲಾ 35 ಮುಚ್ಚುಲಿಗಳನ್ನೂ ಒಂದಲ್ಲ ಒಂದು ಬಗೆಯಲ್ಲಿ ಬಳಸಿಕೊಂಡರು. ಇದರಿಂದಾಗಿ, ಮತ್ತು ಇಂತಹವೇ ಬೇರೆಯೂ ಹಲವು ತಪ್ಪುಗಳಿಂದಾಗಿ, ಇವತ್ತು ಮಣಿಪುರಿ ಬರಹದಲ್ಲಿ ಹಲವಾರು ಪದಬರಿಗೆಯ (ಸ್ಪೆಲ್ಲಿಂಗ್) ತೊಡುಕುಗಳು ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಮಣಿಪುರಿಯಲ್ಲಿ ಒಂದು ಸಕಾರ ಮಾತ್ರ ಇದೆ. ಅದನ್ನು ಬರೆಯಲು ಒಂದು ಬರಿಗೆ ಇದ್ದರೆ ಸಾಕು. ಆದರೆ, ಬಂಗಾಲಿ ಲಿಪಿಯಲ್ಲಿ ಸ, ಶ ಮತ್ತು ಷಗಳೆಂಬ ಮೂರು ಅಂತಹ ಬರಿಗೆಗಳಿವೆ. ಮಣಿಪುರಿ ಬರಹಗಾರರು ಅವುಗಳಲ್ಲಿ ಒಂದನ್ನು ಮಾತ್ರವೇ ಆರಿಸಿಕೊಳ್ಳುವ ಬದಲು ಮೂರನ್ನೂ ಆರಿಸಿಕೊಂಡರು. ಆದರೆ, ಅವುಗಳಲ್ಲಿ ಯಾವುದನ್ನು ಎಲ್ಲಿ ಬಳಸಬೇಕು ಎಂಬುದಕ್ಕೆ ಯಾವ ಒಂದು ಕಟ್ಟಲೆಯನ್ನೂ ಮಾಡಲಿಲ್ಲ. ಇದರಿಂದಾಗಿ, ಇವತ್ತು ಮಣಿಪುರಿಯ ಯಾವ ಪದದಲ್ಲಿ ಬರುವ ಸಕಾರವನ್ನು ಸಕಾರವಾಗಿ, ಶಕಾರವಾಗಿ ಇಲ್ಲವೇ ಷಕಾರವಾಗಿ ಬರೆಯಲಾಗುತ್ತದೆ ಎಂಬ ವಿಶಯದಲ್ಲಿ ಎಂತಹ ಕಟ್ಟಳೆಯೂ ಕಾಣಿಸುವುದಿಲ್ಲ!
ಇಂತಹವೇ ಇನ್ನೂ ಹಲವಾರು ಪದಬರಿಗೆಯ ತೊಡಕುಗಳು ಮಣಿಪುರಿ ಬರಹದಲ್ಲಿ ತುಂಬಿಕೊಂಡಿವೆ. ಈ ತೊಡಕುಗಳನ್ನು ಬಗೆಹರಿಸಬೇಕಿದ್ದಲ್ಲಿ ಮಣಿಪುರಿ ಉಲಿಗಳು ಎಶ್ಟಿವೆಯೋ ಅಶ್ಟು ಬರಿಗೆಗಳನ್ನು ಮಾತ್ರ ಉಳಿಸಿಕೊಳ್ಳ ಬೇಕು ಮತ್ತು ಪದಗಳನ್ನು ಯಾವ ರೀತಿಯಲ್ಲಿ ಓದಲಾಗುತ್ತದೆಯೋ ಅದೇ ರೀತಿಯಲ್ಲಿ ಬರೆಯುವ ಹಾಗೆ ಈ ಬರಿಗೆಗಳನ್ನು ಬಳಸಬೇಕು. ಇದನ್ನು ಮಣಿಪುರಿ ಉಲಿಯರಿಮೆಯ ತಿಳಿವಿಲ್ಲದೆ ನಡೆಸಲು ಬರುವುದಿಲ್ಲ.
ಇಂಗ್ಲಿಶ್ ಬರಹದಲ್ಲಿ ಪದಗಳನ್ನು ಯಾವ ರೀತಿ ಬರೆಯಬೇಕು, ಅವುಗಳಲ್ಲಿ ಯಾವ ಬರಿಗೆ(ಅಕ್ಶರ)ಗಳನ್ನು ಬಳಸಬೇಕು ಎಂಬ ವಿಶಯದಲ್ಲಿ ತುಂಬಾ ಗೊಂದಲವಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬರೆಯುತ್ತಿದ್ದರು. ಈ ಸಮಯದಲ್ಲಿ (1788ರಲ್ಲಿ), ಸಾಮ್ಯುವೆಲ್ ಜಾನ್ಸನ್ ಎಂಬ ವಿದ್ವಾಂಸರು ಒಂದು ಚನ್ನಾಗಿರುವ ಪದನೆರಕೆ(ಕೋಶ)ವನ್ನು ಹೊರತಂದರು. ಇದರಲ್ಲಿ ಪದಗಳ ಹುರುಳುಗಳನ್ನು ತುಂಬಾ ಚನ್ನಾಗಿ ಕೊಡಲಾಗಿತ್ತು.
ಇದರಿಂದಾಗಿ, ಆ ಪದನೆರಕೆ ಇಂಗ್ಲಿಶ್ ಬರಹಗಾರರಿಗೆ ಮಾದರಿ ಪದನೆರಕೆಯಾಯಿತು. ಎಲ್ಲರೂ ಅದರಲ್ಲಿ ಕೊಟ್ಟಿರುವ ಪದಬರಿಗೆಯನ್ನೇ
(ಸ್ಪೆಲ್ಲಿಂಗ್) ಬಳಸಲು ತೊಡಗಿದರು ಮತ್ತು ಇದರಿಂದಾಗಿ, ಆ ವಿಶಯದಲ್ಲಿ ಮೊದಲಿಗಿದ್ದ ಗೊಂದಲ ಇಲ್ಲವಾಯಿತು.
ಆದರೆ, ಜಾನ್ಸನ್ ಅವರಿಗೆ ಸರಿಯಾದ ಬರಿಗೆಯರಿಮೆಯ ತಿಳಿವು ಇರಲಿಲ್ಲ. ಇಂಗ್ಲಿಶ್ ಪದಗಳ ಚರಿತ್ರೆ ಎಂತಹದು ಎಂಬುದನ್ನು ಅವುಗಳಲ್ಲಿ ಬರುವ ಬರಿಗೆಗಳು ಸೂಚಿಸುವಂತಿರಬೇಕು ಎಂಬ ತಪ್ಪು ತೀರ್ಮಾನವನ್ನು ಅವರು ಮಾಡಿಕೊಂಡಿದ್ದರು. ಎತ್ತುಗೆಗಾಗಿ, ಞಟಿoತಿ, ಞಟಿighಣ, ಞಟಿoಛಿಞ, ಞಟಿob, ಞಟಿiಣ, ಞಟಿoಣ ಮೊದಲಾದ ಪದಗಳ ಮೊದಲಿಗೆ ಅವರು ಇರಿಸಿದ್ದ ಞ ಬರಿಗೆ ಆ ಪದಗಳ ಉಲಿಪಿನಲ್ಲಿ (ಉಚ್ಚಾರಣೆಯಲ್ಲಿ) ಹಿಂದೆ ಒಂದು ಕಕಾರವಿತ್ತು ಎಂಬುದಾಗಿ ಅದರ ಚರಿತ್ರೆಯನ್ನು ಸೂಚಿಸುತ್ತದೆಯಲ್ಲದೆ ಅದರ ಇವತ್ತಿನ ಉಲಿಪನ್ನು ಸೂಚಿಸುವುದಿಲ್ಲ.
ಇಂತಹ ಇನ್ನೂ ಹಲವಾರು ಉಲಿಪಿನಲ್ಲಿಲ್ಲದ ಮತ್ತು ಉಲಿಪಿಗಿಂತ ಬೇರಾಗಿರುವ ಬರಿಗೆಗಳನ್ನು ಅವರು ತಮ್ಮ ಪದನೆರಕೆಯ ಪದಗಳಲ್ಲಿ ಬಳಸಿದ್ದಾರೆ. ಇದಲ್ಲದೆ, ಪದಗಳ ಚರಿತ್ರೆಯನ್ನೂ ಅವರು ಎಲ್ಲೆಡೆಗಳಲ್ಲೂ ಸರಿಯಾಗಿ ಸೂಚಿಸಿರಲಿಲ್ಲ. ಅದಕ್ಕೆ ಬೇಕಾದ ತಿಳುವಳಿಕೆ ಅವರಲ್ಲಿಲ್ಲದಿದ್ದುದೇ ಇದಕ್ಕೆ ಕಾರಣ.
ಎತ್ತುಗೆಗಾಗಿ, ಡಿeಛಿeiಠಿಣ ಪದದಲ್ಲಿದ್ದ ಲ್ಯಾಟಿನ್ ಪಕಾರವನ್ನು ಅವರು ಉಳಿಸಿದ್ದಾರೆ, ಅದರೆ ಜeಛಿeiಣ ಪದದಲ್ಲಿ ಅದನ್ನು ಉಳಿಸಿಲ್ಲ; uಠಿhiಟಟ ಪದದಲ್ಲಿ ಎರಡು ಲಕಾರಗಳನ್ನು ಉಳಿಸಿದ್ದಾರೆ, ಆದರೆ ಜoತಿಟಿhiಟ ಪದದಲ್ಲಿ ಒಂದನ್ನು ಬಿಟ್ಟಿದ್ದಾರೆ; ಚಿಞe ಪದಕ್ಕೆ ಗ್ರೀಕ್ ನುಡಿಯ ಚಿಛಿhos ಪದ ಮೂಲ ಎಂಬ ತಪ್ಪು ಗ್ರಹಿಕೆಯಿಂದ ಚಿಛಿhe ಎಂಬ ಪದಬರಿಗೆಯನ್ನು ಕೊಟ್ಟಿದ್ದಾರೆ; ನಿಜಕ್ಕೂ ಅದು ಆಂಗ್ಲೋ-ಸಾಕ್ಸನ್ ಪದವಾಗಿದ್ದು, ಅದನ್ನು ಚಿಞe ಎಂಬುದಾಗಿ ಬರೆಯುವುದೇ ಸರಿಯಾಗಿತ್ತು. ಇಂತಹ ಹಲವಾರು ಬೇಡದ ತಪ್ಪುಗಳನ್ನು ಅವರು ಮಾಡಿದುದರಿಂದಾಗಿ, ಮತ್ತು ಆಮೇಲೆ ಅದನ್ನು ಯಾರೂ ಸರಿಪಡಿಸಲು ಹೋಗದುದರಿಂದಾಗಿ, ಇವತ್ತು ಇಂಗ್ಲಿಶ್ ಬರಹದಲ್ಲಿ ಹಲವಾರು ಪದ ಬರಿಗೆಯ ತೊಡಕುಗಳು ತುಂಬಿಕೊಂಡಿವೆ.
ನಿಜಕ್ಕೂ ಪದಗಳ ಉಲಿಪು ಎಂತಹದು, ಎಂದರೆ ಅವುಗಳನ್ನು ಓದುವ ಬಗೆ ಹೇಗೆ ಎಂಬುದನ್ನು ಸೂಚಿಸುವುದೇ ಬರಹಗಳಲ್ಲಿ ಬಳಕೆಯಾಗುವ ಬರಿಗೆಗಳು ಮಾಡಬೇಕಾಗಿರುವ ಕೆಲಸ. ಉಲಿಪಿನಲ್ಲಿಲ್ಲದ ಬರಿಗೆಗಳನ್ನು ಬಳಸಿದಾಗಲೆಲ್ಲ ಪದಗಳನ್ನು ಓದಲು ಮತ್ತು ಬರೆಯಲು ತೊಂದರೆಯಾಗು ತ್ತದೆ. ಹಿಂದಿನ ಕಾಲದಲ್ಲಿ ಹಲವು ನುಡಿಗಳಿಗೆ ಲಿಪಿಗಳನ್ನು ಅಳವಡಿಸಿದ್ದ
ಕ್ರಿಶ್ಚಿಯನ್ ಮಿಶನರಿಗಳೂ ಈ ವಿಶಯದಲ್ಲಿ ತುಂಬಾ ತಪ್ಪುಗಳನ್ನು ಮಾಡಿ ದ್ದಾರೆ. ಅವರ ಈ ತಪ್ಪುಗಳಿಂದಾಗಿ, ಇವತ್ತು ಅಂತಹ ನುಡಿಗಳ ಬರಹಗಳೆಲ್ಲ ಅನವಶ್ಯಕವಾಗಿ ತೊಡಕು ತೊಡಕಾಗಿವೆ.
ಜಾನ್ಸನ್ ಮಾಡಿದ ಹಲವು ಬಗೆಯ ಬರಿಗೆಯ ತಪ್ಪುಗಳಿಂದಾಗಿ, ಇವತ್ತು ಇಂಗ್ಲಿಶ್ ಬರಹವನ್ನು ಕಲಿಯುವ ಕೆಲಸ ತುಂಬಾ ತೊಡಕಿನದಾಗಿದೆ. ಬೇರೆ ಉಲಿಬರಿಗೆಯ ಬರಹಗಳ ಕಲಿಕೆಗೆ ಬೇಕಾಗುವ ಸಮಯದ ಮೂರು ಪಾಲಶ್ಟು ಸಮಯ ಇಂಗ್ಲಿಶ್ ಬರಹದ ಕಲಿಕೆಗೆ ಬೇಕಾಗುತ್ತದೆ! ಅಮೆರಿಕಾದಂತಹ ತುಂಬಾ ಮುಂದುವರಿದ ದೇಶಗಳಲ್ಲಿ ಮಕ್ಕಳ ಕಲಿಕೆಗಾಗಿ ಹಲವಾರು ಹೊಸ ಹೊಸ ವಿದಾನಗಳನ್ನು ಬಳಸಲಾಗುತ್ತದೆ; ಹೀಗಿದ್ದರೂ, ಇವತ್ತು ಅಲ್ಲಿನ ಶಾಲೆಗಳಲ್ಲಿ ಇಂಗ್ಲಿಶ್ ಕಲಿತ ಮಕ್ಕಳಲ್ಲಿ ಅರೆವಾಶಿ ಮಕ್ಕಳಿಗೂ ಸರಿಯಾಗಿ ಬರೆಯಲು ಬರುವುದಿಲ್ಲ, ಮತ್ತು ಅಯ್ವರಲ್ಲೊಬ್ಬರಿಗೆ ಸರಿಯಾಗಿ ಓದಲೂ ಬರುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ.
ಇಂಗ್ಲಿಶ್ ಬರಹಗಳನ್ನು ಓದುವ ಕೆಲಸ ಅಶ್ಟೊಂದು ತೊಡಕಿನದಾಗಿರಲು ಕಾರಣವೇನೆಂದರೆ, ಅದರ ಪದಗಳಲ್ಲಿ ಬರುವ ಒಂದೇ ಬರಿಗೆ ಇಲ್ಲವೇ ಬರಿಗೆಕಂತೆಯನ್ನು ಬೇರೆ ಬೇರೆ ಬಗೆಗಳಲ್ಲಿ ಓದಬೇಕಾಗುತ್ತದೆ. ಎತ್ತುಗೆಗಾಗಿ, oಟಿಛಿe, oಟಿಟಥಿ, ತಿomಚಿಟಿ, ತಿomeಟಿ, ತಿoಡಿಡಿಥಿ ಎಂಬ ಅಯ್ದು ಪದಗಳಲ್ಲಿ ಬರುವ o ಬರಿಗೆಯನ್ನು ಅಯ್ದು ಬೇರೆ ಬೇರೆ ಬಗೆಗಳಲ್ಲಿ ಓದಬೇಕಾಗುತ್ತದೆ. ಯಾವ ಪದದಲ್ಲಿ ಬರುವ o ಬರಿಗೆಯನ್ನು ಯಾವ ಬಗೆಯಲ್ಲಿ ಓದಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳದೆ ಇಂತಹ ಪದಗಳನ್ನು ಓದಲು ಬರುವುದಿಲ್ಲ.
ಇದಲ್ಲದೆ, ಒಂದೇ ಉಲಿಯನ್ನು ಬರೆಯಬೇಕಾಗಿರುವಲ್ಲೂ ಇಂಗ್ಲಿಶ್ನಲ್ಲಿ ಹಲವು ಬರಿಗೆಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಈ ಎಂಬ ಒಂದು ಉಲಿಯನ್ನು ಬರೆಯಲು ಞeಥಿ, sಞi, ಠಿeeಠಿ, ಟeಚಿಠಿ, ಠಿeoಠಿಟe, ತಿeಚಿಡಿಜ, ಛಿhieಜಿ, ಠಿoಟiಛಿe, me ಎಂಬ ಎಂಟು ಪದಗಳಲ್ಲಿ ಎಂಟು ಬೇರೆ ಬೇರೆ ಬರಿಗೆ ಇಲ್ಲವೇ ಬರಿಗೆಕಂತೆಗಳನ್ನು ಬಳಸಬೇಕಾಗುತ್ತದೆ. ಇದರಿಂದಾಗಿ, ಉಲಿ ಒಂದೇ ಇರುವಲ್ಲೂ ಯಾವ ಪದದಲ್ಲಿ ಯಾವ ಬರಿಗೆಯನ್ನು ಬಳಸಬೇಕು ಎಂಬುದನ್ನು ಬರೆಯುವವರು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಇಂಗ್ಲಿಶ್ನಲ್ಲಿ ಸ್ವಲ್ಪಮಟ್ಟಿಗಾದರೂ ತಪ್ಪಿಲ್ಲದೆ ಓದಲು-ಬರೆಯಲು ಗೊತ್ತಿರಬೇಕಿದ್ದಲ್ಲಿ, ಕಡಿಮೆಯೆಂದರೆ 3,700ರಶ್ಟು ಪದಗಳ ಬರಿಗೆಗಳನ್ನು ನೆನಪಿನಲ್ಲಿರಿಸಿಕೊಳ್ಳಬೇಕಾಗುತ್ತದೆ! ಇದಕ್ಕೆ ಬದಲು, ಮೇಲೆ ವಿವರಿಸಿರುವಂತಹ ಕೊರಿಯನ್ ಇಲ್ಲವೇ ಫಿನ್ನಿಶ್ ಬರಹಗಳಲ್ಲಿ ಓದಲು-ಬರೆಯಲು ಕಲಿಯ
ಬೇಕಿದ್ದಲ್ಲಿ, ಆ ರೀತಿ ಒಂದೇ ಒಂದು ಪದದ ಬರಿಗೆಗಳನ್ನೂ ನೆನಪಿನಲ್ಲಿರಿಸಿ ಕೊಳ್ಳಬೇಕಾಗಿಲ್ಲ! ಅವುಗಳಲ್ಲಿ ಎಲ್ಲಾ ಪದಗಳನ್ನೂ ಬರೆದಿರುವ ಹಾಗೆಯೇ ಓದಲಾಗುತ್ತದೆ ಮತ್ತು ಓದುವ ಹಾಗೆಯೇ ಬರೆಯಲಾಗುತ್ತದೆ. ಹಾಗಾಗಿ, ಅವುಗಳಲ್ಲಿ ಓದಲು ಇಲ್ಲವೇ ಬರೆಯಲು ಕಲಿಯುವವರು ಯಾವ ಬರಿಗೆ ಯಾವ ಉಲಿಯನ್ನು ಸೂಚಿಸುತ್ತದೆ ಎಂಬುದನ್ನಶ್ಟೇ ತಿಳಿದುಕೊಂಡರೆ ಸಾಕು.
9.2.4 ಕನ್ನಡ ಬರಹದ ಪದಬರಿಗೆಯ ತೊಡಕು
ಕನ್ನಡಕ್ಕೆ ತುಂಬಾ ಒಳ್ಳೆಯ ಬರಿಗೆಕಟ್ಟಲೆಯಿದೆ. ಯಾಕೆಂದರೆ, ಕನ್ನಡದ್ದೇ ಆದ ಪದಗಳನ್ನು ನಾವು ಹೇಗೆ ಓದುತ್ತೇವೆಯೋ ಹಾಗೆಯೇ ಬರೆಯುತ್ತೇವೆ. ಇದಲ್ಲದೆ, ಕನ್ನಡದ ಬರಿಗೆಗಳು ನೇರವಾಗಿ ಉಲಿಗಳನ್ನು ಸೂಚಿಸುತ್ತವೆ ಮಾತ್ರವಲ್ಲ, ಅವುಗಳಲ್ಲಿ ಬರುವ ಮುಚ್ಚುಲಿ(ವ್ಯಂಜನ) ಮತ್ತು ತೆರೆಯುಲಿ(ಸ್ವರ)ಗಳ ಕಂತೆಗಳು (ಬ, ಬಿ, ಬು, ಕಿ, ಕು ಮೊದಲಾದವು) ಉಲಿಕಂತೆಗಳನ್ನೂ ಸೂಚಿಸುತ್ತವೆ. ಎರಡು ಮುಚ್ಚುಲಿಗಳು ಒಟ್ಟಿಗೆ ಬರುವಲ್ಲಿ (ಕಟ್ಟು, ಕತ್ತಲೆ, ಕಣ್ತಪ್ಪು ಎಂಬಂತಹ ಪದಗಳಲ್ಲಿ) ಮಾತ್ರ, ಬರಿಗೆಕಂತೆಗೂ ಉಲಿಕಂತೆಗೂ ನಡುವಿರುವ ಪತ್ತುಗೆ(ಸಂಬಂದ) ಅಶ್ಟೊಂದು ಸ್ಪಶ್ಟವಾಗಿಲ್ಲ. ಕನ್ನಡದವೇ ಆದ ಪದಗಳ ಮಟ್ಟಿಗೆ ಬರಿಗೆಗಳ ಬಳಕೆ ಇಶ್ಟು ಚನ್ನಾಗಿರಲು ಒಂದು ಕಾರಣವೇನೆಂದರೆ, ಪದಗಳ ಓದಿನಲ್ಲಿ (ಉಲಿಪಿನಲ್ಲಿ) ಮಾರ್ಪಾಡುಗಳು ನಡೆಯುತ್ತಿದ್ದ ಹಾಗೆ, ಅವುಗಳ ಬರಿಗೆಗಳಲ್ಲೂ ಮಾರ್ಪಾಡುಗಳನ್ನು ಮಾಡಿಕೊಳ್ಳ ಲಾಗಿದೆ. ಎತ್ತುಗೆಗಾಗಿ, ರ-ಱ ಮತ್ತು ಳ-ೞಗಳ ನಡುವಿನ ವ್ಯತ್ಯಾಸ ಓದಿನಿಂದ ಬಿದ್ದುಹೋದಾಗ, ಕನ್ನಡ ಬರಹದಿಂದಲೂ ಆ ವ್ಯತ್ಯಾಸಗಳನ್ನು ತೆಗೆದು ಹಾಕಲಾಯಿತು; ಓದಿನಲ್ಲಿ ಪಕಾರ ಹಕಾರವಾದಾಗ, ಮತ್ತು ವಕಾರ ಬಕಾರ ವಾದಾಗ, ಬರಹದಲ್ಲೂ ಅಂತಹದೇ ಮಾರ್ಪಾಡನ್ನು ಮಾಡಿಕೊಳ್ಳಲಾಯಿತು. ಆದರೆ, ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳ ವಿಶಯದಲ್ಲಿ ಈ ರೀತಿ ಓದಿಗೂ ಬರಹಕ್ಕೂ ನಡುವೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಮಗೆ ಸಾದ್ಯವಾಗಿಲ್ಲ. ಅಂತಹ ಪದಗಳನ್ನುಎರಡು ಸಾವಿರ ವರ್ಶಗಳಶ್ಟು ಹಿಂದೆ ಸಂಸ್ಕ್ರುತದಲ್ಲಿ ಹೇಗೆ ಬರೆಯಲಾಗುತ್ತಿತ್ತೋ ಮತ್ತು ಓದಲಾಗುತ್ತಿತ್ತೋ ಹಾಗೆಯೇ ಕನ್ನಡದಲ್ಲೂ ಬರೆಯುತ್ತಿರಬೇಕು ಮತ್ತು ಓದುತ್ತಿರಬೇಕು ಎಂಬ ಕಟ್ಟಲೆಯೊಂದನ್ನು ನಾವು ನಮ್ಮ ಮೇಲೆ ಹೊರಿಸಿಕೊಂಡಿದ್ದೇವೆ. ಕನ್ನಡದ ಮಟ್ಟಿಗೆ ಇದು ತೀರಾ ಅನವಶ್ಯಕವಾಗಿರುವ ಕಟ್ಟಲೆ. ಈ ಪದಗಳನ್ನು ಓದುವ ವಿಶಯದಲ್ಲಿ ಇವತ್ತು ಹೆಚ್ಚಿನ ಕನ್ನಡಿಗರೂ ಈ ಕಟ್ಟಲೆಯನ್ನು ಉಳಿಸಿಕೊಂಡಿಲ್ಲ;
ಆದರೆ, ಬರೆಯುವ ವಿಶಯದಲ್ಲಿ ಮಾತ್ರ ಅದನ್ನು ಉಳಿಸಿಕೊಂಡಿದ್ದೇವೆ. ಇದರಿಂದಾಗಿ, ಇವತ್ತು ಈ ಪದಗಳ ಬರವಣಿಗೆಯಲ್ಲಿ ಉಲಿ ಮತ್ತು ಬರಿಗೆಗಳ ನಡುವೆ ನೇರವಾದ ಹೊಂದಾಣಿಕೆಯಿಲ್ಲ.
ಶಾಲೆಯಲ್ಲಿ ಮಕ್ಕಳಿಗೆ ಕನ್ನಡ ಬರಹವನ್ನು ಓದಲು ಮತ್ತು ಬರೆಯಲು ಕಲಿಸುವಾಗ, ಈ ಅನವಶ್ಯಕವಾದ ಕಟ್ಟಲೆಯನ್ನು ಉಳಿಸಿಕೊಳ್ಳುವುದಕ್ಕಾಗಿ, ಋ, ಷ, ಮಹಾಪ್ರಾಣ, ವಿಸರ್ಗ ಮೊದಲಾದ ಹಲವು ಹೆಚ್ಚಿನ ಬರಿಗೆಗಳನ್ನು ಕಲಿಸಬೇಕಾಗಿದೆ. ಇವು ಓದಿನಲ್ಲಿ ಕಾಣಿಸಿಕೊಳ್ಳುವುದಿಲ್ಲವಾದ ಕಾರಣ, ಕನ್ನಡ ಬರಹದಲ್ಲಿ ಹಲವು ಪದಬರಿಗೆಯ ತೊಡಕುಗಳನ್ನು ತಂದುಹಾಕಿವೆ. ಅವನ್ನು ಬಳಸಬೇಕಾಗಿರುವ ಮತ್ತು ಬಳಸಬಾರದಿರುವ ಎಲ್ಲಾ ಪದಗಳನ್ನೂ ನೆನಪಿನ ಲ್ಲಿಟ್ಟುಕೊಳ್ಳದೆ ಮಕ್ಕಳಿಗೆ ಕನ್ನಡದಲ್ಲಿ ತಪ್ಪಿಲ್ಲದೆ ಬರೆಯಲು ಬರುವುದಿಲ್ಲ. ಓದಲು ಕಲಿಯುವಲ್ಲೂ ಇವು ತೊಂದರೆ ಕೊಡುತ್ತವೆ. ಯಾಕೆಂದರೆ, ಶಾಲೆಗಳಲ್ಲಿ ಓದಲು-ಬರೆಯಲು ಕಲಿಸುವಾಗ, ಈ ಬರಿಗೆಗಳ ಓದು ಉಳಿದ ಬರಿಗೆಗಳ ಓದಿಗಿಂತ ಬೇರಾದುದು ಎಂಬುದಾಗಿಯೇ ಕಲಿಸಲಾಗುತ್ತದೆ. ಆದರೆ ಹೆಚ್ಚಿನ ಕಲಿಸುಗರಿಗೂ ಅವು ಹೇಗೆ ಬೇರಾಗಿವೆ ಎಂಬುದನ್ನು ಮಕ್ಕಳಿಗೆ ಮನ ಮುಟ್ಟುವಂತೆ ತಿಳಿಸಲು ಬರುವುದಿಲ್ಲ. ಇದಲ್ಲದೆ, ಓದುವಾಗ ಅಂತಹ ಕಲಿಸುಗರೂ ಅವನ್ನು ಬೇರಾಗಿ ಓದುವುದಿಲ್ಲ. ಅವರ ಓದಿನಲ್ಲಿ ಶ-ಷಗಳ ನಡುವೆ, ರು-ಋಗಳ ನಡುವೆ, ಮತ್ತು ಅಲ್ಪಪ್ರಾಣ-ಮಹಾಪ್ರಾಣಗಳ ನಡುವೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಇದು ಮಕ್ಕಳಲ್ಲಿ ಗೊಂದಲವನ್ನುಂಟು ಮಾಡುತ್ತದೆ.
ಕನ್ನಡದ ಮಟ್ಟಿಗೆ ತೀರಾ ಅನವಶ್ಯಕವಾಗಿರುವ ಈ ಕಟ್ಟಲೆಯನ್ನು ಕಯ್ಬಿಟ್ಟಲ್ಲಿ, ಕನ್ನಡ ಬರಹವನ್ನು ಓದಲು ಮತ್ತು ಬರೆಯಲು ಕಲಿಸುವ ಕೆಲಸ ತುಂಬಾ ಸುಳುವಾಗಬಲ್ಲುದು (2.3.5 ನೋಡಿ). ಇದು ಮೇಲ್ವರ್ಗ ದವರಿಗಿಂತ ಕೆಳವರ್ಗದವರಿಗೆ ಹೆಚ್ಚು ಅನುಕೂಲವಾಗಬಲ್ಲ ಬರಿಗೆಹಮ್ಮುಗೆ ಯಾಗಿದೆ. ಇದನ್ನು ನಡೆಸುವ ಬಗೆ ಹೇಗೆ ಎಂಬುದನ್ನು ನಾನು ನನ್ನ ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ (ಬಟ್ 2005, 2009) ವಿವರಿಸಿದ್ದೇನೆ.
ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗುವ ಹಾಗೆ ನಾವು ಇವತ್ತು ಮಾಡಲೇಬೇಕಾಗಿದೆ. ಯಾಕೆಂದರೆ, ಇವತ್ತು ಬರಹವನ್ನು ಜನರಿಗೆ ತಿಳುವಳಿಕೆಯನ್ನು ಕೊಡುವ ಕೆಲಸಕ್ಕಾಗಿಯೇ ಹೆಚ್ಚು ಹೆಚ್ಚು ಬಳಸಲಾಗುತ್ತಿದೆ, ಮತ್ತು ಅವು ಕೊಡಬಲ್ಲ ಈ ತಿಳುವಳಿಕೆಯನ್ನು
ಎಲ್ಲರೂ ಪಡೆಯಬೇಕಾಗಿದೆ. ಹೀಗಾಗಬೇಕಿದ್ದಲ್ಲಿ, ಎಲ್ಲರೂ ಬರಹಗಳನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.
ಆದರೆ, ಇದಕ್ಕೆ ಹಲವು ತೊಡರುಗಳಿದ್ದು, ಕನ್ನಡಕ್ಕೆ ತೀರಾ ಅನವಶ್ಯಕ ವಾಗಿರುವ ಮೇಲಿನ ಕಟ್ಟಲೆ ಅವುಗಳಲ್ಲೊಂದು. ಅದನ್ನು ಬಿಟ್ಟುಕೊಡುವಂತಹ ಹಮ್ಮುಗೆಯನ್ನು ನಾವು ಇವತ್ತು ಹಮ್ಮಿಕೊಳ್ಳಲೇಬೇಕೆಂದು ನನಗೆ ಅನಿಸುತ್ತದೆ. ಹಾಗೆ ಮಾಡಿದಲ್ಲಿ, ಇವತ್ತು ಕನ್ನಡ ಬರಹದಲ್ಲಿರುವ ಪದಬರಿಗೆಯ ತೊಡಕು ಪೂರ್ತಿ ಇಲ್ಲವಾಗಬಲ್ಲುದು, ಮತ್ತು ಅದು ಫಿನ್ನಿಶ್, ಕೊರಿಯನ್ ಮೊದಲಾದ ಬರಹಗಳ ಹಾಗೆ, ಜನರಿಗೆ ಕಲಿಯಲು ತುಂಬಾ ಸುಳುವಾದ ಬರಹವಾಗ ಬಲ್ಲುದು.
9.2.5 ಸೊಲ್ಲರಿಮೆಯ ಹಮ್ಮುಗೆ
ಒಂದು ನುಡಿ ಇಲ್ಲವೇ ಒಳನುಡಿಯನ್ನು ಎಲ್ಲರ ನುಡಿಯಾಗಿ ಇಲ್ಲವೇ ಕಲಿಕೆ, ಆಡಳಿತ, ಕೋರ್ಟು, ಕಯ್ಗಾರಿಕೆ, ಮಾರಾಟ ಮೊದಲಾದವುಗಳ ನುಡಿಯಾಗಿ ನುಡಿಹಮ್ಮುಗೆಯ ಮೂಲಕ ಬಳಕೆಗೆ ತರಬೇಕಿದ್ದಲ್ಲಿ, ಮೊದಲಿಗೆ ಅದರ ಸೊಲ್ಲರಿಮೆ ಎಂತಹದು ಎಂಬುದನ್ನು ಕಂಡುಹಿಡಿಯಬೇಕಾಗುತ್ತದೆ.
ಈ ಕೆಲಸವನ್ನು ನುಡಿಯರಿಗರು ಮಾತ್ರವೇ ನಡೆಸಬಲ್ಲರು. ಯಾಕೆಂದರೆ, ಸೊಲ್ಲರಿಮೆಯೆಂಬುದು ತೀರಾ ತೊಡಕು ತೊಡಕಾದ ವಿಶಯ. ಎಲ್ಲಾ ನುಡಿಗಳಿಗೂ ಅವುಗಳದೇ ಆದ ಸೊಲ್ಲರಿಮೆಯಿದ್ದು, ಒಂದು ನುಡಿಯ ಸೊಲ್ಲರಿಮೆಯ ಹಾಗೆ ಇನ್ನೊಂದು ನುಡಿಯ ಸೊಲ್ಲರಿಮೆ ಇರುವುದಿಲ್ಲ. ಈ ವಿಶಯವನ್ನು ಗಮನಕ್ಕೆ ತೆಗೆದುಕೊಂಡು, ನುಡಿಹಮ್ಮುಗೆಗೆ ಆಯ್ಕೆಯಾಗಿರುವ ನುಡಿ ಇಲ್ಲವೇ ಆಡುನುಡಿಯ ನಿಜವಾದ ಸೊಲ್ಲರಿಮೆ ಎಂತಹದು ಎಂಬುದನ್ನು ಅರಕೆ(ಸಂಶೋದನೆ)ಗಳ ಮೂಲಕ ಕಂಡುಹಿಡಿಯಬೇಕು.
ನಿಜಕ್ಕೂ ಇದು ಎಶ್ಟು ಮಾಡಿದರೂ ಮುಗಿಯದ ಕೆಲಸ. ಯಾಕೆಂದರೆ, ಯಾವುದೇ ಒಂದು ನುಡಿಯ ಸೊಲ್ಲರಿಮೆಯನ್ನೂ ಪೂರ್ತಿಯಾಗಿ ಬರೆದು ಮುಗಿಸಲು ಬರುವುದೇ ಇಲ್ಲ. ಇವತ್ತು ಇಂಗ್ಲಿಶ್ ನುಡಿಯ ಸೊಲ್ಲರಿಮೆಯ ಮೇಲೆ ಸಾವಿರಾರು ಬರಹಗಳು ಹೊರಬಂದಿವೆ. ಒಂದೆರಡು ಸಾವಿರ ಪುಟಗಳ ಕೆಲವು ಪುಸ್ತಕಗಳೂ ಹೊರಬಂದಿವೆ. ಹೀಗಿದ್ದರೂ, ಈ ಬರಹಗಳು ಇಂಗ್ಲಿಶ್ ನುಡಿಯ ಸೊಲ್ಲರಿಮೆಯನ್ನು ಪೂರ್ತಿಯಾಗಿ ತಿಳಿಸುತ್ತವೆಯೆಂದು ಯಾರೂ ಹೇಳಲಾರರು.
ಆದರೆ, ನುಡಿಹಮ್ಮುಗೆಗೆ ಬೇಕಾಗಿರುವುದು ಅಂತಹ ಪೂರ್ತಿಯಾದ ಸೊಲ್ಲರಿಮೆಯೇನಲ್ಲ. ಬಗೆಬಗೆಯ ಕೆಲಸಗಳಿಗೆ ಎಂತಹ ಸೊಲ್ಲರಿಮೆಯ ತಿಳಿವುಗಳು ಬೇಕಾಗುತ್ತವೆಯೋ ಅವನ್ನು ಬಗೆಬಗೆಯ ಬರಹಗಳ ಮೂಲಕ ಒದಗಿಸಿಕೊಡುವಂತಹ ಕೆಲಸ ಅದರಲ್ಲಿ ನಡೆಯಬೇಕಾಗಿದೆ.
ಎತ್ತುಗೆಗಾಗಿ, ಒಂದು ನುಡಿಯನ್ನು ಕೋರ್ಟು-ಕಚೇರಿಗಳ ನುಡಿಯಾಗಿ ಬಳಕೆಗೆ ತರಬೇಕಿದ್ದಲ್ಲಿ, ಅದರಲ್ಲಿ ಇಪ್ಪುರುಳಿನ ಸೊಲ್ಲುಗಳು ಬಾರದ ಹಾಗೆ ಕಾನೂನುಗಳನ್ನು, ತೀರ್ಮಾನಗಳನ್ನು ಇಲ್ಲವೇ ಆಡಳಿತದ ಕಟ್ಟಲೆಗಳನ್ನು ಬರೆಯಲು ಬರಬೇಕು. ಇದಕ್ಕಾಗಿ ಯಾವ ಬಗೆಯ ಸೊಲ್ಲುಗಳನ್ನು ಬಳಸಬೇಕು, ಮತ್ತು ಯಾವ ಬಗೆಯವನ್ನು ಬಳಸದಿರಬೇಕು ಎಂಬುದನ್ನು ಸೊಲ್ಲರಿಗರು ಅರಕೆಗಳ ಮೂಲಕ ತೋರಿಸಿಕೊಡಬಲ್ಲರು. ಅವರ ಈ ಅರಕೆಗಳು ಕಾನೂನು ಗಳನ್ನು ಬರೆಯುವವರಿಗೆ ನೆರವಾಗಬಲ್ಲುವು.
ಎಲ್ಲರ ನುಡಿಯಾಗಿ ಆಯ್ಕೆಯಾಗಿರುವ ನುಡಿಯನ್ನು ಇಲ್ಲವೇ ಆಡುನುಡಿ ಯನ್ನು ಶಾಲೆಗಳಲ್ಲಿ ಮಕ್ಕಳಿಗೆ ಕಲಿಸಿಕೊಡಬೇಕಾಗುತ್ತದೆ; ಈ ಮಕ್ಕಳು ಅಂತಹದೇ ಒಂದು ನುಡಿಯನ್ನು (ಎಂದರೆ, ಆ ನುಡಿಯ ಆಡುನುಡಿಯೊಂದನ್ನು) ತಮ್ಮ ತಾಯ್ನುಡಿಯಾಗಿ ಕಲಿತಿರಬಹುದು, ಇಲ್ಲವೇ ಅವರ ತಾಯ್ನುಡಿ ಬೇರೆಯೇ ಒಂದು ನುಡಿಯಾಗಿರಬಹುದು. ಈ ಎರಡು ಬಗೆಯ ಸಂದರ್ಬ ಗಳಲ್ಲೂ, ಆಯ್ಕೆಯಾಗಿರುವ ನುಡಿಯನ್ನು ಮಕ್ಕಳಿಗೆ ಕಲಿಸಲು ಎಂತಹ ಸೊಲ್ಲರಿಮೆಯ ಕಟ್ಟಲೆಗಳು ನೆರವಿಗೆ ಬರುತ್ತವೆ ಎಂಬುದನ್ನು ಸೊಲ್ಲರಿಗರು ಕಂಡುಹಿಡಿಯಬೇಕು. ಅವನ್ನು ಸೂಚಿಸುವಂತಹ ಬರಹಗಳನ್ನು ಅವರು ಹೊರತಂದಲ್ಲಿ ಅವು ಶಾಲೆಯ ಕಲಿಸುಗರಿಗೆ ನೆರವಾಗಬಲ್ಲುವು.
ಎಲ್ಲರ ನುಡಿಯಾಗಿ ಆಯ್ಕೆಯಾಗಿರುವ ನುಡಿಯನ್ನು ಹೀಗೆ ನುಡಿಹಮ್ಮುಗೆಯ ಮೂಲಕ ಬಗೆಬಗೆಯ ಕೆಲಸಗಳಲ್ಲಿ ತೊಡಗಿಸುವುದಕ್ಕಾಗಿ ಹಲವು ಬಗೆಯ ಸೊಲ್ಲರಿಮೆಯ ಬರಹಗಳನ್ನು ಉಂಟುಮಾಡಬೇಕಾಗುತ್ತದೆ. ಇದನ್ನು ಆ ನುಡಿಯ ಸೊಲ್ಲರಿಮೆಯನ್ನು ಚನ್ನಾಗಿ ತಿಳಿದುಕೊಂಡಿರುವ ನುಡಿಯರಿಗರೇ ನಡೆಸಬೇಕು. ಇಲ್ಲವಾದರೆ, ಅಂತಹ ಬರಹಗಳಿಂದ ಆ ಕೆಲಸಗಳನ್ನು ನಡೆಸುವವರಿಗೆ ಯಾವ ನೆರವೂ ದೊರೆಯಲಾರದು.
ಇವತ್ತು ಶಾಲೆಗಳಲ್ಲಿ ಇಲ್ಲವೇ ಕಾಲೇಜುಗಳಲ್ಲಿ ಕಲಿಸುವುದಕ್ಕಾಗಿ ಬಳಕೆಯಾಗುತ್ತಿರುವ ಕನ್ನಡದ ವ್ಯಾಕರಣ ಪುಸ್ತಕಗಳು ಇದಕ್ಕೆ ಉತ್ತಮ ಎತ್ತುಗೆಗಳಾಗಿವೆ. ನಿಜಕ್ಕೂ ಕನ್ನಡದ ವ್ಯಾಕರಣ (ಸೊಲ್ಲರಿಮೆ) ಎಂತಹದು ಎಂಬುದನ್ನು ತಿಳಿದಿಲ್ಲದ ಪಂಡಿತರು ಅವನ್ನು ಬರೆದಿದ್ದಾರೆ. ಹಾಗಾಗಿ, ಅವು
ಕನ್ನಡದಲ್ಲಿ ಓದಲು-ಬರೆಯಲು ಕಲಿಯುವ ಇಲ್ಲವೇ ಕಲಿಸುವ ಕೆಲಸದಲ್ಲಿ ಎಂತಹ ನೆರವನ್ನೂ ಕೊಡುವುದಿಲ್ಲ.
ಕೇಶಿರಾಜನೇ ಮೊದಲಾದ ಹಿಂದಿನ ತಿಳಿವಿಗರು ಸಂಸ್ಕ್ರುತದ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು, ಅಂತಹದೇ ಒಂದು ವ್ಯಾಕರಣವನ್ನು ಕನ್ನಡಕ್ಕೆ ಬರೆಯಲು ಪ್ರಯತ್ನ ಮಾಡಿದ್ದರು. ಆ ಪ್ರಯತ್ನ ಎಶ್ಟರ ಮಟ್ಟಿಗೆ ಕನ್ನಡದ ಪದಗಳನ್ನು, ಪದರೂಪಗಳನ್ನು ಮತ್ತು ಸೊಲ್ಲುಗಳನ್ನು ವಿವರಿಸುತ್ತಿವೆ ಎಂಬುದನ್ನು ಆಮೇಲಿನ ದಿನಗಳಲ್ಲಿ ಯಾರೂ ಆಳವಾಗಿ ಪರಿಶೀಲಿಸಲು ಹೋಗಲೇ ಇಲ್ಲ. ಅವರು ಬರೆದ ಹಳೆಗನ್ನಡದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹೊಸಗನ್ನಡಕ್ಕೂ ಅಳವಡಿಸಿಕೊಂಡು, ಅದನ್ನು ಶಾಲೆ-ಕಾಲೇಜು ಗಳಲ್ಲಿ ಕಲಿಸುವಂತಹ ಕೆಲಸವನ್ನು ಮಾತ್ರ ಕನ್ನಡದ ತಿಳಿವಿಗರು ಮಾಡುತ್ತಿದ್ದಾರೆ. ಕನ್ನಡದ್ದೇ ಆದ ಸೊಲ್ಲರಿಮೆ ಇದಕ್ಕಿಂತ ಯಾವ ರೀತಿಯಲ್ಲಿ ಬೇರಾಗಿದೆ ಎಂಬುದನ್ನು ನಾನು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (ಬಟ್ 2008) ಎಂಬ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದೇನೆ. ಅಂತಹ ಕನ್ನಡದ್ದೇ ಆದ ಸೊಲ್ಲರಿಮೆಯನ್ನು ಬರಹಕ್ಕೆ ಇಳಿಸುವ ಕೆಲಸ ಇವತ್ತು ನಡೆಯಬೇಕಾಗಿದೆ. ಮೇಲೆ ಸೂಚಿಸಿದ ಹಾಗೆ, ಇದು ಒಬ್ಬ ವ್ಯಕ್ತಿ ನಡೆಸಿ ಮುಗಿಸುವ ಕೆಲಸವಲ್ಲ; ಹಲವು ಕೂಟಗಳು ಹಲವಾರು ನುಡಿಯರಿಗರ ನೆರವಿನಿಂದ ನಡೆಸುತ್ತಾ ಇರ ಬೇಕಾದಂತಹ ಕೆಲಸ.
ಇದಲ್ಲದೆ, ಕನ್ನಡವನ್ನು ಬಗೆಬಗೆಯ ಕೆಲಸಗಳಲ್ಲಿ ತೊಡಗಿಸುವುದಕ್ಕೆ ಎಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ತಿಳಿಸುವಂತಹ ಸೊಲ್ಲರಿಮೆಯ ಬರಹಗಳೂ ಇವತ್ತು ಕನ್ನಡದಲ್ಲಿ ತಯಾರಾಗಬೇಕಾಗಿದೆ. ಎತ್ತುಗೆಗಾಗಿ, ಮೇಲೆ ಸೂಚಿಸಿದ ಹಾಗೆ, ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಓದಲು-ಬರೆಯಲು ಕಲಿಸಬೇಕಿದ್ದಲ್ಲಿ ಎಂತಹ ಸೊಲ್ಲರಿಮೆಯ ಕಟ್ಟಲೆಗಳನ್ನು ಅವರು ಗಮನಿಸುವ ಹಾಗೆ ಮಾಡಬೇಕು ಎಂಬುದನ್ನು ಕಂಡುಹಿಡಿಯಬೇಕು, ಮತ್ತು ಅವನ್ನು ತಿಳಿಸುವಂತಹ ಬರಹವನ್ನು ಸೊಲ್ಲರಿಗರ ನೆರವಿನಿಂದ ತಯಾರಿಸಬೇಕು. ಅಂತಹ ಸೊಲ್ಲರಿಮೆಯ ಬರಹ ಶಾಲೆಗಳಲ್ಲಿ ಮಕ್ಕಳಿಗೆ ಓದು-ಬರಹದ ಕಲಿಸುವ ಕೆಲಸದಲ್ಲಿ ನೆರವಾಗಬಲ್ಲುದು.
ಇದೇ ರೀತಿಯಲ್ಲಿ, ಜಾಹೀರಾತುಗಳನ್ನು ಬರೆಯುವುದು, ಕಾನೂನುಗಳನ್ನು ಇಲ್ಲವೇ ಒಪ್ಪಂದಗಳನ್ನು ಬರೆಯುವುದು, ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವುದು, ಬೇರೆ ಬೇರೆ ಅರಿಮೆ(ವಿಜ್ನಾನ)ಗಳಲ್ಲಿ ಪುಸ್ತಕಗಳನ್ನು ಬರೆಯುವುದು ಮೊದಲಾದ ಕೆಲಸಗಳಿಗೆ ಎಂತಹ ಸೊಲ್ಲರಿಮೆಯ
ತಿಳಿವು ನೆರವಿಗೆ ಬರಬಲ್ಲುದು ಎಂಬುದನ್ನು ಕಂಡುಹಿಡಿದು, ಅದನ್ನು ವಿವರಿಸುವ ಬರಹಗಳನ್ನು ಈ ಕೆಲಸಗಳನ್ನು ನಡೆಸುವವರಿಗೆ ಒದಗಿಸಿಕೊಡಬೇಕು. ಈ ಬೇರೆ ಬೇರೆ ಬಗೆಯ ಬರಹಗಳಲ್ಲಿ ಬಳಸಬೇಕಾಗಿರುವ ನುಡಿ ಮತ್ತು ನುಡಿಯ ಒಡ್ಡವಗಳು ಬೇರೆ ಬೇರಾಗಿರುವ ಕಾರಣ, ಮತ್ತು ಅವರು ಎದುರಿಸುವ ಸೊಲ್ಲರಿಮೆಯ ತೊಡಕುಗಳು ಬೇರೆ ಬೇರಾಗಿರುವ ಕಾರಣ, ಎಲ್ಲರ ಇದಿರಲ್ಲೂ ಒಂದೇ ಬಗೆಯ ಸೊಲ್ಲರಿಮೆಯ ಬರಹವನ್ನು ಇರಿಸಿದಲ್ಲಿ, ಅದನ್ನವರಿಗೆ ಬಳಸಿಕೊಳ್ಳಲು ಬರುವುದಿಲ್ಲ.
ಆದರೆ, ಕನ್ನಡಕ್ಕೆ ಇಂತಹ ಸೊಲ್ಲರಿಮೆಯ ಬರಹಗಳನ್ನು ತಯಾರಿಸ ಬೇಕಾಗಿರುವ ಸೊಲ್ಲರಿಗರಿಗೆ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದು ತಿಳಿದಿರಬೇಕಾಗುತ್ತದೆ ಎಂಬುದೇ ಇಲ್ಲಿನ ಒಂದು ತೊಡಕಾಗಿದೆ. ನಿಜಕ್ಕೂ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದನ್ನು ಎಶ್ಟು ಸಾದ್ಯವೋ ಅಶ್ಟು ಪೂರ್ತಿಯಾಗಿ ಕಂಡುಹಿಡಿಯುವುದು, ಮತ್ತು ಅದನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸುವುದಕ್ಕೆ ಎಂತಹ ತಿಳಿವು ಬೇಕಾಗುತ್ತದೆ ಎಂಬುದನ್ನು ತಿಳಿಸಬಲ್ಲ ಹಲವು ಬರಹಗಳನ್ನು ತಯಾರಿಸುವುದು ಎಂಬ ಈ ಎರಡು ಕೆಲಸಗಳು ಜೊತೆಜೊತೆಯಾಗಿಯೇ ನಡೆಯಬೇಕಾಗುತ್ತದೆ. ಅವುಗಳಲ್ಲಿ ಒಂದು ಇನ್ನೊಂದಕ್ಕೆ ಪೂರಕವಾಗಿರುವ ಕಾರಣ, ಒಂದನ್ನು ಮುಗಿಸಿ ಇನ್ನೊಂದನ್ನು ಎತ್ತಿಕೊಳ್ಳುವ ಹಾಗಿಲ್ಲ.
9.2.6 ಪದನೆರಕೆಯ ಹಮ್ಮುಗೆ
ಒಂದು ನುಡಿಯನ್ನು ಎಲ್ಲರ ನುಡಿಯಾಗಿ ಹಮ್ಮಿಕೊಳ್ಳಬೇಕಿದ್ದಲ್ಲಿ ಅದರಲ್ಲಿ ಹಲವು ಬಗೆಯ ಪದಗಳು ಇರಬೇಕಾಗುತ್ತದೆ. ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಬಗೆಯ ಪದಗಳು ಬೇಕಾಗುತ್ತವೆ. ಎತ್ತುಗೆಗಾಗಿ, ಆಡಳಿತಕ್ಕೆ ಒಂದು ಬಗೆಯ ಪದಗಳು, ಕೋರ್ಟುಗಳಿಗೆ ಇನ್ನೊಂದು ಬಗೆಯ ಪದಗಳು, ನುಡಿಯರಿಮೆ, ಉಲಿಯರಿಮೆ, ಮಂದಿಯರಿಮೆ, ಮದ್ದರಿಮೆ ಮೊದಲಾದ ಬಗೆ ಬಗೆಯ ಅರಿಮೆ(ವಿಜ್ನಾನ)ಗಳಿಗೆ ಬೇರೆ ಬಗೆಯ ಪದಗಳು ಎಂಬುದಾಗಿ ಹಲವು ಬಗೆಯ ಪದಗಳು ಅದಕ್ಕೆ ಬೇಕಾಗುತ್ತವೆ.
ಇಂತಹ ಪದಗಳನ್ನು ಒದಗಿಸಿಕೊಡುವುದಕ್ಕಾಗಿ, ಹಲವು ಬಗೆಯ ಪದನೆರಕೆ(ಪದಕೋಶ)ಗಳನ್ನು ಅದರಲ್ಲಿ ಉಂಟುಮಾಡಬೇಕಾಗುತ್ತದೆ. ಈಗಾಗಲೇ ಇಂತಹ ಪದಗಳು ಆ ನುಡಿಯಲ್ಲಿ ಬಳಕೆಯಲ್ಲಿವೆಯಾದರೆ, ಅವನ್ನೆಲ್ಲ ಈ ಪದನೆರಕೆಗಳಲ್ಲಿ ಸೇರಿಸಿಕೊಳ್ಳಬಹುದು. ಆದರೆ, ಮೇಲಿನ
ಕೆಲಸಗಳನ್ನು ಸರಿಯಾಗಿ ನಡೆಸಲು ಇನ್ನಶ್ಟು ಪದಗಳು ಬೇಕಾಗಬಹುದು. ಇಂತಹವನ್ನು ಬೇರೆ ನುಡಿಗಳಿಂದ ಎರವಲಾಗಿ ಪಡೆಯಬಹುದು ಇಲ್ಲವೇ ಆ ನುಡಿಯಲ್ಲಿ ಹೊಸದಾಗಿ ಉಂಟುಮಾಡಿಕೊಳ್ಳಬಹುದು. ಇದು ಪದನೆರಕೆಯ ಹಮ್ಮುಗೆಯ ಮೂಲಕ ನಾವು ನಡೆಸಬೇಕಾಗಿರುವ ಕೆಲಸವಾಗಿದೆ.
ಇಂತಹ ಪದನೆರಕೆಗಳನ್ನು ತಯಾರಿಸುವುದಕ್ಕೂ ಸೊಲ್ಲರಿಮೆಯ ನೆರವು ಬೇಕಾಗುತ್ತದೆ. ಯಾಕೆಂದರೆ, ಬೇರೆ ನುಡಿಯಿಂದ ಎರವಲಾಗಿ ಪಡೆಯುವ ಪದಗಳು ಮತ್ತು ಹೊಸದಾಗಿ ಉಂಟುಮಾಡುವ ಪದಗಳು ನಮ್ಮ ನುಡಿಯ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವನ್ನು ಬಳಸಿರುವ ಬರಹಗಳು ತುಂಬಾ ತೊಡಕು ತೊಡಕಾಗುತ್ತವೆ, ಮತ್ತು ಅವನ್ನು ಕಲಿಯುವವರಿಗೆ ತೊಂದರೆ ಕೊಡುತ್ತವೆ. ಆದರೆ, ಆ ರೀತಿ ಅವನ್ನು ನುಡಿಯ ಸೊಲ್ಲುಗಳಲ್ಲಿ ಹೊಂದಿಕೊಳ್ಳುವಂತೆ ಮಾಡುವುದು ಹೇಗೆ ಎಂಬುದು ಸೊಲ್ಲರಿಮೆಯ ತಿಳಿವಿಲ್ಲದವರಿಗೆ ಗೊತ್ತಾಗುವುದಿಲ್ಲ. ಇದಕ್ಕೆ ಕನ್ನಡದಲ್ಲಿ ಇತ್ತೀಚೆಗೆ ನಡೆದ ಅರಿಮೆಯ (ಪಾರಿಬಾಶಿಕ) ಪದಗಳ ತಯಾರಿಕೆಯನ್ನು ಎತ್ತುಗೆಯಾಗಿ ಕೊಡಬಹುದು:
ಹಿಂದಿನ ಕಾಲದಲ್ಲಿ ಕನ್ನಡಕ್ಕೆ ಬೇಕಾಗುವ ಅರಿಮೆಯ ಪದಗಳಲ್ಲಿ ಹೆಚ್ಚಿನ ವನ್ನೂ ಸಂಸ್ಕ್ರುತದಿಂದ ಎರವಲಾಗಿ ಪಡೆಯಲಾಗುತ್ತಿತ್ತು. ಇದಕ್ಕೆ ಕಾರಣ ವೇನೆಂದರೆ, ಮೊನ್ನೆ ಮೊನ್ನೆಯ ವರೆಗೂ ಸೊಲ್ಲರಿಮೆ, ಮದ್ದರಿಮೆ, ಎಣಿಕೆ ಯರಿಮೆ, ಬಾನರಿಮೆ ಮೊದಲಾದ ಹಲವು ಬಗೆಯ ಅರಿಮೆಗಳ ತಿಳಿವನ್ನು ಕನ್ನಡದ ತಿಳಿವಿಗರು ಸಂಸ್ಕ್ರುತದಿಂದಲೇನೇ ಪಡೆಯುತ್ತಿದ್ದರು. ಹಾಗಾಗಿ, ಆ ತಿಳಿವನ್ನು ಪಡೆಯುವುದರೊಂದಿಗೆ ಅದನ್ನು ತಿಳಿಸಲು ಬೇಕಾಗುವ ಪದಗಳನ್ನೂ ಅವರು ಸಂಸ್ಕ್ರುತದಿಂದಲೇನೇ ಎರವಲಾಗಿ ಪಡೆದುಕೊಳ್ಳುತ್ತಿದ್ದರು.
ಇವತ್ತು ಹೆಚ್ಚಿನ ಅರಿಮೆಗಳ ತಿಳಿವನ್ನೂ ನಾವು ಇಂಗ್ಲಿಶ್ನಿಂದ ಪಡೆಯು ತ್ತಿದ್ದೇವೆ, ಮತ್ತು ಈ ತಿಳಿವನ್ನು ಕನ್ನಡದಲ್ಲಿ ತಿಳಿಸಲು ಬೇಕಾಗುವ ಪದಗಳಲ್ಲಿ ಹಲವನ್ನು ಇಂಗ್ಲಿಶ್ನಿಂದಲೇನೇ ಎರವಲಾಗಿ ಪಡೆಯುತ್ತಿದ್ದೇವೆ. ಇಂತಹ ಇಂಗ್ಲಿಶ್ ಪದಗಳು ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳುವು ದಿಲ್ಲವಾದಲ್ಲಿ, ನಮಗೆ ಬೇಕಾಗುವ ಮಾರ್ಪಾಡುಗಳನ್ನೂ ಅವುಗಳಲ್ಲಿ ಮಾಡಿ ಕೊಳ್ಳುತ್ತಿದ್ದೇವೆ. ಇದು ಸರಿಯಾದ ದಾರಿ.
ಆದರೆ, ಕನ್ನಡದ ಸೊಲ್ಲುಗಳಲ್ಲಿ ಸರಿಯಾಗಿ ಹೊಂದಿಕೊಳ್ಳದಿರುವ ಇಂಗ್ಲಿಶ್ನ ಅರಿಮೆಯ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಉಂಟುಮಾಡುವಲ್ಲಿ ಕನ್ನಡದ ತಿಳಿವಿಗರು ಒಂದು ದೊಡ್ಡ ತಪ್ಪನ್ನು
ಮಾಡಿದ್ದಾರೆ, ಮತ್ತು ಈಗಲೂ ಮಾಡುತ್ತಿದ್ದಾರೆ: ಅಂತಹ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದಗಳನ್ನು ಉಂಟುಮಾಡುವ ಬದಲು, ಸಂಸ್ಕ್ರುತದಲ್ಲಿ ಉಂಟುಮಾಡಿ ಅವನ್ನು ಕನ್ನಡದಲ್ಲಿ ಬಳಸುತ್ತಿದ್ದಾರೆ! ಇವುಗಳಲ್ಲಿ ಹಲವು ಕನ್ನಡದ ಸೊಲ್ಲುಗಳಲ್ಲಿ ಇಂಗ್ಲಿಶ್ ಪದಗಳಶ್ಟೂ ಹೊಂದಿಕೊಳ್ಳುವುದಿಲ್ಲ!
ಕನ್ನಡದ ತಿಳಿವಿಗರು ಮಾಡುತ್ತಿರುವ ಈ ತಪ್ಪಿನಿಂದಾಗಿ, ಇವತ್ತು ಕನ್ನಡದಲ್ಲಿ ಹೊರತಂದ ಅರಿಮೆಯ ಬರಹಗಳನ್ನು ಕಲಿಯುವ ಕೆಲಸ ಅನವಶ್ಯಕವಾಗಿ ತುಂಬಾ ತೊಡಕಿನದಾಗಿದೆ.
ಯುರೋಪಿನಲ್ಲೂ ಹಿಂದಿನ ಕಾಲದಲ್ಲಿ ಹಲವು ಬಗೆಯ ಅರಿಮೆಯ ತಿಳುವಳಿಕೆಗಳು ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿದ್ದುವು, ಮತ್ತು ಇಂಗ್ಲಿಶ್, ಫ್ರಂಚ್ ಮೊದಲಾದ ನುಡಿಗಳಲ್ಲಿ ಅವುಗಳ ಕುರಿತಾಗಿ ಬರಹಗಳನ್ನು ಬರೆಯಬೇಕಾದಾಗ, ಅಲ್ಲಿನ ತಿಳಿವಿಗರು ಲ್ಯಾಟಿನ್ ಇಲ್ಲವೆ ಗ್ರೀಕ್ ಪದಗಳನ್ನು ಎರವಲಾಗಿ ಪಡೆಯುತ್ತಿದ್ದರು. ಕನ್ನಡದಲ್ಲಿ ಸಂಸ್ಕ್ರುತದ ಎರವಲುಗಳನ್ನು ಬಳಸುವುದೂ ಇಂತಹದೇ ಒಂದು ವಿದಾನ ಎಂಬುದಾಗಿ ಕನ್ನಡದ ತಿಳಿವಿಗರು ವಾದಿಸುತ್ತಾರೆ.
ಆದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಬೆಳವಣಿಗೆಯನ್ನು ಪಡೆಯ ದಿದ್ದಂತಹ ಅರಿಮೆಗಳಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗ, ಯುರೋಪಿನ ತಿಳಿವಿಗರು ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸಿಲ್ಲ ಮತ್ತು ಬಳಸುವುದಿಲ್ಲ. ಎತ್ತುಗೆಗಾಗಿ, ಇಂಗ್ಲಿಶ್ನ ಎಣಿಕೆಯರಿಮೆಯಲ್ಲಿ (ಗಣಿತದಲ್ಲಿ) ಬಳಕೆಯಾಗಿರುವ ಹೆಚ್ಚಿನ ಪದಗಳೂ ಇಂಗ್ಲಿಶ್ನವೇ. ಇತ್ತೀಚೆಗೆ ಬೆಳವಣಿಗೆಯನ್ನು ಕಂಡಿರುವ ಎಣ್ಣುಕದ (ಕಂಪ್ಯೂಟರ್ನ) ಅರಿಮೆಯಲ್ಲಿ ಹೊಸದಾಗಿ ಉಂಟುಮಾಡಿರುವಂತಹ ಪದಗಳಲ್ಲೂ ಹೆಚ್ಚಿನವೂ ಇಂಗ್ಲಿಶ್ ನವೇ. ಹಾಗಾಗಿ, ಸಂಸ್ಕ್ರುತದಲ್ಲಿ ಬೆಳವಣಿಗೆಯನ್ನು ಕಾಣದಿರುವಂತಹ ಅರಿಮೆಯ ವಿಶಯಗಳಲ್ಲಿ ಹೊಸ ಪದಗಳನ್ನು ಉಂಟುಮಾಡಬೇಕಾದಾಗ ಕನ್ನಡದ ತಿಳಿವಿಗರು ಸಂಸ್ಕ್ರುತದ ಮರೆಹೊಗುತ್ತಿರುವುದು ನಿಜಕ್ಕೂ ತಪ್ಪು ದಾರಿಯೇ.
ಇನ್ನೊಂದು ವಿಶಯದಲ್ಲೂ ಇದು ಕನ್ನಡದ ಮಟ್ಟಿಗೆ ತಪ್ಪುದಾರಿಯಾಗು ತ್ತದೆ: ಯುರೋಪಿನ ನುಡಿಗಳಿಗೂ ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಿಗೂ ನಡುವೆ ಹತ್ತಿರದ ನಂಟಸ್ತಿಕೆಯಿದೆ. ಆದರೆ, ಕನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಅಂತಹ ಹತ್ತಿರದ ನಂಟಸ್ತಿಕೆಯಿಲ್ಲ. ಈ ಕಾರಣಕ್ಕಾಗಿ, ಯುರೋಪಿನ ನುಡಿಗಳಲ್ಲಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳು ಹೊಂದಿಕೊಳ್ಳುವ ಹಾಗೆ
ಸಂಸ್ಕ್ರುತದ ಪದಗಳು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹಾಗಾಗಿ, ಲ್ಯಾಟಿನ್ ಪದಗಳು ಯುರೋಪಿನ ಕಲಿಗರಿಗೆ ತೊಂದರೆ ಕೊಡುವು ದಕ್ಕಿಂತ ಸಂಸ್ಕ್ರುತ ಪದಗಳು ಕನ್ನಡದ ಕಲಿಗರಿಗೆ ಹೆಚ್ಚು ತೊಂದರೆ ಕೊಡುತ್ತವೆ. ಇನ್ನೊಂದು ಕಾರಣವೇನೆಂದರೆ, ಕನ್ನಡ ಸಂಸ್ಕ್ರುತಕ್ಕಿಂತ ಸೊಲ್ಲರಿಮೆಯ ಮಟ್ಟಿಗೆ ತೀರ ಬೇರಾಗಿರುವ ನುಡಿಯಾದ ಕಾರಣ, ಕನ್ನಡದ ಸೊಲ್ಲುಗಳಲ್ಲಿ ಬಳಸಲು ಬೇಕಾಗುವಂತಹ ಪದಗಳನ್ನು ಸಂಸ್ಕ್ರುತದಲ್ಲಿ ಉಂಟುಮಾಡಲು ಬರುವುದಿಲ್ಲ. ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಿರುವ ಕನ್ನಡದ ತಿಳಿವಿಗರು ಇದನ್ನು ಗಮನಿಸಿಯೇ ಇಲ್ಲವೆಂದು ತೋರುತ್ತದೆ. ಈ ಪದಗಳು ಕನ್ನಡಕ್ಕೆ ಬೇಕಾಗಿರುವ ವ್ಯತ್ಯಾಸಗಳನ್ನು ಕಾಣಿಸುವುದಿಲ್ಲವಾದ ಕಾರಣ, ಅವನ್ನು ಬಳಸಿರುವ ಕನ್ನಡದ ಬರಹಗಳು ಹಲವು ರೀತಿಯ ಗೊಂದಲಗಳಿಗೆ ಎಡೆಮಾಡಿಕೊಡುತ್ತಿವೆ.
ಇದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ (ಬಟ್ 2005) ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ. ಎತ್ತುಗೆಗಾಗಿ, ಕನ್ನಡದಲ್ಲಿ ಹೆಸರು(ನಾಮ)ಪದಗಳಿಗೂ ಪರಿಚೆ(ಗುಣ)ಪದಗಳಿಗೂ ನಡುವೆ ವ್ಯತ್ಯಾಸವಿದೆ; ಆದರೆ ಸಂಸ್ಕ್ರುತದಲ್ಲಿ ಅಂತಹ ವ್ಯತ್ಯಾಸ ಇಲ್ಲ. ಹಾಗಾಗಿ, ಹೆಸರುಪದಗಳಿಗಿಂತ ಬೇರಾಗಿರುವ ಪರಿಚೆಪದಗಳನ್ನು ಉಂಟುಮಾಡಲು ಬೇಕಾಗುವ ಒಟ್ಟುಗಳೂ ಸಂಸ್ಕ್ರುತದಲ್ಲಿಲ್ಲ.
ಈ ಹೆಸರುಪದ-ಪರಿಚೆಪದ ವ್ಯತ್ಯಾಸ ಇಂಗ್ಲಿಶ್ನ ಅರಿಮೆ ಪದಗಳಲ್ಲಿದೆ, ಮತ್ತು ಕನ್ನಡಕ್ಕೂ ಅದು ಬೇಕಾಗುತ್ತದೆ. ಆದರೆ, ಸಂಸ್ಕ್ರುತದ ಒಟ್ಟುಗಳನ್ನು ಬಳಸಿ ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಈ ವ್ಯತ್ಯಾಸವನ್ನು ಕಾಣಿಸಲು ಸಾದ್ಯವಾಗದು. ಹಾಗೆ ಮಾಡಲು ಪ್ರಯತ್ನಿಸಿರುವಂತಹ ಕನ್ನಡದ ತಿಳಿವಿಗರು ಇದರಿಂದಾಗಿ ತುಂಬಾ ಗೊಂದಲಕ್ಕೆಡೆಯಾಗಿದ್ದಾರೆ. ಅವರು ಉಂಟು ಮಾಡಿರುವ ಅರಿಮೆ ಪದಗಳಲ್ಲಿ ಈ ವ್ಯತ್ಯಾಸ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವೊಮ್ಮೆ ಕಾಣಿಸಿಕೊಳ್ಳುವುದಿಲ್ಲ (4.3.2 ನೋಡಿ).
ಕನ್ನಡದ ತಿಳಿವಿಗರು ಮಾಡಿದಂತಹ ಈ ತಪ್ಪನ್ನು ಇವತ್ತು ನಾವು ಪದ ಹಮ್ಮುಗೆಯ ಮೂಲಕ ಸರಿಪಡಿಸಬೇಕಾಗಿದೆ. ಇಂಗ್ಲಿಶ್ನ ಅರಿಮೆ ಪದಗಳಿಗೆ ಬದಲಾಗಿ ಕನ್ನಡದಲ್ಲಿ ಅರಿಮೆ ಪದಗಳನ್ನು ಉಂಟುಮಾಡಬೇಕಾದಾಗ, ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುವ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕು, ಮತ್ತು ಅಂತಹ ಕಡೆಗಳಲ್ಲೆಲ್ಲ ಕನ್ನಡದವೇ ಆದ ಪದಗಳನ್ನು
ಬಳಸತೊಡಗಬೇಕು. ಹೊಸಗನ್ನಡದಲ್ಲಿ ಇದಕ್ಕೆ ಬೇಕಾಗುವ ಪದಗಳು ಇಲ್ಲವಾದರೆ, ಅದಕ್ಕಾಗಿ ಹಳೆಗನ್ನಡದ ಪದಗಳನ್ನು ಬಳಸುವುದೇ ಕನ್ನಡಕ್ಕೆ ಅನುಕೂಲವಾದ ದಾರಿ.
9.3 ಬೆಳವಣಿಗೆಯ ಹಮ್ಮುಗೆ
ಎಲ್ಲರ ನುಡಿಯಾಗಿ ಬಳಕೆಗೆ ಬಂದ ನುಡಿಯಲ್ಲಿ ಹಲವು ಬಗೆಯ ಬೆಳವಣಿಗೆ ಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಮುಕ್ಯವಾಗಿ ಅದನ್ನು ಬೇರೆ ಬೇರೆ ಕೆಲಸ ಗಳಲ್ಲಿ ತೊಡಗಿಸಲು ಬೇಕಾಗುವಂತಹ ಸಾದನಗಳನ್ನು ಉಂಟುಮಾಡುತ್ತಲೇ ಇರಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ನುಡಿಗಳೂ ಈ ರೀತಿ ಬದಲಾಗುತ್ತಲೇ ಇರುತ್ತವೆ. ಹೊಸ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದಕ್ಕಾಗಿ, ಮತ್ತು ಆಡುಗರು ಎದುರಿಸಬೇಕಾಗಿರುವ ಹೊಸ ಹೊಸ ತೊಡಕುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಕ್ಕಾಗಿ ಅವು ಹಾಗೆ ಬದಲಾಗುತ್ತಲೇ ಇರಬೇಕಾಗುತ್ತದೆ. ಆದರೆ, ನುಡಿಹಮ್ಮುಗೆಯ ಮೂಲಕ ನಾವು ಆಯ್ಕೆ ಮಾಡಿ ಪರಿಚೆ ಕೊಟ್ಟಿರು ವಂತಹ ನುಡಿಯಲ್ಲಿ ಇಂತಹ ಬೆಳವಣಿಗೆಯ ಕೆಲಸಗಳನ್ನೂ ನಾವು ನುಡಿ ಹಮ್ಮುಗೆಯ ಮೂಲಕವೇನೇ ನಡೆಸಿಕೊಡಬೇಕಾಗುತ್ತದೆ. ಯಾಕೆಂದರೆ ಹಾಗೆ ಮಾಡದಿದ್ದರೆ, ನಮ್ಮ ನುಡಿಹಮ್ಮುಗೆ ನಡುವೆಯೇ ನಿಂತುಹೋಗಬಲ್ಲುದು. ಈ ಬೆಳವಣಿಗೆಯ ಹಮ್ಮುಗೆ ಒಂದು ರೀತಿಯಲ್ಲಿ ಪರಿಚೆ ಹಮ್ಮುಗೆಯ ಮುಂದುವರಿಕೆಯೆಂದೂ ಹೇಳಬಹುದು. ಎತ್ತುಗೆಗಾಗಿ, ಆಯ್ಕೆಯಾಗಿರುವ ನುಡಿಯಲ್ಲಿ ಪರಿಚೆಹಮ್ಮುಗೆಯ ಮೂಲಕ ಹಲವು ಬಗೆಯ ಪದನೆರಕೆಗಳನ್ನು ಉಂಟುಮಾಡಿರಬಹುದು. ಆದರೆ, ಬೇರೆ ಬೇರೆ ಕೆಲಸಗಳಲ್ಲಿ ಮತ್ತು ಅರಿಮೆ ಗಳಲ್ಲಿ ಆ ನುಡಿಯನ್ನು ಬಳಸುತ್ತಿರುವಂತೆ, ಈ ಪದನೆರಕೆಗಳಲ್ಲಿ ಉಂಟುಮಾಡಿ ಕೊಟ್ಟಿರುವ ಪದಗಳು ಸಾಕಾಗುವುದಿಲ್ಲ. ಸಾವಿರಾರು ಹೊಸ ಅರಿಮೆಯ ಪದಗಳಿಗೆ ಮತ್ತು ಇತರ ಕೆಲಸಗಳಿಗೆ ಬೇಕಾಗುವ ಹೊಸ ಪದಗಳಿಗೆ ಬೇಡಿಕೆ ಗಳು ಬರುತ್ತಲೇ ಇರುತ್ತವೆ. ಇಂತಹ ಹೊಸಪದಗಳನ್ನು ಬೆಳವಣಿಗೆಯ ಹಮ್ಮುಗೆಯ ಮೂಲಕ ಉಂಟುಮಾಡಿಕೊಡಬೇಕಾಗುತ್ತದೆ.
ಪದನೆರಕೆಯಲ್ಲಿ ಮಾತ್ರವಲ್ಲದೆ ನುಡಿಗೆ ಸಂಬಂದಿಸಿದ ಬೇರೆ ವಿಶಯ ಗಳಲ್ಲೂ ಮಾರ್ಪಾಡುಗಳನ್ನು ಮಾಡಬೇಕಾಗುವಂತಹ ಸಂದರ್ಬಗಳು ಬರಬಲ್ಲುವು. ಇವುಗಳನ್ನು ನಡೆಸಿಕೊಡುವಲ್ಲಿಯೂ ಸೊಲ್ಲರಿಮೆಯ ತಿಳಿವು
ನೆರವಿಗೆ ಬರುತ್ತದೆ. ಸೊಲ್ಲರಿಮೆಯ ತಿಳಿವಿಲ್ಲದೆ ನಡೆಸಿದ ಬೆಳವಣಿಗೆಯ ಹಮ್ಮುಗೆಗಳು ಜನರನ್ನು ತೊಂದರೆಯಲ್ಲಿ ಸಿಲುಕಿಸುತ್ತವೆ.
9.4 ತಿರುಳು
ಒಂದು ಸಮಾಜದಲ್ಲಿ ಹಲವು ನುಡಿಗಳು ಇಲ್ಲವೇ ಆಡುನುಡಿಗಳು ಬಳಕೆ ಯಲ್ಲಿವೆಯಾದರೆ, ಅವುಗಳಲ್ಲಿ ಒಂದನ್ನು ಎಲ್ಲರ ನುಡಿಯಾಗಿ ನುಡಿಹಮ್ಮುಗೆಯ ಮೂಲಕ ಆಯ್ದುಕೊಳ್ಳಬೇಕಾಗುತ್ತದೆ. ಆ ರೀತಿ ಆಯ್ದುಕೊಂಡಿರುವ ನುಡಿಯಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನೂ ನುಡಿಹಮ್ಮುಗೆಯ ಮೂಲಕ ನಡೆಸ ಬೇಕಾಗುತ್ತದೆ. ಅದಕ್ಕೊಂದು ಲಿಪಿಯನ್ನು ಅಳವಡಿಸಬೇಕಾಗುತ್ತದೆ; ಕೋರ್ಟು- ಕಚೇರಿ, ಕಯ್ಗಾರಿಕೆ, ಮಾರಾಟ, ಅರಿಮೆಗಳ ಕಲಿಕೆ ಮೊದಲಾದವುಗಳಲ್ಲಿ ಅದನ್ನು ಬಳಸುವುದಕ್ಕಾಗಿ ಅದರ ಪದನೆರಕೆಯನ್ನು ಹೆಚ್ಚಿಸಬೇಕಾಗುತ್ತದೆ; ಮತ್ತು ಅದಕ್ಕೆ ಬಗೆ ಬಗೆಯ ಬರಹದ ಒಡ್ಡವಗಳನ್ನು ಒದಗಿಸಿಕೊಡಬೇಕಾಗು
ಇಂತಹ ಕೆಲಸಗಳನ್ನೆಲ್ಲ ನಡೆಸಲು ಆ ನುಡಿಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಅದನ್ನು ಪಡೆಯದಿರುವವರು ಈ ಕೆಲಸಗಳನ್ನು ನಡೆಸ ಹೊರಟಲ್ಲಿ, ಸಮಾಜ ಹಲವು ಬಗೆಯ ತೊಂದರೆಗಳಿಗೊಳಗಾಗುತ್ತದೆ.
ಹತ್ತನೇ ಪಸುಗೆ — ಮಾತಿನ ತೊಂದರೆಗಳು
10.1 ಮುನ್ನೋಟ
ಮಾತನಾಡುವುದು ಮತ್ತು ಇನ್ನೊಬ್ಬರು ಆಡಿದ ಮಾತನ್ನು ಕೇಳಿ ತಿಳಿಯುವುದು ಇವೆರಡೂ ತುಂಬಾ ತೊಡಕಾದ ಕೆಲಸಗಳು. ಮಾತನಾಡಬೇಕಿದ್ದಲ್ಲಿ ಮಿದುಳು ಏನು ಹೇಳಬೇಕೆಂಬುದನ್ನು ಮೊದಲು ತೀರ್ಮಾನಿಸಬೇಕು, ಮತ್ತು ಅದನ್ನು ಹೇಳುವುದಕ್ಕೆ ಬೇಕಾಗುವ ಉಲಿಗಳನ್ನುಂಟುಮಾಡುವಂತೆ ಸಾಲು ಸಾಲಾಗಿ ಸುಳಿವುಗಳನ್ನು ಬಾಯಿಯ ನರಗಳಿಗೆ ಕಳಿಸುತ್ತಿರಬೇಕು. ಈ ಸುಳಿಗವುಳಿಗನುಸಾರ ವಾಗಿ, ಬಾಯಿಯಲ್ಲಿರುವ ನಾಲಿಗೆ, ತುಟಿಗಳು, ದವಡೆ, ಮೆದು ಅಂಗುಳ, ಉಲಿಪೆಟ್ಟಿಗೆ ಮೊದಲಾದುವು ಚಲಿಸಿ, ಮಿದುಳು ಬಯಸಿರುವ ಉಲಿಗಳು ಬಾಯಿಯಿಂದ ಹೊರಡುವಂತೆ ಮಾಡಬೇಕು.
ಮಾತನ್ನು ಕೇಳಿ ತಿಳಿದುಕೊಳ್ಳುವುದೂ ಇಂತಹದೇ ತೊಡಕಾದ ಕೆಲಸ. ಕಿವಿಗೆ ಬಂದು ಅಪ್ಪಳಿಸುವ ಗಾಳಿಯ ಅಲೆಗಳನ್ನು ಉಲಿಗಳಾಗಿ ಬದಲಾಯಿಸಿ, ಅವುಗಳಲ್ಲಿ ಮಾತಿಗೆ ಸಂಬಂದಿಸಿದವುಗಳನ್ನು ಬೇರೆ ಸಪ್ಪಳಗಳಿಂದ ಬೇರ್ಪಡಿಸ ಬೇಕು, ಮತ್ತು ಹಾಗೆ ಬೇರ್ಪಡಿಸಿದ ಮೇಲೆ, ಅವನ್ನು ಪದಗಳಾಗಿ, ಪದಕಂತೆ ಗಳಾಗಿ, ತುಂಡುಸೊಲ್ಲುಗಳಾಗಿ, ಮತ್ತು ಸೊಲ್ಲುಗಳಾಗಿ ಜೋಡಿಸಿಕೊಂಡು, ಅವುಗಳ ಮೂಲಕ ಆಡುಗನು ತನಗೆ ಏನನ್ನು ತಿಳಿಸಲು ಬಯಸುತ್ತಿದ್ದಾನೆ ಎಂಬುದನ್ನು ಊಹಿಸಿಕೊಳ್ಳಬೇಕು.
ಈ ಎರಡು ಬಗೆಯ ಕೆಲಸಗಳನ್ನು ನಡೆಸುವಲ್ಲೂ ಹಲವು ಬಗೆಯ ತೊಂದರೆ ಗಳು ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಉಲಿಗಳನ್ನು ಹೊರಡಿಸುವಲ್ಲಿ ತಪ್ಪಾಗಿ, ಒಂದು ಉಲಿಯ ಬದಲು ಬೇರೊಂದು ಉಲಿ ಉಂಟಾಗಬಹುದು; (ನಾಯಿ ಎನ್ನುವ ಬದಲು ದಾಯಿ ಎನ್ನಬಹುದು); ಒಂದು ಉಲಿ ಬಿಟ್ಟೇ ಹೋಗಬಹುದು; ಉಲಿಗಳ ಜಾಗ ಬದಲಿಹೋಗಬಹುದು (ಪದದಲ್ಲಿ ಮೊದಲಿಗೆ ಬರಬೇಕಾದ ಉಲಿ ಕೊನೆಗೆ ಬರಬಹುದು). ಪದಗಳಿಗೆ ಪದರೂಪ
ಮಾತಿನ ತೊಂದರೆಗಳು
ಗಳನ್ನು ಕೊಡುವಲ್ಲಿ, ಮತ್ತು ಅವುಗಳನ್ನು ಪದಕಂತೆಗಳಾಗಿ ಮತ್ತು ಸೊಲ್ಲು ಗಳಾಗಿ ಜೋಡಿಸುವಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು.
ಆಡುಗರಲ್ಲಿ ಮತ್ತು ಕೇಳುಗರಲ್ಲಿ ಇರುವ ಇಲ್ಲವೇ ಉಂಟಾಗುವ ಹಲವು ಬಗೆಯ ಮಾತಿನ ಕಾಯಿಲೆಗಳಿಂದಾಗಿ, ಅವರು ಮಾತನಾಡುವಲ್ಲಿ ಮತ್ತು ಮಾತನ್ನು ಕೇಳಿ ತಿಳಿಯುವಲ್ಲಿ ಇಂತಹ ತಪ್ಪುಗಳು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆಗಳಲ್ಲಿ ಹಲವು ಮಾಜಿಸಲಾರದಂತಹವು. ಹಾಗಿದ್ದರೂ, ಅವುಗಳಿಂದ ಉಂಟಾಗುವ ಮಾತಿನ ತೊಂದರೆಗಳಲ್ಲಿ ಹೆಚ್ಚಿನವನ್ನೂ ಉಲಿಯರಿಮೆಯ ಇಲ್ಲವೇ ಸೊಲ್ಲರಿಮೆಯ ನೆರವಿನಿಂದ ಕಡಿಮೆ ಮಾಡಲು ಮತ್ತು ಹತೋಟಿಗೆ ತರಲು ಬರುತ್ತದೆ.
ಮಾತಿನ ತೊಂದರೆಗಳನ್ನು ಮುಕ್ಯವಾಗಿ ಎರಡು ಬಗೆಯವೆಂದು ಬೇರ್ಪಡಿಸ ಬಹುದು: ಚಿಕ್ಕಂದಿನಲ್ಲಿ, ಎಂದರೆ ಮಾತು ಕಲಿಯುವ ಸಮಯದಲ್ಲಿ, ಕಾಣಿಸಿ ಕೊಳ್ಳುವ ತೊಂದರೆಗಳು ಮೊದಲನೇ ಬಗೆಯವು; ಇವನ್ನು ಬೆಳವಣಿಗೆಯ ಮಾತಿನ ತೊಂದರೆಗಳು ಎಂಬುದಾಗಿ ಹೆಸರಿಸಬಹುದು. ದೊಡ್ಡವರಾದ ಮೇಲೆ, ಮಿದುಳಿಗೆ ಪೆಟ್ಟಾದುದರಿಂದಾಗಿ, ಇಲ್ಲವೇ ಬೇರೆ ಕೆಲವು ಕಾರಣ ಗಳಿಂದಾಗಿ, ಕಾಣಿಸಿಕೊಳ್ಳುವ ಮಾತಿನ ತೊಂದರೆಗಳು ಎರಡನೇ ಬಗೆಯವು; ಇವನ್ನು ಬಳಕೆಯ ಮಾತಿನ ತೊಂದರೆಗಳು ಎಂಬುದಾಗಿ ಹೆಸರಿಸಬಹುದು. ಈ ಎರಡು ಬಗೆಯ ತೊಂದರೆಗಳನ್ನು ಬಗೆಹರಿಸುವಲ್ಲೂ ಉಲಿಯರಿಮೆ ಮತ್ತು ಸೊಲ್ಲರಿಮೆಗಳ ತಿಳಿವು ನೆರವಿಗೆ ಬರುತ್ತದೆ.
10.2 ಬೆಳವಣಿಗೆಯ ಮಾತಿನ ತೊಂದರೆಗಳು
ಎಲ್ಲಾ ಮಕ್ಕಳೂ ಮಾತನ್ನು ಒಂದೇ ವೇಗದಲ್ಲಿ ಕಲಿಯುವುದಿಲ್ಲ; ಕೆಲವರಿಗೆ ಅದು ಬೇಗನೆ ಬರುತ್ತದೆ, ಮತ್ತು ಬೇರೆ ಕೆಲವರಿಗೆ ಅದನ್ನು ಪಡೆಯಲು ತುಸು ಹೆಚ್ಚು ಸಮಯ ಹಿಡಿಯುತ್ತದೆ. ಆದರೆ, ಹೆಚ್ಚಿನ ಮಕ್ಕಳೂ ಮೂರು- ನಾಲ್ಕು ವರ್ಶ ದಾಟುವಶ್ಟರಲ್ಲಿ ಸರಿಯಾಗಿ ಮತ್ತು ತಿಳಿಯಾಗಿ ಮಾತನಾಡಲು ಕಲಿತಿರುತ್ತಾರೆ. ಕೆಲವು ಮಕ್ಕಳಿಗೆ ಮಾತ್ರ ಈ ವಯಸ್ಸಿನಲ್ಲೂ ಸರಿಯಾಗಿ ಮಾತನಾಡಲು ಬರುವುದಿಲ್ಲ. ಇಂತಹ ಮಕ್ಕಳಲ್ಲಿ ಯಾವುದೋ ಒಂದು ಬೆಳವಣಿಗೆಯ ಮಾತಿನ ತೊಂದರೆಯಿದೆಯೆಂದು ಊಹಿಸಬಹುದು.
ಇಂತಹ ಮಾತಿನ ತೊಂದರೆಗಳು ಕಡಿಮೆ ಬುದ್ದಿಯ ಮಕ್ಕಳಲ್ಲಿ ಮಾತ್ರ ವಲ್ಲದೆ, ಸಾಕಶ್ಟು ಬುದ್ದಿ ಮತ್ತು ಜಾಣ್ಮೆಗಳಿರುವ ಮಕ್ಕಳಲ್ಲೂ ಕಾಣಿಸಿಕೊಳ್ಳ ಬಹುದು. ಇವುಗಳಲ್ಲಿ ಕೆಲವು ಬಗೆಯ ತೊಂದರೆಗಳು ಯಾಕೆ ಕಾಣಿಸು
ತ್ತವೆಯೆಂಬುದೇ ಇನ್ನೂ ಗೊತ್ತಾಗಿಲ್ಲ. ಇದಲ್ಲದೆ, ಕೆಲವು ಮಕ್ಕಳಿಗೆ ಮಾತಿನ ತೊಂದರೆಯಿದೆಯೆಂಬುದು ಅವರು ಶಾಲೆಗಳಲ್ಲಿ ಕಲಿಯತೊಡಗಿ ಕೆಲವು ವರ್ಶಗಳಾಗುವ ವರೆಗೂ ಗೊತ್ತಾಗುವುದಿಲ್ಲ. ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಓದು-ಬರಹಗಳನ್ನು ಬಳಸಬೇಕಾದಾಗ, ಈ ಮಕ್ಕಳು ತಮ್ಮ ತರಗತಿಯಲ್ಲಿ ಹಿಂದೆ ಬೀಳತೊಡಗುತ್ತಾರೆ, ಮತ್ತು ಅದಕ್ಕೆ ಮಾತಿನ ತೊಂದರೆ ಕಾರಣ ಎಂಬುದು ಗೊತ್ತಾಗುತ್ತದೆ.
ಬೆಳವಣಿಗೆಯ ಮಾತಿನ ತೊಂದರೆಗಳಲ್ಲಿ ಅಯ್ದು ಬಗೆಯವನ್ನು ಬೇರ್ಪಡಿಸಿ ಹೇಳಬಹುದು: ಮೊದಲನೆಯದಾಗಿ, ಕಿವಿ ಕೇಳಿಸದ ಮಕ್ಕಳಿಗೆ ಮಾತನ್ನು ಪಡೆಯಲು ಬರುವುದಿಲ್ಲ. ಆದರೆ, ಅಂತಹ ಮಕ್ಕಳು ಮಾತಿನ ನುಡಿಯ ಬದಲು ಸನ್ನೆನುಡಿಯನ್ನು ಕಲಿಯಬಲ್ಲರು. ಈ ನುಡಿ ಮಾತಿನ ನುಡಿಯಶ್ಟೇ ಕಸುವುಳ್ಳ ನುಡಿಯೆಂಬುದು ಇತ್ತೀಚೆಗಿನ ಅರಕೆ(ಸಂಶೋದನೆ)ಗಳಿಂದ ತಿಳಿದುಬಂದಿದೆ. ಇದಲ್ಲದೆ, ಸನ್ನೆನುಡಿಯನ್ನು ಚನ್ನಾಗಿ ಕಲಿತಿರುವ ಮಕ್ಕಳು ಅದರ ಮೂಲಕ ಮಾತಿನ ನುಡಿಯನ್ನು ಮತ್ತು ಅವುಗಳಲ್ಲಿರುವ ಬರಹಗಳನ್ನು ಹೆಚ್ಚು ಸುಳುವಾಗಿ ಕಲಿತುಕೊಳ್ಳಬಲ್ಲರು.
ಎರಡನೆಯದಾಗಿ, ಕೆಲವು ಮಕ್ಕಳಿಗೆ ಉಲಿಗಳನ್ನು ಹೊರಡಿಸುವುದರಲ್ಲಿ ತೊಂದರೆಯಿರುತ್ತದೆ. ಇಂತಹ ಮಕ್ಕಳಿಗೆ ಸರಿಯಾದ ಕಲಿಕೆಯನ್ನು ಕೊಡಿಸುವ ಮೂಲಕ ಈ ತೊಂದರೆಯನ್ನು ಸರಿಪಡಿಸಬಹುದು. ಮೂರನೆಯದಾಗಿ, ಓದನ್ನು ಕಲಿಯುವ ಮಕ್ಕಳು ಪದಗಳನ್ನು ಬರಿಗೆಗಳಾಗಿ ಬೇರ್ಪಡಿಸಲು, ಮತ್ತು ಅವನ್ನು ಉಲಿಗಳೊಂದಿಗೆ ಹೊಂದಿಸಿಕೊಳ್ಳಲು ಕಲಿಯಬೇಕಾಗುತ್ತದೆ. ಇದನ್ನು ತಾವಾಗಿಯೇ ಕಲಿತುಕೊಳ್ಳಲು ಬಾರದಿರುವ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆ. ಇಂತಹ ಮಕ್ಕಳಿಗೂ ಸರಿಯಾಗಿ ಓದುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟಲ್ಲಿ, ಅವರು ತಮ್ಮ ಓದಿನಲ್ಲಿ ಮುಂದೆಹೋಗಬಲ್ಲರು.
ನಾಲ್ಕನೆಯದಾಗಿ, ಕೆಲವು ಮಕ್ಕಳು ಮಾತನಾಡುವಾಗ ಉಗ್ಗುವುದನ್ನು ಕಾಣಬಹುದು. ಈ ತೊಂದರೆ ಕೆಲವು ಮಕ್ಕಳಲ್ಲಿ ತಾನಾಗಿಯೇ ಇಲ್ಲವಾಗುತ್ತದೆ; ಆದರೆ ಬೇರೆ ಕೆಲವು ಮಕ್ಕಳಲ್ಲಿ ಅದು ದೊಡ್ಡವರಾದಾಗಲೂ ಉಳಿದು ಕೊಳ್ಳುತ್ತದೆ. ಇಂತಹವರಿಗೆ ಮಾತನ್ನು ಹತೋಟಿಯಲ್ಲಿರಿಸಲು ಕಲಿಸಿದಲ್ಲಿ, ಅವರು ಈ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಲ್ಲರು.
ಅಯ್ದನೆಯದಾಗಿ, ಕೆಲವು ಮಕ್ಕಳಿಗೆ ಮಾತನಾಡುವಾಗ ತಾವು ಬಳಸ ಬೇಕಾಗುವ ಸೊಲ್ಲರಿಮೆಯ ಕಟ್ಟಲೆಗಳನ್ನು ಸರಿಯಾಗಿ ಕಲಿತುಕೊಳ್ಳಲು ಬರುವು ದಿಲ್ಲ. ಹಾಗಾಗಿ, ಅವರು ಈ ಕಟ್ಟಲೆಗಳನ್ನು ತಪ್ಪು ತಪ್ಪಾಗಿ ಬಳಸುತ್ತಾರೆ.
ಅಂತಹ ಮಕ್ಕಳಿಗೆ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸುವ ಬಗೆ ಹೇಗೆ ಎಂಬುದನ್ನು ನೇರವಾಗಿ ಕಲಿಸಿಕೊಟ್ಟಲ್ಲಿ, ಅವರ ಮಾತಿನಲ್ಲಿ ಕಾಣಿಸಿಕೊಳ್ಳುವ ತಪ್ಪುಗಳು ಕಡಿಮೆಯಾಗಬಲ್ಲುವು.
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಬೆಳವಣಿಗೆಯ ಮಾತಿನ ತೊಂದರೆಗಳು ಎಂತಹವು ಎಂಬುದರ ಕುರಿತಾಗಿ, ಮತ್ತು ಅವನ್ನು ಬಗೆಹರಿಸುವಲ್ಲಿ ಇಲ್ಲವೇ ಕಡಿಮೆ ಮಾಡುವಲ್ಲಿ ಉಲಿಯರಿಮೆ ಮತ್ತು ಸೊಲ್ಲರಿಮೆಗಳ ತಿಳಿವನ್ನು ಹೇಗೆ ಬಳಸಬಲ್ಲೆವು ಎಂಬುದರ ಕುರಿತಾಗಿ ಕೆಲವು ವಿವರಗಳನ್ನು ಕೆಳಗೆ ಕೊಡಲಾ
10.2.1 ಕಿವಿ ಕೇಳಿಸದ ಮಕ್ಕಳು
ಮಕ್ಕಳಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲವಾದರೆ, ಅವರು ಮಾತಿನ ಕಲಿಕೆಯಲ್ಲಿ ಹಿಂದೆಬೀಳಬಹುದು. ಮೊದಲಿಗೆ ಅವರು ಉಳಿದ ಮಕ್ಕಳ ಹಾಗೆ ತಾವಾಗಿಯೇ ಮಾತನ್ನು ಕಲಿಯತೊಡಗುತ್ತಾರೆ; ಆದರೆ ಸಮಯ ಕಳೆದಂತೆಲ್ಲ, ಅವರಿಗೆ ಆ ಕಲಿಕೆಯನ್ನು ಸರಿಯಾಗಿ ಮುಂದುವರಿಸಲು ಬರುವುದಿಲ್ಲ. ಯಾಕೆಂದರೆ, ಹಾಗೆ ಮುಂದುವರಿಸಲು ಬೇಕಾಗುವಂತಹ ದೊಡ್ಡವರ ಮಾತನ್ನು ಕೇಳುವ ಅಳವು ಅವರಿಗಿರುವುದಿಲ್ಲ.
ಮನೆಯಲ್ಲಿ ದೊಡ್ಡವರು ಅವರಿಗೆ ಕೇಳಿಸುವ ಹಾಗೆ ಗಟ್ಟಿಯಾಗಿ ಮಾತ ನಾಡುತ್ತಿರುವ ಮೂಲಕ, ಇಲ್ಲವೇ ಅವರ ಕಿವಿಗೆ ಮಾತು ಕೇಳಿಸುವ ಉಪಕರಣ ವನ್ನು ತೊಡಿಸುವ ಮೂಲಕ, ಈ ತೊಂದರೆಯನ್ನು ಬಗೆಹರಿಸಬಹುದು. ಆದರೆ, ಏನೂ ಕೇಳಿಸದ ಮಕ್ಕಳಿಗೆ ಆ ರೀತಿ ಮಾತನ್ನು ಕಲಿಸಲು ಬರುವುದಿಲ್ಲ. ಏನೂ ಕೇಳಿಸದ ಮಕ್ಕಳು ಮಾತಿನ ಬದಲು ಅವರದೇ ಆದ ಸನ್ನೆನುಡಿಯನ್ನು ತಾವಾಗಿಯೇ ಕಲಿಯಬಲ್ಲರು. ಆದರೆ ಇದಕ್ಕಾಗಿ ಅವರನ್ನು ಸನ್ನೆನುಡಿಯನ್ನು ಬಳಸುವ ಬೇರೆ ಜನರ ನಡುವೆ ಬಿಡಬೇಕಾಗುತ್ತದೆ. ಇದನ್ನು ಚಿಕ್ಕಂದಿನಲ್ಲಿ ಎಂದರೆ ತಾಯ್ನುಡಿಯನ್ನು ಕಲಿಯುವ ಸಮಯದಲ್ಲೇನೇ ಮಾಡಬೇಕಾಗುತ್ತದೆ. ಇಲ್ಲವಾದರೆ, ಅವರಿಗೆ ಅಂತಹ ನುಡಿಯನ್ನು ತಾವಾಗಿಯೇ ಪಡೆದುಕೊಳ್ಳಲು ಬರುವುದಿಲ್ಲ. ತಾಯ್ನುಡಿಯನ್ನು ಕಲಿಯುವ ಸಮಯ ದಾಟಿದ ಮೇಲೆ ಸನ್ನೆನುಡಿ ಬರಬೇಕಿದ್ದಲ್ಲಿ, ಅದನ್ನು ಅವರಿಗೆ ಕಲಿಸಿಕೊಡಬೇಕಾಗುತ್ತದೆ; ಆದರೆ ಇದಕ್ಕೆ ಸನ್ನೆನುಡಿಯನ್ನು ಬಳಸಬಲ್ಲವರ ಮತ್ತು ಅದರ ಸೊಲ್ಲರಿಮೆಯನ್ನು ವಿವರಿಸಬಲ್ಲವರ ನೆರವು ಬೇಕಾಗುತ್ತದೆ.
ಕಿವುಡರು ಬಳಸುವ ಈ ಸನ್ನೆನುಡಿಗೆ ಮಾತಿನ ನುಡಿಯಂತಹದೇ ಕಸುವಿದೆ. ಮಾತಿನ ನುಡಿಯ ಉಲಿಗಳ ಹಾಗೆ, ಅದರಲ್ಲಿ ಬಳಕೆಯಾಗುವ ಸನ್ನೆಗಳಿಗೂ ನೇರವಾದ ಹುರುಳಿಲ್ಲ. ಅಂತಹ ಹುರುಳಿಲ್ಲದ ಕೆಲವೇ ಕೆಲವು ಸನ್ನೆಗಳ ಮೂಲಕ ಸಾವಿರಾರು ಹುರುಳಿರುವ ಸನ್ನೆಪದಗಳನ್ನು ಸನ್ನೆನುಡಿಯಲ್ಲಿ ಬಳಸಲಾಗುತ್ತದೆ.
ಇದಲ್ಲದೆ, ಮಾತಿನ ನುಡಿಯ ಹಾಗೆ ಸನ್ನೆನುಡಿಯಲ್ಲೂ ತುಂಬಾ ತೊಡಕು ತೊಡಕಾದ ಸಾವಿರಾರು ಸೊಲ್ಲರಿಮೆಯ ಕಟ್ಟಲೆಗಳು ಬಳಕೆಯಾಗುತ್ತವೆ. ಇವುಗಳ ಮೂಲಕ ಮನಸ್ಸಿನಲ್ಲಿ ಮೂಡುವ ಎಂತಹ ಅನಿಸಿಕೆಗಳನ್ನು ಬೇಕಿದ್ದರೂ ಸನ್ನೆನುಡಿಯ ಸೊಲ್ಲುಗಳ ಮೂಲಕ ಇನ್ನೊಬ್ಬರಿಗೆ ತಿಳಿಸಬಹುದು. ಎತ್ತುಗೆಗಾಗಿ, ಅಮೆರಿಕಾದ ಸನ್ನೆನುಡಿಯಲ್ಲಿ ಹೆಸರುಪದ, ಎಸಕಪದ, ಪರಿಚೆಪದ ಮೊದಲಾದ ಸನ್ನೆಪದಗಳಿದ್ದು, ಅವಕ್ಕೆ ಸರಿತದ (ಚಲನೆಯ) ರೂಪದಲ್ಲಿರುವ ಒಟ್ಟುಗಳನ್ನು ಸೇರಿಸಿ ಸೊಲ್ಲುಗಳನ್ನು ಉಂಟುಮಾಡಲಾಗು ತ್ತದೆ. ಅದರ ಎಸಕ(ಕ್ರಿಯಾ)ಪದಗಳೊಂದಿಗೆ ಆಗುಗ ಮತ್ತು ಮಾಡುಗರನ್ನು ಸೂಚಿಸುವ ಒಟ್ಟುಗಳು, ಅವರ ಎಣಿಕೆಯನ್ನು ಸೂಚಿಸುವ ಒಟ್ಟುಗಳು ಮೊದಲಾ ದುವೂ ಬಳಕೆಯಾಗುತ್ತವೆ.
ಅಮೆರಿಕಾದ ಈ ಸನ್ನೆನುಡಿ ಇಂಗ್ಲಿಶ್ನಶ್ಟೇ ಕಸುವಿರುವ ನುಡಿಯಾದರೂ ಅದರ ಸೊಲ್ಲರಿಮೆ ಇಂಗ್ಲಿಶ್ ಸೊಲ್ಲರಿಮೆಗಿಂತ ತೀರ ಬೇರಾಗಿದೆ. ಎತ್ತುಗೆಗಾಗಿ, ಅದರ ಸೊಲ್ಲುಗಳಲ್ಲಿ ಪದಗಳನ್ನು ಜೋಡಿಸುವ ಬಗೆ ಇಂಗ್ಲಿಶ್ ಸೊಲ್ಲುಗಳಲ್ಲಿ ಜೋಡಿಸುವ ಬಗೆಗಿಂತ ಬೇರಾಗಿದೆ. ಅದರ ಸೊಲ್ಲುಗಳಲ್ಲಿ ಒಂದು ವಿಶಯ ವನ್ನು ಮೊದಲು ಸೂಚಿಸಿ, ಅದರ ಕುರಿತಾಗಿ ಹೇಳಬೇಕಾಗಿರುವುದನ್ನು ಆಮೇಲೆ ಹೇಳಲಾಗುತ್ತದೆ. ಆ ನುಡಿಯಲ್ಲಿ ಒಂದು ಸೊಲ್ಲು ಮನೆ, ನಾನು ಹೋಗು ತ್ತೇನೆ ಎಂಬುದರ ಹಾಗಿರಬಹುದು ಮತ್ತು ಇನ್ನೊಂದು ಸೊಲ್ಲು ಹಣ್ಣು, ನಾನು ತಿನ್ನುತ್ತೇನೆ ಎಂಬುದರ ಹಾಗಿರಬಹುದು. ಇವುಗಳಲ್ಲಿ ಹೇಳಬೇಕಾಗಿರುವ ವಿಶಯವನ್ನು (ಮನೆ ಮತ್ತು ಹಣ್ಣು ಎಂಬವುಗಳನ್ನು) ಮೊದಲು ಸೂಚಿಸಲಾಗಿದೆ, ಮತ್ತು ಅದರ ಕುರಿತಾಗಿ ಹೇಳಬೇಕೆಂದಿರುವುದನ್ನು ಆಮೇಲೆ ತಿಳಿಸಲಾಗಿದೆ ಎಂಬುದನ್ನು ಗಮನಿಸಬಹುದು.
ಸನ್ನೆನುಡಿಗಳಲ್ಲಿ ಕಯ್ಸನ್ನೆ, ಕಣ್ಣುಸನ್ನೆ, ಹುಬ್ಬುಗಳ ಕುಣಿತ, ತುಟಿಗಳ ಸರಿತ (ಚಲನೆ), ತಲೆಯ ಸರಿತ, ನಿಲ್ಲುವ ಬಗೆ ಮೊದಲಾದವುಗಳನ್ನು ಸನ್ನೆಗಳಾಗಿ ಮಾಡಿ, ಅವುಗಳ ಮೂಲಕ ಪದ, ಪದಕಂತೆ, ಸೊಲ್ಲುಗಳು ಮೊದಲಾದುವನ್ನು ರಚಿಸಲಾಗುತ್ತದೆ.
10.2.2 ಉಲಿಯ ತೊಂದರೆಗಳು
ಎಲ್ಲಾ ಮಕ್ಕಳೂ ಮಾತು ಕಲಿಯುತ್ತಿರುವಾಗ ತಪ್ಪು ಮಾಡುತ್ತಿರುತ್ತಾರೆ. ಅವರ ಮಾತಿನಲ್ಲಿ ಕಕಾರದ ಬದಲು ಗಕಾರ ಇಲ್ಲವೇ ತಕಾರ ಬರಬಹುದು, ಲಕಾರ ಇಲ್ಲವೇ ರಕಾರಗಳು ಸರಿಯಾಗಿ ಹೊರಡದಿರಬಹುದು, ಮತ್ತು ಪದ ಗಳನ್ನು ಉಚ್ಚರಿಸುವಾಗ ಕೆಲವು ಉಲಿಗಳು ಬಿಟ್ಟುಹೋಗಬಹುದು. ಆದರೆ, ಇವೆಲ್ಲ ಅವರ ಕಲಿಕೆಯ ಹಂತಗಳನ್ನು ಸೂಚಿಸುತ್ತವೆ, ಅಶ್ಟೆ. ಸಮಯ ಕಳೆದಂತೆ, ಈ ತಪ್ಪುಗಳನ್ನು ಅವರು ತಾವಾಗಿಯೇ ಸರಿಪಡಿಸಿಕೊಳ್ಳುತ್ತಾರೆ. ಮೂರು-ನಾಲ್ಕು ವರ್ಶ ಕಳೆದ ಮೇಲೂ ಮಕ್ಕಳ ಮಾತಿನಲ್ಲಿ ಇಂತಹ ತಪ್ಪುಗಳು ಉಳಿದುಕೊಂಡಿವೆಯಾದರೆ ಮಾತ್ರ, ಅವರಲ್ಲಿ ಉಲಿಯ ತೊಂದರೆ ಯಿದೆಯೆಂದು ಊಹಿಸಬಹುದು. ಇಂತಹ ಮಕ್ಕಳು ಅಯ್ದು ವರ್ಶವಾದಾಗಲೂ ಮೂರು ವರ್ಶದ ಮಕ್ಕಳ ಹಾಗೆ ಮಾತನಾಡುತ್ತಿರಬಹುದು. ಯಾವಾಗಲೂ ಕೇಳಿ ಅಬ್ಯಾಸವಾದವರನ್ನು ಬಿಟ್ಟು, ಉಳಿದವರಿಗೆ ಅವರ ಮಾತು ಗೊತ್ತಾಗದಿರ ಬಹುದು.
ಉಲಿಯ ತೊಂದರೆ ಹಲವು ಬಗೆಗಳಲ್ಲಿ ಕಾಣಿಸಿಕೊಳ್ಳಬಹುದು: ಉಲಿ ಯನ್ನು ಹೊರಡಿಸಲು ಬೇಕಾಗುವ ನಾಲಿಗೆ, ತುಟಿಗಳು, ದವಡೆ ಮೊದಲಾ ದವುಗಳ ಸರಿತದ (ಚಲನೆಯ) ಮೇಲೆ ಸರಿಯಾದ ಹಿಡಿತವಿಲ್ಲದುದರಿಂದಾಗಿ ಕಾಣಿಸಿಕೊಳ್ಳುವ ಉಲಿಯ ತೊಂದರೆ ಇವುಗಳಲ್ಲಿ ಒಂದು ಬಗೆಯದು. ಇಂತಹ ತೊಂದರೆಯಿರುವ ಮಕ್ಕಳಿಗೆ ಇತರ ಕೆಲಸಗಳಿಗಾಗಿ ಈ ಬಾಯಿಯ ಅಂಗಗಳನ್ನು ಬಳಸುವುದಕ್ಕೂ ತೊಂದರೆಯಾಗುತ್ತಿರುತ್ತದೆ.
ಈ ಅಂಗಗಳ ಮೇಲೆ ಸರಿಯಾದ ಹಿಡಿತವಿರುವ ಮಕ್ಕಳಲ್ಲೂ ಉಲಿಯ ತೊಂದರೆ ಕಾಣಿಸಿಕೊಳ್ಳಬಹುದು. ಇದಕ್ಕೆ ಕಾರಣವೇನೆಂದರೆ, ಉಲಿಗಳನ್ನು ಹೊರಡಿಸಬೇಕಿದ್ದಲ್ಲಿ, ಅದಕ್ಕಾಗಿ ಈ ಅಂಗಗಳನ್ನು ಹಲವಾರು ಬಗೆಗಳಲ್ಲಿ ಸರಿಸಬೇಕಾಗುತ್ತದೆ ಮತ್ತು ಇದಕ್ಕಾಗಿ ಮಿದುಳಿನಿಂದ ಸೂಚನೆಗಳು ಬರ ಬೇಕಾಗುತ್ತದೆ. ಈ ರೀತಿ ಮಾತಿಗೆ ಸಂಬಂದಿಸಿದಂತಹ ಸೂಚನೆಗಳನ್ನು ಕೊಡಬೇಕಾಗಿರುವ ಮಿದುಳಿನ ಜಾಗದಲ್ಲಿ ಇವರಿಗೆ ತೊಂದರೆಯಿರಬಹುದು. ಇಂತಹ ಮಕ್ಕಳಲ್ಲಿ ಕೆಲವರಿಗೆ ಉಲಿಗಳನ್ನು ಹೊರಡಿಸುವ ಕೆಲಸ ತೊಡಕಿನ ದಾಗಿ ತೋರಬಹುದು. ಅವರು ಮಾತನಾಡುವಾಗ, ಒಂದು ಉಲಿಯ ಬದಲು ಇನ್ನೊಂದು ಉಲಿ ಬರಬಹುದು, ಕೆಲವು ಉಲಿಗಳು ಬಿಟ್ಟುಹೋಗ ಬಹುದು, ಇಲ್ಲವೇ ಹೆಚ್ಚಿನ ಉಲಿಯೊಂದು ಸೇರಿಕೊಳ್ಳಬಹುದು. ಒಂದೇ ಪದವನ್ನು
ಹೇಳುವುದಿದ್ದರೂ ಇವರು ಅದನ್ನು ಒಂದೊಂದು ಬಾರಿ ಒಂದೊಂದು ಬಗೆ ಯಾಗಿ ಹೇಳಬಹುದು.
ಉಲಿಗಳನ್ನು ಇವರು ತುಂಬಾ ಕಶ್ಟದಿಂದ ಹೊರಡಿಸುತ್ತಿರುವ ಹಾಗೆ ಇತರರಿಗೆ ಅನಿಸಬಹುದು. ಆದರೆ, ಇವರಿಗೆ ಬೇರೆಯವರ ಮಾತನ್ನು ತಿಳಿಯುವಲ್ಲಿ ಯಾವ ತೊಂದರೆಯೂ ಇರುವುದಿಲ್ಲ. ಮಾತನಾಡುವ ಕೆಲಸ ಅಶ್ಟೊಂದು ತೊಡಕಿನದೆಂದು ಅನಿಸುವ ಕಾರಣ, ಇಂತಹ ಮಕ್ಕಳು ಮಾತನಾಡುವುದನ್ನೇ ಕಡಿಮೆಮಾಡಬಹುದು.
ಈ ರೀತಿ ಉಲಿಗಳನ್ನು ಒಂದೊಂದಾಗಿ ಹೊರಡಿಸುವಲ್ಲಿ ತೊಂದರೆ ಕಾಣಿಸಿಕೊಳ್ಳುವ ಬದಲು, ಉಲಿಗಳ ಕೆಲವು ಗುಂಪುಗಳನ್ನು ಹೊರಡಿಸುವಲ್ಲಿ ತೊಂದರೆಯಿರಬಹುದು. ಎತ್ತುಗೆಗಾಗಿ, ನಾಲಿಗೆಯ ಹಿಂಬಾಗದಿಂದ ಹೊರಡಿಸ ಬೇಕಾಗಿರುವ ಉಲಿಗಳನ್ನೆಲ್ಲ ಇವರು ಮುಂಬಾಗದಿಂದ ಹೊರಡಿಸುತ್ತಿರ ಬಹುದು (ಕಕಾರದ ಬದಲು ತಕಾರವನ್ನು, ಮತ್ತು ಗಕಾರದ ಬದಲು ದಕಾರ ವನ್ನು ಹೊರಡಿಸುತ್ತಿರಬಹುದು).
ಈ ಎರಡು ಬಗೆಯ ತೊಂದರೆಗಳನ್ನು ಬಗೆಹರಿಸುವಲ್ಲೂ ಉಲಿಯರಿಮೆಯ ತಿಳಿವು ಬೇಕಾಗುತ್ತದೆ. ತುಟಿ, ನಾಲಿಗೆ, ಉಲಿಪೆಟ್ಟಿಗೆ ಮೊದಲಾದವುಗಳನ್ನು ಬಳಸಿ ಉಲಿಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳದೆ ಉಲಿಗಳನ್ನು ಉಂಟುಮಾಡುವಲ್ಲಿ ಕಾಣಿಸಿಕೊಳ್ಳುವ ತೊಂದರೆಗಳನ್ನು ಬಗೆಹರಿ ಸಲು ಬರುವುದಿಲ್ಲ, ಮತ್ತು ಒಂದು ನುಡಿಯ ಪದಗಳ ರಚನೆಯಲ್ಲಿ ಉಲಿಗಳ ಬಳಕೆ ಎಂತಹದು ಎಂಬುದನ್ನು ತಿಳಿದುಕೊಳ್ಳದೆ ಅವುಗಳ ಬಳಕೆಯಲ್ಲಿ ಬರುವ ಕಟ್ಟಲೆಗಳ ಕಲಿಕೆಯಲ್ಲಿ ಕಾಣಿಸಿಕೊಳ್ಳುವ ತಪ್ಪುಗಳನ್ನು ಸರಿಪಡಿಸಲು ಬರುವು
ಮಕ್ಕಳಲ್ಲಿ ಕಾಣಿಸುವ ತೊದಲು ನುಡಿ ಕೆಲವರಲ್ಲಿ ಮಾತು ಕಲಿಕೆಯ ಒಂದು ಮೆಟ್ಟಲಾಗಿರುತ್ತದೆ, ಮತ್ತು ಆ ಮೆಟ್ಟಲನ್ನು ದಾಟುತ್ತಿರುವಂತೆ ಅದು ಇಲ್ಲವಾಗುತ್ತದೆ. ಆದರೆ, ಬೇರೆ ಕೆಲವು ಮಕ್ಕಳಲ್ಲಿ ಅದು ಹಾಗೆಯೇ ಬದಲಾಗದೆ ಉಳಿದಿರುತ್ತದೆ. ನಾಲ್ಕಯ್ದು ವರ್ಶವಾದಾಗಲೂ ತೊದಲು ನುಡಿ ಹಾಗೆಯೇ ಉಳಿದಿದೆಯಾದರೆ, ಅದನ್ನೂ ತಿದ್ದಿ ಸರಿಪಡಿಸಬೇಕಾಗುತ್ತದೆ.
ತೊದಲಿನಲ್ಲಿ ಮೂರು ಬಗೆಗಳಿವೆ. ನಾಲಿಗೆ ಅಂಗುಳಿನ ಹತ್ತಿರಕ್ಕೆ ಹೋಗುವ ಬದಲು, ಹಲ್ಲುಗಳ ಹತ್ತಿರ ಹೋಗಬಹುದು (ಇದರಿಂದ ಸಕಾರ ತಕಾರವಾಗಿ ಕೇಳಿಸುತ್ತದೆ), ನಾಲಿಗೆಯ ತುದಿಯ ಬದಲು ಅದರ ಹಿಂದಿರುವ ಅಲಗು ಮೇಲೆ ಹೋಗಬಹುದು (ಸಕಾರ-ತಕಾರಗಳು ಚಕಾರವಾಗಿ ಕೇಳಿಸುತ್ತವೆ),
ಇಲ್ಲವೇ ನಾಲಿಗೆಯ ಮೇಲಿನಿಂದ ಉಸಿರು ಹಾಯುವ ಬದಲು ಬದಿಗಳಿಂದ ಹಾಯಬಹುದು (ಸಕಾರ-ತಕಾರಗಳು ಲಕಾರವಾಗಿ ಕೇಳಿಸುತ್ತವೆ).
ತೊದಲುವ ಮಕ್ಕಳು ಯಾವ ಉಲಿಗಳನ್ನು ಸರಿಯಾಗಿ ಹೊರಡಿಸುವುದಿಲ್ಲ ಎಂಬುದನ್ನು ಮೊದಲು ಕಂಡುಕೊಳ್ಳಬೇಕಾಗುತ್ತದೆ, ಮತ್ತು ಆಮೇಲೆ ಆ ಉಲಿಗಳನ್ನು ಒಂದೊಂದಾಗಿ ಅವರಿಗೆ ಸರಿಯಾಗಿ ಹೊರಡಿಸುವಂತೆ ಕಲಿಸಿಕೊಡ ಬೇಕಾಗುತ್ತದೆ. ಇದಲ್ಲದೆ, ಈ ಉಲಿಗಳನ್ನು ಉಲಿಕಂತೆಗಳಲ್ಲಿ, ಪದಗಳಲ್ಲಿ, ಮತ್ತು ಸೊಲ್ಲುಗಳಲ್ಲಿ ಬಳಸಿ ನುಡಿಯುವುದು ಹೇಗೆ ಎಂಬುದನ್ನೂ ಕಲಿಸ ಬೇಕಾಗುತ್ತದೆ. ಇಂತಹ ಕೆಲವು ದಿವಸಗಳ ಕಲಿಕೆ ಅವರಿಗೆ ದೊರೆತಲ್ಲಿ, ಅವರ ತೊದಲು ನುಡಿ ಇಲ್ಲವಾದೀತು.
10.2.3 ಸೊಲ್ಲರಿಮೆಯ ತೊಂದರೆಗಳು
ಮಾತು ಕಲಿಯುವ ಮಕ್ಕಳಲ್ಲಿ ಹಲವು ಬಗೆಯ ಸೊಲ್ಲರಿಮೆಯ ತೊಂದರೆಗಳೂ ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಅವರಿಗೆ ಕೆಲವು ಬಗೆಯ ಪದಗಳನ್ನು ಕಲಿತುಕೊಳ್ಳಲು ಬಾರದಿರಬಹುದು; ಕಲಿತಿರುವ ಪದಗಳ ಎಣಿಕೆಯೂ ತೀರಾ ಚಿಕ್ಕದಾಗಿರಬಹುದು; ಇದಲ್ಲದೆ, ಹೊಸ ಪದಗಳನ್ನು ಕಲಿಯಬೇಕಿದ್ದಲ್ಲಿ ಹಲವು ಬಾರಿ ಅವುಗಳ ಬಳಕೆಯನ್ನು ಅವರು ಕೇಳಬೇಕಾಗಬಹುದು.
ಅವರದೇ ವಯಸ್ಸಿನ ಬೇರೆ ಮಕ್ಕಳು ಬಳಸುವ ಸೊಲ್ಲುಗಳಿಗಿಂತ ತೀರಾ ಸರಳವಾಗಿರುವ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಮಾತ್ರ ಅವರು ಬಳಸುತ್ತಿರಬಹುದು; ಕೆಲವೇ ಕೆಲವು ಸೊಲ್ಲಿನ ಇಟ್ಟಳಗಳನ್ನು ಮಾತ್ರ ಬಳಸಲು ಅವರಿಗೆ ಬರುತ್ತಿರ ಬಹುದು; ಇದಲ್ಲದೆ, ಸೊಲ್ಲುಗಳಲ್ಲಿ ಬಳಸಬೇಕಾಗುವ ಆದರೆ, ಮತ್ತು, ಅಲ್ಲದೆ ಮೊದಲಾದ ಪದಗಳನ್ನು ಬಳಸಲು ಅವರಿಗೆ ಗೊತ್ತಿಲ್ಲದಿರಬಹುದು. ಕೆಲವರ ಮಾತಿನಲ್ಲಂತೂ ಬರೇ ಹೆಸರುಪದಗಳು ಮಾತ್ರ ಬರುತ್ತಿರಬಹುದು. ಕೆಲವು ಮಕ್ಕಳಿಗೆ ಓದಿದುದನ್ನು ಇಲ್ಲವೇ ಹೇಳಿದುದನ್ನು ಸರಿಯಾಗಿ ತಿಳಿದು ಕೊಳ್ಳಲು ಬರುವುದಿಲ್ಲ. ಸೊಲ್ಲುಗಳಲ್ಲಿ ಬಳಕೆಯಾಗಿರುವ ಇಟ್ಟಳಗಳ ಹುರುಳು ಗಳನ್ನು ಕಂಡುಹಿಡಿಯಲು ಮತ್ತು ಕುಳ್ಳಿಹ(ಸಂದರ್ಬ)ಕ್ಕೆ ತಕ್ಕಂತೆ ಪದಗಳ ಹುರುಳುಗಳನ್ನು ತಿಳಿದುಕೊಳ್ಳಲು ಬಾರದಿರುವುದೇ ಇದಕ್ಕೆ ಕಾರಣ.
ಮೊದಲಿಗೆ ಇಂತಹ ಮಕ್ಕಳು ತಮ್ಮ ಮಾತಿಗೆ ಸರಿಯಾಗಿ ಗಮನವನ್ನೇ ಕೊಡುವುದಿಲ್ಲವೆಂದು ದೊಡ್ಡವರಿಗೆ ತೋರಬಹುದು. ಆದರೆ ನಿಜಕ್ಕೂ ಅವರು ಗಮನ ಕೊಡುತ್ತಿರುತ್ತಾರೆ; ಆದರೆ, ಹಾಗೆ ಮಾಡಿದರೂ ಅವರಿಗೆ ಬೇರೆಯವರ
ಮಾತನ್ನು ತಿಳಿದುಕೊಳ್ಳಲು ಬರುವುದಿಲ್ಲ. ಇದರಿಂದಾಗಿ, ಅವರು ಆಗಾಗ ಗೊಂದಲಕ್ಕೊಳಗಾಗುತ್ತಿರುತ್ತಾರೆ. ಯಾರಾದರೂ ತಮಾಶೆ ಮಾಡಿದಾಗಲೂ ಅವರಿಗೆ ಅದು ತಮಾಶೆಯೆಂದು ಗೊತ್ತಾಗುವುದಿಲ್ಲ.
ಇಂತಹ ಮಕ್ಕಳ ಮಾತಿನಲ್ಲಿ ಇನ್ನೊಂದು ಬಗೆಯ ತೊಂದರೆಯೂ ಕಾಣಿಸಿ ಕೊಳ್ಳುತ್ತದೆ: ಹೇಳಬೇಕೆಂದಿರುವುದನ್ನು ಸ್ಪಶ್ಟವಾಗಿ ಹೇಳಲು ಅವರಿಗೆ ಬರುವು ದಿಲ್ಲ; ಹೇಳಬೇಕೆಂದಿರುವುದೊಂದು, ಹೇಳುವುದು ಬೇರೊಂದು ಎಂದಾಗುತ್ತದೆ. ಮನಸ್ಸಿನಲ್ಲಿರುವುದನ್ನು ತಿಳಿಸಲು ಸಾಕಶ್ಟು ಸಮಯವಿದ್ದಾಗ ಮಾತ್ರ, ಇಂತಹ ಮಕ್ಕಳಿಗೆ ಮಾತನಾಡಲು ತೊಂದರೆಯಾಗುವುದಿಲ್ಲ. ಬೇಗ ಬೇಗನೆ ಹೇಳಿಬಿಡ ಬೇಕೆಂದು ಒತ್ತಾಯಿಸಿದರೆ ಅವರು ತಪ್ಪು ಮಾಡತೊಡಗುತ್ತಾರೆ.
ಕೆಲವರು ತಾವಾಗಿಯೇ ಸ್ವಲ್ಪ ಮಟ್ಟಿಗೆ ಉಳಿದವರೊಡನೆ ಹೊಂದಿಕೊಳ್ಳಲು, ಮತ್ತು ತಮ್ಮ ಮಾತನ್ನು ಹೊಂದಿಸಿಕೊಳ್ಳಲು ಕಲಿಯುತ್ತಾರೆ. ಆದರೆ ಎಲ್ಲರಿಗೂ ಇದನ್ನು ನಡೆಸಲು ಬರುವುದಿಲ್ಲ. ಸೊಲ್ಲರಿಗರ ನೆರವು ದೊರೆತಲ್ಲಿ, ಈ ತೊಂದರೆಯಿರುವವರೆಲ್ಲರೂ ಅದನ್ನು ಸಾಕಶ್ಟು ಕಡಿಮೆ ಮಾಡಿಕೊಳ್ಳಬಲ್ಲರು. ಮಕ್ಕಳಲ್ಲಿ ಕಾಣಿಸುವಂತಹ ಈ ಹಲವಾರು ಬಗೆಯ ಸೊಲ್ಲರಿಮೆಯ ತೊಡಕುಗಳ ನಿಜವಾದ ಪರಿಚೆ(ಸ್ವರೂಪ) ಎಂತಹದು ಎಂಬುದನ್ನು ತಿಳಿಯ ಬೇಕೆಂದಿರುವವರಿಗೆ, ಮತ್ತು ಅವುಗಳನ್ನು ಹೋಗಲಾಡಿಸುವಲ್ಲಿ ಇಲ್ಲವೇ ಕಡಿಮೆಮಾಡುವಲ್ಲಿ ನೆರವಾಗಬೇಕೆಂದಿರುವವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
10.2.4 ಓದಿನ ತೊಂದರೆಗಳು
ಓದಲು-ಬರೆಯಲು ತೊಡಗಿರುವ ಮಕ್ಕಳಲ್ಲಿ ಇನ್ನೊಂದು ಬಗೆಯ ತೊಂದರೆ ಕಾಣಿಸಿಕೊಳ್ಳುತ್ತದೆ: ಬರಹಗಳನ್ನು ಓದಿ ಅವುಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಅವರಿಗೆ ತುಂಬಾ ಕಶ್ಟವಾಗುತ್ತದೆ. ಇನ್ನೊಬ್ಬರು ಬಾಯಲ್ಲಿ ಹೇಳಿದುದನ್ನು ಅವರು ಸುಳುವಾಗಿ ತಿಳಿದುಕೊಳ್ಳಬಲ್ಲರು; ಆದರೆ ಬರೆದುದನ್ನು ಓದಿ ತಿಳಿಯುವುದು ಅವರಿಗೆ ತುಂಬಾ ತೊಡಕಿನ ಕೆಲಸವೆಂದು ಅನಿಸುತ್ತದೆ.
ಓದುವಾಗ ಇವರು ಬರಿಗೆಗಳನ್ನು ತಿರುಗಿಸಿ ಓದಬಹುದು; ಕೆಲವನ್ನು ಬಿಟ್ಟುಬಿಡಬಹುದು; ಪದಗಳನ್ನೂ ಆಚೀಚೆ ಮಾಡಬಹುದು. ಈ ರೀತಿ, ಓದುವ ಕೆಲಸವೇ ಇವರಿಗೆ ತುಂಬಾ ತೊಡಕಿನದಾಗಿರುವ ಕಾರಣ, ಓದಿದ್ದು ಏನು
ಎಂಬುದನ್ನು ತಿಳಿದು ಮತ್ತು ನೆನಪಿನಲ್ಲಿರಿಸಿಕೊಂಡು, ಬರಹದಲ್ಲಿ ಒಟ್ಟಾರೆ ಹೇಳಿರುವುದೇನು ಎಂಬುದನ್ನು ಗೊತ್ತುಮಾಡಿಕೊಳ್ಳಲು ಬರುವುದಿಲ್ಲ.
ಮಕ್ಕಳಲ್ಲಿ ಇಂತಹ ಓದಿನ ತೊಂದರೆಗಳು ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ: ಕೆಲವು ಮಕ್ಕಳು ಪದಗಳಲ್ಲಿ ಬರುವ ಬರಿಗೆಗಳನ್ನು ಉಲಿಗ ಳೊಂದಿಗೆ ಮತ್ತು ಉಲಿಕಂತೆಗಳೊಂದಿಗೆ ಹೊಂದಿಸಿಕೊಂಡು ಓದುವ ಬದಲು, ನೇರವಾಗಿ ಹುರುಳಿನೊಂದಿಗೆ ಹೊಂದಿಸಲು ಪ್ರಯತ್ನಿಸುತ್ತಾರೆ. ಎಂದರೆ, ಅವರು ಪದಗಳನ್ನು ಚಿತ್ರಗಳ ಹಾಗೆ ನೋಡುತ್ತಾರಲ್ಲದೆ, ಅವನ್ನು ಬರಿಗೆಗಳ ಸೇರಿಕೆ ಯಿಂದ ರಚಿಸಲಾಗಿದೆ ಎಂಬುದನ್ನು ಗಮನಿಸುವುದಿಲ್ಲ.
ಕನ್ನಡದಂತಹ ಬರಹಗಳಲ್ಲಿ ಕೆಲವೇ ಕೆಲವು ಬರಿಗೆಗಳನ್ನು ಬಳಸಿ ಸಾವಿರಾರು ಪದಗಳನ್ನು ಸೂಚಿಸಲಾಗುತ್ತದೆ. ಹಾಗಾಗಿ, ಪದಗಳಲ್ಲಿ ಬಳಕೆ ಯಾಗುವ ಬರಿಗೆಗಳನ್ನು ಉಲಿಗಳೊಂದಿಗೆ ಹೊಂದಿಸಿ ಓದುವವರಿಗೆ ಕೆಲವೇ ಕೆಲವು ಬರಿಗೆಗಳ ಓದನ್ನು ನೆನಪಿನಲ್ಲಿರಿಸಿಕೊಂಡರೆ ಸಾಕಾಗುತ್ತದೆ. ಇದಕ್ಕೆ ಬದಲು, ಪದಗಳನ್ನು ನೇರವಾಗಿ ಓದುವವರು ಸಾವಿರಾರು ಪದಗಳ ಓದನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದು ತುಂಬಾ ತೊಡಕಿನ ಕೆಲಸವಾದ ಕಾರಣ, ಅವರು ಓದಿನಲ್ಲಿ ಹಿಂದೆ ಬೀಳುತ್ತಾರೆ.
ಇಂತಹ ಮಕ್ಕಳಿಗೆ ಮಾತಿನಲ್ಲಿ ಬರುವ ಪದಗಳನ್ನು ಹೇಗೆ ಉಲಿಗಳ ಸೇರಿಕೆಯಿಂದ ರಚಿಸಲಾಗುತ್ತದೆ, ಮತ್ತು ಬರಹದಲ್ಲಿ ಹೇಗೆ ಈ ಉಲಿಗಳನ್ನು ಬರಿಗೆಗಳ ಮೂಲಕ ಸೂಚಿಸಲಾಗುತ್ತದೆ ಎಂಬುದನ್ನು ತೋರಿಸಿಕೊಡಬೇಕು. ಇದನ್ನು ತಿಳಿದುಕೊಂಡಲ್ಲಿ, ಅವರಿಗೆ ಬರಿಗೆಗಳನ್ನು ಉಲಿಗಳಾಗಿ ಮಾರ್ಪಡಿಸಿ ಓದಲು, ಮತ್ತು ಆಮೇಲೆ ಬೇರೆ ಮಕ್ಕಳ ಹಾಗೆ ಸಲೀಸಾಗಿ ಓದಲು ಬರುತ್ತದೆ. ಮಕ್ಕಳಲ್ಲಿ ಓದಿನ ತೊಂದರೆ ಕಾಣಿಸಿಕೊಳ್ಳಲು ಬೇರೆಯೂ ಕೆಲವು ಕಾರಣಗಳಿವೆ. ಎತ್ತುಗೆಗಾಗಿ, ಕಿವಿಯ ತೊಂದರೆಯಿಂದಾಗಿ ಇಲ್ಲವೇ ಕಣ್ಣಿನ ತೊಂದರೆಯಿಂದಾಗಿ ಓದಿನ ತೊಂದರೆ ಕಾಣಿಸಿಕೊಳ್ಳಬಹುದು. ಮಾತಿನ ತೊಂದರೆಗಳೂ ಓದಿನಲ್ಲಿ ಮಕ್ಕಳು ಹಿಂದೆ ಬೀಳುವಂತೆ ಮಾಡಬಹುದು.
ಜೀನ್ನಲ್ಲಿ ಒಂದು ಕ್ರೊಮೊಸೋಮ್ ಹೆಚ್ಚಿರುವ ಕೆಲವು ಮಕ್ಕಳಲ್ಲಿಯೂ ಓದಿನ ತೊಂದರೆ ಕಾಣಿಸಿಕೊಳ್ಳುತ್ತದೆ. ಇವರಿಗೆ ಪದಗಳನ್ನು ಸರಿಯಾಗಿ ಓದಲು ಬರುತ್ತದೆ; ಆದರೆ ಅವನ್ನು ಸೇರಿಸಿರುವ ಸೊಲ್ಲುಗಳ ಹುರುಳನ್ನು ತಿಳಿದು ಕೊಳ್ಳುವಲ್ಲಿ ತೊಂದರೆಯಾಗುತ್ತದೆ. ಸೊಲ್ಲುಗಳ ಹುರುಳನ್ನು ತಿಳಿಯಲು ಬೇಕಾಗುವ ನೆನಪಿನ ಕಸುವು ಅವರಲ್ಲಿಲ್ಲದಿರುವುದೇ ಇದಕ್ಕೆ ಕಾರಣ.
ಓದಿನ ತೊಂದರೆಯಿರುವ ಮಕ್ಕಳಲ್ಲಿ ಇಂತಹ ಬೇರೆ ತೊಂದರೆ ಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿದು, ಅವನ್ನು ಹೋಗಲಾ ಡಿಸಲು ಇಲ್ಲವೇ ಹತೋಟಿಯಲ್ಲಿರಿಸಲು ಕಲಿಸಿದಲ್ಲಿ, ಅವರು ಹೆಚ್ಚು ಕಡಿಮೆ ಬೇರೆ ಮಕ್ಕಳಶ್ಟೇ ಚನ್ನಾಗಿ ಓದಲು ಕಲಿಯಬಲ್ಲರು.
10.2.5 ಉಗ್ಗುಮಾತು
ಮಾತು ಕಲಿಯುವ ಮಕ್ಕಳಲ್ಲಿ ಕಾಣಿಸುವ ಇನ್ನೊಂದು ತೊಂದರೆಯೆಂದರೆ ಉಗ್ಗುಮಾತು. ಹೇಳಬೇಕೆಂದು ಅನಿಸಿದುದನ್ನು ಹೇಳುವಲ್ಲಿ ಇವರು ಕಶ್ಟಪಡು ತ್ತಾರೆ. ಮಾತನಾಡುತ್ತಿರುವಾಗ ತುಟಿ, ನಾಲಿಗೆ, ದವಡೆ, ಉಲಿಪೆಟ್ಟಿಗೆ, ಉಸಿರುಕ ಮೊದಲಾದವುಗಳಿಗೆ ಮಿದುಳಿನಿಂದ ಬಗೆಬಗೆಯ ಆದೇಶಗಳು ಬರುತ್ತಿರ ಬೇಕಾಗುತ್ತದೆ; ಈ ಆದೇಶಗಳ ಮೇಲೆ ಸರಿಯಾದ ಹಿಡಿತವಿಲ್ಲರುವುದೇ ಮಾತನಾಡುವಾಗ ಉಗ್ಗುತ್ತಿರುವುದಕ್ಕೆ ಕಾರಣ.
ಮಿದುಳಿನಿಂದ ಆದೇಶಗಳು ಹೊತ್ತುತಪ್ಪಿ ಬರುವುದು, ಉಲಿಗಳನ್ನು ಹೊರಡಿಸುವುದಕ್ಕೂ, ಅದು ಹೇಗೆ ಕೇಳಿಸುತ್ತಿದೆ ಎಂಬುದನ್ನು ಕಿವಿಯ ನರಗಳ ಮೂಲಕ ಮಿದುಳಿಗೆ ತಿಳಿಸುತ್ತಿರುವುದಕ್ಕೂ ನಡುವೆ ಹೊಂದಾಣಿಕೆಯಿಲ್ಲ ದಿರುವುದು, ಮತ್ತು ಉಲಿಗಳನ್ನು ಹೊರಡಿಸುವಲ್ಲಿ ಎಡಮಿದುಳಿಗೆ ಸರಿಯಾದ ಹತೋಟಿಯಿಲ್ಲದಿರುವುದು ಉಗ್ಗುಮಾತಿಗೆ ಕಾರಣವಾಗಿರಬಹುದು.
ಚಿಕ್ಕಂದಿನಲ್ಲಿ ಕಾಣಿಸುವ ಉಗ್ಗುಮಾತು ಕೆಲವು ಮಕ್ಕಳಲ್ಲಿ ಆಮೇಲೆ ತಾನಾಗಿಯೇ ಇಲ್ಲವಾಗುತ್ತದೆ; ಆದರೆ, ಬೇರೆ ಕೆಲವರಲ್ಲಿ ಇದು ಹಾಗೆಯೇ ಉಳಿಯುತ್ತದೆ, ಇಲ್ಲವೇ ಹೆಚ್ಚಾಗುತ್ತದೆ. ಇದನ್ನು ಪೂರ್ತಿ ಇಲ್ಲವಾಗಿಸಲು ಬರುವುದಿಲ್ಲವಾದರೂ ಕೆಲವು ಹೊಲಬುಗಳ ಮೂಲಕ ಹತೋಟಿಗೆ ತರಲು ಬರುತ್ತದೆ.
ಎತ್ತುಗೆಗಾಗಿ, ಮಾತಿನ ವೇಗವನ್ನು ಕಡಿಮೆ ಮಾಡುವ ಮೂಲಕ ಅದನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕಲಿಸಬಹುದು; ಮಾತನ್ನು ತುಸು ಮೆಲ್ಲಗೆ ತೊಡಗಲು, ಮತ್ತು ಬಿಗಿತವನ್ನು ತುಸು ಕಡಿಮೆ ಮಾಡಲು ಕಲಿಸಬಹುದು; ಮತ್ತು ಉಸಿರಾಟವನ್ನು ಹಿಡಿತದಲ್ಲಿರಿಸಿಕೊಳ್ಳಲು ಕಲಿಸಬಹುದು. ಇವೆಲ್ಲವೂ ಉಗ್ಗುಮಾತಿನ ಮೇಲೆ ಹತೋಟಿಯನ್ನು ಪಡೆಯಲು ನೆರವಾಗುತ್ತವೆ. ಇಲ್ಲಿಯೂ ಕೂಡ, ಮಾತನಾಡುವಾಗ ಉಲಿಗಳನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ವಿವರಿಸುವ ಉಲಿಯರಿಮೆ ನೆರವಿಗೆ ಬರುತ್ತದೆ.
10.3 ಬಳಕೆಯ ತೊಂದರೆಗಳು
ಚನ್ನಾಗಿ ಮಾತನಾಡಲು ಕಲಿತಿರುವ ಮಕ್ಕಳಿಗೆ ಇಲ್ಲವೇ ದೊಡ್ಡವರಿಗೆ ಮಿದುಳಿನ ತೊಂದರೆಯೇನಾದರೂ ಆದಲ್ಲಿ ಅದು ಅವರ ಮಾತನ್ನು ಕೆಡಿಸಬಲ್ಲುದು. ತಲೆಗೆ ಪೆಟ್ಟು ಬಿದ್ದಾಗ, ಮಿದುಳಿನಲ್ಲಿ ನೆತ್ತರು ಗಟ್ಟಿಕಟ್ಟಿದಾಗ, ಇಲ್ಲವೇ ಬೇರೆ ಕಾರಣಗಳಿಂದಾಗಿ ಮಿದುಳಿನ ಒಂದು ಜಾಗ ಸತ್ತುಹೋದಾಗ, ಹಲವು ರೀತಿಯ ಮಾತಿನ ತೊಂದರೆಗಳು ಕಾಣಿಸಿಕೊಳ್ಳಬಲ್ಲುವು.
ಈ ತೊಂದರೆಗಳು ಎಂತಹವು ಎಂಬುದು ಸ್ವಲ್ಪ ಮಟ್ಟಿಗೆ ಮಿದುಳಿನಲ್ಲಿ ಯಾವ ಜಾಗ ಕೆಟ್ಟುಹೋಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಹೆಚ್ಚಿನವ ರಲ್ಲೂ ಮಾತಿನ ಕೆಲಸಗಳು ಎಡಮಿದುಳಿನಲ್ಲಿ (ಎಂದರೆ, ಮಿದುಳಿನ ಎಡಬಾಗದಲ್ಲಿ) ನಡೆಯುತ್ತವೆ. ಹಾಗಾಗಿ, ಎಡಮಿದುಳಿಗೆ ಪೆಟ್ಟು ಬಿದ್ದಾಗಲೆಲ್ಲ ಒಂದಲ್ಲ ಒಂದು ಬಗೆಯ ಮಾತಿನ ತೊಂದರೆ ಕಾಣಿಸಿಕೊಳ್ಳದಿರುವುದಿಲ್ಲ. ಮಾತಿನ ಕೆಲಸಗಳು ಮಿದುಳಿನಲ್ಲಿ ಮುಕ್ಯವಾಗಿ ಎರಡು ಕಡೆಗಳಲ್ಲಿ ನಡೆಯು ತ್ತವೆ. ಇವನ್ನು ಕಂಡು ಹಿಡಿದಿರುವ ಬ್ರೋಕಾ ಮತ್ತು ವೆರ್ನಿಕೆ ಎಂಬವರ ಹೆಸರುಗಳನ್ನು ಮಿದುಳಿನ ಈ ಜಾಗಗಳಿಗೆ ಕೊಡಲಾಗಿದೆ.
ಇವುಗಳಲ್ಲಿ ಮೊದಲನೆಯದಾದ ಬ್ರೋಕಾನ ಜಾಗ ಮಿದುಳಿನಲ್ಲಿ ಕಿವಿಯ ಎದುರಿಗಿರುವ ಕಣತಲೆಗಿಂತ ಸ್ವಲ್ಪ ಮೇಲೆ ಇದೆ; ಇದು ಬಾಯಿಯಲ್ಲಿರುವ ನರಗಳನ್ನು ಹಿಡಿತದಲ್ಲಿರಿಸಿಕೊಂಡಿರುವ ಜಾಗದ ಹತ್ತಿರವೇ ಇದೆ. ಈ ಜಾಗಕ್ಕೆ ಏಟು ಬಿದ್ದಿದೆಯಾದರೆ, ಇಲ್ಲವೇ ಅಲ್ಲಿ ಬೇರೆ ತೊಂದರೆಗಳುಂಟಾಗಿವೆಯಾದರೆ, ಮಾತು ಹೊರಡಿಸುವ ಕೆಲಸಕ್ಕೆ ತೊಂದರೆಯುಂಟಾಗುತ್ತದೆ.
ಎರಡನೆಯದಾದ ವೆರ್ನಿಕೆಯ ಜಾಗ ಮಿದುಳಿನಲ್ಲಿ ಬ್ರೋಕಾನ ಜಾಗಕ್ಕಿಂತ ಹಿಂದೆ ಮತ್ತು ಸ್ವಲ್ಪ ಕೆಳಗಡೆ ಇದೆ. ಇದು ಕಿವಿಯಿಂದ ಹೊರಟ ನರಗಳು ಮಿದುಳನ್ನು ತಲಪುವ ಜಾಗದಲ್ಲಿದ್ದು, ಅಲ್ಲಿ ಮಾತಿಗೆ ಹುರುಳನ್ನು ಹೊಂದಿಸಿಕೊಳ್ಳುವ ಕೆಲಸ ನಡೆಯುತ್ತದೆ. ಈ ಜಾಗಕ್ಕೆ ಏಟು ಬಿದ್ದವರಿಗೆ ಸಲೀಸಾಗಿ ಮಾತನಾಡಲು ಬರುತ್ತದೆ; ಆದರೆ, ತಾವಾಡುವ ಮಾತಿಗೆ ಹುರುಳನ್ನು ಹೊಂದಿಸಿಕೊಳ್ಳಲು ತೊಂದರೆಯಾಗುತ್ತದೆ. ಎಂದರೆ, ಇವರು ಏನೇನೋ ಹೇಳುತ್ತಿರುತ್ತಾರೆ. ಅವರ ಮಾತು ಸಲೀಸಾಗಿ ಹರಿಯುತ್ತಿದೆ; ಆದರೆ, ಅದಕ್ಕೆ ಯಾವ ಹುರುಳೂ ಇರುವುದಿಲ್ಲ. ಇದಲ್ಲದೆ, ಇನ್ನೊಬ್ಬರ ಮಾತನ್ನೂ ಇವರಿಗೆ ತಿಳಿದುಕೊಳ್ಳಲು ಬರುವುದಿಲ್ಲ.
ಬ್ರೋಕಾನ ಜಾಗ ಮತ್ತು ವೆರ್ನಿಕೆಯ ಜಾಗಗಳು ಮಾತಿಗೆ ಬೇಕಾಗುವ ಮಿದುಳಿನ ಎರಡು ಮುಕ್ಯವಾದ ಜಾಗಗಳು. ಈ ಜಾಗಗಳಲ್ಲಿ ಮಾತ್ರವಲ್ಲದೆ
ಮಿದುಳಿನ ಬೇರೆಯೂ ಕೆಲವು ಜಾಗಗಳಲ್ಲಿ ಮಾತಿನ ಕೆಲಸಗಳು ನಡೆಯುತ್ತವೆ. ಹೀಗಿದ್ದರೂ, ಮಿದುಳಿನ ತೊಂದರೆಯಿಂದಾಗಿ ಮಾತಿನ ತೊಂದರೆಗೊಳಗಾದ ವರನ್ನು ಸಾಮಾನ್ಯವಾಗಿ ಬ್ರೋಕಾನ ತೊಂದರೆಯವರು (ಸಲೀಸಾಗಿ ಮಾತನಾ ಡಲು ಬಾರದವರು) ಮತ್ತು ವೆರ್ನಿಕೆಯ ತೊಂದರೆಯವರು (ಸಲೀಸಾಗಿ, ಆದರೆ ಯಾವ ಹುರುಳೂ ಇಲ್ಲದಂತೆ, ಮಾತನಾಡುವವರು) ಎಂಬುದಾಗಿ ವಿಂಗಡಿಸಿ ಪರಿಶೀಲಿಸಲಾಗುತ್ತಿದೆ.
10.3.1 ಸಲೀಸಾದ ಮಾತು
ಬ್ರೋಕಾನ ತೊಂದರೆಯಿರುವವರಿಗೆ ಸಲೀಸಾಗಿ ಮಾತನಾಡಲು ಬರುವುದಿಲ್ಲ. ಉಲಿಗಳನ್ನು ಹೊರಡಿಸುವಲ್ಲಿ ಮತ್ತು ಪದಗಳನ್ನು ನೆನೆಪಿಸುವಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಪದಗಳಿಗೆ ತಕ್ಕುದಾದ ಪದರೂಪಗಳನ್ನು ಕೊಟ್ಟು ಅವನ್ನು ಸೊಲ್ಲುಗಳಲ್ಲಿ ಸರಿಯಾಗಿ ಬಳಸಲು ಇವರಿಗೆ ಬರುವುದಿಲ್ಲ. ಹೀಗಿದ್ದರೂ, ಬೇರೆಯವರು ಹೇಳಿದ್ದು ಇವರಿಗೆ ಹೆಚ್ಚಿನ ಮಟ್ಟಿಗೂ ಗೊತ್ತಾಗು
ಉಲಿಗಳನ್ನು ಹೊರಡಿಸುವಲ್ಲಿ ಮೂರು ಬಗೆಯ ತೊಂದರೆಗಳು ಇವರಲ್ಲಿ ಕಾಣಿಸಿಕೊಳ್ಳಬಲ್ಲುವು: ಮೊದಲನೆಯದಾಗಿ, ಕೆಲವರಿಗೆ ಉಲಿಗಳನ್ನು ಹೊರಡಿಸಲು ಬೇಕಾಗುವ ನರಕಟ್ಟುಗಳ ಮೇಲಿನ ಹಿಡಿತ ತಪ್ಪಿದುದರಿಂದಾಗಿ, ತುಟಿ, ನಾಲಿಗೆ, ದವಡೆ ಮೊದಲಾದವುಗಳನ್ನು ಬೇಕಾದ ಹಾಗೆ ಸರಿಸಲು ಬರುವುದಿಲ್ಲ. ಇಂತಹವರ ಮಾತು ತುಂಬಾ ಮೆಲ್ಲಗೆ ಮತ್ತು ಮೆತ್ತಗಾಗಿರು ತ್ತದೆ. ಇವರಿಗೆ ಮಾತಿನ ಅಂಗಗಳನ್ನು ಬಳಸುವಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಬರುವುದಿಲ್ಲ.
ಎರಡನೆಯದಾಗಿ, ಕೆಲವರಿಗೆ ನರಕಟ್ಟುಗಳ ಮೇಲಿನ ಹಿಡಿತ ತಪ್ಪಿಲ್ಲ ವಾದರೂ, ಉಲಿಗಳನ್ನು ಹೊರಡಿಸುವ ಕೆಲಸ ತುಂಬಾ ತೊಡಕಿನದಾಗಿರುತ್ತದೆ. ಅದಕ್ಕೆ ಬೇಕಾಗುವ ಸೂಚನೆಗಳನ್ನು ಮಿದುಳಿನಿಂದ ನರಕಟ್ಟುಗಳಿಗೆ ತಲಪಿಸು ವಲ್ಲಿ ಅವರು ತೊಂದರೆಗೊಳಗಾಗುತ್ತಾರೆ.
ಮೂರನೆಯದಾಗಿ, ಕೆಲವರಿಗೆ ಬೇಕಾಗಿರುವ ಎಲ್ಲಾ ಉಲಿಗಳನ್ನೂ ಸರಿ ಯಾಗಿ ಹೊರಡಿಸಲು ಬರುವುದಿದ್ದರೂ, ಯಾವ ಪದಕ್ಕೆ ಯಾವ ಉಲಿಗಳು ಬೇಕಾಗುತ್ತವೆ ಎಂಬುದನ್ನು ನೆನಪಿಸಿಕೊಂಡು ಆಡಲು ತೊಂದರೆಯಾಗುತ್ತದೆ. ಇಂತಹ ಜನರು ಪದಗಳನ್ನು ಆಡುವಾಗ ಕೆಲವು ಉಲಿಗಳು ಬಿಟ್ಟುಹೋಗುತ್ತವೆ,
ಇಲ್ಲವೇ ಒಂದರ ಬದಲು ಇನ್ನೊಂದು ಬರುತ್ತದೆ; ಕೆಲವು ಹೆಚ್ಚಿನ ಉಲಿಗಳು ಸೇರಿಕೊಳ್ಳುತ್ತವೆ.
ಈ ತೊಂದರೆಗಳು ಒಬ್ಬೊಬ್ಬನಲ್ಲಿ ಒಂದೊಂದು ತೆರನಾಗಿ ಕಾಣಿಸಿಕೊಳ್ಳು ತ್ತವೆಯಾದ ಕಾರಣ, ಒಬ್ಬನಲ್ಲಿ ಎಂತಹ ತೊಂದರೆಯಿದೆ ಎಂಬುದನ್ನು ತಿಳಿಯದೆ ಚಿಕಿತ್ಸೆಯನ್ನು ನಡೆಸಲು ಬರುವುದಿಲ್ಲ. ಹೀಗೆ ತಿಳಿದುಕೊಳ್ಳುವುದಕ್ಕೆ, ಮತ್ತು ಅದಕ್ಕೆ ಬೇಕಾಗುವ ಚಿಕಿತ್ಸೆಯನ್ನು ನಡೆಸುವುದಕ್ಕೆ ಉಲಿಯರಿಮೆಯ ನೆರವು ಬೇಕಾಗುತ್ತದೆ.
ಹಲವು ಬಗೆಯ ಸೊಲ್ಲರಿಮೆಯ ತೊಂದರೆಗಳೂ ಈ ಗುಂಪಿಗೆ ಸೇರುವವರ ಮಾತಿನಲ್ಲಿ ಕಾಣಿಸಿಕೊಳ್ಳುತ್ತವೆ. ಮೊದಲನೆಯದಾಗಿ, ಪದಗಳನ್ನು ಜೋಡಿಸಿ ಸೊಲ್ಲುಗಳನ್ನು ರಚಿಸುವ ಅಳವನ್ನು ಇವರು ಕಳೆದುಕೊಂಡಿರಬಹುದು. ಎರಡ ನೆಯದಾಗಿ, ಪದರೂಪಗಳನ್ನು ರಚಿಸಲು ಬೇಕಾಗುವ ಒಟ್ಟು(ಪ್ರತ್ಯಯ)ಗಳನ್ನು ಬಳಸಲು ಇವರಿಗೆ ಬಾರದಿರಬಹುದು. ಮೂರನೆಯದಾಗಿ, ಸೊಲ್ಲುಗಳಲ್ಲಿ ಬರುವ ಪದಗಳ ಹುರುಳನ್ನು ಕುಳ್ಳಿಹ(ಸಂದರ್ಬ)ದಿಂದ ತಿಳಿದುಕೊಳ್ಳಲು ಬಾರದಿರ ಬಹುದು. ಕೆಲವರಿಗೆ ಮಾತನಾಡುವಾಗ ತಕ್ಕುದಾದ ಪದಗಳೇ ಸಿಗದಿರಬಹುದು.
10.3.2 ಹುರುಳಿಲ್ಲದ ಮಾತು
ವೆರ್ನಿಕೆಯ ತೊಂದರೆಯಿರುವವರಿಗೆ ಸಲೀಸಾಗಿ ಮಾತನಾಡಲು ಬರುತ್ತದೆ. ಎಲ್ಲಾ ಸೊಲ್ಲರಿಮೆಯ ಕಟ್ಟಲೆಗಳನ್ನೂ ಅವರು ಸರಿಯಾಗಿಯೇ ಬಳಸಬಲ್ಲರು. ಆದರೆ, ಅವರ ಮಾತಿಗೆ ಹುರುಳೇ ಇರುವುದಿಲ್ಲ. ಒಂದು ವಿಶಯವನ್ನು ತಿಳಿಸುವುದಕ್ಕಾಗಿ ಸೊಲ್ಲುಗಳಲ್ಲಿ ಯಾವ ಪದಗಳನ್ನು ಬಳಸಬೇಕೋ ಅವುಗಳ ಬದಲು ಅವರು ಬೇರೆ ಯಾವುದಾದರೂ ಪದಗಳನ್ನು ಬಳಸಿಬಿಡುತ್ತಾರೆ. ಎತ್ತುಗೆಗಾಗಿ, ಟೆಲಿಫೋನ್ನಲ್ಲಿ ಮಾತನಾಡಿದೆ ಎನ್ನುವ ಬದಲು ಟಿವಿಯಲ್ಲಿ ಮಾತನಾಡಿದೆ ಎನ್ನಬಹುದು.
ಈ ತೊಂದರೆಯಿರುವವರು ಎಶ್ಟು ಬೇಕಾದರೂ ಮಾತನಾಡಬಲ್ಲರು; ತುಂಬಾ ತೊಡಕು ತೊಡಕಾದ ಸೊಲ್ಲುಗಳನ್ನೂ ಬಳಸಬಲ್ಲರು; ಆದರೆ ಅವರು ಬಳಸುವ ಸೊಲ್ಲುಗಳಿಗೆ ಯಾವ ಹುರುಳನ್ನೂ ಕೊಡಲು ಬರುವುದಿಲ್ಲ. ಕೆಲವೊಮ್ಮೆ ಅವರು ಎಂತೆಂತಹವೋ ಪದಗಳನ್ನು ಹೊಸದಾಗಿ ಉಂಟು ಮಾಡಿಯೂ ಹೇಳುತ್ತಿರುತ್ತಾರೆ. ಹಾಗಾಗಿ, ಅವರು ಏನು ಹೇಳುತ್ತಿದ್ದಾರೆಂದು ಯಾರಿಗೂ ಗೊತ್ತಾಗುವುದಿಲ್ಲ.
ಇದಲ್ಲದೆ, ಇವರಿಗೂ ಬೇರೊಬ್ಬರು ಹೇಳಿದುದೇನೆಂದು ಗೊತ್ತಾಗುವುದಿಲ್ಲ,
ಮತ್ತು ಬರಹದಲ್ಲಿ ಬರೆದುದೇನೆಂಬುದೂ ತಿಳಿಯುವುದಿಲ್ಲ.
ಮಿದುಳಿನ ಯಾವ ಜಾಗಕ್ಕೆ ಪೆಟ್ಟು ಬಿದ್ದಿದೆ ಎಂಬುದರ ಮೇಲೆ ಬೇರೆಯೂ ಕೆಲವು ಬಗೆಯ ಮಾತಿನ ತೊಂದರೆಗಳು ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಕೆಲವರಿಗೆ ಒಂದು ವಸ್ತು ಎಂತಹದು, ಅದನ್ನು ಏನು ಮಾಡಬಹುದು ಎಂಬುದು ತಿಳಿದಿರುತ್ತದೆ; ಆದರೆ, ಅದರ ಹೆಸರೇನೆಂಬುದನ್ನು ಹೇಳಲು ಬರುವುದಿಲ್ಲ. ಮೇಲೆ ವಿವರಿಸಿದಂತಹ ಮಾತಿನ ತೊಂದರೆಗೊಳಗಾದವರಲ್ಲಿ ಕೆಲವರು ಕೆಲವು ಗಂಟೆಗಳ ನಂತರ, ಇಲ್ಲವೇ ಕೆಲವು ದಿವಸಗಳ ನಂತರ ತಾವಾಗಿಯೇ ಮಾತನ್ನು ಪಡೆಯಬಹುದು. ಮಿದುಳಿನಲ್ಲಿ ನೆತ್ತರು ಕಟ್ಟಿರುವ ಜಾಗಕ್ಕೆ ನೆತ್ತರು ಹೋಗಲು ಸುರುವಾದಲ್ಲಿ, ಆ ಜಾಗದಲ್ಲಿ ಅವರಿಗಿದ್ದ ಮಾತಿನ ತೊಂದರೆ ತಾನಾಗಿಯೇ ಇಲ್ಲವಾಗಬಹುದು.
ಆದರೆ, ಬೇರೆ ಕೆಲವರಲ್ಲಿ ಈ ತೊಂದರೆ ಹಾಗೆಯೇ ಉಳಿಯಬಹುದು. ಇಂತಹ ಜನರಿಗೆ ಸರಿಯಾದ ಉಪಚಾರಗಳನ್ನು ಒದಗಿಸುವ ಮೂಲಕ ತೊಂದರೆಗಳನ್ನು ಕಡಿಮೆಮಾಡಬಹುದು. ಇದಕ್ಕೆ ಸೊಲ್ಲರಿಮೆಯ ನೆರವು ಬೇಕಾಗುತ್ತದೆ.
11.4 ತಿರುಳು
ಮಕ್ಕಳು ಮಾತು ಕಲಿಯುವ ಸಮಯದಲ್ಲಿ, ಮತ್ತು ಮಾತನ್ನು ಕಲಿತ ಮೇಲೆಯೂ ಮಿದುಳಿನ ತೊಂದರೆಯಿಂದಾಗಿ ಹಲವು ಬಗೆಯ ಮಾತಿನ ತೊಂದರೆಗಳಿಗೆ ಒಳಗಾಗಬಹುದು. ಇಂತಹ ತೊಂದರೆಗಳನ್ನು ಕಡಿಮೆ ಮಾಡಿ, ಮಾತನ್ನು ಆದಶ್ಟು ಮಟ್ಟಿಗೆ ತಮ್ಮ ಹತೋಟಿಯಲ್ಲಿರಿಸಿಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಲು ಬರುತ್ತದೆ. ಆದರೆ, ಇದಕ್ಕೆ ಉಲಿಯರಿಮೆಯ ಮತ್ತು ಸೊಲ್ಲರಿಮೆಯ ನೆರವು ಬೇಕಾಗುತ್ತದೆ.
ಹನ್ನೊಂದನೇ ಪಸುಗೆ — ಮುಕ್ತಾಯ
11.1 ಹಲವು ಬಗೆಯ ಬಳಕೆಯ ಸೊಲ್ಲರಿಮೆಗಳು
ಸೊಲ್ಲರಿಮೆಯ ತಿಳಿವು ಹೇಗೆ ನುಡಿಗೆ ಸಂಬಂದಿಸಿದಂತಹ ಹಲವು ಬಗೆಯ ಕೆಲಸಗಳನ್ನು ನಡೆಸುವಲ್ಲಿ ನೆರವಿಗೆ ಬರಬಲ್ಲುದು ಎಂಬುದನ್ನು ಹಿಂದಿನ ಒಂಬತ್ತು ಪಸುಗೆಗಳಲ್ಲಿ ಪರಿಶೀಲಿಸಲಾಗಿದೆ. ಈ ಪರಿಶೀಲನೆಯಿಂದ ಒಂದು ಮುಕ್ಯ ವಿಶಯ ನಮ್ಮ ಗಮನಕ್ಕೆ ಬಂದಿದೆ. ಅದೇನೆಂದರೆ, ಈ ಕೆಲಸಗಳಲ್ಲಿ ಒಂದೊಂದಕ್ಕೂ ಒಂದೊಂದು ಬಗೆಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ: ಶಾಲೆಗಳಲ್ಲಿ ಓದಲು-ಬರೆಯಲು ಕಲಿಯುತ್ತಿರುವ ಮಕ್ಕಳಿಗೆ ಆ ಕೆಲಸದಲ್ಲಿ ನೇರವಾಗಿ ನೆರವಾಗಬಲ್ಲ ಸೊಲ್ಲರಿಮೆಯ ತಿಳಿವನ್ನು ಕೊಡಿಸಿದಲ್ಲಿ ಮಾತ್ರ, ಅದು ಅವರ ಕುತೂಹಲವನ್ನು ಕೆರಳಿಸಬಲ್ಲುದು. ಇದಕ್ಕೆ ಬದಲು, ಬರವಣಿಗೆ ಯಲ್ಲಿ ಹೆಚ್ಚಿನ ಜಾಣ್ಮೆಯನ್ನು ಪಡೆಯಬೇಕೆಂದಿರುವ ದೊಡ್ಡ ಹುಡುಗ- ಹುಡುಗಿಯರಿಗೆ ಹೆಚ್ಚಿನ ಹರವು ಮತ್ತು ಆಳಗಳಿರುವ ಸೊಲ್ಲರಿಮೆಯ ತಿಳಿವನ್ನು ಕೊಡಿಸಬಹುದು; ಯಾಕೆಂದರೆ, ಅದನ್ನು ತಮ್ಮ ಓದಿನಲ್ಲಿ ಮತ್ತು ಬರವಣಿಗೆ ಯಲ್ಲಿ ಬಳಸಿಕೊಳ್ಳುವ ಅಳವು ಅವರಲ್ಲಿರುತ್ತದೆ.
ಅರಿಮೆಯ (ವಿಜ್ನಾನದ) ಬರಹಗಳನ್ನು ಬರೆಯುವವರಿಗೆ ಮುಕ್ಯವಾಗಿ ಅಂತಹ ಬರಹಗಳಲ್ಲಿ ಕಾಣಿಸಿಕೊಳ್ಳುವ ತೊಡಕುಗಳನ್ನು ಬಗೆಹರಿಸುವ ಬಗೆ ಹೇಗೆ ಎಂಬುದನ್ನು ತಿಳಿಸುವಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಈ ತಿಳಿವನ್ನು ಬಳಸಿ, ಅವರು ತಮ್ಮ ಬರಹವನ್ನು ಓದುಗರ ಮಟ್ಟಕ್ಕನುಸಾರ ವಾಗಿ ಬದಲಾಯಿಸಿಕೊಳ್ಳಬಲ್ಲರು. ಇದಕ್ಕೆ ಬದಲು, ಇಂತಹ ಬರಹಗಳಿಗಾಗಿ ಹೊಸ ಪದಗಳನ್ನು ಉಂಟುಮಾಡಿಕೊಡುವವರಿಗೆ ಬೇರೆಯೇ ಒಂದು ಬಗೆಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ತಮ್ಮ ನುಡಿಯಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಇವರು ತಿಳಿದಿರಬೇಕು, ಮತ್ತು ಮೂಲ ನುಡಿಯ ಪದಗಳಲ್ಲಿ ಕಾಣಿಸುವ ಹುರುಳುಗಳನ್ನು ತಮ್ಮ ನುಡಿಯಲ್ಲಿ ಮೂಡಿಸು ವುದು ಹೇಗೆ ಎಂಬುದನ್ನೂ ಅರಿತಿರಬೇಕು.
ಕತೆ, ಕವಿತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯು ವವರಿಗೆ ಪದ ಮತ್ತು ಸೊಲ್ಲುಗಳ ಆಯ್ಕೆಯ ಮೂಲಕ ಓದುಗರಲ್ಲಿ ಹೇಗೆ ಹಲವು ಬಗೆಯ ಅನಿಸಿಕೆಗಳನ್ನು ಉಂಟುಮಾಡಬಹುದು ಎಂಬುದರ ಕುರಿತು ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಇದಲ್ಲದೆ, ಓದುಗರ ಗಮನವನ್ನು ಬರಹದ ಹುರುಳಿನಿಂದ ಬರಹದ ಕಡೆಗೆ ಸೆಳೆಯುವುದಕ್ಕಾಗಿ ನುಡಿಯ ಕಟ್ಟಲೆ ಗಳಲ್ಲಿ ಎಂತಹವನ್ನು ಮುರಿಯಬಹುದು ಮತ್ತು ಎಂತಹವನ್ನು ಮುರಿಯ ಬಾರದು ಎಂಬಂತಹ ಸೊಲ್ಲರಿಮೆಯ ತಿಳಿವೂ ಅವರಿಗೆ ಬೇಕಾಗುತ್ತದೆ.
ಎರಡನೇ ನುಡಿಯಾಗಿ ಇಂಗ್ಲಿಶ್, ತಮಿಳು, ಹಿಂದಿ ಮೊದಲಾದವುಗಳನ್ನು ಕಲಿಯುವವರಿಗೆ ತಮ್ಮ ತಾಯ್ನುಡಿಯಾದ ಕನ್ನಡಕ್ಕೂ ಆ ಎರಡನೇ ನುಡಿಗೂ ನಡುವೆ ಸೊಲ್ಲರಿಮೆಯ ಕಟ್ಟಲೆಗಳಲ್ಲಿ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬು ದರ ತಿಳಿವು ನೆರವಿಗೆ ಬರಬಲ್ಲುದು. ಒಂದು ನುಡಿಯಿಂದ ಇನ್ನೊಂದು ನುಡಿಗೆ ಬರಹಗಳನ್ನು ನುಡಿಮಾರ(ಅನುವಾದಿಸ)ಬೇಕೆಂದಿರುವವರಿಗೂ ಇಂತಹದೇ ತಿಳಿವು ಬೇಕಾಗುತ್ತದೆ. ಈ ಕೆಲಸಕ್ಕಾಗಿ ಎಣ್ಣುಕ (ಕಂಪ್ಯೂಟರ್)ಗಳನ್ನು ಬಳಸ ಬೇಕೆಂದಿರುವವರಿಗಂತೂ ಈ ಸೊಲ್ಲರಿಮೆಗಳ ನಡುವಿನ ವ್ಯತ್ಯಾಸದ ತಿಳಿವು ಇನ್ನಶ್ಟು ಆಳವಾಗಿರಬೇಕು, ಮತ್ತು ಹರವಿನದಾಗಿರಬೇಕು.
ತಮ್ಮ ನುಡಿಗೆ ಹೊಸ ಲಿಪಿಯೊಂದನ್ನು ಕೊಡಿಸುವುದು ಇಲ್ಲವೇ ಇರುವ ಲಿಪಿಯನ್ನು ಸರಿಪಡಿಸುವುದು, ನುಡಿಯನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸು ವುದು, ಮತ್ತು ಅದಕ್ಕಾಗಿ ಅದರಲ್ಲಿ ಹಲವು ಬಗೆಯ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಮೊದಲಾದ ನುಡಿಹಮ್ಮುಗೆಯ ಕೆಲಸಗಳನ್ನು ನಡೆಸ ಬೇಕೆಂದಿರುವವರಿಗೆ ಅಂತಹ ಕೆಲಸಗಳಲ್ಲಿ ನೆರವಾಗಬಲ್ಲಂತಹ ಬೇರೆಯೇ ಬಗೆಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
ಇದೇ ರೀತಿಯಲ್ಲಿ, ಹಲವು ಬಗೆಯ ಮಾತಿನ ತೊಂದರೆಗಳನ್ನು ಬಗೆಹರಿಸ ಬೇಕೆಂದಿರುವವರಿಗೆ ನೇರವಾಗಿ ಅಂತಹ ತೊಂದರೆಗಳಿಗೆ ಸಂಬಂದಿಸಿರುವಂತಹ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಎತ್ತುಗೆಗಾಗಿ, ಉಲಿಯ ತೊಂದರೆಯನ್ನು ಬಗೆಹರಿಸಬೇಕಿದ್ದಲ್ಲಿ ಉಲಿಯನ್ನು ಉಂಟುಮಾಡುವ ಬಗೆ ಹೇಗೆ ಎಂಬುದರ ತಿಳಿವು ಬೇಕಾಗುತ್ತದೆ, ಮತ್ತು ಸೊಲ್ಲುಗಳ ತೊಂದರೆಯನ್ನು ಬಗೆಹರಿಸ ಬೇಕಿದ್ದಲ್ಲಿ ಸೊಲ್ಲುಗಳನ್ನು ಕಟ್ಟುವ ಬಗೆ ಹೇಗೆ ಎಂಬುದರ ತಿಳಿವು ಬೇಕಾಗು
ಈ ರೀತಿ, ಒಂದೊಂದು ಬಗೆಯ ಕೆಲಸಕ್ಕೂ ಒಂದೊಂದು ಬಗೆಯ ಸೊಲ್ಲರಿ ಮೆಯ ತಿಳಿವು ಬೇಕಾಗುವುದಾದ ಕಾರಣ, ಈ ಹಲವು ಬಗೆಯ ಕೆಲಸಗಳನ್ನುಮಾಡುವವರೆದುರು ಒಂದೇ ಬಗೆಯ ಸೊಲ್ಲರಿಮೆಯನ್ನು ಇರಿಸಿದಲ್ಲಿ, ಅದನ್ನು ಅವರು ತಮ್ಮ ಕೆಲಸಗಳಲ್ಲಿ ಬಳಸಿಕೊಳ್ಳಲಾರರು. ನೇರವಾಗಿ ಅವರ ಕೆಲಸಗಳಿಗೆ ನೆರವನ್ನು ನೀಡುವಂತಹ ವಿಶಯಗಳನ್ನು ಬೇರ್ಪಡಿಸಿ ತಿಳಿಸುವ ಬಳಕೆಯ ಸೊಲ್ಲರಿಮೆಗಳನ್ನು ಮಾತ್ರ ಅವರು ತಮ್ಮ ಕೆಲಸಗಳಲ್ಲಿ ಬಳಸಿಕೊಳ್ಳಬಲ್ಲರು. ಎಂತಹ ಕೆಲಸಕ್ಕೆ ಎಂತಹ ಸೊಲ್ಲರಿಮೆಯ ತಿಳಿವು ನೆರವಾಗಬಲ್ಲುದು ಎಂಬುದನ್ನು ತಿಳಿಸುವ ಈ ಬಳಕೆಯ ಸೊಲ್ಲರಿಮೆಗಳನ್ನು ನುಡಿಗಳ ಒಳಗುಟ್ಟ ನ್ನರಿತಿರುವ ನುಡಿಯರಿಗರು (ಬಾಶಾವಿಜ್ನಾನಿಗಳು) ಕಂಡುಹಿಡಿಯಬಲ್ಲರು. ಆದರೆ, ಇದನ್ನು ನಡೆಸಲು ಅವರಿಗೆ ಅಂತಹ ಕೆಲಸಗಳಲ್ಲಿ ಪಳಗಿರುವ ತಿಳಿವಿಗರ ನೆರವು ಬೇಕಾಗುತ್ತದೆ. ಎತ್ತುಗೆಗಾಗಿ, ಕಾನೂನುಗಳನ್ನು ಬರೆಯುವಲ್ಲಿ ಎಂತಹ ಇಪ್ಪುರುಳಿನ ತೊಡಕುಗಳು ಬರಬಲ್ಲುವು ಎಂಬುದನ್ನು ಅವರು ಕಾನೂನಿನ ತಿಳಿವಿಗರ ನೆರವಿನಿಂದ ತಿಳಿದುಕೊಳ್ಳಬಲ್ಲರು, ಮತ್ತು ತಮ್ಮ ಸೊಲ್ಲರಿಮೆಯ ತಿಳಿವನ್ನು ಬಳಸಿ ಅವನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ಕಂಡು ಹಿಡಿಯಬಲ್ಲರು (6.3.1 ನೋಡಿ).
ಇಂಗ್ಲಿಶ್ನಲ್ಲಿ ಇಂತಹ ಬಳಕೆಯ ಸೊಲ್ಲರಿಮೆಗಳನ್ನು ಉಂಟುಮಾಡುವ ಹಲವು ಕೆಲಸಗಳು ಈಗಾಗಲೇ ನಡೆದಿವೆ, ಮತ್ತು ನಡೆಯುತ್ತಿವೆ; ಆದರೆ, ಕನ್ನಡದ ತಿಳಿವಿಗರು ಈ ಕೆಲಸದಲ್ಲಿನ್ನೂ ತೊಡಗಿಯೇ ಇಲ್ಲ.
ಹಾಗಾಗಿ, ಕನ್ನಡದ ಸೊಲ್ಲರಿಮೆಯಲ್ಲಿ ಇವತ್ತು ಎರಡು ಬಗೆಯ ಅರಕೆ (ಸಂಶೋದನೆ)ಗಳು ನಡೆಯಬೇಕಾಗಿವೆ: ನಿಜಕ್ಕೂ ಕನ್ನಡದ ಸೊಲ್ಲರಿಮೆ ಎಂತಹದು ಎಂಬುದನ್ನು ತಿಳಿಯುವ, ಮತ್ತು ಅಂತಹ ತಿಳಿವನ್ನು ಒಂದುಗೂಡಿಸಿ ಕನ್ನಡಕ್ಕೊಂದು ಒಳ್ಳೆಯ ತಿಳಿವಿನ ಸೊಲ್ಲರಿಮೆಯನ್ನು ಒದಗಿಸಿಕೊಡುವ ಕೆಲಸ ನಡೆಯಬೇಕು, ಮತ್ತು ಅದರೊಂದಿಗೇನೇ ಈ ತಿಳಿವನ್ನು ಬಗೆಬಗೆಯ ಕೆಲಸಗಳಲ್ಲಿ ಬಳಸಿಕೊಳ್ಳಲು ಬರುವಂತೆ ಮಾಡುವ ಹಲವು ಬಗೆಯ ಬಳಕೆಯ ಸೊಲ್ಲರಿಮೆಗಳನ್ನು ಉಂಟುಮಾಡುವ ಕೆಲಸವೂ ನಡೆಯಬೇಕು.
ಈ ಎರಡು ಕೆಲಸಗಳು ಒಂದನ್ನೊಂದು ತುಂಬಬಲ್ಲುವಾಗಿವೆ: ಕನ್ನಡದ ಸೊಲ್ಲರಿಮೆಯ ತಿಳಿವು ಹೆಚ್ಚು ಹೆಚ್ಚು ಹರವಿನದಾಗುತ್ತಿರುವಂತೆ ಮತ್ತು ಆಳದ್ದಾಗುತ್ತಿರುವಂತೆ, ಅದನ್ನು ನುಡಿಗೆ ಸಂಬಂದಿಸಿದಂತಹ ಕೆಲಸಗಳಲ್ಲಿ ತೊಡಗಿಸುವ ಕೆಲಸವೂ ಹೆಚ್ಚು ಹೆಚ್ಚು ಹರವಿನದಾಗುತ್ತದೆ. ಇದಲ್ಲದೆ, ನುಡಿಗೆ ಸಂಬಂದಿಸಿದಂತಹ ಕೆಲಸಗಳಲ್ಲಿ ತೋರಿಬರುವ ತೊಡಕುಗಳನ್ನು ಸೊಲ್ಲರಿ ಮೆಯ ತಿಳಿವಿನಿಂದ ಬಗೆಹರಿಸಹೊರಟಾಗ, ಹೊಸ ಹೊಸ ಸೊಲ್ಲರಿಮೆಯ ವಿಶಯಗಳು ನಮ್ಮ ಕಣ್ಣೆದುರು ಮೂಡಿಬರುತ್ತವೆ. ಹಾಗಾಗಿ, ಈ ಎರಡು
ಬಗೆಯ ಅರಕೆಗಳೂ ಒಟ್ಟೊಟ್ಟಿಗೆ ಮುಂದೆ ಹೋಗುತ್ತಿದ್ದಲ್ಲಿ ಅವೆರಡರಲ್ಲೂ ನಾವು ಹೊಸ ಹೊಸ ವಿಶಯಗಳನ್ನು ಕಂಡುಕೊಳ್ಳುತ್ತಿರಬಹುದು.
11.2 ಎರಡು ಬಗೆಯ ಸೊಲ್ಲರಿಮೆಯ ತಿಳಿವು
ಸೊಲ್ಲರಿಮೆಯ ತಿಳಿವು ನಮ್ಮ ಅರಿವಿಗೆ ಎಟಕುವಂತಹದು ಮತ್ತು ಎಟಕ ದಂತಹದು ಎಂಬುದಾಗಿ ಎರಡು ಬಗೆಯದಾಗಿರಬಲ್ಲುದು ಎಂಬುದನ್ನು ನಾವು ಮೇಲೆ ಮೊದಲನೇ ಪಸುಗೆಯಲ್ಲಿ ನೋಡಿರುವೆವು. ಚಿಕ್ಕಂದಿನಲ್ಲಿ ನಮ್ಮ ನುಡಿಯನ್ನು ಕಲಿಯುವ ಸಮಯದಲ್ಲಿ ಅದನ್ನು ಬಳಸಲು ಬೇಕಾಗುವ ಸೊಲ್ಲರಿ ಮೆಯ ತಿಳಿವನ್ನು ನಾವು ನಮ್ಮ ಅರಿವಿಗೆ ಎಟಕದ ರೂಪದಲ್ಲಿ ಪಡೆದಿರುತ್ತೇವೆ. ಈ ತಿಳಿವು ನಮ್ಮ ಮಿದುಳಿನಲ್ಲಿ ಕೆಲಸವನ್ನು ನಡೆಸುವ ನೆನಪಾಗಿ ನೆಲೆನಿಂತಿರುತ್ತದೆ. ಇದನ್ನು ನಾವು ಮಾತನಾಡುವಲ್ಲಿ ಬಳಸಬಲ್ಲೆವಲ್ಲದೆ ಆ ತಿಳಿವು ಎಂತಹದು ಎಂಬುದನ್ನು ನಮ್ಮ ಅರಿವಿಗೆ ತಂದುಕೊಂಡು, ಅದನ್ನು ಇನ್ನೊಬ್ಬರಿಗೆ ವಿವರಿಸಲಾರೆವು.
ಇಂತಹ ಬೇರೆಯೂ ಹಲವು ಬಗೆಯ ಕೆಲಸಗಳನ್ನು ನಡೆಸುವ ಮತ್ತು ಅರಿವಿಗೆ ಎಟಕದಿರುವ ತಿಳಿವುಗಳು ಆ ಕೆಲಸಗಳನ್ನು ಕಲಿತುಕೊಳ್ಳುತ್ತಿರುವಂತೆ ನಮ್ಮ ಮಿದುಳಿನಲ್ಲಿ ನೆಲೆಗೊಳ್ಳುತ್ತಿರುತ್ತವೆ. ಎತ್ತುಗೆಗಾಗಿ, ಸಯ್ಕಲ್ ತುಳಿಯು ವುದು, ಈಜುವುದು, ಕೊಳಲು ನುಡಿಸುವುದು ಮೊದಲಾದ ಕೆಲಸಗಳನ್ನು ನಡೆಸಬೇಕಿದ್ದಲ್ಲಿ, ಅಂತಹ ಕೆಲಸ ನಡೆಸುವ ತಿಳಿವುಗಳು ನಮಗೆ ಬೇಕಾಗುತ್ತವೆ. ಇವನ್ನೂ ನಾವು ಪಡೆದು ಬಳಸುತ್ತೇವಲ್ಲದೆ ಅವು ಎಂತಹವು ಎಂಬುದನ್ನು ತಿಳಿಯಲು ಹೋಗುವುದಿಲ್ಲ; ಹಾಗಾಗಿ, ಅವನ್ನು ನಮ್ಮ ನೆನಪಿನಿಂದ ಹೊರತಂದು ಬೇರೆಯವರಿಗೆ ವಿವರಿಸಲಾರೆವು.
ಈ ಎಲ್ಲಾ ಬಗೆಯ ಕೆಲಸಗಳ ಕುರಿತಾಗಿಯೂ ನಾವು ಅರಿವಿಗೆ ಎಟಕು ವಂತಹ ತಿಳಿವನ್ನೂ ಪಡೆಯಬಲ್ಲೆವು. ಒಂದು ನುಡಿಯ ಕುರಿತಾಗಿ ಅಂತಹ ತಿಳಿವನ್ನು ಪಡೆಯಬೇಕಿದ್ದಲ್ಲಿ, ಅದನ್ನಾಡುವ ಜನರ ಮಾತುಗಳನ್ನು ಇಲ್ಲವೇ ಬರಹಗಳನ್ನು ಪರಿಶೀಲಿಸಿ, ಅವನ್ನು ಉಂಟುಮಾಡಬೇಕಾದಲ್ಲಿ ಎಂತಹ ಕಟ್ಟಲೆಗಳನ್ನು ಬಳಸಬೇಕಾಗಬಹುದು ಎಂಬುದನ್ನು ಕಂಡುಹಿಡಿಯ ಬೇಕಾಗುತ್ತದೆ. ಸೊಲ್ಲರಿಗರು ತಮ್ಮ ಸೊಲ್ಲರಿಮೆ(ವ್ಯಾಕರಣ)ಗಳನ್ನು ಈ ರೀತಿ ಮಾತುಗಳನ್ನು ಇಲ್ಲವೇ ಬರಹಗಳನ್ನು ಪರಿಶೀಲಿಸಿ ಬರೆಯುತ್ತಾರೆ. ಅರಿವಿಗೆ ಎಟಕದ (ಕೆಲಸ ನಡೆಸುವ) ಸೊಲ್ಲರಿಮೆಯ ತಿಳಿವಿಗೂ ಅರಿವಿಗೆ ಎಟಕುವ ಸೊಲ್ಲರಿಮೆಯ ತಿಳಿವಿಗೂ ನಡುವೆ ಹಲವು ವ್ಯತ್ಯಾಸಗಳಿವೆ.ಅವೆರಡನ್ನು ಸೊಲ್ಲರಿಮೆ ಇಲ್ಲವೇ ವ್ಯಾಕರಣ ಎಂಬ ಒಂದೇ ಹೆಸರಿನಿಂದ ಕರೆದಲ್ಲಿ ಗೊಂದಲವುಂಟಾಗಬಲ್ಲುದು. ಹಾಗಾಗಿ, ಅವುಗಳಲ್ಲಿ ಮೊದಲಿನದನ್ನು ಎಸಕದರಿವು ಎಂಬುದಾಗಿ, ಮತ್ತು ಎರಡನೆಯದನ್ನು ಅರಿಕೆಯರಿವು ಎಂಬುದಾಗಿ ಹೆಸರಿಸುವುದೊಳ್ಳೆಯದು.
ಈ ಎರಡು ಬಗೆಯ ಅರಿವುಗಳು ಮಿದುಳಿನ ಬೇರೆ ಬೇರೆ ಜಾಗಗಳಲ್ಲಿ ನೆಲೆಸಿರುತ್ತವೆಯೆಂದು ಕಂಡುಹಿಡಿಯಲಾಗಿದೆ. ಇವುಗಳಲ್ಲಿ ಒಂದು ಬಗೆಯ ಅರಿವನ್ನು ಇನ್ನೊಂದು ಬಗೆಯ ಅರಿವಾಗಿ ಮಾರ್ಪಡಿಸುವ ಕಸುವು ನಮ್ಮಲ್ಲಿಲ್ಲ. ಒಂದು ಕೆಲಸವನ್ನು ಕಲಿಯುತ್ತಿದ್ದಂತೆ ಅದರ ಎಸಕದರಿವು ನಮಗೆ ತಿಳಿಯದಂತೆ ನಮ್ಮ ಮಿದುಳಿನಲ್ಲಿ ನೆಲೆಸುತ್ತದೆ; ಅದರ ಕುರಿತಾಗಿ ಅರಿಕೆಯರಿವನ್ನು ಪಡೆಯಬೇಕಿದ್ದಲ್ಲಿ ಅದಕ್ಕಾಗಿ ಬೇರೆಯೇ ಒಂದು ಕಲಿಕೆಯನ್ನು ನಡೆಸ ಬೇಕಾಗುತ್ತದೆ.
ಸೊಲ್ಲರಿಮೆಯ ಎಸಕದರಿವನ್ನು ನೇರವಾಗಿ ಪರಿಶೀಲಿಸಲು ಬರುವುದಿಲ್ಲ ವಾದ ಕಾರಣ, ಸೊಲ್ಲರಿಗರು ಬರೆದಿರುವ ಸೊಲ್ಲರಿಮೆಯ ಅರಿಕೆಯರಿವನ್ನು ಯಾವ ರೀತಿಯಲ್ಲೂ ಅದರೊಂದಿಗೆ ಹೋಲಿಸಿ ನೋಡಲು ಬರುವುದಿಲ್ಲ. ಇದಲ್ಲದೆ, ಸೊಲ್ಲರಿಗರು ಎಶ್ಟು ವಿವರವಾಗಿ ಒಂದು ನುಡಿಯ ಸೊಲ್ಲರಿಮೆ ಯನ್ನು (ಅರಿಕೆಯರಿವನ್ನು) ಬರೆದು ಮುಗಿಸಿದರೂ, ಅದು ಆ ನುಡಿಯನ್ನು ಬಳಸುವವರ ಮಿದುಳಿನಲ್ಲಿ ನೆಲೆಸಿರುವ ಸೊಲ್ಲರಿಮೆಯ (ಎಸಕದರಿವಿನ) ಒಂದು ಚಿಕ್ಕ ಅಂಶವನ್ನಶ್ಟೇ ಓದುಗರ ಅರಿವಿಗೆ ಎಟಕುವಂತೆ ಮಾಡಬಲ್ಲುದು. ಹಾಗಾಗಿ, ಬರಹದ ರೂಪದಲ್ಲಿರುವ ಎಲ್ಲಾ ಸೊಲ್ಲರಿಮೆಗಳೂ ಮುಡಿಗೊಳ್ಳದ (ಅಪೂರ್ಣವಾದ) ಸೊಲ್ಲರಿಮೆಗಳೇ ಆಗಿರುತ್ತವೆ.
ಪಾಣಿನಿಯ ಸಂಸ್ಕ್ರುತ ವ್ಯಾಕರಣ ಆ ನುಡಿಯ ಒಂದು ಸಂಪೂರ್ಣವಾದ ಸೊಲ್ಲರಿಮೆಯೆಂಬುದಾಗಿ ಕೆಲವರು ಹೇಳುತ್ತಾರೆ. ಆದರೆ, ಇದು ಬರಿಯ ಬ್ರಮೆಯಲ್ಲದೆ ಬೇರೇನಲ್ಲ. ಸಂಸ್ಕ್ರುತದಲ್ಲಿ ಸಲೀಸಾಗಿ ಮಾತನಾಡ ಬಲ್ಲವ ನೊಬ್ಬನ ಮಿದುಳಿನಲ್ಲಿ ನೆಲೆಸಿರುವ ಸೊಲ್ಲರಿಮೆಯ ತಿಳಿವಿನ (ಎಸಕದರಿವಿನ) ಒಂದು ಚಿಕ್ಕ ಅಂಶವನ್ನಶ್ಟೇ ಪಾಣಿನಿಯ ವ್ಯಾಕರಣ (ಅರಿಕೆಯರಿಮೆ) ತಿಳಿಸ ಬಲ್ಲುದು. ಸಂಸ್ಕ್ರುತ ಬರಹಗಳ ಹಿಂದೆಯೂ ಪಾಣಿನಿಯ ವ್ಯಾಕರಣಕ್ಕೆ ಎಟಕದ ಹಲವಾರು ಕಟ್ಟಲೆಗಳಿವೆ.
ಸಾಮಾನ್ಯವಾಗಿ ಸೊಲ್ಲುಗಳ ಇಟ್ಟಳಗಳನ್ನು, ಮತ್ತು ಅವುಗಳ ನಡುವಿನ ಪತ್ತುಗೆಯನ್ನು ಯಾವುದಾದರೂ ಒಂದು ಕೋನದಿಂದ ಕಣ್ಣರಸುವ (ಪರಿಶೀಲಿಸುವ) ಮೂಲಕ, ಸೊಲ್ಲರಿಗರು ತಮ್ಮ ಅರಿಕೆಯರಿವಿನ ಸೊಲ್ಲರಿಮೆ
ಗಳನ್ನು ಬರೆಯುತ್ತಾರೆ. ಅದನ್ನೇ ಬೇರೊಂದು ಕೋನದಿಂದ ಕಣ್ಣರಸಿದಲ್ಲಿ, ಬೇರೆಯೇ ಕಟ್ಟಲೆಗಳು ಅವರ ಕಣ್ಣಿಗೆ ಬೀಳಬಲ್ಲುವು.
ಒಂದೊಂದು ನುಡಿಗೆ ಸಂಬಂದಿಸಿದ ಕೆಲಸಕ್ಕೂ ಒಂದೊಂದು ಬಗೆಯ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದಾಗಿ ಮೇಲೆ ಹೇಳಿರುವುದೂ ಇದನ್ನೇ ಸೂಚಿಸುತ್ತದೆ. ನಲ್ಬರಹಗಳ ಕೋನದಿಂದ ಸೊಲ್ಲರಿಮೆಯನ್ನು ಪರಿಶೀಲಿಸಿದಾಗ ನಮ್ಮ ಕಣ್ಣಿಗೆ ಬೀಳುವ ಕಟ್ಟಲೆಗಳು ಅರಿಮೆಯ ಬರಹಗಳ ಕೋನದಿಂದ ನೋಡಿದಾಗ, ಇಲ್ಲವೇ ನುಡಿಮಾರಿಕೆಯ ಕೋನದಿಂದ ನೋಡಿ ದಾಗ ಸಿಗುವವುಗಳಿಗಿಂತ ಹಲವು ವಿಶಯಗಳಲ್ಲಿ ಬೇರಾಗಿರುತ್ತವೆ. ಹಾಗಾಗಿ, ಎಲ್ಲಾ ವಿಶಯಗಳಲ್ಲೂ ಪರಿಪೂರ್ಣವಾಗಿರುವಂತಹ ಅರಿಕೆಯರಿವಿನ ಸೊಲ್ಲರಿಮೆ ಯನ್ನು ಯಾರೂ ಬರೆಯಲಾರರು.
11.3 ಸೊಲ್ಲರಿಮೆಯ ಹೆಚ್ಚುಗಾರಿಕೆ
ಒಂದು ನುಡಿಯ ಇಲ್ಲವೇ ಮಾತಿನ ಕುರಿತಾಗಿ ಏನು ಹೇಳಬೇಕಿದ್ದರೂ ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಮಾತಿನಲ್ಲಿ ಬಳಕೆಯಾಗುವ ಸೊಲ್ಲು ಗಳನ್ನು ಮತ್ತು ಅವನ್ನು ಕಟ್ಟುವಲ್ಲಿ ಬಳಕೆಯಾಗುವ ಬಗೆ ಬಗೆಯ ಪದಗಳನ್ನು, ಪದಕಂತೆಗಳನ್ನು, ಪದರೂಪಗಳನ್ನು ಮತ್ತು ತುಂಡುಸೊಲ್ಲುಗಳನ್ನು ಹೆಸರಿಸಿ ವಿವರಿಸಬೇಕಿದ್ದರೂ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
ಮೇಲೆ ಸೂಚಿಸಿದ ಹಾಗೆ, ಚಿಕ್ಕಂದಿನಲ್ಲಿ ಮಕ್ಕಳು ತಮ್ಮ ತಾಯ್ನುಡಿಯ ಸೊಲ್ಲರಿಮೆಯನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದಾರಲ್ಲದೆ, ಆ ಕೆಲಸವನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ಅವರು ತಿಳಿದಿಲ್ಲ; ಅದರ ಕುರಿತಾಗಿ ಮಾತನಾಡಲೂ ಅವರು ಕಲಿತಿಲ್ಲ. ಈ ಎರಡು ಬಗೆಯ ತಿಳಿವನ್ನೂ ಸೊಲ್ಲರಿಮೆಯಿಂದ ಪಡೆಯಬಹುದು. ಮಾತನಾಡುವವರ ಮನಸ್ಸಿ ನೊಳಗೆ ಹೊಕ್ಕು ನೋಡಲು ಅದು ನಮಗೊಂದು ಕಿಂಡಿಯನ್ನೊದಗಿಸುತ್ತದೆ. ಸೊಲ್ಲರಿಮೆಯ ಈ ತಿಳಿವು ಬರಹದಲ್ಲಿ ಕಾಣಿಸಿಕೊಳ್ಳುವ ತಪ್ಪುಗಳನ್ನು ಸರಿಪಡಿಸುವಲ್ಲಿ ಮಾತ್ರವಲ್ಲ, ಬರಹ ಹೆಚ್ಚು ಸ್ಪಶ್ಟವಾಗುವಂತೆ ಮಾಡುವಲ್ಲಿ, ಓದುಗರ ಮನಸೆಳೆಯುವಂತೆ ಮಾಡುವಲ್ಲಿ, ಮತ್ತು ತುಂಬಾ ಅಚ್ಚುಕಟ್ಟಾಗಿರು ವಂತೆ ಮಾಡುವಲ್ಲಿಯೂ ನೆರವಾಗುತ್ತದೆ. ತಪ್ಪುಗಳನ್ನು ಸರಿಪಡಿಸುವಲ್ಲಿಯೂ, ಅವನ್ನು ಯಾಕೆ ತಪ್ಪೆಂದು ಹೇಳಲಾಗುತ್ತದೆ ಮತ್ತು ಯಾವ ಬಗೆಗಳಲ್ಲೆಲ್ಲ ಅವನ್ನು ಸರಿಪಡಿಸಬಲ್ಲೆವು ಎಂಬುದಾಗಿ ಬರಹಗಾರರಿಗೆ ಹಲವು ಆಯ್ಕೆಗಳನ್ನು ಅದು ಒದಗಿಸಿಕೊಡುತ್ತದೆ.ಒಂದು ಬರಹ ಚನ್ನಾಗಿದೆಯೇ ಇಲ್ಲವೇ ಎಂಬುದನ್ನು ಸಾಮಾನ್ಯ ಓದುಗರೂ ಹೇಳಬಲ್ಲರು. ಆದರೆ, ಅದು ಯಾಕೆ ಚನ್ನಾಗಿದೆ, ಇಲ್ಲವೇ ಯಾಕೆ ಚನ್ನಾಗಿಲ್ಲ ಎಂಬುದನ್ನು ವಿವರಿಸಿ ತಿಳಿಸಬೇಕಿದ್ದಲ್ಲಿ, ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ. ಬರಹಗಾರರ ಇಲ್ಲವೇ ಬರಹವನ್ನು ಒರೆಹಚ್ಚುವವರ (ವಿಮರ್ಶಕರ) ಕಯ್ಯಲ್ಲಿ ಅದು ಒಂದು ಒಳ್ಳೆಯ ಉಪಕರಣವಾಗಿ ಬಳಕೆಯಾಗಬಲ್ಲುದು. ಬೇರೆಯವರ ಬರಹಗಳನ್ನು ಮಾತ್ರವಲ್ಲದೆ, ತಮ್ಮದೇ ಬರಹವನ್ನು ಒರೆಹಚ್ಚುವಲ್ಲೂ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ತಮ್ಮ ಬರಹ ತಿಳಿಯಾಗಿದೆಯೇ ಇಲ್ಲವೇ ಗೊಂದಲಿಸುವಂತಿದೆಯೇ, ಓದಲು ಸುಳುವಾಗಿದೆಯೇ ಇಲ್ಲವೇ ತೊಡಕು ತೊಡಕಾಗಿದೆಯೇ, ಅದರಲ್ಲಿ ಸಂಗತಿಗಳನ್ನು ಎದ್ದುಕಾಣುವಂತೆ ಹೇಳಲಾಗಿದೆಯೇ ಇಲ್ಲವೇ ತೇಲಿಸಿಬಿಡ ಲಾಗಿದೆಯೇ ಎಂಬಂತಹ ವಿಶಯಗಳನ್ನು ತಿಳಿದು ವಿವರಿಸಬೇಕಿದ್ದರೂ ಸೊಲ್ಲರಿ ಮೆಯ ತಿಳಿವು ಬೇಕಾಗುತ್ತದೆ.
ಕೆಲವರು ತುಂಬಾ ಚನ್ನಾಗಿ ಕತೆ ಬರೆಯಬಲ್ಲರು; ಇನ್ನು ಕೆಲವರು ಒಳ್ಳೇ ನಗೆಬರಹಗಳನ್ನು ಬರೆಯಬಲ್ಲರು; ಬೇರೆ ಕೆಲವರು ಅಂದವಾದ ಹಾಡುಗಳನ್ನು ಕಟ್ಟಬಲ್ಲರು. ಇವರಲ್ಲಿ ಯಾರೂ ಈ ಕೆಲಸಗಳನ್ನು ನೇರವಾಗಿ ಬೇರೊಬ್ಬರಿಂದ ಕಲಿತಿಲ್ಲವಾದ ಕಾರಣ, ಇವರೆಲ್ಲ ಹುಟ್ಟಿನಿಂದಲೇ ಈ ಜಾಣ್ಮೆಗಳನ್ನು ಪಡೆದು ಕೊಂಡು ಬಂದಿದ್ದಾರೆಂದು ಹೇಳಲಾಗುತ್ತದೆ.
ಇಂತಹ ಜಾಣ್ಮೆಗಳನ್ನು ಹುಟ್ಟಿನಿಂದ ಪಡೆಯದವರೂ ಅವನ್ನು ತಮ್ಮ ಪ್ರಯತ್ನದಿಂದ ಪಡೆಯಬಲ್ಲರೇ? ಹುಟ್ಟಿನಿಂದ ಕತೆಗಾರರಾಗಿಲ್ಲದವರೂ ಕತೆ ಗಳನ್ನು ಬರೆಯಲು ಕಲಿಯಬಲ್ಲರೇ? ಇದಕ್ಕೆ ಅವರು ಏನು ಮಾಡಬೇಕು? ಈ ವಿಶಯದಲ್ಲಿ ಸೊಲ್ಲರಿಮೆ ಅವರ ನೆರವಿಗೆ ಬರುತ್ತದೆ: ತಾವು ಆರಿಸಿ ಕೊಂಡಿರುವ ಜಾಣ್ಮೆಯಲ್ಲಿ ಮುಂದೆ ಬಂದಿರುವವರು ಅದನ್ನು ನಡೆಸುವಲ್ಲಿ ಎಂತಹ ಚಳಕಗಳನ್ನೆಲ್ಲ ಬಳಸುತ್ತಿರುತ್ತಾರೆ ಎಂಬುದನ್ನು ಆಳವಾಗಿ ಒರೆದು ನೋಡಬೇಕು; ಆಮೇಲೆ, ಅಂತಹ ಚಳಕಗಳನ್ನೆಲ್ಲ ಒಂದೊಂದಾಗಿ ಕಯ್ವಶ ಮಾಡಿಕೊಳ್ಳಬೇಕು; ಹೀಗೆ ಮಾಡಿದಲ್ಲಿ, ಅವರೂ ಆ ಜಾಣ್ಮೆಯಲ್ಲಿ ಸಾಕಶ್ಟು ಮುಂದೆಬರಬಲ್ಲರು.
ಎತ್ತುಗೆಗಾಗಿ, ಒಳ್ಳೇ ಕತೆಗಾರರು ಸುರುವಿನಿಂದ ಕೊನೆವರೆಗೂ ಓದುಗರ ಗಮನವನ್ನು ಹೇಗೆ ತಮ್ಮ ಹಿಡಿತದಲ್ಲಿರಿಸಿಕೊಳ್ಳುತ್ತಾರೆ? ಕತೆಯಲ್ಲಿ ಬರುವ ಬಗೆ ಬಗೆಯ ಸನ್ನಿವೇಶಗಳನ್ನು ಚಿತ್ರಿಸಲು ಎಂತಹ ಸೊಲ್ಲುಗಳನ್ನು ಬಳಸುತ್ತಾರೆ? ಈ ಸೊಲ್ಲುಗಳಲ್ಲಿ ಎಸಕಪದ ಮತ್ತು ಪರಿಚೆಪದಗಳ ಬಳಕೆಯನ್ನು ಅವರು
ಹೇಗೆ ತಮ್ಮ ಹತೋಟಿಯಲ್ಲಿರಿಸಿಕೊಂಡಿದ್ದಾರೆ? ಅವರ ಕತೆಗಳನ್ನು ಒಂದೊಂದಾಗಿ ಒರೆದು ನೋಡಿ, ಅವುಗಳಲ್ಲಿ ಬಳಕೆಯಾಗುವ ಇಂತಹ ಹಲವು ಬಗೆಯ ಸೊಲ್ಲರಿಮೆಯ ಚಳಕಗಳನ್ನು ಕಂಡುಹಿಡಿಯಬಲ್ಲೆವು, ಮತ್ತು ಒಳ್ಳೇ ಕತೆಗಾರರಾಗಬೇಕೆಂದಿರುವವರು ಈ ಚಳಕಗಳನ್ನು ಒಂದೊಂದಾಗಿ ತಮ್ಮ ಕಯ್ವಶಮಾಡಿಕೊಳ್ಳಬಲ್ಲರು.
ಹೀಗೆ, ಬರಹಕ್ಕೆ ಸಂಬಂದಿಸಿದಂತಹ ಹತ್ತು ಹಲವು ಕೆಲಸಗಳಲ್ಲಿ
ನೆರವಾಗಬಲ್ಲುದೆಂಬುದೇ ಸೊಲ್ಲರಿಮೆಯ ಹೆಚ್ಚುಗಾರಿಕೆಯಾಗಿದೆ.
ಇವತ್ತಿನ ಕೆಲವು ಮಂದಿ ಓದುಗರಿಗೆ ತೊಡಕೆನಿಸಬಲ್ಲ ಕೆಲವು ಪದಗಳ ಹುರುಳುಗಳು
ಸಂಸ್ಕ್ರುತ ಇಲ್ಲವೇ ಇಂಗ್ಲಿಶ್ ಪದಗಳನ್ನು ಹೆಚ್ಚು ಹೆಚ್ಚು ಬಳಸಿರುವ ಕನ್ನಡ ಬರಹಗಳನ್ನು ಓದಿ ಬಳಕೆಯಾಗಿರುವ ಇವತ್ತಿನ ಕೆಲವು ಓದುಗರಿಗೆ ಈ ಪುಸ್ತಕದಲ್ಲಿ ಬಳಸಿರುವ ಹಲವು ಕನ್ನಡದವೇ ಆದ ಪದಗಳನ್ನು ಅರ್ತಮಾಡಿ ಕೊಳ್ಳಲು ತುಸು ತೊಡಕೆನಿಸಬಹುದು. ಅವರಿಗೆ ನೆರವಾಗುವಂತೆ ಅಂತಹ ಕೆಲವು ಪದಗಳ ಹುರುಳುಗಳನ್ನು ಕೆಳಗೆ ಸಂಸ್ಕ್ರುತ ಎರವಲುಗಳ ಮೂಲಕ ಮತ್ತು ಇಂಗ್ಲಿಶ್ ಪದಗಳ ಮೂಲಕ ಸೂಚಿಸಲಾಗಿದೆ. ಮುಂದಿನ ಪೀಳಿಗೆಯ ಓದುಗರಿಗೆ ಕನ್ನಡ ಬರಹಗಳಲ್ಲಿ ಇಂತಹ ಕನ್ನಡದ್ದೇ ಆದ ಪದಗಳ ಬಳಕೆ ಒಂದು ತೊಡಕೆಂದು ತೋರದಿರಲಿ ಎಂಬುದು ನನ್ನ ಹಾರಯ್ಕೆ.
ಸಂಶೋದನೆ ವಿಜ್ನಾನ ವಿಜ್ನಾನಿ ಪಾರಿಬಾಶಿಕ ಪದ ಪರೀಕ್ಶಿಸು ರಚನೆ ಪುನರುಕ್ತಿ ಅರ್ತಸಂದಿಗ್ದತೆ ದ್ವಿಬಾಶಿ ಉದ್ದೇಶಿತ ಬಾಶೆ ವರ್ತಮಾನಕಾಲ
ಅರಿಮೆಯ ಪದ ಆರಯ್ಯು ಇನ್ನುಡಿಹ ಇಪ್ಪುರುಳು ಇರ್ನುಡಿಗ ಈಡುನುಡಿ ಈಪೊತ್ತು ಉಲಿಪು ಎಡೆನುಡಿ ಎತ್ತುಗೆಯ ಗುರುತು ಉದ್ದರಣ ಚಿಹ್ನೆ ಎತ್ತುಗೆ ಎಸಕಪದ
ಉದಾಹರಣೆ ಕ್ರಿಯಾಪದ
ಉಚ್ಚಾರಣೆ
research science scientist technical term investigate structure repetition ambiguity bilingual target language present tense sound syllable pronunciation interlingua computer quotation mark example verb
ಒಡ್ಡವ ಒಯ್ಯುಗೆ ಒರೆದುನೋಡು ಒರ್ಸೂಳು ಒಳಒಕ್ಕಣೆ ಕಟ್ಟಲೆ ಕುರಳು ಕುಳ್ಳಿಹ ಕೂಡುಗೆ ಕೇಳ್ವಿ ಗುರುತು ಕೊಗೆತ ಚಳಕ ತಡೆ ಗುರುತು ತೆರೆಯುಲಿ ತೋರುಪದ ನಡುನುಡಿ ನಲ್ಬರಹ ನುಡಿಮಾರು ನೆಗಳ್ತೆ ನೆಲೆ-ತಿಳಿವು ನೇರ ಎತ್ತುಗೆ ಪತ್ತುಗೆ ಪದನೆರಕೆ ಪರಿಚೆಪದ ಪಸುಗೆ ಪಾಂಗು ಪಾಳಿಹಿಡಿಯುವುದು ಬರಹದ ಗುರುತು ಬರಿಗೆಪಟ್ಟಿ ಬೆರಗು ಗುರುತು ಮಂದಿಯಾಳ್ವಿಕೆ ಮರುನೋಟ ಮಾರೆಡೆ
ಪ್ರತ್ಯಯ ಶಯ್ಲಿ ಮಾದ್ಯಮ ಪರಾಮರ್ಶಿಸು ಏಕೋಕ್ತಿ ಉಪಶೀರ್ಶಿಕೆ ಕ್ರಮ (ನಿಯಮ) ವಾಕ್ಯಪರಿಚ್ಚೇದ ಸಂದರ್ಬ ಸಮುಚ್ಚಯ ಪ್ರಶ್ನಾರ್ತಕ ಚಿಹ್ನೆ ವಿವರಣ ಚಿಹ್ನೆ ಕವ್ಶಲ್ಯ
ಸಾಂದ್ರತೆ ಸ್ವರ
ಸಾಹಿತ್ಯ ಬಾಶಾಂತರಿಸು
ಪ್ರತ್ಯಕ್ಶ ಉದ್ದರಣ ಸಂಬಂದ ಶಬ್ದಕೋಶ ಸ್ವರೂಪ ವಿಶೇಶಣಪದ ಅದ್ಯಾಯ ಪಾತ್ರ
ವಿರಾಮ ಚಿಹ್ನೆ ವರ್ಣಮಾಲೆ ಆಶ್ಚರ್ಯಸೂಚಕ ಚಿಹ್ನೆ ಪ್ರಜಾಪ್ರಬುತ್ವ ಪುನರ್ವಿಮರ್ಶೆ ಹಸ್ತಾಂತರ
affix style medium examine monologue subtitle order rule paragraph context conjunction question mark colon skill comma density vowel demonstrative pronoun dialogue literature translate language planning action topic-comment direct quotation relation dictionary characteristic adjective, adverb chapter role turn-taking punctuation mark letter alphabet exclamatory mark republic review transfer
ಕೆಲವು ಪದಗಳ ಹುರುಳುಗಳು
ಮಾರ್ಪುರುಳು ಮಿಣ್ಣನೆ ಮುಚ್ಚುಲಿ ಮುಂಜರಿಸುವಿಕೆ ಮುಂಬೊತ್ತು ಸನ್ನೆನುಡಿ ಸರಿತೆರಪಿನ ಇಟ್ಟಳ ಸಿಕ್ಕಲು ಸೊಲ್ಲು ಸುಳು ಸೂಳುನುಡಿ ಸೊಲ್ಲರಿಮೆ ಹಮ್ಮುಗೆ ಹಿಂಬೊತ್ತು ಹುರುಳು ಹೆಸರುಪದ ಹೊದ್ದಿಕೆ ಹೊಲಬು
ರೂಪಕ ಮವ್ನವಾಗಿ ವ್ಯಂಜನ
ಬವಿಶ್ಯತ್ಕಾಲ
ಸಮಾಂತರ ರಚನೆ ಸಂಕೀರ್ಣವಾಕ್ಯ ಸುಲಬ ಸಂಬಾಶಣೆ ವ್ಯಾಕರಣ ಯೋಜನೆ ಬೂತಕಾಲ ನಾಮಪದ ಸಂಬದ್ದತೆ ವಿದಾನ
metaphor silently consonant foregrounding future tense sign language parallel structure complex sentence easy conversation grammar planning past tense meaning noun cohesion methodಅಡಕ ಬರಹ 77 ಅಣಕುಪದ 120 ಅರಿಮೆಯರಿವು 249 ಅರಿಮೆಯ ಪದ 86, 88-94 ಅರಿಮೆಯ ಬರಹ 22, 86-109, 150-
ಆಡುಗನ ಹುರುಳು 132-3 ಆಡುಗನ್ನಡ 30-1 ಆಡುನುಡಿ 25, 20-30, 34, 128-9,
186-7
173-7, 188, 193, 195, 215,
ಇಂಗ್ಲಿಶ್ ಕಲಿಕೆ 164-77 ಇಂಗ್ಲಿಶ್ ಬರಹ 216-18, 221, 225 ಇಂಟರ್ನೆಟ್ 152, 195-6 ಇನ್ನುಡಿಹ 151 ಇಪ್ಪುರುಳು 23, 136-56, 189, 200,
ಇರ್ನುಡಿಗ 158-60 ಇಸ್ರೇಲ್ 211 ಈಪೊತ್ತು 143 ಉಗ್ಗುಮಾತು 240
ಉಲಿಪು 164 ಊಹೆ-ಅಪ್ಪಣೆ 142 ಊಹೆ-ಒಪ್ಪಿಗೆ 140-1 ನಡೆನುಡಿ ಹಮ್ಮುಗೆ 199-202 ಎಣಿಕೆಯ ಹಮ್ಮುಗೆ 201
3, 181, 194-204
ಎತ್ತುಗೆಯ ಗುರುತು 84 ಎರಡನೇ ನುಡಿ 158-79 ಓದು-ಬರಹದ ಕಲಿಕೆ 172-5 ದೊಡ್ಡವರ ಕಲಿಕೆ 175-7 ಹೆಚ್ಚುಗಾರಿಕೆ 158-60
ಎಲ್ಲರ ಕನ್ನಡ 25, 29-30, 42-3, 57 ಎಸಕದರಿವು 249
187-8 ಒಣವಿಶಯ 110 ಒಪ್ಪಂದ 150 ಒರ್ಸೂಳು 125 ಒಳಒಕ್ಕಣೆ 77—8 ಒಳನುಡಿ 130, 202-3, 207 ಓದಿನ ಕಲಿಕೆ 159 ಓದಿನ ಗುರಿ 49
ಓದುಗನ ನೋಟ 76 ಓದುವ ಕೆಲಸ 34-8 ಕತಕನ ಲಿಪಿ 36 ಕಂಪೆನಿ 59 ಕಯ್ಬರಹ 51-2 ಕಯ್ಲಾಸಂ, ಟಿ.ಪಿ. 128, 131-3 ಕರ್ಮಣಿ ಇಟ್ಟಳ 188 ಕಲಿಕೆಯ ತಪ್ಪು 170-2 ಕಲಿಕೆನುಡಿ 174-5 ಕಲಿಕೆಯ ಹಂತ 163-4, 171, 174-5 193-4 ಕಾನೂನು 149-50, 247 ಕಿರು-ಕಿತ್ ತುಂಡುಪದ 47 ಕುರಳಿನ ಗುರಿ 67 ಕುರಳು 52, 67, 74, 78, 81-2, ಕುಳ್ಳಿಹ 48, 95, 151, 197, 202 ಕೂಡುಗೆ 146 ಕೆ.ಜಿ.ಕ್ಲಾಸು 41 ಕೇಶಿರಾಜ 12, 223 ಕೇಳ್ವಿ ಗುರುತು 83 ಕೊಗೆತ ಗುರುತು 84 ಕೊಂಡಿಪದ 82 ಕೊನೆಗುರುತು 83 ಕೊರಿಯನ್ ಬರಹ 213-14 ಕ್ರುಶ್ಣಬಟ್ 91 ಕ್ರೊಮೊಸೋಮ್ 239 ಗಟ್ಟಿಯಾಗಿ ಬರೆ 53 ಗಾರ ಒಟ್ಟು 47ಗುರಿಸೊಲ್ಲು 82 ಗೋರೂರು ರಾಮಸ್ವಾಮಿ ಅಯ್ಯಂಗಾರ್ 118 ಚೊಮ್ಸ್ಕೀ 169 ಜಪಾನೀಸ್ 36-7, 195 ಜಡಬರತ 127-8 ಜಾಹೀರಾತು 185 ಡಿಸೋಜ, ನಾ 120 ತಡೆಗುರುತು 80, 83-4 ತನ್ನತನ 166 ತಮಿಳು 178-9 ತಾಯ್ನುಡಿ 26, 160, 165-7 ತಾಯ್ನುಡಿಯ ಸೊಲ್ಲರಿಮೆ 168-70 ತಿಳಿದುದು-ತಿಳಿಯದುದು 191-2 ತಿಳಿವಿನ ಬರಹ 75 ತಿಳಿವಿನ ಸೊಲ್ಲರಿಮೆ 247 ತೆರೆಯುಲಿ 37, 39, 47 ತೋರುಪದ 72-3, 193 ದಕ್ಶಿಣ ಕನ್ನಡ 160 ದೊಡ್ಡವರ ಕಲಿಕೆ 163 ನಗೆಹನಿ 137, 154-5 ನಡುನುಡಿ 81 ನಂಟಸ್ತಿಕೆ 190, 226 ನ-ಣ ವ್ಯತ್ಯಾಸ 33 ನಲ್ಬರಹ 22, 75-6, 110-35, 136,
153-5, 188, 193
ನುಡಿಗಟ್ಟು 190 ನುಡಿಮಾರು 24, 152-3, 174, 180-
ನುಡಿಹಮ್ಮುಗೆ 24, 206-29 ನೆಲೆ-ತಿಳಿವು 63-8, 73, 98-9 ನೆಲೆಯ ಮುನ್ನಡೆತ 65-7 ನೇರ ಎತ್ತುಗೆ 147-8 ಪಟ್ಯಪುಸ್ತಕ 46, 94 ಪದನೆರಕೆ 45-8, 140, 197, 199, 224-5 ಪದದ ಹರವು 147 ಪದರೂಪ 140-4 ಪಾಣಿನಿ 249 ಪಾಲ್ ಗ್ರಯ್್ಸ 126 ಪಾಳಿಹಿಡಿಯುವುದು 130-2 ಪೂರ್ಣಚಂದ್ರ ತೇಜಸ್ವಿ 147 ಫಿನ್ನಿಶ್ ಬರಹ 213-14 ಬಂಗಾಲಿ ಲಿಪಿ 215 ಭೈರಪ್ಪ 81 ಬರಹದ ಇಟ್ಟಳ 191 ಬರಹಗಾರ 60-2 ಬರಹದ ಗುರಿ 185-6 ಬರಹದ ಗುರುತು 62, 78-80, 112
ತೊಡಕು 208, 212, 219-21 ಹಮ್ಮುಗೆ 211-21 ಬಳಕೆಯ ಸೊಲ್ಲರಿಮೆ 247 ಬ್ರೋಕಾನ ಜಾಗ 241-3 ಬೆರಗು ಗುರುತು 83 ಬೆಳವಣಿಗೆಯ ಹಂತ 161 ಮಣಿಪುರಿ ಬರಹ 215-16 ಮಂದಿಮೆಚ್ಚುವ ಬರಹ 101, 108 ಮಂದಿಯಾಳ್ವಿಕೆ 56 ಮಯ್ಸೂರು 33
ಮರುನೋಟ 61-2, 76-8 ಮಲಯೇಶಿಯಾ ಬರಹ 214 ಮಾತಿನ ತೊಂದರೆ 230-44 ಬೆಳವಣಿಗೆಯ ತೊಂದರೆ 231-40 ಬಳಕೆಯ ತೊಂದರೆ 241-4 ಮಾತು-ಬರಹ 16-22 ಮಾರೆಡೆ ಹಮ್ಮುಗೆ 197-9 ಮಾರ್್ಕ ಟ್ವಯ್್ನ 119-20 ಮಾರ್ಪುರುಳು 48, 87, 151, 189-90 ಸೊಲ್ಲರಿಮೆಯ 87, 95-106
-ಹೋಲಿಕೆ 115
ಮಿಂಚಂಚೆ 60 ಮಿದುಳರಿಗರು 40 ಮಿದುಳು 14-15, 39-41, 43, 46, 110-11, 138, 158, 166-7, 170-1, 249 ಮುಚ್ಚುಲಿ 37, 39, 47 ಮುಂಜರಿಸು 116-18 ಮುನ್ನೋಟ-ಮುಕ್ತಾಯ 76 ಮುಂಬೊತ್ತು-ಹಿಂಬೊತ್ತು 142-3 ಮೂಲನುಡಿ-ಈಡುನುಡಿ 184, 187-90 ಯಾವಾಗಿನ ರೂಪ 116-17 ಯುರೋಪ್ 167 ರೋಮನ್ ಲಿಪಿ 36-7 ಲಕ್ಶ್ಮಣರಾವ್ 91 ಲೆಕ್ಕದರಿಮೆ 94 ಲ್ಯಾಟಿನ್ 93-4 ವೆರ್ನಿಕೆಯ ಜಾಗ 241, 243-4 ವ್ಯಾಕರಣ 11-13, 222, 248-9 ಶಿವರಾಮ ಕಾರಂತ 108-9, 118 ಶ್ರೀರಂಗ 134
ಸನ್ನೆನುಡಿ 233-4 ಸಂಪತ್ಕುಮಾರಾಚಾರ್ 71 ಸರಿತೆರಪಿನ ಇಟ್ಟಳ 70-2 ಸಂಸ್ಕ್ರುತ 12, 41, 43, 90-4, 102, 167, 173, 188, 219, 225-7, ಸ-ಶ ವ್ಯತ್ಯಾಸ 32 ಸಂಸ 125 ಸಾಮ್ಯುವೆಲ್ ಜಾನ್ಸನ್ 216-18 ಸಿಕ್ಕಲು ಸೊಲ್ಲು 106-7 ಸಿನಿಮಾ 122 ಸೂಳುನುಡಿ-ನಡುನುಡಿ 122-28 ಸೂಳುನುಡಿಯ ಕಟ್ಟಲೆ 126-7 ಸೊಲ್ಲರಿಮೆ 13-14, 248-9 ಹಕಾರ 33 ಹಂಗುಲ್ ಲಿಪಿ 213 ಹಮ್ಮುಗೆಯ ಹಂತ 209-11 ಹಾಜಾ ಲಿಪಿ 213 ಹಿನ್ನೋಟ 122 ಹೀಬ್ರೂ 211 ಹುರುಳು-ತಿಳಿವು 182-4, 202 ಹುಲುಸಾದ ಪದ 119 ಹೊದ್ದಿಕೆ 73-4, 82, 192-3 ಹೊಸ ಬರಹ 43, 173 ಹೋಲಿಕೆಯ ಸೊಲ್ಲು 117ಬಾಶಾಪ್ರಕಾಶನದ ಬೇರೆ ಪುಸ್ತಕಗಳು
ಡಿ. ಎನ್. ಶಂಕರ ಬಟ್ ಬರೆದ ಬೇರೆ ಪುಸ್ತಕಗಳು:
- ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, 2008, 336 ಪುಟ ರೂ. 240
- ಮಾತಿನ ಒಳಗುಟ್ಟು, 2008, ಪುಟ 208, ರೂ 120.
- ಕನ್ನಡ ನುಡಿ ನಡೆದು ಬಂದ ದಾರಿ, 2007, 2009, ಪುಟ 348, ರೂ 190.
-
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, 2000, 2001, 2006, 2009; ಪು.
- ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? 2005, ಪು. 265, ರೂ. 65.
- ಕನ್ನಡ ಪದಗಳ ಒಳರಚನೆ, 1999; 2002, ಪುಟ 239, ರೂ. 120.
- ಕನ್ನಡದ ಸರ್ವನಾಮಗಳು, 2003, ಪುಟ 192, ರೂ. 46.
-
ಬಾಶೆಯ ಬಗೆಗೆ ನೀವೇನು ಬಲ್ಲಿರಿ?, 1970, 1998, 2002, ಪು. 191,
- ಕನ್ನಡ ವಾಕ್ಯಗಳ ಒಳರಚನೆ, 2004, 2006, ಪುಟ 280, ರೂ. 120.
- ಕನ್ನಡ ಬರಹವನ್ನು ಸರಿಪಡಿಸೋಣ, 2006,2009, ಪು.304, ರೂ. 160.
ಬಾರತಿ ಬಟ್ ಬರೆದ ಪುಸ್ತಕಗಳು:
- ನನ್ನ ಬೆಲ್ಜಿಯಂ ಪ್ರವಾಸ, 2000, ಪುಟ 160, ರೂ. 50.
- ತಾಯಂದಿರಿಗೆ ಕಿವಿಮಾತು, 2007, ಪುಟ 224, ರೂ. 120.
ದಬ್ರೆ ನಾರಾಯಣ ಶಾಸ್ತ್ರಿ ಬರೆದ ಪುಸ್ತಕ:
- ಸನಾತನತ್ವದ ಇಣುಕುನೋಟಗಳು, 2007, ಪುಟ 264, ರೂ. 140
ಪ್ರತಿಗಳಿಗೆ ಬರೆಯಿರಿ:
ಅತ್ರಿ ಬುಕ್ ಸೆಂಟರ್, 4, ಶರಾವತಿ ಕಟ್ಟಡ, ಬಲ್ಮಟ, ಮಂಗಳೂರು 575 001 ದೂರವಾಣಿ: 0824-2425161, -2492397