ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಲೇಖಕರು: ಡಿ. ಎನ್. ಶಂಕರ ಭಟ್ ಮೂಲ: PDF (Sarvam Vision OCR)

ಪರಿವಿಡಿ


Image

ಭಾಷೆಯ ಬಗೆಗೆ ನೀವೇನು ಬಲ್ಲಿರಿ?

ತಿದ್ದಿ ದೊಡ್ಡದು ಮಾಡಿರುವ ನಾಲ್ಕನೇ ಮುದ್ರಣ

ಡಿ. ಎನ್. ಶಂಕರ ಭಟ್

ಭಾಷಾಪ್ರಕಾಶನ ಹೆಗ್ಗೋಡು, ಸಾಗರ


BHASHEYA BAGEGE NIIVEENU BALLIRI? (What do you know about language?) by D.N.Shankara Bhat, Ninasam, Heggodu, Sagara 577 417. E-mail: bhatdns@gmail.com

ಮೊದಲನೇ ಮುದ್ರಣ: ೧೯೭೦ ಎರಡನೇ ಪರಿಷ್ಕೃತ ಮುದ್ರಣ: ೧೯೯೮ ಮೂರನೇ ವಿಸ್ತ್ರತ ಮುದ್ರಣ: ೨೦೦೨ ತಿದ್ದಿ ದೊಡ್ಡದು ಮಾಡಿರುವ ನಾಲ್ಕನೇ ಅಚ್ಚು: ೨೦೧೦

© : ಬರಹಗಾರ

ಪ್ರಕಟಣೆ: ಭಾಷಾಪ್ರಕಾಶನ, ಹೆಗ್ಗೋಡು, ಸಾಗರ ೫೭೭ ೪೧೭

ವಿತರಣೆ:

ಅತ್ರಿ ಬುಕ್ ಸೆಂಟರ್, ೪, ಶರಾವತಿ ಕಟ್ಟಡ, ಬಲ್ಮಠ, ಮಂಗಳೂರು ೫೭೫ ೦೦೧

ಮುದ್ರಣ:

ಶ್ರೀಶಕ್ತಿ ಎಲೆಕ್ಟ್ರಿಕ್ ಪ್ರೆಸ್, ೧೩ನೇ ಕ್ರಾಸ್, ಜಯನಗರ, ಮೈಸೂರು ೫೭೦ ೦೧೪


ಮೂರನೇ ಮುದ್ರಣದ ಮುನ್ನುಡಿ

ಇದೊಂದು ಲೇಖನಗಳ ಸಂಕಲನ. ಈ ಹೆಸರಿನ ನನ್ನ ಪುಸ್ತಕ ಮೊದಲ ಬಾರಿಗೆ ೧೯೭೦ರಲ್ಲಿ ಪ್ರಕಟವಾಗಿತ್ತು. ಅನಂತರ ೧೯೯೮ರಲ್ಲಿ ಪುತ್ತೂರಿನ ಕನ್ನಡ ಸಂಘದ ಮೂಲಕ ಇದು ಎರಡನೇ ಮುದ್ರಣವನ್ನು ಕಂಡಿತ್ತು. ಆ ಎರಡನೇ ಮುದ್ರಣದಲ್ಲಿ ಒಂದೆರಡು ಹೊಸ ಲೇಖನಗಳನ್ನು ಸೇರಿಸಿದ್ದೆ, ಮತ್ತು ಉಳಿದವು ಗಳಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದ್ದೆ. ಈಗ ಈ ಮೂರನೇ ಮುದ್ರಣ ದಲ್ಲಿ ಬೇರೆ ಕೆಲವು ಬದಲಾವಣೆಗಳನ್ನು ಮಾಡಿದ್ದೇನೆ, ಮತ್ತು ಹಲವು ಹೊಸ ಲೇಖನಗಳನ್ನೂ ಸೇರಿಸಿದ್ದೇನೆ.

ಭಾಷೆಯೆಂಬುದು ನಮಗೆಲ್ಲ ತೀರ ಪರಿಚಿತವಾಗಿರುವ ವಿಷಯ. ನಮ್ಮ ನಾಲಿಗೆಯ ತುದಿಯಲ್ಲೇ ಕುಣಿಯುವಂತಹ ವಿಚಿತ್ರ ತಂತ್ರ. ಆದರೆ, ಅದರ ಸ್ವರೂಪದ ಕುರಿತಾಗಿ ನಾವು ಸರಿಯಾಗಿ ತಿಳಿದಿರುವುದಕ್ಕಿಂತಲೂ ತಪ್ಪಾಗಿ ಕಲ್ಪಿಸಿ ಕೊಂಡಿರುವುದೇ ಜಾಸ್ತಿ. ಭಾಷೆ ಈ ರೀತಿ ಅತಿಪರಿಚಿತವಾಗಿರುವ ಕಾರಣ, ಇವು ತಪ್ಪು ಕಲ್ಪನೆಗಳೆಂದು ತಿಳಿಸಿ ಹೇಳುವುದೂ ಬಹಳ ಕಷ್ಟ. ಹೀಗೆ ಹೇಳಲು ಯತ್ನಿಸುವ ಭಾಷಾವಿಜ್ಞಾನಿಯ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಹೆಚ್ಚಿನವರಿಗೂ ಅವನ ಮಾತಿನಲ್ಲಿ ನಂಬಿಕೆಯೇ ಬರುವುದಿಲ್ಲ.

ಈ ತಪ್ಪು ಕಲ್ಪನೆಯ ಫಲವನ್ನು ಮಾತ್ರ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ರಾಜಕೀಯದಲ್ಲಿ ಮಾತ್ರವಲ್ಲ, ನಮ್ಮ ದಿನನಿತ್ಯದ ಆಗುಹೋಗುಗಳಲ್ಲೂ ಭಾಷಾ ಸಮಸ್ಯೆ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇದನ್ನು ಬಗೆಹರಿಸಲು ಯತ್ನಿಸುವವರೆಲ್ಲ ಕಗ್ಗತ್ತಲಲ್ಲಿ ತಡಕಾಡುತ್ತಿದ್ದಾರೆ. ಅವರ ಯತ್ನಗಳೆಲ್ಲ ಈ ಸಮಸ್ಯೆಯನ್ನು ಇನ್ನಷ್ಟು ಬಿಗಿಗೊಳಿಸುವ ಹಾಗೆ ಕಾಣಿಸುತ್ತಿದೆ. ಭಾಷಾಮಾಧ್ಯಮದ ವಿಷಯದಲ್ಲಿ, ಲಿಪಿವಿಷಯದಲ್ಲಿ (ಇತ್ತೀಚೆಗಿನ ಋಕಾರದ ಕತೆ), ಮತ್ತು ರಾಜ್ಯ ಗಳ ಗಡಿ ವಿಷಯದಲ್ಲಿ ಈ ಸಮಸ್ಯೆ ಅನವಶ್ಯಕವಾಗಿ ಆಗಾಗ ವಿಕಾರವಾದ ರೂಪವನ್ನು ತಳೆಯುವುದು ಕಾಣಿಸುತ್ತಿದೆ.

ಇಂತಹ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಲ್ಲ ಲೇಖನಗಳನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿ ನಾಲ್ಕು ರೀತಿಯ ಲೇಖನಗಳಿವೆ. ಭಾಷೆಯ ಸ್ವರೂಪವೆಂತದೆಂಬುದನ್ನು ತಿಳಿಸುವವುಗಳು ಆರು; ಭಾಷೆಗೂ ಬರಹಕ್ಕೂ ನಡುವಿರುವ ಸಂಬಂಧವೇನು, ಅವನ್ನು ಕಲಿಸುವ ವಿಧಾನಗಳಲ್ಲಿ ಲೋಪದೋಷ ಗಳು ಏನಿವೆ ಎಂಬುದನ್ನು ಚರ್ಚಿಸುವವುಗಳು ಹನ್ನೆರಡು; ಕನ್ನಡ ಭಾಷೆಯ ಸ್ವರೂಪವನ್ನು ತಿಳಿಸಿಕೊಡುವವುಗಳು ಐದು; ಮತ್ತು, ಭಾರತದಲ್ಲಿ ಮತ್ತು


ಮುನ್ನುಡಿ

ಪ್ರಪಂಚದ ಇತರ ಭಾಗಗಳಲ್ಲಿ ಕಾಣಿಸುವ ಭಾಷೆಗಳ ವೈವಿಧ್ಯತೆ ಎಂತಹದು ಎಂಬುದನ್ನು ಸೂಕ್ಷ್ಮವಾಗಿ ವರ್ಣಿಸಲು ಯತ್ನಿಸುವವುಗಳು ಏಳು.

ಈ ಸಂಕಲನದಲ್ಲಿ ಕಾಣಿಸುವ ಲೇಖನಗಳಲ್ಲಿ ಕೆಲವು ಸುಮಾರು ನಲುವತ್ತು ವರ್ಷಗಳಷ್ಟು ಹಿಂದೆಯೇ ಪ್ರಕಟವಾದವುಗಳು; ಇನ್ನು ಕೆಲವು ಇತ್ತೀಚೆಗೆ ಪ್ರಕಟ ವಾದವುಗಳು; ಕೆಲವು ಅಪ್ರಕಟಿತ ಲೇಖನಗಳೂ ಇದರಲ್ಲಿವೆ. ಇವು ಪರಿ ಹರಿಸಲು ಯತ್ನಿಸುವ ಸಮಸ್ಯೆಗಳು ಮಾತ್ರ ಇವತ್ತಿಗೂ ಕಾಣಿಸಿಕೊಳ್ಳುವಂತಹವು ಗಳೇ. ಭಾಷೆಯ ರಾಜಕಾರಣಿಗಳಿಗೆ, ಅಧ್ಯಾಪಕರಿಗೆ, ಮತ್ತು ಭಾಷೆಯ ನಿಜವಾದ ಸ್ವರೂಪವೇನೆಂಬುದನ್ನು ತಿಳಿಯ ಬಯಸುವ ಓದುಗರಿಗೆ ಈ ಸಂಕಲನ ರುಚಿಸ ಬಹುದು.

ಈ ಪುಸ್ತಕದ ಮುದ್ರಣಕ್ಕಾಗಿ ತಮ್ಮ ‘ಬರಹ’ ಎಂಬ ಹೆಸರಿನ ತಂತ್ರಾಂಶ ವನ್ನು ಉಚಿತವಾಗಿ ಬಳಸಲು ಒಪ್ಪಿಗೆ ಕೊಟ್ಟಿರುವ ಶ್ರೀ ಶೇಶಾದ್ರಿವಾಸು ಚಂದ್ರಶೇಖರನ್ ಅವರಿಗೆ, ಅಂದವಾಗಿ ಮುದ್ರಿಸಿ ಕೊಟ್ಟಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್‌ನ ಶ್ರೀ ರಾ. ವೆಂ. ಶ್ರೀನಿವಾಸ ಮೂರ್ತಿ, ಮತ್ತು ಅವರ ಸುಪುತ್ರ ಶ್ರೀ ರಾ. ಶ್ರೀ. ಮೋಹನ ಮೂರ್ತಿ ಅವರಿಗೆ, ಮತ್ತು ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವರ್ಧನ ಅವರಿಗೆ ನಾನು ಆಭಾರಿ.

ಮೈಸೂರು ಮಾರ್ಚ್ ೨೦, ೨೦೦೨

ಡಿ. ಎನ್. ಶಂಕರ ಭಟ್

ಳ್ಳ


ನಾಲ್ಕನೇ ಅಚ್ಚಿನ ಮುನ್ನುಡಿ

೨೦೦೨ರಲ್ಲಿ ಮೂರನೆಯ ಬಾರಿಗೆ ಅಚ್ಚಾಗಿದ್ದ ಈ ಪುಸ್ತಕವನ್ನು ಈಗ ನಾಲ್ಕನೇ ಬಾರಿಗೆ ಅಚ್ಚು ಹಾಕಿಸುತ್ತಿದ್ದೇನೆ. ಇದಕ್ಕಾಗಿ ವರ್ತಮಾನ ಕಾಲ, ಭಾಷೆಯ ಕಲಿಕೆಗೆ ವ್ಯಾಕರಣದ ನೆರವು, ಟರ್ಕಿ ದೇಶದ ಲಿಪಿಕ್ರಾಂತಿ, ಕನ್ನಡಕ್ಕೊಂದು ‘ಹೊಸ ಬರಹ’ ಮತ್ತು ಭಾಷೆ ಮತ್ತು ಬರಹ ಎಂಬ ಐದು ಹೆಚ್ಚಿನ ಲೇಖನಗಳನ್ನು ಸೇರಿಸಿದ್ದೇನೆ; ಉಳಿದ ಲೇಖನಗಳಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಿದ್ದೇನೆ. ಮತ್ತು ಮೊದಲಿದ್ದ ನಾಲ್ಕ ಭಾಗಗಳನ್ನು ಐದು ಭಾಗಗಳಲ್ಲಿ ಅನುಗೊಳಿಸಿದ್ದೇನೆ.

ಆದರೆ, ನನ್ನ ಇತ್ತೀಚೆಗಿನ ಪುಸ್ತಕಗಳ ಹಾಗೆ, ಇದರಲ್ಲಿ ಹೊಸಬರಹವನ್ನು ಬಳಸಲು ಹೋಗಿಲ್ಲ. ಹೊಸಬರಹದಲ್ಲಿ ನನ್ನ ಒಲವು ಕಡಿಮೆಯಾದುದು ಇದಕ್ಕೆ ಕಾರಣವಲ್ಲ; ಹೊಸದಾಗಿ ಬರೆಯುವ ಪುಸ್ತಕಗಳಲ್ಲೆಲ್ಲ ಅದನ್ನೇ ಬಳಸುತ್ತಿದ್ದೇನೆ. ಇತ್ತೀಚೆಗೆ ಪ್ರಕಟವಾಗಿರುವ ಕನ್ನಡ ಬರಹದ ಸೊಲ್ಲರಿಮೆ-೧ ಪುಸ್ತಕದಲ್ಲೂ ಅದನ್ನೇ ಬಳಸಿದ್ದೇನೆ.

ಆದರೆ, ಈ ಪುಸ್ತಕದ ಮೂರನೆಯ ಅಚ್ಚು ನಾನು ಹೊಸ ಬರಹವನ್ನು ಓದುಗರ ಮುಂದಿರಿಸುವ ಮೊದಲೇ (೨೦೦೨ರಲ್ಲಿ) ಹೊರಬಂದಿತ್ತು. ಈಗ ಅದನ್ನು ಹೊಸ ಬರಹಕ್ಕೆ ಮಾರ್ಪಡಿಸಬೇಕಿದ್ದಲ್ಲಿ, ಅದರಲ್ಲಿ ಬಳಕೆಯಾಗಿರುವ ಸಂಸ್ಕೃತ ಎರವಲುಗಳ ಎಣಿಕೆಯನ್ನೂ ಸಾಕಷ್ಟು ಕಡಿಮೆ ಮಾಡಬೇಕಾಗುತ್ತದೆ, ಮತ್ತು ಇದಕ್ಕಾಗಿ ಹೆಚ್ಚು ಕಡಿಮೆ ಹೊಸ ಪುಸ್ತಕವೊಂದನ್ನು ಬರೆದಷ್ಟೇ ಕೆಲಸ ಮಾಡಬೇಕಾಗುತ್ತದೆ. ಇದು ನನ್ನ ಈಗಿನ ಕನ್ನಡ ಬರಹದ ಸೊಲ್ಲರಿಮೆ ಪುಸ್ತಕದ ಮುಂದಿನ ಭಾಗಗಳ ಬರವಣಿಗೆಗೆ ತಡೆಯೊಡ್ಡಬಲ್ಲುದಾದ ಕಾರಣ, ಆ ಕೆಲಸವನ್ನು ಕೈಗೆತ್ತಿಕೊಳ್ಳಲು ಹೋಗಿಲ್ಲ.

ಈ ಲೇಖನಗಳಲ್ಲಿ ಕೆಲವನ್ನು ಸುಮಾರು ನಲುವತ್ತು ವರ್ಷಗಳಷ್ಟು ಹಿಂದೆಯೇ ಬರೆದಿದ್ದೆ, ಮತ್ತು ಬೇರೆ ಕೆಲವನ್ನು ಇತ್ತೀಚೆಗೆ ಬರೆದಿದ್ದೇನೆ. ಈ ದೀರ್ಘವಾದ ಅವಧಿಯಲ್ಲಿ ಭಾಷೆಯ ಕುರಿತು, ಮತ್ತು ಕನ್ನಡದ ಕುರಿತು ನನ್ನ ತಿಳುವಳಿಕೆಯಲ್ಲಿ ಹಲವು ಮಾರ್ಪಾಡುಗಳುಂಟಾಗಿವೆ. ಇವು ಸ್ವಲ್ಪ ಮಟ್ಟಿಗೆ ಈ ಬರಹಗಳಲ್ಲೂ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಒಂದಕ್ಕೊಂದು ತೀರ ವಿರುದ್ಧ ಗಳಾಗಬಲ್ಲಂತಹ ವಾಕ್ಯ ಇಲ್ಲವೇ ಪಾರಾಗಳನ್ನು ಮಾತ್ರ ಬದಲಿಸಿದ್ದೇನೆ. ಉಳಿದವುಗಳನ್ನು ಹಾಗೆಯೇ ಬಿಟ್ಟಿದ್ದೇನೆ.


ಮುನ್ನುಡಿ

ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿರುವ ಶ್ರೀಶಕ್ತಿ ಇಲೆಕ್ಟ್ರಿಕ್ ಪ್ರೆಸ್‌ನ ಶ್ರೀ ರಾ. ಶ್ರೀ. ಮೋಹನ ಮೂರ್ತಿ ಅವರನ್ನು, ಇದರ ಮಾರಾಟದ ಹೊಣೆ ಹೊತ್ತಿರುವ ಅತ್ರಿ ಬುಕ್ ಸೆಂಟರಿನ ಶ್ರೀ ಜಿ. ಎನ್. ಅಶೋಕವರ್ಧನ ಅವರನ್ನು, ಮತ್ತು ಈ ಪುಸ್ತಕವನ್ನು ಸಿದ್ಧಪಡಿಸುವಲ್ಲಿ ನನಗೆ ಹಲವು ರೀತಿಯ ಬೆಂಬಲ ನೀಡಿರುವ ಮಡದಿ ಭಾರತಿ ಭಟ್ ಅವರನ್ನು ನಾನಿಲ್ಲಿ ನೆನಪಿಸಬಯಸುತ್ತೇನೆ.

ಹೆಗ್ಗೋಡು, ಸಾಗರ ೨೦ ಮೇ ೨೦೧೦

ಡಿ. ಎನ್. ಶಂಕರ ಭಟ್


ಅನುಕ್ರಮಣಿಕೆ

ಭಾಗ ಒಂದು: ಭಾಷೆಯ ಸ್ವರೂಪ

೧.೧ ಭಾಷೆಗಳೊಳಗೆ ಕೀಳು-ಮೇಲಿಲ್ಲ ೧೧ ೧.೨ ಭಾಷೆಗಳ ಹುಟ್ಟು-ಸಾವು ೧೫ ೧.೩ ಭಾಷೆಗಳಲ್ಲಿ ಹಳತು-ಹೊಸತು ೨೦ ೧.೪ ಭಾಷಾಸ್ವಾತಂತ್ರ್ಯ ೨೪ ೧.೫ ಭಾಷೆಯು ತರ್ಕಬದ್ಧವೇನು? ೨೮ ೧.೬ ವರ್ತಮಾನ ಕಾಲ ೩೩ ೧.೭ ಎಣಿಕೆಯಲ್ಲೂ ವೈವಿಧ್ಯವಿದೆ ೩೯

ಭಾಗ ಎರಡು: ವ್ಯಾಕರಣ ಮತ್ತು ಕಲಿಕೆ

೨.೧ ತೊದಲು ನುಡಿಯ ಇಂದ್ರಜಾಲ ೪೪ ೨.೨ ಕನ್ನಡದ ಮಕ್ಕಳಿಗೆ ಕನ್ನಡದ ಪಾಠ ೪೭ ೨.೩ ವ್ಯಾಕರಣವೆಂಬ ಕಲ್ಲಿನ ಕಡಲೆ ೫೧ ೨.೪ ಶಾಲಾವ್ಯಾಕರಣಗಳಲ್ಲಿ ಮೊದಲನೆಯ ಪಾಠ ೫೫ ೨.೫ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ದೆವ್ವ ೬೦ ೨.೬ ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ ಇವೆಯೇ? ೬೩ ೨.೭ ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಪಾಠ ೬೮ ೨.೮ ಭಾಷೆಯ ಕಲಿಕೆಗೆ ವ್ಯಾಕರಣದ ನೆರವು ೭೨ ೨.೯ ಗಂಟೆಗೆಷ್ಟು ಪುಟ ಓದಬಲ್ಲಿರಿ? ೮೪ ೨.೧೦ ಓದಲು ಬಂದರೂ ಓದುವುದಿಲ್ಲ ವೇಕೆ? ೮೮

ಭಾಗ ಮೂರು: ಮಾತು ಮತ್ತು ಬರಹ

೩.೧ ಮಾತಿಗೂ ಒಂದು ಫೋಟೋ ೯೨

೩.೨ ಭಾರತಕ್ಕೆಲ್ಲ ಒಂದು ಲಿಪಿ ಬೇಕೇ? ೯೭


ಅನುಕ್ರಮಣಿಕೆ

೩.೩ ಋಕಾರದ ಅಳಿವು-ಉಳಿವು ೧೦೩ ೩.೪ ಟರ್ಕಿ ದೇಶದ ಲಿಪಿಕ್ರಾಂತಿ ೧೦೯ ೩.೫ ಕನ್ನಡಕ್ಕೊಂದು ‘ಹೊಸ ಬರಹ’ ೧೧೨ ೩.೬ ಭಾಷೆ ಮತ್ತು ಬರಹ ೧೨೧

ಭಾಗ ನಾಲ್ಕು: ಕನ್ನಡ ಭಾಷೆಯ ಸ್ವರೂಪ

೪.೧ ಕನ್ನಡದ ಮೂರು ಮುಖಗಳು ೧೨೯ ೪.೨ ಕನ್ನಡದ ಉಪಭಾಷೆಗಳು ೧೩೩ ೪.೩ ಕನ್ನಡದ ವ್ಯಾಕರಣ ಪರಂಪರೆ ೧೪೯ ೪.೪ ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ ೧೫೩ ೪.೫ ಶಬ್ದಬ್ರಹ್ಮರು ಎಡವಿದಾಗ ೧೬೬ ೪.೬ ಪಾರಿಭಾಷಿಕ ಪದಗಳ ಸೃಷ್ಟಿ ೧೬೯

ಭಾಗ ಐದು: ಜಗತ್ತಿನ ಭಾಷೆಗಳು

೫.೧ ಭಾರತದ ಭಾಷೆಗಳು ೧೭೬ ೫.೨ ಏಶ್ಯಾದ ಭಾಷೆಗಳು ೧೮೯ ೫.೩ ಯುರೋಪಿನ ಭಾಷೆಗಳು ೧೯೨ ೫.೪ ಆಫ್ರಿಕಾದ ಭಾಷೆಗಳು ೧೯೩ ೫.೫ ಅಮೆರಿಕಾದ ಭಾಷೆಗಳು ೧೯೭ ೫.೬ ಆಸ್ಟ್ರೇಲಿಯಾದ ಭಾಷೆಗಳು ೧೯೯ ೫.೭ ಓಶಿಯಾನಾದ ಭಾಷೆಗಳು ೨೦೪ ೫.೮ ಮುಕ್ತಾಯ ೨೦೬


ಭಾಗ ಒಂದು

ಭಾಷೆಯ ಸ್ವರೂಪ

ನಾವು ದಿನನಿತ್ಯವೂ ಲೀಲಾಜಾಲವಾಗಿ ಬಳಸುತ್ತಿರುವ ಈ ಭಾಷೆ ನಮ್ಮೆಲ್ಲರಿಗೂ ತುಂಬಾ ಪರಿಚಿತವಾದುದು. ಹಾಗಾಗಿ, ಅದರ ವಿಷಯವಾಗಿ ನಮ್ಮಲ್ಲಿ ಹಲವರು ಎಲ್ಲ ತಿಳಿದವರಂತೆ ಮಾತನಾಡುತ್ತಾರೆ. ನಿಜಕ್ಕೂ ನಮ್ಮ ನಾಲಿಗೆಯ ತುದಿಯಲ್ಲಿ ಕುಣಿಯುವ ಈ ಭಾಷೆಯ ಕುರಿತು ನಾವು ತಿಳಿಯದಿರುವ ಮತ್ತು ತಪ್ಪಾಗಿ ತಿಳಿದುಕೊಂಡಿರುವ ವಿಷಯಗಳೇ ಹೆಚ್ಚು. ಹಲವು ಸಂದರ್ಭಗಳಲ್ಲಿ ಈ ತಿಳುವಳಿಕೆಯಿಲ್ಲದಿರುವುದು ಮತ್ತು ತಪ್ಪು ತಿಳುವಳಿಕೆಯಿರುವುದು ನಮ್ಮನ್ನು ಮತ್ತು ಉಳಿದವರನ್ನು ಬಗೆಬಗೆಯ ತೊಂದರೆಗಳಿಗೆ ಒಳಪಡಿಸುತ್ತದೆ.

ಭಾಷೆಯ ಕುರಿತಾಗಿ ನಮ್ಮಲ್ಲಿರುವ ಈ ಅಜ್ಞಾನದ ಫಲವನ್ನು ನಾವು ಎಲ್ಲಿ ಬೇಕಿದ್ದರೂ ಕಾಣಬಹುದು. ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅವನ ಮಾತಿ ನಿಂದ ಅಳೆಯುತ್ತೇವೆ. ನಮಗರಿಯದ ಭಾಷೆಯನ್ನಾಡುವವರನ್ನು ಸಂಶಯದಿಂದ ನೋಡುತ್ತೇವೆ. ನಮ್ಮ ಭಾಷೆಯನ್ನಾಡುವವರು ಸಿಕ್ಕಿದರೆ ಅವರನ್ನು ನಂಬಿ ಸುಲಭವಾಗಿ ಮೋಸಹೋಗುತ್ತೇವೆ. ಭಾಷೆಯ ಹೆಸರಿನಲ್ಲಿ ನಮ್ಮಲ್ಲಿ ಎಷ್ಟೆಲ್ಲ ಹೊಡೆದಾಟಗಳು ನಡೆದಿಲ್ಲ? ನಡೆಯುತ್ತಿಲ್ಲ? ಆದರೆ, ಇವೆಲ್ಲ ಸರಿಯೇ, ಅವಶ್ಯವೇ ಎಂಬುದನ್ನು ತಾಳ್ಮೆಯಿಂದ ಪರೀಕ್ಷಿಸುವವರು ಮಾತ್ರ ಬಹಳ ಕಡಿಮೆ.

ಭಾಷಾಸಹಿಷ್ಣುತೆ ಎಂಬುದು ನಮ್ಮಲ್ಲಿ ಬೆಳೆಯಬೇಕಾದರೆ, ಮುಖ್ಯವಾಗಿ ಭಾಷೆಯ ಕುರಿತು ನಮ್ಮಲ್ಲಿರುವ ಅಜ್ಞಾನವನ್ನು ತೊಡೆದು ಹಾಕುವ ಅವಶ್ಯಕತೆ ಯಿದೆ. ಭಾಷೆಗಳಲ್ಲಿ ಕಾಣಿಸುವ ವೈವಿಧ್ಯತೆ ಬೇರೆ ಬೇರೆ ಕಾರಣಗಳಿಂದಾಗಿ ಅವುಗಳಲ್ಲಿ ತಲೆದೋರುವ ಬದಲಾವಣೆಗಳ ಫಲ. ಆದರೆ ಈ ವೈವಿಧ್ಯತೆ ಭಾಷೆ ಗಳನ್ನಾಡುವ ಜನರ ಯೋಗ್ಯತೆ, ವಿಶ್ವಾಸಾರ್ಹತೆ, ಬುದ್ಧಿವಂತಿಕೆ, ಮೊದಲಾದುವ ನ್ನೇನೂ ಪ್ರತಿಬಿಂಬಿಸುವುದಿಲ್ಲ. ಒಂದೇ ಕುಟುಂಬದ ಜನರು ದೂರದೂರದ ಎರಡು ಊರುಗಳಲ್ಲಿ ಪರಸ್ಪರ ಸಂಪರ್ಕವಿಲ್ಲದೆ ಹಲವು ವರ್ಷಗಳಷ್ಟು ಕಾಲ ಉಳಿದರಾದರೆ, ಅವರ ಭಾಷೆಯಲ್ಲೂ ಹಲವಾರು ವ್ಯತ್ಯಾಸಗಳು ಮೂಡಿಬರದೆ ಇರಲಾರವು.

ಹೀಗಿದ್ದರೂ, ಭಾಷೆ ನಮ್ಮ ಜೀವನದ ಒಂದು ಅತಿ ಮುಖ್ಯ ಅಂಗವಾಗಿದೆ. ಹಾಗಾಗಿ, ಹೊರಗಿನ ಪ್ರಪಂಚವನ್ನು ನಾವು ಹೇಗೆ ಕಾಣುತ್ತೇವೆ ಮತ್ತು ಅನುಭವಿಸುತ್ತೇವೆ ಎಂಬುದರ ಮೇಲೆ ಸ್ವಲ್ಪವಾದರೂ ನಮ್ಮ ಭಾಷೆಯ ಪ್ರಭಾವ ಆಗದಿರದು. ಹಳದಿ ಬಣ್ಣದ ಕನ್ನಡಕವನ್ನು ಧರಿಸಿದ ವ್ಯಕ್ತಿಗೆ ಹೇಗೆ ಎಲ್ಲಾ ವಸ್ತು


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಗಳೂ ಹಳದಿ ಬಣ್ಣದವಾಗಿ ಕಾಣಿಸುತ್ತವೆಯೋ ಹಾಗೆಯೇ ಒಂದು ವಿಶಿಷ್ಟವಾದ ಭಾಷೆಯನ್ನಾಡುವವರಿಗೆ ಹೊರಗಿನ ಪ್ರಪಂಚ ಆ ಭಾಷೆ ಅದನ್ನು ಹೇಗೆ ತೋರಿ ಸುತ್ತದೆಯೋ ಹಾಗೆ ಕಾಣಿಸುತ್ತದೆ. ನಮ್ಮ ಆಲೋಚನೆ, ಅನುಭವ ಇವೆಲ್ಲ ಬಹಳಮಟ್ಟಿಗೆ ನಮ್ಮ ಭಾಷೆಯಲ್ಲೇ ನಡೆಯುವುವಾದ ಕಾರಣ, ಇವುಗಳ ಮೇಲೆಲ್ಲ ನಮ್ಮ ಭಾಷೆಯ ಪ್ರಭಾವ ಇದ್ದೇ ಇರುತ್ತದೆ.

ಈ ಒಂದು ವಿಷಯವನ್ನು ಗಮನದಲ್ಲಿರಿಸಿಕೊಳ್ಳದಿದ್ದರೆ, ಎರಡು ಬೇರೆ ಬೇರೆ ಭಾಷೆಗಳನ್ನಾಡುವವರೊಳಗೆ ಅನವಶ್ಯಕವಾಗಿ ತಪ್ಪು ತಿಳುವಳಿಕೆಗಳು ತಲೆ ದೋರಬಲ್ಲುವು. ಉದಾಹರಣೆಗಾಗಿ, ನಮ್ಮ ದೇಶದ ಈಶಾನ್ಯ ಗಡಿಪ್ರದೇಶದಲ್ಲಿ ಕಂಡುಬರುವ ಹಲವಾರು ಸಮಸ್ಯೆಗಳಿಗೆ ಇಂತಹ ಭಾಷೆಗೆ ಸಂಬಂಧಿಸಿದ ಅಜ್ಞಾನ ಮತ್ತು ಅಸಹಿಷ್ಣುತೆಗಳೂ ಸ್ವಲ್ಪಮಟ್ಟಿಗೆ ಕಾರಣವಾಗಿರಲು ಸಾಧ್ಯವಿದೆ.

ನಮ್ಮ ಭಾಷೆಯ ಜ್ಞಾನ ನಮ್ಮಲ್ಲಿ ಅರಿವಿಗೆ ಎಟಕುವಂತಹದು ಮತ್ತು ಎಟಕದಂತಹದು ಎಂಬುದಾಗಿ ಎರಡು ಬೇರೆ ಬೇರೆ ಸ್ತರಗಳಲ್ಲಿ ಸ್ಥಾಪಿತವಾಗಿರು ಇದೆ. ಮಾತನಾಡುವಾಗಲೆಲ್ಲ ನಾವು ನೂರಾರು ವ್ಯಾಕರಣ ನಿಯಮಗಳನ್ನು ಅನವರತವಾಗಿ ಬಳಸುತ್ತಿರುತ್ತೇವೆ. ಈ ವ್ಯಾಕರಣ ನಿಯಮಗಳ ಜ್ಞಾನ ನಮ್ಮ ಮಿದುಳಿನಲ್ಲಿ ನಮ್ಮ ಅರಿವಿಗೆ ಎಟಕದ ಸ್ಥಿತಿಯಲ್ಲಿ ನೆಲಸಿರುತ್ತದೆ. ನಾವು ಆಡುವಂತಹ ಮಾತನ್ನು ಗಣಕ ಯಂತ್ರಗಳು ಬಳಸುವಂತೆ ಮಾಡಬೇಕಿದ್ದಲ್ಲಿ ಇಂತಹ ನೂರಾರು ವ್ಯಾಕರಣ ನಿಯಮಗಳನ್ನು ಕಂಡುಹಿಡಿದು, ಅವನ್ನೆಲ್ಲ ಅವುಗ ಳೊಳಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಇದರಿಂದ, ನಮ್ಮ ದಿನನಿತ್ಯದ ಮಾತಿ ನಲ್ಲೂ ಇಂತಹ ನೂರಾರು ನಿಯಮಗಳ ಬಳಕೆ ನಮಗೆ ತಿಳಿಯದ ಹಾಗೆ ನಡೆಯುತ್ತಿರುತ್ತದೆ ಎಂಬ ವಿಷಯ ಸ್ಪಷ್ಟವಾಗುತ್ತದೆ.

ಇಂತಹ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ಮಾತ್ರವಲ್ಲದೆ ಅರಿವಿಗೆ ಎಟಕುವ ಇನ್ನೊಂದು ರೀತಿಯ ವ್ಯಾಕರಣ ಜ್ಞಾನವೂ ನಮ್ಮಲ್ಲಿದೆ. ಶಾಲೆಯಲ್ಲಿ ನಾವು ಕಲಿಯುವ ವ್ಯಾಕರಣ ಜ್ಞಾನ ಇಂತಹದು. ಈ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಸಹಾಯದಿಂದ ನಾವು ನಮ್ಮ ಭಾಷೆಯಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಿಕೊಳ್ಳಬಲ್ಲೆವು. ಹೊಸ ಹೊಸ ಪದಗಳನ್ನು ಸೃಷ್ಟಿಸಿ ಅದರಲ್ಲಿ ಬಳಸಿಕೊಳ್ಳಬಲ್ಲೆವು, ಮತ್ತು ಬೇರೆ ಭಾಷೆಗಳಿಂದ ನಮಗೆ ಬೇಕೆನಿಸಿದ ಪದಗಳನ್ನು ಎರವಲಾಗಿ ಪಡೆದುಕೊಳ್ಳಬಲ್ಲೆವು. ವಾಕ್ಯಗಳ ರಚನೆಯಲ್ಲೂ ಸಂದರ್ಭಕ್ಕೆ ತಕ್ಕಂತೆ, ಈ ವ್ಯಾಕರಣ ಜ್ಞಾನದ ಸಹಾಯದಿಂದ, ಹಲಕೆಲವು ಬದಲಾವಣೆಗಳನ್ನೂ ನಾವು ಮಾಡಿಕೊಳ್ಳಬಲ್ಲೆವು.

ಆದರೆ, ಕಾಲದಿಂದ ಕಾಲಕ್ಕೆ ನಮ್ಮ ಭಾಷೆಯಲ್ಲಿ ನಡೆಯುವ ಬದಲಾವಣೆ ಗಳಲ್ಲಿ ಹೆಚ್ಚಿನವೂ ನಮ್ಮಲ್ಲಿರುವ ಅರಿವಿಗೆ ಎಟಕದ ವ್ಯಾಕರಣ ಜ್ಞಾನದ ಮೂಲಕ ನಡೆಯುತ್ತವೆ. ಅವು ಯಾರ ನಿಯಂತ್ರಣಕ್ಕೂ ಒಳಗಾಗದೆ ನಡೆಯುವ ಬದಲಾವಣೆಗಳು. ನಿರಂತರವಾಗಿ ನಡೆಯುವ ಈ ಬದಲಾವಣೆಗಳನ್ನು ಭಾಷಾ ಪಂಡಿತರು ವಿರೋಧಿಸುವರಾದರೂ ಅವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ನಮ್ಮಲ್ಲಿರುವ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಆಧಾರದ ಮೇಲೆ ಇವಲ್ಲಿ

೧೦

ಭಾಷೆಗಳೊಳಗೆ ಕೀಳುಮೇಲಿಲ್ಲ

ಕೆಲವನ್ನು ದೂರ ಇರಿಸುವ ಪ್ರಯತ್ನವನ್ನೇನೋ ಮಾಡಬಲ್ಲೆವು, ಆದರೆ, ಇದರಿಂದಾಗಿ ಭಾಷೆ ಬದಲಾಗದಿರುವುದಿಲ್ಲ. ಮಾತಿನ ಭಾಷೆ ಬದಲಾಗುತ್ತಾ ಇರುತ್ತದೆ, ಆದರೆ ಬರಹದ ಭಾಷೆ ಕೆಲವು ವಿಷಯಗಳಲ್ಲಿ ಬದಲಾಗದೆ ಉಳಿದು ಅದಕ್ಕೂ ಮಾತಿನ ಭಾಷೆಗೂ ನಡುವೆ ಕಂದಕವೊಂದು ಏರ್ಪಡುತ್ತದೆ.

ನಮ್ಮಲ್ಲಿರುವ ಈ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ನಮಗೆ ಗೊತ್ತಾಗದ ಹಾಗೆ ನಮ್ಮ ದೃಷ್ಟಿಕೋನದ ಮೇಲೂ ಪ್ರಭಾವವನ್ನು ಬೀರುತ್ತಿರುತ್ತದೆ. ಈ ವಿಷಯದಲ್ಲಿ ವಿದ್ವಾಂಸರೊಳಗೆ ಭಿನ್ನಾಭಿಪ್ರಾಯವಿರುವುದೇನೋ ನಿಜ; ಆದರೆ, ಹೆಚ್ಚು ಹೆಚ್ಚು ಭಾಷೆಗಳನ್ನು ಅಭ್ಯಾಸ ಮಾಡಿದಂತೆಲ್ಲ ಈ ಅರಿವಿಗೆ ಎಟಕದ ವ್ಯಾಕರಣ ಜ್ಞಾನದಲ್ಲಿ ಭಾಷೆಯಿಂದ ಭಾಷೆಗೆ ಬಹಳಷ್ಟು ವೈವಿಧ್ಯತೆಯಿರಲು ಸಾಧ್ಯ ಎಂಬ ವಿಷಯ ಬೆಳಕಿಗೆ ಬರುತ್ತಿದೆ. ಭಾಷೆಯೆಂಬುದು ನಮ್ಮ ಅನುಭವ ಮತ್ತು ಆಲೋಚನಾ ವಿಧಾನಗಳನ್ನು ನಿಯಂತ್ರಿಸಬಲ್ಲುದಾದರೆ, ಅದರಲ್ಲಿ ಕಾಣಿಸುವ ಈ ವೈವಿಧ್ಯತೆಯೂ ನಮ್ಮ ಅನುಭವ ಮತ್ತು ಆಲೋಚನಾ ವಿಧಾನಗಳಲ್ಲಿ ಪ್ರತಿಬಿಂಬಿತವಾಗಬಲ್ಲುದಲ್ಲವೇ?

ಭಾಷೆಯ ವಿಷಯವಾಗಿ ನಮ್ಮಲ್ಲಿ ಬೆಳೆದುಬಂದಿರುವ ಅಜ್ಞಾನದ ಸ್ವರೂಪ ಎಂತಹದು ಎಂಬುದನ್ನು ಈ ಮೊದಲನೇ ವಿಭಾಗದ ಲೇಖನಗಳು ಪರಿಚಯ ಮಾಡಿಕೊಡುತ್ತವೆ.

೧.೧ ಭಾಷೆಗಳೊಳಗೆ ಕೀಳು ಮೇಲಿಲ್ಲ

ಸುಲಭವಾದ ಭಾಷೆ, ಕ್ಲಿಷ್ಟವಾದ ಭಾಷೆ, ಕಿವಿಗಿಂಪಾದ ಭಾಷೆ, ಕಠೋರವಾದ ಭಾಷೆ, ಬೆಳೆಯುತ್ತಿರುವ ಭಾಷೆ, ಕಾಡು ಭಾಷೆ ಎಂದೆಲ್ಲ ಭಾಷೆಗಳ ಮೇಲೆ ನೂರಾರು ವಿಶೇಷಣಗಳನ್ನೇನೋ ನಾವು ಹೇರುತ್ತೇವೆ; ಆದರೆ, ಇವೆಲ್ಲವೂ ಭಾಷೆಯನ್ನು ಕೇಳುವ ಇಲ್ಲವೇ ಆಡುವ ನಮ್ಮ ಮನಸ್ಸಿನಲ್ಲಿ ಮೂಡುವ ವಿಶೇಷಣಗಳಲ್ಲದೆ ಭಾಷೆಗಳೊಳಗೆ ಈ ರೀತಿಯ ಕೀಳುಮೇಲಿಲ್ಲ. ಈ ಮಾತನ್ನು ಭಾಷಾವಿಜ್ಞಾನಿಗಳು ನಡೆಸಿರುವ ನೂರಾರು ಸಂಶೋಧನೆಗಳ ಆಧಾರದ ಮೇಲೆ ಬರೆಯಲಾಗಿದೆಯಾದರೂ ಇದನ್ನು ಹೆಚ್ಚಿನವರೂ ಸುಲಭದಲ್ಲಿ ನಂಬಲಾರರೆಂಬು ದಂತೂ ನಿಜವೇ.

ಕಷ್ಟ-ಸುಲಭ

ಯಾವ ಭಾಷೆಯೂ ಅದನ್ನು ತಾಯ್ನುಡಿಯಾಗಿ ಆಡುತ್ತಿರುವವರಿಗೆ ಕಷ್ಟವಾಗಿ ಕಾಣಿಸುವುದಿಲ್ಲ. ಭಾಷೆಗಳಲ್ಲೆಲ್ಲ ಕನ್ನಡವೇ ಅತ್ಯಂತ ಸುಲಭವಾದುದು, ಚೈನೀಸ್ ಇದ್ದುದರಲ್ಲೆಲ್ಲ ಕಷ್ಟವಾದುದೆಂದು ನಾವೇನೋ ಹೇಳಬಲ್ಲೆವು. ಆದರೆ, ಇದೇ ವಿಷಯವನ್ನು ಚೈನೀಸ್ ಭಾಷೆಯನ್ನು ಆಡುವವನೊಬ್ಬನೊಂದಿಗೆ

೧೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹೋಗಿ ಕೇಳಿ ನೋಡಿರಿ. ಆತನಿಗೆ ಖಂಡಿತವಾಗಿಯೂ ಕನ್ನಡಕ್ಕಿಂತ ಜೈನೀಸೇ ಹೆಚ್ಚು ಸುಲಭವಾದ ಭಾಷೆಯೆಂದೆನಿಸದಿರದು.

ಬಾಲ್ಯದಲ್ಲಿ ನಾವು ಒಂದು ವಿಧವಾದ ಭಾಷೆಯನ್ನು ಆಡಲು ಕಲಿತಿರುತ್ತೇವೆ. ಆ ಭಾಷೆಗೂ, ಮುಂದೆ ಕಲಿಯಲಿರುವ ಎರಡನೆಯ ಭಾಷೆಗೂ ನಡುವೆ ಎಂತೆಂತಹ ವ್ಯತ್ಯಾಸಗಳಿವೆ, ಮತ್ತು ಎಷ್ಟು ವ್ಯತ್ಯಾಸಗಳಿವೆ ಎಂಬುದರ ಮೇಲೆ ಆ ಭಾಷೆ ಹೆಚ್ಚು ಇಲ್ಲವೇ ಕಡಿಮೆ ಕ್ಲಿಷ್ಟವಾದುದೆಂದು ನಮಗೆ ಅನಿಸುತ್ತದೆ.

ಕನ್ನಡ ಮತ್ತು ತಮಿಳು ಭಾಷೆಗಳೊಳಗೆ ಹಲವಾರು ವಿಷಯಗಳಲ್ಲಿ ಸಾಮ್ಯ ವಿದೆ. ಹಾಗಾಗಿ, ತಮಿಳನ್ನು ನಾವು ಬಹಳ ಸುಲಭವಾಗಿ ಕಲಿತು ಅರ್ಥ ಮಾಡಿಕೊಳ್ಳಲು ಶಕ್ತರಾಗುತ್ತೇವೆ. ಇಂಗ್ಲಿಷಿಗೂ ಕನ್ನಡಕ್ಕೂ ನಡುವೆ ಇಂತಹ ಸಮಾನತೆಗಳು ಬಹಳ ಕಡಿಮೆ. ಆದುದರಿಂದ ಮೂರು ನಾಲ್ಕು ವರ್ಷ ಕಲಿತರೂ ಇಂಗ್ಲಿಷ್ ನಮ್ಮ ಹಿಡಿತಕ್ಕೆ ಸಿಕ್ಕುವುದಿಲ್ಲ.

ಭಾಷೆಯೊಂದು ಸುಲಭವಾದುದು ಇಲ್ಲವೇ ಕ್ಲಿಷ್ಟವಾದುದು ಎಂದೆನಿಸಲು ಬೇರೆಯೂ ಕಾರಣಗಳಿವೆ. ಉದಾಹರಣೆಗಾಗಿ, ಹಿಂದೀ ಭಕ್ತರಿಗೆ ಅದರಲ್ಲಿ ಒಂದು ವಾಕ್ಯ ಸರಿಯಾಗಿ ಆಡಲು ಬಾರದಿದ್ದರೂ ಹಿಂದಿಗಿಂತ ಸುಲಭವಾದ ಭಾಷೆ ಜಗತ್ತಿನಲ್ಲಿ ಯಾವುದೂ ಇಲ್ಲವೆಂದು ಅವರು ಸಾರುತ್ತಿರುತ್ತಾರೆ.

ಭಾಷೆಯೊಂದರ ಮೇಲೆ ಬರೆದಿರುವ ವ್ಯಾಕರಣ ಬಹಳ ಕ್ಲಿಷ್ಟವಾಗಿದೆ ಯಾದರೂ ಆ ಭಾಷೆ ಕ್ಲಿಷ್ಟವಾಗಿದೆಯೆಂದು ಅದನ್ನು ಕಲಿಯಲು ಪ್ರಯತ್ನಿಸು ವವರಿಗೆ ಅನಿಸಬಲ್ಲುದು. ಉದಾಹರಣೆಗಾಗಿ, ಸಂಸ್ಕೃತ ಭಾಷೆಯ ಮೇಲೆ ಬಹಳ ಕ್ಲಿಷ್ಟವಾದ, ಆದರೆ ಅತ್ಯಂತ ಉತ್ತಮವಾದ ವ್ಯಾಕರಣವನ್ನು ಸಿದ್ಧಗೊಳಿಸಲಾಗಿದೆ. ಸಂಸ್ಕೃತ ಭಾಷೆಯನ್ನು ಈ ವ್ಯಾಕರಣದ ಸಹಾಯದಿಂದ ಕಲಿಯಲು ಪ್ರಯತ್ನಿಸು ವವರಿಗೆ ಅದು ಬಹಳ ಕ್ಲಿಷ್ಟವಾದ ಭಾಷೆಯೆಂದು ಅನಿಸದಿರದು.

ಕನ್ನಡಕ್ಕೂ ಇಂತಹದೇ ಕ್ಲಿಷ್ಟವಾದ ವ್ಯಾಕರಣವನ್ನು ತಯಾರಿಸಿ, ಅದೂ ಬಹಳ ಕ್ಲಿಷ್ಟವಾದ ಭಾಷೆಯೆಂದು ಅದನ್ನು ಅಂತಹ ವ್ಯಾಕರಣದ ಮೂಲಕ ಕಲಿಯಲು ಪ್ರಯತ್ನಿಸುವವರಿಗೆ ಅನ್ನಿಸುವಂತೆ ಮಾಡುವುದು ಅಸಾಧ್ಯವೇನಲ್ಲ.

ಭಾಷೆಗಳಲ್ಲಿರುವ ವಿಭಕ್ತಿಗಳ ಸಂಖ್ಯೆ, ಲಿಂಗಭೇದಗಳು, ಪದನಿಷ್ಪತ್ತಿ, ಮೊದಲಾದ ವ್ಯಾಕರಣಾಂಶಗಳ ಆಧಾರದ ಮೇಲೆ ಅವುಗಳ ಸಾಪೇಕ್ಷ ಕ್ಲಿಷ್ಟತೆ ಯನ್ನು ನಿರ್ಧರಿಸಲು ಭಾಷಾವಿಜ್ಞಾನಿಗಳು ನಡೆಸಿದ ಪ್ರಯತ್ನಗಳೆಲ್ಲವೂ ನಿಷ್ಫಲ ವಾಗಿವೆ. ಕಷ್ಟ, ಸುಲಭ ಎಂಬುದೆಲ್ಲ ವ್ಯಕ್ತಿನಿಷ್ಠ ಮಾತ್ರ, ಭಾಷಾನಿಷ್ಠ ವಲ್ಲವೆಂದೇ ಈ ವಿದ್ವಾಂಸರು ಕೊನೆಯ ನಿರ್ಧಾರಕ್ಕೆ ಬರಬೇಕಾಯಿತು. ಒಂದು ಭಾಷೆಯ ಪದರಚನೆ ಎಷ್ಟೊಂದು ಸುಲಭವಾಗಿರುತ್ತದೆಯೋ ಅದರ ವಾಕ್ಯರಚನೆ ಅಷ್ಟೇ ಕ್ಲಿಷ್ಟವಾಗಿಯೂ ಇರುವಂತೆ ಕಾಣಿಸುತ್ತದೆ. ಭಾಷೆಗಳ ಎಲ್ಲಾ ಅಂಶ ಗಳನ್ನೂ ಒಟ್ಟಿಗೆ ಗಮನಕ್ಕೆ ತೆಗೆದುಕೊಂಡೆವಾದರೆ, ಕ್ಲಿಷ್ಟತೆಯಲ್ಲಿ ಅವುಗಳೊಳಗೆ ಹೆಚ್ಚು ಕಡಿಮೆಯಿರಲಾರದೆಂದೇ ವಿದ್ವಾಂಸರ ಅಭಿಪ್ರಾಯ.

೧೨


ಭಾಷೆಗಳೊಳಗೆ ಕೀಳುಮೇಲಿಲ್ಲ

ಭಾಷೆಯ ಇಂಪು

ಲಾಲಿತ್ಯ, ಇಂಪು ಮೊದಲಾದವುಗಳೂ ವ್ಯಕ್ತಿನಿಷ್ಠವಲ್ಲದೆ ಭಾಷಾನಿಷ್ಠವಲ್ಲ. ಕರ್ನಾಟಕ ಸಂಗೀತವನ್ನು ಕೇಳಿ ಅಭ್ಯಾಸವಾಗಿರುವ ದಕ್ಷಿಣದವರಿಗೆ ಉತ್ತರಾದಿ ಸಂಗೀತದಲ್ಲಿ ಇಂಪೂ ಇಲ್ಲ, ಅಂದವೂ ಇಲ್ಲ. ಆದರೆ ಉತ್ತರಾದಿಯನ್ನು ಕೇಳಿ ಸಂತೋಷಪಡಲು ಅಭ್ಯಾಸವಾದವರಿಗೆ ಕರ್ನಾಟಕ ಸಂಗೀತದಲ್ಲಿ ದಕ್ಷಿಣದವರಿಗೆ ಕಾಣಿಸುವಂತಹ ಅಂದವೇನೂ ಕಾಣಿಸುವುದಿಲ್ಲ.

ಭಾಷೆಗಳಲ್ಲೂ ಹೀಗೆಯೇ. ಎಳೆಯ ಪ್ರಾಯದಲ್ಲಿ ನಾವು ಎಂತಹ ಸಂಸ್ಕಾರ ಕ್ಕೊಳಗಾಗಿರುವೆವೋ ಅದನ್ನಾಧರಿಸಿ ಒಂದು ವಿಧದ ಮಾತು ಅಂದವಾಗಿ ಕೇಳಿಸುತ್ತದೆ, ಮತ್ತು ಇನ್ನೊಂದು ವಿಧದ ಮಾತು ಕರ್ಕಶವಾಗಿ ಕೇಳಿಸುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ತಮ್ಮದೇ ಆದ ತಾಯ್ನುಡಿ ಕಿವಿಗಿಂಪಾಗಿ ಕೇಳಿಸು ತ್ತದೆ.

ಭಾಷೆಯ ಬೆಳವಣಿಗೆ

ಭಾಷೆಗಳ ಮೇಲೆ ಅನವಶ್ಯಕವಾಗಿ ಹೇರಿರುವ ಇನ್ನೊಂದು ವಿಶೇಷಣವೆಂದರೆ, ಬೆಳವಣಿಗೆ. ಭಾರತದ ಭಾಷೆಗಳನ್ನೆಲ್ಲ ಬೆಳೆಯುತ್ತಿರುವ ಭಾಷೆಗಳೆಂದು ಕರೆಯು ವುದು ರೂಢಿ. ಈ ಮಾತನ್ನು ರಾಜಕಾರಣಿಗಳು ಮಾತ್ರವಲ್ಲ, ವಿದ್ವಾಂಸರೂ ಉಪಯೋಗಿಸುತ್ತಿರುವುದು ನಿಜಕ್ಕೂ ಶೋಚನೀಯವಾದ ಸಂಗತಿ. ನಿಜಕ್ಕೂ ಇವತ್ತು ಪ್ರಚಲಿತವಾಗಿರುವ ಭಾಷೆಗಳೆಲ್ಲವೂ ಪೂರ್ತಿ ಬೆಳೆದಿರುವ ಭಾಷೆಗಳೇ. ಅವುಗಳಲ್ಲಿ ಕಡಿಮೆ ಬೆಳೆದವುಗಳು ಮತ್ತು ಜಾಸ್ತಿ ಬೆಳೆದವುಗಳು ಎಂಬುದಾಗಿ ಇಲ್ಲವೇ ಪ್ರಬುದ್ಧವಾದವುಗಳು ಮತ್ತು ಅಪ್ರಬುದ್ಧವಾದವುಗಳು ಎಂಬುದಾಗಿ ವಿಂಗಡಿಸಿ ಹೇಳುವುದು ಅಸಾಧ್ಯ.

ಭಾಷೆಗಳ ಹುಟ್ಟು ಹೇಗಾಗಿರಬೇಕೆಂಬುದನ್ನು ತಿಳಿಯಲು ವಿದ್ವಾಂಸರು ಬಹಳಷ್ಟು ಪ್ರಯತ್ನ ನಡೆಸಿದ್ದಾರೆ ಮತ್ತು ಈ ವಿಷಯದಲ್ಲಿ ಹಲವಾರು ಗ್ರಂಥ ಗಳನ್ನು ಬರೆದಿದ್ದಾರೆ. ಆದರೆ ಈ ವಿಷಯದಲ್ಲಿ ನಡೆದಿರುವ ವಾದ ವಿವಾದ ಗಳೆಲ್ಲ ನಿಷ್ಪಲಗಳಾಗಿ ಉಳಿದಿದ್ದು, ಈ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಅತೀ ಹಿಂದಿನದೆನ್ನಬಹುದಾದ ಭಾಷೆಯೂ ಆಧುನಿಕ ಭಾಷೆಯಷ್ಟೇ ಪ್ರಬುದ್ಧ ವಾಗಿರುವಂತೆ ತೋರುವುದೇ ಈ ವೈಫಲ್ಯಕ್ಕೆ ಮುಖ್ಯ ಕಾರಣ.

ಪ್ರಾಣಿಗಳ ಇಲ್ಲವೇ ಪಕ್ಷಿಗಳ ಕೂಗಿನಂತೆ ಮೊತ್ತಮೊದಲಿಗೆ ಕೆಲವೇ ಕೆಲವು ಪದಗಳನ್ನೊಳಗೊಂಡಿದ್ದ ಭಾಷೆ ಆಮೇಲೆ ಒಂದೊಂದಾಗಿ ತನ್ನ ಪದರಾಶಿಯನ್ನು ಬೆಳೆಸಿಕೊಂಡು ಇಂದಿನ ವಿಸ್ತ್ರತವಾದ ರೂಪವನ್ನು ತಾಳಿರಬೇಕೆಂದು ಕೆಲವರು ವಾದಿಸಿರುವರಾದರೂ ಇಂತಹ ವಾದಕ್ಕೆ ಆಧಾರವೇನೂ ದೊರೆತಿಲ್ಲ.

೧೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಗಿರಿಜನರ ಭಾಷೆ

ಗಿರಿಜನರ ಇಲ್ಲವೇ ಕಾಡುಜನರ ಭಾಷೆಗಳನ್ನು ಅರ್ಧಂಬರ್ಧವಾಗಿ ಅಭ್ಯಾಸ ಮಾಡಿದ ಮಿಶನರಿಗಳು ಆ ಭಾಷೆಗಳಲ್ಲಿ ಹಲವಾರು ಕುಂದುಕೊರತೆಗಳನ್ನು ಕಂಡರು. ಅವರ ಮತದಂತೆ, ಈ ಭಾಷೆಗಳಲ್ಲಿ ಪದಗಳ ಸಂಖ್ಯೆ ಕಡಿಮೆ; ಇರುವ ಪದಗಳೆಲ್ಲ ಕಣ್ಣಿಗೆ ಕಾಣುವ ಇಲ್ಲವೇ ಕೈಗೆ ತಗಲುವ ವಸ್ತುಗಳನ್ನಷ್ಟೇ ಸೂಚಿಸಬಲ್ಲವಲ್ಲದೆ ಅವುಗಳ ಗುಣಧರ್ಮಗಳನ್ನು ಸೂಚಿಸಲಾರವು; ಆ ಭಾಷೆಗಳ ಧ್ವನಿಗಳು ತೀರ ಕ್ಲಿಷ್ಟವಾದವುಗಳು, ಮತ್ತು ಅವುಗಳ ವ್ಯಾಕರಣಗಳು ಸಾಕಷ್ಟು ಬಲಿತುಕೊಂಡಿಲ್ಲ, ಇತ್ಯಾದಿ. ಅನಂತರ ನಡೆಸಿರುವ ಆಳವಾದ ಅಭ್ಯಾಸ ಗಳು ಮಾತ್ರ, ಇವೆಲ್ಲಾ ಅಭಿಪ್ರಾಯಗಳೂ ತಪ್ಪೆಂಬುದನ್ನು ಸ್ಪಷ್ಟವಾಗಿ ತೋರಿಸಿ ಕೊಟ್ಟಿವೆ.

ಉದಾಹರಣೆಗಾಗಿ, ಪೇಟೆಯಲ್ಲಿ ವಾಸಿಸುವ ಜನರು ಐವತ್ತೋ, ನೂರೋ ಮರಗಿಡಗಳ ಹೆಸರುಗಳನ್ನು ಅರಿತಿರುವರಾದರೆ, ಗಿರಿಜನರ ಮಾತಿನಲ್ಲಿ ಇಂತಹ ಹೆಸರುಗಳ ಸಂಖ್ಯೆ ಎರಡು ಮೂರು ಸಾವಿರವಾದರೂ ಇರಬಹುದು. ಪದ ಸಂಪತ್ತು ಆಯಾ ಬಾಷೆಯನ್ನು ಬಳಸುವ ಜನರ ಮುಖ್ಯ ಕಸುಬನ್ನಾಧರಿಸಿ ಬೇರೆ ಬೇರೆ ಶಾಖೆಗಳಲ್ಲಿ ವಿಸ್ತರಿಸಿರುತ್ತದೆ. ಬೆಸ್ತರವನೊಬ್ಬನ ನೆನಪಿನಲ್ಲಿರುವಂತಹ ಮೀನುಗಳ ಹೆಸರುಗಳನ್ನು ಮತ್ತು ಅವಕ್ಕೆ ಸಂಬಂಧಿಸಿರುವ ಇತರ ಹೆಸರುಗಳನ್ನು ಸಂಗ್ರಹಿಸಿದರೆ ಒಂದು ಪದಕೋಶವೇ ಸಿದ್ಧವಾದೀತು. ಅಂತೂ ಈ ಒಂದು ವಿಷಯದಲ್ಲಿ ಯಾವ ಭಾಷೆಯನ್ನೂ ಕೀಳೆಂದು ಕರೆಯಲು ಸಾಧ್ಯವಾಗದು.

ವ್ಯಾಕರಣದ ವಿಷಯ ಇನ್ನೊಂದು ತೆರ. ಇದರ ಕ್ಲಿಷ್ಟತೆ ಇಲ್ಲವೇ ಸರಳತೆ ಬೆಳವಣಿಗೆಯ ವಿವಿಧ ಹಂತಗಳನ್ನು ಸೂಚಿಸುವುದೆಂದು ವಾದಿಸ ಹೊರಟ ವಿದ್ವಾಂಸರೆಲ್ಲ ಒಂದಕ್ಕೊಂದು ವಿರುದ್ಧವಾದ ಹೇಳಿಕೆಗಳನ್ನು ಕೊಟ್ಟು ನಗೆ ಗೀಡಾಗಿದ್ದಾರೆ. ಸಂಸ್ಕೃತದಂತೆ ತೀರ ಕ್ಲಿಷ್ಟವಾದ ರೂಪಾವಳಿಗಳನ್ನು ತೋರಿಸುವ ಭಾಷೆಗಳೇ ಬೆಳವಣಿಗೆಯ ತುತ್ತತುದಿಯನ್ನು ಮುಟ್ಟಿದವುಗಳೆಂದು ಹೇಳು ವವರನ್ನು ಸಂಸ್ಕೃತಕ್ಕಿಂತಲೂ ನಾಲ್ಕು ಪಾಲು ಜಾಸ್ತಿ ರೂಪಾವಳಿಗಳನ್ನು ತೋರಿಸುವ ಗಿರಿಜನರ ಭಾಷೆಗಳು ದಂಗುಗೊಳಿಸಿವೆ.

ನಾಗರಿಕರೆನ್ನಿಸುವ ಇಂಗ್ಲಿಷ್, ಫ್ರೆಂಚ್ ಮೊದಲಾದ ಜನಾಂಗಗಳ ಭಾಷೆ ಗಳಿಗೆ ಈ ವಿಕಾಸವಾದದಲ್ಲಿ ಬಹಳ ಕೆಳಗಿನ ಸ್ಥಾನ ದೊರೆತೀತು! ಯಾವ ರೀತಿಯ ರೂಪಾವಳಿಗಳನ್ನೂ ತೋರಿಸದ ‘ಸುಲಭ’ವಾದ ಭಾಷೆಗಳೇ ಬೆಳವಣಿಗೆಯ ತುತ್ತತುದಿಯನ್ನು ಮುಟ್ಟಿದವುಗಳೆಂದು ವಾದಿಸಿದಲ್ಲಿ, ಇಲ್ಲೂ ನಾಗರಿಕರ ಭಾಷೆಗಳನ್ನು ಮೀರಿ ನಿಲ್ಲಬಲ್ಲ ಗಿರಿಜನರ ಭಾಷೆಗಳಿವೆ.

ವ್ಯಾಕರಣಗಳು ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿವೆಯೆಂದು ಹೇಳಿ, ಇದರಲ್ಲಿ ಬೇರೆ ಬೇರೆ ವ್ಯಾಕರಣಗಳ ಸಾಪೇಕ್ಷ ಸ್ಥಾನವೇನೆಂಬುದನ್ನು ನಿರ್ಧರಿಸ ಹೊರಟ ವಿದ್ವಾಂಸರ ಪ್ರಯತ್ನವೂ ಹೀಗೆ ಸಂಪೂರ್ಣವಾಗಿ ನಿಷ್ಪಲಗೊಂಡಿದೆ ಯೆಂದು ಹೇಳಬಹುದು. ಇದುವರೆಗೆ ಭಾಷಾವಿಜ್ಞಾನಿಗಳ ಅಭ್ಯಾಸಕ್ಕೊಳಗಾ

೧೪


ಭಾಷೆಗಳ ಹುಟ್ಟು-ಸಾವು

ಗಿರುವ ಎಲ್ಲಾ ಸಾಹಜಿಕ ಭಾಷೆಗಳ ವ್ಯಾಕರಣಗಳೂ ಪರ್ಯಾಪ್ತಗಳಾಗಿಯೇ ಇರುವುದು ಕಂಡುಬಂದಿದೆ. ಇವು ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಿರ ಬಹುದು, ಆದರೆ, ಈ ಬದಲಾವಣೆಯನ್ನು ಬೆಳವಣಿಗೆಯ ಹಂತಗಳೆಂದು ಕರೆಯಲು ಯಾವ ಆಧಾರವೂ ಇದುವರೆಗೆ ದೊರಕಿಲ್ಲ.

ಭಾಷೆ ಮತ್ತು ವ್ಯಾಕರಣ

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ತಾಯ್ನುಡಿಯನ್ನು ಕಲಿಯುವಾಗ ಒಡಹುಟ್ಟಿದವರ, ತಾಯಿತಂದೆಯರ, ಮತ್ತು ಆಟದ ಗೆಳೆಯರ ಮಾತುಗಳನ್ನು ಕೇಳಿ ಕೇಳಿ, ಅವನ್ನು ಅರ್ಥ ಮಾಡಿಕೊಳ್ಳಲು ಮತ್ತು ಇತರರಿಗೆ ಅರ್ಥವಾಗುವಂತೆ ಅಂತಹವೇ ಮಾತು ಗಳನ್ನು ಸೃಷ್ಟಿಸಿಕೊಳ್ಳಲು ಅತ್ಯಂತ ಪರ್ಯಾಪ್ತವಾದ ‘ವ್ಯಾಕರಣ’ವೊಂದನ್ನು ರಚಿಸಿಕೊಳ್ಳಬೇಕಾಗುತ್ತದೆ. ಈ ವ್ಯಾಕರಣವೇ ಆ ವ್ಯಕ್ತಿಯ ಭಾಷಾಜ್ಞಾನವೆಂದು ವಿದ್ವಾಂಸರ ಅಭಿಪ್ರಾಯ. ಭಾಷೆಯನ್ನಾಡುವ ವ್ಯಕ್ತಿ ಪಂಡಿತನಿರಲಿ, ಪಾಮರ ನಿರಲಿ, ನಾಗರಿಕನಿರಲಿ, ಅನಾಗರಿಕನಿರಲಿ, ಇಂತಹ ಪರಿಪೂರ್ಣವಾದ ವ್ಯಾಕರಣದ ಸಹಾಯವಿಲ್ಲದೆ ಆತನಿಗೆ ತನ್ನ ಭಾಷೆಯನ್ನು ಉಪಯೋಗಿಸಲು ಸಾಧ್ಯವಾಗದು.

ಆದರೆ, ಇಂತಹದೊಂದು ವ್ಯಾಕರಣಜ್ಞಾನ ತನ್ನಲ್ಲಿದೆಯೆಂದಾಗಲಿ, ಅದರ ಸ್ವರೂಪವೆಂತದೆಂದಾಗಲಿ ಅವನಿಗೆ ತಿಳಿದಿಲ್ಲ. ಅವನು ಮಾತನಾಡುವಾಗ ನೂರಾರು ವ್ಯಾಕರಣ ನಿಯಮಗಳು ಬಳಕೆಯಾಗುವುವಾದರೂ, ಆ ನಿಯಮಗಳು ಎಂತಹವೆಂಬುದನ್ನು ಆತ ವಿವರಿಸಿ ಹೇಳಲಾರ. ಮಾತನಾಡುವಾಗ ಅವನ ಅರಿವಿಲ್ಲದಂತೆಯೇ ಅವನ ಸಹಾಯಕ್ಕೆ ಬರುವಂತೆ ಈ ವ್ಯಾಕರಣ ಜ್ಞಾನ ಅವನ ಮಿದುಳಿನಲ್ಲಿ ಅಡಗಿ ಕುಳಿತಿದೆ.

ತನ್ನ ಭಾಷೆಯಲ್ಲಿ ಇದುವರೆಗೆ ಕೇಳದೇ ಇದ್ದಂತಹ ಮಾತುಗಳನ್ನು ರಚಿಸಿ ಆಡಿದರೂ ಆತ ಅರ್ಥಮಾಡಿಕೊಳ್ಳಬಲ್ಲ, ಮತ್ತು ಅಂತಹ ಮಾತುಗಳನ್ನು ಆತ ತಾನೇ ರಚಿಸಿಕೊಳ್ಳಬಲ್ಲ ಎಂಬ ವಿಷಯದಿಂದ ಇಂತಹದೊಂದು ವ್ಯಾಕರಣಜ್ಞಾನ ಅವನಲ್ಲಿ ಇರಲೇಬೇಕೆಂದು ನಾವು ಊಹಿಸಿಕೊಳ್ಳಬೇಕಾಗುತ್ತದೆ. ಈ ವ್ಯಾಕರಣ ಅಪೂರ್ಣವಾಗಿರಲಾರದು.

೧.೨ ಭಾಷೆಗಳ ಹುಟ್ಟು-ಸಾವು

ಮಗುವೊಂದು ಹುಟ್ಟಿ ಬೆಳೆಯುತ್ತಿರುವಂತೆ ಅದರ ತೊದಲು ನುಡಿಯಾಗಿ ಹುಟ್ಟಿ, ಬೆಳೆದು, ಅದು ಮುದುಕನಾಗಿ ಸಾಯುವಾಗ ಇಲ್ಲವೇ ಬೇರಾವುದೋ ಕಾರಣ ದಿಂದ ಮೂಕನಾಗುವಾಗ ನಶಿಸಿ ಹೋಗುವಂತಹ ಭಾಷೆ, ಒಂದು ವಿಧದಲ್ಲಿ ಅದಕ್ಕೆ ಆಧಾರವಾಗಿರುವಂತಹ ವ್ಯಕ್ತಿಯೊಂದಿಗೆ ಹುಟ್ಟಿ ಸಾಯುವುದೆಂದೂ

೧೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವಾದಿಸಬಹುದು. ಆದರೆ, ಆ ವ್ಯಕ್ತಿಯಿಂದ ಅವನ ಮಕ್ಕಳಿಗೆ, ಅವರಿಂದ ಅವರ ಮಕ್ಕಳಿಗೆ - ಹೀಗೆ ಅನವರತವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗುವ ಇದೇ ಭಾಷೆ ಇನ್ನೊಂದು ವಿಧದಲ್ಲಿ ನಶ್ವರವಾಗಿರುವುದೆಂದೂ ವಾದಿಸಬಹುದು. ಭಾಷೆ ಯೊಂದರ ಹುಟ್ಟು-ಸಾವುಗಳ ಪ್ರಶ್ನೆ ನಿಜಕ್ಕೂ ಇವೆರಡು ವಾದಗಳ ನಡುವೆ ನಿಂತಿದೆ.

ಯಾವುದೇ ಒಂದು ಭಾಷೆಯನ್ನು ನಶ್ವರವಾಗಿಸುವಂತಹ ಒಂದು ಸಮಾಜದ ನಿರಂತರತೆ ಸಾವು-ನೋವುಗಳಿಂದಾಗಿ ಕಡಿದು ಹೋದಲ್ಲಿ, ಆ ಸಮಾಜದೊಡನೆ ಅದರ ಭಾಷೆಯೂ ನಷ್ಟವಾಗಿ ಹೋಗಲು ಸಾಧ್ಯವಿದೆಯೆಂಬುದನ್ನು ಗಮನಿಸ ಬೇಕು. ಉದಾಹರಣೆಗಾಗಿ, ಅಮೆರಿಕದ ಮೂಲ ನಿವಾಸಿಗಳಲ್ಲಿ ಬಳಕೆಯಲ್ಲಿದ್ದ ಹಲವಾರು ಭಾಷೆಗಳು ಆ ಮೂಲನಿವಾಸಿಗಳು ನಿರ್ನಾಮಗೊಂಡಾಗ ಅವರೊಡ ನೆಯೇ ನಷ್ಟವಾಗಿರುವುದು ಕಂಡುಬರುತ್ತದೆ. ಆಸ್ಟ್ರೇಲಿಯಾದ ಮೂಲ ನಿವಾಸಿ ಗಳಲ್ಲೂ ಇದೇ ಪರಿಸ್ಥಿತಿ ನಡೆದಿದೆ.

ಭಾರತದಲ್ಲೂ ಹಲವಾರು ಗುಡ್ಡಕಾಡುಗಳಲ್ಲಿ ವಾಸಿಸುತ್ತಿದ್ದ ಜನರ ಭಾಷೆ ಗಳು ಈ ರೀತಿ ನಷ್ಟವಾಗಿರುವುದು, ಮತ್ತು ನಷ್ಟವಾಗುತ್ತಿರುವುದು ಕಂಡು ಬರುತ್ತಿದೆ. ಒಂದು ಸಮಾಜವು ತನ್ನ ತಾಯ್ನುಡಿಯನ್ನು ಬಿಟ್ಟುಕೊಟ್ಟು ಬೇರೊಂದು ನುಡಿಯನ್ನು ಬಳಸಲು ಪ್ರಾರಂಭಿಸಿದಾಗಲೂ ಇದೇ ಫಲಿತಾಂಶ ಲಭಿಸುತ್ತದೆ. ಉದಾಹರಣೆಗಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಸಿಸುವ ಕೊರಗರು ತಮ್ಮದೇ ಆದ ಕೊರಗ ಎಂಬ ಭಾಷೆಯನ್ನಾಡುತ್ತಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ವಾಸಿಸುವ ಕೊರಗರೆಲ್ಲ ತಮ್ಮ ಈ ಕೊರಗ ಭಾಷೆಯನ್ನು ಬಿಟ್ಟುಕೊಟ್ಟು ತುಳು ಭಾಷೆಯನ್ನೇ ತಮ್ಮ ತಾಯ್ನುಡಿ ಯನ್ನಾಗಿ ಅಳವಡಿಸಿಕೊಂಡಿದ್ದಾರೆ. ಉಳಿದವರೂ ಇದೇ ದಾರಿ ಹಿಡಿದಲ್ಲಿ, ಈ ಕೊರಗ ಭಾಷೆ ಇನ್ನೊಂದೆರಡು ತಲೆಮಾರುಗಳಲ್ಲಿ ಸಂಪೂರ್ಣ ವಾಗಿ ನಶಿಸಿ ಹೋಗಬಲ್ಲುದು.

ತಾಯ್ನುಡಿ

ಭಾಷೆಗಳಿಗೆ ಕಲ್ಪಿತವಾಗಿರುವ ಇನ್ನೊಂದು ವಿಧದ ನಾಶ ಇಲ್ಲವೇ ಸಾವಿಗೆ ಸಂಸ್ಕೃತ ಭಾಷೆ ಅತ್ಯುತ್ತಮ ಉದಾಹರಣೆ. ಸಾಮಾನ್ಯವಾಗಿ ಪ್ರತಿಯೊಂದು ಭಾಷೆಯಲ್ಲೂ ಹಲವಾರು ಪ್ರಭೇದಗಳು (ಉಪಭಾಷೆಗಳು) ಬಳಕೆಯಲ್ಲಿರುತ್ತವೆ. ಇವು ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳಿರಬಹುದು, ಇಲ್ಲವೇ ಬೇರೆ ಬೇರೆ ಜಾತಿಗಳಲ್ಲಿ ಅಥವಾ ಪಂಗಡಗಳಲ್ಲಿ ಪ್ರಚಲಿತವಾಗಿರುವ ಪ್ರಭೇದಗಳಿರಬಹುದು. ಇಂತಹ ಪ್ರಭೇದಗಳಲ್ಲಿ ಯಾವುದಾದರೂ ಒಂದು ಪ್ರಭೇದವು ಬರವಣಿಗೆಯ ಪ್ರಭೇದವೆಂದು ಪರಿಗಣಿಸಲ್ಪಟ್ಟು, ಸಾಹಿತ್ಯ ಕೃತಿ ಗಳಲ್ಲಿ ಬಳಕೆಯಾಗುತ್ತದೆ.

೧೬


ಭಾಷೆಗಳ ಹುಟ್ಟು-ಸಾವು

ಆಡುನುಡಿಯಾಗಿ ಬಳಕೆಯಾಗುವ ಪ್ರಭೇದಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತ ನಡೆಯುವುವಾದರೂ, ಈ ರೀತಿ ಬರವಣಿಗೆಯಲ್ಲಿ ಬಳಕೆಯಾಗುವ ಪ್ರಭೇದ ಮಾತ್ರ, ಬೇರೆ ಬೇರೆ ಕಾರಣಗಳಿಂದಾಗಿ, ಕೆಲವೊಮ್ಮೆ ಬಹಳ ಕಾಲದ ವರೆಗೂ ಜಾಸ್ತಿ ಬದಲಾಗದೆ ಉಳಿಯುವುದಿದೆ. ಆ ಪ್ರಭೇದದಲ್ಲಿ ಉತ್ತಮವಾದ ಸಾಹಿತ್ಯ ಕೃತಿಗಳು ರಚಿತವಾಗಿದ್ದು, ಅಂತಹ ಕಾರ್ಯಕ್ಕೆ ಆ ಪ್ರಭೇದವನ್ನು ಬಳಸುವುದು ಅನಿವಾರ್ಯವೆಂಬ ಅಭಿಪ್ರಾಯ ಬೆಳೆದು ಬರುವುದು ಇಂತಹ ಕಾರಣಗಳಲ್ಲಿ ಮುಖ್ಯವಾದುದು.

ಕಾಲಕ್ರಮೇಣ, ಆಡುನುಡಿ ಮತ್ತು ಈ ಬರಹದ ಪ್ರಭೇದಗಳ ನಡುವೆ ಅವು ಬೇರೆ ಬೇರೆ ಭಾಷೆಗಳೆನ್ನುವಲ್ಲಿವರೆಗೂ ವ್ಯತ್ಯಾಸಗಳೇರ್ಪಡುತ್ತವೆ, ಮತ್ತು ಕ್ರಾಂತಿಕಾರಿಗಳ ಕೈಯಲ್ಲಿ ಈ ಆಡುನುಡಿಯೂ ಬರಹಗಳಲ್ಲಿ ಬಳಕೆಯಾಗ ತೊಡಗುತ್ತದೆ. ಇದರ ಪರಿಣಾಮವಾಗಿ, ಹೆಚ್ಚಿನವರಿಗೂ ಸುಲಭದಲ್ಲಿ ಅರ್ಥ ವಾಗುವ ಆಡುನುಡಿ ಹಳೆಯ ಕಾಲದಿಂದಲೂ ಪ್ರಚಾರದಲ್ಲಿದ್ದ ಬರಹದ ಭಾಷೆಯ ಸ್ಥಾನವನ್ನು ಆಕ್ರಮಿಸತೊಡಗುತ್ತದೆ. ಈ ಆಕ್ರಮಣ ಸಂಪೂರ್ಣ ವಾದಾಗ, ಎಂದರೆ ಹಳೆಯ ಬರಹದ ಪ್ರಭೇದವನ್ನು ಬಳಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ, ಇಲ್ಲವೇ ಇಲ್ಲವೆನ್ನುವಂತಾದಾಗ, ಅದು ‘ಸತ್ತಿತು’ ಎನ್ನುವ ಸ್ಥಿತಿ ಬಂದೊದಗುತ್ತದೆ.

ಸಂಸ್ಕೃತದ ಸ್ಥಾನವನ್ನು ಅದರ ಆಡುನುಡಿಗಳಾದ ಪ್ರಾಕೃತ, ಹಿಂದಿ, ಮರಾಠಿ, ಗುಜರಾತಿ ಮೊದಲಾದವುಗಳು ಆಕ್ರಮಿಸಿಕೊಂಡು, ಅದನ್ನು ಬರಹದಲ್ಲಿ (ಸಾಹಿತ್ಯ ರಚನೆಯಲ್ಲಿ) ಬಳಸುವವರ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ ಯೆಂಬುದನ್ನೇ ಅದು ‘ಸಾವ’ನ್ನಪ್ಪುತ್ತಿದೆಯೆಂದು ವರ್ಣಿಸಬಹುದು. ಇದು ಸಂಸ್ಕೃತ ಭಕ್ತರಿಗೆ ಅಪ್ರಿಯವಾಗಿ ಕಾಣಿಸಬಹುದಾದರೂ ನಿಜವಾದ ಸಂಗತಿ.

ಭಾಷೆಯ ಹುಟ್ಟು

ಭಾಷೆಗಳು ಹೇಗೆ ಸತ್ತುಹೋಗಬಲ್ಲುವೆಂಬುದನ್ನು ವಿವರಿಸಿದಷ್ಟು ಸುಲಭವಾಗಿ ಅವು ಹೇಗೆ ಹುಟ್ಟಿಕೊಳ್ಳಬಲ್ಲುವೆಂಬುದನ್ನು ವಿವರಿಸಲು ಸಾಧ್ಯವಾಗದು. ಒಂದು ಭಾಷೆಯನ್ನು ಬಳಸುತ್ತಿರುವ ಸಮಾಜವು ಬೇರೆ ಬೇರೆ ಕಾರಣಗಳಿಂದಾಗಿ ಎರಡು ಭಿನ್ನ ಭಿನ್ನವಾದ ಸಮಾಜಗಳಾಗಿ ಒಡೆದುಕೊಂಡಾಗ, ಅದು ಬಳಸುವ ಭಾಷೆಯೂ ಆ ಎರಡು ಸಮಾಜಗಳಲ್ಲಿ ಬೇರೆ ಬೇರೆ ದಿಕ್ಕುಗಳಲ್ಲಿ ಬದಲಾಗುತ್ತ ನಡೆದು, ಕೊನೆಗೆ ಎರಡು ಬೇರೆ ಬೇರೆ ಭಾಷೆಗಳಾಗಿ ಒಡೆದುಕೊಳ್ಳಲು ಸಾಧ್ಯವಿದೆ. ಆದರೆ, ಇದರಿಂದಾಗಿ ಒಂದು ಭಾಷೆ ಎರಡಾಯಿತೆಂದು ಹೇಳ ಬಹುದಲ್ಲದೆ, ಹೊಸದೊಂದು ಭಾಷೆ ಹುಟ್ಟಿಕೊಂಡಿತೆಂದು ವಾದಿಸುವುದು ಕಷ್ಟ ಸಾಧ್ಯ.

ಭೂಮಿಯ ಹುಟ್ಟನ್ನು ಮತ್ತು ಅದರಲ್ಲಿರುವ ಜೀವರಾಶಿಗಳ ವಿಕಾಸವನ್ನು ಸುಸಂಬದ್ಧವಾಗಿ ಕಲ್ಪಿಸಿಕೊಳ್ಳಲು ಆತುರರಾಗಿರುವಂತಹ ಜೀವ ವಿಜ್ಞಾನಿಗಳಿಗೆ

೦೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮನುಷ್ಯನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಭಾಷೆಯೆಂಬ ಹೆಸರಿನ ಈ ವಿಶಿಷ್ಟ ವಾದ ಸಂಪರ್ಕ ಸಾಧನವು ಹೇಗೆ ಹುಟ್ಟಿಕೊಂಡಿರಬೇಕೆಂಬುದನ್ನು ಸರಿಯಾಗಿ ಪ್ರತಿಪಾದಿಸಲು ಸಾಧ್ಯವಾಗುವಲ್ಲಿವರೆಗೂ ಸಮಾಧಾನವಿಲ್ಲ. ಈ ವಿಷಯದಲ್ಲಿ ಹುಟ್ಟಿಕೊಂಡಿರುವ ಸಿದ್ಧಾಂತಗಳ ಮತ್ತು ಅವುಗಳ ಮೇಲೆ ಬರೆಯಲಾಗಿರುವ ಪುಟಗಳ ಸಂಖ್ಯೆಯೂ ಈ ವಿಷಯವೆಷ್ಟು ಜನಪ್ರಿಯವಾಗಿತ್ತೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಮನುಷ್ಯನಲ್ಲಿ ಮಾತ್ರವೇ ಕಾಣಿಸುವ ಈ ಭಾಷೆ ಮನುಷ್ಯನು ವಿಕಾಸ ಗೊಂಡು ಇತರ ಜೀವಿಗಳಿಂದ ಬೇರ್ಪಡುತ್ತಿದ್ದ ಸಮಯದಲ್ಲಿ ಹುಟ್ಟಿಕೊಂಡಿರ ಬೇಕೆಂದೇನೋ ವಾದಿಸಬಹುದು. ಆದರೆ ಭಾಷೆ ಬಾರದ ಇತರ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಯಾವ ರೀತಿಯ ಸಂಪರ್ಕಸಾಧನಗಳೂ ಈ ಹುಟ್ಟು ಹೇಗಿರ ಬಹುದೆಂಬುದನ್ನು ತಿಳಿಯಲು ಸಹಾಯಕವಾಗುತ್ತಿಲ್ಲ.

ಭಾಷಾವಿಜ್ಞಾನಿಗಳೂ ಈ ವಿಷಯದ ಮೇಲೆ ಬಹಳಷ್ಟು ವಾದ ವಿವಾದ ಗಳನ್ನು ನಡೆಸಿದ್ದಾರೆ. ಮಕ್ಕಳಲ್ಲಿ, ಮುದುಕರಲ್ಲಿ, ಸಂತ್ರಸ್ತರಲ್ಲಿ, ಕಿವುಡರಲ್ಲಿ, ಭಾಷೆಯೇ ಬಾರದ ಪ್ರಾಣಿಗಳಲ್ಲಿ – ಹೀಗೆ ಎಲ್ಲಾ ಕಡೆಗಳಲ್ಲೂ ಭಾಷೆಯ ಉಗಮವನ್ನರಿಯಲು ಸುಳುಹುಗಳೇನಾದರೂ ದೊರೆಯುವುದೇ ಎಂಬುದಾಗಿ ಪ್ರಯತ್ನಪಟ್ಟು ಹುಡುಕಿದ್ದಾರೆ. ಮತ್ತು ಇವೆಲ್ಲಾ ಪ್ರಯತ್ನಗಳೂ ನಿಷ್ಫಲಗಳಾಗು ತಿರುವುದನ್ನು ಕಂಡು, ಈ ಕೆಲಸ ಭಾಷಾವಿಜ್ಞಾನಿಗಳದೇ ಅಲ್ಲವೆಂದು, ಅಥವಾ ಇದನ್ನು ಪೂರ್ತಿಗೊಳಿಸಲು ಸಾಧ್ಯವೇ ಇಲ್ಲವೆಂದು ಹಲವು ಮಂದಿ ವಿದ್ವಾಂಸರು ವಾದಿಸಿದ್ದಾರೆ. ಈ ರೀತಿಯ ನಿರಾಶಾವಾದಕ್ಕೆ ಕಾರಣವಿಲ್ಲ ದಿಲ್ಲ.

ಆಧಾರಗಳ ಕೊರತೆ

ಇಂದು ಬಳಕೆಯಲ್ಲಿರುವ ಭಾಷೆಗಳ ಆಧಾರದ ಮೇಲೆ, ಮತ್ತು ನಮಗೆ ದೊರೆತಿರುವ ಅತೀ ಪ್ರಾಚೀನವಾದ ಭಾಷಾವಿಷಯಕ ಅವಶೇಷಗಳ ಆಧಾರದ ಮೇಲೆ, ಹಲವಾರು ಮೂಲಭಾಷೆಗಳನ್ನು ಕಲ್ಪಿಸಲಾಗಿದೆ. ಆದರೆ ಇವುಗಳಲ್ಲಿ ಯಾವುದೂ ಆಧುನಿಕ ಭಾಷೆಗಳಿಗಿಂತ ಅವುಗಳ ಧ್ವನಿಯಲ್ಲಾಗಲಿ, ವ್ಯಾಕರಣ ದಲ್ಲಾಗಲಿ ಸ್ವಲ್ಪವೂ ಭಿನ್ನವಾಗಿಲ್ಲ. ಭಾಷೆಯ ಉಗಮವು ಇಂತಹ ಕಲ್ಪಿತ ಮೂಲಗಳಿಂದ ಮಿಲಿಯಗಟ್ಟಲೆ ವರ್ಷಗಳಷ್ಟು ಹಿಂದಿನದಾಗಿರಬೇಕೆಂಬುದೇ ಇದಕ್ಕೆ ಮುಖ್ಯ ಕಾರಣವಿರಬಹುದು. ಆ ಉಗಮ ಹೇಗಿದ್ದಿರಬಹುದು ಎಂಬು ದನ್ನು ಊಹಿಸುವುದಕ್ಕೂ ಕೂಡ ಈ ಕಲ್ಪಿತ ಮೂಲಗಳಲ್ಲಿ ಸೂಚನೆ ದೊರೆಯು ತ್ತಿಲ್ಲ.

ಪ್ರಪಂಚದಲ್ಲಿರುವ ಬೇರೆ ಬೇರೆ ಭಾಷೆಗಳನ್ನು ತುಲನಾತ್ಮಕವಾಗಿ ಅಭ್ಯಸಿಸಿ, ಭಾಷಾವಿಕಾಸದ ಬೇರೆ ಬೇರೆ ಹಂತಗಳಲ್ಲಿ ಅವನ್ನು ಹಂಚಿಕೊಳ್ಳಲು ನಡೆಸಿದ ಪ್ರಯತ್ನಗಳೂ ಇದೇ ರೀತಿಯಲ್ಲಿ ನಿಷ್ಪಲಗೊಂಡಿವೆ. ಬೆಳೆದಂತೆಲ್ಲ ಒಂದು ಭಾಷೆಯ ವ್ಯಾಕರಣ ಸಂಸ್ಕೃತ ಭಾಷೆಯಲ್ಲಿರುವಂತೆ ಕ್ಲಿಷ್ಟವಾಗುತ್ತ ನಡೆಯುವು

೧೮


ಭಾಷೆಗಳ ಹುಟ್ಟು-ಸಾವು

ದೆಂದು ಭಾವಿಸುವವರಿಗೆ ಸಂಸ್ಕೃತಜನ್ಯಗಳಾದ ಹಿಂದಿ, ಮರಾಠಿ ಮೊದಲಾ ದವುಗಳ ಇಲ್ಲವೇ ಲ್ಯಾಟಿನ್‌ನಿಂದ ಬೆಳೆದು ಬಂದ ಫ್ರೆಂಚ್, ಸ್ಪ್ಯಾನಿಷ್ ಮೊದಲಾದವುಗಳ ವ್ಯಾಕರಣಗಳು ಲಲಿತವಾಗುತ್ತಿರುವುದು ದೊಡ್ಡ ತಲೆ ನೋವನ್ನೇ ತಂದೊಡ್ಡಿದೆ.

ಈ ವಾದಕ್ಕೆ ವಿರುದ್ಧವಾಗಿ, ಭಾಷೆ ಬೆಳೆದಂತೆಲ್ಲ ಅದರ ವ್ಯಾಕರಣ ಲಲಿತ ವಾಗುತ್ತಾ ಹೋಗುತ್ತದೆಯೆಂದು ವಾದಿಸುವವರಿಗೂ ಎದುರು ನಿಲ್ಲಬಲ್ಲ ನಿದರ್ಶನಗಳು ಹಲವಿವೆ. ಕ್ಲಿಷ್ಟ-ಲಲಿತ ಎಂಬಂತಹ ವಿಶೇಷಣಗಳು ಭಾಷೆಗಳಿಗೆ ಅನ್ವಯಿಸುವಂತಹವೇ ಅಲ್ಲವೆಂಬುದು ಆಧುನಿಕ ಸಿದ್ದಾಂತವಾಗಿರುವಾಗ, ಈ ಮೇಲಿನ ವಾದಗಳಿಗೆಲ್ಲ ನಿಜಕ್ಕೂ ಯಾವ ಬೆಲೆಯೂ ಇಲ್ಲ.

ಭಾಷೆಯ ಉಗಮದ ಕುರಿತು ವಾದವಿವಾದಗಳನ್ನು ನಡೆಸುತ್ತಿರುವವರಲ್ಲಿ ಹೆಚ್ಚಿನವರೂ ಅದು ಮೊತ್ತಮೊದಲಿಗೆ ಅತ್ಯಂತ ರೂಕ್ಷ ರೂಪದಲ್ಲಿದ್ದು, ಕ್ರಮೇಣ ಅದನ್ನಾಡುವ ಜನ ಹೆಚ್ಚು ಹೆಚ್ಚು ನಾಗರಿಕರಾದಂತೆ ಅವರ ಭಾಷೆಯೂ ಮೆಲ್ಲಮೆಲ್ಲನೆ ಪರಿಷ್ಕೃತಗೊಳ್ಳುತ್ತ ಇಂದಿನ ವಿಶಿಷ್ಟ ರೂಪವನ್ನು ತಳೆದಿರ ಬೇಕೆಂದು ಭಾವಿಸುತ್ತಾರೆ. ಭಾಷೆಯ ಉಗಮವನ್ನು ಅನುಕರಣಾತ್ಮಕ ಪದ ಗಳಿಂದ, ಪ್ರಾಣಿಗಳ ಕೂಗುಗಳಿಂದ, ಇಲ್ಲವೇ ಬೇರೆ ಅತಿ ಸರಳವಾದ ಪದ ಗಳಿಂದ ಸಾಧಿಸಲು ಇವರು ಪ್ರಯತ್ನಿಸುತ್ತಿರುವುದಕ್ಕೆ ಇದೇ ಮುಖ್ಯ ಕಾರಣ. ಆದರೆ, ಜೀವರಾಶಿಗಳ ಮತ್ತು ಅವುಗಳ ವಿಶೇಷಗುಣಗಳ ವಿಕಾಸವು ಈ ರೀತಿ ಸಾವಧಾನವಾಗಿ, ಸ್ವಲ್ಪ ಸ್ವಲ್ಪವೇ ಬದಲಾಗುತ್ತ ನಡೆದಿರಬೇಕೆಂದು ವಾದಿಸುವು ದಕ್ಕೆ ಇದುವರೆಗೆ ಯಾವ ಆಧಾರವೂ ದೊರೆತಿಲ್ಲ.

ದೈವದತ್ತವಾದ ವರ

ಯಾವುದೇ ಒಂದು ಜೀವಿಯ ಆಂತರಿಕ ರಚನೆಯಲ್ಲಿ ಇದ್ದಕ್ಕಿದ್ದಂತೆ ವಿಶಿಷ್ಟವಾದ ಬದಲಾವಣೆ ನಡೆದು, ಅದು ಬೆಳೆದುಬರುವಾಗ ಹೊಸ ಹೊಸ ಚಾತುರ್ಯ ಗಳನ್ನು ಕೈವಶಮಾಡಿಕೊಳ್ಳುವಂತಹ ನವೀನವಾದೊಂದು ಶಕ್ತಿಯನ್ನು ಪಡೆದು ಕೊಳ್ಳಲು ಸಾಧ್ಯವಿದೆ; ಮತ್ತು ಮಾನವನ ವಿಕಾಸದಲ್ಲಾದ ಇಂತಹದೇ ಒಂದು ಆಂತರಿಕ ಬದಲಾವಣೆಯ ಫಲವಾಗಿ ಭಾಷೆಯೂ ಹುಟ್ಟಿಕೊಂಡಿರಬಹುದೆಂದು ಕೆಲವರು ಸಂಶೋಧಕರು ಅಭಿಪ್ರಾಯಪಡುತ್ತಾರೆ.

ಉಣ್ಣುವುದು, ನಡೆಯುವುದು ಮೊದಲಾದ ಇತರ ಕಾರ್ಯಗಳಂತೆ ಭಾಷೆಯೂ ಸಾಹಜವಾಗಿ, ವ್ಯಕ್ತಿಯೊಬ್ಬನ ಬೆಳವಣಿಗೆಯ ಅಂಗವಾಗಿ ಮೂಡಿ ಬರುವಂತಹದು, ಅದನ್ನು ಯಾರೂ ಪ್ರಯತ್ನ ಪೂರ್ವಕವಾಗಿ ಕಲಿಯಬೇಕಾಗಿಲ್ಲ ಮತ್ತು ಕಲಿಸಬೇಕಾಗಿಲ್ಲ ಎಂಬ ಸಿದ್ಧಾಂತವೊಂದನ್ನು ಈ ಅಭಿಪ್ರಾಯವನ್ನಾಧರಿಸಿ ಮಂಡಿಸಲಾಗಿದೆ. ಇದು ನಿಜವಾದರೆ, ಭಾಷೆಯು ಮಾನವನಿರ್ಮಿತವಲ್ಲ, ದೈವ ದತ್ತವಾದುದು ಎನ್ನುವ ಹಳೆಯ ಹೇಳಿಕೆಯು ಒಂದು ಮಟ್ಟಿಗೆ ಸರಿಯೇ ಎಂದೂ ವಾದಿಸಿದಂತಾದೀತು.

೧೬


೧.೩ ಭಾಷೆಗಳಲ್ಲಿ ಹಳತು-ಹೊಸತು

ಕರ್ಣಾಟಕದ ಕರಾವಳಿಯ ಜಿಲ್ಲೆಗಳಲ್ಲಿ ನೆಲೆಸಿರುವ ಹವ್ಯಕ, ಹಾಲಕ್ಕಿ, ಗೌಡ ಮೊದಲಾದ ಕನ್ನಡವನ್ನಾಡುವ ಕೆಲವು ಜನಾಂಗಗಳ ಮಾತನ್ನು ‘ಹಳಗನ್ನಡ’ ವೆಂದು ಕರೆಯುವ ಕ್ರಮವಿದೆ. ಆಧುನಿಕ ಬರಹದ ಕನ್ನಡಕ್ಕೂ ಈ ಜನರ ಮಾತಿಗೂ ನಡುವಿರುವ ವ್ಯತ್ಯಾಸಗಳು ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಿನ ಪಂಪ-ರನ್ನರ ಕಾಲದ ಕನ್ನಡವನ್ನು ನೆನಪಿಗೆ ತರುವುದೇ ಇದಕ್ಕೆ ಕಾರಣ ವಿರಬೇಕು.

ಆದರೆ, ಅತ್ಯಾಧುನಿಕ ಕಾಲದಲ್ಲೇ ರೂಢಿಯಲ್ಲಿರುವ ಪ್ರಚಲಿತ ಭಾಷಾರೂಪ ವೊಂದನ್ನು ಈ ರೀತಿ ‘ಹಳೆ’ಯ ಕಾಲದ್ದೆಂದು ಕರೆಯುವುದರಲ್ಲಿ ಶಾಸ್ತ್ರೀಯ ವಾದಂತಹ ಔಚಿತ್ಯವೇನಾದರೂ ಇದೆಯೇ ಎಂಬುದನ್ನು ವಿಚಾರಿಸುವುದು ಅವಶ್ಯ.

ಪರಿವರ್ತನೆಯ ಫಲ

ಕಾಲದಿಂದ ಕಾಲಕ್ಕೆ ಭಾಷೆಗಳು ಬದಲಾಗುತ್ತಾ ಹೋಗುವುವೆಂಬುದನ್ನು ಎಲ್ಲರೂ ಬಲ್ಲರು. ಹಳೆಗನ್ನಡವಿದ್ದದ್ದು ನಡುಗನ್ನಡವಾಗಿರುವುದು, ಮತ್ತು ನಡುಗನ್ನಡ ವಿದ್ದದ್ದು ಹೊಸಗನ್ನಡವಾಗಿರುವುದು ಇದಕ್ಕೊಂದು ಉತ್ತಮ ಉದಾಹರಣೆ. ಈ ರೀತಿ ಪರಿವರ್ತನೆಗೊಳ್ಳುವಾಗ, ಭಾಷೆಯಲ್ಲಿರುವ ಪದಗಳ ಉಚ್ಚಾರಣೆಯಲ್ಲಿ ಹಲವಾರು ವ್ಯತ್ಯಾಸಗಳು ತೋರಿಬರುತ್ತವೆ. ಇದಲ್ಲದೆ, ಆ ಭಾಷೆಯ ಪದಗಳಲ್ಲಿ ಕೆಲವು ರೂಢಿಯಿಂದ ಬಿದ್ದು ಹೋಗುತ್ತವೆ, ಮತ್ತು ಅವುಗಳ ಸ್ಥಾನದಲ್ಲಿ ಹೊಸ ಹೊಸ ಪದಗಳು ನಿರ್ಮಾಣಗೊಂಡು ರೂಢಿಗೆ ಬರುತ್ತವೆ. ನೆರೆಹೊರೆಯ ಭಾಷೆ ಗಳಿಂದಲೂ ಪದಗಳು ಎರವಲಾಗಿ ಬಂದು ಈ ಭಾಷೆಯಲ್ಲಿ ಸೇರಿಕೊಳ್ಳುತ್ತವೆ.

ಹೀಗೆ ಬೇರೆ ಬೇರೆ ರೀತಿಯಲ್ಲಿ ಉಂಟಾಗುವ ಬದಲಾವಣೆಗಳು ಒಂದು ಪ್ರದೇಶದಲ್ಲಿ ನಡೆದ ಹಾಗೆ ಇನ್ನೊಂದು ಪ್ರದೇಶದಲ್ಲಿ ನಡೆಯುವುದಿಲ್ಲ, ಒಂದು ಜಾತಿಯಲ್ಲಿ ನಡೆದ ಹಾಗೆ ಇನ್ನೊಂದು ಜಾತಿಯಲ್ಲಿ ನಡೆಯುವುದಿಲ್ಲ, ಒಂದು ಪಂಗಡದಲ್ಲಿ ನಡೆದ ಹಾಗೆ ಇನ್ನೊಂದು ಪಂಗಡದಲ್ಲಿ ನಡೆಯುವುದಿಲ್ಲ. ಇದರಿಂದಾಗಿ, ಊರಿನಿಂದ ಊರಿಗೆ, ಜಾತಿಯಿಂದ ಜಾತಿಗೆ, ಮತ್ತು ಪಂಗಡ ದಿಂದ ಪಂಗಡಕ್ಕೆ ಆಡುಮಾತಿನಲ್ಲಿ ವ್ಯತ್ಯಾಸಗಳು ಮೂಡಿಬರುತ್ತವೆ.

ಹಳೆಗನ್ನಡದ ಕಾಲದಿಂದ ಹೊಸಗನ್ನಡದ ಕಾಲಕ್ಕೆ ಬರಬೇಕಾದರೆ, ಇಂತಹ ಹಲವಾರು ಬದಲಾವಣೆಗಳನ್ನು ದಾಟಿಕೊಂಡು ಬರಬೇಕು. ಈ ಬದಲಾವಣೆ ಗಳಲ್ಲಿ ಕೆಲವು ಇಡೀ ಕನ್ನಡ ನಾಡನ್ನೇ ವ್ಯಾಪಿಸಿಕೊಂಡಂತಹವುಗಳು. ಇನ್ನು ಕೆಲವು ಕನ್ನಡ ನಾಡಿನಿಂದ ಹೊರಗೆ ಬೇರೆ ಭಾಷೆಗಳಿಗೂ ಹಬ್ಬಿದವುಗಳು. ಬೇರೆ

೨೦

ಭಾಷೆಗಳಲ್ಲಿ ಹಳತು-ಹೊಸತು

ಕೆಲವು ಕನ್ನಡನಾಡಿನೊಳಗೆ ಒಂದು ಪ್ರದೇಶ, ಜಾತಿ ಇಲ್ಲವೇ ಪಂಗಡಕ್ಕೆ ಮಾತ್ರವೇ ಸಂಬಂಧಿಸಿರುವವುಗಳು.

ಉದಾಹರಣೆಗಾಗಿ, ಹಳೆಗನ್ನಡ ಪದಗಳ ಆದಿಯಲ್ಲಿ ಬರುವ ಪಕಾರವು ಸುಮಾರು ಹತ್ತನೆಯ ಶತಮಾನದಲ್ಲಿ ಹಕಾರವಾಗಿ ಪರಿವರ್ತಿತವಾಯಿತು. ಈ ಬದಲಾವಣೆಯ ಪರಿಣಾಮವಾಗಿ, ಹಳೆಗನ್ನಡದ ಪಾಲ್ ಇಂದು ಹಾಲು ಎಂದಾಗಿದೆ, ಪತ್ತು ಎಂಬುದು ಹತ್ತು ಎಂದಾಗಿದೆ, ಪೋಗು ಎಂಬುದು ಹೋಗು ಎಂದಾಗಿದೆ, ಪೆಣ್ ಎಂಬುದು ಹೆಣ್ಣು ಎಂದಾಗಿದೆ.

ಇದೇ ರೀತಿಯಲ್ಲಿ, ಹಳೆಗನ್ನಡದಲ್ಲಿದ್ದ ಅ-ಳ ಭೇದ ಮತ್ತು ಅ-ರ ಭೇದಗಳು ಹೊಸಗನ್ನಡದಲ್ಲಿ ಇಲ್ಲವಾಗಿವೆ. ಆದರೆ, ಇವುಗಳಲ್ಲಿ ಅ-ರ ಭೇದ ಕನ್ನಡದ ಎಲ್ಲಾ ಪ್ರಭೇದಗಳಲ್ಲೂ ನಷ್ಟವಾಗಿಲ್ಲ. ಸೊಲಿಗರು ಮತ್ತು ಬಡಗರು ಬಳಸುವ ಕನ್ನಡದ ಪ್ರಭೇದಗಳಲ್ಲಿ ಈ ಭೇದ ಇಂದಿಗೂ ಉಳಿದುಕೊಂಡಿದೆ.

ಕರಾವಳಿಯಲ್ಲಿ ನಡೆಯದ ಬದಲಾವಣೆಗಳು

ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಮೇಲೆ ಹೇಳಿರುವ ಬದಲಾವಣೆಗಳೆಲ್ಲ ನಡೆದಿವೆಯಾದರೂ, ಬೇರೆ ಕೆಲವು ಬದಲಾವಣೆಗಳು ನಡೆದಿಲ್ಲ. ಉದಾಹರಣೆ ಗಾಗಿ, ಕನ್ನಡದ ಎರಡು ಲಘು ಅಕ್ಷರಗಳಿರುವ ಪದಗಳ ಮೊದಲನೆಯ ಅಕ್ಷರ ದಲ್ಲಿ ಬರುವ ಎಕಾರ ಮತ್ತು ಒಕಾರಗಳು, ಎರಡನೆಯ ಅಕ್ಷರದಲ್ಲಿ ಇ ಇಲ್ಲವೇ ಉ ಇದ್ದಾಗ, ಅನುಕ್ರಮವಾಗಿ ಇಕಾರ ಮತ್ತು ಉಕಾರಗಳಾಗಿ ಕನ್ನಡದ ಹೆಚ್ಚಿನ ಪ್ರಭೇದಗಳಲ್ಲೂ ಬದಲಾಗಿವೆ.

ಈ ಬದಲಾವಣೆಯ ಪರಿಣಾಮವಾಗಿ, ಹಿಂದೆ ಕೆಡಿ ಎಂದಿದ್ದ ಪದ ಈಗ ಕಿಡಿ ಎಂದಾಗಿದೆ; ಬೆಳೆ ಎಂದಿದ್ದುದು ಬಿಳಿಯಾಗಿದೆ; ಕೊದಿ ಎಂದಿದ್ದುದು ಕುದಿ ಯಾಗಿದೆ, ಮತ್ತು ಸೊರಿ ಎಂದಿದ್ದುದು ಸುರಿಯಾಗಿದೆ.

ಈ ಬದಲಾವಣೆ ಸುಮಾರು ಹತ್ತನೇ ಶತಮಾನದ ಹೊತ್ತಿಗೆ ನಡೆದಿರ ಬೇಕೆಂದು ವಾದಿಸಲು ಶಾಸನಗಳ ಆಧಾರವಿದೆ. ಅದಕ್ಕೆ ಹಿಂದಿನ ಎಂಟು- ಒಂಬತ್ತನೇ ಶತಮಾನದ ಶಾಸನಗಳಲ್ಲಿ ಎದಿರ್ ‘ಇದಿರು’, ಪೊಗು ‘ಪುಗು > ಹುಗು’, ತೊಲು ‘ದನ’, ಪೆರಿಯ ‘ಹಿರಿಯ’ ಮೊದಲಾದ ಪದರೂಪಗಳು ಕಾಣ ಸಿಗುತ್ತಿದ್ದು, ಅವು ಈ ಬದಲಾವಣೆಯನ್ನು ತೋರಿಸುತ್ತಿಲ್ಲ.

ಈ ಬದಲಾವಣೆ ಕರಾವಳಿಯ ಹವ್ಯಕ, ಹಾಲಕ್ಕಿ, ಗೌಡ, ಮೊದಲಾದ ಕನ್ನಡ ಪ್ರಭೇದಗಳಲ್ಲೂ ನಡೆದಿಲ್ಲ. ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ಹೊಸ ಗನ್ನಡದ ಬಿಳಿ ಎಂಬ ಪದ ಬೆಳೆ ಎಂದಿದೆ, ಸುಲಿ ಎಂಬುದು ಸೊಲಿ ಎಂದಿದೆ, ಉಳಿ ಎಂಬುದು ಬಳಿ ಎಂದಿದೆ, ಮತ್ತು ಕುಣಿ ಎಂಬುದು ಕೊಣಿ ಎಂದಿದೆ. ಕರಾವಳಿಯ ಇತರ ಕನ್ನಡ ಪ್ರಭೇದಗಳಲ್ಲೂ ಹೀಗೆಯೇ.

೨೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹಳೆಗನ್ನಡದ ಎರಡು ರೀತಿಯ ಪದಗಳಲ್ಲಿದ್ದ ಅನುಸ್ವಾರ ಹೊಸಗನ್ನಡದ ಎರಡು ಬಗೆಯ ಪದಗಳಲ್ಲಿ ಮಾಯವಾಗಿದೆ. ದಾಂಟು ಎಂಬುದು ದಾಟು ಎಂದಾದುದು, ನಾಂಟು ಎಂಬುದು ನಾಟು ಎಂದಾದುದು, ಇಲ್ಲವೇ ನೂಂಕು ಎಂಬುದು ನೂಕು ಎಂದಾದುದು ಈ ಬದಲಾವಣೆಗಳಲ್ಲಿ ಮೊದಲನೆಯದು; ಮತ್ತು ಅವುಂಕು ಎಂಬುದು ಅವುಕು ಎಂದಾದುದು, ತುಳುಂಕು ಎಂಬುದು ತುಳುಕು ಎಂದಾದುದು, ಕಲಿಂಕು ಎಂಬುದು ಕಲಿಕು ಎಂದಾದುದು, ಇಲ್ಲವೇ ಕಾಡಿಂಗೆ ಎಂಬುದು ಕಾಡಿಗೆ ಎಂದಾದುದು ಎರಡನೆಯದು.

ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಎರಡು ರೀತಿಯ ಪದಗಳಲ್ಲೂ ಅನುಸ್ವಾರ ಲೋಪಗೊಂಡಿಲ್ಲ. ಉದಾಹರಣೆಗಾಗಿ, ಹವ್ಯಕ ಕನ್ನಡದಲ್ಲಿ ದಾಂಟು, ನೂಂಕು, ಕಲಿಂಕು, ಮುರುಂಟು, ಕಾಡಿಂಗೆ ಮೊದಲಾದ ಪದಗಳು ಮತ್ತು ಪದರೂಪಗಳು ರೂಢಿಯಲ್ಲಿವೆ.

ಕರಾವಳಿಯಲ್ಲಿ ನಡೆದ ಬದಲಾವಣೆಗಳು

ಇಂತಹ ಇನ್ನೂ ಕೆಲವು ಬದಲಾವಣೆಗಳು ಹೊಸಗನ್ನಡದಲ್ಲಿ, ಎಂದರೆ ಇವತ್ತಿನ ಬರಹದ ಕನ್ನಡದಲ್ಲಿ ನಡೆದಿದ್ದು, ಕರಾವಳಿಯ ಕನ್ನಡ ಪ್ರಭೇದಗಳಾದ ಹವ್ಯಕ, ಹಾಲಕ್ಕಿ, ಗೌಡ ಮೊದಲಾದವುಗಳಲ್ಲಿ ನಡೆದಿಲ್ಲ. ಹೀಗೆಂದ ಮಾತ್ರಕ್ಕೆ, ಆ ಪ್ರಭೇದಗಳು ‘ಹಳೆಯ’ವೆಂದೇನೂ ಸಿದ್ಧವಾಗುವುದಿಲ್ಲ. ಬರಹದ ಕನ್ನಡದ ಹಾಗೆ, ಮತ್ತು ಮೇಲಿನ ಬದಲಾವಣೆಗಳನ್ನು ತೋರಿಸುವ ಕನ್ನಡದ ಇತರ ಪ್ರಭೇದಗಳ ಹಾಗೆ, ಈ ಕರಾವಳಿಯ ಪ್ರಭೇದಗಳೂ ಇವತ್ತು ಬಳಕೆಯ ಲ್ಲಿರುವಂತಹ ‘ಹೊಸ’ಗನ್ನಡಗಳೇ.

ಇದಲ್ಲದೆ, ಬೇರೆ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ನಡೆದಿದ್ದು, ಬರಹದ ಕನ್ನಡದಲ್ಲಿ ಮತ್ತು ಇತರ ಕನ್ನಡದ ಪ್ರಭೇದಗಳಲ್ಲಿ ನಡೆದಿಲ್ಲ. ಉದಾಹರಣೆಗಾಗಿ, ಪದಾದಿಯ ಚಕಾರ, ಜಕಾರ, ಮತ್ತು ಗಕಾರಗಳ ಅನಂತರ ಬರುವ ಅಕಾರವು ಹವ್ಯಕದ ಹಲವು ಪದಗಳಲ್ಲಿ ಎಕಾರವಾಗಿದೆ, ಆದರೆ ಬರಹದ ಕನ್ನಡದಲ್ಲಿ ಇದು ಬದಲಾಗದೆ ಹಾಗೆಯೇ ಉಳಿದಿದೆ.

ಈ ಬದಲಾವಣೆಯ ಫಲವಾಗಿ, ಹೊಸಗನ್ನಡದ ಚಪ್ಪರ ಎಂಬುದು ಹವ್ಯಕ ದಲ್ಲಿ ಚೆಪ್ಪರ ಎಂಬುದಾಗಿ ಕಾಣಿಸುತ್ತದೆ, ಜರಿ ಎಂಬುದು ಜೆರಿ ಎಂಬುದಾಗಿ ಕಾಣಿಸುತ್ತದೆ, ಮತ್ತು ಗದ್ದೆ ಎಂಬುದು ಗೆದ್ದೆ ಎಂಬುದಾಗಿ ಕಾಣಿಸುತ್ತದೆ.

ಮೂರಕ್ಷರದ ಪದಗಳಲ್ಲಿ ಮೊದಲಿನವೆರಡು ಲಘುವಾಗಿರುವಾಗ ಮೂರನೇ ಅಕ್ಷರ ದ್ವಿತ್ವವಾಗುವುದು ಹವ್ಯಕದಲ್ಲಿ ಕಾಣಿಸುವ, ಮತ್ತು ಬರಹದ ಕನ್ನಡದಲ್ಲಿ ಕಾಣಿಸದಿರುವ ಇನ್ನೊಂದು ಬದಲಾವಣೆ. ಇದರಿಂದಾಗಿ, ಬರಹದ ಕನ್ನಡದ ಹುಡುಕು ಎಂಬ ಪದ ಹವ್ಯಕದಲ್ಲಿ ಹುಡುಕ್ಕು ಎಂಬುದಾಗಿಯೂ, ಒರತೆ ಎಂಬ ಪದ ಒರತ್ತೆ ಎಂಬುದಾಗಿಯೂ, ಮತ್ತು ಹುರುಪು ಎಂಬ ಪದ ಹುರುಪ್ಪು ಎಂಬುದಾಗಿಯೂ ಕಾಣಿಸುತ್ತದೆ.

೨೨


ಭಾಷೆಗಳಲ್ಲಿ ಹಳತು-ಹೊಸತು

ಬಹುವಚನದ ಪ್ರತ್ಯಯ

ಈ ರೀತಿ ಕನ್ನಡದ ಬೇರೆ ಬೇರೆ ಪ್ರಭೇದಗಳು ಅವು ತೋರಿಸುವ ಬದಲಾವಣೆ ಗಳ ಮಟ್ಟಿಗೆ ಬೇರೆ ಬೇರಾಗಿವೆ. ಆದರೆ, ಇವನ್ನಾಧರಿಸಿ ಈ ಪ್ರಭೇದಗಳನ್ನು ಹೊಸತು-ಹಳತೆಂದು ವಿಂಗಡಿಸುವುದು ಮಾತ್ರ ಸರಿಯಲ್ಲ. ಹವ್ಯಕವು ‘ಹಳೆ ಗನ್ನಡ’ವೆಂದು ಅದನ್ನು ಕೇಳುವವರಿಗೆ ಅನಿಸುವುದಕ್ಕೆ ಬಹುವಚನ ಪ್ರತ್ಯಯ ದಲ್ಲಿ ನಡೆದ (ಮತ್ತು ನಡೆಯದಿರುವ) ಬದಲಾವಣೆಗಳು ಒಂದು ಮುಖ್ಯ ಕಾರಣವೆನ್ನಬಹುದು. ಈ ಪ್ರತ್ಯಯ ಹಳೆಗನ್ನಡದಲ್ಲಿ ಅಕಾರಾಂತ ಪದಗಳ ಮುಂದೆ ೦ಗಳ್ ಎಂದಿತ್ತು. ಮರ-ಮರಂಗಳ್, ದೇಶ, ದೇಶಂಗಳ್ ಮೊದ ಲಾದ ಪದರೂಪಗಳಲ್ಲಿ ಈ ಪ್ರತ್ಯಯದ ಪ್ರಯೋಗವನ್ನು ಕಾಣಬಹುದು.

ಆಧುನಿಕ ಬರಹದ ಕನ್ನಡದಲ್ಲಿ ಇದರ ಸೊನ್ನೆ ಮಾಯವಾಗಿ (ಮತ್ತು ಕೊನೆಯ ವ್ಯಂಜನಕ್ಕೆ ಉಕಾರ ಸೇರಿ) ಮರಗಳು, ದೇಶಗಳು ಎಂಬಂತಹ ರೂಪಗಳು ಸಿದ್ಧವಾಗಿವೆ. ಇದಕ್ಕೆ ಬದಲಾಗಿ, ಹವ್ಯಕದಲ್ಲಿ ಸೊನ್ನೆ ಉಳಿದು ಕೊಂಡಿದೆ, ಆದರೆ ಳಕಾರ ಮಾಯವಾಗಿದೆ, ಮತ್ತು ಗಕಾರದ ಅನಂತರ ಬರುವ ಅಕಾರ ಒಕಾರವಾಗಿ ಬದಲಾಗಿದೆ. ಇದರಿಂದಾಗಿ ಹವ್ಯಕದಲ್ಲಿ ಮರಂಗೊ, ದೇಶಂಗೊ ಎಂಬಂತಹ ರೂಪಗಳು ಸಿದ್ದಿಸಿವೆ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಆಧುನಿಕ ಬರಹದ ಕನ್ನಡ (ಇಲ್ಲವೇ ‘ಹೊಸಗನ್ನಡ’) ಮತ್ತು ಆಧುನಿಕ ಹವ್ಯಕ ಕನ್ನಡ - ಇವೆರಡರಲ್ಲೂ ಬದಲಾವಣೆಗಳು ನಡೆದಿವೆ. ಆದರೆ, ಒಂದರಲ್ಲಿ ನಡೆದ ಬದಲಾವಣೆಗಳು ಇನ್ನೊಂದರಲ್ಲಿ ನಡೆದಿಲ್ಲ. ಅವೆರಡರಲ್ಲೂ ಬೇರೆ ಬೇರೆ ಬದಲಾವಣೆಗಳು ನಡೆದಿವೆ ಅಷ್ಟೆ.

ಹೊಸಗನ್ನಡವನ್ನು ಕೇಳಿ ಅಭ್ಯಾಸವಾದವರಿಗೆ ಹವ್ಯಕ ಕನ್ನಡದ ಬಹುವಚನ ರೂಪದಲ್ಲಿ ಕಾಣಿಸುವ ಸೊನ್ನೆಯನ್ನು ಕೇಳಿದಾಗ ಅದು ಹಳೆಗನ್ನಡವಿರ ಬಹುದೆಂಬ ಭ್ರಮೆ ಮೂಡುತ್ತದೆ. ಆದರೆ, ಬರಹ ಕನ್ನಡದಲ್ಲಿರುವ ಮತ್ತು ಹವ್ಯಕ ಕನ್ನಡದಲ್ಲಿ ಇಲ್ಲದಿರುವ ಳಕಾರ ಬರಹ ಕನ್ನಡ ಹಳೆಯದಿರಬೇಕೆಂಬ ಭ್ರಮೆಯನ್ನು ಯಾಕೋ ಮೂಡಿಸುತ್ತಿಲ್ಲ. ಬರಹ ಕನ್ನಡವನ್ನು ಮೊದಲಿಗೇನೇ ‘ಹೊಸ’ಗನ್ನಡವೆಂದು ಪರಿಗಣಿಸಿರುವುದೇ ಇದಕ್ಕೆ ಕಾರಣವಿರಬಹುದು.

ಇತರ ಪ್ರಭೇದಗಳು

ಕನ್ನಡದ ಇತರ ಪ್ರಭೇದಗಳನ್ನು ಗಮನಿಸಿದೆವಾದರೆ, ಅವುಗಳಲ್ಲೂ ಇದೇ ರೀತಿ ಕೆಲವು ಬದಲಾವಣೆಗಳು ಹೆಚ್ಚಿಗೆ ಕಾಣಿಸುತ್ತವೆ, ಮತ್ತು ಬೇರೆ ಕೆಲವು ಬದಲಾವಣೆಗಳು ಕಾಣಿಸುವುದಿಲ್ಲ. ಉದಾಹರಣೆಗಾಗಿ, ಮೈಸೂರಿನ ಕೆಲವು ಪ್ರಭೇದಗಳಲ್ಲಿ ಪದಾದಿಯ ಹಕಾರಗಳೆಲ್ಲ ಬಿದ್ದು ಹೋಗಿವೆ. ಹಕ್ಕಿ ಎಂಬ ಪದ ಅಕ್ಕಿ ಎಂದಾಗಿದೆ, ಹಾಲು ಎಂಬ ಪದ ಆಲು ಎಂದಾಗಿದೆ, ಹೇಳಿ ಎಂಬ ಪದ ಏಳಿ ಎಂದಾಗಿದೆ.

೨೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಎಕಾರಾಂತವಾದ ಧಾತುಗಳೆಲ್ಲ ಈ ಕನ್ನಡದ ಪ್ರಭೇದಗಳಲ್ಲಿ ಇಕಾರಾಂತ ಗಳಾಗಿವೆ. ಬರೆ, ಅಗೆ, ಕರೆ ಮೊದಲಾದವುಗಳು ಇದರಿಂದಾಗಿ ಬರಿ, ಅಗಿ, ಕರಿ ಎಂದಾಗಿವೆ. ಆದರೆ ಈ ಕಾರಣಕ್ಕಾಗಿ, ಮೈಸೂರಿನ ಈ ಪ್ರಭೇದಕ್ಕಿಂತ ಇತರ ಪ್ರಭೇದಗಳು ‘ಹಳೆಯ’ವೆಂದು ಯಾರೂ ವಾದಿಸುವುದಿಲ್ಲ.

ಪದಗಳ ಅಳಿವು-ಉಳಿವು

ಹಳೆಗನ್ನಡದಲ್ಲಿದ್ದ ಪದಗಳಲ್ಲೂ ಕೆಲವು ಒಂದು ಪ್ರಭೇದದಲ್ಲಿ ಉಳಿದಿರ ಬಹುದು, ಮತ್ತು ಇನ್ನೊಂದರಲ್ಲಿ ಅಳಿದಿರಬಹುದು. ಉದಾಹರಣೆಗಾಗಿ, ಹಳೆ ಗನ್ನಡದಲ್ಲಿದ್ದ ಅಬ್ಬೆ (ತಾಯಿ), ಕಿಚ್ಚು (ಬೆಂಕಿ), ಪಚ್ಚೆ (ಹಸಿರು) ಮೊದಲಾದ ಪದಗಳು ಹವ್ಯಕದಲ್ಲಿ ಉಳಿದಿವೆ, ಮತ್ತು ಇತರ ಕನ್ನಡದ ಪ್ರಭೇದಗಳಲ್ಲಿ ಅಳಿದಿವೆ.

ಆದರೆ, ಬೇರೆ ಕೆಲವು ಪದಗಳು (ಉದಾ: ಉಗುಳು, ತೆರು, ನೋಯು, ಮೊದಲಾದವುಗಳು) ಹವ್ಯಕದಲ್ಲಿ ಅಳಿದಿವೆ, ಮತ್ತು ಇತರ ಪ್ರಭೇದಗಳಲ್ಲಿ ಉಳಿದಿವೆ. ಇದರಿಂದಾಗಿ ಹವ್ಯಕ ಕನ್ನಡ ಒಂದು ಭಿನ್ನವಾದ ಪ್ರಭೇದವೆಂದು ಸಿದ್ಧ ವಾಗುತ್ತದೆಯಲ್ಲದೆ ಹಳೆಯದೆಂದೇನೂ ಸಿದ್ದವಾಗುವುದಿಲ್ಲ.

ಒಂದೇ ಭಾಷೆಯನ್ನಾಡುವ ಎರಡು ಸಮಾಜಗಳು ಎಷ್ಟು ಸಮಯ ಮತ್ತು ಎಷ್ಟು ದೂರ ಒಂದರಿಂದೊಂದು ಬೇರಾಗಿರುತ್ತವೆಯೋ ಅಷ್ಟರಮಟ್ಟಿಗೆ ಅವುಗಳೊಳಗಿನ ಭಾಷಾವ್ಯತ್ಯಾಸವೂ ಹೆಚ್ಚುತ್ತದೆ. ಕರಾವಳಿಯ ಕನ್ನಡಿಗರು ಉಳಿದ ಕನ್ನಡಿಗರಿಂದ ಬೇರ್ಪಟ್ಟು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳು ಕಳೆದಿರ ಬೇಕಾದ್ದರಿಂದ, ಮತ್ತು ಈ ಎರಡು ಪ್ರದೇಶಗಳನ್ನು ದುರ್ಗಮವಾದ ಪಶ್ಚಿಮ ಘಟ್ಟಗಳು ಬೇರ್ಪಡಿಸುತ್ತಿದ್ದುವಾದ್ದರಿಂದ, ಈ ಎರಡು ಪಂಗಡಗಳ ನುಡಿಗಳು ಭಿನ್ನಭಿನ್ನವಾಗಿ ಬೆಳೆದು ಬಂದಿವೆ. ಇದರಲ್ಲಿ ಹಳೆತನ-ಹೊಸತನಗಳ ಪ್ರಶ್ನೆಯಿಲ್ಲ.

೧.೪ ಭಾಷಾ ಸ್ವಾತಂತ್ರ್ಯ

ಕೊಂಕಣಿ ಮರಾಠಿಯ ಪ್ರಭೇದವೇ, ಅಥವಾ ಅದಕ್ಕಿಂತ ಭಿನ್ನವಾದ ಮತ್ತು ಸ್ವತಂತ್ರವಾದ ಭಾಷೆಯೇ ಎಂಬುದೊಂದು ಬಹಳ ಮಟ್ಟಿಗೆ ಕಾವೇರಿಸುವ ಪ್ರಶ್ನೆ. ಬಹಳ ಮಂದಿ ಇದಕ್ಕೆ ‘ಕೊನೆಯ’ ಉತ್ತರವನ್ನು ಕೊಡಲು ಪ್ರಯತ್ನಪಟ್ಟಿರುವ ರಾದರೂ ಈ ಪ್ರಶ್ನೆಯಿನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಮುಖ್ಯವಾಗಿ ರಾಜ ಕಾರಣಿಗಳ ಮಟ್ಟದಲ್ಲೇ ನಡೆದಿರುವ ಈ ವಾದ ವಿವಾದಗಳೆಡೆಯಲ್ಲಿ ಹಲವಾರು ತರ್ಕ ವಿತರ್ಕಗಳು ಮೇಲೆದ್ದಿವೆ. ಇವುಗಳಲ್ಲಿ ಪ್ರಸ್ತುತ ವಿಷಯಕ್ಕೆ ಸ್ವಲ್ಪವೂ ಸಂಬಂಧವಿಲ್ಲದಂತಹ ವಾದಗಳೇ ಜಾಸ್ತಿಯಾಗಿರುವುದರಿಂದ, ಅವು ‘ಕಾವ’ ನ್ನಲ್ಲದೆ ಬೇರೇನನ್ನೂ ಹುಟ್ಟಿಸಲಾರವು.

೨೪


ಭಾಷಾ ಸ್ವಾತಂತ್ರ್ಯ

ಲಿಪಿಯ ಬೆಲೆ

ಉದಾಹರಣೆಗಾಗಿ, ಕೊಂಕಣಿಗೆ ತನ್ನದೇ ಆದ ಒಂದು ಲಿಪಿಯಿಲ್ಲವಾದುದರಿಂದ, ಅದನ್ನು ಸ್ವತಂತ್ರವಾದ ಭಾಷೆಯೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ವಾದಿಸುವ ಮಂದಿ ಹಲವರಿದ್ದಾರೆ. ಕರ್ನಾಟಕದಲ್ಲಿ ಇದನ್ನು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ, ಗೋವಾದಲ್ಲಿ ದೇವನಾಗರಿ ಇಲ್ಲವೇ ರೋಮನ್ ಲಿಪಿಯಲ್ಲಿ ಬರೆಯುತ್ತಾರೆ, ಮತ್ತು ಕೇರಳದಲ್ಲಿ ಮಲಯಾಳ ಲಿಪಿಯಲ್ಲಿ ಬರೆಯುತ್ತಾರೆ.

ಆದರೆ, ಇವರ ಈ ತರ್ಕವನ್ನು ಒಪ್ಪಿಕೊಳ್ಳಲು ಸಾಧ್ಯವಿದೆಯಾದರೆ, ಸಂಸ್ಕೃತ ಮತ್ತು ಹಿಂದೀ ಭಾಷೆಗಳಿಗಿರುವ ಲಿಪಿಗಿಂತ ಭಿನ್ನವಾದ ಮತ್ತು ತನ್ನದೇ ಎನ್ನಿಸಿಕೊಳ್ಳಬಹುದಾದ ಲಿಪಿ ಮರಾಠಿಗೂ ಇಲ್ಲವಾದುದರಿಂದ, ಅದನ್ನೂ ಒಂದು ಸ್ವತಂತ್ರ ಭಾಷೆಯೆಂದು ಹೇಳಲು ಸಾಧ್ಯವಾಗದು. ಮಣಿಪುರಿ ಭಾಷೆಯನ್ನು ಬಂಗಾಲಿ ಲಿಪಿಯಯಲ್ಲಿ ಬರೆಯಲಾಗುತ್ತದೆ, ಮತ್ತು ಸಿಂಧಿ ಭಾಷೆಯನ್ನು ದೇವನಾಗರಿ, ಪರ್ಸೋ-ಅರೇಬಿಕ್ ಮತ್ತು ರೋಮನ್ ಲಿಪಿಗಳಲ್ಲಿ ಬರೆಯ ಲಾಗುತ್ತದೆ.

ನಿಜಕ್ಕೂ ನಮ್ಮಲ್ಲಿ ಬಹಳ ಮಂದಿ ಭಾಷೆ ಮತ್ತು ಲಿಪಿಗಳೊಳಗಿರುವ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ. ಮನುಷ್ಯನಿಗೊಂದು ಫೊಟೊ ಇರುವ ಹಾಗೆ ಭಾಷೆಗೊಂದು ಲಿಪಿ. ಫೊಟೊ ತೆಗೆಸಿಕೊಳ್ಳಲಿಲ್ಲವೆಂಬ ಒಂದು ಕಾರಣಕ್ಕೆ ಮಾತ್ರವೇ ಮನುಷ್ಯನೊಬ್ಬನ ಸ್ವಾತಂತ್ರ್ಯಕ್ಕೆ ಇಲ್ಲವೇ ಅಸ್ತಿತ್ವಕ್ಕೆ ಹೇಗೆ ಧಕ್ಕೆ ಬರುವುದಿಲ್ಲವೋ ಹಾಗೆಯೇ ತನ್ನದೇ ಆದ ಲಿಪಿಯಿಲ್ಲವೆಂಬ ಕಾರಣ ಮಾತ್ರದಿಂದ ಭಾಷೆಯೊಂದರ ಯೋಗ್ಯತೆಗೆ ಚ್ಯುತಿ ಬರುವುದಿಲ್ಲ.

ಅಲ್ಲದೆ, ಜಗತ್ತಿನ ಲಿಪಿಗಳೆಲ್ಲ ಮೂರೋ ನಾಲ್ಕೋ ಮೂಲ ಲಿಪಿಗಳಿಂದ ಬೆಳೆದುಬಂದವುಗಳಾದ್ದರಿಂದ, ಹೆಚ್ಚಿನ ಭಾಷೆಗಳೂ ಅವು ಬಳಸುತ್ತಿರುವ ಲಿಪಿ ಗಳನ್ನು ಒಂದಲ್ಲ ಒಂದು ಕಾಲದಲ್ಲಿ ಬೇರೆ ಯಾವುದಾದರೊಂದು ಭಾಷೆಯಿಂದ ಎರವಲಾಗಿ ಪಡೆದುಕೊಂಡಿದ್ದಿರಲೇ ಬೇಕು. ಭಾರತದ ಲಿಪಿಗಳಲ್ಲಿ ಹೆಚ್ಚಿನವೂ ಅಶೋಕನ ಕಾಲದ ಬ್ರಾಹ್ಮೀ ಲಿಪಿಯಿಂದ ಬೆಳೆದು ಬಂದವುಗಳೆಂದು ವಿದ್ವಾಂಸರ ಅಭಿಪ್ರಾಯವಿದೆ.

ಸಾಹಿತ್ಯ ಮತ್ತು ಭಾಷೆ

ಕೊಂಕಣಿಗೆ ನಿಶ್ಚಿತವಾದೊಂದು ಸಾಹಿತ್ಯ ಪರಂಪರೆಯಿಲ್ಲವಾದ್ದರಿಂದ ಅದನ್ನು ಸ್ವತಂತ್ರವಾದೊಂದು ಭಾಷೆಯೆಂದು ಕರೆಯಲು ಸಾಧ್ಯವಿಲ್ಲವೆಂದು ವಾದಿಸುವ ಮಂದಿಯೂ ಕೆಲವರಿದ್ದಾರೆ. ಆದರೆ, ಈ ವಾದವನ್ನು ಮುಂದೆ ತರುವವರು ಭಾಷೆಯ ಅತೀ ಮುಖ್ಯವಾದ ಕಾರ್ಯವೇನೆಂಬುದನ್ನೇ ಮರೆತಂತಿದೆ. ದಿನನಿತ್ಯದ ಜೀವನದಲ್ಲಿ ಒಬ್ಬನ ಮನಸ್ಸಿನಲ್ಲಿರುವ ಇಂಗಿತವನ್ನು ಇನ್ನೊಬ್ಬನಿಗೆ ತಿಳಿಸಿ ಹೇಳಲು ಸಾಧಕವಾಗಿರುವಂತಹದೇ ಭಾಷೆ. ಅದನ್ನು ಬಳಸುತ್ತಿರುವವರು ಇಬ್ಬ ರಿರಲಿ, ಎರಡು ಕೋಟಿ ಜನರಿರಲಿ, ಸಾಹಜವಾಗಿ ಬೆಳೆದು ಬಂದಿರುವ ಭಾಷೆ

೨೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಗಳೆಲ್ಲವೂ ಈ ಕಾರ್ಯವನ್ನು ತೃಪ್ತಿಕರವಾಗಿ ನಡೆಸಬಲ್ಲುವು. ಈ ವಿಷಯದಲ್ಲಿ ಸಂಸ್ಕೃತ ಮತ್ತು ಅಸಂಸ್ಕೃತ ಜನರ ಭಾಷೆಗಳೊಳಗೆ ಯಾವ ವ್ಯತ್ಯಾಸವೂ ಇಲ್ಲ.

ಸಾಹಿತ್ಯ ರಚನೆಯೆಂಬುದು ಭಾಷೆಗಿರುವ ಅಮುಖ್ಯವಾದ ಬಳಕೆಗಳಲ್ಲಿ ಒಂದು ಮಾತ್ರ. ಮನುಷ್ಯನು ತನ್ನ ಕೈಕಾಲುಗಳನ್ನು ನಡೆಯುವುದು, ಉಣ್ಣು ವುದು, ಮೊದಲಾದ ಜೀವನಾವಶ್ಯಕ ಕೆಲಸಗಳಿಗೆ ಮಾತ್ರವಲ್ಲದೆ, ಕುಣಿಯು ವುದು, ಅಭಿನಯಿಸುವುದು ಮೊದಲಾದ ಕಲಾತ್ಮಕ ಕಾರ್ಯಗಳಲ್ಲೂ ಬಳಸಿಕೊಳ್ಳ ಬಲ್ಲನು.

ಹೀಗೆಯೇ, ತನ್ನ ಭಾಷೆಯನ್ನೂ ದಿನನಿತ್ಯದ ವ್ಯವಹಾರಗಳಲ್ಲಿ ಮಾತ್ರವಲ್ಲದೆ ಕತೆ ಕಟ್ಟುವುದು, ಕವಿತೆ ರಚಿಸುವುದು ಮೊದಲಾದ ಕಲಾತ್ಮಕ ಕಾರ್ಯಗಳಲ್ಲೂ ಬಳಸಿಕೊಳ್ಳಬಲ್ಲನು. ಯಾವುದೇ ಒಂದು ಭಾಷೆಯಲ್ಲಿ ಇಂತಹ ಕಲಾತ್ಮಕ ಕೃತಿ ಗಳು ರಚಿತವಾಗಿವೆಯೇ, ಅಥವಾ ಇಲ್ಲವೇ ಎಂಬುದು ಅವನ್ನು ರಚಿಸಬಲ್ಲ ವ್ಯಕ್ತಿಗಳನ್ನು ಅವಲಂಬಿಸಿದೆಯಲ್ಲದೆ, ಅವರು ಬಳಸುವ ಭಾಷೆಯನ್ನಲ್ಲ. ಪ್ರತಿಭಾವಂತನಾದ ವ್ಯಕ್ತಿ ಯಾವ ಭಾಷೆಯನ್ನು ಕೈಗೆ ತೆಗೆದುಕೊಂಡರೂ ಅದರಲ್ಲಿ ಮೇರು ಕೃತಿಗಳನ್ನು ರಚಿಸಬಲ್ಲನು.

ಹಾಗಾಗಿ, ಬರಿಯ ಪ್ರಭೇದವೆಂದು ಕರೆಯಬೇಕೇ, ಇಲ್ಲವೇ ಸ್ವತಂತ್ರವಾದ ಭಾಷೆಯೆಂದು ಪರಿಗಣಿಸಬೇಕೇ ಎಂಬ ಈ ಪ್ರಶ್ನೆಗೆ ಉತ್ತರ ಕೊಡಲು ಯಾವ ಭಾಷೆಯಲ್ಲೂ ಆಂತರಿಕವಾದ ಪುರಾವೆಗಳು ಸಿಗಲಾರವು. ರಾಜಕೀಯ, ಸಾಮಾಜಿಕ ಇಲ್ಲವೇ ಚಾರಿತ್ರಿಕ ಕಾರಣಗಳಿಂದಾಗಿ ಬೇರೆ ಬೇರೆ ಭಾಷಾ ಪ್ರಭೇದಗಳಿಗೆ ಬೇರೆ ಬೇರೆ ರೀತಿಯ ಮಹತ್ವ ಲಭಿಸುತ್ತದೆ.

ಹೀಗೆ ಲಭಿಸಿದ ಮಹತ್ವದಿಂದಾಗಿ, ಹೊಸ ಹೊಸ ಸನ್ನಿವೇಶಗಳಲ್ಲಿ ಪ್ರಯುಕ್ತ ವಾಗುವಂತಹ ಸಂದರ್ಭಗಳು ಅವುಗಳಿಗೆ ಬರುತ್ತವೆ. ಆದರೆ, ಹೀಗೆ ವಿಶಿಷ್ಟ ವಾದ ಕಾರ್ಯಗಳಲ್ಲಿ ಪ್ರಯುಕ್ತವಾಗಿವೆಯಾದ್ದರಿಂದ ಆ ಭಾಷೆಗಳಲ್ಲೇನೋ ವೈಶಿಷ್ಟ್ಯವಿರಬೇಕೆಂದು ವಾದಿಸುವುದಕ್ಕೆ ಮಾತ್ರ ಅಂತಹ ಭಾಷೆಗಳ ಅಭ್ಯಾಸ ದಿಂದ ಇದುವರೆಗೆ ಯಾವ ಆಧಾರವೂ ದೊರೆತಿಲ್ಲ.

ವ್ಯತ್ಯಾಸದ ಪರಿಮಾಣ

ಎರಡು ಪ್ರಭೇದಗಳನ್ನು ಒಂದು ಭಾಷೆಯ ಪ್ರಭೇದಗಳೆಂದು ಪರಿಗಣಿಸುವ ಬದಲು, ಬೇರೆ ಬೇರೆ ಭಾಷೆಗಳೆಂದು ಕರೆಯಲು ಅವು ಎಷ್ಟರ ಮಟ್ಟಿಗೆ ಭಿನ್ನ ವಾಗಿರಬೇಕು ಎಂಬುದು ಇನ್ನೊಂದು ಪ್ರಶ್ನೆ. ಇದಕ್ಕೂ ಕೂಡ, ರಾಜಕೀಯ ಇಲ್ಲವೇ ಸಾಮಾಜಿಕ ಆಧಾರಗಳ ಮೇಲೆ ಉತ್ತರ ಕೊಡಲು ಸಾಧ್ಯವಿದೆಯಲ್ಲದೆ, ಭಾಷಾವಿಷಯಕ ಆಧಾರಗಳ ಮೇಲೆ ಉತ್ತರ ಕೊಡಲು ಸಾಧ್ಯವಾಗದು.

ಉದಾಹರಣೆಗಾಗಿ, ಹಿಂದಿ ಮತ್ತು ಉರ್ದುಗಳೊಳಗಿನ ವ್ಯತ್ಯಾಸವನ್ನು ಗಮನಿಸಬಹುದು. ಕೆಲವು ವಿಶಿಷ್ಟವಾದ ಪದಗಳನ್ನು ಬಿಟ್ಟರೆ, ಇವೆರಡರೊಳಗೆ

೨೬


ಭಾಷಾ ಸ್ವಾತಂತ್ರ್ಯ

ಭಾಷಾವಿಷಯಕವಾದ ವ್ಯತ್ಯಾಸಗಳೇನೂ ಇಲ್ಲ. ಆದರೂ ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ, ಮತ್ತು ಈ ಎರಡು ಭಾಷೆಗಳಿಗೆ ಭಿನ್ನ ಭಿನ್ನವಾದ ಲಿಪಿಗಳಿವೆಯೆಂಬುದಕ್ಕಾಗಿ, ಅವನ್ನು ಬೇರೆ ಬೇರೆ ಭಾಷೆಗಳೆಂದು ಪರಿಗಣಿಸ ಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಚೈನೀಸ್ ಭಾಷೆಯ ಪ್ರಭೇದಗಳಾದ ಮಂದಾರಿನ್, ಕಂಟೊನೀಸ್ ಮೊದಲಾದವುಗಳ ನಡುವೆ ಬಹಳಷ್ಟು ಅಂತರವಿದೆ. ಅವುಗಳಲ್ಲಿ ಒಂದನ್ನು ಮಾತನಾಡುವವರಿಗೆ ಇನ್ನೊಂದನ್ನು ಕೇಳಿದಾಗ ಸ್ವಲ್ಪವೂ ಅರ್ಥ ವಾಗದು. ಆದರೂ ಅವನ್ನೆಲ್ಲ ಒಂದೇ ಭಾಷೆಯ ಪ್ರಭೇದಗಳೆಂದು ಪರಿಗಣಿಸ ಲಾಗುತ್ತಿದೆ. ಇದಕ್ಕೆ ರಾಜಕೀಯ ಮತ್ತು ಲಿಪಿ ವಿಷಯಕ ಆಧಾರಗಳು ಮಾತ್ರ ಕಾರಣವಲ್ಲದೆ, ಭಾಷಾ ವಿಷಯಕ ಆಧಾರಗಳಲ್ಲ.

ಚಾರಿತ್ರಿಕ ಸಂಬಂಧ

ಕೊಂಕಣಿ ಮತ್ತು ಮರಾಠಿಗಳೊಳಗೆ ಅತ್ಯಂತ ನಿಕಟವಾದ ಚಾರಿತ್ರಿಕ ಸಂಬಂಧ ವಿದೆ. ಅವೆರಡೂ ಒಂದೇ ಮೂಲದಿಂದ ಎರಡು ಕವಲುಗಳಾಗಿ ಒಡೆದು ಬಂದವುಗಳು. ಆದರೆ, ಇಂತಹ ಚಾರಿತ್ರಿಕ ಸಂಬಂಧದ ಆಧಾರದ ಮೇಲೆ ಅವು ಭಿನ್ನ ಭಿನ್ನ ಭಾಷೆಗಳಲ್ಲವೆಂದು ವಾದಿಸಲು ಬರುವುದಿಲ್ಲ.

ಯಾಕೆಂದರೆ, ಇಂತಹದೇ ನಿಕಟ ಸಂಬಂಧ ಬಂಗಾಲಿ ಮತ್ತು ಒಡಿಯಾಗಳ ನಡುವೆ ಇದೆ, ತಮಿಳು ಮತ್ತು ಮಲಯಾಳಗಳ ನಡುವೆಯೂ ಇದೆ. ಆದರೆ, ಇವನ್ನು ಒಂದೇ ಭಾಷೆಯ ಪ್ರಭೇದಗಳೆಂದು ಯಾರೂ ವಾದಿಸುವುದಿಲ್ಲ. ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಎರಡು ಸಮಾಜಗಳಲ್ಲಿ ಬಳಕೆಯಲ್ಲಿರುವ ಮಾತುಗಳು ಒಂದೇ ನುಡಿಯ ಪ್ರಭೇದಗಳೆಂದು ಹೇಳಲು ಅವುಗಳ ನಡುವೆ ಚಾರಿತ್ರಿಕ ಸಂಬಂಧವಿರಲೇಬೇಕು, ಎಂದರೆ ಅವೆರಡೂ ಒಂದೇ ನುಡಿಯಿಂದ ಬೆಳೆದುಬಂದಿರಬೇಕು. ಇದಲ್ಲದೆ, ಅವು ತುಂಬಾ ಹತ್ತಿರವೂ ಇರಬೇಕು; ಆದರೆ, ಮೇಲೆ ಸೂಚಿಸಿದ ಹಾಗೆ, ಎಷ್ಟು ಹತ್ತಿರ ಇರಬೇಕು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕೊಡುವುದು ಕಷ್ಟ.

ಪ್ರಭೇದಗಳ ಯೋಗ್ಯತೆ

ನಿಜಕ್ಕೂ ಕೊಂಕಣಿ ಸ್ವತಂತ್ರ ಭಾಷೆಯೇ ಅಥವಾ ಮರಾಠಿಯ ಪ್ರಭೇದವೇ ಎಂಬ ಪ್ರಶ್ನೆಯ ಉತ್ತರ ಕೊಂಕಣಿಯನ್ನಾಡುವ ಕೊಂಕಣಿಗರ ಕೈಯಲ್ಲಿದೆ. ತಾವು ಮನೆಯಲ್ಲಾಡುವ ಮಾತು ಸಾಹಿತ್ಯಕ ಭಾಷೆಯಾಗಿ ವಿರಾಜಿಸಬೇಕೆಂಬ ಆಕಾಂಕ್ಷೆ ಅವರಲ್ಲಿದೆಯಾದರೆ, ಅವರೇ ಅದನ್ನು ಆ ಸ್ಥಾನಕ್ಕೆ ಏರಿಸಬಲ್ಲರು.

ಇದಕ್ಕೆ ಸಾಧಕವಾಗಬಲ್ಲಂತಹ ಶಕ್ತಿ ಇಲ್ಲವೇ ಯೋಗ್ಯತೆ ಕೊಂಕಣಿಗಿಲ್ಲ ವೆಂದು ಯಾರಾದರೂ ಹೇಳುವುದಿದ್ದರೆ ಮಾತ್ರ, ಅಂತಹ ವಾದವನ್ನು ವೈಜ್ಞಾನಿಕ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವಾಗಿಯೇ ಖಂಡಿಸಬಹುದು. ಯಾಕೆಂದರೆ, ಸಾಹಜವಾಗಿ ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿರುವ ಎಲ್ಲಾ ಭಾಷೆ ಮತ್ತು ಭಾಷಾಪ್ರಭೇದಗಳಿಗೂ ಇಂತಹ ಆಂತರಿಕ ಶಕ್ತಿ ಇದ್ದೇ ಇರುತ್ತದೆ. ಈ ವಿಷಯದಲ್ಲಿ ಭಾಷೆಗಳೊಳಗೆ ಕೀಳುಮೇಲಿಲ್ಲ. ಆ ಶಕ್ತಿಯನ್ನು ಬಳಸಿ, ಉತ್ತಮವಾದ ಸಾಹಿತ್ಯಕ ಕೃತಿಗಳನ್ನು ಆ ಭಾಷೆಯಲ್ಲಿ ರಚಿಸುವವರು ಅದನ್ನಾಡುವ ಸಮಾಜದಲ್ಲಿ ಹುಟ್ಟಿ ಬಂದರೆ ಸಾಕು.

ಭಾಷೆಗಳ ಚರಿತ್ರೆಯಲ್ಲಿ ಈ ಅಭಿಪ್ರಾಯಕ್ಕೆ ಸಾಕಷ್ಟು ನಿದರ್ಶನಗಳೂ ದೊರೆಯುತ್ತವೆ. ಒಂದು ಕಾಲದಲ್ಲಿ ಬರಿಯ ಹೆಂಗಸರ ಮತ್ತು ಕೆಳಗಿನ ಸ್ತರದ ಜನರ ಭಾಷೆಯೆಂದು ಪರಿಗಣಿತವಾಗಿದ್ದ ಪಾಲಿ ಮತ್ತು ಪ್ರಾಕೃತಗಳು ಬೌದ್ಧರ ಮತ್ತು ಜೈನರ ಕೈಯಲ್ಲಿ ಕಾವ್ಯಗಳ ರಚನೆಗೂ ಶಾಸ್ತ್ರಗಳ ಚರ್ಚೆಗೂ ಯೋಗ್ಯ ವೆನಿಸುವ ನುಡಿಗಳಾದುವು.

ಅವುಗಳಿಂದಲೇ ಬೆಳೆದು ಬಂದಿರುವ ಬಂಗಾಲಿ, ಮರಾಠಿ, ಹಿಂದಿ ಮೊದಲಾ ದವುಗಳು ರವೀಂದ್ರನಾಥ, ತುಳಸೀದಾಸ ಮೊದಲಾದವರಿಂದಾಗಿ ಇಂದಿನ ಸಾಹಿತ್ಯಕ ಭಾಷೆಗಳಾಗಿವೆ. ಒಂದು ಕಾಲದಲ್ಲಿ ಲ್ಯಾಟಿನ್, ಫ್ರೆಂಚ್‌ಗಳಿಂದ ತುಳಿಸಿ ಕೊಂಡು, ಬಹಳ ಹೀನಾಯ ಸ್ಥಿತಿಯಲ್ಲಿದ್ದ ಇಂಗ್ಲಿಷ್ ಭಾಷೆ ಇಂದು ಅಂತರಾಷ್ಟ್ರೀಯ ಭಾಷೆಯೆನಿಸಿದೆ. ಇವೆಲ್ಲಾ ನಿದರ್ಶನಗಳೂ ಭಾಷೆಗಳನ್ನು ಕೀಳು -ಮೇಲೆಂದು, ಸ್ವತಂತ್ರ-ಅಸ್ವತಂತ್ರಗಳೆಂದು ವಿಭಜಿಸಲು ಅವುಗಳಲ್ಲಿ ಆಂತರಿಕ ವಾದ ಆಧಾರಗಳೇನೂ ದೊರಕಲಾರವು ಎಂಬುದನ್ನು ಸ್ಪಷ್ಟಮಾಡಿಕೊಡುತ್ತವೆ.

೧.೫ ಭಾಷೆಯು ತರ್ಕಬದ್ಧವೇನು?

ಕನ್ನಡದಲ್ಲಿ ಮೂರು ಕಾಲಗಳು, ಮೂರು ವಚನಗಳು, ಎಂಟು ವಿಭಕ್ತಿಗಳು ಎಂದೆಲ್ಲ ಇವೆಯೆಂದು ವರ್ಣಿಸುತ್ತಿರುವ ನಮ್ಮ ವೈಯಾಕರಣಿಗಳು ಭಾಷೆಗಳೆಲ್ಲ ತರ್ಕಬದ್ಧವಾಗಿ ಇರುತ್ತವೆ, ಇಲ್ಲವೇ ಇರಬೇಕು ಎಂಬ ಭಾವನೆಯನ್ನಿಟ್ಟು ಕೊಂಡಂತಿದೆ. ಅವರು ಮಾಡಿದ ಈ ತಪ್ಪಿನಿಂದಾಗಿ, ವ್ಯಾಕರಣವೆಂಬುದು ಕನ್ನಡ ದಲ್ಲಿ ಕಬ್ಬಿಣದ ಕಡಲೆಯಾಗಿದೆ. ಕನ್ನಡದಲ್ಲಿಲ್ಲದ ಎಂಟು ವಿಭಕ್ತಿಗಳನ್ನು ಇವೆ ಯೆಂದು ಯಾರೇ ಹೇಳಲಿ, ಕಲಿಯುವುದು ಅಸಾಧ್ಯ ತಾನೇ?

ಕರ್ಣಾಟಕದಲ್ಲಿ ಮಾತ್ರವಲ್ಲ, ಜಗತ್ತಿನ ಇತರ ಭಾಗಗಳಲ್ಲೂ ವೈಯಾಕರಣಿ ಗಳು ಈ ರೀತಿಯ ತಪ್ಪನ್ನು ಪದೇ ಪದೇ ಮಾಡುತ್ತ ಬಂದಿದ್ದಾರೆ.

ಕಾಲಭೇದ

ಕಾಲವೆಂಬುದು ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ವಿಧವೆಂದು ವಾದಿಸಬಹುದು. ಆದರೆ, ಕಾಲದ ಈ ವಿಭಜನೆ ನಮ್ಮ ಮಾತಿಗೆ ಸಂಬಂಧಿಸಿದುದು: ಒಂದು ಘಟನೆಯು ಅದನ್ನು ಮಾತಿನ ಮೂಲಕ ತಿಳಿಸಿ

೨೮


ಭಾಷೆಯು ತರ್ಕಬದ್ಧವೇನು?

ಹೇಳುವ ಸಮಯದಲ್ಲಿ ನಡೆಯುತ್ತಿದೆಯಾದರೆ ಅದರ ಕಾಲ ವರ್ತಮಾನ; ಆ ಸಮಯಕ್ಕಿಂತ ಹಿಂದೆಯೇ ಅದು ನಡೆದು ಹೋಗಿದೆಯಾದರೆ ಅದರ ಕಾಲ ಭೂತ; ಮತ್ತು ಅದು ಆ ಸಮಯದ ಅನಂತರ ನಡೆಯುವಂತಹದಾದರೆ ಅದರ ಕಾಲ ಭವಿಷ್ಯತ್. ಕಾಲವನ್ನು ಯಾವ ರೀತಿಯಲ್ಲೇ ಆಗಲಿ ವಿಭಜಿಸಬೇಕಿದ್ದಲ್ಲಿ, ಅದಕ್ಕೆ ಈ ರೀತಿ ಘಟನೆಯೊಂದರ ಆಧಾರ ಬೇಕಾಗುತ್ತದೆ.

ಆದರೆ ಈ ರೀತಿ ಮಾತಿಗೆ ಸಂಬಂಧಿಸಿದಂತೆ ವಿಂಗಡಿಸಿ ಹೇಳಬಹುದಾದ ಕಾಲಭೇದವನ್ನು ಎಲ್ಲಾ ಭಾಷೆಗಳೂ ಒಂದೇ ರೀತಿಯಾಗಿ ಅವುಗಳ ಕ್ರಿಯಾ ರೂಪಗಳಲ್ಲಿ ಕಾಣಿಸಬೇಕೆಂಬ ನಿಯಮವೇನಿಲ್ಲ. ಕೆಲವು ಭಾಷೆಗಳು ಅವುಗಳ ಕ್ರಿಯಾರೂಪಗಳಲ್ಲಿ ಕಾಲಭೇದವನ್ನೇ ತೋರಿಸುವುದಿಲ್ಲ. ನಮ್ಮ ದೇಶದ ಉತ್ತರ ಕ್ಕಿರುವ ಮೈನ್ಮಾರ್‌ನ ಬರ್ಮೀಸ್ ಭಾಷೆ ಇಂತಹದು. ನಮ್ಮ ದೇಶದಲ್ಲೇನೇ ನಾಗಾಲೇಂಡಿನ ಕೆಲವು ಭಾಷೆಗಳಲ್ಲೂ (ಉದಾ: ಖೇಜೋ ಭಾಷೆ) ಕಾಲಭೇದ ವನ್ನು ತೋರಿಸುವ ಕ್ರಿಯಾರೂಪಗಳಿಲ್ಲ.

ಬರ್ಮೀಸ್ ಭಾಷೆಯ ಕ್ರಿಯಾಪದಗಳಲ್ಲಿ ಅವು ತಿಳಿಸುವ ಘಟನೆಯ ಕಾಲ ಭೇದವನ್ನು ಸೂಚಿಸುವ ಬದಲು, ಅವುಗಳ ನೈಜತೆಯ ಕುರಿತು ಮಾತನಾಡು ವವನ ಅನಿಸಿಕೆಯನ್ನು ಸೂಚಿಸುತ್ತದೆ. ಒಂದು ಘಟನೆ ನಡೆಯುವುದು ಇಲ್ಲವೇ ನಡೆದಿರುವುದು ನಿಜವೆಂಬುದು ಆತನ ಅನಿಸಿಕೆಯಾದರೆ ಕ್ರಿಯಾಪದದ ಒಂದು ರೂಪವನ್ನು ಬಳಸಲಾಗುತ್ತದೆ, ಮತ್ತು ನಿಜವಲ್ಲವೆಂಬುದು ಆತನ ಅನಿಸಿಕೆಯಾದರೆ ಇಲ್ಲವೇ ಆ ವಿಷಯದಲ್ಲಿ ಆತನಿಗೆ ಸಂಶಯವಿದೆಯಾದರೆ ಇನ್ನೊಂದು ರೂಪವನ್ನು ಬಳಸಲಾಗುತ್ತದೆ.

ಕ್ರಿಯಾಪದಗಳಲ್ಲಿ ಕಾಲಭೇದವನ್ನು ತೋರಿಸುವ ಭಾಷೆಗಳೂ ಬೇರೆ ಬೇರೆ ಬಗೆಯಲ್ಲಿ ಅದನ್ನು ತೋರಿಸಬಲ್ಲುವು. ಉದಾಹರಣೆಗಾಗಿ, ಅಂತಹ ಕೆಲವು ಭಾಷೆಗಳಲ್ಲಿ ಕ್ಷಣಿಕ ಘಟನೆಗಳನ್ನು ತಿಳಿಸುವ ಕ್ರಿಯಾಪದಗಳಿಗೆ ವರ್ತಮಾನ ರೂಪಗಳಿರುವುದಿಲ್ಲ.

ಕನ್ನಡದಲ್ಲಿ ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಮೂರು ಕಾಲರೂಪಗಳಿವೆ (ಇದ್ದಾನೆ, ಇರುತ್ತಾನೆ ಮತ್ತು ಇದ್ದ); ಆದರೆ, ಕುಡಿ, ತಿನ್ನು, ಬೀಳು, ಓಡು ಮೊದಲಾದ ಉಳಿದ ಎಲ್ಲಾ ಕ್ರಿಯಾಪದಗಳಿಗೂ ಎರಡು ಕಾಲರೂಪಗಳು ಮಾತ್ರ ಇವೆ (ಕುಡಿಯುತ್ತಾನೆ, ಕುಡಿದ; ಬೀಳುತ್ತಾನೆ, ಬಿದ್ದ). ಬೀಳುವನು ಎಂಬಂತಹ ಮೂರನೆಯ ರೂಪವೂ ಇದೆಯೆಂದು ವ್ಯಾಕರಣ ಪುಸ್ತಕಗಳಲ್ಲಿ ಬರೆದಿರಬಹುದು (ಇದಕ್ಕನುಗುಣವಾಗಿ ಇರು ಎಂಬ ಕ್ರಿಯಾಪದಕ್ಕೆ ಇರುವನು ಎಂಬ ನಾಲ್ಕನೆಯ ರೂಪವನ್ನೂ ಕೊಡಬಹುದು); ಆದರೆ, ಈ ಹೆಚ್ಚಿನ ರೂಪ ಕನ್ನಡದಲ್ಲಿ ಒಂದು ಹೆಚ್ಚಿನ ಕಾಲರೂಪವಾಗಿ ಬಳಕೆಯಾಗುತ್ತಿಲ್ಲ.

೨೬


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಲಿಂಗಭೇದ

ಪ್ರಕೃತಿಯಲ್ಲಿ ಲಿಂಗವು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗವೆಂಬುದಾಗಿ ಮೂರು ವಿಧವಾಗಿದೆಯೆಂದು ವಾದಿಸಬಹುದು. ಆದರೆ ಇದು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತದೆ. ಅವುಗಳಲ್ಲಿ ಕಾಣಿಸುವ ಲಿಂಗಭೇದಕ್ಕೂ ಪ್ರಕೃತಿಯಲ್ಲಿರುವ ಲಿಂಗಭೇದಕ್ಕೂ ಯಾವ ಸಂಬಂಧವೂ ಇಲ್ಲದಿರಲು ಸಾಧ್ಯವೆಂಬುದಕ್ಕೆ ಹಿಂದಿ, ಸಂಸ್ಕೃತ ಮೊದಲಾದ ಭಾಷೆಗಳು ಉತ್ತಮ ಉದಾಹರಣೆಗಳು.

ಭಾಷೆಗಳಲ್ಲಿ ಕಾಣಿಸುವ ಲಿಂಗಭೇದಗಳು ಸಾಮಾನ್ಯವಾಗಿ ನಾಮಪದಗಳ ವಿಭಜನೆಗೆ ಸಂಬಂಧಿಸಿದವುಗಳು. ಇವುಗಳ ಸಂಖ್ಯೆ ಮೂರಕ್ಕಿಂತ ಕಡಿಮೆಯೂ ಇರಬಹುದು, ಇಲ್ಲವೇ ಜಾಸ್ತಿಯೂ ಇರಬಹುದು. ಬಂಟೂ ಕುಟುಂಬಕ್ಕೆ ಸೇರಿದ ಆಫ್ರಿಕದ ಕೆಲವು ಭಾಷೆಗಳಲ್ಲಿ ನಾಮಪದಗಳು ಇಪ್ಪತ್ತಕ್ಕಿಂತಲೂ ಹೆಚ್ಚು ‘ಲಿಂಗ ಭೇದ’ಗಳನ್ನು ತೋರಿಸುತ್ತವೆ.

ಸರ್ವನಾಮದಲ್ಲಿ ವೈಶಿಷ್ಟ್ಯ

ನಮಗೆ ಪರಿಚಿತವಾಗಿರುವ ಭಾಷೆಗಳಲ್ಲೆಲ್ಲ ಉತ್ತಮ, ಮಧ್ಯಮ, ಮತ್ತು ಪ್ರಥಮ ಎಂಬುದಾಗಿ ಮೂರು ಪುರುಷಭೇದಗಳಿವೆ. ಮಾತನಾಡುವವನು, ಮಾತನ್ನು ಕೇಳುವವನು, ಮತ್ತು ಇತರರು ಎಂಬುದಾಗಿ ಮಾತಿಗೆ ಸಂಬಂಧಿಸಿ ದಂತೆ ಮೂವರು ವ್ಯಕ್ತಿಗಳನ್ನು ಸೂಚಿಸುವ ಈ ಪುರುಷ ಭೇದ ತರ್ಕಬದ್ಧವಾದು ದೆಂದು ನಮಗೇನೋ ಅನಿಸಬಹುದು. ಆದರೆ ಇದಕ್ಕಿಂತ ಹೆಚ್ಚಿನ ವೈವಿಧ್ಯತೆ ಯನ್ನು ತೋರಿಸುವ ಭಾಷೆಗಳೂ ಕೆಲವಿವೆ.

ಅಲ್ಗೊಂಕಿಯನ್ ಕುಟುಂಬಕ್ಕೆ ಸೇರಿದ ಅಮೆರಿಕಾದ ಕೆಲವು ಭಾಷೆಗಳಲ್ಲಿ ನಾಲ್ಕನೆಯದೊಂದು ಪುರುಷವಿದೆ. ‘ಅವನು ಅವನ (ಇನ್ನೊಬ್ಬನ) ತಂದೆಯನ್ನು ಕರೆದ’ ಎಂಬಂತಹ ವಾಕ್ಯಗಳಲ್ಲಿ ಬರುವ ಎರಡು ‘ಅವನು’ಗಳನ್ನು ಈ ಭಾಷೆ ಗಳಲ್ಲಿ ಬರುವ ಎರಡು ಪ್ರಥಮ ಪುರುಷಗಳು ಪ್ರತ್ಯೇಕಿಸುತ್ತವೆ.

ಕನ್ನಡದಲ್ಲಿ ನಾವು ಎಂಬ ಪದವನ್ನು ‘ನಾವು ಮಾತ್ರ’, ‘ನಾವು ಮತ್ತು ಅವರು’, ‘ನಾವು ಮತ್ತು ನೀವು’, ‘ನಾವು, ನೀವು, ಅವರು, ಎಲ್ಲರೂ’ ಮೊದಲಾದ ಹಲವು ಬಗೆಯ ಅರ್ಥಗಳಲ್ಲಿ ಬಳಸಬಹುದು.

ದಕ್ಷಿಣ ಕನ್ನಡದ ಹವ್ಯಕರ ಮಾತಿನಲ್ಲಿ ನಾವು ಎಂಬ ಪದವನ್ನು ಇವು ಗಳಲ್ಲಿ ಕೊನೆಯ ಎರಡು ಅರ್ಥಗಳಲ್ಲಿ ಮಾತ್ರ ಬಳಸಲಾಗುತ್ತದೆ; ‘ನಾವು ಮಾತ್ರ’ ಇಲ್ಲವೇ ‘ನಾವು ಮತ್ತು ಅವರು ಮಾತ್ರ’ ಎಂಬರ್ಥದಲ್ಲಿ ಎಂಗೊ ಎಂಬ ಬೇರೊಂದು ಸರ್ವನಾಮವನ್ನು ಬಳಸಲಾಗುತ್ತದೆ. ಇಂತಹದೇ ವ್ಯತ್ಯಾಸ ಹಳೆಗನ್ನಡದಲ್ಲೂ ಇತ್ತು.

೩೦

ಭಾಷೆಯು ತರ್ಕಬದ್ಧವೇನು?

ಮುಂಡ ಕುಟುಂಬಕ್ಕೆ ಸೇರಿದ ಬಿಹಾರಿನ ಸಂತಾಲಿ ಎಂಬ ಭಾಷೆಯಲ್ಲಿ ಪುರುಷ ಮತ್ತು ವಚನಗಳ ವ್ಯವಸ್ಥೆ ಇನ್ನಷ್ಟು ಕ್ಲಿಷ್ಟವಾಗಿದೆ. ಅದರಲ್ಲಿ ಏಕವಚನ, ದ್ವಿವಚನ ಮತ್ತು ಬಹುವಚನಗಳೆಂಬುದಾಗಿ ಮೂರು ವಚನಗಳಿದ್ದು, ದ್ವಿವಚನ ದಲ್ಲಿ ನಾವಿಬ್ಬರು, ಎಂದರೆ ‘ನಾನು ಮತ್ತು ಅವನು’, ‘ನಾನು ಮತ್ತು ನೀನು’, ‘ನೀವಿಬ್ಬರು’, ‘ಅವರಿಬ್ಬರು’ ಎಂಬವನ್ನೆಲ್ಲ ಬೇರೆ ಬೇರೆ ಸರ್ವನಾಮಗಳ ನ್ನುಪಯೋಗಿಸಿ ತಿಳಿಸಬಹುದು. ಬಹುವಚನದಲ್ಲೂ ‘ನಿನ್ನನ್ನುಳಿದು ನಾವು ಮಾತ್ರ’, ‘ನಾವೆಲ್ಲ’, ‘ನೀವೆಲ್ಲ’, ‘ಅವರೆಲ್ಲ’ ಎಂದೆಲ್ಲ ಪ್ರತ್ಯೇಕ ಪ್ರತ್ಯೇಕವಾಗಿ ತಿಳಿಸಬಹುದು.

ನಾಲ್ಕು ವಚನಗಳು

ವಚನಗಳ ಸಂಖ್ಯೆಯಾದರೂ ಹೀಗೆಯೇ. ಮೂರು ವಚನಗಳಿರುವುದರಿಂದ ಸಂಸ್ಕೃತಕ್ಕೊಂದು ವೈಶಿಷ್ಟ್ಯ ಬರುವುದಿಲ್ಲ; ಎರಡೇ ಇರುವುದರಿಂದ ಕನ್ನಡಕ್ಕೆ ಕುಂದೂ ಬರುವುದಿಲ್ಲ.

ಲಿನ್ನಾಟೋನ್ ದ್ವೀಪದಲ್ಲಿ ವಾಸಿಸುವ ಕಾಡುಜನರ ಭಾಷೆಯಲ್ಲಿ ಏಕವಚನ, ದ್ವಿವಚನ, ತ್ರಿವಚನ ಮತ್ತು ಬಹುವಚನ ಎಂಬುದಾಗಿ ನಾಲ್ಕು ವಚನಗಳಿವೆ. ಫಿಜಿಯನ್ ಭಾಷೆಯಲ್ಲಿ ಹಲವರು ಎಂಬುದನ್ನು ಸೂಚಿಸುವ ಬಹುವಚನ ವಲ್ಲದೆ, ಕೆಲವರು ಎಂಬುದನ್ನು ಸೂಚಿಸುವ ಇನ್ನೊಂದು ವಚನವೂ ಇದೆ.

ಇದಕ್ಕೆ ವಿರುದ್ಧವಾಗಿ, ಮೇಕ್ಸಿಕೋದ ತರಹುಮರ ಭಾಷೆಯಲ್ಲಿ ಏಕವಚನ ಮತ್ತು ಬಹುವಚನ ಎಂಬ ಭೇದವೂ ಕಾಣಿಸುವುದಿಲ್ಲ. ಅದರಲ್ಲಿ ಇರುವುದು ಒಂದೇ ವಚನ. ಬಹುತ್ವವನ್ನು ಸೂಚಿಸಬೇಕಾದಾಗಲೆಲ್ಲ ಈ ಭಾಷೆಯನ್ನಾಡುವ ಜನರು ಸಂಖ್ಯೆಯನ್ನುಪಯೋಗಿಸುತ್ತಾರೆ.

ಗಣನಾ ಪದ್ಧತಿ

ನಮ್ಮಲ್ಲಿ ಬಳಕೆಯಲ್ಲಿರುವ ದಶಮಾಂಶ ಪದ್ಧತಿಯು ಅತ್ಯಂತ ತರ್ಕಬದ್ಧವಾದ ಗಣನಾಪದ್ಧತಿಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ. ಆದರೆ ಇದಕ್ಕೆ ನಮ್ಮ ಭಾಷೆಗಳು ಸಂಖ್ಯೆಗಳಲ್ಲಿ ದಶಮಾಂಶ ಪದ್ಧತಿಯನ್ನು ಬಳಸುತ್ತಿರುವುದೇ ಕಾರಣವೆಂಬುದನ್ನು ಮರೆಯಬಾರದು.

ಒಂದು, ಎರಡು, ಮೂರು ಎಂಬುದಾಗಿ ಲೆಕ್ಕ ಹಾಕುವಾಗ, ನಾವು ನಮ್ಮ ಭಾಷೆಗಳಲ್ಲಿ ಈ ಎಣಿಕೆಯನ್ನು ಹತ್ತಕ್ಕೆ ನಿಲ್ಲಿಸಿ, ಅನಂತರ ಹನ್ನೊಂದು, ಹನ್ನೆರಡು ಎಂಬುದಾಗಿ ಮುಂದಕ್ಕೆ ಹೋಗುತ್ತೇವೆ, ಎಂಟಕ್ಕೆ ನಿಲ್ಲಿಸಿ ಎಂಟೊಂದು, ಎಂಟೆರಡು ಎಂದಾಗಲೀ ಇಲ್ಲವೇ ಐದಕ್ಕೆ ನಿಲ್ಲಿಸಿ ಐದೊಂದು, ಐದೆರಡು ಎಂದಾಗಲೀ ಮುಂದಕ್ಕೆ ಹೋಗುವ ಅಷ್ಟಮಾಂಶ ಇಲ್ಲವೇ

೩೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಪಂಚಮಾಂಶ ಪದ್ಧತಿಯನ್ನು ನಾವು ಅನುಸರಿಸುವುದಿಲ್ಲ. ಹಾಗಾಗಿ, ದಶಮಾಂಶ ಪದ್ಧತಿ ನಮ್ಮ ಭಾಷೆಗಳ ಮಟ್ಟಿಗೆ ಮಾತ್ರ ತರ್ಕಬದ್ಧವಾದುದು.

ಆದರೆ, ಭಾಷೆಗಳೆಲ್ಲವೂ ಎಣಿಕೆಯಲ್ಲಿ ಈ ರೀತಿ ದಶಮಾಂಶ ಪದ್ಧತಿಯನ್ನೇ ಅನುಸರಿಸಬೇಕೆಂದೇನಿಲ್ಲ. ಅಷ್ಟಮಾಂಶ ಪದ್ಧತಿಯನ್ನೋ ಪಂಚಮಾಂಶ ಪದ್ಧತಿ ಯನ್ನೂ ಅನುಸರಿಸಲೂ ಸಾಧ್ಯವಿದೆ, ಮತ್ತು ಇಂತಹ ಭಾಷೆಗಳನ್ನಾಡುವವರಿಗೆ ದಶಮಾಂಶ ಗಣನಾಪದ್ಧತಿ ತರ್ಕಬದ್ದವಾಗಲಾರದು.

ಉದಾಹರಣೆಗಾಗಿ, ಅಸ್ಸಾಮಿನ ಬೋಡೋ ಜನಾಂಗದವರು ತಮ್ಮ ಭಾಷೆ ಯಲ್ಲಿ ಸಂಖ್ಯೆಗಳನ್ನು ನಾಲ್ಕಕ್ಕೆ ನಿಲ್ಲಿಸಿ ಅನಂತರ ನಾಲ್ಕೊಂದು, ನಾಲೈರಡು ಎಂಬುದಾಗಿ ಮುಂದುವರಿಯುತ್ತಾರೆ. ಇವರ ಭಾಷೆಯಲ್ಲಿ ಹತ್ತು ಎನ್ನಬೇಕಿದ್ದರೆ ‘ಎರಡು ನಾಲ್ಕುಗಳು ಮತ್ತು ಎರಡು’ ಎಂದು ಹೇಳಬೇಕು.

ಎರಡು ನಿಷೇಧಗಳಿದ್ದರೂ ನಿಷೇಧವೇ

ಎರಡು ನಿಷೇಧ ಪದಗಳನ್ನು ಒಂದು ವಾಕ್ಯದಲ್ಲಿ ಪ್ರಯೋಗಿಸಿದೆವಾದರೆ, ಅದಕ್ಕಿರುವ ನಿಷೇಧಾರ್ಥ ಮಾಯವಾಗಿ ಇದೆ ಎಂಬ ಅರ್ಥ ಬರುತ್ತದೆ ಎಂಬ ವಾದ (ಉದಾಹರಣೆಗಾಗಿ, ಕನ್ನಡದಲ್ಲಿ ಇಲ್ಲವೆಂದಿಲ್ಲ ಎಂದರೆ ಇದೆ ಎಂಬ ಅರ್ಥ ಬರುತ್ತದೆ ಎಂಬುದು) ನಮಗೇನೋ ತರ್ಕಬದ್ಧವಾಗಿ ತೋರಬಹುದು. ಆದರೆ ಫ್ರೆಂಚ್ ಮಾತನಾಡುವವನೊಬ್ಬನ ಹತ್ತಿರ ಹೋಗಿ ಕೇಳಿ ನೋಡಿದರೆ, ಇದಕ್ಕೆ ವಿರುದ್ಧವಾದ ಅಭಿಪ್ರಾಯ ದೊರಕೀತು. ಎರಡು ನಿಷೇಧಾರ್ಥಕ ಪದ ಗಳಿದ್ದರೂ ವಾಕ್ಯದ ಅರ್ಥ ನಿಷೇಧವಾಗಿಯೇ ಉಳಿಯಬಲ್ಲುದೆಂದು ಆತ ವಾದಿಸಬಹುದು. ಯಾಕೆಂದರೆ, ಫ್ರೆಂಚ್ ಭಾಷೆಯಲ್ಲಿ ಇಂತಹ ಪ್ರಯೋಗಗಳು ಕಾಣಸಿಗುತ್ತವೆ. ತರ್ಕಬದ್ಧತೆಯೆಂಬುದು ಭಾಷೆಯನ್ನವಲಂಬಿದೆಯಲ್ಲದೆ ಭಾಷೆ ಅದನ್ನವಲಂಬಿಸಿಲ್ಲ.

ಭಾಷೆಯ ಸ್ವಚ್ಛಂದತೆ

ಜರ್ಮನಿಯವನೊಬ್ಬ ಹೇಳಿದನಂತೆ, ‘ಈ ಫ್ರೆಂಚರು ನಿಜಕ್ಕೂ ತೀರ ವಿಚಿತ್ರ ಮನುಷ್ಯರು. ಯಾಕೆಂದರೆ, ಅವರು ರೊಟ್ಟಿಯನ್ನು ಡುವೇ ಎಂದು ಕರೆಯು ತ್ತಾರೆ. ಇದು ಹುಚ್ಚುತನವಲ್ಲದೆ ಮತ್ತೇನು? ಯಾರೇನೇ ಕರೆಯಲಿ, ನಿಜ ವಾಗಿಯೂ ಅದು ಬ್ರೋಟ್ ಎಂದು ಎಂತಹ ಹುಂಬನಿಗೂ ಗೊತ್ತಿದೆ’ (ಜರ್ಮನ್ ಭಾಷೆಯಲ್ಲಿ ರೊಟ್ಟಿಗೆ ಬ್ರೋಟ್ ಎಂದು ಹೆಸರು).

ಭಾಷೆಯ ಸ್ವಚ್ಛಂದತೆಯನ್ನು ಮೇಲಿನ ಕತೆ ಬಹಳ ಸುಂದರವಾಗಿ ವಿವರಿಸು ತ್ತದೆ. ಒಂದು ವಸ್ತುವನ್ನು ನಾವು ಅಂಗಿ ಎಂದು ಕರೆಯುತ್ತೇವೆ. ಇಲ್ಲಿ ಆ ವಸ್ತು ವಿಗೂ ಮತ್ತು ಅಂಗಿ ಎಂಬ ಪದದಲ್ಲಿ ಬರುವ ಅಕಾರ, ಅನುಸ್ವಾರ, ಗಕಾರ ಇಲ್ಲವೇ ಇಕಾರಗಳಿಗೂ ನಡುವೆ ನೇರವಾಗಿ ಯಾವ ತರದ ಸಂಬಂಧವೂ ಇಲ್ಲ.

೩೨


ವರ್ತಮಾನಕಾಲ

ನಮ್ಮ ಹಿರಿಯರು ಆ ವಸ್ತುವನ್ನು ಅಂಗಿ ಎಂದು ಕರೆದರು, ಅದನ್ನು ಕೇಳಿ ನಾವೂ ಹಾಗೆಯೇ ಕರೆಯುತ್ತಿದ್ದೇವೆ.

ವಸ್ತುವಿಗೂ ಅದನ್ನು ಹೆಸರಿಸುವ ಪದಕ್ಕೂ ನಡುವೆ ಸಹಜವಾದ ಸಂಬಂಧ ವಿದೆಯಾದರೆ, ಕನ್ನಡದ ಅಂಗಿ ಎಂಬುದು ಇಂಗ್ಲಿಷ್‌ನಲ್ಲಿ ಶರ್ಟ್ ಆಗಲಾರದು, ಇಲ್ಲವೇ ಹಿಂದಿಯಲ್ಲಿ ಕಮೀಜ್ ಆಗಲಾರದು. ಪದ ಮತ್ತು ಅರ್ಥಗಳ ನಡುವಿರುವ ಸಂಬಂಧ ಈ ರೀತಿ ರೂಢಿಮೂಲವಾದುದು. ಈ ರೂಢಿ ಇಲ್ಲವೇ ಪರಂಪರೆ ಭಾಷೆಯಿಂದ ಭಾಷೆಗೆ ಬೇರೆ ಬೇರಾಗಿರುತ್ತದೆ.

ಪದಗಳನ್ನು ಸೇರಿಸಿ ವಾಕ್ಯಗಳನ್ನು ಮಾಡುವ ಕ್ರಮವೂ ಇದೇ ರೀತಿ ಭಾಷೆ ಯಿಂದ ಭಾಷೆಗೆ ಬೇರೆ ಬೇರಾಗಿರುತ್ತದೆ. ಇಲ್ಲೂ ಕೂಡ ಸಾಕಷ್ಟು ವೈವಿಧ್ಯತೆಗೆ ಎಡೆಯಿದ್ದು, ಒಂದು ಭಾಷೆಯ ವ್ಯಾಕರಣ (ಎಂದರೆ ವಾಕ್ಯ ರಚನೆಯ ವಿಧಾನ) ಇನ್ನೊಂದು ಭಾಷೆಯ ವ್ಯಾಕರಣಕ್ಕಿಂತ ತೀರ ಭಿನ್ನವಾಗಿರಲು ಸಾಧ್ಯವಿದೆ. ಇದರಲ್ಲಿ ಒಂದು ಸರಿ, ಇನ್ನೊಂದು ತಪ್ಪು ಇಲ್ಲವೇ ಒಂದು ಇನ್ನೊಂದಕ್ಕಿಂತ ಉತ್ತಮ ಎಂದು ವಾದಿಸುವುದೆಂದರೆ, ಮೇಲೆ ಜರ್ಮನಿಯವನು ಫ್ರಾನ್ಸಿನವನ ಮಾತನ್ನು ಹೀಗಳೆದಂತಲ್ಲದೆ ಬೇರೇನಲ್ಲ.

೧.೬ ವರ್ತಮಾನ ಕಾಲ

ಕಾಲವೆಂಬುದು ಅನವರತವಾಗಿ ಸಾಗುತ್ತಲೇ ಇರುತ್ತದೆ. ಅದನ್ನು ಬೇರೆ ಬೇರೆ ತುಣುಕುಗಳಾಗಿ ಒಡೆಯಲು, ಮತ್ತು ಆ ತುಣುಕುಗಳನ್ನು ಬೇರೆ ಬೇರೆಯೆಂದು ಗುರುತಿಸಲು ಕಾಲದಲ್ಲಿ ಜರಗುವ ಘಟನೆಗಳನ್ನು ನಾವು ಬಳಸಿಕೊಳ್ಳಬೇಕಾಗು ತ್ತದೆ. ಗಡಿಯಾರದ ಮುಳ್ಳುಗಳ ಚಲನೆಯನ್ನಾಧರಿಸಿ ಕಾಲವನ್ನು ನಾವು ಸೆಕೆಂಡು, ಮಿನಿಟು ಮತ್ತು ಗಂಟೆಗಳಾಗಿ ಒಡೆಯುತ್ತೇವೆ, ಮತ್ತು ಗಡಿಯಾರದಲ್ಲಿರುವ ದೊಡ್ಡ ಮುಳ್ಳು ಮತ್ತು ಸಣ್ಣ ಮುಳ್ಳುಗಳು ಯಾವ ಅಂಕೆಯ ಮುಂದೆ ನಿಂತಿವೆ ಎಂಬುದನ್ನಾಧರಿಸಿ, ಇಂತಿಷ್ಟನೇ ಗಂಟೆಯ ಇಂತಿಷ್ಟನೇ ಮಿನಿಟು ಎಂಬುದಾಗಿ ಆ ತುಣುಕುಗಳಲ್ಲೊಂದನ್ನು ಗುರುತಿಸುತ್ತೇವೆ.

ಇದೇ ರೀತಿಯಲ್ಲಿ ಸೂರ್ಯನ ಚಲನೆಯನ್ನಾಧರಿಸಿ ಕಾಲವನ್ನು ದಿನಗಳಾಗಿ ಮತ್ತು ದಿನದ ಭಾಗಗಳಾಗಿ ಒಡೆಯುತ್ತೇವೆ ಮತ್ತು ಆ ಭಾಗಗಳನ್ನು ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಇತ್ಯಾದಿಯಾಗಿ ಗುರುತಿಸುತ್ತೇವೆ. ಇದಲ್ಲದೆ, ದಿನ ಗಳನ್ನು ವಾರ, ತಿಂಗಳು ಮತ್ತು ವರ್ಷಗಳಲ್ಲಿ ಜೋಡಿಸುತ್ತೇವೆ ಮತ್ತು ಅವಕ್ಕೆ ತಾರೀಕು, ವಾರ, ತಿಂಗಳು ಮತ್ತು ಇಸವಿಗಳ ಹೆಸರು ಕೊಟ್ಟು ಗುರುತಿಸುತ್ತೇವೆ.

ಕಾಲವನ್ನು ಈ ರೀತಿ ಒಡೆದು ಹೆಸರಿಸುವ ವಿಧಾನ ಹಿಂದಿನ ಕಾಲದಲ್ಲಿ ಊರಿಂದೂರಿಗೆ ಬೇರೆ ಬೇರಾಗಿತ್ತು. ಆದರೆ ಈವತ್ತು ನಾವೆಲ್ಲ ಕೈಗೆ ವಾಚು

೩೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಟ್ಟಿ, ಗೋಡೆಗೆ ಕೆಲೆಂಡರ್ ತೂಗ ಹಾಕಿ, ಪ್ರಪಂಚದಲ್ಲಿರುವವರೆಲ್ಲರೂ ಒಂದೇ ವಿಧಾನವನ್ನನುಸರಿಸುವ ಹಾಗಾಗಿದೆ.

ವ್ಯಾಕರಣದಲ್ಲಿ ಕಾಲ

ಆದರೆ, ವ್ಯಾಕರಣದಲ್ಲಿ ಕಾಣಿಸುವ ಕಾಲದ ವಿಭಜನೆ ಇದಕ್ಕಿಂತ ತೀರಾ ಭಿನ್ನ ವಾದುದು, ಮತ್ತು ಭಾಷೆಯಿಂದ ಭಾಷೆಗೂ ಭಿನ್ನವಾಗಿರುವಂತಹದು. ಎಲ್ಲಾ ಭಾಷೆಗಳೂ ಒಂದೇ ರೀತಿಯ ಕಾಲವಿಭಜನೆಯನ್ನು ಬಳಸಿದರೆ ಉತ್ತಮ ಎಂದು ನಾವು ಭಾವಿಸಬಹುದು, ಆದರೆ, ಹಾಗೆ ಬಳಸುವಂತೆ ಮಾಡಲು ಯಾರಿಗೂ ಸಾಧ್ಯವಾಗದು.

ಇದಕ್ಕೆ ಕಾರಣವೇನೆಂದರೆ, ಭಾಷೆಯನ್ನು ಬಳಸುವವರಿಗೆ ತಾವು ತಮ್ಮ ಭಾಷೆಯಲ್ಲಿ ಕಾಲದ ವಿಭಜನೆಗಾಗಿ ಎಂತಹ ವಿಧಾನವನ್ನು ಬಳಸುತ್ತಿರುತ್ತೇವೆ ಎಂಬುದೇ ತಿಳಿದಿರುವುದಿಲ್ಲ. ಅದರ ಬಳಕೆ ಅವರ ಅರಿವಿಗೆ ಎಟಕದ ರೂಪದಲ್ಲಿ ನಡೆಯುತ್ತಿರುತ್ತದೆ. ವೈಯಾಕರಣಿಗಳು ತಾವು ವರ್ಣಿಸುವ ಭಾಷೆಯಲ್ಲಿ ಕಾಲದ ಬಳಕೆ ಹೇಗಿದೆ ಎಂಬುದನ್ನು ಪರಿಶೀಲಿಸುವ ಮೂಲಕ ತಿಳಿಯಬಲ್ಲರಾದರೂ, ಅವರೂ ಅದನ್ನು ತಮ್ಮ ಅರಿವಿಗೆ ಎಟಕದ ರೂಪದಲ್ಲೇನೇ ಬಳಸಬೇಕಾಗುತ್ತದೆ.

ಕನ್ನಡದ ಎರಡು ವಿಧಾನಗಳು

ಕನ್ನಡದ ಮಟ್ಟಿಗೆ ಹೇಳುವುದಾದರೆ, ನಾವು ಕಾಲದ ವಿಭಜನೆಗಾಗಿ ಎರಡು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತೇವೆ. ಇವುಗಳಲ್ಲಿ ಮೊದಲನೆಯ ವಿಧಾನದ ಮೂಲಕ ನಾವು ಒಂದು ಘಟನೆಯ ಕಾಲ ಯಾವುದೆಂಬುದನ್ನು ಸೂಚಿಸುತ್ತೇವೆ, ಮತ್ತು ಇನ್ನೊಂದು ವಿಧಾನದ ಮೂಲಕ ಎರಡು ಘಟನೆಗಳ ನಡುವೆ ಕಾಲದ ಮಟ್ಟಿಗೆ ಎಂತಹ ಸಂಬಂಧವಿದೆಯೆಂಬುದನ್ನು ತಿಳಿಸುತ್ತೇವೆ.

ಒಂದು ಘಟನೆ ಅದನ್ನು ವರದಿ ಮಾಡುವ ಸಮಯಕ್ಕಿಂತ ಮೊದಲು ನಡೆ ದಿರಬಹುದು ಇಲ್ಲವೇ ಅದರ ಅನಂತರ ನಡೆಯಲಿರಬಹುದು. ಈ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಕನ್ನಡದ ಕ್ರಿಯಾಪದಗಳಿಗೆಲ್ಲ ಎರಡೆರಡು ಕಾಲರೂಪಗಳಿವೆ. ಉದಾಹರಣೆಗಾಗಿ, ‘ರಾಜು ಪೇಟೆಗೆ ಹೋಗು’ವ ಘಟನೆ ಅದನ್ನು ವರದಿ ಮಾಡುವ ಸಮಯಕ್ಕಿಂತ ಮೊದಲೇ ನಡೆದಿದೆಯಾದರೆ, ಅದನ್ನು ಸೂಚಿಸಲು ಹೋದ ಎಂಬ ರೂಪವಿದೆ ಮತ್ತು ಅನಂತರ ನಡೆಯಲಿರುವುದಾದರೆ ಹೋಗು ತ್ತಾನೆ ಎಂಬ ರೂಪವಿದೆ.

ಎರಡು ಘಟನೆಗಳ ನಡುವೆ ಮೂರು ರೀತಿಯ ಸಂಬಂಧಗಳಿರಬಲ್ಲುವು: ಒಂದು ಘಟನೆ ಇನ್ನೊಂದು ಘಟನೆಯ ಮೊದಲು ನಡೆದಿರಬಹುದು, ಅನಂತರ ನಡೆದಿರಬಹುದು, ಇಲ್ಲವೇ ಅವೆರಡೂ ಒಟ್ಟಿಗೆ ಒಂದೇ ಕಾಲದಲ್ಲಿ ನಡೆದಿರಬ ಹುದು (ಅಥವಾ ನಡೆಯಲಿರಬಹುದು). ಇದನ್ನು ಸೂಚಿಸುವುದಕ್ಕಾಗಿ ಎರಡು

ಇಳ


ವರ್ತಮಾನಕಾಲ

ಘಟನೆಗಳಲ್ಲಿ ಮೊದಲನೆಯದನ್ನು ಸೂಚಿಸುವ ಕ್ರಿಯಾಪದಕ್ಕೆ ಕನ್ನಡದಲ್ಲಿ ಮೂರು ರೂಪಗಳಿವೆ.

ಉದಾಹರಣೆಗಾಗಿ, ‘ತಿಂಡಿ ತಿನ್ನುವ’ ಘಟನೆ ಮತ್ತು ‘ಮನೆಗೆ ಹೋಗುವ’ ಘಟನೆಗಳ ನಡುವಿರುವ ಈ ಮೂರು ರೀತಿಯ ಸಂಬಂಧಗಳನ್ನು ಸೂಚಿಸುವು ದಕ್ಕಾಗಿ ಅವುಗಳಲ್ಲಿ ಮೊದಲಿನದನ್ನು ಸೂಚಿಸುವ ಕ್ರಿಯಾಪದವನ್ನು ಮೂರು ಬೇರೆ ಬೇರೆ ರೂಪಗಳಲ್ಲಿ ಬಳಸಬಲ್ಲೆವು:

  1. (೧) ಜಾನಕಿ ತಿಂಡಿ ತಿಂದು ಮನೆಗೆ ಹೋಗುತ್ತಾಳೆ.
  2. (೨) ಜಾನಕಿ ತಿಂಡಿ ತಿನ್ನುತ್ತಾ ಮನೆಗೆ ಹೋಗುತ್ತಾಳೆ.
  3. (೩) ಜಾನಕಿ ತಿಂಡಿ ತಿನ್ನಲು ಮನೆಗೆ ಹೋಗುತ್ತಾಳೆ.

ಮೇಲಿನ ವಾಕ್ಯಗಳಲ್ಲಿ ‘ತಿಂಡಿ ತಿನ್ನುವ’ ಘಟನೆಯನ್ನು ತಿಂದು, ತಿನ್ನುತ್ತಾ ಮತ್ತು ತಿನ್ನಲು ಎಂಬ ಮೂರು ಕ್ರಿಯಾರೂಪಗಳ ಮೂಲಕ ಸೂಚಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಕನ್ನಡದಲ್ಲಿ ಈ ರೀತಿ ಘಟನೆಗಳನ್ನು ಸೂಚಿಸುವ ಎಲ್ಲಾ ಕ್ರಿಯಾಪದಗಳಿಗೂ ಕಾಲವನ್ನು ಸೂಚಿಸುವುದಕ್ಕಾಗಿ ಎರಡು ಪೂರ್ಣ ರೂಪಗಳಿವೆ ಮತ್ತು ಮೂರು ಅಪೂರ್ಣ ರೂಪಗಳಿವೆ. ಪೂರ್ಣರೂಪಗಳ ಮೂಲಕ ಒಂದು ಘಟನೆಯ ಸಮಯವನ್ನು ಅದನ್ನು ವರದಿ ಮಾಡುವ ಸಮಯಕ್ಕೆ ಸಂಬಂಧಿಸಿದಂತೆ ಸೂಚಿಸು ತೇವೆ, ಮತ್ತು ಅಪೂರ್ಣ ರೂಪಗಳ ಮೂಲಕ ಸಮಯದ ಮಟ್ಟಿಗೆ ಎರಡು ಘಟನೆಗಳ ನಡುವಿರುವ ಸಂಬಂಧವೆಂಹದು ಎಂಬುದನ್ನು ಸೂಚಿಸುತ್ತೇವೆ. ಇವು ಸಮಯವನ್ನು ಸೂಚಿಸುವುದಕ್ಕಾಗಿ ಕನ್ನಡದಲ್ಲಿ ಬಳಕೆಯಾಗುವ ಎರಡು ವಿಧಾನಗಳು.

ಇರು ಕ್ರಿಯಾಪದದ ವೈಶಿಷ್ಟ್ಯ

ಇರು ಎಂಬ ಒಂದು ಕ್ರಿಯಾಪದಕ್ಕೆ ಮಾತ್ರ ಕನ್ನಡದಲ್ಲಿ (ಇದ್ದ, ಇರುತ್ತಾನೆ ಮತ್ತು ಇದ್ದಾನೆ ಎಂಬುದಾಗಿ) ಮೂರು ಬೇರೆ ಬೇರೆ ಕಾಲಗಳನ್ನು ಸೂಚಿಸುವ ಪೂರ್ಣರೂಪಗಳಿವೆ. ಇವು ವರದಿ ಮಾಡುವ ಸಮಯಕ್ಕಿಂತ ಮೊದಲು, ಅದರ ಅನಂತರ, ಮತ್ತು ಅದೇ ಸಮಯಗಳಲ್ಲಿ ಕಾಣಿಸುವ ಇರುವಿಕೆಗಳನ್ನು ಸೂಚಿಸು ತ್ತವೆ.

ಇರು ಎಂಬುದು ಒಂದು ಘಟನೆಯನ್ನು ಸೂಚಿಸುವ ಬದಲು ‘ಇರುವಿಕೆ’ ಎಂಬ ಒಂದು ಸ್ಥಿತಿಯನ್ನು ಸೂಚಿಸುತ್ತಿರುವುದೇ ಅದಕ್ಕೆ ಈ ರೀತಿ ಮೂರು ಪೂರ್ಣರೂಪಗಳಿರುವುದಕ್ಕೆ ಕಾರಣವಿರಬೇಕು. (ಇದಲ್ಲದೆ, ಇತರ ಕ್ರಿಯಾಪದ ಗಳ ಹಾಗೆ ಇರು ಎಂಬುದಕ್ಕೂ ಇದ್ದು, ಇರುತ್ತಾ ಮತ್ತು ಇರಲು ಎಂಬುದಾಗಿ ಮೂರು ಅಪೂರ್ಣ ರೂಪಗಳಿವೆ).

೩೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವರ್ತಮಾನ ಕಾಲ

ಒಂದು ಘಟನೆ ಅದನ್ನು ವರದಿ ಮಾಡುವ ಸಮಯದಲ್ಲೇನೇ ನಡೆಯುತ್ತಿದೆ ಎಂಬುದನ್ನು ಸೂಚಿಸಲು ಕನ್ನಡದಲ್ಲಿ ವಿಶಿಷ್ಟವಾದ ‘ವರ್ತಮಾನ’ ಕಾಲದ ಕ್ರಿಯಾ ರೂಪವಿಲ್ಲ. ಹಾಗಾಗಿ, ಈ ಅರ್ಥವನ್ನು ಸೂಚಿಸಬೇಕಾದಾಗ ನಾವು ಒಂದು ಘಟನೆಗೂ ಅದರ ಇರುವಿಕೆಗೂ ನಡುವಿರುವ ಸಂಬಂಧವನ್ನು ಸೂಚಿಸುವಂತಹ ಬಳಸುದಾರಿಯನ್ನು ಹಿಡಿಯಬೇಕಾಗುತ್ತದೆ.

ಉದಾಹರಣೆಗಾಗಿ, ‘ರಾಜು ಹೋಗುವ’ ಘಟನೆ ಅದನ್ನು ವರದಿ ಮಾಡುವ ಸಮಯದಲ್ಲೇನೇ ನಡೆಯುತ್ತಿದೆ ಎಂಬುದನ್ನು ಸೂಚಿಸಬೇಕಿದ್ದಲ್ಲಿ ರಾಜು ಹೋಗುತ್ತಾ ಇದ್ದಾನೆ (ಇಲ್ಲವೇ ಹೋಗುತ್ತಿದ್ದಾನೆ) ಎಂಬುದಾಗಿ ಹೋಗು ವಿಕೆಗೂ ಇರುವಿಕೆಗೂ ನಡುವಿರುವ ಸಂಬಂಧ ಒಂದೇ ಕಾಲದ್ದು (ಮತ್ತು ಆ ಇರುವಿಕೆ ಈಗಿನದು) ಎಂಬುದಾಗಿ ಅಪೂರ್ಣರೂಪ ಮತ್ತು ಪೂರ್ಣರೂಪಗಳ ಜೋಡಿಯನ್ನು ಬಳಸಬೇಕಾಗಿದೆ.

ಕಾಲಭೇದ ತೋರಿಸದ ಪದಗಳು

ಬಲ್ ಮತ್ತು ಆರ್ ಎಂಬ ಎರಡು ಕ್ರಿಯಾಪದಗಳಿಗೆ ಕನ್ನಡದಲ್ಲಿ ಕಾಲವನ್ನು ಸೂಚಿಸುವ ಪ್ರತ್ಯಯವನ್ನು ಸೇರಿಸಲು ಸಾಧ್ಯವಾಗದು (ಮಾಡಬಲ್ಲೆ, ಹೋಗ ಲಾರೆ, ಮೊದಲಾದ ಪ್ರಯೋಗಗಳಲ್ಲಿ ಅವುಗಳ ಮುಂದೆ ಕಾಲಪ್ರತ್ಯಯ ಬಂದಿಲ್ಲ ಎಂಬುದನ್ನು ಗಮನಿಸಬಹುದು). ಇವು ಘಟನೆಯನ್ನು ಸೂಚಿಸುವ ಬದಲು, ಘಟನೆಯಲ್ಲಿ ತೊಡಗಲು ವ್ಯಕ್ತಿಯೊಬ್ಬನಿಗಿರುವ (ಅಥವಾ ಇಲ್ಲದಿರುವ) ‘ಸಾಮರ್ಥ್ಯ’ವನ್ನು ಸೂಚಿಸುತ್ತವೆ. ಇವಕ್ಕೆ ನೇರವಾಗಿ ಕಾಲಭೇದವನ್ನು ಸೂಚಿಸುವ ಶಕ್ತಿಯಿಲ್ಲ. ಹಾಗೆ ಸೂಚಿಸಬೇಕಾದಲ್ಲಿ, ಮಾಡಬಲ್ಲವನಾಗಿದ್ದೆ, ಮಾಡಬಲ್ಲವನಾಗುತ್ತೇನೆ ಎಂಬಂತಹ ಪ್ರಯೋಗಗಳಲ್ಲಿ ಕಾಣಿಸುವ ಹಾಗೆ, ಬಳಸುದಾರಿಯನ್ನು ಹಿಡಿಯಬೇಕಾಗುತ್ತದೆ.

ಮೂರು ಕಾಲಗಳು

ಕನ್ನಡದ ವ್ಯಾಕರಣಗಳಲ್ಲೆಲ್ಲ ಸಾಮಾನ್ಯವಾಗಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಮೂರು ಕಾಲಗಳಿವೆಯೆಂದು, ಮತ್ತು ಇವನ್ನು ಸೂಚಿ ಸುವುದಕ್ಕಾಗಿ ಕನ್ನಡದಲ್ಲಿ ಬಂದ, ಬರುತ್ತಾನೆ ಮತ್ತು ಬರುವನು ಎಂಬಂತಹ ಮೂರು ಕ್ರಿಯಾರೂಪಗಳಿವೆಯೆಂದು ಹೇಳುವುದು ರೂಢಿ.

ಆದರೆ ಈ ಮೂರು ಕ್ರಿಯಾರೂಪಗಳಲ್ಲಿ ಬರುವನು ಎಂಬಂತಹ ರೂಪ ಗಳನ್ನು ಕನ್ನಡದ ಕೆಲವು ಬರಹಗಾರರು ಮಾತ್ರ ಬಳಸುತ್ತಿದ್ದಾರೆ; ಮತ್ತು ಹಾಗೆ ಬಳಸಿರುವಲ್ಲೂ ಅವಕ್ಕೆ ಬರುತ್ತಾನೆ ಎಂಬಂತಹ ರೂಪಗಳ ಅರ್ಥವೇ ಇರುವ ಹಾಗೆ ಕಾಣಿಸುತ್ತದೆ.

೩೬


ವರ್ತಮಾನಕಾಲ

ಹಳೆಗನ್ನಡದಲ್ಲೂ ‘ವರ್ತಮಾನ’ ರೂಪವೆಂಬುದಾಗಿ ವೈಯಾಕರಣಿಗಳು ಹೇಳುವ ಮಾಡಿದಪಂ, ಎತ್ತಿದಪಂ ಎಂಬಂತಹ ರೂಪಗಳು ಹೊಸಗನ್ನಡದ ಮಾಡುತ್ತಾ ಇದ್ದಾನೆ (ಮಾಡುತ್ತಿದ್ದಾನೆ), ಎತ್ತುತ್ತಾ ಇದ್ದಾನೆ ಎಂಬ ರೂಪಗಳ ಹಾಗೆ, ಮೇಲೆ ವಿವರಿಸಿದ ಎರಡು ವಿಧಾನಗಳ ಸೇರಿಕೆಯಿಂದ (ಎಂದರೆ ಅಪೂರ್ಣ ಮತ್ತು ಪೂರ್ಣ ಕ್ರಿಯಾರೂಪಗಳ ಸೇರಿಕೆಯಿಂದ) ತಯಾರಾದ ರೂಪಗಳಲ್ಲದೆ, ಒಂದೇ ವಿಧಾನದಲ್ಲಿ ತಯಾರಾದ (ಒಂದೇ ಕ್ರಿಯಾ ಪದದ) ರೂಪಗಳಲ್ಲ.

ಉದಾಹರಣೆಗಾಗಿ, ಮಾಡಿದಪಂ ಎಂಬುದರಲ್ಲಿ ಮಾಡಿದ ಎಂಬ ಅಪೂರ್ಣ ಕ್ರಿಯಾರೂಪದ ಮೂಲಕ ಮಾಡುವ ಘಟನೆಗೂ ಆಗುವ ಘಟನೆಗೂ ನಡುವಿರುವ ಸಂಬಂಧವನ್ನು ಸೂಚಿಸಲಾಗಿದೆ, ಮತ್ತು ಅಪಂ (ಅಪ್ಪಂ) ಎಂಬ ಬೇರೊಂದು ಕ್ರಿಯಾಪದದ ಪೂರ್ಣ ಕ್ರಿಯಾರೂಪದದ ಮೂಲಕ ಆಗುವ ಘಟನೆ ನಡೆಯುವುದು (ಎಂದರೆ ಮಾಡುವ ಘಟನೆ ಕೊನೆಗೊಳ್ಳುವುದು) ವರದಿ ಮಾಡುವ ಸಮಯದ ಅನಂತರ ಎಂಬುದನ್ನು ಸೂಚಿಸಲಾಗಿದೆ.

ಇದಲ್ಲದೆ, ಹಳೆಗನ್ನಡದಲ್ಲಿ ಈ ಕ್ರಿಯಾರೂಪವನ್ನು ವರ್ತಮಾನಾರ್ಥ ಮತ್ತು ಭವಿಷ್ಯದರ್ಥಗಳೆಂಬ ಎರಡು ಅರ್ಥಗಳಲ್ಲೂ ಬಳಸಲಾಗುತ್ತಿತ್ತು; ಉದಾಹರಣೆ ಗಾಗಿ, ಪಂಪನ ಕಾವ್ಯಗಳಲ್ಲಿ ಈ ಕ್ರಿಯಾರೂಪಗಳ ಬಳಕೆಯನ್ನು ಗಮನಿಸಿದಾಗ ಈ ವಿಷಯ ಸ್ಪಷ್ಟವಾಗುತ್ತದೆ (ನನ್ನ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಪುಸ್ತಕವನ್ನು ನೋಡಿ); ಹಳೆಗನ್ನಡದ ವ ರೂಪಕ್ಕೂ ಇಂತಹದೇ ಬಳಕೆಯಿದೆ; ಅದನ್ನೂ ವರ್ತಮಾನಾರ್ಥ ಮತ್ತು ಭವಿಷ್ಯದರ್ಥಗಳೆಂಬ ಎರಡು ಅರ್ಥಗಳಲ್ಲೂ ಬಳಸಲಾಗುತ್ತಿತ್ತು. ಹಾಗಾಗಿ, ಹಳೆಗನ್ನಡದ ದಪ ಮತ್ತು ವ ರೂಪಗಳ ನಡುವಿನ ವ್ಯತ್ಯಾಸ ಕಾಲದ ವ್ಯತ್ಯಾಸವೇ ಅಲ್ಲ ಎಂದು ಹೇಳಬೇಕಾಗು ತ್ತದೆ.

ಮಣಿಪುರಿಯಲ್ಲಿ ಕಾಲಭೇದ

ಕಾಲವನ್ನು ವಿಭಜಿಸುವ ವಿಧಾನ, ಮತ್ತು ಅದನ್ನು ಕ್ರಿಯಾಪದಗಳ ಮೂಲಕ ಸೂಚಿಸುವ ವಿಧಾನ, ಮೇಲೆ ತಿಳಿಸಿದ ಹಾಗೆ, ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರಾಗಿರುತ್ತದೆ. ಉದಾಹರಣೆಗಾಗಿ, ಮಣಿಪುರಿ ಭಾಷೆಯಲ್ಲಿ ಕಾಲವನ್ನು ಸೂಚಿ ಸುವುದಕ್ಕಾಗಿ ಕನ್ನಡದಲ್ಲಿರುವ ಹಾಗೆ ಎರಡು ಪೂರ್ಣ ಕ್ರಿಯಾರೂಪಗಳಿವೆ ಯಾದರೂ ಅವುಗಳ ಬಳಕೆ ಕನ್ನಡದ ಕ್ರಿಯಾರೂಪಗಳ ಬಳಕೆಗಿಂತ ಭಿನ್ನವಾಗಿದೆ:

ಕನ್ನಡದಲ್ಲಿ ಈಗ ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಘಟನೆ ಗಳನ್ನು ಒಟ್ಟು ಸೇರಿಸಿ ಒಂದು ಕ್ರಿಯಾರೂಪದ ಮೂಲಕವೂ, ಹಿಂದೆ ನಡೆದಿದ್ದ ಘಟನೆಗಳನ್ನು ಇನ್ನೊಂದು ಕ್ರಿಯಾರೂಪದ ಮೂಲಕವೂ ಸೂಚಿಸಲಾಗುತ್ತದೆ; ಆದರೆ, ಮಣಿಪುರಿ ಭಾಷೆಯಲ್ಲಿ ಹಿಂದೆ ನಡೆದಿದ್ದ ಮತ್ತು ಈಗ ನಡೆಯು ತಿರುವ ಘಟನೆಗಳನ್ನು ಒಟ್ಟು ಸೇರಿಸಿ ಒಂದು ಕ್ರಿಯಾರೂಪದ ಮೂಲಕವೂ,

೩೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮುಂದೆ ನಡೆಯಲಿರುವ ಘಟನೆಯನ್ನು ಬೇರೊಂದು ಕ್ರಿಯಾರೂಪದ ಮೂಲಕವೂ ಸೂಚಿಸಲಾಗುತ್ತದೆ.

ಮೂರು ದೃಷ್ಟಿಕೋನಗಳು

ಸಮಯವನ್ನು ಸೂಚಿಸುವ ವಿಧಾನಗಳ ಬಳಕೆಯಲ್ಲಿ ಭಾಷೆಗಳ ನಡುವೆ ಕಾಣಿಸುವ ಒಂದು ಪ್ರಾಮುಖ್ಯವಾದ ವ್ಯತ್ಯಾಸವೇನೆಂದರೆ, ಅವು ಘಟನೆಗಳ ಸಮಯವನ್ನು ಒಂದೇ ದೃಷ್ಟಿಕೋನದಿಂದ ಪರಿಶೀಲಿಸುವುದಿಲ್ಲ.

ಕನ್ನಡ, ಮಣಿಪುರಿ, ಇಂಗ್ಲಿಷ್ ಮೊದಲಾದ ಭಾಷೆಗಳು ವರದಿ ಮಾಡುವ ಸಮಯಕ್ಕೂ ಘಟನೆ ನಡೆಯುವ ಸಮಯಕ್ಕೂ ನಡುವಿರುವ ಸಂಬಂಧಕ್ಕೆ ಪ್ರಾಶಸ್ತ್ರ ಕೊಡುವುವಾದರೆ, ಸಂಸ್ಕೃತ, ಹಿಂದಿ, ಮರಾಠಿ, ಮಾಲ್ಟೀಸ್, ಹೋಪಿ ಮೊದಲಾದ ಭಾಷೆಗಳು ಘಟನೆಗಳ ಆಂತರಿಕ ಕಾಲವ್ಯವಸ್ಥೆಗೆ, ಎಂದರೆ ಅವು ಸಂಪೂರ್ಣವೋ, ಅಸಂಪೂರ್ಣವೋ, ಕ್ಷಣಿಕವೋ, ನಿರಂತರವೋ, ಒಮ್ಮೆ ನಡೆದವುಗಳೋ, ಹಲವು ಬಾರಿ ನಡೆದವುಗಳೋ ಎಂಬಂತಹ ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ರ ಕೊಡುತ್ತವೆ.

ಇದಲ್ಲದೆ, ಘಟನೆಯ ಯಥಾರ್ಥತೆಗೆ (ಅದು ನಿಜಕ್ಕೂ ನಡೆದಿದೆಯೇ ಅಥವಾ ಇಲ್ಲವೇ, ನಡೆದಿದೆಯೆನ್ನಲು ಎಂತಹ ಪುರಾವೆಗಳಿವೆ ಮತ್ತು ಅದು ನಡೆಯುವಂತೆ ಮಾಡುವ ಶಕ್ತಿಗಳು ಎಂತಹವು ಎಂಬಂತಹ ವಿಷಯಗಳಿಗೆ) ಪ್ರಾಶಸ್ತ್ರ ಕೊಡುವ ಭಾಷೆಗಳೂ ಹಲವಿವೆ.

ಉದಾಹರಣೆಗಾಗಿ ಬರ್ಮಿಸ್‌ ಭಾಷೆಯ ಕ್ರಿಯಾಪದಗಳಿಗೆ ಎರಡು ರೂಪ ಗಳಿದ್ದು, ಇವು ಘಟನೆ ಯಥಾರ್ಥವೇ ಅಥವಾ ಅಲ್ಲವೇ ಎಂಬುದನ್ನು ಸೂಚಿಸು ತ್ತವೆ. ನಡೆದಿರುವ ಘಟನೆ ಮತ್ತು ನಡೆಯುತ್ತಿರುವ ಘಟನೆ ಇವೆರಡನ್ನೂ ಒಂದು ಕ್ರಿಯಾರೂಪ ಸೂಚಿಸುತ್ತದೆ, ಮತ್ತು ನಡೆಯಲಿರುವ ಘಟನೆ ಮತ್ತು ನಡೆದಿರ ಬಹುದಾದ (ಆದರೆ ಈ ವಿಷಯದಲ್ಲಿ ಸಂಶಯವಿರುವ) ಘಟನೆ ಇವೆರಡನ್ನು ಎರಡನೆಯ ರೂಪ ಸೂಚಿಸುತ್ತದೆ.

ಈ ರೀತಿ ಕ್ರಿಯಾರೂಪಗಳ ಮೂಲಕ ಕಾಲಸಂಬಂಧ ಇಲ್ಲವೇ ಕಾಲವ್ಯವಸ್ಥೆ ಯನ್ನು ಸೂಚಿಸುವ ಬದಲು, ಘಟನೆಯ ಯಥಾರ್ಥತೆಯನ್ನು ಸೂಚಿಸುವ ಭಾಷೆ ಗಳೂ ಹಲವಿವೆ. ‘ಸೆನೆಕಾ’ದಂತಹ ಅಮೆರಿಕಾದ ಉತ್ತರ ಇರೊಕ್ವಿಯನ್ ಭಾಷೆ ಗಳು, ‘ಮುನಾ’ದಂತಹ ಪೋಲಿನೇಶಿಯನ್ ಭಾಷೆಗಳು, ‘ಕಯಾರದಿಲ್’ನಂತಹ ಆಸ್ಟ್ರೇಲಿಯಾದ ಭಾಷೆಗಳು, ‘ಮನಾಮ್’ನಂತಹ ಓಶಿಯಾನಿಕ್ ಭಾಷೆಗಳು ಇಂತಹವು. (ಜಾಸ್ತಿ ವಿವರಗಳಿಗೆ ೧೯೯೯ರಲ್ಲಿ ಅಮ್‌ಸ್ಟರ್‌ಡಾಮಿನ ಜಾನ್ ಬೆಂಜಮಿನ್ಸ್ ಕಂಪೆನಿ ಪ್ರಕಟಿಸಿದ ನನ್ನ ಪುಸ್ತಕ The Prominence of Tense, Aspect and Mood ಎಂಬ ಪುಸ್ತಕವನ್ನು ನೋಡಬಹುದು).

ಇಲ್ಲಿ ಒಂದು ವಿಷಯವನ್ನು ನಾವು ನೆನಪಿನಲ್ಲಿರಿಸಿಕೊಳ್ಳುವುದು ಅವಶ್ಯ. ತಾರ್ಕಿಕರು ನಮ್ಮ ಮುಂದಿರಿಸುವ ನಿಯಮಗಳು ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ

೩೮


ಎಣಿಕೆಯಲ್ಲೂ ವೈವಿಧ್ಯವಿದೆ

ಪ್ರದೇಶಗಳಿಗೂ ಒಂದೇ ರೀತಿಯಲ್ಲಿ ಅನ್ವಯಿಸುವಂತಹ ನಿಯಮಗಳು. ಅವು ಎಲ್ಲಾ ಭಾಷೆಗಳಿಗೂ ಸಮಾನವಾಗಿ ಅನ್ವಯಿಸುತ್ತವೆ.

ಆದರೆ, ವ್ಯಾಕರಣದ ನಿಯಮಗಳು ಇವಕ್ಕಿಂತ ತೀರ ಭಿನ್ನವಾಗಿದ್ದು, ಒಂದು ಭಾಷೆಯ ಒಂದು ಪ್ರಭೇದಕ್ಕೆ ಮಾತ್ರ ಅನ್ವಯಿಸುವಂತಹವುಗಳು. ಹಳೆಗನ್ನಡದ ವ್ಯಾಕರಣ ನಿಯಮಗಳಲ್ಲಿ ಹಲವು ಹೊಸಗನ್ನಡಕ್ಕೆ ಅನ್ವಯಿಸಲಾರವು, ಮತ್ತು ಹೊಸಗನ್ನಡದ ಹಲವು ನಿಯಮಗಳು ಹಿಂದಿಗಾಗಲಿ, ಮರಾಠಿಗಾಗಲಿ, ಸಂಸ್ಕೃತ ಕ್ಕಾಗಲಿ ಅನ್ವಯಿಸಲಾರವು.

ಎಲ್ಲಾ ಭಾಷೆಗಳಿಗೂ ಮೂರು ಕಾಲಗಳನ್ನು ಸೂಚಿಸುವ ಅವಶ್ಯಕತೆಯಿದೆ, ಹಾಗಾಗಿ, ಎಲ್ಲಾ ಭಾಷೆಗಳಲ್ಲೂ ಕ್ರಿಯಾಪದಗಳಿಗೆ ಮೂರು ಕಾಲರೂಪಗಳಿರ ಬೇಕು ಎಂದು ವಾದಿಸುವವರು ತಾರ್ಕಿಕ ನಿಯಮಗಳಿಗೂ ವ್ಯಾಕರಣ ನಿಯಮ ಗಳಿಗೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸಿಲ್ಲ ಎಂಬುದು ಸ್ಪಷ್ಟ.

ವ್ಯಾಕರಣಗಳ ಮಟ್ಟಿಗಂತೂ ಇಂತಹ ನಿಯಮಗಳನ್ನು ಹಾಕಲು ಸಾಧ್ಯವೇ ಇಲ್ಲ. ಯಾಕೆಂದರೆ, ಘಟನೆಗಳ ಸಮಯಕ್ಕೂ ಅವನ್ನು ವರದಿ ಮಾಡುವ ಸಮಯಕ್ಕೂ ನಡುವೆ ಎಂತಹ ಸಂಬಂಧವಿದೆ ಎಂಬುದನ್ನು ಕ್ರಿಯಾಪದಗಳ ಮೂಲಕ ನೇರವಾಗಿ ಸೂಚಿಸದೇ ಇರುವಂತಹ (tenseless) ಹಲವು ಭಾಷೆ ಗಳಿವೆ. ಇವು ಕ್ರಿಯಾರೂಪಗಳ ಮೂಲಕ ಘಟನೆಗಳ ಕಾಲವ್ಯವಸ್ಥೆ ಇಲ್ಲವೇ ಯಥಾರ್ಥತೆಯನ್ನು ಮಾತ್ರವೇ ಸೂಚಿಸುತ್ತವೆ.

೧.೭ ಎಣಿಕೆಯಲ್ಲೂ ವೈವಿಧ್ಯವಿದೆ

ಲೆಕ್ಕ ಹಾಕುವಾಗ ನಾವು ಒಂದು, ಎರಡು, ಮೂರು, ನಾಲ್ಕು ಇತ್ಯಾದಿಯಾಗಿ ಹತ್ತರವರೆಗೆ ಎಣಿಸಿ, ಅನಂತರ ಹನ್ನೊಂದು ‘ಹತ್ತರ ಒಂದು’, ಹನ್ನೆರಡು ‘ಹತ್ತರ ಎರಡು’, ಹದಿಮೂರು ‘ಹತ್ತರ ಮೂರು’ ಎಂಬುದಾಗಿ ಪುನಃ ಒಂದ ರಿಂದ ಸುರುಮಾಡುತ್ತೇವೆ. ಈ ರೀತಿ ನಮ್ಮ ಎಣಿಕೆ ಹತ್ತು ಹತ್ತರ ಗುಂಪುಗಳಲ್ಲಿ ಸಾಗುತ್ತದೆ.

ಇಂತಹ ಹತ್ತು ಗುಂಪುಗಳ ದೊಡ್ಡ ಗುಂಪಿಗೆ ನೂರು ಎಂಬ ಹೆಸರು ಕೊಡುತ್ತೇವೆ. ಹೀಗೆ ಸಾಗುವ ನಮ್ಮ ಎಣಿಕೆ ಹತ್ತರ ಪದ್ಧತಿಯದು. (ನಮ್ಮ ಒಂಬತ್ತು ಎಂಬ ಪದಕ್ಕೆ ಮಾತ್ರ ‘ಹತ್ತರಿಂದ ಒಂದು ಕಡಿಮೆ’ ಎಂಬ ಮೂಲಾರ್ಥವಿದೆ.)

ಇಂಗ್ಲಿಷ್, ಹಿಂದಿ, ಮರಾಠಿ ಮೊದಲಾದ ಹಲವಾರು ಭಾಷೆಗಳಲ್ಲಿ ಇದೇ ಹತ್ತರ ಪದ್ಧತಿ ಜಾರಿಯಲ್ಲಿದೆ. ಆದರೆ ಎಣಿಕೆಗಳೆಲ್ಲವೂ ಇಂತಹದೇ ಹತ್ತರ ಪದ್ಧತಿಯಲ್ಲಿ ಸಾಗಬೇಕೆಂಬ ನಿಯಮವೇನಿಲ್ಲ. ಎಣಿಕೆಯ ಗುಂಪುಗಳನ್ನು

೩೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹತ್ತರಲ್ಲಿ ಮಾಡುವ ಬದಲು ಇದರಲ್ಲಿ ಮಾಡಬಹುದು, ಇಲ್ಲವೇ ಇಪ್ಪತ್ತ ರಲ್ಲೂ ಮಾಡಬಹುದು.

ನಾಲ್ಕರ ಪದ್ಧತಿ

ಅಸ್ಸಾಮಿನಲ್ಲಿ ವಾಸಿಸುವ ಕಸಾರಿ ಜನಾಂಗದವರ ಬೊಡೊ (ಇಲ್ಲವೇ ಬೊರೊ) ಭಾಷೆಯಲ್ಲಿ ನಾಲ್ಕರ ಪದ್ಧತಿ ಕಾಣಸಿಗುತ್ತದೆ. ಈ ಭಾಷೆಯಲ್ಲಿ ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ನಾಲ್ಕರ ವರೆಗೆ ಲೆಕ್ಕ ಹಾಕಿ, ಮುಂದಕ್ಕೆ ಒಂದ್ನಾಲ್ಕರ ಒಂದು (ಎಂದರೆ ಐದು), ಒಂದ್ನಾಲ್ಕರ ಎರಡು (ಎಂದರೆ ಆರು), ಒಂದ್ನಾಲ್ಕರ ಮೂರು (ಎಂದರೆ ಏಳು) ಮತ್ತು ಎರಡಾಲ್ಕು (ಎಂದರೆ ಎಂಟು) ಇತ್ಯಾದಿಯಾಗಿ ಎಣಿಕೆ ಸಾಗುತ್ತದೆ. ಹನ್ನೊಂದು ಎನ್ನಲು ಈ ಭಾಷೆಯಲ್ಲಿ ಎರಡಾಲ್ಕರ ಮೂರು ಎನ್ನಬೇಕು, ಹದಿನಾಲ್ಕು ಎನ್ನಲು ಮೂರ್ನಾಲ್ಕರ ಎರಡು ಎನ್ನಬೇಕು, ಇತ್ಯಾದಿ.

ಬೊಡೋ ಭಾಷೆಯಲ್ಲಿ ಐದಕ್ಕೂ ಒಂದು ಪದ ಇದೆಯಾದ ಕಾರಣ, ಈ ನಾಲ್ಕರ ಪದ್ಧತಿಯಲ್ಲಿ ಇಪ್ಪತ್ತರ ವರೆಗೆ ಲೆಕ್ಕ ಹಾಕಲು ಬರುತ್ತದೆ; ಅದಕ್ಕಿಂತ ಹೆಚ್ಚಿನ ಎಣಿಕೆಯನ್ನು ನಡೆಸಲು, ಅದಕ್ಕೆ ಹೊಸದೊಂದು ಪದ್ಧತಿ ಬೇಕಾಗುತ್ತದೆ. ಇದಕ್ಕಾಗಿ ನಮ್ಮಲ್ಲಿ ನೂರರ ಪದ್ಧತಿಯಿರುವಂತೆ, ಬೋಡೋ ಭಾಷೆಯಲ್ಲಿ ಇಪ್ಪತ್ತರ ಪದ್ಧತಿಯಿದೆ.

ಈ ಪದ್ಧತಿಯಂತೆ, ಇಪ್ಪತ್ತಾರು ಎನ್ನಲು ‘ಒಂದಿಪ್ಪತ್ತು ಒಂದ್ನಾಲ್ಕರ ಎರಡು’ ಎನ್ನಬೇಕು. ‘ಮೂರಿಪ್ಪತ್ತು ಮೂರ್ನಾಲ್ಕರ ಒಂದು’ ಎಂದರೆ ಎಪ್ಪತ್ತಮೂರು (೩ x ೨೦) + (೩ x ೪) + ೧ ಎಂದಾಗುತ್ತದೆ. ಇಂತಹ ಎಣಿಕೆ ನಮ್ಮದರಿಂದ ತೊಡಕಾದುದೆಂದು ನಮಗೆ ತೋರಬಹುದು, ಆದರೆ ಬೋಡೋ ಭಾಷೆಯಲ್ಲಿ ಮಾತನಾಡುವವರಿಗೆ ನಮ್ಮಲ್ಲಿರುವ ಹತ್ತರ ಪದ್ಧತಿಗಿಂತ ಅವರ ನಾಲ್ಕರ ಪದ್ಧತಿಯೇ ಲೇಸೆಂದು ಅನಿಸದಿರದು.

ಎಣಿಸುವ ವಸ್ತುಗಳ ಸೂಚನೆ

ಬೋಡೋ ಜನರ ಎಣಿಕೆಯಲ್ಲಿ ಈ ವೈಶಿಷ್ಟ್ಯ ಮಾತ್ರವಲ್ಲದೆ ಬೇರೆಯೂ ಕೆಲವು ವೈಶಿಷ್ಟ್ಯಗಳಿವೆ. ಉದಾಹರಣೆಗಾಗಿ, ಅವರಿಗೆ ನಮ್ಮ ಹಾಗೆ ಒಂದು, ಎರಡು, ಮೂರು, ನಾಲ್ಕು ಎಂಬುದಾಗಿ ಬರಿಯ ಅಂಕೆಗಳನ್ನು ಎಣಿಸುವುದೇ ತಿಳಿಯದು. ಹಾಗೆ ಅಂಕೆಗಳನ್ನು ಬಳಸಬೇಕಾಗಿ ಬಂದಾಗಲೆಲ್ಲ, ಅವರು ಯಾವ ರೀತಿಯ ವಸ್ತುಗಳನ್ನೆಣಿಸುತ್ತಿದ್ದೇವೆ ಎಂಬುದನ್ನೂ ಕಡ್ಡಾಯವಾಗಿ ತಿಳಿಸಬೇಕು ಎಂಬುದಾಗಿ ಅವರ ಭಾಷೆಯಲ್ಲಿ ಒಂದು ವ್ಯಾಕರಣ ನಿಯಮವಿದೆ. ಇದು ಅವರ ಭಾಷೆಯ ಎಣಿಕೆಯಲ್ಲಿ ತೋರುವ ಇನ್ನೊಂದು ವೈಶಿಷ್ಟ್ಯ.

೪೦

ಎಣಿಕೆಯಲ್ಲೂ ವೈವಿಧ್ಯವಿದೆ

ಉದಾಹರಣೆಗಾಗಿ, ಅವರು ಎಣಿಸುತ್ತಿರುವುದು ಹಣ್ಣು, ಚೆಂಡು, ಕಣ್ಣು ಮೊದಲಾದ ಉರುಟಾಗಿರುವ ಪದಾರ್ಥಗಳನ್ನಾದರೆ, ಆ ಎಣಿಕೆಯಲ್ಲಿ ಪ್ರತಿ ಸಲವೂ ತಾಯ್ ಎಂಬ ಪದವನ್ನು ಸೇರಿಸಿಕೊಳ್ಳಬೇಕು; ಇದರ ಬದಲು ಪುಸ್ತಕ, ಕಾಗದ, ಎಲೆ, ರೆಕ್ಕೆ ಮುಂತಾದ ಚಪ್ಪಟೆಯಾದ ಪದಾರ್ಥಗಳನ್ನು ಎಣಿಸಬೇಕಾಗಿ ಬಂದಾಗ, ಗಾಜ್ ಎಂಬ ಪದವನ್ನು ಸೇರಿಸಿಕೊಳ್ಳಬೇಕು; ಜನರನ್ನು ಲೆಕ್ಕ ಹಾಕುವಾಗ ಕಾ ಎಂಬ ಪದವನ್ನು ಸೇರಿಸಬೇಕು, ಪ್ರಾಣಿಗಳನ್ನು ಲೆಕ್ಕ ಹಾಕುವಾಗ ಮಾ ಎಂಬ ಪದವನ್ನು ಸೇರಿಸಬೇಕು, ಇತ್ಯಾದಿ.

ಇದರಂತೆ, ಒಂದ್ನಾಲ್ಕರ ಒಂದು ಎಂದು ಹೇಳಿದರೆ ಈ ಭಾಷೆಯಲ್ಲಿ ಅದಕ್ಕೆ ಯಾವ ಅರ್ಥವೂ ಇಲ್ಲ; ಹಾಗೆ ಅವರು ಹೇಳುವುದೂ ಇಲ್ಲ. ಒಂದ್ನಾಲ್ಕರ ಮಾ ಒಂದು ಎಂದರೆ ಐದು ಪ್ರಾಣಿಗಳು ಎಂದಾಗುತ್ತದೆ; ಒಂದ್ನಾಲ್ಕರ ತಾಯ್ ಒಂದು ಎಂದರೆ ಐದು ಹಣ್ಣುಗಳಂತಹ ಉರುಟಾದ ವಸ್ತುಗಳು ಎಂಬ ಅರ್ಥ ಬರುತ್ತದೆ; ಒಂದ್ನಾಲ್ಕರ ಗಾಜ್ ಒಂದು ಎಂದರೆ ಐದು ಪುಸ್ತಕಗಳಂತಹ ಚಪ್ಪಟೆಯಾದ ವಸ್ತುಗಳು ಎಂದಾಗುತ್ತದೆ. ಒಂದು, ಎರಡು, ಮೂರು, ನಾಲ್ಕು ಮೊದಲಾದ ಅಂಕೆಗಳಿಗೂ ಬೋಡೋ ಭಾಷೆಯಲ್ಲಿ ಕನ್ನಡದ ಅಂಕೆಗಳಿಗಿಂತ ಭಿನ್ನವಾದ ಸೇ, ನಯ್, ತಾಮ್, ಬ ಮೊದಲಾದ ಪದಗಳಿವೆ ಎಂದು ಬೇರೆ ಹೇಳಬೇಕಾಗಿಲ್ಲವಷ್ಟೆ

ಲೆಕ್ಕ ಹಾಕುವಾಗ ಈ ರೀತಿ ವಸ್ತುಗಳ ಸ್ವರೂಪವನ್ನು ಸೂಕ್ಷ್ಮವಾಗಿ ತಿಳಿಸಿ ಹೇಳುವ ಕ್ರಮ ಬೋಡೋ ಭಾಷೆಯಲ್ಲಿ ಮಾತ್ರವಲ್ಲದೆ, ನಮ್ಮ ದೇಶದ ಉತ್ತರ ಮತ್ತು ಈಶಾನ್ಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಬೇರೆಯೂ ಹಲವಾರು ಗಿರಿಜನರ ಭಾಷೆಗಳಲ್ಲಿ ಬಳಕೆಯಲ್ಲಿದೆ. ಈ ಜನರ ಸಂಪರ್ಕದಿಂದಾಗಿ ಇಂತಹ ಕ್ರಮ ಇಂಡೋ-ಆರ್ಯನ್ ಭಾಷೆಗಳಾದ ಅಸ್ಸಾಮಿ, ಬಿಹಾರಿ ಮೊದಲಾದವು ಗಳಲ್ಲೂ ಬಳಕೆಗೆ ಬಂದಿವೆ. ಬಿಹಾರಿನ ರಾಜಮಹಾಲ್ ಪರ್ವತ ಶ್ರೇಣಿಗಳಲ್ಲಿ ವಾಸಿಸುವ ನಮ್ಮ ‘ದಾಯಾದಿ’ಗಳಾದ ಮಾಲ್ಟೋ ಜನರ ಮಾತಿನಲ್ಲೂ ಈ ವೈಶಿಷ್ಟ್ಯ ಕಂಡುಬರುತ್ತಿದೆಯೆಂದು ವಿದ್ವಾಂಸರು ವರದಿಮಾಡಿದ್ದಾರೆ.

ಕ್ರಿಯಾಪದಗಳ ವೈಶಿಷ್ಟ್ಯ

ಬೋಡೋ ಭಾಷೆಯನ್ನಾಡುವ ಕಸಾರಿ ಜನಾಂಗದವರು ತಮ್ಮ ಭಾಷೆಯ ಇತರ ವಿಭಾಗಗಳಲ್ಲೂ ಇದೇ ರೀತಿಯ ಹಲವಾರು ವೈಶಿಷ್ಟ್ಯಗಳನ್ನು ಪಡೆದಿದ್ದಾರೆ. ವಸ್ತುಗಳನ್ನು ಚಪ್ಪಟೆಯಾದವುಗಳು, ಉರುಟಾದವುಗಳು, ಕೋಲಿನಂತಿರುವವು ಗಳು, ಹಗ್ಗದಂತಿರುವವುಗಳು ಇತ್ಯಾದಿಯಾಗಿ ಸೂಚಿಸದೆ ಅವರಿಗೆ ಆ ವಸ್ತು ಗಳನ್ನು ಲೆಕ್ಕಹಾಕಲು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ಕ್ರಿಯಾಪದ ಗಳನ್ನು ಬಳಸುವಾಗಲೂ ಕ್ರಿಯೆಗಳಲ್ಲಿ ಕಾಣಿಸುವ ಸೂಕ್ಷ್ಮವಾದ ವ್ಯತ್ಯಾಸಗಳನ್ನು ಗಮನಿಸದೆ ಅವರಿಗೆ ಅವರ ಭಾಷೆಯಲ್ಲಿ ಮಾತನಾಡಲು ಬಾರದು.

ಳಂ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ನಮ್ಮಲ್ಲಿ ತಿನ್ನು, ಎಂದಿರುವ ಒಂದೇ ಒಂದು ಕ್ರಿಯಾಪದಕ್ಕೆ ಸಮನಾಗಿ ಈ ಭಾಷೆಯಲ್ಲಿ ಇನ್ನೂರೈವತ್ತು ಕ್ರಿಯಾರೂಪಗಳಿವೆ: ಎಂತಹ ವಸ್ತುವನ್ನು ತಿನ್ನು ತೇವೆ, ಹೇಗೆ ತಿನ್ನುತ್ತೇವೆ, ಎಷ್ಟು ತಿನ್ನುತ್ತೇವೆ, ಯಾರೊಡನೆ ತಿನ್ನುತ್ತೇವೆ, ಮೊದಲಾದ ವಿವಿಧ ವಿಷಯಗಳಿಗನುಸಾರವಾಗಿ, ಅವರು ಆರಿಸಿಕೊಳ್ಳಬೇಕಾದ ಕ್ರಿಯಾರೂಪ ವ್ಯತ್ಯಾಸಗೊಳ್ಳುತ್ತದೆ. ಕತ್ತಲೆಯಲ್ಲಿ ತಿನ್ನುವುದು ಎನ್ನುವುದಕ್ಕೆ ಒಂದು ರೂಪವಿದೆ, ಕದ್ದು ತಿನ್ನುವುದು ಎನ್ನುವುದಕ್ಕೆ ಇನ್ನೊಂದು ರೂಪವಿದೆ, ಮಡಚಿ ತಿನ್ನುವುದು ಎನ್ನುವುದಕ್ಕೆ ಮತ್ತೊಂದು ರೂಪವಿದೆ, ತೂತು ಮಾಡಿ ತಿನ್ನುವುದು ಎನ್ನುವುದಕ್ಕೆ ಇನ್ನೊಂದು ರೂಪವಿದೆ.

ಭಾಷೆಯು ಮನುಷ್ಯನ ಆಲೋಚನಾಕ್ರಮವನ್ನೇ ತನ್ನ ಕೈಹಿಡಿತದಲ್ಲಿ ಇಟ್ಟು ಕೊಳ್ಳುವುದೆಂದು ಕೆಲವರು ವಾದಿಸುತ್ತಾರೆ. ಸುತ್ತಲೂ ಕಣ್ಣಿಗೆ ಕಾಣಿಸುವ ಜಗತ್ತೇ ಈ ಭಾಷೆಗನುಗುಣವಾಗಿ ಭಿನ್ನ ಭಿನ್ನವಾಗಿ ತೋರುವುದೆಂದೂ ಇವರ ವಾದವಿದೆ. ಈ ವಾದ ನಿಜವಾದರೆ, ಬೋಡೋ ಜನರ ಜಗತ್ತಿಗೂ ಕನ್ನಡಿಗರ ಜಗತ್ತಿಗೂ ನಡುವೆ ಬಹಳಷ್ಟು ವ್ಯತ್ಯಾಸವಿದೆಯೆಂದ ಹಾಗಾಯಿತು. ಇದು ನಿಜವಾದರೆ, ಭಿನ್ನ ಭಿನ್ನವಾದ ಹಲವಾರು ಭಾಷೆಗಳನ್ನು ಅಭ್ಯಸಿಸುವುದರ ಮೂಲಕ ನಮ್ಮ ಜಗತ್ತನ್ನು ಇನ್ನಷ್ಟು ವ್ಯಾಪಕ ಮತ್ತು ವೈವಿಧ್ಯಯುಕ್ತವನ್ನಾಗಿ ಮಾಡಲು ಸಾಧ್ಯ ವಾದೀತಲ್ಲವೇ?

ಳ್ಳು


ಭಾಗ ಎರಡು

ಕಲಿಕೆ ಮತ್ತು ವ್ಯಾಕರಣ

ಚಿಕ್ಕ ಮಕ್ಕಳು ತಮ್ಮ ಬೆಳವಣಿಗೆಯ ಅಂಗವಾಗಿ ಮಾತೃಭಾಷೆಯನ್ನು ಕಲಿಯುವು ದಕ್ಕೂ, ಶಾಲೆಯಲ್ಲಿ ಇಂಗ್ಲಿಷ್, ಹಿಂದಿ ಮೊದಲಾದ ಎರಡನೇ ಇಲ್ಲವೇ ಮೂರನೇ ಭಾಷೆಯನ್ನು ಕಲಿಯುವುದಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಇದೇ ರೀತಿಯಲ್ಲಿ, ಭಾಷೆಯನ್ನು ಕಲಿಯುವುದಕ್ಕೂ ಅದನ್ನು ಓದಲು ಇಲ್ಲವೇ ಬರೆಯಲು ಕಲಿಯುವುದಕ್ಕೂ ನಡುವೆಯೂ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸ ಗಳು ಎಂತಹವು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳದೆ, ಹೊಸ ಭಾಷೆ ಯೊಂದನ್ನು, ಇಲ್ಲವೇ ಮಾತೃಭಾಷೆಯದೇ ಆದ ಬರಹವನ್ನು ಕಲಿಸ ಹೊರಟರೆ ಹಲವಾರು ಸಮಸ್ಯೆಗಳೇಳಬಲ್ಲುವು.

ಇಂತಹ ಹಲವು ಸಮಸ್ಯೆಗಳು ಇವತ್ತು ನಮ್ಮ ಶಾಲೆಗಳಲ್ಲಿ ಬಳಕೆಯ ಲ್ಲಿರುವ ಪಠ್ಯ ಕ್ರಮದಲ್ಲಿ ಕಾಣಿಸುತ್ತಿವೆ. ಕನ್ನಡದ ಕ್ಲಾಸಿನಲ್ಲಿ ಕನ್ನಡ ಮಕ್ಕಳಿಗೆ ಓದು-ಬರಹ ಕಲಿಸಬೇಕಾಗಿದೆ, ಆದರೆ ನಿಜಕ್ಕೂ ನಾವು ಕಲಿಸುತ್ತಿರುವುದು ಕನ್ನಡ ಭಾಷೆಯನ್ನು. ಇದಕ್ಕೆ ಬದಲು, ಹೊಸ ಭಾಷೆಯೊಂದನ್ನು ಕಲಿಸಬೇಕಾಗಿರುವ ಇಂಗ್ಲಿಷ್, ಹಿಂದಿ ಮೊದಲಾದ ಬೇರೆ ಭಾಷೆಗಳ ಕ್ಲಾಸುಗಳಲ್ಲಿ ಭಾಷೆಯನ್ನು ಸರಿಯಾಗಿ ಕಲಿಸುವ ಮೊದಲೇ ನೇರವಾಗಿ ಆ ಭಾಷೆಯ ಸಾಹಿತ್ಯ ಕೃತಿಗಳನ್ನು ಕಲಿಸುವ ಯತ್ನ ನಡೆಯುತ್ತಿದೆ!

ಕನ್ನಡ ವ್ಯಾಕರಣವೆಂಬ ಹೆಸರಿನಲ್ಲಿ ಕನ್ನಡಕ್ಕೆ ಸ್ವಲ್ಪವೂ ಸಂಬಂಧಿಸದಂತಹ ವಿಷಯಗಳನ್ನು ಕಲಿಸಲಾಗುತ್ತಿದೆ. ನಿಜಕ್ಕೂ ಒಂದು ಭಾಷೆಯಲ್ಲಿ ಪದಗಳನ್ನು, ಪದರೂಪಗಳನ್ನು ಮತ್ತು ವಾಕ್ಯಗಳನ್ನು ಹೇಗೆ ರಚಿಸಲಾಗುತ್ತದೆ ಎಂಬುದನ್ನು ವ್ಯಾಕರಣ ಹೇಳಿಕೊಡಬೇಕು; ಆದರೆ ಕನ್ನಡದ ತರಗತಿಗಳಲ್ಲಿ ಕಲಿಸುವ ವ್ಯಾಕರಣ ಇದೊಂದನ್ನೂ ಹೇಳದೆ, ಕನ್ನಡದ ಮಟ್ಟಿಗೆ ತೀರ ಅನವಶ್ಯಕ ಗಳಾಗಿರುವ ಕೆಲವು ಸಂಸ್ಕೃತ ವ್ಯಾಕರಣದ ವಿಷಯಗಳನ್ನು ತಿಳಿಸುತ್ತದೆ.

ಭಾಷೆ ಮತ್ತು ಬರಹಗಳನ್ನು ಕಲಿಸುವ ವಿಧಾನದಲ್ಲಿ ಮೂಡಿ ಬಂದಿರುವ ಈ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ಐದಾರು ವರ್ಷ ಒಂದು ಭಾಷೆಯನ್ನು ಕಲಿತರೂ ಅವರಿಗೆ ಅದರಲ್ಲಿ ಒಂದು ವಾಕ್ಯವನ್ನೂ ಸರಿಯಾಗಿ ಬರೆಯಲು ಸಾಧ್ಯವಾಗದ ಹಾಗಾಗಿದೆ. ಇದಲ್ಲದೆ, ಬರಹವನ್ನು ಕಲಿತರೂ ಅವರಲ್ಲಿ ಪುಸ್ತಕ ಗಳನ್ನು ಓದುವ ಆಸಕ್ತಿ ಉಂಟಾಗುವುದಿಲ್ಲ.

ಳ್ಳ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ, ಇತ್ತೀಚೆಗಿನ ಸಂಶೋಧನೆಗಳು ಈ ವಿಷಯದಲ್ಲಿ ಏನು ಹೇಳುತ್ತವೆ ಎಂಬುದನ್ನು ಕೆಳಗಿನ ಹತ್ತು ಲೇಖನಗಳಲ್ಲಿ ವಿವರಿಸಲಾಗಿದೆ.

೨.೧ ತೊದಲು ನುಡಿಯ ಇಂದ್ರಜಾಲ

ಹುಟ್ಟಿದೊಡನೆಯೇ ಜೋರಾಗಿ ಅಳಲು ಸುರುಮಾಡುವ ಮಕ್ಕಳಿಗೆ ತಮ್ಮ ಬಾಯಿ ಯಿಂದ ಸ್ವರ ಹೊರಡಿಸಲು ಯಾರೂ ಹೇಳಿಕೊಡಬೇಕಾಗಿಲ್ಲವೇನೋ ನಿಜ. ಆದರೆ, ಈ ಸ್ವರದಲ್ಲಿ ನೂರಾರು ವೈವಿಧ್ಯತೆಗಳನ್ನು ಬರಿಸಿ ಅವನ್ನೆಲ್ಲ ತಮ್ಮ ಸ್ವಾಧೀನದಲ್ಲಿರಿಸಿಕೊಂಡು ಮಾತಾಗಿ ಬಳಸುವುದೆಂದರೆ ಅಷ್ಟೊಂದು ಸುಲಭದ ಕೆಲಸವೇನಲ್ಲ. ಈ ಕಾರ್ಯದ ಕ್ಲಿಷ್ಟತೆಯನ್ನು ಮನಗಂಡ ಭಾಷಾವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳು ಮಗು ತನ್ನ ಭಾಷೆಯನ್ನು ಮೊದಲ ಬಾರಿಗೆ ಹೇಗೆ ಕೈವಶ ಮಾಡಿಕೊಳ್ಳುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಬಹಳ ಸಮಯದಿಂದಲೂ ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನವಿನ್ನೂ ಪೂರ್ತಿ ಸಫಲಗೊಂಡಿದೆಯೆನ್ನುವ ಸ್ಥಿತಿಗೆ ಬಂದು ಮುಟ್ಟಿಲ್ಲ.

ಹುಟ್ಟಿದಂದಿನಿಂದಲೂ ಬಗೆ ಬಗೆಯ ಶಬ್ದಗಳನ್ನು ಉತ್ಪಾದಿಸಲು ಪ್ರಯತ್ನಿ ಸುತ್ತಲೇ ಇರುವ ಮಗು ಸಾಮಾನ್ಯವಾಗಿ ಒಂದು-ಒಂದೂವರೆ ವರ್ಷದಲ್ಲಿ ಎರಡು ಇಲ್ಲವೇ ಮೂರು ಪದಗಳುಳ್ಳ ಮಾತುಗಳನ್ನಾಡಲು ಶಕ್ತವಾಗುತ್ತದೆ ಮತ್ತು ಇನ್ನೊಂದು ವರ್ಷ ಕಳೆಯುವುದರೊಳಗೆ ತನ್ನ ಮಾತೃಭಾಷೆಯಲ್ಲಿ ಹೆಚ್ಚು ಕಡಿಮೆ ಸರಿಯಾಗಿಯೇ ಮಾತನಾಡಲೂ ಕಲಿತು ಬಿಡುತ್ತದೆ ಎಂಬುದು ಕೆಲ ಸಂಶೋಧಕರಿಗಂತೂ ಆಶ್ಚರ್ಯವನ್ನೇ ಉಂಟುಮಾಡಿದೆ.

ಇದು ಎಷ್ಟು ಕಷ್ಟದ ಕೆಲಸವೆಂಬುದನ್ನು ಏಳೆಂಟು ವರ್ಷ ಪ್ರಯತ್ನಪಟ್ಟು ಕಲಿತರೂ ಇಂಗ್ಲಿಷ್‌ನಲ್ಲಿ ಒಂದೇ ಒಂದು ವಾಕ್ಯವನ್ನೂ ಸರಿಯಾಗಿ ಆಡಲು ಸಾಧ್ಯವಾಗದಿರುವಂತಹ ನಮ್ಮ ಶಾಲಾ ವಿದ್ಯಾರ್ಥಿಗಳು ಹೇಳಬಲ್ಲರು. ಅವರೇ ಈ ಕೆಲಸವನ್ನು ತಮ್ಮ ಬಾಲ್ಯದಲ್ಲಿ ಲೀಲಾಜಾಲವಾಗಿ ಮಾಡಿ ಮುಗಿಸಿರುವ ರಾದ್ದರಿಂದ ಈ ಕಾರ್ಯದ ಹಿಂದೆ ನಮಗರಿಯದಂತಹ ಇಂದ್ರಜಾಲವೇನೋ ಅಡಗಿದೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಮಾತು ಕಲಿಯುವ ಶಕ್ತಿ

ಇದೆಂತಹ ಇಂದ್ರಜಾಲ? ಹುಟ್ಟುವಾಗಲೇ ಮಕ್ಕಳು ಮಾತು ಕಲಿಯಲು ಬೇಕಾ ದಂತಹ ಒಂದು ವಿಶಿಷ್ಟವಾದ ಶಕ್ತಿಯನ್ನು ಪಡೆದುಕೊಂಡು ಹುಟ್ಟಿರುವರೆಂದೂ, ಮತ್ತು ಈ ಶಕ್ತಿ ಐದು-ಆರು ವರ್ಷ ಪ್ರಾಯದ ವರೆಗೆ ಮಾತ್ರವೇ ಅವರಲ್ಲಿ ಉಳಿದಿರುತ್ತದೆಯೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಒಂದು ಮಗು ಆ

ಳ್ಳ


ತೊದಲು ನುಡಿಯ ಇಂದ್ರಜಾಲ

ಪ್ರಾಯದೊಳಗೆ ಭಾಷೆಯನ್ನು ಕಲಿಯಲಿ, ಕಲಿಯದಿರಲಿ, ಅನಂತರ ಆ ಶಕ್ತಿ ಆ ಮಗುವಿನ ಕೈಯಲ್ಲಿ ಉಳಿದಿರಲಾರದು.

ಅರೆಕಿವುಡಾದ ಮಗುವಿಗೂ ಮೂರು ನಾಲ್ಕು ವರ್ಷಗಳೊಳಗೇನೇ ಭಾಷೆ ಯನ್ನು ಪ್ರಯತ್ನಪೂರ್ವಕವಾಗಿ ಕಲಿಸಿದಲ್ಲಿ ಅದು ಸುಲಭವಾಗಿ ಕಲಿಯಬಲ್ಲುದು; ಆದರೆ, ಅದರ ವಯಸ್ಸು ಜಾಸ್ತಿಯಾದಂತೆಲ್ಲ ಈ ಕೆಲಸ ಹೆಚ್ಚು ಹೆಚ್ಚು ಕಠಿಣ ವಾಗುತ್ತಾ ಹೋಗುತ್ತದೆಯೆಂದು ವಿಜ್ಞಾನಿಗಳು ಕಂಡುಹಿಡಿದಿರುವುದು ಇದಕ್ಕೆ ಒಂದು ಉತ್ತಮ ಉದಾಹರಣೆ. ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲ ಈ ಮಾತು ಕಲಿಯುವ ಶಕ್ತಿಯನ್ನು ಪಡೆದಿರುವಂತಹ ವಯಸ್ಸನ್ನು ದಾಟಿರುತ್ತಾರೆ. ಹಾಗಾಗಿ, ಅವರ ತಲೆಯೊಳಗೆ ಹೊಸದೊಂದು ಭಾಷೆಯನ್ನು ತುಂಬುವುದು ಅಷ್ಟೊಂದು ಕಷ್ಟವಾಗುತ್ತಿದೆಯೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ?

ತೊದಲು ನುಡಿಯ ಈ ಹಸುಳೆಗಳ ಭಾಷಾಭ್ಯಾಸ ಹೇಗೆ ನಡೆಯುತ್ತದೆ? ಕೆಲವು ಮನೆಗಳಲ್ಲಿ ತಾಯಿತಂದೆಯರು ತಮ್ಮ ಮಕ್ಕಳೊಂದಿಗೆ ಸ್ಪಷ್ಟವಾಗಿ ಅವರಿಗೆ ಅರ್ಥವಾಗುವಂತೆ ಮಾತನಾಡುವರಾದರೂ ಈ ರೀತಿಯ ಮಾತು ಮಕ್ಕಳ ಭಾಷಾಭ್ಯಾಸಕ್ಕೆ ಎಷ್ಟು ಅವಶ್ಯವೆಂಬುದಿನ್ನೂ ಸ್ಪಷ್ಟವಾಗಿಲ್ಲ. ತಮ್ಮೊಡನೆ ಯಾವ ರೀತಿಯಲ್ಲೂ ಮಾತನಾಡಲು ತಾಯಿತಂದೆಯರೇ ಇಲ್ಲದಂತಹ ತಬ್ಬಲಿ ಮಕ್ಕಳೂ ಲೀಲಾಜಾಲವಾಗಿ ತಮ್ಮ ಮೊದಲ ಭಾಷೆಯನ್ನು ಕಲಿತುಕೊಳ್ಳುತ್ತಾರೆ. ಹಾಗಾಗಿ, ಈ ಕಾರ್ಯದ ಹಿಂದಿನ ವೈಚಿತ್ರ್ಯ ಇನ್ನಷ್ಟು ಗೂಢವಾಗಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಬಹುಶಃ ತಮ್ಮ ಮನೆಯ ಮತ್ತು ನೆರೆಹೊರೆಯ ಮನೆಗಳ ವಯಸ್ಕರು ಆಡುವ ಮಾತುಗಳನ್ನು ಕೇಳಿಕೇಳಿ ತಾವಾಗಿ ಮಾತನಾಡಲು ಮತ್ತು ಬೇರೆಯವರ ಮಾತುಗಳನ್ನು ಅರ್ಥಮಾಡಿಕೊಳ್ಳಲು ಬೇಕಾದಂತಹ ಅನುಭವವನ್ನು ಮೇಲೆ ಹೇಳಿದ ವಿಶಿಷ್ಟವಾದ ಶಕ್ತಿಯ ಮೂಲಕ ಮಕ್ಕಳು ತಾವಾಗಿಯೇ ಪಡೆದುಕೊಳ್ಳು ತಾರೆಂದು ಹೇಳಬಹುದೇನೋ. ಈ ಅನುಭವವನ್ನು ಪಡೆಯುವ ಕ್ರಮ ಹೇಗೆ ಎಂಬ ವಿಷಯದಲ್ಲಿ ಇತ್ತೀಚೆಗೆ ಬಹಳಷ್ಟು ವಾದ ವಿವಾದಗಳು ನಡೆಯುತ್ತಿವೆ.

ಕೆಲವರ ಮತದಂತೆ, ಹುಟ್ಟುವಾಗಲೇನೇ ಮಕ್ಕಳು ಜಗತ್ತಿನ ಭಾಷೆಗಳಿಗೆಲ್ಲ ಹೊಂದಿಕೆಯಾಗಬಹುದಾದಂತಹ ನಿಯಮಾವಳಿಯೊಂದನ್ನು (ಎಂದರೆ ವ್ಯಾಕರಣ ವನ್ನು) ತಲೆಯೊಳಗೆ ತುಂಬಿಕೊಂಡಿರುತ್ತವೆ, ಮತ್ತು ತಮ್ಮ ಸುತ್ತುಮುತ್ತಲಿನವರ ಮಾತುಗಳನ್ನು ಕೇಳಿ ಕೇಳಿ ಅಂತಹ ನಿಯಮಾವಳಿಯಲ್ಲಿ ಅವಶ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳುತ್ತವೆ.

ಇದು ಹೇಗೇ ಇರಲಿ, ಮಕ್ಕಳು ತಮ್ಮ ಮೊದಲ ಮೂರು ನಾಲ್ಕು ವರ್ಷ ಗಳಲ್ಲಿ ಒಂದು ಭಾಷೆಯನ್ನು ಕಲಿತುಕೊಳ್ಳುವ ಕ್ರಮಕ್ಕೂ, ಆ ವಯಸ್ಸು ದಾಟಿದ ಮೇಲೆ ಹೊಸದೊಂದು ಭಾಷೆಯನ್ನು ಕಲಿತುಕೊಳ್ಳುವ ಕ್ರಮಕ್ಕೂ ನಡುವೆ ಬಹಳಷ್ಟು ವ್ಯತ್ಯಾಸವಿದೆಯೆಂಬುದಂತೂ ನಿಜ. ಮೊದಲನೆಯ ಭಾಷೆಯನ್ನು

ಳ್ಳ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಲಿತಬಂದ ಅನುಭವದ ತಳಪಾಯದ ಮೇಲೇನೇ ಎರಡನೆಯ ಇಲ್ಲವೇ ಮೂರನೆಯ ಭಾಷೆಯ ಕಲಿಯುವಿಕೆ ನಡೆಯಬೇಕು.

ಮೊದಲನೆಯ ಭಾಷೆಯನ್ನು ಕಲಿಯುವಂತಹ ಎಳೆ ವಯಸ್ಸನ್ನು ದಾಟಿದ ಮಕ್ಕಳು ಆ ವಯಸ್ಸಿನಲ್ಲಿ ಯಾವ ಭಾಷೆಯನ್ನೂ ಕಲಿಯದಿದ್ದರೂ, ಮತ್ತು ಅನಂತರ ಅವರಿಗೆ ಮೊದಲನೆಯ ಭಾಷೆಯನ್ನೇ ಕಲಿಸಬೇಕಿದ್ದರೂ, ಎರಡನೆಯ ಇಲ್ಲವೇ ಮೂರನೆಯ ಭಾಷೆಯನ್ನು ಕಲಿಸುವ ಕ್ರಮದಲ್ಲೇನೇ ಅದನ್ನು ಕಲಿಸ ಬೇಕಾಗುವುದೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಈ ಎರಡು ರೀತಿಯ ಕಲಿಯುವಿಕೆಗಳ ನಡುವಿರುವ ವ್ಯತ್ಯಾಸವನ್ನು ಸ್ಪಷ್ಟ ಮಾಡಿಕೊಡುವುದಕ್ಕಾಗಿ ಮಕ್ಕಳು ತಮ್ಮ ಮೊದಲನೆಯ ಮಾತೃಭಾಷೆಯನ್ನು ‘ಗಳಿಸಿ’ಕೊಳ್ಳುತ್ತಾರೆಂದೂ, ಎರಡನೆಯ ಇಲ್ಲವೇ ಮೂರನೆಯ ಭಾಷೆಯನ್ನು ‘ಕಲಿತು’ಕೊಳ್ಳುತ್ತಾರೆಂದೂ ಈ ಎರಡು ಕಾರ್ಯಗಳನ್ನು ಸೂಚಿಸಲು ಬೇರೆ ಬೇರೆ ಕ್ರಿಯಾಪದಗಳನ್ನು ಬಳಸುವ ಕ್ರಮ ಭಾಷಾವಿಜ್ಞಾನಿಗಳಲ್ಲಿ ರೂಢಿಗೆ ಬಂದಿದೆ.

ಕಿವುಡು ಮಕ್ಕಳಿಗೆ ಮಾತು ಕಲಿಸುವುದು

ಹುಟ್ಟು ಕಿವುಡರಾದ ಮಕ್ಕಳಿಗೆ ಮಾತು ಬಾರದಿರುವುದಕ್ಕೆ ಅವರಲ್ಲಿ ಇಂತಹ ಮಾತು ಕಲಿಯುವ ಶಕ್ತಿ ಇಲ್ಲದಿರುವುದು ಕಾರಣವಲ್ಲ, ಹಾಗೆ ಕಲಿಯುವುದಕ್ಕೆ ಅವಶ್ಯವಾಗಿರುವಂತಹ ಇತರರು ಆಡುವ ಮಾತನ್ನು ಕೇಳುವ ಶಕ್ತಿ ಅವರ ಲ್ಲಿಲ್ಲದಿರುವುದೇ ಕಾರಣ. ಮೊದಲ ಹತ್ತು ಹದಿನೈದು ತಿಂಗಳುಗಳಲ್ಲಿ ಇತರ ಮಕ್ಕಳಂತೆ ಕಿವುಡರಾದ ಮಕ್ಕಳೂ ಬೇರೆ ಬೇರೆ ರೀತಿಯ ಶಬ್ದಗಳನ್ನು ಹೊರಡಿಸುತ್ತಿರುತ್ತವೆ. ಆದರೆ, ಈ ಶಬ್ದಗಳು ತಾಯಿ ತಂದೆಯರ ಇಲ್ಲವೇ ಸಹೋದರ ಸಹೋದರಿಯರ ಮಾತಿನಲ್ಲಿ ಬರುವ ಪದಗಳಿಗೆ ಸಮನಾಗಿ ಬದಲಾಗಲು ಸಾಧ್ಯವಿರುವುದಿಲ್ಲ.

ಇತರ ಮಕ್ಕಳು ತಮ್ಮ ಸುತ್ತಲಿನವರ ಮಾತುಗಳನ್ನು ಕೇಳಿ ಕೇಳಿ, ಹೊಸ ಹೊಸ ಶಬ್ದಗಳನ್ನು ಉತ್ಪಾದಿಸುವ ವಯಸ್ಸನ್ನು ಮುಟ್ಟಿದಾಗ, ಕಿವುಡುತನವಿರುವ ಮಕ್ಕಳು ಮೆಲ್ಲ ಮೆಲ್ಲಗೆ ಬಾಯಿಯಿಂದ ಶಬ್ದ ಹೊರಡಿಸುವುದನ್ನೇ ನಿಲ್ಲಿಸ ತೊಡಗುತ್ತವೆ. ಹಾಗಾಗಿ, ಯಾವುದಾದರೊಂದು ಮಗು ಈ ರೀತಿ ಬಾಯಿಯಿಂದ ಶಬ್ದ ಹೊರಡಿಸುವುದನ್ನು ಅಂತಹ ಪ್ರಾಯದಲ್ಲಿ ಕಡಿಮೆಮಾಡತೊಡಗಿದೆ ಯಾದರೆ, ಅದಕ್ಕೆ ಕಿವಿದೋಷವೇನಾದರೂ ಇದೆಯೇ ಎಂದು ಪರೀಕ್ಷಿಸಿಕೊಳ್ಳುವ ಅವಶ್ಯಕತೆಯಿದೆ.

ದೊಡ್ಡವರಲ್ಲಿರುವಂತೆ ಮಕ್ಕಳಲ್ಲೂ ಬೇರೆ ಬೇರೆ ಮಟ್ಟದ ಕಿವುಡುತನ ವಿರುತ್ತದೆ. ಕೆಲವು ಮಕ್ಕಳಿಗೆ ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೆ ಕೇಳಿಸುವಂತಹ ಕಡಿಮೆ ಮಟ್ಟದ ಕಿವುಡುತನವಿರಬಹುದು. ಇಂತಹ ಒಂದು ಮಗು ಭಾಷೆ ಕಲಿಯುವ ಪ್ರಾಯವನ್ನು ಮುಟ್ಟುತ್ತಿರುವ ಸಮಯದಲ್ಲಿ, ಎಂದರೆ ಸುಮಾರು ಒಂದೂವರೆ-ಎರಡು ವರ್ಷ ವಯಸ್ಸಿನದಾದಾಗ, ತಾಯಿತಂದೆಯರು ಪ್ರಯತ್ನ

ಳ್ಳ


ಕನ್ನಡದ ಮಕ್ಕಳಿಗೆ ಕನ್ನಡ ಪಾಠ

ಪಟ್ಟು ಆ ಮಗುವಿನೊಡನೆ ನಿತ್ಯವೂ ಅದಕ್ಕೆ ಕೇಳಿಸುವಂತೆ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಮಾತನಾಡುವ ಪರಿಪಾಠವನ್ನಿಟ್ಟುಕೊಂಡರೆ, ಆ ಮಗುವಿನ ತೊದಲು ನುಡಿ ಕಡಿಮೆ ಕಡಿಮೆಯಾಗಿ ಮಾಯವಾಗುವ ಬದಲು ಹಿರಿಯರ ಮಾತ ನ್ನನುಸರಿಸಿ ಪದಗಳಂತಾಗಿ, ಆ ಮಗು ಇತರ ಮಕ್ಕಳಂತೆಯೇ ಮಾತನಾಡಲು ಕಲಿಯುವುದೆಂದು ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ.

ಇದಕ್ಕೂ ಹೆಚ್ಚಿನ ಮಟ್ಟದ ಕಿವಿಡುತನವಿರುವ ಮಗುವಿಗೆ ಉಳಿದವರಾಡುವ ಮಾತು ಕೇಳಿಸುವಂತೆ ಕಿವಿಗಳಿಗೆ ಹಾಕಿಕೊಳ್ಳುವ ಉಪಕರಣವೊಂದನ್ನು ತೊಡಿಸುವ ಸಾಧ್ಯತೆಯಿದೆ. ಬರಿಯ ಹತ್ತು ತಿಂಗಳಿನ ಶಿಶುಗಳಿಗೂ ಅಮೆರಿಕದ ಕೆಲವು ಪ್ರಯೋಗಶಾಲೆಗಳಲ್ಲಿ ಇಂತಹ ಉಪಕರಣಗಳನ್ನು ತೊಡಿಸಿ ಪರೀಕ್ಷಿಸಿ ದ್ದಾರೆ. ಅತೀ ಕಡಿಮೆ ಕೇಳಿಸುವಂತಹ ಹುಟ್ಟುಕಿವುಡರಾದ ಮಕ್ಕಳೂ ಇಂತಹ ಉಪಕರಣಗಳ ಸಹಾಯದಿಂದ ಇತರ ಮಕ್ಕಳಂತೆಯೇ ಶೀಘ್ರವಾಗಿ ಮತ್ತು ಸ್ಪಷ್ಟ ವಾಗಿ ಮಾತನಾಡಲು ಕಲಿತಿವೆ.

ಕಿವುಡುತನ ಮತ್ತು ಮಾತುಬಾರದಿರುವಿಕೆ ಇವೆರಡು ಮನುಷ್ಯನನ್ನು ಎಂತಹ ಅಸಹಾಯಕ ಸ್ಥಿತಿಗೆ ಮತ್ತು ಅಸಹ್ಯವಾದ ಏಕಾಂತಕ್ಕೆ ತಳ್ಳಬಹುದೆಂಬುದನ್ನು ಮನಗಂಡು ತಾಯಿತಂದೆಯರು ಎಳೇ ಪ್ರಾಯದಲ್ಲೇನೇ ಕಿವುಡುತನವಿರ ಬಹುದಾದ ತಮ್ಮ ಮಕ್ಕಳಿಗೆ ಮಾತು ಕಲಿಯಲು ಎಲ್ಲಾ ರೀತಿಯ ಸಹಾಯ ಗಳನ್ನೂ ಒದಗಿಸಿಕೊಡುವುದು ಅವಶ್ಯ.

೨.೨ ಕನ್ನಡದ ಮಕ್ಕಳಿಗೆ ಕನ್ನಡ ಪಾಠ

ಮೊದಲನೆಯ ತರಗತಿಗೆ ಬಂದು ಸೇರುವ ಹುಡುಗ ಹುಡುಗಿಯರಿಗೆ ಕನ್ನಡದ ಕ್ಲಾಸಿನಲ್ಲಿ ಏನನ್ನು ಕಲಿಸಬೇಕು ಎಂಬ ವಿಷಯವನ್ನು ನಮ್ಮ ವಿದ್ಯಾಧಿಕಾರಿ ಗಳಿನ್ನೂ ಸಾಕಷ್ಟು ಸೂಕ್ಷ್ಮವಾಗಿ ವಿವೇಚಿಸಿದಂತಿಲ್ಲ. ಹುಟ್ಟಿ ಮೂರು ನಾಲ್ಕು ವರ್ಷ ಕಳೆಯುವುದರೊಳಗೇನೇ ಈ ಮಕ್ಕಳು ಕನ್ನಡ ಭಾಷೆಯನ್ನು ಆಡುವು ದರಲ್ಲಿ ಮತ್ತು ಬೇರೆಯವರು ಆಡಿದ್ದನ್ನು ಕೇಳಿ ಅರ್ಥ ಮಾಡಿಕೊಳ್ಳುವುದರಲ್ಲಿ ಸಾಕಷ್ಟು ಪಳಗಿರುತ್ತಾರೆ. ಈ ವಿಷಯದಲ್ಲಿ ಕಲಿಯಬೇಕಾದುದನ್ನೆಲ್ಲ ಸ್ವತಃ ಕಲಿತುಕೊಳ್ಳುವ ಶಕ್ತಿಯೂ ಜನ್ಮತಃ ಅವರಿಗೆ ಲಭಿಸಿರುತ್ತದೆ. ತಮ್ಮ ಮಾತೃ ಭಾಷೆಯನ್ನು ಕಲಿತುಕೊಳ್ಳುವ ಕ್ರಮ ಹೇಗೆಂಬುದನ್ನು ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಹಾಗಾದರೆ, ಕನ್ನಡ ಕ್ಲಾಸಿನಲ್ಲಿ ಅವರಿಗೆ ಕಲಿಸಿಕೊಡ ಬೇಕಾದದ್ದೇನು?

ಮಾತನಾಡಿದುದನ್ನು ಕೇಳಿ ಅರ್ಥ ಮಾಡಿಕೊಳ್ಳುವುದು ಮತ್ತು ಹೇಳ ಬೇಕೆಂದೆನಿಸಿದುದನ್ನು ಮಾತಿನಿಂದ ಹೇಳಿ ತಿಳಿಸುವುದು ಇವೆರಡು ಕಾರ್ಯಗಳ ನ್ನಲ್ಲದೆ, ಓದುವುದು ಮತ್ತು ಬರೆಯುವುದು ಎಂಬ ಇನ್ನೆರಡು ಕಾರ್ಯಗಳನ್ನೂ ಮಾಡುವ ಶಕ್ತಿ ಮನುಷ್ಯನಿಗಿರಬೇಕೆಂಬುದು ನಮ್ಮ ಆಧುನಿಕ ನಾಗರಿಕತೆಯ

ಳ್ಳು


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವೈಶಿಷ್ಟ್ಯಗಳಲ್ಲೊಂದಾಗಿದೆ. ಮೊದಲನೆಯ ತರಗತಿಗೆ ಸೇರುವ ಮಕ್ಕಳಿಗೆ ಕಲಿಸಿಕೊಡಬೇಕಾಗಿರುವ ವಿಷಯಗಳಲ್ಲಿ ಓದುವುದು ಮತ್ತು ಬರೆಯುವುದು ಇವೆರಡೂ ಅತ್ಯಂತ ಮುಖ್ಯವಾದ ಅಂಶಗಳೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಕೆಲಸವನ್ನು ಮುಖ್ಯವಾಗಿ ಕನ್ನಡದ ಕ್ಲಾಸಿನಲ್ಲೇ ನಡೆಸಬೇಕಾಗಿದೆ. ಹಾಗಾಗಿ, ಇವೆರಡು ಚಾತುರ್ಯಗಳನ್ನು ಮಕ್ಕಳಿಗೆ ಕಲಿಸಿಕೊಡುವಲ್ಲಿ ಕನ್ನಡ ಕ್ಲಾಸಿನ ಪಠ್ಯ ಪುಸ್ತಕಗಳು ಮತ್ತು ಪಾಠಕ್ರಮಗಳು ಎಷ್ಟರ ಮಟ್ಟಿಗೆ ತಕ್ಕುದಾಗಿವೆಯೆಂಬುದನ್ನು ಪರಿಶೀಲಿಸುವುದು ಅವಶ್ಯ.

ಓದು ಕಲಿಸುವುದು

ಓದುವಿಕೆಯಲ್ಲಿ ಪರಿಣತನಾಗಲು ವಿದ್ಯಾರ್ಥಿಯು ಹಲವಾರು ರೀತಿಯ ಕೌಶಲ್ಯ ಗಳನ್ನು ಕೈವಶಮಾಡಿಕೊಳ್ಳಬೇಕಾಗುತ್ತದೆ. ಆತನು ತಾನು ಓದಬೇಕಾಗಿರುವ ಭಾಷೆಯನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ಬರವಣಿಗೆಯಲ್ಲಿ ಬಳಸ ಲಾಗುವ ಬೇರೆ ಬೇರೆ ಸಂಜ್ಞೆಗಳೊಳಗಿರುವ ಅತಿ ಸೂಕ್ಷ್ಮವಾದ ವ್ಯತ್ಯಾಸಗಳನ್ನು ಗಮನಿಸಿಕೊಳ್ಳುವಷ್ಟು ಆತನ ಬುದ್ಧಿ ಬೆಳೆದಿರಬೇಕು. ಸಂಜ್ಞೆಗಳಿಗೂ ಶಬ್ದಗಳಿಗೂ ನಡುವೆ ಸಂಬಂಧವನ್ನು ಕಲ್ಪಿಸಿಕೊಳ್ಳುವ, ಮತ್ತು ಬರಹದ ಸಂಜ್ಞೆಗಳನ್ನು ನೇರ ವಾಗಿ ಮತ್ತು ಶಬ್ದಗಳ ಮೂಲಕ ಅರ್ಥಮಾಡಿಕೊಳ್ಳುವ ಶಕ್ತಿ ಆತನಲ್ಲಿ ಮೂಡಿರ ಬೇಕು.

ಸಂಜ್ಞೆಗಳನ್ನು ಯಾವ ಕ್ರಮದಲ್ಲಿ ಬಳಸಲಾಗಿದೆಯೆಂಬುದನ್ನು, ಎಂದರೆ ಸರ ಮತ್ತು ರಸಗಳ ನಡುವಿರುವ ವ್ಯತ್ಯಾಸ ಎಂತಹದೆಂಬುದನ್ನು ಗಮನಿಸಿಕೊಳ್ಳುವ ಶಕ್ತಿ ಆತನಿಗಿರಬೇಕು. ಬೆಳವಣಿಗೆಯ ವಿವಿಧ ಹಂತಗಳಲ್ಲಿರುವ ಈ ಸಾಮರ್ಥ್ಯ ಗಳನ್ನೆಲ್ಲ ಅವುಗಳ ಪೂರ್ಣ ರೂಪಕ್ಕೆ ಬೆಳೆಸಿಕೊಡುವುದರ ಮೂಲಕ ವಿದ್ಯಾರ್ಥಿಗೆ ಕನ್ನಡ ಬರಹವನ್ನು ಕಲಿಸಿಕೊಡುವುದೇ ಕನ್ನಡ ಕ್ಲಾಸಿನ ಮುಖ್ಯ ಉದ್ದೇಶವೆಂದು ವಾದಿಸಲು ಸಾಧ್ಯವಿದೆ.

ಮಕ್ಕಳಿಗೆ ಓದು ಕಲಿಸುವುದು ಹೇಗೆ ಎಂಬುದರಲ್ಲಿ ಮುಖ್ಯವಾಗಿ ಎರಡು ಭಿನ್ನ ಭಿನ್ನವಾದ ಅಭಿಪ್ರಾಯಗಳು ವಿದ್ವಾಂಸರ ಗಮನವನ್ನು ಸೆಳೆದಿವೆ. ಮಕ್ಕಳಿಗೆ ಬೇರೆ ಬೇರೆ ಪದಗಳನ್ನು ಓದಲು ಹೇಳಿಕೊಡುವಾಗ, ಅವುಗಳಲ್ಲಿ ಬಳಕೆ ಯಾಗಿರುವ ಅಕ್ಷರಗಳನ್ನು ಬಿಡಿಸಿ ಬಿಡಿಸಿ ಓದಲು ಕಲಿಸಬೇಕೆಂಬುದೊಂದು; ಮತ್ತು ಹಾಗೆ ಬಿಡಿಸಿ ಹೇಳಲು ಹೋಗದೆ, ಪದಗಳನ್ನು ಮತ್ತು ಪದಸಮೂಹ ಗಳನ್ನು ಒಟ್ಟೊಟ್ಟಾಗಿ ಓದಿ ಗ್ರಹಿಸಿಕೊಳ್ಳಲು ಕಲಿಸಬೇಕೆಂಬುದಿನ್ನೊಂದು. ಸದ್ಯಕ್ಕೆ ಈ ಎರಡು ಅಭಿಪ್ರಾಯಗಳಲ್ಲಿ ಯಾವುದು ಸರಿ ಎಂದು ತಿಳಿಯಲು ಪ್ರಯತ್ನಿ ಸುವುದಕ್ಕಿಂತಲೂ ಅವುಗಳಲ್ಲಿ ಯಾವ ವಿಧಾನ ನಮ್ಮ ಭಾಷೆಯ ಬರಹವನ್ನು ಕಲಿಸುವಲ್ಲಿ ಹೆಚ್ಚು ಉಪಯುಕ್ತವಾಗಬಲ್ಲುದು ಎಂಬುದನ್ನು ನಿರ್ಧರಿಸಿ ಕೊಳ್ಳುವುದು ಅತ್ಯವಶ್ಯ.

ಳ್ಳಲ


ಕನ್ನಡದ ಮಕ್ಕಳಿಗೆ ಕನ್ನಡ ಪಾಠ

ಇಂಗ್ಲಿಷ್‌ನಲ್ಲಿರುವಷ್ಟು ‘ಸ್ಪೆಲ್ಲಿಂಗ್’ ಸಮಸ್ಯೆಗಳಿಲ್ಲದಿರುವ ಕನ್ನಡ ಬರಹ ವನ್ನು ಕಲಿಸುವಲ್ಲಿ ಮೇಲೆ ಕೊಟ್ಟಿರುವ ಮೊದಲನೆಯ ವಿಧಾನವೇ ಹೆಚ್ಚು ಪ್ರಯೋಜನಕಾರಿಯಾಗಬಲ್ಲುದು. ಇದಲ್ಲದೆ, ಅದುವರೆಗೆ ಓದದೇ ಇದ್ದಂತಹ ಹೊಸ ಹೊಸ ಪದಗಳನ್ನೋದಲು ಮಕ್ಕಳು ಬೇರೆ ಬೇರೆ ಅಕ್ಷರಗಳಿಗಿರುವ ಉಚ್ಚಾರಣೆಯನ್ನು ಅರಿತುಕೊಂಡಿರುವುದು ಉತ್ತಮ. ಆದರೂ ಓದುವಿಕೆಯು ಜಾಸ್ತಿ ವೇಗದಿಂದ ನಡೆಯಬೇಕಾದರೆ, ಪದಗಳನ್ನು ಅಕ್ಷರ ಅಕ್ಷರಗಳಾಗಿ ಬಿಡಿಸಿ ಓದಲು ಹೋಗದೆ, ಒಟ್ಟೊಟ್ಟಾಗಿ ಗ್ರಹಿಸಿಕೊಳ್ಳುವ ಅಭ್ಯಾಸವನ್ನೂ ಕೂಡ ಮಾಡ ಬೇಕಾಗುತ್ತದೆ.

ಮಕ್ಕಳಿಗೆ ಕೊಡುವ ಓದಿನ ಶಿಕ್ಷಣದಲ್ಲಿ ಮೊದಲಿಗೆ ಅಕ್ಷರಗಳನ್ನು ಬಿಡಿಸಿ ಬಿಡಿಸಿ ಓದಲು ಕಲಿಸಿ, ಅಕ್ಷರಗಳ ಸರಿಯಾದ ಪರಿಚಯವಾಗುವ ಹೊತ್ತಿಗೆ ಅವರನ್ನು ಈ ಅಭ್ಯಾಸದಿಂದ ತಪ್ಪಿಸಿ, ಪದಗಳನ್ನು ಒಟ್ಟೊಟ್ಟಾಗಿ ಗ್ರಹಿಸಿಕೊಂಡು ಶೀಘ್ರವಾಗಿ ಓದಲು ಕಲಿಸುವಂತಹ ಮಧ್ಯದ ದಾರಿಯೊಂದನ್ನು ಅನುಸರಿಸುವುದೇ ಕನ್ನಡದ ಮಟ್ಟಿಗೆ ಉತ್ತಮವೆಂದು ಇಲ್ಲಿ ಹೇಳಬಹುದು.

ಅಂತೂ ಕನ್ನಡದ ಮೊದಲ ಪುಸ್ತಕವು ಮಕ್ಕಳು ತಮಗೆ ತಿಳಿದಿರುವಂತಹ ಪದಗಳನ್ನು ಮತ್ತು ಮಾತುಗಳನ್ನು ಆದಷ್ಟು ಶೀಘ್ರವಾಗಿ ಓದಿ ತಿಳಿದುಕೊಳ್ಳಲು ಸಹಾಯ ಮಾಡುವಂತಿರಬೇಕು. ಇದಕ್ಕಾಗಿ ಈ ಪುಸ್ತಕದಲ್ಲಿ ಬರುವ ಪಾಠಗಳನ್ನು ಕನ್ನಡದ ಅಕ್ಷರಗಳಿಗೆ ಮತ್ತು ಅವುಗಳ ರಚನಾಕ್ರಮಕ್ಕೆ ಅನುಗುಣವಾಗಿ ತಯಾರಿಸಿಕೊಳ್ಳುವ ಅವಶ್ಯಕತೆಯಿದೆ, ಮತ್ತು ಅವುಗಳಲ್ಲಿ ಆದಷ್ಟು ಮಟ್ಟಿಗೆ ಮಕ್ಕಳಿಗೆ ತಿಳಿದಿರುವಂತಹ ಪದಗಳನ್ನೇ ಉಪಯೋಗಿಸುವ ಅವಶ್ಯಕತೆಯಿದೆ. ಇವುಗಳಲ್ಲಿ ಬಳಸಲಾಗುವ ಅಕ್ಷರಗಳೂ ಕೂಡ ಬೇರೆ ಬೇರೆ ಸನ್ನಿವೇಶಗಳಲ್ಲಿ ಪ್ರಯೋಗಿಸಲ್ಪಟ್ಟು, ಮಕ್ಕಳ ಮನಸ್ಸಿನಲ್ಲಿ ದೃಢಗೊಳ್ಳುವಂತಿರಬೇಕು. ಯಾವ ಅಕ್ಷರವೂ ಒಂದೋ ಎರಡೋ ಪದಗಳಲ್ಲಿ ಮಾತ್ರವೇ ತೋರಿಬಂದು ಅನಂತರ ಎಲ್ಲೂ ತೋರಿ ಬರದಿರುವಂತಹ ಸ್ಥಿತಿಯಿರಬಾರದು.

ಓದಿನ ಭಾಷೆ ಕಲಿಸುವುದು

ಬರಹದ ಕನ್ನಡಕ್ಕೂ ಮಾತಿನ ಕನ್ನಡಕ್ಕೂ ನಡುವೆ ಸ್ವಲ್ಪವಾದರೂ ವ್ಯತ್ಯಾಸವಿದ್ದೇ ಇರುತ್ತದೆ. ಪಠ್ಯಪುಸ್ತಕಗಳಲ್ಲಿ ಬರಹಕ್ಕೆ ಯೋಗ್ಯವಾಗಿರುವಂತಹ ಕನ್ನಡದ ಪ್ರಭೇದವನ್ನೇ ಬಳಸುತ್ತಿರುವೆವಾದ್ದರಿಂದ ಲಿಪಿಯನ್ನು ಕಲಿಯುವುದರೊಂದಿಗೆ ಕನ್ನಡದ ಈ ವಿಶಿಷ್ಟವಾದ ಪ್ರಭೇದವನ್ನೂ ಮಕ್ಕಳು ಕಲಿಯಬೇಕಾಗುತ್ತದೆ.

ಹಾಗಾಗಿ, ಕನ್ನಡದ ಕ್ಲಾಸಿನಲ್ಲಿ ಓದಲು ಮತ್ತು ಬರೆಯಲು ಕಲಿಸುವುದು ಮಾತ್ರವಲ್ಲದೆ, ಒಂದು ವಿಶಿಷ್ಟವಾದ ಭಾಷಾಪ್ರಭೇದವನ್ನೂ ಮಕ್ಕಳಿಗೆ ಕಲಿಸ ಬೇಕಾಗುವುದೆಂಬ ವಿಷಯವನ್ನು ನೆನಪಿನಲ್ಲಿರಿಸಿಕೊಳ್ಳುವುದು ಅವಶ್ಯ. ಪಾಠ ಗಳನ್ನು ರಚಿಸುವಾಗ ಲಿಪಿಯ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ, ಭಾಷೆಯ ವೈಶಿಷ್ಟ್ಯಗಳನ್ನೂ (ಎಂದರೆ ಅದು ಯಾವ ಅಂಶಗಳಲ್ಲಿ ಆಡುಮಾತಿಗಿಂತ

ಳ್ಳ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಭಿನ್ನವಾಗಿದೆಯೆಂಬುದನ್ನು) ಗಮನದಲ್ಲಿರಿಸಿಕೊಳ್ಳುವುದು ಇದರಿಂದ ಅವಶ್ಯವಾಗು ತ್ತದೆ.

ಪಠ್ಯಪುಸ್ತಕಗಳ ರಚನೆ

ಆದರೆ, ನಮ್ಮ ಶಾಲೆಗಳಲ್ಲಿ ಬಳಸುವ ಕನ್ನಡ ಪಠ್ಯಪುಸ್ತಕಗಳನ್ನು ರಚಿಸಿದವರಲ್ಲಿ ಹೆಚ್ಚಿನವರೂ ಈ ಮೇಲಿನ ವಿಷಯಗಳನ್ನು ಗಮನದಲ್ಲಿರಿಸಿಕೊಂಡಿರುವಂತೆ ಕಾಣಿಸುವುದಿಲ್ಲ. ಶಾಲಾ ಮಕ್ಕಳಿಗೆ ತಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿಸಲು ಬಳಸುವ ಪುಸ್ತಕಗಳು ಅವರ ಎರಡನೇ ಇಲ್ಲವೇ ಮೂರನೇ ಭಾಷೆ ಯಾಗಬಲ್ಲ ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳನ್ನು ಕಲಿಸಲು ಬಳಸುವ ಪುಸ್ತಕ ಗಳಿಗಿಂತ ಸ್ವಲ್ಪವಾದರೂ ಭಿನ್ನವಾಗಿವೆಯೇ ಎಂಬುದನ್ನು ಗಮನಿಸಿದೆವಾದರೆ ಈ ವಿಷಯ ಸ್ಪಷ್ಟವಾದೀತು.

ಇಂಗ್ಲಿಷ್ ಮತ್ತು ಹಿಂದೀ ಕ್ಲಾಸುಗಳಲ್ಲಿ ನಮ್ಮ ಮಕ್ಕಳಿಗೆ ಒಂದು ಹೊಸ ಲಿಪಿಯನ್ನು ಓದಲು ಮತ್ತು ಬರೆಯಲು ಕಲಿಸಬೇಕು ಮಾತ್ರವಲ್ಲ, ಒಂದು ಹೊಸ ಭಾಷೆಯನ್ನೂ ಕಲಿಸಬೇಕು. ಇದಕ್ಕಾಗಿ ಹೊಸ ಹೊಸ ಪದಗಳನ್ನು ಮತ್ತು ಹೊಸ ಹೊಸ ವಾಕ್ಯರಚನಾಕ್ರಮಗಳನ್ನು ಅವರಿಗೆ ಕಲಿಸಬೇಕು. ಪಠ್ಯಪುಸ್ತಕ ಗಳನ್ನು ರಚಿಸುವವರು ಈ ರೀತಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವುದಕ್ಕೂ ಇಂಗ್ಲಿಷ್ ಕಲಿಸುವುದಕ್ಕೂ ನಡುವಿರುವ ಈ ಅತ್ಯಂತ ಮುಖ್ಯವಾದ ವ್ಯತ್ಯಾಸ ವನ್ನು ಗಮನಿಸಿಕೊಳ್ಳಬೇಡವೇ?

ನಿಜಕ್ಕೂ ನಮ್ಮ ಶಾಲೆಗಳಲ್ಲಿ ಕಲಿಯುವ ಹೆಚ್ಚಿನ ಮಕ್ಕಳೂ ಪಠ್ಯಪುಸ್ತಕ ಗಳಲ್ಲಿ ಬರುವ ಪಾಠಗಳನ್ನು ಮತ್ತು ಪದ್ಯಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತಾರಲ್ಲದೆ ಅವನ್ನು ಓದಲು ಕಲಿಯುವುದಿಲ್ಲ. ಅವುಗಳಲ್ಲಿ ಬರುವ ಚಿತ್ರಗಳು ಹೀಗೆ ಬಾಯಿಪಾಠ ಮಾಡಿದ ಅಂಶಗಳನ್ನು ಆ ಪುಟಗಳನ್ನು ತೆರೆ ದೊಡನೆ ನೆನಪಿಗೆ ತರಲು ಸಹಾಯವನ್ನು ಮಾತ್ರ ಮಾಡುತ್ತವೆ. ಹಾಗಾಗಿ, ಮಕ್ಕಳು ಪುಸ್ತಕದಲ್ಲಿ ಬರೆದುದನ್ನು ಓದದೆ, ಅದರಲ್ಲಿ ಇರುವ ಚಿತ್ರಗಳನ್ನು ಓದುತ್ತಾರೆಂದರೂ ಸಲ್ಲುತ್ತದೆ

ಮಕ್ಕಳು ಅಕ್ಷರಗಳನ್ನು ಮತ್ತು ಪದಗಳನ್ನು ಓದುವಂತೆ ಮತ್ತು ಆ ಪದಗಳ ಮತ್ತು ವಾಕ್ಯಗಳ ಅರ್ಥವನ್ನು ಹಾಗೆ ಓದಿ ಗ್ರಹಿಸಿಕೊಳ್ಳುವಂತೆ ಪ್ರೇರೇಪಿಸಲು ಸಮರ್ಥವಾಗದಿರುವ ಪಠ್ಯಪುಸ್ತಕಗಳು ಓದು-ಬರಹ ಕಲಿಸಲು ಅರ್ಹವಲ್ಲ ವೆಂದು ಬೇರೆ ಹೇಳಬೇಕಾಗಿಲ್ಲವಷ್ಟೆ.

ಪಠ್ಯಪುಸ್ತಕದ ಉದ್ದೇಶ

ಕನ್ನಡದಲ್ಲಿ ಮೊದಲನೆಯ ತರಗತಿಗೆ ಪಠ್ಯಪುಸ್ತಕವನ್ನು ತಯಾರಿಸುವವರು ಈ ಒಂದು ವಿಷಯವನ್ನು ಅತ್ಯವಶ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಕನ್ನಡದ

೫೦

ವ್ಯಾಕರಣವೆಂಬ ಕಲ್ಲಿನ ಕಡಲೆ

ಮಕ್ಕಳಿಗೆ ಕನ್ನಡದ ಮೊದಲ ತರಗತಿಯಲ್ಲಿ ಭಾಷೆಗಿಂತಲೂ ಬರಹವನ್ನು ಕಲಿಸುವುದೇ ಅತಿ ಮುಖ್ಯವಾದ ಕೆಲಸ. ಕನ್ನಡ ಪದ್ಯವೊಂದನ್ನು ಬಾಯಿಪಾಠ ಮಾಡಿ ಹೇಳಲು ಮಕ್ಕಳಿಗೆ ಬರುವುದೇ ಇಲ್ಲವೇ ಎಂಬುದು ಮುಖ್ಯವಲ್ಲ. ಬಾಯಿಗೆ ಬರದೇ ಇರುವ ಪದ್ಯವನ್ನು ಮತ್ತು ಪಾಠವನ್ನು ಪುಸ್ತಕದಿಂದ ಓದಿ ಹೇಳಲು ಅವರಿಗೆ ಬರುವುದೇ ಇಲ್ಲವೇ ಎಂಬುದು ಮುಖ್ಯ.

ಇದಕ್ಕಾಗಿ, ಮೊದಲು ಕನ್ನಡ ಪುಸ್ತಕದಲ್ಲಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಬರುವ ಅಕ್ಷರಗಳನ್ನೋದಲು ಮಕ್ಕಳಿಗೆ ಸಂದರ್ಭವನ್ನೊದಗಿಸಿ ಕೊಡುವಂತಹ ವಿವಿಧ ರೀತಿಯ ಪಾಠಗಳಿರಬೇಕು. ಇಂತಹ ಪಾಠಗಳ ಸಂಖ್ಯೆ ಜಾಸ್ತಿಯಿದ್ದಷ್ಟು, ಮತ್ತು ಅವುಗಳ ವೈವಿಧ್ಯತೆ ಹೆಚ್ಚಿದಷ್ಟು ಮಕ್ಕಳು ಬಾಯಿಪಾಠ ಮಾಡುವುದು ತಪ್ಪುತ್ತದೆ, ಮತ್ತು ಅಕ್ಷರಗಳನ್ನು ಹಾಗೂ ಪದಗಳನ್ನು ಓದಿಯೇ ಗ್ರಹಿಸಿಕೊಳ್ಳು ವಂತಹ ಸಂದರ್ಭ ಜಾಸ್ತಿಯಾಗುತ್ತದೆ.

ಅಕ್ಷರಗಳನ್ನು ಮತ್ತು ಪದಗಳನ್ನು ಓದುವಲ್ಲಿ ಮಕ್ಕಳಿಗೆ ಸಾಕಷ್ಟು ಕುತೂಹಲವನ್ನುಂಟುಮಾಡಲು ಸಾಧ್ಯವಿದೆಯಾದಲ್ಲಿ, ಬರಹವನ್ನು ಕಲಿಸುವ ಪಠ್ಯಪುಸ್ತಕಗಳಲ್ಲಿ ಚಿತ್ರಗಳನ್ನೇ ಕೊಡಬೇಕಾಗಿಲ್ಲವೆಂದು ಕೆಲವರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲಿಷ್ ಮಕ್ಕಳಿಗೆ ಬರಹವನ್ನು ಕಲಿಸುವುದಕ್ಕಾಗಿ ಇಂತಹ ಪಠ್ಯಪುಸ್ತಕವೊಂದನ್ನು ಅಮೆರಿಕದ ಖ್ಯಾತ ಭಾಷಾವಿಜ್ಞಾನಿ ಲಿಯೊನಾರ್ಡ್ ಬ್ಲೂಮ್‌ಫೀಲ್ಡ್ ರಚಿಸಿ ಕೊಟ್ಟಿದ್ದಾರೆ. ಆದರೆ ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುವ ಅವಶ್ಯಕತೆಯಿದೆ. ಯಾಕೆಂದರೆ, ಕೆಲವರ ಅಭಿಪ್ರಾಯದಂತೆ, ಮಕ್ಕಳ ಪುಸ್ತಕಗಳಲ್ಲಿ ಕೆಲವಾದರೂ ಚಿತ್ರಗಳು ಇದ್ದೇ ತೀರಬೇಕು.

೨.೩ ವ್ಯಾಕರಣವೆಂಬ ಕಲ್ಲಿನ ಕಡಲೆ

ವ್ಯಾಕರಣವೆಂದರೆ ಬಹಳ ಮಂದಿಗೆ ತಲೆನೋವು. ಅದೊಂದು ಶುಷ್ಕ ಮತ್ತು ನಿಷ್ಟ್ರಯೋಜಕ ವಿಷಯವೆಂದು ಹಲವರಿಗೆ ಅದರಲ್ಲಿ ತಾತ್ಸಾರ. ನಿಜವಾಗಿಯೂ ಒಂದು ಪತ್ತೇದಾರಿ ಕತೆಯ ಹಾಗೆ ರೋಮಾಂಚಕವಾಗಿರಬೇಕಾಗಿರುವ ಈ ವಿಷಯವನ್ನು ಇಂತಹ ಅಧೋಗತಿಗೆ ತಂದು ಇಳಿಸಿದವರು ಬೇರಾರೂ ಅಲ್ಲ, ನಮ್ಮ ನೆಚ್ಚಿನ ವೈಯಾಕರಣಿಗಳೇ.

ವ್ಯಾಕರಣದಲ್ಲಿ ನಾವು ತಿಳಿಯಬೇಕಾದುದು ಇಲ್ಲವೇ ಕಲಿಯಬೇಕಾದುದು ಏನಿದೆ ಎಂದು ಹಲವು ಮಂದಿ ಪ್ರಶ್ನಿಸಬಹುದು. ಇದಕ್ಕೆ ಉತ್ತರವಾಗಿ ನಮ್ಮ ಕನ್ನಡ ಭಾಷೆಯ ವ್ಯಾಕರಣವನ್ನೇ ಪರಿಶೀಲಿಸಬಹುದು. ಎರಡು ಎರಡೂವರೆ ವರ್ಷ ಪ್ರಾಯದವರಾದಾಗಿನಿಂದಲೂ ನಾವು ಅನವರತವಾಗಿ ಈ ಭಾಷೆಯಲ್ಲಿ ಮಾತನಾಡುತ್ತ ಬಂದಿದ್ದೇವೆ. ನಮ್ಮಲ್ಲಿ ಹೆಚ್ಚಿನವರೂ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಇತರರಿಗೆ ಅರ್ಥವಾಗುವಂತೆ ತಿಳಿಸಿಕೊಡಬಲ್ಲರು, ಮತ್ತು

೫೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಇನ್ನೊಬ್ಬರು ಹೇಳಿದುದನ್ನು ಸಾಕಷ್ಟು ಮಟ್ಟಿಗೆ ಸರಿಯಾಗಿಯೇ ಅರ್ಥಮಾಡಿಕೊಳ್ಳಬಲ್ಲರು. ಮಾತೃಭಾಷೆಯಲ್ಲಿ ನಾವು ಪಡೆದಿರುವ ಈ ಚಾತುರ್ಯ ನಿಜಕ್ಕೂ ದೈವದತ್ತವಾದುದು ಎಂದೇ ಹೇಳಬಹುದು.

ಕನ್ನಡದಲ್ಲಿ ವ್ಯಾಕರಣಗಳು ತಿಳಿಸಿ ಹೇಳಬೇಕಾಗಿರುವುದು ಈ ಚಾತುರ್ಯದ ಸ್ವರೂಪವೇನೆಂಬುದನ್ನು, ನಾವು ಹೇಗೆ ಮಾತನಾಡುತ್ತೇವೆ? ಮನಸ್ಸಿನಲ್ಲಿರುವು ದನ್ನು ಹೇಗೆ ಇನ್ನೊಬ್ಬರಿಗೆ ಅರ್ಥವಾಗುವಂತೆ ತಿಳಿಸಿ ಹೇಳುತ್ತೇವೆ? ಇನ್ನೊಬ್ಬರು ಹೇಳಿದುದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ವ್ಯಾಕರಣ ಉತ್ತರ ಕೊಡುತ್ತದೆ. ನಾಲಿಗೆಯನ್ನು ಬೇರೆ ಬೇರೆ ರೀತಿಯಲ್ಲಿ ತಿರುಗಿಸಿ ಶಬ್ದ ಹೊರಡಿಸುತ್ತೇವೆ; ಈ ಶಬ್ದಗಳಿಂದ ಸಿದ್ಧವಾದ ಪದಗಳನ್ನು ಬೇರೆ ಬೇರೆ ರೀತಿಯಲ್ಲಿ ಸೇರಿಸಿ ಮಾತುಗಳನ್ನು ರಚಿಸುತ್ತೇವೆ; ಇದು ಹೇಗೆ ನಡೆಯು ತ್ತದೆ ಎಂಬುದನ್ನು ವ್ಯಾಕರಣ ತಿಳಿಸುತ್ತದೆ.

ತಿಳಿಯುವುದರ ಫಲ

ಈ ಸಂಗತಿಯನ್ನು ತಿಳಿದು ಆಗಬೇಕಾದದ್ದಾದರೂ ಏನು ಎಂದು ಕೆಲವರು ಕೇಳಬಹುದು. ಇದಕ್ಕೊಂದು ಉತ್ತಮವಾದ ಉದಾಹರಣೆಯಿದೆ. ಕೈ, ಕಾಲು, ತಲೆ ಮೊದಲಾದ ಅಂಗಗಳನ್ನು ನಾವು ಹೇಗೆ ಬೇಕೋ ಹಾಗೆ ಮನಸ್ಸಿಗೆ ಬಂದಂತೆ ತಿರುಗಿಸಬಲ್ಲೆವು; ನಡೆಯಬಲ್ಲೆವು, ಓಡಬಲ್ಲೆವು, ಕುಣಿಯಬಲ್ಲೆವು; ಈ ಎರಡು ಕೈಗಳಿಂದ ಸಾವಿರಾರು ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಬಲ್ಲೆವು.

ಆದರೆ, ಇಂತಹ ಚಲನೆಗಳನ್ನೆಲ್ಲ ನಡೆಸುವುದಕ್ಕಾಗಿ ನಮ್ಮ ಕೈಕಾಲು ಗಳಲ್ಲಿರುವ ಎಂತೆಂತಹ ಸ್ನಾಯುಗಳನ್ನು ಮತ್ತು ಎಲುಬುಗಳನ್ನು ಹೇಗೆ ಹೇಗೆಲ್ಲ ಚಲಿಸಬೇಕು ಎಂಬುದನ್ನು ನಾವೇನಾದರೂ ತಿಳಿದಿರುವೆವೇನು? ಇದೊಂದೂ ತಿಳಿಯದಿದ್ದರೂ ನಮಗೆ ನಮ್ಮ ಈ ಕೆಲಸಗಳನ್ನೆಲ್ಲ ಸಮರ್ಪಕವಾಗಿ ಮಾಡಿ ಮುಗಿಸಲು ಸಾಧ್ಯವಾಗುತ್ತಿದೆ.

ಆದರೆ, ನಡೆಯುವಾಗ ಕಾಲು ಉಳುಕಿದಲ್ಲಿ, ಕೈ ಎಲುಬು ಮುರಿದಲ್ಲಿ, ಇಲ್ಲವೇ ಬೇರೇನಾದರೂ ಅಪಘಾತ ಸಂಭವಿಸಿದಲ್ಲಿ ನಾವು ನೇರವಾಗಿ ಡಾಕ್ಟರ ರಲ್ಲಿಗೆ ಓಡಬೇಕಾಗುತ್ತದೆ, ಅಲ್ಲವೇ? ಆಗ ಗೊತ್ತಾಗುತ್ತದೆ, ನಿಜಕ್ಕೂ ನಮ್ಮ ಅಜ್ಞಾನದ ಮಹಿಮೆಯಂತಹದು ಎಂಬುದು. ಭಾಷೆಯ ವಿಷಯದಲ್ಲಿ ನಮ ಗಿರುವ ಅಜ್ಞಾನದಿಂದಾಗಿ ಇಂತಹ ತೊಂದರೆಗಳಾವುವೂ ಬರಲಾರವೆಂದು ಯಾರಾದರೂ ಭಾವಿಸಬಹುದು. ಆದರೆ ಭಾಷೆಯ ಒಳಗುಟ್ಟನ್ನರಿಯದ ನಮ್ಮ ರಾಜಕಾರಣಿಗಳ ಅಜ್ಞಾನದ ಫಲವನ್ನು ನಾವಿಂದು ದಿನನಿತ್ಯವೂ ಅನುಭವಿಸು ತಿದ್ದೇವಲ್ಲ?

೫೨


ವ್ಯಾಕರಣವೆಂಬ ಕಲ್ಲಿನ ಕಡಲೆ

ತಿಳಿಯುವ ಆಸೆ

ವ್ಯಾಕರಣವನ್ನು ಕಲಿತು ಏನು ಪ್ರಯೋಜನ ಎಂದು ಕೇಳುವವರಿಗೆ ಇನ್ನೊಂದು ರೀತಿಯ ಉತ್ತರವನ್ನೂ ಕೊಡಬಹುದು. ಪ್ರಪಂಚದಲ್ಲಿ ಸಾವಿರಾರು ಕುತೂಹಲ ಕಾರಿಯಾದ ವಿಷಯಗಳಿವೆ. ಆಕಾಶದಲ್ಲಿ ಚಂದ್ರನಿದ್ದಾನೆ, ನಕ್ಷತ್ರಗಳಿವೆ; ಸಮುದ್ರ ದಲ್ಲಿ ಮೀನುಗಳಿವೆ, ಮತ್ತು ಇನ್ನೂ ಏನೇನೋ ಜಂತುಗಳಿವೆ; ನಮ್ಮ ಸುತ್ತಲೂ ಸಾವಿರಾರು ಆಶ್ಚರ್ಯಕಾರಕ ವಸ್ತುಗಳು ಹರಡಿವೆ. ಇವನ್ನೆಲ್ಲ ಕೂಲಂಕಶವಾಗಿ ತಿಳಿದುಕೊಳ್ಳಬೇಕು ಎಂಬುದು ನಮ್ಮ ಮಾನವಸಹಜವಾದ ಆಸೆ. ಈ ಆಸೆಯನ್ನು ಈಡೇರಿಸುವುದಕ್ಕಾಗಿ ಮಾನವನು ಹಿಮಾಲಯದ ತುದಿಗೆ ಹತ್ತಿದ್ದಾನೆ, ಸಮುದ್ರದ ಆಳಕ್ಕೆ ಇಳಿದಿದ್ದಾನೆ, ಚಂದ್ರಲೋಕಕ್ಕೂ ಪ್ರಯಾಣ ಬೆಳೆಸಿದ್ದಾನೆ.

ನಮ್ಮ ಬಾಯಿಯಿಂದಲೇ ಹೊರ ಹೊರಡುವ ಮಾತೂ ಇಂತಹ ಆಶ್ಚರ್ಯ ಕರವಾದ ಸಂಗತಿಗಳಲ್ಲಿ ಒಂದು. ಅದರ ವಿಷಯವಾಗಿ ಅಭ್ಯಾಸ ಮಾಡಿದಷ್ಟೂ ಹೊಸ ಹೊಸ ಸಂಗತಿಗಳು ಹೊರಬರುತ್ತಿವೆ. ಉದಾಹರಣೆಗಾಗಿ, ಮಾತು ಹೊರಡಿಸುವಾಗ ನಡೆಯುವ ನಮ್ಮ ನಾಲಿಗೆಯ ಚಲನೆಯನ್ನೇ ಪರೀಕ್ಷಿಸಿ ನೋಡ ಬಹುದು. ರ ಎನ್ನುವಾಗ ಅದರ ತುದಿ ಬಾಯಿಯ ಮೇಲ್ಛಾವಣಿಯನ್ನು ತಟ್ಟು ಇದೆ; ಲ ಎನ್ನುವಾಗ ಅದು ಅಲ್ಲೇ ನಿಂತು ಎರಡೂ ಬದಿಗಳಲ್ಲಿ ಉಸಿರು ಹೊರ ಹಾಯುವಂತೆ ಮಾಡುತ್ತದೆ; ತ ಎನ್ನುವಾಗ ಉಸಿರು ಎಲ್ಲೂ ಹೋಗದಂತೆ ಅದು ತಡೆಗಟ್ಟುತ್ತದೆ; ಟ ಎನ್ನುವಾಗ ಅದರ ತುದಿ ಹಿಂದಕ್ಕೆ ಮಡಚಿಕೊಂಡು ಈ ಕೆಲಸ ಮಾಡುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಮಾತನಾಡುವಾಗ ತಮ್ಮ ನಾಲಿಗೆಯ ಮೂಲಕ ಈ ಎಲ್ಲಾ ಕೆಲಸಗಳನ್ನೂ ಮಾಡುತ್ತಿರುವೆವಾದರೂ ನಾಲಿಗೆಯ ಈ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದವರೆಷ್ಟು ಮಂದಿ?

ವ್ಯಾಕರಣದಲ್ಲಿ ಭಾಷೆಯ ಕುರಿತು ತಿಳಿಸಿ ಹೇಳಬಹುದಾದ ಸಾವಿರಾರು ವಿಷಯಗಳಲ್ಲಿ ಇದೂ ಒಂದು. ಮನೆಯಿಂದ ಬಂದೆ ಮತ್ತು ಮನೆಗೆ ಬಂದೆ ಎಂಬೆರಡು ವಾಕ್ಯಗಳೊಳಗೆ ಅರ್ಥದಲ್ಲಿ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಕನ್ನಡ ದಲ್ಲಿ ಹೇಗೆ ಸೂಚಿಸುತ್ತೇವೆ ಎಂಬುದನ್ನು ಕನ್ನಡದ ವ್ಯಾಕರಣ ತಿಳಿಸುತ್ತದೆ. ಮನೆ ಎಂಬ ಪದಕ್ಕೆ ಎರಡು ಬೇರೆ ಬೇರೆ ‘ವಿಭಕ್ತಿಪ್ರತ್ಯಯ’ಗಳನ್ನು ಸೇರಿಸಿ ಕನ್ನಡದಲ್ಲಿ ಈ ಅರ್ಥಭೇದವನ್ನು ಸೂಚಿಸುತ್ತದೆ. ಆದರೆ, ಎಲ್ಲಾ ಭಾಷೆ ಗಳೂ ಇದೇ ಕ್ರಮವನ್ನು ಅನುಸರಿಸಬೇಕೆಂದೇನೂ ನಿಯಮವಿಲ್ಲ. ಕೆಲವು ಭಾಷೆ ಗಳಲ್ಲಿ ಪದಗಳ ಸ್ಥಾನವನ್ನು ಬದಲಾಯಿಸಿ ಈ ಅರ್ಥಭೇದವನ್ನು ಸೂಚಿಸ ಲಾಗುತ್ತದೆ; ಮತ್ತು ಇನ್ನು ಕೆಲವು ಭಾಷೆಗಳಲ್ಲಿ ಪ್ರತ್ಯಯಗಳ ಬದಲು ಬೇರೆ ಪದಗಳನ್ನೇ ಬಳಸಲಾಗುತ್ತದೆ.

ನೀರಸತೆಯನ್ನು ಕಳೆಯಲು ದಾರಿ

ನಮ್ಮ ಭಾಷೆಯ ವ್ಯಾಕರಣ ಈ ರೀತಿ ನಿಜಕ್ಕೂ ನಮ್ಮ ಭಾಷೆಯ ಸ್ವರೂಪವೇನು ಎಂಬುದನ್ನು ಕುತೂಹಲ ಹುಟ್ಟುವಂತೆ ವರ್ಣಿಸಹೊರಟಲ್ಲಿ ಅದರ ನೀರಸತೆ

ಆಹ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಯೆಲ್ಲ ಇದ್ದಕ್ಕಿದ್ದಂತೆ ಮಾಯವಾದೀತು. ಮ ಎಂಬುದು ‘ಅನುನಾಸಿಕ’ ಎಂದು ಹೇಳಿ ‘ನಾಸಿಕೆಯನ್ನು ಅನುಸರಿಸುವುದೇ ಅನುನಾಸಿಕ’ ಎಂದು ವಿವರಣೆ ಕೊಟ್ಟರೆ ಯಾರಿಗೂ ಏನೂ ಅರ್ಥವಾಗದು, ಮತ್ತು ಅದು ಯಾರ ಕುತೂಹಲವನ್ನೂ ಕೆರಳಿಸಲಾರದು. ಆದರೆ ನಮ್ಮ ಶಾಲಾ ವ್ಯಾಕರಣಗಳಲ್ಲೆಲ್ಲ ಮಕಾರವನ್ನು ವರ್ಣಿಸುವ ಕ್ರಮ ಇಂತಹದೇ.

ಹೀಗೆ ಹೇಳುವ ಬದಲು, ಮ ಎನ್ನುವಾಗ ತುಟಿಗಳೆರಡು ಮುಚ್ಚಿಕೊಂಡು, ಉಸಿರು ಬಾಯಿಯಿಂದ ಹೊರಗೆ ಹೋಗದಂತಾಗುತ್ತದೆ; ಆದರೆ, ಮೂಗಿನ ಮೂಲಕ ಹೊರ ಹೋಗುವ ದ್ವಾರ ತೆರೆದಿರುವ ಕಾರಣ, ಅದು ಮೂಗಿನ ಮೂಲಕ ಹೊರ ಹೋಗುತ್ತದೆ ಎಂಬುದಾಗಿ ಮಕಾರವನ್ನು ಉಚ್ಚರಿಸಿ ವಿವರಿಸಿ ದಲ್ಲಿ, ಅಂತಹ ವಿವರಣೆ ಯಾರಲ್ಲೂ ಕುತೂಹಲವನ್ನು ಕೆರಳಿಸೀತು.

ಇನ್ನೊಂದು ಉದ್ದೇಶ

ವ್ಯಾಕರಣವನ್ನು ಕಲಿಯುವುದರಲ್ಲಿ ಇನ್ನೊಂದು ಉದ್ದೇಶವೂ ಇದೆ. ಅದೇನೆಂಬು ದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸೋಣ: ಮಾತನಾಡುವಾಗ ನಾವು ಸಾಮಾನ್ಯ ವಾಗಿ ಒಬ್ಬರ ಮುಖವನ್ನೊಬ್ಬರು ನೋಡುತ್ತಿರುತ್ತೇವೆ. ಮಾತನ್ನು ಕೇಳುತ್ತಿರು ವವನು ಹೀಗೆ ಮುಖವನ್ನು ನೋಡಿಯೇ ಮಾತನಾಡುವವನು ಸಂತೋಷ ದಲ್ಲಿದ್ದಾನೋ, ಬೇಸರದಲ್ಲಿದ್ದಾನೋ, ಕೋಪದಲ್ಲಿದ್ದಾನೋ ಎಂಬುದನ್ನೆಲ್ಲ ತಿಳಿಯಬಲ್ಲನು. ಮಾತನಾಡುವವನ ಮಾತಿನ ಕ್ರಮದಿಂದಲೂ ಕೇಳುವವನಿಗೆ ಇಂತಹ ಹಲವು ವಿಷಯಗಳು ಗೊತ್ತಾಗಬಹುದು.

ಅಲ್ಲದೆ, ಮಾತನಾಡುವಾಗ ನಾವು ಕೈಸನ್ನೆ, ಕಣ್ಣುಸನ್ನೆ ಮೊದಲಾದವು ಗಳನ್ನು ಬಳಸುತ್ತಿರುತ್ತೇವೆ. ಹೇಳಿದ ಮಾತು ಸರಿಯಾಗಿ ಕೇಳಿಸದಿದ್ದರೂ, ಈ ಕೈಸನ್ನೆ, ಕಣ್ಣುಸನ್ನೆಗಳ ಸಹಾಯದಿಂದ ಮಾತನಾಡುವವನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಊಹಿಸಿಕೊಳ್ಳಬಲ್ಲೆವು. ಇದೊಂದೂ ಸಾಧ್ಯವಾಗದಿದ್ದರೂ, ಮಾತ ನಾಡುವವನು ಎದುರಿಗೇನೇ ಇರುವ ಕಾರಣ, ಅವನೊಡನೆ ಅರ್ಥವಾಗದಿರುವ ವಿಷಯಗಳ ಬಗ್ಗೆ ಬೇಕಾದಷ್ಟು ಪ್ರಶ್ನೆಗಳನ್ನು ಕೇಳಿ ಅವನ್ನು ಗೊತ್ತುಮಾಡಿ ಕೊಳ್ಳುವ ಸಾಧ್ಯತೆಯೂ ಇದೆ ಎಂಬುದನ್ನು ಮರೆಯಬಾರದು.

ಬರಹದ ಸಮಸ್ಯೆಗಳು

ದೂರದ ಊರಿನಲ್ಲಿರುವ ಮಿತ್ರನೊಬ್ಬನಿಗೆ ಪತ್ರ ಬರೆಯುವುದಿದ್ದಲ್ಲಿ ಇಂತಹ ಸಹಾಯಕ ಅಂಶಗಳೊಂದೂ ಸಿಗುವುದಿಲ್ಲ. ಪತ್ರದಲ್ಲಿ ಬರೆದಿರುವ ವಾಕ್ಯಗಳು ಮಾತ್ರವೇ ಆತನಿಗೆ ನಾವು ತಿಳಿಸಿಕೊಡಬೇಕೆಂದಿರುವ ವಿಷಯಗಳನ್ನೆಲ್ಲ ತಿಳಿಸಿ ಕೊಡಬೇಕು. ಪತ್ರ ಬರೆದವನು ಸಂತೋಷದಲ್ಲಿದ್ದನೋ, ಕೋಪದಲ್ಲಿದ್ದನೋ, ಬೇಸರದಲ್ಲಿದ್ದನೋ ಎಂಬುದನ್ನೆಲ್ಲ ಈ ವಾಕ್ಯಗಳು ಮತ್ತು ಅವುಗಳಲ್ಲಿ ಬಂದಿರುವ ಬೇರೆ ಬೇರೆ ಪದಗಳು ಮತ್ತು ಪ್ರತ್ಯಯಗಳು ತಿಳಿಸಿಕೊಡಬೇಕು.

ಆಳ


ಶಾಲಾ ವ್ಯಾಕರಣಗಳಲ್ಲಿ ಮೊದಲನೆಯ ಪಾಠ

ಮಾತಿನ ಮೂಲಕ ಒಂದು ವಿಷಯವನ್ನು ತಿಳಿಸಿ ಹೇಳುವುದಕ್ಕಿಂತಲೂ ಬರಹದ ಮೂಲಕ ತಿಳಿಸಿ ಹೇಳುವುದು ಹೆಚ್ಚು ಕಷ್ಟದ ಕೆಲಸವೆಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ. ಈ ಕೆಲಸವನ್ನು ತೃಪ್ತಿಕರವಾಗಿ ನಡೆಸಲು ವಿದ್ಯಾರ್ಥಿಗಳು ಶಾಲೆ ಯಲ್ಲಿ ಒಂದು ಹೊಸ ಚಾತುರ್ಯವನ್ನೇ ಕೈವಶ ಮಾಡಿಕೊಳ್ಳಬೇಕಾಗುತ್ತದೆ.

ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ಜೀವನದಲ್ಲಿ ಹಲವಾರು ತೊಂದರೆಗಳಿಗೆ ಸಿಕ್ಕಿ ಬೀಳು ತ್ತಾರೆ. ತಮಾಶೆಗಾಗಿ ತಮ್ಮ ಪತ್ರದಲ್ಲಿ ಏನಾದರೂ ಗೀಚಿಹಾಕಿದ್ದರೆ, ಅವರ ಮಿತ್ರರು ಅದನ್ನು ನಿಜವೆಂದೇ ತಿಳಿದು, ಅವರಿಗೂ ಅವರ ಮಿತ್ರರಿಗೂ ನಡು ವಿರುವ ಸಂಬಂಧವೇ ಒಡೆದುಹೋಗುವ ಸಂದರ್ಭ ಬರಬಹುದು. ಸರಳ ನುಡಿ, ಕೊಂಕು ನುಡಿ, ದ್ವೇಷದ ನುಡಿ, ತಮಾಶೆಯ ನುಡಿ ಇವನ್ನೆಲ್ಲ ಬರಹದಲ್ಲಿ ಸೂಚಿಸಲು ಬೇರೆ ಬೇರೆ ಕ್ರಮಗಳಿವೆ. ಭಾಷೆಯ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಈ ಚಾತುರ್ಯಗಳೆಲ್ಲವೂ ಕೈವಶವಾಗಿರುತ್ತವೆ.

ಮೋಟಾರು ನಡೆಸುವವನು ತನ್ನ ಮೋಟಾರಿನ ಆಂತರಿಕ ರಚನೆಯಂತಹ ದೆಂಬುದನ್ನು ತಿಳಿದುಕೊಳ್ಳದಿದ್ದರೂ ಆ ಕೆಲಸವನ್ನು ಸಮರ್ಪಕವಾಗಿಯೇ ಮಾಡ ಬಲ್ಲನೆಂಬುದೇನೋ ನಿಜ. ಆದರೆ ಮೋಟಾರಿನ ಒಳಗುಟ್ಟನ್ನರಿತಲ್ಲಿ ಅವನು ಈ ಕೆಲಸದಲ್ಲಿ ಇನ್ನೂ ಹೆಚ್ಚಿನ ಚಾತುರ್ಯವನ್ನು ಬಳಸಬಲ್ಲನೆಂಬುದೂ ನಿಜವೇ. ಭಾಷೆಯ ಮತ್ತು ಬರಹದ ಬಳಕೆಯಲ್ಲೂ ಇದೇ ತತ್ವವನ್ನು ಕಾಣಬಹುದು. ಶಾಲೆಯಲ್ಲಿ ವ್ಯಾಕರಣವನ್ನು ಕಲಿಸುವುದರಿಂದ ತಮ್ಮ ಭಾಷೆಯ ಬಗ್ಗೆ ವಿದ್ಯಾರ್ಥಿ ಗಳಲ್ಲಿ ಕುತೂಹಲವನ್ನು ಕೆರಳಿಸುವುದರೊಂದಿಗೆ, ಬರಹದ ಒಳಗುಟ್ಟನ್ನೂ ಅವರಿಗೆ ತಿಳಿಸಿಕೊಡಲು ಸಾಧ್ಯವಿದೆ. ಇದನ್ನು ಸರಿಯಾಗಿ ಮಾಡಲು ಶಕ್ತರಾದಲ್ಲಿ, ವೈಯಾಕರಣಿಗಳು ಒಂದು ದೊಡ್ಡ ಕಾರ್ಯವನ್ನೇ ಸಾಧಿಸಿದಂತಾದೀತು.

೨.೪ ಶಾಲಾ ವ್ಯಾಕರಣಗಳಲ್ಲಿ ಮೊದಲನೆಯ ಪಾಠ

ಕನ್ನಡದಲ್ಲಿ ವ್ಯಾಕರಣಗಳನ್ನು ಬರೆಯುತ್ತಿರುವ ವಿದ್ವಾಂಸರಲ್ಲಿ ಹೆಚ್ಚಿನವರೂ ತಮ್ಮ ವಿಚಾರ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವರೆಂಬುದಕ್ಕೆ ‘ವರ್ಣಮಾಲೆ’ಯೆಂಬ ಅವರ ವ್ಯಾಕರಣದ ಮೊದಲನೆಯ ಪಾಠವೇ ಉತ್ತಮ ಉದಾಹರಣೆ. ಕನ್ನಡ ಭಾಷೆಯ ವರ್ಣಗಳಾವುವು, ಮತ್ತು ಎಂತಹವು ಎಂಬು ದನ್ನು ಚಿಕ್ಕ ಮಕ್ಕಳಿಗೆ ಅರ್ಥವಾಗುವಂತೆ ವಿವರವಾಗಿ ತಿಳಿಸಿ ಹೇಳಬೇಕಾಗಿರುವ ಈ ಪಾಠದ ಸ್ವರೂಪ ಒಂದು ಸಾವಿರ ವರ್ಷಗಳಷ್ಟು ಸಮಯವೂ ಬದಲಾಗದೆ ಉಳಿದಿದೆ.

ಈ ಸಾವಿರ ವರ್ಷಗಳಲ್ಲಿ ಬೇರೆಲ್ಲಾ ಶಾಸ್ತ್ರಗಳಲ್ಲೂ ಎಂತೆಂತಹ ಬದಲಾ ವಣೆಗಳೆಲ್ಲ ನಡೆದು ಹೋಗಿವೆಯೆಂಬುದನ್ನು ಗಮನಿಸಿದವಾದರೆ (ಚಪ್ಪಟೆಯಿದ್ದ

ಆಆ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಭೂಮಿ ಉರುಟಾಗಿದೆ), ಕನ್ನಡದ ಈ ಬಡ ವ್ಯಾಕರಣಶಾಸ್ತ್ರ ಎಷ್ಟು ಹಿಂದುಳಿ ದಿದೆಯೆಂಬ ವಿಷಯ ಸ್ಪಷ್ಟವಾದೀತು.

ಭಾಷೆ ಮತ್ತು ಲಿಪಿ

ಭಾಷೆ ಮತ್ತು ಅದು ಬಳಸುವ ಲಿಪಿಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿರಲು ಸಾಧ್ಯವಿದೆ. ಕನ್ನಡ ಭಾಷೆಯ ಚರಿತ್ರೆ ಮತ್ತು ಕನ್ನಡ ಲಿಪಿಯ ಚರಿತ್ರೆ - ಇವೆರಡೂ ಭಿನ್ನ ಭಿನ್ನವಾದವುಗಳು; ಹಾಗಾಗಿ, ಕನ್ನಡದಲ್ಲೂ ಭಾಷೆ ಮತ್ತು ಲಿಪಿಗಳ ನಡುವೆ ತುಂಬಾ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ಸರಿಯಾಗಿ ಗ್ರಹಿಸಿ ಕೊಳ್ಳಲು ಪ್ರಯತ್ನಿಸದಿರುವುದೇ ವರ್ಣಮಾಲೆಯೆನ್ನುವ ಈ ಪಾಠವನ್ನು ಬರೆದ ವಿದ್ವಾಂಸರ ಮುಖ್ಯ ದೋಷವಾಗಿದೆ. ಕೇಶಿರಾಜನೂ ಈ ತಪ್ಪನ್ನು ಮಾಡಿದ್ದನು, ಅದನ್ನು ಕಂಡುಕೊಳ್ಳಲಾರದ ಅವನ ಹಿಂಬಾಲಕರೆಲ್ಲರೂ ಇದನ್ನು ಮಾಡು ತ್ತಿದ್ದಾರೆ.

ಕನ್ನಡವನ್ನು ಬರೆಯಲು ನಾವಿಂದು ಬಳಸುತ್ತಿರುವ ಲಿಪಿ ಕನ್ನಡಕ್ಕಾಗಿಯೇ ಸಿದ್ಧವಾದುದೇನಲ್ಲ. ಅಶೋಕನ ಕಾಲದಲ್ಲಿ ಬಳಕೆಯಲ್ಲಿದ್ದ ಬ್ರಾಹ್ಮೀ ಲಿಪಿಯನ್ನು, ಇಲ್ಲವೇ ಅದಕ್ಕೆ ತೀರ ಹತ್ತಿರವಿದ್ದ ಲಿಪಿಯೊಂದನ್ನು ನಮ್ಮ ಪೂರ್ವಿಕರು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ತಮ್ಮ ಭಾಷೆಗೂ ಅಳವಡಿಸಿಕೊಂಡಿದ್ದರು. ಈ ಲಿಪಿಯ ರಚನಾಕ್ರಮದಲ್ಲಿ ಇವತ್ತಿಗೂ ವಿಶೇಷ ಬದಲಾವಣೆಯೇನೂ ನಡೆದಿಲ್ಲ. ಆದರೆ, ಅದರ ಸಂಜ್ಞೆಗಳಲ್ಲಿ ಮಾತ್ರ ಹಲವು ಬದಲಾವಣೆಗಳಾಗಿವೆ.

ಭಾರತದ ಲಿಪಿಗಳಲ್ಲಿ ಹೆಚ್ಚಿನವೂ ಈ ಬ್ರಾಹ್ಮೀ ಲಿಪಿಯಿಂದಲೇ ಉತ್ಪನ್ನ ವಾದವುಗಳಾದ್ದರಿಂದ, ತೆಲುಗು, ಮಲಯಾಳ, ಮರಾಠಿ, ಗುಜರಾತಿ ಮೊದಲಾದ ಭಾಷೆಗಳು ಬಳಸುವ ಲಿಪಿಗಳಲ್ಲೆಲ್ಲ ಕನ್ನಡದ ಲಿಪಿಯಂತಹದೇ ರಚನಾಕ್ರಮ ತೋರಿಬರುತ್ತಿದೆ. ಈ ಲಿಪಿಗಳೊಳಗಿನ ವ್ಯತ್ಯಾಸಗಳಲ್ಲಿ ಹೆಚ್ಚಿನವೂ ಅವು ಬಳಸುವ ಸಂಜ್ಞೆಗಳ ಸ್ವರೂಪದಲ್ಲಿ ನಡೆದು ಬಂದ ಬದಲಾವಣೆಗಳ ಫಲ.

ವರ್ಣಮಾಲೆ ಮತ್ತು ಅಕ್ಷರಮಾಲೆ

ಈ ರೀತಿ, ಕನ್ನಡ ಭಾಷೆಯ ಚರಿತ್ರೆ ಅದು ಬಳಸುವ ಲಿಪಿಯ ಚರಿತ್ರೆಗಿಂತ ತೀರ ಭಿನ್ನವಾಗಿದೆಯಾದ ಕಾರಣ, ಅದರ ‘ವರ್ಣಮಾಲೆ’ ಮತ್ತು ಅದು ಬಳಸುವ ಲಿಪಿಯ ‘ಅಕ್ಷರಮಾಲೆ’ ಇವುಗಳೊಳಗೆ ವ್ಯತ್ಯಾಸಗಳಿರುವುದು ಸಹಜ. ಬಹಳ ಮಂದಿ ವಿದ್ವಾಂಸರು ಕನ್ನಡದಲ್ಲಿ ಇವೆರಡೂ ಒಂದೇ ಎಂಬ ಅರ್ಥ ಬರುವ ಹಾಗೆ ಬರೆದಿರುತ್ತಾರೆ.

ಕನ್ನಡ ಲಿಪಿಯಲ್ಲಿ ಒಟ್ಟು ಹದಿನಾಲ್ಕು ಸ್ವರ ಸಂಜ್ಞೆಗಳಿವೆಯಾದರೆ (ಕೆಲವರು ಇನ್ನೂ ಎರಡನ್ನು ಸೇರಿಸಿಕೊಳ್ಳುತ್ತಾರೆ) ಕನ್ನಡ ಭಾಷೆಯಲ್ಲಿ ಒಟ್ಟು ಅ, ಆ, ಇ, ಈ, ಉ, ಊ, ಎ, ಏ, ಒ, ಮತ್ತು ಓ ಎಂಬ ಹತ್ತು ಸ್ವರ ವರ್ಣಗಳು ಮಾತ್ರ

ಆಟ


ಶಾಲಾ ವ್ಯಾಕರಣಗಳಲ್ಲಿ ಮೊದಲನೆಯ ಪಾಠ

ಇವೆ. ಲಿಪಿಯಲ್ಲಿ ಕಾಣಿಸುವ ಋ, ಖೂ, ಐ, ಮತ್ತು ಔ ಎಂಬ ಉಳಿದ ನಾಲ್ಕು ಸ್ವರ ಸಂಜ್ಞೆಗಳನ್ನು ನಾವು ವ್ಯಂಜನಯುಕ್ತ ಸ್ವರಗಳನ್ನಾಗಿ ಉಚ್ಚರಿಸುವೆವಾದ ಕಾರಣ, ಅವನ್ನು ಮೇಲಿನವುಗಳಿಂದ ಭಿನ್ನವಾದ ಸ್ವರವರ್ಣಗಳೆಂದು ಕರೆಯುವು ದರಲ್ಲಿ ಅರ್ಥವಿಲ್ಲ.

ಉದಾಹರಣೆಗಾಗಿ ಐ ಮತ್ತು ಔ ಎಂಬ ಎರಡು ಸ್ವರಸಂಜ್ಞೆಗಳನ್ನು ಗಮನಿಸಬಹುದು. ಉಚ್ಚಾರಣೆಯಲ್ಲಿ ಇವು ಅಯ್ ಮತ್ತು ಅವ್ ಎಂಬ ಸಂಜ್ಞಾಗುಚ್ಛಗಳಿಂದ ಸ್ವಲ್ಪವೂ ಭಿನ್ನವಾಗಿಲ್ಲ. ಯಕಾರ ಮತ್ತು ವಕಾರಗಳು ಕನ್ನಡದಲ್ಲಿ ಇತರ ಸ್ವರಗಳೊಡನೆಯೂ (ಉದಾ: ಎಯ್, ಬಯ್, ಇವ್ ಇತ್ಯಾದಿ) ಬರುತ್ತವೆಯಾದ ಕಾರಣ, ಅವುಗಳಲ್ಲಿ ಅಯ್ ಮತ್ತು ಅವ್‌ಗಳಿಗೆ ಮಾತ್ರ ಒಂದು ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿಕೊಟ್ಟು, ಅವನ್ನು ಬರೆಯಲು ಐ ಮತ್ತು ಔ ಎಂಬ ಬೇರೆಯೇ ಎರಡು ಅಕ್ಷರಗಳನ್ನು ಬಳಸುವುದರಲ್ಲಿ ಯಾವ ಔಚಿತ್ಯವೂ ಇಲ್ಲ.

ಹೀಗಿದ್ದರೂ ನಮ್ಮ ಪೂರ್ವಿಕರು ತಮ್ಮ ಭಾಷೆಯನ್ನು ಬರೆಯಲು ಬ್ರಾಹ್ಮೀ ಲಿಪಿಯನ್ನು ಬಳಸತೊಡಗಿದಾಗ, ಇತರ ಸ್ವರಸಂಜ್ಞೆಗಳೊಂದಿಗೆ ಇವೆರಡನ್ನೂ ಎತ್ತಿಕೊಂಡರೆಂಬುದು ನಮ್ಮ ಲಿಪಿಯಲ್ಲಿ ತೋರಿಬರುವ ಈ ಎರಡು ಅನವಶ್ಯಕ ಸಂಜ್ಞೆಗಳಿಗೆ ಕಾರಣ.

ಇತರ ಎರಡು ಸ್ವರಸಂಜ್ಞೆಗಳಲ್ಲಿ ಋಕಾರವು ಕನ್ನಡದ ಮಟ್ಟಿಗಂತೂ ವ್ಯಾಕರಣ ಪುಸ್ತಕಗಳಲ್ಲಿ ಮಾತ್ರವೇ ಕಾಣಸಿಗುವಂತಹದು. ಅದಕ್ಕೆ ಕನ್ನಡ ವರ್ಣ ಮಾಲೆಯಲ್ಲಿ ಯಾವ ಸ್ಥಾನವೂ ಇಲ್ಲ. ಕನ್ನಡ ಲಿಪಿಯ ಅಕ್ಷರ ಮಾಲೆಯಲ್ಲೂ ಅದನ್ನು ಸೇರಿಸಿಕೊಳ್ಳುವ ಅವಶ್ಯಕತೆಯೇನಿಲ್ಲ.

ಋಕಾರದ ಮಟ್ಟಿಗೆ ಹೇಳುವುದಾದರೆ, ಅದು ಉಚ್ಚಾರಣೆಯಲ್ಲಿ ರಕಾರ ಯುಕ್ತ ಸ್ವರವಾಗಿಯೇ ಬಳಕೆಯಲ್ಲಿದೆ. ಈ ಸ್ವರ ಕೆಲವರಲ್ಲಿ ಇಕಾರವಿರಬಹುದು, ಕೆಲವರಲ್ಲಿ ಉಕಾರವಿರಬಹುದು, ಮತ್ತು ಇನ್ನು ಕೆಲವರಲ್ಲಿ ವಿಶಿಷ್ಟವಾದೊಂದು ಉಕಾರ (ವಿವೃತೋಷ್ಣ)ವಾಗಿಯೂ ಇರಬಹುದು. ಈ ವೈವಿಧ್ಯವನ್ನು ತೋರಿಸುವುದಕ್ಕಾಗಿ, ಬಹುಶಃ ಬರಹದ ಮಟ್ಟಿಗೆ ಅದನ್ನೊಂದು ವಿಶಿಷ್ಟ ಅಕ್ಷರವೆಂದು ಪರಿಗಣಿಸಬಹುದು. ಆದರೆ, ಅದನ್ನೊಂದು ಹೆಚ್ಚಿನ ಸ್ವರವರ್ಣ ವೆಂಬುದಾಗಿ ಹೇಳಲು ಬರುವುದಿಲ್ಲ.

ವರ್ಗೀಯಗಳು ಮತ್ತು ಅವರ್ಗೀಯಗಳು

ವ್ಯಂಜನಗಳನ್ನು ವರ್ಗೀಯ ಮತ್ತು ಅವರ್ಗೀಯಗಳೆಂಬ ಎರಡು ಗುಂಪುಗಳಾಗಿ ವಿಂಗಡಿಸುವ ಸಂಸ್ಕೃತ ವ್ಯಾಕರಣದ ಪದ್ಧತಿಯನ್ನೇ ಕನ್ನಡ ವ್ಯಾಕರಣಗಳಲ್ಲೂ ಅನುಸರಿಸಲಾಗುತ್ತದೆ. ವರ್ಗೀಯಗಳನ್ನು ಕವರ್ಗ, ಚವರ್ಗ, ಟವರ್ಗ, ತವರ್ಗ, ಮತ್ತು ಪವರ್ಗಗಳೆಂದು ಒಟ್ಟು ಐದು ವರ್ಗಗಳಾಗಿ ವಿಂಗಡಿಸುವುದು ಕ್ರಮ. ಒಂದೊಂದು ವರ್ಗದಲ್ಲೂ ಐದೈದು ಸಂಜ್ಞೆಗಳಿದ್ದು, ವರ್ಗೀಯ ವ್ಯಂಜನಗಳ

೫೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಒಟ್ಟು ಸಂಖ್ಯೆ ಇಪ್ಪತ್ತೈದಾಗುವುದು. ಯ, ರ, ಲ, ವ, ಶ, ಷ, ಸ, ಹ, ಮತ್ತು ಳಗಳು ಒಂಬತ್ತು ಅವರ್ಗೀಯಗಳೆನಿಸುವುವು. ಅನುಸ್ವಾರ ಮತ್ತು ವಿಸರ್ಗಗಳನ್ನು ಯೋಗವಾಹಗಳೆಂಬ ಮೂರನೆಯ ಗುಂಪಿನಲ್ಲಿರಿಸುವುದು ರೂಢಿ.

ಇದು ಕನ್ನಡ ಲಿಪಿಯ ವ್ಯಂಜನ ಸಂಜ್ಞೆ(ಅಕ್ಷರ)ಗಳ ವಿವೇಚನೆಯಾಯಿತು. ಮೇಲೆಯೇ ಹೇಳಿದಂತೆ, ಕನ್ನಡ ಭಾಷೆಯ ವ್ಯಂಜನ ವರ್ಣಗಳ ಸಂಖ್ಯೆ ಅದರ ಲಿಪಿಯ ಅಕ್ಷರ ಸಂಖ್ಯೆಗೆ ಸರಿಹೊಂದಬೇಕೆಂದೇನೂ ನಿಯಮವಿಲ್ಲವಷ್ಟೆ? ಕನ್ನಡ ದಲ್ಲಿ ಮಹಾಪ್ರಾಣಾಕ್ಷರಗಳ ಸ್ಥಾನವೇನೆಂಬುದರ ಕುರಿತು ಬಹಳ ಚರ್ಚೆ ನಡೆದಿದೆ. ಅವು ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಮಾತ್ರ ಪ್ರಯುಕ್ತವಾಗುವುವೆಂಬುದು ಕೆಲವರ ಮತವಾದರೆ, ಅಚ್ಚಕನ್ನಡ ಪದಗಳಲ್ಲೂ ಅವುಗಳ ಪ್ರಯೋಗವಿದೆಯೆಂಬುದು ಇನ್ನು ಕೆಲವರ ಮತ.

ಆದರೆ, ಮಹಾಪ್ರಾಣಾಕ್ಷರಗಳು ಬರುವ ಪದಗಳ ಮೂಲ ಕನ್ನಡವಿರಲಿ, ಸಂಸ್ಕೃತವಿರಲಿ, ಅವನ್ನುಚ್ಚರಿಸುವಾಗಲಂತೂ ಅಲ್ಪಪ್ರಾಣಾಕ್ಷರಗಳಿಂದ ಭಿನ್ನವಾಗಿ ಉಚ್ಚರಿಸುವ ಕನ್ನಡಿಗರು ಕೆಲವೇ ಕೆಲವು ಮಂದಿ ಮಾತ್ರ ಎಂಬುದರಲ್ಲಿ ಸಂಶಯ ವಿಲ್ಲ. ಕನ್ನಡ ವರ್ಣಮಾಲೆ ಕನ್ನಡಿಗರ ಉಚ್ಚಾರಣೆಯ ಮೇಲೆ ಅವಲಂಬಿಸಿರ ಬೇಕು; ಹಾಗಾಗಿ, ಮಹಾಪ್ರಾಣಗಳನ್ನು ವಿಶಿಷ್ಟ ವರ್ಣಗಳೆಂದು ಪರಿಗಣಿಸುವ ಅವಶ್ಯಕತೆಯಿಲ್ಲವೆಂದೇ ಹೇಳಬಹುದು.

ಇ, ಇ, ಣ, ನ, ಮ ಎಂಬ ಐದು ಅನುನಾಸಿಕಗಳಲ್ಲಿ ಮೊದಲ ಮೂರು ಪದಮಧ್ಯ ಸ್ಥಾನದಲ್ಲಿ ಮಾತ್ರವೇ ಪ್ರಯುಕ್ತವಾಗುತ್ತವೆ. ಅದರಲ್ಲೂ ಜಕಾರ ಮತ್ತು ಇಕಾರಗಳು ಸವರ್ಗೀಯ ವ್ಯಂಜನಗಳೆದುರು (ಎಂದರೆ ಜಕಾರವು ಕ ಮತ್ತು ಗ ಎಂಬವುಗಳೆದುರು ಮತ್ತು ಇಕಾರವು ಚ ಮತ್ತು ಜ ಎಂಬವು ಗಳೆದುರು) ಮಾತ್ರ ಬರುತ್ತವೆ; ಹಾಗಾಗಿ, ಮತ್ತು ಆ ಸ್ಥಾನದಲ್ಲಿ ಉಳಿದ ಅನುನಾಸಿಕಗಳು ಬರದೇ ಇರುವ ಕಾರಣ, ಅವೆರಡಕ್ಕೂ ವಿಶಿಷ್ಟವಾದ ವರ್ಣ ಸ್ಥಾನವನ್ನು ಕಲ್ಪಿಸಬೇಕಾಗಿಲ್ಲ. ಣ, ನ, ಮತ್ತು ಮ ಎಂಬಿವು ಮೂರೇ ಕನ್ನಡದ ಅನುನಾಸಿಕ ವರ್ಣಗಳು ಎಂಬುದು ಇದರಿಂದ ಸಿದ್ಧವಾಗುತ್ತದೆ.

ಅವರ್ಗೀಯಗಳೆಂದು ಹೇಳಲಾಗುವ ಯಕಾರಾದಿಗಳನ್ನು ಮೇಲಿನ ಐದು ವರ್ಗಗಳೊಳಗೆಯೇ ಸೇರಿಸಿ ವರ್ಗೀಯಗಳನ್ನಾಗಿ ಪರಿಗಣಿಸಲು ಸಾಧ್ಯವಿದೆ. ಷಕಾರವನ್ನು ಹೆಚ್ಚಿನವರೂ ಶಕಾರವಾಗಿಯೇ ಉಚ್ಚರಿಸುತ್ತಾರೆ; ಹಾಗಾಗಿ, ಅದಕ್ಕೆ ವರ್ಣಸ್ಥಾನ ಕೊಡಬೇಕಾಗಿಲ್ಲ. ಹಕಾರವನ್ನು ಕವರ್ಗದಲ್ಲೂ, ಶಕಾರ, ಯಕಾರ ಗಳನ್ನು ಚವರ್ಗದಲ್ಲೂ, ಳಕಾರವನ್ನು ಟವರ್ಗದಲ್ಲೂ, ಸಕಾರ, ಲಕಾರ ಮತ್ತು ರಕಾರಗಳನ್ನು ತವರ್ಗದಲ್ಲೂ, ವಕಾರವನ್ನು ಪವರ್ಗದಲ್ಲೂ ಅವುಗಳ ಉಚ್ಚಾರಣೆಯನ್ನನುಸರಿಸಿ ಸೇರಿಸಿಕೊಳ್ಳಬಹುದು.

ಈ ಲೆಕ್ಕದಂತೆ ಕನ್ನಡದ ಕವರ್ಗದಲ್ಲಿ ಮೂರು (ಕ, ಗ, ಹ), ಚವರ್ಗದಲ್ಲಿ ನಾಲ್ಕು (ಚ, ಜ, ಶ, ಯ), ಟವರ್ಗದಲ್ಲಿ ನಾಲ್ಕು (ಟ, ಜ, ಣ, ಳ), ತವರ್ಗದಲ್ಲಿ ಆರು (ತ, ದ, ನ, ಸ, ಲ, ರ), ಮತ್ತು ಪವರ್ಗದಲ್ಲಿ ನಾಲ್ಕು

೫೮


ಶಾಲಾ ವ್ಯಾಕರಣಗಳಲ್ಲಿ ಮೊದಲನೆಯ ಪಾಠ

(ಪ, ಬ, ಮ, ವ) ಎಂಬುದಾಗಿ ಕನ್ನಡದಲ್ಲಿ ಒಟ್ಟು ಇಪ್ಪತ್ತೊಂದು ವ್ಯಂಜನ ವರ್ಣಗಳಿವೆಯೆಂದು ಸಿದ್ಧವಾಗುತ್ತದೆ.

ಯೋಗವಾಹಗಳು

ಅನುಸ್ವಾರ ಮತ್ತು ವಿಸರ್ಗಗಳೆಂಬ ಯೋಗವಾಹಗಳೆರಡೂ ಕನ್ನಡಕ್ಕೆ ತಾನು ಎರವಲಾಗಿ ಪಡಕೊಂಡ ಲಿಪಿಯೊಡನೆ ಬಂದ ಹೊರೆಗಳು ಮಾತ್ರ. ಉಚ್ಚಾರಣೆ ಯಲ್ಲಿ ಅನುಸ್ವಾರವು ಮಕಾರ, ನಕಾರಗಳಿಗಿಂತ ಭಿನ್ನವಾದುದಲ್ಲ. ವಿಸರ್ಗಕ್ಕೆ ಪದಾಂತ್ಯದಲ್ಲಿ ಹಕಾರವಾಗಿಯೂ, ಪದಮಧ್ಯದಲ್ಲಿ ಒತ್ತಕ್ಷರವಾಗಿಯೂ ಉಚ್ಚಾ ರಣೆಯಿದೆ. ಹಾಗಾಗಿ, ಇವೆರಡಕ್ಕೂ ಕನ್ನಡ ವರ್ಣಮಾಲೆಯಲ್ಲಿ ಸ್ಥಳವಿಲ್ಲ.

ವರ್ಣಗಳ ಉಚ್ಚಾರಣೆ

ಇನ್ನು ಈ ವರ್ಣಗಳ ಉಚ್ಚಾರಣೆಯಂತಹದು ಎಂಬುದನ್ನು ವರ್ಣಿಸುವ ರೀತಿಯೂ ಸಾವಿರ ವರ್ಷಗಳಷ್ಟು ಹಿಂದಿನದೇ. ಈ ವಿಷಯದಲ್ಲಿ ಭಾಷಾ ವಿಜ್ಞಾನಿಗಳು ಬಹಳಷ್ಟು ಸಂಶೋಧನೆಗಳನ್ನು ನಡೆಸಿದ್ದು, ನೂರಾರು ಹೊಸ ಹೊಸ ವಿಷಯಗಳು ಬೆಳಕಿಗೆ ಬಂದಿವೆ. ಇವೊಂದೂ ನಮ್ಮ ಕನ್ನಡ ವೈಯಾಕರಣಿಗಳ ಗಮನಕ್ಕೆ ಬಂದಿಲ್ಲವೆಂದು ತೋರುತ್ತದೆ. ಅಥವಾ ಬಂದರೂ ಅವಕ್ಕನುಗುಣವಾಗಿ ಪಠ್ಯವನ್ನು ಸುಧಾರಿಸಬೇಕೆಂಬ ಉತ್ಸಾಹ ಅವರಲ್ಲಿ ಮೂಡಿಲ್ಲ. ತಾವು ಚಿಕ್ಕಂದಿನಲ್ಲಿ ಏನು ಕಲಿತಿದ್ದೆವೋ ಅದನ್ನೇ ಇಂದಿನ ಹುಡುಗರೂ ಉರುಹೊಡೆದು ಪರೀಕ್ಷೆಯಲ್ಲಿ ಬರೆದರೆ ಸಾಕು ಎಂಬುದು ಅವರ ಆಶಯವಿರಬಹುದು.

ಈ ವ್ಯಾಕರಣ ಪುಸ್ತಕಗಳಲ್ಲಿ ಕಾಣಿಸುವ ಉಚ್ಚಾರಣೆಯ ವರ್ಣನೆಗೂ ಕನ್ನಡ ಭಾಷೆಯ ಉಚ್ಚಾರಣೆಗೂ ನಡುವೆ ಯಾವ ಸಂಬಂಧವೂ ಇಲ್ಲವಾದರೆ ಅದು ವರ್ಣನೆ ಹೇಗಾದೀತು? ಮತ್ತು ಅದನ್ನು ಕಲಿಯುವವರಿಗೆ ಏನು ಅರ್ಥ ವಾದೀತು? ಉದಾಹರಣೆಗಾಗಿ, ಕವರ್ಗದ ವ್ಯಂಜನಗಳನ್ನು ‘ಗಂಟಲಿ’ನಲ್ಲಿ ಉಚ್ಚರಿಸುವ ಕಾರಣ ಅವು ಕಂಠಗಳೆಂದು ಹೆಚ್ಚಿನ ವ್ಯಾಕರಣಗಳಲ್ಲೂ ಬರೆದಿದೆ. ನಿಜಕ್ಕೂ ನಾವಿವನ್ನು ಗಂಟಲಿನಲ್ಲಿ ಉಚ್ಚರಿಸುತ್ತೇವೆಯೋ? ಕ ಎನ್ನುವಾಗ ನಾಲಗೆಯ ಹಿಂಭಾಗ ಮೇಲಕ್ಕೆ ಉಬ್ಬಿ ನಾಲಗೆಯ ಮೇಲ್ಬಾಗದಲ್ಲಿರುವ ಅಂಗುಳು (ಮೃದುತಾಲು)ವನ್ನು ಮುಟ್ಟುವುದಲ್ಲದೆ ಗಂಟಲಲ್ಲಿ ಎಂತಹ ಉಚ್ಚಾ ರಣೆಯೂ ನಡೆಯುವುದಿಲ್ಲ.

ಇದೇ ರೀತಿಯಲ್ಲಿ, ಟವರ್ಗದ ವ್ಯಂಜನಗಳನ್ನು ಉಚ್ಚರಿಸುವಾಗ, ನಾಲಿಗೆಯ ತುದಿ ಹಿಂದಕ್ಕೆ ಮಡಚಿಕೊಳ್ಳುವುದೇ ಅತ್ಯಂತ ಮುಖ್ಯವಾದ ಕಾರ್ಯ. ಇದನ್ನು ವಿವರಿಸಿಹೇಳುವ ಬದಲು ಅವು ಮೂರ್ಧನ್ಯಗಳು, ಬಾಯಿಯ ಮೇಲ್ಬಾಗದಲ್ಲಿ ಉತ್ಪನ್ನವಾಗುತ್ತವೆ ಎಂದು ಬರೆದರೆ ಅವುಗಳ ವಿಶಿಷ್ಟವಾದ ಉಚ್ಚಾರಣೆ ವಿದ್ಯಾರ್ಥಿಗಳಿಗೆ ಹೇಗೆ ಗೊತ್ತಾದೀತು?


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕನ್ನಡ ವರ್ಣಗಳ ಉಚ್ಚಾರಣೆಯನ್ನು ವಿವರವಾಗಿ ವರ್ಣಿಸಹೊರಟರೆ ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು. ಇಂತಹ ಪುಸ್ತಕದಲ್ಲಿ ಬರಬಹು ದಾದ ವಿಷಯಗಳಲ್ಲಿ ಯಾವುವನ್ನು ಕನ್ನಡ ವ್ಯಾಕರಣದ ಮೊದಲನೆಯ ಪಾಠ ದಲ್ಲಿ ಸೇರಿಸಿಕೊಳ್ಳಬೇಕು, ಮತ್ತು ಯಾವುವನ್ನು ಬಿಡಬೇಕು ಎಂಬುದು ಒಂದು ಪ್ರಶ್ನೆ. ಇದನ್ನು ಪಠ್ಯಪುಸ್ತಕಗಳನ್ನು ರೂಪಿಸುವ ವಿದ್ವಾಂಸರೇ ನಿರ್ಧರಿಸಬೇಕು. ಆದರೆ, ಇವತ್ತಿನ ವ್ಯಾಕರಣ ಪುಸ್ತಕಗಳಲ್ಲಿ ಇಂತಹ ಪುಸ್ತಕದಲ್ಲಿ ಕಾಣಿಸದೇ ಇರುವಂತಹ ಅರ್ಥವಿಲ್ಲದ ‘ವರ್ಣನೆ’ಗಳೇ ಜಾಸ್ತಿ ಕಾಣಿಸುತ್ತವೆ; ಹಾಗಾಗಿ, ಅವು ಏನನ್ನು ವರ್ಣಿಸುತ್ತವೆಯೆಂಬುದೂ ವಿದ್ಯಾರ್ಥಿಗಳಿಗೆ (ಮತ್ತು ಅಧ್ಯಾಪಕ ರಿಗೆ) ಗೊತ್ತಾಗಲಾರದು.

ವರ್ಣಮಾಲೆ ಮತ್ತು ಅಕ್ಷರಮಾಲೆಗಳೊಳಗೆ ಕನ್ನಡದಲ್ಲಿ ಇಷ್ಟೆಲ್ಲಾ ವ್ಯತ್ಯಾಸ ಗಳಿದ್ದರೂ, ಅವನ್ನು ಸ್ವಲ್ಪವೂ ಪರಿಗಣಿಸದಿರುವುದರಿಂದಾಗಿ, ನಮ್ಮ ಶಾಲಾ ವ್ಯಾಕರಣಗಳು ವಿದ್ಯಾರ್ಥಿಗಳಿಗೆ ಬರಿಯ ತಲೆನೋವಾಗಿಯೇ ಉಳಿದಿವೆ. ವಸ್ತು ಸ್ಥಿತಿಯನ್ನು ಅರ್ಥವಾಗುವಂತೆ ವರ್ಣಿಸಹೊರಟಲ್ಲಿ ಮಾತ್ರ ಅವು ವಿದ್ಯಾರ್ಥಿ ಗಳಲ್ಲಿ ಕುತೂಹಲವನ್ನು ಕೆರಳಿಸಬಲ್ಲುವು.

೨.೫ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ದೆವ್ವ

ಕೇಶಿರಾಜನ ಶಬ್ದಮಣಿದರ್ಪಣದಿಂದ ಸುರುವಾಗಿ ಇವತ್ತಿನ ಶಾಲಾವ್ಯಾಕರಣಗಳ ವರೆಗೆ, ಕನ್ನಡದವೆಂದೆನಿಸಿಕೊಳ್ಳುವ ವ್ಯಾಕರಣಗಳಲ್ಲೆಲ್ಲ ಸಣ್ಣ ದೊಡ್ಡ ಸಂಸ್ಕೃತ ದೆವ್ವಗಳನೇಕ ತುಂಬಿಕೊಂಡಿವೆ. ಈ ದೆವ್ವಗಳ ಕಾಟದಿಂದಾಗಿ, ಕನ್ನಡ ಭಾಷೆ ಯಲ್ಲಿ ಎಷ್ಟೇ ಬದಲಾವಣೆಯಾದರೂ ಅದರ ‘ವ್ಯಾಕರಣ’ ಮಾತ್ರ ಬಂಡೆಗಲ್ಲಿನ ಹಾಗೆ ಅಚಲವಾಗಿ ನಿಂತುಕೊಂಡಿದೆ. ಭಾಷೆಯಲ್ಲಿ ಇರುವುದೊಂದು, ಅದರ ವ್ಯಾಕರಣ ಹೇಳುವುದಿನ್ನೊಂದು ಎಂಬ ಈ ಪರಿಸ್ಥಿತಿಯಿಂದಾಗಿ, ವ್ಯಾಕರಣವನ್ನು ಕಲಿಯುವ ವಿದ್ಯಾರ್ಥಿಗಳಲ್ಲಿ ಗೊಂದಲವಲ್ಲದೆ ಬೇರೇನೂ ಮೂಡುತ್ತಿಲ್ಲ.

ಭಾಷೆಯಲ್ಲಿಲ್ಲದ ಭವಿಷ್ಯತ್ತು

ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬುದಾಗಿ ಕನ್ನಡದ ಕ್ರಿಯಾಪದಗಳಲ್ಲಿ ಮೂರು ಕಾಲಭೇದಗಳಿವೆಯೆಂದು ನಮ್ಮ ಶಾಲಾವ್ಯಾಕರಣಗಳೆಲ್ಲ ಸಾರಿ ಹೇಳು ತಿವೆ. ಅವುಗಳ ವರ್ಣನೆಯ ಪ್ರಕಾರ, ಬಂದನು ಎಂಬುದು ಭೂತರೂಪ, ಬರುತ್ತಾನೆ ಎಂಬುದು ವರ್ತಮಾನ ರೂಪ, ಮತ್ತು ಬರುವನು ಎಂಬುದು ಭವಿಷ್ಯತ್ ರೂಪ. ಆದರೆ ನಿಜಕ್ಕೂ ಕನ್ನಡದಲ್ಲಿ ಈ ಮೂರು ಕ್ರಿಯಾರೂಪ ಗಳನ್ನು ನಾವು ಈ ಮೂರು ಅರ್ಥಗಳಲ್ಲಿ ಬಳಸುತ್ತಿರುವೆವೇನು?

೬೦

ಕನ್ನಡ ವ್ಯಾಕರಣಗಳಲ್ಲಿ ಸಂಸ್ಕೃತದ ದೆವ್ವ

ಕನ್ನಡದ ಆಧುನಿಕ ಪ್ರಯೋಗಗಳನ್ನು ಪರೀಕ್ಷಿಸಿ ನೋಡಿದಲ್ಲಿ ಒಂದು ಕುತೂಹಲಜನಕವಾದ ಅಂಶ ಗಮನಕ್ಕೆ ಬಂದೀತು. ಕರ್ಣಾಟಕದ ದಕ್ಷಿಣ ಭಾಗದ ಲೇಖಕರು ಬರುತ್ತಾನೆ ಎಂಬ ರೂಪವನ್ನೇ ವರ್ತಮಾನ ಮತ್ತು ಭವಿಷ್ಯ ದರ್ಥಗಳೆರಡರಲ್ಲೂ ಬಳಸುತ್ತಾರೆ. ಬರುವನು ಎಂಬ ರೂಪ ಅವರ ಬರಹ ಗಳಲ್ಲಿ ಕಾಣಿಸುವುದೇ ಇಲ್ಲ. ಉತ್ತರದವರ ಕೆಲವು ಲೇಖನಗಳಲ್ಲಿ ಬರುವನು ಎಂಬ ರೂಪ ಕಾಣಿಸುವುದಾದರೂ ಅದಕ್ಕೆ ಭವಿಷ್ಯದರ್ಥದೊಂದಿಗೆ ವರ್ತಮಾ ನಾರ್ಥವೂ ಇದೆ. ಅಂತೂ ಭಾಷೆಯ ಮಟ್ಟಿಗೆ ಹೇಳುವುದಾದರೆ, ಬರಹದ ಕನ್ನಡದಲ್ಲಿ ಭೂತ ಮತ್ತು ಇತರ ಎಂಬ ಎರಡೇ ಎರಡು ಕಾಲಭೇದಗಳು ಮಾತ್ರ ಕಂಡುಬರುತ್ತವೆ. ಶಾಲಾ ವ್ಯಾಕರಣಗಳಲ್ಲಿ ಮಾತ್ರ ಕಾಲಭೇದಗಳು ಮೂರು.

ಸಾಮಾನ್ಯಾರ್ಥ ಮತ್ತು ನಿಶ್ಚಿತಾರ್ಥ

ಹೀಗೆ ಪ್ರಯೋಗದಲ್ಲಿ ಇಲ್ಲದೇ ಇರುವ ಕಾಲಭೇದವನ್ನು ಕ್ರಿಯಾರೂಪಗಳ ಮೇಲೆ ಹೇರಿದ ನಮ್ಮ ವೈಯಾಕರಣಿಗಳು ಇರು ಎಂಬ ಒಂದು ಕ್ರಿಯಾಪದದಲ್ಲಿ ಮಾತ್ರ ಬಹಳ ಸ್ಪಷ್ಟವಾಗಿಯೇ ತೋರಿಬರುವ ಕಾಲಭೇದವನ್ನು ಗಮನಿಸಿ ದಂತಿಲ್ಲ. ಕನ್ನಡದಲ್ಲಿ ಇದ್ದಾನೆ ಮತ್ತು ಇರುತ್ತಾನೆ ಎಂಬ ಈ ಎರಡು ರೂಪ ಗಳಿಗೆ ಎರಡು ಭಿನ್ನ ಭಿನ್ನವಾದ ಅರ್ಥಗಳಿವೆ. ಮನೆಯಲ್ಲಿ ಇರುತ್ತಾನೆ ಎಂದರೆ ‘ಸಾಮಾನ್ಯವಾಗಿ ಇರುತ್ತಾನೆ, ಈಗ ಇದ್ದಾನೋ ಇಲ್ಲವೋ ತಿಳಿಯದು’ ಎಂಬ ಅರ್ಥವಾದರೆ, ಮನೆಯಲ್ಲಿ ಇದ್ದಾನೆ ಎಂದರೆ, ‘ನಿಶ್ಚಿತವಾಗಿಯೂ ಇದ್ದಾನೆ’ ಎಂಬ ಅರ್ಥ ಬರುತ್ತದೆ.

ಹೀಗೆ ಸಾಮಾನ್ಯ ಮತ್ತು ನಿಶ್ಚಿತಗಳೆಂಬ ಎರಡು ಅರ್ಥಗಳನ್ನು ಕೊಡುವ ರೂಪಭೇದ ಇರು ಎಂಬ ಒಂದು ಧಾತುವಿನಲ್ಲಿ ಮಾತ್ರ ತೋರಿಬರು ತ್ತದೆ. ಹೆಚ್ಚಿನ ವೈಯಾಕರಣಿಗಳೂ ಈ ಎರಡು ರೂಪಗಳಿಗೆ ಒಂದೇ ಅರ್ಥವಿದೆ ಯೆಂಬ ಹಾಗೆ ಬರೆದಿದ್ದಾರೆ.

ವ್ಯತ್ಯಾಸಗಳ ಮೂಲ

ನಾವು ಉಪಯೋಗಿಸುವ ಭಾಷೆಗೂ ಅದನ್ನು ವರ್ಣಿಸಲೆಂದು ಹೊರಟ ವ್ಯಾಕರಣಗಳಿಗೂ ನಡುವೆ ಇಂತಹ ಹಲವಾರು ವ್ಯತ್ಯಾಸಗಳು ಕಂಡು ಬರುತ್ತಿವೆ. ಕನ್ನಡ ಭಾಷೆಯ ಸ್ವರೂಪವೇನೆಂಬುದನ್ನು ತಿಳಿಯಲು ನಾವು ಯಾವ ರೀತಿಯ ಪ್ರಯತ್ನವನ್ನೂ ಮಾಡುತ್ತಿಲ್ಲವೆಂಬುದೇ ಈ ವ್ಯತ್ಯಾಸಗಳಿಗೆಲ್ಲ ಮೂಲ ಕಾರಣ ವಾಗಿದೆ. ಪಾಣಿನಿಯೇ ಮೊದಲಾದ ವಿದ್ವಾಂಸರ ಸತತ ಪ್ರಯತ್ನದಿಂದಾಗಿ ಸಂಸ್ಕೃತ ಭಾಷೆಯನ್ನು ಸ್ಪಷ್ಟವಾಗಿ ವರ್ಣಿಸುವ ಗ್ರಂಥಗಳು ಹಲವು ಸಿದ್ಧ ವಾದುವು. ಸಂಸ್ಕೃತ ಭಾಷೆಗೂ ಕನ್ನಡ ಭಾಷೆಗೂ ನಡುವೆ ಬಹಳ ವ್ಯತ್ಯಾಸ ವಿದೆಯಾದ ಕಾರಣ, ಸಂಸ್ಕೃತ ವ್ಯಾಕರಣವನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಿ

೬೦


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕೊಳ್ಳಲು ಸಾಧ್ಯವಾಗದು. ಹಾಗೆ ಮಾಡಲು ಯತ್ನಿಸುತ್ತಿರುವುದರಿಂದಲೇ ನಮ್ಮ ವ್ಯಾಕರಣಗಳು ಇಷ್ಟೊಂದು ಹೀನ ಸ್ಥಿತಿಯಲ್ಲಿವೆ.

ಸಂಸ್ಕೃತ ವ್ಯಾಕರಣಗಳು ಸಂಸ್ಕೃತ ಭಾಷೆಯನ್ನು ವರ್ಣಿಸಲು ಯತ್ನಿಸುವ ಹಾಗೆ, ಕನ್ನಡ ವ್ಯಾಕರಣಗಳು ಕನ್ನಡ ಭಾಷೆಯನ್ನು ವರ್ಣಿಸಲು ಯತ್ನಿಸಬೇಕು. ಕನ್ನಡದ ಪದಗಳನ್ನು ನಾವು ಹೇಗೆ ಉಚ್ಚರಿಸುತ್ತೇವೆ, ಪ್ರತ್ಯಯಗಳ ಮೂಲಕ ಅವನ್ನು ನಾವು ಹೇಗೆ ಸಾಧಿಸುತ್ತೇವೆ, ಅವನ್ನು ಒಂದಕ್ಕೊಂದು ಸೇರಿಸಿದಾಗ ಎಂತಹ ಬದಲಾವಣೆಗಳೆಲ್ಲ ತಲೆದೋರುತ್ತವೆ, ಕನ್ನಡದ ವಾಕ್ಯಗಳನ್ನು ರಚಿಸಲು ಈ ಪದಗಳನ್ನೆಲ್ಲ ಯಾವ ಯಾವ ರೀತಿಯಲ್ಲಿ ಪೋಣಿಸಿಕೊಳ್ಳಬೇಕು - ಇಂತಹ ಹಲವಾರು ಕುತೂಹಲಕಾರಕವಾದ ಪ್ರಶ್ನೆಗಳಿಗೆ ಕನ್ನಡದ ವ್ಯಾಕರಣ ನೇರವಾದ ಉತ್ತರಗಳನ್ನು ಕೊಡಲು ಯತ್ನಿಸಬೇಕು.

ಈ ಉತ್ತರಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬರೆಯ ಬೇಕು ಮಾತ್ರವಲ್ಲ, ಶಾಲಾ ವಿದ್ಯಾರ್ಥಿಗಳು ತಮ್ಮ ಮಾತಿನಲ್ಲಿ ಇಲ್ಲವೇ ಬರಹ ಗಳಲ್ಲಿ ಬಳಸುವ ಧ್ವನಿಗಳ, ಪದಗಳ ಮತ್ತು ವಾಕ್ಯಗಳ ರಚನೆಯನ್ನು ಮಾತ್ರವೇ ಉದಾಹರಣೆಗಳನ್ನಾಗಿ ಬಳಸಿ ಈ ವ್ಯಾಕರಣ ನಿಯಮಗಳನ್ನು ಪಠ್ಯ ಪುಸ್ತಕಗಳು ವರ್ಣಿಸಬೇಕು.

ಹೀಗೆ ಇರುವುದನ್ನು ಇರುವಂತೆ ವರ್ಣಿಸತೊಡಗಿದಲ್ಲಿ ವ್ಯಾಕರಣವು ವಿದ್ಯಾರ್ಥಿಗಳ ಕುತೂಹಲವನ್ನು ಕೆರಳಿಸಬಹುದು ಮಾತ್ರವಲ್ಲ, ಮುಂದೆ ದೊಡ್ಡವ ರಾದ ಮೇಲೆ ಈ ವಿದ್ಯಾರ್ಥಿಗಳೇ ಕನ್ನಡ ಭಾಷೆಯ ಕುರಿತು ಹೊಸ ಹೊಸ ಸಂಗತಿಗಳನ್ನು ಕಂಡುಹಿಡಿಯುವಂತೆ ಪ್ರೇರೇಪಣೆಯನ್ನೂ ಕೊಡಬಲ್ಲುದು. ವಸ್ತುಸ್ಥಿತಿಯಿಂದ ದೂರವಾಗಿ ಉಳಿಯುವುದರಿಂದಲೇ ನಮ್ಮ ವ್ಯಾಕರಣವಿಂದು ಬರಿಯ ಶುಷ್ಕ ವಿಷಯವಾಗಿ ಯಾರಲ್ಲೂ ಕುತೂಹಲವನ್ನು ಕೆರಳಿಸಲು ಸಮರ್ಥ ವಾಗದೆ ಉಳಿದಿದೆ.

ಒಂದು ಭಾಷೆಯ ಸ್ವರೂಪವನ್ನು ಚಿತ್ರಿಸುವ ವ್ಯಾಕರಣ ಆ ಭಾಷೆ ಬದಲಾದಂತೆಲ್ಲ ಬದಲಾಗುತ್ತ ಹೋಗಬೇಕು, ಮತ್ತು ಆ ಭಾಷೆಯ ಕುರಿತು ಹೊಸ ಹೊಸ ಅಂಶಗಳು ಗಮನಕ್ಕೆ ಬಂದಂತೆಲ್ಲ ಅದರಲ್ಲೂ ಮಾರ್ಪಾಟು ಗಳಾಗುತ್ತಿರಬೇಕು. ಹೀಗೆ ಜೀವಕಳೆಯನ್ನು ತುಂಬುವಲ್ಲಿವರೆಗೂ ನಮ್ಮ ಭಾಷೆಯ ವ್ಯಾಕರಣ ನಿಷ್ಪ್ರಯೋಜಕವಾಗಿಯೇ ಉಳಿದೀತು.

ಶಾಲಾ ವ್ಯಾಕರಣಗಳ ಮುಖ್ಯ ದೋಷ

ನಮ್ಮ ಶಾಲಾ ವ್ಯಾಕರಣಗಳ ಮುಖ್ಯ ದೋಷವೇನೆಂದರೆ, ಅವು ಹೊಸಗನ್ನಡದ ಸ್ವರೂಪವೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಯತ್ನಿಸುವ ಬದಲು, ಕೇಶಿರಾಜ, ಪಾಣಿನಿ ಮೊದಲಾದವರು ಚರ್ಚಿಸಿದ ಅತೀ ಕ್ಲಿಷ್ಟವಾದ ಮತ್ತು ಹೊಸಗನ್ನಡಕ್ಕೆ ಸ್ವಲ್ಪವೂ ಸಂಬಂಧಿಸದಂತಹ ನೂರಾರು ವಿಷಯಗಳನ್ನು ವಿದ್ಯಾರ್ಥಿಗಳ ತಲೆ ಯೊಳಗೆ ತುಂಬಲು ಯತ್ನಿಸುತ್ತವೆ.

೬೨


ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ ಇವೆಯೇ?

ಸಂಸ್ಕೃತ ಭಾಷೆಗೆ ಸಂಬಂಧಿಸಿದಂತಹ ಗುಣ, ವೃದ್ಧಿ, ಶುತ್ವ, ಷ್ಟುತ್ವ, ಜಶ್ತ್ವ ಮೊದಲಾದ ಸಂಧಿಕಾರ್ಯಗಳನ್ನು ಹೇಳಿಕೊಡುವ ಈ ವ್ಯಾಕರಣಗಳಿಗೆ ಕನ್ನಡದ ಉದಾಹರಣೆಗಳು ಸಿಗುವುದು ಅಸಂಭವವೇ. ಹಾಗಾಗಿ, ಎಂಟನೇ ತರಗತಿಗೆ ಸಿದ್ಧವಾದ ವ್ಯಾಕರಣಗಳಲ್ಲಿ ಹೂವಿಲ್ಲ, ಅಮ್ಮಯ, ಷಡೂರ್ಮಿ ಮೊದಲಾದ, ಕನ್ನಡದ ಮಟ್ಟಿಗೆ ತೀರ ವಿಚಿತ್ರವಾಗಿ ಕಾಣಿಸುವ, ಪದಗಳ ಪ್ರಯೋಗ ಕಾಣಸಿಗುತ್ತದೆ. ಇವನ್ನೆಲ್ಲ ಪರೀಕ್ಷೆಗಾಗಿ ಬಾಯಿಪಾಠ ಮಾಡ ಬೇಕಾಗಿರುವ ವಿದ್ಯಾರ್ಥಿಗಳಿಗೆ ವ್ಯಾಕರಣವೆಂಬುದೊಂದು ವಿಚಿತ್ರವಾದ ವಿಷಯ ವೆಂದು ಅನಿಸಿದರೆ ತಪ್ಪೇನು?

ಹಾಗಾಗಿ, ಶಾಲಾ ವ್ಯಾಕರಣಗಳನ್ನು ಬರೆಯುವವರು ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಪಠ್ಯಪುಸ್ತಕ ಸಮಿತಿಯವರು ಈ ವ್ಯಾಕರಣಗಳನ್ನು ಬರೆಯುವುದರ ಮತ್ತು ಕಲಿಸುವುದರ ಉದ್ದೇಶವೇನೆಂಬುದನ್ನು ಮೊದಲಿಗೇನೇ ನಿರ್ಧರಿಸಿಕೊಳ್ಳಬೇಕು. ತಮ್ಮ ತಾಯಿನುಡಿಯ ಸ್ವರೂಪವೇನೆಂಬುದನ್ನು ತಿಳಿದು ಕೊಳ್ಳಲು, ಮತ್ತು ಆ ಭಾಷೆಯಲ್ಲಿ ಬರಹದ ಮೂಲಕ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಇತರರಿಗೆ ಸರಿಯಾಗಿ ಅರ್ಥವಾಗುವ ಹಾಗೆ ತಿಳಿಸಲು ಹಾಗೂ ಇತರರು ಬರೆದುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವ್ಯಾಕರಣವನ್ನು ಕಲಿಸುವ ಅವಶ್ಯಕತೆಯಿದೆ. ಅವರು ಯಾವ ರೀತಿಯ ಬರಹ ವನ್ನು ಬಳಸುತ್ತಿದ್ದಾರೆ ಮತ್ತು ಬಳಸಬೇಕಾಗಿದೆ ಎಂಬುದರ ಮೇಲೆ ಈ ವ್ಯಾಕರಣದ ರಚನೆ ಅವಲಂಬಿಸಿರಬೇಕು.

ಹೊಸಗನ್ನಡದ ವ್ಯಾಕರಣದಲ್ಲಿ ಹೊಸಗನ್ನಡದ ವಿಚಾರಗಳನ್ನು ಮಾತ್ರವೇ ವಿವರಿಸಬೇಕು. ಸಂಸ್ಕೃತದ ಇಲ್ಲವೇ ಹಳೆಗನ್ನಡದ ವಿಚಾರಗಳನ್ನೂ ಮಕ್ಕಳಿಗೆ ತಿಳಿಸಿ ಹೇಳುವುದರಿಂದ ಪ್ರಯೋಜನವೇನಾದರೂ ಇದೆಯೆಂದು ಈ ವಿದ್ವಾಂಸರ ಮತವಾದರೆ, ಆ ವಿಷಯಗಳಿಗಾಗಿ ಬೇರೆಯೇ ಪುಸ್ತಕವನ್ನು ಬರೆಯುವುದು ಉತ್ತಮ. ಇವೆಲ್ಲವನ್ನು ಹೊಸಗನ್ನಡ ವ್ಯಾಕರಣದಲ್ಲೇ ಸೇರಿಸುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲವಲ್ಲದೆ ಬೇರೇನೂ ಮೂಡಲಾರದು.

೨.೬ ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ

ಇವೆಯೇ?

ಪಠ್ಯ ಪುಸ್ತಕ ಸಮಿತಿಯ ಆದೇಶದ ಮೇರೆಗೆ ಹೈಸ್ಕೂಲು ವಿದ್ಯಾರ್ಥಿಗಳಿಗೆ ಕನ್ನಡ ವ್ಯಾಕರಣವನ್ನು ಕಲಿಸಲು ಸಿದ್ಧವಾಗಿರುವ ಪಠ್ಯ ಪುಸ್ತಕಗಳಲ್ಲಿ ‘ಸಮಾಸಗಳು’ ಎಂಬ ವಿಭಾಗವೊಂದಿದೆ. ಇದರಲ್ಲಿ ಪ್ರಾಮುಖ್ಯವಾಗಿ ತತ್ಪುರುಷ, ಕರ್ಮ ಧಾರಯ, ದ್ವಿಗು, ಬಹುವ್ರೀಹಿ, ಅವ್ಯಯೀಭಾವ ಮತ್ತು ದ್ವಂದ್ವ ಎಂಬ ಆರು ಸಂಸ್ಕೃತ ಸಮಾಸಗಳನ್ನೂ ಗಮಕ ಹಾಗೂ ಕ್ರಿಯಾಸಮಾಸಗಳೆಂಬ ಎರಡು

೬೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹೆಚ್ಚಿನ ‘ಕನ್ನಡ’ ಸಮಾಸಗಳನ್ನೂ ಪರಿಚಯಿಸುವುದು ರೂಢಿ. ಕನ್ನಡ ವ್ಯಾಕರಣ ಗಳಲ್ಲಿ ಸಮಾಸಗಳನ್ನು ಪರಿಚಯಿಸುವ ಈ ಕ್ರಮ ಹದಿಮೂರನೇ ಶತಮಾನ ದಲ್ಲಿದ್ದ ಕೇಶಿರಾಜನ ಕಾಲದಿಂದಲೂ ಬಳಕೆಯಲ್ಲಿದೆ.

ಆದರೆ, ಕನ್ನಡ ವ್ಯಾಕರಣದಲ್ಲಿ ಈ ರೀತಿ ಸಂಸ್ಕೃತ ಸಮಾಸಗಳನ್ನು ಕಲಿಸುವ ಅವಶ್ಯಕತೆಯಿದೆಯೇ, ಮತ್ತು ಹಾಗೆ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವೇನಾದರೂ ಸಿಗಬಹುದೇ, ಅಥವಾ ಇದಕ್ಕೆ ಬದಲಾಗಿ ಅದು ಅವರಲ್ಲಿ ಗೊಂದಲವನ್ನೇನಾದರೂ ಉಂಟುಮಾಡಬಹುದೇ ಎಂಬುದನ್ನು ಯಾರೂ ವಿವೇಚಿಸಿದಂತಿಲ್ಲ.

ವ್ಯಾಕರಣದ ಉದ್ದೇಶ

ಕನ್ನಡದಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ರಚನೆಯೆಂತಹದೆಂಬುದನ್ನು ತಿಳಿಸಿಹೇಳುವುದೇ ಕನ್ನಡ ವ್ಯಾಕರಣದ ಮುಖ್ಯ ಉದ್ದೇಶವಾಗಿರಬೇಕು. ಸಂಸ್ಕೃತ ಪದಗಳ ಮತ್ತು ವಾಕ್ಯಗಳ ರಚನೆ ಕನ್ನಡದವಕ್ಕಿಂತ ತೀರ ಭಿನ್ನವಾಗಿರುವ ಕಾರಣ, ಕನ್ನಡ ವ್ಯಾಕರಣದಲ್ಲಿ ಅವನ್ನೂ ವಿವರಿಸಹೋದರೆ ಆ ವ್ಯಾಕರಣ ಅನವಶ್ಯಕವಾಗಿ ಬಹಳ ಕ್ಲಿಷ್ಟವಾದೀತು. ಸಂಸ್ಕೃತ ಬಹಳ ಮುಖ್ಯವಾದ ಭಾಷೆ, ಅತ್ಯುತ್ತಮವಾದ ಕಾವ್ಯ ಮತ್ತು ಶಾಸ್ತ್ರ ಗ್ರಂಥಗಳು ಅದರಲ್ಲಿವೆ, ಮತ್ತು ಅದನ್ನು ನಾವು ‘ದೇವ ಭಾಷೆ’ಯೆಂದು ಪರಿಗಣಿಸುತ್ತೇವೆ ಎಂಬುದೆಲ್ಲವೂ ನಿಜವಾದರೂ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಅರಿಯಬೇಕೆಂದಿರುವವರಿಗೆ ಸಂಸ್ಕೃತ ಪದಗಳ ಮತ್ತು ವಾಕ್ಯಗಳ ರಚನೆಯನ್ನು ತಿಳಿಸಹೋಗುವುದು ತೀರಾ ಅನವಶ್ಯಕ.

ನಿಮ್ಮ ಮನೆಗೆ ಹೋಗಲು ದಾರಿ ಕೇಳಿದವರಿಗೆ ನಿಮ್ಮೂರಿನ ದೇವ ಸ್ಥಾನದ ದಾರಿ ಹೇಳಿದಿರಾದರೆ, ಅದೂ ನಿಮ್ಮ ಮನೆ ದೇವಸ್ಥಾನಕ್ಕಿಂತ ಬೇರೆಯೇ ಒಂದು ದಿಕ್ಕಿನಲ್ಲಿದೆಯಾದರೆ, ಹೇಗೆ ತೊಂದರೆಯುಂಟಾಗಬಹುದೋ, ಹಾಗೆಯೇ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತ ವ್ಯಾಕರಣದ ಅಂಶಗಳನ್ನು ಸೇರಿಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಿರದು.

ಸಮಾಸವೆಂದರೇನು?

ಸಮಾಸ ಎಂಬುದು ಎರಡು ಪದಗಳು ಒಟ್ಟು ಸೇರಿ ಒಂದೇ ಪದವಾಗಿರುವಂತಹ ಕೆಲವು ವಿಶಿಷ್ಟವಾದ ಪದಗಳ (ಎಂದರೆ ಸಮಸ್ತಪದಗಳ) ರಚನೆಯೆಂತಹದು ಎಂಬುದನ್ನು ತಿಳಿಸುವ ಒಂದು ವ್ಯಾಕರಣ ಶಾಸ್ತ್ರ ವಿಭಾಗ. ಇಂತಹ ಸಮಸ್ತ ಪದಗಳು ಕನ್ನಡದಲ್ಲೂ ಇವೆ, ಸಂಸ್ಕೃತದಲ್ಲೂ ಇವೆ; ಹಿಂದಿ, ಇಂಗ್ಲಿಷ್, ಮರಾಠಿ ಮೊದಲಾದ ಬೇರೆ ಭಾಷೆಗಳಲ್ಲೂ ಇವೆ. ಇಂತಹ ಪದಗಳಿಲ್ಲದ ಭಾಷೆಗಳೂ ಕೆಲವಿವೆ. ಈ ಪದಗಳ ರಚನೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ತೆರನಾಗಿದೆ.

೬೪


ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ ಇವೆಯೇ?

ಕನ್ನಡದಲ್ಲಿ ಬರುವ ಸಮಸ್ತಪದಗಳ ರಚನೆಯನ್ನು ತಿಳಿಸಿ ಹೇಳಲು ಹೇಗೆ ಹಿಂದಿ, ಇಂಗ್ಲಿಷ್, ಮರಾಠಿ ಮೊದಲಾದವುಗಳಲ್ಲಿ ಬರುವ ಸಮಸ್ತ ಪದಗಳ ರಚನೆಯನ್ನು ತಿಳಿಸುವ ಅವಶ್ಯಕತೆಯಿಲ್ಲವೋ, ಹಾಗೆಯೇ ಅದಕ್ಕೆ ಸಂಸ್ಕೃತದಲ್ಲಿ ಬರುವ ಸಮಸ್ತಪದಗಳ ರಚನೆಯನ್ನು ತಿಳಿಸುವುದೂ ಅವಶ್ಯವಿಲ್ಲ.

ನಮ್ಮ ಪಠ್ಯಪುಸ್ತಕ ಸಮಿತಿಯವರಾಗಲೀ, ವ್ಯಾಕರಣ ಪುಸ್ತಕಗಳನ್ನು ಬರೆ ಯುವ ವಿದ್ವಾಂಸರಾಗಲೀ ಈ ವಿಷಯವನ್ನು ಗಮನಿಸಿದ ಹಾಗೆ ಕಾಣಿಸುವು ದಿಲ್ಲ. ಸಂಸ್ಕೃತಕ್ಕೂ ಕನ್ನಡಕ್ಕೂ ನಡುವೆ ಸಮಸ್ತಪದಗಳ ರಚನೆಯಲ್ಲಿ ಹಲವು ಮುಖ್ಯವಾದ ವ್ಯತ್ಯಾಸಗಳಿವೆ. ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಿಗೂ ಕನ್ನಡದಲ್ಲಿ ಕನ್ನಡದವೇ ಆದ ರಚನಾ ನಿಯಮಗಳು ಅನ್ವಯಿಸುತ್ತವೆ. ಹಾಗಾಗಿ, ಅಂತಹ ಸಮಸ್ತಪದಗಳನ್ನು ವರ್ಣಿಸುವಲ್ಲೂ ಸಂಸ್ಕೃತ ಸಮಾಸಗಳನ್ನು ಬಳಸುವ ಅವಶ್ಯಕತೆಯಿಲ್ಲ.

ಕೆಲವು ಮುಖ್ಯ ವ್ಯತ್ಯಾಸಗಳು

ಸಂಸ್ಕೃತ ಮತ್ತು ಕನ್ನಡ ಭಾಷೆಗಳ ನಡುವಿರುವ ಒಂದು ಅತ್ಯಂತ ಮುಖ್ಯವಾದ ವ್ಯತ್ಯಾಸವೇನೆಂದರೆ, ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ರೀತಿಯ ಪದಗಳು ಮಾತ್ರ ಇವೆ (ಅವ್ಯಯಗಳೆಂಬ ಮೂರನೇ ರೀತಿಯ ಪದಗಳಿವೆಯಾದರೂ ಇವನ್ನು ನಾಮಪದಗಳೆಂದೇ ಪರಿಗಣಿಸುವುದು ರೂಢಿ). ಆದರೆ ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣವಾಚಕ ಪದ ಎಂಬು ದಾಗಿ ಮೂರು ಬಗೆಯ ಪದಗಳಿವೆ.

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ಗುಣವಾಚಕ ಪದಗಳನ್ನು ವಿಶೇಷಣ ಗಳನ್ನಾಗಿ ಬಳಸುವಾಗ, ನಾಮಪದಗಳ ಹಾಗೆ ಅವಕ್ಕೂ ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿದೆ. ಕನ್ನಡದಲ್ಲಿ ಇದು ಅವಶ್ಯವಿಲ್ಲ. ಸಂಸ್ಕೃತದ ಕೃಷ್ಣೇನ ಸರ್ಪಣ ಎಂಬುದು ಕನ್ನಡದಲ್ಲಿ ಕಪ್ಪು ಹಾವಿನಿಂದ ಎಂದಾಗುತ್ತ ದಲ್ಲದೆ, ಕಪ್ಪಿನಿಂದ ಹಾವಿನಿಂದ ಎಂದಾಗುವುದಿಲ್ಲ.

ಇದೇ ರೀತಿಯಲ್ಲಿ ಸರ್ವನಾಮ, ಕೃದಂತ ಮೊದಲಾದವುಗಳೂ ನಾಮಪದ ಗಳೊಂದಿಗೆ ವಿಶೇಷಣಗಳಾಗಿ ಬರುವಾಗ ಅವುಗಳಿಗೆ ಸಂಸ್ಕೃತದಲ್ಲಿ ನಾಮಪದ ಗಳ ಹಾಗೆಯೇ ವಿಭಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ, ಆದರೆ ಕನ್ನಡದಲ್ಲಿ ಇದು ಅವಶ್ಯವಿಲ್ಲ. ಮೃತೇನ ಸರ್ಪಣ - ಸತ್ತ ಹಾವಿನಿಂದ, ತಸ್ಯ ಬಾಲಕಸ್ಯ - ಆ ಹುಡುಗನ ಮೊದಲಾದ ಪ್ರಯೋಗಗಳಲ್ಲಿ ಈ ವ್ಯತ್ಯಾಸವನ್ನು ಕಾಣಬಹುದು.

ಸಂಸ್ಕೃತದಲ್ಲಿ ನಾಮಪದಗಳೊಂದಿಗೆ ವಿಶೇಷಣಗಳಾಗಿ ಬರುವ ಗುಣ ಪದಗಳು ವಿಭಕ್ತಿಪ್ರತ್ಯಯವಿಲ್ಲದೆ ಬಂದಾಗ (ಉದಾ: ಕೃಷ್ಣ ಸರ್ಪಣ, ಮೃತಸರ್ಪಣ) ಅವುಗಳಲ್ಲಿ ವಿಭಕ್ತಿ ಪ್ರತ್ಯಯ ಲೋಪವಾಗಿ ಸಮಸ್ತಪದ ವಾಗಿದೆಯೆಂದು ಹೇಳುತ್ತಾರೆ. ಹಾಗೆ ಹೇಳುವುದು ಸಮಂಜಸವೂ ಹೌದು. ಆದರೆ

ಓಂ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕನ್ನಡದಲ್ಲೂ ಇದೇ ರೀತಿಯಲ್ಲಿ ಕಪ್ಪು ಹಾವನ್ನು, ಸತ್ತ ಹಾವಿಗೆ ಎಂಬಂತಹ ಪ್ರಯೋಗಗಳಲ್ಲಿ ವಿಭಕ್ತಿ ಪ್ರತ್ಯಯದ ಲೋಪವಾಗಿದೆಯೆಂದು ಹೇಳಿದರೆ ಅದು ಸರಿಯಾಗಲಾರದು.

ಯಾಕೆಂದರೆ, ಕನ್ನಡದ ನಾಮಪದಗಳೊಂದಿಗೆ ವಿಶೇಷಣಗಳಾಗಿ ಬರುವ ಗುಣಪದಗಳು ಇಲ್ಲವೇ ಕೃದಂತಗಳು ಸಂಸ್ಕೃತದ ಹಾಗೆ ವಿಭಕ್ತಿ ಪ್ರತ್ಯಯ ಗಳೊಂದಿಗೆ ಬರುವುದಿಲ್ಲ. ಹಾಗಾಗಿ, ಅಲ್ಲಿ ವಿಭಕ್ತಿಲೋಪದ ಪ್ರಶ್ನೆಯೇ ಏಳುವು ದಿಲ್ಲ. ಹೀಗಿದ್ದರೂ ಕೂಡ, ಕನ್ನಡದ ವ್ಯಾಕರಣಗಳಲ್ಲೆಲ್ಲ ಬಿಸಿಗಾಳಿ, ಆ ಹುಡುಗ, ಸತ್ತ ಹಾವು ಮೊದಲಾದವುಗಳಲ್ಲಿ ಸಮಾಸವಾಗಿದೆಯೆಂದೂ, ಅವು ಕರ್ಮಧಾರಯ, ಗಮಕ ಮೊದಲಾದ ಸಮಾಸಗಳಿಗೆ ಉದಾಹರಣೆಗಳೆಂದೂ ಬರೆಯಲಾಗಿದೆ. ಸಂಸ್ಕೃತ ವ್ಯಾಕರಣದಿಂದ ಸಮಾಸಗಳನ್ನು ಹಾಗೆಯೇ ಕನ್ನಡ ವ್ಯಾಕರಣಕ್ಕೆ ತಂದು ಸೇರಿಸಿರುವುದೇ ಈ ರೀತಿ ನಮ್ಮ ವೈಯಾಕರಣಿಗಳು ತಪ್ಪು ಮಾಡಲು ಮುಖ್ಯ ಕಾರಣ.

ಲಿಂಗ ಮತ್ತು ವಿಭಕ್ತಿ ಪ್ರತ್ಯಯಗಳು

ಸಂಸ್ಕೃತಕ್ಕೂ ಕನ್ನಡಕ್ಕೂ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸ ವೇನೆಂದರೆ, ಸಂಸ್ಕೃತದಲ್ಲಿ ಬರುವ ನಾಮಪದಗಳ ಲಿಂಗವೇನೆಂಬುದನ್ನು ಅವಕ್ಕೆ ಎಂತಹ ವಿಭಕ್ತಿಪ್ರತ್ಯಯ ಸೇರುತ್ತದೆ ಎಂಬುದರ ಮೇಲೆ ತಿಳಿದುಕೊಳ್ಳ ಬೇಕಾಗು ತ್ತದೆ. ನಿಜಕ್ಕೂ ಸಂಸ್ಕೃತದ ವಿಭಕ್ತಿ ಪ್ರತ್ಯಯಗಳು ನಾಮಪದದ ಲಿಂಗ, ವಚನ, ಮತ್ತು ವಿಭಕ್ತಿ ಈ ಮೂರನ್ನೂ ಒಟ್ಟಾಗಿ ಸೂಚಿಸುತ್ತವೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ನೃಪ ‘ಅರಸು’, ವೃಕ್ಷ ‘ಮರ’, ಅನಿಲ ‘ಗಾಳಿ’ ಮೊದಲಾದವುಗಳು ಪುಲ್ಲಿಂಗದಲ್ಲೂ, ಜನನಿ ‘ತಾಯಿ’, ಮಾಲಾ ‘ಮಾಲೆ’, ಆಜ್ಞಾ ‘ಆಜ್ಞೆ’ ಮೊದಲಾದವು ಸ್ತ್ರೀಲಿಂಗದಲ್ಲೂ, ಕಲತ್ರ ‘ಹೆಂಡತಿ’, ಬ್ರಹ್ಮ ‘ಪರಮಾತ್ಮ’ ಉದಕ ‘ನೀರು’ ಮೊದಲಾದವು ನಪುಂಸಕ ಲಿಂಗದಲ್ಲೂ ಇವೆ. ಬರಿಯ ಅರ್ಥದಿಂದ ಈ ಪದಗಳ ಲಿಂಗವೇನೆಂಬುದನ್ನು ತಿಳಿಯಲು ಸಾಧ್ಯವಾಗದು.

ಕನ್ನಡದಲ್ಲಿ ಬರುವ ನಾಮಪದಗಳ ಲಿಂಗ ಇದಕ್ಕಿಂತ ತೀರ ಭಿನ್ನವಾದುದು. ಅದು ಅವುಗಳ ಅರ್ಥವನ್ನವಲಂಬಿಸಿದೆ. ಇದಲ್ಲದೆ, ಕನ್ನಡದ ವಿಭಕ್ತಿ ಪ್ರತ್ಯಯ ಗಳು ವಿಭಕ್ತಿಯನ್ನು ಮಾತ್ರ ಸೂಚಿಸುತ್ತವೆ, ವಚನ ಮತ್ತು ಲಿಂಗಗಳನ್ನು ಸೂಚಿಸಲು ಕನ್ನಡದಲ್ಲಿ ಐಚ್ಛಿಕವಾಗಿರುವ ಬೇರೆಯೇ ಪ್ರತ್ಯಯಗಳಿವೆ.

ಈ ಕಾರಣಕ್ಕಾಗಿ, ಸಂಸ್ಕೃತದಲ್ಲಿ ಬರುವ ಬಹುವ್ರೀಹಿ ಸಮಾಸಕ್ಕೂ ಕನ್ನಡ ದಲ್ಲಿ ಬರುವ ಬಹುವ್ರೀಹಿ ಸಮಾಸಕ್ಕೂ ನಡುವೆ ವ್ಯತ್ಯಾಸವಿದೆ. ಸಮಸ್ತಪದದ ಅಂಗಗಳಾಗಿ ಬಂದಿರುವ ಪದಗಳಲ್ಲಿ ಯಾವುದಾದರೂ ಒಂದು ಅದರ ಕೇಂದ್ರ ಬಿಂದುವಾಗಿರುವ ಬದಲು, ಅದರ ಹೊರಗಿರುವ ಒಂದು ಪದ ಕೇಂದ್ರ ಬಿಂದು ವಾಗಿದೆಯಾದರೆ ಅದನ್ನು ಬಹುವ್ರೀಹಿಯೆಂದು ಕರೆಯುವುದು ರೂಢಿ.

೬೬


ಸಂಸ್ಕೃತದ ಸಮಾಸಗಳು ಕನ್ನಡದಲ್ಲಿ ಇವೆಯೇ?

ಉದಾಹರಣೆಗಾಗಿ, ಸಂಸ್ಕೃತದ ಪೀತಾಂಬರಃ ‘ಹಳದಿ ಬಟ್ಟೆಯನ್ನುಟ್ಟವನು’ ಎಂಬ ಪದದಲ್ಲಿ ಪೀತ ‘ಹಳದಿ’ ಮತ್ತು ಅಂಬರ ‘ಬಟ್ಟೆ’ ಎಂಬ ಎರಡು ಪದ ಗಳು ಅಂಗಗಳಾಗಿ ಬಂದಿವೆ. ಆದರೆ, ಈ ಪದದ ಕೇಂದ್ರ ಬಿಂದು ಈ ಎರಡು ಅಂಗಗಳಲ್ಲಿ ಒಂದರ ಮೇಲೂ ಬೀಳದೆ ಅದರ ಹೊರಗಿರುವ ‘ಉಟ್ಟವನು’ ಎಂಬರ್ಥದ ಪದದ ಮೇಲೆ ಬೀಳುತ್ತದೆ. ಹಾಗಾಗಿ, ಅದನ್ನು ಬಹುವ್ರೀಹಿ ಯೆಂದು ಕರೆಯಬಹುದು.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಪೀತಾಂಬರಃ ಎಂಬ ಪದದ ಕೊನೆಯಲ್ಲಿ ಬರುವ ವಿಸರ್ಗ ಆ ಪದದ ವಿಭಕ್ತಿಯನ್ನು ಸೂಚಿಸುತ್ತಿದೆಯಲ್ಲದೆ ಅದು ಆ ಪದದ ಅಂಗವಲ್ಲ.

ಕನ್ನಡ ವ್ಯಾಕರಣಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಹಣೆಗಣ್ಣ, ಚಲವಾದಿ ಮೊದಲಾದ ಪದಗಳನ್ನು ಉದಾಹರಣೆಗಳನ್ನಾಗಿ ಕೊಡುವುದು ರೂಢಿ. ಇವು ಸಂಸ್ಕೃತದ ಬಹುವ್ರೀಹಿ ಸಮಾಸವಿರುವ ಪದಗಳನ್ನು ಹೋಲುತ್ತಿರುವುದೇ ಇದಕ್ಕೆ ಕಾರಣ. ಆದರೆ, ಈ ಪದಗಳ ಕೊನೆಯಲ್ಲಿ ಬರುವ ಅ ಇಲ್ಲವೇ ಇ ಎಂಬ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಲ್ಲ. ಅವು ಆ ಪದಗಳ ಅಂಗಗಳೇ.

ಕನ್ನಡದ ಮಟ್ಟಿಗೆ ಹೇಳುವುದಾದರೆ, ಹಣೆಗಣ್ಣ ಎಂಬ ಪದದಲ್ಲಿ ಹಣೆ ಮತ್ತು ಕಣ್ಣ ‘ಕಣ್ಣುಳ್ಳವನು’ ಎಂಬ ಎರಡು ಪದಗಳು ಸೇರಿವೆ. ಹಾಗಾಗಿ, ಅದರಲ್ಲಿ ಎರಡನೆಯ ಅಂಗವಾಗಿರುವ ಪದ (ಕಣ್ಣ ಎಂಬುದು) ಪ್ರಧಾನ ಪದವಾಗಿದೆಯಲ್ಲದೆ ಹೊರಗಿರುವ ಪದವೊಂದು ಪ್ರಧಾನ ಪದವಾಗಿಲ್ಲ. ಹಾಗಾಗಿ ಅದು ತತ್ಪುರುಷ ಸಮಾಸಕ್ಕೆ ಉದಾಹರಣೆಯಲ್ಲದೆ ಬಹುವ್ರೀಹಿಗಲ್ಲ.

ಕನ್ನಡದ ಬಹುವ್ರೀಹಿ

ಸಂಸ್ಕೃತದಲ್ಲಿ ಅವ್ಯಯೀಭಾವವೆಂಬ ಸಮಾಸವೊಂದಿದೆ. ಇದರಿಂದ ಸಿದ್ದ ವಾಗುವ ಪದಗಳು ಅವ್ಯಯ (ಕ್ರಿಯಾವಿಶೇಷಣ)ಗಳಾಗಿದ್ದು, ಅವುಗಳ ಕೇಂದ್ರ ಬಿಂದು ಮೊದಲನೆಯ ಅಂಗದ ಮೇಲೆ ಬೀಳುತ್ತದೆ. ಉದಾಹರಣೆಗಾಗಿ, ಉಪ ಕೃಷ್ಣಂ ‘ಕೃಷ್ಣನ ಹತ್ತಿರ’ ಎಂಬುದು ಸಂಸ್ಕೃತದಲ್ಲಿ ಒಂದು ಅವ್ಯಯವಾಗಿದ್ದು, ಅದರ ಕೇಂದ್ರ ಬಿಂದು ಉಪ ಎಂಬ ಮೊದಲನೆಯ ಅಂಗದ ಮೇಲೆ ಬೀಳುತ್ತದೆ.

ಅವ್ಯಯೀಭಾವ ಸಮಾಸಕ್ಕೆ ಕನ್ನಡದಲ್ಲಿ ಕನ್ನಡ ವ್ಯಾಕರಣಗಳು ಕೊಡುವ ಉದಾಹರಣೆಗಳು ಹಿಂಗಾಲು, ಮುಂದಲೆ, ಮೊದಲಾದವುಗಳು. ಆದರೆ ಇವು ಕನ್ನಡದಲ್ಲಿ ನಾಮಪದಗಳಾಗಿವೆಯಲ್ಲದೆ ಅವ್ಯಯ ಇಲ್ಲವೇ ಕ್ರಿಯಾವಿಶೇಷಣ ಗಳಾಗಿಲ್ಲ. ಇದಲ್ಲದೆ, ಹಿಂಗಾಲು ಎಂಬ ಪದ ಕಾಲಿನ ಹಿಂಭಾಗವನ್ನು ಸೂಚಿಸು ತಿದ್ದು, ಅದರ ಕೇಂದ್ರ ಬಿಂದು ಹಿಂದೆ ಮತ್ತು ಕಾಲು ಎಂಬ ಅದರ ಎರಡು ಅಂಗಗಳಲ್ಲಿ ಯಾವುದರ ಮೇಲೂ ಬೀಳದೆ, ಆ ಪದದ ಹೊರಗಿರುವ ಭಾಗ ಎಂಬ ಪದದ ಮೇಲೆ ಬೀಳುತ್ತದೆ. ಹಾಗಾಗಿ ನಿಜಕ್ಕೂ ಇದು ಬಹುವ್ರೀಹಿಗೆ ಉದಾಹರಣೆಯಾಗಬಲ್ಲುದಲ್ಲದೆ ಅವ್ಯಯೀಭಾವಕ್ಕೆ ಉದಾಹರಣೆಯಾಗಲಾರದು.

೬೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕೆಲವರು ಈ ಸಮಾಸವನ್ನು ‘ಅಂಶಿ’ ಎಂದರೆ ಒಂದು ವಸ್ತುವಿನ ಅಂಶವನ್ನು ತಿಳಿಸುವವು ಎಂಬುದಾಗಿ ಬೇರೆ ಹೆಸರಿನಿಂದ ಕರೆದಿದ್ದಾರೆ. ಆದರೆ, ಅಮ್ಮನಿಗಿಂತ ಚಿಕ್ಕವಳಾಗಿರುವ ಒಬ್ಬ ಹೆಂಗಸನ್ನು (ಎಂದರೆ ಅವಳ ತಂಗಿಯನ್ನು) ಸೂಚಿಸುವ ಚಿಕ್ಕಮ್ಮ ಎಂಬಂತಹ ಬೇರೆ ಕೆಲವು ಪದಗಳೂ ಇಂತಹವೇ ಆಗಿದ್ದು ಅವನ್ನು ಅಂಶಿಯೆಂದು ಕರೆಯಲು ಬರುವುದಿಲ್ಲ. ಇವೆಲ್ಲವೂ ಕನ್ನಡದಲ್ಲಿ ಬಹುವ್ರೀಹಿಗೆ ಉದಾಹರಣೆಗಳಾಗಬಲ್ಲುವು.

ಕೆಲವು ವ್ಯಾಕರಣಗಳಲ್ಲಿ ಕೆಳದುಟಿ ಎಂಬ ಪದದಲ್ಲೂ ಅಂಶಿ ಸಮಾಸವಿದೆ ಎಂದಿದ್ದಾರೆ, ಮತ್ತು ‘ತುಟಿಯ ಕೆಳಗು’ ಎಂಬುದಾಗಿ ಅದಕ್ಕೆ ವಿಗ್ರಹವಾಕ್ಯ ಕೊಟ್ಟಿದ್ದಾರೆ. ಆದರೆ ನಿಜಕ್ಕೂ ಕೆಳದುಟಿ ಎಂಬುದು ಕೆಳಗಿನ ತುಟಿಯನ್ನು ಸೂಚಿಸುತ್ತಿದ್ದು, ಕರ್ಮಧಾರಯಕ್ಕೆ ಉದಾಹರಣೆಯಾಗಬಲ್ಲುದಲ್ಲದೆ ಅಂಶಿಗಲ್ಲ.

ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ರಚಿತವಾಗಿರುವ ಕನ್ನಡ ವ್ಯಾಕರಣ ಎಂಬ ಪಠ್ಯಪುಸ್ತಕದ ‘ಸಮಾಸಗಳು’ ಎಂಬ ಒಂದು ಚಿಕ್ಕ ವಿಭಾಗದಲ್ಲಿ ಇಂತಹ ಇನ್ನೂ ಹಲವಾರು ಅಸಾಂಗತ್ಯಗಳು ಮತ್ತು ತಪ್ಪುಗಳಿವೆ. ಸಂಸ್ಕೃತ ವ್ಯಾಕರಣವನ್ನು ಹಾಗೆಯೇ ಕನ್ನಡಕ್ಕೆ ಅನ್ವಯಿಸಲು ಹೊರಟಿರುವುದೇ ಈ ತಪ್ಪುಗಳಿಗೆ ಮುಖ್ಯ ಕಾರಣ. ಇಂತಹ ಹಲವಾರು ತಪ್ಪುಗಳಿಂದ ತುಂಬಿ ತುಳುಕುತ್ತಿರುವ ಈ ವ್ಯಾಕರಣ ವಿಭಾಗವನ್ನು ಕಲಿಯಬೇಕಾಗಿರುವ ವಿದ್ಯಾರ್ಥಿಗಳಿಗೆ ಅದು ತಲೆನೋವನ್ನಲ್ಲದೆ ಬೇರೆ ಏನನ್ನೂ ಒದಗಿಸಲಾರದು.

೨.೭ ಕನ್ನಡದ ಮಕ್ಕಳಿಗೆ ಇಂಗ್ಲಿಷ್ ಪಾಠ

ಐದಾರು ವರ್ಷ ಶಾಲೆಗಳಲ್ಲಿ ಕಲಿತರೂ ನಮ್ಮ ವಿದ್ಯಾರ್ಥಿಗಳಿಗೆ ಆ ಭಾಷೆಯಲ್ಲಿ ಒಂದೇ ಒಂದು ವಾಕ್ಯವನ್ನೂ ಸರಿಯಾಗಿ ರಚಿಸಲು ಸಾಧ್ಯವಾಗುತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ. ಆದರೆ ಇದಕ್ಕೆ ವಿದ್ಯಾರ್ಥಿಗಳ ಅಶ್ರದ್ಧೆಗಿಂತಲೂ ಅವರಿಗೆ ಇಂಗ್ಲಿಷ್ ಕಲಿಸಹೊರಟ ನಮ್ಮ ಅಜ್ಞಾನ ಮತ್ತು ಅಶ್ರದ್ಧೆಗಳು ಮೂಲಕಾರಣ ವೆಂಬುದನ್ನು ಮಾತ್ರ ಯಾರೂ ಗಮನಿಸಿದಂತಿಲ್ಲ.

ಇಂಗ್ಲೆಂಡಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಮಾತನಾಡಲು ಬರುವ ಹುಡುಗರಿಗೆ ಆ ಭಾಷೆಯ ಬರಹವನ್ನು ಕಲಿಸುವುದಕ್ಕಾಗಿ ತಯಾರಾಗಿರುವ ಪಠ್ಯ ಪುಸ್ತಕದ ಪ್ರತಿರೂಪವನ್ನೇ ನಾವಿಲ್ಲಿ ಆ ಭಾಷೆಯ ಹೆಸರನ್ನೇ ಕೇಳಿರದ ಮಕ್ಕಳಿಗೆ ಭಾಷೆ ಮತ್ತು ಬರಹ ಇವೆರಡನ್ನೂ ಕಲಿಸುವುದಕ್ಕಾಗಿ ಬಳಸುತ್ತಿದ್ದೇವೆ. ಈ ಪುಸ್ತಕವನ್ನಿರಿಸಿಕೊಂಡು ಕ್ಲಾಸಿನಲ್ಲಿ ಅವರಿಗೆ ಅಕ್ಷರ ಹೇಳಿಕೊಡುತ್ತೇವೆ, ಮತ್ತು ಸ್ಪೆಲ್ಲಿಂಗ್ ಕಲಿಸುತ್ತೇವೆ, ಆದರೆ ಭಾಷೆಯನ್ನು ಮಾತ್ರ ಕಲಿಸುತ್ತಿಲ್ಲ. ಹೀಗೆಲ್ಲಾ ಇದ್ದರೂ ಅವರು ಅಲ್ಪಸ್ವಲ್ಪ ಇಂಗ್ಲಿಷ್ ಕಲಿತುಕೊಳ್ಳುತ್ತಾರಲ್ಲ, ಅದು ನಿಜಕ್ಕೂ ನಮ್ಮ ಭಾಗ್ಯವೆಂದೇ ಹೇಳಬೇಕು.

೬೮


ಕನ್ನಡ ಮಕ್ಕಳಿಗೆ ಇಂಗ್ಲಿಷ್ ಪಾಠ

ಭಾಷೆ ಕಲಿಯದೆ ಓದು ಕಲಿಯುವುದು

ಈ ಪಠ್ಯಪುಸ್ತಕಗಳನ್ನು ರಚಿಸಿರುವ ವಿದ್ವಾಂಸರಿಗೆ ಭಾಷೆ ಮತ್ತು ಬರಹಗಳ ನಡುವಿರುವ ಸಂಬಂಧವೇ ತಿಳಿದಂತಿಲ್ಲ. ಬರಹವು ನಿಜಕ್ಕೂ ಒಂದು ಭಾಷೆ ಯನ್ನು ಪ್ರತಿನಿಧಿಸುವ ಸಂಜ್ಞಾವಿಧಾನ ಮಾತ್ರ. ನಮಗೆ ತಿಳಿಯದಿರುವ ಭಾಷೆಯನ್ನು ಮೊದಲು ಕಲಿತುಕೊಳ್ಳದೆ, ಅದರ ಬರಹವನ್ನು ಕಲಿಯುವುದು ತುಂಬಾ ಕಷ್ಟ.

ಭಾಷೆಯನ್ನು ಕಲಿಯುವುದೆಂದರೆ ಅದರಲ್ಲಿ ಆಡಿದುದನ್ನು ಕೇಳಿ ಅರ್ಥಮಾಡಿ ಕೊಳ್ಳಲು ಕಲಿಯುವುದು, ಮತ್ತು ಇತರರಿಗೆ ಅರ್ಥವಾಗುವಂತೆ ಅದರಲ್ಲಿ ಆಡಲು ಕಲಿಯುವುದು. ಇವೆರಡು ಚಾತುರ್ಯಗಳನ್ನು ಕೈವಶ ಮಾಡಿಕೊಂಡ ಮೇಲೇನೇ ಆ ಭಾಷೆಯಲ್ಲಿ ಬರೆಯುವ ಇಲ್ಲವೇ ಓದುವ ಚಾತುರ್ಯಗಳನ್ನು ದೊರಕಿಸಿಕೊಳ್ಳಲು ಸಾಧ್ಯವಿದೆ.

ನಮಗೆ ತಿಳಿದಿರುವ ಹೊಸ ಭಾಷೆಯೊಂದನ್ನು ಹೀಗೆ ಆಡಲು ಮತ್ತು ಕೇಳಲು ಕಲಿಯದೇನೇ ನೇರವಾಗಿ ಅದರಲ್ಲಿ ಬರೆದ ಪುಸ್ತಕಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಬಹಳ ಮಂದಿ ಪ್ರಯತ್ನಿಸುತ್ತಾರೇನೋ ನಿಜ. ಇಂತಹ ಜನರಲ್ಲಿ ಕೆಲವರು ಈ ಪ್ರಯತ್ನದಲ್ಲಿ ಅಲ್ಪ ಸ್ವಲ್ಪ ಜಯವನ್ನೂ ಗಳಿಸುತ್ತಾರೆ.

ಆದರೆ, ಇಂತಹವರು ಆ ಭಾಷೆಯಲ್ಲಿ ಓದುವ ಕ್ರಮ ಮಾತ್ರ ಅತ್ಯಂತ ಕ್ಲಿಷ್ಟವಾದುದು. ಪುಸ್ತಕದಲ್ಲಿ ಬರುವ ವಾಕ್ಯಗಳನ್ನು ನೇರವಾಗಿ ಅರ್ಥಮಾಡಿ ಕೊಳ್ಳುವ ಬದಲು, ಇವರು ಪ್ರತಿಯೊಂದು ಪದವನ್ನೂ ಬೇರೆ ಬೇರೆಯಾಗಿ ತಮ್ಮ ಮಾತೃಭಾಷೆಯಲ್ಲಿ ಭಾಷಾಂತರಿಸುತ್ತ ಬಿಡಿಬಿಡಿಯಾಗಿ ಓದುತ್ತಾರೆ. ಹೀಗೆ ಓದುವುದರಲ್ಲಿ ಎರಡು ಮುಖ್ಯವಾದ ತೊಂದರೆಗಳಿವೆ.

ಈ ರೀತಿಯ ಓದುವಿಕೆ ಅತ್ಯಂತ ನಿಧಾನವಾಗಿ ಸಾಗುವುದೆಂಬುದು ಇಂತಹ ತೊಂದರೆಗಳಲ್ಲಿ ಮೊದಲಿನದು. ಒಂದು ಪುಟವನ್ನು ಓದಲೇನೇ ಇಂತಹ ಓದುಗರಿಗೆ ಬಹಳಷ್ಟು ಸಮಯ ಹಿಡಿದೀತು. ಎರಡನೆಯದಾಗಿ, ಪ್ರತಿಯೊಂದು ಪದವನ್ನೂ ಬೇರೆ ಬೇರಾಗಿ ಭಾಷಾಂತರಿಸಿ ಓದುವಾಗ, ವಾಕ್ಯದ ನಿಜವಾದ ಅರ್ಥ ಇವರ ಕೈಗೆ ಸಿಗುವುದಿಲ್ಲ.

ಇದಲ್ಲದೆ, ಒಂದು ಭಾಷೆಯಲ್ಲಿ ಬರುವ ಪದಗಳಿಗೆ ಸಮರ್ಪಕವಾಗಿ ಹೊಂದಿಕೆಯಾಗುವ ಪದಗಳು ಇನ್ನೊಂದು ಭಾಷೆಯಲ್ಲಿ ಸಿಗುವುದು ಬಹಳ ಅಪರೂಪ. ಸನ್ನಿವೇಶಕ್ಕನುಸಾರವಾಗಿ ಪದಗಳ ಅರ್ಥ ಬಹಳಷ್ಟು ವ್ಯತ್ಯಾಸ ಗೊಳ್ಳುತ್ತದೆ; ಹಾಗಾಗಿ, ಅರ್ಥಕೋಶಗಳಲ್ಲಿ ಕೊಟ್ಟಿರುವ ವಿವರಣೆಗಳ ಸಹಾಯ ದಿಂದ ವಾಕ್ಯದಲ್ಲಿ ಬರುವ ಪದಗಳ ಅರ್ಥ ಹೇಳುವುದು ತುಂಬಾ ಕಷ್ಟ.

ಈ ಎಲ್ಲಾ ಕಾರಣಗಳಿಂದಾಗಿ, ಇಂತಹ ಓದುವಿಕೆಯ ಮೂಲಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಎಂದಿಗೂ ಸಿಗಲಾರದು.

ಓಂ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಭಾಷೆಯ ಮೂರು ಅಂಶಗಳು

ನಿಜಕ್ಕೂ ಒಂದು ಹೊಸ ಭಾಷೆಯನ್ನು ಕಲಿಯಬೇಕೆಂದಿರುವವರು ಅದರ ಮೂರು ಮುಖ್ಯವಾದ ಅಂಶಗಳನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆ ಭಾಷೆ ಯಲ್ಲಿ ಬಳಸುವ ಧ್ವನಿಗಳು, ಅದರ ಪದರಾಶಿ, ಮತ್ತು ಈ ಪದಗಳನ್ನು ವಾಕ್ಯ ಗಳಾಗಿ ಜೋಡಿಸುವ ಕ್ರಮ - ಎಂದರೆ ಆ ಭಾಷೆಯ ವ್ಯಾಕರಣ - ಇವು ಭಾಷೆಯೊಂದರ ಮೂರು ಮುಖ್ಯ ಅಂಶಗಳಾಗಿವೆ.

ಇವುಗಳಲ್ಲಿ ಪದರಾಶಿಯೆಂಬುದು ಭಾಷೆಯಲ್ಲಿರುವ ಅತ್ಯಂತ ವಿಸ್ತಾರವಾದ ಅಂಶ. ಎಷ್ಟೇ ಅಭ್ಯಾಸ ಮಾಡಿರಲಿ, ಒಂದು ಭಾಷೆಯ ಪದರಾಶಿಯನ್ನು ತಾನು ಸಂಪೂರ್ಣವಾಗಿ ಕೈವಶ ಮಾಡಿಕೊಂಡಿರುವೆನೆಂದು ಯಾರೂ ಎದೆತಟ್ಟಿ ಹೇಳ ಲಾರರು. ಒಬ್ಬನ ಅಧೀನದಲ್ಲಿರುವ ಪದರಾಶಿಯ ವಿಸ್ತಾರ ಆತನ ಅನುಭವ ವನ್ನು ಹೊಂದಿಕೊಂಡು ಹೆಚ್ಚು ಕಡಿಮೆಯಾಗಿರುತ್ತದೆ. ಯಾವುದೇ ಒಂದು ವಿಷಯ ದಲ್ಲಿ ಒಬ್ಬನ ಅನುಭವ ಜಾಸ್ತಿಯಾದಂತೆಲ್ಲ ಆ ವಿಷಯಕ್ಕೆ ಸಂಬಂಧಿಸಿದ ಪದ ಗಳ ಮೇಲೆ ಆತನ ಹಿಡಿತ ಭದ್ರವಾಗುತ್ತದೆ.

ಮನುಷ್ಯನು ಸಾವಿರಾರು ಬೇರೆ ಬೇರೆ ರೀತಿಯ ಧ್ವನಿಗಳನ್ನು ಉಚ್ಚರಿಸಬಲ್ಲ ನಾದರೂ ಅವನ ಭಾಷೆಯು ಈ ಧ್ವನಿಗಳಲ್ಲಿ ನೂರಿನ್ನೂರನ್ನು ಮಾತ್ರ ಬಳಸಿ ಕೊಳ್ಳುತ್ತದೆ. ಹೀಗೆ ಬಳಸಿಕೊಳ್ಳುವ ಧ್ವನಿಗಳು ಭಾಷೆಯಿಂದ ಭಾಷೆಗೆ ಭಿನ್ನ ವಾಗಿರುತ್ತವೆ; ಹಾಗಾಗಿ, ಹೊಸ ಭಾಷೆಯೊಂದನ್ನು ಕಲಿಯಬೇಕೆಂದಿರುವವರು ಹೊಸ ಹೊಸ ಧ್ವನಿಗಳನ್ನೂ ಉಚ್ಚರಿಸಲು ಕಲಿಯಬೇಕಾಗುತ್ತದೆ. ಮಾತನ್ನು ಕೇಳಿ ಅರ್ಥಮಾಡಿಕೊಳ್ಳುವಲ್ಲಿ ಧ್ವನಿಯೇ ಮುಖ್ಯದ್ವಾರವಾಗಿರುವುದರಿಂದ, ಹೊಸ ಭಾಷೆಯೊಂದನ್ನು ಕಲಿಯುವಲ್ಲಿ ಆ ಭಾಷೆಯು ಬಳಸುವ ವಿವಿಧ ಧ್ವನಿಗಳನ್ನು ಕೇಳಿ, ಉಚ್ಚರಿಸಿ, ಅವುಗಳ ನಡುವಿರುವ ವ್ಯತ್ಯಾಸಗಳನ್ನು ಗ್ರಹಿಸಿಕೊಳ್ಳಲು ಅಭ್ಯಾಸ ಮಾಡುವುದೇ ಮೊದಲಿನ ಪಾಠವಾಗಿರಬೇಕು.

ವ್ಯಾಕರಣವನ್ನು ಕಲಿಯದೆ ಭಾಷೆ ಬರಲಾರದೆಂಬುದನ್ನು ಎಲ್ಲರೂ ಬಲ್ಲರು. ಆದರೆ, ಈ ಕಲಿಯುವಿಕೆ ಹೇಗೆ ಸಾಗಬೇಕೆಂಬುದನ್ನು ಮಾತ್ರ ಹೆಚ್ಚಿನವರೂ ಅರ್ಥಮಾಡಿಕೊಂಡಂತಿಲ್ಲ. ವ್ಯಾಕರಣದ ನಿಯಮಗಳನ್ನು ಬಾಯಿಪಾಠ ಮಾಡಿ ಕೊಳ್ಳುವುದರಿಂದ ಮಾತ್ರವೇ ಭಾಷೆಯನ್ನು ಕಲಿಯಬೇಕೆಂದಿರುವವರಿಗೆ ಯಾವ ಪ್ರಯೋಜನವೂ ಸಿಗಲಾರದು. ಆ ನಿಯಮಗಳು ಅವರ ಮನಸ್ಸಿನಲ್ಲಿ ನೆಲೆನಿಂತು, ಅವುಗಳ ಪ್ರಯೋಗ ಯಾಂತ್ರಿಕವಾದರೇನೇ ಅವು ಅವರ ಕೈವಶವಾದಂತೆ. ಹಾಗಾಗಿ, ವ್ಯಾಕರಣ ನಿಯಮಗಳನ್ನು ನೇರವಾಗಿ ಕಲಿಯುವುದಕ್ಕಿಂತಲೂ ಅವನ್ನು ಬಳಸುವುದರ ಮೂಲಕ ಸಿದ್ಧವಾದ ವಾಕ್ಯಗಳನ್ನು ಮನನ ಮಾಡುವುದೇ ಅತ್ಯುತ್ತಮವಾದ ಮಾರ್ಗವೆಂಬುದರಲ್ಲಿ ಸಂದೇಹವಿಲ್ಲ.

ಹಾಗಾಗಿ, ಭಾಷೆಯೊಂದನ್ನು ಕಲಿಯುವವರು ಅದರ ವ್ಯಾಕರಣ ನಿಯಮ ಗಳನ್ನು ನೇರವಾಗಿ ಕಲಿಯುವ ಅವಶ್ಯಕತೆಯಿಲ್ಲ. ಆದರೆ ಭಾಷೆಯನ್ನು ಇತರರಿಗೆ

೭೦

ಕನ್ನಡ ಮಕ್ಕಳಿಗೆ ಇಂಗ್ಲಿಷ್ ಪಾಠ

ಕಲಿಸುವುದಕ್ಕಾಗಿ ಪಠ್ಯಪುಸ್ತಕಗಳನ್ನು ರಚಿಸಹೊರಟವರಿಗೆ ಈ ನಿಯಮಗಳೆಲ್ಲ ಅವಶ್ಯವಾಗಿ ತಿಳಿದಿರಬೇಕು.

ಇಂಗ್ಲಿಷ್ ಪಾಠಕ್ರಮದ ದೋಷಗಳು

ನಮ್ಮ ಇಂಗ್ಲಿಷ್ ಪಾಠಕ್ರಮದ ದೋಷಗಳಾವುವೆಂಬುದು ಈ ಮೇಲಿನ ಚರ್ಚೆ ಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಇಂಗ್ಲಿಷ್ ಕ್ಲಾಸಿಗೆ ಬರುವ ಮಕ್ಕಳಿಗೆ ಒಂದು ಭಾಷೆ (ಕನ್ನಡ) ಆಗಲೇ ತಿಳಿದಿರುತ್ತದೆ. ಅವರು ಇಂಗ್ಲಿಷ್ ಎಂಬ ಹೊಸ ದೊಂದು ಭಾಷೆಯನ್ನೇ ಕಲಿಯಬೇಕಾಗಿದೆ, ಬರಿಯ ಇಂಗ್ಲಿಷ್ ಬರಹವನ್ನಲ್ಲ. ಈ ಭಾಷೆಯಲ್ಲಿ ಬರುವ ಧ್ವನಿಗಳಿಗೂ ಕನ್ನಡದಲ್ಲಿ ಬರುವ ಧ್ವನಿಗಳಿಗೂ ನಡುವೆ ಹಲವಾರು ವ್ಯತ್ಯಾಸಗಳಿವೆ. ಹಾಗಾಗಿ, ಮೊದಲಿಗೆ ಈ ಹೊಸ ಧ್ವನಿಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಚಿಕ್ಕ ಚಿಕ್ಕ ವಾಕ್ಯಗಳನ್ನು ಆಡಲು ಮತ್ತು ಕೇಳಿ ಅರ್ಥಮಾಡಿಕೊಳ್ಳಲು ಕಲಿಸಬೇಕು. ಇದಕ್ಕೆ ಇಂಗ್ಲಿಷ್ ಅಕ್ಷರದ ಜ್ಞಾನ ಬೇಕಾಗಿಲ್ಲ.

ಧ್ವನಿಗಳನ್ನು ಕಲಿಸುವುದರೊಂದಿಗೆ ಇಂಗ್ಲಿಷ್‌ನ ವಾಕ್ಯರಚನೆಯ ಕ್ರಮ ಗಳನ್ನೂ ಕಲಿಸಬಹುದು. ಇದಕ್ಕೆ ಅವಶ್ಯಬೀಳುವ ಕೆಲವೇ ಕೆಲವು ಪದಗಳನ್ನು ಮಾತ್ರ ಬಳಸಿಕೊಂಡು ಅವುಗಳ ಸಹಾಯದಿಂದ ಬೇರೆ ಬೇರೆ ರೀತಿಯ ವಾಕ್ಯ ಗಳನ್ನು ರಚಿಸುವ ಕ್ರಮವನ್ನು ತಿಳಿಸಬೇಕು. ಪಾಠಗಳು ಮುಂದುವರಿದಂತೆ ಇವುಗಳಲ್ಲಿ ಬರುವ ಪದಗಳ ಸಂಖ್ಯೆಯೂ ಮೆಲ್ಲ ಮೆಲ್ಲನೆ ಜಾಸ್ತಿಯಾಗುತ್ತಿರ ಬೇಕು. ಈ ಪಾಠಗಳೆಲ್ಲವೂ ಬಾಯಿಯಿಂದಲೇ ನಡೆಯಬೇಕು. ಸ್ಪೆಲ್ಲಿಂಗ್ ಸಮಸ್ಯೆ ಯಿಂದಾಗಿ ಇಂಗ್ಲಿಷ್‌ನ ಬರಹದ ಕ್ರಮ ಬಹಳಷ್ಟು ಕ್ಲಿಷ್ಟವಾಗಿದೆ. ಹಾಗಾಗಿ, ಒಂದೆರಡು ವರ್ಷಗಳ ಭಾಷಾಭ್ಯಾಸವಾದ ಮೇಲೇನೇ ಮಕ್ಕಳಿಗೆ ಇಂಗ್ಲಿಷ್ ಬರಹದ ಶಿಕ್ಷಣವನ್ನು ಕೊಡಿಸಬೇಕು.

ಭಾಷೆ ಮತ್ತು ಬರಹಗಳು ಭಿನ್ನ ಭಿನ್ನವಾದವುಗಳು. ಹೊಸದೊಂದು ಭಾಷೆ ಯನ್ನು ಕಲಿಸುವಾಗ ಇವೆರಡನ್ನು ಬೇರ್ಪಡಿಸುವುದು ಅವಶ್ಯವೆಂಬ ಈ ವಿಷಯ ವನ್ನು ಹೆಚ್ಚಿನ ಶಿಕ್ಷಣತಜ್ಞರೂ ಮನಗಂಡಂತಿಲ್ಲ. ಭಾಷೆಯೊಂದನ್ನು ಸರಿಯಾಗಿ ಆಡಲು ಕಲಿಯುವ ಮೊದಲೇ ಅದನ್ನು ಓದಲು ಇಲ್ಲವೇ ಬರೆಯಲು ಪ್ರಯತ್ನಿಸುವುದೆಂದರೆ ಭದ್ರವಾದ ಅಡಿಪಾಯವಿಲ್ಲದೆ ಮಾಳಿಗೆ ಮನೆಯನ್ನು ಕಟ್ಟಲು ಹೊರಟಂತೆ.

ಇವತ್ತಿನ ಶಾಲೆಗಳಲ್ಲಿ ಬಳಕೆಯಲ್ಲಿರುವ ಇಂಗ್ಲಿಷ್ ಪಾಠಕ್ರಮದ ಮುಖ್ಯ ವಾದ ಕೊರತೆಯೇ ಇದು. ಈ ಕೊರತೆಯನ್ನು ನೀಗಿಸದಿರುವುದರಿಂದಾಗಿ, ನಮ್ಮ ಮಕ್ಕಳು ಕಲಿಯುವುದರಲ್ಲಿ ಹಿಂದೆ ಬೀಳುತ್ತಿದ್ದಾರೆ ಮಾತ್ರವಲ್ಲ, ಅವರ ಕಲಿಯುವ ಸಮಯವೂ ಬಹಳಷ್ಟು ವ್ಯರ್ಥವಾಗುತ್ತಿದೆ.

ಭಾಷೆಯನ್ನು ಕಲಿಯುವುದರಲ್ಲಿ ಪದಗಳ ಅಭ್ಯಾಸಕ್ಕಿಂತಲೂ ಧ್ವನಿ ಮತ್ತು ವ್ಯಾಕರಣಗಳ ಅಭ್ಯಾಸ ಹೆಚ್ಚು ಮುಖ್ಯವಾದುದು, ಮತ್ತು ಮೂಲಭೂತ

೭೦


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವಾದುದು ಎಂಬುದನ್ನು ಮರೆಯಬಾರದು. ಬರಿಯ ಪದಗಳನ್ನು ಮಾತ್ರವೇ ಕಲಿಯುವ ಮೂಲಕ ಮಾತುಗಳನ್ನು ಆಡಲು ಇಲ್ಲವೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದು. ಮೇಲೆಯೇ ಹೇಳಿರುವಂತೆ, ಪದಗಳ ಕಲಿಯುವಿಕೆಗೆ ಕೊನೆಯೇ ಇಲ್ಲ. ಅದು ನಿರಂತರವಾಗಿ ಸಾಗುತ್ತಿರುವ ಕೆಲಸ. ಧ್ವನಿ ಮತ್ತು ವ್ಯಾಕರಣ ನಿಯಮಗಳನ್ನು ಮಾತ್ರ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಲಿತು ಮುಗಿಸಲು ಸಾಧ್ಯವಿದೆ. ಇವೆರಡು ಅಂಶಗಳಲ್ಲಿ ವಿದ್ಯಾರ್ಥಿಗಳು ಪರಿಣತರಾಗುವಂತೆ ಮಾಡು ವುದೇ ಇಂಗ್ಲಿಷ್ ಕ್ಲಾಸಿನ ಮುಖ್ಯ ಉದ್ದೇಶವಾಗಿರಬೇಕು.

ಹಿಂದಿ, ಸಂಸ್ಕೃತ ಮೊದಲಾದ ಇತರ ಭಾಷೆಗಳನ್ನು ಕಲಿಸುವ ಕ್ಲಾಸುಗಳೂ ನಮ್ಮ ಶಾಲೆಗಳಲ್ಲಿ ಇದೇ ರೀತಿ ದಿಕ್ಕು ತಪ್ಪಿವೆಯಾದ್ದರಿಂದ ವಿದ್ಯಾರ್ಥಿಗಳು ಅಲ್ಲೂ ಬಹಳಷ್ಟು ತಮ್ಮ ಅಮೂಲ್ಯವಾದ ಸಮಯವನ್ನು ಹಾಳುಮಾಡಬೇಕಾ ಗಿದೆ.

೨.೮ ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ಕನ್ನಡದಲ್ಲಿ ಇವತ್ತು ವ್ಯಾಕರಣದ ಕುರಿತಾಗಿ ಎರಡು ಬಗೆಯ ಸಂಶೋಧನೆಗಳು ಒಟ್ಟೊಟ್ಟಿಗೆ ನಡೆಯಬೇಕಾಗಿದೆ: ನಿಜಕ್ಕೂ ಕನ್ನಡದ ವ್ಯಾಕರಣ ಎಂತಹದು ಎಂಬುದನ್ನು ತಿಳಿದುಕೊಳ್ಳುವ ಸಂಶೋಧನೆ ಒಂದು ಬಗೆಯದು; ಮತ್ತು ಈ ತಿಳಿವನ್ನು ಹೇಗೆ ಬೇರೆ ಕೆಲಸಗಳನ್ನು ನಡೆಸುವಲ್ಲಿ ಬಳಸಬಲ್ಲೆವು ಎಂಬುದನ್ನು ಕಂಡುಹಿಡಿಯುವ ಸಂಶೋಧನೆ ಇನ್ನೊಂದು ಬಗೆಯದು.

ಕನ್ನಡದಲ್ಲಿ ಎಂತಹ ಪದಗಳೆಲ್ಲ ಬಳಕೆಯಾಗುತ್ತಿವೆ, ಅವುಗಳ ಒಳರಚನೆ ಎಂತಹದು, ಅವನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಉಂಟುಮಾಡುವ ಬಗೆ ಹೇಗೆ, ವಾಕ್ಯಗಳನ್ನು ಬಳಸಿ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ವ್ಯಾಕರಣದ ಮೂಲ ಗುರಿಯಾಗಿದೆ.

ಈ ತಿಳಿವು ನಮಗೆ ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು. ಉದಾ ಹರಣೆಗಾಗಿ, ಕಾನೂನುಗಳನ್ನು ಇಲ್ಲವೇ ಒಪ್ಪಂದಗಳನ್ನು ಬರೆಯುವವರು ತಾವು ಬಳಸುವ ವಾಕ್ಯಗಳಿಗೆ ಎರಡು ಇಲ್ಲವೇ ಹೆಚ್ಚು ಹುರುಳುಗಳು (ಇಪ್ಪುರುಳು) ಬಾರದಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಅವು ಹಲವು ಬಗೆಯ ಜಗಳಗಳಿಗೆ ಕಾರಣವಾಗಬಲ್ಲುವು. ತಮ್ಮ ಬರಹದಲ್ಲಿ ಇಪ್ಪುರುಳು ನುಸುಳದಂತೆ ನೋಡಿಕೊಳ್ಳಬೇಕಿದ್ದಲ್ಲಿ, ಎಂತಹ ವಾಕ್ಯಗಳಿಗೆ ಇಪ್ಪುರುಳು ಬರ ಬಲ್ಲುದು, ಮತ್ತು ಅದು ಬಾರದ ಹಾಗೆ ವಾಕ್ಯಗಳನ್ನು ಬದಲಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದಿರಬೇಕಾಗುತ್ತದೆ. ಈ ತಿಳಿವನ್ನು ಪಡೆಯುವಲ್ಲಿ ವ್ಯಾಕರಣದ ತಿಳಿವು ನೆರವಿಗೆ ಬರಬಲ್ಲುದು.

೭೨


ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ಚಿಕ್ಕ ಮಕ್ಕಳಿಗಾಗಿ, ಇಲ್ಲವೇ ಸಾಮಾನ್ಯ ಜನರಿಗಾಗಿ ತಿಳಿವಿನ ಬರಹಗಳನ್ನು ಬರೆಯುವವರು ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಅವರಿಗೆ ಸುಲಭವಾಗಿ ಗೊತ್ತಾಗುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ತಿಳಿದಿರಬೇಕು. ಇಲ್ಲ ವಾದರೆ, ಇವತ್ತು ಕನ್ನಡದಲ್ಲಿ ಬರೆದಿರುವ ಪಠ್ಯಪುಸ್ತಕಗಳ ಹಾಗೆ, ಅವನ್ನು ಓದಿ ತಿಳಿದುಕೊಳ್ಳುವುದು ತುಂಬಾ ತೊಡಕಿನ ಕೆಲಸವಾಗಬಲ್ಲುದು. ಎಂತಹ ವಾಕ್ಯ ಗಳು ಚಿಕ್ಕ ಮಕ್ಕಳಿಗೆ ಇಲ್ಲವೇ ಸಾಮಾನ್ಯ ಓದುಗರಿಗೆ ತೊಡಕಿನವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವಲ್ಲಿ, ಮತ್ತು ಅವು ತಮ್ಮ ಬರಹದಲ್ಲಿ ಬಾರದ ಹಾಗೆ ನೋಡಿಕೊಳ್ಳುವಲ್ಲಿ ವ್ಯಾಕರಣದ ತಿಳಿವು ನೆರವಿಗೆ ಬರಬಲ್ಲುದು.

ಎಲ್ಲಕ್ಕಿಂತಲೂ ಮುಕ್ಯವಾಗಿ, ಕನ್ನಡದಲ್ಲಿ ಓದಲು ಮತ್ತು ಬರೆಯಲು ಕಲಿಯಬೇಕೆಂದಿರುವವರಿಗೆ, ಮತ್ತು ಇಂಗ್ಲಿಷ್‌ನಂತಹ ಬೇರೆ ಭಾಷೆಯೊಂದನ್ನು ಕಲಿಯಬೇಕೆಂದಿರುವವರಿಗೆ ಕನ್ನಡದ ವ್ಯಾಕರಣ ತುಂಬಾ ನೆರವನ್ನು ನೀಡ ಬಲ್ಲುದು. ಈ ಕೊನೆಯ ವಿಷಯವನ್ನು ಮಾತ್ರ ಈ ಲೇಖನದಲ್ಲಿ ಪರಿಶೀಲಿಸ ಲಾಗಿದೆ.

ಓದು-ಬರಹದ ಕಲಿಕೆ

ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ತಮ್ಮ ಆಡುನುಡಿಯಲ್ಲಿ (ಕನ್ನಡದಲ್ಲಿ) ಮಾತನಾಡಲು ಚನ್ನಾಗಿ ತಿಳಿದಿರುತ್ತದೆ. ಶಾಲೆಯಲ್ಲಿ ಅವರು ಮೊದಲಿಗೆ ಮಾಡ ಬೇಕಾಗಿರುವ ಕೆಲಸವೇನೆಂದರೆ, ತಮ್ಮ ಆಡುನುಡಿಗಿಂತ ಸ್ವಲ್ಪ ಮಟ್ಟಿಗೆ ಬೇರಾ ಗಿರುವ ಎಲ್ಲರ ಕನ್ನಡದಲ್ಲಿ (ಎಂದರೆ ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಹೆಚ್ಚು ಕಡಿಮೆ ಒಂದೇ ರೂಪದಲ್ಲಿರುವ ಕನ್ನಡದಲ್ಲಿ) ಮಾತನಾಡಲು ಕಲಿಯುವುದು, ಮತ್ತು ಅದರಲ್ಲೇನೇ ಓದಲು ಮತ್ತು ಬರೆಯಲು ಕಲಿಯುವುದು.

ಮಾತನಾಡುವುದು ಹೇಗೆ ಎಂಬುದು ಮಕ್ಕಳಿಗೆ ಗೊತ್ತಿದೆ; ಹಾಗಾಗಿ, ಎಲ್ಲರ ಕನ್ನಡದಲ್ಲಿ ಮಾತನಾಡುವುದೆಂದರೆ, ಕನ್ನಡದ ಒಂದು ರೂಪದ ಬದಲು ಇನ್ನೊಂದು ರೂಪವನ್ನು ಮಾತಿನಲ್ಲಿ ಬಳಸಲು ಕಲಿಯುವುದು. ಇದನ್ನು ಅವರು ಹೆಚ್ಚು ತೊಂದರೆಯಿಲ್ಲದೆ ನಡೆಸಬಲ್ಲರು.

ಆದರೆ ಹೀಗೆ ಕಲಿಯುತ್ತಿರುವಾಗ, ಅವರು ಮನೆಯಲ್ಲಿ ಬಳಸುವ ಆಡುಗನ್ನಡ ತಪ್ಪು ತಪ್ಪಾದುದು ಮತ್ತು ಶಾಲೆಯಲ್ಲಿ ಬಳಸುವ ಎಲ್ಲರ ಕನ್ನಡವೇ ಸರಿ ಯಾದುದು ಎಂಬ ತಪ್ಪು ಅನಿಸಿಕೆ ಅವರಲ್ಲಿ ಮೂಡದ ಹಾಗೆ ನೋಡಿಕೊಳ್ಳ ಬೇಕು.

ಅವೆರಡು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಬೇಕಾಗಿರುವ ಕನ್ನಡದ ಬಗೆ ಗಳಾಗಿದ್ದು, ಅವುಗಳಲ್ಲಿ ಯಾವುದೂ ತಪ್ಪಲ್ಲ ಎಂಬುದನ್ನು ಅವರಿಗೆ ತಿಳಿಸಿಕೊಡ ಬೇಕು. ಇದಲ್ಲದೆ, ಅವೆರಡರ ನಡುವಿರುವ ವ್ಯತ್ಯಾಸಗಳನ್ನು ಅವರು ಗಮನಿಸುವ ಹಾಗೆ ಮಾಡಿದಲ್ಲಿ, ಎಲ್ಲರ ಕನ್ನಡವನ್ನು ಕಲಿಯುವ ಕೆಲಸ ಹೆಚ್ಚು ಸುಲಭದ್ದಾಗ ಬಲ್ಲುದು.

೭೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮಕ್ಕಳ ಆಡುಗನ್ನಡಕ್ಕೂ ಶಾಲೆಯಲ್ಲಿ ಬಳಸುವ ಎಲ್ಲರ ಕನ್ನಡಕ್ಕೂ ನಡುವೆ ಧ್ವನಿಗಳ ಬಳಕೆಯಲ್ಲಿ ಕೆಲವು ವ್ಯತ್ಯಾಸಗಳಿರಬಲ್ಲುವು, ಮತ್ತು ಅವು ಮಕ್ಕಳಿಗೆ ತೊಂದರೆ ಕೊಡಬಲ್ಲುವು. ಉದಾಹರಣೆಗಾಗಿ, ಮಕ್ಕಳ ಆಡುಮಾತಿನಲ್ಲಿ ಶಕಾರ ಇಲ್ಲದಿರಬಹುದು; ಹಾಗಿದ್ದಲ್ಲಿ, ಶಕಾರ ಬಂದಿರುವ ಪದಗಳು ಮಕ್ಕಳ ಮಾತಿ ನಲ್ಲಿ ಸಕಾರವಾಗಿ ಕಾಣಿಸಿಕೊಳ್ಳಬಲ್ಲುವು. ಇದನ್ನು ಸರಿಪಡಿಸಬೇಕಿದ್ದಲ್ಲಿ, ಶಕಾರಕ್ಕೂ ಸಕಾರಕ್ಕೂ ನಡುವೆ ಎಂತಹ ವ್ಯತ್ಯಾಸ ಇದೆ ಎಂಬುದನ್ನು ಕಲಿಸು ವವರು ತಿಳಿದಿರಬೇಕಾಗುತ್ತದೆ, ಮತ್ತು ಅದನ್ನು ಮಕ್ಕಳಿಗೆ ಕಲಿಸುವುದು ಹೇಗೆ ಎಂಬುದನ್ನೂ ಅವರು ತಿಳಿದಿರಬೇಕಾಗುತ್ತದೆ.

ಇದಲ್ಲದೆ, ಮಕ್ಕಳಿಗೆ ಎಲ್ಲರ ಕನ್ನಡದಲ್ಲಿ ಬರುವ ಧ್ವನಿಗಳಲ್ಲಿ ಕೆಲವನ್ನು ಹೊರಡಿಸಲು ಬಾರದಿರುವುದಕ್ಕೆ ಅವು ಅವರ ಆಡುನುಡಿಯಲ್ಲಿ ಇಲ್ಲದಿರುವುದು ಕಾರಣವಲ್ಲದೆ, ಅವರ ಇಲ್ಲವೇ ಅವರ ನಾಲಿಗೆಯ ಕೊರತೆಯಲ್ಲ ಎಂಬುದನ್ನು ಕಲಿಸುವವರು ತಿಳಿದಿರಬೇಕು. ಯಾವುದಾದರೂ ಒಂದು ತರಗತಿಯಲ್ಲಿ ಕಲಿ ತಿರುವ ಮಕ್ಕಳಿಗೆ ಅಂತಹ ಧ್ವನಿಗಳನ್ನು ಆಡಲು ತಿಳಿದಿಲ್ಲವಾದರೆ, ಅದಕ್ಕೆ ಆ ತರಗತಿಯಲ್ಲಿ ಕಲಿಸುವವರರ ಕೊರತೆಯೇ ಕಾರಣವಲ್ಲದೆ ಮಕ್ಕಳ ಕೊರತೆ ಯಲ್ಲ.

ಧ್ವನಿಗಳನ್ನು ಹೊರಡಿಸುವ ಈ ಒಂದು ವಿಷಯವನ್ನು ಬಿಟ್ಟರೆ, ಎಲ್ಲರ ಕನ್ನಡ ದಲ್ಲಿ ಮಾತನಾಡಲು ಕಲಿಯುವುದು ಮಕ್ಕಳಿಗೆ ಹೆಚ್ಚು ತೊಂದರೆ ಕೊಡುವ ಕೆಲಸ ವಲ್ಲ. ಆದರೆ, ಓದಲು ಮತ್ತು ಬರೆಯಲು ಕಲಿಯುವುದು ಅವರಲ್ಲಿ ಹೆಚ್ಚಿನವರಿಗೂ ಒಂದು ತುಂಬಾ ತೊಡಕಿನ ಕೆಲಸವೆಂದು ಅನಿಸದಿರದು. ಇದಕ್ಕೆ ಕಾರಣವೇನೆಂದರೆ, ಅದು ಅವರು ಹುಟ್ಟಿನಿಂದಲೇ ಪಡೆಯಬಲ್ಲ ಕೆಲಸಗಳಲ್ಲಿ ಸೇರಿಲ್ಲ. ಅವರಷ್ಟಕ್ಕೇ ಬಿಟ್ಟರೆ ಮಕ್ಕಳು ಮಾತನಾಡಲು ಕಲಿಯುತ್ತಾರೆ, ಆದರೆ ಓದಲು ಮತ್ತು ಬರೆಯಲು ಕಲಿಯುವುದಿಲ್ಲ.

ಇದಲ್ಲದೆ, ಮಾತು ಮತ್ತು ಬರಹಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳಿವೆ. ಮಾತಿನಲ್ಲಿ ಪದಗಳನ್ನೆಲ್ಲ ಒಟ್ಟೊಟ್ಟಿಗೆ ಸೇರಿಸಿ ಹೇಳುತ್ತೇವೆ; ಆದರೆ, ಬರೆಯುವಾಗ ಅವನ್ನು ಬೇರ್ಪಡಿಸಿ ಬರೆಯಬೇಕಾಗುತ್ತದೆ. ಮಾತಿನಲ್ಲಿ ಬರುವ ವಾಕ್ಯಗಳು ತುಂಡು ತುಂಡಾಗಿರುತ್ತವೆ; ಆದರೆ, ಬರೆಯುವಾಗ ಅವೆಲ್ಲ ಇಡಿ ಇಡಿಯಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಾತಿನಲ್ಲಿ ಹೆಚ್ಚಾಗಿ ಚಿಕ್ಕ ಚಿಕ್ಕ ವಾಕ್ಯಗಳು ಮಾತ್ರ ಬರುತ್ತಿರುತ್ತವೆ; ಆದರೆ, ಬರಹದಲ್ಲಿ ಹೆಚ್ಚು ತೊಡಕಾ ಗಿರುವ ಉದ್ದುದ್ದ ವಾಕ್ಯಗಳನ್ನು ಬಳಸಬೇಕಾಗುತ್ತದೆ. ಮಾತಿನಲ್ಲಿ ಹಲವು ಬಾರಿ ಹೇಳಿದ್ದನ್ನೇ ಹೇಳುತ್ತಿರುತ್ತೇವೆ; ಮತ್ತು ಹೇಳುವುದಕ್ಕೆ ಒಂದು ಕ್ರಮವಿರುವುದಿಲ್ಲ; ಆದರೆ, ಬರೆಯುವಾಗ ಅವನ್ನೆಲ್ಲ ಒಂದು ಕ್ರಮದಲ್ಲಿ ಜೋಡಿಸಿಕೊಳ್ಳಬೇಕಾಗು ತ್ತದೆ.

ಶಾಲೆಯಲ್ಲಿ ಮಕ್ಕಳು ಎಲ್ಲರ ಕನ್ನಡದಲ್ಲಿ ಓದಲು ಮತ್ತು ಬರೆಯಲು ಕಲಿಯಬೇಕಿದ್ದಲ್ಲಿ ಈ ಒಂದು ಹೊಸ ಬಗೆಯ ಬರಹದ ಕನ್ನಡವನ್ನು ಅವರು ಕಲಿಯಬೇಕಾಗುತ್ತದೆ, ಮತ್ತು ಅದಕ್ಕಾಗಿ ಅವರು ಹಲವು ಹೊಸ ಕೌಶಲ್ಯಗಳನ್ನೂ

೭೪


ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ಕಲಿಯಬೇಕಾಗುತ್ತದೆ. ಇದು ತುಂಬಾ ತೊಡಕಿನ ಕೆಲಸವಾಗಿದ್ದು, ಇದನ್ನು ನಡೆಸು ವಲ್ಲಿ ಮಕ್ಕಳಿಗೆ ಮತ್ತು ಕಲಿಸುವವರಿಗೆರಿಗೆ ವ್ಯಾಕರಣದ ತಿಳಿವು ಹಲವು ಬಗೆ ಯಲ್ಲಿ ನೆರವನ್ನು ನೀಡಬಲ್ಲುದು.

ಓದುವ ಕೆಲಸ

ಸರಿಯಾಗಿ ಓದಲು ಕಲಿಯಬೇಕಿದ್ದಲ್ಲಿ, ಮೊದಲಿಗೆ ತಮ್ಮ ಮಾತಿನಲ್ಲಿ ಬರುವ ಪದಗಳನ್ನು ಧ್ವನಿಗಳ ಸೇರಿಕೆಯಿಂದ ಉಂಟುಮಾಡಲಾಗಿದೆ ಎಂಬ ವಿಷಯವನ್ನು ಮಕ್ಕಳು ತಿಳಿದುಕೊಳ್ಳುವುದು ಅವಶ್ಯ; ಆಮೇಲೆ, ಬರಹದಲ್ಲಿ ಬರುವ ಗುರುತು ಗಳು (ಅಕ್ಷರಗಳು) ಈ ಧ್ವನಿಗಳನ್ನು ಸೂಚಿಸುತ್ತವೆ ಎಂಬುದರ ಕಡೆಗೆ ಅವರ ಗಮನ ಹೋಗಬೇಕು. ಧ್ವನಿಗಳನ್ನು ಜೋಡಿಸಿ ಪದಗಳನ್ನು ಉಂಟುಮಾಡಿದ ಹಾಗೆ, ಅಕ್ಷರಗಳನ್ನು ಜೋಡಿಸಿ ಪದಗಳನ್ನು ಉಂಟುಮಾಡಲಾಗುತ್ತದೆ ಎಂಬು ದನ್ನು ಕಂಡುಕೊಂಡಾಗ ಮಾತ್ರ, ಅವರಿಗೆ ಬರಹದಲ್ಲಿ ಬರುವ ಎಂತಹ ಪದವನ್ನೂ (ಅದುವರೆಗೆ ನೋಡಿರದಂತಹ ಪದವನ್ನೂ) ಓದಲು ಗೊತ್ತಾಗು ತ್ತದೆ.

ಈ ತಿಳುವಳಿಕೆಯನ್ನು ಮಕ್ಕಳಿಗೆ ಕೊಡಿಸುವುದು ಹೇಗೆ ಎಂಬುದನ್ನು ಕಲಿಸುವವರು ತಿಳಿದಿರಬೇಕು. ಹೆಚ್ಚಿನ ಮಕ್ಕಳೂ ಅದನ್ನು ತಾವಾಗಿಯೇ ಪಡೆಯ ಲಾರರು. ಮಕ್ಕಳಿಗೆ ಓದುವ ಬಗೆ ಹೇಗೆ ಎಂಬುದನ್ನು ಸರಿಯಾಗಿ ಕಲಿಸದಿದ್ದಲ್ಲಿ, ಅವರು ಪದಗಳನ್ನು ಬಿಡಿಸಿ ಓದದೆ ಇಡಿ ಇಡಿಯಾಗಿ ಓದಲು ಕಲಿಯುತ್ತಾರೆ, ಮತ್ತು ಈ ತಪ್ಪು ಕಲಿಕೆಯಿಂದಾಗಿ, ಅವರಿಗೆ ಓದುವ ಕೆಲಸ ತುಂಬಾ ತೊಡಕಿನ ದಾಗಿ ಕಾಣಿಸುತ್ತದೆ. ಮುಂದೆ ಸಲೀಸಾಗಿ ಓದಲು ಅವರಿಗೆ ಬರುವುದೇ ಇಲ್ಲ.

ಈ ವ್ಯತ್ಯಾಸ ಎಷ್ಟು ಮುಖ್ಯವಾದುದು ಎಂಬುದನ್ನು ಇತ್ತೀಚೆಗೆ ನಡೆಸಿದ ಮಿದುಳಿನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಸಲೀಸಾಗಿ ಓದುವ ಮಕ್ಕಳ ಮಿದುಳಿನಲ್ಲಿ ಅವರು ಓದುತ್ತಿರುವಾಗ ಮೂರು ಬಗೆಯ ನರಗಳು ಮಿಂಚುತ್ತಿರು ಇವೆ: (೧) ಅಕ್ಷರಗಳನ್ನು ಗಮನಿಸುವ ಕಣ್ಣಿಗೆ ಸಂಬಂಧಿಸಿದ ನರಗಳು, (೨) ಅವನ್ನು ಧ್ವನಿಗಳಾಗಿ ಮಾರ್ಪಡಿಸುವ ಕಿವಿಗೆ ಸಂಬಂಧಿಸಿದ ನರಗಳು, ಮತ್ತು (೩) ಧ್ವನಿಗಳನ್ನು ಪದಗಳಾಗಿ ಜೋಡಿಸಿ ಅವಕ್ಕೆ ಅರ್ಥವನ್ನು ಹೊಂದಿಸುವ ಪದಕೋಶಕ್ಕೆ ಮತ್ತು ವ್ಯಾಕರಣಕ್ಕೆ ಸಂಬಂಧಿಸಿದ ನರಗಳು. ಗಟ್ಟಿಯಾಗಿ ಓದುತ್ತಿರುವಾಗ ಮಾತ್ರವಲ್ಲದೆ, ಮೌನವಾಗಿ ಓದುತ್ತಿರುವಾಗಲೂ ಈ ಮೂರು ಬಗೆಯ ನರಗಳು ಅವರ ಮಿದುಳಿನಲ್ಲಿ ಮಿಂಚುತ್ತಿರುತ್ತವೆ.

ಇದಕ್ಕೆ ಬದಲು, ಸಲೀಸಾಗಿ ಓದಲು ಬಾರದಿರುವ ಮಕ್ಕಳ ಮಿದುಳಿನಲ್ಲಿ ಓದುತ್ತಿರುವಾಗ ಎರಡು ಬಗೆಯ (೧ನೇ ಮತ್ತು ೩ನೇ) ನರಗಳು ಮಾತ್ರ ಮಿಂಚುತ್ತಿರುತ್ತವೆ; ಅಕ್ಕರಗಳನ್ನು ಧ್ವನಿಗಳಾಗಿ ಮಾರ್ಪಡಿಸುವ ಕಿವಿಗೆ ಸಂಬಂಧಿಸಿದ (೨ನೇ ಬಗೆಯ) ನರಗಳು ಅವರು ಓದುತ್ತಿರುವಾಗ ಮಿಂಚುವುದೇ ಇಲ್ಲ. ಈ ನರಗಳೂ ಮಿಂಚುವ ಹಾಗೆ ಅವರಿಗೆ ಸರಿಯಾಗಿ ಓದುವ ಬಗೆಯನ್ನು

೭೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ತಿಳಿಸಿಕೊಟ್ಟಲ್ಲಿ, ಮುಂದೆ ಸಲೀಸಾಗಿ ಓದುವುದು ಹೇಗೆ ಎಂಬುದನ್ನು ಅವರು ತಾವಾಗಿಯೇ ಕಲಿತುಕೊಳ್ಳುತ್ತಾರೆ.

ಇಂಗ್ಲಿಷ್‌ನಂತಹ ನುಡಿಗಳ ಬರಹಗಳಲ್ಲಿ ತುಂಬಾ ತೊಡಕು ತೊಡಕಾದ ಸ್ಪೆಲ್ಲಿಂಗ್ ಸಮಸ್ಯೆಯಿದೆ; ಹಾಗಾಗಿ, ಅವುಗಳಲ್ಲಿಯೂ ಈ ರೀತಿ ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ಸಂಬಂಧವಿದೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಡು ವುದು ತುಂಬಾ ಕಷ್ಟದ ಕೆಲಸ. ಕನ್ನಡದಲ್ಲಿಯೂ ಕನ್ನಡದವೇ ಆದ ಪದಗಳಲ್ಲಿ ಈ ಸಂಬಂಧವನ್ನು ಮಕ್ಕಳಿಗೆ ಸುಲಭವಾಗಿ ತೋರಿಸಿಕೊಡಬಹುದು. ಆದರೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳು ಅವರಲ್ಲಿ ಗೊಂದಲವನ್ನುಂಟು ಮಾಡಬಲ್ಲುವು.

ಯಾಕೆಂದರೆ, ಈ ಪದಗಳನ್ನು ಕನ್ನಡದಲ್ಲಿ ಅವುಗಳ ಉಚ್ಚಾರಣೆ ಹೇಗಿದೆಯೋ ಹಾಗೆಯೇ ಬರೆಯುವ ಬದಲು, ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದ ನಿಯಮವಿದೆ. ಮಹಾ ಪ್ರಾಣ, ಷ, ಋ ಮೊದಲಾದ ಹಲವು ಅಕ್ಷರಗಳಿಗೆ ಬೇಕಾಗುವ ಉಚ್ಚಾರಣೆ ಹೆಚ್ಚಿನವರ ಓದಿನಲ್ಲೂ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಅಕ್ಷರಗಳಿಗೂ ಧ್ವನಿ ಗಳಿಗೂ ನಡುವಿರುವ ಸಂಬಂಧವನ್ನು ಕಂಡುಕೊಳ್ಳುವಲ್ಲಿ ಮಕ್ಕಳಿಗೆ ಈ ಪದಗಳು ತೊಂದರೆ ಕೊಡುತ್ತವೆ.

ಸಂಸ್ಕೃತದ ಎರವಲುಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ಈ ನಿಯಮವನ್ನು ಬಿಟ್ಟುಕೊಡುವ ಮೂಲಕ, ಇಲ್ಲವೇ ಇಂತಹ ಅಕ್ಷರಗಳಿರುವ ಸಂಸ್ಕೃತ ಎರವಲುಗಳನ್ನು ಚಿಕ್ಕ ಮಕ್ಕಳ ಪುಸ್ತಕಗಳಲ್ಲಿ ಬಳಸದಿರುವ ಮೂಲಕ, ಅವರಿಗೆ ಮೇಲಿನ ಸಂಬಂಧವನ್ನು ಕಂಡುಕೊಳ್ಳುವಲ್ಲಿ ಗೊಂದಲವುಂಟಾಗದ ಹಾಗೆ ನೋಡಿಕೊಳ್ಳಬಹುದು.

ಬರಹಗಳನ್ನು ಮಕ್ಕಳು ಸರಿಯಾದ ಕ್ರಮದಲ್ಲಿ ಓದಲು ಕಲಿಯಬೇಕು ಮಾತ್ರ ವಲ್ಲ; ಓದುತ್ತಿರುವ ಹಾಗೆ, ಅವು ಏನು ಹೇಳುತ್ತಿವೆ ಎಂಬುದನ್ನು ಗೊತ್ತುಮಾಡಿ ಕೊಳ್ಳಲೂ ಕಲಿಯಬೇಕಾಗುತ್ತದೆ. ವಾಕ್ಯಗಳಲ್ಲಿ ಬರುವ ಪದಗಳನ್ನು ಅರ್ಥ ಕೊಡುವ ಗುಂಪುಗಳಾಗಿ ಜೋಡಿಸಿ ಓದುವುದು ಹೇಗೆ ಎಂಬುದನ್ನು, ಮತ್ತು ಓದುವುದನ್ನು ಸರಿಯಾದ ಜಾಗಗಳಲ್ಲಿ ನಿಲ್ಲಿಸಿ ನಿಲ್ಲಿಸಿ ಓದುವುದು ಹೇಗೆ ಎಂಬುದನ್ನು ಅವರು ಕಲಿಯಬೇಕಾಗುತ್ತದೆ. ಈ ಕೆಲಸವನ್ನು ಸರಿಯಾಗಿ ನಡೆಸಲು ಬಾರದ ಮಕ್ಕಳಿಗೆ ಅವರು ಓದುತ್ತಿರುವ ವಾಕ್ಯಗಳ ಒಳರಚನೆಯಂತಹದು ಎಂಬಂತಹ ವ್ಯಾಕರಣದ ತಿಳಿವನ್ನು ಕೊಡಿಸಿದಲ್ಲಿ, ಅದು ಅವರಿಗೆ ನೆರವನ್ನು ನೀಡುತ್ತದೆ.

ಓದಿನಲ್ಲಿ ಬರುವ ಕ್ಲಿಷ್ಟವಾದ ವಾಕ್ಯಗಳನ್ನು ಸರಳ ವಾಕ್ಯಗಳಾಗಿ ಒಡೆಯು ವುದು ಹೇಗೆ, ಅವುಗಳಲ್ಲಿ ಮುಖ್ಯ ವಾಕ್ಯ ಯಾವುದು, ಉಳಿದ ವಾಕ್ಯಗಳು ಈ ಮುಖ್ಯ ವಾಕ್ಯ ಕೊಡುವ ಅರ್ಥವನ್ನು ಹೇಗೆ ಹೆಚ್ಚಿಸುತ್ತವೆ ಎಂಬಂತಹ ವ್ಯಾಕರಣಕ್ಕೆ ಸಂಬಂಧಿಸಿದ ತಿಳಿವು ಓದಿನಲ್ಲಿ ಮುಂದೆ ಹೋಗಲು ನೆರವು

೭೬


ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ನೀಡುತ್ತದೆ. ಈ ತಿಳಿವು ತರಗತಿಯಲ್ಲಿ ಮುಂದಿರುವವರಿಗಿಂತಲೂ ಹಿಂದೆ ಬೀಳುವವರಿಗೆ ಹೆಚ್ಚಿನ ನೆರವನ್ನು ನೀಡುತ್ತದೆ.

ಬರೆಯುವ ಕೆಲಸ

ಓದಲು ಕಲಿಯುವ ಕೆಲಸಕ್ಕಿಂತಲೂ ಬರೆಯಲು ಕಲಿಯುವ ಕೆಲಸ ಹೆಚ್ಚು ತೊಡಕಿನದಾದುದು. ಇದಕ್ಕೆ ಕಾರಣವೇನೆಂದರೆ, ಮಾತಿಗೂ ಬರಹಕ್ಕೂ ನಡು ವಿರುವ ಹಲವು ವ್ಯತ್ಯಾಸಗಳನ್ನು ಬರೆಯುವವರು ತಮ್ಮ ಬರವಣಿಗೆಯಲ್ಲಿ ಮೂಡಿಸಬೇಕಾಗುತ್ತದೆ. ಉದಾಹರಣೆಗಾಗಿ, ಮಾತಿನಲ್ಲಿ ಬರುವ ವಾಕ್ಯಗಳು ತುಂಡು ತುಂಡಾಗಿರಬಲ್ಲುವು; ಆದರೆ, ಬರಹದಲ್ಲಿ ಅವೆಲ್ಲ ಇಡಿಯಿಡಿಯಾಗಿರು ವಂತೆ ನೋಡಿಕೊಳ್ಳಬೇಕಾಗುತ್ತದೆ. ತುಂಡು ವಾಕ್ಯಗಳಿಗೂ ಇಡೀ ವಾಕ್ಯಗಳಿಗೂ ನಡುವಿರುವ ವ್ಯತ್ಯಾಸ ಎಂತಹದು, ತುಂಡು ವಾಕ್ಯಗಳನ್ನು ಇಡೀ ವಾಕ್ಯಗಳಾಗಿ ಮಾರ್ಪಡಿಸುವುದು ಹೇಗೆ ಎಂಬುದನ್ನು ತಿಳಿದಿದ್ದಲ್ಲಿ ಮಾತ್ರ, ಅವರಿಗೆ ಈ ಕೆಲಸವನ್ನು ಸರಿಯಾಗಿ ನಡೆಸಲು ಬರುತ್ತದೆ.

ಚಿಕ್ಕ ಚಿಕ್ಕ ವಾಕ್ಯಗಳನ್ನು ಜೋಡಿಸಿ ಉದ್ದ ವಾಕ್ಯಗಳನ್ನು ಉಂಟುಮಾಡುವುದು ಹೇಗೆ, ಒಂದು ಚಿಕ್ಕ ವಾಕ್ಯದೊಳಗೆ ಬೇರೆ ಚಿಕ್ಕ ವಾಕ್ಯಗಳನ್ನು ಇರಿಸಿ ಕ್ಲಿಷ್ಟವಾದ ವಾಕ್ಯಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನೂ ಅವರಿಗೆ ಕಲಿಸಬೇಕಾಗು ಇದೆ. ಯಾಕೆಂದರೆ, ಸಾಮಾನ್ಯವಾಗಿ ಮಾತಿನಲ್ಲಿ ಬಾರದಿರುವಂತಹ ಹಲವು ಬಗೆಯ ಉದ್ದ ವಾಕ್ಯಗಳು ಮತ್ತು ಕ್ಲಿಷ್ಟ ವಾಕ್ಯಗಳು ಬರಹದಲ್ಲಿ ಬರುತ್ತವೆ. ಎಲ್ಲಾ ಮಕ್ಕಳಿಗೂ ಇವನ್ನು ಉಂಟುಮಾಡುವ ಬಗೆ ಹೇಗೆ ಎಂಬುದನ್ನು ತಾವಾಗಿಯೇ ಕಲಿತುಕೊಳ್ಳಲು ಬರುವುದಿಲ್ಲ.

ವಾಕ್ಯಗಳನ್ನು ಸೇರಿಸಿ ಪಾರಾಗಳನ್ನು ಕಟ್ಟುವ ಬಗೆಯನ್ನೂ ಅವರಿಗೆ ಕಲಿಸಿ ಕೊಡಬೇಕಾಗುತ್ತದೆ. ಒಳ್ಳೇ ಮಾದರಿ ಪಾರಾಗಳಲ್ಲಿ ಮೊದಲಿಗೆ ಮುಖ್ಯ ವಿಷಯವನ್ನು ಮುಂದಿಡುವ ಚಿಕ್ಕ ವಾಕ್ಯವಿರುತ್ತದೆ; ಆಮೇಲೆ, ಅದನ್ನು ಹೆಚ್ಚು ವಿವರವಾಗಿ ತಿಳಿಸುವ, ಮತ್ತು ಅದಕ್ಕೆ ಬೆಂಬಲ ನೀಡುವ ವಿಷಯಗಳು ಬರುತ್ತವೆ; ಮತ್ತು ಕೊನೆಯಲ್ಲಿ, ಮುಕ್ತಾಯಗೊಳಿಸುವ ವಾಕ್ಯ ಬರುತ್ತದೆ. ವಾಕ್ಯಗಳನ್ನು ಈ ರೀತಿ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಬರೆಯುವುದು ಹೇಗೆ ಎಂಬುದನ್ನು ಅವರಿಗೆ ತಿಳಿಸಿಕೊಡಬೇಕು.

ಬರಹದಲ್ಲಿ ಬರುವ ಪಾರಾಗಳನ್ನು ಹೇಗೆ ಅಣಿಗೊಳಿಸುವುದು ಎಂಬುದನ್ನೂ ಅವರಿಗೆ ಕಲಿಸಬೇಕಾಗುತ್ತದೆ. ಇದು ಬೇರೆ ಬೇರೆ ಗುರಿಗಳಿಗಾಗಿ ಬಳಕೆಯಾಗುವ ಬರಹಗಳಲ್ಲಿ ಬೇರೆ ಬೇರಾಗಿರುತ್ತದೆ. ಒಂದು ಕತೆಯನ್ನು ಬರೆಯುವವರು ಅದರ ಕತೆ ಮುಂದೆ ಹೋಗುವುದಕ್ಕೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇದಕ್ಕೆ ಬದಲು, ಒಂದು ವಿಷಯದ ಮಟ್ಟಿಗೆ ಇನ್ನೊಬ್ಬರ ಒಪ್ಪಿಗೆ ಇಲ್ಲವೇ ಒಲವನ್ನು ಪಡೆಯಬೇಕೆಂದಿರುವವರು ಆ ವಿಷಯವನ್ನು ಓದುಗರ ಮುಂದಿರಿಸುವುದು

೭೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹೇಗೆ, ಮತ್ತು ಅದನ್ನು ಬೆಂಬಲಿಸುವ ವಿಷಯಗಳನ್ನು ಕೊಡುವ ಬಗೆ ಹೇಗೆ ಎಂಬುದಕ್ಕೆ ಗಮನ ಕೊಡಬೇಕಾಗುತ್ತದೆ.

ಮಾತಿನಲ್ಲಿಲ್ಲದಂತಹ ಕೊನೆ (.), ಅರೆಕೊನೆ (;), ತಡೆ (,) ಮೊದಲಾದ ಹಲವು ಬಗೆಯ ಗುರುತುಗಳನ್ನು ಬರಹದಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಮಾತಿ ನಲ್ಲಿ ಬರುವ ಕಯ್ಯನ್ನೆ, ಕಣ್ಣುಸನ್ನೆ, ಧ್ವನಿಯ ಏರಿಳಿತ, ಬಿಡುವು ಮೊದಲಾದವು ಗಳಿಗೆ ಬದಲಾಗಿ ಇವನ್ನು ಬಳಸಲಾಗುತ್ತದೆ. ಈ ಗುರುತುಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವ್ಯಾಕರಣದ ತಿಳಿವು ನೆರವಿಗೆ ಬರುತ್ತದೆ.

ಒಮ್ಮೆ ಬರೆದುದನ್ನು ಓದಿ ನೋಡಿ, ಅದು ಸರಿಯಿಲ್ಲವೆಂದು ಅನಿಸಿದಲ್ಲಿ ಅದನ್ನು ತಿದ್ದಿ ಸರಿಪಡಿಸುವುದು ಹೇಗೆ ಎಂಬುದನ್ನೂ ಮಕ್ಕಳು ತಿಳಿದಿರಬೇಕು. ಇದಕ್ಕಾಗಿ ಅವರು ತಾವು ಬರೆದಿರುವ ವಾಕ್ಯವನ್ನು ಬೇರೆ ಬೇರೆ ಬಗೆಗಳಲ್ಲಿ ಮಾರ್ಪಡಿಸಲು ಕಲಿತಿರಬೇಕಾಗುತ್ತದೆ. ತಾವು ಬರೆದಿರುವ ವಾಕ್ಯದ ಒಳರಚನೆ ಎಂತಹದು, ಆ ವಾಕ್ಯವನ್ನು ಬೇರೆ ಯಾವ ರಚನೆಗಳಿಗೆ ಮಾರ್ಪಡಿಸಬಹುದು ಎಂಬಂತಹ ವ್ಯಾಕರಣದ ತಿಳಿವು ಅವರಿಗಿದ್ದಲ್ಲಿ, ತಾವು ಬರೆದಿರುವ ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ಅವರು ಹೆಚ್ಚು ಚನ್ನಾಗಿ ನಡೆಸಬಲ್ಲರು.

ಇಂತಹ ಹತ್ತು ಹಲವು ಕೌಶಲ್ಯಗಳನ್ನು ಬರೆಯಲು ಕಲಿಯುವ ಮಕ್ಕಳು ಪಡೆದಿರಬೇಕಾಗುತ್ತದೆ; ಇವಕ್ಕೆ ಸಂಬಂಧಿಸಿದ ವ್ಯಾಕರಣದ ತಿಳಿವನ್ನು ಕೊಡಿಸಿ ದಲ್ಲಿ, ಅವರಿಗೆ ಈ ಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳಲು ಹೆಚ್ಚು ಸುಲಭವಾಗು ತ್ತದೆ. ಹಾಗಾಗಿ, ಯಾವ ಬಗೆಯ ವ್ಯಾಕರಣದ ತಿಳಿವು ಬರೆಯಲು ಕಲಿಯುವ ಮಕ್ಕಳಿಗೆ ನೆರವನ್ನು ನೀಡಬಲ್ಲುದು ಎಂಬುದನ್ನು ಕಂಡುಹಿಡಿಯುವ ಕೆಲಸವನ್ನೂ ನಾವು ಇವತ್ತು ನಡೆಸಬೇಕಾಗಿದೆ.

ಇದಕ್ಕೆ ಉದಾಹರಣೆಯಾಗಿ, ಬರಹಗಳಲ್ಲಿ ಸರಿತೆರಪಿನ (co-ordinated) ರಚನೆಗಳನ್ನು ಬಳಸುವಲ್ಲಿ ಕಾಣಿಸಿಕೊಳ್ಳುವ ತೊಂದರೆಯನ್ನು ಗಮನಿಸಬಹುದು: ಒಂದೇ ಬಗೆಯ ಎರಡು ಇಲ್ಲವೇ ಹೆಚ್ಚು ವಿಷಯಗಳನ್ನು ತಿಳಿಸಬೇಕಾದಾಗ ಇಂತಹ ರಚನೆಗಳನ್ನು ಬಳಸಲಾಗುತ್ತದೆ.

ಉದಾಹರಣೆಗಾಗಿ, ಅವನು ಆಪೀಸಿಗೂ ಹೋಗಲಿಲ್ಲ, ಮದುವೆಗೂ ಬರಲಿಲ್ಲ ಎಂಬ ವಾಕ್ಯದಲ್ಲಿ ಎರಡು ವಿಷಯಗಳನ್ನು ಎದುರೆದುರಾಗಿ ನಿಲ್ಲಿಸಿ ಹೇಳಲಾಗಿದೆ, ಮತ್ತು ಇದಕ್ಕಾಗಿ ಸರಿತೆರಪಿನ ರಚನೆಯನ್ನು ಬಳಸಲಾಗಿದೆ. ಇಂತಹ ರಚನೆಗಳಲ್ಲಿ ವಿಷಯಗಳನ್ನು ಜೋಡಿಸುವುದಕ್ಕಾಗಿ ಮತ್ತು, ಇಲ್ಲವೇ, ಆಗಲಿ, ಊ, ಇಂತ ಮೊದಲಾದ ಪದ ಇಲ್ಲವೇ ಪ್ರತ್ಯಯಗಳನ್ನು ಬಳಸ ಲಾಗುತ್ತದೆ. ತಿಳಿಸಬೇಕಾಗಿರುವ ವಿಷಯಗಳು ಎರಡಕ್ಕಿಂತ ಹೆಚ್ಚು ಇದ್ದಲ್ಲಿ, ಅವನ್ನು ಒಂದು ಪಟ್ಟಿಯಾಗಿಯೂ ಕೊಡಬಹುದು.

ಸರಿತೆರಪಿನ ರಚನೆಗಳಲ್ಲಿ ವಿಷಯಗಳನ್ನು ಪದ, ಪದಕಂತೆ ತುಂಡು ವಾಕ್ಯ, ಇಲ್ಲವೇ ಇಡೀ ವಾಕ್ಯಗಳ ಮೂಲಕ ಸೂಚಿಸಲಾಗುತ್ತದೆ. ಇಲ್ಲಿ ಬರೆಯುವವರು ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೇನೆಂದರೆ, ಇವುಗಳಲ್ಲಿ ಬರುವ

೭೮


ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ನುಡಿತಗಳು ಒಂದೇ ಬಗೆಯವಾಗಿರಬೇಕು. ಯಾಕೆಂದರೆ, ಅವು ಬೇರೆ ಬೇರೆ ಬಗೆಯವಾಗಿದ್ದರೆ ಓದುಗರಿಗೆ ತೊಂದರೆಯಾಗುತ್ತದೆ.

ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಎಲ್ಲಾ ನುಡಿತಗಳೂ ಒಂದೇ ಬಗೆಯವಾಗಿಲ್ಲ:

ಇವತ್ತು ನಾವು ಮಾಡಿರುವ ಕೆಲಸಗಳು:

  1. ವಿಳಾಸಗಳನ್ನೆಲ್ಲ ಎಣ್ಣುಕದಲ್ಲಿ ಸೇರಿಸಿ ಅಚ್ಚು ಹಾಕಿದೆವು
  2. ಹೊದಿಕೆಗಳಿಗೆ ವಿಳಾಸಗಳನ್ನು ಅಂಟಿಸಿ ಸುತ್ತೋಲೆಗಳನ್ನು
  3. ಅವುಗಳೊಳಗೆ ಹಾಕಿದೆವು
  4. ಅಂಚೆಯಲ್ಲಿ ಕಳಿಸಬೇಕಾದುವನ್ನು ಬೇರೆ ಇರಿಸಲಾಯಿತು
  5. ಇಪ್ಪತ್ತಾಯ್ತು ಕಡೆಗಳಿಗೆ ಸುತ್ತೋಲೆ ಮುಟ್ಟಿಸಿದ್ದು

ಈ ಉದಾಹರಣೆಯಲ್ಲಿ ಮೊದಲ ಮೂರು ನುಡಿತಗಳು ವಾಕ್ಯಗಳು; ಆದರೆ, ನಾಲ್ಕನೆಯದು ಒಂದು ಪದಕಂತೆ. ಇದಲ್ಲದೆ, ಮೂರನೇ ವಾಕ್ಯದ ರಚನೆ ಮೊದಲ ಎರಡು ವಾಕ್ಯಗಳ ರಚನೆಗಿಂತ ಬೇರಾಗಿದೆ. ಈ ವ್ಯತ್ಯಾಸಗಳಿಂದಾಗಿ, ಮೇಲಿನ ಸರಿತೆರಪಿನ ಬರಹ ಓದುಗರಿಗೆ ತೊಂದರೆ ಕೊಡುತ್ತದೆ ಎಂಬುದನ್ನು ಗಮನಿಸಬಹುದು. ಅದು ಸುಲಭವಾಗಿ ಓದಿಸಿಕೊಂಡು ಹೋಗುವುದಿಲ್ಲ.

ಇಂತಹ ವ್ಯತ್ಯಾಸಗಳು ತಮ್ಮ ಬರಹದಲ್ಲಿ ಸೇರಿಕೊಂಡಿವೆಯೆಂಬುದು ಬರೆಯುವವರಿಗೆ ಸಾಮಾನ್ಯವಾಗಿ ಗೊತ್ತೇ ಆಗುವುದಿಲ್ಲ. ಅವು ಗಮನಕ್ಕೆ ಬರ ಬೇಕಿದ್ದಲ್ಲಿ, ಬರಹವನ್ನು ಅವರು ಗಟ್ಟಿಯಾಗಿ ಓದಿ ನೋಡಬೇಕು, ಇಲ್ಲವೇ ಬೇರೊಬ್ಬರ ಹತ್ತಿರ ಓದಲು ಹೇಳಬೇಕು. ಬರಹಗಳಲ್ಲಿ ಬರುವ ರಚನೆಗಳ ತಿಳಿವು ಇಂತಹ ತಪ್ಪುಗಳನ್ನು ಗುರುತಿಸುವಲ್ಲಿ, ಮತ್ತು ಅವನ್ನು ಸರಿಪಡಿಸುವಲ್ಲಿ ಬರೆಯುವವರ ನೆರವಿಗೆ ಬರುತ್ತದೆ.

ಇಂಗ್ಲಿಷ್ ಭಾಷೆಯ ಕಲಿಕೆ

ಶಾಲೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಸುತ್ತಿರುವಾಗ ಮಕ್ಕಳ ತಾಯ್ನುಡಿಯನ್ನು ಬಳಸಬಹುದೇ, ಇಲ್ಲವೇ ಬಳಸಬೇಕೇ ಎಂಬ ವಿಷಯ ದಲ್ಲಿ ಇತ್ತೀಚೆಗೆ ತುಂಬಾ ಚರ್ಚೆಗಳು ನಡೆಯುತ್ತಿವೆ; ಆದರೆ, ಇವತ್ತು ಹೆಚ್ಚಿನ ಸಂಶೋಧಕರೂ ಇಂಗ್ಲಿಷ್ ಭಾಷೆಯ ಕಲಿಕೆಯಲ್ಲಿ ತಾಯ್ನುಡಿಯ ಬಳಕೆ ಹಲವು ಬಗೆಯಲ್ಲಿ ನೆರವಾಗಬಲ್ಲುದು ಎಂಬುದನ್ನು ಒಪ್ಪುವ ಹಂತಕ್ಕೆ ಬಂದಿದ್ದಾರೆ.

ಆದರೆ ಕಳೆದ ಶತಮಾನದಿಂದ, ಇಂಗ್ಲಿಷ್ ತರಗತಿಗಳಲ್ಲಿ ತಾಯ್ನುಡಿಯನ್ನು ಬಳಸಲೇ ಕೂಡದು ಎಂಬ ಕಟ್ಟಲೆಯೊಂದು ಬೆಳೆದುಬಂದಿದೆ. ಇದಕ್ಕೆ ತಾಯ್ನುಡಿ

೭೬


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಯನ್ನು ಆ ರೀತಿ ಬಳಸಿದಲ್ಲಿ, ಅದು ಇಂಗ್ಲಿಷ್ ಕಲಿಕೆಗೆ ಅಡ್ಡಿಯನ್ನುಂಟುಮಾಡ ಬಲ್ಲುದೆಂಬ ತಪ್ಪು ತಿಳಿವಳಿಕೆ ಇಂಗ್ಲಿಷ್ ನುಡಿಯನ್ನು ಕಲಿಸುವವರಲ್ಲಿ ಬೆಳೆದು ಬಂದುದೇ ಮುಖ್ಯ ಕಾರಣ.

ಇದಲ್ಲದೆ, ಮಕ್ಕಳು ಯಾವಾಗಲೂ ಇಂಗ್ಲಿಷ್ ಭಾಷೆಯನ್ನೇ ಕೇಳುತ್ತಿದ್ದಲ್ಲಿ, ಮತ್ತು ಬೇರೆ ಯಾವ ಭಾಷೆಯನ್ನೂ ಕೇಳದೆ ಇದ್ದಲ್ಲಿ, ಅವರಿಗೆ ಇಂಗ್ಲಿಷ್‌ನಲ್ಲಿ ತುಂಬಾ ಚನ್ನಾಗಿ ಮತ್ತು ಬಹಳ ಬೇಗನೆ ಮಾತನಾಡಲು ಬಂದೀತೆಂಬ ಇನ್ನೊಂದು ತಪ್ಪು ಅನಿಸಿಕೆಯೂ ಇದಕ್ಕೆ ಕಾರಣವಾಗಿತ್ತು.

ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವ ಕೆಲವು ಶಾಲೆಗಳ ಲ್ಲಂತೂ ಮಕ್ಕಳು ಶಾಲೆಯೊಳಗೆ ತಮ್ಮ ತಾಯ್ನುಡಿಯನ್ನು ಬಳಸುವುದೇ ಒಂದು ದೊಡ್ಡ ಅಪರಾಧವೆಂಬುದಾಗಿ ಇವತ್ತಿಗೂ ಪರಿಗಣಿಸಲಾಗುತ್ತಿದೆ.

ನಿಜಕ್ಕೂ ಇದು ಮಕ್ಕಳ ಇಲ್ಲವೇ ದೊಡ್ಡವರ ಕಲಿಕೆ ಹೇಗೆ ಸಾಗುತ್ತದೆ ಎಂಬುದನ್ನು ತಿಳಿಯದೆ ಮಾಡಿರುವಂತಹ ಕಟ್ಟಲೆ. ಯಾರೇ ಆಗಲಿ, ತಮ್ಮ ಲ್ಲಿರುವ ತಿಳುವಳಿಕೆಯ ತಳಹದಿಯ ಮೇಲೆ ಹೊಸ ತಿಳುವಳಿಕೆಯನ್ನು ಪಡೆಯ ಬೇಕಾಗುತ್ತದೆ. ಶಾಲೆಗೆ ಬರುವ ಮೊದಲೇ ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಚನ್ನಾಗಿ ಮಾತನಾಡಲು ಕಲಿತಿರುತ್ತಾರೆ; ತಮ್ಮ ಅನಿಸಿಕೆಗಳನ್ನು ಆ ಭಾಷೆಯಲ್ಲಿ ತಿಳಿಸುವುದು ಹೇಗೆ, ಮತ್ತು ಅದರಲ್ಲಿ ಬೇರೆಯವರು ಹೇಳಿದುದನ್ನು ಕೇಳಿ ತಿಳಿಯುವುದು ಹೇಗೆ ಎಂಬುದನ್ನು ಅವರು ಚನ್ನಾಗಿ ತಿಳಿದಿರುತ್ತಾರೆ. ಅವರ ಆಲೋಚನೆಗಳೆಲ್ಲವೂ ಆ ಭಾಷೆಯಲ್ಲಿಯೇ ನಡೆಯುತ್ತಿರುತ್ತವೆ.

ಹಾಗಿರುವಾಗ, ಮಕ್ಕಳು ಶಾಲೆಯಲ್ಲಿ ಹೊಸ ಭಾಷೆಯೊಂದನ್ನು ಕಲಿಯ ಬೇಕಿದ್ದಲ್ಲಿ, ಅದನ್ನು ಅವರು ಅದಕ್ಕೆ ಮೊದಲೇ ಕಲಿತುಕೊಂಡಿದ್ದ ತಾಯ್ನುಡಿಯ ಮೂಲಕವೇನೇ ಕಲಿಯಬೇಕು. ಇದಲ್ಲದೆ, ಭಾಷೆಯ ಸ್ವರೂಪವೆಂತಹದು ಎಂಬುದನ್ನು ಶಾಲೆಗೆ ಸೇರುವ ಮೊದಲೇನೇ ಅವರಿಗೆ ತಾಯ್ನುಡಿಯ ಕಲಿಕೆ ತಿಳಿಸಿಕೊಟ್ಟಿದೆ. ಧ್ವನಿಗಳನ್ನು ಬಳಸಿ ಪದಗಳನ್ನು ಉಂಟುಮಾಡುವುದು ಹೇಗೆ, ಅವನ್ನು ಬಳಸಿ ಪದಕಂತೆಗಳನ್ನು ಮತ್ತು ವಾಕ್ಯಗಳನ್ನು ಉಂಟುಮಾಡುವುದು ಹೇಗೆ, ಅವು ಅರ್ಥಗಳನ್ನು ಹೇಗೆ ಸೂಚಿಸಬಲ್ಲುವು ಎಂಬುದನ್ನೆಲ್ಲ ಅವರು ಅದಕ್ಕೆ ಮೊದಲೇ ತಮ್ಮ ತಾಯ್ನುಡಿಯ ಕಲಿಕೆಯ ಮೂಲಕ ತಿಳಿದಿರುತ್ತಾರೆ.

ಅವರು ಕಲಿಯಬೇಕಾಗಿರುವ ಹೊಸ ಭಾಷೆಯಲ್ಲಿ (ಇಂಗ್ಲಿಷ್‌ನಲ್ಲಿ) ಇದನ್ನೇ ಬೇರೊಂದು ಬಗೆಯಲ್ಲಿ ನಡೆಸಲಾಗುತ್ತದೆ. ಈ ಬಗೆ ಎಂತಹದು ಎಂಬುದನ್ನು ಅವರು ಗಮನಿಸುವ ಹಾಗೆ ಮಾಡುವ ಮೂಲಕ, ಅದನ್ನು ಕಲಿಯಲು ತೊಡಗಿಸು ವುದೇ ಸರಿಯಾದ ಮತ್ತು ಸುಲಭವಾದ ದಾರಿ. ಈ ರೀತಿ ತಾಯ್ನುಡಿಯ ಮೂಲಕ ಹೊಸ ಭಾಷೆಯನ್ನು ಕಲಿಸಹೊರಟಲ್ಲಿ, ಮಕ್ಕಳಿಗೆ ನೆಮ್ಮದಿಯ ಕಲಿಕೆ ದೊರಕುತ್ತದೆ, ಮತ್ತು ಹೊಸ ಭಾಷೆಯಲ್ಲಿ ಅಂಜದೆ ಮಾತು ಕಲಿಯಲು ಬರುತ್ತದೆ.

೮೦

ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ಇದಕ್ಕೆ ಬದಲು, ತಾಯ್ನುಡಿಯನ್ನು ಶಾಲೆಯಲ್ಲಿ ಬಳಸಲೇ ಕೂಡದೆಂಬ ಕಟ್ಟಲೆಯನ್ನು ಮಾಡಿದಲ್ಲಿ, ಕಲಿಕೆಯಲ್ಲಿ ಅವರು ಬಳಸಬಲ್ಲ ಒಂದು ಅಮೂಲ್ಯ ವಾದ ಸಾಧನವನ್ನು ಅವರಿಂದ ಕಿತ್ತುಕೊಂಡಹಾಗಾಗುತ್ತದೆ, ಮತ್ತು ತಾಯ್ನುಡಿಯ ಕುರಿತಾಗಿ ಅವರಲ್ಲಿ ಕೀಳರಿಮೆಯನ್ನು ಉಂಟುಮಾಡಿದ ಹಾಗಾಗುತ್ತದೆ. ಇದರಿಂದಾಗಿ, ಹಲವು ಮಕ್ಕಳಿಗೆ ತಮ್ಮ ತನ್ನತನವನ್ನೇ ಕಳೆದುಕೊಂಡ ಹಾಗೆಯೂ ಆಗುತ್ತದೆ.

ನಿಜಕ್ಕೂ ಮಕ್ಕಳು ತಮ್ಮ ಎರಡನೇ ಭಾಷೆಯನ್ನು ಮೊದಲನೇ ಭಾಷೆಯ ತಳಹದಿಯ ಮೇಲೇನೇ ಕಲಿಯುತ್ತಾರೆ. ತರಗತಿಯಲ್ಲಿ ತಾಯ್ನುಡಿಯನ್ನು ಬಳಸ ಬಾರದೆಂಬ ಕಟ್ಟಲೆಯನ್ನು ಮಾಡಿದರೂ, ಅವರು ಕಲಿಯುತ್ತಿರುವಾಗ ಮನಸ್ಸಿ ನಲ್ಲಿ ಇಲ್ಲವೇ ಮಿದುಳಿನಲ್ಲಿ ತಾಯ್ನುಡಿಯನ್ನು ಬಳಸದಿರುವುದಿಲ್ಲ. ಯಾಕೆಂದರೆ, ಹಾಗೆ ಬಳಸದಿರಲು ಅವರಿಗೆ ಸಾದ್ಯವೇ ಇಲ್ಲ! ಹಾಗಾಗಿ, ಅವರ ತಾಯ್ನುಡಿ ಯನ್ನು ಮನಸ್ಸಿನಲ್ಲಿ ಮಾತ್ರವೇ ಬಳಸಲಾಗುತ್ತಿದೆಯೋ, ಇಲ್ಲವೇ ಹೊರಗೂ ಬಳಸಲಾಗುತ್ತಿದೆಯೋ ಎಂಬುದೇ ಇಲ್ಲಿರುವ ವ್ಯತ್ಯಾಸ.

ಪದ ಮತ್ತು ವಾಕ್ಯಗಳಿಗೂ ಅವುಗಳ ಅರ್ಥಕ್ಕೂ ನಡುವಿರುವ ಸಂಬಂಧವನ್ನು ತಿಳಿದುಕೊಂಡು, ಅದನ್ನು ನೆನಪಿನಲ್ಲಿ ಉಳಿಸಿಕೊಳ್ಳುವ ಕೆಲಸ ಮಕ್ಕಳ ಮಿದುಳಿನ ಒಂದು ಕಡೆಯಲ್ಲಿ ಮಾತ್ರ ನಡೆಯುತ್ತದೆ. ಹೊಸದೊಂದು ಭಾಷೆಯನ್ನು ಕಲಿಯುವ ಮಕ್ಕಳಲ್ಲೂ ಈ ಕೆಲಸ ಅದೇ ಜಾಗದಲ್ಲಿ, ಎಂದರೆ ಅವರು ತಮ್ಮ ತಾಯ್ನುಡಿಯನ್ನು ಕಲಿಯುತ್ತಿರುವಾಗ ಬಳಸಿದ ಜಾಗದಲ್ಲೇನೇ ನಡೆಯುತ್ತದೆ. ಎರಡನೇ ಭಾಷೆಯನ್ನು ಎಂಟು-ಹತ್ತು ವರ್ಷ ದಾಟಿದ ಮಕ್ಕಳು ಕಲಿಯುತ್ತಿರು ವಾಗಲೂ ಅವರ ಮಿದುಳಿನಲ್ಲಿ ಈ ಕೆಲಸವನ್ನು ನಡೆಸಲು ಬೇರೆ ಹೊಸ ಜಾಗ ಬಳಕೆಗೆ ಬರುವುದಿಲ್ಲ. ಎಂದರೆ, ತಾಯ್ನುಡಿಯ ತಿಳಿವಿಗೆ ಸಂಬಂಧಿಸಿದ ಹಾಗೇನೇ ಅವರ ಎರಡನೇ ಭಾಷೆಯ ತಿಳಿವು ಮಿದುಳಿನಲ್ಲಿ ನೆಲೆಗೊಳ್ಳುತ್ತದೆ.

ಮೊದಲನೇ ಭಾಷೆಯ ನೆಲೆಗಟ್ಟಿನ ಮೇಲೆ ಎರಡನೇ ಭಾಷೆಯ ಕಲಿಕೆ ನಡೆಯುವ ಕಾರಣ, ಅವೆರಡು ಭಾಷೆಗಳ ನಡುವೆ ವ್ಯಾಕರಣದ ನಿಯಮ ಗಳಲ್ಲಿರುವ ವ್ಯತ್ಯಾಸವನ್ನು ಮಕ್ಕಳು ಗಮನಿಸುವ ಹಾಗೆ ಮಾಡಿದಲ್ಲಿ, ಎರಡನೇ ಭಾಷೆಯನ್ನು ಕಲಿಯುವ ಕೆಲಸ ಹೆಚ್ಚು ಸುಲಭವಾಗಬಲ್ಲುದೆಂದು ಸಂಶೋ ಧನೆಗಳು ತೋರಿಸಿಕೊಟ್ಟಿವೆ. ಇಂತಹ ತಿಳಿವು ಚಿಕ್ಕ ಮಕ್ಕಳಿಗಿಂತಲೂ ದೊಡ್ಡವರಿಗೆ ಹೆಚ್ಚು ನೆರವನ್ನು ನೀಡುತ್ತದೆ.

ಉದಾಹರಣೆಗಾಗಿ, ಕನ್ನಡದಲ್ಲಿ ಕ್ರಿಯಾಪದ ವಾಕ್ಯದ ಕೊನೆಗೆ ಬರುತ್ತದೆ (ನಾನು ಮನೆಗೆ ಹೋದೆ); ಆದರೆ, ಇಂಗ್ಲಿಷ್‌ನಲ್ಲಿ ಇದು ವಾಕ್ಯದ ನಡುವೆ ಬರುತ್ತದೆ (I went home). ಇದು ಈ ಎರಡು ಭಾಷೆಗಳಲ್ಲಿ ಬಳಕೆಯಾಗುವ ವಾಕ್ಯಗಳ ನಡುವಿರುವ ಒಂದು ಮುಖ್ಯವಾದ ವ್ಯತ್ಯಾಸ. ಇದಕ್ಕೆ ಸಂಬಂಧಿಸಿದಂತೆ, ಬೇರೆಯೂ ಹಲವು ವ್ಯತ್ಯಾಸಗಳು ಈ ಎರಡು ಭಾಷೆಗಳ ನಡುವೆ ಕಾಣಿಸಿ ಕೊಳ್ಳುತ್ತವೆ:

೮೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಉದಾಹರಣೆಗಾಗಿ, ಕನ್ನಡದಲ್ಲಿ ಒತ್ತಾಸೆಯ (auxiliary) ಕ್ರಿಯಾಪದ ಮುಖ್ಯ ಕ್ರಿಯಾಪದದ ಬಳಿಕ ಬರುತ್ತದೆ (ಬಂದಿದ್ದೇನೆ), ಆದರೆ ಇಂಗ್ಲಿಷ್‌ನಲ್ಲಿ ಅದು ಮುಖ್ಯ ಕ್ರಿಯಾಪದದ ಮೊದಲು ಬರುತ್ತದೆ (have come). ಕನ್ನಡದಲ್ಲಿ ಮರದ ಕೆಳಗೆ ಎನ್ನುತ್ತೇವೆ, ಆದರೆ ಇಂಗ್ಲಿಷ್‌ನಲ್ಲಿ under the tree ಎನ್ನುತ್ತೇವೆ; ಕನ್ನಡದಲ್ಲಿ ಮರದ ಗೆಲ್ಲು ಎನ್ನುತ್ತೇವೆ; ಇಂಗ್ಲಿಷ್‌ನಲ್ಲಿ branch of the tree ಎನ್ನುತ್ತೇವೆ; ಕನ್ನಡದಲ್ಲಿ ಬೇಗ ಬನ್ನಿ ಎನ್ನುತ್ತೇವೆ; ಇಂಗ್ಲಿಷ್‌ನಲ್ಲಿ come quickly ಎನ್ನುತ್ತೇವೆ.

ಇಂತಹ ಬೇರೆಯೂ ಹಲವಾರು ವ್ಯತ್ಯಾಸಗಳು ಈ ಎರಡು ಭಾಷೆಗಳ ನಡುವೆ ಕಾಣಿಸುತ್ತಿವೆ; ಈಗಾಗಲೇ ಒಂದು ಬಗೆಯ ಬಳಕೆಯನ್ನು ಕಲಿತವರಿಗೆ ಅದಕ್ಕೂ ಈಗ ಕಲಿಯಬೇಕಾಗಿರುವ ಬಳಕೆಗೂ ನಡುವಿರುವ ವ್ಯತ್ಯಾಸಗಳನ್ನು ತೋರಿಸಿಕೊಟ್ಟಲ್ಲಿ, ಅವರ ಕಲಿಕೆ ಹೆಚ್ಚು ಸುಲಭವಾಗಿ ಸಾಗುತ್ತದೆ.

ಒಂದು ಭಾಷೆಯಲ್ಲಿ ಓದುವ ಮತ್ತು ಬರೆಯುವ ಕೆಲಸವನ್ನು ನಡೆಸಲು ಹಲವು ಕೌಶಲ್ಯಗಳನ್ನು ಕಯ್ದಶ ಮಾಡಿಕೊಳ್ಳಬೇಕಾಗುತ್ತದೆ; ಇವನ್ನು ಬೇರೆ ಭಾಷೆಗಳಲ್ಲಿ ಪಡೆಯುವುದಕ್ಕಿಂತ ತಾಯ್ನುಡಿಯಲ್ಲಿ ಪಡೆಯುವುದೇ ಹೆಚ್ಚು ಸುಲಭ. ಯಾಕೆಂದರೆ, ತಾಯ್ನುಡಿಯಲ್ಲಿ ಚನ್ನಾಗಿ ಮಾತನಾಡಲು ಬರುವು ದರಿಂದ, ಅದರಲ್ಲಿ ಓದುವುದನ್ನು ಮತ್ತು ಬರೆಯುವುದನ್ನು ಬೇಗನೆ ಕಲಿಯ ಬಹುದು. ಈ ರೀತಿ ತಾಯ್ನುಡಿಯಲ್ಲಿ ಪಡೆದ ಕೌಶಲ್ಯಗಳನ್ನು ಆಮೇಲೆ ಸುಲಭ ವಾಗಿ ಬೇರೆ ಭಾಷೆಗಳಿಗೆ ವರ್ಗಾಯಿಸಲು ಬರುತ್ತದೆ. ಹಾಗಾಗಿ, ಮೊದಲಿಗೆ ತಾಯ್ನುಡಿಯಲ್ಲಿ ಓದಲು ಮತ್ತು ಬರೆಯಲು ಕಲಿಸಿ, ಆಮೇಲೆ ಎರಡನೇ ಇಲ್ಲವೇ ಮೂರನೇ ಭಾಷೆಯಲ್ಲಿ ಕಲಿಸುವುದೇ ಸರಿಯಾದ ದಾರಿ.

ಇಂಗ್ಲಿಷ್‌ನಲ್ಲಿ ತುಂಬಾ ತೊಡಕು ತೊಡಕಾದ ಸ್ಪೆಲ್ಲಿಂಗ್ ಸಮಸ್ಯೆಯಿದೆ. ಹಾಗಾಗಿ, ಅದರ ಬರಹಗಳಲ್ಲಿ ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ಹೊಂದಾಣಿಕೆ ಇದೆ ಎಂಬುದನ್ನು ಮಕ್ಕಳು ಗಮನಿಸುವ ಹಾಗೆ ಮಾಡುವುದು ತುಂಬಾ ತೊಡಕಿನ ಕೆಲಸ. ಹಲವು ಮಂದಿ ಮಕ್ಕಳ ಗಮನಕ್ಕೆ ಇದು ಬರುವುದೇ ಇಲ್ಲ. ಹಾಗಾಗಿ, ಅಂತಹ ಮಕ್ಕಳು ಪದಗಳನ್ನು ಅಕ್ಷರಗಳಾಗಿ ಒಡೆದು ಧ್ವನಿ ಗಳೊಂದಿಗೆ ಹೊಂದಿಸಲು ಹೋಗದೆ, ನೇರವಾಗಿ ಓದಲು ತೊಡಗುತ್ತಾರೆ. ಈ ರೀತಿ ಓದಲು ಮೊದಲಿಗೆ ಅಷ್ಟೊಂದು ತೊಂದರೆಯಾಗುವುದಿಲ್ಲವಾದರೂ, ಕಲಿಕೆ ಯಲ್ಲಿ ಮುಂದೆ ಹೋದಂತೆ ಹೆಚ್ಚು ಹೆಚ್ಚು ಬರಹಗಳನ್ನು ಓದಬೇಕಾಗುವುದಾದ ಕಾರಣ, ಅವರು ಕಲಿಕೆಯಲ್ಲಿ ಹಿಂದೆ ಬೀಳತೊಡಗುತ್ತಾರೆ.

ಹಾಗಾಗಿ, ಮೊದಲಿಗೆ ಕನ್ನಡದಲ್ಲಿ ಓದಲು ಕಲಿಯುವ ಮೂಲಕ ಸರಿಯಾಗಿ ಓದುವ ಬಗೆ ಹೇಗೆ ಎಂಬುದನ್ನು ತಿಳಿದುಕೊಂಡಿರುವ ಮಕ್ಕಳು ಇಂಗ್ಲಿಷ್‌ನಲ್ಲೂ ಸರಿಯಾಗಿ ಓದಲು ಸುಲಭವಾಗಿ ಕಲಿತುಕೊಳ್ಳಬಲ್ಲರು. ಯಾಕೆಂದರೆ, ಓದುವ ಕೆಲಸಕ್ಕಾಗಿ ಕನ್ನಡದಲ್ಲಿ ಪಡೆದಿರುವ ಕೌಶಲ್ಯವನ್ನು ಅವರು ಸುಲಭವಾಗಿ ತಮ್ಮ ಇಂಗ್ಲಿಷ್ ಓದಿಗೂ ವರ್ಗಾಯಿಸಬಲ್ಲರು.

೮೨


ಭಾಷೆಯ ಕಲಿಕೆಗೆ ವ್ಯಾಕರಣದ ನೆರವು

ಅಕ್ಷರಗಳಿಗೂ ಧ್ವನಿಗಳಿಗೂ ನೇರ ಸಂಬಂಧವಿರುವ ಬರಹಗಳನ್ನು ಓದಲು ಕಲಿಸುವಾಗ ಮಕ್ಕಳಿಗೆ ಒಂದು ವರ್ಷದಲ್ಲಿ ಎಷ್ಟು ಕಲಿಯಲು ಸಾಧ್ಯವಾಗು ತ್ತದೆಯೋ ಅಷ್ಟನ್ನು ಕಲಿಯಲು, ಇಂಗ್ಲಿಷ್‌ನಂತಹ ಸ್ಪೆಲ್ಲಿಂಗ್ ಸಮಸ್ಯೆಯಿರುವ ಬರಹಗಳನ್ನು ಓದಲು ಕಲಿಸುವಾಗ ಎರಡೂವರೆ ವರ್ಷಗಳಷ್ಟು ಸಮಯ ತಗಲುತ್ತದೆಯೆಂದು ಸಂಶೋಧನೆಗಳು ತೋರಿಸಿಕೊಟ್ಟಿವೆ. ಹಾಗಾಗಿ, ಮುಂದೆ ಕನ್ನಡವನ್ನು ಓದುವುದೇ ಬೇಡ ಎನ್ನುವವರಿಗೂ ಮೊದಲಿಗೆ ಅದರಲ್ಲಿ ಓದಲು ಕಲಿಸಿ, ಆಮೇಲೆ ಇಂಗ್ಲಿಷ್‌ನಲ್ಲಿ ಓದಲು ಕಲಿಸುವುದರಿಂದ ಸರಿಯಾಗಿ ಓದುವ ಕ್ರಮವನ್ನು ಅವರು ಹೆಚ್ಚು ಬೇಗನೆ ತಿಳಿದುಕೊಳ್ಳಬಲ್ಲರು.

ಮೇಲೆ ವಿವರಿಸಿದ ಹಾಗೆ, ಓದಲು ಕಲಿಯುವುದಕ್ಕಿಂತಲೂ ಬರೆಯಲು ಕಲಿ ಯುವುದು ಹೆಚ್ಚು ತೊಡಕಿನ ಕೆಲಸ. ಇದನ್ನು ಎರಡನೇ ಭಾಷೆಯಲ್ಲಿ ನಡೆಸಲು ಕಲಿಯುವುದು ಮತ್ತಷ್ಟು ತೊಡಕಿನ ಕೆಲಸ. ಈ ಎರಡನೇ ಕೆಲಸವನ್ನು ತಮ್ಮ ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ಎರಡನೇ ನುಡಿಯಲ್ಲಿ ಹೆಚ್ಚು ಸುಲಭವಾಗಿ ನಡೆಸಬಲ್ಲರು. ಯಾಕೆಂದರೆ, ಅವರು ಇದಕ್ಕಾಗಿ ತಮ್ಮ ತಾಯ್ನುಡಿ ಯಲ್ಲಿ ಕಲಿತು ಕೊಂಡಿದ್ದ ಕೌಶಲ್ಯಗಳಲ್ಲಿ ಹೆಚ್ಚಿನವನ್ನೂ ಎರಡನೇ ಭಾಷೆಯ ಬರವಣಿಗೆಗೂ ವರ್ಗಾಯಿಸಿಕೊಳ್ಳಬಲ್ಲರು.

ಮಕ್ಕಳಿಗೆ ತಮ್ಮ ತಾಯ್ನುಡಿಯಲ್ಲಿ ಆಲೋಚಿಸಲು ಏನೂ ತೊಂದರೆ ಯಾಗುವುದಿಲ್ಲ. ಆದರೆ, ಎರಡನೇ ಭಾಷೆಯಲ್ಲಿ ಸಾಕಷ್ಟು ಪಳಗುವಲ್ಲಿವರೆಗೆ ಅವರಿಗೆ ಅದರಲ್ಲಿ ಆಲೋಚಿಸಲು ಬರುವುದಿಲ್ಲ. ಹಾಗಾಗಿ, ಬರೆಯಬೇಕಾಗಿರುವ ವಿಷಯಗಳನ್ನು ಮೊದಲಿಗೆ ತಮ್ಮ ತಾಯ್ನುಡಿಯಲ್ಲಿ ಆಲೋಚಿಸಿ, ಮತ್ತು ಅವನ್ನು ಬೇಕಾದ ಕ್ರಮದಲ್ಲಿ ಜೋಡಿಸಿಕೊಂಡು, ಆಮೇಲೆ ಎರಡನೇ ಭಾಷೆಯಲ್ಲಿ ಬರೆಯುವುದು ಅವರಿಗೆ ಹೆಚ್ಚು ಸುಲಭವಾದ ಕೆಲಸವಾಗಬಲ್ಲುದು.

ಇದಲ್ಲದೆ, ತಾಯ್ನುಡಿಯಲ್ಲಿ ಬರೆಯಲು ಕಲಿತಿರುವ ಮಕ್ಕಳು ತಾವು ಒಟ್ಟುಗೂಡಿಸಿರುವ ವಿಷಯಗಳನ್ನು ಮೊದಲಿಗೆ ತಮ್ಮ ತಾಯ್ನುಡಿಯಲ್ಲಿ ಬರೆದು, ಆಮೇಲೆ ಅದನ್ನು ಎರಡನೇ ಭಾಷೆಗೆ ಅನುವಾದಿಸಬಹುದು. ಎರಡನೇ ಭಾಷೆ ಯನ್ನು ಕಲಿಯುವ ಮೊದಲ ಹಂತಗಳಲ್ಲಿ ಇಂತಹ ಅನುವಾದದ ಬಳಕೆಯೂ ನೆರವಿಗೆ ಬರುತ್ತದೆಯೆಂದು ಇತ್ತೀಚೆಗಿನ ಕೆಲವು ಸಂಶೋಧನೆಗಳು ತೋರಿಸಿ ಕೊಟ್ಟಿವೆ.

ಎರಡನೇ ಭಾಷೆಯನ್ನು ಕಲಿಯುತ್ತಿರುವಾಗ ಒಟ್ಟೊಟ್ಟಿಗೆ ತಮ್ಮ ತಾಯ್ನುಡಿ ಯಲ್ಲೂ ಓದು-ಬರಹದ ತಿಳಿವನ್ನು ಹೆಚ್ಚಿಸಿಕೊಳ್ಳುವ ಮಕ್ಕಳು ಎರಡನೇ ಭಾಷೆಯ ಕಲಿಕೆಯಲ್ಲಿ ಬೇರೆ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ. ತಾಯ್ನುಡಿ ಯನ್ನು ಪೂರಿ ಕಡೆಗಣಿಸಿರುವ ಮಕ್ಕಳು ಮೊದಮೊದಲಿಗೆ ತುಂಬಾ ವೇಗವಾಗಿ ಮುಂದೆ ಹೋಗುತ್ತಿರುವಂತೆ ಕಾಣಿಸುತ್ತಾರೆ; ಆದರೆ, ಆಮೇಲೆ ಅವರಲ್ಲಿ ಹಲವು ಮಕ್ಕಳು ತಮ್ಮ ಎರಡನೇ ಭಾಷೆಯ ಕಲಿಕೆಯಲ್ಲಿ ಹಿಂದೆ ಬೀಳತೊಡಗುತ್ತಾರೆ. ಇದರಿಂದ ಗೊತ್ತಾಗುವುದೇನೆಂದರೆ, ಎರಡನೇ ಭಾಷೆಯ ಕಲಿಕೆಯಲ್ಲಿ ಹೆಚ್ಚಿನ ಮಕ್ಕಳಿಗೂ ತಮ್ಮ ತಾಯ್ನುಡಿಯ ಬೆಂಬಲ ಬೇಕಾಗುತ್ತದೆ.

೮೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸಬೇಕಾಗಿದೆ: ಭಾಷೆಯ ಕಲಿಕೆಯಲ್ಲಿ ಎರಡು ಮುಖ್ಯವಾದ ಹಂತಗಳಿರುತ್ತವೆ. ಅದರಲ್ಲಿ ಸಲೀಸಾಗಿ ಮಾತನಾಡಲು ಕಲಿಯುವುದು ಒಂದು ಹಂತ, ಮತ್ತು ಗಣಿತ, ವಿಜ್ಞಾನ ಮೊದಲಾದ ಅಮೂರ್ತ (abstract) ವಿಷಯಗಳನ್ನು ತಿಳಿಯಲು, ಮತ್ತು ಇನ್ನೊಬ್ಬರಿಗೆ ತಿಳಿಸಲು ಕಲಿಯು ವುದು ಇನ್ನೊಂದು ಹಂತ.

ಶಾಲೆಯಲ್ಲಿ ಮೊದಲಿನಿಂದಲೂ ಇಂಗ್ಲಿಷ್ ನುಡಿಯನ್ನೇ ಶಿಕ್ಷಣಮಾಧ್ಯಮ ವಾಗಿ ಬಳಸಿರುವ ಮಕ್ಕಳು ಆ ಭಾಷೆಯಲ್ಲಿ ಸಲೀಸಾಗಿ ಮಾತನಾಡುವುದನ್ನು ಗಮನಿಸಿರುವ ಹಲವರಿಗೆ, ಅವರು ಅದನ್ನು ಬಹಳ ಚನ್ನಾಗಿ ಕಲಿತುಕೊಂಡಿ ದ್ದಾರೆಂದು ಅನಿಸುತ್ತದೆ. ಹಾಗಾಗಿ, ತಮ್ಮ ಮಕ್ಕಳೂ ಇಂಗ್ಲಿಷ್ ನುಡಿಯನ್ನೇ ಶಿಕ್ಷಣಮಾಧ್ಯಮವಾಗಿ ಬಳಸಿ, ಆದಷ್ಟು ಬೇಗನೆ ಆ ಭಾಷೆಯಲ್ಲಿ ಪರಿಣತ ರಾಗಬೇಕೆಂದು ಅವರು ಬಯಸುತ್ತಾರೆ. ಆದರೆ, ನಿಜಕ್ಕೂ ಅಂತಹ ಮಕ್ಕಳು ತಮ್ಮ ಇಂಗ್ಲಿಷ್ ಕಲಿಕೆಯಲ್ಲಿ ಮೊದಲನೆಯ ಹಂತವನ್ನಷ್ಟೇ ತಲಪಿರುತ್ತಾರೆ.

ಮುಂದೆ ಎರಡನೇ ಹಂತವನ್ನು ತಲಪುವ ಕೆಲಸದಲ್ಲಿ ಅವರು ಹಿಂದೆ ಬೀಳು ತ್ತಾರೆ. ಇದಕ್ಕೆ ಕಾರಣವೇನೆಂದರೆ, ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಈ ಕೆಲಸ ವನ್ನು ಹೆಚ್ಚು ಸುಲಭವಾಗಿ ನಡೆಸಬಲ್ಲರು, ಮತ್ತು ಆಮೇಲೆ ಅದನ್ನು ತಮ್ಮ ಎರಡನೆಯ ಭಾಷೆಗೂ ಸುಲಭವಾಗಿ ವರ್ಗಾಯಿಸಬಲ್ಲರು. ಇಂಗ್ಲಿಷ್ ಭಾಷೆ ಯನ್ನು ಶಿಕ್ಷಣಮಾಧ್ಯಮವಾಗಿ ಬಳಸುತ್ತಿರುವ ಮಕ್ಕಳಿಗೆ ಇಂತಹ ತಾಯ್ನುಡಿಯ ನೆರವು ದೊರಕುವುದಿಲ್ಲವಾದ ಕಾರಣ, ಅವರಿಗೆ ತಮ್ಮ ಕಲಿಕೆಯ ಎರಡನೇ ಹಂತವನ್ನು ತಲಪುವಲ್ಲಿ ತುಂಬಾ ತೊಂದರೆಯಾಗುತ್ತದೆ.

ಹಾಗಾಗಿ, ಮೊದಲಿಗೆ ಕನ್ನಡವನ್ನೇ ಶಿಕ್ಷಣಮಾಧ್ಯಮವಾಗಿ ಬಳಸಿ, ಆಮೇಲೆ ಹೈಸ್ಕೂಲಿನಲ್ಲಿ, ಇಲ್ಲವೇ ಮುಂದೆ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಬಳಸುವ ಮಕ್ಕಳು ಆ ಭಾಷೆಯಲ್ಲಿ ಎರಡನೇ ಹಂತವನ್ನು ತಲಪುವಲ್ಲಿ ಸುರುವಿನಿಂದಲೂ ಅದಕ್ಕಾಗಿ ಇಂಗ್ಲಿಷ್ ಭಾಷೆಯನ್ನೇ ಬಳಸುವ ಮಕ್ಕಳಿಗಿಂತ ಮುಂದೆ ಹೋಗುತ್ತಾರೆ.

೨.೯ ಗಂಟೆಗೆಷ್ಟು ಪುಟ ಓದಬಲ್ಲಿರಿ?

ಓದುವುದರಲ್ಲಿ ಬರಿಯ ವೇಗಕ್ಕೆ ಅಂತಹ ಮಹತ್ವವೇನೂ ಇಲ್ಲ. ಓದಿದ್ದನ್ನು ಸರಿ ಯಾಗಿ ಅರ್ಥಮಾಡಿಕೊಳ್ಳುವುದು, ಯಾವ ಮಾತು ಸರಿ, ಯಾವುದು ತಪ್ಪು ಎಂದು ನಿರ್ಧರಿಸಿಕೊಳ್ಳುವುದು, ಮತ್ತು ಬರಹದ ಅಂದವನ್ನು ಮನಗಂಡು ಆನಂದಿಸುವುದು - ಇವೆಲ್ಲವೂ ಓದಿನಿಂದ ಮನುಷ್ಯನು ಪಡೆದುಕೊಳ್ಳಬಹು ದಾದ ಮಹತ್ವದ ಅಂಶಗಳು.

ಆದರೂ, ಇವೆಲ್ಲಾ ಕಾರ್ಯಗಳಿಗೆ ಮೂಲಾಧಾರವಾದ ಓದುವಿಕೆಯೆಂಬ ಯಾಂತ್ರಿಕ ಕೆಲಸವೊಂದಿದೆಯಲ್ಲ, ಪುಟಗಳ ಮೇಲೆ ಬರೆದುದನ್ನು ಇಲ್ಲವೇ

೮೪


ಗಂಟೆಗಟ್ಟೆಷ್ಟು ಪುಟ ಓದಬಲ್ಲಿರಿ?

ಮುದ್ರಿಸಿದುದನ್ನು ಕಣ್ಣಿನಿಂದ ನೋಡಿ ಮಾತುಗಳಾಗಿ ಇಲ್ಲವೇ ಮಾತುಗಳ ಅರ್ಥ ಗಳಾಗಿ ಪರಿವರ್ತಿಸಿಕೊಳ್ಳುವಂತಹ ಈ ಕೆಲಸವನ್ನು ತ್ವರೆಗೊಳಿಸಿದಷ್ಟೂ ನಮ್ಮ ಓದುವಿಕೆಯ ವೇಗ ಜಾಸ್ತಿಯಾಗಿಯೇ ಆಗುತ್ತದೆ, ಮತ್ತು ಅಂತಹ ವೇಗದಿಂದ ನಮ್ಮ ಸಮಯದ ಉಳಿತಾಯವೂ ಆಗುತ್ತದೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಹಾಗಾಗಿ, ಓದುವಿಕೆಯೆಂಬ ಈ ಯಾಂತ್ರಿಕ ಕೆಲಸವನ್ನು ತ್ವರೆಗೊಳಿಸು ವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಮಾನ ಓದು

ಆಲೋಚನೆಯ ಇಲ್ಲವೇ ಕಲ್ಪನೆಯ ವೇಗವೆಷ್ಟಿರುವುದೋ ಅಷ್ಟೇ ವೇಗವಾಗಿ ಓದುವಿಕೆಯೂ ಸಾಗಬಲ್ಲುದಾದರೆ, ಅದನ್ನು ಅತ್ಯುತ್ತಮವಾದ ಓದುವಿಕೆಯೆಂದು ಕರೆಯಬಹುದು. ಆದರೆ, ಬರಹದಲ್ಲಿರುವುದನ್ನು ನೋಡಿ ಗ್ರಹಿಸಿಕೊಳ್ಳಲು ಕಣ್ಣಿಗೆ ಸ್ವಲ್ಪವಾದರೂ ಸಮಯ ತಗಲುವುದಾದ್ದರಿಂದ ಓದುವಿಕೆಯ ವೇಗ ಆಲೋ ಚನೆಯ ವೇಗಕ್ಕಿಂತ ಅಷ್ಟರ ಮಟ್ಟಿಗಾದರೂ ಕಡಿಮೆಯಾಗಿಯೇ ಆಗುತ್ತದೆ.

ಮಿನಿಟಿಗೆ ಒಂದು ಸಾವಿರ ಪದಗಳ ವರೆಗೂ ಕಣ್ಣು ಗ್ರಹಿಸಿಕೊಳ್ಳಬಹುದು. ಆದರೆ, ಹೀಗೆ ಕಣ್ಣು ಗ್ರಹಿಸಿಕೊಂಡುದನ್ನು ಅರ್ಥಮಾಡಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಹಿಡಿಯುತ್ತದೆ. ಹಾಗಾಗಿ, ಅತ್ಯಂತ ವೇಗವಾಗಿ ಓದುವವರೂ ಮಿನಿಟಿಗೆ ಆರುನೂರು-ಏಳುನೂರಕ್ಕಿಂತ ಜಾಸ್ತಿ ಪದಗಳನ್ನು ಓದಿ ಗ್ರಹಿಸಿಕೊಳ್ಳಲಾರರು.

ಮೌನವಾಗಿ ಓದುವವರು ಪದಗಳನ್ನು ಒಂದೊಂದಾಗಿ ಉಚ್ಚರಿಸಿ ಓದು ವವರಿಗಿಂತ ಹೆಚ್ಚು ಶೀಘ್ರವಾಗಿ ಓದಬಲ್ಲರೆಂಬುದು ಇದರಿಂದ ವ್ಯಕ್ತವಾಗುತ್ತದೆ. ನಿಜಕ್ಕೂ ಬಹಳ ವೇಗವಾಗಿ ಓದುವವರು ವಾಕ್ಯಗಳಲ್ಲಿ ಬರುವ ಪದಗಳನ್ನು ಮತ್ತು ಅಕ್ಷರಗಳನ್ನು ಬೇರೆ ಬೇರಾಗಿ ಗಮನಿಸಿಕೊಳ್ಳಲು ಹೋಗದೆ ಒಟ್ಟೊಟ್ಟಾಗಿ ಓದಲು ಕಲಿತಿರುತ್ತಾರೆ. ಅತಿ ಪರಿಚಿತವಾದ ಪದಗಳನ್ನು ಅವುಗಳ ಕೆಲವೇ ಕೆಲವು ವಿಶಿಷ್ಟವಾದ ಅಂಶಗಳಿಂದ (ಉದಾ: ತಲೆಕೊಟ್ಟು, ಒತ್ತಕ್ಷರ ಮೊದಲಾ ದವುಗಳಿಂದ) ಮಾತ್ರವೇ ಊಹಿಸಿಕೊಳ್ಳುವ ಅಭ್ಯಾಸ ಇವರಿಗಿರುತ್ತದೆ.

ಗಟ್ಟಿಯಾಗಿ ಓದುವವರೂ ಇಂತಹ ವಿಶಿಷ್ಟವಾದ ಅಂಶಗಳಿಂದ ಪದಗಳ ಇರವನ್ನು ಊಹಿಸಿಕೊಳ್ಳಬಲ್ಲರು. ಆದರೆ, ಆ ಪದಗಳನ್ನು ಅವರು ಬೇರೆ ಬೇರಾಗಿ ಉಚ್ಚರಿಸಬೇಕಾಗುತ್ತದೆ. ಹಾಗಾಗಿ, ಅವರ ಓದಿನ ವೇಗ ಅಷ್ಟರಮಟ್ಟಿಗೆ ಕುಂಠಿತವಾಗುತ್ತದೆ.

ಗಟ್ಟಿಯಾಗಿ ಓದುವವರ ಕಣ್ಣು ಯಾವಾಗಲೂ ಅವರು ಓದುತ್ತಿರುವ ಪದಕ್ಕಿಂತ ಮುಂದೆಯೇ ಇರುವುದೆಂಬುದನ್ನು ಗಮನಿಸಬಹುದು. ಕಣ್ಣಿಗಿರುವಷ್ಟು ವೇಗ ನಾಲಿಗೆಗಿಲ್ಲವಾದ ಕಾರಣ, ಅವರ ಓದಿನ ವೇಗ ನಾಲಿಗೆಯ ವೇಗದಲ್ಲೇ ಉಳಿಯುತ್ತದೆ.

೮೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಬರಹದ ಯೋಗ್ಯತೆ

ಉತ್ತಮ ಓದುಗಾರನಿಗೆ ತನ್ನ ಓದಿನ ವೇಗವನ್ನು ಸನ್ನಿವೇಶಕ್ಕನುಸಾರವಾಗಿ ಹೆಚ್ಚು ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯವಿರಬೇಕು. ಅತೀ ಉತ್ತಮ ದರ್ಜೆಯ ಬರಹಗಳನ್ನೋದುವಾಗ, ಆತನು ಅದರಲ್ಲಿ ಬರುವ ಪ್ರತಿಯೊಂದು ಹೇಳಿಕೆ ಯನ್ನೂ ತೂಗಿನೋಡಿ, ಅದರ ಸಾರಾಸಾರಗಳನ್ನು ವಿಚಾರಿಸುತ್ತ ಮುಂದುವರಿಯ ಬೇಕಾಗುತ್ತದೆ. ಹಾಗಾಗಿ, ಅಂತಹ ಬರಹಗಳನ್ನೋದಲು ಆತನಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಬರಹದ ದರ್ಜೆ ಕೆಳಗಾದಂತೆಲ್ಲ ಆತನ ಓದುವಿಕೆಯ ವೇಗ ಹೆಚ್ಚುತ್ತಾ ಹೋಗುತ್ತದೆ.

ತಮ್ಮ ಓದುವಿಕೆಯನ್ನು ಉತ್ತಮಗೊಳಿಸಬೇಕೆಂದು ಇರುವವರು ಈ ರೀತಿ ಬರಹದ ಯೋಗ್ಯತೆಯನ್ನನುಸರಿಸಿ ತಮ್ಮ ಓದಿನ ವೇಗವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಲು ಕಲಿಯಬೇಕು. ಎಲ್ಲಾ ರೀತಿಯ ಬರಹಗಳನ್ನೂ ಒಂದೇ ವೇಗದಿಂದ, ಒಂದಕ್ಷರವನ್ನೂ ಬಿಡದೆ, ಓದುವವರು ತಮ್ಮ ಸಮಯವನ್ನು ಬಹಳಷ್ಟು ಹಾಳು ಮಾಡಿಕೊಳ್ಳುತ್ತಿರುತ್ತಾರೆಂಬುದು ಸ್ಪಷ್ಟ.

ಓದಿನ ಉದ್ದೇಶ

ಬರಹದ ಯೋಗ್ಯತೆಯನ್ನನುಸರಿಸಿ ಮಾತ್ರವಲ್ಲ, ಓದುವುದರಲ್ಲಿ ತಮ್ಮ ಉದ್ದೇಶ ವೇನೆಂಬುದನ್ನು ಅನುಸರಿಸಿಯೂ ಓದಿನ ವೇಗವನ್ನು ಹೆಚ್ಚು ಕಡಿಮೆ ಮಾಡಿ ಕೊಳ್ಳಲು ಕಲಿಯುವುದು ಅವಶ್ಯ. ಒಂದು ಪುಟವನ್ನು ಮೇಲಿನಿಂದ ಮೇಲೆ ನೋಡಿಯೇ ಅದರಲ್ಲಿ ನಾವು ಅರಸುತ್ತಿರುವ ವಿಷಯವಿರಬಹುದೇ ಅಥವಾ ಇಲ್ಲವೇ ಎಂಬುದನ್ನು ಊಹಿಸಿಕೊಳ್ಳಲು, ಮತ್ತು ಬೇಡವಾಗಿರುವ ಪುಟಗಳನ್ನು ಹಾಗೆಯೇ ಬಿಟ್ಟು ಓದನ್ನು ಮುಂದುವರಿಸಲು ಅಭ್ಯಾಸ ಮಾಡಬೇಕು. ಪುಸ್ತಕ ದಲ್ಲಿರುವ ಪರಿವಿಡಿ, ವಿಷಯಸೂಚಿ, ಮೊದಲಾದವುಗಳ ಸಹಾಯದಿಂದ ನಮಗೆ ಬೇಕಾಗಿರುವ ಅಂಶ ಇಂತಹದೇ ಜಾಗದಲ್ಲಿದೆಯೆಂಬುದನ್ನು ಅರಿತುಕೊಳ್ಳಲು ಕಲಿಯಬೇಕು.

ಪುಸ್ತಕದಲ್ಲಿ ಬರೆದಿರುವುದೆಲ್ಲವೂ ವೇದವಾಕ್ಯವೆಂದು ಲೇಖಕನ ಹೇಳಿಕೆ ಗಳನ್ನೆಲ್ಲ ಹಾಗೆಯೇ ಗಿಳಿಪಾಠ ಮಾಡಿಕೊಳ್ಳುವುದು ಬಹಳ ಮಂದಿ ವಿದ್ಯಾರ್ಥಿ ಗಳಲ್ಲಿ ಮತ್ತು ಇತರ ಓದುಗರಲ್ಲಿ ತೋರಿಬರುವ ಇನ್ನೊಂದು ಕೊರತೆಯಾಗಿದೆ. ಹೇಳಿಕೆಗಳ ಸತ್ಯಾಸತ್ಯತೆಗಳನ್ನು ವಿಚಾರಿಸಿ ನೋಡುವಂತೆ, ಬರಹದಲ್ಲಿ ಕಾಣಿಸುವ ವಿಷಯಗಳನ್ನೂ ಹಾಗೆಯೇ ಸ್ವೀಕರಿಸದೆ, ಅವನ್ನು ವಿಮರ್ಶಿಸುವ ಅಭ್ಯಾಸವನ್ನು ಬೆಳೆಸಬೇಕು. ಓದುವಿಕೆ ನಮ್ಮ ಆಲೋಚನೆಯನ್ನು ಕೆರಳಿಸುತ್ತಿರಬೇಕು.

ಆದರೆ, ಈ ಆಲೋಚನೆ ಸಂದರ್ಭದ ಹಿಡಿತದಲ್ಲಿರಬೇಕು. ಎಲ್ಲೆಲ್ಲೋ ಅಲೆಯುತ್ತ ಹೋಗಬಾರದು. ಕೆಲವರು ಓದುವಾಗ, ಒಂದೊಂದು ಪದವೂ ಅವರ ನೆನಪಿನಲ್ಲಿರುವ ಯಾವ ಯಾವುದೋ ಹಳೆಯ ಅನುಭವಗಳನ್ನು ಹೊರ ತರುತ್ತಿರುತ್ತದೆ, ಮತ್ತು ಅವರ ಕಣ್ಣು ಗೆರೆಯಿಂದ ಗೆರೆಗೆ ಬರಹವನ್ನೋದುತ್ತ

೮೬


ಗಂಟೆಗೆಷ್ಟು ಪುಟ ಓದಬಲ್ಲಿರಿ?

ಸಾಗುವುದಾದರೂ, ಮನಸ್ಸು ಮಾತ್ರ ಇನ್ನೆಲ್ಲೋ ಅಲೆದಾಡುತ್ತಿರುತ್ತದೆ. ಇಂತಹ ಓದುವಿಕೆಯಿಂದ ಓದುಗನಿಗೆ ಆನಂದ ಸಿಗಬಹುದಾದರೂ ಅದರ ನಿಜವಾದ ಉದ್ದೇಶ ಮಾತ್ರ ಸಿದ್ಧಿಸಲಾರದು.

ಓದಿನ ಸಾಮರ್ಥ್ಯ

ಆಲೋಚನಾ ಸಾಮರ್ಥ್ಯದಂತೆ ಓದುವ ಸಾಮರ್ಥ್ಯವೂ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುತ್ತದೆ. ಪ್ರಯತ್ನಪಟ್ಟಲ್ಲಿ ಪ್ರತಿಯೊಬ್ಬನೂ ತನ್ನಲ್ಲಿರುವ ಈ ಸಾಮರ್ಥ್ಯವನ್ನು ಒಂದು ನಿಶ್ಚಿತವಾದ ಮಟ್ಟದವರೆಗೆ ಏರಿಸಬಲ್ಲನು. ತಾನು ತಲಪಬಹುದಾದ ಓದಿನ ವೇಗ ಎಂತಹದೆಂಬುದನ್ನು ತಿಳಿದುಕೊಂಡು, ಅದನ್ನು ಪಡೆಯಲು ಪ್ರತಿಯೊಬ್ಬನೂ ಪ್ರಯತ್ನಿಸುವುದು ಅವಶ್ಯ.

ಸಾಮಾನ್ಯವಾಗಿ ಬುದ್ಧಿವಂತರಾದ ಓದುಗರೆಲ್ಲ ತಾವು ತಲಪಬಹುದಾದ ಓದಿನ ವೇಗಕ್ಕಿಂತ ಬಹಳ ಕಡಿಮೆ ವೇಗದಲ್ಲೇನೇ ಓದುತ್ತಿರುವರೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಉದಾಹರಣೆಗಾಗಿ, ಗಣಿತ, ವಿಜ್ಞಾನ ಮೊದಲಾದ ವಿಷಯಗಳಲ್ಲಿ ಜಾಸ್ತಿ ಅಂಕಗಳನ್ನು ಪಡೆಯಬಲ್ಲ ವಿದ್ಯಾರ್ಥಿ ಕನ್ನಡ, ಇಂಗ್ಲಿಷ್ ಮೊದಲಾದವುಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯು ತಿರುವನಾದರೆ, ಅವನಿಗೆ ಸರಿಯಾಗಿ ಓದಲು ಬಾರದಿರುವುದೇ ಇದಕ್ಕೆ ಮುಖ್ಯ ಕಾರಣವಿರಬಹುದು. ಕನ್ನಡ ಇಲ್ಲವೇ ಇಂಗ್ಲಿಷ್ ಬರಹಗಳ ಓದು ಅವನ ಬುದ್ದಿಯ ಓಟಕ್ಕೆ ಸರಿಯಾಗಿ ಓಡದೆ, ಅವನಿಗೆ ಓದಿನಲ್ಲಿ ಬೇಸರ ಬಂದಿರಲೂ ಸಾಧ್ಯವಿದೆ.

ಯಾಂತ್ರಿಕ ಉಪಕರಣಗಳು

ಓದುವಿಕೆಯ ವೇಗವನ್ನು ಮತ್ತು ಕ್ರಮವನ್ನು ಅಭಿವೃದ್ಧಿಗೊಳಿಸಲು ಹಲವು ಬಗೆಯ ವಿಧಾನಗಳನ್ನು ಕಂಡುಹಿಡಿಯಲಾಗಿದೆ. ಇದಕ್ಕಾಗಿ ಕೆಲವು ಯಾಂತ್ರಿಕ ಉಪಕರಣಗಳನ್ನೂ ಬಳಸಬಹುದು. ಉದಾಹರಣೆಗಾಗಿ, ಟೆಕಿಸ್ಟೊಸ್ಕೋಪ್ ಎಂಬ ಉಪಕರಣವು ಒಂದು ನಿಶ್ಚಿತ ವೇಗದಲ್ಲಿ ಓದಬೇಕಾದ ಬರಹ ಒಂದು ಪರದೆಯ ಮೇಲೆ ಬೀಳುತ್ತಿರುವಂತೆ ಮಾಡುತ್ತದೆ. ಈ ವೇಗವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ, ಓದುಗನು ಜೋರು ಜೋರಾಗಿ ಓದುವಂತೆ ಮಾಡಲು ಸಾಧ್ಯವಿದೆ. ಪದಗಳನ್ನು ಒಂದೊಂದಾಗಿ ಓದುವ ಬದಲು ಅರ್ಥ ಘಟಕಗಳಾಗಿರುವ ಪದಸಮೂಹಗಳನ್ನು ಒಟ್ಟೊಟ್ಟಾಗಿ ಗ್ರಹಿಸುವಂತೆ ಪ್ರೇರೇಪಿಸಲೂ ಕೂಡ ಈ ಉಪಕರಣವನ್ನು ಬಳಸ ಬಹುದು.

ಯಾಂತ್ರಿಕ ಉಪಕರಣಗಳ ಸಹಾಯವಿಲ್ಲದಿದ್ದರೂ ಸ್ವಪ್ರಯತ್ನದಿಂದಲೇ ನಮ್ಮ ಓದಿನ ವೇಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ವಯಸ್ಕರೂ ಪ್ರಯತ್ನಿಸಿದಲ್ಲಿ ಸಫಲರಾಗ ಬಲ್ಲರೆಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.

೮೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಓದುತ್ತಿರುವ ವಿಷಯದಲ್ಲೇ ಉಳಿದಿರುವಂತೆ ಮನಸ್ಸನ್ನು ಹಿಡಿತದಲ್ಲಿಟ್ಟು ಕೊಳ್ಳುವುದು, ಮೌನವಾಗಿ ಮತ್ತು ವೇಗವಾಗಿ ಓದಲು ಕಲಿಯುವುದು, ಒಂದು ಪಾರಾದಲ್ಲಿ ಹೇಳಿರುವಂತಹ ವಿಷಯವನ್ನು ಅದರ ಮೊದಲಿನ ಒಂದೆರಡು ವಾಕ್ಯ ಗಳಿಂದಲೇ ಊಹಿಸಲು ಯತ್ನಿಸುವುದು - ಇಂತಹ ಹಲವು ಬಗೆಯ ಅಭ್ಯಾಸ ಗಳ ಮೂಲಕ ಓದುವಿಕೆಯನ್ನು ಅಭಿವೃದ್ಧಿ ಗೊಳಿಸಲು ಸಾಧ್ಯವಿದೆ.

೨.೧೦ ಓದಲು ಬಂದರೂ ಓದುವುದಿಲ್ಲವೇಕೆ?

ಇಂದಿನ ವಿದ್ಯಾರ್ಥಿಗಳು ಓದಿನಲ್ಲಿ ಜಾಸ್ತಿ ಆಸಕ್ತಿ ವಹಿಸುತ್ತಿಲ್ಲ, ಒತ್ತಾಯಕ್ಕಾಗಿ ಪಠ್ಯಪುಸ್ತಕಗಳನ್ನು ಕೊಂಡುಕೊಂಡಿದ್ದರೂ ಅವನ್ನೆಲ್ಲ ಓದಲು ಹೋಗದೆ ಬರಿಯ ಮಾರ್ಗದರ್ಶಕಗಳಿಂದಲೇ ಪರೀಕ್ಷೆಗೆ ಬೇಕಾಗುವಷ್ಟು ಉತ್ತರಗಳನ್ನು ಬಾಯಿ ಪಾಠ ಮಾಡಿಕೊಂಡು ಅಷ್ಟರಿಂದಲೇ ತೃಪ್ತರಾಗಿರುತ್ತಾರೆಂಬ ಮಾತು ಆಗಾಗ ಕೇಳಿಬರುತ್ತದೆ. ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ, ವಯಸ್ಕರಲ್ಲೂ ಓದಿನ ಬಗ್ಗೆ ಈ ರೀತಿಯ ಅಶ್ರದ್ಧೆ ತೋರಿಬರುತ್ತಿದೆ. ಪಠ್ಯಪುಸ್ತಕಗಳನ್ನು ಬಿಟ್ಟು ಬೇರಾವ ಪುಸ್ತಕ ಗಳನ್ನು ಪ್ರಕಟಿಸಹೊರಟರೂ ಪ್ರಕಾಶಕರ ಕೈ ಸುಟ್ಟು ಹೋಗುತ್ತಿರುವುದು ಇದ ಕ್ಕೊಂದು ಉತ್ತಮ ನಿದರ್ಶನ.

ನಮ್ಮಲ್ಲಿ ದಿವಸದಿಂದ ದಿವಸಕ್ಕೆ ಶಾಲೆಗಳ ಸಂಖ್ಯೆ ಜಾಸ್ತಿಯಾಗುತ್ತಿದೆ, ಮತ್ತು ಈ ಶಾಲೆಗಳಲ್ಲಿ ‘ಓದಲು-ಬರೆಯಲು’ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇದರಿಂದಾಗಿ ನಮ್ಮಲ್ಲಿರುವ ಅಕ್ಷರಸ್ಥರ ಸಂಖ್ಯೆ ಯೇನೋ ಹೆಚ್ಚುತ್ತಿದೆ; ಆದರೆ, ನಿಜಕ್ಕೂ ಈ ಅಕ್ಷರ ಕಲಿತ ಮಂದಿಯನ್ನು ಅಕ್ಷರಸ್ಥರೆಂದು ಕರೆಯಲು ಸಾಧ್ಯವೇ ಎಂಬುದನ್ನು ಯೋಚಿಸುವುದು ಅವಶ್ಯ.

ತಾವು ಕಲಿತ ಅಕ್ಷರವನ್ನು ತಮ್ಮ ಹಿತಕ್ಕಾಗಿ ಇಲ್ಲವೇ ಆನಂದಕ್ಕಾಗಿ ಇವರು ಬಳಸುತ್ತಿಲ್ಲವಾದರೆ, ಅಕ್ಷರ ಕಲಿತ ಇವರಿಗೂ ಇತರ ಅನಕ್ಷರಸ್ಥರಿಗೂ ಏನು ಭೇದ ಸಿದ್ಧಿಸಿದ ಹಾಗಾಯಿತು? ಓದು ಕಲಿಸುವುದಕ್ಕಿಂತಲೂ ಕಲಿತ ಓದಿನಲ್ಲಿ ಅಭಿರುಚಿ ಮತ್ತು ಆಸಕ್ತಿ ಹುಟ್ಟುವಂತೆ ಮಾಡುವುದೇ ಅತಿ ಮುಖ್ಯವಾದ ಕೆಲಸ ವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಓದಿನ ಉದ್ದೇಶ

ಕಾಳಿದಾಸನ ಇಲ್ಲವೇ ಭಾಸನ ಕೃತಿಗಳನ್ನು ಓದಬೇಕೆಂದು ಸಂಸ್ಕೃತ ಕಲಿಯು ವವರಿಗೆ, ಇಲ್ಲವೇ ಶೇಕ್ಸ್‌ಪಿಯರ್ ಓದಬೇಕೆಂದು ಇಂಗ್ಲಿಷ್ ಕಲಿಯುವವರಿಗೆ, ಮುಂದೆ ಆ ಓದಿನ ಉಪಯೋಗವನ್ನು ಹೇಗೆ ಮಾಡಿಕೊಳ್ಳಬಹುದೆಂಬುದನ್ನು ಯಾರೂ ತಿಳಿಸಿಕೊಡಬೇಕಾಗಿಲ್ಲ. ಆದರೆ, ನಮ್ಮಲ್ಲಿ ಹೆಚ್ಚಿನವರಿಗೂ ಓದು

೮೮


ಓದಲು ಬಂದರೂ ಓದುವುದಿಲ್ಲವೇಕೆ?

ಕಲಿಯುವುದರಲ್ಲಿ, ಇಲ್ಲವೇ ಭಾಷೆ ಕಲಿಯುವುದರಲ್ಲಿ ಇಂತಹ ನೇರವಾದ ಉದ್ದೇಶವೇನೂ ಇರುವುದಿಲ್ಲ.

ಎಸ್.ಎಸ್.ಎಲ್.ಸಿ.ಯಲ್ಲಿ ಸರಾಸರಿ ಜಾಸ್ತಿ ಸಿಗಬೇಕೆಂದು ಹಿಂದೀ ಕ್ಲಾಸಿಗೆ ಸೇರುವವರಿಗೆ, ಇಲ್ಲವೇ ಮಾರ್ಕು ಹೆಚ್ಚು ಸಿಗಬೇಕೆಂದು ಕನ್ನಡ ಬಿಟ್ಟು ಸಂಸ್ಕೃತ ವನ್ನರಸುವವರಿಗೆ ಕಾಳಿದಾಸನಾದರೇನು ಬೇರೊಬ್ಬನಾದರೇನು? ಕಲಿಯುವಿಕೆಯ ಉದ್ದೇಶ ಈ ರೀತಿ ತಿರುವು ಮುರುವಾಗಿರುವುದೇ ಕಲಿತ ವಿಷಯದ ಮೇಲೆ ನಮ್ಮಲ್ಲಿ ಬೆಳೆದು ಬರುತ್ತಿರುವ ಈ ಅನಾಸ್ಥೆಯ ಮೂಲ.

ಅದ್ಭುತ ರಮ್ಯ ಕಾದಂಬರಿಗಳನ್ನೋದಿ ಮನಸ್ಸನ್ನು ತಣಿಸಿಕೊಂಡವರಿಗೆ, ಇಲ್ಲವೇ ವಿಚಾರಪೂರ್ಣ ಲೇಖನಗಳನ್ನೋದಿ ಬುದ್ಧಿಯನ್ನು ಹರಿತ ಮಾಡಿ ಕೊಂಡವರಿಗೆ ಹೊಸ ಹೊಸ ಪುಸ್ತಕಗಳನ್ನು ಕೊಂಡುಕೊಂಡೋ, ಎರವಲು ಪಡೆದೋ ಓದಬೇಕೆಂದು ಯಾರೂ ಒತ್ತಾಯ ಮಾಡಬೇಕಾಗಿಲ್ಲ.

ಆದರೆ, ಇಂತಹ ಪುಸ್ತಕಗಳ ಇಲ್ಲವೇ ಲೇಖನಗಳ ರುಚಿಯನ್ನೇ ನೋಡಿರ ದಂತಹ ಸಾಮಾನ್ಯ ಓದುಗರಿಗೆ ಅವುಗಳಲ್ಲಿ ಆಸಕ್ತಿ ಹುಟ್ಟಬೇಕಾದರೆ, ಅದಕ್ಕಾಗಿ ಯಾರಾದರೂ ಪ್ರಯತ್ನ ಇಲ್ಲವೇ ಒತ್ತಾಯ ಮಾಡಲೇಬೇಕಲ್ಲ? ಈ ಕೆಲಸವನ್ನು ಮಾಡಲು ಅತಿ ಉತ್ತಮ ಸ್ಥಳವೆಂದರೆ ಮಕ್ಕಳಿಗೆ ಓದು ಕಲಿಸುತ್ತಿರುವಂತಹ ಶಾಲೆಗಳೇ ಎಂಬುದನ್ನು ಮಾತ್ರ ಹೆಚ್ಚಿನವರೂ ಗಮನಿಸಿದಂತಿಲ್ಲ.

ಓದಿನ ಸನ್ನಿವೇಶ

ಮನೆಯಲ್ಲಿ ವಯಸ್ಕರು ದಿನಾಲೂ ಪುಸ್ತಕಗಳನ್ನೋ ಪತ್ರಿಕೆಗಳನ್ನೂ ಓದುತ್ತಿರು ವರಾದರೆ, ಅಂತಹ ಸನ್ನಿವೇಶದಲ್ಲಿ ಬೆಳೆಯುವ ಮಕ್ಕಳು ತಾವಾಗಿಯೇ ಓದಿನಲ್ಲಿ ಆಸಕ್ತಿ ತೋರಿಸಬಹುದು. ಅಂತಹ ಆಸಕ್ತಿಯನ್ನು ಗಮನಿಸಿ, ಅವರಿಗೆ ರುಚಿಸು ವಂತಹ ಓದಿನ ಸಾಮಗ್ರಿಯನ್ನು ಒದಗಿಸಿ ಕೊಟ್ಟಲ್ಲಿ, ಆ ಆಸಕ್ತಿ ತಾನಾಗಿಯೇ ಬೆಳೆದುಕೊಳ್ಳುತ್ತದೆ.

ಆದರೆ, ಇವತ್ತು ಹೆಚ್ಚಿನ ವಿದ್ಯಾರ್ಥಿಗಳೂ ಇಂತಹ ಓದಿನ ಸನ್ನಿವೇಶ ಲವಲೇಶವೂ ಇಲ್ಲದಂತಹ ಮನೆಗಳಲ್ಲೇ ಬೆಳೆಯುತ್ತಿದ್ದಾರೆ; ಹಾಗಾಗಿ, ಅವರಿಗೆ ಓದನ್ನು ಮಾತ್ರವಲ್ಲ, ಓದಿನ ರುಚಿಯನ್ನೂ ಕಲಿಸಿಕೊಡುವಂತಹ ಜವಾಬ್ದಾರಿ ಸಂಪೂರ್ಣವಾಗಿ ನಮ್ಮ ಶಾಲೆಗಳ ಮೇಲೆ ಬಿದ್ದಿರುತ್ತದೆ.

ನಮ್ಮ ಶಾಲೆಗಳು ಮಾತ್ರ, ಈ ಪ್ರಾಮುಖ್ಯವಾದ ಕೆಲಸದ ಕಡೆಗೆ ಸ್ವಲ್ಪವೂ ಗಮನವಿತ್ತಂತಿಲ್ಲ. ಓದನ್ನು ಕಲಿಯುತ್ತಿರುವಾಗಲಾಗಲಿ, ಕಲಿತು ಮುಗಿಸಿದಾಗ ಲಾಗಲಿ, ಈ ಮಕ್ಕಳಲ್ಲಿ ಹೆಚ್ಚಿನವರಿಗೂ ಪುಸ್ತಕಗಳನ್ನು ಕಂಡರೇನೇ ತಲೆನೋವು ಬರುತ್ತದೆ. ಇದಕ್ಕೆ ಈ ವಿದ್ಯಾರ್ಥಿಗಳನ್ನು ದೂರಿ ಫಲವಿಲ್ಲ.

ಸ್ವಾಭಾವಿಕವಾಗಿ ಅವರಲ್ಲಿ ಮೂಡಿಬರುವ ಆಸಕ್ತಿಯನ್ನು ಚಿಕ್ಕಂದಿನಲ್ಲೇನೇ ಮುರಿದು ಹಾಕುವ ಅವರ ಅಧ್ಯಾಪಕರನ್ನೇ ದೂರಬೇಕು. ಕತೆ ಕಾದಂಬರಿಗಳ

೮೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ನೋದಿ ಸಮಯ ಹಾಳುಮಾಡಬೇಡಿರಿ, ಪಠ್ಯಪುಸ್ತಕಗಳನ್ನು ಮಾತ್ರವೇ ಓದಿರಿ ಎಂದು ಉಪದೇಶ ಮಾಡುವ ಈ ಮಹಾತ್ಮರನ್ನು ಬೇರೇನನ್ನ ಬೇಕು?

ಓದಿನ ಫಲ - ಮನೋರಂಜನೆ

ಪುಸ್ತಕಗಳ ಮೂಲಕ, ಇಲ್ಲವೇ ಪತ್ರಿಕೆಗಳ ಮೂಲಕ ಬೇರೆ ಬೇರೆ ವಿಷಯಗಳ ನ್ನರಿತುಕೊಳ್ಳಲು ಸಾಧ್ಯವಾಗುವುದೆಂಬುದೇನೋ ನಿಜ. ಆದರೆ, ಪುಸ್ತಕಗಳು ಇರು ವುದೇ ಈ ‘ಒಣ’ ಉದ್ದೇಶಕ್ಕಾಗಿ ಎಂಬ ಭಾವನೆ ಮಕ್ಕಳಲ್ಲಿ ಬೇರೂರಿತೆಂದರೆ, ಅವು ಮಾಡುವ ಇನ್ನೊಂದು ಅಷ್ಟೇ ಮುಖ್ಯವಾದ ಕಾರ್ಯಕ್ಕೆ ಸಂದರ್ಭವೇ ದೊರಕದಂತಾಗುತ್ತದೆ.

ಚಲಚ್ಚಿತ್ರ, ನಾಟಕ ಮೊದಲಾದುವನ್ನು ನೋಡಿ ಸಂತೋಷಪಡುವಂತೆ, ಪುಸ್ತಕಗಳನ್ನು ಓದಿಯೂ ಮನುಷ್ಯನು ಸಂತೋಷಪಡಬಲ್ಲನು ಎಂಬುದನ್ನು ಈ ರುಚಿಯನ್ನು ಸವಿದ ಮತ್ತು ಸವಿಯುತ್ತಿರುವ ನಾವೆಲ್ಲರೂ ಬಲ್ಲೆವು. ಆದರೆ, ಜನ ಸಾಮಾನ್ಯರಿಗೆ ಈ ರುಚಿಯ ಅರಿವು ಸ್ವಲ್ಪವೂ ಆದಂತಿಲ್ಲ. ಪಠ್ಯಪುಸ್ತಕಗಳನ್ನು ಹೊರತುಪಡಿಸಿ, ಬೇರೆ ಪುಸ್ತಕಗಳ ಮಾರಾಟ ಇವತ್ತು ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಿದಲ್ಲಿ ಇದು ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕಗಳ ರುಚಿಯನ್ನು ತೋರಿಸಿಕೊಡುವುದಕ್ಕಾಗಿ ನಮ್ಮ ಶಾಲೆಗಳು ನೇರವಾದ ಪ್ರಯತ್ನ ನಡೆಸಬೇಕು.

ಓದಿನಲ್ಲಿ ಅಭಿರುಚಿ ಹುಟ್ಟದೇ ಇರುವುದಕ್ಕೆ, ಇಲ್ಲವೇ ಮೂಡಿಬಂದ ಆಸಕ್ತಿ ಅಲ್ಲಿಗೇ ನಶಿಸಿ ಹೋಗುವುದಕ್ಕೆ ಹಲಕೆಲವು ವಿಷಯಗಳು ಕಾರಣಗಳಾಗ ಬಲ್ಲುವು. ಮನಸ್ಸಿಗೆ ಹಿಡಿಸುವಂತಹ ಪುಸ್ತಕವಾವುದೂ ಓದು ಕಲಿಯುತ್ತಿರುವ ಹುಡುಗರ ಕಣ್ಣಿಗೆ ಬೀಳಲಿಲ್ಲವೆಂಬುದೊಂದು; ಹಾಗೆ ಕಣ್ಣಿಗೆ ಬಿದ್ದರೂ ಅದರ ಲ್ಲಿರುವ ಕತೆಯನ್ನು ಆ ಕತೆಯ ಓಟಕ್ಕೆ ಹೊಂದಿಕೊಳ್ಳುವಂತೆ ಶೀಘ್ರವಾಗಿ ಓದುವ ಕ್ರಮ ಅವರಿಗೆ ಕರಗತವಾಗಿಲ್ಲವೆಂಬುದು ಇನ್ನೊಂದು; ಆ ಕತೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಆನಂದಿಸುವಷ್ಟು ಅವರ ಪದಸಂಪತ್ತು ಬೆಳೆದಿಲ್ಲವೆಂಬು ದಿನ್ನೊಂದು; ಅಂತಹ ಪುಸ್ತಕಗಳನ್ನು ಓದುವುದೇ ತಪ್ಪೆಂಬ ಭಾವನೆಯನ್ನು ಅವರಲ್ಲಿ ತಾಯಿತಂದೆಯರು ಇಲ್ಲವೇ ಅಧ್ಯಾಪಕರು ಮೂಡಿಸಿರುವರೆಂಬುದು ಮತ್ತೊಂದು.

ಇಂತಹ ಹಲವು ಕಾರಣಗಳಿಂದಾಗಿ, ಓದಲು ಬಂದರೂ ಓದದೇ ಇರು ವಂತಹ ಜನರ ಸಂಖ್ಯೆ ನಮ್ಮಲ್ಲಿ ಜಾಸ್ತಿಯಾಗಿದೆ. ಕಾಲೇಜಿನ ಹೊಸ್ತಿಲನ್ನು ದಾಟಿದರೂ, ತಮ್ಮ ಪಠ್ಯಪುಸ್ತಕ (ಇಲ್ಲವೇ ಅವುಗಳ ಮಾರ್ಗದರ್ಶಿಕೆ)ಗಳನ್ನು ಬಿಟ್ಟು ಬೇರೆ ಪುಸ್ತಕಗಳಲ್ಲಿ ಒಂದೇ ಒಂದನ್ನೂ ಸಂಪೂರ್ಣವಾಗಿ ಬುಡದಿಂದ ಕೊನೆಯ ವರೆಗೆ ಓದಿದ ಅನುಭವ ನಮ್ಮ ವಿದ್ಯಾರ್ಥಿಗಳಲ್ಲಿ ಬಹಳ ಮಂದಿಗಿಲ್ಲ. ಈ ವಿದ್ಯಾರ್ಥಿಗಳೆಲ್ಲ ತಮ್ಮ ಜೀವನದಲ್ಲಿ ಅತ್ಯಮೂಲ್ಯವಾದ ಒಂದು ಅನು ಭವಕ್ಕೆ ಹೊರತಾಗಿದ್ದಾರೆಂಬುದು ಬಹಳ ಬೇಸರದ ಸಂಗತಿ.

೬೦

ಓದಲು ಬಂದರೂ ಓದುವುದಿಲ್ಲ ಏಕೆ?

ಬೆಂಗಳೂರಿನಂತಹ ನಗರದಲ್ಲಿ ಹತ್ತು ಹದಿನೈದು ವರ್ಷ ವಾಸಿಸಿಯೂ ಒಂದೇ ಒಂದು ಚಲನಚಿತ್ರವನ್ನೂ ನೋಡದಿರುವ ಮಹನೀಯನೊಬ್ಬನಿದ್ದರೆ ಅವನನ್ನು ನೀವು ಏನೆಂದು ಕರೆಯಬಹುದೋ ಅದನ್ನೇ ಈ ಪುಸ್ತಕ ಓದದ ಮಹನೀಯರಿಗೂ ಅನ್ವಯಿಸಬಹುದು.

ಸಮಸ್ಯೆಗೆ ಪರಿಹಾರ

ಅಕ್ಷರ ಕಲಿತೂ ಅನಕ್ಷರಸ್ಥರಾಗಿಯೇ ಉಳಿಯುವಂತಹ ಈ ದುರವಸ್ಥೆಯನ್ನು ಹೋಗಲಾಡಿಸಲು ನಮ್ಮ ಶಿಕ್ಷಣತಜ್ಞರು ಮತ್ತು ಈ ವಿಷಯದಲ್ಲಿ ಆಸಕ್ತಿ ಯಿರುವ ಇತರ ಮಹನೀಯರು ಏನಾದರೂ ವ್ಯವಸ್ಥೆ ಮಾಡುವುದು ಅವಶ್ಯ. ಓದು ಕಲಿಯುತ್ತಿರುವ ಮಕ್ಕಳ ಮನಸ್ಸಿಗೆ ಹಿಡಿಯುವ, ಮತ್ತು ಅವರ ಓದಿನ ವೇಗಕ್ಕೆ ಹೊಂದಿಕೆಯಾಗುವ ಬೇರೆ ಬೇರೆ ಪುಸ್ತಕಗಳನ್ನಾರಿಸಿ, ಅಂದವಾಗಿ ಮುದ್ರಿಸಿ, ಆ ಮಕ್ಕಳ ಕೈಗೆ ಸುಲಭವಾಗಿ ಎಟಕುವಂತೆ ಮಾಡಬೇಕು; ಈ ಪುಸ್ತಕಗಳನ್ನು ಅವರು ತಾವಾಗಿಯೇ ಆರಿಸಿ, ಓದಿ, ಸಂತೋಷಪಡುವಂತೆ ಅವರ ಶಾಲೆಗಳಲ್ಲಿ ಸನ್ನಿವೇಶಗಳನ್ನು ಕಲ್ಪಿಸಿ ಕೊಡಬೇಕು; ಮತ್ತು ಇಂತಹ ಓದಿನಲ್ಲಿ ಆಸಕ್ತಿ ತೋರದಿರುವ ಮಕ್ಕಳಿಗೆ ಅವರ ವೈಯಕ್ತಿಕ ಸಮಸ್ಯೆಗಳೇನೆಂಬುದನ್ನು ಪರಿಶೀಲಿಸಿ, ಅವಕ್ಕೆ ತಕ್ಕ ಪರಿಹಾರಗಳನ್ನು ಒದಗಿಸಬೇಕು.

ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ಮಾತ್ರವಲ್ಲ, ಓದುಗರ ಸಂಖ್ಯೆ ಜಾಸ್ತಿಯಾಗಬೇಕೆಂದು ಬಯಸುವ ಇತರ ಮಹನೀಯರೂ ಸಮಸ್ಯೆಯ ಈ ಮೂಲವನ್ನು ಗಮನಿಸುವುದು ಅವಶ್ಯ. ಓದುಗರ ಸಂಖ್ಯೆ ಜಾಸ್ತಿಯಾದಷ್ಟೂ ಬರೆಹಗಾರರ, ಪುಸ್ತಕ ವ್ಯಾಪಾರಿಗಳ, ಮತ್ತು ಪತ್ರಿಕೆಗಳ ವ್ಯಾಪ್ತಿ ಹೆಚ್ಚುತ್ತದೆ, ಮತ್ತು ಇದರಿಂದಾಗಿ ಅವನ್ನು ಅವಲಂಬಿಸಿರುವ ಇತರ ಉದ್ಯಮಗಳ ವ್ಯಾಪ್ತಿಯೂ ಹೆಚ್ಚುತ್ತದೆ. ಹಾಗಾಗಿ, ಬೇರಾವ ಕಾರಣಕ್ಕಾಗಿ ಅಲ್ಲದಿದ್ದರೂ ತಮ್ಮ ಸ್ವಾರ್ಥಕ್ಕಾಗಿಯಾದರೂ ಈ ಉದ್ಯಮಿಗಳ ದೃಷ್ಟಿ ಶಾಲಾ ವಿದ್ಯಾರ್ಥಿಗಳ ಓದಿನ ಕಡೆಗೆ ಹರಿದರೆ, ಈ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚು ಅನುಕೂಲತೆಗಳು ಲಭಿಸಬಹುದು.

೬೦


ಭಾಗ ಮೂರು

ಮಾತು ಮತ್ತು ಬರಹ

ಬರಹವುಳ್ಳ ಭಾಷೆಗಳಿಗೂ ಬರಹವಿಲ್ಲದ ಭಾಷೆಗಳಿಗೂ ನಡುವೆ, ಅವುಗಳ ವ್ಯಾಕರಣದ ಮಟ್ಟಿಗೆ, ಯಾವ ವ್ಯತ್ಯಾಸವೂ ಇಲ್ಲ; ಈ ಎರಡು ಬಗೆಯ ಭಾಷೆ ಗಳಲ್ಲೂ ಪರಿಪೂರ್ಣವಾದ ವ್ಯಾಕರಣಗಳೇ ಬಳಕೆಯಾಗುತ್ತಿರುತ್ತವೆ. ಇದಲ್ಲದೆ, ‘ಪ್ರಬುದ್ಧತೆಯ’ ಮಟ್ಟಿಗೂ ಅವುಗಳ ವ್ಯಾಕರಣಗಳ ನಡುವೆ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗದು.

ಒಂದು ಭಾಷೆಯು ಬಳಸುತ್ತಿರುವ ಲಿಪಿಯ ಚರಿತ್ರೆ ಆ ಭಾಷೆಯ ಚರಿತ್ರೆ ಗಿಂತ ತೀರ ಭಿನ್ನವಾಗಿರಲು ಸಾಧ್ಯವಿದೆ. ಭಾರತದ ಭಾಷೆಗಳು ನಾಲ್ಕು ಬೇರೆ ಬೇರೆ ಮೂಲಗಳಿಂದ ಬೆಳೆದು ಬಂದಿವೆ; ಆದರೆ, ಅವುಗಳಲ್ಲಿ ಹೆಚ್ಚಿನವೂ ಒಂದೇ ಮೂಲದಿಂದ ಬೆಳೆದು ಬಂದ ಲಿಪಿಗಳನ್ನು ಬಳಸುತ್ತಿವೆ. ಈ ಲಿಪಿಗಳ ಮತ್ತು ಅವುಗಳನ್ನು ಬಳಸುವ ಬರಹಗಳ ಮೂಲ ಇತ್ತೀಚೆಗಿನದು; ಆದರೆ, ಭಾಷೆಗಳ ಮೂಲ ಮಿಲಿಯಗಟ್ಟಲೆ ವರ್ಷಗಳಷ್ಟು ಹಿಂದೆ, ಎಂದರೆ ನಮ್ಮ ಅರಿವಿಗೆ ಎಟುಕದ ಕಾಲವೊಂದರಲ್ಲಿ ಅಡಗಿದೆ.

ಮಾತು ಮತ್ತು ಬರಹಗಳ ನಡುವೆ ಬೇರೆಯೂ ಹಲವು ಮುಖ್ಯವಾದ ವ್ಯತ್ಯಾಸಗಳಿದ್ದು, ಕೆಲವೊಮ್ಮೆ ಬರಹ ಮಾತಿನಿಂದ ಬೇರಾಗಿ ತನ್ನದೇ ಆದ ಒಂದು ಅಸ್ತಿತ್ವವನ್ನು ಉಂಟುಮಾಡಿಕೊಳ್ಳಬಹುದು. ಹಾಗಾದಾಗ, ಅದಕ್ಕೂ ಮಾತಿಗೂ ನಡುವಿನ ಕೊಂಡಿ ತಪ್ಪಿ ಹೋಗಿ, ಅದರಲ್ಲಿ ಹಲವು ಬಗೆಯ ಕೃತಕತೆ ಗಳು ತುಂಬಿಕೊಳ್ಳುತ್ತವೆ; ಇದರಿಂದಾಗಿ ಅದು ಒಂದು ‘ಭಾಷೆ’ಯೆಂದು ಕರೆಯಲು ಸಾಧ್ಯವಿಲ್ಲದಂತಹ ರೂಪವನ್ನು ಪಡೆಯಬಲ್ಲುದು.

ಭಾಷೆ ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸಗಳು ಎಂತಹವು, ಮತ್ತು ಅವನ್ನು ತಿಳಿದುಕೊಳ್ಳುವುದು ಯಾಕೆ ಅವಶ್ಯ ಎಂಬುದನ್ನು ಈ ವಿಭಾಗದ ಆರು ಲೇಖನಗಳು ಸ್ಪಷ್ಟಪಡಿಸುತ್ತವೆ.

೩.೧ ಮಾತಿಗೂ ಒಂದು ಫೋಟೋ

ಕ್ಯಾಮರಾದ ಎದುರು ನಿಂತು ನಾವೆಲ್ಲ ನಮ್ಮ ಫೋಟೋ ತೆಗೆಸಿಕೊಳ್ಳುತ್ತೇವಲ್ಲ? ಹಾಗೆಯೇ ನಮ್ಮ ಮಾತನ್ನೂ ಕ್ಯಾಮರಾದೆದುರು ‘ನಿಲ್ಲಿಸಿ’ ಅದರ ಫೋಟೋ ತೆಗೆಯಲು ಸಾಧ್ಯವೇ? ಇದನ್ನು ಸಾಧ್ಯವಾಗಿಸಿದ್ದಾರೆ ಇಂದಿನ ವಿಜ್ಞಾನಿಗಳು.

೬೨


ಮಾತಿಗೂ ಒಂದು ಫೋಟೋ

ಆದರೆ, ಇಲ್ಲಿ ಫೋಟೋ ತೆಗೆಯುವುದು ಸಾಧಾರಣ ಕೆಮರಾ ಅಲ್ಲ, ಸ್ಪೆಕ್ಟೋ ಗ್ರಾಮ್ ಎನ್ನುವ ಒಂದು ವಿಶಿಷ್ಟವಾದ ಉಪಕರಣ. ಮಾತು ನಿಮ್ಮ ಬಾಯಿ ಯಿಂದ ಹೊರಟು ಅಲೆ ಅಲೆಯಾಗಿ ಗಾಳಿಯಲ್ಲಿ ಸಂಚರಿಸುವಾಗ, ಈ ಉಪಕರಣ ಅದನ್ನು ಹಿಡಿದಿಟ್ಟು, ವಿಚ್ಛೇದಿಸಿ, ಅದರ ಭೌತಿಕ ಚಿತ್ರವೊಂದನ್ನು ತಯಾರಿಸಿ ಕೊಡುತ್ತದೆ. ನೀವೊಂದು ಭಾಷಣ ಕೊಡುತ್ತಿದ್ದೀರಾದರೆ, ಅದನ್ನು ಈ ಉಪಕರಣ ಚಲನಚಿತ್ರವಾಗಿಯೂ ಪರಿವರ್ತಿಸಬಲ್ಲುದು. ಟೆಲಿವಿಷನ್‌ನ ಮೇಲೆ ಮಾತಿನ ಈ ಚಲನಚಿತ್ರವನ್ನು ನೋಡಿ, ಕಿವುಡರೂ ನಿಮ್ಮ ಭಾಷಣವನ್ನು ಅರ್ಥ ಮಾಡಿಕೊಳ್ಳಬಲ್ಲರು.

ಓದುವ ಫೋಟೋ

ಆದರೆ, ಈ ಬಗೆಯ ಉಪಕರಣದ ಸಂಶೋಧನೆ ಇತ್ತೀಚೆಗಿನದು. ಮಾತನ್ನು ಕಣ್ಣಿನೆದುರು ಹಿಡಿದು ನಿಲ್ಲಿಸುವ ಪ್ರಯತ್ನ ಇದಕ್ಕಿಂತಲೂ ಎಷ್ಟೋ ವರ್ಷ ಹಿಂದೆಯೇ ಪ್ರಾರಂಭವಾಗಿತ್ತು. ಅಂದಿನ ಕಾಲದ ಮಾನವನ ಚಾಣಾಕ್ಷತೆಯ ಫಲವಾಗಿ, ನೀವಿಂದು ನಾನಾಡಬಹುದಾದ ಮಾತಿನ ‘ಫೋಟೋ’ವನ್ನು ಈ ಪುಟದ ಮೇಲೆ ನೋಡಿ, ‘ಓದಿ’, ಅದರ ಅರ್ಥವನ್ನು ಗ್ರಹಿಸಿಕೊಳ್ಳುತ್ತಿದ್ದೀರಿ.

ಈ ದಿಕ್ಕಿನಲ್ಲಿ ಕಡಿಮೆಯೆಂದರೆ ಮೂರು ಸ್ವತಂತ್ರವಾದ ಸಂಶೋಧನೆ ಗಳಾದರೂ ನಡೆದಿರಬೇಕೆಂಬುದು ಲಿಪಿಶಾಸ್ತ್ರಜ್ಞರ ಊಹೆ. ಪುರಾತನ ಈಜಿಪ್ಟಿನ ಲ್ಲೊಂದು, ಪುರಾತನ ಚೀನಾದಲ್ಲೊಂದು, ಮತ್ತು ಯುಕಾಟನ್‌ದ ಮಾಯಾದವ ರಲ್ಲಿ ಮತ್ತೊಂದು. ಇವಲ್ಲದೆ, ಮೆಸಪೊಟೇಮಿಯಾದಲ್ಲೂ ಸ್ವತಂತ್ರವಾಗಿ ಬರಹದ ಸಂಶೋಧನೆ ನಡೆದಿರಬಹುದೆಂಬ ಊಹೆಯಿದೆ. ಇವತ್ತು ಜಗತ್ತಿನಲ್ಲಿ ಬಳಕೆಯಲ್ಲಿರುವ ಲಿಪಿಗಳಲ್ಲಿ ಹೆಚ್ಚಿನವಕ್ಕೂ ಈಜಿಪ್ಟ್ ಮತ್ತು ಮೆಸಪೊಟೇ ಮಿಯಾಗಳಲ್ಲಿ ಅಂದು ಸಿದ್ಧವಾಗಿದ್ದ ಲಿಪಿಗಳೇ ಮೂಲವಾಗಿರಬೇಕು.

ಪದಸಂಕೇತ ಮತ್ತು ವರ್ಣಸಂಕೇತ

ಪದಸಂಕೇತ ಮತ್ತು ವರ್ಣಸಂಕೇತ ಎಂಬುದಾಗಿ ಲಿಪಿಗಳಲ್ಲಿ ಎರಡು ಮುಖ್ಯ ವಾದ ಪ್ರಭೇದಗಳನ್ನು ಗುರುತಿಸಬಹುದು. ಪದಸಂಕೇತವೆಂದರೆ, ಲಿಪಿಯಲ್ಲಿ ಒಂದೊಂದು ಪದಕ್ಕೂ ಒಂದೊಂದು ವಿಶಿಷ್ಟವಾದ ಸಂಕೇತವನ್ನು ಕೊಡುವುದು. ಇಂತಹ ಲಿಪಿಗಳನ್ನು ಬಳಸುವವರು ತಮ್ಮ ಭಾಷೆಯಲ್ಲಿ ಎಷ್ಟು ಪದಗಳಿವೆಯೋ ಅಷ್ಟೇ ಸಂಖ್ಯೆಯ ಸಂಕೇತಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಎಂದರೆ, ಇಂತಹ ಲಿಪಿಯಲ್ಲಿ ಕಡಿಮೆಯೆಂದರೆ ಹತ್ತಿಪ್ಪತ್ತು ಸಾವಿರ ಸಂಕೇತಗಳಾದರೂ ಇರ ಬೇಕಾಗುತ್ತದೆ.

ವರ್ಣಸಂಕೇತವೆಂದರೆ, ಭಾಷೆಯಲ್ಲಿರುವ ಒಂದೊಂದು ವರ್ಣ (ಸ್ವರ ಇಲ್ಲವೇ ವ್ಯಂಜನ)ಕ್ಕೂ ಒಂದೊಂದು ಸಂಕೇತವನ್ನು ಕೊಡುವುದು. ಯಾವ ಭಾಷೆಯಲ್ಲೂ ೫೦-೬೦ಕ್ಕಿಂತ ಜಾಸ್ತಿ ವರ್ಣಗಳಿರುವುದಿಲ್ಲವಾದ್ದರಿಂದ, ಇಂತಹ

೬೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಲಿಪಿಯನ್ನು ಬಳಸುವವರು ನೂರಕ್ಕಿಂತ ಜಾಸ್ತಿ ಸಂಕೇತಗಳನ್ನು ಕಲಿತುಕೊಳ್ಳ ಬೇಕಾಗುವುದಿಲ್ಲ.

ವಿಶ್ವದ ಬರವಣಿಗೆಗಳನ್ನೆಲ್ಲ ಈ ಎರಡು ಗುಂಪುಗಳೊಳಗೆ ಸೇರಿಸಿಕೊಳ್ಳಲು ಸಾಧ್ಯವಿದೆಯಾದರೂ, ಶುದ್ಧವಾಗಿ ಯಾವ ಲಿಪಿಯನ್ನೂ ಪದಸಂಕೇತ ಇಲ್ಲವೇ ವರ್ಣಸಂಕೇತ ಎಂಬುದಾಗಿ ವರ್ಣಿಸಲುಬರುವುದಿಲ್ಲ. ಇಂಗ್ಲಿಷ್ ಬರವಣಿಗೆ ಯಲ್ಲಿ ಪದ ಮತ್ತು ವರ್ಣಸಂಕೇತಗಳೆರಡೂ ಸೇರಿಹೋಗಿವೆ. ಉದಾಹರಣೆ ಗಾಗಿ, no ಮತ್ತು know ಎಂಬ ಎರಡು ಪದಗಳ ನಡುವೆ ಉಚ್ಚಾರದಲ್ಲಿ ವ್ಯತ್ಯಾಸವೇನೂ ಇಲ್ಲವಾದುದರಿಂದ ಅವು ಎರಡು ಬೇರೆ ಬೇರೆ ಪದಗಳನ್ನು ಸೂಚಿಸುವ ಪದಸಂಕೇತಗಳೆಂದು ಹೇಳಬೇಕಾಗುತ್ತದೆ.

ಜಪಾನೀಯರ ಬರವಣಿಗೆಯಲ್ಲಿ ಪದಸಂಕೇತಗಳೊಂದಿಗೆ ವರ್ಣಗುಚ್ಛ ಗಳನ್ನು ಸೂಚಿಸುವ ಸಂಕೇತಗಳೂ ಸೇರಿಕೊಂಡಿವೆ. ಪದಸಂಕೇತಕ್ಕೆ ಅತೀ ಉತ್ತಮ ಉದಾಹರಣೆಯೆಂದರೆ ಚೀನೀ ಬರವಣಿಗೆ. ಆದರೆ, ಈ ಬರವಣಿಗೆ ಯಲ್ಲೂ ವರ್ಣಸಂಕೇತಗಳ ಪ್ರಯೋಗ ಕೆಲವೆಡೆ ಸೇರಿಕೊಂಡಿದೆ. ಇವೆರಡ ಕ್ಕಿಂತಲೂ ಭಿನ್ನವಾಗಿರುವ ಅರೇಬಿಕ್ ಬರವಣಿಗೆಯಲ್ಲಿ ಸಾಮಾನ್ಯವಾಗಿ ಸ್ವರ ವರ್ಣಗಳನ್ನು ಬಿಟ್ಟು, ವ್ಯಂಜನವರ್ಣಗಳನ್ನು ಮಾತ್ರವೇ ಬರೆಯುವ ರೂಢಿಯಿದೆ.

ಪದಸಂಕೇತದ ವೈಶಿಷ್ಟ್ಯ

ಒಂದೊಂದು ಪದಕ್ಕೂ ಒಂದೊಂದು ಸಂಕೇತವಿರುವ ಈ ಪದಸಂಕೇತದ ಲಿಪಿ ಯಲ್ಲಿ ಸಾವಿರಾರು ಭಿನ್ನ ಭಿನ್ನವಾದ ಸಂಕೇತಗಳನ್ನು ಬಳಸಬೇಕಾಗುತ್ತದೆ. ಉದಾಹರಣೆಗಾಗಿ, ಚೈನೀಸ್ ಲಿಪಿಯಲ್ಲಿ ಸಾಮಾನ್ಯವಾಗಿ ಪದಕ್ಕೊಂದು ಸಂಕೇತ ವಿರುತ್ತದೆ. ಅದರ ಹಲವಾರು ಪದಗಳ ನಡುವೆ ಉಚ್ಚಾರಣೆಯಲ್ಲಿ ವ್ಯತ್ಯಾಸ ವಿಲ್ಲದಿದ್ದರೂ ಅರ್ಥದಲ್ಲಿ ವ್ಯತ್ಯಾಸವಿರುವ ಕಾರಣ, ಬರಹದಲ್ಲಿ ಬೇರೆ ಬೇರೆ ಸಂಕೇತಗಳನ್ನು ಬಳಸಬೇಕಾಗುತ್ತದೆ.

ಉದಾಹರಣೆಗಾಗಿ, ಹೆಂಡತಿ, ಏಳು, ಮೋಸಮಾಡು, ಕಾಲ, ದು:ಖ ಮೊದ ಲಾದ ಹಲವು ಅರ್ಥಗಳನ್ನು ಸೂಚಿಸಲು ಚೈನೀಸ್ ಭಾಷೆಯಲ್ಲಿ ಛೀ ಎಂಬ ಒಂದೇ ಉಚ್ಚಾರಣೆಯಿರುವ ಪದವನ್ನು ಬಳಸಲಾಗುತ್ತದೆ, ಆದರೆ ಇವಕ್ಕೆಲ್ಲ ಚೈನೀಸ್ ಲಿಪಿಯಲ್ಲಿ ಬೇರೆ ಬೇರೆ ಸಂಕೇತಗಳಿವೆ. ಇದೇ ರೀತಿಯಲ್ಲಿ, ನುಡಿ, ಅರೆ, ಬಣ್ಣ, ಉಪ್ಪು, ಅಲ್ಲಿ ಮೊದಲಾದ ಅರ್ಥಗಳನ್ನು ಸೂಚಿಸುವ ಪದಗಳಿಗೆ ಲಿಪಿಯಲ್ಲಿ ಬೇರೆ ಬೇರೆ ಸಂಕೇತಗಳಿವೆ; ಆದರೆ, ಇವೆಲ್ಲಕ್ಕೂ ಉಚ್ಚಾರಣೆ ಜೆನ್ ಎಂಬುದೊಂದೇ.

ಚೀನೀ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ಓದಲು ಕಡಿಮೆಯೆಂದರೆ ಏಳೆಂಟು ಸಾವಿರ ಸಂಕೇತಗಳನ್ನಾದರೂ ಕಲಿತುಕೊಳ್ಳಬೇಕಾಗುತ್ತದೆ. ಅದರ ಸಂಪೂರ್ಣ ಪದಕೋಶವೊಂದರಲ್ಲಿ ಒಟ್ಟು ಸುಮಾರು ಐವತ್ತು ಸಾವಿರ ಸಂಕೇತ ಗಳಿವೆ! ಇದು ವಿದ್ಯಾರ್ಥಿಗಳಿಗೊಂದು ದೊಡ್ಡ ತಲೆನೋವನ್ನೇ ತಂದೊಡ್ಡ


ಮಾತಿಗೂ ಒಂದು ಫೋಟೋ

ಬಲ್ಲುದೇನೋ ನಿಜ; ಆದರೆ, ತಮ್ಮ ತಮ್ಮ ಭಾಷೆಗಳನ್ನು ಕಲಿಯುವುದರೊಂದಿಗೆ ಇಷ್ಟೆಲ್ಲಾ ಸಂಕೇತಗಳನ್ನೂ ಅವರು ಕಡ್ಡಾಯವಾಗಿಯೇ ಕಲಿತುಕೊಳ್ಳ ಬೇಕಾಗುವು ದಾದ್ದರಿಂದ, ಎಪ್ಪತ್ತೈದು ಕೋಟಿ ಜನರಿರುವ ಚೀನಾದೇಶದಲ್ಲಿ ಭಾಷಾ ಸಮಸ್ಯೆಯೇ ಏಳುತ್ತಿಲ್ಲ.

ಇದು ಹೇಗೆಂದರೆ, ದೂರ ದೂರದ ಊರುಗಳಲ್ಲಿರುವ ಚೈನೀಸ್ ಜನರಲ್ಲಿ ಒಬ್ಬರ ಮಾತನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳಲಾರರಾದರೂ, ಒಬ್ಬರು ಬರೆದುದನ್ನು ಇನ್ನೊಬ್ಬರು ಓದಿ ಅರ್ಥಮಾಡಿಕೊಳ್ಳಬಲ್ಲರು. ಉದಾಹರಣೆಗಾಗಿ, ಮಂದಾರಿನ್ ಎಂಬ ಒಂದು ಮಾದರಿಯ ಚೈನೀಸ್ ಭಾಷೆಯನ್ನಾಡುವವನೊಬ್ಬ ತನ್ನ ಭಾಷೆಯಲ್ಲಿ ಚೈನೀಸ್ ಲಿಪಿಯನ್ನು ಬಳಸಿ ಬರೆದ ಪತ್ರವನ್ನು ಕೆಂಟೊನೀಸ್ ಎನ್ನುವ ಇನ್ನೊಂದು ಮಾದರಿಯ ಚೈನೀಸ್ ಭಾಷೆಯನ್ನಾಡುವವನು ತನ್ನದೇ ಭಾಷೆಯಲ್ಲಿ ಓದಿ ಅರ್ಥಮಾಡಿಕೊಳ್ಳಬಲ್ಲನು. ಆದರೆ, ಮಂದಾರಿನ್‌ನವನು ತನ್ನ ಭಾಷೆಯಲ್ಲಿ ಮಾತನಾಡಹೊರಟರೆ ಅವನಾಡಿದ ಒಂದೇ ಒಂದು ಮಾತೂ ಕೆಂಟೊನೀಸ್‌ನವನಿಗೆ ಅರ್ಥವಾಗದು

ನಮ್ಮ ದೇಶದಲ್ಲೂ ಇಂತಹ ಒಂದು ಲಿಪಿ ಪ್ರಚಾರದಲ್ಲಿದ್ದಿದ್ದರೆ, ಶೇಕಡಾ ಎಪ್ಪತ್ತೈದು ಮಂದಿಯಾದರೂ ಒಬ್ಬರು ಬರೆದುದನ್ನು ಇನ್ನೊಬ್ಬರು ಯಾವ ಹೊಸ ಭಾಷೆಯನ್ನು ಕಲಿತುಕೊಳ್ಳದೆಯೂ ಸುಲಭದಲ್ಲಿ ಅರ್ಥಮಾಡಿಕೊಳ್ಳುವಂತೆ ಆಗಬಹುದಿತ್ತು.

ಕನ್ನಡದ ಲಿಪಿ

ನಾವು ಭಾರತದಲ್ಲಿ ಬಳಸುವ ಲಿಪಿಗಳಲ್ಲೆಲ್ಲ ಹೆಚ್ಚು ಕಡಿಮೆ ವರ್ಣಕ್ಕೊಂದು ಸಂಕೇತವಿದೆ. ರೋಮನ್ ಲಿಪಿಗೂ, ಕನ್ನಡ ಲಿಪಿಗೂ ನಡುವೆ ಇರುವ ಮುಖ್ಯ ವ್ಯತ್ಯಾಸವೇನೆಂದರೆ, ರೋಮನ್ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳೆರಡಕ್ಕೂ ಸ್ವತಂತ್ರವಾದ ಅಸ್ತಿತ್ವವುಳ್ಳ ಸಂಕೇತಗಳಿವೆ, ಆದರೆ ಕನ್ನಡ ಲಿಪಿಯಲ್ಲಿ ಸಾಮಾನ್ಯ ವಾಗಿ ಒಂದು ವ್ಯಂಜನದ ಅನಂತರ ಬರುವ ಸ್ವರ ಇಲ್ಲವೇ ವ್ಯಂಜನಗಳ ಸಂಕೇತಗಳಿಗೆ ಪದದ ಆದಿಯಲ್ಲಿ ಇಲ್ಲವೇ ಸ್ವರದ ಅನಂತರ ಬರುವ ಸಂಕೇತ ಗಳಷ್ಟು ಪೂರ್ಣತೆಯಿಲ್ಲ. ಇದನ್ನು ಸರಿಯಾಗಿ ಗಮನಿಸದ ಕೆಲವರು ಕನ್ನಡ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳೆರಡಕ್ಕೂ ಒಟ್ಟಾಗಿ ಸಂಕೇತಗಳಿವೆಯೆಂದು ತಪ್ಪಾಗಿ ತಿಳಿದುಕೊಂಡಂತಿದೆ.

ಲಿಪಿ ಸಮಸ್ಯೆ

ಭಾಷಾಸಮಸ್ಯೆಯೊಂದಿಗೆ ಲಿಪಿ ಸಮಸ್ಯೆಯೂ ನಮ್ಮ ದೇಶದಲ್ಲಿ ಹಲಕೆಲವು ಹೋರಾಟಗಳಿಗೆ ಕಾರಣವಾಗಿದೆ. ಉದಾಹರಣೆಗಾಗಿ, ಹಿಂದಿ-ಉರ್ದು ವಿವಾದ ಹೆಚ್ಚು ಕಡಿಮೆ ಲಿಪಿ ವಿವಾದವೆಂದೇ ಹೇಳಿದರೂ ತಪ್ಪಾಗದು. ಭಾಷೆಯ

ಓಂ


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವ್ಯಾಕರಣದ ಮಟ್ಟಿಗೆ ಹಿಂದಿ ಮತ್ತು ಉರ್ದುಗಳೊಳಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಸಂಸ್ಕೃತ, ಹಿಂದೀ ಮತ್ತು ಮರಾಠಿ ಭಾಷೆಗಳು ಬಳಸುವ ದೇವನಾಗರಿ ಲಿಪಿಯಷ್ಟು ‘ವೈಜ್ಞಾನಿಕ’ವಾದ ಲಿಪಿ ಬೇರಿಲ್ಲವೆಂದು ಕೆಲವರು ರಾಜಕಾರಣಿಗಳು ಮಾತ್ರವಲ್ಲ, ವಿದ್ವಾಂಸರೆಂದೆನ್ನಿಸಿಕೊಳ್ಳುವವರೂ ಹೇಳುತ್ತಿರುತ್ತಾರೆ. ಆದರೆ ಈ ಮಾತಿಗೆ ಆಧಾರವೇನೂ ಇಲ್ಲ.

ದೇವನಾಗರಿ ಲಿಪಿ ವೈಜ್ಞಾನಿಕವೆಂದು ಹೇಳಲು ಅದರಲ್ಲಿ ಬರುವ ಸಂಕೇತ ಗಳನ್ನು ವೈಜ್ಞಾನಿಕವಾಗಿ, ಎಂದರೆ ಅವುಗಳ ಉಚ್ಚಾರಣೆಗನುಸಾರವಾಗಿ, ಬೇರೆ ಬೇರೆ ವರ್ಗಗಳಲ್ಲಿ ವಿಂಗಡಿಸಲಾಗಿದೆ ಎಂಬುದೇ ಮುಖ್ಯ ಆಧಾರ. ಆದರೆ ಇದು ಸಂಕೇತಗಳ ವಿಂಗಡಣೆಯ ವೈಜ್ಞಾನಿಕತೆಯಲ್ಲದೆ, ಸಂಕೇತಗಳ ಇಲ್ಲವೇ ಅವನ್ನು ಬಳಸುವ ಲಿಪಿಯ ವೈಜ್ಞಾನಿಕತೆಯಲ್ಲ. ಯಾವ ಲಿಪಿಯಲ್ಲಿ ಬರುವ ಸಂಕೇತ ಗಳನ್ನು ಬೇಕಿದ್ದರೂ ಈ ರೀತಿ ಉಚ್ಚಾರಣೆಗನುಸಾರವಾಗಿ ವಿಂಗಡಿಸುವುದು ಕಷ್ಟ ವೇನಲ್ಲ.

ನಿಜಕ್ಕೂ ಭಾರತದ ಲಿಪಿಗಳಲ್ಲೆಲ್ಲ ಉರ್ದು ಲಿಪಿಯನ್ನು ಬಿಟ್ಟರೆ ದೇವ ನಾಗರಿ ಲಿಪಿಯೇ ಅತ್ಯಂತ ಕ್ಲಿಷ್ಟವಾದ ಮತ್ತು ತೊಡಕುತೊಡಕಾದ ಲಿಪಿ. ಕನ್ನಡ ಲಿಪಿ ಮತ್ತು ದೇವನಾಗರಿ ಲಿಪಿ ಇವೆರಡೂ ಒಂದೇ ಮೂಲದಿಂದ ಬಂದಿವೆ ಯಾದರೂ ಕನ್ನಡ ಲಿಪಿ ದೇವನಾಗರಿಗಿಂತ ಹಲವಾರು ವಿಷಯಗಳಲ್ಲಿ ಸರಳ ವಾಗಿದೆ ಮತ್ತು ಲಲಿತವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲಾರದ ಕನ್ನಡಿಗರು ಕೆಲವರು ನಮ್ಮಲ್ಲಿ ಈಗಾಗಲೇ ಬಳಕೆಯಲ್ಲಿರುವ ಉತ್ತಮವಾದ ಲಿಪಿಯನ್ನು ಹೊರಗೆಸೆದು, ದೇವನಾಗರಿಯನ್ನು ಬಳಸಿಕೊಳ್ಳುವ ಆತುರದಲ್ಲಿರುವಂತಿದೆ.

ಮಾತು ಮತ್ತು ಬರವಣಿಗೆ

ಮಾತಿಗೆ ಹೋಲಿಸಿದೆವಾದರೆ ಬರವಣಿಗೆಯೆಂಬುದು ಬಹಳ ಇತ್ತೀಚೆಗಿನದು. ಸಾವಿರಾರು ವರ್ಷಗಳ ಹಿಂದೆಯೇ ಈಜಿಪ್ಟ್ ಮತ್ತು ಮೆಸಪೊಟೇಮಿಯಾಗಳಲ್ಲಿ ಮನುಷ್ಯನಿಗೆ ಬರವಣಿಗೆ ತಿಳಿದಿತ್ತೆಂಬುದು ನಿಜ. ಆದರೆ, ಸಾಮಾನ್ಯ ಜನರ ಕೈಗೆ ಅದು ಬಂದು ಇನ್ನೂ ಇನ್ನೂರು ವರ್ಷ ಕಳೆದಿಲ್ಲ. ಇವತ್ತಿಗೂ ಬರವಣಿಗೆಯನ್ನು ಬಳಸಿಕೊಳ್ಳುವಂತಹ ಭಾಷೆಗಳು ಕೆಲವು ಮಾತ್ರ. ಜಗತ್ತು ಇಷ್ಟೊಂದು ಮುಂದು ವರಿದಿದೆಯಾದರೂ ಓದಲು ಮತ್ತು ಬರೆಯಲು ಬಲ್ಲ ಜನರ ಸಂಖ್ಯೆ ಶೇಕಡಾ ಐವತ್ತಕ್ಕಿಂತಲೂ ಕಡಿಮೆ.

ಲಿಪಿಯಿಲ್ಲದ ಭಾಷೆಗೂ ಲಿಪಿಯಿರುವ ಭಾಷೆಗೂ ನಡುವೆ ಎಂತಹ ವ್ಯತ್ಯಾಸ ವಿದೆ? ಈ ಪ್ರಶ್ನೆಗೆ ‘ಏನೂ ಇಲ್ಲ’ ಎಂಬುದಾಗಿ ಭಾಷಾವಿಜ್ಞಾನಿಗಳು ಕೊಡುವ ಉತ್ತರವನ್ನು ಬಹುಶಃ ಹೆಚ್ಚಿನವರೂ ನಂಬಲಾರರು. ಆದರೆ, ಜಗತ್ತಿನಲ್ಲಿ ಬಳಕೆ ಯಲ್ಲಿರುವ ಹಲವಾರು ಭಾಷೆಗಳ ಮೇಲೆ ಅವರು ನಡೆಸಿರುವ ಸಂಶೋಧನೆಗಳ ಫಲವಾಗಿ ತಿಳಿದು ಬಂದ ಆಶ್ಚರ್ಯಕರ ವಿಷಯಗಳಲ್ಲಿ ಇದೂ ಒಂದು.

೬೬


ಭಾರತಕ್ಕೆಲ್ಲ ಒಂದು ಲಿಪಿ ಬೇಕೇ?

ಭಾಷೆಗಳಲ್ಲಿ ನಡೆಯಬಹುದಾದ ಬದಲಾವಣೆಗಳಲ್ಲಿ ಲಿಪಿಯಿಂದಾಗುವ ಕಾರ್ಯ ಸೊನ್ನೆಯೆಂದೇ ಹೇಳಬಹುದು. ಭಾಷೆಯೊಂದರ ಯೋಗ್ಯತೆಯೂ ಲಿಪಿ ಯಿರುವುದರಿಂದ ಇಲ್ಲವೇ ಇಲ್ಲದಿರುವುದರಿಂದ ಹೆಚ್ಚುಕಡಿಮೆಯಾಗುವುದಿಲ್ಲ. ಲಿಪಿಯಿರುವ ಭಾಷೆಯಷ್ಟೇ ಲಿಪಿಯಿಲ್ಲದ ಭಾಷೆಯೂ ಸಮೃದ್ಧ ಮತ್ತು ಸಂಪನ್ನ ವಾಗಿರಬಲ್ಲುದು.

ಸಂಸ್ಕೃತ ಭಾಷೆಗೆ ತನ್ನದೇ ಆದ ಲಿಪಿ ದೊರಕುವುದಕ್ಕಿಂತ ಎಷ್ಟೋ ವರ್ಷ ಗಳ ಹಿಂದೆಯೇ ಅದರಲ್ಲಿ ಜಗತ್ತಿನ ಮಹೋನ್ನತ ಕೃತಿಗಳಲ್ಲಿ ಒಂದಾಗಿರುವ ವೇದಗಳ ರಚನೆಯಾಗಿತ್ತೆಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆ. ಲಿಪಿಯು ಭಾಷೆಯ ಮೇಲೆ ಮಾಡಬಹುದಾದ ಪರಿಣಾಮವೇನಾದರೂ ಇದ್ದರೆ, ಅದು ಆ ಭಾಷೆಯ (ಬರಹದ) ವ್ಯಾಕರಣ ನಿಯಮಗಳಿಗಿರುವ ಅಪವಾದಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡುವುದು ಮಾತ್ರ

೩.೨ ಭಾರತಕ್ಕೆಲ್ಲ ಒಂದು ಲಿಪಿ ಬೇಕೇ?

ಭಾರತದ ಭಾಷೆಗಳೆಲ್ಲ ಒಂದೇ ಲಿಪಿಯನ್ನು ಬಳಸತೊಡಗಿದಲ್ಲಿ ನಮ್ಮ ದೇಶದ ಭಾಷಾಸಮಸ್ಯೆಗಳೆಲ್ಲವೂ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುವುವೆಂದು ವಾದಿಸುವ ಆಶಾವಾದಿಗಳು ನಮ್ಮಲ್ಲಿ ಬಹಳ ಮಂದಿ ಇದ್ದಾರೆ. ತಮಿಳು, ಕನ್ನಡ, ಬಂಗಾಲಿ, ಒಡಿಯಾ ಮೊದಲಾದ ಈ ಬೇರೆ ಬೇರೆ ಭಾಷೆಗಳನ್ನಾಡುವ ಜನರು ತಮ್ಮವೇ ಆದ ಲಿಪಿಗಳನ್ನು ಸಂಪೂರ್ಣವಾಗಿ ಬಿಟ್ಟು ಕೊಡಲು ಸಿದ್ಧರಿಲ್ಲದಿರಬಹುದು. ಆದರೂ ‘ರಾಷ್ಟ್ರದ ಐಕ್ಯತೆ’ಗಾಗಿ ಈ ಭಾಷೆಗಳನ್ನಾಡುವ ಮಂದಿ ತಮ್ಮ ತಮ್ಮ ಲಿಪಿಗಳೊಡನೆ ಇಂತಹ ರಾಷ್ಟ್ರೀಯ ಲಿಪಿಯೊಂದನ್ನೂ ಕಲಿತು ಬಳಸತೊಡಗಿ ದಲ್ಲಿ, ನಮ್ಮ ದೇಶ ಬಹಳಷ್ಟು ಉದ್ಧಾರವಾದೀತೆಂದು ಇವರೆಲ್ಲರೂ ನಂಬಿರು ವಂತಿದೆ.

ಇಂತಹ ವಾದವನ್ನು ಮುಂದೆ ತರುವವರು ಬರಿಯ ರಾಜಕಾರಣಿಗಳು ಮಾತ್ರವಲ್ಲ; ಈ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಪರಿಣತ ರಾಗಿರುವೆವೆಂದು ಹೇಳಿಕೊಳ್ಳುವ ವಿದ್ವಾಂಸರೂ ಇವೇ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ಸಂಗತಿಯಾಗಿದೆ.

ಉದಾಹರಣೆಗಾಗಿ, ೧೯೫೬ರಲ್ಲಿ ಪ್ರಕಟವಾದ ಅಧಿಕೃತ ಭಾಷಾ ಸಮಿತಿಯ ವರದಿಯು ಇಂತಹ ರಾಷ್ಟ್ರೀಯ ಲಿಪಿಯೊಂದರ ಬಳಕೆಯು ಅವಶ್ಯವೆಂದೇ ಸಮರ್ಥಿಸಿತ್ತು. ಜಸ್ಟಿಸ್ ಶಾರದಾಚರಣ ಮಿತ್ರರು ‘ಏಕಲಿಪಿ ವಿಸ್ತಾರ ಪರಿಷತ್’ ಎಂಬುದಾಗಿ ಒಂದು ಸಂಸ್ಥೆಯನ್ನೇ ಸ್ಥಾಪಿಸಿದ್ದರು.

ಇಂತಹ ಏಕಲಿಪಿ ವಾದವನ್ನು ಮಂಡಿಸುವವರಲ್ಲಿ ಹೆಚ್ಚಿನವರೂ ಭಾರತದ ಈ ರಾಷ್ಟ್ರೀಯ ಲಿಪಿ ಇವತ್ತು ಹಿಂದೀ ಭಾಷೆಯನ್ನು ಬರೆಯಲು ಬಳಸುತ್ತಿರುವ

೬೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ದೇವನಾಗರಿ ಲಿಪಿಯೇ ಆಗಬೇಕೆಂದು ವಾದಿಸುತ್ತಿರುವುದು ಇನ್ನೊಂದು ಗಮ ನಾರ್ಹವಾದ ಸಂಗತಿಯಾಗಿದೆ.

ಏಕಲಿಪಿ ಅವಶ್ಯವೇ?

ಇಲ್ಲಿ ಎರಡು ಮುಖ್ಯವಾದ ಪ್ರಶ್ನೆಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಭಾರತದ ಭಾಷೆಗಳೆಲ್ಲ ಒಂದೇ ಲಿಪಿಯನ್ನು ಇಲ್ಲವೇ ಸಮಾನ ಲಿಪಿಯೊಂದನ್ನು ಬಳಸುವುದು ಅವಶ್ಯವೇ, ಮತ್ತು ಹಾಗೆ ಮಾಡುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂಬುದೊಂದು; ಮತ್ತು ಅದು ಅವಶ್ಯವಾಗಿದೆ ಯಾದರೂ, ಅಂತಹ ಸಮಾನ ಲಿಪಿಯಾಗಲು ದೇವನಾಗರಿಯೇ ಅರ್ಹವಾದು ದೆಂಬ ವಾದದಲ್ಲಿ ಹುರುಳಿದೆಯೇ ಎಂಬುದಿನ್ನೊಂದು.

ಇವುಗಳಲ್ಲಿ ಮೊದಲನೆಯ ಪ್ರಶ್ನೆಯನ್ನು ಯಾರೂ ಇದುವರೆಗೆ ಸರಿಯಾಗಿ ವಿವೇಚಿಸಿದ ಹಾಗೆ ಕಂಡುಬರುವುದಿಲ್ಲ. ಏಕಲಿಪಿಯ ಕುರಿತು ವಾದ ನಡೆಸು ವವರೆಲ್ಲ ಅದರ ಅವಶ್ಯಕತೆ ಸ್ವತಃಸಿದ್ಧವಾದುದೆಂಬ ಅಭಿಪ್ರಾಯದಿಂದಲೇ ತಮ್ಮ ವಾದವನ್ನು ಪ್ರಾರಂಭಿಸುತ್ತಾರೆ.

ಈ ವಿಷಯದಲ್ಲಿ ಅಧಿಕೃತ ಭಾಷಾ ಸಮಿತಿಯು ಎರಡು ಮುಖ್ಯವಾದ ಕಾರಣಗಳನ್ನು ಕೊಟ್ಟಿದೆ. ದೇಶದ ಐಕ್ಯತೆಗೆ ಅದು ಸಹಾಯಕವಾಗಬಹುದೆಂಬು ದೊಂದು; ಬೇರೆ ಬೇರೆ ಭಾಷೆಗಳನ್ನು ಕಲಿಯುವ ಕೆಲಸ ಅದರಿಂದ ಸುಗಮ ವಾಗಬಹುದೆಂಬುದಿನ್ನೊಂದು. ಇವೆರಡೂ ಹೆಚ್ಚಿನ ಮಟ್ಟಿಗೆ ಕಲ್ಪಿತವಾದ ಕಾರಣ ಗಳು. ದೇಶದ ಐಕ್ಯತೆಯೆಂಬುದು ತರ್ಕದೆದುರು ನಿಲ್ಲದ ವಿಷಯ. ಭಾರತಕ್ಕೆಲ್ಲ ಒಂದು ಲಿಪಿಯನ್ನು ತಂದು ಹಾಕುವ ಅವಸರದಲ್ಲಿ ಈಗ ಇರುವ ಐಕ್ಯತೆಯೂ ಒಡೆದುಹೋಗುವ ಸಂಭವವೇ ಜಾಸ್ತಿ.

ಲಿಪಿ ಮತ್ತು ಭಾಷಾಭ್ಯಾಸ

ಲಿಪಿ ಭೇದವಿಲ್ಲದಿದ್ದರೆ ನೆರೆ ಪ್ರಾಂತದವರ ಭಾಷೆಗಳನ್ನು ಕಲಿಯುವ ಕೆಲಸ ಸುಗಮವಾಗಬಹುದು, ಮತ್ತು ಅದರಿಂದಾಗಿ ಹಾಗೆ ಕಲಿಯುವ ಜನರ ಸಂಖ್ಯೆಯೂ ಹೆಚ್ಚಬಹುದು ಎಂಬ ವಾದ ಸತ್ಯದಿಂದ ಬಹಳ ದೂರ ಇದೆ. ತೆಲುಗು ಮತ್ತು ಕನ್ನಡ ಭಾಷೆಗಳಿಗೆ ಹೆಚ್ಚು ಕಡಿಮೆ ಒಂದೇ ಲಿಪಿಯಿದೆ ಯೆಂದರೂ ಸಲ್ಲುತ್ತದೆ. ತೆಲುಗು ಭಾಷೆಯನ್ನು ಕಲಿಯಬೇಕೆಂಬ ಇಚ್ಛೆಯುಳ್ಳ ಕನ್ನಡಿಗರು ಅರ್ಧ ಗಂಟೆಯೊಳಗೆ ಅದರ ಲಿಪಿಯನ್ನು ಕೈವಶ ಮಾಡಿಕೊಳ್ಳ ಬಲ್ಲರು. ಆದರೆ, ಇಂದು ಎಷ್ಟು ಮಂದಿ ಕನ್ನಡಿಗರು ಇಲ್ಲವೇ ತೆಲುಗರು ಈ ಸೌಕರ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ?

ಮರಾಠಿ ಮತ್ತು ಹಿಂದೀ ಭಾಷೆಗಳೆರಡೂ ಒಂದೇ ಲಿಪಿಯನ್ನು ಬಳಸಿಕೊಳ್ಳು ತ್ತಿವೆ. ಹಾಗೆಂದು ಮರಾಠಿಯನ್ನು ಕಲಿಯುವ ಹಿಂದೀ ಜನರ ಸಂಖ್ಯೆ ಅದೇ

೯೮


ಭಾರತಕ್ಕೆಲ್ಲ ಒಂದು ಲಿಪಿ ಬೇಕೇ?

ಭಾಷೆಯನ್ನು ಕಲಿಯುವ ಕನ್ನಡಿಗರ ಇಲ್ಲವೇ ಗುಜರಾತಿಗಳ ಸಂಖ್ಯೆಗಿಂತ ಜಾಸ್ತಿ ಯಿರುವ ಹಾಗೇನೂ ಕಾಣಿಸುತ್ತಿಲ್ಲ. ನಿಜಕ್ಕೂ ಒಂದು ಭಾಷೆಯನ್ನು ಕಲಿಯುವ ಅವಶ್ಯಕತೆ ಬಂದರೆ ಚೀನೀ ಭಾಷೆಗಿರುವಂತಹ ಅತೀ ಕ್ಲಿಷ್ಟವಾದ ಲಿಪಿಯನ್ನೂ ಜನ ಅರಗಿಸಿಕೊಂಡಾರು. ಬೇಡವಾಗಿರುವ ಭಾಷೆಯ ಲಿಪಿ ಸಮಾನವಾಗಿದ್ದರೂ ಒಂದೇ, ಭಿನ್ನವಾಗಿದ್ದರೂ ಒಂದೇ.

ಲಿಪಿ ಭೇದವನ್ನು ತೆಗೆದುಹಾಕಿದಲ್ಲಿ ಭಾಷೆಗಳನ್ನು ಕಲಿಯುವ ಕೆಲಸ ಸುಗಮ ವಾದೀತೆಂದು ವಾದಿಸುವವರೆಲ್ಲ ಲಿಪಿ ಮತ್ತು ಭಾಷೆಗಳ ನಡುವಿನ ಸಂಬಂಧ ವನ್ನೇ ಸರಿಯಾಗಿ ಅರ್ಥಮಾಡಿಕೊಂಡಂತಿಲ್ಲ. ಇಂಗ್ಲಿಷ್‌ನಂತಹ ಕೆಲವು ಬರಹ ಗಳಲ್ಲಿ ಕ್ಲಿಷ್ಟವಾದ ‘ಸ್ಪೆಲ್ಲಿಂಗ್’ ಸಮಸ್ಯೆಗಳಿರುವ ಕಾರಣ, ಭಾಷೆಗಳನ್ನು ಕಲಿತಾದ ಮೇಲೂ ಅವುಗಳ ಬರಹವನ್ನು ಓದಿ ಅರ್ಥಮಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುತ್ತದೆ. ಆದರೆ, ಭಾರತೀಯ ಭಾಷೆಗಳಲ್ಲಿ ಹೆಚ್ಚಿನವೂ ಒಂದೇ ಮಾದರಿಯ ಲಿಪಿಗಳನ್ನು ಬಳಸುತ್ತಿವೆಯಾದ ಕಾರಣ, ಅವುಗಳಲ್ಲಿ ಒಂದು ಲಿಪಿಯನ್ನು ಕಲಿತವರು ಹೊಸದೊಂದು ಲಿಪಿಯನ್ನು ಒಂದೆರಡು ದಿನಗಳಲ್ಲೇ ಕೈವಶಮಾಡಿಕೊಳ್ಳಬಲ್ಲರು. ಲಿಪಿಗಿಂತಲೂ ಭಾಷೆಯನ್ನು ಕಲಿತುಕೊಳ್ಳುವುದೇ ಇಲ್ಲಿ ಹೆಚ್ಚಿನ ಸಮಸ್ಯೆಯಾಗಿರುತ್ತದೆ.

ಹಾಗಾಗಿ, ಈ ಭಾಷೆಗಳೆಲ್ಲ ಸಮಾನ ಲಿಪಿಯೊಂದನ್ನು ಬಳಸುವುದರಿಂದಾಗಿ ಹೊಸ ಭಾಷೆಯನ್ನು ಕಲಿಯುವಲ್ಲಿ ಆಗುವ ಉಳಿತಾಯ ಬರೇ ಒಂದೆರಡು ದಿನ ಗಳಷ್ಟು ಮಾತ್ರ. ಈ ಅಲ್ಪ ಉಳಿತಾಯಕ್ಕಾಗಿ ನಾವು ಮಾಡಬೇಕಾಗಿರುವ ತ್ಯಾಗ ವೆಂತಹದೆಂಬುದನ್ನು ಗಮನಿಸಿದಲ್ಲಿ, ಯಾರೂ ಈ ಕೆಲಸಕ್ಕೆ ಕೈಹಾಕಲಾರರು. ಏಕಲಿಪಿವಾದ ಮಾತ್ರವಲ್ಲ, ಸಮಾನಲಿಪಿವಾದವೂ ಭಾರತದ ಮಟ್ಟಿಗೆ ನಿರಾಧಾರವಾದುದೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

ದೇವನಾಗರಿಯ ಅರ್ಹತೆ

ಇನ್ನು ಏಕಲಿಪಿವಾದಿಗಳು ಈ ಸ್ಥಾನಕ್ಕೆ ದೇವನಾಗರಿ ಲಿಪಿಯೇ ಅರ್ಹವೆಂದು ವಾದಿಸುತ್ತಿದ್ದಾರಲ್ಲ, ಈ ವಾದದಲ್ಲಿ ಎಷ್ಟು ಹುರುಳಿದೆ ಎಂಬುದನ್ನು ವಿವೇಚಿಸು ವುದು ಅವಶ್ಯ. ಇತರ ಭಾರತೀಯ ಲಿಪಿಗಳಿಗಿಂತೆಲ್ಲ ದೇವನಾಗರಿ ಲಿಪಿಯನ್ನು ಬಳಸುವ ಭಾರತೀಯರ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿರುವುದೆಂಬ ಒಂದು ಕಾರಣ ಮಾತ್ರ ಯುಕ್ತಿಯುಕ್ತವಾಗಿದೆ. ಮರಾಠಿ, ಹಿಂದಿ ಮತ್ತು ಸಂಸ್ಕೃತ - ಈ ಮೂರು ಭಾಷೆಗಳೂ ದೇವನಾಗರಿ ಲಿಪಿಯನ್ನೇ ಬಳಸುತ್ತಿವೆ. ಕೆಲವೆಡೆಗಳಲ್ಲಿ ಕೊಂಕಣಿಗೂ ಇದೇ ಲಿಪಿ ಬಳಕೆಯಲ್ಲಿದೆ. ಹಾಗಾಗಿ, ಈ ಲಿಪಿಗೆ ಜನ ಸಂಖ್ಯೆಯ ಬೆಂಬಲ ಬೇಕಾದಷ್ಟಿದೆ.

ಆದರೆ, ಹಿಂದಿಯನ್ನು ಭಾರತದ ರಾಜಕೀಯ ಭಾಷೆಯನ್ನಾಗಿ ಆರಿಸಿಕೊಳ್ಳು ವಲ್ಲಿ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಂತೆ ದೇವನಾಗರಿ ಲಿಪಿಯನ್ನು ಸಮಾನ ಲಿಪಿಯಾಗಿ ಆರಿಸಿಕೊಳ್ಳುವಲ್ಲೂ ಅದೇ ಅಂಶಕ್ಕೆ ಮಹತ್ವ ಕೊಡ

೬೬


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಬೇಕೆಂದೇನಿಲ್ಲ. ಸಾಹಜವಾಗಿ ಬೆಳೆದು ಬಂದಿರುವ ಭಾಷೆಗಳೊಳಗೆ ಮೇಲು ಕೀಳಿಲ್ಲವೆಂಬುದೇನೋ ನಿಜ. ಆದರೆ ಲಿಪಿಗಳು ಮಾನವ ನಿರ್ಮಿತವಾಗಿರುವು ವಾದ್ದರಿಂದ, ಅವುಗಳಲ್ಲಿ ಕೆಲವು ಅತ್ಯುತ್ತಮವಾದವುಗಳು ಮತ್ತು ಸರಳವಾದವು ಗಳು, ಮತ್ತು ಕೆಲವು ಅತೀ ಕ್ಲಿಷ್ಟವಾದವುಗಳು ಎಂಬುದಾಗಿ ಮೌಲ್ಯಮಾಪನ ಮಾಡಲು ಬರುತ್ತದೆ. ದೇವನಾಗರಿ ಲಿಪಿಗೆ ಜನಸಂಖ್ಯೆಯ (ಬಳಸುವವರ ಸಂಖ್ಯೆಯ) ಬೆಂಬಲವೊಂದನ್ನು ಬಿಟ್ಟರೆ ಬೇರಾವ ಯೋಗ್ಯತೆಯೂ ಇಲ್ಲ ಎಂಬುದು ಈ ಕೆಳಗಿನ ವಿಚಾರಗಳಿಂದ ಸ್ಪಷ್ಟವಾಗುತ್ತದೆ.

ಲಿಪಿಯ ವೈಜ್ಞಾನಿಕತೆ

ಪ್ರಪಂಚದಲ್ಲಿ ದೇವನಾಗರಿಯಷ್ಟು ವೈಜ್ಞಾನಿಕವಾದ ಲಿಪಿ ಬೇರೊಂದಿಲ್ಲವೆಂದು ಹಲವಾರು ಹಿಂದೀ ಭಕ್ತರು ಮತ್ತು ರಾಜಕಾರಣಿಗಳು ಸಾರುತ್ತಿದ್ದಾರೆ. ಲಿಪಿ ಯಲ್ಲಿ ವೈಜ್ಞಾನಿಕತೆಯೆಂದರೆ ಏನೆಂಬುದನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳದೆ ಹೇಳುವ ಮಾತಿದೆಂಬುದರಲ್ಲಿ ಸಂಶಯವಿಲ್ಲ. ನಿಜಕ್ಕೂ ದೇವನಾಗರಿ ಬಹಳ ಕ್ಲಿಷ್ಟವಾದ ಮತ್ತು ತೊಡಕು ತೊಡಕಾದ ಲಿಪಿ. ಇಂಗ್ಲಿಷ್, ಫ್ರೆಂಚ್, ಮೊದಲಾದ ಭಾಷೆಗಳು ಬಳಸುವ ರೋಮನ್ ಲಿಪಿ ಅದಕ್ಕಿಂತ ಬಹಳಷ್ಟು ಸರಳವಾದುದು. ಕನ್ನಡ ಲಿಪಿಯೂ ದೇವನಾಗರಿ ಲಿಪಿಗಿಂತ ಹೆಚ್ಚು ಶ್ರೇಷ್ಠವಾದುದು.

ಲಿಪಿಗಳ ಯೋಗ್ಯತೆಯನ್ನು ತುಲನಾತ್ಮಕವಾಗಿ ಅಭ್ಯಸಿಸುವಲ್ಲಿ ಎರಡು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅವಶ್ಯ. ಆ ಲಿಪಿಯಲ್ಲಿ ಬರುವ ಸಂಜ್ಞೆಗಳ ಇಲ್ಲವೇ ಸಂಕೇತಗಳ ಒಳರಚನೆ ಹೇಗಿದೆ ಎಂಬುದೊಂದು; ಮತ್ತು, ಅದನ್ನು ಬಳಸುತ್ತಿರುವ ಭಾಷೆಯಲ್ಲಿ ಬರುವ ಧ್ವನಿಗಳನ್ನು ಈ ಸಂಕೇತ ಗಳು ಹೇಗೆ ಪ್ರತಿನಿಧೀಕರಿಸುತ್ತಿವೆ ಎಂಬುದಿನ್ನೊಂದು. ಲಿಪಿಗಳ ಕುರಿತು ವಾದ ನಡೆಸುವವರೆಲ್ಲ ಈ ಎರಡು ಅಂಶಗಳನ್ನು ಸರಿಯಾಗಿ ಬೇರ್ಪಡಿಸಿಕೊಳ್ಳಲಾರದೆ ಎಲ್ಲೆಲ್ಲೋ ದಿಕ್ಕುತಪ್ಪಿ ಅಲೆಯುತ್ತಿರುತ್ತಾರೆ.

ಸ್ಟೆಲ್ಲಿಂಗ್ ಸಮಸ್ಯೆ

ರೋಮನ್ ಲಿಪಿಯನ್ನು ಬಳಸುವ ಇಂಗ್ಲಿಷ್ ಬರಹದಲ್ಲಿ ಅತಿ ಕ್ಲಿಷ್ಟವಾದ ‘ಸ್ಪೆಲ್ಲಿಂಗ್’ ಸಮಸ್ಯೆಯಿದೆ. ಇದರಲ್ಲಿ ಒಂದೇ ಸಂಜ್ಞೆಗೆ ಹಲವಾರು ಉಚ್ಚಾರಗ ಳಿರುತ್ತವೆ, ಮತ್ತು ಒಂದೇ ಧ್ವನಿಗೆ ಹಲವಾರು ಸಂಜ್ಞೆಗಳೂ ಇರುತ್ತವೆ; ಸಂಜ್ಞೆಗಳಿಗೂ ಅವುಗಳ ಉಚ್ಚಾರಕ್ಕೂ ನಡುವೆ ನೇರವಾದ ಸಂಬಂಧವಿಲ್ಲ. ಈ ಕಾರಣಕ್ಕಾಗಿ, ಇಂಗ್ಲಿಷ್ ಬರಹವನ್ನು ತುಂಬಾ ಕ್ಲಿಷ್ಟವಾದ ಬರಹವೆಂದು ಹೇಳಲಾಗುತ್ತದೆ.

ಆದರೆ ಇವೆಲ್ಲ ಇಂಗ್ಲಿಷ್ ಜನರು ರೋಮನ್ ಲಿಪಿಯನ್ನು ತಮ್ಮ ಭಾಷೆಗೆ ತಪ್ಪು ತಪ್ಪಾಗಿ ಅಳವಡಿಸಿಕೊಂಡಿರುವುದರಿಂದಾಗಿ ಹುಟ್ಟಿಕೊಂಡಿರುವ ದೋಷ ಗಳು. ಈ ದೋಷಗಳನ್ನು ರೋಮನ್ ಲಿಪಿಯ ಆಂತರಿಕ ದೋಷಗಳೆಂದು

೧೦೦

ಭಾರತಕ್ಕೆಲ್ಲ ಒಂದು ಲಿಪಿ ಬೇಕೇ?

ಕರೆಯಲು ಎಂದಿಗೂ ಸಾಧ್ಯವಾಗದು. ಇದೇ ಲಿಪಿಯನ್ನು ಹೊಸದೊಂದು ಭಾಷೆ ಯನ್ನು ಬರೆಯುವಲ್ಲಿ ಬಳಸಬೇಕಾದಾಗ, ಈ ಸಮಸ್ಯೆಗಳಲ್ಲಿ ಒಂದೂ ಬಾರದಂತೆ ನೋಡಿಕೊಳ್ಳಬಹುದು.

ಇಂತಹ ಸ್ಪೆಲ್ಲಿಂಗ್ ಸಮಸ್ಯೆ ಲಿಪಿಯ ದೋಷವಲ್ಲ, ಅದರ ಬಳಕೆಯ ದೋಷ ಎಂಬುದಕ್ಕೆ ದೇವನಾಗರಿ ಲಿಪಿಯೇ ಒಂದು ಉತ್ತಮ ಉದಾಹರಣೆ. ಸಂಸ್ಕೃತ ಭಾಷೆಯನ್ನು ಬರೆಯುವಲ್ಲಿ ಈ ಲಿಪಿಯನ್ನು ಬಹಳ ಮಟ್ಟಿಗೆ ಸಮರ್ಪಕವಾಗಿಯೇ ಬಳಸಲಾಗುತ್ತಿದೆ. ಆದರೆ, ಅದನ್ನು ಬಳಸುವ ಮರಾಠಿ ಮತ್ತು ಹಿಂದೀ ಭಾಷೆಗಳ ಬರಹಗಳಲ್ಲಿ ಹಲಕೆಲವು ಸ್ಪೆಲ್ಲಿಂಗ್ ದೋಷಗಳು ಸೇರಿಕೊಂಡಿವೆ.

ಇಂದಿನ ಹಿಂದೀ ಪಂಡಿತರು ಕುಡುಖ್, ಬೋಡೋ, ಕೋಲಾಮಿ ಮೊದ ಲಾದ ಕೆಲವು ಲಿಪಿಯಿಲ್ಲದ ಭಾಷೆಗಳಿಗೆ ಇದೇ ದೇವನಾಗರಿ ಲಿಪಿಯನ್ನು ಬಳಸಿ ಕೊಂಡಿರುವ ಕ್ರಮವನ್ನು ನೋಡಿದರೆ ಮಾತ್ರ, ಯಾರಿಗೂ ಆಶ್ಚರ್ಯವಾದೀತು. ಇಂಗ್ಲಿಷ್‌ನ ಬರಹಗಳಲ್ಲಿರುವುದಕ್ಕಿಂತ ಹತ್ತರಷ್ಟು ಸ್ಪೆಲ್ಲಿಂಗ್ ಭೂತಗಳು ಈ ಭಾಷೆಗಳ ‘ದೇವನಾಗರಿ’ ಬರಹಗಳಲ್ಲಿ ಸೇರಿಕೊಂಡಿವೆ

ಆಂತರಿಕ ಗುಣಗಳು

ಲಿಪಿಗಳಿಗೆ ಇರಬಹುದಾದ ಆಂತರಿಕ ಗುಣಗಳೆಂದರೆ, ಅವುಗಳಲ್ಲಿರುವ ಸಂಜ್ಞೆ ಗಳ ಸ್ವರೂಪ, ಒಂದೇ ಸಂಜ್ಞೆಗಿರುವ ಉಪಸಂಜ್ಞೆಗಳ ಸಂಖ್ಯೆ (ಕನ್ನಡ ಲಿಪಿ ಯಲ್ಲಿ ರಕಾರಕ್ಕೆ ರ, ೯, ಮತ್ತು ಎಂಬುದಾಗಿ ಮೂರು ಉಪಸಂಜ್ಞೆ ಗಳಿರುವಂತೆ), ಎಷ್ಟು ಶೀಘ್ರವಾಗಿ ಅವನ್ನು ಬರೆಯಬಹುದು, ಟೈಪ್ ಮಾಡ ಬಹುದು, ಮತ್ತು ಎಷ್ಟು ಹತ್ತಿರ ಹತ್ತಿರವಾಗಿ ಅವನ್ನು ಮುದ್ರಿಸಬಹುದು, ಇತ್ಯಾದಿ. ಈ ಎಲ್ಲಾ ವಿಷಯಗಳಲ್ಲೂ ದೇವನಾಗರಿ ಲಿಪಿಗೆ ದೊರಕುವ ಅಂಕ ಗಳು ಬಹಳ ಕಡಿಮೆ.

ದೇವನಾಗರಿ ಲಿಪಿಯ ಸಂಜ್ಞೆಗಳು ಬಹಳ ತೊಡಕು ತೊಡಕಾಗಿವೆ; ಹಾಗಾಗಿ ಅವನ್ನು ಬರೆಯುವಾಗ ಕೈ ಹೆಚ್ಚು ಶೀಘ್ರವಾಗಿ ಓಡಲಾರದು; ಸಂಜ್ಞೆಗಳ ಮೇಲೆ ಬರುವ ತಲೆಕೊಟ್ಟು ಬರೆಯುವ ವೇಗವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ; ಸಂಜ್ಞೆಗಳು ಒಂದಕ್ಕೊಂದು ಸೇರಿಕೊಳ್ಳದೆ ದೂರ ದೂರ ನಿಲ್ಲುವುವಾದ್ದರಿಂದ ಬರೆಯುವಾಗ ಲೇಖನಿಯನ್ನು ಆಗಾಗ ಎತ್ತಿ ಇಡಬೇಕಾಗುತ್ತದೆ; ಅದರಲ್ಲಿ ಬರುವ ಒತ್ತಕ್ಷರಗಳು ಮತ್ತು ಸ್ವರ ಸಂಜ್ಞೆಗಳು ಈ ಲಿಪಿಯನ್ನು ಟೈಪ್ ರೈಟರ್‌ಗೆ ಅಳವಡಿಸುವಲ್ಲಿ ಬಹಳಷ್ಟು ತೊಂದರೆ ಕೊಟ್ಟಿವೆ; ಮುದ್ರಣದಲ್ಲೂ ಈ ಲಿಪಿಯ ಸಾಲುಗಳನ್ನು ರೋಮನ್ ಲಿಪಿಯ ಸಾಲುಗಳಷ್ಟು ಹತ್ತಿರ ಹತ್ತಿರ ವಾಗಿ ಮುದ್ರಿಸಲು ಸಾಧ್ಯವಾಗದು.

ಹಾಗಿದ್ದರೆ, ದೇವನಾಗರಿ ಲಿಪಿ ಅತ್ಯಂತ ವೈಜ್ಞಾನಿಕ ಲಿಪಿಯೆಂದು ಬಹಳ ಮಂದಿ ಸಾರಿ ಹೇಳುತ್ತಿರುವುದಕ್ಕೆ ಕಾರಣವೇನು? ಅದರ ಸಂಜ್ಞೆಗಳ (ಸಂಕೇತ

೧೦೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಗಳ) ಪಟ್ಟಿ (ಅಕ್ಷರಮಾಲೆ)ಯನ್ನು ಸಂಜ್ಞೆಗಳು ಸೂಚಿಸುವ ಧ್ವನಿಗಳ ಉಚ್ಚಾ ರಣೆಗೆ ಅನುಸಾರವಾಗಿ ಸಿದ್ಧಪಡಿಸಲಾಗಿದೆಯೆಂಬುದೇ ಇದಕ್ಕೆ ಮುಖ್ಯ ಆಧಾರ. ಆದರೆ, ಅಕ್ಷರಮಾಲೆಯ ರಚನೆಗೂ ಲಿಪಿಯ ಯೋಗ್ಯತೆಗೂ ಯಾವ ಸಂಬಂಧವೂ ಇಲ್ಲವೆಂಬುದನ್ನು ಈ ಮಹನೀಯರು ಗಮನಿಸಿದಂತಿಲ್ಲ. ಒಂದು ಲಿಪಿಯಲ್ಲಿ ಬರುವ ಸಂಜ್ಞೆಗಳನ್ನು ಹೇಗೆ ಬೇಕಿದ್ದರೂ ಪಟ್ಟಿಮಾಡಬಹುದು. ಇದರಿಂದಾಗಿ ಆ ಲಿಪಿಯ ಯೋಗ್ಯತೆಯೇನೂ ಹೆಚ್ಚು ಕಡಿಮೆಯಾಗುವುದಿಲ್ಲ.

ಹಿಂದಿಯನ್ನು ಇಲ್ಲವೇ ಸಂಸ್ಕೃತವನ್ನು ದೇವನಾಗರಿಯಲ್ಲದೆ ಬೇರಾವ ಲಿಪಿಯಲ್ಲಿ ಬರೆದರೂ ಅದರ ಯೋಗ್ಯತೆ ಅಳಿಯುತ್ತದೆ ಎಂದು ವಾದಿಸುವ ಈ ಹಿಂದೀ ಪ್ರೇಮಿಗಳಿಗೆ, ಕನ್ನಡವೇ ಮೊದಲಾದ ಇತರ ಲಿಪಿಗಳನ್ನು ಬಳಸು ವವರಿಗೂ ತಮ್ಮ ತಮ್ಮ ಲಿಪಿಗಳಲ್ಲಿ ಆದರವಿರುತ್ತದೆ ಎಂಬ ವಿಷಯ ಅರ್ಥ ವಾಗುವುದಿಲ್ಲ. ದೇವನಾಗರಿ ಲಿಪಿಗಿಂತ ವೈಜ್ಞಾನಿಕವಾಗಿ ಹೆಚ್ಚು ಯೋಗ್ಯತೆಯುಳ್ಳ ಕನ್ನಡ ಲಿಪಿಯನ್ನು ನೂರಾರು ವರ್ಷಗಳಿಂದಲೂ ನಮ್ಮ ಹಿರಿಯರು ಬೆಳೆಸಿ ಕೊಂಡು ಬಂದಿರುವ ಕಾರಣ, ಅದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ವಾಗಿದೆ. ಅದನ್ನು ಖಡ್ಡಾಯವಾಗಿ ತೊರೆಯಬೇಕಿದ್ದರೂ ಆ ಸ್ಥಾನಕ್ಕೆ ದೇವನಾಗರಿ ಲಿಪಿ ಯಾವ ವಿಧದಲ್ಲೂ ಅರ್ಹವಲ್ಲವೆಂಬುದನ್ನು ಕನ್ನಡಿಗರು ಮರೆಯಬಾರದು.

ಕನ್ನಡಕ್ಕೆ ರೋಮನ್ ಲಿಪಿ

ಇವತ್ತಿನ ಕನ್ನಡಲಿಪಿಯೊಂದಿಗೆ ಆಯ್ಕೆಯ ಲಿಪಿಯಾಗಿ ಬಳಸಲು, ರೋಮನ್ ಲಿಪಿಯನ್ನು ಬಳಸಿ ಮಾಡಿದ ‘ಹಲ’ ಎಂಬ ಹೆಸರಿನ ಹೊಸಲಿಪಿಯೊಂದನ್ನು ಬಾ. ರಾ. ಕಿರಣ್ ಅವರು ಕನ್ನಡ ಬರಹಗಾರರ ಮುಂದಿರಿಸುತ್ತಿದ್ದಾರೆ. ರೋಮನ್ ಲಿಪಿಯ ಅಕ್ಷರಗಳಲ್ಲಿ ನಮಗೆ ಬೇಕಾದುವನ್ನು ಆರಿಸಿ, ಅವುಗಳಲ್ಲಿ ಕೆಲವಕ್ಕೆ ಮೇಲೆ ಗೆರೆ ಎಳೆದ ಮತ್ತು ಇನ್ನು ಕೆಲವಕ್ಕೆ ಕೆಳಗೆ ಚುಕ್ಕೆ ಇರಿಸಿದ ಕೆಲವು ಹೆಚ್ಚಿನ ಅಕ್ಷರಗಳನ್ನು ಸೇರಿಸಿ, ಅವರು ಈ ಹಲಲಿಪಿಯನ್ನು ಉಂಟುಮಾಡಿದ್ದಾರೆ. ಈಗಾಗಲೇ ಮೊಬೈಲ್‌ಗಳ ಮೂಲಕ ಎಸ್ಸೆಮೈನ್ಸ್ ಕಳುಹಿಸುವುದಕ್ಕಾಗಿ ಕನ್ನಡವನ್ನು ಬಳಸುವವರೆಲ್ಲರೂ ಅದಕ್ಕಾಗಿ ಕನ್ನಡ ಲಿಪಿಯ ಬದಲು ರೋಮನ್ ಲಿಪಿಯನ್ನೇ ಬಳಸುತ್ತಿದ್ದಾರೆ. ಆದರೆ, ಹೀಗೆ ಬಳಸುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆ ಲಿಪಿಯ ಅಕ್ಷರಗಳನ್ನು ಅಳವಡಿಸಿಕೊಳ್ಳುವ ಕಾರಣ, ತುಂಬಾ ಗೊಂದಲಗಳಿವೆ. ಇದಕ್ಕೆ ಬದಲು, ಎಲ್ಲರೂ ಒಂದೇ ರೀತಿಯಲ್ಲಿ ಅವನ್ನು ಬಳಸುವ ಹಾಗಾದರೆ, ಈ ಗೊಂದಲ ಇಲ್ಲವಾಗಬಹುದು. ಕಿರಣ್ ಅವರ ಹಲಲಿಪಿ ಇಲ್ಲಿ ನೆರವಾಗಬಲ್ಲುದು.

ಬೇರೆ ಕಡೆಗಳಲ್ಲೂ ಕನ್ನಡವನ್ನು ಬರೆಯಲು ಈ ಹೊಸಲಿಪಿಯನ್ನು ಒಂದು ಆಯ್ಕೆಯ ಲಿಪಿಯಾಗಿ ಬಳಸಬಹುದು; ಅದರಲ್ಲಿ ಪುಸ್ತಕಗಳನ್ನೂ ಅಚ್ಚು ಹಾಕಿಸಬಹುದು. ಯಾಕೆಂದರೆ, ಅದರ ಬಳಕೆಯಿಂದ ನಾವು ಹಲವು ಹೆಚ್ಚಿನ ಪ್ರಯೋಜನಗಳನ್ನೂ ಪಡೆಯಬಲ್ಲೆವು: ಅದರಲ್ಲಿ ಕನ್ನಡವನ್ನು ಓದಲು-

೧೦೨


ಮುಕಾರದ ಅಳಿವು-ಉಳಿವು

ಬರೆಯಲು ಕಲಿತವರಿಗೆ ಇಂಗ್ಲಿಷ್ ಕಲಿಯಲು ಹೆಚ್ಚು ಸುಲಭವಾಗಬಲ್ಲುದು ಎಂಬುದೊಂದು; ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಈಗಿನ ಲಿಪಿಯಲ್ಲಿರುವ ಸ್ಪೆಲ್ಲಿಂಗ್ ತೊಡಕುಗಳು ಹೊಸಲಿಪಿಯಲ್ಲಿ ಇಲ್ಲವಾಗುತ್ತವೆ ಎಂಬುದಿನ್ನೊಂದು; ಮತ್ತು ಕನ್ನಡ ಮಾತನಾಡಲು ಬರುತ್ತಿದ್ದರೂ ಅದರ ಲಿಪಿಯನ್ನು ಕಲಿಯದವರು ಮತ್ತು ಇಂಗ್ಲಿಷ್ ತಿಳಿದಿರುವವರು ಸುಲಭವಾಗಿ ಈ ಲಿಪಿಯಲ್ಲಿ ಕನ್ನಡ ಬರಹಗಳನ್ನು ಓದಬಲ್ಲರು ಎಂಬುದಿನ್ನೊಂದು.

ಅಕ್ಷರಗಳ ರಚನೆಯ ಮಟ್ಟಿಗೆ, ಹಲಲಿಪಿಯನ್ನು ಬಳಸುವುದು ಈಗಿರುವ ಕನ್ನಡ ಲಿಪಿಗಿಂತ ಹಲವು ವಿಷಯಗಳಲ್ಲಿ ಹೆಚ್ಚು ಅನುಕೂಲವಾಗಿದೆ. ಉದಾ ಹರಣೆಗಾಗಿ, ಅದರಲ್ಲಿ ಒತ್ತಕ್ಷರಗಳಿರುವುದಿಲ್ಲ; ಹಾಗಾಗಿ, ಅದರ ಸಾಲುಗಳನ್ನು ಹೆಚ್ಚು ಹತ್ತಿರ ಇರಿಸಬಹುದು. ತುಂಬಾ ಚಿಕ್ಕದಾಗಿ ಅಚ್ಚುಹಾಕಿಸಿದರೂ ಅದನ್ನು ಓದಲು ಕಷ್ಟವಾಗುವುದಿಲ್ಲ. ಕನ್ನಡ ಲಿಪಿಯನ್ನು ಅಷ್ಟು ಚಿಕ್ಕದಾಗಿ ಅಚ್ಚು ಹಾಕಿಸಿದರೆ ಓದಲು ತುಂಬಾ ಕಷ್ಟವಾಗುತ್ತದೆ. ಕನ್ನಡ ಲಿಪಿಯಲ್ಲಿ ವ್ಯಂಜನಗಳ ಬಳಿಕ ಬರುವ ಸ್ವರಗಳನ್ನು ಮತ್ತು ವ್ಯಂಜನಗಳನ್ನು ಅದರೊಂದಿಗೆ ಸೇರಿಸಿ ಬರೆಯುವುದು ಇದಕ್ಕೆ ಕಾರಣವಿರಬಹುದು.

ಇದಲ್ಲದೆ, ಕಂಪ್ಯೂಟರ್ ಮೊದಲಾದ ಉಪಕರಣಗಳಲ್ಲಿ ಕನ್ನಡವನ್ನು ಈ ಹಲಲಿಪಿಯಲ್ಲಿ ಬಳಸುವುದು ಹೆಚ್ಚು ಸುಲಭವಾಗುತ್ತದೆ; ಇಂಗ್ಲಿಷ್‌ನಂತಹ ಯುರೋಪಿನ ನುಡಿಗಳಿಂದ ಪದಗಳನ್ನು ಎರವಲು ಪಡೆದು ಬಳಸುವುದೂ ಸುಲಭ; ಮತ್ತು, ಈ ಲಿಪಿಯಿಂದಾಗಿ ಕನ್ನಡಕ್ಕೆ ಜಾಗತಿಕ ಮಟ್ಟದ ಬಳಕೆ ಸುಲಭವಾಗುತ್ತದೆ. ಇಂತಹ ಹಲವು ಪ್ರಯೋಜನಗಳಿರುವ ಕಾರಣ, ಇದನ್ನು ಒಂದು ಆಯ್ಕೆಯ ಲಿಪಿಯಾಗಿ ಬಳಕೆಗೆ ತರುವುದರಿಂದ ಯಾವ ತೊಂದರೆಯೂ ಇಲ್ಲ.

೩.೩ ಋಕಾರದ ಅಳಿವು-ಉಳಿವು

ಕನ್ನಡದ ಪಠ್ಯಪುಸ್ತಕಗಳಲ್ಲಿ ಋ ಎಂಬ ಅಕ್ಷರವನ್ನು ಬಳಸುವ ಬದಲು ರು ಎಂಬುದನ್ನೇ ಬಳಸುವ ಮೂಲಕ (ಋಷಿ, ಕೃಷ್ಣ, ಮೃಗ ಮೊದಲಾದ ಪದ ಗಳನ್ನು ರುಷಿ, ಕ್ರುಷ್ಣ, ಮುರುಗ ಇತ್ಯಾದಿಯಾಗಿ ಬರೆಯುವುದರ ಮೂಲಕ), ಕನ್ನಡ ಲಿಪಿಯನ್ನು ಕಲಿಯಬೇಕಾಗಿರುವ ಮಕ್ಕಳ ಹೊರೆಯನ್ನು ಕಡಿಮೆಮಾಡ ಬಹುದೆಂದು ಪಠ್ಯಪುಸ್ತಕ ಸಮಿತಿಯವರು ಒಂದು ನಿರ್ಧಾರಕ್ಕೆ ಬಂದಿದ್ದರು. ಆದರೆ ಈ ನಿರ್ಧಾರವನ್ನು ಹಲವು ಮಂದಿ ಗಣ್ಯರ ವಿರೋಧದಿಂದಾಗಿ ಕೈಬಿಡ ಬೇಕಾಯಿತೆಂದು ದಿನಪತ್ರಿಕೆಗಳಲ್ಲಿ ಬರೆದಿದೆ. ಇಲ್ಲಿ ಯಾವ ನಿರ್ಧಾರ ಸರಿ ಮತ್ತು ಯಾವುದು ತಪ್ಪು?

೧೦೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವರ್ಣಮಾಲೆ ಮತ್ತು ಅಕ್ಷರಮಾಲೆ

ಭಾಷೆಯಲ್ಲಿರುವ ವರ್ಣಮಾಲೆಗೂ ಅದು ಬಳಸುವ ಲಿಪಿಯಲ್ಲಿ ಇರುವ ಅಕ್ಷರ ಮಾಲೆಗೂ ನಡುವೆ ವ್ಯತ್ಯಾಸಗಳಿರಬಲ್ಲುವು. ಹೆಚ್ಚಿನ ಭಾಷೆಗಳೂ ಬೇರೆ ಯಾವುದೋ ಒಂದು ಭಾಷೆಗಾಗಿ ಸಿದ್ಧವಾದ ಲಿಪಿಯನ್ನು ತಮ್ಮದಾಗಿ ಮಾಡಿ ಕೊಂಡಿರುವುದು ಇದಕ್ಕೆ ಒಂದು ಕಾರಣ. ಭಾರತದ ಭಾಷೆಗಳು ಬಳಸುವ ಲಿಪಿ ಗಳಲ್ಲಿ ಹೆಚ್ಚಿನವಕ್ಕೂ ಅಶೋಕನ ಕಾಲದಲ್ಲಿ ಪಾಲಿ ಭಾಷೆಯನ್ನು ಬರೆಯಲು ಬಳಸುತ್ತಿದ್ದ ಬ್ರಾಹ್ಮೀ ಲಿಪಿಯೇ ಮೂಲ. ಇದಲ್ಲದೆ, ಭಾರತದ ಹೊರಗೆ ಬಳಕೆ ಯಲ್ಲಿರುವ ಟಿಬೆಟನ್, ಬರ್ಮೀಸ್, ಥಾಯಿ, ಲವೋತಿಯನ್, ಕಂಬೋಡಿಯನ್ ಮೊದಲಾದ ಇತರ ಹಲವು ಭಾಷೆಗಳು ಬಳಸುವ ಲಿಪಿಗಳಿಗೂ ಇದೇ ಬ್ರಾಹ್ಮೀ ಲಿಪಿ ಮೂಲವಾಗಿದೆ.

ಒಂದು ಲಿಪಿಯನ್ನು ತಮ್ಮದಾಗಿ ಮಾಡಿಕೊಳ್ಳುವಾಗ, ಬೇರೆ ಬೇರೆ ಭಾಷೆ ಗಳು ಅದರಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ. ಎಲ್ಲಾ ಭಾಷೆಗಳಲ್ಲೂ ವರ್ಣಮಾಲೆ ಒಂದೇ ಆಗಿಲ್ಲದಿರುವುದೇ ಇದಕ್ಕೆ ಕಾರಣ. ಉದಾಹರಣೆಗಾಗಿ, ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿ ಕೊಂಡಾಗ ಅದರಲ್ಲಿ ದೀರ್ಘ ಎಕಾರ ಮತ್ತು ದೀರ್ಘ ಒಕಾರ (ಏ ಮತ್ತು ಓ) ಎಂಬ ಎರಡು ಹೆಚ್ಚಿನ ಸ್ವರಾಕ್ಷರಗಳನ್ನೂ, ಅ ಮತ್ತು ಿ ಎಂಬ ಎರಡು ಹೆಚ್ಚಿನ ವ್ಯಂಜನಾಕ್ಷರಗಳನ್ನೂ ಸೇರಿಸಿಕೊಳ್ಳಬೇಕಾಗಿತ್ತು.

ಎರವಲಾಗಿ ಪಡೆದ ಲಿಪಿಯಲ್ಲಿರುವ ಅನವಶ್ಯಕವಾದ ಅಕ್ಷರಗಳನ್ನು ಬಿಟ್ಟು ಕೊಡುವುದೂ ಅಪರೂಪವೇನಲ್ಲ. ಉದಾಹರಣೆಗಾಗಿ, ಇದೇ ಬ್ರಾಹ್ಮೀ ಲಿಪಿ ಯನ್ನು ತಮಿಳಿಗೆ ಅಳವಡಿಸಿಕೊಳ್ಳುವಾಗ, ವರ್ಗಾಕ್ಷರಗಳಲ್ಲಿ ಮೊದಲನೆಯ ಮತ್ತು ಐದನೆಯ ಅಕ್ಷರಗಳನ್ನು ಮಾತ್ರ (ಉದಾ: ಕವರ್ಗದಲ್ಲಿ ಕ ಮತ್ತು ಜಿ ಎಂಬವುಗಳನ್ನು ಮಾತ್ರ) ಉಳಿಸಿಕೊಳ್ಳುವ ಅವಶ್ಯಕತೆ ಕಂಡುಬಂದಿತ್ತು. ಹಾಗಾಗಿ, ಉಳಿದ ಮೂರು ಅಕ್ಷರಗಳನ್ನು (ಖ, ಗ, ಘಗಳನ್ನು) ತಮಿಳು ಲಿಪಿಗೆ ಅಳವಡಿಸಿ ಕೊಂಡಿರಲಿಲ್ಲ. ಇತರ ವರ್ಗಗಳಲ್ಲೂ ಇದೇ ವಿಧಾನವನ್ನು ಅನುಸರಿಸಲಾಯಿತು.

ಇದಲ್ಲದೆ, ಕಾಲದಿಂದ ಕಾಲಕ್ಕೆ ಭಾಷೆಗಳಲ್ಲಿ ನಡೆಯುವ ಬದಲಾವಣೆ ಗಳಿಂದಾಗಿ ಅವುಗಳಲ್ಲಿರುವ ವರ್ಣಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗಲು ಸಾಧ್ಯವಿದೆ, ಮತ್ತು ಈ ರೀತಿ ನಡೆಯುವ ಬದಲಾವಣೆಗಳಿಂದಲೂ ಅವುಗಳ ಲ್ಲಿರುವ ವರ್ಣ ಮತ್ತು ಅಕ್ಷರಗಳ ನಡುವೆ ವ್ಯತ್ಯಾಸಗಳುಂಟಾಗಲು ಸಾಧ್ಯವಿದೆ. ಉದಾಹರಣೆಗಾಗಿ, ಹಳೆಗನ್ನಡದಲ್ಲಿ ರ-ಅ ಮತ್ತು ಳಿ-ಳಗಳನ್ನು ಭಿನ್ನ ಭಿನ್ನವಾಗಿ ಉಚ್ಚರಿಸುತ್ತಿದ್ದಿರಬೇಕು. ಈ ಉಚ್ಚಾರಣಾಭೇದ ಹೊಸಗನ್ನಡದ ಕಾಲದಲ್ಲಿ ಅಳಿದು ಹೋಗಿದೆ. ಅದು ಈ ರೀತಿ ಅಳಿದುಹೋಗುತ್ತಿರುವ ಕಾಲದಲ್ಲಿ ಬರಹಕ್ಕೂ ಉಚ್ಚಾರಣೆಗೂ ನಡುವೆ ಅಂತರವೇರ್ಪಟ್ಟಿರಬೇಕು. ಆದರೆ, ಹೊಸ ಗನ್ನಡದ ಬರಹದಲ್ಲಿ ಅ ಮತ್ತು ಳಿ ಎಂಬ ಎರಡು ವ್ಯಂಜನಾಕ್ಷರಗಳನ್ನು ತೆಗೆದು ಹಾಕುವ ಮೂಲಕ, ಈ ಅಂತರವನ್ನು ಇಲ್ಲವಾಗಿಸಲಾಗಿದೆ.

೧೦೪


ಮುಕಾರದ ಅಳಿವು-ಉಳಿವು

ಸ್ಟೆಲ್ಲಿಂಗ್ ಸಮಸ್ಯೆ

ಭಾಷೆಯೊಂದರ ವರ್ಣಮಾಲೆಗೂ ಅದು ಬಳಸುವ ಲಿಪಿಯ ಅಕ್ಷರ ಮಾಲೆಗೂ ನಡುವೆ ಹೊಂದಾಣಿಕೆಯಿಲ್ಲವಾದಾಗಲೆಲ್ಲ ಆ ಭಾಷೆಯ ಬರವಣಿಗೆಯಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ತಲೆದೋರುತ್ತದೆ. ಕನ್ನಡದ ಲಿಪಿಯಲ್ಲಿ ಬರುವ ಶ ಮತ್ತು ಷ ಎಂಬ ಎರಡು ಅಕ್ಷರಗಳಿಗೂ ಉಚ್ಚಾರ ಒಂದೇ. ಎಂದರೆ, ಅವು ಒಂದೇ ವರ್ಣವನ್ನು ಸೂಚಿಸುತ್ತಿದ್ದು, ಅವುಗಳ ಬಳಕೆಯಲ್ಲಿ ಅಕ್ಷರಕ್ಕೂ ವರ್ಣಕ್ಕೂ ನಡುವೆ ಹೊಂದಾಣಿಕೆಯಿಲ್ಲ. ಇದೇ ರೀತಿಯಲ್ಲಿ, ಐ ಮತ್ತು ಅಯ್ ಎಂಬವು ಗಳ ನಡುವೆ, ಔ ಮತ್ತು ಅವ್ ಎಂಬವುಗಳ ನಡುವೆ, ಮತ್ತು ಅಲ್ಪಪ್ರಾಣಾಕ್ಷರ -ಮಹಾಪ್ರಾಣಾಕ್ಷರಗಳ ನಡುವೆ ಹೆಚ್ಚಿನ ಕನ್ನಡಿಗರ ಮಾತಿನಲ್ಲೂ ಉಚ್ಚಾರಣೆ ಯಲ್ಲಿ ವ್ಯತ್ಯಾಸವಿಲ್ಲ.

ಕನ್ನಡದ ಲಿಪಿಯಲ್ಲಿ ಋಕಾರದ ಸ್ಥಾನವೂ ಇಂತಹದೇ. ಹೆಚ್ಚಿನವರೂ ಅದನ್ನು ರು ಇಲ್ಲವೇ ರಿ ಎಂದು ಉಚ್ಚರಿಸುತ್ತಾರೆ. (ಅಥವಾ ರಕಾರವನ್ನೇ ಉಕಾರ ಮತ್ತು ಇಕಾರಗಳಿಂದ ಭಿನ್ನವಾದ ಬೇರೊಂದು ಸ್ವರದೊಂದಿಗೆ ಉಚ್ಚರಿಸುತ್ತಾರೆ.) ಯಾರೂ ಅದನ್ನು ಒಂದು ಸ್ವತಂತ್ರ ಸ್ವರವಾಗಿ ಉಚ್ಚರಿಸುವು ದಿಲ್ಲ. ಉಚ್ಚಾರಣೆಯಲ್ಲಿಲ್ಲದ ಈ ವ್ಯತ್ಯಾಸವನ್ನು ಲಿಪಿಯಲ್ಲಿ ಕಾಣಿಸಬೇಕಾಗಿರು ವುದರಿಂದ, ಅದೊಂದು ಸ್ಟೆಲ್ಲಿಂಗ್ ಸಮಸ್ಯೆಯಾಗಿದೆ.

ಬರಹದಲ್ಲಿರುವ ಅಕ್ಷರಗಳಿಗೂ ಅವುಗಳ ಉಚ್ಚಾರಣೆಗೂ ನಡುವೆ ಈ ರೀತಿ ವ್ಯತ್ಯಾಸಗಳು ಕಾಣಿಸಿಕೊಳ್ಳಲು ಲಿಪಿಯನ್ನು ಭಾಷೆಗೆ ಅಳವಡಿಸಿಕೊಳ್ಳುವಾಗ ಲಿಪಿ ಪಂಡಿತರು ಮಾಡುವ ತಪ್ಪುಗಳು ಇನ್ನೊಂದು ಕಾರಣ. ಹಿಂದಿನ ಕಾಲದಲ್ಲಿ ಬರಹವನ್ನು ಕೆಲವೇ ಕೆಲವು ಮಂದಿ ಮಾತ್ರ ಬಳಸುತ್ತಿದ್ದರು. ಶ-ಷಭೇದ, ಅಲ್ಪಪ್ರಾಣ-ಮಹಾಪ್ರಾಣಭೇದ ಮತ್ತು ಋ-ರು ಭೇದವನ್ನು ಇವರು ಉಚ್ಚಾರಣೆ ಯಲ್ಲಿ ಸ್ಪಷ್ಟವಾಗಿ ಮೂಡಿಸುತ್ತಿದ್ದಿರಬಹುದು. ಆದರೆ, ಇವತ್ತು ಬರಹವನ್ನು ಬಳಸುವವರ ಸಂಖ್ಯೆ ಬಹಳಷ್ಟು ಜಾಸ್ತಿಯಾಗಿರುವ ಕಾರಣ, ಹೆಚ್ಚಿನವರ ಉಚ್ಚಾರಣೆಯಲ್ಲೂ ಈ ವ್ಯತ್ಯಾಸಗಳು ಕಾಣಿಸದೆ ತೊಂದರೆಯುಂಟಾಗಿದೆ.

ಐ-ಅಯ್ ಭೇದ, ಔ-ಅವ್ ಭೇದ, ಮತ್ತು ಸೊನ್ನೆ-ಅನುನಾಸಿಕ ಭೇದ ಕನ್ನಡದ ಮಟ್ಟಿಗೆ ಅವಶ್ಯವಿಲ್ಲದ ವ್ಯತ್ಯಾಸಗಳು. ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸುವಾಗ ನಮ್ಮ ಹಿಂದಿನವರು ಇವನ್ನು ಬಿಟ್ಟುಕೊಡಬಹುದಿತ್ತು. ಹಾಗೆ ಮಾಡದಿದ್ದುದೇ ಇವತ್ತಿನ ತೊಂದರೆಗೆ ಕಾರಣ.

ಅ-ರ ಮತ್ತು ಬಿ-ಳಗಳ ನಡುವಿನ ವ್ಯತ್ಯಾಸ ಉಚ್ಚಾರಣೆಯಲ್ಲಿ ಇಲ್ಲವಾದು ದನ್ನು ಗಮನಿಸಿ, ನಮ್ಮ ಹಿರಿಯರು ಅ ಮತ್ತು ಿ ಎಂಬ ಎರಡು ಅಕ್ಷರಗಳು ಹೊಸಗನ್ನಡಕ್ಕೆ ಅನವಶ್ಯಕ ಎಂಬುದಾಗಿ ನಿರ್ಧರಿಸಿದ್ದರು, ಮತ್ತು ಅವನ್ನು ನಮ್ಮ ಬರಹದಿಂದ ತೆಗೆದುಹಾಕಿದ್ದರು. ಅವರು ಹೀಗೆ ಮಾಡಿರದಿದ್ದರೆ ಇವತ್ತಿಗೂ ನಾವು ಈ ಎರಡು ಹೆಚ್ಚಿನ ಅಕ್ಷರಗಳನ್ನು ಕಟ್ಟಿಕೊಂಡು ಕಷ್ಟಪಡಬೇಕಾಗುತ್ತಿತ್ತು.

೧೦೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಉಚ್ಚಾರಣೆಯಲ್ಲಿ ವ್ಯತ್ಯಾಸವಿಲ್ಲದ ಇತರ ಅಕ್ಷರಯುಗ್ಮಗಳ ಸ್ಥಿತಿಯೂ ಇಂತಹದೇ. ಎಷ್ಟೋ ಬಾರಿ ಎಲ್ಲಿ ಷ ಬರೆಯಬೇಕು ಮತ್ತು ಎಲ್ಲಿ ಶ ಬರೆಯ ಬೇಕು ಎಂಬುದನ್ನು ನಿರ್ಧರಿಸಲು ನಾವು ಅರ್ಥಕೋಶದ ಮರೆಹೊಗಬೇಕಾಗು ತ್ತದೆ. ಇವುಗಳ ಉಚ್ಚಾರಣೆಯಲ್ಲಿ ವ್ಯತ್ಯಾಸವಿಲ್ಲದಿರುವುದೇ ಇದಕ್ಕೆ ಕಾರಣ. ಈ ಎರಡು ವ್ಯಂಜನಗಳನ್ನು ಬರೆಯುವಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡುವುದಕ್ಕೂ ಇದೇ ಕಾರಣ. ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವಿನ ವ್ಯತ್ಯಾಸವೂ ಇಂತಹದೇ. ಹೆಚ್ಚಿನ ಕನ್ನಡಿಗರ ಉಚ್ಚಾರಣೆಯಲ್ಲೂ ಇವುಗಳೊಳಗೆ ಯಾವ ವ್ಯತ್ಯಾಸವೂ ಇಲ್ಲ. ಬರಹದಲ್ಲಿ ಮಾತ್ರ ಈ ವ್ಯತ್ಯಾಸವನ್ನು ಕಾಣಿಸಬೇಕಾಗುತ್ತದೆ. ಹಾಗಾಗಿ, ಎಲ್ಲಿ ಮಹಾಪ್ರಾಣ ಬರಬೇಕು, ಮತ್ತು ಎಲ್ಲಿ ಅಲ್ಪಪ್ರಾಣ ಬರಬೇಕು ಎಂಬುದನ್ನು ನಿರ್ಧರಿಸಲು ನಾವು ಆಗಾಗ ಅರ್ಥಕೋಶದ ಮರೆಹೊಗಬೇಕಾಗು ತ್ತದೆ.

ಸಮಸ್ಯೆಗೆ ಪರಿಹಾರ

ಈ ರೀತಿ ಬರಹಕ್ಕೂ ಮಾತಿಗೂ (ಉಚ್ಚಾರಣೆಗೂ) ನಡುವೆ ಹೊಂದಾಣಿಕೆ ತಪ್ಪಿಹೋದಾಗಲೆಲ್ಲ ಬರಹದಲ್ಲಿ ಬದಲಾವಣೆಯನ್ನು ಮಾಡಿ ಅದು ಉಚ್ಚಾ ರಣೆಗೆ ಹೊಂದಿಕೊಳ್ಳುವಂತೆ ಮಾಡುವುದೇ ಸ್ಪೆಲ್ಲಿಂಗ್ ಸಮಸ್ಯೆಗೆ ಉತ್ತಮ ಪರಿಹಾರ. ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ಪೆಲ್ಲಿಂಗ್ ಸಮಸ್ಯೆ ಬಹಳ ಜಟಿಲ ವಾಗಿದೆ. ಹಾಗಾಗಿ, ಅದನ್ನು ಪರಿಹರಿಸುವುದೂ ಬಹಳ ಕಷ್ಟ. ಆದರೆ, ಕನ್ನಡದ ಬರಹದಲ್ಲಿ ಹೆಚ್ಚಿನಡೆಗಳಲ್ಲೂ ಮಾತಿನೊಡನೆ ನೇರವಾದ ಹೊಂದಾಣಿಕೆ ಯಿರುವುದಾದ ಕಾರಣ, ಕೆಲವೇ ಕೆಲವು ಬದಲಾವಣೆಗಳ ಮೂಲಕ ಅದರಲ್ಲಿ ಕಾಣಿಸುವ ಸ್ಪೆಲ್ಲಿಂಗ್ ಸಮಸ್ಯೆಯನ್ನು ನಿವಾರಿಸಬಹುದು.

ಇಲ್ಲಿ ಕೆಲವು ಮುಖ್ಯವಾದ ವಿಷಯಗಳನ್ನು ಗಮನಿಸುವುದು ಅವಶ್ಯ. ಕಾಲ ದಿಂದ ಕಾಲಕ್ಕೆ ಭಾಷೆ ಬದಲಾಗುತ್ತಿರುವುದು ಒಂದು ಸಹಜವಾದ ಕ್ರಿಯೆ. ಅದು ನಮ್ಮ ಅರಿವಿಗೆ ಎಟಕದ ವ್ಯಾಕರಣ ಜ್ಞಾನದಲ್ಲಿ ನಡೆಯುವ ಬದಲಾವಣೆಯ ಫಲವಾದ ಕಾರಣ, ಅದನ್ನು ಯಾರೂ ತಡೆಯಲಾರರು. ಆದರೆ ಈ ಬದಲಾವಣೆ ಗಳನ್ನನುಸರಿಸಿ ನಮ್ಮ ಬರಹ ಇಲ್ಲವೇ ಲಿಪಿಯಲ್ಲಿ ಬದಲಾವಣೆಗಳನ್ನು ಪ್ರಯತ್ನ ಪೂರ್ವಕವಾಗಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಭಾಷೆ ಮತ್ತು ಬರಹಗಳ ನಡುವೆ ಹೊಂದಾಣಿಕೆ ತಪ್ಪಿಹೋಗಿ, ಬರಹವನ್ನು ಸ್ಪೆಲ್ಲಿಂಗ್ ಸಮಸ್ಯೆ ಕಾಡುತ್ತದೆ.

ಇಂತಹ ಬದಲಾವಣೆಗಳನ್ನು ಸಮಾಜದ ಗಣ್ಯರು ನಿಷೇಧಿಸುವುದೂ ಸಹಜವೇ. ಅವರು ಸಾಮಾನ್ಯವಾಗಿ ಈ ರೀತಿ ಲಿಪಿಯಲ್ಲಿ ಮಾಡಬಹುದಾದ ಬದಲಾವಣೆಗಳನ್ನು ಮಾತ್ರವಲ್ಲ, ಭಾಷೆಯಲ್ಲಿ ಸಾಹಜವಾಗಿ ನಡೆಯುವಂತಹ ಬದಲಾವಣೆಗಳನ್ನೂ ಸಹಿಸುವುದಿಲ್ಲ. ಆದರೆ, ಭಾಷೆಯಲ್ಲಿ ನಡೆಯುವ ಬದಲಾ ವಣೆಗಳ ಮೇಲೆ ಯಾರಿಗೂ ನೇರವಾದ ನಿಯಂತ್ರಣವಿರುವುದಿಲ್ಲ. ಅಂತಹ

೧೦೬


ಮುಕಾರದ ಅಳಿವು-ಉಳಿವು

ಬದಲಾವಣೆಗಳು ಬರಹವನ್ನು ಸ್ಪರ್ಶಿಸದಂತೆ ಅವರು ಸ್ವಲ್ಪಮಟ್ಟಿಗೆ ಅದನ್ನು ನಿಯಂತ್ರಿಸಬಲ್ಲರು. ಆದರೆ ಇದರಿಂದಾಗಿ ಬರಹಕ್ಕೂ ಮಾತಿಗೂ ನಡುವೆ ಕಂದಕ ವೇರ್ಪಡುತ್ತದೆ.

ಸ್ಟೆಲ್ಲಿಂಗ್ ಸಮಸ್ಯೆ ಸ್ವಲ್ಪ ಸ್ವಲ್ಪವಾಗಿ ಬರಹದಲ್ಲಿ ಸೇರಿಕೊಳ್ಳುತ್ತಿರುತ್ತದೆ. ಇದು ಬಹಳ ಜಾಸ್ತಿಯಾದಾಗ ಮಾತ್ರ, ಜನರಿಗೆ ಅದೊಂದು ಸಮಸ್ಯೆಯೆಂಬ ಅರಿವಾಗುತ್ತದೆ. ಇಂತಹ ಸಮಯದಲ್ಲಿ ಕ್ರಾಂತಿಕಾರೀ ಯುವಕರು ಗಣ್ಯರ ವಿರೋಧವನ್ನೂ ಲೆಕ್ಕಿಸದೆ, ಬರಹವನ್ನು ಬದಲಾಯಿಸಿಕೊಳ್ಳಬಲ್ಲರು. ಕನ್ನಡದಲ್ಲಿ ಮುಖ್ಯವಾಗಿ ರು-ಋ, ಶ-ಷ, ಅಯ್-ಐ, ಅವ್-ಔ, ಮತ್ತು ಅಲ್ಪಪ್ರಾಣ- ಮಹಾಪ್ರಾಣಗಳೆಂಬ ಈ ಅಕ್ಷರಯುಗ್ಮಗಳ ಬಳಕೆಯಲ್ಲಿ, ಮತ್ತು ಸೊನ್ನೆ ಹಾಗೂ ವಿಸರ್ಗಗಳ ಬಳಕೆಯಲ್ಲಿ ಸ್ಟೆಲ್ಲಿಂಗ್ ಸಮಸ್ಯೆಯಿರುವುದಂತೂ ನಿಜ.

ಈ ಅಕ್ಷರಯುಗಗಳಲ್ಲಿ ಪ್ರತಿಯೊಂದರಲ್ಲೂ ಎರಡನೆಯ ಅಕ್ಷರವನ್ನು ಬರಹದಿಂದ ತೆಗೆದುಹಾಕಿ ಕನ್ನಡ ಬರಹದ ಸ್ಪೆಲ್ಲಿಂಗ್ ಸಮಸ್ಯೆಯನ್ನು ನಿವಾರಿಸ ಬಹುದು. ಹೀಗೆ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಬರಹವನ್ನು ಕಲಿಯಲು ಮತ್ತು ಇತರರಿಗೆ ಅದನ್ನು ಬಳಸಲು ಸುಲಭವಾದೀತು ಎಂಬುದೂ ನಿಜವೇ. ಆದರೆ, ಇಂತಹ ಬದಲಾವಣೆಗಳನ್ನು ಮಾಡಬೇಕೇ ಅಥವಾ ಬೇಡವೇ, ಮತ್ತು ಮಾಡುವುದಾದರೆ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ಸಮಾಜವೇ ನಿರ್ಧರಿಸಬೇಕು.

ಹಳೇ ಮತ್ತು ಹೊಸ ಬರಹಗಳು

ಈ ಅನವಶ್ಯಕವಾದ ಅಕ್ಷರಗಳನ್ನು ಬಿಟ್ಟುಕೊಟ್ಟಲ್ಲಿ, ಅವುಗಳನ್ನು ಬಳಸುವ ಹಳೆಯ ಬರಹಗಳನ್ನು ಓದಲು ಕಷ್ಟವಾಗಬಹುದೇ, ಮತ್ತು ಹಾಗೆ ಓದುವಾಗ ಗೊಂದಲವುಂಟಾಗಬಹುದೇ ಎಂಬುದನ್ನೂ ಚಿಂತಿಸುವುದು ಅವಶ್ಯ. ನಿಜಕ್ಕೂ ಒಂದು ಹೊಸ ಅಕ್ಷರವನ್ನು ಗುರುತಿಸಿಕೊಳ್ಳಲು ನಮಗೆ ಕೆಲವೇ ಕೆಲವು ಮಿನಿಟು ಗಳಷ್ಟು ಸಮಯ ಸಾಕು.

ಉದಾಹರಣೆಗಾಗಿ, ಹಳೆಗನ್ನಡದ ಬರಹಗಳನ್ನು ಮೊದಲ ಬಾರಿಗೆ ಓದುವಾಗ ಅವುಗಳಲ್ಲಿ ಹೊಸದಾಗಿ ಕಾಣಿಸುವ ಅ ಮತ್ತು ಿಗಳನ್ನು ಗುರುತಿಸಿಕೊಳ್ಳುವಲ್ಲಿ ನಮಗೆ ಸಮಸ್ಯೆಯೇನೂ ಉದ್ಭವಿಸುವುದಿಲ್ಲ. ಇವತ್ತಿನ ಉಚ್ಚಾರಣೆಯಲ್ಲಿ ಅ-ರ ಮತ್ತು ಿ-ಳಗಳೊಳಗೆ ವ್ಯತ್ಯಾಸವಿಲ್ಲ, ಹಳೆಗನ್ನಡದ ಕಾಲದಲ್ಲಿದ್ದ ವ್ಯತ್ಯಾಸವನ್ನು ಅವು ಪ್ರತಿನಿಧೀಕರಿಸುತ್ತವೆ ಎಂದಿಷ್ಟನ್ನು ಮಾತ್ರ ನಮಗೆ ಯಾರಾದರೂ ತಿಳಿಸಿ ಹೇಳಿದರೆ ಸಾಕು.

ನಿಜಕ್ಕೂ ಉಚ್ಚಾರಣೆಯಲ್ಲಿ ಕಾಣಿಸದ ವ್ಯತ್ಯಾಸವನ್ನು ಬರಹದಲ್ಲಿ ಕಾಣಿಸ ಬೇಕಾಗಿ ಬಂದಾಗ ಮಾತ್ರ ಸಮಸ್ಯೆ ಎದುರಾಗುತ್ತದೆ. ಎಲ್ಲಿ ಋ ಬರೆಯಬೇಕು ಎಲ್ಲಿ ರು ಬರೆಯಬೇಕು, ಇಲ್ಲವೇ ಎಲ್ಲಿ ಶ ಬರೆಯಬೇಕು ಎಲ್ಲಿ ಷ ಬರೆಯ ಬೇಕು, ಎಲ್ಲಿ ಮಹಾಪ್ರಾಣ ಬಳಸಬೇಕು ಎಲ್ಲಿ ಅಲ್ಪಪ್ರಾಣ ಬಳಸಬೇಕು

೧೦೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಎಂಬುದೇ ನಮ್ಮ ಸಮಸ್ಯೆ. ಇತರರು ಅಂತಹ ವ್ಯತ್ಯಾಸವನ್ನು ಕಾಣಿಸಿರುವರಾದರೆ ಅದನ್ನು ಓದುವಲ್ಲಿ ನಮಗೆ ಯಾವ ಸಮಸ್ಯೆಯೂ ಉದ್ಭವಿಸಲಾರದು. ಹಾಗಾಗಿ, ಋ, ಐ, ಔ, ಷ, ಸೊನ್ನೆ, ವಿಸರ್ಗ ಮೊದಲಾದ ಅನವಶ್ಯಕವಾದ ಅಕ್ಷರಗಳನ್ನು ನಮ್ಮ ಬರಹದಿಂದ ತೆಗೆದು ಹಾಕಿದೆವಾದರೆ, ಕನ್ನಡ ಬರಹದಲ್ಲಿ ಕಾಣಿಸುವ ಸ್ಪೆಲ್ಲಿಂಗ್ ಸಮಸ್ಯೆ ಬಹಳ ಮಟ್ಟಿಗೆ ಕಡಿಮೆಯಾಗಬಲ್ಲುದಲ್ಲದೆ, ಅವನ್ನು ಬಳಸುವ ಹಳೆಯ ಬರಹಗಳನ್ನು ಓದುವಲ್ಲಿ ಎಂತಹ ಗೊಂದಲವೂ ಉಂಟಾಗ ಲಾರದು.

ಯಾವುದು ಸಂಸ್ಕೃತಿ?

ಈ ಮೇಲಿನ ಅಕ್ಷರಯುಗ್ಮಗಳು ಕನ್ನಡ ಭಾಷೆಯ ಮಟ್ಟಿಗೆ ಅನವಶ್ಯಕ ಎಂಬುದರಲ್ಲಿ ಸಂಶಯವಿಲ್ಲ. ಸಂಸ್ಕೃತ ಭಾಷೆಯನ್ನು ಬರೆಯುವಲ್ಲಿ ಅವು ಅವಶ್ಯವಿರಬಹುದು. ಅವುಗಳಲ್ಲಿ ಕೆಲವು ವೇದಕಾಲದಲ್ಲಿ ಸಂಸ್ಕೃತ ಭಾಷೆಯನ್ನು ನುಡಿಯುತ್ತಿದ್ದಾಗ ಮಾಡುತ್ತಿರಬಹುದಾದ ಉಚ್ಚಾರಣಾಭೇದವನ್ನು ಪ್ರತಿಬಿಂಬಿಸು ತಿವೆ. ಇನ್ನು ಕೆಲವು ಸಂಧಿಕಾರ್ಯದಲ್ಲಿ ಕಾಣಿಸುವ ವ್ಯತ್ಯಾಸವನ್ನು ಸೂಚಿಸುವು ದಕ್ಕಾಗಿ ಬಳಕೆಗೆ ಬಂದಿವೆ. ಆದರೆ ಈ ಕಾರಣಕ್ಕಾಗಿ ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಈ ಲಿಪಿಭೇದವನ್ನು ನಾವು ಹಾಗೆಯೇ ಉಳಿಸಿ ಕೊಳ್ಳಬೇಕು, ಇಲ್ಲವಾದರೆ ನಮ್ಮ ‘ಸಂಸ್ಕೃತಿ’ಯೇ ನಷ್ಟವಾಗುತ್ತದೆ ಎಂದು ಕೆಲವರು ಗಣ್ಯರು ವಾದಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾದ ಸಂಗತಿ.

ಈ ರೀತಿ ಸಂಸ್ಕೃತ ಲಿಪಿಯ ವೈಶಿಷ್ಟ್ಯವನ್ನು ಹಾಗೆಯೇ ಉಳಿಸಿಕೊಳ್ಳ ದಿದ್ದರೆ ನಮ್ಮ ಸಂಸ್ಕೃತಿಯೇ ನಾಶವಾಗುವುದೆಂದು ಹೇಳುವ ಈ ಗಣ್ಯರು ಯಾರೂ ಹಳೆಗನ್ನಡದ ಅ ಮತ್ತು ಳಿಗಳನ್ನು ಕೈಬಿಟ್ಟಿರುವುದರಿಂದಾಗಿ ನಮ್ಮ ಸಂಸ್ಕೃತಿ ನಷ್ಟವಾಗಿದೆಯೆಂದಾಗಲಿ, ಇಲ್ಲವೇ ಅವನ್ನು ಪುನಃ ಬಳಕೆಗೆ ತರ ಬೇಕೆಂದಾಗಲಿ ಹೇಳುವ ಹಾಗೆ ಕಾಣಿಸುವುದಿಲ್ಲ. ಸಂಸ್ಕೃತದಿಂದ ಎರವಲಾಗಿ ಬಂದ ಪದಗಳನ್ನು ಕನ್ನಡದಲ್ಲಿ ನಾವು ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯುವುದರಲ್ಲಿ ತಪ್ಪೇನಿಲ್ಲ. ಹಾಗೆ ಮಾಡುವುದೇ ನಮ್ಮ ಸಂಸ್ಕೃತಿಯೆಂದು ತಿಳಿದುಕೊಂಡರೆ ಸಾಕು.

ತಮಿಳು ಬರಹದಲ್ಲಿ ಋಕಾರ, ವಿಸರ್ಗ, ಸೊನ್ನೆ, ಮಹಾಪ್ರಾಣ ಮೊದಲಾ ದವುಗಳನ್ನು ಬಳಸುವ ಕ್ರಮವಿಲ್ಲ. ಹೀಗೆ ಬಳಸದಿರುವುದೇ ತಮ್ಮ ಸಂಸ್ಕೃತಿ ಯೆಂದು ಅವರು ತಿಳಿದಿದ್ದಾರೆ. ಏ-ಓ, ಅ-ಅಗಳು ಮಾತ್ರವಲ್ಲದೆ ಕನ್ನಡದ ಲ್ಲಿಲ್ಲದ ವಿಶಿಷ್ಟವಾದೊಂದು ನಕಾರವನ್ನೂ ಅವರು ತಮ್ಮ ಲಿಪಿಗೆ ಅವಶ್ಯವೆಂದು ಸೇರಿಸಿಕೊಂಡಿದ್ದಾರೆ. ನಮ್ಮ ಭಾಷೆಯಲ್ಲಿರುವ ವರ್ಣಗಳನ್ನೆಲ್ಲ ತಪ್ಪಿಲ್ಲದೆ ಸರಿಯಾಗಿ ಸೂಚಿಸುವಂತಹ ಲಿಪಿಯನ್ನು ನಮ್ಮ ಭಾಷೆಗೆ ಅಳವಡಿಸಿಕೊಳ್ಳುವುದೇ ಸಂಸ್ಕೃತಿಯಲ್ಲದೆ ಅನವಶ್ಯಕವಾದ ಸಂಜ್ಞೆಗಳನ್ನು ಕಷ್ಟದಿಂದ ಉಳಿಸಿಕೊಳ್ಳುವುದು ಭ್ರಮೆಯಲ್ಲದೆ ಸಂಸ್ಕೃತಿಯಲ್ಲ.

೧೦೮


ಟರ್ಕಿ ದೇಶದ ಲಿಪಿಕ್ರಾಂತಿ

ನನ್ನ ಚಿಕ್ಕಂದಿನಲ್ಲಿ ಜುಟ್ಟನ್ನು ಇರಿಸಿಕೊಳ್ಳುವುದು ಸಂಸ್ಕೃತಿಯೆಂದು ಹಿರಿಯರು ವಿಧಿಸಿದ್ದರು. ಆದರೆ ಶಾಲೆಯಲ್ಲಿ ಹೆಚ್ಚಿನವರೂ ಅದನ್ನು ತೆಗೆದುಹಾಕಿ ಅಂದವಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದರಾದ ಕಾರಣ, ನನಗೆ ಜುಟ್ಟನ್ನು ಇರಿಸಿ ಕೊಳ್ಳುವುದು ಮುಜುಗರವೆಂದೆನಿಸುತ್ತಿತ್ತು. ಹಾಗಾಗಿ, ಯಾವಾಗಲೂ ನಾನು ಒಂದು ಗಾಂಧೀ ಟೊಪ್ಪಿಯನ್ನು ಧರಿಸುತ್ತಿದ್ದು, ಜುಟ್ಟನ್ನು ಅದರ ಒಳಗೆ ಅಡಗಿಸಿ ಕೊಳ್ಳುತ್ತಿದ್ದೆ. ಅನಂತರ ಉಚ್ಚವಿದ್ಯಾಭ್ಯಾಸಕ್ಕಾಗಿ ದೂರದ ಊರಿನಲ್ಲಿರಬೇಕಾಗಿ ಬಂದಾಗ, ಧೈರ್ಯ ತಂದುಕೊಂಡು ಅದನ್ನು ತೆಗೆಸಿ ಹಾಕಿ ಆ ‘ಸಂಸ್ಕೃತಿ’ಯ ಹೊರೆಯಿಂದ ಮುಕ್ತನಾದೆ.

ಋಕಾರ, ಷಕಾರ, ಐಕಾರ ಮೊದಲಾದವುಗಳ ಹೊರೆಯೂ ಇಂತಹದೇ ಎಂದು ನನ್ನ ಅಭಿಪ್ರಾಯ. ಆ ಹೊರೆಯಿಂದ ಮುಕ್ತರಾಗಲು ಧೈರ್ಯ ಬೇಕು. ಗಣ್ಯರೆಂದೆನ್ನಿಸಿಕೊಂಡವರ ವಿರೋಧವನ್ನೂ ಲೆಕ್ಕಿಸದೆ ಅನವಶ್ಯಕವಾದ ಈ ಹೊರೆಯನ್ನು ತೆಗೆದುಹಾಕಿದಲ್ಲಿ, ಮುಂದಿನ ಪೀಳಿಗೆಯವರೆಲ್ಲರ ಕೃತಜ್ಞತೆಗೂ ನಾವು ಭಾಗಿಗಳಾಗಬಲ್ಲೆವು.

೩.೪ ಟರ್ಕಿ ದೇಶದ ಲಿಪಿಕ್ರಾಂತಿ

ಸುಮಾರು ಎಪ್ಪತ್ತೈದು ವರ್ಷಗಳಷ್ಟು ಹಿಂದೆ, ಟರ್ಕಿ ದೇಶದಲ್ಲಿ ಒಂದು ದೊಡ್ಡ ಲಿಪಿಕ್ರಾಂತಿ ನಡೆಯಿತು. ಅದುವರೆಗೆ ಹೆಚ್ಚಿನವರೂ ತಮ್ಮ ಬರಹಗಳಲ್ಲಿ ಬಳಸು ತಿದ್ದ ಅರೇಬಿಕ್ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ಲ್ಯಾಟಿನ್ ಲಿಪಿ ಯನ್ನು ಬಳಸುವ ನಿರ್ಧಾರ ಮಾಡಲಾಯಿತು. ಇದರಿಂದಾಗಿ, ಮೇಲ್ವರ್ಗದ ಕೆಲವೇ ಕೆಲವು ಜನರ ಸೊತ್ತಾಗಿ ಉಳಿದಿದ್ದ ಟರ್ಕಿಷ್ ಬರಹ ಎಲ್ಲರ ಸೊತ್ತಾಗಲು ಸಾಧ್ಯವಾಯಿತು.

ಬರಹ ಎಲ್ಲರ ಸೊತ್ತಾಗಬೇಕು, ಎಲ್ಲರೂ ‘ಸಾಕ್ಷರರಾಗಬೇಕು’ ಎಂಬ ಪ್ರಯತ್ನ ನಮ್ಮಲ್ಲೂ ಹಲವು ವರ್ಷಗಳಿಂದ ನಡೆಯುತ್ತಿದೆ, ಮತ್ತು ಇದಕ್ಕಾಗಿ ನಮ್ಮ ಸರಕಾರ ಕೋಟಿಗಟ್ಟಲೆ ಹಣವನ್ನೂ ಖರ್ಚು ಮಾಡುತ್ತಿದೆ. ಆದರೆ, ಇದರ ಪ್ರತಿಫಲ ಮಾತ್ರ ತುಂಬಾ ಕಡಿಮೆ. ಕಷ್ಟಪಟ್ಟು ಬರಹ ಕಲಿತರೂ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಿಕೊಳ್ಳಬಲ್ಲವರು ಇವತ್ತಿಗೂ ನಮ್ಮಲ್ಲಿ ಹೆಚ್ಚು ಮಂದಿಯಿಲ್ಲ.

ಕೆಳವರ್ಗದ ಜನರು ಕನ್ನಡ ಬರಹವನ್ನು ಕಲಿಯದಿರುವುದಕ್ಕೆ, ಮತ್ತು ಕಲಿತರೂ ಅದನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಸಲು ಸಾಧ್ಯವಾಗ ದಿರುವುದಕ್ಕೆ ನಾವು ಕನ್ನಡದಲ್ಲಿ ಬಳಸುವ ಲಿಪಿಯ ದೋಷವೇನಾದರೂ ಕಾರಣ ವಿರಬಹುದೇ? ಮತ್ತು ಇದು ನಿಜವಾದರೆ, ಟರ್ಕಿಷ್ ದೇಶದ ಈ ಲಿಪಿಕ್ರಾಂತಿ

೧೦೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಯಿಂದ ನಾವೇನಾದರೂ ಕಲಿತುಕೊಳ್ಳಲು ಸಾಧ್ಯವೇ ಎಂಬುದನ್ನು ಇಲ್ಲಿ ಪರಿಶೀಲಿಸುವ ಅವಶ್ಯಕತೆಯಿದೆ.

ಅರೇಬಿಕ್ ಲಿಪಿಯ ದೋಷಗಳು

ಟರ್ಕಿಷ್ ಭಾಷೆಯನ್ನಾಡುವ ಜನರು ಮುಸ್ಲಿಮರಾಗಿ ಮತಾಂತರಗೊಂಡಾಗ ಲೇನೇ ಅರೇಬಿಕ್ ಲಿಪಿಯನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡಿರಬೇಕು. ಹಾಗಾಗಿ, ಆ ಲಿಪಿಯ ಬಳಕೆಗೆ ಟರ್ಕಿಷ್ ಭಾಷೆಯಲ್ಲಿ ಸಾವಿರ ವರ್ಷಗಳಿ ಗಿಂತಲೂ ಹೆಚ್ಚು ದೀರ್ಘವಾದ ಚರಿತ್ರೆಯಿದೆ. ಆದರೆ, ಆ ಲಿಪಿ ಹಲವು ರೀತಿಯಲ್ಲಿ ಟರ್ಕಿಷ್ ಪದಗಳ ಉಚ್ಚಾರಣೆಯನ್ನು ಸರಿಯಾಗಿ ಸೂಚಿಸಲು ಶಕ್ತವಾಗಿರಲಿಲ್ಲ.

ಉದಾಹರಣೆಗಾಗಿ, ಟರ್ಕಿಷ್ ಭಾಷೆಯಲ್ಲಿ ಎಂಟು ಸ್ವರವರ್ಣಗಳಿದ್ದು ವಾದರೂ ಅದು ಬಳಸುವ ಅರೇಬಿಕ್ ಲಿಪಿಯಲ್ಲಿ ಮೂರು ಸ್ವರಗಳನ್ನು ಮಾತ್ರ ಸೂಚಿಸಲು ಸಾಧ್ಯವಿತ್ತು. ಇದಲ್ಲದೆ, ಅರೇಬಿಕ್ ಮತ್ತು ಪರ್ಶಿಯನ್ ಭಾಷೆ ಗಳಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಾಗ, ಉಚ್ಚಾರಣೆಯಲ್ಲಿ ಇಲ್ಲದಂತಹ ಹಲವು ವ್ಯತ್ಯಾಸಗಳನ್ನು ಲಿಪಿಯಲ್ಲಿ ತೋರಿಸುವ ಪದ್ಧತಿ ಬಳಕೆ ಯಲ್ಲಿತ್ತು. ಬರಹದಲ್ಲಿ ಇಂತಹ ಪದಗಳ ಬಳಕೆಯೂ ಬಹಳ ಜಾಸ್ತಿಯಿತ್ತು. ಇದರಿಂದಾಗಿ, ಬರಹದ ಭಾಷೆ ಮಾತಿನ ಭಾಷೆಗಿಂತ ಬಹಳ ಭಿನ್ನವಾಗಿ ಬೆಳೆದು ಬಂದಿತ್ತು.

ಈ ಎಲ್ಲಾ ಕಾರಣಗಳಿಂದಾಗಿ, ಟರ್ಕಿಷ್ ಬರಹ ಆ ದೇಶದಲ್ಲಿ ಕೆಲವರ ಸೊತ್ತಾಗಿ ಮಾತ್ರ ಉಳಿದಿತ್ತು. ಶೇಕಡಾ ಹತ್ತಕ್ಕಿಂತ ಕಡಿಮೆ ಜನ ಮಾತ್ರ ಆ ದೇಶದಲ್ಲಿ ಬರಹವನ್ನು ಬಲ್ಲವರಾಗಿದ್ದರು. ಈ ಪರಿಸ್ಥಿತಿ ಹಿಂದಿನ ಕಾಲಕ್ಕೆ ಸರಿಹೋಗಬಹುದಿತ್ತಾದರೂ, ಇಪ್ಪತ್ತನೇ ಶತಮಾನಕ್ಕೆ ಕಾಲಿರಿಸುತ್ತಿದ್ದಂತೆ, ಯುರೋಪಿನ ಇತರ ದೇಶಗಳಲ್ಲಿ ಕಾಣಿಸುವ ಹಾಗೆ, ಟರ್ಕಿ ದೇಶದಲ್ಲೂ ಬರಹ ಎಲ್ಲರ ಸೊತ್ತಾಗಬೇಕೆಂಬ ಕಳಕಳಿ ಅಲ್ಲಿನ ವಿದ್ವಾಂಸರಲ್ಲಿ ಮತ್ತು ರಾಜಕಾರಣಿ ಗಳಲ್ಲಿ ಉಂಟಾಯಿತು.

ಲಿಪಿಯ ಬದಲಾವಣೆ

೧೯೨೩ರಲ್ಲಿ ಟರ್ಕಿ ಒಂದು ಪ್ರಜಾಪ್ರಭುತ್ವವುಳ್ಳ ಗಣರಾಜ್ಯವಾಯಿತು. ಆಗ ಈ ಕಳಕಳಿಗೆ ಇನ್ನಷ್ಟು ಹೆಚ್ಚಿನ ಮಹತ್ವ ಬಂತು. ಪ್ರಜಾಪ್ರಭುತ್ವದಲ್ಲಿ ಬರಹ ಎಲ್ಲರ ಸೊತ್ತಾಗುವುದು ರಾಜಕೀಯವಾಗಿ ಮಾತ್ರವಲ್ಲದೆ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯವಶ್ಯ. ಹೆಚ್ಚಿನ ವಿದ್ವಾಂಸರೂ ಈ ರೀತಿ ಟರ್ಕಿಷ್ ಬರಹ ಎಲ್ಲರ ಸೊತ್ತಾಗದಿರುವುದಕ್ಕೆ ಅದು ಬಳಸುವ ಅರೇಬಿಕ್ ಲಿಪಿಯೇ ಕಾರಣ ಎಂಬ ನಿರ್ಧಾರಕ್ಕೆ ಬಂದಿದ್ದರು.

೧೧೦

ಟರ್ಕಿ ದೇಶದ ಲಿಪಿಕ್ರಾಂತಿ

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಿಂದಲೂ ಅರೇಬಿಕ್ ಲಿಪಿ ಯಲ್ಲಿ ಟರ್ಕಿಷ್ ಭಾಷೆಯನ್ನು ಬರೆಯುವ ಕುರಿತು ವಿದ್ವಾಂಸರಲ್ಲಿ ಅಸಮಧಾನ ಕಾಣಿಸಲು ಸುರುವಾಗಿತ್ತು. ಆ ಸಮಯದಲ್ಲಿ ಹೆಚ್ಚಿನವರೂ ಟರ್ಕಿಷ್ ಭಾಷೆ ಯನ್ನು ಬರೆಯಲು ಅರೇಬಿಕ್ ಲಿಪಿಯನ್ನು ಬಳಸುತ್ತಿದ್ದರಾದರೂ, ಅಲ್ಪಮತ ದವರಾದ ಕ್ರಿಶ್ಚಿಯನ್ನರು ರೋಮನ್ ಲಿಪಿಯನ್ನು ಬಳಸುತ್ತಿದ್ದರು. ಇದಲ್ಲದೆ, ಬೇರೆ ಕೆಲವರು ಗ್ರೀಕ್ ಲಿಪಿಯನ್ನೂ ಈ ಭಾಷೆಗೆ ಅಳವಡಿಸಿಕೊಂಡಿದ್ದರು.

ಪಕ್ಕದ ದೇಶವಾದ ಅಲ್ಬೇನಿಯಾದಲ್ಲಿ ೧೮೭೯ರಲ್ಲೇನೇ ಅಲ್ಬೇನಿಯನ್ ಭಾಷೆಗೆ ಅರೇಬಿಕ್ ಲಿಪಿಗಿಂತಲೂ ರೋಮನ್ ಲಿಪಿಯೇ ಉತ್ತಮವೆಂಬುದಾಗಿ ನಿರ್ಧರಿಸಿ, ಅದುವರೆಗೆ ಬಳಕೆಯಲ್ಲಿದ್ದ ಅರೇಬಿಕ್ ಲಿಪಿಗೆ ಬದಲಾಗಿ ರೋಮನ್ ಲಿಪಿಯನ್ನು ಬಳಸಲು ತೊಡಗಿಯಾಗಿತ್ತು. ಸುಧಾರಣೆಯ ಹೆಸರಿನಲ್ಲಿ ಹೀಗೆ ಮಾಡುವುದು ಧರ್ಮನಿಂದನೆಯೆಂಬುದಾಗಿ ಮತಾಧಿಕಾರಿಗಳು ಫತ್ವಾ ಹೊರಡಿ ಸಿದ್ದರಾದರೂ ಈ ಕೆಲಸ ನಡೆದುಹೋಗಿತ್ತು.

೧೯೨೮ರಲ್ಲಿ ಟರ್ಕಿ ದೇಶವೂ ಟರ್ಕಿಷ್ ಭಾಷೆಗೆ ಅರೇಬಿಕ್ ಲಿಪಿಯನ್ನು ಬಳಸುವ ಬದಲು ರೋಮನ್ ಲಿಪಿಯನ್ನು ಬಳಸಬೇಕೆಂಬ ನಿರ್ಧಾರಕ್ಕೆ ಬಂತು. ಆಗಿನ ಜನಪ್ರಿಯ ಅಧ್ಯಕ್ಷರಾಗಿದ್ದ ಮುಸ್ತಾಫಾ ಕಮಲ್ ಅವರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದುದರಿಂದಾಗಿ, ಈ ಬದಲಾವಣೆ ಇಡೀ ದೇಶದಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ನಡೆದು ಹೋಗಲು ಸಾಧ್ಯವಾಯಿತು. ಇದರಿಂದಾಗಿ, ಆ ದೇಶದಲ್ಲಿ ಹೆಚ್ಚು ಹೆಚ್ಚು ಜನ ಟರ್ಕಿಷ್ ಬರಹವನ್ನು ತಮ್ಮದನ್ನಾಗಿ ಮಾಡಿ ಕೊಳ್ಳಲು ಶಕ್ತರಾದರು.

ಕನ್ನಡದ ಪರಿಸ್ಥಿತಿ

ಕನ್ನಡದ ಪರಿಸ್ಥಿತಿ ಬಹಳಮಟ್ಟಿಗೆ ಈ ಟರ್ಕಿಷ್ ಪರಿಸ್ಥಿತಿಯನ್ನು ಹೋಲುತ್ತದೆ: ಟರ್ಕಿಷ್ ಭಾಷೆಗೆ ಅರೇಬಿಕ್ ಮೂಲದ ಲಿಪಿಯನ್ನು ಅಳವಡಿಸಿಕೊಂಡಿದ್ದ ಕಾರಣ, ಅರೇಬಿಕ್ ಮತ್ತು ಪರ್ಶಿಯನ್ ಮೂಲದ ಪದಗಳನ್ನು ಆ ಭಾಷೆಗಳಲ್ಲಿ ಹೇಗೆ ಬರೆಯುತ್ತಾರೋ ಹಾಗೆಯೇ ಟರ್ಕಿಷ್‌ನಲ್ಲೂ ಬರೆಯಬೇಕು ಎಂಬ ನಿಯಮವನ್ನು ತಮ್ಮ ಮೇಲೆ ಹೊರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿತ್ತು.

ಕನ್ನಡದಲ್ಲೂ ಹೀಗೆಯೇ. ಈ ಭಾಷೆಗೆ ಬ್ರಾಹ್ಮೀ ಲಿಪಿಯನ್ನು ಅಳವಡಿಸಿ ಕೊಂಡಿದ್ದ ಕಾರಣ, ಸಂಸ್ಕೃತ ಪದಗಳನ್ನು ಆ ಭಾಷೆಯಲ್ಲಿ ಹೇಗೆ ಬರೆಯು ತಾರೋ ಹಾಗೆಯೇ ಕನ್ನಡದಲ್ಲೂ ಬರೆಯಬೇಕೆಂಬ ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾದ ನಿಯಮವನ್ನು ನಮಗೂ ಮಾಡಿಕೊಳ್ಳಲು ಸಾಧ್ಯವಾಗಿತ್ತು.

ಟರ್ಕಿ ದೇಶದ ಜನರು ಈ ಅನವಶ್ಯಕವಾದ ಹೊರೆಯನ್ನು ತೆಗೆದು ಹಾಕಲು ತಮ್ಮ ಲಿಪಿಯನ್ನೇ ಬದಲಾಯಿಸಿಕೊಂಡರು. ಕನ್ನಡದಲ್ಲೂ ಈಗಿರುವ ಲಿಪಿಯನ್ನು ಬಿಟ್ಟುಕೊಟ್ಟು ರೋಮನ್‌ನಂತಹ ಬೇರೊಂದು ಲಿಪಿಯನ್ನು ಅಳವಡಿಸಿಕೊಂಡಲ್ಲಿ, ಸುಲಭವಾಗಿ ಮೇಲಿನ ಹೊರೆ ನಮ್ಮನ್ನು ಬಿಟ್ಟುಹೋದೀತು.

೧೧೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಆದರೆ, ಅರೇಬಿಕ್ ಮೂಲದ ಲಿಪಿ ಬೇರೆಯೂ ಕೆಲವು ವಿಷಯಗಳಲ್ಲಿ ಟರ್ಕಿಷ್ ಭಾಷೆಗೆ ಅನುಕೂಲವಾಗಿರಲಿಲ್ಲ; ಉದಾಹರಣೆಗಾಗಿ, ಮೇಲೆ ತಿಳಿಸಿದ ಹಾಗೆ, ಟರ್ಕಿಷ್ ಭಾಷೆಯ ಎಲ್ಲಾ ಸ್ವರಗಳನ್ನೂ ಆ ಲಿಪಿಯಲ್ಲಿ ಸರಿಯಾಗಿ ಸೂಚಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಆ ಲಿಪಿಯನ್ನು ಬಿಟ್ಟುಕೊಟ್ಟು ಬೇರೆ ಲಿಪಿಯನ್ನು ಬಳಸತೊಡಗುವುದು ಈ ಹೆಚ್ಚಿನ ಕಾರಣಗಳಿಗಾಗಿಯೂ ಅವರಿಗೆ ಅವಶ್ಯವಾಗಿತ್ತು.

ಕನ್ನಡದಲ್ಲಿ ಕನ್ನಡದವೇ ಆದ ಪದಗಳನ್ನು ಬರೆಯುವಲ್ಲಿ ಯಾವ ಸಮಸ್ಯೆಯೂ ಇಲ್ಲ. ಹಾಗಾಗಿ, ಕನ್ನಡದ ಈಗಿನ ಲಿಪಿಯಲ್ಲೇನೇ ಅವಶ್ಯವಿಲ್ಲದ ಅಕ್ಷರಗಳನ್ನು ತೆಗೆದುಹಾಕುವ ಮೂಲಕ, ಮೇಲಿನ ಹೊರೆಯಿಂದ ಮುಕ್ತರಾಗ ಬಲ್ಲೆವು.

೩.೫ ಕನ್ನಡಕ್ಕೊಂದು ‘ಹೊಸ ಬರಹ’

ಮೇಲೆ ೩.೩ನೇ ಲೇಖನದಲ್ಲಿ ವಿವರಿಸಿದ ಹಾಗೆ, ಕನ್ನಡ ಬರಹದಲ್ಲಿ ಕನ್ನಡಕ್ಕೆ ಬೇಕಾಗುವ ಅಕ್ಷರಗಳನ್ನು ಮಾತ್ರವೇ ಉಳಿಸಿಕೊಂಡಿರುವ ‘ಹೊಸ ಬರಹ’ ಎಂಬ ಹೆಸರಿನ ಕನ್ನಡ ಬರಹವೊಂದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ (೨೦೦೬, ೨೦೦೯) ಎಂಬ ಪುಸ್ತಕದಲ್ಲಿ ಓದುಗರ ಮುಂದಿರಿಸಿದ್ದೆ; ಇದಲ್ಲದೆ, ಆಮೇಲೆ ಬರೆದ ನಾಲ್ಕು ಪುಸ್ತಕಗಳಲ್ಲಿ ಅದನ್ನೇ ಬಳಸಿದ್ದೆ. (ಆದರೆ, ಈ ಪುಸ್ತಕದ ಲೇಖನಗಳನ್ನು ನಾನು ಅದಕ್ಕೆ ಮೊದಲೇ ಬರೆದಿದ್ದೆನಾದ ಕಾರಣ, ಅವುಗಳಲ್ಲಿ ಬಳಕೆಯಾಗಿದ್ದ ಹಳೆ ಬರಹವನ್ನು ಬದಲಿಸಹೋಗಿಲ್ಲ; ಇದರಲ್ಲಿ ಹೊಸದಾಗಿ ಸೇರಿಸಿರುವ ಲೇಖನಗಳಲ್ಲೂ ಅದನ್ನು ಬಳಸಿಲ್ಲ.)

ಕನ್ನಡದವೇ ಆದ ಪದಗಳನ್ನು ಬರೆಯಲು ಅ, ಆ, ಇ, ಈ, ಉ, ಊ, ಎ, ಏ, ಒ, ಓ ಎಂಬ ಹತ್ತು ಸ್ವರಗಳು ಮತ್ತು ಕ್, ಚ್, ಟ್, ತ್, ಪ್; ಗ್, ಜ್, ಡ್, ದ್, ಬ್; ಣ್, ನ್, ಮ್; ಸ್, ಶ್, ರ್; ಲ್, ಳ್; ಯ್, ವ್ ಎಂಬ ೨೧ ವ್ಯಂಜನಗಳು ಎಂಬುದಾಗಿ ಒಟ್ಟು ೩೧ ಅಕ್ಷರಗಳು ಮಾತ್ರ ಸಾಕಾಗುತ್ತದೆ; ಆದರೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವುದಕ್ಕಾಗಿ ಋ, ಐ, ಔ ಎಂಬ ಮೂರು ಹೆಚ್ಚಿನ ಸ್ವರಗಳು, ಮತ್ತು ಖ್, ಛ್, ಠ್, ಥ್, ಫ್; ಫ್, ಝ್, ಢ್, ಧ್, ಭ್; ಞ್, ಞ್; ಃ ಎಂಬ ೧೪ ಹೆಚ್ಚಿನ ವ್ಯಂಜನಗಳು ಎಂಬುದಾಗಿ ಒಟ್ಟು ೧೭ ಹೆಚ್ಚಿನ ಅಕ್ಷರಗಳನ್ನು ಇವತ್ತು ಕನ್ನಡ ಬರಹಗಳಲ್ಲಿ ಬಳಸುತ್ತಿದ್ದೇವೆ.

ಹಳೆಗನ್ನಡದಲ್ಲಿ ಳ್ ಮತ್ತು ಳ್ ಎಂಬ ಇನ್ನೂ ಎರಡು ಹೆಚ್ಚಿನ ಅಕ್ಷರ ಗಳು ಬಳಕೆಯಲ್ಲಿದ್ದುವು; ಆದರೆ ಹೊಸಗನ್ನಡದ ಕಾಲದಲ್ಲಿ, ಇವು ಹೆಚ್ಚಿನ ಕನ್ನಡಿಗರ ಉಚ್ಚಾರಣೆಯಲ್ಲೂ ರ್ ಮತ್ತು ಳ್ ಎಂಬವುಗಳಿಂದ ಭಿನ್ನವಾಗಿಲ್ಲ

೧೧೨


ಕನ್ನಡಕ್ಕೊಂದು ‘ಹೊಸ ಬರಹ’

ಎಂಬುದನ್ನು ಗಮನಿಸಿದ ನಮ್ಮ ಹಿಂದಿನ ಬರಹಗಾರರು ಆ ಎರಡು ಅಕ್ಷರ ಗಳನ್ನು ಬರಹದಿಂದ ತೆಗೆದುಹಾಕಿದ್ದರು.

ಅದೇ ರೀತಿಯಲ್ಲಿ, ಸಂಸ್ಕೃತ ಪದಗಳನ್ನು ಬರೆಯುವಲ್ಲಿ ಬಳಕೆಯಾಗು ತಿರುವ ಮೇಲಿನ ೧೭ ಅಕ್ಷರಗಳೂ ಇವತ್ತು ಹೆಚ್ಚಿನ ಕನ್ನಡಿಗರ ಉಚ್ಚಾರಣೆ ಯಲ್ಲೂ ಭಿನ್ನವಾಗಿ ಕಾಣಿಸಿಕೊಳ್ಳುವುದಿಲ್ಲವೆಂಬುದನ್ನು ಗಮನಿಸಿ, ನಾವು ಇವತ್ತು ಅವನ್ನೂ ನಮ್ಮ ಬರಹದಿಂದ ತೆಗೆದುಹಾಕಬೇಕಾಗಿದೆ. ಈ ಕೆಲಸವನ್ನು ‘ಹೊಸ ಬರಹ’ದಲ್ಲಿ ಮಾಡಲಾಗಿದೆ.

ಇಂಗ್ಲಿಷ್‌ನಿಂದ ಎರವಲಾಗಿ ಪಡೆದ ಪದಗಳನ್ನು ಬರೆಯುವಲ್ಲೂ ಮುಖ್ಯ ವಾಗಿ ಷ್, ಫ್ ಮತ್ತು ಥ್ ಎಂಬ ಮೂರು ಹೆಚ್ಚಿನ ಅಕ್ಷರಗಳನ್ನು ಕನ್ನಡ ಬರಹಗಳಲ್ಲಿ ಬಳಸಲಾಗುತ್ತದೆ; ಆದರೆ, ಇವುಗಳಲ್ಲಿ ಮೊದಲಿನದನ್ನು ಹೆಚ್ಚಿನ ಕನ್ನಡಿಗರೂ ತ್ ಎಂಬುದಾಗಿಯೇ ಉಚ್ಚರಿಸುತ್ತಾರೆ, ಮತ್ತು ಇಂಗ್ಲಿಷ್‌ನಲ್ಲಿಯೂ ಅದರ ಉಚ್ಚಾರ ತ್ ಎಂಬುದಾಗಿಯೇ ಇದೆ; ಹಾಗಿರುವಾಗ, ಅದನ್ನು ತ್ ಎಂಬುದಾಗಿ ಬರೆಯದೆ ಷ್ ಎಂಬುದಾಗಿ ಬರೆಯುವುದು ನಿಜಕ್ಕೂ ವಿಚಿತ್ರವೇ! (ಇಂಗ್ಲಿಶ್ ಎರವಲು ಪದಗಳನ್ನು ಬರೆಯುವಾಗ ತ್ ಎಂಬುದನ್ನು ನಾವು ಬಳಸುವುದೇ ಇಲ್ಲ!) ‘ಹೊಸ ಬರಹ’ದಲ್ಲಿ ಅದನ್ನು ತ್ ಎಂಬುದಾಗಿಯೇ ಬರೆಯಲಾಗುತ್ತದೆ. ಉಳಿದ ಎರಡು ಅಕ್ಷರಗಳ ಬದಲಾಗಿಯೂ ಪ್ ಮತ್ತು ತ್ ಎಂಬವುಗಳನ್ನೇ, ಹೆಚ್ಚಿನ ಕನ್ನಡಿಗರ ಉಚ್ಚಾರಣೆಯನ್ನನುಸರಿಸಿ, ಬಳಸಬಹುದು.

ವಿಮರ್ಶೆಗಳು

೨೦೦೬ರಲ್ಲಿ ನಾನು ಓದುಗರ ಮುಂದಿರಿಸಿದ್ದ ಈ ‘ಹೊಸ ಬರಹ’ದ ಕುರಿತಾಗಿ ಹಲವು ವಿಮರ್ಶೆಗಳು ಬಂದಿವೆ; ಹಲವರು ಅದರಿಂದಾಗಬಹುದಾದ ತೊಂದರೆ ಗಳ ಕುರಿತೂ ಬರೆದಿದ್ದಾರೆ. ಆದರೆ, ಅವರು ಕಲ್ಪಿಸಿಕೊಂಡಿರುವ ಈ ತೊಂದರೆ ಗಳು ನಿಜಕ್ಕೂ ತೊಂದರೆಗಳೇ ಅಲ್ಲ; ಭಾಷೆ ಮತ್ತು ಬರಹಗಳ ನಡುವಿನ ಸಂಬಂಧ ಎಂತಹದು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರು ಈ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಈ ವ್ಯತ್ಯಾಸ ಎಂತಹದು ಎಂಬುದನ್ನು ನಾನು ವಿವರವಾಗಿ ಮುಂದಿನ (೩.೬) ಲೇಖನದಲ್ಲಿ ಬರೆಯಲಿದ್ದೇನೆ.

ಒಂದು ಬರಹದಲ್ಲಿ ಬರೆದುದನ್ನು ಯಾವ ರೀತಿಯಲ್ಲಿ ಓದಲಾಗುತ್ತದೆ ಎಂಬುದನ್ನು ಓದುಗನಿಗೆ ತಿಳಿಸುವುದೇ ಅದರಲ್ಲಿ ಬಳಕೆಯಾಗುವ ಲಿಪಿಯ ಮುಖ್ಯ ಕೆಲಸ; ಪದಗಳ ಚರಿತ್ರೆಯನ್ನು ತಿಳಿಸುವುದಾಗಲಿ, ಬೇರೊಂದು ಭಾಷೆ ಯಲ್ಲಿ ಅವನ್ನು ಹೇಗೆ ಬರೆಯಲಾಗುತ್ತದೆ ಎಂಬುದನ್ನು ತಿಳಿಸುವುದಾಗಲಿ ಅದರ ಕೆಲಸವಲ್ಲ. ಇಂತಹ ಬೇಡದ ಕೆಲಸಗಳ ಹೊರೆಯನ್ನು ಅದರ ಮೇಲೆ ಹೊರಿಸಿ ದಾಗ, ಬರಹ ಕ್ಲಿಷ್ಟವಾಗುತ್ತಾ ಹೋಗುತ್ತದೆ.

ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ, ಅವನ್ನು ಸಂಸ್ಕೃತದಲ್ಲಿ ಹೇಗೆ ಬರೆಯಲಾಗುತ್ತದೆಯೋ ಹಾಗೆಯೇ ಬರೆಯಬೇಕು

೧೧೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಎಂಬ ನಿಯಮ ಕನ್ನಡದ ಮಟ್ಟಿಗೆ ಇಂತಹ ತೀರಾ ಅನವಶ್ಯಕವಾದ ಒಂದು ಹೊರೆ. ಹಿಂದಿನ ಕಾಲದಲ್ಲಿ ಕನ್ನಡ ಬರಹಗಾರರಿಗೆ ಸಂಸ್ಕೃತದ ಮೇಲೆ ಅತಿಯಾದ ಪೂಜ್ಯಭಾವವಿತ್ತು; ಮತ್ತು ಈ ಕಾರಣಕ್ಕಾಗಿ, ಅದರ ಪದಗಳನ್ನು ‘ಕೆಡಿಸ’ಹೋಗದೆ ಅದರಲ್ಲಿರುವ ಹಾಗೆಯೇ ಅವನ್ನು ಕನ್ನಡದಲ್ಲೂ ಬರೆಯಬೇಕು ಎಂಬ ಈ ನಿಯಮವನ್ನು ಅವರು ತಮ್ಮ ಮೇಲೆ ಹೊರಿಸಿಕೊಂಡಿದ್ದರು.

ಹಿಂದಿನ ಕಾಲದಲ್ಲಿ ಸಮಾಜದ ಕೆಲವೇ ಕೆಲವು ಮಂದಿ ಪಂಡಿತರು ಮಾತ್ರ ಬರಹವನ್ನು ಬಳಸುತ್ತಿದ್ದರು; ಹಾಗಾಗಿ, ಮೇಲಿನ ಕಟ್ಟಲೆಯಿಂದ ಹೆಚ್ಚು ತೊಂದರೆಯಾಗುತ್ತಿರಲಿಲ್ಲ; ತೊಂದರೆಯಾದರೂ, ಸಂಸ್ಕೃತದ ಮೇಲಿನ ಪೂಜ್ಯ ಭಾವದಿಂದಾಗಿ ಅವರು ಅದನ್ನು ಸಹಿಸಿಕೊಂಡಿದ್ದರು. ಆದರೆ, ಇವತ್ತು ಎಲ್ಲಾ ಕನ್ನಡಿಗರೂ ಬರಹವನ್ನು ಬಳಸಲು ಕಲಿಯಬೇಕಾಗಿದೆ. ಹಾಗಾಗಿ, ಈ ಸಂದರ್ಭ ದಲ್ಲಿ, ಕನ್ನಡದ ಮಟ್ಟಿಗೆ ತೀರ ಅನವಶ್ಯಕವಾಗಿರುವ ಈ ನಿಯಮವನ್ನು ತೆಗೆದು ಹಾಕುವುದೇ ಬುದ್ಧಿವಂತಿಕೆ.

ಯಾಕೆಂದರೆ, ಹಾಗೆ ಮಾಡುವ ಮೂಲಕ, ಕನ್ನಡ ಬರಹವನ್ನು ಕಲಿಯುವ ಮತ್ತು ಬಳಸುವ ಕೆಲಸ ಹೆಚ್ಚು ಸುಲಭವಾಗುವಂತೆ ಮಾಡಬಹುದು. ಸಂಸ್ಕೃತದ ಎರವಲುಗಳನ್ನು ಹೆಚ್ಚಿನ ಕನ್ನಡಿಗರೂ ಹೇಗೆ ಓದುತ್ತಾರೆ ಎಂಬುದನ್ನು ತಿಳಿಸು ವಲ್ಲಿ ಈ ೧೭ ಹೆಚ್ಚಿನ ಅಕ್ಷರಗಳು ಸ್ವಲ್ಪವೂ ಸಹಾಯಮಾಡುವುದಿಲ್ಲವಾದ ಕಾರಣ, ನಿಜಕ್ಕೂ ಅವು ಕನ್ನಡ ಬರಹಕ್ಕೆ ಬೇಕಾಗಿಯೇ ಇಲ್ಲ.

ನನ್ನ ಈ ವಾದ ತಪ್ಪು ಎಂದು ಹೇಳುವವರು ಯಾರೂ ಸಂಸ್ಕೃತ ಎರವಲು ಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯುವುದರಿಂದ ಕನ್ನಡದ ಓದುಗರಿಗೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಎಂಬುದನ್ನು ಎಲ್ಲೂ ತೋರಿಸಿ ಕೊಟ್ಟಿಲ್ಲ. ಬೇರೆ ಏನೇನೋ ವಿಷಯಕ್ಕೆ ಸಂಬಂಧಿಸದ ವಾದಗಳನ್ನು ಮುಂದಿಟ್ಟು ಕೊಂಡು ಅವರು ಈ ಬದಲಾವಣೆಯನ್ನು ವಿರೋಧಿಸುತ್ತಿದ್ದಾರೆ.

ಉದಾಹರಣೆಗಾಗಿ, ದ-ಧ ವ್ಯತ್ಯಾಸವನ್ನು ಬರಹದಲ್ಲಿ ತೋರಿಸದಿದ್ದರೆ ದನ -ಧನ, ಮದ್ಯ-ಮಧ್ಯ ಮೊದಲಾದ ಪದಗಳನ್ನು ಬರೆದಿರುವಲ್ಲಿ ಗೊಂದಲ ವುಂಟಾಗಬಲ್ಲುದು ಎಂಬ ವಾದವನ್ನು ಗಮನಿಸಬಹುದು. ಹಳೆಗನ್ನಡದ ರ-ಅ ಮತ್ತು ಳ-ಇ ವ್ಯತ್ಯಾಸವನ್ನು ಬಿಟ್ಟುಕೊಟ್ಟಾಗಲೂ ಇಂತಹದೇ ಸಮಸ್ಯೆ ಎದ್ದಿರ ಬಹುದಲ್ಲವೇ? ಯಾಕೆಂದರೆ, ಕರೆ ‘ಬರಹೇಳು’, ಕಳ್ ‘ಹಾಲು ಕರೆ’; ಸಾರು ‘ಹತ್ತಿರ ಹೋಗು’, ಸಾಳು ‘ಕೂಗಿ ಹೇಳು’; ಎಳೆ ‘ಎಳತು’, ಎಲ್ ‘ಎಳೆದಾಡು’ ಎಂಬಂತಹ ಹಲವಾರು ಪದಗಳನ್ನು ಬರೆಯುವಲ್ಲಿ, ಅ ಮತ್ತು ಇಗಳನ್ನು ತೆಗೆದುಹಾಕಿದಾಗ, ಮೊದಲಿಗಿದ್ದ ವ್ಯತ್ಯಾಸ ಇಲ್ಲವಾಗಿತ್ತು; ಹಾಗಿದ್ದರೂ ನಮ್ಮ ಹಿಂದಿನವರು ಧೈರ್ಯದಿಂದ ಈ ಮಾಪ್ಪಾಡನ್ನು ಮಾಡಿಕೊಂಡಿದ್ದರು. ಇವತ್ತು ಯಾರಿಗೂ ಇದೊಂದು ಸಮಸ್ಯೆಯೆಂದು ತೋರುವುದೇ ಇಲ್ಲವಲ್ಲ! ನಿಜಕ್ಕೂ ಅವರು ಈ ಬದಲಾವಣೆಯನ್ನು ಮಾಡಿರದಿದ್ದರೆ ಅದು ನಮಗೆ ಒಂದು ದೊಡ್ಡ ಸಮಸ್ಯೆಯಾಗುತ್ತಿತ್ತು

೧೧೪


ಕನ್ನಡಕ್ಕೊಂದು ‘ಹೊಸ ಬರಹ’

ಇದಲ್ಲದೆ, ಮಾತಿನಲ್ಲಿ ಈ ವ್ಯತ್ಯಾಸ ಇಲ್ಲವಾದರೂ ತೊಂದರೆಯಾಗುವು ದಿಲ್ಲವೆಂದ ಮೇಲೆ, ಬರಹದಲ್ಲಿ ಯಾಕೆ ತೊಂದರೆಯಾಗಬೇಕು? ಇನ್ನೊಂದು ವಿಷಯವೇನೆಂದರೆ, ಭಾಷೆಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳಿಗೂ ಒಂದ ಕ್ಕಿಂತ ಹೆಚ್ಚು ಅರ್ಥಗಳಿರುತ್ತವೆ; ಸಂಸ್ಕೃತದ ಪದಗಳಿಗಂತೂ ಇನ್ನಷ್ಟು ಹೆಚ್ಚು ಅರ್ಥಗಳಿರುತ್ತವೆ; ಕೆಲವು ಪದಗಳಿಗೆ ಇಪ್ಪತ್ತು-ಮೂವತ್ತು ಅರ್ಥಗಳಿರುತ್ತವೆ. ಸಂಸ್ಕೃತದ ಒಂದು ಪದಕೋಶವನ್ನು ಬಿಡಿಸಿ ನೋಡಿದರೆ ಇದು ಸ್ಪಷ್ಟವಾದೀತು. ಹಾಗಿದ್ದರೂ, ಓದುಗರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಹೆಚ್ಚಿನೆಡೆ ಗಳಲ್ಲೂ ಬಳಸಿದ ಸಂದರ್ಭದಿಂದಲೇ ಅವುಗಳಲ್ಲಿ ಸರಿಯಾದ ಅರ್ಥವನ್ನು ಆರಿಸಿಕೊಳ್ಳಲು ನಮಗೆ ಗೊತ್ತಾಗುತ್ತದೆ. ಹಾಗಾಗಿ, ಕನ್ನಡ ಬರಹದಲ್ಲೂ ಓದಿನ ಲ್ಲಿಲ್ಲದ ಮೇಲಿನ ವ್ಯತ್ಯಾಸಗಳನ್ನು ತೆಗೆದುಹಾಕುವುದರಿಂದ ಓದುಗರಿಗೆ ಯಾವ ಹೆಚ್ಚಿನ ತೊಂದರೆಯೂ ಆಗಲಾರದು.

ಬರಹವನ್ನು ಸರಿಪಡಿಸುವುದು

‘ಭಾಷಾವಿಜ್ಞಾನಿಗಳು ಭಾಷೆಗಳನ್ನು ವರ್ಣಿಸಹೋಗಬೇಕಲ್ಲದೆ ಅವನ್ನು ಬದಲಾ ಯಿಸುವ ಪ್ರಯತ್ನ ಮಾಡಬಾರದು; ಹಾಗಿರುವಾಗ, ನಾನು ಯಾಕೆ ಈ ರೀತಿ ಕನ್ನಡವನ್ನು ಬದಲಾಯಿಸಲು ಹೊರಟಿದ್ದೇನೆ?’ ಎಂಬುದು ಅವರು ಎತ್ತಿರುವ ಇನ್ನೊಂದು ಆಕ್ಷೇಪ. ಆದರೆ, ನಾನಿಲ್ಲಿ ಬದಲಾಯಿಸಹೊರಟಿರುವುದು ಕನ್ನಡ ಭಾಷೆಯನ್ನಲ್ಲ, ಕನ್ನಡ ಬರಹವನ್ನು. ಭಾಷೆಗೂ ಬರಹಕ್ಕೂ ನಡುವಿರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಅವರು ಈ ಆಕ್ಷೇಪವನ್ನೆತ್ತಿದ್ದಾರೆ.

ಭಾಷೆ ತಾನಾಗಿಯೇ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ, ಮತ್ತು ಆ ಮೂಲಕ ಅದು ತನ್ನನ್ನು ಸರಿಪಡಿಸಿಕೊಳ್ಳುತ್ತಾ ಇರುತ್ತದೆ. ಹಾಗಾಗಿ, ಅದಕ್ಕೆ ಭಾಷಾವಿಜ್ಞಾನಿಯ ನೆರವು ಬೇಕಾಗಿಲ್ಲ. ಆತ ತನ್ನ ನೆರವನ್ನು ಕೊಡಲು ಹೋದರೂ ಅದು ಅದನ್ನು ಸ್ವೀಕರಿಸುವುದಿಲ್ಲ.

ಆದರೆ, ಬರಹ ಆ ರೀತಿಯದಲ್ಲ. ಹೊಸ ಹೊಸ ಸಂದರ್ಭಗಳಿಗೆ ಹೊಂದಿ ಕೊಳ್ಳುವ ಹಾಗೆ, ಅದನ್ನು ಬರಹಗಾರರೇ ಪ್ರಯತ್ನಪಟ್ಟು ಬದಲಾಯಿಸಿಕೊಳ್ಳು ತಿರಬೇಕಾಗುತ್ತದೆ. ಭಾಷೆಯ ಹಾಗೆ ತಾನಾಗಿ ಬದಲಾಗುವ ಶಕ್ತಿ ಅದಕ್ಕಿಲ್ಲ. ಕೆಲವೊಮ್ಮೆ ಬರಹದ ಒಳಗುಟ್ಟನ್ನರಿಯದವರು ಇಂತಹ ಮಾರಾಡುಗಳನ್ನು ನಡೆಸಲು ಹೊರಡುತ್ತಾರೆ, ಮತ್ತು ಆ ಮೂಲಕ ತಮ್ಮ ನುಡಿಯ ಬರಹ ಇನ್ನಷ್ಟು ಕ್ಲಿಷ್ಟವಾಗುವ ಹಾಗೆ ಮಾಡುತ್ತಾರೆ.

ಉದಾಹರಣೆಗಾಗಿ, ಇಂಗ್ಲಿಷ್‌ನಲ್ಲಿ ಇವತ್ತು ಕಾಣಿಸುವ ಹೆಚ್ಚಿನ ಸ್ಪೆಲ್ಲಿಂಗ್ ಸಮಸ್ಯೆಗಳಿಗೂ ಸಾಮ್ಯುವೆಲ್ ಜಾನ್ಸನ್ ಎಂಬ ಪದಕೋಶಕಾರ ಅದರ ಬರಹ ದಲ್ಲಿ ನಡೆಸಿದ್ದ ಹಲವು ತಪ್ಪು ಮಾರಾಡುಗಳೇ ಕಾರಣ. ಉದಾಹರಣೆಗಾಗಿ, ಪದಗಳ ರೂಪ ಅವುಗಳ ಚರಿತ್ರೆಯನ್ನೂ ಸೂಚಿಸಬೇಕು (know ಮತ್ತು no ಪದಗಳ ಉಚ್ಚಾರಣೆ ಒಂದೇ ಇದ್ದರೂ, ಅವುಗಳ ಚರಿತ್ರೆ ಬೇರೆ ಎಂಬುದನ್ನು

೧೧೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ರೂಪಭೇದ ಸೂಚಿಸುವ ಹಾಗೆ) ಎಂಬ ಅನವಶ್ಯಕವಾದ ಹೊರೆಯನ್ನು ಆತ ಇಂಗ್ಲಿಷ್ ಬರಹದ ಮೇಲೆ ಹೊರಿಸಿದ್ದ. ಬೇರೆ ಯಾರಾದರೂ ಬರಹಗಾರರು ಇಲ್ಲವೇ ವಿದ್ವಾಂಸರು ಮುಂದೆ ಬಂದು, ಆತ ಹೊರಿಸಿದ ಇಂತಹ ಹೊರೆಗಳನ್ನು ತೆಗೆದುಹಾಕುವಲ್ಲಿ ವರೆಗೂ, ಇಂಗ್ಲಿಷ್ ಬರಹದ ಈ ಸ್ಪೆಲ್ಲಿಂಗ್ ಸಮಸ್ಯೆಗಳು ಹಾಗೆಯೇ ಉಳಿದಿರುತ್ತವೆ ಮಾತ್ರವಲ್ಲ, ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಾ ಹೋಗುತ್ತವೆ. ಇವನ್ನು ತಾನಾಗಿ ಸರಿಪಡಿಸಿಕೊಳ್ಳುವ ಶಕ್ತಿ ಬರಹಕ್ಕಿಲ್ಲ.

ತಮ್ಮ ಬರಹವನ್ನು ತಪ್ಪು ಮಾಡದೆ ಸರಿಪಡಿಸಿದವರೂ ಹಲವರಿದ್ದಾರೆ. ಉದಾಹರಣೆಗಾಗಿ, ಕೊರಿಯನ್ ಬರಹದಲ್ಲಿ ಬಳಕೆಯಾಗುತ್ತಿದ್ದ ಚೈನೀಸ್ ಮೂಲದ ಹಾಜಾ ಲಿಪಿ ತುಂಬಾ ತೊಡಕು ತೊಡಕಾಗಿತ್ತು; ಅದನ್ನು ಕಲಿಯಲು ಹಲವು ವರ್ಷಗಳೇ ಬೇಕಾಗುತ್ತಿದ್ದುವು; ಕಲಿತ ಮೇಲೆ ಅದನ್ನು ಬಳಸುವುದೂ ತುಂಬಾ ತೊಡಕಿನ ಕೆಲಸವಾಗಿತ್ತು. ಎಲ್ಲಾ ಜನರೂ ಬರಹವನ್ನು ಕಲಿಯಲು ಸುಲಭವಾಗುವಂತೆ, ೧೯೪೫ರಲ್ಲಿ ಅದಕ್ಕಿಂತ ತುಂಬಾ ಚನ್ನಾಗಿರುವ ಹಂಗುಲ್ ಎಂಬ ಒಂದು ಹೊಸ ಲಿಪಿಯೊಂದನ್ನು ಸೃಷ್ಟಿಸಿ, ಕೊರಿಯನ್ ಭಾಷೆಗೆ ಅಳವಡಿಸಲಾಯಿತು.

ಈ ಲಿಪಿಯಲ್ಲಿ ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಅದನ್ನು ಕಲಿಯುವ ಮತ್ತು ಬಳಸುವ ಕೆಲಸ ತುಂಬಾ ಸುಲಭವಾಗಿದೆ. ಈ ಹೊಸ ಲಿಪಿಯನ್ನು ಬಳಸತೊಡಗಿದುದರಿಂದಾಗಿ, ಕೊರಿಯಾದಲ್ಲಿ ಓದು-ಬರಹ ಬಲ್ಲ ವರ ಎಣಿಕೆ ತುಂಬಾ ಹೆಚ್ಚಾಗಿದೆಯೆಂದು ಹೇಳಲಾಗುತ್ತದೆ.

ಟರ್ಕಿಷ್ ಭಾಷೆಯಲ್ಲೂ ಇಂತಹದೇ ಒಂದು ಮಾರ್ಪಾಡನ್ನು ಮಾಡಲಾಗಿತ್ತು; ತೊಡಕು ತೊಡಕಾಗಿದ್ದ ಅದರ ಅರೇಬಿಕ್ ಮೂಲದ ಲಿಪಿಯನ್ನು ಬಿಟ್ಟುಕೊಟ್ಟು ರೋಮನ್ ಲಿಪಿಯನ್ನು ಬಳಸತೊಡಗುವ ಮೂಲಕ, ಅದರ ಬರಹದಲ್ಲಿದ್ದ ಹಲವು ಬಗೆಯ ಹೊರೆಗಳನ್ನು ತೆಗೆದುಹಾಕಲಾಗಿತ್ತು, ಮತ್ತು ಇದರಿಂದಾಗಿ ಇವತ್ತು ಟರ್ಕಿಯಲ್ಲೂ ಓದು-ಬರಹ ಕಲಿತವರ ಎಣಿಕೆ ತುಂಬಾ ಹೆಚ್ಚಾಗಿದೆ. ಈ ಮಾರ್ಪಾಡಿನ ಸ್ವರೂಪವನ್ನು ಹಿಂದಿನ ಲೇಖನದಲ್ಲಿ (೩.೫) ವಿವರಿಸ ಲಾಗಿದೆ.

ಈ ರೀತಿ ಹಳೇ ಲಿಪಿಯನ್ನು ಬಿಟ್ಟುಕೊಟ್ಟು ಹೊಸಲಿಪಿಯನ್ನು ಬಳಸಲು ಹೊರಡುವ ಬದಲು, ಬಳಕೆಯಲ್ಲಿರುವ ಲಿಪಿಯನ್ನೇ ಸರಿಪಡಿಸಿರುವ ಉದಾ ಹರಣೆಗಳೂ ಹಲವಿವೆ: ಫಿನ್ನಿಷ್ ಭಾಷೆಯನ್ನು ಬರೆಯುವುದಕ್ಕಾಗಿ ಬಳಕೆಯಾಗು ತಿದ್ದ ಹಳೇ ಲಿಪಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಅದನ್ನು ಸರಿಪಡಿಸ ಲಾಗಿದೆ. ಹಿಂದಿನ ಲಿಪಿಯಲ್ಲಿ ಪದಗಳ ಓದಿಗೂ ಬರವಣಿಗೆಗೂ ನಡುವೆ ಹಲವು ವ್ಯತ್ಯಾಸಗಳು (ಸ್ಪೆಲ್ಲಿಂಗ್ ಸಮಸ್ಯೆಗಳು) ಇದ್ದುವು; ಅವನ್ನೆಲ್ಲ ತೆಗೆದುಹಾಕುವ ಮೂಲಕ, ಫಿನ್ನಿಷ್ ಬರಹವನ್ನು ಸರಿಪಡಿಸಲಾಯಿತು. ಇದರಿಂದಾಗಿ, ಇವತ್ತು ಇಡೀ ಯುರೋಪಿನಲ್ಲೇ ಕಲಿಯಲು ಮತ್ತು ಬಳಸಲು ಅತ್ಯಂತ ಸುಲಭ ವಾಗಿರುವ ಬರಹ ಫಿನ್ನಿಷ್ ಬರಹವೆಂಬುದಾಗಿ ಹೇಳಲಾಗುತ್ತದೆ.

೧೦೬


ಕನ್ನಡಕ್ಕೊಂದು ‘ಹೊಸ ಬರಹ’

ಬರಹವನ್ನು ಕಲಿಯಬೇಕೆಂದಿರುವವರು ಚೈನೀಸ್‌ನಂತಹ ತುಂಬಾ ಕ್ಲಿಷ್ಟ ವಾದ ಬರಹವನ್ನೂ ಕಲಿತಾರು ಎಂಬುದಾಗಿ ನಾನು ಮೇಲೆ ಬರೆದಿದ್ದೆ. ಹಾಗೆಂದು, ನಮ್ಮ ಬರಹದಲ್ಲಿರುವ ಅನವಶ್ಯಕವಾದ ತೊಡಕುಗಳನ್ನು ತೆಗೆದು ಹಾಕಬಾರದೆಂದೇನೂ ಇಲ್ಲವಲ್ಲ? ನಾಲ್ಕೈದು ಮೈಲು ದೂರ ನಡೆದು ಹೋಗಿಯೂ ಕುಡಿಯುವ ನೀರನ್ನು ತರುವವರಿದ್ದಾರೆ, ನಿಜ; ಆದರೆ, ನೀರಿನ ಬಾವಿ ಅಂಗಳದ ತುದಿಯಲ್ಲೇ ಇದ್ದರೂ ಮೇಲೆ ಟೇಂಕ್ ಕಟ್ಟಿಸಿ, ಅದರಲ್ಲಿ ನೀರನ್ನು ಪಂಪಿನಿಂದ ತುಂಬಿಸಿ, ಮನೆಯ ನಲ್ಲಿಗಳಲ್ಲಿ ಬರುವ ಹಾಗೆ ಮಾಡು ವವರೂ ಇದ್ದಾರಲ್ಲ? ಹೆಚ್ಚಿನವರೂ ತಮ್ಮ ಕೆಲಸಗಳು ಸುಲಭವಾಗಿ ನಡೆಯ ಬೇಕೆಂದು ಪ್ರಯತ್ನಿಸುತ್ತಿರುತ್ತಾರೆ. ಸೋಮಾರಿಗಳು ಮಾತ್ರ ಬದಲಾವಣೆಗಳನ್ನು ವಿರೋಧಿಸುತ್ತ ನಿಂತ ನೀರಿನ ಹಾಗೆ ಕೊಳೆಯುತ್ತಿರುತ್ತಾರೆ.

ಹೆಚ್ಚಿನ ಧ್ವನಿಗಳನ್ನೇಕೆ ಕಲಿಸಬಾರದು?

ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದ ಈ ಹೆಚ್ಚಿನ ಅಕ್ಷರಗಳು ಹೆಚ್ಚಿನ ಕನ್ನಡಿಗರ ಓದು ಇಲ್ಲವೇ ಉಚ್ಚಾರಣೆಯಲ್ಲೂ ಇಲ್ಲ; ಹಾಗಾಗಿ, ಓದು ಕಲಿಯುವಲ್ಲಿ ಮತ್ತು ಬರಹ ಬಳಸುವಲ್ಲಿ ತೊಂದರೆ ಕೊಡುವ ಈ ಅಕ್ಷರಗಳನ್ನು ತೆಗೆದುಹಾಕುವುದೇ ಒಳ್ಳೆಯದು ಎಂಬುದಾಗಿ ನಾನು ವಾದಿಸಿದ್ದೆ; ಹೀಗೆ ಹೇಳು ವಾಗ, ನಾನು ಕನ್ನಡ ಬರಹವನ್ನು ಸರಿಪಡಿಸಹೊರಟಿದ್ದೆ.

ಇದನ್ನು ವಿರೋಧಿಸುವವರೊಬ್ಬರು ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದುವನ್ನು ಸರಿಯಾಗಿ ಓದುವುದು ಇಲ್ಲವೇ ಉಚ್ಚರಿಸುವುದು ಕಷ್ಟದ ಕೆಲಸವೇನಲ್ಲ; ಮಕ್ಕಳಿಗೆ ಅವನ್ನು ಸುಲಭವಾಗಿ ಕಲಿಸಬಹುದು ಎಂಬುದಾಗಿ ವಾದಿಸಿದ್ದಾರೆ. ನಿಜಕ್ಕೂ ಇದು ಮೇಲಿನ ವಿಷಯಕ್ಕೆ ನೇರವಾಗಿ ಸಂಬಂಧಿಸ ದಂತಹ ಇನ್ನೊಂದು ವಾದವಾಗಿದೆ. ಯಾಕೆಂದರೆ, ಇದು ಓದನ್ನು ಎಂದರೆ ಮಾತನ್ನು ಸರಿಪಡಿಸುವ ಕೆಲಸ; ಬರಹವನ್ನು ಸರಿಪಡಿಸುವ ಕೆಲಸವೇ ಅಲ್ಲ. ಅವರೇ ಇನ್ನೊಂದು ಕಡೆ ಹೇಳಿದ ಹಾಗೆ, ಮಾತನ್ನು ಇಲ್ಲವೇ ಭಾಷೆಯನ್ನು ಸರಿಪಡಿಸುವುದು ಭಾಷಾವಿಜ್ಞಾನಿಯ ಕೆಲಸವಲ್ಲ; ಆತ ಹಾಗೆಲ್ಲಾದರೂ ಅದನ್ನು ಸರಿಪಡಿಸಹೊರಟರೂ ಭಾಷೆ ಅದನ್ನು ಒಪ್ಪಿಕೊಳ್ಳದೆ ಪಕ್ಕಕ್ಕೆಸೆದುಬಿಡಬಹುದು. ಯಾಕೆಂದರೆ, ಯಾರಿಗೂ ಭಾಷೆಯ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯ ವಾಗದು.

ಇದಲ್ಲದೆ, ಸಾವಿರಗಟ್ಟಲೆ ಅಧ್ಯಾಪಕರಿಗೆ ಮತ್ತು ಮಿಲಿಯಗಟ್ಟಲೆ ವಿದ್ಯಾರ್ಥಿ ಗಳಿಗೆ ಈ ಹೆಚ್ಚಿನ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಲು ಕಲಿಸುವುದು ಅವರು ಊಹಿಸಿದಷ್ಟು ಸುಲಭದ ಕೆಲಸವೇನಲ್ಲ; ಒಂದು ಚಿಕ್ಕ ಇಪ್ಪತ್ತೈದು-ಮೂವತ್ತು ವಯಸ್ಕರ ತರಗತಿಯಲ್ಲಿ ಎಲ್ಲರಿಗೂ ಈ ಅಕ್ಷರಗಳನ್ನು ಸರಿಯಾಗಿ ಉಚ್ಚರಿಸಲು ಕಲಿಸಹೊರಟವರಿಗೆ ಮಾತ್ರವೇ ಈ ಕೆಲಸ ಎಷ್ಟು ತೊಡಕಿನದು ಎಂಬುದರ ಅರಿವಾಗಬಲ್ಲುದು. ಅದು ಹೇಗೇ ಇರಲಿ, ಆ ರೀತಿ ಹೆಚ್ಚಿನ ಧ್ವನಿಗಳನ್ನು

೧೧೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಉಚ್ಚರಿಸಲು ಕಲಿತು ಕನ್ನಡಿಗರಿಗೆ ಆಗಬೇಕಾದ್ದೇನು? ಇವತ್ತಿನ ಸಮಾಜದಲ್ಲಿ ಸಂಸ್ಕೃತದ ಈ ಹೆಚ್ಚಿನ ಅಕ್ಷರಗಳನ್ನು ಕಲಿಯುವುದಕ್ಕಿಂತಲೂ ಇಂಗ್ಲಿಷ್‌ನ ಹೆಚ್ಚಿನ ಅಕ್ಷರಗಳನ್ನು ಕಲಿಯುವುದಕ್ಕೇನೆ ಜನರು ಆಸಕ್ತಿ ತೋರಿಸಬಹುದು.

ಕನ್ನಡ ಬರಹದಲ್ಲಿ ಈ ೧೭ ಹೆಚ್ಚಿನ ಅಕ್ಷರಗಳಿರುವುದು ಅದರ ಶ್ರೀಮಂತಿಕೆ ಎಂಬುದಾಗಿ ಕೆಲವರು ಭಾವಿಸಿದ್ದಾರೆ; ಹಾಗಾಗಿ, ಅದನ್ನು ತೆಗೆದುಹಾಕುವುದೆಂದರೆ ಬಡವರನ್ನು ಮೇಲೆತ್ತುವ ಬದಲು ಶ್ರೀಮಂತರನ್ನು ಬಡವರ ಮಟ್ಟಕ್ಕೆ ಇಳಿಸುವ ಹಾಗೆ ಎಂಬುದಾಗಿ ಅವರು ವಾದಿಸುತ್ತಾರೆ. ನಿಜಕ್ಕೂ ಓದಿನಲ್ಲಿ ಕಾಣಿಸದಿರುವ ಅಕ್ಷರಗಳು ಬರಹದಲ್ಲಿರುವುದು ಶ್ರೀಮಂತಿಕೆಯಲ್ಲ, ಯಾವ ಪ್ರಯೋಜನಕ್ಕೂ ಬಾರದ ಒಂದು ಹೊರೆ! ಹಳೆಗನ್ನಡದಲ್ಲಿದ್ದ ಅ-ಅಗಳನ್ನು ಬಿಟ್ಟುಕೊಟ್ಟುದ ರಿಂದಾಗಿ ಹೊಸಗನ್ನಡ ಬರಹ ಹೇಗೆ ಬಡವಾಗಲಿಲ್ಲವೋ ಹಾಗೆಯೇ ಈ ೧೭ ಅಕ್ಷರಗಳನ್ನು ಬಿಟ್ಟುಕೊಟ್ಟಾಗಲೂ ಅದು ಬಡವಾಗುವುದಿಲ್ಲ, ಇನ್ನೊಂದು ಹೊರೆ ಯನ್ನು ಕಳಚಿಕೊಳ್ಳುತ್ತದೆ, ಅಷ್ಟೆ

‘ಹೊಸ ಬರಹ’ದ ಪ್ರಯೋಜನಗಳು

ಇಲ್ಲಿ ನಮ್ಮ ಮುಂದಿರುವ ಪ್ರಶ್ನೆ ನಿಜಕ್ಕೂ ತುಂಬಾ ಸರಳವಾದುದು: ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ, ಅವು ಸಂಸ್ಕೃತದಲ್ಲಿ ಹೇಗಿವೆಯೋ ಹಾಗೆಯೇ ಬರೆಯಬೇಕೋ, ಇಲ್ಲವೇ ಅವನ್ನು ಹೆಚ್ಚಿನ ಕನ್ನಡಿಗರೂ ಕನ್ನಡದಲ್ಲಿ ಹೇಗೆ ಓದುತ್ತಾರೋ (ಉಚ್ಚರಿಸು ತಾರೋ) ಹಾಗೆ ಬರೆಯಬೇಕೋ ಎಂಬುದು.

ಅವನ್ನು ನಾವು ಹೇಗೆ ಓದುತ್ತೇವೋ ಹಾಗೆ ಬರೆದರೆ ಸಾಕು, ಸಂಸ್ಕೃತ ದಲ್ಲಿರುವ ಹಾಗೆಯೇ ಕನ್ನಡದಲ್ಲೂ ಬರೆಯಬೇಕಾಗಿಲ್ಲ ಎಂಬುದು ‘ಹೊಸ ಬರಹ’ದ ನಿಲುವು; ಇವತ್ತು ಹೀಗೆ ಮಾಡುವುದರಿಂದ ನಾವು ಹಲವು ಪ್ರಯೋಜನಗಳನ್ನು ಪಡೆಯಬಲ್ಲೆವು. ಇವುಗಳಲ್ಲಿ ಮುಖ್ಯವಾದ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ:

(೧) ಚಿಕ್ಕ ಮಕ್ಕಳಿಗೆ ಮತ್ತು ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹ ವನ್ನು ಕಲಿಸುವ ಕೆಲಸ ಸುಲಭವಾಗುತ್ತದೆ. ಯಾಕೆಂದರೆ, ಅವರಿಗೆ ೪೮ ಅಕ್ಷರಗಳ ಬದಲು ಬರೇ ೩೧ ಅಕ್ಷರಗಳನ್ನು ಕಲಿಸಿದರೆ ಸಾಕು. ಇವನ್ನೆಲ್ಲ ಓದುವ ಹಾಗೆಯೇ ಬರೆಯುವ ಕಾರಣ, ಕಲಿಯುವುದೂ ಸುಲಭ.

(೨) ಎಲ್ಲಾ ಪದಗಳನ್ನೂ ಓದುವ ಹಾಗೆಯೇ ಬರೆಯುವ ಕಾರಣ, ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ಸಮಸ್ಯೆ ಪೂರ್ತಿ ಇಲ್ಲವಾಗುತ್ತದೆ.

(೩) ಇವತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಮತ್ತು ಕತೆ-ಕಾದಂಬರಿಗಳಲ್ಲಿ ತುಂಬಾ ಹೆಚ್ಚು ಅಚ್ಚಿನ ತಪ್ಪುಗಳು ಕಾಣಿಸುವುದು ಮಹಾಪ್ರಾಣಾಕ್ಷರ, ಷಕಾರ, ಮತ್ತು ಋಕಾರಗಳ ಬಳಕೆಯಲ್ಲಿ. ಇವು ಸಾಮಾನ್ಯವಾಗಿ ‘ಹೊಸ ಬರಹ’ದಲ್ಲಿ ಬರುವುದಿಲ್ಲವಾದ ಕಾರಣ, ಈ ತಪ್ಪುಗಳೆಲ್ಲವೂ ಇಲ್ಲವಾಗುತ್ತವೆ. (ಹಲವು

೧೧೮


ಕನ್ನಡಕ್ಕೊಂದು ‘ಹೊಸ ಬರಹ’

ಜನರಿಗೆ ಹಕಾರದ (ಇಲ್ಲವೇ ಶಕಾರದ) ಬಳಕೆಯೂ ತೊಂದರೆಯದಾಗಿ ಕಾಣಿಸುತ್ತದೆ; ಆದರೆ ಸದ್ಯಕ್ಕಂತೂ ಆ ವಿಷಯದಲ್ಲಿ ನಾವೇನೂ ಮಾಡಲಾರೆವು).

  1. (೪) ಬರಹಗಾರರಿಗೆ ಎಲ್ಲಿ ಯಾವ ಅಕ್ಷರಗಳನ್ನು ಬಳಸಬೇಕು ಎಂಬ
  2. ವಿಷಯದಲ್ಲಿ ಸಂಶಯವೇಳುವುದು, ಮತ್ತು ಆಗಾಗ ಪದಕೋಶಗಳನ್ನು ಬಿಡಿಸಿ
  3. ನೋಡಬೇಕಾಗುವುದು ಮೇಲಿನ ಅಕ್ಷರಗಳ ಬಳಕೆಯಲ್ಲಿ ಮಾತ್ರ. ಅವನ್ನು
  4. ಓದುವ ಹಾಗೆ ಬರೆಯದಿರುವುದೇ ಇದಕ್ಕೆ ಕಾರಣ. ‘ಹೊಸ ಬರಹ’ದಲ್ಲಿ ಈ
  5. ಸಂಶಯಗಳೆಲ್ಲ ಇಲ್ಲವಾಗುತ್ತವೆ.
  6. (೫) ಕೆಳವರದ ಮಕ್ಕಳಿಗೆ ಉಚ್ಚಾರಣೆಯಲ್ಲಿಲ್ಲದ ಈ ಹೆಚ್ಚಿನ ಅಕ್ಷರಗಳನ್ನು
  7. ಕಲಿಯಲು ತುಂಬಾ ಕಷ್ಟವೆಂದೆನಿಸುವ ಕಾರಣ, ಅವರಲ್ಲಿ ಕೀಳರಿಮೆಯುಂಟಾಗು
  8. ಇದೆ; ಮತ್ತು, ಅವರು ತಮ್ಮ ಕಲಿಕೆಯನ್ನು ನಡುವಿನಲ್ಲೇ ಬಿಟ್ಟುಬಿಡುತ್ತಾರೆ.
  9. ‘ಹೊಸ ಬರಹ’ದ ಬಳಕೆಯಾದಲ್ಲಿ ಈ ತೊಂದರೆಯಿಲ್ಲ.
  10. (೬) ‘ಹೊಸ ಬರಹ’ದಲ್ಲಿ ಬೆರಳಚ್ಚು ಮಾಡುವುದು ಮತ್ತು ಕಂಪ್ಯೂಟರಿನಲ್ಲಿ
  11. ಬರೆಯುವುದು ಸುಲಭ; ಶಿಫ್ಟ್ ಕೀಯನ್ನು ತುಂಬಾ ಕಡಿಮೆ ಬಾರಿ ಒತ್ತಬೇಕಾಗು
  12. ಇದೆ.
  13. (೭) ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ, ಬರಹಕ್ಕೂ ಆಡು
  14. ಮಾತಿಗೂ ನಡುವಿರುವ ಅಂತರ ಕಡಿಮೆಯಾಗುತ್ತದೆ.
  15. (೮) ಬರಹದ ಕ್ಲಿಷ್ಟತೆ ಮತ್ತು ಕೃತಕತೆಗಳು ಕಡಿಮೆಯಾಗುತ್ತವೆ, ಮತ್ತು
  16. ಇದರಿಂದಾಗಿ ಬರಹ ಹೆಚ್ಚು ಜೀವಂತವಾಗಿ ಕಾಣಿಸುತ್ತದೆ.
  17. ನನ್ನ ಇತ್ತೀಚೆಗಿನ ಕನ್ನಡ ವ್ಯಾಕರಣ ಯಾಕೆ ಬೇಕು ಎಂಬ ಪುಸ್ತಕದಲ್ಲಿ
  18. ಇನ್ನೊಂದು ಮುಖ್ಯವಾದ ಪ್ರಯೋಜನವನ್ನೂ ಕೊಟ್ಟಿದ್ದೇನೆ:
  19. (೯) ಕನ್ನಡ ಬರಹವನ್ನು ಓದಲು ಕಲಿಯುವ ಮಕ್ಕಳು ಅದರಲ್ಲಿ ಅಕ್ಷರ
  20. ಗಳನ್ನು ಜೋಡಿಸಿ (ಮರ ಪದವನ್ನು ಮ ಮತ್ತು ರ ಎಂಬ ಅಕ್ಷರಕಂತೆಗಳನ್ನು
  21. ಜೋಡಿಸಿ, ಮತ್ತು ಮ ಎಂಬ ಅಕ್ಷರಕಂತೆಯನ್ನು ಮ್ ಮತ್ತು ಅ ಎಂಬ ಅಕ್ಷರ
  22. ಗಳನ್ನು ಜೋಡಿಸಿ) ಪದಗಳನ್ನು ಬರೆಯಲಾಗುತ್ತದೆ ಎಂಬುದನ್ನು, ಮತ್ತು ಬರಹ
  23. ದಲ್ಲಿ ಕಾಣಿಸುವ ಅಕ್ಷರಗಳಿಗೂ ಬಾಯಿಯಿಂದ ಹೊರಡಿಸುವ [ಮ್], [ಅ],
  24. [ರ್], [ಅ] ಮೊದಲಾದ ಧ್ವನಿಗಳಿಗೂ ನಡುವೆ ಸಂಬಂಧ ಇದೆ ಎಂಬುದನ್ನು
  25. ಕಂಡುಕೊಂಡಲ್ಲಿ ಮಾತ್ರ, ಅವರಿಗೆ ಅದನ್ನು ಸಲೀಸಾಗಿ ಓದಲು ಬರುತ್ತದೆ.

ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ನೇರವಾದ ಸಂಬಂಧ ಇದೆಯಾದರೆ, ಇದನ್ನು ಕಂಡುಕೊಳ್ಳುವುದು ತುಂಬಾ ಸುಲಭ; ಬರಹದಲ್ಲಿರುವ ‘ಸ್ಟೆಲ್ಲಿಂಗ್’ ಸಮಸ್ಯೆಗಳು ಈ ಸಂಬಂಧವನ್ನು ಕೆಡಿಸುತ್ತವೆ; ಹಾಗಾಗಿ, ಇಂತಹ ಸಮಸ್ಯೆಗಳು ತುಂಬಾ ಹೆಚ್ಚಿರುವ ಇಂಗ್ಲಿಷ್‌ನಂತಹ ಬರಹಗಳನ್ನು ಮಕ್ಕಳಿಗೆ ಸರಿಯಾದ ಕ್ರಮ ದಲ್ಲಿ ಓದಲು ಕಲಿಸುವುದು ತುಂಬಾ ಕಷ್ಟ. ಇವತ್ತು ಇಂಗ್ಲಿಷ್ ಬರಹವನ್ನು ಓದಲು ಕಲಿಯುವ ಮಕ್ಕಳಲ್ಲಿ ಹೆಚ್ಚಿನವರಿಗೂ ಸರಿಯಾದ ಕ್ರಮದಲ್ಲಿ ಓದು

೧೧೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವುದು ಹೇಗೆ ಎಂಬುದು ಗೊತ್ತಾಗುವುದೇ ಇಲ್ಲ ಎಂಬುದಾಗಿ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಕನ್ನಡ ಬರಹದಲ್ಲೂ, ಮಹಾಪ್ರಾಣಾಕ್ಷರ, ಷಕಾರ, ಋಕಾರ ಮೊದಲಾದ ಹೆಚ್ಚಿನ ಅಕ್ಷರಗಳು ಸ್ಪೆಲ್ಲಿಂಗ್ ಸಮಸ್ಯೆಯನ್ನು ತಂದೊಡ್ಡುತ್ತವೆ; ಯಾಕೆಂದರೆ, ಅವು ಅಕ್ಷರಗಳಿಗೂ ಧ್ವನಿಗಳಿಗೂ ನಡುವೆ ನೇರವಾದ ಸಂಬಂಧವಿಲ್ಲದ ಹಾಗೆ ಮಾಡುತ್ತವೆ. ಹಾಗಾಗಿ, ಅವನ್ನು ಬರಹದಿಂದ ಹೊರಗಿರಿಸಿದಲ್ಲಿ ಮಕ್ಕಳು ಬಹಳ ಬೇಗನೆ ಸರಿಯಾದ ಕ್ರಮದಲ್ಲಿ ಓದುವುದು ಹೇಗೆ ಎಂಬುದನ್ನು ಕಲಿಯಬಲ್ಲರು.

ಹಳೇ ಬರಹವನ್ನು ಉಳಿಸಿಕೊಳ್ಳುವುದರಿಂದ ಪ್ರಯೋಜನವಿದೆಯೇ?

ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ನಿಯಮವನ್ನು ಈಗಿರುವ ಹಾಗೆಯೇ ಉಳಿಸಿಕೊಂಡಲ್ಲಿ ಕನ್ನಡಿಗರಿಗೆ ಪ್ರಯೋಜನಗಳೇನಾದರೂ ಸಿಗಬಲ್ಲುವೇ ಎಂಬುದನ್ನೂ ಪರಿಶೀಲಿಸ ಬಹುದು.

ನನಗೆ ಅನಿಸುವುದೇನೆಂದರೆ, ಈ ಪದಗಳನ್ನು ಬದಲಾಯಿಸಹೋಗದೆ, ಸಂಸ್ಕೃತದಲ್ಲಿರುವ ಹಾಗೆಯೇ ಬರೆಯುತ್ತಿರುವುದರಿಂದ ಸಿಗಬಲ್ಲ ಪ್ರಯೋಜನ ಗಳೆಲ್ಲ ತಾತ್ಕಾಲಿಕವಾದವುಗಳು. ಉದಾಹರಣೆಗಾಗಿ, ಅವನ್ನು ಹಳೇ ರೂಪದಲ್ಲಿ ನೋಡಿ ಬಳಕೆಯಾಗಿರುವವರಿಗೆ ಹೊಸ ರೂಪವನ್ನು ಕಂಡಾಗ ಅದು ತಪ್ಪೆಂದು ಅನಿಸುತ್ತದೆ; ಇಂತಹ ಅನಿಸಿಕೆ ಉಂಟಾಗದಂತೆ, ಇವರಿಗಾಗಿ ಈ ಬದಲಾವಣೆ ಯನ್ನು ಮಾಡದಿರಬೇಕು. ಆದರೆ, ಹೊಸ ರೂಪವನ್ನು ಕಂಡು ಬಳಕೆಯಾದವರಿಗೆ ಅದು ತಪ್ಪೆಂದು ಅನಿಸುವುದೇ ಇಲ್ಲವಲ್ಲ

ಹೊಸ ಬರಹವನ್ನು ಕಲಿತವರಿಗೆ ಹಳೇ ಬರಹದಲ್ಲಿರುವ ಪುಸ್ತಕಗಳನ್ನು ಓದಲು ತುಸು ತೊಂದರೆಯಾಗಬಹುದು; ಇದೂ ಕೂಡ ತಾತ್ಕಾಲಿಕವಾದ ತೊಂದರೆ. ಸಮಯ ಕಳೆದಂತೆ ಇಂತಹ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತವೆ.

ಬರಹದಲ್ಲಿ ಎಂತಹ ಬದಲಾವಣೆಯನ್ನು ಮಾಡುವುದಿದ್ದರೂ ಇಂತಹ ತಾತ್ಕಾಲಿಕವಾದ ತೊಂದರೆಗಳು ಬಂದೇ ಬರುತ್ತವೆ; ಅವಕ್ಕೆ ಹೆದರಿ ಬದಲಾವಣೆ ಯನ್ನು ಮಾಡಿಕೊಳ್ಳದಿದ್ದರೆ, ಸ್ಪೆಲ್ಲಿಂಗ್ ಸಮಸ್ಯೆಯನ್ನು ಯಾವಾಗಲೂ ಅನುಭವಿ ಸುತ್ತಲೇ ಇರಬೇಕಾಗುತ್ತದೆ. ಯಾಕೆಂದರೆ, ಕನ್ನಡ ಬರಹವನ್ನು ಮೇಲೆ ಸೂಚಿಸಿದ ಹಾಗೆ ಬದಲಾಯಿಸುವುದರಿಂದ ನಮಗೆ ದೊರಕುವ ಪ್ರಯೋಜನ ಗಳಲ್ಲಿ ಪ್ರತಿಯೊಂದೂ ನಮಗೆ ಯಾವಾಗಲೂ ದೊರಕುವಂತಹವು.

ಇಂಗ್ಲಿಷ್‌ನ ಸ್ಪೆಲ್ಲಿಂಗ್ ಸಮಸ್ಯೆಯೂ ಇಂತಹದೇ. ಅದನ್ನು ಸರಿಪಡಿಸ ಹೋದರೆ ಹಲವಾರು ತಾತ್ಕಾಲಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇಂಗ್ಲಿಷ್‌ನಲ್ಲಿ ಇಂತಹ ತಾತ್ಕಾಲಿಕ ತೊಂದರೆಗಳು ತುಂಬಾ ಜಾಸ್ತಿ; ಹಾಗಾಗಿ, ಹೆಚ್ಚಿನವರಿಗೂ ಅದನ್ನು ಸರಿಪಡಿಸಬೇಕೆಂದು ಅನಿಸುವುದಿಲ್ಲ.

೧೨೦

ಭಾಷೆ ಮತ್ತು ಬರಹ

ಕನ್ನಡದಲ್ಲಿ ತೊಂದರೆಗಳು ಹೆಚ್ಚಿಲ್ಲವಾದ ಕಾರಣ (ಕನ್ನಡದವೇ ಆದ ಪದಗಳ ಮಟ್ಟಿಗೆ ಏನೂ ಇಲ್ಲ), ಅದನ್ನು ಸುಲಭವಾಗಿ ಸರಿಪಡಿಸಬಹುದು. ಇದನ್ನು ನಾನು ನನ್ನ ಇತ್ತೀಚೆಗಿನ ಪುಸ್ತಕಗಳಲ್ಲಿ ತೋರಿಸಿಕೊಟ್ಟಿದ್ದೇನೆ.

೩. ಭಾಷೆ ಮತ್ತು ಬರಹ

ಮಾತು ಮತ್ತು ಬರಹಗಳ ನಡುವೆ ಹಲವು ವ್ಯತ್ಯಾಸಗಳಿವೆ; ಈ ವ್ಯತ್ಯಾಸಗಳು ಮಾತಿಗಿಲ್ಲದ ಹಲವು ಅನುಕೂಲತೆಗಳನ್ನು ಬರಹಕ್ಕೆ ತಂದುಕೊಟ್ಟಿವೆ; ಆದರೆ, ಇವೇ ವ್ಯತ್ಯಾಸಗಳು ಕೆಲವು ಸಂದರ್ಭಗಳಲ್ಲಿ ಬರಹಕ್ಕೆ ಹಾನಿಕಾರಕಗಳಾಗಿಯೂ ಪರಿಣಮಿಸಿವೆ.

ಈ ವ್ಯತ್ಯಾಸಗಳಿಂದಾಗಿ, ಕೆಲವು ಬರಹಗಳಿಗೆ ಭಾಷೆಯ ಕಟ್ಟನ್ನು ಮುರಿದು ಹೊರಬರಲು, ಮತ್ತು ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ಸಾಧಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ, ಹಾಗೆ ಸ್ವತಂತ್ರವಾಗಿ ನಿಂತಿರುವ ಬರಹಗಳನ್ನು ‘ಭಾಷೆ’ಗಳೆಂದು ಕರೆಯುವುದು ಮಾತ್ರ ಸರಿಯಲ್ಲವೆಂದು ನನಗೆ ತೋರುತ್ತದೆ. ಯಾಕೆಂದರೆ, ಭಾಷೆಗಳಲ್ಲಿರುವ ಜೀವಂತಿಕೆ ಈ ಬರಹಗಳಲ್ಲಿ ಉಳಿದಿರುವುದಿಲ್ಲ. ಮಾತನ್ನನುಸರಿಸಿ ಬದಲಾಗುತ್ತಾ ಹೋಗುವ ಬರಹಗಳು ಮಾತ್ರ ತಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುವು.

ಈ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳಲು ಮೊದಲಿಗೆ ಮಾತು ಮತ್ತು ಬರಹಗಳ ನಡುವಿನ ವ್ಯತ್ಯಾಸಗಳೆಂತಹವು, ಮತ್ತು ಈ ವ್ಯತ್ಯಾಸಗಳು ಮಾತು ಮತ್ತು ಬರಹಗಳ ಮೇಲೆ ಎಂತಹ ಪರಿಣಾಮವನ್ನು ಬೀರಬಲ್ಲುವು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಮಾತು ಕ್ಷಣಿಕ, ಬರಹ ಶಾಶ್ವತ

ಮಾತಿನ ಮಾಧ್ಯಮ ಧ್ವನಿಯಾದ ಕಾರಣ, ಆಡುತ್ತಿದ್ದ ಹಾಗೆಯೇ ಅದು ಅಳಿದುಹೋಗುತ್ತಾ ಇರುತ್ತದೆ. ಆದರೆ, ಕಾಗದದ ಮೇಲೆ ಮೂಡಿಸುವ ಬರಹ ಹೆಚ್ಚು ಶಾಶ್ವತವಾದುದು. ಮಾತು ಮತ್ತು ಬರಹಗಳ ನಡುವಿನ ಈ ವ್ಯತ್ಯಾಸ ದಿಂದಾಗಿ, ಅವುಗಳ ನಡುವೆ ಹಲವು ತುಂಬಾ ಮುಖ್ಯವಾದ ವ್ಯತ್ಯಾಸಗಳು ಮೂಡಿಬಂದಿವೆ.

ಒಮ್ಮೆ ನುಡಿದ ಮಾತನ್ನು ನಾವು ಹಿಂದಕ್ಕೆ ಪಡೆಯಲಾರೆವು; ಹಾಗಾಗಿ, ಅದರಲ್ಲಿ ಬದಲಾವಣೆಗಳನ್ನೂ ಮಾಡಲಾರೆವು; ಅದು ತಪ್ಪಾಗಿದ್ದರೆ, ಅದನ್ನು ಸರಿಪಡಿಸುವ ಬೇರೊಂದು ಮಾತನ್ನು ಹೇಳಬಲ್ಲೆವಲ್ಲದೆ, ಅದನ್ನೇ ಹಿಂದಕ್ಕೆ ಪಡೆದು ಸರಿಪಡಿಸುವ ಹಾಗಿಲ್ಲ. ಆದರೆ, ಬರೆದುದನ್ನು ಓದಿ ನೋಡಿ, ಅದರಲ್ಲಿ

೧೨೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ತಪ್ಪುಗಳಿದ್ದರೆ ಅವನ್ನು ತಿದ್ದಿ ಸರಿಪಡಿಸಿ, ಬೇಕಿದ್ದರೆ ಅದನ್ನೇ ಇನ್ನೊಮ್ಮೆ ಬರೆದು, ಆಮೇಲೆ ಅದನ್ನು ಓದುಗರೆದುರು ಇರಿಸಬಲ್ಲೆವು.

ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸ ಅವುಗಳ ನಡುವೆ ಇನ್ನೂ ಹಲವಾರು ವ್ಯತ್ಯಾಸಗಳನ್ನು ತಂದು ಹಾಕಿದೆ. ಮಾತಿನಲ್ಲಿ ಬರುವ ವಾಕ್ಯಗಳು ಸಾಮಾನ್ಯವಾಗಿ ತುಂಡು ತುಂಡಾಗಿರುತ್ತವೆ; ಅವುಗಳಲ್ಲಿ ಹಲವು ತಪ್ಪಾಗಿಯೂ ಇರಬಲ್ಲುವು. ಇದಲ್ಲದೆ, ಮಾತಿನಲ್ಲಿ ಹಲವು ಬಾರಿ ಹೇಳಿದ್ದನ್ನೇ ಹೇಳುತ್ತಿರುತ್ತೇವೆ; ಒಂದು ವಿಷಯದ ನಡುವೆ ಇನ್ನೊಂದು ವಿಷಯ ತಲೆಹಾಕು ತಿರುತ್ತದೆ; ಒಬ್ಬನು ಮಾತನಾಡುತ್ತಿರುವಾಗ ನಡುವೆ ಇನ್ನೊಬ್ಬನ ಮಾತೂ ಬಂದಿರುತ್ತದೆ.

ಆದರೆ, ಬರಹದಲ್ಲಿ ವಾಕ್ಯಗಳು ಇಡಿಯಿಡಿಯಾಗಿರುತ್ತವೆ, ಮತ್ತು ಅವು ಸರಿ ಯಾಗಿರುವಂತೆಯೂ ನೋಡಿಕೊಳ್ಳಲಾಗುತ್ತದೆ. ತಿಳಿಸಬೇಕೆಂದಿರುವ ವಿಷಯ ಗಳನ್ನು ಒಂದು ಕ್ರಮದಲ್ಲಿ ಜೋಡಿಸಲಾಗುತ್ತದೆ, ಮತ್ತು ಅವುಗಳಲ್ಲಿ ಪುನರುಕ್ತಿ ದೋಷ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ.

ಮಾತಿನಲ್ಲಿ ಬಳಕೆಯಾಗುವ ವಾಕ್ಯಗಳು ಚಿಕ್ಕ ಚಿಕ್ಕವು; ಉದ್ದುದ್ದ ವಾಕ್ಯ ಗಳಿದ್ದರೂ ಅವನ್ನು ಚಿಕ್ಕ ಚಿಕ್ಕ ವಾಕ್ಯಗಳ ಜೋಡಣೆಯಿಂದ ಉಂಟುಮಾಡಲಾಗು ತ್ತದೆ. ಆದರೆ, ಬರಹದಲ್ಲಿ ಹೆಚ್ಚಾಗಿ ಉದ್ದುದ್ದ ವಾಕ್ಯಗಳೇ ಬಳಕೆಯಾಗುತ್ತಿರು ತ್ತವೆ. ಇದಲ್ಲದೆ, ಒಂದು ವಾಕ್ಯದೊಳಗೆ ಇನ್ನೊಂದು ವಾಕ್ಯವನ್ನು ಇರಿಸಿರು ವಂತಹ ಸಿಕ್ಕಲು ವಾಕ್ಯಗಳು ಬರಹದಲ್ಲಿ ಕಾಣಿಸಿಕೊಳ್ಳುವ ಹಾಗೆ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಮಾತಿಗೂ ಬರಹಕ್ಕೂ ನಡುವೆ ಇಂತಹ ಹಲವು ವ್ಯತ್ಯಾಸಗಳಿರುವುದ ರಿಂದಾಗಿ, ಬರಹ ಮಾತಿಗಿಂತ ಶ್ರೇಷ್ಠ ಎಂಬ ಅನಿಸಿಕೆ ನಮ್ಮಲ್ಲಿ ಬೆಳೆದುಬಂದಿದೆ. ಆದರೆ, ನಿಜಕ್ಕೂ ಮಿಲಿಯಗಟ್ಟಲೆ ವರ್ಷಗಳಿಂದ ಭಾಷೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವುದು ಮಾತಲ್ಲದೆ ಬರಹವಲ್ಲ. ಮಾತಿಗೆ ಸ್ವಲ್ಪಮಟ್ಟಿಗಿನ ಶಾಶ್ವತತೆಯನ್ನು ತಂದುಕೊಡುವುದಕ್ಕಾಗಿ ಕೆಲವೇ ಕೆಲವು ಭಾಷೆಗಳಲ್ಲಿ ಮಾತ್ರ ಬರಹ ಬಳಕೆಗೆ ಬಂದಿದೆ. ಇವತ್ತಿಗೂ ಬರಹವನ್ನು ಬಳಸುವ ಭಾಷೆಗಳಿಗಿಂತಲೂ ಬಳಸದ ಭಾಷೆಗಳೇ ಹೆಚ್ಚಿವೆ.

ಬರಹವನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುವುದಿಲ್ಲ

ಮಾತಿಗೂ ಬರಹಕ್ಕೂ ನಡುವಿರುವ ಇನ್ನೊಂದು ಮುಖ್ಯವಾದ ವ್ಯತ್ಯಾಸವೆಂದರೆ, ಮಾತನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುತ್ತಾರೆ; ಅದನ್ನು ಅವರಿಗೆ ಯಾರೂ ಕಲಿಸಿಕೊಡಬೇಕಾಗಿಲ್ಲ; ಮನೆಯಲ್ಲಿ ದೊಡ್ಡವರು ಮಾತನಾಡುವುದನ್ನು ಕೇಳಿ, ಅವರು ತಾವಾಗಿಯೇ ಅದನ್ನು ಕಲಿತುಕೊಳ್ಳುತ್ತಾರೆ; ಆರೋಗ್ಯದಲ್ಲಿರುವ ಯಾವ ಮಗುವೂ ತನ್ನ ತಾಯ್ನುಡಿಯನ್ನು ಕಲಿತುಕೊಳ್ಳದಿರುವುದಿಲ್ಲ. ಇದಲ್ಲದೆ, ಎಲ್ಲಾ ಮಕ್ಕಳೂ ತಮ್ಮ ತಾಯ್ನುಡಿಯಲ್ಲಿ ಒಂದೇ ಬಗೆಯ ಪರಿಣತಿಯನ್ನು ಪಡೆಯು

೧೨೨


ಭಾಷೆ ಮತ್ತು ಬರಹ

ತ್ತಾರೆ: ಇದನ್ನು ಪಡೆಯಲು ಕೆಲವರಿಗೆ ತುಸು ಹೆಚ್ಚು ಸಮಯ ತಗಲಬಲ್ಲುದು, ಮತ್ತು ಕೆಲವರಿಗೆ ತುಸು ಕಡಿಮೆ ಸಮಯ ತಗಲಬಲ್ಲುದು; ಆದರೆ, ಯಾವ ಮಗುವೂ ತನ್ನ ತಾಯ್ನುಡಿಯಲ್ಲಿ ಸಂಪೂರ್ಣವಾದ ಪರಿಣತಿಯನ್ನು ಪಡೆಯ ದಿರುವುದಿಲ್ಲ.

ಆದರೆ, ಬರಹವನ್ನು ಮಕ್ಕಳು ಹುಟ್ಟಿನಿಂದಲೇ ಪಡೆಯುವುದಿಲ್ಲ. ಅದನ್ನು ಅವರಿಗೆ ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಯಾರಾದರೂ ಕಲಿಸಬೇಕಾಗುತ್ತದೆ. ಹಾಗೆ ಕಲಿಸದಿದ್ದರೆ, ಅವರು ಅದನ್ನು ಕಲಿಯುವುದೇ ಇಲ್ಲ. ಇದಲ್ಲದೆ, ಎಲ್ಲಾ ಮಕ್ಕಳೂ ಬರಹದಲ್ಲಿ ಒಂದೇ ಬಗೆಯ ಪರಿಣತಿಯನ್ನು ಪಡೆಯುವುದಿಲ್ಲ; ಕೆಲವರಿಗೆ ಅದನ್ನು ತುಂಬಾ ಚನ್ನಾಗಿ ಬಳಸಲು ಬರುತ್ತದೆ, ಮತ್ತು ಬೇರೆ ಕೆಲವರಿಗೆ ಅದನ್ನು ಎಷ್ಟು ಕಲಿತರೂ ಸರಿಯಾಗಿ ಬಳಸಲು ಬರುವುದಿಲ್ಲ. ಈ ಎಲ್ಲಾ ವಿಷಯಗಳಲ್ಲೂ, ಈಜುವುದು, ಸೈಕಲ್ ತುಳಿಯುವುದು, ವಾಹನಗಳನ್ನು ಓಡಿಸುವುದು ಮೊದಲಾದವುಗಳ ಹಾಗೆ, ಬರಹವೆಂಬುದು ನಮ್ಮ ಮಟ್ಟಿಗೆ ಹುಟ್ಟಿನಿಂದಲೇ ಪಡೆಯದ, ಮತ್ತು ಕಲಿತು ಪಡೆಯಬೇಕಾಗಿರುವ ಕೌಶಲ್ಯವಾಗಿದೆ.

ಮಾತು ಮತ್ತು ಬರಹಗಳ ನಡುವಿರುವ ಈ ವ್ಯತ್ಯಾಸ ಅವುಗಳ ನಡುವೆ ಬೇರೊಂದು ತುಂಬಾ ಮುಖ್ಯವಾದ ವ್ಯತ್ಯಾಸವನ್ನು ತಂದಿರಿಸಿದೆ: ಹೇಗೆ ಬರೆಯ ಬೇಕು, ಮತ್ತು ಏನು ಬರೆಯಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿಕೊಡಬಹುದು; ದೊಡ್ಡವರು ಹೇಗೆ ಕಲಿಸಿಕೊಡುತ್ತಾರೋ, ಹಾಗೆಯೇ ಮಕ್ಕಳೂ ಬರೆಯಲು ಕಲಿಯುತ್ತಾರೆ.

ಆದರೆ, ಹೇಗೆ ಮಾತನಾಡಬೇಕು, ಮತ್ತು ಏನು ಮಾತಾಡಬೇಕು ಎಂಬು ದನ್ನು ಮಕ್ಕಳಿಗೆ ಕಲಿಸಿಕೊಡಲು ಬರುವುದಿಲ್ಲ; ಅವರು ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ಕಲಿಯುತ್ತಿರುವಾಗ ಅವರನ್ನು ತಂದೆತಾಯಿಯರು ತಿದ್ದಲು ಹೋದರೂ, ಅದು ಅವರ ಮಾತಿನ ಮೇಲೆ ಯಾವ ಪರಿಣಾಮವನ್ನೂ ಬೀರುವು ದಿಲ್ಲ. ಇದಲ್ಲದೆ, ತಾಯ್ನುಡಿಯನ್ನು ಕಲಿಯುವಲ್ಲಿ ಕೆಲವು ನಿಶ್ಚಿತವಾದ ಹಂತ ಗಳಿದ್ದು, ಇವುಗಳಲ್ಲಿ ಒಂದೊಂದನ್ನೂ ನಿಶ್ಚಿತವಾದ ಕ್ರಮದಲ್ಲಿ ಮಕ್ಕಳೆಲ್ಲರೂ ದಾಟುತ್ತಿರುತ್ತಾರೆ. ಈ ವಿಷಯದಲ್ಲೂ ಅವರ ಮೇಲೆ ದೊಡ್ಡವರ ಕಲಿಸುವಿಕೆ ಯಾವ ಪರಿಣಾಮವನ್ನೂ ಬೀರುವುದಿಲ್ಲ.

ಮಕ್ಕಳು ಮಾತು ಮತ್ತು ಬರಹಗಳನ್ನು ಕಲಿಯುವ ಕ್ರಮದಲ್ಲಿರುವ ಈ ವ್ಯತ್ಯಾಸದಿಂದಾಗಿ, ಅವುಗಳ ನಡುವೆ ಇನ್ನೊಂದು ಮುಕ್ಯವಾದ ವ್ಯತ್ಯಾಸ ಮೂಡಿ ಬಂದಿದೆ. ಮಾತು ಕಾಲದಿಂದ ಕಾಲಕ್ಕೆ, ಮತ್ತು ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುತ್ತದೆ, ಮತ್ತು ಸಹಜವಾಗಿ ನಡೆಯುವ ಈ ಬದಲಾ ವಣೆಯ ಮೂಲಕ, ಮಾತು ಯಾವಾಗಲೂ ತನ್ನ ಹೊಸತನವನ್ನು ಉಳಿಸಿ ಕೊಂಡಿರುತ್ತದೆ. ಈ ಬದಲಾವಣೆ ಮುಖ್ಯವಾಗಿ ಮಕ್ಕಳು ತಮ್ಮ ತಾಯ್ನುಡಿಯನ್ನು ಕಲಿತುಕೊಳ್ಳುವ ಸಮಯದಲ್ಲಿ ನಡೆಯುತ್ತದೆ. ದೊಡ್ಡವರ ಮಾತಿನಲ್ಲಿ ಕೃತಕತೆ ಗಳೇನಾದರೂ ಸೇರಿಕೊಂಡಿವೆಯಾದರೆ, ಅವೆಲ್ಲವೂ ಇಂತಹ ಬದಲಾವಣೆಗಳ

೧೨೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮೂಲಕ ಮಕ್ಕಳ ಮಾತಿನಲ್ಲಿ ಪೂರ್ತಿ ಇಲ್ಲವಾಗುತ್ತವೆ. ಮಾತಿನಲ್ಲಿ ನಡೆಯುವ ಈ ಬದಲಾವಣೆಯ ಮೇಲೆ ಯಾರ ಹತೋಟಿಯೂ ಇರುವುದಿಲ್ಲ.

ಆದರೆ, ಬರಹದಲ್ಲಿ ಇಂತಹ ಯಾವ ಬದಲಾವಣೆಯೂ ನಡೆಯುವುದಿಲ್ಲ. ಅದನ್ನು ಮಕ್ಕಳಿಗೆ ಕಲಿಸಿಕೊಡಬೇಕಾಗುತ್ತದೆಯಾದ ಕಾರಣ, ಹಾಗೆ ಕಲಿಸಿಕೊಡು ವಾಗ ಅದನ್ನು ಮಕ್ಕಳು ‘ಸರಿಯಾಗಿ’ ಕಲಿಯುವಂತೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ, ಸಮಯ ಕಳೆದಂತೆಲ್ಲ ಬರಹದಲ್ಲಿ ಕೃತಕತೆ ತುಂಬಿಕೊಳ್ಳುತ್ತದೆ, ಮತ್ತು ಅದು ಮಾತಿನಿಂದ ದೂರವಾಗುತ್ತಾ ಹೋಗುತ್ತದೆ. ಈ ಕೃತಕತೆಯನ್ನು ಹೋಗಲಾಡಿಸಬೇಕಾದಲ್ಲಿ, ಮತ್ತು ಮಾತಿಗೂ ಬರಹಕ್ಕೂ ನಡುವೆ ಬೆಳೆದು ಬರುವ ಅಂತರವನ್ನು ಕಡಿಮೆ ಮಾಡಬೇಕಾದಲ್ಲಿ, ಯಾರಾದರೂ ಬರಹಗಾರರು ತಮ್ಮ ಬರಹಗಳಲ್ಲಿ ಅದಕ್ಕೆ ಬೇಕಾದ ಬದಲಾವಣೆಗಳನ್ನು ಮೂಡಿಸಲು ಪ್ರಯತ್ನ ಪಡಬೇಕಾಗುತ್ತದೆ.

ಯಾವುದು ಭಾಷೆ?

ಮಾತಿಗೂ ಬರಹಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸಿದಾಗ, ಇನ್ನೊಂದು ಮುಖ್ಯವಾದ ವಿಷಯ ನಮ್ಮ ಗಮನಕ್ಕೆ ಬರುತ್ತದೆ: ನಾವು ‘ಭಾಷೆ’ ಎಂಬ ಪದದ ಮೂಲಕ ಜನರ ಮಾತನ್ನು ಹೆಸರಿಸಬೇಕಲ್ಲದೆ ಅವರ ಬರಹ ವನ್ನಲ್ಲ. ಮಿಲಿಯಗಟ್ಟಲೆ ವರ್ಷಗಳಿಂದ ಭಾಷೆಯ ಮಾಧ್ಯಮವಾಗಿದ್ದುದು ಮಾತಲ್ಲದೆ ಬರಹವಲ್ಲ. ಮಾತಿನಲ್ಲಿ ಹೇಳಿದ ಸಂಗತಿ ತುಸು ಶಾಶ್ವತವಾಗಿ ಉಳಿಯುವಂತೆ ಮಾಡಲು ಬರಹವನ್ನು ಬಳಸಲಾಗುತ್ತದೆ, ಅಷ್ಟೆ. ಭಾಷೆಯಿಂದ ಮಾತು, ಮತ್ತು ಮಾತಿನಿಂದ ಬರಹ ಎಂಬುದಾಗಿ ಬರಹಕ್ಕೂ ಭಾಷೆಗೂ ನಡುವೆ ಮಾತು ಒಂದು ಕೊಂಡಿಯಾಗಿ ನಿಂತಿರುತ್ತದೆ. ಇದಲ್ಲದೆ, ಮೊನ್ನೆ ಮೊನ್ನೆಯ ವರೆಗೂ ಬರಹವನ್ನು ಸಮಾಜದ ಕೆಲವೇ ಕೆಲವು ಮಂದಿ ಮಾತ್ರ ಬಳಸು ತ್ತಿದ್ದರು.

ಆದರೆ ಮೇಲೆ ಸೂಚಿಸಿದ ಹಾಗೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಈ ವ್ಯತ್ಯಾಸಗಳಿಂದಾಗಿ ಬರಹಕ್ಕೆ ಮಾತಿನಿಂದ ಬೇರಾಗಿರುವ ತನ್ನದೇ ಆದ ಅಸ್ತಿತ್ವವೊಂದನ್ನು ಕಟ್ಟಿಕೊಳ್ಳಲು ಸಾಧ್ಯವಾಗಿದೆ, ಮತ್ತು ಇದರಿಂದಾಗಿ, ಜನರ ಮನಸ್ಸಿನಲ್ಲಿ ಇವತ್ತು ಮಾತಿಗಿಂತಲೂ ಬರಹಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇದಲ್ಲದೆ, ಬರಹವಿಲ್ಲದ ಮಾತು ಭಾಷೆಯೇ ಅಲ್ಲ ಎಂಬ ಅನಿಸಿಕೆ ಇವತ್ತು ಹಲವರಲ್ಲಿದೆ. ಆದರೆ ಇದು ನಾಯಿ ತನ್ನ ಬಾಲವನ್ನು ಬೀಸುವ ಬದಲು, ಬಾಲವೇ ನಾಯಿಯನ್ನು ಬೀಸುವ ಹಾಗೆ

ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುವ ಮಾತನ್ನನುಸರಿಸಿ ಬರಹ ಬದಲಾಗದಿದ್ದರೆ ಏನಾಗುತ್ತದೆ? ಇದಕ್ಕೆ ಸಂಸ್ಕೃತ ಬರಹ ಒಂದು ಒಳ್ಳೆಯ ಉದಾಹರಣೆ. ಹಲವಾರು ಒಳ್ಳೆಯ ಬರಹಗಾರರು ಸಂಸ್ಕೃತದಲ್ಲಿ ಬರಹಗಳನ್ನು ಬರೆದರು; ಇವನ್ನಾಧರಿಸಿ, ಪಾಣಿನಿಯಂತಹ ವೈಯಾಕರಣಿಗಳು ಸಂಸ್ಕೃತಕ್ಕೆ

೧೨೪


ಭಾಷೆ ಮತ್ತು ಬರಹ

ಒಂದು ಕಟ್ಟುನಿಟ್ಟಾದ ವ್ಯಾಕರಣವನ್ನೂ ಬರೆದುಕೊಟ್ಟರು. ಇವುಗಳಿಂದಾಗಿ, ಸಂಸ್ಕೃತ ಬರಹ ಮಾತನ್ನನುಸರಿಸಿ ಬದಲಾಗಲು ಹೋಗದೆ ನಿಶ್ಚಲವಾಗಿ ಉಳಿಯುವಂತಾಯಿತು. ಕಳೆದ ಎರಡು ಸಾವಿರ ವರ್ಷಗಳಲ್ಲಿ ಈ ರೀತಿ ಸಂಸ್ಕೃತ ಬರಹ ಮಾತನ್ನನುಸರಿಸಿ ಬದಲಾಗದೆ ಉಳಿದಿದೆ.

ನಿಜಕ್ಕೂ ಇವತ್ತು ಸಂಸ್ಕೃತವನ್ನು ಒಂದು ಭಾಷೆಯೆಂದು ಕರೆಯುವುದು ಸರಿಯಲ್ಲ. ಯಾಕೆಂದರೆ, ಎರಡು ಸಾವಿರ ವರ್ಷಗಳಷ್ಟು ಹಿಂದೆ ಮಾತಿನಿಂದ ಬೇರ್ಪಟ್ಟಾಗಲೇ ಅದು ‘ಭಾಷೆ’ ಎಂಬ ಹೆಸರನ್ನೂ ಕಳೆದುಕೊಂಡಿತ್ತು. ಇವತ್ತು ಕೆಲವರು ತಾವು ಸಂಸ್ಕೃತವನ್ನು ಆಡುತ್ತಿದ್ದೇವೆಂದು ಹೇಳಬಹುದು; ಆದರೆ, ಕಾಲದಿಂದ ಕಾಲಕ್ಕೆ ಮತ್ತು ತಲೆಮಾರಿನಿಂದ ತಲೆಮಾರಿಗೆ ಬದಲಾಗುವಂತಹ, ಮತ್ತು ಆ ಮೂಲಕ ತನ್ನ ಹೊಸತನವನ್ನು ಉಳಿಸಿಕೊಳ್ಳುವಂತಹ ಭಾಷೆಯ ಮುಖ್ಯ ಸ್ವಭಾವ ಅದಕ್ಕಿಲ್ಲ. ಯಾಕೆಂದರೆ, ಆ ರೀತಿ ಬದಲಾದರೆ ಅದು ಸಂಸ್ಕೃತ ವಾಗಿ ಉಳಿಯದೆ ಬೇರೊಂದು ಭಾಷೆಯಾಗಿಬಿಡುತ್ತದೆ

ಹಾಗಾಗಿ, ಸಂಸ್ಕೃತವನ್ನು ಮಾತಿನಲ್ಲಿ ಬಳಸುವವರೆಲ್ಲರೂ ಇವತ್ತು ಪಾಣಿನಿಯ ವ್ಯಾಕರಣಕ್ಕೆ ಮತ್ತು ಮಹಾಕವಿಗಳ ಬಳಕೆಗೆ ಹೊಂದಿಕೊಳ್ಳುವಂತೆ ತಮ್ಮ ಮಾತನ್ನು ಸರಿದೂಗಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಅದರಲ್ಲಿ ಬದಲಾ ವಣೆಗಳೇನಾದರೂ ನಡೆದರೂ ಅವು ಸ್ವಾಭಾವಿಕವಾಗಿ ನಡೆಯುವ ಬದಲು, ಬರಹಗಾರರು (ಕವಿಗಳು) ವೈಯಕ್ತಿಕವಾಗಿ ನಡೆಸಿದುದರಿಂದಾಗಿ ಉಂಟಾಗುತ್ತವೆ. ಈ ರೀತಿ ಮಾತಿನ ಆಧಾರವನ್ನು ಬಿಟ್ಟುಕೊಟ್ಟುದರಿಂದಾಗಿ ಸಂಸ್ಕೃತ ಬರಹಗಳು ಕೃತಕವಾಗುತ್ತಾ ಹೋಗುತ್ತಿವೆ.

ಇದನ್ನು ತಿಳಿಯಲು, ಸಂಸ್ಕೃತದಲ್ಲಿ ಬಳಕೆಯಾಗುವ ಸಮಸ್ತಪದಗಳನ್ನು ಪರಿಶೀಲಿಸಬಹುದು: ಸಾಮಾನ್ಯವಾಗಿ, ಭಾಷೆಗಳಲ್ಲಿ ಸಮಸ್ತಪದಗಳಿಗೂ ಪದ ಕಂತೆಗಳಿಗೂ ನಡುವೆ ವ್ಯತ್ಯಾಸವಿರುತ್ತದೆ; ಉದಾಹರಣೆಗಾಗಿ, ಕನ್ನಡದಲ್ಲಿ ಕರಿಹಲಗೆ ಎಂಬುದು ಒಂದು ಸಮಸ್ತಪದ, ಬಿಳಿಹಲಗೆ ಎಂಬುದು ಒಂದು ಪದಕಂತೆ.

ಇಂತಹ ಪದಕಂತೆಯನ್ನು ಒಂದು ವಿಶಿಷ್ಟವಾದ ಅರ್ಥದಲ್ಲಿ ತಯಾರಿಸಿ ಬಳಸಿದಾಗ, ಮತ್ತು ಆ ಅರ್ಥದಲ್ಲಿ ಅದು ಮಾತಿನಲ್ಲಿ ಬಳಕೆಗೆ ಬಂದಾಗ ಮಾತ್ರ ಸಮಸ್ತಪದವೆಂದೆನ್ನಿಸುತ್ತದೆ. ಬೆಣ್ಕಲ್ಲು, ಹುಟ್ಟುಹಬ್ಬ, ಹುರಿಗಡಲೆ ಮೊದಲಾ ದವುಗಳು ಈ ರೀತಿ ವಿಶಿಷ್ಟವಾದ ಅರ್ಥದಲ್ಲಿ ಬಳಕೆಗೆ ಬಂದು ಕನ್ನಡದಲ್ಲಿ ಸಮಸ್ತಪದಗಳೆನಿಸಿವೆ.

ಸಮಸ್ತಪದ ಮತ್ತು ಪದಕಂತೆಗಳ ನಡುವೆ ಭಾಷೆಗಳಲ್ಲಿ ಕಾಣಿಸಿಕೊಳ್ಳುವ ಈ ವ್ಯತ್ಯಾಸ ಸಂಸ್ಕೃತ ಬರಹದಲ್ಲಿ ಇಲ್ಲವಾಗಿದೆ. ಅದರಲ್ಲಿ ಕೆಲವು ಸಮಸ್ತ ಪದಗಳಿಗೆ ವಿಶಿಷ್ಟವಾದ ಅರ್ಥವಿದೆಯಾದರೂ, ಅವನ್ನು ಅಂತಹ ಅರ್ಥದಲ್ಲಿ ಮಾತ್ರವಲ್ಲದೆ ಬರಿಯ ಪದಕಂತೆಯ ಅರ್ಥದಲ್ಲೂ ಕವಿಗಳು ಬಳಸಬಲ್ಲರು. ಹಾಗಾಗಿ, ‘ಸಮಾಸ’ವೆಂಬ ವ್ಯಾಕರಣ ವಿಧಾನ ಸಂಸ್ಕೃತದಲ್ಲಿ ಎರಡು ಇಲ್ಲವೇ

೧೨೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹೆಚ್ಚು ನಾಮಪದಗಳನ್ನು ಒಟ್ಟುಸೇರಿಸಿ ಸಂಕ್ಷಿಪ್ತ ರೂಪದಲ್ಲಿ ಬಳಸುವ ಒಂದು ಸಾಧನ ಮಾತ್ರವಾಗಿ ಉಳಿದುಕೊಂಡಿದೆ.

ಸಂಸ್ಕೃತದ ಪದಕಂತೆಗಳಲ್ಲಿ ಎರಡು ನಾಮಪದಗಳನ್ನು ಒಟ್ಟಿಗೆ ಬಳಸ ಬೇಕಾದಲ್ಲಿ, ಅವೆರಡಕ್ಕೂ ಲಿಂಗ, ವಚನ, ಮತ್ತು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ. ಕೃಷ್ಣಂ ಸರ್ಪ೦, ಕೃಷ್ಣನ ಸರ್ಪೇಣ ಎಂಬಂತಹ ಪದಕಂತೆಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಸಮಸ್ತಪದಗಳಲ್ಲಿ ಈ ಪ್ರತ್ಯಯ ಕೊನೆಯ ಪದದಲ್ಲಿ ಮಾತ್ರ ಇರುತ್ತದೆ ಎಂಬು ದನ್ನು ಕೃಷ್ಣಸರ್ಪ೦, ಕೃಷ್ಣಸರ್ಪೇಣ ಎಂಬಂತಹ ಪದರೂಪಗಳಲ್ಲಿ ಕಾಣ ಬಹುದು.

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ಕವಿಗಳ ಕೈಯಲ್ಲಿ ಈ ವಿಧಾನ ಪದ ಗಳನ್ನು ವಾಕ್ಯಗಳಲ್ಲಿ ಸಂಕ್ಷಿಪ್ತವಾಗಿ ಬಳಸುವ ಒಂದು ವಿಧಾನವಾಗಿ ಬದಲಾಗಿದೆ. ಯಾವ ಎರಡು (ಇಲ್ಲವೇ ಹೆಚ್ಚು) ನಾಮಪದಗಳನ್ನು ಬೇಕಿದ್ದರೂ ಒಟ್ಟು ಸೇರಿಸಿ ಮತ್ತು ಸಂಕ್ಷಿಪ್ತಗೊಳಿಸಿ, ಅದನ್ನು ಅವರು ತಮ್ಮ ಕಾವ್ಯಗಳಲ್ಲಿ ಬಳಸಬಲ್ಲರು.

ಉದಾಹರಣೆಗಾಗಿ, ಬಾಣಭಟ್ಟನ ಕಾದಂಬರಿಯಲ್ಲಿ ಇಪ್ಪತ್ತು-ಮೂವತ್ತು ನಾಮಪದಗಳನ್ನು ಒಟ್ಟುಸೇರಿಸಿ ತಯಾರಿಸಿರುವ ಉದ್ದುದ್ದವಾದ ಸಮಸ್ತಪದ ಗಳನ್ನೂ ಕಾಣಬಹುದು. ಇಂತಹ ಸಮಸ್ತಪದಗಳಿಗೆ ತಯಾರಿಕೆ ಎಂಬ ಒಂದೇ ಒಂದು ಹಂತವಿರಬಲ್ಲುದಲ್ಲದೆ, ಅದಕ್ಕಿಂತ ಭಿನ್ನವಾದ ಬಳಕೆ ಎಂಬ ಇನ್ನೊಂದು ಹಂತವಿರಲಾರದು. ಯಾಕೆಂದರೆ, ಅಂತಹ ಉದ್ದುದ್ದವಾದ ಪದಗಳನ್ನು ತಿರು ತಿರುಗಿ ಬಳಸುವ ಮೂಲಕ ಅವು ಒಂದು ಭಾಷೆಯಲ್ಲಿ ರೂಢಿಗೆ ಬರಲು ಸಾಧ್ಯವೇ ಇಲ್ಲ

ಕವಿಗಳು ವೈಯಕ್ತಿಕವಾಗಿ ನಡೆಸಿರುವ ಇಂತಹ ಹಲವು ಮಾರ್ಪಾಡು ಗಳಿಂದಾಗಿ, ಸಂಸ್ಕೃತ ಬರಹದಲ್ಲಿ ಕೃತಕೆಗಳು ತುಂಬಿಕೊಂಡಿವೆ. ಕಾಲದಿಂದ ಕಾಲಕ್ಕೆ ಸಹಜವಾಗಿ ಮುಂದುವರಿಯುವ ಭಾಷೆಗಳಲ್ಲಿ ಇಂತಹ ಕೃತಕೆಗಳು ತಾವಾಗಿಯೇ ಬಿದ್ದುಹೋಗುತ್ತವೆ; ಆದರೆ, ಸಂಸ್ಕೃತ ಬರಹಕ್ಕೆ ಎರಡು ಸಾವಿರ ವರ್ಷಗಳಿಂದಲೂ ಮಾತಿನ ಆಧಾರ ತಪ್ಪಿಹೋಗಿದೆಯಾದ ಕಾರಣ, ಅದರಲ್ಲಿ ಸೇರಿಕೊಂಡಿರುವ ಕೃತಕೆಗಳು ಹಾಗೆಯೇ ಉಳಿದಿವೆ. ನಿಂತ ನೀರಿನ ಹಾಗೆ ಅದು ಜಡವಾಗಿದೆ, ಮತ್ತು ತನ್ನ ಜೀವಂತಿಕೆಯನ್ನು ಕಳೆದುಕೊಂಡಿದೆ.

‘ಕ್ಲಾಸಿಕಲ್’ ಭಾಷೆಯೋ, ಬರಹವೋ?

ಸಂಸ್ಕೃತ, ಲ್ಯಾಟಿನ್ ಮೊದಲಾದ ಕೆಲವು ಬರಹಗಳನ್ನು ಕ್ಲಾಸಿಕಲ್ ಭಾಷೆ ಗಳೆಂದು ಕರೆಯಲಾಗುತ್ತದೆ; ನೂರಾರು ವರ್ಷಗಳಿಂದ ಬದಲಾಗದೆ ಉಳಿದಿರು ವುದು, ಮತ್ತು ಹಲವು ಬಗೆಯ ಉತ್ತಮವಾದ ಗ್ರಂಥಗಳನ್ನು ಅವುಗಳಲ್ಲಿ ಬರೆದಿರುವುದು ಅವಕ್ಕೆ ಈ ‘ಕ್ಲಾಸಿಕಲ್’ ಎಂಬ ಹೆಸರು ಬರಲು ಮುಖ್ಯ ಕಾರಣ. ಆದರೆ, ಮೇಲೆ ಸೂಚಿಸಿದ ಹಾಗೆ, ನೂರಾರು ವರ್ಷ ಬದಲಾಗದೆ ಉಳಿದಿರ

೧೨೬


ಭಾಷೆ ಮತ್ತು ಬರಹ

ಬೇಕಾದರೆ, ಅವು ಮಾತಿನ ಆಧಾರ ತಪ್ಪಿಹೋಗಿರುವ ಬರಹಗಳಾಗಿರಬೇಕಲ್ಲದೆ ಭಾಷೆಗಳಾಗಿರಲು ಸಾಧ್ಯವಿಲ್ಲ.

ಇವತ್ತು ಕನ್ನಡಕ್ಕೂ ಭಾರತ ಸರಕಾರ ‘ಕ್ಲಾಸಿಕಲ್’ ಪದವಿಯನ್ನು ಕೊಟ್ಟಿದೆ. ಆದರೆ, ಕನ್ನಡ ಬರಹ ಸಂಸ್ಕೃತ ಮತ್ತು ಲ್ಯಾಟಿನ್ ಬರಹಗಳ ಹಾಗೆ ಬದಲಾಗದೆ ಉಳಿದಿಲ್ಲ; ಅದು ಮೊದಲಿಗೆ ಹಳೆಗನ್ನಡವಿದ್ದುದು ಆಮೇಲೆ ನಡು ಗನ್ನಡವಾಗಿ, ಇವತ್ತು ಹೊಸಗನ್ನಡವಾಗಿದೆ. ಕನ್ನಡ ಭಾಷೆ ಮಾತಿನಲ್ಲಿ ಬದಲಾಗುತ್ತಿರುವಂತೆ, ಅದನ್ನನುಸರಿಸಿ ಕನ್ನಡ ಬರಹವೂ ಬದಲಾಗುತ್ತಾ ಹೋಗಿದೆ. ಹಾಗಾಗಿ, ಇವತ್ತಿಗೂ ಕನ್ನಡ ಬರಹ ಜೀವಂತವಾಗಿದೆ.

ಹಾಗಾದರೆ, ಕನ್ನಡದಲ್ಲಿ ಯಾವುದನ್ನು ‘ಕ್ಲಾಸಿಕಲ್’ ಎಂಬುದಾಗಿ ಕರೆಯ ಬಹುದು? ನನಗೆ ಅನಿಸುವುದೇನೆಂದರೆ, ಹಳೆಗನ್ನಡ ಬರಹಕ್ಕೆ ಬೇಕಿದ್ದರೆ ಈ ಪದವಿಯನ್ನು ಕೊಡಬಹುದು. ಯಾಕೆಂದರೆ, ವಡ್ಡಾರಾಧನೆಯಿಂದ ತೊಡಗಿ ಮುದ್ದಣ್ಣನವರೆಗೂ ನೂರಾರು ವರ್ಷಗಳ ಬಳಕೆ ಅದಕ್ಕಿದೆಯೆಂದು ಹೇಳ ಬಹುದು.

೧೨


ಭಾಷೆಯ ಬಗೆಗೆ ನೀವೇನು ಬಲ್ಲಿರಿ?

ಭಾಗ ನಾಲ್ಕು ಕನ್ನಡ ಭಾಷೆಯ ಸ್ವರೂಪ

ಕನ್ನಡ ಭಾಷೆ ಒಂದು ಊರಿನಲ್ಲಿ ಇರುವ ಹಾಗೆ ಇನ್ನೊಂದು ಊರಿನಲ್ಲಿ ಇರುವು ದಿಲ್ಲ; ಒಂದು ಸಮಾಜ ಇಲ್ಲವೇ ಜಾತಿಯಲ್ಲಿ ಇರುವ ಹಾಗೆ ಇನ್ನೊಂದು ಸಮಾಜ ಇಲ್ಲವೇ ಜಾತಿಯಲ್ಲಿ ಇರುವುದಿಲ್ಲ; ಒಂದು ಕಾಲದಲ್ಲಿ ಇರುವ ಹಾಗೆ ಇನ್ನೊಂದು ಕಾಲದಲ್ಲಿ ಇರುವುದಿಲ್ಲ. ಬೇರೆ ಬೇರೆ ಊರು, ಸಮಾಜ ಮತ್ತು ಕಾಲಗಳಲ್ಲಿ ಅದು ಈ ರೀತಿ ಭಿನ್ನ ಭಿನ್ನವಾಗಿ ಕಾಣಿಸಲು ಮುಖ್ಯವಾಗಿ ಕಾಲ ದಿಂದ ಕಾಲಕ್ಕೆ ಅದರಲ್ಲಿ ನಡೆಯುವ ಬದಲಾವಣೆಗಳೇ ಕಾರಣವೆಂದು ಹೇಳ ಬಹುದು.

ಈ ಬದಲಾವಣೆಗಳು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆಯಾಗಿ ನಡೆಯಲು ಆ ಊರುಗಳಲ್ಲಿ ವಾಸಿಸುವ ಜನರ ನಡುವೆ ಸಂಪರ್ಕ ಕಡಿಮೆ ಯಾಗಿರುವುದೇ ಕಾರಣ. ಉದಾಹರಣೆಗಾಗಿ, ಕರಾವಳಿಯ ಊರುಗಳಿಗೂ ಕರ್ಣಾಟಕದ ಇತರ ಊರುಗಳಿಗೂ ನಡುವೆ ಪಶ್ಚಿಮ ಘಟ್ಟಗಳಿಂದಾಗಿ ಹಿಂದಿನ ಕಾಲದಲ್ಲಿ ಪರಸ್ಪರ ಸಂಪರ್ಕ ಬಹಳ ಕಡಿಮೆಯಿದ್ದಿರಬೇಕು. ಇದರಿಂದಾಗಿ, ಕರಾವಳಿಯ ಕನ್ನಡದಲ್ಲಿ ನಡೆದ ಬದಲಾವಣೆಗಳು ಇತರ ಪ್ರದೇಶಗಳಲ್ಲಿ ಬಳಕೆ ಯಲ್ಲಿರುವ ಕನ್ನಡದ ಪ್ರಭೇದಗಳಲ್ಲಿ ನಡೆದ ಬದಲಾವಣೆಗಳಿಗಿಂತ ಭಿನ್ನವಾದ ದಾರಿಯನ್ನು ಹಿಡಿದಿರಬೇಕು, ಮತ್ತು ಇದರಿಂದಾಗಿ ಇವತ್ತು ಕರಾವಳಿಯಲ್ಲಿ ಬಳಕೆಯಲ್ಲಿರುವ ಕನ್ನಡ ಇತರ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡಕ್ಕಿಂತ ಭಿನ್ನವಾಗಿ ಕಾಣಿಸುತ್ತಿದೆ.

ಬೇರೆ ಬೇರೆ ಸಮಾಜ ಇಲ್ಲವೇ ಜಾತಿಗಳಲ್ಲೂ ಇದೇ ರೀತಿಯಲ್ಲಿ ಪರಸ್ಪರ ಸಂಪರ್ಕ ಕಡಿಮೆಯಾದಷ್ಟೂ ಆ ಸಮಾಜ ಇಲ್ಲವೇ ಜಾತಿಗಳಿಗೆ ಸೇರಿದ ಜನರ ಮಾತುಗಳಲ್ಲಿ ಬದಲಾವಣೆಗಳು ಬೇರೆ ಬೇರೆ ದಿಕ್ಕಿನಲ್ಲಿ ನಡೆಯುತ್ತವೆ, ಮತ್ತು ಇದರಿಂದಾಗಿ ಅವು ಕ್ರಮೇಣ ಒಂದಕ್ಕಿಂತ ಒಂದು ಭಿನ್ನವಾಗತೊಡಗುತ್ತವೆ. ಹೀಗೆ, ಕಾಲ, ಊರು ಮತ್ತು ಸಮಾಜಗಳ ನಡುವೆ ಕಾಣಿಸುವ ವ್ಯತ್ಯಾಸಗಳಿಗೆಲ್ಲ ಭಾಷೆ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದೇ ಮುಖ್ಯ ಕಾರಣ.

ಕನ್ನಡದಲ್ಲಿ ಈ ರೀತಿ ಕಾಲ, ದೇಶ, ಮತ್ತು ಸಮಾಜಗಳಿಗೆ ಸಂಬಂಧಿಸಿ ದಂತೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬ ವಿಷಯದಲ್ಲಿ ಇನ್ನೂ ಬಹಳಷ್ಟು ಸಂಶೋಧನೆಗಳು ನಡೆಯುವ ಅವಶ್ಯಕತೆಯಿದೆ. ಈ ಸಂಶೋಧನೆಗಳು ಹೇಗೆ ಮುಂದುವರಿಯಬೇಕು ಎಂಬುದನ್ನು ಈ ವಿಭಾಗದ ಮೊದಲ ಎರಡು ಲೇಖನ ಗಳು ಸೂಚಿಸುತ್ತವೆ.

೧೨೮


ಕನ್ನಡದ ಮೂರು ಮುಖಗಳು

ಕನ್ನಡ ವ್ಯಾಕರಣದ ವಿಷಯದಲ್ಲೂ ನಾವು ಕಲಿಯಬೇಕಾಗಿರುವ ವಿಷಯ ಗಳು ಹಲವಿವೆ. ಕನ್ನಡದ ಹೆಚ್ಚಿನ ವೈಯಾಕರಣಿಗಳೂ ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣವನ್ನು ಮಾದರಿಯಾಗಿರಿಸಿಕೊಂಡು ಕನ್ನಡಕ್ಕೆ ವ್ಯಾಕರಣವನ್ನು ರಚಿಸಿರುವಂತೆ ಕಾಣಿಸುತ್ತದೆ.

ಕನ್ನಡ ಭಾಷೆ ಈ ಎರಡು ಭಾಷೆಗಳಿಗಿಂತ ತೀರ ಭಿನ್ನವಾಗಿರುವ ಕಾರಣ, ಇಂತಹ ವ್ಯಾಕರಣಗಳು ಅದರ ಪದಗಳ ಮತ್ತು ವಾಕ್ಯಗಳ ರಚನೆಗಳನ್ನು ಸರಿಯಾಗಿ ಪ್ರತಿಬಿಂಬಿಸಲಾರವು. ಕನ್ನಡ ವ್ಯಾಕರಣಕ್ಕೆ ಅದರದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ಈ ವಿಭಾಗದ ಮುಂದಿನ ಎರಡು ಲೇಖನಗಳು ಸೂಚಿಸುತ್ತವೆ.

ಕನ್ನಡ ಪದಗಳ ಆಂತರಿಕ ರಚನೆ ಮತ್ತು ಚರಿತ್ರೆಯಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಂಶೋಧನೆಗೂ ಕವಿತ್ವಕ್ಕೂ ನಡುವೆ ಘರ್ಷಣೆಗಳುಂಟಾಗಲು ಸಾಧ್ಯವಿದೆ. ಕೆಲವು ಸಂದರ್ಭಗಳಲ್ಲಿ ಕವಿತ್ವ ಎಲ್ಲೆ ಮೀರುತ್ತಿದೆಯೆಂದು ಸಂಶೋಧನೆ ತಿಳಿಸಬಹುದೇನೋ ಎಂಬುದನ್ನು ಐದನೆಯ ಲೇಖನ ಸೂಚಿಸು ತ್ತದೆ.

ಕನ್ನಡದಲ್ಲಿ ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸಲು ಮತ್ತು ಇತರ ಭಾಷೆಗಳಿಂದ ಅಂತಹ ವಿಚಾರಗಳನ್ನು ಆಮದು ಮಾಡಿಕೊಳ್ಳಲು ಅದರ ಪದ ರಾಶಿಯನ್ನು ವೃದ್ಧಿಸುವ ಅವಶ್ಯಕತೆ ಕಂಡುಬರುತ್ತದೆ. ಇದನ್ನು ಹೇಗೆ ನಡೆಸ ಬೇಕು? ಹೇಗೆ ನಡೆಸಿದಲ್ಲಿ ಈ ಪದವೃದ್ಧಿ ಕನ್ನಡದ ಸಾಹಜಿಕತೆಯನ್ನು ಕೆಡಿಸ ದಿದ್ದೀತು ಎಂಬ ವಿಷಯವನ್ನು ಆರನೆಯ ಲೇಖನ ಪರೀಕ್ಷಿಸುತ್ತದೆ.

೪.೧ ಕನ್ನಡದ ಮೂರು ಮುಖಗಳು

ಕರ್ಣಾಟಕದಲ್ಲಿ ಹೆಚ್ಚಿನ ಜನರೂ ಕನ್ನಡವನ್ನಾಡುತ್ತಾರೆಂಬ ವಿಷಯ ನಮಗೆಲ್ಲ ಗೊತ್ತಿದೆ. ಈ ಆಡುಗನ್ನಡ ಹಳ್ಳಿಯಿಂದ ಹಳ್ಳಿಗೆ, ಜಿಲ್ಲೆಯಿಂದ ಜಿಲ್ಲೆಗೆ, ಮತ್ತು ಜಾತಿಯಿಂದ ಜಾತಿಗೆ ಬದಲಾಗುತ್ತಾ ನಡೆಯುವುದೆಂಬುದೂ ನಮಗೆ ಗೊತ್ತಿದೆ.

ಮೈಸೂರಿನ ಮಂದಿ ಒಂದು ತರದ ಕನ್ನಡವನ್ನಾಡುತ್ತಾರಾದರೆ, ಮಂಗಳೂರಿ ನವರು ಇನ್ನೊಂದು ತರ, ಧಾರವಾಡದವರು ಮತ್ತೊಂದು ತರ, ಮತ್ತು ಬೀದರ್ ನವರು ಮಗದೊಂದು ತರ. ಇಷ್ಟೇ ಅಲ್ಲ, ಮೈಸೂರು ಜಿಲ್ಲೆಯಲ್ಲೇನೇ ಕೊಳ್ಳೆ ಗಾಲದ ಕನ್ನಡ, ನಂಜನಗೂಡಿನ ಕನ್ನಡ, ಮತ್ತು ಹೆಗ್ಗಡದೇವನ ಕೋಟೆಯ ಕನ್ನಡಗಳ ನಡುವೆ ವ್ಯತ್ಯಾಸವಿದೆ.

ಈ ರೀತಿ ಊರಿನಿಂದ ಊರಿಗೆ ವ್ಯತ್ಯಾಸವಿದೆ ಮಾತ್ರವಲ್ಲ, ಒಂದೇ ಹಳ್ಳಿ ಯಲ್ಲಿ ವಾಸಿಸುವ ಜನರಲ್ಲೂ ಬ್ರಾಹ್ಮಣರ ಮಾತು, ಒಕ್ಕಲಿಗರ ಮಾತು, ಆದಿ ಕರ್ಣಾಟಕರ ಮಾತು ಎಂಬುವೆಲ್ಲ ಬೇರೆ ಬೇರಾಗಿವೆ.

೧೨೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವ್ಯತ್ಯಾಸಗಳ ನಿಯಮಬದ್ಧತೆ

ಕನ್ನಡದಲ್ಲಿ ಇಷ್ಟೆಲ್ಲ ವ್ಯತ್ಯಾಸಗಳಿವೆಯೆಂಬುದನ್ನು ನಾವೆಲ್ಲ ತಿಳಿದಿರುವೆವಾದರೂ ಈ ವ್ಯತ್ಯಾಸಗಳು ಎಂತಹವು, ಇವುಗಳ ವ್ಯಾಪ್ತಿಯೇನು ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ಯಾರೂ ವಿವರಿಸಿಲ್ಲ. ಶಾಸ್ತ್ರೀಯವಾದ ಅಭ್ಯಾಸ ನಡೆಸಿದಲ್ಲಿ, ಈ ವ್ಯತ್ಯಾಸಗಳ ಹಿಂದೆ ನಿಶ್ಚಿತವಾದೊಂದು ನಿಯಮವಿದೆ ಎಂಬುದರ ಅರಿವಾಗ ಬಹುದು.

ಉದಾಹರಣೆಗಾಗಿ, ಮೈಸೂರಿನವರು ಮನೆ ಎನ್ನುತ್ತಾರಾದರೆ, ಧಾರವಾಡ ದವರು ಮನಿ ಎನ್ನುತ್ತಾರೆ. ಮೈಸೂರಿನ ಹಣೆ ಧಾರವಾಡದಲ್ಲಿ ಹಣಿಯಾಗು ಇದೆ, ಕೆರೆ ಕೆರಿಯಾಗುತ್ತದೆ, ಗೆರೆ ಗೆರಿಯಾಗುತ್ತದೆ. ಮೈಸೂರು ಕನ್ನಡದ ನಾಮಪದಗಳ ಕೊನೆಯಲ್ಲಿ ಬರುವ ಎಕಾರಗಳೆಲ್ಲ ಧಾರವಾಡ ಕನ್ನಡದಲ್ಲಿ ಇಕಾರವಾಗುತ್ತದೆಯೆಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಮೈಸೂರು ಜಿಲ್ಲೆಯೊಳಗೇನೇ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಅಂಬು ಎಂದಾಗುತ್ತದೆ, ಹಾವು ಅವು ಎಂದಾಗುತ್ತದೆ. ಪದಗಳ ಆದಿಯಲ್ಲಿ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಲೋಪಗೊಂಡಿವೆ ಎಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಕೊಳ್ಳೇಗಾಲದಲ್ಲಿ ಎಕಾರಾಂತವಾಗಿರುವ ಕ್ರಿಯಾಪದಗಳೆಲ್ಲ ನಂಜನಗೂಡಿ ನಲ್ಲಿ ಇಕಾರಾಂತವಾಗುತ್ತವೆಯೆಂಬುದು ಇಂತಹದೇ ಇನ್ನೊಂದು ನಿಯಮ. ಕೊಳ್ಳೇಗಾಲದಲ್ಲಿ ಬರೆ ಎಂದಿರುವುದು ನಂಜನಗೂಡಿನಲ್ಲಿ ಬರಿ ಎಂದಾಗುತ್ತದೆ; ಅಗೆ ಅಗಿಯಾಗುತ್ತದೆ, ಕರೆ ಕರಿಯಾಗುತ್ತದೆ, ಒಡೆ ಒಡಿಯಾಗುತ್ತದೆ. ಆದರೆ ಈ ನಿಯಮ ಕ್ರಿಯಾಪದಗಳಿಗೆ ಮಾತ್ರ ಅನ್ವಯಿಸುತ್ತದೆ, ನಾಮಪದಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಬೇಕು.

ವ್ಯತ್ಯಾಸಗಳ ವ್ಯಾಪ್ತಿ

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳು ಹೀಗೆ ನಿಯಮಬದ್ಧವಾಗಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತ ವಾದ ವ್ಯಾಪ್ತಿಯೂ ಇದೆ. ಉದಾಹರಣೆಗಾಗಿ, ಪದದ ಆದಿಯಲ್ಲಿರುವ ಹಕಾರವು ಬಿದ್ದು ಹೋಗುವುದೆಂಬ ನಿಯಮವನ್ನು ಗಮನಿಸಬಹುದು.

ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಮತ್ತು ಪಿರಿಯಾ ಪಟ್ಟಣಗಳಲ್ಲಿ ಪದಗಳ ಆದಿಯಲ್ಲಿ ಬರುವ ಹಕಾರವನ್ನು ಜನರು ಸ್ಪಷ್ಟವಾಗಿಯೇ ಉಚ್ಚರಿಸುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ ಅಲ್ಲಿ ಪದಗಳ ಆದಿಯಲ್ಲಿ ಬರುವ ಹಕಾರಗಳೆಲ್ಲ ಲೋಪಗೊಂಡಿರುವುದನ್ನು

೧೩೦

ಕನ್ನಡದ ಮೂರು ಮುಖಗಳು

ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜ ನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ ಮೊದಲಾದ ಕಡೆಗಳಲ್ಲೂ ಹಕಾರವು ಹೀಗೆ ಲೋಪಗೊಂಡಿರುವುದನ್ನು ಕಾಣಬಹುದು.

ಈ ರೀತಿ ಹಕಾರ ಲೋಪ ಎಲ್ಲೆಲ್ಲಿ ನಡೆದಿದೆ ಮತ್ತು ಎಲ್ಲೆಲ್ಲಿ ನಡೆದಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ಕೂಲಂಕಶವಾಗಿ ಅಭ್ಯಾಸ ಮಾಡಿದೆ ವಾದರೆ, ಮೈಸೂರಿನ ನಕ್ಷೆಯಲ್ಲಿ ಒಂದು ಸ್ಪಷ್ಟವಾದ ‘ಹಕಾರದ ಗೆರೆ’ ಯನ್ನೆಳೆಯಲು ಸಾಧ್ಯವಾದೀತು. ಈ ಗೆರೆ ನಂಜನಗೂಡು-ಹುಣಸೂರುಗಳ ನಡುವೆ, ಹೆಗ್ಗಡದೇವನ ಕೋಟೆಯ ಪಶ್ಚಿಮಕ್ಕಾಗಿ ಹಾಯ್ದಿತು.

ಈ ಗೆರೆ ಮೈಸೂರು ಜಿಲ್ಲೆಯನ್ನು ಮಾತ್ರವಲ್ಲ, ಇಡೀ ಕರ್ಣಾಟಕವನ್ನೇ ಎರಡು ಭಾಗಗಳಾಗಿ ವಿಂಗಡಿಸುತ್ತಿದೆಯೆಂದು ತೋರುತ್ತದೆ. ಇದರ ಒಂದು ತುದಿ ಮೈಸೂರು ಜಿಲ್ಲೆಯಲ್ಲಿದೆಯಾದರೆ, ಇನ್ನೊಂದು ತುದಿ ಗುಲ್ಬರ್ಗ ಮತ್ತು ಶಾಬಾದ್‌ಗಳ ನಡುವೆ ಹಾದು ಆಂಧ್ರದ ಗಡಿಯನ್ನು ಮುಟ್ಟುವ ಹಾಗೆ ಕಾಣಿಸುತ್ತದೆ. ಈ ಎರಡು ತುದಿಗಳ ನಡುವೆ ಈ ಗೆರೆ ಯಾವ ಯಾವ ಜಿಲ್ಲೆ ಗಳನ್ನೆಲ್ಲ ಕತ್ತರಿಸುತ್ತದೆ, ಇದರ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಮಂಡ್ಯ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಜನರ ಮಾತನ್ನು ಗಮನಿಸಬೇಕು.

ಅಗೆ-ಆಗಿ ಗೆರೆ

ಕನ್ನಡದಲ್ಲಿ (ಗುದ್ದಲಿಯಿಂದ) ಅಗೆ, ಮತ್ತು (ಬಾಯಿಯಲ್ಲಿ) ಅಗಿ ಎಂಬುದಾಗಿ ಎರಡು ಕ್ರಿಯಾಪದಗಳಿವೆಯಷ್ಟೆ. ಮೈಸೂರು ಜಿಲ್ಲೆಯ ಬೇರೆ ಬೇರೆ ತಾಲೂಕು ಗಳಲ್ಲಿ ಇವಕ್ಕೆ ಎರಡು ರೂಪಗಳಿವೆ:

(೧) ಕೊಳ್ಳೇಗಾಲ ಮತ್ತು ತಿ.ನರಸೀಪುರಗಳಲ್ಲಿ ಇವೆರಡೂ ಆಗಿ ಎಂಬ ಒಂದೇ ರೂಪವನ್ನು ತಾಳುತ್ತವೆ.

(೨) ಹುಣಸೂರು ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಇವೆರಡೂ ಇಕಾರದಲ್ಲಿ ಕೊನೆಗೊಳ್ಳುತ್ತವೆ; ಆದರೆ, ಈ ಪದಗಳಲ್ಲಿ ಮೊದಲಿಗೆ ಬರುವ ಅಕಾರದಲ್ಲಿ ವ್ಯತ್ಯಾಸ ತಲೆದೋರಿದೆ: ಗುದ್ದಲಿಯಿಂದ ಅಗಿ, ಬಾಯಿಯಲ್ಲಿ ಅ’ಗಿ. ಇಲ್ಲಿ ಎಕಾರಾಂತವಾದ ಕ್ರಿಯಾಪದಗಳೆಲ್ಲ ಇಕಾರಾಂತವಾಗಿವೆ; ಆದರೆ, ಹಿಂದೆ ಇಕಾರಾಂತವಾಗಿದ್ದ ಕ್ರಿಯಾಪದಗಳಲ್ಲಿ ಮೊದಲಿಗೆ ಬರುವ ಅಕಾರಗಳೆಲ್ಲ ಅ’ಕಾರಗಳಾಗಿವೆಯೆಂಬ ನಿಯಮ ಕಂಡುಬರುತ್ತಿದೆ.

ಕಂದ-ಕಂಡ ಗೆರೆ

ಮೈಸೂರು ಕನ್ನಡದ ಇನ್ನೊಂದು ವೈಶಿಷ್ಟ್ಯವೇನೆಂದರೆ, ಕನ್ನಡದ ಮಾಡಿ ಕೊಂಡ, ತಿಂದುಕೊಂಡ ಎಂಬಂತಹ ಪದಗಳಲ್ಲಾಗುವ ಪರಿವರ್ತನೆ:

೧೩೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

(೧) ನಂಜನಗೂಡು, ಚಾಮರಾಜನಗರ, ತಿ.ನರಸೀಪುರ ಮತ್ತು ಕೊಳ್ಳೇ ಗಾಲಗಳಲ್ಲಿ ಇವು ಮಾಡ್ಕಂದ, ತಿಂಡ್ಕಂದ ಎಂದಾಗುತ್ತವೆ;

(೨) ಉಳಿದೆಡೆಗಳಲ್ಲಿ ಮಾಡ್ಕಂಡ, ತಿಂಡ್ಕಂಡ ಎಂದಾಗುತ್ತವೆ.

ಈ ‘ಕಂದ-ಕಂಡ’ ಗೆರೆ ಚಾಮರಾಜನಗರ ಮತ್ತು ನಂಜನಗೂಡುಗಳ ಪಶ್ಚಿಮಕ್ಕಾಗಿ ಹಾಯುತ್ತದೆ. ಈ ಗೆರೆಯ ಇನ್ನೊಂದು ಕೊನೆ ಎಲ್ಲಿ ಎಂಬುದನ್ನು ತಿಳಿಯಲು ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ವಾಸಿಸುವ ಜನರ ಮಾತನ್ನು ಪರಿಶೀಲಿಸಬೇಕು.

ಸಾಮಾಜಿಕ ಪರಿಮಿತಿ

ಇಷ್ಟರ ವರೆಗೆ ಕನ್ನಡದಲ್ಲಿ ಊರಿನಿಂದ ಊರಿಗೆ ಕಂಡುಬರುವ ವ್ಯತ್ಯಾಸಗಳ ಭೌಗೋಳಿಕ ಪರಿಮಿತಿ ಇಲ್ಲವೇ ವ್ಯಾಪ್ತಿ ಎಂತಹದೆಂಬುದನ್ನು ಪರಿಶೀಲಿಸಿದೆವು. ಒಂದೇ ಹಳ್ಳಿಯಲ್ಲಿಯೂ ಕನ್ನಡವು ಜಾತಿಯಿಂದ ಜಾತಿಗೆ ವ್ಯತ್ಯಾಸ ಹೊಂದು ತ್ತಿದೆಯಾದ ಕಾರಣ, ಮೇಲಿನ ನಿಯಮಗಳಿಗೆಲ್ಲ ‘ಸಾಮಾಜಿಕ ಪರಿಮಿತಿ’ಯನ್ನೂ ನಿರ್ಧರಿಸುವುದು ಅವಶ್ಯ.

ಉದಾಹರಣೆಗಾಗಿ, ಪದದ ಆದಿಯಲ್ಲಿರುವ ಹಕಾರ ಬಿದ್ದುಹೋಗುತ್ತದೆ ಯೆಂಬ ನಿಯಮವನ್ನು ಗಮನಿಸಬಹುದು:

(೧) ನಂಜನಗೂಡಿನ ಒಕ್ಕಲಿಗರ ಇಲ್ಲವೇ ಆದಿಕರ್ಣಾಟಕರ ಮಾತಿನಲ್ಲಿ ಪದಾದಿಯ ಹಕಾರ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಿದ್ದುಹೋಗಿದೆ;

(೨) ಆದರೆ, ಇದೇ ಊರಿನ ಬ್ರಾಹ್ಮಣರ ಕನ್ನಡದಲ್ಲಿ ಈ ಹಕಾರ ಹಾಗೆಯೇ ಉಳಿದುಕೊಂಡಿದೆ.

ಜಾತಿಯಿಂದ ಜಾತಿಗೆ ತೋರಿಬರುವ ಸಾಮಾಜಿಕ ವ್ಯತ್ಯಾಸಗಳೂ ಭೌಗೋಳಿಕ ವ್ಯತ್ಯಾಸಗಳಷ್ಟೇ ನಿಯಮಬದ್ಧವಾಗಿರುತ್ತವೆ. ಉದಾಹರಣೆಗಾಗಿ, ನಂಜನಗೂಡಿನ ಒಕ್ಕಲಿಗರ ಮತ್ತು ಆದಿಕರ್ಣಾಟಕರ ಮಾತುಗಳನ್ನು ಹೋಲಿಸಿ ನೋಡಬಹುದು:

ಒಕ್ಕಲಿಗರು ಮನೆ ಎನ್ನುವುದಕ್ಕೆ ಆದಿಕರ್ಣಾಟಕರು ಮನ ಎನ್ನುತ್ತಾರೆ, ಅಣೆ (ಹಣೆ)ಗೆ ಅಣ ಎನ್ನುತ್ತಾರೆ, ತಲೆಗೆ ತಲಿ ಎನ್ನುತ್ತಾರೆ, ಅತ್ತೆಗೆ ಅತ್ತ ಎನ್ನುತ್ತಾರೆ. ನಾಮಪದಗಳ ಕೊನೆಯಲ್ಲಿರುವ ಎಕಾರಗಳೆಲ್ಲ ಆದಿಕರ್ಣಾಟಕರ ಮಾತಿನಲ್ಲಿ ಅಕಾರಗಳಾಗಿವೆಯೆಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಚಾರಿತ್ರಿಕ ಪರಿಮಿತಿ

ಕನ್ನಡ ಭಾಷೆಯಲ್ಲಿ ತೋರುವ ವ್ಯತ್ಯಾಸಗಳಿಗೆ ಈ ರೀತಿ ಭೌಗೋಳಿಕ ಮತ್ತು ಸಾಮಾಜಿಕ ಪರಿಮಿತಿಗಳು ಮಾತ್ರವಲ್ಲದೆ, ಮೂರನೆಯದಾದ ಚಾರಿತ್ರಿಕ ಪರಿಮಿತಿಯೂ ಇದೆಯೆಂಬುದನ್ನು ಗಮನಿಸಬೇಕು: ಹಳೆಗನ್ನಡದಲ್ಲಿ ಬರೆದ

೧೩೨


ಕನ್ನಡದ ಉಪಭಾಷೆಗಳು

ಪಂಪನ ಭಾಷೆಗೂ, ನಡುಗನ್ನಡದಲ್ಲಿ ಬರೆದ ಬಸವಣ್ಣನ ವಚನಗಳ ಭಾಷೆಗೂ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಮೇಲಿನ ವ್ಯತ್ಯಾಸಗಳ ಹಾಗೆಯೇ ಈ ವ್ಯತ್ಯಾಸಗಳೂ ನಿಯಮಬದ್ಧವಾಗಿವೆ.

ಪಂಪನ ಕನ್ನಡದಲ್ಲಿ ಪದಗಳ ಆದಿಯಲ್ಲಿ ಬರುತ್ತಿದ್ದ ಪಕಾರಗಳೆಲ್ಲ ನಡು ಗನ್ನಡದಲ್ಲಿ ಮತ್ತು ಇಂದಿನ ಕನ್ನಡದಲ್ಲಿ ಹಕಾರಗಳಾಗಿವೆಯೆಂಬುದು ಇಂತಹ ನಿಯಮಬದ್ಧವಾದ ಚಾರಿತ್ರಿಕ ವ್ಯತ್ಯಾಸಗಳಲ್ಲಿ ಒಂದು.

ಭೌಗೋಳಿಕ, ಸಾಮಾಜಿಕ ಮತ್ತು ಚಾರಿತ್ರಿಕಗಳೆಂಬ ಈ ಮೂರು ಮುಖ್ಯ ಬದಲಾವಣೆಗಳಿಂದಾಗಿ ಕನ್ನಡದಲ್ಲಿ ಬೇರೆ ಬೇರೆ ಪ್ರಭೇದಗಳೇರ್ಪಟ್ಟಿವೆ. ಇವನ್ನು ಕೂಲಂಕಶವಾಗಿ ಅಭ್ಯಾಸ ಮಾಡದೆ, ನಮ್ಮ ಕನ್ನಡದ ಜ್ಞಾನ ಪೂರ್ಣವಾಗದು.

ಒಂದೊಂದು ಕಾಲದಲ್ಲಿ ಒಂದೊಂದು ಪ್ರಭೇದ ಲೇಖನಯೋಗ್ಯವೆಂದು ಪರಿಗಣಿತವಾಗುತ್ತಿರುವುದು ಕಂಡುಬರುತ್ತಿದೆ. ಹೀಗೆ ಪರಿಗಣಿತವಾಗದೇ ಇರುವ ಪ್ರಭೇದಗಳು ತಪ್ಪು ಇಲ್ಲವೇ ಗ್ರಾಮ್ಯ ಎಂದು ತೆಗಳುವುದು ಸರಿಯಲ್ಲ. ಕನ್ನಡದ ಮೂರು ಮುಖಗಳಂತಿರುವ ಈ ಮೂರು ವಿಧವಾದ ಭಾಷಾಪ್ರಭೇದಗಳು ಸರಿ ಸಮನಾದ ಗೌರವಕ್ಕೆ ಅರ್ಹವಾದವುಗಳು. ಅವುಗಳೊಳಗೆ ಕೀಳು ಮೇಲಿಲ್ಲ.

೪.೨ ಕನ್ನಡದ ಉಪಭಾಷೆಗಳು

ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ, ಊರಿನಿಂದ ಊರಿಗೆ, ಮತ್ತು ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಹನ್ನೆರಡನೇ ಶತಮಾನದಲ್ಲಿದ್ದ ಪಂಪನ ಕಾಲದ ಕನ್ನಡ, ಹದಿನೈದನೇ ಶತಮಾನದಲ್ಲಿದ್ದ ಬಸವಣ್ಣನ ಕಾಲದ ಕನ್ನಡ, ಮತ್ತು ಇಪ್ಪತ್ತನೇ ಶತಮಾನದ ಇವತ್ತಿನ ಕನ್ನಡಗಳ ನಡುವೆ ಹಲವಾರು ವ್ಯತ್ಯಾಸಗಳು ಕಾಣಿಸುತ್ತಿದ್ದು, ಇವೆಲ್ಲ ಮುಖ್ಯವಾಗಿ ಕಾಲದಿಂದ ಕಾಲಕ್ಕೆ ಕನ್ನಡ ಭಾಷೆ ಬದಲಾಗುತ್ತಾ ಹೋದುದರ ಪರಿಣಾಮವೆಂದು ಹೇಳಬಹುದು.

ಇದೇ ರೀತಿಯಲ್ಲಿ, ಕರಾವಳಿಯ ಕನ್ನಡ. ಮೈಸೂರಿನ ಕನ್ನಡ, ಮತ್ತು ಧಾರವಾಡದ ಕನ್ನಡಗಳ ನಡುವೆ ಹಲವಾರು ವ್ಯತ್ಯಾಸಗಳು ಕಾಣಿಸುತ್ತಿದ್ದು, ಇವೆಲ್ಲ ಬೇರೆ ಬೇರೆ ಪ್ರದೇಶಗಳಲ್ಲಿ ಕನ್ನಡ ಭಾಷೆ ಬೇರೆ ಬೇರೆ ರೀತಿಯಲ್ಲಿ ಬದಲಾವಣೆಗೊಂಡುದರ ಪರಿಣಾಮವೆಂದು ಹೇಳಬಹುದು.

ಒಂದೇ ಊರಿನಲ್ಲಿ ವಾಸಿಸುವ ಬೇರೆ ಬೇರೆ ಸಮಾಜ(ಜಾತಿ)ಗಳ ನಡುವೆಯೂ ಕನ್ನಡ ಭಾಷೆಯಲ್ಲಿ ಹಲವು ಬಗೆಯ ವ್ಯತ್ಯಾಸಗಳು ಕಾಣಿಸುತ್ತವೆ. ಉದಾಹರಣೆಗಾಗಿ, ಕರಾವಳಿ ಕರ್ನಾಟಕದ ಸುಳ್ಯದಲ್ಲಿ ಹವ್ಯಕರು ಬಳಸುವ ಕನ್ನಡಕ್ಕೂ ಗೌಡರು ಬಳಸುವ ಕನ್ನಡಕ್ಕೂ ನಡುವೆ ಹಲಕೆಲವು ವ್ಯತ್ಯಾಸಗಳಿವೆ. ಇವು ಬೇರೆ ಬೇರೆ ಸಮಾಜಗಳಲ್ಲಿ ಕನ್ನಡ ಭಾಷೆ ಬೇರೆ ಬೇರೆ ರೀತಿಯಲ್ಲಿ ಬದಲಾವಣೆಗೊಂಡುದರ ಪರಿಣಾಮವೆಂದು ಹೇಳಬಹುದು.

೧೩೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಒಂದು ಭಾಷೆಗೆ ಎಂತಹ ಉಪಭಾಷೆಗಳೆಲ್ಲ ಇವೆ ಎಂಬ ಪ್ರಶ್ನೆಗೆ ಉತ್ತರ ಹೇಳಲು ಆ ಭಾಷೆ ಬೇರೆ ಬೇರೆ ಕಾಲಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ, ಮತ್ತು ಬೇರೆ ಬೇರೆ ಸಮಾಜಗಳಲ್ಲಿ ಯಾವ ರೀತಿಯಲ್ಲೆಲ್ಲ ಬಳಕೆಯಲ್ಲಿತ್ತು ಮತ್ತು ಬಳಕೆಯಲ್ಲಿದೆ, ಆ ಬಳಕೆಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬ ವಿಷಯವನ್ನು ಕೂಲಂಕಶವಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಕನ್ನಡದ ಮಟ್ಟಿಗೆ ಈ ವಿಷಯದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿಲ್ಲವಾದ ಕಾರಣ, ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕೊಡುವುದು ಸದ್ಯಕ್ಕಂತೂ ಕಷ್ಟಸಾಧ್ಯ.

ನಮಗೆ ತಿಳಿದಿರುವ ಮಟ್ಟಿಗೆ, ಕೆಲವು ಮುಖ್ಯವಾದ ಅಂಶಗಳನ್ನು ಮಾತ್ರವೇ ಇಲ್ಲಿ ಸೂಚಿಸಲು ಸಾಧ್ಯ. ಆದರೆ ಹೀಗೆ ಮಾಡುವುದರಿಂದ, ಇನ್ನು ಮುಂದೆ ಕನ್ನಡದಲ್ಲಿ ಎಂತಹ ಸಂಶೋಧನೆಗಳೆಲ್ಲ ನಡೆಯಬೇಕು ಎಂಬುದನ್ನು ಊಹಿಸಿ ಕೊಳ್ಳಲು ಸಾಧ್ಯವಿದೆ.

ಕನ್ನಡದ ವಿಭಜನೆ

ಚಾರಿತ್ರಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಪೂರೈದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಮತ್ತು ಹೊಸಗನ್ನಡ ಎಂಬುದಾಗಿ ನಾಲ್ಕು ಮುಖ್ಯ ಉಪಭಾಷೆ ಗಳಾಗಿ ವಿಭಜಿಸಲಾಗಿದೆ. ಈ ವಿಭಜನೆಯನ್ನು ಛೇದಿಸುವಂತೆ, ಪ್ರಾದೇಶಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಕರಾವಳಿಯ ಪಶ್ಚಿಮ ಕನ್ನಡ ಮತ್ತು ಒಳನಾಡಿನ ಪೂರ್ವ ಕನ್ನಡ ಎಂಬುದಾಗಿಯೂ, ಇವುಗಳಲ್ಲಿ ಪೂರ್ವ ಕನ್ನಡ ವನ್ನು ದಕ್ಷಿಣ (ಮೈಸೂರು) ಕನ್ನಡ ಮತ್ತು ಉತ್ತರ (ಧಾರವಾಡ) ಕನ್ನಡ ಎಂಬುದಾಗಿಯೂ ವಿಂಗಡಿಸಬಹುದು.

ಸಾಮಾಜಿಕ ವೈವಿಧ್ಯತೆಯನ್ನಾಧರಿಸಿ ಕನ್ನಡವನ್ನು ಸೊಲಿಗ, ಬಡಗ, ಮತ್ತು ಇತರ ಎಂಬುದಾಗಿಯೂ, ಮತ್ತು ಇತರ ಎಂಬುದನ್ನು ಬೇರೆ ಬೇರೆ ಸಮಾಜ ಇಲ್ಲವೇ ಜಾತಿಗಳನ್ನಾಧರಿಸಿ ಬೇರೆ ಬೇರೆ ಉಪಭಾಷೆಗಳನ್ನಾಗಿಯೂ ವಿಂಗಡಿಸ ಬಹುದು. ಆದರೆ ಮೇಲೆ ಸೂಚಿಸಿದಂತೆ, ಈ ಮೂರು ವಿಭಜನೆಗಳೂ ಒಂದ ನ್ನೊಂದು ಛೇದಿಸುವುವಾದ ಕಾರಣ, ಅವುಗಳಲ್ಲಿ ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಿ ಹೇಳುವುದು ಕಷ್ಟ.

ಉದಾಹರಣೆಗಾಗಿ, ಕರಾವಳಿ (ಪಶ್ಚಿಮ) ಮತ್ತು ಒಳನಾಡು (ಪೂರ್ವ) ಎಂಬ ಪ್ರಾದೇಶಿಕ ವಿಭಜನೆ ಪೂರ್ವದ ಹಳೆಗನ್ನಡಕ್ಕಿಂತಲೂ ಹಳೆಯದಾಗಿದೆ; ಹಾಗಾಗಿ, ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಈ ನಾಲ್ಕು ಉಪಭಾಷೆಗಳ ಕಾಲದಲ್ಲೂ ಪೂರ್ವ-ಪಶ್ಚಿಮವೆಂಬ ಪ್ರಾದೇಶಿಕ ವಿಭಜನೆಯಿದ್ದಿರಬೇಕೆಂದು ಹೇಳಬಹುದು.

ಕರಾವಳಿಯಲ್ಲಿ ಬಳಕೆಯಲ್ಲಿರುವ ಹವ್ಯಕ ಎಂಬ ಪ್ರಭೇದದಲ್ಲಿ ಕರಾವಳಿ ಯಲ್ಲೇನೇ ದಕ್ಷಿಣ ಮತ್ತು ಉತ್ತರ ಪ್ರದೇಶಗಳ ನಡುವೆ ವ್ಯತ್ಯಾಸಗಳಿವೆ; ಹಾಗಾಗಿ, ಅಲ್ಲಿಯೂ ಸಾಮಾಜಿಕ ಪ್ರಭೇದವನ್ನು ಪ್ರಾದೇಶಿಕ ಪ್ರಭೇದ ಛೇದಿಸು

೧೩೪


ಕನ್ನಡದ ಉಪಭಾಷೆಗಳು

ತಿದೆಯೆಂದು ಹೇಳಬಹುದು. ಇದಲ್ಲದೆ, ಸೊಲಿಗ ಮತ್ತು ಬಡಗ ಎಂಬವುಗ ಳೆರಡು ಕೆಲವು ವಿಶಿಷ್ಟವಾದ ಪ್ರದೇಶಗಳಲ್ಲಿ ಮಾತ್ರ ಬಳಕೆಯಲ್ಲಿವೆ; ಹಾಗಾಗಿ, ಅವುಗಳ ಮಟ್ಟಿಗೆ ಸಾಮಾಜಿಕ ಮತ್ತು ಪ್ರಾದೇಶಿಕ ಅಂಶಗಳೆರಡು ಒಟ್ಟು ಸೇರಿವೆ ಯೆಂದು ಹೇಳಬಹುದು.

ಇದಲ್ಲದೆ, ಮೇಲೆ ಹೇಳಿರುವ ಪೂರ್ವದ ಹಳೆಗನ್ನಡ, ಹಳೆಗನ್ನಡ, ನಡು ಗನ್ನಡ, ಮತ್ತು ಹೊಸಗನ್ನಡ ಎಂಬ ವಿಭಜನೆ ಬರಿಯ ಚಾರಿತ್ರಿಕ ವಿಭಜನೆ ಯಲ್ಲ. ಯಾಕೆಂದರೆ, ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳು ಶಾಸನಗಳಲ್ಲಿ ಮತ್ತು ಕಾವ್ಯಗಳಲ್ಲಿ ಬಳಕೆಯಾಗಲು ಸಾಧ್ಯವಿದ್ದು, ಇವು ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳನ್ನೂ ಪ್ರತಿನಿಧೀಕರಿಸಲು ಸಾಧ್ಯವಿದೆ.

ಉದಾಹರಣೆಗಾಗಿ, ಹಳೆಗನ್ನಡವೆಂಬುದು ಮುಖ್ಯವಾಗಿ ಜೈನ ಲೇಖಕರಿಂದ ರಚಿತವಾಗಿರುವ ಕಾವ್ಯಗಳಲ್ಲಿ ಕಾಣಿಸುವ ಪ್ರಭೇದವಾದರೆ, ನಡುಗನ್ನಡವೆಂಬುದು ಮುಖ್ಯವಾಗಿ ಲಿಂಗಾಯತರ ಕೃತಿಗಳಲ್ಲಿ ಕಾಣಿಸುವ ಪ್ರಭೇದ. ಹಾಗಾಗಿ, ಇವು ಚಾರಿತ್ರಿಕ ಅಂಶಗಳಲ್ಲಿ ಮಾತ್ರವಲ್ಲದೆ, ಸಾಮಾಜಿಕ ಅಂಶದಲ್ಲೂ ಒಂದಕ್ಕಿಂತ ಒಂದು ಭಿನ್ನವಾಗಿವೆಯೆಂದು ಹೇಳಬೇಕಾಗುತ್ತದೆ. ಇದೇ ರೀತಿಯಲ್ಲಿ, ಹೊಸ ಗನ್ನಡ ಹಲವು ವಿಷಯಗಳಲ್ಲಿ ಮೈಸೂರಿನ ಕನ್ನಡವನ್ನು ಹೋಲುತ್ತದೆ; ಹಾಗಾಗಿ, ಅದನ್ನೂ ಆಧುನಿಕ ಕನ್ನಡವೆಂದು ಪರಿಗಣಿಸುವುದು ಮಾತ್ರವಲ್ಲದೆ, ದಕ್ಷಿಣದ ಒಂದು ಪ್ರಾದೇಶಿಕ ಪ್ರಭೇದವೆಂದೂ ಪರಿಗಣಿಸಬೇಕಾಗುತ್ತದೆ.

ಕನ್ನಡ ಭಾಷೆಗೆ ಎಂತಹ ಉಪಭಾಷೆಗಳೆಲ್ಲ ಇವೆ ಎಂಬ ಪ್ರಶ್ನೆಗೆ ಉತ್ತರ ಹೇಳಲು ಈ ರೀತಿ ಕಾಲ, ಪ್ರದೇಶ, ಮತ್ತು ಸಮಾಜಗಳೆಂಬ ಈ ಮೂರು ಪ್ರಮಾಣಗಳನ್ನೂ ಒಟ್ಟಾಗಿ ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಕಾಲದಿಂದ ಕಾಲಕ್ಕೆ ಕನ್ನಡ ಭಾಷೆ ಯಾವ ರೀತಿಯಲ್ಲೆಲ್ಲ ಬದಲಾಗುತ್ತಾ ಬಂದಿದೆ ಎಂಬು ದನ್ನು ತಿಳಿಯುವುದರ ಮೂಲಕ, ಅದು ಕಳೆದ ಒಂದೂವರೆ ಸಾವಿರ ವರ್ಷಗಳಲ್ಲಿ ಹೇಗೆ ಬೇರೆ ಬೇರೆ ಕವಲುಗಳಾಗಿ ಒಡೆದಿದೆ ಎಂಬುದನ್ನು ನಿರ್ಧರಿಸಬಹುದು. ಇದಕ್ಕಾಗಿ ಈ ಒಂದೂವರೆ ಸಾವಿರ ವರ್ಷಗಳಲ್ಲಿ ರಚಿತವಾಗಿರುವ ಕನ್ನಡದ ಶಾಸನಗಳನ್ನು ಮತ್ತು ಇತರ ಗ್ರಂಥಗಳನ್ನು, ಅವುಗಳನ್ನು ರಚಿಸಿದ ಸಮಯವ ನ್ನಾಧರಿಸಿ, ಪರಿಶೀಲಿಸುವುದು ಅವಶ್ಯ.

ಇದಲ್ಲದೆ, ಕನ್ನಡದ ಆಧುನಿಕ ಪ್ರಭೇದಗಳ ನಡುವೆ ಕಾಣಿಸುವ ವ್ಯತ್ಯಾಸ ಗಳನ್ನು ಸಂಗ್ರಹಿಸಿ, ಅವಕ್ಕೆ ಕಾರಣಗಳಾಗಿರುವ ಬದಲಾವಣೆಗಳು ಎಂತಹವು, ಮತ್ತು ಅವುಗಳಲ್ಲಿ ಯಾವುವು ಮೊದಲು ಮತ್ತು ಯಾವುವು ಅನಂತರ ನಡೆದಿರ ಬಹುದು, ಎಂದರೆ ಅವುಗಳ ಕಾಲವ್ಯವಸ್ಥೆ ಎಂತಹದು ಎಂಬುದನ್ನು ತಿಳಿಯುವು ದರ ಮೂಲಕವೂ ಕನ್ನಡ ಭಾಷೆಯ ಚರಿತ್ರೆಯನ್ನು, ಮತ್ತು ಅದರ ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಭೇದಗಳ ಚರಿತ್ರೆಯನ್ನು ಕಲ್ಪಿಸಿಕೊಳ್ಳಲು ಬರುತ್ತದೆ.

೧೩೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕರಾವಳಿ ಮತ್ತು ಒಳನಾಡಿನ ಕನ್ನಡ

ಕನ್ನಡದ ಉಪಭಾಷೆಗಳನ್ನು ಮುಖ್ಯವಾಗಿ ಕರಾವಳಿಯ ಕನ್ನಡ ಮತ್ತು ಒಳ ನಾಡಿನ ಕನ್ನಡ ಎಂಬುದಾಗಿ ವಿಂಗಡಿಸುವ ಅವಶ್ಯಕತೆಯಿದೆ. ಸಾಮಾನ್ಯವಾಗಿ, ಕನ್ನಡ ಭಾಷೆಯ ಚರಿತ್ರೆಯನ್ನು ಬರೆಯುವವರು ಅದು ಮೊದಲಿಗೆ ಉತ್ತರ ಮಾರ್ಗ ಮತ್ತು ದಕ್ಷಿಣ ಮಾರ್ಗ ಎಂಬ ಎರಡು ಕವಲುಗಳಾಗಿ ಒಡೆದಿದೆಯೆಂದು ಹೇಳುವುದೇ ರೂಢಿ. ನೃಪತುಂಗನ ಕವಿರಾಜಮಾರ್ಗದಲ್ಲಿ, ಎರಡನೇ ನಾಗ ವರ್ಮನ ಕಾವ್ಯಾವಲೋಕನದಲ್ಲಿ, ಮತ್ತು ಭಟ್ಟಾಕಳಂಕನ ಶಬ್ದಾನುಶಾಸನದಲ್ಲಿ ಈ ರೀತಿ ಕನ್ನಡದಲ್ಲಿ ಉತ್ತರ ಮತ್ತು ದಕ್ಷಿಣ ಮಾರ್ಗಗಳಿವೆಯೆಂದು ಹೇಳಿರು ವುದು ಇದಕ್ಕೆ ಮುಖ್ಯ ಆಧಾರವಿರಬೇಕು.

ಆದರೆ, ಕನ್ನಡ ಕವಿಗಳ ಮತ್ತು ವೈಯಾಕರಣಿಗಳ ಈ ಹೇಳಿಕೆ ಕನ್ನಡದ ಪ್ರಭೇದಗಳನ್ನು ಆಳವಾಗಿ ಅಭ್ಯಾಸ ಮಾಡಿ ಸಿದ್ಧಪಡಿಸಿದ ಹೇಳಿಕೆಯ ಹಾಗೆ ಕಾಣಿಸುವುದಿಲ್ಲ. ಸಂಸ್ಕೃತದಲ್ಲಿ ಉತ್ತರಮಾರ್ಗ ಮತ್ತು ದಕ್ಷಿಣಮಾರ್ಗಗಳೆಂಬ ಎರಡು ಪ್ರಭೇದಗಳಿವೆಯೆಂಬುದಾಗಿ ಕಾವ್ಯಾದರ್ಶದಲ್ಲಿ ದಂಡಿ ಹೇಳಿರುವ ಮಾತನ್ನು ಹಾಗೆಯೇ ಕನ್ನಡಕ್ಕೂ ಅಳವಡಿಸುವುದರ ಮೂಲಕ, ಈ ವಿಭಜನೆ ಯನ್ನು ಸಿದ್ದಪಡಿಸಿರುವ ಹಾಗೆ ಕಾಣಿಸುತ್ತದೆ. ದಂಡಿಯ ಈ ಮಾತಿಗೆ ಸಂಸ್ಕೃತ ದಲ್ಲಿ ಗೌಡಿ ಮತ್ತು ವೈದರ್ಭಿಗಳೆಂಬ ಎರಡು ಶೈಲಿಗಳಿದ್ದುದೇ ಕಾರಣ. ಕನ್ನಡದಲ್ಲೂ ಉತ್ತರ-ದಕ್ಷಿಣ ಭೇದವಿರುವುದು ನಿಜವಾದರೂ, ಅದು ಕರಾವಳಿ-ಒಳನಾಡು (ಇಲ್ಲವೇ ಪಶ್ಚಿಮ-ಪೂರ್ವ) ಎಂಬ ಭೇದದಷ್ಟು ಮುಖ್ಯ ವಾದುದಲ್ಲ.

ಆಧುನಿಕ ವಿದ್ವಾಂಸರೂ ಈ ಮೇಲಿನ ಹೇಳಿಕೆಯನ್ನು ಹೆಚ್ಚಿನ ಪರಾಮರ್ಶೆಗೆ ಗುರಿಪಡಿಸಿದ ಹಾಗೆ ಕಾಣುವುದಿಲ್ಲ. ಉದಾಹರಣೆಗಾಗಿ, ಶ್ರೀಕಂಠಯ್ಯ ಮತ್ತು ವೆಂಕಣ್ಣಯ್ಯ ಅವರ ಪ್ರಕಾರ “ಧಾರ್ವಾಡ(ಉತ್ತರ ಕರ್ಣಾಟಕ)ದ ಕನ್ನಡಕ್ಕೂ ಮೈಸೂರು ಕನ್ನಡಕ್ಕೂ ಇರುವಷ್ಟು ಭೇದವು ಮಂಗಳೂರು ಕನ್ನಡಕ್ಕೂ ಮೈಸೂರು ಕನ್ನಡಕ್ಕೂ ಇರುವುದಿಲ್ಲ”. ಮೇಲಿನಿಂದ ಮೇಲೆ ನೋಡಿದಾಗ ಈ ಮಾತು ಸರಿಯೆಂದು ತೋರುತ್ತದೆ; ಆದರೆ, ಇಲ್ಲಿ ಮೈಸೂರು ಮತ್ತು ಧಾರವಾಡ ಕನ್ನಡಗಳೊಂದಿಗೆ ಹೋಲಿಸಿರುವುದು ಮಂಗಳೂರಿನ ಬರಹದ ಕನ್ನಡವನ್ನಲ್ಲದೆ, ಅಲ್ಲಿನ ಕನ್ನಡಿಗರ ಮಾತಿನಲ್ಲಿ ಬಳಕೆಯಲ್ಲಿರುವ ಹವ್ಯಕ, ಕೋಟ, ಗೌಡ, ಹಾಲಕ್ಕಿ ಮೊದಲಾದ ಪ್ರಭೇದಗಳನ್ನಲ್ಲ.

ಬರಹದ ಕನ್ನಡ ಕರ್ನಾಟಕದಲ್ಲಿ ಎಲ್ಲೆಡೆಯಲ್ಲೂ ಹೆಚ್ಚು ಕಡಿಮೆ ಒಂದೇ ತರವಾಗಿದೆ. ಕೆಲವು ವಿಶಿಷ್ಟವಾದ ಬರಹಗಳಲ್ಲಿ ಮಾತ್ರ ಮಾತಿನ ಕನ್ನಡ ಬಳಕೆ ಯಾಗುತ್ತಿದ್ದು, ಸಾಹಿತಿಗಳು ಅದನ್ನು ಬಳಸಿ ಪ್ರಾದೇಶಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ತೋರಿಸಿಕೊಡಲು ಪ್ರಯತ್ನಿಸುತ್ತಾರೆ. ಮಂಗಳೂರಿನ (ಸಾಹಿತಿ ಗಳ) ಬರಹಗಳಲ್ಲೂ ಈ ರೀತಿ ಕೆಲವು ಪ್ರಾದೇಶಿಕ ಅಂಶಗಳನ್ನು ಕಾಣಲು ಸಾಧ್ಯ. ಆದರೆ, ಇವು ಧಾರವಾಡ ಇಲ್ಲವೇ ಮೈಸೂರಿನ ಬರಹಗಳಲ್ಲಿ ಕಾಣಿಸುವ ಹಾಗೆ, ಅಲ್ಲಿನವರ ಮಾತನ್ನು ಪೂರ್ತಿಯಾಗಿ ತೋರಿಸಿಕೊಡಲು ಯತ್ನಿ

೧೩೬


ಕನ್ನಡದ ಉಪಭಾಷೆಗಳು

ಸುವುದಿಲ್ಲ. ಹಾಗೆ ಮಾಡಿದಲ್ಲಿ ಆ ಬರಹಗಳು ಇತರ ಕನ್ನಡಿಗರಿಗೆ ಸ್ವಲ್ಪವೂ ಅರ್ಥವಾಗದೆಂಬುದೇ ಇದಕ್ಕೆ ಕಾರಣವಿರಬಹುದು.

ಕೆಲವು ಮುಖ್ಯವಾದ ವ್ಯತ್ಯಾಸಗಳು

ಕರಾವಳಿಯ ಕನ್ನಡಿಗರ ಆಡುಮಾತನ್ನು ಒಳನಾಡಿನ ಕನ್ನಡಿಗರ ಆಡುಮಾತಿ ನೊಂದಿಗೆ ಹೋಲಿಸಿ ನೋಡಿದೆವಾದರೆ, ಅವುಗಳ ನಡುವೆ ಹಲವಾರು ಮುಖ್ಯ ವಾದ ವ್ಯತ್ಯಾಸಗಳಿರುವುದನ್ನು ಕಾಣಬಹುದು. ಮೈಸೂರು ಕನ್ನಡ ಮತ್ತು ಧಾರವಾಡ ಕನ್ನಡಗಳ ನಡುವಿರುವ ವ್ಯತ್ಯಾಸಗಳಿಗಿಂತ ಇವು ಒಟ್ಟು ಸಂಖ್ಯೆಯಲ್ಲಿ ಮಾತ್ರವಲ್ಲದೆ, ಕಾಲದ ಮಟ್ಟಿಗೂ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇವು ಗಳಲ್ಲಿ ಕೆಲವು ಪೂರ್ವದ ಹಳೆಗನ್ನಡಕ್ಕಿಂತಲೂ ಹಿಂದಿನ ಕಾಲದಲ್ಲಿ, ಎಂದರೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದೆ ನಡೆದ ಬದಲಾವಣೆಗಳಿಂದ ಸಿದ್ದವಾದವುಗಳಿರಬೇಕು.

ಉದಾಹರಣೆಗಾಗಿ, ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಮಧ್ಯಮಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ ಎಂಬುದಾಗಿ ಉತ್ತಮಪುರುಷದಲ್ಲಿ ಎರಡು ರೂಪಗಳಿವೆ: ಹವ್ಯಕದಲ್ಲಿ ನಾವು ಎಂಬುದಕ್ಕೆ ‘ನೀವೂ ಕೂಡ’ ಎಂಬ ಸಮಾವಿಷ್ಟ ಅರ್ಥವಿದೆಯಾದರೆ, ಎಂಗೊ ಎಂಬುದಕ್ಕೆ ‘ನಿಮ್ಮನ್ನು ಬಿಟ್ಟು ನಾವು ಮಾತ್ರ’ ಎಂಬ ಅಸಮಾವಿಷ್ಟ ಅರ್ಥವಿದೆ. ಕ್ರಿಯಾಪದಗಳ ಪದರೂಪ ಗಳಲ್ಲೂ ಹವ್ಯಕದಲ್ಲಿ ಈ ವ್ಯತ್ಯಾಸ ಕಾಣಿಸುತ್ತದೆ.

ಮಧ್ಯಮಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ ಎಂಬ ಈ ವ್ಯತ್ಯಾಸ ಹಳೆಗನ್ನಡದಲ್ಲಿ (ಉದಾ: ಪಂಪನ ಕಾವ್ಯಗಳಲ್ಲಿ) ನಾಮ್ ಮತ್ತು ಆಮ್ ಎಂಬ ಸರ್ವನಾಮಗಳಲ್ಲಿ ಕಾಣಿಸುತ್ತದೆ; ಆದರೆ, ನಡುಗನ್ನಡ ಮತ್ತು ಹೊಸಗನ್ನಡ ಗಳಲ್ಲಿ ಕಾಣಿಸುವುದಿಲ್ಲ. ಹಳೆಗನ್ನಡದಲ್ಲೂ ಈ ವ್ಯತ್ಯಾಸ ಕ್ರಿಯಾಪದಗಳ ಪದರೂಪಗಳಲ್ಲಿ ಕಾಣಿಸುವುದಿಲ್ಲ.

ವ್ಯಾಕರಣದ ಮಟ್ಟಿಗೆ ಕರಾವಳಿಯ ಕನ್ನಡ ಪ್ರಭೇದಗಳಿಗೂ ಒಳನಾಡಿನ ಪ್ರಭೇದಗಳಿಗೂ ನಡುವೆ ಇನ್ನೂ ಹಲವಾರು ವ್ಯತ್ಯಾಸಗಳಿದ್ದು, ಅವುಗಳಲ್ಲಿ ಕೆಲವನ್ನು ಪರಿಶೀಲಿಸಿದಾಗ, ಕರಾವಳಿಯ ಕನ್ನಡ ಪ್ರಭೇದಗಳು ಹಳೆಗನ್ನಡ ಕ್ಕಿಂತಲೂ ಹಿಂದಿನ ಕಾಲದಲ್ಲೇನೇ ಒಳನಾಡಿನ ಪ್ರಭೇದಗಳಿಂದ ಭಿನ್ನವಾಗಿದ್ದಿರ ಬೇಕೆಂಬುದನ್ನು ಸೂಚಿಸುತ್ತವೆ.

ಉದಾಹರಣೆಗಾಗಿ, ಮೂಲದ್ರಾವಿಡದಲ್ಲಿ ಕ್ರಿಯಾಪದಗಳಿಗೆ ತ್ ಪ್ರತ್ಯಯ ವನ್ನು ಸೇರಿಸಿ ಆಗುವಿಕೆಯನ್ನು ಮಾಡುವಿಕೆಯನ್ನಾಗಿ ಮಾರ್ಪಡಿಸಲಾಗುತ್ತಿತ್ತು; ಈ ಪ್ರತ್ಯಯ ಕನ್ನಡ ಮತ್ತು ತುಳು ಭಾಷೆಗಳನ್ನು ಹೊರತುಪಡಿಸಿ, ಎಲ್ಲಾ ದ್ರಾವಿಡ ಭಾಷೆಗಳಲ್ಲೂ ಉಳಿದುಕೊಂಡಿದೆ. ಕನ್ನಡದಲ್ಲಿ ಇದು ಬರೇ ಪಳೆಯುಳಿಕೆಯಾಗಿ ಅಡಗು ‘ಮರೆಯಾಗು’: ಅಡಕು ‘ಮರೆಮಾಡು’, ಅಮುಗು ‘ಒತ್ತಿಹೋಗು’:

೧೩೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಅಮುಕು ‘ಒತ್ತು’, ತುರುಗು ‘ಒತ್ತಿ ತುಂಬಿರು’ : ತುರುಕು ‘ಒತ್ತಿ ತುಂಬಿಸು’ ಎಂಬಂತಹ ಕೆಲವೇ ಕೆಲವು ಕ್ರಿಯಾಪದಜೋಡಿಗಳಲ್ಲಿ ಮಾತ್ರ ಕಾಣಿಸುತ್ತದೆ.

ಆದರೆ ಬಡಗ ಕನ್ನಡದಲ್ಲಿ ಮತ್ತು ಹವ್ಯಕ ಕನ್ನಡದಲ್ಲಿ ಇವತ್ತಿಗೂ ಈ ಪ್ರತ್ಯಯದ ಬಳಕೆ ಉಳಿದುಕೊಂಡಿದೆ. ಹವ್ಯಕದ ಮುರುತ್ತು ‘ಮುರಿಯಿತು’ : ಮುರುದತ್ತು ‘ಮುರಿದ’, ಒಡತ್ತು ‘ಒಡೆಯಿತು’ : ಒಡದತ್ತು ‘ಒಡೆದ’, ಮರತ್ತು ‘ಮರೆತುಹೋಯಿತು’: ಮರೆದತ್ತು ‘ಮರೆತ’ ಎಂಬಂತಹ ರೂಪ ಜೋಡಿಗಳಲ್ಲಿ ಈ ಪ್ರತ್ಯಯದ ಬಳಕೆಯನ್ನು ಕಾಣಬಹುದು.

ಧ್ವನಿ ಪರಿವರ್ತನೆಗಳು

ಕರಾವಳಿಯ ಈ ಕನ್ನಡ ಪ್ರಭೇದಗಳು ಹಳೆಗನ್ನಡಕ್ಕಿಂತ ಹಿಂದಿನವೆಂಬುದನ್ನು ಅವುಗಳಲ್ಲಿ ಕಾಣಿಸುವ ಬೇರೆ ಕೆಲವು ಧ್ವನಿ ಪರಿವರ್ತನೆಗಳ ಆಧಾರದ ಮೇಲೂ ಸಾಧಿಸಬಲ್ಲೆವು. ಉದಾಹರಣೆಗಾಗಿ, ಎಂಟು-ಒಂಬತ್ತನೇ ಶತಮಾನದಲ್ಲಿ ನಡೆದ (೧) ಎಕಾರ ಇಕಾರವಾಗುವ, ಮತ್ತು (೨) ಒಕಾರ ಉಕಾರವಾಗುವ ಬದಲಾ ವಣೆ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ನಡೆದಿಲ್ಲ, ಆದರೆ ಹಳೆಗನ್ನಡ-ನಡು ಗನ್ನಡಗಳಲ್ಲಿ ಮತ್ತು ಒಳನಾಡಿನ ಇವತ್ತಿನ ಪ್ರಭೇದಗಳಲ್ಲಿ ನಡೆದಿವೆ.

ಪದಗಳ ಮೊದಲನೇ ಅಕ್ಷರದಲ್ಲಿ ಎಕಾರ ಇಲ್ಲವೇ ಒಕಾರ ಬಂದಿದ್ದು, ಅದರ ಅನಂತರ ಯಾವುದಾದರೊಂದು ಒತ್ತೆ ವ್ಯಂಜನ, ಮತ್ತು ಆ ವ್ಯಂಜನದ ಬಳಿಕ ಉಕಾರ ಇಲ್ಲವೇ ಇಕಾರ ಬಂದಿದೆಯಾದರೆ, ಮೊದಲನೇ ಅಕ್ಷರದ ಎಕಾರ ಇಕಾರವಾಗುತ್ತದೆ, ಮತ್ತು ಒಕಾರ ಉಕಾರವಾಗುತ್ತದೆ ಎಂಬುದೇ ಈ ಮಾರ್ಪಾಡಿನ ಸ್ವರೂಪ.

ಎಂಟು-ಒಂಬತ್ತನೇ ಶತಮಾನದ ಶಾಸನಗಳಲ್ಲಿ ಕಾಣಿಸುವ ಎದಿರ್, ಕೆಡಿಸು, ಕೆಸು ‘ಕೆಂಪು’, ಪೆರಿಯ ‘ದೊಡ್ಡ’ ಮೊದಲಾದ ಪದಗಳು ಆಮೇಲಿನ ಶಾಸನಗಳಲ್ಲಿ ಅನುಕ್ರಮವಾಗಿ ಇದಿರು, ಕಿಡಿಸು, ಕಿಸು, ಪಿರಿಯ ಎಂಬು ದಾಗಿಯೂ, ತೊಲು ‘ದನ’, ಪೊಗು ‘ಪ್ರವೇಶಿಸು’ ಮೊದಲಾದ ಪದಗಳು ತುಲು, ಪುಗು ಎಂಬುದಾಗಿಯೂ ಬದಲಾಗಿರುವುದು ಇದಕ್ಕೆ ಉದಾಹರಣೆ.

ಮೇಲೆ ಸೂಚಿಸಿದ ಹಾಗೆ, ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ಈ ಬದಲಾ ವಣೆ ನಡೆದಿಲ್ಲ. ಉದಾಹರಣೆಗಾಗಿ, ಹವ್ಯಕದ ಎದುರು, ಕೆಡು, ಹೆರಿಯೋರು ‘ದೊಡ್ಡವರು’, ಹೊಗು ಮೊದಲಾದ ಪದಗಳಲ್ಲಿ ಎಕಾರ, ಮತ್ತು ಕೆಮಿ ‘ಕಿವಿ’, ಬೆಳಿ ‘ಬಿಳಿ’, ಎರಗು ‘ಇರುವೆ’, ಸೊಲಿ ‘ಸುಲಿ’, ತೊರುಸು ‘ತುರಿಸು’, ತೊಳಿ ‘ತುಳಿ’ ಮೊದಲಾದ ಪದಗಳಲ್ಲಿ ಇಕಾರ ಬದಲಾಗದೆ ಉಳಿದಿರುವುದನ್ನು ಕಾಣ ಬಹುದು.

ಇದಲ್ಲದೆ, ಕರಾವಳಿಯ ಇತರ ಕನ್ನಡ ಪ್ರಭೇದಗಳಲ್ಲೂ ಈ ಬದಲಾವಣೆ ನಡೆದಿಲ್ಲವೆಂಬುದಕ್ಕೆ ಹಾಲಕ್ಕಿ ಒಕ್ಕಲಿಗರ ಕನ್ನಡದಲ್ಲಿ ಕಾಣಿಸುವ ಎದುರು, ಕೆವಿ ‘ಕಿವಿ’, ಬೆಳಿ ‘ಬಿಳಿ’, ಹೆರಿ, ತೊರಿ ‘ತುರಿಸು’ ಮೊದಲಾದ ಪದಗಳನ್ನು, ಮತ್ತು

೧೩೮


ಕನ್ನಡದ ಉಪಭಾಷೆಗಳು

ಸುಳ್ಯದ ಗೌಡರ ಕನ್ನಡದಲ್ಲಿ ಕಾಣಿಸುವ ಕೆಬಿ ‘ಕಿವಿ’, ಬೆದರ್ ‘ಬಿದಿರು’, ಕೊದಿ ‘ಕುದಿ’ ತೊಳಿ ‘ತುಳಿ’ ಮೊದಲಾದ ಪದಗಳನ್ನು ಉದಾಹರಿಸಬಹುದು.

ಎಂಟು-ಒಂಬತ್ತನೇ ಶತಮಾನದಲ್ಲಿ ನಡೆದಿದ್ದ ಈ ಬದಲಾವಣೆ ಈ ರೀತಿ ಕರಾವಳಿಯ ಕನ್ನಡ ಪ್ರಭೇದಗಳಲ್ಲಿ ನಡೆದಿರಲಿಲ್ಲವಾದ ಕಾರಣ, ಕನ್ನಡದಲ್ಲಿ ಕರಾವಳಿ-ಒಳನಾಡು (ಇಲ್ಲವೇ ಪಶ್ಚಿಮ-ಪೂರ್ವ) ಎಂಬ ಪ್ರಾದೇಶಿಕ ಪ್ರಭೇದ ಹಳೆಗನ್ನಡದ ಕಾಲಕ್ಕಿಂತಲೂ ಹಿಂದೆಯೇ ಸಿದ್ಧವಾಗಿತ್ತು ಎಂದು ಹೇಳಲು ಬರು ತ್ತದೆ.

ಆದರೆ, ಕನ್ನಡದಲ್ಲಿ ಈ ಬದಲಾವಣೆಯ ಅನಂತರ ಬೇರೆಯೂ ಹಲವು ಬದಲಾವಣೆಗಳು ನಡೆದಿದ್ದು, ಅವುಗಳಲ್ಲಿ ಕೆಲವು ಕರಾವಳಿ ಮತ್ತು ಒಳನಾಡಿನ ಪ್ರಭೇದಗಳೆರಡರಲ್ಲೂ ಕಾಣಿಸುತ್ತವೆ; ಆದರೆ, ಇನ್ನು ಕೆಲವು ಬದಲಾವಣೆಗಳು ಒಳನಾಡಿನ ಪ್ರಭೇದಗಳಲ್ಲಿ ಮಾತ್ರ ಕಾಣಿಸುತ್ತವೆ, ಮತ್ತು ಬೇರೆ ಕೆಲವು ಕರಾವಳಿಯ ಪ್ರಭೇದಗಳಲ್ಲಿ ಮಾತ್ರ ಕಾಣಿಸುತ್ತವೆ.

ಉದಾಹರಣೆಗಾಗಿ, ಸುಮಾರು ಒಂಬತ್ತನೇ ಶತಮಾನದಲ್ಲಿ ನಡೆಯಲು ಸುರುವಾಗಿದ್ದ ಪಕಾರ ಹಕಾರವಾಗುವ ಬದಲಾವಣೆ ಕನ್ನಡದ ಎಲ್ಲಾ ಪ್ರಭೇದ ಗಳಲ್ಲೂ ಕಾಣಿಸುತ್ತದೆ. ಈ ಬದಲಾವಣೆಗೆ ಕರಾವಳಿಯ ಪ್ರಭೇದಗಳು ಅಪವಾದಗಳಲ್ಲ. ಪಾಲ್>ಹಾಲು, ಪುಲಿ>ಹುಲಿ, ಪೋ>ಹೋಗು, ಪೊಗಲ್>ಹೊಗಳು ಮೊದಲಾದ ಪದಗಳಲ್ಲಿ ಈ ಬದಲಾವಣೆ ನಡೆದಿರುವು ದನ್ನು ಕಾಣಬಹುದು. ಇದೇ ರೀತಿಯಲ್ಲಿ, ಹತ್ತು-ಹನ್ನೊಂದನೇ ಶತಮಾನದಲ್ಲಿ ನಡೆದ ಳಿಕಾರ ಳಕಾರವಾಗುವ ಬದಲಾವಣೆಯೂ ಕನ್ನಡದ ಎಲ್ಲಾ ಪ್ರಭೇದ ಗಳಲ್ಲೂ ಕಾಣಿಸುತ್ತದೆ. ಅಲಿ ‘ನಾಶವಾಗು’>ಅಳಿ, ಪುಲು>ಹುಳ, ಪೊಗಲ್> ಹೊಗಳು, ಎಲೆ ‘ಎಳೆದಾಡು’ > ಎಳೆ, ಬಲಿಸು ‘ಉಪಯೋಗಿಸು’ > ಬಳಸು ಮೊದಲಾದ ಪದಗಳಲ್ಲಿ ಈ ಬದಲಾವಣೆಯನ್ನು ಕಾಣಬಹುದು.

ಆದರೆ, ದೀರ್ಘ ಸ್ವರದ ಅನಂತರ, ಇಲ್ಲವೇ ಮೂರಕ್ಷರದ ಪದಗಳಲ್ಲಿ ಎರಡನೇ ಸ್ವರದ ಅನಂತರ ಬರುವ ಅನುನಾಸಿಕವು ಅದರ ಅನಂತರ ಒಂದು ಸ್ಪರ್ಶವ್ಯಂಜನ ಬಂದಾಗ ಲೋಪಗೊಳ್ಳುವ ಬದಲಾವಣೆ ಹಳೆಗನ್ನಡದ ಕಾಲ ಕ್ಕಿಂತ ಅನಂತರ ನಡೆದ ಬದಲಾವಣೆ. ಇದು ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ನಡೆದಿದೆಯಾದರೂ, ಕರಾವಳಿಯ ಪ್ರಭೇದಗಳಲ್ಲಿ ನಡೆದಿಲ್ಲ. ಹವ್ಯಕದ ದಾಂಟು ‘ದಾಟು’, ನೂಂಕು ‘ನೂಕು’, ಸಾಂಕು ‘ಸಾಕು’, ಕಲಿಂಕು ‘ಕಲಕು’, ಕಾಡಿಂಗೆ ‘ಕಾಡಿಗೆ’, ಮರಂಗೊ ‘ಮರಗಳು’ ಮೊದಲಾದ ಪದಗಳನ್ನು ಮತ್ತು ಪದರೂಪ ಗಳನ್ನು ಇದಕ್ಕೆ ಉದಾಹರಣೆಗಳಾಗಿ ಕೊಡಬಹುದು.

ಆದಿಚಕಾರ, ಜಕಾರ ಮತ್ತು ಗಕಾರಗಳ ಅನಂತರ ಬರುವ ಅಕಾರ ಎಕಾರ ವಾಗುವ ಬದಲಾವಣೆ ಕರಾವಳಿಯಲ್ಲಿ ಮಾತ್ರ ನಡೆದಿದೆ; ಆದರೆ, ಒಳನಾಡಿನಲ್ಲಿ ನಡೆದಿಲ್ಲ. ಹವ್ಯಕದ ಜೆಗಿಲಿ ‘ಜಗಲಿ’, ಚೆಪ್ಪರ ‘ಚಪ್ಪರ’, ಗಂಡು ‘ಗಂಡು’,

೧೩೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಗೆಡ್ಡೆ ‘ಗಡ್ಡೆ’, ಗೆಡ್ಡೆ ‘ಗಡ್ಡ’ ಮೊದಲಾದ ಪದಗಳನ್ನು ಇದಕ್ಕೆ ಉದಾಹರಣೆ ಗಳಾಗಿ ಕೊಡಬಹುದು.

ಒಂದು ಭಾಷೆ ಹಲಕೆಲವು ಉಪಭಾಷೆಗಳಾಗಿ ಒಡೆದ ಮೇಲೂ ಅದರಲ್ಲಿ ನಡೆಯುವ ಬದಲಾವಣೆಗಳು ಅದರ ಎಲ್ಲಾ ಉಪಭಾಷೆಗಳನ್ನೂ ಬಾಧಿಸಲು ಸಾಧ್ಯವಿದೆ. ಪಕಾರ ಹಕಾರವಾಗಿರುವ, ಮತ್ತು ವಕಾರ ಬಕಾರವಾಗಿರುವ ಬದಲಾವಣೆಗಳು ಕನ್ನಡದಲ್ಲಿ ಇಂತಹವೆಂದು ಹೇಳಬಹುದು.

ಕೆಲವು ಬದಲಾವಣೆಗಳು ಒಂದು ಪ್ರದೇಶದಲ್ಲಿ ಬಳಕೆಯಲ್ಲಿರುವ ಎಲ್ಲಾ ಭಾಷೆಗಳನ್ನೂ ಒಟ್ಟಾಗಿ ಬಾಧಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಉತ್ತರದ ಕನ್ನಡ ಪ್ರಭೇದವನ್ನು ಬಾಧಿಸಿದ ಚಕಾರ ತ್ಸ್ ಮತ್ತು ಚ್ ಎಂಬುದಾಗಿ ಒಡೆದು ಕೊಳ್ಳುವ ಬದಲಾವಣೆ ಕನ್ನಡವನ್ನು ಮಾತ್ರವಲ್ಲದೆ ತೆಲುಗು ಮತ್ತು ಮರಾಠಿ ಭಾಷೆಗಳನ್ನು ಬಾಧಿಸಿದೆ; ಆದರೆ, ಕನ್ನಡದಲ್ಲಿ ಇದು ಉತ್ತರದ ಉಪಭಾಷೆ ಗಳನ್ನು ಮಾತ್ರ ಬಾಧಿಸಿದೆ, ದಕ್ಷಿಣದವನ್ನು ಬಾಧಿಸಿಲ್ಲ.

ಇದಕ್ಕೆ ಬದಲಾಗಿ, ಕೆಲವು ಬದಲಾವಣೆಗಳು ಒಂದು ಭಾಷೆಯ ಕೆಲವು ಉಪಭಾಷೆಗಳನ್ನು ಮಾತ್ರ ಬಾಧಿಸಿ, ಉಳಿದುವನ್ನು ಸ್ಪರ್ಶಿಸದಿರಲು ಸಾಧ್ಯವಿದೆ. ಉದಾಹರಣೆಗಾಗಿ, ಮೂರಕ್ಷರದ ಪದಗಳಲ್ಲಿ ಬರುವ ಎರಡನೇ ಸ್ವರ ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ಲೋಪಗೊಂಡಿರುವುದನ್ನು ನಾವು ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ಮಾತ್ರ ಕಾಣುತ್ತೇವೆ: ಕುದುರೆ>ಶುದ್ರೆ, ಸಾಸಿವೆ> ಸಾಸ್ವೆ, ಬಾಗಿಲು>ಬಾಗ್ಲು, ಅಂಗಡಿ>ಅಂಗ್ಲಿ ಮೊದಲಾದ ಮೈಸೂರು ಕನ್ನಡದಲ್ಲಿ ನಡೆದಿರುವ ಈ ಬದಲಾವಣೆ ಕರಾವಳಿಯ ಕನ್ನಡದಲ್ಲಿ ನಡೆದಿಲ್ಲ.

ಕರಾವಳಿಯ ಕನ್ನಡ ಹಳೆಗನ್ನಡವೇ?

ಕರಾವಳಿಯ ಕನ್ನಡ ಪ್ರಭೇದಗಳಾಗಿರುವ ಹವ್ಯಕ, ಹಾಲಕ್ಕಿ, ಗೌಡ ಮೊದಲಾದವು ಗಳನ್ನು ಕೇಳಿದಾಗ ಕೆಲವರಿಗೆ ಹಳೆಗನ್ನಡವನ್ನು ಕೇಳಿದ ಹಾಗೆ ಅನಿಸುತ್ತದೆ. ಇತರ ಕನ್ನಡ ಪ್ರಭೇದಗಳಲ್ಲಿ ನಡೆದಿರುವ ಕೆಲವು ಬದಲಾವಣೆಗಳು ಈ ಪ್ರಭೇದದಲ್ಲಿ ನಡೆಯದಿದ್ದುದೇ ಅವರಿಗೆ ಹೀಗೆ ಅನಿಸಲು ಮುಖ್ಯ ಕಾರಣ.

ಉದಾಹರಣೆಗಾಗಿ ಮೇಲೆಯೆ ಸೂಚಿಸಿದಂತೆ, ಇತರ ಪ್ರಭೇದಗಳಲ್ಲಿ ನಡೆದಿದ್ದ ಅನುನಾಸಿಕ ಲೋಪ ಹವ್ಯಕದಲ್ಲಿ ನಡೆದಿಲ್ಲ. ಈ ಕಾರಣಕ್ಕಾಗಿ, ಹವ್ಯಕದ ಬಹುವಚನ ರೂಪಗಳನ್ನು (ಮರಂಗೊ, ಮಂಗಂಗೊ ಇತ್ಯಾದಿ) ಕೇಳಿದಾಗ, ಮತ್ತು ಅನುನಾಸಿಕವಾಗಿರುವ ಬೇರೆ ಕೆಲವು ಪದಗಳನ್ನು (ದಾಂಟು, ನೂಂಕು, ಅವುಂಕು ಮೊದಲಾದವುಗಳನ್ನು) ಕೇಳಿದಾಗ ಹಳೆಗನ್ನಡ ವನ್ನು ಕೇಳಿದಂತೆ ಅನಿಸುತ್ತದೆ.

ಇದೇ ರೀತಿಯಲ್ಲಿ, ಹಳೆಗನ್ನಡದ ಕ್ರಿಯಾಪದಗಳಿಗಿದ್ದ ಭವಿಷ್ಯದ್ರೂಪಗಳು ಮತ್ತು ನಿಷೇಧರೂಪಗಳು ಹವ್ಯಕದಲ್ಲಿ ಮತ್ತು ಇತರ ಕರಾವಳಿಯ ಪ್ರಭೇದ ಗಳಲ್ಲಿ ನಷ್ಟವಾಗದೆ ಉಳಿದಿವೆ: ಬಪ್ಪೆ ‘ಬಂದೇನು’, ಹೋಪ್ ‘ಹೋದೇನು’,

೧೪೦

ಕನ್ನಡದ ಉಪಭಾಷೆಗಳು

ತಿಂಬೆ ‘ತಿಂದೇನು’, ಹೋಗ ‘ಹೋಗಲಿಕ್ಕಿಲ್ಲ’, ಹಾಡ ‘ಹಾಡಲಿಕ್ಕಿಲ್ಲ’ ಮೊದಲಾದ ಹವ್ಯಕದ ಪದರೂಪಗಳನ್ನು ಕೇಳಿದಾಗಲೂ ಅವಕ್ಕೆ ಸಮನಾಗಿರುವ ಹಳೆಗನ್ನಡ ಪದರೂಪಗಳನ್ನು ಕೇಳಿದ ಹಾಗೆ ಅನಿಸುತ್ತದೆ.

ಆದರೆ ಈ ಕಾರಣಕ್ಕಾಗಿ ಕರಾವಳಿಯ ಪ್ರಭೇದಗಳನ್ನು ‘ಹಳೆಗನ್ನಡ’ವೆಂದು ಹೇಳುವುದು ಸರಿಯಲ್ಲ. ಇತರ ಕನ್ನಡ ಪ್ರಭೇದಗಳ ಹಾಗೆ ಅವು ಹೊಸಗನ್ನಡದ ಪ್ರಭೇದಗಳೇ. ಒಳನಾಡಿನ ಪ್ರಭೇದಗಳಲ್ಲಿ ನಡೆದ ಕೆಲವು ಬದಲಾವಣೆಗಳು ಕರಾವಳಿಯ ಪ್ರಭೇದಗಳಲ್ಲಿ ಹೇಗೆ ನಡೆದಿಲ್ಲವೋ, ಹಾಗೆಯೇ ಕರಾವಳಿಯ ಪ್ರಭೇದಗಳಲ್ಲಿ ನಡೆದ ಕೆಲವು ಬದಲಾವಣೆಗಳು ಒಳನಾಡಿನ ಪ್ರಭೇದಗಳಲ್ಲಿ ನಡೆದಿಲ್ಲ. ಇದರಿಂದಾಗಿ, ಇವು ಒಂದರಿಂದೊಂದು ಭಿನ್ನವಾಗಿವೆಯೆಂದು ಹೇಳಲು ಸಾಧ್ಯವಿದೆಯಲ್ಲದೆ, ಇವುಗಳಲ್ಲಿ ಕೆಲವನ್ನು ಹೊಸಗನ್ನಡವೆಂದೂ ಇನ್ನು ಕೆಲವನ್ನು ಹಳೆಗನ್ನಡವೆಂದೂ ಹೇಳಲು ಬರುವುದಿಲ್ಲ.

ಆದರೆ, ಕನ್ನಡದಲ್ಲಿ ಹಲವು ಮಂದಿ ಬರಹಗಾರರು ಈ ತಪ್ಪನ್ನು ಮಾಡು ವುದು ಕಾಣಿಸುತ್ತದೆ. ಹಳತು-ಹೊಸತು ಎಂಬುದು ಒಂದು ಪ್ರಭೇದ ಯಾವ ಕಾಲದಲ್ಲಿ ಬಳಕೆಯಲ್ಲಿದೆ ಎಂಬುದನ್ನು ಅವಲಂಬಿಸಿದೆಯಲ್ಲದೆ ಅದರ ವ್ಯಾಕರಣ ಎಂತಹದು ಎಂಬುದರ ಮೇಲೆ, ಇಲ್ಲವೇ ಅದರ ಪದಗಳ ರಚನೆಯಲ್ಲಿ ಎಂತಹ ಧ್ವನಿಗಳೆಲ್ಲ ಬಳಕೆಯಾಗುತ್ತಿವೆ ಎಂಬುದರ ಮೇಲೆ ಅವಲಂಬಿಸಿಲ್ಲ.

ಬಡಗ ಮತ್ತು ಸೊಲಿಗ

ಹಳೆಗನ್ನಡ ಕಾಲದ ಅನಂತರ, ಆದರೆ ಹದಿನೈದನೇ ಶತಮಾನಕ್ಕಿಂತ ಮೊದಲು, ಬಡಗ ಮತ್ತು ಸೊಲಿಗ ಎಂಬ ಈ ಎರಡು ಕನ್ನಡ ಪ್ರಭೇದಗಳು ಕನ್ನಡದ ಇತರ ಒಳನಾಡಿನ ಪ್ರಭೇದಗಳಿಂದ ಬೇರ್ಪಟ್ಟಿರುವ ಹಾಗೆ ಕಾಣಿಸುತ್ತದೆ. ಹಳೆಗನ್ನಡ ಕಾಲದ ಅನಂತರ, ಎಂದರೆ ಹದಿನಾಲ್ಕು-ಹದಿನೈದನೇ ಶತಮಾನದಲ್ಲಿ ನಡೆದ ಅಕಾರ ರಕಾರವಾಗುವ ಬದಲಾವಣೆ ಈ ಎರಡು ಕನ್ನಡ ಪ್ರಭೇದಗಳಲ್ಲೂ ನಡೆ ದಿಲ್ಲ. ಆದರೆ, ಅದಕ್ಕಿಂತ ಮೊದಲು ನಡೆದಿದ್ದ ಬದಲಾವಣೆಗಳೆಲ್ಲ ಇವುಗಳಲ್ಲೂ ನಡೆದಿರುವ ಹಾಗೆ ಕಾಣಿಸುವುದೇ ಹೀಗೆ ಹೇಳಲು ಆಧಾರ.

ಉದಾಹರಣೆಗಾಗಿ, ಸೊಲಿಗರ ಕನ್ನಡದಲ್ಲಿ ಅಟ್ ‘ಬಂಡೆ’ : ಅರೆ ‘ಅರ್ಧ’, ಇಟು ‘ಇರುವೆ’ : ಇರು ‘ಇರು’, ಕಟ್ ‘ಬರಹೇಳು’ : ಕರೆ ‘ಬಟ್ಟೆಯ ಕಲೆ’, ಊಟು ‘ಕಾಲೂರು’ : ಊರು ‘ಹಳ್ಳಿ’ ಮೊದಲಾದ ಪದಜೋಡಿಗಳಲ್ಲಿ ಅಕಾರ ಮತ್ತು ರಕಾರಗಳು ಭಿನ್ನವಾಗಿ ಉಳಿದಿರುವುದನ್ನು ಕಾಣಬಹುದು.

ಇದೇ ರೀತಿಯಲ್ಲಿ, ಬಡಗ ಕನ್ನಡದ ಮಟು ‘ಕರು’ : ನರಿ ‘ನರಿ’, ಮೂರು ‘ಮೂರು’ : ಮಾರು ‘ಎದೆ’, ಬೇಟು ‘ಕೆಸರು’ : ಬೇರು ‘ಬೇರು’, ಮೂರು ‘ಮುರಿ’ : ಪುರಿ ‘ಹುರಿಯಕ್ಕಿ’ ಮೊದಲಾದ ಪದಜೋಡಿಗಳಲ್ಲಿ ಈ ವ್ಯತ್ಯಾಸ ಅಳಿಯದೆ ಉಳಿದಿರುವುದನ್ನು ಕಾಣಬಹುದು.

೧೪೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಈ ಬದಲಾವಣೆಗಿಂತ ಮೊದಲೇ ನಡೆದಿದ್ದ ಳಕಾರ ಳಕಾರವಾಗುವ ಬದಲಾವಣೆ, ಪಕಾರ ಹಕಾರವಾಗುವ ಬದಲಾವಣೆ ಮೊದಲಾದವುಗಳೆಲ್ಲ ಈ ಎರಡು ಪ್ರಭೇದಗಳಲ್ಲೂ ನಡೆದಿರುವ ಹಾಗೆ ಕಾಣಿಸುವುದಾದ ಕಾರಣ, ಇವು ಹಳೆಗನ್ನಡ ಕಾಲದ ಬಳಿಕ ಕವಲೊಡೆದು ಬೇರಾಗಿರಬೇಕೆಂದು ಸದ್ಯಕ್ಕೆ ಊಹಿಸಿ ಕೊಳ್ಳಬಹುದು.

ಒಳನಾಡಿನ ಪ್ರಭೇದಗಳು

ಒಳನಾಡಿನ ಕನ್ನಡದಲ್ಲಿ ಎಂತಹ ಪ್ರಭೇದಗಳೆಲ್ಲ ಇವೆ, ಅದನ್ನು ಯಾವ ರೀತಿ ಯಲ್ಲೆಲ್ಲ ವಿಂಗಡಿಸಬಹುದು ಎಂಬುದನ್ನು ಇದುವರೆಗೆ ಯಾರೂ ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ಉತ್ತರ ಮತ್ತು ದಕ್ಷಿಣ ಎಂಬುದಾಗಿ ಎರಡು ಮುಖ್ಯವಾದ ಪ್ರಭೇದಗಳನ್ನು ವಿದ್ವಾಂಸರು ಗಮನಿಸಿರುವರಾದರೂ, ನಿಜಕ್ಕೂ ಈ ಎರಡು ಒಳನಾಡಿನ ಪ್ರಭೇದಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಅವುಗಳ ವ್ಯಾಪ್ತಿ ಎಂತಹದು, ಮತ್ತು ಈ ವ್ಯತ್ಯಾಸಗಳ ಆಧಾರದ ಮೇಲೆ ಒಳನಾಡಿನ ಪ್ರಭೇದಗಳನ್ನು ಯಾವ ರೀತಿಯಲ್ಲಿ ವಿಂಗಡಿಸಲು ಸಾಧ್ಯ ಎಂಬ ವಿಷಯದಲ್ಲಿ ಪರಿಪೂರ್ಣವಾದ ಮತ್ತು ವ್ಯಾಪಕವಾದ ಸಂಶೋಧನೆ ಇನ್ನೂ ನಡೆದಿಲ್ಲ. ಕನ್ನಡ ವಿಶ್ವವಿದ್ಯಾಲಯವಾಗಲೀ ಇಲ್ಲವೇ ಕರ್ನಾಟಕದ ಇತರ ವಿಶ್ವವಿದ್ಯಾಲಯಗಳಾಗಲೀ ಇಂತಹ ಸಂಶೋಧನೆಯನ್ನು ಕೈಗೆತ್ತಿಕೊಳ್ಳುವುದು ಅವಶ್ಯ.

ಉದಾಹರಣೆಗಾಗಿ, ಹಕಾರ ಲೋಪಗೊಳ್ಳುವ ಬದಲಾವಣೆಯನ್ನು ನಾವು ಮೈಸೂರು ಜಿಲ್ಲೆಯಲ್ಲೂ ಕಾಣುತ್ತೇವೆ, ಬಳ್ಳಾರಿ ಜಿಲ್ಲೆಯಲ್ಲೂ ಕಾಣುತ್ತೇವೆ, ಮತ್ತು ಗುಲ್ಬರ್ಗ ಜಿಲ್ಲೆಯಲ್ಲೂ ಕಾಣುತ್ತೇವೆ. ಆದರೆ, ಮೈಸೂರು ಜಿಲ್ಲೆ ಯಲ್ಲೇನೇ ಕೆ.ಆರ್.ನಗರ, ಪಿರಿಯಾಪಟ್ಟಣ, ಮತ್ತು ಹುಣಸೂರಿನ ಒಂದು ಭಾಗದಲ್ಲಿ ಈ ಬದಲಾವಣೆ ಕಾಣಿಸುವುದಿಲ್ಲ. ಉಳಿದ ಭಾಗಗಳಲ್ಲಿ ಮಾತ್ರ ಕಾಣಿಸುತ್ತದೆ.

ಇಲ್ಲೂ ಕೂಡ, ಮೇಲ್ವರ್ಗದವರ ಕನ್ನಡದಲ್ಲಿ ಕಾಣಿಸುವುದಿಲ್ಲ, ಮಧ್ಯಮ ಮತ್ತು ಕೆಳವರ್ಗದವರ ಕನ್ನಡದಲ್ಲಿ ಮಾತ್ರ ಕಾಣಿಸುತ್ತದೆ. ಗುಲ್ಬರ್ಗ ಜಿಲ್ಲೆಯಲ್ಲೂ ಈ ಬದಲಾವಣೆ ಕೆಲವು ಪ್ರಭೇದಗಳಲ್ಲಿ ಕಾಣಿಸುತ್ತದೆ, ಆದರೆ ಬೇರೆ ಕೆಲವು ಪ್ರಭೇದಗಳಲ್ಲಿ ಕಾಣಿಸುವುದಿಲ್ಲ.

ನಿಜಕ್ಕೂ ಈ ಬದಲಾವಣೆಯ ವ್ಯಾಪ್ತಿಯೇನು? ಬೇರೆ ಬೇರೆ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಹಕಾರಲೋಪ ಒಂದೇ ಬದಲಾವಣೆಯೇ, ಇಲ್ಲವೇ ಸ್ವತಂತ್ರವಾಗಿ ನಡೆದ ಬೇರೆ ಬೇರೆ ಬದಲಾವಣೆಗಳೇ? ಒಂದೇ ಬದಲಾವಣೆ ಯಾದರೆ, ಇದು ಕನ್ನಡವನ್ನು ಯಾವ ರೀತಿಯಲ್ಲಿ ವಿಭಜಿಸುತ್ತದೆ? ಗುಲ್ಬರ್ಗಕ್ಕೂ ಮೈಸೂರಿಗೂ ನಡುವೆ ಈ ಹಕಾರಲೋಪದ ಗೆರೆ ಹೇಗೆ ಹರಿಯುತ್ತದೆ?

೧೪೨


ಕನ್ನಡದ ಉಪಭಾಷೆಗಳು

ಒಳನಾಡಿನ ಉಪಭಾಷೆಗಳ ವಿಭಜನೆಯಲ್ಲಿ ಅದರ ಸ್ಥಾನವೇನು? ಇಂತಹ ಹಲವಾರು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.

ಒಳನಾಡಿನ ಕನ್ನಡ ಪ್ರಭೇದಗಳಲ್ಲಿ ನಡೆದಿರುವ ಎಲ್ಲಾ ಬದಲಾವಣೆಗಳ ವಿಷಯದಲ್ಲೂ ಇಂತಹವೇ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯಬೇಕಾಗಿದೆ. ಇದಕ್ಕಾಗಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳನ್ನು ಒಂದೊಂದಾಗಿ ಆರಿಸಿಕೊಂಡು, ಅವುಗಳಲ್ಲಿ ಎಂತಹ ಕನ್ನಡ ಪ್ರಭೇದಗಳೆಲ್ಲ ಇವೆ, ಮತ್ತು ಈ ಪ್ರಭೇದಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ ಎಂಬುದಾಗಿ ಪರಿಶೀಲನೆಯೊಂದನ್ನು ನಡೆಸಬೇಕಾಗಿದೆ.

ಮೈಸೂರು ಕನ್ನಡದ ಪ್ರಭೇದಗಳು

ಉದಾಹರಣೆಗಾಗಿ, ಮೈಸೂರು ಜಿಲ್ಲೆಯ ಕನ್ನಡ ಪ್ರಭೇದಗಳನ್ನು ಗಮನಿಸ ಬಹುದು. ಸುಮಾರು ಮೂವತ್ತು ವರ್ಷಗಳ ಹಿಂದೆ ನಾನು ಒಂದು ತಿಂಗಳು ಈ ಜಿಲ್ಲೆಯಲ್ಲಿ ಸುತ್ತಾಡಿ, ಬೇರೆ ಬೇರೆ ಊರುಗಳಲ್ಲಿ ಬಳಕೆಯಲ್ಲಿರುವ ಕನ್ನಡ ಪ್ರಭೇದಗಳ ನಡುವಿರುವ ವ್ಯತ್ಯಾಸಗಳನ್ನು ಸಂಗ್ರಹಿಸಿದ್ದೆ. ಇದು ಈ ಜಿಲ್ಲೆಯ ಸಮಗ್ರ ಪರಿಶೀಲನೆಯೇನೂ ಅಲ್ಲ; ಆದರೂ, ಕನ್ನಡ ಪ್ರಭೇದಗಳ ಕುರಿತು ಎಂತಹ ವಿಷಯಗಳನ್ನು ಸಂಗ್ರಹಿಸಲು ಸಾಧ್ಯ ಎಂಬುದನ್ನು ಇದು ತೋರಿಸಿಕೊಡ ಬಲ್ಲುದು.

ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಅವರು ಹೇಳುವಂತೆ, ಮೈಸೂರಿನ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸಮಾಜದ ಸಂಪೂರ್ಣ ಸದಸ್ಯರಾಗಿರುವವರು, ಅರ್ಧ ಸದಸ್ಯರಾಗಿರುವವರು, ಮತ್ತು ಸಮಾಜದಿಂದ ಹೊರಗಿರುವವರು ಎಂಬುದಾಗಿ ಮೂರು ವರ್ಗಗಳಲ್ಲಿ ವಿಂಗಡಿಸಬಹುದು. ಮುಸ್ಲಿಮರು ಇವರಲ್ಲಿ ಕೊನೆಯ ವರ್ಗಕ್ಕೆ ಸೇರುತ್ತಾರೆ; ಆದರೆ, ಅವರು ಮನೆಯಲ್ಲಿ ಉರ್ದು ಮಾತ ನಾಡುವ ಕಾರಣ, ಕನ್ನಡ ಪ್ರಭೇದಗಳ ಈ ಪರಿಶೀಲನೆಯಲ್ಲಿ ಅವರ ಮಾತನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ.

ಸಮಾಜದ ಅರ್ಧ ಸದಸ್ಯರಾಗಿರುವ ಎರಡನೇ ವರ್ಗದವರನ್ನು ಮೇಲ್ವರ್ಗ ದವರು ಮತ್ತು ಕೆಳವರ್ಗದವರು ಎಂಬುದಾಗಿ ಎರಡು ಪ್ರಭೇದಗಳಲ್ಲಿ ವಿಂಗಡಿಸ ಬಹುದು, ಮತ್ತು ಸಮಾಜದ ಸಂಪೂರ್ಣ ಸದಸ್ಯರಾಗಿರುವ ಮೊದಲನೆಯ ವರ್ಗದವರನ್ನು ಮಧ್ಯ ವರ್ಗದವರೆಂದು ಪರಿಗಣಿಸಬಹುದು. ಕನ್ನಡದ ಪ್ರಭೇದ ಗಳ ಮಟ್ಟಿಗೆ ಹೇಳುವುದಾದರೆ, ಮೈಸೂರಿನ ಹಳ್ಳಿಗಳಲ್ಲಿ ಮೇಲಿನ ಮೂರು ವರ್ಗಗಳಿಗನುಸರಿಸಿ ಮೂರು ಸಾಮಾಜಿಕ ಪ್ರಭೇದಗಳನ್ನು ಕಾಣಬಹುದು.

ಪ್ರಾದೇಶಿಕವಾಗಿ, ಮೈಸೂರು ಜಿಲ್ಲೆಯನ್ನು ಪಶ್ಚಿಮ, ಪೂರ್ವ, ಮತ್ತು ಮಧ್ಯ ಎಂಬುದಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಬಹುದು. ಟಿ.ನರಸೀಪುರ, ಕೊಳ್ಳೇ ಗಾಲ, ಯಳಂದೂರು, ಚಾಮರಾಜನಗರ, ಮತ್ತು ಗುಂಡ್ಲುಪೇಟೆ ತಾಲೂಕಿನ ಸ್ವಲ್ಪ ಭಾಗ - ಇವಿಷ್ಟು ಪೂರ್ವ ವಿಭಾಗಕ್ಕೂ, ಪಿರಿಯಾಪಟ್ಟಣ, ಕೆ.ಆರ್.ನಗರ,

೧೪೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮತ್ತು ಹುಣಸೂರು ತಾಲೂಕಿನ ಸ್ವಲ್ಪ ಭಾಗ - ಇವಿಷ್ಟು ಪಶ್ಚಿಮ ಭಾಗಕ್ಕೂ, ಮತ್ತು ಜಿಲ್ಲೆಯ ಉಳಿದ ಭಾಗಗಳು ಮಧ್ಯ ವಿಭಾಗಕ್ಕೂ ಸೇರುತ್ತವೆ.

ಇದು ಈ ಪ್ರದೇಶದಲ್ಲಿ ಬಳಕೆಯಲ್ಲಿರುವ ಕನ್ನಡ ಪ್ರಭೇದಗಳನ್ನು ಅವಲಂಬಿಸಿ ರಚಿಸಿರುವ ಪ್ರಾದೇಶಿಕ ವಿಭಜನೆ. ಮೇಲೆ ವಿವರಿಸಿದ ಮೂರು ಸಾಮಾಜಿಕ ಪ್ರಭೇದಗಳು ಈ ಮೂರು ಪ್ರಾದೇಶಿಕ ಪ್ರಭೇದಗಳನ್ನು ಛೇದಿಸುತ್ತವೆ ಯಾದ ಕಾರಣ, ಮೈಸೂರು ಜಿಲ್ಲೆಯ ಕನ್ನಡ ಪ್ರಭೇದಗಳ ವರ್ಣನೆಯನ್ನು ಕೊಡುವಾಗ ಸಾಮಾಜಿಕ ಮತ್ತು ಪ್ರಾದೇಶಿಕಗಳೆಂಬ ಈ ಎರಡು ಅಂಶಗಳನ್ನೂ ಗಮನದಲ್ಲಿರಿಸಿಕೊಳ್ಳುವುದು ಅವಶ್ಯ.

ಮೈಸೂರು ಜಿಲ್ಲೆಯ ಎಲ್ಲಾ ಕನ್ನಡ ಪ್ರಭೇದಗಳಲ್ಲೂ ಕಾಣಿಸುವ, ಮತ್ತು ಬರಹ ಕನ್ನಡದಲ್ಲಿ ಕಾಣಿಸದಿರುವ ವೈಶಿಷ್ಟ್ಯಗಳು ಕೆಲವಿವೆ. ಉದಾಹರಣೆಗಾಗಿ, ಮೂರು ಲಘು ಅಕ್ಷರಗಳಿರುವ ಪದಗಳಲ್ಲಿ, ಮತ್ತು ಮೂರು ಅಕ್ಷರಗಳಲ್ಲಿ ಮೊದಲನೆಯದು ಮಾತ್ರ ಗುರುವಾಗಿರುವ ಪದಗಳಲ್ಲಿ ಎರಡನೆಯ ಸ್ವರ ಲೋಪಗೊಳ್ಳುತ್ತದೆ (ಆಗಸ>ಆಗ್ನ, ಕೂದಲು> ಕೂದ್ದು); ಇಂತಹ ಪದಗಳಲ್ಲಿ ಮೂರು ಅಕ್ಷರಗಳ ಬದಲು ನಾಲ್ಕು ಅಕ್ಷರಗಳಿವೆಯಾದರೆ, ಎರಡನೆಯ ಸ್ವರದ ಬದಲು ಮೂರನೆಯ ಸ್ವರ ಲೋಪಗೊಳ್ಳುತ್ತದೆ (ಕನ್ನಡಕ>ಕನ್ನಡ). ಈ ಬದಲಾವಣೆ ಮೈಸೂರಿನ ಎಲ್ಲಾ ಪ್ರಭೇದಗಳಲ್ಲೂ ಕಾಣಿಸುತ್ತದೆ.

ಅಕಾರ ಮತ್ತು ಎಕಾರಗಳು ಪರವಾದಾಗ, ಒ ಮತ್ತು ಓ ಸ್ವರಗಳು ಅನುಕ್ರಮವಾಗಿ ವ ಮತ್ತು ವಾ ಎಂದಾಗುವುದು (ಒಗೆ>ವಗೆ, ಗೋಡೆ> ಗ್ವಾಡೆ), ಮಕಾರದ ಅನಂತರ ಅ ಮತ್ತು ಆ ಎಂದಾಗುವುದು (ಮೊಸರು> ಮಸರು), ಮತ್ತು ಎ-ಏ ಸ್ವರಗಳು ಯ-ಯಾ ಎಂದಾಗುವುದು (ಎಮ್ಮೆ> ಯಮ್ಮೆ, ಹೇಟೆ>ಹ್ಯಾಟೆ) ಮೈಸೂರು ಜಿಲ್ಲೆಯಲ್ಲಿ ಎಲ್ಲೆಡೆಯಲ್ಲೂ ಕಾಣಿಸುವ ಇನ್ನೊಂದು ಬದಲಾವಣೆ.

ಆದರೆ, ಕೆಲವರ ಮಾತಿನಲ್ಲಿ ಮಾತ್ರ ಈ ಬದಲಾವಣೆ ಕಾಣಿಸಿಕೊಳ್ಳುತ್ತದೆ, ಬೇರೆ ಕೆಲವರ ಮಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ, ಈ ಬದಲಾ ವಣೆಯ ನಿಜವಾದ ವ್ಯಾಪ್ತಿ ಎಂತಹದು ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇದಕ್ಕೆ ಸಾಮಾಜಿಕ ಇಲ್ಲವೇ ಪ್ರಾದೇಶಿಕ ಮಿತಿಗಳೇನಾದರೂ ಇವೆಯೇ ಎಂಬುದನ್ನು ತಿಳಿಯಲು ಹೆಚ್ಚಿನ ಪರಿಶೀಲನೆ ಅವಶ್ಯ.

ಮೇಲ್ವರ್ಗದವರ ಪ್ರಭೇದದಲ್ಲಿ ಕಾಣಿಸದಿರುವ, ಮತ್ತು ಉಳಿದ ಎಲ್ಲಾ ಪ್ರಭೇದಗಳಲ್ಲೂ ಕಾಣಿಸುವ ವೈಶಿಷ್ಟ್ಯಗಳೂ ಕೆಲವಿವೆ. ಉದಾಹರಣೆಗಾಗಿ, ರ್ತ್, ರ್ಡ್, ಮತ್ತು ರ್ಟ್ ಎಂಬ ವ್ಯಂಜನಕಂತೆಗಳು ಳ್, ಣ್, ಮತ್ತು ಣ್ಣ್ ಎಂಬುದಾಗಿ ಬದಲಾಯಿಸಿರುವುದನ್ನು (ಹುರ್ತಿ>ಹುಳ್ಳಿ ‘ಹುರುಳಿ’, ಕಳುರ್ತಿ> ಕಳ್ಳು ‘ಕರುಳು’, ಕುರ್ಡ>ಕುಣ್ಣ ‘ಕುರುಡ’, ಹೋರ್ಟ>ಹೊಣ್ಣ ‘ಹೊರಟ’)

೧೪೪


ಕನ್ನಡದ ಉಪಭಾಷೆಗಳು

ಮಧ್ಯ ಮತ್ತು ಕೆಳವರ್ಗದ ಪ್ರಭೇದಗಳಲ್ಲಿ ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು.

ಮಧ್ಯವರ್ಗದ ಪ್ರಭೇದಗಳು

ಮಧ್ಯವರ್ಗದ ಸಾಮಾಜಿಕ ಪ್ರಭೇದವನ್ನು ಮೈಸೂರು ಕನ್ನಡದ ಮುಖ್ಯ ಸಾಮಾಜಿಕ ಪ್ರಭೇದವೆಂದು ಪರಿಗಣಿಸಬಹುದು. ಮೇಲೆ ವಿವರಿಸಿದಂತೆ, ಮೈಸೂರಿನ ಹಳ್ಳಿಗಳಲ್ಲಿ ಇದು ಸಮಾಜದ ಸಂಪೂರ್ಣ ಸದಸ್ಯರಾಗಿರುವ ಜನರ ಪ್ರಭೇದ. ಈ ಪ್ರಭೇದವನ್ನು ಪೂರ್ವ, ಪಶ್ಚಿಮ, ಮತ್ತು ಮಧ್ಯ ಎಂಬ ಮೂರು ಪ್ರಾದೇಶಿಕ ಪ್ರಭೇದಗಳಾಗಿ ವಿಂಗಡಿಸಬಹುದು.

ಈ ವಿಭಜನೆಗೆ ಆಧಾರವಾಗಬಲ್ಲ ಬದಲಾವಣೆಗಳನ್ನು ಒಟ್ಟಾಗಿ ಪರಿಶೀಲಿಸಿ ದಾಗ, ಪಶ್ಚಿಮದ ಪ್ರಭೇದ ಉಳಿದ ಎರಡು ಪ್ರಭೇದಗಳಿಗಿಂತ ಹಲವು ವಿಷಯ ಗಳಲ್ಲಿ ಭಿನ್ನವಾಗಿರುವುದು ಕಾಣಿಸುತ್ತದೆ. ಆದರೆ, ಪೂರ್ವ ಮತ್ತು ಮಧ್ಯ ಪ್ರಭೇದಗಳ ನಡುವೆ ಹೆಚ್ಚು ವ್ಯತ್ಯಾಸಗಳು ಕಾಣಿಸುವುದಿಲ್ಲ.

ಉದಾಹರಣೆಗಾಗಿ ಮೇಲೆಯೇ ಸೂಚಿಸಿರುವಂತೆ, ಆದಿಹಕಾರ ಲೋಪ ಗೊಳ್ಳುವ ಬದಲಾವಣೆ (ಹಾಲು>ಆಲು, ಹಕ್ಕಿ>ಅಕ್ಕಿ, ಹೇಳು>ಏಳು, ಹುಳಿ> ಉಳಿ) ಪೂರ್ವ ಮತ್ತು ಮಧ್ಯ ಪ್ರಭೇದಗಳಲ್ಲಿ ನಡೆದಿದೆ; ಆದರೆ, ಪಶ್ಚಿಮ ಪ್ರಭೇದದಲ್ಲಿ ನಡೆದಿಲ್ಲ. ಇದೇ ರೀತಿಯಲ್ಲಿ, ಡ್ ಎಂದು ಎಂಬ ವ್ಯಂಜನಕಂತೆ ಪೂರ್ವ ಮತ್ತು ಮಧ್ಯ ಪ್ರಭೇದಗಳಲ್ಲಿ ಳ್ ಎಂದಾಗಿದೆ (ಕೊಡ್ಡಿ>ಕೊಳ್ಳಿ ‘ಕೊಡಲಿ’, ಕಡ್ಡೆ>ಕಳ್ಳೆ ‘ಕಡಲೆ’, ಸಡ್ಡು>ಸಳ್ಳು ‘ಸಡಿಲು’, ಗುಡ್ಡು>ಗುಳ್ಳು ‘ಗುಡಿಸಲು’); ಆದರೆ, ಪಶ್ಚಿಮ ಪ್ರಭೇದದಲ್ಲಿ ಬದಲಾಗದೆ ಹಾಗೆಯೇ ಉಳಿದಿದೆ.

ಪಶ್ಚಿಮ ಮತ್ತು ಮಧ್ಯ ಪ್ರಭೇದಗಳನ್ನು ಪೂರ್ವ ಪ್ರಭೇದದಿಂದ ಬೇರ್ಪಡಿಸುವ ಬದಲಾವಣೆಯೆಂದರೆ, ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳು ಇಕಾರದಲ್ಲಿ ಕೊನೆಗೊಳ್ಳುವಂತಾಗುವುದು (ಬರೆ>ಬರಿ, ನಡೆ>ನಡಿ, ಕರ>ಕರಿ ‘ಬರಹೇಳು’, ಅಗೆ>ಅಗಿ ‘ಗುದ್ದಲಿಯಿಂದ ಆಗಿ’). ಈ ಬದಲಾವಣೆ ಪಶ್ಚಿಮ ಮತ್ತು ಮಧ್ಯ ಪ್ರಭೇದಗಳಲ್ಲಿ ನಡೆದಿದೆ; ಆದರೆ, ಪೂರ್ವ ಪ್ರಭೇದದಲ್ಲಿ ನಡೆದಿಲ್ಲ.

ಇಲ್ಲೂ ಪಶ್ಚಿಮದ ಪ್ರಭೇದ ಮಧ್ಯ ಪ್ರಭೇದಕ್ಕಿಂತ ಬೇರಾಗಿದೆ: ಕೊನೆಯ ಎಕಾರ ಇಕಾರವಾಗಿರುವ ಕ್ರಿಯಾಪದಗಳು ಮೊದಲಿನಿಂದಲೂ ಕೊನೆಯಲ್ಲಿ ಇಕಾರವಿದ್ದ (ಅಗಿ ‘ಜಗಿ’, ಕರಿ ‘ಎಣ್ಣೆಯಲ್ಲಿ ಕರಿ’ ಮೊದಲಾದ) ಕ್ರಿಯಾಪದ ಗಳಿಗಿಂತ ಮಧ್ಯ ಪ್ರಭೇದದಲ್ಲಿ ಬೇರಾಗಿಲ್ಲ; ಆದರೆ, ಪಶ್ಚಿಮದ ಪ್ರಭೇದದಲ್ಲಿ ಅವೆರಡು ಮೊದಲನೆಯ ಸ್ವರದಲ್ಲಿ ಬೇರಾಗಿವೆ.

ಇದಲ್ಲದೆ, ಪೂರ್ವ ಮತ್ತು ಪಶ್ಚಿಮ ಪ್ರಭೇದಗಳ ನಡುವೆ ಅವು ಬಳಸುವ ಪದಗಳಲ್ಲೂ ಕೆಲವು ವ್ಯತ್ಯಾಸಗಳಿವೆ; ಇಲ್ಲೂ ಕೂಡ, ಮಧ್ಯ ಪ್ರಭೇದ ಪೂರ್ವ

೧೪೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಪಶ್ಚಿಮದ ಪ್ರಭೇದ ಪೂರ್ವದ ಪ್ರಭೇದ
ಬೆಂಕಿ ಬಿಂಕಿ
ಇಲಿ ಎಲಿ
ಮಗ ಮಣ
ಮಗ್ಗು ಮಗ
ಚೇಣು ಚೇಳು
ಏಳು ಯೋಳು
ಬೆಳ್ಳು ಬೆಟ್ಟು
ಗೊರ್ಲು ಕೊಬ್ಬು
ತಿಂದೊ ‘ತಿಂದೆವು’ ತಿಂದು
ತಿಂದಿವ್ನಿ ತಿಂದಿನಿ

ಪೂರ್ವದ ಪ್ರಭೇದವನ್ನು ದಕ್ಷಿಣ ಪೂರ್ವ ಮತ್ತು ಉತ್ತರ ಪೂರ್ವ ಎಂಬು ದಾಗಿ ವಿಂಗಡಿಸಬಹುದು. ಪದಗಳ ಕೊನೆಯಲ್ಲಿ ಬರುವ ಎಕಾರ ದಕ್ಷಿಣದಲ್ಲಿ ಅಯ್ ಇಲ್ಲವೇ ಅ ಎಂದಾಗಿರುವುದು (ಬರೆ>ಬರ, ಬರಯ್, ಮನೆ>ಮನ, ಮನಯ್, ಅಗೆ>ಅಗ, ಅಗಯ್) ಈ ವಿಭಜನೆಗೆ ಒಂದು ಆಧಾರ. ಪ್ರಥಮ ಪುರುಷ ಏಕವಚನದಲ್ಲಿ ಕ್ರಿಯಾಪದಗಳ ಪುಲ್ಲಿಂಗ ಮತ್ತು ಸ್ತ್ರೀಲಿಂಗ ರೂಪಗಳು ದಕ್ಷಿಣದಲ್ಲಿ ಭಿನ್ನವಾಗಿವೆ, ಉತ್ತರದಲ್ಲಿ ಭಿನ್ನವಾಗಿಲ್ಲ ಎಂಬುದು ಇನ್ನೊಂದು ಆಧಾರ.

ದಕ್ಷಿಣದಲ್ಲಿ ಪುಲ್ಲಿಂಗ ರೂಪಗಳ ಕೊನೆಯಲ್ಲಿ ಬರುವ ಅಕಾರ ಅನುನಾಸಿಕ ಸ್ವರವಾಗಿದೆ. ಉತ್ತಮ ಪುರುಷ ಏಕವಚನದಲ್ಲೂ ಕ್ರಿಯಾಪದದ ಭೂತರೂಪ ಗಳು ದಕ್ಷಿಣದಲ್ಲಿ ಎಕಾರದಲ್ಲಿ ಕೊನೆಗೊಳ್ಳುವುವಾದರೆ, ಉತ್ತರದಲ್ಲಿ ಇಕಾರ ದಲ್ಲಿ ಕೊನೆಗೊಳ್ಳುತ್ತವೆ (ಬಂದೆ>ಬಂದಿ, ತಿಂದೆ>ತಿಂದಿ, ನೋಡ್ಡೆ>ನೋಡ್ಡಿ).

ಇತರ ಪ್ರಭೇದಗಳು

ಇತರ ಎರಡು ಸಾಮಾಜಿಕ ಪ್ರಭೇದಗಳೂ ಇದೇ ರೀತಿಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ತೋರಿಸುತ್ತವೆ. ಉದಾಹರಣೆಗಾಗಿ, ಮೇಲ್ವರ್ಗದ ಪ್ರಭೇದ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳಲ್ಲಿ ಎಕಾರದಲ್ಲಿ ಕೊನೆಗೊಳ್ಳುವ ಕ್ರಿಯಾಪದ ಗಳು ಇಕಾರದಲ್ಲಿ ಕೊನೆಗೊಳ್ಳುವಂತೆ ಮಾಡುತ್ತವೆ, ಆದರೆ ಪೂರ್ವ ಪ್ರದೇಶ ದಲ್ಲಿ ಮಾಡುವುದಿಲ್ಲ. ಪಶ್ಚಿಮ ಪ್ರದೇಶದಲ್ಲಿ ಮೊದಲಿಂದಲೇನೇ ಇಕಾರದಲ್ಲಿ ಕೊನೆಗೊಳ್ಳುತ್ತಿದ್ದ ಕ್ರಿಯಾಪದಗಳು ಎಕಾರ ಇಕಾರವಾದುದರಿಂದ ಸಿದ್ಧವಾದ

೧೪೬


ಕನ್ನಡದ ಉಪಭಾಷೆಗಳು

ಕ್ರಿಯಾಪದಗಳಿಂದ ಅವುಗಳ ಮೊದಲನೇ ಸ್ವರದಲ್ಲಿ ಭಿನ್ನವಾಗಿವೆ, ಆದರೆ, ಮಧ್ಯ ಪ್ರದೇಶದಲ್ಲಿ ಇಂತಹ ವ್ಯತ್ಯಾಸವಿಲ್ಲ.

ಕೆಳವರ್ಗದವರಲ್ಲಿ ಬಳಕೆಯಲ್ಲಿರುವ ಕನ್ನಡದ ಪ್ರಭೇದ ಮಧ್ಯ ವರ್ಗದವರ ಪ್ರಭೇದದಲ್ಲಿ ಕಾಣಿಸುವ ವೈಶಿಷ್ಟ್ಯಗಳೆಲ್ಲವನ್ನೂ ಪಡೆದಿರುತ್ತದೆ. ಇದಲ್ಲದೆ, ಅದರಲ್ಲಿ ಅದರವೇ ಆದ ಬೇರೆ ಕೆಲವು ವೈಶಿಷ್ಟ್ಯಗಳೂ ಸೇರಿಕೊಂಡಿವೆ. ಆದರೆ, ಈ ವೈಶಿಷ್ಟ್ಯಗಳು ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಿಸುತ್ತಿದ್ದು, ಅವುಗಳ ನಿಜವಾದ ವ್ಯಾಪ್ತಿಯಂತಹದು ಎಂಬುದನ್ನು ತಿಳಿಯಲು ಇದಕ್ಕಿಂತಲೂ ಹೆಚ್ಚು ವಿಸ್ತಾರವಾದ ಪರಿಶೀಲನೆಯನ್ನು ನಡೆಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಕೆ.ಆರ್.ನಗರ ತಾಲೂಕಿನ ಕೆಳವರ್ಗದವರ ಮಾತಿನಲ್ಲಿ ಕಕಾರ ಮತ್ತು ಗಕಾರಗಳು, ಇ, ಈ, ಎ ಮತ್ತು ಏ ಸ್ವರಗಳು ಬಳಿಕ ಬಂದಾಗ, ಅನುಕ್ರಮವಾಗಿ ಚಕಾರ ಮತ್ತು ಜಕಾರಗಳಾಗಿ ಮಾರ್ಪಟ್ಟಿವೆ (ಕಿವಿ>ಚಿವಿ, ಕೀಲು>ಚೀಲು, ಕೆಲಸ>ಚೆಲ್ಸ, ಕೇಳು>ಬೇಳು; ಗಿಡ>ಜಿಡ, ಗೀರು>ಜೀರು, ಗೆಲ್ಲು>ಜೆಲ್ಲು, ಗೇಣು>ಜೇಣು). ಈ ಬದಲಾವಣೆಯ ವ್ಯಾಪ್ತಿ ಪಶ್ಚಿಮ ಪ್ರದೇಶದಲ್ಲಿ ಹೇಗಿದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಕೆಳವರ್ಗದವರ ಮಾತಿನಲ್ಲೇನೇ, ಚಾಮರಾಜನಗರ ತಾಲೂಕಿನ ದಕ್ಷಿಣ ಪ್ರದೇಶದಲ್ಲಿ ನಕಾರ ಣಕಾರವಾಗಿರುವುದು ಕಂಡುಬರುತ್ತದೆ (ಅನ್ನ>ಅಣ್ಣ, ನಿನ್ನೆ>ನಿಣ್ಣೆ, ಬನ್ನಿ>ಬಣ್ಣಿ, ಆನೆ>ಆಣೆ). ಈ ಬದಲಾವಣೆಯದೂ ವ್ಯಾಪ್ತಿ ಮತ್ತು ಸ್ವರೂಪಗಳು ಎಂತಹವು ಎಂಬುದು ಸ್ಪಷ್ಟವಾಗಿಲ್ಲ.

ಕಾಡುಕುರುಬರ ಕನ್ನಡ

ಮೈಸೂರಿನ ಪಶ್ಚಿಮ ಪ್ರದೇಶದಲ್ಲಿ ಮೇಲೆ ವಿವರಿಸಿದ ಸಮಾಜಗಳಿಗಿಂತ ಭಿನ್ನ ವಾಗಿರುವ ಕಾಡುಕುರುಬ ಎಂಬ ಪಂಗಡವೂ, ಪೂರ್ವ ಪ್ರದೇಶದಲ್ಲಿ ಸೊಲಿಗ ಎಂಬ ಪಂಗಡವೂ ಇದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಇವುಗಳಲ್ಲಿ ಸೊಲಿಗ ಎಂಬ ಪಂಗಡ ಹಳೆಗನ್ನಡದ ಕಾಲದಲ್ಲೇನೇ ಕವಲೊಡೆದ ಪಂಗಡ ವಿರಬೇಕೆಂಬುದನ್ನು ನಾವು ಮೇಲೆ ನೋಡಿರುವೆವು. ಕಾಡುಕುರುಬ ಪಂಗಡದ ಕನ್ನಡವೂ ಇತರ ಕನ್ನಡ ಪ್ರಭೇದಗಳಿಗಿಂತ ಹಲವು ವಿಷಯಗಳಲ್ಲಿ ಬೇರಾಗಿದೆ.

ಉದಾಹರಣೆಗಾಗಿ, ಈ ಪ್ರಭೇದದಲ್ಲಿ ಎ ಮತ್ತು ಏ ಸ್ವರಗಳು ಅನುಕ್ರಮ ವಾಗಿ ಅ ಮತ್ತು ಆ ಸ್ವರಗಳಾಗುತ್ತವೆ; ಆದರೆ, ಈ ಬದಲಾವಣೆ ಅವುಗಳ ಬಳಿಕ ಟ್, ಡ್, ಣ್ ಮತ್ತು ಳ್ ವ್ಯಂಜನಗಳು ಬಂದಿರುವಲ್ಲಿ ನಡೆಯುವುದೇ ಜಾಸ್ತಿ (ಎಣ್ಣೆ>ಅಣ್ಣೆ, ಹೆಣ್ಣು>ಅಣ್ಣು, ಹೇಳು>ಆಳು, ಬೇಡ>ಬಾಡ).

ಮಕಾರದ ಅನಂತರ ಒ ಮತ್ತು ಓ ಸ್ವರಗಳು ಅನುಕ್ರಮವಾಗಿ ಅ ಮತ್ತು ಆ ಸ್ವರಗಳಾಗಿ ಬದಲಾಗುವುದು ಈ ಪ್ರಭೇದದ ಇನ್ನೊಂದು ವೈಶಿಷ್ಟ್ಯ (ಮೊಟ್ಟೆ>ಮಟ್ಟೆ, ಮೊಳೆ>ಮಳೆ, ಮೋಡ>ಮಾಡ).

೧೪೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಇಂತಹವೇ ಇಲ್ಲವೇ ಇದಕ್ಕಿಂತಲೂ ಆಳವಾದ ಮತ್ತು ವಿಸ್ತಾರವಾದ ಪರಿಶೀಲನೆಯನ್ನು ನಡೆಸಿ, ಅಲ್ಲಿ ಬಳಕೆ ಯಲ್ಲಿರುವ ಕನ್ನಡದಲ್ಲಿ ಎಂತಹ ವೈಶಿಷ್ಟ್ಯಗಳೆಲ್ಲ ಕಾಣಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಈ ರೀತಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪರಿಶೀಲನೆ ನಡೆಸಿದ ಬಳಿಕ, ಅದರಿಂದ ಸಿದ್ಧವಾಗುವ ಪ್ರಭೇದಗಳನ್ನೆಲ್ಲ ಒಟ್ಟು ಸೇರಿಸಿ, ಕನ್ನಡಕ್ಕೆ ಎಂತಹ ಪ್ರಭೇದ ಇಲ್ಲವೇ ಉಪಭಾಷೆಗಳೆಲ್ಲ ಇವೆ ಎಂಬು ದನ್ನು, ಮತ್ತು ಈ ಪ್ರಭೇದಗಳ ವ್ಯಾಪ್ತಿಯೇನು, ಅವುಗಳ ನಡುವೆ ಎಂತಹ ವ್ಯತ್ಯಾಸಗಳೆಲ್ಲ ಇವೆ, ಅವು ಚಾರಿತ್ರಿಕವಾಗಿ ಎಷ್ಟು ವರ್ಷಗಳಷ್ಟು ಹಿಂದೆ ಕವಲೊಡೆದಿರಬಹುದು ಎಂಬುದನ್ನು ನಿರ್ಧರಿಸಬಹುದು.

ಪರಿಶೀಲನೆಯ ಅವಶ್ಯಕತೆ

ಸಾಮಾನ್ಯವಾಗಿ, ಮಾತಿನಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಪ್ರಭೇದಗಳನ್ನೆಲ್ಲ ‘ಅಶುದ್ಧ’ ರೂಪಗಳೆಂದೂ, ಬರಹದಲ್ಲಿ ಕಾಣಿಸುವ ರೂಪವನ್ನು ‘ಶುದ್ಧ’ ರೂಪ ವೆಂದೂ ಹೇಳುವುದು ರೂಢಿ. ಬರಹದಲ್ಲಿ ಎಂತಹ ಪ್ರಭೇದವನ್ನು ಬಳಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವುದಕ್ಕಾಗಿ ಈ ರೀತಿ ಶುದ್ಧ ಮತ್ತು ಅಶುದ್ಧ ಎಂಬುದಾಗಿ (ಇಲ್ಲವೇ ಬೇರೆ ಯಾವುದಾದರೂ ಪದದ ಬಳಕೆಯ ಮೂಲಕ) ಕನ್ನಡ ಪ್ರಭೇದಗಳನ್ನು ಪ್ರತ್ಯೇಕಿಸುವುದು ಅವಶ್ಯವಾದರೂ, ಶುದ್ಧಾಶುದ್ಧವೆಂಬ ಪದಗಳ ಹಿಂದಿರುವ ಅರ್ಥ ಇವುಗಳ ನಡುವಿರುವ ವ್ಯತ್ಯಾಸಕ್ಕೆ ಅನ್ವಯಿಸುವು ದಿಲ್ಲವೆಂಬುದನ್ನು ಗಮನಿಸುವುದು (ಮತ್ತು ವಿದ್ಯಾರ್ಥಿಗಳಿಗೆ ತಿಳಿಹೇಳುವುದು) ಅವಶ್ಯ.

ಮೇಲೆಯೇ ಸೂಚಿಸಿದಂತೆ, ಒಂದು ನುಡಿಯ ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪ್ರಭೇದಗಳಲ್ಲಿ ಯಾವುದು ಬೇಕಿದ್ದರೂ, ಬರಹದಲ್ಲಿ ಬಳಕೆ ಯಾಗುವ ಮೂಲಕ, ಬರಹದ ಪ್ರಭೇದವಾಗಬಲ್ಲುದು. ಇದಲ್ಲದೆ, ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಪ್ರಭೇದಗಳು ಬರಹದ ಪ್ರಭೇದವಾಗಿ ಬಳಕೆಗೆ ಬರ ಬಲ್ಲುವು. ಎಂದರೆ, ಒಂದು ಕಾಲದಲ್ಲಿ ‘ಅಶುದ್ಧ’ವೆಂದೆನಿಸಿದ್ದ ಪ್ರಭೇದ ಇನ್ನೊಂದು ಕಾಲ ದಲ್ಲಿ ‘ಶುದ್ಧ’ವೆಂದೆನಿಸಬಲ್ಲುದು.

ಈ ಕಾರಣಕ್ಕಾಗಿ, ಕನ್ನಡದ ಪ್ರಭೇದಗಳ ನಡುವೆ ಕಾಣಿಸುವ ಈ ವೈವಿಧ್ಯತೆ ಕನ್ನಡದ ಭಾಷಾಸಂಪತ್ತು ಎಂಬುದಾಗಿ ನಾವು ತಿಳಿದುಕೊಳ್ಳಬೇಕಾಗಿದೆ. ಈ ವೈವಿಧ್ಯತೆಯನ್ನು ಪರಿಶೀಲಿಸುವುದೆಂದರೆ, ನಿಜಕ್ಕೂ ಕನ್ನಡದ ಭಾಷಾಸಂಪತ್ತನ್ನು ಪರಿಶೀಲಿಸಿದ ಹಾಗೆ. ಹಳೆಗನ್ನಡ-ನಡುಗನ್ನಡಗಳಿಗೂ ಹೊಸಗನ್ನಡಕ್ಕೂ ನಡು ವಿರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಹೇಗೆ ಅವಶ್ಯವೋ, ಹಾಗೆಯೇ ಕನ್ನಡದ ಬೇರೆ ಬೇರೆ ಸಾಮಾಜಿಕ ಮತ್ತು ಪ್ರಾದೇಶಿಕ ಪ್ರಭೇದಗಳ ನಡುವಿರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದೂ ಅವಶ್ಯವೇ.

೧೪೮


ಕನ್ನಡದ ವ್ಯಾಕರಣ ಪರಂಪರೆ

ಈ ಪ್ರಭೇದಗಳ ನಡುವೆ ಅವು ಬಳಸುವ ಪದಗಳಲ್ಲಿಯೂ ಹಲವಾರು ವ್ಯತ್ಯಾಸಗಳಿವೆ. ಕೆಲವು ಪ್ರಭೇದಗಳಲ್ಲಿ ಮಾತ್ರವೇ ಕಾಣಿಸುವಂತಹ ಪದಗಳೂ ಹಲವಿವೆ. ಇವನ್ನೆಲ್ಲ ಒಟ್ಟು ಸೇರಿಸಿ, ಕನ್ನಡದ ಉಪಭಾಷಾಕೋಶವೊಂದನ್ನು ತಯಾರಿಸಿದೆವಾದರೆ, ಪದಗಳ ಮಟ್ಟಿಗೆ ನಿಜಕ್ಕೂ ಕನ್ನಡದ ಭಾಷಾಸಂಪತ್ತು ಎಂತಹದು ಎಂಬ ವಿಷಯ ಸ್ಪಷ್ಟವಾದೀತು.

ಇದೇ ರೀತಿಯಲ್ಲಿ, ಈ ಪ್ರಭೇದಗಳ ನಡುವೆ ಅವು ಬಳಸುವ ವ್ಯಾಕರಣದ ಮಟ್ಟಿಗೂ ಹಲವು ವ್ಯತ್ಯಾಸಗಳಿವೆ. ಇವನ್ನೂ ಒಟ್ಟು ಸೇರಿಸಿ, ಪದಗಳನ್ನು ಮತ್ತು ವಾಕ್ಯಗಳನ್ನು ರಚಿಸುವಲ್ಲಿ ಈ ಪ್ರಭೇದಗಳು ಹೇಗೆ ಬೇರೆ ಬೇರೆ ತಂತ್ರಗಳನ್ನು ಬಳಸುತ್ತಿವೆ ಎಂಬುದನ್ನು ತಿಳಿಯಬಹುದು. ಕನ್ನಡ ಭಾಷೆಯ ಸ್ವರೂಪವೆಂತಹದು ಎಂಬ ವಿಷಯ ಇಂತಹ ಕನ್ನಡ ಪ್ರಭೇದಗಳ ಪರಿಶೀಲನೆಯಿಂದ ಮಾತ್ರವೇ ಸ್ಪಷ್ಟವಾಗಬಲ್ಲುದು.

೪.೩ ಕನ್ನಡದ ವ್ಯಾಕರಣ ಪರಂಪರೆ

ಕನ್ನಡದ ವ್ಯಾಕರಣದ ಅಧ್ಯಯನಕ್ಕೆ ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ದೀರ್ಘವಾದ ಚರಿತ್ರೆಯಿದೆ. ಈ ಅವಧಿಯಲ್ಲಿ ಕನ್ನಡ ವ್ಯಾಕರಣದ ಮೇಲೆ ಬೇರೆ ಬೇರೆ ರೀತಿಯ ಮತ್ತು ಬೇರೆ ಬೇರೆ ಗಾತ್ರದ ನೂರಕ್ಕೂ ಮಿಕ್ಕಿ ಗ್ರಂಥಗಳು ಮತ್ತು ಲೇಖನಗಳು ರಚಿತವಾಗಿವೆ. ಇವು ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಷ್, ಸಂಸ್ಕೃತ, ರಶ್ಯನ್ ಮೊದಲಾದ ಬೇರೆ ಕೆಲವು ಭಾಷೆಗಳಲ್ಲೂ ರಚಿತವಾಗಿವೆ. ಈ ವ್ಯಾಕರಣಗಳು ಸೂತ್ರರೂಪದಲ್ಲಿ, ಸೂತ್ರದ ವ್ಯಾಖ್ಯಾನ ರೂಪದಲ್ಲಿ, ಪ್ರಶ್ನೆ- ಉತ್ತರ ರೂಪದಲ್ಲಿ, ಪ್ರಬಂಧ ರೂಪದಲ್ಲಿ - ಹೀಗೆ ಬೇರೆ ಬೇರೆ ರೂಪ ಗಳಲ್ಲೂ ರಚಿತವಾಗಿವೆ.

ಕನ್ನಡವನ್ನು ಕಲಿಯಬಯಸುವವರಿಗೆ, ಕನ್ನಡದ ಒಳಗುಟ್ಟನ್ನು ತಿಳಿಯ ಬಯಸುವವರಿಗೆ, ಕನ್ನಡವನ್ನು ಇತರ ದ್ರಾವಿಡ ಇಲ್ಲವೇ ಬೇರೆ ಭಾಷೆಗಳೊಂದಿಗೆ ಹೋಲಿಸಬಯಸುವವರಿಗೆ, ಕನ್ನಡದ ಚರಿತ್ರೆಯನ್ನು ಅರಿಯಬೇಕೆಂದಿರುವವರಿಗೆ

  • ಹೀಗೆ ಬೇರೆ ಬೇರೆ ಉದ್ದೇಶಗಳನ್ನು ಮುಂದಿಟ್ಟುಕೊಂಡು ಬರೆದಿರುವ ವ್ಯಾಕರಣಗಳೂ ಇವುಗಳಲ್ಲಿವೆ.

ಮೂರು ಮುಖ್ಯ ಪರಂಪರೆಗಳು

ಕನ್ನಡ ವ್ಯಾಕರಣದ ಮೇಲೆ ಇಷ್ಟೆಲ್ಲಾ ಗ್ರಂಥಗಳು ಮತ್ತು ಲೇಖನಗಳು ಹೊರ ಬಂದಿವೆಯೆಂಬುದು ನಮಗೆ ಸಂತೋಷವನ್ನು ಮತ್ತು ಹೆಮ್ಮೆಯನ್ನು ತರುವಂತಹ ಸಂಗತಿಯೆಂಬುದೇನೋ ನಿಜ. ಆದರೆ, ನಿಜಕ್ಕೂ ಈ ಗ್ರಂಥಗಳು ಮತ್ತು ಲೇಖನ ಗಳು ಕನ್ನಡ ವ್ಯಾಕರಣದ ಒಳಗುಟ್ಟನ್ನು ತಿಳಿಸಿಕೊಡುವಲ್ಲಿ ಎಷ್ಟರ ಮಟ್ಟಿಗೆ

೧೪೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಸಮರ್ಥವಾಗಿವೆ ಎಂಬುದನ್ನು ಪರಿಶೀಲಿಸುವುದು ಅವಶ್ಯ. ಇದಕ್ಕಾಗಿ ಈ ಗ್ರಂಥ ಗಳನ್ನು ಮತ್ತು ಲೇಖನಗಳನ್ನು ಮೂರು ಮುಖ್ಯ ಪರಂಪರೆಗಳಲ್ಲಿ ರಚಿತವಾದವು ಗಳೆಂದು ವಿಂಗಡಿಸಿಕೊಳ್ಳಬಹುದು.

ಪಾಣಿನಿಯ ಸಂಸ್ಕೃತ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಕೇಶಿರಾಜನ ಶಬ್ದಮಣಿದರ್ಪಣ, ಭಟ್ಟಾಕಳಂಕನ ಶಬ್ದಾನುಶಾಸನ ಮತ್ತು ಇನ್ನಿತರ ಹಲವಾರು ಹಳೆಗನ್ನಡ ವ್ಯಾಕರಣಗಳು, ಮತ್ತು ಅವುಗಳ ಮೇಲೆ ಬರೆದ ವ್ಯಾಖ್ಯಾನಗಳು ಒಂದು ವಿಭಾಗಕ್ಕೆ ಸೇರುತ್ತವೆ. ಆಧುನಿಕ ಕನ್ನಡದ ಮೇಲೂ ಈ ಪರಂಪರೆಯಲ್ಲಿ ಬರೆದ ವ್ಯಾಕರಣಗಳು ಹಲವಿವೆ.

ಹತ್ತೊಂಬತ್ತನೇ ಶತಮಾನದಿಂದ ಈಚೆಗೆ, ಮುಖ್ಯವಾಗಿ ಕ್ರಿಶ್ಚಿಯನ್ ಮಿಶನರಿಗಳು ಇಂಗ್ಲಿಷ್‌ನಲ್ಲಿ ಬರೆದಿರುವ ಕೆಲವು ಹೊಸಗನ್ನಡ ವ್ಯಾಕರಣಗಳು ಯುರೋಪಿನ ವ್ಯಾಕರಣ ಪರಂಪರೆಯಲ್ಲಿ ರಚಿತವಾಗಿದ್ದು ಎರಡನೆಯ ವಿಭಾಗಕ್ಕೆ ಸೇರುತ್ತವೆ.

ಅದರಿಂದೀಚೆಗೆ, ಆಧುನಿಕ ಭಾಷಾವಿಜ್ಞಾನಿಗಳು ರಚಿಸಿರುವ ವ್ಯಾಕರಣ ಗ್ರಂಥಗಳು ಮತ್ತು ಲೇಖನಗಳು ಮುಖ್ಯವಾಗಿ ಅಮೆರಿಕದ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಸಿದ್ಧವಾಗಿದ್ದು, ಮೂರನೆಯ ವಿಭಾಗಕ್ಕೆ ಸೇರುತ್ತವೆ.

ಕನ್ನಡದ ಈ ಮೂರು ರೀತಿಯ ವ್ಯಾಕರಣಗಳಲ್ಲೂ ನಮಗೆ ಕಂಡುಬರುವ ಒಂದು ಮುಖ್ಯವಾದ ಸಂಗತಿಯೇನೆಂದರೆ, ಇವು ಬೇರೆ ಯಾವುದೋ ಒಂದು ಭಾಷೆಯ (ಎಂದರೆ ಸಂಸ್ಕೃತ, ಲ್ಯಾಟಿನ್ ಇಲ್ಲವೇ ಇಂಗ್ಲಿಷ್ ಭಾಷೆಯ) ವ್ಯಾಕರಣ ಪರಂಪರೆಯನ್ನು ಅನುಸರಿಸಲು ಪ್ರಯತ್ನಿಸಿವೆಯಲ್ಲದೆ, ಕನ್ನಡಕ್ಕೆ ಅದರದ್ದೇ ಆದ ಒಂದು ವ್ಯಾಕರಣ ಪರಂಪರೆಯನ್ನು ಸಾಧಿಸಿಕೊಡಲು ಪ್ರಯತ್ನಿ ಸಿಲ್ಲ. ಈ ಎಲ್ಲಾ ವ್ಯಾಕರಣಗಳಲ್ಲೂ ಇದೊಂದು ಎದ್ದು ಕಾಣುವ ಕೊರತೆ.

ಸಂಸ್ಕೃತ, ಲ್ಯಾಟಿನ್ ಮತ್ತು ಇಂಗ್ಲಿಷ್ - ಇವು ಮೂರೂ ಇಂಡೋ ಯುರೋಪಿಯನ್ ಎಂಬ ಒಂದೇ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು. ಇವು ಸ್ವತಂತ್ರ ಭಾಷೆಗಳಾಗಿದ್ದು ಒಂದರಿಂದೊಂದು ಸಾಕಷ್ಟು ಭಿನ್ನವಾಗಿವೆಯಾದರೂ, ಇವುಗಳ ವ್ಯಾಕರಣದ ಮೂಲ ಸೂತ್ರಗಳು ಹೆಚ್ಚು ಕಡಿಮೆ ಒಂದೇ ಆಗಿವೆ; ಹಾಗಾಗಿ, ಈ ಮೂರು ವ್ಯಾಕರಣ ಪರಂಪರೆಗಳು ಹೆಚ್ಚು ಕಡಿಮೆ ಒಂದೇ ವ್ಯಾಕರಣ ಪರಂಪರೆಯ ಮೂರು ಪ್ರಭೇದಗಳೆಂದು ಹೇಳಲು ಸಾಧ್ಯವಿದೆ.

ಕನ್ನಡ ಭಾಷೆ ಇದಕ್ಕಿಂತ ತೀರ ಭಿನ್ನವಾದ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ. ಇದರ ವ್ಯಾಕರಣದ ಮೂಲ ಸೂತ್ರಗಳು ಸಂಸ್ಕೃತ, ಲ್ಯಾಟಿನ್, ಇಂಗ್ಲಿಷ್ ಮೊದಲಾದ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಕಾಣಿಸುವ ವ್ಯಾಕರಣದ ಮೂಲ ಸೂತ್ರಗಳಿಗಿಂತ ತೀರ ಭಿನ್ನವಾದವುಗಳು. ಹಾಗಾಗಿ, ಕನ್ನಡ ವ್ಯಾಕರಣದ ಮೂಲಸೂತ್ರಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸಿಕೊಳ್ಳುವುದು ಅವಶ್ಯ. ಸಂಸ್ಕೃತ ಇಲ್ಲವೇ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಬರೆದ ಗ್ರಂಥಗಳು

೧೫೦

ಕನ್ನಡದ ವ್ಯಾಕರಣ ಪರಂಪರೆ

ಮತ್ತು ಲೇಖನಗಳು ಇಂತಹ ಕನ್ನಡದವೇ ಆದ ವೈಶಿಷ್ಟ್ಯಗಳಿಗೆ ಹೆಚ್ಚಿನ ಗಮನ ಕೊಡಲಾರವು.

ವ್ಯಾಕರಣ ಸಂಬಂಧಗಳು

ಉದಾಹರಣೆಗಾಗಿ, ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿತವಾಗಿರುವ ಗ್ರಂಥಗಳಲ್ಲಿ ಕರ್ತೃ, ಕರ್ಮ, ಕರಣ ಮೊದಲಾದ ‘ಕಾರಕ’ಗಳಿಗೆ ಮಹತ್ವದ ಸ್ಥಾನವಿದೆ. ಇಂತಹ ಕಾರಕಗಳು ಸಂಸ್ಕೃತದ ವಾಕ್ಯರಚನೆಯನ್ನು ಸರಿಯಾಗಿ ವರ್ಣಿಸಿ ಹೇಳಲು ಅವಶ್ಯವಾದ ಕಾರಣ, ಅವಕ್ಕೆ ಆ ಭಾಷೆಯ ವ್ಯಾಕರಣ ಪರಂಪರೆಯಲ್ಲಿ ಪ್ರಧಾನವಾದ ಸ್ಥಾನವನ್ನು ಕೊಡುವುದು ಉಚಿತವೆಂದೇ ಹೇಳಬಹುದು.

ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಪರಂಪರೆಯಲ್ಲಿ ಸಿದ್ಧ ವಾಗಿರುವ ಗ್ರಂಥಗಳಲ್ಲಿ ಇಂತಹವೇ ಆದ ಸಬ್ಜೆಕ್ಟ್, ಡೈರೆಕ್ಟ್ ಆಬ್ಜೆಕ್ಟ್, ಎಂಬಂತಹ ‘ವ್ಯಾಕರಣ ಸಂಬಂಧಗಳು’ ಮಹತ್ವದ ಸ್ಥಾನ ಪಡೆದಿವೆ. ಈ ಭಾಷೆಗಳಲ್ಲಿ ಬರುವ ವಿಭಕ್ತಿ ಪ್ರತ್ಯಯ ಇಲ್ಲವೇ ಉಪಸರ್ಗಗಳಿಗೆ ನೇರವಾಗಿ ಅರ್ಥ ಹೇಳಲು ಸಾಧ್ಯವಿಲ್ಲವಾದ ಕಾರಣ, ವಾಕ್ಯಗಳಲ್ಲಿ ಅವು ಎಂತಹ ಕಾರ್ಯ ಗಳನ್ನು ನಡೆಸುತ್ತವೆ ಎಂಬುದನ್ನು ತಿಳಿಸಲು ಇಂತಹ ವ್ಯಾಕರಣ ಸಂಬಂಧಗಳ ಅವಶ್ಯಕತೆಯಿದೆ.

ಆದರೆ, ಕನ್ನಡದ ವಾಕ್ಯರಚನೆಯಲ್ಲಿ ಈ ಸಮಸ್ಯೆಯಿಲ್ಲ. ಅದರ ವಿಭಕ್ತಿ ಪ್ರತ್ಯಯಗಳಿಗೆ ನೇರವಾಗಿ ಅರ್ಥದೊಡನೆ ಸಂಬಂಧವನ್ನು ಕಲ್ಪಿಸಿಕೊಡಲು ಸಾಧ್ಯ ವಿದೆ. ವಾಕ್ಯವು ತಿಳಿಸುವ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದವುಗಳ ಕಾರ್ಯವೇನು ಎಂಬುದನ್ನು ಈ ವಿಭಕ್ತಿ ಪ್ರತ್ಯಯಗಳು ನೇರ ವಾಗಿ ಸೂಚಿಸುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ, ಕನ್ನಡದ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯಗಳ ಅರ್ಥವೇನೆಂಬುದನ್ನು ತಿಳಿಸಲು ಕಾರಕಗಳನ್ನಾಗಲಿ ಇಲ್ಲವೇ ಇತರ ವ್ಯಾಕರಣ ಸಂಬಂಧಗಳನ್ನಾಗಲಿ ಬಳಸುವ ಅವಶ್ಯಕತೆಯಿಲ್ಲ.

ಸಂಸ್ಕೃತ, ಇಂಗ್ಲಿಷ್ ಮೊದಲಾದ ಇತರ ಭಾಷೆಗಳ ವ್ಯಾಕರಣ ಪರಂಪರೆ ಯಲ್ಲಿ ಬರೆದ ಕನ್ನಡ ವ್ಯಾಕರಣಗಳು ಇಂತಹ ಅನವಶ್ಯವಾದ ಕಾರಕಗಳನ್ನು ಇಲ್ಲವೇ ವ್ಯಾಕರಣ ಸಂಬಂಧಗಳನ್ನು ಕನ್ನಡದ ಮೇಲೆ ಹೇರಿ, ಅದರ ವ್ಯಾಕರಣ ತುಂಬಾ ಕ್ಲಿಷ್ಟವಾಗುವಂತೆ ಮಾಡಿವೆ.

ಉದಾಹರಣೆಗಾಗಿ, ಯುರೋಪಿಯನ್ ಭಾಷೆಗಳ ವ್ಯಾಕರಣಗಳಲ್ಲಿ ಬಳಕೆ ಯಾಗುವ ‘ಸಬ್ಜೆಕ್ಟ್’ ಎಂಬ ವ್ಯಾಕರಣ ಸಂಬಂಧವನ್ನು ಕನ್ನಡ ವ್ಯಾಕರಣದಲ್ಲೂ ಅಳವಡಿಸಹೊರಟ ಭಾಷಾವಿಜ್ಞಾನಿಗಳು ಕನ್ನಡದ ನನಗೆ ಮೂರು ಕತೆ ಗೊತ್ತಿದೆ ಎಂಬಂತಹ ವಾಕ್ಯಗಳಲ್ಲಿ ಯಾವುದನ್ನು (ನನಗೆ ಎಂಬುದನ್ನೋ, ಕತೆ ಎಂಬುದನ್ನೋ) ಸಬ್ಜೆಕ್ಟ್ ಎಂಬುದಾಗಿ ಪರಿಗಣಿಸಬೇಕು ಎಂಬ ವಿಷಯದಲ್ಲಿ

೧೫೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಹಲವು ಸಮಸ್ಯೆಗಳನ್ನೆದುರಿಸಬೇಕಾಗಿದೆ. ಕನ್ನಡಕ್ಕೆ ಅದರದೇ ಆದ ವ್ಯಾಕರಣ ಪರಂಪರೆಯೊಂದನ್ನು ಸಾಧಿಸಿಕೊಟ್ಟಲ್ಲಿ ಇಂತಹ ತೊಡಕುಗಳು ಏಳುವುದಿಲ್ಲ.

ಗುಣಪದಗಳು

ಕನ್ನಡದ ವಾಕ್ಯರಚನೆಯಲ್ಲಿ ಉದ್ದ, ಅಗಲ, ದೊಡ್ಡ ಮೊದಲಾದ ಗುಣಪದ ಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ; ಅವು ನಾಮಪದ ಮತ್ತು ಕ್ರಿಯಾಪದ ಗಳಿಗಿಂತ ಭಿನ್ನವಾದ ಬೇರೆಯೇ ಒಂದು ಪದವರ್ಗಕ್ಕೆ ಸೇರುತ್ತವೆ. ಕನ್ನಡ ಭಾಷೆಯ ಮೇಲೆ ರಚಿತವಾಗಿರುವ ವ್ಯಾಕರಣಗಳು ಕನ್ನಡದ ಈ ವೈಶಿಷ್ಟ್ಯವನ್ನು ಸ್ಪಷ್ಟವಾಗಿ ವಿವರಿಸಿ ಹೇಳುವುದು ಅವಶ್ಯ.

ಸಂಸ್ಕೃತದ ವಾಕ್ಯರಚನೆ ಈ ವಿಷಯದಲ್ಲಿ ಕನ್ನಡಕ್ಕಿಂತ ತೀರ ಭಿನ್ನ ವಾದುದು. ಸಂಸ್ಕೃತದಲ್ಲಿ ಇಂತಹ ಗುಣವಾಚಕ ಪದಗಳಿಗೆ ನಾಮಪದಗಳಿಗಿಂತ ಭಿನ್ನವಾದ ಸ್ಥಾನವಿಲ್ಲ. ಅವು ನಾಮಪದಗಳ ಹಾಗೆಯೇ ಲಿಂಗ, ವಚನ ಮತ್ತು ವಿಭಕ್ತಿ ಪ್ರತ್ಯಯಗಳೊಂದಿಗೆ ಬರುತ್ತಿದ್ದು, ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲ ಬಲ್ಲುವು. ಕನ್ನಡ ವಾಕ್ಯಗಳಲ್ಲಿ ಕಾಣಿಸುವ ಹಾಗೆ, ಅವು ನಾಮಪದಗಳನ್ನು ಅವಲಂಬಿಸಿಕೊಂಡಿರುವುದಿಲ್ಲ. ಸಂಸ್ಕೃತ ಭಾಷೆಯ ಈ ವೈಶಿಷ್ಟ್ಯವನ್ನು ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿಸಿರುವ ಗ್ರಂಥಗಳು ಸರಿಯಾಗಿ ಪ್ರತಿ ಬಿಂಬಿಸುತ್ತವೆ.

ಆದರೆ, ಪಾಣಿನಿಯ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಕನ್ನಡ ವ್ಯಾಕರಣಗಳು ಕನ್ನಡದ್ದೇ ಆದ ವೈಶಿಷ್ಟ್ಯವನ್ನು ವರ್ಣಿಸುವ ಬದಲು, ಅದರ ವಾಕ್ಯರಚನೆ ಸಂಸ್ಕೃತದ ವಾಕ್ಯರಚನೆಯ ಹಾಗೆಯೇ ಇದೆಯೆಂಬ ತಪ್ಪು ಕಲ್ಪನೆ ಬರುವಂತೆ ಮಾಡುತ್ತವೆ. ಸಂಸ್ಕೃತದ ಗುಣಧರ್ಮವನ್ನು ಕನ್ನಡದ ಮೇಲೆ ಹೇರಹೋಗಿ, ಕನ್ನಡ ವ್ಯಾಕರಣ ಅನವಶ್ಯಕವಾಗಿ ಹೆಚ್ಚು ಕ್ಲಿಷ್ಟವಾಗುವಂತೆ ಮಾಡುತ್ತವೆ.

ಕನ್ನಡ ಭಾಷೆ ಇಂತಹ ಹಲವಾರು ವಿಷಯಗಳಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಿಗಿಂತ ತೀರ ಭಿನ್ನವಾಗಿದೆ; ಹಾಗಾಗಿ, ಅದರ ವ್ಯಾಕರಣವನ್ನು ಸಂಸ್ಕೃತ ಇಲ್ಲವೇ ಇಂಗ್ಲಿಷ್ ಭಾಷೆಯ ವ್ಯಾಕರಣ ಪರಂಪರೆಯಲ್ಲಿ ಬರೆಯ ಹೋದಾಗ, ಆ ವ್ಯಾಕರಣ ಅನವಶ್ಯಕವಾಗಿ ಹೆಚ್ಚು ಕ್ಲಿಷ್ಟವಾಗುತ್ತದೆ.

ಕನ್ನಡಕ್ಕೆ ಅದರದ್ದೇ ಆದ ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ತನ್ನದೇ ವ್ಯಾಕರಣ ಪರಂಪರೆಯಲ್ಲಿ ರಚಿತವಾದ ಗ್ರಂಥಗಳು ಕನ್ನಡದ ವಾಕ್ಯರಚನೆಯನ್ನು ಸರಳವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ವಿವರಿಸಿ ಹೇಳಬಲ್ಲುವು. ಕನ್ನಡ ವ್ಯಾಕರಣ ವನ್ನು ವರ್ಣಿಸಹೊರಡುವವರೆಲ್ಲ ಈ ದಿಕ್ಕಿನಲ್ಲಿ ಸಂಶೋಧನೆ ನಡೆಸುವುದು ಅವಶ್ಯ.

೧೫೨


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

೪.೪ ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಕಳೆದ ಇಪ್ಪತ್ತನೇ ಶತಮಾನದಲ್ಲಿ ಕನ್ನಡ ವ್ಯಾಕರಣದ ಮೇಲೆ ಎಂತಹ ಸಂಶೋಧನೆಗಳೆಲ್ಲ ನಡೆದಿದ್ದುವು ಎಂಬುದನ್ನು ತಿಳಿಯುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಆದರೆ, ಈ ಪರಿಶೀಲನೆಯನ್ನು ನಡೆಸುವ ಮೊದಲು ಸಂಶೋಧನೆಯೆಂದರೇನು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಯಿದೆ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧಕರು ಬಹಳ ಮಂದಿ ಇರುವ ರಾದರೂ ಜಾಗತಿಕ ಮಟ್ಟದ ಸಂಶೋಧನೆಗಳು ನಮ್ಮಲ್ಲಿ ಹೆಚ್ಚೇನೂ ನಡೆಯು ತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದಕ್ಕೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಮಾರ್ಗದರ್ಶನ ಮಾಡುವವರಲ್ಲಿ ಹೆಚ್ಚಿನವರೂ ಸಂಶೋಧನೆ ಎಂದರೇನು, ಸಂಶೋಧನೆ ಮತ್ತು ಕಲಿಯುವಿಕೆಗಳ ನಡುವೆ ಎಂತಹ ವ್ಯತ್ಯಾಸ ವಿದೆ ಎಂಬುದನ್ನು ಸರಿಯಾಗಿ ತಿಳಿಯದಿರುವುದೇ ಮುಖ್ಯ ಕಾರಣವೆಂದು ನನಗೆ ಅನಿಸುತ್ತದೆ.

ಈ ವ್ಯತ್ಯಾಸವನ್ನು ಮೊದಲಿಗೆ ಸ್ವಲ್ಪ ವಿವರಿಸಿ, ಆಮೇಲೆ ಕನ್ನಡ ವ್ಯಾಕರಣದ ಮೇಲೆ ಕಳೆದ ಶತಮಾನದಲ್ಲಿ ನಡೆದ ಸಂಶೋಧನೆಗಳು ಹೇಗೆ ದಾರಿ ತಪ್ಪಿವೆ ಎಂಬುದನ್ನು ತೋರಿಸಬಯಸುತ್ತೇನೆ.

ಕಲಿಯುವಿಕೆ ಮತ್ತು ಸಂಶೋಧನೆ

ಯಾವುದಾದರೂ ಒಂದು ವಿಷಯವನ್ನು ಕಲಿಯುವುದಕ್ಕೂ, ಅದರ ಮೇಲೆ ಸಂಶೋಧನೆ ಮಾಡುವುದಕ್ಕೂ ನಡುವೆ ಕೆಲವು ಮುಖ್ಯವಾದ ವ್ಯತ್ಯಾಸಗಳಿವೆ: ನಾವು ಎತ್ತಿಕೊಂಡ ವಿಷಯದ ಮೇಲೆ ಬೇರೆ ಬೇರೆ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ಮತ್ತು ಅವನ್ನು ಓದಿ ತಿಳಿದುಕೊಂಡಿರುವ ವಿದ್ವಾಂಸರಲ್ಲಿ ಸಾಕಷ್ಟು ಮಾಹಿತಿಗಳು ಸಂಗ್ರಹವಾಗಿರುತ್ತವೆ. ಅಂತಹ ಪುಸ್ತಕ ಮತ್ತು ಪತ್ರಿಕೆಗಳನ್ನು ಓದಿ, ವಿದ್ವಾಂಸರು ಹೇಳುವುದನ್ನು ಕೇಳಿ, ಆ ವಿಷಯದ ಕುರಿತು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಕಲಿಯುವುದು ಎಂದು ಹೆಸರು.

ಸಂಶೋಧನೆ ಎಂಬುದು ಇದಕ್ಕಿಂತ ತೀರ ಭಿನ್ನವಾದುದು: ಒಂದು ವಿಷಯದ ಕುರಿತು ಸಮಾಜದಲ್ಲಿ ಸಂಗ್ರಹವಾಗಿರುವ ಮಾಹಿತಿಯಲ್ಲಿ ತಪ್ಪುಗಳು ಇಲ್ಲವೇ ಅಸಾಂಗತ್ಯಗಳು ಏನಾದರೂ ಇವೆಯೇ, ಮತ್ತು ಯಾರಿಗೂ ತಿಳಿಯದಿರುವಂತಹ ಹೊಸ ಸಂಗತಿಗಳೇನಾದರೂ ಇವೆಯೇ ಎಂಬುದನ್ನು ಕಂಡುಹಿಡಿಯುವುದೇ ಸಂಶೋಧನೆ.

ಈ ವ್ಯತ್ಯಾಸದ ಪ್ರಕಾರ, ಒಂದು ವಿಷಯವನ್ನು ನಮಗೆ ಕಲಿಯಬೇಕೆಂದಿದ್ದಲ್ಲಿ ನಮಗೆ ಅಧ್ಯಾಪಕರ ಸಹಾಯ ಬೇಕು; ಆದರೆ, ಒಂದು ವಿಷಯದ ಕುರಿತು

೧೫೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಸಂಶೋಧನೆ ನಡೆಸಬೇಕೆಂದಿದ್ದಲ್ಲಿ, ಅದಕ್ಕೆ ನಮಗೆ ‘ಮಾರ್ಗದರ್ಶಕರ’ ಸಹಾಯ ಬೇಕಲ್ಲದೆ ಅಧ್ಯಾಪಕರ ಸಹಾಯ ಬೇಕಾಗಿಲ್ಲ. ಕಲಿಯುವವರ ಮಟ್ಟಿಗೆ ಅಧ್ಯಾಪಕರೆಂದರೆ ಎಲ್ಲವನ್ನೂ ತಿಳಿದವರು; ಕಲಿಯುವವರಲ್ಲಿ ಏಳುವ ಸಂಶಯ ಗಳನ್ನೆಲ್ಲ ನಿವಾರಿಸುವ ಶಕ್ತಿ ಅವರಿಗಿದೆ; ಹಾಗಾಗಿ, ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಕಿವಿಗೊಟ್ಟು ಕೇಳಿ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಕಲಿಯುವವರು ಮಾಡಬೇಕಾಗಿರುವ ಮುಖ್ಯ ಕೆಲಸ.

ಆದರೆ, ಸಂಶೋಧಕರ ಮಟ್ಟಿಗೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ; ಮಾರ್ಗದರ್ಶಕರು ಅವರಿಗೆ ಯಾವ ರೀತಿಯಲ್ಲಿ ಸಂಶೋಧನೆ ಮಾಡಬೇಕು ಎಂಬುದನ್ನು ತಿಳಿಸಬಲ್ಲರಲ್ಲದೆ, ಸಂಶೋಧನೆಯ ಫಲಿತಾಂಶ ಏನಿರಬಹುದು, ಇಲ್ಲವೇ ಏನಿರಬೇಕು ಎಂಬುದನ್ನು ತಿಳಿಸಲಾರರು. ಅದನ್ನು ತಮ್ಮ ಸಂಶೋಧನೆ ಗಳ ಮೂಲಕ ಹೊಸದಾಗಿ ಕಂಡುಹಿಡಿಯುವುದೇ ಸಂಶೋಧಕರ ಮುಖ್ಯ ಕೆಲಸ.

ಈ ರೀತಿ, ಯಾರಿಗೂ ಗೊತ್ತಿಲ್ಲದಿರುವ ಸಂಗತಿಗಳನ್ನು ಕಂಡುಹಿಡಿಯುವ ಮೂಲಕ, ಮತ್ತು ತಪ್ಪಾಗಿ ತಿಳಿದುಕೊಂಡಿರುವ ಸಂಗತಿಗಳನ್ನು ಸರಿಪಡಿಸುವ ಮೂಲಕ ಸಮಾಜದ ಜ್ಞಾನರಾಶಿಯನ್ನು ಹೆಚ್ಚಿಸುವುದೇ ಸಂಶೋಧಕರ ಕೆಲಸ.

ಕಲಿಯುವಿಕೆಗೂ ಸಂಶೋಧನೆಗೂ ನಡುವೆ ವ್ಯತ್ಯಾಸವಿರುವ ಹಾಗೆ, ಕಲಿಸುವ ಅಧ್ಯಾಪಕರಿಗೂ ಸಂಶೋಧನೆಗೆ ದಾರಿ ತೋರಿಸುವ ಮಾರ್ಗದರ್ಶಕರಿಗೂ ನಡುವೆ ವ್ಯತ್ಯಾಸವಿರುವುದು ಅವಶ್ಯ. ಅಧ್ಯಾಪಕನೊಬ್ಬ ತಾನು ಕಲಿಸುವ ವಿಷಯ ವನ್ನು ಸರಿಯಾಗಿ ತಿಳಿದಿರಬೇಕು ಮಾತ್ರವಲ್ಲ, ತಾನು ತಿಳಿದಿರುವುದೆಲ್ಲವೂ ಸರಿ ಎಂಬ ಆತ್ಮವಿಶ್ವಾಸವೂ ಆತನಲ್ಲಿರಬೇಕು. ಈ ವಿಷಯದಲ್ಲಿ ಸ್ವಲ್ಪವಾದರೂ ಸಂಶಯವಿದೆಯಾದರೆ, ಆತ ಧೈರ್ಯದಿಂದ ವಿದ್ಯಾರ್ಥಿಗಳಿಗೆ ಕಲಿಸಲಾರ.

ಆದರೆ, ಸಂಶೋಧನೆ ಮಾಡುವವರು, ಮತ್ತು ಸಂಶೋಧನೆಗೆ ಮಾರ್ಗ ದರ್ಶನ ಮಾಡುವವರು ಯಾವ ಹೇಳಿಕೆಯನ್ನೂ ಸಂಪೂರ್ಣವಾಗಿ ಸರಿಯೆಂದು ತಿಳಿದುಕೊಳ್ಳಬಾರದು. ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡಿದಾಗ ಮಾತ್ರ, ಅವರ ಸಂಶೋಧನೆ ಮುಂದೆ ಹೋಗಬಲ್ಲುದು. ಎಂತಹ ದೊಡ್ಡ ವಿದ್ವಾಂಸರು ಹೇಳಿದ್ದನ್ನೂ ಹಾಗೆಯೇ ಒಪ್ಪಿಕೊಳ್ಳದೆ ವಿಚಾರಣೆಗೆ ಒಳಪಡಿಸಲು ಅವರು ಸಿದ್ಧರಿರಬೇಕು.

ಈ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ರೇಂಕ್ ಗಳಿಸುವ ವಿದ್ಯಾರ್ಥಿ ಉತ್ತಮ ಸಂಶೋಧಕನಾಗಬೇಕೆಂದೇನಿಲ್ಲ. ಹಾಗೆ ಆಗುವುದೂ ಕಷ್ಟಸಾಧ್ಯ. ಇದೇ ರೀತಿ ಯಲ್ಲಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕ ಉತ್ತಮ ಮಾರ್ಗದರ್ಶಕ ನಾಗುವುದೂ ಕಷ್ಟಸಾಧ್ಯ. ಕಲಿಯುವುದಕ್ಕೆ ಮತ್ತು ಕಲಿಸುವುದಕ್ಕೆ ಬೇಕಾಗುವ ಮನೋಭಾವ ಸಂಶೋಧನೆಗೆ ಮತ್ತು ಮಾರ್ಗದರ್ಶನಕ್ಕೆ ಬೇಕಾಗುವ ಮನೋ ಭಾವಕ್ಕಿಂತ ತೀರ ಭಿನ್ನವಾಗಿರುವುದೇ ಇದಕ್ಕೆ ಕಾರಣ.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಈ ಎರಡು ಕೆಲಸಗಳನ್ನೂ ಒಬ್ಬರೇ ಮಾಡ ಬೇಕಾಗುವುದರಿಂದ, ಸಂಶೋಧನೆಯೆಂಬ ಹೆಸರಿನಲ್ಲಿ ಕಲಿಯುವಿಕೆ ಮಾತ್ರ

೧೫೪


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ನಡೆಯುವುದು ಕಾಣಿಸುತ್ತದೆ. ಹೆಚ್ಚಿನವರಿಗೂ ಈ ಎರಡು ಭಿನ್ನ ಭಿನ್ನವಾದ ಕೆಲಸಗಳನ್ನು ಒಟ್ಟಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.

ಒಮ್ಮೆ ನನ್ನ ಮಿತ್ರರೊಬ್ಬರು ಡಾಕ್ಟರೇಟ್ ಪದವಿಗಾಗಿ ತಾವು ಬರೆದ ಪ್ರಬಂಧವನ್ನು ನನಗೆ ತೋರಿಸಿದರು. ಅದನ್ನು ಓದಿದಾಗ ನನಗೆ ಆಶ್ಚರ್ಯ ವಾಯಿತು: ಮೂವತ್ತು ವರ್ಷಗಳಷ್ಟು ಹಳೆಯ ಸಿದ್ಧಾಂತಗಳನ್ನು ಬಳಸಿ ಅವರು ಆ ಪ್ರಬಂಧವನ್ನು ಬರೆದಿದ್ದರು. ಆ ಸಿದ್ಧಾಂತಗಳಲ್ಲಿ ಹೆಚ್ಚಿನವೂ ಸರಿಯಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಅವರು ಹೀಗೆ ಮಾಡಿದ್ದರು.

ಇದು ಯಾಕೆ ಹೀಗೆ ಎಂದು ನಾನು ಕೇಳಿದಾಗ ಅವರು ಹೇಳಿದರು, “ನನ್ನ ಮಾರ್ಗದರ್ಶಿಗಳು ತಮ್ಮ ಡಾಕ್ಟರೇಟ್ ಪ್ರಬಂಧದಲ್ಲಿ ಈ ಸಿದ್ದಾಂತಗಳನ್ನು ಬಳಸಿದ್ದಾರೆ; ಈಗ ನಾನು ಹೊಸ ಸಿದ್ದಾಂತಗಳನ್ನು ಬಳಸಿದಲ್ಲಿ, ಅವರು ಹಿಂದೆ ಬರೆದಿದ್ದ ಪ್ರಬಂಧ ಸರಿಯಲ್ಲ ಎಂಬುದಾಗಿ ನಾನು ಹೇಳಿದ ಹಾಗಾದೀತು. ಹಾಗೆ ಮಾಡಿದಲ್ಲಿ, ನನ್ನ ಪ್ರಬಂಧಕ್ಕೆ ಅವರ ಒಪ್ಪಿಗೆ ಸಿಗುವುದು ಅಸಂಭವ”.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದ ಸಂಶೋಧನೆಗಳು ನಡೆಯ ದಿರುವುದಕ್ಕೆ ಒಂದು ಮುಖ್ಯವಾದ ಕಾರಣವನ್ನು ಈ ಮೇಲಿನ ಘಟನೆ ಬಹಳ ಸ್ಪಷ್ಟವಾಗಿ ಸೂಚಿಸುತ್ತದೆ. ತಮ್ಮ ಮಾರ್ಗದರ್ಶನದಲ್ಲಿ ಪ್ರಬಂಧಗಳನ್ನು ಬರೆಯು ತಿರುವ ಸಂಶೋಧಕರು ತಾವು ಬರೆದಿರುವ ಪ್ರಬಂಧಕ್ಕಿಂತ ಒಂದು ಹೆಜ್ಜೆ ಮುಂದೆ ಹೋದರೂ ಬೇಸರಪಟ್ಟುಕೊಳ್ಳುವ ಅಧ್ಯಾಪಕರಿರುವಷ್ಟು ದಿವಸ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸುವುದು ಅಸಾಧ್ಯವೆಂದೇ ಹೇಳ ಬಹುದು. ತನ್ನ ಶಿಷ್ಯನಿಂದ ಪರಾಭವವನ್ನು ಬಯಸುವ ಅಧ್ಯಾಪಕರು ಮಾತ್ರ ನಿಜಕ್ಕೂ ಸಂಶೋಧನೆಗೆ ಮಾರ್ಗದರ್ಶಕರಾಗಬಲ್ಲರು. ಅಂತಹ ಅಧ್ಯಾಪಕರು ನಮ್ಮಲ್ಲಿ ಬೆರಳೆಣಿಕೆಯಷ್ಟು ಇಲ್ಲ ಎಂಬುದು ಬೇಸರದ ಸಂಗತಿ.

ಕನ್ನಡ ವ್ಯಾಕರಣದ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯ. ಕೇಶಿರಾಜನೇ ಮೊದಲಾದ ಕನ್ನಡ ವೈಯಾಕರಣಿಗಳು ಏನು ಹೇಳಿದ್ದಾರೆ ಎಂಬುದನ್ನು ಚರ್ಚಿಸುವುದು ವ್ಯಾಕರಣದ ಕಲಿಯುವಿಕೆಯಲ್ಲದೆ ಸಂಶೋಧನೆಯಲ್ಲ. ಅವರು ಬರೆದಿರುವ ವ್ಯಾಕರಣ ನಿಯಮಗಳಲ್ಲಿ ತಪ್ಪು ಇಲ್ಲವೇ ಅಸಾಂಗತ್ಯಗಳೇನಾದರೂ ಇವೆಯೇ? ಇದ್ದರೆ ಅವನ್ನು ನಿವಾರಿಸುವುದು ಹೇಗೆ? ಅವರು ಹೇಳದೇ ಇರುವಂತಹ ಹೊಸ ವ್ಯಾಕರಣಾಂಶಗಳೇನಾದರೂ ಇವೆಯೇ? ಅವರು ಬರೆ ದಿರುವ ವ್ಯಾಕರಣ ನಿಯಮಗಳನ್ನು ಹೊಸಗನ್ನಡಕ್ಕೆ ಹೊಂದಿಸಿಕೊಳ್ಳಲು ಅವು ಗಳಲ್ಲಿ ಎಂತಹ ಬದಲಾವಣೆಗಳನ್ನು ಮಾಡಿಕೊಳ್ಳಬೇಕು? ಇಂತಹ ವಿಷಯಗಳ ಕುರಿತು ಚರ್ಚೆ ನಡೆದಲ್ಲಿ ಮಾತ್ರ ಈ ವ್ಯಾಕರಣಗಳ ಮೇಲೆ ಸಂಶೋಧನೆ ನಡೆದಿದೆಯೆಂದು ಹೇಳಬಹುದು.

ಆದರೆ, ಕನ್ನಡ ವ್ಯಾಕರಣದ ಕುರಿತಾಗಿ ಅಂತಹ ಚರ್ಚೆ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ನಡೆದಿಲ್ಲ ಮತ್ತು ನಡೆಯುತ್ತಿಲ್ಲವೆಂದೇ ಹೇಳಬಹುದು.

೧೫೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕೇಶಿರಾಜನ ನಿಯಮಗಳಲ್ಲಿ ತಪ್ಪಿದೆಯೆಂದು ಹೇಳುವುದೇ ಮಹಾಪಾಪ ಎಂದು ಭಾವಿಸುವವರಿಗೆ ನಿಜಕ್ಕೂ ಸಂಶೋಧನೆ ಮಾಡುವ ಅಧಿಕಾರವೇ ಇಲ್ಲ.

ಶತಮಾನದ ವ್ಯಾಕರಣಗಳು

ಕಳೆದ ಶತಮಾನದಲ್ಲಿ ಕನ್ನಡ ವ್ಯಾಕರಣದ ಮೇಲೆ ಹಲವಾರು ಪುಸ್ತಕಗಳು ಮತ್ತು ಲೇಖನಗಳು ಪ್ರಕಟವಾಗಿವೆ. ಆದರೆ, ಇವುಗಳಲ್ಲಿ ಸಂಶೋಧನೆಯ ಮೂಲಕ ಕನ್ನಡ ವ್ಯಾಕರಣದ ಕುರಿತು ನಮ್ಮ ಜ್ಞಾನ ಹೆಚ್ಚಾಗುವಂತೆ ಮಾಡುವ ಪುಸ್ತಕಗಳು ಮತ್ತು ಲೇಖನಗಳು ಬಹಳ ಕಡಿಮೆ. ಹೆಚ್ಚಿನವೂ ಕೇಶಿರಾಜನೇ ಮೊದಲಾದ ಹಿಂದಿನ ವೈಯಾಕರಣಿಗಳು ಹೇಳಿದ ವಿಷಯವನ್ನೇ ಬೇರೆ ಬೇರೆ ರೀತಿಯಲ್ಲಿ ವಿವರಿಸಿ ಹೇಳಲು ನಡೆಸಿದ ಪ್ರಯತ್ನಗಳು.

ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಬಳಸುವ ಬದಲು ಯುರೋಪಿನ ಲ್ಯಾಟಿನ್, ಗ್ರೀಕ್ ಮೊದಲಾದ ಭಾಷೆಗಳ ವ್ಯಾಕರಣ ಪರಂಪರೆಯನ್ನಾಗಲಿ, ಇಲ್ಲವೇ ಇಂಗ್ಲೆಂಡ್ ಮತ್ತು ಅಮೆರಿಕದ ಇಂಗ್ಲಿಷ್ ವ್ಯಾಕರಣ ಪರಂಪರೆ ಯನ್ನಾಗಲಿ ಬಳಸಿ ರಚಿಸಿದ ವ್ಯಾಕರಣ ಗ್ರಂಥಗಳು ಮತ್ತು ಲೇಖನಗಳು ಹಲವು ಈ ಶತಮಾನದಲ್ಲಿ ಸಿದ್ಧವಾಗಿವೆ. ಆದರೆ, ಈ ಪ್ರಯತ್ನಗಳಲ್ಲೆಲ್ಲ ಕನ್ನಡದ್ದೇ ಆದ ವ್ಯಾಕರಣ ನಿಯಮಗಳನ್ನು ಕಂಡುಹಿಡಿಯುವ ಸಂಶೋಧಕ ಪ್ರವೃತ್ತಿ ಕಾಣಿಸು ವುದು ಬಹಳ ಅಪರೂಪವೆಂದೇ ಹೇಳಬಹುದು.

ಪ್ರೌಢಶಾಲೆಗಳಲ್ಲಿ ವ್ಯಾಕರಣವನ್ನು ಬೋಧಿಸುವುದಕ್ಕಾಗಿ ಹಲವಾರು ಮಂದಿ ಅಧ್ಯಾಪಕರು ಮತ್ತು ಇತರ ಲೇಖಕರು ಚಿಕ್ಕ ಚಿಕ್ಕ ವ್ಯಾಕರಣ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಇವೆಲ್ಲವೂ ಕೇಶಿರಾಜನೇ ಮೊದಲಾದ ಹಿಂದಿನ ಕನ್ನಡ ವೈಯಾಕರಣಿಗಳು ತೋರಿಸಿದ ದಾರಿಯಲ್ಲೇ ನಡೆದಿವೆಯಾದ ಕಾರಣ, ಇವುಗಳ ರಚನೆಯ ಹಿಂದೆ ಸಂಶೋಧನೆಯೇನೂ ಇಲ್ಲ. ಇಂತಹ ಪುಸ್ತಕಗಳು ಪಠ್ಯಪುಸ್ತಕ ಸಮಿತಿಯು ಎಳೆದಿರುವ ಗೆರೆಯೊಳಗೇನೇ ಉಳಿಯುವ ಅವಶ್ಯಕತೆಯಿದೆಯಾದ ಕಾರಣ, ಇವುಗಳ ತಯಾರಿಕೆಯಲ್ಲಿ ಸಂಶೋಧನೆಯನ್ನು ಕಾಣಲು ಸಾಧ್ಯವೂ ಇಲ್ಲ.

ಇದಲ್ಲದೆ, ಹಳೆಗನ್ನಡ ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಎದು ರಾಗುವ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುವ ಲೇಖನ ಮತ್ತು ಗ್ರಂಥಗಳೂ ಕೆಲವು ಪ್ರಕಟವಾಗಿವೆ. ಇವು ವ್ಯಾಖ್ಯಾನಕಾರನ ದೃಷ್ಟಿಕೋನವನ್ನು ಅವಲಂಬಿಸು ತ್ತವೆಯಲ್ಲದೆ, ಒಬ್ಬ ಸಂಶೋಧಕನ ದೃಷ್ಟಿಕೋನವನ್ನು ಅವಲಂಬಿಸುವುದಿಲ್ಲ. ಹಾಗಾಗಿ, ಇವುಗಳಲ್ಲೂ ಕನ್ನಡ ವ್ಯಾಕರಣದ ಕುರಿತಾಗಿ ಹೊಸ ವಿಷಯಗಳ ಪ್ರಸ್ತಾಪವನ್ನು ಕಾಣುವುದು ಕಷ್ಟಸಾಧ್ಯ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪದವಿ (ಪಿ.ಹೆಚ್.ಡಿ)ಗಾಗಿ ಸಿದ್ಧ ವಾಗಿರುವ ಪ್ರಬಂಧಗಳು, ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆದವುಗಳು, ಹಲವಿವೆ. ಇವುಗಳಲ್ಲಿ ಹಳೆಗನ್ನಡ (ಸಂಸ್ಕೃತ) ವ್ಯಾಕರಣ ಪರಂಪರೆಯನ್ನು

೧೫೬


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಬಿಟ್ಟುಕೊಟ್ಟು, ಯುರೋಪಿನ ಇಲ್ಲವೇ ಅಮೆರಿಕದ ವ್ಯಾಕರಣ ಪರಂಪರೆಯನ್ನು ಬಳಸಿರುವುದು ಕಂಡುಬರುತ್ತದೆ. ಆದರೆ, ಈ ವ್ಯಾಕರಣ ಪರಂಪರೆಗೂ ಲ್ಯಾಟಿನ್, ಗ್ರೀಕ್, ಇಂಗ್ಲಿಷ್ ಮೊದಲಾದ ಇಂಡೋ-ಯುರೋಪಿಯನ್ ಭಾಷೆ ಗಳೇ ಆಧಾರವಾಗಿರುವ ಕಾರಣ, ಕನ್ನಡದ ಮಟ್ಟಿಗೆ ಇದು ಸಂಸ್ಕೃತ ವ್ಯಾಕರಣ ಪರಂಪರೆಯಷ್ಟೇ ಅಸಮರ್ಪಕವೆಂದು ಹೇಳಬಹುದು.

ಕನ್ನಡ ಭಾಷೆ ಈ ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾಕುಟುಂಬಕ್ಕೆ ಸೇರಿರುವ ಭಾಷೆ. ಅದರ ವ್ಯಾಕರಣ ಇಂಡೋ-ಯುರೋಪಿಯನ್ ಭಾಷೆಗಳ ವ್ಯಾಕರಣಕ್ಕಿಂತ ತೀರ ಭಿನ್ನವಾದುದು. ಕನ್ನಡ ವ್ಯಾಕರಣದ ಮೇಲೆ ರಚಿತವಾಗಿರುವ ಈ ಪ್ರಬಂಧಗಳು ಆ ವ್ಯಾಕರಣ ಒಂದು ಹೊಸ ದಾರಿಯಲ್ಲಿ ನಡೆಯುವಂತೆ ಮಾಡಿರುವುವೇನೋ ನಿಜ. ಆದರೆ, ಈ ಹೊಸ ದಾರಿಯೂ, ಹಳೇ ದಾರಿಯ ಹಾಗೆ, ಕನ್ನಡದ ಮಟ್ಟಿಗೆ ಒಂದು ತಪ್ಪು ದಾರಿಯಲ್ಲದೆ ಬೇರೆನಲ್ಲ.

ಕೇಶಿರಾಜನ ವ್ಯಾಕರಣ

ಕೇಶಿರಾಜನ ಕಾಲದಲ್ಲಿ ಕನ್ನಡವನ್ನು ಬಹುಶಃ ಪ್ರಾಕೃತ, ಪಾಲಿ, ಅಪಭ್ರಂಶ ಮೊದಲಾದವುಗಳ ಹಾಗೆ ಸಂಸ್ಕೃತದ ಒಂದು ವಿಕೃತ ರೂಪವೆಂದು ಪರಿಗಣಿಸು ತಿದ್ದಿರಬೇಕು. ಇವತ್ತಿಗೂ ಇಂತಹ ಅಭಿಪ್ರಾಯವನ್ನು ಹೊಂದಿರುವ ಮಂದಿ ನಮ್ಮಲ್ಲಿ ಕೆಲವರಿದ್ದಾರೆ.

ಆದರೆ, ಹತ್ತೊಂಬತ್ತನೇ ಶತಮಾನದ ಕೊನೆಯಲ್ಲೇನೇ ಈ ಅಭಿಪ್ರಾಯ ತಪ್ಪು ಎಂಬ ವಿಷಯ ಸಿದ್ಧವಾಗಿತ್ತು. ಸಂಸ್ಕೃತ ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುವುದೆಂದೂ, ಕನ್ನಡ ಅದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾಕುಟುಂಬಕ್ಕೆ ಸೇರುವುದೆಂದೂ ಆ ಸಮಯದಲ್ಲಿ ವಿದ್ವಾಂಸರು ತೋರಿಸಿಕೊಟ್ಟಿದ್ದರು. ಈ ಕಾರಣಕ್ಕಾಗಿ, ಕನ್ನಡ ವ್ಯಾಕರಣ ಸಂಸ್ಕೃತವೇ ಮೊದಲಾದ ಇಂಡೋ-ಯುರೋಪಿಯನ್ ಭಾಷೆಗಳ ವ್ಯಾಕರಣಕ್ಕಿಂತ ಭಿನ್ನ ವಾಗಿರುವುದು ಅನಿವಾರ್ಯ. ಆದರೆ, ಯಾವ ರೀತಿಯಲ್ಲೆಲ್ಲ ಅದು ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನ ಕನ್ನಡದ ಮಟ್ಟಿಗೆ ಇನ್ನೂ ಸರಿಯಾಗಿ ನಡೆದಿಲ್ಲ.

ಕೇಶಿರಾಜನ ಶಬ್ದಮಣಿದರ್ಪಣ ಎಂಬುದು ಸಂಸ್ಕೃತದ ವ್ಯಾಕರಣ ನಿಯಮ ಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ನಡೆಸಿರುವ ಪ್ರಯತ್ನ ಮಾತ್ರ. ಹಾಗೆ ಅಳವಡಿಸಲು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲವೆಂದು ತೋರಿದಾಗ ಮಾತ್ರ, ಕನ್ನಡಕ್ಕೆ ಅದರದೇ ಆದ ವ್ಯಾಕರಣ ನಿಯಮಗಳನ್ನು ತಯಾರಿಸಿಕೊಡುವ ಪ್ರಯತ್ನವನ್ನು ಈ ವ್ಯಾಕರಣದಲ್ಲಿ ಮಾಡಲಾಗಿದೆ.

ಆದರೆ ಹೀಗೆ ಮಾಡಿದುದರಿಂದಾಗಿ, ಆ ವ್ಯಾಕರಣ ಕನ್ನಡದ ಮಟ್ಟಿಗೆ ಒಂದು ಗಂಟು ಗಂಟಾಗಿರುವ, ಮತ್ತು ಅನವಶ್ಯಕವಾಗಿ ತುಂಬಾ ಕ್ಲಿಷ್ಟವಾಗಿರುವ

೧೫೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವ್ಯಾಕರಣವಾಗಿದೆ. ಹಲವೆಡೆಗಳಲ್ಲಿ ಅದು ಸಂಸ್ಕೃತ ವ್ಯಾಕರಣದ ನಿಯಮಗಳ ಮೇಲೆ ಕನ್ನಡ ನಿಯಮಗಳ ತೇಪೆ ಹಾಕಿರುವ ಹಾಗಿದೆ.

ಹೊಸಗನ್ನಡದ ಮಟ್ಟಿಗೆ ಹೇಳುವುದಾದರೆ, ಈ ವ್ಯಾಕರಣವನ್ನು ಸಂಪೂರ್ಣ ವಾಗಿ ಬಿಟ್ಟುಕೊಟ್ಟು, ಕನ್ನಡದ್ದೇ ಆದ ಹೊಸದೊಂದು ವ್ಯಾಕರಣವನ್ನು ಸಿದ್ಧಪಡಿಸುವುದೇ ನಮಗೆ ಉಳಿದಿರುವ ದಾರಿ.

ಹಳೆಗನ್ನಡದ ಈ ವ್ಯಾಕರಣವನ್ನು ಸಂಶೋಧಕನ ದೃಷ್ಟಿಯಿಂದ ಪರೀಕ್ಷಿಸಿದೆ ವಾದರೆ, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಭಾಗದಲ್ಲಿ ಕನ್ನಡಕ್ಕೆ ಅವಶ್ಯವಲ್ಲದ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಬಹಳ ಕಷ್ಟದಿಂದ ಕನ್ನಡ ಉದಾಹರಣೆ ಗಳನ್ನು ಕೊಟ್ಟು ವಿವರಿಸಲು ಪ್ರಯತ್ನಿಸಿರುವುದನ್ನು ಕಾಣಬಹುದು. ಉಳಿದ ಅರ್ಧದ ಸ್ವಲ್ಪ ಭಾಗದಲ್ಲಿ ಸಂಸ್ಕೃತದಲ್ಲಿ ಇಲ್ಲದ, ಮತ್ತು ಕನ್ನಡದಲ್ಲಿ ಇವೆ ಯೆಂದು ಭ್ರಮಿಸಿರುವ ವ್ಯಾಕರಣ ನಿಯಮಗಳನ್ನು ಕಾಣಬಹುದು. ಇನ್ನು ಸ್ವಲ್ಪ ಭಾಗದಲ್ಲಿ ಹಳೆಗನ್ನಡಕ್ಕೆ ಅನ್ವಯಿಸುವ, ಮತ್ತು ಹೊಸಗನ್ನಡಕ್ಕೆ ಅನ್ವಯಿಸ ದಿರುವ ನಿಯಮಗಳಿವೆ. ಹಾಗಾಗಿ, ಈ ವ್ಯಾಕರಣದಲ್ಲಿ ನಿಜಕ್ಕೂ ಹೊಸಗನ್ನಡಕ್ಕೆ ಅನ್ವಯಿಸುವ ನಿಯಮಗಳಿರುವ ಭಾಗ ಬಹಳ ಚಿಕ್ಕದು.

ಉದಾಹರಣೆಗಾಗಿ, ಕನ್ನಡದ ಸಮಾಸಗಳನ್ನು ಈ ವ್ಯಾಕರಣ ನೇರವಾಗಿ ವರ್ಣಿಸಲು ಪ್ರಯತ್ನಿಸುವುದಿಲ್ಲ. ಇದಕ್ಕೆ ಬದಲು, ಸಂಸ್ಕೃತದ ಆರು ಸಮಾಸ ಗಳನ್ನು (ತತ್ಪುರುಷ, ಕರ್ಮಧಾರಯ, ದ್ವಿಗು, ಅವ್ಯಯೀಭಾವ, ದ್ವಂದ್ವ, ಮತ್ತು ಬಹುವ್ರೀಹಿ ಎಂಬವುಗಳನ್ನು) ಹಾಗೆಯೇ ಉಳಿಸಿಕೊಂಡು, ಅನಂತರ ಈ ಆರು ಸಮಾಸಗಳಲ್ಲಿ ಸೇರದಿರುವ ಸಮಸ್ತಪದಗಳಿಗಾಗಿ ಮಾತ್ರ, ಇನ್ನೆರಡು ಸಮಾಸ ಗಳನ್ನು (ಗಮಕ ಮತ್ತು ಕ್ರಿಯಾಸಮಾಸ ಎಂಬವುಗಳನ್ನು) ಹೊಸದಾಗಿ ಸೇರಿಸಿ ಕೊಳ್ಳುತ್ತದೆ. ನಿಜಕ್ಕೂ ಕನ್ನಡದ ಸಮಸ್ತಪದಗಳನ್ನು ವರ್ಣಿಸಲು ಈ ತೇಪೆ ಕೆಲಸ ಅವಶ್ಯವಿಲ್ಲ. ನೇರವಾಗಿ ಕನ್ನಡ ಸಮಾಸಗಳು ಎಂತಹವು ಎಂಬುದಾಗಿ ವರ್ಣನೆ ಯೊಂದನ್ನು ಕೊಟ್ಟಿದ್ದರೆ ಸಾಕಾಗುತ್ತಿತ್ತು.

ಸಂಸ್ಕೃತದ ಸಮಸ್ತಪದಗಳನ್ನು ಅವುಗಳ ಅಂಗಗಳಾಗಿ ಬಂದಿರುವ ಪದ ಗಳಲ್ಲಿ ಪ್ರಧಾನಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸ ಬೇಕಾಗುತ್ತದೆ. ಆದರೆ, ಕನ್ನಡದ ಹೆಚ್ಚಿನ ಸಮಸ್ತಪದಗಳಲ್ಲೂ ಎರಡನೆಯ ಅಂಗವೇ ಪ್ರಧಾನಪದವಾಗಿದೆಯಾದ ಕಾರಣ, ಅವನ್ನು ಈ ವಿಷಯದ ಆಧಾರದ ಮೇಲೆ ವಿಂಗಡಿಸಿದಲ್ಲಿ ಅದು ಸಮರ್ಪಕವಾದ ವಿಭಜನೆಯಾಗಲಾರದು.

ಇದಲ್ಲದೆ, ಸಂಸ್ಕೃತದಲ್ಲಿ ನಾಮಪದಗಳನ್ನು ಮಾತ್ರ ಸಮಸ್ತಪದಗಳಲ್ಲಿ ಬಳಸಲು ಸಾಧ್ಯ. ಅವ್ಯಯಗಳೂ ಅವುಗಳಲ್ಲಿ ಬರಬಲ್ಲುವಾದರೂ, ಅವನ್ನು ಸಂಸ್ಕೃತ ವ್ಯಾಕರಣಗಳಲ್ಲಿ ನಾಮಪದಗಳೆಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ಬದಲು, ಕನ್ನಡದಲ್ಲಿ ಸಮಸ್ತಪದಗಳ ಮೊದಲನೆಯ ಅಂಗವಾಗಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬ ಮೂರು ಬಗೆಯ ಪದಗಳು ಬರಬಲ್ಲುವು. ಹಾಗಾಗಿ, ಕನ್ನಡದ ಸಮಸ್ತಪದಗಳ ವಿಭಜನೆಗೆ (ಮತ್ತು ಬೇರೆ ದ್ರಾವಿಡ

೧೫೮


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ನುಡಿಗಳ ಸಮಸ್ತಪದಗಳ ವಿಭಜನೆಗೆ) ಅವುಗಳ ಮೊದಲ ಪದವಾಗಿ ಎಂತಹ ಪದ ಬಂದಿದೆ ಎಂಬುದೇ ಸರಿಯಾದ ಆಧಾರವಾಗಬಲ್ಲುದು.

ಕನ್ನಡದಲ್ಲಿ ನಾಮಪದಗಳು ಮತ್ತು ಗುಣಪದಗಳು ಎಂಬ ಎರಡು ಪದ ವರ್ಗಗಳಿಗೆ ಸೇರುವ ಪದಗಳಿವೆ; ಆದರೆ, ಸಂಸ್ಕೃತದಲ್ಲಿ ಈ ಎರಡು ಬಗೆಯ ಪದಗಳೂ ನಾಮಪದವೆಂಬ ಒಂದೇ ಪದವರ್ಗದಲ್ಲಿ ಬರುತ್ತವೆ. ಕನ್ನಡದಲ್ಲಿ ಗುಣಪದಗಳನ್ನು, ಕೃದಂತಗಳನ್ನು, ಮತ್ತು ಸಂಖ್ಯಾವಾಚಕ ಪದಗಳನ್ನು ನೇರ ವಾಗಿ ಅವುಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ನಾಮಪದದೊಂದಿಗೆ ಬಳಸಬಲ್ಲೆವು. ಆದರೆ, ಸಂಸ್ಕೃತದಲ್ಲಿ ಇವಕ್ಕೆ ಸಮನಾದ ಪದಗಳನ್ನು ನಾಮ ಪದಗಳೊಂದಿಗೆ ಬಳಸಬೇಕಿದ್ದಲ್ಲಿ, ಆ ಪದಗಳೊಂದಿಗೆ ಬರುವ ವಿಭಕ್ತಿ-ವಚನ ಪ್ರತ್ಯಯಗಳನ್ನು ಅವಕ್ಕೂ ಸೇರಿಸಬೇಕಾಗುತ್ತದೆ.

ಉದಾಹರಣೆಗಾಗಿ, ಕೃಷ್ಣನ ಸರ್ಪಣ ‘ಕಪ್ಪು ಹಾವಿನಿಂದ’ ಎಂಬುದರಲ್ಲಿ ತೃತೀಯಾ-ಏಕವಚನದ ವಿಭಕ್ತಿ ಪ್ರತ್ಯಯ ಸರ್ಪ ಎಂಬ ನಾಮಪದದೊಂದಿಗೆ ಮಾತ್ರವಲ್ಲದೆ ಕೃಷ್ಣ ಪದದೊಂದಿಗೂ ಬಂದಿದೆ. ಆದರೆ, ಕನ್ನಡದಲ್ಲಿ ಈ ರೀತಿ *ಕಪ್ಪಿನಿಂದ ಹಾವಿನಿಂದ ಎಂದು ಹೇಳಲು ಬರುವುದಿಲ್ಲ.

ಸಂಸ್ಕೃತದಲ್ಲಿ ಕೃಷ್ಣ ಎಂಬ ಪದವನ್ನು ವಿಭಕ್ತಿ ಪ್ರತ್ಯಯವಿಲ್ಲದೆ ಕೃಷ್ಣ ಸರ್ಪಣ ಎಂಬುದರಲ್ಲಿರುವ ಹಾಗೆ ಬಳಸಿದಾಗ, ಅಲ್ಲಿ ವಿಭಕ್ತಿಲೋಪವಾಗಿ ಸಮಾಸವಾಗಿದೆಯೆಂದು ಹೇಳಲು ಬರುತ್ತದೆ; ಆದರೆ, ಕನ್ನಡದ ಕಪ್ಪುಹಾವು ಎಂಬುದರಲ್ಲಿ ಈ ರೀತಿ ವಿಭಕ್ತಿ ಲೋಪ ಆಗಿಲ್ಲವಾದ ಕಾರಣ (ಅಲ್ಲಿ ಮೊದಲಿಗೇನೇ ವಿಭಕ್ತಿ ಪ್ರತ್ಯಯವಿರಲಿಲ್ಲವಾದ ಕಾರಣ) ಸಮಾಸವಾಗಿದೆಯೆಂದು ಹೇಳಲು ಯಾವ ಆಧಾರವೂ ಇಲ್ಲ. ಆದರೆ, ಇಂತಹ ಕಡೆಗಳಲ್ಲಿ ಸಮಾಸ ವಾಗಿದೆಯೆಂದು ಕನ್ನಡದ ವೈಯಾಕರಣಿಗಳು ಭ್ರಮಿಸಿದ್ದಾರೆ.

ಕೃದಂತ, ಸರ್ವನಾಮ ಮತ್ತು ಸಂಖ್ಯಾವಾಚಕಗಳ ಬಳಕೆಯೂ ಇದೇ ರೀತಿ ಯದು. ಸಂಸ್ಕೃತದಲ್ಲಿ ಮೃತೇನ ಸರ್ಪಣ ಎಂಬಲ್ಲಿ, ಇಲ್ಲವೇ ತಸ್ಮಾತ್ ಘಟಾತ್ ಎಂಬಲ್ಲಿ ವಿಭಕ್ತಿ ಪ್ರತ್ಯಯ ಎರಡು ಪದಗಳಲ್ಲೂ ಬಂದಿದ್ದು, ಮೃತ ಸರ್ಪಣ ಮತ್ತು ತದ್ವಟಾತ್ ಎಂಬಲ್ಲಿ ಮೊದಲನೆಯ ಪದದ ವಿಭಕ್ತಿ ಲೋಪ ವಾಗಿದೆಯೆಂದು ಹೇಳಬಲ್ಲೆವು.

ಆದರೆ, ಕನ್ನಡದಲ್ಲಿ ಸತ್ತ ಹಾವಿನಿಂದ ಮತ್ತು ಆ ಕೊಡದಿಂದ ಎಂಬ ಬಳಕೆಗಳಿವೆಯಲ್ಲದೆ, *ಸತ್ತದಿಂದ ಹಾವಿನಿಂದ ಮತ್ತು *ಅದರಿಂದ ಕೊಡ ದಿಂದ ಎಂಬಂತಹ ಮೊದಲನೆಯ ಪದಕ್ಕೆ ವಿಭಕ್ತಿ ಪ್ರತ್ಯಯವನ್ನು ಸೇರಿಸಿರುವ ಬಳಕೆಗಳಿಲ್ಲ. ಹಾಗಾಗಿ, ಕನ್ನಡದ ಸತ್ತ ಹಾವು, ಆ ಕೊಡ ಎಂಬಂತಹ ಬಳಕೆ ಗಳಲ್ಲಿ ವಿಭಕ್ತಿ ಲೋಪವೂ ಇಲ್ಲ. ಇವುಗಳಲ್ಲಿ ಗಮಕ ಸಮಾಸವೆಂಬ ಕನ್ನಡದ್ದೇ ಆದ ಸಮಾಸವಿದೆಯೆಂದು ನಮ್ಮ ವೈಯಾಕರಣಿಗಳು ಹೇಳಿರುವುದು ಅವರ ಭ್ರಮೆ ಮಾತ್ರ.

೧೫೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ಅವುಗಳ ಅರ್ಥದೊಂದಿಗೆ ನೇರವಾಗಿ ಸಂಬಂಧಿಸುವುದು ತುಂಬಾ ಕಷ್ಟ. ಹಲವೆಡೆಗಳಲ್ಲಿ ಕಾಣಿಸುವ ವಿಭಕ್ತಿ ಪಲ್ಲಟಕ್ಕೆ ಸಂಸ್ಕೃತದಲ್ಲಿ ಅರ್ಥವೇ ಇಲ್ಲ. ಈ ಕಾರಣಕ್ಕಾಗಿ, ಮತ್ತು ಸಂಸ್ಕೃತದ ಕೆಲವು ವ್ಯಾಕರಣ ನಿಯಮಗಳನ್ನು ಸುಲಭವಾಗಿ ವಿವರಿಸಲು ಸಾಧ್ಯವಾಗುವಂತೆ ಅದರ ವೈಯಾಕರಣಿಗಳು ಕಾರಕ ಎಂಬ ವ್ಯಾಕರಣ ತತ್ವವೊಂದನ್ನು ಕಲ್ಪಿಸಿಕೊಂಡಿ ದ್ದಾರೆ. ಇಂಗ್ಲಿಷ್, ಫ್ರೆಂಚ್ ಮೊದಲಾದ ಕೆಲವು ಪಾಶ್ಚಾತ್ಯ ಭಾಷೆಗಳಲ್ಲೂ ಇಂತಹದೇ ಸಮಸ್ಯೆಯಿದ್ದು, ಅದಕ್ಕಾಗಿ ಸಬ್ಜೆಕ್ಟ್, ಆಬ್ಜೆಕ್ಟ್ ಮೊದಲಾದ ಕೆಲವು ವ್ಯಾಕರಣ ತತ್ವಗಳನ್ನು ಕಲ್ಪಿಸಿಕೊಳ್ಳಬೇಕಾಗಿದೆ.

ಸಂಸ್ಕೃತದಲ್ಲಿ ಈ ರೀತಿ ಕಾರಕ ಎಂಬುದನ್ನು ಯಾಕೆ ಕಲ್ಪಿಸಿಕೊಂಡಿದ್ದಾರೆ, ಮತ್ತು ಕನ್ನಡಕ್ಕೆ ಇದರ ಅವಶ್ಯಕತೆಯಿದೆಯೇ ಎಂಬುದನ್ನು ಪರಾಮರ್ಶಿಸಲು ಹೋಗದೆ, ಕನ್ನಡ ವೈಯಾಕರಣಿಗಳು ಅದನ್ನು ಹಾಗೆಯೇ ತಮ್ಮ ವ್ಯಾಕರಣ ಗಳಲ್ಲೂ ಅಳವಡಿಸಿಕೊಂಡಿದ್ದಾರೆ.

ಆದರೆ, ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳಿಗೆ ಅವುಗಳ ಎಲ್ಲಾ ಬಳಕೆಗಳಲ್ಲೂ ನೇರವಾಗಿ ಅರ್ಥದೊಂದಿಗೆ ಸಂಬಂಧವನ್ನು ಸಾಧಿಸಬಹುದು. ಅವುಗಳ ಬಳಕೆ ಯಲ್ಲಿ ಸಂಸ್ಕೃತ ವಿಭಕ್ತಿಗಳ ಬಳಕೆಯಲ್ಲಿ ಕಾಣಿಸುವಂತಹ ಸಮಸ್ಯೆಯಿಲ್ಲ. ಹಾಗಾಗಿ, ಅವನ್ನು ಅರ್ಥದೊಂದಿಗೆ ಸಂಬಂಧಿಸುವುದಕ್ಕಾಗಿ ಕಾರಕವೆಂಬ ವ್ಯಾಕರಣ ತತ್ವವನ್ನು ಬಳಸುವ ಅವಶ್ಯಕತೆಯಿಲ್ಲ.

ಕನ್ನಡದ ವ್ಯಾಕರಣ ನಿಯಮಗಳನ್ನು ವಿವರಿಸುವಲ್ಲೂ ಈ ಕಾರಕಗಳ ಅವಶ್ಯಕತೆ ಕಂಡುಬರುವುದಿಲ್ಲ. ಇದನ್ನು ಕಂಡುಕೊಳ್ಳಲು ಸಾಧ್ಯವಾಗದ ಕನ್ನಡದ ವೈಯಾಕರಣಿಗಳು ಈ ಕಾರಕವೆಂಬ ಕಲ್ಪಿತ ತತ್ವವನ್ನು ಕನ್ನಡ ವ್ಯಾಕರಣದೊಳಕ್ಕೆ ತಂದು ಹಾಕಿ, ಆ ವ್ಯಾಕರಣ ಅನವಶ್ಯಕವಾಗಿ ಕ್ಲಿಷ್ಟವಾಗುವಂತೆ ಮಾಡಿದ್ದಾರೆ.

ಹಳೆಗನ್ನಡ ವ್ಯಾಕರಣಗಳಲ್ಲಿ, ಮತ್ತು ಅವುಗಳ ಆಧಾರದ ಮೇಲೆ ರಚಿತ ವಾಗಿರುವ ಹೊಸಗನ್ನಡ ವ್ಯಾಕರಣಗಳಲ್ಲಿ ಇಂತಹ ಕನ್ನಡಕ್ಕೆ ಅವಶ್ಯವಿಲ್ಲದಿರುವ ಇನ್ನೂ ಹಲವಾರು ವ್ಯಾಕರಣ ನಿಯಮಗಳನ್ನು ಮತ್ತು ಕಲ್ಪನೆಗಳನ್ನು ಕಾಣ ಬಹುದು. ಕಲಿಯುವವನ ವೃತ್ತಿಯನ್ನು ಬಿಟ್ಟುಕೊಟ್ಟು, ಸಂಶೋಧಕನ ದೃಷ್ಟಿ ಯಿಂದ ಪರಿಶೀಲಿಸಿದಾಗ ಮಾತ್ರ, ಕನ್ನಡ ವ್ಯಾಕರಣಕ್ಕೆ ಇವು ಯಾಕೆ ಅವಶ್ಯವಿಲ್ಲ ಎಂಬುದು ಸ್ಪಷ್ಟವಾದೀತು.

ನಮ್ಮ ವೈಯಾಕರಣಿಗಳಲ್ಲಿ ಅಪರೂಪಕ್ಕೆ ಕೆಲವರು ಇಂತಹ ಸಂಶೋಧಕ ದೃಷ್ಟಿಯಿಂದ ಹಳೆಗನ್ನಡ ವ್ಯಾಕರಣಗಳನ್ನು, ಮತ್ತು ಅದೇ ಪರಂಪರೆಯಲ್ಲಿ ಸಿದ್ಧವಾದ ಹೊಸಗನ್ನಡ ವ್ಯಾಕರಣಗಳನ್ನು ಪರಿಶೀಲಿಸಿದ್ದಾರೆ. ಉದಾಹರಣೆಗಾಗಿ, ಪಂಚಮೀ ವಿಭಕ್ತಿ ಮತ್ತು ಗಮಕ ಸಮಾಸಗಳ ಕುರಿತು ಸೇಡಿಯಾಪು ಕೃಷ್ಣಭಟ್ಟರು ಬರೆದಿರುವ ಲೇಖನಗಳನ್ನು ಗಮನಿಸಬಹುದು.

೧೬೦

ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಪಾರಿಭಾಷಿಕ ಪದಗಳು

ವ್ಯಾಕರಣವೊಂದರಲ್ಲಿ ಬಳಕೆಯಾಗುವ ಪಾರಿಭಾಷಿಕ ಪದಗಳು ಅದರ ಹಿಂದಿರುವ ವ್ಯಾಕರಣ ಪರಂಪರೆಯಲ್ಲಿ ಬೆಳೆದುಬಂದಿರುತ್ತವೆ. ಅವುಗಳ ಅವಶ್ಯಕತೆ, ಅವುಗಳಿಗಿರುವ ಅರ್ಥ ಮೊದಲಾದುವೆಲ್ಲ ಆ ವ್ಯಾಕರಣ ಪರಂಪರೆ ಯನ್ನು, ಮತ್ತು ಆ ಭಾಷೆಯ ವ್ಯಾಕರಣವನ್ನು ಅವಲಂಬಿಸಿರುತ್ತವೆ. ಅವನ್ನು ಬೇರೊಂದು ಭಾಷೆಯ ವ್ಯಾಕರಣವನ್ನು ಬರೆಯುವಲ್ಲಿ ಬಳಸಬೇಕಾದಾಗ, ಇಂತಹ ವ್ಯಾಕರಣಾಂಶಗಳು ಅನವಶ್ಯಕವಾಗಿ ಆ ಭಾಷೆಯ ವ್ಯಾಕರಣವನ್ನು ಕ್ಲಿಷ್ಟವಾಗಿ ಮಾಡದಂತೆ ಎಚ್ಚರ ವಹಿಸುವ ಅವಶ್ಯಕತೆಯಿದೆ.

ಉದಾಹರಣೆಗಾಗಿ, ಸಂಸ್ಕೃತದಲ್ಲಿ ಏಳು ವಿಭಕ್ತಿಗಳಿವೆ; ಸಂಸ್ಕೃತದ ವೈಯಾ ಕರಣಿಗಳು ಇವನ್ನು ಪ್ರಥಮಾ, ದ್ವಿತೀಯಾ, ತೃತೀಯಾ ಇತ್ಯಾದಿಯಾಗಿ ಹೆಸರಿಸಿದ್ದಾರೆ. ಈ ಪಾರಿಭಾಷಿಕ ಪದ(ಹೆಸರು)ಗಳನ್ನು ಕನ್ನಡದ ವೈಯಾಕರಣಿ ಗಳು ಹಾಗೆಯೇ ಕನ್ನಡ ವ್ಯಾಕರಣದಲ್ಲೂ ಅಳವಡಿಸಿಕೊಂಡಿದ್ದಾರೆ.

ಇಲ್ಲಿ ಏಳು ವಿಭಕ್ತಿಗಳಿವೆಯೆಂಬುದು, ಅವನ್ನು ಒಂದನೇ ವಿಭಕ್ತಿ, ಎರಡನೇ ವಿಭಕ್ತಿ, ಮೂರನೇ ವಿಭಕ್ತಿ ಮೊದಲಾದವುಗಳಾಗಿ ಒಂದು ಕ್ರಮದಲ್ಲಿ ಪಟ್ಟಿ ಮಾಡಬೇಕೆಂಬುದು, ಮತ್ತು ಈ ಪಟ್ಟಿಯಲ್ಲಿ ಬರುವ ಯಾವುದೇ ಒಂದು ವಿಭಕ್ತಿಗೆ ಇಂತಹದೇ ಅರ್ಥ ಇಲ್ಲವೇ ಬಳಕೆ ಇರಬೇಕೆಂಬುದು ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ ಅಂಶ. ಕನ್ನಡ ವ್ಯಾಕರಣ ಈ ಎಲ್ಲಾ ವಿಷಯಗಳಲ್ಲೂ ಸಂಸ್ಕೃತಕ್ಕಿಂತ ಭಿನ್ನವಾಗಿರಬಲ್ಲುದು, ಮತ್ತು ನಿಜಕ್ಕೂ ಅದು ಆ ರೀತಿ ಭಿನ್ನವಾಗಿದೆ.

ಕನ್ನಡದಲ್ಲಿ ಒಟ್ಟು ನಾಲ್ಕು ವಿಭಕ್ತಿಗಳು ಮಾತ್ರ ಇವೆ: ಅನ್ನು, ಇಂದ, ಗೆ, ಮತ್ತು ಲ್ಲಿ ಎಂಬವು ಈ ನಾಲ್ಕು ವಿಭಕ್ತಿಗಳನ್ನು ಸೂಚಿಸುವ ಪ್ರತ್ಯಯಗಳು. ಕನ್ನಡದ ಮಟ್ಟಿಗೆ ಇಂದ ಮತ್ತು ಗೆ ಎಂಬವುಗಳೆರಡು ಮುಖ್ಯವಾಗಿ ಚಲನೆಗೆ ಸಂಬಂಧಿಸಿದ ಆಕರವನ್ನು, ಎಂದರೆ ಚಲನೆ ಎಲ್ಲಿಂದ ಸುರುವಾಗಿದೆ ಮತ್ತು ಎಲ್ಲಿಗೆ ಸಾಗಿದೆ ಎಂಬುದನ್ನು, ಸೂಚಿಸುತ್ತವೆ. ಚಲನೆಗೆ ಸಂಬಂಧಿಸದೇ ಇರುವ ಆಕರವನ್ನು ಲ್ಲಿ ಎಂಬ ಪ್ರತ್ಯಯ ಸೂಚಿಸುತ್ತದೆ. ಹೀಗೆ ಈ ಮೂರು ಪ್ರತ್ಯಯ ಗಳದು ಒಂದು ಗುಂಪಾದರೆ, ಅನ್ನು ಎಂಬ ಪ್ರತ್ಯಯ ಇವಕ್ಕಿಂತ ತೀರ ಭಿನ್ನ ವಾಗಿದ್ದು, ಒಂದು ಘಟನೆ ಯಾವುದರ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಸೂಚಿಸುತ್ತದೆ.

ಸಂಖ್ಯೆಗಳ ಮೂಲಕ ಈ ಪ್ರತ್ಯಯಗಳನ್ನು ಹೆಸರಿಸುವುದಾದರೆ, ಅನ್ನು ಎಂಬುದನ್ನು ಮೊದಲನೆಯ ವಿಭಕ್ತಿಯೆಂದೂ, ಇಂದ ಮತ್ತು ಗೆ ಎಂಬವುಗಳನ್ನು ಎರಡನೇ ಮತ್ತು ಮೂರನೇ ವಿಭಕ್ತಿಗಳೆಂದೂ, ಲ್ಲಿ ಎಂಬುದನ್ನು ನಾಲ್ಕನೇ ವಿಭಕ್ತಿಯೆಂದೂ ಹೆಸರಿಸುವುದೇ ಕನ್ನಡದ ಮಟ್ಟಿಗೆ ಸರಿ.

ಸಂಸ್ಕೃತ ವ್ಯಾಕರಣದಲ್ಲಿ ವಿಭಕ್ತಿಗಳಿಗೆ ಪ್ರಥಮಾ, ದ್ವಿತಿಯಾ, ತೃತೀಯ ಇತ್ಯಾದಿಯಾಗಿ ಸಂಖ್ಯೆಗಳನ್ನು ಬಳಸಿ ಹೆಸರುಗಳನ್ನು ಕೊಟ್ಟಿರುವುದಕ್ಕೆ ಕಾರಣ

೧೬೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಬೇರೆಯೇ ಇದೆ: ಅವನ್ನು ಸೂಚಿಸುವ ಪ್ರತ್ಯಯಗಳು ಎಲ್ಲೆಲ್ಲ ಒಂದೇ ರೂಪ ದಲ್ಲಿ ಬರುತ್ತವೆ ಎಂಬುದನ್ನು ಸೂಚಿಸಲು ಸುಲಭವಾಗುವಂತೆ ಈ ಪಟ್ಟಿಯನ್ನು ಮಾಡಲಾಗಿದೆ. ಉದಾಹರಣೆಗಾಗಿ, ಅಗ್ನಿ ಎಂಬ ಪದಕ್ಕೆ ದ್ವಿವಚನದ ತೃತೀಯಾ, ಚತುರ್ಥೀ ಮತ್ತು ಪಂಚಮಿ ವಿಭಕ್ತಿಗಳಲ್ಲಿ ಅಗ್ನಿಭ್ಯಾಂ ಎಂಬ ಒಂದೇ ರೂಪ ಇದೆ. ಆದರೆ, ಬಹುವಚನದ ಚತುರ್ಥೀ ಮತ್ತು ಪಂಚಮಿಗಳಲ್ಲಿ ಮಾತ್ರ ಅಗ್ನಿಭ್ಯಃ ಎಂಬ ಒಂದೇ ರೂಪ ಇದೆ. ಏಕವಚನದ ಪಂಚಮೀ ಮತ್ತು ಷಷ್ಠಿಗಳಲ್ಲಿ ಅಗ್ನೇಃ ಎಂಬ ಒಂದೇ ರೂಪ ಇದೆ.

ಈ ರೀತಿ ಬೇರೆ ಬೇರೆ ನಾಮಪದಗಳಿಗೆ ಒಂದೇ ರೂಪ ಕಾಣಿಸುವ ವಿಭಕ್ತಿಗಳೆಲ್ಲ ಒಟ್ಟೊಟ್ಟಾಗಿ ಬರುವಂತೆ ಸಂಸ್ಕೃತದ ವೈಯಾಕರಣಿಗಳು ಈ ವಿಭಕ್ತಿಗಳ ಪಟ್ಟಿಯನ್ನು ಮಾಡಿದ್ದಾರೆ. ಇದನ್ನು ಕನ್ನಡದಲ್ಲೂ ಹಾಗೆಯೇ ಬಳಸುವುದರಿಂದ ಕನ್ನಡದ ವ್ಯಾಕರಣದ ಮಟ್ಟಿಗೆ ಯಾವ ಪ್ರಯೋಜನವೂ ಸಿಗುವುದಿಲ್ಲ. ನಿಜಕ್ಕೂ ಕನ್ನಡದ ಯಾವ ಎರಡು ವಿಭಕ್ತಿಗಳೂ ಒಂದೇ ರೂಪ ದಲ್ಲಿ ಬರುವುದಿಲ್ಲ.

ಸಂಸ್ಕೃತ ವೈಯಾಕರಣಿಗಳು ಬಳಸುವ ಸ್ವರಗಳ ಪಟ್ಟಿಯೂ ಹೀಗೆಯೇ. ಸಂಸ್ಕೃತದ ಸಂಧಿನಿಯಮಗಳನ್ನು ಸುಲಭವಾಗಿ ಮತ್ತು ಅಡಕವಾಗಿ ಹೇಳಲು ಸಾಧ್ಯವಾಗುವಂತೆ ಈ ಪಟ್ಟಿಯನ್ನು ರಚಿಸಲಾಗಿದೆ. ಕನ್ನಡದ ವೈಯಾಕರಣಿಗಳು ಈ ಪಟ್ಟಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ಮಾಡಿ, ಹಾಗೆಯೇ ಅದನ್ನು ಕನ್ನಡಕ್ಕೆ ಅಳವಡಿಸಿಕೊಂಡಿದ್ದಾರೆ. ಆದರೆ ಈ ಪಟ್ಟಿ ಕನ್ನಡ ವ್ಯಾಕರಣಕ್ಕೆ ಸ್ವಲ್ಪವೂ ಅನುಕೂಲವಾಗಿಲ್ಲ.

ಅ, ಇ ಮತ್ತು ಉ (ಹ್ರಸ್ವ ಮತ್ತು ದೀರ್ಘ) ಎಂಬವುಗಳನ್ನು ಒಟ್ಟಿಗೆ ಹೇಳಿ, ಅನಂತರ ಋ ಮತ್ತು ೈ (ಹ್ರಸ್ವ ಮತ್ತು ದೀರ್ಘ) ಎಂಬವುಗಳನ್ನು, ಮತ್ತು ಅನಂತರ ಏ, ಓ ಮತ್ತು ಐ, ಔ ಎಂಬವುಗಳನ್ನು ಹೇಳುವುದು ಸಂಸ್ಕೃತದ ಕ್ರಮ. ಅಇಉಣ್, ಋಲ್ಕಕ್, ಏಓಚ್, ಐಓಚ್ ಎಂಬ ಮಾಹೇಶ್ವರ ಸೂತ್ರ ಗಳಲ್ಲಿ ಈ ಪಟ್ಟಿ ಬರುತ್ತದೆ.

ಸಂಸ್ಕೃತದಲ್ಲಿ ಅಕಾರ, ಇಕಾರ ಮತ್ತು ಉಕಾರಗಳು ಮೂಲಸ್ವರಗಳು; ಇಂಡೋ-ಯುರೋಪಿಯನ್ ಮೂಲಭಾಷೆಯ ಎಕಾರ ಮತ್ತು ಒಕಾರಗಳು ಸಂಸ್ಕೃತದಲ್ಲಿ ಅಕಾರವಾಗಿ ಬದಲಾಗಿವೆಯಾದ ಕಾರಣ, ಸಂಸ್ಕೃತದಲ್ಲಿ ಕಾಣಿಸುವ ಎಕಾರ ಮತ್ತು ಒಕಾರಗಳು ಮೂಲಸ್ವರಗಳಲ್ಲ. ಅವು ಸಂಧಿಯ ಮೂಲಕ ಸಿದ್ಧವಾಗುವ ‘ಗುಣಾಕ್ಷರಗಳು’ ಮಾತ್ರ. ಅವನ್ನು ಅಕಾರ, ಇಕಾರ ಮತ್ತು ಉಕಾರಗಳಿಂದ ಬೇರೆ ಇರಿಸಲು ಇದು ಒಂದು ಕಾರಣ; ಅವು ದೀರ್ಘ ರೂಪದಲ್ಲಿ ಮಾತ್ರ ಬರುತ್ತವೆ, ಹ್ರಸ್ವ ರೂಪದಲ್ಲಿ ಬರುವುದಿಲ್ಲ ಎಂಬುದು ಇನ್ನೊಂದು ಕಾರಣ. ಐ ಮತ್ತು ಔಗಳೂ ಸಂಸ್ಕೃತದ ಸಂಧಿಕಾರ್ಯಗಳಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವ ‘ವೃದ್ಧಿ’ ಎಂಬ ಹೆಸರಿನ ಸ್ವರಗಳು. ಈ ರೀತಿ, ಮೇಲಿನ ಸ್ವರಗಳ ಪಟ್ಟಿ ಸಂಸ್ಕೃತ ವ್ಯಾಕರಣದ ಮಟ್ಟಿಗೆ ಅತ್ಯಂತ ಉಪಯುಕ್ತವಾದ ಪಟ್ಟಿ.

೧೬೨


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಆದರೆ, ಕನ್ನಡ ವ್ಯಾಕರಣದ ಮಟ್ಟಿಗೆ ಈ ಪಟ್ಟಿ ತೀರಾ ಅನುಪಯುಕ್ತ ವಾದುದು. ಯಾಕೆಂದರೆ, ಕನ್ನಡದಲ್ಲಿ ಎಕಾರ ಮತ್ತು ಒಕಾರಗಳೆರಡೂ ಮೂಲ ಸ್ವರಗಳಾಗಿದ್ದು, ಹ್ರಸ್ವ ಮತ್ತು ದೀರ್ಘಗಳೆಂಬ ಎರಡು ರೂಪಗಳಲ್ಲೂ ಬರು ತ್ತವೆ; ಅವನ್ನು ಅ, ಇ ಮತ್ತು ಉ ಸ್ವರಗಳಿಂದ ಪ್ರತ್ಯೇಕಿಸುವುದಕ್ಕೆ ಕನ್ನಡ ವ್ಯಾಕರಣದಲ್ಲಿ ಯಾವ ಆಧಾರವೂ ಇಲ್ಲ.

ಇದಲ್ಲದೆ, ಕನ್ನಡದ ಸಂಧಿಕಾರ್ಯಗಳಲ್ಲಿ ಇಕಾರ ಮತ್ತು ಎಕಾರಗಳು ಒಂದು ರೀತಿಯಲ್ಲಿ ವರ್ತಿಸುವುವಾದರೆ (ಅವುಗಳೆದುರು ಯಕಾರ ಆಗಮವಾಗಿ ಬರುತ್ತದೆ), ಉಕಾರ, ಒಕಾರ ಮತ್ತು ಅಕಾರಗಳು ಇನ್ನೊಂದು ರೀತಿಯಲ್ಲಿ ವರ್ತಿಸುತ್ತವೆ (ಅವುಗಳೆದುರು ವಕಾರ ಆಗಮವಾಗಿ ಬರುತ್ತದೆ). ಹಾಗಾಗಿ, ಕನ್ನಡದ ಮಟ್ಟಿಗೆ ಸ್ವರಗಳ ಪಟ್ಟಿಯನ್ನು ಇ, ಎ; ಉ, ಒ, ಅ (ಹ್ರಸ್ವ ಮತ್ತು ದೀರ್ಘ) ಎಂಬುದಾಗಿ ಕೊಡುವುದೇ ಉತ್ತಮ.

ಇದಲ್ಲದೆ, ಐ ಮತ್ತು ಔಗಳಿಗೆ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಹಾಗೆ ವಿಶಿಷ್ಟವಾದ ಸ್ಥಾನವಿಲ್ಲ. ನಿಜಕ್ಕೂ ಅವು ಅಕಾರಕ್ಕಿಂತ ಭಿನ್ನವಾದ ಸ್ವರಗಳೇ ಅಲ್ಲ; ಅಕಾರಕ್ಕೆ ಯಕಾರ ಮತ್ತು ವಕಾರಗಳನ್ನು ಸೇರಿಸಿರುವ ಸೇರಿಕೆಗಳು ಮಾತ್ರ. ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿಕೊಂಡಾಗ ಅನವಶ್ಯಕವಾಗಿ ಬಂದು ಸೇರಿಕೊಂಡ ಅಕ್ಷರಗಳಿವು. ಕನ್ನಡದಲ್ಲಿ ಇವೆರಡು ಮಾತ್ರವಲ್ಲದೆ, ಎಯ್, ಒಯ್, ಆಯ್ ಮೊದಲಾದ ಬೇರೆಯೂ ಹಲವು ಸೇರಿಕೆಗಳಿವೆಯಾದ ಕಾರಣ, ಈ ಎರಡು ಸೇರಿಕೆಗಳಿಗೆ ಮಾತ್ರ ವಿಶಿಷ್ಟವಾದ ಸ್ಥಾನವನ್ನು ಕೊಟ್ಟಿರು ವುದರಿಂದಾಗಿ ಕನ್ನಡ ಬರಹ ಅನವಶ್ಯಕವಾಗಿ ಕ್ಲಿಷ್ಟವಾಗಿದೆ. ಇದಲ್ಲದೆ, ಅದು ಸಂಶೋಧಕರಲ್ಲಿ ಗೊಂದಲವನ್ನೂ ಉಂಟುಮಾಡುತ್ತದೆ.

ಆಧುನಿಕ ವ್ಯಾಕರಣಗಳು

ಸಂಸ್ಕೃತದ ವ್ಯಾಕರಣ ಪರಂಪರೆಯನ್ನು ಬಿಟ್ಟುಕೊಟ್ಟು, ಯುರೋಪಿನ ಇಲ್ಲವೇ ಅಮೆರಿಕಾದ ವ್ಯಾಕರಣ ಪರಂಪರೆಯನ್ನು ಅನುಸರಿಸಿ ಬರೆದ ಹಲವು ಕನ್ನಡ ವ್ಯಾಕರಣಗಳು ಕಳೆದ ಶತಮಾನದಲ್ಲಿ ಸಿದ್ಧವಾಗಿವೆ. ಕೆಲವು ವಿಷಯಗಳಲ್ಲಿ ಇವು ಸಂಸ್ಕೃತ ವ್ಯಾಕರಣದ ಹೊರೆಯನ್ನು ಕನ್ನಡ ವ್ಯಾಕರಣದಿಂದ ತೆಗೆದುಹಾಕುವ ಮೂಲಕ ಕನ್ನಡ ವ್ಯಾಕರಣವನ್ನು ಸರಳಗೊಳಿಸಿವೆ. ಆದರೆ, ಇನ್ನು ಕೆಲವು ವಿಷಯಗಳಲ್ಲಿ ಇಂಗ್ಲಿಷ್ ಇಲ್ಲವೇ ಇತರ ಪಾಶ್ಚಾತ್ಯ ಭಾಷೆಗಳ ವ್ಯಾಕರಣದ ಹೊರೆಯನ್ನು ಕನ್ನಡ ವ್ಯಾಕರಣದ ಮೇಲೆ ಹೇರುವ ಮೂಲಕ ಅದನ್ನು ಕ್ಲಿಷ್ಟ ಗೊಳಿಸಿವೆ.

ಅಮೆರಿಕಾದ ಇಂಗ್ಲಿಷ್ ವ್ಯಾಕರಣ ಪರಂಪರೆಯಲ್ಲಿ ಮುಖ್ಯವಾಗಿ ಎರಡು ರೀತಿಯ ದೃಷ್ಟಿಕೋನಗಳನ್ನು ಕಾಣಬಹುದು: ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ರೀತಿಯ ವ್ಯಾಕರಣಗಳಿರಲು ಸಾಧ್ಯ, ಮತ್ತು ಈ ಕಾರಣಕ್ಕಾಗಿ ಅವುಗಳ ವ್ಯಾಕರಣಗಳನ್ನು ಅವುಗಳದೇ ಆದ ರಚನಾವೈಶಿಷ್ಟ್ಯಗಳನ್ನು ಕಂಡುಹಿಡಿಯುವ

೧೬೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮೂಲಕ ವರ್ಣಿಸಬೇಕು ಎನ್ನುವ ಬ್ಲೂಮ್‌ಫೀಲ್ಡ್ ಮೊದಲಾದವರ ವರ್ಣ ನಾತ್ಮಕ ವ್ಯಾಕರಣಗಳ ದೃಷ್ಟಿಕೋನ ಇವುಗಳಲ್ಲೊಂದು; ಎಲ್ಲಾ ಭಾಷೆಗಳಿಗೂ ಸಮಾನವಾಗಿರುವ ವ್ಯಾಕರಣವೊಂದಿದೆ, ಅದನ್ನು ಮೊದಲಿಗೆ ವರ್ಣಿಸಿ, ಅನಂತರ ಅವುಗಳ ನಡುವೆ ಮೇಲಿನಿಂದ ಮೇಲೆ ಕಾಣಿಸುವ ವ್ಯತ್ಯಾಸಗಳಾವುವು ಎಂಬುದನ್ನು ವರ್ಣಿಸಬೇಕು ಎಂಬ ಚೊಮ್‌ಸ್ಕಿ ಮೊದಲಾದವರ ದೃಷ್ಟಿಕೋನ ಇನ್ನೊಂದು.

ಆಧುನಿಕ ಕನ್ನಡ ವ್ಯಾಕರಣಗಳಲ್ಲಿ ಹೆಚ್ಚಿನವೂ ಇವುಗಳಲ್ಲಿ ಮೊದಲನೆಯ ದಾದ ವರ್ಣನಾತ್ಮಕ ದೃಷ್ಟಿಕೋನವನ್ನವಲಂಬಿಸಿವೆ. ಆದರೆ, ಅದರ ಮೂಲ ತತ್ವಗಳನ್ನು ಬಳಸಿಕೊಳ್ಳುವಲ್ಲಿ ಅವು ಯಶಸ್ವಿಯಾಗಿರುವ ಹಾಗೆ ಕಾಣಿಸುವುದಿಲ್ಲ. ಹಲವಾರು ವಿಷಯಗಳಲ್ಲಿ ಅವು ಇಂಗ್ಲಿಷ್ ಭಾಷೆಗೆ ಅವಶ್ಯವಿರುವ, ಆದರೆ ಕನ್ನಡ ಭಾಷೆಗೆ ಅವಶ್ಯವಿಲ್ಲದಿರುವ ವ್ಯಾಕರಣಾಂಶಗಳನ್ನು ಹಾಗೆಯೇ ಕನ್ನಡ ವ್ಯಾಕರಣದಲ್ಲೂ ಅಳವಡಿಸಲು ಯತ್ನಿಸಿರುವುದನ್ನು ಕಾಣಬಹುದು.

ಉದಾಹರಣೆಗಾಗಿ, ಸಂಸ್ಕೃತದ ಹಾಗೆ ಇಂಗ್ಲಿಷ್‌ನಲ್ಲೂ ಸಮಸ್ತಪದಗಳ ವಿಭಜನೆಯನ್ನು ಅವುಗಳ ಅಂಗಗಳಲ್ಲಿ ಪ್ರಧಾನ ಪದ ಯಾವುದು ಎಂಬ ವಿಷಯದ ಆಧಾರದ ಮೇಲೆ ಸಾಧಿಸಲು ಸಾಧ್ಯವಿದೆ. ಇದನ್ನೇ ಈ ವ್ಯಾಕರಣಗಳು ಕನ್ನಡಕ್ಕೂ ಅನ್ವಯಿಸಿರುವುದನ್ನು ಕಾಣಬಹುದು. ಇದಲ್ಲದೆ, ಇಂಗ್ಲಿಷ್‌ನ ಸಬ್ಜೆಕ್ಟ್, ಆಬ್ಜೆಕ್ಟ್ ಮೊದಲಾದುವನ್ನೂ ಇವು ಕನ್ನಡ ವ್ಯಾಕರಣದಲ್ಲಿ ಅನವಶ್ಯಕವಾಗಿ ಅಳವಡಿಸಿಕೊಂಡಿವೆ.

ಆದರೆ, ಬೇರೆ ಕೆಲವು ವಿಷಯಗಳಲ್ಲಿ ಇವು ಕನ್ನಡ ವ್ಯಾಕರಣವನ್ನು ಹೊಸ ರೀತಿಯಲ್ಲಿ ವರ್ಣಿಸಲು ಯತ್ನಿಸಿವೆ. ಉದಾಹರಣೆಗಾಗಿ, ಕನ್ನಡದ ಸ್ವರಗಳನ್ನು ಪೂರ್ವ ಮತ್ತು ಪಶ್ಚ ಎಂಬುದಾಗಿ ವಿಂಗಡಿಸುವ ಮೂಲಕ, ಕನ್ನಡ ವ್ಯಾಕರಣಕ್ಕೆ ಅನುಕೂಲವಾಗುವಂತಹ ಸ್ವರಗಳ ಪಟ್ಟಿಯನ್ನು ಕೊಡಲು ಇವು ಶಕ್ತವಾಗಿವೆ. ಕನ್ನಡದ ಸಂಧಿಕಾರ್ಯಗಳನ್ನೂ ಇವು ಸ್ವತಂತ್ರ ರೀತಿಯಲ್ಲಿ ವರ್ಣಿಸಿರುವುದನ್ನು ಕಾಣಬಹುದು. ವಿಭಕ್ತಿಗಳ ವರ್ಣನೆ, ಕ್ರಿಯಾರೂಪಗಳ ವರ್ಣನೆ ಮೊದಲಾದ ಬೇರೆ ಕೆಲವು ಕಡೆಗಳಲ್ಲೂ ಇವು ಕನ್ನಡದ ಸ್ವರೂಪವನ್ನು ಹೆಚ್ಚು ಸರಳವಾಗಿ ವಿವರಿಸಲು ಶಕ್ತವಾಗಿವೆ.

ಚೊಮ್‌ಸ್ಕಿಯ ‘ಜನರೆಟಿವ್’ ದೃಷ್ಟಿಕೋನದಿಂದ ಸಿದ್ಧವಾದ ವ್ಯಾಕರಣಗಳಲ್ಲಿ ಮಾತ್ರ, ಕನ್ನಡ ವ್ಯಾಕರಣ ಇಂಗ್ಲಿಷ್ ವ್ಯಾಕರಣದ ತದ್ಪ್ರತಿಯಾಗಿದೆ. ಎ.ಕೆ. ರಾಮಾನುಜನ್ ಅವರ ಕನ್ನಡ ವ್ಯಾಕರಣದಲ್ಲಿ ಇದನ್ನು ಸ್ಪಷ್ಟವಾಗಿ ಕಾಣ ಬಹುದು. ಉದಾಹರಣೆಗಾಗಿ, ಇಂಗ್ಲಿಷ್‌ನಲ್ಲಿ ವಾಕ್ಯರಚನೆಗೆ ಪದಗಳ (ಇಲ್ಲವೇ ಪದಗುಚ್ಛಗಳ) ಸಾಪೇಕ್ಷ ಸ್ಥಾನ ಬಹಳ ಮುಖ್ಯವಾದುದು. ವಾಕ್ಯದಲ್ಲಿ ಒಂದು ನಾಮಪದ ಕ್ರಿಯಾಪದದ ಮೊದಲು ಬಂದರೆ ಅದು ಸಬ್ಜೆಕ್ಟನ್ನೂ, ಅನಂತರ ಬಂದರೆ ಆಬ್ಜೆಕ್ಟನ್ನೂ ಸೂಚಿಸುತ್ತದೆಯೆಂಬ ನಿಯಮ ಅದರಲ್ಲಿದೆ.

೧೬೪


ಶತಮಾನದ ಕನ್ನಡ ವ್ಯಾಕರಣ ಸಂಶೋಧನೆ

ಇದಲ್ಲದೆ, ಇಂಗ್ಲಿಷ್ ವಾಕ್ಯದಲ್ಲಿ ಆಬ್ಜೆಕ್ಟ್ ಇಲ್ಲದ ವಾಕ್ಯ ಇರಬಲ್ಲುದು, ಆದರೆ ಸಬ್ಜೆಕ್ಟ್ ಇಲ್ಲದ ವಾಕ್ಯ ಇರಲಾರದು.

ಇಂತಹ ಹಲವು ನಿಯಮಗಳ ಆಧಾರದ ಮೇಲೆ, ಇಂಗ್ಲಿಷ್ ವಾಕ್ಯಗಳನ್ನು ನಾಮಪದಗುಚ್ಛ (ಸಬ್ಜೆಕ್ಟ್) ಮತ್ತು ಕ್ರಿಯಾಪದಗುಚ್ಛ ಎಂಬುದಾಗಿ ಮೊದಲಿಗೆ ವಿಂಗಡಿಸಿ, ಆಮೇಲೆ ಕ್ರಿಯಾಪದಗುಚ್ಛವನ್ನು ತಿರುಗಿ ಕ್ರಿಯಾಪದಗುಚ್ಛ ಮತ್ತು ನಾಮಪದಗುಚ್ಛ (ಆಬ್ಜೆಕ್ಟ್) ಎಂಬುದಾಗಿ ವಿಂಗಡಿಸಲಾಗುತ್ತದೆ.

ಆದರೆ, ಈ ಎಲ್ಲಾ ವಿಷಯಗಳಲ್ಲೂ ಕನ್ನಡ ಭಾಷೆ ಇಂಗ್ಲಿಷ್‌ನಿಂದ ಭಿನ್ನವಾಗಿದೆ; ಹಾಗಾಗಿ, ಮೇಲಿನ ನಿಯಮಗಳನ್ನು ಕನ್ನಡದ ವಾಕ್ಯಗಳಿಗೆ ಅನ್ವಯಿಸಲು ಸಾಧ್ಯವಾಗದು. ಹಾಗಿದ್ದರೂ, ರಾಮಾನುಜನ್ ಅವರ ಕನ್ನಡ ವ್ಯಾಕರಣ ಇಂತಹದೇ ವಾಕ್ಯರಚನೆಯನ್ನು ಕನ್ನಡದಲ್ಲೂ ಕಾಣಲು ಪ್ರಯತ್ನಿಸು ತ್ತದೆ.

ಮುಂದೆ ಎಂಬತ್ತನೇ ದಶಕದಲ್ಲಿ ಭಾಷೆಗಳು ಈ ವಿಷಯದಲ್ಲಿ ಭಿನ್ನ ವಾಗಿರಲು ಸಾಧ್ಯ ಎಂಬುದನ್ನು ಮನಗಂಡ ಚೊಮ್‌ಸ್ಕಿ ಮೊದಲಾದವರು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದಾರೆ; ಇದಲ್ಲದೆ, ಇತ್ತೀಚೆಗೆ ಅವರ ಸಿದ್ಧಾಂತ ಇದೇ ದಿಕ್ಕಿನಲ್ಲಿ ಇನ್ನಷ್ಟು ಬದಲಾವಣೆಗಳನ್ನು ಕಂಡಿದೆ: ಬೇರೆ ಬೇರೆ ಭಾಷೆಗಳ ನಡುವೆ ಸಮಾನವಾಗಿರುವ ವ್ಯಾಕರಣಾಂಶ ಅತ್ಯಲ್ಪ ಎಂದು ವಾದಿಸುವ ಚೊಮ್‌ಸ್ಕಿಯವರ ‘ಮಿನಿಮಲಿಸ್ಟ್ ಸಿದ್ಧಾಂತ’ ಈ ವಿಷಯದಲ್ಲಿ ಹೆಚ್ಚು ಕಡಿಮೆ ಬ್ಲೂಮ್‌ಫೀಲ್ಡ್ ಅವರ ಹಳೇ ಸಿದ್ದಾಂತವನ್ನೇ ಹೋಲುತ್ತಿದೆ. ಕನ್ನಡ ವ್ಯಾಕರಣದ ಮಟ್ಟಿಗೆ ಈ ಸಿದ್ದಾಂತವನ್ನು ಕಾರ್ಯರೂಪಕ್ಕೆ ತರುವ ಕೆಲಸ ಈ ಶತಮಾನದಲ್ಲಿ ಇನ್ನೂ ನಡೆಯಬೇಕಾಗಿದೆ.

ವ್ಯಾಕರಣದ ಅವಶ್ಯಕತೆ

ನಿಜಕ್ಕೂ ಈ ರೀತಿ ಕನ್ನಡ ವ್ಯಾಕರಣವನ್ನು ಸಂಶೋಧಿಸುವುದರಿಂದ ಪ್ರಯೋಜನ ವೇನಾದರೂ ಇದೆಯೇ ಎಂದು ಯಾರಾದರೂ ಕೇಳಬಹುದು. ವ್ಯಾಕರಣಬದ್ಧ ವಾಗಿ ಮಾತನಾಡಲು ನಾವು ಚಿಕ್ಕಂದಿನಲ್ಲೇ ಕಲಿತಿರುವೆವಾದ ಕಾರಣ, ಅದಕ್ಕೆ ವ್ಯಾಕರಣವನ್ನು ಕಲಿಯುವ ಅವಶ್ಯಕತೆಯಿಲ್ಲ. ಆದರೆ, ಅರಿವಿಗೆ ಎಟಕುವಂತಹ ವ್ಯಾಕರಣ ಜ್ಞಾನದಿಂದ ಬೇರೆ ಹಲವು ರೀತಿಯ ಪ್ರಯೋಜನಗಳನ್ನು ನಾವು ಪಡೆಯಬಲ್ಲೆವು.

ಕಂಪ್ಯೂಟರ್‌ಗಳು ಇವತ್ತು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ವನ್ನು ಆಕ್ರಮಿಸಿಕೊಳ್ಳುತ್ತಿವೆ. ಕನ್ನಡ ಭಾಷೆಯನ್ನು ಕಂಪ್ಯೂಟರ್‌ಗಳಿಗೆ ಅಳವಡಿಸಿ ಕೊಳ್ಳಬೇಕಿದ್ದಲ್ಲಿ, ಅದಕ್ಕೆ ಕನ್ನಡ ಪದರಚನೆ ಮತ್ತು ವಾಕ್ಯರಚನೆಗಳನ್ನು ತಿಳಿಸಿಕೊಡುವ ತಂತ್ರಾಶವನ್ನು ತಯಾರಿಸಿಕೊಡುವುದು ಅವಶ್ಯ. ಇದಕ್ಕೆ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಇಲ್ಲವೇ ಇಂಗ್ಲಿಷ್ ವ್ಯಾಕರಣ ನಿಯಮಗಳನ್ನು ಕನ್ನಡದವೆಂದು ಭ್ರಮಿಸುವ ಕನ್ನಡ ವ್ಯಾಕರಣಗಳಿಂದ ಏನೂ ಪ್ರಯೋಜನ

೧೬೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವಾಗಲಾರದು. ಕನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಸಿದ್ಧಪಡಿಸಿದಲ್ಲಿ ಮಾತ್ರ, ಅಂತಹ ವ್ಯಾಕರಣವನ್ನು ಬಳಸಿ ಕಂಪ್ಯೂಟರ್‌ಗಳಿಗೆ ಉತ್ತಮವಾದ ಕನ್ನಡ ತಂತ್ರಾಂಶವನ್ನು ತಯಾರಿಸಿಕೊಡಲು ಸಾಧ್ಯ.

ಇಂತಹ ಕನ್ನಡದ್ದೇ ಆದ ತಂತ್ರಾಂಶದ ಮೂಲಕ, ನಾವು ಬರೆದಿರುವ ಕನ್ನಡ ಪದಗಳನ್ನು ಮತ್ತು ವಾಕ್ಯಗಳನ್ನು ಕಂಪ್ಯೂಟರ್ ಮೂಲಕ ತಿದ್ದಲು ಸಾಧ್ಯವಾಗ ಬಹುದು, ಮತ್ತು ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಬರೆದ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಕೆಲಸವನ್ನೂ ಕಂಪ್ಯೂಟರ್ ಮೂಲಕ ಮಾಡಿಸಲು ಸಾಧ್ಯವಾಗಬಹುದು. ಹಾಗಾಗಿ, ಈ ಕಂಪ್ಯೂಟರ್‌ಗಳ ಹೊಸ ಯುಗದಲ್ಲಿ ಕನ್ನಡ ವ್ಯಾಕರಣಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಬರುವುದರಲ್ಲಿ ಸಂಶಯವಿಲ್ಲ.

೪.೫ ಶಬ್ದಬ್ರಹ್ಮರು ಎಡವಿದಾಗ

ಶಬ್ದಕ್ಕೆ ಅರ್ಥ ಹೇಳುವುದೂ ಒಂದು ಕಲೆಯೇ ಎಂಬುದನ್ನು ಒಪ್ಪಬೇಕು. ಯಾಕೆಂದರೆ, ಈ ಕಾರ್ಯದಲ್ಲಿ ವಿದ್ವಾಂಸರಿಗಿಂತಲೂ ಕವಿಗಳಿಗೇ ಅಗ್ರಸ್ಥಾನ. ಕೆಲವೆಡೆಗಳಲ್ಲಿ ಒಂದು ಶಬ್ದ ಮತ್ತು ಅದರ ಅರ್ಥ ಇವುಗಳೊಳಗೆ ಯಾವ ರೀತಿಯ ಚಾರಿತ್ರಿಕ ಸಂಬಂಧವಿಲ್ಲದಿದ್ದರೂ ಕವಿಗಳು ಆ ಅರ್ಥ ಕೊಟ್ಟುದ ರಿಂದಾಗಿ ಅದಕ್ಕೆ ಮಾನ್ಯತೆ ಬರುತ್ತದೆ. ಹಾಗೆಂದು ವಿದ್ವಾಂಸರು ತಮ್ಮ ಶಾಸ್ತ್ರೀಯ ಕೃತಿಗಳಲ್ಲೂ ಕವಿತ್ವಕ್ಕೆ ಇಲ್ಲವೇ ಕಲ್ಪನಾವಿಲಾಸಕ್ಕೆ ಮಾರುಹೋದರಾದರೆ, ಅಂತಹ ವಿದ್ವಾಂಸರು ಎಡವಿದ್ದಾರೆಂದೇ ಹೇಳಬೇಕಾಗುತ್ತದೆ.

ಕೆಂಪಗಿರುವುದು ಕೆನ್ನೆ (ಆರೋಗ್ಯವಂತರ ಕೆನ್ನೆ ಕೆಂಪಾಗಿರುವುದರಿಂದ) ಎಂದಾಗಲಿ, ಪರನೆ ಪರಿದು ಹೋಗುವ ಸ್ವಭಾವವುಳ್ಳುದೇ ಪರ್ದು > ಹದ್ದು ಎಂದಾಗಲಿ, ಮೇಯುವುದರಲ್ಲಿ ಹಿರಿದೆನಿಸಿದ್ದನ್ನು ಕಂಡುಹಿಡಿದುದೇ ಮೇಕೆ ಎಂದಾಗಲಿ ಶಂ.ಭಾ.ಜೋಶಿಯವರು ವಾದಿಸಿದರೆ, ಅದನ್ನು ತಪ್ಪೆಂದು ಶಾಸ್ತ್ರೀಯವಾಗಿ ವಾದಿಸಲು ಸಾಧ್ಯವಾಗದಿರಬಹುದು. ಕುಡು-ಕುಡನೆ ನಡುಗುವು ದಕ್ಕೆ ಹಚ್ಚುವ ಚಳಿಯನ್ನು ಕೋಡು ಎಂದೂ, ಆ ಚಳಿಯಿನ್ನೂ ಜಾಸ್ತಿಯಾಗಿ ಕುಳ್ಳಿರಬೇಕಾದ ಪರಿಸ್ಥಿತಿ ಬಂದರೆ ಅದಕ್ಕೆ ಕುಳಿರ್ ಎಂಬ ಹೆಸರೆಂದೂ ಅವರು ಸಾರಿದರೂ ಅವರ ಈ ಕವಿತ್ವಕ್ಕೆ ಕೆಲವರು ತಲೆದೂಗಬಹುದು (ಶಂ.ಭಾ. ಜೋಶಿಯವರ ಕನ್ನುಡಿಯ ಹುಟ್ಟು ಎಂಬ ಪುಸ್ತಕವನ್ನು ನೋಡಿ).

ಆದರೆ, ಬೆರಲ್ ಎಂಬ ಶಬ್ದದಿಂದ ಬೆರಂಟು ಎಂಬುದು ಸಿದ್ದವಾಗಿದೆ ಯೆಂದಾಗಲಿ, ಕೂಳ್ (ಅನ್ನ)ವನ್ನು ತಿಂದು ತಿರುಗುವುದರಿಂದಾಗಿ ಕೂಳಿ > ಗೂಳಿ ಎಂಬ ಪದ ಸಿದ್ಧವಾಗಿದೆಯೆಂದಾಗಲಿ, ಸುದ್ದಿಗಳನ್ನು ಬೇರೆಯವರಿಗರಿಯ ದಂತೆ ಹೀರಿಕೊಂಡು ಬರುವವನೇ ಹೇರ ಇಲ್ಲವೇ ಹೇರಿಗೆ ಎಂದಾಗಲಿ ವಾದಿಸಹೊರಟರೆ ಅದಕ್ಕೆ ಶಾಸ್ತ್ರದ ಮನ್ನಣೆ ದೊರಕಲಾರದು. ಶಬ್ದಗಳಲ್ಲಿ

೧೬೬


ಶಬ್ದ ಬ್ರಹ್ಮರು ಎಡವಿದಾಗ

ಬರುವ ಪ್ರತಿಯೊಂದು ವ್ಯಂಜನಕ್ಕೆ ಇಲ್ಲವೇ ಸ್ವರಕ್ಕೆ ಅದರದೇ ಆದ ಚರಿತ್ರೆ ಯಿದ್ದು, ಬರಿಯ ಸಾರೂಪ್ಯದ ಆಧಾರದ ಮೇಲೆ ಶಬ್ದಗಳೊಳಗೆ ಸಂಬಂಧವನ್ನು ಕಲ್ಪಿಸಲು ಸಾಧ್ಯವಾಗದು.

ಸ್ವರ ಮತ್ತು ವ್ಯಂಜನಗಳ ಚರಿತ್ರೆ

ಕನ್ನಡ ಶಬ್ದಗಳಲ್ಲಿ ಬರುವ ಸ್ವರ ಮತ್ತು ವ್ಯಂಜನಗಳ ಚರಿತ್ರೆಯನ್ನು ಬರೀ ಕನ್ನಡ ಶಬ್ದಗಳನ್ನು ಮಾತ್ರವೇ ಪರಿಶೀಲಿಸುವುದರ ಮೂಲಕ ತಿಳಿಯಲು ಸಾಧ್ಯವಾಗದು. ಇದಕ್ಕಾಗಿ ಕೆಲವೊಮ್ಮೆ ತಮಿಳು, ತೆಲುಗು, ತುಳು, ಗೋಂಡಿ, ಕುಡುಖ್ ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿ ಬರುವ ಶಬ್ದಗಳನ್ನೂ ಅಭ್ಯಾಸ ಮಾಡುವ ಅವಶ್ಯಕತೆ ಕಂಡುಬರುತ್ತದೆ.

ಉದಾಹರಣೆಗಾಗಿ, ಬೆರಂಟು ಎಂಬ ಶಬ್ದದಲ್ಲಿ ಬರುವ ಎರಡನೆಯ ವ್ಯಂಜನವು ಅಕಾರವಾಗಿದ್ದು, ಕನ್ನಡದಲ್ಲಿ ಅದು ರಕಾರವಾಗಿದೆಯೆಂದು, ಮತ್ತು ಬೆರಲ್ ಎಂಬುದರಲ್ಲಿ ಈ ವ್ಯಂಜನಕ್ಕೆ ರಕಾರವೇ ಮೂಲವಾಗಿತ್ತೆಂದು ಇಂತಹ ಅಭ್ಯಾಸದಿಂದ ಸಿದ್ಧಿಸುತ್ತದೆ. ಅವುಗಳೊಳಗೆ ಅರ್ಥದಲ್ಲಿ ಸಂಬಂಧ ತೋರಬಹು ದಾದರೂ ಶಬ್ದಗಳ ಮಟ್ಟಿಗೆ ಸಂಬಂಧವಿಲ್ಲ.

ಕೂಳ್-ಗೂಳ್ ಎಂಬವುಗಳಲ್ಲೂ ಹೀಗೆಯೇ. ಅವುಗಳೊಳಗೆ ಅರ್ಥ ಸಾಮ್ಯ ಕಾಣಿಸುತ್ತದೆ, ಆದರೆ ಶಬ್ದ ಸಂಬಂಧವಿಲ್ಲ. ಕೂಳ್ ಎಂಬುದು ಹಳೆಗನ್ನಡ ದಲ್ಲೇನೇ ಕೂಳ್ ಎಂದಿದೆ. ಆದರೆ, ಗೂಳ್ ಎಂಬುದರಲ್ಲಿರುವ ಳಕಾರ ಈ ರೀತಿ ಐಕಾರದಿಂದ ಬಂದಿದೆಯೆಂದು ವಾದಿಸಲು ಯಾವ ಆಧಾರವೂ ಇಲ್ಲ. ಅದು ಮೂಲದಲ್ಲೂ ಳಕಾರವಾಗಿಯೇ ಇದ್ದಿರಬೇಕು. ಹೀರು ಎಂಬ ಪದದಿಂದ ಹೇರ ಇಲ್ಲವೇ ಹೇರಿಗ ಎಂಬ ಪದವನ್ನು ಶಾಸ್ತ್ರೀಯವಾಗಿ ಸಾಧಿಸಲು ಸಾಧ್ಯವಿಲ್ಲವೇಕೆಂದರೆ, ಕನ್ನಡದ ಚರಿತ್ರೆಯಲ್ಲಿ ಈ ಎಂಬ ಸ್ವರ ಏ ಎಂಬ ಸ್ವರವಾಗಿದೆಯೆಂದು ಹೇಳಲು ಯಾವ ಆಧಾರವೂ ಇಲ್ಲ.

ನಮ್ಮ ನುಡಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಬರೆದ ನಮ್ಮ ನುಡಿ ಎಂಬ ಪುಸ್ತಕ ದಲ್ಲೂ ಇಂತಹವೇ ಹಲವು ಕಲ್ಪನೆಗಳನ್ನು ಕಾಣುತ್ತೇವೆ. ಅಂದವಾದ ಕೈ ಅಂಗೈ, ಅಂಗೈಯಲ್ಲಿ ಇರುವುದು ಅಂಕೆಯಲ್ಲಿರುತ್ತದೆ, ಹಾಗಾಗಿ ಅಂಕೈಯೇ ಅನಂತರ ಅಂಕೆ ಎಂದಾಗಿರಬೇಕು ಎಂಬುದು ಇಂತಹ ಕಲ್ಪನೆಗಳಲ್ಲೊಂದು. ಬಾಯಲ್ಲಿ ನೀರೂರುವಂತೆ ಮಾಡುವ ಪದಾರ್ಥ ಊರ್ಪು > ಉಪ್ಪು ಎಂಬು ದಿನ್ನೊಂದು. ಇರು ಎಂಬ ಧಾತುವಿನಿಂದ ಏತೆ, ಐದಾನೆ ಎಂಬ ರೂಪಗ ಳಾದಂತೆ, ಕೈಯ ಬೆರಳುಗಳ ಹಾಗೆ ಒತ್ತಾಗಿರು ಎಂಬ ಅರ್ಥದಲ್ಲಿ ಐದು ಎಂಬ ಪದ ಬಂದು ಅದೇ ಐದು ಎಂಬ ಸಂಖ್ಯಾವಾಚಿಯಾದ ಪದವಾಗಿರಲೂ ಸಾಕು ಎಂಬುದು ಮತ್ತೊಂದು.

೧೬೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮೇಲಿನಿಂದ ಮೇಲೆ ನೋಡುವವರಿಗೆ ಇವೆಲ್ಲವೂ ಯುಕ್ತಿಯುಕ್ತವಾದ ವಾದ ಗಳಾಗಿಯೇ ತೋರಬಹುದಾದರೂ ಒಂದು ಮುಖ್ಯ ಚಾರಿತ್ರಿಕ ಕಾರಣಕ್ಕಾಗಿ ಇವು ಮೂರನ್ನೂ ತಪ್ಪು ಕಲ್ಪನೆಗಳೆಂದು ತ್ಯಜಿಸಬೇಕಾಗುತ್ತದೆ. ಕನ್ನಡದವೇ ಆದ ಚಂದ, ಚನ್ನಾಗಿ ಮೊದಲಾದ ಪದಗಳಿಂದ ಮತ್ತು ಇತರ ದ್ರಾವಿಡ ಭಾಷೆಗಳಲ್ಲಿ ಕಾಣಿಸುವ ಪದಗಳಿಂದ, ಕನ್ನಡದ ಅಂದ ಎಂಬ ಪದದ ಮೂಲವೂ ಚಂದ ಎಂದೇ ಇದ್ದಿರಬೇಕೆಂದು ನಿರ್ಧರಿಸಬೇಕಾಗುತ್ತದೆ.

ಆದಿ ಚಕಾರ ವಿಕಲ್ಪವಾಗಿ ಲೋಪಗೊಂಡಿರುವುದೇ ಈ ರೀತಿ ಕನ್ನಡದಲ್ಲಿ ಚಂದ-ಅಂದ ಎಂಬುದಾಗಿ ಎರಡೆರಡು ರೂಪಗಳು ಕಾಣಿಸಲು ಕಾರಣ. ಅಂಗೈ ಮತ್ತು ಅಂಕೆ ಎಂಬ ಪದಗಳ ಮೂಲರೂಪಕ್ಕೆ ಇಂತಹ ಆದಿಚಕಾರವನ್ನು ಕಲ್ಪಿಸಿಕೊಳ್ಳಲು ಯಾವ ಆಧಾರವೂ ಇಲ್ಲವಾದುದರಿಂದ, ಅವಕ್ಕೂ ಅಂದ ಎಂಬ ಪದಕ್ಕೂ ನಡುವೆ ಯಾವ ಸಂಬಂಧವೂ ಸಿದ್ದಿಸದು.

ಉಪ್ಪು ಎಂಬ ಪದದ ಮೂಲವೂ ಚುಪ್ಪು ಎಂದಿದ್ದಿರಬೇಕೆಂದು ಕುಯಿ, ಗೋಂಡಿ, ಪಾರ್ಜಿ ಮೊದಲಾದ ಮಧ್ಯದ್ರಾವಿಡ ಭಾಷೆಗಳ ಆಧಾರದ ಮೇಲೆ ಹೇಳಬಹುದು. ಐದು ಎಂಬ ಪದದಲ್ಲೂ ಇಂತಹ ಆದಿಚಕಾರವಿತ್ತು. ಉದಾ ಹರಣೆಗಾಗಿ, ಪಾರ್ಜಿಯಲ್ಲಿ ಈ ಪದ ಚೇದು ಎಂದೂ, ಕುಯಿಯಲ್ಲಿ ಸಿಂಗಿ ಎಂದೂ ಬರುತ್ತದೆ. ಊರು (ಮೂಲ ಊರು) ಎಂಬ ಪದಕ್ಕಾಗಲಿ, ಇರು ಎಂಬ ಪದಕ್ಕಾಗಲಿ ಇಂತಹ ಆದಿಚಕಾರವನ್ನು ಕಲ್ಪಿಸಿಕೊಳ್ಳಲು ಆಧಾರವಿಲ್ಲವಾದ ಕಾರಣ, ಮೇಲೆ ಹೇಳಿದ ಮಾಸ್ತಿಯವರ ಕಲ್ಪನೆಯನ್ನು ಸರಿಯೆಂದು ಸಮರ್ಥಿಸಿ ಕೊಳ್ಳಲು ಸಾಧ್ಯವಾಗದು. ಇಲ್ಲ ಎಂಬ ಪದಕ್ಕೂ ಚಿಲ್ ಎಂಬ ರೂಪವಿದ್ದಿತಾದ ಕಾರಣ, ಅದನ್ನೂ ಇರ್ ಎಂಬ ಧಾತುವಿನಿಂದ ಸಾಧಿಸುವುದು ಕಷ್ಟಸಾಧ್ಯ.

ಬೇರೆ ಕೆಲವು ಕಲ್ಪನೆಗಳು

ಮಾಸ್ತಿಯವರ ಪುಸ್ತಕದಲ್ಲಿ ಇದೇ ರೀತಿಯ ಇನ್ನೂ ಹಲವಾರು ಕಲ್ಪನೆಗಳನ್ನು ಕಾಣಬಹುದು. ಇವುಗಳಲ್ಲಿ ಕೆಲವನ್ನು ಮೇಲಿನ ಕಲ್ಪನೆಗಳ ಹಾಗೆ ತಪ್ಪೆಂದು ನಿರ್ಧಾರವಾಗಿ ಹೇಳಬಹುದಾದರೆ, ಬೇರೆ ಕೆಲವನ್ನು ಸರಿಯೆಂದು ಇಲ್ಲವೇ ತಪ್ಪೆಂದು ವಾದಿಸಲು ಯಾವ ಆಧಾರವೂ ಇಲ್ಲವಾದ್ದರಿಂದ ಸದ್ಯಕ್ಕಂತೂ ಹಾಗೆಯೇ ಬಿಡಬೇಕಾಗುತ್ತದೆ.

ಬಾಗಿ ಬಾಗಿ ಮಾಡುವ ಕೆಲಸವಾದ್ದರಿಂದ ಕುಣಿ ಎಂಬುದಕ್ಕೂ ಕೂನು ಎಂಬುದಕ್ಕೂ ಸಂಬಂಧ ಕಲ್ಪಿಸಿದ್ದಾರೆ, ಆದರೆ ಕೂನು ಎಂಬುದರ ನಕಾರ ಕುಣಿ ಎಂಬುದರಲ್ಲಿ ಣಕಾರವಾದುದು ಹೇಗೆ ಎಂಬುದನ್ನು ಮಾತ್ರ ಹೇಳಿಲ್ಲ. ಕಳ್ ‘ಮರೆಸು’ ಎಂಬುದರಿಂದ ಕಳತಲೆ > ಕತ್ತಲೆ ಎಂಬ ಪದ ಬಂದಿದೆಯೆಂದಿ ದ್ದಾರೆ, ಆದರೆ ಈ ಎರಡನೆಯ ಪದ (ಕಳತಲೆ ಎಂಬುದು) ಕರಿ ಎಂಬುದರಿಂದ ಸಿದ್ಧಿಸಿದೆಯೆಂದು ಹೇಳಲು ಚಾರಿತ್ರಿಕ ಆಧಾರವಿದೆ. ಪಿತ್ (ಹಿಂದೆ) ಎಂಬ ಪದದ

೧೬೮


ಪಾರಿಭಾಷಿಕ ಪದಗಳ ಸೃಷ್ಟಿ

ಉಚ್ಚಾರಣೆ ಹಿಂದುಮುಂದಾಗಿ ತಿಪ್ಪೆ ಎಂದಾಗಿದೆಯೆಂದು ಅವರು ಹೇಳಿರುವು ದಂತೂ ತೀರ ವಿಚಿತ್ರ.

ಬೆನ್ನು ಎಂಬ ಪದವನ್ನು ಮಾಸ್ತಿಯವರು ಪಿನ್ ಎಂಬ ಪದದಿಂದ ಸಾಧಿಸು ತ್ತಾರೆ. ಆದರೆ ಕನ್ನಡದ ಇಕಾರ ಎಕಾರವಾದುದು ಅಕಾರ ಇಲ್ಲವೇ ಎಕಾರ ಪರದಲ್ಲಿ ಬಂದಾಗ ಮಾತ್ರ (ಉದಾ: ಇರ್ > ಎರಡು, ನಿಲ್ಲು > ನೆಲೆ). ಬೆನ್ನು ಎಂಬ ಪದದ ಮೂಲ ‘ವೆರಿನ್’ ಎಂದೇನೋ ಇರಬೇಕು (ತುಳುವಿನ ಬೆರಿ, ತಮಿಳಿನ ವೆರಿನ್ ಇತ್ಯಾದಿ ಪದಗಳನ್ನು ಇದಕ್ಕೆ ಆಧಾರವಾಗಿ ಕೊಡಬಹುದು).

ಒಗೆದು ಒಣಗಿಸಿದ ಬಟ್ಟೆಯನ್ನು ಮಡಿಸುತ್ತೇವೆ, ಆದ್ದರಿಂದ ಮಡಿಸಿದ ಬಟ್ಟೆ ಮೈಲಿಗೆ ಅಲ್ಲದ ಬಟ್ಟೆ ಮಡಿ ಆಯಿತು, ಇದನ್ನು ಮಾಡುವವನೇ ಮಡಿ ವಳ ಎಂಬ ಮಾಸ್ತಿಯವರ ವಾದವನ್ನು ಸದ್ಯಕ್ಕಂತೂ ತಪ್ಪೆಂದು ಸಾಧಿಸಲು ಸಾಧ್ಯವಿಲ್ಲವಾದರೂ ಅದು ಮೇಲಿನವುಗಳ ಹಾಗೆಯೇ ಇದೆ.

ರೂಢಿಮೂಲವಾದ ಸಂಬಂಧ

ಭಾಷೆಯಲ್ಲಿ ಬರುವ ಹೆಚ್ಚಿನ ಪದಗಳಿಗೂ ಅವು ಸೂಚಿಸುವ ವಸ್ತುವಿನೊಡನೆ ಇಲ್ಲವೇ ವಿಷಯದೊಡನೆ ನೇರವಾದ ಸಂಬಂಧವಿಲ್ಲ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ರೂಢಿಮೂಲವಾದ ಸಂಬಂಧ ಮಾತ್ರವೇ ಇವುಗಳೊಳಗೆ ಇರುವಂತಹದು ಎಂಬುದನ್ನು ಮರೆಯಬಾರದು. ಪದಕ್ಕೂ ಅದು ಸೂಚಿಸುವ ವಸ್ತುವಿಗೂ ನೇರವಾದ ಸಂಬಂಧ ಇದೆಯಾದರೆ, ಕನ್ನಡದ ಮರಕ್ಕೆ ಸಂಸ್ಕೃತ ದಲ್ಲಿ ವೃಕ್ಷ, ಹಿಂದಿಯಲ್ಲಿ ಪೇಡ್, ಮರಾಠಿಯಲ್ಲಿ ಝಾಡ್, ಇಂಗ್ಲಿಷ್‌ನಲ್ಲಿ ಟ್ರೀ ಎಂದೆಲ್ಲ ಬೇರೆ ಹೆಸರುಗಳಿರಲು ಸಾಧ್ಯವಾಗುತ್ತಿರಲಿಲ್ಲ.

ಪದಗಳಿಗೂ, ವಸ್ತು ಇಲ್ಲವೇ ವಿಷಯಗಳಿಗೂ ನಡುವಿರುವ ಈ ಸಂಬಂಧ ವನ್ನು, ಮತ್ತು ಅದರ ಚರಿತ್ರೆಯನ್ನು ತಿಳಿಯುವಲ್ಲಿ ತರ್ಕಕ್ಕೆ ಯಾವ ಸ್ಥಾನವೂ ಇಲ್ಲ. ಭಾಷೆಯ ಸ್ವರೂಪವನ್ನು ತರ್ಕದ ಮೂಲಕ ವಿಶ್ಲೇಷಿಸ ಹೊರಟವರಲ್ಲಿ ಒಬ್ಬರೂ ಇದುವರೆಗೆ ಜಯಶೀಲರಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

೪. ಪಾರಿಭಾಷಿಕ ಪದಗಳ ಸೃಷ್ಟಿ

ಯಾವುದಾದರೊಂದು ಶಾಸ್ತ್ರದಲ್ಲಿ ಹೊಸ ವಿಷಯಗಳನ್ನು ಕಂಡುಹಿಡಿದ ಮೇಲೆ, ಅದನ್ನು ವರದಿಮಾಡಬೇಕಾಗಿ ಬಂದಾಗ, ಹಲವು ಬಾರಿ ಹೊಸ ಪದಗಳನ್ನೂ ಸೃಷ್ಟಿಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ. ಭಾಷೆಯಲ್ಲಿರುವ ಪದಗಳು ಈ ಹೊಸ ವಿಷಯಗಳನ್ನು ಸ್ಪಷ್ಟವಾಗಿ ಮತ್ತು ಅಡಕವಾಗಿ ವರ್ಣಿಸಲು ಶಕ್ತವಾಗ ದಿರುವುದೇ ಇದಕ್ಕೆ ಕಾರಣ. ಈ ಸಮಸ್ಯೆ ಹೆಚ್ಚಾಗಿ ಶಾಸ್ತ್ರೀಯ ಬರಹಗಳಲ್ಲಿ

೧೬೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಈ ರೀತಿ ಹೊಸದಾಗಿ ಸೃಷ್ಟಿಯಾಗುವ ಪದಗಳು ಶಾಸ್ತ್ರೀಯ ಬರಹಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತವೆ, ಮತ್ತು ಅವುಗಳಲ್ಲಿ ಹೆಚ್ಚಿನವೂ ಅಂತಹ ಬರಹಗಳಿಗಷ್ಟೇ ಸೀಮಿತವಾಗಿರುತ್ತವೆ.

ಇಂತಹ ಪದಗಳನ್ನು ನಾವು ಪಾರಿಭಾಷಿಕ ಪದಗಳೆಂದು ಕರೆಯುತ್ತೇವೆ. ಇವುಗಳ ಅರ್ಥವೇನೆಂಬುದನ್ನು ತಿಳಿಯಲು, ಅವಕ್ಕೆ ಸಂಬಂಧಿಸಿದ ಶಾಸ್ತ್ರಗಳನ್ನು ತಿಳಿದುಕೊಂಡಿರುವುದು ಅತ್ಯವಶ್ಯ. ಉದಾಹರಣೆಗಾಗಿ, ಸಮಾಸ ಎಂಬುದು ವ್ಯಾಕರಣ ಶಾಸ್ತ್ರಕ್ಕೆ ಸಂಬಂಧಿಸಿರುವ ಒಂದು ಪಾರಿಭಾಷಿಕ ಪದ. ಇದರ ಅರ್ಥ ವೇನೆಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗಿದ್ದಲ್ಲಿ, ಮೊದಲಿಗೆ ಅದಕ್ಕೆ ಸಂಬಂಧಿಸಿದ ವ್ಯಾಕರಣ ತತ್ವಗಳು ಎಂತಹವು ಎಂಬುದನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಇತ್ತೀಚೆಗೆ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳಲ್ಲಿ ಹೆಚ್ಚಿನವೂ ಇಂಗ್ಲಿಷ್ ಭಾಷೆಯಲ್ಲೇ ವರದಿಯಾಗುತ್ತಿವೆ. ಹಾಗಾಗಿ, ಅವಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪಾರಿಭಾಷಿಕ ಪದಗಳೂ ಆ ಭಾಷೆಯಲ್ಲೇ ಹೆಚ್ಚು ಹೆಚ್ಚು ಸೃಷ್ಟಿ ಯಾಗುತ್ತಿವೆ. ಆದರೆ, ಕನ್ನಡದಂತಹ ಇತರ ಭಾಷೆಗಳಲ್ಲಿ ಈ ಹೊಸ ವಿಷಯ ಗಳನ್ನು ವಿವರಿಸಬೇಕಾದಾಗಲೆಲ್ಲ, ಅವುಗಳಲ್ಲೂ ತಕ್ಕುದಾದ ಪಾರಿಭಾಷಿಕ ಪದಗಳನ್ನು ಸೃಷ್ಟಿಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತದೆ. ಈ ಪಾರಿಭಾಷಿಕ ಪದಗಳ ಸೃಷ್ಟಿಯನ್ನು ಯಾವ ರೀತಿಯಲ್ಲಿ ನಡೆಸಬಹುದು ಎಂಬುದನ್ನು ಪರಿಶೀಲಿಸುವುದೇ ಈ ಲೇಖನದ ಗುರಿ.

ಎರಡು ರೀತಿಯ ವ್ಯಾಕರಣ ಜ್ಞಾನಗಳು

ಒಂದು ಭಾಷೆಯನ್ನು ಬಳಸುತ್ತಿರುವಾಗ, ನಾವು ಎರಡು ರೀತಿಯ ವ್ಯಾಕರಣ ಜ್ಞಾನಗಳನ್ನು ಉಪಯೋಗಿಸುತ್ತಿರುತ್ತೇವೆ. ನಮ್ಮ ಅರಿವಿಗೆ ಎಟಕದಂತಹ ವ್ಯಾಕರಣ ಜ್ಞಾನವೊಂದು; ಇದನ್ನು ನಾವು ನಮ್ಮ ಅರಿವಿಲ್ಲದಂತೆಯೇ ಬಳಸು ತಿರುತ್ತೇವೆ; ಇದರಲ್ಲಿ ನಡೆಯುವ ಬದಲಾವಣೆಗಳೂ ನಮಗೆ ಗೊತ್ತಾಗದಂತೆ ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ನಮ್ಮ ಭಾಷೆಯ ಬಗೆಗಿರುವ ಈ ವ್ಯಾಕರಣ ಜ್ಞಾನವನ್ನು ನಾವು ಚಿಕ್ಕಂದಿನಲ್ಲಿ ಭಾಷೆಯನ್ನು ಪಡೆಯುವಾಗ ನಮಗರಿವಿಲ್ಲ ದಂತೆಯೇ ಪಡೆದಿರುತ್ತೇವೆ.

ಇಂತಹ ಅರಿವಿಗೆ ಎಟಕದ ವ್ಯಾಕರಣ ಜ್ಞಾನ ಮಾತ್ರವಲ್ಲದೆ, ನಮ್ಮ ಭಾಷೆಯ ಕುರಿತಾಗಿ ಅರಿವಿಗೆ ಎಟಕುವ ವ್ಯಾಕರಣ ಜ್ಞಾನವೂ ನಮ್ಮಲ್ಲಿದೆ. ಸ್ವಲ್ಪ ಮಟ್ಟಿಗೆ ನಾವಿದನ್ನು ಕನ್ನಡದ ಕ್ಲಾಸಿನಲ್ಲಿ ಕಲಿತಿರುತ್ತೇವೆ. ಅನಂತರವೂ ಭಾಷೆಯ ಕುರಿತಾಗಿ ನಮಗಿರುವ ಕುತೂಹಲವನ್ನು ತಣಿಸುವುದಕ್ಕಾಗಿ ಲೇಖನಗಳ ನ್ನೋದಿಯೋ ಅಥವಾ ನಮ್ಮ ಮಾತನ್ನೇ ಗಮನಿಸಿಯೋ ಆ ಮಾತಿನ ಆಂತರಿಕ ರಚನೆಯಂತಹದು ಎಂಬುದನ್ನು ಸ್ವಲ್ಪಮಟ್ಟಿಗೆ ಅರಿತಿರುತ್ತೇವೆ. ಪಾರಿಭಾಷಿಕ

೧೭೦

ಪಾರಿಭಾಷಿಕ ಪದಗಳ ಸೃಷ್ಟಿ,

ಪದಗಳ ಸೃಷ್ಟಿ ಪ್ರಾಮುಖ್ಯವಾಗಿ ಈ ಎರಡನೇ ರೀತಿಯ ವ್ಯಾಕರಣ ಜ್ಞಾನದ ಆಧಾರದ ಮೇಲೆ ನಡೆಯಬೇಕಾಗಿದೆ.

ಹಾಗಾಗಿ, ಇಂತಹ ಪದಗಳನ್ನು ಸೃಷ್ಟಿಸುವವರಿಗೆ ಸಾಕಷ್ಟು ಅರಿವಿಗೆ ಎಟಕುವ ವ್ಯಾಕರಣ ಜ್ಞಾನವಿಲ್ಲದಿದ್ದಲ್ಲಿ ಅವರು ಸೃಷ್ಟಿಸುವ ಪದಗಳು ಭಾಷೆಗೆ ಸರಿಯಾಗಿ ಹೊಂದಿಕೊಳ್ಳಲಾರವು. ಇದಲ್ಲದೆ, ಇಂತಹ ಪದಗಳ ಮೂಲಕ ಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು. ಅವನ್ನು ಭಾಷೆ (ಎಂದರೆ ಭಾಷೆಯನ್ನು ಬಳಸುವ ಸಮಾಜ) ಸ್ವೀಕರಿಸದಿರಲೂ ಸಾಧ್ಯವಿದೆ. ಎಂದರೆ, ಹೀಗೆ ಸೃಷ್ಟಿಯಾದ ಪದಗಳು ಪಾರಿಭಾಷಿಕ ಪದಕೋಶಗಳಲ್ಲಷ್ಟೇ ಉಳಿಯಲೂ ಸಾಧ್ಯವಿದೆ.

ಇಲ್ಲಿ ನಾವು ಗಮನಿಸಬೇಕಾಗಿರುವ ವಿಷಯವೇನೆಂದರೆ, ಪಾರಿಭಾಷಿಕ ಪದ ಗಳನ್ನು ಒಂದು ಭಾಷೆಯ ವಿದ್ವಾಂಸರು ತಮ್ಮ ಅರಿವಿಗೆ ಎಟಕುವ ವ್ಯಾಕರಣ ಜ್ಞಾನದ ಆಧಾರದ ಮೇಲೆ ರಚಿಸಿ ಬರಹಗಳಲ್ಲಿ ಬಳಸುತ್ತಾರಾದರೂ, ಅನಂತರ ಭಾಷೆಯಲ್ಲಿ ನಡೆಯುವ ಅದರ ಬಳಕೆ ಅರಿವಿಗೆ ಎಟಕದ ವ್ಯಾಕರಣಜ್ಞಾನದ ಅಂಗವಾಗಿಯೇ ನಡೆಯಬೇಕಾಗುತ್ತದೆ. ಈ ಎರಡನೆಯ ಕ್ರಿಯೆ ಸಮರ್ಪಕವಾಗಿ ನಡೆಯಬೇಕಿದ್ದಲ್ಲಿ ಅಂತಹ ಪದಗಳು ಭಾಷೆಯ ರಚನೆಗೆ ಹೊಂದುವಂತಿರು ವುದು ಅವಶ್ಯ.

ವಿದ್ವಾಂಸರು ಸೃಷ್ಟಿಸುವ ಹೊಸ ಹೊಸ ಪಾರಿಭಾಷಿಕ ಪದಗಳು ಭಾಷೆ ಯಲ್ಲಿ ಸರಿಯಾಗಿ ಹೊಂದಿಕೊಂಡು, ಅವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಬಳಸುವ ಇತರ ವಿದ್ವಾಂಸರಿಗೆ ತೊಂದರೆಯಾಗದಿರಬೇಕಾದಲ್ಲಿ, ಅಂತಹ ಪದ ಗಳನ್ನು ಸೃಷ್ಟಿಸುವವರೆಲ್ಲ ಅತ್ಯವಶ್ಯವಾಗಿಯೂ ತಿಳಿದುಕೊಳ್ಳಬೇಕಾಗಿರುವ ವಿಷಯಗಳು ಕೆಲವಿವೆ.

ಪದಗಳ ಮೂಲ

ಹೊಸತಾಗಿ ಪದಗಳನ್ನು ಸೃಷ್ಟಿ ಮಾಡುವಾಗ ಅದಕ್ಕೆ ಬೇಕಾಗುವ ಪದಾಂಶ ಗಳನ್ನು ಎಂದರೆ ಧಾತುಗಳನ್ನು ಮತ್ತು ಪ್ರತ್ಯಯಗಳನ್ನು ಎಲ್ಲಿಂದ ಪಡೆಯಬೇಕು ಎಂಬುದು ಒಂದು ಪ್ರಶ್ನೆ. ಕನ್ನಡದಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿ ಮಾಡು ವವರೆಲ್ಲ ಇವನ್ನು ಸಂಸ್ಕೃತದಿಂದ ಎತ್ತಿಕೊಳ್ಳುವುದು ರೂಢಿ. ಆದಷ್ಟು ಮಟ್ಟಿಗೆ ಇವರು ಇಂಗ್ಲಿಷ್‌ನಲ್ಲಿರುವ ಪದಗಳನ್ನು ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ; ಅವು ಕನ್ನಡ ಭಾಷೆಗೆ ಸ್ವಲ್ಪವೂ ಹೊಂದಿಕೊಳ್ಳುವುದಿಲ್ಲ ಎಂದು ಅನಿಸಿದಲ್ಲಿ ಮಾತ್ರ, ಇವರು ಹೊಸ ಪದಗಳನ್ನು ಸೃಷ್ಟಿಸಲು ಹೋಗುತ್ತಾರೆ.

ಕನ್ನಡದ್ದೇ ಆದ ಧಾತು ಮತ್ತು ಪ್ರತ್ಯಯಗಳನ್ನು ಇಂತಹ ಪಾರಿಭಾಷಿಕ ಪದ ಗಳನ್ನು ಸೃಷ್ಟಿಸುವಲ್ಲಿ ಬಳಸದಿರಲು ಇವರು ಕೊಡುವ ಮುಖ್ಯ ಕಾರಣ ವೇನೆಂದರೆ, ಕನ್ನಡದಲ್ಲಿ ಈ ಧಾತುಗಳಿಗೆ ದಿನಬಳಕೆಯ ಅರ್ಥವಿದ್ದು, ನಿಷ್ಕೃಷ್ಟ

೧೭೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವಾದ ಅರ್ಥ ಬರುವಂತೆ ಅವನ್ನು ಶಾಸ್ತ್ರೀಯ ಬರಹಗಳಲ್ಲೂ ಬಳಸಿದೆವಾದರೆ ಗೊಂದಲವುಂಟಾಗಲು ಸಾಧ್ಯವಿದೆ ಎಂಬುದು.

ಇಂಗ್ಲಿಷ್, ಫ್ರೆಂಚ್ ಮೊದಲಾದ ಭಾಷೆಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿ ಸುವುದಕ್ಕಾಗಿ ಗ್ರೀಕ್ ಇಲ್ಲವೇ ಲ್ಯಾಟಿನ್ ಭಾಷೆಗಳಿಂದ ಧಾತುಗಳನ್ನು ಮತ್ತು ಪ್ರತ್ಯಯಗಳನ್ನು ಆಮದು ಮಾಡಿಕೊಳ್ಳುವ ಕ್ರಮ ರೂಢಿಗೆ ಬಂದಿತ್ತು. ಕನ್ನಡದ ಮಟ್ಟಿಗೆ ಇದೇ ರೀತಿಯಲ್ಲಿ ಸಂಸ್ಕೃತದಿಂದ ಧಾತುಗಳನ್ನು ಮತ್ತು ಪ್ರತ್ಯಯ ಗಳನ್ನು ಆಮದು ಮಾಡಿಕೊಳ್ಳುವುದು ಅಷ್ಟೇ ಅನುಕೂಲ ಎಂಬುದು ಇವರ ವಾದ.

ಆದರೆ, ದಿನಬಳಕೆಯ ಅರ್ಥವಿರುವ ಪದಗಳನ್ನು ಪಾರಿಭಾಷಿಕ ಪದಗಳಾಗಿ ಬಳಸಿದಲ್ಲಿ ಗೊಂದಲವುಂಟಾಗಬಲ್ಲುದು ಎಂಬ ವಾದ ನಿಜಕ್ಕೂ ಸಾಧಾರವೇ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಇಂಗ್ಲಿಷ್‌ನ ಇತ್ತೀಚೆಗಿನ ಪ್ರವೃತ್ತಿ ಯನ್ನು ಗಮನಿಸಿದೆವಾದರೆ, ದಿನಬಳಕೆಯ ಪದಗಳೇ ಹೆಚ್ಚು ಹೆಚ್ಚಾಗಿ ಪಾರಿಭಾಷಿಕ ಪದಗಳ ಸ್ಥಾನದಲ್ಲಿ ಬಳಕೆಗೆ ಬರುತ್ತಿರುವುದು ಕಂಡುಬರುತ್ತಿದೆ.

ಉದಾಹರಣೆಗಾಗಿ, ಗಣಕಯಂತ್ರಕ್ಕೆ (ಕಂಪ್ಯೂಟರ್) ಸಂಬಂಧಿಸಿದ ಪಾರಿ ಭಾಷಿಕ ಪದಗಳಲ್ಲಿ ಹೆಚ್ಚಿನವೂ ದಿನಬಳಕೆಯ ಪದಗಳೇ (mouse, tools, paste, web, ಇತ್ಯಾದಿ). ಇಂತಹ ಪದಗಳನ್ನು ಅಡಕವಾಗಿ ರಚಿಸಲು ಸಾಧ್ಯ ವಾಗದೆ, ದೀರ್ಘವಾದ ಪದಗುಚ್ಛಗಳನ್ನು ಬಳಸಬೇಕಾಗಿ ಬಂದಾಗ, ಅವುಗಳಲ್ಲಿ ಬರುವ ಪದಗಳ ಮೊದಲನೆಯ ಅಕ್ಷರಗಳನ್ನು ಮಾತ್ರ ಬಳಸಿ ಅಡಕವಾದ ಪದಗಳನ್ನು ರಚಿಸುವ ಕ್ರಮವೂ (URL ‘Uniform Resource Locator’, FTP ‘File Transfer Protocol’, VBA ‘Visual Basic for Applications’ ಇತ್ಯಾದಿ) ಇಂಗ್ಲಿಷ್‌ನಲ್ಲಿ ಬೆಳೆದು ಬಂದಿದೆ.

ಕನ್ನಡದಲ್ಲೂ ಇದೇ ವಿಧಾನವನ್ನು ಯಾಕೆ ಬಳಸಬಾರದು? ರಾಜಕೀಯ ಪಕ್ಷಗಳನ್ನು ಹೆಸರಿಸುವಲ್ಲಿ ಮತ್ತು ವ್ಯಕ್ತಿಗಳನ್ನು ಹೆಸರಿಸುವಲ್ಲಿ (ಕುವೆಂಪು, ತರಾಸು, ಅನಕೃ, ಇತ್ಯಾದಿ) ಇಂತಹದೇ ವಿಧಾನ ಈಗಾಗಲೇ ಕನ್ನಡದಲ್ಲಿ ಬಳಕೆಯಲ್ಲಿದೆ. ಅದನ್ನೇ ಪಾರಿಭಾಷಿಕ ಪದಗಳನ್ನು ಉಂಟುಮಾಡುವಲ್ಲೂ ಬಳಸಬಹುದು.

ನಾವು ಗಮನಿಸಬೇಕಾಗಿರುವ ಇನ್ನೊಂದು ವಿಷಯವೇನೆಂದರೆ, ಸಂಸ್ಕೃತ ದಲ್ಲಿ ಹೊಸ ಪಾರಿಭಾಷಿಕ ಪದಗಳನ್ನು ರಚಿಸಬೇಕಾದಾಗ, ಅವರು ಬೇರೆ ಯಾವ ಭಾಷೆಗೂ ಮರೆಹೊಕ್ಕಿರಲಿಲ್ಲ; ಸಂಸ್ಕೃತದವೇ ಆದ ಪದ ಮತ್ತು ಪ್ರತ್ಯಯ ಗಳನ್ನೇ ಬಳಸಿ ತಮಗೆ ಬೇಕಾದ ಹೊಸ ಪದಗಳನ್ನು ಉಂಟುಮಾಡಿಕೊಂಡಿದ್ದರು. ಲ್ಯಾಟಿನ್‌ನಲ್ಲಿಯೂ ಹೀಗೆಯೇ. ಈ ಭಾಷೆಗಳಲ್ಲಿ ಈ ರೀತಿ ತಮ್ಮವೇ ಆದ ಪದ ಮತ್ತು ಪ್ರತ್ಯಯಗಳನ್ನು ಬಳಸಿ ಪಾರಿಭಾಷಿಕ ಪದಗಳನ್ನು ಉಂಟುಮಾಡಿರುವುದು ಗೊಂದಲಕ್ಕೆ ಎಡೆಕೊಡಲಿಲ್ಲವಾದರೆ, ಕನ್ನಡದಲ್ಲಿ ಯಾಕೆ ಗೊಂದಲಕ್ಕೆಡೆ ಕೊಡಬೇಕು?

೧೭೨


ಪಾರಿಭಾಷಿಕ ಪದಗಳ ಸೃಷ್ಟಿ,

ಎರವಲು ಮತ್ತು ಪದಸೃಷ್ಟಿ

ಒಂದು ಭಾಷೆ ಎಷ್ಟು ಸುಲಭವಾಗಿ ಬೇರೆ ಭಾಷೆಗಳಿಂದ ಪದಗಳನ್ನು ಎರವಲಾಗಿ ಪಡೆದುಕೊಳ್ಳಬಲ್ಲುದು ಎಂಬುದು ಬಹುಶಃ ಅದನ್ನು ಬಳಸುವ ಇಡೀ ಸಮಾಜದ ಅನಿಸಿಕೆಯನ್ನವಲಂಬಿಸಿದೆ. ಕನ್ನಡದಲ್ಲಿ ಇಂತಹ ಎರವಲು ಬಹಳ ಸುಲಭವಾಗಿ ನಡೆಯುತ್ತದೆ, ಆದರೆ, ಇದಕ್ಕೆ ವಿರುದ್ಧವಾಗಿ, ಬಳಸಬೇಕಾಗಿರುವ ಪದಗಳನ್ನೆಲ್ಲ ತಮ್ಮ ಭಾಷೆಗೆ ಭಾಷಾಂತರಿಸಿಕೊಳ್ಳುವ ಪ್ರವೃತ್ತಿ ತಮಿಳಿನಲ್ಲಿ ಕಾಣಿಸುತ್ತದೆ.

ಈ ಎರಡು ವಿಧಾನಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳ ನಡುವೆಯೂ ಇಂತಹದೇ ವ್ಯತ್ಯಾಸವಿರುವುದನ್ನು ಕಾಣಬಹುದು. ಇಂಗ್ಲಿಷ್‌ನಲ್ಲಿ ಎರವಲು ಬಹಳ ಸುಲಭವಾಗಿ ನಡೆಯಬಲ್ಲುದು, ಆದರೆ ಜರ್ಮನ್‌ನಲ್ಲಿ ಭಾಷಾಂತರ ವಿಧಾನವನ್ನು ಬಳಸುವುದೇ ಜಾಸ್ತಿ.

ಕನ್ನಡ ಭಾಷೆಯನ್ನು ಬಳಸುವ ಸಮಾಜ ಎರವಲನ್ನು ಬಹಳ ಸುಲಭವಾಗಿ ಅಂಗೀಕರಿಸಬಲ್ಲುದಾದ ಕಾರಣ, ಪಾರಿಭಾಷಿಕ ಪದಗಳ ಸೃಷ್ಟಿಯಲ್ಲಿ ಸಂಸ್ಕೃತ ಧಾತು ಮತ್ತು ಪ್ರತ್ಯಯಗಳ ಬಳಕೆಗೆ ಈ ಸಮಾಜದಲ್ಲಿ ಹೆಚ್ಚಿನ ವಿರೋಧ ವೇನೂ ತೋರಿಬರುವುದಿಲ್ಲ. ಆ ರೀತಿ ರಚಿತವಾದ ಪಾರಿಭಾಷಿಕ ಪದಗಳನ್ನು ಅರಗಿಸಿಕೊಳ್ಳುವುದು ಮಾತ್ರ ವಿದ್ಯಾರ್ಥಿಗಳಿಗೆ ಮತ್ತು ಇತರ ಓದುಗರಿಗೆ ತುಂಬಾ ಕಷ್ಟವಾಗುತ್ತಿದೆ.

ಇದಲ್ಲದೆ, ಸಂಸ್ಕೃತದ ಬದಲು ಕನ್ನಡದವೇ ಆದ ಪದ ಮತ್ತು ಪ್ರತ್ಯಯ ಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡಿದಲ್ಲಿ, ಅಂತಹ ಪದಗಳು ಕನ್ನಡದ ಜಾಯಮಾನಕ್ಕೆ ಹೆಚ್ಚು ಹೊಂದಿಕೆಯಾಗಬಲ್ಲುವು ಎಂಬ ವಿಷಯದಲ್ಲಿ ಸಂಶಯವಿಲ್ಲ. ಹೊಸಗನ್ನಡದ ಪದಗಳು ಇದಕ್ಕೆ ಅನುಕೂಲವಾಗಿಲ್ಲವಾದಲ್ಲಿ ಹಳೆಗನ್ನಡದ ಇಲ್ಲವೇ ಕನ್ನಡದವೇ ಆದ ಉಪಭಾಷೆಗಳ ಪದಗಳನ್ನು ಮತ್ತು ಪ್ರತ್ಯಯಗಳನ್ನು ಇದಕ್ಕಾಗಿ ಆರಿಸಿಕೊಳ್ಳಬಹುದಲ್ಲವೇ?

ಭಾಷಾಂತರ ಮತ್ತು ಅರ್ಥಾಂತರ

ಇಂಗ್ಲಿಷ್‌ನಲ್ಲಿರುವ ಪಾರಿಭಾಷಿಕ ಪದವೊಂದಕ್ಕೆ ಬದಲಾಗಿ ಕನ್ನಡದಲ್ಲಿ ಒಂದು ಹೊಸದಾದ ಪಾರಿಭಾಷಿಕ ಪದವನ್ನು ಸೃಷ್ಟಿಸುವಾಗ, ಅದು ಇಂಗ್ಲಿಷ್‌ನಲ್ಲಿದ್ದ ಪದದ ಒಳರಚನೆ ಮತ್ತು ಅದರ ಅರ್ಥ ಇವನ್ನು ಪ್ರತಿಬಿಂಬಿಸಬೇಕೇ ಅಥವಾ ಆ ಪದಕ್ಕೆ ಶಾಸ್ತ್ರದಲ್ಲಿ ಯಾವ ಅರ್ಥವಿದೆಯೋ ಅದನ್ನು ಪ್ರತಿಬಿಂಬಿಸಬೇಕೇ ಎಂಬ ವಿಷಯದಲ್ಲಿ ವಿದ್ವಾಂಸರೊಳಗೆ ಭಿನ್ನಾಭಿಪ್ರಾಯವಿದೆ.

ಉದಾಹರಣೆಗಾಗಿ black box ಎಂಬ ಪದಕ್ಕೆ ಬದಲಾಗಿ ಕನ್ನಡದಲ್ಲೊಂದು ಪಾರಿಭಾಷಿಕ ಪದವನ್ನು ಸೃಷ್ಟಿಸಬೇಕಾದಾಗ, ಆ ಪದದ ಒಳರಚನೆಯನ್ನು ಮತ್ತು ಅದರ ಅರ್ಥವನ್ನು ಸೂಚಿಸುವಂತೆ ಕಪ್ಪು ಪೆಟ್ಟಿಗೆ ಎಂಬ ಪದವನ್ನು ಬಳಸ ಬೇಕೇ, ಇಲ್ಲವೇ ಆ ಪದ ಗುರುತಿಸುವ ವಸ್ತುವನ್ನು (cockpit recorder)

೧೭೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ವರ್ಣಿಸುವಂತೆ ಬೇರೊಂದು ಪದವನ್ನು ಇಲ್ಲವೇ ಪದಗುಚ್ಛವನ್ನು ಬಳಸಬೇಕೇ ಎಂಬುದಾಗಿ ಸಂದೇಹವುಂಟಾಗಲು ಸಾಧ್ಯವಿದೆ.

ವಿಜ್ಞಾನ ಪದಕೋಶವನ್ನು ಕನ್ನಡದಲ್ಲಿ ತಯಾರಿಸುವವರು ಮೊದಲನೆಯ ವಿಧಾನವನ್ನು ಅನುಸರಿಸಿರುವರಾದರೆ, ಅದನ್ನೇ ಮರಾಠಿಯಲ್ಲಿ ತಯಾರಿಸುವವರು ಎರಡನೆಯ ವಿಧಾನವನ್ನು ಅನುಸರಿದ್ದಾರೆ. ಆದರೆ, ಇವುಗಳಲ್ಲಿ ಯಾವುದನ್ನೂ ಸಂಪೂರ್ಣ ಸರಿಯೆಂದು ಹೇಳಲು ಬರುವುದಿಲ್ಲ. ಒಂದು ಪದವನ್ನು ಬಳಸ ತೊಡಗುವಾಗ, ಸಾಮಾನ್ಯವಾಗಿ ಅದು ಗುರುತಿಸುವ ವಸ್ತುವಿನ ಗುಣಧರ್ಮ ಗಳಲ್ಲಿ ಕಣ್ಣಿಗೆ ಹೊಡೆದು ಕಾಣಿಸುವಂತಹದನ್ನು ಆ ಪದ ವರ್ಣಿಸುವಂತಿರ ಬೇಕೆಂದು ನಾವು ಪ್ರಯತ್ನಿಸುತ್ತೇವೆ. ಆದರೆ, ಬಳಕೆ ಮುಂದುವರಿದಂತೆ ಆ ವಸ್ತುವಿನ ಗುಣಧರ್ಮಗಳಲ್ಲಿ ಬದಲಾವಣೆಗಳುಂಟಾಗಲು ಸಾಧ್ಯವಿದೆ, ಮತ್ತು ಆ ವಸ್ತುವಿನ ಕುರಿತಾಗಿ ನಮಗಿರುವ ಜ್ಞಾನದಲ್ಲೂ ಬದಲಾವಣೆಗಳುಂಟಾಗಲು ಸಾಧ್ಯವಿದೆ.

ಹಾಗಾಗಿ, ಬಳಸಲು ಪ್ರಾರಂಭಿಸಿದ ಸಮಯದಲ್ಲಿ ಒಂದು ಪಾರಿಭಾಷಿಕ ಪದದ ಒಳರಚನೆ ಮತ್ತು ಅರ್ಥ ಅದು ಗುರುತಿಸುವ ವಸ್ತುವಿಗೆ ಅನ್ವಯಿಸು ವಂತೆಯೇ ಇದ್ದಿತಾದರೂ, ಅನಂತರದ ಕಾಲದಲ್ಲಿ ಅದು ಆ ರೀತಿ ಅನ್ವಯಿಸ ದಂತೆ ಆಗಲು ಸಾಧ್ಯವಿದೆ. ಕನ್ನಡದ ಉಗಿಬಂಡಿ ಪದ ಇದಕ್ಕೆ ಒಂದು ಉತ್ತಮ ಉದಾಹರಣೆ. ಈಗಿನ ಕಾಲದಲ್ಲಿ ಈ ಪದ ಗುರುತಿಸುವ ಸಾಧನ ಡೀಸೆಲ್ ಇಲ್ಲವೇ ವಿದ್ಯುಚ್ಛಕ್ತಿಯಿಂದ ಚಲಿಸುವುದೇ ಜಾಸ್ತಿ.

ಇದಲ್ಲದೆ, ಭಾಷೆಗಳಲ್ಲಿ ಬರುವ ಪದಗಳ ಒಳರಚನೆ ಮತ್ತು ಅರ್ಥ ಇವಕ್ಕೂ ಅವು ಗುರುತಿಸುವ ವಸ್ತುವಿನ ಗುಣಧರ್ಮಕ್ಕೂ ನಡುವೆ ಅಸಾಂಗತ್ಯ ವಿರುವುದೇ ಜಾಸ್ತಿ. ಕೃಷ್ಣ ಎಂಬ ಹೆಸರಿನ ವ್ಯಕ್ತಿ ಬೆಳ್ಳಗಾಗಿರುವುದು, ಇಲ್ಲವೇ ಸುಂದರಿ ಎಂಬ ಹೆಸರಿನ ಹುಡುಗಿ ಕುರೂಪಿಯಾಗಿರುವುದು ಅಷ್ಟೊಂದು ಅಪರೂಪವೇನಲ್ಲ. ಈ ಹೆಸರುಗಳನ್ನು ಬಳಸುವವರೂ ಅವು ವ್ಯಕ್ತಿಗಳ ಇಲ್ಲವೇ ವಸ್ತುಗಳ ಗುಣಧರ್ಮವನ್ನು ಸರಿಯಾಗಿ ತಿಳಿಸುತ್ತಿರಬಹುದೆಂದು ನಿರೀಕ್ಷಿಸು ವುದೂ ಇಲ್ಲ. ಪದಗಳು ಭಾಷೆಯಲ್ಲಿ ಬರಿಯ ಸಂಕೇತಗಳಾಗಿ ಬಳಕೆಯಾಗುವು ವಲ್ಲದೆ, ಅವು ಗುರುತಿಸುವ ವಸ್ತುಗಳ ಇಲ್ಲವೇ ವಿಷಯಗಳ ವರ್ಣನೆಗಳಾಗಿ ಬಳಕೆಯಾಗುವುದು ಬಹಳ ಕಡಿಮೆ. ಪಾರಿಭಾಷಿಕ ಪದಗಳೂ ಈ ರೀತಿ ಸಂಕೇತ ಗಳಾಗಿದ್ದರೆ ಸಾಕು, ವರ್ಣನೆಗಳಾಗಿರಬೇಕೆಂದೇನೂ ಇಲ್ಲ.

೧೭೪


ಭಾಗ ಐದು

ಜಗತ್ತಿನ ಭಾಷೆಗಳು

ಪ್ರಪಂಚದಲ್ಲಿ ಒಟ್ಟು ಎಷ್ಟು ಭಾಷೆಗಳಿವೆ ಎಂಬ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ಕೊಡುವುದು ಸ್ವಲ್ಪ ಕಷ್ಟ. ಇದಕ್ಕೆ ಹಲವು ಕಾರಣಗಳಿವೆ. ಸಂಶೋಧಕರ ಗಮನಕ್ಕೆ ಬಾರದಿರುವ ಭಾಷೆಗಳು ಹಲವಿವೆಯೆಂಬುದು ಒಂದು ಮುಖ್ಯವಾದ ಕಾರಣ. ಉದಾಹರಣೆಗಾಗಿ, ದಕ್ಷಿಣ ಅಮೆರಿಕಾದ ಅಭೇದ್ಯವಾದ ಕಾಡುಗಳಲ್ಲಿ ವಾಸಿಸುವ ಹಲವು ಜನಾಂಗಗಳನ್ನು ಮತ್ತು ಅವರಾಡುವ ಭಾಷೆಗಳನ್ನು ಸಂಶೋಧಕರಿನ್ನೂ ಸರಿಯಾಗಿ ಅಭ್ಯಾಸ ಮಾಡಿಲ್ಲ. ನಮ್ಮ ದೇಶದಲ್ಲೂ ಗುಡ್ಡ ಕಾಡುಗಳಲ್ಲಿ ವಾಸಿಸುವ ಹಲಕೆಲವು ಜನಾಂಗಗಳ ಭಾಷೆಗಳೆಂತಹವೆಂಬುದನ್ನು ನಾವಿನ್ನೂ ಸರಿಯಾಗಿ ತಿಳಿದಿಲ್ಲ.

ಎರಡನೆಯದಾಗಿ, ಎರಡು ಸಮಾಜಗಳಲ್ಲಿ ಬಳಕೆಯಲ್ಲಿರುವ ಭಾಷಾ ಪ್ರಭೇದಗಳನ್ನು ಎರಡು ಭಾಷೆಗಳೆಂದು ಪರಿಗಣಿಸಬೇಕೇ, ಇಲ್ಲವೇ ಒಂದೇ ಭಾಷೆಯ ಎರಡು ಪ್ರಭೇದಗಳೆಂದು ಪರಿಗಣಿಸಬೇಕೇ ಎಂಬ ವಿಷಯದಲ್ಲಿ ಅಭಿಪ್ರಾಯಭೇದಗಳಿರಲು ಸಾಧ್ಯ. ಈ ಕಾರಣಕ್ಕಾಗಿಯೂ ಬೇರೆ ಬೇರೆ ವಿದ್ವಾಂಸರು ಕೊಡುವ ಭಾಷೆಗಳ ಪಟ್ಟಿ ಬೇರೆ ಬೇರಾಗಲು ಸಾಧ್ಯವಿದೆ.

ಕೆಲವು ವಿದ್ವಾಂಸರ ಮತದಂತೆ, ಪ್ರಪಂಚದಲ್ಲಿ ಒಟ್ಟು ಸುಮಾರು ಐದು ಸಾವಿರ ಭಾಷೆಗಳು ಬಳಕೆಯಲ್ಲಿವೆ. ಈ ಸಂಖ್ಯೆ ಇದಕ್ಕೆ ಎರಡರಷ್ಟು, ಎಂದರೆ ಸುಮಾರು ಹತ್ತು ಸಾವಿರದಷ್ಟೆಂದು ಹೇಳುವವರೂ ಕೆಲವರಿದ್ದಾರೆ, ಮತ್ತು ಇದನ್ನು ಮೂರು ಸಾವಿರಕ್ಕೆ ಇಳಿಸುವವರೂ ಕೆಲವರಿದ್ದಾರೆ. ಈ ಭಾಷೆಗಳಲ್ಲಿ ಹೆಚ್ಚಿನವನ್ನೂ ಇಂಡೋ-ಯುರೋಪಿಯನ್, ಟಿಬೆಟೋ-ಬರ್ಮನ್, ಆಫ್ರಿ- ಏಶಿಯಾಟಿಕ್, ಆಸ್ಟ್ರಿಕ್, ಇಂಡೋ-ಪೆಸಿಫಿಕ್ ಮೊದಲಾದ ಕೆಲವು ಭಾಷಾ ಕುಟುಂಬಗಳಲ್ಲಿ ಸೇರಿಸಿ ಹೇಳುವ ಪ್ರಯತ್ನವೂ ನಡೆದಿದೆ. ಮುಖ್ಯವಾಗಿ ಇಂತಹ ಹದಿನೈದಿಪ್ಪತ್ತು ಭಾಷಾಕುಟುಂಬಗಳನ್ನು ಇದಕ್ಕಾಗಿ ಕಲ್ಪಿಸಿಕೊಳ್ಳಲಾಗಿದೆ.

ಪ್ರಪಂಚದಲ್ಲಿ ಕಾಣಿಸುವ ಈ ಭಾಷಾವೈವಿಧ್ಯ ಒಂದು ರೀತಿಯಲ್ಲಿ ಮಾನವ ಸಂಸ್ಕೃತಿಯ ವೈವಿಧ್ಯವನ್ನು ಪ್ರತಿಬಿಂಬಿಸುತ್ತದೆಯೆಂದೂ ಹೇಳಬಹುದು. ಪ್ರತಿಯೊಂದು ಸಮಾಜದ ಭಾಷೆಯೂ ಆ ಸಮಾಜದಲ್ಲಿರುವ ಜನರ ದಿನನಿತ್ಯದ ಜೀವನಕ್ಕೆ ಹೊಂದಿಕೊಳ್ಳುವಂತೆ ಸಾವಿರಾರು ವರ್ಷಗಳಿಂದ ಬದಲಾಗುತ್ತಾ ಬಂದಿದೆ. ಆದರೆ, ಈ ಬದಲಾವಣೆ ಬೇರೆ ಬೇರೆ ಸಮಾಜಗಳಲ್ಲಿ ಬೇರೆ ಬೇರೆ

೧೭೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ದಿಕ್ಕಿನಲ್ಲಿ ಸಾಗುವುದೇ ಪ್ರಪಂಚದಲ್ಲಿ ಇವತ್ತು ಕಾಣಿಸುವ ಭಾಷಾ ವೈವಿಧ್ಯಕ್ಕೆ ಮೂಲ ಕಾರಣ.

ಮನಸ್ಸಿನಲ್ಲೇನಿದೆಯೆಂಬುದನ್ನು ಇತರರಿಗೆ ತಿಳಿಸಲು, ಮತ್ತು ಇತರರ ಮನಸ್ಸಿನಲ್ಲೇನಿದೆಯೆಂಬುದನ್ನು ತಿಳಿಯಲು ನಮ್ಮಲ್ಲಿರುವ ಅತ್ಯಂತ ಮುಖ್ಯವಾದ ಸಾಧನವೆಂದರೆ ಈ ಭಾಷೆಯೇ. ಇಬ್ಬರು ವ್ಯಕ್ತಿಗಳಾಡುವ ಭಾಷೆಗಳ ನಡುವೆ ಎಷ್ಟು ವ್ಯತ್ಯಾಸವಿರುತ್ತದೆಯೋ, ಅವರಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಳ್ಳಲು ಅಷ್ಟೇ ಕಷ್ಟವೂ ಆಗುತ್ತದೆ. ಹಾಗಾಗಿ, ಭಾಷೆಯೆಂಬುದು ಮನಸ್ಸುಗಳ ನಡುವಿನ ಕೊಂಡಿಯೂ ಹೌದು, ಗೋಡೆಯೂ ಹೌದು. ಈ ಕಾರಣಕ್ಕಾಗಿ, ಭಾಷೆ ಯೊಂದರ ಸ್ವಭಾವವೇನೆಂಬುದನ್ನು ತಿಳಿಯುವಷ್ಟೇ ಭಾಷೆಗಳ ನಡುವಿನ ವ್ಯತ್ಯಾಸ ಗಳೆಂತಹವೆಂಬುದನ್ನು ತಿಳಿಯುವುದೂ ಅತ್ಯವಶ್ಯ.

೫.೧ ಭಾರತದ ಭಾಷೆಗಳು

ಭಾರತದಲ್ಲಿ ಮುಖ್ಯವಾಗಿ ಇಂಡೋ-ಆರ್ಯನ್, ದ್ರವಿಡಿಯನ್ (ದ್ರಾವಿಡ), ಟಿಬೆಟೋ-ಬರ್ಮನ್ ಮತ್ತು ಆಸ್ಟ್ರೋ-ಏಶಿಯಾಟಿಕ್ ಎಂಬುದಾಗಿ ನಾಲ್ಕು ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳು ಬಳಕೆಯಲ್ಲಿವೆ:

  1. (೧) ಹಿಂದಿ, ಬಂಗಾಲಿ, ಮರಾಠಿ, ಗುಜರಾತಿ ಮೊದಲಾದವುಗಳು
  2. ಇಂಡೋ-ಆರ್ಯನ್ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು;
  3. (೨) ಕನ್ನಡ, ತಮಿಳು, ತೆಲುಗು, ಮಲಯಾಳ, ತುಳು ಮೊದಲಾದವುಗಳು
  4. ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳು;
  5. (೩) ಮಣಿಪುರಿ (ಮಯ್‌ತಯ್), ಬೋಡೊ, ಅಂಗಾಮಿ, ಆವೊ, ಲುಶಾಯಿ,
  6. ಮೊದಲಾದವುಗಳು ಟಿಬೆಟೋ-ಬರ್ಮನ್ ಭಾಷಾ ಕುಟುಂಬಕ್ಕೆ ಸೇರಿದವುಗಳು;
  7. ಮತ್ತು
  8. (೪) ಸಂತಾಲಿ, ಮುಂಡಾರಿ, ಖಡಿಯಾ, ಸೋರಾ ಮೊದಲಾದವುಗಳು
  9. ಆಸ್ಟ್ರೋ-ಏಶಿಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದವುಗಳು.

ಇವಲ್ಲದೆ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಬಳಕೆ ಯಲ್ಲಿರುವ ಬೇರೆ ಕೆಲವು ಭಾಷೆಗಳು ಇಂಡೋ-ಪೆಸಿಫಿಕ್ ಎಂಬ ಬೇರೊಂದು ಭಾಷಾಕುಟುಂಬಕ್ಕೆ ಸೇರುತ್ತವೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಧ್ಯ ಪ್ರದೇಶದ ನಿಮಾರ್ ಜಿಲ್ಲೆಯಲ್ಲಿ ಬಳಕೆಯಲ್ಲಿರುವ ನಹಾಲಿ ಎಂಬ ಇನ್ನೊಂದು ಭಾಷೆ ಈ ಕುಟುಂಬಗಳಲ್ಲಿ ಯಾವುದಕ್ಕೂ ಸೇರದೆ ಏಕಾಕಿಯಾಗಿರುವುದೆಂದು ಕೆಲವರ ಅಭಿಪ್ರಾಯ.

ಭಾರತದಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂಬ ಪ್ರಶ್ನೆಗೆ ಉತ್ತರ ಹೇಳುವು ದೆಂದರೆ, ಪ್ರಪಂಚದಲ್ಲಿ ಒಟ್ಟು ಎಷ್ಟು ಭಾಷೆಗಳಿವೆಯೆಂಬ ಪ್ರಶ್ನೆಗೆ ಉತ್ತರ

೧೭೬


ಭಾರತದ ಭಾಷೆಗಳು

ಹೇಳುವಷ್ಟೇ ಕಷ್ಟ. ಹೆಚ್ಚು ಕಡಿಮೆ ಇನ್ನೂರು ಭಾಷೆಗಳು ಭಾರತದಲ್ಲಿವೆಯೆಂದು ಹೇಳಬಹುದಾದರೂ, ಈ ಸಂಖ್ಯೆ ಕಾಡುಗುಡ್ಡಗಳಲ್ಲಿ ವಾಸಿಸುವ ಜನರ ಭಾಷೆ ಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಿದಂತೆಲ್ಲ ಹೆಚ್ಚಾಗಲು (ಇಲ್ಲವೇ ಕಡಿಮೆಯಾಗಲು) ಸಾಧ್ಯವಿದೆ. ಇದಲ್ಲದೆ, ಭಾಷೆ ಮತ್ತು ಉಪಭಾಷೆಗಳ ನಡುವಿನ ವ್ಯತ್ಯಾಸವೇನೆಂಬುದನ್ನು ನಿರ್ಧರಿಸುವಲ್ಲಿ ನಮ್ಮ ನಿಲುವೇನು ಎಂಬು ದರ ಮೇಲೂ ನಾವು ಕೊಡುವ ಭಾಷೆಗಳ ಸಂಖ್ಯೆ ಹೆಚ್ಚುಕಡಿಮೆಯಾಗಬಲ್ಲುದು.

ಭಾರತದಲ್ಲಿ ಬಳಕೆಯಲ್ಲಿರುವ ಈ ಇನ್ನೂರು ಭಾಷೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಷೆಗಳು ಹಿಮಾಲಯದ ಪರ್ವತಶ್ರೇಣಿಯಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷಾಕುಟುಂಬಕ್ಕೆ ಸೇರಿವೆ. ಆದರೆ, ಭಾರತದ ಜನಸಂಖ್ಯೆ ಯಲ್ಲಿ ಈ ಭಾಷೆಗಳನ್ನಾಡುವವರದು ಶೇಕಡಾ ಒಂದಕ್ಕಿಂತಲೂ ಕಡಿಮೆ! ಹಿಮಾಲಯದ ಗುಡ್ಡಕಾಡುಗಳಲ್ಲಿ ಪ್ರತಿಯೊಂದು ಹಳ್ಳಿಗೂ ಒಂದೊಂದು ವಿಶಿಷ್ಟ ವಾದ ಭಾಷೆಯಿರುವುದನ್ನು ಕಾಣಬಹುದು. ಈ ಹಳ್ಳಿಗಳ ನಡುವೆ ಅನಾದಿಕಾಲ ದಿಂದಲೂ ಪರಸ್ಪರ ಸಂಪರ್ಕ ಬಹಳ ಕಡಿಮೆಯಾಗಿದ್ದುದೇ ಇದಕ್ಕೆ ಕಾರಣ.

ಇಂಡೋ-ಆರ್ಯನ್ ಕುಟುಂಬಕ್ಕೆ ಸೇರಿದ ಸುಮಾರು ೫೦ ಭಾಷೆಗಳು, ದ್ರಾವಿಡ ಕುಟುಂಬಕ್ಕೆ ಸೇರಿದ ೨೬ ಭಾಷೆಗಳು, ಮತ್ತು ಆಸ್ಟೋ-ಏಶಿಯಾಟಿಕ್ ಕುಟುಂಬಕ್ಕೆ ಸೇರಿದ ೨೦ ಭಾಷೆಗಳು ಭಾರತದಲ್ಲಿ ಬಳಕೆಯಲ್ಲಿವೆ. ಇವಲ್ಲದೆ, ಯಾವ ಕುಟುಂಬಕ್ಕೂ ಸೇರದ ನಹಾಲಿಯಂತಹ ಕೆಲವು ಭಾಷೆಗಳೂ, ಇಂಡೋ -ಪೆಸಿಫಿಕ್ ಕುಟುಂಬಕ್ಕೆ ಸೇರಬಲ್ಲ ಅಂಡಮನೀಸ್ ಮತ್ತು ನಿಕೊಬರೀಸ್ ದ್ವೀಪ ಗಳ ಕೆಲವು ಭಾಷೆಗಳೂ ಭಾರತದಲ್ಲಿವೆ.

ಇಂಡೋ-ಆರ್ಯನ್ ಭಾಷೆಗಳು

ಇವುಗಳಲ್ಲಿ ಇಂಡೋ-ಆರ್ಯನ್ (ಆರ್ಯ) ಕುಟುಂಬಕ್ಕೆ ಸೇರಿದ ಭಾಷೆಗಳು ಯುರೋಪಿನ ಮುಖ್ಯ ಭಾಷೆಗಳಾದ ಇಂಗ್ಲಿಷ್, ಫ್ರೆಂಚ್, ಜರ್ಮನ್ ಮೊದಲಾದ ಭಾಷೆಗಳಿಗೆ ಸಂಬಂಧಿಸಿದ್ದು, ಆ ಕುಟುಂಬ ಇಂಡೋ-ಯುರೋ ಪಿಯನ್ ಎಂಬ ದೊಡ್ಡದೊಂದು ಭಾಷಾಕುಟುಂಬದ ಶಾಖೆಯಾಗಿದೆ. ಭಾರತ ದಲ್ಲಿ ಈ ಕುಟುಂಬಕ್ಕೆ ಸೇರಿದ ನೆಪಾಲಿ, ಅಸ್ಸಾಮೀಸ್, ಬಂಗಾಲಿ, ಒಡಿಯಾ, ಮರಾಠಿ, ಗುಜರಾತಿ, ಪಂಜಾಬಿ, ಕಾಶ್ಮೀರಿ ಮೊದಲಾದ ಹಲವು ಭಾಷೆಗಳು ವೃತ್ತಾಕಾರವಾಗಿ ಹರಡಿದ್ದು, ಅವುಗಳ ನಡುವೆ ಹಿಂದಿ ಮತ್ತು ಅದರ ಉಪಭಾಷೆಗಳಾಗಿರುವ ಬಾಂಗ್ರು, ಬ್ರಜ್, ಬುನ್ದೇಲಿ, ಅವಧಿ, ಭೋಜ್‌ಪುರಿ, ಮೊದಲಾದವುಗಳು ನೆಲೆಸಿವೆ.

ನಿಜಕ್ಕೂ ಇಂಡೋ-ಆರ್ಯನ್ ಭಾಷೆಗಳು ಬಳಕೆಯಲ್ಲಿರುವ ಈ ಪ್ರದೇಶ ಭಾಷೆಯ ಮಟ್ಟಿಗೆ ಒಂದು ಅವಿಚ್ಛಿನ್ನ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಇಲ್ಲವೇ ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣ ಮಾಡಿದಲ್ಲಿ, ಹಳ್ಳಿಯಿಂದ ಹಳ್ಳಿಗೆ ಮಾತಿನ ಭಾಷೆ ಸ್ವಲ್ಪ ಸ್ವಲ್ಪವೇ ಬದಲಾಗುತ್ತಾ ಬರುವುದು

೧೭೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಂಡುಬರುತ್ತದೆ. ಆದರೆ ಎಲ್ಲಿ ಒಂದು ಭಾಷೆ ಮುಗಿದು ಇನ್ನೊಂದು ಭಾಷೆ ಪ್ರಾರಂಭಿಸುತ್ತದೆ ಎಂಬುದನ್ನು ಜನರ ಮಾತಿನಲ್ಲಿ ಕಾಣಿಸುವ ವ್ಯತ್ಯಾಸಗಳ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಾಗದು.

ಉದಾಹರಣೆಗಾಗಿ, ಮರಾಠಿ ಮತ್ತು ಗುಜರಾತಿ ಭಾಷೆಗಳನ್ನಾಡುವ ಪ್ರದೇಶ ಗಳ ನಡುವೆ ರಾಜಕೀಯವಾದ ಗಡಿಯಿರುವುದು ನಿಜವಾದರೂ, ಆ ಗಡಿಪ್ರದೇಶ ಗಳಲ್ಲಿ ಜನರು ಆಡುವ ಮಾತಿನ ಆಧಾರದ ಮೇಲೆ ಭಾಷೆಯ ಗಡಿ ಎಲ್ಲಿ ಹಾದುಹೋಗುವುದೆಂಬುದನ್ನು ನಿರ್ಧರಿಸಲು ಸಾಧ್ಯವಾಗದು. ಈ ಕಾರಣಕ್ಕಾಗಿ, ಇಂತಹ ಗಡಿಪ್ರದೇಶದಲ್ಲಿರುವ ಖಾಂದೇಶಿಯನ್ನು ಮರಾಠಿಯ ಉಪಭಾಷೆ ಯೆಂದು ಹೇಳಬೇಕೇ, ಇಲ್ಲವೇ ಗುಜರಾತಿಯ ಉಪಭಾಷೆಯೆಂದು ಹೇಳಬೇಕೇ ಎಂಬುದರಲ್ಲಿ ಮತಭೇದವಿದೆ. ಇದೇ ರೀತಿಯಲ್ಲಿ, ಮರಾಠಿ ಮತ್ತು ಒಡಿಯಾ ಭಾಷೆಗಳ ನಡುವೆ ಕಾಣಿಸುವ ಹಲ್ಬಿ ಎಂಬ ಉಪಭಾಷೆ ಅವೆರಡರಲ್ಲಿ ಯಾವುದಕ್ಕೆ ಸೇರಬೇಕು ಎಂಬ ವಿಷಯದಲ್ಲಿ ಮತಭೇದವಿದೆ.

ದ್ರಾವಿಡ ಭಾಷೆಗಳ ನಡುವಿರುವ ಗಡಿ ಪ್ರದೇಶ ಇದಕ್ಕಿಂತ ತೀರ ಭಿನ್ನ ವಾದುದು. ಕನ್ನಡ ಮತ್ತು ತೆಲುಗು ಭಾಷೆಗಳ ನಡುವೆ, ಇಲ್ಲವೇ ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸ್ಪಷ್ಟವಾದ ಗಡಿಯಿದ್ದು ಇಲ್ಲಿ ವಾಸಿಸುವ ಜನರಲ್ಲಿ, ಅವರಾಡುವ ಮಾತನ್ನಾಧರಿಸಿ, ಯಾರು ಕನ್ನಡಿಗರು, ಯಾರು ತೆಲುಗರು, ಮತ್ತು ಯಾರು ತಮಿಳರು ಎಂಬುದನ್ನು ನಿರ್ಧರಿಸುವಲ್ಲಿ ಯಾವ ತೊಂದರೆಯೂ ಇಲ್ಲ. ಇವುಗಳಲ್ಲಿ ಒಂದು ಭಾಷೆಯನ್ನಾಡುವವರು ಇನ್ನೊಂದು ಭಾಷೆಯನ್ನೂ ಅರಿತಿರಬಹುದು, ಆದರೆ ಅವರಲ್ಲಿ ಯಾರ ಮಾತೃಭಾಷೆ ಯಾವುದು ಎಂಬ ವಿಷಯ ಸ್ಪಷ್ಟವಾಗಿಯೇ ಇರುತ್ತದೆ.

ಇಂಡೋ-ಆರ್ಯನ್ ಭಾಷೆಗಳು ಪರ್ಶಿಯನ್, ಬಲೂಚಿ, ಪಶೊ ಮೊದಲಾದ ಇರಾನಿಯನ್ ಭಾಷೆಗಳೊಂದಿಗೆ ಹತ್ತಿರದ ಸಂಬಂಧವನ್ನು ಪಡೆ ದಿದ್ದು, ಅವನ್ನೆಲ್ಲ ಒಟ್ಟಿಗೆ ಇಂಡೋ-ಇರಾನಿಯನ್ ಎಂಬ ಶಾಖೆಯಲ್ಲಿ ಸೇರಿಸಿ ಹೇಳುವುದು ರೂಢಿ. ಇವುಗಳಲ್ಲಿ ಇಂಡೋ-ಆರ್ಯನ್ ಭಾಷೆಗಳಿಗೆಲ್ಲ ಸಂಸ್ಕೃತ ಭಾಷೆಯೇ ಮೂಲವೆಂದು ಕೆಲವರ ಅಭಿಪ್ರಾಯ.

ಇನ್ನು ಕೆಲವರ ಮತದಂತೆ, ಈ ಭಾಷೆಗಳಿಗೆಲ್ಲ ಮೂಲವಾಗಿದ್ದ ಭಾಷೆ ಬೇರೊಂದಿತ್ತು; ಬರವಣಿಗೆಯ ಬಳಕೆಗಾಗಿ, ಆ ಮೂಲಭಾಷೆಯ ಆಧಾರದ ಮೇಲೆ, ಸಂಸ್ಕೃತವೆಂಬ ವಿಶಿಷ್ಟವಾದ ಭಾಷೆಯೊಂದನ್ನು ವಿದ್ವಾಂಸರು ಬೆಳೆಸಿರ ಬೇಕು. ಇಂಡೋ-ಆರ್ಯನ್ ಮೂಲಭಾಷೆಯನ್ನು ಬಳಸುತ್ತಿದ್ದ ಬೇರೆ ಬೇರೆ ಸಮಾಜಗಳಲ್ಲಿ ನಡೆದ ಬದಲಾವಣೆಗಳ ಫಲವಾಗಿ, ಆ ಮೂಲಭಾಷೆ ಪಾಲಿ, ಪ್ರಾಕೃತ, ಅಪಭ್ರಂಶ ಮೊದಲಾದ ರೂಪಗಳನ್ನು ಪಡೆಯಿತು. ಅನಂತರ ನಡೆದ ಬದಲಾವಣೆಗಳ ಫಲವಾಗಿ, ಅವೇ ಭಾಷೆಗಳು ಹಿಂದಿ, ಮರಾಠಿ, ಗುಜರಾತಿ ಮೊದಲಾದ ಇಂದಿನ ಬೇರೆ ಬೇರೆ ಇಂಡೋ-ಆರ್ಯನ್ ಭಾಷೆಗಳಾಗಿ ಕಾಣಿಸಿಕೊಳ್ಳುತ್ತಿವೆ.

೧೭೮


ಭಾರತದ ಭಾಷೆಗಳು

ದ್ರಾವಿಡ ಭಾಷೆಗಳು

ಕನ್ನಡ, ತಮಿಳು, ತೆಲುಗು ಮೊದಲಾದ ಮುಖ್ಯವಾಗಿ ಭಾರತದ ದಕ್ಷಿಣ ವಿಭಾಗ ದಲ್ಲಿ ಬಳಕೆಯಲ್ಲಿರುವ ಭಾಷೆಗಳಿಗೆ ಈ ಇಂಡೋ-ಆರ್ಯನ್ ಭಾಷೆಗಳಿಗಿಂತ ತೀರ ಭಿನ್ನವಾದ ಮೂಲವಿದೆ. ಹಾಗಾಗಿ, ಇವನ್ನು ದ್ರಾವಿಡ ಎಂಬ ಬೇರೆಯೇ ಒಂದು ಕುಟುಂಬದಲ್ಲಿ ಸೇರಿಸುವ ಅವಶ್ಯಕತೆಯಿದೆ. ಇಂಡೋ-ಆರ್ಯನ್ ಭಾಷೆಗಳನ್ನಾಡುವ ಜನರು ಭಾರತಕ್ಕೆ ವಲಸೆಗಾರರಾಗಿ ಬರುವ ಮೊದಲೇ ಈ ದ್ರಾವಿಡ ಭಾಷೆಗಳನ್ನಾಡುವ ಜನರು ಭಾರತದಲ್ಲಿ ನೆಲೆಸಿದ್ದರೆಂದು ವಿದ್ವಾಂಸರ ಊಹೆ.

ಭಾರತದ ಹೊರಗಿರುವ ಬೇರೆ ಕೆಲವು ಭಾಷಾಕುಟುಂಬಗಳೊಂದಿಗೆ ದ್ರಾವಿಡ ಭಾಷೆಗಳನ್ನು ಸಂಬಂಧಿಸುವ ಪ್ರಯತ್ನಗಳಲ್ಲಿ ಒಂದೂ ಇದುವರೆಗೆ ಸಫಲ ವಾಗಿಲ್ಲ. ಯುರೋಪಿನ ಯುರಾಲಿಕ್ ಕುಟುಂಬದ ಉಪಕುಟುಂಬವಾದ ಫಿನ್ನೋ -ಉಗ್ರಿಕ್‌ನೊಂದಿಗೆ ಇವನ್ನು ಸಂಬಂಧಿಸಬಹುದೆಂದು ಕೆಲವರ ಅಭಿಪ್ರಾಯ ವಾದರೆ, ಉತ್ತರ ಆಫ್ರಿಕಾದ ಕೆಲವು ಭಾಷೆಗಳೊಂದಿಗೆ ಇವನ್ನು ಸಂಬಂಧಿಸ ಬಹುದೆಂದು ಬೇರೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮೊಹೆಂಜದಾರೋದಲ್ಲಿ ಸಿಕ್ಕಿದ ಬರಹಗಳ ಹಿಂದಿರುವ ಭಾಷೆ ಒಂದು ದ್ರಾವಿಡ ಭಾಷೆಯಾಗಿರ ಬಹುದೆಂದು ಸಾಧಿಸಲು ಬೇರೆ ಕೆಲವರು ಪ್ರಯತ್ನಿಸಿದ್ದಾರೆ. ಆದರೆ ಈ ಎಲ್ಲಾ ಪ್ರಯತ್ನಗಳೂ ಊಹಾಪೋಹದ ಸ್ಥಿತಿಯಲ್ಲೇ ಉಳಿದಿವೆ.

ದ್ರಾವಿಡ ಭಾಷೆಗಳನ್ನು ಮುಖ್ಯವಾಗಿ ನಾಲ್ಕು ಶಾಖೆಗಳಲ್ಲಿ ವಿಂಗಡಿಸಬಹು ದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ:

  1. (೧) ಕನ್ನಡ, ತುಳು, ತಮಿಳು, ಮಲಯಾಳ, ಕೊಡಗು, ತೊದ ಮೊದಲಾದ
  2. ಭಾಷೆಗಳು ದಕ್ಷಿಣ ದ್ರಾವಿಡ ವಿಭಾಗದಲ್ಲೂ,
  3. (೨) ತೆಲುಗು, ಗೋಂಡಿ, ಕೊಂಡ, ಕೂಯಿ, ಮಾಂಡ, ಪೆಂಗೊ ಮೊದಲಾದ
  4. ಭಾಷೆಗಳು ದಕ್ಷಿಣ-ಮಧ್ಯ ವಿಭಾಗದಲ್ಲೂ,
  5. (೩) ಕೋಲಾಮಿ, ಪಾರ್ಜಿ, ಗದಬ ಮೊದಲಾದವುಗಳು ಮಧ್ಯ ವಿಭಾಗ
  6. ದಲ್ಲೂ, ಮತ್ತು
  7. (೪) ಕುಡುಖ್, ಮಾಲ್ತೋ ಮತ್ತು ಬ್ರಾಹುಯೀ ಭಾಷೆಗಳು ಉತ್ತರ
  8. ವಿಭಾಗದಲ್ಲೂ ಸೇರುತ್ತವೆ.

ದ್ರಾವಿಡ ಭಾಷೆಗಳ ಈ ವಿಭಜನೆ ಅವು ಮೂಲಭಾಷೆಯಿಂದ ಯಾವ ರೀತಿ ಯಲ್ಲಿ ಕವಲೊಡೆದಿರಬೇಕು ಎಂಬುದನ್ನು ಅವಲಂಬಿಸಿದೆಯಾದರೂ, ಇವತ್ತು ಅವನ್ನಾಡುವ ಜನರು ನೆಲೆಸಿರುವ ಪ್ರದೇಶವನ್ನೂ ಈ ವಿಭಜನೆ ಪ್ರತಿಬಿಂಬಿಸು ತ್ತದೆ. ದಕ್ಷಿಣ ದ್ರಾವಿಡ ಭಾಷೆಗಳನ್ನಾಡುವ ಜನರು ಮುಖ್ಯವಾಗಿ ಭಾರತದ ದಕ್ಷಿಣ ಭಾಗದಲ್ಲಿ (ತಮಿಳುನಾಡು, ಕೇರಳ, ಮತ್ತು ಕರ್ಣಾಟಕಗಳಲ್ಲಿ) ನೆಲೆಸಿ ದ್ದಾರೆ.

೧೭೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಇದೇ ರೀತಿಯಲ್ಲಿ, ಉತ್ತರ ವಿಭಾಗದ ಕುಡುಖ್ ಭಾಷೆಯನ್ನಾಡುವ ಜನರು ಒರಿಸ್ಸಾ, ಬಿಹಾರ್ ಮತ್ತು ಮಧ್ಯಪ್ರದೇಶದ ಉತ್ತರ ಭಾಗಗಳಲ್ಲೂ, ಮಾಲ್ತೋ ಭಾಷೆಯನ್ನಾಡುವವರು ಬಿಹಾರದ ರಾಜಮಹಾಲ್ ಪರ್ವತ ಶ್ರೇಣಿಯಲ್ಲೂ ನೆಲೆಸಿದ್ದಾರೆ. ನೇಪಾಳದಲ್ಲಿ ನೆಲಿಸಿರುವ ಧನಗರ್ ಜನಾಂಗದವರೂ ಕುಡುಖ್ ಭಾಷೆಯನ್ನಾಡುತ್ತಾರೆ. ಉತ್ತರ ವಿಭಾಗದ ಮೂರನೇ ಭಾಷೆಯಾದ ಬ್ರಾಹುಯಿ ಯನ್ನಾಡುವವರು ಪಾಕಿಸ್ತಾನದ ಉತ್ತರ ವಿಭಾಗದಲ್ಲಿ ಕ್ವೆಟ್ಟಾದಿಂದ ಲಸ್‌ಬೆಲಾ ದವರೆಗೆ ಕ್ವಾಲಾತ್, ಹರಿಪುರ್ ಮತ್ತು ಹೈದರಾಬಾದ್ ಜಿಲ್ಲೆಗಳಲ್ಲಿ ನೆಲೆಸಿ ದ್ದಾರೆ.

ದಕ್ಷಿಣ-ಮಧ್ಯ ದ್ರಾವಿಡ ಭಾಷೆಗಳಾದ ತೆಲುಗು ಭಾಷೆಯನ್ನಾಡುವವರು ಆಂಧ್ರ ಪ್ರದೇಶದಲ್ಲಿ, ಗೋಂಡಿ ಭಾಷೆಯನ್ನಾಡುವವರು ಮಧ್ಯಪ್ರದೇಶದಲ್ಲಿ, ಮತ್ತು ಕೊಂಡ, ಕೂಯಿ ಮತ್ತು ಕೂವಿ ಭಾಷೆಗಳನ್ನಾಡುವವರು ಒರಿಸ್ಸಾದಲ್ಲಿ ನೆಲೆಸಿದ್ದಾರೆ. ಇದಕ್ಕೆ ಬದಲು, ಮಧ್ಯ ದ್ರಾವಿಡ ಭಾಷೆಗಳಾದ ಕೋಲಾಮಿ ಮತ್ತು ನಾಯ್ಕಿ ಭಾಷೆಗಳನ್ನಾಡುವವರು ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ, ಪಾರ್ಜಿ ಭಾಷೆಯನ್ನಾಡುವವರು ಮಧ್ಯ ಪ್ರದೇಶದ ಬಸ್ತಾರ್ ಜಿಲ್ಲೆಯಲ್ಲಿ, ಮತ್ತು ಗದಬ ಭಾಷೆಯನ್ನಾಡುವವರು ಒರಿಸ್ಸಾದಲ್ಲಿ ನೆಲೆಸಿದ್ದಾರೆ.

ಈ ರೀತಿ, ದಕ್ಷಿಣ, ದಕ್ಷಿಣ-ಮಧ್ಯ, ಮಧ್ಯ, ಮತ್ತು ಉತ್ತರ ದ್ರಾವಿಡ ಭಾಷೆಗಳು ಒಂದರ ಉತ್ತರಕ್ಕೆ ಇನ್ನೊಂದರಂತೆ ಭೌಗೋಳಿಕ ಹರವನ್ನು ತೋರಿಸುತ್ತಿವೆಯಾದರೂ, ಈ ಭಾಷೆಗಳಲ್ಲಿ ಕೆಲವು ಬೇರೆ ಪ್ರದೇಶದಲ್ಲಿರುವ ದ್ರಾವಿಡ ಭಾಷೆಗಳ ವೈಶಿಷ್ಟ್ಯಗಳನ್ನೂ ತೋರಿಸುತ್ತಿರುವುದು ಈ ವಿಭಜನೆಯ ಒಂದು ಸಮಸ್ಯೆಯಾಗಿದೆ.

ಉದಾಹರಣೆಗಾಗಿ, ದಕ್ಷಿಣದಲ್ಲಿ ಬಳಕೆಯಲ್ಲಿರುವ ತುಳು ಭಾಷೆ ಹಲವು ವಿಷಯಗಳಲ್ಲಿ ದಕ್ಷಿಣದ ಇತರ ಭಾಷೆಗಳಿ೦ದ ಭಿನ್ನವಾಗಿದ್ದು, ಮಧ್ಯದ್ರಾವಿಡ ಭಾಷೆಗಳನ್ನು ಹೋಲುತ್ತದೆ. ದಕ್ಷಿಣದಲ್ಲೇ ಇರುವ ಕೊರಗ ಎಂಬ ಇನ್ನೊಂದು ಭಾಷೆ ಕೆಲವು ವಿಷಯಗಳಲ್ಲಿ ಉತ್ತರದ ಕುಡುಖ್ ಮತ್ತು ಮಾಲ್ತೋ ಭಾಷೆಗಳನ್ನು ಹೋಲುತ್ತದೆ. ದಕ್ಷಿಣ-ಮಧ್ಯ ದ್ರಾವಿಡ ಭಾಷೆಯೆನಿಸಿದ ತೆಲುಗು ಹಲವು ವಿಷಯಗಳಲ್ಲಿ ದಕ್ಷಿಣ ದ್ರಾವಿಡ ಭಾಷೆಗಳನ್ನು ಹೋಲುತ್ತದೆ, ಇತ್ಯಾದಿ.

ದ್ರಾವಿಡ ಭಾಷೆಗಳ ನಡುವಿನ ಕೆಲವು ವ್ಯತ್ಯಾಸಗಳು

ಈ ನಾಲ್ಕು ವಿಭಾಗಗಳಿಗೆ ಸೇರಿದ ದ್ರಾವಿಡ ಭಾಷೆಗಳ ನಡುವೆ ಹಲವು ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಇವತ್ತಿನ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದು ಬೇರೆ ಬೇರೆ ಬಾಷೆಗಳಾಗುತ್ತಿರುವಂತೆ, ಅವುಗಳಲ್ಲಿ ಇಂತಹ ವ್ಯತ್ಯಾಸಗಳು ಮೂಡಿಬಂದಿವೆ.

ಮೂಲ ದ್ರಾವಿಡದ ವೈಶಿಷ್ಟ್ಯಗಳಲ್ಲಿ ಕೆಲವನ್ನು ಕೆಲವು ಭಾಷೆಗಳು ಉಳಿಸಿ ಕೊಂಡಿವೆ, ಮತ್ತು ಕೆಲವು ಭಾಷೆಗಳು ಉಳಿಸಿಕೊಂಡಿಲ್ಲ ಎಂಬುದರಿಂದ ಈ

೧೮೦

ಭಾರತದ ಭಾಷೆಗಳು

ವ್ಯತ್ಯಾಸಗಳಲ್ಲಿ ಕೆಲವು ಹುಟ್ಟಿಕೊಂಡಿವೆ, ಮತ್ತು ಇನ್ನು ಕೆಲವು ವ್ಯತ್ಯಾಸಗಳು ಮೂಲ ದ್ರಾವಿಡದಲ್ಲಿ ಇಲ್ಲದಿದ್ದ ವೈಶಿಷ್ಟ್ಯಗಳನ್ನು ಆಧುನಿಕ ಭಾಷೆಗಳು ಬೆಳೆಸಿಕೊಂಡು ಬಂದಿರುವುದರಿಂದಾಗಿ ತಲೆದೋರಿವೆ.

ಉದಾಹರಣೆಗಾಗಿ, ಮೂಲದ್ರಾವಿಡದ ಸರ್ವನಾಮಗಳಲ್ಲಿ ಕೇಳುಗನನ್ನು ಸೇರಿಸಿ ಹೇಳುವವುಗಳು, ಮತ್ತು ಕೇಳುಗನನ್ನು ಬಿಟ್ಟು ಹೇಳುವವುಗಳು ಎಂಬು ದಾಗಿ ಎರಡು ರೀತಿಯ ಬಹುವಚನ ರೂಪಗಳಿದ್ದುವು. ತಮಿಳು, ಮಲಯಾಳ, ತುಳು ಮೊದಲಾದ ಭಾಷೆಗಳಲ್ಲಿ ಈ ವೈಶಿಷ್ಟ್ಯ ಉಳಿದಿದೆ, ಆದರೆ ಕನ್ನಡದಲ್ಲಿ ಉಳಿದಿಲ್ಲ. ಮಲಯಾಳದಲ್ಲಿರುವ ಇಚ್ಚಳ್ ‘ನಾವು ಮಾತ್ರ’ ಮತ್ತು ಇಾಮ್ ‘ನಾವು ಮತ್ತು ನೀವು’ ಎಂಬ ಎರಡು ಸರ್ವನಾಮಗಳಿಗೆ ಬದಲಾಗಿ ಕನ್ನಡದಲ್ಲಿ ನಾವು ಎಂಬ ಒಂದೇ ಒಂದು ಸರ್ವನಾಮವಿದೆ ಎಂಬುದನ್ನು ಇಲ್ಲಿ ಗಮನಿಸ ಬಹುದು. ಕರಾವಳಿಯ ಕೆಲವು ಕನ್ನಡ ಪ್ರಭೇದಗಳಲ್ಲಿ ಮಾತ್ರ ಈ ವೈಶಿಷ್ಟ್ಯ ಇವತ್ತಿಗೂ ಉಳಿದುಕೊಂಡಿದೆ (ಉದಾ: ಹವ್ಯಕದ ಎಂಗೊ ಮತ್ತು ನಾವು). ಹಳೆಗನ್ನಡದಲ್ಲೂ ಈ ವ್ಯತ್ಯಾಸವಿತ್ತು.

ದಕ್ಷಿಣ-ಮಧ್ಯ ದ್ರಾವಿಡ ಭಾಷೆಗಳಲ್ಲೆಲ್ಲ ನಡೆದ ಒಂದು ಬದಲಾವಣೆ ಯೆಂದರೆ, ಪದದ ಎರಡನೇ ಅಕ್ಷರದಲ್ಲಿದ್ದ ರಕಾರ, ಡಕಾರ, ಳಕಾರ, ಮತ್ತು ಲಕಾರಗಳು ಕೆಲವು ವಿಶಿಷ್ಟವಾದ ಸನ್ನಿವೇಶಗಳಲ್ಲಿ ಮೊದಲನೆಯ ಅಕ್ಷರಕ್ಕೆ ಸ್ಥಳಾಂತರಿಸಿವೆ. ಈ ಬದಲಾವಣೆಯ ಪರಿಣಾಮವಾಗಿ ಕನ್ನಡದ ಎಳೆಯವನು ಎಂಬ ಪದ ಕೂವಿ ಭಾಷೆಯಲ್ಲಿ ಲಾವೆಂಜು ಎಂದಾಗುತ್ತದೆ, ಮತ್ತು ಗೋಂಡಿ ಭಾಷೆಯಲ್ಲಿ ಲೆಯ್ಯೋ ಎಂದಾಗುತ್ತದೆ. ಇದೇ ರೀತಿಯಲ್ಲಿ ಕನ್ನಡದ ಬರೆಯು ಎಂಬುದು ತೆಲುಗಿನಲ್ಲಿ ರಾಯು ಎಂದಾಗುತ್ತದೆ, ಅಡಗು ಎಂಬುದು ಡಾಗು ಎಂದಾಗುತ್ತದೆ, ಉದ್ದು (ಉರ್ದು) ಎಂಬುದು ರುದ್ದು ಎಂದಾಗುತ್ತದೆ, ಇಲ್ಲ ಎಂಬುದು ಲೇದು ಎಂದಾಗುತ್ತದೆ, ಇತ್ಯಾದಿ.

ದ್ರಾವಿಡ ಮತ್ತು ಆರ್ಯ ಭಾಷೆಗಳ ನಡುವಿನ ವ್ಯತ್ಯಾಸಗಳು

ದ್ರಾವಿಡ ಮತ್ತು ಆರ್ಯ (ಇಂಡೋ-ಆರ್ಯನ್) ಭಾಷೆಗಳ ನಡುವೆಯೂ ವ್ಯಾಕರಣದ ಮಟ್ಟಿಗೆ ಹಲವು ರೀತಿಯ ವ್ಯತ್ಯಾಸಗಳು ಕಂಡುಬರುತ್ತಿವೆ. ಇವು ಗಳಲ್ಲಿ ಹೆಚ್ಚಿನವಕ್ಕೂ ಈ ಭಾಷೆಗಳಿಗೆ ಮೂಲವಾಗಿದ್ದ ಮೂಲದ್ರಾವಿಡ ಮತ್ತು ಮೂಲ ಇಂಡೋ-ಯುರೋಪಿಯನ್ ಭಾಷೆಗಳು ವಾಕ್ಯರಚನೆಗಾಗಿ ಬೇರೆ ಬೇರೆ ವ್ಯಾಕರಣ ತಂತ್ರಗಳನ್ನು ಬಳಸಿಕೊಂಡಿದ್ದುದೇ ಕಾರಣವೆಂದು ಹೇಳಬಹುದು.

ಆರ್ಯ ಭಾಷೆಗಳನ್ನಾಡುವ ಜನರು ಭಾರತಕ್ಕೆ ವಲಸೆ ಬಂದ ಮೇಲೆ ಅವರ ಭಾಷೆಗಳಲ್ಲಿ ಹಲವಾರು ಬದಲಾವಣೆಗಳು ನಡೆದಿವೆ. ಇವುಗಳಲ್ಲಿ ಹೆಚ್ಚಿನವೂ ಆ ಕಾಲದಲ್ಲಿ ಭಾರತದಲ್ಲಿ ಬಳಕೆಯಲ್ಲಿದ್ದ ದ್ರಾವಿಡ (ಮತ್ತು ಇತರ) ಭಾಷೆಗಳ ಸಂಪರ್ಕದಿಂದಾಗಿ ಅವನ್ನು ಹೆಚ್ಚು ಹೆಚ್ಚು ಹೋಲುವಂತೆ ಮಾಡುವ ಬದಲಾವಣೆ ಗಳೇ ಆಗಿವೆ. ಹೀಗಿದ್ದರೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳ

೧೮೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ನಡುವೆ ಇವತ್ತಿಗೂ ಹಲವು ಮುಖ್ಯವಾದ ವ್ಯತ್ಯಾಸಗಳು ಉಳಿದಿರುವುದನ್ನು ಕಾಣ ಬಹುದು.

ಆರ್ಯ ಭಾಷೆಗಳಲ್ಲಿ ನಾಮಪದ ಮತ್ತು ಕ್ರಿಯಾಪದ ಎಂಬ ಎರಡು ಮುಖ್ಯವಾದ ಪದವರ್ಗಗಳು ಮಾತ್ರ ಇವೆ; ಆದರೆ, ದ್ರಾವಿಡ ಭಾಷೆಗಳಲ್ಲಿ ಈ ಎರಡು ಪದವರ್ಗಗಳು ಮಾತ್ರವಲ್ಲದೆ, ಗುಣಪದ ಎಂಬ ಮೂರನೆಯದೊಂದು ಪದವರ್ಗವೂ ಇದೆ ಎಂಬುದು ಇಂತಹ ವ್ಯತ್ಯಾಸಗಳಲ್ಲಿ ಮುಖ್ಯವಾದುದು. ಈ ವ್ಯತ್ಯಾಸದ ಪರಿಣಾಮವಾಗಿ, ವಾಕ್ಯರಚನೆಯ ಮತ್ತು ಪದರಚನೆಯ ಹಲವು ನಿಯಮಗಳು ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳಲ್ಲಿ ಭಿನ್ನ ಭಿನ್ನ ವಾಗಿವೆ.

ಎರಡನೆಯದಾಗಿ, ನಾಮಪದಗಳನ್ನು ಬೇರೆ ಬೇರೆ ಲಿಂಗಗಳಲ್ಲಿ ವಿಂಗಡಿಸು ವುದಕ್ಕಾಗಿ ಆರ್ಯ ಭಾಷೆಗಳು ಬಳಸುವ ವಿಧಾನ ದ್ರಾವಿಡ ಭಾಷೆಗಳು ಬಳಸುವ ವಿಧಾನಕ್ಕಿಂತ ತೀರ ಭಿನ್ನವಾದುದು. ನಾಮಪದಗಳನ್ನು ಮುಖ್ಯವಾಗಿ ಅವುಗಳ ಅಂತ್ಯಾಕ್ಷರಗಳ ಆಧಾರದ ಮೇಲೆ ವಿಭಜಿಸುವ ಕ್ರಮ ಆರ್ಯ ಭಾಷೆಗಳದಾದರೆ, ಅರ್ಥದ ಆಧಾರದ ಮೇಲೆ ವಿಭಜಿಸುವುದು ದ್ರಾವಿಡ ಭಾಷೆಗಳು ಬಳಸುವ ವಿಧಾನ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ‘ಹೆಂಡತಿ’ ಎಂಬ ಒಂದೇ ಅರ್ಥ ವಿರುವ ಪದಗಳಲ್ಲಿ ದಾರಾ: ಎಂಬುದು ಪುಲ್ಲಿಂಗ, ಪತ್ನಿ ಎಂಬುದು ಸ್ತ್ರೀಲಿಂಗ, ಮತ್ತು ಕಲಿತ್ರಂ ಎಂಬುದು ನಪುಂಸಕಲಿಂಗ. ದ್ರಾವಿಡ ಭಾಷೆಗಳಲ್ಲಿ ಬಳಸುವು ದಿದ್ದರೆ, ಈ ಮೂರೂ ಸ್ತ್ರೀಲಿಂಗ ಪದಗಳೇ ಆಗಿರುತ್ತವೆ.

ವಿಭಕ್ತಿಗಳ ಬಳಕೆಯಲ್ಲೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ದ್ರಾವಿಡ ಭಾಷೆಗಳಲ್ಲಿ ವಿಭಕ್ತಿ ಪ್ರತ್ಯಯ ಗಳಿಗೆ ಅರ್ಥದೊಡನೆ ನೇರವಾದ ಸಂಬಂಧವಿದೆ. ಆದರೆ ಆರ್ಯ ಭಾಷೆಗಳಲ್ಲಿ ಇಂತಹ ನೇರವಾದ ಸಂಬಂಧವಿಲ್ಲ. ಈ ಕಾರಣಕ್ಕಾಗಿ, ವಿಭಕ್ತಿಗಳ ಬಳಕೆಯನ್ನು ವರ್ಣಿಸಲು ಆರ್ಯ ಭಾಷೆಗಳಲ್ಲಿ ಕಾರಕಗಳೆಂಬ ವ್ಯಾಕರಣ ತತ್ವವನ್ನು ಬಳಸ ಬೇಕಾಗುತ್ತದೆ. ಅವುಗಳ ವಾಕ್ಯರಚನೆಯಲ್ಲಿ ಕಾಣಿಸುವ ಕರ್ತರಿ-ಕರ್ಮಣಿ ಪ್ರಯೋಗಗಳ ಬಳಕೆಯೂ ಇದೇ ಕಾರಣಕ್ಕಾಗಿ ಉದ್ಭವಿಸಿದೆ. ಆದರೆ, ಈ ವಿಷಯದಲ್ಲಿ ಇವತ್ತಿನ ಆರ್ಯ ಭಾಷೆಗಳು ಸ್ವಲ್ಪ ಬದಲಾಗಿವೆ.

ಪದರಚನೆಯ ವಿಧಾನವೂ ಈ ಎರಡು ಕುಟುಂಬಗಳಿಗೆ ಸೇರಿದ ಭಾಷೆ ಗಳಲ್ಲಿ ಬೇರೆ ಬೇರಾಗಿದೆ. ಆರ್ಯ ಭಾಷೆಗಳಲ್ಲಿ ಧಾರಾಳವಾಗಿ ಕಾಣಿಸುವ ಪೂರ್ವ ಪ್ರತ್ಯಯಗಳ ಬಳಕೆ ದ್ರಾವಿಡ ಭಾಷೆಗಳಲ್ಲಿಲ್ಲ. ಹೆಚ್ಚಿನ ಪದಗಳಿಗೂ ಕ್ರಿಯಾಧಾತುಗಳೇ ಮೂಲ ಎಂಬ ನಿಯಮ ಆರ್ಯ ಭಾಷೆಗಳಲ್ಲಿದೆ, ಆದರೆ ದ್ರಾವಿಡ ಭಾಷೆಗಳಲ್ಲಿಲ್ಲ.

ಸಮಸ್ತಪದಗಳ ವಿಭಜನೆಯಲ್ಲೂ ಆರ್ಯ ಮತ್ತು ದ್ರಾವಿಡ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸಗಳಿವೆ. ಆರ್ಯ ಭಾಷೆಗಳಲ್ಲಿ ಈ ವಿಭಜನೆಯನ್ನು ಸಮಸ್ತಪದದ ಅಂಗಗಳಾಗಿ ಬಂದ ಪದಗಳಲ್ಲಿ ಪ್ರಧಾನ ಪದ ಯಾವುದು ಎಂಬ

೧೮೨


ಭಾರತದ ಭಾಷೆಗಳು

ವಿಷಯದ ಆಧಾರದ ಮೇಲೆ ನಡೆಸಬಹುದಾದರೆ, ದ್ರಾವಿಡ ಭಾಷೆಗಳಲ್ಲಿ, ಸಮಸ್ತಪದದ ಮೊದಲನೆಯ ಪದ ಯಾವ ವರ್ಗಕ್ಕೆ ಸೇರುತ್ತದೆ ಎಂಬ ವಿಷಯದ ಆಧಾರದ ಮೇಲೆ ನಡೆಸಬೇಕಾಗುತ್ತದೆ.

ದ್ರಾವಿಡ ಭಾಷೆಗಳಲ್ಲಿ ಕ್ರಿಯಾಪದಗಳು ‘ಕಾಲಭೇದ’ವನ್ನು ಸೂಚಿಸುವು ವಾದರೆ, ಆರ್ಯ ಭಾಷೆಗಳಲ್ಲಿ ‘ಕಾಲವ್ಯವಸ್ಥೆ’ಯ ಭೇದವನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕನ್ನಡದ ಹೊಡೆಯುತ್ತಾನೆ ಎಂಬ ಕ್ರಿಯಾರೂಪ ಮಾತ ನಾಡುವ ಸಮಯಕ್ಕಿಂತ ಅನಂತರ ನಡೆಯುವ ಇಲ್ಲವೇ ಮಾತನಾಡುವ ಸಮಯ ದಲ್ಲೇನೇ ನಡೆಯುತ್ತಿರುವ ಘಟನೆಯನ್ನೂ, ಹೊಡೆದ ಎಂಬ ಕ್ರಿಯಾರೂಪ ಮಾತನಾಡುವ ಸಮಯಕ್ಕಿಂತ ಮೊದಲು ನಡೆದ ಘಟನೆಯನ್ನೂ ಸೂಚಿಸುತ್ತವೆ.

ಇದಕ್ಕೆ ಬದಲಾಗಿ, ಹಿಂದೀ ಭಾಷೆಯಲ್ಲಿ ಬರುವ ಆತಾ ‘ಬರುತ್ತಾನೆ’ ಎಂಬ ಕ್ರಿಯಾರೂಪ ಒಂದು ಅಪೂರ್ಣ ಕ್ರಿಯೆಯನ್ನೂ, ಆಯಾ ‘ಬಂದ’ ಎಂಬ ಕ್ರಿಯಾ ರೂಪ ಒಂದು ಪೂರ್ಣ ಕ್ರಿಯೆಯನ್ನೂ ಸೂಚಿಸುತ್ತವೆ. ಇಲ್ಲಿ ಕಾಲಭೇದ ಮುಖ್ಯ ವಲ್ಲ. ಈ ಎರಡು ಕ್ರಿಯಾರೂಪಗಳನ್ನೂ ವರ್ತಮಾನಾರ್ಥ ಕೊಡುವ ಹೈ ಎಂಬ ಉಪಕ್ರಿಯಾಪದದೊಂದಿಗೆ (ಆತಾ ಹೈ, ಆಯಾ ಹೈ), ಇಲ್ಲವೇ ಭೂತಾರ್ಥ ವನ್ನು ಕೊಡುವ ಥಾ ಎಂಬ ಉಪಕ್ರಿಯಾಪದದೊಂದಿಗೆ (ಆತಾ ಥಾ, ಆಯಾ ಥಾ) ಬಳಸಲು ಸಾಧ್ಯವಿದೆ. ಸಂಸ್ಕೃತದಲ್ಲೂ ಈ ಪೂರ್ಣ ಮತ್ತು ಅಪೂರ್ಣ ಎಂಬ ಕಾಲವ್ಯವಸ್ಥೆಯ ಭೇದ ಭೂತ ಮತ್ತು ಅಭೂತ ಎಂಬ ಕಾಲಭೇದಕ್ಕಿಂತ ಹೆಚ್ಚು ಮುಖ್ಯವಾದುದು.

ಟಿಬೆಟೋ-ಬರ್ಮನ್ ಭಾಷೆಗಳು

ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ತ್ರಿಪುರಾದವರೆಗೂ ಹರಡಿರುವ ಹಿಮಾ ಲಯದ ಪರ್ವತಶ್ರೇಣಿಯಲ್ಲಿ ಟಿಬೆಟೋ-ಬರ್ಮನ್ ಎಂಬ ಭಾಷಾ ಕುಟುಂಬಕ್ಕೆ ಸೇರಿದ ಲಡಾಖಿ, ನೆವಾರಿ, ಲೆಪ್ಪಾ, ಬೋಡೋ, ಗಾರೋ, ಆವೋ ನಾಗ, ಮಣಿ ಪುರಿ, ಲುಶಾಯಿ, ತ್ರಿಪುರಿ, ಮೊದಲಾದ ನೂರಕ್ಕೂ ಹೆಚ್ಚು ಭಾಷೆಗಳನ್ನಾಡುವ ಜನರು ವಾಸಿಸುತ್ತಾರೆ.

ಟಿಬೆಟನ್ ಮತ್ತು ಬರ್ಮೀಸ್ ಭಾಷೆಗಳೊಂದಿಗೆ ಮಾತ್ರವಲ್ಲ, ಚೈನೀಸ್ ಭಾಷೆಯೊಂದಿಗೂ ಈ ಭಾಷೆಗಳಿಗೆ ಹತ್ತಿರದ ಸಂಬಂಧವಿದ್ದು, ಇವೆಲ್ಲ ಒಂದೇ ಮೂಲಭಾಷೆಯಲ್ಲಿ ಬೇರೆ ಬೇರೆ ರೀತಿಯ ಬದಲಾವಣೆಗಳಾದುದರಿಂದಾಗಿ ಭಿನ್ನ ಭಿನ್ನ ಭಾಷೆಗಳಾದವುಗಳೆಂದು ವಿದ್ವಾಂಸರು ಕಂಡುಹಿಡಿದಿದ್ದಾರೆ. ಟಿಬೆಟೋ- ಬರ್ಮನ್ ಭಾಷೆಗಳಿಗೂ, ಚೈನೀಸ್ ಭಾಷೆಗೂ ನಡುವೆ ಸಂಬಂಧವಿದೆಯೆಂಬು ದನ್ನು ಸೂಚಿಸುವುದಕ್ಕಾಗಿ ಅದನ್ನು ಸಿನೋ-ಟಿಬೆಟನ್ ಎಂಬ ಇನ್ನಷ್ಟು ವಿಸ್ತಾರ ವಾದ ಭಾಷಾ ಕುಟುಂಬದ ಉಪಕುಟುಂಬವೆಂದು ಹಿಂದಿನವರು ಪರಿಗಣಿಸಿದ್ದರು.

ಆದರೆ, ಇತ್ತೀಚೆಗೆ ನಡೆದ ಕೆಲವು ಸಂಶೋಧನೆಗಳು ಚೈನೀಸ್ ಭಾಷೆ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕೆಲವಕ್ಕೆ (ಎಂದರೆ ಬೋಡೊ, ಗಾರೋ,

೧೮೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಿರಾಂತೀ, ಮೊದಲಾದುವಕ್ಕೆ) ಉಳಿದುವಕ್ಕಿಂತ ಹೆಚ್ಚು ಹತ್ತಿರವೆಂಬುದನ್ನು ತೋರಿಸಿಕೊಟ್ಟಿವೆ; ಮತ್ತು ಈ ಸಂಶೋಧನೆಗಳ ಆಧಾರದ ಮೇಲೆ, ಚೈನೀಸ್ ಮತ್ತು ಅದಕ್ಕೆ ಸಂಬಂಧಿಸಿದ ಬೇರೆ ಕೆಲವು ಭಾಷೆಗಳನ್ನು ಒಟ್ಟಾಗಿ ಟಿಬೆಟೋ- ಬರ್ಮನ್ ಎಂಬ ಭಾಷಾ ಕುಟುಂಬದ ಒಂದು ಉಪಕುಟುಂಬವೆಂಬುದಾಗಿ ಪರಿಗಣಿಸುವ ಅವಶ್ಯಕತೆಯುಂಟಾಗಿದೆ.

ಜಗತ್ತಿನ ಭಾಷೆಗಳಲ್ಲೆಲ್ಲ ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಭಾಷೆಗಳನ್ನು ಬಿಟ್ಟರೆ ಈ ಟಿಬೆಟೋ-ಬರ್ಮನ್ ಎಂಬ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳೇ ಅತೀ ಹೆಚ್ಚು ಜನರ ಮನೆಮಾತಾಗಿವೆ. ಆದರೆ, ಈ ಭಾಷಾ ಕುಟುಂಬಕ್ಕಿರುವ ಜನಸಂಖ್ಯೆಯ ಬಲ ಮುಖ್ಯವಾಗಿ ಚೈನೀಸ್ ಭಾಷೆಯ ಜನ ಸಂಖ್ಯಾಬಲದ ಮೇಲೆ ಅವಲಂಬಿಸಿದೆ. ಸುಮಾರು ನೂರು ಮಿಲಿಯ ಜನರ ಮಾತಾಗಿರುವ ಆ ಭಾಷೆಯನ್ನು ಬಿಟ್ಟರೆ, ಉಳಿದ ಭಾಷೆಗಳಲ್ಲಿ ೨೨ ಮಿಲಿಯ ಜನರ ಮಾತಾಗಿರುವ ಬರ್ಮೀಸ್ ಮತ್ತು ನಾಲ್ಕು ಮಿಲಿಯ ಜನರ ಮಾತಾ ಗಿರುವ ಟಿಬೆಟನ್ ಮುಖ್ಯವಾದವುಗಳು.

ಭಾರತದಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಒಂದು ಮಿಲಿಯಕ್ಕಿಂತ ಜಾಸ್ತಿ ಜನರ ಮಾತಾಗಿರುವ ಭಾಷೆಗಳು ಮಣಿಪುರಿ ಮತ್ತು ಬೋಡೋ ಮಾತ್ರ. ಇವಲ್ಲದೆ, ೧೭೨ ಸಾವಿರ ಜನರ ಮನೆ ಮಾತಾಗಿರುವ ಆವೋ, ಮತ್ತು ೯೭ ಸಾವಿರ ಜನರ ಮನೆ ಮಾತಾಗಿರುವ ಅಂಗಾಮಿ ನಾಗಾ ಭಾಷೆಗಳೂ ಈ ಕುಟುಂಬಕ್ಕೆ ಸೇರುತ್ತವೆ. ಇವಕ್ಕಿಂತ ಕಡಿಮೆ ಜನರು ಮಾತ ನಾಡುವ ಈ ಕುಟುಂಬದ ಭಾಷೆಗಳು ಭಾರತದಲ್ಲಿ ಒಟ್ಟು ನೂರಕ್ಕಿಂತಲೂ ಜಾಸ್ತಿ ಇವೆ.

ಈ ಭಾಷೆಗಳನ್ನೆಲ್ಲ ಪಶ್ಚಿಮ ಮತ್ತು ಪೂರ್ವ ಭಾಷೆಗಳೆಂದು ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಪೂರ್ವ ವಿಭಾಗವನ್ನು ಉತ್ತರ ಮತ್ತು ದಕ್ಷಿಣ ವಿಭಾಗಗಳೆಂದು ವಿಂಗಡಿಸಲು ಸಾಧ್ಯವಿದ್ದು, ಚೈನೀಸ್, ಬೋಡೋ ಮೊದಲಾದವುಗಳು ಉತ್ತರ ವಿಭಾಗದಲ್ಲೂ, ಬರ್ಮೀಸ್, ಲೋಲೋ, ಮಣಿಪುರಿ ಮೊದಲಾದವುಗಳು ದಕ್ಷಿಣ ವಿಭಾಗದಲ್ಲೂ ಸೇರುತ್ತವೆ.

ಮಣಿಪುರಿ ಭಾಷೆಯಲ್ಲಿ ಹದಿನೈದನೇ ಶತಮಾನದಿಂದಲೂ ಸಾಹಿತ್ಯ ರಚನೆ ನಡೆಯುತ್ತಿದೆ. ಮೊದಲಿಗೆ ಈ ಸಾಹಿತ್ಯ ಗ್ರಂಥಗಳನ್ನು ಅವರದೇ ಆದ ಮಣಿಪುರಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಆದರೆ ಅನಂತರ, ಮಣಿಪುರಿ ಜನರ ಮೇಲೆ ವೈಷ್ಣವ ಪ್ರಭಾವ ಬೆಳೆದುಬಂದ ಸಮಯದಲ್ಲಿ, ಈ ಲಿಪಿಯನ್ನು ಬಿಟ್ಟುಕೊಟ್ಟು, ಅದರ ಬದಲಿಗೆ ಬೆಂಗಾಲಿ ಲಿಪಿಯನ್ನು ಬಳಸುವ ಕ್ರಮ ರೂಢಿಗೆ ಬಂತು.

ಆದರೆ, ಈ ಲಿಪಿಯಲ್ಲಿ ಮಣಿಪುರಿ ಭಾಷೆಗೆ ಅವಶ್ಯವಿಲ್ಲದಿರುವ ಹಲವಾರು ಸ್ವರ ಮತ್ತು ವ್ಯಂಜನ ಸಂಜ್ಞೆಗಳಿರುವ ಕಾರಣ, ಮತ್ತು ಆ ಲಿಪಿಯನ್ನು ತಮ್ಮ ಭಾಷೆಗೆ ಅಳವಡಿಸಿಕೊಳ್ಳುವ ಸಮಯದಲ್ಲಿ ಮಣಿಪುರಿ ವಿದ್ವಾಂಸರು ಈ

೧೮೪


ಭಾರತದ ಭಾಷೆಗಳು

ಅವಶ್ಯವಿಲ್ಲದ ಸಂಜ್ಞೆಗಳನ್ನೆಲ್ಲ ಹಾಗೆಯೇ ಉಳಿಸಿಕೊಂಡಿರುವ ಕಾರಣ, ಅವರ ಭಾಷೆಯ ಇಂದಿನ ಬರಹ ತುಂಬಾ ತೊಡಕು ತೊಡಕಾಗಿದೆ.

ವ್ಯಾಕರಣದ ಕೆಲವು ವೈಶಿಷ್ಟ್ಯಗಳು

ವ್ಯಾಕರಣದ ಮಟ್ಟಿಗೆ ಭಾರತದಲ್ಲಿ ಬಳಕೆಯಲ್ಲಿರುವ ಟಿಬೆಟೋ-ಬರ್ಮನ್ ಭಾಷೆಗಳು ಹಲವಾರು ವೈಶಿಷ್ಟ್ಯಗಳನ್ನು ತೋರಿಸುತ್ತವೆ. ಈ ವ್ಯಾಕರಣ ವೈಶಿಷ್ಟ್ಯ ಗಳು ವಾಕ್ಯರಚನೆಗಾಗಿ ಈ ಭಾಷೆಗಳು ಸಿದ್ಧಪಡಿಸಿಕೊಂಡಿರುವ ವಿಶಿಷ್ಟವಾದ ತಂತ್ರಗಳಾಗಿವೆಯಾದ ಕಾರಣ, ಇವು ಈ ಭಾಷೆಗಳನ್ನಾಡುವ ಜನರ ಸಂಸ್ಕೃತಿ ಯನ್ನೂ ಪ್ರತಿಬಿಂಬಿಸುತ್ತವೆಯೆಂದು ಹೇಳಬಹುದು. ಹಾಗಾಗಿ, ಈ ಭಾಷೆಗಳ ನ್ನಾಡುವ ಜನರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದಿದ್ದರೆ, ಅವರ ಭಾಷೆ ಗಳಲ್ಲಿ ಕಾಣಿಸುವ ಈ ವ್ಯಾಕರಣ ವೈಶಿಷ್ಟ್ಯಗಳನ್ನೂ ಸರಿಯಾಗಿ ತಿಳಿದುಕೊಳ್ಳು ವುದು ಅವಶ್ಯ.

ಆರ್ಯ ಭಾಷೆಗಳ ಹಾಗೆ, ಈ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲೂ ನಾಮ ಪದ ಮತ್ತು ಕ್ರಿಯಾಪದಗಳೆಂಬ ಎರಡು ಪದವರ್ಗಗಳು ಮಾತ್ರ ಕಾಣಿಸುತ್ತವೆ. ಆದರೆ, ಗುಣಪದಗಳನ್ನು ಆರ್ಯ ಭಾಷೆಗಳು ನಾಮಪದಗಳೊಂದಿಗೆ ಸೇರಿಸು ತ್ತವೆಯಾದರೆ, ಈ ಕುಟುಂಬದ ಭಾಷೆಗಳು ಕ್ರಿಯಾಪದಗಳೊಂದಿಗೆ ಸೇರಿಸು ತ್ತವೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ಕೃಷ್ಣ: ‘ಕಪ್ಪು’ ಎಂಬುದು ಒಂದು ನಾಮಪದ, ಆದರೆ, ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಮಣಿಪುರಿ ಭಾಷೆಯಲ್ಲಿ ಮೂ ‘ಕಪ್ಪು’ ಎಂಬುದು ಒಂದು ಕ್ರಿಯಾಪದ. ಸಂಸ್ಕೃತದಲ್ಲಿ ಕೃಷ್ಣ: ಎಂಬ ಪದಕ್ಕೆ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವ ಹಾಗೆ, ಮಣಿಪುರಿಯಲ್ಲಿ ಮೂ ಎಂಬ ಪದಕ್ಕೆ ಕಾಲಪ್ರತ್ಯಯಗಳನ್ನು ಮತ್ತು ಅಖ್ಯಾತ ಪ್ರತ್ಯಯಗಳನ್ನು ಸೇರಿಸಬಹುದು.

ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲೂ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಾಣಬಹುದು. ಉದಾಹರಣೆಗಾಗಿ, ಮಣಿಪುರಿ ಭಾಷೆ ಯಲ್ಲಿ ಬರುವ ದ ಎಂಬ ಸಪ್ತಮೀ ವಿಭಕ್ತಿ ಪ್ರತ್ಯಯವನ್ನು ಕನ್ನಡದ ಇಂದ, ಗೆ ಮತ್ತು ಅಲ್ಲಿ ಎಂಬ ಮೂರು ವಿಭಕ್ತಿಗಳ ಅರ್ಥದಲ್ಲೂ ಬಳಸಲು ಬರುತ್ತದೆ. ಇವುಗಳೊಳಗೆ ವ್ಯತ್ಯಾಸವನ್ನು ತೋರಿಸಬೇಕಿದ್ದಲ್ಲಿ, ಈ ಪ್ರತ್ಯಯದೊಂದಿಗೆ ಬೇರೆ ಪ್ರತ್ಯಯ ಇಲ್ಲವೇ ಪದಗಳನ್ನು ಬಳಸಬೇಕಾಗುತ್ತದೆ.

ಕನ್ನಡದ ವಿಭಕ್ತಿ ಪ್ರತ್ಯಯಗಳಲ್ಲಿ ಅನ್ನು ಎಂಬುದನ್ನು ಬಳಸುವಲ್ಲಿ ನಮಗೆ ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯವಿದೆ ಎಂದು ಹೇಳಬಹುದು. ಹಲವು ಸಂದರ್ಭಗಳಲ್ಲಿ ಅದನ್ನು ಬಳಸದಿರಲೂ ಸಾಧ್ಯವಿದೆ: ಮನೆ ಮಾರಿದ ಮತ್ತು ಮನೆಯನ್ನು ಮಾರಿದ ಎಂಬಂತಹ ವಿಕಲ್ಪವಾದ ಪ್ರಯೋಗಗಳನ್ನು ಕನ್ನಡದಲ್ಲಿ ಕಾಣಬಹುದು. ಆದರೆ ಬೇರೆ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲಿ ಇಂತಹ ಸ್ವಾತಂತ್ರ್ಯವಿಲ್ಲ.

೧೮೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಇಂತಹ ಸ್ವಾತಂತ್ರ್ಯವನ್ನು ಹೆಚ್ಚಿನ ವಿಭಕ್ತಿ ಪ್ರತ್ಯಯಗಳ ಬಳಕೆಯಲ್ಲೂ ಕಾಣಬಹುದು. ಇದಲ್ಲದೆ, ವಿಭಕ್ತಿ ಪ್ರತ್ಯಯ ವೊಂದರ ಪ್ರಯೋಗವಾಗಿದೆಯೇ, ಅಥವಾ ಇಲ್ಲವೇ ಎಂಬ ವಿಷಯದ ಆಧಾರದ ಮೇಲೆ, ಬೇರೆ ಕೆಲವು ಅರ್ಥ ವ್ಯತ್ಯಾಸಗಳನ್ನೂ ಈ ಭಾಷೆಗಳಲ್ಲಿ ಸೂಚಿಸಲು ಸಾಧ್ಯವಿದೆ. ಉದಾಹರಣೆಗಾಗಿ, ಮಣಿಪುರಿಯಲ್ಲಿ ಕನ್ನಡದ ಅನ್ನು ಎಂಬ ಪ್ರತ್ಯಯದ ಅರ್ಥವಿರುವ ಬು ಎಂಬ ಪ್ರತ್ಯಯವನ್ನು ಅವಶ್ಯವಿಲ್ಲದಲ್ಲಿ ಬಳಸಿದಾಗ ‘ಅನ್ನು ಮಾತ್ರ’ ಎಂಬ ಅರ್ಥ ಬರುತ್ತದೆ (ಕಾರು ಎಂಬ ಪದದೊಂದಿಗೆ ಅದನ್ನು ಬಳಸದಿರುವಲ್ಲಿ ‘ಕಾರನ್ನು’ ಎಂಬ ಅರ್ಥ ಬರುವು ದಾದರೆ, ಬಳಸಿರುವಲ್ಲಿ ‘ಕಾರನ್ನು ಮಾತ್ರ’ ಎಂಬ ಅರ್ಥ ಬರುತ್ತದೆ.)

ವಿಭಕ್ತಿಗಳ ಬಳಕೆಯಲ್ಲಿ ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಈ ಭಾಷೆ ಗಳಲ್ಲಿ ಕಾಣಬಹುದು. ಉದಾಹರಣೆಗಾಗಿ, ಅಂಗಾಮೀ ನಾಗಾ ಭಾಷೆಯಲ್ಲಿ ಗಿನು ಮತ್ತು ನುನು ಎಂಬ ಎರಡು ಸಪ್ತಮೀ ವಿಭಕ್ತಿ ಪ್ರತ್ಯಯಗಳಿವೆ. ಇವುಗಳಲ್ಲಿ ಮೊದಲನೆಯದನ್ನು ಬಹಳ ಎತ್ತರದಲ್ಲಿರುವ ಸ್ಥಾನವನ್ನು ಸೂಚಿಸುವಲ್ಲಿ ಬಳಸ ಬೇಕು, ಮತ್ತು ಎರಡನೆಯದನ್ನು ಬಹಳ ತಗ್ಗಿನಲ್ಲಿರುವ ಸ್ಥಾನವನ್ನು ಸೂಚಿಸು ವಲ್ಲಿ ಬಳಸಬೇಕು. ಉದಾಹರಣೆಗಾಗಿ, ಬಸ್ಸಿನಲ್ಲಿ ಕುಳಿತೆ ಎಂದು ಹೇಳ ಬೇಕಾದಾಗ, ಆ ಬಸ್ಸು ಪರ್ವತದ ತುದಿಯಲ್ಲಿ ಸಾಗುತ್ತಿದ್ದರೆ ಅಂಗಾಮಿ ಭಾಷೆ ಯಲ್ಲಿ ಗಿನು ಎಂಬ ಪ್ರತ್ಯಯವನ್ನೂ, ಅದು ಕೆಳಗೆ ಕಣಿವೆಯಲ್ಲಿ ಸಾಗುತ್ತಿದ್ದರೆ ನುನು ಎಂಬ ಪ್ರತ್ಯಯವನ್ನೂ ಬಳಸಬೇಕಾಗುತ್ತದೆ.

ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಬೋಡೋ ಎಂಬ ಇನ್ನೊಂದು ಭಾಷೆಯಲ್ಲಿ ಕ್ರಿಯಾಪದಗಳು ತಿಳಿಸುವ ಘಟನೆಗಳ ಸ್ಥಾನ ವೈಶಿಷ್ಟ್ಯವನ್ನು ಸೂಚಿ ಸುವುದಕ್ಕಾಗಿ ಅವುಗಳೊಂದಿಗೆ ಹಲವಾರು ಪ್ರತ್ಯಯಗಳನ್ನು ಸೇರಿಸಿ ಹೇಳ ಲಾಗುತ್ತದೆ. ಉದಾಹರಣೆಗಾಗಿ, ದ್ದಾ ‘ತಿನ್ನು’ ಎಂಬ ಕ್ರಿಯಾಪದದೊಂದಿಗೆ ಕ್ಲಾಯ್ ಎಂಬ ಪ್ರತ್ಯಯವನ್ನು ಸೇರಿಸಿದಲ್ಲಿ ‘ಕೆಳಗಿನಿಂದ ಮೇಲಕ್ಕೆ ತಿನ್ನು’ ಎಂಬ ಅರ್ಥವೂ, ದ್ದ ಪ್ರತ್ಯಯವನ್ನು ಸೇರಿಸಿದಲ್ಲಿ ‘ನೆಕ್ಕಿ ತಿನ್ನು’ ಎಂಬ ಅರ್ಥವೂ, ಪ್ರು ಪ್ರತ್ಯಯವನ್ನು ಸೇರಿಸಿದಲ್ಲಿ ‘ಮಧ್ಯದಿಂದ ಕಚ್ಚಿ ತಿನ್ನು’ ಎಂಬ ಅರ್ಥವೂ, ಸ್ಲೆರ್ ಪ್ರತ್ಯಯವನ್ನು ಸೇರಿಸಿದಲ್ಲಿ ‘ಬದಿಯಿಂದ ತಿನ್ನು’ ಎಂಬ ಅರ್ಥವೂ, ದ್ದೊಬ್ ಪ್ರತ್ಯಯವನ್ನು ಸೇರಿಸಿದಲ್ಲಿ ‘ಮೇಲಿನಿಂದ ತಿನ್ನು’ ಎಂಬ ಅರ್ಥವೂ ಬರುತ್ತದೆ. ಈ ಭಾಷೆಯಲ್ಲಿ ಇಂತಹ ಹಲವು ಬಗೆಯ ಅರ್ಥಗಳನ್ನು ಕೊಡಬಲ್ಲ ಒಟ್ಟು ಇನ್ನೂರ ಐವತ್ತಕ್ಕಿಂತಲೂ ಜಾಸ್ತಿ ಪ್ರತ್ಯಯಗಳು ಬಳಕೆಯಲ್ಲಿವೆ.

ಕನ್ನಡದಲ್ಲಿ ಬರಬಹುದು ಎಂಬುದಕ್ಕೆ ‘ಬರುವುದು ಸಾಧ್ಯ’ ಎಂಬ ಅರ್ಥವೂ ಇದೆ, ‘ಬರುವುದಕ್ಕೆ ಒಪ್ಪಿಗೆಯಿದೆ’ ಎಂಬ ಅರ್ಥವೂ ಇದೆ. ಇದೇ ರೀತಿಯಲ್ಲಿ, ಬರಬೇಕು ಎಂಬುದಕ್ಕೆ ‘ಬರುವುದು ನಿಶ್ಚಯ’ ಎಂಬ ಅರ್ಥವೂ ಇದೆ, ‘ಬರುವುದು ಅವಶ್ಯ’ ಎಂಬ ಅರ್ಥವೂ ಇದೆ. ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಈ ಎರಡು ರೀತಿಯ ಅರ್ಥಗಳನ್ನು ಸೂಚಿಸಲು ಬೇರೆ ಬೇರೆ ಪ್ರತ್ಯಯಗಳನ್ನು ಇಲ್ಲವೇ ಪದಗಳನ್ನು ಪ್ರಯೋಗಿಸಲಾಗುತ್ತದೆ. ಹಾಗಾಗಿ,

೧೮೬


ಭಾರತದ ಭಾಷೆಗಳು

ದ್ರಾವಿಡ ಮತ್ತು ಆರ್ಯ ಭಾಷೆಗಳಲ್ಲಿ ಕಾಣಿಸುವ ಈ ಅರ್ಥಸಂದಿಗ್ಧತೆ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ ಕಾಣಿಸುವುದಿಲ್ಲ.

ನಮ್ಮ ದೇಶದ ಈಶಾನ್ಯ ಗಡಿಪ್ರದೇಶದಲ್ಲಿ ನಾವು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅಲ್ಲಿನ ಜನರು ಆಡುವ ಭಾಷೆಗಳು ದಿಲ್ಲಿಯ ರಾಜಕಾರಣಿಗಳ ಭಾಷೆಗಳಿಗಿಂತ ತೀರಾ ಭಿನ್ನವಾಗಿರುವುವಾದ ಕಾರಣ, ಅವರ ಅನಿಸಿಕೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ದಿಲ್ಲಿಯ ರಾಜ ಕಾರಣಿಗಳು ಎಡವುತ್ತಿದ್ದಾರೆ. ಬಹುಶಃ ಗಡಿಪ್ರದೇಶದ ತೊಂದರೆಗಳಿಗೆ ನಮ್ಮ ರಾಜಕಾರಣಿಗಳು ಅನುಭವಿಸುತ್ತಿರುವ ಈ ಭಾಷಾವಿಷಯಕ ಸಮಸ್ಯೆಯೂ ಒಂದು ಕಾರಣವಾಗಿರಬಲ್ಲುದು. ಈ ವಿಷಯವನ್ನು ಸ್ವಲ್ಪ ಆಳವಾಗಿ ಪರಿಶೀ ಲಿಸುವ ಅವಶ್ಯಕತೆಯಿದೆ.

ಆಸ್ಟೋ-ಏಶಿಯಾಟಿಕ್ ಭಾಷೆಗಳು

ಭಾರತದಲ್ಲಿ ಆಸ್ಟೋ-ಏಶಿಯಾಟಿಕ್ ಎಂಬ ಹೆಸರಿನ ಈ ಕುಟುಂಬಕ್ಕೆ ಸೇರಿದ ಭಾಷೆಗಳು ಮುಖ್ಯವಾಗಿ ಬಿಹಾರ್, ಒರಿಸ್ಸಾ, ಮತ್ತು ಮಧ್ಯಪ್ರದೇಶಗಳ ಗುಡ್ಡ ಕಾಡುಗಳಲ್ಲಿ ನೆಲೆಸಿರುವ ಜನರಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳನ್ನಾಡುವ ಜನರ ಹಾಗೆ, ಈ ಭಾಷೆಗಳನ್ನಾಡುವ ಜನರೂ ಆರ್ಯರು ಭಾರತಕ್ಕೆ ವಲಸೆ ಬರುವ ಮೊದಲೇ ಇಲ್ಲಿ ನೆಲೆಸಿದ್ದಿರಬೇಕು. ಈ ಭಾಷೆಗಳಲ್ಲಿ ಐವತ್ತೆರಡು ಲಕ್ಷ ಜನರ ಮನೆಮಾತಾಗಿರುವ ಸಂತಾಲಿ, ಮತ್ತು ಎಂಟೂವರೆ ಲಕ್ಷ ಜನರ ಮನೆ ಮಾತಾಗಿರುವ ಮುಂಡಾರಿ ಭಾಷೆಗಳು ಮುಖ್ಯವಾದವುಗಳು.

ಈ ಭಾಷೆಗಳನ್ನು ಮುಂಡ ಮತ್ತು ಮೋನ್-ಖ್ಮೇರ್ ಎಂಬ ಎರಡು ಉಪ ಕುಟುಂಬಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಮುಂಡ ವಿಭಾಗಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯಾ, ಭೂಮಿಜ್, ಕೊರ್ಕು, ಸೋರಾ ಮೊದಲಾದ ಒಟ್ಟು ಸುಮಾರು ಹದಿನೆಂಟು ಭಾಷೆಗಳೂ, ಮೋನ್-ಖ್ಮೇರ್ ವಿಭಾಗಕ್ಕೆ ಸೇರಿದ ಖಾಸಿ ಮತ್ತು ನಿಕೊಬರೀಸ್ ಎಂಬ ಎರಡು ಭಾಷೆಗಳೂ ಭಾರತದಲ್ಲಿ ಬಳಕೆಯಲ್ಲಿವೆ.

ಭಾರತದ ಹೊರಗೆ ಬಳಕೆಯಲ್ಲಿರುವ ವಿಯಟ್ನಮೀಸ್, ಖ್ಮೇರ್ (ಕಂಬೋ ಡಿಯನ್) ಮೊದಲಾದ ಬೇರೆ ಹಲವು ಭಾಷೆಗಳೂ ಈ ಮೋನ್-ಖ್ಮೇರ್ ಗುಂಪಿಗೆ ಸೇರುತ್ತವೆ. ಆದರೆ, ಮುಂಡ ವಿಭಾಗಕ್ಕೆ ಸೇರಿದ ಭಾಷೆಗಳು ಭಾರತ ದಲ್ಲಿ ಮಾತ್ರ ಬಳಕೆಯಲ್ಲಿವೆ. ಅವನ್ನು ಮುಖ್ಯವಾಗಿ ದಕ್ಷಿಣ ಮುಂಡ (ಸೋರ, ಗೋರುಮ್), ಕೊರಾಪುತ್ ಮುಂಡ (ಗುಥೋಬ್, ರೆಮೋ), ಮಧ್ಯ ಮುಂಡ (ಖಡಿಯಾ, ಜುವಾಂಗ್), ಮತ್ತು ಉತ್ತರ ಮುಂಡ (ಕೊರ್ಕು, ಸಂತಾಲಿ, ಮುಂಡಾರಿ, ಕೊರ್ವ, ಹೋ, ಇತ್ಯಾದಿ) ಎಂಬುದಾಗಿ ವಿಂಗಡಿಸಲಾಗುತ್ತದೆ.

ಆಸ್ಟ್ರೋ-ಏಶಿಯಾಟಿಕ್ ಭಾಷಾಕುಟುಂಬವನ್ನು ಚೈನಾ, ವಿಯೆಟ್ನಾಂ ಮೊದ ಲಾದ ಭಾರತದ ಹೊರಗಿರುವ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಮಿಯನ್

೧೮೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಮತ್ತು ಇತರ ಮಿಯಾವ್-ಯಾವ್ ಭಾಷೆಗಳೊಂದಿಗೆ, ಮತ್ತು ಥಾಯ್‌ಲೇಂಡಿನ ಥಾಯಿ, ಲಾವೋ, ಜುವಾಂಗ್ ಮೊದಲಾದ ದಾಯಿಕ್ ಭಾಷೆಗಳೊಂದಿಗೆ ಸೇರಿಸಿ, ಆಸ್ಟ್ರಿಕ್ ಎಂಬ ದೊಡ್ಡದೊಂದು ಭಾಷಾಕುಟುಂಬವನ್ನು ಕಲ್ಪಿಸಿಕೊಳ್ಳ ಬಹುದೆಂದು ಕೆಲವರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಕರಣದ ಕೆಲವು ವೈಶಿಷ್ಟ್ಯಗಳು

ಈ ಕುಟುಂಬಕ್ಕೆ ಸೇರಿದ ಭಾಷೆಗಳು ಹಲವು ವಿಷಯಗಳಲ್ಲಿ ಭಾರತದ ಇತರ ಭಾಷೆಗಳಿಂದ ಭಿನ್ನವಾಗಿವೆ. ಉದಾಹರಣೆಗಾಗಿ, ಮುಂಡ ವಿಭಾಗಕ್ಕೆ ಸೇರಿದ ಮುಂಡಾರಿ ಭಾಷೆಯಲ್ಲಿ ಎಲ್ಲಾ ಪದಗಳೂ ಒಂದೇ ಪದವರ್ಗದಲ್ಲಿ ಬರುತ್ತವೆ. ಎಂದರೆ, ಅವುಗಳಲ್ಲಿ ಯಾವುದನ್ನು ಬೇಕಿದ್ದರೂ ನಾಮಪದವಾಗಿ, ಕ್ರಿಯಾಪದ ವಾಗಿ ಇಲ್ಲವೇ ಗುಣಪದವಾಗಿ ಬಳಸಲು ಸಾಧ್ಯವಿದೆ. ಉದಾಹರಣೆಗಾಗಿ, ಮುಂಡಾರಿ ಭಾಷೆಯಲ್ಲಿ ‘ಮತ್ತು’ ಎಂಬ ಅರ್ಥವನ್ನು ಕೊಡುವ ಒಡೊ ಎಂಬ ಪದವನ್ನು ಆ ಅರ್ಥದಲ್ಲಿ ಮಾತ್ರವಲ್ಲದೆ, ವಿಭಕ್ತಿ ಪ್ರತ್ಯಯಗಳೊಂದಿಗೆ ‘ಹೆಚ್ಚಿ ನವರು’ ಎಂಬ ಅರ್ಥದಲ್ಲೂ ಬಳಸಬಹುದು, ಮತ್ತು ಆಖ್ಯಾತ ಪ್ರತ್ಯಯ ಗಳೊಂದಿಗೆ ‘ಇನ್ನೊಮ್ಮೆ ಮಾಡು’ ಎಂಬ ಅರ್ಥದಲ್ಲೂ ಬಳಸಬಹುದು.

ಮುಂಡಾರಿ ಭಾಷೆಯಲ್ಲಿ ಬರುವ ಬೇರೆ ಕೆಲವು ಪದಗಳ ಅರ್ಥವನ್ನು ಪರಿಶೀಲಿಸಿದಲ್ಲಿ, ಅದಕ್ಕೂ ಇತರ ಭಾಷೆಗಳಿಗೂ ನಡುವೆ ಇರುವ ಈ ವ್ಯತ್ಯಾಸ ಸ್ಪಷ್ಟವಾದೀತು. ಅದರ ಹೆಚ್ಚಿನ ಪದಗಳಲ್ಲೂ ‘ವಸ್ತು (ಇಲ್ಲವೇ ವಿಷಯ)’ ಮತ್ತು ‘ಅದಕ್ಕೆ ಸಂಬಂಧಿಸಿದ ಘಟನೆ’ ಎಂಬ ಈ ಎರಡು ರೀತಿಯ ಪರಿಕಲ್ಪನೆಗಳೂ ಹುದುಗಿರುತ್ತವೆ; ಇದನ್ನು ಕೆಳಗೆ ಕೊಟ್ಟಿರುವ ಮುಂಡಾರಿ ಪದಗಳಲ್ಲಿ ಕಾಣಬಹುದು.

ಮುಂಡಾರಿ ಪದ ವಸ್ತು ಸಂಬಂಧಿಸಿದ ಘಟನೆ
ಬುರು ‘ಪರ್ವತ’ ‘ರಾಶಿ ಹಾಕು’
ಗಪ ‘ನಾಳೆ’ ‘ಮುಂದೂಡು’
ಕುಮ್ಮು ‘ಕಳ್ಳ’ ‘ಕದ್ದು ಕೋ’
ಲುತುರ್ ‘ಕಿವಿ’ ‘ಕೇಳು’

ಮುಂಡಾರಿ ಭಾಷೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ಇದರ ಕ್ರಿಯಾಪದ ಗಳು ತಿಳಿಸುವ ಘಟನೆಗಳಲ್ಲಿ ಬೇರೆ ಬೇರೆ ಕಾರ್ಯಗಳಿಗಾಗಿ ತೊಡಗಿಕೊಳ್ಳುವ ವ್ಯಕ್ತಿಗಳನ್ನು ಸೂಚಿಸಲು ಆ ಕ್ರಿಯಾಪದಗಳಲ್ಲೇನೇ ಆಖ್ಯಾತ ಪ್ರತ್ಯಯಗಳನ್ನು ಬಳಸುವ ವ್ಯವಸ್ಥೆಯಿದೆ.

ಉದಾಹರಣೆಗಾಗಿ, ದಲ್ ‘ಹೊಡೆ’ ಎಂಬ ಕ್ರಿಯಾಪದವನ್ನು ಬಳಸುವು ದಿದ್ದಲ್ಲಿ, ಅದರೊಂದಿಗೆ ‘ಹೊಡೆದದ್ದು ಯಾವಾಗ’ ಎಂಬುದನ್ನು ಮಾತ್ರವಲ್ಲದೆ,

೧೮೮


ವಿಷ್ಯದ ಭಾಷೆಗಳು

‘ಹೊಡೆದದ್ದು ಯಾರು’, ಮತ್ತು ‘ಹೊಡೆದದ್ದು ಯಾರಿಗೆ’ ಎಂಬ ಬೇರೆ ಎರಡು ವಿಷಯಗಳನ್ನೂ ಸೂಚಿಸಲು ಆಖ್ಯಾತ ಪ್ರತ್ಯಯಗಳನ್ನು ಬಳಸಬಹುದು. ಈ ಭಾಷಾವೈಶಿಷ್ಟ್ಯವನ್ನು ಅಮೆರಿಕಾದ ಸಾಲಿಶ್ ಭಾಷೆಗಳಲ್ಲೂ ಕಾಣಬಹುದು.

ಸಂಸ್ಕೃತ ಭಾಷೆಯ ಹಾಗೆ, ಮುಂಡಾರಿ ಭಾಷೆಯಲ್ಲೂ ಮೂರು ವಚನ ಗಳಿವೆ ಮಾತ್ರವಲ್ಲ, ದ್ವಿವಚನ ಮತ್ತು ಬಹುವಚನಗಳೆರಡರಲ್ಲೂ ಕೇಳುಗನನ್ನು ಬಿಟ್ಟು ಇಲ್ಲವೇ ಸೇರಿಸಿ ಹೇಳುವಂತೆ ಎರಡೆರಡು ಸರ್ವನಾಮ ರೂಪಗಳಿವೆ. ಸಂಸ್ಕೃತದ ಕ್ರಿಯಾರೂಪಗಳನ್ನು ಮುಂಡಾರಿ ಭಾಷೆಯ ಕ್ರಿಯಾರೂಪಗಳೊಂದಿಗೆ ಹೋಲಿಸಿ ನೋಡಿದೆವಾದರೆ, ಸಂಸ್ಕೃತಕ್ಕಿಂತ ಎಷ್ಟೋ ಪಾಲು ಜಾಸ್ತಿ ಕ್ರಿಯಾ ರೂಪಗಳು ಮುಂಡಾರಿಯಲ್ಲಿರುವುದನ್ನು ಕಾಣಬಹುದು.

ಕನ್ನಡದಲ್ಲಿ ಅಲ್ಲಿ ಮತ್ತು ಇಲ್ಲಿ ಎಂಬ ಎರಡು ಸ್ಥಾನಗಳನ್ನು ನಿರ್ದೇಶಿಸುವ ಸರ್ವನಾಮಗಳಿವೆಯಾದರೆ, ಮುಂಡಾರಿ ಭಾಷೆಯಲ್ಲಿ ಒಟ್ಟು ಒಂಬತ್ತು ಸ್ಥಾನ ಗಳನ್ನು ನಿರ್ದೇಶಿಸುವ ಸರ್ವನಾಮಗಳಿವೆ. ‘ಮಾತನಾಡುವವನ ಹತ್ತಿರ’, ‘ದೂರ’, ಮತ್ತು ‘ಇವುಗಳ ನಡುವೆ’ ಎಂಬ ಮೂರು ಸ್ಥಾನಭೇದಗಳನ್ನು ಮಾತ್ರವಲ್ಲದೆ, ಇವುಗಳಲ್ಲಿ ಪ್ರತಿಯೊಂದೂ ‘ಹತ್ತಿರ’, ‘ಬಹಳ ಹತ್ತಿರ’, ಮತ್ತು ‘ಇನ್ನಷ್ಟು ಹತ್ತಿರ’ ಎಂಬುದಾಗಿ ಮೂರು ಹೆಚ್ಚಿನ ರೂಪಗಳನ್ನು ತೋರಿಸುತ್ತವೆ.

ಆಸ್ಟ್ರೋ-ಏಶಿಯಾಟಿಕ್ ಕುಟುಂಬದಲ್ಲೇನೇ ಮೋನ್-ಖ್ಮೇರ್ ಎಂಬ ಉಪ ಕುಟುಂಬಕ್ಕೆ ಸೇರುವ, ಮತ್ತು ಮೇಘಾಲಯದಲ್ಲಿ ಬಳಕೆಯಲ್ಲಿರುವ, ಖಾಸಿ ಭಾಷೆ ಮುಂಡ ಭಾಷೆಗಳಿಂದ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಉದಾ ಹರಣೆಗಾಗಿ, ಖಾಸಿ ಭಾಷೆಯಲ್ಲಿ ನಾಮಪದಗಳನ್ನು ಬಳಸುವಾಗಲೆಲ್ಲ ಉ ‘ಪುಲ್ಲಿಂಗ’ ಇಲ್ಲವೇ ಕ ‘ಸ್ತ್ರೀಲಿಂಗ’ ಎಂಬ ಎರಡು ಸರ್ವನಾಮಗಳಲ್ಲಿ ಯಾವು ದಾದರೂ ಒಂದನ್ನು ಅವುಗಳೊಂದಿಗೆ ಬಳಸಲೇಬೇಕೆಂಬ ನಿಯಮವಿದೆ.

ಬಹುವಚನದಲ್ಲಾದರೆ, ಇವೆರಡಕ್ಕೂ ಬದಲಾಗಿ ಕಿ ಎಂಬ ಸರ್ವನಾಮವನ್ನು ಬಳಸಬಹುದು. ಈ ಸರ್ವನಾಮಗಳು ಲಿಂಗಭೇದವನ್ನು ಮಾತ್ರವಲ್ಲ, ಅಪ್ರಾಣಿ ವಾಚಕ ಪದಗಳೊಂದಿಗೆ ಬಂದಾಗ ಅವುಗಳ ಆಕಾರ ಇಲ್ಲವೇ ಗಾತ್ರವನ್ನೂ ಸೂಚಿಸಬಲ್ಲುವು (ಉ ಸ್ಲ ‘ಚಿಕ್ಕ ಎಲೆ’, ಕ ಸ್ಲ ‘ದೊಡ್ಡ ಎಲೆ’)

೫.೨ ಏಷ್ಯಾದ ಭಾಷೆಗಳು

ಭಾರತದಲ್ಲಿ ಬಳಕೆಯಲ್ಲಿರುವ ಭಾಷಾಕುಟುಂಬಗಳಾದ ಇಂಡೋ-ಆರ್ಯನ್ (ಇಂಡೋ-ಯುರೋಪಿಯನ್), ದ್ರವಿಡಿಯನ್, ಟಿಬೆಟೋ-ಬರ್ಮನ್ ಮತ್ತು ಆಸ್ಟ್ರೋ-ಏಶಿಯಾಟಿಕ್ ಎಂಬವುಗಳಿಗೆ ಸೇರಿದ ಭಾಷೆಗಳು ಮಾತ್ರವಲ್ಲದೆ, ಉರಾಲಿಕ್ ಮತ್ತು ಅಲ್ಟೇಯಿಕ್ ಎಂಬ ಬೇರೆ ಎರಡು ಕುಟುಂಬಗಳಿಗೆ ಸೇರಿದ ಭಾಷೆಗಳೂ ಏಶ್ಯಾಖಂಡದಲ್ಲಿ ಬಳಕೆಯಲ್ಲಿವೆ. ಇವಲ್ಲದೆ, ಚುಕ್ಚಿ-ಕಾಮ್ಚತ್

೧೮೯


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಕಾನ್, ಮಿಯಾವ್-ಯಾವ್ ಮತ್ತು ದಾಯಿಕ್ ಎಂಬ ಇನ್ನೂ ಮೂರು ಕುಟುಂಬಗಳಿಗೆ ಸೇರಿದ ಭಾಷೆಗಳೂ ಈ ಖಂಡದಲ್ಲಿ ಬಳಕೆಯಲ್ಲಿವೆ.

ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಇರೇ ನಿಯನ್ ಮತ್ತು ಆರ್ಮೇನಿಯನ್ ಭಾಷೆಗಳು ಏಶ್ಯಾದ ನೈಋತ್ಯ ಭಾಗದಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಭಾರತದಲ್ಲಿ ಮಾತ್ರವಲ್ಲದೆ, ಪಾಕಿಸ್ತಾನ (ಬ್ರಾಹುಯೀ), ನೇಪಾಲ (ಕುಡುಖ್), ಬಂಗ್ಲಾದೇಶ ಮೊದಲಾದ ಏಶ್ಯಾದ ಬೇರೆ ಕೆಲವು ದೇಶಗಳಲ್ಲೂ ಬಳಕೆಯಲ್ಲಿವೆ.

ಟಿಬೆಟೋ-ಬರ್ಮನ್ ಕುಟುಂಬಕ್ಕೆ ಸೇರಿದ ಚೈನೀಸ್ ಭಾಷೆ (ನಿಜಕ್ಕೂ ಇದು ಮಂದಾರಿನ್, ಕೆಂಟೊನೀಸ್, ವೂ, ದಕ್ಷಿಣ ಮತ್ತು ಉತ್ತರ ಮಿನ್, ಕೇಜಾ ಮೊದಲಾದ ಹಲವು ಭಾಷೆಗಳ ಒಂದು ಉಪಕುಟುಂಬ) ಏಶ್ಯಾ ಖಂಡದ ಒಂದು ಮುಖ್ಯವಾದ ಭಾಷೆ. ಇದಲ್ಲದೆ, ಈ ಕುಟುಂಬಕ್ಕೆ ಸೇರಿದ ಟಿಬೆಟನ್ ಮತ್ತು ಬರ್ಮೀಸ್ ಎಂಬ ಇನ್ನೆರಡು ಮುಖ್ಯವಾದ ಭಾಷೆಗಳೂ ಏಶ್ಯಾದಲ್ಲಿ ಬಳಕೆ ಯಲ್ಲಿವೆ.

ಆಸ್ಟ್ರೋ-ಏಶಿಯಾಟಿಕ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಭಾರತದ ಹೊರಗೆ ಏಶ್ಯಾದಲ್ಲಿ ಬಳಕೆಯಲ್ಲಿರುವ ಭಾಷೆಗಳೆಲ್ಲ ಮೋನ್-ಖ್ಮೆರ್ ಎಂಬ ಉಪಕುಟುಂಬಕ್ಕೆ ಸೇರುತ್ತವೆ. ವಿಯಟ್ನಮೀಸ್ ಮತ್ತು ಖ್ಮೆರ್ (ಕಂಬೋ ಡಿಯನ್) ಭಾಷೆಗಳು ಇವುಗಳಲ್ಲಿ ಮುಖ್ಯವಾದವುಗಳು. ಇಂತಹ ನೂರೈವತ್ತು ಭಾಷೆಗಳು ಏಶ್ಯಾದಲ್ಲಿ ಬಳಕೆಯಲ್ಲಿವೆ.

ಥಾಯಿ, ಲಾವೋ ಮೊದಲಾದ ಒಟ್ಟು ಅರುವತ್ತು ಭಾಷೆಗಳನ್ನೊಳಗೊಂಡ ದಾಯಿಕ್ ಕುಟುಂಬ, ಮತ್ತು ಚೈನಾ, ವಿಯೆಟ್ನಾಂ, ಥೈಲೇಂಡ್ ಮೊದಲಾದ ದೇಶಗಳಲ್ಲಿ ಬಳಕೆಯಲ್ಲಿರುವ ಮಿಯಾವ್-ಯಾವ್ ಕುಟುಂಬ - ಇವೆರಡನ್ನೂ ಆಸ್ಟ್ರೋ-ಏಶಿಯಾಟಿಕ್ ಎಂಬ ಕುಟುಂಬದೊಂದಿಗೆ ಸೇರಿಸಿ, ಆಸ್ಟ್ರಿಕ್ ಎಂಬ ದೊಡ್ಡದೊಂದು ಭಾಷಾಕುಟುಂಬವನ್ನು ಸಾಧಿಸಬಹುದೆಂದು ಕೆಲವರು ಅಭಿ ಪ್ರಾಯಪಟ್ಟಿದ್ದಾರೆ.

ಮುಖ್ಯವಾಗಿ ಯುರೋಪ್‌ನಲ್ಲಿ ಬಳಕೆಯಲ್ಲಿರುವ ಯುರಾಲಿಕ್ ಭಾಷೆಗಳಲ್ಲಿ ಸಮೊಯೆದ್ ಎಂಬ ಉಪಕುಟುಂಬಕ್ಕೆ ಸೇರಿದ ಭಾಷೆಗಳು ಏಶ್ಯಾದ ಯುರಾಲ್ ಪರ್ವತಶ್ರೇಣಿಯಲ್ಲಿ ಬಳಕೆಯಲ್ಲಿವೆ. ಅಲ್ಟಯಿಕ್ ಕುಟುಂಬದಲ್ಲಿ ಟರ್ಕಿಕ್, ಮೊಂಗೋಲಿಯನ್, ಮಂಚು-ತುಂಗುಸ್ ಮತ್ತು ಕೊರಿಯನ್ ಎಂಬ ನಾಲ್ಕು ಉಪಕುಟುಂಬಗಳು ಸೇರುತ್ತವೆ. ಐವತ್ತು ಮಿಲಿಯ ಜನರ ಮನೆಮಾತಾದ ಟರ್ಕಿಶ್ ಭಾಷೆ ಇವುಗಳಲ್ಲಿ ಮುಖ್ಯವಾದುದು. ಕೆಲವರ ಅಭಿಪ್ರಾಯದಂತೆ, ಜಪಾನೀಸ್ ಮತ್ತು ಐನು ಭಾಷೆಗಳನ್ನೂ ಈ ಅಲ್ಟಯಿಕ್ ಕುಟುಂಬದಲ್ಲಿ ಸೇರಿಸಬಹುದು.

೧೯೦

೫.೩ ಯುರೋಪಿನ ಭಾಷೆಗಳು

ಯುರೋಪ್ ಖಂಡದಲ್ಲಿ ಮುಖ್ಯವಾಗಿ ಇಂಡೋ-ಯುರೋಪಿಯನ್, ಯುರಾಲಿಕ್ ಮತ್ತು ಕೌಕೇಶಿಯನ್ ಎಂಬ ಮೂರು ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳು ಬಳಕೆಯಲ್ಲಿವೆ. ಇವುಗಳಲ್ಲಿ ಇಂಡೋ-ಯುರೋಪಿಯನ್ ಕುಟುಂಬಕ್ಕೆ ಸೇರಿದ ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪಾನಿಶ್, ರಶ್ಯನ್ ಮೊದಲಾದ ಭಾಷೆಗಳನ್ನಾಡುವ ಜನರು ಅಮೆರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಮೊದಲಾದ ಬೇರೆ ಭೂಖಂಡಗಳಿಗೂ ವಲಸೆ ಹೋಗಿ ಅಲ್ಲೂ ವಿಸ್ತಾರವಾಗಿ ಹರಡಿಕೊಂಡಿದ್ದಾರೆ. ಇದರಿಂದಾಗಿ, ಇವತ್ತು ಜಗತ್ತಿನ ಒಟ್ಟು ಜನಸಂಖ್ಯೆಯ ಲೆಕ್ಕವನ್ನು ಹಿಡಿದಲ್ಲಿ, ಇಂಡೋ-ಯುರೋಪಿಯನ್ ಭಾಷಾಕುಟುಂಬಕ್ಕೆ ಸೇರಿದ ಭಾಷೆಗಳಿಗೆ ಮೊದಲನೆಯ ಸ್ಥಾನ ಸಿಗುತ್ತದೆ.

ಇಂಡೋ-ಯುರೋಪಿಯನ್ ಭಾಷೆಗಳು

ಈ ಕುಟುಂಬಕ್ಕೆ ಸೇರಿದ ಭಾಷೆಗಳ ಸಂಖ್ಯೆ ನೂರೈವತ್ತಕ್ಕಿಂತ ಜಾಸ್ತಿಯಿಲ್ಲ. ಈ ಭಾಷೆಗಳನ್ನಾಡುವ ಜನರ ಮೂಲ ಯುರೋಪ್ ಖಂಡವಾಗಿದೆಯಾದರೂ ಮೊದಲಿಗೆ ಹತ್ತಿರದ ಏಶ್ಯಾ ಖಂಡಕ್ಕೆ ಮತ್ತು ಇತ್ತೀಚೆಗೆ ಇತರ ಎಲ್ಲಾ ಖಂಡ ಗಳಿಗೂ ಈ ಜನರು ವಲಸೆ ಹೋಗಿ, ಇವತ್ತು ಇಡೀ ಭೂಮಿಯನ್ನೇ ಆಕ್ರಮಿಸಿ ಕೊಂಡಿದ್ದಾರೆ. ಈ ಕುಟುಂಬಕ್ಕೆ ಸೇರಿದ ಇಂಗ್ಲಿಷ್ ಭಾಷೆ ಇವತ್ತು ಜಗತ್ತಿನ ಭಾಷೆಯೆನಿಸಿದೆ.

ಸುಮಾರು ಮೂರು ಸಾವಿರ ವರ್ಷಗಳಷ್ಟು ಹಿಂದೆ ಇವತ್ತಿನ ಟರ್ಕಿಯಲ್ಲಿ ಬಳಕೆಯಲ್ಲಿದ್ದು, ಅನಂತರ ನಶಿಸಿಹೋಗಿದ್ದ ಹಿಟ್ಟೈಟ್ ಎಂಬ ಭಾಷೆ ಇಂಡೋ-ಯುರೋಪಿಯನ್ ಭಾಷೆಗಳಿಗೆ ಸಂಬಂಧಿಸಿದ್ದೆಂದೂ, ಮತ್ತು ಈ ಭಾಷೆಯನ್ನು ಇಂಡೋ-ಯುರೋಪಿಯನ್ ಭಾಷೆಗಳೊಂದಿಗೆ ಸೇರಿಸಿ ಒಟ್ಟಾಗಿ ಇಂಡೋ-ಹಿಟ್ಟೈಟ್ ಎಂಬ ಇನ್ನೂ ದೊಡ್ಡ ಭಾಷಾಕುಟುಂಬವೊಂದನ್ನು ಸಾಧಿಸಲು ಸಾಧ್ಯ ವೆಂದೂ ಕೆಲವರು ವಾದಿಸಿದ್ದಾರೆ.

ಇಂಡೋ-ಯುರೋಪಿಯನ್ ಭಾಷೆಗಳನ್ನು ಶ-ಕ ಭೇದದ ಆಧಾರದ ಮೇಲೆ ಪೂರ್ವ ಮತ್ತು ಪಶ್ಚಿಮ ಭಾಷೆಗಳೆಂದು ವಿಂಗಡಿಸುವ ಕ್ರಮ ಬಳಕೆ ಯಲ್ಲಿತ್ತು. ಆದರೆ ಕಕಾರವನ್ನು ಶಕಾರವಾಗಿ ಮಾಡಿರುವ ಭಾಷೆಗಳ ನಡುವೆ ಕಕಾರವನ್ನು ಉಳಿಸಿಕೊಂಡಿರುವ ಹಿಟ್ಟೈಟ್ ಭಾಷೆಯಿದೆಯೆಂಬುದನ್ನು ಕಂಡು ಹಿಡಿದಾಗ, ಈ ವಿಭಜನೆಗೆ ಬೆಲೆಯಿಲ್ಲದಾಯಿತು. ಸದ್ಯಕ್ಕೆ ಇಂಡೋ- ಯುರೋಪಿಯನ್ ಭಾಷೆಗಳನ್ನು ಇಂಡೋ-ಇರೇನಿಯನ್, ಜರ್ಮೇನಿಕ್, ಸ್ಲಾವಿಕ್, ಬಾಲ್ಟಿಕ್, ಕೆಲ್ಟಿಕ್, ಇಟಾಲಿಕ್, ಮೊದಲಾದ ಒಟ್ಟು ಹನ್ನೆರಡು ಉಪಕುಟುಂಬಗಳಲ್ಲಿ ವಿಂಗಡಿಸುವುದು ರೂಢಿ. ಈ ಉಪಕುಟುಂಬಗಳಲ್ಲಿ ಗ್ರೀಕ್,

೧೯೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಆರ್ಮೇನಿಯನ್ ಮತ್ತು ಅಲ್ಬೇನಿಯನ್‌ಗಳಲ್ಲಿ ಒಂದೊಂದು ಭಾಷೆ (ಮತ್ತು ಅವುಗಳ ಉಪಭಾಷೆಗಳು) ಮಾತ್ರ ಇದೆ.

ಇತರ ಭಾಷೆಗಳು

ಯುರಾಲಿಕ್ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ಮಧ್ಯಯುರೋಪಿನಲ್ಲಿ ಬಳಕೆ ಯಲ್ಲಿರುವ ಸುಮಾರು ಹದಿನೈದು ಮಿಲಿಯ ಜನರ ಮನೆಮಾತಾದ ಹಂಗೇರಿಯನ್ ಮುಖ್ಯವಾದುದು. ಇದಲ್ಲದೆ, ಫಿನ್‌ಲೇಂಡಿನಲ್ಲಿ ಸುಮಾರು ಐದು ಮಿಲಿಯ ಜನರ ಮನೆಮಾತಾಗಿರುವ ಫಿನ್ನಿಶ್ ಭಾಷೆಯೂ ಈ ಕುಟುಂಬಕ್ಕೆ ಸೇರುತ್ತದೆ. ಎಸ್ಟೋನಿಯಾದ ಎಸ್ತೋನಿಯನ್, ಸ್ಕೇಂಡಿನೇವಿಯಾದ ಲಾಪ್, ಕರೇಲಿಯನ್, ಮೋರ್ಡ್ವಿನ್ ಮೊದಲಾದ ಈ ಕುಟುಂಬದ ಇತರ ಮೂವತ್ತು ಭಾಷೆಗಳನ್ನಾಡುವ ಜನರ ಒಟ್ಟು ಸಂಖ್ಯೆ ಐದು ಮಿಲಿಯಕ್ಕಿಂತ ಜಾಸ್ತಿ ಇಲ್ಲ. ಏಶ್ಯಾದ ಉತ್ತರ ಭಾಗದಲ್ಲೂ ಈ ಕುಟುಂಬಕ್ಕೆ ಸೇರಿದ ಅಥವಾ ಸಂಬಂಧಿಸಿದ ಯುಕಾಘಿರ್, ಮಾನ್ಸಿ ಮೊದಲಾದ ಭಾಷೆಗಳಿವೆ.

ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ ಇವುಗಳ ಪದಗಳಲ್ಲೆಲ್ಲ ಸ್ವರಗಳ ಸಾಮರಸ್ಯ ಕಾಣಿಸುತ್ತದೆ. ಇದಕ್ಕಾಗಿ ಪದಗಳಲ್ಲಿ ಬರುವ ಸ್ವರಗಳನ್ನು ಪೂರ್ವ ಮತ್ತು ಪಶ್ಚ ಎಂಬ ಎರಡು ಗುಂಪುಗಳಲ್ಲಿ ವಿಂಗಡಿಸುವ ಅವಶ್ಯಕತೆ ಯಿದೆ. ಇಕಾರ ಮತ್ತು ಎಕಾರಗಳು ಪೂರ್ವ ಸ್ವರಗಳು, ಮತ್ತು ಉಕಾರ, ಒಕಾರ ಮತ್ತು ಅಕಾರಗಳು ಪಶ್ಚ ಸ್ವರಗಳು. ಯಾವ ಪದದಲ್ಲೂ ಪೂರ್ವ ಮತ್ತು ಪಶ್ಚ ಸ್ವರಗಳು ಒಟ್ಟಾಗಿ ಬರಲಾರವು. ಹಾಗಾಗಿ, ಈ ಭಾಷೆಗಳಲ್ಲಿ ಬರುವ ಪ್ರತ್ಯಯ ಗಳಿಗೆಲ್ಲ ಪೂರ್ವಸ್ವರಯುಕ್ತ ಮತ್ತು ಪಶ್ಚಸ್ವರಯುಕ್ತಗಳೆಂಬ ಎರಡೆರಡು ರೂಪ ಗಳಿರುತ್ತವೆ.

ಉದಾಹರಣೆಗಾಗಿ, ಹಂಗೇರಿಯನ್ ಭಾಷೆಯಲ್ಲಿ ‘ಮೇಲೆ’ ಎಂಬ ಅರ್ಥದ ಪ್ರತ್ಯಯಕ್ಕೆ ಎನ್ ಮತ್ತು ಒನ್ ಎಂಬ ಎರಡು ರೂಪಗಳಿವೆ. ಒಂದು ನಾಮಪದ ಪೂರ್ವಸ್ವರಯುಕ್ತವಾಗಿದ್ದರೆ ಅದರೊಂದಿಗೆ ಈ ಪ್ರತ್ಯಯದ ಎನ್ ಎಂಬ ರೂಪ ವನ್ನೂ (ವಿದ್ಸೆನ್ ‘ನೀರಿನ ಮೇಲೆ’), ಮತ್ತು ಪಶ್ಚಸ್ವರಯುಕ್ತವಾಗಿದ್ದರೆ ಒನ್ ಎಂಬ ರೂಪವನ್ನೂ (ಲೊವೊನ್ ‘ಕುದುರೆಯ ಮೇಲೆ’) ಬಳಸಬೇಕಾಗುತ್ತದೆ.

ಈ ಭಾಷೆಗಳಲ್ಲಿ ವಿಭಕ್ತಿ ಪ್ರತ್ಯಯಗಳ ಸಂಖ್ಯೆ ಸಾಮಾನ್ಯವಾಗಿ ಬಹಳ ದೊಡ್ಡದು. ಉದಾಹರಣೆಗಾಗಿ, ಪೆರ್‌ಮ್ಯಾಕ್ ಎಂಬ ಭಾಷೆಯಲ್ಲಿ ೨೮ ವಿಭಕ್ತಿ ಪ್ರತ್ಯಯಗಳಿವೆ. ಈ ಪ್ರತ್ಯಯಗಳು ಮುಖ್ಯವಾಗಿ ಹಲವು ಬಗೆಯ ಸ್ಥಾನಗಳನ್ನು ಸೂಚಿಸಲು ಬಳಕೆಯಾಗುತ್ತವೆ. ಕನ್ನಡದಲ್ಲಿ ಇಂದ ಮತ್ತು ಗೆ ಎಂಬ ಎರಡು ಅಸ್ಥಾಯಿ ಸ್ಥಾನಗಳನ್ನು ಸೂಚಿಸುವ ಪ್ರತ್ಯಯಗಳೂ, ಅಲ್ಲಿ ಎಂಬ ಸ್ಥಾಯಿ ಸ್ಥಾನವನ್ನು ಸೂಚಿಸುವ ವಿಭಕ್ತಿಯೂ ಇದೆಯಾದರೆ, ಈ ಭಾಷೆಗಳಲ್ಲಿ ಹಲವು ಬಗೆಯ ಸ್ಥಾಯಿ ಸ್ಥಾನಗಳನ್ನು ಸೂಚಿಸುವ ಪ್ರತ್ಯಯಗಳಿವೆ.

೧೯೨


ಆಫ್ರಿಕಾದ ಭಾಷೆಗಳು

ಕೌಕೇಶಿಯನ್ ವಿಭಾಗಕ್ಕೆ ಸೇರಿದ ಭಾಷೆಗಳಲ್ಲಿ ಹೆಚ್ಚಿನವೂ ಹಿಂದಿನ ಸೋವಿಯೆಟ್ ಯೂನಿಯನ್‌ನಲ್ಲಿದ್ದ ಕೌಕಸಸ್ ಪ್ರದೇಶದಲ್ಲಿ ಬಳಕೆಯಲ್ಲಿವೆ. ಇವುಗಳಲ್ಲಿ ಜಾರ್ಜಿಯನ್ ಮುಖ್ಯವಾದುದು. ಅಬ್‌ಖಾಜ್, ಚೆಚನ್, ಘಸ್ತಾನಿ, ದರ್ಗ್ವಾ, ಲೆಜ್‌ಗಿ ಮೊದಲಾದ ಒಟ್ಟು ಸುಮಾರು ೩೭ ಭಾಷೆಗಳನ್ನು ಈ ವಿಭಾಗದಲ್ಲಿ ಸೇರಿಸುವುದು ರೂಢಿ. ನಿಜಕ್ಕೂ ಈ ಎಲ್ಲಾ ಭಾಷೆಗಳನ್ನೂ ಒಟ್ಟಾಗಿ ಒಂದು ಭಾಷಾಕುಟುಂಬವೆಂದು ಪರಿಗಣಿಸುವುದಕ್ಕೆ ಸಾಕಷ್ಟು ಆಧಾರವಿನ್ನೂ ದೊರೆತಿಲ್ಲ. ಹಾಗಾಗಿ, ಕೌಕೇಶಿಯನ್ ಎಂಬುದು ಒಂದು ಭಾಷಾಕುಟುಂಬ ವೆನ್ನುವುದಕ್ಕಿಂತಲೂ ಒಂದು ಪ್ರಾದೇಶಿಕ ವಿಭಜನೆಯೆಂದು ಹೇಳುವುದೇ ಲೇಸು.

ಈ ಭಾಷೆಗಳನ್ನು ಉತ್ತರ ಮತ್ತು ದಕ್ಷಿಣ (ಕರ್ತೇಲಿಯನ್) ಎಂಬ ಎರಡು ಗುಂಪುಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಉತ್ತರದ ಭಾಷೆಗಳಲ್ಲಿ ಕಾಣಿಸಿ ಕೊಳ್ಳುವ ವರ್ಣಗಳ ಸಂಖ್ಯೆ ಸಾಮಾನ್ಯವಾಗಿ ಬಹಳ ದೊಡ್ಡದು. ಉದಾಹರಣೆ ಗಾಗಿ, ಯುಬಿಖ್ ಭಾಷೆಯಲ್ಲಿ ಒಟ್ಟು ೮೦ ವ್ಯಂಜನ ವರ್ಣಗಳಿವೆ. ಆದರೆ ಈ ಭಾಷೆಯಲ್ಲಿರುವ ಸ್ವರಗಳ ಸಂಖ್ಯೆ ಮಾತ್ರ ಬರೇ ಎರಡು (ಇವು ಎರಡು ಬಗೆಯ ಅಕಾರಗಳು). ಈ ಭಾಷೆಯಲ್ಲಿ ಉ, ಒ, ಇ, ಎ ಮೊದಲಾದ ಅಕಾರಕ್ಕಿಂತ ಭಿನ್ನವಾದ ಸ್ವರಗಳಿಲ್ಲ.

ಕರ್ತೇಲಿಯನ್ ಭಾಷೆಗಳಲ್ಲಿ ವಿಭಕ್ತಿಗಳ ಸಂಖ್ಯೆ ಅಧಿಕ. ಉದಾಹರಣೆಗಾಗಿ, ಲಾಕ್ ಭಾಷೆಯಲ್ಲಿ ಒಟ್ಟು ೪೦ ವಿಭಕ್ತಿಗಳಿವೆ. ತಬಸಾರಸ್ ಎಂಬ ಇನ್ನೊಂದು ಭಾಷೆಯಲ್ಲಿ ೪೬ ವಿಭಕ್ತಿಗಳಿವೆ. ಇದರ ಕೆಲವು ಉಪಭಾಷೆಗಳಲ್ಲಿ ಇನ್ನೂ ಜಾಸ್ತಿ ವಿಭಕ್ತಿಗಳಿವೆ. ಇವುಗಳಲ್ಲಿ ಹೆಚ್ಚಿನವೂ ಬೇರೆ ಬೇರೆ ಸ್ಥಾನಗಳನ್ನು ಸೂಚಿಸುವು ದಕ್ಕಾಗಿ ಬಳಕೆಯಾಗುತ್ತವೆ. ಉದಾಹರಣೆಗಾಗಿ, ಕನ್ನಡದ ಸಪ್ತಮಿಗೆ ಬದಲಾಗಿ ಸ್ಥಾನದ ಸ್ವರೂಪವನ್ನಾಧರಿಸಿ, ಎಂದರೆ ‘ಸಮತಟ್ಟಾದ ಜಾಗ’, ‘ಇಳಿಜಾರಾದ ಜಾಗ’, ‘ಮೇಲ್ಮೈ’, ‘ಕೆಳಮೈ’, ‘ಖಾಲಿ ಜಾಗ’, ‘ತುಂಬಿದ ಜಾಗ’, ಮೊದಲಾದ ಭೇದಗಳನ್ನಾಧರಿಸಿ, ಈ ಭಾಷೆಗಳಲ್ಲಿ ಹಲವಾರು ಪ್ರತ್ಯಯಗಳನ್ನು ಬಳಸ ಲಾಗುತ್ತದೆ.

೫.ಆಫ್ರಿಕಾದ ಭಾಷೆಗಳು

ಆಫ್ರಿಕಾದಲ್ಲಿ ಒಟ್ಟು ಸುಮಾರು ಒಂದೂವರೆ ಸಾವಿರದಿಂದ ಹಿಡಿದು ಎರಡು ಸಾವಿರದಷ್ಟು ಭಾಷೆಗಳು ಬಳಕೆಯಲ್ಲಿಯೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಈ ಭಾಷೆಗಳನ್ನೆಲ್ಲ ಆಫ್ರೋ-ಏಶಿಯಾಟಿಕ್, ನೈಲೋ-ಸಹರಾನ್, ನೈಜರ್-ಕೊರ್ಡೋಫೇನಿಯನ್, ಮತ್ತು ಖೊಯ್ಸಾನ್ ಎಂಬ ನಾಲ್ಕು ಮುಖ್ಯ ಕುಟುಂಬಗಳಲ್ಲಿ ವಿಂಗಡಿಸಬಹುದೆಂದು ಇವರಲ್ಲಿ ಹೆಚ್ಚಿನವರೂ ಅಭಿಪ್ರಾಯ ಪಡುತ್ತಾರೆ. ಆಫ್ರಿಕಾದಲ್ಲಿ ಈ ನಾಲ್ಕು ಕುಟುಂಬಗಳಿಗೂ ಸೇರದೆ ಪ್ರತ್ಯೇಕವಾಗಿ ಉಳಿಯುವ ಭಾಷೆಗಳೂ ಕೆಲವಿವೆ.

೧೯೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಆಫ್ರಿ-ಏಶಿಯಾಟಿಕ್ ಭಾಷೆಗಳು

ಈ ವಿಭಾಗಕ್ಕೆ ಸೇರುವ ಸುಮಾರು ಇನ್ನೂರ ನಲುವತ್ತು ಭಾಷೆಗಳು ಆಫ್ರಿಕಾದ ಉತ್ತರ ಭಾಗದಲ್ಲಿ ಬಳಕೆಯಲ್ಲಿವೆ. ಇವನ್ನು ಈಜಿಪ್ಟಿಯನ್, ಸೆಮಿಟಿಕ್, ಬೆರ್ಬೆರ್, ಚಾದಿಕ್, ಮತ್ತು ಕುಶಿಟಿಕ್ ಎಂಬ ಐದು ಉಪವಿಭಾಗಗಳಲ್ಲಿ ವಿಂಗಡಿಸಬಹುದು. ಇವುಗಳಲ್ಲಿ ಕೆಲವು ಭಾಷೆಗಳನ್ನು ಒಮೋಟಿಕ್ ಎಂಬ ಇನ್ನೊಂದು ಪ್ರತ್ಯೇಕವಾದ ವಿಭಾಗದಲ್ಲಿ ಸೇರಿಸಬೇಕೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಉಪವಿಭಾಗಗಳಲ್ಲಿ ಈಜಿಪ್ಟಿಯನ್ ಎಂಬುದಕ್ಕೆ ಸೇರಿದ ಭಾಷೆ ಗಳೆಲ್ಲ ಈಗ ಅಳಿದು ಹೋಗಿವೆ. ಹಳೇ ಈಜಿಪ್ಟಿಯನ್ ಭಾಷೆಯ ಬರಹಗಳು ಐದು ಸಾವಿರ ವರ್ಷಗಳಷ್ಟು ಹಳೆಯವು. ಅದರ ಇತ್ತೀಚೆಗಿನ ಪ್ರಭೇದವೆಂದರೆ ಹದಿನಾರನೇ ಶತಮಾನದ ಕೋಪ್ಟಿಕ್ ಭಾಷೆ.

ಸೆಮಿಟಿಕ್ ಕುಟುಂಬಕ್ಕೆ ಸೇರಿದ ಭಾಷೆಗಳು ಅರಬ್ ದೇಶಗಳಾದ ಸೌದೀ ಅರೇಬಿಯ, ಜೋರ್ಡಾನ್, ಇರಾಕ್, ಇಸ್ರೇಲ್, ಲೆಬನಾನ್, ಸಿರಿಯಾಗಳಲ್ಲೂ, ಸೋಮಾಲಿಯಾ ಮತ್ತು ಇಥಿಯೋಪಿಯಾದ ಹೆಚ್ಚಿನ ಭಾಗಗಳಲ್ಲೂ, ಮತ್ತು ಇರಾನ್ ಹಾಗೂ ಟರ್ಕಿ ದೇಶಗಳ ಕೆಲವು ಭಾಗಗಳಲ್ಲೂ ಬಳಕೆಯಲ್ಲಿವೆ. ಅಕ್ಕಾಡಿಯನ್ ಎಂಬುದು ಈ ವಿಭಾಗಕ್ಕೆ ಸೇರಿದ ಒಂದು ಹಳೇ ಭಾಷೆ.

ನೂರು ಮಿಲಿಯ ಜನರ ಮನೆಮಾತಾಗಿರುವ ಅರೇಬಿಕ್, ಎಂಟು ಮಿಲಿಯ ಜನರ ಮಾತಾಗಿರುವ ಅಮ್ಹಾರಿಕ್, ನಾಲ್ಕು ಮಿಲಿಯ ಜನರ ಮಾತಾಗಿರುವ ತಿಗ್ರೀನಿಯಾ ಮೊದಲಾದವುಗಳು ಈ ಸೆಮಿಟಿಕ್ ವಿಭಾಗಕ್ಕೆ ಸೇರಿದ ಆಧುನಿಕ ಭಾಷೆಗಳು. ಇಸ್ರೇಲಿನ ಹೀಬ್ರೂ ಭಾಷೆಯೂ ಇದೇ ವಿಭಾಗಕ್ಕೆ ಸೇರುತ್ತದೆ. ಕ್ರೈಸ್ತನ ಕಾಲದಲ್ಲಿ ಹೆಚ್ಚು ಕಡಿಮೆ ಪೂರ್ತಿ ನಷ್ಟವಾಗಿ ಹೋಗಿದ್ದ ಈ ಭಾಷೆ ಯನ್ನು ಪುನರುಜ್ಜೀವನಗೊಳಿಸಿ ಆಧುನಿಕ ಆಡಳಿತ ಭಾಷೆಯನ್ನಾಗಿ ಮಾಡ ಲಾಗಿದೆ. ಇವತ್ತು ಇದನ್ನು ಬಳಸುತ್ತಿರುವವರ ಸಂಖ್ಯೆ ಸುಮಾರು ಮೂರು ಮಿಲಿಯ.

ಸೆಮಿಟಿಕ್ ವಿಭಾಗಕ್ಕೆ ಸೇರಿದ ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳ ಪದಗಳಲ್ಲಿ ಹೆಚ್ಚಿನವುಗಳಲ್ಲೂ ಮೂರು ವ್ಯಂಜನಗಳ ಒಂದು ಧಾತು ವಿರುತ್ತದೆ. ಈ ಧಾತುವಿನೊಂದಿಗೆ ಕೆಲವೇ ಕೆಲವು ಸ್ವರಗಳ ವಿನ್ಯಾಸಗಳನ್ನು ಬಳಸುವುದರ ಮೂಲಕ, ಈ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಪದಗಳನ್ನು ಮತ್ತು ಪದರೂಪಗಳನ್ನು ಸಾಧಿಸಬಹುದು.

ಉದಾಹರಣೆಗಾಗಿ, ಅರೇಬಿಕ್ ಭಾಷೆಯಲ್ಲಿ ಕ್-ತ್-ಬ್ ಎಂಬುದು ‘ಬರೆ’ ಎಂಬರ್ಥದ ಒಂದು ಧಾತು. ಇದನ್ನು ಬೇರೆ ಬೇರೆ ಸ್ವರವಿನ್ಯಾಸಗಳೊಂದಿಗೆ ಬಳಸಿ, ಕಿತಾಬ್ ‘ಪುಸ್ತಕ’, ಕಾತಿಬ್ ‘ಲೇಖಕ’, ಕುತುಬಿ ‘ಪುಸ್ತಕ ವ್ಯಾಪಾರಿ’, ಕತಬ ‘ಬರವಣಿಗೆಯವನು’, ಕಿತಾಬ್ ‘ಬರಹ’, ಕುತ್ತಾಬ್ ‘ಪ್ರಾಥಮಿಕ ಶಾಲೆ’ ಮೊದಲಾದ ಪದಗಳನ್ನು ಸಾಧಿಸಬಹುದು. ಇದಲ್ಲದೆ, ಇವಕ್ಕೆ ಬೇರೆ ಕೆಲವು ವ್ಯಂಜನಗಳನ್ನು ಸೇರಿಸಿ, ಮಕ್ಕೂಬ್ ‘ಪತ್ರ’, ಮಿಕ್ತಾಬ್ ‘ಟೈಪ್‌ರೈಟರ್’,

೧೯೪


ಆಫ್ರಿಕಾದ ಭಾಷೆಗಳು

ಮಕ್ಕಬ್ ‘ಕಚೇರಿ’, ಮಕ್ಕಬ ‘ಗ್ರಂಥಾಲಯ’, ಇಸ್ತ್ರಿಕ್ತಾಬ್ ‘ಹೇಳಿ ಬರೆಯಿಸು’, ಇಕ್ತಿತಾಬ್ ‘ನೋಂದಾಯಿಸು’ ಮೊದಲಾದ ಬೇರೆ ಹಲವು ಪದಗಳನ್ನು ರಚಿಸಬಹುದು.

ಈ ರೀತಿ, ಧಾತುಗಳ ನಡುವಿನ ಅರ್ಥವ್ಯತ್ಯಾಸವನ್ನು ಸೂಚಿಸಲು ಈ ಭಾಷೆ ಯಲ್ಲಿ ಸ್ವರಗಳ ಅವಶ್ಯಕತೆಯಿಲ್ಲವಾದ ಕಾರಣ, ಇದರ ಬರಹದಲ್ಲಿ ಸಾಮಾನ್ಯ ವಾಗಿ ವ್ಯಂಜನಗಳನ್ನು ಮತ್ತು ದೀರ್ಘಸ್ವರಗಳನ್ನು ಮಾತ್ರ ಬರೆಯುವ ಕ್ರಮ ಬಳಕೆಗೆ ಬಂದಿದೆ. ಹ್ರಸ್ವ ಸ್ವರಗಳನ್ನು, ಪದಗಳ ಕೊನೆಯಲ್ಲಿ ಬರುವ ವ್ಯಂಜನ ಗಳನ್ನು, ಮತ್ತು ಒತ್ತಕ್ಷರಗಳನ್ನು ಚಿಕ್ಕಮಕ್ಕಳ ಪಠ್ಯಪುಸ್ತಕಗಳಲ್ಲಿ ಮತ್ತು ಕುರಾನ್ ನಲ್ಲಿ ಮಾತ್ರ ಸೂಚಿಸಲಾಗುತ್ತದೆ.

ಆಸ್ಟ್ರೋ-ಏಶಿಯಾಟಿಕ್ ಕುಟುಂಬದ ಕುಶಿಟಿಕ್ ಎಂಬ ಇನ್ನೊಂದು ಉಪ ವಿಭಾಗಕ್ಕೆ ಸೇರಿದ ಸೊಮಾಲಿ, ಒರೊಮೋ, ಅಫಾರ್ ಮೊದಲಾದ ಭಾಷೆಗಳು ಸುಡಾನ್, ಇಥಿಯೋಪಿಯಾ, ಸೊಮಾಲಿಯಾ ಮೊದಲಾದ ದೇಶಗಳಲ್ಲಿ ಬಳಕೆ ಯಲ್ಲಿವೆ. ಬೆರ್ಬೆರ್ ಭಾಷೆಗಳು ಮೊರೊಕ್ಕೊ ಮತ್ತು ಅಲ್ಜೀರಿಯಾಗಳಲ್ಲಿ ಬಳಕೆಯಲ್ಲಿವೆ. ಚಾದಿಕ್ ಭಾಷೆಗಳಲ್ಲಿ ಹೌಸಾ ಅತ್ಯಂತ ಮುಖ್ಯವಾದುದು. ಈ ಭಾಷೆಯನ್ನು ಮನೆಮಾತಾಗಿ ಬಳಸುವವರ ಸಂಖ್ಯೆ ಸುಮಾರು ಹನ್ನೆರಡು ಮಿಲಿಯ, ಮತ್ತು ಎರಡನೇ ಭಾಷೆಯಾಗಿ ಬಳಸುವವರ ಸಂಖ್ಯೆ ಸುಮಾರು ಹದಿಮೂರು ಮಿಲಿಯ. ಈ ಭಾಷೆ ಮಾತ್ರವಲ್ಲದೆ, ಬುರಾ, ಮಾರ್ಬ ಮೊದ ಲಾದ ಬೇರೆ ಸುಮಾರು ನೂರ ಇಪ್ಪತ್ತು ಭಾಷೆಗಳೂ ಈ ಉಪವಿಭಾಗದಲ್ಲಿವೆ. ಇಥಿಯೋಪಿಯಾ ಮತ್ತು ಕೆನ್ಯಾಗಳಲ್ಲಿ ಬಳಕೆಯಲ್ಲಿರುವ ಸುಮಾರು ಮೂವ ತ್ತೈದು ಭಾಷೆಗಳು ಒಮೋಟಿಕ್ ವಿಭಾಗಕ್ಕೆ ಸೇರುತ್ತವೆ.

ಆಫ್ರೋ-ಏಶಿಯಾಟಿಕ್ ಭಾಷೆಗಳ ಇನ್ನೊಂದು ವೈಶಿಷ್ಟ್ಯವೇನೆಂದರೆ, ಇವು ಗಳ ವಾಕ್ಯಗಳಲ್ಲಿ ಸಾಮಾನ್ಯವಾಗಿ ಕ್ರಿಯಾಪದ ಮೊದಲಿಗೆ ಬರುತ್ತದೆ. (ಕನ್ನಡ ದಲ್ಲಿ ಇದು ಕೊನೆಗೆ ಬರುತ್ತದೆ).

ನೈಲೋ-ಸಹರಾನ್ ಭಾಷೆಗಳು

ನೈಜೀರಿಯಾದ ಕನುರಿ, ಚಾದ್‌ನ ನೈಜೆರ್, ಕೆನ್ಯಾದ ಲುವೋ ಮೊದಲಾದ ಸುಮಾರು ತೊಂಬತ್ತು ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ. ಈ ಭಾಷೆಗಳು ಆಫ್ರಿಕಾದಲ್ಲಿ ಆಫ್ರೋ-ಏಶಿಯಾಟಿಕ್ ಮತ್ತು ನೈಜರ್-ಕೋಂಗೋ ಭಾಷೆಗಳ ನಡುವೆ ವಿಸ್ತರಿಸಿವೆ. ಸುಡಾನ್ ಮತ್ತು ಈಜಿಪ್ಟ್ಗಳಲ್ಲಿ ಬಳಕೆಯಲ್ಲಿರುವ ನುಬಿಯನ್ ಭಾಷೆಗಳೂ ಈ ಕುಟುಂಬಕ್ಕೆ ಸೇರಿದ್ದು, ಇವುಗಳ ಬರಹಗಳು ಎಂಟನೇ ಶತಮಾನದಿಂದಲೂ ಉಳಿಸಿಕೊಂಡು ಬರಲಾಗಿದೆ; ಇದಕ್ಕಾಗಿ ಇವು ಗ್ರೀಕ್ ಲಿಪಿಯನ್ನು ಬಳಸುತ್ತಿವೆ.

ಈ ಭಾಷೆಗಳನ್ನು ಸೊಂಘಾಯ್, ಪೂರ್ವ ಸುಡಾನಿಕ್, ಮತ್ತು ಮಧ್ಯ ಸುಡಾನಿಕ್ ಎಂಬುದಾಗಿ ಮೂರು ಗುಂಪುಗಳಲ್ಲಿ ವಿಭಜಿಸಬಹುದು. ಈ ಎಲ್ಲಾ

೧೯೫


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಭಾಷೆಗಳೂ ವೇದ ಕಾಲದ ಸಂಸ್ಕೃತದ ಹಾಗೆ ಉದಾತ್ತ, ಅನುದಾತ್ತ ಮೊದ ಲಾದ ನಾದವೈವಿಧ್ಯಗಳನ್ನು ತೋರಿಸುತ್ತವೆ. ಕೆಲವು ಭಾಷೆಗಳಲ್ಲಿ ಈ ವೈವಿಧ್ಯ ವನ್ನು ವಿಭಕ್ತಿಗಳ ನಡುವಿನ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿಯೂ ಬಳಸಲಾಗು ಇದೆ. ಪೂರ್ವ ಮತ್ತು ದಕ್ಷಿಣ ಪ್ರದೇಶದ ಭಾಷೆಗಳಲ್ಲಿ ಕ್ರಿಯಾಪದವು ವಾಕ್ಯದ ಮೊದಲ ಪದವಾಗಿ ಬರುತ್ತಿದ್ದು, ಅವು ಅದಕ್ಕನುಗುಣವಾದ ಬೇರೆಯೂ ಹಲವು ವೈಶಿಷ್ಟ್ಯಗಳನ್ನು ತೋರಿಸುತ್ತವೆ.

ನೈಜರ್-ಕೊಡೋಫೇನಿಯನ್ ಭಾಷೆಗಳು

ಆಫ್ರಿಕಾಖಂಡದಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ಹೆಚ್ಚಿನವೂ, ಎಂದರೆ ಸುಮಾರು ಎರಡು ಸಾವಿರ ಭಾಷೆಗಳಲ್ಲಿ ಒಂದೂವರೆ ಸಾವಿರ ಭಾಷೆಗಳೂ ನೈಜರ್-ಕೊರ್ಡೋಫೇನಿಯನ್ ಕುಟುಂಬಕ್ಕೆ ಸೇರುತ್ತವೆ. ಈ ಕುಟುಂಬವನ್ನು ನೈಜರ್-ಕೋಂಗೋ ಮತ್ತು ಕೊರ್ಡೋಫೇನಿಯನ್ ಎಂಬುದಾಗಿ ಎರಡು ಮುಖ್ಯ ವಿಭಾಗಗಳಲ್ಲಿ ವಿಂಗಡಿಸಬಹುದು; ಇದಲ್ಲದೆ, ನೈಜರ್-ಕೋಂಗೋ ವನ್ನು ಪಶ್ಚಿಮ ಅಟ್ಲಾಂಟಿಕ್, ಮಾಂದೇ, ಗುರ್, ಕ್ವಾ, ಬೆನು-ಕೋಂಗೋ, ಪೂರ್ವ ಅಡಮಾವಾ ಮೊದಲಾದ ಬೇರೆ ಬೇರೆ ಉಪವಿಭಾಗಗಳಾಗಿ ವಿಂಗಡಿಸ ಬಹುದು.

ನೈಜೀರಿಯಾದ ಯೊರುಬಾ, ಸುಡಾನಿನ ತೆಗಾಲಿ, ಸೆನೆಗಲ್‌ನ ಫುಲಕುನ್ದ, ಪೂರ್ವ ಆಫ್ರಿಕಾದ ಹಲವು ದೇಶಗಳಲ್ಲಿ ಬಳಕೆಯಲ್ಲಿರುವ ಸ್ವಹಿಲಿ, ಜಿಂಬಾಬ್ವೆಯ ಶೋನಾ, ರ್ವಾಂಡಾ ಮತ್ತು ಯುಗಾಂಡಗಳಲ್ಲಿ ಬಳಕೆಯಲ್ಲಿರುವ ಕಿನ್ಯಾರ್‌ವಾಂದಾ, ದಕ್ಷಿಣ ಆಫ್ರಿಕಾದ ಜುಲು ಇತ್ಯಾದಿ ಭಾಷೆಗಳು ಈ ವಿಭಾಗಕ್ಕೆ ಸೇರುತ್ತವೆ.

ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಹರಡಿಕೊಂಡಿರುವ ಸುಮಾರು ಐನೂರು ಬಂಟು ಭಾಷೆಗಳೂ ಈ ನೈಜರ್-ಕೋಂಗೋ ಉಪವಿಭಾಗಕ್ಕೆ ಸೇರು ತ್ತವೆ. ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳಲ್ಲಿ ಬರುವ ನಾಮ ಪದಗಳಲ್ಲೆಲ್ಲ ಎರಡು ಅಂಗಗಳಿರುತ್ತವೆ; ಆ ಪದಗಳ ಲಿಂಗವನ್ನು ಸೂಚಿಸುವ ಅಂಗ ಮೊದಲಿನದು, ಮತ್ತು ಅದರ ಅರ್ಥವನ್ನು ಸೂಚಿಸುವ ಅಂಗ ಎರಡ ನೆಯದು. ಉದಾಹರಣೆಗಾಗಿ, ಬಂಟು ಎಂಬ ಈ ಭಾಷೆಗಳ ಹೆಸರಿನಲ್ಲಿ ಬ ಎಂಬುದು ಒಂದು ಲಿಂಗಸೂಚಕ ಪ್ರತ್ಯಯ; ಅದು ಮನುಷ್ಯರನ್ನು ಸೂಚಿಸುತ್ತದೆ.

ಈ ಭಾಷೆಗಳಲ್ಲಿ ಇಂತಹ ಹತ್ತು-ಹದಿನೈದು ಲಿಂಗಸೂಚಕ ಪ್ರತ್ಯಯ ಗಳಿರುತ್ತವೆ. ಇವುಗಳಲ್ಲಿ ಕೆಲವಕ್ಕೆ ಏಕವಚನ ಮತ್ತು ಬಹುವಚನಗಳಲ್ಲಿ ಬೇರೆ ಬೇರೆ ರೂಪಗಳಿರುತ್ತವೆ. ಇವು ವ್ಯಕ್ತಿ, ಮರ-ಗಿಡ, ಜೋಡಿ ವಸ್ತುಗಳು (ಕಣ್ಣು, ಕಿವಿ, ಇತ್ಯಾದಿ), ಪ್ರಾಣಿ, ಅಪ್ರಾಣಿ, ಚಿಕ್ಕ ವಸ್ತುಗಳು, ಇತ್ಯಾದಿ ವರ್ಗಗಳಲ್ಲಿ ನಾಮಪದಗಳನ್ನು ಹಂಚುತ್ತವೆ. ನಾಮಪದಗಳ ಅಂಗಗಳಾಗಿ ಬರುವ ಈ

೧೬೬


ಅಮೆರಿಕಾದ ಭಾಷೆಗಳು

ಲಿಂಗಭೇದವನ್ನು ವಾಕ್ಯದಲ್ಲಿ ಬರುವ ಬೇರೆ ಹಲವಾರು ಪದಗಳೂ ಸೂಚಿಸು ತ್ತವೆ.

ಬೊಯ್ಸಾನ್ ಭಾಷೆಗಳು

ಆಫ್ರಿಕಾದ ನೈಋತ್ಯ ಭಾಗದ ಕಲಹಾರಿ ಮರುಭೂಮಿ ಪ್ರದೇಶದಲ್ಲಿ ಬಳಕೆ ಯಲ್ಲಿರುವ ಖೂ, ನಾಮ ಹೊಟ್ಟೆಂಟೋಟ್, ಸಂದಾವೇ, ಹತ್ಸ ಮೊದಲಾದ ಸುಮಾರು ಮೂವತ್ತು ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ. ಇವುಗಳ ನ್ನಾಡುವ ಜನರಲ್ಲಿ ಹೆಚ್ಚಿನವರೂ ಕುಳ್ಳರು. ಹಿಂದಿನ ಕಾಲದಲ್ಲಿ ಇವರು ಆಫ್ರಿಕಾದ ದಕ್ಷಿಣ ಭಾಗದಲ್ಲೆಲ್ಲ ಹರಡಿದ್ದರೆಂದು ತೋರುತ್ತದೆ. ಆದರೆ ಉತ್ತರ ದಿಂದ ಬಂಟು ಭಾಷೆಯನ್ನಾಡುವ ಜನರೂ, ದಕ್ಷಿಣದಿಂದ ಡಚ್ ಭಾಷೆಯ ನ್ನಾಡುವ ವಸಾಹತುದಾರರೂ ಒಟ್ಟಿಗೆ ಸೇರಿ ಇವರನ್ನು ಮರುಭೂಮಿಗೆ ತಳ್ಳಿ ದ್ದಾರೆ.

ಓಷ್ಟ್ಯ, ತಾಲವ್ಯ, ಘೋಷ, ಅಘೋಷ ಮೊದಲಾದ ಹಲವು ಬಗೆಯ ‘ಕ್ಲಿಕ್’ವರ್ಣಗಳಿರುವುದು ಈ ಭಾಷೆಗಳ ಒಂದು ಪ್ರಾಮುಖ್ಯವಾದ ವೈಶಿಷ್ಟ್ಯ.

೫.೫ ಅಮೆರಿಕಾದ ಭಾಷೆಗಳು

ಅಮೆರಿಕಾ ಖಂಡಗಳನ್ನು ಯುರೋಪಿನ ಜನರು ಕಂಡುಹಿಡಿಯುವುದಕ್ಕಿಂತ ಮೊದಲು ಅಲ್ಲಿ ನೂರಾರು ಭಾಷೆಗಳನ್ನಾಡುವ ಜನರು ವಾಸಿಸುತ್ತಿದ್ದರು. ಉತ್ತರ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಒಟ್ಟಿಗೆ ಇಂತಹ ಸುಮಾರು ಒಂದು ಸಾವಿರ ಭಾಷೆಗಳು ಬಳಕೆಯಲ್ಲಿ ದ್ದಿರಬೇಕು.

ಇವುಗಳಲ್ಲಿ ಹಲವು ಅವುಗಳನ್ನಾಡುವ ಜನಾಂಗಗಳೊಂದಿಗೆ ನಾಶ ಗೊಂಡಿವೆ. ಇನ್ನು ಹಲವು ನಾಶದ ಹಾದಿಯಲ್ಲಿವೆ. ಇವುಗಳಲ್ಲಿ ಕೆಲವನ್ನು ಸದ್ಯಕ್ಕೆ ಬಳಸುತ್ತಿರುವವರು ಇಬ್ಬರೋ ಮೂವರೋ ಮುದುಕರು ಮಾತ್ರ. ಈ ರೀತಿ ಬಹಳಮಟ್ಟಿಗೆ ಅಳಿದು ಹೋಗಿ, ಈಗ ಉಳಿದಿರುವ, ಆದರೂ ಶೀಘ್ರವಾಗಿ ಅಳಿಯುತ್ತಿರುವ, ಸುಮಾರು ೬೫೦ ಭಾಷೆಗಳು ಈ ಬೇರೆ ಬೇರೆ ಜನಾಂಗಗಳಲ್ಲಿ ಇವತ್ತು ಬಳಕೆಯಲ್ಲಿವೆ.

ಅಮೆರಿಕಾದ ಎರಡು ಖಂಡಗಳಲ್ಲಿ ಹರಡಿರುವ ಈ ಭಾಷೆಗಳನ್ನೆಲ್ಲ ಎಸ್ಕಿಮೋ-ಅಲೆಯುತ್, ನಾ-ಡೆನೆ, ಮತ್ತು ಅಮೆರಿಂಡ್ ಎಂಬ ಮೂರು ಮುಖ್ಯ ಕುಟುಂಬಗಳಲ್ಲಿ ಸೇರುವಂತೆ ವಿಭಜಿಸಬಹುದೆಂದು ವಿದ್ವಾಂಸರು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯದಂತೆ, ಎಸ್ಕಿಮೋ-ಅಲೆಯುತ್‌ಗೆ ಸೇರಿದ ಹತ್ತು ಭಾಷೆಗಳು, ಮತ್ತು ನಾ-ಡೆನೆಗೆ ಸೇರಿದ ಮೂವತ್ತಮೂರು ಭಾಷೆಗಳನ್ನು ಬಿಟ್ಟರೆ ಉಳಿದುವೆಲ್ಲವೂ ಅಮೆರಿಂಡ್ ಎಂಬ ಭಾಷಾ ಕುಟುಂಬಕ್ಕೆ ಸೇರುತ್ತವೆ.

೧೯೭


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಎಸ್ಕಿಮೋ ಭಾಷೆಗಳು

ಎಸ್ಕಿಮೋ-ಅಲೆಯುತ್ ಭಾಷೆಗಳು ಅಲಾಸ್ಕಾ, ಗ್ರೀನ್‌ಲೇಂಡ್, ಸೈಬೀರಿಯಾ ಮೊದಲಾದ ಉತ್ತರಧ್ರುವಕ್ಕೆ ಸಮೀಪದ ಪ್ರದೇಶಗಳಲ್ಲಿ ಬಳಕೆಯಲ್ಲಿವೆ. ಅಲೆಯುತ್, ಯೂಪಿಕ್, ಇನುಯಿತ್, ಅಲಾಸ್ಕನ್ ಮೊದಲಾದ ಭಾಷೆಗಳು ಈ ಕುಟುಂಬಕ್ಕೆ ಸೇರುತ್ತವೆ.

ಎಸ್ಕಿಮೋ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಒಂದು ದೊಡ್ಡ ವಾಕ್ಯ ದಲ್ಲಿ ಬರಬಲ್ಲ ವಿಷಯಗಳನ್ನೆಲ್ಲ ಬರೇ ಒಂದು ಪದದಲ್ಲಿ ಅಡಕವಾಗಿ ಹೇಳುವ ಕ್ರಮ ಈ ಭಾಷೆಗಳಲ್ಲಿದೆ. ಆದರೆ, ಇದಕ್ಕಾಗಿ ಆ ಪದದೊಂದಿಗೆ ಹಲವಾರು ಪ್ರತ್ಯಯಗಳನ್ನು ಸೇರಿಸಿ ಹೇಳಬೇಕಾಗುತ್ತದೆ. ಒಂದು ಘಟನೆಯನ್ನು ಸೂಚಿಸುವ ಪದದೊಂದಿಗೆ ಯಾರು, ಯಾರನ್ನು, ಯಾವಾಗ, ಯಾಕೆ, ಎಲ್ಲಿ, ಯಾರಿಗಾಗಿ ಆ ಘಟನೆಯಲ್ಲಿ ತೊಡಗಿಸಿದರು ಎಂಬುದನ್ನು ತಿಳಿಸುವುದಕ್ಕಾಗಿ ಈ ರೀತಿ ಹಲವು ಬಗೆಯ ಪ್ರತ್ಯಯಗಳನ್ನು ಕ್ರಿಯಾಪದಗಳಿಗೆ ಸೇರಿಸಬಹುದು. ಈ ಕಾರಣಕ್ಕಾಗಿ, ಭಾರತದ ಮುಂಡಾರಿ ಭಾಷೆಯ ಹಾಗೆ, ಮತ್ತು ಅಮೆರಿಕಾದ ಸಾಲಿಶಾನ್ ಭಾಷೆ ಗಳ ಹಾಗೆ, ಈ ಭಾಷೆಗಳನ್ನೂ ‘ಪೋಲಿಸಿಂಥೆಟಿಕ್’ ಭಾಷೆಗಳೆಂದು ಪರಿಗಣಿಸ ಲಾಗುತ್ತದೆ.

ನಾ-ಡೆನೆ ಭಾಷೆಗಳು

ನಾ-ಡೆನೆ ಭಾಷೆಗಳೆಂದರೆ ಮುಖ್ಯವಾಗಿ ಅಥಬಾಸ್ಕನ್ ಎಂಬ ಉಪಕುಟುಂಬಕ್ಕೆ ಸೇರಿದ ನವಹೋ, ಅಪಾಚೇ, ಸಾರ್ಸೀ ಮೊದಲಾದ ಸುಮಾರು ಮೂವತ್ತು ಭಾಷೆಗಳು, ಮತ್ತು ಇವಕ್ಕಿಂತ ಭಿನ್ನವಾದ ಎಯಾಕ್, ಹೈದಾ ಮತ್ತು ತ್ಲಿಂಗಿತ್ ಎಂಬ ಭಾಷೆಗಳು. ಇವುಗಳಲ್ಲಿ ಎಯಾಕ್ ಭಾಷೆಯನ್ನಾಡುವವರಲ್ಲಿ ಇವತ್ತು (೧೯೯೬ರಲ್ಲಿ) ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿದ್ದಾನೆ.

ಉತ್ತರ ಅಮೆರಿಕಾದಲ್ಲಿ ಯುಟೋ-ಅಜ್‌ಟೆಕನ್ ಭಾಷೆಗಳನ್ನು ಬಿಟ್ಟರೆ, ಅತಿ ಹೆಚ್ಚು ಭಾಷೆಗಳಿರುವ ಮತ್ತು ಅತಿ ಹೆಚ್ಚು ಜನರು ಬಳಸುವ ಭಾಷಾ(ಉಪ) ಕುಟುಂಬವೆಂದರೆ, ಈ ಅಥಬಾಸ್ಕನ್ ಎಂಬುದಾಗಿದೆ.

ಅಮೆರಿಕನ್ ಭಾಷೆಗಳು

ಅಮೆರಿಂಡ್ ಎಂಬುದು ಅಮೆರಿಕನ್ ಇಂಡಿಯನ್ ಎಂಬುದರ ಸಂಕ್ಷಿಪ್ತ ರೂಪ. ಅಮೆರಿಕಾ ಖಂಡಗಳನ್ನು ಮೊದಲ ಬಾರಿಗೆ ತಲುಪಿದ ಪಾಶ್ಚಾತ್ಯರ ತಪ್ಪು ಕಲ್ಪನೆಯಿಂದಾಗಿ, ಇಂಡಿಯನ್ ಎಂಬ ಹೆಸರು ಇವರಿಗೆ ಬಂದಿದೆಯಾದರೂ ಇವರ ಭಾಷೆಗಳಿಗೂ ಭಾರತದ ಭಾಷೆಗಳಿಗೂ ನಡುವೆ ನಮಗೆ ತಿಳಿದಂತೆ ಯಾವ ಸಂಬಂಧವೂ ಇಲ್ಲ. ಕೆನಡಾದಿಂದ ಹಿಡಿದು, ದಕ್ಷಿಣ ಅಮೆರಿಕಾದ ದಕ್ಷಿಣದ ಕೊನೆಯವರೆಗೂ ಈ ಭಾಷೆಗಳು ಬಳಕೆಯಲ್ಲಿವೆ.ಜನಸಂಖ್ಯೆಯ

೧೯೮


ಆಸ್ಟ್ರೇಲಿಯಾದ ಭಾಷೆಗಳು

ಮಟ್ಟಿಗೆ ಈ ಭಾಷೆಗಳನ್ನಾಡುವವರು ದಕ್ಷಿಣ ಅಮೆರಿಕಾದಲ್ಲಿ ಇವತ್ತಿಗೂ ಪ್ರಬಲರಾಗಿದ್ದಾರೆ. ಎಪ್ಪತ್ತು ಲಕ್ಷ ಜನರ ಮಾತಾಗಿರುವ ಕ್ವೆಚುವಾ ಭಾಷೆ ಕೊಲಂಬಿಯಾ, ಯುಕಡೋರ್, ಪೆರು ಮತ್ತು ಬೊಲೀವಿಯಾಗಳಲ್ಲೂ, ಮೂವತ್ತು ಲಕ್ಷ ಜನರ ಮಾತಾಗಿರುವ ಗುವಾರಾನೀ ಭಾಷೆ ಪರಾಗ್ವೇ, ಬ್ರೇಜಿಲ್ ಮತ್ತು ಅರ್ಜೆಂಟೀನಾಗಳಲ್ಲೂ, ಹದಿನೈದು ಲಕ್ಷ ಜನರ ಮಾತಾಗಿರುವ ಅಯ್ಯಾರಾ ಭಾಷೆ ಪೆರು ಮತ್ತು ಬೊಲೀವಿಯಾಗಳಲ್ಲೂ, ಮತ್ತು ಹತ್ತು ಲಕ್ಷ ಜನರ ಮಾತಾಗಿರುವ ನಹುವಾತ್ಸ್ ಭಾಷೆ ದಕ್ಷಿಣ ಮೆಕ್ಸಿಕೋದಲ್ಲೂ ಬಳಕೆ ಯಲ್ಲಿವೆ.

ಇದಕ್ಕೆ ವಿರುದ್ಧವಾಗಿ, ಕೆನಡಾ ಮತ್ತು ಉತ್ತರ ಅಮೆರಿಕಾಗಳಲ್ಲಿ ಈ ಭಾಷೆ ಗಳನ್ನಾಡುವ ಜನರ ಸಂಖ್ಯೆ ಹೆಚ್ಚೆಂದರೆ ಕೆಲವು ಸಾವಿರಗಳಷ್ಟು ಮಾತ್ರ ಕಾಣಿಸು ತ್ತದೆ. ದಕ್ಷಿಣ ಅಮೆರಿಕಾದಲ್ಲಿ ದಟ್ಟವಾದ ಕಾಡುಗಳಿದ್ದ ಕಾರಣ ಈ ಭಾಷೆಗಳ ನ್ನಾಡುವವರು ಪಾಶ್ಚಾತ್ಯ ವಸಾಹತುದಾರರ ಗುಂಡಿಗೆ ಸಿಕ್ಕದೆ ತಪ್ಪಿಸಿಕೊಂಡು ಇದ್ದುದು, ಮತ್ತು ಉತ್ತರ ಅಮೆರಿಕಾದಲ್ಲಿ ಕಾಡು ಪ್ರದೇಶ ಕಡಿಮೆಯಿದ್ದ ಕಾರಣ ಅವರಲ್ಲಿ ಹೆಚ್ಚಿನವರೂ ನಾಶಹೊಂದಿದ್ದುದೇ ಇದಕ್ಕೆ ಮುಖ್ಯ ಕಾರಣ.

ಅಮೆರಿಂಡ್ ಭಾಷೆಗಳನ್ನು ಉತ್ತರ, ಮಧ್ಯ, ಛಿಬ್‌ಛಾನ್-ಪೇಜಾನ್, ಆಂಡಿಯನ್, ತುಕಾನೊವನ್, ಮತ್ತು ಗೇ-ಪಾನೋ-ಕಾರಿಬ್ ಎಂಬ ಆರು ಉಪಕುಟುಂಬಗಳಲ್ಲಿ ವಿಭಜಿಸಿ ಹೇಳಲು ಸಾಧ್ಯವಿದೆಯೆಂದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರ ಮತದಂತೆ, ಈ ಭಾಷೆಗಳನ್ನೊಳಗೊಂಡ ಭಾಷಾಕುಟುಂಬಗಳ ಸಂಖ್ಯೆ ನೂರಕ್ಕಿಂತಲೂ ಜಾಸ್ತಿ.

ಇವುಗಳಲ್ಲಿ ಕೆಲವು ಭಾಷಾಕುಟುಂಬಗಳನ್ನು ಹೆಚ್ಚಿನವರೂ ಒಪ್ಪಿಕೊಳ್ಳು ತ್ತಾರೆ. ಅಲ್ಗೋಂಕಿಯನ್, ಸಾಲಿಶ್, ಕಡೋವನ್, ಸಿಯೊವನ್, ಇರೋಕ್ವೊ ಯಿಯನ್, ಹೋಕನ್, ಪೆನುಟಿಯನ್, ತನೊವನ್, ಯುಟೋ-ಅಜ್‌ಟೆಕನ್ ಮೊದಲಾದ ಕುಟುಂಬಗಳು ಇಂತಹವು.

ಈ ಭಾಷೆಗಳ ಮತ್ತು ಭಾಷಾಕುಟುಂಬಗಳ ನಡುವಿರುವ ವೈವಿಧ್ಯವನ್ನು ಸಂಕ್ಷಿಪ್ತವಾಗಿ ಬಣ್ಣಿಸಬೇಕಿದ್ದರೂ ಅದು ಒಂದು ದೊಡ್ಡ ಪುಸ್ತಕವೇ ಆದೀತು. ಇಡೀ ವಾಕ್ಯದ ಅರ್ಥವನ್ನು ಒಂದು ಪದದೊಳಗೆ ತುಂಬಿಸಬಲ್ಲ ಸಾಲಿಶಾನ್ ಭಾಷೆಗಳಿಂದ ಹಿಡಿದು, ಚೈನೀಸ್‌ನ ಹಾಗೆ ಪದಗಳಲ್ಲಿ ಸ್ವಲ್ಪವೂ ಆಂತರಿಕ ರಚನೆಯೇ ಇಲ್ಲದಿರುವಂತಹ ಭಾಷೆಗಳೂ ಈ ಕುಟುಂಬದಲ್ಲಿ ಕಾಣಿಸುತ್ತವೆ.

೫. ಆಸ್ಟ್ರೇಲಿಯಾದ ಭಾಷೆಗಳು

ಆಸ್ಟ್ರೇಲಿಯಾದಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಾರೆಂದು ಹೆಚ್ಚಿನವರೂ ಭಾವಿಸುತ್ತಿರಬಹುದು; ಆದರೆ, ನಿಜಕ್ಕೂ ಇಂಗ್ಲಿಷ್ ಮಾತನಾಡುವ ಜನ

೧೯೬


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಆಸ್ಟ್ರೇಲಿಯಾ ಖಂಡಕ್ಕೆ ಬಂದು ನೆಲೆಸುವ ಮೊದಲು, ಇಂಗ್ಲಿಷ್‌ಗಿಂತ ತೀರ ಭಿನ್ನವಾಗಿರುವ ಇನ್ನೂರು-ಮುನ್ನೂರು ಭಾಷೆಗಳನ್ನಾಡುವ ಜನ ಅಲ್ಲಿ ನೆಲೆ ಸಿದ್ದರು.

ವಸಾಹತುಗಾರರಾಗಿ ಬಂದ ಇಂಗ್ಲಿಷರ ಕಾಲ ತುಳಿತಕ್ಕೆ ಸಿಕ್ಕಿ, ಈ ಮೂಲ ನಿವಾಸಿಗಳಲ್ಲಿ ಹೆಚ್ಚಿನವರೂ ಈಗ ಅಳಿದುಹೋಗಿದ್ದಾರೆ. ಅವರೊಂದಿಗೆ ಅವರು ಆಡುತ್ತಿದ್ದ ನೂರಾರು ಭಾಷೆಗಳೂ ಹೆಚ್ಚಿನ ಮಟ್ಟಿಗೆ ಅಳಿದುಹೋಗಿವೆ. ಈಗ ಅಲ್ಲೊಂದು ಇಲ್ಲೊಂದು ಎಂಬುದಾಗಿ, ಗುಡ್ಡಗಾಡುಗಳಲ್ಲಿ ಮತ್ತು ಮರುಭೂಮಿ ಗಳಲ್ಲಿ ಮಾತ್ರ ಕೆಲವು ಭಾಷೆಗಳು ಉಳಿದುಕೊಂಡಿವೆ. ಅವುಗಳಲ್ಲಿ ಮುಂದಿನ ತಲೆಮಾರಿನ ವರೆಗೆ ಉಳಿಯಬಲ್ಲವುಗಳು ಇಪ್ಪತ್ತಕ್ಕಿಂತಲೂ ಕಡಿಮೆ.

ಆಸ್ಟ್ರೇಲಿಯಾ ಖಂಡಕ್ಕೆ ಇಂಗ್ಲಿಷರು ವಲಸೆ ಬಂದಾಗ, ಎಂದರೆ ಸುಮಾರು ಇನ್ನೂರು ವರ್ಷಗಳಷ್ಟು ಹಿಂದೆ, ಅಲ್ಲಿ ಬಹಳ ಕಡಿಮೆಯೆಂದರೂ ಸುಮಾರು ಮೂರು ಲಕ್ಷ ಮೂಲ ನಿವಾಸಿಗಳಿದ್ದಿರಬೇಕೆಂದು ಊಹಿಸಲಾಗಿದೆ. ನಿಜಕ್ಕೂ ಇವರ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದ್ದಿರಲು ಸಾಧ್ಯವಿದೆ.

ಅವರ ದೈನಂದಿನದ ಜೀವನ ನಿಸರ್ಗದೊಂದಿಗೆ ಹೆಣೆದುಕೊಂಡಿತ್ತು. ತಮ್ಮ ಪರಿಸರವನ್ನು ಸ್ವಲ್ಪವೂ ಕೆಡಿಸದೆ, ಅದರ ಒಂದು ಅಂಗವಾಗಿ ಬದುಕುವ ಕ್ರಮ ಸಾವಿರಾರು ವರ್ಷಗಳಿಂದಲೂ ಅವರಲ್ಲಿ ಪರಂಪರಾಗತವಾಗಿ ಬೆಳೆದುಬಂದಿತ್ತು. ತಮ್ಮ ದಿನನಿತ್ಯದ ಅವಶ್ಯಕತೆಗಳಿಗೆ ಬೇಕಾದಷ್ಟೇ ಆಹಾರ ಮತ್ತು ಇತರ ವಸ್ತು ಗಳನ್ನು ಅವರು ತಮ್ಮ ಪರಿಸರದಿಂದ ಆಯ್ದುಕೊಳ್ಳುತ್ತಿದ್ದರು. ಬೇಕಾದ್ದಕ್ಕಿಂತ ಹೆಚ್ಚು ಸೊತ್ತುಗಳನ್ನು ಕೂಡಿಹಾಕುವ ಗೋಜಿಗೇ ಅವರು ಹೋಗುತ್ತಿರಲಿಲ್ಲ. ಇದರಿಂದಾಗಿ, ಅವರ ಪರಿಸರ ನಾಶವಾಗದೆ ಎಲ್ಲರಿಗೂ ತೃಪ್ತಿಯನ್ನ ಕೊಡು ತಿತ್ತು.

ಇಂಗ್ಲೆಂಡ್‌ನಿಂದ ಮತ್ತು ಯುರೋಪಿನ ಇತರ ದೇಶಗಳಿಂದ ವಲಸೆ ಬಂದ ಜನರು ಈ ಮೂಲ ನಿವಾಸಿಗಳ ಹಾಗೆ ಅಲ್ಪತೃಪ್ತರಾಗಿರಲಿಲ್ಲ. ತಮಗೆ ಎಷ್ಟು ಭೂಮಿಯಿದ್ದರೂ ಸಾಲದು, ಎಷ್ಟು ಸಂಪತ್ತಿದ್ದರೂ ಸಾಲದು ಎಂಬ ಮನೋ ಭಾವ ಅವರದಾಗಿತ್ತು. ತಮ್ಮ ಕಾಲಕ್ಕೆ ಮಾತ್ರವಲ್ಲದೆ ತಮ್ಮ ಮಕ್ಕಳ ಮತ್ತು ಅವರ ಮಕ್ಕಳ ಕಾಲಕ್ಕೂ ಸಾಕಾಗುವಷ್ಟು ಸಂಪತ್ತನ್ನು ಕೂಡಿಹಾಕಿದರೂ ಅವರಿಗೆ ಸಮಾಧಾನವಿಲ್ಲ. ಅವರ ಈ ಉದ್ದೇಶಕ್ಕೆ ಅಡ್ಡ ಬಂದ ಮೂಲ ನಿವಾಸಿಗಳನ್ನು ಒಂದೋ ಗುಂಡಿನಿಂದ ಸುಟ್ಟು ಹಾಕಿದರು, ಇಲ್ಲವೇ ಫಲವತ್ತಾದ ಭೂಮಿಯನ್ನು ಬಿಟ್ಟು ಮರಳುಗಾಡಿನೊಳಕ್ಕೆ ಓಡಿಹೋಗುವ ಹಾಗೆ ಮಾಡಿದರು.

ತಮ್ಮ ಜೀವನಕ್ಕೆ ಹೊಂದಿಕೊಂಡಿದ್ದ ಭೂಮಿಯಿಂದ ಬೇರಾದ ಈ ಅಳಿದುಳಿದ ಜನಾಂಗ ಬಹುಬೇಗ ನಷ್ಟವಾಗುತ್ತಾ ಹೋಯಿತು. ಇತ್ತೀಚೆಗಿನ ಅಂಕೆಸಂಖ್ಯೆಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಮೂಲ ಭಾಷೆಗಳನ್ನಾಡುವ ಜನರ ಸಂಖ್ಯೆ ಕಳೆದ ನೂರು-ನೂರೈವತ್ತು ವರ್ಷಗಳಲ್ಲಿ ಮೂರು ಲಕ್ಷವಿದ್ದುದು ಮೂವತ್ತು ಸಾವಿರಕ್ಕಿಳಿದಿದೆ. ಅವರ ಹೆಚ್ಚಿನ ಭಾಷೆಗಳೂ ನಾಶದ ಹಾದಿಯಲ್ಲಿವೆ.

೨೦೦

ಆಸ್ಟ್ರೇಲಿಯಾದ ಭಾಷೆಗಳು

ಯೊಲ್ನ್‌ಗು, ವಾರ್ಲ್‌ಪಿರಿ, ಮತ್ತು ಪಶ್ಚಿಮ ಮರುಭೂಮಿಯ ಕೆಲವು ಭಾಷೆಗಳು ಮಾತ್ರ ಇವತ್ತು ಶಾಲೆಗಳಲ್ಲಿ ಇಂಗ್ಲಿಷ್‌ನೊಂದಿಗೆ ಪಠ್ಯಗಳಾಗಿವೆ. ಇಂತಹ ಭಾಷೆಗಳ ಸಂಖ್ಯೆ ಹತ್ತಕ್ಕಿಂತಲೂ ಕಡಿಮೆ.

ಆಸ್ಟ್ರೇಲಿಯಾದಲ್ಲಿ ಬಳಕೆಯಲ್ಲಿರುವ ಮೂಲ ಭಾಷೆಗಳಲ್ಲಿ ಹೆಚ್ಚಿನವೂ ಒಂದೇ ಭಾಷಾಕುಟುಂಬಕ್ಕೆ ಸೇರಿದವುಗಳಿರಬೇಕೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಅಪವಾದವೆಂದರೆ, ಮಿರಿಯಂ ಎಂಬ ಪಾಪುವಾನ್ ಭಾಷೆ, ಮತ್ತು ತಾಸ್ಮೇನಿಯಾದಲ್ಲಿ ಬಳಕೆಯಲ್ಲಿದ್ದ, ಮತ್ತು ಈಗ ಅಳಿದು ಹೋಗಿರುವ ಬೇರೆ ಎರಡು ಭಾಷೆಗಳು.

ಆಸ್ಟ್ರೇಲಿಯಾದ ಭಾಷೆಗಳನ್ನು ಒಟ್ಟು ೨೬ ಉಪಕುಟುಂಬಗಳಲ್ಲಿ ಪ್ರತ್ಯೇಕಿಸ ಬಹುದು. ಇವುಗಳಲ್ಲಿ ಮಾಮಾ-ನ್ಯುಂಗಾನ್ ಎಂಬ ಒಂದೇ ಒಂದು ಉಪ ಕುಟುಂಬಕ್ಕೆ ಸೇರಿದ ಭಾಷೆಗಳೇ ಆಸ್ಟ್ರೇಲಿಯಾದ ಹೆಚ್ಚಿನ ಭಾಗಗಳಲ್ಲೂ ಬಳಕೆ ಯಲ್ಲಿವೆ. ಉಳಿದ ೨೫ ಉಪಕುಟುಂಬಗಳಿಗೆ ಸೇರಿದ ಭಾಷೆಗಳೆಲ್ಲ ಆಸ್ಟ್ರೇಲಿಯಾ ಖಂಡದ ಉತ್ತರ ತುದಿಯಲ್ಲಿ ಸಂಗ್ರಹಿತವಾಗಿವೆ.

ವ್ಯಾಕರಣದ ವೈಶಿಷ್ಟ್ಯ

ಆಸ್ಟ್ರೇಲಿಯಾದ ಈ ಮೂಲ ಭಾಷೆಗಳಲ್ಲಿ ಸಾಮಾನ್ಯವಾಗಿ ಅ, ಇ ಮತ್ತು ಉ ಎಂಬ ಮೂರು ಸ್ವರಗಳು ಮಾತ್ರ ಇರುತ್ತವೆ. ಇವಕ್ಕಿಂತ ಭಿನ್ನವಾದ ಎ ಮತ್ತು ಒ ಸ್ವರಗಳಾಗಲೀ, ದೀರ್ಘಸ್ವರಗಳಾಗಲೀ ಇವುಗಳಲ್ಲಿಲ್ಲ. ಇದಲ್ಲದೆ, ಈ ಭಾಷೆಗಳಲ್ಲಿ ಸ್ವರದಿಂದ ಸುರುವಾಗುವ ಪದಗಳು ಅಪರೂಪ.

ವ್ಯಂಜನಗಳಲ್ಲಿ ಗ, ಜ, ಡ, ದ ಮತ್ತು ಬ ಎಂಬ ಐದು ಸ್ಪರ್ಶಗಳು ಮಾತ್ರ ವಲ್ಲದೆ, ನಾಲಿಗೆಯನ್ನು ಹಲ್ಲುಗಳ ನಡುವೆ ಇರಿಸಿ ಉಚ್ಚರಿಸುವ ಆರನೆಯ ದೊಂದು ಸ್ಪರ್ಶವೂ ಇವುಗಳಲ್ಲಿರುತ್ತದೆ. ಇದೇ ರೀತಿ ಆರು ಅನುನಾಸಿಕಗಳೂ ಇರುತ್ತವೆ. ಆದರೆ, ಕ, ಚ, ಟ, ತ, ಪ ಮೊದಲಾದ ಅಘೋಷ ಸ್ಪರ್ಶ ಗಳಾಗಲೀ, ಖ, ಛ, ಠ, ಥ, ಫ ಮೊದಲಾದ ಮಹಾಪ್ರಾಣಾಕ್ಷರಗಳಾಗಲೀ, ಇಲ್ಲವೇ ಸ, ಶ, ಹ ಮೊದಲಾದ ಊಷ್ಮ ವ್ಯಂಜನಗಳಾಗಲೀ ಈ ಭಾಷೆಗಳಲ್ಲಿ ಕಾಣಿಸುವುದು ಅಪರೂಪ.

ಈ ಭಾಷೆಗಳ ಸರ್ವನಾಮಗಳು ಏಕವಚನ, ದ್ವಿವಚನ, ಮತ್ತು ಬಹುವಚನ ಎಂಬುದಾಗಿ ಮೂರು ವಚನಗಳನ್ನು ಸೂಚಿಸಬಲ್ಲುವು. ಉದಾಹರಣೆಗಾಗಿ, ದ್ವಿರ್ಬಲ್ ಎಂಬ ಭಾಷೆಯಲ್ಲಿ ಬಯ್ಗು ಎಂದರೆ ‘ನಾನು’, ಬಿಲಿ ಎಂದರೆ ‘ನಾವಿಬ್ಬರು’, ಮತ್ತು ಜನ ಎಂದರೆ ‘ನಾವು ಮೂವರು’ ಇಲ್ಲವೇ ‘ಜಾಸ್ತಿ ಜನ’ ಎಂಬ ಅರ್ಥ ಬರುತ್ತದೆ.

ಇದಲ್ಲದೆ, ಉತ್ತಮ ಪುರುಷ ದ್ವಿವಚನ ಮತ್ತು ಬಹುವಚನಗಳಲ್ಲಿ ಮಧ್ಯಮ ಪುರುಷಯುಕ್ತ ಮತ್ತು ಮಧ್ಯಮಪುರುಷರಹಿತ ಎಂಬ ವ್ಯತ್ಯಾಸವನ್ನೂ ಈ ಭಾಷೆಯ ಸರ್ವನಾಮಗಳು ತೋರಿಸುತ್ತವೆ. ಉದಾಹರಣೆಗಾಗಿ, ಐಲಿತ್ಯ

೨೦೧


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಎಂದರೆ ‘ನೀನು ಮತ್ತು ನಾನು’ ಎಂದೂ, ಜಿಲಿ ಎಂದರೆ ‘ನಿನ್ನನ್ನು ಬಿಟ್ಟು ನಾವಿಬ್ಬರು’ ಎಂದೂ ಅರ್ಥ ಬರುತ್ತದೆ. ಹೀಗೆಯೇ, ಜಂತು ಎಂದರೆ ‘ನೀನು ಮತ್ತು ನಾವು (ಮೂರು ಇಲ್ಲವೇ ಹೆಚ್ಚು ಮಂದಿ)’ ಎಂದೂ, ಜಿನ್ನು ಎಂದರೆ ‘ನಿನ್ನನ್ನು ಬಿಟ್ಟು ನಾವು (ಮೂರು ಇಲ್ಲವೇ ಹೆಚ್ಚು ಮಂದಿ)’ ಎಂದೂ ಅರ್ಥ ಬರುತ್ತದೆ.

ಹಿಂದೆ-ಮುಂದೆ, ಎಡಕ್ಕೆ-ಬಲಕ್ಕೆ

ಸ್ಥಾನಸೂಚಕ ಪದಗಳ ಬಳಕೆಯಲ್ಲೂ ಆಸ್ಟ್ರೇಲಿಯಾದ ಭಾಷೆಗಳಲ್ಲಿ ಕೆಲವು ವೈಶಿಷ್ಟ್ಯಗಳು ಕಾಣಿಸುತ್ತವೆ. ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಎಲ್ಲಿದೆ ಎಂಬುದನ್ನು ತಿಳಿಸುವುದಕ್ಕೆ ನಾವು ಹಿಂದೆ-ಮುಂದೆ, ಎಡಕ್ಕೆ-ಬಲಕ್ಕೆ, ಮೇಲೆ-ಕೆಳಗೆ ಎಂಬ ವಿಶೇಷಣಗಳನ್ನು ಬಳಸುತ್ತೇವೆ. ಆತ ಮನೆಯ ಮುಂದೆ ನಿಂತಿದ್ದಾನೆ, ತೆಂಗಿನ ಮರ ಮನೆಯ ಎಡಕ್ಕೆ ಇದೆ ಎಂಬಂತಹ ವಾಕ್ಯಗಳಲ್ಲಿ ಇವುಗಳ ಪ್ರಯೋಗವನ್ನು ಕಾಣಬಹುದು.

ಆಸ್ಟ್ರೇಲಿಯಾದ ಕೆಲವು ಭಾಷೆಗಳಲ್ಲಿ ಒಬ್ಬ ವ್ಯಕ್ತಿ ಇಲ್ಲವೇ ಒಂದು ವಸ್ತು ಎಲ್ಲಿದೆಯೆಂಬುದನ್ನು ಹೀಗೆ ಇನ್ನೊಂದು ವಸ್ತುವಿನ ಇಲ್ಲವೇ ಮಾತನಾಡುವವನ ದೃಷ್ಟಿಕೋನದ ಮೂಲಕ ತಿಳಿಸುವ ಬದಲು, ಪೂರ್ವ-ದಕ್ಷಿಣ-ಪಶ್ಚಿಮ- ಉತ್ತರ ಎಂಬ ದಿಕ್ಕುಗಳ ಸಹಾಯದಿಂದಲೇನೇ ತಿಳಿಸಲಾಗುತ್ತದೆ.

ಗೂಗು-ಯಿಮ್‌ಧಿರ್ ಎಂಬ ಭಾಷೆ ಇಂತಹದು. ಮೇಲೆ ಕೊಟ್ಟಿರುವ ಎರಡು ವಾಕ್ಯಗಳು ತಿಳಿಸುವ ಸಂಗತಿಯನ್ನು ಈ ಭಾಷೆಯಲ್ಲಿ ದಿಕ್ಕುಗಳ ಸಹಾಯದಿಂದ ಮಾತ್ರವೇ (ಮನೆಯ ಪೂರ್ವಕ್ಕೆ, ಮನೆಯ ಪಶ್ಚಿಮಕ್ಕೆ, ಇತ್ಯಾದಿ) ತಿಳಿಸಲಾಗುತ್ತದೆ.

ಚಿತ್ರವೊಂದರಲ್ಲಿ ಕಾಣಿಸುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಇನ್ನೊಬ್ಬನ ಬಲಬದಿಗೆ ನಿಂತಿದ್ದಾನೆ ಎನ್ನಲೂ ಈ ಭಾಷೆಯಲ್ಲಿ ಸಾಧ್ಯವಾಗದು. ಅಲ್ಲೂ ನಿಜವಾದ ದಿಕ್ಕನ್ನೇ ತಿಳಿಸಬೇಕು, ಮತ್ತು ಚಿತ್ರವನ್ನು ಸ್ವಲ್ಪ ತಿರುಗಿಸಿ ಹಿಡಿದರೆ, ದಿಕ್ಕು ಬದಲಾಗಿರುವುದನ್ನೂ ಸರಿಯಾಗಿ ಅರಿತು ಹೇಳಬೇಕು.

ಈ ರೀತಿ ಚಿಕ್ಕ ಚಿಕ್ಕ ವಸ್ತುಗಳ ಸ್ಥಾನವನ್ನೂ ದಿಕ್ಕುಗಳ ಸಹಾಯದಿಂದ ತಿಳಿಸುವುದು ನಮಗೆ ತೀರ ವಿಚಿತ್ರ ಮತ್ತು ಬಹಳ ಕಷ್ಟದ ಕೆಲಸ ಎಂದು ಅನಿಸ ಬಹುದು. ಆದರೆ, ಆಸ್ಟ್ರೇಲಿಯಾದ ಈ ಮೂಲನಿವಾಸಿಗಳು ಮರುಭೂಮಿಯಲ್ಲಿ ಸಂಚರಿಸುತ್ತಿರಬೇಕಾಗಿದೆಯಾದ ಕಾರಣ, ಅವರಿಗೆ ಈ ರೀತಿ ಯಾವಾಗಲೂ ದಿಕ್ಕುಗಳ ಅರಿವಿರುವುದು ತುಂಬಾ ಉಪಯುಕ್ತವಾಗುತ್ತದೆ. ಮರುಭೂಮಿಯಲ್ಲಿ ಸ್ಥಾನ ಸೂಚಕಗಳಾಗಿ ಬಳಸಲು ಮರ, ಗುಡ್ಡ ಮೊದಲಾದ ಗುರುತುಗಳಾವುವೂ ಇರುವುದಿಲ್ಲ; ಹಾಗಾಗಿ, ದಿಕ್ಕಿನ ಜ್ಞಾನವೊಂದರಿಂದಲೇ ಅವರು ಯಾವಾಗಲೂ ತಾವೆಲ್ಲಿ ಇರುವೆವೆಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.

೨೦೨


ಆಸ್ಟ್ರೇಲಿಯಾದ ಭಾಷೆಗಳು

ಅತ್ತೆಭಾಷೆ

ಆಸ್ಟ್ರೇಲಿಯಾದ ಕೆಲವು ಭಾಷೆಗಳಲ್ಲಿ ಅತ್ತೆ, ಮಾವ, ಅತ್ತಿಗೆ, ಭಾವ ಮೊದಲಾದ ಸಂಬಂಧಿಗಳೊಂದಿಗೆ ಮಾತನಾಡುವಾಗ ಬಳಸುವ ಭಾಷೆ ಇತರ ಸಂದರ್ಭ ಗಳಲ್ಲಿ ಬಳಸುವ ಭಾಷೆಗಿಂತ ತೀರಾ ಭಿನ್ನವಾಗಿರುತ್ತದೆ. ಎರಡರಲ್ಲೂ ವ್ಯಾಕರಣ ಒಂದೇ; ಆದರೆ, ಪದಗಳು ಮಾತ್ರ ಬೇರೆ ಬೇರೆ. ಇತರರೊಂದಿಗೆ ಮಾತನಾಡು ವಾಗ ಬಳಸುವ ಪದಗಳಲ್ಲಿ ಒಂದನ್ನೂ ಈ ಅತ್ತೆಭಾಷೆಯಲ್ಲಿ ಬಳಸಲು ಸಾಧ್ಯ ವಿಲ್ಲ.

ಉದಾಹರಣೆಗಾಗಿ, ದ್ಯರ್ಬಲ ಎಂಬ ಭಾಷೆಯಲ್ಲಿ ಸಾಮಾನ್ಯವಾಗಿ ‘ಹೊರಗೆ ಬಾ’ ಎನ್ನಲು ಮಯಿನ್ ಎನ್ನುತ್ತಾರೆ, ಆದರೆ ಅದರ ಅತ್ತೆಭಾಷೆಯಲ್ಲಿ ಯಿಲ್ ವುನ್ ಎನ್ನುತ್ತಾರೆ; ‘ತಿನ್ನು’ ಎನ್ನುವುದಕ್ಕೆ ಸಾಮಾನ್ಯ ಭಾಷೆಯಲ್ಲಿ ದ್ಯಂಗ್‌ಇು ಎನ್ನುತ್ತಾರೆ, ಆದರೆ ಅತ್ತೆಭಾಷೆಯಲ್ಲಿ ಯಲ್‌ಮಿಇು ಎನ್ನುತ್ತಾರೆ.

ಈ ವಿಶಿಷ್ಟವಾದ ಅತ್ತೆಭಾಷೆಯನ್ನು ಗಂಡಸರು ತಮ್ಮ ಅತ್ತೆ (ಹೆಂಡತಿಯ ತಾಯಿ), ಸೊಸೆ (ಮಗನ ಹೆಂಡತಿ), ಅತ್ತಿಗೆ (ತಾಯಿಯ ಸಹೋದರನ ಇಲ್ಲವೇ ತಂದೆಯ ಸಹೋದರಿಯ ಮಗಳು) - ಇವರೊಂದಿಗೂ, ಹೆಂಗಸರು ತಮ್ಮ ಮಾವ (ಗಂಡನ ತಂದೆ), ಅಳಿಯ (ಮಗಳ ಗಂಡ), ಮತ್ತು ಭಾವ (ತಾಯಿಯ ಸಹೋದರನ ಇಲ್ಲವೇ ತಂದೆಯ ಸಹೋದರಿಯ ಮಗ) - ಇವರೊಂದಿಗೂ ಕಡ್ಡಾಯವಾಗಿ ಬಳಸಬೇಕಾಗುತ್ತದೆ.

ಬೇರೆ ಕೆಲವು ಸಂಬಂಧಿಗಳೊಂದಿಗೂ (ಉದಾ: ಗಂಡಸರ ಮಟ್ಟಿಗೆ ತಾಯಿಯ ಸಹೋದರನ ಮಗ, ಮತ್ತು ಹೆಂಗಸರ ಮಟ್ಟಿಗೆ ತಾಯಿಯ ಸಹೋ ದರನ ಮಗಳು) ಅತ್ತೆಭಾಷೆಯನ್ನು ಬಳಸಬಹುದಾದರೂ, ಇದರಲ್ಲಿ ಕಡ್ಡಾಯ ವಿಲ್ಲ. ಉಳಿದವರೊಂದಿಗೆ ಮಾತ್ರ, ಈ ಅತ್ತೆಭಾಷೆಯನ್ನು ಬಳಸಬಾರದು; ಸಾಮಾನ್ಯ ಭಾಷೆಯನ್ನೇ ಬಳಸಬೇಕು.

ಈ ಅತ್ತೆಭಾಷೆಯ ಒಂದು ವೈಶಿಷ್ಟ್ಯವೇನೆಂದರೆ, ಅದರಲ್ಲಿ ಬಳಕೆಯಾಗುವ ಪದಗಳು ಬಹಳ ಕಡಿಮೆ, ಎಂದರೆ ಸಾಮಾನ್ಯ ಭಾಷೆಯಲ್ಲಿ ಇರುವುದರ ಕಾಲು ಭಾಗದಷ್ಟು ಪದಗಳು ಮಾತ್ರ ಇದರಲ್ಲಿ ಬಳಕೆಯಾಗುತ್ತವೆ. ಹೀಗಿದ್ದರೂ, ಹೇಳ ಬೇಕೆಂದಿರುವ ಸಂಗತಿಗಳನ್ನೆಲ್ಲ ಅದರ ಮೂಲಕ ಹೇಳಲು ಏನೂ ತೊಂದರೆ ಯಾಗುವುದಿಲ್ಲ. ಈ ರೀತಿ ಪದಗಳ ಸಂಖ್ಯೆ ಅತ್ತೆಭಾಷೆಯಲ್ಲಿ ಕಡಿಮೆಯಿರಲು ಮುಖ್ಯ ಕಾರಣವೇನೆಂದರೆ, ಸಾಮಾನ್ಯ ಭಾಷೆಯಲ್ಲಿ ಬರುವ ಮೂರು-ನಾಲ್ಕು ಪದಗಳಿಗೆ ಬದಲಾಗಿ, ಅತ್ತೆಭಾಷೆಯಲ್ಲಿ ಒಂದೇ ಪದವಿರುತ್ತದೆ.

ಉದಾಹರಣೆಗಾಗಿ, ಅತ್ತೆಭಾಷೆಯಲ್ಲಿ ‘ನೋಡು’ ಎಂಬರ್ಥದ ಇಮ್ಮಲ್ ಎಂಬ ಒಂದು ಪದಕ್ಕೆ ಬದಲಾಗಿ, ಸಾಮಾನ್ಯ ಭಾಷೆಯಲ್ಲಿ ವಬಲ್ ‘ಮೇಲೆ ನೋಡು’, ಬಿಡ್ಇದ್ಸಯ್ ‘ಎವೆಯಿಕ್ಕದೆ ನೋಡು’, ಗಿಂದಲ್ ‘ರಾತ್ರಿ ಹೊತ್ತು ದೀಪದ ಬೆಳಕಿನಲ್ಲಿ ನೋಡು’, ಮಮಿಲ್ ‘ಗೊತ್ತಾಗದ ಹಾಗೆ ನೋಡು’, ಬುಡಲ್ ‘ಒಬ್ಬನ ಕಡೆಗೆ ನೋಡು’ ಮೊದಲಾದ ಪದಗಳಿವೆ.

೨೦೩


ಭಾಷೆಯ ಬಗ್ಗೆ ನೀವೇನು ಬಲ್ಲಿರಿ?

ಈ ಎರಡು ರೀತಿಯ ಭಾಷೆಗಳು ದ್ಯರ್ಬಲ್‌ನಲ್ಲಿ ಹಳಬರಲ್ಲಿ ಮಾತ್ರ ಉಳಿ ದಿವೆಯಲ್ಲದೆ, ತರುಣ-ತರುಣಿಯರ ಮತ್ತು ಹುಡುಗ-ಹುಡುಗಿಯರ ಮಾತಿನಲ್ಲಿ ಉಳಿದಿಲ್ಲ. ಈ ಮೂಲನಿವಾಸಿಗಳ ಇತರ ಸಂಪ್ರದಾಯಗಳ ಹಾಗೆ, ಈ ಭಾಷಾ ಸಂಪ್ರದಾಯವೂ ನಶಿಸಿ ಹೋಗುತ್ತಿದೆ.

ಆಸ್ಟ್ರೇಲಿಯಾದ ಮೂಲನಿವಾಸಿಗಳ ಭಾಷೆಯಲ್ಲಿ ಕಾಣಿಸುವ ಇನ್ನೊಂದು ವೈಶಿಷ್ಟ್ಯವೇನೆಂದರೆ, ಅವರ ಸಮಾಜದಲ್ಲಿ ಯಾರಾದರೂ ಸತ್ತರೆ ಆತನ ಹೆಸರನ್ನು ಹೋಲುವ ಪದ ಅವರ ಭಾಷೆಯಲ್ಲಿ ಯಾವುದಿದ್ದರೂ ಅದನ್ನು ಅನಂತರ ಉಚ್ಚರಿಸುವಂತಿಲ್ಲ; ಹಾಗೆ ಉಚ್ಚರಿಸಿದಲ್ಲಿ ಆತನ ಆತ್ಮ ಅವರಿರು ವಲ್ಲಿಗೆ ಬಂದೀತೆಂಬ ನಂಬಿಕೆಯೇ ಇದಕ್ಕೆ ಕಾರಣ. ಈ ಸಂಪ್ರದಾಯದಿಂದಾಗಿ, ಅವರ ಭಾಷೆಯ ಹಲವು ಪದಗಳು ಒಂದೊಂದಾಗಿ ಬಳಕೆಯಿಂದ ಹೊರ ಬೀಳುತ್ತಿರುತ್ತವೆ, ಮತ್ತು ಅವುಗಳ ಜಾಗವನ್ನು ಬೇರೆ ಪದಗಳು ಆಕ್ರಮಿಸು ತಿರುತ್ತವೆ. ಆದರೆ, ಒಂದು ಸಮಾಜದಲ್ಲಿ ಈ ರೀತಿ ಕಾಣೆಯಾದ ಪದಗಳನ್ನು ಪಕ್ಕದ ಸಮಾಜದಲ್ಲಿ ಕಾಣಬಹುದು.

೫.೭ ಓಶಿಯಾನಾದ ಭಾಷೆಗಳು

ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿ ಹರಡಿರುವ ಸಾವಿರಾರು ದ್ವೀಪ ಗಳಲ್ಲಿ ವಾಸಿಸುವ ಜನರಲ್ಲಿ ಸಾವಿರಾರು ಭಿನ್ನ ಭಿನ್ನವಾದ ಭಾಷೆಗಳು ಬಳಕೆ ಯಲ್ಲಿವೆ. ಈ ದ್ವೀಪಗಳಲ್ಲಿ ಕಾಣಿಸುವ ಭಾಷೆಗಳ ಸಂಖ್ಯೆ ಜಗತ್ತಿನ ಒಟ್ಟು ಭಾಷೆಗಳ ಶೇಕಡಾ ನಲುವತ್ತರಷ್ಟಾಗಬಹುದೆಂದು ಕೆಲವರು ಲೆಕ್ಕ ಹಾಕಿದ್ದಾರೆ. ಇವನ್ನು ಮುಖ್ಯವಾಗಿ ಆಸ್ಟೋನೇಶಿಯನ್ ಮತ್ತು ಇಂಡೋ-ಪೆಸಿಫಿಕ್ ಎಂಬ ಎರಡು ಭಾಷಾಕುಟುಂಬಗಳಲ್ಲಿ ವಿಂಗಡಿಸಬಹುದು.

ಇವುಗಳಲ್ಲಿ ಆಸ್ಟ್ರೇನೇಶಿಯನ್ ಭಾಷೆಗಳು ಬಹಳ ವಿಸ್ತಾರವಾಗಿ ಈ ಎರಡು ಮಹಾಸಾಗರಗಳಲ್ಲಿರುವ ಎಲ್ಲಾ ದ್ವೀಪಗಳಲ್ಲೂ ಎಂದರೆ, ಆಫ್ರಿಕಾ ಖಂಡದ ಹತ್ತಿರವಿರುವ ಮೆಡಗಾಸ್ಕರ್ ದ್ವೀಪದಿಂದ ಹಿಡಿದು ಇಂಡೋನೇಶಿಯಾ, ಫಿಲಿಪೈನ್ಸ್ ದ್ವೀಪಗಳನ್ನು ದಾಟಿ, ಮುಂದೆ ಪೆಸಿಫಿಕ್ ಮಹಾಸಾಗರದಲ್ಲಿರುವ ಹವಾಯಿ ದ್ವೀಪಗಳವರೆಗೂ ಹಬ್ಬಿಕೊಂಡಿರುವುವಾದರೆ, ಇಂಡೋ-ಪೆಸಿಫಿಕ್ ಭಾಷೆಗಳು ನ್ಯೂಗಿನಿ ಮತ್ತು ಅದರ ಸುತ್ತುಮುತ್ತಲಿನ ದ್ವೀಪಗಳಲ್ಲಿ ಮಾತ್ರ ಬಳಕೆಯಲ್ಲಿವೆ.

ಆದರೆ, ಆಸ್ಟ್ರೇನೇಶಿಯನ್ ಭಾಷೆಗಳೆಲ್ಲ ಒಂದಕ್ಕೊಂದು ತೀರ ಹತ್ತಿರದ ಸಂಬಂಧವನ್ನು ತೋರಿಸುತ್ತಿವೆ, ಮತ್ತು ಇದಕ್ಕೆ ವಿರುದ್ಧವಾಗಿ, ಇಂಡೋ- ಪೆಸಿಫಿಕ್ ಭಾಷೆಗಳು ಒಂದೇ ಕಡೆ ಸೇರಿದ್ದರೂ ಹಲವಾರು ರೀತಿಯ ವೈವಿಧ್ಯ ಗಳನ್ನು ತೋರಿಸುತ್ತಿದ್ದು, ಅವನ್ನೆಲ್ಲ ಒಂದೇ ಕುಟುಂಬದಲ್ಲಿ ಸೇರಿಸಿ ಹೇಳಲು ಸಾಧ್ಯವೇ ಎಂಬ ವಿಷಯದಲ್ಲಿ ವಿದ್ವಾಂಸರೊಳಗೆ ಮತಭೇದವಿದೆ.

೨೦೪


ಓಶಿಯಾನಾದ ಭಾಷೆಗಳು

ಆಸ್ಟೋನೇಶಿಯನ್ ಭಾಷೆಗಳು

ಮಡಗಾಸ್ಕರ್‌ನ ಮಲಗಾಸಿ, ಮಲಯೇಶಿಯಾದ ಮಲಯ್, ಇಂಡೋನೇಶಿಯಾದ ಬಹಸಾ ಇಂಡೋನೇಶಿಯಾ, ಜಾವನೀಸ್, ಸುಂಡನೀಸ್, ಮಾದುರೀಸ್, ಬಾಲಿ, ಫಿಲಿಪೈನ್ಸ್‌ನ ಪಿಲಿಪಿನೋ (ತಗಲೋಗ್), ಪೋಲಿನೇಶ್ಯಾದ ಸಮೋವನ್, ತಹಿತಿಯನ್ ಮತ್ತು ಹವಾಯಿಯನ್ ಮೊದಲಾದ ಒಟ್ಟು ಒಂದು ಸಾವಿರ ಭಾಷೆಗಳು ಆಸ್ಟೋನೇಶಿಯನ್ ಕುಟುಂಬಕ್ಕೆ ಸೇರುತ್ತವೆ. ಈ ಭಾಷೆಗಳನ್ನು ಮುಖ್ಯವಾಗಿ ಮಲಯೋ-ಪೋಲಿನೇಶಿಯನ್ ಎಂಬ ಒಂದು ದೊಡ್ಡ ಉಪ ಕುಟುಂಬದಲ್ಲೂ, ಅತಾಯಲಿಕ್, ತ್ಸೌಯಿಕ್ ಮತ್ತು ಪೈವನಿಕ್ ಎಂಬ ಮೂರು ಚಿಕ್ಕ ಉಪಕುಟುಂಬಗಳಲ್ಲೂ ಸೇರಿಸಿ ಹೇಳಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಈ ಕುಟುಂಬಕ್ಕೆ ಸೇರಿದ ಸುಮಾರು ಇನ್ನೂರರಿಂದ ಮುನ್ನೂರರಷ್ಟು ಭಾಷೆ ಗಳು ನ್ಯೂಗಿನಿಯಿಂದ ಪಶ್ಚಿಮಕ್ಕೆ ಬಳಕೆಯಲ್ಲಿದ್ದು, ಇವನ್ನಾಡುವವರ ಸಂಖ್ಯೆ ೨೦೦ ಮಿಲಿಯದಷ್ಟಿದೆ. ನ್ಯೂಗಿನಿಯಿಂದ ಪೂರ್ವಕ್ಕೆ ಇದಕ್ಕಿಂತಲೂ ಜಾಸ್ತಿ, ಎಂದರೆ ಸುಮಾರು ಮುನ್ನೂರರಿಂದ ನಾನ್ನೂರರ ವರೆಗೆ ಭಾಷೆಗಳಿವೆಯಾದರೂ, ಇವನ್ನಾಡುವವರ ಸಂಖ್ಯೆ ಮಾತ್ರ ಎರಡು ಮಿಲಿಯದಷ್ಟು ಮಾತ್ರ ಇದೆ. ೬೫ ಮಿಲಿಯ ಜನರ ಜಾವನೀಸ್, ೨೦ ಮಿಲಿಯ ಜನರ ಸುಂಡನೀಸ್, ಮತ್ತು ೧೦ ಮಿಲಿಯ ಜನರ ತಗಲೋಗ್ (ಫಿಲಿಪೈನ್ಸ್‌ನ ಭಾಷೆ) ಎಂಬವು ಈ ಭಾಷೆಗಳಲ್ಲಿ ಜನಸಂಖ್ಯೆಯ ಮಟ್ಟಿಗೆ ಮುಖ್ಯವಾದವುಗಳು.

ಸಾಮಾನ್ಯವಾಗಿ ಈ ಭಾಷೆಗಳಲ್ಲಿ ಬಳಕೆಯಾಗುವ ವರ್ಣಗಳ ಸಂಖ್ಯೆ ಬಹಳ ಚಿಕ್ಕದು. ಉದಾಹರಣೆಗಾಗಿ, ಮವೊರಿ ಭಾಷೆಯಲ್ಲಿ ಒಟ್ಟು ಹತ್ತು ವ್ಯಂಜನಗಳು (ಕ್, ತ್, ಪ್, ಫ್, ಹ್, ಮ್, ನ್, ಜ್, ರ್, ವ್) ಮಾತ್ರ ಬಳಕೆಯಲ್ಲಿವೆ. ಆದರೆ, ಸ್ವರಗಳು ಹತ್ತು (ಹ್ರಸ್ವ ಮತ್ತು ದೀರ್ಘ ಸ್ವರಗಳು ಸೇರಿ) ಇವೆ.

ಮಲಯೋ-ಪೋಲಿನೇಶಿಯನ್ ಕುಟುಂಬದ ಒಂದು ವಿಭಾಗವಾದ ಓಶಿಯಾನಿಕ್ ಇಲ್ಲವೇ ಮೆಲನೇಶಿಯನ್ ಭಾಷೆಗಳ ಒಂದು ವೈಶಿಷ್ಟ್ಯ ವೇನೆಂದರೆ, ಇವುಗಳಲ್ಲಿ ನಿರ್ದೇಶಕ ಸರ್ವನಾಮಗಳು ‘ಮಾತನಾಡುವವನ ಹತ್ತಿರ’, ‘ಕೇಳುಗನ ಹತ್ತಿರ’, ಮತ್ತು ‘ಇಬ್ಬರಿಂದಲೂ ದೂರ’ ಎಂಬುದಾಗಿ ಮೂರು ವಿಶಿಷ್ಟವಾದ ಸ್ಥಾನಗಳನ್ನು ಸೂಚಿಸುತ್ತವೆ. ಭಾರತದಲ್ಲಿ ಬಳಕೆ ಯಲ್ಲಿರುವ ಕೆಲವು ಟಿಬೆಟೋ-ಬರ್ಮನ್ ಭಾಷೆಗಳಲ್ಲೂ, ಯುರೋಪಿನ ಯುರಾಲಿಕ್ ಭಾಷೆಗಳಲ್ಲೂ ಇಂತಹ ಮೂರು ರೀತಿಯ ಸ್ಥಾನನಿರ್ದೇಶಕ ಸರ್ವನಾಮಗಳನ್ನು ಕಾಣಬಹುದು.

೨೦೫


ಭಾಷೆಗಳ ಬಗ್ಗೆ ನೀವೇನು ಬಲ್ಲಿರಿ?

ಇಂಡೋ-ಪೆಸಿಫಿಕ್ ಭಾಷೆಗಳು

ಈ ಕುಟುಂಬಕ್ಕೆ ಸೇರಿದ ಭಾಷೆಗಳ ಸಂಖ್ಯೆ ಸಾವಿರಕ್ಕೆ ಹತ್ತಿರ ಇದೆಯಾದರೂ, ಇವನ್ನಾಡುವ ಜನರ ಸಂಖ್ಯೆ ಒಟ್ಟು ಇಪ್ಪತ್ತು ಲಕ್ಷಕ್ಕಿಂತ ಜಾಸ್ತಿಯಿಲ್ಲ. ಮುಖ್ಯ ವಾಗಿ ನ್ಯೂಗಿನಿ ಎಂಬ ಒಂದೇ ಒಂದು ದ್ವೀಪದಲ್ಲಿ ಹರಡಿವೆಯಾದರೂ, ಈ ಭಾಷೆಗಳು ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದು ಅವನ್ನೆಲ್ಲ ಒಂದೇ ಕುಟುಂಬ ದಲ್ಲಿ ಸೇರಿಸಿ ಹೇಳಬಹುದೆಂಬ ವಾದವನ್ನು ಎಲ್ಲರೂ ಒಪ್ಪುವುದಿಲ್ಲ.

ಭಾರತದ ಅಂಡಮಾನ್ ದ್ವೀಪದಲ್ಲಿ ಬಳಕೆಯಲ್ಲಿರುವ ಕೆಲವು ಭಾಷೆ ಗಳನ್ನೂ ಈ ಕುಟುಂಬದಲ್ಲಿ ಸೇರಿಸಬಹುದೆಂದು ಕೆಲವರು ಅಭಿಪ್ರಾಯಪಟ್ಟಿ ದ್ದಾರೆ. ಇವಲ್ಲದೆ, ಈಗ ಪೂರ್ತಿ ಅಳಿದು ಹೋಗಿರುವ ತಸ್ಮೀನಿಯಾದ ಭಾಷೆ ಗಳು, ನ್ಯೂಗಿನಿಯ ಮಧ್ಯಭಾಗದಲ್ಲಿ ಬಳಕೆಯಲ್ಲಿರುವ ಭಾಷೆಗಳು, ಪಶ್ಚಿಮದ ಪಾಪುವಾನ್ ಭಾಷೆಗಳು, ಪೂರ್ವದ ಭಾಷೆಗಳು, ವಾಯವ್ಯದ ಭಾಷೆಗಳು ಮತ್ತು ಪೆಸಿಫಿಕ್ ಭಾಷೆಗಳು ಎಂಬುದಾಗಿ ಈ ಭಾಷೆಗಳನ್ನು ಏಳು ವಿಭಾಗಗಳಾಗಿ ಹಂಚಲು ಸಾಧ್ಯವಿದೆಯೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಗಿನಿ ದ್ವೀಪದಲ್ಲಿ ಬಳಕೆಯಲ್ಲಿರುವ ಒಟ್ಟು ಒಂದು ಸಾವಿರ ಭಾಷೆಗಳಲ್ಲಿ ಮುಕ್ಕಾಲು ಪಾಲಷ್ಟು, ಎಂದರೆ ಸುಮಾರು ೭೫೦ ಭಾಷೆಗಳು ಪಾಪುವಾನ್ ಎಂಬ ಒಂದು ವಿಭಾಗಕ್ಕೆ ಸೇರುತ್ತವೆ. ಈ ಭಾಷೆಗಳ ಒಂದು ವೈಶಿಷ್ಟ್ಯವೇನೆಂದರೆ, ಇವುಗಳಲ್ಲಿ ಸ್ವತಂತ್ರ ಮತ್ತು ಅಸ್ವತಂತ್ರಗಳೆಂಬ ಎರಡು ರೀತಿಯ ಕ್ರಿಯಾಪದ ಗಳಿರುತ್ತವೆ. ಆಖ್ಯಾತ ಮತ್ತು ಕಾಲ ಪ್ರತ್ಯಯಗಳಲ್ಲಿ ಹೆಚ್ಚಿನವೂ ಸ್ವತಂತ್ರ ಕ್ರಿಯಾಪದಗಳೊಂದಿಗೆ ಮಾತ್ರ ಬರುತ್ತವೆ.

೫.೮ ಮುಕ್ತಾಯ

ಜಗತ್ತಿನಲ್ಲಿರುವ ಜನರೆಲ್ಲ ಒಂದೇ ಭಾಷೆಯನ್ನಾಡುವ ಹಾಗಿದ್ದರೆ ಬಹಳ ಒಳ್ಳೆಯದು ಎಂದು ಭಾವಿಸುವ ಮಂದಿ ನಮ್ಮಲ್ಲಿ ಕೆಲವರಿದ್ದಾರೆ. ಹೀಗಾದಲ್ಲಿ, ಬೇರೆ ಬೇರೆ ಭಾಷೆಗಳನ್ನು ಕಲಿಯುವ ಕೆಲಸ ತಪ್ಪಬಹುದು ಮಾತ್ರವಲ್ಲ, ಭಾಷೆಯ ಹೆಸರಿನಲ್ಲಿ ಇವತ್ತು ನಡೆಯುತ್ತಿರುವ ನೂರಾರು ಹೋರಾಟಗಳೂ ಇಲ್ಲವಾಗಬಹುದೆಂದು ಈ ಜನರು ಭಾವಿಸುತ್ತಾರೆ.

ಆದರೆ, ನಿಜಕ್ಕೂ ನಮಗೆ ಇಂತಹ ಏಕರೂಪತೆ ಬೇಕೇ ಎಂಬುದನ್ನು ಪರಿಶೀಲಿಸುವ ಅವಶ್ಯಕತೆಯಿದೆ. ಎಲ್ಲರೂ ಒಂದೇ ರೀತಿಯ ಬಟ್ಟೆಗಳನ್ನು ಉಡುವ ಹಾಗಾದಲ್ಲಿ, ಒಂದೇ ರೀತಿಯ ಸಾಮಾನುಗಳನ್ನು ಬಳಸುವ ಹಾಗಾದಲ್ಲಿ, ಮತ್ತು ಒಂದೇ ರೀತಿಯ ಗಿಡಗಳನ್ನು ನೆಡುವ ಹಾಗಾದಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಕಡಿಮೆ ಮಾಡಬಹುದೇನೋ

೨೦೬


ಓಶಿಯಾನಾದ ಭಾಷೆಗಳು

ನಿಜ; ಆದರೆ, ಇದರಿಂದಾಗಿ ನಮ್ಮ ಜೀವನದಲ್ಲಿ ಈಗ ಕಾಣಿಸುವ ವೈವಿಧ್ಯತೆಯೇ ಇಲ್ಲವಾಗಿ, ಎಲ್ಲವೂ ನೀರಸವಾಗಬಲ್ಲುದು.

ಇದಲ್ಲದೆ, ಕಾಲ ಬದಲಾದಂತೆಲ್ಲ ಪ್ರಪಂಚದಲ್ಲಿ ಕಾಣಿಸುವ ಜೀವಿಗಳಲ್ಲಿ ಕೆಲವು ಹೊಸ ಕಾಲಕ್ಕೆ ಹೊಂದಿಕೊಳ್ಳಲು ಅಸಮರ್ಥವಾಗಿ ನಾಶಗೊಳ್ಳುವುದನ್ನು ನಾವು ಕಾಣುತ್ತೇವೆ. ಯಾವ ರೀತಿಯ ಜೀವಿ ಈ ರೀತಿ ಅಳಿದುಹೋಗಬಲ್ಲುದು, ಮತ್ತು ಯಾವುದು ಉಳಿಯಬಲ್ಲುದು ಎಂಬುದನ್ನು ನಾವು ಅವುಗಳ ಇವತ್ತಿನ ನಡತೆಯ ಇಲ್ಲವೇ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾರೆವು. ಹಾಗಾಗಿ, ಜೀವಿಗಳಲ್ಲಿ ಕಾಣಿಸುವ ವೈವಿಧ್ಯತೆಯನ್ನು ಅಳಿಸಿ ಹಾಕಿದಲ್ಲಿ, ಮುಂದೆ ಬರಲಿರುವ ಒಂದು ಕಾಲದಲ್ಲಿ ಉಳಿಯಬಹುದಾದ ಜೀವಿಯೇ ಇಲ್ಲವೆಂದಾಗಲು ಸಾಧ್ಯವಿದೆ.

ಭಾಷೆಯಲ್ಲಿ ಕಾಣಿಸುವ ವೈವಿಧ್ಯತೆಯೂ ಇದೇ ರೀತಿಯದು. ನಮ್ಮ ಜೀವನದಲ್ಲಿ ಕಾಣಿಸುವ ಇತರ ವೈವಿಧ್ಯತೆಗಳಂತೆಯೇ ಅದೂ ಅತ್ಯವಶ್ಯ ವಾದುದು. ಇವತ್ತಿನ ಅವಶ್ಯಕತೆಗಳನ್ನು ಪೂರೈಸಲು ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆ ಅತ್ಯಂತ ಸಮರ್ಥವೆಂದು ಕೆಲವರು ಭಾವಿಸಬಹುದು. ಆದರೆ ಮುಂದೆ ಬರುವ ಒಂದು ದಿವಸದಲ್ಲಿ ಅವುಗಳ ಬದಲು ಈಗ ತೀರಾ ಕೆಳಮಟ್ಟದಲ್ಲಿರುವ ಗುಡ್ಡಗಾಡಿನ ಜನರ ಒಂದು ಭಾಷೆ ಹೆಚ್ಚು ಸಮರ್ಥವೆಂದು ಸಿದ್ಧವಾಗಲು ಸಾಧ್ಯವಿದೆ. ಹಾಗಾಗಿ, ಭಾಷೆಯ ಉಳಿವೇ ಅದರಲ್ಲಿ ಕಾಣಿಸುವ ವೈವಿಧ್ಯತೆಯ ಮೇಲೆ ಅವಲಂಬಿಸಿದೆಯೆಂದು ಹೇಳಬಹುದು.

ಭಾಷೆಗಳಲ್ಲಿ ಕಾಣಿಸುವ ಈ ವೈವಿಧ್ಯತೆಯನ್ನು ಅರಿತಷ್ಟೂ ಭಾಷೆಯ ಸ್ವರೂಪ ನಮಗೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ, ಈ ವಿಷಯದಲ್ಲಿ ನಾವು ತಿಳಿಯಬೇಕಾದದ್ದು ಇನ್ನೂ ಬಹಳ ಜಾಸ್ತಿ ಇದೆ. ನೂರಾರು ವರ್ಷಗಳಿಂದಲೂ ಸಾವಿರಾರು ಮಂದಿ ಸಂಶೋಧಕರು ಇಂಗ್ಲಿಷ್ ಭಾಷೆಯ ಮೇಲೆ ಸಂಶೋಧನೆಗಳನ್ನು ನಡೆಸುತ್ತಾ ಬಂದಿದ್ದಾರೆ; ಹಾಗಿದ್ದರೂ, ಆ ಭಾಷೆಯ ಕುರಿತಾಗಿ ಇವತ್ತಿಗೂ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಹೀಗಿರು ವಾಗ, ಒಬ್ಬರೋ ಇಬ್ಬರೋ ಸಂಶೋಧನೆ ನಡೆಸುತ್ತಿರುವ ಇತರ ಭಾಷೆಗಳ ಪಾಡೇನು?

ಇದಲ್ಲದೆ, ಸಂಶೋಧಕರು ಸಾಮಾನ್ಯವಾಗಿ ಜಾಸ್ತಿ ಸಂಶೋಧನೆ ಮಾಡಿದ ಭಾಷೆಯ ಸ್ವರೂಪವನ್ನೇ ಇತರ ಭಾಷೆಗಳಲ್ಲೂ ಕಾಣುತ್ತಾರೆ. ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಕನ್ನಡದಲ್ಲಿ ಕಂಡ ಕನ್ನಡ ವೈಯಾಕರಣಿಗಳ ಅವಸ್ಥೆ ಇಂತಹದು. ತಾವು ಅಭ್ಯಾಸ ಮಾಡುವ ಭಾಷೆಯ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಇವರು ಇನ್ನಷ್ಟು ಆಳವಾದ ಸಂಶೋಧನೆಗಳನ್ನು ಮಾಡ ಬೇಕಾಗುತ್ತದೆ. ಪ್ರಪಂಚದಲ್ಲಿರುವ ಸಾವಿರಗಟ್ಟಲೆ ಭಾಷೆಗಳಲ್ಲಿ ಎಷ್ಟನ್ನು ಈ ರೀತಿ ಅಭ್ಯಾಸ ಮಾಡಲು ಸಾಧ್ಯ?

೨೦೭


ಭಾಷೆಗಳ ಕುರಿತು ನಮಗಿರುವ ಅಜ್ಞಾನ ಎಂತಹದು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಈ ಅಜ್ಞಾನವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು ಮಾತ್ರವಲ್ಲ, ಆದಷ್ಟು ಮಟ್ಟಿಗೆ ಭಾಷೆಗಳ ನಡುವಿರುವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದಕ್ಕೂ ನಾವು ಪ್ರಯತ್ನಿಸಬೇಕು. ಕನ್ನಡದ ಉಪಭಾಷೆಗಳ ನಡುವಿನ ವ್ಯತ್ಯಾಸಗಳು ಕನ್ನಡದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಆ ಉಪಭಾಷೆಗಳಲ್ಲಿ ಒಂದು ಸರಿ ಉಳಿದುವೆಲ್ಲ ತಪ್ಪು ಎಂಬ ಭಾವನೆಯನ್ನು ನಾವು ತೊಡೆದು ಹಾಕಬೇಕು. ನಿಜಕ್ಕೂ ಕನ್ನಡದ ಉಳಿವು ಈ ವೈವಿಧ್ಯತೆಯನ್ನವಲಂಬಿಸಿದೆ ಎಂಬುದನ್ನು ನಾವು ಮರೆಯಬಾರದು.

೨೦೮